LOADING

ಹುಡುಕಲು ಟೈಪ್ ಮಾಡಿ

ಮನೆಯಂಗಳದಲ್ಲಿ ಮಾತುಕತೆ ರಂಗಕರ್ಮಿಗಳು

ಶ್ರೀ ಎಲ್.ಬಿ.ಶೇಖ(ಮಾಸ್ತರ )

ಅರಿವೇ ಗುರು, ಅನುಭವವೇ ಜ್ಞಾನ. ಲೋಕಾನುಭವದ ಮೂಯಲ್ಲಿ ಅರಳಿದವರೇ ನಿಜಸಾಧಕರು. ಕನ್ನಡ ರಂಗಭೂಮಿ ಅಂತಹ ಅಗಣಿತ ಸಾಧಕರ ಸಂಪನ್ನ ಕ್ಷೇತ್ರ. ರಂಗವೇ ವೃತ್ತಿ, ಪ್ರವೃತ್ತಿ. ಬದುಕು-ಭಾವವಾದಾಗ ಸಾಧನೆಯ ಸತ್ಫಲ ಕಟ್ಟಿಟ್ಟ ಬುತ್ತಿ. ಕಲಾನಿಷ್ಠ ಸಾಧಕರೇ ನಾಡಿನ ಸಾಂಸ್ಕೃತಿಕ ಆಸ್ತಿ. ವೃತ್ತಿ ರಂಗಭೂಮಿಯ ಚೇತನ ಎಲ್‌.ಬಿ. ಶೇಖ (ಮಾಸ್ತರ) ಅವರು ನಿಸ್ಸಂಶಯವಾಗಿಯೂ ನಾಡಿನ ಅ೦ತಹ ಪ್ರೇರಕ ಕಲಾ ಆಸ್ತಿ. ಹೆಸರಾಂತ ಹಾರ‍್ಮೋನಿಯಂ ಮೇಷ್ಟ್ರು. ಹಿರಿಯ ರಂಗ ನಿರ್ದೇಶಕರು, ನಾಟಕ ಕಂಪನಿಯ ಮಾಲೀಕರು, ನಾಲ್ಕೂವರೆ ದಶಕಕ್ಕೂ ಮೀರಿ ಮುನ್ನಡೆದಿರುವ ಕಲಾಸೇವೆಯ ರಂಗಜೀವಿ.
ವೃತ್ತಿ ರಂಗಭೂಮಿಯಲ್ಲಿ ಎಲ್.ಬಿ. ಶೇಖ (ಮಾಸ್ತರ) ಅವರ ಹೆಸರು ಅಚ್ಚಳಿಯದಂತಹುದು. ನಿಸ್ಪೃಹ ಸೇವೆ, ನಿಷ್ಕಾಮ ರಂಗಕೈಂಕರ್ಯದಿಂದ ಮಿನುಗಿದ ಈ ರಂಗನಕ್ಷತ್ರ ಉತ್ತರ ಕರ್ನಾಟಕದ ಪ್ರತಿಭೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಲಿಂಗದಳ್ಳಿ ಗ್ರಾಮದ ಅನನ್ಯ ಕಲಾಕೊಡುಗೆ. ಸಾಬ ಶೇಖ ಮತ್ತು ಶಹಜಾಬಿ ದಂಪತಿಯ ಸುಪುತ್ರರು. 1955ರ ಸೆಪ್ಟೆಂಬರ್‌ 1 ರಂದು ಜನನ. ಓದಿದ್ದು ಎಸ್. ಎಸ್. ಎಲ್.ಸಿ. ವರೆಗಷ್ಟೇ. ಬಾಲ್ಯದಿಂದಲೂ ಅಕ್ಷರಕ್ಕಿಂತಲೂ ಕಲೆಯೆಡೆಗೆ ವಿಪರೀತ ಸೆಳೆತ. ಸಂಗೀತವೇ ಕಿವಿಗಿಂಪು, ಮನಕೆ ಮುದ, ಸಾಧನೆಗೆ ಸ್ಫೂರ್ತಿ. ಬಾಲಕನ ಈ ಅವ್ಯಕ್ತ ಕಲಾ ಆಸೆಗೆ ನೀರೆರೆದ ಪೋಷಕರು. ತಾಳಿಕೋಟೆಯ ವಂಶದಲ್ಲಿ ಹಿಂದೂಸ್ತಾನಿ ಸಂಗೀತದ ಅಭ್ಯಾಸ. ಸೀನಿಯರ್ ಪರೀಕ್ಷಿಯಲ್ಲಿ ಪಾಸು. ಹಾಡಿನೊಟ್ಟಿಗೆ ಹಾರ‍್ಮೋನಿಯಂ ಕಂಡರೆ ಜೀವ! ಸತತ ಪರಿಶ್ರಮದ ಫಲವಾಗಿ ಹಾರ‍್ಮೋನಿಯಂ ವಾದನದಲ್ಲಿ ಪೂರ್ಣ ಹಿಡಿತ. ಸಂಗೀತ-ವಾದನ ಒಲಿದಾಗ ನಟನೆಯತ್ತ ಹರಿದ ಚಿತ್ತ. ಜಾತ್ರೆಗಳಲ್ಲಿ ಅನಾವರಣಗೊಳ್ಳುತ್ತಿದ್ದ ಕಂಪನಿ ನಾಟಕಗಳಿಗೆ “ಕಣ್ಣಾ”ದಾಗ ಕಂಪನಿದಾರನಾಗುವ ಹೆಬ್ಬಯಕೆ. ರಂಗನಟನೆಯ’ಹಸಿವು’ ಹೆಚ್ಚಾದಾಗ ಹಲವು ಸಾಮಾಜಿಕ ಪಾತ್ರಗಳ ಪೋಷಣೆ. ಬದುಕೇ “ಬಣ್ಣ”ಮಯ, ಭಾವ “ರಂಗಮಯ”ವಾಗಲು 1983ರಲ್ಲಿ ಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘ ಹಾಗೂ ಹಾನಗಲ್ ವೃತ್ತ ಕಂಪನಿ ಸ್ಥಾಪನೆ. ಮುಂದಿನದ್ದು ತನ್ಮಯದ ಸಂತೃಪ್ತ ಕಲಾಯಾನ. 2003ರಿಂದ ಸತತವಾಗಿ ಹದಿಮೂರು ವರ್ಷಗಳ ಕಾಲ ತಮ್ಮ ಒಡೆತನದ ಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘದ ಒಂದೇ ವೇದಿಕೆಯಲ್ಲಿ 24 ನಾಟಕಕಾರರ 60 ಸಾಮಾಜಿಕ, ಜನಪದ ಹಾಗೂ ಧಾರ್ಮಿಕ ನಾಟಕಗಳ ಅನಾವರಣ. ಬರೋಬ್ಬರಿ 90 ಸಾವಿರ ಪ್ರದರ್ಶನದ ಸಂಘಟಣೆ-ನಟನೆ. ಇದೊಂದು ಐತಿಹಾಸಿಕ ದಾಖಲೆ. ಕಿವುಡ ಮಾಡಿದ ಕಿತಾಪತಿ, ಬದುಕು ಬಂಗಾರವಾಯಿತು, ಎಚ್ಚರ ತಂಗಿ ಎಚ್ಚರ, ಮುದುಕನ ಮದುವೆ, ಧರ್ಮಾಧಿಕಾರಿ, ರೈತನ ಮಕ್ಕಳು, ಮಂತ್ರಿ ಮಗಳು, ತ್ಯಾಗಜೀವಿ, ಗೌಡ್ರ ಗದ್ಲ ಮುಂತಾದ ಬಹುತೇಕ ನಾಟಕಗಳ ಭರ್ಜರಿ ಯಶಸ್ಸು. ಉತ್ತರ ಕರ್ನಾಟಕದಾದ್ಯಂತ ಮನೆಮಾತು. ನೂರಾರು ಕಲಾವಿದರನ್ನು ಸಾಕಿ ಸಲುಹಿದ ಅನ್ನದಾತ ಮಾಲೀಕ. ನಾಟಕಕಾರರಿಗೆ, 130ಕ್ಕೂ ಅಧಿಕ ಕಲಾವಿದನಿಗೆ ಸನ್ಮಾನದ ಗೌರವಾರ್ಪಣೆ.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ, ಅಧ್ಯಕ್ಷ, ಕರ್ನಾಟಕ ವೃತ್ತಿ ರಂಗ ಕಲಾವಿದರ ವೇದಿಕೆಯ ಅಧ್ಯಕ್ಷ, ವೃತ್ತಿ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಮುಂತಾದ ಹುದ್ದೆ-ಸಂಘಟನೆಗಳಲ್ಲಿ ಸ್ತುತ್ಯರ್ಹ ಸೇವೆ. ರಂಗಭೂಮಿಗೆ ಅಮೂಲ್ಯ ಕಾಣಿಕೆ. ಅಶಕ್ತ ಕಲಾವಿದರಿಗೆ ನೆರವು -ಭರಪೂರ ಅವಕಾಶ ನೀಡಿ ಪ್ರೋತ್ಸಾಹಿಸಿದ ಧನ್ಯತಾಭಾವ.
ನಾಲ್ಕೂವರೆ ದಶಕಗಳಿಂದಲೂ ವೃತ್ತಿ ರಂಗಭೂಮಿಯಲ್ಲಿ ಸಕ್ರಿಯವಾಗಿರುವ ಎಲ್‌.ಬಿ. ಶೇಖ ರಾಗಸಂಯೋಜನೆಯಲ್ಲೂ ಸಿದ್ಧಹಸ್ತರು. ನಿರ್ದೇಶನಕ್ಕೂ ಸೈ, ನಟನೆಗೂ ಸೈ, ಸಂಘಟನೆಯಲ್ಲಿ ಎತ್ತಿದ ಕೈ. ಸಮಾಜಸೇವೆಯಲ್ಲಿ ಸದಾ ಸಕ್ರಿಯರು. ಗದಗದ ವೀರೇಶ್ವರ ಪುಣ್ಯಾಶ್ರಮದ ಕುಮಾರಶ್ರೀ ಪ್ರಶಸ್ತಿ, ಕರ್ನಾಟಕದ ನಾಟಕ ಅಕಾಡೆಮಿ ಪ್ರಶಸ್ತಿ, ಚಿನ್ನದುಂಗುರ, ಬೆಳ್ಳಿ ಕಿರೀಟ, ಬೆಳ್ಳಿ ಗೋಲಗುಂಬಜ, ರಂಗಾಂತರಂಗ, ರಂಗಸಾಧಕ ಅಭಿನಂದನಾ ಗ್ರಂಥ ಮತ್ತಿತರ ಗೌರವಾರ್ಪಣೆಗಳಿಂದ ಭೂಷಿತರಾದ ಶೇಖ ಮಾಸ್ತರರ ಕಲಾಸೇವೆ-ಕಲಾನಿಷ್ಠೆ-ರಂಗಬದ್ಧತೆ ರಂಗತಲೆಮಾರಿಗೊಂದು ಮಾದರಿ, ರಂಗಕತ್ತೆಯೊಂದಿಗೂ ಮರೆಯಲಾಗದ ರಂಗಜೀವಿ.
ಇಂತಹ ಅಪರೂಪದ ಅಪ್ರತಿಮ ರಂಗ ಸಾಧಕರ ಬದುಕು ನವಪೀಳಿಗೆಗೆ ಆದರ್ಶವಾಗಲಿ ಎಂದು ಆಶಯ.

ಟ್ಯಾಗ್‌ಗಳು:
ಹಿಂದಿನ ಲೇಖನ

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *

ಮಹತ್ವದ ಜಾಲತಾಣಗಳು

ಇ ಆಡಳಿತ ಜಾಲತಾಣ

ಇ-ಸೇವೆಗಳು

ಸಾಮಾನ್ಯ ಅಂಕಿ ಅಂಶ

ಸರ್ಕಾರದ ಆ್ಯಪ್ ಗಳು

ಕೇಂದ್ರ ಸರ್ಕಾರದ ಜಾಲತಾಣಗಳು

ತಾಂತ್ರಿಕ‌ ಜಾಲತಾಣಗಳು

ಕನ್ನಡ ಸಂಬಂಧಿ ಜಾಲತಾಣಗಳು

ಆಯೋಗಗಳು

ನ್ಯಾಯಾಲಯಗಳು

ಡೌನ್‌ಲೋಡ್‌ಗಳು