LOADING

ಹುಡುಕಲು ಟೈಪ್ ಮಾಡಿ

ಇತಿಹಾಸ ತಜ್ಞರು ಮನೆಯಂಗಳದಲ್ಲಿ ಮಾತುಕತೆ ಲೇಖಕರು

ಶ್ರೀ ಸುರೇಶ ಮೂನ

ಇತಿಹಾಸವನ್ನು ಅರಿಯದವನು ಇತಿಹಾಸವನ್ನು ಸೃಷ್ಟಿಸಲಾರ ಎಂಬ ಲೋಕನುಡಿ ಅಕ್ಷರಶಃ ಸತ್ಯ. ಸಾಗರರೂಪಿ ಇತಿಹಾಸದ ಒಳಗರ್ಭದಲ್ಲಿ ಅಡಗಿರುವ ಮುತ್ತಿನಮಣಿಗಳನ್ನು ಹೆಕ್ಕಿ ತೆಗೆಯುವುದು ಸಂಶೋಧನೆಯ ಸಾಹಸ. ಇತಿಹಾಸದ ಸತ್ವಸಾರವನ್ನು ಸಾಕ್ಷೀಕರಿಸುವ ಇತಿಹಾಸಕಾರ ನಿಜಕ್ಕೂ ಸಾಧಕೋತ್ತಮ. ಅಂತಹ ಸಾಧಕರ ಸಾಲಿನ ಶ್ರೇಷ್ಠರಲ್ಲಿ ಸುರೇಶ್ ಮೂನ ಪ್ರಮುಖರು. ನಾಡಪ್ರಭು ಕೆಂಪೇಗೌಡರ ನಗರಿಯ ಐತಿಹ್ಯವನ್ನು ಜಗದಗಲ ಪಸರಿಸಿದ ಬೆಂಗಳೂರು ಇತಿಹಾಸ ಧುರೀಣರು. ಪ್ರಸಿದ್ಧ ಅಂಕಣಕಾರರು, ಅತ್ಯುತ್ತಮ ಉಪನ್ಯಾಸಕರು, ಹೆಸರಾಂತ ವಾಗ್ಮಿಗಳೂ ಕೂಡ.
ಬೆಂಗಳೂರು ಇತಿಹಾಸ ತಜ್ಞರಾದ ಸುರೇಶ್ ಮೂನ ತುಮಕೂರು ಜಿಲ್ಲೆಯವರು. ಗುಬ್ಬಿ ತಾಲ್ಲೂಕಿನ ಮೂಕನಹಳ್ಳಿ ಹುಟ್ಟೂರು. ಸುವಿಖ್ಯಾತ ರಂಗಕಲಾವಿದ ನಟಭಯಂಕರ ಗಂಗಾಧರ ರಾಯರ ಮನೆತನದ ಕುಡಿ. ಅಕ್ಷರದ ಅಂಗಳದಲ್ಲಿ ಆರಳಿದ ಪ್ರತಿಭೆ. ಬೆಂಗಳೂರು ಬೆಳದೂರು. ಬಾಲ್ಯದಿಂದಲೂ ಇತಿಹಾಸದ ಬಗ್ಗೆ ವಿಶೇಷ ಒಲವು, ಹಿರಿಯರ ಕುರಿತು ಆಪಾರ ಗೌರವ. ಪೂರ್ವಜರ ಹಿರಿಮೆ ಗರಿಮೆ ಸಾಧನೆಗಳನ್ನು ಪ್ರತಿಯೊಬ್ಬರ ಮನೆಯ ಬಾಗಿಲಿಗೆ ತಲುಪಿಸುವನೇ ಸಮಾಜದ ಹಿತಚಿಂತಕ ಎಂಬ ಸ್ವಾಮಿ ವಿವೇಕಾನಂದರ ಮಾತೇ ಅನುಗಾಲದ ಆದರ್ಶ. ಅಧ್ಯಯನ, ಅಧ್ಯಾಪನ ಮತ್ತು ಅಕ್ಷರದ ಧ್ಯಾನ ಸುರೇಶ್ ಮೂನ ಅವರ ತ್ರಿವಳಿ ಆಸಕ್ತಿ. ಕನ್ನಡದಷ್ಟೇ ಇಂಗ್ಲೀಷ್ ಮೇಲೂ ಮಾತು-ಬರವಣಿಗೆಯಲ್ಲಿ ಪೂರ್ಣ ಹಿಡಿತ. ಬೆಂಗಳೂರಿನ ಆಚಾರ್ಯ ಪಾಠಶಾಲೆ ಕಾಲೇಜಿನಲ್ಲಿ ವಿಜ್ಞಾನದ ಉಪನ್ಯಾಸಕರಾಗಿ ಬರೋಬ್ಬರಿ ೩೨ ವರ್ಷಗಳ ಸಾರ್ಥಕ ಸೇವೆ. ರಾಜ್ಯ-ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಎನ್ಸಿಸಿ ಅಧಿಕಾರಿ. ಬೇಡಿಕೆಯ ಅತಿಥಿ ಉಪನ್ಯಾಸಕ. ಬರವಣಿಗೆ ನೆಚ್ಚಿನ ಪ್ರವೃತ್ತಿ. ಇಂಗ್ಲೀಷ್ ಪತ್ರಿಕೆಯೊಂದರಲ್ಲಿನ ಬೆಂಗಳೂರು ಕುರಿತ ಲೇಖನ ಬೆಂಗಳೂರಿನ ಇತಿಹಾಸ ಅರಿಯುವ ಕುತೂಹಲಕ್ಕೆ ನಾಂದಿ. ಆನಂತರ ಸತತ ಸಂಶೋಧನೆ. ಕೆಂಪೇಗೌಡರ ನಗರಿಯ ಇತಿಹಾಸದ ದರ್ಶನಕ್ಕೆ ದೃಢಸಂಕಲ್ಪ. ಬದುಕು-ಭಾವವೆರಡೂ ಆದಕೇ ಮುಡಿಪು. ಚೊಚ್ಚಲ ಲೇಖನ ಡೆಕ್ಕನ್ ಹೆರಾಲ್ಡ್ನಲ್ಲಿ ಪ್ರಕಟ. ಓದುಗರ ಪ್ರತಿಕ್ರಿಯೆಯಿಂದ ಬೆಂಗಳೂರಿನ ಇತಿಹಾಸದ ಅಧ್ಯಯನ-ಬರವಣಿಗೆಯಲ್ಲಿ ಆನವರತ ತ್ಲಲೀನ. ಮಾಹಿತಿಪೂರ್ಣತೆ, ಆಸಕ್ತಿದಾಯಕ ಶೈಲಿ, ಕುತೂಹಲಕಾರಿ ಅಂಕಿಅಂಶ ಸುರೇಶ್ ಮೂನರ ಅಂಕಣದ ವೈಶಿಷ್ಟ್ಯ. ಡೆಕ್ಕನ್ ಹೆರಾಲ್ಡ್, ಏಷಿಯನ್ ಏಜ್, ಟೈಮ್ಸ್ ಆಫ್ ಇಂಡಿಯಾ, ವಿಜಯಕರ್ನಾಟಕ, ಉಷಾಕಿರಣ, ಮಂಗಳ… ಹೀಗೆ ಕನ್ನಡ ಮತ್ತು ಇಂಗ್ಲೀಷ್ನ ಬಹುಪಾಲು ಪತ್ರಿಕೆಗಳಲ್ಲಿ ಅಂಕಣಕಾರರಾಗಿ ಜನಜನಿತ. ಬೆಂಗಳೂರು ಇತಿಹಾಸ ಧುರೀಣನಾಗಿ ರೂಪಾಂತರ. ಉದಯವಾಣಿ ಪತ್ರಿಕೆಯ ನಮ್ಮ ಬೆಂಗಳೂರು ಪುರವಣಿಯಲ್ಲಿ ‘ಬೆಂಗಳೂರು ಇತಿಹಾಸ ಮಾಲೆ’ ಅಂಕಣ ಹತ್ತು ವರ್ಷಗಳ ಕಾಲ ಪ್ರಕಟಗೊಂಡಿದ್ದು ಪತ್ರಿಕೋದ್ಯಮದ ಇತಿಹಾಸದಲ್ಲೇ ಅಚ್ಚಳಿಯದ ದಾಖಲೆ. ಜನಪ್ರಿಯತೆ ಹೆಚ್ಚಿದಂತೆಲ್ಲಾ ದಿ ಹಿಂದೂ, ಬೆಂಗಳೂರು ಮಿರರ್ ಅ೦ಕಣ ಪ್ರಕಟ. ಜನಶ್ರೀ ಕನ್ನಡ ಸುದ್ದಿವಾಹಿನಿಯಲ್ಲಿ ‘ಬೆಂಗಳೂರು ಇದು ನಮ್ಮ ಊರು’ ಸರಣಿಯ ಸಂಪನ್ಮೂಲ ವ್ಯಕ್ತಿ. ನಿರೂಪಕರಾಗಿ ನಾಡಿನ ಮನೆಮನೆಗೆ ತಲುಪಿದ ಹಿರಿಮೆ. ಸುವರ್ಣ ನ್ಯೂಸ್ ಸುದ್ದಿವಾಹಿನಿ, ರೇಡಿಯೋ ಸಿಟಿ ೯೧.೧ ಎಫ್ ಎಂ, ಬಿಗ್ ಎಫ್ ಎಂ ಗಳಲ್ಲೂ ಶ್ರೋತೃಗಳಿಗೆ ಬೆಂಗಳೂರಿನ ಐತಿಹಾಸಿಕ ದರ್ಶನ. ಸದ್ಯ ಸುಚಿತ್ರ ಫಿಲಂ ಇನ್ಸ್ಟಿಟ್ಯೂಟ್ನಲ್ಲಿ ಬೆಂಗಳೂರು ಇತಿಹಾಸ ಕುರಿತು ಸರಣಿ ಉಪನ್ಯಾಸದಲ್ಲಿ ನಿರತರಾಗಿರುವ ಸುರೇಶ್ ಮೂನರದ್ದು ಮಾಸ್ತಿ ಅಧ್ಯಯನ ಪೀಠದ ಪ್ರಾಯೋಜನೆಯಲ್ಲಿ ಲಂಡನ್ಗೆ ತೆರಳಿ ಲಂಡನ್ ಮತ್ತು ಬೆಂಗಳೂರು ನಗರಗಳ ತೌಲನಿಕ ಅಧ್ಯಯನ ಕೈಗೊಂಡ ಹೆಗ್ಗಳಿಕೆ. ವಿಶ್ವದ ಅನೇಕ ನಗರಗಳ ದರ್ಶನ. ತಲಾ ಒಂದು ಸಾವಿರ ಪುಟಗಳ ಮೂರು ಸಂಪುಟಗಳುಳ್ಳ ‘ಬೆಂಗಳೂರು ನಗರ ನಿರ್ಮಾಪಕರು’, ಮಹಾಮಹಿಮ ಹರಕೆ ಹನುಮ, ದಂಡಿನ ದರ್ಶನ, ಮೈಸೂರು ಬ್ಯಾಂಕ್ ಹೆಜ್ಜೆಗುರುತುಗಳು ಸೇರಿ ಒಟ್ಟು ೮ ಮಹತ್ವದ ಕೃತಿಗಳ ರಚನಕಾರರು. ಪ್ರತಿಷ್ಠಿತ ಕೆಂಪೇಗೌಡ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಮುಂತಾದ ಗೌರವಗಳಿಂದ ಭೂಷಿತರು, ಬೆಂಗಳೂರಿನ ಮಹತ್ವವನ್ನು ಬೆಳಗಿ ಇತಿಹಾಸ ಸೃಷ್ಟಿಸಿದ ಮಾದರಿ ಇತಿಹಾಸಕಾರರು.

ಟ್ಯಾಗ್‌ಗಳು:
ಹಿಂದಿನ ಲೇಖನ

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *

ಮಹತ್ವದ ಜಾಲತಾಣಗಳು

ಇ ಆಡಳಿತ ಜಾಲತಾಣ

ಇ-ಸೇವೆಗಳು

ಸಾಮಾನ್ಯ ಅಂಕಿ ಅಂಶ

ಸರ್ಕಾರದ ಆ್ಯಪ್ ಗಳು

ಕೇಂದ್ರ ಸರ್ಕಾರದ ಜಾಲತಾಣಗಳು

ತಾಂತ್ರಿಕ‌ ಜಾಲತಾಣಗಳು

ಕನ್ನಡ ಸಂಬಂಧಿ ಜಾಲತಾಣಗಳು

ಆಯೋಗಗಳು

ನ್ಯಾಯಾಲಯಗಳು

ಡೌನ್‌ಲೋಡ್‌ಗಳು