. ಮುಸ್ಲೀಮರು ಹುತಾತ್ಮರಾದ ಪದಾ

ದೈವ ಕೇಳರಿ ಸಣ್ಣ ದೊಡ್ಡವರು ಪುರಮಾಸಿ
ಇದು ಸಾಹಸ ಹೇಳುವೆ ಕಣ್ಣೀರ ಸುರಿಸಿ || ಪಲ್ಲವಿ ||

ಮಹಾ ಮುಸ್ಲೀಮನ ದುಃಖಾ ಕಂಡ ತ್ರಿತಯೋಗದಲಿತ್ತರಿ ಲೋಕ
ಚಿಂತಿಸುವರೋ ಮಾಡಿ ತಮ್ಮ ಮನಸಿನಂತೆ ಅತೀ ಶೋಕ
ನವಖಂಡ ಪಾತಾಳ ಸರ್ವ ಜಗತ್ತಕ್ಕೆಲ್ಲಾ ಇದ್ದಿಲ್ಲರಿ ಸುಖಾ
ಏರು || ಎಷ್ಟಂತ ಜನಕ ವರ್ಣಿಸಲಿ ದುಃಖಸಾಗರ ಮ್ಯಾಲಿಂದ ಮ್ಯಾಲೆ
ಮಾಯಾವಲ್ಲದೊ ಕೊರದಂತ ಕಲಿ | ಮುಂದ ತಿಳಿಸುವ ಜನಕ್ಕೆ ಅನುಸರಿಸಿ
ಮಗ ಮುಆವಿಯಾಂದ ತನ್ನ ಮನಕ ಸೋಸಿ | ಕಪಟದಕಿಲಿಂದ ಪತ್ತರ ಬರಿಸಿ  || ೧ ||

ಹೊಂಟಾನೋ ಜಾಸೂದ ತಗೊಂಡ ಹಾರಿಸಿ
ಬರದ ಕೊಟ್ಟ ಕಾಗದ ಬಂದ ಮದೀನ ಶಾರಪಟ್ಟಣಕ ಮುಟ್ಟಿದಾ
ತಂದ ಮುಜರಿ ಮಾಡಿ ಹುಸೇನ ಸಾಹೇಬನ ಮುಂದ ಇಟ್ಟಿದ್ದ
ಅರಜ ಕಾಗದ ಹುಸೇನಸಾಹೇಬ ಓದಿ ಕರದ ಮುಸ್ಲೀಮಗ
ಕೊಟ್ಟಾರೊ ವರದಿ ತುರ್ತ ಕೂಫೇಕ ಹೋಗಬೇಕೋ ಜಲ್ದಿ
ಅಂದ ಮುಸ್ಲಿಂ ಶಿರಬಾಗಿಸಿ || ೨ ||

ಕಟ್ಯಾರೊ ಹತಿಯಾರಾ ನಡುವಿಗೇರಿಸಿ
ಕೊಟ್ಯಾರೋ ಹುಸೇನ ಸಾಹೇಬ ಚಲೋ ತೇಜಿ ತರಿಸಿ
ಮುಸ್ಲಿಂ ಸಾಹೇಬರು ಬಹಳ ಧೈರ್ಯವಾನಾ |
ಬಂದ ಮುಸ್ಲಿಂ ಸಾಹೇಬರ ಕೂಫೇದ ಜನ ಕಂಡರು
ಬಾಳ ಅಕ್ಕರತೀಲೆ ಮುಸ್ಲೀಮನಾ
ಅಂತಾರ ಮುಸ್ಲೀಮಗ ಕೈ ಜೋಡಿಸಿ || ೩ ||

ಮುಸ್ಲಿಂ ಸಾಹೇಬರು ಮಹಾ ಇಸ್ವಾಸಾ
ನಂಬಿದ ಕೂಪೇದ ಜನಕ ತರಲಿಲ್ಲ ಸಂಶೆ |
ನಮಾಜಿಗೆ ಶರಣರು ನಿಂತಾರೋ
ಸಂಗತೀಲೆ ಕರಕೊಂಡ ಎಲ್ಲ ಶಿಷ್ಯರಾ ||
ಒಟ್ಟ ಹಿಂಬಾಲಾ ಇದ್ದಾರೋ ಐನೂರಾ ||
ವ್ಯಾಳ್ಯಾ ಆಗಿತ್ತೋ ಸೂರ್ಯ ಮುಣುಗುಕ ಉಳಿದಿತ್ತೊ ಒಂದು ಮಾರಾ
ಅಂತ ಸಮಯಕ್ಕೆ ಬಂದಾನೋ ವೈರಿ
ಮುಸ್ಲಿಂ ಸಾಹೇಬರ ಕೊಲ್ಲಾಕ ಹತ್ಯಾರರಿ
ಖೋಡಿ ಶರಣರು ಆಗ್ಯಾರೋ ಗಾಬರಿ
ಓಡಿ ಹೋಗ್ಯಾರೋ ಶಿಷ್ಯರು ಮಾಡಿ ಘಾಸಿ  || ೪ ||

ಮುಸ್ಲಿಂ ಸಾಹೇಬರು ಮಾದೇವನ ನೆನಸಿ
ಅಂತಾರ ಮರಣ ಒದಗೀತ ಬಿಟ್ಟಾರ ಜೀವ ಆಶಿ
ಬಂದ ಯಜೀದ ಅಡರಾಶಿ ಶರಣರಿಗೆ ಒಗಿದ ಕವಣಿಗಲ್ಲಾ ||
ಪೆಟ್ಟಹತ್ತಿತೋ ಮುಸ್ಲಿಂ ಸಾಹೇಬನ ಹಣೆಯ ಮೇಲಾ ||
ಮೂರೂ ತಾಸಿನ್ಯಾಗ ಆತೋ ಅವರ ಜಲ್ಮಗಾಲಮೇಲಾ
ಬಾಳ ದುಃಖಾ ಸೋಸಿ ಮಸ್ಲಿಂ ಶರಣಾ
ಬ್ಯಾನಿ ಸೋಸದೆ ಮುಚ್ಯಾರೋ ಕಣ್ಣಾ
ಕಂಡಾರೋ ಮುಕ್ತಿಮಾರ್ಗ ಹೋತೋ ಪ್ರಾಣಾ
ಕುಂತಾರಾ ವೈಕುಂಠದಾಗ ಮುತ್ತಿನ ಮಂಚಹಾಸಿ || ೫ ||

ಮಾಡ್ಯಾರ ಘಾತಕತನ ಮುಸ್ಲಿಂ ಸಾಹೇಬನ ಕರಿಸಿ
ಕಡದ ತುಣಕ ಮಾಡ್ಯಾರ ಹೊಡೆದ ಜಲ್ಮದರಿಸಿ
ಸೂರ್ಯ ಚಂದ್ರನಕ್ಕಿಂತ ಹೆಚ್ಚಿನ ಮುಸ್ಲಿಂ ಸಾಹೇಬನ ಪುತ್ತರಾ
ತಪ್ಪಿ ಹುಟ್ಟಿದ್ರೋ ಮುಸ್ಲಿಂ ಸಾಹೇಬನ ಹೊಟ್ಟೇಲಿ ಇಬ್ಬರಾ
ದಿಕ್ಕಿಲ್ಲದಾಂಗ ಆತೋ ಅವರ ಬೆನ್ನ ಹಿಂದೆ ಯಾರ‍್ಯಾರ
ಮಹ್ಮದ ಇಬ್ರಾಹಿಮ ಸಾಹೇಬ | ತಂದಿ ಕಾಣುದಿಲ್ಲಂತ ಆಗ್ಯಾರೋ ಗಾಬಾ |
ತಮ್ಮಗ ಅಂತಾನೋ ಅಣ್ಣಾ ಹುಡಿಕ್ಯಾಡಿ ಬಾ
ನನ್ನ ಜೀವಕ ಇಲ್ಲರಿ ಬರೋಸಿ || ೬ ||

ಬಂತ ಕಾಸೀಮ ಸಾಹೇಬರ ಬಾಳ ಸಂಶಿ
ಇಟ್ಟಿದ್ದ ಮಕ್ಕಳ ತಂದ ಮನಿಯಾಗ ಅಡಗಿಸಿ
ಶಾರ ಕೂಫೇದ ಅರಸ ಮಹಾ ಚದಾಮಯಿದ್ದ
ಮುಆವಿಯ್ಯಾನ ಮಗಾ ಹಾರೀಸ ಅಂತಾನ ಹಲ್ಲ ತಿಂತಾನ
ಮುಸ್ಲೀಮ ಸಾಹೇಬನ ಎರಡು ಕೂಸಾ
ಅಡಗಿಸಿ ಯಾರ ಇಟ್ಟಿದಾರ ಜಲ್ಮದಿಂದ ಥಾರ
ಹೊಡದ ಹುರದ ಬಿಡತೇನಿ ಅವರ ವಂಶಾ
ಯಾರ ಮನ ಮುಕ್ಕಾಶಿರಾ ತಂದ ಕೊಟ್ಟಮಗ ಹಾಕಿ ಜಾಹಿರಾ |
ಕೊಡತೇನಿ ಸಂತೋಷದಿಂದ ಮನಪೂರಾ
ಬಿಟ್ಟಾನ ಊರೆಲ್ಲಾ ಡಂಗೂರ ಹೊಡಿಸಿ || ೭ ||

ಡಂಗೂರ ಸುದ್ದಿಕೇಳಿ ಆಗಿ ಉದಾಸಿ | ಕಾಸೀಮಸಾಹೇಬ ತನ್ನ ಮಗನಿಗೆ ರಂಬಿಸಿ
ಮುಸ್ಮೀಮನ ಮಕ್ಕಳಾ ಆರೇಳು ವರ್ಷದ ಸಣ್ಣ ಬಾಲಾ
ಇಂದ ಏನ ಕಾರಣ ಸುದ್ದಿ ಆತರಿ ಮುಖಮುಂದ ಹೂಳುವುದು |
ಥಳಾ ಥಳಾ ಸಲ್ಲದೆ ಯಜೀದ ಕೊಲ್ಲುವನೋ
ಮುಸ್ಲೀಮನು ಕೂಸುಗಳಿಗೆ ಆಗ್ಯಾನೋ ಕಾಳಾ
ತನ್ನ ಮಗನಿಗೆ ಹೇಳ್ಯಾನೋ ಎಲ್ಲಾ ಬಿಚ್ಚಿ
ಕರಕೊಂಡ ಹೋಗ್ಯಾರ ಇಬ್ಬರನ ಮುಚ್ಚಿ
ತಿರುಗಿ ಬಂದಾನ ಮದೀನಾ ದಾರಿ ಹಚ್ಚಿ |
ಕೂಫೇಕ ಬಂದಾರ ಮತ್ತೆ ದಾರಿ ತಪ್ಪಿಸಿ || ೮ ||

ಮುಸ್ಲೀಮನ ಮಕ್ಕಳು ರಾಜಹಂಸಿ
ತಂದಿಗೆ ಹುಡುಕ್ಯಾರೋ ಆಗಿ ಪರದೇಶಿ
ಕೂಫೇದ ಪಟ್ಟಣವೆಲ್ಲಾ ತಿರುಗಿ ಹುಡಿಕ್ಯಾರೋ ತಂದಿಕಾಣವಲ್ಲಾ
ಹೊತ್ತ ಮುಳುಗಿ ಕಾಣದಾಂಗ ಆಗಿತ್ತೋ ಕತ್ತಲಾ
ಕಂಡ ಇಬ್ಬರನ ಯೋಜಿಸಿ ಮನಗಂಡ ಅಬ್ದುಲ್ಲಾ
ಬಂದ ಇಬ್ಬರ ಕೂಸಿಗೆ ಹಿಡಿದ | ಮಾರಿ ಮಾರಿಗೆ ತಗದೊಂದು ಹೊಡಿದ
ಕೊಟ್ಟ ಪಾರೇದವನ ಕೈಯಾಗ ಹಿಡಿದಾ
ಅಂದಾನ ನಾಳಿಗೆ ಮಾಡೂನು ಚವಕಾಶಿ || ೯ ||

ಇದ್ದ ಮುಸ್ಲೀಮರ ಪಾರೇದವ ಮೀರಾಶಿ
ಅಂತಾನ ಕೂಸಿನ ಕೊರಳಿಗೆ ಬಿದ್ದು ದುಃಖಿಸಿ
ಬಾಳ ವಿದ್ಯೆಯೋದಿ ಹೇಳಿ ಕೊಟ್ಟನೋ
ಕೂನ ತನ್ನ ಕೈಯಾನ ಉಂಗುರಾ
ತೀವ್ರದಿಂದ ಊರಬಿಟ್ಟ ನೀವು ಹೋಗಬೇಕರಿ ದೂರ
ನಮ್ಮ ಅಣ್ಣ ಒಬ್ಬ ಇರತಾನ ನೇಮಿ ಅಲಿ ದಾರಿಕಾರ
ಬ್ಯಾಗ ಉಂಗುರ ತಗದ ತೋರಿಸಿರಿ
ಅಂವ ತೋರಿ ತೋರಿಸ್ತಾನ ಮದೀನಾದ ದಾರಿ
ತಿರುಗಿ ಬರಬ್ಯಾಡ ಹೋಗರಿ ಪರಬರಿ
ಬಿಟ್ಟಾನ ಪಾರೇದವ ದಾರಿ ತೋರಿಸಿ || ೧೦ ||

ಸಣ್ಣ ಬಾಲಕರಿಗೆ ಸಾವು ಜಪ್ಪಿಸಿ | ಬೆನ್ನ ಹತ್ತಿತೋ ಮತ್ತೆ ದಾರಿ ತಪ್ಪಿಸಿ
ಕೂಫೇದ ಸೀಮಿ ತಿರುಗಿ ಬಂದ ಕುಂತಾರ ಭಾಂವಿಗಿ
ಹಂತೇಲಿ ಪಳ್ಳಗಿಡದಾಗ ಅಡಗಿ |
ಮಾತಾಡುತ ಕುಳಿತಾರೋ ಬಾಳ ನಿತ್ರಾಣ ಆಗಿ
ದಾರಿ ಮೇಲೆ ಹೋಗುವ ಜನರಿಗೆ ಕಾಣದಾಂಗ ಮರಿಯಾಗಿ
ಅಂತ ಸಮಯದಲ್ಲಿ ಅರಸನ ದಾಸಿ | ಬಾವಿ ನೀರಿಗೆ ಬಂದಾಳ ಪುರಮಾಸಿ
ಕಂಡಾಳ ಕಂದನ ಅಡರಾಶಿ | ಕರಕೊಂಡ ಬಂದಾಳ ಮನಿಗೆ ರಂಬಿಸಿ || ೧೧ ||

ಬಾಳ ಕುಸಿಲಿಂದ ಅರಸನ ದಾಸಿ
ಕರತಂದ ಇಟ್ಟಾಳ ದೇವರ ಕೋಲ್ಯಾಗ ಅಡಗಿಸಿ
ತೂಗುವ ಮಂಚದ ಮ್ಯಾಲೆ
ಮಲಗಿಕೊಂಡರು ಅಣ್ಣ ತಮ್ಮ ಇಬ್ಬರು ಜೋಡಿಲಿ
ಅಣ್ಣ ಕಂಡಾನ ತಂದಿ ಕೂನ ಮಂಚದ ಮ್ಯಾಲೆ ಸ್ವರ್ಗದಲಿ
ಏಕಾಯೇಕಿ ಅಣ್ಣ ನಿದ್ದೀಲಿ ಎದ್ದು |
ಅಳತಾನ ತಮ್ಮನ ಕೊರಳಿಗೆ ಬಿದ್ದು
ಅಣ್ಣನ ದುಃಖ ನೋಡಿ ತಮ್ಮಗಾಬಾದಾ
ಇಬ್ಬರು ಅಳತಾರೋ ದುಃಖ ದುಃಖಿಸಿ || ೧೨ ||

ಅತಿ ಶೋಕ ಮಾಡ್ಯಾರೋ ತಂದಿಗೆ ನೆನಸಿ
ಸ್ವರಕೇಳಿ ಹಾರೀಸ ಎದ್ದ ಅಡರಾಶಿ ಹೋಗಿ ಇಬ್ಬರನ ಕಂಡ
ಮುಸ್ಲೀಮನ ಮಕ್ಕಳ ಮಾರಿ ನೋಡಿ ಆಗ್ಯಾನೋ ಬೆಂಕಿ ಕೆಂಡ
ಹತಿಯಾರಿಲೆ ಸಂಹಾರ ಮಾಡಿದಾನೋ ಇಬ್ಬರನ ಚಂಡ
ಪಾಪಿಷ್ಟ ಮನಸಿನ್ಯಾಗ ಕೋಪಯಿಟ್ಟಿದ್ದಾ ತೀರಿಸಿಕೊಂಡ
ಹಾರೀಸ ಯಜೀದಗ ಬರಲಿಲ್ಲ ಅಕ್ಕರತಿ
ಮುಸ್ಲೀಮನ ಮಕ್ಕಳು  ಪಡಿದಾರೋ ಮುಕ್ತಿ
ಇಬ್ಬರು ಕೊಡ್ಯಾರೋ ಮಡ್ಡಿ ಪೀರಾನಂತೆ
ಹುಸೇನಮಿಯ್ಯಾನ ಕವಿ ಚ್ಯಾಪಿಸಿ
ಇದರ ಸಾರಾಂಶ ಹೇಳುವೆ ಕಣ್ಣೀಗೆ ನೀರ ಸುರಿಸಿ || ೧೩ ||

* * *

. ವೀರ ಕಾಸೀಮನ ಲಢಾಯಿ

ಅಡಿಪ್ರಾಸ ಅಂಬುದು ನುಡಿ ಗೊತ್ತೇನಿಲ್ಲಾ
ಸೂಳಿಯಾಂಗ ಕುಣಿದಾಡಿ ವಾಳಿ ಹೋಗತಾನಲ್ಲಾ | ಸಿಂಗಲ್ ಚಾಕ ಮೂಲಾ || ಪಲ್ಲವಿ ||

ಏರು || ಹೇಡಿ ಓಡಿ ಖೋಡಿ ಲೌಡಿ |
ಒಂಟ ಅಕ್ಷರ ತೊಂಟ ಈ ಪಡಶೆಂಟ ತರತಾನ ಶಾಹೀರಾ
ಜೋಡಿ ಪದಗಳ ಮಾಡಿ ತಂದು ಹಾಡಿ ಹೋಗೋ ಗಂಭೀರಾ
ವಾದ ಹಾಕಬ್ಯಾಡ ಗುದ್ದ ಹೊಗಸೇನ ಸುದ್ದ ಹಾಡೋ ಅಕ್ಷರಾ
ಇ || ಮಾನಾ ಪಾನಕ ಶ್ವಾನಾಯಿಂವಾ ಆಗಿಮೂಲಾ | ಬಂದ ಕಿಸ್ತಾಹ್ಲಲಾ || ೧ ||

ಶರಣ ಕಾಸೀಮಸಾಬ ಇವರು  ಸಣ್ಣಬಾಲಾ
ಹದಿನಾಲ್ಕು ವರ್ಷದ ಕಂದಾ ಎಳೆಕಮಲಾ | ಹೀಂಗ ಅಂತಾರಲ್ಲಾ
ಏರು || ಮಾತಾ ಪಿತಾ ತುರ್ತಾ ಶರತಾ
ಖುದ್ದ ಹೋಗಿ ಯುದ್ಧಮಾಡಿ ಗೆದ್ದ ಬರತೇನಿ ಕಣದಲ್ಲಿ
ಬಂಟನಾ ಬಲಿಷ್ಟ ನನಗ  ಎಳ್ಳಷ್ಟ ಭಯಾಯಿಲ್ಲಾ ಮನದಲ್ಲಿ
ಕೆಟ್ಟ ಮರವಾನ ದ್ರುಷ್ಟ ಆ ಬ್ರಷ್ಟಗ ಹೊಡುತೇನಿ ಕ್ಷಣದಲ್ಲಿ
ಇ|| ಹಟ ಹಿಡಿದ ಕುಂತಾರ ಫಟ್ಟಿ ಬಿಡಲಿಲ್ಲಾ | ತಾಯಿದು ಹಿಡಿದಾರಾ ಕಾಲಾ || ೨ ||

ಕೇಳಿ ತಾಯಿ ಅಳತಾಳ ಹೊರಳಿ ಅಳತೆಯಿಲ್ಲಾ
ಸುಳಕ ಕಣಕ ಹೋಗಬ್ಯಾಡೋ ನಿನಗ ಕಳಸುದಿಲ್ಲಾ | ನನಗ ನೋಡವರಿಲ್ಲಾ
ಏರು || ಕುದುರಿ ಏರಿ ದೊರಿ ಪೇರಿ
ಬಂದ ಮಡದಿ ಮುಂದ ನಿಂತಾರ ಚಂದದಿಂದ ಅತಿ ಸುಂದರಾ
ಬಿದ್ದ ಪಾದಕ ಎದ್ದು ಹೇಳತಾಳ ಗೆದ್ದು ಬರುವುದು ದುಸ್ತಾರಾ
ಕಷ್ಟ ನಂದು ನಷ್ಟ ಮಾಡಿ ಹೊಂಟಿ ಹೋಗರಿ ಸರದಾರಾ
ಇ || ಶಿವನ ಧ್ಯಾನಾ ಮಾಡೂತ ವರಣ ಹೇಳ್ಯಾರಲ್ಲ | ಅವನ ಹೊರತ್ಯಾರಿಲ್ಲಾ || ೩ ||

ಮಹಾಗಂಭೀರ ಧೀರ ಹೇಳಿ ನಡೆದಾರಲ್ಲಾ
ಹತಿಯಾರ ಕೈಯಾಗ ಸೂರ ಹಿಡಿದ ಡಾಲಾ ರಣಕ ಮುಟ್ಯಾರಲ್ಲಾ
ಏರು || ಬಿರದಾ ಹಿರದಾ ಮರದಾ ಕರದಾ
ಹಿಂಡ ವೈರಿಯ ಗಂಡ ನಾನು ಪುಂಡ ಅನಿಸೇನಿ ಬಹಾದ್ದೂರ
ಹಿಡಿದ ವೈರಿಗೆ ಹೊಡೆದ ಬಿಡತೇನಿ ಕಡದ ಮಾಡಿ ಚೂರಚೂರ
ಕಂಡ ಅವರಿಗೆ ಭಂಡ ಮರವಾನ ದಂಡ ತಂದಾನ ಗಂವಾರಾ
ಇ| ಆಗಿ ಹೋಗಲಿ ಕೂಗಿ ಅಂತಾರಲ್ಲಾ ಯಜೀದರೆಲ್ಲಾ | ತಿಂದ ಕರಕರಾಹಲ್ಲಾ || ೪ ||

ಹಿರದ ಹತಿಯಾರ ಮರದ ಜಿಗದ ಹೊಡುತಾನಲ್ಲಾ
ರುಂಡ ಸಿಡದ ಕಡಕೊಂಡ ತೆಳಗ ಬಿದ್ದಾವಲ್ಲಾ | ಜೀವದ ಕಬರಿಲ್ಲಾ
ಏರು || ಶೂರಾ ಧೀರಾ ಸೀರಾ ಥಾರಾ.
ಎತ್ತ ನೋಡಿದರ ಸುತ್ತ ಹೆಣಗಳು ಸತ್ತು ಬಿದ್ದಾವ ರಣದಲ್ಲಿ
ಅಚಿತ್ರ ಕೇಳರಿ ವತ್ರದಿಂದಲಿ ನೇತ್ರದ ಹರುತಿತ್ತು ಕಾವಲಿ
ಜಂಗ ಮಾಡ್ಯಾರ ಹಿಂಗ ಜೀವದ ಹಂಗ ಇಟ್ಟಿದಿಲ್ಲ ಹುಲಿ
ಇ|| ಆರು ದಿವಸ ಅಸನ ನೀರು ಏನೇನಿಲ್ಲಾ | ಸೋತ ಕೈಯ ಕಾಲಾ  || ೫ ||

ಬಂದ ರಣದಿಂದ ತಾಯಿ ಮುಂದ ಹೇಳ್ಯಾರಲ್ಲಾ
ಹಡದವ್ವಾ ಕುಡಸವ್ವಾ ನೀರ ನಿರ್ವಾಯಿಲ್ಲಾ | ಗಂಟಲ ಒಣಗೈತಲ್ಲಾ
ಏರು || ಬ್ಯಾಗ ಮಗ್ಗ ಆಗ ಈಗ
ಮಾರಿ ನೋಡಿ ತಾಯಿ ಚೀರಿ ದುಃಖ ಭಾರಿ ಮಾಡ್ಯಾಳು
ಹೆಂತಾ ಹೊತ್ತ ಮಗನ ಸುತ್ತ ಒದಗಿ ಬಂತ ಅಂದಾಳು
ಶಂಕರಾ ಭವಸಾಗರಾ ನೀರಿನ ಬರಾ ತಂದೆಂತಾಳು
ಇ|| ಇಷ್ಟ ಕೇಳಿ ಶರಣರು ಹೊಂಟ ಹ್ವಾದಾರಲ್ಲಾ | ನೀರ ಸಿಗಲಿಲ್ಲಾ || ೬ ||

ಹರಿ ಬರಿದಂತ ಬರಿ ಇದು ತಪ್ಪುದಿಲ್ಲಾ
ಒಂಬತ್ತು ದಿನಾ ಉಪವಾಸಾ ಶರಣ ಇದ್ದಾರಲ್ಲಾ | ಒದಗಿ ಬಂದೀತು ಕಾಲಾ
ಏರು || ಕಂಡಾ ಪುಂಡಾ ಭಂಡಾ ದಂಡಾ
ಸುತ್ತ ಮುತ್ತ ಆತ ಸೈನ್ಯ ಹುಕುಮ ಕೊಟ್ಟಾನ ಮರವಾನಾ
ಹಿಡಿದ ಕಾಸೀಮರ ಹೊಡೆದ ಯಜೀದ ಕರಣಯಿಲ್ಲದೆ ಬೇಮಾನಾ
ಮಡದ ಸುದ್ದಿ ಕೇಳಿ ಹಡದ ತಾಯಿ ಮಡದಿ ಬಂದ ಆ ದಿನಾ
ಇ || ದುಃಖ ಮಾಡುರೋ ಶೋಕ ಇವರು ಅಳತಿಯಿಲ್ಲಾ
ಬಿದ್ದ ಹೆಣದ ಮ್ಯಾಲಾ || ೭ ||

ಹುಸ್ನೆ ಇಬ್ನೆ ಶರಣರು ಅಲಿ ನೋಡಿದಿಲ್ಲಾ
ಸುತ್ತ ಅರಬಿಯ ಡೋಲಿ ಎತ್ತಿ ದೈವಾಯೆಲ್ಲಾ ಮಣ್ಣು ಮಾಡ್ಯಾರಲ್ಲಾ
ಏರು || ಶಕ್ತಿ ಭಕ್ತಿ ಕೀರ್ತಿ ಮುಕ್ತಿ
ಮಡದ ಶರಣರು ಪಡದ ದಾರಿ ಹಿಡಿದ ಸ್ವರ್ಗ ಕಂಡಾರು
ಅಕ್ಕರತಿ ಬಾಳಿ ಪ್ರೀತಿಯಿಂದ ಮುತ್ತಿನ ತೊಟ್ಟಿಲ ಕಟ್ಯಾರು
ಶರಣರಿಗೆ ಶಿರಬಾಗಿ ರಂಭೇರು ತೂಗಿ ಸೇವಾ ಮಾಡವರು
ಹೀಂಗ ಮನಸಿಟ್ಟ ನಡದಂವಗ ಸ್ವರ್ಗ ಸೇಲಾ | ಸಾಂಬಾಯಿಟ್ಟಾನಲ್ಲಾ || ೮ ||

ಶಾರ ಬಾಗಲಕೋಟಿ ಊರ ರಂಗಲಾಲಾ
ದಸ್ತಗೀರ ಕೇಸುಪೀರ ನಮ್ಮ ಮ್ಯಾಲಾ ಹಸ್ತ ಇಟ್ಟಾರಲ್ಲಾ ||
ಏರು || ಜೋಡಿ ಕೂಡಿ ಮಾಡಿ ಹಾಡಿ
ತೊಡಕ ಅಕ್ಷರ ಮಾಡಾಕವಲ್ಲಿ ಹೆಡಕ ಮುರದೇನ ಕುಂಬಾರ
ರಂಗ ಲಚಮನ ಸಿಂಗ ಉಸ್ತಾದನ್ಹಾಂಗ ಕವಿ ಮಾಡೋ ಪಾಮರಾ
ಸುಳ್ಳ ಶಾಹೀರ, ಮಳ್ಳನೀನು ಕಳ್ಳಹಿಡಿ ತುಣುತುಣುಸುರಾ
ಲಾಲಡೋಂಗ್ರಿ ಖ್ಯಾಲ ಮಾಡ್ಯಾರ ಮೋಲಯಿಲ್ಲಾ | ಕಟ್ರೋ ಕುಂಡಿಗೆ ಗುಲ್ಲಾ || ೯ ||


* * *

. ಕಾಸೀಮನ ಜಂಗಿನ ಪದಾ

ಮಾತಕೇಳರಿ ಚಿತ್ತಕೊಟ್ಟು ನೀವು | ಮುತ್ತಿನಂತ ನುಡಿ ಮುಂದ ಇನ್ನಾ
ಸುತ್ತ ಮುತ್ತ ನೆರದಿರೋ ಜನಾ | ಬೋಲ | ಹತ್ತು ದೈವಕ್ಕ ಪುತ್ರ ನಾನಾ || ೧ ||

ಕರ್ಬಲದಾಗ ಕಾಸೀಮ ಸಾಹೇಬನ ಲಗ್ನ ಮಾಡಬೇಕಂದರಣ್ಣಾ
*

[1] ಎಲ್ಲೆಲ್ಲಿ ಸಿಗಲಿಲ್ಲೊ ಮದುವಿ ಹೆಣ್ಣಾ | ಬೋಲ | ಮಗಳಕೊಟ್ಟು ಲಗ್ನ ಮಾಡ್ಯಾರಣ್ಣಾ || ೨ ||

ಯಜೀದ ಕೋಪಿಸಿ ಲಡಾಯಿಕೆ ಬಾರೆಂದು | ಮೇಲೆ ಮೇಲೆ ಪತ್ರ ಬರದಾರಣ್ಣಾ
ಕಾಸೀಮ ಸಾಯ್ಬಾಗ ತಿಳಿಸ್ಯಾರಣ್ಣಾ | ಬೋಲ | ತಯಾರಾಗಿ ನಿಂತಾನ ರಾತೊ ದಿನಾ || ೩ ||

ಮದುವಿಯಾಗಿ ಮೂರು ದಿವಸ ಆಗಿದ್ದಿಲ್ಲೊ | ತೊಳದಿಲ್ಲೊ ಮೈಯ್ಯಾನ ಅರಸೀಣಾ
ಬಿಚ್ಚಿಲ್ಲೊ ಕಟ್ಟಿದ ಕಂಕಣಾ | ಬೋಲಾ | ಶಿರದ ಬಾಸಿಂಗವರು ಬಿಚ್ಚಿಲ್ಲಣ್ಣಾ || ೪ ||

ಮುಹ್ಮದ ಕಾಸೀಮ ಕರೆದು ತನ್ನ ಮಡದೀನಾ | ಎಲ್ಲ ವರ್ತಮಾನಾ ತಿಳಿಸ್ಯಾನಾ
ರಣಕೆ ಹೋಗತೀನಿ ಇಂದಿನ ದಿನಾ | ಬೋಲ | ಕೊಂದ ಬರತೇನಿ ಯಜೀದನಾ || ೫ ||

ಕಾಸೀಮನ ಮಡದಿ ಕೈಮುಗಿದು ಹೇಳತಾಳೊ | ಹೋಗಬ್ಯಾಡ್ರಿ ಕೇಳ್ರಿ ಎನ್ನ ವಚನಾ
ನಿಮ್ಮನ್ನಗಲಿ ಹ್ಯಾಂಗ ಇರಲಿ ನಾನಾ | ಬೋಲ | ನಿಮ್ಮ ಸಂಗಡ ಬರತೇನಿ ನಾನಾ || ೬ ||

ಕಾಸೀಮ ಸಾಹೇಬ ಮಡದಿಗೆ ಹೇಳತಾನೊ | ಹಿಂಬಾಲಹತ್ತಿ ಬರಬ್ಯಾಡೆ ನೀನಾ |
ನನ್ನ ಸಂಗಡ ಬರುವುದು ಮರಿಯೇ ನೀನಾ | ಬೋಲ | ಸತಿಪತಿ ಎಂತ ತಿಳಿಯೆ ನೀನಾ || ೭ ||

ಕಾಸೀಮ ಸಾಹೇಬ ಹೇಳಿದ ನೇಮಾ | ನಾಳೆ ಸ್ವರ್ಗದಾಗ ಬಾರೆ ನೀನಾ
ಅಂಗಿ ತೋಳಿಂದ ಹಿಡಿಯೇ ಕೂನಾ | ಬೋಲ | ಹೋಗಿ ಹಿಡಿಬೇಕು ಕಾಸೀಮನ ಚರಣಾ || ೮ ||

ಇಷ್ಟೆಲ್ಲಾ ಹೇಳಿ ಹೊಂಟಾನೋ ರಣಕ | ಮದಿಮಗ ಕಾಸೀಮ ಸ್ವಾಮಿ ಶರಣಾ
ಏಳು ವರ್ಷದ ವಾಯ ಇತ್ತೋ ಅವನಾ | ಬೋಲ | ಕರ್ಬಲದ  ಕದನ ಮಾಡ್ಯಾರಣ್ಣಾ || ೯ ||

ದಂಡು ಸಂಹಾರ ಮಾಡುತ್ತ ಹೊಂಟಾನೋ |
ಧೂಲ ಧೂಲ ಮೌಲಾ ಅಂದಾರಣ್ಣಾ
ದಂಡು ಕಡದುಗುಂಪು ಹಾಕಾರಣ್ಣಾ | ಬೋಲ ||
ಕರ್ಬಲದಾಗ ಕದನವು ನಡಸ್ಯಾರಣ್ಣಾ || ೧೦ ||

ಕಾಸೀಮನ ನೋಡಿ ಕಟ್ಟಿಕೊಂಡ ದವಡಿ |
ಓಡಿ ಬಂದ ಒಬ್ಬ ಪೈಲಾವಾನಾ||
ಹಿಂದಾ ಬಂದು ಹೊಡುತಾ ಮಾಡ್ಯಾರಣ್ಣಾ | ಬೋಲ |
ಕಡಕೊಂಡು ಬಿದ್ದಾನ ಕಾಸೀಮ ಶರಣಾ || || ೧೧ ||

ಕಾಸೀಮ ಸಾಹೇಬ ಸ್ವಾಮಿ ಶಿರಣರು |
ಕೈಲಾಸವಾಸಿಯಾದರಣ್ಣಾ ||
ನೀರನೀರಂತೆ ಕೊಟ್ಟಾರೋ ಪ್ರಾಣಾ || ಬೋಲ ||
ಮಡದಿಗೆ ಸುದ್ದಿ ಮುಟ್ಟಿತೊ ಇನ್ನಾ || ೧೨ ||

ಕಾಸೀಮನ ಮಡದಿ ದುಃಖ ಮಾಡುವದು ನೋಡಿ |
ಅಳತಾರೊ ಕರ್ಬಲದೊಳಗಿನ ಜನಾ ||
ರೋನೇ ಲಗಿ ಜಮೀನ ಆಸಮಾನ | ಬೋಲ |
ಇದಿಮಾಯಿ ಬೆನ್ನ ಹತ್ತಿತ್ತೇಸೊ ದಿನಾ || ೧೩ ||

ಅಯ್ಯಯ್ಯೋ ಶಿವನೆ ನಾ ಸಾಯಲಿಲ್ಲೊ |
ಎಷ್ಟಂತ ಧ್ಯಾನಿಸುತ್ತಿರಲಿ ನಾನಾ ||
ಮಡದ ಹೋದ ಪುರುಷನ ಹೆಂಗ ಮರಿಯಲಿ ನಾನಾ |
ಅವರ ಮುಂದಾಗಲಿಲ್ಲೊ ನಮ್ಮ ಮರಣಾ  || ೧೪ ||

ಭೂಮಿ ಮ್ಯಾಲೆ ಬಿದ್ದು ಅಳತಾಳೊ ಸಕೀನಾ |
ನನಮ್ಯಾಲೆ ಮುನದಾನೊ || ಸ್ವಾಮಿ ಭಗವಾನಾ ||
ಕಳದಿಟ್ಯೊ ನನ್ನ ಮುತ್ತೈದಿತನಾ | ಬೋಲ ||
ಅಡವಿ ಆರ‍್ಯಾಣದಾಗ ಕೊಯ್ದೊ ಗೋಣ || || ೧೫ ||

ಬೇವನೂರ ಊರ ಸುತ್ತವಾಯಿನಾ |
ವಾರಿಗಿ ಹುಡುಗರು ಒಂದೇ ಸವನಾ ||
ಹೆಜ್ಜೆ ಹಾಕುತ್ತಾರೋ ತಾಳಗತ್ತಿನ್ನಾ || ಬೋಲ ||
ಝಂಡಾ ಹಿಡಿದು ಹೊಡಿತಾರೊ ಧೀನಾ || ೧೬ ||

* * *

. ಅಬ್ದುಲ್ಲಾನ ಜಂಗಿನ ಪದಾ

ಏನ ಚಂದಾ ಸಬಾ ಪಸಂದ ಕೂಡಿರಿ
ದೇವೇಂದ್ರನಕ್ಕಿಂತ ಮಿಗಿಲಾ || ಪಲ್ಲವಿ ||

ಏರು || ಕುಂತ ದೈವದೊಳಗಾಗಲಿ ಚೌಕಾಸಿ
ಬಂದೀನಿ ಪುರಮಾಸಿ ಅಕ್ಷರಗಳ ಸೋಸಿ
ಇ|| ಹಚ್ಚಿ ನೋಡೋ ವರಿ ಬಂತೋ ಬಿರಿ ಇದರ ಸರಿ
ಶಾಣ್ಯಾತನ ನೋಡೂನ ಜಾಣ ಒದರಾಡಿಯೇನು ಫಲ || ೧ ||

ಶರಣ ಹುಸೇನ ಸಾಹೇಬನ ಚರಣಕ ಬಿದ್ದು
ರಣಕ ಹೋಗ್ತಾನಂತಾನಬ್ದುಲ್ಲಾ ||
ಏರು || ಕೊಡರಿ ಹೋಗಲಾಕ ಅಪ್ಪಣಿ ನನಗ
ಅನುಮಾನ ಯಾಕೀಗ ಹೋಗುವುದು ರಣದಾಗ
ಇ|| ಕಡದಾಡಿ ಕೊಲಿ ಹಾರಿಸ ತಲಿ ಭೂಮಿಮ್ಯಾಲೆ
ಹಿಡಿದು-ಹೊಡೆದು-ಕಡದು ಹಾಕುವೆ ನನಗೇನು ಥರ ಜಲ್ಲಾ || ೨ ||

ಹೀಂಗೆಂದ ಹುಸೇನ ಸಾಹೇಬ ಕಂದನ ಮುಂದ ನಿಂದೇನು ವಯಸಲ್ಲಾ
ಏರು || ಕದನ ಮಾಡುವಾಂಗಿಲ್ಲೋ ನಿನ್ನ ವಯ
ಮನಸಿನ್ಯಾಗ ಭಯ ಇನ್ನು ಎಳೇ ಪ್ರಾಯಾ
ಇ|| ಹೋಗಬ್ಯಾಡೋ ನೀನು ಹೇಳತೇನೋ ನಾನು
ಮರತ ಬಿಡೋ ನಿನ್ನ ಶರಥ ನಿನ್ನಿಂದೇನಾಗಾಕಿಲ್ಲಾ || ೩ ||

ಶರಣ ಕರುಣ ಮಾಡಂತ ಚರಣ
ಹಿಡಿದಾನೋ ಆಗ ಅಬ್ದುಲ್ಲಾ
ಏರು || ಹುಸೇನಸಾಹೇಬ ಅಂತಾನೋ ಮಗನೇ
ನಿನಗ ಬಿಟ್ಟೇನಿ ಶಿವನ ಮ್ಯಾಗ | ಈ ನಿನ್ನ ಅದೃಷ್ಟದಾಗ
ಇ|| ಬರೆದಂತ ಬರಿ ಶ್ರೀಹರಿ ತಪ್ಪದಲಿ
ನಾನೇನ ಮಾಡಲಿಯಿನ್ನಾ ದೈವೇನು ನೋಡಿ ಬಂದಿಲ್ಲ  || ೪ ||

ಹುಕುಮ ರಕಮ ಕೊಟ್ಟ ಕುಶಿಯಾದ ಮನದಾಗ ಅಬ್ದುಲ್ಲಾ
ಏರು|| ಹಾಂ ಕುಂತಾರೋ ತಮ್ಮ ಕುದುರಿಮ್ಯಾಗ
ಅಂಜಿಕಿಲ್ಲದಾಂಗ ತಿರುವೂತ ಪೇರಿ ಹೀಂಗ
ಅಂತಾರೋ ದೊರಿ ಬಾ ವೈರಿ ನನ್ನ ಸರಿ
ಉಳದ ಬೆಳದ ಹೋಗಂತ ತುಳದ ಬಿಡತೇನಿ | ಅಂತಾನಬ್ದುಲ್ಲಾ || ೫ ||

ಮುಂದ ಜಿಗಿದ ಹತಿಯಾರ ಹಿರದಾ
ಹೋಗಿ ಬಿದ್ದಾನ ವೈರಿ ಮ್ಯಾಲೆ | ಆಡಿನೊಳಗ ಬಿದ್ದಂಗಾತು ಹುಲಿ
ಹಾರಡಾವೊ ಮಾಲೆ ತಲಿ | ಧಡ ಧಡನೆ ಭೂಮಿ ಮ್ಯಾಲೆ
ಅನೇಕ ಜೀಂವಾ ವೈದಾನು ಶಿವಾ ಮಾದೇವಾ
ಇ|| ಜಂಗರಂಗ ಆದೀತೋ ಹೀಂಗ ಶರಣರಿಗೇನು ಅರವಿಲ್ಲಾ || ೬ ||

ಸೈನಾ-ಜೈನಾ-ಶುಮರಲೈನಾ ತಂದ ಶರಣರ ಸುತ್ತಯೆಲ್ಲಾ
ಏರು || ಹೊರಳಿ ಹೋದೇನಂದದ ದಾರಿಯಿಲ್ಲಾ
ಬಂದಿತೋ ಬಾಳ ಬಿರಿ ಮುನದಾನೋ ಶ್ರೀ ಹರಿ
ಇ|| ಯಜೀದರಾ ಕೊಯ್ದಾರೋ ಶಿರಾ ಮುಡದಾರಾ
ಕರಣ ವರುಣ ಇದ್ದಿಲ್ಲಂವಗ ಪಾಪಿಷ್ಟರೈದಾನ ಖುಲ್ಲಾ || ೭ ||

ಮಗನ ಮಥನ ಆದ ಸುದ್ದೀನ ಹುಸನೈನ ಕೇಳ್ಯಾರಲ್ಲಾ
ಏರು || ಇಂದು ಕರ್ಬಲಕೆ ಆದೆಲ್ಲೋ ಮಗನೆ ಮಣ್ಣಾ
ಇಷ್ಟು ನಿನ್ನ ದೈವಾನ ಬರಿದಾನೊ ಭಗವಾನಾ
ಇ || ಹೋದ ಸ್ವರ್ಗದಲಿ ಶಿವನ ಹುಲಿ
ತೊಟ್ಟಿಲಲಿ ಬಂದ ಚಂದ ಅಮೃತ ತಂದ
ಕುಡಿಸ್ಯಾರೋ ರಸೊಲಿಲ್ಲಾ || ೮ ||

ಸುತ್ತ ದೇಶದೊಳು ಸತ್ತುಳ್ಳಗುರುಗಳು
ಹಸ್ತ ಇಟ್ಟಿರೋ ತಲಿಮ್ಯಾಲೆ
ಏರು || ಬಾಗಲಕೋಟಿಯೊಳಗ ದಸ್ತಗೀರ ಪೀರ
ನಾಗೂ-ಗೌಸು ನುಡಿ ಕೇಳಿ ವೈರಿ ಹೋದ ಓಡಿ
ಹವ್ವಳ ನಿವ್ವಳ-ಕೆಚ್ಚಿದಕ್ಕಿಂತ ಅಕ್ಷರ ಭಿನ್ನಮೌಲಾ || ೯ ||

* * *

ಅಬ್ಬಾಸ ಅಲಿ ಜಂಗಿನ ಪದಾ

ಜಾಣಾಗ್ನಾನಾಲಿಂದ ಬಯಾನಾ ತಗದೇನಿ ಒಂದಾ | ತೋಡಿ ಪದಾ ನಿಂದಾ
ಕುಂತೀರಿ ದೈವದವರಾ ಸಣ್ಣ ದೊಡ್ಡ ಹಿರಿಯರು | ಮಾಡಿರಿ ವಿಚಿಯಾರಾ
ಆಡಿಪ್ರಾಸ ಅಕ್ಷರ ಆದರ ತಪ್ಪಾ
ಬಿಟ್ಟು ಮನದಾನ ಕೋಪಾ ನನಗ ಮಾಡರಿ ಮಾಪಾ
ಏರು || ಕೇಳಿ ವಾಳಿ ಸೂಳಿಹಾಂಗ ಕುಣೀತಿದಿ ಮುಂದಾ
ತೋಡಿ ಪದಾ ನಿಂದಾ  || ೧ ||

ರಂಗ ಅಬ್ಬಾಸನ ಜಂಗಕೇಳರಿ
ಪರಸಂಗ ಹೇಳತೀನಿ ಒಂದಾ | ಮನಸೀಗೆ ತಂದಾ
ಮಕ್ಕಾ ಮದೀನಾ ಬಿಟ್ರೋ ಹುಸನೈನಾ
ತಮ್ಮ ಸರೂ ಸೈನಾ ತಗೊಂಡಾರೊ ಬ್ಯಾಗನಾ
ಅಬ್ಬಾಸ ಅಲಿ ಇದ್ದಾಂಗ ಶಿವನ ಹುಲಿ | ಜಂಗ ಮಾಡೂದಕ ಕೊಲಿ
ಏರು || ಪುಂಡ ಹಿಂಡ ವೈರಿಗಂಡ ಶರಣ ಅನಿಸಿದ್ದಾ
ತೋಡಿ ಪದಾ ನಿಂದಾ || ೨ ||

ಸಣ್ಣ ಕೂಸಿನ ಬಣ್ಣಾ ಸುಟ್ಟ ಹೌಸಾನ ಹಾರಿತೋ ಕಂದಾ
ಪೂರ್ಣಮಿ ಚಂದ್ರಾ | ಅಲಿ ಅಸ್ಗರಾ | ಅಂದ ನೀರ ನೀರಾ
ಹಾರಿತೋ ಖಬರಾ | ಸಣ್ಣ ಸುಕುಮಾರಾ
ಹತ್ತಿತ್ತೋ ಬಿಕ್ಕಿ ಎರಡು ಕೈಕಾಲ ತಿಕ್ಕಿ ದುಃಖಿಸಿ ಆಕಿ
ಬಾನೂ ಬೀಬಿ ಶೋಕ ಮಾಡುವಳೋ |
ಮಗಾ ಯಾಕ ಆಗಿದ್ದಾನೆ ಸುಂದಾ | ತೋಡಿ ಪದಾ ನಿಂದಾ  || ೩ ||

ಕರುಣ ಅಬ್ಬಾಸ ಅಲಿ ಶರಣ ತಗೊಂಡ | ಮಸಕಿನ ಕೈಯಾಗ ಹಿಡದಾ
ಭಯಾಯಿಲ್ಲದ ನಡದಾ | ಹತ್ತಿ ತನ್ನ ಕುದುರಿ
ಹಿಡಿದಾರೋ ದಾರಿ | ನಡದಾರೋ ಬಿರಿಬಿರಿ | ತಿರುವೂತ ಪೇರಿ
ಅಂತಾರ ಧೀನ್ ಧೀನ್ | ಇಂದಿಗೆ ಹೋಗಲಿ ಪ್ರಾಣಾ
ನೀರ ಬಿಡೂದಿಲ್ಲಾ ನಾನಾ | ಕುದುರಿ ನಡಿತ ಕಾಲ ಕೆದರಿ
ಏರು | ಜೀಂವಕ ಚೂರ ಹೆದರಿಕಿಯಿಲ್ಲದಾ | ತೋಡಿ ಪದಾ ನಿಂದಾ || ೪ ||

ಕೆಟ್ಟ ಮರವಾನಾ ದ್ರುಷ್ಟ ಹೇಳಿದಾನ
ಬೃಷ್ಟ ಯಜೀದನ ಮುಂದಾ | ಅಟ್ಟಾಸಲಿ ಬಂದಾ
ನೀರಿನ ಮ್ಯಾಲಾ ಇಟ್ಟಿದ್ದ ಕಾವಲಾ |
ಯಜೀದ ಖುಲ್ಲಾ ನಡೆಸಿದ ಅಮಲಾ
ಬಂದೋಬಸ್ತ ಅಂವ ಇಟಿದ್ದ ಮಸ್ತಾ | ಹಂತ ಯಾವ ಶಮರಂತಾ
ಏರು || ಬಂದ ಇಂದಕೊಂದ ನಮ್ಮನ್ನ
ಹ್ವಾದಾನೋ ಜೀವಲಿಂದಾ | ತೋಡಿ ಪದಾ ನಿಂದಾ || ೫ ||

ಸೂರಾಧೀರಾ ತಗೊಂಡ ಹತಿಯಾರಾ
ಕೈಯಾಗ ಹಿಡದಾ | ಅಂತಾನೋ ಭರ್ರಂದಾ
ಅಬ್ಬಾಸಲಿ ಶರಣರ ಜಂಗ ನಡೆದೀತೋ ಆವಾಗ
ಇಟ್ಟಿದಿಲ್ಲೋ ಜೀವನ ಹಂಗ | ನಬಿಸಾಬರ ಕರುಣ ನಮಗ
ಐತಿ ನಮ್ಮ ಮ್ಯಾಲೆ ಅಂತಾರೋ ಅಬ್ಬಾಸ ಅಲಿ | ಶಿವನ ಮನಿ ಹುಲಿ
ಏರು || ಕಡದಾ – ಹೊಡದಾ – ನಡದಾ
ಅಬ್ಬಾಸಲಿ ನೀರ‍್ಹಿನಂತೇಲಿ ಹ್ವಾದಾ | ತೋಡಿ ಪದಾ ನಿಂದಾ || ೬ ||

ಪುಂಡ ಗಂಡಾ ನೀರ ತುಂಬಿಕೊಂಡ ತಿರುಗಿ ಅಂವಾ ಬಂದಾ
ಮರವಾನಾ ಅಂದಾ | ಹಿಡಿದ ನಿರ್ತಿಟ್ಟ ಬಾಣಾ
ಹೊಡದಾನೊ ದುಷ್ಟನ್ನಾ | ಹರಿದೀತೊ ಮಸಿಕಿ ನಾ
ನೀರ ಉಳಿಲಿಲ್ಲನ್ನುನಾ | ಆದಾಗ ನೆನೆದಾರೊ ಶಿವನಾ
ನಿನಗ ಬರಲಿಲ್ಲ ಕರುಣಾ | ಮಕ್ಕಳದು ಹೋಗತೈತಿ ಪ್ರಾಣಾ ||
ಏರು || ಭಂಡ ಮರವಾನಾ ಕಂಡ ಅಂದಾ
ಮನಗಂಡು ಬಾಣ ಹೊಡೆದಾ || ತೋಡಿ ಪದಾ ನಿಂದಾ  || ೭ ||

ಶರಣಾ ಮರಣಾ ಹೊಂದ್ಯಾರಾದಿನಾ
ಬರದಿದ್ದ ಪ್ರಾರಬ್ದಾ ತಪ್ಪೊದಿಲ್ಲಾ ಅಂದಾ
ಹುಸ್ನೆ ಇಬ್ನೆ ಅಲಿ ಶರಣಾ | ಎತ್ತಿವೋದ್ರೋ ಅಬ್ಬಾಸಲಿನಾ
ಅಂತಾರ‍್ಹಿಂಗ ಹುಸನೈನಾ | ಬರಲಿಲ್ಲ ಶಿವಗ ಕರುಣಾ
ಮಾಡ್ಯಾರೋ ಮಣ್ಣಾ | ತಂದ ಸರೂ ಸ್ವಾಮಾನಾ | ಸ್ವರ್ಗಕ ಹ್ವಾದರಣ್ಣಾ
ಏರು || ದುಃಖ ಶೋಕ ಮಾಡೀತ ತ್ರಿಲೋಕ
ಹೆಂತಾ ಹುಲಿ ಹ್ವಾದಾ || ತೋಡಿ ಪದಾ ನಿಂದಾ || ೮ ||

ಗುರು ದಸ್ತಗೀರ ಹೀಂಗ ವರವ ಕೊಟ್ಟಾರೋ
ಸುರು ಹಿಡಿತೇನಿ ಅವರ ಪಾದಾ ಕೊಟ್ಟಾ ಸರೂ ಬೇದಾ
ಕರುಣುಳ್ಳ ಕೇಸು ಪೀರಾ | ಆದಾನೋ ಸಹಕಾರಾ
ನಾಗೂ-ಗೌಸೂರ ಪೂರಾ | ವಿದ್ಯೆ ಕೊಟ್ಟ ಎದಿಗಾರಾ
ತಗೋ ನಿನ್ನ ತೋಡಿ | ಕಂತ್ರಿ ಪದಾ ಏನ ಹಾಡಿ
ಮಾರಿ ತಪ್ಪಿಸಿ ಓಡಿ | ಜೋಡಿ ಗೆಳೆಯರು ಕೂಡಿ
ಏರು || ಲಾಲ ಡೋಂಗ್ರಿ ಹಾಡಿ ಹೇಳ್ಯಾರೋ ಚಂದಾ
ತೋಡಿ ಪದಾ ನಿಂದಾ     || ಪಲ್ಲವಿ || || ೯ ||

* * *

. ಕರ್ಬಲಾದಡವಿಯಲ್ಲಿ ಇಮಾಮ ಹುಸೇನಾ

ನೆರೆದ ಸಭಾಕ ಕರ ಮುಗಿದು ಹೇಳತೇನಿ
ವಿನಂತಿ ವಿಘ್ನಾಪಾನ ಆಲಿಸರಿ ಇನ್ನಾ ||
ಪ್ರಾರಂಭ ಮಾಡುವೆ ಹೊಂದಿವಸ ನಾನು ಪಂಚಾತನರನಾ
ಇಮಾಮ ಹುಸೇನ ಕರ್ಬಲದೊಳಗೆ ಮಾಡಿದಾರ್ರಿ ಕದನಾ
ಹಾ ಹಾ ಹೇಳುವೆ ಬಯಾನಾ || ೧ ||

ಪತ್ರ ಬರೆದ ಯಜಿದ ಮುಡದಾರ ತಿಳಿಸಿ ವರ್ತಮಾನಾ
ಸ್ವಾಮಿ ಶರಣರ ನಾಮವನ್ನ ಸರಿಸಮಾನ ತಿಳಿದು ಬೈಯಾತ ಮಾಡೋ ನೀನಾ
ಒಲ್ಲೆನೆಂದರೆ ಸಾಹಸಾ ಇದ್ದರೆ ಮಾಡು ಎನ್ನೊಳು ಕದನಾ
ಹಾ ಹಾ | ಸಿದ್ದಮಾಡೋ ಸೈನ್ಯಾ || ೨ ||

ಪತ್ತರ ಓದಿ ಮತಲಬ ತಿಳಿದಾರೋ
ಇಮಾಮ ಹುಸೇನ ಸೈನ್ಯಾ ತಯಾರ ಆಗ್ಯಾನಾ
ಮಕ್ಕೆಶರೀಫಕ ಹೋಗಬೇಕೆಂದು ಮನದೊಳಗೆ ಯೋಚನಾ
ಸತಿ ಸುತ ಹಿತರು ಬಂಧು ಆಪ್ತಜನ ಕರಕೊಂಡು ನಡದಾನ
ಹಾ ಹಾ ಬಿಟ್ಟಾರೋ ಮದೀನಾ  || ೩ ||

ಕರ್ಬಲದಡಿವಾಗ ಎದುರಿಗೆ ಬಂದು ನಿಂತ ಶುಮ್ರಲಹಿನಾ ||
ತಗೊಂಡು ತನ್ನ ಸೈನ್ಯಾ ಪರಹತ್ ಎಂಬೊ ನದಿ ನೀರಿಗೆ ಪೈರ‍್ಯಾ ಇಡಿಶ್ಯಾನ
ನೀರು ಕುಡಿಯಲಾಕ ಕೊಡಬ್ಯಾಡರಿ ಇಮಾಮ ಹುಸೇನಾ
ಹಾ ಹಾ ಅಂತಾ ಮಾಡ್ಯಾನೋ ಆಜ್ಞಾ || ೪ ||

ಕರ್ಬಲ ಅಂಬೋದು ನೋಡರಿ ಘೋರ ಕಾನನಾ ಪಕ್ಷಿಗಳೇ ಶೂನ್ಯಾ
ಉಸುಗು ರೇತಿಮಣ್ಣು ಕಲ್ಲುಗಳು ಇವೇ ಇರುವವು ಘನಾ
ನೆರಳಿಗೆ ಹೋಗಿ ಕುಂತೇನಂದರ ಇಲ್ಲರಿ ಗಿಡಗಳ ಕೂನಾ |
ಹಾ ಹಾ ಎಂತಾ ಕಾನನಾ || ೫ ||

ನೀರು ಕಾಣದೆ ಲಡಾಯಿ ಮಾಡಿ ಮಡಿದು ಹೋಯಿತೊ ಜನಾ
ಇಮಾಮ ಹುಸನೈನಾ ಚಿಕ್ಕಮಗಾ ಅಸ್ಗರ ಅಲಿ ಇದ್ದಾ ಮೋಹದ ರತ್ನಾ
ನೀರು ಕಾಣದೆ ತುಟಿಯು ಒಣಗಿ ಆದರೋ ನಿತ್ರಾಣಾ
ಹಾ ಹಾ ಆರು ತಿಂಗಳದವನಾ || ೬ ||

ಮಗಾ ಮರಗುವದು ನೋಡಿ ತಾಳಲಾರದೆ ಇಮಾಮ ಹುಸನೈನಾ
ತಗೊಂಡಾ ಕೂಸಿನಾ ನದಿಗೆ ಹೋಗಿ ನೀರು ಕೇಳಿದರೆ ಪಾಪಿ ಯಜೀದನಾ
ಸಣ್ಣ ಶಿಶುವು ನೀರು ಕಾಣದೆ ಹೋಗತಾದೆ ಪ್ರಾಣಾ
ಹಾ ಹಾ ಮಾಡರಿ ರಕ್ಷಣಾ || ೭ ||

ಎಷ್ಟು ಕೇಳಿದರ ಬರಲಿಲ್ಲ ಅಂತಕರಣ ಬಿಟ್ಟಾರೋ ಬಾಣಾ
ಕೂಸಿನ ಕುತ್ತಿಗೆಗೆ ಗುರಿಯಿಟ್ಟು ಹೊಡೆದಾನೋ ಶುಮರಲೈನಾ
ಕುತ್ತಿಗೆ ಹೋಗಿ ಮುಂಡಿಗಿ ತಗಲೀತು ಇಮಾಮ ಹುಸನೈನಾ
ಹಾಹಾ ಹೋಯಿತು ಕೂಸಿನ ಪ್ರಾಣಾ || ೮ ||

ದುಃಖ ಮಾಡೂತ ಇಮಾಮ ಹುಸೇನ ಮನಿಗೆ ಬಂದ ತಾನಾ |
ಕರೆದು ಕಾಂತಿಗೆ ಕೂಸಿನ ಬೀಬಿಬಾನು ಕೈಯಲ್ಲಿ ಕೊಟ್ಟ ಶರಣಾ
ಶಿವನ ಹೆಸರ ಮೇಲೆ ಬಿಟ್ಟ ಹೊಂಟರೊ ಹೆಂಡರು ಮಕ್ಕಳನಾ
ಹಾ ಹಾ ಮಾಡಲಿಕ್ಕೆ ಕದನಾ  || ೯ ||

ಮೈಯೊಳು ಚಿಲಕಾ ಕಪನಿ ಅಂಗಿ ಕುದುರಿ ಪಂಚವರಣಾ ಏರಿದ್ದಾರೋ ಶರಣಾ
ಘರ ಘರ ಘರ ತಿರುವುತ ಪೇರಿಹೊಕ್ಕ ಯಜೀದನ ಸೈನ್ಯಾ
ಖಡ ಖಡ ಖಡ ತೋಮ ಎಂಬಂತ ಸಿಡಿಲಿನ ಗರ್ಜನಾ
ಹಾ ಹಾ ಮಾಡುತ್ತಾ ಹೊಕ್ಕಾ ಸೈನ್ಯಾ || ೧೦ ||

ಚರ ಚರ ಚರ ಕೊಯ್ಯುತ ನಡಿದಾನೋ ಯಜೀದನ ಸೈನ್ಯಾ ಕೈಲಾಸಕ ಜನಾ
ತರ್ ತರ್ ತರ್ ನಡಗಲಿಕ್ಕೆ ಹತ್ತಿದ್ದ ಶುಮರಲೈನಾ
ತಲ್ ಮಲ್ ತಲ್ ಮಲ್ ಆಗಿ ಹೋಯಿತೋ ಯಜೀದನ ಸೈನ್ಯಾ
ಹಾ ಹಾ ಆದರ ಫಲವೇನಾ || ೧೧ ||

ಕುದುರಿ ಕಾಲಿನ ಧೂಳಿನಿಂದ ಮುಚ್ಚಿಹೋಯಿತೋ ರಣಾ | ಅಡಗಿದಾವೋ ಕಿರಣಾ
ನೆತ್ತರದೊಳಗ ಹರಿದು ಹೋದವು ಕೈಲಾಸಕ ಹೆಣಾ
ಕಾಲ ಬಂದು ಒದಗಿತೋ ಸ್ವಾಮಿ ಶರಣರನಾ
ಹಾ ಹಾ ಚಿತ್ತೈಸರಿ ಇನ್ನಾ || ೧೨ ||

ಜನಾ ಮಡಿವದು ನೋಡಿ ಸೈರಿಸಲಾರದೆ ಸಾಕ್ಷಾತ್ ಭಗವಾನಾ ಇಮಾಮ ಹುಸನೈನಾ
ಚಿಕ್ಕಂದಿನಲ್ಲಿ ಕರ್ಬಲದಡಿವ್ಯಾಗ ಕೊಡತೇನಂತ ಪ್ರಾಣಾ
ಜನಾ ಕೊಲ್ಲತೀರಿ ವ್ಯರ್ಥವಾಗಿ ಮೊದಲ ಕೊಟ್ಟ ವಚನಾ
ಹಾ ಹಾ ಇದು ಏನ ಕಾರಣಾ || ೧೩ ||

ಶಿವನ ವಾಕ್ಯ ಕೇಳಿಸಿ ಜಿದ್ದಾ ಮಾಡಿದಾರೋ ಶರಣಾ | ಶುಮರಲಹಿನಾ |
ತಕ್ಷಣದಲ್ಲಿ ತೆಲಿಯ ಕೊದಾನೊ ಇಮಾಮ ಹುಸನೈನಾ
ಮುಹ್ಮದ ಹನಿಫಶ್ಯಾನ ಕೈಯಲ್ಲಿ ಕಡಿಗೆ ಸಾಯತಾನೋ ಶುಮ್ರಲಹಿನಾ
ಹಾ ಹಾ ಮುಗಿದಿತೊ ಬಯ್ಯಾನಾ || ೧೪ ||

ಸುತ್ತ ದೇಶದೊಳು ಮುತ್ತ ಬಾಗಲಕೋಟಿ ಜಾಗಿಹುದೋ ಚೈನಾ
ಮಡ್ಡಿಪೀರಾನ | ಹುಸೇನಮಿಯ್ಯಾನ ಶಿಷ್ಯನ ಹಾಡಿಕಿ ಸುರದಂಗ ರತನಾ
ಸಭಾದೊಳಗ ನಿಂತ ಹಾಡತಾನೋ ಗರೀಬ ಹುಸೇನಾ
ಹಾ ಹಾ ಬಡಿದಂಗೆ ಬಾಣಾ || ೧೫ ||

* * *[1] * ಎಲ್ಲೆಲ್ಲಿ ಸಿಗಲಿಲ್ಲೊ ಮದುವಿ ಹೆಣ್ಣಾ – ಮೂಲ ಕಥೆಗೆ ವಿರುದ್ಧವಾದ ಅಭಿಪ್ರಾಯ.