. ಬೀಬಿ ಫಾತಿಮಾ ಅವರ ಪ್ರೇಮ ಯಾವ ಮಗನ ಮೇಲೆ ಹೆಚ್ಚು ಎನ್ನುವ ಪದಾ

ಜನ ದಂಗ ಆದಿರಿ ಒಂದ ಪರಸಂಗಂತೇನಿ ಭಿನ್ನಮೌಲಾ || ಪಲ್ಲ ||

ಹಸೇನ ಹುಸೇನ ಸಾಹೇಬ ಮೌಲಾನ ಪುತ್ತರಾ
ಖಾಸಾ ಅಣ್ಣ-ತಮ್ಮರಾ | ಇಬ್ಬರು ಮಾಡ್ಯಾರ ತಕರಾರಾ
ವಿದ್ಯೇಕ ಗನ್ನಾ ಹುಡುಗರಾ | ಕೇಳರಿ ರಂಗಲಾಲಾ
ಅಲಿ ಮೌಲಾನ ಹೊಟ್ಟೀಲಿ ಹುಟ್ಟಶ್ಯಾನ ಎರಡು ಕಮಲಾ || ಪಲ್ಲ ||

ಏರು || ಜೋಡಿಲಿ ಮರ್ತ್ಯದಾಗ ಜೀಂವಾ ಹೆಚ್ಚಿನ ರತನಾ
ಫಾತಿಮಾ ಮಾಡ್ಯಾಳೋ ಜೋಪಾನಾ | ಆರೇಳು ವರ್ಷ ದಿನಾ
ಜಾಗ್ರತದಿಂದಲೆ ಜೋಪಾನ ಮಾಡ್ಯಾಳ | ಕುಡಿಸಿ ಮಲಿಹಾಲಾ || ೧ ||

ಇ || ತನ್ನ ಮಕ್ಕಳಾಡುದು ನೋಡಿ ತಾಯಿ ಆಗ್ಯಾಳೋ ಕುಶಿಯಾಲಾ
ಮೌಲಾನ ಮುಂದ ಹೇಳತಾಳ ಬೀಬಿ ಫಾತಿಮಾ
ಇನ್ನ ದೈವ ತೆರಿತ್ರಿ ನಿಮ್ಮಾ ಆಡೂದು ನೋಡಿರಿ ರತನಾ
ಸಾಲಿ ಹಾಕಿ ಬಿಡರಿ ಸುಮ್ನ ಕಲಿಲಿ ವಿದ್ಯೆ ಎಲ್ಲಾ || ಪಲ್ಲಾ ||
ಏರು || ಹಸನ ಹುಸೇನ ಸಾಹೇಬ ಕರಕೊಂಡು ಹೋದಾರೊ ಅಲಿಮೌಲಾ
ಸಾಲಿಗೆ ಹಾಕಿ ಬಂದಾರಲ್ಲಾ ವಿದ್ಯೆ ಕಲಿಯಾಕ
ನಬಿಸಾಹೇಬರ‍್ಹಂತೇಕ ಅರೆಬ್ಬಿ ಕುರಾನ ಓದುದಕ
ಪಾಠ ಹೇಳ್ಕೋರೊ ದಿನ ದಿನಕ ನಬಿ ರಸೂಲಿಲ್ಲಾ || ೨ ||

ಇ || ಚಿಕ್ಕ ಹುಡುಗರು ಮಿಕ್ಕಿ ವಿದ್ಯೆ ಕಲಿತ ಬುದ್ದಿಗೆ ಬೆಲಿಯಿಲ್ಲಾ |
ಒಂದಾನ ಒಂದ ದಿನ ಅಣ್ಣ ತಮ್ಮರು ಬ್ಯಾಗ
ಸಾಲಿ ಬಿಟ್ಟು ಬರುವಾಗ ಕದನ ತಗದಾರೋ ಹಾದ್ಯಾಗ
ಹುಸೇನ ಸಾಹೇಬ ಅಂತಾನಣ್ಣ ತಗದಿ ಹೆಚ್ಚಿನ ಅಕಲಾ
ನಮ್ಮ ತಾಯಿ ಫಾತಿಮಾ ಪ್ರೀತಿ ಆದಾಳು ಯಾರ ಮ್ಯಾಲಾ || ೩ ||

ಇ || ನನ್ನ ಮ್ಯಾಲೆ ನಿನ್ನ ಮ್ಯಾಲೆ ಹೋಗಿ ನೋಡೂಣು
ಪರೀಕ್ಷೆ ಮಾಡೂಣು | ಮುಂದ ನಡಿಯೋ ಅಣ್ಣಾ ನೀನಾ
ನಾನು ಬರುವೆ ಬೆನ್ನ ಹತ್ತಿ ನಿನ್ನ ಹಿಂಬಾಲಾ || ಪಲ್ಲ  ||

ಏರು || ಹುಸೇನ ಸಾಹೇಬನ ಮಾತಿಗೆ ಹಸನ ಸಾಹೇಬ ಆಗಿ ಕಬೂಲಾ
ಅಣ್ಣನ ಬೆನ್ನ ಹತ್ತಿ ತಮ್ಮನು ಬಂದಾನ ಆಗ
ಫಾತಿಮಾ ಇದ್ದಾರೋ ಮನಿಯಾಗ | ಎತ್ತಿಕೊಂಡಾರೊ ಬಗಲಾಗ
ಪ್ರೀತಿ ಮಾಡ್ಯಾರೋ ಹಿರೇಮಗ್ಗ ಚುಂಬಿಗಲ್ಲದ ಮ್ಯಾಲಾ
ಪ್ರೀತಿ ಮಾಡೂದು ಕಣ್ಣತುಂಬಿ ನೋಡಿ ಹುಸನೈನ ಸಣ್ಣ ಬಾಲಾ || ೪ ||

ಇ || ತಾಯಿಗೆ ಅಂತಾನ ಬಾಳ ಬಾಯಿಲೆ ಸಿಟ್ಟಿಗೇರಿ
ಸತ್ತರ ನೋಡಾಕಿಲ್ಲ ಮಾರಿ | ಫಾತಿಮಾ ತಗೋ ಕಡಿ ಮುಜರಿ
ಇಂದಿಗೆ ಆದೆ ನಾನಿನ್ನ ವೈರಿ | ಬೀಳತೇನಿ ಕಾಲಾ || ಪಲ್ಲ ||

ಏರು || ತಮ್ಮ ತಾಯಿ ಸಂಗಾಟಾ ಮಾಡಿ ಮನಸಾ ಹುಸನೈನ ರಣಧೂಲಾ
ಸಿಟ್ಟೀಲೆ ಹೊಂಟಾನೋ ಬಾಳ ತಿಳಿದ ತಾಯಿ ಮಹಿಮೆ
ದಾಟ್ಯಾನೋ ಮಕ್ಕಾ ಮದೀನಾ ಸೀಮಿ | ತೋರಸೂಕ ತನ್ನ ಪರಾಕ್ರಮಿ
ನಡಗತಿತ್ತ ಗಡ ಗಡ ಭೂಮಿ | ಒದರತಿತ್ತ ಮುಗಲಾ || ೫ ||

ಇ || ಸಂಗ ಯಾರು ಇಲ್ಲದೆ ರಂಗ ತುಂಬಿ ಆಗಿ ಅಡವಿಪಾಲಾ ||
ಕುಂತಾನೋ ಹುಸೇನಸಾಹೇಬ ಮಾಡೂತ ಶಿವನಲೀಲಾ
ಮೂರುದಿನಾ ಮುಕ್ಕನೀರ ಕುಡಿಯಲಿಲ್ಲಾ | ಎಳ್ಳಷ್ಟು ಬಿದ್ದಿದಿಲ್ರಿ ಬಿಸಲಾ |
ಬಿದ್ದೀತು ಕಾಣದಾಂಗ ಕತ್ತಲಾ | ಅವತ್ತೇನು ಸುಳ್ಳಲ್ಲಾ ||
ಎಲ್ಲಾ ಆಕಾಶಕ ಹೋಗಿ ಪ್ರಕಾಶ ಭೂಮಿಗೆ ಕಳದ ಗೌದಿತೋ ಕತ್ತಲಾ ||
ಏರು || ಯಾವೆಲ್ಲೊ ಅಡಗ್ಯಾನೋ ಹೋಗಿ ಹೇಳೋ ಸೂರ‍್ಯನ ಕಿರಣಾ
ಬಲ್ಲಾಂವಾ ಶಾಸ್ತ್ರರಾ ಓದಾಂವಾ | ಹೇಳಿದರ ಹೌದಂತ ತರಬ್ಯಾನಾ
ಇಲ್ಲೀಕಂದರ ಬಿಟ್ಟಿಕ್ವಾಣಾ ಅಂತಾರೋ ಜನರೆಲ್ಲಾ
ಹೀಂಗಾತೋ ಶಿವನ ಮಹಿಮೆ | ಬಂದಾರೋ ಜುಬರಾಹಿಲಾ || ೬ ||

ಇ || ಸಾರಿ ಫಾತಿಮಾಗ ನಿನ್ನ ಜೀವದ ಕಮಲಾ
ಆಗಿ ಕುಂತಾನ ಅಡವಿ ಪಾಲಾ | ರಂಬಿಸಿ ಕರಕೊಂಡ ಬಾರೋ ಮೌಲಾ ||
ಇಲ್ಲೀಕಂದರ ಮೂರುಮಂಡಲ ಆದೀತೋ ಗಾಲಮೇಲಾ || ಪಲ್ಲ ||

ಏರು || ಇಷ್ಟ ಮಾತ ಕೇಳಿ ಎದಿಎದಿ ಬಡಕೊಂಡ್ರೋ ಮೌಲಾ ||
ಅಳತಾರೋ ಬೀಬಿ ಫಾತಿಮಾ ಧರಣಿಗೆ ಹೊರಳಾಡಿ
ಹೊಂಟಾರೋ ಮೌಲಾ ಲಗುಮಾಡಿ |
ಕರಕೊಂಡ ನಬಿಸಾಹೇಬರ ಜೋಡಿ |
ಜೀವದ ಕಬರು ಇಲ್ಲದ ಓಡಿ ಇಬ್ಬರೂ ಬರಿಗಾಲಾ || ೭ ||

ಇ || ಹೋಗಿ ನಾನಾ ತರದಿಂದ ಕರಿತಾರೋ ಹುಸನೈನಾ ಬರವೊಲ್ಲಾ
ಬಗಲಾದ ಎತ್ತಿಕೊಂಡಾರೋ ಮುತ್ಯಾರಸೂಲಿಲ್ಲಾ
ಮದೀನಕ ಬಂದ ತೆರಿತ್ರಿ ಬಿಸಿಲಾ | ಅಂತಾರ ಪೀರ ಮಲ್ಲೇಕಲ್ಲಾ
ಏರು || ನಿಂತಾರ ಹುಸೇನ ಮಿಯಾ ಇದರಿಗೆ ವೈರಿ ಎದಿಯ ಮೇಲಾ
ಜನದಂಗ ಆದಿರಿ ಒಂದ ಪರಸಂಗಂತೇನಿ ಭಿನ್ನ ಮೌಲಾ || ೮ ||

* * *

. ಹಸೇನ ಹುಸೇನರ ಆಟದ ಪದಾ

ನಾಶರಿಸುರಿ ದೈವಕ ತಿಳಿಸುವೆ ಸಾರಿ
ಕುಂತ ಧ್ಯಾನಕ ನೀವು ಅಂತೀರಿ || ಪಲ್ಲ ||

ಶರಣ ನಬಿಸಾಬ ಧ್ಯಾನ ಸಾಂಬಂದು ಮಾಡಿಕುಂತಾರೋ ಒಂದಿನಾ |
ಒಬ್ಬ ಬ್ಯಾಟಿಗಾರ ಬಂದ ಚಿಗರಿ ತಂದಾ ಆಂವಾ ಆದಿನಾ |
ಅಂತಾನವ ಶರಣರ ಮುಂದ | ಅರಜ ಐತಿ ಕೇಳರಿ ನಂದಾ
ನಿಮ್ಮದಸಿಂದ ಚಿಗರಿ ಮರಿ | ನಾಶರಿಸುರಿ ದೈವಕ ತಿಳಿಸುವೆ ಸಾರಿ || ೧ ||

ಆ ಶರಣ ಕರುಣಾಯಿಟ್ರೋ ಚಿಗರಿ ಮ್ಯಾಲೆ ಭಾರಿ
ಅಂತಾರ ನಬಿಸಾಬಗ ಬರ್ರಿ ||
ಚಿಗರಿ ಆಗ ಅವರ ಕೈಯಾಗ ಕೊಟ್ಟಾರ ಬ್ಯಾಗ | ನಬಿಸಾಬ ಶರಣಾ
ಏನಚಂದ ಚಿಗರಿ | ಇಂದ ಮುತ್ಯಾ ತಂದ ಕೊಟ್ಟಿರಿ ನೀವು ನನ್ನ
ಖುಷಿ ಆಗಿ ಮನಸಿನೊಳಗ | ಹಸನಸಾಬರು ಆಡುರೊ ಹೊರಗ
ಬೆನ್ನಿಂದ ಬರುತಿತ್ತೊ ಹಾರಿ ಹಾರಿ |
ನಾಶರಿಸುರಿ ದೈವಕ ತಿಳಿಸುವೆ ಸಾರಿ || ೨ ||

ಹುಸನೈನ ಶರಣಾ | ಕೇಳತಾರ ಅಣ್ಣನ ಪರಿಪರಿ
ನಿಮಗ್ಯಾರ ಕೊಟ್ಟಾರ ಚಿಗರಿ ಮರಿ
ಏರು || ಚಲ್ಲಾಟ ಚಿಗರಿ ಮರಿಯಾಟ ನೋಡಿ | ಸಿಟ್ಟಬಂದೀತ ಆವಾಗ
ಹಿರೇ ಅಣ್ಣಗಂತಾರ ನನಗ | ಕೊಡರಿ ನಾನು ಆಡುವೆ ಈಗ
ಹಸನಸಾಬರು ಅಂದ್ರೋ ಹುಸನೈನಾ | ಕೊಡೋದಿಲ್ಲ ಚಿಗರಿ ನಾನಾ
ಕೇಳಿಬಂದೀತ ಸಿಟ್ಟಿಬಾರಿ | ಸಾಶರಿಸುರಿ ದೈವಕ ತಿಳಿಸುವೆ ಸಾರಿ || ೩ ||

ಸಂತಾಪ ಕೋಪ ಬಂತ ಹುಸೇನಸಾಬಗ ಬಾರಿ
ಅಳವೂತ ಹೊಂಟಾರ ಚೀರಿ ಚೀರಿ ||
ಏರು || ಸಿಟ್ಟಿಲಿಂದ ಮುತ್ಯಾಗಂದ ಚಿಗರಿ ಕೊಡರಿ ತಂದ ನಮಗಿನ್ನಾ
ಅಣ್ಣಗ ಕೊಟ್ಟಿರಿ ಹ್ಯಾಂಗಾದರೂ ಬಿಡೂದಿಲ್ಲ ನಾನು ನಿಮ್ಮನ್ನಾ
ನಬಿಸಾಬರು ಅಂದ್ರೋ ಹುಸನೈನಾ | ಮತ್ತೊಮ್ಮಿಗೆ ಕೊಡತೇನಿ ನಿನಗಿನ್ನಾ
ಎತ್ತುವೆ ಬಗಲಾಗ ಬರ್ರಿ | ನಾಶರಿ ಸುರಿ ದೈವಕ್ಕ ತಿಳಿಸುವೆ ಸಾರಿ || ೪ ||

ಇಲ್ಲ ಚೈನಾ ಹುಸನೈನಾ | ದುಃಖಿಸಿ ಅಳತಾರ ಬಾರಿ
ಕೇಳಿ ಸಾಂಬಗ ಬಂತ ಬಿರಿ
ಏರು || ಬಿಕ್ಕಟ್ಟ ಸಾಂಬನ ಆಟ | ಇದು ಎಳ್ಳಷ್ಟು ತಿಳಿಯದು ಯಾರಿಗೇನಾ
ಶ್ರೇಷ್ಠ ಸಂಬಾ ಇಟ್ಟ ಮಾಯಾ ತೊಟ್ಟ ಹುಕುಮಾ ಚಿಗರಿಗೆ ನಾ
ಅಳತಾರ ಹುಸನೈನಾ ಕೊಟ್ಟಬಾರ ನೀ ಕೂಸಿಗಿನ್ನಾ
ಕೇಳಿ ಹೊಂಟಿತೋ ಬಿರಿಬಿರಿ
ನಾಶರಿ ಸುರಿ ದೈವಕ ತಿಳಿಸುವೆ ಸಾರಿ || ೫ ||

ತನ್ನ ಕಂದನ ತಂದಾ | ನಿಂತಿತ ಆವಾಗ ಚಿಗರಿ
ಬಾಳ ಮನದಲ್ಲೇ ಉಮೇದ್ವಾರಿ |
ಏರು || ಆ ಚಿಗರಿ ಅಂತೈತಿ ಒದರಿಕೇಳರಿ | ಸದರಿಗೊಪ್ಪುವ ಶರಣಾ
ಶಿವನಿಂದ ಹುಕುಮಾತ ಇಂದ | ನಾನು ನಿಮಗಿನ್ನಾ
ನಬಿಸಾಬರು ಅಂದ್ರೊ ಹುಸನೈನಾ | ಶಿವಾ ಚಿಗರಿ ಕಳಿಸ್ಯಾರೊ ನಿನಗಿನ್ನಾ
ಬಿಡಲಿಲ್ಲ ಹಟಾ ನಿಮ್ಮದು ಬಾರಿ ||
ನಾಶರಿ ಸುರಿ ದೈವಕ ತಿಳಿಸುವೆ ಸರಿ || ೬ ||

ಆ ಬಾಲಾ ಕುಷಿಯಾಲಾ ಆದ ಹುಸೇನಸಾಬ ದೊರಿ
ತಗೊಂಡು ನಡದಾರೋ ಚಿಗರಿ ಮರಿ |
ಏರು || ಖುಷಿಯಿಂದ ಅಣ್ಣನ ಮುಂದ
ಚಿಗರಿ ತಂದ ತೋರಸ್ಯಾರ ನೋಡರಿ
ಇಬ್ಬರು ಕೂಡಿ ಆಡುವರೋ ಜೊಡಿ | ಹೀಂಗ ಮಾತಾಡಿ ಕತಿ ಆತರಿ
ತಗೋ ಪದಾ ತೋಡಿಗೆ ತೋಡಿ | ಅಲ್ಲಾ ವಾಳಿ ನಮ್ಮ ಜೋಡಿ
ಕುಂಡ್ಯಾಗ ಇಟ್ಟೇನೋ ಕಾಲಮರಿ
ನಾಶರಿ ಸುರಿ ದೈವಕ ತಿಳಿಸುವೆ ಸಾರಿ || ೭ ||

ದಸ್ತಗೀರ ಪೀರನ ಮೇಲೆ ಹಾರಿಸೋ ಚೌರಿ
ಕೇಸುಪೀರನ ದಯಾ ನಮಗ ಭಾರಿ |
ಏರು || ಹಸ್ತಿಟ್ಟ ಮತಿಹೀಂಗ ಕೊಟ್ಟ ಕೇಳರಿಶ್ರೇಷ್ಠ
ನಾಗೂ-ಗೌಸೂನು ಸೇವಾದಲ್ಲಿ ಇರತಾರಲ್ಲಿ ರಾತ್ರಿ ಹಗಲಿ ಮಾಡಿ ವಂದನಾ
ಲಾಲ ಡೋಂಗ್ರಿ ಸಾಂಬನ ಹಿಂಬಾಲಾ
ಜೂಜಾಡಿ ಕಳಕೊಂಡ್ರೋ ರುಮಾಲಾ |
ನಾಚಿಕಿಲ್ಲ ನಿನಗ ನಾರಿ | ನಾಶುರಿಸುರಿ ದೈವಕ ತಿಳಿಸುವೆ ಸಾರಿ || ೮ ||

* * *

. ಸ್ವರ್ಗದ ಹಣ್ಣು ತಿಂದ ಹಸೇನ ಹುಸೇನರ ಪದಾಕುಂ

ತ ಕೇಳರಿ ಇಟ್ಟ ಕರುಣಾ | ಸರೂದೈವಕ ಶರಣಾ
ಕರುಣಾದಿ ಕರುಣೀಶ್ವರಾ ಅಲಿ ಮೌಲಾಗ ವಲ್ಲತ್ತಾ ||
ಏರು || ಏನು ಹೇಳಲಿ ಮಹಿಮಾ ಹರಿಬ್ರಹ್ಮನ ತಿಳುದಿಲ್ಲಾಂತಾ
ವರ್ಣಿಸಲಾರೆ ತರುಣ ಬಾಲಕ ಶ್ರೀ ಶರಣರನಾ ಸ್ಮರಿಸುವೆ ನಾ
ಹರುಷದಿಂದ ಮಾಡಿ ವಂದನಾ | ಬೀಬಿ ಖಾತೂನಾ
ಪುತ್ರ ಎರಡು ಹಸೇನ ಹುಸೇನಾ || ೧ ||

ಇ || ಅಡ್ಡಾಡುತ್ತ ಕೂಡಿ ಒಂದಿನಾ | ಹೊಂಟ ಹೋಗ್ಯಾರ ರತನಾ
ಚಿಂತ್ಯಾಗಿ ಮನಿವೊಳಗ ತಾಯಿ ಕುಂತಾರ ಅತಗೊಂತ
ಬ್ಯಾಸಗಿ ಬಿಸಿಲ ಮಕ್ಕಳು ಎರಡು ಬರಲಿಲ್ಲ ಅಂತ |
ಆಡಿಕೊಂತ ಹೋದಾವ ಇನ್ನೂವರಿಗಿ ಬಂದಿಲ್ಲ ತಿರುಗಿ
ಇನ್ನೇನ ಗತಿ ಮಾಡಲೆಂತ | ಮನದಲ್ಲೆ ಮರಗಿ | ಯಾರಿಗೆ ಹೇಳಲಿ
ಅಂತಾರ ಕೈವೊಡ್ಡಿ ಮೋಹನಾ | ನೀ ಕಾಯೋ ಭಗವಾನಾ || ೨ ||

ಇ || ಅಷ್ಟರಲ್ಲಿ ಬಂದಾರ ಶರಣಾ | ನೋಡಿ ಮಾರಿಯಾ ಚಿನ್ನಾ
ಅಂತಾರ ಕೇಳವ್ವಾ ಚಿಂತ್ಯಾಗಿ ಕುಂತೇನ ಕಾರಣಾ
ಏರು || ಏನು ಹೇಳಲಿ ಮನೆಯಲ್ಲಿ ಯಾರಿಲ್ಲಾ ಹಸೇನ ಹುಸೇನಾ
ಆಡಿಕೊಂತ ಅಣ್ಣ ತಮ್ಮ ಕೂಡಿ ಹೊಂಟ ಹೋಗ್ಯಾರಲ್ಲಾ |
ಮಿಕ್ಕೇತಿ ಊಟದ ವ್ಯಾಳೆ ಕೇಳರಿ ಬ್ಯಾಸಿಗೆ ಬಿಸಿಲಾ
ಇದ್ದಾರಿ ಎಳೆ ಕಮಲಾ
ನೀರಡಿಸಿ ಪುತ್ರಯನ್ನ ರತನಾ | ಆಗಿದ್ದಾರ ಹೈರಾಣಾ || ೩ ||

ಕೇಳಿ ಇಷ್ಟೆಲ್ಲಾ ಆ ಕ್ಷಣಾ | ನಬಿಸಾಹೇಬ ಶರಣಾ
ಚಿಂತಿಸಬೇಡವ್ವಾ ಅಂತ ಕಣ್ಣೀರ ಸುರಸೂತ ಹೊರಗ
ದುಕ್ಕಮಾಡಿಕೊಂಡ ವತ್ತರದಿಂದ ಹೊಂಟಾರ ಬ್ಯಾಗ
ಈ ವಜ್ರದ ಹರಳ ಎರಡು ನಿವ್ವಳ ಅಂತರ್ಯದಲ್ಲಿ
ಎನ್ನ ಪ್ರೇಮ ಪುತ್ರ ಎಲ್ಲಿ ಇದ್ದಾರಂತ ಹುಡುಕಲಿ
ಕೇಳಿದರೆ ಮೌಲಾ ಅಲಿ ಎಲ್ಲಿವರು ತಮ್ಮ ಮಗ | ನಾ ಮಾಡಲಿನ್ನೇನಾ || ೪ ||

ಇ || ಶರಣರಿಗೆ ಇಲ್ಲದೆ ಚೈನಾ | ಹೊಂಟಾರ ಮೊಮ್ಮಕ್ಕಳ ಧ್ಯಾನಾ
ಹುಡುಕ್ಯಾಡಿಕೊಂತ ಮುಟ್ಯಾರ ಹೋಗಿ ಆರ‍್ಯಾಣದೊಳಗ
ಏರು || ಶಿವಸಾಂಬನ ದಯಾಕರುಣದಿಂದ ಆಗ ಬ್ಯಾಗ
ಮನಗಂಡ ಕಣ್ಣೀಲೆ ಕಂಡಾರ ನಿಂತಾನ ಪುರುಷ ಒಬ್ಬ
ಹಿಡಿದ ಕೈಯಾಗ ಬಡಗಿ ಆಡ ಕಾಯುತ್ತಿದ್ದ ಕುರುಬ | ಅಂತಾರ ತರಬಿ
ತಿಳಿಸ್ಯಾರ ಸ್ಥಿತಿಗತಿ ತನ್ನಾ | ನಿಮತ ಇದರಿಗೆ ಕರಣಾ || ೫ ||

ಇ || ಕೇಳಿ ಕುರುಬ ಅಂತಾನ ಶರಣಾ ವರ್ಣಿಸಲಾರೆ ನಾನಾ
ಚಿಕ್ಕವಯ ಮಿಕ್ಕೇತಿ ಮೈಬಣ್ಣ ಲಿಂಬಿ ಹಣ್ಣ
ಹೊಳುತಿತ್ತ ಸೂರ್ಯ ಚಂದ್ರನ ಸರಿ ಮಾರಿಯ ಚಿನ್ನ
ಕೂಡಿ ಆಡಿಕೊಂತ ಇಲ್ಲಿಂದ ಹೋಗ್ಯಾರ ಸಾಗಿ
ಇದೇ ದಿಕ್ಕ ಅಂತ ಕುರುಬ ತನ್ನ ತಲೆಬಾಗಿ ಆಂವಾ ಚರಣಕ ಎರಗಿ
ಕೇಳಿ ಸಂತೋಷಾಗಿ ಶರಣಾ | ಶಿಶುಕುಮಾರ ಧುರಿಣಾ || ೬ ||

ಇ || ಅತ್ತಇತ್ತ ಬಾಡಿದ್ದವು ಕಣ್ಣಾ | ಹೊಂಟೋಗ್ಯಾರ ಆ ಕ್ಷಣಾ
ಏರು || ಏನ ಹೇಳಲಿ ಶಿವನ ಮಹಿಮಾ ಯಾರ‍್ಯಾರಿಗೆ ತಿಳೂದಿಲ್ಲಾ
ಪುತ್ರ ಎರಡು ಗಿಡದ ಬುಡಕ ಹೋಗಿ ಮಲಕೊಂಡಿದ್ದಾರಲ್ಲಾ
ಜಿಬರಾಯಿಲ ಬೀಸಣಿಕಿ ಹಿಡಿದ ಕೈಯಲ್ಲಿ ಸೊಂತ
ಹಸೈನ ಹುಸೈನ ಮ್ಯಾಲೆ ಗಾಳಿ ಬೀಸೋರೊ ಕುಂತ
ಕಂಡಾರ ಶರಣರು | ನಿಂತ ಅತಿ ಸಂತೋಷಾಗಿ ಮನಾ
ನೆನಸ್ಯಾರ ಶಿವಶರಣರನಾ || ೭ ||

ಇ || ಧರಣಿ ಪಾಲಕರ ಕರಣಾ | ಇವರ ಮ್ಯಾಲೆ ಸಂಪೂರಣಾ
ಏರು || ಇದ್ದಾಂಗ ಮತ್ತು ಯಾರಿಗಿಲ್ಲಂತ ಮುಂದಕ ಸಾಗಿ
ತನ್ನ ಮೊಮ್ಮಕ್ಕಳಿಗೆ ಹಿಡಿದ ಕೈಯಾ ಎಬಸ್ಯಾರ ಹೋಗಿ | ಅಪ್ಪಿಕೊಂಡಾರ
ಕಂಡ ಮಕ್ಕಳ ಮುತ್ಯಾಗ ನೋಡಿ | ಉಣಸರಿ ಹಸುಬಾಳ ಆಗೇತಿ ಅಂತಾರ ಕೂಡಿ
ಶರಣರು ಯೋಚನೆ ಮಾಡಿ | ಅಂತಾರ ಇಲ್ಲ ಅಡವ್ಯಾಗ ಇಲ್ಲಾ | ದೊರೆಯುವದು ಕಠಿಣಾ || ೮ ||

ಇ || ಅಷ್ಟರಲ್ಲಿ ಚಿಬರೀಲ ಆಕ್ಷಣಾ | ಮತ್ತ ಬಂದಾರ ಪುನಾಃ
ಏರು || ಅಂತಾರ ನಿಂತ ಶರಣರ ಮುಂದ ತಿಳಿಸ್ಯಾರ ಕುಶಿಯಾಲಾ |
ಶಿವನ ಅಪ್ಪಣಿಯಲಿಂದ | ಸ್ವರ್ಗದ ಹಣ್ಣು ಹಂಪಲಾ
ತಂದೇನಿ ತಿನಸರಿ ಸುಕುಮಾರ ಆಗಲಿ ಶಾಂತ
ಭೂಪ್ರಾಂತದೊಳು ಇವರಷ್ಟು ಮಾಯಾ ಯಾರಿಗಿಲ್ಲಂತಾ
ತಿಳಿಯಿರಿ ಸ್ವಂತ ಸಾಕ್ಷಾಂತ | ಆ ಭಗವಾನ ಕೊಟ್ಟ ಕಳಿಸ್ಯಾನ ನನ್ನಾ || ೯ ||

ಇ || ತಂದಂತಾ ಸ್ವರ್ಗದ ಹಣ್ಣಾ | ಕೊಟ್ಟಾರ ಮೊಮ್ಮಕ್ಕಳನಾ
ಏರು || ಒಳೇ ಪ್ರೀತಿಲಿಂದ ಹಸೇನ ಹುಸೇನ ತಿಂದಾರ ಕುಂತ
ನೀರಡಸಿ ಮುತ್ಯಾಗ ಅಂತಾರ ನೀರ ಕುಡಿಸಬೇಕಂತ
ಅಷ್ಟರೊಳಗ ಏನ ಹೇಳಲಿ ಆತ ಚಮತ್ಕಾರಾ
ಆ ಗಿಡದ ಬಡ್ಯಾಗಿಂದ ಪುಟಿಲಿಕ್ಕ ಹತ್ತೀತ ನೀರಾ | ಕುಡದಾರ ಮನಪೂರಾ
ಶಾಂತಾಗಿ ಹಸ್ಯೆನಾ ಹುಸ್ಯೇನಾ | ಅಪ್ಪಿಕೊಂಡಾರ ಮುತ್ಯಾನಾ || ೧೦ ||

ಇ || ಎತ್ತಿಕೊಂಡ ಹಸನ ಹುಸೇನನಾ | ಹೆಗಲಮ್ಯಾಲೆ ಶರಣಾ
ಏರು || ಮುಟ್ಯಾರ ಹೋಗಿ ಕಂಡ ಅಪ್ಪಕೊಂಡಾರ ಖಾತೂನನಾ
ಇರುವದು ಬಾಗಲಕೋಟಿ ಪಟ್ಟಣದೊಳಗ | ಮಲ್ಲೇಕಲ್ಲ ಹುಸೇನಾ
ನೆನದಾರ ಕೇಳರಿ ಮಡ್ಡಿಮ್ಯಾಲಾ ಹೊಳಿದಂಡಿ ಸಾಲಾ |
ಉಸ್ತಾದ ಹುಸೇನ ಮಿಯ್ಯಾನ ಕವಿ ರಂಗಲಾಲಾ ||

* * *

. ಹಸೇನ ಹುಸೇನರನ್ನು ಒತ್ತೆಯಿಟ್ಟ ಮೌಲಾಲಿ

ನೋಡಿರಿ ದೈವೆಲ್ಲಾ | ಮಾಡಬ್ಯಾಡರಿ ಗುಲ್ಲಾ || ಪಲ್ಲವಿ ||

ರೂಢಿಗೊಡೆಯ ಅಲಿ ಹಜರತಮೌಲಾ | ಬೇಡಿದ್ದ ಕೊಡುವ ಫಲಾ
ಏರು || ಕಡುಗಲಿ ಹತ್ತಿರ ಒಬ್ಬ ಬಡವ ಕಂಗಾಲಾ
ಅಡಬರಿಸಿ ಆಗಿ ಹೋದ ಅಡವಿ ಪಾಲಾ
ತೆರವಿನ ಸಲುವಾಗಿ ಹಣ | ಕಮ್ಮಿಯಾದ ಕಾರಣ
ಧರ್ಮಿಷ್ಟ ಹಣ ಕೊಡು ಎಂದು ಪಾದದ ಮೇಲಾ | ಬಿದ್ದು ಏಳಲಿಲ್ಲಾ || ೧ ||

ಇ || ಬಡವನ ಹಾಸಿಲಾ ಕೇಳಿ ಹಜರತಲಿ ಮೌಲಾ
ಬಿಡೋ ಬಿಡು ಚಿಂತೆಯೆಂದು ಎಬಿಸಿದನಲ್ಲಾ | ಅನುಮಾನ ಬಿಡಲಿಲ್ಲಾ
ಏರು || ಸದ್ಯಕ್ಕೆ ಕೊಡಲಿಕ್ಕೆ ಒಂದು ದುಡ್ಡು ಇಲ್ಲಾ
ಎದ್ದಾನೋ ಕೇಳಲಿಕ್ಕೆ ಒಡ್ಢಿ ಸಾಲಾ
ಅಡವಿಟ್ಟರೆ ಸಾಹುಕಾರರು ಕೊಡುವೆವು ಅಂದರು ಮಿಡಿಮಿಡಕಿ
ಹಜರತಲಿ ಮೌಲಾ ಆದ್ರೋ ಗಾಲಮೇಲಾ || ೨ ||

ಇ || ತರುವಾಯ ಸುಶೀಲಾ | ಹಸೇನ ಹುಸೇನ ಘಳೀಲಾ
ಕರೆಸಿ ಒತ್ತಿಇಟ್ಟಾರೊ ತತ್ಕಾಲಾ | ತಗೆದುಕೊಂಡ್ರೊ ಸಾಲಾ
ಏರು || ಬಡವಗ ಹಣಕೊಟ್ಟು ಕಳಿಸಿದ ಮೇಲಾ
ದೃಡವಂತ ಸಾಹುಕಾರ ಹೇಳ್ಯಾರೋ ಅಲಿ ಮೌಲಾ
ಇವತ್ತು ಬೇಗಿನ್ಹೊತ್ತು | ಹೊತ್ತು ಮುಳುಗುವದರೊಳಗ
ಯಾವತ್ತು ರಖಮು ಮಾಡು ಫೈಸಲಾ | ನಿಜನಿಜ ಸುಳ್ಳಲ್ಲಾ || ೩ ||

ಇ || ಶರಣರ ಮಹಿಮದ ಲೀಲಾ | ತಿಳಿಯದೆ ಆ ಚಿನಿವಾಲಾ
ತಿರಿಗುತ್ತರ ಕೊಟ್ಟ ಖೊಟ್ಟಿ ಕುಲಾ | ಯಾವುದು ಗೊತ್ತಿಲ್ಲಾ
ಏರು || ಹೊತ್ತು ಮುಳುಗುವುದರೊಳಗ | ಬಡ್ಡಿಗಂಟ ಸಾಲಾ
ಸದ್ಯಕ್ಕೆ ಎಲ್ಲಾ ಮಾಡು ಫೈಸಲಾ
ಇಲ್ಲದಿದ್ದರೆ ನಿನ್ನ ಒತ್ತಿಯ ಮಕ್ಕಳನ | ರಖಮ ಮಾಡುವೆ
ಕಬರದಾರನ ಸುಳ್ಳಲ್ಲಾ | ಅಂದಾನೋ ಸುಳ್ಳಲ್ಲಾ || ೪ ||

ಇ || ಸಾಹುಕಾರನ ವಾಕ್ಯವೆಲ್ಲಾ ಕೇಳಿ ಹಜರತ ಮೌಲಾ
ಅವಕಾಶ ಮಾಡದೆ ಕೇಳ್ಯಾರೋ ಊರಾಗ ಸಾಲಾ | ಎಲ್ಲೆಲ್ಲಿ ಹುಟ್ಟಲಿಲ್ಲಾ
ಏರು || ಕಬರು ಹಾರಿ ಕುತಗೊಂಡು ಮಂಚದ ಮೇಲಾ
ಅಬರು ಹೋಗುವದೆಂದು ಒಡೆದಾರೋ ಜಲ್ಲಾ
ಪತಿಮುಖ ಬಾಡಿದ್ದು ನೋಡಿ | ಫಾತಿಮಾ ಬಂದಾಳೋ ಓಡಿ
ಕ್ಷಿತಿಪಾಲಕ ಹೇಳಿದ ಮಕ್ಕಳ ತಪಶೀಲಾ | ಬಾಡಿತು ಮುಖಕಮಲಾ || ೫ ||

ಇ || ಮಕ್ಕಳ ತಪಶೀಲಾ | ಕೇಳಿ ಫಾತಿಮಾ ಲೋಲಾ
ಕಣ್ಣೀರು ಸುರಿಸ್ಯಾಳೋ ತತ್ಕಾಲಾ | ದುಃಖದ ಕೋಮಲಾ
ಏರು || ಅತ್ತಕೂಡಲೆ ಮುತ್ತು ಮಾಣಿಕ ನೀಲಾ
ಮುತ್ತು ವಜ್ರಗಳು ಬಿದ್ದಾವೋ ಅಳತಿಲ್ಲಾ
ಸ್ವಾತಿಕ ಬಳಕೊಂಡು ನೌರತ್ನ ತುಂಬಿಕೊಂಡು
ಒತ್ತರದಿ ಹೋಗಲು ಹೊತ್ತು ಮುಳುಗಿತಲ್ಲಾ | ಆದೀತು ಕತ್ತಲಾ || ೬ ||

ಇ || ಬುದ್ದಿಗೇಡಿ ಚಿನಿವಾಲಾ | ಸಾಲಾ ಹಿಡಿಯಲಿಲ್ಲಾ
ಮುದ್ದತು ಮೀರಿತೆಂದು ಅಂದನಲ್ಲಾ | ಅಲಿ ಆದ ಬೆಂಕಿಲಾಲಾ
ಏರು || ಭೂಮಿಯ ಮೆಟ್ಟಿದಾಗ ಸೂರ್ಯನ ಪ್ರಜ್ವಾಲಾ
ಮಹಾಪರಾಕ್ರಮಿ ಕೆಡವಿದ ಬಿಸಲಾ
ಗಾಬರಿಸಿ ಚಿನಿವಾಲಾ | ಬಡಕೊಂಡ ಗಲ್ಲಗಲ್ಲಾ ||
ತೋಬಾ ತೋಬಾ ಎಂದು ಕಲ್ಮಾ ಓದಿದಾ
ಪ್ಯಾಲಾ ಕುಡಿದಾನೋ ಚಿನಿವಾಲಾ || ೭ ||

ಇ || ಮೇಲಾದ ಕೌಲೂರು ಮಿಗಿಲಾ | ಜೀಲಾನಿ ಪ್ರಭೂಲಾ
ನೋಟೀಸ ಕೊಟ್ಟಾರೊ ಮೆರೆಯುವ ರಾಜ್ಯದ ಮೇಲಾ | ನಂಬರ ಪೈಲಾ
ಏರು || ಮೋಟಾರು ಬಿಟ್ಟಾಂಗ ಅಡಿಪ್ರಾಸ ರಂಗಲಾಲಾ
ಥೇಟ ನಾಟಕ ದಾಟಿ ಹೊಡಿದಾಂಗ ರೂಲಾ
ಕೋಟಿ ಪ್ಯಾಟಿಯ ಜನಾ | ಪೈಟಮಾಡಿ ಆಕ್ಷಣಾ
ರೈಟೆಂದು ಹಾಕುವರೊ ಕೊರಳಿಗೆ ಹೂವಿನ ಮಾಲಾ
ಕೊಟ್ಟಾರೊ ಬಂಗಾರ ಗೋಲಾ || ೮ ||

* * *

೧೦. ಹಸನೈನ ಹುಸನೈನರನ್ನು ದಾನ ಮಾಡಿದ ಪದಾ

ಬಯ್ಯಾನವೊಂದ ಧ್ಯಾನಕ ತಂದ | ಹೇಳುವೆ ಇಂದ ದೈವಕ ಸಾರಿ ||
ಏರು || ಮಕ್ಕಾ ಮದೀನಾ ಮುತ್ಯಾನ ಸ್ಥಾನಾ
ಇರುವ ಠಿಕಾಣಾ ನಬಿಸಾಹೇಬ ದೊರಿ
ಚ್ಯಾಲ || ಒಬ್ಬ ಫಕೀರ ಬಂದ ಶರಣರ ಮುಂದ ನಿಂತಾನ ಮಾಡ್ಯಾನ ಸವ್ವಾಲಾ
ಕಂದ ಹಸನೈನಗ ತಂದು ಕೊಡಬೇಕ್ರಿ ಇಂದು ದಾನ ತತ್ಕಾಲಾ
ಇ || ಕೇಳಿ ಶರಣಂತಾರ ಆಭವನ್ನಾ | ಹೋಗಿ ಕೇಳಬೇಕ್ರಿ ನೀವು ಮೌಲಾನಾ
ಮೌಲಾನಾ ಮುಂದ ನಿಂತ ಮಾಡ್ಯಾನರಿ ಮುಜರಿ || ೧ ||

ಅಂತಾನ ಮೌಲಾಗ ಫಕೀರ ಆಗ
ಹಸನೈನಗ ದಾನ ಕೊಡಬೇಕಂತಾನರಿ ಒದರಿ
ಏರು || ಕೇಳಿ ಅವನ ಸೊಲ್ಲ ತಾಸಮಿಸೇಲ
ಆಗಿ ಖುಷಿಯಾಲಾ ದಾನ ಕೊಟ್ರೊ ಸೊರದಾರಿ
ಚ್ಯಾಲ || ಬಾವಾ ತಗೊಂಡು ಹಸನೈನಗ ತನ್ನ ಹಿಂಬಾಲಾ
ಚಂದ ಫಾತಿಮಾನ ಮುಂದ ನಿಂತು ಅಲ್ಲೇ ಮಾಡ್ಯಾನ ಸವ್ವಾಲಾ
ಇ || ಮೌಲಾ ಹಸನೈನಗ ಮಾಡ್ಯಾರ ಸ್ವಾದೀನಾ
ನೀವು ಹುಸನೈನಗ ಮಾಡರಿ ಸ್ವಾದೀನಾ | ಖುಷಿಲಿಂದ ಕೊಟ್ಟಾರೋ ಅಂವಗ ವಚನಾ || ೨ ||

ನೋಡುವೆ ತೋರಸರಿ ಜರ ಹಸನೈನಗ್ಸ ಮಾರಿ
ಕರದು ಖಾತೂನಾ ಎರಡು ಮಕ್ಕಳನಾ
ಉಣಿಸ್ಯಾಳ ಅನ್ನಾ ಪ್ರೀತಿ ಮಾಡ್ಯಾಳ ಮಿತಿಮೀರಿ
ಏರು || ಕೇಳಿ ಅವನ ಸೊಲ್ಲಾ | ಮಾಡ್ಯಾಳ ಬಾವಾನಾ ಸ್ವಾದೀನಾ
ಎಂಥ ಹೈವಾನಾ ಹ್ವಾದಾನ ನಡಸೂತ ದಾರಿ
ಚ್ಯಾಲ || ಸುಡುವದು ತಾಳಲಾರದೆ ಸಣ್ಣ ಎರಡು ಕಮಲಾ
ಇ || ಎರಡು ಮಕ್ಕಳಿಗೆ ಬಡಿದು ಬಾಸ್ಯಾನ ಗಲ್ಲಾ | ಚೂರಕರುಣ ಆತಗ ಬರಲಿಲ್ಲಾ
ಶಿವಸಾಂಬ ಕಳಿಸ್ಯಾನ ಬೇಗ ಜಿಬರೀಲ | ದೂರೈತ್ರಿ ಹೋಗರಿ ಮುಂದ ಜಮಶಾದ್ ನಗರಿ || ೩ ||

ದೂತರು ಆಗ ಬಂದಾರ ಬೇಗ ಜಗ್ಯಾರ ಭೂಮಿ
ಸನೇವ ಮಾಡ್ಯಾರ ಮಿತಿಮೀರಿ
ಏರು || ಜಮಶ್ಯಾನ ಊರನೋಡಿ ಫಕೀರಾ
ಸಂತೀಯ ಜುಮರ ಮಂದಿ ನೆರದೈತಿ ಮಿತಿಮೀರಿ
ಚ್ಯಾಲ || ಸೂರ್ಯ ಚಂದ್ರರಂತ ಪುತ್ರರನ ಬಂದು ನೋಡ್ಯಾರ ಜನರೆಲ್ಲಾ
ಜಮಶಾದನ ಅರಸು ಬಂದು | ಪರದಾನಿ ಕಂಡು ಆಗ್ಯಾನ ಕುಶಿಯಾಲಾ
ಇ || ಏನರೂಪ ಇವಂದು ಪೂರ್ಣಮಿ ಚಂದಿರಾ
ಕಂಡು ಬೋಳೀಕ ಬಂದು ಆಗಿ ನಿಂತಾನ ಸುಂದಾ ||
ಹೇಳೋ ಬೆಲಿ ಬೇಡಿದ್ದು ಕೊಡುವೆನು ನಾನಾ
ಅವರ ತೂಕ ಹಣ ಕೊಟ್ಟರ ಕೊಡತೇನಂತಾನರಿ || ೪ ||

ಕೊಟ್ಟಾರಾಕ್ಷಣಾ ಕುಸಿಯಾಗೂತ ದೊರಿ
ಏರು || ಓದು ಮಕ್ಕಳನಾ ಅರಸರ ಸ್ವಾದೀನಾ | ನೋಡವರ ಗನಾ ಅಳತಾರ ಹೌಸಾನಾ ಹಾರಿ
ಚ್ಯಾಲ || ದೊರಿ ಅರಸನ ಮಕ್ಕಳು ಇದ್ದಾಳ್ರಿ ಕೇಳರಿ ನೀವು ಜನರೆಲ್ಲಾ
ಆಕಾರ ಇಲ್ಲ ಮಾರಿ ನೋಡಿದ್ರ ದೆವ್ವಿನಾಂಗ ಕಾಣೂದಲ್ಲಾ
ಇ || ಎರಡು ಮನುಷ್ಯಾರ ತಿನ್ನುವಳು ನಿತ್ಯಕಾಲಾ
ಅರಸ ಕೊಟ್ಟು ಬ್ಯಾಸತ್ತನಲ್ಲಾ | ಹಸನೈನ ಹುಸನೈನ ಎರಡು ಮಕ್ಕಳನಾ
ದಬ್ಬಿಕೋಲ್ಯಾಗ ಕೀಲಿ ಹಾಕ್ಯಾರ ದೆವ್ವಗ ಹಾರನಾ
ಕತ್ತಲದಾಗ ಹೋಗಿ ಮೂಲ್ಯಾಗ ಕುಂತಾರೋ ಆಗ ಅರಸನ ಹಾಂಗ || ೫ ||

ಸರೂ ರಾತ್ರಿ ಆಗ ಸಪ್ಪಳ ಮನಿಯಾಗ ಬಂತೋ ರಾಕ್ಷಸ ಮ್ಯಾಲ ಅಳತಾರೋ ಚೀರಿ
ಏರು || ಐದು ವರ್ಷದ ಚಿಕ್ಕ ಪ್ರಾಯದ ಹುಸನೈನಗ ಅಂತಾರಲ್ಲಾ
ಅಣ್ಣ ಕೇಳ ಸತ್ತ ಹೋಗ್ತೇವಿ ನಾವು ಈಗ ಉಳುವದಿಲ್ಲಾ
ಚ್ಯಾಲ || ಒಬ್ಬರೊಬ್ಬರು ಕೊರಳಿಗೆ ಅಪ್ಪಿ ಅಳತಾರಲ್ಲಾ
ಇಲ್ಲೇ ನಮಗ ದಿಕ್ಕು ಯಾರ‍್ಯಾರು ಇಲ್ಲಾ
ಇ || ಹಸನೈನ ಸಾಹೇಬ ದೀರ ಹೇಳ್ಯಾನೋ ||
ಮುತ್ಯಾ ನಬಿಸಾಹೇಬರ ವಚನಾ
ಆಗೈತ್ರಿ ಖಾತ್ರಿ | ಕೇಳ ಹುಸನೈನ ತುಸು ಇಟ್ಟ ಜ್ಞಾನಾ |
ಕರ್ಬಲದೊಳು ನಿಂದು ಮರಣಾ ಬರದಾನ ಶ್ರೀಹರಿ || ೬ ||

ಇಸಾಕುಡಿದು ನಾನು ಆಗುವೆ ಮರಣಾ | ಬರದಾನ ಬ್ರಹ್ಮ ಇಂಥ ಅದೃಷ್ಟದ ಬರಿ
ಏರು || ಸ್ವಾಮಿ ಕುಂತಾನೋ ಜ್ಞಾನ ಮಾಡುತ್ತಾ | ಬಿಟ್ಟು ತಾ ಮನದಾನ ಜಲ್ಲಾ
ದೆವ್ವ ಹೋಗಿ ಹೆಣ್ಣು ಆದೀತ ಹೊನ್ನ ಬಿದ್ದಾಂಗ ಬಿಸಿಲಾ
ಇ || ಬಂದ ಮಗ್ಗಲದಾಗ ಕುಂತಾಳೋ ಬಾಲಿ
ಹಣಿ ಇಟ್ಟಾಳೋ ಇಬ್ಬರ ಪಾದದ ಮ್ಯಾಲಿ
ಬೆಳಗಾಗಿ ಅರಸ ತಾ ಬಂದು ನೋಡ್ಯಾನೋ
ಗಾಬಾಗಿ ಕಂಡ ಅರಸ ಹೆಣ್ಣ ಸುಂದರಿ || ೭ ||

ಕರತಂದು ಆಗ ಗಾದಿಯ ಮ್ಯಾಗ ಕೂಡಿಸಿ | ಅರಸ ಬ್ಯಾಗ ಮಾಡ್ಯಾನ ಚಾಕರಿ
ಏರು || ಕಲ್ಮಾ ಓದ್ಯಾನರಿ ಶ್ರೇಷ್ಠರಸ ಬಿಟ್ಟು ತಾ ಮನದಾನ ಜಲ್ಲಾ
ಎರಡು ಮಕ್ಕಳಿಗೆ ಬೇಗ ಮದೀನಾಕ್ಕೆ ಕಳಿಸ್ಯಾನ ಆಗ ತಡಾಯಿಲ್ಲಾ
ಇ || ದೇಶದಲ್ಲಿ ದಸ್ತಗೀರ ದೈವಾನಾ
ಕೇಸುಪೀರ ಕೊಟ್ಟಾನೋ ಬುದ್ಧಿಯ ಜ್ಞಾನಾ
ಸೋಸಿ ಸಂಗ್ಯಾ ಗದಿಗ್ಯಾ ದೇಶಿ ಬಯಾನಾ
ಕಾಸಿ ವೈರಿ ಎದಿಯಾಗ ಬಡದಾಂಗ ಹಾರಿ || ೮ ||

* * *