. ಸೂರ್ಯನಿಗೆ ಉಮರ ಕೊಟ್ಟ ಶಾಪದ ಪದ

ಪಂತರು ಬುದ್ಧಿವಂತರು ಕೂಡಿ ಕುಂತೀರಿ ಬಂದಾ
ಮಜಕೂರ ಒಂದ ಧ್ಯಾನಕ ತಂದ ಮನಸಿಗೆ ತಂದ
ಏರು | ಸರಸ ಸಬಾ ನೀವು ಪುರಮಾಸಿ | ನೆರದೀರಿ ಮಾಡೂದಕ ಚೌಕಾಸಿ
ಚ್ಯಾಲ || ಇಂದ ನಾನು ಒಂದ ಕತಿ ತಗದೇನಿ ಹುಡುಕಿ
ಮುಂದ ಶಾಹೀರ ಕೇಳೋ ನಿನ್ನ ಮನದಾಗ ಮಿಡುಕಿ
ತಮ್ಮಾ ಜರಾ ದಮ್ಮ ಹಿಡಿ ಹಾರಿಸುವೆ ಪಡಕಿ
ನಿನ್ನ ಅಡಿಗಡಿ ಕೊಡತೇನೋ ತೋಡಿಗೆ ತೋಡಿ
ನಿನ್ನ ಮೂಗಿನ್ಯಾಗ ಪೋಣಿಸಿ ಬಿಡತೇನಿ ಕೌಡಿ
ಹಾಡತೀದಿ ಮಂಗ್ಯಾನಂಗ ಬಲು ಕುಣದಾಡಿ || ೧ ||

ಇ || ಖಡಕ ಅಕ್ಷರ ತೊಡಕ ಬಲು ಬಿಗಿ ಬಂದ
ಧ್ಯಾನಕ ತಂದ ಕೇಳರಿ ಪಸಂದ ಮನಸ್ಸಿಗೆ ತಂದ
ಏರು || ಉಮರ ಉಸ್ಮಾನ ಅಲಿ ಮೌಲಾ | ಅಬೂಬಕರ ಸಿದ್ದೀಕಾದರ ಅಲಿ
ಚ್ಯಾಲ || ಇವರು ಅಗದಿ ಅಗದಿ ಜೀವನ ಮಿತ್ರ
ಶರಣ ನಬಿಸಾಬನ ತಲಿಮ್ಯಾಲಿನ ಛತ್ರ
ಐದು ಹೊತ್ತು ನಮಾಜ ಮಾಡ್ಯಾರೊ ಸಾಂಬನ ಸ್ತ್ರೋತ್ರಾ
ಅಷ್ಟು ಮಂದಿ ಕುಡಿ ಉದಯದ ನಮಾಜ ಮಾಡಿ
ಹೊರಟು ಹೋದಾರೋ ತಮ್ಮ ತಮ್ಮ ಮನಿ ಕಡೆ
ಉಮರ ಅದರಾಗಿಂದ ಹ್ವಾದಾನೊಡದ || ೨ ||

ಇ || ಉತ್ತತ್ತಿ ವನದಾಗ ಉಮರ ಹೋಗಿ ಕುಂತಿದ್ದಾ
ಅವರ ಮೈಯಾಗಿದ್ದ ಅಂಗಿ ತೊಟ್ಟಿದ್ದು ಹೋಗಿತ್ತೊ ಹರದಾ
ಏರು || ಕಳದಾರ ಉಮರ ಮೈಮ್ಯಾಲಿನ ಅಂಗಿ | ಉತ್ತತ್ತಿ ಎಳಿಲಿಂದ ಹೊಲುವ ಸಲುವಾಗಿ
ಚ್ಯಾಲ || ಸಣ್ಣನೂಲ ಬೆನ್ನಮ್ಯಾಲ ಹೋಗಿತ್ತೋ ಹರದ
ಜೋಡಿಸಿ ಅದು ಪೋಣಿಸಿ ಉತ್ತತ್ತಿಗಿಡದ
ಆಗಿ ಮನ ಪೈರನ ಬಿಡಬೇಕ ಹೊಲದ ಸೂಜಿ ಹಿಡಿದರಾಗ
ತಂದ ಮನಸಿನ ಮ್ಯಾಗ ಗಟ್ಟಿ | ಹೊಲಿಬೇಕೋ ಎಂದೂ ಹರಿದಾಂಗ
ಬರಿಮೈಯ ಬಿಟ್ಟು ಉಮರ ಅಂಗಿಯ ಹೊಲಿತಿದ್ದ || ೩ ||

ಅಷ್ಟು ಹೊತ್ತಿನ್ಯಾಗ ಸೂರ್ಯ ಉದಿಹಾದ ಬಂದಾ
ಉಮರನ ಹಿಂದ ಪೂರ್ವಕ್ಕೇರಿದ್ದಾ ಬೆನ್ನ ಮಾಡಿ ಕುಂತಿದ್ದಾ
ಏರು || ಹೊಲುದರೊಳಗ ಬಿದ್ದಿತೋ ಉಮರನ ಧ್ಯಾಸಾ | ಎಳೆ ಬಿಸಲಿಗೆ ಬಳೆ ಸುಟ್ಟಿತೋಬೆನ್ನಾ
ಚ್ಯಾಲ || ಸುಟ್ಟ ಬೆನ್ನ ಸಿಟ್ಟಿಲಿಂದ ತಿರುವ್ಯಾರೋ ಗೋಣಾ
ಉಮರ ಆಗ ಸೂರ್ಯನಮ್ಯಾಗ ಕಿಸ್ತಾರೋ ಕಣ್ಣಾ
ಸೂರ್ಯ ಜರಬ ಆಗಿ ಗಾಬ ಸೂರ್ಯ ಬರಲಿಲ್ಲ ತಿರುಗಿ
ಹೋಗಿ ಏಳನೆಯ ಪಾತಾಳದಾಗ ಕುಂತಾನೋ ಅಡಗಿ
ಕುಂತಿದ್ದ ಜಾಗ ನಮಗ ಹೇಳಬೇಕೋ ಒಡದಾ || ೪||

ಇಳು || ಬಿದ್ದೀತು ಸುತ್ತ ಮುತ್ತ ಕತ್ತಲ ಗಡದಾ
ಕಾಳ ಕತ್ತಲ ಗಡದಾ ಬಡಬಗ್ಗರದಾ ಆದೀತ ಬಂದಾ
ಏರು || ಕಂಡ ನಬಿಸಾಬ ಶರಣರಾ | ಮಾಡುವರೊ ಮನಸಿನ್ಯಾಗ ವಿಚಿಯಾರಾ
ಚ್ಯಾಲ || ಏನು ಚಮತ್ಕಾರವಿದು ತಿಳಿಲಿಲ್ಲ ನನಗ
ಮೂಡಿ ಮುಣುಗಿದ್ದು ಆಗಿಲ್ಲ ಹ್ಯಾಂಗ
ಕಿಯಾಮತ್ ಪ್ರಳಯಕಾಲ ಬಂದೀತ ಈಗ
ಇದ ಯೋಚನ್ಯಾಗ ಕುಂತಾನ ಬಡದ ದಿಂಗ
ಚೂರ ಚೈನ ಇದ್ದಿಲ್ಲ ಅವನ ಜೀವದ ಒಳಗ
ಶರಣ ನಬಿಸಾಬಗ ಬಿದ್ದೀತೋ ಭುಗಿಲಾ || ೫ ||

ಇ || ಅರಜ ಮಾಡ್ಯಾರೋ ಶರಣರು ಸಿದ್ದಶಿವನ ಹುಕುಮಲಿಂದಾ
ಜಿಬರಾಯಿಲಾ ಬಂದಾ ತಿಳಿಸುದಕ
ಏರು || ಅಂತಾನೋ ಜಿಬಿರಾಯಿಲಾ ಯಾತಕ್ಕ ಚಿಂತೆ
ನಿಮ್ಮ ಅಸಹಾಬ ಉಮರ ಮಾಡಿದ ಖ್ಯಾತಿ
ಚ್ಯಾಲ || ಇಂದ ಮುಂಜಾಲೆ ಹೋಗಿದ್ದ ಅಂವಾ ಉತ್ತತ್ತಿ ವನಕ
ನೀವು ಎಲ್ಲಾರೂ ಕೂಡಿ ನಮಾಜು ಮಾಡಿದ ಬಳಕ
ಅವನ ಅಂಗಿ ಹರಿದಿತ್ತು ಹೊಲುವುದುಸಕ
ಅಂಗಿ ಕಳದ ಕುಂತಾ ಸ್ವಲ್ಪ ಏರಿತ್ತೊ ಹೊತ್ತಾ
ಎಳೆ ಬಿಸಿಲು ಹತ್ತಿ ಅವನ ಬೆನ್ನು ಸುಟ್ಟಿತಲ್ಲಾ
ಅವರು ಸಿಟ್ಟೀಲೆ ದಿಟ್ಟೀಸಿ ನೋಡ್ಯಾರ ಸೂರ್ಯ ಆದ ಐಕಾ || ೬ ||

ಇ || ಈ ಮಾತ ಅವರಿಂದಾ ನೀಗದೊ ಯಾರಿಂದಾ
ಹೇಳಿ ಇಷ್ಟ ಬೇದಾ ಜಿಬರಾಯಿಲಾ ಹೋದಾ ಹುಕುಮ ಸಾಂಬಂದಾ
ಏರು || ಈ ಮಾತು ನಬಿಸಾಬ ತಿಳಕೊಂಡಾ
ಹೋದಾರೋ ನಾಲ್ಕುಮಂದಿ ಕರಕೊಂಡಾ
ಚ್ಯಾಲಿ || ಸಾಗಿ ಅವರು ಅಲ್ಲಿಗೆ ಹೋಗಿ ನೋಡುತನಕ
ಊರ ಬಿಟ್ಟ ದೂರ ಇರುವ ಉತ್ತತ್ತಿ ವನಕ
ಕುಂತಿದ್ದಾ ಅಂವಾ ಅಂಗಿ ಹೊಲುತಿದ್ದಾ ಒಂದು ಗಿಡದ ಬುಡಕ
ಶರಣರು ಹಿಡದಾರೋ ಕೂನಾ ದೂರಿಂದ ಮಾಡ್ಯಾರೊ ಶರಣಾ
ಬಾಳ ಬುದ್ಧಿವಂತ ಉಮರ ನಿಮ್ಮದು ಶಾಂತಗುಣಾ
ಇಷ್ಟೊಂದ ಕೋಪಾ ನಿಮಗ ಯಾಕ ಬಂದಿತೋ ಇಂದಾ || ೭ ||

ಇ || ನಿಮ್ಮ ಜರಬಿಗೆ ಅಂಜಿ ನಡುಗಿ ಗದಗದಾ
ಮಾರಿ ತೋರಿಸದೆ ಬಂದಾ ಅಂವಾ ಇಳದ ಸೂರ್ಯ ಮುಳುಗಿದ್ದಾ |
ಏರು || ಹಂತವರದು ಆಗೇತಿ ಆಗತಿ ಬೆಳಗು ಮಾಡೋ ಅಧಿಪತಿ
ಚ್ಯಾಲ || ಇಷ್ಟು ಸಿಟ್ಟ ಇಟ್ಟರ ನೀವು ಮನಸಿನೊಳಗ
ನಡದೀತ ಹ್ಯಾಂಗ ಆದೀತ ಹ್ಯಾಂಗ ಬೇಗು ಬೆಳಗು
ಬಂದ ಜಿಬಿರಾಯಿಲ ತಂದ ಮಾಹಿತಿ ಹೇಳಿದ ನಮಗ
ನೋಡಿ ಆ ಸೂಚನಾ ನಾವು ಇಲ್ಲಿತನಾ
ನಡೆದ ಬಂದೇವಿ ಕೊಡಬೇಕ ಮಾನಾ ಪಾನಾ |
ಇಲ್ಲಂದರ ಇಂದಿಗೆ ಸೂರ್ಯ ಬರುವುದಿಲ್ಲಂದಾ || ೮ ||

ಇ || ಇಷ್ಟು ಕೇಳಿ ಉಮರ ಸೂರ್ಯಗ ಝಟ್ಟನೆ ಕರದಾ
ಕೇಳಿ ಈ ಶಬ್ದಾ ಆದಾ ಅಂವಾ ಲುಬ್ದಾ ತೆರದೀತ ಪ್ರಾರಬ್ದಾ
ಏರು || ಬಂದಾನೋ ಸೂರ್ಯ ಭೂಮಿಮ್ಯಾಲೆ ಮೂಡಿ
ಸರ್ವರ ಮನಾ ಸಂತೋಷ ಆತ ಪ್ರಕಾಶ ನೋಡಿ
ಚ್ಯಾಲಿ || ಶರಣರು ಮತ್ತು ನಾಲ್ವರು ಮಿತ್ರರು ಕೂಡಿ
ಸಾಂಬನಲ್ಲಿಗೆ ಹೋಗಿ ಬಂದಾರ ಬೇಡಿ
ದಸ್ತಗೀರ ಕೇಸುಪೀರ ಸತ್ಯದ ಮಹಿಮಾ
ಬಾಗಲಕೋಟಿಯೊಳಗ ಉಸ್ತಾದ ಲಚ್ವಮನ ಸಿಂಗ
ತುಸು ತಗುಲಿಲ್ಲದೆ ಮಿಗಿಲಾದರೋ ದೇಶದೊಳಗ
ನಾಗು ಗೌಸು ವೈರಿಗೆ ಹೊಗಿಸ್ಯಾರೋ ಗುಡ್ಡಾ || ೯ ||

* * *

. ಮೌಲಾಲಿಯ ಜನನ ಮತ್ತು ಬಾಲಲೀಲೆ

ಪಂಡಿತ ಪಂತರು ಎಲ್ಲಾ ಇಟ್ಟಕೇಳರಿ ಖ್ಯಾಲಾ ||
ಹುಟ್ಟಿ ಬಂದಾರೋ ಅಲಿ ಮೌಲಾ ಮರತೇಕ || ಪಲ್ಲವಿ ||

ಏರು || ಬೀಬಿ ಫಾತಿಮಾ ಫಕರಾ ಮೌಲಾನ ತಾಯಿಯ ಹೆಸರಾ
ಒಂಬತ್ತು ತಿಂಗಳ ಬಸರಾ ಕಾಲಕ ಸಾಗಿ ಹೋಗಿಹೋಗಿದ್ದರು ಬೇಬಿಬೈತುಲ್ಲಕ್ಕ
ಆ ಕಾಬೇಕ ಬಂದ ಮ್ಯಾಲಾ ಬೆಟ್ಟಿ ಆದ್ರ ನಬಿರಸೂಲಿಲ್ಲಾ
ಅಂತಾರ ಬೀಬಿಗೆ ತಡೆಯದೆ ತತ್ಕಾಲಾ
ಹೋಗರಿ ಮನಿಗೆ ಇನ್ನಾ | ಬ್ಯಾರೆ ಆಗೇತಿ ನಿಮ್ಮ ಚಿನ್ನಾ |
ಬರತಾರ ಹುಟ್ಟಿ ರತನಾ ಜಗತೇಕ || ೧ ||

ಇ || ಶರಣರು ತಾಕೀತ ಕೊಟ್ಟ ಹ್ವಾದಾರ ಮನಿಗೆ ಹೊಂಟಾ
ತಿಳೂದಿಲ್ಲ ಸಾಂಬನ ಆಟ ಕೌತೂಕ
ಏರು || ಬೀಬಿ ಫಾತಿಮಾ ಫಕರಾ ತಿಳಕೊಂಡ ಮಜಕೂರಾ
ಮಾಡತಾರ ಅವಸರಾ ಹೋಗುದಕ | ಬ್ಯಾನಿಯೆದ್ದ ಹೊಟ್ಟಿ ಕಡಿಲಾಕ
ಆ ಪರಮಾತ್ಮನ ಲೀಲಾ ಸುಳ್ಳು ಆಗೂದು ಕವಲಾ
ಕಾಬೇದಾಗ ಹುಟ್ಟೂದು ಇತ್ತ ಅಲಿಮೌಲಾ
ಬ್ಯಾನಿಯೆದ್ದು ಮಾಡ್ಯಾವ ಜೇರಾ ಆದಾರಾ ಗಾಬರಾ
ಇದ್ದಿಲ್ಲಾ ಯಾರ‍್ಯಾರ ಹಂತೇಕ || ೨ ||

ಇ || ಫಾತಿಮಾ ಫಕರಾ ಆಗ ನೆನಸಿ ಅಂತಾರ ಶಿವಗ
ಸಿಗವಲ್ಲದು ಮರಿಯಾದಿ ಜಾಗ ನಸೀಬಕ
ಏರು || ಬೀಬಿ ಮರಗವ ನೋಡಿ ಬಿರದೀತ ಕಾಬೇದ ಗ್ವಾಡಿ
ಸಾಂಬನ ಹುಕುಂ ಮಾಡಿದಾಕ್ಷಣಕ ಹೋಗಿ ಕುಂತಾರ ಬೀಬಿ ಆಸರಕ
ಆ ಪರದ್ಯಾಗ ರಂಬಿ ಹಡದಾರ ಮೌಲಾಗ ನವಮಾಸ ತುಂಬಿ
ಮಾದೇವನ ಕರುಣ ಕಟಾಕ್ಷ ನಂಬಿ
ಭೂಮಿಗೆ ಬಿದ್ದಾಕ್ಷಣ ಅದರೀತ ತ್ರಿಲೋಕ
ಕಾಬೇ ತುಂಬ ಬಿದ್ದೀತ ಬೆಳಕ ಸುರತಕ್ಕ || ೩ ||

ಇ || ಬಂದಾರ ನಾಗಕನ್ಯಾರು ಸ್ವರ್ಗದ ನೀರು ತಂದು ಎರೆದಾರು
ಕಳಿಸಿದಾ ಸದ್ಗುರು ಬಾಣೇತನಕ
ಏರು || ಮೂರು ದಿನದ ಮ್ಯಾಲಾ ಬಿಟ್ಟಾರ ಬೈತುಲ್ಲಾ
ಮನಿಗೆ ಹೋದಾರ ಖುಷಿಯಾಲಾ ಮದೀನೇಕ
ಖುಷಿಯಾದಾರ ರಸೂಲಿಲ್ಲಾ ನೋಡಿ ಕಮಲಾ
ಆ ಕೂಸಿನ ಮ್ಯಾಗ ಮಮತಿ ಬಗಲಾಗ ತಗೊಂಡಾರ ಎತ್ತಿ
ನಬಿಸಾಬ ಮೌಲಾಗ ನೋಡಿ ಬಿಡುವರು ಅಕ್ಕರತಿ
ಮುದ್ದಾಡಿದಾರ ಅಂವಚಿ ಮಾರಿಗೆ ಮಾರಿ ಹಚ್ಚಿ
ಹತ್ತಿತ ವಿದ್ಯೆದ ಶುಚಿ ಅದ ಕಾಲಕ || ೪ ||

ಇ || ಮರುದಿನಾ ತೊಟ್ಟಿಲದಾಗ ಮಲಗಿಸಿ ಅಲಿ ಮೌಲಾಗ
ತಾಯಿ ಕೂತ್ರ ಬಚ್ಚಲದಾಗ ಜಳಕಕ
ಏರು || ಹಾಂವ ಒಂದ ತೊಟ್ಟಿಲದಾಗ ಬಂದ ಬಿತ್ತ ಮೌಲಾನ ಮ್ಯಾಗ
ಎಚ್ಚರಾಗಿ ನೋಡುದರೊಳಗ ಬಂತ ಕಡಿಯಾಕ
ಕಸುವ ತೋರಸ್ಯಾರ ಹುಟ್ಟಿದ ನಾಕ ದಿನಕ
ಆಗ ಮೌಲಾ ಮಾಡಿ ಚಾಲಾಕಿ ಎರಡು ಕೈ ಬಟ್ಟ | ಹಾಂವಿನ ಬಾಯಾಗ ತುರಕಿ
ಸೀಳಿ ಒಗದಾರ ಮಾಡಿ ಎರಡು ಪಕರಾಣಕಿ
ಫಾತಿಮಾ ಪತಿವರತಾ ಜೆಳಕಾ ಮಾಡಿ ಎದ್ದಾರ ತುರತಾ
ತೊಟ್ಟಿಲ ಸುತ್ತ ಬಿದ್ದೀತ ರಗತಾ ನೋಡುತನಕ || ೫ ||

ಇ || ತೊಟ್ಟಿಲ ಎಡಬಲಕ ಬಿದ್ದೀತ ಹಾಂವಿನ ತುಣಕ
ಗಟಾಸರ್ಪ ಅಚಾನಕ ಜೀವದಸಕ
ಏರು || ತಾಯಿ ಕಂಡು ಹೌಸಾಣ ಹಾರಿ ಒದರ‍್ಯಾರ ಚಿಟ್ಟನೆ ಚೀರಿ
ಕೂಡ್ಯಾರ ನೆರಿಹೊರಿ ಕಲಕಾಟಕ ನೋಡಿತ್ತ ಕೂಡಿತ ಮಂದಿ ಕೌತೂಕ
ಆಗ ಹಜರತ ರಸೂಲಿಲ್ಲಾ ನಿಂತ ನೋಡತಾರ ತೊಟ್ಟಿಲ ಮಗ್ಗಲಾ
ಮೌಲಾನ ಚೆಹರಾ ಸಿಟ್ಟೀಲೆ ಆಗಿತ್ತ ಕೆಂಪಲಾಲಾ
ಮೈತುಂಬ ಮುಣಗಿತ್ತ ರಗತಾ ಒರಸಿದಾರ ಕೈಮುಟ್ಟಿ ಹಸ್ತಾ
ಶಿವನ ಹುಲಿ ಶಕ್ತಿವಂತಾ ಈ ಬಾಲಕ || ೬ ||

ಇ || ಗಫಾರನ ಪಂಚಪ್ರಾಣಾ ಕೂಫಾರನ ಗಂಟಲಗಾಣಾ
ಕಂಡಲ್ಲಿ ಕೊಯಿತಾರಾ ಗೋಣಾ ಕಡಿತನಕ
ಏರು || ಪ್ರೀತೀಲೆ ಹುಟ್ಟಿಸ್ಯಾನ ಸಾಂಬಾ | ಇಸ್ಲಾಮ ಧರ್ಮದ ಸ್ಥಂಬಾ
ಆಗೂದು ಜಗತುಂಬಾ ಇವರ ಬೆಳಕಾ
ಕಾಳ ಆಗುವಾ ವೈರಿಗಳ ಕುಲಕ | ಆ ಬಾಗಲಕೋಟಿ ಶಾರಾ
ಸುತ್ತದೇಶಕ ಜಾಹಿರಾ | ದಸ್ತಗೀರ ಕೇಸುಪೀರಾ ಶೇನೇದಾರ
ನಾಗೂ-ಗೌಸೂನ ಜರಬಾ | ನಿನಗ ಹ್ಯಾಂಗ ಬಂದೀತ ಕುರುಬಾ
ಕೊಯಿಕೊಂಡ ಬಿಡತೇನಿ ತುರಬಾ ಕಡಿಕಾಲಕ || ೬ ||

* * *

. ನಾಲ್ಕು ದಾರಿಯ ಪದ

ಚಂದ ಸಬಾ ಕೂಡಿರಿ ಬಂದ | ಮಜಕೂರ ತಗದೇನಿ ಒಂದ
ಆಗಬೇಕ ಆನಂದ ಜನರೆಲ್ಲಾ || ಪಲ್ಲವಿ ||

ಮರ್ತ್ಯೆದೊಳಗ ಮೌಲಾ | ಆದಾರೋ ಪ್ರಭೂಲಾ
ಶಿವನ ಹುಲಿ ಅನಿಸಿದರಲ್ಲಾ | ಭವದೊಳು ಭಕ್ತರ ಮೇಲಾ
ಏರು || ಒಂದ ದಿನ ಆಡಾಕ ಬ್ಯಾಟಿ | ಹೊಂಟಾರೋ ನಡಾ ಕಟ್ಟಿ
ಕುದುರಿಗೆ ಜೀನ ಜರಕಾಟಿ | ರಂಗಲಾಲಾ || ೧ ||

ಇ || ನಬಿಸಾಬ ಕಂಡರಾಗ ಕರದಾರ ಅಲಿ ಮೌಲಾಗ
ತಾಕೀತ ಮಾಡ್ಯಾರ ಹೀಂಗ | ರಸೂಲಿಲ್ಲಾ
ಏರು || ನಿಮ್ಮ ಮನದಾಗ ಹುಟ್ಟಿ | ನಡದೀರಿ ಆಡೂಕ ಬ್ಯಾಟಿ
ನಿಮಗೊಂದ ಹೇಳತೇನಿ ಗಟ್ಟಿ | ನಮ್ಮ ಸೀಮಿ ಹ್ವಾದಿಂದ ದಾಟಿ
ಬರತಾವ ನಾಲ್ಕುದಾರಿ | ತಪ್ಪದಲೆ ನೆಪ್ಪಹಿಡಿರಿ
ಅದರಾಗ ಮೂರುದಾರಿ ಭಯಾಯಿಲ್ಲಾ || ೨ ||

ಇ || ನಾಲ್ಕನೆಯ ದಾರಿಗೆ ಹೋಗಬ್ಯಾಡಾ | ಐತಿ ಅದು ಬಲೆ ಅನಗಡಾ
ದಕ್ಷಿಣ ದಿಕ್ಕು ಸುಡಗಾಡಾ | ಚಲ್ಲೋದಲ್ಲಾ
ಏರು || ಕೇಳಿಕೊಂಡು ಮಾವನ ಕಲ್ಮಾ | ಹೊಂಟಾರೋ ತಗೊಂಡ ಹುಕುಮಾ
ದಾರಿ ಹಿಡದಾರೋ ತಮ್ಮಾ ಕುದುರಿಗೆ ಹಾಕಿ ಲಗಾಮಾ
ಸೀಮಿದಾಟಿ ಹೋಗೂತನಕ | ದಾರಿಗಳು ಬಂದಾವ ನಾಲ್ಕು
ಮಾವನ ಮಾತ ಆದೀತ ತರ್ಕಾ ಮರೆಯಲಿಲ್ಲಾ || ೩ ||

ಇ || ಬ್ಯಾಡಂತ ಹೇಳಿದ ಹಾದಿಗೆ | ಕುದುರಿ ಹ್ವಾದೀತ ಸಾಗಿ
ಎಷ್ಟು ಹಿಡಿದರ ಜಗ್ಗಿ ಕೇಳಲಿಲ್ಲಾ
ಏರು || ತುಂಬೀತ ಕುದುರಿಗೆ ಗಾಳಿ | ಹೋಗುವಾಗ ಆರ‍್ಯಾಣದಲ್ಲಿ
ಮೂರು ಭಾವಿ ಇದ್ದಾವ ಅಲ್ಲಿ | ನೋಡತಾರಾ ಮೌಲಾ ಅಲಿ
ಎಡಬಲ ಬಾವ್ಯಾಗ ನೀರಾ | ತುಂಬಿದ್ದವು ಭರಪೂರಾ
ನಡುವಿನ ಬಾವ್ಯಾಗ ಜರಾ | ಇದ್ದಿದ್ದಿಲ್ಲಾ || ೪ ||

ಇಳು || ಕಂಡ ಮೌಲಾ ಆಗ್ಯಾರ ಹೈಪಾ | ಸಾಂಬನ ತಂತ್ರ ತಾರೀಫಾ
ಕಲ್ಪನಾ ಮಾಡಿದರು ಸ್ವಲ್ಪ ತಿಳಿಯಲಿಲ್ಲಾ
ಏರು || ಮತ್ತ ಅಲ್ಲಿಂದ ಕುದುರಿ | ಹೋದೀತ ಭರಾರರಿ.
ಗಾಳಿ ಬಿಟ್ಟ ರವದಿಯ ಸರಿ | ಸಮುದ್ರಕ ಬಂದಿತ್ತರಿ
ಚಮತ್ಕಾರಾ ಕಂಡಾರ ಮೌಲಾ | ಮುಣುಗುತಿದ್ದವು ನೀರಾಗ ಕುಳ್ಳಾ
ತೇಲುತಿದ್ದವು ದೊಡ್ಡ ದೊಡ್ಡ ಕಲ್ಲಾ | ಹರಗೋಲಾ || ೫ ||

ಇ || ಕಣಗಂಡ ಕಂಡ ಕೌತೂಕ | ಮೌಲಾವಲಿ ಆದಾರ ಛಕ್ಕ
ಗೂಡಾರ್ಥ ಅವರಿಗೆ ಪಕ್ಕ ತಿಳಿಯಲಿಲ್ಲಾ |
ಏರು || ಮಜಕೂರ ತಿಳಿದಂಗಾತು | ಮನದಲ್ಲಿ ಅಗಾದ ಹಿಡಿತು
ಕುದುರಿ ದಾರಿ ಹಿಡಿದಿತ್ತು | ಮತ್ತ ಪಕ್ಷಿವೊಂದ ಕಣ್ಣಿಗೆ ಬಿತ್ತ
ಹಕ್ಕಿರೆಕ್ಕಿಯ ಮ್ಯಾಲಾ | ಅಕ್ಷರ ಬರೆದಿದ್ದವು ಖುಲ್ಲಾ
ತಮಾಮ ಕಲ್ಮಾ ಷರೀಪಯೆಲ್ಲಾ ಉಳಿದಿದ್ದಿಲ್ಲಾ || ೬ ||

ಇ || ನೆದರ‍್ಹಚ್ಚಿ ನೋಡೂತನಕ | ಪಕ್ಷಿ ತಿಂತಿತ್ತೊ ನರಕ
ಚೈನೇನು ಮೌಲಾನಾ ಜೀಂವಕ್ಕ ಉಳಿಯಲಿಲ್ಲಾ |
ಏರು || ಕಣಮುಟ್ಟಿಕಂಡ ಮ್ಯಾಲಾ | ಕುಂತಗೊಂಡು ಅತ್ತಾರ ಮೌಲಾ
ಮೈತುಂಬಾ ಕಲಾಮುಲ್ಲಾ | ಬಾಯಿಲೆ ತಿಂತಿತ್ತೊ ಎಲ್ಲಾ ||
ಮೌಲಾ ಅಲಿ ಆದಾರ ಗಾಬಾ | ಇದು ಏನು ಸಬಾಬಾ
ಅಂತಾರ ತೋಬಾ ತೋಬಾ | ಯಾ ಅಲ್ಲಾ || ೭ ||

ಇ || ಅವಸರಲಿ ಮನಿಗೆ ಬಂದಾ | ಹೇಳತಾರ ಮಾವನ ಮುಂದಾ
ಅಡವ್ಯಾಗ ಆಗಿದ್ದ ಬೇದಾ | ತಪಶೀಲಾ
ಏರು || ಬಿದ್ದೈತಿ ನನಗ ಗುಮ್ಮಾ | ಒಡದ ಹೇಳರಿ ಕಲ್ಮಾ
ಕೇಳಿ ಅಂದ್ರೊ ರಸೂಲೆ ಕರಿಮಾ | ಮುಂದ ಮಳೇ ಆಗೂದು ಕಮ್ಮಾ
ಒಬ್ಬನ ಹೊಲಕ ಆಗೂದು ಮಸ್ತಾ | ಮಗ್ಗಲದಾಂವಾ ಕುಂತಾನ ಅತ್ತಾ
ಮೂರುಬಾಂವಿದು ತಿಳಿಬೇಕ ತರ್ಕಾ | ಸುಳ್ಳಲ್ಲಾ || ೮ ||

ಇ || ಸಮುದ್ರದು ಕೇಳರಿ ಸೂಚನಾ | ಬರತಾವ ಇಂಥ ದಿನಮಾನಾ
ಒಳ್ಳೆ ಮನುಷ್ಯರದು ಮಾನಾ ಉಳೂದಿಲ್ಲಾ
ಏರು || ಪಕ್ಷಿ ತಿನ್ನೂದು ನರಕಾ | ಇಟ್ಟ ಕೇಳರಿ ತರಕಾ
ಸಿಟ್ಟಿಗೆ ಬರಬ್ಯಾಡ್ರಿ ತೋಕ | ಬಿದ್ದರ ಮಾತಿನ ಫರಕಾ
ಪುರಾಣ ಕುರಾನ ಓದಾವರು | ನಮಾಜ ರೋಜಾ ಮಾಡಾವರು
ಬಡ್ಡಿ ತಿನ್ನೊದು ಅವರು ಬಿಡೂದಿಲ್ಲಾ || ೯ ||

ಇ || ಕೇಳಿ ಮಾಂವನ ಮಾತಾ | ಮೌಲಾನ ಮನ ಆದೀತ ಶಾಂತಾ
ಈ ಮಾತ ನಡದಾವ ತುರತಾ | ಹಾಲಿಹಾಲಾ
ಏರು || ಇನ್ನಾರ ಬಿಡವಲ್ಲಿ | ತಿನ್ನೂದು ಬಿಡವಲ್ಲಿ
ದಸ್ತಗೀರ ಕೇಸುಪೀರನ್ಹಂತೇಲಿ | ಜವಾಬೇನ ಕೊಡತೀದಿ ಪ್ಯಾಲಿ
ನಾಗೂಗೌಸೂನ ಕೂಡ ರಂಡಿ ಜಿದ್ದಹಾಕಿಯೇನ ಉಂಡಿ
ಜಿಗದಾಡಿ ಕಳಕೊಂಡಿ ರುಂಬಾಲಾ || ೧೦ ||

* * *

. ಕಂದೂರ ಕಿಲ್ಲೆಯ ಸೈನ್ಯ ಸೋಲಿಸಿದ ಮೌಲಾಲಿ

ಪ್ರಖ್ಯಾತ ಪೃಥ್ವಿಮ್ಯಾಲೆ ಕಂದೂರ ಬಂದೂರ ಕಿಲ್ಲೆ
ಕಾಣೆ ಈ ಭೂತಳದಲ್ಲೆ ಬಲು ಮಾಟ ಘಾಟ ಸುದ್ದ ಇಮಲಾ
ಏರು || ಆ ಕಿಲ್ಲೇದ ಗ್ವಾಡಿ ಥೇಟ ತಗದಾಂಗ ಪಗಡಿ
ಯೊಳ ಜಾತಿಯ ಮಾಡಿ ಕಲ್ಲಿನ ಚೌಕಡಿ
ಕಿಲ್ಲೇದ ಸುತ್ತ ಬಲು ಬಂದೋಬಸ್ತ
ನಾಲ್ಕು ಗುಡ್ಡ ಇದ್ದು ಮ್ಯಾಕ ನೋಡಿದರ
ತಳಿಯಾಕ ಬೀಳೂದು ರುಂಬಾಲಾ |
ಆ ನಾಲ್ಕು ಗುಡ್ಡದ ಬಣ್ಣ ಬ್ಯಾರೆ ಬ್ಯಾರೆ ವರಣಾ
ಹಸಿರು ಕರೆ ಕಿರಣ ಹಳದಿ ಕೆಂಪಲಾಲಾ
ಕಿಲ್ಲೇದ ಸುತ್ತ ಮುತ್ತ ನೀರ ಇತ್ತ
ಸಮುದ್ರದೊಳಗ ಹೋಗುವದು ಸ್ವತಂತ್ರದಾರದು ಇಲ್ಲಾ
ನಾಲ್ಕುನೂರು ಗುಮಜಗಳು ಕೆಚ್ಚಿದಾಂಗ ಕಾಣುವ ಹರಳಾ
ಶಾಹೀರ ನೀ ಕುಂತಗೊಂಡ ಕೇಳು ಮುಖತಿಲಕ ಅರಸನ ಅಮಲಾ || ೧ ||

ಅಡಮುಟ್ಟ ಅಬೂಜೈಲನ ಕಮಲಾ ತತ್ಕಾಲ ಅಂಭುವಾ ಕುಲ್ಲಾ
ನೊಂದ ಬೆಂದ ಅಂದ ಹಗಲೆಲ್ಲಾ | ನಮ್ಮ ತಂದಿಗೆ ಕೊಂದಾರೊ ಮೌಲಾ
ಏರು || ಆ ಮಹಾಬಲಗೂಡ ನಾ ಆಗೂದಿಲ್ಲ ಈಡಾ
ಹೀಂಗಿತ್ತು ಹಳವಂಡಾ ಹ್ಯಾಂಗ ತೀರಸಲಿ ಸೇಡಾ
ಕಂದೂರ ಬಂದೂರ ಅರಸನ ಬಹಾದ್ದೂರಾ
ಇನ್ನ ಹೋಗಿ ಅವನ ಬೆನ್ನ ಬಿದ್ದರ ನನ್ನ ಪಂಥ ತೀರುವದು
ಖೋಡಿ ಅಲ್ಲಿಗೆ ಓಡಿ ಹೋಗಿ ರಣಹೇಡಿ ನಿಂತ ಕೈಮುಗಿದು
ತಿಳಿಸಿ ವರ್ತಮಾನ ಬಳಸಿ ಅರಸಗ ಉಳಸದೆ ಎಲ್ಲಾನು ಒಡದು
ಕುಂದರಬ್ಯಾಡೋ ನೀ ಮೈಮರತಾ ಮೌಲಾವಲಿ ಮಹಾಶಮರಂತಾ
ನಿನಗಾದರೂ ಒಂದಿನ ಪೂರ್ತಿ ಪಿಲಾದೇಂಗೆ ಇಸಲಾಮಿ ಪ್ಯಾಲಾ || ೨ ||

ಮುಖಾತೀಲ ಅರಸಗ ಕೆಟ್ಟಾ ಮನಸಿಗೆ ಹತ್ತಿತೋ ಪೆಟ್ಟಾ
ಅಬ್ಬರಿಸಿ ತುಂಬಿತೋ ಸಿಟ್ಟಾ ಆಗ ಬಾರಿಸ್ಯಾನೊ ಜಂಗಿನ ತಬಲಾ
ಏರು || ರಣಬೇರಿ ಬಾರಿಸಿ ದಂಡಿಗೆ ಕೂಡಿಸಿ
ಈ ಮಜಕೂರ ತಿಳಿಸಿ ಹುರಿ ಹಾಕರಿ ಮೀಸಿ
ಇದ್ದಾಂವಾ ಬಂಟಾ ಬರ್ರಿ ಮುಕ್ಕಟ್ಟಾ
ಇಂದ ಮೌಲಾಗ ಕೊಂದ ತಲಿ ತಂದವನಿಗೆ ಅಂದೇನೊ ಕರ್ಣಾ
ಅರ್ಧ ರಾಜ್ಯ ಮತ್ತ ನೆರೆದ ಮಗಳ ಕೊಟ್ಟು ಗರ್ದಿಲೆ ಮಾಡುವೆ ಲಗ್ಗನಾ
ಬಕ್ಷೀಸ ಇಟ್ಟಿದ್ದಾ ಇಂಥಾ ಬಹಳ ಶಮರಂತಾ
ಮುಖದ್ವರ ಅಂತೊಬ್ಬ ಇದ್ದ ಪೈಲ್ವಾನ ಇಳೇಯೆತ್ತಿ ಅಂದಾ ಬಾಯಿಲಿ
ತರತೇನಿ ನಾ ಮೌಲಾನ ತಲಿ ನಡಾಕಟ್ಟಿ ಹೊಂಟಾ ಕ್ಷಣದಲ್ಲಿ
ಕರಕೊಂಡ ತನ್ನ ದಂಡ ಹಿಂಬಾಲಾ || ೩ ||

ಮುಖದ್ದರ ಮೌಲಾನ ಶೋಧ ಮಾಡೂತ ಮಾರ್ಗ ಹಿಡಿದಾ
‘ದಿನಮೇಕ’ ಎಂಬ ಗುಡ್ಡದಾಗ ಬಂದಾ |
ಅಲ್ಲಿ ಇಳಿಸ್ಯಾನೋ ತನ್ನ ಮಾರ್ಬಲಾ
ಏರು || ಈ ಗುಡ್ಡ ಮೌಲಾನದು ಐತಿ ಬ್ಯಾಟಿ ಆಡೂದು
ಕುಂತರ ತಳಹಿಡಿದು ನಮ್ಮ ಕೆಲಸ ಆಗುವದು
ಗುಡ್ಡದ ವಾರಿಲಿ ಇತ್ತೊಂದ ಚಿರಕಿಲಿ
ಅಡಗಿ ಕುಂತಾರವರು ತುಡಗ ಬೆಕ್ಕಿನ್ಹಾಂಗ ಮನದಾಗ ಮಾಡಿ ಮಸಲತ್ತಾ
ಬ್ಯಾಟಿ ಆಡೂತ ಮೌಲಾ ಬಂದರ ಕಟ್ಟುವೆವು ಜೀವಂತಾ
ಬ್ಯಾಗ ತೋರಿಸಿ ಶಿರಾ ಲಗ್ನ ಆಗಬೇಕಂತಾ
ಹಿಗ್ಯಾನೊ ಮುಖದ್ದರ ಪೂರ್ತಿ ಆ ದಿವಸ ಮದೀನದೊಳಗ
ನಮಾಜು ಮಾಡಿ ಮಸೂತಿಯೊಳಗ
ಮಂದ್ಯಾಗ ಕುಂತಿದ್ದರು ನಬಿ ರಸೂಲಿಲ್ಲಾ || ೪ ||

ನಬಿಸಾಬ ಶರಣರು ಖಾಸಾ ಅಂತಾರೋ ಚಿಗರಿ ಮಾಂಸಾ
ತಿನ್ನೂದು ಆಗೈತಿ ಮನಸಾ ಯಾರ ತರತೇರಿ ಹೇಳರಿ ಮೊದಲಾ
ಏರು || ಆದಮ ಎಂಬವನು ಔತಣ ಕೊಟ್ಟಾನೋ
ನಡಾಗಟ್ಟಿ ಹೊಂಟಾನೊ ಬ್ಯಾಟಿ ಆಡಿ ತರುವೆನು
ಹತ್ಯಾನೋ ಕುದರಿ ತಿರುವೂತ ಪೇರಿ
ಹೊಂಟ ಬ್ಯಾಟಿಗೆ ಬಂಟ ಆದಮ ಬಂದಾನೊ ಅದ ಗುಡ್ಡದಾಗ
ಕಂಡ ಆದಮಗ ಬಂಡ ಮುಖದ್ದರನ ದಂಡು ಘೇರಾಯಿಸಿ ಅಂವಗ
ಬಿರಸಿ ಮಾತ ಆಡಿ ಸರಸ ಮೌಲಾಗ ತೋರಸ ಅಂತಾರ ನಮಗ
ಕೊಯಿಕೊಂಡು ಹೋಗುವೆ ತೆಲಿ ಹೂಕಿ ಹೊಡೆದ ಆದಮ ಹುಲಿ
ನಾನೇ ಅದೇನಿ ಮೌಲಾ ಅಲಿ ನಿಮ್ಮ
ಮೈಯ್ಯಾನ ತೊಗಲಾ ಸುಲದೇನೋ || ೫ ||

ಎದಿಗೊಟ್ಟು ನಿಂತಾರಾ ಇದಿರಾ | ಹಿಡಕೊಂಡ ತನ್ನ ಹತಿಯಾರಾ
ಹೊಕ್ಕಾನೋ ರಣದಾಗ ಶೂರಾ | ಜೀವದ ಹಂಗ ಇಡಲಿಲ್ಲ
ಅಲಿ ಮೌಲಾಗ ನೆನೆದಾ ಜಂಗ ಮಾಡ್ಯಾರೊ ಕುಣದಾ
ಮನ ಬಲ್ಲಾಂಗ ಹಣದಾ | ರಾಶಿ ಹಾಕ್ಯಾನೊ ಹೆಣದಾ
ಆದೀತೋ ಭಂಡ ಮುಖದ್ದರನ ದಂಡಾ
ತಿರುಗಿ ನಿಂತಾರೋ ಹರುಷಾಗಿ ಆದಮನ | ಕೊರಳಿಗೆ ಹಾಕ್ಯಾರೊ ಕಮಂಡಾ
ಹದ್ದ ಹಾರಿದಾಂಗ ಖುದ್ದ ಬಿದ್ದ ಕುದುರಿ ಮ್ಯಾಗಿಂದಾ
ಬಾಣ ಬಿಡದ ನಿತ್ರಾಣ ಆಗಿದ್ದಾ | ಗೋಣ ಕೋದ್ರೊ ಆತಂದಾ
ತಲಿತಗೊಂಡು ಮುಖದ್ದರ ನಡದಾ | ಕಂದೂರ ಬಂದೂರಕ ಬಂದಾ
ಇಟ್ಟಾನೊ ಅರಸನ ಮುಂದಾ | ಲಗೂ ತೀರಸಲಿ ನಮದೆಲ್ಲಾ || ೬ ||

ಅರಸ ಅಂದಾ ವಾವ್ಹಾರೆ ಮರ್ದಾ | ಅರ್ಧ ರಾಜ್ಯ ಕೊಟ್ಟಾನೊ ಬರದಾ
ಮದುವೆ ಮಾಡುವೆ ಮುಹೂರ್ತ ತಗದಾ
ಸರೂ ಕೂಡಿಸ್ಯಾರೊ ಸಂಭ್ರಮಯೆಲ್ಲಾ ||
ಏರು || ಕೂಡಿ ಬೀಗ ಬಿಜ್ಜರಾ ಹಾಕ್ಯಾರೋ ಹಂದರಾ
ಮುಖದ್ದರ ಬಹಾದ್ದೂರ ತಂದ ಮೌಲಾನ ಶಿರಾ
ಸುತ್ತ ಚೌಪೀರ ಜೈಜೈಕಾರ ಇತ್ತಿಡರಿ ನಿಮ್ಮ ಚಿತ್ತ
ಮದೀನಕ ಬಂತ ಆದಮನ ಕುದುರಿ ಮೈತುಂಬ ರಕ್ತ ಮುಣಗಿತ್ತ
ಮಸೂತಿ ಮುಂದೆ ನಿಂತಿತ ಕಾಲ ಕೆದರಿ
ಕಣ್ಣೀಲೆ ಹರೂತಿದ್ದು ನೀರ ಕೇಳಿ ಮಜಕೂರ
ಆದ್ರ ಗಾಬರಿ ಮಂದಿಯೆಲ್ಲಾ ಹೆದರಿ | ಮೌಲಾಲಿಗೆ ಹತ್ತಿತೊ ಸುತ್ತಿ
ಮನಬಲ್ಲಾಂಗ ಮೈತುಂಬಾಗುದ್ದಿ | ಮುಖದ್ದರಗ ಮಾಡುವೆ ಮುದ್ದಿ || ೭ ||

ಹೊಂಟಾರೋ ತಡ ಮಾಡಲಿಲ್ಲ | ಹೊಕ್ಕಾರೊ ಕಿಲ್ಲೇದವೊಳಗ
ಲಗ್ನದ ಮಂಟಪದಾಗ ಸಾಗಿ ಹೋಗಿ ಹೊಡದಾರೋ ಗುಡಗ
ಇದು ಏನ ನಡಸಿರಿ ತಗಲಾ
ಏರು || ಮುಖದ್ವರ ಅಂಬಾವಾ ಎಲ್ಲಿರತಾನೋ ಅಂದಾ
ನನ್ನ ತಲಿ ತರಾಂವಾ ಇಲ್ಲ ಜಗದಾಗ ಯಾಂವಾ
ಚಿತ್ತ ಪ್ರಸಂಗ ನಡಿದೀತೊ ಜಂಗ
ಹಾರಿ ಬಂದಾಂವಗ ತೂರಿ ಒಗೂತಿದ್ರೋ | ಯಾರೂ ಇಲ್ಲ ದರಕಾರಾ
ನೋಡಿ ಮುಖದ್ದರ ಓಡಿ ಹೋದನೋ |
ಕಿಲ್ಲೇದ ಸೈನ್ಯಯೆಲ್ಲಾ ಅಳದ ಬಿಟ್ಟಾನೋ
ಉಳಿದವರು ಇಲ್ಲ ಯಾರ‍್ಯಾರು
ಹಮ್ಮು ಬಿಟ್ಟಾರೋ ಕಲ್ಮ ಓದ್ಯಾರೊ | ಜಲ್ಮ ಆತೋ ಉದ್ದಾರಾ
ಕಂದೂರ ಕಿಲ್ಲೇದ ಕತಿ ಹೇಳಿದರ ಬಾಳೈತಿ | ಇಲ್ಲಿಗೆ ಮಾಡೇನಿ ಮುಕ್ತಿ || ೮ ||

ಬಾಗಲಕೋಟಿ ಜಾಗಾ | ಪೀರ ದಸ್ತಗೀರನ ದರಗಾ
ಜಾಗ ನೋಡಿ ಹೊಡದಾರೊ ಪಾಗಾ
ಹಸ್ತ ಇಟ್ರೋ ನಮ್ಮ ತಲಿಮ್ಯಾಲಾ ||
ಏರು || ಕರುಣುಳ್ಳ ಕೇಸುಪೀರಾ | ನಮಗೈತಿ ಆಸರಾ
ನಾಗೂ ಗೌಸು ಶಾಹೀರಾ | ದೇಶಕ್ಕ ಜಾಹೀರಾ
ಲಚಮನಸಿಂಗ ವಸ್ತಾದಂದ್ರೋ ಹೀಂಗ
ಖಾಸ ಕವಿ ಅಡಿಪ್ರಾಸ ಕಡಿತನಾ | ಸೋಸಿದಾಂಗ ಬಂಗಾರಾ
ಹಗರ ಪದಾ ಹಾಡಿ ನಿಗರಬ್ಯಾಡೋ ಒಗರು ಉಳುದೆಲ್ಲಾ ಜರಾ
ಇಂಥ ಪದಾ ಮಾಡೆ ಶಾಂತಗುಣ ಇಡೊ ಅಂತೇನಿ ಆಗ ಕವಿಗಾರಾ
ಸುಮಕ ನಿನ್ನ ದಿಮಾಕ | ಬಹಳ ಏರಿಸ್ತಿದೋ ಮುಂಗೈ ತೋಳಾ
ಪದದವೊಳಗ ಏನಿಲ್ಲಾ ಹುರುಳಾ | ನೀವು ಹೇಳರಿ ಹೌದೇನಿಲ್ಲಾ || ೯ ||

* * *

೫ ತನ್ನನ್ನು ಮಾರಿಕೊಂಡು ಸಹಾಯ ನೀಡಿದ ಮೌಲಾಲಿ

ಅಲಲೆ ಬಪ್ಪರೆ ಮೌಲಾ ಪುಂಡ ಪೈಲ್ವಾನಾ
ಬಂದ ಬಡಜನಕ ಕಂಡ ಮಾಡ್ಯಾರು ದಾನಾ  || ಶ್ಲೋಕ ||

ಏರು || ಶಾಸ್ತ್ರರಕ ಸರಿಯಾಗಿ ನಾ ತಿಳಿಸುವೆ ಖುಲ್ಲಾ
ಬಂದಾನೊಬ್ಬ ಕಂಗಾಲಾ ಮಾಡ್ಯಾನೋ ಸವ್ವಾಲಾ
ಚ್ಯಾಲ || ಕೇಳರಿ ಅಲಿಮೌಲಾ | ನನಗ ಒಂದು ನೂರ ಹೊನ್ನಾ ಕೊಡಬೇಕರಿ ಆಕ್ಷಣಾ
ಇ || ಕೇಳಿ ಸುದ್ಧಿ ಬಂದೇನಿ ನಿನ್ನ ಬಿಟ್ಟ ಪಟ್ಟಣಾ | ಅಂತ ಹಿಡಿದಾನೋ ಚರಣಾ
ಮಗನ ಮದವಿ ಮಾಡೇನಂದರ ಇಲ್ಲರಿ ಅಸನಾ | ನಾ ಮಾಡಲಿನ್ನೇನಾ
ಏರು || ಕೇಳಿ ಅಲಿ ಮೌಲಾ ಅಂತಾರೋಖುಲ್ಲಾ
ಚ್ಯಾಲ || ಹಂತೇಲಿ ಏನು ಇಲ್ಲಾ | ನಿಂತಾರ ಪ್ಯಾಟ್ಯಾಗ ಮಾರನಡಿ ನನ್ನಾ || ೧ ||

ಇ || ಬಿಗಿದು ರಟ್ಟಿಗೆ ಕಟ್ಯಾನೋ ಹಗ್ಗಾ ಹಿಗ್ಗಿ ಸಂಪೂರಣಾ
ಹಿಡಕೊಂಡ ಕಂಗಾಲಾ ಮೌಲಾಗ ನಡದಾನೋ ಆಕ್ಷಣಾ || ಪಲ್ಲ ||

ಏರು || ಗಬರೆಂಬುವ ಶಹರ ಇತ್ತರಿ ಒಳೇ ಬಾರ
ಮರತೇಕ ಜಾಹೀರಾ ಅರಸನಿದ್ದಾನೊ ಬಾದ್ದೂರಾ
ಚ್ಯಾಲ || ಆತನ ಪ್ಯಾಟಿ ಪಟ್ಟಣದೊಳಗ
ಹೋಗಿ ಮುಟ್ಯಾರೋ ಜನರೆಲ್ಲಾ ಕಂಡಾರೋ
ಇ || ನೋಡಿ ರೂಪ ಹೈತ ಆಗೂರೊ ಕುಂತ ನಿಂತವರೋ ||
ಮನದಲ್ಲಿ ಮರುಗುವರೊ ಅಷ್ಟರೊಳಗ ಅರಸ ಪರದಾನಿ ಕೂಡಿ ಇಬ್ಬರೋ
ಏರು || ಜತ್ತಾಗಿ ಬಂದಾರೋ ಕಂಡಾರ ಮೌಲಾಗ ಕೇಳತಾರ ಅಂವಗ
ಕಿಮ್ಮತ್ತ ಹೇಳೋ ತಂದಿ ಪ್ಯಾಟ್ಯಾಗ ಮಿಕ್ಕಿ ಪೈಲ್ವಾನ
ಚ್ಯಾಲ || ಚಿತ್ತ ಇಟ್ಟ ಕೇಳರಿ ದೊರಿ ಖರೇ ವಚನ
ಎಣಿಸಿಕೊಟ್ಟರ ಕೊಡತೇನಿ ಒಂದು ನೂರು ಹೊನ್ನಾ || ೨ ||

ಏರು || ಹೇಳಿ ಅರಸ ಹೀಂಗಂದ ಮನಸಾಗೈತಿ ನಂದಾ
ತಗೋ ಕೊಡತೇನಿ ಸುದ್ದಾ ಇಟ್ಟಾನೋ ಅವನ ಮುಂದಾ
ಒಂದು ನೂರು ಹೊನ್ನ ತಗೊಂಡು ಮಾರಾಟ ಮಾಡ್ಯಾನ ಪ್ಯಾಟ್ಯಾಗ ಆಕ್ಷಣಕ ಮೌಲಾಗ
ಚ್ಯಾಲ || ಕೊಟ್ಟಾನೊ ತಗದ ಹೊಂಟದಾರಿ ಹಿಡಿದಾನೋ ಬ್ಯಾಗ
ಕುಶಿಯಾಗಿ ಮನದಾಗ ಅರಸನ ಸಂಗತೀಲೆ ಮೌಲಾಗ
ನೆನೆದಾನೋ ಆಗ ನೆನಸೂತ ಸಾಂಬಗ
ಇ || ಪುಣ್ಯೆ ಪ್ರಭೂಲಾ ಮರತೇಕ ಮಿಗಿಲಾ
ಅನಸ್ಯಾರೊ ಮೌಲಾ ತಿಳಿಸುವೆ ಖುಲ್ಲಾ ಕೇಳರಿ ಜಾಣಾ || ೩ ||

ಏರು || ಮೌಲಾ ಎಂಬುದು ಅರಸಗ ಗೊತ್ತಯಿಲ್ಲ ಇಲ್ಲರಿ ಏನೇನ
ಕುಂತ ಪಟ್ಟದ ಮ್ಯಾಲೆ ಅರಸ ತಗದಾನ ಕಲ್ಪನಾ || ಪಲ್ಲವಿ ||

ಕರಸ್ಯಾನೊ ಮೌಲಾಗ ತಿಳಿಸ್ಯಾನರಿ ಬ್ಯಾಗ
ನಮ್ಮ ಊರ ಸೀಮ್ಯಾಗ ಏನ ಹೇಳಲಿ ಈಗ
ದೊಡ್ಡ ಸರಪ ಐತಿ ಅಂಜಿಕಿ ರೇತರ ಜೀವಕ್ಕೆ | ಹೋಗಿ ಹೊಡಿಬೇಕ ಅದಕ್ಕ
ಏರು || ಕೇಳಿ ಪುಂಡ ಮೌಲಾ ಹೊಂಟಾ | ಅಡವಿ ಆರ‍್ಯಾಣಕ
ಚಿಕ್ಕೊಂತ ಅಲಕ್ಕ ಮೆಲ್ಲಕ | ಹೋಗಿ ಕಂಡ ಸರ್ಪ ಹೊಡೆದಾಕ್ಷಣಕ
ಮಾಡ್ಯಾರ ಮೂರ ತುಣಕ
ಚ್ಯಾಲ || ಕುಂತ ಅರಸ ಅಂದಾ | ಮಾಡಿದೆ ಮೂರ ತುಂಡಾ
ನಮ್ಮ ದಂಡಿನವೊಳಗ ಇಂವಾ ಪುಂಡ ಪೈಲ್ವಾನಾ || ೪ ||

ಇ || ಅರಸನ ಮನಸಾ ಆಗಿ ಹರುಷಾ | ಮತ್ತ ಮೌಲಾಗ ಅಂತಾನ
ಇನ್ನ ಒಂದ ಮಾತ ನಿಮಗ ತಿಳಿಸುವೆ ಸೂಚನಾ ||
ಏರು || ಇನ್ನ ತಿಳಿಸುವೆ ಗುರುತ ಇಡಬೇಕರಿ ಚಿತ್ತ
ಕೆರಿವೊಡ್ಡು ಒಳೆ ಶಿಸ್ತ | ಹಾಕಬೇಕೋ ಸುತ್ತ ಮುತ್ತ
ನೀರ ಮುಕ್ಕ ಕುಡಿಯಲಿಕ್ಕೆ ಇರೂದಿಲ್ಲ ಜನಕ್ಕ
ಇಷ್ಟು ಕೇಳಿದಾಕ್ಷಣಕ ಕಟ್ಟಿ ನಡಾ ಸಿಟ್ಟೀಲೆ ಹೊಂಟಾ
ಹೋಗ್ಯಾರಾರ‍್ಯಾಣಕ ಎತ್ತಿ ತಂದಾರೋ ಗುಡ್ಡಕ
ಒಡ್ಡ ಸುತ್ತ ಮುತ್ತ ಹಾಕ್ಯಾರೋ
ಕೆರಿ ಎಡಬಲಕ | ನೀರ ನಿಂದರುವದುಸಕ
ಚ್ಯಾಲ || ಮಾಡಿ ಒಳ್ಳಿ ಶಿಸ್ತಾ | ಮೌಲಾ ಅಲಿ ಸ್ವಂತಾ ||
ಹತಿಯಾರ ಸಂಗತೀಲೆ ಹಿಡುವರು ನೇಮ ಬಾಕ ಸಂಗೀನ || ೫ ||

ಇ || ಮತ್ತ ಮೌಲಾಗ ಕರೆಸಿ ಅರಸ ತಿಳಿಸ್ಯಾನೋ ಸ್ವಾನಾ
ಪುಂಡ ಮನಗಂಡ ಇದವೊಂದ ಮಾತ ಕೇಳಬೇಕೋ ನೀನಾ
ಏರು || ನಾ ಇಟ್ಟೇನಿ ಪಂಥಾ ಅಲಿ ಮೌಲಾಗ ತುರತಾ
ತರಬೇಕೋ ಹಿಡಿ ಗುರುತ ಈ ಕೆಲಸ ನಿನ ಹೊರತ |
ಆಗೂದಿಲ್ಲ ಯಾರ ಕಡಿಂದ
ಹೋಗಬೇಕೋ ನೀನ | ಹಿಡಿದು ತರಬೇಕೋ ಅವನ
ಅಂದರ ನಿನಗ ರಾಜ್ಯದಾ ಸಂಪೂರಣಾ ನಾ ಕೊಡುವೆನು ಇನ್ನಾ
ಚ್ಯಾಲ || ಕೇಳಿ ಪ್ರಭೂಲಾ ಅಂತಾರೋ ಖುಲ್ಲಾ
ನಾನೇ ಮೌಲಾ ಅಂತ ಜಿಗದ ನಿಂತ ಹಿಡಿಬಾ ನೀನನ್ನ || ೬ ||

ಇ || ಸಿಟ್ಟೀಲಿ ಅರಸ ದಿಟ್ಟಿಸಿ ನೋಡಿ ಹೌರಿ ಹೌಸಾಣಾ
ದಂಡ ತಗೊಂಡು ಮಾಡ್ಯಾನೋ ಜಂಗ
ನಡದೈತೋ ಧುಮಸ್ಯಾನೋ ||
ಏರು || ಮೌಲಾ ಅಲಿ ಪುಂಡ ಕಂಡ ಗಂಡ ಮನಗಂಡ
ಮಿಕ್ಕಿ ಕೊಯ್ದಾರೊ ರುಂಡ ಬಿದ್ದಾವರಿ ಚಂಡ
ಕಂಡ ಗಬರು ಅರಸ ಬಂದ ಅಲ್ಲಿಗೆ ಓಡಿ ಅಂತಾನೋ ಕೈಜೋಡಿ
ಬೇಡಿಕೊಂಬುವೆ ಕೇಳರಿ ಚಿತ್ತಿಟ್ಟ ನನಕಡಿ ಸ್ವಲ್ಪರ ದಯಮಾಡಿ
ಇಷ್ಟ ಈ ಅಹಂಕಾರ ಹಾದಿ
ಚ್ಯಾಲ || ಆದೆ ನಾ ಖೋಡಿ ಈ ತಪ್ಪ ನನಕಡಿ
ಉಳದ ಮಂದಿಯೆಲ್ಲಾ ಕೇಳರಿ ಮೌಲಾ
ಬಾಗಿ ಶಿರಾ ನಾವು ಆಗುವೆ ಕೂಡಿ ಇಂದ ಮುಸಲಮೀನ || ೭ ||

ಇ || ಕೇಳಿ ಮೌಲಾ ಓದಸ್ಯಾರೋ ಕಲ್ಮಾ ಅವರಿಗೆ ಆಕ್ಷಣಾ
ಲೆಕ್ಕ ಇಲ್ಲದ ಮಂದಿ ಮುಸಲ್ಮಾನ ಆಗ್ಯಾರೋ ಆ ದಿನಾ ||
ಏರು || ಶಾರ ಬಾಗಲಕೋಟಿ ಒಳ್ಳಿ ಮೋಜಿನ ಪ್ಯಾಟಿ
ತಿಳಿ ಶಾಯಿರ ಎಟ್ಟಿ | ಕಳಿಸುವೆ ಕುಂಡಿ ಸುಟ್ಟಿ
ಬಿಟ್ಟ ಪಡಾ ಓಡಿ ಹ್ವಾದಿಯೋ
ತಿಳಿ ನಿನ್ನ ಮನಕ ಜಾಹೀರ ಮರತೇಕ
ಇರತಾರೋ ಪೀರ ಮಲ್ಲೆಯಕಲ್ಲಾ ಹೊಂದಿ ಪಾದಕ್ಕ
ಗಂಧ ಏರಿಸಬೇಕು ಅಂತಾರೋ ಹುಸೇನಮಿಯ್ಯಾನ ಕವಿ
ಮಾಡಿ ಬಹು ತೊಡಕ ಮುರದಾಂಗ ವೈರಿ ಸೊಕ್ಕ
ಚ್ಯಾಲ || ಮಾಡಬ್ಯಾಡೋ ಡೌಲಾ | ಕಳಕೊಂಡಿ ರುಂಬಾಲಾ
ಹತ್ತೇನಿ ಬೆನ್ನಾ ಇಂದಿಗೆ ನಿಮಗ ಒಯೋ ಮನಿತನಾ || ೮ ||

* * *