. ಮುಹ್ಮದ ಪೈಗಂಬರರು ಹುಟ್ಟಿದಾಗ ಹಾಡಿದ ಜೋಗುಳ ಪದಾ

ಹೊಸ ಸಂದಾ ಕೇಳರಿ ಮುಂದಾ ಮತ್ತೊಂದಾ || ಪಲ್ಲವಿ ||

ಗುರು ನಬಿಸಾಹೇಬ ಮಕ್ಕೆ ಶಾರದಾಗ ಹುಟ್ಟಿ ಬಂದದ್ದು
ಏರು || ಅಬ್ದುಲ್ಲಾನ ಹೊಟ್ಟೀಲೆ ಹುಟ್ಟಿ ಉತ್ಪನ್ನಾದರೋ
ಆರತಾಸ ರಾತ್ರಿಯಿತ್ತೊ ಸುದ್ದಾ | ಬೀಬಿ ಅಮೀನಾರು ಬ್ಯಾನಿಯ ಎದ್ದು
ಇದು ಶರಣರ ಸಂದಾ ಕೇಳರಿ ಮುಂದಾ ಮತ್ತೊಂದಾ || ೧ ||

ಇ|| ಗಾಡ ಗಂಧರ್ವರು ದೇವಗನ್ಯಾರು ಇಳಿದು ಬಂದಾ
ಅವರು ಸ್ವರ್ಗದಿಂದ ನೀರು ತಂದು ಬಾಣತಿಗೆರೆದದ್ದು
ಏರು || ಮುತ್ತಿನಾ ತೊಟ್ಟಿಲಾ ಕಟ್ಟಿ ಅವರು ಜೋಗುಳ ಪಾಡಿದ್ದು
ನಬಿಸಾಹೇಬನ್ನ ತೂಗ್ಯಾರ ಹಿಡಿದು
ಜೋ ಜೋ ಎನ್ನೀರೆ ಜೈತುನ್ನಬಿಕೋ ಜೋ ಜೋ
ಅಲ್ಲಾಕು ಪ್ಯಾರೇ ಪೈಗಂಬರೀ ನಬಿ ನೂರೇಕು ಜೂಲಾ ಜೂಲಾರೇ ಜೋ ಜೋ
ಏಳು ಲೋಕಕ್ಕೆ ಅಧಿಪತಿ ನೀನು
ಶಿವನ ಕರುಣದಿಂದ ಹುಟ್ಟಿ ಬಂದವನೋ | ಜಗದ ಗುರುವಿನಂತೆ ನಬಿಸಾಹೇಬನೊ
ನಿನ್ನ ಜನ್ಮದ ನಾಮ್ಹೆಸರು ಮಹ್ಮದ ಹೌದೇನೋ ಜೋಜೋ || ೨ ||

ಇ|| ಅಬ್ದುಲ್‌ಸಾಬ ಕಾರ‍್ಯೇದಾಗ ಮಲಗಿದ್ದೊ
ಅವರು ಏಕಾಏಕಿ ಎಚ್ಚರಾಗಿ ಎದ್ದು ಕುಂತೋ
ಏರು || ಬಿಚ್ಚುಗತ್ತಿ ಪಾರಾ ಇತ್ತೊ ಶಿವದೂತರದೋ
ನಿಂತ ನೋಡಿದಾರೋ ದೂರದಲಿಂದೋ
ನಾಲ್ಕು ತಾಸು ರಾತ್ರಿಯಿತ್ತೋ ಕಾರ‍್ಯೇಕ ಬಂದದ್ದೋ
ಯಾರು ನೋಡಿದ್ದಿಲ್ಲಾ ಊರಾನ ಮಂದಿ ಅವರು ಬಂದಿದ್ದಾ
ಮುಂಜಾನೆದ್ದು ನೋಡಿದಾರೋ ಸ್ವಾಮಿ ಹುಟ್ಟಿದ್ದಾ
ತೂಗುತಿತ್ತೋ ತೊಟ್ಟಿಲಾ ಒಂದಾ |
ಕಲ್ಲ ದೇವರೆಲ್ಲಾ ಹೋಗಿ ಬಾವ್ಯಾಗ ಬಿದ್ದಾ || ೩ ||

ಇ|| ರಮಲಶಾಸ್ತ್ರ ಹೇಳಾವೊಬ್ಬ ಮುಂಜಾಲೆದ್ದೊ
ಅಂವಾ ನವಸಾರೆಂಬ ಅರಸನಂತೇಲಿ ನಡೆದುಬಂದಾ
ಏರು || ಮುಂದ ಆಗುದೆಲ್ಲಾ ಅಂವಾ ಬಿಚ್ಚಿಹೇಳಿದ್ದು
ಇಂದ ನಿನ್ನವೈರಿ ಹುಟ್ಟಿ ಬಂದಾ |
ಇನ್ನು ಮೂರು ತಿಂಗಳಿಗೆ ನೀನು ಸಾಯುವದೋ
ಹೀಂಗ ರಮಲಶಾಸ್ತ್ರ ಹೇಳಿದಾಂವ ತಿಳಿಸಿಬಂದದ್ದೋ
ಜೋ ಜೋ ಎನ್ನೀರೆ ಜೈತುನ್ನಬಿಕೋ ಜೋ ಜೋ
ತಾಯಿಯಿಲ್ಲದವನೋ ನಬಿಸಾಹೇಬನೋ ||
ಹುಟ್ಟಿದ ಐದು ದಿವಸಾತೋ ಮಕ್ಕಳ ಹಾಲು ಕುಡಿದವನೋ || || ೪ ||

ಹುಟ್ಟೂತ ಸತ್ತಳೋ ತಾಯಿ ಅಮೀನನೋ
ನಿನಗೆ ಹಾಲು ಕುಡಿಸಿದಾಕೆ ದಾಯಿ ಹಲೀಮನೋ
ಜೋ ಜೋ ಎನ್ನಿರೆ ಜೈತುನ್ನಬಿಕೋ ಜೋ ಜೋ
ಶಾರ ಸವದತ್ತಿ ಊರ ಮುಂದೆ ಕಿಲೇವ ಕಟ್ಟಿತೋ
ಈ ಕಿಲ್ಲೇದ ಮುಂದ ಪ್ಯಾಟಿಲೈನಾ ಬಂಗಲೆ ಹುಟ್ಟಿದ್ದಾ
ಅಪ್ಪಾ ಸುಲ್ತಾನಿ ವಸ್ತಾದಿ ಮಾಡಿ ಬುದ್ಧಿ ಕೊಟ್ಟಿದ್ದಾ
ಹಸ್ತ ಇಟ್ಟಿರೋ ತಲಿಮ್ಯಾಲೆ ತಂದಾ
ಅಜ್ಜ ಅಡವ್ಯಾ ಹೇಳಿದಾರೋ ಹೊಸಾ ಸಂದಾ ||
ಹೊಸಾ ಸಂದಾ ಕೇಳರಿ ಮುಂದಾ ಮತ್ತೊಂದಾ || ೫ ||

* * *

. ನಬಿಸಾಬರು ಮುಟ್ಟಿ ಜಗ್ಗಿದ ಪದಾ

ಸರೂ ದೈವಕ್ಕ ನಾ ನಿಮ್ಮ ಸೇವಕ ಮಾಡುವೆ ಶರಣಾ ನಿಮ್ಮ ಕರುಣಾ
ಇಡಬೇಕರಿ ಶ್ರೀಹರಿ ಐಶ್ವರ್ಯ ನಬಿಸಾಬ ಶರಣಾ || ಪಲ್ಲವಿ ||

ಏರು || ಪರಂಜ್ಯೋತಿ ಪ್ರಕಾಶ ನಿಮ್ಮಲಿಂದ ಹುಟ್ಟಿಸಿದಾನೋ ಜಗದೀಶಾ
ಓಂಕಾರ ಶಬ್ದ ಝೇಂಕರಿಸುವ ಸಮಯದಲ್ಲಿ ನಿಮ್ಮಾ
ನೌಖಂಡ ಮಂಡಲ ನಡಗತಿದ್ದಾವ್ರಿ ಸಾರೂತ ಕಲ್ಮಾ
ಬ್ರಹ್ಮಾಂಡ ಭೂಮಿಗಳಾದವ್ರಿ ನಿಮ್ಮ ನಗುತದ ಅಲ್ಮಾ
ನಿಮ್ಮದಸಿಂದಾ ಸಾಂಬಾ ತ್ರಿಲೋಕ ಜಗತುಂಡಾ
ಪ್ರೀತೀಲೆ ನಿಮ್ಮ ಜ್ಯೋತಿ ಜರಬೀಲೆ ಮಾಡ್ಯಾರ ಮಂಡಲನಾ || ೧ ||

ಇ|| ನಿಮ್ಮ ಕೌತೂಕ ಮಕ್ಕೇ ಮದೀನಕ ಆತರಿ ಭೂಷಣಾ
ಚಂದ್ರನ ವರಣಾ ತುಂಬಿ ತುಳುಕೂತ ಜಗಭರಿತ ಅದ್ಭುತ ಕಿರಣಾ
ಏರು || ಒಂದಾನೊಂದಿವಸಾ ಶರಣರದೋ ಆತರಿ ಮನಸಾ
ಶೃಂಗಾರ ವನಾವನಾಂತರ ತಿರುಗಾಡಿ ಹೋಗುದಕ
ಹೊಂಟಾರೋ ತಿಳಿದ ಬೆಳೆದ ತ್ವಾಟದ ತಾರೀಫ ನೋಡುದಕ
ಸಾಕ್ಷಾತ್ ಕೈಲಾಸ ಕಂಡಾಂಗ ಹೋಯ್ದಾವು ಹೊಳುವುದು ಮನಕ
ಹೋಗಿ ನಿಂತಾರೋ ಹಿಂದಾ ನೋಡೂತಾ ಕಣ್ಣ ತುಂಬಾ
ಗಿಡಾಗಂಟಿ ತಪ್ಪಲಾ ಅಂತಿದ್ದವು ನಬಿಸಾಬ ಶರಣಾ
ನಿಮ್ಮ ಕರುಣಾ ಇಡಬೇಕರಿ ಶ್ರೀಹರಿ ಐಶ್ವರ್ಯ ರಸೂಲಿಲ್ಲಾ ಶರಣಾ || ೨ ||

ಇ|| ಉತ್ತತ್ತಿ ನೋಡುದಕ ಆತರಿ ತಿನ್ನೂದಕ ಮನಾ
ಪೈಗಂಬರನಾ ಮಟ್ಟಿ ಹೊಡುವವಗ ಕೇಳ್ಯಾರಾಗ
ಏರು || ಮಟ್ಟಿ ಹೊಡುವವ ಅಂತಾನರಿ
ಒಂದು ಮಟ್ಟಿ ಹೊಡೆದರ ಒಂದು ಉತ್ತತ್ತಿ ಕೊಡತೇನರಿ
ಹೀಂಗ ಮಟ್ಟಿ ಹೊಡಿಲಾಕ ಗಟ್ಟಿ ಹಚ್ಚಿದಾನೋ ಶರಣರಿಗೆ
ಮಟ್ಟಿ ಹೊಡುವಾಗ ಕುಲುಕುಲು ನಗಿ ಬಂತೋ ಸೃಷ್ಟಿಕರ್ತನಿಗೆ
ಜಗ್ಯಾರ ಕಸುವೀಲೆ ಗಟ್ಟಿ ಹರದ ಬಿತ್ತರಿ ಮುಟ್ಟಿ
ಗಾಬಾಗಿ ನಿಂತಾರಾ ಮನಸ್ಸಿಗೆ ಅಂತಾರಾ ಧೋರಣಾ
ನಿಮ್ಮ ಕರುಣಾ ಇಡಬೇಕರಿ ಶ್ರೀಹರಿ ಐಶ್ವರ್ಯಾ ನಬಿಸಾಬ ಶರಣಾ || ೩ ||

ಇ|| ಮಟ್ಟಿ ಸಪ್ಪಳಾ ಕೇಳಿಕ್ಯಾಸ ಬಂದಾನೋ ಅಡರಾಶಿ ತರುಣಾ
ಮಟ್ಟಿ ಜಾಣಾ ದೂರದಿಂದ ಓಡುತ ಬಂದಾ
ಶರಣರಿಗೆ ಹೊಡೆದ ಬೇಮಾನಾ
ಏರು || ಗಡಾಗಡಾ ಗದ್ದರಿಸಿ ಆಕಾಶ ಥರಾಥರಾ ಥರಗುಡತಿತ್ತರಿ
ಮೇರುಮಂಡಲ ಬೇಹೋಶಾ
ಬೆಂಕಿದೇವ ಬಂದ ಲಂಕಾ ಸುಟ್ಟಾಂಗ ನಾ ಇಂವಗ ಸುಟ್ಟು ಬಿಡುವೆ
ಕ್ರೂರ ಕೋಪ ತಾಳಿ ವೈವರ್ಣಾ ಹೇಳತಾನ | ಗಾಳೀಲೆ ಹಾರಿಸುವೆ
ಲಗು ಅಪ್ಪಣಿ ಕೊಡರಿ ಭೂಪತಿ ಭೂಕಾಂತ ಬುಜಬಲ ಗುರುವೆ
ಬ್ಯಾಡಂತಾರೋ ಶರಣಾ ಮಾಡರಿ ಅಂತಃಕರುಣಾ
ತಪ್ಪ ನಂದಾಗೈತಿ ಗಪ್ಪನೆ ಹೋಗರಿ ಸುಮ್ಮನಾ
ನಿಮ್ಮ ಕರುಣೆ ಇಡಬೇಕರಿ ಶ್ರೀಹರಿ ಐಶ್ವರ್ಯ ನಬಿಸಾಬ ಶರಣಾ || ೪ ||

ಇ|| ಶರಣರಿಗೆ ಹೊಡೆದಿದಕ ಮಹಿಮೆ ಸತ್ತುಳ್ಳತನದ ಬಾಣಾ ಹೊಡೆದಾಕ್ಷಣಾ
ಕೈ ಒಣಗುತಾ ನಡೆದೀತು ಬ್ಯಾನಿ ಬಯಂಕರ ಬಾಧನಾ
ಏರು || ಉರುಪ ತಾಳದೆ ಹೊರಡುವಾ | ಬಳಲೂತ ಬೋರ‍್ಯಾಡಿ ಅಳಾಂವಾ
ತ್ವಾಟಾ ಮಾಟಾ ಎಲ್ಲಾ ಪಾಟಾ-ಪೋಟಾ ಕುಲ್ಲಾ ಬಂತ ಒಣಗುದಕ
ಗಿಡಗಂಟಿ ಎಲ್ಲಾ ಗಂಟಿ ಬಾರಿಸತಾವ ನೀರ ಅರಬಾಗಿದಕ
ತಾಯಿ ಬುತ್ತಿ ತಂದ ಮುತ್ತಿನಂತ ತ್ವಾಟಾ ಹೀಂಗ್ಯಾಕಾತ್ರಿ ಕಾಯಿಕ
ಚಿಂತಿ ಮಾಡುಳೋ ಮೋಹನಾ ನೋಡಿ ತನ್ನ ಮಗನ್ನಾ
ನಿಂತ ಕೇಳತಾಳ ತಾಯಿ ತ್ವಾಟ ಆಗಿದ್ದ ಹಾಳ ಕಾರಣಾ
ನಿಮ್ಮ ಕರುಣಾ ಶ್ರೀಹರಿ ಐಶ್ವರ್ಯ ನಬಿಸಾಬ ಶರಣಾ || ೫ ||

ಇ|| ದುಃಖ ಸಾಗರದಲ್ಲಿ ಅಂತಾನ ಬಾಯಿಲಿ ಕಥನಾ ನನ್ನವರನಾ
ಒಬ್ಬ ಮುದುಕಗ ಹೊಡೆದಲ್ಲಿ ಹೀಂಗಾತ ಕೇಳಿ ತಾಯಿ ನೀನಾ
ಏರು || ಛೀ ದುಷ್ಟ ಮಗನೆ ತಿಳಿಯದೆ ಖೊಟ್ಟಿ ಆದರುಷ್ಟದವನೆ
ಸಾಕ್ಷಾತ್ ಸೃಷ್ಟಿಕರತಾ ಮಾಡಿದ ಸೃಷ್ಟಿ ಅವತಾರೋ
ಮುದುಕ ಅಲ್ಲ ಅವರೋ ಪ್ರಗುಣಾ ಆಗುವರೋ ಪ್ರೇಮ ಪೈಗಂಬರರೋ
ನಮ್ಮ ಮೋಕ್ಷ ಮಾರ್ಗದಿ ದೀಕ್ಷಾ ಕೊಡುವ ಸಾಕ್ಷಾತ್ ಬಂದಿದ್ದರೋ
ಅಂಧಕಾರ ದುಂದಿನಲ್ಲಿ ಹೀಂಗಾತ ಕೇಳಪ್ಯಾಲಿ
ನಡಿಪಾದಕ ಬಿದ್ದು ಕ್ಷಮಾ ಬೇಡಿಕೊಂಡ ಬರೂಣಾ
ನಿಮ್ಮ ಕರುಣಾ ಇಡಬೇಕರಿ ಶ್ರೀಹರಿ ಐಶ್ವರ್ಯ ನಬಸಾಬ ಶರಣಾ || ೬ ||

ಇ|| ಶರಣರ ಪಾದಕ ಬಿದ್ದು ಹೇಳತಾನೋ
ಕೈಮುಗಿದು ಪ್ರಾಣಕೊಡುವೆ ನಾನಾ
ಗರ್ವ ಅಹಂಕಾರದಲ್ಲಿ ಪೂರಾ ಹೊಡೆದಲ್ಲಿ ಕ್ಷಮಿಸರಿ ನನ್ನಾ
ಏರು || ಶರಣರು ಆಗಿ ಬಹು ಪ್ರೇಮಾ ಕ್ಷಮಿಸಿ ಓದಸ್ಯಾರೋ ಶ್ರೀಕಲ್ಮಾ
ಕಲ್ಮಾ ಓದಿದ ಬಳಿಕ ಆದೀತೋ ಎಲ್ಲಾ ಬೆಳಕ ಹೋದೀತೊ ಓ ಪೂರಾ
ಶ್ರೀಮಂತರೆಲ್ಲರು ಊರಾನ ರೈತರು ಬಂದು ನಿಂತಕ್ಯಾರಾ
ಶಿರಬಾಗಿ ಸಾಷ್ಟಾಂಗ ಹಾಕಿದರೋ ನೋಡಿ ಕಲ್ಮೆದ ಹುಜೂರಾ
ತ್ವಾಟಾ ಆತರಿ ಹಸರಾ | ತ್ವಾಟದ ಗ್ರಾಮ ಮಿಸರಾ
ನೋಡಿ ಭಕ್ತರು ಮುಕ್ತಿಗೆ ಹೊಂದ್ಯಾರೋ ರತನಾ
ನಿಮ್ಮ ಕರುಣ ಇಡಬೇಕರಿ ಶ್ರೀ ಹರಿ ಐಶ್ವರ್ಯ ನಬಿಸಾಬ ಶರಣಾ || ೭ ||

ಇ|| ಶಾರ ಬಾಗಲಕೋಟಿ ಐತಿ ಮೋಜಿನ ಪ್ಯಾಟಿ ಸಜ್ಜನಾ ಪಟ್ಟಣಾ
ಕೇಸುಪೀರಾ ಶ್ರೀ ದಸ್ತಗೀರಾ ವರಾ ಕೊಟ್ಟು ಸಲುವ್ಯಾರ ನಮ್ಮನ್ನಾ
ಏರು|| ಭರ ಬಾಜಾರದಲ್ಲಿ ಅವರ ದರಗಾ | ನೋಡರಿ ಪವಿತ್ರದ ಜಾಗಾ
ಶಾಹೀರ ಶಾಣ್ಯಾನಾಗಿ ಬಂದೀತ ಮನಸಾಗಿ ಜಾಹೀರ ಸಭಾದೊಳಗ
ಹುಲಿ ಹೂಂಕರಿಸಿತ್ತ ಹುರುಪಾಗಿ ಬಂದಿತ್ತ ಬಿತ್ತ ಬಲಿಯೊಳಗ
ಇಲಿಯಾಗಿ ಬಂದದ್ದು ಬಲಿಯೆಲ್ಲಾ ಹರದದ್ದು ಗೊತ್ತಿಲ್ಲೇನೋ ನಿನಗ
ನೆನಪ ಹಿಡಿಯೋ ಇಲಿದಾ | ಮರತೇನೋ ಬಿಡಿಸಿದ್ದಾ
ಅಂಬಗ್ಯಾರನಾಗಿ ಕ್ಯಾರಾ ಹೊರಬೇಕ ಜೋಕುಮಾರ ನೀನಾ
ತೂರ ಬೂದಿನಾ ಓಣಿ ತಿರುಗಾಡಿ ಕುಣಿದಾಡಿ ಜ್ವಾಳ ತಗೊಂಡ ಬಾಗಿದ್ದನಾ || ೮ ||

* * *

. ಮುಹ್ಮದ ಪೈಗಂಬರರು ಮಾಡಿಸಿದ ಮದುವಿ ಪದಾ

ಕುಂತಿರು ದೈವಾ ಕೂಡಿರಿ ಸರ್ವರು ಸಂಪೂರ್ಣ | ಮಾಡಿ ಕರುಣಾ
ಏರು || ಅಜ್ಞಾನಿ ನಿಮ್ಮ ಕಂದಾ | ಅರಜ ಮಾಡುವೆ ಒಂದಾ
ಭೂಮಿಗೆ ಅಧಿಕಾರಾ | ಸ್ವಾಮಿ ನಬಿಸಾಬ ಶರಣಾರ
ಓದಿ ಹೇಳ್ಯಾರೋ ಶಾಸ್ತರಾ | ಅಬೂಬಕರ ಉಮರಾ
ಉಸ್ಮಾನ ಅಲಿ ಹೈದರಾ | ಶಾಸ್ತರಾ ತಿಳಿ ವಿಸ್ತಾರ ||೧||
ಇಳು || ಒಬ್ಬ ಬಡವಾ ಬಂದಾ | ಅಂವಾ ಅರಜ ಮಾಡ್ಯಾನಾ
ಸಹಜ ಸ್ವಾಮಿ ಶರಣರ ಮುಂದಾ | ಸವಾಲೈತರಿ ನಂದಾ
ಏರು || ನನ್ನ ಲಗ್ಗನಾ ಆಗಿಲ್ಲಾ | ನೀವೇ ಮಾಡರಿ ಅಂತಾ
ಹಿಡಿದನೋ ಪಾದಾ | ಸರುವ ಹೇಳ್ಯಾನೋ ಬೇದಾ
ಯಾರ‍್ಯಾರಿಲ್ಲರಿ ನಮಗಿನ್ನಾ | ಸತ್ತುಳ್ಳ ಶರಣಾ
ಕೇಳಿ ಬಡವನ ವಚನಾ | ಮಾಡ್ಯಾರಿ ಕರುಣಾ || ೨ ||

ಇ|| ಧರಣಿಯ ಪಾಲಕ ಶಿವದೂತ ಜಿಬ್ರಾಹಿಲನಾ | ತಿಳಿಸ್ಯಾರೋ ವಚನಾ
ಹೋಗಿ ಭೂಮಿಮ್ಯಾಗ ಹೇಳೋ ನಬಿಸಾಹೇಗ
ಸಾವುತನಾ ಬಡವಾ ಲಗ್ನ ಆಗಿದ್ದ ದಿನಾ | ಮಾಡರಿ ಕರುಣಾ
ಏರು || ಹರುಷಾಗಿ ಜಿಬ್ರಾಹಿಲನಾ | ತಡಮಾಡದೆ ನಡದಾನೋ
ಮರತೆದೊಳಗ ಬಂದನೋ | ಸ್ವಾಮಿಗೆ ಹೀಂಗ ಅಂದನೋ
ಮಜಕೂರ ಹೇಳಿ ತೀವ್ರಾ | ಜಿಬ್ರಾಹೀಲ ಹೊಂಟಾ
ಮಿತ್ರರಿಗೆ ತಿಳಿಸಿ ಹೇಳ್ಯಾರೋ ನಬಿಸಾಹೇಬ ಶರಣಾ || ೩ ||

ಇ|| ಯಾರ ಕೊಡತೀರಿ ಹೆಣ್ಣಾ | ಕುಸಿಲಿಂದ ಮಾಡುವೆ ಲಗ್ಗನಾ
ಕೇಳಿ ಕುಂತಾರ ಸುಮ್ಮನಾ | ಸರ್ವರು ಸಂಪನ್ನಾ
ಒಬ್ಬಾಂವ ಅಂತಾನಾ | ಕೇಳಿ ಬರತೇನಿ ಸತಿಯಳನಾ
ಏರು || ನಬಿಸಾಹೇಬ ಶರಣಾ | ತಿಳಿಸಿ ಹೇಳ್ಯಾರ ಮಿತ್ರರನಾ
ಬಡವನ ಮರಣಾ | ಮದುವಿ ಆಗಿದ್ದ ರಾತ್ರಿ | ಇಂದಾ ಸಾವೂದು ಖಾತ್ರಿ
ಜಿಬ್ರಾಹಿಲ ಬಂದು ಹೇಳಿ ಹೋದ ವರ್ತಮಾನ || ೪ ||

ಇ|| ಕೇಳಿ ಸರ್ವರು ಮಜಕೂರಾ | ಮಾಡಿ ಹೊಂಟಾರೋ ಅಂವಸರಾ
ಬಂದು ಮನಿಗೆ ತೀವರಾ | ಹೇಳ್ತಾರ ಹೇಣ್ತಿಗೆ ವಿಸ್ತಾರಾ
ಕಬೂಲ ಆಗೇನಿಲ್ಲಾ | ನಿರವಾಯಿಲ್ಲಾ
ಏರು || ಒಂದೈತಿ ವರಾ | ಮಗಳಿಗೆ ನೀ ಕೇಳ ಅವಸರಾ
ನನ್ನ ಮದನ ಸುಂದರ ಪತಿರಾಜ | ನಿಮ್ಮ ವಚನಕ್ಕೆ ನಾನು ಇಲ್ಲ ಬ್ಯಾರಿ
ಇರತೇನ ತಾಬೇಸರಿ | ಹೇಳ್ಯಾನ ಸರ್ವಸಾರಿ
ಲಗ್ನದ ರಾತ್ರಿ ಆಗೂದು ಅವನ ಮರಣಾ || ೫ ||

ಇ|| ಈ ಮಾತಕೇಳಿ ಅಂತಾಳ ತನ್ನ ಗಂಡನ್ನಾ | ಕೊಡುವದಿಲ್ರಿ ಹೆಣ್ಣಾ
ನನ್ನ ಹರೆಯದ ಮಗಳು | ಎದಿಮ್ಯಾಗ ಕುಂತಾಳು
ಏರು || ಮುಂದ ಎಷ್ಟು ದಿವಸ ಹಾಕ್ಯಾಳು ರಂಡಿತನಾ
ಹ್ಯಾಂಗ ಆಗಿರಿ ಕಬೂಲಾ | ಹಂತವಗ ಕೊಟ್ಟೇನು ಫಲಾ
ನಿಮಗ ಯಾಕ ತಿಳಿಲಿಲ್ಲಾ | ನಾನು ಏನು ರಾಜಿ ಇಲ್ಲಾ
ಉರಲಾ ತಂದಿಟ್ಟೀರಲ್ಲಾ | ಮಗಳು ಕೇಳ್ಯಾಳಲ್ಲಾ || ೬ ||

ಇ|| ತನ್ನ ತಂದಿಗೆ ಅಂತಾಳ ವಚನ ನೀವು ಕೊಟ್ಟಿರೇನವಗ
ಮಾಡಿ ಕೊಡಬೇಕ ನನಗ | ನಬಿಸಾಬ ಶರಣರ
ವಚನ ಮೀರುವದು ಹ್ಯಾಂಗ
ಏರು || ಕೇಳೂನು ಹೇಳಿದಾಂಗ | ಕೊಡ್ರಿ ಸಾವುವಂವಗ
ಬಡವನ ಕೂಡ ಆಗಲಿ ನನ್ನ ಲಗ್ಗನಾ
ಅಂತಾಳ ತಾಯಿ ನಿಂದೇನ ಮಗಳ ದೈವಾನಾ | ನಾನು ಮಾಡಲೇನಾ || ೭ ||

ಇ|| ಸಾವುವವನ ಕೂಡಾ ಲಗ್ಗನಾ ನೀ ಆಗಬ್ಯಾಡಾ
ಮುಂದ ಎಷ್ಟು ದಿವಸ ಕಳದಿ ಮಗಳ ನೀನಾ | ಮಾಡರಿ ಕರುಣಾ
ಏರು || ಬ್ರಹ್ಮಾ ಬರದದ್ದ ಬರಿ | ಯಾರಿಗೆ ತಪ್ಪಿದಲ್ಲರಿ
ನನ್ನ ಹೊಟ್ಟೇಲೆ ಶ್ರೀಹರಿ ಕೊಟ್ಟಾರ ಮಕ್ಕಳ ಮರಿ
ಪುತ್ರರ ಹುಟ್ಟಿ ಸತ್ತರ ದುಃಖ ಸಾವೂತನಾ || ೮ ||

ಇ|| ಹೀಂಗ ಇದ್ದರ ಅವನ ಕೂಡ ಆಗೂವೆ ಲಗ್ಗನಾ
ಇದಕ್ಯಾರ ಇಲ್ಲೋ ಬೇರೆ ಯತನಾ
ಏರು || ನನ್ನ ಹೊಟ್ಟೇಲೆ ಕಂದ ಹುಟ್ಟಿ ಸತ್ತರ ನಂದೀತೋ ಮನಾ
ಕೇಳ ತಾಯವ್ವಾ ನೀನಾ | ನನ್ನ ಬರದಂತೆ ದೈವಾನಾ
ಬಡವನ ಕೂಡ ಆಗಲಿ ಲಗ್ಗನಾ || ೯ ||

ಇ || ಈ ಮಾತು ಕೇಳಿ ಸಂತೋಷ ಆದೀತು ಮನಾ | ಮಾಡರಿ ಕರುಣಾ
ದೈವದಾಗ ಅಂವಾ ಬಂದಾ ಕೈಮುಗಿದ ಹೀಂಗ ಅಂದಾ
ಆಗಲಿ ಮಗಳ ಲಗ್ಗನಾ | ಮಾಡರಿ ಕರುಣಾ
ಏರು || ಕೂಡಿದಂತಾ ಭಕ್ತರಾ | ಪ್ರೀತಿಯುಳ್ಳ ಮಿತ್ರರಾ
ಮನಿಗೆ ಬಂದಾರು ತೀವ್ರ | ಮಾಡಲಿಕ್ಕೆ ಲಗ್ಗನಾ
ಹೇಳರಿ ಮಗಳಿಗೆ ತಿಳಿಸಿ ನಬಿಸಾಬ ಇದ್ದಂತಾ ಬುಯಾನಾ || ೧೦ ||

ಇ|| ಲಗ್ನದ ರಾತರಿ | ಅಂವಾ ಸಾವೂದು ಖಾತ್ರಿ
ಏರು || ಇದಕ ಯಾರಿಲ್ಲೊ ಯತನಾ | ಐತಿ ಸಾಂಬನ ವಚನಾ
ಅಂತಾಳೋ ನನ್ನ ದೈವಾನಾ | ಮಾಡಲಿನ್ನೇನಾ
ಬಪ್ಪರೆ ಮಗಳಂತ ಮಾಡ್ಯಾರೋ ಲಗ್ಗನಾ | ಮಾಡರಿ ಕರುಣಾ || ೧೧ ||

ಇ|| ಬ್ಯಾರೊಂದು ಮನಿಯಾಗ ಇಟ್ಟಾರೋ ಕೂಡಿ ಸತಿ ಪತಿನ್ನ
ಆದಿಂದ ಲಗ್ಗನಾ | ತುಂಟಿ ಎರಡು ‘ಆಗಲೆ’ ಸಂಗತಿಲೆ
ಏರು || ಕೊಟ್ಟಾರ ಮುಸಲ್ಮಾನಿ ಧರ್ಮಾ
ಐತಿ ಶಾಸ್ತ್ರ ದಾನಾ | ಮಾಡರಿ ಕರುಣಾ
ಗಂಡ ಮಾಡತಾನೋ ವಿಚಿತ್ತರಾ | ಮರಣ ಬರದಾನೋ ಶಂಕರಾ
ನಬಿಸಾಬ ಶರಣರಾ | ಹೇಳಿದಂತಾ ಅಕ್ಷರಾ
ಸತಿ ನಾ ಮಾಡಲೇನಾ | ಹ್ಯಾಂಗ ಬರುವುದು ಮರಣಾ || ೧೨ ||

ಇ|| ತಿಳಿದಾವ ಆಗ ಮನಸಿನ್ಯಾಗ ಮಾಡಿಕೊಂಡ ಮಲಕೊಂಡ ಸುಮ್ಮನಾ
ಮಾಡಿ ಸಾಂಬನ ಧ್ಯಾನಾ || ಸತಿ ಆಗ ಅಂತಾಳ
ಆಗ ಹ್ಯಾಂಗ ಬರುವುದು ಗಂಡನ ಮರಣಾ
ಏರು || ನೋಡಬೇಕು ಅಂತಾಳ ಇನ್ನಾ | ಇಟ್ಟಾಳ ಏಕ ನಿಷ್ಠಿನಾ
ಬಾವಾ ಆಗಿ ಬಂದಾರೋ ಜಿಬ್ರಾಹಿಲ ಆಕ್ಷಣಾ | ಮಾಡರಿ ಕರುಣಾ
ಮೂರು ದಿವಸ ಆತೋ ಇಲ್ಲ ಹೊಟ್ಯಾಗ ಅಸನಾ | ಹೋಗೂದು ಪ್ರಾಣಾ || ೧೩ ||

ಇ || ಮದುಮಗಳು ಕೇಳಿ ಬ್ಯಾಗ ಕರದಾಳ ಬಾವಾಗ ಮುಂದಾ
‘ಆಗಲೆ’ ಇಟ್ಟು ಆಗಲಿ ಭೋಜನಾ | ಮಾಡರಿ ಕರುಣಾ
ಏರು || ಊಟ ಆದಿಂದ ಸಂತುಷ್ಟ | ಹಸ್ತ ತಲಿಮ್ಯಾಲೆ ಇಟ್ಟಾ
ಬಾವಾ ಹೀಂಗ ಹರಕಿ ಕೊಟ್ಟಾ | ತೆರದೀತೋ ನಿನ್ನ ಅದರುಷ್ಟಾ
ಮುತ್ತೈದಿತನಾ ಇರಲಿ ಕಡಿತನಾ | ನೋಡ ನನ್ನ ಭಕ್ತಿನಾ || ೧೪ ||

ಇ|| ಒಂದ ಹಾವು ಬಂತು ನುಂಗಬೇಕಂತ ಬಡವಗ ಸರೂರಾತರಿನ್ಯಾಗ
ಆ ಉಂಡ ‘ಆಗಲೆ’ ಅಡ್ಡ ಬಂದಾವು ನುಂಗೀತೋ ಅದಕ
ಏರು|| ಸಿಕ್ಕಿತೋ ಗಂಟಲದಾಗ | ಮರಣ ಬಂತೋ ಹಾವಿಂದಾ
ಕಸುವೀಲೆ ನುಂಗಿ ತುಣುಕಾಗಿ ಬಿಟ್ಟಿತೋ ಪ್ರಾಣಾ ಮಾಡರಿ ಕರುಣಾ
ಬೆಳಗಾದಿಂದ ಕರಕೊಂಡು ಮಿತ್ರರನ್ನಾ | ಬಂದರೋ ಶರಣಾ || ೧೫ ||

ಇ|| ಶರಣರು ಅಂತಾರೋ ಹೋಗಿ | ಆ ಮದುಮಗಳಿಗೆ ಬಾಕಲ ತೆರಿಹೊರಗ
ತರತೇವಿ ಆ ಹೆಣಾ | ಮಾಡರಿ ಕರುಣಾ
ಏರು || ಕೊಟ್ಟಾಳ ಹೀಂಗ ಉತ್ತರಾ | ಮಲಗ್ಯಾರ ನಮ್ಮ ಹಿರಿಯರಾ
ನಬಿಸಾಹೇಬ ಶರಣಾ | ತಿಳಿದು ಆಗ ವಿಚಿತ್ರಾ
ಕರದಾರೋ ಆಗ ಎಲ್ಲರೂ | ತಿಳಿದಾರೋ ಆದ ಮಜಕೂರಾ
ನಬಿಸಾಹೇಬ ಶರಣಾ | ಮಾಡಿ ಸಾಂಬನ ಧ್ಯಾನಾ || ೧೬ ||

ಇ|| ತೆರದೀತೋ ದೈವಾನಾ | ಅವರು ಜೋಡಿಲಿಂದ
ಕೂಡಿ ಮಾಡುವರೋ ಬಾಳೇವನಾ
ತೆರದೀತೋ ದೈವಾನಾ | ತಿಳಿಯದೆ ಅವನ ತಂತರಾ
ಏರು || ಇಟ್ಟು ಅಡಿಪ್ರಾಸ ಮಾಡಿ ಹಾಡುವವನೋ ಜಾಣಾ
ಮಾಡರಿ ಕರುಣಾ | ನೀನು ಸಾಂಬನ ಧ್ಯಾನಾ | ಮಾಡೋ ಕಡಿತನಾ
ಲಚಮನಸಿಂಗ ಹೀಂಗ ಹೇಳಿ | ಮುಗಸ್ಯಾರೋ ಪುರಾಣಾ || ೧೭ ||

* * *

. ಮುಹ್ಮದ ಪೈಗಂಬರರು ಮೊಮ್ಮಕ್ಕಳನ್ನು ಹೊತ್ತು ನಮಾಜು ಮಾಡಿದ ಪದಾ

ಕೈಜೋಡಿ ದೈವಕ ಬೇಡಿಕೊಂಬುವೆ
ಇಟ್ಟ ತಮ್ಮ ಪ್ರೇಮಾ ಕುಂತ ಕೇಳರಿ ಸುಮ್ಮಾ || ಪಲ್ಲವಿ ||

ಏರು || ತಿಳಿಸುವೆ ಸೊಲ್ಪ ಅಲ್ಪಾ ಕಂದಾ
ತಪ್ಪಾ ಆದರ ನಂದಾ | ಕ್ಷಮಿಸರಿ ಇಂದಾ
ಚಂದದಿಂದ ಪ್ರೀತಿಯಿಂದ | ನಾನು ಓದುವೆ ಕಲ್ಮಾ | ಕುಂತ ಕೇಳರಿ ಸುಮ್ಮಾ || ೧ ||

ಇ|| ದುರ್ಗದ ಬೈಲಾಗ ಹೋದಬ್ಯಾರೆ ಜಗಳಾಡಿ ತಮ್ಮಾ
ಹೋಗಿದ್ದೀಯೋ ಹುಮ್ಮಾ
ಏರು || ಸಾಂಬಗ ಸಲಾಮ | ದಿವಾನಿ ಸುನ್ಯಾಗ ತೋರಸತೇನಂತಾ
ಒಳ್ಳೆ ಇಟ್ಟೀದಿ ಪಂತಾ | ಅದು ಬಿಟ್ಟು ಕೈಜೋಡಿ ಬೇಡಿಕೊಂತೇನಂತ
ಹಡಸಿ ತಮ್ಮಾ | ಕುಂತಕೇಳರಿ ಸುಮ್ಮಾ | ಬಿಡೂದಿಲ್ಲ ಸಭಾದಲ್ಲಿ || ೨ ||

ತುಳದ ಮಾಡುವೆ ನರಮಾ | ಕಿತ್ತೇನೋ ನಿನ್ನ ಚರಮಾ
ಏರು || ನಬಿಸಾಹೇಬರಿಗೆ ಮೇ ಅರಾಜು ಮೂರು ಸರತಿ ಆಗಿತ್ತು
ಸಲಾಮ ಶಿವನ ಕಡಿಲಿಂದ ಬಂದಿತ್ತು
ಅತ್‌ಹಿಯ್ಯಾತ್ ಓದಿ ನೋಡೋ ಪೂರ್ಣಾ
ಶಾಸ್ತರ ನಮ್ಮಾ | ಕುಂತ ಕೇಳರಿ ಸುಮ್ಮಾ || ೩ ||

ಹುಚ್ಚನಾಯಿ ಬೊಗಳಿದಂಗ ಬೊಗಳತಿ ಬಿಟ್ಟ ಧರ್ಮಾ
ಮೆಚ್ಚಲಿಕ್ಕಿಲ್ಲಾ ಹರಿಬ್ರಹ್ಮಾ
ಏರು || ನಬಿಸಾಬರ ಮೊಮ್ಮಕ್ಕಳು ಹಸೇನ ಹುಸೇನಾ
ಮುತ್ತಿನಂಥ ರತನಾ ಜೋಡಿಲೆ ಕೂಡಿ ಆಡುವರೋ
ಮಸೂತಿ ಹೊರಗ ಅಣ್ಣಾ ತಮ್ಮಾ ಕುಂತ ಕೇಳರಿ ಸುಮ್ಮಾ || ೪ ||

ಇವರ ಇಬ್ಬರಮ್ಯಾಲೆ ಮುತ್ಯಾ ನಬಿಸಾಹೇಬ ಬಹು ಪ್ರೇಮಾ
ಹುಟ್ಟಶ್ಯಾನ ಹರಿಬ್ರಹ್ಮಾ
ಏರು|| ರಸೂಲಿಲ್ಲಾ ದೈವದ ಸಂಗತೀಲೆ ನಮಾಜು ಮಾಡತಿದ್ರೋ ಕೂಡಿ
ಅಂತಾ ವ್ಯಾಳೇಕ ಓಡಿ ಹೋಗಿ ಕುಂತಾರ ಮುತ್ಯಾನ ಬೆನ್ನಿನ ಮ್ಯಾಲೆ
ಜೋಡೀಲೆ ಅಣ್ಣ ತಮ್ಮಾ | ಕುಂತ ಕೇಳರಿ ಸುಮ್ಮಾ || ೫ ||

ಇ|| ಮನದಲ್ಲಿ ವಿಚಾರ ಮಾಡುವರೋ ನಬಿಸಾಹೇಬರು ನಮ್ಮಾ
ಕುಂತಾರ ಅಂತ ಅಣ್ಣ ತಮ್ಮಾ
ಏರು || ತನ್ನ ಬೆನ್ನ ಮ್ಯಾಲಿಂದ ಇಬ್ಬರಿಗೆ ಇಳಿಸಬೇಕಂತಾ
ಶಿವನ ಧ್ಯಾನದಲ್ಲಿ ಕುಂತಾ
ಅಂತಾರ ನಮಾಜ ಅಪಮಾನ ಆಗೂದು ಅಂತಾ
ಬಿತ್ತ ಗುಮ್ಮಾ | ಕುಂತ ಕೇಳರಿ ಸುಮ್ಮಾ  || ೬ ||

ಶಿವನ ಅಪ್ಪಣಿಯಿಂದ ಆಕಾಶವಾಣಿ ನುಡಿತರಿ ನೇಮಾ | ಆಗೂದಿಲ್ಲಾ ಅಧರ್ಮಾ
ಏರು || ಈ ಸಪ್ಪಳ ಕೇಳಿ ಬಂತರಿ ರಸೂಲಿಲ್ಲಾ ಕಿವ್ಯಾಗ | ಖುಷಿ ಆಗ್ಯಾರ ಆಗ
ಮುಗದಿಂದ ನಮಾಜ ಮೊಮ್ಮಕ್ಕಳಿಗೆ ಮಾಡ್ಯಾರ ಪ್ರೇಮಾ | ಕುಂತ ಕೇಳರಿ ಸುಮ್ಮಾ || ೭ ||

ಸುಲೇಮಾನ ಶರಣರೊಳಗ ಹೆಚ್ಚಿಗೆ ಅಂದಿದ್ದಿ ಉತ್ತಮಾ
ನೀ ಎಂಥಾ ಗುಲಾಮಾ ||
ಏರು || ನಬಿಸಾಹೇಬರಕ್ಕಿಂತ ಪದವಿ ಹೆಚ್ಚಿಗೆ ಯಾವ ಶರಣರನಾ
ಕೊಟ್ಟಿಲ್ಲಾ ಆ ಭಗವಾನಾ | ನಾ ನಬಿಸಾಹೇಬರ ಓದುವೆ ಕಲ್ಮಾ
ಕೊಡುವೆ ಈ ಜಲ್ಮಾ | ಕುಂತ ಕೇಳರಿ ಸುಮ್ಮಾ || ೮ ||

ಇ|| ತಿಳೂತೈತಿ ಎಷ್ಟೈತಿ ನಿಂದು ನೋಡುವೆ ದಮ್ಮಾ | ಬೇದಿಬಿಟ್ಟ ಶ್ರಮಾ
ಏರು || ಆಡಿ ನೀ ಆಟಾ ಕೆತ್ತಿಗೂಟಾ ಬಡದಾಂಗ ನಿಮ್ಮನ್ನಾ
ನೀ ಕೇಳೋ ಮೋದೀನಾ | ಬಣ್ಣ ಕುಂಕುಮ ಹಣೆಗೆ ಹಚ್ಚಿದಲ್ಲೆ
ಕಾಣಸತಿದಿ ನೀ ಚಂದ್ರಮಾ | ಕುಂತ ಕೇಳರಿಸುಮ್ಮಾ || ೯ ||

ಇ|| ನಾ ಆಟ ಆಡಿದ್ದು ತಗದಿ | ಹಣೆಗೆ ಹಚ್ಚಿದ ಕುಂಕುಮಾ
ಅಂದಿ ಧೇಟ ಹರಾಮಾ |
ಏರು || ನೀ ಆಡಿ ಆಟಾ ಮುದುಕ ಆದಿ ಹಚ್ಚಿ ಕುಂಕುಮಾ
ನಿಂದು ಬ್ಯಾರೇ ಐತೇನ ಧರ್ಮಾ | ನಾನೇನು ಮುಸಲ್ಮಾನ ಇದ್ದು
ನಮದ್ಹ್ಯಾಂಗ ಹರಾಮಾ | ಕುಂತ ಕೇಳರಿ ಸುಮ್ಮಾ || ೧೦ ||

ಇ|| ಕವಿಕಲ್ತ ಹಾಡಾಂವಾ ಅಂತ ಬೊಗಳತಿ
ಇಟ್ಟ ವರಮಾ | ನೀ ಥೇಟ ಹಜಾಮಾ
ಏರು || ಶಾರ ಬಾಗಲಕೋಟ್ಯಾಗ | ಪೀರ ಮಲ್ಲೆಕಲ್ಲಾ
ನೆನದಾರೊ ಘಟ್ಟಿ | ಹಾಡುವೆ ಕವಿಕಟ್ಟಿ
ಹುಸೇನಮಿಯ್ಯಾನ ಕೂಡ ವಾದ ಹಾಕಬ್ಯಾಡೋ ಸುಧಾಮಾ
ಕುಂತ ಕೇಳರಿ ಸುಮ್ಮಾ

* * *

ಮುಹ್ಮದ ಪೈಗಂಬರರು ಮೇ ಅರಾಜಕ್ಕೆ ಹೋಗಿ ಬಂದ ಪದಾ

ಸಾಕ್ಷಾತ್ ಶಿವನ ನೇಮಾ ಮಾಡುವೆನು ಜನಕ ಕ್ಷೇಮಾ
ಇ|| ಭೂಮಿಮ್ಯಾಲೆ ಮನುಷ್ಯರ ಜಲ್ಮಾ | ಮುಕ್ತಿ ಆಗಮಾ
ಮುಹ್ಮದರ ನಾಮ ನುಡಿದು
ಭಕ್ತಿಯನ್ನು ಹಿಡಿಯಿರಿ ತಿಳಿದು | ಮರತೇಕ ಬಂದರು ಇಳಿದು
ಏರು || ಒಂದಾನ ಒಂದು ದಿವಸ | ಪರಮಾತ್ಮನಿಗೆ ಆದೀತೋ ಧ್ಯಾಸ
ಜಿಬರೀಲಗ ತಿಳಿಸಿ ಕಾಸ | ಆಗೇತಿ ನನ್ನ ಮನಸ
ಚ್ಯಾಲಿ || ನೀ ಭೂಮಿಗೆ ಹೋಗು ಲಗುಮಾಡಿ
ಶರಣರನು ತರಬೇಕು ಕೂಡಿ
ಅಂದಾನೋ ಅಲ್ಲಮಾ | ಶ್ಯಾಮಾ ಪ್ರೇಮಾ || ೧ ||

ಇ || ಜಿಬರೀಲ ಸನೇಕ ಬಂದು ಕಾಮಜಾನಿ ಸ್ವರ್ಗದಿಂದ ತಂದಾ
ಎಷ್ಟು ಹೇಳಲಿ ಅದರ ವರ್ಣನಾ ಶಕ್ತಿ ಪಾವನಾ
ಏರು || ಪಂಚವಜ್ರ ಹೊಳಪಿನ ದೇಹಾ || ಮುತ್ತು ರತ್ನ ಬೆಳಕಿನ ಛಾಯಾ
ಗೋಮೇಧಿಕ ಗರಿಗಳು ಪಾಯಾ | ಪಂಚವರ್ಣ ಮುಖದಲಿ ನಾಮಾ
ಲಾ ಇಲಾಹಾ ಬರೆದತ್ತೋ ಕಲ್ಮಾ | ಸೃಷ್ಟಿಗೆ ಅಪರೂಪ ಜಲ್ಮಾ
ಹುಟ್ಟಿಸಿದ ಪರಮಾತ್ಮಾ ||
ಚ್ಯಾಲಿ | ಈ ಧರಣಿಗೆ ಬಂದಿತೋ ಜೋಡಿ | ಶರಣರನು ಎಬ್ಬಿಸಿಬೇಡಿ
ನಡಿಬೇಕ್ರಿ ಶ್ಯಾಮಾ ಕಲ್ಮಾ ಅಲ್ಮಾ || ೨ ||

ಇ|| ಜಿಬರೀಲ ಮಾಡಿದನಾ ಮೇ ಅರಾಜ ನಿಮ್ಮ ವಚನಾ
ತರುವುದಕ್ಕೆ ಮಾಡಿ ಜತನಾ
ದೇವ ಶಾಸ್ತ್ರನಾ | ಕೂಡಿಕೊಂಡು ಹೊಂಟಾರೋ ಚಂದ |
ಜಿಬರೀಲ ಇರತಿದ್ದ ಮುಂದಾ
ಏರು || ಶಬ್ದ ಬಂತೋ ಎಡಬಲದಿಂದಾ
ನಿಂದರಬೇಕೋ ಶರಣರು ತುಸಾ | ಕೇಳರಿ ಮಾತ ನಮ್ಮದು ಖಾಸಾ
ಕೇಳದ್ಹಾಂಗ ಹೊಂಟ್ರೊ ರವಸಾ | ಮುಂದ ಮಾಡ್ಯಾರೋ ವಾಸಾ |
ಚ್ಯಾಲಿ || ಮುದುಕಿಗೆ ಕಂಡ್ರೋ ಲಗುಮಾಡಿ
ಎದ್ದು ನಿಂತು ಶರಣರನು ನೋಡಿ ಅಸಲಾ ಪದ್ಮಿನಾ ಹೊನ್ನಾ ಚಿನ್ನಾ || ೩ ||

ಇ|| ಹೆಣ್ಣ ಅನತೈತಿ ಮದನಾ | ಮಾತಾಡಬೇಕ್ರಿ ಮೌನಾ
ಮಾರಿ ತಿರುವಿ ನೋಡಲಿಲ್ಲ ಶರಣಾ | ಸಾಗಿ ಮೋಹನಾ
ಶರಣರು ಜಿಬರೀಲ ನೋಡಿ ಕೇಳತಾರೋ ಮಾತಿನ ತೋಡಿ
ಕೇಳಬೇಕ್ರಿ ವಿಸ್ತಾರ ಮಾಡಿ
ಏರು || ಎಡಬಲಕ ಆದ ಶಬ್ದಾ | ನಸರಾಣಿ ಯಹೂದೀದ | ಉತ್ತರ ಕೊಡದೆ ಇದ್ದಾ
ನಿಮ್ಮ ಉಮ್ಮತ ಉಳಿದ | ನುಡಿದಿದ್ದು ಉಮ್ಮತ ಹೋಗಿ
ಹಾಳಾಗಿತ್ತೋ ನಸುರಾಣಿಯಾಗಿ | ಕೇಳಿದ ಶರಣಾ | ದೀನಾ ಮಾನಾ
ಚ್ಯಾಲಿ || ದಾರಿಯೊಳಗ ನಿಂತ ಹೆಣ್ಣಾ | ಪರಪಂಚ ಮಾಯಾ ಜಾಣಾ
ಸತ್ಯವಾಗಿ ಕೊಡಲಿಲ್ಲ ವಚನಾ | ಮುಕ್ತಿ ಪಾವನಾ || ೪ ||

ಇ|| ಹೊನ್ನು ಹೆಣ್ಣು ಮಾಯದಿಂದಾ
ಮಣ್ಣು ಕೂಡಿ ಹೋಗೂದು ಚಂದಾ
ನರಕದೊಳು ಸುಡುವುದು ದುಂದಾ
ಏರು || ಶಾಂತದಿಂದಾ ತಿಳಿಸಿದ ಮಾತಾ | ಶರಣರ ಮನಸಾದೀತ ಶಾಂತಾ
ದೇವರ ಧ್ಯಾನಾ ಮಾಡೂತ | ಮಕ್ಕೇಕ ಮುಟ್ಟಿ ತುರತಾ
ಗದುಗು ಇರುವುದು ದೇಶಕ ಭರತಿ | ಮಾಬೂಬರದು ಕರಣಾತು ಪೂರ್ತಿ
ಚ್ಯಾಲಿ || ಜಂಗಲಿ ಚಮನಾ ನೇಮಾ ಹೇಮಾ
ಸಾಕ್ಷಾತ್ ಶಿವನ ನೇಮಾ | ಮಾಡುವೆನು ಜನಕ ಕ್ಷೇಮಾ || ೫ ||

* * *

. ಚಂದ್ರನನ್ನು ಮತ್ತೆ ಹೋಳು ಮಾಡಿ ಕೂಡಿಸಿದ ಪದಾ
ಏನ ಚಂದಾ ಸಬಾ ಬಂದ ಕೂಡಿರಿ ಅಸಲಾ
ಇತ್ತ ಇಡಬೇಕರಿ ನಿಮ್ಮ ಖ್ಯಾಲಾ |
ಏರು || ಪುರಮಾಸಿ ತಳಸೋಸಿ ಚೌಕಾಸಿ | ಮಾಡರಿ ಮನಸಿಗೆ ತಂದ
ಬಿಡೆ ಇಲ್ಲದೆ ಯಾರ‍್ಯಾರದಾ | ಅಡಿ ಪ್ರಾಸ ಕಡಿತನಾ ಸುದ್ದಾ
ನುಡಿಗಳು ತಪ್ಪದ ಬಂದಾ | ಬರಲಿ ಅಕ್ಷರ ಹಿಡಿದ ಸಾಲಾ || ೧ ||

ಇ|| ಬಲುಮಂದಿ ಕವಿ ಮಾಡೂಂದು ಸುಳ್ಳ ಡೌಲಾ
ಸಿಕ್ಕಿಲ್ಲವರಿಗೆ ಗುರುಕೀಲಾ |
ಏರು || ಹೆಚ್ಚಿನಾ ಎಸನಾ ಹಾಕಿ ನಾನಾ ತಗದೇನಿ ಬಯಾನಾ
ಇಟ್ಟಕೇಳರಿ ಧ್ಯಾನಾ ನಬಿಸಾಹೇಬ ಶರಣಾ
ತೋರಿಸಿವಿ ಸತ್ಯವನಾ ಬಾಲಾ ಹೇಳುವೆ ಅವರ ಲೀಲಾ || ೨ ||

ಇ|| ಮಸಲತ್ತು ಮಾಡಿ ಬಂದಾನ ಅಬೂ ಜೈಲಾ
ಕರಕೊಂಡು ಯಹೂದಿಗೆ ಹಿಂಬಾಲಾ
ಏರು || ದೃಷ್ಟಾ ಬೃಷ್ಟಾ ಅಡಮುಟ್ಟಾ | ಅಬೂಜೈಲಾ ಯಹೂದಿಗೆ ಅಂದಾ
ನಬಿಸಾಬ ಕುಂತಾನ ಬೆಳೆದಾ | ಕಣ್ ಕಣ್ ವಿದ್ಯೆದಿಂದಾ
ಮಂದಿಗೆ ಹಟ್ಯಾನ ಫಂದಾ | ಬಾಳ ನಡಸ್ಯಾನ ಬೋಲಭಲಾ || ೩ ||

ಇ|| ಈ ಭೂಮಿ ಬಿಟ್ಟ ಮಾಡೂನು ಒಂದು ಸವ್ವಾಲಾ
ಮುಗಿಲಮ್ಯಾಗ ಜ್ಯಾದು ನಡಿಯೂದಿಲ್ಲಾ |
ಏರು | ಹತಿಯಾರಾ ಹಿಡದಾರಾ ಪಾಮರಾ | ಅಂತಾರ ನಬಿಸಾಹೇಬರಾ
ಸವಾಲೈತ್ರಿ ನಿಮ್ಮ ಮ್ಯಾಗ ಬಿಟ್ಟ ಈ ಭೂಮಿ ಮ್ಯಾಗ
ತೋರಸಬೇಕ ಆಕಾಶ ಮ್ಯಾಗ ಇಲ್ಲಂದರ ಜಲ್ಮಾ ಉಳಿಯಾಕಿಲ್ಲಾ || ೪ ||

ಇ|| ಎರಡು ತುಣಕಮಾಡಿ ಚಂದ್ರಗ ರಸೂಲಿಲ್ಲಾ
ಕಾಣೂಹಾಂಗ ಸರೂ ಜನಕೆಲ್ಲಾ
ಏರು || ಶರಣರಾ ನೆನೆದಾರ ಶಂಕರಾ | ನಮಾಜ ಮಾಡಿ ವರವ ಬೇಡಿ
ಚಂದ್ರಗ ಸನ್ನಿಯ ಮಾಡಿ | ಆದೀತ ಎರಡು ತುಕಡಿ
ಅಬೂಜೈಲಾ ಅಂತಾನ ನೋಡಿ | ಮತ್ತೆ ಕೂಡಸರಿ ರಸೂಲಿಲ್ಲಾ || ೫ ||

ಚಂದ್ರಗ ಒಂದ ಆಗಂದ್ರ ರಸೂಲಿಲ್ಲಾ | ಅಂತಾನ ದುಷ್ಟ ಅಬೂಜೈಲಾ
ಏರು || ಮತ್ತ ತಂದು ಹಚ್ಯಾನ ಪಂಟಾ | ಮಾಡಿ ನಮ್ಮ ಕಣ್ಕಟ್ಟಾ
ತೋರಿಸಿದ ಹಾಂವಗಾರಾಟ  ಸಾಕ್ಷಿ ಇದಕ ಯಾರೂ ಇಲ್ಲಾ || ೬ ||

ನುಡದಾರ ಬಂದ ನೋಡಿದಾರ ಜನರೆಲ್ಲಾ
ಯಾರೂ ಹೇಳಿದರೂ ಕೇಳವಲ್ಲಾ
ಏರು || ಜಾರಾ ಜೋರಾ ಬದ್ದ ಖೋರಾ | ಅಬೂಜೈಲಾ ಹ್ವಾದಾನ ಓಡಿ
ಕಲ್ಮಾ ಓದ್ಯಾನ ತೀಡಿ | ಹೋತ ಅವನ ಮನಸಿನ್ಯಾಗ ಜಲ್ಲಾ || ೭ ||

ಇ|| ನಾಡಿನೊಳಗ ಬಾಗಲಕೋಟೆ ಸೇಲಾ
ಅಲ್ಲಿ ಇರುವದು ಗುರುಕೀಲಾ
ಏರು || ಧೀರಾ ಪೀರಾ ದಸ್ತಗೀರಾ
ಕೇಸುಪೀರ ಕೊಟ್ಟಾ ಅಕಲಾ | ನಾಗೂ ಗೌಸೂನ ಕವಿಗಳು ಮಿಗಿಲಾ
ಜಿದ್ದ ಆಡಿ ಅವರ‍್ಹಿಂಬಾಲಾ | ಕಳಕೊಂಡಿ ರುಂಬಾಲಾ
ಕೊಟ್ಟಾರ ಮುಕಳಿಮ್ಯಾಗ ಗುಲ್ಲಾ  || ೮ ||

* * *

ಯೆಮನ್ ಅರಸನನ್ನು ಮುಸಲ್ಮಾನನಾಗಿಸಿದ ಪದಾ

ಶ್ರೀ ಸಭಾ ನೆರದಿರಿ ಗರದಿ | ಗುರು ಹಿರಿಯರ ಪಾದಕ ಹೊಂದಿ
ಇದ್ದ ಮಾತ ಶ್ರೀ ಸುದ್ದ ತಿಳಿಸುವೆ ಸುದ್ದಿ | ಶಾಸ್ತರ ಸರಿಯಾಗಿ
ಏರು || ಅರುಹಿಡದು ನಡದಾವ ಶ್ರೇಷ್ಠಾ | ಗರು ಇಟ್ಟಾಂಂವ ಕಡಿತನಾ ಕೆಟ್ಟಾ
ಇಟ್ಟ ಗುರಿಯ ಸೃಷ್ಟಿಯೊಳು ಸಟ್ಟಾ ಆಳುತ್ತಿದ್ದ ಯೆಮನ್‌ದ ಅರಸಾ
ಅವನ ಕಿರೆ ಸಾರುವೆ ಸಭೆದಾಗ | ಇತ್ತ ಇಟ್ಟ ಕೇಳರಿ ತುಸಾ
ವರಮ ನಬಿಸಾಹೇಬರ ಸಂಗತೀಲೆ ಇಟ್ಟ | ಕಡಿಗೆ ಆದ ಕಾಲ ಕಸಾ
ನಡಿಬೇಕ್ರಿ ಧರ್ಮದ ಸರಿ
ಭಕ್ತಿಲೆ ನಡಕೊಂಡವನಿಗೆ ಮೆಚ್ಚುವಾ ಆ ಶ್ರೀಹರಿ
ಕಠಿಣ ಐತಿ ಕಾಣೂದು ಸ್ವರ್ಗಾ | ಬುದ್ದಿವಂತರ ಮುಕ್ತಿಯ ಮಾರ್ಗ
ಹಿಡಿದ ನಡದಲ್ಲೆ ಕಂಡಾರ ಸೊರ್ಗ ಆಗ ತಿಳಿಮನ ಮರಿಗಿ || ೧ ||

ಇ || ಸೃಷ್ಟಿಕರ್ತನ ಕೃಪಾ ಅರ್ಪಿಸುವೆ ದೈವಕ ಸೊಲ್ಪಾ
ವಲ್ಲತ ಬ್ರಹ್ಮ ನಬಿಸಾಹೇಬರಿಗೆ ಹಿಡಿ ನೆನಪಾ ಅವನಿಗೆ ಪ್ರೀತಿ ಆಗಿ
ಏರು || ಶಿವನ ಅಪ್ಪಣೆಯಿಂದ ಜಿಬರೀಲ ಇಳಿದಾರ ತತ್ಕಾಲಾ
ಬಂದ ಶರಣರ ಮುಂದ ತಿಳಿಸಿದಾರ ಸಾಂಬನ ಕೌತೂಕ ಸರೂಯೆಲ್ಲಾ
ಚಂದದಿಂದ ಮನದಿಂದ ಇಂದ ನೀವು ಖುದ್ದ ಹೋಗಬೇಕರಿ ಮೊದಲಾ
ಯೆಮನ್ ಅರಸ ಅರಿವಿಷ್ಟ ಮಹಾಸಿಟ್ಟ | ಇಟ್ಟಾನ ಮನದಲ್ಲಿ ನಿಮ್ಮ ಮ್ಯಾಲಾ
ಕೇಳರಿ ತುರ್ತಾ ಹೋಗರಿ ಮುಸಲ್ಮಾನ ಮಾಡರಿ ಅವನಿಗೆ ಬಿಡಬಾರದು
ಕೇಳಿ ತಾ ಒಬ್ಬನೆ ಸ್ವತಾ ಕುದುರಿಯ ಕುಣಿಸುತಾ
ಹೊಂಟಾರ ದಾರ‍್ಯಾಗ ತ್ವಾಟ ಕಂಡಾರ | ವಿಪರೀತ ಕುಂತಾರ ಬೆರಗಾಗಿ || ೨ ||

ಆ ತೋಟಯಿತ್ತ ಒಳೆ ಭರ್ತಿ | ಶರಣರಿಗೆ ಆಗಿ ಪ್ರೀತಿ
ತ್ವಾಟ ನೋಡಬೇಕಂತ ಆಗಿ ಅಕ್ಕರತಿ | ಒಳಗ ಹೋಗ್ಯಾರ ಸಾಗಿ
ಏರು || ಶ್ರಿಂಗಾರ ತೋಟೆಲ್ಲಾ ತಿರುಗಿ | ನೋಡಿದಾರ ಮನಸ ಹರುಪಾಗಿ
ಒಬ್ಬ ಪುರುಷ ಅಲ್ಲೆ ಸೊಂತಾ | ತಿರುವುತಾನ ಹರದ ಹೋಗುವ ಕಾವಲಿ ನೀರಾ
ಆತಗ ಶರಣರು ಬ್ಯಾಗ ಹೋಗಿ ಹೀಂಗ ನಿಂತ ಕೇಳತಾರ ಅವನ ಇದಿರಾ
ಏನಚಂದ ಈ ತ್ವಾಟಕ್ಯಾರ ಅಧಿಕಾರ ಹೇಳೋ ಕೇಳುವೆ ಹೆಸರಾ
ಆ ಪುರುಷ ಆಗಿ ಹರುಷ ಅಂತಾನ ಮಹಾ ಶ್ರೇಷ್ಟಾ | ಇಟ್ಟಾನ ಕೇಳರಿ ಯೆಮನರಸ
ದಂಗ ಆಗಿ ಅಂತಾರ ಶರಣಾ | ಏನ ಸಾಂಬನ ಅಂತಃ ಕರುಣಾ
ತಡಮಾಡದೆ ನಾ ಬಂದೆ ಇಲ್ಲಿತನಾ | ಗುಡ್ಡಗಂವಾರ ತಿರುಗಿ || ೩ ||

ನೀರಿನ ಕಾವಲಿ ನೋಡಿ ಮಲಕೊಂಡಾರ ನಮಾಜಮಾಡಿ
ನಿದ್ರಿ ವ್ಯಾಳೇಕ ಪಾದ ಕಾವಲಿನೊಳ ಕೂಡಿ | ನೀರ ಹರೂತಿತ್ತ ಸಾಗಿ
ಏರು || ತೊಳತೊಳೆದ ಪಾದ ನೀರಾ | ಹೋಗೂದು ಗಿಡಗಂಟಿಗೆ ಪೂರಾ
ಮತ್ತಿಷ್ಟ ತ್ವಾಟಾ ಚಿಗೀತ ಹೆಚ್ಚಿಗೆ ಹತ್ತಿದ್ವೊ ಹಣ್ಣು ಹಂಪಲಾ
ಏನ ಹೇಳಲಿ ಕೇಳರಿ ದೈವಾ ಚಿತ್ತಯಿಟ್ಟ | ಆ ತ್ವಾಟೆಲ್ಲಾ ಗಟ್ಟಿ ಗಿಡಾಗಂಟಿ
ಒಟ್ಟಿಗೆ ನುಡಿತಿದ್ವೊ ಅಂತ ನಬಿ ರಸೂಲಿಲ್ಲಾ |
ಒಳ್ಳೆ ಭರಪೂರಾ ಗಾಬರ‍್ಯಾಗಿ ಬಿಟ್ಟ ತೋಟ | ಓಡಿ ಹ್ವಾದಾ ಮಾಡಿ ಅವಸರಾ
ಜೀವದಯಾಯಿಲ್ಲದ ಖಬರಾ | ಕಂಡಾನ ತನ್ನ ಊರಾ
ಮುಟ್ಟಿ ತ್ವಾಟದ ತಿಳಿಸ್ಯಾನ ಎಲ್ಲಾ ಮಜಕೂರಾ | ಅರಸಗ ಭೆಟ್ಯಾಗಿ || ೪ ||

ಕೇಳಿ ಅರಸ ಆಗಿ ಸಿಟ್ಟ | ದಂಡ ದರಬಾರ ಪುಂಡ ಶ್ರೇಷ್ಟಾ
ಮುತ್ಯಾರ ಸಂಗತಿಲೆ ಹೊರಟಾನ ಜರ್ಬಾ | ಬಳೆಯಿಟ್ಟ ಅವರ ಕೊಲ್ಲೂವುದಕ್ಕಾಗಿ
ಏರು || ಆ ತ್ವಾಟದ ಸುತ್ತಮುತ್ತ ದಂಡ ದರಬಾರ ಇಟ್ಟಾನ ಶಿಸ್ತ
ಹತಿಯಾರ ಸಂಗೀನ ಬಾಕ ಕರಾಬಿನ ಹಿಡಿದ ನಡಾಕಟ್ಟಿ ಜರ್ಬಿಲೆ
ನಿಂತಾರ ಅವರಿಗೆ ಅಂತಾನ ಅರಸ ಹೋಗುವೆ ನಾಯಿನ್ನಾ ತೋಟದಲ್ಲೆ
ಹೋದವನ ಬಿಡೂದಿಲ್ಲಾ ಓಡಿಹ್ವಾದರ ಪಾರಮಾಡರಿ ಒಳ್ಳೆಯೆಚ್ಚರಲೆ
ಬಿಚ್ಚುಗತ್ತೀಲೆ ಮಹಾಸಿಟ್ಟೇಲೆ | ಖೋಡಿ ಅರಸ ಓಡಿ ಒಳಗ ಹೋಗಿ
ಶರಣ್ಹಂತೇಲಿ | ಅಂತಾನ ಬಿಡೂದಿಲ್ಲಯಿಲ್ಲಿ | ಸಿಕ್ಕಿರಿ ನನ್ನ ಕೈಯಾಗ ಬಂದ
ಮಾಡುವೆ ಸಂದಾರ ಇದೆ ಹತಿಯಾರಲಿಂದ ಬೀಳುಹಾಂಗ ತುಣಕಾಗಿ || ೫ ||

ಇ|| ಹೊಡಿಯಂತ ಹಿಡಿ ಸಮಾಧಾನ | ಅಂತಾರ ನಬಿಸಾಹೇಬ ಶರಣಾ
ಪೃಥ್ವಿಪಾಲಕ ನನ ಮ್ಯಾಲೆಯಿಟ್ಟ ಕರುಣಾ | ಮಣೂದಿಲ್ಲ ಯಾರ‍್ಯಾರಿಗೆ
ಏರು || ಜಯಸಂಗರ ಜಗಭರಿತರ ಭಜಿಸೋ ಭಜನಿ ಮಾಡೋ ಹೀಂಗ
ನಡಿನಡಿ ನಮ್ಮ ಧರ್ಮಾ ಓದಿ ನೀ ಕಲ್ಮಾ ಆಗೋ ಮುಸ್ಲಿಮಿನಾ
ಸಿಟ್ಟು ತಾಳಲಾರದೆ ಅರಸ ಹತಿಯಾರ ಹಸ್ತದಿಂದ ಎತ್ತಿ ಆ ಕ್ಷಣಾ
ಹೊಡಿಬೇಕಂತ ಹೋಗುವಷ್ಟರಲ್ಲಿ ಕೈ ಅಲ್ಲಿಗೆ ನಿಂತು ಎರಡು ಸವನಾ
ಗಾಬಾದನು ಯೆಮನ್ ಅರಸನು ನಡಗ ಹುಟ್ಟಿ ಕಡದ ತನ್ನ ತುಟಿ
ಎಡವಿ ನೆಲಕ ಬಿದ್ದನು | ಬಿದ್ದಲ್ಲೆ ಅಂತಾನ ಕುಲ್ಲಾ
ಖರೇ ಇದ್ದರ ನಬಿರಸೂಲಿಲ್ಲಾ
ಕೇಳರಿ ಮಾಡುವೆ ನಾನಾ ನಿಮಗೆ ಸವ್ವಾಲಾ | ಮಾತೊಂದು ನೆನಪಾಗಿ || ೬ ||

ಇದರಿಗೆ ಕಾಣೂದು ಗೋರಿ | ಅದರೊಳಗಿನ ಹೆಣದ ಮಾರಿ
ನೋಡುವೆ ಹೆಣಕ ಜೀವಾ ತುಂಬಿಸಬೇಕರಿ ಅಂತಾನ ಒಳೆ ಹಿಗ್ಗಿ
ಏರು || ಹೀಂಗ ಆತ ಮಗಳ ಅವಸ್ತಿ ಅರಸ ಅಲ್ಲೆ ಶರಣರ ಸಂಗತಿ
ವಾದ ಹಾಕಿ ಹೀಂಗಾ ಅಂದಾ ನನ್ನ ಮುಂದಾ | ನಡೂದಿಲ್ಲಾ ಯಾತಾಳ ಮಂತರಾ
ಸುದ್ದಿಕೇಳಿ ಬಾ ಮನಿಗೆ ಹೋಗಿ ಅಂತ ಹೇಳ್ಯಾರ ಪೈಗಂಬರಾ
ಅಷ್ಟರೊಳಗೆ ಅರಸನ ಮುಂದಾ | ಮನಿಸುದ್ದಿ ತಿಳಿಸಿದಾರ ಬಂದ ಜನರಾ
ಕೇಳಿ ಅವುಸರಾ ಹಾಕಿ ಉಸರಾ | ದುಃಖ ತಾಳದ ಮಿಕ್ಕಿ ಓಡಿದಾ
ಜೀವವಿಲ್ಲದೆ ಖಬರಾ | ಅರಸ ತನ್ನ ಮಗಳಿಗೆ ಮಾರಿ
ಕಂಡ ಹೌಹಾರಿ ಅಳತಾನ ಎತ್ತಿಕೊಂಡ ಬಗಲಾಗ ಒಳೆ ಮಿತಿಮೀರಿ
ಸಣ್ಣ ಮಾರಿ ಮಾಡಿ ಕೂಗಿ || ೮ ||

ಏನ ಹೇಳಲಿ ಸಾಂಬನ ಆಟ | ಆ ಕನ್ನಿಕೆಗೆ ಆಗಿ ಕಷ್ಟ
ಹಡದಾಳ ತೊಂಬತ್ತು ವರ್ಷದ ಮಗಾ | ಒಳ್ಳೆ ಶ್ರೇಷ್ಟ ಕುಂತಾನ ಡೌಲಾಗಿ
ಏರು || ಇತ್ತು ಗಡ್ಡಾ ಬಿಳೇ ಕೂದಲಾ | ತ್ರಾಣ ತುಸು ಇದ್ದಿದ್ದಿಲ್ಲಾ
ಕುಂತಾನ ಹಂತೇಲಿ ಮುತ್ಯಾಗ ತೊಡಿಮ್ಯಾಲ ತಗೊಂಡ
ಆಡಿಸುವಂತ ಮುದುಕ | ಹುಟ್ಯಾನಂತ ಊರ ತುಂಬ ಸುದ್ದಿಕೇಳಿ
ಓಡಿ ಬಂದಾರ ಜನರೆಲ್ಲ ನೋಡುದಕ
ಕಂಡ ಮುದುಕ  ಅಂತಾನ ಮುಂದಿಗೆ ನೆರದಿರಿ | ಬಂದ ಇಲ್ಲೆ ಯಾತಕ
ಯೆಮನ್ ಅರಸನು ಹೀಂಗ ನುಡಿದನು ನಾ ಏನ ಚಮತ್ಕಾರ ಆತ
ಇದು ಅಂತ ಹಣಿಹಣಿ ಬಡಕೊಂಡನು | ಮುತ್ಯಾಗ ಮುದಕ ಹೀಂಗ
ಅಂದಾ ಶರಣರ ಕೂಡ ಹಾಕಿದಿ ವಾದಾ | ಅಲ್ಲೊ ಬುದ್ದಿಗೇಡಿ
ಹಿಡಿನಡಿ ಅವರ ಕಾಲಾ | ಅಂತಾನ ತಲಿಬಾಗಿ || ೯ ||

ಕೇಳಿ ಏಕಂದ್ರಾ ಜನಾ ಹೊಂಟಾರ ಅರಸ ಆಕ್ಷಣಾ
ಮುಂದ ಮುದುಕ ಹಿಡಕೊಂಡ ಬಡಗಿ ಒಂದೇ ಸಮನಾ
ಹೀಂಗ ನಡುತಿದ್ದಾ ನಡಗಿ ||
ಏರು || ನೋಡಿ ಜನರೆಲ್ಲಾ ಅವನ ನಕ್ಕೊಂತ ಬೆನ್ನ ಹಿಂದೆ ಹಿಂದ
ನಡದಾರ ಮುದಕ ಮುಂದ ಇದ್ದಾ ಬೆಟ್ಟಾಗಿ ಶರಣರಿಗೆ ಕೈಮುಗಿದಾನ
ಇರಲಿ ಕರುಣಾ ಓದುಸರಿ ಕಲ್ಮಾ ಓದುವೆ ಪ್ರೀತೀಲೆ ನಾ ಖುದ್ದಾ
ಕೇಳಿ ಶರಣರು ಅಂತಾರ ಆತಗ | ಯಾರೋ ಹೇಳೋ ನೀ ನನಗ ಒಡದಾ
ಆ ಮುದುಕನು ಹೀಂಗ ಅಂದನು | ಇದೇ ಗೋರಿ ತಪಶೀಲ
ಅರಸ ನಿಮಗ ಕೇಳಿದನು | ನಾನೇ ಇದ್ದೇನಿ | ಬೇಶಕ್ ಶೀಸ ಪೈಗಂಬರ ಕಾಲಕ
ನಾ ಇದ್ದೆ ಜೀವಂತ ಸತ್ತ ಬಿದ್ದಿದ್ದೆ ಇನ್ನೂ ತನಕ | ಅಂತಾನ ತಲಿಬಾಗಿ || ೧೦ ||

ಕೇಳಿ ಕೂಡಿದಂತ ಜನರು | ಹೌದಂತ ಖರೇ ಶರಣರು
ರಾಜಾ ಪ್ರಜಾ ಪ್ರೀತೀಲೆ ಕಲ್ಮಾ ಓದ್ಯಾರು ಅವರ ಚರಣರ ಎರಗಿ
ಏರು || ಬಾಗಲಕೋಟಿ ಬರ್ತಿ ಬಹಾರ || ಸುತ್ತ ನಾಡಿಗೆ ಜಾಹೀರ
ಮಿಕ್ಕಿ ಮ್ಯಾಗಿನ ಓಣಿ ಗಂಡ ಮೆಟ್ಟ ಚಲ್ಲಾಟ ಮಾಡಿ ಹಚ್ಚೇವಿ ಬಿರದಾ
ಕರದ ವೈರಿಗೆ ಹುಸೇನಮಿಯ್ಯಾ ಅಂತಾರ ತುಳಿತಾರ ಸರಸರದಾ
ಕಾಸಿ ಕೆಬ್ಬಣಾ ಕೊಟ್ಟರ ಬರಿ ಉಳ್ಳಾಡಿ ಹ್ವಾದೀರೋ ಜರಜರದಾ
ನಮ್ಮ ಸರಿ ಹಚ್ಚಿ ವರಿ ಅಕ್ಷರ ಅಡಿಪ್ರಾಸ ಹೊಂದಿ ಮಾಡೋ
ನೋಡೂನು ಶಾಯರಿ ಮಲ್ಲೇಕಲ್ಲಾನ ದಯಾದಿಂದಾ
ಸಭಾದಲ್ಲಿ ವೈರಿಗೆ ಇಂದ | ಬಿಡೂದಿಲ್ಲಾ ಹೊಡೂತೇನಿ
ಕೆತ್ತಿಗೂಟಾ ಬಿಗಿ ಬಂಧ ಪುನಃ ಬರದಾಂಗ ತಿರುಗಿ || ೧೧ ||

* * *