ನಬಿಸಾಬರ ಪಾದಧೂಳಿಯ ಪವಾಡ ಪದಾ

ಗರ್ದಿ ಸಭಾ ನೆರೆದಿರಿ ಜನಾ ಜಾತ್ರಿ ಜುಮರಾ
ಏರು || ಸುತ್ತಮುತ್ತ ಕುಂತೀರಿ ಬುದ್ಧಿವಂತ ಬರಿ ಬಲ್ಲವರಾ
ಚಿತ್ತಯಿಟ್ಟ ಕೇಳಿರಿ ಚೌಕಾಸಿ ಮಾಡಿರಿ ಹಿರಿಯರಾ
ಕಸರ ಇಲ್ಲದಾಂಗ ಕುಶಲ ಕೇಳಿ ನಿನ್ನ ಉಸಲಗಟ್ಟಿತೋ ಶಾಹೀರಾ
ಜಿಗದಾಡಿ ಕುಣಿದಾಡಿದಕ ಮಾರಿ ಮಾಡಿಕೊಂಡಿ ಕಿಂಕರಾ || ೧ ||

ಇ|| ತೋಡಿಗೆ ತೋಡಿ ಹಾಡಿ ಅನಿಸಿಕೊಳ್ಳೊ ಬಹಾದ್ದೂರಾ
ಏರು || ಬುದ್ದಿಗೇಡಿ ಒಬ್ಬ ಯಹೂದಿ ಇದ್ದಾನಾ ಮಹಾಬೇಮಾನ
ನಬಿಸಾಬರ ಹೆಸರು ಹೇಳಿದರ ಹಲ್ಲ ತಿಂತಿದ್ದ ಮುಡದಾರಾ
ಆತನ ಹೊಟ್ಟೀಲೆ ಹುಟ್ಯಾಳ ಏನ ಹೇಳಲಿ ಮನೋಹರಾ
ಕಾಮಿನಿ ಸಹಧರ್ಮಿಣಿ ಚಲುವಿಕೆ ಹೆಣ್ಣ ಸುಂದರಾ || ೨ ||

ಇ|| ಕೋಮಲಿ ಹೆಣ್ಣು ಬಾಲಿ ಗುಣಗಳು ಇದ್ದು ಗಂಭೀರಾ
ಏರು || ನೇಮಿ ನಬಿಸಾಹೇಬರ ಕಲ್ಮಾ ಓದುಳೋ ತನ್ನ ಮನಸೀಲೆ
ತಂದಿಗೆ ತಿಳಿಗೊಡದೆ ನೆನಸುವಳೋ ರಾತ್ರಿ ಹಗಲಿ
ಭಕ್ತೀಲೆ ನಡುವುಳೋ ನುಡಿವಳೊ ಬಾಯಿಲಿ ಅತಿ ಪ್ರೀತಿಲಿ
ಭಾವಕ ಬೇಶಕ್ ಮೆಚ್ಯಾನ ಶ್ರೀಹರಿ ಶಂಕರಾ || ೩ ||

ಇ|| ಶರಣರಗೂಡ ವರ್ಮಾ ಇಟ್ಟಿದ್ದಾ ಭಯಂಕರಾ
ಏರು || ಆ ಯಹೂದಿ ಒಮ್ಮಿಂದೊಮ್ಮೆ ಕಣ್ಣ ಕಾಣದೆ ಕುಂತರಿ
ಬ್ಯಾನಿ ತಾಳಲಾರದೆ ಉಳ್ಯಾಡುವ ಹಗಲಿ ರಾತರಿ
ಏನ ಹೇಳಲಿ ಶಿವನ ಆಟಾ ಯಾರಿಗೆ ತಿಳೂದಿಲ್ಲರಿ
ವೈದ್ಯರು ಬರುವರು ಕೊಡುವರು ಔಷಧ ನೀರಾ || ೪ ||

ಇ|| ಔಷದ ಹಾಕಿದಾಂಗ ಕಣ್ಣ ಬ್ಯಾನಿ ಬಹುಜೋರಾ
ಏರು|| ಕೊಟ್ಟ ಔಷದ ಬ್ಯಾಸತ್ತ ಹೊಂಟ ಹೋಗ್ಯಾರ ಬಹುಜನಾ
ಸೊಚ್ಚ ಆಗವಲ್ಲವು ಕಣ್ಣಾ ಮಗಳ ಕಂಡ ಆಕ್ಷಣಾ
ನಿಂತಾಳ ತಂದಿಗೆ ಅಂತಾಳ ಕೊಡುವೆ ಔಷಧ ತಂದ ನಾ
ಅಪ್ಪಣಿ ಕೊಡಬೇಕ ನೀ ಹೇಡಿ ಮನಸ ಆಗೈತಿ ಬ್ಯಾಸರಾ || ೫ ||

ಇ|| ಇಷ್ಟು ಕೇಳಿ ಅಪ್ಪಣಿ ಕೊಟ್ಟಾ ಮಾಡಿ ಮನಕ ವಿಚಿಯಾರಾ
ಏರು || ಹೊಂಟಹೋಗಿ ಬೆಟ್ಟಿ ಆಗಿ ಶರಣರ ಮುಂದ ತಿಳಿಸ್ಯಾಳ ಮಜಕೂರಾ
ಕೇಳಿ ತಗದ ಕೊಟ್ಟಾರ ತನ್ನ ಪಾದ ಬುಡಕಿನ ಮಣ್ಣಾ
ಹಾಕುಹೋಗು ನಿಚ್ಚಳ ಆಗತಾವ ಎರಡು ಕಣ್ಣಾ
ನಕ್ಕೊಂತ ಕುಣಕೊಂತ ಬಂದಾಳ ಮಾಡಿ ಅವಸರಾ || ೬ ||

ಇ|| ಹಾಕ್ಯಾಳ ತಂದ ಮಣ್ಣ ಕಣ್ಣಿನೊಳಗ ಮನಪೂರಾ
ಏರು || ನಿಚ್ಚಳ ಆದಾವು ಕಣ್ಣು ಎರಡು | ಎದ್ದು ಕುಂತಾನ ಆಕ್ಷಣಾ
ನಗತಾನ ನಗಿ ಮುಗುಳ ಮಗಳಿಗೆ ಕೇಳತಾನ ಹೌಹಾರಿ
ಹಿಂತಾ ಔಷದ ತಂದಿ ನೀ ಎಲ್ಲಿಂದಾ ತಿಳಿಸವ್ವಾ ಹಾತೊರಿ
ಬೆದರಿ ಚದುರಿ ನಿಂತಾಳ ಹೈಪಾಗಿ ಸುಂದರಾ || ೭ ||

ಇ|| ಪ್ರಚಂಡ ಈ ಭೂಮಂಡಲಕ ನಬಿಸಾಹೇಬ ಶರಣರಾ
ಏರು || ಅವರ ಪಾದ ಬುಡಕಿನ ಮಣ್ಣತಂದ ಹಾಕೇನಿ ಕಣ್ಣಿನೊಳಗ
ಇಷ್ಟು ಕೇಳಿದ ಕ್ಷಣಕ ಬೆಟ್ಟನೆ ಬೇರಿ ಸಿಟ್ಟೀಲೆ ನಿಂತಾನ
ಸರದ ಮುಂದಕ ಹಿರದ ಹತಿಯಾರ ಹಿಡದ ಮಗಳಿಗೆ ಅಂತಾನ
ನೋಡವ್ವಾ ಕೇಳವ್ವಾ ಬಿಡೂದಿಲ್ಲಾ ಮಾಡುವೆ ಸಂಹಾರಾ || ೮ ||

ಇ|| ಶರತ ಇಟ್ಟ ಸಿಟ್ಟೀಲೆ ಹರತ ಚೂರಿ ಹಿಡಿದ ಗಂದಾರಾ
ಏರು || ತನ್ನ ಕಣ್ಣಿನೊಳಗ ಬಡಕೊಂಡ ಕಣ್ಣಗುಡ್ಡಿ ತಗತಗದಾನರಿ
ಹೇಸಿ ಯಹೂದಿ ಬೀಸಿ ಕಣ್ಣಗುಡ್ಡಿ ಒಗಿತಿದ್ದಾ ತಗತಗದಾ
ಹ್ಯಾಂಗ ಒಗೂತಿದ್ದಾ ಮತ್ತ ಪುನಾಬಂದು ಹತ್ತಿ ಕಣ್ಣ ಜೊತೆ ಹೆಚ್ಚಿಂದಾ
ಜಿಗದ ತಗತಗದ ಬ್ಯಾಸತ್ತ ಹಾಕ್ಯಾನು ಉಸರಾ || ೯ ||

ಇ|| ತಿಳಕೊಂಡಾ ತನ್ನ ಮನಸಿನೊಳಗ ದಿಕದಿಗಂಬರಾ
ಏರು || ಬಿಟ್ಟ ತನ್ನ ಧರ್ಮಾ ಕಲ್ಮಾ ಓದ್ಯಾನ ಶರಣರ ಹಂತೇಲಿ
ನಿಂತಾನ ಅಂತಾನ ಇಂದಿಗೆ ಆದೆ ನಾ ಮುಸಲ್ಮಿನಾ
ಸಂಗತಿಲೆ ನಿಂತ ಮಗಳು ನಗತಾಳ ರೂಪ ಸುಂದರ ಹೆಣ್ಣಾ
ಅನ್ನುವಳೋ ನೆನಸುವಳೋ ಮನಸಿನಲಿ ಶ್ರೀಹರಿ ಶಂಕರಾ || ೧೦ ||

ಇ || ಬಾಗಲಕೋಟಿ ಪ್ಯಾಟಿ ಪಟ್ಟಣಾ ಮಿಕ್ಕಿ ಜಾಹೀರಾ ||
ಏರು || ಗಂಡಮೆಟ್ಟ ಮ್ಯಾಗಿನ ಓಣಿ ಉಸ್ತಾದ ಹುಸೇನಮಿಯ್ಯಾಗ
ಕೊಟ್ಟಾರ ಮತಿ ಪೀರ ಮಲ್ಲೇಕಲ್ಲ ಇಟ್ಟಾರ ಹಸ್ತ ತಲಿಮ್ಯಾಲಾ
ಕೇಳರಿ ವೈರಿಗೆ ಎಷ್ಟು ಉಗಳಿದರ ನಾಚಿಕೆ ಏನಿಲ್ಲಾ
ಮುದಕ ಸುಮಕ ಮಾಡತಾನ ಗೊತ್ತಿಲ್ಲದೆ ಮಂತರಾ

* * *

. ಜಾಬೀರನ ಮಕ್ಕಳನ್ನು ಬದುಕಿಸಿದ ಪದಾ

ಮಹಾ ಪಂಡಿತ ಪಂತರು ಕುಂತಾ | ಚಿತ್ತಿಯಿಟ್ಟ ಕೇಳಿರಿ ಬುದ್ಧಿವಂತಾ | || ಪಲ್ಲವಿ ||

ಏರು | ಸಾರಿ ಪೇಳುವೆ ಸೂರಿ ಮಿಕ್ಕಿ ನುಡಿ ಕವಿ ಮಾಡಿ
ಹಾಡುವೆ ಹೊಸ ಧರತಿ ಬಲ ಭರತಿ | ಕೂಡಿರಿ ಚಂದದಿಂದಾ
ಬಂದ ದೈವೆಲ್ಲಾ ಮುಂದ | ಕೇಳಿ ಆಗರಿ ಸನಮಂತಾ || ೧ ||

ಇ|| ಜಾಬೀರ ಅಂಬುವರು ಹೊಂಟಾರ ಸಾಕ್ಷಾಂತಾ
ನಬಿಸಾಹೇಬ ಶರಣರಿಗೆ ಔತಣಾ ಹೇಳಬೇಕಂತಾ
ನಬಿಸಾಹೇಬ ಶರಣರಿಗೆ ಔತಣ ಹೇಳಬೇಕಂತಾ
ಏರು || ಹಿಡಿದ ನಡದಾರ ದಾರಿ | ಹೋಗಿ ಕಂಡಾರ ದಾರಿ
ಕುಂತಿದ್ದರೋ ನಬಿರಸೂಲಿಲ್ಲಾ ಖುಲ್ಲಾ | ತಿಳಿಸ್ಯಾರ ಅವರಿಗೆ ಹೀಂಗ |
ಔತಣ ಇಂದ ನಿಮಗ | ಅಂತ ಹೇಳ್ಯಾರ ನಾಳಿಗೆ ಬರಬೇಕಂತಾ || ೨ ||

ಔತಣ ಕಬೂಲ ಮಾಡ್ಯಾರ ನಕ್ಕೂಂತಾ | ನಬಿಸಾಹೇಬ ಶರಣರು ಕುಂತಾ
ಏರು || ಪರತ ಜಾಬೀರ ಹೊಂಟ ಹೋಗಿ | ಮುಟ್ಯಾರ ಮನಿಗೆ
ಕಟ್ಟಿತ್ತ ಉತ್ತಮ ಒಂದು ಬ್ಯಾಟಿ | ಮನಕ ನಟ್ಟಿ | ಕೋದಾರ ಬಿಸಮಿಲ್ಲಾ ಅಂತಾ
ಮಕ್ಕಳು ಇಬ್ಬರು ನಿಂತಾ | ನೋಡಿ ಮಸಲತ್ ಮಾಡ್ಯಾರ ಸೊಂತಾ || ೩ ||

ಇ|| ಅಡಗಿ ಅವಸರಲಿ ಮಾಡು ಚಿಂತಾ | ಒಲಿ ಹೊತಸ್ಯಾರ ಸತಿಪತಿ ಕುಂತಾ
ಏರು || ಬಿಟ್ಟು ಮಕ್ಕಳ ವ್ಯಸನಾ | ಇದ್ದಿಲ್ಲಾ ಅವರಿಗೆ ಚೈನಾ
ಮಕ್ಕಳು ರಂಗಮ್ಹಾಲ ಏರಿ | ಹಿಡಿದ ಚೂರಿ | ತಂದಿ ಕೋದಾಂಗ ಬ್ಯಾಟಿ
ಆಡೂನು ಇಬ್ಬರು ಘಟ್ಟಿ | ಕೂಡಿ ನಾವು ಆಡೂನು ಕುಣಕೊಂತಾ || ೪ ||

ಅಂದಾ ಹಿರೇ ಅಣ್ಣ ಇದರಿಗೆ ನಿಂತಾ | ಕೇಳ್ಯಾನ ತಮ್ಮ ಮುಹಮ್ಮದ ಶಮರಂತಾ
ಏರು || ಒಳ್ಳೇದಾದೀತ್ತಣ್ಣಾ ಮಲಗುವೆ ಈ ಕ್ಷಣಾ | ಕೋದಾಂಗ ಕೊಯ್ಯು ಬ್ಯಾಟಿ ನನ್ನಾ
ಹಿರೇ ಅಣ್ಣಾ | ಹಿಡಿದ ಕೈಯಾಗ ಚೂರಿ |
ಎಳದಾನ ಹಾತೊರಿ ಗೋಣ ಕಡಿಗೆ ಆತ ಕಂಡಾ | ಬಲವಂತಾ || ೫ ||

ಇ|| ಇಂತ ಬವಳಿಕೆ ಇದು ಏನು ತಂತಾ | ಬಿದ್ದಾನ ಮಾಲಿನಕೆಳಗೆ ಗುಣವಂತಾ
ಏರು || ಪೆಟ್ಟ ನೆತ್ತಿಗೆ ಹತ್ತಿ | ಹಾರಿತ್ತ ಅವನ ಉಸಲಾ
ಬಿತ್ತ ಭೂಮಿಮ್ಯಾಲೆ ಹೆಣಾ | ಆಕ್ಷಣಾ | ಬಂತ ನೆನಪ ಆಗ
ತಾಯಿ ತಂದಿಗೆ ಬ್ಯಾಗ | ನಮ್ಮ ಮಕ್ಕಳು ಕಾಣುದಿಲ್ಲಾಂತಾ || ೬ ||

ಬಂದಾರ ಹೊರಗ ಹುಡಿಕ್ಯಾಡಿ ಕೊಂತಾ
ಕಂಡ ಗುರ್ತ ಹಿಡದಾರ ಮಗನು ಹೌದಂತಾ
ಏರು || ಗಾಬರ‍್ಯಾಗಿ ತಾಯಿ | ಅಳತಾಳ ದುಃಖಿಸಿ
ಏನಾತ ಎನ್ನ ಮಗನೆ ನಿನ್ನಾ | ಬಿಟ್ಟಿ ಪ್ರಾಣಾ | ಹಾರಿತ್ತ ಹೌಸಾನಾ
ಹುಡುಕವರೋ ಸಣ್ಣ ಮಗನಾ | ದಿಕ್ಕತಪ್ಪಿ ಸತಿಪತಿ ಅತಗೊಂತಾ || ೭ ||

ಇ|| ಕಾಣವಲ್ಲದು ಮಾರಿ ಇನ್ನೇನು ಮಾಡೋಣಾಂತ ಕರೆ
ಹತ್ಯಾರ ರಂಗಮಾಲ | ಹಣಿ ಹಣಿ ಬಡಕೊಂತಾ
ಏರು || ನೆತ್ತರ ನೋಡಿ ಮಗನ ರುಂಡ ಕಂಡಾಕ್ಷಣಕ
ತಾಯಿತಂದಿ ಅಳತಾರ ಅಳತಿಲ್ಲಾ | ಅಂತಾರಲ್ಲಾ ಕೆಟ್ಟ ಅದರುಷ್ಟ
ಮನಿತನಾ | ಆತ ನಷ್ಟ ಇನ್ನಾ | ಇಂದ ಮುನದಾನ ನಮ್ಮ ಮ್ಯಾಲೆ ಭಗವಂತಾ || ೮ ||

ಇ|| ದುಕ್ಕ ಮಾಡಬೇಡ ತಡಿ ಸನಮಂತಾ | ಅಂತಾನ ಪತಿ ಮಡದಿಗೆ ತಿಳಿಸಿ ಇರಲೆಂತಾ
ಏರು || ಮುಚ್ಚಿ ಇಡಬೇಕ ಹೆಣಾ | ಸುದ್ದಿ ಮಾಡದೆ ಇನ್ನಾ | ತಿಳಿಗೊಡದೆ ಶರಣರನಾ
ಔತಣಾ ಹೇಳೇವಿ ಅವರಿಗೆ ಬರಲಿಕ್ಕಿಲ್ಲಾ ನಮ್ಮ ಮನಿಗೆ
ಮೋಹನಾ | ಕೇಳ ಮೋಹನಾ | ಹೇಳುವೆ ಸಾಕ್ಷಾಂತಾ || ೯ ||

ಇ || ಮುಚ್ಚಿ ಇಟ್ಟಾ ಹೆಣಾ | ಜಾಬೀರ ನಕ್ಕೊಂತಾ ಹೋಗಿ ಕರದಾರ ಶರಣರಿಗೆ  ಸೊಂತಾ
ಏರು || ಇಟ್ಟಾರ ಎಡಿತಂದ | ಆಗ ಶರಣರ ಮುಂದಾ
ಇಳದಾರ ಬ್ಯಾಗ | ಜಿಬ್ರಾಯಿಲ ತತ್ಕಾಲಾ | ಜಾಬೀರನ ಚಿರಂಜೀವ
ಸರೂ ಹಕೀಕತಿಯೆಲ್ಲಾ | ಎಲ್ಲಾ ತಿಳಿಸ್ಯಾರ ಇಬ್ಬರು ಸತ್ತರಂತಾ || ೧೦ ||

ಇ|| ಊಟಾ ಒಬ್ಬನೆ ನಾ ಹ್ಯಾಂಗ ಮಾಡಲೆಂತಾ
ಶರಣರು ಜಾಬೀರಗ ಅಂತಾರ ಕೇಳ ಗುಣವಂತಾ
ಏರು || ನಿನ್ನ ಮಕ್ಕಳು ನೀನು | ನನ್ನ ಸಂಗತೀಲೆ ಊಟ ಮಾಡಬೇಕ
ಅವರಿಗೆ ಕರಿತಾ | ಈಗ ತುರ್ತಾ ಕೇಳಿ ಜಾಬೀರ ಬೆರೆತಾ
ನಿಂತ ಅಂತಾರ | ಪುತ್ರ ಹೊರಗ ಹೋಗ್ಯಾರ ಆಡಲಿಕ್ಕೆಂತಾ || ೧೧ ||

ಇ|| ಮಕ್ಕಳು ಬರೂತನಾ ಎಡಿಮ್ಯಾಲೆ ಕುಂತಾ
ಹೇಳ್ಯಾರ ಶರಣರು ಸಾಪ ಉಣ್ಣೂದಿಲ್ಲಂತಾ
ಏರು || ಅಡರಾಶಿ ಎದ್ದ ಆಗ | ಜಾಬೀರ ಹೋಗ್ಯಾರ ಹೊರಗ
ತಿರುಗಿ ಬಂದ ಅಂತಾರ ಸಿಗಲಿಲ್ಲಾ | ಹುಡುಕಿದೆ ಎಲ್ಲಾ |
ಊಟ ಮಾಡರಿ ಶರಣಾ | ಕೇಳಿ ಅಂತಾರ ಪುನಾಃ | ಖರೇ ಹೇಳ ಹಕೀಕತಿ ಇದ್ದಂತಾ || ೧೨ ||

ಇಷ್ಟು ಕೇಳಿ ಜಾಬೀರ ಎದಿಎದಿ ಬಡಕೊಂತಾ
ತಿಳಿಸ್ಯಾರ ಸಾರಾಂಶ ಮಕ್ಕಳಿಗೆ ಆದಂತಾ
ಏರು || ಹೊಕ್ಕಿ ಕೋಲ್ಯಾಗ ತೆಕ್ಕಿ ಬಡದ ಮಕ್ಕಳ ಹೆಣಾ
ತಂದ ಇಟ್ಟಾರ ಶರಣರ ಮುಂದಾ | ದುಕ್ಕಲಿಂದಾ
ತಾಯಿ ನೋಡ್ಯಾಳ ಹಣಕಿ ಶರಣರು ಮಿಕ್ಕಿ
ಮಂತರಾ | ಮಂತರಾ ಓದಿ ಊದ್ಯಾರ ಸತ್ಯವಂತಾ || ೧೩ ||

ಇ|| ಮಕ್ಕಳು ಎದ್ದು ಕುಂತ್ರೋ ಚಿನ್ನ ರೂಪದಂತಾ
ಕುಂತ ಕೂಡಿ ಊಟ ಮಾಡ್ಯಾರ ಏಕಂತಾ
ಏರು || ಕಾರ ಬಾಗಲಕೋಟೆ | ಊರ ಮೋಜಿನ ಪ್ಯಾಟಿ
ನೆನೆದಾರ ಮಲ್ಲೇಕಲ್ಲಾ ಹುಸೇನಾ ಗಾದಿ ರತನಾ
ಅಂತಾರ ಹುಸೇನಮಿಯಾ | ವೈರಿಯ ಸಂದ ನೋಡಿ ಒದುವೆ
ಒದುವೆ ಬೀಳುಹಾಂಗ ಮುಕಳಾನ ಜಂತಾ || ೧೪ ||

* * *

೧೦. ಯಹೂದಿಯರ ಮೇಲಾದ ಪೈಗಂಬರರ ಪ್ರಭಾವ

ಬಂದ ಬಂದ ಚಂದದಿಂದ ಕುಂತೀರಿ ದೈವೆಲ್ಲಾ
ತಿಳಿಯ ಪಡಿಸುವೆ ಶಾಸ್ತರ ಲೀಲಾ ||
ಏರು || ಪ್ರೀತಿಲೆ ಇಟ್ಟ ಚಿತ್ತಾ | ಸೊಂತ ಬುದ್ದಿವಂತಾ
ಕೇಳದೆ ಮಾಡದೆ ಗುಲ್ಲಾ |
ಪ್ರಖ್ಯಾತ ನಬಿರಸೂಲಿಲ್ಲಾ | ಪೃಥ್ವಿಗೆ ಅನಸ್ಯಾರಲ್ಲಾ
ಸಾರತೈತಿ ದೇಶದ ಮೇಲಾ | ಕೊಟ್ಟ ಪದವಿ | ಶ್ರೇಷ್ಠ ಪ್ರಭು ಪಾಲಾ || ೧ ||

ಇಳು || ಒಂದು ದಿನಾ ಯಹೂದೇರು ಹೊಂಟಾರು
ದಾರಿಲಿ ದಂಡೆಲ್ಲಾ ಕಂಡ ತರಬ್ಯಾನ ಅಬೂಜೈಲಾ
ಏರು || ಕೇಳ್ಯಾನ ಅವರಿಗೆ ಆಗ ಬ್ಯಾಗ ಈಗ | ಹೊಂಟಿ ಕೂಡಿ ಇಂದ
ಎಲ್ಲಿಗೆ ಹೋಗತೀರಿ ಹೇಳರಿ ಒಡದ | ಕೇಳಿ ಅವರು ಆತನ ಮುಂದಾ
ತಿಳಿಸ್ಯಾರ ಸುದ್ದಿ ಮುಟ್ಟೀತ ಬಂದ | ಸತ್ಯವಂತ ಅಂತ ರಸೂಲಿಲ್ಲಾ || ೨ ||

ಇ|| ಮನಸು ಆಗೇತಿ ಕಲ್ಮಾ ಓದಿ ಮುಸಲ್ಮಾನ ಆಗಿ ಮೊದಲಾ
ಬರತೇವಿ ಹೋಗಿ ಇನ್ನಮ್ಯಾಲಾ ||
ಏರು || ಅಬೂಜೈಲಾ ಕೇಳಿ ಅಂದಾ | ಬೇಧ ನಿಮಗ ತಿಳಿಯದಾ
ಏನ ಬಲ್ಲಿರಿ ಅವನ ತಂತರಾ | ದರನೇಮಿ ನೋಡಿ ನಕ್ಷತ್ತರಾ
ಮಾಡಿ ಯಾತಾಳ ಮಂತರಾ | ತೋರಸ್ತಾನ ತನ್ನ ಪವಿತ್ರಾ
ಕಂಡ ದಂಗ ಆಗತಾರ ಜನರೆಲ್ಲಾ || ೩ ||

ಇ|| ನಾ ನಿಮಗೂಡ ಬರುವೆ ನಡಿರಿ ನೋಡೂನು ಕೂಡಿ ಎಲ್ಲಾ
ಅಂತ ಹತ್ಯಾನ ಹಿಂಬಾಲಾ |
ಏರು || ನಡೂತಾನ ನಡಗಿ ಮೀರಿ ಜಾರಿ ಹಾರಿ ||
ಮುಂದ ಇದ್ದಾ ಎಲ್ಲರಕ್ಕಿಂತಾ
ನಗುನಗುತಾ ಒಳೆ ಕುಣಕೊಂತಾ | ಮುಟ್ಟಿ ಶರಣರ ಹಂತೇಲಿ ಸೊಂತ
ಅಂತಾನ ಇದರಿಗೆ ನಿಂತ ಮಾಡುವೆ ನಿಮಗೆ ಸವ್ವಾಲಾ || ೪ ||

ಇ|| ಕೇಳಿ ಶರಣರು ಅಂತಾರ ತಿಳಿಸ ಅದು ಮಾತ ಏನು ಖುಲ್ಲಾ
ಅಂತಾನ ಆಗ ಅಬೂಜೈಲಾ
ಏರು || ಇದರಿಗೆ ಕಲ್ಲಪಡಿ | ನೋಡಿ ಅಂದಾ ಖೋಡಿ |
ಕಲ್ಲಿನ ಬಣ್ಣಾ ಕೆಂಪಾಗಿ ಮೊದಲಾ
ಅದರೊಳಗೆ ಗಿಡಾವೊಂದ ಅಸಲಾ | ಹುಟ್ಟಿಬರಬೇಕರಿ ಮ್ಯಾಲಾ
ಕಲ್ಮಾ ಸರೂ ತಪ್ಪಲ ಮ್ಯಾಲಾ | ಬರೆದಿರಬೇಕ ನಬಿರಸೂಲಿಲ್ಲಾ || ೫ ||

ಆ ಕಲ್ಲಿನ ಮ್ಯಾಲಾ | ಬೀಳಬಾರದು ತುಸು ಬಿಸಲಾ
ಹತ್ತಿರಬೇಕರಿ ಹಣ್ಣುಹಂಪಲಾ
ಏರು || ಗಿಡದ ಮ್ಯಾಲೆ ಪಕ್ಷಿ | ಸೋಸಿ ನಿಮ್ಮ ಸಾಕ್ಷಿ
ನುಡಿಬೇಕ ಖರೇ ಅಂತ ಶರಣಾ
ಅಂದರ ಆಗ ಆಗುವೆ ಮುಸಲಮೀನಾ | ಆ ಗಿಡದ ಒಂದೊಂದ ಹಣ್ಣಾ
ತಿಂದು ನೋಡಿದರ ನಮ್ಮನ್ನಾ | ಬ್ಯಾರೆ ಬ್ಯಾರೆ ರುಚಿ ಇರಬೇಕಲ್ಲಾ || ೬ ||

ನಬಿಸಾಹೇಬ ಶರಣಾ ಕೇಳಿ ದಂಗ ಆಗಿ ಕುಂತಾರಲ್ಲಾ
ಇಳಿದು ಬಂದಾರ ಜಿಬರಾಯಿಲಾ
ಏರು || ಶಿವನ ಅಂತಃ ಕರಣಾ | ಶರಣಾ ನಿಮ್ಮನ್ನಾ | ಆಗೇತಿ ಬಂದೇನಿ ನಾ
ತಿಳಿಸುವೆ ಕಲ್ಲಿನ ಸೂಚನಾ | ಆಗತೈತಿ ಕೇಳರಿ ಶರಣಾ
ಚಿಂತಿ ಮಾಡಬ್ಯಾಡರಿ ಇನ್ನಾ | ಸಂತೋಷ ಪಡಿರಿ ಬಿಟ್ಟಜಲ್ಲಾ || ೭ ||

ತೋರಸ್ಯಾರ ಮೊದಲಿಗೆ ಕೇಳಿದ್ದು ಕಲ್ಲ ಹೌದೇನಿಲ್ಲಾ
ಕುಂತಲ್ಲೆ ನಬಿರಸೂಲಿಲ್ಲಾ
ಏರು || ಅಬೂಜೈಲಾ ನೋಡತಾನಾ ಬಣ್ಣಾ | ಆಕ್ಷಣಾ
ಆಗ ಕೆಂಪ ಸೀಳಿ ಕಲ್ಲಾ
ಗಿಡಾ ಚಿಗಿತ ಬಂತರಿ ಮ್ಯಾಲಾ | ಹೇಳಿದಂತೆ ಹಣ್ಣು ಹಂಪಲಾ
ಕುಂತ ಗುಬ್ಬಿ ಗಿಡದ ಮ್ಯಾಲಾ | ನುಡಿತ ಸಾಕ್ಷಿ ಖರೇ ರಸೂಲಿಲ್ಲಾ || ೮ ||

ಇ || ಇಷ್ಟೆಲ್ಲಾ ಕಂಡ ಓಡಿ ಹೋಗ್ಯಾನ ಅಬೂಜೈಲಾ
ಕಡಿತನಾ ಕಲ್ಮಾ ಓದಲಿಲ್ಲಾ |
ಏರು | ಯಹೂದೇರು ಎಲ್ಲಾ | ಮೊದಲಿಗೆ ಹೂಲಿಗೆ ಹೂಲಾ
ಕಂಡ ಕಲ್ಮಾ ಆಗಿನ ಕ್ಷಣಾ | ಓದ್ಯಾರ ಸರೂ ಸಂಪೂರ್ಣಾ
ಆಗ್ಯಾರ ಮುಸಲ್ಮೀನಾ ಕೇಳರಿ ಕುಂತ ವಿದ್ವಾನಾ
ತಿಳಿಸಿ ನೀ ಖುಲ್ಲಾ ತಪಶೀಲಾ || ೯ ||

ಇ|| ಇರತಾರ ಪೀರ ಮಲ್ಲೇಕಲ್ಲ ಹೊಳಿದಂಡೆ ಸಾಲಾ
ನೆನದಾರ ನೋಡು ಮಡ್ಡಿಯ ಮ್ಯಾಲಾ ||

* * *

೧೧. ಗುಣವಂತ ಶರಣ ನಬಿಸಾಹೇಬರು

ಶರಣಾ ನಬಿಸಾಬ ಸಾಕ್ಷಾತ್ ತನಯಾ | ನಾ ||
ವರಣನ ಮಾಡಲಿ ಎಷ್ಟು ಅಂತಾ || ಚಾಲ ||
ಏರು || ಕೇಳಿರಿ ಒಂದಿನಾ ಬೀಬಿ ಖಾತೂನ ಜನ್ನಾ
ಕುಂತ್ರು ಸಾಂಬನ ಸ್ತೋತ್ರ ಮಾಡುತ | ಇತ್ತ ವ್ಯಾಳ್ಯಾ ಕಠಿಣಾ |
ಕಷ್ಟ ನಾನೆಷ್ಟಂತ ಹೇಳಲಿ ಇಟ್ಟಿದ್ದ ಆ ಭಗವಾನಾ |
ಹಸುವಾಗಿ ಶಿಶು ಮುಖ ಬಾಡಿ ಚಿನ್ನಾ || ೧ ||

ಚಾಲ || ತಿನ್ನಲಾಕ ಮನಿಯಾಗ ಇಲ್ಲ ಏನೇನೂ
ಮರಮರ ಮರಗುವರು ಒಂದ ಸವನಾ
ಶಿವನೆ ನೀ ಇಷ್ಟ ಯಾಕ ತಿಂದ ಇಟ್ಟಿ ವಿಪರೀತಾ |
ಮೂರು ದಿವಸ ಆಯಿತೋ ಹಾಕಿಲ್ಲೊ ತುತ್ತಾ
ಅನ್ಯಾಯ ನ್ಯಾಯ ಏನರ ಮಾಡಿದಿವೊ ನಿನಗ ಗುರತಾ
ಏರು || ನಬಿಸಾಬ ಶರಣರೊ ಅಷ್ಟರಲ್ಲಿ ಬಂದರೊ ಕೇಳಿ ವರ್ತಮಾನಾ ||
ಮನಸಿನ್ಯಾಗ ಉದಾಸ ಆದಾರ
ಊರಬಿಟ್ಟ ಆರ‍್ಯಾಣದಾರಿ ಹಿಡಿದ ಅವರು ನಡಿದಾರೊ || ೨ ||

ಚ್ಯಾಲ || ಅಲ್ಲಿ ಒಂದಾ ಭಾವಿ ಇತ್ತ ಸೇದೂದ | ಒಂಟಿ ಸವಾರ ಅಲ್ಲಿ ಇಳದಿದ್ದ
ಆತಗ ಕೇಳತಾರ ತಾವು ಖುದ್ದ | ನನಗ ನೀ ಏನರ ಕೂಲಿ ಹಚ್ಚ ಅಂತಾ
ಹೇರಾಬ ಹೇಳ್ಯಾನೊ ನಗನಗತಾ | ಜಗ್ಗಿ ಜಗ್ಗಿ ಒಂಟಿಗೆ ನೀರ ಕುಡಿಸ ಅಂತಾ ||
ಮೂರ ಉತ್ತತ್ತಿ ಕರಾರಾ
ಕಬೂಲ ಮಾಡಿ ನಬಿಸಾಹೇಬರು ಜಗ್ಗ ಹತ್ತ್ಯಾರೊ ನೀರಾ || ೩ ||

ಚ್ಯಾಲ || ಎಂಟು ಡೋಲಿ ಜಗ್ಗುದರೊಳಗ
ಹರಕೊಂಡ ಬಿದ್ದಿತೊ ಬಾವ್ಯಾಗ | ಸಿಟ್ಟು ಬಂದಿತೋ ಹೇರಾಬಗ
ಶರಣರಿಗೆ ಹೊಡದ ಕಪಾಳಕ ಬಡಭಕ್ತ
ಶಾಂತ ಮನದಿಂದ ಗುಣವಂತ ಶರಣರೆ | ಇಳದ ಬಾವ್ಯಾಗ ಸ್ವಂತ ತಗದಾರೊ ||
ಏರು || ಕರಾರ ಪ್ರಕಾರ ಇಸಗೊಂಡ್ರೂ ಪಗಾರಾ
ಎಂಟು ಡೋಲಿಗೆ ಒಟ್ಟು ಉತ್ತತ್ತಿ ಖಜೂರ
ತಂದ ಮಗಳಿಗೆ ಅಂದರೊ ಇದ ಅಷ್ಟ ತಿಂದ ಕುಡಿ ಅವ್ವಾ ನೀರಾ || ೪ ||

ಚ್ಯಾಲ || ಹೇರಾಬಗ ಬಹು ಕೆಡಕ | ಶರಣರ ಕಪಾಳಕ ಹೊಡೆದಿದಕ
ಕೈ ಕಡದ ಮಾಡಿಕೊಂಡ ತುಣತುಣಕ
ಬಹು ಬ್ಯಾನಿ ಬ್ಯಾನಿ ಬ್ಯಾನಿ ಮಾಡಿತ ಕುತ್ತ
ಅನಕೊಂತ ಶರಣರ ಪ್ರತಾಪ ವಿಪರೀತ |
ಇದ್ದಾಂಗ ಗುಮ್ಮ ನೀರಿನ ನೆಲ ಇಲ್ಲದಂತ
ಏರು || ಹೇರಾಬನ ಕೈಯ್ಯಾಮುರದ ಆದೀತೊ | ಘಾಯಾ
ತಾಳಲಾರದ ಒದರಿ ಬಿಕ್ಕಿ ಬಿಡತಾನೊ ಬಾಯಾ
ಹಿಂದ ಮುದಕಗ ಹೊಡೆದ ನಾನು ಸುಮ್ಮನಾದೊ ಮಾರಾಯಾ || ೫ ||

ಚಾಲ || ಹುಡುಕುತ ಹೊಂಟಾನೊ ಶರಣರಿಗೆ
ಮಕ್ಕೇದ ಬೇಡ ಒಳಗ | ಮಕ್ಕೆದೊಳಗ ಹತ್ತಿತೊ ಶರಣರ ಗುರತಾ |
ಏರು || ತಿಳಿಗೆಟ್ಟ  ಬಡದೇನಿ ಪಶ್ಚಾತ್ತಾಪ  ಪಡೆದೇನಿ
ಅಂದಿನ ಹಿಡದು ಇಂದಿನ ತನಾ ಒದರಿ ಸಾಯತೇನಿ |
ಕ್ಷಮಿಸಿ ನನಗ ಉಳಿಸಬೇಕರಿ ತಾಳಲಾರೆನೊ ಬ್ಯಾನಿ || ೬ ||

ಚಾಲ || ಕರುಣ ಹುಟ್ಟಿತೊ ನಬಿಸಾಬಗ
ಮಂತ್ರ ಓದಿ ಊದಿದ್ರೊ ಅವನ ಮ್ಯಾಗ
ಸಾಬೀತ ಕೈಯಾ ಆದಿತೊ ಆಗಿಂದಾಗ
ಹೇರಾಬ ಖುಷಿಯಾಲಾ ಆದಾನೊ ಅತ್ಯಂತಾ
ಬಿಟ್ಟ ಕಾಫರ ಹಿಡದ ಇಸ್ಲಾಮಿ ಪಂತಾ
ಹಿಡದಾನೊ ಜರೆ ಧರ್ಮಾ ಇದು ಸಿದ್ಧಾಂತಾ ||
ಏರು || ಓದ್ಯಾನೊ ಕಲಮಾ ಪಾವನತೊ ಅವನ ಜಲ್ಮಾ
ತಗಲ ಮಾತಿಲ್ಲ ಮಿಗಿಲ ಬಾಗಲಕೋಟ ಮುಕ್ಕಾಂ
ಶಿಸ್ತ ದಸ್ತಗೀರಸಾಬ ಕೇಸುಪೀರ ಇಟ್ಟೊ ನಮಮ್ಯಾಲ ಪ್ರೇಮಾ || ೭ ||

ಚ್ಯಾಲ || ನಾಗುಗೌಸುನ ಕವಿ ಒಳೆ ಖಡಕ
ವೈರಿ ಎದಿಯಾಗ ಜಡದಾಂಗ ಮೇಕ
ಇಂವಾ ಒಂದ ಹಾಡಿದ ಕವಿ ಹರಕ |
ಸದಾ ಹೇಳಂದಾ ಇಂವಾ ಅತಗೊಂತ ||

* * *

೧೨ನಬಿಸಾಬರಿಂದ ಆಕಾಶ ಮುಸ್ಲೀಮರಾದದ್ದು

ಸಭಾ ಬಂದ ಕೂಡಿರಿ ಸೊಂತಾ | ಹೇಳತೇನಿ ಬೇಧ ಏಕಂತಾ
ಕೇಳಬೇಕ ಶಾಸ್ತ್ರ ಸಿದ್ಧಾಂತಾ ಸರೂವೆಲ್ಲಾ || ಪಲ್ಲವಿ ||

ಏರು || ನಬಿಸಾಬ ಶರಣಾರಾ ಜಗತೇಕ ಅಧಿಕಾರಾ
ಅವರ‍್ಹಾಂಗ ಯಾರ‍್ಯಾರ ಆಗೂದಿಲ್ಲ ಕರುಣ ಸಾಗರಾ
ಅವರ ಮ್ಯಾಲೆ ಹರಿಬ್ರಹ್ಮಾ | ಇಟ್ಟಿದ್ದಾನೋ ತನ್ನ ಪ್ರೇಮಾ
ನೋಡೋ ಶಾಸ್ತ್ರ ಸುಳ್ಳಲ್ಲೋ ತಮ್ಮಾ ಖುಷಿಯಾಲಾ || ೧ ||

ಇ|| ಊರ ಒಳಗ ಸಾರಿ ಡಂಗೂರನಾ | ಬಂದ ಕೂಡ್ಯಾರೊ ಸರೂಜನಾ
ಇಂದ ಆಗೂದು ನನ್ನ ಮರಣಾ ಅಂತಾರಲ್ಲಾ
ಏರು || ಲಕ್ಷ ಇಪ್ಪತ್ತು ನಾಲ್ಕು ಸಾವಿರಾ | ಶರಣರಾದ್ರೋ ಎಂತೆಂಥವರಾ
ಸರವರ ಮ್ಯಾಲೆ ಅಧಿಕಾರಾ | ಇಟ್ಟ ನಡೆಸಿದ್ದಾ ಆ ಶಂಕರಾ
ಕೂಡಿದಂತ ಭಕ್ತರವೊಳಗ | ನಬಿಸಾಬ ಅಂತಾರೋ ಹೀಂಗ
ಹೊಡೂದಿದ್ದರ ಹೊಡದು ನನಗ | ತಗೋ ಬದಲಾ || ೨ ||

ಕೇಳಿ ಆಕಾಶ ಈ ಸುದ್ದಿ | ತಡಾಯಿಲ್ದ ಬಂದಾನ ಜಲ್ದಿ
ನಬಿಸಾಬಗ ಅಂತಾನ ಗುದ್ದಿ ಮಾಡಿ ಸವಾಲಾ
ಏರು || ಹೊಡಿರೊಮ್ಮೆ ನೀವು ನನಗ | ಹೊಡೂತೇನಿ ನಾನು ನಿಮಗ
ನಟ್ಟ ನಡು ಬೆನ್ನಿನ ಮ್ಯಾಗ | ನಿಂತ ಬಾಯಿಲೆ ಅಂತಾನ ಹೀಂಗ
ನಬಿಸಾಬ ಕುಂತಾರ ಮುಂದಾ ಹೊಡಿ ಅಂತಾರ ಬಾಯಿಲಿಂದಾ
ಛಡಿ ಹಿಡಿದ ಆಕಾಶ ಹಿಂದಾ ನಿಂತಾನಲ್ಲಾ || ೩ ||

ಇ|| ಕೈಯ ಮುಗದ ಅಬೂಬಕರಾ | ನಿಂತ ಆಕಾಶಾನ ಇದರಾ
ಮಾಡೋ ನೀನು ದಯಾಸಾಗರಾ | ಅವರಮ್ಯಾಲಾ
ಏರು || ಬಾಯಿಲಿಂದ ಅಂತಾನೋ ಹೀಂಗ | ನೀವು ಏನ ಹೊಡುದಿಲ್ಲ ನನಗ
ನಬಿಸಾಬ್ರ ಹೊಡದಾರ ಹ್ಯಾಂಗ ಹೊಡೂತೇನಿ ನಾನು ಅಂವಗ
ಅಬೂಬಕರ ಆದ್ರೋ ಹಿಂದಕ | ಪುತ್ರ ಉಮ್ಮರ ಬಂದ ಮುಂದಕ
ಆಕಾಶಾಗ ಅಂತಾರ ಯಾಕ | ಕೇಳೂದಿಲ್ಲಾ || ೪ ||

ಇ|| ಅಂತಾರ ಉಮರ ಆಕಾಶಾಗ | ಸಿಟ್ಟ ಇದ್ದರ ನಿನ್ನಮನದಾಗ
ಹೊಡಿ ನನ್ನ ಬೆನ್ನಿನ ಮ್ಯಾಗ | ಆದಿ ನಿ ಖಬೂಲಾ
ಏರು || ನಬಿಸಾಬ ಸತ್ತುಳ್ಳ ಶರಣಾ | ಸಾರಿ ಡಂಗೂರ ಕೊಟ್ಟಾರ ವಚನಾ
ಯಾರಿಗೇನ ಮಾಡಲಿ ನಾನಾ | ಹೊಡದಾರ ಹೊಡುವೆ ಅವರನಾ
ಕೇಳಿ ಉಮರ ಹ್ವಾದಾನೋ ತಿರುಗಿ | ಬಹಳ ಚಿಂತಿ ಮನದಲ್ಲೆ ಆಗಿ
ಬಂದ ಉಸ್ಮಾನ ಮುಂದಕ ಸಾಗಿ | ತಡಾಯಿಲ್ಲಾ || ೫ ||

ಇ|| ಆಕಾಶಾಗ ಅಂದ್ರೋ ಉಸಮಾನ | ಇಲ್ಲ ನಮ್ಮ ಜೀವದಾಗ ಚೈನಾ
ಕರುಣ ಮಾಡಿ ಬಿಡ ಶರಣರನಾ | ತಿಳಿಯಾಕಿಲ್ಲಾ
ಏರು || ಇವರ ವಾರ್ತೆ ಬಂದೇನಿ ಕೇಳಿ | ನಬಿಸಾಹೇಬ ಕಳಿಸಿದ್ರೊ ಹೇಳಿ
ನಿನ್ನ ಮನಸಿನ್ಯಾಗ ತಿಳಿ | ಬಂದ ಹಟಾ ಹಿಡದಾನ ವಾಳಿ
ಬಿಡೂದಿಲ್ಲಾ ನಬಿಸಾಹೇಬನಾ | ಹೊಡೂತೇನಿ ಒಡೂಹಾಂಗ ಚಿನ್ನಾ
ಯಾರು ಹೇಳಿದರ ಕೇಳೂದಿಲ್ಲಾ ನಾನಾ | ಅಂತಾನಲ್ಲಾ || ೬ ||

ಇ|| ದುಃಖ ಶೋಕ ಆಗಿ ಉಸಮಾನಾ | ಸಾಂಬ ನಿನಗ ಇಲ್ಲೇನೋ ಕರುಣಾ
ಹೇಳಿ ಹೀಂಗ ಹ್ವಾದಾರಣ್ಣಾ | ತಡಾಯಿಲ್ಲಾ
ಏರು || ತಿಳಿಯದು ಸಾಂಬನ ನೆಲಿ | ಧರಣಿಪಾಲನ ಹುಲಿ
ಬಂದಾರೋ ಮೌಲಾ ಅಲಿ | ನಿಂತ್ರೋ ಆಕಾಶಾನ ಬದಿಲಿ
ಬಿಟ್ಟ ನಿನ್ನ ಮನದಾನ ಕೋಪಾ | ಇಟ್ಟ ನಿನ್ನ ಮನಸಾ ಸಾಪಾ
ಮಾಡೋ ನೀ ಶರಣರಿಗೆ ಮಾಪಾ | ಅಂತಾರಲ್ಲಾ || ೭ ||

ಇ|| ಮೌಲಾ ಅಲಿ ಹೇಳ್ಯಾರೋ ನಿಂತಾ | ಕೇಳೋ ಆಕಾಶ ನನ್ನ ಮಾತಾ
ಯಾರೂ ಹೇಳಿದರ ಕೇಳೂದಿಲ್ಲ ಅಂತ | ಅಂತಾರಲ್ಲಾ
ಏರು ||| ಅಣ್ಣಾ ತಮ್ಮಾ ಹಸೇನ ಹುಸೇನಾ | ತಡಾಯಿಲ್ದ ಬಂದಾರಣ್ಣಾ
ಹೇಳತಾರೋ ಆಕಾಶಾನ್ನ | ಹೊಡಿಬ್ಯಾಡೋ ಬಿಡೋ ಮುತ್ಯಾರಿನ್ನಾ
ಅಲ್ಲೊ ಆಕಾಶ ನಿನ್ನ ಧರ್ಮಾ | ಅವರಗೂಡ ಕಟ್ಟಿದಿ ವರ್ಮಾ
ಸಿಟ್ಟಿಲಿಂದ ಅಂತಾನೋ ತಮ್ಮಾ | ಬಿಡೊದಿಲ್ಲಾ || ೮ ||

ಇ|| ಆಕಾಶ ಅಂತಾನೋ ಹೀಂಗ | ಅಂಗಿ ಸರಿಸರಿ ಬ್ಯಾಗ
ಹೊಡೂತೇನಿ ಬೆನ್ನಿನ ಮ್ಯಾಗ | ತಡಾಯಿಲ್ಲಾ
ಏರು || ಸರಿಸಿ ಅಂಗಿ ಹಿಡಿದಾರೋ ಮ್ಯಾಕ | ಬೆನ್ನಿನವೊಳಗ ಬಿದ್ದೀತ ಬೆಳಕ
ಬಂದಾ ಬಿದ್ದಾ ಅವರ ಚರಣಕ | ಸಂತೋಷಾತ ಸ್ವಾಮಿ ನನ್ನ ಮನಕ
ಓದಿ ಕಲ್ಮಾ ಮುಸಲ್ಮೀನಾ | ಮಾಡಿ ಬಿಟ್ರೋ ಆಕಾಶನ್ನ
ಹಗಲಿ ಇರುಳು ಸಾಂಬನ ಧ್ಯಾನಾ | ಮಾಡೂನಲ್ಲಾ || ೯ ||

ಇ|| ಮುಕ್ಕಾಮ ಬಾಗಲಕೋಟಿ ಶಾರಾ | ಅಲ್ಲಿ ಇರುವರೋ ದಸ್ತಗೀರಾ
ಕರುಣುಳ್ಳ ಕೇಸುಪೀರಾ ಒಲಿದಾನಲ್ಲಾ | ನೋಡೂ ನಾಗೂ ಗೌಸೂನ ಕವಿತಾ
ಏರು || ಗುರಿಯಿಟ್ಟು ಹೊಡೆದಾಂಗ ನಿರತಾ | ಅವರಗೂಡ ಕಟ್ಟಿದಿ ಶರತಾ
ಬ್ಯಾಡೋ ತಮ್ಮಾ ಆದಿ ಅನರ್ಥಾ | ಲಾಲಡೋಂಗರಿ ಅಂತಾರೋ ಹೀಂಗ
ನಮ್ಮ ಉಸ್ತಾದ ಲಚಮನ ಸಿಂಗ | ಅವರಲಿಂದ ಸರೂ ಅಂತರಂಗ | ತಿಳಿಯಿತಲ್ಲಾ || ೧೦ ||

* * *

೧೩. ಶೈರಮ್ಮರಸನಿಗೆ ಕಲ್ಮಾ ಓದಿಸಿದ ನಬಿಸಾಬರು

ಮಹಾಶಿವನು ಕುಳಿತು ಜುಬರಾಹಿಲ ಎಂಬ ಶಿವದೂತನಿಗೆ ಹೇಳಿದನು
ಏರು|| ಮರಿಯಬ್ಯಾಡ ಮದೀನಾಕ್ಹೋಗಿ ನಬಿಸಾಬರಿಗೆ ತಿಳಿಸೆಂದನು
ಶೈರಮ್ಮರಸಗ ಮುಸಲ್ಮಾನ ಮಾಡಿ ಕಲ್ಮಾ ಓದಿಸಿ ಬಿಡೆಂದನು
ಆ ದೂತನು ಬಂದು ಹೇಳಿದನು ಸ್ಪಷ್ಟ ನಬಿಸಾಬರು ಕೇಳಿದರು ಕಿವಿಗೊಟ್ಟಾ
ಪ್ರಚಾರಕನ ಮಾತು | ಇತ್ತ ಕಡಿಗೆ ಕೇಳೋ ಮಹ್ಮದನು ಮದೀನ ಶ್ಯಾರ ಬಿಟ್ಟಾ
ಮನಯೋಗದಿಂದ ಹೊಂಟಾ | ಶೈರಮ್ಮರಸನ ಪಟ್ಟಣಕ್ಕೆ
ಚ್ಯಾಲ | ಯುಕ್ತಿ ಕಡಿ ಶಕ್ತಿಯಿಂದ ಶೈರಮ್ಮನ ಪಟ್ಟಕ್ಕೆ ಹೊರಟಾನು
ಮುಂದಕ್ಕೆ ದಾರಿ ಹಿಡಿದಾನು | ಹೋಗಿ ಅವನ ತೋಟದಲ್ಲಿ ಇಳಿದಾನು
ತೋಟದಾನ ಮರದ ಬುಡಕ ಮಲಗಿಕೊಂಡನು
ಕಾವಲಿ ಹರಿಯುವದು ಕಂಡನು | ಕಾಲಿಟ್ಟು ಪಾದ ತೊಳೆದಾನು
ಪಾದ ತೊಳೆದ ನೀರು ಹರಿದು ಹೋಗಿ ಪುರಕ ತತ್ಕಾಲಾ || ೧ ||

ಇ|| ಗುರುವಿನ ನೆನಸಿ ಮರಗಳಾ ಎಲ್ಲ ಸೊರಣಿ ಮಾಡಿದವು
ಏರು|| ಸ್ವಾಮಿ ದಯಾದಿಂದ ಉದ್ದಾರಾದೆವೆಂದು ಮರಗಳು
ಮಾತಾಡಕ ಹತ್ತಿದವು | ಅಲ್ಲಾ ಎಂಬುವ ಕಲ್ಮಾ ಓದಿ ದೀನೆಂದವು
ತೋಟ ಕಾಯವ ಮರದ ಸೊರಣಿ ಕೇಳಿ ಬೆರಗಾದನು
ಇದು ಏನು ಕೌತುಕ ದೇವರ ಆಟ ನನಗ ತಿಳಿಯದು ಎಂದನು
ಎಲ್ಲೆಲ್ಲಿ ನೋಡಿದರು ಅಲ್ಲಾ ಎಂಬ ಶಬ್ದ ಕಲ್ಮಾ ಓದಾಕ ಹತ್ತಿದವು
ಆ ತೋಟ ಕಾಯುವ ಚಾರನು | ನಬಿಸಾಹೇಬರಿಗೆ ನಮಸ್ಕಾರ ಮಾಡಿ
ನೀವು ಯಾರೆಂದು ಕೇಳಿದನು | ಈ ಚಾರನೆ ನಾನು ಮದೀನಾ ಶಾರದವನು
ಶೈರಮ್ಮ ಅರಸನಿಗೆ ಮುಸಲ್ಮಾನನು ಮಾಡಲಿಕ್ಕೆ ಬಂದಿದ್ದೇನೆಂದು ಹೇಳಿದನು
ಚ್ಯಾಲ || ದೂತ ಹೋಗಿ ಶೈರಮ್ಮರಸನಿಗೆ ಶರಣ ಮಾಡಿದನು
ಲಗು ಮಾಡಿ ಸುದ್ದಿ ಹೇಳಿದನು | ಜಲ್ದಿ ತೀವ್ರ ಹೊರಡೆಂದನು
ಸುದ್ದಿಕೇಳಿ ಅರಸು ಬಹಳ ಸಿಟ್ಟಿಗೆದ್ದನು | ಹೊರಟ ತಯಾರಾದನು
ಸುತ್ತ ಚೌಕ ತನಗೆ ಪಾರಾಯಿಟ್ಟನು
ಬೃಷ್ಟ ಶೈರಮ್ಮ ಕತ್ತಿ ಹಿಡಕೊಂಡು ಕಡಿಯಾಕ ಹೊರಟನು  || ೨ ||

ಇ|| ನೋಡಿ ನಬಿಸಾಹೇಬ ಸ್ವಾಮಿ ಮರಳೆಂದು ಸುಮ್ಮನೆ ನಿಂತನು
ಏರು || ಶೈರಮ್ಮ ಅಂತಾನು ಯಾವ ದೇಶದವ ಇಲ್ಯಾಕ ಬಂದಿರಿ ತೋಟದಲ್ಲಿ
ಸ್ವಾಮಿ ಶಿವನ ಅಪ್ಪಣೆಯಿಂದ ಮುಸಲ್ಮಾನ ಮಾಡಿ ಹೋಗುವೆನು
ಇಷ್ಟು ಕೇಳಿ ಅರಸು ಕೋಪದಿಂದ ಖಡ್ಗ ನೆಗವಿದನು
ನೆಗವಿದಂತ ಖಡ್ಗ ಸ್ವಾಮಿ ನೋಡಿ ಅಂತರಲೆ ನಿಲ್ಲಿಸಿದನು
ಎರಡು ಕೈಯಾಗ ಅಂತರಲೆ ನಿಂತಾವು ಮಂತ್ರ ಮಾಡಿದ ಗಿಡಗಾರನು
ಆ ನಬಿಸಾಹೇಬ ಸ್ವಾಮಿ ನಾನು ಗಿಡಗಾರನಲ್ಲ ನನ್ನ ಕರ ತತ್ವವನ್ನು ನೋಡಿ
ವಿಚಾರ ಮಾಡಿ ಮನಸಿಗೆ ತಿಳಿಯೆಂದನು | ಎಲೋ ನೀನು ಸತ್ಯಕ್ಕೆ ಹೌದಾದರೆ
ಈ ಗೋರಿಯೊಳಗಿನ ಹೆಣವನ್ನು ಮೇಲಕ್ಕೆ ಎಬ್ಬಿಸೆಂದು ಹೇಳಿದನು
ಚ್ಯಾಲಿ || ಇಷ್ಟು ಕೇಳಿ ಸ್ವಾಮಿ ಶಿವನ ಸೊರಣಿ ಮಾಡಿದನು
ಗೋರಿಯ ಮಣ್ಣ ತಗೊಂಡನು | ನಿಂತು ಮೇಲಕ್ಕೆ ತೂರಿದನು
ತೂರಿದಂತ ಮಣ್ಣು ಮೇಲಕ್ಕೆ ನೀರು ಕಾವಲಾಗಿ ಹರಿಸಿದನು
ಒಣಗಿದ ಮರವ ಚಿಗಿಸಿದನು | ತನ್ನ ಮಹಿಮೆ ತೋರಿಸಿದನು
ಒಣಗಿದ ಮರವು ಚಿಗಿತು ಹಣ್ಣು ಕಾಯಾಗಿ ನಿಂತವು || ೩ ||

ಇ|| ಈ ಮಹಿಮಾಸ್ವಾಮಿ ಹೊರತು ಯಾರಿಗೆ ತಿಳಿಯದೆ ಹೋಯಿತು
ಏರು || ಶೈರಮ್ಮ ಅರಸನ ಮಗಳು ಬಂದು ವನದೊಳಗೆ ನಿಂತು
ನೋಡಿದಳು | ಹಣ್ಣು ಕಾಯಿ ಆದದ್ದು ನೋಡಿ ಹರದು ತಿಂದಳು
ಹೊಟ್ಟಿಕಡತೆದ್ದು ತಾಳಲಾರದೆ ಮನಿಗೆ ಹೋದಳು
ಆಕಿಯ ದೂತಿ ಹೋಗಿ ಶೈರಮ್ಮರಸಗ ಸುದ್ದಿ ಹೇಳಿದಳು
ಸುದ್ದಿ ಕೇಳಿ ಶೈರಮ್ಮ ತೋಟಕ್ಕೆ ಹೋಗಿ ನಿಂತನು
ಆ ಸ್ವಾಮಿಯವರು ನನ್ನ ಮಗಳ ಹೊಟ್ಟೆ ಕಡತ ನಿಂತಿತೆಂದು
ಮನೆಗೆ ಹೋಗೆಂದು ಹೇಳಿದರು | ಈ ಶೈರಮ್ಮ ಅರಸು ಸ್ವಾಮಿ
ಆಡಿದ ವ್ಯಾಖ್ಯೆವನ್ನು ಕೇಳಿ ಮನೆಗೆ ಹೋಗುವುದರಲ್ಲಿ
ಒಂಬತ್ತು ವರುಷದ ಕೂಸನ್ನು ಹಡೆದಿದ್ದಳು
ಚ್ಯಾಲಿ || ವಿಚಿತ್ರ ನೋಡಿ ಶೈರಮ್ಮರಸು ಸ್ವಾಮಿಗೆ ಹೇಳಿದನು
ಲಗುಮಾಡಿ ಮನಿಗೆ ಕರೆತಂದನು | ಕೂಸಿನ್ನ ಭೆಟ್ಟಿ ಮಾಡಿಸೆಂದನು
ಎದ್ದು ನಿಂತು ಕೂಸು ಹೇಳಿತು ಉದ್ದಾರಾದೆನು | ಹಿಂದಿನ ಜಲ್ಮಕಳೆದನು
ನಿಮ್ಮ ಪಾದಕ್ಕೆ ಹೊಂದಿದೆನು | ಕೂಸು ಮಾತಾಡುದು ಕೇಳಿ
ಎಲ್ಲ ಜನರು ನೋಡಿ ಬೆರಗಾದರು || ೪ ||

ಇ|| ನಬಿಸಾಹೇಬರು ಕುಂತು ನೀವು ಯಾರೆಂದು ವಿಚಾರ ಮಾಡಿದರು
ಏರು || ಕೂಸು ಹೇಳಿತು ಆದ ಮಾತು ಗೋರಿಯ ಒಳಗ ಇದ್ದೆನು
ನಬಿಸಾಹೇಬರ ಕರುಣದಿಂದ ಇಲ್ಲಿಗೆ ಬಂದೆನು
ಇಷ್ಟು ಕೇಳಿ ಕೂಸು ನಬಿಸಾಬರ ಪಾದಕ್ಕೆ ಬಿದ್ದಿತು
ಎಲ್ಲ ಜನರು ನೋಡಿ ಶರಣು ಮಾಡಿ ಎದ್ದು ನಿಂತರು
ಕೂಸಿನ್ನ ನೋಡಿ ಕುಶಿಯಾಗಿ ಸ್ವಾಮಿ ಆದ ಮಾತು ಕೇಳಿದರು
ಆ ಕೂಸು ಹೇಳಿತು ಹಿಂದಿನ ಈಸಾ ಪೈಗಂಬರ ಆಳಿಕೆ
ಉಮೇದ್ವಾರಿಯಲ್ಲಿ ಎಂಬತ್ತು ವರ್ಷದವನಾಗಿ ಸತ್ತಿದ್ದೆನು
ಈ ಏಳು ನೂರಾ ಎಂಬತ್ತು ವರ್ಷದವರೆಗೆ ಗೋರಿ ಒಳಗ ಇದ್ದು
ಅಂತಃಕರಣದಿಂದ ಹುಟ್ಟಿ ಬಂದು ಮಂದಿಯೊಳಗ ಸಂತೋಷದಿಂದ ಇರುವೆನು
ಚ್ಯಾಲಿ || ಈ ಸುದ್ದಿ ಕೇಳಿ ಶೈರಮ್ಮರಸು ಹರುಷವಾದನು
ಸ್ವಾಮಿ ಕೌತುಕ ನೋಡಿದನು | ಸತ್ಯಕ ಶರಣರು ಹೌದೆಂದನು
ಸ್ವಾಮಿಯ ಮಹತ್ವ ನೆನಸಿ ತಿಳಿದು ಗಿಡಗಾರ ಅಲ್ಲೆಂದನು
ಕಲ್ಮಾ ಓದಿಸಿ ಬಿಡೆಂದನು ಮುಸಲ್ಮಾನನಾಗಿ ಇರುವೆನು
ಸ್ವಾಮಿ ಕೂಸಿನ್ನ ಕರಿದು ನೂರೊರಷ ಆಯುಷ್ಯಕೊಟ್ಟರು
ಶೈರಮ್ಮರಸಗ ಮುಸಲ್ಮಾನನ ಮಾಡಿ ಸ್ವಾಮಿ ಮದೀನಕ್ಕೆ ಹೋದರು
ಪೊಡವಿಯಲ್ಲಿ ಮೆರೆಯುವಂತ ಒಡೆಯ ನರಗುಂದ ಪೀರನು
ಧೃಡಭಕ್ತಿಲಿಂದ ಕಮಾಲಸಾಹೇಬ ತೋರಿದರು || ೫ ||

* * *

೧೪. ಜೈಕುಮನ ಗರ್ವಭಂಗ

ಈ ಸಂದ ದೈವದ ಮುಂದ ಹೇಳುವೆ ಒಂದ ಬಯಾನ
ನಮಗ ಮೂಲ ಆಗಿ ನಿಂತಾನ ಗೂಗಿ ಇಂವಾ ಪತ್ರೋಳಿ
ಹಾರಿ ಬಂದರ ತೂರಿ ಒಗೂತೇನಿ ವೈರಿಗೆ ಈ ಪಡದಾಗ
ಬುದ್ದಿ ಇಲ್ಲದೆ ಗೆದ್ದೇನಂದರ ಗುದ್ದಿ ಕಟ್ಟೇನಿ ಕೊರಳಾಗ
ಗೇನಿಸಿ ಅಕ್ಷರ ಎಣಿಸಿ ತರಬೇಕ ತೊನಸಿ ಹೊಡಿಬ್ಯಾಡ ಮನದಾಗ
ಶಾಹೀರ ಮುಡದಾರ ಇಂವಗ ಇಲ್ಲೊ ಕಾಣೇತನಾ || ೧ ||

ಬಿಟ್ಟ ಗುಲ್ಲ ಇಡಬೇಕ ಖ್ಯಾಲಾ | ಕೇಳ ತಪಶೀಲ ಸಂದಾನಾ
ಸಾರಿ ಜೈಕುಮ ಜಗದ ಒಳಗ ಮೀರಿ ನಿಂತಾನ ಮುಡದಾರಾ
ಯಾಂವಾ ಇದ್ರ ಬೆಳದಾಂವಾ ಕೊಡಲಾಕ ಜೀವಾ ಬರಬೇಕ ನನ್ನಲ್ಲಿ
ಆಗ ಡಂಗುರ ಬ್ಯಾಗ ಸಾರ‍್ಯಾನ ಹೀಂಗ ಅರಸ ಊರಲ್ಲಿ
ಹಿಂಡ ವೈರಿಯ ಗಂಡ ನಾನು ಪುಂಡ ಅನಿಸಿನಿ ಜಗದಲ್ಲಿ
ಎದಿಗಾರಾ ಗಂಭೀರಾ ಯಾರದು ಇಟ್ಟಿಲ್ಲಾ ಅನುಮಾನಾ || ೨ ||

ಕೇಳಿ ವರದಿ ನಬಿಸಾಹೇಬ ಸುದ್ದಿ ಹೊಂಟಾರೋ ಬುದ್ಧಿ ಅದಿನಾ
ಜೋಡಿಲಿಂದ ನಾಲ್ವರು ಮಿತ್ರರು ಕೂಡಿ ನಬಿಸಾಬ ಸಂಗತೀಲೆ
ಬ್ಯಾಗ ಮಾಡೂಕ ಜಂಗ | ನಡದಾನೋ ಸಂಗ ಮೌಲಾ ಶರಣರಾ
ತಡದ ದಾರಿ ಹಿಡದ ಶರಣರು ಹ್ವಾದಾರೋ ಮಾಡಿ ಅವುಸರಾ
ಈಗ ಆ ಜೈಕುಮಗ ಮಾಡೂನು ಹ್ಯಾಂಗ ಮುಂದಿನ ಹುನ್ನಾರಾ
ರಣಶೂರ ಬಹಾದ್ದೂರಾ ಜೈಕುಮಗ ಕೊಟ್ಟಾರ ವಶರೀನಾ || ೩ ||

ಕಳಿಸ್ಯಾರ ಹೇಳಿ | ಜೈಕುಮ ಕೇಳಿ | ಬಂದಾನ ವಾಳಿ ಬೇಗನಾ
ಡೌಲ ಮಾಡಿ ಬಂದಾನ ಜನಾಬಲ ಅಂಬಾವಾ ಬಲಿಷ್ಠಾ
ಚಂದ ಮೂವತ್ತೊಂದ ಗಜಾ ಇದ್ದ | ಇಂದ ಕೇಳರಿ ಖುಷಿಯಾಲಾ
ರಾಜಾ ಇದ್ದಾನ ಸೇಜ ಅಂವಾ ಹನ್ನೊಂದು ಗಜಾ ಅಂವಾ ಅಡ್ಡಗಲಾ
ಐನೂರು ಮಣದ ಧೀರ ಇಟ್ಟಾನ ಟೊಪ್ಪಿಗಿ ತೆಲಿಮ್ಯಾಲಾ
ಸಾವಿರ ಆಕಾರಾ ಮಣದ್ದಿತ್ತ | ಮೈಯಾಗ ಅಂಗಿಯಾನಾ || ೪ ||

ಒಂಬತ್ತು ನೂರ ಮಣದ್ದಿತ್ತ ಗದಾ ಶಿಸ್ತ ಕೇಳರಿನ್ನಾ
ಮೂವತ್ನಾಲ್ಕ ಮಣದ್ದಿತ್ತ ಒಂದೇ ಹಸ್ತ ಕೈಯಾನ ಹತಿಯಾರಾ
ಆರನೂರ ಮಣದ್ದಿತ್ತ ಕಡ್ಲಿದೀರ ಹಿಡಕೊಂಡ ಕೈಯಲ್ಲಿ
ಒದರಿ ಅಂತಾನ ಹೆದರಿಕೆ ಇಲ್ಲದ ವೈರಿ ಬಂದರ ರಣದಲ್ಲಿ
ಯಾಂವ ಇದ್ದಾನ್ಹಂತಾವಾ ಕೊಡಲಾಕ ಜೀವಾ ಬರತಾನ ನಮ್ಮಲ್ಲಿ
ಹಂಕಾರ ಇದ್ದರಾ | ಮಾಡಲಿಕ್ಕೆ ಬರಬೇಕು ಕದನಾ || ೫ ||

ಸೈಯ್ಯದ ಅಂಬಾವಾ ಖುದ್ದ ಮಾಡೂಕ ಯುದ್ಧ ಬ್ಯಾಗನಾ
ಸಿಟ್ಟಿಲಿಂದ ಸೈಯ್ಯದ ಸರದಾರ ಕಟ್ಟಿ ನಡಾ ಹೊಂಟಾರು
ಒದರಿ ಅಂತಾನ ಬರ್ರಿ ಬಂದಾರ ವೈರಿ ಆ ಜನಾಬಿಲಾ
ಜಂಗ ಆದೀತ ರಂಗ ಆತನ ಸಂಗ ಆದೀತ ಗಾಲಮೇಲಾ
ಸತ್ತ ಸೈಯ್ಯದ ಘಾತ ಆದೀತ ಮಾತ ಮುಂದೇನ ಉಳಿಯಲಿಲ್ಲಾ
ಶರಣರಾ ಹೈದರಾ ಕೇಳ್ಯಾರೋ ಸೈಯ್ಯದನ ಮರಣಾ || ೬ ||

ಸುತ್ತ ಹಿಂಡ ವೈರಿಗಂಡ ಅನಸ್ಯಾರ ಪುಂಡ ಮರವಾನಾ
ತಡಾಯಿಲ್ಲದ ಹೊಂಟಾರೋ ಕಟ್ಟಿನಡಾ ಆ ಮೌಲಾವಲಿ
ತಡದ ಹೊಡದಾರ ಗುಡಗ ಹುಟ್ಟಿ ನಡುಗಿ ಬಿದ್ದಾರೊ ಸರುವೆಲ್ಲಾ
ಜೇರ ಆಗಿ ಸತ್ತಾರ ಕಾರಿ ನೆತ್ತರ ಜನಾ ಅಳತಿ ಇಲ್ಲಾ
ಡೌಲಮಾಡಿ ಜನಾಬಿಲಾ ಬಂದಾ ಕಂಗಾಲಾ ಅವನಿಗೆ ತಿಳಿಲಿಲ್ಲಾ
ಜಂಗಬಾರಾ ಜಮ್ಮರಾ ಮಾಡ್ಯಾರ ಮೌಲಾ ಶರಣಾ || ೭ ||

ಕೈಚಾಚಿ ಜನಾಬಿಲ ಕ್ವಾಚಿ ಹಿಡದಾನ ಅಂವುಚಿ ಮೌಲಾನಾ
ಎತ್ತಿ ಒಗೂತೀನಿ ಮೌಲಾ ನಿಮಗ ಒತ್ತಿ ಆ ಭೂಮಿಯ ಮ್ಯಾಗ
ನಗುತ ಆಡ್ಯಾರೋ ಮಾತ ಮನಸಿಗೆ ಬಂತ ಏನ ಹರಕತ ಇಲ್ಲಿ
ಅಲಿ ಹೀಂಗ ಬಾಯಲಿ ಹೇಳಿ ತೆಲಿಮ್ಯಾಲ ಎತ್ಯಾರ ತಡಾಯಿಲ್ಲಾ
ಶರಣರಾ ಅವುಸರಾ ಒಗದ ಜನಾಬಿಲನಾ || ೮ ||

ನೋಡಿ ಜನಾಬಿಲ ಆದಾನ ಗಾಬಾ ಕೊಡಲಿಲ್ಲ ಜವಾಬ ಏನೇನಾ
ಎದ್ದ ಜನಾಬಿಲ ಮಾಡಿ ಅವಸರ | ಬಿದ್ದಾನೊ ಪಾದದ ಮ್ಯಾಲ
ಕರುಣ ನಬಿಸಾಬ ಶರಣ ಮುಸಲಮಾನ ಮಾಡ್ಯಾರೋ ಆವಾಗ
ಗುರು ದಸ್ತಗೀರ ಮರವ ಬೀಳದ್ಹಾಂಗ | ವರವ ಕೊಟ್ಟಾರ ನಮಗ
ಶಿಸ್ತ ಕೇಸುಪೀರ ಮಸ್ತ ಬುದ್ದಿಕೊಟ್ಟ ಹಸ್ತ ಇಟ್ಟ ನಾಗೂ ಗೌಸುಗ
ಮಿತ್ರರಾ ಇಬ್ಬರಾ ಲಾಲಡೋಂಗ್ರಿ ಶಾಣೇತನದಿಂದ ರಿವಾಯಿತ ಕಟ್ಯಾರ || ೯ ||

* * *

೧೫. ನಬಿಸಾಬರು ಗಿಡುಗನಿಗೆ ಬುದ್ಧಿ ಹೇಳಿದ್ದು

ಅತಿ ಸುಂದ್ರ ಚಂದ್ರನಂತೆ ದೇವಿಂದ್ರ ಸಭಾ ಶಾಂತ
ಕೇಳರಿ ಇಟ್ಟು ಚಿತ್ತ | ಮಾಡದೆ ಗುಲ್ಲಾ
ಏರು || ಪ್ರೀತಿಯಿಂದ ಹುಟ್ಟಿಸಿದ ಸದ್ಗುರು ಪ್ರೇಮಿ | ಅಂತರ‍್ಯಾಮಿ
ಅನಿಸ್ಯಾರೋ ನಬಿಸಾಬರು ಇರುವ ಠಿಕಾಣಿ | ಮಕ್ಕಾ ಮದೀನಾ
ಪರಮ ಪಾವನ ಸರ್ವ ಸಂಪನ್ನಾ | ಮಾಡಿದ ಲೀಲಾ
ಖ್ಯಾತ್ರದ ದಾಖಲ ತಿಳಿಸ್ಯಾರೋ ಖುಲ್ಲಾ || ೧ ||

ಕುಂತಿದ್ರೊ ಮಸೀದಿಯೊಳಗೆ | ನಬಿಸಾಹೇಬರು ಆವಾಗ
ಶಿವನ ಧ್ಯಾನಾ ಮನದಾಗ ಮಾಡುತ್ತ ಖ್ಯಾಲಾ ||
ಏರು || ಒಂದು ಬೆಳವ ಬಂದು ಶರಣರ ಮುಂದಾ ಮಾಡೀತು ಅರಜಾ
ಗಿಡಗ ನನಗ ಹಿಡಿದು ತಿನತೈತಿ ಉಳಿಸಬೇಕರಿ ಸರಜ
ಹಿಡಿದೀತು ಚರಣಾ | ಉಳಿಸಬೇಕರಿ ಪ್ರಾಣಾ
ದಯವಂತ ಶರಣಗ ಬಂತು ಅಂತಃಕರುಣಾ
ಬಿಡು ನಿನ್ನ ಜಲ್ಲಾ ಬೆನ್ನಿಗೆ ಬಿದ್ದ ಮೇಲಾ | ನಾನು ನಿನಗೆ ಕೊಡುವುದಿಲ್ಲಾ || ೨ ||

ನಬಿಸಾಬ ಶರಣರು ಗಿಡಗಕ್ಕೆ ಅಂದರು
ನನ್ನ ಮಾತು ಕೇಳ ಗಬರು | ಬಿಡು ಇದರ ಹಿಂಬಾಲ ||
ಏರು || ಗಿಡಗ ಅಂದೀತು ಬಿಡಲಿ ಹ್ಯಾಂಗ | ಹೊಟ್ಟೆ ಹಸ್ತು ಸಾಯತೇನಿ
ಮೂರು ದಿವಸ ತುಸು ಅನ್ನ ಇಲ್ಲಾ | ಘೋರ ಬಿಟ್ಟು ಹಿಡಿದೀನಿ
ಅಂತಾರೋ ಶರಣಾ | ಹಿಡಿ ಸಮಾಧಾನ
ಹೊಟ್ಟೆತುಂಬ ಅನ್ನ ಉಣಿಸುವೆ ಗಿಡಗನ ಪಾಲ
ಉಂಡ್ಹೋಗೋ ಖುಷಿಯಾಲಾ | ಅನುಮಾನಾ ಇಲ್ಲಾ || ೩ ||

ಶರಣರಿಗಂತೋ ಗಿಡುಗ
ನಿಮಗ ಗೊತ್ತಿದ್ದ ನಾ ಮಾಂಸ ಹೊರ್ತು ಏನು ಮುಟ್ಟೂದಿಲ್ಲಾ
ಏರು || ವಹಾರೆ ಗಬರು ಖರೇ ಮಾತು ಬಾರೋ ಮಾಂಸ ಕೊಡತೇನಿ
ಊಟ ಮಾಡೋ ಹೊಟ್ಟೆ ತುಂಬಾ | ಬಿಟ್ಟು ಬಿಡೋ ಬೆಳವನಿಗೆ
ಶರಣರಿಗೆ ಗಿಡಗ ಹೀಂಗ ಅಂತು
ಮುಟ್ಟೋದಿಲ್ಲಾ ಪರತ ಹೊಡೆದು ತಿನ್ನುವೆ ಸ್ವಂತಾ
ನಮ್ಮದಿಂಥಾ ಕುಲಾ | ತಗದಾರೋ ರಸೂಲಿಲ್ಲಾ ಮತ್ತೊಂದು ಅಕಲಾ || ೪ ||

ನಬಿಸಾಬ್ರು ಗಿಡಗಗ ಅಂದ್ರೊ ತಗೋ ನನ್ನ ಮಾಂಸ
ಬೆಳವನದು ಬಿಡೊ ದ್ಯಾಸ | ಅದು ಚಲೋದಲ್ಲಾ ||
ಏರು || ಗಿಡಗ ಅಂದೀತು ಕಡಿದುಕೊಡರಿ ಬಿಟ್ಟು ಬಿಡುವೆ ಬೆಳವನ್ನ
ಸುದ್ದಿಕೇಳಿ ಬಂದ್ರೊ ನಾಲ್ಕು ಮಂದಿ | ಸಾಹೇಬರು ಆ ಕ್ಷಣದಾಗ
ಅಬೂಬಕರ | ಉಸಮಾನ ಅಲಿ ಹೈದರ | ಗಿಡಗಕಂತಾರ
ಶರಣರ ಬದಲಾ ನನ್ನ ಮಾಂಸ ಸವಿ ಬೆಲ್ಲಾ | ಉಂಡ್ಹೋಗೋ ಖುಷಿಯಾಲಾ || ೫ ||

ಗಿಡಗ ಅಂದೀತು ಏನಿದು ನನಗೆ | ಶರಣರ ಮಾಂಸ ಹೊರ್ತು
ಯಾರ‍್ಯಾರದು ಮಾಂಸ ನನಗೆ ಬೇಕಾಗಿಲ್ಲಾ ||
ಏರು || ದಿಕ್ಕ ತಪ್ಪಿ ಚಿಕ್ಕ ಮೊಮ್ಮಕ್ಕಳಾ ಹಸೇನಹುಸೇನ ಬಂದ ಗಿಡಗಕ್ಕ
ವಂದಿಸ್ಯಾರೋ ಪರಿ ಪರಿ ಮಾಡಿ | ರೋಧನ ಮತ್ತೊಬ್ಬನ
ಮುದಕ ಬಿರಸ ಮಾಂಸ ಯಾಕ ನನ್ನ ಮಾಂಸ ತಿಂದು | ನೋಡಬೇಕ ರುಚಿ
ಬಹಳ | ಗಿಡಗ ಎಬ್ಬಿಸು ಗದ್ದಲ | ನಾ ಕೇಳೂದಿಲ್ಲಾ || ೬ ||

ಶರಣರಿಗೆ ಗಿಡಗ ಖುಲ್ಲಾ | ಹುಡುಗಾಟ ಚಲೋದಲ್ಲ
ನನ್ನ ಬೆಳವ ಕೊಡರಿ ಮೊದಲಾ | ನಾ ನಿಂದ್ರೂದಿಲ್ಲಾ ||
ಏರು || ವಚನದ ಸರಿಯಾಗಿ ಶರಣರು ಚೂರಿ ತಗೊಂಡರೊ ಕೈಯೊಳಗೆ
ಆಕಾಶ ಭೂಮಿ ನಡುಗಿತು ಆಕ್ಷಣದಾಗ | ನೋಡಿ ಅವರಿಷ್ಯಾ
ಗಿಡಗ ಸಂತುಷ್ಟ ಆಗಿ ಅಂತೋ ಶ್ರೇಷ್ಠಶರಣರು ಉತ್ಕೃಷ್ಟ |
ನಿಮ್ಮಂತವರು ಸೇಲಾ | ಎಲ್ಲಿ ಇಲ್ಲಾ | ಈ ಪೃಥ್ವಿಯ ಮೇಲಾ  || ೭ ||

ಖರೇ ಮಾತು ಇದು ಕಾಣೆ ನೋಡುವುದಕ್ಕ
ನಿಮ್ಮ ಮನಸ್ಸ  ಕಳಿಸ್ಯಾನೋ ಜಗದೀಶ | ಗಿಡಗ ಆದಾವ ಇಜರಾಹಿಲಾ
ಏರು || ಕಳವು ಯಾತಕ ಬೆಳವ ಆದಾವ ಈ ಜಿಬ್ರಯಿಲಾ
ಪ್ರೇಮಯಿಟ್ಟು ಶಾಹೀರ ನಮಗೆ
ಧರೆಯೊಳು ಬಾಗಲಕೋಟಿ ಶಾರ | ಪೀರ ದಸ್ತಗೀರ ನಮಗೆ ಆದಾರ
ಪಿತಾಂಬರಪ್ಪನಾ ಗುಣ ಸಣಕಲ್ಲ ಬಯಾನ | ಕುಲ್ಲಾ ಹೇಳ್ಯಾರೋ ಅಸಲಾ || ೮ ||

* * *