| ಅಯ್ಯೂಬರಿಗೆ ಇಬ್‌ಲೀಶ ಕಾಡಿದ ಪದಾ

ಏನ ಚಂದ ಸಭಾ ಪಸಂದ ಕೇಳರಿ
ಇದು ಒಂದ ಕೇಳರಿ ಜುಳಕ || ಪಲ್ಲವಿ ||

ಏರು || ಅಯ್ಯೂಬ ಶರಣಾ ಮಹಾ ಪುಣ್ಯವಾನಾ | ದೇಶದಲ್ಲಿ ಬೆಳಕ
ಮಕ್ಕಳು ಮರಿ ಮನಸಿನ ತಕ್ಕ | ದನ ದೌಲತ್ತಿಗೇನು ಕಡಿಮಿ ಇದ್ದಿಲ್ರಿ ಶಿವಕೊಟ್ಟ ಬಳಿಕ || ೧ ||

ಇ|| ದಿನಾ ದಿನಾ ನಮಾಜ ನಿತ್ಯ ನೇಮ ನಿರಕ
ಏರು || ಕತಾಪದ ಮಾರ್ಗ ಹ್ಯಾಂಗ ಇದ್ದೀತು ಹಾಂಗ ನಡಿಯೋ ತರಕ ||
ಮಾಡಲಿಲ್ಲ ಚೂರು ಅದರಾಗ ಪರಕ
ಪಂಡಿತ ಶಾಣ್ಯಾ ತಿಳಿದಾನೋ ಮನ ಏನುಬಲ್ಲ ಮೂರ್ಖ || ೨ ||

ಇ|| ಬಡವರಿಗರಿಬಿ ಕೊಡತಿದ್ರೋ ಪೋಷಾಕ | ಉಡಲಾಕ ತೊಡಲಾಕ
ಏರು || ದೀನ ದಯಾಳು ಅನಾಥರಿಗೆ ದಿನಾಲು ಉಣಿಸುವತನಕ
ಹಾಕಲಿಲ್ಲೊ ಬಾಯಾಗ ಒಂದ ತುಣಕ
ಇಂಥವರ ಪಂಥ ಕೆಡುಸುದುಕ ಇಬ್ಲೀಸ ಹತ್ಯಾನೋ ಕಾಡುದಕ || ೩ ||

ಇ|| ಗುಪ್ತದಿಂದ ಬೆಂಕಿ ಹತ್ತಿ ಮನಿಸುಟ್ಟು ಆಗಿಹೋತ್ರಿ ಪಾಕ
ಏರು|| ಆನಿ ಕುದುರೆಗಳು ಏನು ಉಳಿಯಲಿಲ್ಲ ಸುಟ್ಟುರಿಯಿತೋ ಜಳಕ
ಉಳಿಯಲಿಲ್ಲ ಚೂರ ಬಾಳೇ ಬದುಕ
ಭಸ್ಮಾಗಿ ಹೋತೋ ನಿಮಿಷ ಹತ್ತಲಿಲ್ಲ ತಟಕ || ೪ ||

ಇ|| ಮೂರು ಮಂದಿ ಹೆಂಡಿರು ಸತ್ತು ಒಬ್ಬಾಕಿ ಉಳದಾಳೋ ತಳಕ
ಏರು || ಉಳಿದಂತಾಕಿ ರಹಿಮಾ ಎಂಬಾಕಿ | ಐಯ್ಯೂಬನ ನಸೀಬಕ
ಏಳುಮಂದಿ ಮಕ್ಕಳು ಕಲಿಯಲಿಕ್ಕೆ ಸಾಲಿಗೆ ಹೋದಲ್ಲಿ
ಮೇಲಿನ ದಬಾಸು ಬಿದ್ದಿತು ಸುಮಸುಮಕ || ೫ ||

ಇ|| ಸತ್ತ ವರ್ತಮಾನ ಕೇಳಿ ಅಯ್ಯೂಬ ಅಳತಾನೋ
ಏರು | ಅವರ ಹೆಂಡತಿ ಮಹಾಗುಣವಂತಿ | ಧೈರ್ಯ ಹೇಳ್ಯಾಳೋ ಮನಕ
ಪತಿ ನೀವು ಚಿಂತಿ ಮಾಡುವುದ್ಯಾತಕ
ಹ್ಯಾಂಗ ಇಡತಾನಾ ಶಿವ ಹಾಂಗ ನುಡಿಯಬೇಕ | ಇರುವದು ಮನಪಾಕ || ೬ ||

ಇ|| ಶರಣರ ಕಾಲಿಗೆ ಹುಣ್ಣಾಗಿ ಬಹುಬ್ಯಾನಿ ಮಾಡಿತು ಜೀವಕ
ಏರು || ಏನು ಹಚ್ಚಿದರೂ ಮಾಯಲಿಲ್ಲ ಹೆಚ್ಚಾದೀತು ದಿನದಿನಕ | ಸುರುವಾತು
ಮೈತುಂಬ ಹಬ್ಬುವದಕ | ಸುಲದಿತೊ ಎಲ್ಲ ಮೈಯಾನ ತೊಗಲು ಉಳಿಲಿಲ್ಲ ತಟಕ  || ೭ ||

ಇ|| ಕೀಂವ ರಕ್ತಸೋರಿ ಹುಳಬಿದ್ದಾವು ಮೈಹತ್ತಿ ನಾರುದಕ
ಏರು|| ಅವನ ಹೆಂಡತಿ ಮಹಾಗುಣವಂತಿ ಹೇಸಲಿಲ್ಲೊ ಅದಕ | ಹಗಲಿ ರಾತ್ರಿ
ಬೆಳತನಕ ಗಂಡನ್ನ | ಜೀಂವದಕ್ಕಿಂತ ಹೆಚ್ಚು ಮಾಡ್ಯಾಳೋ ಜೋಪಾನ || ೮ ||

ಇ|| ಊರಮಂದಿ ಬೇಜಾರು ಮಾಡ್ಯಾರೋ ಮೈನಾರುದಕ
ಏರು| ಹೊರಗ ಹಾಕಿದರೋ ಊರಿಂದ ಐಯ್ಯೂಬನ ನಸೀಬಕ್ಕ
ಉಪಾಯವಿಲ್ಲ ಶಿವಾ ತಂದ ಬಳಿಕ | ಗಂಡನ ಕರಕೊಂಡ
ಹೆಂಡತಿ ಹೊಂಟಾಳೋ ಪರ ಊರಿಗೋಗುದಕ || ೯ ||

ಇ|| ಶರಣರಿಗೆ ಇಬ್ಬರು ಶಿಷ್ಯೆರು ಬಂದಾರೋ ಕಳಿಸುದಕ
ಏರು || ಹೊತಗೊಂಡ ನಡದಾರೊ ಮುಂದಿನ ಊರಿಗೆ |
ಮಂದಿ ಕಂಡಾಕ್ಷಣಕ ನಿಂದರಗೊಡಲಿಲ್ಲ ಒಂದಕ್ಷಣಕ |
ಸತ್ತ ಹೆಣಾಹೊತ್ಯಾಕ ತಂದಿರಿ ಏನು ಕಾರಣ ಎಲ್ಲಿಯ ತನಕ || ೧೦ ||

ಇ|| ಹೀಂಗ ಏಳೂರು ತಿರುಗಿದರು ಸಿಗಲಿಲ್ಲ ಜನ ತಟಕ
ಏರು || ಹೊತ್ತೊತ್ತು ಶಿಷ್ಯರು ಬ್ಯಾಸತ್ತು ಬಿಟ್ಟಾರ ನಡಬರಕ
ಅಡವಿಯೊಳು ಯಾರು ಇಲ್ಲ ಹಂತೇಕ | ಬೀಬಿ ರಹಿಮಾನ ದೈವಕ
ಹೇಳಿಕೊಂತ ಕುಂತಾಳೋ ಮಗ್ಗಲಕ || ೧೧ ||

ಇಮಾಮಿನ ಮೋಜು ಬಿಡಲಿಲ್ಲ ಇಷ್ಟಾದ್ರು ಮನಕ
ಏರು || ಐದು ಹೊತ್ತು ಆಗದಾಂಗ ಚೂಕ | ನಮಾಜು ಮಾಡ್ಯಾರೋ
ಹೆಂಡತಿ ತಲಿಯಾನ ಕೂದಲ ಹಿಡಕೊಂಡು ತ್ರಾಣ ಇಲ್ಲದಕ
ಇದೇ ಪರಿ ಹದಿನೆಂಟು ವರ್ಷದ ತನಕ || ೧೨| |

ಇ|| ಸನೇದ ಹಳ್ಳಿಗೆ ರಹಿಮಾನ ಹೋದಾಳು ಕೂಲಿಯ ಮಾಡುದಕ
ಏರು || ರೊಟ್ಟಿ ಎಬ್ಬಿಸಿಕ್ಯಾರ ಹೊಟ್ಟಿ ತುಂಬಿಸತಾಳೋ |
ಶಿವತಂದ ಬಡತನಕ ಯಾರೇನು ಕೊಟ್ಟಾರೊಂದ ರೊಟ್ಟಿತುಣಕ |
ಗಂಡ ತಿಂದ ಬಳಿಕ ಉಣ್ಣುವಳೊ ಮನಪಾಕ || ೧೩ ||

ಇ|| ಇಷ್ಟಾದರೂ ಬಿಡಲಿಲ್ಲೊ ಮತ್ತ ಹಾಕಿದಾನೋ ತೊಡಕ
ಏರು || ಎಲ್ಲೆಲ್ಲಿ ಹೋದರೂ ಸಿಗಲಿಲ್ಲ ಕೂಲಿ ಒಬ್ಬರ ಹಂತೇಕ |
ಬೇಡುವುದಕ ಹೊಂಟಾಳೋ ರೊಟ್ಟಿ ತುಣಕ |
ನಾಳಿಗೆ ಬಂದ ನಿಮ್ಮ ಸಾಲಾ ಮುಟ್ಟಸತೀನಿ ಹಿಡದ ಬೀಸಾಕ || ೧೪ ||

ಇ|| ಹೆಣ್ಣುಮಗಳು ಅಂತಾಳೊ ತಲಿಯನ ಕೂದಲ ರೊಟ್ಟಿಯದುಸಕ
ಏರು|| ರಹಿಮಾ ಅಂತಾಳೋ ತಲಿಯನ ಕೂದಲ ಗಂಡನ ಕೆಲಸಕ್ಕೆ |
ಬೀಳಾತಾವೋ ನಮಾಜ ಮಾಡುದಕ |
ಇಷ್ಟ ಕೇಳಿ ಆದುಷ್ಟ ಹೆಣ್ಣು ಸಾಗಂದಾಳೋ ಮುಂದಕ್ಕೆ || ೧೫ ||

ಇ|| ಬೇದವಿಲ್ಲದೆ ಕೊಟ್ಟಾಳೋ ಕೂದಲ ರೊಟ್ಟಿಯದುಸಕ
ಏರು || ತಡವಿಲ್ಲದೆ ಗಡಬಂದಾನೋ ಇಬ್ಲೀಸಾಗ ಅಯ್ಯೂಬನಂತೇಕ
ಇಲ್ಲದ್ದೊಂದು ಮಾಡಿ ಹೇಳತಾನೋ ಮಲಕ | ನಿಮ್ಮ ಹೆಂಡತಿ
ಬಾಳ ಪರಿಣಿತಳು ತುಡುಗು ಮಾಡಲಾಕ || ೧೬ ||

ಇ|| ಸಿಕ್ಕಾಳಿಂದು ಪುರಮಾಸಿ ತಲೆ ಕತ್ತರಿಸಿ ಮಾಡ್ಯಾರ ಮಂಡಕ
ಏರು || ಕೇಳಿ ಅಯ್ಯೂಬಗ ಸಿಟ್ಟುಬಂತು ಹೆಂಡತಿ ಕೃತ್ಯೇಕ |
ಜಿಬರಾಯಿಲ ಬಂದಾನೋ ಆ ಕ್ಷಣಕ |
ನಿಮ್ಮ ಹೆಂಡತಿ ಪತಿವೃತಾ ಇದ್ದಾಳೋ ಇಬ್ಲೀಶನ ಮನಕ || ೧೭ ||

ಇ|| ಸ್ವರ್ಗದಿಂದ ನೀರುತಂದು ಕೊಟ್ಟಾರು ಮಾಡಿದರೋ ಜಳಕ
ಏರು|| ಜಳಕ ಮಾಡಿದ ಬಳಿಕ ಕೊಳಕ ಹೋಗಿ ಆದೀತೋ ಠೀಕ
ಕೊಟ್ಟಾರೋ ಜರತಾರಿ ಪೋಷಾಕ |
ಎಷ್ಟು ಮಾಡಿದರೂ ಆಟ ನಡಿಯಲಿಲ್ಲೋ ಇಬಲೀಶಂದು ಕಡಿಕ || ೧೮ ||

ಮುಂಚಿನಕ್ಕಿಂತ ಹೆಚ್ಚಿನ ಧನದೌಲತ್ತು ಶಿವಕೊಟ್ಟ ಮನಕ
ಏರು || ಆನೆ ಕುದುರೆಗಳು ಏನು ಹೇಳಲಿ ಬಹಳ ಬಾಳೇಬದಕ
ಸತಿಪತಿ ಇದ್ದಾರೊ ಮನಪಾಕ |
ಅಂತಾರೋ ಶರಣ ನಿಮ್ಮ ತಕ್ಕಗುಣ ಯಾರಿಗಿರಬೇಕ || ೧೯ ||

ಇ|| ಜರಬಿನ ವಸ್ತಿ ಬಾಗಲಕೋಟಿ ಜಾಹೀರ ದೇಶಕ
ಏರು|| ದಸ್ತಗೀರ ಕೇಸುಪೀರಾ ಮತಿ ನಮಗ ಕೊಟ್ಟಾನೋ ಕಡಕ
ನಾಗೂ-ಗೌಸೂನ ಕವಿ ಕಡಕ
ಹಾಡೋ ಶಾಹೀರಾ ಹೋಗಬ್ಯಾಡೋ ನಿಲ್ಲೋ ನನ್ನ ಎಡಕ || ೨೦ ||
* * *

. | ಸುಲೇಮಾನರ ಅಂತರಗಮನದ ಪದಾ

ಚಿತ್ತಯಿಟ್ಟ ಕೇಳರಿ ಜನಾ | ಸತ್ಯವಂತ ಸುಲೇಮಾನಾ || ಪಲ್ಲವಿ ||

ಹಾರೂದು ಅಂತರಗಮನಾ | ಅವರ ಸಿಂಹಾಸನಾ
ಏರು || ಪಡೆದಿದ್ರೋ ಸಾಂಬನಲ್ಲಿ | ಉಂಗುರೊಂದು ಬೆರಳಿನಲ್ಲಿ
ಏನು ಹೇಳಲಿ ಉಂಗುರದ ಮಹಿಮೆ | ಅದರಿಂದ ಸಿಂಹಾಸನ ನೇಮಿ
ಹಾರೂದು ಸುಲೇಮಾನ ಸ್ವಾಮಿ | ಮಾಡಿಕೊಂಡ ಸ್ವಾದೀನಾ
ಹಕ್ಕಿ ಪಕ್ಕಿ ಭೂತ ಪಿಶಾಚಿ ಜಿನ್ನಾ | ನಾಗನ್ನೆಕ್ಕರನಾ || ೧ ||

ಇ|| ತಾಬೇದಾಗ ತಪ್ತ ಶರಣಾ | ಹುಕುಮ ಕೊಟ್ಟಾಕ್ಷಣಾ
ತಂದು ಕೊಡುರೋ ಬೇಡಿದ ಸ್ವಾಮಾನಾ | ಮುರುತ್ತಿದ್ದಿಲ್ಲಾ ವಚನಾ
ಏರು || ಸಕ್ರದೇವ ಅಂಬಾವಾ ಜಟ್ಟಾ | ಇಟ್ಟಿದ್ದಾ ಮನದಾಗ ಕಪಟಾ
ಉಂಗುರ ಎಬಿಸಬೇಕಂತಾ | ಏನಾರಮಾಡಿ ಮಸಲತ್ತಾ
ವ್ಯಾಳೆ ಬಂದಾಗ ನೋಡಬೇಕಂತಾ | ಹುಟ್ಟಿತ ದುರ್ಗುಣಾ
ಹಗಲಿಯಿರುಳ ಬೇಗು ಬೆಳಗಾನಾ | ಚಿಂತ್ಯಾಗ ಹೈರಾಣಾ || ೨ ||

ಇ|| ಬರದಿದ್ದು ಹಣಿಬಾರದನ್ನಾ | ಯಾರಿಗೆ ತಪ್ಪದಣ್ಣಾ
ಒಂದಿನಾ ಸುಲೇಮಾನಾ | ಕರದಾರ ಸತಿಯಳನಾ
ಏರು || ಕೈಯಾನ ಉಂಗುರ ತಗದ | ಕೊಟ್ಟ ಹ್ವಾದ್ರೊ ಹೊರಗ ಬಿದ್ದ
ಸಕ್ರದೇವ ಕುಂತಿದ್ದಾ ಜಪಿಸಿ | ಬಂದಾನ ಖೂನಾ ತಪ್ಪಿಸಿ
ಶರಣರ ರೂಪ ತೋರಿಸಿ ಉಂಗುರ ಎಬಸ್ಯಾನಾ
ಸಮುದ್ರದಾಗ ಹೋಗಿ ಒಗದಾನಾ | ಬಿಡಿಸಿದ ಬಂಧಾನಾ || ೩ ||

ಇ|| ಬಂದಾರ ಹೊರಗಿಂದ ಶರಣಾ | ಉಂಗುರ ಬೇಡತಾರ ಸತಿಯಳನಾ
ಮತ್ತೊಂದು ಎಲ್ಲಿಂದ ತರಲಿನ್ನಾ | ಕಾಡಬ್ಯಾಡ್ರಿ ಸುಮ್ಮನಾ
ಏರು || ಉಂಗುರದು ಹತ್ತಲಿಲ್ಲ ಪತ್ತೆ | ಶರಣರದು ನಿಂತಿತು ಸತ್ತೆ
ದೆವ್ವ ಭೂತ ಪಿಶಾಚಿ ಮಲಾಯೇಕ | ಹಕ್ಕಿ ಪಕ್ಕಿ ಬರವಲ್ಲು ಸನಿಯಾಕ
ಸಿಂಹಾಸನ ಹಾರವಲ್ದು ಯಾಕ | ಹಾರೀತ ಹೌಸಾಣಾ
ಇಷ್ಟ ಕಷ್ಟ ತಂದಿಟ್ಟೊ ಭಗವಾನಾ | ಸಿಗವಲ್ಲದು ಅಸನಾ || ೪ ||

ಇ|| ಹೊಟ್ಟಿ ಸುಡಲಾರದ ಶರಣಾ ಬಿಟ್ಟಾರ ತಮ್ಮ ಠಿಕಾಣಾ
ಯಾರಿಗೆ ಸ್ಥಿರವಲ್ಲಾ ದೌಳತನಾ | ಇದ್ದಾಂಗ ಮಧ್ಯಾನಾ
ಏರು || ಇದಿ ಬೆನ್ನು ಹತ್ತಿದ ಬಳಿಕ | ಅದು ಹ್ಯಾಂಗ ಬಿಟ್ಟಿತು ಸುಮಕ
ಎಲ್ಲೆಲ್ಲಿ ಹತ್ತುವಲ್ದು ಕೂಲಿ | ಹೋಗಿ ಕುಂತಾರ ಸಮುದ್ರ ದಂಡಿಲಿ
ಒಬ್ಬ ಮೀನಗಾರ ಬಂದಾನ ಅಲ್ಲಿ | ಅಂವಾ ಹಿಡುತಿದ್ದಾ ಮೀನಾ
ಆತಗ ಕೇಳೀತಾರ ಸುಲೇಮಾನಾ | ಕೂಲಿ ಕರಕೋ ನನ್ನಾ || ೫ ||

ಇ|| ಮೀನಗಾರ ಅಂತಾನ ಜಾಣಾ | ರೊಕ್ಕರೂಪಾಯಿ ಸಿಗಲಾರದಣ್ಣಾ
ನಂದು ಐತಿ ಹೆಚ್ಚಿನ ಬಡತಾನಾ | ಮಾಡುವೆ ಜ್ವಾಪಾನಾ
ಏರು || ನಿರವಾಯಿಲ್ಲದ ಮಟ್ಟಿಗೆ | ಹೂಂ ಅಂದಾರ ತಮ್ಮ ಹೊಟ್ಟಿಗೆ
ಬಲಿ ಜಗ್ಗತಾರ ಕೂಲಿಗಿ | ಮೀನಾ ತಗದ ಸನೇದ ಹಳ್ಳಿಗೆ
ವೋದು ಮಾರತಿದ್ರೋ ಕಾಳಿಗಿ | ಹೀಂಗ ಎಷ್ಟೋ ದಿನಾ
ಮೀನಗಾರನ ಮನ್ಯಾಗ ಕಾಲ್ಹರಣಾ | ಮಾಡತಿದ್ರೊ ಶರಣಾ || ೬ ||

ಇ|| ದಿನದಿನಕ ಹೆಚ್ಚಿನಾ | ಸಿಗಲಾಕ ಹತ್ಯಾವ ಮೀನಾ
ಮೀನಗಾರ ಹಿಡದ ಪಟ್ಟಣಾ | ಆದಾನೋ ದೈವಾನಾ
ಏರು || ಮೀನದ ಮೀನಗಾರತಿ | ಮಾತಾಡತಾರ ಗಂಡಾ ಹೆಂಡತಿ
ಈ ಮನುಷ್ಯಾನ ಬಂದಾನ ಹಿಡಿದು | ಹಣೇಬಾರ ತೆರಿತ ನಮ್ಮ ನಿಮದು
ಇವನ ಕಾಲಗುಣಾ ಒಳೆ ಚಲೋದು | ಬಿಡಬಾರದು ಇವನಾ
ನಮ್ಮ ಹೊಟ್ಟೀಲೆ ಇದ್ದ ಒಂದ ಹೆಣ್ಣಾ | ಮಾಡೂನು ಲಗ್ಗನಾ || ೭ ||

ಇ|| ಮಾಡಿ ಕೊಟ್ಟಿಂದಾ ಲಗ್ಗನಾ | ಹೋಗೂದಿಲ್ಲಾ ಬಿಟ್ಟ ನಮ್ಮನ್ನಾ
ಖಬೂಲ ಮಾಡಿ ಸುಲೇಮಾನಾ | ಅಲ್ಲೇ ಆದಾರ ಲಗ್ಗನಾ
ಏರು || ದಿನದಂತೆ ತಗೊಂಡ ಪಾಟಿ | ಆಡಲಿಕ್ಕೆ ಹೊಂಟಾರ ಬ್ಯಾಟಿ
ಸಕ್ರದೇವ ಉಂಗುರ ಒಗದಿದ್ದ | ಒಂದ ಮೀನ ಕಂಡಕ್ಯಾರ ಛಂದ
ನುಂಗಿ ಬಲಿಯಾಗ ಬಿದ್ದೀತ ಬಂದ | ಕಳಿಸ್ಯಾರ ಆ ಕ್ಷಣಾ
ಕಳಿಸ್ಯಾರ ಮನಿಗೆ ಅದೇ ಮೀನಾ | ಮಾಡೂನು ಪಕವಾನಾ || ೮ ||

ಇ|| ಮೀನಗಾರ ಮಗಳ ಮೋಹನ್ನಾ | ಕುಂತಾಳ ಮಾಡುಕ ಹಸನಾ
ಹೊಟ್ಟಿಯೊಳಗ ಉಂಗುರದ ಕಿರಣಾ | ಕಂಡ ಮುಚ್ಯಾವ ಕಣ್ಣಾ
ಏರು || ಇಟ್ಟಾಳ ಕಡಿಯಾಕ ತಗದ | ಕೊಟ್ಟಾಳ ಗಂಡ ಬಂದಿದ್ದ
ಖುಷಿ ಆದ್ರೋ ಸುಲೇಮಾನ ಮನಕ | ಸತ್ತೆ ನಡದೀತ ಮೊದಲಿನ ತನಕ
ಸರೂ ಜಿನ್ನಾ ಆದಾವೋ ತಾಬೇಕ | ಅತ್ತಿ ಮಾಂವಾ ಹೆಣತಿನ್ನಾ
ಕುಂಡರಿಸಿಕೊಂಡ ಸಿಂಹಾಸನಾ | ಹಾರಶ್ಯಾರೋ ಸ್ವಾಮಿ ಶರಣಾ || ೯ ||

ಇ|| ಅರು ಹಿಡಿ ಗರು ಬ್ಯಾಡೋ ಜಾಣಾ | ವರು ಪಡಿ ಗುರುವಿನ ಕರುಣಾ
ಧರೆಯೊಳು ದಸ್ತಗೀರ ಸುಬಹಾನಾ | ಬೊಗದಾದ ಠಿಕಾಣಾ
ಏರು || ಕೇಸುಪೀರ ವಸಧಿಯೊಳಗ | ಲೇಸ ಮಾಡುರೋ ಗೌಸು – ನಾಗೂಗ
ಸುತ್ತ ದೇಶಕ ಬಾಗಲಕೋಟೆ | ಬಲಬರ್ತಿ ಬಾಜಾರ ನಾಲ್ಕು ಪ್ಯಾಟಿ
ನಡು ಊರಾಗ ಪೀರನ ಕಟ್ಟಿ | ವರುಷಕ ಒಂದಿನಾ | ಗಂಧಗಲೀಪ
ಮಕರಂದ ನಿಶಾನಾ ರಬಿಲಾಖರ ಮಹಿನಾ || ೧೦ ||

* * *

. | ಸುಲೇಮಾನರು ಜೀವರಾಶಿಗೆ ನೀಡಿದ ಔತಣದ ಪದಾ

ಮಹಾಪಂಡಿತರು | ಬುದ್ದಿಬಲ್ಲಾಂತರು | ದೈವೆಲ್ಲಾ ಗಲಬಲಾ
ಮಾಡಬ್ಯಾಡ್ರಿ ಕೇಳರಿ | ಶ್ರೀಹರಿ ಸಾಂಬನ ಲೀಲಾ || ಪಲ್ಲವಿ ||

ಏರು || ಮನುಷ್ಯಾನ ಜಲ್ಮಕ | ಹುಟ್ಟಿ ಬಂದ ಸಾರ್ಥಕ
ಮಾಡಬೇಕ ದುಡಿಬೇಕ | ಮನದಾನ ವಹಿಲಾ
ಸದಾಶಿವನ ಭಜನಿವೊಳಗ ಕಳಿಬೇಕ ಕಾಲಾ
ಚ್ಯಾಲ | ಶರ್ತ ತುರ್ತಗುರ್ತ ಹಿಡಿಬೇಕ ಮಾತಿಗೆ ಮೊದಲಾ
ಅರುವಿನ ಗುರು ಶ್ರೇಷ್ಠ | ಗರು ಮನುಷ್ಯಾಗ ಕೆಟ್ಟಾ
ಅಹಂಕಾರ ಇಟ್ಟಾರು ಬಲುಮಂದಿ ಕೆಟ್ಟಾರು ಮೊದಲಾ ಸುಳ್ಳಲ್ಲಾ
ಇದಕ್ಕ ಸಾಷ್ಟಾಂತ | ದೃಷ್ಟಾಂತ | ಸಿದ್ದಾಂತ | ತಿಳಿಸುವೆ ಖುಲ್ಲಾ || ೧ ||

ಇ|| ಒಮ್ಮೆ ಶರಣರು ಸುಲೇಮಾನ ಅಂಬಾವರು | ಪ್ರಭೂಲಾ
ಕುಂತ ಗ್ಯಾನಶ್ಯಾರು | ಉಣಿಸಬೇಕ ಅಂತಾರು | ಜೀವರಾಶಿಗೆಲ್ಲಾ
ಏರು || ಅರಜ ಶಿವನ ಕಡಿಗೆ ಮಾಡ್ಯಾರು | ನನಗ ಕೊಡ ಅಪ್ಪಣಿ
ಹಾಕತೇನಿ ಸರೂ ಪ್ರಾಣಿಗೆ ಊಟಾ | ಇರುವಿ ಎಂಬತ್ತು ಕೋಟಿ ಜೀವರಾಶಿಗೆ ಸಗಟಾ
ಶಿವಾ ಅಂದಾ ಜೀಂವಕ ತೊಂದ್ರಿ ನಿಮಗ ಯಾತಕ ಇಷ್ಟಾ
ಚ್ಯಾಲ | ಸಿರಿ ಬಂದ ಕಾಲಕ್ಕೆ ಮರಿಮಾಡಿ ಉಣಬೇಕ
ಬಿಡ ನಿನ್ನ ಹವ್ಯಾಸ | ಕುಂತಿಯೋ ಉಪವಾಸ | ಎಲ್ಲಾ ಸುಳ್ಳಲ್ಲಾ
ಅವಕ ಕರಸೂದು ಉಣಿಸೂದು ಯಾರಿಂದ ಆಗೂದಿಲ್ಲಾ || ೨ ||

ಇ|| ಮತ್ತ ಶರಣರು ಸುಲೇಮಾನರು ಅಂತಾರ
ಎಷ್ಟು ಬಂದಾವು ತಿಂದಾವು ಹ್ವಾದಾವು ವನ ಚರ ಎಲ್ಲಾ
ಏರು || ಶಿವನು ಮತ್ತ ಅಂದನು ಖಾಲಿ ಕೆಡಬ್ಯಾಡ ನೀನು
ಬಿಡು ದಿಮಾಕ ಸುಮಕ ಯಮಕ ನಿಂದು ಎದ್ದೀತು ಗೋಳಾ
ಅಂಡಜಾ ಮತ್ತ ಪಿಂಡಜಾ ಜಲಜಾ ಮರಿಬಹಳ
ಶರಣಂದ್ರೊ ತುಸು ತೊಂದರಿ ಇಲ್ಲದೆ ಉಣಿಸುವೆ ನಿವ್ವಳಾ
ಚ್ಯಾಲ || ಈ ಮಾತಿಗೆ ಶಿವನು ಕುಲುಕುಲು ನಕ್ಕಾನು
ಕಾಮಾಂಧ ಮದಾಂಧ ಮನುಷ್ಯಾಗ ಹೇಳಿದರಕಲಾ | ತಿಳೂದಿಲ್ಲಾ
ಎಲ್ಲಾ ಬಿಟ್ಟಾನ ಅಪ್ಪಣಿ ಕೊಟ್ಟಾನ ತಡಾಯಿಲ್ಲಾ || ೩ ||

ಇ|| ಆಯಿತು ಆನಂದ ಹುಕುಮ ಆದಿಂದ ಶರಣರು ಸೇಲಾ | ತತ್ಕಾಲಾ
ಸುರು ನಡಸ್ಯಾರ ಹಂಡೆಬಂಡೆ ತರಸ್ಯಾರ ಸಾಮಾನು ಎಲ್ಲಾ
ಏರು || ಪಕವಾನಾ ಸಾಹಿತ | ಮಾಡುಕ ತಾಕೀತ
ಕೊಟ್ಟಾರು ನಡಾ ಕಟ್ಯಾರು ಸರುದೇವತಾ ಜನಾ
ಓಡ್ಯಾಡಿ ಅಡಗಿ ಮಾಡಿದಾರೋ ಅಳತಿಲ್ಲದ ಅನ್ನಾ
ಪಕವಾನ ರಾಶಿ ನೋಡಿ ಖುಷಿ ಸುಲೇಮಾನ
ಚ್ಯಾಲ | ಬೇಕಾದಷ್ಟು ಬರಲಿ | ಮನಾ ಬಲ್ಲಾಂಗ ಉಣಲಿ
ಅನುಮಾನ ಯಾಕಿನ್ನಾ ಔತಣಾ ಕೊಟ್ಟಾರಲ್ಲಾ | ಜಗಪಾಲಾ
ಕಳಿಸಿಕೊಡಬೇಕ ಬೇಶಕ್ಕ ಊಟಕ್ಕ ಜೀವರಾಶಿಗೆಲ್ಲಾ || ೪ ||

ಇ|| ಶಿವನ ಕೌತೂಕ | ಮೀನವೊಂದ ಊಟಕ್ಕ | ಬಂತ ಅಕ್ರಾಳ ವಿಕ್ರಾಳ
ಬಹಳ ಹಸ್ತೇನಿ | ಇಲ್ಲಂದ್ರ ಸಾವುತೇನಿ | ಹಾರತೈತಿ ಉಸಲಾ
ಏರು|| ನೋಡಿ ಮೀನದ ಗಡಿಬಿಡಿ | ಶರಣರಂದ್ರೋ ಅರಬೂತಗೇಡಿ
ಬಂದೈತಿ ಒದರತೈತಿ ಮುಂಚ ಉಣಸರಿ ಇದಕ
ತಿಂತ ಒಂದ ತುತ್ತ ಆತ ಮಾಡಿದೆಲ್ಲಾ ಬದಕ |
ಹೊಟ್ಟಿ ತುಂಬ ಉಣಸ | ಊಟ ಮಾಡಿಸಿದಿ ಎದಕ
ಚ್ಯಾಲ | ಶ್ರೀಹರಿ ಭಗವಂತಾ ಹಿಂತಾವು ಮೂರ ತುತ್ತಾ
ದಿನಾನಮಗ ಉಣಸಾಂವಾ | ಸರೂ ಬೀಂವಕ್ಕ ಸಲುವಾವಾ
ಅಕೇಲಾ ಹೀಂಗ ಅನ್ನಾನಾ | ಸುಲೇಮಾನ ಶರಣರು ನಾಚಿದರಲ್ಲಾ || ೫ ||

ಬಾಗಲಕೋಟ್ಯಾಗ ಸುತ್ತ ನಾಕ ಪ್ಯಾಟ್ಯಾಗ | ನೆನೆದಾರಲ್ಲಾ ಪ್ರಭೂಲಾ
ದಸ್ತಗೀರಂದು ಪೀರಂದು | ಇರುವದು ನಮಗ ಅನುಕೂಲಾ
ಏರು || ಧೀರಾ ಕರುಣಾ ಸಾಗರಾ ಕೃಪೆವಂತ ಕೇಸುಪೀರಾ
ಹಸ್ತಿಟ್ಟ ಮಸ್ತ ಬುದ್ಧಿ ಜ್ಞಾನ ಕೊಟ್ಟಾರೋ ನಮಗ
ನಾಡಿನ್ಯಾಗ ನಾಗೂ-ಗೌಸುನ ಕವಿ ಕಸರಿಲ್ಲದಾಂಗ
ಹಿಂಡ ವೈರಿಯ ಗಂಡ ಕವಿ ಗುಂಡ ಹೊಡದಾಂಗ
ಚ್ಯಾಲ | ಕಡಿ ನುಡಿ ಅಡಿ ಪ್ರಾಸಾ | ರಣಹೇಡಿ ಇಡು ಧ್ಯಾಸಾ
ಇಲ್ಲದೊಂದು ಬಾಯಿಗೆ ಬಲ್ಲಾಂಗ ಬೊಗಳಿದರಲ್ಲಾ ಕಿಸ್ತ ಹಲ್ಲಾ
ಇಲ್ಲಿ ಕುಂತವರು ನಿಂತವರು ಉಗಳ್ಯಾರ ಮಾರಿಮ್ಯಾಲಾ || ೬ ||

* * *

. ಸುಲೇಮಾನ ಪೈಗಂಬರರು ಇರುವೆಗೆ ನೀಡಿದ ಔತಣದ ಪದಾ

ಕುಂತ ದೈವದವರು ಕೇಳರಿ ಇಟ್ಟಧ್ಯಾನಾ
ನಿಮಗೆ ತಿಳಿಸುವೆ ಶಾಸ್ತರ ಸಂಧಾನಾ ||
ಏರು || ಶಿವನ ಆಟ ಶಿವನಿಗೆ ಠಾವಿಕಿ
ಅವನ ತಂತ್ರ ತಿಳಿಯದು ಯಾರಿಗೆ
ಶರಣ ಸುಲೇಮಾನರ ವರಣ ಹೇಳುವೆ ತಿಳಿಯಬೇಕ ಇದರ ಬಗಿ
ಒಂದು ದಿವಸ ಶರಣರು | ದಂಡ ತಗೊಂಡು ತೀವ್ರಾ
ಪಟ್ಟ ಮ್ಯಾಲಕ ಕಟ್ಟಿ ನಡದಾರ | ಎಷ್ಟ ಹೇಳಲಿ ಶ್ರಿಂಗಾರ
ಚ್ಯಾಲ || ದೇವಗನ್ನಕ್ಯಾರು ಕೊಟ್ಟಾರ ತಮ್ಮ ಹೆಗಲಾ
ಪಟ್ಟ ಅಂತರಲೆ ನಡಿತಿತ್ತೋ ಮೇಲಾ
ಕಂಡಾರ ದಾರ‍್ಯಾಗ ಒಂದ ಇರುಬಿ ಸಾಲಾ
ಅಂತಾರ ದಂಡಿಗೆ ತುಳದ ಹೊಡದಿರಿ ಪ್ರಾಣಾ || ೧ ||

ಇ|| ಇರಬಿ ಅಂತೈತಿ ಸುಲೇಮಾನ ಶರಣಾ
ನಿಮ್ಮಂತವರು ಅನೇಕ ಹ್ವಾದಾರಣ್ಣಾ
ಏರು || ಅದರುಷ್ಟದಲಿ ಬರದದ್ದು ಬರಿ ಯಾರಿಗೇನ ತಪ್ಪೂದಿಲ್ಲಾ
ಸಾವೂ ಜೀವಾ ಬದುಕಸಾಂವಾ ಮ್ಯಾಲೆ ಇರತಾನ ಆ ಶಿವಾ
ಕೇಳ್ಯಾರ ಸುಲೇಮಾನ ಶರಣರು | ಇರಬಿ ಬಾಯಿಲೆ ನುಡಿ
ನಿನ್ನ ಮಹಿಮೆ ತಿಳಿಯದು ಯಾರಿಗೆ ತಪ್ಪಯಿಲ್ಲ ನಮ್ಮ ಕಡಿ
ಚ್ಯಾಲ || ಇರಬಿ ಅಂತೈತಿ ಸುಲೇಮಾನ ಶರಣರಿಗೆ | ನನ್ನ ಔತಣ ನಿಮ್ಮ ದಂಡಿಗೆ
ಮಾಡ್ರಿ ದಯಾ ಕರುಣಾ ನೀವು ನಮ್ಮ ಮ್ಯಾಗಾ
ಇರಬಿ ಹೇಳಿತೋ ದಂಡಿಗೆ ಔತಣಾ || ೨ ||

ಇ|| ಸಾಂಬಗ ಅಂತಾರ ಸುಲೇಮಾನ ಶರಣಾ
ಬಾಳ ವಿಚಿತ್ರ ಕಾಣುದು ಮಾತ ನಾನಾ
ಏರು || ಇರಬಿ ಹೇಳಿತೋ ದಂಡಿಗೆ ಔತಣಾ
ಉಣಿಸುವ ಆಕಾರ ಕಾಣುದಿಲ್ಲಾ
ಎಷ್ಟ ಬಿಟ್ಟಿತು ಕಷ್ಟ ಉಣಸಾಕ | ಉಣಿಸುದು ಇದರ ತ್ರಾಣಲ್ಲಾ
ಶರಣಾರು ಅಂತಾರ ಕಣ್ಣಿಗೆ ಕಾಣೂದು ಸಣ್ಣ ಜೀಂವಾ
ತಂದ ಬೇಕಾದ್ದು ಮುಂದ ಇಟ್ಟರ ತಿಂದ ಬಿಡತಾನ ಒಬ್ಬಾಂವಾ
ಚ್ಯಾಲ || ಇಷ್ಟ ಅನ್ನುದರೊಳಗ ಇರಬಿ ಲಗುಬಂತು
ಊಟ ಮಾಡಬೇಕ್ರಿ ಆದೀತು ಬಾಳ ಹೊತ್ತು
ಇರಬಿ ಮುಂದ ನಡೀತು ಹಿಂದ ಹತ್ಯಾರ ಬೆನ್ನಾ || ೩ ||

ಇ|| ಹೋಗಿ ಮುಂದ ಕುಂತಾರ ಸರೂ ಸೈನ್ಯಾ
ಶಿವನ ಮುಂದ ಆಟ ನಡೂದಿಲ್ಲಾ ಯಾರದೇನಾ
ಏರು || ಶ್ರೇಷ್ಟವಾದ ಅಕ್ರೋಟ ಬದಾಮ ಒಟ್ಟಿದಾರ ಅಳತಿಯಿಲ್ಲಾ
ಶ್ರೇಷ್ಟಾ ಸ್ರಿಂಗಾರ ಶಿಸ್ತಕಾರಿಕ ಮಸ್ತ ಮುಣಕ್ಕ ಅಳತಿಲ್ಲಾ
ಬೆಲ್ಲ ಸಕ್ಕರಿ ಮೊದಲು ಮಾಡಿಕೊಂಡು ತಗಲ ಇದರಾಗ ಏನಿಲ್ಲಾ
ಶಾಸ್ತ್ರ ಸಿದ್ಧಾಂತ ಮಾತಿದು ಚಿತ್ತ ಇಡರಿ ದೈವೆಲ್ಲಾ
ಚ್ಯಾಲ || ಕುಂತಾರ ಸರೂಜನಾ ಮಾಡಾಕ ಊಟಾ
ಯಾವ ಮಾತಿನದು ಕಡಿಮೆ ಆಗಿಲ್ಲ ಏನಾ || ೪ ||

ಇ|| ಶರಣರ ಊಟ ಆದಿಂದ ಸಂತೋಷಾದಿತ ಮನಾ
ತಿರುಗಿ ಹೋದಾರೋ ತಗೊಂಡು ತಮ್ಮ ಸೈನ್ಯಾ
ಏರು || ಶರಣರ ಮನಸಿಗೆ ಬಡದಿತ ಈ ಮಾತಿನ ಪೆಟ್ಟಾ
ಇರಬಿ ಎಂಬತ್ತು ಜೀವರಾಶಿಗೆ ಉಣಿಸುವೆ ಊಟಾ ||
ಶರಣರಂದರು ಸಾಂಬ ಹುಕುಂ ಕೊಡಬೇಕ ತೀವರಾ
ಭಯಾ ಇಲ್ಲದೆ ಉಣಿಸುವ ನಿನ್ನ ವಿಸ್ತಾರುಣಾ |
ಸಂಭಾ ಶರಣಾರಿಗೆ ಹೀಂಗ ಉತ್ತರ ಕೊಟ್ಟಾ
ಚ್ಯಾಲ || ನಿನ್ನ ಕೈಲೆ ಆಗೂದಿಲ್ಲೊ ಎಳ್ಳಷ್ಟಾ
ಉಪವಾಸ ಹೊಡಿದಿ ಔತಣಾ ಕೊಟ್ಟಾ
ಶಿವನ ಮಾತ ಮೀರಿ ತಿರುಗಿ ಹೊಂಟಾರ ಶರಣಾ || ೫ ||

ಇ|| ದೈತ್ಯರಿಗೆ ಹೇಳ್ಯಾರ ಸುಲೇಮಾನ ಶರಣಾ
ಗಿಡಾಗಂಟಿ ಕಡದ ಜಾಗಾ ಮಾಡರಿ ಹಸನಾ
ಏರು || ಹೇಳಿದ ಪ್ರಕಾರ ಕೇಳಿ ದೈತ್ಯರೆಲ್ಲಾ
ಹಸನ ಅಡವಿ ಜಾಗ ಮಾಡ್ಯಾರ ಧ್ಯಾಸ ಇಡರಿ ದೈವೆಲ್ಲಾ
ಎಪ್ಪತ್ತು ಸಾವಿರ ಕುರಿ ಕೋದಾರಲ್ಲಾ
ಅಕ್ಕಿಗೋಧಿ ಕುಟ್ಟಿ ಚೀಲಾ ಒಟ್ಟಿದಾರ ಅಳತಿಯಿಲ್ಲಾ
ಬೆಲ್ಲ ಸಕ್ಕರಿ ಮೊದಲು ಮಾಡಿಕೊಂಡು ತಗಲ ಇದರಾಗ ಏನಿಲ್ಲಾ
ಶಾಸ್ತ್ರ ಸಿದ್ಧಾಂತ ಮಾತ ಐತಿದು ಧ್ಯಾಸ ಇಡರಿ ದೈವೆಲ್ಲಾ ||
ಚ್ಯಾಲಿ || ಏಳು ಲಕ್ಷ ಹಂಡೆಗಳ ತಂದಾರಲ್ಲಾ
ಒಂದೊಂದು ಹಂಡೆದ್ದು ಕೇಳಬೇಕ ತಪಶೀಲಾ
ಇಪ್ಪತ್ತು ಗಜಾ ಉದ್ದ ಅಷ್ಟ ಅಡ್ಡಗಲಾ | ಅಡಗಿ ಮಾಡ್ಯಾರವರು ಆಕ್ಷಣಾ || ೬ ||

ಇ|| ಔತಣಾ ವರ್ತಮಾನ ಕೇಳಿ ಒಂದ ಮೀನಾ
ಹಸದ ಅಡರಾಶಿ ಬಂದೀತೋ  ಮೀರಿ ಯತನಾ
ಏರು || ಬಂದ ಮೀನ ಶರಣರಿಗೆ ಅಂದಿತು ಮೊದಲ ನನಗ ಉಣಸರಿ
ಹೊಟ್ಟಿಯೊಳಗ ಕೂಳ ಇಲ್ಲದ ಸಂಗಟಾಗೂದು ಈ ಪರಿ
ಶರಣರಂತಾರ ಮೀನಕ ಉಣಸ ಅಂತೇನಿ ನಿಂದ್ರ ಜರಾ
ಹೇಳಿದ ಔತಣಕ ಬರಲಿಲ್ಲ ಜನಾ | ಕಳಿಸುವ ಉಣಿಸಿಕ್ಯಾರಾ
ಚ್ಯಾಲಿ || ಅವರು ಬರೂತನಾ ನಿಂದ್ರುದಿಲ್ಲೊ ನಾನಾ
ನಿಮ್ಮ ಮ್ಯಾಲೆ ಜುಲುಮಿ ಜಾಸ್ತಿ ಏನಾ
ಔತಣ ಹೇಳಿದಲ್ಲೆ ಬಂದೇನಿಲ್ಲಿತನಾ || ೭ ||

ಇ|| ದೈತ್ಯರಿಗೆ ಹೇಳ್ಯಾರ ಸುಲೇಮಾನ ಶರಣಾ
ಮುಂಚೆ ಉಣಸರಿ ಉಂಡು ಹೋಗಲಿ ಮೀನಾ
ಏರು || ಹೇಳಿದ ಪ್ರಕಾರ ಕೇಳಿ ಹೊಂಟಾರೋ ದೈತ್ಯರೆಲ್ಲಾ
ಊಣಿಸುದಕ ತಂದಾರಾಗ | ಹೆಂಗ ತಂದ ಹಾಕಿದಂಗ
ಅಂತೈತಿ ಹಿಂದ ಹೊಟ್ಟಿ ತುಂಬುವುದಿಲ್ಲ ತೆರದ ಬಾಯಿ ಹಂಗ
ದೊರೆದು ಹಿರದು ಹೊಡೆದಿತು ಅನ್ನ ಎಲ್ಲಾ
ಶರಣರು ಅಂತಾರ ಅನ್ನಾ ಉಣಿಸುದಕ ಏನು ಇಲ್ಲಾ
ಚ್ಯಾಲಿ || ಮೀನ ಅಂತೈತ್ರಿ ಕೇಳರಿ ನನ್ನ ಮಾತಾ
ಸಂಭಾ ಕೊಡತಿದ್ದಾ ದಿನಾ ಮೂರು ತುತ್ತಾ
ಹೊಟ್ಟಿ ತುಂಬಲಿಲ್ಲೋ ಹೋಗತೇನಿ ಪರತಾ
ನೋಡಿ ಶರಣರು ಕಚ್ಚಿಕೊಂಡ್ರೋ ತಮ್ಮ ಬೊಟ್ಟವನಾ || ೮ ||

ಇ|| ಶರಣರ ಶರತ ಆತ ಮೀರತ ನಡಿಲಿಲ್ಲ ಏನಾ
ಕಡಿಗೆ ಸೋತ ಹೋತ ಮಾತವ ಮೀರಿ ವಚನಾ
ಏರು || ಶರಣರು ಅಂತಾರ ಸಂಭಗ ನಿನ್ನ ಆಟ ಯಾರಿಗೆ ತಿಳೂದಿಲ್ಲಾ
ಸರ್ವ ಜೀವಾ ಸಲುವುವಾಂವಾ ನಿನ್ನ ಮುಂದ ಯಾರ ಆಟ ನಡೂದಿಲ್ಲಾ
ಶಾರ ಬಾಗಲಕೋಟಿಯೊಳಗ ಇರುವ ಪೀರ ದಸ್ತಗೀರಾ
ಕರುಣ ಮಾಡ್ರಿ ಚರಣ ಹಿಡಿಯೂವೆ ಕೇಸು ಪೀರಾನ ಆಧಾರಾ
ಚ್ಯಾಲಿ || ನಾಗೂ-ಗೌಸೂನ ಕವಿ ರಂಗಲಾಲಾ
ಹನ್ನೊಂದು ಅಡಿ ಪ್ರಾಸ ತರಬೇಕ ಸಾಲಿಗೆ ಸಾಲಾ
ತಮ್ಮಾ ಇದರಾಗ ತಿಳೂತೈತಿ ನಿನ್ನ ಅಕಲಾ
ಲಾಲಸಾಬ ಡೋಂಗ್ರಿಮುಂದ ಓಡಿ ಹೋದಿ ಎಲ್ಲಿತನಾ || ೯ ||

* * *

ಇರಬಿ ಸುಲೇಮಾನರಿಗೆ ನೀಡಿದ ಔತಣಾ

ಜಾತ ಮುತ್ತಾ ಶಾಸ್ತ್ರ ಲಿಖಿತಾ ಇಟ್ಟ ಚಿತ್ತಾ
ಸರೂಜನಾ ಕೇಳರಿ ಇರಬಿ ಬಯಾನಾ || ಪಲ್ಲವಿ ||

ಏರು || ಸರೂ ವಿದ್ಯೆ ಹಂತೇಕ ಇದ್ದರ ಫಡಕ
ಇಲ್ಲಂದರ ಯಾತಕ ಬರಬೇಕ ಜಕಸಾಕ
ಶಾಹೀರಾಗಿ ಸಣ್ಣದೊಡ್ಡ ದೈವಕ ತಿಳೂಹಾಂಗ ಹೇಳಬೇಕ
ಹೌದ ಹೌದ ಅನ್ನೂಹಾಂಗ ಎತ್ತರ ಮಣೂತಿದಿ
ಕೈಮಾಡಿ ಕುಣೂತಿದಿ ಕಲಬುರ್ಗಿ ಕೊಜ್ಯಾರಂಗ
ಖಾಲಿ ಹಮ್ಮ ಬ್ಯಾಡೋ ತಮ್ಮಾ ಇಟ್ಟ ನೇಮಾ
ಕಡಿತನಾ ಹಾಡೋ ಇಂಥ ಬಯಾನಾ || ೧ ||

ಇ|| ದರುಣಿ ದಾತಾ ಮರಣ ರಹಿತಾ
ಕರುಣವಂತ ಭಿಗವಾನಾ ಸೃಷ್ಟಿಕರತಾ ಜೀವನಾ
ಕೊಟ್ಟಿದ್ದಾ ಬಲ್ಲಾಂಗ ಅಷ್ಟ ಐಶ್ವರ್ಯ ಹೀಂಗ
ಚ್ಯಾಲಿ || ಏನು ಹೇಳಲಿ ಅರಸ ಅನಸ್ಯಾರ ತಮ್ಮಾ
ನಡಸ್ಯಾರ ಸರೂ ಹುಕುಮಾ ಮೂಡು ಮುಣುಗು ತನಕಾ
ತಾಬೇಕ ಯಾವತ್ತ ಇರತಿದ್ದ ದೇವಭೂತ
ಜಿನ್ನ ಪರಿ ಮತ್ತು ಮಲಾಯಿಕಾ
ಹಕ್ಕಿ ಪಕ್ಕಿ ತೆರೆದ ರೆಕ್ಕಿ ನೆರಳಹಾಕಿ | ಬಿಸಿಲಿನ ತ್ರಾಸ || ೨ ||

ಆಗದಾಂಗ ಕರುಣ ಲಹರಿ ತಾ ಶ್ರೀ ಹರಿ ಪೈಗಂಬರಿ
ಪದವಿನ ಕೊಟ್ಟಾ ಸುಲೇಮಾನಾ ಶರಣಾ
ಏರು || ಸುಲೇಮಾನ ಶರಣರು ಬಲು ಬುದ್ಧಿವಂತರು
ಹಕ್ಕಿ-ಪಕ್ಕಿ ವನಚರ | ಮಾತಾಡಿದರೂ ತಿಳುತ್ತಿದ್ದರು
ಶರಣರು ಒಂದು ದಿನಾ ತಮ್ಮ ಸಿಂಹಾಸನ ಹಾರಿಸಿ ಗಾಳಿಮ್ಯಾಗ
ಕೊಂಡ ತಂಡ ತಂಡ ಖುದ್ ಸಾವಿರ ದಂಡ ಹೋಗುವ ಹಾದಿವೊಳಗ
ಅಲ್ಲಿ ಒಂದ ಜಾಗಾ ಚಂದ | ಇರಬಿ ಇದ್ದ ಮೈದಾನಾ | ಇತ್ತ ಒಂದರಿ ಠಿಕಾನಾ || ೩ ||

ಇ|| ಇರಬಿಯ ಅರಸ ಶಾಮೂರ ಖಾಸಾ | ಹುಕುಮ ಅರಸಾ
ಕೊಟ್ಟಾನ ತನ್ನ ಇರಬಿ ದಂಡನಾ
ಏರು|| ಲಗು ಹೋಗರಿ ನಿಮ್ಮ ಹೊರತಾ || ಬರತಾನ ಶಮರಂತಾ
ಚ್ಯಾಲ || ಕೇಳಿ ಶರಣಾ ಈ ಮಾತ ಇಳಿಸಾರ | ತಖ್ತಾ ಸಿಂಹಾಸನಾ
ಇರಬಿಯ ಅರಸಗ ಹಿಡಕೊಂಡ ಕೈಯಾಗ
ಹೇಳಿದ ಘಟ್ಟಿಮುಟ್ಟಿ ನಿಮಗೇನು ಅಂತಾದ್ದು ಮಾಡಿದ್ದು
ಯಾಕ ಹೀಂಗ ಹುಕುಮ ಕೊಟ್ಟ ಅಂದಿತ್ತ ಇರುಬಿ
ನಾವು ಸಣ್ಣ ಜೀವಿ | ನಮ್ಮ ನಮ್ಮ ಸಾವಿಗೆ ಅಂಜಿ
ಪೂರ್ಣ ಇಲ್ಲಿಂದ ನೀವು ಹೋಗುತಾನಾ || ೪ ||

ಇ|| ಕುದುರಿ ಕುಣತಾಗ ಕಾಲಾಗ ಸಿಕ್ಕ ಹುಗದ ಹಕನಾಕ ನಮ್ಮ ಪ್ರಾಣಾ
ಕೇಳರಿ ಇರಬಿಯ ಶಾಣೇತನಾ
ಏರು || ಕೇಳಿ ಇರಬಿಯ ಮಾತಾ | ಶರಣರಂದ್ರೋ ಚಕಿತಾ
ಹೇಳಂದ್ರಾ ಖಚಿತಾ | ಸದ್ಯಕ ತುರತಾ
ನಿನ್ನ ಹಂತೇಲಿ ದಂಡಾ ಇರತೈತಿ ಎಷ್ಟು ಮಾಡತಾರ ಹುಡುಗಾಟಾ
ಇರಬಿ ಅಂದಿತ ಹೀಂಗ | ನಾಲವತ್ತು ಸಾವಿರ ಇರತಾರ ಸರದಾರ
ಐದು ಸಾವಿರ ದಂಡು ಒಬ್ಬೊಬ್ಬಗ ಅವರ ಜಲ್ಮಾ
ನನ್ನ ಆತ ಇಟ್ಟ ಪ್ರೇಮ ಹೆಚ್ಚೆನಾ ಬಲ್ಲೆ ನಾನು ನಿಮ್ಮ ಗುಣಾ || ೫ ||

ಇ|| ಇರಬಿ ಅಂತ ಖಾಲಿ | ಮಾಡಬ್ಯಾಡ್ರಿ ನಕಲಿ
ನಿಮ್ಮ ಹಂತೇಲಿ ಇಲ್ಲ ಗ್ನಾನ | ಬಿಲ್‌ಕುಲ್ ಕಡಿಮಿ ನಮ್ಮಲ್ಲೇನಾ
ಏರು || ಹ್ಯಾಂವ ಐತಿ ಬಹಳ ನಿಮಗ | ಬೇಡಿಕೊಂಡರ ಸಾಂಬಗ
ಅರಸಕಿ ಜಗದಾಗ | ಇರಬಾರದು ನನ್ನಾಂಗ ಯಾರ‍್ಯಾರಿಗೆ
ಈ ಮಾತು ಅಂತಾದ್ದು ಶರಣರಿಗೆ ಸಲ್ಲದು
ಶರಣರಿಗೆ ಬಂದೀತ ಸಿಟ್ಟು | ಇರುಬಿ ಅಂತ ತಿಳಿದ ನೋಡರಿ
ಸಿಟ್ಟಿಗೆ ಬರಬ್ಯಾಡ್ರಿ ತಿಳಿಸುವೆ ಮತ್ತೊಂದು ಇಸಮಾ
ನಿಮ್ಮ ಕೈಯ್ಯಾನ ಉಂಗುರ ಬೇಧ ಒಡದ ಹೇಳರಿ
ನೋಡಿ ಅದನಾ ಗೊತ್ತಿಲ್ಲಂದಾರ ಸ್ವಾಮಿ ಸುಲೇಮಾನ || ೬ ||

ಇ|| ಹಿಂತ ಅನೇಕ ಮಾತಿನ ಮಲಕ
ಹತ್ತಲಿಲ್ಲ ಡಾಳ ಶರಣರನಾ | ಇರಬಿಗೆ ಅಂತಾರ ಸುಲೇಮಾನ
ಏರು || ನೀ ಬಾಳಾ ಶಾಣ್ಯಾ ಆಗಿ ಇರತೀದಿ ಬಲ್ಲಾಂವಾ
ಬಂದೀತ ತಿಳುವಳಿಕಿ ಕೂಡ ಅಪನಿಕಟಕಿ ಹೋಗುತ್ತಿದ್ದನು
ಇರಬಿ ಅಂದೀತ ಆಗ ಉಪವಾಸ ನಿಮಗ ಇಲ್ಲಿಂದಾ
ಕಳಿಸುವದಿಲ್ಲಾ ಇದ್ದಷ್ಟು ನಿಮ್ಮ ದಂಡ | ಸಂತುಷ್ಟ ಆಗಲಿ ಉಂಡ
ಹೋಗರಿ ಖುಷಿಯಾಲಾ ಇರಬಿ ಔತಣಾ ಕಬೂಲ ಬಿನ್ನ
ಮಾಡ್ಯಾರ ಶರಣ ಸುಲೇಮಾನ | ಬಿದ್ದೀತು ಮತ್ತ ಗುಮಾನ || ೭ ||

ಇ|| ಭಯಂಕರ ಚಮತ್ಕಾರ ನನ್ನ ಲಷ್ಕರ
ಭಲೇ ಜನಾ ಮಾಡತಾರ ಹ್ಯಾಂಗ ಪಕವಾನಾ
ಏರು || ಪಕವಾನಾ ಗಡಿಬಿಡಿ ಕಾಣವಲ್ಲದು ಯಾವ ಕಡಿ
ಸಾವಿರಾರು ಇರಬಿ ಕೂಡಿ ಹೊತಗೊಂಡು ತಂದವು ತೋಡಿ
ಒಂದ ಮಿಡಚಿ ಇರುಬಿಗೆ ಅಂತೈತಿ ನೋಡಿ
ಉಣಿಸರಿ ದಂಡಿಗೆ ಕರದು ಶರಣಂದ್ರೋ ಹೈಪಾಗಿ
ನನ್ನ ದಂಡ ಬಹಳೈತಿ | ಇದು ಹ್ಯಾಂಗ ಸಾಲತೈತಿ
ಇರುಬಿ ಅಂದೀತ ಕೂಗಿ ಇದರ ಬರಕತ ನಿಮಗೇನ ಗೊತ್ತ
ಇರತಾನ ಸಾಕ್ಷಾತ್ ಭಗವಾನಾ | ಕೂಡಿ ಮಾಡ್ರಿ ಭೋಜನಾ || ೮ ||

ಇ|| ಸ್ವಾಮಿ ಶರಣರು ದಂಡಿಗೆ ಕರೆದರು ಕುಂತು ಉಂಡರು
ಸರೂಜನಾ | ತೀರಲಿಲ್ಲಾ ಮಿಡಚಿ ತೋಡಿದ್ದು ಇತ್ತ ಇನ್ನು
ಏರು|| ಸುಲೇಮಾನ ಶರಣರು | ಮನಸಿಗೆ ತಿಳಿದರು
ಒಬ್ಬರ ಮ್ಯಾಗ ಒಬ್ಬರು ಹೆಚ್ಚು ಕಡಿಮೆ ಇರತಾರ
ಈ ಮಾತು ಘನ ಶಾರ ಬಾಗಲಕೋಟೆ | ಊರ ಮೋಜನ ಪ್ಯಾಟಿ
ಜಾಹೀರ ದೇಶದೊಳಗ | ದಸ್ತಗೀರ ಕೇಸು ಪೀರ ಹಸ್ತ ಇಟ್ಟಾರ
ನಾಗು-ಗೌಸುಗ ತಲಿಮ್ಯಾಗ | ಲಚಮನಸಿಂಗ ಉಸ್ತಾದಂದ್ರೋ ಹೀಂಗ
ವೈರಿಯ ಮೂಗಿನ್ಯಾಗ ಪೋಣಶಾರೋ ಮೂಗುದಾರಾ || ೯ ||

* * *

. ಈಸಾ ಪೈಗಂಬರರು ಪವಾಡ ಮಾಡಿದ ಪದಾ

ನಾಸಾರಿ-ದೊರಿ-ಮೀರಿ ಹೇಳು ಪ್ರೇಮನೆ
ಏರು || ಕೂಡಿಟ್ಟು ಅಡಿಪ್ರಾಸ | ನುಡಿ ಹೀಂಗ ಸಾರಾಂಶ
ಖೋಡಿ ನಿನಗ ತಿಳಿಯುವುದಿಲ್ಲ ಹುಡಿಮಣ್ಣಾ
ಈ ದಾಟಿಯಲ್ಲಿ ಜೋಡಿ ಬರಬೇಕೋ ಸವನೆ || ೧ ||

ಇ|| ನೀ ಲಜ್ಜಿ ಕೊಜ್ಜಿ ಗೆಜ್ಜೆ ಕಟ್ಟಿದೋ ಜೋಡನೇ
ಏರು || ನಾಚಿಕಿಲ್ಲದೆ ಬಾಯಿ ತೆರುವುತೀದಿ ಮುಗಿದ ಕೈಯ
ಕಚ್ಚಿಬಿಚ್ಚಿ ಹೊಡದರ ಗಿಚ್ಚಿ ಮುಚ್ಚಿ ಕಣ್ಣ
ಛೀ ಹೋಗಲೇ ಸುಗುಡಿ ತೆರದೀತು ಮುಕಳಿ ಆಸನ || ೨ ||

ಇ|| ನಾ ಸೋಸಿ ಬೇಸಿ ಖಾಸಿ ಆ ಇಸಾ ಶರಣನೆ
ಏರು|| ಪ್ರಾಂತಕ್ಕೆ ಅವರ ಬೆಳಕ ಹೊಳೆಯುವುದು ಜನರಿಗೆ ತಕ್ಕ
ಅದೇ ಕಾಲದಲ್ಲಿ ಸತಿಪತಿ ಜಾಣಾ
ಆ ಸತಿ ಪತಿ ಮಾಡಿ ತಮ್ಮಲ್ಲಿ ನೇಮನೆ || ೩ ||

ಇ || ತಾ ಸತಿಯು ಕುಂತು ಪತಿಗೆ ಅಂತಾಳೊ ಪ್ರೇಮನೆ
ಏರು || ಇಬ್ಬರಲ್ಲಿ ಸತ್ತವರನ್ನಾ ಒಯ್ಯಬೇಕೋ ಗೋರಿಯ ತನಾ
ಮಾಡಬೇಕ್ರಿ ಜೋಪಾನ ದಿನಾ
ಸ್ಮಶಾನಕ ಹೋಗಿ ಮಾಡಬೇಕ್ರಿ ಗೋರಿ ಹಸನಾ || ೪ ||

ಇ|| ಹಿಂಗ್ಹೇಳಿ ಸತಿ ಮರಣ ಹೊಂದ್ಯಾಳೋ ಒಂದಿನ
ಏರು || ಗಂಡನು ಸಂಪೂರ್ಣಾ ಮಾಡ್ಯಾನು ಸತಿಯ ಮಣ್ಣಾ
ಮನದಾಗ ತಿಳಿದ ಸತಿಯ ಆಜ್ಞವನಾ
ಇದರಂತೆ ನಡಸಿ ಯಾವತ್ತು ವರುಷ ಅವಧಿಯನಾ || ೫ ||

ಇ|| ತಾ ಇದರಂತೆ ನಡಸ್ಯಾನು ವನವಾಸನೇ
ಏರು || ಸತ್ಯ ಶರಣ ಈಸಾ ಬಂದು ನಿಂತಾರೊ ಅವನ ಮುಂದ
ಏನು ಕಾರಣ ಹೇಳೋ ನಿನ್ನ ಕಷ್ಟವನಾ
ಅಂವ ಹೇಳಿದ ಆಗ ತನ್ನ ಮನದನ ಭೇದನೆ || ೬ ||

ಇ|| ನೀ ಶರಣಾ ಕರುಣಾ ಮಾಡಿ ಎಬಸರಿ ಸತಿಯನ
ಏರು || ಶರಣರು ಮಾಡಿ ಕೃಪಾ | ಹೆಣ್ಣ ಸುಂದರ ಅಪರೂಪ
ಎಬಸ್ಯಾರ ಮಾಡಿ ಜಾಪ | ಈಸಾ ಶರಣಾ
ಹಿಂಗ್ಹೇಳಿ ಶರಣಾ | ಮಾಯಾ ಆಕ್ಷಣಾ ಆದನೆ || ೭ ||

ಇ|| ಆ ಸತಿಯು ನೋಡಿ ಪತಿಗೆ ಅಂತಾಳೋ ಯಾವನೆ
ಏರು|| ಸತಿಮಾತ ಕೇಳಿ ತಾನ | ತಿಳಿಸ್ಯಾನೊ ಪತಿಯು ನಾನ
ಸಿಟ್ಟಾಗಿ ಅಂದಾಳೊ ಅಲ್ಲೋ ಗಂಡ ನೀನಾ
ಛೀ ಹೋಗೋ ನೀನು ಯಾವನೋ || ೮ ||

ಇ|| ಆ ಕಾಲದಲ್ಲಿ ಅರಸು ಬ್ಯಾಟಿಗೆ ಬಂದನೆ
ಏರು|| ಹಿಡಿದು ಅವರಿಬ್ಬರಿಗೆ ನಡಸ್ಯಾನ ನ್ಯಾಯ ಆವಾಗ
ತಿಳಿಸ್ಯಾಳೋ ಅವನ ಸತಿ ಅರಸನಿಗೆ ಪೂರ್ಣಾ
ಇವನಲ್ಲ ಗಂಡ ನಡಸ್ಯಾನು ಸುಳ್ಳ ಭಂಡನೇ || ೯ ||

ಇ|| ನಾ ನಿಮ್ಮ ಕೂಡ ಬರತೇನಿ ಮಾಡೋ ಪ್ರೇಮನೆ
ಏರು|| ಅರಸಾಗ ಸಂತೋಷ | ಮನದಾಗ ಬಹು ಹರುಷ
ಗಂಡಗ ಮಾಡಿ ಮೋಸ ಹೊಂಟಾಳ ಜಾಣಿ
ತಾ ಲಗುಬಗಿ ಬಂದರ ಈಸಾ ಶರಣನೆ || ೧೦ ||

ಈ ರೂಪ ನೋಡಿ ಕೋಪ ಆದಾನು ಶರಣನೆ
ಏರು || ಶರಣರು ಆಗಿ ಕೋಪ | ಮಾಡ್ಯಾರು ಮಾಯದ ರೂಪ
ಹೇಣತಿಗೆ ಮಾಡ್ಯಾರು ಗಪ್ಪ ಕೂಡಿ ಮಣ್ಣ
ಮಣ್ಣಿಗೆ ಮಣ್ಣ ಕೂಡಿ ಹೋಯಿತೋ ದೇಹನೆ || ೧೧ ||

ಈ ಸೃಷ್ಟಿಯಲ್ಲಿ ಶ್ರೇಷ್ಟ ಬಾಗಿಲಕೋಟಿನೆ
ಏರು || ಧರಣಿಗೆ ಧೀರ ದಸ್ತಗೀರ | ಕರುಣುಳ್ಳ ಕೇಸುಪೀರಾ
ನಾಗೂ-ಗೌಸು ಹಾಡಿ ತೋಡಿ ಕವಿ ರಚನಾ
ನಿಂತಗಲ ಮಾಡಿ ಇಟ್ಟಾರು ಅಗಳಿನೆ || ೧೨ ||

* * *

. | ಈಸಾರು ಡೋಗಿ ಬದುಕಿಸಿದ ಪದಾ

ಧ್ಯಾನಿಟ್ಟ ಕೇಳರಿ ದೈವಕ ನಾ ಮಾಡತೇನಿ ಖುಲ್ಲಾ
ಈಶನ ಸರಿ ಇಲ್ಲಾ ಈ ಪೃಥ್ವಿಯ ಮ್ಯಾಲಾ |
ಏರು || ದೈವಕ್ಕೆ ಸಾರಿ ಅಂತೇನೋ ಮಿತಿ ಮೀರಿ | ಈಸಾ ಪೈಗಂಬರಾ
ಒಂದಿನ ಹೊಂಟಾರೊ ಅನಂತರ | ಹಾದ್ಯಾಗ ಹೋಗುವಾಗ ಒಂದು ಡೌಗಿ ಕಂಡರಲ್ಲಾ || ೧ ||

ಶರಣರು ನಿಂತು ಸಾಂಬಗ ಬೇಡಿಕೊಂಡಾರಲ್ಲಾ |
ಇದು ಯಾರದು ಡೌಗಿ ನೆಲದ ಮ್ಯಾಲಾ
ಏರು || ಆಗಿ ಕರ್ಮಿಷ್ಟ ಬಿದೈತ್ರಿ ಎಂದಿನ ಸುಟ್ಟಾ | ಒಣಗಿ ಆಗೇತ್ರಿ ಸೆಕ್ಕೆ
ಜೀವ ತುಂಬಿಸಬೇಕ ಹರಕಿ | ಮಾತಾಡಿಸು ಮನಸು ಆಗೇತಿ ನಂದು ಇದರಮೇಲಾ || ೨ ||

ಇ|| ಈಸಾನ ಅರ್ಚನೆ | ಶಿವ ಮಾಡ್ಯಾನೋ ಕಬೂಲಾ
ಕೊಟ್ಟಾನೋ ಹುಕುಮಾ ಅವರಿಗೆ ಮಾತಾಡಲಾಕ ಖುಲ್ಲಾ
ಏರು || ಶರಣರಿಗೆ ಡೌಗಿ ಅಂದಿತು ಕೂಗಿ | ಬಿಚ್ಚಿ ಹೇಳುವೆ ಒಡದಾ
ಹೆಂಗಸು ಗಂಡಸು ಇದ್ದಿದ್ದಾ | ಶರಣರ ಸ್ವರಕೇಳಿ ಡೌಗಿ ಅಂದಿತೋ ಬಿಸಮಿಲ್ಲಾ || ೩ ||

ಇ|| ಶಿರಬಾಗಿ ಅಂದಿತು ಡೌಗಿ ಈಸಾ ರಸೂಲಿಲ್ಲಾ |
ಕೇಳಿದರೆ ಹೇಳುವೆನು ಬಿಟ್ಟು ಮೈಯಾನ ಜಲ್ಲಾ
ಏರು || ಈಸಾ ಶರಣರು ಡೌಗಿಗೆ ಅಂತಾರೊ ನಿನ್ನ ಹೆಸರೇನ
ಜಗದಲ್ಲಿ ಏನೇನ ಉದ್ಯೋಗ ಮಾಡತಿದ್ಯೋ ಈ ಭೂಮಿ ಮೇಲಾ || ೪ ||

ಇಳು || ಶರಣರಿಗೆ ಅಂದಿತು ಡೌಗಿ ಸರ್ವ ಜಗತ್ತಕ್ಕೆಲ್ಲಾ
ಮೀರಿದ ಅರಸು ನಾನು ಎನಿಸಿದ ಪ್ರಭೂಲಾ
ಏರು || ಮತ್ತ ನನ್ನಂಥ ಗಂಡಸು ಸುತ್ತ ನಾಡಿನೊಳಗ | ಯಾರ‍್ಯಾರು ಇದ್ದಿಲ್ಲಾ
ಜಮ್ ಜಮ್ ನನ್ನ ಹೆಸರು | ನನ್ನ ಕೂಡ ಯುದ್ಧ ಮಾಡಾಕ ಯಾರ‍್ಯಾರು ಇದ್ದಿಲ್ಲಾ || ೫ ||

ಇ || ನಾನೂರು ವರುಷ ನಾನು ನಡಸೀದೆ ನನ್ನ ಹಾವಳ
ದೌಲತ್ತು ಕೊಟ್ಟಿದ್ನೊ ಶಿವಾ ಏನ ಕಡಿಮೆ ಇಲ್ಲಾ ||
ಏರು || ಹಿಂಡಿಗೆ ಹಿಂಡಾ ಮತ್ತ ಮನಗಂಡ ದಂಡು ದರ್ಬಲಕ್ಕೆಲ್ಲಾ
ಕುದುರಿ ಕೊಟ್ಟಿದ್ನೊ ಶ್ರೀಹರ | ಹಿಂಡ ಹಿಂಡ ಅರಸರೊಳಗ ನಾ ಪುಂಡನಾಗಿದ್ನೊ ಮೇಲಾ ||೬||

ಇ|| ಬಂದ ಬಂದ ಬಡವರಿಗೆಲ್ಲಾ ಅರಬಿ ಕೊಡುತ್ತಿದ್ದೆ ಹಗಲೆಲ್ಲಾ
ವನವಾಸ ಅದೇನಂದರ ಕಿವಿಲೆ ಕೇಳಲಿಲ್ಲಾ
ಏರು || ತ್ರಿಜಗ ಜೀವ ಇರತಾನೋ ಭಗವಾನಾ | ನಡೆಯಲಿಲ್ಲೊ ಅಂಜಿ
ಕಲ್ಲ ಇಟ್ಟಿ ಮಾಡತಿದ್ದೊ ಪೂಜೆ | ಇಷ್ಟ ತಪ್ಪಿಗೆ ಕಷ್ಟ ತಂದ ನನ್ನ ಮ್ಯಾಲಾ || ೭ ||

ಇ|| ತೀರಿಕೊಂಡು ನೂರು ವರುಷ ಏಸು ಕಡಿಮೆ ಇಲ್ಲಾ
ಸುಡತೇನಿ ಸತ್ರನ ಸುಟ್ಟ ಚೂರ ಚೈನವಿಲ್ಲ
ಏರು || ಶರಣರಿಗೆ ಡೌಗಿ ಅಂದಿತು ಕೂಗಿ | ನಿಮ್ಮ ಹೊರತ ಇಲ್ಲ ಯಾರ |
ಮಾಡಿದಿಲ್ಲ ನನಗ ಪಾರ ಶರಣರಿಗೆ ಡೌಗಿ ಮರಗ ಕೇಳಿ ಕರುಣ ಬಂದಿತಲ್ಲಾ || ೮ ||

ಇ|| ಆತನದುಸಕ ಸಾಂಬನ ಕಡಿಗೆ | ಅರ್ಜ ಮಾಡ್ಯಾರಲ್ಲಾ
ಬಗವಾನ ಈ ಸಾರ ಮಾತು ತಂದ ಮನಸಿನ ಮೇಲಾ
ಏರು || ಎಬಸ್ಯಾರೋ ತೀವ್ರದಿಂದ ಜಮ್ ಜಮ್ ಜೀವದಿಂದ | ಹ್ಯಾಂಗ ಇದ್ದಂಗ ಮುಂಚೆ
ಎಲಬು ತೊಗಲು ಶಿರಹಚ್ಚಿ | ಜಮ್ ಜಮ್‌ಗ ಕಲ್ಮಾ ಓದಿಂದ ಅಂತಾರೋ ಬಿಸಮಿಲ್ಲಾ || ೯ ||

ಇ|| ಶರಣರ ಚರಣಕ್ಕೆ ಅಂದ ಸ್ವಾಮಿ ಸೇಲಾ
ನಿಮ್ಮಿಂದ ಪಾರ ಆದೇನು ಪೂರಾ ಹೊತ್ತ ಜಲ್ಮಾ
ಏರು || ಎಂಬತ್ತು ವರುಷ ಇರುತ್ತಿದ್ದ | ಖಾಸ ಮಾಡತಿದ್ನೊ ಜಿಂದಗಾನಿ
ನಡತಿ ಇಟ್ಟಿದ್ದ ಮುಸಲ್ಮಾನಾಗಿ | ಎಲ್ಲಾನು ಬಿಟ್ಟು ಭಕ್ತಿ ಇಟ್ಟಿದ್ದ ಶಿವನ ಮೇಲಾ || ೧೦ ||

ಇ|| ಅಷ್ಟರೊಳು ಜಮ್ ಜಮ್ ಬಾದಶಹಾಗ | ಮರಣ ಬಂದಿತಲ್ಲಾ
ಸತ್ತನೋ ಉಮಾಯದಿಂದ ಕಂಡ ಸ್ವರ್ಗಸ್ಥಲಾ
ಏರು || ದೈವಾನ ದಸ್ತಗೀರ ಶಿಸ್ತುಳ ಕೇಸುಪೀರ | ಬಾಗಲಕೋಟ್ಯಾಗ
ನಾಗು – ಗೌಸೂನ ರಿವಾಯಿತ | ದೇಶಕ್ಕ ರಂಗಲಾಲಾ || ೧೧ ||

* * *