. | ಈಸಾ ಅವರು ಜೇಲಿನಿಂದ ಪಾರಾದ ಪದಾ

ಎಂಥೆಂತವರು ಇಟ್ಟ ಪಂಥ | ಮುಕ್ಯಾರ ಮಣ್ಣ ನಾ ಶ್ರೇಷ್ಟಂತ
ಶರಕಸ ಅಂಬು ಅರಸನ ಸುದ್ದಿ ಎಷ್ಟಂತ | ತಿಳಿಸಲಿ ಸರ್ವರಿಗೆ
ಏರು | ಮಹಾ ಪಂಡಿತ ಬುದ್ದಿವಂತರು ಅನೇಕ ಬರಿ ಬಲ್ಲವರು
ಕುಂತಕೇಳಿ ಸಂತೋಷ ಪಡಿರಿ | ಶ್ರೀಮಂತ ಸಭಾ | ಕೂಡಿರಿ ಬಂದಾ
ಅಡಿಪ್ರಾಸ ನುಡಿ ಕಡಿತನಕ | ಲಕ್ಷ ಇಡಿರಿ | ಮುಗುವೆ ಕೈ ನಾ ಇಂದಾ
ಬೀಬಿ ಮರಿಯಮ್ಮಗ ವಲ್ಲತ್ ಬ್ರಹ್ಮಗಂಡ ಇಲ್ಲದೆ | ಕೊಟ್ಟಾನ ಪುತ್ರ ಒಂದಾ
ಏನ ಹೇಳಲಿ | ಸಭಾದಲ್ಲಿ | ಈಸಾ ಪೈಗಂಬರ ಅಂತಾ ಪದವಿ ಕೊಟ್ಟಾ
ಈ ಜಗದಲ್ಲಿ | ಶಿವನ ಅಪ್ಪಣಿ ಪೈಗಂಬರರಿಗೆ | ಆತರಿ ಸರಕಸ ಅರಸನಿಗೆ
ಹೋಗಿ ಉಪದೇಶ | ಮಾಡಬೇಕರಿ ಅವನಿಗೆ ಧರ್ಮದ ಸರಿಯಾಗಿ || ೧ ||

ಈಸಾ ಪೈಗಂಬರ ಶರಣಾ ಹೊಂಟಾರ ಆಕ್ಷಣಾ | ಹುಟ್ಟಿ ಮನಸ್ಸಿನಲ್ಲೆ
ಅವರಿಗೆ ಅಂತಾನ ಕರುಣಾ | ಅಲ್ಲೆ ಮುಟ್ಯಾರ ಹೋಗಿ
ಏರು || ಸರಕಸ ಅರಸನ ದರ್ಬಾರ | ನೆರೆದಿತ್ತ ಒಳ್ಳೆ ಗರದಿ ಬಹಾರ
ಈಸ ಪೈಗಂಬರ | ಸರಕಸ ಅರಸಗ | ಹೋಗಿ ತಿಳಿಸಿದಾರ ಮಜಕೂರ
ಕರುಣಾದಿ ಕರುಣಾ ಈಶ್ವರನ | ನೀ ಭಜಿಸೋ ಬಿಡೋ ನಿನ್ನ ಅಹಂಕಾರ
ಸೃಷ್ಟಿಕರ್ತನ | ಕರ್ತೃ ಆದ ವಸ್ತು | ನಾನೇ ಈಸಾ ಪೈಗಂಬರಾ | ತಿಳಿಮನಕ
ಬಿಡೋ ಯಮಕ | ಮೋಕ್ಷ ಆದವನಿಂದ | ಕಂಡಿ ಸ್ವರ್ಗಕ್ಕೆ
ಹೊಂದಿಯೋ ಬೇಶಕ್ | ಇಲ್ಲಂದರ ದೊರಕೀತೋ ನರಕ
ಸುಟ್ಟ ಹ್ವಾದಿ ಹಿಡಿಯೋ ತರಕ | ತಿಳಿಸಿರಿ ಇದರೊಳಗ
ಏನ ಇಲ್ಲದಾಂಗ ಪರಕ | ತಿಳಿ ನಿನ್ನ ಮನಸ್ಸಿಗೆ || ೨ ||

ಶಾಸ್ತರ ಸರಿಯಾಗಿ | ಮೂಸಾ ಪೈಗಂಬರ ಧರ್ಮಾ | ಬಿಟ್ಟು ನಂದು ಓದೋ ಕಲ್ಮಾ
ಅಂದರ ನಿನಗೆ ಮೆಚ್ಚುವಾ ಆ ಹರಿ ಬ್ರಹ್ಮಾ | ತಿಳಿಸ್ಯಾರ ಹರುಷಾಗಿ ||
ಏರು || ಕೇಳಿ ಅರಸ ಸಿಟ್ಟಿಗೆ ಬಂದಾ | ಇವರಿಗೆ ಹಾಕಬೇಕ ಕೊಂದಾ
ಅಂತ ಮನಸ್ಸಿನಲ್ಲೆ ಬಂತ ಕಪಟ ಹೀಂಗ | ಸಭಾದಲ್ಲಿ ಏನ ಹೇಳಲಿಲ್ಲಾ
ಎದ್ದ ಅಲ್ಲಿಂದಾ ಖುದ್ದ ಮನಿಗೆ | ಬಂದ ಮುಟ್ಯಾರ ಈಸಾ ರಸೂಲಿಲ್ಲಾ
ನೆರೆದಿತ್ತ ಮಂದಿ | ಮನಿಯಾಗ | ಶರಣರ ಸಂಗತಿಲೆ | ಕುಂತಾರ ಲೆಕ್ಕಿಲ್ಲಾ
ಒಳ್ಳೆ ಹರುಷ ಆಗಿ ಮನಸ ಅಂತಾರ ನನ್ನ ತರುವಾಯ
ಹುಟ್ಟುವರೋ ಒಂದಾನೊಂದ ದಿವಸ | ನಬಿಸಾಬ ಪೈಗಂಬರ
ಕೇಳರಿ ತಿಳಿಸುವೆ ಅವರ ಹೆಸರ | ಶರಣರವೊಳಗ
ಶ್ರೇಷ್ಟಪದವಿ ಆ ಶಂಕರ ಕೊಟ್ಟಾನ ಅವರಿಗೆ || ೩ ||

ನಬಿಸಾಹೇಬರ ಮ್ಯಾಲೆ ಇಟ್ಟ ಭಗತಿ | ನಡದ ಪಡಿಯಿರಿ ಮುಕ್ತಿ
ಅವರ ಹೊರ್ತು ಯಾರಿಗೆಯಿಲ್ಲಾ ಸದ್ಗತಿ | ತಿಳಿಸಿರಿ ಮನಸಾಗಿ
ಏರು || ಆ ಜನರ ಪೈಕಿ ಒಬ್ಬ | ಎದ್ದ ಹೋಗಿದ್ದಾನ ಬೇಖೂಬ್
ತಿಳಿಸ್ಯಾನ ಅರಸಗ ಈಸಾ ಪೈಗಂಬರ | ಅಡಗಿ ಕುಂತಾರ ಮನೆಯಲ್ಲಿ
ಕೇಳಿ ಅರಸ ಒಳೇ ಹರುಷಾಗಿ | ದಂಡ ತಯ್ಯಾರ ಮಾಡ್ಯಾನ ಕ್ಷಣದಲ್ಲಿ
ಕೊಟ್ಟ ಅರಸ ಮಹಾ ದ್ರುಷ್ಟ | ಮೊದಲಿ ಸಿಟ್ಟಿಯಿಟ್ಟಿದ್ದಾ ಮನದಲ್ಲಿ
ಹೊಂಟಾರಲ್ಲಾ ಸರೂಮಂದೆಲ್ಲಾ | ಹೋಗಿ ಈಸಾ ಪೈಗಂಬರ ಮನಿಗೆ
ಮುತ್ತಗಿ ಹಾಕ್ಯಾರಲ್ಲ | ಒಳಗ ಹೋಗಿ ಹಿಡಿದಾರ ಬ್ಯಾಗ | ಶರಣರಿಗೆ ತಂದಾರ ಹೊರಗ
ಇಟ್ಟಾರ ಒಯ್ದು ಮತ್ತೊಂದು ಮನಿಯಾಗ | ಒಳ್ಳೆ ಮನದಲ್ಲಿ ಹಿಗ್ಗಿ || ೪ ||

ಆ ಮನೆ ಸುತ್ತ ಮುತ್ತ | ಕಾವಲಿ ಬಂದೋಬಸ್ತ
ಹಸ್ತದೊಳಗ ಹತಿಯಾರ ಹಿಡಕೊಂಡ ಶಿಸ್ತಪಾರ ಮಾಡುರೋ ತಿರುಗಿ
ಏರು || ಆ ಕ್ಷಣಕ ಜಿಬರಾಯಿಲ ಬಂದಾರ ತತ್ಕಾಲಾ
ಮನಿ ಡಬಾಸ ಕಿತ್ತು ಒಗದ ತಡಮಾಡದೆ ತಗದಾರಲ್ಲಾ
ಈಸಾ ಪೈಗಂಬರಗ ತಗೊಂಡ ಹಾರಿ ಹೋಗ್ಯಾರ ಆಕಾಶಮ್ಯಾಲಾ
ಬೆಳಗಾದಿಂದ | ಅರಸ ಬಂದಾ | ಅಂತಾನ ತೆಗೆಯಿರಿ ಬಾಕಲಾ
ತೆಗಿರಿ ಹೊರಗ | ಆ ಈಸಾಗ | ಗಲ್ಲಿಗೇರಿಸಿ ಅಂವಗ
ಶಾಂತ ಪಡಸರಿ ನನಗ | ಅಂತ ಅಪ್ಪಣಿ ಕೊಟ್ಟಾನಲ್ಲಾ | ಒಳಗ ಒಬ್ಬಾಂವಹೋಗ್ಯಾನಲ್ಲಾ
ಈಸಾ ಪೈಗಂಬರ ಅವನಿಗೆ ಕಾಣಲಿಲ್ಲಾ | ನಿಂತಾನಹೈಪಾಗಿ || ೫ ||

ಒಳಗ ಹ್ವಾದ ಪುರುಷನ ಮಾರಿ ಆತ ಈಸಾನ ಸರಿ
ಸಾಂಬನ ಕೌತುಕ ಯಾರಿಗೆ ತಿಳುದಿಲ್ಲರಿ | ತಿಳಿಸುವೆ ಸುದ್ದಾಗಿ
ಏರು || ಬಂದ ಹೊರಗ ಅಂತಾನಲ್ಲಾ | ಈಸಾ ಪೈಗಂಬರ ಇಲ್ಲಾ
ಅಂತಾರ ಮಂದಿ ನೀನೇ ಈಸಾ | ಪಂಟ ಹಚ್ಚಬ್ಯಾಡ ನಮ್ಮ ಮುಂದಾ
ಕೇಳರಿ ಈಸಾ ನಾಯೇನ ಅಲ್ಲಾ | ಕಿರೇ ಮಾಡಿ ಹೇಳುವೆ ಖುದ್ದಾ
ಸಿಟ್ಟ ತಡಿಯದೆ ಎದ್ದು ಅರಸ ಬಂದಾ ಆತನ ಕೈಹಿಡಿದಾ |
ಎಳದ ಒಯ್ಯಿರಿ | ಬಿಡಬ್ಯಾಡರಿ | ಪಂಟ ಹಚ್ಯಾನ ಈಸಾ ಅಲ್ಲಂತಾ
ಗಲ್ಲಿಗೆ ಏರಸರಿ | ಕೇಳಿ ಹಣಿಹಣಿ ಬಡಕೊಂತ | ಅಳತಾನ ನಾ ಅಲ್ಲಂತಾ
ಮುಗುವೆ ಕೈಯಾ ಗಲ್ಲಿಗೆ ಏರಿಸಬ್ಯಾಡರಂತ | ಅಂತಾನ ಶಿರಾಬಾಗಿ || ೬ ||

ಎಷ್ಟು ಹೇಳಿದರ ಕೇಳಲಿಲ್ಲಾ | ಹಿಡದ ವೈದಾರ | ಆತಗ ಮೊದಲಾ
ಏರಿಸ್ಯಾರ ಗಲ್ಲಿಗೆ ಹಾರಿತ್ತ ಅವನ ಉಸಲಾ | ಹೊರಬಿತ್ತ ನಾಲಿಗಿ
ಏರು || ಗಲ್ಲಿಗೆ ಅವನಿಗೆ ಏರಿಸಿ | ಮಾಡಿದ್ದಾರ ಒಳ್ಳೆ ಚೌಕಾಸಿ | ಇವನೆ ಈಸಾ
ಖರೇ ಇದ್ದರ ನಮ್ಮ ಪೈಕಿ ಒಬ್ಬ ಬಹಾದ್ದೂರ | ಒಳಗ ಹ್ವಾದಾಂವ
ಬಂದಿಲ್ಲಾ ತಿರುಗಿ ಜನರೆಲ್ಲಾ ಹೀಂಗ ಅಂತಾರ
ಅರಸ ಕೇಳಿ ದಂಗ ಆಗಿ ಅಂತಾನ | ಇದುಯೇನ ಆತ ಚಮತ್ಕಾರಾ
ಹಾರೀತು ನೆನಪ ಆಯಿತು | ಈತನೆ ನಮ್ಮಾಂವಾ | ಆದರೆ ಈಸಾ ಎಲ್ಲೆ
ಹ್ವಾದಾಂಗ ಆಯಿತು | ಬಿತ್ತವರಿಗೆ ಎಲ್ಲರಿಗೆ ಗುಮ್ಮಾ | ಅಳತಾರ ಮೆಲ್ಲಕ ಸುಮ್ಮಾ ಸುಮ್ಮಾ
ಏನಯಿದು ಎಂಥಾ ಬುದ್ದಿ ತಮ್ಮಾ | ಅಂತಾರ ಮರಮರಗಿ || ೭ ||

ಈಸುದ್ದಿ ಆತನ ಮನಿಗೆ | ಮಡದಿ ಮತ್ತು ಮಕ್ಕಳಿಗೆ | ಮುಟ್ಟಿತ
ಅತಕೊಂತ ಬಂದ ನೋಡ್ಯಾರ ಅಲ್ಲಿಗೆ ಹೆಣಾ ಬಿದ್ದಿತೊ ತೂಗಿ
ಏರು || ಅಂತಾಳ ಕಣ್ಣೀರು ಸುರಸಿ || ನನ್ನ ಮಕ್ಕಳ ಪರದೇಶಿ
ಅದು ಇಂದಿಗೆ ಈಸಾಪೈಗಂಬರ ಸಲುವಾಗಿ ಮಾಡಿ ಜಿದ್ದ
ಹಿಡಿಲಿಕ್ಕೆ ಹೋಗಿ ಕೊಟ್ಟಾನ ಪ್ರಾಣಾ | ನಮಗ ಒದಗಿತ್ತೊ ಪಾಪೆಲ್ಲಾ ಒಂದಾ
ಅಂತ ಎಲ್ಲಾರು ಕೂಡಿ ಎದ್ದ | ಹೋಗಿದ್ದಾರ ಅಲ್ಲಿಂದ | ಎಲ್ಲಾ ಜನಾ
ಕೇಳರಿ ವಿದ್ವಾನಾ | ಸುತ್ತ ನಾಡಿಗೆ ಜಾಹೀರಾ | ಬಾಗಲಕೋಟಿ ಪಟ್ಟಣಾ
ಇರತಾರ ಮಲ್ಲೆಕಲ್ಲ ಪೀರ | ಹುಸೇನ ಮಿಯ್ಯಾ ಗಂಭೀರ
ತರಬಿ ವೈರಿಗೆ ಜರಬಿಲೆ ಹೀಂಗ ಅಂತಾರ | ಎಂದ ಹಾಡಿದ್ಯೋಗೂಗಿ || ೮ ||

* * *

. ಹ ಶಮವೂನ ಪೈಗಂಬರರಿಗೆ ಒದಗಿದ ಕಷ್ಟ

ಪೇಳುವೆ ಬಾಲಾ ಸಾರಿ ಶಮವೂನ ಶರಣರ ಲೀಲಾ
ಏರು || ಸೃಷ್ಟಿ ಸರಿಯಾಗಿ ನಿಷ್ಟವಂತರಿಗೆ | ಕಷ್ಟ ಎಂದಿಗೆ ತಪ್ಪೂದಿಲ್ಲಾ
ಶ್ರೇಷ್ಟ ಸಾಂಬನ ಆಟ ತಿಳೂದಿಲ್ಲಾ | ಪರಮಾತ್ಮ ಶಮವೂನ ಶರಣರಿಗೆ
ಕೊಟ್ಟ ವಿಪರೀತ ಶರೀರ ಹುಟ್ಟಸ್ಯಾನ ಅವರಿಗೆ
ಶಕ್ತಿಗೆ ಮಿಗಿಲಾ | ಇದ್ದು ಮೈತುಂಬ ಉದ್ದ ಕೂದಲಾ || ೧ ||

ಇ|| ದೇಶದ ಮ್ಯಾಲಾ ಇತ್ತ ಅಮಜ ಅರಸನ ಅಮಲಾ
ಏರು || ಶರಣರದು ನೇಮಾ | ಇಸ್ಲಾಮದ ಧರ್ಮಾ
ಬೆಳಸುವಾ ಪ್ರೇಮಾ ಹಂಬಲಾ | ಇತ್ತ ಮನದಿ ರಾತರಿಹಗಲಾ
ನಾಕ ತಿಂಗಳ ಕಾಫರ ಮಂದಿಗೂಡ ಜಗಳಾ | ಮಾಡತಿದ್ರೂ ಸಾಂಬನ ಸ್ತೋತ್ರ ನಾಕ ತಿಂಗಳಾ
ಹೋಗುವರಲ್ಲಾ ನಾಕ ತಿಂಗಳ ದೇಶದ ಮ್ಯಾಲಾ || ೨ ||

ಇ|| ಶರಣರು ಸೇಲಾ || ಆಗಿ ಅಮಜ ಅರಸಗ ಅಮಲಾ
ಏರು || ಗಂಡ ಆಗಿದ್ದರು ದಂಡಕ ಇಡುತ್ತಿದ್ದರು | ಭಂಡ ಕಾಫರರು
ಜನಕಿಲ್ಲಾ ಯಾರು ಅವರಿಗೆ ಎಡ ಇದ್ದಿಲ್ಲಾ | ಅಮಲಜ ಅರಸ
ಕರಸಿ ತನ್ನ ಜನಕ | ಏನುಪಾಯ ಮಾಡುನು ನಾವು ಇದಕ
ಇಂವಾ ಇನ್ನ ಮ್ಯಾಲಾ | ಖಾಸ ನಮ್ಮದು ಓಸ ಇಡೂದಿಲ್ಲಾ || ೩ ||

ಇ|| ಸಣ್ಣ ದೊಡ್ಡವರಿಲ್ಲಾ | ಮಾಡಿ ಮಸಲತ್ ತಗದಾರೋ ಅಕಲಾ
ಏರು || ಶಮವೂನ ಶರಣರ ಸತಿ | ಇದ್ದಾಳರಿ ಮತಿ
ಇಲ್ಲದೊಂದೀಗತಿ | ಹಾಕಿ ಭುಗಿಲಾ | ಮಾಡಿ ಅವಳಿಗೆ ಹಾಕ್ಯಾರೋ ಜೇಲಾ
ಹಿಡದ ಕೊಡರಿ ನಿಮ್ಮ ಗಂಡಗ | ಮಾಡತೇವಿ ನಿಮಗ ನಮ್ಮ ಅರಸಗ
ಮಂಚದ ಮ್ಯಾಗ ತೂಗಿರೆಂತ | ಉಂಡ ಖುಷಿಯಾಲಾ || ೪ ||

ಇ|| ಬಹು ಸ್ಥಿರವಲ್ಲಾ | ಕೆಟ್ಟ ಹೆಂಗಸರ ಆಟ ತಿಳೂದಿಲ್ಲಾ
ಏರು || ಕಪಟ ಮನದಾಗ || ಹುಟ್ಟಿತರಿ ಹೀಂಗ | ಮಲಗಿಕೊಂಡಾಗ | ಕಯ್ಯಕಾಲಾ
ತನ್ನ ಗಂಡಗ ಕಟ್ಟಿದಾಳಲ್ಲಾ | ಶಮವೂನ ಶರಣರು ಎಚ್ಚರಾಗಿ ಯಾರ ಕಟ್ಯಾರಂತ
ಕೇಳತಾರ ಮಡದಿಗೆ | ಹೇಳತಾಳಲ್ಲಾ | ಶಕ್ತಿ ಪರೀಕ್ಷಾ ಮಾಡೇನಿ ನಾನೇ ಎಲ್ಲಾ || ೫ ||

ಇ|| ತಿಳಿಗೊಡಲಿಲ್ಲಾಕಿ ಜಗ್ಗಿ ಹರದಾರ | ಹಗ್ಗ ಸ್ವಾಮಿ ಸೇಲಾ
ಏರು || ಮರುದಿನಾ ಕಾಪೀರಾ | ತಂದ ಕೊಟ್ಟಾರಾ | ಕಬ್ಬಿಣ ಜಂಜಿರಾ | ಸಂಕೋಲಾ
ಹಾಕಿಗಂಡಗ ಹಾಸಿಗೆ ಮ್ಯಾಲಾ | ಎಚ್ಚರಾಗಿ ಶರಣರು ಜಂಜಿರಾ
ಮುರದ ತುಣಕ ಮಾಡಿ ಒಗದಾರಾ | ಹೇಳತಾಳಲ್ಲಾ ಶಕ್ತಿ ನಿಮ್ಮದು ಐತಿ ಬಹುತೋಲಾ || ೬ ||

ಇ|| ಕಿಡಗೇಡಿ ಕುಲಾ | ತನ್ನ ಕಪಟ ತಿಳಿಗೊಡಲಿಲ್ಲಾ
ಏರು || ಉತ್ತಮ ಥರದವಳು | ಮತ್ತು ಕೇಳಿದಳು | ಹೇಳು ಅಂತಾಳು ನಿಮ್ಮ ಕುಶಲಾ
ಶಕ್ತಿ ನಿಮ್ಮದು ಎದಕ ನಡುದಿಲ್ಲಾ | ತಿಳಿಲಿಲ್ಲಾ ಶರಣರಿಗೆ | ಕಪಟಾ
ತಿಳಿಸಿದಾರ ಸತಿಯಳಿಗೆ | ನನ್ನ ಕೂದಲಾ | ಕಟ್ಟ ಅದರಿಂದ ಆಟ ನಡೂದಿಲ್ಲಾ || ೭ ||

ಇ|| ಕೇಳಿ ನಿಜಕೀಲಾ | ಬಾಲಿ ಮನದಾಗ | ಆದ್ಲೋ ಕುಶಿಯಾಲಾ
ಏರು | ಮರುದಿನ ಗಂಡ | ಉಂಡ | ಮಲಕೊಂಡ | ಕಾಂತಿ ಕೊಯಕೊಂಡ ಕೂದಲಾ
ಕಟ್ಟಿದಾಳ ಕೈಕಾಲಾ | ಹರಿಲಿಲ್ಲ ಶರಣರದು | ಮೀರಿತು ಯತನಾ | ಸುದ್ದಿ ಕೇಳಿ ಬಂದಾರ
ಕೂಫಾರ ಜನಾ | ಹೊತ್ತ ವೈದಾರಲ್ಲಾ | ತಂದ ಅರಸನ ಮುಂದ ಖುಷಿಯಾಲಾ || ೮ ||

ಅರಸ ಜಾದಿಲಾ | ಒಟ್ಟ ಹುಕುಂ ಕೊಟ್ಟಿದ್ದಾ ಮೊದಲಾ
ಏರು || ಕೈಕಾಲ ಕಡಿಸಿ | ಕಿವಿಯಾಗ ಕೊಯಿಸಿ | ಎರಡು ಕಣ್ಣು ಕೀಳಸಿ
ದಿಮ್ಮ ದುಂಬಾಲಾ | ಮಾಡಿ ಸಮುದ್ರ ನೀರಿನ ಪಾಲಾ
ಹುಕುಮಿನ ಪರಕಾರಾ ದಿಂಬಕ | ಓದು ಒಗದಾರ ಸಮುದರದಾನ ಮಡಕ
ಹುಕುಮಿನ ಮ್ಯಾಲಾ | ಬಂದ ಸಾಂಬನ ದೂತ ಜಿಬರೀಲಾ || ೯ ||

ಇ|| ಶರಣರ ಮ್ಯಾಲಾ | ಆತ ಸಾಂಬನಕೃಪಾ ತತ್ಕಾಲಾ
ಏರು || ಬಂದು ಚಿಗಿತ ಕಣ್ಣ ಮೂಗೆಲ್ಲಾ | ಶರಣರು ಸಿಟ್ಟೀಲೆ | ಮನಿಗೆ ಹ್ವಾದ್ರ
ಹೊಡಿಬೇಕಂತ | ತಮ್ಮ ಸತಿಯಳಿಗೆ |
ಜುಬರಾಹಿಲಾ ಶಾಂತ ಮಾಡಿದಾರ ಸಾನುಕೂಲಾ || ೧೦ ||

ಇ|| ಜಿಬರಾಹಿಲಾ ಅಂದಾರಲ್ಲಾ | ಶಮವೂನ ಶರಣಗ ಮೊದಲಾ
ಏರು || ದುಷ್ಟ ಅರಸಿಂವಾ | ಕಷ್ಟ ಪಡಸ್ಯಾನ | ನಷ್ಟ ಮಾಡರಿ ತತ್ಕಾಲಾ
ಊರ ಇವಂದು ಹಾಕ್ರಿ ಬಾಕಲಾ | ಸತ್ಯವಂತ ಶರಣರು ಆ ಗ್ರಾಮಕ
ಕಿತ್ತಿ ಒಗದಾರ ಎತ್ತಿ ಅಲಕ | ಬಂತ ಅಂತ್ಯಕಾಲ | ಊರ ಗ್ರಾಮದ ಕೂನಾ ಉಳಿಲಿಲ್ಲಾ || ೧೧ ||

ಇ|| ದೇಶದ ಮ್ಯಾಲಾ | ಶಾರ ಬಾಗಲಕೋಟಿ ಪ್ರಭಲಾ
ಏರು || ಹಸ್ತ ತಲಿಮ್ಯಾಗ | ದಸ್ತಗೀರ ನಮಗ | ಮಸ್ತ ಕೊಟ್ಟಾರ ಅಕಲಾ
ಆದ್ರ ಕೇಸುಪೀರ ಅನುಕೂಲಾ | ನಾಗೂ-ಗೌಸುನ ಕವಿ ಕಡಕ | ಕಟಬಂದ
ಅಕ್ಷರ ಬಲು ತೊಡಕ | ಇಂವಾಯೇನ ಬಲ್ಲ ಪಿಚ್ಚು | ಮುಂಚೆ ಕೊಯ್ಯಾಂವ ಹುಲ್ಲಾ ||೧೨||

* * *

೧೦. ಸಾರಾ ಅವರ ಪತಿವ್ರತಾ ಭಕ್ತಿಯ ಪದಾ

ಪತಿವ್ರತಾ ಬೀಬಿ ಕಾತೂನ ಸಾರಾ
ಹುಟ್ಯಾಳ ರಂಭಿ ಸೂತರದ ಗೊಂಬಿ || ಪಲ್ಲವಿ ||

ಏರು || ಸೂರ‍್ಯ ಪ್ರಕಾಶದಂತೆ ಜಗತುಂಬಿ | ವಯಾ ಇತ್ತ ಎಳಕ
ಬೆಳಕ ಬಿತ್ತ ದೇಶದ ಮ್ಯಾಲಿ | ಮದುವಿ ಇಲ್ಲದ ಮನಾ ಜಲ್ಲಾ ಆಗೂದು ರಾತ್ರಿಹಗಲ
ನನ್ನ ಮನಸಿಗೆ ಬಂದ ಪುರುಷ ಆಗುವೆ ಲಗ್ನ ಬಾಲಿ
ತಂದಿಗೆ ನಿಷ್ಟುರಾ ಅಂದಾಳಾ ಸುಂದರಾ || ೧ ||

ಇ|| ಇಷ್ಟ ಕೇಳಿ ತಂದಿ ಆಗ ಮಾಡಸ್ಯಾನಾ ಸ್ವಯಂವರಾ
ಹರಿದಿತ್ತ ಸುದ್ದಿ | ನೆರೆದಿತ್ತ ಮಂದಿ
ಏರು | ತೊಟ್ಟರು ತಕ್ಕಷ್ಟು ಪೋಷಾಕ ಗರದಿ
ಏಕಲಾಕ ರಾಜಲೋಕ ಸ್ಥಾನಿಕ ಜನರು
ಆಗಬಿಟ್ಟ ಇಬ್ರಾಹಿಮ ಶರಣರು
ಹೋಗುವಾಗ ಹಾದಿವೊಳಗ ಮಂದಿಗೂಡ ನಡೆದರು
ಕೂಡಿತ್ತ ಜುಮರಾ | ನಡೆದಿತ್ತ ಸ್ವಯಂವರಾ || ೨ ||

ಇ|| ಸ್ವಾಮಿ ಶರಣಾ ಹೋಗಿ ಕುಂತಾರ ಪರಭರಾ
ಕೈಯಾಗ ಹಿಡದಾಳೋ ನವರತ್ನ ಸರಾ
ಏರು || ಬಂದಾಳೋ ಮುಂದ ಮಾರಿಗೆ ಹಾಕಿಕೊಂಡು ಗೋಷಾ
‘ಥಿ ದಿಲ್‌ಭರಿ ಓ ಪೈಗಂಬರಿ ನೂರ್ ಕಿ ಆಶಾ’
ನೋಡಿ ಇಬ್ರಾಹಿಮ ಶರಣರ ಮಾರಿ ಮನಾ ಆತ ಹರುಷಾ
ಕಂಡಾಳೋ ಚಹರಾ ಹಾಕ್ಯಾಳೋ ಹಾರಾ || ೩ ||

ಇ|| ಗರ್ದಿಲಿಂದ ಮದುವಿ ನಡದೀತ ಜುಮರಾ
ಏರು || ಒಂದ ದಿನಾ ಶರಣಾ | ಸತಿಗೆ ಸಂಪೂರಣಾ
ತಿಳಿಸಿ ಹೇಳ್ಯಾರ ಮನಸಿನ್ಮಾನ ಧೋರಣಾ
ಕೊಡ ಅಪ್ಪಣಿ ಹೋಗ್ತೇನಿ ನಮ್ಮ ದೇಶಕ್ಕೆ ಹೊಂಟಾ
ಸತಿ ಅಂದ್ಲೊ ಪತಿಗೆ ಇಲ್ಲಗತಿ ನಿಮಗ ಬಿಟ್ಟಾ
ಬರತೇನಿ ನಾ ಇರತೇನಿ ನಡೀರಿ ನಿಮ್ಮ ಸಂಗಾಟಾ
ನಿಮ್ಮಲಿಂದಾ ಉದ್ದಾರಾ ಆಗೂದು ನಿರ್ಧಾರಾ || ೪ ||

ಇ|| ಕೊಟ್ಟಾರ ಅಪ್ಪಣಿ ಅತ್ತಿ ಮಾಂವ ಎಲ್ಲಾರಾ
ಏರು || ಹಿಡದಾರ ಹಾದಿ ಬರು ಹೋಗು ಮಂದಿ
ತಿಳಿಸ್ಯಾರ ಮಿಸರ ದೇಶದ ಅರಸನ ಬಾಧಿ
ಬಾಳೈತಿ ನಿಮ್ಮ ಗೋಳ ಮಂದಿ ಇಟ್ಟ ಜಕಾತಿ
ಬೇಡತಾರ ಅಲ್ಲಿ ಮಾಡತಾರ ಸರೂ ಮಾಲಿನ ಜಡತಿ
ಹೆಂಗಸರಗಿ ಹರುಷಾಗಿ ಒಯ್ದು ಅರಸನ ಹಂತಿ
ಹುಕುಮಿನ ಪರಕಾರ ಮಾಡುವರು ಹಾಜರಾ || ೫ ||

ಇ|| ಸ್ವಾಮಿ ಶರಣಾರು | ಆಗ ತಗದಾರ ಹುನ್ನಾರಾ
ಏರು || ಊರಿಗೆ ಹೋಗಿ ತಂದಾರ ಒಂದ ಪೆಟಗಿ
ಕುಂಡರಸಿ ಅದರಾಗ ಸತಿಯಳಗಿ
ಸುತ್ತಗಟ್ಟಿ ಬಿಗದ ಕಟ್ಟಿ | ಕೀಲಿ ಹಾಕ್ಯಾರ ಗಟ್ಟಿ
ಹೇರ‍್ಯಾರ ಆಗ | ಕುಂತಾರ ಆಗ | ಬಿಟ್ಟಾರ ಒಂಟಿ
ನಡೆದಿತ್ತ ಮುಂದ ಬಂತ ಮಿಸರ ದೇಶದ ಕಟ್ಟಿ
ಕೇಳತಾನ ತಳವಾರಾ | ಯಾತರದು ಹೇರಾ || ೬ ||

ಇ|| ಅಂತಾರ ಶರಣಾ ಸಾಮಾನ ಐತಿ ಚಾರಚೂರಾ |
ಏರು || ಮಾಲಿಂದು ಜಡತಿ | ಮಾಡುದು ರೀತಿ
ಐತಿ ಅರಸಂದು ನಮಗ ತಾಕೇತಿ
ಶರಣರಂದ್ರೋ ಜೀಂವಕ ತೊಂದ್ರಿ ಯಾತಕ ಇಷ್ಟಾ
ಅಜಮಾಸ ಮಾಡರಿ ಖಾಸ ಕೊಡುವೆನು ಬೇಡಿದಷ್ಟಾ
ತಳವಾರ ಇಳವಿ ಹೊರಕೀಲಿ ತೆರದಾ ದುಷ್ಟಾ
ಕುಂತಿದ್ಲೋ ಸುಂದರಾ | ಮೂಡಿದಾಂಗ ಚಂದಿರಾ
ನಿಂದರಸ್ಯಾರ ಒಯ್ದು ಅರಸನ ಇದರಾ || ೭ ||

ಇ|| ಕಂಡ ಮದಾಂಧಾ ಕಾಮನ ಬಾಧಾ
ತಾಳಲಾರದಾ ಹಿಡಿಲಾಕಾ ಹ್ವಾದಾ
ಏರು || ಭಕ್ತರಿಗೆ ಬಂದ ರಕ್ಷಣ ಮಾಡಾಂವಾ ಸಮರ್ಥಾ
ಹಿಡಿಲಾಕ ಬಂದ ಅರಸನ ಕೈ ಒಣಗ್ಯಾವ ತುರತಾ
ಹುಗದಿತ್ತ ನೆಲಾ ಬಿಗದ ಹಿಡಿತ ಅತಿಗೊಂತ ಕುಂತಾ
ಸಿಗಬಿದ್ದ ಪಾಮರಾ ಆದಾನ ಗಾಬರಾ || ೮ ||

ಇ|| ಅಂತಾನ ಅರಸಾ | ಇದು ಜಾದೂದು ಆಕಾರಾ
ಏರು || ಕಾತೂನ ಸಾರಾ | ಅಂದಾಳೋ ಮುಡದಾರಾ
ನನ್ನಪತಿ ಸಾಂಬನ ಪ್ರೀತಿ ಪೈಗಂಬರರಾ
ಕೇಳಿ ಅರಸ ಹಿಂತ ಕೆಲಸ ಮುಂದ | ಮಾಡೂದಿಲ್ಲಾ ಅಂದಾ
ಬಿಟ್ಟೈತಿ ನೆಲಾ ಒಣಗಿದ ಕೈ ಆದಾವ ಚಂದಾ
ಮತ್ತ ಅರಸ ಕೆಟ್ಟಗಣ್ಣೀಲೆ ದಿಟ್ಟೀಸಿ ನೋಡಿದಾ
ಕಣ್ಣ ಹೋಗಿ ಮುಡದಾರಾ | ಆದಾನೋ ಬ್ಯಾಸರಾ || ೯ ||

ಇ|| ಮತ್ತ ಅರಸಾ ಜಲ್ಮಾ ಮಾಡಂದಾ ಉದ್ದಾರಾ
ಏರು || ಸಾರಾ ಕಾತೂನಾ ಪತಿವೃತಾ ರತನಾ
ಮಾಫ ಮಾಡ್ಯಾಳ ಬಂದಾವ ಕಣ್ಣಾ
ಬೇಮಾನ ಅರಸ ಹೀನ ಮನಸ ಮಾಡ್ಯಾನ ಹೀಂಗ
ಕೈಯಾಗ ಸಿಕ್ಕಬ್ಯಾಟಿ ತಿರುಗಿ ಬಿಡಬೇಕ ಹ್ಯಾಂಗ
ಕಣ್ಣ ಹೋಗಿ ಕೈಯ ಒಣಗಿ ಕುಂತ ಮೊದಲಿನ ಹಾಂಗ
ಅಂತಾನ ಗಂವಾರಾ ಮಾಡವ್ವಾ ಉದ್ದಾರಾ || ೧೦ ||

ಅಂತಾರ ಸಾರಾ ನಂದು ತೀರಿತ್ತು ಕಾರಭಾರಾ
ಏರು || ಕರೆಸಿ ಶರಣಗ ಬಿದ್ದ ಪಾದದ ಮ್ಯಾಗ
ಉದ್ದಾರ ಮಾಡರಿ ಜಲಮಾ ನೀವು ನನಗ
ಈ ತಪ್ಪ ಮಾಡರಿ ಮಾಫ ನಿಮಗ ಕೊಟ್ಟೇನಿ ತಾಪಾ
ವಹಿತಂದ ಜಿಬ್ರಾಯಿಲ ಬಂದ ಶರಣರಿಗೆ ಅಂತಾನ ಸಾಪಾ
ಈ ಅರಸ ತನ್ನ ದೌಲತ್ತ ಸರೂ ಕೊಟ್ಟರ ಮಾಪಾ
ಮಾಡರಿ ಶರಣರಾ ಹುಕುಮಿನ ಪರಕಾರಾ || ೧೧ ||

ಇ|| ತಿಳಿಸ್ಯಾರ ವಚನಾ ತಂದ ಇಮಾನಾ
ಇಟ್ಟಾನ ಮುಂದ ತನ್ನ ಖಜಾನಾ
ಸಾಂಬನ ಹುಕುಮಿಲಿಂದ ಅರಸ ಆದ ಸಾಬೀತಾ
ಶರಣರು ಎರಡು ಭಾಗ ಮಾಡ್ಯಾರ ಇದ್ದ ದೌಲತ್ತಾ
ಅರಸಗ ಅರ್ಧ ಕೊಟ್ಟಾರು ತಮ್ಮ ಕೈಮುಟ್ಟಿ ಹಸ್ತಾ
ಮಾಡ್ಯಾರ ಉಪಗಾರಾ ಕರುಣ ಸಾಗರಾ || ೧೨ ||

ಇ|| ಮಾಡತಾನ ಅರಸಾ ಬೇಬಿ ಸಾರಾನ ವಿಸ್ತಾರಾ
ಏರು || ಈ ಭೂಮಿಮ್ಯಾಗ ಬೇಗು ಬೆಳಗು ಹಾಲಿ
ಆಗೂದು ನಿಮ್ಮಂತವರು ಇದ್ದಲ್ಲಿ
ಪತಿವ್ರತಾ ಅಂತ ಪ್ರಾಂತದೊಳಗ ಆದ ಅಸಕರಿ
‘ಖಿದ್‌ಮತ್‌ಕು ಬೀಬಿ ಹಾಜರಾ ಕಿಯಾ ತಾಬೇದಾರಿ’
ಕುಶಿಲಿಂದ ಅರಸಾ ತಂದ ಸಾರಾಗ ಕೊಟ್ಟ ಉಡಗರಿ
ಹೊಂಟಾರ ಶರಣರ ಬಿಟ್ಟಾರ ಆ ನಗರಾ || ೧೩ ||

ಇ|| ಬಾಗಲಕೋಟೆ ಸುತ್ತ ದೇಶಕ ಜಾಹಿರಾ
ಏರು || ಗುರು ದಸ್ತಗೀರಾ | ಕರುಣ ಸಾಗರಾ
ಹಸ್ತ ಇಟ್ಟ ತೆಲಿಮ್ಯಾಗ ಭರಪೂರಾ
ನಮ್ಮ ಕೇಸುಪೀರ ಲೇಸ ಮಾಡ್ಯಾರ ನಾಗೂ-ಗೌಸೂಗ
ಕಟಿಬಂದ ನುಡಿಚಂದ ತುಸು ತಗಲಿಲ್ಲದಾಂಗ
ಪ್ರಸಿದ್ಧ ಆದ ಉಸ್ತಾದ ನಮ್ಮ ಲಚಮನಸಿಂಗ
ಕಟಬಂದ ಅಕ್ಷರಾ | ಕವಿಗಳು ಬಂಗಾರಾ || ೧೪ ||

* * *

೧೧. ಸ್ವಾಲೆಹಾ ಪೈಗಂಬರರ ಸೇಬು ಹಣ್ಣಿನ ಬಯಾನಾ

ದೈವಾ ಕೇಳರಿ ನೀವು ಕೈಮುಗಿದು ಹೇಳುವೆವು
ಚಿತ್ತ ಇಡಬೇಕು ತಾವು ನಮ್ಮ ಮೇಲಾ ||
ಏರು|| ಅಬು ಸ್ವಾಲೆಹಾ ಎಂಬ ಶರಣರ ಬಯಾನಾ
ಬಿಚ್ಚಿ ಹೇಳುವೆನು ಏನು ಕಸರಿಲ್ಲಾ ||
ಇ || ಒಂದಾನ ಒಂದಿನ ಅಬುಸ್ವಾಲೆಹಾ ಶರಣಾ ಹೊಳಿದಂಡಿಮೇಲೆ
ಕುಂತಿದ್ದರಾಗ ಸೇಬುಹಣ್ಣು ತೇಲಿ ಬಂತೋ ಅಲ್ಲೆ
ದಿಟ್ಟಿಸಿ ನೋಡಿ ಕಯ್ಯಾಗ ತಗೊಂಡ ಆ ಹಣ್ಣಾ
ಅದು ಇತ್ತೋ ಪಂಚವರಣಾ
ಶರಣಾ ಹಸುವು ಆಗಿ ಆ ಹಣ್ಣು ತಿಂದಾರಲ್ಲಾ || ೧ ||

ಇ|| ಹಣ್ಣು ತಿಂದಗಳಗಿ ಮ್ಯಾಗ | ಚಿಂತಿ ಹತ್ತಿತು ಆಗ
ತಿನಬಾರದಿತ್ತು ಹಣ್ಣು ತಿಂದೇನಲ್ಲಾ
ಏರು || ಪರಮಂದಿ ಮಾಲಾ ತಿಂದ ಹಾಸಿಲಾ
ತೀರಿಸಿ ಬಿಡತೇನಿ ನಾನು ಬಿಡುವದಿಲ್ಲಾ
ಚ್ಯಾಲ || ಕುಂತರ ನಡುದಿಲ್ಲ ಅಂತಾ ಹೇಳಿ ಮುಂದಕ ಸಾಗಿದಾ
ಗುರತ ನೋಡಿಕೊಂತ ನಡದಾನೋ ಶರಣಾ ಹೊಳಿದಂಡಿ ಹಿಡದಾ
ಹೋಗು ಹೋಗೂತ ಕಂಡಾರೋ ಸೇಬುಹಣ್ಣಿನ ಮರಾ
ಇದ್ದಾನೋ ತೋಟದ ಸಾಕಾರಾ
ಹೋಗಿ ಗಾಟ್ಯಾಗಿ ಅವರಿಗೆ ಕೇಳತಾನಲ್ಲಾ || ೨ ||

ಇ|| ಕಣ್ಣೀಲೆ ಕಂಡು ನಾನು ತಿಂದೇನು ಆ ಹಣ್ಣಾ
ಹ್ಯಾಂಗ ತೀರೀತು ರಿಣಾ ಹೇಳರಿ ಮೊದಲಾ
ಏರು || ಕೇಳರಿ ಸಾಹುಕಾರಾ | ನನ್ನ ಮಾತ ಪೂರಾ
ನಿಮಗ ಬಿಡುವುದಿಲ್ಲಾ ||
ಚ್ಯಾಲ || ಯಾರ ಬದಕ ಯಾರ ತಿನಬೇಕ
ಮಾಡಿರಿ ವಿಚಿಯಾರಾ ಭೂಮಿ ಮ್ಯಾಲೆ ಹುಟ್ಟಿ
ಹೀಂಗ ಮಾಡಿಕೊಂತ ಹೋದರ ಶಿವನಲ್ಲಿ
ಆದೀತ ಹ್ಯಾಂಗ ಬೆಟ್ಟಿ
ಏನ ಹಚ್ಚತಿರಿ ನೀವು ಹಚ್ಚರಿ ಬದಕ | ಸರಿಯಾಗಿ ಹಣ್ಣಿನ ರಿಣಕ
ನೀವು ಬಿಟ್ಟೇನೆಂದರ ನಾನು ಬಿಡುವುದಿಲ್ಲಾ || ೩ ||

ಸಾವುಕಾರ ಅಂತಾನೋ ಆಗ | ಎಂಥಾಭಕ್ತಿ ಭಾವ ಇಂವಗ
ಏಕ ನಿಷ್ಠಾ ಶಿವಾ ಇವಗ ಕೊಟ್ಟಾನಲ್ಲಾ
ಏರು || ನನ್ನ ಮಗಳಾ ರತ್ನದ ಹರಳಾ
ಅಂತಾಕಿ ಇಂವಗ ನಾನು ಕೊಡಬೇಕಲ್ಲಾ
ಚ್ಯಾಲ || ಇವನ ಏಕನಿಷ್ಠಿ ನೋಡಬೇಕಾದರ ಸುಳ್ಳ ಸುಳ್ಳ ನಾನು ಹೇಳಿ
ಮಗಳ ರೂಪ ವಿಚಾರಗೆಡಿಸಿ ಮಾತಿಲಿಂದಾ
ಹೇಳಿ ಕೇಳಿದ ಅವನ ಮುಂದಾ
ಕಣ್ಣ ಇಲ್ಲದ ಕುರುಡಿ | ತಲಿ ಇದ್ದಾಂಗ ಹಿಟ್ಟಿನ ಜರಡಿ
ಕಿವುಡಿ ಮೊದಲ ಕಿವಿ ಕೇಳುವುದಿಲ್ಲಾ || ೪ ||

ಕಾಲಿಲ್ಲದ ಕುಂಟಿ ಕೈಯಿಲ್ಲದ ಸೊಟ್ಟಿ
ಗಟ್ಟಿ ಆಕಿ ಮೂಕಿ ಬಾಯಿ ಮೊದಲಿಲ್ಲಾ ||
ಏರು || ಮದುವಿ ಆಕಿಯನಾ | ಮಾಡಿಕೋ ನೀನಾ
ತೀರುವದು ಹಣ್ಣಿನ ರಿಣಾ ಉಳಿಯುದಿಲ್ಲಾ
ಚ್ಯಾಲ || ಆಕಿಯ ಕೂಡ ಬಾಳೇವ ಮಾಡಿ ಹೌದ ಅನಿಸಿಕೋ ಬೇಕ
ಹೌದು ಅಲ್ಲಾ ನಿನ್ನ ಮನಸಿಗೆ ತಿಳಿಯಬೇಕ ತಂದು ಕೇಳು ನನ್ನ ಮಾತ
ಇದು ಬ್ರಹ್ಮನ ಲಿಖಿತ ಮುಂದ ನಿನ್ನ ಹಣೇಬಾರ ನಾನು ಬರೆದಿಲ್ಲಾ || ೫ ||

ಇ|| ಅಬೂ ಸ್ವಾಲೆಹಾ ಶರಣಾ ಕಬೂಲಾದಾರಣ್ಣಾ
ನಡೆದೀತೊ ಲಗ್ಗನಾ ಒಳ್ಳೆ ಪ್ರಭೂಲಾ
ಏರು || ಮದುವಿ ಆದಾಕ್ಷಣಕ ಅಂತಾನೋ ಬೇಶಕ್
ಮುಂದಿನ ತೂಕಾ ನನಗ ತಿಳಿಯೂದಿಲ್ಲಾ
ಚ್ಯಾಲ || ಅಬೂ ಸ್ವಾಲೆಹಾ ಶರಣಾ ನಿಂತಾರೋ
ಸುಮ್ಮನಾ ಆಗ ದಿಂಗಬಡದಾ
ಶರಣರ ನೋಡಿ ಅಂತಾನೋ ಸಾಹುಕಾರಾ ಮುಂದ ಕರದಾ
ಹೋಗರಿ ಹೇಣತಿ ಮನಿಗೆ ಬಾಳೇವ ಮಾಡೂದಕ ಆಗಲಿ ನಿಮ್ಮ ಸುಖದುಃಖಾ
ಯಾಕ ನಿಂತೀದಿ ನಿನಗೇನು ಭಯವಿಲ್ಲಾ || ೬ ||

ಇ|| ಹೋಗಿ ಅಬೂಸ್ವಾಲೆಹಾ ನಿಂತಾರೋ ಬಾಗಿಲಲ್ಲಿ
ಅಲ್ಲಿ ಹೆಣತಿನ ನೋಡಿ ದಿಕ್ಕ ತಪ್ಪಿತಲ್ಲಾ
ಏರು || ಹೆಣ್ಣಿನ ತಾರೀಫಾ ಹೇಳುದಕ ನೆಪ್ಪಾ
ದಿಕ್ಕು ತಪ್ಪಿ ಅವಂದು ಅಂವಗ ನೆನಪಿಲ್ಲಾ
ಚ್ಯಾಲ || ಓಡಿ ಬಂದು ಸಾವಕಾರನ ಕಡೆಗೆ ಹೇಳತಾನೋ ಒದರಿ
ಕಣ್ಣು ಕಾಲು ಬಾಯಿ ಇಲ್ಲಂತ ಹೇಳದಿರಿ
ಪರಹೆಣ್ಣಿನ ನೋಡಿ ಮಾಡಿದೆ ಬಹು ಪಾಪಾ
ಹೀಂಗ ಹೇಳಬಾರದು ಬೂಪಾ
ಕೋಪಾ ಏನಾರ ಇದ್ದರ ಹೇಳರಿ ನನ್ನ ಮೇಲಾ || ೭ ||

ಶ್ರೇಷ್ಟಾ ಸಾವುಕಾರ ಅಂದಾ ಅಬೂ ಸ್ವಾಲೆಹಾ ಶರಣರ ಮುಂದಾ
ಏನು ಇಲ್ಲೊ ಬಿನ್ನಬೇದ ನಿನ್ನ ಮೇಲಾ ||
ಏರು || ಮೂಕಿ ಅಂದೆನಿಲ್ಲಾ | ಆಕಿ ಯಾರಗೂಡ ಮಾತಾಡುದಿಲ್ಲಾ ||
ಕಣ್ಣೀಲೆ ಯಾರನು ನೋಡೂದಿಲ್ಲಾ
ಚ್ಯಾಲಿ || ಬಾಯಿಲ್ಲಂದರ ಮಂದಿಗೆ ನಿಂದೆ ಎಂದಿಗೂ ಆಡ್ಯಾಳು
ಶಿವಧ್ಯಾನ ಮಾಡತಾಳೋ ನಿತ್ಯ ಹಗಲಿ ಇರುಳು
ಬಾಗಲದಾಟಿ | ಹೊರಗ ಮೊದಲ ಬಂದಿಲ್ಲಾ | ಅದಕ ಅಂದೇನು ಕಾಲಿಲ್ಲಾ
ಕೈಲೆ ಮಂದಿ ಬದುಕ ಮುಟ್ಟೂದಿಲ್ಲಾ || ೮ ||

ಅಬೂಸ್ವಾಲೆಹಾ ಆಗ ಚಿಂತೆ ಬಿಟ್ಟಾರಾಗ
ಸಂತೋಷಾಗಿ ಮನದಾನ ಬಿಟ್ಟ ಜಲ್ಲಾ
ಏರು || ಮನಿಗೆ ಹೋದನೋ ಶರಣಾ | ಮುಗದೀತೋ ಬಯ್ಯಾನಾ
ಹೆಸರಾದಾವಾಗ ಏನೇನಿಲ್ಲಾ ||
ಚ್ಯಾಲ || ಗಟ್ಟಿ ಬಾಗಲಕೋಟಿ ಪ್ಯಾಟಿ ಇರುವದು ಸೇಲಾ
ದಸ್ತಗೀರ ಕೇಸುಪೀರ ಹಸ್ತ ಇಟ್ಟರಲ್ಲಾ
ನಾಗೂ-ಗೌಸೂನ ಪದಕ ಅನ್ನುವರೋ ಸೈ ಸೈ
ಗೆಜ್ಜೆ ಕಟ್ಟಿ ಕುಣಿಯೂದು ಥೈ ಥೈ
ವೈರಿ ನೋಡಿ ನಾಯಿಹಾಂಗ ಕಿಸ್ತಾನೋ ಹಲ್ಲಾ || ೯ ||

* * *

೧೨. ಇಸ್ಮಾಯಿಲ ಪೈಗಂಬರರ ಕಾಲಿನ ತುದಿಯಿಂದಾದ ನೀರಿನ ಪವಾಡ

ಜಗದಲ್ಲಿ ಜಾಹೀರ ಈ ಮಾತು ಕೇಳರಿ ಜನರೆಲ್ಲಾ
ಪ್ರಪಂಚದ ತಾಪ ಒಳ್ಳೊಳ್ಳೆ ಶರಣರಿಗೆ ತಪ್ಪಿಲ್ಲಾ
ಇಬ್ರಾಹಿಮ ಪೈಗಂಬರ ಆತನ ಇಬ್ಬರ ಹೆಂಡರಾ
ಸಾರಾ ಹಾಜರಾ ಹೆಸರು ಆವಾಗ ಒಂದು ಹುಟ್ಟಿತೋ ಪುತ್ತರಾ
ಆರೇಳು ತಿಂಗಳದ ಇಸ್ಮಾಹಿಲ ಇದ್ದ ಸಣ್ಣ ಕಮಲಾ || ೧ ||

ಇಬ್ಬರು ಹೆಂಗಸರ ಒಳಗ ನಡೀತ್ತೊ ಜಗಳ
ಅವರಿಬ್ಬರ ಹೆಂಡರು ಇಬ್ರಾಹಿಮನ ಜೀವಕ್ಕ ಆಗಿದ್ದರೋ ಮೂಲ
ಏನು ಹೇಳಲಿ ಮನಿಯಾನ ಕದನಾ | ಕೇಳಿ ಬೇಜಾರ ಆದ ಬಗವಾನಾ
ತಗದಾನೋ ಒಂದ ಇಕ್ಕಿ | ಇಬ್ರಾಹಿಮಗ ಹೇಳ್ಯಾನೋ ಹಿಕಮತಿ
ಮಗ ಹೆಂಡತಿನ ಮಾಡೆಂದ ಸಾಂಬ ಒಯ್ದು ಅಡವಿ ಪಾಲಾ || ೨ ||

ಶಿವಸಾಂಬನ ಆಜ್ಞಾ ಶರಣ ಎಂದು ಮೀರೂದಿಲ್ಲಾ
ಸತಿಸುತನ ಕರಕೊಂಡ ಆರ‍್ಯಾಣಹಾದಿ ಹಿಡಿದನಲ್ಲಾ
ಮಕ್ಕಾದಲ್ಲಿ ಬಿಡುವೆನೆಂದು ಮಡದಿಗೆ ಹೇಳಿ ಸನಮಂತು
ಕರಕೊಂಡ ನಡೆದಿದ್ದ ಸುದ್ದಿ ಏನು ಹೇಳಲಿ ಅರಣ್ಯದಾ
ಮನುಷ್ಯ ಪ್ರಾಣಿ ಏನು ಹಕ್ಕಿ ಪಕ್ಕಿ ಸುಳುವು ಇಲ್ಲಾ || ೩ ||

ಅಂತ ಜಾಗದಲ್ಲಿ ಇಬ್ರಾಹಿಮ ಕರದೊಯಿದಾನಲ್ಲಾ
ಆರು ತಾಸು ಮೀರಿತೋ ಹೊತ್ತು ಕೆಟ್ಟ ಬ್ಯಾಸಿಗಿ ಬಿಸಲಾ
ಮೊದಲೆ ಅಮೃತ ಅರಸನ ಮಗಳ ರೂಪದಲ್ಲಿ ಇದ್ದಳೋ ನಿವ್ವಳಾ
ಬಿಸಲಮಾರಿ ಎಂದು ಕಂಡಿದ್ದಿಲ್ಲೊ ಯಾವಾಗ ಹೊರಬಿದ್ದ |
ಅಂತಾಕಿನ ಕರಕೊಂಡು ನಡದಾನೋ ಶಿವನ ಹುಕುಮ ಮೇಲಾ || ೪ ||

ಬ್ಯಾಸಗಿ ಬಿಸಲಾಗ ನಡೆದು ಒಣಗಿತೋ ಗಂಟಲಾ
ಮೈಯೆಲ್ಲಾ ಕಾವೇರಿ ಸೇದಿಕೊಂಡಿತೋ ಮೊಲೆಹಾಲಾ
ಗಂಡಗ ಅಂತಾಳೋ ಈಗ ನೀರು ತಂದು ಕೊಡಬೇಕು
ನನಗ ಉಳಿಯದಿಲ್ಲೊ ಪ್ರಾಣಾ ವ್ಯರ್ಥ ಸಾಯತೇನಿ ಸುಮ್ಮನಾ
ಮೊಲೆಯಾಗ ಹಾಲು ಇಲ್ಲದ ಕೂಸು ಅಳತಿತ್ತೊ ಸಣ್ಣ ಕಮಲಾ || ೫ ||

ಇಬ್ರಾಹಿಮಗ ಇಷ್ಟ ನೆವನ ಬೇಕಾಗಿತ್ತಲ್ಲಾ
ಹುಡುಕಿ ನೀರು ತರುವೆನೆಂದು ಮನಿಹಾದಿ ಹಿಡಿದನಲ್ಲಾ
ಒಂದು ಮರದ ಕೆಳಗ ನಾರಿ ನೋಡೂತ ಕುಂತಾಳ ತನ್ನ ಗಂಡನ ಹಾದಿ
ಆಯಿತೊ ಬಹುತ ದೇರ ಯಾವಾಗ ತರತಾರೋ ನೀರ
ಕೂಸಿನ ಗಿಡದ ಕೆಳಗ ಹಾಕಿ ತಾನೇ ನಡದಾಳಲ್ಲಾ || ೬ ||

ಹುಡುಕ್ಯಾಳೋ ಅರಣ್ಯ ತಿರುಗಿ ನೀರ ಸಿಗಲಿಲ್ಲ ಮತ್ತೊ
ಕೂಸಿನ ಕಡಿ ಆಯಿತೋ ಅಮಲಾ
ಅದೇ ಮರದ ಟೊಂಗಿಯ ಮೇಲಾ ಮಧುವಂದು ಇಟ್ಟಿತ್ತೋ
ಆಸರ ಆದಿತ್ತೋ ಸಾಂಬನ ಆಜ್ಞ ಸುರುವಿ ಬೀಳತಿತ್ತೊ ಹನಿಹನಿ
ಕೂಸು ನೆಕ್ಕಿ ಸಮಾಧಾನಲಿಂದ ಬಿದ್ದಿದ್ದ ಕುಶಿಯಾಲಾ || ೭ ||

ತಾಯಿ ನೋಡಿ ಬಿಟ್ಟಳೋ ಚಿಂತಿಲ್ಲಾ
ಕೈಕಾಲು ಆಡೂತ ಬಡಿಯಾಂತ ಬಿದ್ದಿದ್ದ ಇಸ್ಮಾಯಿಲ
ಕಾಲಾಡೋ ಜಾಗದಲ್ಲಿ ಉಸುಕೆಲ್ಲಾ ಬೈಲಾಗಿ ಕಾಣತಿತ್ತೋ ಕೆಸರಾ
ಕುಂತ ನೋಡ್ಯಾಳೋ ಹಾಜರಾ ||
ಕಟಗಿ ಒಂದು ಕೈಯಾಗ ತಗೊಂಡು ಕೆದರತಾಳ್ರಿ ನೆಲಾ || ೮ ||

ತೋಡ್ಯಾಳೋ ಗೇಣುದ್ದ ತೆಗ್ಗ ಹೊಂಟಿತೋ ನೀರಜಲ
ಪೂಜೆ ಮಾಡಿ ಅದೇ ನೀರ ಶಿವನಧ್ಯಾನಾ ಮಾಡಿದಳಲ್ಲಾ
ನಮಾಜ ಓದಿ ನೋಡ್ಯಾಳೋ ಬಂದ
ತೆಗ್ಗ ತುಂಬಿ ನೀರಿನಿಂದ ಕುಡಿದಾಳೋ ನೀರಕುಂತಾ
ಮನಸಿಗೆ ಆಯಿತೊ ಸನುಮಂತ
ಏಸೋ ವರ್ಷ ಏಸೋ ದಿವಸ ಅಲ್ಲಿ ಕಾಲ ಕಳೆದರಲ್ಲಾ || ೯ ||

ಎಷ್ಟೋ ವರ್ಷದ ಮೇಲೆ ಇಬ್ರಾಹಿಮ ಕಲಿಲುಲ್ಲಾ
ಸತಿಸುತರ ಹುಡುಕುತ್ತ ಅಡವಿಹಾದಿ ಹಿಡಿದರಲ್ಲಾ
ಸತಿಸುತನ ನೋಡಿ ಕುಶಿಯಾದ ಕಾಯುವ ನೀ ಸಾಕ್ಷಾತ್ ಸ್ಮರಣಿ ಮಾಡಿದರಲ್ಲಾ
ಮೂವರು ಕುಂತಾರ ಕುಶಿಯಾಲಾ
ಎಷ್ಟಂತ ಹೇಳಲಿ ಮಾಫಮಾಡರಿ ದೈವೆಲ್ಲಾ || ೧೦ ||

ಸಗರಗಡ್ಡಿ ಸಂಸ್ಥಾನದಲ್ಲಿ ಶಹಪುರ ಮಿಗಿಲಾ
ಮೋದಿನ ಪೀರನ ಕರುಣ ಶೇಖ-ನಬಿ ಮೇಲಾ
ಅಬ್ದುಕಾಸೀಮನ ವಾಸದಲಿ ಹುಡುಗರು ಜಮ್ಮೆತಿ ಹಾಡೂದು ಒಳ್ಳೆ ನಿವ್ವಳಾ
ಮುತ್ತಿನಾಗ ಪೋಣಿಸಿದಂಗ ಹವಳಾ
ಶಾಹೀರ ಕೇಳಿ ಓಡಿ ಹೊದನೋ ದಿಕ್ಕಪಾಲಾ || ೧೧ ||

* * *

೧೩. ಇಬ್ರಾಹಿಮ್ ಖಲೀಲುಲ್ಲಾರ ಪದಾ

ಮೊದಲಿಗೆ ಎನ್ನುವುದು ಬಾಯಲಿ ಬಿಸಮಿಲ್ಲಾ
ಬಿಸಮಿಲ್ಲಾನ ಹೊರತಾವ ನುಡಿಯಿಲ್ಲಾ || ಪಲ್ಲವಿ ||

ಏರು || ಅಲ್ಲಾನ ಹೊರತು ಯಾವ ಮಾತಿಲ್ಲಾ
ಸಲ್ಲು ಸಲ್ಲಿಗೆ ಅಂತಾರ್ರಿ ಬಿಸಮಿಲ್ಲಾ
ಇಬ್ರಾಹಿಂ ಖಲೀಲುಲ್ಲಾ ಕೇಳಬೇಕಲ್ಲಾ
ಕಾಬಾ ಕಟ್ಟಾಕ ಹತ್ಯಾರ ಸುಳ್ಳೇನಲ್ಲಾ
ದರದಿವಸ ಕಾಬಾ ಕಡಕೊಂಡು ಬೀಳುವುದಿಲ್ಲಾ
ಅದು ಎಲ್ಲಾ ಶಿವನಿಗೆ ತಿಳಿದೀತಲ್ಲಾ || ೧ ||

ಇ|| ಜುಬರಾಹಿಲ ದೂತರಿಗೆ ಆಗ ಹೇಳಿ ಕಳಿಸಿದನಲ್ಲಾ
ಅವರಿಗೆ ಹೋಗಿ ನೀವು ಈ ಸುದ್ದಿ ಹೇಳಬೇಕಲ್ಲಾ
ಏರು || ನಿಮ್ಮ ಮಗಾ ಇರುವನು ಇಸ್ಮಾಯಿಲಾ
ಅವನಿಗೆ ಮಾಡಬೇಕರಿ ಹಲಾಲಾ
ಹಂಗಾದರೆ ಕಾಬಾದ ಪಾಯಾ ನಿಲ್ಲುವದಲ್ಲಾ
ಚಿಂತಿ ಮಾಡುತ ಹೋದರು ಮನಿಗೆ ಖಲೀಲುಲ್ಲಾ
ಆಮೇಲೆ ಬಂದು ಕೇಳಿದ ಇಸ್ಮಾಯಿಲಾ
ಯಾಕ ಚಿಂತಿ ಮಾಡತೀರಿ ನನಗೆ ಹೇಳಬೇಕಲ್ಲಾ || ೨ ||

ಇ|| ಆಗ ಹೇಳಿದಾರೋ ಇಬ್ರಾಹಿಂ ಖಲೀಲುಲ್ಲಾ
ನೀನೊಬ್ಬ ನನಗೆ ಮಾಡಬೇಕು ಹಲಾಲಾ
ಏರು || ಹಂಗಾದರೆ ಪಾಯಾ ನಿಲ್ಲುವದಿಲ್ಲಾ
ಅಷ್ಟು ಮಾತಿಗೆ ಒಪ್ಪಿಕೊಂಡಾರೋ ಇಸ್ಮಾಯಿಲ
ನಾನು ಆಗತೇನಿ ಕಾಬಾದ ಮೇಲೆ ಹಲಾಲಾ
ಸಂಗತೀಲೆ ಕರಕೊಂಡು ಹೊರಟಾರೋ ಖಲೀಲುಲ್ಲಾ
ಪಾಯಾದ ಮೇಲೆ ಆಗ ಮಗನಿಗೆ ಮಲಿಗ್ಯಾಸರಲ್ಲಾ
ಚೂರಿ ತಗೊಂಡು ಮಾಡತಾರೋ ಹಲಾಲಾ || ೩ ||

ಇ|| ಏನಾದರೂ ಆಗಲಿಲ್ಲರಿ ಹಲಾಲಾ ||
ಚೂರಿ ಆಗ ಹೇಳತಿರಿ ಖಲೀಲುಲ್ಲಾ
ಏರು || ಹಂಗ ನಿಮ್ಮ ಮಗ ಆಗೂದಿಲ್ರಿ ಹಲಾಲಾ
ಕಣ್ಣಿಗೆ ಈಗ ನೀವು ಪಟ್ಟಿ ಕಟ್ಟಬೇಕಲ್ಲಾ
ಪಟ್ಟಿಕಟ್ಟಿ ಮಗನಿಗೆ ಮಾಡರಿ ಹಲಾಲಾ
ಕಣ್ಣಿಗೆ ಪಟ್ಟಿ ಕಟ್ಯಾರೋ ಖಲೀಲುಲ್ಲಾ
ಪಟ್ಟಿಕಟ್ಟಿ ನುಡಿದಾರೋ ಬಿಸಮಿಲ್ಲಾ
ಸ್ವರ್ಗದಿಂದ ದುಂಬಾ ಬಕರಾ ಇಳಿದೀತಲ್ಲಾ || ೪ ||

ದುಂಬಾ ಬಕರಾ ಆದೀತಲ್ರಿ ಹಲಾಲಾ
ಆಗ ಸಿಟ್ಟೀಲೆ ಕೇಳ್ಯಾರ್ರಿ ಖಲೀಲುಲ್ಲಾ
ಖಡ್ಗ ಸಮುದ್ರದೊಳಗ ಬೀಸಿದರಲ್ಲಾ
ಸಿಗಡಿ ಸೆಟೆದು ಬಿದ್ದೀತು ಸುಳ್ಳೇನಲ್ಲಾ
ಏಡಿ ಅಡ್ಡ ನಡೆದೀತೋ ಕೇಳಬೇಕಲ್ಲಾ
ಮೀನು ಆದಿತ್ರಿ ಸಿಕ್ಕೂ ಹಲಾಲಾ
ಅಂದಿಂದ ಆತು ಮೀನ ಹಲಾಲಾ || ೫ ||

ಕುರ್ಬಾನಿ ಮಾಡೂದು ಅಲ್ಲಿಂದ ಜಾಹೀರ ಆದೀತಲ್ಲಾ
ಧರೆಯೊಳು ಕಾಗಿನೆಲ್ಲಿ ಕವಿಗಳಾ
ಕವಿ ಮಾಡಿ ಹೇಳಿದಾರೊ ಹುಡುಗುರಾ
ಅವರ ಮಾನಕ್ಕೆ ಕಾಯಪ್ಪಾ ಶಂಕರಾ ||

* * *

೧೪. ಶಿವನಾಗಬಯಸಿದ ಫರವೂನನಿಗೆ ಬುದ್ಧಿ ಕಲಿಸಿದ ಮೂಸಾ ಹಾರೂನ್ ಪೈಗಂಬರರು

ಪಂಡಿತ ಪಂತರ ಮುಂದ ಶಾಸ್ತ್ರ ತಗದೇನಿ ಒಂದ ಕೇಳರಿ ಧ್ಯಾನಕ ತಂದ ಜನರೆಲ್ಲಾ
ಮೂಸಾ ಹಾರೂನ ಇವರು ಖಾಸ ಅಣ್ಣ ತಮ್ಮರು | ಸಾಂಬನ ಸ್ಮರಣಿ ಇವರು ತಪ್ಪದೆ ಮಾಡುವರು
ಫರವೂನ ಅಂಬಾವಾ ಹೀನ ಮನುಷ್ಯ ಇದ್ದ ನಿಕಮ್ಮಾ | ತುಸು ಕೇಳರಿ ಕಲ್ಮಾ
ನನ್ನಾಂಗ ಈ ಜಗದಾಗ ಯಾರಿಲ್ಲಂತಾನ್ರಿ ಹುಮ್ಮಾ | ನಾನೇ ಹರಿಬ್ರಹ್ಮಾ
ಏಕಭಾವದಿಂದ ಸೇವಾ ಮಾಡರಿ ತಪ್ಪದೆ ನೇಮಾ | ನನ್ನ ಮ್ಯಾಲಿಟ್ಟ ಪ್ರೇಮಾ
ಹ್ಯಾಂವಕ ಬಿದ್ದಾನಂವಾ ಅಂತಾನ್ರಿ ನಾನೇ ಶಿವಾ
ನನ್ನ ಹೊರ್ತು ಇಲ್ಲ ಯಾಂವಾ ಭೂಮಿಮ್ಯಾಲಾ || ೧ ||

ಒಂದಾನ ಒಂದ ದಿವಸ ಸಾಂಬನ ಆದೀತ ಮನಸ | ಅಳಿಬೇಕ ಇವನ ವಂಶ ಅಂತಾರಲ್ಲಾ
ಗರುಬಂತ ಫರವೂನಗ ಕರದುದಾ ಮೂಸಾಗ | ತಿಳಿಸಿ ಹೇಳ್ಯಾರ ಅಂವಗ
ಬಿಡಬ್ಯಾಡರಿ ಫರವೂನಗ ಲಗುಬಗಿ ನೀವು ಹೋಗಿ ಹೇಳರಿ |
ಆತನ ಹುಜುರಾ | ಆದಂತಾ ಮಜಕೂರಾ |
ನಡಕಟ್ಟಿ ಹೊಂಟಾರ ಭೆಟ್ಟಿ ಆಗೂಕ ಬಿಟ್ಟಾರೋ ನಗರಾ
ಮೂಸಾ ನಡೆದಾನೋ ತೀವರಾ | ಆ ಶ್ಯಾರ ಒಳಗ ಯಾರೂ ಹೋಗಿ ಆಗಿಲ್ಲ ಪಾರಾ
ಇತ್ತ ಬಾಳ ಬಯಂಕರ ಬ್ಯಾಸಿಗಿ ಬಿಸಲಾಗ
ಮೂಸಾ ಹಾರೂನ ಆಗ | ಫರವೂನನ ಸೀಮ್ಯಾಗ ಬಂದಾರಲ್ಲಾ ||೨||

ಮೂಸಾ ಫರವೂನಗ ಕರದಾ | ಶಿವಾ ಅಂಬುದು ಬಿಡೋ ಶಬ್ದಾ
ನಡಿ ಏಕಭಾವದಿಂದಾ ಇಟ್ಟ ಖ್ಯಾಲಾ ||
ಘರವೂನಗ ಬಂತ ಸಿಟ್ಟ ಮನಸಿಗೆ ಹತ್ತಿತ ಪೆಟ್ಟಾ
ಈ ಬುದ್ದಿಯಾಂವಾ ಕೊಟ್ಟಾ | ಶಿವಾ ನಾ ಅನಿಸಿನಿ ಬಂಟಾ
ಪುಂಡ ಫರವೂನ ತನ್ನ ದಂಡಿಗೆ ಕರೆಸಿ ಕೊಡಬೇಕಂದಾ ಫಾಸಿ
ಪರವಾನಿ ಅವನ ಗ್ಯಾನಿ ಇದ್ದ ಆತನ ಕರಸಿ | ಮಾಡಂದಾ ಚೌಕಾಸಿ
ಕೈಕಾಲ ಕಟ್ಟಿ ಮೇಲಮಾಳಗಿ ಮ್ಯಾಲ ಏರಿಸಿ ಓದಿಟ್ಟಾನೋ ಹೇಸಿ
ಅಂತಾರೋ ಮೂಸಾ ಹಾರೂನಾ | ಕಾಯಬೇಕೋ ನಮ್ಮ ಮಾನಾ
ರಾತ್ರಿ ಹಗಲಿ ಶಿವನ ಧ್ಯಾನಾ ಮಾಡುವರಲ್ಲಾ || ೩ ||

ಪರದಾನಿ ಮರು ದಿವಸ | ಕೇಳತಾನೊ ಯಾಕೋ ಮೂಸಾ | ಏನೈತಿ ನಿಮ್ಮ ಮನಸಾ
ಹೇಳೋ ಖುಲ್ಲಾ | ಮೂಸಾ ಹಾರೂನ ಸಿಟ್ಟಿಗೆ ಬಂದಾ | ಆಗಲಿ ನಿಮ ನಮ್ಮದಾ
ಪಾರಾಗಿ ಹೋಗೋ ಬೆಳದಾ | ಅಂತೇನಿ ನಾ ಮರದಾ
ನಿನ್ನ ಶಿವಗ ಹೇಳು ಹೋಗೋ ನೋಡೂನು ಬರಲಿ ಕದನಕ
ತಿಳೂತೈತಿ ನಿಮ್ಮ ಬೆಳಕ | ಮಳ್ಳ ಶಿವಗ ನೀವು ಸುಳ್ಳ ಬೆಳಸುವದು ಯಾತಕ
ಅನಬಾರದ ದೃಷ್ಟ | ಇಷ್ಟ ಕೇಳಿ ಪರದಾನಿ ಹೊರಳಿ ಹೋದ ಅರಸನ ಹಂತ್ಯಾಕ
ಸಿಟ್ಟು ಹತ್ತಿತೋ ಮನಕ | ಮೂಸಾ ಹಾರೂನ ಕೂಡಿ | ಶಿವಾ ಯಾಕ ಅಂತೀರಿ ಖೋಡಿ
ನೋಡೂನು ಇವನ ನಾಡಿ ಅಂತಾರಲ್ಲಾ || ೪ ||

ಫರವೂನ ಪರದಾನಿ ಮಾತಕೇಳಿ ಅಂತಾನೋ ತುರತ
ಅಂವಾಯಾವ ಪಂಡಿತಾ | ಇದ್ದಾನಲ್ಲಾ | ದಂಡ ದರಬಾರ ಮಾಡಹೋಗ ತಯ್ಯಾರಾ
ಏನು ಮಾಡ್ಯಾರೋ ಅವರಿಬ್ಬರಾ | ಕೊಯ್ಯಬೇಕೋ ಅವರ ಶಿರಾ
ಹೇಳಿ ಪರದಾನಿ ಓಡಿ ಹೋಗಿ ದಂಡ ತಂದಾ | ಬಾಳ ಹರುಷಾಗಿ ಹೋದಾ
ನಿಮ್ಮ ಮರಣಾ ಶರಣ ಮೂಸಾಗ ಹೇಳ್ಯಾನ ಕರದಾ | ಈಗ ತಿಳೂತೈತಿ ನಿಮ್ಮದಾ
ಮೂಸಾ ಹಾರೂನ ಹಿಗ್ಗಿ ಕೈಯಾಗಿತ್ತ ಊರುವ ಬಡಗಿ
ಭೆಟ್ಟಿ ಆಗ್ಯಾರ ಅರಸಗ ಹೋಗಿ ತತ್ಕಾಲಾ || ೫ ||

ಪರಮಾತ್ಮಾ ನಾ ಅನಿಸಿನಿ ಮೂಡು ಮುಣುಗುವಲ್ಲಿ ವಾಹಿನಿ
ಸುಳ್ಳ ಅಂದರ ಸುಲುತೀನಿ ಮೈಯ್ಯಾನ ತೊಗಲಾ | ಮೂಸಾ ಅಂತಾರ ಅಂವಗ
ಮರತೇನ ಹುಟ್ಟಿಸಿದವಗ | ಯಾಕಿಷ್ಟ ಹಮ್ಮ ನಿನಗ | ಹೇಳ್ಯಾರ ಫರವೂನಗ
ಸಿಟ್ಟೇರಿ ಫರವೂನ ವೈರಿ ಮೂಸಾಗ ತೂರಿ | ಒಗಿಯಬೇಕ | ದಂಡ ಬಂತ ಆಕ್ಷಣಕ
ಸ್ವರ್ಗದಿಂದ ಸಪ್ಪಳ ಒಂದ ಮೂಸಾಗ ಬಂದಿದ ಬಳಿಕ | ಖುಷಿ ಆಗ್ಯಾರೋ ಮನಕ
ಊರುವ ಬಡಗಿ ಒಗದಾರೋ ಜಗ್ಗಿ | ಸರ್ಪಾಗಿ ಆ ಜನಕ | ದಂಡ ಅಂಜಿತೋ ಜೀವಕ
ಎಪ್ಪತ್ತು ಸಾವಿರ ಜನಾ | ನುಂಗಿತೋ ಆ ಕ್ಷಣಾ | ಮಾಡಲಿಲ್ಲೊ ಅನುಮಾನಾ ತಡಾಯಿಲ್ಲಾ || ೬ ||

ಅರಸಗ ಬಂದಿತ್ತೊ ಅಗಾದಾ | ಹಾಳಾತೋ ಪಟ್ಟಣಾ ನಂದಾ |
ನೆಲಾ ಅವಾ ಬರುತಿದ್ದಾ ಹೊಕ್ಕ ಬುಗಿಲಾ |
ಮೂಸಾ ಹೇಳ್ಯಾರೋ ಅಂವಗ ಫರವೂನ ಅರಸಗ
ಸಿಟ್ಟು ಹತ್ತಿ ಪರದಾನಿ ಯುಕತಿ ತಗದಾನ
ಚಿಂತಿಸಬ್ಯಾಡಾ | ತರತೇನಿ ದಂಡಾ | ಬಂಗಾಲಿ ದೇಶದಲ್ಲಿ | ಇರತಾರೋ ಅಲ್ಲಿ
ಮುಖಂಡಾ | ತಂದ ಎಬಸೂನು ಬಂಡಾ | ತೊಟ್ಟ ದೀರ | ಹೋದ ಶೂರ
ಮಹಾ ಗಂಭೀರ ತಾಯಿಗಂಡ | ಜಾದು ಮಂದಿಗೆ ತಂದಾ
ಎಪ್ಪತ್ತು ಸಾವಿರ ಗಾರುಡಿ ಜನರಾ | ಅರಸನ ಇದರಾ ತಂದಾನಲ್ಲಾ || ೭ ||

ಬಾಳ ಬಾಳ ನೀ ಬೆಳಸಿದ್ದೆ | ನನ್ನ ಮುಂದ ತೋರಿಸು ಸಧ್ಯೆ
ನೋಡೂನು ಇವರ ವಿದ್ಯೆ | ಬುದ್ದಿ ಅಕಲಾ | ಮಾಡ್ಯಾರ ಬಂಗಾಲಿ ಆಟಾ | ನೋಡ್ಯಾನ ಕಣ್ಣಮುಟ್ಟಾ
ಅರಸ ಅಂದಾ ಬಲಿಷ್ಟಾ | ನಿಮ್ಮ ಹೊರ್ತು ಯಾರಿಲ್ಲಾ ಶ್ರೇಷ್ಟಾ
ತಿರುವ್ಯಾರೋ ಮೋಡಿ ಯಾರೂ ಇಲ್ಲ ನಮ್ಮ ಸಮಾನ | ಖರೆ ಗುರುವಿನ ವಚನಾ
ಮಂತ್ರಿಸಿ | ನೀರ ಸಿಂಬಡಿಸಿ | ಒಗದಾರೋ ಗಾರುಡಿ ಜನಾ | ಮೂಸಾಗ ಆಗಲಿಲ್ಲ ಏನಾ
ಸಿಟ್ಟಾಗಿ | ಒಗದಾರೋ ಬಡಗಿ | ಹಾವ ಆದಿತೋ ಆಕ್ಷಣಾ | ನುಂಗಿತೋ ಎಲ್ಲರನಾ |
ಫರವೂನ ಕಯ್ಯಾನ ಕಬ್ಜಾ ಕಳಕೊಂಡಾನೋ ಆ ದುರಬೀಜಾ
ಜಗದಾಗ ಆದಾನೋ ಲಜ್ಜಾ ಫರವೂನಾ || ೮ ||

ಏನಂತ ತೋರಸಲಿ ಮಾರಿ | ಪಾಪಕ ಆದೇನೋ ಗುರಿ
ಸಮುದ್ರದೊಳಗ ಬಿದ್ದಾನೋಹಾರಿ | ಹೋತೋ ಉಸಲಾ | ಮೂಸಾ ಹಾರೂನ ಇವರಾ
ಪಟ್ಟಣಕ ಆದ್ರೋ ಅಧಿಕಾರಾ | ಗುರು ನಮ್ಮ ದಸ್ತಗೀರ ಕರುಣುಳ್ಳ ಕೇಸುಪೀರಾ
ರಾಗರಂಗ ಲಕ್ಷ್ಮಣಸಿಂಗ | ಹೇಳ್ಯಾರ ಹೀಂಗ ಕವಿಮಾಡಿ
ಅಕ್ಷರ ಬರಬೇಕ ಕೂಡಿ
ಲಾಲಡೋಂಗ್ರಿ ಮಾಡ್ಯಾರ ಸೂರ | ನಾಚಿವೈರಿ ಹೋದ ಓಡಿ | ನೀ ಅಲ್ಲ ಅವರ ಜೋಡಿ
ಅಡಿ ಪ್ರಾಸ ಮಾಡಿ ಸರಸ | ಹಾಡ ತೋಡಿಗೆ ತೋಡಿ
ಸುಮ್ನ್ಯಾಕ ಕುಂತೀದಿ ಲವುಡಿ | ಶಾಹೀರ ಆಗಿ ಗಾಬಾ
ಕುಂತಾನ ಮಳ್ಳ ಕುರುಬಾ | ಕೊಯಿದೇನ ನಿನ್ನ ತುರಬಾ | ಬಿಡಲಾರೆ || ೯ ||

* * *