ಕರ್ನಾಟಕದ ಕಲಾಕ್ಷೇತ್ರಕ್ಕೆ ಉತ್ತರ ಕರ್ನಾಟಕದ ಕೊಡುಗೆಗಳಲ್ಲಿ ಮಹತ್ವದ ಹೆಸರು ಶ್ರೀ ಎಂ.ಬಿ. ಪಾಟೀಲ್ ಅವರದು.
ಬಿಜಾಪುರ ಜಿಲ್ಲೆಯ ತಿಕೋಟಾದಲ್ಲಿ ೧೯೩೯ರಲ್ಲಿ ಜನಿಸಿದ ಎಂ. ಬಿ. ಪಾಟೀಲ್ ಬಾಲ್ಯದಿಂದಲೇ ಕಲೆಯಲ್ಲಿ ಆಸಕ್ತಿ ತೋರಿ, ನಂತರ ಮುಂಬಯಿಯ ಜಿ.ಡಿ. ಆರ್ಟ್ಸ್ ಹಾಗೂ ನೂತನ್ ಕಲಾ ಮಂದಿರದಲ್ಲಿ ಕಲಾಭ್ಯಾಸ ಮಾಡಿದರು. ತಮ್ಮ ಕಲೆಯಿಂದ ಬಹಳ ಬೇಗ ಪ್ರಖ್ಯಾತಿಗೆ ಬಂದ ಪಾಟೀಲ್ ಅವರು ವ್ಯಕ್ತಿಚಿತ್ರ, ಭಿತ್ತಿ ಚಿತ್ರಗಳು, ವಾಸ್ತವ ಚಿತ್ರಣ, ಜಲವರ್ಣ, ಲ್ಯಾಂಡ್‌ಪ್‌ಗಳಲ್ಲಿ ಪರಿಣತರಾದರು.
ಭಾರತದ ಪ್ರತಿಷ್ಠಿತ ಕಲಾ ಗ್ಯಾಲರಿಗಳಲ್ಲಿ ಹಾಗೂ ಖಾಸಗಿ ಕಲಾಕ್ಷೇತ್ರಗಳಲ್ಲಿ ಅವರ ಅಪಾರ ಕಲಾಕೃತಿಗಳು ಪ್ರದರ್ಶನಗೊಂಡಿವೆ.
ಪ್ರಾರಂಭದಲ್ಲಿ ಕರ್ನಾಟಕದಾದ್ಯಂತ ಸಮೂಹ ಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿದ ಎಂ. ಬಿ. ಪಾಟೀಲ್ ನಂತರ ಏಕವ್ಯಕ್ತಿ ಪ್ರದರ್ಶನಗಳನ್ನು ನಡೆಸಿ ಖ್ಯಾತಿಗಳಿಸಿದ್ದಾರೆ.
ರಾಜ್ಯ ಮತ್ತು ಕೇಂದ್ರ ಲಲಿತ ಕಲಾ ಅಕಾಡೆಮಿಯ ಕಲಾ ಶಿಬಿರಗಳು, ದೆಹಲಿಯ ಆಧುನಿಕ ಕಲಾ ಗ್ಯಾಲರಿ, ಚೆನ್ನೈನ ದಕ್ಷಿಣ ವಲಯ ಶಿಬಿರ, ಕೇರಳದ ಭಿತ್ತಿ ಚಿತ್ರ ಕಲಾವಿದರ ಶಿಬಿರ, ಪಾಂಡಿಚೇರಿಯ ಕಲಾ ಶಿಬಿರ ಹೀಗೆ ಹಲವು ಹತ್ತು ಕಡೆ ಭಾಗವಹಿಸಿ ಕರ್ನಾಟಕಕ್ಕೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ. ಕಲೆ ಕುರಿತು ಶ್ರೀಯುತರ ಉಪನ್ಯಾಸಗಳು ಹಾಗೂ ಪ್ರಾತ್ಯಕ್ಷಿಕೆಗಳು ಅತ್ಯಂತ ಜನಪ್ರಿಯವಾಗಿವೆ.
ಎಂ.ಬಿ. ಪಾಟೀಲರ ಸಾಧನೆಯನ್ನು ಗಮನಿಸಿ ಅನೇಕ ಪ್ರಶಸ್ತಿ, ಸನ್ಮಾನಗಳನ್ನು ನೀಡಿ ಗೌರವಿಸಲಾಗಿದೆ. ಮುಖ್ಯವಾಗಿ ರಾಜ್ಯ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ, ಸ್ಪರ್ಧಾತ್ಮಕ ಪ್ರಶಸ್ತಿ, ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಎಂ.ಟಿ.ವಿ. ಆಚಾರ್ಯ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರತಿಷ್ಠಾನ ಪ್ರಶಸ್ತಿಗಳು ಇವರಿಗೆ ಲಭಿಸಿವೆ.
ಹಿರಿಯ ತಲೆಮಾರಿನ ಕಲಾವಿದರಾಗಿ, ಕಿರಿಯ ತಲೆಮಾರಿಗೆ ಆದರ್ಶಪ್ರಿಯರಾಗಿ, ಸದಾ ಸ್ನೇಹಮಯಿ ಕಲಾವಿದರೆಂದು ಹೆಸರಾದವರು ಶ್ರೀ ಎಂ.ಬಿ. ಪಾಟೀಲ್ ಅವರು.