. ಕಾಮುಕ ಹೆಣ್ಣಿಗೆ ಕ್ಷಮಿಸಿದ ಮಾಬುಸುಭಾನಿ

ಧರಣಿಪಾಲಾ ಕರುಣವಿರಲಿ | ಚರಣಕ್ಕೆ ಎರಗುವೆ ನಾ || ಪಲ್ಲವಿ ||

ಏರು || ಕಂದಾ ಇಂದ ಬಂದಾ ಮುಂದಾ | ಹುರಷದಿ ಸಾರುವೆ ನಾನಾ
ಕುಶೀಲೆ ಕೇಳರಿ ಜನಾ | ವೈಬೂಬರ ಬೈಯಾನಾ | ಸ್ವಾಮಿ ಶರಣಾ
ಇವರ ವರಣಾ | ಒಬ್ಬ ಬಾಲಿ ನೋಡಿದಾಳೊ ತಾನ | ಮರುಳಾಗಿ ನಿಂತಳಲ್ಲಾ || ೧ ||

ಇ|| ಸುಂದರ ಹೆಣ್ಣಾ ಬಂದು ತಾನಾ | ಮಾಡಿ ಯೋಚನಾ
ಏರು|| ಧನಿ ಮುನಿ ಮೌನಿ ಕರುಣಿ | ಬಿನ್ನಪಾ ಲಾಲಿಸೋ ಶರಣಾ
ಮನಿಗೆ ನಡಿರಿ ಇನ್ನಾ ಸ್ವಾಮಿ ಶರಣಾ | ಉಣಿಸುವೆನಾ ಕರಕೊಂಡು
ಹೊರಟಾಳೋ ಹೆಣ್ಣಾ | ಆಗ ತಾನಾ ಮನಿತನಾ || || ೨ ||

ಇಳು|| ಮಂಚದ ಮ್ಯಾಲೆ ಹೂವಿನ ಮಾಲೆ | ಹಾಸಿ ತಕ್ಷಣಾ
ಏರು|| ಶರಣಾ ಜಾಣಾ ಸುಗುಣಾ ಕರುಣಾ | ಕುಂತಾರೋ ಮಂಚದ ಮೇಲಾ
ಇಟ್ಟಾಳೋ ಎಲಿ ಅಡಕಿ ತರಿಸಿ | ನಗುವಳುಕಿಲಿ ಕಿಲಿ | ಅಂಗನಿತಾ | ಮುರುಕಾ
ಮಾಡೂತಾ | ಕರುಣ ಮಾಡಬೇಕ ನೀವು ಶರಣಾ | ಬಿದ್ದಾಳೋ ತೆಕ್ಕಿ ತಾನಾ || ೩ ||

ಇ|| ಶರಣರು ಸೋಸಿ ತಿಳಿದಾರೋ ಬೇಸಿ ಮಾಡಿ ಯೋಚನಾ
ಏರು|| ಭೃಷ್ಟಿ ದುಷ್ಟಿ ಮುಟ್ಟಿ ಕೆಟ್ಟಿ | ಬಿಡು ಬಿಡು ಕೈಯ ನೀನಾ
ಊಟ ಸಾಕು ಹೋಗುವೆ ನಾನಾ | ಬೆಂಕಿ ಹಚ್ಚು ಊಟಕ್ಕೆ ನಿನ್ನ | ಛೀ ಬಂಡಿ ಹುಚ್ಚ ರಂಡಿ
ದೃಢ ಇಡು ನನ್ನ ಮೆಲೆ ನೀನಾ | ತೋರಿಸುವೆ ಸ್ವರ್ಗವನಾ || ೪ ||

ಇ|| ಅಂದಾಳೊ ಬಾಲಿ | ತನ್ನ ಬಾಯಿಲಿ | ಕೇಳರಿ ಶರಣಾ
ಏರು|| ಇಂದ ಬಂದ ಚಂದ ಆನಂದ | ಮಾಡಿರಿ ಸೋಬತಿ ಶರಣಾ |
ಮಾಡದಿದ್ರ ನೋಡರಿ ಇನ್ನಾ | ಗಂಡಗ ಹೇಳಿ ಬಿಗಿಸುವೆ ನಾನಾ | ಕೇಳಿ ಶರಣಾ
ಆಕ್ಷಣಾ | ಹೊರಟು ಹೋದರು ಮಾಯವಾಗಿ ತಾನಾ | ಮಾಡೂತ ಶಿವ ಧ್ಯಾನಾ || ೫ ||

ಇ|| ಭಂಡ ನಾರಿ ತುಂಡ ಚಾಡಿ ಮಾಡಿ ಕಲ್ಪನಾ
ಏರು|| ಕಳ್ಳಿ ಮಳ್ಳಿ ಸೂಳಿ | ತುಂಡ ಕಂಡಿ ಮಾಡ್ಯಾಳ ಗತ್ತ
ಗಂಡ ಬಂದಾಗ ಹೇಳ್ಯಾಳ ಅತ್ತಾ | ಮೈಬೂಬರು ಇವತ್ತ ಬಂದು ನನಗ ಮಾನಭಂಗ
ಮಾಡಿದಾರ ನನಗ | ಹೇಳತೇನಿ ನಾನ ಕೇಳರಿ ಗಂಡ ಇನ್ನಾ || ೬ ||

ಇ|| ಗಂಡ ಬೇಸಿ ತಿಳಿದ ಸೋಸಿ | ಸತಿಯಳ ವಚನಾ
ಏರು|| ಗಂಡ ಕಂಡಾ ಪುಂಡಾ ಆದ ಕೆಂಡಾ | ಸುತ್ತುಳ್ಳ ಶರಣರ ವಂಶ
ಮಾಡಲಾರೆ ನಾನು ಸಂಶಾ | ಬಂದೀತೋ ನನಗ ದೋಷ | ಸತಿಯಳನ್ನ
ಬಡಿದ ತಾನು | ಕಲಿ ಹಚ್ಚಿದೆಲೆ ಶರಣಗ ಇನ್ನಾ | ತವರ ಮನಿಗೆ ನಡಿಯ ನೀನಾ || ೭ ||

ಇ|| ದೋಷದಿಂದ ಆಕೆಗೆ ಬಂದ ಹುಣ್ಣ ಉತ್ಪನ್ನ
ಏರು|| ಗೂಗಿ ಕಾಗಿ ರೋಗಿ ಆಗಿ | ತಗಿಸ್ಯಾಳೋ ಹೊತ್ತಗಿ ನೋಡಿ ಪ್ರಶ್ನೆ
ಹೇಳುವರೋ | ಮೈಬೂಬರ ಕಾಟ ತಪ್ಪದವ್ವಾ ಪರಿಪಾಟ | ಹೋಗ ಪ್ಯಾಲಿ
ಶರಣರಲ್ಲಿ | ಹೋಗಿ ಹಿಡಿದಾಳೋ ಅವರ ಚರಣಾ ಉದ್ದಾರ ಮಾಡ್ರಿ ನನ್ನಾ || ೮ ||

ಇ|| ನೋಡಿ ಶರಣಾ ಮಾಡ ಕರುಣಾ | ಏಳು ತಾಯಿ ನೀನಾ
ಏರು|| ಪಾಪ ತಪ್ಪ ಮಾಪ ಲೋಪ | ಮಾಡಿದೆವು ಉದ್ದಾರ ನಿನ್ನಾ
ಗಂಡನ ಮನಿಗೆ ಹೋಗವ್ವಾ ನೀನಾ | ಹಿಡಿದು ಪಾದವನಾ | ಕೆಟ್ಟ ಗುಣಾ ಬಿಡು ನಿನಾ
ಕೊಡುವನು ಮುಕ್ತಿ ಭಗವಾನಾ | ಆಶೀರ್ವಾದ ಮಾಡುವೆ ನಾನಾ || ೯ ||

ಇ|| ಕವಲೂರ ಕವಿ ದೈವಕ್ಕ ಸವಿ | ವೈರಿಗೆ ಬಂಧನಾ
ಏರು|| ಹಾಡಿ ತೋಡಿ ಜೋಡಿ ಮಾಡಿ ಓಡಬ್ಯಾಡ ನೀ ತಮ್ಮಾ
ಅಡಬರಿಸಿ ಹತ್ತಿ ದಮ್ಮಾ | ಕಡಿಗೆ ನೀ ನಿಕಮ್ಮಾ | ಛೀ ಲವಡಿ
ಹೆಣ್ಣ ಸುಗಡಿ | ಹೂವಿನ ಹಾರ ಹಾಕೋ ನೀನಾ | ಬಿಟ್ಟ ಪಂಥ ನೀನಾ || ೧೦ ||

* * *

. ಸುಂದರಿಯ ಮಾನ ಕಾಪಾಡಿದ ಮಾಬುಸುಬಾನಿ

ಬುದ್ದಿವಂತ ಸಭೆಯೊಳು | ನಿಂತ ಹೇಳುವೆ ಬಯ್ಯಾನಾ
ಕವಿ ಮಾಡೂದು ಹುಡುಗಾಟಲ್ಲಾ | ಈ ಮೂರ್ಖಗ ತಿಳುದಿಲ್ಲಾ
ಕಡಿಗೆ ಹೋಗತಾನ ಕೊಯ್ಯಾಕ ಹುಲ್ಲಾ | ಇಲ್ಲಿಂವಗ ಗ್ನಾನಾ || ೧ ||

ಇ|| ಮನಗಂಡ ಪುರುಷವೊಬ್ಬ ಪುಂಡ | ಆದಾನೋ ಲಗ್ಗನಾ
ಆಕಿ ನಾಸಿಕ ಸಂಪಗಿ ಅರಳಾ | ಕಣ್ಣು ಗಲ್ಲ ಕನ್ನಡಿ ಹರಳಾ
ಮುಖ ಹೊಳವತಿತ್ತೊ ಥಳಾ ಥಳಾ | ಸೂರ‍್ಯನ ಕಿರಣಾ || ೨ ||

ಇ|| ಗಂಡ ಆಗ ಮನಸಿನವೊಳಗ ಹಾಕ್ಯಾನೋ ಯೋಚನಾ
ಈಕೀಗಿಟ್ಟರ ಊರಿನವೊಳಗ | ಬಾಳ ಮಂದಿ ಕಣ್ಣ ಈಕಿಮ್ಯಾಗ
ಅಂಜಿಕಿತ್ತ ಜೀಂವದವೊಳಗ | ತಿಳಿಸ್ಯಾನೋ ಸತಿಯಿಗೆನಾ || ೩ ||

ಇ|| ಪತಿ ಮಾತ ಮನಸಿಗೆ ಬಂತ | ಖುಸಿಯಾದ್ಲೋ ಮೋಹನ್ನಾ |
ಏರು|| ಗಂಡಗುರು ನನ್ನ ತಲಿಮ್ಯಾಲಿ | ನಾ ಇರತೇನಿ ನೀವು ಇಟ್ಟಲ್ಲಿ
ಪತಿರಾಜಗ ಬಿಟ್ಯಾಂಗಿರಲಿ | ಹತ್ಯಾಳೋ ಬೆನ್ನಾ || ೪ ||

ಇ|| ಪತಿ ಮುಂದ ಸತಿಯೊಳು ಹಿಂದ | ನಡದಾಳೋ ಆ ದಿನಾ
ಇತ್ತ ಅಡವಿ ಗುಡ್ಡಗಂವಾರಾ | ಮನುಷ್ಯರದು ಇಲ್ಲೋ ಸಂಚಾರಾ
ಆ ಜಾಗದಲ್ಲಿ ಗಂಡ ಹೆಂಡಿರಾ | ಮಾಡೋರೋ ಬಾಳೇವನಾ || ೫ ||

ಇ|| ಗಂಡ ಹೀಗ ತಾಕಿತ ಆಗ | ಕೊಟ್ಟಾನೋ ಸತಿಗಿನ್ನಾ
ಏರು | ದರದಿನ ಊರಾಗ ಬಂದ ಬೇಗಿ ದುಡದ ಸಂಜಿಕ
ಹೋಗತಿದ್ದಾ ತಿರುಗಿ ತನ್ನ ಮನಸಿನೊಳಗ | ಖುಸಿ ಆಗಿ ನೆನೆವುತಿದ್ದಾ ಮೈಬೂಬನಾ || ೬ ||

ಇ|| ಒಂದು ದಿವಸ ಬಂದ | ಒಬ್ಬ ಅರಸ ಆಡೂತ ಬ್ಯಾಟಿನಾ
ಏರು | ಹವಾಖೋರಿಗೆ ಬಂದಿದ್ದಾಳೋ ಹೊರಗ | ಕಂಡಕಣ್ಣೀಲೆ ಅರಸಾವಾಗ
ಬಂದ ಬವಳಿಕಿ ಬಿದ್ದಾನೋ ತೆಳಗ | ಹಾರಿತೋ ಹೌಸಾನಾ || ೭ ||

ಇ|| ಖಬರ‍್ಹಾರಿ ಆಗಿ ಅವಿಚಾರಿ | ಕೇಳ್ಯಾನೋ ಆಕಿನಾ
ಏರು|| ದೇವಗನ್ನಕಿಯಂತ ರಂಬಿ | ಕಾಮ ಕ್ರೋಧ ತುಳಕತೈತಿ ತುಂಬಿ
ಖರೇ ಹೇಳ ಸೂತ್ರದಾನ ಗೊಂಬಿ | ಅಡಿವ್ಯಾಗೇನ ಕಾರಣ || ೮ ||

ಇ|| ಆಕಿ ಉತ್ತರ ಕೊಟ್ಟಾಳೋ ವತ್ರ | ಗಂಡ ತಂದಾನ ನಮ್ಮನಾ
ಏರು|| ನನಗಿಟ್ಟ ಈ ಅಡವಿಯೊಳಗ | ದುಡಿಲಿಕ್ಕೆ ಹೋಗ್ಯಾರೋ ಊರಾಗ
ಅರಸಂದಾ ಬಿಡುದಿಲ್ಲ ನಿನಗ | ಒಯ್ಯುತೇನಿ ಬ್ಯಾಗನಾ || ೯ ||

ಇ|| ಆರಸಾಗ ಕುದುರಿಮ್ಯಾಗ | ಕುಂಡರಿಸಿ ಆಕಿನಾ
ಏರು|| ಬಲ್ಲಬರಾಟೆ ಬಿಟ್ಟಾನ ಕುದುರಿ | ಮಹಾಬೂಬಗ ನೆನದಾಳೋ ಒದರಿ
ಎಲ್ಲಿದ್ದೀರಿ ಸ್ವಾಮಿ ಬರ್ರೀ | ಬಿಡಿಸುದಕ ಬಂದಾನ || ೧೦ ||

ಇ|| ಸಂಕಷ್ಟ ಮಾಡುತ ನಷ್ಟ | ಮಹಾಬೂಬ ಶರಣಾ
ಏರು|| ಮೆಚ್ಚಿ ಬಾವುಕ ಕುದುರಿ ಹತ್ತಿ | ಕೈಯಾಗ ಹಿಡಿದ ಬಿಚ್ಚುಕತ್ತಿ
ತಮ್ಮ ಕುದುರಿಗೆ ತಂದರ ಒತ್ತಿ | ಹೊಡದಾರೋ ದುಷ್ಟನಾ || ೧೧ ||

ಇ|| ಪಾದದ ಮ್ಯಾಲಿ ಬಿದ್ದಾಳೋ ಬಾಲಿ | ಹಿಡಿದವರ ಚರಣಾ
ಏರು|| ಸ್ವಾಮಿ ಏನ ಹೇಳರಿ ನಿಮ್ಮ ಹೆಸರಾ | ನನ್ನ ಸಂಕಷ್ಟ ಮಾಡಿರಿ ಪಾರಾ
ನಾ ಮಹಬೂಬ ನನ್ನ ಅಧಿಕಾರಾ | ನಡಿಸ್ಯಾನೋ ಭಗವಾನಾ || ೧೨ ||

ಇ|| ಉಪದೇಶ ತಗೊಂಡಾಳ ಖಾಸ | ಇಟ್ಟ ಏಕಧ್ಯಾನಾ
ಮಾಬೂಬನ ಸೊರಣಿ ಮಾಡಿ | ಗಂಡ ಹೆಂಡರು ಎದ್ದಾರ ಕೂಡಿ
ಶಿವಾ ಗಂಟು ಹಾಕಿದಾನ ಜೋಡಿ | ಮುತ್ತೈದಿತನಾ || ೧೩ ||

ಹಸ್ತ ಇಟ್ಟ ಮತಿ ಹೀಂಗ ಕೊಟ್ಟಾರೋ ದಸ್ತಗೀರ ದೈವಾನಾ
ಕೇಸು ಪೀರಾನ ಸೇವಾದಲ್ಲಿ | ನಾಗು-ಗೌಸು ಇರತಾರ ಅಲ್ಲಿ
ಲಾಲ-ಡೋಗ್ರಿನ ಕವಿಗಳ ಮ್ಯಾಲಿ | ಇಟ್ಟಾಂಗ ಕುಂದನಾ || ೧೪ ||

* * *

. ಏಳು ಮಕ್ಕಳ ಫಲ ನೀಡಿದ ಮಾಬುಸುಬಾನಿ

ಹಕೀಕತ್ತಾ ದೈವಾ ಕೇಳರಿ ಕುಂತಾ | ಜ್ಯಾತ ಮುತ್ತು ಹುಡುಕಿ ತಗದೇನಿ ಸಿದ್ದಾಂತಾ |
ಏರು | ಹ್ಯಾಂವಕ ಬಿದ್ದಿ | ಹಾಡಲಿಕ್ಕೆ ಬಂದಿ | ಶಾಹಿರಿ ಮಾಡೂದು ನಿನಗ ಸಿಕ್ಕಿಲ್ಲ ಹಾದಿ
ನಿಂತಗೊಂಡ ಬೇದಿ ಪುಗಸೆಟ್ಟಿ ದಣಿದೆ | ಹೇಳಿ ಕೇಳಿ ನಿಂದು
ಹರೂತೀನಿ ಪರಿದಿ | ಸನಮಂತಾ | ಇದ್ದಾಂಗ ಮೈಮ್ಯಾಲೆ ಬಂತಾ
ಡೊಗ್ಗಿಸಿ ನಿಂತಾ | ಇಡತೇನಿ ಮುಕಳಾಗ ಕಿಸ್ತಾ || ೧ ||

ಇ|| ಸಾಕೇನ ಮತ್ತಾ | ಬೇಕ ಬೇಗಳ ಬಡತಾ | ತಗಿಬಾರದಿತ್ತಾ
ತಗದ ದೋತರದಾಗ ಹೇತಾ || ಹಕೀಕತ್ತಾ ದೈವಾ ಕೇಳರಿ ಕುಂತಾ ||
ಏರು|| ಕುಂತಿರು ಜನಕ ಬರೂ ಹಾಂಗ ಮನಕ
ಹಾಡೂದ ಬಿಟ್ಟನಿಂತಿ ಬೇದಾಡಲಾಕ | ಇನ್ನಾರ ತರ್ಕ
ಹಿಡದ ಹಾಡೋ ಮೂರ್ಖ | ಪರತ ಕಲ್ತ ಬಂದ ಗುರುವಿನ್ಹಂತೇಕ
ಜಾಣರ ಜತ್ತಾ ಮಾಡಿದರೆ ರೀತ ಕಿಮ್ಮತಾ
ಅಡತರ ಮಾತಾ | ಕೇಳಿದರ ಹೋದಿ ಹೋಯಿಕೊಂತಾ || ೨ ||

ಇ|| ಹೇಳವನಕ್ಕಿಂತಾ ಕೇಳಾಂವ ಇರಬೇಕ ಪಂಡಿತಾ
ಆದೀತೋ ಸ್ವಾರ್ಥಾ ಇಲ್ಲಂದರ ಹೇಳೂದು ವ್ಯರ್ಥಾ
ಏರು|| ಬಂದ ಹೆಣ್ಣ ಬಾಲಿ ಮಾಬೂಬನಂತೇಲಿ
ಅತಗೊಂತ ನಿಂತಾಳ ಬಂದ ಬಿದ್ದಳು ಪಾದದ ಮ್ಯಾಲೆ
ಅಂತಾರೋ ಶರಣಾ ಹೇಳವ್ವಾ ನೀನಾ | ಏನು ಘೋರ ದಿನಗ ಬಂದದ್ದು ಹಾಲಿ
ಧನ ದೌಲತ್ತು ಮಸ್ತಕೊಟ್ಟಾನ ಭಗವಂತಾ | ಮತ್ತಿನಂತ ಐತಿ ಮಕ್ಕಳ ಚಿಂತಾ || ೩ ||

ಇ|| ಸತ್ಯಮಂತ ಶರಣಾ ಮಾಬೂಬ ಪ್ರಖ್ಯಾತ | ಅನುಮತಾ ಕೇಳಿ ಬಂದೀತ ಮಮತಾ
ಏರು|| ಶಿವಶರಣರು ಅರಜ ಮಾಡ್ಯಾರೋ | ಕೊಡಬೇಕ ಈ ಹೆಣ್ಣ ಮಗಳಿಗೆ
ನಿಂತನ ತೀವ್ರ ಸಾಂಬನ ಉತ್ತರಾ | ಬಂದೀತು ಉತ್ತರಾ
ಅರಜ ಮಾಡ್ಯಾರೋ ಪರತಾ | ಒಂದರಕ್ಕಿಂತಾ ಎರಡು ಕೊಟ್ಟರ ಸಾಕಂತಾ || ೪ ||

ಇ|| ಜಗಭರಿತಾ ಜವಾಬಯೆಲ್ಲಿಂದಾ ಕೊಡಲೆಂತಾ
ಬಿಡಬೇಕ ಶರತಾ ಇಲ್ಲ ಹೆಂಗಸಿನ ಕಿಸಮತಾ
ಏರು|| ಇಲ್ಲಂದ್ರ ಮೂರು ಕೊಡಂದ್ರ ಶರಣರು | ಎಲ್ಲಿಂದ ಕೊಡಲಿ
ಅಂತಾನ ಪರಮೇಶ್ವರಾ | ಕೊಡಬೇಕ ನಾಕ ತಡವು ಯಾಕ
ಸಾಂಬನ ಕೂಡ ನಡಿಸ್ಯಾನ ತಕರಾರಾ | ಜಗನ್ನಾಥ ಅಂದಾ | ಹೆಚ್ಚಿಂದು ಬಂತಾ
ಮಾಬೂಬ ಮತ್ತ ಬೇಡ್ಯಾರ ಐದು ಕೊಡಂತಾ || ೫ ||

ಇ|| ಸೃಷ್ಟಿಕರತಾ ಎಷ್ಟು ಹೇಳಿದರ ಸನಮಂತಾ |
ಹಟಹಿಡಿದು ಕುಂತಾ ಮೆಹಬೂಬ ಆರ ಬೇಕಂತಾ ||
ಏರು|| ಶಿವಾ ಅಂದಾ ಕೇಳು | ಇಲ್ಲಂತ ಹೇಳು | ಮಹಬೂಬ ಆದ್ಯಾಕಯೇಳು
ಅಂತಾನ ಸಾಂಬಾ | ಆಗ ಅಬಬಾ | ಸಾಕ ಮಾಡ ಇಷ್ಟ್ಯಾಕ ತಕ್ಕ ಗೋಳು
ಮೆಹಬೂಬ ಸ್ವಂತಾ ಕೈಮುಟ್ಟಿ ಹಸ್ತಾ
ಕೊಟ್ಟ ವಿಭೂತಾ ಕಟ್ಟಿಗೋ ಕೊರಳಾಗ ತಾಯಿತಾ || ೬ ||

ಇ|| ಕಳಿಸ್ಯಾರ ತುರತಾ | ಬಾಲಿಗೆ ಮಾಡಿ ಸನಮಂತಾ
ಪತಿವೃತಾ ಹೋದಾಳೋ ನಕ್ಕೊಂತಾ
ಏರು|| ಶರಣರ ಭಾಷೆ | ಆಗಲಿಲ್ಲ ಹುಸಿ
ಹಡದಾಳೋ ಏಳೋ ಮಕ್ಕಳಾ ಒಂದೊಂದು ಎಣಿಸಿ
ಆಗ ಸುಂದರಾ | ಮಾಡ್ಯಾಳೋ ಘೋರಾ | ಕೊಟ್ಟಾ ಶಂಕರಾ
ಜಗದೀಶ ಮೆಹಬೂಬಗ ಮರತಾ ನೆನಸುವಳೋ ಭಗವಂತನಾ
ಹೋದಾವೋ ಸತ್ತು ಏಳು ಮಕ್ಕಳು ಅನರ್ಥಾ || ೭ ||

ಇ|| ಅತಗೊಂತಾ ಆ ಶರಣರಂತೇಲಿ ಮತ್ತಾ
ಹಕೀಕತ್ತ ತಿಳಿಸಿ ಹೇಳ್ಯಾಳೋ ಆದಂತಾ
ಏರು|| ಮೆಹಬೂಬ ಶರಣರು ಸಿಟ್ಟು ಮಾಡ್ಯಾರು | ಆದಮ ಶಹರದಿಂದಾ
ಮಕ್ಕಳು ಕರಿಸ್ಯಾರು | ಕಳಿಸ್ಯಾರ ಮನಿಗೆ ಸೋಡತಾಳ ಹೋಗಿ
ಆಡುತ್ತಿದ್ದವು ತನ್ನ ಏಳು ಪುತ್ರರಾ | ಸತ್ಯವಂತಾ | ಕೊಟ್ಟ ಹುಟ್ಟಸ್ಯಾನ ಭಗವಂತಾ
ಕರಾಮತಾ | ಮೆಹಬೂಬ ಶರಣರದು ಪ್ರಖ್ಯಾತಾ || ೮ |||

ಇ|| ನಾಡಿಗೆ ಗೊತ್ತಾ ಬಾಗಲಕೋಟೆದು ಕವಿತಾ ರಿವಾಯಿತಾ
ಸುತ್ತ ದೇಶಕ ಪ್ರಖ್ಯಾತಾ | ಗುರು ದಸ್ತಗೀರ ಕರುಣ ಸಾಗರಾ
ಏರು|| ಕೇಸು ಪೀರಂದು ನಮಗ ಐತಿ ಆಧಾರಾ
ಅಂದ್ರೋ ನಾಗೂ-ಗೌಸು | ರಿವಾಯಿತು ಖಾಸು | ಹೆದರಿ ವೈರಿ ಬರುದಿಲ್ಲ ಅವರ ಇದಿರಾ
ಬಂಗಾರದಂತ ಅಕ್ಷರಾ | ಸುರದಾಂಗ ಮುತ್ತಾ
ಇನ್ನಾ ಇವರಂತಾ | ಶಾಹೀರ ಹುಟ್ಟೂದು ಕಿಂಚಿತ್ತಾ || ೯ ||

* * *

. ಕುರೂಪದ ಗುರುವಿಗೆ ಸುರೂಪ ಕರುಣಿಸಿದ ಮಾಬುಸುಬಾನಿ

ಅರ್ಥಬಲ್ಲವರು ಬುದ್ಧಿವಂತರು | ಕುಂತ ಕೇಳರಿ ಮಾಡದೇ ಗುಲ್ಲಾ
ಏರು|| ಇಂದ ಪ್ರೀತಿಲಿಂದ ಚಂದದಿಂದ ಸಾರಿ ಪೇಳುವೆ
ಚಿತ್ತಯಿಡರಿ ಮಿತಿಮೀರಿ ನೆರದಿರಿ ಗರದಿ ಸಭಾ ಶೃಂಗಾರ ಜನಾ ಜಾತರಿ
ಸರೂದೈವಕ ಮಾಡುವೆ ಶರಣಾ | ಇರಲಿ ಬಡವನ ಮ್ಯಾಲೆ ಅಂತಃಕರಣಾ
ಸರಸ ಹರುಷ ಸೋಸಿ ನಾ ಪುರಮಾಸಿ ಕವಿ ಮಾಡಿನಿ ರಚನಾ
ಹಿಂತ ನುಡಿ ಕೇಳೋ ಶಾಯೀರ ಕೆಂವು ತುಜೆ ಇಡಬೇಕೋ ಗಮಜಾ
ಮಾಡೂನು ಪೂಜಾ | ತರಕ ಹಿಡಿ ತಿಳಿಸುವೆ ಖುಲ್ಲಾ || ೧ ||

ಇ|| ಮೆಹಬೂಬ ಶರಣ ಹಿಡಿದ ಕುರಾನ | ಓದುತ್ತ ಕುಳಿತಿದ್ರೋ ಮಾಲಿನಮ್ಯಾಲಾ
ಏರು|| ಹಾದ ನೀರಿಗೆ ಹೋಗುಳೋ ಒಬ್ಬಾಕಿ ದಾಸಿ ಅಲ್ಲಿಂದ
ಕೇಳಿ ಸೊರಾ | ತನ್ನ ಮನಪೂರಾ | ನಿಂತಾಳ ಹೈಪಾಗಿ ಅಷ್ಟರೊಳಗ ಆಕಿ ಪುತ್ತರಾ
ಓಡಿಕೊಂತ ಅಲ್ಲಿಗೆ ಬಂದ ನಿಂತಾ | ಕೇಳ ತಾಯವ್ವಾ ನಾ ಬರತೇನಂತಾ
ಕೇಳಿ ಹೊರಳಿ ಸೋಸಿ ಕಂದಗ | ದಾಸಿ ಅಂತಾಳ ತಿಳಿಸುವೆ ನಿನಗ
ಹೊಡದರ ಅತಕೊಂತ ಹ್ವಾದಿ ಮೆಹಬೂಬ ಅತ್ತಾಂಗ
ಹೀಂಗ ಬೆದರಿಸಿ ಆ ಹುಚ್ಚದಾಸಿ ನೀರ ತರಲಿಕ್ಕೆ ಹೊರಟ ಹೋಗ್ಯಾಳಲ್ಲಾ || ೨ ||

ಇ|| ದಾಸಿಯ ಶಬ್ದಕೇಳಿ ತಾ ಖುದ್ದ ಸಿಟ್ಟೇಲೆ ಮೆಹಬೂಬ ಇಳದಾರಲ್ಲಾ
ಏರು|| ಚಿಕ್ಕ ವಯಸಯಿತ್ತ ಬಂದ ನಿಂತ ನೋಡ್ಯಾರ ಹೊರಗ
ಕಾಣಲಿಲ್ಲ | ನಿಂತಾರಲ್ಲ | ನೀರ ತುಂಬಿಕೊಂಡ ದಾಸಿ ಅಲ್ಲಿಗೆ ಬಂದಾಳಲ್ಲಾ
ಕಂಡ ಮಹಬೂಬ ಜರಬೀಲ್ ಹೋಗಿ | ತರಬಿ ದಾಸಿಗೆ ಅಂತಾರ ಸಿಟ್ಟಾಗಿ
ಕೇಳ ನಿವ್ವಳ | ನಾ ಮಾಲಿನ ಮೇಲೆ | ಕುರಾನ ಓದುತ್ತಿದ್ದೆ ಕೂತು
ಅಳತಾನಂತ ನಿನ್ನ ಕಿವಿಗೆ ಹ್ಯಾಂಗ ಕೇಳಿ ಬಂತು
ದಾಸಿ ಕೈಮುಗದ | ಅಂತಾಳ ಖುದ್ದ | ಏನ ಹೇಳಲಿ ಇದರ ತಪಶೀಲಾ || ೩ ||

ಇ|| ಓದುವ ಪರಿ | ಕೇಳರಿ ದೊರಿ | ನಮ್ಮ ದೊರೆಸಾನಿ ಓದುಕ ಮಿಗಿಲಾ
ಏರು|| ಓದುವಾಗ ಪಕ್ಷಿ ಹರುಷದಿಂದ ಕೇಳತಾವಲ್ಲಾ
ಕೇಳಿ ಶರಣ ದಾಸಿಯನಾ | ಅಂತಾರ ತಿಳಿಸವ್ವಾ ಹೋಗಿ | ನಿನ್ನ ದೊರಿಸಾನಿಯನ್ನಾ
ನಾಳೆ ಬರತೇನಿ ಪ್ರೀತಿಲಿಂದ | ಕೇಳಿದಾಸಿ ಹೊಂಟ ಹೋಗ್ಯಾಳ ಅಲ್ಲಿಂದ
ಇಟ್ಟ | ಬೆಟ್ಟ ಆಗಿ ದೊರಿಸಾನಿ ಮುಂದ ತಿಳಿಸ್ಯಾಳ ಬ್ಯಾಗ
ಸತ್ಯವಂತರು ಮೆಹಬೂಬ ಹೇಳಿ ಕಳಿಸ್ಯಾರ ಹೀಂಗ
ನಿನ್ನ ಮನೆತನಕ | ನಾಳೆ ಉದಯೇಕ | ಬರತಾರ ಕೇಳವ್ವಾ ತಿಳಿಸಿನಿ ಖುಲ್ಲಾ || ೪ ||

ಇ|| ಕೇಳಿ ದೊರಿಸಾನಿ ಸುಖಜಾಣಿಪಿಣಿ ಸುಂದರ ಮಣಿ ಹರುಷಾಗ್ಯಾಳಲ್ಲಾ
ಏರು | ಗಂಧ ಕಸ್ತೂರಿ | ತರಿಸಿ ಸಾರಸಿದಾಳ ರಂಗಮಾಲ | ಮರುದಿವಸ
ಆಗಿ ಮನಸ | ಬಂದಾರ ದೊರಿಸಾನಿ ಮನಿಗೆ ಮೆಹಬೂಬ ಆಗಿ ಹರುಷ
ಕಂಡ ದೊರಿಸಾನಿ ಎರಡು ಕೈಮುಗದ | ಕುಂಡ್ರಸ್ಯಾಳ ಮಂಚದಮ್ಯಾಲೆ
ಮೆಹಬೂಬಗ ಒಯ್ದ | ಕುಂತ | ಸೊಂತ | ಅಂತಾರ ಮೆಹಬೂಬ
ದೊರಿಸಾನಿಯ ಮುಂದ | ಓದವ್ವಾ ಕುರಾನ ಕೂತ ನೀ ನನ್ನ ಮುಂದ
ದೊರಿಸಾನಿ ಖುದ್ದ ಆಗಿ ಆನಂದ | ಓದುಕ ಆರಂಭ ಮಾಡಿದ್ದಾಳಲ್ಲಾ || ೫ ||

ಇ|| ದೊರಿಸ್ವಾನಿ ಸೊರಾ ಕೇಳಿ ಪಕ್ಷಿ ಆಧರಾ ಹಾರಾಡತಿದ್ವೊ ಸುತ್ತಮುತ್ತೆಲ್ಲಾ ||
ಏರು | ಕಂಡ ಪಕ್ಷಿ ಮನಗಂಡ ಮೆಹಬೂಬ ಆನಂದ ಆದರು
ಎದ್ದಾರಲ್ಲಾ | ನಿಂತಾರಲ್ಲಾ | ಅಂತಾರ ದೊರಿಸಾನಿಗೆ ಮೆಹಬೂಬ ಆಗಿ ಶಾಮಿಲಾ
ಹಿಂತಾ ವಿದ್ಯೆ ನನಗ ಕಲಸವ್ವಾ | ನಾನು ಮನದಿಂದ ಮಾಡುವೆ ಸೇವಾ
ಸಾಸಿ | ಸೊರಣಿ | ಮಾಡ ಶಿವನ ಮೆಹಬೂಬಗ ಬಂದು ಹಿಡಿತಾಳ ಕಾಲಾ
ಸತ್ಯವಂತರು ಇದ್ದೀರಿ ಈ ಪೃಥ್ವಿಗೆ ಮಿಗಿಲಾ
ನನ್ನ ಮಾಸ್ತರ ಇದ್ದಾರಾ ಗಂಭೀರ ಮಿಕ್ಕ ನನಕ್ಕಿಂತ ಓದುತಾರಲ್ಲಾ || ೬ ||

ಇ|| ಬರದ ಪತ್ತರಾ ಕೊಡುವೆ ವತ್ತರಾ ಹೋಗಿ ತೋರಿಸಿ ಕಲ್ತಬರ್ರಿ ಮೊದಲಾ
ಏರು | ಇರತಾರ ಮಾಸ್ತರ ಅರಬಸ್ತಾನ ಪಟ್ಟಣದಲ್ಲಿ | ಕೇಳಿ ಹರುಷ ಆಗಿ ಮನಸ
ಪತ್ರ ಬರಸಿಕೊಂಡ ದೊರಿಸಾನಿ ಕಡಿಂದಾ | ಆ ದಿವಸ ತಮ್ಮ ತಾಯಿಗೆ
ತಿಳಿಸ್ಯಾರ ಬಂದಾ | ವಿದ್ಯೆ ಕಲಿಲಿಕ್ಕೆ ಹೋಗುವೆ ನಾನು ಇಂದಾ
ಜನನಿ ಅಪ್ಪಣೆ ಕೊಟ್ಟಾರ | ಹಸ್ತಯಿಟ್ಟ ಪ್ರೀತಿಲೆ ಚುಮ್ಮಿದಾರ ಗಲ್ಲಾ
ತಗದ ಹದಿನೈದು ರೂಪಾಯಿ ಕೊಟ್ಟಿದಾರಲ್ಲಾ | ಮುಟ್ಟಿತಾಯಿ ಪಾದಾ
ಹೊಂಟಾರ ಖುದ್ದಾ | ಸಂಗಲೀಲೆ ಯಾರ‍್ಯಾರ ಇದ್ದಿಲ್ಲಾ || ೭ ||

ಇ|| ಪುಂಡ ಮನಗಂಡ ತುಡಗರ ದಂಡ | ಕಂಡ ಮೆಹಬೂಬಗ ಕೇಳಿದಾರಲ್ಲಾ
ಏರು|| ಯಾರ ನೀ ನಿನ್ನ ಹಂತೇಲಿ ಪ್ರೀತಿ ತೋರಸ ಮೊದಲಾ
ತಗದಾರಲ್ಲಾ | ಒಗದಾರಲ್ಲಾ ಹದಿನೈದು ರೂಪಾಯಿ ಹೊರ್ತು ಮತ್ತು ಏನೇನು ಇಲ್ಲಾ
ನಾನು ಎಂದಿಗೆ ಸುಳ್ಳ ಹೇಳುವುದಿಲ್ಲಾ | ನನ್ನ ಹೆಸರ ಮೆಹಬೂಬ ಕೇಳರಿ ಖುಲ್ಲಾ
ಕೇಳಿ | ಟೋಳಿ ಎಲ್ಲಾ | ಕಳ್ಳರು ಕೂಡಿ ಬೇಡಿಕೊಂತಾರ ನಿಂತ
ಇಂದ ಹರಿಬ್ರಹ್ಮ ಕೂಡಿಸಿಕೊಟ್ಟಾನ ಅಂತ | ಹೋಗಿ ಮುಂದಕ ಬಿದ್ದಾರ ಪಾದಕ
ಇದ್ದೀರಿ ಮೆಹಬೂಬ ಕ್ಷಮಿಸಿರಿ ಮೊದಲಾ || ೮ ||

ಇ|| ಮೆಹಬೂಬ ಶರಣ ಆ ಮಂದಿಯನಾ ಭಕ್ತರು ಮಾಡಿ ಹೊಂಟ ಹೋಗ್ಯಾರಲ್ಲಾ
ಏರು|| ಮುಟ್ಟಾರು ಮೆಹಬೂಬ ಅರಬಸ್ತಾನ ಪಟ್ಟಣಕ ಹೋಗಿ ಕಂಡಾರಲ್ಲಾ
ಮಾರಿಯ ಮ್ಯಾಲಾ ಇತ್ತರಿ ಮಕನಾ | ಮಾಸ್ತರ ಕೈಯಾಗ ಪತ್ತರ ಕೊಟ್ಟಾರಲ್ಲಾ
ಮಾಸ್ತರ ಪತ್ತರಾ ಓದಿ ನೋಡ್ಯಾರು | ಮೆಹಬೂಬಗ ವಿದ್ಯೆವ ಕಲಿಸ್ಯಾರು
ಕಲ್ತ ಸೊಂತ | ಹೋಗ್ಯಾರ ಒಂದ ದಿವಸ ಸಮುದ್ರ ದಂಡಿಯ ಮ್ಯಾಗ
ಆಗಿ ಪ್ರೀತಿ ಕುಂತಾರ ಬಟಾಬೈಲದಾಗ | ಓದುಕ ಆರಂಭ ಮಾಡ್ಯಾರ ಮೆಹಬೂಬ
ಅಲ್ಲೆ ಅವರ ಹೊರತು ಯಾರ‍್ಯಾರ ಇದ್ದಿಲ್ಲಾ || ೯ ||

ಇ|| ಓದುವ ಸೊಲ್ಲಾ ಮೀನಾ ಮಸಳಿಯಲ್ಲಾ | ಮೃಗ ಪಕ್ಷಿಕೇಳಿ ಕುಣುತಿದ್ವು ನವಲಾ
ಏರು|| ಮೆಹಬೂಬ ಮನದಲ್ಲಿ ಹಿಗ್ಗಿ ತಿರುಗಿ ಬಂದಾರ ಸಾಲಿಗೆ
ಮಾಸ್ತರರಿಗೆ ಆ ಹೊತ್ತಿಗೆ ಕೇಳತಾರ ಅಪ್ಪಣಿನಾ ಹೋಗುವೆ ನಮ್ಮ ಊರಿಗೆ
ಮಾಸ್ತರ ಮೆಹಬೂಬಗ ಅಪ್ಪಣೆ ಕೊಟ್ಟಾರಲ್ಲಾ | ಪ್ರೀತೀಲೆ ಹಸ್ತಯಿಟ್ಟ
ತಲಿಯಮ್ಯಾಲಾ | ಹೋಗರಿ | ಹಾತೊರಿ | ಮಹಬೂಬ ಮಾಸ್ತರಿಗೆ
ಮಾರಿ ನೋಡಬೇಕಂತ ಮಕನಾ ಎತ್ತಿದಾರ ತಮ್ಮ ಕೈಲಿಂದ ಸೊಂತ
ಮಾಸ್ತರ ಮಾರಿ ಇತ್ತ ಹಂದಿಸರಿ | ಕಂಡ ಮೆಹಬೂಬ ದಂಗ ಆಗ್ಯಾರಲ್ಲಾ || ೧೦ ||

ಇ|| ನಿಂತ ಇದರಿಗೆ ಮೆಹಬೂಬ ಮಾಸ್ತರಿಗೆ ಬಾಗಿ ಶಿರಾ ಕೇಳಿದ್ದಾರಲ್ಲಾ
ಏರು|| ಹಂದಿಸರಿ ನಿಮ್ಮ ಮಾರಿ ಆಗಿದ್ದೇನ ಕಾರಣ | ಒಡದ ಹೇಳರಿ
ಬಂತ ಬಿರಿ | ಅಂತ ಮನಕ ತಿಳಿದ ಮಾಸ್ತರ ಮೆಹಬೂಬ ಅಂತಾರ ಕೇಳರಿ
ತಾಯಿನಿಂದೆ ಮಾಡಿದ್ದ ತಪ್ಪು ನಂದು | ಕೇಳಿ ಮೆಹಬೂಬ ಧ್ಯಾನಕ ತಂದು
ಬಿಟ್ಟ | ಮೆಟ್ಟ | ಹೊಂಟ ಹೋಗಿ ಶಿವನಲ್ಲಿ ಬೇಡಿದ್ದ ಕ್ಷಣಕ
ಏನೇ ಹೇಳಲಿ ಮಾಸ್ತರ ಮಾರಿ ಆತರಿ ಚೊಕ್ಕ | ಅವಸರ ಮಾಡಿ
ಮಾಸ್ತರ ಕೈಗೂಡಿ ತೋರಸ್ಯಾರ ಕನ್ನಡಿ ಮೆಹಬೂಬ ಪ್ರಭೂಲಾ || ೧೧ ||

ಇ|| ಮಾಸ್ತರ ಕನ್ನಡವೊಳಗ ಮುಖಾನೋಡಿ | ಹಿಗ್ಗಿ ಮೆಹಬೂಬನ ಹಿಡಿದಾರ ಕಾಲಾ
ಏರು | ಅಂತಾರ ಮೆಹಬೂಬಗ ತಮ್ಮ ದಯಾ ಕರುಣದಿಂದ | ಸ್ವಚ್ಛಾತರಿ
ನನ್ನ ಮಾರಿ ಅಂತ ಮಾಸ್ತರ ತಾರೀಫ ಮಾಡ್ಯಾರ | ಯಾರಿಲ್ಲ ನಿಮ್ಮ ಸರಿ
ಪ್ಯಾಟಿ ಪಟ್ಟಣ ಬಾಗಲಕೋಟೆ ಶಹರ | ಸುತ್ತ ದೇಶಕ ಹೆಸರ
ಜಾಹೀರ | ಧೀರ | ಗಂಭೀರ | ಇರತಾರ ಮಲ್ಲೆಕಲ್ಲ ಹುಸೇನಾ | ಮಡ್ಡಿಯಮ್ಯಾಲಾ
ವೈರಿಗೆ ಹುಸೇನಮಿಯ್ಯಾ ಹೇಳಿ ಹಿಂಗ ಅಂತಾರಲ್ಲಾ | ಮಾರಿ ಹಂಜಿಪುಟ್ಟಿ
ಮಾಡಿಕೊಂಡ ಹೊಟ್ಟಿ ಬಂದಿ | ಸಭೇದಾಗ ಬಿಡೋ ನಿನ್ನ ಡೌಲಾ || ೧೨ ||

* * *

. ಮಾಬುಸುಬಾನಿಗೆ ಮರುಳಾದ ಹೆಣ್ಣಿನ ಪದಾ

ಬೈಯಾನ ಕೇಳರಿ ದೈವೆಲ್ಲಾ ತಿಳಿಸುವೆ ಖುಲ್ಲಾ
ಉತ್ತರ ದೇಶದ ಅರಸರ ಸತ್ಯವಂತರ ದೇಶಾ
ಬಗದಾದ ಪಟ್ಟಣ ಸ್ಥಳ ತಿಳಿಸುವೆ ಖುಲ್ಲಾ ||
ಚಿಕ್ಕ ಪ್ರಾಯದ ಮಾಬೂಬ ಬಾಲಾ
ಚಂಡು ಬಗರಿsನಾ ಆಡುವ ಖ್ಯಾಲಾ
ಅವರ ವರಣಾ ಚಂದರ ಕಿರಣ
ಚ್ಯಾಲಿ|| ಚಲುವಿsಕಿ ಚಾಲಾಕಿ ಹೋಲಿsಕಿ ರೂಪ
ಥಳಥಳ ಹೊಳೆಯುವ ತುಟಿಗಲ್ಲಾ ಕೇಳರಿ ಖುಲ್ಲಾ || ೧ ||

ಒಬ್ಬ ಬಾಲಿ ಕಂಡಾಳ ನಿರ್ಮಾಲಿ ಮರುಳಾದಳಲ್ಲಾ
ಮಾಬೂಬ ಸುಬಾನಿ ಮನಿಗೆ ಬರಬೇಕ ಧನಿ
ಅಡಿಗಿ ಮಾಡೇನಿ ಭಿನ್ನ ಮೌಲಾ ಉಣಿಸುವೆನಲ್ಲಾ
ಕರಕೊಂಡ ಹೋಗಿ ತನ್ನ ಮನಿಗೆ ಬಾಲಿ
ಶ್ರೇಷ್ಟ ಶರಣರಿಗೆ ಮಾಡುವಳು ನಕಲಿ
ಚ್ಯಾಲಿ|| ಮಂಚದ ಮ್ಯಾಲೆ ಹೂವಿನ ಮಾಲಿ
ವಿಸ್ತಾರ ತಯ್ಯಾರ ಶ್ರಿಂಗಾರ ಮಾಡಿ ಕೈಹಾಕಿ ಶರಣರ ಎಳೆಯುವಳಲ್ಲಾ || ೨ ||

ಗಾಬ ಆದಾರೋ ಗುಣಶೀಲಾ ಹೇಳುವರಲ್ಲಾ
ಇಂಥ ಪಾಪದ ಕೆಲಸಾ ಸೇರಲಾರದೋ ಮನಸಾ
ದೃಢಭಕ್ತಿ ಇಡೋ ನನ್ನ ಮೇಲಾ ಭಿನ್ ಮೌಲಾ
ಬಾಲಿ ಹೇಳುವಳೋ ತನ್ನ ಕಷ್ಟ ಕೇಳರಿ ಮಾಬೂಬ ಶ್ರೇಷ್ಟಾ
ಹೆಣ್ಣಿನ ಕಷ್ಟ ಮಾಡಿ ನಷ್ಟ ಮಾಡದೆ ನೋಡದೆ ಕೊಡದೆ
ಹೋದರ ಗಂಡಗ ಹೇಳಿ ಮುರಿಸುವೆ ಹಲ್ಲಾ | ಕೇಳರಿ ಖುಲ್ಲಾ || ೩ ||

ಓಡಿ ಹೋದರ ಕೈಗೆ ಸಿಗಲಿಲ್ಲಾ ನೋಡರಿ ಮೊದಲಾ
ದೈವಾ ಕೇಳರಿ ಸೊಲ್ಪಾ ಹೆಣ್ಣಿನ ತಾರೀಫಾ
ಹರವಿಕೊಂಡು ತನ್ನ ಕೂದಲಾ ಕುಂತಿದ್ದಳಲ್ಲಾ
ಚ್ಯಾಲಿ || ಆಕಿ ಗಂಡ ಬಂದ ಹೊರಗಿಲಿಂದ
ಬಾಲಿ ಹೇಳುವಳೋ ತನ್ನ ಗಂಡನ ಮುಂದಾ
ಮಾಬೂಬ ಇಂದ ಮನಿಗೆ ಬಂದ
ಎಳೀದ ಎಳಿದ ಕಳೀದ ಮಾನ ಬೇಡಿಕೊಂಡರ
ದಯಾ ಬರಲಿಲ್ಲಾ ಕೇಳರಿ ಖುಲ್ಲಾ || ೪ ||

ಇ|| ಗಂಡಗ ಹೇಳಿ ಹಿಡಿದಾಳೋ ಕಾಲಾ ತಿಳಕೊಂಡ ಮೂಲಾ
ಸತ್ಯ ಶರಣರ ಕೂಡ ಮಾಡಬಾರದ ವಿಶ್ವಾಸ
ತಿಳಿಯದು ಸ್ತ್ರೀಯರ ಜಾಲ ಕೇಳರಿ ಖುಲ್ಲಾ
ಕೆಟ್ಟ ಕೆಲಸ ಮಾಡಿದಿ ಹೊಯ್ಮಾಲಿ
ಶ್ರೇಷ್ಟ ಶರಣರಿಗೆ ಹಚ್ಚಿದಿ ಗಿಲ್ಲಿ ಇರಬ್ಯಾಡ ಇಲ್ಲಿ ನನ್ನ ಮನೆಯಲ್ಲಿ
ಆತೂರ ಚಾತೂರ ಪ್ರಚೂರ ಹೇಳಿ
ಹಚ್ಚಿ ಹೊಡದಾನೋ ಬಾರಕೋಲಾ ಕೇಳರಿ ಖುಲ್ಲಾ || ೫ ||

ತವರ ಮನಿಗೆ ಹೋದಾಳೋ ತತ್ಕಾಲಾ ನೋಡರಿ ಮೊದಲಾ
ಬಾಲಿ ತಲಿಯೊಳಗ ಹುಣ್ಣ ಹುಟ್ಟಿತೋ ಆಗ
ಹುಳಬಿದ್ದು ಬಳಲುವಳಲ್ಲಾ ರಾತರಿ ಹಗಲಾ
ಚ್ಯಾಲಿ|| ಹೋಗಿ ಕೇಳುವಳೋ ಜೋಹಿಸನೋಟ
ಪ್ರಶ್ನೆ ಹೇಳುವರೋ ಮಾಬೂಬರ ಕಾಟ
ನನ್ನ ಪಡಿಪಾಟ ಹೆಚ್ಚಿನ ಪಾಟ
ಮಾರ್ಗಕ್ಕೆ ತಡವ್ಯಾಕೆ ಕೊಡಲಿಕ್ಕೆ ಹೋಗಿ
ನನ್ನ ಕಷ್ಟ ಆದೀತೋ ನಿರ್ಬಯಲಾ ಎಲ್ಲ ಹೇಳಿದರಲ್ಲಾ || ೬ ||

ಕೇಳಿ ಬಾಲಿ ಮರುಳಿ ತತ್ಕಾಲಾ ಹೊರಳಿದಳಲ್ಲಾ
ಬಗದಾದ ಮುಖಾಮಕ ಬಂದು ಬಿದ್ದಾಳೋ ನೆಲಕ
ಹಿಡಕೊಂಡು ಶರಣರ ಕಾಲಾ ಬೀಳುವಳಲ್ಲಾ
ಟ್ಯಾಲಿ|| ನನ್ನ ತಪ್ಪು ಕ್ಷಮಿಸಿರಿ ಸುಬಹಾನಿ
ಮಾಬಾಬರು ಹೇಳುವರೋ ಗಂಡನ ಮನಿ
ಜಿದ್ದು ಬಿಡು ನೀನು ಕೊಡುವೆನು ನಾನು
ಆದಾರ ಪರಿಹಾರ ಕೌಲೂರು ಗ್ರಾಮ
ಚಿಕ್ಕ ಮಸೂತಿ ಸಕ್ಕರಿಬೆಲ್ಲಾ ನಿನಗನುಕೂಲಾ || || ೭ ||

* * *

. ನೇಕಾರನಿಗಾಗಿ ಮೆಹಬೂಬರು ಮಾಡಿದ ಪವಾಡ

ಚಿತ್ತ ಇಟ್ಟ ಕೇಳರಿ ದೈವಾ ಇತ್ತ ಜರಾ
ಸತ್ಯವಂತ ಪ್ರಖ್ಯಾತ ಸ್ವಾಮಿ ದಸ್ತಗೀರಾ || ಪಲ್ಲವಿ ||

ಏರು|| ಒಂದು ದಿನ ಮಾಬೂಬ ಶರಣರು ಸೈಲ ಮಾಡೂತ  ನಡೆದರು
ಪಿರತಾ ಸಂಚಾರ ಮಾಡುತ ಒಂದ ಊರಿಗೆ ಬಂದರು
ಇದ್ದ ಅಲ್ಲಿ ಪ್ರಸಿದ್ದ ಅರಸಾ ಬುದ್ದಿವಂತ ರೈತಾ
ಅವನ ಹಂತೇಲಿ ಇದ್ದಾ ಒಬ್ಬಾ ನೇಕಾರ || ೧ ||

ಕಂಡ ಮೆಹಬೂಬ ಶರಣರಿಗೆ ಈ ನೇಕಾರಾ
ತನ್ನ ಮನಿವೊಳಗ ಕರಕೊಂಡು ಹೋದಾ ಖಿದ್‌ಮತಗಾರಾ
ಏರು|| ಖಾಸ ಅಂದಾ ದರದಿವಸ ನೇಯ್ದ ಒಂದ ಥಾನ ಅರಸಗ
ಕೊಡತಿದ್ದಾ ಸುಖಾಪಡುತಿದ್ದಾ ಅರಸ ತನ್ನ ಮನದಾಗ
ಎರಡು ನೇಯಾಕ ಸುರುಮಾಡ್ಯಾನ ಶರಣ ಮೆಹಬೂಬ ಬಂದಮ್ಯಾಗ
ಮುಂಚೆ ನೇಯ್ದಿದ್ದು ಇಡತಿದ್ದಾ ತಂದ ಶರಣರ ಹುಜುರಾ || ೨ ||

ಇ|| ಎರಡನೆಯ ಸರತಿ ನೇಯ್ದಿದ್ದು ಅರಸಗ ಕೊಡತಿದ್ದಾ ದೀರಾ
ಸುದ್ದಿ ಕೊಟ್ಟಾನ ಅರಸಗ ಒಬ್ಬಾ ಚಾಡಿಕೋರಾ
ಏರು|| ಕೇಳಿ ಅರಸಾ ನೇಕಾರಗ ಸಿಟ್ಟ ಮಾಡ್ಯಾನ ಜಟಕಾಸಿ
ಸಣ್ಣ ಮಾರಿ ಮಾಡಿ ನಿಂತ ನೇಕಾರ ಶರಣರಂತೇಲಿ ಬಂದಕ್ಯಾಸಿ
ಕೆಟ್ಟ ಅರಸ ಬಿಟ್ಟ ನನಗ ಬೈಯ್ದ ಬಾಯಿಲೆ ಬೆದರಿಸಿ
ಇವಗ ತೋರಿಸಬೇಕ ಸ್ವಾಮಿ ನಿಮ್ಮ ಸುತ್ತೇದ ಜೋರಾ || ೩ ||

ಇ|| ಕೇಳಿ ನೇಕಾರಗ ಜವಾಬ ಕೊಟ್ಟಾರ ಶರಣರಾ
ನಿಮ್ಮ ಹಂತೇಲಿ ಏನ ಐತಿ ಸದಾ ಫಕೀರಾ
ಏರು|| ಕರುಣ ಮಾಡಬೇಕ ಶರಣಸ್ವಾಮಿ ಬಡವನಿಗಾಗಿ ಅನುಕೂಲಾ
ಗೌಸಲಾಜಮ್ ಗ್ಲಾಸ ತಂದ ಬಹಾರಂಥಾರಲ್ಲಾ
ಗಪ್ಪ ಆದೀತ ಗ್ಲಾಸಿನೊಳಗ ಭೂಪ ಅರಸನ ರಾಜೆಲ್ಲಾ
ಅವನ ತಾಯಿ ಹೋಗಿದ್ದಳು ಮೊದಲಾ ಹಜ್ಜಕ ದೂರಾ || ೪ ||

ಇ|| ಹಜ್ ಮಾಡಿ ಸರಹದ್ದಿಗೆ ಬಂದು ನೋಡತಾಳ ಊರಾ
ದಂಡು ದರಬಾರ ಸಂಪತ್ತು ಮಗಂದು ಕಾಣವಲ್ದೊ ಜರಾ
ಏರು|| ಮುದುಕಿ ಮನದಾಗ ಮಿಡುಕಿ ಅಂತಾಳ ಸುರಿಸಿ ಕಣ್ಣೀರ ಅತಗೊಂತಾ
ಅಷ್ಟರೊಳಗ ಒಬ್ಬ ದರವೇಶಿ ಮುದುಕಿ ಮುಂದ ಬಂದ ನಿಂತಾ
ಕೇಳಿ ಮಜಕೂರ ಬಂದ ದರವೇಶಿ ಕೊಟ್ಟಾ ಒಂದ ತಾಯಿತಾ
ಇಟ್ಟ ಮಲಕೋ ತಲೆಗುಂಬಿಲಿ ಇದಕ ತಿಳಿತೈತಿ ಸಾರಾ || ೫ ||

ಕನಸಿನ್ಯಾಗ ಮುದುಕಿಗೆ ಆತ ಒಂದು ಇಶಾರಾ
ನಬಿಸಾಹೇಬರ ರೋಜೇಕ ಹೋಗನೀ ಆಗೂದು ಜಾಹೀರಾ
ಏರು|| ಹುಕುಮಿನ ಸರಿ ಹೋದಳು ಮುದುಕಿ ಮೌಲಾಲಿ ರೋಜೇಕ
ಅಲ್ಲಿ ಒಂದ ಕನಸ ಕಂಡಾಳ ಹೋಗ ಉಸಮಾನ ರೋಜೇಕ
ಉಸ್ಮಾನಗನಿ ರೋಜೇದಾಗ ಕನಸಕಂಡಾಳ ಬೇಶಕ್
ಹೋದಾಳ ಉಮರನ ಗಮಜಿನೊಳಗೆ ಆತ ಇಶಾರಾ || ೬ ||

ಕನಸಿನ್ಯಾಗ ಅಬೂಬಕರ ರೋಜೇಕ ಹೋಗಂತಾರಾ
ನಬಿಸಾಬರ ರೋಜೇಕ ಮುದುಕಿ ಬಂದಾಳ ತೀವ್ರಾ
ಏರು|| ಧ್ಯಾನ ಮಾಡಿ ಮಲಗಿದಾಳ ರಸೂಲಿಲ್ಲಾಗ ನೆನಸಿ
ಕನಸಿನ್ಯಾಗ ಕಂಡಾಳಾಗ ಪೈಗಂಬರ ಪುರಮಾಸಿ
ಸಫಿವುಲ್ಲಾ ಸಾಂಬಗೆಲ್ಲಾ ತಿಳಿಸಿದಾರ ಸಾರಾಂಶಿ
ಏನಾತ ಈ ಮುದುಕಿ ಮಗಂದು ಸಂಸಾರಾ || ೭ ||

ಇ|| ಸಿದಾ ಬಂತ ಮೆಹಬೂಬನ ಹಂತೇಲಿ ಹೋಗಂತಕ್ಯಾರಾ
ಹೊಂಟಾರ ಪೈಗಂಬರ ಮೆಹಬೂಬಗ ನೋಡು ಉಮ್ಮೇದಾರಾ
ಏರು|| ಅಂತರ್ಯಾಮಿ ಮೆಹಬೂಬಗ ತಿಳಿತ ಹಜರತ ಬರುವುದಾ
ಅವರಕ್ಕಿಂತ ಮುಂಚೆ ನಾನು ಸ್ವಂತ ಹೋಗಬೇಕ ಇಲ್ಲಿಂದಾ
ಮುತ್ಯಾನ ರೋಜೇಕ ಮೆಹಬೂಬ ಮುಟ್ಟಿದಾರ ಖುಷಿಲಿಂದಾ
ಏನ ಕಾರಣ ನಿಂತೀರಿ ಹೊಂಟ ಹೇಳರಿ ತೀವ್ರಾ || ೮ ||

ತಿಳಿಸಿ ಹೇಳ್ಯಾರ ಪೈಗಂಬರ ಮುದುಕಿ ಮಜಕೂರಾ
ಸೈಪ್ಲ ಮಾಡರಿ ಮುದುಕಿ ಮ್ಯಾಗ ಉಪಕಾರಾ
ಏರು|| ಮುತ್ಯಾನ ಮಾತಿನ ಮ್ಯಾಗ ಮಾಪ ಮೆಹಬೂಬ ಮಾಡ್ಯಾರ
ಖಾಸ ಹೋಗಿ ಗ್ಲಾಸ ತಿರುವುಣಾ ಹೊರಗ ಬಿದ್ದೀತ ಆ ಊರಾ
ಮುದುಕಿ ಮಗಾ ಕೂಡಿ ಮೆಹಬೂಬಗ ನೋಡಿ ಚರಣಕ ಎರಗ್ಯಾರಾ
ದಸ್ತಗೀರ ಕೇಸುಪೀರನ ನಾಗೂ-ಗೌಸು ಶಿಷ್ಯರಾ || || ೯ ||

* * *