೧೩. ರಾಬಿಯಾ ಬಸರಿ ಅವರು ರೊಟ್ಟಿ ದಾನ ಮಾಡಿದ ಪದಾ

ಪೈಲೇಕ ಪೃಥ್ವಿಪಾಲಕ ಸಾಂಬಗ ಶರಣಾ
ಏರು|| ಸೃಷ್ಟಿಕರ್ತನ ಆಟ ನಾ ಎಷ್ಟಂತ ಮಾಡಲಿ ವರ್ಣನಾ
ಪ್ರೀತಿಲಿಂದ ಉತ್ಪತ್ತಿಮಾಡಿ ಕಳುವ್ಯಾನಾ ನಮ್ಮ ನಿಮ್ಮನಾ
ಹಲವು ತರದಿಂದ ಸಲುವತಿಹನೋ ಕೇವಲಾ ಜಗಜೀವನಾ
ಸರ್ವ ಜೀವರಾಶಿಗೆ ಇರುವಿ ಎಂಬತ್ತಕೋಟಿಗೆ ಆ ಭಗವಾನ
ಆತನ ಪ್ರಾರ್ಥನಾ ಇಂದ ಮಾಡುವೆ ಕಂದ ನಾ || ೧ ||

ಇ|| ಸಭೆಯೊಳು ನಬಿಸಾಬಗ ಅದಬಿಲೆ ಶರಣಾ
ಏರು|| ಅಲಿ ಸಾಂಬನಹುಲಿಗೆ ಮಾಡುವೆ ಶರಣಾ
ಬೀಬಿ ಖಾತೂನನ ಪಾದಕ ಶಿರಬಾಗಿ ಮಾಡುವೆ ವಂದನಾ
ಹಸನ ಮನಾ ಇಟ್ಟ ಹಸನೈನ ಹುಸನೈನ ಅಣ್ಣ ತಮ್ಮಗ ಶರಣಾ.
ನಂಬಿಗಿಟ್ಟು ವಂದಿಸುವೆ ಪಂಜತನ್‌ರಿಗೆ ದರದಿನಾ
ಠಿಕಾಣಾ ವತನಾ ಮುಖ್ಯೆ ಮಕ್ಕಾ ಮದೀನಾ || ೨ ||

ಇ|| ಸಜ್ಜನ ಸರೂ ಸಭಾಜನಕ ಮುದದಿಂದ ಶರಣಾ
ಏರು|| ಖಾಸ ಮಾತಿದು ಸೋಸಿ ಕೇಳರಿ ಧ್ಯಾಸ ಇಟ್ಟ ಸರೂಜನಾ
ತಪ್ಪ ಆದರ ಮಾಫ್ ಮಾಡರಿ ಕೋಪಬಿಟ್ಟು ಮನದಾನಾ
ನಿತ್ಯ ಐದಹೊತ್ತ ನಮಾಜ ಮತ್ತ ಮಾಡರಿ ದರದಿನಾ
ದುಡ್ಡ ದುಗಾಣಿ ಹತ್ತುದಿಲ್ಲ ಖರ್ಚು ಅದಕ ಏನೇನಾ
ಇಮಾನಾ ಕುರಾನಾ ಮ್ಯಾಗ ಇಟ್ಟ ಸಂಪೂರ್ಣ || ೩ ||

ಭಕ್ತೀಲೆ ಶಕ್ತಿ ಸರಿಯಾಗಿ ಕೊಡಬೇಕ ದಾನಾ
ಏರು|| ನಿಷ್ಟಾ ಇಟ್ಟ ಕೊಟ್ಟ ದಾನಾ ಮುಟ್ಟತೈತಿ ಸಾಂಬನ್ನಾ
ಮತ್ತ ಒಂದಕ ಹತ್ತು ಕೊಡತಾನಾ ಗುಪ್ತದಿಂದ ಭಗವಾನಾ
ಮಾಡಿ ಅನುಭವ ನೋಡಿ ಹ್ವಾದರ ರೂಢಿಯೊಳಗ ಬಹುಜನಾ
ಬೀಬಿ ರಾಬಿಯಾ ಬಸರಿ ಅನಶ್ಯಾರ ದಾನದಲ್ಲಿ ನಿಪುಣಾ
ಒಂದಿನಾ ಗುರುವಿನಾ ಹಸನ ಬಸರಿಗೆ ಔತಣಾ || ೪ ||

ಇ|| ರಾಬಿಯಾ ಬಸರಿ ಬೀಬಿದು ಬಹಳಿತ್ತ ಬಿಡತಾನಾ |
ಏರು|| ಹುಡುಕಿ ಮುನಿಯೆಲ್ಲಾ ಆಡಿಸಿ ಕೈ ಅಡಕಲಾ ನೋಡು ತನಾ
ತಳಕ ಗಡಿಗ್ಯಾಗ ಹುಳಕಗೋದಿ ಕಂಡ ಹರುಷ ಆದೀತ ಮನಾ
ಹಸನ ಮಾಡಿ ಬೀಸಿದಾರೋ ನೆನಪಿ ನೆನಸಿ ಶಿವನಾ
ಹಿಟ್ಟನಾದಿ ರೊಟ್ಟಿ ಮಾಡಿದಾರ ದೋಚಹುವೆ ಜಾಸ್ತಿ ಕಹಾ ಆನಾ
ಏಕಮನಾ ಗುರುವಿನಾ ಮುಂದ ಇಟ್ಟಾರ ಬರ್ತನಾ || ೫ ||

ಅಷ್ಟರೊಳಗ ನೀಡ ಅಂತ ಬೇಗ ಒಬ್ಬ ಬಾವಾ ಬಂದಾನ
ಏರು|| ದಾನವಂತಿ ಎರಡು ರೊಟ್ಟಿ ಎತ್ತಿ ನೀಡ್ಯಾರ
ಆಕ್ಷಣಾ ಹೋದ ಬಾವಾ ಅಂದ ಒಂದಕ ಹತ್ತಕೊಡಲಿ ಭಗವಾನಾ
ಬುದ್ಧಿವಂತರು ಬಂದ ಕೂಡಿರಿ ಬೇಧಕೇಳರಿ ಮುಂದಿನ್ನಾ
ಬೀಬಿ ರಾಬಿಯಾ ಬಸರಿ ಭಾವಕ ಮೆಚ್ಚಿ ಆ ಜಗಜೀವನಾ
ಮಹಾಘನಾ ದೈವಾನಾ ಸಾಹುಕಾರ ಒಬ್ಬಿದ್ದಾ ಕೃಪಣಾ || ೬ ||

ಇ|| ಆತನ ಹೆಂಡತಿ ಹೊಟ್ಟೆವೊಳಗ ಹುಟ್ಟಿತ್ತ ಕಲ್ಪನಾ
ಏರು|| ಇಂದ ಬೀಬಿರಾಬಿಯಾಗ ಕಳಿಸಿಕೊಡಬೇಕ ಪಕವಾನಾ
ಖಾಸ ಗೋದಿ ಬೀಸಿ ಮಾಡ್ಯಾರ ರೊಟ್ಟಿ ಇಪ್ಪತ್ತು ಆಗೋಣಾ
ಥರಾ ಹಚ್ಚಿ ಬುತ್ತಿ ಕಟ್ಟಿ ಕರದ ಬಾಣಗಿತ್ತಿನಾ
ಜಲ್ದಿ ಹೋಗಿ ಕೊಟ್ಟ ಬೀಬಿಗೆ ಹೇಳ ನನ್ನ ವಂದನಾ
ಪಕವಾನಾ ವಾಸನಾ ಕಂಡ ದಾಸಿಯದು ಹರಿದೀತು ಮನಾ || ೭ ||

ಇ|| ಉಸ್ ಘಡಿ ಉಸ್‌ಮೇಸೆ ಕಾಡಿ ಏಕರೋಟಿ ಸಾಲನಾ
ಏರು|| ಬಿಚ್ಚಿ ಇಟಗೊಂಡ ಬಾಕಿ ಬುತ್ತಿ ಬೀಬಿ ಆಕ್ಷಣಾ
ಎಣಿಸಿ ನೋಡ್ಯಾರ ಹತ್ತೊಂಬತ್ತು ಇದ್ದು ಬಂದೀತು ಅನುಮಾನಾ
ಕರದ ದಾಸಿಗೆ ತಿರುಗಿ ಒಯ್ಯೋ ಅಂದ್ರೋ ನಮ್ಮದಲ್ಲಾ ಈ ಭಾಸನಾ
ಆಶೆಬುರುಕಿ ದಾಸಿಗಾಗ ಹಾರಿಹೋದೀತ ಹಲ್ಲಣಾ
ವ್ಯಸನಾ ಹೌಸಾನಾ ಹಾರಿ ನಿಂತಾಳ ಸುಮ್ಮನಾ || ೮ ||

ಗಬರಾಸಿ ಮನದಾಗ ದಾಸಿ ಅಂತಾಳ ಮಾಡಲಿ ಇನ್ನೇನಾ
ಏರು|| ಹೊರಗ ತಂದ ತಾ ತಗದ ರೊಟ್ಟಿ ಹಾಕಿ ಕಟ್ಟಿದಾಳ ಪುನಾಃ
ಪರತ ತಂದ ಸಾಬೀತ ಬುತ್ತಿ ಇಟ್ಟ ಮಾಡ್ಯಾಳು ವಂದನಾ
ಬುತ್ತಿ ಬಿಚ್ಚಿ ಬೀಬಿ ರಾಬಿಯ ಎಣಿಸಿ ನೋಡ್ಯಾರ ಆಕ್ಷಣಾ
ಒಂದಕ್ಕ ಹತ್ತರಂತೆ ಇಪ್ಪತ್ತು ಕಂಡ ಪುರುಷ ಆದೀತ ಮನಾ |
ಗುರುವಿನಾ ಉಣಿಸೋಣಾ ತಾವು ಮಾಡ್ಯಾರ ಭೋಜನಾ || ೯ ||

ಇ|| ಮಹಾ ಶ್ರೇಷ್ಟ ಗಂಡಮೆಟ್ಟ ಬಾಗಲಕೋಟಿ ಠಿಕಾಣಾ
ಏರು|| ದಸ್ತಗೀರವಲಿ ಮಸ್ತ ಬುದ್ದಿ ಕೊಟ್ಟ ಹಸ್ತ ತಲಿಮ್ಯಾಗ ಪೂರ್ಣಾ
ಕೇಸುಪೀರ ಹೀಂಗ ಲೇಸ ಮಾಡ್ಯಾರ ಸೋಸಿ ನಾಗು-ಗೌಸುನಾ
ಕಸರ ಇಲ್ಲದಾಂಗ ಹೆಸರ ನಡುತೈತಿ ದೂರದೂರದಿಂದ ನತನಾ
ತೋಡಿ ಮಾಡಿ ಹಾಡ ಇಲ್ಲಂದ್ರ ಓಡ ನಿನ್ನ ಮನೆತನಾ
ಗುರುವಿನ ಚರಣಾ ಹಿಡಿದ ಪಡಿಬೇಕ ಗ್ನಾನಾ || ೧೦ ||

* * *

೧೪. ಖಾದಿರಶ್ಯಾವಲಿಯವರು ಮಾಡಿದ ಪವಾಡ ಪದಾ

ಬುದ್ಧಿವಂತಾ ದೈವಾ ಕುಂತ ಚೌಕಾಸಿ ಮಾಡಿರಿ
ಇವಂದು ಹೆಚ್ಚಾತ ಕಿರಿಕಿರಿ ಕೊಡತೇನಿ ಬ್ಯಾನಿ ನೋಡಿ ಬರಿ
ಏರು|| ಕರುಣಾ ಭರಣಾ ಶರಣಾ ಸಯ್ಯದೀ ಘರಾಣಾ
ಚ್ಯಾಲಿ|| ಖಾಸ ಮೆಹಬೂಬರ ದೋಸ್ತ ಅನಿಸ್ಯಾರ ಶರಣರು
ಹುಟ್ಟಿ ತಿಮ್ಮನಟ್ಟಿ ಗ್ರಾಮದೊಳಗ ಬೆಳೆದರು
ಧೀರ ದಾದೇ ಪೀರ ಆದ ಇವರ ಹಿರಿಯರು
ಹನುಮಸಾಗರ ಐತೆ ಜಹಗೀರಾ ವಂಶ ಪರಂಪಾರಾ
ಭಕ್ತರ ಮ್ಯಾಗ ದಯಾಭಾರಿ ಸ್ವಾಮಿ ಮುರುತುಜಾ ಖಾದರಿ || ೧ ||

ಇ|| ಇತ್ತ ಭಕ್ತ ಜನಾ ಸುತ್ತ ಇಪ್ಪತ್ತ ಹರದಾರಿ
ನಿತ್ಯ ಮಾಡತಿದ್ರೊ ಪೇರಿ ಸ್ವಾಮಿ ಸ್ವಂತ ಹತ್ತಿ ಕುದುರಿ
ಏರು|| ಸ್ವಾಮಿ ನೆಹಮಿ ಮಹಿಮಿ ತೋರಿ ಪರಾಕ್ರಮಿ
ಚ್ಯಾಲಿ|| ಬಂದ ಪಾದಕ ಬಿದ್ದ ಭಕ್ತಗ ಪ್ರೀತಿಲಿ
ಕಷ್ಟ ಪರಿಹಾರ ಮಾಡಿ ಬಿಟ್ರ ಕ್ಷಣದಲ್ಲಿ
ಗಾಳಿ ಪಿಶಾಲಿ ಉಳ್ಳಿ ಶಿಳ್ಳಿ ಹೋಗುವ ನಿಖಾಲಿ
ಬಾಗಲಕೋಟೆಗೆ ಬಂದ ಭಕ್ತ ಜನರ ಮುಂದ
ತೋರಿಸಿ ಪರಾಕ್ರಮಿ ಹುಲಿ ಆಗಿ ಗುಡುಗ ಹೊಡದ ಚೀರಿ
ಭಕ್ತರು ಆದರು ಗಾಬರಿ || ೨ ||

ಇ|| ನೋಡಿ ಭಕ್ತರೆಲ್ಲ ಓಡಾಡುತಿದ್ರ ಬೆದರಿ
ಸ್ವಾಮಿ ಮರತುಜಾ ಖಾದರಿ | ನಿಮ್ಮ ನಿಜರೂಪ ತೋರಿರಿ
ಏರು|| ಆಗ ಬ್ಯಾಗ ಲಗ್ಗ ಕ್ಷಣದಾಗ
ಚ್ಯಾಲಿ|| ಭೂಪ ತದ್ರೂಪ ಹುಲಿರೂಪ ಅಡಗಿಸಿ
ಮೋಜ ಸ್ವಾಮಿ ನಿಜರೂಪ ತೋರಿಸಿ
ಭಕ್ತರೆಲ್ಲ ನಿಂತ್ರ ಮುಂದ ಕೈಯ್ಯ ಜೋಡಿಸಿ
ಸತ್ಯ ಮನಗಂಡಾ ಹಿಂಡಿಗೆ ಹಿಂಡಾ ಸ್ವಾಮಿಗೆ ಬೇಡಿಕೊಂಡಾ
ಎಷ್ಟೋಜನಾ ಮಾಡಿಕೊಂಡ್ರೊ ಖಾತ್ರಿ ಭಕ್ತರ ಆದರು ಮಿತಿಮೀರಿ || ೩ ||

ಇ|| ಬಾಗಲಕೋಟೆ ಬಿಟ್ಟು ಹೊಂಟ್ರೋ | ನಡದಾರ ಕುದುರಿಯೇರಿ
ಊರೂರ ಮಾಡುತ ಸಂಚಾರಿ | ಕೆಂಬಾವಿಗೆ ಬಂತ ಸವಾರಿ
ಏರು|| ಬಂದರು ಅಲ್ಲಿ ಭಕ್ತರು ಕೂಡ್ಯಾರು ಕರಕೊಂಡ ನಡದರು
ಚ್ಯಾಲಿ|| ಸಾಲ ಕರಡಿ ಮ್ಯಾಳ ತಾಳ ಬಾಜಾ ಭಜಂತ್ರೀ
ಬಂತ ಬಾರಸಿಗೊಂತ ನೌ ಬತ್ತ ನಗಾರಿ
ನಡುವೆ ಪಾತರಮ್ಯಾಳ ಕುಣಿತಾಳ ಶಾಪರಿ
ಸಡಗರದಿಂದ ಶರಣರ ಮುಂದ ಬಾಜಾರ ಹಿಡಿದಾ
ಎಡಬಲ ಹಿಡಿದ ಆಪ್ತಾಗಿರಿ ಭಕ್ತರು ಹಾರಸತಿದ್ರೋ ಚೌರಿ || ೪ ||

ನಡದೀತ ಸರತಿಮ್ಯಾಗ ದಿನಾ ಒಂದ ಓಣಿ ಬೀದಿಗೇರಿ
ಸಣ್ಣ ದೊಡ್ಡ ತವಂಗರಿ ಅಷ್ಟು ಮನಿ ಹೋದಾವ ತೀರಿ
ಏರು|| ಓರ್ವ ಬಡವಾ ಇರಾವಾ ಏಕನಿಷ್ಠಿ
ಬಂದ ಶರಣರ ಮುಂದ ನಿಂತ ಮಾಡಿ ವಂದನಾ
ಏಕನಿಷ್ಟೆಯಿಂದ ಕೂಟ್ಟ ಹೋದಾ ಔತಣಾ
ಬಂದ ಮಡದಿಗೆಂದ ಇಂದ ಮಾಡ ಪಕವಾನಾ
ಪ್ರೀತಿಲಿಂದ ಆಗಿ ಆನಂದ ಬೇಧ ಇಲ್ಲದಾ
ಮನಿಗೆ ಬರತಾರ ಮನೋಹರಿ | ನಮ್ಮ ಮರತುಜಾ ಖಾದರಿ || ೫ ||

ಇ|| ಕೇಳಿ ಗಂಡನ ಮಾತ ಪತಿವ್ರತಾ ಆದಾಳ ಗಾಬರಿ
ಬಡತಾನ ಐತಿ ನಮ್ಮದು ಭಾರಿ | ತಿನ್ನಲಾಕೆ ಜ್ವಾಳಾ ಇಲ್ಲ ಸೆರಿ |
ಏರು|| ಸತಿ ಪತಿ ಚಿಂತಿ ಇಲ್ಲ ಗತಿ
ಚ್ಯಾಲಿ|| ಅಷ್ಟೊತ್ತಿಗೆ ಔತಣ ಹೊತ್ತ ಮೀರಿ ಹೋದೀತು
ಅಂತ್ರ ದೃಷ್ಟಿ ಕುಂತ್ರ ಸ್ವಾಮಿಗೆ ತಂತ್ರ ತಿಳಿದೀತು.
ಇಲ್ಲ ಅಡಗಿ ಬರೇ ಗಡಗಿ ಎಲ್ಲ ಕಂಡೀತು.
ಕರುಣವಂತ ಶರಣಾ ಬೇಕಂತಾ | ತಾವೇ ನಡಕೊಂತಾ |
ಸಂಗತಿಲೆ ಭಕ್ತಜನಾ ಐತ್ರಿ | ಬಂದಾರೆ | ಮರತುಜಾ ಖಾದರಿ || ೬ ||

ಇ|| ಬಂದ ಬಡವನ ಮನಿಗೆ ಕುಂತಾರ | ಮರತುಜಾ ಖಾದರಿ
ಸತಿಗೆ ಹುಟ್ಟೀತ ಥರಥರಿ | ನೋಡತಾಳ ತನ್ನ ಗಂಡನ ಮಾರಿ
ಏರು|| ಖ್ಯಾಲಾ ಮನಿಯೆಲ್ಲಾ ನೋಡ್ಯಾಳಲ್ಲಾ ಏನು ಇದ್ದಿಲ್ಲಾ
ಚ್ಯಾಲಿ|| ಅಬರು ಹೋಗಿ ಜೀವಾ ನಂದು ಇಟ್ಟೇನು ಫಲಾ
ಸತ್ತ ಹೋಗಬೇಕಂತಾಳ ಹಾಕಿಕೊಂಡ ಉರಲಾ
ಚಿಂತಿವೊಳಗ ಜಂತಿಗೆ ಹಗ್ಗ ಹಾಕ್ಯಾಳಲ್ಲಾ ಮತ್ತು ಬಂದಖ್ಯಾಲಾ
ಇಳಿಸ್ಯಾಳ ಅಡಕಲಾ ಹಾತೊರಿ ಕಮಲಾ
ತುಂಬಿದ್ದವು ಅಡಕಲದಾನ ಸ್ವಾರಿ | ಶ್ಯಾಂವಿ ಗುಳಗಿ ತುಪ್ಪ ಸಕ್ಕರಿ || ೭ ||

ಇ|| ಮನ ಸಂತೋಷಾಗಿ ಕರದಾಳ ಗಂಡಗ ನಾರಿ
ತೋರಿಸಿ ಅಷ್ಟು ಸಾಮಗ್ರಿ ಕೊಟ್ಟಾರ ಮರತುಜಾ ಖಾದರಿ
ಏರು|| ಮನಸಾ ಹರಷಾ ಪುರಷಾ ಆಗಿ ಸಂತೋಷಾ
ಚ್ಯಾಲಿ|| ಬಂದ-ಮಂದಿ ಉಂಡ ಸಂತ ಆದರೂ
ಸ್ವಾಮಿ ಶರಣರ ಮಹಿಮೆ ಕಣಗಂಡ ಕಂಡರೂ
ಗಂಡ ಹೆಂಡತಿ ಎದ್ದ ಸ್ವಾಮಿ ಚರಣ ಹಿಡಿದರೂ
ಸ್ವಾಮಿ ಶರಣ ಉಳಿಸೀರಿ ಅಬರೂ ಬೇಡಿಕೊಂಡರೂ
ಇನ್ನು ಮುಕ್ತಿ ಕೊಡಿಸರಿ ಸ್ವಾಮಿ ಮರತುಜಾ ಖಾದರಿ || ೮ ||

ಇ|| ಬಾಗಲಕೋಟಿವೊಳಗ ಲಚಮನಸಿಂಗನ ಶಾಹೀರಿ
ಬಂಗಾರ ಚೀಪ ಗಟ್ಟಿವರಿ ಕಸರ ಬಂದರ ತಗಿಯೋ ಛೀಮಾರಿ
ಏರು|| ಧೀರಾ ಪೀರಾ ದಸ್ತಗೀರಾ ಕರುಣಸಾಗರಾ
ಚ್ಯಾಲಿ|| ಕೆಸುಪೀರ ಗೌಸು ನಾಗುಗ ಲೇಸ ಮಾಡ್ಯಾರೋ
ಪಡಕ | ಬಂದ ಖಡಕ | ವೈರಿ ಹೆಡಕ | ಮುರದಾರೋ
ಮುರುಕ | ನೀ ಅಳಬುರಕ | ನಿನಗೆ ಕೇಳೂದಿಲ್ಲ ಯಾರೂ
ನೀ ನಮ್ಮ ಜೋಡಿ ಬರೂದಿಲ್ಲ ಹೇಡಿ ಪೋಣಿಸಿ ಮೂಗಿನ್ಯಾಗ ಕವಡಿ
ಬೇದಾಡಬ್ಯಾಡೋ ನಿಗನಿಗರಿ ಮುಕಳಾಗ ಜಡೊತೇನಿ ಹಾರಿ.

* * *

೧೫. ಖಾದಿರ ಶ್ಯಾವಲಿಯವರ ಚರಿತ್ರೆ

ಉಲ್ಲಾಸದಿ ಕೇಳಬೇಕರಿ | ದೈವಾ ಇಟ್ಟು ಕರುಣಾ
ತಿಳಿದಷ್ಟು ಶರಣರ ಕಥನಾ ಸಾರುವೆ ಸರ್ವರ ಮುನ್ನಾ
ಏರು|| ಅಲ್ಲಾ ಉದ್ದೀನ ಶಾ ಖಾದರಿಯು ಬಿಟ್ಟರು ಸೈಡೂರನ್ನ
ಬಂದು ಸೇರ‍್ಯಾರೋ ಬಂಕಾಪುರದ ಒಂದು ಆರ‍್ಯಾಣಾ
ಒಂದಿತ್ತು ಬೇವಿನ ಮರವನ ಛಂದದಿ ಅಲ್ಲಿ ಮಾಡ್ಯಾರ ಠಾಣಾ
ಕುಂದದಿ ಮನದಿ ಹಗಲು ಇರುಳು ಮಾಡೂತ ಶಿವನ ಧ್ಯಾನಾ
ಬದಿಯಲ್ಲಿ ಒಬ್ಬ ಗೋಸಾದಿ ಇದ್ದನು ಮಾಡೂತ ಜಾದೂನಾ
ಸಾಧು ನೆನಸೂತಲವನ ಬೋಧವ ಮಾಡೂತಲಿ ವನ
ಇವರು ಇದ್ದರ ನನ್ನ ಆಟವು ನಡೆಯುವುದಿಲ್ಲಣ್ಣಾ
ತಿಳಿದು ಜಾದೂಮಾಡಿ ಕಲ್ಲುಗಳನ್ನು ತಲೆಮ್ಯಾಲೆ ಸುರಿಸೋಣ
ಕಲ್ಲು ಬಡಿಯದೆ ಶರಣಾ ಅಲ್ಲಮನ ಧ್ಯಾನದಿ ಶರಣರು ಸುಮ್ಮನೆ ಕೂಡ್ರೋಣಾ
ಅಲ್ಲೆ ಬಿಟ್ಟು ಗೋಸಾವಿ ಯಾವಲ್ಲೋ ಕಾಣದಾಂಗ ಹೋಗೋಣಾ || ೧ ||

ಜಾಲವು ತಿಳಿಯದೆ ಶರಣಾ ಭಾವಿಯಲ್ಲಿ ದೂಡೋಣಾ
ನಿಲ್ಲದೆ ಗೋಸಾವಿ ಬಂದು ಕೇಳಿದನ ತನ್ನ ಬಂಗಾರ
ನೋಡಿಲ್ಲ ನಾನ ಕಾಣೆನೆನ್ನಲು ಕೇಳಲಿಲ್ಲ ದುಶ್ಮನ್
ಮೂಡನೆ ತಡಿಯೊಂದು ಕ್ಷಣ ಕೊಡತೇನಿ ನಿನ್ನ ಬಂಗಾರದ
ದೊಡ್ಡದೊಂದು ಕಲ್ಲಿನ ಮೇಲೆ ಶರಣರು ಉಗುಳೋಣ
ಉತ್ತಮವಾದ ಬಂಗಾರವಾದೀತು ಕಲ್ಲು ಆಕ್ಷಣಾ
ಶರಣರ ಕೌತುಕವನ್ನು ನೋಡಿ ದುಶ್ಮನ್
ಸತ್ಯ ಶರಣರೆಂದು ತಿಳಿದು ಅವರಿಗೆ ಮಾಡಿದ ವಂದಿನ || ೨ ||

(ಆತುರದಿಂದ ಕುಳಿತು ಕೇಳುವ ಸರ್ವ ಸಭಿಕರೆ ಅಲ್ಲಾ ಉದ್ದೀನ್ ಖಾದ್ರಿಯ ಮಹಿಮಾ ಸುತ್ತಲೂ ಹಬ್ಬುತ್ತಾ ಬಂತು. ಆದರೆ ಅದೇ ಊರಿನಲ್ಲಿ ಹಸನ ಮಿಯಾ ಎಂಬುವನು ಅವರ ಸತ್ಯವನ್ನು ಪರೀಕ್ಷಿಸಿ ಶಿಷ್ಯನಾದನು ಬಳಿಕ ಎಷ್ಟೋ ಜನ ಶಿಷ್ಯರಾದರು. ಆಮೇಲೆ ಗುರುಗಳು ಎಲ್ಲಾ ಶಿಷ್ಯರಿಗೆ ತಮ್ಮ ಬಳಿಗೆ  ಕರೆದು ಹೀಗೆ ಹೇಳುತ್ತಾರೆ. ಎಲೈ ಶಿಷ್ಯರೇ ನನ್ನ ಮರಣವು ಇದೇ ಶುಕ್ರವಾರ ದಿವಸವೆ ಅಂದು ನಾನು ಸ್ವರ್ಗಸ್ಥನಾಗುವೆನು. ನೀವು ನನ್ನ ಸ್ರವಕ್ಕೆ ಮೈ ತೊಳಿಸದೆ ಕಫನ್ ತೊಡಿಸದೆ ದಫನ್ ಮಾಡಿರಿ ಎಂದು ಹೇಳಿ ಶುಕ್ರವಾರ ದಿನದಂದು ಸ್ವರ್ಗಸ್ಥರಾದರು. ಗುರುಗಳು ನಮ್ಮನ್ನು ಬಿಟ್ಟು ಹೋಗುತ್ತಾರೆಂದು ತಿಳಿದು ಎಲ್ಲ ಶಿಷ್ಯರು ಕೂಡಿಕೊಂಡು ದುಃಖಮಾಡುತ್ತಾರೆ).
ಏರು|| ಭುವನ ಬಿಟ್ಟು ಇಂದಿಗೆ ಹೊರಟಾರಿ ಗುರುವೆ
ಇಂದಿಗೆ ನಿಮ್ಮ ಚರಣಾ ನಂದಿಸಿದ ಭಗವಾನಾ
ವಂದನೆ ಮಾಡುವೆನು ಇನ್ನಾರಿಗೆ ಗುರುವೆ
ಒಡೆಯರೆ ಗಂಡಾಂತರ ಮಾಡೆಂದು ಪರಿಹಾರ
ಬೇಡೋಣಿನ್ನ ಯಾರಿಗೆ ಗುರುವೆ | ಹಾಂ | ಹಾಂ |
ಸೇರ‍್ಯಾರು ಬಂದು ಊರಿನ ಜನ ಮಾಡಲಿಕ್ಕೆ ದಫನ
ಮೀರದೆ ಶಿಷ್ಯರು ಗುರುವಚನ ಅರಿಯದೆ ಕೇಳಿದರು ಪಂಡಿತರನ್ನ
ವಿರುದ್ದಾಗುವುದು ಎಂದು ಶಾಸ್ತ್ರಕ್ಕೆ ಸರಿಯಾಗಿ ಮೈತೊಳಿಸಿರಣ್ಣಾ
ಒಡನೆ ಕಫನ್ ತೊಡಸಿ ಒಯ್ದಾರ ಸ್ರವ ಗೋರಿಯ ಬಳಿಕಿನ್ನಾ
ಮಾಡ್ಯಾರ ನಮಾಜ ಕೂಡಿದ ಜನಾ ಇಡಲು ಗೋರಿಯ ಒಳಗೆ
ಹೇಗೆ ದೂಡಬೇಕೆಂದು ಎನ್ನುವುದರೊಳಗ
ಕೂಡಲೆ ಎದ್ದರು ಕೊಡವಿಕೊಂಡು ಶರಣಾ || ೩ ||

ಇ|| ದುಷ್ಟ ಶಿಷ್ಯರೇ ಎಷ್ಟು ಹೇಳಿದರೂ ನಿಮಗೆ
ಭ್ರಷ್ಟಗೆಡಿಸಿದಿರಿ ಕೊಟ್ಟಂತ ವಚನ
ಏರು|| ಒಟ್ಟಾಗಿ ಬಂದಿsರಿ ಹುಗಿಲಿಕ್ಕೆ ನನ್ನ
ಪಟ್ಟಣದಿ ನಿಮಗೆಂದಿಗೂ ದಫನ್ ಆಗಲಾರನೆಂದು ಸಿಟ್ಟೀಲೆ ಶರಣಾ
ಇ|| ಕಿಡಿಕಿಡಿ ಉಗುಳುತ್ತಾ ದುಡುಕಿಲೆ ಹೋಗಿದ್ದು ನೋಡಿದಾರೋ ಜನಾ
ಏರು|| ಕಡು ದುಃಖದಿ ಹಿಡಿದು ಚರಣಾ
ಒಡೆಯರೆ ಕ್ಷಮಾ ಮಾಡಿರಿ ನಮ್ಮ ತಪ್ಪನ್ನಾ
ಒಡನೆ ಬಂತು ಶರಣರಿಗೆ ಕರುಣಾ | ಕೂಡಿ ಶಿಷ್ಯರು ಮನಿಗೆ ಹೋಗೋಣಾ || ೪ ||

ಇ|| ಪ್ರೀತಿಯ ಶಿಷ್ಯಾ ಹುಸೇನಮಿಯಾ ಮಾಡಿದಾನೋ ಒಂದು ಹವನಾ
ಏರು|| ಸತ್ಯಶರಣರು ಹೀಗೆ ಇದ್ದರೆ ಚಿತ್ತಕ್ಕೆ ಬಂದಾಂಗ ಹೋಗುವುದಣ್ಣಾ
ಉತ್ತಮ ಹೆಣ್ಣು ತೆಗೆದು ಲಗ್ನ ಮಾಡಿದರೆತ್ತ ಹೋಗುವರಣ್ಣಾ
ಇ|| ಮಾಡಿ ಮನದಿ ಒಂದಿನ ಶರಣರದು ಹಿಡಿದು ಪಾದವನು
ಏರು|| ಒಡೆಯರೆ ಮಾಡಬೇಕರಿ ಇಚ್ಛಿತಾ ಪೂರ್ಣಾ
ಕೊಡದಲೆ ಭಾಷೆ ಬಿಡೂದಿಲ್ಲ ಚರಣಾ
ಗೂಡತನ ತಿಳಿಯದ ಶರಣಾ ಮಾಡುವೆನೆಂದು ವಚನ ಕೊಡೋಣ || ೫ ||

ಇ|| ಕೇಳರಿ ಶರಣಾ ಪ್ರಯಾಣ ಮಾಡಬೇಕೆಂಬ ಮನ
ಏರು|| ಹಲವು ತರದಿ ಹೇಳ್ಯಾರೋ ಶರಣಾ | ಕೇಳೂತ ಹೊಂಟಾರು ಹುಡುಕೂತ ಹೆಣ್ಣಾ
ಒಲಿದಿರುವುದು ಚುಟಗೇರಿ ಪಟ್ಟಣಾ | ಅಲ್ಲೊಂದು ಇತ್ರಿ ಖಾದ್ರಿ ಮನೆತನಾ
ಇ|| ನೋಡಿ ವರ ಹೆಣ್ಣು ಕೊಡುವೆನೆನ್ನಲು ಬಂದ ಶರಣರನ್ನ
ಏರು|| ಗಾಡಧಿ ಕರೆದೊಯ್ದು ಮಾಡಿ ದರ್ಶನ
ನೋಡಬೇಕರಿ ನಿಮ್ಮ ವಂಶ ಪರೀಕ್ಷೆಯನು
ಒಡನೆ ಕಿತ್ತರೊಂದು ಮೀಸೆ ಕೂದಲವನಾ
ನೋಡದೆ ಬೆಂಕಿಯೊಳಗ ಒಗಿಯೋಣ || ೬ ||

ಇ|| ಕೂದಲು ಸುಡದೆ ಇರಲು ನೋಡಿ ಆ ಹೆಣ್ಣಿನ ಜನ
ಏರು|| ಆಗ ನೋಡಿರಿ ಹೆಣ್ಣಿನ ಜನ ತಮದೊಂದು ಕೂದಲ ಕಿತ್ತರು ಆಕ್ಷಣಾ
ಅದೇ ಬೆಂಕಿಯೊಳಗ ಒಗಿಯೋಣ | ಎರಡು ಬಿದ್ದಾವ ತಳಿಕೆಯನಾ
ಇ|| ಒಂದೇ ಮನೆತನವೆಂದು ಪರಿಮಾಣ ಮಾಡಿ ಕೊಡಲು ಆಕ್ಷಣಾ
ಏರು|| ಚಂದದಿ ಸತಿಗೂಡಿ ಬಂಕಾಪುರನಾ | ಬಂದು ಸೇರ‍್ಯಾರೋ ಸತ್ತುಳ್ಳ ಶರಣಾ
ಮುಂದ ಇರುವುದಿವರ ಚರಿತ್ರೆಯನ | ಒಂದಿಷ್ಟು ಕೊಡರಿ ಸಮ್ಮತಿನ || ೭ ||

ಏರು|| ಶರಣ ಅಲ್ಲಾ ಉದ್ದೀನ ಶಾ ಖಾದ್ರಿಯ ಹೊಟ್ಟೆಯಲಿ
ಮಹ್ಮದ ಹಯ್ಯತನೆಂಬುವ ಹುಟ್ಯಾನು ಬಾಲಾ
ಏರು|| ಮಿರಿ ಮಿರಿ ಮಿಂಚುವ ರೂಪ ಮಿಗಿಲಾ
ಹರನು ತೋರ‍್ಯಾನೊಂದು ಲೀಲಾ | ತರಳ ಹುಟ್ಟಿದ ಐದನೆಯ ದಿವಸದ ಮೇಲಾ
ಹರುಷದಿ ತಾಯಿಯ ಮಲಿಹಾಲ | ಕುಡಿಸಬೇಕೆಂದು ಮಗನಿಗೆ ಮಲಿಗೆ ಹಚ್ಚಾರಲ್ಲಾ
ನೋಡಿ ತಾಯಿಗೆ ಹೇಳುವುದು ಆ ಬಾಲಾ
ಏರು|| ಕುಡಿ ಕುಡಿ ಎಂದು ಮಲಿಹಾಲ ಕುಡಿಸಬೇಡವ್ವ ನನಗ ವಿಫಲಾ || ೮ ||

ಇ|| ಕಡು ಹಸುವು ಆದಾಗ್ಗೆ ನಿನಗೆ ಕರೆಯುವೆ ನಾ
ಒಡನೆ ಬಂದು ಕಡಿಸವ್ವ ಮಲಿಹಾಲಾ
ಒಂದು ಕೋಲಿಯೊಳಗಿನ್ನ ಮಲಗಿಸವ್ವ ಎನಗೆ ಮುನ್ನಾ
ಒಂದು ಮಾತವ್ವ ನಾನಿದ್ದ ಕೋಲಿ ಬಾಗಿಲ ತೆಗೆಯಬೇಡಾ ನೀನಾ
ಹೀಗೆ ಹೇಳುವುದು ಕೇಳಿ ತಾಯಿ ಅಕಲಾ
ನುಡಿದರ ಪತಿಯ ಮುಂದ ಬಾಲನಾಡಿದ ಸಲ್ಲ
ನಡಸೂತ ಇದರಂತೆ ಇದ್ದರಲ್ಲ || ೯ ||

ಏರು|| ಒಂದಿನ ಪ್ರಾತಃಕಾಲ ದಡಲ್ಲೆಂದು ಆತುಗುಲ್ಲಾ
ಚಂದದಿ ತಾಯವ್ವಾ ಬಂದು ಕೋಲಿಯೊಳು ಮೊದಲಾ
ಹುಡುಕಲು ಇದ್ದಿದಿಲ್ಲಾ ಮಲಗಿದ ಬಾಲಾ ಕಂದ ಮಲಗಿದ ಹತ್ತರ
ಗೋರಿಯಂತೆ ಇತ್ತು ಚಂದದಿ ತೋರಿತು ಜನಕೆಲ್ಲಾ
ತಂದೆ ತಾಯಿ ಅಂದರಲ್ಲಾ | ನಿಂದು ತಿಳಿಯದು ಶಿವನಲೀಲಾ
ಇ|| ಕಂದಾ ಕೊಟ್ಟಿದ್ದು ಒಯ್ದಾ ತೋರಿಸಿ ಕಮಲಾ
ಕುಂದದಿ ಕೊಡು ಮತ್ತೊಂದು ಫಲಾ || ೧೦ ||

(ಮಾತು : ಆತುರದಿಂದ ಕೂತು ಕೇಳುವ ಸರ್ವ ಸಭಿಕರೆ ಅಲ್ಲಾ ಉದ್ದೀನ್ ಶಾ ರವರಿಗೆ
ಹುಟ್ಟಿದ ಮಗನು ಮಾಯವಾಗಲು ಪುನಃ ಹರನಿಗೆ ಮೊರೆಯಿಟ್ಟು ಅರಿಕೆ ಮಾಡಲು ಅವರ
ಉದರದಲ್ಲಿ ಅಬ್ದುಲ್ ರಜಾಕ ಶಾ ಖಾದ್ರಿ, ಅಹ್ಮದ ಶಾ ಖಾದ್ರಿ, ಯಾಸೀನ ಶಾ ಖಾದ್ರಿ ಮತ್ತು
ಹಜರತ್ ಫಾತಿಮಾಬಿ, ಹಜರತ್ ಹಲೀಮಾಬಿ ಎಂಬೆರಡು ಹೆಣ್ಣು ಮಕ್ಕಳನ್ನು ಕೊಟ್ಟರು ಹಜರತ್ ಹಲೀಮಾಬಿ ಅವರಿಗೆ ಬಿಜಾಪುರಕ್ಕೆ ಮದುವೆ ಮಾಡಿಕೊಟ್ಟರು ಅಷ್ಟರಲ್ಲಿ ಹಲೀಮಾಬಿ ಅವರಿಗೆ
ಆರು ತಿಂಗಳು ಗರ್ಭವಿತ್ತು ಇವರ ತಂದೆ ತಾಯಿಗಳ ಮರಣದ ಸುದ್ದಿ ಕೇಳಿ ಬಂಕಾಪುರಕ್ಕೆ
ಬಂದರು ಮುಂದೆ…)
ಕುಂದದಿ ನವಮಾಸ ತುಂಬಿ ಬ್ಯಾನಿ ಎದ್ದಾವು ಒಂದಿನಾ |
ಚಂದದಿ ಕೂಸು ಆಗಲು ಜನನ | ಹಿಂದಕ ತಾಯಿ ಬಿದ್ದು ಹೊಂದ್ಯಾಳೋ ಮರಣಾ
ನೋಡಿ ಮನ ಅಬ್ದುಲ್ ರಜಾಕ್ ಮುಂದ ಗತಿಯೇನಾ ಎಂದು
ಎತ್ತಿ ಕಂದನ್ನಾ ಒಂದು ತೆಗ್ಗಿನೊಳು ಅದನ ಒಗಿದಾರಣ್ಣಾ
ಸತ್ತು ಬಕ್ಕಳು ಆದಾವು ಇಂದಿಗೆ ಮೂರು ದಿನಾ
ಏರು|| ಫಾತಿಮಾ ಮಾಡತಾರೋ ರೋಧನಾ |
ಹಿತ್ತಲದೊಳಗ ಹೋದಾರಣ್ಣಾ
ಸೀತಾಪರಿಯ ಗಿಡದ ಬುಡದಲ್ಲಿ ಆಡುವ ರತನಾ
ಒತ್ತರದಿ ಹೋಗಿ ನೋಡೋಣ || ೧೧ ||

ಇ|| ಪ್ರೀತೀಲೆ ಆಡುವ ಕಂದನ್ನಾ
ಓಡುತ ಬಂದು ಹೇಳ್ಯಾಳೋ ಅಣ್ಣ ತಮ್ಮರ ಮುಂದಿನ್ನಾ
ಏರು|| ಮಡಿದು ಹೋಗಲೆಂದು ಒಗೆದ ಕೂಸನ್ನಾ
ಕುಡದಲಿ ಮರಣ ಉಳಿಸಿದಿ ಪ್ರಾಣಾ
ಮೃಡನೆ ನಿಂದು ತಿಳಿಯದು ಯಾರಿಗೆ ಮಹಿಮಾವನ್ನ
ಕಂದಗ ಮಾಡಲಿಕ್ಕೆ ಜೋಪಾನ ಗೌಡರಿಗೆ ಕರಿಶ್ಯಾರಾಕ್ಷಣಾ || ೧೨ ||

ಇ|| ಯಾರ ಮಲಿಗೆ ಹಚ್ಚಲು ಕೂಸು ಕುಡಿಯದೆ ಹಾಲನ್ನಾ
ಏರು|| ಪರಿಪರಿಯಿಂದ ನೋಡ್ಯಾರೋ ಜನಾ
ಬೋರ‍್ಯಾಡಿ ಕೂಸು ಅಳುವುದಣ್ಣಾ
ತರಳನ ಸೋದರಮಾವ ಅಬ್ದುಲ್ ರಜಾಕನಾ
ತ್ವರಿತದಿ ಎತ್ತಿ ಕಂದನ್ನಾತಿರುಗೂತ ಮಾಡೂತ ಸಮಾಧಾನ
ಆಡಿಸುತ ಎದಿಗೆ ಹಚ್ಚಲು ಕೂಸು ಆಕ್ಷಣಾ
ಏರು|| ಒಡನೆ ಪಿಡಿದು ಮಾವನ ಮಲಿಯನ || ೧೩ ||

ಗಟಗಟ ಕುಡಿಯಿತು ಹಾಲನ್ನ | ಒಡಲು ತುಂಬಿ ಹರುಷದಿ ಆಡುವುದಣ್ಣಾ
ನೋಡಿ ಕೌತುಕ ಜನ ಮಾಡ್ಯಾರೋ ಕಂದನ ವರುಣಾ
ಹಜರತ ಶಾ ಖಾದ್ರಿ ಎಂದು ಇಟ್ಟಾರು ಹೆಸರನ್ನಾ
ಮೋಜಿಲಿ ಕುಡಿಯೂತ ಮಾವನ ಮಲಿಯನ್ನಾ
ಸೋಜಿಗದಿ ಬೆಳೆದರು ಸುಗುಣಾ
ಬಿಜಾಪುರಕ್ಕೆ ಬಂದರು ಖಾದರಿ ಮುಂದಿನ ಕಥನಾ
ಸಹಜ ಕೊಡರಿ ಸುಮ್ಮತಿನಾ ರಾಜದಿ ಕಾಗಿನೆಲ್ಲಿ ವಾಹಿನಾ || ೧೪ ||

* * *

೧೬. ಮೆಹಬೂಬರು ಜೀವದಾನ ಮಾಡಿದ ಪದಾ

ಚಂದದಿಂದ ದೈವಕ ಮಾಡುವೆ ಶರಣಾ
ತುಸು ಕಂದನ ಮ್ಯಾಲೆ ಇಡಬೇಕ ಕರುಣಾ ||
ಏರು|| ದೀರ ಪೀರಾನೆ ಪೀರ ದಸ್ತಗೀರ ಮೈಬೂಬ ಅನಿಸ್ಯಾರು
ಭಕ್ತಿಪಾಲಕ ಮುಕ್ತಿದಾಯಕ ಸತ್ಯವಂತ ಶರಣರು
ಕೊಟ್ಟ ವರಗಳ ಹುಟ್ಟಿಸಿದ ಸೃಷ್ಟಿಕರ್ತ ಸದ್ಗುರು
ಬರದ ನಾಲಿಗೆ ಮ್ಯಾಲ ಸರೂ ಸಂಪೂರಣಾ || ೧ ||

ಚ್ಯಾಲ|| ಬಂದ ಪಾದಕ ಬಿದ್ದ ಭಕ್ತನ ಮನಸ್ವಂತ ಶಾಂತ
ಮಾಡಿಸಿ ಕಳಿಸುವರೋ ಸತ್ಯವಾನಾ||
ಏರು|| ಕಿವುಡಗ ಕಿವಿ, ಕುರುಡಗ ಕಣ್ಣು ಮೂಕಗ ಮಾತಾಡಿಸಿ
ಹುಟ್ಟು ಬಂಜಿಗೆ ಕೊಟ್ಟು ಫಲಗಳ ಎತ್ತಿ ಇಳುವಿ ಅಡಿಸಿ
ಶಾಂತ ಪಡಿಸ್ಯಾರ ಸತ್ಯವಂತ ಗಂಡ ಹೆಂಡತಿನ ಕೂಡಿಸಿ
ಬಾಯಿ ಸಾಲದು ಮಾಡಲಿಕ್ಕೆ ವರಣನಾ || ೨ ||

ಚ್ಯಾಲ|| ಶಹರ ಬಗದಾದಲ್ಲೆ ಇರುವ ಠಿಕಾಣಾ
ಮೈಬೂಬ ಸುಬಹಾನ ಅನ್ನೊ ಸಣ್ಣ ಪುತ್ರ ರತನಾ||
ಏರು|| ಮಡಿ ಹುಡಿಯಿಂದ ಹೆಸರಗೊಂಡರ ಜನ್ಮ ಆಗೂದ ಪಾವನಾ
ಮೈಲಿಗೆ ಮುಡಚಟ್ಟ ನಡೂದಿಲ್ಲಾ ಕಷ್ಟ ಬಿಡಲಾರದು ಮನಾ|
ಅವರ ಗುಮಜದ ಮ್ಯಾಲೆ ಪಕ್ಷಿ ಹಾರೋದಿಲ್ಲಾ ಇಂದಿನ ತನಾ
ಸುಳ್ಳ ಅಂದೀ ಶಾಹೀರ ಕಿತ್ತೇನೋ ಕಣ್ಣಾ || ೩ ||

ಚ್ಯಾಲ|| ಸೇಲ ಮಾಡುತ್ತ ಶರಣರು ಒಂದು ದಿನಾ
ಹವಾಸಿರಿ ಹೊಂಟಾರೋ ಹೊಳಿ ದಂಡಿತನಾ||
ಏರು|| ಒಂದ ಮುದುಕಿ ಬಂದ್ಲು ತುಂಬಿ ನೀರು ಕೊಡದಲ್ಲಿ
ಹೊತ್ತ ಕೊಡ ಅತಿಗೂಂತ ಬರತಿದ್ಲು ಸ್ವತಃ ನೋಡಿ ದಸ್ತಗೀರವಲಿ
ಕರೆದು ಮುದುಕಿಗೆ ತರಬಿ ಕೇಳತಾರ ಒಡೆದು ಹೇಳ ನಿನ್ನ ಬಾಯಿಯಲಿ
ದುಃಖ ಯಾಕ ಮಾಡತೀದಿ ಏನ ಕಾರಣಾ || ೪ ||

ಚ್ಯಾಲ|| ಮುದಕಿ ಹೇಳ್ಯಾಳೊ ಶರಣರಿಗೆ ಅದೃಷ್ಟಹೀನ ಗೋಳಬಾಳ
ನಂದೈತರಿ ಹೇಳಲೇನಾ||
ಏರು|| ನನ್ನ ಹೊಟ್ಟೆಲಿ ಇತ್ತೊಂದಾ ಮುತ್ತಿನಂಥ ರತನಾ
ಅವನ ಮದುವಿಗೆ ಕಳಿಸಿದೆ ನಾ ಕೂಡಿ ಬೀಗರ ಬಿಜ್ಜರಾ
ಕಾರ್ಯ ತೀರಿಸಿ ಬರುವಾಗ ನಂದಿಯು ಬಂದೀತು ಭರಪೂರಾ
ಮುಳುಗಿ ಹರಗೋಲಾ ಸತ್ತಾರ ಮುನಿದು ಭಗವಾನಾ || ೫ ||

ಸತ್ತು ಹನ್ನೆರಡು ವರ್ಷವಾಯಿತು ಒಂದೇ ಸವನಾ
ಅತ್ತು ಅತ್ತು ಮಂಜು ಆಗ್ಯಾವೋ ಕಣ್ಣಾ | ಇಲ್ಲೋ ತ್ರಾಣಾ
ಏರು|| ಬೀಗ ಬಿಜ್ಜರು ನೀಗಿ ಹೋದರು ಮುಳುಗಿ ನೀರಾಗ
ಮಗಾ ಸೊಸಿ ಚಿಕ್ಕಮಕ್ಕಳಿಗಿಕ್ಕಿ ಆದೆ ದಿಕ್ಕಿಲ್ಲದ ಪರದೇಶಿ
ನದಿ ನೀರಿನ ಹಾದಿ ಹಿಡಿದರೆ ಎದಿ ಹಾರೂದು ಡಬಕಾಸಿ
ನೆಪ್ಪ ಆಗತೈತಿ ಗಪ್ಪನೆ ನನಗೆ ಇಲ್ಲಿ ಬರೂದರೊಳಗ || ೬ ||

ಚ್ಯಾಲ|| ಕೇಳಿ ಬಡವಿ ಮುದುಕಿದು ಎಲ್ಲ ವರ್ತಮಾನಾ
ದಯಾವಂತ ಶರಣರಿಗೆ ಆಗಬಂತೋ ಕರುಣಾ
ಏರು|| ಸರಜಸ್ವಾಮಿ ಅರಜ ಮಡ್ಯಾರೋ ಶಿವನ ಕಡಿಗೆ ಧ್ಯಾನಿಸಿ
ಕಳಿಸಿ ಕೊಡಬೇಕ ಮುದುಕಿ ಬಳಗಕ ಜೀವಕಳೆ ತುಂಬಿಸಿ
ಅಂದ್ರ ಮುದುಕಿಗೆ ನಿಂದ್ರ ಸ್ವಲ್ಪು ಬಂದ್ರ ನಿನ್ನ ಮಗ ಸೊಸಿ ||
ಬೀದ ಬಿಜ್ಜರು ಬರತಾರ ಹಿಡಿ ಸಮಾಧಾನಾ || ೭ ||

ಚ್ಯಾಲ|| ಮುದುಕಿ ತೆಲಿಮ್ಯಾಲಿನ ಬಿಂದಿಗಿ ಇಳಿಸಿ
ಸುತ್ತಮುತ್ತ ಕಣ್ಣು ತೆರೆದು ನೋಡ್ಯಾಳ |
ಎಲ್ಲಿದ್ದಾರೋ ಸ್ವಾಮಿ ಕಾಣವಲ್ಲರೋ ನನ್ನ ಬಳಗ |
ಏರು|| ಅಲ್ಲ ನೀವು ಹೀಂಗ ಸುಳ್ಳ ಹೇಳಿ ಕಲ್ಲಮನಸ ಮಾಡುವುದು
ಬೆಂಕಿ ಮ್ಯಾಲೆ ಹುಲ್ಲು ಒಗೆದಂಗ ಕಿಚ್ಚು ಹೊಟ್ಯಾಗ ಏಳುವುದು
ಕೆಟ್ಟ ನನ್ನ ಅದೃಷ್ಟ ಚಲೋದಲ್ಲ ಕಷ್ಟ ಹತ್ತಿತು ಬೆನ್ನಿನಿಂದ |
ದುಃಖ ಶೋಕ ತಪ್ಪದು ನನಗ ಸಾವುತನಾ || ೮ ||

ಚ್ಯಾಲ|| ಎರಡನೆ ಸರತಿ ಸಾಂಬಗ ವರದಿ ಕೊಟ್ಟಾರ ಶರಣಾ
ಜಲ್ದಿ ಕಳಿಸಿ ಕೊಡಬೇಕ ಯಾಕ ಅನುಮಾನಾ |
ಏರು|| ಸ್ವಂತ ಆ ಭಗವಂತ ಮೈಬೂಬನ ಮಾತ ಮನಸಿಗೆ ತಂದನು
ಜೀವದೊಳು ಜೀವ ತುಂಬಿಸಿ ಸರುವ ಮಂದೀನ ಕಳಿಸ್ಯಾನೋ
ಬೀದರು ಬಿಜ್ಜರು ಚಂದದಿಂದ ಬಂದ ಮುದುಕಿಯ ಕಂಡಾರು
ಮುದುಕಿ ಶರಣರ ಪಾದಕ ಎರಗಿ ಮಾಡಿ ವಂದನಾ || ೯ ||

ಚ್ಯಾಲ|| ಸುತ್ಯದೇಶಕ ಗೊತ್ತ ಬಾಗಲಕೋಟಿ ಠಿಕಾಣಾ
ಶಿಸ್ತ ದಸ್ತಗೀರನ ವಸ್ತಿ ಐತಿ ವತನಾ |
ಕೇಸುಪೀರ ಹಿಂಗ ನಾಗು ಗೌಸುಗ
ಏರು|| ತಿಳಿಸಿ ಹೇಳ್ಯಾರ ಹಂಚಿಕೆ |
ರಂಗ ಲಚಮನಸಿಂಗನ ದಯದಿಂದ ಇಲ್ಲ ಹೆದರಿಕೆ
ಡುರುಕಿ ಹೊಡುತಾನ ಪರಕಿ ವೈರಿಗೆ ತಿಕ್ಕತೇನಿ ನೆಲಕ ಹಾಕಿ
ಈತನ ಮುಕಳಿಗೆ ಬಡೂತೇನಿ ಕ್ಯಾಮಂಣ್ಣಾ || ೧೦ ||

* * *

೧೭. ಮೆಹಬೂಬ ಮಕಬೂಲರ ಚಿಣಿಪಣಿಯಾಟ

ಹದಿನಾರು ಸಾವಿರ ಶರಣರೊಳಗ ಶರಣ ಮಿಗಿಲಾ
ಹುಟ್ಟಿದ್ದಾ ತಂದಿ ಹೊಟ್ಟೀಲಿ ಮೆಹಬೂಬ ಪ್ರಭೂಲಾ
ಆತನ ತಾರೀಫಾ ಆಗೇತಿ ಅಪರೂಪಾ ಕುಂತ ಕೇಳರಿ ದೈವಾ
ಚಿತ್ತ ಇಟ್ಟು ಏಕಭಾವಾ | ಸಂತೋಷದಿಂದ ಪಂತರೆಲ್ಲಾ ಮೆಹಬೂಬನ ಮಜಲಾ || ೧ ||

ಮೆಹಬೂಬನ ಕಾಲಕೀರ್ತಿ ಕೇಳಿರಿ ಇನ್ನೂ ಮೇಲಾ
ಹುಚ್ಚಾಗಿ ಮುಚ್ಚೆ ಇಡುವುದಿಲ್ಲೊ ಬಿಚ್ಚಿ ಹೇಳುವೆ ಕುಲ್ಲಾ
ಶಾಸ್ತ್ರದ ಮಾರ್ಗ ಹಿಡಿದು ಹೇಳುವೆ ಜನದಾಗ ಒಡೆದು ವಹವ್ವಾರೆ ಗೌಸಾಲಿ
ಮಿಕ್ಕಿ ತಾ ಚಿಕ್ಕ ಪ್ರಾಯದಲ್ಲಿ | ಮೆಹಬೂಬ ತನ್ನ ಸತ್ಯ ತೋರಿದಂತಾ ಮಜಲಾ || ೨ ||

ಐದಾರು ವರ್ಷದ ಕಂದಾ ತೀರ ಸಣ್ಣ ಬಾಲಾ
ಶೆಡವಿಲಿಂದ ಮೆಹಬೂಬರಿನ್ನು ಕುಡಿಯುತಿದ್ರೋ ಹಾಲಾ
ಆತನ ವರಣಾ ಸೂರ್ಯನ ಕಿರಣಾ ಹೊಳೆದಂಗ ಥಳಾಥಳಾ
ಮಾರಿ ನೋಡಿದರೆ ಚಿನ್ನದರಳಾ | ಕಂದನಾ ನೋಡಿದರೆ ವಿಚಿತ್ರದ ಕಮಲಾ || ೩ ||

ಸಣ್ಣ ಸಣ್ಣ ಹುಡುಗರ ಸಂಗತೀಲೆ ಆಡುವರೋ ಹಗಲೆಲ್ಲಾ
ಸಂಗತಿಲೆ ಬಡವನ ಮಗ ಒಬ್ಬ ಇರೂತಿದ್ದ ಮಕಬೂಲಾ
ಬಗದಾದ ಪಟ್ಟಣದಲ್ಲಿ ಇಬ್ಬರೂ ಜೋಡಿಲಿ
ಸೂರ್ಯಚಂದ್ರನಾಂಗ ಪ್ರೀತೀಲೆ ಇದ್ದರೋ
ಇದ್ದಂಗ ಒಂದಿನಾ ಚಿಣಿಮಣಿಯ ಆಟಾ ಹೂಡ್ಯಾರೋ ಮಿಗಿಲಾ || ೪ ||

ಅಂಜಿಕಿ ಇಲ್ಲೊ ಸಂಜೀತನಾ ಆಡ್ಯಾರೋ ಖುಷಿಯಾಲಾ
ಮೆಹಬೂಬನ ಆಟ ಏರಿತೋ ಮಕಬೂಲನ ಮೇಲಾ
ಮಕಬೂಲನ ತಾಯಿ ಬಂದು ಮಾಡ್ಯಾಳೋ ಬಾಯಿ ಆಟ ಬಿಡೋ ಕಂದಾ
ಊಟಕ ಮನಿಗೆ ನಡಿಯೋ ಕಂದಾ
ಮಕಬೂಲ ಅಂತಾನೋ ತಾಯಿ ನನಗ ಹಸುವಿಲ್ಲಾ || ೫ ||

ಮಕಬೂಲನ ತಾಯಿ ಕಲಾ ಕಲಾ ಮಾಡ್ಯಾಳೋ ಗುಲ್ಲಾ
ಹೊತ್ತೆಲ್ಲಾ ತೀರಾ ಮುಳುಗಿ ಆದೀತೋ ಕತ್ತಲಾ
ಹಸುಹ್ಯಾಂಗ ಇಲ್ಲೊ ನಿನಗ ಕರದಾಳೋ ತನ್ನ ಮಗ್ಗಾ
ಅಂತಾನೋ ಮೆಹಬೂಬಾ ಮುಂಗೈ ಹಿಡಿದಾನೋ ಜಿಗದಾ
ಬಾ ನನ್ನಾಟ ಕೊಡುವತನಕ ನಿಮ್ಮ ಅಪ್ಪಗ ಬಿಡುದಿಲ್ಲೊ || ೬ ||

ಹಸುವಾದ ತುಸು ಹೊತ್ತಿಗೆ ಅಂತಾನೋ ಮಕಬೂಲಾ
ಕೈಬಿಡೋ ಮೆಹಬೂಬ ನಿನಗ ಬೀಳತೇನಿ ಕಾಲಾ
ನಾಳಿಗೆ ನಾನು ಬಂದು ಕೊಡತೇನಿ ಆಟಾ ನಿಂದು ಹೇಳತೇನಿ ಖುಲ್ಲಾ |
ನನ್ನ ಮೇಲೆ ಇರಲಿ ಹಂಬಲಾ ರಾತ್ರಿಗೆ ಎದ್ದರೆ ಮತ್ತೆ ಅದೇ ಆಟದ ಖ್ಯಾಲಾ || ೭ ||

ಮೆಹಬೂಬ ಅಂತಾನೋ ತಮ್ಮಾ ನಿಂದು ಭರವಸೆ ಇಲ್ಲಾ
ಬೆಳಗಾಗ ಬರತೇನಂತ ಭಾಷೆ ಕೊಡು ಮೊದಲಾ
ಮಕಬೂಲಾ ಮನಸೋಸಿ ನೀತಿಲಿ ಕೊಟ್ಟನೋ ಭಾಷೆ
ಕೈ ಮೇಲೆ ಕೈ ಹಾಕಿದ ಮಕಬೂಲ ಮನಿಗೆ ನಡದನಲ್ಲಾ
ಕಾಳಾಗಿ ಕಂದಗ ಮರಣ ಹತ್ತಿತೋ ಹಿಂಬಾಲಾ || ೮ ||

ಐದಾರು ತಾಸು ರಾತ್ರಿಗೆ ಮೀರಿತೋ ಅಮಲಾ
ಮಕಬೂಲನ ಏಕಾಏಕಿ ಹಾರಿಹೋಯಿತೋ ಉಸರಾ
ಅಳತಾರೋ ತಾಯಿ ತಂದಿ ಬಡಕೊಂಡು ಎದಿ ಎದಿ
ಸಾಂಬ ಮಾಡಿದ ಘಾತ ಕಾಜಿನಾ ಕಂಬಾ ಹೊಡೆದಂಗ
ವ್ಯರ್ಥ ಮಾಡಿದ್ದೊ ಮಹಾದೇವನ ಮಗ ಎಂಥಾ ಕೆಡಕಾ || ೯ ||

ಮೆಹಬೂಬ ಸತ್ತ ಸುದ್ದಿ ಮೆಹಬೂಬಗ ಠಾವಿಕಿಲ್ಲಾ
ಬೆಳಗಾಗಿ ಎದ್ದರೊ ವ್ಯಸನಾ ಅದೇ ಆಟದ ಖ್ಯಾಲಾ
ಎದ್ವಾರೋ ತಾಸೊತ್ತೇರಿ ಹೊಂಟಾನೊ ಬಿರಿ ಬಿರಿ ಮಕಬೂಲ ಮನಿತನಾ
ಮಕಬೂಲಗ ಆಟಕ ಕರಿಲಾಕ ಅವನಾ
ಮಕಬೂಲನ ಮನಿಯಾಗ ಮಂದಿ ನೆರೆದಿತ್ತೊ ಗದ್ದಲಾ || ೧೦ ||

ಸರ್ವಸಾಹಿತ್ಯ ಮಾಡ್ಯಾರೋ ಮಕಬೂಲಗ ತಂದು
ಮಂಚದ ಮೇಲೆ ಮಲಗಿದ್ದ ನೋಡಿ ಅಳತಾರ ಸರ್ವಮಂದಿ ಎಲ್ಲಾ
ಅಂತಾರೋ ನಾಲ್ಕುಮಂದಿ ಬಿಟ್ಟು ಹೋಗತಾನೋ ತಂದೆತಾಯಿಗೆ ಮಕಬೂಲಾ
ಕಲ್ಮಾ ಅಂದ್ರೋ ರಸೂಲಿಲ್ಲಾ
ತರಿಬ್ಯಾನೋ ಮೆಹಬೂಬ ನಂದು ಆಟಾ ಬಿಡೂದಿಲ್ಲಾ || ೧೧ ||

ಮಕಬೂಲಾ ಸತ್ತಾವ ಉಳದಾ ಏನ ಭಯಾವಿಲ್ಲಾ
ಬಂದೀನಿ ಮೆಹಬೂಬ ನಿಂದು ಆಟಾ ಮರಿಯುದಿಲ್ಲಾ
ಇಬ್ಬರು ಗೆಳೆಯರಾ ಆಟದ ಜುಮ್ಮರಾ ಆಟಕೊಟ್ಟನಲ್ಲಾ
ಬಾಕಿ ಏನೇನು ಉಳಿಯಲಿಲ್ಲಾ |
ಕೈಮುಗಿದು ಬೇಡಿಕೊಂಡರೊ ಸರ್ವಮಂದಿಯೆಲ್ಲಾ || ೧೨ ||

ಸತ್ತವಗ ಎಬಿಸ್ಯಾರೊ ಮೆಹಬೂಬಗ ಕಂಡಾರೋ ದೈವೆಲ್ಲಾ
ಆಗ್ಯಾರೊ ಶಿಷ್ಯಾರು ಆತನ ಸೇವಾ ಮಾಡಿದರಲ್ಲಾ
ಶ್ಯಾರ ಬಾಗಲಕೋಟಿ ಊರ ಹಾದೋ ಮೋಜಿನ ಪ್ಯಾಟಿ
ಪೀರ ಮಲ್ಲೇಕಲ್ಲ ಭಕ್ತಿಲಿಂದ ಹೋಗಿ ಹಿಡಿಯೋ ಕಾಲಾ
ಹುಸೇನ ಮಿಯ್ಯಾನ ಹಾಡಕಿ ಚಂದಾ ಕುಣಿದಾಂಗ ನವಲಾ || ೧೩ ||

* * *

೧೮. ಅಡ್ನೂರ ಸಾಹೇಬರ ಪದಾ

ಇದು ಒಂದ ಸಂದ ಕೇಳರಿ ಮುಂದ ಅಡ್ನೂರ ಸಾಯಿಬಂದಾ
ಸ್ವಾಮಿ ರಾಮದುರ್ಗಕ ನೇಮಿಸಿ ಇಳಿದಾರೋ ಸ್ವರ್ಗಸ್ಥಳದಿಂದಾ || ಪಲ್ಲವಿ ||

ಇ|| ಸರ್ಪಿನ ಪಾವುಡ ಶಿರಸಕ ಸುತ್ಯಾರೋ ಸರ್ವೆಸಾಹಿಬಂದಾ
ಛತ್ತಿಸಕೊಟಿ ದೇವ ದೇವತ್ಯಾರು ಬೆನ್ನ ಹತ್ಯಾರಿಂದಾ
ಪಡಕೋಟ್ಯಾಗ ಪಾಯಾ ಹಾಕ್ಯಾರೋ ಕೀಳದಾಂಗ ಎಂದೆಂದಾ
ರಾಮದುರ್ಗದಾಗ ಸದರಿನ ಮೇಲೆ ಶಿವ ಇಳಿದಾನೋ ಬಂದಾ
ಸ್ವಾಮಿ ಬಂದಾನಲ್ಲಿ ಬೈಲಿ ಮಾಡಿದರೂ ಬಾಳ ಸಾಯಿ ಬಂದಾ
ಏರು|| ಒಮ್ಮನರಾವ ಎರಿಗ್ಯಾನ ಪಾದಕ ಸ್ವಾಮಿ ಭಕ್ತಿಲಿಂದಾ
ಸ್ವಾಮಿಪಾದಕ ಸಲ್ಲಿತೊ ಭಕ್ತಿ ಒಮ್ಮನರಾವಂದಾ
ಪಾದದೊಳಗಿನ ಹುಣ್ಣು ಪರಿಹಾರ ಮಾಡ್ಯಾನು ಸ್ವಾಮಿ ಬೂದಿಲಿಂದಾ || ೧ ||

ಇ|| ಮುನ್ನಾರಾರವತ್ತು ರೋಗ ಅಳಿತಾರೋ ಸ್ವಾಮಿ ಬೂದಿಲಿಂದಾ
ಸ್ವಾಮಿ ಕೈಲಾಕ ದೆವ್ವಿನ ಕಾಲಾಗ ತಿಳಿದಾರೋ ಭೂತಗಳೊಂದೊಂದಾ
ಗಿರಿಯ ಮೇಲೆ ಭಟ್ಟಂಗಿ ಹಾರಿತೊ ಸ್ವಾಮಿ ಹೆಸರಿಲಿಂದಾ
ಇಷ್ಟು ದೆವ್ವಿನ ಮೇಲೆ ಸರದಾರ ಇಬಲೀಸ ಹಿಡಿತಂದಾ ಹಾಂ
ಕೈಲಾಕ ದೆವ್ವಿನ ಕಾಲಾಗ ತುಳಿದಾರೋ ಭೂತಗಳೊಂದೊಂದಾ
ಏರು|| ಬಂದ ಭಕ್ತರಿಗೆ ಮುಂದಕ ಕರಿದಾರೋ ಗುರುಮಾರ್ಗದಿಂದಾ
ಸ್ವಾಮಿ ಹಸ್ತ ಎತ್ತಿ ಹಣ್ಣು ಕಾಯಿ ಕೊಟ್ಟಾರೋ ಕಾರೀಕ ಉಡಿಯೆಂದಾ
ಬಹುಮಂದಿ ಬಾಲ್ಯಾರ ಬಂಜಿತನ ಹಿಂಗಿತು ಸ್ವಾಮಿ ಕಾರೀಕ ತಿಂದಾ || ೨ ||

ಇ|| ಮುಂದಿನ ವರ್ಷಕ ಕಂದನ ಎತ್ತಿಕೊಂಡು ಬಂದ್ರೋ ಹರುಷದಿಂದಾ
ಗುಡಿಯ ಮುಂದ ಜಡಿ ಇಳಿಸ್ಯಾರೋ ಹರಕಿ ಮುಟ್ಟಿತೋ ನಿಂದಾ
ಶಿರಸಂಗಿ ಎಂಬುದು ಶ್ರೀರಂಗಪಟ್ಟಣ ಆಗುದೈತ್ರಿ ಮುಂದಾ
ಸ್ವಾಮಿ ಸಾಧು ಸಂತರ ಪಾದ ಬಿದ್ದಿತೋ ಊರ ಒಳಗ ಬಂದಾ
ಏರು|| ಹುಬ್ಬಳ್ಳಿ ದೇಶಕ ಹೊಂಟಿತೋ ಸವಾರಿ ಜಾತ್ರಿ ಆರೂಢಂದಾ
ಆಗ ಗಾಡಿಗೆ ಯೋಗಿ ಹತ್ಯಾರೋ ಹತ್ತು ಪ್ರೀತಿಲಿಂದಾ
ಹಾಸಿಲು ಕೊಟ್ಟು ಹತ್ತರಿಗಾಡಿ ನುಗಸಿಕೊಟ್ಟಾರೋ ಇಂದಾ || ೩ ||

ಇ|| ಹಾಸಿಲಕೊಟ್ಟು ಸ್ವಾಮಿ ತಗೊಂಡ ಸರಪೀಟ ಸಾಯಿಬಂದಾ
ಪಾದಾನಿಟ್ಟು ಬೇಗ ಹತ್ತಿದಾರೋ ಗಾಡಿ ಸಾಗಿತೋ ಮುಂದಾ
ಹೋಗು ಗಾಡಿಗೆ ಯೋಗಿ ನಿಲ್ಲಿಸ್ಯಾರೋ ಸತ್ಯದ ಬಲದಿಂದಾ
ಅಣ್ಣಿಗೇರಿ ದುಂದೂರ ನಡುವೆ ಗಾಡಿ ಆತೋ ಬಂದಾ
ಏರು|| ಗೋರಬಿಟ್ಟು ಮಾಡಿತಾರ ಬಡಿದಾರೊ ಕಲಕತ್ತಾಕ ಮುಂದಾ |
ಸ್ವಾಮಿ ಉದೇಹಾವುದರಾಗ ಹುಕುಮ ಬಂದಿತೋ ಕಲಕತ್ತಾಲಿಂದಾ
ಅಪ್ಪತಪ್ಪ ಅಪರಾಧ ಮಾಡರಿ ಮಾಫ ತಪ್ಪಾದೀತು ನಂದಾ
ಗಲ್ಲ ಗಲ್ಲ ಬಡಕೊಂತಾನೋ ಸಾಹೇಬ ಸ್ವಾಮಿ ಮುಂದಾ || ೪ ||

ಇ|| ಗಾಡ್ಯಾನ ಜನರು ನೋಡಿ ನಗತಾರೋ ಯವಸ್ದಾ ಸಾಹೇಬಂದಾ
ಹುಚ್ಚ ಫಕೀರನ ಮುಚ್ಚೀದ ಕಣ್ಣು ತೆರಿವಲ್ಲ ತಂದಾ
ಸ್ವಾಮಿ ಪಾದಕ ಬಿದ್ದು ಸಾಹೇಬ ಉಳುತಾನ ದಿಂಡರಕಿಯ ಮುಂದಾ
ಏಳು ಮಂದು ಕೂಡಿ ವಿಚ್ಯಾರ ಮಾಡ್ಯಾರ ಸರದಾರಗ ಬಂದಾ
ಪುಂಡ ಬೆಳವಲಕ ಮುಂಬಯಿಲಿಂದಾ ಗೌವರ್ನರ ಸಾಹಿಬಂದಾ ||
ಏರು|| ಹಾಂ ವರುಷಕ್ಕೊಮ್ಮೆ ಉರುಸ ಮಾಡತೇನಿ ಕರಣ ಇರಲಿ ನಿಂದಾ
ಬಂದ ಭಕ್ತರಿಗೆ ಮುಂದಕ ಕರಿದಾರೋ ಗುರುಮಾರ್ಗದಿಮದಾ
ಸ್ವಾಮಿ ಅರಿವುಳ್ಳವರಿಗೆ ಅರಿಕಿಯಾದೀತೋ ಗಾಡಿಸಾಗಿತೋ ಮುಂದಾ
ನರೇಗಲ್ಲರಿಗೆ ನಗಿ ಬಂದೀತೋ ತಾರೀಫ ಅಣ್ಣಂದಾ || ೫ ||

ಇ|| ಅಡ್ನೂರ ಉರುಸಿನ ಅರ್ಭಟ ನಡದೈತೋ ನಡರಿ ಹೋಗೂನಂದಾ
ಬಾಯಾನ ಮಾತು ಬಾಯಾಗಿತ್ತರಿ ಪತ್ರ ಮುಟ್ಟಿತೋ ಬಂದಾ
ಮೂಡಲ ಸೀಮಿಗೆ ಮುಕ್ಕಣ್ಣ ಬರತಾನೋ ನೆರೆಗಲ್ಲಿನಿಂದಾ
ಸ್ವಾಮಿ ಅಡ್ನೂರ ಜನರು ಅಡ್ಡಾಗಿ ನಿಂತಾರೋ ನಡುಹಾದಿಗೆ ಬಂದಾ
ಏರು|| ಅಣ್ಣ ತಮ್ಮಗಳ ಬೆಟ್ಟಿ ಆದೀತೋ ಶಿವ ಇಳಿದಾಂಗ ಬಂದಾ
ಶಿವದೂತರು ಸೆರಗೊಡ್ಡಿ ನಿಂತಾರೋ ಹಿಂದಾ ಮುಂದಾ
ಹಾಂ ಬೆಳವಲದೇಶಕ ಬೆಳಕ ಬಿದ್ದೀತೋ ಹಂದರ ಉರಸಿಂದಾ || ೬ ||

ಇ|| ಬಂದ ಭಕ್ತರಿಗೆ ಮುಂದಕ ಕರಿದಾರೋ ಗುರುಮಾರ್ಗದಿಂದಾ
ಸ್ವಾಮಿ ಅರುವುಳ್ಳವರಿಗೆ ಅರಕಿಯಾದೀತೋ ಕಣ್ಣಮುಂದಾ
ಗಂಧ ರಾತ್ರಿ ದಿನ ಮಂದಿ ಕೂಡೈತೋ ಸದಾ ದೇವಿಂದ್ರಂದಾ
ಊದಿನ ಹೊಗಿಯಾಗ ಯೊಗಿ ಕುಂತಾರೋ ಮುಡಪ ಸುರವ್ಯಾರ ಮುಂದಾ
ಕರ್ತನ ಹೆಸರೀಲೆ ಕಾರ್ತಿಕ ಹಚ್ಯಾರೋ ಉರುಸ ಆತೋ ದುಂದಾ ||
ಏರು|| ಉರುಸಿನ ಮರುದಿನ ಕರಿಸಿ ಕೇಳತಾರೋ ಭಕ್ತರ ಬಾಯಿಲಿಂದಾ
ಸ್ವಾಮಿ ಇಂಥಾ ಊಟಾ ಉಂಡಿದಿಲ್ಲಾ ನಾವು ಹುಟ್ಟಿ ಎಂದೆಂದಾ
ಹಾಲುತುಪ್ಪದೊಳು ಕೈಯಾ ತೊಳದೇವು ಸ್ವಾಮಿ ನಿಮ್ಮ ದಯದಿಂದಾ
ಹರಕಿ ಕೊಟ್ಟು ಹಸ್ತ ಇಟ್ಟಾರೋ ಸ್ವಾಮಿ ಎದ್ದು ಬಂದಾ
ನರೇಗಲ್ಲರು ತುರಾಯಿ ಇಟ್ಟಾರೋ ತಲಿಮ್ಯಾಗ ಮೀರಂದಾ || ೭ ||

* * *