. ಮೌಲಾಲಿ ಎತ್ತದ ಪುಟ್ಟಿಯ ಉದ್ದಗಲ ಎಷ್ಟು ?

ಭಕ್ತಿವಂತ ಸರೂ ಜಗತ್ತಕ್ಕೆಲ್ಲಾ ಅವನಂಗ ಭೂಮಿಮ್ಯಾಲೆ ಯಾರ‍್ಯಾರ ಇದ್ದಿಲ್ಲಾ
ಏರು || ನವಖಂಡ ಪೃಥ್ವಿ ಹದಿನಾಲ್ಕು ಆಕಾಶ ಭೂಮಿ
ಮೀರಿ ಆಗಿದ್ದ ಪುಂಡ | ಮೈಯಾಗ ಕಸವಿತ್ತೊ ಬ್ರಹ್ಮಾಂಡ
ಕಂಡರೆ ವೈರಿಗೆ ಕರಕರ ತಿಂತಿದ್ದಾನೋ ಹಲ್ಲಾ || ೧ ||

ಪುಂಡಾದ ದೈತ್ಯರ ದಂಡಿಗೆ ಮಾಡಿ ಮಣ್ಣಿನ ಪಾಲಾ
ಕಂಡ ಕಂಡಲ್ಲೆ ಕಾಳಗ ವೈರಿದು ಅಡಗಿಸಿ ಬಿಟ್ಟಾ ಸೊಲ್ಲಾ
ಏರು || ಬಲವಾನ ಬಲಿಷ್ಟಾ ಜಗತ್ತೇಕ ಶ್ರೇಷ್ಟ
ಮೂಡು ಮುಣುಗುವಲ್ಲಿ ಹೆಚ್ಚಿನ ಹೆಸರಾದ
ದೊಡ್ಡ ದೊಡ್ಡ ಪರ್ವತಗುಡ್ಡಾ ತಿಳಿದಿದ್ದ ಕೂದಲಾ || ೨ ||

ಮೈಯಾಗ ಬಹಳ ಗರ್ವ ಇತ್ತು ಅಂತಾನೋ ಯಾರಿಲ್ಲೋ ಈ ಪೃಥ್ವಿಮ್ಯಾಲಾ
ಮೌಲಾನ ಕಸವೀನ ಮಹಿಮಾ ಕೇಳರಿ ಜನರೆಲ್ಲಾ
ಶಾಸ್ತ್ರಕ ಸರಿಯಾಗಿ ನಿಮಗ ವಡದ ಹೇಳುವೆ ಕುಶಲಾ
ಸ್ವರ್ಗ ಲೋಕದಿಂದ ಶಿವಧೂತ ಇಳಿದು ಬಂದ ಆಗಿ ಮುದುಕಿ ರೂಪ || ೩ ||

ಪ್ಯಾಟ್ಯಾಗ ಕುಂತಿದ್ದ ತದ್ರೂಪ ತುಂಬಿದ್ದ ಪುಟ್ಟಿ ತಗೊಂಡ ಹಸೆ ಟಿಸೆ ಹುಲ್ಲಾ
ಆದಿನ ಸಾಧಿಸಿ ಪ್ಯಾಟ್ಯಾಗ ಬಂದಿದ್ದಾರೋ ಮೌಲಾ
ದಿಟ್ಟಿಸಿ ನೋಡ್ಯಾರ ಕಣ್ಣೀಲೆ ನೆದರ ಎತ್ತಿ ಮೇಲಾ
ಏರು || ಹೊಡದಾಳೋ ಹೊಕಿ ಕರದಾಳೋ ಮುದುಕಿ
ಬಾ ಅಂತ ಮೌಲಾಗ ಪುಟ್ಟಿ ಹೊರಸೋ ತಲಿಮ್ಯಾಗ
ಮುಪ್ಪಿನ ಮುದಕಿ ನನಗ ಮೈಯಾಗ ತ್ರಾಣಿಲ್ಲಾ || ೪ ||

ಹಾತೋರಿ ಹೋಗ್ಯಾರ ಮೌಲಾ | ಕೇಳಿ ಮುದುಕಿ ಸೊಲ್ಲಾ
ಯಾಕ ಹೇಳ ಟೊಂಕ ಬಗ್ಗಿಸಿಕೊಂಡ ಎಷ್ಟಮಾಡತಿ ಗುಲ್ಲಾ
ಏರು || ಹಂತೇಲಿ ಹೋಗಿ ಹಿಡಿದಾರೋ ಪುಟ್ಟಿ ಮೊದಲು ಒಂದು ಕೈಲಿ
ಹೊರಸಬೇಕಂತ ತಲಿಮ್ಯಾಲೆ. ಮ್ಯಾಲಕ ಎಬಿಸ್ಯಾರ ಪುಟ್ಟಿ ನೆಲಬಿಟ್ಟು ಅಗಲಲಿಲ್ಲಾ || ೫ ||

ಹಮ್ಮಿಟ್ಟ ದಮ್ಮದಣಿಯಾಗಿ ಮೊಣಕಾಲಮೇಲೆ ನೆಗವ್ಯಾರೋ ಹುಲ್ಲಿನ ಪುಟ್ಟಿ
ಹೆಚ್ಚಿಗೆ ಕೀಳಲಿಲ್ಲಾ ಬಿಟ್ಟಾರ ಅನ್ನನೀರಾ | ಖಿನ್ನಾಗಿ ಬಾದ್ದೂರಾ
ಮೂರು ನಾಲ್ಕುದಿವಸ ಉಂಡಿಲ್ಲ ಕುಂತಾರ ಉಪವಾಸ
ಮನಿಗೆ ಬಂದ್ರೋ ರಸೂಲಿಲ್ಲಾ ಹೇಳ್ಯಾರ ಸರ್ವ ಹಕೀಕತ || ೬ ||

ಮಾದೇವನ ಲೀಲಾ ತುಂಬಿದ್ದ ಪುಟ್ಯಾಗ ಬಾಕೀದು ಏನೇನ ಉಳಿದಿದ್ದಿಲ್ಲಾ
ಏರು || ಬಂದಿದ್ರೋ ಜುಬರಾಯಿಲಾ ತಂದಿದ್ರೋ ಮುದುಕಿ ಡೋಲಾ
ಏನು ಠಾವಿಕಿ ನಿಮಗ ಇಂಬಾಗಿ ತುಂಬಿದ್ದವು ಪುಟ್ಯಾಗ
ಆಕಾಶ ಭೂಮಿ ವಿಶೇಷಗಳು ಮೇರು ಮಂಡಲಾ || ೭ ||

ನಬಿಸಾಹೇಬ ಬಾಯಿಲೆ ಕೇಳಿ ಕುಶಿ ಆಗ್ಯಾರ ಮೌಲಾ
ಕಸುವು ಬಂದೀತೋ ಮೈಯಾಗ ಮೊದಲಿನ ನಾಲ್ಕು ಪಾಲಾ
ಏರು || ಕಸುವ ಮಾಡಿ ಮೌಲಾ ಎದ್ದಾರೋ ಮೇಲಾ
ಹದಿನಾಲ್ಕು ಆಕಾಶ ಭೂಮಿ ನಿಮ್ಮಷ್ಟು ಹೆಚ್ಚಿನ ಪರಾಕ್ರಮಿ
ಜನದೊಳು ನಿಮ್ಮ ಹೊರ್ತು ಮತ್ತಾರು ಇಲ್ಲಾ || ೮ ||

ಏಳು ಭೂಮಿ ಏಳು ಆಕಾಶ ಕೂಡಿ ಒಟ್ಟಿಗೆ ಜುಮಲಾ
ಹಾಂಗಿದ್ದ ಚಟ್ಟನೆ ಹೇಳೋ ಪುಟ್ಟಿ ತುಂಬಿದ್ದಿಲ್ಲಾ ||
ಏರು || ಯಾತರ ಪುಟ್ಟಿ ತೋರಿಸೋ ಘಟ್ಟಿ
ನೋಡೂನು ನಿನ್ನ ಅಕಲಾ ಪುಟ್ಟಿ ಇತ್ತೋ ಎಷ್ಟು ಅಡ್ಡಗಲಾ
ಉದ್ದೆಷ್ಟು ಇತ್ತೋ ಹೇಳರಿ ತುರ‍್ತ ತತ್ಕಾಲಾ || ೯ ||

ಜವಾಬೇಳೋ ಗಾಬಾಗಬ್ಯಾಡ ಕಟ್ಟೇನಿ ಕೈಕಾಲಾ
ಎಬಿಸ್ಯಾರೋ ಪುಟ್ಟಿಗೆ ಪೋಲಾ ನಿಂತ ಎದರ ಮೇಲಾ
ಏರು || ಒಂದು ವರುಷದಿನ ಮುದ್ದತ್ತ ಕೊಡತೇನಿ
ಹುಡಿಕ್ಯಾಡಿ ತರಬೇಕು ನಿನಮ್ಯಾಲೆ ಒಗದೇನು ಬಲಿ ಸರಕ್ಕ
ಹದಿನೆಂಟು ಪಾಲ ಗಂಟಲಕ ಹಾಕಿ ಬಿಟ್ಟೀನೋ ಉರಲಾ || ೧೦ ||

ಜವಾಬೇಳೋ ಗಾಬಾಗಬ್ಯಾಡ ಕಿತ್ತೇನೋ ಹಲ್ಲಾ
ಸಾಂಬನ ಮುಂದ  ಜಂಬ ಮಾಡಬ್ಯಾಡ ನಡುವುದಿಲ್ಲಾ
ಏರು || ಪೀರಮಲ್ಲೇಕಲ್ಲಾ ಹಸ್ತಿಟ್ಟ ತಲಿಮ್ಯಾಲಾ
ಕೊಟ್ಟ ಮತಿ ನಮಗ ಸೊಸ್ತ ನಿಮಗ
ಹುಸೇನ ಮಿಯ್ಯಾ ಮಾಡ್ಯಾನೋ ರಿವಾಯಿತ ರಂಗಲಾಲಾ || ೧೧ ||

* * *

. | ಅಯ್ಯೂಬನ ಹೆಂಡರ ಹೆಸರು ಹೇಳೋ

ಇಂದ್ರ ಸಭಾ ದೇವಿಂದ್ರ ಕೂಡಿರಿ ಸೂರ‍್ಯ ಚಂದ್ರನಂತ ಬೆಳಕ
ಏರು || ಮಾಡಿ ರಿವಾಯಿತ ಹೇಳುವೆ ಪಡದಾಗ ದೈವಾ ಕೇಳಬೇಕ
ಬರೂಹಾಂಗ ನಿಮ್ಮ ಮನಸಿನ ತಕ್ಕ ಅಯ್ಯೂಬ ಶರಣರ ಕೌತೂಕ
ಚ್ಯಾಲಿ | ಹೇಳೂವೆ ಖುಲ್ಲಾ ಕೇಳಿ ಜನರೆಲ್ಲಾ ಹೌದೌದನಬೇಕ
ಇ || ಹುಟ್ಟಿದ್ದು ಅಯ್ಯಾಬ ಸ್ಪಷ್ಟ ಸಮಾಚಾರ ತಲ್ಲೇ ಮರತೇಕ
ಶರಣ ಅಯ್ಯೂಬಗ ಕರುಣ ಇಟ್ಟಿದ್ದಾ ಮಹಾದೇವ ಬೇಶಕ
ಕೇಳ್ಯಾನ ಏನ ಬೇಡತಿ ಬೇಡಬೇಕ ವರುವಾಗಿ ಕೊಡುವುದು ನನಹಕ್ಕ
ಬೇಡಿದ್ದ ದೀನಸಾ ಕೊಡುವೆನು ಸರಸಾ ನಿನ್ನ ಮನಸಿನ ತಕ್ಕ || ೧ ||

ಕಯ್ಯ ಜೋಡಿ ಬೇಡಿಕೊಂಡ್ರೋ ಅಯ್ಯೂಬಾ ನರಜಲ್ಮದ ದುಸಕಾ
ಏರು || ಗರುವ ಬ್ಯಾಡ ನರಜಲ್ಮಕ ಬಂದಿಂದ ಸುಖಾಏನ ಸುಡಬೇಕ
ಅರುಇಟ್ಟ ಹಾದಿಯ ಹಿಡಿಬೇಕ ಮರಿಯಬಾರದು ಮೂರುಲೋಕ
ಚ್ಯಾಲ || ಭೋಗಿ ಸುಖಾ ದುಃಖಾ ತಿರುಗಿ ಮತ್ತೆ ನಿಮ್ಮ ಹಂತೇಕ ಬರಬೇಕ
ಇ || ಸ್ವಂತಾ ಮನಾ ತಿಳಿ ಬಂತೋ ಅಯ್ಯೂಬನ ಮಹದೇವನ ಮನಕ
ಇಟ್ಟಿದ್ದಾ ಮಮತಾ ಕೊಟ್ಟಿದ್ದಾ ಮಸ್ತಾ ಅಂವಾ ಬೇಡಿದ್ದ ಬದಕ
ಹೆಣ್ಣ ಒಂದ ಹುಟಸ್ಯಾನೋ ನಾಜೂಕ ಅಯ್ಯೂಬನ ಲಗ್ಗನ ಮಾಡೂದಕ
ನಷ್ಟ ಜಲುಮಕ ಶಿವಗಂಟ ಹಾಕ್ಯಾನೋ ಸಂಗಟ ಸೋಸಲಾಕ || ೨ ||

ಧನ್ನ ದೌಲತ್ತ ಮನ ಮಸ್ತ ಕೇಳಿ ಕೊಟ್ಟಿದ್ದಾ ಹೆಂಡರಿದ್ರೋ ನಾಲ್ಕ
ಏರು || ಅಯ್ಯೂಬಸ್ವಾಮಿ ಹಂತೇಲಿ ನೇಮಿ ಸಂಸಾರ ಮಾಡುದಕ
ಚೊ ಇತ್ತೋ ಬಕ್ಕಳ ಬಾಳೇ ಬದುಕ ಏಳುಮಂದಿ ಮಕ್ಕಳ ಜಲುಮಕ್ಕ
ಚ್ಯಾಲಿ || ಸಣ್ಣ ಕೂಸೋ ಮೂರ ಹೆಣ್ಣ ಇದ್ದವರಿ ಗಂಡ ಮಕ್ಕಳ ನಾಲ್ಕ
ಇ || ಎಷ್ಟ ಅಯ್ಯೂಬ ಕಷ್ಟ ಪಡುವುತಾನ ಸುಖಾ ಇಲ್ಲ ಜಲುಮಕ್ಕ
ನಿತ್ಯನಮಾಜಿ ಮಾಡುರೋ ಸೇಜಿ ಬೇಗು ಬೆಳತನಕ
ಸಂಬನ ಧ್ಯಾನಾ ಹಿಡದ ಮನಕ ಹತ್ತು ಮಂದಿ ದಿನಾ ಉಣಿಸುತನಕ
ಬಾಳ ಇಟ್ಟಿದ್ದಾ ತಾ ಉಣತ್ತಿದ್ದಿಲ್ಲ ಒಂದ ರೊಟ್ಟಿ ತುಣಕ || ೩ ||

ಇ || ಬಡವರ ನೋಡಿ ಅರಿಬಿ ಅಂಚಡಿ ದಾನ ಮಾಡೂರು ದಿನಕ
ಏರು || ಅಂತವರಾ ಮಾನಾ ಸಮಾಧಾನಾ ತೋರಿಸಿ ಕೋಡುತನಕ
ತೋಡುವರೋ ತಾವು ಅರಬಿ ಹರಕ ಇದರೊಳಗ ಏನೂ ಇಲ್ರಿ ಫರಕ
ಚ್ಯಾಲಿ || ಸಾಧಿಸಿ ಪ್ರೇಮಾ ಮಾಡೂರು ಧರಮಾ ಕರಮ ಮಾಡಿದ ತರಕ
ಪ್ರಾಂತದೊಳಗ ಭಗವಂತಾ ಅಯ್ಯೂಬನ ಮರ್ಜಿ ನೋಡೂದಕ
ರೋಗ ಹಾಕಿದಾನೋ ಭೋಗಿಸುವಂತ ಹದಿನೆಂಟು ರಸತನಕ
ಐಯ್ಯೂಬ ಸೋಸ್ಯಾರೋ ದುಃಖಾ | ಮೆಯ್ಯಾ ತಂದು ಮೇಸತಿದ್ರೋ ಹುಳಕ
ಹುಣ್ಣು ಒಡದ ಸಣ್ಣ ತೂತಬಿದ್ದ ಕೀವ ನಾರುತಿತ್ತೊ ಕೊಳಕ || ೪ ||

ಮೋಸಗಾರ ಶಿವ ನಾಶ ಮಾಡಿದಾನೋ ಅಯ್ಯೂಬನ ಬದಕ
ಏರು || ಮರಿಯ ಮಕ್ಕಳೆಲ್ಲ ತೀರಿ ಹೋದಾವೋ ಕಾಡುವ ಕಾಲಕ್ಕ
ಯಾರು ಯಾರು ಉಳಿಯಲಿಲ್ಲ ದಿಕ್ಕ ಹೆಣ್ಣ ಒಂದ ಕುಂತಾಳೋ ಹಂತೇಕ
ಇ || ಲಗ್ಗನ ಹೆಂಡತಿ ಬ್ಯಾಗನ ಬಂದಾಳೋ ಸೇವಾ ಮಾಡೂದಕ
ಅನ್ನಾ ಅಸನಾ ತಿಂದೇನಂದರ ಏನೂ ಇಲ್ಲೋ ಹಂತೇಕ
ಮಹಾ ಪತಿವರತಿ ಉಳದ ಹೆಣತಿ ತಿಳಿದ ತನ್ನಮನಕ
ಗಂಡಗ ಗಂಜಿ ಕುಡಸಲಾಕ ಹೋಗ್ಯಾಳಪ್ಪಾ ಬಿಕ್ಕಿ ಬೇಡಲಾಕ || ೫ ||

ಇ || ಹೋಗಿ ದುರೋಷ್ಣದಲ್ಲಿ ತುರುಬಾ ಕೊಯ್ದು ಕೊಟ್ಟು ಅಕ್ಕಿತಂದಾಳೋ ಮುಕ್ಕ
ಏರು || ನೋಡಿ ಅಯ್ಯೂಬಾ ಆಗ್ಯಾನೋ ಗಾಬಾ ಹೆಣತಿ ಹೋಗಲಕ
ಪಾಪ ಇಲ್ಲದಿ ಕೋಪದಿ ಹೆಣತಿಗೆ ಅಂತಾನೋ ಬೇಶಕ್
ಚ್ಯಾಲಿ || ನನ್ನ ಬ್ಯಾನಿ ನೆಟ್ಟಗಾದ ಬಳಿಕ ನಿನಗ ನೂರ ಪೆಟ್ಟಹೊಡುವ ತನಕ
ಇ || ಹೊಡುವೆನು ಬಾಲಿ ಬೆನ್ನಿನ ಮ್ಯಾಲಿ ಬಾರ ಮೂಡುವ ತನಕ
ಸುರಿಸಿ ಕಣ್ಣೀಲೆ ನೀರ ಅಳತಾರೋ ಶರಣರು ಮಾಡಿ ಅತೀಶೋಕ
ಬಿಟ್ಟ ಹೆಣತಿಗೆ ಚಟ್ಟನೆ ಅಯ್ಯೂಬಾ ಹೋಗಿ ಗಿಡದ ಬುಡಕ
ಕಣ್ಣಿಗೆ ನಿದ್ದಿಇಲ್ರಿತಟಕ ಮಾರಿ ಮ್ಯಾಲೆ ಹಾಕಿ ಕುಂತಾರೋ ಮುಸಕ || ೬ ||

ಇ || ಬ್ಯಾನಿ ಸೋಸಲಾರೆ ಹಾನಿ ಜಲ್ಮ ಇದು ಲಗು ಹೋಗಬೇಕ
ಏರು || ಮರಗ ನೋಡದೆ ಸ್ವರಗ ಲೋಕದಿಂದ ಇಳದ ಶರಣರದುಸಕ
ಬಂದಾನೋ ಶಿವದೂತ ನಿಂತಾನೋ ಇದರಿಗೆ ಸಹಿ ಅಂತಾನೋ ಮುಸಕ
ಚ್ಯಾಲಿ || ನಜರ ಎತ್ತಿ ನೋಡಬೇಕ್ರಿ ಯಾಕ ನೀರ ತಂದ ಇಟ್ಟ ಪಾದ ಬುಡಕ
ಇ || ತಿಳಿಸ್ಯಾನೋ ಶಿವದೂತ ರಂಬಿಸಿ ಸರೂ ಮಾತ ಸಂಬನ ಕೌತೂಕ
ಸುದ್ದ ಕಾಲೀಲೆ ಒದ್ರೋ ಶರಣರು ಗುದ್ದ ಬಿತ್ತೊ ನೆಲಕ
ಸೆಲಿಯ ಒಡದು ನೀರ ಮ್ಯಾಲೆ ಬಂದಾವರಿ ಅದರಾಗಾತೋ ಜೆಳಕ
ಮಾದು ಹುಣ್ಣು ಮೈಯ್ಯ ಆತ್ರಿ ಚೊಕ್ಕ ಮೊದಲಿನಕ್ಕಿಂತ ಹೆಚ್ಚು ಜುಳಕ || ೭ ||

ಮಾರಿಯ ವರಣಾ ಸೂರ‍್ಯನ ಕಿರಣಾಕ್ಕಿಂತ ಹೆಚ್ಚು ಠಳಕ
ಏರು || ಮುಂದ ಉಳಿತಿ ಅಯ್ಯೂಬನ ಕತಿಯ ಸಂದಿಗ್ಹಾಕೇನಿ ಸರಕ
ಪಂಡಿತ ಶ್ಯಾಣ್ಯಾರು ಖಂಡಿತ ಕೂಡಿರಿ ಅಲಾಪಿ ಆಡೂದಕ
ಚ್ಯಾಲ || ಬಲ್ಲಾಂವಾ ದಾರ ಹಿಡಿಯೋ ತರಕ ಅರೇದಾಂದ ಏನಬಲ್ಲಮೂರ್ಖ
ಇ || ಯಾತಕ ನೀರ ಹೇಳೋ ಶಾಹೀರಾ ನೋಡೂನು ನಿನ್ನ ಬೆಳಕ
ಒಂಬತ್ತು ಮಂದಿ ಅಯ್ಯೂಬನ ಹೆಂಡರ ಹೆಸರ ಹೇಳಬೇಕ
ನೆಫ್ಪೀಲೆ ಹೇಳೋ ತಪ್ಪದೆ ಲಗ್ಗನ ಯಾವ ಯಾವ ಮೂರ್ತಕ್ಕ
ಆಗಿದ್ದೂ ಬ್ಯಾರೆ ಬ್ಯಾರೆ ತೋರಸಬೇಕ ಸವಾಲ ಮಾಡೇನಿ ಬಹುಕಡಕ || ೮ ||

ಇ || ಗಾಬ ಆಗಬ್ಯಾಡೋ ಇದರ ಜವಾಬ ಹೇಳ ನಿನಗ ಹಾಕೇನಿ ತೊಡಕ
ಏರು || ಏಳುಮಂದಿ ಮಕ್ಕಳ ಹೆಸರ ಬ್ಯಾರೆಬ್ಯಾರೆ ತೋರಸಬೇಕ
ಯಾರ‍್ಯಾರ ಹೊಟ್ಟೀಲೆ ಯಾರ‍್ಯಾರು ಹುಟ್ಟಾರೋ ಮಾಡಿಹೇಳೋ ಲೆಕ್ಕ
ಚ್ಯಾಲ || ಮುದ್ದತ್ತ ಕೊಟ್ಟೇನಿ ಸಾವೂತನಕ ಎರಗಿ ಮಡ್ಡಿ ಪೀರಾನ ಚರಣಕ್ಕ
ಇ || ಹುಸೇನಮಿಯ್ಯಾ ಉಸ್ತಾದನ ರಿವಾಯಿತ ಹೊಡದಾಂಗ ಚಾಬೂಕ
ಇಂದ್ರಸಭಾ ದೇವೀಂದ್ರಕೂಡಿರಿ ಸೂರ‍್ಯಚಂದ್ರನಂತ ಬೆಳಕ
ಮಾಡಿ ರಿವಾಯಿತ ಹೇಳುವೆ ಪಡದಾಗ ದೈವಾ ಕೇಳಬೇಕ
ಬರೂಹಾಂಗ ನಿಮ್ಮ ಮನಸಿನ ತಕ್ಕ ಅಯ್ಯೂಬ ಶರಣರ ಕೌತೂಕ || ೯ ||

* * *

. ಯಾವ ಪೈಗಂಬರ ಸತಿಯು ಮೊದಲು ಜಡಿಯ ಹಾಕ್ಯಾರೋ ?

ಮೆತ್ತಾನ ಕಳ್ಳಾ ಹತ್ತಿರ ಬಂದಾನೋ ಹೊಡಿಯಲಿಕ್ಕೆ ನೋಟಾ
ಏರು || ರಿವಾಯತ ಸಲುವಾಗಿ ಶಾಹೀರ ಇವನು ಬಾಳೇಬದುಕ ಬಿಟ್ಟಾ
ಕಡಿಯಾಕ ಹೋಗಪ್ಪಾ ನಟ್ಟಾ | ಎಲ್ಲಾದ್ರು ಆಗತೈತಿ ಪುರಾಟಾ || ೧ ||

ಬಾಳೇವದ ಮಾತ ಬಾಳ ಹೇಳಿದರ ಬರುವತೈತಿ ಸಿಟ್ಟಾ
ಮಂದಿ ಕಣ್ಣಿಗೆ ಹಾಕತಾರಿ ಇವರು ಟೆರಿಕೋಟ ಶರ್ಟಾ
ಏರು || ಕಿಸೇದಾಗ ಸೇದಾಕ ಇಲ್ರಿ ಚುಟ್ಟಾ
ಹಾಂ ಹಾಂ ಡೌಲು ಮಾಡತಾರ ಇವರೆಷ್ಟಾ || ೨ ||

ಮಾತು ಕೇಳಿದರ ದೊಡ್ಡ ದೊಡ್ಡ ಮಾತು ಕಟ್ಟತಾನ ಗೋಲಗುಮ್ಮಟಾ
ಗೆಳೆಯರ ಕೈಯಾಗ ರೂಪಾಯಿ ಕೊಟ್ಟು ಹಾಕ್ಕೊಂತಾರ ನೋಟಾ
ಏರು || ಗೊತ್ತಪ್ಪ ಇವರದು ಬೈಲಾಟಾ
ಹಾಂ ಹಾಂ ಇನ್ನಮ್ಯಾಲೆ ಬಡಿತೇನಿ ಗೂಟಾ || ೩ ||

ಶಾಸ್ತರ ಹಿಡಿದು ಸವಾಲು ಕೇಳತೇನಿ ಒಡಿಯಪ್ಪ ನನ್ನ ಒಗಟಾ
ಅಕ್ಕ ತಂಗಿಯರು ಜಡಿಯ ಹಾಕತಾರೋ ಮಕ್ಕಳಿಗೆ ನೀಟಾ
ಏರು || ಜಗತ್ಯಕ್ಕೆ ಜಾಹೀರ ಆದ ಆಟ
ಮೊದಲು ಯಾರಿಂದ ಬಂತು ಹೇಳೋ ಬಂಟಾ || ೪ ||

ಯಾವ ಪೈಗಂಬರ ಸತಿಯು ಮೊದಲು ಜಡಿಯ ಹಾಕ್ಯಾರೋ ನೀಟಾ
ಶಾಸ್ತರ ಹಿಡಿದು ಸವಾಲು ಒಡಿಯೋ ಕಟ್ಟಿ ಇಟ್ಟಂಗಿ ಗಂಟಾ
ಏರು || ಒಡೆದು ಒಯ್ಯೋ ಇಲ್ಲಿ ನೋಟಾ ಇಲ್ಲಂದರ ಬೀಳತಾವೋ ಏಟಾ
ಸಣ್ಣ ಸವಾಲು ಒಡಿದರ ಕೊಡತೇನಿ ತಿನ್ನಾಕ ಬಿಸ್ಕೀಟಾ || ೫ ||

ದೇಶದೊಳಗ ಖಾಸಾ ನಮ್ಮ ಮುಂಡರಗಿ ಪೇಠಾ
ಕವಿಗಳು ರಿಕಾರ್ಡಿನ ಪ್ಲೇಟಾ ಜಂದಿಪೀರಾ ಬಡಿಯತಾನೋ ಗೂಟಾ
ಮೆತ್ತಾನ ಕಳ್ಳಾ ಹತ್ತಿರ ಬಂದಾನೋ ಹೊಡಿಯಲಿಕ್ಕೆ ನೋಟಾ
ರಿವಾಯತ ಸಲುವಾಗಿ ಶಾಹೀರ ಇವನು ಬಾಳೇ ಬದುಕ ಬಿಟ್ಟಾ
ಕಡಿಯಾಕ ಹೋಗಪ್ಪಾ ನಟ್ಟಾ ಎಲ್ಲಾದ್ರು ಆಗತೈತಿ ಪುರಾಟಾ || ೬ ||

* * *

. ಶಬ್ದಾದ ಅರಸನ ಸ್ವರ್ಗದ ಲೆಕ್ಕ ಹೇಳುವ ಜವಾಬು ಪದಾ

ಹಗಲೆಲ್ಲಾ ಇದೆ ನಿನ್ನರಗಳಿ ಬ್ಯಾಸತ್ತಾರ ಜನರೆಲ್ಲಾ ಕೇಳಿ
ಯಲ್ಲಿಂದ ಕಳಸತಾರ ಮಾರಿಮ್ಯಾಲೆ ನಿನಗವುಗುಳಿ ಕಡಿಗೆ ಛೀ ಮಾಡಿ
ಏರು || ಯೆತ್ತೆತ್ತರ ಮಾಡಿ ಕವಿ ಪಡಿಬೇಕಂತಿಯೋ ಸವಿ
ನಿನಗ ಹ್ಯಾಂಗ ದೊರಕೀತ ಪದವಿ ಕೇಳ್ಹೋಗ ಯಾಂವ ಕವಿಗಾರ
ಅನಿಸಿಕೊಳ್ಳೂನು ಮಹಾ ಹಾಡುಸೂರ ಏನಬಲ್ಲಿ ಹುಚ್ಚಪ್ಯಾಲಿ
ಕಲಿಹೋಗಯಿನ್ನ ಸಾಲಿ ಗೊತ್ತೈತಿ ನನಗ ನಿನ್ನ ಎಳಿ
ಸಂಗತೀಲೆ ಬಾ ನಿನ್ನ ಮನಸಿಗೆ ಬಂದಂತಾ ಇಡಿಸುವೆ ಕೈಯಾಗ ಚಿಕ್ಕಬಳಿ
ತಿರಗಂತ ಮೂರ ಮುರಕೊಂತ ಕೈಮಾಡಿ || ೧ ||

ಕೇಳ ನಡಾ ಕಟ್ಟಿದ ಮನಕನಟ್ಟಿ ಕವಿ ಮಾಡೂದು ಬಿದ್ದಿಲ್ಲ ಪುಗಸ್ಯಾಟಿ
ಅಂತ ಬೊಗಳತಿ ಬಸರ ಹೆಂಗಸಿನ್ಯಾಂಗ ಮಾಡಿಕೊಂಡ ಹೊಟ್ಟಿ
ರಾಮನ ಸರಿಜೋಡಿ
ಏರು || ಹುಡುಕಿ ತಗದೀನಿ ಮಾತೊಂದ ಶ್ರೇಷ್ಟಯಿದ್ದಾ ಅರಸ
ಶದೀದನ ತಮ್ಮನಾದ ಶಬ್ದಾದ ಅರಸಕಿ ಮಾಡುವಾ ಮಿಕ್ಕಿ
ನಾನೇ ಶಿವನಂತ ಅಂತಿದ್ದಾ ಕಡಿಕಾಲಕ ತಿಂದಾನ ದಕ್ಕಿ
ಶಬ್ದಾದನ ಸವಾಲ ಝಂಡೇದಾಗ ಮಾಡಿದರ ದಾಖಲೆ ಕೀತಾಬದಾಗ ಇಲ್ಲ ಅಂದಿ
ಕೇಳಿದವರೆಲ್ಲರು ಜನರೆಲ್ಲರು ಇದ್ದಾರ ಇಲ್ಲೇ ಈ ಸಭಾದೊಳಗ ಅನೇಕ ಮಂದಿ
ತಿಳಿಸ್ಯಾಯಿರಾ ಕಳಿಸುವೆ ಪೋಣಿಸಿ ಮಾಗನ್ಯಾಗ ಕವಡಿ || ೨ ||

ಶಬ್ದಾದ ನಾನೇ ಶಿವನಂತ ಸಾರತಿದ್ದಾಯಿಟ್ಟ ಪಂತ
ಉಪದೇಶ ಅರಸನಿಗೆ ಮಾಡುವರೋ ಬಂದ ಬುದ್ದಿವಂತ ಪಂಡಿತರು ಕೂಡಿ
ಏರು || ಭಜಿಸೋ ಭಜಿನಿ ಮಾಡೋ ಶಿವಂದು ಅಂತಾರ ಕೈಮುಗುದು
ಕಂಡಿ ಸ್ವರಗ ನೋಡೋ ತಿಳಿದು ತಿಳಿಮನಕ ಹಿಡ ತರಕ
ಇಲ್ಲಂದರ ಸುಟ್ಟಹ್ವಾದಿ ನರಕೀನ ಬೆಂಕಿಯೊಳಗ ಬೇಶಕ್
ಸಿಟ್ಟಾಗಿ ಶಬ್ದಾದ ಅಂತಾನ ನನ್ನಗ ಧನ್ನದೌಲತ್ತಯೇನ ಕಡಿಮಯಿಲ್ಲಾ
ಶಿವನಿಗೆ ಯಾತಕ ನೆನಸಲಿ ತಯ್ಯಾರ ಮಾಡುವೆ ಸೊರಗ ಈ ಭೂಮಿಮ್ಯಾಲಾ
ಹೋಗಿ ನೋಡುವೆ ಸೊರಗ ತಯ್ಯಾರ ಮಾಡಿ || ೩ ||

ಭೂಮಿವೊಳಯಿದ್ದಾಂತ ಬದುಕ ಸಿಕ್ಕಿದಲ್ಲೇ ಅರಸ ಮನ ತಕ್ಕ
ತಗತಗದ ಬೈಲಿಗೆ ಇಟ್ಟಂಗಿ ಮಾಡಸ್ಯಾನ ಒಳೇ ಚೊಕ್ಕ ನಕ್ಷತ್ತರ ನೋಡಿ
ಏರು || ಸೊರಗದ ಥರಾ ಹಮ್ಮ ಚೌಕ ಸವನಾಗಿ ನಾಲ್ಕು ದಿಕ್ಕ
ಕಡಸ್ಯಾನ ನೀರು ಹತ್ತು ತನಕ ಯೇನು ಹೇಳಲಿ ಸಭಾದಲ್ಲಿ
ಥರಾ ಕಡಸುವಲ್ಲೇ ಬಂದೋ ಬಸ್ತಯಿಟ್ಟಿದ್ದಾ ಕಾವಲಿ ದುಡಿತಿದ್ರೋ ಜನರೆಲ್ಲಾ
ಯೇಕಂದ್ರ ಒಂದು ಲಕ್ಷ ಶಾಯಿರ ಚಿತ್ತಯಿಟ್ಟ ಕೇಳೋ ನೀನು
ಸಂಗ ಸುಲೇಮಾನಿ ಕಲ್ಲಿಂದ ಥರಾ ತುಂಬಿ ಭೂಮಿಯ ಸವನಾಗಿ
ಮಾಡಿಸಿದನು ಲೆಕ್ಕಾ ಹೇಳೇನಿ ಒಟ್ಟಿಗೆ ತರಕ ಹಿಡಿ || ೪ ||

ಬೆಳ್ಳಿ ಬಂಗಾರ ಇಟ್ಟಂಗಿಲಿಂದ ಕಟ್ಯಾರಗ್ವಾಡಿ ಬಹುಚಂದ
ಎತ್ತರ ಐನೂರ ಗಜಾಯಿತ್ತ ಗ್ವಾಡಿ ಒಳೇ ಸುದ್ದಾ ಕೇಳೋ ಕಿಮ್ಮತ್ತಗೇಡಿ
ಏರು || ಸೂರ್ಯ ಮೂಡುವ ಕಾಲಕ ಗ್ವಾಡಿ ಮಿಂಚೂದು ಲಕಲಕ
ಥಳಾಥಳ ಹೊಳುತಿತ್ತು ಬೆಳಕ ಮಿತಿಮೀರಿ ಹೇಳುವೆ ಸಾರಿ
ಸೊರಗದ ಉದ್ದಗಲಾ ನಾಲ್ವತ್ತ ಹರದಾರಿತ್ತ ಬರಾಬರಿ
ಅರಸನ ಮನಪೂರ ಸ್ವರಗಾತ ತಯ್ಯಾರ ಭೂಮಿಮ್ಯಾಗ ಹನ್ನೆರಡು ವರ್ಷದಲ್ಲಿ
ಮುತ್ತು ಮಾಣಿಕ ಹೊನ್ನದಲ್ಲಿ ಬೆರಸಿ ರಂಗಮ್ಹಾಲ ಕಟ್ಟಿಶ್ಯಾನ ಸ್ವರಗದಲ್ಲಿ
ಹಾಲುಮತ್ತು ನೀರಿನ ಶೆಲಿ ಹರುತಿದ್ವೊ ಕೂಡಿ || ೫ ||

ಶೆಲಿ ಹರುತಿತ್ತ ಶರೆದ ಸಾಗಿ ಜೇನು ತುಪ್ಪದ ಶಲಿಗೆ ಸರಿಯಾಗಿ
ಹರುತಿತ್ತ ಸವಳ ನೀರಿ ಸವಿನೀರ ಮನಪೂರಾಗಿ ಎಲ್ಲಾ ಸರಜೋಡಿ
ಏರು || ಏನು ಹೇಳಲಿ ಮ್ಹಾಲಿನ ವರ್ಣಾ ಹೌಜ ನೀರಿಲೆ ಸಂಪೂರಣಾ
ಪುಟುತಿದ್ವೊ ಕಾರಂಜಿ ಸವನಾ ಪಾರೇದ ಜನಾ ಕೇಳೊ ಹೈವಾನ
ಒಂದೊಂದ ಮಾಲಿಗೆ ಒಬ್ಬೊಬ್ಬ ಕುಂತಿದ್ದಾ ತಿಳಿಸುವೆ ನಾ
ದರವಂದ ಮ್ಹಾಲಿನ ಮುಂದಾ ಗಿಡಾ ಒಂದೊಂದ ಹಚ್ಚಿಸಿದ್ದಾ ಬಂಗಾರದಾ
ಇದ್ದುವೋ ಬೇರ ಜಮರೂತಿ ತಪ್ಪಲಾ ಮಾಗಿ ಹಣ್ಣು ಹಂಪಲಾ
ಮುತ್ತಿನ ಗೊಂಚಲಾ ಇದ್ವೊ ಸದರ ಅನೇಕ ಥರದ ಪಕ್ಷಿ ಇಟ್ಟಾರ ಮಾಡಿ || ೬ ||

ನೆರೆದಿರುವ ಕುಂತ ಸಭಾದಲ್ಲಿ ಎಷ್ಟಂತ ಹೀಂಗ ವರಣಿಸಲಿ
ಒಂದ ಸಾವಿರ ಸರಿಯಾಗಿ ಮ್ಹಾಲಯಿದ್ವೊ ಸ್ವರಗದಲಿ ತಿಳಿಶಾಯಿರ ಹೇಡಿ
ಏರು || ಇದರಂತೆ ಕಟ್ಟಿ ತಯ್ಯಾರ ಆತರಿ ಇಲ್ಲದಾಂಗ ಕಸರ
ಮಾಡ್ಯಾರ ಒಳೇ ಶ್ರಿಂಗಾರ ಏನು ಸದರ ಒಂದ ಸಾವಿರ
ಬೆಳ್ಳಿ ಬಂಗಾರದ ಸುತ್ತಮುತ್ತ ಹಚ್ಯಾರ ಮಿನಾರ
ದರವೊಂದ ಮ್ಹಾಲಿನವೊಳಗ ಒಂದ ಸಾವಿರ ಕಂಬ ಇದ್ವೋ
ಕೇಳೋ ನೀ ಹುಚ್ಚಪ್ಯಾಲಿ ಸುತ್ತೆಲ್ಲಾ ಕಂಬಕ ಮುತ್ತ ಮಾಣಿಕ ಹೊನ್ನ
ಜರದ ಜರುತಿದ್ವೊ ಏನುಹೇಳಲಿ ಸುಳ್ಳಂತ ತಿಳಿದರ ಮತ್ತ ಮುರದೇನೋ ದವಡಿ || ೭ ||

ತಯ್ಯಾರ ಆಗಿದ್ದ ಸೊರಗದ ಸುದ್ದಿ ಹೋಗಿ ತಿಳಿಸ್ಯಾರ ಅರಸಗ ತಿದ್ದಿ
ಕೇಳಿ ಆನಂದ ಆಗಿ ಶಬ್ದಾದ ಹಿಡದಾನ ಹಾದಿ ಹಾಕಿ ಕುದುರಿಗೆ ಥಡಿ
ಏರು || ಕುಂತಿದ್ದಾ ಕುದುರಿಯ ಮ್ಯಾಲೆ ಅನೇಕ ದಂಡ ಸಂಗತೀಲೆ
ಮತ್ತ ಹೊಂಟಾನ ರವುಸೀಲೆ ಹೋಗುವಾಗ ದಾರಿವೊಳಗ
ಕಂಡ ಪಂಡಿತರಿಗೆ ಹುಡುಗಾಟ ಮಾಡುವ ಮನ ಬಲ್ಲಾಂಗಾ
ಕೇಳರಿ ಹರುಷಾಗಿ ಉಪದೇಶ ನನಗ ಮಾಡತಿದ್ರಿ
ಶಿವನಿಗೆ ನೆನಸಬೇಕಂತ ನೋಡರಿ ನಡಿಯಿರಿ ಮಾಡೇನಿ ತಯ್ಯಾರ
ಸೊರಗ ಭೂಮಿಮ್ಯಾಗ ನಾನೇಸೊಂತ
ಯಾತಕ ನೆನಸಲಿ ಶಿವನಿಗೆ ಕೈಜೊಡಿ || ೮ ||

ಶಾಣ್ಯಾ ಶಾಯಿರಾ ನಾನೇ ಒಬ್ಬ ಅಂತ ವಾದ ಹಾಕತಾನ ಕುರುಬ
ಓದಿ ನೋಡೋ ದಬಶ್ಯಾನ ತಪಸೀರ ತಂದಕೀರಾಬ ನೀಕೇಳೋ ಮಾನಗೇಡಿ
ಏರು || ಕುಂತ ಮಾಡರಿ ಚೌಕಾಗಿ ಹೇಳುವೆ ಪುರಮಾಸಿ ಅಕ್ಷರ ನುಡಿ ಸೋಸಿ
ತಿಳಿಸುವೆ ನಾ ಸಂಪೂರಣಾ ಕುಂತೀರಿ ಬುದ್ಧಿವಂತ ಕೇಳಿಶಾಂತ ಪಡಿರಿ ವಿದ್ಯಾನಾ
ತಪ್ಪ ಆದರ ನನ್ನ ಮಾಫ ಮಾಡರಿ ಬೇಡಿಕೊಂಬುವೆ ಇದ್ದೀನಿ ಅಲ್ಪಕಂದಾ
ಸ್ವಲ್ಪ ಮಾತ ನಾನು ಕೇಳಿದರ ಸಬ್ರಾದಲ್ಲೇ ಶಾಯಿರ ನಿಂತಾನ ಆಗಿಸುಂದಾ
ತಿಳಿದಾಂಗ ಆತ ನಿನ್ನ ಬಂಡೋಲ ಕೇಳ ಲವಡಿ || ೯ ||

ಸ್ವರಗದ ಸಮೀಪದಲ್ಲೇ ಹ್ವಾದು ಒಳಗಿಂದ ಮಂದಿ ಬಂದ ಬಂದಾ
ಶಬ್ದಾದಗ ಬೆಟ್ಟಿ ಆಗಿ ಹಿಡುರೋ ಪಾದಾ ಮುತ್ತುಮಾಣಿಕ ಹಾರಶ್ಯಾಡಿ
ಏರು || ಆನಂದ ಆಗಿ ಶಬ್ದಾದ ಬಾಕಲತನ ಹೋಗಿ ಖುದ್ಧ
ಒಳಗಯಿಟ್ಟಿದ್ದಾ ಕಾಲವೊಂದ ಮೊದಲ ತತ್ಕಾಲಾ
ಶಿವನ ಅಪ್ಪಣೆಲಿಂದ ಇಳದ ಬಂದಾರ ಇಜರಾಯಲಾ
ನಿಂತಾರ ಇದರಿಗೆ ಗಾಬಾಗಿ ಶಬ್ದಾದು ಕೇಳ್ಯಾನ ಬೆದರಿಸಿ ಯಾರ ನೀನು
ನಿಂತಾರ ನಗತಾರ ಯಿಜರಾಯಿಲ ಅಂತಾರ ನಿನ್ನ ಜೀಂವಾ
ತಗಿಲಿಕ್ಕೆ ಬಂದೇನಿ ನಾನು ಕೇಳಿ ಬೇಡಿಕೊಂತಾನ ಅರಸ ನಾಚಿಗೇಡಿ || ೧೦ ||

ನೋಡಿ ಸೊರಗ ಕಣ್ಣೀಲೆ ಕಂಡಿಲ್ಲಾ ತುಸು ನೋಡುವೆ ಒಳಗ ಹೋಗಿ ಮೊದಲಾ
ಅಂತ ಹೇಳೂತನಕ ಇಜರಾಯಿಲಾ ಜೀಂವಾ ತಗದಾರಲ್ಲಾ ಸತ್ತ ಬಿದ್ದಾನ ಖೋಡಿ
ಏರು || ಶಿವನ ಅಪ್ಪಣಿಲಿಂದ ಐಕಾತ ಸ್ವರಗ ಅಂದ
ಕವಿ ಮಾಡಿ ಹಾಡುವೆ ಛಂದ ಸಂಪೂರಣಾ ತಿಳಿಸ ನೀನಾ
ಸುತ್ತದೇಶಕ ವಾಹಿನಿ ಬಾಗಲಕೋಟಿ ಪಟ್ಟಣಾ
ಜಾಹೀರ ಮಡ್ಡಿಪೀರ ಗಂಭೀರ ಹುಸೇನ ಮಿಯ್ಯಾ ಕಂಡಲ್ಲೇ
ವೈರಿಗೆ ಆಗಿ ಮೂಲಾ, ನಿನ್ನ ಸವಾಲ ಒಡದ ತಿಳಸಿನಿ ತಿಳಿಯದಕ
ಶಾಹೀರಗೆ ಖುಲ್ಲಾ ಖುಲ್ಲಾ ಅಲ್ಲಂದರ ಅಂದೇನೋ ನಿನಗ ಖರೇ ಸುಗಡಿ || ೧೧ ||

* * *

. ಶಬ್ದಾದ ಅರಸನ ಸ್ವರ್ಗ ನೋಡಿದವ ಉಮರ ಬಿನ್ ಕತ್ತಾಬ

ಶಾಹೀರ ಸಭಾದಾಗ ಬಂದ  ಸವಾಲು ಮಾಡಿದಿ ನನಗೊಂದ
ಜವಾಬ ಕೊಡತೇನಿ ನಿನ್ನ ಮಾರಿಮ್ಯಾಗ ಹೊಡದ ಹಾರಸತೇನಿ ಚಿಂದಿ
ಏರು || ಪಂಡಿತರು ಪುರಮಾಸಿ | ಕುಸುಮ ಕಾಮಿಲ ತರಿಸಿ
ಮಾಡಿರಿ ಚವುಕಾಸಿ | ಶಬ್ದಾದನು ಗರ್ವಿಷ್ಟನು ಸ್ವರ್ಗ ಕಟ್ಟಿಸಿ
ಭೂಮಿಮ್ಯಾಗ ಕಾಣದೆ ಮಡದ್ಹೋದನು | ಸ್ವರ್ಗ ಅದೃಶಾ ಮಾಡಿದ ಜಗದೀಶಾ
ಹಗಲ್ಹೊತ್ತ ಜನರಿಗೆ ಕಾಣದಾಂಗ | ಹೊತ್ತಮುಳಗಿ ತುಸುಕತ್ತಲ ಆದಿಂದ
ಮಿಂಚೂದು ಕೋಲ್ಮಿಂಚು ಮಿಂಚಿದಾಂಗ | ಅದು ಕಂಡವನ ಹೆಸರು ಕೇಳುತ್ತೀದಿ || ೧ ||

ಉಮರ ಬಿನ್ ಕತ್ತಾಬಾ | ಹೌದಲ್ಲೋ ನೋಡೋ ಕಿತಾಬಾ
ಅಲ್ಲಂದರ ನಿನಗ ದನಗರ ಅಂದಾರ ಕುರುಬಾ ಈ ಕುಂತಿರು ಮಂದಿ
ಏರು || ಅಬ್ದುಲ್ ಬಿನ್ ಕತ್ತಾಬಾ | ಒಂಟಿ ಕಳಕೊಂಡ ತೋಬಾ
ಆಗಿದ್ದನು ಗಾಬಾ | ಹುಡುಕುದಕ ಆದೇಶಕ | ಹೋಗು ಹಾದ್ಯಾಗ
ಹೊತ್ತ ಮುಣಗಿ ಸ್ವರ್ಗ ಹತ್ತಿತು ಮಿಂಚುದಕ | ಧೈರ್ಯದ ಅನುಕೂಲಾ
ಸಿಕ್ಕಿತ ಬಾಕಲಾ | ಹಣಕಿ ನೋಡ್ಯಾಗ ಯಾರು ಇದ್ದಿದ್ದಿಲ್ಲಾ
ಮುತ್ತು ಮಾಣಿಕ ರತ್ನ ವಜ್ರ ಕೆಚ್ಚಿದ ಕಂಬದ ಮ್ಯಾಗಿದ್ದ ಎಷ್ಟೋ ಮಹಾಲಾ
ಬಳಕೊಂಡ ಮುತ್ತು ಮಾಣಿಕ ಹಿಡಿದಾನೋ ಹಾದಿ || ೨ ||

ಹೊತ್ತಗೊಂಡ ಮುತ್ತು ಮಾಣಿಕ | ಹಾದಿ ಹಿಡಿದ ಮುಂದ ಹೋಗುತನಕ
ಅಲ್ಲೇ ಸರಸಾ ಆಳುತ್ತಿದ್ದ ಅರಸಾ | ಮೌಲಾನಂತೇಕ ಹೇಳತಾನ ಹೊಸಾ ಸುದ್ಧಿ
ಏರು || ಹೇಳ್ತಾನ ಪೌರುಷ ತೀಡಿ | ದಂಗಾದೆ ನೋಡಿ
| ಬೆಳ್ಳಿ ಬಂಗಾರದ ಗ್ವಾಡಿ ಕಟ್ಟಿದ್ದವು ಹೊಳಾತ್ತಿದ್ದವು |
ಹುಚ್ಚಾದೆ ಮಿಂಚನೋಡಿ ನನ್ನ ಕಣ್ಣ ಮಿಂಚುತ್ತಿದ್ದವು ಕೇಳಕೊಂಡ ಅನವಾಯಾ |
ಅಂತಾನ ಮಾವಯ್ಯಾ ನಿವ್ಯಾಗದಿ ಏನ ಎಚ್ಚರದಿ ಸುಳ್ಳು ಹೇಳಾಕ
ನನಗ ಕಳ್ಳತನ ಬಂದಿಲ್ಲಾ ನಿಚ್ಚಳ ಹೇಳುವೆ ನೋಡಿದ ಸುದ್ದಿ |
ಬಿಚ್ಚಿ ತೋರಸ್ತಾನ | ಮುತ್ತು ಮಾಣಿಕ ನಗದಿ || ೩ ||

ಮಾವಯ್ಯ ಪಂಡಿತರಿಗೆ ಕರೆಸಿ | ಅಂತಾನ ನೋಡರಿ ತಳಸೋಸಿ
ಇವಾ ಹೇಳುವ ಮಾತ ಹೌದಲ್ಲ ಹೇಳಬೇಕ ತಿಳಿಸಿ ಹೆಚ್ಚಿನ ತಗಾದಿ
ಪಂಡಿತರು ಹೇಳ್ಯಾರಲ್ಲಾ | ಇವನ ಮಾತು ಸುಳ್ಳಲ್ಲಾ | ನಮ್ಮ ಹಜರತ ರಸೂಲಿಲ್ಲಾ
ಹೇಳಿದರು ನಮ್ಮ ಒಳಗಿನವರು ಒಬ್ಬರು | ಒಂಟಿ ಹುಡುಕೂತ ಹೋಗಿ
ಶಬ್ದಾದನ ಸ್ವರ್ಗ ನೋಡಿ ಬರತಾರು ನೋಡಿದ ಮನುಷ್ಯಾನ | ಇರತಾವ ಹಿಂತಾ ಚಿನ್ನಾ
ಗಿಡ್ಡ ಇರತಾನ | ಅವನ ಕೆಂಪ ಬಣ್ಣಾ | ಕಣ್ಣ ಹುಬ್ಬಕುತ್ತಗಿ ಮ್ಯಾಗವನ
ಇರತೈತಿ | ಅಂಬು ತಿಳಿರಿ ಮುಖ ಖೂನಾ |
ನೋಡತಾರ ಆ ಮನುಷ್ಯಾಗ ಕರೆದು ಎಲ್ಲಾ ಮಂದಿ || ೪ ||

ಹೇಳಿದಂತೆ ನೋಡಿ ಸರೂ ಚಿನ್ನಾ | ಮಾವಯ್ಯಾ ಆದ ಸಮಾಧಾನಾ
ನಬಿಸಾಬರ ಮಾತ ಅಲ್ಲಂತಾನ ಯಾಂವ ಹೈವಾನಾ | ಛೀ ಅಲ್ಲ ನಿನ್ನ ಬುದ್ಧಿ
ಏರು || ದೇಶದಾಗ ಬಾಗಲಕೋಟಿ | ಭರತಿ ಬಾಜಾರ ಪ್ಯಾಟಿ
ನಡುವೆ ಐತಿ ಪೀರನ ಕಟ್ಟಿ | ಗುರುಮುನಿ ದಸ್ತಗೀರ ಧನಿ
ವರ್ಷಕ್ಕೊಮ್ಮೆ ಚಂದ | ಮಕರಂಧ ಗಲ್ಲೀಪ ಹಚ್ಚಿ ನಿಶಾನಿ
ಕೇಸುಪೀರನ ಸತ್ತೆ | ನಾಗೂ-ಗೌಸೂಗ ನಿತ್ಯೆ | ಬೇಡಿದ ವರಗಳ ಕೊಡುತಿಹರು
ಅರಸ ಶಬ್ದಾದನ ಹಡದ ತಾಯಿ ಹೆಸರ ಒಡದ ಹೇಳಿ ಶಾಹೀರ
ಅನಸು ಗಬರು | ಇಲ್ಲಂದರ ಮುಕುಳಿವೊಳಗ ಹಾದೀತ ಗೂದಿ || ೫ ||

* * *