. ಕರ್ಬಲಾ ಅಡವಿ ಹಮ್ಮಚೌಕ ಎಷ್ಟಿತ್ತೊ ?

ಸಭಾ ಕೂಡಿರಿ ರಂಗಲಾಲ | ಬಾಯಿ ಮಾಡಬೇಡರಿ ಕಲಲಾ
ಏರು | ಬೀಸಿ ಒಗೆದಾಂಗ ಕಲ್ಲಾ | ಮುರದೇನೋ ಬಾಯಾನ ಹಲ್ಲಾ
ಮಾನಪಾನ ಸಿಗುವುದಿಲ್ಲಾ | ಬಂದ ಹಿಡಿಯೋ ದೈವದ ಕಾಲಾ || ೧ ||

ಕರ್ಬಲ ಕದನ ನಡೆದ ಅಮಲಾ | ತಿಳಿಸುವೆ ಶಾಹೀರಗೆಲ್ಲಾ
ಏರು || ನಿನ್ನ ಉತ್ತರ ತಗೋ ಮಳ್ಳಾ | ಬಂದೀತೋ ನಿನಗ ಗೋಳಾ
ಸುಳ್ಳ ಅಂದರ ಮುರದೇನೋ ಹಲ್ಲಾ | ಮಾನಾಪಾನ ಸಿಗುವುದಿಲ್ಲಾ || ೨ ||

ಶುಮರಲೈನಾ ಕೆಟ್ಟಕುಲಾ | ಪತ್ರ ಕಳಿಸಿದ ತತ್ಕಾಲಾ
ಏರು || ರಣಗಂಬ ನಡೆಸಿದನಲ್ಲಾ | ಕರಕರ ತಿನ್ನೂತ ಹಲ್ಲಾ
ಆಕಾಶವಾಣಿ ಕೂಗಿತಲ್ಲಾ | ಹುಸೇನಸಾಬರಿಗೆ ಬಿದ್ದಿತೋ ದಿಗಿಲಾ || ೩ ||

ಕುದುರಿಗೆ ಜೀನ ಬಿಗಿದಾರಲ್ಲಾ | ರಭಸೀಲೆ ಹತ್ಯಾರಲ್ಲಾ
ಏರು || ಕರ್ಬಲಕ ಬಂದಾರಲ್ಲಾ | ಐವರು ಹಿಂಬಾಲಾ
ಅಬ್ಬಾಸ ಅಸ್ಗರ ಹಸನ ಕಮಲಾ | ಅಕಬರ ಸಣ್ಣಬಾಲಾ || ೪ ||

ಕದನ ನಡೆದೀತೋ ಒಳ್ಳೆ ಜುಮಲಾ | ನೇತ್ತರ ಕಾವಲಿ ಹರಿದಾವಲ್ಲಾ
ಏರು || ಕುದುರಿಗೆ ತೀರ ಹಾಕಿದನಲ್ಲಾ | ಶುಮ್ರಲೈನಾ ಕೆಟ್ಟಕುಲಾ
ಬಿದ್ದಾರೋ ಭೂಮಿಯ ಮೇಲಾ | ಬಿದ್ದೀತೋ ಕತ್ತಲಾ || ೫ ||

ನಾಲ್ವರು ಹೊಂಟಾರಲ್ಲಾ | ದುಃಖದಿಂದ ತತ್ಕಾಲಾ |
ಏರು || ತಮ್ಮ ಸ್ಥಾನಕ ಹೊಂಟಾರಲ್ಲಾ | ಹುಸೇನಸಾಹೇಬ ಮಡಿದಾನಲ್ಲಾ
ಅಂದಿನಿಂದ ಆಶೂರ ಆದೀತಲ್ಲಾ | ನಿನಗೊಂದ ಸವಾಲಮಲಾ
ಕೇಳುವೆ ಇನ್ನಮೇಲಾ | ಕರ್ಬಲಾ ಆಡುವೆಯಲ್ಲಾ || ೬ ||

ಎಷ್ಟು ದಾರಿ ಹಮ್ಮಚೌಕಾ ಇತ್ತೋ ಹೇಳೋ ಮೊದಲಾ
ಮಣ್ಣ ಯಾವ ವರ್ಣದ್ದು ಹೇಳಬೇಕೋಖುಲ್ಲಾ | ಮುಗಸೇನಿ ಸ್ವಲ್ಪಕ ಅಮಲಾ
ಶಾಹೀರನ ಬಿಡುವುದಿಲ್ಲಾ | ಕೊಣ್ಣೂರು ರಾಜ್ಯದ ಮೇಲಾ || ೭ ||

ವಾಹೀನ ಇರುವುದಲ್ಲಾ | ನಬಿಯಾ ಮಾದೇವ ವೈರಿಗೆಲ್ಲಾ
ತರಬಿ ಕೇಳ್ಯಾರಲ್ಲಾ ಧೀನ್ ಧೀನ್ ಎಂದು ಅಲಾಯಿ ಆಡ್ಯಾರಲ್ಲಾ || ೮ ||

* * *

. ನಬಿಸಾಬರು ಹುಟ್ಟಿದ ನಂತರ ಸೃಷ್ಟಿಗೊಂಡ ಬಾಳಿವನದ ಎತ್ತರ ಎಷ್ಟಿತ್ತು ?

ಸದಾ ಸದಾ ಗುರುವಿಗೆ ಶರಣಾ | ಮಾಡುವೆ ಮೊದಲಗೆ ನಾನಾ
ನವಖಂಡ ಭೂಮಿ ಮಂಡಲನಾ | ಹುಟ್ಟಿಸಿದಂತವನಾ
ಏರು || ಮುಂಚೆ ಮೊದಲ ಮೂಲರಂಭಾ | ಆಪೇ ಆಪ ಇದ್ದಾನು ಸಂಬಾ
ಚ್ಯಾಲ || ನಬಿಸಾಹೇಬ ಹುಟ್ಟಿಸುದಸಿಂದ ತನ್ನೊಳಗಿನ ಜ್ಯಾತಿ ತಗದಾ
ಕಂದೀಲದೊಳಗ ಇಟ್ಟಿದ್ದಾ ಮುಂದಿನ ಉತ್ಪನ್ನಾ
ಎಪ್ಪತ್ತಸಾವಿರ ವರುಷದಿನಾ | ಮಾಡಿದ್ದ ಜ್ವಾಪಾನಾ || ೧ ||

ಇ || ಮುತ್ತ ಮುಂದ ಇಟ್ಟ ಇಟ್ಟ ಭಗವಾನಾ | ದಿಟ್ಟಿಸಿ ಅದಕ ನೋಡುವನಾ
ಕರಗಿ ನೀರಾತೋ ಆಕ್ಷಣಾ ಇದು ಸಾಂಬನ ಕರುಣಾ
ಏರು || ಮೊಸರ ಕಡೆದಾಂಗ ನಿಂತು ನಾಲ್ಕು ಮಂದಿ ದೂತರು ಸೊಂತು
ಕಡದಿಂದ ಬುರುಗ ಹೊರಟಿತೊ | ಬರುಗದಿಂದ ಹೊಗಿಯು ಹೊಂಟೀತು
ಹೊಗಿಯಲಿಂದ ಹೆಪ್ಪುಗಟ್ಟಿತೋ | ಆದೀತೋ ಮಂಡಲಾ
ಸುಳ್ಳ ಅಂದರ ಶಾಹೀರಾ | ಕಿತ್ತೇನಿ ನಿನ್ನ ಕಣ್ಣಾ || ೨ ||

ಕಂದಿಲದಾನ ಅರ್ಧಾ ಕಿರಣ | ತಗದಿಟ್ಟ ಆ ಜಗಜರಣಾ
ದೂತರು ಮಾಡಿದ್ದು ನಿರ್ಮಾಣಾ | ಅವರಿಗೆ ನನ್ನ ಶರಣಾ
ಏರು || ಜುಬರಾಹಿಲ ಮಿಕಾಯಿಲ | ಇಸರಾಫಿಲ | ಇಜರಾಯಿಲ
ಚ್ಯಾಲ || ಹುಟ್ಯಾರೋ ನಾಲ್ಕು ಮಂದಿ ಜತ್ತಾ | ಅದರೊಳಗಿನ ಅರ್ಧಮುತ್ತಾ
ತಗದ ಮಾಡಿದಾರ ಒಂದ ಮುತ್ತ | ಬೆಲಿ ಇಲ್ಲದ ರತನಾ
ಎಪ್ಪತ್ತ ಸಾವಿರ ವರುಷದಿನಾ | ಮಾಡ್ಯಾರ ಜೋಪಾನಾ || ೩ ||

ಮುತ್ತ ಮುಂದ ಇಟ್ಟ ಭಗವಾನಾ | ದಿಟ್ಟಿಸಿ ಅದಕ ನೋಡುವನಾ
ಕರಗಿ ನೀರಾತೋ ಆ ಕ್ಷಣಾ | ಇದು ಸಾಂಬನ ಕರುಣಾ
ಏರು || ಗಿಡಾ ಒಂದು ಕಣ್ಣಿಲಿಂದಾ | ಕಂಡೇನಿ ನಾ ಒಂದ
ಪ್ರೀತಿಲಿಂದ ಹುಟಶ್ಯಾನೋ ಧೀರಾ | ತುದಿ ತೆಳಗ ಮ್ಯಾಲೆ ಇತ್ತೋ ಬೇರಾ
ಯಾವತ್ತು ಮೂಡತಿತ್ತೊ ಹಸರಾ | ಕಸರಿಲ್ಲದ ಏನಾ
ಹೂವುಕಾಯಿಲಿಂದ ಬಾಳಿವನಾ | ಕಾಣುವದು ಬಹುಚೈನಾ || ೪ ||

ಯಾವ ತಾರೀಖ ದಿನಾ | ಆಗೈತಿ ಉತ್ಪನ್ನಾ
ನೆಪ್ಪೀಲೆ ಹೇಳೋ ಲೆಕ್ಕದ ಪರಿಮಾಣಾ | ತೋರಿಸಬೇಕೋ ಕೂನಾ
ಏರು || ಎತ್ತರ ಎಷ್ಟಿತ್ತೋ ಸತ್ತರ ಹತ್ತುದಿಲ್ಲೋ ಗೊತ್ತೋ
ತರಕ ಹಿಡಿಯಬೇಕು ಅಡಬಂಗಿ | ಹೂವುಕಾಯಿ ಏಸಿದ್ದವು ಟೊಂಗಿ
ನೀ ತೊಟಗೊಂಡಿ ಪುಗಶೆಟ್ಟಿ ಅಂಗಿ | ನಿನ್ನ ಕಿಮ್ಮತ್ತೇನಾ ||
ಬಗಲಾಗ ಹಿಡಿದೀದಿ ಕುರಾನಾ | ಹೇಳಬೇಕೋ ನೀನಾ || ೫ ||

ಗುರು ನಮ್ಮ ದಸ್ತಗೀರಪೀರಗ ಶರಣಾ | ಖುಷಿಲಿಂದ ಮಾಡುವೆ ನಾನಾ
ಏರು || ದಯಾ ಅವರ ಇರೂತನಾ | ಮಾಡರಿ ಕರುಣಾ
ಉಸ್ತಾದ ಲಚಮನಸಿಂಗ | ಹಸ್ತಇಟ್ರೋ ತಲಿಮ್ಯಾಲೆ ಹೀಂಗ
ಸುತ್ತ ದೇಶಕ ಬಾಗಲಕೋಟಿ | ನಡು ಊರಾಗ ಪೀರಾನ ಕಟ್ಟಿ
ಕವಿ ಮಾಡತಿದ್ರೋ ಹೊಸದಾಟಿ | ವರ್ಷಕ ಒಂದಿನಾ
ಗಂಧ ಗಲ್ಲೀಫ ಮಕರಂದ ನಿಶಾನಾ | ಲಬಿಲಾಖರ ಮಹಿನಾ || ೬ ||

* * *

. ಏಳು ಮಂದಿ ಶರಣರು ಯಾರು ಯಾರು ?

ಕೇಳರಿ ಕುಂತಾ ಇಟ್ಟ ನಿಮ್ಮ ಚಿತ್ತಾ | ತಿಳಿಸಿ ಹೇಳುವೆ ಶಾಸ್ತರ ಧುರೀಣಾ
ಮಾಡಬ್ಯಾಡರಿ ಗುಲ್ಲಾ ಸಣ್ಣದೊಡ್ಡವರೆಲ್ಲಾ | ಕೂಡಿ ಕುಂತಿರಿ ಸರೂ ಸಂಪೂರಣಾ
ಏರು || ಒಬ್ಬ ಶರಣರು | ಶಿವನ ಗೆಳೆಯರು | ನಿತ್ಯಕಾಲದಲ್ಲಿ ಸ್ಮರಣೀಯ ಒಳಗೆ
ಚೈನಿಲ್ಲದಾಂಗ ಕುಂತ್ರೋ ರಾತ್ರಿಹಗಲಾ | ಮಾಡಿ ನಮಾಜ ತಿರುಗಿ ಮನಿಗೆ ಹೋಗುವಾಗ
ಇಬಲೀಸ ಬಂದ ದಾರಿವೊಳಗ | ಮನಸ ಒಡಿಸ್ಯಾನ | ಇದ್ದಿಲ್ರಿ ಅವರಿಗೆ ಸಮಾಧಾನ
ಬಿಟ್ಟ ಮನೆದಾರಿ ತಿರುಗೂತ ಪೇರಿ | ಹೋದಾರೋ ಪಾತರದಾಕಿ ಮನೆತನ || ೧ ||

ಇ || ತಗದ ಬೈತಾಲಿ | ಕುಂತಾಳೋ ಬಾಲಿ | ಲಕಲಕ ಹೊಳೆಯತಿತ್ತೊ ಮಾರಿಯ ಚಿನ್ನಾ
ಹರೆಯದ ಭಾರ ಆಗಿ ಶೃಂಗಾರ | ಕೈಹಿಡಿದು ಕರದು ಒಯ್ದಾಳೋ ಶರಣರನಾ
ಏರು || ಕುಂತಾರೋ ಆಗ ಮಂಚದ ಮ್ಯಾಗ | ಆಗಿ ಬಹಳ ಕುಶಲಾ
ತಬಕ ತಂದು ಇಟ್ಟಾಳೋ ಮುಂದ | ಎಲೆ ಅಡಕಿ ಮೊದಲಾ
ವೀಳೆಯ ಮಡಚಿ ಕೊಟ್ಟಾಳೋ ನಾರಿ ಸರೂ ಸಾಮಾನ ಹಾಕಿ
ಜಾಜಿಕಾಯಿ ಪತ್ರಿ ಯಾಲಕ್ಕಿ | ಕೇಳ್ಯಾರ ದರ ಏನ ಇಟ್ಟೀದಿ ಚೌಕ ನೀನಾ || ೨ ||

ಅಂತಾಳ ಬಾಲಿ ಕುಂತ ಹಂತೇಲಿ | ತಿಳಿದವರಿಗೆ ಒಡದ ಹೇಳಲೇನ ನಾನ
ಕೊಟ್ಟಾರ ಕೈಮುಚ್ಚಿ ಹಸ್ತಕ ಹಸ್ತಹಚ್ಚಿ | ಕುಸಿಯಾಗಿ ಗಾದಿಮ್ಯಾಗ ಹೋದ್ರೋ ಬ್ಯಾಗನಾ
ಏರು || ಸಾಂಬನ ಮಾತ ನೆನಪಾತೋ ತುರತಾ | ಆಗ ಶರಣರದು ಜರದೀತೋ ಮನಾ
ಇಲ್ಲಿಗೆ ಬಂದದ್ದು ತಪ್ಪಾಯಿತು ನಂದು | ಅಂದ್ರೋ ಸ್ವಾಮಿ ಸೇಲಾ
ಮಂಚ ಇಳಿದು ಮನಸಿಗೆ ತಿಳಿದು ಬಡಕೊಂಡ ತನ್ನಗಲ್ಲಾ
ಥರ ಥರ ನಡಗೂತ ಅತಗೊಂತ ನಿಂತಾರೋ ಮನಿಯಾಗ || ೩ ||

ಇ || ಅಳುಕ ಕಾರಣ ಹೇಳರಿ ನನಗ | ತಾಯಿ ಕೆಟ್ಟಕೆಲಸ ಮಾಡುವದಿಲ್ಲವ್ವ ನಾನ
ಪರಹಣ್ಣಿನ ಮ್ಯಾಲೆ ಆಗಬಾರದು ಮೋಹ | ಮನದಲಿ ಹಳಹಳಿಸಿ
ಏರು || ಬಿಡತಾರೋ ಸರಸದಿ ಗಾದಿ | ಹೋದಾರೋ ಹೊಂಟ ಆಕಿ ಮನಿಬಿಟ್ಟ
ಮಾಡಿ ನಮಾಜ ಬೇಡಿಕೊಂಡ್ರೋ ಶಿವನ | ಬಂದದ್ದು ಘೋರ ಆದೀತು ದೂರ
ಪಾರ ಮಾಡರಿ ಉಳಿಸಿ ನನ್ನ ಮಾನ ಪಾತರದಾಕಿ ಕುಂತ ಉಸರ‍್ಹಾಕಿ
ತಿಳಿದರೋ ಮನಕ ಮಹಾಕೆಟ್ಟ ಕೆಲಸ ಮಾಡೇನಿ ದೋಷ ಚೈನಿಲ್ಲೊ ಜೀವಕ || ೪ ||

ದಾತರಿ ಹಗಲಿ ನಾನು ಕೆಟ್ಟ ಕೆಲಸದಾಗ ದ್ರವ್ಯಗಳಿಸಿನಿ ಬಲ್ಲಾಂಗ
ಮುಂದ ಆಗೂದು ತಿಳಿದಿಲ್ಲೊ ನನಗ | ತಾಯಿ ತಂದಿನಾ ಕರಸಿ ಎಲ್ಲರನ
ಏರು || ಬದುಕು ಬಾಳುವೆ ಮಾಡತೇನಿ ದಾನ | ತಾಯಿ ತಂದಿ ಆಗ ಅಂತಾರ ಹೀಂಗ
ಬಂದದ್ದ ಹೇಳ ಸಂಕಟವನ | ಮಾಡಿದ ಕರ್ಮಾ ಆದೀತ್ಹ್ಯಾಂಗ ಕಮ್ಮಾ
ಬರದಾನೋ ಬ್ರಹ್ಮಾ ಎಂತಾ ದೈವಾನಾ | ಒಬ್ಬ ಶರಣರು ಸತ್ಯವಂತರು
ನನ್ನ ಮನಿಗೆ ಬಂದ | ಪಾಪ ಪುಣ್ಯ ಎರಡು ಬೇಧಗಳು ಹೇಳಿದ ಒಡದ || ೫ ||

ಈ ಮಾತು ಕೇಳಿದಸುಟ್ಟು ಜೀವಕ್ಕಿಲ್ಲ ಸೊಗಸ | ಬಿಟ್ಟೇನಿ ಕೆಟ್ಟ ಕೆಂಸದ ಧ್ಯಾಸಾ
ಮಾಡಿ ಪಾಪಕ್ಕೆ ಗುರಿಯಾದೆ ಇಷ್ಟು ದಿನ
ಏರು || ನನ್ನ ಮನದಾಗ ತಿಳಿದಿನಿ ಹೀಂಗ | ಆಗುವೆ ನಿಕಾಹ ಶರಣರನ ನಾನಾ
ಖುಷಿಯಾಗಿ ಮನಕ ಕರೆಸಿ ಬಡಜನಕ | ರೊಕ್ಕ ರೂಪಾಯಿ ಮಾಡ್ಯಾಳೋ ದಾನಾ
ಬಿಳಿ ಪೋಷಾಕ ಉಟಗೊಂಡ ಬೆಳಕ | ಹುಡುಕೂತ ಹೊಂಟಾಳೋ ಶರಣರನಾ
ಓಣಿಓಣ್ಯಾಗ ತಿರುಗೂತ ಹೀಂಗ ಕೇಳೂತ ಅವರ ಹೆಸರಾ || ೬ ||

ಇ || ಮಾಡಿ ನಮಾಜ ಕುಂತಿದ್ರೋ ಶರಣರು ಹೋಗಿ ಆಕಿ ನಿಂತಾಳೋ ಇದಿರ
ಕರದಾರೊ ಶರಣರು ಹೆಸರ ತಗೊಂಡು ಆ ನಾರಿ ತಿರುಗಿ ನೋಡ್ಯಾರೋ
ಆಕಿ ಮಾರಿ | ಅಂತಾರೋ ಮನದಾಗ ಉಳಿದಿಲ್ಲೋ ನನ್ನ ಮಾನ
ಶಿವಸಾಂಬನ ಆಟ ಉಸಲು ಹೋತೋ ಹೊಂಟ
ಕಂಡಾಳೋ ಕಣಮುಟ್ಟ ಆದೀತೋಮರಣಾ
ಊರಾನ ಮಂದಿ ಕೇಳಿ ಈ ಸುದ್ಧಿ | ಬಂದು ಕೂಡ್ಯಾರೊ ಸರ್ವ ಎಲ್ಲ ಜನಾ || ೭ ||

ಇಂಥಾ ಶರಣರಿಗೆ ಮರಣಿದುಹ್ಯಾಂಗ | ಬಂದದ್ದು ತಿಳಿದಿಲ್ಲೋ ಧುರಿಣಾ
ಪಾತರದಾಕಿ ನಿಂತು ಉಸುರುಹಾಕಿ ಅಂತಾಳೋ ದೈವಕ
ಏರು || ಕೆಟ್ಟಕ್ರಮಗಳು ಅಳದ ಬಂದೀನಿ ನಾನು ಇವರದುಸಕ
ಮನಿಯಾನ ಧನ ದೌಲತ್ತ ಮಾಡಿಬಂದೆ ಲೂಟಿ
ನಿಕಾಹ ಅಗಬೇಕು ಈತಗ | ನನ್ನ ಕಂಡಾ ಕ್ಷಣಕೆ ಬಿಟ್ಟಿರೋ ಪ್ರಾಣ
ಕೂಡಿ ದೈವದವರು ನನ್ನ ವಿಚಾರ ಮಾಡುತ ಹ್ಯಾಂಗ ಕೊಡತೀರಿ ಮಣ್ಣಾ || ೮ ||

ದೈವದವರು ಸೋಸಿ ಮಾಡ್ಯಾರ ಚೌಕಾಸಿ | ಕರಸ್ಯಾರೋ ಶರಣರ ಸಣ್ಣ ತಮ್ಮನ್ನಾ
ಬಂತೋ ಮನದಾಗ ಈಕಿಗೆ ನಿನಗ ನಿಕಾಹ ಮಾಡತೇವಿ ಆದಿಂದ ಮಣ್ಣಾ
ಏರು || ಕೇಳಿ ಶರಣರ ತಮ್ಮಾ ಅಂತಾನ ಬಂದ್ರ ನಿಮ್ಮ ಮನಕ
ನಿಕಾಹ ನನಗ ಮಾಡ್ರಿ ಅಂತಾನ | ನೀವು ಮಣ್ಣ ಕೊಟ್ಟ ಬಳಿಕ
ತಂದಾರೋ ಎತ್ತಿ ಹೆಣಕ | ತೊಳಿಯಲಾಕ ಹೊರಗ
ಹಸನ ಮಾಡಿ ಇಟ್ಟಾರೋ ಡೋಲ್ಯಾಗ | ಕರ್ಪೂರ ಗಂಧೆಣ್ಣಿ ನಾತ ಸುವಾಸನ || ೯ ||

ಎತ್ತಿ ಗೋರಿತನಕ ಒಯ್ದಾರೋ ಸ್ರವಕ ಹಿಂದಿಂದ ಹೊಂಟಾರೋ ಸರೂಜನಾ
ಕೂಡಿ ದೈವೆಲ್ಲಾ ಮಾಡಿ ಮಣ್ಣಪಾಲಾ | ತಿರುಗಿ ಬಂದಾರೋ ಅವರು ಮನಿತನಾ
ಏರು || ಪಾತರದಾಕಿಗೆ ನಿಕಾಹ ಮಾಡಿದರಾಗ | ತೆರದೀತೋ ಮುಂದೆ ಆಕಿಯ ದೈವಾನ
ಏಳು ಮಂದಿ ಶರಣರು ಹುಟ್ಯಾರೋ ಆಕಿಯ ಹೊಟ್ಟಿಯಲಿಂದಾ |
ಯಾವ ತಾರೀಖದಾಗ ಯಾವ ಹುಟ್ಯಾನ ಒಡದ ಹೇಳ ಬೇಧಾ
ಒಬ್ಬೊಬ್ಬರ ಹೆಸರ ಬೇರೆ ಮಾಡಿ ಖುಲ್ಲಾ ಹೇಳೂತನಾ || ೧೦ ||

ನಿನಗ ಬಿಡೂದಿಲ್ಲ ಇದರಾಗ | ತಿಳೂತೈತಿ ನಿಂದೂ ಎಲ್ಲಾ ಶಾಣೇತನಾ
ಯಾವ ಎಲ್ಲಿ ಮಡಿದ ಹೇಳೋ ನೀನ ಒಡದು ಯಾವ ಶರಣರದು ಎಲ್ಲಿ ಠಿಕಾಣಾ
ಏರು || ಇಡಬ್ಯಾಡರಿ ಕಸರು ಪಾತರದಾಕಿಯ ಹೆಸರ ತಿಳೂತೈತಿ ನಿನ್ನ ಬುದ್ದಿ ಜ್ಞಾನಾ
ಎಷ್ಟು ವಯದಾಗ ನಿಕಾಹ ಆದಳು ಆವಾಗ ತಾರೀಖ ಯಾವದಿತ್ತು ಯಾವದಿನಾ
ಬಾಳ ಬುದ್ಧಿವಂತ ಆದಿರಂತ ಕೇಳಿ ಬಂದೀನಿ ಹೆಸರಾ
ಸವಾಲ ತಲಿಮ್ಯಾಲೆ ಬಂತ ಅಂತ ನಿಂತ ಹಾಕಬ್ಯಾಡ ಉಸರಾ || ೧೧ ||

ಇ || ನಿಕಾಹ ಆದ ಶರಣರ ಹೆಸರು ಹೇಳೋ ಒಡದು ಜನಕ ಬರೂಹಾಂಗ
ಸರ್ವದೈವದ ಮನಕ ಪಂಟ ಹಚ್ಚಿ ಹೋದರ ಬಿಡೂದಿಲ್ಲ ನಾನ
ಏರು || ಬೆನಕದ ಸರ ನಿನಗ ಹಾಕೇನಿ ಕೊರಳಾಗ ಸಿಕ್ಕಿಲ್ಲ ಶಾಣ್ಯಾ ಗುರು ನಿನಗ
ಗುರು ದಸ್ತಗೀರವಲಿ ಸತ್ತುಳ್ಳ ಕೇಸುಪೀರ ಕೊಟ್ಟ ಬುದ್ದಿ ಜ್ಞಾನ
ನಾಗೂ-ಗೌಸುಗ ಹಸ್ತ ತಲಿಮ್ಯಾಲ ಮಾಡಿ ಬಿಟ್ಟಾರ ದಯದ ಕರುಣಾ
ಒಲ್ಲೆ ಒಲ್ಲೆನಂದರ ಜ್ವಾಕಿ ಕೊಟ್ಟ  ಹೋಗತೀರಿ ಹೊಂಟಾ
ಹೋಗಗೊಡುವುದಿಲ್ಲಾ ದೈವದವರು ಹಾಡಾಕ ಬಂದರ ಉಣಿಸುವರೋ ಊಟಾ || ೧೨ ||

* * *

. ಅಬೂಬಕರ ಗುರು ಹ್ಯಾಂಗಾದ ?

ಕುಂತಿರು ದೈವೆಲ್ಲಾ ಬಯ್ಯಾನೊಂದ ಸಭೇದಾಗ
ಚಂದದಿಂದ ತಗದೇನಿ ಅಕಲಾ || ಪಲ್ಲವಿ ||

ಏರು || ನಬಿಸಾಹೇಬ ಶರಣನಾ | ನಮಾಜ ಮಾಡಾಕ ಒಂದಿನಾ
ಸಂಗತಿಲೆ ಜುಬರಾಹಿಲನಾ ಬಂದರಿನ್ನಾ
ಯಾವದಿನ ನಮಾಜ ಮಾಡ್ಯಾರಿನ್ನಾ ||
ಚ್ಯಾಲ || ಅವರ ಮಿತ್ರರು ಇದ್ದಾರೋ ನಾಲ್ವರು
ಇಜರಾಹಿಲ ಇಸ್ರಾಪೀಲ ಹಜರತಲಿಯನಾ ಬಂದಾರೋ ಆದಿನಾ
ಅಬೂಬಕರ ಸಿದ್ದೀಕನಾ | ಬಂದಾರೋ ಒಂದ ದಿನಾ
ಜುಬರಾಹಿಲ ಎದ್ದು ಮಾಡ್ಯಾರವರಿಗೆ ಶರಣಾ || ೧ ||

ಜುಬರಾಹಿಲಗ ಮೊದಲಾ | ನಬಿಸಾಹೇಬರು ಕೇಳಿದರಾಗ ತಗದ ಅಕಲಾ
ಏರು || ಅಬೂಬಕರಗ ಶರಣ ಮಾಡಿದೇನ ಕಾರಣಾ ?
ಹೇಳಬೇಕೋ ತೀವ್ರದಿ ನೀನಾ | ಜುಬ್ರಾಹಿಲನಾ | ಹೇಳ್ಯಾರಿನ್ನಾ
ನನ್ನ ಗುರುವು ಇವರು ಇನ್ನಾ | ನಬಿಸಾಹೇಬರಾಗ
ಚ್ಯಾಲ || ಅಂದಾರೋ ಬೇಗ | ದೂತ ಪೈಲಾ ನೀನಾ | ಗುರು ಹ್ಯಾಂಗ ಅವನಾ
ಇಲ್ಲಿಗೆ ತಂದ ಮುಗಸೇನಿ ಸಂದ ಕೇಳರಿ ಇನ್ನಾ
ಕುಂತಿರು ಸರ್ವಜನಾ ಶಾಹೀರಗಿನ್ನಾ | ತಂದೇನಿ ಮುಸಗಿಯನಾ
ಕುಂಡಿ ಸುಟ್ಟ ಬೆಕ್ಕಿನಾಂಗ ಓಡ್ಯಾಡ ಬ್ಯಾಡೋ ನೀನಾ || ೨ ||

ಜುಬರಾಹಿಲನಾ ಅಬೂಬಕರ ಗುರು ಹ್ಯಾಂಗ ಆದ ಅವನಾ
ಏರು || ಹೇಳಬೇಕೋ ಶಾಹೀರ ನೀನಾ | ನಿಂದು ಐತಿ ವಾಹಿನಾ
ತೀರಲಿ ಇಂದಿನದಿನಾ | ಗುರು ದ್ರೋಹಿ ನೀನಾ | ಆದವನಾ
ಶಾಸ್ತ್ರದ ರೀತಿ ಇಷ್ಟ ಐತಿ ಗೊತ್ತಾ | ಮಾಡತೀದಿ ಕವಿತಾ
ಕೇಳೋ ಹೈವಾನ ನಿನಗಿಲ್ಲೇಳೋ ಗ್ನ್ಯಾನ
ನುಚ್ಚ ಇಟ್ಟವರ ಮನಿಯ ಎತ್ತಕಾಯಾಂವ ನೀನಾ
ನೀನಾದೋ ಬೇಮಾನಾ | ಗುರು ಹುಸೇನ ಸಾಹೇಬನಾ
ಕಣದಿಯ ಕವಿತವನಾ | ಮಾಬುಸುಬಹಾನಿಯವರ ಕರುಣ ಪೂರ್ಣಾ || ೩ ||

* * *

೧೦. ಕಲ್ಮಾ ಎಷ್ಟು ಒಟ್ಟಿಗೆ ಹೇಳೋ ಕುರಾನ್ ನೋಡಿ

ತಂದೆ ತಾಯಿಗೆ ಶರಣು ಮಾಡಿ | ಬಯ್ಯಾನ ಹೇಳತೇವಿ ಕುರಾನ ನೋಡಿ
ಏರು || ವಿದ್ಯಾಬುದ್ದಿಗೆ ಹದ್ದು ಇಲ್ಲಾ ವಿಚಾರ ಮಾಡಿ
ನಾನು ಮೇಲು ಎಂದು ಶಾಹೀರ ಬರತಾನ ಓಡಿ
ಇ || ಗರುವು ಮಾಡಿ ಆಗತಾನ್ರಿ ನಮಗೆ ಆಡಿ
ಕಲ್ಮಾ ಓದತೇವಿ ಇವನಿಗೆ ಪ್ರೀತಿ ಮಾಡಿ || ೧ ||

ಮಹಾ ಮಕ್ಕಾ ಮದೀನಾ ಅನ್ನುವ ರೂಢಿ | ಸ್ವರ್ಗ ಐತರಿ ತಂದೆತಾಯಿ ಪಾದದಡಿ
ಏರು || ಮದೀನಾದಲ್ಲಿ ತಾಯಿ ಮಗಾ ಇದ್ದಾರೋ ಜೋಡಿ
ತಾಯಿ ಬೆಳಸ್ಯಾಳೋ ಮಗನಿಗೆ ಜೋಪಾನ ಮಾಡಿ
ಇ || ಮಾಕಿ ಮೊಹಬ್ಬತ್ ಬಹುತ್ ಬಡಿ
ಮುಂದೆ ಹೇಳುವೆ ಕೇಳರಿ ದೈವಾ ನೋಡಿ || ೨ ||

ಜಿಲಾನಿ ಎಂದು ನಮಗೆ ಕರುಣ ಮಾಡಿ | ಜೋಪಾನ ಮಾಡ್ಯಾಳೋ ತಾಯಿ ಜೋಗುಳ ಹಾಡಿ
ಪ್ರಾಯಕ್ಕೆ ಬಂದ ಮೇಲೆ ಮಗ ಹುಡಿಕ್ಯಾಡಿ
ಒಂದು ಹೆಣ್ಣಿಗೆ ಕಣ್ಣು ಇಟ್ಟಾಳ ಚೆಲುವಿಕಿ ನೋಡಿ
ಇ || ಸೂರ್ಯ ಚಂದ್ರ ನಾಚುವರೋ ಹೆಣ್ಣಿಗೆ ನೋಡಿ
ಥಳ ಥಳ ಹೊಳಿಯುವಳೋ ಬಹಳ ಮಾಡಿ || ೩ ||

ಜಿಲಾನಿಗೆ ಕರದಾಳಾಕಿ ಸನ್ನೆ ಮಾಡಿ
ಅವಳ ಹತ್ತಿರ ಹೋದಾನವನು ಮನಸು ಮಾಡಿ
ಏರು || ಜಿಲಾನಿ ಕೇಳತಾನೋ ಹೆಣ್ಣಿಗೆ ಜೋರುಮಾಡಿ
ಶಾದಿ ಕರಲೇತಾ ಹೂಂಜೀ ಆಪ್ ಹೈಬಡಿ
ಇ || ನಿನಗ ಲಗ್ನ ಆಗಬೇಕಾದರ ಜಿಲಾನಿ ನೋಡಿ
ಒಂದು ಕೆಲಸ ಐತಿ ಅದು ನಡೆಸಿಕೊಡಿ || ೪ ||

ಜಿಲಾನಿ ಕೇಳತಾನು ಜಲ್ದಿ ಮಾಡಿ ಯಾವ ಕೆಲಸ ಇರುವದು ಬೇಗನೆ ನುಡಿ
ಏರು || ನನ್ನ ಮೇಲೆ ಮನಸು ಇದ್ದರ ನೀವು ದಯಮಾಡಿ
ನಿಮ್ಮ ತಾಯಿ ಮಾಂಸ ನನಗ ತಂದು ಕೊಡಿ
ಇ || ಮಾಂಸ ತಂದು ಕೊಟ್ಟರ ಲಗ್ನವ ಹೂಡಿ
ಬೇಗ ತಂದುಕೊಡಬೇಕರಿ ಲಗುಮಾಡಿ || ೫ ||

ಆಗಲಿ ಅಂತಾ ಮನಿಗೆ ಹೋದಾನು ಜಿಲಾನಿ ಓಡಿ
ಕೊಡ್ಲಿ ಹಿಡಿದಾನು ತಾಯಿ ಮಲಗಿದ್ದು ನೋಡಿ ||
ಏರು || ತಾಯಿಗೆ ಕೊಂದು ಮಾಂಸ ಒಯ್ದ ಲಗು ಮಾಡಿ
ಹೋಗುವಾಗ ಕಲ್ಲಿಗೆ ಎಡವಿ ಬಿದ್ದಾನೋ ಖೋಡಿ
ಇ || ಮಾಂಸ ಹೇಳತೈತರಿ ಬಿದ್ದ ಮಗನಿಗೆ ನೋಡಿ
ಅಯ್ಯೋ ಮಗನೆ ಬಿದ್ದಿಯೇನೋ ಮೆಲ್ಲಕ ನಡಿ || ೬ ||

ತಾಯಿ ಮಾಂಸ ಹೇಳುವುದು ಮರಗುತ ಬೋರ‍್ಯಾಡಿ
ಪೆಟ್ಟು ಎಲ್ಲಿ ಬಡದೀತೋ ಮಗನೆ ಹೇಳೋ ಲಗುಮಾಡಿ
ಏರು || ತಾಯಿ ಪ್ರೇಮಾ ಹೆಚ್ಚಿಂದೈತಿ ದೈವಾ ನೋಡಿ
ಅನ್ಯಾಯ ಮಾಡಬಾರದೋ ತಾಯ್ತಂದಿ ಕಡಿ
ಇ || ಸೇವಾ ಮಾಡಬೇಕರಿ ಶಿವನ ಸರಿಮಾಡಿ
ಮಾರೆ ಪಾಂವಮೆ ಶಾನ್ ಹೈಜಿ ದುನಿಯಾಮೆ ಬಡಿ || ೭ ||

ಹೆಣ್ಣಿನ ಹತ್ತಿರ ಹಿಡಕೊಂಡು ಒಯ್ದ ಮಾಂಸದ ತುಕಡಿ
ಮಾಂಸ ನೋಡಿ ಹೆಣ್ಣು ಅಂತಾಳೋ ದೈವಾ ನೋಡಿ
ಏರು || ಜಲ್ಮಾ ಕೊಟ್ಟ ತಾಯಿಗೆ ಕೊಂದಿ ನೀನು ಕುಲಗೇಡಿ
ಮುಂದೆ ನನಗೂ ಕೊಂದಿ ನೀನು ಮೋಸಮಾಡಿ
ಇ || ಲಗ್ನ ಆಗೂದಿಲ್ಲ ನಿನಗೆ ನಾನು ದಯಮಾಡಿ
ತಾಯಿ ಸೇವೆಗೆ ಮಾಡುವವನಿಗೆ ಆಗತೇನಿ ಜೋಡಿ || ೮ ||

ಶಾಹೀರಗ ಕೇಳತೇನಿ ಪ್ರಶ್ನೆ ಮಾಡಿ
ಕಲ್ಮಾ ಎಷ್ಟು ಒಟ್ಟಿಗೆ ಹೇಳೋ ಕುರಾನ್ ನೋಡಿ
ಏರು || ಕವಲೂರು ಇರುವದು ಮುಂಡರಗೀ ಕಡಿ
ಅಲ್ಲೇ ಇರತಾರೋ ಗೌಸು ಜಂದಿಪೀರಾ ಜೋಡಿ
ಇ || ಹಾಡುವರೊ ಕುರಾನ್‌ದೊಳಗಿನ ಮಾಹಿತಿ ನೋಡಿ
ಕುಂತ ನಿಂತ ಜನರಿಗೆ ಶರಣು ಮಾಡಿ
ಬಯ್ಯಾನ ಹೇಳತೇವಿ ಕುರಾನ್ ನೋಡಿ || ೯ ||

* * *

೧೧. ಆ ಪುರುಷ ಎಷ್ಟು ವರುಷ ಸಮುದ್ರದಲ್ಲಿ ಇದ್ದ ಖಾಸ ?

ಸಭಾಸುಂದ್ರ ದೇವಿಂದ್ರ | ಕುಂತೀರಿ ಏಕಂದ್ರ
ಗಿರಿವಾಸ ಶ್ಯಾಮಂದರ ಚಂದ್ರಸೇಲಾ  || ಪಲ್ಲವಿ ||

ಏರು || ಇದ್ದ ಸುದ್ದ ನುಡಿಯೆ ನಾನು | ಬುದ್ದಿವಂತ ಗೆದ್ದ ಕಾಂಬುವೆನು
ಶ್ರೀ ಶ್ರಿಂಗಾರ ಸರಸುವೆನೊ | ಮಂದರ ಗಿರಿಧರನು | ವಿದ್ವಾಂಸ ಇತಿಹಾಸ
ಸರಸ ಹೇಳುವೆ ಹರುಷಾದ ವದನೆ | ಉಲ್ಲಾಸ ಸಾಗರನೆ
ಎಷ್ಟಂತ ನಾ ದೃಷ್ಟಾಂತ ನೋಡಲಿ ಕಷ್ಟ ಪಡುವನೆ
ನೀ ಸೃಷ್ಟಿಕರ್ತನೆ ಕಾಮಸ್ರೆಗಳಂಬು ಪ್ರೇಮ ಭಜಿಸುವೆ ನಾಮಧರನೆ
ನೀ ನಂದಿ ವಾಹನನೆ ಶ್ರೀಧರ ಅವತಾರ ಕರತಾರ ||
ನಿರಂಕಾರ ನಿರ್ಗುಣ ನಿರಾಧಾರ | ಸಂಬರಗುಣ ಅಂಬುರ ಭರಿತಾರ ಸಂಬಲೀಲಾ || ೧ ||

ಶ್ರೀವಾನ ಬಯ್ಯಾನ ಕೇಳರಿ ಇಟ್ಟಧ್ಯಾನಾ
ಶರಣ ಸುಲೇಮಾನರು ಶ್ರೀ ಸಕಲಾ ||
ಏರು || ಸುಂದ್ರಸದರ ಸಿಂಹಾಸನಾ | ಹೊಳುತಿತ್ತು ಚಂದ್ರನ ಕಿರಣಾ
ಸುತ್ತಮುತ್ತ ಮಾಣಿಕ ಹೊನ್ನಾ | ತುಂಬಿ ಜಡದಾಂಗ ಜರಬೀಲೆ ಹರುಣಾ
ಭೂ ಪ್ರಾಂತ ಸೊಂತ ಕುಂತ ತಿರುಗುವರೊ ಸಿಂಹಾಸನದ ಮ್ಯಾಲೆ
ಸುಲೇಮಾನ ಭಕ್ತೀಲೆ ರಂಬೇರ ನಾಗನ್ಯರ ನಿಂತಾರ ಇದರಿಗೆ
ಚವುರಿ ಹಾರಸುತಲೆ ಶ್ರಿಂಗಾರ ಪ್ರೀತೀಲೆ
ಸರಸ ಸಿಂಹವಾಸ | ಹರುಷ ಕೊಡೋ ಜಗದೀಶ ಜರಬೀಲೆ
ಜ್ಯೋತಿ ಜನ್ಮಯಾನಲ್ಲೆ ಶ್ರೀ ಗ್ನ್ಯಾನ ಸುಲೇಮಾನ ಶರಣಾ
ಒಂದಾನ ಒಂದಿನಾ ಮಾಡುತ್ತ ಶಿವನ ಧ್ಯಾನಾ ಕುಂತಾರಲ್ಲಾ || ೨ ||

ಶಿವನ ಅಪ್ಪಣಿಯಲಿಂದಾ ಜಿಬರಾಯಿಲ ಇಳಿದು ಬಂದ ತತ್ಕಾಲಾ
ಶರಣರ ಮುಂದ ತಿಳಿಸ್ಯಾರಲ್ಲಾ ||
ಏರು || ಹೋಗಬೇಕರಿ ಸಮುದ್ರ ಸವಾರಿ | ಚಮತ್ಕಾರ ಪೃಥ್ವಿಮೀರಿ
ಸುಲೇಮಾನನ ನೀವು ಕಂಡೀರಿ | ಕಂಡ ಭೂಪ ಹೈಪ ಆದಿರಿ
ಇಷ್ಟು ಕೇಳಿ ಶ್ರೇಷ್ಟ ಪಟ್ಟ ಸಿಂಹಾಸನ ಹೊಂಟಿತ ಅದಾಗ
ಸುತ್ತ ಮುತ್ತ ರಂಬೇರು | ಸಿಂಹಾಸನ ಮೇಲೆ ಪಕ್ಷಿ ನೆರಳು ಬಿದ್ದೀತ ಸದರಾ
ದೆವ್ವ ಬೂತ ನಾಗನ್ಯಾರು | ನಾ ಮಿಕ್ಕಿ ಕೇಳುವೆ ಲೆಕ್ಕ ಹೇಳೋ ದಿಕ್ಕ ದಿಗಂಬರಾ
ಒಡದ ಹೇಳೋ ಶಾಯಿರಾ | ಹಂಜಿ ಪುಟ್ಟಿ ಮಾಡಿಕೊಂಡ ಹೊಟ್ಟಿ
ಸೃಷ್ಟಿಯೊಳಗ ಬಂದಿಯೋ ಹುಟ್ಟಿ | ಕಡಿಗೆ ನೀ ಹೊರಾಂವಾ ಬಿಟ್ಟಿ ಪಲಿಹುಲ್ಲಾ || ೩ ||

ಸಮುದ್ರಕ ಮುಟ್ಯಾರೋ ಹೋಗಿ ನೋಡ್ಯಾರ ಸುತ್ತಮುತ್ತ ತಿರಗಿ
ಚಮತ್ಕಾರ ಪೃಥ್ವಿಬೇಗಿ ಕಾಣಲಿಲ್ಲಾ ||
ಏರು || ಬಹಳ ಚಿಂತಿ ಬ್ರಾಂತಿಗೆಟ್ಟಾ ಸುಲೇಮಾನ ಕುಂತ ಅಂತಾರಶ್ರೇಷ್ಠಾ
ಶ್ರೀಸಾಂಬ ನೀಲಕಂಠಾ | ಎಲ್ಲೆ ಕಾಣವಲ್ಲದು ಭೂಮಿ ಆಟಾ
ಶ್ರೀ ಸಂಬಾ ನುಡದ ತುಂಬಿ ಅಂಬುರನೆ ಬೋನಿ ಭಗತಾ
ಸುಲೇಮಾನ ಶ್ರೀಮಂತಾ | ಸಮುದ್ರತಳಾ ಮುಟ್ಟಿ ಪಾತಾಳ ನೋಡಿದರಾ ಅಂತಾ
ನಿಮಗ ಆಗೂದು ಗೊತ್ತಾ | ಸುಲೇಮಾನ ಶರಣರು ಕರದಾರ
ಒತ್ತರಲೆ ಬಂದಾವ ದೆವ್ವಭೂತಾ | ಈಗ ಹೋಗಿ ನೀವು ತುರ್ತಾ
ಸಮುದ್ರದೊಳಗ ಮುಣುಗಿ ತಡ ಮಾಡದೆ ಬರಬೇಕ ತಿರುಗಿ
ಏನಾರ ತರಬೇಕ ಹೋಗಿ ತತ್ಕಾಲಾ || ೪ ||

ದೆವ್ವಜಾತ ಸಮುದ್ದರದಲ್ಲಿ | ಮುಣಗ್ಯಾರೋ ಆ ಕ್ಷಣದಲ್ಲಿ
ಹತ್ತಿಲ್ಲ ನೆಲಿ ಖಾಲಿಕೈಲೆ | ಬಂದಾರೋ ಮ್ಯಾಲಾ
ಏರು || ಕಂಡ ಸುಲೇಮಾನ ಶರಣಾ | ಸುಂದಾಗಿ ನಿಂತಾಕ್ಷಣಾ
ಚಿಂತಿಯೊಳು ಕುಂತ ಕರುಣಾ ಬ್ರಾಂತಿಗೆಟ್ಟೇತ್ರಿ ಹರಣಾ
ಎಷ್ಟನೆಂಬಲಿನಾ ಸಂಬಾ ನಿನಗ | ಅಂಬುಜವದನೆ
ನೀ ನಂದಿವಾಹನನೆ | ನಿನ್ನ ಆಟಾ ನೀನೇ ಬಲ್ಲಿಯಲ್ಲ
ನೆಲಿ ನಿರ್ಗುಣನೆ | ಹತ್ತಿಲ್ಲೊ ಸಾಗರನೆ | ಮಂದರ ಗಿರಿಧರ ಸುಂದರ ನೀ
ಚಂದ್ರಶೇಖರನೆ | ನಾ ಇಂದ ಕಾಂಬುವನೆ
ಸಾಂಬನ ಕರುಣದಿಂದ | ಆಕಾಶವಾಣಿ ನುಡಿತ ಛಂದ
ಸಮುದ್ರ ಪಾತಾಳದಲಿಂದ | ನೋಡರಿ ಮೊದಲಾ || ೫ ||

ಉಲ್ಲಾಸ ಶರಣರು ಆಗಿ ತಿಳಿಸ್ಯಾರೋ ಪ್ರಧಾನಿಗೆ
ಸಮುದ್ರದಲ್ಲೇ ಮುಣಗೀ ತರಬೇಕ ಮ್ಯಾಲಾ
ಏರು || ಧೀರ ಗಂಭೀರ ಬೀರಬಲ್ಲಾ | ಪಾತಾಳಕ ಮುಟ್ಯಾರಲ್ಲಾ
ಕಪ್ಪರ ಗುಮಜ ಮಿಗಿಲಾ | ಎತ್ತಿಕೊಂಡ ತಂದಾರ ಮ್ಯಾಲಾ
ನಾಲ್ಕು ದಿಕ್ಕಿಗೆ ನಾಲ್ಕು ಬಾಗಿಲಾ | ಬೆಳಕು ಹೊಳೆವುದಾ
ಮುತ್ತು ಮಾಣಿಕ ಜಡದಾ | ಬೆಳ್ಳಿ ಬಂಗಾರ ಬೆಳ್ಳಿಕಟ್ಟಿ
ತಿಳಿವಾಳಿ ಜಗದಾ | ರತ್ನದಲ್ಲೇ ಬೆರಸಿದಾ
ಹಿರೇಕನ್ನಿ ಪಟ್ಟದರಾಣಿ | ತಾ ಉಣ್ಣು ಮನಿ ಅಳದಾ
ಸಲೇಮಾನ ನೋಡಿದಾ | ಒಂದ ಹನಿ ನೀರ ಇಲ್ಲಾ ||
ಗುಮಜಿನ್ಯಾಗ ಪುರುಷ ಇದ್ದಾ | ನಿಂತ ನಮಾಜ ಮಾಡತಿದ್ದಾ ಶಿವಲೀಲಾ || ೬ ||

ಸುಲೇಮಾನ ಶರಣರು ಭೂಪಾ | ಕಂಡ ಆಗ್ಯಾರ ಹೈಪಾ
ಆ ಪುರುಷಗ ಕೇಳ್ಯಾರ ಸೊಲ್ಪಾ | ಆಗಿ ಶಾಮೀಲಾ
ಏರು || ಖರೇಮಾತ ತಿಳಿಸಬೇಕ | ಇಡಬಾರದು ಏನೇನು ಫರಕ
ಚೈನ ಇಲ್ಲ ನನ್ನ ಮನಕ | ನಿನ್ನ ಕಂಡಿದಾಕ್ಷಣಕ
ಸಮುದ್ರ ಪಾತಾಳದಲ್ಲಿ ಇರುವುದು ಏನ ಕಾರಣಾ
ಒಡದ ಹೇಳೋ ನೀನನ್ನಾ | ಆ ಪುರುಷ ಕೈಯ ಮುಗದ ಅಂದಾಕೇಳರಿ ಶರಣಾ
ಪ್ರೀತಿಯಲಿಂದ ತಂದೆ ತಾಯಿಯದು ಸೇವಾ ಮಾಡಿದಕ ನಾ
ಮೆಚ್ಯಾನಾ ಭಗವಾನಾ | ನನ್ನ ಮ್ಯಾಲೆ ಅಂತಕರುಣಾ
ಇದ್ದಲ್ಲೆ ಸಂಪೂರ್ಣ ಇದ್ದೇನಿ ಇಲ್ಲೆನಾ ಖುಷಿಯಾಲಾ || ೭ ||

ಸುಲೇಮಾನ ಶರಣರು ಬೆರೆತ | ಕೇಳತಾರ ಮತ್ತಪರತ
ಗುರುತ ಹಿಡಿಯೋ ಶಾಹಿರಾ ತುರತಾ | ಕಲಿ ಅಕಲಾ
ಏರು || ಸಮುದ್ರದಲ್ಲೆ ಇದ್ದಿ | ಹಸುವು ಆದರ ಏನ ತಿಂತಿದ್ದಿ
ನಿದ್ದಿ ಹ್ಯಾಂಗ ಮಾಡತಿದ್ದಿ | ಇಷ್ಟೆಲ್ಲಾ ತಿಳಿಸೋ ಬುದ್ದಿ
ಆ ಪುರುಷ ಅಂದಾ | ಪಕ್ಷಿ ಒಂದ | ಪದಾರ್ಥ ಸುಮ್ಮಾ | ತಂದು ಕೊಡುವದು ನೇಮಾ
ದರದಿವಸ ಕಳಿಸಿಕೊಡುವಾ ಹೀಂಗ ಆ ಹರಿಬ್ರಹ್ಮಾ | ಏನ ಇದ್ದಿಲ್ಲಾ ಕಮ್ಮಾ
ನಾ ಆ ಪದಾರ್ಥ ತಿಂದ ಸುಖಾ | ಪಡತಿದ್ದೆ ಜಲ್ಮಾ | ಕೇಳಿ ಬಿತ್ತರಿ ಗುಮ್ಮಾ
ಇರತಿದ್ದೆ ನೋಡರಿ ಗುಮಜಾ | ಇದರೊಳಗೆ ಮಾಡತಿದ್ದೆ ರಮಜಾ
ಯಾರ‍್ಯಾರದು ಇದ್ದಿಲ್ಲಾ ದರಜಾ | ತಿಳಿಸ್ಯಾನ ಖುಲ್ಲಾ || ೮ ||

ಇದರಂತೆ ತಿಳಿ ಶಾಹೀರಾ ಒಡದ ಹೇಳೋ ಪಕ್ಷಿಯ ಹೆಸರಾ
ಹಾಕಬ್ಯಾಡೋ ಕುಂತ ಉಸರಾ | ಮುರದೇನೋ ಹಲ್ಲಾ
ಏರು || ಆ ಪುರುಷ ಎಷ್ಟು ವರುಷ ಸಮುದ್ರದಲ್ಲೆ ಇದ್ದ ಖಾಸ
ಎಷ್ಟಿತ್ತು ಅವನ ವಯಸ್ಸ ಹೇಳೋ ಆಗ ಬ್ಯಾಡೊ ನಪಾಸ
ಈ ಸವಾಲ ನಿನಮ್ಯಾಲೆ ಹಾಕಿ ವರುಷ ಆದ್ವು ನಾಲಕ
ತಿಳಿಸವಲ್ಲಿ ಇನ್ನೂ ತನಕ | ಶ್ಯಾರ ಬಾಗಲಕೋಟ್ಯಾಗ | ಮ್ಯಾಗಿನ ಓಣ್ಯಾಗ
ಮೋಜ ಬಹುಲಕ್ಕ | ಆಗೂದು ದರವರುಷಕ್ಕ
ಮಲ್ಲೇಕಲ್ಲ ಹುಸೇನ ಪೀರ ಜಾಹೀರಾ | ಆಗ್ಯಾರ ಮರತೇಕ
ಸುತ್ತೆಲ್ಲಾ ದೇಶಕ ಹುಸೇನಮಿಯ್ಯಾ ಇದ್ದಾರ ಮಿಕ್ಕಿ
ವೈರಿ ಮುಕಳಾಗ ತುರಕ್ಯಾರ ಗಣಕಿ
ಬಿಡತಾನ ಕಣ್ಣ ಪಿಕಿವಿಕಿ | ಸಿಕ್ಕಿ ಉಸಲಾ || ೯ ||

* * *