Categories
asia

ಬಲ್ಗೇರಿಯಾ

ಬಲ್ಗೇರಿಯಾ ಅಧಿಕೃತವಾಗಿ ಬಲ್ಗೇರಿಯಾ ಗಣರಾಜ್ಯ. ರಾಜಧಾನಿ ಮತ್ತು ದೊಡ್ಡ ನಗರ ಸೋಫಿಯಾ. ಯೂರೋಪಿಯನ್ ಯೂನಿಯನ್, ಯೂರೋಪಿಯನ್ ಕೌನ್ಸಿಲ್‌ನ ಸದಸ್ಯ ರಾಷ್ಟ್ರ. ಯೂರೋಪಿನ ಭದ್ರತೆ ಮತ್ತು ಸಹಕಾರ ಸಂಘಟನೆಯ ಸ್ಥಾಪಕ ರಾಷ್ಟ್ರವಾಗಿದ್ದು, ಮೂರು ಬಾರಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸ್ಥಾನ ಪಡೆದಿತ್ತು. ಬಲ್ಗೇರಿಯಾ ಅಭಿವೃದ್ಧಿಹೊಂದುತ್ತಿರುವ ದೇಶವಾಗಿದ್ದು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ೫೨ನೇ ಸ್ಥಾನದಲ್ಲಿದೆ. ವ್ಯಾಪಕ ಭ್ರಷ್ಟಾಚಾರವು ದೇಶವನ್ನು ಕಾಡುತ್ತಿದೆ. ಇದೊಂದು ದೇಶದ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಯಾಗಿದೆ. ೨೦೧೮ರಲ್ಲಿ ಯೂರೋಪಿಯನ್ ಒಕ್ಕೂಟದಲ್ಲಿ ಅತ್ಯಂತ ಭ್ರಷ್ಟರಾಷ್ಟ್ರವೆಂಬ ಸ್ಥಾನ ಪಡೆದಿದೆ. ಧ್ಯೇಯ – ’ಏಕತೆ ಬಲವನ್ನು ನೀಡುತ್ತದೆ’ ರಾಷ್ಟ್ರಗೀತೆ – ’ಆತ್ಮೀಯ ಮಾತೃಭೂಮಿ’. ಬಲ್ಗೇರಿಯಾ ಸಂಸದೀಯ ಪ್ರಜಾಪ್ರಭುತ್ವವಾಗಿದ್ದು ಪ್ರಧಾನಮಂತ್ರಿ ಸರ್ಕಾರದ ಮುಖ್ಯಸ್ಥನಾಗಿದ್ದಾನೆ. ಉನ್ನತ ಮಧ್ಯಮ ಆದಾಯದ ಮಾರುಕಟ್ಟೆ ವ್ಯವಸ್ಥೆಯನ್ನು ಹೊಂದಿದೆ. ಖಾಸಗಿ ವಲಯ ಶೇ. ೭೦% ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ. ಬಲ್ಗೇರಿಯಾ ಗೋಧಿ ಮತ್ತು ತರಕಾರಿಗಳನ್ನು ಬಾಹ್ಯಾಕಾಶದಲ್ಲಿ ಬೆಳೆದ ಮೊದಲ ದೇಶವಾಗಿದ್ದು, ಅದಕ್ಕಾಗಿ ಹಸಿರುಮನೆಯನ್ನು ಮಿರ್ ಬಾಹ್ಯಾಕಾಶದಲ್ಲಿ ಸ್ಥಾಪಿಸಿದೆ. ೨೦೧೧ರ ರಾಷ್ಟ್ರೀಯ ಜನಗಣತಿ ಪ್ರಕಾರ ದೇಶದ ಜನಸಂಖ್ಯೆ ೭,೩೬೦,೦೦೦. ಬಲ್ಗೇರಿಯಾ ಒಂದು ಜಾತ್ಯತೀತ ರಾಷ್ಟ್ರ. ಪೂರ್ವದ ಕ್ರಿಶ್ಚಿಯನ್ ಸಂಪ್ರದಾಯಸ್ಥರು ಶೇ. ೮೫% ಅಂದರೆ ಅರ್ಮೇನಿಯನ್, ಗ್ರೆಗೋರಿಯನ್, ಆರ್ಥೊಡಾಕ್ಸ್ ಚರ್ಚ್‌ನ ಅನುಯಾಯಿಗಳು ಅಂದರೆ ಪೆಂಟೆಕೊಸ್ಟಲ್, ಮೆಥೋಡಿಸ್ಟ್, ಬ್ಯಾಪ್ಟಿಸ್ಟ್, ಅಡ್ವೆಂಟಿಸ್ಟ್‌ಗಳು ಇದ್ದು ಶೇ. ೧೩% ರಷ್ಟು ಇಸ್ಲಾಂ ಅನುಯಾಯಿಗಳಿದ್ದಾರೆ. ದೇಶದ ಜನಸಂಖ್ಯೆಯಲ್ಲಿ ಶೇ. ೮೪.೮% ಬಲ್ಗೇರಿಯನ್ನರು, ಶೇ. ೮.೮% ಟರ್ಕರು, ಶೇ. ೪.೯% ರೋಮನ್ನರು ಇದ್ದಾರೆ. ಏಕೀಕೃತ ಸಂಸದೀಯ ಗಣರಾಜ್ಯ ಮಾದರಿಯ ಸರ್ಕಾರವನ್ನು ಹೊಂದಿರುವ ಈ ದೇಶದಲ್ಲಿ ಬಲ್ಗೇರಿಯನ್ ಪ್ರಮುಖ ಭಾಷೆಯಾಗಿದೆ. ಸ್ವಾತಂತ್ರ್ಯ ದಿನ – ಅಕ್ಟೋಬರ್ ೫, ೧೯೦೮. ದೇಶದಲ್ಲಿ ಬಳಕೆಯಲ್ಲಿರುವ ನಾಣ್ಯ ಲೆನ್. ದೇಶದ ಅತ್ಯಂತ ಜನಪ್ರಿಯ ಕ್ರೀಡೆ ಪುಟ್ಬಾಲ್. ಪ್ಲೋವ್ಡಿವ್, ವರ್ಣ ಮತ್ತು ಬುರ್ಗಾಸ್ ಪ್ರಮುಖ ನಗರಗಳು.

ಬಲ್ಗೇರಿಯಾ ಭೌಗೋಳಿಕವಾಗಿ ೪೨೦0 ೪೧’ ಉತ್ತರ ಅಕ್ಷಾಂಶ ಮತ್ತು ೨೩೦0 ೧೯’ ಪೂರ್ವ ರೇಖಾಂಶಗಳ ಮಧ್ಯೆ ೧೧೦,೯೯೪ ಚ.ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ದೇಶದ ಉತ್ತರಕ್ಕೆ ರೊಮೋನಿಯಾ (೬೦೯.ಕಿ.ಮೀ) ದೇಶವಿದೆ. ಇದರಲ್ಲಿ ಡ್ಯಾನೂಬ್ ನದಿ ೪೭೦ ಕಿ.ಮೀ ಹೊಂದಿದೆ. ಡ್ಯಾನ್ಯೂಬ್ ನದಿಯ ಉದ್ದಕ್ಕೂ ೪೮ ಬಲ್ಗೇರಿಯನ್ ಮತ್ತು ೩೨ ರೊಮೇನಿಯನ್ ದ್ವೀಪಗಳಿವೆ. ದೊಡ್ಡದಾದ ಬೆಲೆನ್ ದ್ವೀಪ ಬಲ್ಗೇರಿಯಾಗೆ ಸೇರಿದೆ. ಪಶ್ಚಿಮಕ್ಕೆ ಸರ್ಬಿಯಾ (೩೪೧ ಕಿ.ಮೀ.) ಮತ್ತು ಉತ್ತರ ಮ್ಯಾಸಿಡೋನಿಯಾ (೧೬೫ ಕಿ.ಮೀ.), ದಕ್ಷಿಣದ ಗಡಿ ಗ್ರೀಸ್‌ನೊಂದಿಗೆ (೪೯೩ ಕಿ.ಮೀ.) ಮತ್ತು ಟರ್ಕಿಯೊಂದಿಗೆ (೨೫೯ ಕಿ.ಮೀ.), ಪೂರ್ವಕ್ಕೆ ಕಪ್ಪುಸಮುದ್ರ ಗಡಿಯಾಗಿದೆ. ರೊಮೋನಿಯಾದ ಉತ್ತರದ ಗಡಿ ಸೀಸ್ಟ್ರಾ ನಗರದವರೆಗೂ ಡ್ಯಾನ್ಯೂಬ್ ನದಿ ಗಡಿಯನ್ನಾಗಿ ಹೊಂದಿದೆ. ಬಲ್ಗೇರಿಯಾದ ಭೌಗೋಳಿಕ ಕೇಂದ್ರವು ಉಜಾನಾದಲ್ಲಿದೆ. ರಿಲಾ, ಪಿರಿನ್ ಮತ್ತು ಬಾಲ್ಕನ್ ಪರ್ವತಗಳಲ್ಲಿನ ಹಿಮದಿಂದ ಆವೃತವಾದ ಶಿಖರಗಳಿಂದ ಹಿಡಿದು ಬಿಸಿಲಿನ ಕಪ್ಪುಸಮುದ್ರದ ಕರಾವಳಿವರೆಗೆ ಭೂದೃಶ್ಯದೊಂದಿಗೆ ಗಮನಾರ್ಹ ವೈವಿಧ್ಯತೆಯನ್ನು ಹೊಂದಿದೆ. ಉತ್ತರದಲ್ಲಿ ಡ್ಯಾನುಬಿಯನ್ ಬಯಲು ಪ್ರದೇಶದಿಂದ ಮ್ಯಾಸಿಕೋನಿಯಾದ ಕಣಿವೆಗಳಲ್ಲಿ ಮತ್ತು ಥೇಸ್‌ನ ತಗ್ಗುಪ್ರದೇಶದ ಮಾರಿಟ್ಸಾ ನದಿಯ ಉದ್ದಕ್ಕೂ ದಕ್ಷಿಣದ ಬಲವಾದ ಮೆಡಿಟರೇನಿಯನ್ ಹವಾಮಾನ ಪ್ರಭಾವವಿದೆ. ಬಲ್ಗೇರಿಯನ್ ಕಪ್ಪು ಸಮುದ್ರತೀರ, ಆಲ್ಪೈನ್ ಹವಾಮಾನವು ಎತ್ತರದ ಪರ್ವತಗಳಲ್ಲಿ ಮತ್ತು ದಕ್ಷಿಣದ ಪ್ರದೇಶ ಉಪಉಷ್ಣವಲಯದ ಹವಾಮಾನವನ್ನು ಹೊಂದಿದೆ. ಬಾಲ್ಕನ್ ಪರ್ವತಗಳು, ಥಾಸಿಯನ್ ಬಯಲು ಮತ್ತು ರಿಲಾರೋಡೋಪ್ ಮಾಸಿಫ್ ಎಂಬ ಭೌಗೋಳಿಕ ಲಕ್ಷಣಗಳನ್ನು ಹೊಂದಿದೆ. ವಿಟೋಶಾ, ಒಸೊಗೊವೊ ಮತ್ತು ಬೆಲಾಸಿಟ್ಸಾ ಪರ್ವತಗಳನ್ನು ಹೊಂದಿದೆ. ಮುಸಲಾ (೨೯೨೫ ಮೀ) ಅತ್ಯಂತ ಎತ್ತರದ ಪರ್ವತವಾಗಿದೆ. ಬಲ್ಗೇರಿಯಾ ಬಾಲ್ಕನ್ ಪರ್ಯಾಯ ದ್ವೀಪಗಳಲ್ಲಿ ಅತೀ ಎತ್ತರದ ಸ್ಥಳವಾಗಿದೆ. ಅತಿ ಉದ್ದವಾದ ನದಿ ಇಸ್ಕರ್ (೩೬೦ ಕಿ.ಮೀ) ಸ್ಟ್ರುಮಾ ಮತ್ತು ಮಾರಿಟ್ಸಾ ದಕ್ಷಿಣದ ಎರಡು ಪ್ರಮುಖ ನದಿಗಳಾಗಿವೆ. ಒಗೊಸ್ಟಾ ನದಿ ಕಣಿವೆಯಲ್ಲಿ ಹೆಚ್ಚಿನ ಮಳೆಯಾಗುತ್ತದೆ.

ಭೌಗೋಳಿಕಯಾಗಿ ಬಲ್ಗೇರಿಯಾ ಬೋರಿಯನ್ ಸಾಮ್ರಾಜ್ಯದೊಳಗಿನ ಸರ್ಕಂಬೊರಿಯಲ್ ಪ್ರದೇಶದ ಇಲಿಯರಿಯನ್ ಮತ್ತು ಯುಕ್ಷಿನಿಯನ್ ಪ್ರಾಂತ್ಯಗಳನ್ನು ವ್ಯಾಪಿಸಿದೆ. ದೇಶವು ಪ್ಯಾಲಿಯಾರ್ಕ್ವಿರ್ ಪರಿಸರ ವಲಯದ ಆರು ಭೂಪ್ರದೇಶಗಳ ವ್ಯಾಪ್ತಿಗೆ ಬರುತ್ತದೆ. ಬಾಲ್ಕನ್ ಮಿಶ್ರಕಾಡು, ರೋಡೋಪ್ ಮೊಂಟೇನ್ ಮಿಶ್ರಕಾಡು, ಯುಕ್ಷಿನ್ ಕೊಲ್ಟಿಕ್ ಪತನಶೀಲ ಕಾಡುಗಳು, ಏಜಿಯನ್ ಮತ್ತು ಟರ್ಕಿ ಸ್ಕೈರೋಫಿಲಸ್ ಮಿಶ್ರಕಾಡುಗಳು, ಪೂರ್ವ ಯೂರೋಪಿಯನ್ ಅರಣ್ಯ ಹುಲ್ಲುಗಾವಲು ಮತ್ತು ಪಾಂಟಿಕ್ ಕ್ಯಾಸ್ಪಿಯನ್ ಹುಲ್ಲುಗಾವಲುಗಳು. ಬಲ್ಗೇರಿಯಾ ಜೀವವೈವಿಧ್ಯತೆಯನ್ನು ಸಾರುವ ಮೂರು ರಾಷ್ಟ್ರೀಯ ಉದ್ಯಾನವನಗಳು, ೧೧ ಪ್ರಾಕೃತಿಕ ಉದ್ಯಾನವನಗಳು ಮತ್ತು ೫೪ ಪ್ರಕೃತಿ ಮೀಸಲು ಪ್ರದೇಶಗಳಾಗಿ ಸಂರಕ್ಷಿಸಲಾಗಿದೆ. ಪಿರಿನ್ ರಾಷ್ಟ್ರೀಯ ಉದ್ಯಾನವನ ಮತ್ತು ಸ್ರೆಬರ್ನ್ ನೇಚರ್ ರಿಸರ್ವ್ ಗಳನ್ನು ಯುನೆಸ್ಕೋ ವಿಶ್ವಪರಂಪರೆಯ ಪಟ್ಟಿಯಲ್ಲಿ ಸೇರಿಸಲಾಗಿದೆ.

ಬಲ್ಗೇರಿಯನ್ ಜನಪದದ ಒಂದು ಅಂಗ ಬೆಂಕಿ. ಇದನ್ನು ದುಷ್ಟಶಕ್ತಿಗಳು ಮತ್ತು ಕಾಯಿಲೆಗಳನ್ನು ಹೋಗಲಾಡಿಸಲು ಬಳಸುತ್ತಾರೆ. ದುಷ್ಟಶಕ್ತಿಗಳ ವಿರುದ್ಧದ ಕೆಲವು ಆಚರಣೆಗಳು ಇಂದಿಗೂ ಉಳಿದುಕೊಂಡಿವೆ. ಕುಕೇರಿ, ಬದುಕುಳಿದವರು, ಮರ್ಟೆನಿಟ್ಸಾವನ್ನು ವ್ಯಾಪಕವಾಗಿ ಆಚರಿಸಲಾಗುತ್ತದೆ. ನೆಸ್ಟಿನಾಸ್ಟೈವನ್ನು ಯೂನೆಸ್ಕೋ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಸೇರಿಸಿದೆ. ಕ್ರಿ.ಶ. ೧೦ನೇ ಶತಮಾನದಲ್ಲಿ ಪ್ರೆಸ್ಲಾವ್ ಮತ್ತು ಓಹ್ರಿಡ್ ಸಾಹಿತ್ಯ ಶಾಲೆಗಳ ಸ್ಥಾಪನೆಯು, ಮಧ್ಯಯುಗದಲ್ಲಿ ಬಲ್ಗೇರಿಯಾ ಸಾಹಿತ್ಯದ ಸುವರ್ಣಯುಗವಾಗಿತ್ತು.

ಬಲ್ಗೇರಿಯಾ ಎಂಬ ಹೆಸರು ಈ ದೇಶವನ್ನು ಸ್ಥಾಪಿಸಿದ ತುರ್ಕಿಶ್ ಮೂಲದ ಬುಡಕಟ್ಟು ಜನಾಂಗದ ಬಲ್ಗರ್ಸ್‌ನಿಂದ ಬಂದಿದೆ. ಕ್ರಿ.ಪೂ. ೬೫೦೦ರ ಕರಣೋವೊ ಸಂಸ್ಕೃತಿಯು ಈ ಪ್ರದೇಶದಲ್ಲಿ ಹುಟ್ಟಿಕೊಂಡಿತು. ಈ ಪ್ರದೇಶದಲ್ಲಿ ಹಲವಾರು ನವ ಶಿಲಾಯುಗದ ಕುರುಹುಗಳು ಪತ್ತೆಯಾಗಿವೆ. ಕ್ರಿ.ಪೂ. ೬ ರಿಂದ ೩ನೇ ಶತಮಾನದಲ್ಲಿ ಈ ಪ್ರದೇಶವು ಥ್ರೇಶಿಯನ್ನರು, ಪರ್ಷಿಯನ್ನರು, ಸೆಲ್ಟ್ಸ್ ಮತ್ತು ಮ್ಯಾಸಿಡೋನಿಯನ್ನರಿಗೆ ಯುದ್ಧಭೂಮಿಯಾಗಿತ್ತು. ಕ್ರಿ.ಪೂ. ೫ನೇ ಶತಮಾನದಲ್ಲಿ ತಾಮ್ರಯುಗದ ವರ್ಣಸಂಸ್ಕೃತಿ ಚಿನ್ನದ ಲೋಹಶಾಸ್ತ್ರವನ್ನು ಕಂಡುಹಿಡಿದ ಕೀರ್ತಿಗೆ ಪಾತ್ರವಾಗಿದೆ. ಇದಕ್ಕೆ ಸಂಬಂಧಿಸಿದಂತೆ ವರ್ಣ ನೆಕ್ರೆಪೊಲಿಸ್ ನಿಧಿಯು ವಿಶ್ವದ ಅತ್ಯಂತ ಹಳೆಯ ಚಿನ್ನದ ಆಭರಣಗಳನ್ನು ಹೊಂದಿದೆ. ಕ್ರಿ.ಶ. ೪೫ರಲ್ಲಿ ರೋಮನ್ ಸಾಮ್ರಾಜ್ಯವು ಈ ಪ್ರದೇಶವನ್ನು ವಶಪಡಿಸಿಕೊಂಡಿತು. ಕ್ರಿ.ಶ. ೬೮೧ರಲ್ಲಿ ಬಲ್ಗರ್‌ಗಳು ಮೊದಲ ಬಲ್ಗೇರಿಯನ್ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಇದು ಬಾಲ್ಕನ್‌ನಲ್ಲಿ ಪ್ರಾಬಲ್ಯ ಸಾಧಿಸಿತು ಮತ್ತು ಸಿರಿಲಿಕ್ ಲಿಪಿಯನ್ನು ಅಭಿವೃದ್ಧಿಪಡಿಸುವುದರ ಮೂಲಕ ಸ್ಲಾವಿಕ್ ಸಂಸ್ಕೃತಿಯನ್ನು ಪರಸರಿಸಿತು. ಈ ರಾಜ್ಯವು ೧೧ನೇ ಶತಮಾನದ ಆರಂಭದವರೆಗೂ ಇತ್ತು. ನಂತರ ಬೈಜಾಂಟಿಯನ್ ಚಕ್ರವರ್ತಿ ೧೧ನೇ ಬೆಸಿಲ್ ವಶಪಡಿಸಿಕೊಂಡನು. ಕ್ರಿ.ಶ. ೧೧೮೫ರಲ್ಲಿ ಯಶಸ್ವಿ ಬಲ್ಗೇರಿಯನ್ ದಂಗೆ ಎರಡನೇ ಬಲ್ಗೇರಿಯನ್ ಸಾಮ್ರಾಜ್ಯವನ್ನು ಸ್ಥಾಪಿಸಿತು. ಇದು ೨ನೇ ಇವಾನ್ ಅಸೆನ್‌ನ (ಕ್ರಿ.ಶ. ೧೨೧೮-೧೨೪೧) ಅಡಿಯಲ್ಲಿ ಉತ್ತುಂಗಕ್ಕೇರಿತು. ಹಲವಾರು ಬಳಲಿಕೆಯ ಯುದ್ಧಗಳು ಮತ್ತು ಊಳಿಗಮಾನ್ಯ ಕಲಹಗಳ ನಂತರ ೨ನೇ ಬಲ್ಗೇರಿಯನ್ ಸಾಮ್ರಾಜ್ಯವು ಕ್ರಿ.ಶ. ೧೩೯೬ರಲ್ಲಿ ವಿಭಜನೆಯಾಯಿತು. ನಂತರ ೫ನೇ ಶತಮಾನಗಳ ಕಾಲ ಆಟೋಮನ್ ಆಳ್ವಿಕೆಗೆ ಒಳಪಟ್ಟಿತು.  ಕ್ರಿ.ಶ. ೧೮೭೭-೭೮ರ ರುಸ್ಸೊ-ಟರ್ಕಿಶ್ ಯುದ್ಧವು ಮೂರನೇ ಬಲ್ಗೇರಿಯನ್ ರಾಜ್ಯದ ರಚನೆಗೆ ಕಾರಣವಾಯಿತು. ಅನೇಕ ಬಲ್ಗೇರಿಯನ್ ಜನಾಂಗ ಮತ್ತು ಜನರನ್ನು ಗಡಿ ಹೊರಗೆ ಬಿಡಲಾಯಿತು. ಇದು ತನ್ನ ನೆರೆಹೊರೆಯೊಂದಿಗಿನ ಹಲವಾರು ಸಂಘರ್ಷಗಳಿಗೆ ಕಾರಣವಾಯಿತು. ಎರಡು ವಿಶ್ವಯುದ್ಧಗಳಲ್ಲಿ ಜರ್ಮನಿಯೊಂದಿಗೆ ಮೈತ್ರಿ ಮಾಡಿಕೊಂಡಿತು. ೧೯೪೬ರಲ್ಲಿ ಬಲ್ಗೇರಿಯಾ ಏಕಪಕ್ಷದ ಸಮಾಜವಾದಿ ರಾಜ್ಯವಾಯಿತು. ಸೋವಿಯತ್ ನೇತೃತ್ವದ ಈಸ್ಟನ್‌ ಬ್ಲಾಕ್‌ನ ಭಾಗವಾಯಿತು. ೧೯೮೯ರ ಕ್ರಾಂತಿಯ ನಂತರ ಕಮ್ಯುನಿಸ್ಟ್‌ ಪಕ್ಷವನ್ನು ತ್ಯಜಿಸಿ ಬಹುಪಕ್ಷ ಚುನಾವಣೆಗೆ ಅವಕಾಶ ನೀಡಿತು. ಇಂದು ಪ್ರಜಾಪ್ರಭುತ್ವ ರಾಷ್ಟ್ರವಾಗಿ ಪರಿವರ್ತನೆಗೊಂಡಿದೆ.