Categories
ರಚನೆಗಳು

ತುಪಾಕಿ ವೆಂಕಟರಮಣಾಚಾರ್ಯ

೪೦೧
ಅಂಬಾ ನಿಖಿಳಲೋಕ ಜನನಿ ಜಗದಂಬಾ ಪ.
ನಿಖಿಳಲೋಕಸತಿ ಮುಕುತಿಪ್ರದಾಯಕಿ
ಶುಕಶೌನಕಾದಿ ವಿನುತೇ ಕಾತ್ಯಾಯಿನಿ೧
ಆದಿಶಕ್ತಿ ದಿವಿಜಾದಿವಂದಿತೆ ಶಿವೆ
ಯಾದವೇಂದ್ರ ದಾಮೋರಭಗಿನಿ೨
ಕಂಬುಕಂಠಿಣಿ ಸ್ವರ್ಣಕುಂಭಯೋಧರಿ
ಅಂಬುಜಾಸನವಿನುತೆ ಕಾತ್ಯಾಯಿನಿ ೩
ಸರ್ಪವೇಣಿ ವರಬಪ್ಪ ಪುರೇಶ್ವರಿ
ಮುಪ್ಪುರನಾಶನರ್ಧಾಂಗಿ ಕಾತ್ಯಾಯಿನಿ೪
ಸಿರಿಕಾತ್ಯಾಯಿನಿ ಗೌರಿ ಭವಾನಿ
ಹರಿ ಲಕ್ಷುಮಿನಾರಾಯಣ ಭಗಿನಿ೫

೩೬೭
ಅಂಬಾ ಸರಸ್ವತೀ ದೇವಿ ಜಗ-
ದಂಬಾ ಸರಸ್ವತೀ ದೇವಿ ಪ.
ಅಂಭೋಜನಯನೆ ರೋ-
ಲಂಬಕುಂತಳೆ ಜಗ . . . . ಅ.ಪ.
ರುದ್ರಾದಿ ಸುರಕುಲ ಸಿದ್ಧಿಪ್ರದಾಯಕಿ
ಶುದ್ಧ ಸತ್ವಕಲಾಪೆ ಶ್ರದ್ಧಾಭಕ್ತಿಸ್ವರೂಪೆ ೧
ಮಾತ್ರಾಸ್ವರವರ್ಣಮಾನಿ ವಾಣಿ ಕಲ್ಯಾಣಿ
ಸೂತ್ರಾರ್ಥಬೋಧಿನಿ ವಿಧಾತನ ರಾಣಿ ೨
ಕ್ಷೀರಾಬ್ಧಿಶಾಯಿ ಲಕ್ಷ್ಮೀನಾರಾಯಣನ ಕರು-
ಣಾರಸಪೂರೆ ಸುವಿಚಾರೆ ಗಂಭೀರೆ ೩

೧೪೪
ಅಗಜೆ ನಿನ್ನೊಗೆತನದ ಸೊಗಸನೇನೆಂಬೆ
ಜಗವೆಲ್ಲ ನಗುವಂತೆ ಹಗರಣವೆ ತೋರಿಸುವೆ ಪ.
ಕೆಂಗಣ್ಣು ಕೊನೆಮೀಶೆ ಅಂಗವೆಲ್ಲ ವಿಭೂತಿ
ಗಂಗೆ ಶಿರದಲಿ ಬಹು ಭುಜಂಗ ಭೂಷಣನು
ತುಂಗ ತ್ರಿಶಿಖಿವ ಪಿಡಿದು ರಂಗನಟನಂತಿರುವ
ಅಂಗ ಪೂಜೆಯಗೊಂಬ ಇಂಗಿತೇಶನು ಪತಿಯು ೧
ಗೌರಿಯ ಮಗನಾರುಮುಖಿ ಕರಿವದನ ಮತ್ತೋರ್ವ
ಮರುಳುಭೂತಗಳೆಲ್ಲ ಪರಿವಾರವು
ಸುರನಾಥನರಸಿ ಶಚಿ ಗುರು ಮಹಿಳೆ ತಾರಾದಿವರೆ ನಿನ್ನ
ಪರಮ ಸೌಂದರಿಯಕಿದು ಸರಿಯೆಂತು ೨
ಶತ್ರುಜಯ ಸೌಭಾಗ್ಯ ಪುತ್ರ ಮಿತ್ರ ಕಳತ್ರ
ಚಿತ್ರ ಸುಖದಾಯ ಸರ್ವತ್ರ ಪೂಜ್ಯೆ
ಸುತ್ರಾಮಗೊಲಿದೀ ಜಗತ್ರಯವ ಪೊರೆವಸುರ
ಮಿತ್ರ ವೆಂಕಟಪತಿಯ ಪಾತ್ರನೆಂತ್ವಧುವಾದಿ ೩

೪೧
ಅಘಟಿತ ಘಟನಾ ಅದ್ಭುತ ಕಥನಾ
ಮಗುವಿನ ನುಡಿ ಕೇಳು ಮದಮುರಮಥನಾ ಪ.
ಸಾಲದೆರಡು ಮೂರು ಮೂಲಸಹಿತ ತೋರು
ಮೇಲಿನ ಫಲವನ್ನು ಮರೆಯದೆ ಮುಚ್ಚಿಟ್ಟಿರು ೧
ಗುಮ್ಮನ ಕಡೆಯಿಂದ ಗೂಬೆಗಳ್ಬರದಂದ
ಅಮ್ಮನ ತೊಡೆಯ ಮೇಲಿರಿಸೆನ್ನ ಪೂರ್ಣಾನಂದ ೨
ಅಷ್ಟ ನೀನೆನಗಿರೆ ವಪ್ಪದನ್ಯರ ಮೊರೆ
ತಪ್ಪಿಸು ಕರಕರೆ ಸರ್ಪಗಿರಿಯ ದೊರೆ ೩

೧೯
ಅಘಟಿತ ಘಟನಾತ್ಮ ಶಕ್ತಿಯ ನಂಬಿದ
ರಘುಕುಲವೇನಿರದು
ಮಗುವನು ಮಾತೆ ಮಮತೆಯಿಂದ ಪೊರೆವಂತೆ
ನಗುತ ರಕ್ಷಿಪ ಬಿರಿದು ಪ.
ಶಕ್ರನ ಸಲಹ ಬೇಕೆಂದು ವಾಮನವಾಗಿ ಶುಕ್ರ ಶಿಷ್ಯನ ಯಜ್ಞದಿ
ಚಕ್ರವರ್ತೀಶನೆ ತ್ರಿಪದ ಭೂಮಿಯ ನೀಡೆಂದಾಕ್ರಮಿಸಿದ ಜಗದಿ
ವಕ್ರಮತಿಯ ದಾನವರನೆಲ್ಲ ಸದೆದ ತ್ರಿವಿಕ್ರಮಾಹ್ವಯನೀವನು
ಚಕ್ರ ಶಂಕ ಖಡ್ಗ ಗದೆಯ ಧರಿಸಿ ರಿಪು ಚಕ್ರ ಕತ್ತರಿಸುವನು ೧
ಪಂಚಪಂಚದ ಮೇಲಿನ್ನೆರಡು ವರುಷ ವನ ಸಂಚರಿಸಿದ ಬಳಿಕ
ಪಂಚ ಪಾಂಡವರಿಗೆ ಪಂಚಗ್ರಾಮವನೀವ ಹಂಚಿಕೆ ಸರಿಯೆನುತ
ಪಂಚಪಾತಕಿ ಕೌರವೇಂದ್ರನ ಸಭೆಯಲಿ ಪಂಚಾಯಿತನಾಗುತ
ವಂಚಿಸಿ ಭಾವಿ ವಿರಿಂಚಗೆ ಸಕಲ ಪ್ರಪಂಚಾಧಿಪತ್ಯವಿತ್ತ ೨
ಅನುಗಾಲ ನಿಜಪಾದ ವನಜವೆ ಗತಿಯೆಂಬ ಜನರ ಮನೋರಥವ
ಮನಸಿಜಪಿತ ತಾನೆ ನೆನೆಸಿಕೊಂಡಿವುದಕನುಮಾನಿಸನು ಸತತ
ಸನಕಾದಿ ವಂದ್ಯ ಶೇಷಾದ್ರಿ ಶಿಖರವಾಸ ಮನೆಗಧಿಪತಿಯೆನುತ
ಮನ ವಚನಗಳಿಂದ ಮಾಧವಗರ್ಪಿಸಲನುಕೂಲಿಸುವ ನಗುತ ೩

೯೩
(ಭೀಮನಕಟ್ಟೆ ಶ್ರೀರಾಮ)
ಅಚ್ಯುತಪ್ರೇಕ್ಷ ಕರಾರ್ಚಿತ ರಾಮ
ರಕ್ಷಿಸು ಚಂದನಚಾರ್ಚಿತ ರಾಮ ಪ.
ದಾಸಾಗ್ರಣಿ ಭೀಮಸೇನನ ಮನ
ದಾಸೆ ಪೂರಿಪೆನೆಂದು ಬಂದಿಲ್ಲಿ
ವಾಸವಾಗಿಹೆ ತುಂಗಾ ತೀರದಿ ಜಾನ
ಕೀಶ ನಿನ್ನನು ಕಂಡೆ ಮೋದದಿ ೧
ಶ್ರೀ ರಾಮದುರಿತಾಬ್ಧಿವಾರಣ ಹಾದಿ
ದೋರೊ ಮುಂದಕೆ ಫಲಪೂರಣ ೨
ಕೀಶಗೆ ಕಪಿರಾಜ್ಯ ಕೊಡಿಸಿದಿ ವಿ-
ಭೀಷಣನನು ತೋಷಗೊಳಿಸಿದಿ
ಶೇಷಾದ್ರಿ ಶಿಖರದಿ ನಿಲಿಸಿದಿ ನೀನೆ
ಪೋಷಿಪನೆಂದಿಗು ನಿರುತದಿ ೩

೨೦೪
ಅಚ್ಯುತಾನಂತನೆ ನಿನ್ನ ನೆಚ್ಚಿಕೊಂಡಿಹೆನು
ಇಚ್ಛಾರೂಪ ಸ್ವಚ್ಛಾಭೂಪ ಸ್ವೇಚ್ಛೋಪಾತ್ತ ಸಗುಣ ರೂಪ ಪ.
ನಾಮತ್ರಯ ಮಂತ್ರ ಜಪಿಸಿ ಸೋಮಧರನು ತಾನು
ಆ ಮಹಾ ಹಲಾಹಲವನು ನೇಮದಿಂದ ಜಯಿಸಿರುವನು
ಕಾಮಚಾರ ಕುಮತಿ ಮನುಜರಾ ಮಾಯಾದಿಗಳನು
ಶ್ರೀಮಹೀಶ ಸಿಂಧುವಾಸ ನೀ ಮನ್ನಿಸಲು ನಿಲುವದೇನು ೧
ನಗಧರ ನಿನ್ನಂಘ್ರಿಕಮಲಯುಗಳ ಒಂದೆ ಸಾಕು ಎನಗೆ
ತ್ರಿಗುಣ ವಿಷಯವಾದ ಸರ್ವ ನಿಗಮಕರ್ಮವ್ಯಾಕೊ
ಅಗಣಿತಾತ್ಮ ಅಮೃತಾಂಧಸರ ಮಗುವಿನಂತೆ ಪೊರೆವಿ
ನಗುತಲೆನ್ನ ನೀ ಕಾಯ್ದದಕೆ ಪೊಗಳಲು ನಾ ಶಕ್ತನಹುದೆ ೨
ಪೋರ ಕೆಟ್ಟುಹೋದನೆಂದು ಊರಜನರು ನುಡಿದಾ
ಕ್ರೂರ ಮಾತ ಕೇಳಿ ತಾಳಲಾರದೆ ನಾ ಬಂದು
ವಾರಿಜಾಕ್ಷ ನಿನ್ನ ಪದಕೆ ದೂರ ಪೇಳಲಂದು
ಶ್ರೀರಮಣಿಯ ಸಹಿತಲೆನಗಾಧಾರವಾದಿ ದೀನಬಂಧು ೩
ಇಂದ್ರಿಯಂಗಳೆನ್ನ ವಿಷಯಬಂಧದಿಂದ ಬಿಡಲು
ಒಂದು ಕರ್ಮದಲು ಸಾಂಗದಿಂದಲೆನಗೆ ನಿಲಲು
ಇಂದಿರೇಶ ಈ ಕಾರಣದಿ ಕುಂದಮನಕೆ ತಾರದಿರೊ
ತಂದೆ ನೀನೆ ಶರಣನೆಂದು ಹೊಂದಿರುವದನೆಣಿಸಿ ಸಲಹೊ ೪
ನಾಮಸ್ಮರಣವಿತ್ತು ಕಾಯಿ ಕಾಮಿತಾರ್ಥದಾಯಿ
ನೇಮ ಒಂದು ನಡೆಸದಂಥ ಪಾಮರನಾಗಿಹೆನು
ಸೋಮಧರನ ಶುದ್ಧಿಕರಿಸ ಭೂಮಿತೀರ್ಥ ಜನಕರಾಮಕೃಷ್ಣ ವೇದವ್ಯಾಸ ಸ್ವಾಮಿ ಶ್ರೀನಿವಾಸ ೫

೧೯೫
ಅಚ್ಯುತಾನಂದ ಗೋವಿಂದ ಎಚ್ಚರಾಗಿರು
ನಂಬಿದವರ ನೋಡನೆಂಬ ತುಚ್ಛನುಡಿಯ ಪಡೆಯದಿರು ಪ.
ಪವನ ಮುಷ್ಟಿವೆಷ್ಟವಿಷವ
ಶಿವನು ಗೆಲಲು ನಿನ್ನ ನಾಮ
ಸ್ತವನಗೈದನೆಂದು ಮಂತ್ರ
ಕವಿಗಳೆಂಬೊ ಕವನವೇನೊ ೧
ಭರ್ಮಗರ್ಭಾದಿಗಳು ಪೇಳ್ದ
ಕರ್ಮಕಾಂಡ ನೋಡೆ ದೇವ
ಶರ್ಮ ವರದ ನಿನ್ನ ಸ್ಮರಣೆ
ಮರ್ಮವೆಂದು ಒದರುತಿಹುದು ೨
ಮೂರಾರು ಪುರಾಣ ಮಹಾ
ಭಾರತಾದಿ ಕಾವ್ಯಾದಿಗಳ
ಸಾರವರದು ನೋಡೆ ದೀನೋ-
ದ್ಧಾರ ನೀನೆ ತೋರಿಕೊಂಬಿ ೩
ಇಂಥನಂತಾನಂತ ಮಹಿಮ
ವಂತ ನೀನೆ ಶರಣನೆಂದು
ಚಿಂತಿಸುವರಾಜನರಿ-
ಗಂತರಾಯವೆಂತಾಗುವುದು ೪
ಚಂದನ ಮೂರುತಿಯ ನಂಬಿ
ಕುಂದಿದನೆಂಬಪಕೀರುತಿಯ
ಎಂದೆಂದಿಗು ವಹಿಸದಿರು
ತಂದೆ ಲಕ್ಷ್ಮೀ ವೆಂಕಟೇಶ ೫

೩೪೧
(ಅನಂತೇಶ್ವರ ದೇವರನ್ನು ನೆನೆದು)
ಯಾಕಿಲ್ಲಿ ಬಂದು ಮಲಗಿದೆಯೊ ಎಲಾ ಹರಿಯೇ
ಲೋಕೋತ್ತಮಾನಂತೇಶ್ವರ ದೇವಾಲಯದಿ ಪ.
ಬಿಡದೆ ಪಾಲ್ಗಡಲೊಳಗೆ ಕಡು ವೈಭವದಿ ತಡಿಗೆ
ಝಡಿದು ಬರುತಿಹುದು ಭೋರ್ಗುಡಿಪ ತೆರೆಯ
ಝಡಿವ ನಾದಕೆ ಒಡಂಬಡದೇಕಾಂತದಿ ಬಂದು
ಮಡದಿ ಶ್ರೀದೇವಿ ಸಹಿತೊಡನೆ ಮಲಗಿದೆಯೋ ೧
ನೀರೊಳಗೆ ಮುಳುಗಿ ವೇದವÀ ತಂದು ಬೆನ್ನಿನೊಳು
ಭಾರವನು ಪೊತ್ತು ಬಹಳಾಲಸ್ಯವೋ
ಧಾರುಣಿಯ ಸಲಹೆ ಭೋರ್ಗುಡಿಸಿ ಸ್ತಂಭದಿ ಬಂದ
ಕ್ರೂರತನಕಿದುವೆ ವಿಸ್ತಾರ ಸಮಾಧಾನತೆಯೋ ೨
ರೂಢಿಗೊಡೆಯ ತಾನಾಗಿ ಮೋಡಿಯೊಳು ಭೂದಾನ-
ಬೇಡಿದೆನು ಎಂಬ ನಾಚಿಕೆಯ ಮನವೋ
ಖೋಡಿ ನೃಪತಿಯರ ಹೋಗಾಡಿಸುತ ಕಾಡಿನೊಳು
ಕೋಡಗರ ಕೂಡಿ ರಥ ಓಡಿಸಿದ ಬೇಸರವೋ ೩
ಲೋಲಾಕ್ಷಿಯರ ವ್ರತವ ಹಾಳುಮಾಡುತ ಕಲಿಯ
ಕಾಲದೊಳು ಗೈವಂತಮೇಲುಕಾರಿಯದ
ಕಾಲೋಚಿತವ ಮನದೊಳಾಲೋಚಿಸುತ್ತಹಿಯ
ಮೇಲೆ ಪವಡಿಸಿ ನಿದ್ರಾಲೋಲನಾಗಿಹೆಯೋ ೪
ಯುಗಯುಗದೊಳವತಿರಿಸ ಜಗದ ಭಾರವನಿಳುಹಿ
ಬಗೆಬಗೆಯ ನಾಟಕದಿ ಮಿಗೆ ಪಟ್ಟ ಶ್ರಮವ
ತೆಗೆಯಲೋಸುಗ ಚರಣಯುಗವ ಮೃದುಕರದಿ ಶ್ರೀ
ಸೊಗಸಿನಿಂದೊತ್ತುವ ಸೊಂಪೊಗರಿತೋ ನಿನಗೆ ೫
ಲಲಿತ ವೈಕುಂಠದೊಳಗೆ ಜಲಜಭವಮುಖ್ಯಸುರ-
ಗಲಭೆಯುಂಟೆಂದಲ್ಲಿ ನಿ¯ದೆ ಈಗ
ಲಲನೆಯಳ ಕೂಡೆ ಸರಸಗಳನಾಡಲು ತನಗೆ
ಸ್ಥಳವಿಲ್ಲವೆನುತಿಲ್ಲಿ ನೆಲಸಿಕೊಂಡಿಹೆಯೋ ೬
ಸೇರಿರ್ದ ಶರಣ ಸಂಸಾರಿ ನೀನೆಂದು ಶ್ರುತಿ
ಸಾರುವುದು ಕರುಣವನು ತೋರೆನ್ನ ದೊರೆಯೇ
ದಾರಿದ್ರ್ಯದೋಷವಪಹಾರಿಸುತ ಇಷ್ಟಾರ್ಥ-
ಸೇರಿಸೈ ಶ್ರೀ ಲಕ್ಷ್ಮೀನಾರಾಯಣನೆ ಹರಿಯೇ ೭

೩೨೩
ಅನ್ಯರಿಲ್ಲ ಗತಿ
ಅಚ್ಯುತನಾನಂತ ಶ್ರೀಪತಿ
ಅಜಪಿತ ಮಹಾಮತಿ ಪ.
ಸತ್ಯಜ್ಞಾನಾನಂತುಗುಣಸಿಂಧು
ಭಾಗವತಜನಬಂಧು ರಕ್ಷಿಸಿಂದು
ಪ್ರತ್ಯಗಾತ್ಮ ಸುಹೃತ್ತಮ ಜರಾ-
ಮೃತ್ಯುರಹಿತನೆ ಚಿತ್ತಸಾಕ್ಷಿಯೆ ೧
ವಾಸುದೇವ ದಿನೇಶಕೋಟಿಪ್ರಭ
ಪೂಜಿತವಿಬುಧ ಮೌನಿಸಭ ಪದ್ಮನಾಭ
ದಾಸಜನಹೃದಯಾಶ್ರಯಸ್ಥಿತ
ದೋಷಗಂಧವಿದೂರ ಶ್ರೀವರ ೨
ಸಕಲ ಜಗದಾಧಾರಮೂರುತಿಯೆ
ವಿಜಯರಥ ಸಾರಥಿಯೆ ಹರಿಯೆ ದೊರೆಯೆ
ಶಕಟಮರ್ದನ ಶಾಙ್ರ್ಗಧರ ಶ್ರೀ
ಲಕುಮಿನಾರಾಯಣ ನಮೋಸ್ತುತೇ ೩

ಶ್ರೀ ಸುಬ್ರಹ್ಮಣ್ಯ ಸ್ತುತಿ
೪೧೯
ಅಷ್ಟೊಂದು ಸಹಾಯ ಗೈಯಬೇಕಯ್ಯ
ಸೃಷ್ಟಿಗೀಶ ಸುಬ್ವರಾಯ ಕಾರ್ತಿಕೇಯ ಪ.
ಬುದ್ಧಿಗಿತ್ತು ಧೈರ್ಯ ಸಿದ್ಧಿಸಯ್ಯ ಕಾರ್ಯ
ಶುದ್ಧಭದ್ರಕಾಯ ರುದ್ರಾಣೀತನಯ ೧
ಮುತ್ತಿತೆಮಗೆ ಮಾಯಾ ಸತ್ತ್ವಗುಂದಿತಯ್ಯ
ಚಿತ್ತದಭಿಪ್ರಾಯವೆತ್ತ ಬಾಹುಲೇಯ ೨
ಪಾವಂಜಾಖ್ಯ ಕ್ಷೇತ್ರಾಧಿವಾಸಶ್ರೇಯ
ದೇವ ಲಕ್ಷ್ಮೀನಾರಾಯಣನ ಸುಪ್ರೀಯ೩

೨೯
ಅಹಹ ಮರುಳನಾದೆ ಸುಮ್ಮನೆ ಪೂರ್ವ
ಮಹಿಮ ಹರಿಯ ಸೇವೆಯನ್ನು
ಸಹಿಸಿಕೊಂಡು ಗ್ರಹದೊಳಿರದೆ ಪ.
ಇಂದಿರೇಶನಿರವನರಿಯದ ಮೂರ್ಖರಾದ
ಮಂದಮತಿಗಳಾದ ಕುಜನರ
ಬಂದು ಸೇರಿ ಬುದ್ಧಿಹೀನರೆಂದ ನುಡಿಯ ಕೇಳಿ ಬಹಳ
ನೊಂದು ಮಿಡುಕಲಾದೆ ಗೋವಿಂದನಮಲ ಮೂರ್ತಿ ಬಿಟ್ಟು ೧
ತರಣಿ ತಿಮಿರವಟ್ಟಿಲಿರುವದೆ ಸಿಂಹರಾಜ
ಮರಿಯ ಕೂಡೆ ನರಿಯು ಬರುವುದೆ
ಮರುಳತನದ ಭಾಗ್ಯವೆಂಬೀ ನರಕ ಪಾತ್ರರಾದ ಜನರು
ಹರಿಯ ಪಾದ ಪದ್ಮದಾಸ ಚರಿಯವೆಂದು ತಿಳಿವರುಂಟೆ ೨
ನೀರಗುಳ್ಳೆಕಿಂತ ಲಘುತರವಾದ
ಸಂಸಾರ ಸಂಬದ್ಧ ಪರಿಸರ
ಸೇರಿ ಹಿಂದೆ ನಡೆದ ತಪ್ಪ ನೀರಜಾಕ್ಷ ಕ್ಷಮಿಸಿ ಮಹಾ-
ದ್ವಾರದೆಡೆಗೆ ಕರಸಿಕೊಳ್ಳೊ ಭೂರಮೇಶ ವೆಂಕಟೇಶ ೩

೩೫೩
ವಾಯುದೇವರು
ಆಂಜನೇಯ ಕುಂತೀತನಯ-
ಅಂಜನಾಭಪ್ರಿಯ ಮಧ್ವಾಖ್ಯರಾಯ ಪ.
ಮಂಜುಳಾಂಗ ಮೃತ್ಯುಂಜಯಾದಿ ಸುರ-
ರಂಜಿತಾತ್ಮ ಭಯಭಂಜನ ನಿತ್ಯ ನಿ-
ರಂಜನ ದೇವಪ್ರಭಂಜನತನಯ ಅ.ಪ.
ರಾಮರಾಯಬಂಟ ದಿತಿಸುತ-
ಸ್ತೋಮಹರಣ ತುಂಟ
ಸ್ವಾಮಿಕಾರ್ಯಮನಪ್ರೇಮನಿರಾಮಯ
ಭೀಮಪರಾಕ್ರಮಧಾಮ ಘನಾಘನ-
ಶ್ಯಾಮ ನಿಕಾಮ ಸುಧೀಮಲಲಾಮ ೧
ಚಿಂತಾಮಣಿ ರಾಮ ನೇಮ-
ವಾಂತು ಸಾರ್ವಭೌಮ
ಸಂತೋಷದಿ ಗಗನಾಂತರಪಂಥದಿಂ
ಅಂತರಿಸುತ ಮಹಾಂತೋದಧಿಯ
ಪ್ರಾಂತಕೆ ಹಾಯ್ದ ನಿಶ್ಚಿಂತ ಹನುಮಂತಾ ೨
ಆಟನೋಟದಿಂದ ವನದೊಳು
ಸಾಟಿಯಾಗಿ ಬಂದ
ಮೀಟೆನಿಸುವ ಬಲು ಕಾಟಕ ದೈತ್ಯರ
ಕೂಟ ಕೆಡಹಿ ಪುರಕೋಟಿಯ ತಿಕ್ಕಿದ
ಪಾಟಲಮುಖ ಶತಕೋಟಿಶರೀರ ೩
ಅಟ್ಟಹಾಸದಿಂದ ಕಮಲದಿ
ಪುಟ್ಟಿದಾಸ್ತ್ರದಿಂದ
ಕಟ್ಟಿಕೊಳ್ಳಿಸಿ ಜಗಜಟ್ಟಿ ಖ್ಯಾತಿಯಿಂದ
ದಟ್ಟಿಸಿ ಲಂಕೆಯ ಪಟ್ಟಣವನು ಸೂರೆ-
ಸುಟ್ಟುಬಿಟ್ಟ ಕಡುದಿಟ್ಟ ಹನುಮಂತಾ ೪

೧೪೭
(ಶುಕಾಚಾರ್ಯರ ಸ್ತೋತ್ರ)
ಆಚಾರ್ಯನ ನೋಡಿ ಸುಮ್ಮನೆ ಪೇಚಾಡಲು ಬ್ಯಾಡಿ
ಕೀಚಕ ವೈರಿಯ ಮುತ್ಯನ ಕೂಡಿ ಘೃತಾಚಿಯು
ಪಡದ ಮೃಡಾತ್ಮನ ಪಾಡಿ ಪ.
ಬಾಲಕರಂತಿರುವ ಧೂಸರ ಧೂಳಿಯ ಧರಿಸಿರುವಾ
ಕೇಳಿದವರಿಗೊರೆವಾ ಭಗವನ್ಮೂಲ ತತ್ವದಿರವಾ
ಬಾಲ ಪರೀಕ್ಷಿತ ಲಾಲಿಸುವಂತೆರ-
ಮಾಲಯ ಗುಣವರುಣಾಲಯ ತಿಳಿಸಿದ ೧
ವ್ಯಾಪಿಸಿ ಕೊಂಡಿರುವಾ ಸಂಸೃತಿ ತಾಪತ್ರಯ ಭರವಾ
ತಾಪಕ ಮತ್ಸರವಾ ಮೋಹ ಮಹಾಪರಾಧದಿರವಾ
ದೀಪವು ತಿಮಿರವ ಕಳವಂದದಿ ನಿ-
ಲೋಪಗೊಳಿಸುವ ಪರೋಪಕಾರಿಯನು ೨
ಭಾಗವತಾಮೃತವಾ ಮುಖದಿ ಸರಾಗದಿ ಧರಿಸಿದನಾ
ವಾಗೀಶಾಂಶಕನಾ ಹೊಂದಿರೊ ಗುರುಮುನಿ ಶುಕನಾ
ತಾಗುಬಾಗುವೊಳಗಾಗದ ತೆರದಲಿ
ನಾಗ ಗಿರೀಂದ್ರನು ನಲಿವನು ಮನದಲಿ ೩

ಆತ್ಮ ನಿವೇದನೆ
೧೬೩
ಅನಾಥ ಬಂಧೋ ಆದಿ ಪುರುಷ ಪ.
ಅನಾಥ ಬಂಧೋ ಗುಣ ಗಣ ಸಿಂಧೋ
ಮನಸಿಜ ಜನಕನೆ ಮರೆಯದಿರೆಂದೂ ಅ.ಪ.
ಅನುಚಿತ ಕರ್ಮದ ಬಲೆಯಲಿ ಸಿಕ್ಕಿ
ದಿನಗಳ ಕಳೆದನು ಮನೆಯಲ್ಲಿ
ತನುವಿನ ಸ್ಥಿತಿಯನು ಪೇಳಲೇನು ಶ್ರೀ-
ವನಜ ಭವಾರ್ಚಿತ ಒದಗುವಿ ಸಮಯದಿ ೧
ವಿಧಿ ನಿಮಯಗಳನುಸರಿಸದೆ ಕ-
ಣ್ಣಿದಿರಲಿ ಕಾಂಬುದ ಗ್ರಹಿಸದೆ
ಮಧುಮಥನನೆ ತ್ವತ್ಪರ ಪದ್ಮವ ನಂ-
ಬಿದೆ ಕರುಣೋದಧಿ ಕಾಯೊ ಬೇಗದಲಿ ೨
ಸರ್ವಭಾರವು ನಿನ್ನ ಮೇಲಿಹುದು ಮ
ತ್ತೋರ್ವಗುಂಟೆ ನಿನ್ನಯ ಬಿರುದು
ಮರ್ವನೀಯದೆ ಮನದಲ್ಲಿರು ವೆಂಕಟ
ಪರ್ವತೇಂದ್ರ ಪೂರ್ಣಾನಂದಪ್ರದ ೩

೩೭
ಆನಂದತೀರ್ಥ ವಂದ್ಯ ಪಾಲಿಪುದು ಸು-
ಜ್ಞಾನ ಭಕುತಿಯಾನಂದ
ಶ್ರೀನಿವಾಸ ತವ ಧ್ಯಾನವನೆನಗಿತ್ತು
ಸಾನುರಾಗದಿ ಕಾಯೊ ಸನಕಾದಿ ಮುನಿವಂದ್ಯ ಪ.
ಅಖಿಳ ವೇದವಿದಿತ ದಾಸೀಕೃತ ವಿಖನಸಗಣವಿನುತ
ನಿಖಿಳ ದೋಷದೂರ ಸಕಲ ಸದ್ಗುಣಪೂರ
ಅಖಿಳಾಂಡ ಕೋಟಿಧರ ಸ್ವಾಧಾರ
ವಿಕಸಿತಾಂಬುಜಪತ್ರನೇತ್ರನೆ ಮುಕುರಗತಿ ಪ್ರತಿಬಿಂಬನಂದದಿ
ಪ್ರಕಟನಾಗೀಗೆನ್ನಿದಿರಿನಲಿ ಸುರನಿಕರನಂದನ ನೀರದಪ್ರಭ ೧
ಮಾರನಂದನ ನಿನ್ನಯ ಲೀಲಾಮೃತವಾರುಧಿಯೊಳಗಿಳಿದು
ಶ್ರೀರಮಣಿಯು ಇನ್ನು ಪಾರಗಾಣದೆ ತತ್ವ-
ಸಾರ ನಿನ್ನುರವನು ಸೇರಿಕೊಂಡಿಹಳು
ಕ್ರೂರ ಕರ್ಮಾಚರಣ ತತ್ವವಿಚಾರಗಂಧ ವಿದೂರವಾಗಿಹ
ಹಾರಕೂಪದಿ ಮುಳುಗಿರುವನ ಕರಾರವಿಂದದಿ ಪಿಡಿದು ರಕ್ಷಿಸು ೨
ವೇದ ಸ್ರ‍ಮತ್ಯುಕ್ತವಾದ ಕರ್ಮಗಳೆಂಬೊ ಹಾದಿಯನರಿಯೆ ಇನ್ನು
ಈ ಧರೆಯೊಳಗಿಹ ತೀರ್ಥಕ್ಷೇತ್ರಯಾತ್ರೆ-
ಯಾದರು ಮಾಡದಿನ್ನು ಎನ್ನನು
ಶ್ರೀಧರ ಕರಕಮಲ ಪೂಜಿತಪಾದ ನಿನಗೊಪ್ಪಿಸಿದೆ ದೈನ್ಯದಿ
ಕಾದುಕೊಂಬುವ ನೀನೆ ಕರುಣಾಂಬೋಧಿ ಶೇಷಧರಾಧಿರೇಶನ ೩

೪೬೪
ಆನಂದಾನಂದಂ ಶಿವಶಿವ ಆನಂದಾನಂದಂ ಪ.
ಅಪ್ಪ ಅಣ್ಣನೆಂದು ಕರೆದರೆ ನಮಗಿಹ
ತಪ್ಪುಗಳನು ಜಗದಪ್ಪನಿಗೊಪ್ಪಿಸುವಾನಂದಾನಂದಂ ೧
ತತ್ತ್ವವರಿತು ಹರಿಭೃತ್ಯರೊಳಾಡುತ
ಚಿತ್ತವ ಸಂತತೇಕಾತ್ಮನೊಳಿಡುವಂಥಾನಂದಾನಂದಂ೨
ಭೂರಿ ಸಂಸಾರಕೆ ಸೇರಿದೆ ನಿತ್ಯದಿ
ಧೀರ ಲಕ್ಷ್ಮೀನಾರಾಯಣನೆಂಬುವದಾನಂದನಂದಂ೩

೨೨೯
(೩೯ನೇ ವರ್ಷದ ವರ್ಧಂತಿ)
ಆವ ರೀತಿಯೊಳೆನ್ನ ಕಾವಿ ಹರಿ
ಭೂವರ ಭಾಗ್ಯದೇವಿಯ ಕೂಡಿ ಶುಭಕಾರಿ ಪ.
ಏಕೋನ ಚತ್ವಾರಿಂಶತಿವತ್ಸರವು ಸಂತು
ರಾಕುತನದೊಳೆನಗೆ
ಬೇಕು ಬೇಕೆಂಬಾಶಾಪಾಶವ ಸುಡಲಾರೆ
ಭೀಕರಗೊಳಿಪ ಬಗೆ
ಮಾಕಳತ್ರನೆ ಸುಮ್ಮನ್ಯಾಕುಪೇಕ್ಷಿಪೆ ಕರು
ಣಾಕರ ಕಡೆಗಣ್ಣಿಂದಲಿ ನೋಡು ಕಮಲಾಕ್ಷ ೧
ಹಲವು ಹಂಬಲಿಸುತ ಬಳಲಿದೆ ದಿನದಿನ
ಗಳಿತವಾಗಿಹ ದೇಹದಿ
ಬಲವು ಕುಂದಿತು ಒಂದು ನೆಲೆಯ ಕಾಣದು ಕಳ-
ವಳಿಕೆಯಿಂದಲಿ ಮನವು
ಮೊಲೆಯ ಕಂದನೊಳ್ ಫಲ ಸಲುವುದೆ ಮಾತೆಗೆ
ನಳಿನನಾಭನೆ ಎನ್ನ ತಪ್ಪೆಣಿಸದಿನ್ನು ೨
ನಿನ್ನ ನಾಮವ ನಂಬಿ ನೆನೆವರಿಗಖಿಳಾರ್ಥ
ಸನ್ನಹ ಸುಲಭನೆಂದು
ಮುನ್ನಿನ ಮುನಿಗಳು ನುಡಿದ ಮಾತನು ಶ್ರುತಿ
ಸನ್ನುತ ಮರೆಯಲೆಂದು
ಎನ್ನ ಮನೋರಥ ಕೊಡುತ ಕರುಣಾಸಿಂಧು
ಪನ್ನಗಾಚಲನಾಥ ಪಾವನಕರ ಬಂಧು ೩

೪೬೫
ಇಂಥ ಜನಗಳಿಗೆ ಎಂಥಾದ್ದು ಹರಿಕಥೆ
ಕುಂತಿಮಕ್ಕಳಿಗಾಯ್ತು ಕಾಂತಾರವಾಸಪ.
ಸ್ವಂತ ಧರ್ಮವ ಬಿಟ್ಟು ಆಂತನ್ಯಧರ್ಮವ
ಸಂತಾಪಕ್ಕೊಳಗಾಗಿ ಭ್ರಾಂತಿಪಟ್ಟಿಹರು೧
ಜೀವಿಸಿ ಮೃಗದಂತೆ ಸಾವನು ಬಗೆಯದೆ
ಕೇವಲ ತಾಮಸ ಯಾವಜ್ಜೀವನವು೨
ಸರಕಾರದ ಭಯ ಸರ್ವರಿಗಿದ್ದರು
ಸರಿಯಾಗಿ ನಡೆಯದೆ ಬರಿದೆ ಬಳಲುವರು೩
ಬಡವರ ಬಾಯನು ಹೊಡೆದು ತಂದು ತನ್ನ
ಮಡದಿಮಕ್ಕಳಿಗುಣಬಡಿಸಿ ಮೆರೆವರೈ೪
ಲಕ್ಷ್ಮೀನಾರಾಯಣನ ಲಕ್ಷಣಾಂಕಿತರನ್ನು
ಲಕ್ಷ್ಯಕ್ಕೆ ತಾರದ ಕುಕ್ಷಿಂಭರರು೫

೨೧೦
ಇಂದಿರೆಯರಸ ಇರಿಸು ಕರುಣಾರಸ
ಇಂದಿರೆಯರಸ ವಶನಾಗು ಸರಸ ಪ.
ನಿರ್ವಾಹವಿಲ್ಲದೆ ಸರ್ವಾಸೆ ತೊರದೆ
ನಿರ್ವಾಣ ವಂದ್ಯ ನೀನೆ ಗತಿಯೆಂದು ನಂಬಿದೆ ೧
ಕ್ಷೀಣನಾದೆನು ಗುಣ ಕಾಣದೆ ದಿನ ದಿನ
ಪ್ರಾಣದಾಯಕ ನಿನ್ನಾಣೆಯಿಟ್ಟುಸುರುವೆ ೨
ನುಡಿದರೆ ಶ್ರಮದಿಂದ ನಡುಗುತಲಿದೆ ದೇಹ
ಕಡಲಶಯನ ಇನ್ನು ತಡವ ಮಾಡುವಿಯಾಕೆ ೩
ರಕ್ತವಾರುತ ಬಂತು ಶಕ್ತಿ ಇರುವುದೆಂತು
ಯುಕ್ತವಾದರೆ ಕಂತುಪಿತ ನಿನ್ನ ಸೇವೆ ಸಂತು ೪
ತಾಳಲಾರದೆ ಪೇಳ್ದ ಬಾಲಭಾಷಿತವನ್ನು
ಲಾಲಿಸಿ ಕ್ಷಮಿಸು ಲೋಲ ವೆಂಕಟರಾಜ ೫

೧೯೧
ಇಂದಿರೇಶ ದಯದಿಂದಲಿ ತ್ವರಿತದಿ ಬಂದು ಒದಗಿ ಸಲಹೊ
ಮಂದರಧರನನು ತಂದು ಕಡದ ಸುರವೃಂದಕೆ
ಸುಧೆಯಾನಂದ ಉಣಿಸಿದ ಪ.
ಇನ್ನು ನಿರೀಕ್ಷಿಸಲೆನಗೆ ಸಾಧ್ಯವಿಲ್ಲ ಅನ್ಯ ಸಾಧನವಿಲ್ಲ
ಮುನ್ನಿನ ಮಾರ್ಗದ ರೀತಿಯ ನೋಡಲು ಮನ್ನಿಪ ಜನರಿಲ್ಲ
ಧನ್ಯ ವಿಬುಧ ಗಣ ಮಾನ್ಯ ಮುಕುಂದನೆ
ಇನ್ನು ಬಳಲಿಸದೆ ಮನ್ನಿಸು ಮಾಧವ ೧
ಮೂರು ಜಗದಿ ದೊರೆ ದಾರು ನೀನಲ್ಲದೆ ಮಾರಮಣನೆ ನಿನ್ನ
ಸೇರಿದ ಬಳಿಕೀ ಧಾರುಣಿ ಒಳಗೆ ನಿವಾರಣೆಯದೇನೊ
ಮೂರು ದೊರೆಗಳಲಿ ವಾರಿಜನಾಭ ನೀ
ಪ್ರೇರಕನಾಗಿರೆ ಘೋರವಾವರಿಸುವುದೆ ೨
ತಪ್ಪುಗಳೆಲ್ಲವ ಒಪ್ಪಿಕೊಳ್ಳೊಯೆನ್ನಪ್ಪ ನೀ ಕರುಣದಲಿ
ಒಪ್ಪಿಸಿ ಪಡದನು ತಪ್ಪದೆ ಮನದೊಳಗಿಪ್ಪ ವ್ಯಸನ ಬಿಡಿಸೊ
ಸರ್ಪ ಗಿರೀಂದ್ರನೊಳೊಪ್ಪುವ ಸತ್ಯ ಸಂ-
ಕಲ್ಪ ಭಜಕ ನಿಜ ಕಲ್ಪತರುವೆನಿಪ ೩

೪೮೯
ವನಭೋಜನ
ಊರ್ವಶಿ: ಇದೀಗ ಮನವು ಇಂದಿರಾಕ್ಷಿ ಇದೀಗ ಮನವುಪ.
ಮಧುಸೂದನ ತನ್ನ ಸದನದಿಂದಲಿ ಒಮ್ಮೆ
ಒದಗಿ ಪಯಣಗೈದು ಪದುಳದಿ ಮಂಡಿಪ೧
ವಾಸುದೇವ ತಂಪಾಶುಗದಿಂದಾ-
ಯಾಸವ ಬಿಡಿಸಿ ಸಂತೋಷಪಡಿಸುವಂತಿದೀಗ೨
ಭಾಗವತರು ಅನುರಾಗದಿ ಕೂಡಿ ಸ-
ರಾಗದಿ ಯೋಗಾರೋಗಣೆಮಾಡುವದೀಗ೩
ಧಾತ್ರಿ ಉತ್ಪನ್ನ ಸತ್ಪಾತ್ರ ವಿಯೋಗ ಸು-
ಕ್ಷೇತ್ರ ಸುಧಾಮಯ ಕೀರ್ತಿಯೆಂದಿನಿಸುವ ೪
ತರುಗುಲ್ಮಾವಳಿ ಸುರಮುನಿಗಳು ಕಾಣೆ
ಉರು ಪಾಷಾಣವೆಲ್ಲವು ಸಚ್ಚರಿತವು೫
ರಂಭೆ : ಪೋಗಿ ಬರುವ ವನಕ್ಕಾಗಿ
ನಾಗವೇಣಿ ಲೇಸಾಗಿ ಬೇಗ ನಾವುಪ.
ಭಾಗವತಾದಿ ಸಮಾಗಮವಾದರೆ
ಭಾಗ್ಯವಂತೆಯರ್ನಾವಾಗಿ೧
ಹರಬ್ರಹ್ಮಾದಿ ನಿರ್ಜರರಿಗಸಾಧ್ಯವು
ಹರಿಪ್ರಸಾದವೆಂದು ಸಾಗಿ ಬೇಗ೨
ನಾರಿ ನಿನ್ನ ಉಪಕಾರ ಮರೆಯೆ ನಾ
ಭೂರಿ ಪುಣ್ಯವಶಳಾಗಿ೩
ಕಾಣದಿರಲು ಯೆನ್ನ ಪ್ರಾಣ ನಿಲ್ಲದು ಕಾಣೆ
ಶ್ರೀನಿವಾಸನ ಭೇಟಿಗಾಗಿ೪
ಊರ್ವಶಿ : ಅಭಿಷೇಕವನು ಗೈದರಾಗ ಮನಸಿಗನುರಾಗ ಪ.
ವಿಭುಧೋತ್ತಮರೆಲ್ಲರು ಕೂಡುತ್ತ
ಶುಭ ಋಗ್ವೇದೋಕ್ತದಿ ನಲಿಯುತ್ತಅ.ಪ.
ಕ್ಷೀರಾರ್ಣವದೊಳಗಾಳಿದವಂಗೆ
ಕ್ಷೀರಾಬ್ಧಿಯ ದುಹಿತೆಯ ಗಂಡನಿಗೆ
ನೀರಜನಾಭನ ನಿಖಿಲ ಚರಾಚರ
ಪೂರಿತ ಕಲ್ಮಷದೊರಗೆ ಕ್ಷೀರದ೧
ಚದುರತನದಿ ಗೊಲ್ಲರೊಳಾಡಿದಗೆ
ದಧಿಪಾಲ್ ಬೆಣ್ಣೆಯ ಸವಿದುಂಡವಗೆ
ಮದನಜನಕ ಮಹಿಮಾಂಬುಧಿ ಕರುಣಾ-
ಸ್ಪದ ಸತ್ಯಾತ್ಮ ಸನಾಥಗೆ ದಧಿಯ೨
ಶ್ರುತಿಸ್ರ‍ಮತಿತತಿನುತ ರತಿಪತಿಪಿತಗೆ
ಅತುಲಿತಗುಣ ಸೂನೃತಭಾಷಿತಗೆ
ದಿತಿಸುತಹತ ಶೋಭಿತ ಮೂರುತಿ ಶಾ-
ಶ್ವತವಾಶ್ರಿತ ವಾಂಛಿತಗೆ ಘೃತವ೩
ಮಧುಸೂದನ ಮಂದರಗಿರಿಧರೆಗೆ
ಮೃದುವಾಕ್ಯಗೆ ಮಂಗಲಾಂಗನಿಗೆ
ಪದಮಳಾಕ್ಷ ಪರಾತ್ಪರವಸ್ತು ನೀ-
ರದ ಶ್ಯಾಮಲ ನಿತ್ಯಾತ್ಮಗೆ ಮಧುವಿನ೪
ಕರುಣಾಕರ ಕಮಲಜತಾತನಿಗೆ
ದುರುಳ ಸುಬಾಹು ತಾಟಕಿ ಮರ್ದನಗೆ
ನರಕಾಂತಕ ನಾರಾಯಣ ಸಕಲಾ-
ಮರಪೂಜಿತಗೆ ಸರ್ವಾತ್ಮಗೆ ಸಕ್ಕರೆ೫
ಎಳೆತುಳಸೀವನಮಾಲಾಧರಗೆ
ಫಲದಾಯಕ ಪರಬ್ರಹ್ಮರೂಪನಿಗೆ
ಕಲುಷರಹಿತ ನಿರ್ಮಲಚಾರಿತ್ರ್ಯ ನಿ-
ಶ್ಚಲಿತಾನಂದ ನಿತ್ಯನಿಗಳ ನೀರಿನ೬
ಕನಕಾಂಬರಧರ ಶೋಭತನಿಂಗೆ
ಮನಕಾನಂದವ ಪಡಿಸುವನಿಂಗೆ
ಚಿನಮಯ ಪರಿಪೂರ್ಣ ವಿಶ್ವಂಭರ
ಜನಕಜಾ ವರನಿಗೆ ಕನಕಾನನೀಕದ೭
* * *
ವೆಂಕಟೇಶ ಕಣ್ಣ ಮುಂದೆ ನಿಂತಿದಂತಿದೆಪ.
ಶಿರದೊಳು ರತ್ನಕಿರೀಟದ ಝಳಕ
ಮೆರೆವ ಲಲಾಟದಿ ಕಸ್ತೂರಿತಿಲಕ
ವರ ಕರ್ಣಕುಂಡಲಗಳ ಮಯಕನಕ
ಚೆಲುವ ಚರಾಚರಭರಿತಜ ಜನಕ೧
ಕಂಬುಕಂಠದಿ ಕೌಸ್ತುಭವನಮಾಲ
ಇಂಬಾಗಿಹ ಭೂಷಣ ಶುಭಲೋಲ
ಸಂಭ್ರಮಿಸುವ ಮೋಹನ ಗುಣಶೀಲ
ಅಂಬುಜನಾಭಾಶ್ರಿತಜನಪಾಲ೨
ಶಂಖಸುದರ್ಶನಗದಾಪದ್ಮ ಧಾರಿ
ಕಂಕಣವೇಣುವಡ್ಯಾಣವಿಹಾರಿ
ಬಿಂಕದ ಬಿರುದಾಂಕಿತ ಕಂಸಾರಿ
ಶಂಕೆಯಿಲ್ಲದ ಭೂಷಣಾಲಂಕಾರಿ೩
ಎಡಬಲದಲಿ ಮಡದಿಯರ ವಿಲಾಸ
ಕಡುಬೆಡಗಿನ ಪೀತಾಂಬರಭೂಷ
ಕಡಗ ಕಾಲಗೆಜ್ಜೆ ಅಂದುಗೆಯಿಟ್ಟು ತೋಷ
ಒಡೆಯ ಶ್ರೀನಾರಾಯಣ ಸರ್ವೇಶ೪
ಈ ರೀತಿಯಲಿ ಶೃಂಗಾರನಾಗುತ್ತ
ಭೂರಿಭಕ್ತರ ಕಣ್ಮನಕೆ ತೋರುತ್ತ
ನಾರದಾದಿ ಮುನಿವರ ಗೋಚರದ
ಚಾರುಚರಣವನು ತೋರಿಸಿ ಪೊರೆದ೫
* * *
ಆರೋಗಣೆಯ ಗೈದನು ಶ್ರೀರಂಗ
ಸಾರಸವಾದ ಸಮಸ್ತ ವಸ್ತುಗಳ ಪ.
ಧೂಪದೀಪನೈವೇದ್ಯವಿಧಾನ
ಶ್ರೀಪರಮಾತ್ಮ ಮಂಗಲಗುಣಪೂರ್ಣ೧
ಸುರತರುವಿನ ಸೌಭಾಗ್ಯದ ತೆರನ
ಮರಕತಮಯ ಹರಿವಾಣದೊಳಿದನ೨
ಭಕುತರ ಸೌಖ್ಯವಿನ್ನೇನೆಂಬುವೆನು
ಶಕುತ ಶ್ರೀಮಾಧವ ನಿರತ ತೋರುವನು೩
* * *
ಆರತಿ ಶ್ರೀನಿವಾಸಂ ಶ್ರೀವೆಂಕಟೇಶಂ
ಗಾರತಿ ಶ್ರೀನಿವಾಸಂಪ.
ಮಂಗಲಾಂಗ ನರಸಿಂಗ ಮನೋಹರ
ರಂಗರಾಯ ಶ್ರೀಗಂಗಾಜನಕಗೆ೧
ಮಾಧವ ಮಧುಹರ ಮೋದಭರಿತ ಜಗ-
ದಾಧಾರ ವೇಣುನಾದವಿನೋದಗೆ೨
ನಿತ್ಯನಿರಂಜನ ಸತ್ಯಸ್ವರೂಪಗೆ
ಪ್ರತ್ಯಗಾತ್ಮಪರತತ್ತ್ವಸ್ವರೂಪಗೆ೩
ಊರ್ವಶಿ : ಭೋಜನವ ಗೈದರು ಶರಣರೆಲ್ಲ
ಭೋಜನವ ಗೈದರು ಪ. ಮೂಜಗತ್ಪತಿಯ ಪ್ರಸಾದಪ್ರತಾಪದಿ ನೈಜವಾಗಿಹ ಪಾಪ ಮಾಜಿ ಹೋಗಾಡುತ್ತ೧
ಬಗೆಬಗೆ ಷಡುರಸದ ಭಕ್ಷ್ಯಗಳ
ಜಿಹ್ವೆಗೆ ರುಚಿಕರವಪ್ಪುದ
ಮಿಗಿಲಾದ ಶಾಕಪಾಕಗಳನ್ನು ಪಾತ್ರದಿ
ತೆಗೆದು ಸಂತೋಷ ಬೆಡಗುಗಳ ತೋರುತ್ತ೨
ಉಪ್ಪು ಉಪ್ಪಿನಕಾಯಿಯು ಸಾಸಿವೆ ತೋವೆ
ಹಪ್ಪಳ ಸಂಡಿಗೆಯು
ತಪ್ಪು ಒಗರ ಶಾಲ್ಯನ್ನಗಳೆಲ್ಲವ
ತಪ್ಪದೆ ಸವಿದು ಬಾಯ್ ಚಪ್ಪರಿಸಿದರಾಗ೩
ಪಾಯಸ ಪರಮಾನ್ನವು ಘಾರಿಗೆಯು ರಸಾಯನ
ಹೋಳಿಗೆಯು
ಕಾಯದ ಜಡಗಳು ಮಾಯಕವಾದವು
ಆಯುರಾರೋಗ್ಯ ಸುಶ್ರೇಯ ಕಾರಣವಾಯ್ತು೪
ಸುರರು ಉರಗ ಸಿದ್ಧರು ಗರುಡ ಗಂಧರ್ವರು
ಮಾನವರೆಲ್ಲರೂ
ದೊರೆಯ ಪ್ರಸಾದವು ದೊರಕಿತು ಎನುತ ವಿ-
ಸ್ತರವಾದ ತೋಷದಿ ಭರದಿಂದೊದಗುತಲಿ೫

೧೦೯
ಇದು ನೋಡಿ ಚೋದ್ಯ ಇದು ನೋಡಿ ಚೋದ್ಯ ಸರ್ವದ
ವೇದ ವೇದ್ಯ ನಂಬಿದ ಭಕ್ತ ಜನರಿಗಾಗುವ ಸುಖಸಾಧ್ಯ ಪ.
ಶ್ರೀ ಮಹೀಶ ಸತ್ಯಭಾಮೆಯರರಸ ಸು-
ಧಾಮ ತಂದವಲಕ್ಕಿ ಪ್ರೇಮದಿಂದಲಿ ಮೆದ್ದ ೧
ಅಂಡಜವಾಹ ಬ್ರಹ್ಮಾಂಡಗಣಾತತ
ಪಾಂಡುಕುವರನಿಗಾದನು ಭಂಡಿಸೂತ ೨
ಆದರೀ ಕೃತಮಾಯ ಕೃತ್ಯಕದಂಡ ಸ-
ನ್ಮುದದಿಂದ ವಿದುರನ ಮನೆಯ ಪಾಲುಂಡ ೩
ಶ್ರೀವರೀವರಿಯಿಂದ ಸರಸಮಾಡುತಲಿರೆ
ಗೋಪಿಯರಿಗೆ ಮೆಚ್ಚಿ ಗೋವುಗಳ ಕಾಯ್ದ ೪
ಎಲ್ಲ ಜಗವ ಪೊಟ್ಟೆಯಲ್ಲಿಟ್ಟು ಸಲಹುವ
ಗೊಲ್ಲರ ಹುಡುಗರ ಪೆಗಲೇರಿ ಮೆರೆದ ೫
ಘೋರ ಸಂಸಾರಪಹಾರಿ ನಾರದ ವಂದ್ಯ
ಜಾರ ಚೋರ ಕೃತ್ಯ ತೋರಿದ ವರದ ೬
ದೇವ ಮಾನವ ದೈತ್ಯ ಗಣರಿಗಾಧಾರ ಮ-
ತ್ತಾವ ಕಾಲಕು ಭೇದಭೇದವ ಸೇರಾ ೭
ತೇಜಸ್ತಿಮಿರಾದಿ ಸೋಜಿಗ ಶಕ್ತಿಮ-
ಹೋಜಸನೀತ ಪರಾಜಯ ರಹಿತಾ ೮
ಪರದೇಶಿಯ ಮೇಲೆ ಕರುಣ ಕಟಾಕ್ಷದಿ
ಸಿರಿಯೊಡಗೂಡಿ ಬಂದಿರುವ ಶೃಂಗಾರ ೯
ಸರ್ವಕಾಲದಿ ತನ್ನ ನೆನವಿತ್ತು ದುಷ್ರ‍ಕತ
ಪರ್ವತಗಳ ಪುಡಿ ಮಾಡುವ ಧೀರ ೧೦
ತನಯನ ಕಲಭಾಷೆ ಜನನಿ ಲಾಲಿಸುವಂತೆ
ಮನಕೆ ತರುವ ನಮ್ಮ ಮಾತಿನ ಸಾರ ೧೧
ಪೋರಭಾವವ ಶುಭವೇರಿಸುವನು ತುಷ
ವಾರಿಯು ಗಂಗೆಯ ಸೇರುವಾಕಾರ ೧೨
ವಿದ್ಯ ಬುದ್ಧಿಗಳಿಲ್ಲದಿದ್ದರು ದಾಸರ
ನುದ್ಧರಿಸುವ ನಿರವದ್ಯ ಬೇಗದಲಿ ೧೩
ತನ್ನ ಮರತ ಶ್ರುತಿ ಸನ್ನುತ ಕರ್ಮವ
ಮನ್ನಿಸನೆಂದಿಗು ಮುರನರಕಾರಿ ೧೪
ಚಿಂತಾಕ್ರಾಂತಿಗಳಿರದಂತೆ ಸರ್ವದ ನಿ-
ರಂತರ ಪೂಜೆಗೊಂಬರ ಚಕ್ರಧಾರಿ ೧೫
ನಿರುಪಮಾನಂದ ನಿರ್ಭರ ಪುಣ್ಯಮೂರ್ತಿ
ಶ್ರೀವರ ಶೇಷ ಭೂಧರವರನ ಸತ್ಕೀರ್ತಿ ೧೬

೧೮೧
ಇದು ಸಮಯ ಜಗದೀಶ ಯಾಕೆ ಸಾವಕಾಶ
ಮದಮುಖರ ಮುರಿದೊತ್ತು ಮಾಕಮಲಜೇಶ ಪ.
ಕ್ಷೀರಾಬ್ಧಿ ಸುಧೆ ಸುರರ ಸೇರಿತೆಂದಸುರೇಶ
ರಾರುಭಟಿಗೊಳೆ ಶಂಬರಾರಿ ಕೆಂಗೆಡಲು
ಕಾರುಣ್ಯವಾರ್ಧಿ ಖಗವೇರಿ ಬಂದ ಭಯಕರ
ದೋರಿದವನೆಂದರಿದು ಚೀರುವೆನು ನಿನ್ನಿದಿರು ೧
ಎಷ್ಟೋ ಪರಿಯಿಂದ ಪರಮೇಷ್ಠಿವಂದ್ಯನೆ ಕೃಪಾ-
ದೃಷ್ಟಿಯೆನ್ನಲಿ ನೀನಿಟ್ಟು ಸಲಹುವುದು
ಅಷ್ಟಮದಮೋಹದಿಂದೆಷ್ಟಾದರೂ ಬೇಸರದೆ
ನಿಷ್ಠೂರ ನುಡಿವ ಮತಿಭ್ರಷ್ಟರ ಮನದಪ್ಪದಕೆ೨
ನಿನ್ನ ದಾಸರ ನಿಂದೆ ನೀ ಸಹಿಸದವನೆಂದು
ಮುನ್ನ ಮುನಿಗಳು ಪೇಳ್ದ ಮುಖ್ಯ ತತ್ವವನು
ಪನ್ನಗಾಚಲನಾಥ ಪಾಲಿಸುವುದುಚಿತ ಸುರ
ಮಾನ್ಯ ಮಾನವಕಾವರನ್ಯರನು ನಾ ಕಾಣೆ ೩

೨೪೯
ಇನ್ನಾದರೂ ಬುದ್ಧಿ ಬಾರದು ಜನಕೆ
ಕಣ್ಣಾರೆ ಕಂಡರು ಮರವುದು ಮನಕೆ ಪ.
ಉದರದಲ್ಲಿ ರಚಿಸುವರ್ಯಾರು ರೂಪಾ-
ತದಧೀನವಾಗಿ ಬರುವದೆಂದು ತಾಪ
ಮದ ಮೋಹಾದಿಗಳೆಂತು ಮಸುಕುವದೆಂತರಿ-
ತಿದ ನೋಡಿದರೆ ಕರ್ತ ತೋರುವ ಭೂಪ ೧
ಕಾರಣ ಸಾಮಥ್ರ್ಯಯಿದ್ದರು ಕಾರ್ಯ
ತೋರದು ಕೆಲರಿಗೆ ತನ್ನಂತಾಗುವದು
ವಾರಿಧಿ ಶಯನನ ವಶವಾದರಿಂದಹಂ-
ಕಾರದಿಂದಲಿ ತನ್ನಿಂದಹದೆಂಬ ಮೋಹದಿ ೨
ರಕ್ಷಕರಿಲ್ಲದ ಶಿಶು ಬದುಕುವುದು
ಲಕ್ಷ ಜನರ ಯತ್ನದಲಿ ಮತ್ತೊಂದಿರದು
ಲಕ್ಷ್ಮೀರಮಣ ವೆಂಕಟೇಶನ ಗತಿಯೆಂದಾ-
ಪೇಕ್ಷಿಸದಿರೆ ಕುಕ್ಷಿಯೊಳಗಿಟ್ಟು ಸಲಹುವಾ ೩

೧೬೫
ಇಲ್ಲಿ ಬಾರೋ ಹರಿ ತಾತ್ಸಾರ ಥರ
ವಲ್ಲ ನಿನಗೀ ಪರಿ ಪ.
ಬಿಲ್ಲಹಬ್ಬದ ನೆವನದಿಂದತಿ
ಮಲ್ಲಕಂಸಾದಿಗಳ ಮಡುಹಿದ
ಬಲ್ಲಿದನೆ ಲೋಕದಲಿ ಸರಿ ನಿನ-
ಗಿಲ್ಲ ಶ್ರೀ ಭೂನಲ್ಲ ಕೃಪೆಯಿಂದ ಅ.ಪ.
ಶ್ರೀ ಪಯೋಜಭವ ಶಿವ ಶಕ್ರಾದಿಗಳನ್ನು
ಕಾಪಾಡಿ ಖಳಕುಲವ ಖಂಡಿಪ ಸರ್ವ
ಭೂಪತಿ ತವ ಪಾದವ ನಂಬಿರಲೆನ್ನ
ನೀ ಪರಿಯೊಳತಿ ತೀವ್ರ ದುರಿತ ಮ-
ಹಾಪಯೋಧಿಯೊಳಿಳಿಸಿದರೆ ಸುಜ-
ನಾಪವಾದವು ಬಿಡದು ನಿನ್ನ ಪ-
ದೇ ಪದೇ ಇನ್ನೆಷ್ಟು ಪೊಗಳಲಿ ೧
ಬಿಡದು ಪೂರ್ವದ ಕರ್ಮ ಕೊಡುವುದು ಫಲವೆಂಬ
ನುಡಿಯನುಭವಸಿದ್ಧವು ಆದರು ಜಗ
ದೊಡೆಯಗಾವದಸಾಧ್ಯವು ನೀ ಮಾಳ್ಪ ಚೋದ್ಯವು
ನುಡಿ ಮನೋಗತಿಗಳುಕವೆಂಬೀ
ಸಡಗರವು ವೇದ ಪ್ರಸಿದ್ಧವು
ನಡೆಯಲೇಳಲು ಶಕ್ತಿ ಕುಂದಿದ
ಬಡವನನು ಕೈಪಿಡಿದ ತವಕದೊಳ್ ೨
ಬೆಟ್ಟದೊಡೆಯ ವೆಂಕಟೇಶ ನೀ ಗತಿ ಎಂದು
ಘಟ್ಯಾಗಿ ನಂಬಿರುವ ದಾಸನ ಕೈಯ
ಬಿಟ್ಟರೆ ಸರಿಯೆ ದೇವ ಸಜ್ಜನರ ಕಾವ
ಸಟ್ಟಸ ಶಿಗಡಿ ನೀರ ಸುರಿಸುತ
ಕಟ್ಟಿಕಟ್ಟಿಸುತದರ ಛಾಯ ದೊ –
ಳಿಟ್ಟ ಗದ್ದಿಗೆಯಲ್ಲಿ ಕುಳಿತು ಸ-
ಮೃಷ್ಟ ಸುಖವುಂಬರಸನಂದದಿ ೩

೪೮೧
ಚತುರ್ದಶಿಯ ದಿನ
(ಹನುಮಂತನನ್ನು ಕುರಿತು)
ರಂಭೆ : ಇವನ್ಯಾರೆ ದೂರದಿ ಬರುವವ ಇವನ್ಯಾರೆಪ.
ಇವನ್ಯಾರೆ ಮಹಾಶಿವನಂದದಿ ಮಾ-
ಧವನ ಪೆಗಲೊಳಾಂತು ತವಕದಿ ಬರುವವ೧
ದಾಡೆದಂತಮಸಗೀಡಿರುವದು ಮಹಾ
ಕೋಡಗದಂತೆ ಸಗಾಢದಿ ಬರುವವ೨
ಕಡಲೊಡೆಯನು ಮೃದುವಡಿಯಡರಿಸಿ ಬಿಡ
ದಡಿಗಡಿಗಾಶ್ರೀತರೊಡಗೂಡಿ ಬರುವವ೩
ಊರ್ವಶಿ :ನಾರಿ ಕೇಳೆಲೆಗೆ ವೈಯಾರಿ ನೀ ಮುದದಿ
ನಾರಾಯಣನಿಗೀತ ಬಂಟನಾದಾದರಿದಿ
ವೀರ ರಾಮವತಾರದಿ ಹಿಂದೆ ಹರಿಯ
ಚಾರಕನಾಗಿ ಸೇವೆಯ ಗೈದ ಪರಿಯ
ಕ್ರೂರ ದಶಾಸ್ಯನ ಗಾರುಗೆಡಿಸಿ ನೃಪ
ವೀರನ ಪೆಗಲಿನೊಳೇರಿಸಿ ದೈತ್ಯರ
ಭೂರಿವಧೆಗೆ ತಾ ಸಾರಥಿಯಾದವ
ಕಾರುಣೀಕ ಮಹಾವೀರ್ಹನುಮಂತ೧
ಆಮೇಲೆ ವೀರಾವೇಶದಿ ವಾರಿಧಿಯನು
ರಾಮನಪ್ಪಣೆಯಿಂದ ದಾಟಿದನಿವನು
ಭೂಮಿಜೆಗುಂಗುರ ಕೊಟ್ಟ ನಂತರದಿ
ಕಾಮುಕರನು ಸದೆಬಡಿದನಾ ಕ್ಷಣದಿ
ಹೇಮಖಚಿತ ಲಂಕಾಮಹಾನಗರವ
ಹೋಮವ ಗೈದು ಸುತ್ರಾಮಾರಿಗಳ ನಿ-
ರ್ನಾಮಿಸಿ ಸೀತೆಗೆ ತಾ ಮಣಿಯುತ ಚೂ-
ಡಾಮಣಿ ತಂದ ಮಹಾಮಹಿಮನು ಇವ೨
ವಾರಿಮುಖಿ ನೀ ಕೇಳಿದರಿಂದ ಬಂದ
ವೀರ ಹನುಮಂತನನೇರಿ ಗೋವಿಂದ
ಸ್ವಾರಿಗೆ ಪೊರಟ ಚಾತುರ್ದಶಿ ದಿವಸ
ಆರತಿಯನು ಕೈಕೊಳ್ಳುವ ಶ್ರೀನಿವಾಸ
ಭೇರಿ ಮೃದಂಗ ಮಹಾರವದಿಂದ ಸ-
ರೋರುಹನಾಭ ಮುರಾರಿ ಶರಣರು
ದ್ಧಾರಣಗೈಯುವ ಕಾರಣದಿಂದ ಪಾ-
ದಾರವಿಂದಗಳ ತೋರಿಸಿ ಕೊಡುವ೩
ಬಳಿಕ ಪಲ್ಲಂಕಿ ಏರಿದ ಕಾಣೆ ನಾರಿ
ನಲವಿಂದ ವೇದಘೋಷವ ಕೇಳ್ವ ಶೌರಿ
ಜಲಜಭವಾದಿ ನಿರ್ಜರರಿಗಸಾಧ್ಯ
ಸುಲಭನಾದನು ಭಕ್ತಜನಕಿದು ಚೋದ್ಯ
ಸುಲಲಿತ ಮಂಟಪದೊಳೊ ನೆಲಸುತ ನಿ-
ಶ್ಚಲಿತಾನಂದ ಮಂಗಲದ ಮಹೋತ್ಸವ
ಗಳನೆಲ್ಲವ ಕೈಕೊಳುತಲಿ ಭಕ್ತರ
ಸಲಹುವ ನಿರುತದಿ ಮಲಯಜಗಂಧಿನಿ೪
ಶ್ರೀಕಾಂತ ಬಳಿಕ ಭಕ್ತರ ಒಡಗೂಡಿ
ಏಕಾಂತ ಸೇವೆಯಗೊಂಡ ಕೃಪೆಮಾಡಿ
ಸಾಕಾರವಾಗಿ ತೋರುವ ಕಾಣೆ ನಮಗೆ
ಬೇಕಾದ ಇಷ್ಟವ ಕೊಡುವ ಭಕ್ತರಿಗೆ
ಶ್ರೀಕರ ನಾರಾಯಣ ಶ್ರೀನಿವಾಸ ಕೃ-
ಪಾಕರ ವಿಬುಧಾನೇಕಾರ್ಚಿತ ರ-
ತ್ನಾಕರಶಯನ ಸುಖಾಕರ ಕೋಟಿ ವಿ-
ಚಾರಕ ಭಾಸತ್ರಿಲೋಕಾಧಿಪನಿವ೫

ಈಚೆಗೆ ದೊರೆತ ಹಾಡುಗಳು
೫೦೭
ನರಹರಿಯ ನೋಡಿರೈ
ಸರಸಿಜನಾಭನ ನಿರುಕಿಸಲೀಕ್ಷಣ ಪ.
ಮನದಣಿಯಾ ನೋಡಿರೈ
ಮನಮೊರೆಯಾ ಬೇಡಿರೈ ಅ.ಪ.
ತರಳ ಪ್ರಲ್ಹಾದನ ಮೊರೆಯನು ಕೇಳಿ
ಭರದಿಂ ನರಮೃಗ ರೂಪವ ತಾಳಿ
ದುರುಳ ಹಿರಣ್ಯಕಶ್ಯಪನನು ಸೀಳಿದ
ಪರಿಯ ನೋಡಿರೈ ೧
ಭವಪಿತ ಭವನುತ ಭವತಾಡರಹಿತ
ಭವನಾಮಾಂಕಿತ ಭವಭವ ವಂದಿತ
ನವ ಮನ್ಮಥ ಶತಧೃತನ ಮೃತನೊಳ
ಮಿತ ಸಿರಿಯಾ ಬೇಡಿರೈ ೨
ಸುರನರ ಕಿನ್ನರನುತ ವಿಶ್ವಂಭರ
ಮುರಹರ ವಂದಿತ ವಳಲಂಕಾಪುರ
ವರ ಲಕ್ಷ್ಮೀನಾರಾಯಣ ನರ ಕೇ-ಸರಿಯಾ ನೋಡಿರೈ ೩

೧೮
(ಉಂಗುರ ಕಳೆದಾಗ ಮಾಡಿದ ಪ್ರಾರ್ಥನೆ)
ಬೇಡಿಕೊ ಮೂಢಾ ಬೇಡಿಕೊ
ಬೇಡಿಕೊ ಭಕ್ತವತ್ಸಲನಲ್ಲಿ ಭಕ್ತಿ
ಮಾಡು ಪೂಜೆಯನು ಯಥಾಮತಿ ಶಕ್ತಿ
ದೂಡುತ್ತ ದುರುಳರ ಕುಚಿತ್ತಯುಕ್ತಿ
ರೂಢಿವಳಗೆ ಸಂಗ್ರಹಿಸು ವಿರಕ್ತಿ ಪ.
ಲಾಭಾಲಾಭ ಜಯಾಪಜಂಇÀಇಗಳು
ಸ್ವಾಭಾÀವಿಕವಾಗಿ ಬಹ ಹಗಲಿರುಳು
ನಾ ಭಾಗಿ ವರದನ ಪದ ಪದ್ಮ ನೆರಳು
ನೀ ಭಜಿಸಿದ ಮೇಲೆ ಬಾಯೊಳು ಬೆರಳು ೧
ಯತ್ನವಿಲ್ಲದೆ ಬಹ ನಷ್ಟಗಳಂತೆ
ರತ್ನ ಭಂಗಾರ ಸಿಕ್ಕುವುದ್ಯಾಕೆ ಚಿಂತೆ
ನೂತ್ನವಾದ ಮೋಹವನು ಬಿಡು ಭ್ರಾಂತೆ
ರತ್ನಗರ್ಭವ ನಂಬಿರುವುದೆ ನಿಶ್ಚಿಂತೆ ೨
ಅರಿ ಮಿತ್ರೋದಾಸೀನರಿಲ್ಲವು ಹರಿಗೆ
ಸರಿಯಾಗಿ ನಡೆಸುವ ಸರ್ವ ಜೀವರಿಗೆ
ಪರ ವಸ್ತು ನೀನೆಂದು ಸೇವೆ ಮಾಳ್ಪರಿಗೆ
ಸುರ ವೃಕ್ಷದಂತೆ ಕಾರಣವಾಹ ಸಿರಿಗೆ ೩
ಋಣವಿಲ್ಲದೆ ವಸ್ತು ಕ್ಷಣವಾದರಿರದು
ಉಣುವ ಭೋಗಗಳೆಂದು ತಪ್ಪವು ನೆರದು
ಅಣು ಮಹತ್ತುಗಳಂತರಾತ್ಮನ ಬಿರುದು
ಗಣನೆ ಮಾಳ್ಪರ ಕೂಡಿ ನೆನೆ ಮನವರಿದು ೪
ಆಶಾ ಪಾಶದಿ ಸಿಕ್ಕಿ ಕೆಡದಿರು ವ್ಯರ್ಥ
ಶ್ರೀಶನ ನೆನೆವುದೆ ಸಕಲ ವೇದಾರ್ಥ
ಶೇಷಗಿರೀಶನು ಸತ್ಪುರುಷಾರ್ಥ
ದಾಸಗೆ ತಾನಾಗಿ ಕೊಡಲು ಸಮರ್ಥ೫

ಕಾರ್ಕಳದ ವೆಂಕಟರಮಣದೇವರ ಲಕ್ಷದೀಪೋತ್ಸವ
೪೭೮
ಪೀಠಿಕೆ
ಉತ್ತಮರು ಕೇಳಿರೈ ಉಲ್ಲಾಸದಿಂದ ವರ-
ಪೃಥ್ವಿಯೊಳು ಮೂಲಕಾಪುರದೊಳಗಿಹ ವಿಶ್ವಾ
ಮಿತ್ರ ಗೋತ್ರಜ ಶಿವದ್ವಿಜ ಧನಂಜಯ
ಪ್ರವರವೆತ್ತ ವೆಂಕಟಕೃಷ್ಣನ
ಪುತ್ರ ಲಕ್ಷ್ಮೀನಾರಾಯಣನು ಹರಿಪದಕಮಲ
ಚಿತ್ತದೊಳ್ ಧ್ಯಾನಿಸುತ ಪೇಳ್ದನೀ ಕಾವ್ಯಮಂ
ಉತ್ತಮವಿದಲ್ಲೆನುತ ಉಲ್ಲಂಘಿಸದೆ ಯಿದ
ಪ್ರವರ್ತಿಸುವುದೆಲ್ಲ ಜನರು ೧
ಧರೆಯೊಳುತ್ತಮವೆನಿಪ ವರ ಕಾರ್ಕಳಾಖ್ಯ ಪುರ-
ದರಸ ಶ್ರೀವೆಂಕಟೇಶ್ವರನ ಲೀಲಾಭಿವಿ
ಸ್ತರದ ದೀಪೋತ್ಸವದ ಪರಿವಿಲಾಸಕ ಕಾವ್ಯರಚನಾಗುಣಗಳಿಂದ
ಸುರನಾರಿಯರು ಪೇಳ್ದ ಸಂವಾದ ತೆರನಂತೆ
ವಿರಚಿಸಿದೆನೀ ಕೃತಿಯ ದೋಷವಿದ್ದರೆ ತಿದ್ದಿ
ಉರು ಮತ್ಸರಾದಿಗಳ ವರ್ಜಿಸುತ ನಿತ್ಯದೊಳ್ ಮೆರೆಸುವದು
ಸರ್ವ ಜನರು ೨
ಶ್ರೀ ವಿಷ್ಣುನಿಗಮಾರ್ಗಮಾರ್ಚಿತ ಪದಂ ಪೀತಾಂಬರಾಲಂಕೃತಂ
ದೇವಾದಿ ಪ್ರಮುಖೈಃ ಮಹಾಮುನಿ ಜನೈಃ
ಸೇವ್ಯಂ ಸದಾ ತತ್‍ಪದಂ
ಭೂವ್ಯೋಮಾದಿ ಸಮಸ್ತ ತತ್ತ್ವಭರಿತಂ
ದೂರ್ವಾದಲಶ್ಯಾಮಲಂ
ಶ್ರೀವತ್ಸಾಂಕಮುದಾರ ಮಂಗಲಕರಂ ಶ್ರೀ ಶ್ರೀನಿವಾಸಂ ಭಜೇ ೩
ಆದಿಗುರು ವೇದವ್ಯಾಸರನು ವಂದಿಸುತ
ಸಾದರದಿ ಮಧ್ವಯತಿವರರರ ನುತಿಸುತ
ಭೂದಿವಿಜರಿಂಗೆರಗಿ ಬಳಿಕ ಕೂರ್ಮೆಯೊಳು
ಮಾಧವನ ರಾಣಿ ಲಕ್ಷ್ಮಿಯನು ಮನಸಿನೊಳು ೧
ಧ್ಯಾನಿಸುತ ಏಕದಂತನ ಪದವ ಭಜಿಸಿ
ಮಾನದಿಂ ಶಾರದೆಯನೊಲವ ಸಂಗ್ರಹಿಸಿ
ಶ್ರೀನಿವಾಸನ ಪುಣ್ಯಚರಿತೆಯನನುಸರಿಸಿ
ನಾನಾ ಲೀಲೆಗಳನು ಕಾವ್ಯರಚನೆಯಲಿ ನಾನೊರೆವೆ೨
ಪರಮ ಪುರುಷನು ಪ್ರಥಮ ದಿನದಿ ಕಟ್ಟೆಯಲಿ
ವರಪೂಜೆಗೊಂಡು ಮಂಟಪದಿ ವಿನಯದಲಿ
ಚರಣವನು ತೋರಿ ಹನುಮ ಗರುಡನಲಿ
ಪರಿವಿಲಾಸಕರ ಸೇವೆಗೊಂಡು ಕರುಣದಲಿ೩
ಭೋಗಿಪತಿಯಲಿ ಮಂಡಿಸಿದ ಲೀಲೆಗಳನು
ನಾಗತೀರ್ಥದ ಗಂಭೀರೊತ್ಸಾಹಗಳನು
ಭಾಗವತ ಯೋಗವನು ಭೋಜನಾಧಿಕವ
ಭಾಗ್ಯೋದಯದ ಚೂರ್ಣೋತ್ಸವದ ವಿಲಾಸಕವನು ೪
ಶ್ರೀ ನಾರಾಯಣನ ಕರುಣದಲಿ ವೇಣುಮತಿ ಪ್ರಾಸಯತಿಗಳ
ಯುಕ್ತಿಯೆಲ್ಲ ನಾನರಿಯೆ ದೋಷವಿದ್ದರೂ ತಿದ್ದಿ ಬಲ್ಲಭಿ
ಮಾನನಿಧಿಗಳನು ಮೆರೆಸುವದು ಭೂತಳದೊಳುಶ್ರೀನಿವಾಸನು ಪಾಲಿಸುವನು ನಿತ್ಯದೊಳು ೫

೨೯೪
ಉದದಿ ಮೇಖಳೆಯ ಭಾರವನಿಳುಹುವನೆಂದು
ವಿಧಿಪೂರ್ವಸುರರು ಬಂದು ಕ್ಷೀರಾಬ್ಧಿಯ
ಬದಿಯಲಿ ಸ್ತುತಿಸಲಂದು ಕಾರುಣ್ಯ ಸಿಂಧು ಪ.
ಯದು ಕುಲೋತ್ತಮ ಶೌರಿ ಗೃಹದ
ಲ್ಯುದಿಸಿ ಗೋಪಿ ಜನಕೆ ನಾನಾ
ವಿಧದ ಲೀಲಿಯ ತೋರಿ ದೈತ್ಯರ
ಸದೆದು ಗೋವುಗಳ ಕಾಯ್ದ ಕೃಷ್ಣಗೆ
ಪದುಮದಾರತಿಯ ಬೆಳಗಿರೆ ಶೋಭಾನೆ ೧
ಮೆಲ್ಲನೆ ಮಧುರೆಗೆ ಹೋಗಿ ಮಾವನ ದೊಡ್ಡ
ಬಿಲ್ಲ ಮಧ್ಯದಿ ನಿಂದು ರಂಗದಿ ಹಸ್ತ
ಮಲ್ಲಾದಿಗಳ ತರಿದು ಕೈದೋರಿ ಮೆರೆದು
ಖುಲ್ಲನನು ಮಡುಹಿ ಬಂಧುಗ-
ಳೆಲ್ಲರನು ಸಂರಕ್ಷಿಸಿದ ಸಿರಿ
ನಲ್ಲ ಗೋಪೀ ವಲ್ಲಭನ ಪದ
ಪಲ್ಲವಗಳನು ಪಾಡಿ ಪೊಗಳುತ
ಮಲ್ಲಿಗೆಯಾರತಿಯ ಬೆಳಗಿರಿ ಶೋಭಾನೆ ೨
ಮಂದಿಮಾಗದ ಮೊದಲಾದ ರಾಯರ ಮದ
ಕುಂದಿಸಿ ರಥದೊಳಂದು ಭೈಷ್ಮಿಯ ಕರ
ತಂದು ದ್ವಾರಕೆಗೆ ಬಂದು ಭಾಮಾದಿ ಮಹಿಷೀ
ವೃಂದ ಸಂಗ್ರಹಿಸಿದ ಪರಾಪರ
ವಂದ್ಯ ಶೇಷಗಿರೀಂದ್ರನಾಥನ
ಚಂದನಾತ್ಮಕ ಮೂರುತಿಯ ಹೃ-
ನ್ಮಂದಿರದ ಮಧ್ಯದಲಿ ಮಂಡಿಸಿಕುಂದಣದಾರತಿಯ ಬೆಳಗಿರೆ ಶೋಭಾನೆ ೩

೨೩೨
ಎಂಟು ದಿನವಾಯಿತಲ್ಲೊ ಭಕ್ತ
ನೆಂಟನ್ಯಾಕೆ ತಡವು ಮನೆಗೆ ಕರೆಸಯ್ಯ ಕರುಣವಿರಿಸಯ್ಯ ಪ.
ಆವಲ್ಲಿ ಪೋದರು ನಿನ್ನ
ಸೇವೆ ಮಾಳ್ಪ ಸುಖಕೆ ಸರಿಯಾ ಪಡೆಯದೆ ಎಲ್ಲೂ ತಡೆಯದೆ
ಶ್ರೀವಲ್ಲಭ ನಿನ್ನ ಕಾಂ¨
ಭಾವನೆಯಿಂದೆನ್ನ ಮನಸು ತಿರುಗಿತು ಬಹಳ ಕರಗಿತು ೧
ಯೋಗಿವರದ ನಿನ್ನ ಮೂರ್ತಿ
ಬೇಗದಿಂದ ನೋಳ್ಪೆನೆಂದು ಯೋಚಿಸಿ ಮುಂದೆ ಸೂಚಿಸಿ
ನಾಗೂರ ಪಟ್ಟಣವ ಬಿಟ್ಟು
ಸಾಗಿ ಬರುವ ಸಮಯದಲ್ಲಿ ಆಶೆಯಾ ಪಾಶ ಸೂಸಿತು ೨
ದೋಷಿಯೆಂದು ಗ್ರಹಿಸದೆ ಸ-
ರ್ವಾಸೆ ಪೂರಿಸಖಿಳ ಜಗದೀಶನೆ ವೆಂಕಟೇಶನೆ
ಶ್ರೀಶ ನಿನ್ನ ಕಡೆಗೆ ಕರೆಸಿ
ದಾಸನಿಂದ ನಿತ್ಯ ಸೇವೆ ಕೊಳ್ಳಯ್ಯ ಖಜ್ಜಬಿಲ್ಲಯ್ಯ ೩

೨೮೩
ಎಂತಾದರು ಮಾಳ್ಪುದು ಏಕಾದಶಿ
ಇಂಥಾ ವ್ರತವದಾವುದು
ಕಂತುಜನಕ ಲಕ್ಷ್ಮೀಕಾಂತನೊಲಿದು ನಿರ್ಮ-
ಲಾಂತಃಕರಣದಿ ನಲಿವ ಮಹಾಂತ ಪದವನೀಪ ಪ.
ಕೋಟಿ ಕೋಟಿ ಜನ್ಮದ ಪಾತಕಗಳ
ಕೋಟಲೆ ಬಿಡಿಸುವುದು
ಆಟ ಪಾಟಗಳಿಂದಲಾದರು ನಿದ್ರೆಯ
ದಾಟಲು ದುರಿತ ಮಹಾಟವಿ ದಹಿಸುವ ೧
ಹತ್ತೊಂದು ಕರಣದಿಂದ ಘಳಿಸಿದ ನಿ-
ವತ್ರ್ಯ ಪಾತಕಗಳಿಂದ
ನಿತ್ಯ ನರಕದೊಳಗೊತ್ತೆಗೊಳಿಪರ ಮೇ-
ಲೆತ್ತಿ ರಕ್ಷಿಪ ಪರಮೋತ್ತಮ ವ್ರತವನ್ನು ೨
ವರುಷದೊಳೊಂದಾದರು ಮಾಡಲು ಸರ್ವ
ಪುರುಷಾರ್ಥಗಳೀವುದು
ಸರಸಿಜನಾಭ ಶ್ರೀವೆಂಕಟಾಚಲಪತಿ
ಕರುಣಾಸ್ಪದವಾದ ಹರಿದಿನ ವ್ರತವನ್ನು ೩

೨೫೮
ಎಂತು ಮೀರುವೆ ಮಾಯವಾ ಪ.
ಎಂತು ಮೀರುವೆ ಮಾಯಾ ಕಂತು ಬಂಧವನ್ನು
ಕಂತು ಜನಕ ಹರಿಯೆ
ಸಂತತ ಗೃಹಧನ ಭ್ರಾಂತಿಗೆ ಸಿಲುಕುತಾ
ತಂತ್ರವಾದೆನು ಸರ್ವತಂತ್ರ ನೀ ಕರುಣಿಸು ಅ.ಪ.
ದೇಹವೆ ನಾನೆಂಬ ಮೋಹದಿ ಬಹು ವಿಧ
ಮೋಹಗೊಂಡನುದಿನವು
ಆಹಾರ ನಿದ್ರಾ ಮೈಥುನಗಳೆ ಗತಿ ಎಂಬ
ಹಾಹಾಕಾರವು ಬಿಡದು
ಇಹಪರಗಳ ಸನ್ನಾಹ ಒಂದನು ಕಾಣೆ
ಗೇಹಾಂಧಕೂಪಮಹಾಹಿಮುಖದಿ ಸಿಕ್ಕಿ ೧
ವೇದವಿಹಿತ ಕರ್ಮವಾದರು ಮಾಡದೆ
ಸಾಧು ಮಾರ್ಗವ ಮೀರಿದೆ
ಮಾದಿಗನಂತೆ ಮನಸಿನಲಿ ಬಹು ವಿಧ
ಕ್ರೋಧ ಕಪಟ ತಾಳಿದೆ
ವ್ಯಾಧಿ ಪೀಡಿತ ದೇಹ ಬಾಧೆಯ ಸಹಿಸದೆ
ಶ್ರೀದ ನಿನ್ನಯ ಪದ್ಮ ಪಾದವೆ ಗತಿಯೆಂಬೆ ೨
ಮತಿವಂತ ಜನರ ರಕ್ಷಿಪುದು ದುರ್ಘಟವೆ ಶ್ರೀ-
ಪತಿ ನಿನಗುಸುರುವದೆ
ಶತಕೋಟಿ ಮಿತ ಜನ್ಮಾರ್ಜಿತ ಪಾಪ ತತಿ ನೀ ಸಂ-
ಸೃತನಾಗೆ ನಿಲುವುಂಟೆ
ಪತಿತ ಪಾವನನೆಂಬ ಪರಮಾತ್ಮ ಶೇಷಾದ್ರಿ
ಪತಿ ನೀನೆ ಗತಿಯೆಂದು ಸತತ ನಂಬಿದೆ ದೇವ ೩

೯೫
ಎಂಥಾ ಕೂಸಮ್ಮ ಗೋಪಿ ದಾನವ ಕೋರುವಿ
ಎಂಥಾ ಕೂಸಮ್ಮ ಶ್ರೀ-
ಕಾಂತ ಸುಜನಮಾನಸಂತರಂಗದಿ ನಿತ್ಯ
ನಿಂತು ನಲಿವ ಕೃಷ್ಣ ಪ.
ಕ್ಷೀರ ವಾರಿಧಿಯಲ್ಲಿದ್ದನಾದರು ಬೆಣ್ಣೆ
ಕ್ಷೀರವ ಕದ್ದು ಮೆದ್ದ
ತೋರುವ ತತ್ವ ಶುದ್ಧ ಆದರು ಬಹು
ಕ್ರೂರ ರಕ್ಕಸರ ಗೆದ್ದ
ನೀರಜಾಲಯ ರಮಣ ಗೋಕುಲ
ನಾರಿಯರ ಮೇಲ್ ಬಿದ್ದು ರಮಿಸಿದ
ವಾರಿಜಾಸನ ವಂದ್ಯ ಸುರವರ
ವೈರಿ ಶಕಟನ ಕಾಲಲೊದ್ದ ೧
ಸಂಸಾರಾರ್ಣವ ತಾರಕನಾದರು ಪಾಂಡು-
ವಂಶ ರಕ್ಷಣಕಾರಕ
ಹಂಸಾದ್ಯ ಸುರಮಾರಕನಾದರು ನಾನಾ
ಹಿಂಸಾದೋಷ ನಿವಾರಕ
ಕಂಸಮರ್ದನ ವೈನತೇಯ ಶು-
ಭಾಂಸ ಶೋಭಿತ ಪಾದ ಕಮಲ ತಿ-
ಲಾಂಶ ದೋಷರಹಿತ ಗೋಪಾ-
ಲಾಂಶವೇರಿ ವಿನೋದಗೊಳುತಿಹ ೨
ಶುದ್ಧ ಪೂರ್ಣಾನಂದ ಸುಜನಾರ್ತಿವಾರÀ ನಿ-
ಷಿದ್ಧ ಕಲುಷದೂರಾ
ಕ್ರುದ್ಧ ಖಳವಿದಾರ ಕಿಂಕರ ಪರಿಚರ
ಸಿದ್ಧಾಂತ ಶ್ರುತಿ ಶೇಖರಾ
ಬುದ್ಧ ರೂಪದಿ ಭೂತಪತಿಗೆ ಸ-
ಮೃದ್ಧಿ ಜಯಪಾಲಿಸಿ ಸುರೋತ್ತಮ
ಸಿದ್ಧವಂದಿತ ಶೇಷಗಿರಿಯೊಳ-
ಗಿದ್ದು ದಾಸರನುದ್ಧರಿಸುತಿಹ ೩

೧೩೨
(ಶೇಷದೇವರ ಪ್ರಾರ್ಥನೆ)
ಎಂಥಾ ಸುಕೃತ ಭಾಗ್ಯವಂತನೋ ಗುರುಶೇಷ
ಯಂತು ಬಣ್ಣಿಸುವುದಿನ್ನು
ಕಂತುಪಿತನಿಗೆ ನೀ ನಂತರದಲಿ ಪರ-
ಮಾಂತರಂಗದಿ ಪ್ರೇಮ ಪಾತ್ರನಾಗಿರುವದೀ ಪ.
ಶ್ರೀನಿವಾಸಗೆ ಮೂರು ಸ್ಥಾನದಿ ಸರಿಯಾಗಿ
ತಾನೆ ಶಯನ ಪೀಠ ಛತ್ರನಾಗಿ
ಜ್ಞಾನಾನಂದನ ಪರಮಾನುರಾಗದಿ ನೋಡಿ
ಧ್ಯಾನ ಮಾಡುವ ಬಹು ಮಾನವ ಪಡೆದು ೧
ರಾಮರೂಪದಿ ನಿಂದ ಸ್ವಾಮಿಗೆ ನಿರವಧಿ
ಪ್ರೇಮದನುಜನಾಗಿ ಪರಿಚಿರಿಸಿ
ಸೋಮವಂಶದಿ ಬಲರಾಮನೆನಿಸಿ ಸತ್ಯ-
ಭಾಮಾವರನ ಜೇಷ್ಠ ನಾಮವ ಪಡೆದು ೨
ಹಲವು ವಿಧದ ಪುಣ್ಯ ಫಲವ ನೀಡಲು ಲಕ್ಷ್ಮಿ
ಲಲನೆ ಪದ್ಮಜೆಯರ ಬಲಗೊಳ್ಳುತಾ
ಕಲಿಯುಗದಲಿ ಬಂದು ನೆಲೆಯಗೊಳ್ಳಲು ಶೇಷಾ-
ಚಲನೆಂದು ಹರಿಗೆ ನಿಶ್ಚಲವಾದ ನಿಲಯಾಗಿ ೩

೪೩೭
ಎಂದಿಗೆ ದೊರಕುವನೋ ಶ್ರೀಕೃಷ್ಣನು
ಎಂದಿಗೆ ದೊರಕುವನೋಪ.
ಎಂದಿಗೆ ದೊರಕುವ ಸುಂದರ ಪುರುಷನು
ಒಂದು ಗಳಿಗೆ ಯುಗ ಒಂದಾಗಿ ಕಳೆದೆನುಅ.ಪ.
ಸರಿರಾತ್ರಿ ವೇಳ್ಯದಲಿ ಮೆಲ್ಲನೆ ಒಂದು
ಸರಸವಾಡುತಲಿ
ಪರಿಪರಿ ವಿಧದಲಿ ಸ್ಮರನ ಕಲೆಯ ತೋರಿ
ವಿರಹಗೊಳಿಸಿ ನಾಳೆ ಬರುವೆನೆನ್ನುತ ಪೋದ ೧
ಪಂಕಜನಿಭಚರಣ ಕೌಸ್ತುಭ ರತ್ನಾ-
ಲಂಕೃತ ಶುಭಗ್ರೀವನ
ಶಂಕರಾರ್ಚಿತನು ಮೀನಾಂಕಜನಕ ನಿಷ್ಕ-
ಲಂಕ ಮಹಿಮನು ಶ್ರೀವೆಂಕಟರಮಣನು೨
ಅಂಗಜಕೋಟಿರೂಪ ಪರಮ ಸದಯಾ-
ಪಾಂಗನಿರತ ನಿರ್ಲೇಪ
ಮಂಗಲ ಚರಿತ ಭುಜಂಗಶಯನ ನರ-
ಸಿಂಗ ವರದ ಮಾತಂಗ ಶ್ರೀರಂಗನು೩
ಚಂದಿರಶತವದನ ಶೋಭಿಪ ನವ
ಕುಂದ ಕುಟ್ಮಲರದನ
ಸಿಂಧುಶಯನ ಮುಚುಕುಂದಾಪ್ತ ಸಚ್ಚಿದಾ-
ನಂದ ಗೋವಿಂದ ಮುಕುಂದ ನಂದನಕಂದ೪
ಅಕ್ಷರಾರ್ಚಿತ ದೇವನು ಶರಣ ಜನ
ಪಕ್ಷ ಪರಾತ್ಪರನು
ಪಕ್ಷೀಂದ್ರ ತುರಗ ಪದ್ಮಾಕ್ಷ ತ್ರಿಲೋಕ ವಿ-ಲಕ್ಷಣಮೂರ್ತಿ ಶ್ರೀಲಕ್ಷ್ಮೀನಾರಾಯಣ೫

೨೦೬
ಎಂದಿಗೆ ನೀ ಕರುಣಿಸುವಿ ಸುಂದರಾಂಗ ಎನ್ನೊಳು
ಕುಂದಿ ಪೋದೆನಲ್ಲೊ ಬೇಗ ಬಂದು ಕಾಯೊ ಕರುಣಾಳು ಪ.
ಧರ್ಮ ಕರ್ಮಗಳು ಮಾಳ್ಪ ಮರ್ಮವರಿಯದಿದ್ದರು
ಭರ್ಮದಾಶೆಗಾಗಿ ಹೀನ ಕರ್ಮದೊಳಗೆ ಬಿದ್ದರು
ದುರ್ಮದಾಂಧರನು ಗೆಲುವ ನಿರ್ಮಲ ಚಿದಾತ್ಮ ನಿನ್ನ
ಹಮ್ರ್ಯದ ಮುಂದೊದರಿ ಸರ್ವಶರ್ಮಪೊಂದಿಚ್ಛಿಸುವೆನು ೧
ಜೀಯ ನಿನ್ನ ಪೊಗಳಿ ಪಾಡುವಾಯವಿರಲು ಸಾಕಯ್ಯ
ರಾಯರೊಲವು ತನ್ನಂತೆ ನಿರಾಯಾಸದಿಂದಹುದೈಯ್ಯ
ವಾಯುವೀಯ ಜನರ ಕೂಡಿ ಮಾಯ ಗೆಲಲು ಮಾನವೀಯ
ಕಾಯವನ್ನು ನೋಯದಂತೆ ಕಾಯೊ ಸಕಲದಾಯಕಾರಿ ೨
ನಿತ್ಯಾನಂದ ನಿನ್ನ ಪಾಡಿ ಹೊತ್ತ ಕಳೆವ ಕಾರ್ಯಕ್ಕೆ
ಒತ್ತಿ ಬರುವ ವಿಘ್ನಬಾಧೆ ಹತ್ತದಂತೆ ಓಡಿಸು
ಸತ್ಯರಮಣ ಶರಣ ಪುರುಷೋತ್ತಮ ಶ್ರೀ ವೆಂಕಟೇಶ
ಚಿತ್ತದಲ್ಲಿ ನಿನ್ನ ದಿವ್ಯ ಮೂರ್ತಿದೋರೊ ಮರಿಯದಿರು ೩

೨೧೯
ಎಂದಿಗೆನಗೆ ಬುದ್ಧಿ ಬಂದಿತೋ ಹರಿಯೆ
ಇಂದೀವರಾಕ್ಷ ನೀನೆ ಗತಿ ದೊರೆಯೆ ಪ.
ಕಣ್ಣಿದಿರಲಿ ಕಂಡು ಕಾಲಗತಿಗಳನ್ನು
ತನ್ನ ಸಂಸ್ಥಿತಿ ಮುಂದೆಂತಾಹುದನು
ಚೆನ್ನಾಗಿ ಗ್ರಹಿಸದೆ ಚಪಲ ಚಿತ್ತದಿ ಗೃಹ
ಸನ್ಮಹದಲಿ ಮನವನಿಟ್ಟು ಬಳಲುವೆ ೧
ಸಾಗದ ಕಾರ್ಯವ ಸುಲಭವೆಂದೆಣಿಸಿದ-
ರಾಗದು ಹಗಲಿರಳೊರಳಿದರು
ನಾಗಶಯನ ನೀನು ನಿರ್ಣಯಿಸಿದ ರೀತಿ
ಯಾಗುವದೆಂಬುದನರಿಯದೆ ಮರುಳಾದೆ ೨
ಇಂತಾದ ಮ್ಯಾಲೆ ಶ್ರೀಕಾಂತ ನೀ ದೊರಕುವ-
ದೆಂತು ಸಂಘಟ್ಟಿಪದೋ ನಾನರಿಯೆ
ಕಂತುಜನಕ ವೆಂಕಟೇಶನೆ ಮಾನಸ
ಭ್ರಾಂತಿಯ ಬಿಡಿಸು ನಿಶ್ಚಿಂತೆಯಿಂದಿರಿಸ ೩

೧೦೪
ಎಚ್ಚರಾದರು ದೇವಗಣರಿಂದು ನಮ್ಮ
ಲಕ್ಷ್ಮೀರಮಣ ಕೃಷ್ಣ ರಥವನೇರುವನೆಂದು ಪ.
ಶಿಂಶುಮಾರ ಚಕ್ರದಂಶಮಕರ ತಿ-
ಗ್ಮಾಂಶು ಸಂಕ್ರಮಿಸುವ ಸಮಯದಲಿ
ಕಂಸಮರ್ದನ ಯದು ವಂಶಾಬ್ಧಿ ಚಂದ್ರ-
ವಿಪಾಂಗಗಮನನಾಗಿ ವೀಧಿಗೆ ಬಹನೆಂದು ೧
ಕಂದನ ಸಂಭ್ರಮ ತಂದೆಗೆ ಸುಖಕರ-
ವೆಂದು ಪೇಳುವ ಮಾತ ನಿಜವ ದೋರಿ
ಮಂದರಧರ ಮನ್ಮಥನ ಕೇತು ಬೆಳಗುವಾ-
ನಂದದಿ ರಥವೇರುತ್ತಿಂದು ಬರುವನೆಂದು ೨
ಮೋಕ್ಷದಾಯಕ ಕಮಲಾಕ್ಷ ಕೃಷ್ಣನ ಸ-
ತ್ಕಟಾಕ್ಷ ಸಂಪಾದಿಪಪೇಕ್ಷೆಯಲಿ
ತ್ರ್ಯಕ್ಷಾಧ್ಯಕ್ಷಲೋಕಾಧ್ಯಕ್ಷರೆಲ್ಲರು ಕೂಡಿ
ಪಕ್ಷಿವಾಹನನನ್ನು ಈಕ್ಷಿಪ ತವಕದಿ ೩
ಪೃಥೆಯ ಕುಮಾರನ ರಥವ ನಡಸುತತಿ-
ರಥರನು ಗೆಲಿಸಿ ಸಾಮ್ರಾಜ್ಯವಿತ್ತ
ಕಥೆಯ ಕೇಳ್ಪರ ಮನೋರಥಗಳ ಕೊಡುವ ಮ-
ನ್ಮಥನ ಜನಕ ಮುಕ್ತಿ ಪಥವ ತೋರುವನೆಂದು ೪
ಸಿದ್ಧಿ ವಿಘ್ನಮುಖ ದೋಷಭೇಷಜ ಭಕ್ತಿ
ಸಿದ್ಧ ಜಪರಿಗೆ ಸಿದ್ಧಿಸುವನೆಂದು
ಮಧ್ವಮುನಿಯು ತಂದಿಲ್ಲಿರಿಸಿ ಪೂಜಿಸಿದಂಥ
ಸಿದ್ಧಾಂತವೇದ್ಯನಿರುದ್ಧನಿಲ್ಲಿಹನೆಂದು ೫
ಧಾರುಣಿಯೊಳಗಿನ ವಿಷ್ಣುಭಕ್ತರ ಸಂಘ
ಸೇರಿ ಸಂತೋಷದಿ ಜಯವೆನಲು
ಪಾರಿವ್ರಾಜರು ಕೂಡಿ ಪರತತ್ವ ನುಡಿಯೆ ಸ-
ರ್ಪಾರಿಯನೇರಿ ಸಮೀರೇಡ್ಯಬಹನೆಂದು ೬
ಮಾಯಿಜನರ ಮುರಿದೊತ್ತುತ ತತ್ವರ-
ಸಾಯನ ಸುಧೆಯ ಸಜ್ಜನರಿಗಿತ್ತು
ವಾಯುಮುನಿಯು ಪ್ರತಿಷ್ಠೆಯ ಗೈದ ಪುರುಷಾರ್ಥ
ದಾಯಕ ವೆಂಕಟರಾಯನೀತನೆಯೆಂದು ೭

೨೪೨
ಎನ್ನ ಕರ್ಮ ದೊಡ್ಡದೊ ಸ್ವಾಮಿ ನಿನ್ನ ಮಹಿಮೆ ದೊಡ್ಡದೊ
ಮುನ್ನಿನ ದೃಷ್ಟಾಂತದಿಂದ ನಿರ್ಣಯಿಸುವ ನಿತ್ಯಾನಂದ ಪ.
ಅಡವಿಯಲ್ಲಿ ನಿಂತು ಮೃಗವ ಬಡಿದು ತಿಂಬ ಬ್ಯಾಡ ಕಡೆಗೆ
ಗಿಡವ ಕೂಡಿಸೆಂದ ನುಡಿಯ ದೃಢಕೆ ಮೆಚ್ಚಿ ಕಡೆಹಾಯಿಸಿದೆ ೧
ಉಗ್ರಭಾವದಿಂದ ತಮ್ಮ ಅಗ್ರಜರನ್ನು ಕೊಲಿಸಿದಂಥ
ಸುಗ್ರೀವ ವೈಶ್ರವಣರ ಭಕ್ತಾಗ್ರಣ್ಯರೆಂದು ಕಾಯ್ದೆ ೨
ಅದರಿಂದ ಎನ್ನ ಕರ್ಮ ಬಾಧೆ ಕಳದು ಕರುಣದಿಂದ
ಮಾಧವ ನೀ ಸಲಹೊ ಶೇಷ ಭೂಧರೇಂದ್ರ ಶಿಖರವಾಸ ೩

೪೬೬
ಎಲ್ಲಾಪರಾಧವೈಯ್ಯಾ ಹರಿಪ್ರೀತಿ
ಯಿಲ್ಲದಿಹ ಕರ್ಮಗಳು ಝಲ್ಲರಿಯ ಛಾಯಾಪ.
ಸಾಧುಲಿಂಗವ ಧರಿಸಿ ವೇದ ವೇದಾಂತ ಸ-
ದ್ಬೋಧೆಯನು ಕೇಳಿದರು ಪೇಳಿದರು ಸುಪವಿತ್ರ
ಮೇದಿನಿಯ ಸರ್ವತೀರ್ಥಸ್ನಾನ ಮಾಡಿದರು
ಓದಿದರು ಸರ್ವಶಾಸ್ತ್ರ
ಸಾಧಿಸುತ ಕಾಮ ಕ್ರೋಧಾದಿಗಳ ಜೈಸಿ ವನ
ಕೈದಿ ತಪಗೈದರು ಮಹಾದಾನಿಯಾದರು ವಿ-
ರಾಧವಧ ಪಂಡಿತನ ಪಾದಕರ್ಪಣ ವಿನಹ
ಬಾಧಿಸದೆ ಬಿಡದು ಜನ್ಮ ೧
ಹರಿಯೆ ಸರ್ವೋತ್ತಮ ಚರಚರಾತ್ಮಕ ಜಗ-
ದ್ಗುರುತಮ ಮಹಾಮಹಿಮ ಕರುಣಾರ್ಣವನ ನಾಮ
ಸ್ಮರಣೆಯಿಲ್ಲದೆ ಮಾಳ್ಪ ಪರಿಪರಿಯ ಕರ್ಮಗಳು
ನರಕ ಸ್ವರ್ಗದ ಭ್ರಮಣವು
ಸ್ಥಿರವೆಂದು ನಂಬಿ ದುಸ್ತರ ಭವಾರ್ಣವದಿ ಮುಳುಗಿ
ತಿರುತಿರುಗಿ ಜನ್ಮಮಂ ಧರಿಸಿ ಬಹುದುಃಖ ಸಾ
ಗರದಿ ತೇಲಾಡುವುದನರಿಯದತಿ ದುರ್ಮೋಹ
ಸೆರೆಯೊಳಗೆ ಬಿದ್ದ ಮೇಲೆ ೨
ಸರ್ವತಂತ್ರಸ್ವತಂತ್ರ ಸರ್ವತ್ರ ವ್ಯಾಪ್ತ ಸುರ
ಸಾರ್ವಭೌಮಸುನಾಮ ಸಾಮಗಾನಪ್ರೇಮ
ದೂರ್ವಾದಳಶ್ಯಾಮ ದುರ್ಗಾರಮಣ ಜಗವ
ನಿರ್ವಹಿಸಿಕೊಂಡಿರುವನು
ಗರ್ವದಿಂ ತಾ ಕರ್ತುವೆಂದಹಂಕರಿಸಿ ಜಗ
ಕೊರ್ವನೆ ಹೃಷೀಕೇಶ ಕೇಶವ ದೈತ್ಯ
ಪರ್ವತಕುಲಿಶ ಲಕ್ಷ್ಮೀನಾರಾಯಣನ ಭಕ್ತಿ
ಪೂರ್ವಕವೆ ನಿರಪರಾಧ ೩

೪೦೨
ಎಲ್ಲಿಗೆ ಗಮನವಿದು ದುರ್ಗಾಂಬಿಕೆ
ಎಲ್ಲಿಗೆ ಗಮನವಿದುಪ.
ಎಲ್ಲಿ ಗಮನ ಹರವಲ್ಲಭೆ ನೀ ದಯ-
ದಲ್ಲಿ ಬಾಲಕನೊಳು ಮೆಲ್ಲನಿಂದರುಹವ್ವಅ.ಪ.
ಚಂಡಿಕೆ ಮಹಮ್ಮಾಯೆ ದೇವಿ ಪ್ರ-
ಚಂಡ ಲೋಕತಾಯೆ
ಖಂಡಪರಶುಪ್ರಿಯೆ ಅಖಿಲ ಭೂ-
ಮಂಡಲಕಧಿಪತಿಯೆ
ದಂಡಿಗೆ ಮೇಲೇರಿಕೊಂಡು ದುಷ್ಟರ ಶಿರ-
ಚೆಂಡಾಡಿ ಶರಣರ ಕೊಂಡಾಡಿ ಪೊರೆವುತ ೧
ನಿಲ್ಲು ನಿಲ್ಲು ಜನನಿ ಬಾಲಕ-
ನಲ್ಲವೆ ಹೇ ಕರುಣಿ
ಪುಲ್ಲನಯನೆ ತ್ರಿಗುಣಿ ದಯವಿನಿ-
ತಿಲ್ಲವೆ ನಾರಾಯಣಿ
ಮಲ್ಲಿಗೆಗಂಧಿ ಪಥವೆಲ್ಲಿಯು ಕಾಣದೆ
ಸಲ್ಲಲಿತಾಂಘ್ರಿಯ ನಿಲ್ಲದೆ ಬೇಡುವೆ ೨
ದಾರಿ ಯಾವುದಮ್ಮ ಮುಕ್ತಿಯ
ದಾರಿ ತೋರಿಸಮ್ಮ
ಸೇರಿದೆ ನಾ ನಿಮ್ಮ ಭವಾಬ್ಧಿಯ
ಪಾರುಗಾಣಿಸಮ್ಮ
ಚಾರುನಿಗಮ ಶಿರಭೋರೆನಿಪ ವಿಚಾರ-
ಸಾರವಿತ್ತು ದಯಪಾಲಿಸು ಶುಭವರ ೩
ಕಷ್ಟದುರಿತ ಭಯವ ತಾ ಬಡಿ-
ದಟ್ಟಿ ಭಕ್ತಕುಲದ
ಶ್ರೇಷ್ಠತನದಿ ಪೊರೆವ ತನ್ನ
ಇಚ್ಛೆಯ ಕೈಗೊಳುವ
ಲಕ್ಷ್ಮೀನಾರಾಯಣದಿಟ್ಟಭಗಿನಿ ಶಿವೆ
ಕಟ್ಟಿಲಪುರದೊಳು ಗುಟ್ಟಿನಿಂ ನೆಲಸಿಹೆ೪

೩೫೪
ಎಲ್ಲಿರುವೇನೋ ಮಾರುತಿ ಸುವ್ರತಿ
ಎಲ್ಲಿರುವನೇನೋ ಮಾರುತಿ ಪ.
ಎಲ್ಲಾ ಕಡೆಯಲ್ಲಿ ವ್ಯಾಪ್ತಿ
ಯುಳ್ಳವ ಭಾರತೀಪತಿ ಅ.ಪ.
ನಿತ್ಯ ರಾಮಪದೈಕಾಸಕ್ತಿ-
ಚಿತ್ತನು ಸದಾ ಜಾಗರ್ತಿ
ಧೂರ್ತರಿಪುದಲ್ಲಣ ಜೀ-
ವೋತ್ತಮ ವಿಚಿತ್ರಗತಿ ೧
ಪ್ರಾಣಸಮಾನ ಸಂಪ್ರೀತಿ
ಜ್ಞಾನಪೂರ್ವಕ ಸದ್ಭಕ್ತಿ-
ವಾನ ವಾನರೇಂದ್ರ ಸುಪ-
ರ್ವಾಣಕುಲಚಕ್ರವರ್ತಿ ೨
ಲಕ್ಷುಮಿನಾರಾಯಣನ
ಪಕ್ಟ್ರೆಕಧೃತಿ ಸುಮತಿ
ಅಕ್ಷೀಣ ತ್ರಾಣದ ನಿರ-
ಪೇಕ್ಷ ಲಕ್ಷಣಮೂರುತಿ ೩

೧೦೨
ಎಷ್ಟೆಂದು ಪೇಳುವೆನು ನಮ್ಮುಡುಪಿಯ
ಕೃಷ್ಣನÀ ಮಹಿಮೆಯನು
ಅಷ್ಟೋತ್ತರ ಶತಯೀರೆಂಟು ಸಾವಿರ
ಶ್ರೇಷ್ಠ ಮಹಿಷಿಯರ ಸೇವೆ ಕೈಗೊಂಬುದ ಪ.
ದ್ವಾರಕೆಯೊಳಗೆ ನೆಲೆ ತೋರುತಲಿದ್ದು
ಸ್ವಾರಿ ಹೊರಟ ಮೇಲೆ
ಕಾರುಣ್ಯನಿಧಿ ಕಡಲೊಳು ಬಂದು ಕಮಲಾಸ-
ನಾರೂಹನಾಗುವ ನರಯತಿಯನು ಕಂಡು
ಘೋರತರ ಸಂಸಾರಕೂಪವ
ಸೇರಿ ಬಳಲುವ ಸಕಲಸುಜನೋ-
ದ್ಧಾರ ಮಾಡುವೆನೆಂದು ಮೂರ್ತಿಯ
ತೋರುತಿಲ್ಲಿಹ ತ್ರಿಭುವನೇಶನ ೧
ಪಾಪಿಷ್ಠ ಕಲಿಯಾಳುತ್ತಿರುವ
ಕಾಲದಲಿ ಸ್ತ್ರೀ
ರೂಪದಿಂದಲಿ ಪೂಜೆಯ ಕೊಳಲು ಸುಜ-
ನಾಪವಾದದ ಭೀತಿಯ ತಾನೆನಸಿ ಮನದಲಿ
ಕಾಪುರುಷನನು ಕಣ್ಣ ಕಟ್ಟಿ
ಮಹಾಪರಾಧಿಗಳೊಳಗೆ ಸೇರಿಸಿ
ಭೂಪತಿಗಳಲ್ಲಿರುವ ಯತಿವರ
ರೂಪರೊಡನಾಡುವ ಪರಾತ್ಮನ ೨
ಪಾಂಡುಕುಮಾರರು ಪರಿಯಾರು ಕ್ರಮದಿಂದ
ಹೆಂಡತಿಯಾಳ್ದರೆಂದು ದೂಷಿಸುವರ
ಕಂಡು ತಾ ಮನಕೆ ತಂದು ಕಾರುಣ್ಯ ಸಿಂಧು
ಕುಂಡಲೀಂದ್ರ ಗಿರೀಂದ್ರ ನಿಜಪದ
ಪುಂಡರೀಕ ಛಾಯಗಳ ಮತಿ-
ಗೊಂಡು ಮನ್ನಿಸಿ ವತ್ಸರ ದ್ವಯ
ಖಂಡನೆ ಕೈಕೊಂಡು ಮೆರಪನ ೩

೪೩೮
ಎಷ್ಟೋ ಆಪರಾಧಿ ಯಾವುದು
ಬಟ್ಟೆಯೋ ಕರುಣಾಬ್ಧಿ ಪ.
ದುಷ್ಟರಾರು ಜನ ಒಟ್ಟುಗೂಡಿ ಎನ್ನ
ಮೆಟ್ಟಿ ಕುಟ್ಟಿ ಪುಂಡಿಗುಟ್ಟುವರೈ ಹರಿ ಅ.ಪ.
ಲೇಶ ಪುಣ್ಯವಿಲ್ಲ ಪಾಪದ
ರಾಶಿ ಬೆಳೆಯಿತಲ್ಲ
ಆಶಾವಶ ಹರಿದಾಸನೆಂದೆನಿಸಿದೆ
ದೂಷಣ ಜನರ ಶಭಾಸಿಗೆ ಮೆಚ್ಚಿದೆ೧
ಕುಲಕಲ್ಮಷ ಬಹಳ ದೇಹದಿ
ನೆಲೆಸಿತು ಶ್ರೀಲೋಲ
ಜಲಜನಾಭ ನಿನ್ನೊಲುಮೆಯೆ ಮುಖ್ಯವು
ಕುಲಕೆಟ್ಟ ಅಜಮಿಳ ಪಾವನನಾದ ೨
ಹೀನರೈವರ ಸಂಗದಿಂದಲೆ
ಹಾನಿಯಾದೆನೊ ರಂಗ
ಪ್ರಾಣವು ನಿನ್ನಾಧೀನವಾದ ಮೇಲೆ
ನೀನೆ ಗತಿ ಲಕ್ಷ್ಮೀನಾರಾಯಣ ೩

೨೮೨
(ಏಕಾದಶಿಯ ಮಹಿಮೆ)
ಸಾರುತ ಬಂದಿತೇಕಾದಶಿ ನಮ್ಮ
ನಾರಾಯಣನಾರಾಧಿಸಿ ಸುಖಗೊಳಿರೆಂದು ಪ.
ಕರ್ಮ ಕಲುಷವೆಲ್ಲ ಕಳಕೊಂಡು ಕುಲವನ್ನೆ
ನಿರ್ಮಲ ಮಾಡುವ ಮರ್ಮವಿದು
ಸ್ವರ್ಮಹೀಶ ದೇವ ಶರ್ಮವರದನ ಚಾ-
ತುರ್ಮಾಸೆಯಲಿ ಪೂಜಿಸಿರಿಯೆಂದು ಡಂಗುರ ೧
ತುಲಸಿ ಕಮಲ ಮುಖ್ಯ ಹಲವು ಪುಷ್ಪವನೇರಿ
ಸಲು ಕೋಟಿಮಡಿಯಾದ ಫಲವೀವುದು
ನಳಿನನಾಭನು ನಿತ್ಯ ಮೋದದಿ ಸಿರಿಯಪ್ಪಿ
ಮಲಗಿರುವನು ವೃಂದಾವನ ಮೂಲದಲಿಯೆಂದು೨
ಸುಂದರತರ ಪೂರ್ಣಾನಂದ ವೆಂಕಟರಾಜಾ-
ನಂದವರ್ಣಿಸಿ ಜಾಗರ ಸಹಿತ
ಒಂದುಪವಾಸವಾÀದರು ಮಾಡಲಘವೆಲ್ಲ
ಕುಂದಿ ಪೋಗುವುದೆಂದು ಇಂದು ನಿಶ್ಚಯವಾಗಿ ೩

೨೪೩
ಏನ ಹೇಳಲೆನ್ನ ಬುದ್ಧಿಹೀನತೆಯನಿಂದು ಹರಿಯೆ
ಶ್ವಾನಕಿಂತ ನೀಚನಾದೆ ಧ್ಯಾನಿಸದೆ ಮರುಳಾದೆ ಪ.
ಪಂಚವಿಂಶತ್ವದಲ್ಲಿ ಮಿಂಚುತ್ತಿರುವ ನಿನ್ನ ರೂಪ
ಕಿಂಚಿತ್ತಾದರರಿಯದೆ ಕೀಳ್ಹಂಚಿನೊಳಸಂಚ ನಂಬಿ ೧
ಈಶ ನಿನ್ನ ಮಾಯಾ ಶಕ್ತಿ ಪಾಶಬಂಧದಲ್ಲಿ ಸಿಲುಕಿ
ಲೇಶ ಸ್ವಾತಂತ್ರ್ಯವರಿಯದಾಶೆಯೆಂಬ ಕಡಲೊಳಿಳಿದೆ ೨
ಗಣನೆಯಿಲ್ಲದೆನ್ನ ಕೆಟ್ಟ ಗುಣಗಳೊಂದನೆಣಿಸದಿಂದು
ವನಧಿಶಯನ ವೆಂಕಟೇಶ ಮನಕೆ ಬಾರೊ ಮೂರ್ತಿ ದೋರೊ ೩

೩೨೪
ಏನಂತೆನ್ನಲಿ ಎನ್ನನುತಾಪ
ನೀನಾದ್ದರಿಂದೆಂಬೆ ಗೈಯದೆ ಲೋಪ ಪ.
ಕಣ್ಣೆದುರಾದ ಕಂದರ್ಪಲಾವಣ್ಯ
ಸನ್ನುತ ಸಕಲ ಲೋಕೈಕಶರಣ್ಯ
ಬಣ್ಣಿಸಲರಿದು ಸರ್ವೋನ್ನತ ಮಹಿಮ
ಪುಣ್ಯಪುರುಷ ಸುಪ್ರಸನ್ನ ಕೇಳಮ್ಮ ೧
ಕೆಂದಾವರೆಯಂತೆ ಚೆಂದುಳ್ಳ ಚರಣ
ಸೌಂದರ್ಯಸಾರ ಪೀತಾಂಬರಾವರಣ
ವಂದನೀಯ ಪೂರ್ಣಾನಂದ ಮುಕುಂದ
ಸಂದೇಹವಿಲ್ಲ ತೋರಿದನು ಗೋವಿಂದ ೨
ಶಂಕ ಚಕ್ರ ಗದಾ ಪಂಕಜಪಾಣಿ
ಶಂಕರನುತ ಶ್ರೀವತ್ಸಾಂಕಿತ ಜನನಿ
ಬಿಂಕದ ಕೌಸ್ತುಭಾಲಂಕೃತಗ್ರೀವ
ವೆಂಕಟೇಶ ನಿಷ್ಕಳಂಕ ಕೇಳವ್ವ ೩
ಚಂದ್ರಶತಾನನ ಕುಂದಸುಹಾಸ
ಇಂದಿರಾ ಹೃದಯಾನಂದ ಪರೇಶ
ಸುಂದರ ನಳಿನದಳಾಯತನಯನ
ಮಂದರಧಾರ ಧರಾಧರಶಯನ ೪
ಲಕ್ಷ್ಮೀನಾರಾಯಣ ಸುಕ್ಷೇಮಧಾಮ
ಅಕ್ಷರಾರ್ಚಿತ ನೀಲನೀರದಶ್ಯಾಮ
ಪಕ್ಷೀಂದ್ರವಾಹನ ಪಾವನಚರಿತ
ಸಾಕ್ಷಿರೂಪ ಸಚ್ಚಿದಾನಂದಭರಿತ ೫

೪೮೭
ಪಂಚಮಿಯ ದಿನ
ರಂಭೆಸ್ : ಏನಿದು ಇಂದಿನ ವಿಭವ ನಮ್ಮ
ಶ್ರೀನಿವಾಸನ ಮಹಾತ್ಮವ
ಮಾನಿನಿ ರನ್ನೆ ನೀ ಪೇಳೆ ಭಕ್ತಾ-
ಧೀನದ ಚರಣದ ಲೀಲೆ
ಭಾನು ಉದಯದಲಿ ವೀಣಾದಿ ಸು-
ಗಾನ ವಾದ್ಯ ನಾನಾವಿಧ ರಭಸದಿ೧
ಎತ್ತಲು ನೋಡಿದಡತ್ತ ಜನ-
ಮೊತ್ತವಿಲಾಸವಿದೆತ್ತ
ಚಿತ್ತದಿ ನಲಿನಲಿದಾಡಿ ತೋಷ-
ವೆತ್ತಿರುವನು ಒಟ್ಟುಗೂಡಿ
ಸುತ್ತುಮುತ್ತು ಒತ್ತೊತ್ತಿಲಿಹರು ವಿ-
ಪ್ರೋತ್ತಮ ಶ್ರೀಹರಿಭಕ್ತರ ಮಯವಿದು೨
ಚಾಮರ ಛತ್ರ ಸಿಗುರಿಯು ಜನ-
ಸ್ತೋಮ ಪತಾಕೆ ತೋರಣವು
ಹೇಮದ ಕಂಚುಕಿ ಈಟಿ ಗುಣ-
ಧಾಮನ ಬಿರುದುಗಳ್ ಕೋಟಿ
ಆ ಮಹಾಭೇರಿ ಪಟಹ ನಿಸ್ಸಾಳಕ
ಸಾಮಗಾನ ಸಾಮ್ರಾಜ್ಯವೋಲಿಹುದು೩
ಬಾಲರು ವೃದ್ಧ ಯೌವನರು\ಜನ-
ಜಾಲವೆಲ್ಲರು ಕೂಡಿಹರು
ಲೋಲ ಸ್ರೀಮುಂದ್ರಾಂಕಿತದಿ ಬಹು ವಿ-
ಶಾಲ ದ್ವಾದಶನಾಮ ಮುದದಿ
ಆಲಯದೊಳಗಿಹ ಬಾಲಕಿಯರು ಸಹ
ಸಾಲಂಕೃತ ಸಮ್ಮೇಳದಿ ನಲಿವರು೪
ಒಂದು ಭಾಗದಿ ವೇದಘೋಷ ಮ-
ತ್ತೊಂದು ಭಾಗದಿ ಜನಘೋಷ
ಇಂದಿನ ದಿನದತಿಚೋದ್ಯ ಏ-
ನೆಂದು ವರ್ಣಿಸುವದಸಾಧ್ಯ
ಚಂದಿರಮುಖಿ ಯಾರೆಂದೆನಗುಸುರೆಲೆ
ಮಂದರಧರ ಗೋವಿಂದನ ಮಹಿಮೆಯ೫
ಊರ್ವಶಿ : ಕೇಳಿದ್ಯಾ ನಳಿನಾಕ್ಷಿ ಶ್ರೀಹರಿಲೀಲೆ
ಪೇಳಲೇನದಾ ಮೂರ್ಲೋಕದೊಳಗೀ ವಿ-
ಶಾಲವ ನಾ ಕಾಣೆಪ.
ಸೋಜಿಗ ಸೌಭಾಗ್ಯ ಸಂಪದಕಿದು ಬೀಜ ಕಾಣೆಲೆ
ರಾಜೀವನಾಭನ ಪೂಜಾವಿನೋದದಿ
ರಾಜವದನೆ ವನಭೋಜನದಿಂದಿನ೧
ನೇತ್ರದ ಕಲ್ಮಷವಡಗುವದು ಪವಿತ್ರವಾಗಿಹ
ಗೋತ್ರಕುಮಾರಿ ಪ್ರೀತ್ಯರ್ಥದಿ ಕೊಟ್ಟಿಹ
ರಾತ್ರಿ ಪೂಜೆ ಗೈವ ಮಾತ್ರದಿ ಪೊರಟರು೨
ಇಂದಿನ ದಿನದಂದವ
ನೂತನವೆಂದು ನೀ ಪೇಳುವಿ
ಚಂದಿರ ಮುಖಿ ಜನಸಂದಣಿಗಳು ಮಹಾ
ಮಂದಿ ಓಲೈಸುವರಿಂದು ಮುಕುಂದನ೩
ಬಾರೆ ನಾರೀಮಣಿ ವೈಯ್ಯಾರೆ ನೀರೆ ಬಾರೆಪ.
ನಿನ್ನಿಂದಾಯಿತ್ತು ಪುಣ್ಯ ಸಂಪಾದನೆ ಕಣ್ಣಾರೆ
ಕಾಣುವ ಯೋಗಭೋಗ೧
ಎನಗತಿ ಮನವು ನಿನಗತಿ ಛಲವು
ಜನುಮಾಂತರ ಪುಣ್ಯವೈಸೆ ನೀ೨
ರಂಭೆ : ಏನಮ್ಮ ಬಾರಿತ್ತಲು ನೋಡೀತನ್ಯಾರಮ್ಮಾ
ಭಾನುಕೋಟಿ ಪ್ರಕಾಶದಿಂದ ಮೆರೆವನಮ್ಮಾಪ.
ಅನವರತದಿಂದ ಬರುವ ಪುರುಷನಲ್ಲ
ಮೀನಕೇತನ ಶತರೂಪ ಕಾಣೆ೧
ನೂತನ ಪುರುಷನಿವನ್ಯಾರೆಂದರಿಯೆನಮ್ಮಾ
ಶಾತಕುಂಭದ ಮಂಟಪವೇರಿ ಬರುವನಮ್ಮಾ೨
ಸುರುಚಿರಫಣಿಪ ಪೆಡೆ ಶಿರದೊಳಿರುವದಮ್ಮಾ
ತರತರ ರತ್ನವರದ ಬಾಯೊಳಿರುವದಮ್ಮಾ೩
ಕೊರಳೊಳು ಕೌಸ್ತುಭವ ಧರಿಸಿಕೊಂಡಿಹನಮ್ಮಾ
ಪರಮ ಪುರುಷನಂತೆ ತೋರುವನು ಅಮ್ಮಾ೪
ಬಾಲಾರ್ಕನಂತೆ ಮುಖ ಪ್ರಜ್ವಲಿಪುದು
ನೀಲಮಾಣಿಕ್ಯ ಕಾಂತಿಯ ಸೋಲಿಪುದು೫
ಮೂರ್ಲೋಕದೊಳಗೆ ಸರಿಯುಪಮೆ
ತೋರಲರಿಯೆ
ಕಾಲಿಗೆರಗುವೆನು ಪೇಳಬೇಕು ಸಖಿಯೆ೬
ಕರದೊಳು ಶಂಖಚಕ್ರವ ಧರಿಸಿಕೊಂಡಿಹನಮ್ಮಾ
ಬೆರಳೊಳು ವಜ್ರದುಂಗುರವನಿಟ್ಟವನಮ್ಮಾ೭
ವರರತ್ನಖಚಿತದಾಭರಣದಿಂದ ಮೆರೆವ
ಚರಣ ಸರೋಜದೊಳು ರೇಖೆಯಿಂ ಶೋಭಿಸುವ ೮
ವಲ್ಲಭೆಯರ ಸಹಿತುಲ್ಲಾಸದಿ ಬರುವ
ಖುಲ್ಲರ ಮಾನಸಕೆ ಝಲ್ಲೆನಿಸಿ ಮೆರೆವ೯
ಬಲ್ಲಿದ ಪುರುಷನಿವನೆಲ್ಲಿಂದ ಬಂದ
ಎಲ್ಲವ ಪೇಳೆಲೆಗೆ ನಲ್ಲೆ ಸದಾನಂದ೧೦
ಊರ್ವಶಿ : ನೋಡು ನಿತ್ಯಾನಂದಕರನ
ಮೂಡಗಿರಿಯಿಂದೋಡಿ ಬಂದನ ನೋಡೆಪ.
ಛಪ್ಪನ್ನೈವತ್ತಾರು ದೇಶ
ಕಪ್ಪಕಾಣಿಕೆಗೊಂಬ ತೋಷ
ಸರ್ಪಶೈಲ ರಾಜವಾಸ
ಚಪ್ಪರ ಶ್ರೀ ಶ್ರೀನಿವಾಸ೧
ತಿರುಗುತ್ತಿಪ್ಪಾ ತಿರುಮಲೇಶ
ಶರಣ ರಾಮನ ಭಕ್ತಿಪಾಶ
ದುರುಳಿನಲಿ ನಿಂದಿರ್ಪಶ್ರೀಶ
ತರಿಸುವನು ಕಾಣಿಕೆ ವಿಲಾಸ೨
ಪಟ್ಟದರಸನಾದ ದೇವ
ಸೃಷ್ಟಿಯಾಳುವಜಾನುಭಾವ
ದೃಷ್ಟಿಗೋಚರವಾಗಿ ಕಾಯ್ವ
ಇಷ್ಟವೆಲ್ಲವ ಸಲಿಸಿ ಕೊಡುವ ೩
ಊರ್ವಶಿ : ಬಂದ ಗೋವಿಂದ ಸಾನಂದದಿ ಭಕ್ತರ
ವೃಂದ ನೆರಹಿ ವನಕೆ
ಅಂದಣವೇರಿ ಮುಕುಂದನೊಲವಿನಲಿ
ಕುಂದಣ ಮಂಟಪವೇರಿ ಮತ್ತೊಬ್ಬನು
ಸಂದರುಶನವಂ ನೀಡುತ ಯಿಬ್ಬರು
ಒಂದಾಗುತ್ತಾನಂದವ ಬೀರುತ್ತ ೧
ಅಕ್ಕ ನೀ ನೋಡು ಬಹುಮಾನದಿ
ಸಿಕ್ಕಿದಿ ಬಿರುದು ಪೊತ್ತಾ
ತೆಕ್ಕೆಪಕ್ಕೆಯ ವಿಲಾಸ ಮನಸಿನೊಳು
ಉಕ್ಕುವದತಿ ತೋಷ
ಇಕ್ಕೆಲದಲಿ ಬೀಸುವ ಚಾಮರಗಳ ವಕ್ಕಣಿಸುವ
ಸ್ತುತಿಪಾಠಕ ಜನಗಳ
ಮಿಕ್ಕಿ ನೊಡುವ ನೋಟಕೆ ಮನಸಿನೊಳು
ಝಕ್ಕೆನ್ನುವ ಕ್ಷಿತಿಗಕ್ಕಜ ತೋರುತ್ತಾ ೨
ಛತ್ರ ಚಾಮರ ತೋರಣ ಪತಾಕೆ
ಪವಿತ್ರ ನಿಶಾನಿಧಾರಣಾ
ಸುತ್ರಾಮಾರ್ಚಿತ ಚರಣಭಕ್ತರನು
ಪವಿತ್ರಗೈಯುವ ಕಾರಣ
ಮಿತ್ರಮಂಡಳವನು ಮೀರಿ ಪೊಳೆವುತಿಹ
ರತ್ನಖಚಿತ ಮಂಟಪದಲಿ ಮಂಡಿಸಿ
ಧಾತ್ರಿಯೊಳಗೆ ಅನ್ಯತ್ರವಿಲ್ಲೆಂಬುವ
ಕೀರ್ತಿಯ ಧರಿಸಿ ಜಗತ್ರಯಪಾವನ ೩
ವಾಲಗಶ್ರುತಿ ಭೇರಿ ಡಿಂಡಿಮ
ನಿಸ್ಸಾಳ ಪಟಹ ಭೂರಿ
ತಾಳ ಮೃದಂಗ ರವದಿಂದ
ಜನ ಜಾಲ ಕೂಡಿರುವ
ಮೇಳವಿಸುತ್ತನುಕೂಲಿಸಿ ಬಹು ಬಿರು
ದಾಳಿಗೆ ಸಂಭ್ರಮದೇಳಿಗೆಯಿಂದಲಿ
ಕೋಲು ಪಿಡಿದು ಓಹೋಯೆಂಬಂಥ ವಿ-
ಶಾಲ ಭಕ್ತರ ಮೇಲು ಸಂತೋಷದಿ ೪
ದೇಶದೇಶದ ಜನರು ನಾನಾ ವಿಧ
&ಟಿ

೪೩೯
ಏನು ದುಷ್ರ‍ಕತ ಫಲವೋ ಸ್ವಾಮಿ
ಶ್ರೀನಿವಾಸನೆ ಪೇಳೋ ಪ.
ಏನು ಕಾರಣ ಭವಕಾನನದೊಳು ಬಲು
ಹಾನಿಯಾಗಿ ಅವಮಾನ ತೋರುವದಿದು ಅ.ಪ.
ಹಂಬಲವೂ ಹಿರಿದಾಯ್ತು ಎನ್ನ
ನಂಬಿಕೆಯೂ ಕಿರಿದಾಯ್ತು
ಸಂಭ್ರಮವಲ್ಲ ಕುಟುಂಬಿಗೆರೆನ್ನಯ
ಹಂಬಲಿಸರು ನಾನೆಂಬುವದೇನಿದು ೧
ಹಣವಿಲ್ಲಾ ಕೈಯೊಳಗೆ ಸ-
ದ್ಗುಣವಿಲ್ಲಾ ಮನದೊಳಗೆ
ಜನಿತಾರಭ್ಯದಿ ತನುಸುಖವಿಲ್ಲೈ
ಘನದಾಯಾಸವ ಅನುಭವಿಸುವದಾಯ್ತು ೨
ಪೋದರೆಲ್ಲ್ಯಾದರು ಅಪ-
ವಾದವ ಪೇಳ್ವರು ಜನರು
ಆದರವಿಲ್ಲೈ ಶ್ರೀಧರ ತವ ಚರ-
ಣಾಧಾರವೆ ಇನ್ನಾದರೂ ಕೃಪೆಯಿಡು ೩
ಗೋಚರವಿಲ್ಲೆಲೊ ರಂಗ ಎನ್ನ
ಪ್ರಾಚೀನದ ಪರಿಭಂಗ
ನಾಚಿಕೆ ತೋರದ ಯಾಚಕತನವ-
ನ್ನಾಚರಿಸುವ ಕಾಲೋಚಿತ ಬಂದುದು೪
ಸೇರಿದೆನೆಲೊ ರಂಗ ಕೃಪೆ
ದೋರೆನ್ನೊಳ್ ನರಸಿಂಗ
ಭಾರವೆ ನಿನ್ನ ಮೈದೋರಿ ರಕ್ಷಿಸುವುದು
ನಾರದನುತ ಲಕ್ಷ್ಮೀನಾರಾಯಣ ಗುರು೫

೩೨೫
ಏನು ಪುಣ್ಯವೋ ಯಶೋದೆಯ
ಪರೀಕ್ಷಿತರಾಯ
ಯಾವ ಪುಣ್ಯವೋ ಯಶೋದೆಯ ಪ.
ಚೆನ್ನಕೇಶವನ್ನ ತನ್ನ
ಚಿಣ್ಣನೆಂದು ಮುದ್ದಿಸಿ
ಬಣ್ಣಿಸಿ ಮೊಲೆಯನುಣ್ಣಿಸಿ
ಚಿನ್ನದ ತೊಟ್ಟಿಲೊಳಿಟ್ಟು ತೂಗುವ ೧
ಅಗಣಿತ ಬ್ರಹ್ಮಾಂಡಗಳ ತ-
ನ್ನುದರದೊಳಡಗಿಸಿದನ
ಮುಗುಳುನಗೆಯ ಮೊಗವ ನೋಡಿ
ಮಗನೆಂದಾಡಿ ಪೊಗಳಿ ಪಾಡುವ ೨
ಲಕ್ಷ್ಮೀನಾರಾಯಣನ ಪ್ರ-
ತ್ಯಕ್ಷ ಬಾಲಲೀಲೆಯ
ಚಕ್ಷುದಣಿಯೆ ನೋಡುತನ್ಯ-
ಪೇಕ್ಷೆಯಿಲ್ಲದಿಹಳೊ ಅಹೋ೩

ಕುಂದಣ ವರ್ಣದ ಕೇತಃ
೨೪೦
(ಮದ್ರಾಸಿನ ತಿರ್ವಳಕೇಣಿ ಪಾರ್ಥಸಾರಥಿ)
ಏನು ಮಾಡಲಿನ್ನು ನೀನಲ್ಲದೆ ಯಾದಾರ ಬೇಡಲಿನ್ನು ಪ.
ಮಾನಿನಿ ದ್ರೌಪದಿ ಮೊರೆಯಿಡುವುದ ಕೇಳಿ
ನಾನಾ ವಸ್ತ್ರಗಳಿತ್ತ ನರನ ಸಾರಥಿ ದೇವ ಅ.ಪ.
ನೀನಿತ್ತ ಸೌಭಾಗ್ಯದ ಗರ್ವದಿ ಎನ್ನ
ಧ್ಯಾನಾದಿಗಳ ಮಾಡದೆ
ನಾನಾ ವಿಧದ ದುರ್ಮಾನುವಾದುದರಿಂದ
ನೀನೆ ಸದ್ಗತಿಯೆಂದು ಧ್ಯಾನಿಸಿಲ್ಲಿಗೆ ಬಂದೆ ೧
ಬಡತನದಿಂದಿರಲು ಸಕಲ ಸುರ-
ರೊಡೆಯ ನೀ ಕೈ ಪಿಡಿದು
ಕೊಡಲು ಭಾಗ್ಯವ ರೂಢಿ ಮದದಿ ನಿನ್ನನು ಬಿಟ್ಟು
ಕಡೆಗೆ ನಿನ್ನಯ ಪಾದದೆಡೆಗೆ ಬಂದೆನು ದೇವ ೨
ಪಶ್ಚಿಮ ವಾರಿಧಿಯ ತೀರದಲಾದ ದುಶ್ಚರಿತ್ರೆಯ ತಾಳದೆ
ಆಶ್ಚರ್ಯತಮವಾದ ಸಚ್ಚರಿತ್ರನೆ ನಿನ್ನ
ನೆಚ್ಚಿ ಬಂದಿಹೆನೊ ವಿಪಶ್ಚಿತರೊಡೆಯನೆ ೩
ನಕ್ಷತ್ರಗಳಂದಿಂದಲು ಯೆನ್ನಪರಾಧ-
ವಕ್ಷಯವಾಗಿರಲು
ಅಕ್ಷರಿ ವಂದ್ಯ ನೀ ಲಕ್ಷ ಬಿಡುವುದೆ ಕ-
ಟಾಕ್ಷದಿಂದಲಿ ನೋಡಿ ರಕ್ಷಿಸು ಕರುಣದಿ ೪
ಎಷ್ಟು ಕರ್ಮಿಯಾದರು ನಿನ್ನಲಿ ಮನ-
ವಿಟ್ಟು ಬಂದಿರುವೆನಲ್ಲ
ದುಷ್ಟಮರ್ದನ ಶಿಷ್ಟರಕ್ಷಣ ಭಾಜಕ ಜ-
ನೇಷ್ಟದಾಯಕ ಸೃಷ್ಟ್ಯಾದೃಷ್ಟಕರ್ತ ೫
ನಟನ ಮಾಡುವ ಬೊಂಬೆಯ ಪೋಲುವ ಯೆನ್ನ
ಹಟದಿಂದ ದಣಿಸುವುದೆ
ವಟಪತ್ರ ಶಾಯಿ ಧೂರ್ಜಟಿ ವಂದ್ಯ ಅಂಜಲಿ
ಪುಟನಾಗಿ ಬೇಡುವೆ ಘಟಿಸೊಭಿಲಷಿತವ ೬
ಎಂದಿಗಾದರು ನಿನ್ನಯ ಪಾದಯುಗಾರ-
ವಿಂದ ದರ್ಶನವಾಗಲು
ಸಂದೇಹಿಲ್ಲದ ಭವ ಸಿಂಧುವ ದಾಟುವೆ-
ನೆಂದು ಬಂದಿರುವೆ ಸನಂದನಾದಿ ವಂದ್ಯ ೭
ಮೀನ ಕೂರ್ಮ ವರಾಹ ನಾರಸಿಂಹ
ವಾಮನ ಶ್ರೀ ಭಾರ್ಗವ
ರಾಮಕೃಷ್ಣ ಬೌದ್ಧ ಕಲ್ಕಿಯಂಬ ದಿವ್ಯ
ನಾಮಗಳನು ಬಿಟ್ಟು ಕಾಮಲಾಲಸನಾಗಿ ೮
ಒಂದು ನಿಮಿಷವಾದರು ತತ್ವಾಧಾರ
ವಿಂದ ದರ್ಶನ ಮಾಡಲು
ಹೊಂದಿದಘಗಳೆಲ್ಲ ಬೆಂದು ಹೋಗುವುದೆಂದಾ-
ನಂದತೀರ್ಥಚಾರ್ಯರೆಂದ ನುಡಿಯ ನಂಬಿ ೯
ದ್ವೇಷಿ ಮಾನವರ ಮುಂದೆ ನಾನಾ ವಿಧ
ಕ್ಲೇಶವ ತಾಳ್ದೆ ಹಿಂದೆ
ಘಾಸಿಯಾಗಿ ನಾನಾ ದೇಶ ದಾಟಿ ಬಂದೆ
ಮೀಸಲಾದೆ ನಿನ್ನ ದಾಸ ದಾಸ್ಯನೆಂದೆ ೧೦
ಜನರೊಳು ಪ್ರಮಿತನಾಗಿ ಬಾಳಿದ ಮಾನ-
ವನು ಮಾನಹೀನನಾಗಿ
ತನುವ ಪೊರೆದನತಿ ಘನಕ್ಲೇಶವೆನುತ ಅ-
ರ್ಜುನನಿಗೆ ಉಪದೇಶವನು ಪೇಳಿದವ ನೀನೆ ೧೧
ಯುಕ್ತಿ ಒಂದನು ಕಾಣೆನು ದೇಹದಿ ದೃಢ
ಶಕ್ತಿಯಿಲ್ಲದವ ನಾನು
ಮುಕ್ತಾಶ್ರಯ ಸರ್ವ ಶಕ್ತಿ ನೀನಿಹ ಪರ-
ಭುಕ್ತಿ ಮುಕ್ತಿದನೆಂಬ ವಿರಕ್ತಿಯಿಂದಲಿ ಬಂದೆ ೧೨
ಕಾಸೆಲ್ಲ ವ್ಯಯವಾಯಿತು ಎನಗೆ
ಪರದೇಶವಾಸವಾಯಿತು
ಆಸೆ ಬಿಡದುದರ ಘೋಷಣೆಗಿನ್ನವ-
ಕಾಶವೊಂದನು ಕಾಣೆ ಶ್ರೀಶ ನೀನರಿಯೆಯ ೧೩
ನಿಲ್ಲಲಾಶ್ರಯವನು ಕಾಣೆ ಪೋಗುವೆನೆಂದ-
ರೆಲ್ಯು ಮಾರ್ಗವನು ಕಾಣೆ
ಬಲ್ಲಿದ ವೈರಿಗಳಲ್ಲಿ ತುಂಬಿಹರರಿ-
ದಲ್ಲಣ ನೀ ಎನ್ನ ಸೊಲ್ಲ ಲಾಲಿಸು ಕೃಷ್ಣ ೧೪
ಅಶನವಸನ ಕಾಣದೆ ದೇಶವ ಸುತ್ತಿ
ಬಸಿದು ಬೆಂಡಾಗಿಹೆನು
ಉಶನಾಂಇÀರ್ಇ ಶಿಷ್ಯನ ವಶದಿಂದೆತ್ತಿ ಪೃಥ್ವಿಯ
ದಶನಾಯಕರಿಗಿತ್ತ ಅಸಮಸಾಹಸ ದೇವ ೧೫
ಮಾಡಿದಪರಾಧಕೆ ಮಾನಹಾನಿ
ಮಾಡಿದುದು ಸಾಲದೆ
ಬೇಡುವೆ ದೈನ್ಯದಿ ಪಾಡುವೆ ಮಹಿಮೆಯ
ರೂಢಿಯೊಳಗೆ ದಯಮಾಡು ಇನ್ನಾದರು ೧೬
ಇನ್ನಾದರೂ ಮನದಿ ಪಶ್ಚಾತ್ತಾಪ
ವನ್ನು ತಾಳೊ ದಯದಿ
ಕಣ್ಣ ಕಟ್ಟಿ ಕಾಡಿನೊಳು ಬಿಟ್ಟ ತೆರದೊಳಿಂ-
ತೆನ್ನನು ಬಳಲಿಪದನ್ಯಾಯವಲ್ಲವೆ ೧೭
ನಷ್ಟವೇನಹುಣನು ಎನ್ನಲಿ ಕ್ರೋಧ
ಬಿಟ್ಟು ಬಾಧಿಸುತ್ತಿರಲು
ಕೃಷ್ಣ ನೀ ಕರುಣದಿ ಕಷ್ಟ ಬಿಡಿಸಿ ಕಡೆ
ಗಿಷ್ಟು ತಾತ್ಸಾರದಿಂದ ಕಷ್ಟಗೊಳಿಸಿದೆ ೧೮
ಇಂದ್ರಾದಿ ಸುರರುಗಳು ಕೆಲವು ಕಾಲ
ನೊಂದು ಭಾಗ್ಯವ ಪಡದು
ಇಂದಿರೇಶ ನಿನ್ನ ಬಂಧಕ ಶಕ್ತಿಯಾ
ನಂದ ತಿಳಿದಂತೆ ಮಂದನಾನರಿವೆನೆ ೧೯
ಆನೆಯ ಭಾರವನು ಹೊರಲು ಸಣ್ಣ
ಶ್ವಾನ ಸಹಿಸಲಾಪದೆ
ದೀನ ಮಾನವನೆಂದು ಧ್ಯಾನಿಸಿ ಮನದಲಿ
ಘನ್ನ ದುಖ್ಖವ ಕಳೆಯಾನಂಥ ಮೂರುತಿ೨೦
ನೀನಿತ್ತ ಮಾನವನು ನೀ ಕಳದುದ
ಕಾನು ಮಾಡುವದೇನಯ್ಯ
ದಾನವಾರಿ ಸುರಧೇನು ನಿನ್ಡಿಗಳ
ಧ್ಯಾನ ಮಾಡುತಲಿ ಸುಮ್ಮಾನದಿಂದಿರುವೆನು ೨೧
ಸಾಕು ಸಾಕು ಮಾಡಿದೆ ಎನ್ನನು ಬಹು
ನೀಕರಿಸುತ ದೂಡಿದೆ
ಬೇಕಾದರೆ ಭಕ್ತ ನೀ ಕಪಾಲನ ಪ-
ರಾಕೆಂಬ ಬಿರುದಿಂದ ಸಾಕುವದುಚಿತವೆ ೨೨
ಅಂಬರೀಷವರದ ಸ್ವಭಕ್ತ ಕು-
ಟುಂಬಿಯಂಬ ಬಿರುದ
ನಂಬಿದ ಮೇಲೆನಗಿಂಬುದೋರದೆ ವೃಥಾ
ಡಂಬರವ್ಯಾಕಿನ್ನು ಶಂಬರಾರಿಯ ಪಿತ ೨೩
ಹಂಸವಾಹನ ಜನಕ ದಾಸಮದ-
ಭ್ರಂಶಕನೆಂದನ-
ಕ ಸಂಶಯವಿಲ್ಲದೆ ತಿಳಿದೆನು ಮಾತುಳ
ಕಂಸ ಮರ್ದನ ವಿಪಾಂಸ ಶೋಭಿತ ದೇವ ೨೪
ತರಳ ಪ್ರಹ್ಲಾದ ಧ್ರುವಾದಿಗಳನೆಲ್ಲ
ಪೊರೆದನೆಂಬ ಕಥೆಯ
ಹಿರಿಯರು ಪೇಳ್ವರು ಭರವಸೆ ಎನಗಿಲ್ಲ
ಸಿರಿನಲ್ಲ ನೀಯೆನ್ನ ಬರಿದೆ ಬಿಟ್ಟದ ಕಂಡು೨೫
ವಿಜಯಸಾರಥಿ ನಿನ್ನಯ ಮೂರ್ತಿಯ ಕಂಡು
ಭಜಿಸಿದ ಮೇಲೆನ್ನನು
ವಿಜಯ ಪೊಂದಿಸದಿರೆ ತ್ರಿಜಗವು ನಗದೇನೊ
ಭುಜಗ ಭೂಷಣ ವಂದ್ಯ ದ್ವಿಜರಾಜ ಗಮನನೆ ೨೬
ಕುಂದಣ ವರ್ಣವಾದ ಕೇತಕಿಯನು
ಗಂಧಕೆ ಮರುಳನಾಗಿ
ಬಂದು ಕುಸುಮಧೂಳಿಯಿಂದ ಲಂಡನಾದ
ತುಂದಿಲೋದರ ಮಿಳಿಂದನಂದದಿ ಸಿಕ್ಕಿ ೨೭
ಬೇಡುವದೇನೆಂದರೆ ನಿನ್ನನು ಧ್ಯಾನ
ಮಾಡಿ ಪಾಡುವ ಭಾಗ್ಯವ
ನೀಡು ನೀಚರನೆಂದು ಬೇಡದಂದದಿ ಮಾಡು
ರೂಢಿಯೊಳಗೆ ದಯಮಾಡು ನೀ ನಿರುಪದಿ ೨೮
ಇನ್ನು ತಾ ತಾಳಲಾರೆ ಕ್ಷಣೆ ಕ್ಷಣೆ
ನಿನ್ನ ಪೊಗಳಲಾರೆ
ಪನ್ನಗಾಚಲವಾಸ ಪರಮ ಪುರುಷ ಪ್ರ-
ಸನ್ನ ವೆಂಕಟೇಶ ಪಾಲಿಸು ಕೃಪೆಯಿಂದ ೨೯

೨೫೫
ಏನೆಂದರು ಸರಿ ಬೀಳ್ವದು ನಮ್ಮ
ಶ್ರೀನಿವಾಸನ ಮಹಿಮಾನುಸಂಧಾನದಿಂ ಪ.
ಶಯ್ಯದಿಂದೇಳುತ ಶಾರೀರದಾಲಸ್ಯದಿಂ-
ದಯ್ಯ ಅಪ್ಪ ಅಮ್ಮನೆಂಬುವರಾ-
ಜೀಯನ ಗುಣನಾಮಕನುವಾಗಿ ತಿಳಿದರೆ
ಕಯ್ಯ ಪಿಡಿದು ಕಾವ ಕರುಣಾಳು ರಾಜಗೆ ೧
ಅಪತತ್ವದಲಿ ನಿಂತು ಅಪ್ಯಾಯನ ಮಾಳ್ಪ
ತಪ್ಪನೆಂಬುದಕಿದು ಕಾರಣವು
ಮುಪ್ಪುರಹರನಯ್ಯನು ಪೆತ್ತ ದೊರೆಯನು
ಒಪ್ಪಲಾರದೆ ಅಮ್ಮ ಅಯ್ಯನೆಂಬುವ ನಾಮ ೨
ಕುರಿಯೊ ಮರಿಯೊ ಎಂಬ ದಾತಗೆ ಭಿನ್ನ ಹ-
ವರವುದು ಹರಿಗೆ ಮೂಜನವೆಲ್ಲವು
ಕುರಿಯಂತೆ ವಶ್ಯವಾಗಿರುವುದು ಭವಬಂಧ
ಹರಿದ ಜ್ಞಾನದ ಮುಳ್ಳಮುರಿಯೆಂಬ ಭಾವದಿಂ ೩
ಮೂರಾರು ಪುರಾಣ ಮೂಲ ರಾಮಾಯಣ
ಭಾರತ ಪಂಚರಾತ್ರಾದಿಗಳು
ಸೇರಿ ಪೇಳುವುದೆಲ್ಲ ಸಿರಿಯರಸನ ನಾಮ
ವಾರಿಧಿಯೊಳಗಿನ ತೆರೆಗಳಂದದಿ ತೋರ್ಪ ೪
ನಾದ ಬಿಂದು ವರ್ಣದಾತನುದಾತ್ತ ಸ್ವ
ರಾದಿ ಸಕಲ ಶಬ್ದ ವಾಚ್ಯ-
ನಾದ ಶ್ರೀದೇವಿಯರಸ ವೆಂಕಟರಾಜನರಿವಂಥ
ಹಾದಿಯ ತಿಳಿದರಗಾಧ ಮಹಿಮಾ ನಿನ್ನ ೫

೧೨೪
(ಉಡುಪಿಯ ಪ್ರಾಣದೇವರು)
ಏನೆಂದು ಸ್ತುತಿಸಲಿ ಪ್ರಾಣನಾಯಕನಾ
ಕಾಣುವಂದದಿ ಮಹಾ ಮಹಿಮೆ ತೋರುವನಾ ಪ.
ಕಡು ಪಾಪಿ ಕಲಿಯನ್ನು ಕಾಲಿಂದ ಮೆಟ್ಟಿ
ಬಡಜನರಲ್ಲಿಟ್ಟು ಕರುಣಾದೃಷ್ಟಿ
ಉಡುಪಿ ಕೃಷ್ಣನ ಮುಂದೆ ವಿಪ್ಪ ಸಂತುಷ್ಟಿಯ
ಬಡಿಸುತ ನಿಂತಿರುವನು ಜಗಜಟ್ಟಿ ೧
ಪ್ರಥಮ ರೂಪನಾಗಿ ಪರಿಜನರಲ್ಲಿ
ದ್ವಿತೀಯ ರೂಪದಿಂದ ಪಾಕಕರ್ತರಲಿ
ರತಿಪತಿಪಿತನ ಪೂಜಾವಿಧಿ ನಡೆಸಲು
ಯತಿ ಜನರೊಳು ಪೂರ್ಣಮತಿಯಾಗಿ ನಿಲುವನ ೨
ಮೂರೊಂದು ಪುರುಷಾರ್ಥ ದಯೆಮಾಳ್ಪೆನೆಂದು
ದ್ವಾರಾವತಿಯಿಂದ ತಾನಿಲ್ಲಿ ಬಂದು
ಸೇರಿದ ಸಿರಿವರ ವೆಂಕಟನಾಥನ
ಕಾರುಣ್ಯಂಸ ಪಾತ್ರ ಕರುಣಾಳು ರಾಜನ ೩

೧೦೩
ಏನೆಂಬೆನು ಪವಮಾನ ದೇವನಲಿ ಶ್ರೀನಿವಾಸ ಕರುಣಾ
ತಾನಾಗೀತನಕಡೆಯಲಿ ಬಹ ಲಕ್ಷ್ಮೀಮಾನ, ದೀನ ಶರಣಾ ಪ.
ದುರುಳ ದಶಾಸ್ಯನ ಸೆರೆಯೊಳಗಿಕ್ಕಿದ
ಸುರವರನಣುಗನನೂ
ನೆರೆಯದೆ ಮಾರುತಿ ಇರುವ ನಿಮಿತ್ತದಿ
ಕರಿಸಿದ ರವಿಜನನು
ತಿರುಗಿ ದ್ವಾಪರದಿ ಬರಲಾರ ರವಿಜನ
ನರನಿಂದೊರಸಿದನು
ಎರಡು ಯುಗದೊಳೀ ತೆರದಲಿ ಭಾರತಿ
ವರನನು ಸೇರಿದನು ೧
ಶ್ರೀಕರ ಜೀವರಿಗೇಕೀ ಭಾವವ
ಪೋಕ ಮೃಗಗಳಂದೂ
ಕಾಕರಟನದಂತೊರೆವದನರಿತು ದಿ-
ವೌಕಸಗಣಬಂದು
ಶ್ರೀಕಮಲಾಸನ ವಂದ್ಯನೆ ಸಲಹೆನೆ
ಸಾಕುವ ತಾನೆಂದೂ
ಈ ಕಲ್ಯಾಣ ಗುಣಾಢ್ಯನ ಭೂಮಿಗೆ
ತಾ ಕಳುಹಿದನಂದು ೨
ಅದರಿಂ ತರುವಾಯದಲಿ ಸುಖಾಂಭುದಿ
ಒದಗಿದ ತ್ವರೆಯಿಂದ
ಪದುಮನಾಭ ಮೂರುತಿಯ ಕೆಲದಿ ನಿಂ-
ದದುಭುತ ಭರದಿಂದಾ
ವಿಧಿಭವ ಲೋಕಾದ್ಯಧಿಕೃತ ಪುಣ್ಯಾ
ಸ್ಪದ ತೋರುವೆನೆಂದಾ
ವಿಧಿ ಪದ ಯೋಗ್ಯನ ಚದುರತನಕೆ
ಮೆಚ್ಚಿ ಪೂರ್ಣಾನಂದ ೩
ವರ ವೈಕುಂಠವ ರಜತ ಪೀಠ ಸ-
ತ್ಪುರದೊಳಗಿರಿಸಿಹನು
ವಿರಜೆಯ ಮುನಿಕಡತ ಸರಸಿಗೆ ಕರೆಸಿದ
ಮುರದಾನವಹರನು
ಚರಣಾಂಬುಜಕಿಂಕರವರ ಚಂದ್ರೇ-
ಶ್ವರನಲಿ ಕರುಣವನು
ಇರಿಸಿ ಭಜಿಪ ಸುರತರುವೆನಿಸಿದ ಶ್ರೀ-
ವರನ ಮಹಾತ್ಮೆಯನು ೪
ಜ್ಞಾನಾನಂದಾಂಬುಧಿ ಶೇಷಾದ್ರಿಯ
ಶ್ರೀನಿವಾಸನಿವನು
ತಾನಾಗಿಲ್ಲಿಗೆ ಬಂದಿಹ ಭಕ್ತಾ-
ಧೀನ ದಯಾಕರನು
ಮಾನಸಗತ ಮಾಲಿನ್ಯವ ಕಳೆದನು
ಮಾನವ ಬಿಡಿಸುವನು
ನಾನಾಭೀಷ್ಟವ ನಿರವಧಿ ಕೊಡುತಿಹ
ಮೌನಿ ಜನಾರ್ಚಿತನು ೫

೧೩೦
(ಸರಸ್ವತೀ ಪ್ರಾರ್ಥನೆ)
ಏನೇ ಸರಸ್ವತಿಯಮ್ಮಾ ಬಹು
ಮಾನದಿ ಪಾಲಿಸು ನಮ್ಮಾ
ಆ ನಳಿನಜ ಚತುರಾನನನೊಲಿಸಿದ
ಶ್ರೀನಿವಾಸನ ಪರಮಾನುರಾಗದ ಸೊಸೆ ಪ.
ಮೂಢತನವನೆಲ್ಲ ಕಳಿಯೆ ದಯ
ಮಾಡಿ ನೀ ಮನಸಿಗೆ ಹೊಳಿಯೆ
ಬಾಡದ ಪದ್ಮದ ಕಳೆಯೆ ಮನೋ
ರೂಢ ಮಲವ ಬೇಗ ತೊಳಿಯೆ
ಆಡುವ ಮಾತುಗಳೆಲ್ಲವು ಕೃಷ್ಣನ
ಪಾಡಿ ಪೊಗಳುವಂತೆ ರೂಢಿಗೊಳಿಸು ದೇವಿ ೧
ರಾಜಿಕಲೌಕಿಕವಾದ ಬಹು
ಸೋಜಿಗಕರಿಪೂರ್ಣಮೋದ
ಈ ಜಗದೊಳು ಮುಖ್ಯವಾದ ಸುಗು-
ಣೋಜೊಧಾರಣ ಕಲ್ಪಭೂಜ
ಮಾಜಿ ಮರೆಯೊಳಿಹ ಮಂದ ವೈರಿಗಳ ಸ-
ಮಾಜವ ಗೆಲಿಸುತ ರಾಜಿಸು ಮನದಲಿ ೨
ಕರಣಾಭಿಮಾನಿಗಳನ್ನು ಉಪ
ಕರಣರ ಮಾಡುವದನ್ನು
ಕರುಣೀ ನೀ ಬಲ್ಲಿನ್ನು ಮುನ್ನ ಮನ
ವರತು ರಕ್ಷಿಸು ಬೇಗೆನ್ನನು
ಸರಸಿಜಾಕ್ಷ ಶೇಷಗಿರಿ ವರಪದಕಂಜ
ಸ್ಮರಣೆ ಮಾಡುವಂತೆ ಕರುಣಿಸೆನ್ನನು ೩

೪೨೦
ಏಳಯ್ಯ ಸುಬ್ರಹ್ಮಣ್ಯ ಬೆಳಗಾಯಿ-
ತೇಳಯ್ಯ ಸುಬ್ರಹ್ಮಣ್ಯ
ಕೋಳಿ ಕೂಗುವದು ವನಜಾಳಿಸೌರಭ್ಯ ತಂ-
ಗಾಳಿ ಬೀಸುವದು ಕರುಣಾಳು ತವಚರಣವ-
ನ್ನೋಲಗಿಸಲುದಯಗಿರಿಮೇಲುಪ್ಪರಿಗೆಯೇರ್ದ
ಕೀಲಾಲಜಾಪ್ತನೀಗ
ಕಾಲಕಾಲದಿ ಭಕ್ತಜಾಲವನು ಜಯಗೊಳಿಸಿ
ಪಾಲಿಸುವ ಪಾರ್ವತೀಬಾಲ ಭಾಸ್ಕರತೇಜ
ಸಾಲು ಕೃತಾಂಗ ಗುಣಶೀಲನಿಧಿ ಸೇನಾನಿ
ಲೋಲಲೋಚನೆಯ ಸಹಿತ೧
ಇಂದು ಸಂಕ್ರಮಣ ದಿನ ಬಂದಿಹರು ಭಕ್ತಜನ-
ವೃಂದ ಕಾಣಿಕೆ ಕಪ್ಪ ತಂದು ನಿಂದಿಹರು ಬಲ-
ವಂದು ವಂದಿಸಿ ತಮಗೆ ಬಂದ ಭಯ ಪರಿಹರಿಸೆ ತಂದೆ
ಸಲಹೆಂದು ಸ್ತುತಿಸೆ
ಕಂದರ್ಪಸಾಹಸ್ರ ಸೌಂದರ್ಯ ಮೂರ್ತಿಯನು
ಚಂದದಿಂ ಕಾಣುವಾನಂದ ಮಾನಸರು ಗೋ-
ವಿಂದ ನಾಮಸ್ಮರಣೆಯಿಂದ ಪಾವನಗೈವ
ಸ್ಕಂದ ಕರುಣಾಸಿಂಧುವೆ೨
ಪೃಥ್ವಿಯೊಳಗುತ್ತಮ ಪವಿತ್ರ ಪಾವಂಜಾಖ್ಯ
ಕ್ಷೇತ್ರಾಧಿವಾಸ ಲೋಕತ್ರಯ ವಿಭೂಷಣ ಪ-
ರತ್ರೈಕಸಾಧನ ಮಹತ್ತಪ ಮಹೇಷ್ವಾಸ
ಕಾರ್ತಿಕೇಯ ನಮೋಸ್ತುತೇ
ಭೃತ್ಯವತ್ಸಲ ಭವಭಯಾಬ್ಧಿಕುಂಭಜ ಭಜಕ-
ಪ್ರೋತ್ಸಾಹ ಪಾವನಚರಿತ್ರ ಸುತ್ರಾಮನುತ
ಕರ್ತ ಲಕ್ಷ್ಮೀನಾರಾಯಣಪರಾಯಣನೆ
ಮೃತ್ಯುಂಜಯನೆ ಪುತ್ರನೆ೩

೨೩೬
ಒಂದೇ ಬೇಡುವೆ ನಿನ್ನನು ನಿನ್ನಡಿಗಳನೆಂದಿಗು ನೆನೆವುದನು ಪ.
ಒಂದೇ ಬೇಡುವೆನು ಮುಕುಂದ ಇದರ ಬಲ
ದಿಂದ ಸರ್ವಾರ್ಥವ ಹೊಂದುವ ಮನದಿಂದ ಅ.ಪ.
ಪಾತಕಗಳನೆಲ್ಲ ಪರಿಹರಿಸುವ ದುರ್ವಿ-
ಘಾತಕವೈರ ಕತ್ತರಿಸುವುದು
ಶ್ರೀಕರುಣಿಯ ಸನ್ನಿಧಾನವನಿರಿಸುವ
ಆತತಾಯಿಗಳ ಭಂಗಿಸಿ ಬಾಧೆ ಪಡಿಸುವ ೧
ಉಂಬಾಗ ಉಡುವಾಗ ಕೊಂಬಾಗ ಕೊಡುವಾಗ
ತುಂಬಿದ ಜನರೊಡನಾಡುವಾಗ
ನಂಬಿದ ಸತಿಯೊಳು ನಯನುಡಿ ನುಡಿವಾಗ
ಅಂಬುದನಿಭ ನಿನ್ನ ಹಂಬಲಗೊಳುವುದ ೨
ನಡೆವಾಗ ನುಡಿವಾಗ ಮಡಿಯನುಟ್ಟಿರುವಾಗ
ಪೊಡವಿ ಪಾಲಕರೊಡನಾಡುವಾಗ
ಕಡಲಶಯನ ನಿನ್ನ ನೆನೆವರೆ ನಾಚಿಕೆ
ಪಡದೆ ಸಕಲ ಕಾಲ ದೃಢದಿಂದ ಸ್ಮರಿಸುವ ೩
ಖೇದ ಮೋದಗಳೆಂಬ ಭೇದವಿಡದೆ ಯಾವಾ-
ಗಾದರು ಸರಿಯಾಗಿ ಸ್ಮರಿಸುವರ
ಕಾದುಕೊಂಡಿರುವಂಥ ಕರುಣಿಯೆಂಬುದರಿಂದ-
ಗಾಧ ಮಹಿಮೆ ನಿನ್ನ ಹಾದಿ ತೋರಿಸುವುದ ೪
ಶ್ರಮವಿಲ್ಲದೆ ಸ್ರ‍ಮತಿ ಭ್ರಮಣೆ ಬಿಡಿಸುವ ಶ್ರೀ-
ರಮಣ ವೆಂಕಟಗಿರಿ ನಾಯಕನೆ
ನಮಿಸಿ ಬೇಡವೆನೆಂಬ ಮಮತೆಯಿರಿಸಿ ನಿನ್ನ
ಕಮನೀಯಪದಕಲ್ಪದ್ರುಮ ನೆರಳಿರಿಸೆಂದು ೫

೨೧೮
ಒಪ್ಪಿಸಿದೆ ಒರೆದು ದೂರ ಮುಂದೆನ್ನ
ತಪ್ಪನೆಣಿಸದಿರು ಧೀರ
ಅಪ್ಪಳಿಸು ಕಡು ಮೂರ್ಖರ ನಿನಗೆಂದು
ತಪ್ಪುವುದೆ ಭಕ್ತಭಾರ ಪ.
ದುರ್ಗಾಧಿಪತಿ ಲಾಲಿಸು ಮನಸಿಜನ
ಮಾರ್ಗಣಕೆ ಸಿಲುಕಿ ಮನಸು
ನಿರ್ಗಮಿಸದೊಳಸರಿದು ಮುಳುಗಿ ಸ-
ನ್ಮಾರ್ಗಗಾಣದೆ ಕುಂದಿತು ೧
ಪಂಚಾಂಗ ಪಲುಗುತಿರಲು ಮನೆಯ ಮ್ಯಾ-
ಲ್ಹಂಚುಗಳಸ್ಥಿರವಾಗಲು
ಚಂಚಲದಿ ಮನ ಕೆದರಲೂ ತದಧೀನ
ಪಂಚಕರಣವು ಕೆಡುವವು ೨
ಹೀಗಾದ ಬಳಿಕ ನಿನ್ನ ಸೇವೆ ಚೆ-
ನ್ನಾಗುವದ ಕಾಣೆ ಮುನ್ನ
ಶ್ರೀ ಗುರುವೆ ತ್ವರೆಯೊಳೆನನ ಮನವ ಪದ
ರಾಗಿಯಾಗಿಸು ರನ್ನ ೩
ಮೂರು ಋಣಬಾಧೆಯನು ಸಹಿಸುವದ-
ಕಾರಿಂದ ಶಕ್ಯವಿನ್ನು
ತೋರು ತ್ವಕ್ಕರುಣವನ್ನು ದಾಸನ್ನ
ದೂರ ಬಿಡಲ್ಯಾತಕಿನ್ನು ೪
ಸಂದಣಿಸಿಕೊಂಡು ಬರುವ ಸರ್ವ ಪ್ರತಿ
ಬಂಧಕಗಳೆಲ್ಲ ತರಿವ
ತಂದೆ ನೀ ನೀಡು ಕರವ ಶಿರದಿ ಭುಜ-
ಗೇಂದ್ರ ಗಿರಿನಾಥ ದೇವ ೫

೨೬೦
ಒಪ್ಪಿಸಿದೆ ಬಹು ಭಾರ ನಮ್ಮಪ್ಪನಿಗೀ ಸಂಸಾರ
ಉಪ್ಪಿನ ಹೇರಂತಿದು ಬಹುಕ್ಷಾರ ಕೈ-
ತಪ್ಪಿದರೆ ಬಾರದು ಸಣ್ಣ ಚೂರಾ ಪ.
ಅಗಳಿನಾಶೆಗೆ ಪೋಗಿ ನಿಗಳ ಕಂಠಗೆ ಸಿಲುಕಿ
ನೆಗೆದು ಬೀಳ್ವ ಮಚ್ಛ್ಯಗಳಂದದಿ ಬಹು
ಹಗರಣಗೊಳ್ಳುತ ಮರುಳಾಗಿಹೆನು ೧
ಬಾಲಬುದ್ಧಿಯೊಳೆರಡು ಶಾಲೆ ಕೊಂಡರೆ ಪರರ
ಮೇಲೊಡ್ಡುತ ಬಹು ಸಾಲಗಾರನೋಲೆ
ಕೋಳುಗೊಂಬನು ಪಂಚಗೋಲ ಸುಖತಿಯಲಿ ೨
ಪುಣ್ಯಕರ್ಮವ ಮಾಡಿ ತನ್ನದೆಂದರೆ ನಿಲದು
ದಾನವರೊಯ್ವರು ಘನಪಾತಕಗಳು
ಬೆನ್ನ ಬಿಡವು ಮಕ್ಷಿಕಾನ್ನದಂತಿಹವು ೩
ಕರ್ಮಶಾಸ್ತ್ರವ ಗಹನ ಮರ್ಮವ ತಾಳದ ನರನಾ
ನಿರ್ಮಲ ಮಾಡಲು ಚವರ್ಇ ತೊಳಿಯೆ ದು-
ಷ್ಕರ್ಮ ಕಲುಷವನು ನಿರ್ಮೂಲಗೊಳಿಸದೆ ೪
ಹೇಸಿಕೆ ಜೊಲ್ಲಿನ ಮುಸುಡಾ ಹಾಸಿಕೆಯಿಂದೆತ್ತುತಲಿ
ದೂಷಿಸುತನ್ಯರ ಮೀಸೆಯ ತಿರುಹುತ
ಲೇಸಗಾಣದೆ ಬಹು ಮೋಸಗೊಂಡಿಹೆನು ೫
ಹಸ್ತಪಾದಾದಿಗಳ ಮೃತ್ತಿಕೆಯಿಂದಲಿ ತೊಳೆವ
ತತ್ವ ನೋಡಲು ಕಣ್ಣು ಕತ್ತಲೆ ಬರುವುದು
ಕತ್ತೆಗೆ ಷಡ್ರಸವೆತ್ತಲು ದೊರೆಯದು ೬
ಸ್ನಾನದ ರೀತಿಯನಿನ್ನೇನೆಂದು ವರ್ಣಿಪೆನು
ಮಾನವರಿದಿರು ನಿಧಾನದಿ ನಡೆವುದು
ಮಾನಸ ವೈಶಿಕಧಾನಿಯಾಗಿಹುದು ೭
ಮಡಿಯೆಂದು ಕೂತಿರಲು ಮಡದಿ ಹತ್ತಿರ ಬರಲು
ಒಡವೆಯ ನೋಡುತ ಅಡಿಗೆಯ ಪಣ್ಕೆಯ
ನುಡಿಯಲ್ಲದೆ ಜಪಗೊಡವೆಯೇನಿರದು ೮
ಪಾಕ ಪೂರಣವಾಗೆ ಈಗ ಸಾಕೆಂಬೆ ಹರಿಪೂಜೆ
ಶಾಕಾದಿಗಳು ವಿವೇಕವಾಗದಿರೆ
ಭೀಕರಿಸುತ ಅವಿವೇಕನಾಗುವೆನು ೯
ತದನಂತರದಿ ಪರರ ಕದನವನೆಬ್ಬಿಸುತಲಿ
ಒದಗುತ ನಾನಾ ವಿಧದಲಿ ಎನ್ನಯ
ವದನ ತುಂಬುವ ಮಾರ್ಗದಿ ದಿನ ಕಳೆವೆನು ೧೦
ಇಂತು ದಿವಾಯುಷವನ್ನು ಸಂತರಿಸುತ ನಿಶೆಯೊಳ್
ಕಂತು ಕಲಾಪದ ಭ್ರಾಂತಿಗೊಂಡು ಮರ
ದಂತೆ ಬೀಳಲು ನಿಮಿಷಾಂತರ ದೊರೆಯದು ೧೧
ಪಾರಾವಾರದಕಿಂತ ಘೋರವಾಗಿರುವೀ ಸಂ-
ಸಾರದಿ ಸಿಲುಕಿದರ್ಯಾರು ಕಾವರಿಲ್ಲ
ಶ್ರೀರಮಾಪತಿ ಚರಣಾರವಿಂದವೆ ಗತಿ ೧೨
ಈ ವಿಧ ದುಷ್ರ‍ಕತದಿಂದ ಕಾವನು ನೀ
ಗೋವಿಂದ ಪಾವನಾತ್ಮಕ ಶೇಷಾವತಾರ ಗಿರಿ
ಸೇವಿತ ಪದ ಭವ ನಾವ ಮುಕುಂದ ೧೩

೧೨೩
(ಘಟಿಕಾಚಲದ ವಾಯುದೇವರನ್ನು ನೆನೆದು)
ಒಲಿದು ಭಕ್ತನು ಸಲಹುವ ಘಟಿಕಾಚಲನಿವಾಸಿ ಹನುಮಾ
ನಳಿನನಾಭ ನರಸಿಂಹ್ಮನ ಕರುಣಾಬಲದಲಿ
ತ್ರಿಜಗದ್ವಲಯವÀ ನಡಸುವಿ ಪ.
ಎರಡು ಭುಜಗಳನು ಧರಿಸಿ ಪ್ರಪಂಚದೊಳಗಿರುವ ನಿನ್ನ ರೂಪಾ
ಸ್ಮರಿಸುವ ಜನರನು ಪೊರೆವ ದೊರೆಯೆ ಈರೆರಡು ಭುಜದಿ ಭೂಪಾ-
ದರ ಸುದರ್ಶನಾಕ್ಷರ ಸಂಖ್ಯಾಂಗುಲಿ ವರಮಣಿಮಾಲೆಗಳಾ-
ಧರಿಸಿ ಸನ್ಮುಖದೊಳಿರುವ ವಿಚಿತ್ರವನರಿವನಾವನಯ್ಯಾ
ಶರಣು ಜನರನುದ್ಧರಿಸಲಿಂದಿರಾವರನಾಜ್ಞೆಯೊಳೀಪರಿಯ
ತೋರುವೆಯೊ ೧
ಸರಮಣಿ ಹಸ್ತದಿ ಚರಿಸುವದೇನಿದು ಹರಿಯ ಗುಣಗಣಗಳೊ
ಪರಿಪರಿಯಲಿ ನೀ ತರಿದಿಹ ದಿತಿಜರ ಶಿರಗಳ ಸಂಖ್ಯೆಗಳೊ
ಬರುವ ಬ್ರಹ್ಮಪದ ಕುರುವರಿತಾಬ್ಧಗಳಿರವ ಚಿಂತಿಸುವುದೊ
ನರಹರಿ ನಿನ್ನೊಳಗಿರಿಸಿದ ದೊರೆತನ ಚಿರತರ ಕಾರ್ಯಗಳೊ
ಈ ಪರಿವಂದಲ್ಲದೆ ನಿರವಧಿಯನ್ನಪಚರಿಯಗಳಾದರೆ
ಪರಿಹರಿಸದರನು ೨
ಹಿಂದೆ ಅಂಜನಾನಂದನೆನಿಸುತ ಬಂದು ಧಾರುಣಿಯಲಿ
ಇಂದಿರೇಶ ರಾಮನ ಪದಕಂಜದ್ವಂದ್ವ ಸಮಾಶ್ರೈಸಿ
ಇಂದೀವರ ಸಖ ನಂದನನಿಗೆ ನಿಜ ಬಂಧುವಾಗಿ ಸಲಹಿ
ಇಂದಿರಾ ಕೃತಿಗೆ ನಿಜ ರಾಮನ ಮುದ್ರೆಯ ಛಂದದಲಿ ಸಲಿಸಿ
ಮಂದಮತಿಯ ಧಶಕಂಧರನುರವನು ವಂದೆ
ಮುಷ್ಟಿಯಿಂಧೆಂದಿಸಿ ಮೆರೆದನೆ ೩
ಸೋಮಕುಲದಿ ಜನಿಸ್ಯಾಮಹದೈತ್ಯರ ಸ್ತೋಮವ ನೆರೆ ತರಿದು
ಭೂಮಿಜಾಂತಕನನೇಮದಿ ಜಗದೋದ್ದಾಮನ ಸರಿಸಿಗಿದೂ
ಪಾಮರ ಕೀಚಕ ಬಕ ಕಿಮ್ಮೀರರ ನಾಮವಳಿಸಿ ಬಡಿದು
ಭೂಮಿಪ ಕುರುಪನ ಹೋಮಿಸಿ ರಂಗದಿ ಕಾಮಿತಾರ್ಥಪಡದು
ಭೀಮಸೇನ ನಿಸ್ಸೀಮ ಸಕಲಗುಣ
ಧಾಮನಿರ್ಜರೋದ್ಧಾಮ ಸುಮಹಿಮ ೪
ಕಲಿಯೊಳು ಮಿಥ್ಯಾವಾದಿಗಳಿಂದಲಿ ಕಲುಷಿತ ಸಜ್ಜನರ
ಸಲಹುವೆನೆನುತಲಿ ಇಳೆಯೊಳು ವಾಸರ ಒಲುಮೆಯಿಂದಲುದಿಸಿ
ಖಳರ ಕುಶಾಸ್ತ್ರದ ಬಲೆಗಳ ಖಂಡಿಸಿ ನಳಿನಜಾಂಡದೊಳಗೆ
ಜಲಜನಾಭ ವೆಂಕಟಗಿರಿರಾಜನ ನೆಲೆಯ ತೋರಿ ಮೆರದೆ
ಹಲವು ಭವದಿ ಬಹು ಬಳಲುವ ಜನರನು ಸಲಹುತ
ಘಟಿಕಾಚಲದಲಿ ನೆಲಿಸಿದೆ ೫

೪೨೧
ಓಂ ನಮೋ ನಮಃ ಕುಲಸ್ವಾಮಿ ಬಿನ್ನಪ ಲಾಲಿಸು ಪ್ರೇಮಿ
ಮನ್ನಿಸೆಮ್ಮ ಭಕ್ತ ಸುಪ್ರಸನ್ನ ಮೂರುತಿಪ.
ವಹ್ನಿಜಠರಸಂಸ್ಥಿತ ಸ್ವರ್ನದೀಗರ್ಭಸಂಭೃತ
ಪನ್ನಂಗಭೂಷಣನ ವೀರ್ಯೋತ್ಪನ್ನ ಸಂಪನ್ನ೧
ತಾರಕಾದಿದೈತ್ಯಾಂತಕ ವೀರವೈಷ್ಣವರ ತಿಲಕ
ಸೇರಿದವರ ಪೊರೆವ ಕರುಣಾವಾರಿ ರಾಶಿಯೇ೨
ಶಿವಕುಮಾರಾಶ್ರಿತಮಂದಾರ ದಿವಿ ಭುವಿ ವಿಖ್ಯಾತ ಶೂರ
ನವವಿಧ ಹರಿಭಕ್ತಿಯಂ ಬೇಡುವೆನು ನೀಡಯ್ಯಾ೩
ಸ್ಥಾನಿಕಾಖ್ಯವಿಪ್ರರಿಂದ ಅನವರತ ಪೂಜೆಗೊಂಬ
ದೀನಜನವತ್ಸಲ ಭವಾನಿಪುತ್ರನೆ೪
ಭೂವಳಯದಲ್ಲಿ ಮೆರೆವ ಪಾವಂಜಾಖ್ಯ ಪುರನಿವಾಸ
ದೇವಲಕ್ಷ್ಮೀನಾರಾಯಣನ ಸೇವಕೋತ್ತಮ೫

೪೪೦
ಓಡದಿರು ಓಡದಿರು ಖೋಡಿ ಮನವೆ
ಮೂಢತನದಲಿ ಬರುವ ಕೇಡುಗಳನರಿದರಿದುಪ.
ಬೀಸುವದು ಬಿರುಗಾಳಿ ಸೂಸುವದು ಉರಿಮಳೆಯು
ಪೆಸರಿಲ್ಲದೆ ಕತ್ತಲೆಯು ಮುಸುಕುತಿಹುದು
ಈಸು ನೆಲಸಿಹ ಘೋರ ಭೀಷಣಾಟವಿಯೊಳಗೆ
ಬೀಸುವನು ಬೇಡನೊಬ್ಬನು ಬಲೆಯನಿಕದಕೊ೧
ಅತ್ತೆಯೆಂಬುವಳು ನಿನ್ನ ನೆತ್ತಿಯಲಿ ತೈಲವನು
ಒತ್ತಿ ಮೋಹದಿ ವಹಿಸಿಕೊಂಡಿರುವಳು
ಅತ್ತ ಕಡೆ ಬೇಡ ಹಿಂದೊತ್ತಿ ಬರುವರೆ ಬೇಗ
ತುತ್ತಾಗ ಎನುತ ಬಾಯ್ ತೆರೆದಿರುವಳು ೨
ಮುಂಗಡಯೊಳ್ ಸಾಲಾಗಿ ಅಂಗಡಿಗಳಿರುತಿಹವು
ಹಂಗಿಗನು ನೀನಾಗಿ ಬೇಡ ಅವರ
ಸಂಗ ಗೈಯುತ ವ್ಯಾಪಾರಂಗಳನು ಮಾಡಿದರೆ
ಭಂಗಿಯನು ಕೊಟ್ಟು ಬಲು ಭಂಗಪಡಿಸುವರಯ್ಯ ೩
ಖೂಳತನ ಬೇಡ ಬಾ ಮಾಳಿಗೆಗೆ ಹೋಗುವ
ಏಳು ಮೆಟ್ಟಲ ದಾಂಟಿ ಲೋಲತನದಿ
ಅಲದೆಲೆ ಮಂಚದಲಿ ಲೋಲನಾಗಿಹನ ಪದ
ಆಲಿಂಗನದಿ ಬಲು ಕುಶಾಲಿನಲ್ಲಿರು ಕಂಡ್ಯ೪
ಈ ರೀತಿಯಲಿ ನಿನಗೆ ಸಾರಿ ಪೇಳಿದೆ ನೋಡು
ಭೂರಿ ಮಾಯಾಭ್ರಾಂತಿಗೊಳಗಾಗದೆ
ಕಾರಣಿಕ ಲಕ್ಷ್ಮೀನಾರಾಯಣನ ಪಾದ
ವಾರಿಜದಿ ನಲಿದು ಸುಖಿಯಾಗು ನೀ ಮನವೆ೫

೪೮೩
ಪ್ರತಿಪದೆಯ ದಿನ
ರಂಭೆ :ಓಹೊ ಬಲ್ ಬಲ್ ಬಲ್ ಶ್ಯಾಣೆ ಜಾಣೆ ಪ.
ಈ ದಿವಸದಿ ನಿನ್ನೆಯ ದಿನದವನನ್ನು
ಆದರಿಸಲು ಕಾರ್ಯೋದಯವೇನೆ
ಓಹೋ ಬಲ್ ಬಲ್ ಶಾಣೆ ಜಾಣೆ ಅ.ಪ.
ಊರ್ವಶಿ : ಚಿತ್ತಜರೂಪೆ ಸರ್ವೋತ್ತಮ ಭಾಷೆಯ
ನಿತ್ತಿಹ ಕಾರಣದಿ
ಉತ್ತಮ ಶ್ರೀಪಾದ ಎತ್ತಲು ಬೇಕೆಂದು
ಒತ್ತಾಯಗೈದ ಮೋದಿ ೧
ಮತ್ತೊಂದು ಕಾರಣ ಉಂಟು ಶ್ರೀಹರಿಗಿವ
ನಿತ್ಯವಾಹನ ಕಾಣೆಲೆ
ಇತ್ತ ಪಯಣಗೈವೊಡತ್ತಬೇಕಾದರೆ
ಭೃತ್ಯನಿವನು ಹೇ ಬಾಲೆ ೨
ಆದಕಾರಣದಿಂದ ನಾದಿನಿ ಕೇಳೆ ಪ-
ಕ್ಷಾದಿಯೊಳಿವನ ಮ್ಯಾಲೆ
ಪಾದವ ನೀಡಿ ವಯೋದಯದಿಂದ ಶ್ರೀ
ಮಾಧವ ಬರುವ ಕಾಣೆ ೩
ಕೇರಿಕೇರಿಯ ಮನೆಯಾರತಿಗಳನೆಲ್ಲ
ಶ್ರೀರಮಾಧವ ಕೊಳ್ಳುತ
ಭೂರಿ ವಾದ್ಯಗಳ ಮಹಾರವದಿಂದಲಿ
ಸಾರಿ ಬರುವನು ಸುತ್ತ ೪
ಭಾವೆ ನೀ ಕೇಳೆ ನಾನಾ ವಿಧದಿಂದಲಿ
ಸೇವಕರಿಗೆ ದಯದಿ
ಪಾವನಗೈದು ಮಹಾವಿನೋದೇಕಾಂತ
ಸೇವೆಯ ಗೊಂಡ ಕಾಣೆ ೫

೨೭
ಓಹೋ ಸುಮ್ಮನೆ ಮರುಳಾದೆ
ಮಹಿಮೆಯನರಿಯದೆ ಪ.
ದೇವಾಧಿ ದೇವ ಬಂದು ಮನೆಯಲಿಂದು
ಕಾವಲಾಗಿರುವನೆಂದು ತಾ ತಿಳಿದಿರಲಿಂದು
ನಾ ವನಿತೆಯ ಒಡಗೂಡುತ ಪೊರಟರೆ
ಕಾವರಿದಾರೆಂಬುದ ಭ್ರಮೆಗೊಂಡು ೧
ನೀರಿನ ಮೇಲೆ ಧರೆಯ ನಿಲ್ಲಿಸಿದಂಥ
ಈರೇಳು ಲೋಕದ ದೊರೆಯ ವಕ್ಷಸ್ಥಿತ ಸಿರಿಯ
ಸೇರಿದ ದಾಸರಿಗಾರಿಂದಲು ಭಯ
ಬಾರದೆಂಬ ಶ್ರುತಿಸಾರವ ಗ್ರಹಿಸದೆ ೨
ಎಲ್ಲಿ ನೋಡಿದರಲ್ಲಿಪ್ಪ ಶ್ರೀವನಿತೆಯ
ನಲ್ಲ ಭೂಪತಿ ನಮ್ಮಪ್ಪ ನೆನೆದಲ್ಲಿಗೆ ಬಪ್ಪ
ಅಲ್ಲಿ ಇಲ್ಲಿ ಭಯವೆಲ್ಲವು ಬಿಡಿಸಲು
ಬಲ್ಲ ಶೇಷಗಿರಿವಲ್ಲಭನಿರುತಿರೆ ೩

೩೨೬
ಕಂಡಳು ಶ್ರೀ ಹರಿಯ ಶತಮಾ-
ರ್ತಾಂಡ ತೇಜೋನಿಧಿಯ ಪ.
ಪುಂಡರೀಕಾಂಬಕನ ಪೂರ್ಣಾ-
ಖಂಡ ಜಗನ್ಮಯನ ಅ.ಪ.
ಶಂಖಚಕ್ರಾಂಕಿತನ ಧ್ವಜವ-
ಜ್ರಾಂಕುಶಪದಯುಗನ
ಶಂಕರಹಿತಕರನ ಕೌಸ್ತುಭಾ-
ಲಂಕೃತಕಂಧರನ ೧
ಮಕರಕುಂಡಲಧರನ ಸಜ್ಜನ
ನಿಕರೇಷ್ಟಪ್ರದನ
ಪ್ರಕೃತಿನಿಯಾಮಕನ ಸತ್ಯಾ-
ತ್ಮಕ ಪೀತಾಂಬರನ ೨
ಅಕ್ಷಿಗೋಚರನ ಭಕ್ತರ
ಪಕ್ಷದೊಳಿರುತಿಹನ
ಪಕ್ಷೀಂದ್ರವಾಹನನ ಶ್ರೀಹರಿ
ಲಕ್ಷ್ಮೀನಾರಾಯಣನ ೩

ಶ್ರೀಕೃಷ್ಣ
೯೪
ಕಂಡಿರೆ ಅದ್ಭುತ ಕೂಸ ಕಂಡಿರೆ
ಕಂಡಿರೆ ಅದ್ಭುತ ಕೂಸ ನಾಭಿ- ಪ.
ಮಂಡಲದೊಳಗಬ್ಜಕೋಶ ಅಹ ರಿಪು
ಪುಂಡರೀಕ ಚಕ್ರ ಪಾಂಡವ ವನರುಹ
ಚಂಡಗದಾದಂಡ ಮಂಡಿತ ಹಸ್ತನ ಅ.ಪ
ಈರೇಳು ಭುವನದೊಳಿಲ್ಲದಂಥ
ಚಾರು ಶೃಂಗಾರಗಳೆಲ್ಲ
ಸೇರಿ ತೋರಿ ಒಪ್ಪುವ ಸಿರಿನಲ್ಲ ನಿನ
ಗ್ಯಾರು ಸರ್ವೋತ್ತಮರಿಲ್ಲ ಅಹ
ಕ್ರೂರ ಕಂಸಭಯಭೀರುಗಳಾಗಿಹ
ಶೌರಿ ದೇವಕಿಯಯಿದಾರನೆಯ ಮಗುವನು ೧
ಗಂಗೆಯ ಪಡೆದಂಥ ಪಾದ ವೃತ್ತ
ಜಂಘೋರು ಪರಿಗತವಾದ ಜಾನು
ಶೃಂಗದಂತೆ ಪೂರ್ಣಮಾದ ಮಾ
ತಂಗ ಹಸ್ತಸಮನಾದ ಅಹ
ತುಂಗ ಪೀವರೋರು ಸಂಗಿ ಸರ್ವಲೋಕ
ಮಂಗಲದಾಯಿ ಶುಭಾಂಗವಾಸನನ್ನು ೨
ತ್ರಿಭುವನ ಕಮಲಾಧಾರ ನಾಳ
ನೆಗೆದು ಬಂದಿರುವ ಗಂಭೀರ ನಾಭಿ
ಸ್ವಗತ ಭೇದದಿಂದ ದೂರ ನಾನಾ
ಬಗೆಯಾದ ಲೀಲಾವತಾರ ಅಹ
ನಗುವ ರಮೆಯ ಸ್ತನಯುಗ ಮಧ್ಯದೊಳಗಿಟ್ಟ
ಖಗಪತಿವಾಹನ ಮಗುವಾದ ಬಗೆಯನು ೩
ಕಂಬುಸಮಾನ ಸುಗ್ರೀವ ಲಲಿ-
ತಾಂಬುಜಮಾಲೆಯ ಭಾವ ವಿಧಿ-
ಗಿಂಬಾದ ಕೌಸ್ತುಭ ಶೋಭಾ ಕರು
ಣಾಂಬುಧಿ ಭಕ್ತ ಸಂಜೀವಾ ಅಹ
ಬಿಂಬಾಧರ ಕಮಲಾಂಬಕ ಮೃದುನಾಸ
ನಂಬಿದ ಭಕ್ತ ಕುಟುಂಬಿಯಾಗಿರುವವನ ೪
ಮಕರಕುಂಡಲ ಯುಗ್ಮಲೋಲ ದಿವ್ಯ
ಮುಕುರ ವಿಲಾಸಿ ಕಪೋಲ ಭವ
ಚಕಿತರ ಸಲಹುವ ಬಾಲ ಪೂರ್ಣ
ಅಕಳಂಕ ತಾರೇಶ ಲೀಲಾ ದಿವ್ಯ
ಮುಖ ಲಲಾಟ ರತ್ನ ನಿಕಲ ಕಿರೀಟ ಸೇ-
ವಕರ ರಕ್ಷಿಪ ಪೂರ್ಣ ಶಿಖರೀಂದ್ರವಾಸನ೫

೯೦
(ನಾಟಿ ಅಗ್ರಹಾರದ ಶ್ರೀರಾಮ)
ಕಂಡಿರೆ ನಾಟಿ ಕೋದಂಡ ರಾಮನ ಪದ್ಮ-
ಜಾಂಡದಿ ನಾಯಕನಾ
ಕುಂಡಲ ಕಟಕ ಕಿರೀಟಧಾರಿ ಮಾ-
ರ್ತಾಂಡ ಕೋಟಿಪ್ರಭನಾ ಪ.
ಭೂತಳದೊಳಗೆ ವಿಖ್ಯಾತರಾಗಿಹ ರಘು-
ನಾಥ ಒಡೆಯರ ಮೇಲೆ
ಪ್ರೀತಿಯಿಂದಲಿ ಬಂದ ಪವಮಾನವಂದಿತ-
ನೀತನು ನಿಜ ಜನರ
ಬೀತಿಯ ಬಿಡಿಸುವೆನೆಂದು ಬಿಲ್ಲಂಬುಗ-
ಳಾಂತು ಕರಾಬ್ಜದಲಿ
ಪಾತಕಗಳ ಪರಿಹಾರಗೈದರಿಗಳ
ಘಾತಿಸುವನು ಜವದಿ ೧
ಕಡು ಪರಾಕ್ರಮಿ ವಾಯಿನು ಧಿಕ್ಕರಿಸಿ ಕೈ
ಪಿಡಿದಂತೆ ರವಿಜನಸು
ಬಡವರ ಭಕ್ತಿಯ ದೃಢಕೆ ಮೆಚ್ಚುತ ಜಗ-
ದೊಡೆಯನು ಸಂತಸದಿ
ಒಡೆಯ ನೀ ಸಲಹೆಂದು ವಂದಿಸಿ ತುಲಸಿಯ
ನಿಡಲು ಪಾದಾಬ್ಜದಲಿ
ಕೊಡುವನು ಕರುಣ ಕಟಾಕ್ಷದಿ ಪುರುಷಾರ್ಥ
ತಡೆಯದೆ ತವಕದಲಿ ೨
ಎರಡು ಭಾಗದಿ ಭಕ್ತ ಗರುಡ ಮಾರುತಿಯರ-
ನಿರಿಸಿ ಕೊಂಡವನುದಿನದಿ
ನಿರವಧಿ ಸೇವೆಯ ಕೈಕೊಂಡು ಜಾನಕಿ-
ವರನಿಹನೀಪುರದಿ
ಸಿರಿವರ ವೆಂಕಟಗಿರಿ ರಾಜನಿವನೆಂದು
ನೆರೆ ನಂಬಿ ಸೇವಿಪರಾ
ಪರಿಕಿಸಿ ತನ್ನಯ ಚರಣ ಸೇವೆಯನಿತ್ತು
ಪೊರೆವನು ಕರುಣಾಕರ ೩

೪೦೩
(ಕಟೀಲಿನ ದುರ್ಗೆಯನ್ನು ಕುರಿತು)
ಕಟೀಲ್ ದೇವರ್ ಕಟೀಲ್ ದೇವರ್ ಕಟೀಲ್ ದೇವರ್ಯಾರುಪ.
ಸರ್ವಶಿಷ್ಟರಿಷ್ಟಕೊಟ್ಟು ಕಾವ ಬೆಟ್ಟದೊಡೆಯನ ಪಟ್ಟದರಸಿಅ.ಪ.
ಸೃಷ್ಟಿಯೊಳುತ್ರ‍ಕಷ್ಟ ತೇಜಪಟು ಭಕ್ತಜನರ ಮನದ
ಕಷ್ಟವ ಪರಿಹರಿಸಿ ಪೊರೆವ ಕೃಷ್ಣನ ಒಡಹುಟ್ಟಿದವಳು ೧
ದುಷ್ಟ ಕಂಸನ ಶಿರವ ಮೆಟ್ಟಿ ಜಿಗಿದ ವಿವಿಧ ಲೋಕಾ-
ರಿಷ್ಟ ಶಾಂತಿಪ್ರದಳು ಪರಮ ನಿಷ್ಠಳು ಬಲಿಷ್ಠಳಿವಳು೨
ಅಷ್ಟಸಿದ್ಧಿದೇ ಪ್ರಸಿದ್ಧೆ ಜಿಷ್ಣುವಿನುತೆ ಭೂತ ಹೃದಯಾ-
ವಿಷ್ಟೆ ನವನಿಧಿಷ್ಟೆ ಪುಷ್ಟೆ ಶ್ರೇಷ್ಠೆ ಸುಗುಣವರಿಷ್ಠಳಿವಳು೩
ಮುಷ್ಟಿಕಾರಿಯ ಚರಣ ಬಿಟ್ಟವರ ಭವಪಾಶದಿಂ
ಕಟ್ಟುವಳು ಹರಿದಾಸರ್ಗಾದೃಷ್ಟ ಸುಖದ ವೃಷ್ಟಿ ಸುರಿವ೪
ದಿಟ್ಟ ಲಕ್ಷ್ಮೀನಾರಾಯಣನ ಮುಟ್ಟಿ ಭಜಿಸುವವರ ಕರುಣಾ-
ದೃಷ್ಟಿಯಿಂದ ನೋಡಿ ಮನೋಭೀಷ್ಟವೀವ ಹೃಷ್ಟರೂಪೆ೫

೧೨೫
(ನಾವೂರ ಅಗ್ರಹಾರದ ಕಟ್ಟೆ ಮುಖ್ಯಪ್ರಾಣ)
ಕಟ್ಟೆ ಮುಖ್ಯ ಪ್ರಾಣ ಕರವ ಪಿಡಿಯೋ ಜಾಣ
ಘಟ್ಯಾಗಿರಲಿ ಕರುಣಾ
ದುಷ್ಟ ಭಾವನೆಯನ್ನು ದೂರವೋಡಿಸಿ ಮನೋ-
ಭೀಷ್ಟವ ದಯಮಾಡು ದುರಿತಾಬ್ಧಿ ಕಾರಣ ಪ.
ಕೋಳಾಲ ಜನರಮೇಲ್ಕರುಣಾ ಕಟಾಕ್ಷಧಿ
ಕೋಳಾಲ ಕರಯುಗದಿ ಪಿಡಿದು ಬಂದು
ನೀಲ ಮೇಘನ ತೆರದಿ ಶೋಭಿಸುತಾಗ್ರ-
ಮಾಲೆಯ ಶಿಖರದಲಿ ರಾಜಿಸುವ ಕೃಷ್ಣನ
ಲೀಲೆಗಳಿಗನುಕೂಲನಾಗಿ ಸುಲೋಲ ನೇತ್ರಾವತಿ ಸರಿದ್ವರ ಕ-
ಪಿಲದೊಳು ಪುಟ್ಟಾಲಯದೊಳನುಗಾಲ ನಿಂತ ಕೃಪಾಲವಾಲಾ ೧
ಪ್ರಾಚೀನ ಯುಗದಿ ಮಾರೀಚ ವೈರಿಯ ಸೇರಿ
ನೀಚ ರಕ್ಕಸರ ಗೆದ್ದೆ ದ್ವಾಪರದಲ್ಲಿ
ಕೀಚಕ ಕುಲವ ಗೆದ್ದೆ ಕ್ಷಮೆಯೊಳು ತಿದ್ದೆ
ಸೂಚಿಸಿದ ದೇವೋತ್ತಮರ ಬಲು
ಸೂಚನೆಯ ಕೈಗೊಂಡು ಕಲಿಮಲ
ಮೋಚನೆಯಗೊಳಿಸಿಲ್ಲಿ ನಿಂದು ನಿ-
ರೋಚನಾತ್ಮಜ ವರದನೊಲಿಸುವ ೨
ಮಾನಸ ಕಾಯ ವಾಕ್ರ‍ಕತಾನಂತಾ ಪರಧಾಮ-
ನೇನೊಂದನೆಣಿಸದಿರು ಕೃಪಾಪಾತ್ರ
ನಾನೆಂದು ನೆನೆಸುತಿರು ಅಭಿಮಾನ ತೋರು
ದೀನ ಬಂಧು ಜಗದ್ಭರಣ ಲಕ್ಷ್ಮೀನಿವಾಸನ ಪಾದ ಪಂಕಜ
ಮಾನಿ ಕರುಣಿಸಹೀಂದ್ರ ಗಿರಿವರ
ಶ್ರೀನಿವಾಸನ ಮುಖ್ಯಮಂತ್ರಿಯ ೩

ವಿಕಲಿ ಪ್ರವರ್ತನ ಲೋಲಿಕಾಗಮ

ಕಥಾಶ್ರವಣ ಮಾಡದೆ ನರದೇಹವ ವೃಥಾ ಕಳೆವದೆಂದಿಗು ಸಲ್ಲ
ಪೃಥಾಸುತನ ಮಹರಥಾವನು ಸರ್ವಥಾ ಪೊರೆವ ಸಂಶಯವಿಲ್ಲ ಪ.
ವಿಕಲಿ ಪ್ರವರ್ತನ ಲೋಲಿಕಾಗಮ ಕಲಾನುಕೃತ ದುಷ್ಕಾಲದಲಿ
ಬಲಾನುಜನೆ ನೀ ಸಲಹೆನೆ ಬೇಗದಿ
ಒಲಿವನು ನಿರ್ಮಲಗೊಳಿಸುತಲಿ
ಮಲೀಮಸೇಂದ್ರಿಯ ಮಲಾಪನೋದದ
ಸಲೀಲವೆ ಲಘುಕರ್ಮದಲಿ
ಸುನೀಲವಕ್ಷ ಸ್ಥಳಾಂತರ ಶ್ರೀಲಲಾಮನನು ಕೊಂಡಾಡುತಲಿ ೧
ಅಲ್ಪ ಸುಖವ ಸಂಕಲ್ಪಿಸುವರಿಗಹಿತಲ್ಪನೊಲಿಯ ತಾನೆಂದೆಂದು
ನಾಲ್ವರಿ ಫಲಗಳನಿಪ್ಪನೆ ಸಂಸ್ರ‍ಕತಿಯಿಪ್ಪಂದದಿ ದಯದೋರೆಂದು
ಒಪ್ಪಿಸಿ ಮತ್ತವನಿಪ್ಪುದನುಂಡು ನೀರಪ್ಪಣೆಯಲಿ ಸನ್ಮತಗೊಂಡು
ಬಪ್ಪನ ಕಥೆಗಳ ತಪ್ಪದೆ ನಮಿಸಿದರಪ್ಪಳಿಸುವ ದುರಿತದ ಹಿಂಡು ೨
ಸ್ಮರಣೆ ಮಾತ್ರದಿಂದಲವನು ಪಾಪವ ಕರಣವ ಶುದ್ಧೀಕರಿಸುತಲಿ
ಕರುಣಾಮೃತವನು ಕರದು ಸುಕರ್ಮಾಚರಿಸುವ
ಸನ್ಮತಿ ಇರಿಸುವನು
ಪುರು ಪುರುಷಾರ್ಥಕರ ಪದಪದ್ಮವನಿರಿಸಿ ಶಿರದಿ ಸತ್ಕರಿಸುವನು
ಉರಗ ಗಿರೀಂದ್ರನ ಮರೆಯದೆ
ಮನದಲ್ಲಿರಿಸಿದವರನನುಸರಿಸುವನು ೩

೪೮೪
ಬಿದಿಗೆಯ ದಿವಸ
(ಹನುಮಂತನನ್ನು ಕುರಿತು)
ರಂಭೆ : ಕಮಲದಳಾಕ್ಷಿ ಪೇಳೆಲೆ ಈತನ್ಯಾರೆ
ಸಮನಸನಾಗಿ ತೋರುವನಲ್ಲೆ ನೀರೆಪ.
ಧನ್ಯನಾಗಿರುವ ದೊರೆಯ ಧರಿಸುತ್ತ
ಚೆನ್ನಿಗನಾಗಿ ತೋರುವನಲ್ಲೆ ಈತ೧
ಪಟ್ಟೆಕಂಬಿಯ ನಿರುದುಟ್ಟುಕೊಂಡಿರುವ
ಕಟ್ಟಿದುತ್ತರೀಯ ಭೂಷಣದಿಂದ ಮೆರೆವ ೨
ಸೋಮಾರ್ಕಶಿಖಿಯಂತಿರುವುದು ತ್ರಿನಾಮ
ರಾಮಣೀಯಕ ಮನೋಹರ ಪೂರ್ಣಕಾಮ೩
ವೀರವೈಷ್ಣವ ಮುದ್ದು ಮೋಹನಕಾಯ
ಭೂರಿಭೂಷಣಭುಜಬಲ ಹರಿಪ್ರಿಯ೪
ರೂಪ ನೋಡಲು ಕಾಮರೂಪನಂತಿರುವ
ಚಾಪಲ ಪ್ರೌಢ ಚಿದ್ರೂಪನಂತಿರುವ ೫
ಬಾಲವ ನೆಗಹಿ ಕಾಲೂರಿ ಶೋಭಿಸುವ
ನೀಲದುಂಗುರದ ಹಸ್ತವ ನೀಡಿ ಮೆರೆವ ೬
ಗೆಜ್ಜೆ ಕಾಲುಂಗರ ಪದಕ ಕಟ್ಟಾಣಿ
ಸಜ್ಜನನಾಗಿ ತೋರುವನು ನಿಧಾನಿ ೭
ಊರ್ವಶಿ : ತರುಣಿ ಕೇಳೀತನೆ ದೊರೆ ಮುಖ್ಯಪ್ರಾಣ
ವರ ನಿಗಮಾಗಮ ಶಾಸ್ತ್ರಪ್ರವೀಣ ೧
ಮಾಯವಾದಿಗಳ ಮಾರ್ಗವ ಖಂಡಿಸಿದ
ವಾಯುಕುಮಾರ ವಂದಿತ ಜನವರದ
ರಂಭೆ : ದಿಟವಾಯ್ತು ಪೇಳ್ದ ಮಾತಾದರು ಜಾಣೆ
ಚಟುಳ ಹನುಮನ ಉತ್ಕಟರೂಪ ಕಾಣೆ ೧
ವಾಮನನಾದ ಕಾರಣವೇನೆ ಪೇಳೆ
ನಾ ಮನಸೋತೆ ಎಂತುಂಟೊ ಹರಿಲೀಲೆ ೨
ಊರ್ವಶಿ : ನಾಗವೇಣಿ ನೀ ಕೇಳೆ ನಾಗವೈರಿಯೊಳು
ಸಾಗಿತು ಸೇವೆಯೆಂಬುದು ಮನಸಿನೊಳು೧
ವಾದವ ಮಾಡಿ ವಿನೋದದಿ ಹರಿಯ
ಪಾದಸೇವೆಗೆ ಮನನಾದ ಕೇಳಿದೆಯೊ೨
ವೀರ ವೇಷವನಿದ ಕಂಡು ಶ್ರೀಹರಿಯ
ದೂರವಾದನೋ ಎಂದು ಮನದೊಳು ನಿಜವು೩
ತೋರಲು ಬೇಗದಿ ದೊರೆ ಹನುಮಂತ
ಭೂರಿಭೂಷಣ ಸುಂದರ ರೂಪವಾಂತ೪
ಇಂದಿನ ಸೇವೆಯೆನ್ನಿಂದತಿ ದಯದಿ
ಮಂದರಧರಿಸಿಕೊಳ್ವುದು ಎಂದು ಭರದಿ೫
ಒಯ್ಯನೆ ಪೇಳುತ್ತ ವಯ್ಯಾರದಿಂದ
ಕೈಯನು ನೀಡಿ ಸಾನಂದದಿ ಬಂದ೬
ಕಂತುಪಿತನು ಹನುಮಂತ ಮಾನಸಕೆ
ಸಂತಸ ತಾಳಿ ಆನಂತನು ದಿಟಕೆ೭
ಏರುತ ಹನುಮನ ಭೂರಿ ವೈಭವದಿ
ಸ್ವಾರಿಯು ಪೊರಟ ಸಾಕಾರವ ಮುದದಿ೮
ತೋರಿಸಿ ಭಕ್ತರ ಘೋರ ದುರಿತವ
ಸೂರೆಗೊಳ್ಳುವನು ವಿಚಾರಿಸಿ ನಿಜವ೯
ಹದನವಿದೀಗೆಲೆ ಬಿದಿಗೆಯ ದಿನದಿ
ಮದನಜನಕನು ಮೈದೋರುವ ಮುದದಿ೧೦
ಪ್ರತಿದಿನದಂತೆ ಶ್ರೀಪತಿ ದಯದಿಂದ
ಅತಿಶಯ ಮಂಟಪದೊಳು ನಲವಿಂದ೧೧
ಎಂತು ನಾ ವರ್ಣಿಪೆ ಕಂತುಜನಕನ
ಅಂತ್ಯರಹಿತ ಗುಣಾನಂಮಹಿಮನ೧೨
ಏಕಾಂತದಿ ಲೋಕೈಕನಾಯಕನು
ಶ್ರೀಕರವಾಗಿ ನಿಂದನು ನಿತ್ಯಸುಖನು೧೩
* * *
ರಂಭೆ : ಇವನತಿಜಾಣನಮ್ಮಾ ಇವನ್ಯಾರಮ್ಮಾಪ.
ಇವನತಿಜಾಣ ಲಕ್ಷ್ಮೀಧವನಿಗಿಂತಲು ಮುಂದೆ
ತವಕದಿ ಬರುವತ್ತಿತ್ತವರನ್ನು ನೋಡದೆ ೧
ಅಂದಣವೇರಿ ಮತ್ತೊಂದ ತಾ ನೋಡದೆ
ಒಂದೇ ಮನದಿ ಬೇಗ ಮುಂದೆ ಬರುವನಮ್ಮಾ೨
ಬಾಲಬ್ರಹ್ಮಚಾರಿ ಶಿಲೆಯಂತಿರುವನು
ಅಲೋಚಿಸಲಿವ ಮೂಲಪುರುಷನಮ್ಮಾ೩
ಪುಟ್ಟನಾದರು ಜಗಜಟ್ಟಿಯಂತಿರುವನು
ದಿಟ್ಟನಿವನವನ ಮುಟ್ಟಿ ನೋಡಮ್ಮ ೪
ಊರ್ವಶಿ : ನಾರೀ ಇವನೀಗ ಹೊಂತಕಾರಿ ಲೋಕಕ್ಕಾಧಾರಿ ಪ.
ಕೊಬ್ಬಿದ ದೈತ್ಯರಿಗೀತನೆ ಕಾಲ
ಹಬ್ಬುವದಾತ್ಮಕ್ಕೀತನೆ ಮೂಲ
ಉಬ್ಬುವ ಹರಿಯೆಂದರೆ ಮೈಯೆಲ್ಲ
ಒಬ್ಬನಿಗಾದರೂ ಬಗ್ಗುವನಲ್ಲ೧
ಎಲ್ಲಿರುವನು ಹರಿ ಅಲ್ಲಿಹನೀತ
ಬಲ್ಲಿದ ನಾರಾಯಣಗಿವ ದೂತ
ಖುಲ್ಲರ ಮನಕತಿ ಝಲ್ಲೆನುವಾತ
ಸುಲ್ಲಭನೆಯಿವ ಮುಂದಿನ ಧಾತ೨
ಭೇದವಿಲ್ಲೆಂಬುದವರಿಗೆಯಿವ ತುಂಟ
ಮೇದಿನಿ ಬಾಧಕರಿಗೆ ಯಿವ ಕಂಟ
ಆದಿ ಮೂರುತಿ ಕೇಶವನಿಗೆ ಬಂಟ
ಮಾಧವಭಕ್ತರಿಗೀತನೆ ನೆಂಟ ೩
ದುರಿತಾರಣ್ಯದಹನ ನಿರ್ಲೇಪ
ವರ ವೆಂಕಟಪತಿಯಿದಿರೊಳಗಿಪ್ಪ
ಪರಮಾತ್ಮನ ಪರತತ್ತ್ವ ಸ್ವರೂಪ ಮರೆಮಾತೇನಿವ ದೊರೆ ಹನುಮಪ್ಪ೪

೨೧೬
ಕರಿಸು ಬೇಗಿಲ್ಲಿಗೆ ಹರಿಯೆ ನಿನ್ನವರ
ಅರಸಿಕ ದೇಶದಿ ಬಳಲಿಕೊಂಡಿಹನ ಪ.
ಸರ್ವಜ್ಞ ನಿನಗರಿಪುವದೇಸು ವಿವರ
ಸರ್ವ ಪ್ರಕಾರದಿ ಕಾವೆ ನಿನ್ನವರ
ಪೂರ್ವದಂದದಿ ಪರಿಚಾರಕ ಜನರ
ಇರ್ವಲ್ಲಿ ತಂದು ಕೂಡಿಸು ದೇವ ಪ್ರವರ ೧
ವೇಳೆ ವೇಳೆ ನಿನ್ನ ಪೂಜಾದಿಗಳನು
ತಾಳ ಮೃದಂಗಾದಿ ಸನ್ನಹಗಳನು
ಮೇಳೈಸಿ ಕೀರ್ತನೆಗೈವ ದಾಸನನು
ನಾಳೆ ನಾಡದು ಎಂದು ತಾತ್ಸಾರ ಮಾಡದೆ ೨
ಶಕ್ತಿಹೀನ ನಾನೆಂಬುದ ಬಲ್ಲೆ ನೀನು
ಭಕ್ತವತ್ಸಲ ನೀನೆಂದರಿತು ನಂಬಿಹೆನು
ನಿತ್ಯ ಚಿಂತನೆಯನು ತಪ್ಪಿಸು ಸುರಧೇನು
ಶಕ್ತ ವೆಂಕಟರಾಜ ಸಂಶಯವಿನ್ನೇನು ೩

೨೭೫
ಕರುಣ ವಂದಿರೆ ಸಾಕಿನ್ನು ಪ.
ಕರುಣ ವಂದಿರೆ ಸಾಕು ಸಿರಿಯರಸನೆ ನಾನಾ
ಪರಿಯೊಳನ್ಯರ ಬೇಡಿ ತಿರುಗಲಾರೆನು ಕೃಷ್ಣ ಅ.ಪ.
ಪರಮಾಣು ತ್ರುಟಿಲವ ನಿಮಿಷ ಮಾತ್ರ ಯುಗ
ಗುರು ಪ್ರಾಣ ಒಳನಾಡಿ ಮುಹೂರ್ತ ಪ್ರಹರ
ವಾಸರ ಪಕ್ಷ ಸಂಕ್ರಾಂತಿ ಮಾಸ ಋತ್ವಯನ ವ-
ತ್ಸರಯುಗ ಮಾನವೆಂಬ ಉಪಾದಿಗ
ಳಿರಿಸಿ ಭೋಗಗಳನುಂಬ ಮಹಾಕಾಲ
ಧುರವಹ ತಾನೆಯೆಂಬಾ ಧೀರತೆಯಿಂದ
ಲಿರುವಿ ಲೋಕದಲಿ ತುಂಬಾ
ಸರಸಿಜಾಸನ ವಾಯು ವಂದ್ಯ ಪಾದ ಪದ್ಮ ೧
ತೃಣತರು ಕ್ರಿಮಿಪಕ್ಷಿ ಪಶುನರ ದೇವಕ್ಕ
ಳೆಣಿಕಿಯಿಲ್ಲದ ದಿತಿಜಾರಿ ಜೀವರನೆಲ್ಲ
ಕುಣಿಸುವ ಬೊಂಬೆಯಂದದಲಾಡಿಸುತ ಲೇಶ
ದಣಿವಿಲ್ಲದೆ ಭಕ್ತ ಜನರಿಗೆ ಸುಖಸಾರ
ಉಣಿಸಿ ಮದಾಂಧರ ಹಣಿದು ಹಣಿದು ಕುಟ್ಟಿ
ಒಣಗಿಸಿ ಬಿಸುಟು ತಿನ್ನುವತ್ತಿದುವಿ
ಮೇಲಣ ದುರ್ಗಪತಿಗಳನು ಮನ್ನಣೆಯಿಂದ
ತಣಿಸಿ ಕಾಪಾಡುವನು ನೀನಹುದೆಂದು
ಮಣಿದು ಬೇಡುವೆ ನಿನ್ನ ಮುರಹರ ಸಲಹಿನ್ನು ೨
ಮಾಧವ ಮಂಗಲದಾಯಕ ತವ ಪದ್ಮ
ಪಾದ ಸೇವೆಯ ಮಾಡುವಲ್ಲಿಗೆ ಜಾಹ್ನವಿ
ಗೋದಾವರಿ ತುಂಗ ಕಾವೇರಿ ಕಲುಷಾವ
ನೋದದಿ ಕೃಷ್ಣ ಸರಸ್ವತಿ ಗೋಮತಿ
ವೇದವತಿ ಮೊದಲಾದ ನದಿಗಳೆಲ್ಲ
ಸಾದರದಲಿ ಸೇರುತ ಬಂದಿಹರೆಂಬ
ಗಾಧವಚನ ನಂಬುತ ನಿಂದಿಹೆನು ಕ್ಷೀ
ರೋದಧಿ ಗೃಹನಿರತ ಸಾಕಿದೆ ಮುಂದಿ-
ನ್ಹಾದಿ ತೋರಿಸು ಸ್ವರತ
ಶ್ರೀದ ವೆಂಕಟರಾಜ ಸೇವಕನಾನೆಂದು ೩

೩೨೭
ಕರುಣಾಕರ ಪರಮೇಶ್ವರ
ಗುರುತಮ ಕಲ್ಯಾಣಧಾಮ ಪ.
ಸುರುಚಿರ ಪೀತಾಂಬರಧರ
ನರಕೇಸರಿ ಕರಿವರವರದ ನಮೋ ನಮಃ ಅ.ಪ.
ಮಂದರಧರ ಮಧುಸೂದನ
ವೃಂದಾವನಸಂಚರಣ
ಚಂದ್ರಕೋಟಿಸದೃಶಾನನ
ವಂದನೀಯ ನಂದಕುಮಾರವ್ರಜೇಶ್ವರ ೧
ಭುಜಗಶಯನ ಭೂತಭಾವನ
ಭಜಕಜನೋದ್ಧರಣನಿಪುಣ
ಕುಜನಜನಾರಣ್ಯದಹನ
ಪ್ರಜಾನಂದನ ದ್ವಿಜವರ ವಾಹನ ಮೋಹನ ೨
ಮಾತರಿಶ್ವಸಖ ಲೋಕೈಕ
ನಾಥ ಲಕ್ಷ್ಮೀನಾರಾಯಣ
ವೀತಭಯ ವಿಧಾತ ರುಕ್ಮಿಣೀ-
ಪ್ರೀತ ತ್ರಿಗುಣಾತೀತನೆ ಫಲ್ಗುಣಸೂತನೆ ೩

ರುದ್ರದೇವರ ಸ್ತುತಿ
೩೮೨
ಕರುಣಾಕರ ಶಂಕರ ಸ್ವಾಮಿ ಪರಾಕು ಸಜ್ಜನಪ್ರೇಮಿಪ.
ಕರುಣಾಕರ ಕೋಟಿದಿವಾಕರ ಪೂರ್ಣ ಸುಧಾ-
ಕರ ಮಕುಟಲಲಾಮಅ.ಪ.
ಭೋಗೀಂದ್ರ ಫಣಾಮಣಿಮಂಡನ ಸ-
ದ್ಯೋಗೀಂದ್ರ ಮನೋವಿಶ್ರಾಮಿ
ಭಾಗೀರಥಿ ಸುತರಂಗೊತ್ತುಂಗ ಮಹಾ
ಸಾಗರ ತೇ ನೌಮಿ೧
ಕೇವಲ ಪಾಪಿ ಸದಾವ್ರತಹೀನನ
ಕಾವುದು ಗೋಪತಿಗಾಮಿ
ನೀನೊಲಿದರೆ ಮತ್ತಾವುದು ಭಯ ಮಹಾ-
ದೇವ ವಶೀಕೃತಕಾಮಿ೨
ಲಕ್ಷ್ಮೀನಾರಾಯಣದಾಸಾರ್ಯ ಮ-
ಹೋಕ್ಷಧ್ವಜ ಸುರಸುಕ್ಷೇಮಿ
ದಕ್ಷಾಧ್ವರಹರ ವರಪರಮೇಶ ಮು-
ಮುಕ್ಷುಜನಾಂತರ್ಯಾಮಿ೩

೭೧
ಕರುಣಾಮೃತವ ಸಿರದಿ ಸುರಿಯೊ ವರದ ಧನ್ವಂತರಿಯೆ
ಚರಣಯುಗಳ ಕಮಲವನ್ನು ಕರುಣಿಸೆನಗೆ ದೊರೆಯೆ ಪ.
ಶ್ರವಣ ನಯನ ಚಿತ್ತ ಜಿಹ್ವೆಗನುಕೂಲವಾಗಿರುವ ಲೀಲಾ
ಪ್ರವರ ಕಾಂತಿ ಸ್ಮರಣ ನಾಮಗಳನು ಪಾಲಿಸಿ
ಭವಜನೀತ ಭ್ರಮಣ ನಿಲಿಸಿ ಕುವರನಂತೆ ರಕ್ಷಿಸೆನ್ನ
ಕವಿಭಿರೀಡ್ಯ ಕಂಜಜಾತಶಿವರ ಸೌಖ್ಯಗೊಳಿಸದವನೆ ೧
ಕಲಿಕೃತ ಕಲ್ಮಶಗಳಿಂದ ಬಳಲುವಂಥ ಬಾಧೆಯನ್ನು
ನಿಲಿಸಿಕೊಳ್ಳಲು ಅನ್ಯಮಾರ್ಗಂಗಳನು ಕಾಣೆನು
ನಳಿನನಾಭ ನಿನ್ನ ಪಾದಗಳನೆ ನಂಬಿಕೊಂಡಿರುವೆನು
ಬಲಿಯ ಕಾಯ್ವ ಭೂಮಿಜೇಶ ಘಳಿರನೆ ಬಂದೊದಗಿ ಬೇಗ ೨
ವಾಗೀಶ್ವರನ ಕೂಡಿ ನಿಖಿಳ ಭೋಗಗಳನನುಭವಿಸುತ
ಶ್ರೀಗುರು ಮಧ್ವಾಂತರಾತ್ಮ ನಾಗಗಿರಿನಾಥ
ರಾಗ ರೋಗ ದೋಷಗಳನು ನೀಗಿ ನಿನ್ನ ನಂಬಿ ಸ್ತುತಿಪ
ಭಾಗವತರ ಭಕ್ತನೆನಿಪ ಭಾಗ್ಯವಿರಿಸೋ ಭೀಮವರದ ೩

೨೪೪
ಕರುಣಾಸಾಗರ ದೀನೋದ್ಧಾರಣ ಎನ್ನನು ಕಾಯ್ವ
ಪರಿಯ ಚಿಂತಿಸಿ ರಕ್ಷಿಸೊ
ಪರಮ ಪಾವನ ನಾಮಸ್ಮರಣೆಯಲ್ಲದೆ ಕರ್ಮ
ಚರಣರಹಿತ ಪಾಪಕರನಾಬ್ಧಿಪತಿತನ ಪ.
ವರ್ಣಾಶ್ರಮಾಚಾರ ಕರ್ಮಕೃತ್ಯವ ನೀಗಿ
ನಿರ್ಮಲಚಿತ್ತದಿ ನಿನ್ನ ಪೂಜಿಸದೆ
ವರ್ಮವಿಡಿದು ವರ ದ್ರೋಹ ಚಿಂತೆಗಳಿಂದ
ಧರ್ಮಮಾರ್ಗವ ದೂರದಲಿ ತ್ಯಜಿಸಿ
ನಿರ್ಮಲಾಂತ:ಕರಣ ನಿಜಕುಲ
ಧರ್ಮರತ ಸಜ್ಜನರ ದೂಷಿಸಿ
ದುರ್ಮದಾಂಧರ ಸೇರಿ ಕೂಪದ
ಕೂರ್ಮನಂದದಿ ಬರಿದೆ ಗರ್ವಿಪೆ ೧
ನೇತ್ರ ದರ್ಶನಕೆ ಸಂಸ್ಮರಕೆ ಜಿಹ್ವೆಯ
ಗಾತ್ರ ಸೇವೆಗೆ ನೈರ್ಮಲ್ಯಕೆ ಶಿರವ
ಶ್ರೋತ್ರವ ಮಾಹಾತ್ಮ ಶ್ರವಣಕೆ ಪಾದಗಳ
ಕ್ಷೇತ್ರಯಾತ್ರೆಗೆ ಕರಗಳ ಪೂಜಾವಿಧಿಗೆ
ಇತ್ತ ದೊರೆಯನು ಮರೆತು ಇಂದ್ರಿಯ
ವೃತ್ತಿಗಳ ಸ್ವೈರಿಣಿಯ ದರುಶನ
ಭುಕ್ತಿ ಚುಂಬನ ಧ್ಯಾನ ದುಷ್ಟ
ಕಥಾ ಶ್ರವಣಸಲ್ಲಾಪಕಿತ್ತೆನು ೨
ಪತಿತ ಪಾವನ ನೀನು ಪತಿತಾಗ್ರೇಸರ ನಾನು
ಅತಿಶಯಿತನು ನೀನು ಅತಿನೀಚನು ನಾನು
ಗತಿಹೀನ ಜನಕ ಸದ್ಗತಿಯೆಂಬ ಬಿರುದುಳ್ಳ
ಮಿತಚಿತ್ರ ಚರಿತಾತ್ಯದ್ಘುತರೂಪ ಗುಣಪೂರ್ಣ
ಸತತಗತಿ ಪಶುಪತಿ ಸುರೇಶ ಪ್ರ-
ಭೃತಿ ದಿವಿಜಗಣ ಸುತ ಪದಾಂಬುಜ
ಕ್ಷಿತಿಜಲಾಗ್ನಿ ಮರುನ್ನಭೋಹಂ
ಕೃತಿ ಮಹ ಸುಖತತಿನಿಯಮಕ ೩
ಕರಿರಾಜ ಧ್ರುವಾಕ್ರೂರನರ ವಿಭೀಷಣ
ನಾರದರು ಮೊದಲಾಗಿ ನಿನ್ನನುದಿನವು
ಸ್ಮರಿಸಿ ಪೂಜಿಸಿ ಮನವೊಲಿಸಿದವರನ್ನು
ಪರಿಪಾಲಿಸಿದನೆಂಬೊ ಗರುವದಿಂದ
ನಿರುಪಮಾನಂದೈಕ ಸದ್ಗುಣ
ಭರಿತರೆಂಬುದ ಹೆಮ್ಮೆಯಿಂದಲಿ
ಮರೆತರೆನ್ನನು ಪರಮಕರುಣಾ
ಶರಧಿಯೆಂದ್ಹೆಸರಿರುವುದೇತಕೆ ೪
ನಾ ನಿನ್ನ ಮರೆತರು ನೀ ಎನ್ನ ಮರೆದರೆ
ಹಾನಿಯಾಗದೆ ನಿನ್ನ ಭಕ್ತ ವತ್ಸಲಕೆ
ದಾನವಾಂತಕ ಅಕಿಂಚನಾರೆ ಎಂಬ
ಪ್ರಮಾಣ ಉನ್ನತ ವಚನವಾಗದೆ
ಮಾನನಿಧಿ ಪವಮಾನ ತತ್ವಮತ
ಮಾನಿಜನ ಸಂಸ್ತುತ ಪದಾಂಬುಜ
ಶ್ರೀನಿವಾಸ ಕೃಪಾನಿಧೆ ಕಮಲಾ
ನಿಲಯ ವೆಂಕಟನಿಜಾಲಯ ೫
ವೇದವನು ತಂದು ಭೂಧರನ ಬೆನ್ನಲಿ ನೆಗಹಿ
ಈ ಧರೆಯ ಸಲಹೆ ಪ್ರಹ್ಲಾದನನು ಕಾಯ್ದೆ
ಮೇದಿನಿಯನಳೆದಿ ಕಾರ್ತದಶಾಸ್ಯ ಕಂ
ಸಾದಿಗಳ ತರಿದ ಬೌದ್ಧಾದಿ ಕಲ್ಕಿ ಧಾರಣನೆ
ಪತಿತ ಪಾವನನೆಂಬ ಪರಮ ಬಿರುದನು ವಹಿಸಿ
ಜತನ ಮಾಡುವಿ ಭಕ್ತತತಿಗಳನು ಬಿಡದೆ
ಪತಿತ ಶೇಖರನನ್ಯಗತಿಯಾಗಿರುವ ಎನಗೆ
ಗತಿಯ ಪಾಲಿಸು ರಮಾಪತಿಯೆನ್ನುಪೇಕ್ಷಿಸದೆ ೬
ನಾರದಕ್ರೂರ ನರ ಹೈರಣ್ಯಕಾದಿಗಳು
ಸೇರಿ ನಿನ್ನಯ ಪಾದ ನೀರರುಹಗಳನು
ಘೋರತರ ಸಂಸಾರಪಾರವಾರವ ದಾಟಿ
ಧೀರರೆನಿಸಿದರೆಲ್ಲಪಾರಸನ್ಮಹಿಮ
ತರಣಿ ಉದಿಸಿದ ಮೇಲೆ ತಿಮಿರದೊಂದಿರವ್ಯಾಕೆ
ಗರುಡನಿದಿರಲಿ ನಿಲ್ಲೆ ಗರಳ ಭಯವ್ಯಾಕೆ
ಸಿರಿಸಹಿತ ಶೇಷಾದ್ರಿ ವರ ನಿನ್ನಪಾದ ಸಂ-
ದರುಶನವು ದೊರೆತಮ್ಯಾಲರಿಬಾಧೆಯಾಕೆ ಎನಗೆ ೭

೪೪
(ಲಾವಣಿ ಧಾಟಿ)
ಕರುಣಾಳು ಕರುಣಾಳು ನಾನಿನಗೆ ಶರಣ್ಯನಾಗಿರೆ
ದುರಿತದ ಭಯವ್ಯಾಕೆ ಬಲು ಜೋಕೆ ಪ.
ಬಲು ಜೋಕೆಯಿಂದ ನೀ ಸ್ವೀಕರಿಸೆನ್ನ ದ-
ಯಾಕರ ತ್ವರೆಯಿಂದ ಸುರವಂದ್ಯ ೧
ಸುರವಂದ್ಯ ಪಾದ ಮನ್ಮಂದಿರದ ಲಾ-
ನಂದ ಬೀಜಬಿತ್ತು ಫಲವಿತ್ತು ೨
ಫಲವಿತ್ತು ಸಲಹು ಪುರುಷೋತ್ತಮ
ಸುಲಲಿತ ವರ್ತುಳ ಶುಭನಾಭ ಕರಶೋಭ ೩
ಕರಶೋಭ ಚಕ್ರಧರ ವಾರಿತದಾನವ
ವೀರ ವಿದ್ಯಾಧೀರ ಜಲಧಾರಾ ೪
ಜಲಧಾರಾಕರ ನಿಭ ಭೂರಮೇಶ ದು-
ರ್ವಾರ ದುರಿತನಾಶ ಸರ್ಪೇಶ ೫
ಸರ್ಪೇಶ ಗಿರೀಂದ್ರ ಸಮರ್ಪಿತ ವಿಗ್ರಹ
ನಿತ್ಯದಿ ಕಾಪಾಡೊ ದಯಮಾಡು ೬
ದಯಮಾಡು ದುರ್ಮತಿಯ ದೂಡು
ಕಟಾಕ್ಷದಿ ನೋಡುತ ನಲಿದಾಡು ೭

೪೪೧
ಕರುಣಿಸಬಾರದೆ ಕಂಜನಾಭನೆ ಕೈಯ ಮುಗಿವೆನಯ್ಯಾಪ.
ವರ ಫಣಿಗಿರಿ ಸುಸ್ಥಿರಮಂದಿರ ಶ್ರೀ
ಗುರು ಜನಾರ್ದನಾಮರಗಣ ಪಾಲಕಅ.ಪ.
ಅಪರಾಧಗಳಾಲೋಚಿಸುವರೆ ಸರೀ-
ಸೃಪರಾಜನಿಗಳವೆ
ಕೃಪೆಯಿಂದಲಿ ಸಂರಕ್ಷಿಸದಿದ್ದರೀ-
ಯಪಕೀರ್ತಿಯು ಶ್ರೀಹರಿ ನಿನಗಲ್ಲವೆ ೧
ಕನಕ ಪುರಂದರ ಮುಖ್ಯ ದಾಸರಂತೆ
ಗುಣವೆನಗಿನಿತಿಲ್ಲ
ಜನರ ವಿಡಂಬನಕೆ ದಾಸನಾದರೂ
ಘನ ಕೃಪಾರ್ಣವನೆ ಕನಕಾಂಬರಧರ೨
ಲಕ್ಷ ಮಾತ್ಯಾತಕೆ ಲಕ್ಷ್ಮೀನಾರಾಯಣ
ರಕ್ಷಾಮಣಿ ನೀನೆ
ಪಕ್ಷೀಂದ್ರವಾಹನ ಪಾಪವಿಮೋಚನ
ತ್ರ್ಯಕ್ಷಮಿತ್ರನೆನ್ನಕ್ಷಿಗೋಚರನಾಗಿ ೩

೧೭೦
ಕರುಣಿಸು ದೇವ ಶರಣ ಸಂಜೀವ
ಮರೆಯದಿರೆನ್ನನು ಮನೆಯೊಳಗಿರುವ ಪ.
ಎಲ್ಲಿ ವೋದರು ಸಿರಿನಲ್ಲ ನೀ ಬೆಂಬಲ
ವಲ್ಲದೆ ಬೇರೆ ದಾತರಿಲ್ಲವೆಂಬುದು ಸಿದ್ಧ ೧
ಆದರು ಲೌಕಿಕವಾದ ಲಾಭಗಳನ್ನು
ನೀ ದಯಮಾಡುವ ಹಾದಿಯನರಿಯೆನು ವ್ಯರ್ಥಹಂಕೃತಿಯಿಂದ
ಧೂರ್ತನಾದೆನು ಕೃಷ್ಣ ಕರ್ತ ನೀ ಕರುಣದಿ ಕರಸಿಕೊ ಬೇಗ ೨
ಚಂದನ ವಿಗ್ರಹ ಚೆಲುವ ಶೋಭಿತ ಗ್ರಹ
ಹೊಂದದಿರಾಗ್ರಹ ಹರಿಸು ಸರ್ವಾಗ್ರಹ ೩
ನೋಡದೆ ನಿನ್ನನು ನಡುವಿಲಿ ನೆನೆದೆನು
ಬೇಡಿಕೊಂಬೆನು ಶ್ರೀಶ ಮೂಡಲಭೂಧರೇಶ ೪

೫೦
ಕರುಣಿಸು ಬೇಗ ಸಿರಿವರ ಕರುಣಿಸು ಬೇಗ ಪ.
ಲಕ್ಷ್ಮಾಶ್ರಯ ವಕ್ಷಸ್ಥಳ ಪಕ್ಷೇಂದ್ರ ವಿಹಾರಿ
ಅಕ್ಷಾರಿ ಪ್ರಿಯ ಪೂರ್ಣ ಕಟಾಕ್ಷದಿ ನೋಡುತಲಿ ೧
ಕಂಠೇಧೃತ ಕೌಸ್ತುಭ, ವೈಕುಂಠಾಲಯವಾಸಿ
ಶುಂಠಾಶಯ ಧೂವನ ನರ ಕಂಠೀರವ ಕಮಠಾ ೨
ದೂರೀಕೃತ ಘೋರಾಮಯ ಧೀರಾಖಳ ಸಾರಾ
ನಾರಾಯಣ ನರಕಾರ್ಣವ ತಾರಣ ರಘುವೀರ ೩
ಭಕ್ತಾವನಶಕ್ತಾಮೃತ ರಕ್ತಾಧರ ಶ್ರೀದ
ಮುಕ್ತಾಶ್ರಯ ಮುರಹರ ಸಂಸಕ್ತಾಶ್ರಯ ಪಾದ ೪
ವಾಗೀಶ ವೃತಾನುಗ ಸಕಲಾಗಮನುತ ಚರಣ
ಭೋಗೀಶ ಧರಾಲಯ ದಯವಾಗು ಸದಾಶರಣ ೫

೨೫೯
ಕರುಣಿಸೆನ್ನೊಳು ದೀನಬಂಧು ಪ.
ಕರುಣಿಸೆನ್ನೊಳಿರುವ ಸಕಲದುರಿತಜಾತ ರೋಗಗಳನು
ಪರಿಹರಿಸಿ ಪಾದಾರವಿಂದ ಸಿರದೊಳಿರಿಸಿ ಸಲಹು ಬೇಗ ಅ.ಪ.
ಮೂರು ವಿಧದಲಿ ಸುತ್ತಿಕೊಂಡ ಘೋರ ತಾಪದಿ
ಸೂರೆಗೊಳುವ ಗಹನ ಸಂಸಾರ ಕೂಪದಲ್ಲಿ ಬಿದ್ದು
ಚೀರುತಿಹೆನು ಚಿತ್ತದಲ್ಲಿ ತಾರೊ ತರಳಗೊಲಿದ ದೇವ ೧
ಆದಿ ಭೌತಿಕಾದೇಹಜನಿತಾಗಾಧ ಮೋಹ ತಾ
ಬಾಧೆ ಸಹಿಸಲಾರೆ ಮುನಿಸಮಾಧಿಗಮ್ಯ ನಿನ್ನ ಮರವ
ವೇಧೆ ವದಗಿ ಬರುವ ಮೊದಲೆ ಮಾಧವನೆ ಮದೀಯನೆಂದು ೨
ಮಂದನಾದೆನು ಮಮತೆಯಿಂದ ಕುಂದಿಹೋದೆನು
ಮುಂದುಗಾಣವಂದ ಕಾಣದಿಂದು ನಿನ್ನ ಬೇಡಿಕೊಂಬೆ
ಇಂದಿರೇಶ ವೆಂಕಟೇಶ ಎಂದು ನಿನ್ನ ಪದವ ಕಾಂಬೆ ೩

ತಮಿಳು ಭಾಷೆಯಲ್ಲಿರುವ
೫೭
(ಕಾಂಚಿ ವರದರಾಜಸ್ವಾಮಿ)
ಕಾಂಚಿ ವರದರಾಜ ಪರಮ ದಯಾಳೊ
ವಂಚನೆಯಿಲ್ಲದ ಬಿನ್ನಹ ಕೇಳೊ ಪ.
ಐಂದ್ರ ನಕ್ಷತ್ರ ವಾಗೀಂದು ವಾರದಲಿ ದಿ-
ನೇಂದ್ರನುದಯಲಗ್ನ ಸಲುವ ಸಮಯದಿ
ಇಂದ್ರಾದಿ ದಿವಿಜರು ಪೊಗಳಲು ನಭದಿ
ರಾಜೇಂದ್ರ ನೀ ಪೊರಮುಟ್ಟುದನು ಕಂಡೆ ಮುದದಿ ೧
ಭರದಿಂದ ಧ್ವನಿಗೈವ ಭೇರ್ಯಾದಿ ವಾದ್ಯ
ತಿ¾ುವಾಯ್ಮೊ¾õÉÉಯೆಂಬ ದ್ರಾವಿಡ ಪದ್ಯ
ನೆರೆದ ವಿಪ್ರರು ಪೇಳ್ವ ವೇದ ಸಂವೇದ್ಯ
ದೊರೆ ನೀನು ಪೊರಟುದ ಕಂಡೆ ನಿರವದ್ಯ ೨
ಎರಡು ಸಾಲಿನಲಿ ಸಾವಿರ ಸಂಖ್ಯೆ ದೀಪ
ಮೆರೆವ ಭೂಛತ್ರಿ ಪಿಡಿದಿರುವ ಪ್ರತಾಪ
ಗರುಡ ಗಮನನಾಗಿ ಗೋಪುರ ಮಧ್ಯ
ಬರುವ ನಿನ್ನನು ನೋಡಿದರೆ ಮುಕ್ತಿ ಸಿದ್ಧ ೩
ಖಂಡ ಮಂಡಲ ನಾಯಕನ ಭೇಟಿ ದೊರೆಯೆ
ಖಂಡಿತವಾಗೋದು ದಾರಿದ್ರ್ಯ ಮರೆಯೆ
ಅಂಡಜ ವಾಹನ ಅಖಿಳಾಂಡಕೋಟಿ
ಬ್ರಹ್ಮಾಂಡನಾಯಕ ನಿನ್ನ ಕಂಡೆನು ದೊರೆಯೆ ೪
ಶೇಷಗಿರಿಯೊಳಿದ್ದು ಪೋಷಿಪೆ ಜನರ
ದೋಷವಿದೂರ ಕಾಂಚೀಶ ಶ್ರೀವರದ
ಆಶೆ ಪೂರಿಸಿ ಎನ್ನ ಭಾಷೆಯ ಸಲಿಸೊ
ಶ್ರೀಶ ಕೃಪಾರಸ ಸೂಸೆನ್ನ ಶಿರದಿ ೫

೩೮೩
ಕಾಪಾಡಬೇಕು ಮಹಾಲಿಂಗ ಸುರೋತ್ತುಂಗ
ಶ್ರೀಪತಿಚರಣಾರವಿಂದಸದ್ಭಂಗ ಪ.
ತಾಪತ್ರಯಾಗ್ನಿಯೊಳ್ಬೆಂದೆ ಬಲು ನೊಂದೆ
ಆಪತ್ತುಗಳ ಪರಿಹರಿಸೆನ್ನ ತಂದೆ ೧
ಅಜ್ಞಾನವನು ದೂರಮಾಡು ದಯದಿ ನೋಡು
ಸುಜ್ಞಾನ ಹರಿಭಕ್ತಿ ಶ್ರದ್ಧೆಯ ನೀಡು ೨
ಪಾವಂಜೆ ಕ್ಷೇತ್ರಾಭರಣ ದೀನೋದ್ಧರಣ
ದೇವ ಲಕ್ಷ್ಮೀನಾರಾಯಣಪದಶರಣ ೩

೯೬
(ಶೇಣಿ ಗೋಪಾಲಕೃಷ್ಣ)
ಕಾಪಾಡೆನ್ನನು ಕರುಣಾಳು ಶ್ರೀ
ಗೋಪಾಲಕೃಷ್ಣ ನಿನ್ನಡಿಗಳ ಸೇರಿದೆ ಪ.
ಕಾಳಕೂಟಧರ ಕಾಳಿಯ ಸರ್ಪನ
ಧಾಳಿಗೊಂಡಿಹ ಗೋಪಾಲರನ್ನು
ಪಾಲಿಪೆನೆಂದು ಕೃಪಾಲಯ ತಾಂಡವ
ಲೀಲೆಯಿಂದ್ಯಮುನಾಜಲಾಲಯ ಬಿಡಿಸಿದ ೧
ವಿಷವೃಕ್ಷ ದಾವಾಗ್ನಿ ವೃಷಭಕೇಶಿ ಬಕ
ಅಸಮಸಾಹಸಧೇನುಕಾದಿಗಳಾ
ನುಸಿಯಂತೆ ಬಡಿದು ತನ್ನೊಶಗರ ಸಲಹಿದ
ಪಶುಪತಿ ವಂದ್ಯ ನೀ ದೆಸೆಯೆಂದು ನಂಬಿದೆ ೨
ಸರ್ವದೋಷಹರ ಸಕಲಲೋಕ ವಂದ್ಯ
ಗೀರ್ವಾಣಗಣಪೂಜ್ಯ ಪಾದಪದ್ಮ
ನಿರ್ವಹಿಸುತ ನೀನೆ ನಿರುತ ನಾಗರಾಜ
ಪರ್ವತನಾಥ ಸುಪರ್ಣಾಂಗ ಗಮನಾ ೩

೮೫
ಕಾಮಜನಕ ಭೃಗು ರಾಮ ದಯಾಂಬುಧಿ
ಕಾಮಿತ ಫಲದಾಯಿ ಪ.
ಮಂಗಳಾಯನ ಮಾತರಿಶ್ವನುತಾ ದಯವಾಗು ದ್ವಿಯುಗ
ಶೃಂಗ ಹವ್ಯವಹಾಂತರಂಗಗತ ದು:ಕ್ಷತ್ರಹಂತಾ
ತುಂಗ ಪರಶುಧರಾಂಸಬಾಹು ನಿಭಾಂಗ ಶಾರ್ಙಶರಾಸನಾರ್ಜುನ
ಭಂಗ ಬಾಲಾರ್ಕಾಂಗ ದುರಿತ ತರಂಗ ಸಂಗರಮಾಂಗಸಂಗತ ೧
ನೀನೆ ಗ್ರಹಪತಿಯೆಂಬುದನು ತಿಳಿದು ದುರ್ಮೋಹವಳಿದು
ತಾನು ಯನ್ನುವಹಂಕೃತಿಯು ಕಳಿದು ನಿನ್ನಲ್ಲಿ ನಲಿದು
ಮಾನವನು ಮನೆಯಲ್ಲಿ ಮಾಡುವ
ಸ್ನಾನ ಹೋಮ ಸುರಾರ್ಚನಾದಿಗ
ಳೇನು ಮಾಡಿದರೆಲ್ಲ ನಿನ್ನ ಸಮಾನಕರಿಪ ಮಹಾನುಭಾವನೆ ೨
ಒಪ್ಪಿಸಿದೆ ಸರ್ವಸ್ವವನು ನಿನಗೆ ಗತಿ ನೀನೆ ಎನಗೆ
ಕಪ್ಪಕಾಣಿಕೆ ಎಲ್ಲವೂ ನಿನಗೆ ಇದು ಸತ್ಯ ಕೊನೆಗೆ
ಅಪ್ಪಳಿಸು ರಿಪುಪುಂಜವನು ಬರುತಿಪ್ಪದುರಿತವ ಭಂಗಿಸುತ ನ-
ಮ್ಮಪ್ಪ ನೀನಹುದೆಂದು ತೋರು
ಕಂದರ್ಪಭಂಜನ ಸರ್ಪಗಿರಿವರ ೩

೧೩೬
(ಅಮ್ಮೆಂಬಳದ ಕುರ್ನಾಡು ಸೋಮನಾಥ)
ಕಾಮಿತ ಫಲದಾತ ಕಟ್ಟೆಯ ಸ್ವಾಮಿ ಸೋಮನಾಥಾ
ಯೀ ಮಹಿಯೊಳು ನೇತ್ರಾವತಿ ತೀರದಿ ನೇಮದಿ
ಪೂಜೆಯ ನಿರುತದಿ ಕೊಳ್ಳುವ ಪ.
ಅಂಬಿಕೆಯನು ವರಿಸಿ ಗಜಚ
ರ್ಮಾಂಬರವನು ಧರಿಸಿ
ಶಂಬರಾರಿಯನು ಸುಲಭದಿ ಗೆಲಿದಂ-
ಮ್ಮೆಂಬಳಜನರನು ನಂಬಿಸಿ ಸಲಹುವ ೧
ಒಡೆಯನು ನೀನೆಂದೂ ಊರಿನ
ಬಡ ಜನರುಗಳಿಂದೂ
ಕೊಡುವ ಪೂಜೆಯನು ಮಡದಿಸಮೇತೀ-
ಗಿಡದ ಬುಡದಿ ಕೊಂಬುಡುಪತಿಶಿಖರ ೨
ದೋಷಗಳನು ತರಿವಾ ಪನ್ನಗ
ಭೂಷಣನೀ ಬರುವಾ
ತೋಷಪಡುವ ಸಜ್ಜನರಿಗೆ ಶೇಷಗಿ
ರೀಶನು ಸಕಲಭಿಲಾಷೆಯ ಸಲಿಸುವ ೩

೯೧
ಕಾಮಿತಾರ್ಥದಾಯಿ ಸೀತಾರಾಮರಾಜ ರಾಜ
ಸ್ವಾಮಿಯೆನ್ನ ಕಾಯೊ ಖಳನಿರ್ನಾಮ ಭಕ್ತಕಲ್ಪಭೂಜ ಪ.
ಸಾಕೇತಪುರದಿ ವಾಸಪ್ರಾಕೃತ ಲೀಲಾ ವಿಲಾಸ
ಸ್ವೀಕೃತ ರಕ್ಷಾವಿಭೂಷ ಯಾಕೆನ್ನೊಳುಪೇಕ್ಷೆ ಶ್ರೀಶಾ
ಬೀಕೃತಿಗಳ ದೂರೀಕರಿಸುವ ಕರು
ಣಾಕರ ಭಕ್ತ ಪರಾಕ ಪರಾತ್ಪರ ೧
ಪಾತಕಿ ಜನೋದ್ಧಾರೈಕ ಹೇತುವ ತೋರುವೆನೆಂದು
ಸೇತು ನಿರ್ಮಿಸಿದ ರಘುನಾಥ ನೀನೆ ದೀನ ಬಂಧು
ವಾತಜಾತನಿಗೊಲಿದು ಸಂಪ್ರೀತಿಯೊಳಂಬುಜ
ಜಾತನಪದವಿಯನಾತಗೆ ಸಲಿಸಿದ ೨
ಪಾಮರ ಪಾವನದಿವ್ಯ ನಾಮದೇವ ಸಾರ್ವಭೌಮ
ಸೀಮಾಹಿತಸದ್ಗುಣೈಕ ಧಾಮಾ ಸೀತಾಪೂರ್ಣಕಾಮಾ
ತಾಮರಸಾಸನವಂದ್ಯ ಶೇಷಗಿರಿ
ಧಾಮ ದಯಾಂಬುಧಿ ದಶರಥ ರಾಮಾ ೩

೩೯
ಕಾಯೊ ಕರುಣಾಳು ಅಂಬುದಛಾಯ ಬಿನ್ನಹ ಕೇಳು
ತಾಯೊಳು ಶಿಶು ಗುಡಪಾಯಸಗೋಸುಗ ಬಾಯತೋರ್ಪುದು
ನ್ಯಾಯವೇ ಪೇಳು ಪ.
ಭೂತಿದೇವಿಯ ರಮಣಾ ನೃಪ ಸಂಪ್ರೀತಿ ಪೂರ್ತಿ ಕರಣಾ
ಚಾತೂರ್ಯ ಕರಣಾ ದಿವಿಜಾರಾತಿ ಶಿರೋಹರಣಾ
ಮಾತು ಮಾತಿಗೆ ವಿಖ್ಯಾತಿಗೊಳಿಪ ತೆರ
ನೀ ತಿಳಿಯೇಯ ಖಗಕೇತನ ಶುಭದಾ ೧
ಮಧುಮಯ ಮೃದುಭಾಷಾ ಮಧುಹರ
ಮಧುಕರ ಮುಖಭೂಷಾ ಅಧರೀಕೃತ ತೋಷಾ
ದಾನವ ಮದಜಲನಿಧಿಶೋಷಾ ಮಧುರಾ ಪಟ್ಟಣ-
ಕಧಿಪನೆಂದೆಸೆವ ಬುಧರಿಪು ಕಂಸನ ಸದೆದ ಪರೇಶಾ ೨
ಶ್ರೀಪತಿ ಸರ್ವೇಶಾ ದುರಿತಮಹಾಪದ್ಗಣನಾಶಾ
ತಾಪೋನ್ಮಥನೇಶಾ ಪಾಲಿಸು ಭೂಪ ಶೇಷಗಿರೀಶಾ
ನೂಪುರ ಕಿಂಕಿಣಿಕ್ವಣಿತ ಚರಣ ಲ-
ಕ್ಷ್ಮೀ ಪರಿರಂಭಿತ ಪರಮಾನಂದದ ೩

೨೭೧
ಕಾಯೊ ಬಾರೊ ಹರಿಯೆ ಕರುಣಾ ಪಯೋಂಬುಧಿ ಪ.
ಕಾಯೊ ಬಾರೊ ಕರುಣಾಂಬುಧಿ ಕಮಲದ-
ಳಾಯತ ನೇತ್ರ ರಸಾಯನ ಸುರಿವುತ ಅ.ಪ.
ಆದಿ ಭೌತಿಕಾದಿತಾಪ ಮಹಾದವದಲಿ
ಸಿಲುಕಿ ಬಾಧೆಗೊಂಡು ಬಹು
ಬೆದರುವ ದಾಸನ ಕಾದುಗೊಳ್ಳು ಕಂಬ್ವರಿಗದಾಬ್ಜಧರ
ಮಾಧವ ಮಧುಮಥನ ಮನದಿ ವಿನೋದಿಸುವ ಕಥನ ಶ್ರೀ
ಪದಾಬ್ಜಾಮೋದಯುಗ ಸಾಸ್ವಾದನಾತ್ಮಕ ವಿನೋದ ನಲಿವುತ ೧
ಕತ್ತಲೆ ಮುಸುಕಿರುವ ಸಮಯದಿ ಸುತ್ತ ವ್ಯಾಘ್ರವಿರುವ ವನದಲಿ
ಸತ್ವಹೀನವಾದೆತ್ತಿನ ಕೆಡಹುವದುತ್ತಮವೆ ಪುರುಷೋತ್ತಮ ನಿನ್ನಯ
ತತ್ವಮಾರ್ಗ ತಿಳಿಸಿ ತ್ರಿಕರಣವೆತ್ತಿ ಬೋಧೆಗೊಳಿಸಿ
ಅತ್ತಲಿತ್ತ ಸರಿದೋಡದಂತೆ ಸದ್ರ‍ವತ್ತಿಯೊಳಿರಿಸಿ
ಜನೋತ್ತಮನೆನಿಸುತ ೨
ಇಂದಿರೇಶ ನಿನ್ನ ಚರಣವನೆಂದಿಗು ನಂಬಿದನ
ಬಂಧ ಬಿಡಿಸಿ ಕೃಪೆಯಿಂದ ಪೊರೆವನೆಂಬಂದಕಪಾಯವ
ನೆಂದುತಾರದೆ ಹರಿ ಚಂದನಮಯಮೂರ್ತಿ
ಕರುಣಾಸಿಂಧು ನಿನ್ನ ಕೀರ್ತಿ
ಇಂದು ತೋರೊ ಭುಜಗೇಂದ್ರ ಗಿರೀಶ ಮುಕುಂದ
ಮನೋಗತ ಸಂದಣಗೊಳಿಸುತ ೩

೩೪೬
(ಕಾರ್ಕಳದ ವೆಂಕಟೇಶನನ್ನು ನೆನೆದು)
ಶ್ರೀನಿವಾಸ ನಮೋ ನಮೋ ಶ್ರುತಿಗಾನಲೋಲ ಪಾಹಿ ಪ.
ಭಾನುಕೋಟಿ ಸಮಾನ ಭಾಸಿತ ದಾನವ ವಿಪಿನ ನ-
ವೀನದವಾನಲ ದೀನೋದ್ಧಾರ ದಯಾನಿಧೆ ಸುಂದರ ಅ.ಪ.
ಶೇಷಗಿರಿಯಿಂದ ಸುಜನಗಳ ಘೋಷದಿ ನಂಬಿದ
ದಾಸಜನರಭಿಲಾಷೆಯನು ಸಂತೋಷದಿ ಕೊಡಲು-
ಲ್ಲಾಸದಿಂದ ಪರೇಶ ನಾನಾ ವಿಲಾಸದಿ ನೆಲಸುತ
ಕಾಸುವೀಸದ ಭಾಷೆಯನು ದಿಗ್ದೇಶದಿಂದ ಮಹಾಸುಕೀರ್ತಿಯ
ರಾಸಿಗಳಿಸಿ ಜಗದೀಶ ಪರೇಶ ಮ-
ಹೇಶವಿನುತ ನಿರ್ದೋಷ ಜಗನ್ಮಯ ೧
ಉತ್ತಮಾಂಗಸುರತ್ನಖಚಿತಕಿರೀಟದ ನಿಜಪದ-
ಭಕ್ತಜನಮನವೃತ್ತಿ ಒಲಿಸುವ ಕೂಟದ ಕರುಣೋ-
ತ್ಪತ್ತಿ ಸರಸಿಜನೇತ್ರಯುಗ್ಮದ ನೋಟದ ಭೂಷಣ-
ಮೊತ್ತದಿಂದಾದಿತ್ಯಕೋಟಿಯನ್ನೆತ್ತಿಂದತೆಸೆವುತ್ತ ಮಂಗಲ-
ಮೂರ್ತಿಧರಿಸಿ ಜನರರ್ತಿಯ ಸಲಿಸುವ
ಚಿತ್ತಜಜನಕ ಸರ್ವೋತ್ತಮ ನಿರುಪಮ ೨
ಪಂಕಜಾಂಬಕ ಶಂಕರಾಪ್ತ ಶುಭಾಕರ ಶ್ರೀವ-
ತ್ಸಾಂಕ ಮುಕ್ತಾಲಂಕೃತ ಕರುಣಾಕರ ಭಕ್ತಾ-
ತಂಕರಹಿತ ನಿಶ್ಯಂಕ ನಿತ್ಯನಿರಾಕರ ಪ್ರಭು
ವೆಂಕಟೇಶ ನಿರಾಮಯಾಮರಸಂಕುಲಾರ್ಚಿತ ಶಂಖಚಕ್ರಗ-
ದಾಂಕಿತ ದನುಜಭಯಂಕರ ವರ ನಿರ-
ಹಂಕರ ನಿಜದ ನಿಷ್ಕಳಂಕಚರಿತ್ರ ೩
ಮಂದರಾಧರ ಮಾಪತೇ ಮುಖಚಂದಿರ ಮೌನಿ
ವೃಂದವಂದ್ಯ ಸುರೇಂದ್ರಪೂಜ್ಯ ಧುರಂಧರ ಮಹಾ-
ಸಿಂಧುಶಯನ ಮುಕುಂದ ಕಂಬುಕಂಧರ ಶೋಭಿಪ
ಕುಂದರದನ ಕುಚೇಲಪಾಲಾರವಿಂದನಾಭ ಪುರಂದರಾರ್ಚಿತ
ಮಂದಹಾಸ ಮುಚುಕುಂದವರದ ಗೋ-
ವಿಂದ ಸಚ್ಚಿದಾನಂದ ಉಪೇಂದ್ರ ೪
ಮೂರು ಲೋಕೋದ್ಧಾರಿ ಘನಗಂಭೀರನೆ ವೆಂಕಟ
ಧೀರಕಾರ್ಕಳಸಾರನಗರಾಧಿಕಾರನೆ ಭೂಸುರ-
ಭೂರಿವೇದಪುರಾಣಘೋಷಾದಿಹಾರನೆ ಸಂತತ
ಚಾರು ಗೌಡಸಾರಸ್ವತಶೃಂಗಾರಋಗ್ವೇದಾಖ್ಯ ಉತ್ತಮ
ದಾರುಣೀಸುರರಿಂದನವರತ ಮಂಗ-
ಲಾರತಿಗೊಂಬ ಲಕ್ಷ್ಮೀನಾರಾಯಣ ಹರಿ ೫

೪೨೨
ಕಾರ್ತಿಕೇಯ ಮಹಾಸೇನ ನಿಜ
ಭೃತ್ಯರೊಳಾಗು ಪ್ರಸನ್ನಪ.
ಚಿತ್ತಸಾಕ್ಷಿ ಹರಿಭಕ್ತಿಜ್ಞಾನಮ-
ನಿತ್ತು ಕಾಯೊ ಷಡ್ವದನಅ.ಪ.
ತಂದೆ ತಾಯಿ ಕುಲಸ್ವಾಮಿ ಹರಿ-
ಯೆಂದು ಭಜಿಸುವೆನು ಪ್ರೇಮಿ
ಸ್ಕಂದನಾಮಕ ನೀನಂತರ್ಯಾಮಿ
ಸುಂದರ ಮಯೂರಗಾಮಿ ೧
ಪಾರ್ವತಿ ಶಿವಸಂಜಾತ ಪರಿ-
ಪಾಲಿತ ಸುಜನವ್ರಾತ
ಸರ್ವಗೀರ್ವಾಣ ಸೇನಾಧ್ಯಕ್ಷ
ಸರ್ವೋತ್ತಮ ಹರಿಪಕ್ಷ ೨
ತಾರಕದ್ಯೆತ್ಯಸಂಹಾರ ಸುವಿ-
ಚಾರೈಕಪರಾಧಾರ
ಪ್ರಾರಂಭಗೈದ ಕಾರ್ಯ ಸಫಲಿಪುದು
ಭಾರ ನಿನ್ನದು ರಣಧೀರ ೩
ಪಾವಂಜಪುರನಿವಾಸ ನಃ
ಪಾತು ಶಿವಗಣಾಧೀಶ
ದೇವ ಲಕ್ಷ್ಮೀನಾರಾಯಣದಾಸ
ಪಾವನಚರಿತ ವಿಲಾಸ ೪

ಕಾಲಭೈರವ ಸ್ತುತಿ
೩೯೭
ಕಾಲಭೈರವ ಸ್ವಾಮಿಯೆ ಭಕ್ತಜನ-
ರಾಳಿಗೆ ಸುಪ್ರೇಮಿಯೆ ಪ.
ಮೂರ್ಲೋಕದೊಳು ಹರಿಲೀಲೆ ಕೊಂಡಾಡುವ
ಶೀಲರ ಕಾವ ಕೃಪಾಳುವೆ ಜಯ ಜಯ ಅ.ಪ.
ರುದ್ರನಾಮಕ ಹರಿಯ ಪಾದಭಕ್ತಿ-
ಮುದ್ರಾಂಕಿತ ನೀನಯ್ಯ
ಬುದ್ಧಿಜ್ಞಾನ ಸಂಸಿದ್ಧಿಸುತೆಮ್ಮನು
ಉದ್ಧರಿಸುವ ಸುಪ್ರಸಿದ್ಧ ಮಹಿಮ ನಿನ್ನ
ಹೊಂದಿದೆನು ಶಾಂತೀರಮಣನನಿ-
ರುದ್ಧನಂಘ್ರಿಸರೋಜ ಸ್ಮರಣೆ ಸ-
ಮೃದ್ಧಿಯನು ನೀನಿತ್ತು ಒಳಹೊರ-
ಗಿದ್ದು ಕಾಯೊ ಸುಭದ್ರದಾಯಕ ೧
ಕಾಮಕ್ರೋಧ ಮುಂತಾದ ವೈರಿಜನ-
ಸ್ತೋಮದಿಂದ ಬಹಳ ಬಾಧಾ
ಶ್ರೀಮನೋರಮನ ಸುನಾಮಸ್ಮರಣೆಯನ್ನು
ಪ್ರೇಮದಿಂದಿತ್ತು ಸುಕ್ಷೇಮದಿಂ ಪೊರೆಯೆಂದು
ವ್ಯೋಮಕೇಶನೆ ಧೀಮತಾಂವರ
ಸೋಮಧರ ಸುತ್ರಾಮವಂದಿತ
ತಾಮರಸಸಖ ತೇಜ ಸುಜನರ
ಕಾಮಧೇನು ಮನೋಮಯನೆ ಜಯ ೨
ಲಕ್ಷ್ಮೀನಾರಾಯಣನ ದಾಸಾರ್ಯ ಫಾ-
ಲಾಕ್ಷ ಮಹೇಶಾನ
ಸೂಕ್ಷ್ಮಸ್ಥೂಲದೊಳ್ಪರೀಕ್ಷಕನಾಗಿ ವಿ-
ಪಕ್ಷದವರನು ಶಿಕ್ಷಿಸಿ ಶಿಷ್ಟರ
ರಕ್ಷಿಸುವ ಸದಯಾದ್ರ್ರಹೃದಯ ಮು-
ಮುಕ್ಷುಪ್ರಿಯ ಗುರುವರ್ಯ ಲೋಕಾ-
ಧ್ಯಕ್ಷ ದಕ್ಷಮುಖಾಂತರ ಕರು-ಣೇಕ್ಷಣದಲಿ ನಿರೀಕ್ಷಿಸೆಮ್ಮನು೩

೨೦೧
ಕಾವಲಿರು ಕಮಲಾಕ್ಷ ಕರುಣಿ ನಿರಪೇಕ್ಷ
ದೇವ ದೇವಾಧ್ಯಕ್ಷ ದುರಿತಾಳಿಶೀಕ್ಷ ಪ.
ಪಾಂಡುಕುವರರ ಪರಮ ಪ್ರೇಮದಿಂದಲಿ ಕಾಯ್ದೆ
ತೋಂಡಮಾನಗೆ ಚಕ್ರ ಶಂಖಗಳನಿತ್ತೆ
ಪಂಡಿತಾಗ್ರಣಿ ಬಲಿಯ ಬಾಗಿಲೊಳು ಶಾಙ್ರ್ಞಕೋ-
ದಂಡ ಶರಗಳ ಧರಿಸಿಕೊಂಡು ಕಾಪಾಡುವನೆ ೧
ವಿತತರೂಪನೆ ನಿನ್ನೊಳಿಟ್ಟಹೆನು ಭರವಸವ
ಸತತ ನೀ ಸಲಹುವುದು ಸರ್ವಸ್ವವ
ಕ್ಷಿತಿಯನಾಳುವ ಜನರೊಳಂತರಾತ್ಮಕ ನೀನೆ
ಗತಿಯೆಂದು ನಂಬಿದೆನು ಗರುಡಾಂಗಗಮನ ೨
ಕಂಟಕವ ಪರಿಹರಿಸು ಕಂಠೀರವಾಸ್ಯ ವೈ-
ಕುಂಠಗಿರಿಯರಸ ಮೂರೆಂಟು ತತ್ವೇಶ
ಸ್ವಿಂಟನಾಭಿದನ ನಿಷ್ಕಂಟತನವನು ಬಿಡಿಸಿ
ಬಂಟವಾಗಿಹರ ಮೇಲೆ ತಂಟೆ ಬರದಂದದಲಿ ೩

೧೫೦
(ಕಾವೇರಿ ಪ್ರಾರ್ಥನೆ)
ಕಾವೇರಿ ಕಲುಷಹರಿ ಭುವನ ಪಾವನ ನಾರಿ
ಶ್ರೀವರನ ಕೃಪೆ ದೋರಿ ಕಾವುದಕಾಗುವಿ ಸ್ವಾರಿ ಪ.
ತಾಪಗಳೆಲ್ಲವ ತರಿವಾ ಶ್ರೀಪತಿಪಾದಾಶ್ರಯವಾ
ಯೀ ಪರಿಯಿಂದೊದಗಿಸುವ ಲೋಪಾಮುದ್ರೆಯೆನಿಸುವಾ ೧
ಮನಸಿಜನಯ್ಯನ ಕಥೆಯು ಮನೆಯಲಿ ಸಾಂಗದೊಳಿಂದು
ಅನುಕೃತವಾಗುವುದೆಂದು ಕನಸಿಲಿ ತೋರಿದಿ ಬಂದು ೨
ದಕ್ಷಿಣ ಗಂಗೆಯ ನೋಡಿದಾಕ್ಷಣ ಕಷ್ಟವ ದೂಡಿ
ಪಕ್ಷಿವರ ಧ್ವಜಯನ್ನಾಪೇಕ್ಷೆಯ ನೀಡಿದ ಮುನ್ನ ೩
ಕಲಿಮಲಕಾಲನ ಹರಿಯ ಒಲುಮೆಯ ತಾಳಿದ ಪರಿಯ
ತಿಳಿಯದ ಮೋಹದ ಕರಿಯ ಕಳೆವುದು ನೀ ಕರ ಕರಿಯ ೪
ತಪ್ಪುಗಳೆಲ್ಲವ ಕ್ಷಮಿಸಿ ಒಪ್ಪುವುದುತ್ತಮಕರಸಿ
ಸರ್ಪಗಿರೀಂದ್ರನ ಕರುಣಾ ತಪ್ಪು ಮನ್ನಿಸು ಶರಣಾ ೫

ಯತಿ ವರ್ಣನೆ
೪೩೪
ಕಾಶೀಮಠದ ಶ್ರೀ ಭುವನೇಂದ್ರರ ಸ್ತುತಿ
ಕಂಡು ಕೃತಾರ್ಥನಾದೆ ಭುವನೇಂದ್ರರಂಘ್ರಿಯ
ಕಂಡು ಕೃತಾರ್ಥನಾದೆಪ.
ಕಂಡು ಕೃತಾರ್ಥನಾದೆ ಭೂ-
ಮಂಡಲದಿ ಪೆಸರ್ಗೊಂಡು ಮೆರೆದಿಹ
ಪುಂಡರೀಕದಳಾಕ್ಷ ಸತತಾ-
ಖಂಡಸುಖ ಮಾರ್ತಾಂಡತೇಜರಅ.ಪ.
ವಾರಿರುಹಭವಾಂಡದ ಭೂಮಧ್ಯ ವಿ-
ಸ್ತಾರಜಂಬೂದ್ವೀಪದ ನವಖಂಡದೊಳ್
ಸಾರಭರತಖಂಡದ ಹಿಮಗಿರಿಯ ಪಾಶ್ರ್ವದ
ತೋರ್ಪ ವಿಂಧ್ಯಾಚಲದ ಮಧ್ಯ ಭಾ-
ಗೀರಥಿಯ ಪಶ್ಚಿಮ ಭೂಭಾಗದ
ತೀರ ಕಾಶೀಮಠಸಂಸ್ಥಾನ ವಿ-
ಚಾರಶಾಸ್ತ್ರವಿಶಾರದರ ಪದ ೧
ವರ ರಾಜೇಂದ್ರ ಯತೀಂದ್ರರ ಕರಸಂಜಾ-
ತರ ಗುರುಸುರೇಂದ್ರರ ಕರಕಮಲಮಧ್ಯದಿ
ಧರಿಸಿರ್ದ ವಿಭುದೇಂದ್ರರ ಸರೋರುಹ
ಕರಸಂಜಾತ ಮಹಾನುಭಾವರ
ಕರುಣನಿಧಿ ಕಮನೀಯ ಸದ್ಗುಣ
ಭರಿತ ಶ್ರೀಭುವನೇಂದ್ರರಂಘ್ರಿಯ೨
ಸುಂದರಮುಖಶೋಭೆಯ ಪೂರ್ಣಮಿ ಶುಭ
ಚಂದ್ರಸನ್ನಿಭಕಾಂತಿಯ ಶೋಭಿಪ ನವ
ಕುಂದರದನ್ತಪಂಕ್ತಿಯ ತಿಲಕದ ಛಾಯ
ಮಂದಹಾಸಾನಂದ ಪುರಜನ
ವೃಂದಪೂಜಿತಪಾದಪದ್ಮ
ದ್ವಂದ್ವ ಸತತಾನಂದ ಸದ್ಗುಣ
ಇಂದ್ರ ಶ್ರೀಭುವನೇಂದ್ರರಂಘ್ರಿಯ೩
ಶೃಂಗಾರರಸತೇಜರ ಯಮನಿಯಮಾದ್ಯ
ಷ್ಟಾಂಗಯೋಗಸರ್ವಜ್ಞರ ಪಾಪಾತ್ಮರ
ಕಂಗಳಿಗಗೋಚರ ಸತ್ಯಾವತಾರ
ಮಂಗಳಾತ್ಮಕಸಂಗ ಸುಮಮನಸ
ರಂಗ ಸಾಧ್ಯವೇದಾಂಕ ಕರುಣಾ
ಪಾಂಗ ವಿಬುಧೋತ್ತುಂಗ ಅಂಗಜ
ಭಂಗ ಶ್ರೀಯತಿಪುಂಗವರ ಪದ೪
ಎಷ್ಟೆಂದು ನಾ ಪೇಳಲಿ ಸದ್ಗುರುವರ-
ರಿಷ್ಟಕೆ ತೋಷ ತಾಳಲಿ ದಾರಿದ್ರ್ಯದ
ಕಷ್ಟವೆಲ್ಲ ಪರಿಹರಿಸಲಿ ದಯವಿರಲಿ ಎನ್ನಲಿ
ಶ್ರೇಷ್ಠ ಗೌಡಸಾರಸ್ವತ ಸ-
ಮಷ್ಟಿ ಕೊಂಕಣದೇಶವಿಪ್ರ ವಿ-
ಶಿಷ್ಟ ಒಡೆತನ ಪಟ್ಟವಾಳುವ
ಶ್ರೇಷ್ಠಯತಿವರರಂಘ್ರಿಕಮಲವ೫
ಆಶೆಯೊಂದುಂಟೆನಗೆ ಕಾವ್ಯವ ಓದ್ಯ-
ಭ್ಯಾಸಗೈಯುವದು ಮಿಗೆ ಸನ್ನಿಧಾನದಿ
ಪೋಷಿಸಿ ಎನ್ನ ಹೀಗೆ ರಕ್ಷಿಸಲು ಕಡೆಗೆ
ಏಸು ಧನ್ಯನು ನಾನು ಕರುಣಾ
ರಾಶಿ ಸಜ್ಜನಪೋಷಿ ನಿಗಮ ವಿ-
ಲಾಸರಂಘ್ರಿಗೆ ದಾಸದಾಸರ
ದಾಸ ನಾನು ದಯಾಶರಧಿಯರ೬
ಸತತ ಸದ್ಯತಿಧರ್ಮದ ಪರಿಪಾಲಿಸಿ
ಕ್ಷಿತಿಗತಿ ಪ್ರತಿವಾಸವನಂತೆಸೆವುತಾ
ಮಿತ ಭಾಗ್ಯಸಂಪದವ ವಿಖ್ಯಾತವ
ರತಿಪತಿಯ ಪಿತ ಕ್ರುತುಪಾಲಿತ ಸೂ-
ನೃತಭಾಷಿತ ಲಕ್ಷ್ಮೀನಾರಾಯಣ
ಸತತ ವೇದವ್ಯಾಸ ಶ್ರೀರಘು
ಪತೀಚರಣಪೂಜಿತರ ಪದವನು೭

೨೩೫
ಕೃಪೆಯಿರಲಿ ಸ್ವಾಮಿ ಕೃಪೆಯಿರಲಿ
ಅಪರಿಗಣ್ಯ ಸುಗುಣಾಂಬುಧಿ ಹರಿ ನಿನ್ನ ಪ.
ಬೇರಿಗೆ ದಿವ್ಯ ಕಾವೇರಿ ನದಿಯ ಜಲ
ಧಾರೆಯಿರಲು ಕೊಂಬೆಗಳುಬ್ಬಿ
ಸಾರಭರಿತ ಫಲದೋರುವ ತರುವಂತೆ
ಧಾರುಣಿಪರು ಕೈ ಸೇರುವರು ೧
ಶತ್ರುಗಳಂಜಿ ಬಗ್ಗುವರು ಕಾಳ ಕೂಟ
ಪಥ್ಯವಾಗುವುದು ನಿನ್ನಣುಗರಿಗೆ
ನಿತ್ಯ ಮಾಡುವಾ ದುಷ್ರ‍ಕತವೆಲ್ಲವು ಪರ-
ಮೋತ್ತಮ ಧರ್ಮಕರ್ಮಗಳಾಹಲೂ ೨
ಕನಸು ಮನಸಿನಲ್ಲಿ ನೆನೆಸುವ ಕಾರ್ಯಗ-
ಳನುಕೂಲವಾಗುವದನುದಿನವು
ಮನಸಿಜನಯ್ಯ ನೀನನುವಾಗಿರೆ ಸರ್ವ
ಜನರೆಲ್ಲರು ಬಹು ಮನ್ನಿಸುವರು ೩
ಋಗ್ಯಜುಸ್ಸಾಮಾಥರ್ವಣಗಳೆಂಬ ವೇದ ಸ-
ಮಗ್ರ ನೀ ಕರುಣಿಸಿ ಒಲಿದಿರಲು
ಸುಜ್ಞಾನ ಭಕ್ತಿ ವೈರಾಗ್ಯ ಸಹಿತವಾಗಿ
ಭಾಗ್ಯದೇವತೆ ಕೈ ಸೇರುವಳು ೪
ಈ ಕಾರಣದಿಂದನೇಕರ ಬಯಸದೆ
ಶ್ರೀಕರ ನೀ ಕರುಣಿಸಿದರಿಂದು
ಸಾಕೆಂದೊದರುವೆನೇಕಮನದಲಿ ದ-
ಯಾಕರ ವೆಂಕಟರಮಣನಿಂದು ೫

೧೭೯
ಕೃಷ್ಣ ನೀ ಕರುಣದಿ ಥಟ್ಟನೆ ಸಲಹೊ
ದುಷ್ಟಮರ್ದನ ಸಕಲೇಷ್ಟದಾಯಕ ರಾಮ ಪ.
ಹುಟ್ಟಿಸಿದ ದೇವರು ಹುಲ್ಲು ಮೇಯಿಸನೆಂದು
ಶಿಷ್ಟ ನುಡಿವುದ ನಂಬಿಹೆನು
ಮೆಟ್ಟಿ ಬಾಧಿಸುವಂಥ ದಟ್ಟ ದಾರಿದ್ರ್ಯದ
ಕತ್ತಲೆಯನು ನೋಡೆ ಬಟ್ಟೆ ಒಂದನು ಕಾಣೆ ೧
ಊರ ಜನರ ಮುಂದೆ ಸೇರಿದ ಪದವನ್ನು
ದೂರಗೊಳಿಸಿ ಬಹು ಗಾರಾದೆನು
ಮಾರಮಣ ನೀನ್ನುದಾರ ಗುಣವ ನಂಬಿ
ಚೀರುವ ಎನಗೆ ಬೇರಾರು ರಕ್ಷಕರಿನ್ನು ೨
ವಿಶ್ವಕುಟುಂಬಿ ಸರ್ವೇಶ್ವರ ನೀನಿಂದು
ವಿಶ್ವಾಸದಿಂದ ನಾನಿರುವದನು
ವಿಶ್ವ ತೈಜಸ ಪ್ರಾಜ್ಞ ತುರ್ಯರೂಪಗಳಿಂದ
ವಿಶ್ವವ್ಯಾಪಕನಾದ ನಿನಗರುಪುವುದೇನೊ ೩
ಖುಲ್ಲ ಮಾನವರೆಂಬ ಕ್ಷುಲ್ಲ ನುಡಿಗಳಿಂದ
ತಲ್ಲಣಗೊಳಿಸುವುದುಚಿತವೇನೊ
ಮಲ್ಲ ಚಾಣೂರ ಮುಷ್ಟಿಕರನ್ನ ಗೆಲಿÉದರಿ-
ದಲ್ಲಣಯನಗೆ ಬೆಂಬಲನಾಗಿ ಸಲಹಿನ್ನು ೪
ಇಂದ್ರಾದಿ ದಿವಿಜರ ಪದಗಳನವರಿಗೆ
ಪೊಂದಿಸಿ ಪಾಲಿಪ ಕರುಣಿ ನೀನು
ಇಂದಿರೆ ಸಹಿತಾಗಿ ಬಂದೆನ್ನ ಮನಸಿಗಾ
ನಂದ ತೋರಿಸೊ ಭುಜಗೇಂದ್ರಾದಿ ಒಡೆಯ ೫

೧೭೭
ಕೃಷ್ಣ ಪಾಲಿಸು ಪರಮ ಕೃಪಾಲಯ ಪ.
ಪಾಲಿಸು ನಿನ್ನಯ ಬಾಲನು ಬೇಡುವ ಬಯಕೆಯ ಲಕ್ಷ್ಮೀ-
ಲೊಲ ನೀ ಕರದು ತಾರಾಕೆಯ ಅ.ಪ.
ತುರುವು ಮೊಲೆಯನುಂಬ ಕರುವಿನ ಬೆನ್ನನು
ತುರಿಸುತ ತಿರುಗುವ ತೆರದಲಿ ನೀ-
ನಿರುವಿಯೆಂದರಿದೆನು ಮನದಲಿ
ಚರಣ ಪಂಕಜಗಳ ಶರಣ ಹೊಕ್ಕೆನ್ನನು-
ದ್ಧರಿಸು ಶ್ರೀಕಾಂತ ಗುಣದಲಿ ಸ್ವೀ-
ಕರಿಸುತ ನನ್ನ ನಿನ್ನ ಕೆಲದಲ್ಲಿ ೧
ವಾಗೀಶ್ವರ ಖಗರಾಜ ಭೂಧರವರ
ನಾಗಭೂಷಣ ಶಕ್ರ ಪೂಜಿತ ನಿನ್ನಾ-
ವಾಗ ಕಾಂಬೆನು ಗೃಹರಾಜಿತ
ಮೂಗಭಾವದ ತಪ್ಪ ಮನಕೆ ತರುವರೆ ಮ-
ಹಾ ಗಣಪತಿ ಶಬ್ದ ವಾಚ್ಯನೆ ಎನ್ನ
ಬೇಗ ಕರೆಸು ಸರ್ವಾಧ್ಯಕ್ಷನೆ ೨
ಎಲ್ಲವು ನಿನಗೊಪ್ಪಿಸುವೆ ಎಂಬುದ ನೀ
ಬಲ್ಲಿ ಶ್ರೀಭೂರಮೆನಲ್ಲನೆ ಎನ-
ಗಿಲ್ಲ ಭಾರವು ಜಗಮಲ್ಲನೆ
ತಲ್ಲಣ ಬಿಡಿಸಿ ಪಾಲಿಸು ಶಿರದಲಿ ಪದ
ಪಲ್ಲವನನು ವೆಂಕಟೇಶನೆ ಸರಿ-
ಯಲ್ಲ ನಿನಗೆ ಶ್ರೀನಿವಾಸನೆ೩

೧೦೮
ಕೃಷ್ಣಾ ಕರುಣಾಲವಾಲ ಜಿಷ್ಣುಪರಿಪಾಲ
ವಿಷ್ಣು ವಿಶ್ವವ್ಯಾಪಿಸಕಲ ದೃಷ್ಟಾದೀಶ ಕೃಷ್ಣಲೋಲ ಪ.
ವಲವೈರಿಯ ವರದಿ ಕೇಳಿ ಚೆಲುವೆ ಸತ್ಯಭಾಮೆ ಸಹಿತ
ಪೊಳೆವ ಗರುಡ ಸ್ಕಂಧವೇರಿ ಘಳಿರನೆ ಪೋಗಿ
ಜಲಜವ ಹರಿಸೆ ದೈತ್ಯ ಬಲವಕೊಂಡು ಬಂದ ಮುರನ
ಥಳಥಳಿಪ ಚಕ್ರದಿಂದ ತಲೆಯ ಭೂಮಿಗಿಳಿಸಿ ಮೆರೆದ ೧
ಧುರದಿ ಮಂತ್ರಿ ಸುತರ ತರಿದು ಕರಿಯನೇರಿ ಖತಿಯ ತಾಳ್ದ
ನರಕನನ್ನು ನಳಿನಾಂಬಕಿಯ ಕರದಿ ಭಂಗಿಸಿ
ಸರಸಿಜ ಸಂಭವದತ್ತ ವರದಿ ಸಕಲ ಸುರರ ಗೆಲಿದ
ಗರುವನನ್ನು ನಿಲಿಸಿ ಕ್ಷಣದಿ ಶಿರವ ಚಂಡನಾಡಿದವನೆ ೨
ಧಾತ್ರಿದೇವಿ ಬಂದು ನಾನಾ ಸ್ತೋತ್ರ ಗೈಯೈ ಕರುಣದಿಂದ
ಪಾತ್ರಗೊಲಿದು ಸತ್ರಾಜಿತನ ಪುತ್ರಿ ಒಡಗೊಂಡು
ಸುತ್ರಾಮ ಮಂದಿರವನೈದಿ ಚಿತ್ರ ತಾಟಂಕಗಳ ದಿತಿಗೆ
ಪುತ್ರ ತಾನೆಂದಿತ್ತ ಶ್ರೀಕಳತ್ರ ನಿನ್ನ ನಂಬಿರುವೆನು ೩
ಸೌಂದರ್ಯಸಾರೈಕ ನಿಲಯಾ ನಂದಬೋಧಾಧಾರಮೂರ್ತಿ
ಇಂದಿರಾವತಾರೆ ಭಾಮೆ ಎಂದ ನುಡಿ ಕೇಳಿ
ಮಂದಹಾಸದಿಂದ ನಗುತ ಮಂದವಾಯು ಸುಳಿವ ಸುರರ
ನಂದನದೊಳಿಂದುಕಿರಣ ಛಂದದೊಳಾನಂದಗೊಂಡ ೪
ವಾರಿಜಾಕ್ಷಿಯೆಂದ ನುಡಿಗೆ ಧೀರತನವ ತೋರಿ ದೇವ
ಪಾರಿಜಾತ ವೃಕ್ಷವ ಸರ್ಪಾರಿ ಮೇಲಿರಿಸಿ
ಸಾರೆ ಸ್ವರ್ಗನಾಥ ಸ್ವಪರಿವಾರ ಸಹಿತ ತಡಿಯೆ ಗೆದ್ದು
ದ್ವಾರಾವತಿಗೆ ಪೋಗಿ ಮೆರದ ನೀರಜಾಕ್ಷ ವೆಂಕಟೇಶ ೫

೩೨೮
ಕೇಶವ ನಾರಾಯಣ ಮಧುಸೂದನ ವಾಸುದೇವ ಶ್ರೀ ಗೋವಿಂದ
ವಾಸವನುತ ಜಗದೀಶ ಪರೇಶಾಂಬರೀಶ
ವರದ ಶ್ರೀ ಗೋವಿಂದ ೧
ಭೋಗಿಶಯನ ಭವರೋಗವೈದ್ಯ ನಿಗಮಾಗಮ
ಪಾಲಕ ಗೋವಿಂದ
ಸಾಗರಗೃಹ ಶರಣಾಗತವಾಂಛಿತ ಭಾಗವತಪ್ರಿಯ ಗೋವಿಂದ ೨
ಕಾರಣದೈತ್ಯಸಂಹಾರಣ ಮಂದರೋದ್ಧಾರಣ
ಮಾಧವ ಗೋವಿಂದ
ಪ್ರೇರಣ ಕರ್ತುವಿಚಾರಣ ಭಕ್ತೋದ್ಧಾರಣ ಶ್ರೀಹರಿ ಗೋವಿಂದ ೩
ಖಂಡಪರಶು ಸುರತಂಡವಿನುತ
ಭೂಮಂಡಲನಾಯಕ ಗೋವಿಂದ
ಅಂಡಪಿಂಡಾಂಡಖಿಳಾಂಡಕೊಡೆಯ
ಕರದಂಡದಳಾಕ್ಷ ಶ್ರೀ ಗೋವಿಂದ ೪
ತುಂಗವಿಕ್ರಮ ಸಮರಾಂಗಣಜಿತ ನರಸಿಂಗ
ನಮೋ ನಮೋ ಗೋವಿಂದ
ಮಂಗಲ ರಂಗ ವಿಹಂಗತುರಂಗ
ಮತಂಗವರದ ಶ್ರೀ ಗೋವಿಂದ ೫
ಶಕ್ರಾರ್ಚಿತ ವಟುವಾಕೃತಿಧರ ಕರಚಕ್ರಾಂಕಿತ ಹರಿ ಗೋವಿಂದ
ಅಕ್ರೂರವರದ ಅಖಿಳಪ್ರದ ತ್ರಿವಿಕ್ರಮರಾಯ ಶ್ರೀ ಗೋವಿಂದ ೬
ಉಗ್ರಕುಠಾರ ನೃಪಾಗ್ರಣಿವಿಪಿನ
ಶ್ರೀ ಭಾರ್ಗವರಾಮ ಶ್ರೀ ಗೋವಿಂದ
ಅಗ್ರಗಣ್ಯ ಶುಭವಿಗ್ರಹ ನೃಪಕುಲವರ್ಗವಿದಾರಣ ಗೋವಿಂದ ೭
ಸೀತಾಪತೇ ಜಗನ್ನಾಥ ಕೃಪಾಕರ
ನೂತನ ಲೀಲ ಶ್ರೀ ಗೋವಿಂದ
ವಾತಜವರದ ಸಾಕೇತಾಧಿಕ ನಿರ್ಭೀತ ಶ್ರೀ ರಾಮ ಗೋವಿಂದ ೮
ನೀಲನಿಭಾಂಗ ವಿಶಾಲನಯನ
ಕರುಣಾಲಯದೇವ ಶ್ರೀ ಗೋವಿಂದ
ಬಾಲಲೀಲ ಗೋಪಾಲ ಸುಶೀಲ
ಕುಚೇಲವರದ ಶ್ರೀ ಗೋವಿಂದ ೯
ಅದ್ವಯ ಸುಖಪದ ಸಿದ್ಧನಿರಾಮಯ
ಬುದ್ಧಾಕೃತಿಧರ ಗೋವಿಂದ
ಶುದ್ಧಾತ್ಮಕ ಭವವೈದ್ಯ ವಿಬುಧಾರಾದ್ಯಚರಣ ಶ್ರೀ ಗೋವಿಂದ ೧೦
ವಾಜಿಯನೇರ್ದ ಕೃಪಾಜಲನಿಧಿ
ಸುರರಾಜಾಧಿರಾಜ ಶ್ರೀ ಗೋವಿಂದ
ಮೂಜಗಪತಿ ಕುಜನ ಜನಹರ ವಿಭ್ರಾಜಿತ
ಪ್ರೌಢ ಶ್ರೀ ಗೋವಿಂದ ೧೧
ಕಪ್ಪಕಾಣಿಕೆ ತನಗೊಪ್ಪಿಸಿಕೊಂಬ
ಶ್ರೀ ಕಪ್ಪುಗೊರಳಪ್ರಿಯ ಗೋವಿಂದ
ಸರ್ಪಾಚಲದಿಂದೊಪ್ಪಿಲ್ಲಿಯೆ ನೆಲಸಿಪ್ಪ ತಿಮ್ಮಪ್ಪ ಶ್ರೀ ಗೋವಿಂದ ೧೨
ತಾನೆ ಭಕ್ತರ ಸನ್ಮಾನದಿ ಸಲಹಲು ತಾನೆತಂದ ಶ್ರೀ ಗೋವಿಂದ
ಮಾನಿತ ಕಾರ್ಕಳ ಶ್ರೀನಿವಾಸ
ಲಕ್ಷ್ಮೀನಾರಾಯಣ ಹರಿ ಗೋವಿಂದ ೧೩

೩೫೧
(ಕೇಶವಾಯ ನಮಃ ದಿಂದ ಆರಂಭವಾಗುವ ಆಚಮನ ಸ್ತುತಿ)
ಶ್ರೀನಿವಾಸಾಯ ನಮೋ ಪ.
ಶ್ರೀನಿವಾಸಾಯ ಶತಭಾನುಪ್ರಕಾಶಾಯ
ಶ್ರೀನಿವಾಸಾಯ ನಿಜ ಭಕ್ತಜನಪೋಷಾಯ
ಶ್ರೀನಿವಾಸಾಯ ಪರಮಾನಂದಘೋಷಾಯ ಅ.ಪ.
ದೋಷಗಂಧವಿದೂರ ಕೇಶಿಮುಖದಾನವ ವಿ-
ನಾಶವಿಧಿಭವಸುಖನಿವಾಸ ವಾಸುಕಿಶಯನ
ವಾಸವಾದ್ಯಮರಗಣಪೋಷ ಪಾವನವೇಷ ಶ್ರೀಶ ನಿರ್ಗತವಿಶೇಷ
ದಾಸಜನಹೃದಯಾಬ್ಧಿಭೇಶ ಕೌಸ್ತುಭಮಣಿವಿ-
ಭೂಷ ಭೂತಾತ್ಮ ಭವಪಾಶಹರ ಪರತರ ದ-
ಯಾ ಸಮುದ್ರ ವಿನಿದ್ರ ಭೂಶಯನ ಭೂರಿಪ್ರದ
ಕೇಶವಾಯ ನಮೋನಮಃ ೧
ಕ್ಷೀರಸಾಗರವಾಸ ಶ್ರೀರಮಾಪ್ರಾಣೇಶ
ಸಾರಭೋಕ್ರ‍ತಸ್ವತಂತ್ರ ಚಾರುಷಡ್ಗುಣಭರಿತ
ನಾರದಾದಿಮುನೀಂದ್ರವಾರ ಸನ್ನುತ ಪಾದನೀರರುಹದ್ವಂದ್ವನೆ
ವಾರಿಜಾಸನಮುಖ್ಯ ಸುರರು ತಿಳಿಯರು ನಿನ್ನ
ಭೂರಿಮಹಿಮೆಗಳ ಸಾಕಾರವನು ಬಣ್ಣಿಸುವ
ಧೀರನಾವನು ಮಹಾ ವೀರ ವಿಶ್ವಾಧಾರ
ನಾರಾಯಣಾಯ ನಮೋ ೨
ವೇದವೇದ್ಯನೆ ದುರಿತಶೋಧನೆ ದೈತ್ಯಗಣ-
ಛೇದಕನೆ ಸುರಸುಪ್ರಸಾದಕನೆ ಭಕ್ತಜನ-
ಮೋದದಾಯಕ ಸ್ವಗತ ಭೇದವರ್ಜಿತ
ಸಮಾನಾಧಿಕ್ಯರಹಿತ ಸತತ
ಆದಿತ್ಯ ಶತಕೋಟಿತೇಜೋವಿರಾಜ ಮಹ-
ದಾದಿಕಾರಣ ಮಧುವಿರೋಧಿ ಮಂಗಲಸುಖಾಂ-
ಬೋಧಿ ಪದ್ಮಾಲಯವಿನೋದಿ ರಾಧಾರಮಣ
ಮಾಧವಾಯ ನಮೋನಮಃ ೩
ಇಂದಿರಾಹೃದಯಾಬ್ಧಿ ಚಂದ್ರ ಚಾರ್ವಂಗ ಮುಚು-
ಕುಂದಾಪ್ತ ಸರ್ವಶ್ರುತಿವೃಂದಪ್ರತಿಪಾದ್ಯ ಸಾ-
ನಂದ ಭರಿತ ಕಾಳಿಂದೀರಮಣ ರಾಮಚಂದ್ರ ಸನ್ನುತ ಮಹೇಂದ್ರ
ವಂದಾರುಜನತ್ರಿದಶಮಂದಾರ ಕೋಮಲಿತ
ವೃಂದಾವನವಿಹಾರ ಕಂದರ್ಪಜನಕ ಬಾ-
ಳೇಂದುಶೇಖರಸಖ ಸನಂದನಾರ್ಚಿತ ಶ್ರೀಗೋವಿಂದಾಯ
ತುಭ್ಯಂ ನಮಃ ೪
ಜಿಷ್ಣುರಥಸಾರಥಿ ತ್ರಿವಿಷ್ಟಪಸಭಾಧ್ಯಕ್ಷ
ಮುಷ್ಟಿಕಾಸುರವೈರಿ ಮುನಿಜನಮನೋಹಾರಿ
ಮುಟ್ಟಿ ಭಜಿಪರ ಮನೋಭೀಷ್ಟವ ಸಲ್ಲಿಸುವ ಶ್ರೇಷ್ಠ ಪೂರ್ಣಬ್ರಹ್ಮನೇ
ಭ್ರಷ್ಟಸಂಸಾರದೊಳು ನಷ್ಟ ಬುದ್ಧಿಗಳಿಂಗೆ
ತುಷ್ಟಿಯನು ನೀನಿತ್ತು ಸಲಹೊ ಸಾಮಜವರದ
ಬೆಟ್ಟದೊಡೆಯನೆ ಕೃಪಾದೃಷ್ಟಿಯಿಂದಲಿ ನೋಡು ವಿಷ್ಣವೇ
ತುಭ್ಯಂ ನಮೋ ೫
ವಿಧಿಭವಾದಿ ಸಮಸ್ತ ತ್ರಿದಶಜನಸುಖದಾತ
ಬುಧಜನಪ್ರಿಯ ಭೂತಭಾವನ ಜಗನ್ನಾಥ
ಪದುಮಾಕ್ಷ ಪಾಂಡವಪ್ರತಿಷ್ಠಾಪನಾಚಾರ್ಯ
ಮದನಕೋಟಿಸ್ವರೂಪ
ವಿದುರನಾಲಯದಲ್ಲಿ ಪಾಲುಂಡ ಬ್ರಹ್ಮಾಂಡ-
ಕಧಿಪತಿ ಕಲಿಮಲನಾಶ ಕವಿಜನಮನೋಲ್ಲಾಸ
ವಿಧುಮಂಡಲಸ್ಥ ಸದ್‍ಹೃದಯಪಂಕಜವಾಸ
ಮಧುಸೂದನಾಯ ನಮೋ ೬
ಅಕ್ರೂರವರದ ಸದತಿಕ್ರಮರ ಗೆಲಿದ ಹಯ-
ವಕ್ತ್ರ ವೈಕುಂಠಾಖ್ಯ ಪುರವಾಸ ಜಗದೀಶ
ಶುಕ್ರ ಶಿಷ್ಯರನೆಲ್ಲ ಪರಿಹರಿಸಿ ಪಾಲಿಸಿದೆ ಶಕ್ರಾದಿಸುರಗಣವನು
ಚಕ್ರ ಶಂಖ ಗದಾಬ್ಜಧರ ಚತುರ್ಭುಜ ದೇವ-
ಚಕ್ರವರ್ತಿಯನಂತಕೀರ್ತಿ ಪಾವನಮೂರ್ತಿ
ನಕ್ರಮದಹರನಾದ ಬ್ರಹ್ಮ ಗಂಗಾಪಿತ
ತ್ರಿವಿಕ್ರಮಾಯ ನಮೋನಮಃ ೭
ರಾಮಣೀಯಕ ವಪು ನಿರಾಮಯ ನಿರಾಶ್ರಯ ಸು-
ದಾಮಸಖ ಪರಿಪೂರ್ಣಕಾಮ ಕೈರವದಳ-
ಶ್ಯಾಮ ಕಲ್ಯಾಣ ನಿಸ್ಸೀಮ ಮಹಿಮನೆ
ಸುಜನಸ್ತೋಮಸುರಕಾಮಧೇನು
ಗೋಮಿನೀಪತಿ ಗೋಗಣಾನ್ವಿತನೆ ಗೋಪೀಲ-
ಲಾಮ ಗೋವರ್ಧನೋದ್ಧಾರ ಗೋವಿದಾಂಪತಿ ವಿ-
ರಾಮ ವಿಷ್ವಕ್ಸೇನ ವಿಶ್ವತೈಜಸ
ಪ್ರಾಜ್ಞ ವಾಮನಾಯ ನಮೋನಮಃ ೮
ಆದಿಮಧ್ಯಾಂತವಿರಹಿತ ನಿಖಿಲಸಾರ್ಚಿತ ವಿ-
ರಾಧಭಂಜನ ಭವಾಂಬೋಧಿಕುಂಭಜ ಭಜಕ-
ರಾದವರನುದ್ಧರಿಪ ಬೋಧರೂಪನೆ
ಚತುಷ್ಟಾದ ಪಾವನಚರಿತನೆ
ಗಾಧಿಜಾಧ್ವರಪಾಲ ಗರುಡಧ್ವಜ ದಯಾಳು
ನಾದಬಿಂದು ಕಲಾತೀತ ರುಕ್ಮಿಣಿನಾಥ
ಬಾದರಾಯಣನೆ ನಿರುಪಾಧಿ ಮಾಯಾತೀತ
ಶ್ರೀಧರಾಯ ನಮೋನಮಃ ೯
ಪಾಶಧರನುತ ವೆಂಕಟೇಶ ಸರ್ವೇಂದ್ರಿಯಪ್ರ-
ಕಾಶ ಪಾಲಿತನಿಖಿಳಭೂಸುರವ್ರಜ ಮಂದ-
ಹಾಸಮುಖ ನವಕುಂದಭಾಸರದನವಿರಾಜ
ದೂಷಣಾದ್ಯ ಸುರಹರನೆ
ಈಶಪತಿಸೇವ್ಯಾಂಬರೀಶನೃಪವರದ ಪರ-
ಮೇಶ ಕೋವಳಪೀತವಾಸ ಕರ್ದಮಶುಕಪ-
ರಾಶರಾದ್ಯಮಿತಯೋಗೀಶರಕ್ಷಕ
ಹೃಷೀಕೇಶಾಯ ತುಭ್ಯಂ ನಮೋ ೧೦
ಶುದ್ಧ ತ್ರಿಗುಣಾತೀತ ತ್ರಿವ್ರತ ತ್ರಿಜಗತ್ಪಾಲ
ಪ್ರದ್ಯುಮ್ನ ಪ್ರಥಮಾಂಗದೊಡೆಯ ಪರಮಾತ್ಮ ಸುರ-
ಸಿದ್ಧ ಪೂಜ್ಯ ಪುಂಡರೀಕದಳಾಕ್ಷ ಬುದ್ಧ ಬುಧಜನಸುಲಭ
ಮಧ್ವವಲ್ಲಭ ಮಂತ್ರಮೂರ್ತಿ ಕ್ಷೀರಾಬ್ಧಿ ಶ್ವೇ
ತದ್ವೀಪವೈಕುಂಠಮಂದಿರತ್ರಯ ಸಾಧು-
ಹೃದ್ಯ ಭಕ್ತದ್ವೇಷಭಿದ್ಯ ನಿತ್ಯಾತ್ಮ ಶ್ರೀಪದ್ಮನಾಭಾಯ ನಮಃ೧೧
ಸಾಮಗಾನವಿನೋದ ಸಾಧುಜನಸುಖಬೋಧ
ಕಾಮಿತಾರ್ಥಪ್ರದಾತ ಕಪಿಲಋಷಿ ಪ್ರಖ್ಯಾತ
ವ್ಯೋಮಯಾನವರೂಥ ಓಂಕಾರಭರಿತ ರಘುರಾಮ
ಸಮರಂಗ ಭೀಮ
ನಾಮಧಾರಕರ ಪರಿಣಾಮರೂಪಕ ಸುಜನ-
ಕ್ಷೇಮಪ್ರಾಪಕ ನೀಲಜೀಮೂತನಿಭವರ್ಣ
ಭೌಮಪುರುಷೋತ್ತಮ ನಿಯಾಮಕನೆ ರಕ್ಷಿಸೈ
ದಾಮೋದರಾಯ ನಮೋ ೧೨
ಶಂಕರಾಂತರ್ಯಾಮಿ ಶಾಙ್ರ್ಗಪಾಣಿ ಶರಣ್ಯ
ವೆಂಕಟಾಚಲಸದಾಲಂಕಾರ ಶೇಷಪರಿ-
ಯಂಕ ಪ್ರವಿತತನಿಷ್ಕಳಂಕಚಾರಿತ್ರ ಸುಸಂಕುಲಾರ್ಚಿತ ಪದಯುಗ
ಲಂಕಾಧಿಪತ್ಯವ ವಿಭೀಷಣನಿಗೊಲಿದಿತ್ತ
ಓಂಕಾರನಿಧನ ಸಾಮಕಭಕ್ತರಾನೇಕ
ಸಂಕಟವ ಪರಿಹರಿಪ ಸತ್ಯ ಸಂಕಲ್ಪ ಶ್ರೀಸಂಕರ್ಷಣಾಯ ನಮೋ ೧೩
ಈ ಸಮಸ್ತ ಜಗತ್ತು ನಿನ್ನುದರದೊಳಗಿಹುದು
ಈ ಸಕಲಜೀವರೊಳಗಿಹ ನಿತ್ಯನಿರ್ಮುಖ್ಯ
ಸೂಸಿಬಹ ಸಂಸಾರಸಾಗರದಿ ಮುಳುಗಿದೆನು
ನೀ ಸಲಹೊ ದೇವದೇವ
ಭೂ ಸಲಿಲ ಪಾವಕಾಕಾಶಾದಿ ಭೂತಾಧಿ-
ವಾಸ ರಾಕ್ಷಸವನಹುತಾಶ ನಾನಾ ರೂಪ-
ವೇಷಧಾರಕ ನರಾವೇಶ ಪಾಲಿಸು ಎನ್ನ
ವಾಸುದೇವಾಯ ನಮೋ ೧೪
ಅದ್ವಿತೀಯನೆಯಮಿತವಿಕ್ರಮನೆ ಗುಣಕಾಲ
ವಿದ್ಯಾಪ್ರವರ್ತಕನೆ ವಿಶ್ವಾದಿ ಸಾಹಸ್ರ
ಸಿದ್ಧನಾಮ ನರನಾರಾಯಣಪರಾಯಣನೆ ಬುದ್ಧಿಪ್ರೇರಕಪ್ರೇರ್ಯನ
ರುದ್ರರೂಪಪ್ರತಾಪ ಋಗ್ಯಜುಸ್ಸಾಮಶ್ರುತಿ-
ವೇದ್ಯ ಬ್ರಹ್ಮಾಂಡಕೋಟಿಗಳ ಸಲೆ-
ಬದ್ಧ ಕಮನೀಯ ರೂಪ ಸುತಪದುರಾಪ
ಪ್ರದ್ಯುಮ್ನಾಯ ತುಭ್ಯಂ ನಮಃ ೧೫
ಉದ್ಧವಾದಿ ಸಮಸ್ತ ಭಾಗವತಜನಕಮಲ-
ಮಧ್ಯಚರರಾಜಹಂಸಾಯ ಮಾನಸದ
ಶ್ರದ್ಧೆಯಂ ಕೊಟ್ಟು ರಕ್ಷಿಸು ಧೊರೆಯೆ
ಶ್ರೀಹರಿಯೆ ವೈದ್ಯನಾಥವಿಧಾತನೆ
ಬದ್ಧನಾದೆನು ಕರ್ಮಪಾಶದಿಂದ ದೊರೆ ಸಿಕ್ಕಿ-
ಬಿದ್ದೆ ಕೈಪಿಡಿದೆಬ್ಬಿಸೆನ್ನನೆಲೆದೇವ ಮರೆ
ಹೊದ್ದಿದೆನು ಮೈದೋರು ಚಿನುಮಯಾತ್ಮಕನೆ
ಅನಿರುದ್ಧಾಯ ತುಭ್ಯಂ ನಮಃ ೧೬
ಕ್ಷರ ಪುರುಷರೆಲ್ಲ ಬ್ರಹ್ಮಾದಿ ಜೀವರು ರಮಾ
ಕ್ಷರಪುರುಷಳೆನಿಸುವಳು ನೀನೆ ಉತ್ತಮ ಪರುಷ
ಪರತರಾವ್ಯಯಲೋಕಭರಿತ
ಮಂಗಲರಿತ ಗುರುತಮ ಗುಣಧ್ಯಕ್ಷನೆ
ಶರಧಿಸೇತುನಿಬದ್ಧ ಶಬರಿ ಹಣ್ಣನು ಮೆದ್ದ
ಶರಭಂಗ ಮುನಿಪಾಲ ಶಮಿತದಾನವಜಾಲ
ಧುರವಿಜಯ ವಿಜಯಮೈದುನ ಕೃಷ್ಣ ರಕ್ಷಿಸೈ
ಪುರುಷೋತ್ತಮಾಯನ್ನಮೋ ೧೭
ಅಕ್ಷಯಾತ್ಮನೆ ವಿಶ್ವರಕ್ಷಕನೆ ವಿಶ್ವಭುಗ್-
ವಿಶ್ವತೋಮುಖ ವಿಶ್ವತೋಬಾಹು ಕರುಣಾಕ-
ಟಾಕ್ಷದಿಂ ನೋಡೆನ್ನಮ್ಯಾಲೆ
ದಯಮಾಡು ಶ್ರೀವಕ್ಷಸ್ಥಲನಿವಾಸನೆ
ಲಕ್ಷ್ಮಣಾಗ್ರಜನೆ ಸುವಿಲಕ್ಷಣನೆ ಸುಜ್ಞಾನ-
ಮೋಕ್ಷದಾಯಕ ಯಜ್ಞಮೂರ್ತಿ ರೂಪತ್ರಯ ಮ-
ಹೋಕ್ಷಧ್ವಜನಂ ಮೋಹಿಸಿದ ಮೋಹಕಲ್ಪ
ಅಧೋಕ್ಷಜಾಯ ನಮೋನಮಃ ೧೮
ಕ್ರೂರಕರ್ಮಿ ಹಿರಣ್ಯಕಶಿಪುವಂ ಕೊಂದ ದು-
ರ್ವಾರದುರಿತಾಬ್ಧಿಬಾಡಬ ಭಕ್ತವತ್ಸಲ ಮ-
ಹಾರವಕುಲಿಶ ಶತಕೋಟಿಸದೃಶನ
ಶಿರಪ್ರಕರಧೀರ ಪ್ರಹ್ಲಾದಾಭಿವರದ
ಭೂರೀಕರರೂಪ ಭೂಮಕೀರ್ತಿಕಲಾಪ
ಸಾರವಜ್ರಸ್ತಂಭದಿಂ ಬಂದ ನಂದ ಸುಕು-
ಮಾರ ಮಾರ್ಕಾಂಡೇಯವರದ ಲೋಕಶರಣ್ಯ
ನಾರಸಿಂಹಾಯ ನಮೋ ೧೯
ನಿಶ್ಚಲಾತ್ಮ ನಿರೀಹ ನಿರ್ವಿಕಾರಾನಂತ
ಪ್ರೋಚ್ಛ ಸರ್ವಗ ಸದಾನಂದ ಪರಿಪೂರ್ಣ ತ-
ನ್ನಿಚ್ಛೆಯಿಂದಲಿ ಜಗವ ಪಾಲಿಸುವ
ನಿರ್ಮಿಸುವ ಆಶ್ಚರ್ಯಕೃತ ಸಲೀಲ
ಮುಚ್ಚುಮರೆ ಯಾಕಿನ್ನು ಮುಗಿದು ಬೇಡುವೆ ಕೈಯ
ಸ್ವಚ್ಛತರ ಭಕ್ತಿಭಾಗ್ಯವನಿತ್ತು ಸಲಹೊ ಮಹ-
ಕಚ್ಛಪನೆ ಕಾಳೀಯಮರ್ದನಮಹಿತ
ಶ್ರೀಮದಚ್ಯುತಾಯ ನಮೋನಮಃ ೨೦
ಚೈದ್ಯಮಥನ ಮನೋಜ್ಞಶುದ್ಧಾತ್ಮ ಸರ್ವಜ್ಞ
ಯುದ್ಧದಲಿ ಸೈಂಧವನ ಶಿರವ ಕೆಡಹಿಸಿ ಜಯವ
ಹೊದ್ದಿಸಿದ ಪಾರ್ಥನಿಂಗೆ
ಇದ್ದು ನೀ ಹೃದಯದೊಳು ತಿದ್ದೆನ್ನ ಮತಿಯ ಸ್ಮರ-
ವಿದ್ದ ಮಾನಸವ ಪಾದದ್ವಯದೊಳಿರಿಸೈ ದ-
ಯಾದ್ರ್ರಚಿತ್ತ ಸ್ವಭಕ್ತಸಂಸಾರಿ ಕಾಯೆ
ಜನಾರ್ದನಾಯ ನಮೋನಮಃ ೨೧
ಮಂದಾಕಿನಿಯ ಪಡೆದ ಮಾತೆಯ ಶಿರವ ಕಡಿದ
ನಂದಗೋಪನ ಕಂದನೆನಿಸಿ ಬಾಲಕತನದ
ಚಂದಮಂ ತೋರಿಸಿದ ಕುಬುಜೆಗಂಧಕೆ ಒಲಿದ
ಸುಂದರೀರಮಣ ಜಯತು
ತಂದೆತಾಯಿಯು ಸರ್ವ ಜೀವರ್ಗೆ ನೀನೆ ನಿಜ-
ವೆಂದು ತಿಳಿಯದೆ ಮಾಯೆಯಿಂದ ಮಮಕರಿಸಿ ಪರ-
ನಿಂದಾದಿ ದೋಷಗಳ ಮಾಡಿ ಬಳಲುತ್ತಿಹರ್
ಉಪೇಂದ್ರಾಯ ತುಭ್ಯಂ ನಮಃ ೨೨
ಸ್ಥಿರಚರಾತ್ಮಕ ಧೇನುಚರ ದೇವಕೀಜಠರ-
ಶರಧಿಗುರುರಾಜ ಭಾಸ್ಕರಮಂಡಲಾಂತಸ್ಥ
ಪರಮತೇಜೋಮಯ ಪುರಾಣಪುರುಷೇಶ್ವರನೆ
ದುರಿತದೂರ ಗಭೀರನೆ
ನಿರತಿಶಯ ನಿಜನಿರ್ವಿಕಲ್ಪ ಕಲ್ಪಾಂತಸಾ-
ಗರದಿ ವಟಪತ್ರಪುಟಶಯನ ಪುಣ್ಯಶ್ರವಣ
ಪುರುಷನಾಮಕ ಪುಷ್ಕರಾಕ್ಷ ಶ್ರೀಕರನೆ ಜಯ
ಹರಯೇ ನಮೋನಮಸ್ತೇ ೨೩
ವೃಷ್ಟಿಕುಲತಿಲಕ ಸರ್ವೇಷ್ಟದಾಯಕ ನಿಮಿತ-
ಶಿಷ್ಟಜನಪರಿಪಾಲ ಶಿವಗೌರೀ ಗಣಪಗುಹ-
ಸೃಷ್ಟಿಶಕ್ತಿಯನೀವ ಗೋವರ್ಧನಾಚಲವ ಬೆಟ್ಟಿನಿಂದೆತ್ತಿದ ಮಹಾ
ದುಷ್ಟ ನರಕಾದಿದಾನವರ ಮರ್ದಿಸಿದ ಜಗ-
ಜಟ್ಟಿ ಜನಿಮೃತಿಭಯವಿದೂರ ವಿಷಮಯಸರ್ಪ-
ಶ್ರೇಷ್ಠನಂ ಘಾತಿಸಿದ ರಾಮಾನುಜನೆ
ಹರೇ ಕೃಷ್ಣಾಯ ತುಭ್ಯಂ ನಮಃ ೨೪
ಅಕ್ಷೀಣ ಬಲಶಾಲಿಯಾಂಜನೇಯನಿಗಿತ್ತೆ
ಅಕ್ಷಯದ ಬ್ರಹ್ಮಪದವಿಯ ಲೋಕದೊಳಗ್ಯಾವ-
ದಕ್ಷಮರ್ದನ ನಿನಗೆ ಸರ್ವತಂತ್ರಸ್ವತಂತ್ರ ಪಕ್ಷೀಂದ್ರಭುಜವಿರಾಜ
ಸಾಕ್ಷಿಚೈತನ್ಯರೂಪನೆ ಕಮಲನಾಭನೆ ಮು-
ಮುಕ್ಷುಜನಧ್ಯಾನಗಮ್ಯನೆ ಗದಾಧರ ದನುಜ-
ಶಿಕ್ಷಕ ಪರೀಕ್ಷಕನೆ ಪವನವಾಹನ
ಲಕ್ಷ್ಮೀನಾರಾಯಣಾಯ ನಮೋ ೨೫

೨೫೭
ಕೇಳು ಕಲ್ಮಷಹಾರಿ ಕರುಣಾವಾರುಧಿ ಶೌರಿ
ತಾಳು ಕ್ಷಮೆಯ ಕೃಪೆದೋರಿ
ಕೇಳು ಸಂಸೃತಿ ದುಃಖ ತಾಳಲಾರೆನು ಮಾತ
ನಾಲಿಸು ಮಲ್ಲಕಂಸಾರಿ ಪ.
ಮೂರೊಂದು ಎಂಬತ್ತು ಲಕ್ಷ ಯೋನಿಗಳನ್ನು
ಸಾರಿ ಕಡೆಗೆ ಮಾನುಷ್ಯವನು
ಸೇರಿದೆನಿದಿರಲಿ ಷಡ್ವೈರಿ ಗಣವೆನ್ನ
ಗಾರು ಮಾಡುವುದನೇನೆಂಬೆ ೧
ದೂರಾಪುರದ ಕಾಮ ವಾರುಧಿವಳಗೀಸ
ಲಾರದೆ ಬಾಯಬಿಟ್ಟೊರವೆ
ಕ್ಷೀರಾಬ್ಧಿಶಯನ ಥಟ್ಟನೆ ಬಂದು ಸಲಹೊ ಮು-
ರಾರಿ ನೀನ್ಯಾಕೆನ್ನ ಮರೆವೆ ೨
ಬುದ್ಧಿ ಬರುವ ಮೊದಲಿದ್ದ ಪರಿಯು ಮಣ್ಣ
ಮುದ್ದೆಯಂತಾಯ್ತನಂತರದಿ
ಹದ್ದಿನಂದದಿ ಹಂಗಿನನ್ನವ ಕಾಯುತ್ತ
ಇದ್ದೆನು ಪರರ ಮಂದಿರದಿ ೩
ಮಧ್ಯವಯಸ್ಸಿನೊಳ್ ಮದನನ ¨ಲೆಯೊಳು
ಬಿದ್ದು ಹೊರಳಿ ಬಹು ಬಳಲಿ
ಮಧ್ವವಲ್ಲಭ ನಿನ್ನ ಮರೆತೆನು ಮುಂದಾದ-
ರುದ್ಧರಿಸೆನ್ನ ಬೇಗದಲಿ ೪
ನೇಮವ್ರತಗಳನೊಂದಾದರು ಮಾಡದೆ
ಕಾಮಲಾಲಸನಾದೆ ಬರಿದೆ
ವ್ಯಾಮೋಹ ಕಡಲಿಗೆ ಕೊನೆಗಾಣೆ ಕಾರುಣ್ಯ
ಧಾಮನ ಬಿಡೆ ನಿನ್ನ ಸ್ಮರಣೆ ೫
ಸಾಮಜೋದ್ಧಾರ ಸಕಲಸುರವೈರಿ ನಿ-
ರ್ನಾಮವತಾರ ಭೂಧಾರ
ನಾಮಾಮೃತವ ನಿತ್ಯ ಸವಿದು ಬಾಳುವ ಮುಖ್ಯ
ಕಾಮಿತಾರ್ಥವ ನೀಡು ವರದಾ ೬
ಸುರಮುನಿ ಪಿತೃಋಣ ಭರವ ನೀಗುವ ಮೂರು
ತೆರವ ಕಾಣದೆ ಕಾಲ ಕಳೆದೆ
ವರ ದೇವಾಲಯ ಕೂಪಾ ರಾಮಯಜ್ಞಾದಿ ಸ-
ತ್ಕರಗಳ ವಾರ್ತೆಯ ತೊರೆದೆ ೭
ಗುರು ಹಿರಿಯರ ಸೇವೆ ಮರೆತು ಮನಸಿನಲ್ಲಿ
ಸರಿಯಲ್ಲ ಎನಗೆಂದು ತಿಳಿದೆ
ಮರಿಯಾದೆ ಗೆಟ್ಟು ಮಾಯಾತಂತು ಬಂಧದೊ-
ಳಿರುವೆ ಈ ಪರಿಯಿನ್ನು ಥರವೆ ೮
ಲೋಕನಾಯಕ ನಿನ್ನ ಸ್ಮರಣೆ ಒಂದಿದ್ದರೆ
ಸಾಕೆಂಬ ಶ್ರುತಿ ಪುರಾಣಗಳು
ವಾಕಾನುವಾಕುಗಳು ಸುರಿದ ಸರ್ವಜ್ಞ
ಶ್ರೀಕರ ಪಾದದ ಮತವ ೯
ಸ್ವೀಕರಿಸುತ ನಿನ್ನ ಸೇವೆ ಮಾಡಲು ಬ್ಯಾರಿ-
ನ್ಯಾಕಿನ್ನು ಡಾಂಭಿಕರ
ವ್ಯಾಕುಲವ ಬಿಡಿಸಿ ವೆಂಕಟನಾಥ ಕರುಣಿಸ
ಬೇಕು ಶ್ರೀವರ ನಿನ್ನ ಪಥವಾ ೧೦

೪೭೫
ಸಂಕ್ಷಿಪ್ತ ವಿರಾಟಪರ್ವ
ಕೇಳು ಜನಮೇಜಯರಾಜ ಭೂಮಿ-
ಪಾಲ ಪಾಂಡವರ ಸತ್ಕಥೆಯಪ.
ಶ್ರೀಲಲಾಮನ ನೆನೆದು ಭೂರಿ ವ-
ನಾಳಿಯನು ಸಂಚರಿಸಿ ಸಜ್ಜನ
ಕೇಳಿಯಲಿ ವನವಾಸದವಧಿಯ
ಕಾಲವನು ಕಳೆಕಳೆದು ಬಂದರುಅ.ಪ.
ದರ್ವೀಧರಹಸ್ತನಾಗಿ ಮಹಾ
ಪರ್ವತದಂತುರೆ ಮಸಗಿ
ನಿರ್ವಹಿಸಿ ಸೂದತ್ವವನು ಸಲೆ
ಗರ್ವಿತಾಧಮ ಕೀಚಕನ ಕುಲ
ಸರ್ವವನು ಸಂಹರಿಪ ಭೀಮ ಪೆ-
ಸರ್ವಡೆದ ಗುರುವರ್ಯ ಬಂದನು ೧
ಕಡುಗಲಿ ಕಲಿಮಲಧ್ವಂಸ ಎದ್ದು
ನಡೆದು ಬಂದನು ಪರಮಹಂಸ
ನಿಡುಕಿ ಮನದಿ ವಿರಾಟರಾಯನ
ಪೊಡವಿಗಿಡೆ ಪದ ಕೀಚಕಾಖ್ಯನ
ಎಡದ ಭುಜ ಕಂಪಿಸಿತು ಮೂಜಗ
ದೊಡೆಯನುಡುಪತಿಕುಲಶಿಖಾಮಣಿ೨
ಗಂಗಾದಿ ನದಿಗಳ ತೀರ ಪಟ್ಟ
ಣಂಗಳ ಗೈದ ಸಂಚಾರ
ತುಂಗಬಲ ಮಲ್ಲರುಗಳನು ಸಲೆ
ಸಂಘಟಿಸಿ ಜೀಮೂತವೀರಪ್ಪ
ಸಂಗದಲಿ ವೈರಾಟಪುರ ರಾ
ಜಾಂಗಣಕೆ ಭದ್ರಾಂಗ ಬಂದನು೩
ಇಂತು ಮಲ್ಲರನೆಲ್ಲ ಸದೆದು ಬಲ
ವಂತರಿರಲು ನೃಪಗೊಲಿದು
ಸಂತಸವ ಬಡಿಸುತ್ತಲಿರಲ್ವಾ
ಕುಂತಿತನಯರು ಹರಿಯ ನಾಮವ
ಚಿಂತಿಸುತ ದಶಮಾಸ ಕಳೆದಾ
ನಂತರದ ವೃತ್ತಾಂತವೆಲ್ಲವ೪
ಕಥೆಯಂತೆ ಹಿಂದೆ ರಾವಣನ ಕೆಟ್ಟ
ಗತಿಗನುಚರ ಕೀಚಕನ
ಸ್ಥಿತಿಯು ದ್ರುಪದಜೆಗಾದ ಮಾನ
ಚ್ಯುತಿಗೆ ಕಾರಣನಾದ ಜಡ ದು-
ರ್ಮತಿ ಖಳಾಧಮನೊಂದು ದಿನ ನೃಪ
ಸತಿಸಭೆಗೆ ಅತಿ ಹಿತದಿ ಬಂದನು೫
ಪಾಪಿ ಕೀಚಕನಿಗಿಂತುಸುರಿ ದ್ರುಪದ
ಭೂಪಾಲಕನ ಕಿಶೋರಿ
ಶ್ರೀಪತಿಯ ನಾಮವನು ಸ್ಮರಿಸುತ-
ಲಾ ಪತಿವ್ರತೆ ತೊಲಗಲಂಗಜ
ತಾಪತಪ್ತಾಂತಃಕರಣ
ನಾ ಪರಿಯ ಮತಿ ವ್ಯಾಪಿಸಿದನು೬
ಲಾಲಿಸಿ ಮಾಲಿನಿವಚನ ತೋಷ
ತಾಳಿದ ದುರ್ಗುಣಸದನ
ಕಾಲಪಾಶದಿ ಬಿಗಿವಡೆದು ಹೇ-
ರಾಳ ಮುದಕೀಲಾಲ ಸಲೆ ಕ-
ಲ್ಲೋಲಜಾಲದಿ ಮುಳುಗಿ ನರ್ತನ
ಶಾಲೆಗಾಗಿ ಕರಾಳ ಬಂದನು೭
ಮಥಿಸಿ ಕೀಚಕನ ಮಂಟಪದಿ ದ್ರುಪದ
ಸುತೆಗೆ ತೋರಿಸಲತಿ ಮುದದಿ
ಸತಿಶಿರೋಮಣಿ ಕಂಡು ಮನದೊಳ-
ಗತುಳ ಹರುಷವನಾಂತು ಸರ್ವೋ
ನ್ನತಭುಜನ ಚುಂಬಿಸಿದಳು ಪತಿ
ವ್ರತೆಯರ ಶಿರೋರತುನೆ ಪಾವನೆ೮
ಇತ್ತ ವಿರಾಟನಗರದ ಸರ್ವ
ವೃತ್ತಾಂತವೆಲ್ಲವ ತಿಳಿದ
ಧೂರ್ತ ದುರ್ಯೋಧನ ದುರಾಗ್ರಹ
ಚಿತ್ತಗ್ರಹಿಸಿದ ಕಾರ್ಯಕಾರಣ
ವೃತ್ತಿಯಲ್ಲಿ ಪಾಂಡವರು ನಿಜವೆಂ-
ದಾಪ್ತಜನರೊಳು ವಿಸ್ತರಿಸಿದನು೯
ಸುರನದೀಸುತ ಕರ್ಣ ದ್ರೋಣ ಕೃಪಾ
ದ್ಯರು ಕೂಡಿ ಕುಜನಪ್ರವೀಣ
ಪೊರಟ ಪರಮೋತ್ಸಾಹ ಸಾಹಸ
ಭರತಿ ಕೌರವರಾಯ ಮತ್ಸ್ಯನ
ಪುರವರ ಸಮೀಪದಿ ಸುಶರ್ಮನ
ಕರೆದೊರೆದ ಭೂವರ ನಿರ್ಧರ೧೦
ನುಡಿಯ ಕೇಳುತಲಿ ಸುಶರ್ಮ ನಿಜ
ಪಡೆಯ ನೆರಹಿ ವೈರಿವರ್ಮ
ದೃಢಕರಿಸಿ ದಿನಮಣಿಯು ಪಶ್ಚಿಮ-
ಕಡಲ ಸಾರುವ ಸಮಯ ಗೋವ್ಗಳ
ಪಿಡಿದು ಗೋಪರ ಕೆಡಹಿ ಬೊಬ್ಬಿ-
ಟ್ಟೊಡನೊಡನೆ ಪಡಿಬಲವನರಸಿದ೧೧
ಹಾರಿಸಿದನು ರಥ ಪಾರ್ಥ ನರ
ನಾರಿವೇಷದ ಪುರುಷಾರ್ಥ
ತೋರಿಸುವೆನೆಂಬುತ್ಸಾಹದೊಳು
ಬ್ಬೇರಿ ಮನದೊಳು ಕೃಷ್ಣನಂಘ್ರಿಸ-
ರೋರುಹಕೆ ಮಣಿದುತ್ತರನ ಸಹ
ಸೇರಿ ನಗರದ್ವಾರ ದಾಟಿದ೧೨
ಭೀತಿಯ ಬಿಡು ಬಾರೆಂದು ಪುರು
ಹೂತಸುತನು ಎಳತಂದು
ಘಾತಿಸುವೆ ರಿಪುಬಲವನೆಂದು ವ-
ರೂಥದಲಿ ಕುಳ್ಳಿರಿಸಿ ನೃಪತನು
ಜಾತಸಹ ಪಿತೃವನದ ಮಧ್ಯ ಶ-
ಮೀತರುವಿನೆಡೆಗೋತು ಬಂದರು೧೩
ಇಂತು ತಿಳಿಸುತಲರ್ಜುನನು ಬಲ
ವಂತನು ಧನುಶರಗಳನು
ತಾಂ ತವಕದಿಂ ಧರಿಸಿ ವಿಜಯ ಮ-
ಹಾಂತ ವೀರಾವೇಶಭೂಷಣ
ವಾಂತು ಶಂಖನಿನಾದದಿಂ ರಿಪು
ತಿಂಥಿಣಿಯ ಭಯಭ್ರಾಂತಗೊಳಿಸಿದ ೧೪
ಹೂಡಿ ಬಾಣವನುರ್ಜುನನು ಚೆಂ-
ಡಾಡಿದ ರಿಪುಬಲವನ್ನು
ಮೂಢ ದುರ್ಯೋಧನನ ಕಣೆಗಳ
ಜೋಡಣೆಗಳಿಂ ಬಿಗಿದು ತನ್ನೋಶ
ಮಾಡಿಕೊಂಡನು ಗೋಪಗೋವ್ಗಳ
ನಾಡಲೇನದ ಪ್ರೌಢತನವನು೧೫

೨೬೯
ಕೇಳು ನಾ ಪೇಳ್ವದೊಂದಾ ನಿತ್ಯಾನಂದಾ ಪ.
ಕೇಳು ನಾ ಪೇಳ್ವದೊಂದಾ ಕಂಸಾದ್ಯಸುರವೃಂದ
ಸೀಳಿ ಶೀಘ್ರಾದಿ ಪರಿಹರಿಸಿದಿ ಪಿತೃ ಬಂಧ ಅ.ಪ.
ನಿಗಮ ತತಿಗಳು ನಿಶ್ಯೇಷ ತಿಳಿಯದ
ಸುಗುಣವಾರಿಧಿ ಸುಖಬೋಧ ದೇಹ
ಸ್ವಗತ ಖೇದೊಝ್ಝಿತ ಸರ್ವ ನಿಯಾಮಕ
ಖಗಪತಿವಾಹನ ಕಾಮಿತ ಭಾವನ
ಜಗದುದಯ ಪಾಲನ ಪರಾತ್ಪರ
ಸ್ವಗತಿ ನಿಯತಿ ಜ್ಞಾನ ದಾಯಕ
ತ್ರಿಗುಣ ವರ್ಜಿತ ತ್ರಿಭುವನೇಶ್ವರ
ಮಗುವು ನುಡಿವುದ ಮಾತೆಯಂದದಿ ೧
ಮೊದಲಿನ ಭವಗಳ ಹದನ ಒಂದರಿಯೆನು
ವಿಧಿ ಪಿತ ತವ ಪಾದ ಪದುಮಗಳ
ಸದರದಿ ಸೇವಿಸಲಧಿಕ ಸಾಧನ ಮಾನು
ಷ್ಯದಿ ಬಂದು ವೈಷ್ಣವ ಬುಧರಾ ಸೇವೆಯ ಬಿಟ್ಟು
ವಿಧವಿಧ ಮೋಹಾಂಧಕಾರಗ-
ಳುದಿಸಲದರೊಳು ಸಿಲುಕಿ ನಿರುಪದಿ
ಬಧಿರ ಮೂಕ ಜಡಾಂಧನಾದೆನು
ಸದಯ ಇನ್ನಾದರೂ ಕಟಾಕ್ಷದಿ ೨
ತಾಪತ್ರಯೋನ್ಮೂಲನೇಶಾ ಕೌಸ್ತುಭಭೂಷ
ಶ್ರೀಪತಿ ಸುಜನ ಗಣೈಕ ಪೋಷಾ
ಈಪರಿಯೊಳಗೆನ್ನ ಜರಿವದುಚಿತವೇನೊ
ಕಾಪುರುಷರ ಸಂಗ ಕಡಿದು ಕರುಣವಿಟ್ಟು
ಶ್ರೀ ಪಯೋಜ ಭವೇಂದ್ರ ವಂದ್ಯ ಪ್ರ-
ದೀಪ ಸತ್ಸಿದ್ಧಾಂತ ತಿಳಿಸಿ ಪ-
ದೇ ಪದೇ ಕಾಪಾಡು ವೆಂಕಟ
ಭೂಪ ನೀ ಗತಿಯೆಂದು ನಂಬಿದೆ ಕೇಳು ೩

೫೨
ಕೇಳು ಶ್ರೀನಿವಾಸ ಕಷ್ಟವ ತಾಳಲಾರೆ ಶ್ರೀಶ
ಆಳುವ ದೊರೆ ನೀನೆಂದು ನಂಬಿದೆ ಕೃಪಾಳು ಕಂಜಜೇಶ ಪ.
ಮಾತ ಕೇಳದಿರುವ ಮನ ಬಹು
ಕಾತರಗೊಂಡಿರುವ
ರೀತಿಯಿಂದ ಬಹು ಸೋತೆನು ಷಡ್ರಿಪು
ಜಾತ ಬಂಧಿಸಿರುವ ೧
ಕಟ್ಟಿ ಸಹಿಸಲಾರೆ ಮೊದಲ
ನಿಟ್ಟಶರದ ಬೋರೆ
ವಿಠಲ ನೀ ಕೈಬಿಟ್ಟರೆ ಮಾಜದು
ಅಟ್ಟಹಾಸ ತೋರೆ ೨
ಉದಯ ಮೊದಲುಗೊಂಡು ನಾನಾ
ವಿಧದಲಿ ಭ್ರಮೆಗೊಂಡು
ಸದಯ ನಿನ್ನ ಪಾದಾಬ್ಜ ನೆನೆಯದೆ
ಚದುರೆಯ ಮನಗೊಂಡು ೩
ನಿತ್ಯ ಕರ್ಮವೆಲ್ಲ ಕಂಬಳಿ
ಬುತ್ತಿಯಾಯಿತಲ್ಲ
ಕತ್ತರಿಸಿ ಬ್ರಹ್ಮೆತ್ತಿಯನ್ನು ಪುರು-
ಷೋತ್ತಮ ಸಿರಿನಲ್ಲ ೪
ತಲ್ಲಣಗೊಳಿಸುವುದು ತುದಿಮೋದ-
ಲಿಲ್ಲದೆ ದಣಿಸುವುದು
ನಿಲ್ಲೆ ನಡೆಯ ಮಲಗೆಲ್ಯು ಬಿಡದು ದೂ-
ರೆಲ್ಲು ಪೇಳಗೊಡದು ೫
ಮೆಲ್ಲ ಮೆಲ್ಲನೆದ್ದು ನೀ ಮನ
ದಲ್ಲಿ ಸೇರುತ್ತಿದ್ದು
ನಿಲ್ಲಲು ತೀರಿತಲ್ಲದೆ ಲೋಕ
ದೊಳಿಲ್ಲ ಬೇರೆ ಮದ್ದು ೬
ನಿತ್ಯ ನಿನ್ನ ಮುಂದೆ ಸೇವಾ
ವೃತ್ತಿ ಮಾಳ್ಪದೊಂದೆ
ಎತ್ತಾರಕವೆಂದಾಶ್ರಯಿಸದೆ ಮೇ-
ಲೊತ್ತಿ ಬೇಗ ತಂದೆ ೭
ಭೃತ್ಯರ ಬಿಡನೆಂದು ಶ್ರುತಿ ಶಿರ
ವೃತ್ತಿ ವಚನವೆಂದು
ಸತ್ಯವೆಂದು ನಂಬಿದ ನೀನರಿಯೆಯ
ಔತ್ತರೆಯ ಬಂಧು ೮
ವಿಜಯಸೂತನಿಂದ ಪಾದವ
ಭಜಿಸಿದ ಮ್ಯಾಲೆನ್ನ
ನಿಜ ಜನದೊಳು ಸೇರಿಸುವುದು ಚಿತ
ಸಾಮಜ ವರದನೆ ಮುನ್ನ ೯
ಅಜ ಭವ ಪರಿಪಾಲ ಪಾಲಿಸು
ವ್ರಜ ಯುವತಿ ಲೋಲಾ
ಭುಜಗ ರಾಜ ಗಿರಿನಾಥ ಪಾದ ಪಂ-
ಕಜ ಕೊಡು ಗೋಪಾಲ ೧೦

೪೨೪
ಕೈಯ ಮುಗಿವೆ ಗುರುರಾಯ ಶರಣು ಜಗ-
ದಯ್ಯನೆ ಬಾಹುಲೇಯ ಪ.
ಒಯ್ಯನೆ ಬಿನ್ನಪ ಗೈಯುವೆ ಕರುಣಾಳು
ಧೈರ್ಯ ಸಾಹಸ ಗುಣಧುರ್ಯನೆ ಜಯ ಜಯಅ.ಪ.
ವ್ಯರ್ಥ ಜನ್ಮವಾಯಿತು ಹರಿಯ ಸ್ಮರಣೆ
ಗೊತ್ತು ಇಲ್ಲದೆ ಹೋಯಿತು
ಉತ್ತಮೋತ್ತಮ ಗುಣವ ಪಾಲಿಸು
ಭಕ್ತವತ್ಸಲ ಭಯನಿವಾರಣ
ಸತ್ಯಮಾರ್ಗದಿ ನಡೆಸು ಶಂಕರ-
ಪುತ್ರ ಪುಣ್ಯಚರಿತ್ರಭರ್ತನೆ ೧
ತಾಮಸಗುಣಗಳು ಪರಿಹರಿಸು ನಿ-
ಸ್ಸೀಮ ಮಹಿಮನೆ ನೀನು
ಶ್ರೀ ಮನೋರಮನಿಷ್ಠೆ ಸಜ್ಜನ-
ಸ್ತೋಮಸಂಗವನಿತ್ತು ದುರ್ಜನ-
ಸೀಮೆಯೊಳು ಪೊಕ್ಕಿಸದಿರೆನ್ನ ಸು-
ಧಾ ಮಯೂಖಾಸ್ಯನೆ ಮಹೇಶನೆ ೨
ಭೂಮಿಗಧಿಕವೆನಿಪ ಪಾವಂಜಾಖ್ಯ
ಗ್ರಾಮಾಧಿಪತಿ ನಿಷ್ಪಾಪ
ಕಾಮಾರ್ಥವನೀವ ಯೋಗಿ ಲ-
ಲಾಮ ಲಕ್ಷ್ಮೀನಾರಾಯಣನ ಮ-
ಹಾಮಹಿಮೆಯನು ಪೊಗಳಿ ಹಿಗ್ಗುವ
ಕೋಮಲಾಂಗ ಸುಮಂಗಲಪ್ರದ ೩

೩೮೬
ಕೈಯ ಮುಗಿವೆನು ಮಹಾಲಿಂಗ ಜಗ-
ದೈಯನೆ ವೃಷಭತುರಂಗ ಪ.
ಧೈರ್ಯಸಾಹಸ ಸಮುದ್ರ ರುದ್ರ ಸುರ-
ವರ್ಯನೆ ಸದಯಾಪಾಂಗಅ.ಪ.
ಕೆಂಡಗಣ್ಣಿನ ಪರಶಿವನೆ ಸುಪ್ರ-
ಚಂಡ ಚಂಡಿಕಾಧವನೆ
ಮಂಡೆಯೊಳಗೆ ಭಾಗೀರಥಿಯ ತಾಳ್ದ
ಕಂಡಪರಶು ಪಾವನನೆ೧
ಚಂದ್ರಕಲಾಧರ ಹರನೆ ಗೋ-
ವಿಂದನ ವರ ಕಿಂಕರನೆ
ಸುಂದರ ಶುದ್ಧಸ್ಫಟಿಕಶರೀರನೆ
ವೃಂದಾರಕ ಮುನಿವೃಂದವಂದಿತನೆ೨
ಪಾವಂಜೆ ಕ್ಷೇತ್ರವಾಸ ಪರಿ-
ಪಾಲಿಸು ಫಣಿಪತಿಭೂಷ
ದೇವ ಲಕ್ಷ್ಮೀನಾರಾಯಣದಾಸನ
ಕಾವ ಕಲ್ಮಷವಿನಾಶ೩

೨೦೮
ಕೋಪವ್ಯಾತಕೊ ಕರುಣಾನಿಧೆ ಭೂಪನೆಂದು ನಿನ್ನ ನಂಬಿದೆ
ಶ್ರೀಪತೇ ಶರಣಾಗತ ಮೇಲಾಪದ್ಗಣ ತರಬಾರದು ಬರಿದೆ ಪ.
ಆವ ಕಾಲಕು ನಿನ್ನ ಸೇವೆ ಮಾಡುವುದೆನ್ನ ಪಾವನವಂತಿರಲು
ನೋವನು ಪೊಂದಿಪುದ್ಯಾವ ಘನತೆ ಭದ್ರನಾವನೆ ನಿನಗೆ ೧
ಹಸ್ತಪಾದಾದಿಗಳನಿತ್ತುದೆ ಸೇವನಗೆಂದುತ್ತಮ ಭಾವವಿಡ-
ಲೊತ್ತುವುದುಚಿತವೆ ಈ ಪರಿ ದಾಸನ ಚಿತ್ತಜ ಜನಕ ೨
ಪೃಥ್ವಿಯೊಳಿಹ ತನಕಾ ನಿತ್ಯ ನೇಮಂಗಳನು ತಕ್ಕಕಾಲದಿ ನಡೆಸುತ
ಶಕ್ತಿಯನಿತ್ತು ಸಲಹು ಪುರುಷೋತ್ತಮ ನಿರುಪದಿ ೩
ಅನ್ಯರ ಲೆಕ್ಕಿಸದೆ ನಿನ್ನನೆ ಪ್ರಾರ್ಥಿಸಿದೆ
ಮುನ್ನಿನ ಭವಗಳನೆಲ್ಲ ಕಳೆದ ಮ-
ಹೋನ್ನತಿಯನು ತವ ಕರುಣದಿ ಸೇರಿದೆ೪
ತಪ್ಪುಗಳೆಷ್ಟಿದ್ದರೂ ಒಪ್ಪಿಕೊ ಮುನಿಸದಿರು ಅಪ್ಪ ನೀನೆಂಬುವಶ್ರುತಿ ಕೃತ ಬಿರುದನು ತಪ್ಪಿಸಿಕೊಳದಿರು ಸರ್ಪ ಗಿರೀಶನೆ ೫

೨೦೯
ಕೋಪಿಸದಿರು ಸ್ವಾಮಿ ಶ್ರೀ ನರಸಿಂಹ ಪ.
ಕೋಪಿಸದಿರು ಕರುಣಾಪಯೋನಿಧಿಯೆ ಮ-
ಹಾಪರಾಧಗಳನು ಲೇಪಗೊಳಿಸದಿರು ಅ.ಪ.
ಮಧ್ವ ವಲ್ಲಭ ನಿನ್ನ ಸೇವೆಯ ನಡಸುವ
ಮಧ್ಯ ಮಧ್ಯದೊಳೆದ್ದು ಹೋದ ತಪ್ಪು
ಶುದ್ಧಿಯಿಲ್ಲದ ತಪ್ಪು ಸೂಕ್ತಿ ಪಾಠಗಳೊಳಾ-
ಬದ್ಧ ಬರುವ ತಪ್ಪೆನಿದ್ದರು ಕ್ಷಮಿಸಿನ್ನು ೧
ಸಂಸಾರ ಲಂಪಟನಾಗಿ ಬಳಲುವೆನು
ಕಂಸಾರಿ ನಿನಗಿನ್ನು ಪೇಳ್ವದೇನು
ಹಂಸವಾಹನ ಪೀಠ ಹಲಧರನನುಜನೆ
ಸಂಶಯಿಸದೆ ಎನ್ನ ಕಾಯೊ ಕಮಲನಾಭ ೨
ಪತಿತಜನರಿಗಧಿಪತಿಯಾಗಿರುವೆ ನಾನು
ಮತಿಹೀನನೆಂಬುದ ಬಲ್ಲಿ ನೀನು
ಪತಿತ ಪಾವನ ನಿನ್ನ ಪಾದ ಪದ್ಮವೆ ಇನ್ನು
ಗತಿ ಎಂದು ನಂಬಿದನ ಮೇಲೆ ಮುನಿಸಿನ್ನೇನು ೩
ಪಾತಕ ಕಡಲೊಳು ಪೊರಳುತ ನೆರಳುತ
ಯಾತರಿಂದಲು ಏಳಲಾರದಿನ್ನು
ಶ್ರೀ ತರುಣಿಯವರ ನಿನ್ನ ಸೇರಿದ ಜಗ
ನ್ನಾಥ ದಾಸರ ಪಾದದವಲಂಬಗೊಂಡೆನು ೪
ಶ್ರೀಶ ಶೇಷಗಿರೀಂದ್ರ ವಾಸ ನಿನ್ನನೆ ನಂಬಿ
ದಾಸ ಕೂಟದಿ ಸೇರಿಕೊಂಡಿಹೆನು
ದೋಷಗಳೆಣಿಸದೆ ದೂರ ದೂಡದೆ ಕರು
ಣಾ ಸಮುದ್ರನೆ ಎನ್ನ ಕಾವದುಚಿತವಿನ್ನು ೫

೩೦೨
(ಕೋಲ ಹಾಡು)
ಕೋಲು ಕೋಲೆನ್ನ ಕೋಲೆ ಕೋಲು ಕೋಲೆನ್ನ ಕೋಲೆ
ಕೋಲು ಶ್ರೀ ರಾಮನ ಬಲಗೊಂಬೆ ರನ್ನದ ಪ.
ಭೂಮಿಯೊಳಗೆ ಸೀತಾರಾಮನು ಜನಿಸಲು
ಸೀಮೆಯ ನಾರಿ ಜನರೆಲ್ಲ ರನ್ನದಾ
ಸೀಮೆಯ ನಾರಿ ಜನರೆಲ್ಲ ನೆರೆದು ಸು
ಪ್ರೇಮದಿ ಪಾಡಿ ನಲಿದರು ರನ್ನದಾ ೧
ಕಾಲ ಅಂದಿಗೆ ಕರ್ಣಲೋಲ ಕುಂಡಲ ಕಂಠ
ಮಾಲೆಯ ನೊಸಲಾ ತಿಲಕವು ರನ್ನದ
ಮಾಲೆಯ ತಿಲಕನೊಸಲೊಳಗಿರಿಸಿದ
ಬಾಲೇರು ಕೂಡಿ ನಲಿವುದ ರನ್ನದ ೨
ಸಾರಸಂಭವ ಕ್ಷೀರ ವಾರುಧಿ ತಡಿಯಲ್ಲಿ
ಭೋರನೆ ಬಂದು ಸ್ತುತಿಸಲು ರನ್ನದ
ಭೋರನೆ ಬಂದು ಸ್ತುತಿಸಲು ರಾಮವ
ತಾರನಾಗುವೆನೆಂದು ನುಡಿದನು ರನ್ನದ ೩
ಪೃಥಿವಿ ನಾಯಕ ದಶರಥನಲ್ಲಿ ಜನಿಸಿದ
ಕಥನೀಯ ಸುಗುಣ ಸಂಭೃತ ರಾಮರನ್ನದ
ಕಥನೀಯ ಸುಗುಣ ಸಂಭೃತ ರಾಮ ಕೌಸಲ್ಯ
ಸುತನೆಂದು ನಗುತ ಮನ್ಮಥನ ಜನಕನಿಗೆ ೪
ಕೌಶಿಕ ಮುನಿಯ ಮಹಾಶೆ ಪೂರಿಸಿ ಯಜ್ಞ
ದೂಷಕ ದಿತಿಜರ ಘಾಸಿ ಮಾಡಿದ ರಾಮ
ದೂಷಕ ದಿತಿಜರ ಘಾಸಿ ಮಾಡಿದ ಜಗ
ದೀಶನು ಸಕಲಾಭಿಲಾಷಾ ಪೂರಿಪೆನೆಂದು ೫
ಮೆಲ್ಲ ಮೆಲ್ಲನೆ ಪಾದ ಪಲ್ಲವವಿರಿಸುತ
ಕಲ್ಲಾದ ಶಿಲೆಯನ್ನಹಲ್ಯೆ ಮಾಡಿದ ರಾಮ
ಕಲ್ಲಾದ ಶಿಲೆಯನ್ನಹಲ್ಯೆ ಮಾಡಿದ ಸಿರಿ
ನಲ್ಲ ಶಿವನ ಮಹ ಬಿಲ್ಲ ಮುರಿದನು ೬
ಭೂತಳಾಧಿಪಜನವ್ರಾತಮಂಡಲದೊಳು
ಸೀತೆಯನೊಲಿಸಿ ಶುಭದಿಂದ ರನ್ನದಾ
ಸೀತೆಯನೊಲಿಸಿ ಶುಭದಿಂದ ಸ್ವಜನ ಸ-
ಮೇತಾಯೋಧ್ಯಗೆ ಬಂದ ಖ್ಯಾತ ರಾಘವನಿಗೆ ೭
ಜನಕನ ವಾಕ್ಯದಿಂದ ಜನಕಾತ್ಮಜೆಯ ಕೂಡಿ
ವನಕಾಗಿ ನಡೆತಂದ ವನಜಾಕ್ಷ ರನ್ನದಾ
ವನಕಾಗಿ ನಡೆ ತಂದ ವನಜಾಕ್ಷನಲ್ಲಿ ಶೂ-
ರ್ಪನಖಿಯ ಮಾನಭಂಗವನು ಗೈದ ರನ್ನದಾ ೮
ಖರದೂಷಣಾದಿ ದೈತ್ಯರ ಕೊಂದು ಮಾರೀಚ
ದುರುಳನ ಸದೆದಾ ಧುರಧೀರ ರನ್ನದ
ದುರುಳನ ಸದೆದಾ ಧುರಧೀರ ಶ್ರೀ ರಾಮ
ಪರಿಪಾಲಿಸೆಮ್ಮನು ಕರುಣಾಳು ರನ್ನದ ೯
ಪಾತಕಿ ದಶಕಂಠ ಸೀತೆಯನೊಯ್ದನೆಂದು
ಕಾತರಗೊಂಡಂತೆ ಜನಕೆಲ್ಲ ರನ್ನದಾ
ಕಾತರಗೊಂಡಂತೆ ಜನಕೆಲ್ಲ ತೋರ್ದ ರಘು
ನಾಥನ ಮೊಖಲೀಲೆ ಖ್ಯಾತಿಯ ಪೊಗಳುತ೧೦
ಮಂದರಾವಣ ಮೋಸದಿಂದ ಕೆಡಹಿದಂಥ
ತಂದೆಯ ಸಖನಿಗಾನಂದ ಪದವನಿತ್ತ
ತಂದೆಯ ಸಖನಿಗಾನಂದವ ಸಲಿಸಿ ಕ-
ಬಂಧನ ದೈತ್ಯಯೋನಿ ಇಂದ ಬಿಡಿಸಿದಗೆ ೧೧
ಬೇಡತಿ ಶಬರಿಯನ್ನು ನೋಡಿ ರಕ್ಷಣೆ ಮಾಡಿ
ಪ್ರೌಢ ಮಾರುತಿಯಿಂದ ಕೂಡಿದ ರನ್ನದಾ
ಪ್ರೌಢ ಮಾರುತಿಯನ್ನು ಕೂಡಿ ರವಿಜನ ಕಾ
ಪಾಡಿ ವಾಲಿಯ ವಧೆ ಮಾಡಿದ ರನ್ನದಾ ೧೨
ಪ್ರಾಣಾತ್ಮಜನು ನಾಗವೇಣಿಯ ವಾರ್ತೆಯ ತಾರೆ
ಜಾಣತನದಲಿದ ಕ್ಷೀಣಾಂಬುಧಿಯೊಳಂದು
ಜಾಣತನದಲಿದ ಕ್ಷೀಣಾಂಬುಧಿಯೊಳು- ಪ್ರ
ವೀಣತನದಿ ಸೇತು ಕಾಣಿಸಿದವನಿಗೆ ೧೩
ದೋಷಿ ರಾವಣನನು ನಾಶಗೈದಸುರಾರಿ
ನೀಶ ನೀನೆನುತ ವಿಭೀಷಣಗೊರವಿತ್ತಾ
ಈಶ ನೀನೆನುತಲಿವಿಭೀಷಣಗೊರವಿತ್ತ
ದೂಷಣ ವೈರಿ ಜಗದೀಶ ರಾಮನಿಗೆ ೧೪
ಸೃಷ್ಟಿಜಾತೆಯ ಕೂಡಿ ಪಟ್ಟಾಭಿಷೇಕಗೊಂಡು
ಶಿಷ್ಟ ರಕ್ಷಕನಾದ ಸಿರಿನಾಥ ರನ್ನದಾ
ಶಿಷ್ಟ ರಕ್ಷಕನಾದ ಸಿರಿನಾಥ ವೆಂಕಟ
ಬೆಟ್ಟದೊಡೆಯ ನಮ್ಮಭೀಷ್ಟವ ಕೊಡುವನ ೧೫

೨೩೦
(೪೦ನೇ ವರ್ಷದ ವರ್ಧಂತಿ)
ಕ್ಷಿಪ್ರ ಪ್ರಸಾದಕರ ದೊರೆಯೆ ಅಜಭವಾ-
ದ್ಯ ಪ್ರಮೇಯಾ ಸಂತಸುಗುಣಾಬ್ಧಿ ಹರಿಯೆ ಪ.
ಇಳೆಯೊಳಗೆ ನಾ ಬಂದು ಕಳೆದೆ ನಾಲ್ವತ್ವರುಷ
ಉಳಿದ ಪರಿಮಿತಿಯರಿಯೆ ಗಳಿತವಾಯಿತು ದೇಹ
ಬಳಲಿದೆನು ಬಯಲಾಸೆ ಬಲೆಯೊಳಿಂದಿನವರೆಗು
ನಳಿನನಾಭನೆ ನಿನ್ನ ನಂಬಿದೆನು ಮನವರಿತು
ಮುಳುಗಲಾರೆನು ಮೋಹ ಕಡಲ ಮಾಧವನೆ
ತಿಳಿಯದೆ ನಿನಗೆ ಪೊನ್ನೊಡಲ ಮುಂದಿಂತು
ತಳಮಳಿಸದಂತೆ ತಪ್ಪಿಸು ದುರಿತ ಸಿಡಿಲ ೧
ದೇವಾಧಿದೇವ ತವ ಸೇವಾನುಕರನ ಹೊ-
ನ್ನಾವರದೊಳಿರಿಸಲಿನ್ಯಾವನರಸಲಿ ಕೃಷ್ಣ
ಭಾವ ಶುದ್ಧಿಯನರಿತು ಭಜನೆ ಮಾಡುವದೆಂತು
ಸಾವಕಾಶವಿದ್ಯಾಕೆ ಸಾಹಿತ್ಯಗಳು ಜೋಕೆ
ನೀ ಒಲಿದು ನಿತ್ಯ ಕೈಗೊಂಬ ಕೀರ್ತಿ ಸಂ-
ಭಾವನಾ ಸುಖವ ನಾನುಂಬಾ ತರವ ಸಂ-
ಭಾವಿಸು ದಯಾಂಬೋಧಿ ದೀನಾವಲಂಬ ೨
ರಕ್ಕಸಾಂತಕ ನೀನೆ ದಿಕ್ಕೆಂದು ನಿನ್ನಿದಿರು
ಬಿಕ್ಕಿ ಬಿರಿದಳಲುವೆನು ಸೊಕ್ಕಿ ಕಾಡುವ ದೊಡ್ಡ
ಜಕ್ಕಣಿಯ ಕಾಲಿಂದ ತಿಕ್ಕಿ ತೀರಿಸು ನಿನಗ-
ಶಕ್ಯವಾವುದು ಸ್ವರ್ಣಪಕ್ಷ್ಯೇಂದ್ರಗಮನಕರ
ಚಕ್ರಭೂಷಣ ವೆಂಕಟೇಶದಾಸ ಜನ
ಕಕ್ಕರದಿ ತೋರು ಸಂತೋಷ ಭಕ್ತಿಫಲ
ದಕ್ಕುವಂದದಿ ಮಾಡು ದುರಿತಾಬ್ಧಿಶೋಷ ೩

೧೭೧
ಗಂಡಾಂತರ ಪರಿಹರಿಸು ಗರುಡಾಂಕಗಮನ ಹರಿ
ಪುಂಡರೀಕಾಯತಾಕ್ಷ
ಮೊಂಡತನ ತಾಳಿರುವ ಲಂಡರಸನಭಿಮತವ
ಖಂಡಿಸು ಕೃಪಾಂಬುರಾಶಿ ಗ್ರಹವಾಸಿ ಪ.
ನಿನ್ನ ಸೇವೆಯ ಮಾಳ್ಪ ನಿರಪರಾಧಿಯ ಮ್ಯಾಲೆ
ಅನ್ಯಾಯ ಕೃತಭಾರವ
ತನ್ನಂತೆ ಪೊರಿಸಬೇಕೆಂನುವರ ನೀನೆಂತು
ಮನ್ನಿಸುವೆ ಮಾನ ಕಾವ
ಭಿನ್ನ ಭಾವನೆ ತಾಳ್ದ ಭೂಪತಿಗೆ ಭಯದೋರಿ
ಎನ್ನ ಕಾಪಾಡುವ ದೇವ ಭವನಾವ ೧
ಅಡಿಗಡಿಗೆ ನಿನಗಂಜಿ ನಡೆವೆ ನಾನೆಂಬುದನು
ಒಡೆಯ ನಿನಗೆಂಬುದೇನು
ಕಡು ಮೂರ್ಖ ಜನರೆನ್ನ ಕಷ್ಟಗೊಳಿಪುದ ನೋಡಿ
ಬಿಡಲ್ಯಾಕೆ ಭಾಗ್ಯವೇನು
ಒಡೆಯ ಕಂಭದಿ ಬಂದು ಪಿಡಿದಾದಿ ದೈತ್ಯೇಯ-
ನೊಡಲ ಬಗೆದಂಥ ಧೀರ ಬಲಸಾರ ೨
ದಾಸನೆಂದೆನ್ನಿಂದು ಪರಿಯಂತ ಪಾಲಿಸದ
ಶೇಷಾದ್ರಿ ಶಿಖರವಾಸ
ಬ್ಯಾಸತ್ತು ಬಹು ವಿಧದಿ ಬಳಲಿ ಬೆಂಡಾಗಿಹೆನು
ದೋಷವೆಣಿಸದಿರು ಲೇಶ
ಈ ಸಮಯದೊಳಗಿಂಥ ಎರವ ಮಾಡದೆ ಬೇಗ
ನೀ ಸಲಹು ನಿಗಮಭೂಷ ಹೇ ಶ್ರೀಶ ೩

೧೫೧
(ಭಗವದ್ಭಕ್ತ ಸಂಮೋಹ ಪ್ರಾರ್ಥನೆ)
ಗಜಮುಖನ ಪ್ರಪಿತಾಮಹನಹಿಮನ
ಗಜೆಯರಸನ ಪಿತನ ಪೆತ್ತನ
ವಿಜಯರಥ ಸಾರಥಿ ರಮೇಶನ ಪಾದ ಪಂಕಜವ
ಭಜಿಸಿ ಭಾರತಿವರನ ನಮಿಸುವೆ
ಅಜಭವಾದಿ ಗುರೂತ್ತಮರ ನಿಜ
ವೃಜಿನಪಂಕ ನಿವೃತ್ತಿಗೊಳಿಸುವದೆಂದು ವಂದಿಸುವೆ ೧
ಅವ್ಯವಹಿತಾಸದೃಶ ಭಕ್ತಿಯ
ಸವ್ಯಸಾಚಿ ಸಹಾಯ ಸಲಿಸಾ
ದಿವ್ಯ ಪದವಿಯ ಪಡೆವೆನೆಂದುಗತವ್ಯಳೀಕದಲಿ
ಕಾವ್ಯ ವ್ಯಾಕರಣಗಳಿಂದ ವಹಿಸಿದ
ಶ್ರಾವ್ಯ ದ್ವಿಜಗಣ ಸೇವ್ಯ ಗುರು ಲಾ-
ತವ್ಯ ಮುನಿವರರಂಘ್ರಿಕಮಲವ ನುತಿಸಿ ನಮಿಸುವೆನು ೨
ಪುಂಡರೀಕ ದಲಾಯತಾಕ್ಷನೆ
ಹಿಂಡು ದೈವದ ಗಂಡನೆಂದತಿ
ಚಂಡ ಮೈಗಳ ಖಂಡಿಸಿದ ಯತಿಮಂಡಲೇಶ್ವರನ
ಪಾಂಡ್ಯದೇಶದೊಳವತರಿಸಿದಾ
ಖಂಡಲಾತ್ಮನ ನಮಿಪೆ ಮಮ ಹೃ-
ನ್ಮಂಡಲದಿ ಪಾಲಿಸು ಸುಧಾರಸವುಂಡು ನಲಿವಂತೆ ೩
ಮೋದತೀರ್ಥ ಮಹಾಬ್ಧಿಯನು ಕಡೆ-
ದಾದಿಯಲಿ ನ್ಯಾಯಾಮೃತವ ತೆಗೆ-
ದಾದರದಿ ಸಜ್ಜನರಿಗುಣಿಸಿದ ಗಾಢಮತಿಯುತನ
ಮಾಧವನ ಗುಣತರ್ಕ ತಾಂಡವ
ವೋದಿಸುತ ಚಂದ್ರಿಕೆಯ ತೋರಿದ
ಬೋಧಕರ ಪ್ರಲ್ಹಾದಮುನಿ ಕರುಣದಲಿ ಸಲಹೆನ್ನ ೪
ಮಂಗಳಾಂಬುತರಂಗ ತುಂಗಾ
ಸಂಗಿ ಮಂತ್ರಾಲಯದಿ ನಿಂದು ಕು
ರಂಗ ವೈರಿಯ ಪೂರ್ವ ಕರುಣಾಲಿಂಗನೋತ್ಸುಕನ
ಪಂಗು ಬಧಿರಾದ್ಯಂಗ ಹೀನರ
ಪಾಂಗ ನೋಟದಿ ಪಾಲಿಸುವ ಯತಿ
ಪುಂಗವಾರ್ಜಿತ ರಾಘವೇಂದ್ರರ ನಮಿಪೆನನವರತ ೫
ಜೋಲಿಸುವ ಕಂಠದಲಿ ತುಳಸೀ
ಮಾಲೆಯನು ಕರಯುಗದಿ ವೀಣಾ
ತಾಳಗಳ ಬಾರಿಸುತ ಸರ್ವತ್ರದಲಿ ಸಂಚರಿಸಿ
ಶ್ರೀಲಲಾಮನ ಲೀಲೆಗಳಿಗನು-
ಕೂಲರಾದ ಸುರರ್ಷಿ ನಾರದ
ರಾಲಯಸಿ ತಪ್ಪುಗಳ ತಿದ್ದುವುದೆಂದು ನಮಿಸುವೆನು ೬
ಸತ್ಯಭಾಮಾಕಾಂತನಿದಿರಲಿ
ನಿತ್ಯ ನಡೆಸುವನೆಂಬ ಸೇವೆಗೆ
ಒತ್ತಿಬಹ ವಿಘ್ನಗಳ ದೂರದಿ ಕಿತ್ತು ಬಿಸುಟುವರ
ಹತ್ತು ದೆಶೆಯಲಿ ನಿಂತು ರಕ್ಷಿಪ
ಕೃತ್ತಿವಾಸ ಸುರೇಶಮುಖ ದೇ-
ವೋತ್ತುಮರ ನಾ ನಮಿಪೆ ತತ್ವದ ಭೃತ್ಯನಹುದೆಂದು ೭
ಪಾವಮಾನ ಮತೀಯ ವೈಷ್ಣವ-
ರಾವಳಿಗೆ ಶರಣೆಂಬೆ ನಿಮ್ಮ ಕೃ-
ಪಾವಲಂಬನವಿತ್ತು ಕರುಣವ ಶುದ್ಧಿಕರಿಸುತಲಿ
ದೇವ ದೇವವರೇಣ್ಯ ಭಕ್ತರ
ಕಾವ ಶೇಷಗಿರೀಂದ್ರನಾಥನ
ಸೇವಿಸುವ ಸುಖವಿತ್ತು ಸುಲಭದಿ ಸಲುಹಬೇಕೆಂದು ೮

೩೧೧
ಗಣನಾಥ ನಿನ್ನ ನೆನೆವೆ ಗುರುವೆ
ಗಣನಾಥ ನಿನ್ನ ನೆನೆವೆ ಪ.
ಪ್ರಣತಾರ್ತಿ ಭವಭಂಜನ ನಿರಂಜನ
ಗುಣ ಪಾರಾವಾರ ತ್ರಿನಯನ ಕುಮಾರ ೧
ಘನಯೊಗಸಾಧ್ಯ ಜ್ಞಾನ ವಿದ್ಯಾ
ಮಣಿಗಣಭೂಷಣ ಭೂರಿದ ೨
ಇನತೇಜ ಗಜಾನನ ಲಕ್ಷ್ಮೀನಾರಾ-
ಯಣಕಿಂಕರ ಫಣಿಪಾಲಂಕಾರ ೩

೩೧೨
ಗಣಪತಿ ಸುರಚಕ್ರವರ್ತಿ ಪ.
ಮಹಧೃತಿ ಯತಿವರಕೃತಸ್ತುತಿ
ಅತಿಶಯ ಭಕುತಿರತಿಗೆ ನೀ ಗತಿ ಅ.ಪ.
ಪ್ರಾಣನಾಥ ಲಕ್ಷ್ಮೀನಾರಾಯಣ
ಧ್ಯಾನೈಕಪರಮೂರ್ತಿ
ಪರಾರ್ಥಸ್ರ‍ಮತಿ ದೀನಾರ್ತಿನ
ಹರಣ ರವಿಶತದ್ಯುತಿ ೧

೨೦೨
ಗರುಡಧ್ವಜ ಮಾಧವತ್ವಚ್ಚರಣಾಬ್ಜಕೆ ಶರಣು
ಪರಿಭವವೆಂದಿಗು ಬಾರದ ತೆರದಲಿ ಸಲಹಿನ್ನು ಪ.
ಸರಸಿಜ ಸಂಭವ ಶಂಕರ ಸುರವರ ವಂದ್ಯ
ಮರೆಯದಿರೆಂದಿಗು ಕಿಂಪುರುಷಗಣ ವಂದ್ಯ ೧
ಅಸಿಧರ ಶಾಙ್ರ್ಞಗದಾಕರ ವರನಂದನಧಾರಿ
ಅರಿಪಕ್ಷದ ಮೂಲವ ಕತ್ತರಿಸು ಸುಧಾಕಾರಿ೨
ವರವಾಗೀಶ್ವರನೊಳ್ ಸತ್ಕರುಣಾಮೃತನಿಧಿಯ
ನಿರುಪಾಧಿಯೊಳಿರಿಸಹಿಪತಿಗಿರಿರಾಯಧ್ವರ ಸದಯ ೩

೩೫೫
ಗುರು ಮುಖ್ಯಪ್ರಾಣದರಸನೆ ನೀ ಎನ್ನ
ಕರುಣಿಸು ಕೃಪೆಯಿರಿಸು ಪ.
ಸ್ಥಿರಚರದಲಿ ನಿತ್ಯ ಪರಿಪೂರ್ಣನಾಗುತ
ಪರಮಾತ್ಮನ ಮತಕನುಸರಿಸಿ
ಧರೆಗೆ ಭಾರವಾದ ದುರುಳರ ವಧೆಗೈದ
ಮರುತಾತ್ಮಜ ಮನೋಹರ ಮೂರುತಿಯಾದ ೧
ರಾಮನಪ್ಪಣೆಯಿಂದ ಆ ಮಹಾಂಬೋಧಿಯ
ಭೀಮ ವಿಕ್ರಮನುರೆ ದಾಂಟಿ ಬಂದು
ರಾಮಣೀಯಕರವಾದ ರಾಮಮುದ್ರಿಕೆಯನ್ನು
ತಾ ಮಣಿಯುತ ಸೀತಾ ಮಾನಿನಿಗಿತ್ತ ೨
ಆ ಮಹಾಲಕ್ಷ್ಮಿಯ ನೇಮವ ಕೈಗೊಂಡು
ತಾಮಸಿಚರರ ನಿರ್ನಾಮಗೈದು
ಹೇಮಲಂಕೆಯನುರೆ ಹೋಮವಗೈಯುತ
ರಾಮನ ಪದಕೆ ಚೂಡಾಮಣಿ ತಂದಿತ್ತ ೩
ಕ್ರೂರ ಕೌರವಕುಲ ಘೋರ ಕಾನನಕೆ ಕು-
ಠಾರನಾಗುತಲಿ ಸಂಹಾರಗೈದು
ವಾರಿಜಾಕ್ಷನ ಕೃಪೆಯಿಂದ ಮಾಗಧನನ್ನು
ಚೀರಿದ ಕುಂತಿಕುಮಾರ ಮೂರ್ಲೋಕದ ೪
ಹರಿ ಸರ್ವೋತ್ತಮನೆಂದು ಧರೆಗೆ ಸಾರುತ ಬಂದು
ವರ ವೈಷ್ಣವಮತ ಸ್ಥಿರವ ಮಾಡಿ
ಧರಣಿಯೊಳಗೆ ತಾತ್ವರ್ಯನಿರ್ಣಯವೆಂಬ
ಪರಮ ಗ್ರಂಥವಗೈದ ಗುರು ಮಧ್ವಾಚಾರ್ಯನೆ ೫
ಇಂತೀ ಮೂರವತಾರವಾಂತು ದಾನವರಿಂಗೆ
ಸಂತಾಪಗೈದ ಮಹಾತುಮನೆ
ಚಿಂತಿತಾರ್ಥವನೀವ ಚಿಂತಾಮಣಿ ಎಂದು
ಸಂತತ ಭಜಿಪೆನು ಶಾಂತ ಹುನುಮಂತನೆ ೬
ಶ್ರೀ ರಾಘವ ಲಕ್ಷ್ಮೀನಾರಾಯಣನ ಪಾದ-
ಚಾರಕನಾದ ಗಂಭೀರನಿಗೆ
ನೀರಜಾಂಡದೊಳಾರು ಸಮಾನರು
ಕ್ಷಿರಸಾಗರಶಯನ ನೀನೊಬ್ಬನಲ್ಲದೆ ೭

೧೫೪
(ಶ್ರೀ ವ್ಯಾಸರಾಯರ ಪ್ರಾರ್ಥನೆ)
ಗುರು ವ್ಯಾಸರಾಯ ಗುರು ವ್ಯಾಸರಾಯ
ಶ್ರೀಹರಿಗತಿಪ್ರಿಯಗುರುವ್ಯಾಸರಾಯ ಪ.
ಶರ್ಕರ ಕ್ಷೀರವ ಕುಡಿಸುವಂದದಿ ಶುಭ
ತರ್ಕತಾಂಡವ ನ್ಯಾಯಾಮೃತವನು ಸುರಿದ ೧
ಸಾಂದ್ರ ಹೃತ್ತಾಮಸ ತಂದ್ರವೋಡಿಸುವ ಶ್ರೀ
ಚಂದ್ರಿಕಾಕರ ಕರುಣಾಂಬುಧಿ ಧೀರಾ ೨
ಕುಂಡಲ ಗಿರಿವರ ಪಾಂಡವಧಾರಾ ಬ್ರ
ಹ್ಮಾಂಡಕೋಟೀಶನ ಮಂಡಿಸಿ ನಲಿದಂಥ
ಗುರು ವ್ಯಾಸರಾಯ೩

ಗೃಹಸಮರ್ಪಣೆ
೧೭೩
ಪುರುಷಾರ್ಥದಾಯಿ ಶ್ರೀವರ ನೀ ನಿಲಯದಿ
ಸ್ಥಿರವಾಗು ಕರುಣಾನಿಧೆ
ವರದೇಶ ನಿಜಪಾದ ಸರಸೀಜ ಮಕರಂದ
ಸುರಿದು ಶಿರದಿ ನಿನ್ನ ಬಿರುದು ತೋರಿಸಿ ನಿತ್ಯ ಪ.
ಆವ ಕಾಲಕು ಸಿರಿದೇವಿಯರಸ ನೀನೆ
ಕಾವಲಾಗಿರುವಿ ಎಂದು ಭಾವಶುದ್ಧದಿ ನಿನ್ನ
ಸೇವಾರತಿಯನಿತ್ತು ಪಾವನಗೊಳಿಪ ಬಂಧು ಕಾರುಣ್ಯಸಿಂಧು
ಶ್ರೀ ವಿರಿಂಚಿ ಭವಾಹಿ ವಿಪತಿ ಸು-
ರಾವಳೀಶಯವೆಂದು ರವಿಮುಖ
ದೇವ ಋಷಿಗಣ ದೇವ್ಯ ನಿನ್ನ ಕ-
ರಾವಂಬನ ನಿತ್ಯ ಬಯಸುವೆ ೧
ನಿನ್ನ ಕಟಾಕ್ಷ ಸಂಪೂರ್ಣವಾಗಿರಲೆನ-
ಗನ್ಯರ ಭಯವಿಲ್ಲವು ಪರಮ ಸುಗು-
ಣಾರ್ಣವ ನಿನಗೆಲ್ಲವು ತಾ ಸೇರಿರುವವು
ಪನ್ನಗಾರಿ ಧ್ವಜ ಪರೇಶ ಮ-
ಹೋನ್ನತಿ ಪ್ರದ ಮೂಜಗದ್ಭವ
ನಿನ್ನ ದಾಸರದಾಸನೆಂದರಿ-
ದೆನ್ನ ಮೇಲ್ಕಡೆಗಂಣನಿರಿಸುತ ೨
ಶಂಖಾರಿಧರ ನಿಷ್ಕಳಂಕ ಜಗದ್ಭರ
ಪಂಕಜಾಲಯ ಭೂವರ ಕಿಂಕರಾಧಾರನಿ:-
ಶಂಕ ಕೃಪಾಕರ ಅಂಕಿತ ಕೊಡು ಸಾದರ ಬಲಭದ್ರ ಸೋದರ
ಶಂಕರನೆ ಶುಭಕರ ಕಮಲವನು
ಶಂಕಿಸಿದೆ ಶಿರದಲ್ಲಿ ಕಲ್ಪಿಸಿ
ಅಂಕುರಿತ ಭಯ ಬಿಡಿಸು ಸಕಲಾ-
ಶಂಕವಾರಣ ವೆಂಕಟೇಶ್ವರ ೩

೩೮೪
ಗೋಕರ್ಣೇಶಂ ಗೌರೀಶಂ ವಂದೇ ನತಜನಭಯನಾಶಂಪ.
ಪಾಕಹ ಮದನದಿವಾಕರಪ್ರಮುಖ ದಿ-
ವೌಕಸಕೃತ ಜಯಜಯಘೋಷಂಅ.ಪ.
ಕರ್ಪೂರಕ್ಷೀರಗೌರಾಂಗಂ
ಕಲ್ಯಾಣನಿಧಿಂ ನಿಸ್ಸಂಗಂ
ದರ್ಪಕದರ್ಪಹರಂ ತಮುದಾರಂ
ಸರ್ಪಫಣಾಮಣಿಹಾರಂ ಘೋರಂ೧
ಲಕ್ಷ್ಮೀನಾರಾಯಣಸಖಂ ಸುರಾ-
ಧ್ಯಕ್ಷಂ ಶಿವಂ ವಿಗತಶೋಕಂ
ದಕ್ಷಾಧ್ವರವಿಧ್ವಂಸನಚತುರಂ
ಮೋಕ್ಷಜ್ಞಾನದಂ ಸಮ್ಮೋಹಭಿದಂ೨

೪೦೪
ಗೋಕುಲಕ್ಹೋಗು ನೀ ಶೋಕವಿನಾಶಿನಿ
ಲೋಕೇಶ ಪಾರ್ವತಿ ಶ್ರೀಕರೆ ಶ್ರೀಮತಿ ಪ.
ದೇವಕೀಗರ್ಭದ ಕೇವಲೆಂಟಂಶದ
ದೇವಶೇಷಾಖ್ಯನ ದೇವಿಗೈ ದರ್ಶನ ೧
ವಸುದೇವನ ರಾಣಿ ಶಶಿಮುಖಿ ರೋಹಿಣಿ
ಬಸುರೊಳಗಿಡು ನೀ ಬಿಸರುಹಲೋಚನಿ ೨
ಸುಂದರಿ ದೇವಕೀ ಕಂದನಾಗುವೆ ಸುಮುಖಿ
ನಂದನ ನಂದಿನಿಯೆಂದೆನಿಸು ಭವಾನಿ ೩
ಜಗದಂಬಿಕೆ ಜಯೆ ಸುಗುಣೆ ವೈಷ್ಣವಿ ವಿಜಯೆ
ಜಗದೊಳು ನಿನ್ನ ಪೂಜೆ ಅಗಲದ ಗೈವರಗಜೆ೪
ಲಕುಮಿನಾರಾಯಣನ ಯುಕುತಿಯಂತಾಕ್ಷಣ
ಸುಖದೆ ಗೈದಳು ಶಿವಸಖಿ ತಾನೆಲ್ಲವ೫

೧೦೬
ಗೋಪೀಮಾನ ರಂಜನ ಶ್ರೀಪತಿ ಕರುಣಾಳು
ವ್ಯಾಪಿಸಿಕೊಂಡಿಹ ಮಾಮಕ ತಾಪವ ವೋಡಿಸು ಸುಲಭದಿ ಪ.
ಸೌಂದರ್ಯಾಮೃತ ಸಾರಾನಂದಾತ್ಮಕ ದೇಹ
ವೃಂದಾರಕ ಗಣ ನಯನಾ
ನಂದನ ನಿಖಿಳಾತ್ಮಾತ್ರಯ ನಿತ್ಯಾವ್ಯಯ
ಸತ್ಯಾವರ ಭಕ್ತಾಸ್ಪದ ಸುಮುಖ ೧
ಸುಭಗಾಂಬುದನಿಭ ಗೋವರ
ಋಭುಗಣನುತ ಚರಣಾ
ಇಭರಾಟ್ರ‍ಕತ ಕರುಣಾಖಿಳ ವಿಭವಾಶ್ರಯ ತರುಣಿಗಣ
ಶುಭ ಸಂಚಯ ಕರುಣಾ ನಿಜಭರಣಾದೃತ ಕರಣಾ ೨
ಶೃಂಗಾರ ವಿಲಾಸಿನಿಜಾಪಾಂಗಾಹೃತ ಗೋಪಕತ
ಸ್ವಂಗೀಕೃತ ಪ್ರೇಮಭವಾಲಿಂಗಿತ ಶುಭಮೂರ್ತಿ
ಅಂಗಜಜನಕಾದ್ಭುತ ಸಾರಂಗ ಮಮತ ಶೇಷಗಿರಿ
ಶೃಂಗಾಧಿಷ್ಟಿತ ಕರುಣಾಪಾಂಗವ ದಯಮಾಡೆನುತಲಿ ೩

೨೬
(ಕಾರ್ತೀಕ ದಾಮೋದರನನ್ನು ನೆನೆದು)
ಗೋವಿಂದ ಪಾಲಯ ಗೋಪಾಲ ಬಾಲ
ಗೋಪಗಣೇಡಿತಗುಣ ವರುಣಾಲಯ ಪ.
ದೀನ ದಯಾಪರ ದಿತಿಜವಿದಾರ
ನಾನಾವತಾರ ನಂಬುವರಿಗಾಧಾರ
ಏನು ತಪ್ಪಿದ್ದರು ಕ್ಷಮಿಸು ರಮಾವರ ೧
ಭೂಧರ ಬಲಭದ್ರ ಸೋದರವೇಷ
ಆದರದಲಿ ನಿನ್ನ ಪೊಗಳುವೆ ಶ್ರೀಶ
ಶ್ರೀದ ಕಾರ್ತೀಕ ದಾಮೋದರ ಹಾಸ ೨
ಪರಮ ಪಾವನ ಶೇಷಗಿರಿವರ ಮೂರ್ತೆ
ನೀನರಿಯೆಯಾ ದಾಸರ ಮನದಿರವಾರ್ತೆ
ಪರಿಹರಿಸಾರ್ತಿಯ ಪದ್ಮಜನುತಕೀರ್ತೆ ೩

೩೧೩
ಗೌರಿನಂದನ ಗಜವಂದನ ಗೌರಿನಂದನ
ಶೌರಿ ಕರುಣಾಭರಣ ಸೂರಿ ವಿಘ್ನಹರಣ ಪ.
ಯೋಗಿವರ್ಯ ಗುರುವೆ ಬಾಗಿ ಬಿನ್ನವಿಸುವೆ
ಭಾಗವತರ ಸಂಗವಾಗಲಂತರಂಗ ೧
ಲೋಕೈಕಶರಣ್ಯ ಲೇಖಕಾಗ್ರಗಣ್ಯ
ಏಕದಂತ ಶಾಂತ ಶ್ರೀಕರ ನಿಶ್ಚಿಂತ ೨
ಅನಘ ಲಕ್ಷ್ಮೀನಾರಾಯಣ ಪದಾಬ್ಜಭ್ರಮರ
ಪ್ರಣತಕಲ್ಪಭೂಜ ಪಾಹಿ ವಿಘ್ನರಾಜ ೩

೪೯೪
ಗೌರೀಕರಪಂಜರಕೀರ ಜೋ ಜೋ
ಶೌರಿ ದಯಾರಸಪೂರನೆ ಜೋ ಜೋ
ಧೀರ ಮುಕ್ಕಣ್ಣ ಕುಮಾರನೆ ಜೋ ಜೋ
ದಾರಿದ್ರ್ಯ ದುಃಖ ಪ್ರಭಂಜನ ಜೋ ಜೋ ೧
ಸಾವಿರನಯನ ತುರಂಗನೆ ಜೋ ಜೋ
ದೇವರಾಜಸಂಭಾವಿತ ಜೋ ಜೋ
ತಾವರೆನಯನ ಸನ್ಮೋಹನ ಜೋ ಜೋ
ಸೇವಕವಿಬುಧಸಂಜೀವನ ಜೋ ಜೋ ೨
ಪೃಥ್ವಿಯೊಳ್ವಾವಂಜೆ ಕ್ಷೇತ್ರಾಧಿವಾಸ
ಕರ್ತ ಲಕ್ಷ್ಮೀನಾರಾಯಣಪಾದ ದಾಸ
ಭೃತ್ಯವರ್ಗವ ಕಾವ ಭವಹರ ಜೋ ಜೋ
ಕಾರ್ತಿಕೇಯ ಕೃತಕೃತ್ಯನೆ ಜೋ ಜೋ ೩

೧೩೪
(ಮಂಗಳೂರು ಉಮಾಮಹೇಶ್ವರ ದೇವರು)
ಚಂದ್ರಚೂಡನಿವನ್ಯಾರೆ ಹೇಳಮ್ಮ
ಇಂದ್ರಾದಿವರ ಮನೋ ಮಂದಿರ ನಮ್ಮ ಪ.
ಭಾಲಲೋಚನ ಪಂಚತತ್ವ ವಿವೇಚನ
ನೀಲಕಂಧರನಿವನ್ಯಾರೆ ಹೇಳಮ್ಮ
ಸಾಲಾಗಿ ನಿಲುವ ದಿಕ್ಪಾಲ ಗಣದಿ ಕ-
ಟ್ಟಾಳುಗಳಿರವ ಸುಶೀಲ ಕಾಣಮ್ಮ ೧
ಭಸ್ಮೋದ್ಧೂಳಿತ ವಿಗ್ರಹ ವಿಶದ ಮಂ-
ದಸ್ಮಿತಮುಖನಿವನ್ಯಾರೆ ಹೇಳಮ್ಮ
ವಿಸ್ಮರಣೆಗಳೆಂದಿಗೀಯದೆ ಪಾಲಿಪ
ಅಸ್ಮದ್ಗುರುವಂಬಿಕೇಶ ಕಾಣಮ್ಮ ೨
ಉಮ್ಮೆಯನೊಡಗೊಂಡು ವುಛ್ರಯದೋರುತ
ನಮ್ಮಲ್ಲಿ ದಯವಾದನ್ಯಾರೆ ಹೇಳಮ್ಮ
ಬೊಮ್ಮನ ಪೆತ್ತ ಭಕ್ತಾಧೀನ ಶೇಷಾದ್ರಿ
ತಿಮ್ಮಪ್ಪರಾಜನ ಮೊಮ್ಮಕಾಣಮ್ಮ ೩

೬೨
(ಉಡುಪಿಯ ಅನಂತೇಶ್ವರ)
ಚಿಂತಾಂಬುಧಿ ನಿ:ಶೇಷ ವಿಶೇಷಾನಂತೇಶ್ವರ ಕರುಣಾಂಬುಧಿಯೇ
ಕಂತುಜನಕ ನೀನರಿಯೆಂದು
ಮನದಿರವೆಂತಿಹುದೆನಗೆಂಬುದ ದೊರೆಯೆ ಪ.
ಸಂತತ ಸಂಸ್ರ‍ಕತಿ ಚಕ್ರದಿ ತಿರುಗುವ ಭ್ರಾಂತ ಜನರಿಗೀ ಜಗದಲ್ಲಿ
ಸಂತತಿ ಸಂಪತ್ಪ್ರಮುಖ ಸುಖಾಶಾ ತಂತುಬಂಧ ಬಿಟ್ಟಿಹುದೆಲ್ಲಿ
ಅಂತರಂಗ ಭಕ್ತರ ತಾನಾಗಿಯೆ ಸಂತೈಸುವ ಮಹ ಬಿರುದೆಲ್ಲಿ
ಎಂತುಸುರಲಿ ಶ್ರೀಕಾಂತ
ಮನೋಗತವೆಂತಿಹುದೆಂಬುದ ನೀ ಬಲ್ಲಿ ೧
ಪಾರವೀಯ ಪಾರಾಶರ ಮುಖರುರಮಾರಮಣನೆ
ನಿನ್ನೊಲುಮೆಯಲೀ
ಭಾರಿ ಮನೋರಥ ವಾರಿಧಿಯನು
ಪರಿಪೂರಿಸಿಕೊಂಡಿಹ ಕಥೆಗಳನು
ನಾರದಾದಿ ಸನ್ಮುನಿಗಳು ಮನಸಿಗೆ
ತೋರಿದಂತೆ ಪೇಳಿರುವುದನು
ಪಾರವೆಂದು ನಂಬುವ ತೆರವೆನ್ನಲಿ
ತೋರು ತಡೆಯದಿರು ತತ್ವವನು೨
ಚಂದ್ರಮೌಳಿಯನು ತವಕದವನರುಹ
ಸಾಂದ್ರಸುಧಾಕರ ಸೇಚನದಿ
ತಂದ್ರ ಬಿಡಿಸಿ ತಂಪೇರಿಸಿ ಪೊರೆದ ಸುಖ
ಸಾಂದ್ರ ನಿನ್ನ ಕರುಣಾರಸದಿ
ಇಂದ್ರಾದ್ಯಮರ ಮುನೀಂದ್ರ ವಂದ್ಯ
ಸಕಲೇಂದ್ರಿಯ ತೃಪ್ತಿಯಬಡಿಸುತಲಿ
ಚಂದ್ರಾನುಜೆಯರಸನೆ ಪಾಲಿಸು ಭುಜಗೇಂದ್ರ
ಧರೇಶ ನೀ ತ್ವರಿತದಲಿ ೩

೭೯
(ಚಿಂತಾಮಣಿಯ ನರಸಿಂಹದೇವರು)
ಚಿಂತಾಮಣಿ ನರಸಿಂಹನ ನೆನೆದರೆ
ಚಿಂತಿತ ಫಲವೀವನು
ಭ್ರಾಂತ ಬುದ್ಧಿಯೊಳನ್ಯ ದೈವವ ಭಜಿಸದೆ
ಕಂತು ಜನಕ ಲಕ್ಷ್ಮೀಕಾಂತನ ನೆರೆನಂಬು ಪ.
ಜಲಜ ಸಂಭವ ಶಂಭು ಬಲವೈರಿ ಮುಖದೇವ-
ರ್ಕಳನೆಲ್ಲ ಸುಲಭದಿ ಸಲಹುವ ದೊರೆಯು
ಕಲಿಕೃತ ಮಲವನ್ನು ಕಳವನು ನಿರತ ಬೆಂ
ಬಲವಾಗಿ ದುರಿತಾಳಿಗಳ ಓಡಿಸುವನು
ಕಳೆಯ ಪುರದಲಿ ನೆಲೆಯದೋರುವ
ಚೆಲುವ ಲಕ್ಷ್ಮೀನಿಲಯ ಮೂರುತಿ
ಯೋಗಿನಿಗಣ ಭಯಕ್ಕಾಗಿ ಸಂಸ್ತುತಿವೇದ ೧
ನಾಗಭೂಷಣ ನಮ್ಮುದಾಗಿ ರಕ್ಷಿಸೀದ
ವಾಗೀಶ ಪದಯೋಗ್ಯನಾಗಿ ಭೂಮಿಗೆ ಬಂದ
ಯೋಗೀಶ ವಾದಿರಾಜರಿಗೊಲಿದನಾ
ಬೇಗದಲಿ ಭಕ್ತಾಳಿ ರಕ್ಷಣ-
ರಾಗಿಯೆನಿಪ ವಿರಾಗಿ ಹೃದ್ಗತ ೨
ಶಂಖಾರಿ ಪದ್ಮ ಗದಾಧರ ನಿಜ ಜನ
ಶಂಕಾನಿವಾರ ಶಂಕರ ವರದಾ
ಲಿಂಗ ಸುಲಾಲಿತ ಪ್ರಲ್ಹಾದ ರಮಾಕುಚ
ಕುಂಕುಮಲಿಪ್ತಾ ವಕ್ಷೋವೀವರ
ಶಂಕಿಸದೆ ಸಕಲಾರ್ಥವೀವ ಮೃ-
ಗಾಂಕ ಮಾಧವ ವೆಂಕಟೇಶ್ವರ ೩

೬೧
(ಅನಂತಪದ್ಮನಾಭ ಪ್ರಾರ್ಥನೆ)

ಚಿಂತಿತದಾಯಿ ನಿರಂತರ ಸುಖದಾನಂತಪದ್ಮನಾಭಾ
ಚಿಂತಾಮಣಿ ಸುರಧೇನು ಕಲ್ಪತರುವಂತೆ
ಸಕಲಸುಜನಾಂತರ ಫಲದಾ ಪ.
ಇಂದಿರೇಶ ನಿನಗೊಂದಿಪೆ ದಯವಾಗೆಂದು ಬೇಡಿಕೊಳುವೆ
ಯಾಕೆಂದರೆ ಪೂರ್ಣಾ
ನಂದನೀನೊಲಿಯಲು ಎಂದಿಗು ಕುಂದನು ಹೊಂದದಲಿರುವೆ
ಸುಂದರ ವಿಗ್ರಹ ಸುಲಭದಿ ಸಕಲಾನಂದ ವಾರಿಧಿಯೊಳಿಳಿವೆ ಭವ
ಬಂಧನ ಬಿಡಿಸುವ ದೊರೆ ನಿನ್ನರಿಯದೆ ಮಂದ
ಬುದ್ಧಿಯಿಂದಿರುವುದು ಥರವೆ೧
ನೀಲಾಳಕ ಪರಿಶೋಭಿತ ಮುಖಕಮಲಾಲಿಸು ಬಿನ್ನಪವÀ
ಲೀಲಾಮೃತರಸ ಕುಡಿಸುತ ಕರುಣದಿ ಪಾಲಿಸು ವರಸುಖವಾ
ಬಾಲಭಾವದಿ ಸುಶೀಲೆಯು ನಂಬಿದ ಮೇಲೆ ಮಹೋನ್ನತ
ಪದದೊಳಗಿರಿಸಿದ
ಶ್ರೀಲೋಲನೆ ಕಮಲಾಲಯೆ ಸಹಿತ ಮಮಾಲಯದೊಳಗಿರು
ಚಾಲಿತ ದುರಿತ ೨
ಹೆಂಡತಿ ಜನಿಸಿದ ಮನೆಯೊಳಗಿರುವುದೆ ಪುಂಡರೀಕನಾಥಾ
ಪಂಡಿತರುಗಳಿದ ಕಂಡರೆ ನಗರೆ ಬ್ರಹ್ಮಾಂಡಕೋಟಿಭಾಸಾ
ಅಂಡಲೆಯದೆ ಹೃನ್ಮಂಡಲದೊಳು ಶುಭಕುಂಡಲ
ರಮೆಯೊಡಗೊಂಡು ಬೇಗದಲಿ
ಮಂಡಿಸು ಮೂಜಗ ಗಂಡನಾದ ಮಾರ್ತಾಂಡ ಕೋಟಿ
ನಿಭ ಕುಂಡಲಿಗಿರಿಗ ೩

೧೬
ಚಿಂತೆಯಾತಕೊ ಮಾನವಾ ಭಜಿಸು ಶ್ರೀ-
ಕಾಂತಾಖ್ಯ ಸುರಕಾಮಧೇನುವಾ
ಅಂತಪಾರಗಳಿಲ್ಲದಾಸೆ ಕಡಲೊಳು ಬಿದ್ದು
ಭ್ರಾಂತಿಗೊಳಿಸದೆ ಮನವ ಬಳಲಿಸದಿರು ತನುವ ಪ.
ಸಂಸಾರವೆಂಬುವುದು ಸುಖ ದುಃಖ ಮಿಶ್ರಿತವು
ಕಂಸಾರಿವಶದೊಳಿಹವು
ಮಾಂಸ ಮಜ್ಜಾಸ್ತಿ ಶೋಣಿತ ಪೂಯ ಕೇಶ ಕ್ರಿಮಿ
ದಂಶ ಪೂರಿತ ದೇಹವು
ಹಿಂಸೆಯಾಗುವ ಮೊದಲೇ ಹರಿಕೃಪಾಸುಧೆಯ ಲೇ-
ಶಾಂಶ ಸಂಪಾದಿಸಿ ನಿಜಾಂಶ ಸುಖವನು ಸೇರು ೧
ಹಿಂದಿನನುಭವ ಗ್ರಹಿಸು ಹರಿಯ ಮಹಿಮೆಯ ಸ್ಮರಿಸು
ಮಂದ ಭಾವನೆ ವಾರಿಸು
ಮುಂದಾಹದೇನೆಂದು ಕುಂದದಿರು ಧೈರ್ಯದಿಂ-
ದಿಂದಿರೇಶನ ಪೂಜಿಸು
ತಂದೆ ತಾಯಿಗಳು ತಮ್ಮ ಕಂದನನು ಪೊರೆವ ಪರಿ-
ಯಿಂದ ಸಲಹೆಂದು ಗೋವಿಂದನಲಿ ಮೊರೆಯಿರಿಸು ೨
ದೃಢ ಭಕುತಿಯಿಂದ ತನ್ನಡಿಯ ಸೇರಿದ ಜನರ
ಬಿಡನು ಭಕ್ತಾರ್ತಿಹರನು
ಪುಡಿಮಾಳ್ಪದುರಿತಗಳ ಪೂರ್ವದಲಿ ಪೊರೆದಂತೆ
ಕೊಡವನಖಿಳಾರ್ಥಗಳನು
ಮೃಡವಂದ್ಯ ಶೇಷಾದ್ರಿ ಒಡೆಯನಿರಲ್ಯಾಕೆ ಕಂ-
ಗೆಡುವಿ ಎಂದಿಗು ನಿನ್ನ ಕಡೆ ಹಾಯಿಸುವ ಹರಿಯು ೩

೧೪೧
(ಚಿತ್ರಾಪುರದ ದುರ್ಗಾ)
ಚಿತ್ರಾಪುರ ನಾಯಕಿ ಪಾಲಿಸು ನಮ್ಮ
ಗೋತ್ರ ವೃದ್ಧಿದಾಯಕಿ
ಭ್ರಾತ್ರವ್ಯ ಭಯದಿಂದ ಭಜಿಸಿದ ವಿಧಿಯ
ಸ್ತೋತ್ರಕೊಲಿದ ಮೊದಗಾತ್ರದೇವನ ರಾಣಿ ಪ.
ಸರ್ವಮಂಗಲೆ ನಿನ್ನನು ಕಾಣಲು ಕಷ್ಟ
ಪರ್ವತ ಪುಡಿಯಾದುದು
ಶರ್ವ ಸುರೇಂದ್ರಾದಿ ಗೀರ್ವಾಣವಂದ್ಯೆ ನೀ
ನಿರ್ವಹಿಸುವುದೆನ್ನ ಸರ್ವಕಾರ್ಯಗಳನ್ನು ೧
ಕ್ಷುದ್ರರ ಮೋಹಿಸಲು ಹರಿಯು ನಿದ್ರಾ
ಮುದ್ರೆಯ ಧರಿಸಿರಲು
ರೌದ್ರ ರಕ್ಕಸ ಮಧುಕೈಟಭರನು ಕರು-
ಣಾದ್ರ್ರ ಹೃದಯದಿಂದ ಕೊಲಿಸಿದ ಪತಿಯಿಂದ ೨
ಮಹಿಷಮರ್ದಿನಿ ನಿನ್ನಯ ಪಾದವ ನಂಬಿ
ವಹಿಸಿದೆ ಸಕಲವನ್ನೂ
ಸಹಿಸದ ಶತ್ರು ಪುಂಜಗಳನ್ನು ತ್ವರಿತದಿ
ದಹಿಸು ದಾಸನೆಂದು ಗ್ರಹಿಸೆನ್ನ ಪಾಲಿಸು ೩
ಚಂಡಮುಂಡರ ಶಿರವ ಕತ್ತರಿಸುತ
ಚಂಡನಾಡಿದ ಭರವ
ಕಂಡು ಮನಕೆ ರೋಷಗೊಂಡು ದೈತ್ಯರ ರಕ್ತ
ಹಿಂಡಿ ದೇಹವ ತುಂಡು ತುಂಡು ಮಾಡಿದ ಧೀರೆ ೪
ತಪ್ಪುಗಳೆಣಿಸದಿರೇ ಶೇಷಾದ್ರೀಶ-
ನೊಪ್ಪಿದ ಗುರುವ ತೋರೆ
ಅಪ್ಪಿಳಿಸರಿಗಳ ಚಿಪ್ಪನುಳಿಯದಂತೆ
ತಪ್ಪಿಸು ಭಯವ ತಿಮ್ಮಪ್ಪನ ರಾಜನ ನೀರೆ ೫

೧೧೭
ಜಗಜೀವನ ಜೀಯ ಜಯಶೀಲ ಶುಭಕಾಯ
ಸುಗುಣಾಬ್ಧಿಯತಿ ರಾಯಾ
ಖಗಪತಿ ಫಣಿರಾಜ ನಗಚಾಪ ಸುರನಾಥಾದಿಗಳು
ನಿನ್ನಯ ಪಾದಯುಗಳ ನಂಬಿಹರಯ್ಯ ಪ.
ನೀನೆಲ್ಲಿಯಿರುವೆಯೊ ತಾನಲ್ಲಿ ಬರುವನು ಶ್ರೀನಿವಾಸನು ದಯದಿ
ಯೀ ನುಡಿ ನಿಜವೆಂದು ಧ್ಯಾನಿಸುವದಕನುಮಾನವಿಲ್ಲವು ಜಗದಿ
ಭಾನುತನುಜನ ತ್ರೇತೆಯೊಳು ಪರಮಾನುರಾಗದಿ ಪೊರೆದವನು ಕ
ರ್ಣಾನುಜನ ದ್ವಾಪರದಿ ಸೇರಲಿಕೇನುಫಲ ಪವಮಾನ ಪೇಳೆಲೊ ೧
ಇದರಿಂದ ನಿನ್ನಯ ಪದ ಕಮಲವ ಸೇರಿ ಬದುಕುವೆನೆಂಬಾಸೆಯಾ
ಹೃದಯದಿ ದೃಢವಾಗಿ ವಹಿಸಿರುವೆನು ಬೇಗ ಒದಗಿ ರಕ್ಷಿಸು ಭಾಷೆಯ
ಪದುಮಜಾಲಯೆ ರಮಣ ಕರುಣಾಂಬುಧಿ
ಹರಿಯು ಕೃಪೆ ಮಾಡುವಂದದಿ
ವಿಧಿಸು ವಿಷ್ಣುಪದಾಬ್ಜರತಿ ಸುರನದಿಯು
ಜಲನಿಧಿ ಸೇರುವಂದದಿ ೨
ಮಂದಮತಿಯ ಮತದಿಂದ ಸಂಗರದೊಳಗಿಂದ್ರಾರಿತವಕ-
ದಿಂದಾ ಮಹಾಸ್ತ್ರವ ಬಂಧಿಸೆ ಬೇಗದಿಂದಾ ಆ ಲಂಕೆಯಿಂದಾ
ಒಂದೇ ಹಾರಿಕೆಯಿಂದಾಲೌಷಧಿ ತಂದು ಹರಿಗಳ ಕಾಯ್ದ ಪೂರ್ಣ-
ನಂದ ರಾಮಾವತಾರಿ ಶೇಷಗಿರೀಂದ್ರ ಕರುಣವ ಸೂರೆಗೊಂಡಿಹ ೩

೩೨೯
ಜಗವು ನಿನ್ನಧೀನ ಖಗಪತಿವಾಹನ
ನಿಗಮ ಗೋಚರ ಕೃಷ್ಣ ನಿತ್ಯತೃಪ್ತ ಮೋಹನ ಪ.
ಇಂದ್ರಿಯ ಪ್ರೇರಕ ಇಂದಿರೆ ನಾಯಕ
ಸಿಂಧುಶಯನ ಸದಾನಂದ ಸುಖಪ್ರದ ೧
ಜೀವವಿಲಕ್ಷಣ ಜೀವಸಂಪ್ರೇಕ್ಷಣ
ಕೇವಲ ನಿರ್ಗುಣ ಕೇಶಿನಿಷೂದನ೨
ವಾಯುಜನಕ ಯದುರಾಯ ರುಕ್ಮಿಣಿ ಸಖ
ಪ್ರಿಯ ಶ್ರೀ ಲಕ್ಷುಮಿನಾರಾಯಣ ಪಾವನ ೩

೪೦೫
ಜನನಿ ರುದ್ರಾಣಿ ರಕ್ಷಿಸು ಎನ್ನ
ಜಗದೀಶನ ರಾಣಿ ಪ.
ವನಜಭವಸುರಮುನಿಕುಲಾರ್ಚಿತೆ
ಕನಕವರ್ಣಶರೀರೆ ಕಮಲಾ-
ನನೆ ಕರುಣಾಸಾಗರೆ ನಮಜ್ಜನ-
ಮನಮುದಾಕರೆ ಮಾನಿತೋದ್ಧರೆ ಅ.ಪ.
ಆದಿಕೃತಾಯುಗದಿ ಪ್ರತಿಷ್ಠಿತ-
ಳಾದೆ ಧರಾತಳದಿ
ಆದಿತೇಯರ ಬಾಧಿಸುವ ದಿತಿ-
ಜಾಧಮರ ಭೇದಿಸಿದೆ ಸಜ್ಜನ-
ರಾದವರ ಮನ್ನಿಸಿದೆ ತ್ರೈಜಗ-
ದಾದಿಮಾಯೆ ವಿನೋದರೂಪಿಣಿ ೧
ಖಂಡ ಪರಶುಪ್ರೀತೆ ನಿಖಿಲಬ್ರ-
ಹ್ಮಾಂಡೋದರಭರಿತೆ
ಚಂಡಮುಂಡವೇತಂಡದಳನೋ-
ದ್ದಂಡಸಿಂಹೆ ಅಖಂಡಲಾರ್ಚಿತೆ
ಪಾಂಡುತನುಜ ಕೋದಂಡ ವಿತರಣೆ
ಚಂಡಿಕೇ ಕರದಂಡಲೋಚನಿ೨
ಸಿಂಧೂರ ಸಮಯಾನೆ ಸರಸ ಗುಣ-
ವೃಂದೆ ಕೋಕಿಲಗಾನೆ
ಸುಂದರಾಂಗಿ ಮೃಗೇಂದ್ರವಾಹಿನಿ
ಚಂದ್ರಚೂಡಮನೋಜ್ಞೆ ಸತತಾ-
ನಂದಪೂರ್ಣೆ ಮುನೀಂದ್ರನುತೆ ಸುಮ-
ಗಂಧಿ ಗೌರಿ ಶಿವೇ ಭವಾನಿ ೩
ಲಂಬೋದರಮಾತೆ ಲಲಿತ ಜಗ-
ದಂಬಿಕೆ ಗಿರಿಜಾತೆ
ಕಂಬುಕಂಠಿ ಕಾದಂಬನೀಕು-
ರುಂಬಜಿತಧಮ್ಮಿಲ್ಲೆ ತವ ಪಾ-
ದಾಂಬುಜವ ನಾ ನಂಬಿದೆನು ಎನ-
ಗಿಂಬು ಪಾಲಿಸೆ ಶುಂಭಮರ್ದಿನಿ ೪
ಘನವೇಣುಪುರವಾಸೆ ಸರ್ವಾರ್ಥದಾ-
ಯಿನಿ ತ್ರೈಜಗದೀಶೆ
ಸನಕನುತೆ ಶ್ರೀಲಕ್ಷುಮಿನಾರಾ-
ಯಣಭಗಿನಿ ಶ್ರೀಮಹಿಷಮರ್ದಿನಿ
ಮನಮಥಾಮಿತರೂಪೆ ಕಾತ್ಯಾ-
ಯಿನಿ ನಿರಾಮಯೆ ಮಂಜುಭಾಷಿಣಿ ೫

೫೦೦
ಜನನೀ ತ್ರಿಜಗತಿ ಜನಾರ್ದನೀ ಜನನೀ
ಜಯತು ಶ್ರೀಪದ್ಮಾವತೀ ಪ.
ಗುಣಗಣಾರ್ಣವೆ ವಿಶ್ವಪೂಜಿತ
ಜನನಮರಣವಿದೂರೆ ಪದ್ಮಾಸನೆ
ಸನಾಥೆ ಸದಾ ಸುಮಂಗಲೆ
ಘನಗಗನಭೂಪಾಲನಂದಿನಿ ಅ.ಪ.
ಶ್ರೀನಿವಾಸನ ರಾಣಿ ಸರ್ವಾರ್ಥ ನಿ-
ದಾನಾಂಬುಜಪಾಣಿ
ಭಾನುಕೋಟಿಸಮಾನ ತೇಜೆ ಸ-
ದಾನುರಾಗಪ್ರದಾನೆ ವಿಬುಧ-
ಶ್ರೇಣಿನುತೆ ಮಹದಾದಿಮಾಯಾ-
ಮಾನಿ ಮಾಧವಮನವಿಲಾಸಿನಿ ೧
ಸುಂದರಿ ಸುಮನೋಹರಿ ಸುಜ್ಞಾನಾ-
ನಂದೆ ಸಿಂಧುಕುವರಿ
ಚಂದ್ರವದನೆ ಚರಾಚರಾತ್ಮಕಿ
ವಂದನೀಯೆ ಪರೇಶಪರಮಾ-
ನಂದರೂಪೆ ಸನತ್ಸುಜಾತ ಸ-
ನಂದನಾದಿಮುನೀಂದ್ರವಂದಿತೆ ೨
ಅಂಬೆ ಶ್ರೀಹರಿಪ್ರೀತೆ
ಶಂಭುಸಂಭಾವಿತೆ ತ್ರಿಲೋಕಾ-
ರಂಭಸೂತ್ರೆ ಪವಿತ್ರೆ ವಿಶ್ವಕು-
ಟುಂಬೆ ಕಮಲಯನೇತ್ರೆ ಸಾಧ್ವೀಕ-
ದಂಬಮಸ್ತಕಮಣಿಪ್ರಭಾಶಿನಿ ೩
ಪದ್ಮ ಸರೋವಾಸಿನೀ ಪಾವನಹೃ
ತ್ಪದ್ಮನಿತ್ಯಭಾಸಿನಿ
ಪದ್ಮನವಕ್ರೀಡಾವಿಲಾಸಿನಿ ಮ-
ಹನ್ಮನೋಧ್ಯಾನಾಧಿರೂಢೆ ಸು-
ಪದ್ಮಹಸ್ತೆ ನಮಸ್ತೆ ಪಾವನೆ
ಪದ್ಮನಾಭನರಮಣಿ ಕರುಣಿ ೪
ವರಲಕ್ಷ್ಮೀವಾರಾಯಣಿ ಕಲ್ಯಾಣಿ ಶ್ರೀ-
ಕರೆ ಕಾಳಾಹಿವೇಣಿ
ಧರೆಯೊಳುತ್ತಮ ಕಾರ್ಕಳದಿ ಸು-
ಸ್ಥಿರನಿವಸವ ಗೈದೆ ಕರುಣಾ-
ಶರಧಿ ಭಕ್ತರ ಪ್ರಾರ್ಥನೆಯ ಸ್ವೀ-
ಕರಿಸಿ ಪೊರೆವಿಷ್ಟಾರ್ಥದಾಯಿನಿ೫

೨೯೨
ಜಯ ಕಮಲಾಲಯ ರಮಣ ಜಯಪಾದಾಶ್ರಿತಭರಣ
ಜಯಪೂರ್ಣಾಮೃತ ಕರುಣ ಜಯರತ್ನಾಭರಣ ಪ.
ನಳಿನನಾಭನು ಪದ್ಮಲಲನೆಯರೊಡಗೂಡಿ
ನಲಿವ ಕಾಲದೊಳೊಂದ ನುಡಿದ ಗೋವಿಂದ
ಕಲಿಯೊಳಗವತಾರಗೊಳೆನೆಂದ ಮೊದಲಾಗಿ
ಚೆಲುವೆ ದಾಸರಿಗೆನ್ನ ನೆಲೆ ತೋರ್ಪದೆಂದು ೧
ಎಂದ ಮಾತನು ಕೇಳಿ ಇಂದಿರೆ ತೋಷವ ತಾಳಿ
ಮಂದಹಾಸದಿ ಪೇಳ್ದಳೊಂದುಪಾಯವನು
ಹಿಂದೆ ಲಂಕಾಪುರದಿ ನೊಂದ ವೇದಾವತಿಯ
ತಂದು ಲಗ್ನವ ಗಯ್ಯಲೆಂದು ಪೋಗುವುದು ೨
ಹೀಗಾದರವತಾರವಾಗದ ಮರ್ಮವು ಸತ್ಯ
ಸಾಗುವುದಖಿಳಾರ್ಥ ಭೋಗವ ನೀಡುವುದು
ಈಗ ಮುನಿವ ನೆವದಿ ಸಾಗಿ ಕೊಲ್ಲಾಪುರದಿ
ನಾಗಶಯನನೆ ನಿನ್ನ ನೆಲೆಯ ನಂಬಿರುವೆ ೩
ವಿಕಸಿತ ಪದ್ಮಾನನೆಯ ಯುಕುತಿಯ ಮಾತಿಗೆ ಮೆಚ್ಚಿ
ಸಕಲಾವತಾರ ಸಂಭೃತ ಶಕ್ತಿ ಹೆಚ್ಚಿ
ಭಕುತ ವತ್ಸಲ ಭೂವರಾಹ ಮೂರ್ತಿಯ ಕಂಡು
ಬಕುಳ ದೇವಿಯ ಸಹಾಯವನೆ ಕೈಗೊಂಡು ೪
ರಮಾದೇವಿಯ ಕರಸಿ ಬ್ರಹ್ಮಾದಿಗಳ ಬೆರಸಿ
ಬ್ರಹ್ಮ ಘೋಷವ ಬೆಳೆಸಿ ಬಹು ಸಂತೋಷಗೊಳಿಸಿ
ಅಮರ ಸಭೆಯಲಿ ಭರ್ಮಪೀಠದಿ ಕುಳಿತ
ನಿರ್ಮಲಾತ್ಮನ ನೋಡಿ ನಗುತೆಂದಳೊಧುವು ೫
ಶುದ್ಧ ಪೂರ್ಣಾನಂದ ಶುಭಗುಣ ಗಣ ಸಾಂದ್ರ
ಮುದ್ದು ಮುಖಾಂಬುಜವ ತೋರೊ ಗೋವಿಂದ
ಮುದ್ದೆ ಕಸ್ತೂರಿ ಗಂಧಾ ಮೃಗಮದಾದಿಗಳಿಂದ
ಮರ್ದಿಸೀದರಶಿನವ ಕೊಳ್ಳೊ ಮುಕುಂದ ೬
ಹೂವ ತರುವೆನೆಂದು ಭಾಮೆಯರೊಡಗೊಂಡು
ನಾವಂದು ವನದಲ್ಲಿ ನಿಂತಿರುವಲ್ಲಿ
ಕಾವಿದಟ್ಟಿಯನುಟ್ಟು ಕುದುರೆ ಮೇಲಳವಟ್ಟು
ಕೋವಿದ ಬಂದ್ಯಲ್ಲಿ ಕೋಪವ್ಯಾಕಿಲ್ಲಿ ೭
ಮಾನಸವಾಗ ವಿಷಯದ ಮಾತುಗಳಾಡಿದ ಬಗೆಯ
ನೀನಿಂದ ಮರೆತೆಯಾ ನಿನ್ನ ಸಂಸ್ಥಿತಿಯ
ನಾನಾ ಚಿತ್ರದ ಗತಿಯ ನಿಜ ತುರಂಗದ ಗತಿಯ
ಹೀನವಾದರೆ ಹೀಗೆ ತಾಳುವರೆ ಖತಿಯ ೮
ಹಳತಾದದೊಂದಶ್ವ ಕಳದ ಚಿಂತೆಯ ತ್ಯಜಿಸು
ಪೊಳೆವ ಸಾಸಿರ ಸಂಖ್ಯಗಳಲಿ ಕಣ್ಣಿರಿಸು
ಬಳಲಿಸಿದವಳೆಂಬೊ ಛಲವತಾರದೆ ಮನಕೆ
ನಲಿನಾಕ್ಷ ಮುಖವೆತ್ತಿ ತೋರೊ ಮಜ್ಜನಕೆ ೯
ಹದಿನಾರು ಸಾವಿರ ಚದುರೆಯರನು ರಮಿಸಿ
ಮುದುಕನಾದರು ನಿನ್ನ ಮೂರ್ತಿ ಸಾಕೆನಗೆ
ಮದನಜನಕ ನಿನ್ನ ಮಹಾತ್ಮ್ಯಯನು ಬಲ್ಲೆ
ಪದ ಪದ ಪಾಲಿಸಿದರರಸಿನ ಹಚ್ಚುವೆನು ೧೦
ಕರಿವರ್ಣ ಸಂಕೋಚ ತರದಿರೊ ಮನದಲ್ಲಿ
ಕರಿಯಾದ ಕಸ್ತೂರಿ ಪರಿಮಳವಿರದೆ
ಸರಸಿಜಾತನ ಶಿರದ ಮೇಲಿರಿಸಿರುವ
ಕರಕಂಜವನು ತೋರಲರಿಸಿನ ಹಚ್ಚುವೆನು ೧೧
ಹಿಂಡು ಕೂಡಿದ ದೇವ ಮಂಡಲದೊಳಗಿಂಥ
ಪುಂಡು ಮಾತುಗಳೆಂಬ ದಿಂಡೆಯಾತನವು
ಗಂಡರಿದಿರು ಚಿಕ್ಕ ಹೆಂಡಿರಾಡುವ ಪರಿಯು
ಪುಂಡರೀಕಾಕ್ಷ ಪಾಲಿಸು ತಪ್ಪಿದರೆಯು೧೨
ಈ ನಿಂದಾಸ್ತುತಿಗಳನು ಧ್ಯಾನಿಸಿ ವೆಂಕಟವರನು
ಮಾನಿನಿ ಪದ್ಮಾವತಿಗೆ ಮುಖವ ತೋರಿದನು
ಸಾನುರಾಗದಿ ಶ್ರೀಭೂಮಾನಿನಿಯರೊಡಗೂಡಿ
ತಾನಾಗಿ ದಯಮಾಡಿಲ್ಲಿಗೆ ಬಂದ ನೋಡಿ ೧೩

೩೦೫
ಜಯ ಜಯ ಪೂರ್ಣಾನಂದ ಜಯ ಜಯ ಗೋಪಿಯ ಕಂದ
ಜಯ ಜಯ ವೆಂಕಟ ರಮಣ ರಕ್ಷಿಸು ಕೃಪೆಯಿಂದ ಪ.
ಕೃಷ್ಣ ಕೈವಲ್ಯದ ಕರುಣಾ
ದೃಷ್ಟಿಯಿಂದಲಿ ನೋಡು ಶರಣಾ
ಅಷ್ಟಮದೈಶ್ವರ್ಯ ಕಾರಣ
ಕೌಸ್ತುಭಾಭರಣ ೧
ನಿತ್ಯ ಮಂಗಳರೂಪ ನಿರ್ಮಲ
ಚಿತ್ತ ಚಿದಾನಂದ ಮೂರ್ತಿ
ಭೃತ್ಯ ವರ್ಗದೊಳೆನ್ನ ಗ್ರಹಿಸೆ
ನಿನಗೆ ಬಹು ಕೀರ್ತಿ ೨
ಇನ್ನೊಂದು ದೈವವನರಿಯೆ
ನಿನ್ನ ಚರಣ ಪದ್ಮ ಮರೆಯೆ
ಪನ್ನಗಾಚಲವಾಸ
ಪರಿಪಾಲಿಸು ಬೇಗ ದೊರೆಯೆ ೩

೨೯೩
ಜಯ ಜಯ ಭೀಮಶ್ಯಾಮಾ ಜಯ ಸತ್ಯಾವರ ಪ್ರೇಮಾ
ಜಯ ಕೃಷ್ಣಾಗತ ಕಾಮಾ ಜಯ ಪುಣ್ಯನಾಮಾ ಪ.
ಪಂಚಬಾಣನ ಜನಕ ಪಾಂಚಾಲೆಯನು ಕರೆದು
ಪಂಚ ಮೂರುತಿಗರಿಸಿನವ ಹಚ್ಚೆನಲೂ
ಪಂಚರತ್ನಗಳಿಂದ ಮಿಂಚುತ ಭಾವಿ ವಿ-
ರಿಂಚಿಯ ಕಡೆಗಾಗಿ ನಡೆತಂದಳಾಗ ೧
ಅಣಿಮಾದಿ ಗುಣ ಚಿಂತಾಮಣಿಯ ಹತ್ತಿರೆ ಬಂದು
ಮಣಿದು ಪಾದಕೆ ನಾರಿಮಣಿ ನಸುನಗುತಾ
ಝಣಝಣವೆನಿಪ ಕಂಕಣ ಶೋಭಿತದಿಂದ
ಪುನುಗಿನೆಣ್ಣೆಯ ಕೂಡಿದರಿಶಿಣ ಹಚ್ಚಿದಳು ೨
ಕ್ಷತ್ರಿಯ ಗಣ ಶಿರೋರತ್ನನಾಗಿರುವಿ ಸ-
ರ್ವತ್ರ ವ್ಯಾಪಕ ಫಾಲನೇತ್ರ ವಂದಿತನೆ
ಕೃತ್ರಿಮ ದ್ವಿಜ ಭಿಕ್ಷಾ ಪಾತ್ರ ಸಲ್ಲದು ಕಂಜ
ಪತ್ರ ತೋರಿದರೆ ನಾನರಿಶಿಣ ಹಚ್ಚುವೆನು ೩
ಖುಲ್ಲ ಬಕಗೆ ಭಂಡಿಯಲ್ಲಿ ತುಂಬಿದ ನಾನಾ
ಪಲ್ಯ ಭಕ್ಷಗಳ ಮೇಲೆ ಚೆಲ್ಲಿದನ್ನವನು
ಎಲ್ಲ ಉಂಡಸುರನ ನಿಲ್ಲದಂತೊರಸಿದ
ಮಲ್ಲ ನಿನ್ನಯ ದಿವ್ಯ ಗಲ್ಲವ ತೋರೊ ೪
ಅಂಗಸಂಗದಿ ಶತಶೃಂಗಗಿರಿಯನೊಡದ
ಮಂಗಳಮೂರ್ತಿ ಮಾತಂಗ ವೈರಿಗಳ
ಭಂಗಿಸಿ ಬಲುಹಿಂದ ರಂಗನರ್ತನ ಗೈವ
ಶೃಂಗಾರ ಕರಗಳಿಗರಸಿನ ಹಚ್ಚುವೆನು ೫
ಮುಂದೆ ಕೀಚಕಬಾಧೆಯಿಂದ ರಕ್ಷಿಸುವಿ ಸೌ
ಗಂಧಿ ಕುಸುಮವನ್ನು ತಂದು ಮುಡಿಸುವಿ
ಮಂದಮತಿಯ ಕುರುನಂದ ನರನು ಬೇಗ
ಕೊಂದು ಮನ್ಮನಸಿಗಾನಂದ ಪಾಲಿಸುವಿ ೬
ಕುಂಡಲೀ ಗಿರೀಶ ಬ್ರಹ್ಮಾಂಡ ನಾಯಕ ಹೃ-
ನ್ಮಂಡಲದೊಳಗಿಟ್ಟುಕೊಂಡು ಸಂತಸದಿ
ಚಂಡ ವೈರಿಗಳನ್ನು ಖಂಡಿಸಿ ಸುಖದಿಂದ
ಶುಂಡಾಲ ಪುರವಾಳಿಕೊಂಡು ನೀನಿರುವಿ೭

೩೮೫
ಜಯ ಜಯ ಮೃತ್ಯುಂಜಯ ಜಗದಾಶ್ರಯ
ಭಯಹರ ವಿಗತಾಮಯ ಶಿವ ಸದಯಪ.
ಭಾಗವತೋತ್ತಮ ಭಾಸುರಕಾಯ
ಭಾಗೀರಥೀಧರ ಭಗವತೀಪ್ರಿಯ೧
ಅಗಜಾಲಿಂಗನ ಸುಗುಣನಿಕಾಯ
ಮೃಗಧರಚೂಡ ಮುನಿಜನಗೇಯ೨
ಲಕ್ಷ್ಮೀನಾರಾಯಣಪರಾಯಣ
ರಕ್ಷಿಸು ತ್ರಿಜಗಾಧ್ಯಕ್ಷ ಸುಶ್ರೇಯ೩

೭೬
ವರಾಹಾವತಾರ
ಜಯ ಜಯ ಯಜ್ಞವರಾಹ ಚಿನ್ಮಯ ಮೋದಾತ್ಮಕ ದೇಹ
ಭಯವ ಪರಿಹರಿಸೀಗ ಆಲಯವನು ನಿಲಿಸುವ ರಾಗ ಪ.
ಬ್ರಹ್ಮನ ನಾಸಿಕದಿಂದ ಪರಬೊಮ್ಮನು ಕಿಟಿಯಾದಂದ
ಹಮ್ಮಿನ ದೈತ್ಯನ ಕೊಂದ ಈ ಕ್ಷಮ್ಮೆಯ ಸುಲಭದಿ ತಂದ ೧
ಪ್ರಾಜ್ಞ ಶಿಖಾಮಣಿ ರನ್ನ ಶ್ರೀ ಯಜ್ಞವರಾಹನೆ ನಿನ್ನ
ಸುಜ್ಞತೆ ನಂಬಿದೆ ಮುನ್ನ ಸನ್ರ‍ನಗ್ಯನೆ(?) ನೀ ಸಲಹೆನ್ನ ೨
ಶ್ರೀಪತಿ ವೆಂಕಟರಮಣ ಮಹದಾಪದ್ಗಣ ಹರಚರಣ
ಭೂಪತಿ ತೋರಿಸು ಕರುಣ ಸಂತಾಪ ಬಿಡಿಸು ಸಚ್ಚರಣ ೩

ಮಂಗಳಾಚರಣ

ಜಯ ಜಯ ರಮಾಕಾಂತ ಜಯತು ದೈತ್ಯಕೃಪಾಂತ
ಜಯ ಸರ್ವ ವೇದಾಂತ ಜಯತು ನಿಶ್ಚಿಂತಾ ಪ.
ಬ್ಯಾಡ ವೇಷವ ತಾಳಿ ಓಡಿಸುತ ತುರಗವನು
ಹೂಡೆ ಪದ್ಮಾವತಿಯ ನೋಡಿ ನಸುನಗುತ್ತ
ಜೋಡಾತು ತನಗೆಂದು ಗಾಡಿಕಾರನ ಮಾತ-
ನಾಡಿ ಕ್ರೋಡಾಲಯಕೆ ಓಡಿ ಬಂದವನೆ ೧
ತಾಯಿ ಬಕುಳೆಯ ಕಳುಹಿ ಮಾಯಕದ ಕೊರವಂಜಿ
ಕಾಯದಿಂದಾಕಾಶ ರಾಯನರಮನೆಗೆ
ಜೋಯೆಂದು ಪೋಗಿಸದುಪಾಯಗಳ ನಡಿಶಿ ತ-
ನ್ನಾಯ ಕೈಕೊಂಡು ಕಮನೀಯ ಮೂರುತಿಯೆ ೨
ಶುಕಮುನಿಯ ಮುಖದಿಂದ ಸುಖವಾರ್ತೆಯನು ಕೇಳಿ
ಸಕಲ ದೇವೋತ್ತಮರ ನಿಕರವನು ನೆರಹಿ
ಅಕಳಂಕ ಲಗ್ನದಲಿ ಸುಕವೋಲೆಗೊಲಿದುರಗ
ಶಿಖರಿಯಲಿ ನೆಲೆಯಾದ ಲಕುಮಿವಲ್ಲಭನೆ ಜಯ ಜಯ ೩

೧೬೧
(ವಿಜಯದಾಸರ ಪ್ರಾರ್ಥನೆ)
ಜಯ ಜಯ ವಿಜಯೇಂದ್ರ ಜಿತಬುದ್ಧಿ ತಂದ್ರ
ನಯ ನೀತ ಗುಣ ಸಾಂದ್ರ ನುತ ರಾಮಚಂದ್ರ ಪ.
ಅಷ್ಟಮಹಾಸಿದ್ಧಿಯರಿತ ಗಂಭೀರ
ದುಷ್ಟವಾದಿಗಳೆಂಬ ಗಜ ಕುಂಭದಾರ
ಕೃಷ್ಣಾರಾಧಕ ಚತು:ಷಷ್ಟಿಕಳಾಧಾರ
ಇಷ್ಟ ಸಿದ್ಧಿಗಳ ಪಾಲಿಸು ಬೇಗ ಧೀರ ೧
ಶೇಷಾದ್ರಿನಾಥನ ಕರುಣೈಕ ಪಾತ್ರ
ವ್ಯಾಸ ಮುನೀಂದ್ರ ಕರಾಬ್ಜಜ ಪುತ್ರ
ದೋಷವೆಣಿಸದೆ ಸ್ವೀಕರಿಪುದೇ ಸ್ತೋತ್ರನೀ ಸಲಹುವದಾರಾಧಿತ ಮಾಕಳತ್ರ ೨

೩೮೭
ಜಯ ಜಯ ಶ್ರೀ ಮಹಾಲಿಂಗ ಗೋಪತುರಂಗ
ಜಯ ಜಯ ಶ್ರೀ ಮಹಾಲಿಂಗ ಪ.
ಜಯರಹಿತಾಚ್ಯುತಪ್ರಿಯ ಬುಧಾರ್ಚಿತ
ದಯಾಸಾಗರ ಭಸಿತಾಂಗ
ನಯನತ್ರಯ ನಮಿತಾಮರಸಂಘಾ-
ಮಯಹರ ಗಂಗೋತ್ತುಮಾಂಗ ೧
ಭೂತೇಶ ಭೂರಿಭೂತಹೃದಿಸ್ಥಿತ
ಭೂಷಣೀಕೃತಭುಜಂಗ
ಪೂತಾತ್ಮ ಪರಮಜ್ಞಾನತರಂಗ
ಪಾತಕತಿಮಿರಪತಂಗ೨
ಲಂಬೋದರಗುಹಪ್ರಮುಖಪ್ರಮಥನಿಕು-
ರುಂಬಾಶ್ರಿತ ಜಿತಸಂಗ
ಗಂಭೀರಗುಮಕದಂಬೋತ್ತುಂಗ-
ಸಂಭೃತ ಹಸ್ತಕುರಂಗ ೩
ಸೋಮಶೇಖರ ಮಹಾಮಹಿಮ ವಿಜಿತ-
ಕಾಮ ಕಲಿಕಲುಷಭಂಗ
ರಾಮನಾಮ ಸ್ಮರಣಾಂತರಂಗ
ವಾಮಾಂಕಾಸ್ಥಿತ ಪಿಂಗ ೪
ದೇವ ಲಕ್ಷ್ಮೀನಾರಾಯಣ ಪದರಾ-
ಜೀವನಿರತ ವನಭೃಂಗ
ಪಾವಂಜಾಖ್ಯ ಗಿರೀಶ ಶುಭಾಂಗ
ಕೇವಲ ಸದಯಾಪಾಂಗ೫

೪೯೯
ಜಯ ಜಯ ಶ್ರೀಹರಿಪ್ರಿಯೆ ಮಹಾ-
ಭಯಹರೆ ಜಗದಾಶ್ರಯೆ
ಲಯವರ್ಜಿತ ನಿತ್ಯಾತ್ಮೆ ಚಿನ್ಮಯೆ
ಜಯಶೀಲೆ ನಿರಾಮಯೆ ೧
ನಿತ್ಯಮುಕ್ತಿ ನಿರ್ವಿಕಾರೆ ನಿಜ-
ಭೃತ್ಯನಿಚಯ ಮಂದಾರೆ
ಪ್ರತ್ಯಗಾತ್ಮ ಹರಿಭಕ್ತಿರಸಪೂರೆ
ಸತ್ವಾದಿಗುಣವಿದೂರೆ ೨
ಲಕ್ಷ್ಮೀನಾರಾಯಣಿ ಹರಿ-
ವಕ್ಷಸ್ಥಲವಾಸಿನಿ
ಅಕ್ಷರರೂಪಿಣಿ ಬ್ರಹ್ಮಾಂಡಜನನಿ
ಸುಕ್ಷೇಮಪ್ರದಾಯಿನಿ ೩

೩೫೬
ಜಯ ಜಯಜಗತ್ಪ್ರಾಣತ್ರಾಣ ಜನನ ಮರಣಕ್ಲೇಶಹರಣ
ಜಯ ಪಾವನ ದಿವ್ಯಚರಣ ಪ.
ಸರ್ವದೇವತಾಗ್ರಗಣ್ಯ ಸರ್ವಜೀವೋತ್ತಮ ಶರಣ್ಯ
ಪೂರ್ವಾಮರಪುರದಹನ ಪೂರ್ಣಗುಣಗಣ ೧
ವೈಷ್ಣವ ಜನ ಶಿರೋರತುನ ವಿಶ್ವಾಂತರ್ಗತಭಾವನ
ತೀಕ್ಷ್ಣಮನೋದುಷ್ಟದಮನ ಶಿಷ್ಟಜೀವನ ೨
ಭಕುತಿಜ್ಞಾನನಿಧಿ ಕಲ್ಯಾಣ ಭಜಕಜನಭವಾಬ್ಧಿತರಣ
ಲಕುಮಿನಾರಾಯಣಶರಣ ಬಕವಿದಾರಣ ೩

೩೦೭
ಜಯ ಮಂಗಲಂ ನಿತ್ಯ ಶುಭ ಮಂಗಲಂ
ಮಂಗಲಂ ಮಾರುತಿಯ ಪೆಗಲೇರಿ ಬರುವನಿಗೆ ಪ.
ಮಂಗಲಂ ಮಾರೀಚ ವೈರಿಹರಿಗೆ
ಮಂಗಲಂ ಸೀರಜಾ ಮುಖಪದ್ಮ ಭೃಂಗನಿಗೆ
ಮಂಗಲಂ ವೀರ ರಾಘವ ದೇವಗೆ ಅ.ಪ.
ರಾವಣಾದಿಗಳಿಂದ ಲಾಹವದಿ ಬಹು ನೊಂದ
ದೇವತೆಗಳನು ಬೇಗ ಕಾವೆನೆಂದು
ತಾ ಒಲಿದು ಕೌಸಲ್ಯದೇವಿ ಗರ್ಭದಿ ಬಂದು
ಸಾವಧಾನದಿ ಸಕಲ ಸಜ್ಜನರ ಸಲಹಿದಗೆ ೧
ಮಂದಮತಿಗಳೊಳಧಿಕ ತುಂಡಿಲನು ಮಾತ್ಸರ್ಯ
ದಿಂದ ಮಾಡಿರುವ ಪ್ರತಿ ಬಂಧಕವನು
ಇಂದಿಲ್ಲಿ ಬರಲು ಸಮಂಧಗೈಸದೆ ದಾಸ
ನೆಂದೆನ್ನ ಮೇಲೆ ದಯದಿಂದಲೊಲಿದವಗೆ ೨
ಇಂಗಿತಾಭೀಷ್ಟದ ಕುರಂಗ ಮರ್ದನ ರಾಮ
ಶೃಂಗರಿಸಿ ಸರ್ವಪರಿವಾರ ಸಹಿತಾ
ಮಂಗಲಾರತಿ ಕೊಂಡು ಮಂಗಳವ ಬೆಳೆಸುವ ಭು
ಜಂಗ ರಾಜೇಂದ್ರ ಗಿರಿಶೃಂಗನಾಥನಿಗೆ ೩

೩೬೮
ಜಯಜನನೀ ಶಾರದೆ ಜನನಮೃತಿಭಯಭಿದೆ ಪ.
ನಯವಿದೆ ತ್ರಿಜಗನ್ಮಯೆ ವೀಣಾವಿನೋದೆ ಅ.ಪ.
ಭಕ್ತಿಜ್ಞಾನ ಮಾನದೆ ಭಗವತ್ಪ್ರಾಪ್ತ ಪ್ರಸಾದೆ
ಮುಕ್ತಿಶಕ್ತಿಪ್ರದೆ ನಿಜ ಭೃತ್ಯವತ್ಸಲೆ ಪ್ರಬುದ್ಧೆ ೧
ವೇದಾರ್ಥತತ್ವಪ್ರಬೋಧೆ ಆದಿತೇಯಾನತಪದೆ
ಶ್ರೀಧರೆ ಸದಾನಂದೆ ಸಾಧು ಸೌಭಾಗ್ಯನಿಧೆ ೨
ಅನಘ ಲಕ್ಷುಮಿನಾರಾಯಣನ ಭಕ್ತ ಪ್ರಹ್ಲಾದ
ಸನಕನುತೆ ಸನ್ನುತೆ ಘನಪಾಪಾಪಹ್ನುತೆ ೩

೪೦೬
ಜಯಜಯ ಜಲದುರ್ಗೆ ತ್ರಿಜಗನ್ಮಯೆ ಸದ್ಗುಣವರ್ಗೆ ಪ.
ದಯಾಸಾಗರೆ ದಾರಿದ್ರ್ಯದುಃಖ ಭವ-
ಭಯನಾಶಿನಿ ಮಣಿಮಯಕೃತಭೂಷಿಣಿಅ.ಪ.
ಗಜವದನನ ಮಾತೆ ಸುಜನ-
ವ್ರಜಸತ್ಫಲದಾತೆ
ಕುಜನಭಂಜನಿ ನಿರಂಜನಿ ಶೈಲಾ-
ತ್ಮಜೆ ಮಹೋಜೆ ನೀರಜದಳಲೋಚನಿ೧
ಇಂದ್ರಾದ್ಯಮರನುತೆ ಪೂರ್ಣಾ
ನಂದೆ ನಂದಜಾತೆ
ಚಂದ್ರಾಸ್ಯೇ ಯೋಗಿವೃಂದವಂದಿತೆ ಮೃ-
ಗೇಂದ್ರವಾಹಿನಿ ಮದಾಂಧರಿಪು ಮಥನಿ೨
ಅಂಗಜಶತರೂಪೆ ಸದಯಾ-
ಪಾಂಗೆ ಸುಪ್ರತಾಪೆ
ಗಂಗಾಧರವಾಮಾಂಗಶೋಭೆ ಸಾ-
ರಂಗನೇತ್ರೆ ಶ್ರೀರಂಗಸಹೋದರಿ೩
ದಾಸಜನರ ಪೋಷೆ ರವಿಸಂ-
ಕಾಶೆ ತ್ರಿಜಗದೀಶೆ
ವಾಸುದೇವನ ಸ್ಮರಣಾಸಕ್ತಿಯ ಕೊಡು
ಭಾಸುರಜ್ಞಾನಪ್ರಕಾಶವಿಲಾಸಿನಿ೪
ಸೌಖ್ಯವು ಭಕ್ತರ್ಗೆ ಸಲಿಸಲು
ಸೌಖ್ಯವು ನೀ ಭರ್ಗೆ
ಲಕ್ಕುಮಿನಾರಾಯಣನ ಭಗಿನಿ ನಿ-
ರ್ದುಃಖಪ್ರದಕಟಿಲಾಖ್ಯಪುರೇಶ್ವರಿ೫

ಪಾರ್ವತೀದೇವಿಯ ಸ್ತುತಿ
೧೩೯
(ಮಂಗಳೂರು ಮಂಗಳಾದೇವಿ)
ಜಯಜಯ ನಾರಾಯಣಿ ನಳಿನಾಂಬಿಕೆ ಭಯಹರ
ಮಹಾಮಾಯೆ
ಅಯಿ ತವ ಪಾದದ್ವಯವನು ನಮಿಸುವೆ
ದಯದೋರೆಲೆ ತಾಯೆ ಪ.
ವಿಧಿಯ ಮೊರೆ ಕೇಳ್ದು ದಧಿಶಾಯಿಯನು
ಸದರದೊಳೆಬ್ಬಿಸುತಿದಿರಾದ
ಮಧು ಕೈಟಭರನು ವಧಿಸಿ ತಮೋಗುಣಕಧಿಕಾರಿಯೆನಿಸಿದ
ಮದನಾಂಬಾ
ಮಧುಕರ ಝೇಂಕೃತ ವದನ ಕಮಲಗತ ಮಧುಲಿಣ್ಮಾಧವ
ಮುದ ದಾಯಿ
ಸದರದೊಳೆನ್ನಯ ಸದನದಿ ನೆಲೆಗೊಂಡು ದಯವಾಗು
ಶುಭಪದದಾಯಿ ೧
ಭೃಕುಟೀಕೃತ ಹರಿ ಮುಖಸೂಚಿತವಿಧಿ ಮುಖ
ದೇವತೆಗಳ ಸೇರಿರುವಾ
ಸ್ವಕಲಾಂಶಾಂಶದಶಕಲಸ ಮೋಹರಿ ಸಕಲ
ಮನೋಹರ ತನುವಾಗಿ
ಅಕಲುಷ ಹಿಮವಚ್ಛಿಕರದಿ ಸಜ್ಜನ ನಿಕರ ಭಯದಿ
ಮಹಿಷಾಸುರನಾ
ಶಿಖದಲಿ ಶೂಲವನುಗಿದು ಸುರೇಂದ್ರನ ಸುಖಗೊಳಿಸಿದ
ಮೃಗಪತಿಗಮನಾ ೨
ಚಂಡಮುಂಡ ಮುಖ ಮೊಂಡ ರಾಕ್ಷಸರ
ಖಂಡ್ಯಧಾರೆಯೊಳ್ದಿಂಡರಿದೂ
ರುಂಡುಗಳನುಕರಮಂಡಗೈವುತ ಭಂಡ ನಿಶುಂಭನ
ಖಂಡಿಸುತಾ
ಅಂಡಲಿವುತ ಭುಜದಂಡದಿಂದ ಕೋದಂಡ ಧರಿಸಿ
ರಣ ಮಂಡಲದಿ
ಪುಂಡ ಶುಂಭ ಮೋಡಂಡದಿ ಬರುತಿರೆ ತುಂಡುಗಡಿದ
ಬ್ರಹ್ಮಾಂಡ ನಿದಾನಿ ೩
ಜ್ಞಾನಾನಂದ ನಿದಾನರೂಪಿ ನಿನಗೇನಿಹುದು
ತ್ರಿಗುಣಜಮಲವು
ದಾನವಾರಿಗಳ ಮಾನಿಸಿ ದಿತಿಜರ ಹಾನಿಗೊಳಿಸುವದು
ಹರಿಪರವು
ಯೇನ ಪೇಳ್ವೆ ಮರದೇನು ನಿನ್ನ ಮಹಿಮಾನುವರ್ಣನೆಯ
ಮಹಭರವು
ಶ್ರೀನಿವಾಸ ತನ್ನುರದಲಿ ನಿನ್ನನು ಮಾನಿಸಿ ಧರಿಸಿದ
ಮನದಿರವೂ ೪
ಬಾಲಭಾವದಲಿ ಪೇಳಿದ ಮಾತನು ಲಾಲಿಸಿ
ರಕ್ಷಿಸು ಪುರುಕರುಣಿ
ಕೀಳು ಮೇಲುಗಳನರಿಯದೆ ನುಡಿದೆನು ಪಾಲಿಸು
ಕ್ಷಮೆಯಿಂದಂ ಭರಣಿ
ಖೂಳ ವೈರಿಗಳನೇಳದಂತೆ ಪಾತಾಳಕೆ ಕೆಡಹಿಸು ಮಮ ಜನನಿನೀಲ ಮೇಘ ನಿಭ ವೆಂಕಟರಾಜನ ಲೋಲಕಟಾಕ್ಷಸದಾಕರುಣಿ ೫

೪೪೨
ಜಯತು ಜಯತು ಜಯತೆಂಬೆನು ವಿಠಲ
ಭಯನಿವಾರಣ ನಿರಾಮಯ ನೀನೆ ವಿಠಲಪ.
ಮನವೆನ್ನ ಮಾತ ಕೇಳದು ಕಾಣೊ ವಿಠಲ
ಮನಸಿಜನಾಯಸ ಘನವಾಯ್ತು ವಿಠಲ
ನಿನಗಲ್ಲದಪಕೀರ್ತಿಯೆನಗೇನು ವಿಠಲ
ತನುಮನದೊಳಗನುದಿನವಿರು ವಿಠಲ೧
ಕದನ ಮುಖದಿ ಗೆಲುವುದ ಕಾಣೆ ವಿಠಲ
ಮದನ ಮುಖ್ಯಾದಿ ವೈರಿಗಳೊಳು ವಿಠಲ
ವಿಧವಿಧದಿಂದ ಕಷ್ಟಪಟ್ಟೆನು ವಿಠಲ
ಇದಕೇನುಪಾಯ ತೋರಿಸಿ ಕಾಯೋ ವಿಠಲ೨
ಹುಟ್ಟಿದೆ ನಾನಾ ಯೋನಿಗಳೊಳು ವಿಠಲ
ಸುಟ್ಟ ಬೀಜದ ವೋಲ್ ಫಲವಿಲ್ಲ ವಿಠಲ
ಇಷ್ಟಾರ್ಥಗಳನಿತ್ತು ಸಲಹಯ್ಯ ವಿಠಲ
ಇಷ್ಟಕ್ಕೆ ನೀ ಮನ ಮಾಡಯ್ಯ ವಿಠಲ೩
ಬಂಗಾರ ಭಂಡಾರ ಬಯಸೆನು ವಿಠಲ
ಮಂಗಲ ಕೊಡು ಯೆನ್ನ ಬುದ್ಧಿಗೆ ವಿಠಲ
ರಂಗ ರಂಗನೆಂಬ ನಾಮದಿ ವಿಠಲ
ಭಂಗವ ಪರಿಹರಿಸಯ್ಯ ನೀ ವಿಠಲ೪
ಏನು ಬಂದರೂ ಬರಲೆಂದಿಗು ವಿಠಲ
ಮಾನಾವಮಾನ ನಿನ್ನದು ಕಾಣೊ ವಿಠಲ
ನಾನು ನಿನ್ನವನೆಂದು ಸಲಹಯ್ಯ ವಿಠಲ
ಲಕ್ಷ್ಮೀನಾರಾಯಣ ನೀನೆ ತಂದೆ ಕೇಳ್ ವಿಠಲ೫

೩೩೦
(ಮೂಲ್ಕಿಯ ನರಸಿಂಹದೇವರು)
ಜಯತು ಜಯತು ನೃಹರಿ ಬ್ರಹ್ಮಾದಿನಿರ್ಜರ
ಜಯತು ಜಾತಕೈವಾರಿ ಪ.
ಜಯ ನಮೋ ಜಗದಾದಿಮಾಯಾ
ಶ್ರಯ ಚರಿತ್ರ ಪವಿತ್ರ ವಿಗತಾ-
ಮಯ ಸದಾನಂದೈಕನಿಧಿ ಚಿ-
ನ್ಮಯ ದಯಾರ್ಣವ ಭಯನಿವಾರಣ ಅ.ಪ.
ಸುಕುಮಾರ ಪ್ರಹ್ಲಾದನ ಬಾಧಿಸೆ ಭಯಾ-
ನಕ ರೂಪ ತಾಳ್ದಾಕ್ಷಣ
ಸಕಲ ಲೋಕಾಲೋಕಭೀಷಣ
ಪ್ರಕಟನಖಮುಖ ಕ್ರೋಧವಾಹಿನಿ
ಪ್ರಖರ ಜ್ವಾಲಾಮಾಲ ಬದ್ಧ-
ಭ್ರಕುಟಿ ಲಾಲಿತ ಭಕುತ ವತ್ಸಲ ೧
ಪಾರಮೇಷ್ಠಿ ರುದ್ರರೇ ಮುಖ್ಯಸ್ಥ ವೃಂ-
ದಾರಕಋಷಿವರರೇ
ವೀರಭದ್ರ ಸುಭದ್ರ ನಂದಿ ಪ್ರ-
ವೀರ ಭೈರವ ಭೃಂಗಿ ಮುಖ್ಯರು
ಶ್ರೀರಮಣ ಕುರು ಕರುಣ ಪಾರಾ-
ವಾರಸಮ ಗಂಭೀರನೆಂಬರು ೨
ಶಾಂತವಾಗದು ಕ್ರೋಧ ಮಾಡಿದುದಾ-
ನಂತ ಸಂಕ್ಯಾಪರಾಧಾ
ಎಂತು ನಿರ್ವೃತಿ ಎಂದು ಚಿಂತಾ-
ಕ್ರಾಂತರಾಗಿ ಪಿತಾಮಹಾದ್ಯರು
ಕಂತುಜನನಿಯ ಬೇಡಿಕೊಳಲ-
ತ್ಯಂತ ಹರುಷವನಾಂತು ಬಂದಳು ೩
ಪಟ್ಟದರಸನರೂಪ ಕಾಣುತ ಭಯ-
ಪಟ್ಟಳಪೂರ್ವಕೋಪ
ಶ್ರೇಷ್ಠಭಕ್ತಶಿಖಾಮಣಿಯ ಮುಂ-
ದಿಟ್ಟೆರಗಿ ಸಂಸ್ತುತಿಸೆ ದನುಜಘ-
ರಟ್ಟ ಹೃದಯನಿವಿಷ್ಟ ಕರುಣಾ-
ದೃಷ್ಟಿಯಿಂದ ಸಂತುಷ್ಟಗೊಳಿಸಿದ ೪
ಶ್ರೀ ಲಕ್ಷ್ಮೀನಾರಾಯಣ ದೈತ್ಯೇಂದ್ರ ಹೃ-
ಚ್ಛೂಲ ಅಖಿಲ ಕಾರಣ
ಕಾಲಕಾಲಾಂತಕ ತಮಾಲ ಸು-
ನೀಲನಿಭ ನಿತ್ಯಾತ್ಮ ಸುರಮುನಿ
ಜಾಲಪಾಲ ವಿಶಾಲ ಗುಣನಿಧಿ
ಮೂಲಿಕಾಲಯಲೋಲ ನರಹರಿ ೫

ಮಂಗಳ ಪದಗಳು
೪೯೩
ಜಯದೇವ ಜಯದೇವ ಜಯ ಸುಬ್ರಹ್ಮಣ್ಯ
ಆರತಿ ಮಾಡುವೆ ನಿನಗೆ ವರೇಣ್ಯ ಪ.
ಅರಳಿದ ಕಮಲಸನ್ನಿಭಶುಭಚರಣ-
ವರ ಪಂಚಾನನ ಪೋಲ್ವ ಕಟಿಕಾಂಚ್ಯಾಭರಣ
ಉರುಶಕ್ತಿಕುಕ್ಕುಟಾಭಯವಜ್ರಹಸ್ತ
ಶರಣಾಗತಜನದ ರಿತವಿಧ್ವಸ್ತ೧
ಬಲಮುರಿಶಂಖದಂತಿಹ ಚೆಲ್ವಗ್ರೀವ
ಸುಲಲಿತಮಾಣಿಕ್ಯಹಾರದಿಂ ಪೊಳೆವ
ನಲಿವ ಕರ್ಣಕುಂಡಲಗಳ ಶೋಭ
ಜ್ವಲಿತಕಿರೀಟಮಸ್ತಕ ಸೂರ್ಯಾಭ೨
ಈ ಕ್ಷಿತಿಯೊಳಗೆ ಪಾವಂಜೇತಿ ನಾಮ
ಸುಕ್ಷೇತ್ರವಾಸ ಸುಜನಜನಪ್ರೇಮ
ಲಕ್ಷ್ಮೀನಾರಾಯಣನ ಪ್ರೀತಿಯ ಪಾತ್ರ
ರಾಕ್ಷಸಾರಣ್ಯದಹನವೀತಿಹೋತ್ರ ೩

೪೯೭
ಜೋ ಜೋ ಜಾನಕಿ ಜೊ ಚಂದಿರ ಮುಖಿ
ಮಾಂಗಲ್ಯದಾಯಕಿ ಮಾಡೇ ನಿದ್ರೆ ಜೋ ಜೋ ೧
ಆದಿಮಾಯಳೆ ವೇದವೇದ್ಯಳೆ
ಆದಿತೇಯನುತೆ ಭೂಮಿಜಾತೆ ೨
ಮೃಗಮದಗಂಧಿನಿ ಮಾಧುರ್ಯಭಾಷಿಣಿ
ಮಗಳೆ ಜಾನಕಿಯೆ ಕಂಬುಕಂಧರಿಯೇ ೩
ಕಂಜಲೋಚನಿ ಕಂಜಭವಜನನಿ
ಕುಂಜರಗಮನಿ ಸಂಜೀವನಿ ೪
ವಾರಿಜನೇತ್ರೆ ವಾಸುವಸ್ತೋತ್ರೆ
ಮಾರಜನನಿ ಲಕ್ಷ್ಮೀನಾರಾಯಣಿ ೫

೨೯೯
ಜೋ ಜೋ ಜೋ ಜಗತ್ರಾಣ ಸುತ್ರಾಣ
ಜೋ ಜೋ ಜೋ ಶುಭವಾಣಿಯ ರಮಣ
ಜೋ ಜೋ ವೈಷ್ಣವ ಸಿದ್ಧಾಂತಿ ಶರಣ
ಜೋ ಜೋ ಶ್ರೀ ಮುಖ್ಯಪ್ರಾಣ ಕಲ್ಯಾಣ ಪ.
ಲೋಕಾ ಲೋಕ ಪರ್ವತಗಳ ಮ್ಯಾಲೆ
ಏಕಾಕಾರದಿ ಪಾದಗಳೂರಿ
ವ್ಯಾಕರಣಗಳ ದಿವಾಕರನಿದಿರಕಲಿ
ಸ್ವೀಕರಿಸಿದ ಕರುಣಾಕರ ಮೂರ್ತಿ
ಶ್ರೀಪತಿ ಕೃಷ್ಣನ ಸೇವಾನುಸಾರದಿ ೧
ಕೋಪಾಟೋಪವ ಸಮರತಿ ತೋರಿ
ಪಾಡಿದುಶ್ಯಾಸನ ವಕ್ಷೋವಿಧಾರಿ
ದ್ರೌಪಧಿ ಕುಚಕಂಜ ಕುಟ್ಮಲಧಾ ೨
ಸ್ವಾನಂದ ಪರಿಪೂರ್ಣ ಕೃಷ್ಣನ ದಾಸ
ಆನಂದತೀರ್ಥ ತೋರುವ ಮಂದಹಾಸ
ಶ್ರೀನಿಧಿ ವೆಂಕಟೇಶನ ನಂಬಿದವರ
ತಾನೆ ಬಂದೊದಗಿ ಪಾಲಿಪ ದೇವಪ್ರವರ ೩

೩೦೦
ಜೋ ಜೋ ಜೋನಂತ ಸದ್ಗುಣಧಾಮಾ
ಜೋ ಜೋ ಜೋ ಯದುವಂಶಲಲಾಮ
ಜೋ ಜೋ ಸಕಲ ಮಲಾಪಹ ನಾಮ
ಜೋ ಜೋ ಸಮಾಲಿಂಗಿಹ ಸತ್ಯಧಾಮ ಪ.
ನಿಗಮತತಿಗಳೆಲ್ಲ ಪೊಗಳುತ್ತಲಿಹನ
ನಗಚಾಪ ಪಿತನನ್ನು ನಗುತ ಪೆತ್ತವನ
ಸ್ವಗತ ಭೇದಶೂನ್ಯ ಖಗಪ ವಾಹನನ
ಮಗುವೆಂದು ಕೂಗುವ ಮಾರಜನಕನ ೧
ಮೂರು ಗುಣಂಗಳ ಮೀರಿದ ಸಿರಿನಲ್ಲ
ಚೋರತನದಿ ಬೆಣ್ಣೆ ಮೆಲುವರೆ ಬಲ್ಲ
ಈರೇಳು ಭುವನವ ಮೂರಡಿ ಮಾಡಿದ
ಧೀರಗೆ ತಕ್ಕ ತೊಟ್ಟಿಲ ಕಾಣೆನಲ್ಲ ೨
ಜಾಗ್ರತ್ಸ್ವಪ್ನ ಸುಷುಪ್ತಿ ಭಾವಗಳು
ಭೋಗಿ ಶಯನತ್ವದಧೀನವಾಗಿರಲು
ವಾಗೀಶವಾಯುಗಳರ್ಚಿಪ ನಿನ್ನನು
ತೂಗುವ ರಾಗವ್ಯಾವದೊ ಪೇಳೊ ರನ್ನ ೩
ಆದರು ಕಲುಷಾವನೋದನ ನಿನ್ನಯ
ಪಾದಕಮಲಗಳ ಪೊಗಳಿ ಪಾಡುವರ
ಕಾದುಕೊಳ್ಳುವೆನೆಂಬ ವೇದ ಸಾರವನ್ನು
ನೀ ದಯ ಮಾಡಿದರೋದುವೆನಿದನು ೪
ನೀರೊಳಗಾಡಬ್ಯಾಡೆಂದರೆ ಕೇಳದೆ
ಭಾರಿ ಮಂದರ ಪೊತ್ತು ಬೇರನೆ ಕಿತ್ತಿ
ಘೋರ ದೈತ್ಯನ ಸೀಳಿ ತೋರಿ ವಾಮನ ಮೂರ್ತಿ
ಧಾರುಣೀಶರ ಕೊಂದ ಧೀರ ರಾಘವನೆ ೫
ಚಿಕ್ಕತನದಿ ಬಹು ರಕ್ಕಸ ಕುಲವ
ಧಿಕ್ಕರಿಸುತ ಕೈಗೆ ಸಿಕ್ಕದೆ ಓಡಿ
ಮಕ್ಕಳಾಟಿಕೆಯಿಂದ ಫಕ್ಕನೆ ಮಾವನ
ಸೊಕ್ಕ ಮುರಿದು ನೆಲ ತಿಕ್ಕಿದ ಹರಿಯೆ ೬
ಘೋರ ಜರಾಸಂಧ ಸಾಲ್ವೈಕಲವ್ಯರ
ಗಾರಗೆಡಿಸಿ ದ್ವಾರಕಾ ಪುರ ರಚಿಸಿ
ಕೌರವನೊಶದಲಿ ಸೇರಿದ ಧರಣಿಯ
ಮಾರುತಿಯಲಿ ಪ್ರೇಮದೋರಿ ಪಾಲಿಸಿರಿ ೭
ಎರಡು ಹೆಂಗಳನಾಳುವುದೆ ಬಹು ಘೋರ
ಎರಡೆಂಟು ಸಾವಿರ ಮತ್ತೆಂಟು ನೂರ
ನೆರಹಿಕೊಂಡರೆ ನಿನಗಾಗದೆ ಭಾರ
ಪರಮಾತ್ಮ ನಿನಗಿದು ಲೀಲಾವತಾರ ೮
ಬತ್ತಲೆ ತಿರುಗಿದರಾಗದೆ ದೃಷ್ಟಿ
ಉತ್ತಮಾಶ್ವಗಳ ನೇರಿ ಕರವಾಳ ಮುಷ್ಟಿ
ಸುತ್ತ ತಿರುಹಿ ಪಾಪಿಗಳ ಕೊಂದ ಜಟ್ಟಿಯ
ನಿತ್ಯ ನಂಬಿದಪರಿಗಾನಂದ ಪುಷ್ಟಿ ೯
ಅಣುಗಳಿಗೆ ಪರಮಾಣುವಾಗಿ ನಿಲುವಿ
ಘನಕಿಂತ ಘನವಾಗಿದನುಜರ ಕೊಲುವಿ
ಕನಡಿಲಿ ಪ್ರತಿಫಲಿಸುವ ವೋಲಿರುವಿ
ಕನಲುತ ಭಕ್ತರು ನೆನೆವಲ್ಲಿ ಒಲಿವಿ ೧೦
ಜೋಗಿ ಜನರ ಸಹವಾಸ ಬೇಡೆಂದರೆ
ಪೋಗಿ ಪೋಗಿ ಅವರ ಮನದೊಳಗಿರುವಿ
ಶ್ರೀ ಗುರು ಮಧ್ವಮುನಿಯ ಮೇಲೆ ಕರುಣದಿ
ಸಾಗಿ ಬಂದಿರುವೀಗ ರೌಪ್ಯ ಪೀಠದಲಿ ೧೧
ಶೃಂಗಾರ ವಾರುಧಿ ಶ್ರೀ ಕೃಷ್ಣಜೀಯ
ಮಂಗಳ ದೇವಿಯ ಮೋಹಿಪಕಾಯ
ಗಂಗೆಯ ಪಡದಂಗುಷ್ಠವನಿಟ್ಟಪಾಯ
ರಂಗನಾಥ ಶ್ರೀ ವೆಂಕಟರಾಯ ೧೨

೫೦೬
ಡಿಂಗುಡಿಂಗಾಯ್ತು ಶ್ರೀಹರಿಸೇವೆ ಪ.
ರಂಗರಾಯನ ಚರಣಂಗಳ ಸೇವಿಪ
ಡಿಂಗರಿಗೆಲ್ಲ ಸುಮಂಗಲವಾಯ್ತು ೧
ಎಲ್ಲಿ ಪೋದರು ಭಯವಿಲ್ಲದ ತೆರನಾಯ್ತು
ಫುಲ್ಲನಾಭನ ದಯದಲ್ಲಿದ್ದ ಕಾರಣ ೨
ಬದ್ಧವಾಗಿಹ ದಾರಿದ್ರಾವಸ್ಥೆಯ
ಛಿದ್ರಿಸಿ ಹರಿದಯವಿದ್ದ ಕಾರಣದಿಂದ ೩
ಏನಾರಾಗಲಿ ಎಂತಾದರಿನ್ನೇನು
ಶ್ರೀನಿವಾಸನು ದಯ ತಾನೆ ಗೈದರಿಂದ ೪
ಮಾರಜನಕ ಲಕ್ಷ್ಮೀನಾರಾಯಣನೊಳು
ತೂರಿಯಾನಂದಕೆ ಸೇರಿದ್ದ ಕಾರಣ ೫

೮೯
ತಂದೆ ನೀನಹುದೆಂಬುದೆಂದಿಗು ದಿಟವಯ್ಯ
ಇಂದಿರೆಯರಸ ಜೀಯಾ
ಕುಂದುಕೊರತೆಗಳನೊಂದು ನೋಡದೆ ಕೃಪೆ
ಯಿಂದ ನಿನ್ನಂತೆ ರಕ್ಷಿಪರುಂಟೆ ರಘುರಾಯ ಪ.
ತನಗನುವಾಗಿರೆ ತೋಷಬಡುವ ತಾತ
ಕೊನರಿಕೊಂಬುವ ಕಷ್ಟಕಾಲದಲಿ
ವನರುಹದಳನೇತ್ರ ವಾರ್ಧಿಬಂಧನ ನೀನು
ನೆನೆದಬೀಷ್ಟವ ಕೊಟ್ಟು ನಿರ್ಮಲ ಪದವೀವಿ ೧
ಅಘಟಿತಾಘಟಕನೆ ಆದಿ ಪರುಷಮಹ-
ದಘನಿವಾರಣ ಶಕ್ತ ಗುಣವಾರಿಧೆ
ಸ್ವಗತ ಮಾನಸ ಶಬರಿಯ ಸಲಹಿದ ನಮ್ಮ
ರಘುಕುಲತಿಲಕ ರಾವಣವೈರಿ ಸುಖಕಾರಿ ೨
ಮುಪ್ಪುರ ಹರ ಜಪಿಸುವ ಮೂಲ ಮಂತ್ರೇಶ
ಅಪ್ಪ ನೀನಹುದೆಂಬ ನಿರ್ಣಯವ
ತಪ್ಪದೆ ಬಿನ್ನಹ ಒಪ್ಪಿಲ್ಲಿ ನೆಲೆಯಾಗು
ಸರ್ಪಾದ್ರಿನಿಲಯಾ ತಿಮ್ಮಪ್ಪ ಚಿಂತಿತದಾತ ೩

೧೮೭
ತಡವ ಮಾಡುವಿಯಾಕೊ ಒಡೆಯ ಗೋವಿಂದ
ಬಡವನ ಮೇಲಿನ್ನು ಮುನಿಸೆ ಮುಕುಂದ ಪ.
ಕೆಟ್ಟ ಕೃತ್ಯಗಳತ್ಯುತ್ರ‍ಕಷ್ಟವಾದುದರಿಂದ
ದುಷ್ಟ ಮಕ್ಕಳ ಮಂಡೆ ಕುಟ್ಟುವ ತೆರದಿ
ಸಿಟ್ಟಿನಿಂದಲಿ ಬಹು ಕಷ್ಟಗೊಳಿಸಿದಿ
ಕಟ್ಟ ಕಡೆಯಲಿ ನೀ ಕಟ್ಟ ಬಿಡಿಸಿದಿ ೧
ದುಷ್ಟ ಬಾಧೆಯ ಮುರಿದಟ್ಟಿದಿ ದಯದಿ
ಘಟ್ಟ ಬೆಟ್ಟಗಳನ್ನು ಮೆಟ್ಟಿ ನಾ ಭರದಿ
ನಿಟ್ಟುಸುರಲಿ ಬಾರೆ ಕೃಷ್ಣ ನೀ ಕರುಣದಿ
ತೊಟ್ಟಿಲ ಶಿಶುವಿನಂದದಲಿ ಪಾಲಿಸಿದಿ ೨
ಜನರ ಸಹಾಯವ ಕನಸಿಲಿ ಕಾಣೆ
ಧನಬಲವೆಂದೆಂದಿಗಿಲ್ಲ ನಿನ್ನಾಣೆ
ವನರುಹೇಕ್ಷಣ ನಿನ್ನ ನಾಮ ಒಂದೆ ಹೊಣೆ
ಯೆನುತ ನಂಬಿದುದರ ಫಲವಿನ್ನು ಕಾಣೆ ೩
ಜಗದ ಸಜ್ಜನರಿದು ಮಿಗೆ ಮೀರಿತೆನಲು
ಹಗೆಗಳೆಲ್ಲರು ಬಹು ಸೊಗಸಾಯಿತೆನಲು
ನಗಲು ಎನ್ನನು ನೋಡಿ ನಗಧರ ನೀ ಬಂದು
ಅಘಟಿತ ಘಟನ ಮಾಡಿದಿ ದೀನಬಂಧು ೪
ಈ ಪರಿಯಲಿ ನಿರುಪಾಧಿಯೊಳೆನ್ನ
ಕಾಪಾಡಿ ಕಡೆಯೊಳೀ ಕಷ್ಟಗಳನ್ನ
ನೀ ಪರಿಹರಿಸಲೇಬೇಕು ಪ್ರಸನ್ನ
ಶ್ರೀಪತಿ ಶೇಷಾದ್ರಿವಾಸ ಮೋಹನ ೫

೪೪೩
ತಪ್ಪ ಪಾಲಿಸಯ್ಯ ತಿಮ್ಮಯ್ಯ
ತಪ್ಪ ಪಾಲಿಸಯ್ಯಪ.
ತಪ್ಪ ಪಾಲಿಸದೆಯಿಪ್ಪರೆ ಯೆನ್ನೊಳು
ಒಪ್ಪಿಗೆ ಪಟ್ಟೊಲಿಯಪ್ಪ ತಿಮ್ಮಪ್ಪನೆಅ.ಪ.
ಜಲಜನಾಭ ನಿನ್ನ ಮಹಿಮೆಯ
ನೆಲೆಯನರಿಯದೆನ್ನ ಮನವದು
ನೆಲೆಯಿಲ್ಲದ ಭವಜಲಧಿಯೊಳಾಡುತ್ತ
ಲಲನಾ ವಿಷಯದ ಬಲೆಗೆ ಮೋಹಿಸಿ ಮನ
ಸಿಲುಕಿ ಮಲಿನವಾಯ್ತು ತತ್ವದ
ನೆಲೆಯನರಿಯದಾಯ್ತು ಹೀಗೆನ್ನುತ
ಕಳೆದುಹೋಯ್ತು ವಿಂಶತಿ ವತ್ಸರಗಳು
ತೊಳಲಿ ಸಕಲ ಭವದೊಳಗಾರ್ಜಿತವಹ೧
ಹಾಳು ಮನವು ಕೂಡಿ ನಾನಾ
ಚಾಳಿ ಮಾಳ್ಪುದಾಡಿ ಬುದ್ಧಿಯ
ಪೇಳಿದಷ್ಟು ದುಶ್ಯೀಲವೆ ಮಾಳ್ಪುದು
ತಾಳೆಂದರೆ ಒಂದು ವೇಳೆಗೆ ಸುಮತಿಯ
ಆಲೋಚನೆಯೊಳಗೆ ಬಿದ್ದರೆ
ಮೇಲಿಲ್ಲವು ಕ್ಷಣಕೆ ತನ್ನಯ
ಶೀಲವನೆ ಸ್ವೀಕರಿಸುತಿರುವುದು
ಪೇಳಲೇನು ಕರುಣಾಳು ನೀ ಯೆನ್ನಯ೨
ನಾನಾ ಕಷ್ಟಪಟ್ಟೆ ಇನ್ನಾದರು
ಮಾನಿಸಬೇಕಷ್ಟೆ ಎನ್ನೊಳು
ಊನ ಗ್ರಹಿಸಿ ಅನುಮಾನ ಸಾಧಿಸಿದರೆ
ನಾನೆಂಬುವದೇನು ಸ್ವತಂತ್ರವ
ಕಾಣೆನು ಎನ್ನೊಳಗೆ ಸಂತತ
ನೀನೇ ಗತಿಯೆನಗೆ ಇದಕನು-
ಮಾನವಿಲ್ಲ ಪಾದಾನತಜನರಾ
ಧೀನನೆಂಬ ಬಿರುದಾನಬೇಕಾದರೆ೩
ಅಪರಾಧಿಯೆ ನಾನು ಹೇಗೈ
ಅಖಿಲಾತ್ಮನು ನೀನು ಹೃದಯದಿ
ಕೃಪೆಯ ಬೀರಿ ತೋರಿಪ ಪರಮಾತ್ಮನೆ
ಚಪಲನಾಗಿ ಎನ್ನುಪಮೆಗೆಯೊಡ್ಡಿದೆ
ಸಫಲವಾಯ್ತು ಎನಗೆ ಕೀರ್ತಿಯು
ಅಪಕೀರ್ತಿಯು ನಿನಗೆ ಪಾದವ
ಜಪಿಸುವಂತೆ ಕರುಣಿಪುದಿನ್ನಾದರೂ
ಕಪಟವಾಯ್ತೆ ಸರೀಸೃಪಗಿರಿರಾಜನೆ೪
ದೂಷಣಾರಿ ನಿನ್ನ ಪಾದದ
ದಾಸಗೈಯ್ಯೊ ಎನ್ನ ಎನ್ನೊಳು
ದೋಷವಿಲ್ಲ ಜಗದೀಶ ಜನಾರ್ದನ
ದಾಶರಥಿಯ ಕರುಣಾಶರಧಿಯೊಳಗೆ
ಈಸಾಡಿದ ದಾಸ ಕಾರ್ಕಳಾ
ಧೀಶ ಶ್ರೀನಿವಾಸ ರವಿಶತ
ಭಾಸ ಶ್ರೀಲಕ್ಷ್ಮೀನಾರಾಯಣ ಸ
ರ್ವೇಶ ಭಕ್ತಜನಪೋಷ ನೀಯೆನ್ನಯ೫

೨೬೭
ತಪ್ಪ ಪಾಲಿಸಿಕೊಳ್ಳೊ ಜೀಯಾ ತಿಮ್ಮಪ್ಪ ವೆಂಕಟಗಿರಿರಾಯ ಪ.
ಬಪ್ಪ ತನ್ನಯ ಭಕ್ತ ಜನರ ಬವಣೆಗಳ
ನೊಪ್ಪನೆಂಬ ಬಿರುದಿಪ್ಪ ಭಾಸುರಕಾಯ ಅ.ಪ.
ಅರವಿಂದ ಸಖನುದಯಿಸಲು ಅಜ
ಗರನಂತೆ ಬೀಳುವ ತಪ್ಪು
ಗುರು ಹಿರಿಯರ ಜರಿವಂಥ ತಪ್ಪು ನಿನ್ನ
ಸ್ಮರಣೆಯ ಮಾಡದ ತಪ್ಪು
ತ್ವರೆಯಿಂದ ನಿತ್ಯ ಕರ್ಮಗಳ ಬಿಡುವ ತಪ್ಪು
ಸ್ಥಿರ ಚಿತ್ತದಲಿ ನಿನ್ನ ಚರಣಾರಾಧಿಸದಂಥ ೧
ಸಂಧ್ಯಾ ಕೃತ್ಯಗಳ ಕಾಲದಲಿ ಪರ
ನಿಂದೆಯ ಮಾಡುವ ತಪ್ಪು ದಿವ್ಯ ಶ್ರೀ
ಗಂಧ ಶ್ರೀ ತುಳಸಿ ಪುಷ್ಪಗಳ ತಾನೆ
ತಂದಿರಿಸದ ಮಹಾ ತಪ್ಪು
ಮಿಂದು ಮಡಿಯೊಳಿದ್ದು ಮರುಳನಾಗಿ ನಿಜ
ಮಂದಗಮನೆಯಳ ಮಾತನಾಲಿಸುವಂಥ ೨
ಮನ ವಚನಾದಿಗಳಿಂದ ಪರ
ವನಿತೇರ ಸ್ಮರಿಸುವ ತಪ್ಪು ಪುಣ್ಯ
ದಿನಗಳ ತ್ಯಜಿಸುವ ತಪ್ಪು ಪರ
ಧನಾಭಿಲಾಶಿಯ ತಪ್ಪು
ಕನಸಿಲಾದರು ನಿನ್ನ ನೆನೆಯದೆ ಸತಿಸುತ
ತನುವೆನ್ನದೆಂಬ ಚಿಂತನೆಯಿಂದ ಬಳಲುವ ೩
ನೇಮ ವ್ರತಗಳೆಲ್ಲ ಮರತು ಸೌಖ್ಯ
ಕಾಮುಕನಾಗಿಹ ತಪ್ಪು ಬಹು
ಪಾಮರವೃತ್ತಿಯ ತಪ್ಪು ನಿನ್ನ
ದಯ ಶೋಭಿಸದಂಥ ತಪ್ಪು
ಆ ಮಹಾ ಮಂತ್ರಗಳ ಜಪಿಸದ ತಪ್ಪು
ಕಾಮಿನಿಯರ ಮೋಹಕ್ಕೊಳಗಾಗಿ ಬಳಲುವ ೪
ನರಗುರಿಯಾದೆನ್ನ ತಪ್ಪ ನೋಡೆ
ಹುರುಳು ಗಾಣುವುದುಂಟೆನಪ್ಪ ಸರ್ವ
ಸ್ಥಿರ ಚರಾದಿಗಳೊಳಗಿಪ್ಪ ಲಕ್ಷ್ಮೀ
ವರನಿತ್ಯ ಸತ್ಯ ಸಂಕಲ್ಪ
ಪರಮ ಪಾವನ ಶ್ರೀಮದುರಗೇಂದ್ರ ಗಿರಿವಾಸ
ಕರುಣದಿಂದೆನ್ನನುದ್ಧರಿಸಿ ರಕ್ಷಿಸು ಬೇಗ ೫

೫೯
(ಮಹಿಷಿ ಅಶ್ವತ್ಥನಾರಾಯಣ ದೇವರು)
ತಪ್ಪಾ ಕ್ಷಮಿಸು ಕಲ್ಪತರುರೂಪ ತವಪಾದ-
ಕೊಪ್ಪಿಸಿದೆನು ಯೆನ್ನನು
ಅಪ್ಪಳಿಸಖಿಳಾಂತರಾಯವತಿದಯದಿ ತಿ-
ಮ್ಮಪ್ಪರಾಜನೆ ನೀನೆಂದರಿತು ಬಂದಿರುವೆನು ಪ.
ಮಂಗಲ ಮಹಿಮೆ ಮಾತಂಗ ವರದ ಶುಭ
ತುಂಗಾತೀರದಿ ನಿಂದು ತಾರಕನೆಂದು
ಇಂಗಿತ ಫಲಗಳ ಪಾಲಿಸ ಭವ ಭಯ
ಭಂಗದ ಮಹಿಮನೆಂದರಿತು ಬಂದಿಹೆನಿಂದು
ಅಂಗದಾದಿ ದೇವೇಂದ್ರ ಸಂಸ್ತುತ
ತುಂಗಬಲ ಹನುಮತ್ಪ್ರತಿಷ್ಠಿತ
ಅಂಗುಟಾಗ್ರದೊಳಖಿಳಪಾವನ
ಗಂಗೆಯನು ಪಡದಾದಿ ಪುರುಷ ೧
ಪಾವಕ ದಿಋಖ(?) ದೇವ ಸತ್ಸುಖಗಣ
ಭಾವನ ಭಜಕೇಷ್ಟಸಿದ್ಧಿದನೇ
ಮಾವನ ಮಗನೊಳಗುಸುರಿದ ನುಡಿಯನು
ಕಾವೆನಿಂದಿರುವಿಲ್ಲಿ ಕರುಣಾವಾರಿಧಿ ಕೃಷ್ಣಾ
ಈ ವಸುಂಧರೆಯಲ್ಲಿ ಘಟಿಸುವ
ನೋವುಗಳ ಸಂಬಂಧಗೊಳಿಸದೆ
ಶ್ರೀವನಿತೆಯೊಡಗೂಡಿ ನಿನ್ನ ಕ-
ರಾವಲಂಬನವಿತ್ತು ಕರುಣಿಸು ೨
ತ್ರಿವಿಧ ತಾಪಗಳು ಭರಿಸಲಾರದೆ ವಂದು
ನೆವನದಿಂದಲಿ ಬಂದು ನುಡಿದೆನಿಂದು
ಪವಮಾನವಂದಿತ ಪತಿತ ಪಾವನನೆ ನೀ-
ವಹಿಸಿ ರಕ್ಷಿಪುದೆಂದು ಒರೆವೆನು ಗುಣಸಿಂಧು
ಭವ ವಿರಿಂಚಿ ರಮಾ ವರಪ್ರದ
ಭಾರ ನಿನ್ನಲಿರಿಸಿದವನನು
ತವಕದಲಿ ಕಾಪಾಡು ವೆಂಕಟ
ಭವನ ಮಹಿಷಿ ಕ್ಷೇತ್ರ ಪಾಲನ೩

೪೪೪
ತಪ್ಪುಗಳೆಲ್ಲವು ಒಪ್ಪುಗೊಳ್ಳಯ್ಯ ಶ್ರೀ
ಚಪ್ಪರ ಶ್ರೀನಿವಾಸಪ.
ಸರ್ಪರಾಜಗಿರಿಯಪ್ಪ ತಿಮ್ಮಪ್ಪನೆ
ದರ್ಪಕತಾತನೆ ತಾ ಸಜ್ಜನಪ್ರೀತಅ.ಪ.
ಮಾಧವ ನಿನ್ನಯ ಮಹಿಮೆ ತಿಳಿಯದಪ-
ರಾಧವ ಮಾಡಿದೆ ದಾರಿದ್ರ್ಯದ
ಬಾಧೆಯಿಂದ ತವ ಪಾದ ದರುಶನದ
ಗಾದಿಯ ಕಾಣದಾದೆ ನಾ ದ್ರೋಹಿಯಾದೆ೧
ತ್ರಾಣವಿರುವಾಗ ಕಾಣಿಕೆ ಹಾಕಿದೆ
ದೀನದಾರಿದ್ರ್ಯದ ಹೊತ್ತಿನಲಿ
ಮೇಣದರಿಂದಲಿ ತೆಗೆದು ತೆಗೆದು ಪಂಚ
ಪ್ರಾಣಕ್ಕಾಹುತಿಯ ಕೊಟ್ಟೆ ಅಪರಾಧ ಪಟ್ಟೆ೨
ಮಂದವಾರದಿಕ್ಕೊಂದೂಟವ ಸತ್ತ್ವ
ದಿಂದಿರುವಾಗ ನಾ ನೇಮಗೈದೆ
ಮಂದಭಾಗ್ಯ ಜ್ವರದಿಂದ ಪೀಡಿತನಾದ-
ರಿಂದೆರಡೂಟವನೂ ಮಾಡಿದೆ ನಾನು೩
ಶನಿವಾರಕ್ಕೊಂದಾಣೆ ಕಾಣಿಕೆ ಹಾಕುತ್ತ
ಮಿನುಗುವ ಡಬ್ಬಿಯ ನಾ ಮಾಡಿದೆ
ಎನಗೆ ದಾರಿದ್ರ್ಯವ ಕೊಟ್ಟ ಕಾರಣದಿಂದ
ಹಣವೆಲ್ಲ ಗುಣ ನುಂಗಿತು ಪಾದಕೆ ಗೊತ್ತು೪
ದೊಡ್ಡದಾರಿದ್ರ್ಯದ ಗುಡ್ಡೆ ಬಿದ್ದುದರಿಂದ
ದುಡ್ಡೆಲ್ಲ ತೆಗೆದೆ ನಾ ದಡ್ಡನಾಗಿ
ಅಡ್ಡಬಿದ್ದು ಕೈಯೊಡ್ಡಿ ಬೇಡುವೆ ಸ್ವರ್ಣ
ಗುಡ್ಡೆಯ ಮೇಲಿರುವ ಮಹಾನುಭಾವ೫
ಭಂಡಾರದ್ರೋಹ ಬ್ರಹ್ಮಾಂಡಪಾಪಾಗ್ನಿಯು
ಮಂಡೆಯೊಳುರಿವುದು ಖಂಡಿತದಿ
ಪುಂಡರೀಕಾಕ್ಷನೆ ಕರುಣಾಮೃತರಸ
ಕುಂಡದೊಳ್ ಮೀಯಿಸಯ್ಯ ವೆಂಕಟರಾಯ೬
ದೃಢಭಕ್ತಿಯನು ಕೊಟ್ಟು ಸಲಹಬೇಕಲ್ಲದೆ
ಕೆಡುಕು ಮಾಡುವುದೇನು ಜಡಜನಾಭ
ಕಡಲಶಯನ ಲಕ್ಷ್ಮೀನಾರಾಯಣ ನ-
ಮ್ಮೊಡೆಯ ಪಡುತಿರುಪತೀಶ ರವಿಕೋಟಿಭಾಸ೭

೨೬೫
ತಪ್ಪುಗಳೊಪ್ಪುವೆ ಎನ್ನಲಿ ತಿಮ್ಮಪ್ಪ ನೀ ಕ್ಷಮಿಸಿ
ರಕ್ಷಿಸು ಕರುಣದಲಿ ಪ.
ಬುದ್ಧಿ ಹೀನನಾಗಿ ಎದ್ದು ಹಾಸಿಕೆಯಿಂದ
ಮೇಧ್ಯವಸ್ತುಗಳೆಲ್ಲ ತಂದು ತಿಂದು
ಮಧ್ಯಾನದಲಿ ನಿದ್ರೆ ಗೈದು ಮೋಹದಲಿ ನಿ-
ಷಿದ್ಧ ಕಾಲದಿ ಸತಿ ಸಂಗ ಗೈದಿಹೆನು ೧
ಗುರು ಹಿರಿಯರ ಕೆಟ್ಟ ಗರುವದಿಂದ ನೀ
ಕರಿಸಿ ಲೋಭದೊಳತಿಥಿಗಳ ಬಿಟ್ಟು
ಪರ ಧನವನು ನಾನಾ ತರದಿಂದ ಕೊಂಡು ಶ್ರೀ
ವರ ನೀನೆ ಗತಿಯೆಂದು ಸ್ಮರಿಸಿಕೊಂಡಿಹೆನು ೨
ಇಂಥಾನಂತಾನಂತ ಪಾತಕಿಗಳ ರಮಾ
ಕಾಂತ ನೀ ಕ್ಷಮಿಸಲು ಶಕ್ತನೆಂದು
ಚಿಂತಿಸಿ ನುಡಿದೆನು ಲಾಲಿಸಿ ಕಾಯೊ ದು-
ರಂತ ಮಹಿಮ ವೆಂಕಟೇಶ ನೀ ದಯದಿ ೩

೨೦೦
ತಲೆಯ ತೂಗಿ ನಗುವುದೇನೊ ಚೆಲುವ ತಿಮ್ಮರಾಯ ನೀ
ತಿಳಿಸಿದಂತೆ ನುಡಿದೆನಿಂದು ಸಲುಹಬೇಕು ಜೀಯ ಪ.
ಯೋಗ ಮಾಯ ಶಕ್ತಿ ತಾಳ ರಾಗ ರಚನೆಯರಿಯೆ
ಲಾಘವಾದಿ ವರ್ಣಭೇದವಾಗಲಿದನು ತೊರೆಯೆ
ಶ್ರೀಗುರು ಮುಖೇಡ್ಯ ನಿನ್ನಾದಾಗಲು ನಾ ಮರೆಯೆ
ನಾಗಶಯನ ನಿನ್ನ ಪದಕೆ ಬಾಗಿ ನುಡಿವೆ ದೊರೆಯೆ ೧
ಮಾನಸ ವಾಕ್ಕರ್ಮವೆಲ್ಲ ನೀನೆ ಮಾಳ್ಪಿಯೆಂದು
ಧ್ಯಾನಿಸಿಕೊಂಡಿಹೆನು ಭಕ್ತಾದೀನ ಕರುಣಾಸಿಂಧು
ಮಾನವಿಯ ನುಡಿಯೊಳಿರುವ ನಾನಾ ಥರವ ಕುಂದು
ನೀನೆ ಕ್ಷಮಿಸಬೇಕು ಪದ್ಮಮಾನ ದೀನ ಬಂಧು ೨
ಬುದ್ಧಿಹೀನ ಶಿಶುವು ನುಡಿವಾ ಬದ್ಧ ಮಾತಿನಿಂದ
ಲೆದ್ದು ಬಂದು ಜನನಿ ತೊಡೆಯೊಳಿದ್ದು ಕೇಳುವಂದ
ಸಿದ್ಧವಾಗು ಶ್ರೀನಿವಾಸ ಶುದ್ಧ ಪೂರ್ಣಾನಂದ
ಮುದ್ದು ವೆಂಕಟೇಶ ತಪ್ಪ ತಿದ್ದು ಗೋಪಿ ಕಂದ ೩

ತಾತ್ವಿಕ ಹಿನ್ನೆಲೆಯ ಹಾಡುಗಳು
೨೬೮
(ಸರ್ವೋತ್ತಮತ್ವ ವರ್ಣನೆ)
ಸಕಲವು ತ್ವದಧೀನವು ಶ್ರೀಶನೀ ಕೇಳು ಪ.
ಸಕಲವು ತ್ವದಧೀನ ಸಾಕಯ್ಯ ಸತ್ಯಮಾನ
ವಿಖನ ಸಗಣಧಾಮ ವಿಶ್ವಗುಣಾಭಿರಾಮ ಅ.ಪ.
ಕಮಲ ಸಂಭವ ಮುಖರು ಶ್ರೀಶ ತ್ವತ್ಪಾದ
ವಿಮಲ ಪದ್ಮ ಸೇವಕರು
ಅಮಿತ ಗುಣಾಂಬುಧಿ ಆಡುವಿ ನಿರುತದಿ
ಶಮಿತ ದುರಿತ ಬೀಜ ಶ್ಯಾಮ ಸುಂದರ ರಾಜ ೧
ದೇಹ ಗೇಹಾದಿಗಳೆಲ್ಲ ಸುವರ್ಣ ಪಕ್ಷಿ
ವಾಹ ನಿನ್ನೊಶ ಭೂನಲ್ಲ
ಮೋಹದಿ ತನ್ನದೆಂದು ಜೋಹಗೊಂಡ ಪರಿಗೆ
ಬಾಹದಿರದು ಕೇಡು ಬಿಡದೆಂದು ನಗೆಗೇಡು ೨
ಪರಮ ಕೃಪಾಳು ನಿನ್ನ ಪಾದವ ನಂಬಿ
ಮರೆದೆ ದುರ್ಮಾನವನ್ನ
ಉರಗ ಗಿರೀಂದ್ರನೋಳ್ಮೆರೆವ ಮಹಾತ್ಮನೆ
ಶರಣ ಜನ ಮಂದಾರ ಸೇರಿಸು ಕೃಪಾಧಾರ೩

೧೮೩
ತಾತ್ಸಾರಕಿದು ಕಾಲವಲ್ಲ ರಂಗಯ್ಯ ಶ್ರೀ-
ವತ್ಸಲಾಂಛನ ಸುಖ ಚಿನ್ಮಯನೆ
ವತ್ಸನ ಧ್ವನಿ ಕೇಳಿ ಒದಗುವ ಗೋವಂತೆ
ಭೃತ್ಯರ ಸಲಹುವ ಬಿರುದುಳ್ಳ ನರಸಿಂಹ ಪ.
ಹುಚ್ಚಾಗೆಲ್ಲರ ಕಚ್ಚುವ ನಾಯಂತೆ
ತುಚ್ಛವಾದ ಬಗುಳುಚ್ಚರಿಸಿ
ಇಚ್ಛಾನುಸಾರದಿಂದಿರುವ ಹೂಣನ ಬಾಯಿ
ಮುಚ್ಚಿಸಿ ಮೂಲೆಯೊಳ್ಮುರಿದೊತ್ತು ಮುರಹರ ೧
ನಿನ್ನ ಸೇವೆಯನ್ನು ನಿರುತದಿ ನಡೆಸುತ
ಅನ್ಯರ ಲಕ್ಷಿಸದಿರಲೆನ್ನನು
ಭಿನ್ನ ಭಾವದಿ ಭೀತಿ ಬಡಿಸುವ ದುಷ್ಟನ
ಇನ್ನುಪೇಕ್ಷಿಸಿ ಸುಮ್ಮನಿರುವೆ ಯಾತಕೆ ಸ್ವಾಮಿ ೨
ದುಷ್ಟ ಹಿರಣ್ಯಚರ್ಮಾದಿದಮನ ನಿನ-
ಗೆಷ್ಟೆಂದು ಪೇಳಲಿ ವಿಧಿಜನಕ
ಸೃಷ್ಟಿಗೊಡೆಯ ವೆಂಕಟೇಶನ ಹೂಣನ
ಮೆಟ್ಟಿ ಮುರಿದು ಬೇಗ ಸಲಹೆನ್ನ ಮಾಧವ ೩

೨೫
(ಶೇಣಿಯ ಗೋಪಾಲಕೃಷ್ಣನನ್ನು ನೆನೆದು)
ತಾಪವ ಬಿಡಿಸು ದಯಾಪರ ಶ್ರೀ
ಗೋಪಾಲ ಕೃಷ್ಣ ನೀ ಕಾಪಾಡು ಸಂಸಾರ ಪ.
ಲೋಕನಾಯಕ ನಿನ್ನ ಕರುಣವಂದಿದ್ದರೆ
ಸಾಕೆಂಬೆ ಜ್ಞಾನಾನಂದಕರ
ಪಾಕಶಾಸನ ಸುತಗೊಲಿದಾತನ ಭಂಡಿ
ನೂಕಿ ನಡೆಸಿದ ಕೃಪಾಕರ ಮೂರುತಿ ೧
ನಡೆವುದು ನುಡಿವುದು ಕೊಡುವುದು ಕೊಂಬುದು
ಮಡದಿ ಮಂದಿರ ಮಮತಾಸ್ಪದದ
ಒಡವೆ ವಸ್ತುವು ಮೊದಲಾದುದೆಲ್ಲವನು ಶ್ರೀ-
ಮುಡಿಯ ಸಂವರಿಸುವ ಕರದಿ ಸಂಗ್ರಹಿಸುತ೨
ನಿನ್ನಡಿಗಳ ನಂಬಿ ನಿಂದಿಹೆನಿಲ್ಲಿ ಪ್ರ-
ಸನ್ನ ಮುಖಾಂಬುಜ ಪಾಲಿಸೆಂದು
ಅನ್ಯರಿಗೆಂದೆಂದು ದೈನ್ಯ ತೋರಿಸಲಾರೆ
ಪನ್ನಗಾಚಲವಾಸ ಪರಮ ದಯಾಳೊ ೩

೨೧೭
ತಾಳಲಾರೆ ರಂಗಯ್ಯ ನಾ ತಾಳಲಾರೆ
ತಾಳಲಾರೆ ಕರುಣಾಳು ರಾಜೇಂದ್ರನೆ
ಖೂಳ ಜನರು ಕೂಡಿ ಪೇಳುವ ನುಡಿಯನ್ನು ಪ.
ದೇವ ನಿನ್ನ ಪಾದಾಂಬುಜ
ಸೇವೆಯನ್ನು ಭಾವಶುದ್ಧದಿ
ಮಾಳ್ವ ಭಾಗ್ಯ ಪೊಂದಿರಲು ಮೂ-
ದೇವಿ ಎಂದೆನ್ನನು ಮೂದಲಿಸುವ ಮಾತ ೧
ಹೇಡಿ ಜನರು ಮನಕೆ ಬಂದಂ-
ತಾಡುತ್ತಿಹರು ರೂಢಿಪ ಮುಖದಿ ನೀ
ಮಾಡುವ ಕೃತ್ಯದ ಪ್ರೌಢಿಮೆಯರಿಯದೆ
ಮೂಢ ಜನರ ಮಾತ ೨
ಹೆತ್ತ ಮಗನು ಹಸ್ತಕನಾಗಿ
ಹತ್ತಲಿರಲು ಉತ್ತಮ ಪದವಿಯ
ತೊತ್ತಿನ ಕುವರರಿಗಿತ್ತದು ಸರಿಯೆ ಸ-
ರ್ವೋತ್ತಮ ದೊರೆಯೆ ನಾ ೩
ತೋರೊ ಸೂಕ್ತಿ ತಾತ್ಸಾರವ್ಯಾಕ-
ಪಾರ ಯುಕ್ತಿ ಕ್ರೂರ ಮಾನವರಹಂ-
ಕಾರ ಖಂಡಿಸಿ ಮುಖ್ಯ ಧಾರುಣಿ
ಪರೊಳಂತ:ಪ್ರೇರಿಸುವುದು ಶಕ್ತಿ ೪
ಲೋಕನಾಥ ನೀನಹುದೆಂಬ-
ದ್ಯಾಕೆ ಗಾಥಾ ಈ ಕಪಟದ ಕೃತ್ಯ
ಯಿಕ್ಕಡಿವುತ ಬೇಗ ಸಾಕೆನ್ನ ಭಕ್ತ ಪ-
ರಾಕು ವೆಂಕಟನಾಥ ೫

೧೮೨
ತಾಳಲಾರೆನು ದೇವ ಪಾಪ ತಪ್ಪಿಸಿ ಬೇಗ
ಪಾಲ ನೀನೆನಗೆ ಸಂಜೀವ
ಕಾಳಭೈರವನಿಗಪ್ಪಣೆಯ ಕೊಡೊ ದೈತ್ಯಕುಲ
ಕಾಲ ಬಿಡಿಸುವುದೆನ್ನ ನೋವ ಪ.
ನರಹರಿಯೆ ಸರ್ವತ್ರ ಇರುವಂಥ ನಿನಗೆ ನಾ-
ನರುಹಲೇನಿಹುದಿನ್ನು ಜೀಯ
ಉರಿಯನುಗುಳುವ ಘೋರ ಶರಗಳೋಲ್ ಪ್ರತಿನಿಮಿಷ
ವಿರಿವುತಿದೆ ಬಲ್ಲಿ ಮಹರಾಯ
ತರಹರಿಸಿ ದಿನದಿನಕೆ ಕರುಗುತಿಹ ಮದ್ದೇಹ
ಸ್ಥಿರವಾಗಲೀ ನಿನ್ನ ಪಾಯ
ದರ ಚಕ್ರ ಶಾಙ್ರ್ಗನಂದಕ ಚರ್ಮಗದೆಗಳನು
ಧರಿಸಿ ವೋಡಿಸು ಶತ್ರುಮಾಯ ೧
ಈಶನಿಂದೊರಗೊಂಡ ಕಾಶೀಶ ಕಳುಹಿಸಿದ
ಪೈಶಾಚ ದಕ್ಷಿಣಾಗ್ನಿಯನು
ದೋಷವೆಣಿಸದ ಅಂಬರೀಷನಲಿ ಮುನಿದ ದು-
ರ್ವಾಸ ಮುನಿಕೃತ ಕೃತ್ರಿಮವನು
ನಾಶಗೈದಖಿಳಗುಣ ಭೂಷಣನೆ ನಿನಗೆನ್ನ
ಪೋಷಣೆಯು ಬಹು ಭಾರವೇನು ೨
ಸರ್ವಶಕ್ತಿಯೆ ನಿನಗೆದುರ್ವಾದ್ಯವುಂಟೆ ಗುರು
ಶರ್ವ ಸುರನಾಥ ಮುಖವಂದ್ಯ
ಗೀರ್ವಾಣ ಪಕ್ಷಜನ ನಿರ್ವಹಿಸಿ ನೀನೆ ಯೆನ-
ಗಿರ್ವೆ ಗತಿಯಾಗಿ ಸುರವಂದ್ಯ
ಬರ್ವ ದುರಿತಗಳ ಮಹದೂರ್ವಣೆಗೆ ಪುಡಿಗೈದು
ಗರ್ವಿ ವೈರಿಗಳ ಸದೆ ಬಡಿದು
ಪೂರ್ವದಿಂದಲಿ ಸೇವೆ ಸ್ವೀಕರಿಸು ಸರ್ಪವರ
ಪರ್ವತೇಶನೆ ಬೇಗ ಒಲಿದು ೩

೮೪
(ಮುಳಬಾಗಿಲು ಪರಶುರಾಮ ದೇವರು)
ತುಂಗಾ ತಟದಲ್ಲಿ ಥಳಥÀಳಿಸುವ ಭೃಗುಪುಂಗವ ಭೂಪತಿಯೆ
ಇಂಗಿತಗಳ ನೀನರೆಯೆಯ ಕುಜನರ ಭಂಗಿಸು ಶ್ರೀಪತಿಯೆ ಪ.
ಸೂರ್ಯ ದಿನದಿ ನಿನ್ನಡಿಯಲಿ ಬೇಡಿದ ಕಾರ್ಯಗಳೆಲ್ಲವನು
ಸ್ಥೈರ್ಯ ಧೈರ್ಯ ಶೌರ್ಯಗಳ ನೀಡುವಾಚಾರ್ಯ ಸಮರ್ಜಿತನೆ
ಆರ್ಯ ಗ್ರಹಸ್ಥಿತ ಧಾರ್ಯಾನಲಧೃತ ವೀರ್ಯವಿಭಾವನನೆ
ಮರ್ಯಾದೆಯ ಕಾಪಾಡೆಂದಿಗು ಶ್ರೀ ಭಾರ್ಯಾಲಂಗಿತನೇ ೧
ವೈದಿಕ ಲೌಕಿಕ ವಿವಿಧ ಕರ್ಮಗಳ ಸಾಧಿಸು ಸುಲಭದಲಿ
ಶೋದಿಸಿ ಹೃತ್ಕಮಲವನು ನಿಲ್ಲಿಸಿ ಬೋಧಿಸು ಭೂಮಿಯಲಿ
ಬಾಧಿಪ ವಿಘ್ನವ ಬಡಿದೋಡಿಸಿ ಮೃದು ಪಾದಯುಗ್ಮವ
ಸಾದರದೊಳ್ಮಸ್ತಕದಲ್ಲಿರಿಸುತ ಮೋದಗೊಳಿಸು ಮನವ ೨
ನಿರುತದಿ ನೀನಿಲ್ಲಿರುವುದ ಕಂಡರೆ ಹರುಷವ ಹೊಂದಿಹೆನು
ಮರೆಯದಿರೆನ್ನನು ಮನೆಯಲ್ಲಿದ್ದರು ಸರಸಿಜಾಸನ ಪಿತನೆ
ಪರತರ ಮಂಗಳ ಪಾವನ ವೆಂಕಟ ಗಿರಿವರ ಶೋಭಿತನೆ
ಸರಿ ನಿನಗಿಲ್ಲೆಂದರಿವರನೆಂದಿಗು ಪೊರೆವ ಕೃಪಾಕರನೆ೩

೮೩
ಪರಶುರಾಮಾವತಾರ
ತುಂಗಾಮಂಗಳತರಂಗ ಭೂಷಿತಲಿಂಗರೂಪ ಭೃಗುಪುಂಗವನೆ
ಅಂಗುಲಿ ಸಂನೃತಗಾಂಗಸಂಗಿ
ಶಿವಮಂಗಲಧಾಮನೆ ಮಾಧವನೆ ಪ.
ಸರಸಿಜಾಸನಾದ್ಯಖಿಳ ಸುರಾರ್ಚಿತ ಚರಣಾಂಬುಜ ಶ್ರೀ ಕಲ್ಪತರೊ
ಪರಶುದಳಿತ ಪುರು ಮದನೃಪಗಣನೀನರಿಯೆಯ
ಮಾನಸ ಚರಿಯವನು
ಕರಧೃತ ಶಾರ್ಙಶರಾಸನ ಖಂಡಿತ ಕರದಶ ಶತಕರುಣಾ ಜಲಧೇ
ಅರಿಗಳ ಬುಡ ಕತ್ತರಿಸಿ ನಿರಂತರ ಪೊರೆವುದೆನ್ನ ಪರಮಾದರನೆ ೧
ಶ್ರೀನಿಕೇತನ ನೀ ನಡೆಸುವ ಚರ್ಯವನೇನೆಂಬೆನು ನಳಿವಾಂಬಕನೆ
ಮಾನವರಂದದಿ ಮಾತೃವಧಾಕವೇನ ಸನಿಹದೆ ಅರ್ಜುನ ಸಖನೆ
ದೀನ ದಯಾಪರನೆಂಬ ಬಿರುದ ತೋರ್ದಿ
ನರರನು ಸಲಹುವೆನೆಂದು
ಈ ನದಿಯಲಿ ಮಿಂದಖಿಳರ ಪಾತಕ
ಹಾನಿಗೊಳಿಸದೆ ರಮಾವರನೆ ೨
ಈಶನು ಮಾನಿಸಿದಖಿಳ ಕೃತ್ಯವನು
ದಾಸರು ವಹಿಸುವದೆಂಬುದನು
ವಾಸವಿಗರುಪಿದ ವಚನದ ಸ್ಥಾಪಿಸಲೋಸುಗ
ಲೋಕ ವಿಡಂಬನವ
ದೋಷದೂರ ನೀನಡಸುವ ಚರ್ಯವನೇಸು
ವರ್ಣಿಸಲಿ ವಶಿತನವ
ಶೇಷ ಭೂಧರನಿವಾಸಿ ಮಾನಸಿಕದಾಸೆ ಪೂರಿಸಖಿಳೊತ್ತಮನೆ ೩

೧೧೮
ತೊಡಿಸು ನಿನ್ನ ಕೃಪಾಕವಚ ಮೃಡ ಫಣೀಂದ್ರವೀಂದ್ರ ವಂದ್ಯ
ಕಡಲಶಯನ ಶ್ರೀನಿವಾಸ ಒಡೆಯನಾಜ್ಞೆಯಿಂದಲೆನಗೆ ಪ.
ಜೀವಗಣಪತೆ ಸರ್ವದೇವತಾಗತೆ
ಪಾವನಾತ್ಮ ಪದ್ಮ ಸಮಕರಾವಲಂಬಿತ್ತು ಬೇಗ ೧
ಮೂರು ತಾಪವಾ ಹತ್ರ ಸೇರದಂದದಿ ಅದರ
ಬೇರ ಕಡಿದು ಭಕ್ತಿಸಾರ ಧಾರದಿಂದ ದೃಢವ ಮಾಡಿ ೨
ಕೈಟಭಾರಿಯ ಪುರದ ಭಾಟದಾರಿಯ
ಬೇಟ ಜಲಟ ಕುಕ್ಕುಟಗಳ ನೋಟಾಪಾಟದೊಡನೆ ತೋರಿ ೩
ಹರಿಯ ದೊರೆತನ ಕರುಣಿಕಾಗ್ರಣಿ
ಸರಿಯ ಕಾಣೆ ನಿನಗೆ ಕಮಲ ಕರವ ಎನ್ನ ಶಿರದೊಳಿಕ್ಕಿ ೪
ನಿನ್ನ ಕರುಣವು ನಿಯತವಾಗಲು
ಪನ್ನಗಾಚಲೇಂದ್ರ ದಯದಿ ತನ್ನ ದಾಸನೆಂದು ಕಾವ ೫

೩೮
ತೋರೋ ಮುಖವ ಕರುಣಿಸು ಸುಖವ
ದುರುಳ ಜರಾಸುತನುರುತರ ಘನವನು ಪ.
ತರಿದು ರುಕ್ಮಿಣಿಯ ವರಿಸಿದ ಧೀರ ೧
ಸಾಂದೀಪಿನಿ ಗುರುವೆಂದ ನುಡಿಯ ಕೇ-
ಳಂದು ಕಂಧರನ ತಂದ ಪರೇಶ್ವರ ೨
ವರದ ಭುಜಗವರಗಿರಿಯ ಶಿಖರದಲಿ
ಮೆರೆವನೆ ಮನದಲ್ಲಿರು ಸುಖಸಾರ ೩

೨೨೦
ಥರವಲ್ಲ ಸ್ವಾಮಿ ಥರವಲ್ಲ ಪ.
ಥರವಲ್ಲ ಸ್ವಾಮಿ ಈ ತೆರನ ಮಾಡುವುದು
ಕರುಣ ಸಾಗರನೆಂಬ ಬಿರುದಿನ್ನು ನಿಲದು ಅ.ಪ.
ಊರೊಳಗಿಹ ಜನರೆಲ್ಲರು ಕೂಡಿ
ವಾರಿಜಾಕ್ಷನ ದಾಸನೆಂದು ಕೊಂಡಾಡಿ
ಸಾರಿಸಾರಿಗೆ ನಿನ್ನ ಕೀರ್ತನೆ ಮಾಡಿ
ಪೋರ ಪೇಚಾಡುವನೆಂಬರು ಕೂಡಿ೧
ಪಾರಾಯಣದ ಪುಸ್ತಕವ ಕಟ್ಟಿಟ್ಟು
ವಾರಿಜನಾಭ ನಿನ್ನಯ ಪೂಜೆ ಬಿಟ್ಟು
ಕಾರಿ ಕೆಮ್ಮುತ ಬಿದ್ದಿರುವ ದೊಡ್ಡ ಗುಟ್ಟು
ಯಾರ ಮೇಲಿನ್ನು ತೋರಿಸಲೆನ್ನ ಸಿಟ್ಟು ೨
ಮೋಹ ಪಾಶದಿ ಮುಸುಕಿ ಕಟ್ಟಿದರೆ
ಬಹ ಪಾತಕಗಳಿಗೆಲ್ಲ ನಾನಿದಿರೆ
ನೀ ಹದಿನಾಲ್ಕು ಲೋಕೇಶನೆಂದೊದರೆ
ದೇಹವ ಬಳಲಿಸಿದರೆ ನಾನೇನ್ಹೆದರೆ ೩
ನಂಬಿರೊ ಭಕ್ತ ಕುಟುಂಬಿಯನೆಂದು
ಅಂಬುಜಸಂಭವನ್ಯಾಕೆಂದನಂದು
ಹಂಬಲಿಸಿದರು ನೀ ದಯದೋರದಿಂದು
ಬೊಂಬೆಯೆ ಸರಿಯೆಂದು ಜನರೆಂಬೊ ಕುಂದು ೪
ಸರ್ವದೋಷಹರ ಸಾಗರಜೇಶ
ನಿರ್ವೇದದಿಂದ ನಾ ನುಡಿದೆನಾಕ್ರೋಶ
ಸರ್ವಕಾಲಕು ಸಲಹುವ ನೀನೆ ಶ್ರೀಶ
ಶರ್ವಾದಿ ವಂದ್ಯ ಶೇಷಾಚಲವಾಸ ೫

೪೪೫
ದಂಡಿಸಬೇಡೈ ದಯೆದೋರೈ ಕರದಂಡದಳಾಂಬಕನೆಪ.
ಕಂಡೀಶವಿನುತ ಬ್ರಹ್ಮಾಂಡಪಾಲ ಮಾ-
ರ್ತಾಂಡಮಂಡಲಗ ಶುಂಡಾಲವರದಅ.ಪ.
ಕ್ಷೇಮದಿ ಶ್ರೀಹರಿನಾಮವ ವರ್ಣಿಸೆ
ನೇಮಾನುಷ್ಠಾನದೊಳಿರಲು
ನಾ ಮಾಡಿದ ನಾನಾವಿಧ ಪಾಪವ
ತಾಮಸಗೊಳಿಸುವ ಕಾಮಕ್ರೋಧಗಳಿಂ೧
ಶಿಷ್ಟಾಚಾರದೊಳಿಷ್ಟನಾಗಿ ಪರ
ಮೇಷ್ಠಿಜನಕ ಜಯ ಜಯವೆನಲು
ಭ್ರಷ್ಟಾಲೋಚನೆ ಪುಟ್ಟಿಸಿ ಪಾಪದ
ಬಟ್ಟಿಯ ಹೊದ್ದಿಪ ದುಷ್ಟಸಂಗದಿಂ೨
ನಾರಾಯಣ ನರಹರಿಯೆನ್ನುವ ವ್ಯಾ-
ಪಾರವ ನಾ ಮಾಡುತ್ತಿರಲು
ಆರೋಹಣಾವರೋಹಣ ನಾದವಿ-
ಕಾರಗೊಳಿಪ ಶಾರೀರಪ್ರಕೃತಿಯಿಂ ೩
ಆರ್ಕಾರಣ ರಿಪುಗಳಿಗೈ ಸರ್ವ ದೇ-
ವರ್ಕಳ ಮಸ್ತಕಮಣಿ ನೀನೈ
ತರ್ಕಾಗಮ್ಯ ಲಕ್ಷ್ಮೀನಾರಾಯಣ
ಅರ್ಕಾಮಿತಪ್ರಭ ಕಾರ್ಕಳಪುರವರ೪

೧೩೮
(ಹಿರಿಯಡ್ಕದ ವೀರಭದ್ರ ಸ್ತೋತ್ರ)
ದಕ್ಷಯಜ್ಞ ಭಂಜನ
ರಕ್ಷಿಸೋ ನಿರಂಜನ ಪ.
ಪ್ರಮಥ ಭೂತ ನಾಯಕ
ಪ್ರಣತ ಸಿದ್ಧಿದಾಯಕ
ಮಣಿದು ಸ್ತುತಿಪೆ ನಿನ್ನನು
ಮಾನ ಪೊಂದಿಸೆನ್ನನು ೧
ಸಂದಿಗೊಂದಿವೇರಿದಾ
ಸರ್ವದಾಪ್ರಕಾರದಾ
ಮಂದ ವೈರಿ ಸ್ತೋಮವಾ
ಮಾನಿಸೊ ನಿರ್ನಾಮವಾ ೨
ಶಿವಜಟಾಗ್ರ ಜಾತನ
ಶೇಷ ಗಿರೀಶ ದಾಸನೆ
ಭವನ ಬೇಗ ತೋರಿಸೊ
ಭಯವ ದಾರಿ ಹಾರಿಸೊ ೩

೨೨೭
(೩೭ನೇ ವರ್ಷದ ವರ್ಧಂತಿ)
ದಯದೋರೊ ದೀನಾನುಕಂಪಾ ಲಕ್ಷ್ಮೀಶಾ
ಭಯಹಾರಿ ಭಾಮಾ ಮುಖಾಬ್ಜ ದಿನೇಶ ಪ.
ಒಂದೊಂದುಪಾಧಿ ಸಂಬಂಧಿಸಿ ಬರುವಾ
ಮಂದಾಭಿಲಾಷಗಳಿಂದ ನಿಂದಿಸುವ
ಕುಂದ ನಾನೆಂದಿಗು ಹೊಂದದಂದದಲಿ
ನಿಂದು ಮನದಿ ಪೂರ್ಣಾನಂದ ಸಂತಸದಿ ೧
ನಾವಿಬ್ಬರೊಂದೆ ವೃಕ್ಷದಿ ಸೇರಿರುವೆವು
ಕೋವಿದ ನೀನಾದರಿಂದ ಎನ್ನಿರವು
ಜೀವ ಕರ್ತೃತ್ವಾದಿ ಬಳಲುವದೈತು
ತಾವಕನೆಂಬ ಭಾವನೆ ದೂರ ಹೋಯ್ತು ೨
ಮತ್ತೇಳು ಮೂವತ್ತು ವತ್ಸರಗಳನು
ಎತ್ತಿನಂದದಿ ಕಳೆವುತ್ತ ಬಾಳಿದೆನು
ಎತ್ತಾಲು ಹೊಂದದೆ ಎರಡೇಳು ವಿಧದ
ಭಕ್ತಿಯ ಬಯಸುವ ಭಯ ದೂರ ವರದ ೩
ಮನಸಿನ ದೌರಾತ್ಮ್ಯವನು ಪೇಳಲಾರೆ
ತನುವ ದಂಡಿಸಿ ಕರ್ಮಗಳ ತಾಳಲಾರೆ
ಅನುಕೂಲವಲ್ಲದಿಂದ್ರಿಯಗಳನೆಲ್ಲ
ವನಜಾಕ್ಷ ನಾನೆಂತು ಗೆಲ್ಲುವೆ ಶ್ರೀನಲ್ಲ ೪
ನೂರಾರು ದೈವಂಗಳನು ನಂಬದಿನ್ನು
ಈರೇಳು ಭುವನಾಧಿನಾಥ ನಿನ್ನನ್ನು
ಸೇರಿದೆ ಶೇಷಾದ್ರಿ ಶಿಖರವಾಸ
ಸಾರಿದೆ ಸರ್ವಾಭೀಷ್ಟದ ಶ್ರೀನಿವಾಸ ೫

೩೬೯
ದಯಮಾಡಿ ನಡೆಸೆ ಶಾರದೆ ದಯಮಾಡಿ ನಡೆಸೆ ಪ.
ಹೃಯಾಂಗಣದಿ ಸದನವ ಮಾಡುತ
ವಿಧವಿಧ ನವರಸದುದಯದ ತನಕ ೧
ಭೃಂಗಕುಂತಳೆ ಕೃಪಾಪಾಂಗೆ ಬ್ರಹ್ಮಾಣಿ ಕು-
ರಂಗನಯನೆ ಶ್ರೀರಂಗಭಕ್ತಳೆ ೨
ಭೂರಿ ಶಾಸ್ತ್ರವಿಚಾರವ ಪಾಲಿಸೆ
ಧೀರ ಲಕ್ಷ್ಮೀನಾರಾಯಣನ ಸೊಸೆ ೩

೪೦೭
(ಬಪ್ಪನಾಡಿನ ದೇವಿಯನ್ನು ಕುರಿತು)
ದಯಮಾಡೆ ಬಾಗೆ ಶ್ರೀಪಂಚದುರ್ಗೆ ದಯಮಾಡೆ ಬಾಗೆಪ.
ದಯಮಾಡೆ ಕೇವಲ ಭಯವಿಹ್ವಲನಲ್ಲಿ
ದಯಸಾಗರೆ ಸೌಭಾಗ್ಯಸಂಪದವನ್ನುಅ.ಪ.
ವೇದಾಂತವೇದ್ಯೆ ನಿಖಿಳಜಗದಾದಿವಿನೋದೆ
ಭೂಧರಾತ್ಮಜೆ ಸರ್ವಾಧಾರಶಕ್ತಿ ಕಲಾಧರೆ
ಮಧುರಬಿಂಬಾಧರೆ ನಿನ್ನಯ
ಪಾದವನು ಮರೆಹೊಕ್ಕೆ ಮನಸಿನ ಭೇದವನು
ಪರಿಹರಿಸಿ ಸರ್ವಾಪ-
ರಾಧಗಳ ಕ್ಷಮಿಸಮ್ಮ ಕೈಟಭಸೂದನನ ಸೋದರಿ ಮಹೇಶ್ವರಿ ೧
ಅಂಬುಜಚರಣೆ ಮಾಧುರ್ಯೋರುರಂಭಾಸಮಾನೆ
ಗಂಭೀರೆ ಮೇರು ನಿತಂಬೆಸಿಂಹಮಧ್ಯೆ
ಲಂಬೋದರಪರಿರಂಭಕರಾಂಬುಜೆ
ಕುಂಭಿಕುಂಭಪಯೋಜೆ ಶೋಭಿಪ ಕಂಬುಕಂಠಿ
ಮುಖೇಂದುಪದ್ಮ ದ-
ಳಾಂಬಕಿ ಎನಗಿಂಬುದೋರೆ
ರೋಲಂಬಕುಂತಳೆ ಶುಂಭ ಮರ್ದಿನಿ ೨
ಸಿಂಧೂರನಯನೆ ನಿಖಿಲಾಮರವಂದಿತಚರಣೆ
ಸುಂದರಾಂಗಿ ಸುಮಗಂಧಿ ವಿಬುಧ ಮುನಿವೃಂದಸೇವಿತೆ
ನಿತ್ಯಾನಂದಪ್ರಕಾಶಿನಿ
ಅಂಧಕಾಸುರವೈರಿಹೃದಯಾನಂದ ಪಾರಾವಾರ ಪೂರ್ಣಮಿ-
ಚಂದ್ರೆ ಸದ್ಗುಣಸಾಂದ್ರೆ
ಸುರಥನರೇಂದ್ರವರದೆ ಮೃಗೇಂದ್ರವಾಹಿನಿ೩
ರಜತಾದ್ರಿವಾಸೆ ಚಂಪಕನಾಸೆ ಸುಜದನೌಘಪೋಷೆ
ನಿಜದಿ ನಿನ್ನಯ ಪಾದಂಬುಜವ ನಂಬಿದೆ ತ್ರಿಜಗವಂದಿತೆ
ಮಹಾಗಜಗೌರಿ ಶಂಕರಿ
ತ್ರಿಜಗಜ್ಜನನಿ ಭಾವನಿ ಪಾರ್ವತಿ ಭುಜಗಭೂಷಣರಾಣಿ ಕಲುಷ-
ವ್ರಜವಿದಾರಿ ಮುನೀಂದ್ರ ಮನನೀರಜ
ದಿವಾಕರೆ ಮಾನಿತೋದ್ಧರೆ೪
ತಪ್ಪು ಸಹಸ್ರವಿದ್ದರು ಮನದೊಳಿಪ್ಪುದಜಸ್ರ
ಸರ್ಪಶಯನ ಲಕ್ಷ್ಮೀನಾರಾಯಣಪ್ರೀತಿಯಪ್ಪಂತೆ ದಯೆ ಗೈಯೆ
ಜಗದಾದಿಮಾಯೆ
ಕಪ್ಪುಕಂಠನ ರಾಣಿ ವರಕಂದರ್ಪಧಿಕತರೂಪೆ ಸಾಧು ಪ-
ದ ಪ್ರಸಾದವ ಪಾಲಿಸೆನ್ನಲಿ ಬಪ್ಪನಾಡಿನ ಭದ್ರದಾಯಕಿ೫

೧೭೨
ದಯವಾಗು ದೀನ ಬಂಧು ನಿಜ ಭಕ್ತ
ಭಯ ಹರ ಸ್ಮಯ ಮುಖೇಂದು
ಲಯ ದೂರ ಸುಗುಣ ಸಿಂಧು ನಿನ್ನಡಿಯ
ಬಯಸುವೆನು ಭಕ್ತನೆಂದು ಪ.
ಶ್ರೀ ಭೂಮಿಯರಸ ನೀನು ದಯವಾಗೆ
ಭಾಗವತರುದಯವಹುದು
ಯೋಗ ಭೋಗಗಳೆಂಬುದು ಮಿತಿರಹಿತ-
ವಾಗಿ ತಾನೇರಿ ಬಹುದು ೧
ತಾಪಾಗ್ನಿ ಶಮನಕಾರಿಯೆ ನಿ:ಶೇಷ
ಭೂಪಾಲ ಮೌಳಿಸಿರಿಯೆ
ಶ್ರೀಪತಿಯೆ ನಿನ್ನ ಮರೆಯೆ ಎನ್ನಲ್ಲಿ
ಕೋಪಿಸದೆ ಸಲಹು ದೊರೆಯೆ ೨
ಪೂರ್ವ ಗಿರಿನಾಥ ನಿನ್ನ ಸಂಸ್ಮರಣೆ
ಸರ್ವ ದುರಿತೌಘವನ್ನ
ಪರ್ವತ ಶೃಂಗವನ್ನು ನಿಶಿತ ಶತ-
ಪರ್ವದೊಲ್ ತರಿವರನ್ನ ೩

೨೨೮
(೩೮ನೇ ವರ್ಷದ ವರ್ಧಂತಿ)
ದಯಾನಿಧೆ ಪವಮಾನ ವರದ
ದಯಾನಿಧೆ ಪರಿಪಾಲಯ ಮಾಂ ಪ.
ಮಾನುಷತ್ವವು ಬಂದ ಸಮಯದಿ
ಹೀನ ಭೋಗವೆ ಬಯಸಿದೆ
ನಾನು ನನ್ನದು ಎಂಬ ಕೀಳಭಿ-
ಮಾನವೇ ನಾ ವಹಿಸಿದೆ
ಏನನೆಂಬೆನು ಎನ್ನ ಬುದ್ಧಿವಿ-
ಹೀನತೆಯ ಬಯಲಾಸೆ ಬಿಡಿಸು ೧
ಇಳೆಯೊಳಿರುತಿಹ ನಿನ್ನ ಮಹಿಮೆಯ
ತಿಳಿಯದಾದೆನು ಮೋಹದಿ
ಕಳೆದೆ ಮೂವತ್ತೆಂಟು ವತ್ಸರ
ಹಲವು ವಿಷಯದಿ ಚೋಹದಿ
ಕಲಿಮಲಾಪಹ ಕೃಪಾಳು ನಿನ್ನಯ
ನೆಲೆಯನರಿಯದೆ ನೊಂದೆನಲ್ಲೊ ೨
ಆಸ್ಯದಲಿತ್ವನ್ನಾಮ ನುಡಿಸುತ
ದಾಸ್ಯವನು ದಯ ಮಾಡುತ
ಹಾಸ್ಯ ಮಾಳ್ಪರ ಹಲ್ಲ ಮುರಿದು
ವಿಲಾಸ್ಯ ಮತಿ ಕಾಪಾಡುತ
ಪೋಷ್ಯ ಪದವನು ನೀಡು ಲಕ್ಷ್ಮೀ-
ವಾಸ್ಯ ವಕ್ಷನ ವೆಂಕಟೇಶ೩

೪೪೬
ದಾರಿಯ ತೋರೊ ಮುರಾರಿ ಮುಂದಣ
ದಾರಿಯ ತೋರೊ ಮುರಾರಿಪ.
ದಾರಿತೋರು ಕಂಸಾರಿ ಭವಾಂಜನ
ಪಾರಾವಾರ ಉತ್ತಾರಣಗೈಯುವಅ.ಪ.
ಮಾಯಾಶ್ರಿತನಾಗಿಹೆನಲ್ಲೊ ಮೋಕ್ಷೋ-
ಪಾಯಭೇದಂಗಳ ಮರತೆನಲ್ಲೊ
ಕಾಯಜಪಿತ ಕಮಲಾಯತಲೋಚನ
ಕಾಯದೊಳಗೆ ಸನ್ನಾಯದಿ ನೋಡುವ ೧
ದುಃಖವಿಲ್ಲದೆ ಸುಖವಿಲ್ಲ ಇದ
ಒಕ್ಕಣಿಪರೆ ತುದಿಬುಡವಿಲ್ಲ
ಸೊಕ್ಕಿ ನಡೆದು ಭವಯಿಕ್ಕುಳ ಬಾಯೊಳು
ಸಿಕ್ಕಿದೆನಲ್ಲವೊ ರಕ್ಕಸವೈರಿಯೆ೨
ಬಲ್ಲೆನೆಂಬರೆ ಬಲವಿಲ್ಲ ಭವ
ಬಲ್ಲೆಯೊಳಗೆ ಸಿಲುಕಿದೆನಲ್ಲ
ಕಲ್ಲೊಳಗ್ನಿ ಕಲಕಿರುವಂದದಿ ಮನ
ದಲ್ಲಿ ನಿನ್ನ ಪದಪಲ್ಲವ ಭಜಿಸುವ೩
ಸಾರರಹಿತ ಸಂಸಾರದಿ ಮಾಯಾ
ನಾರಿ ಗೈದ ಮಮಕಾರದಿ
ಘೋರ ದುರಿತವಪಹಾರಗೈವ ಲಕ್ಷ್ಮೀ
ನಾರಾಯಣನು ಸೇರಿ ಸೇವಿಸುವಂಥ ೪

೨೫೪
ದಾಸದಾಸ್ಯವ ದಯಮಾಡಿ ಸಲಹೋ ಕರುಣಾ ಸಮುದ್ರ ಹರಿಯೆ
ಮೋಸಗೊಳಿಸದಿರು ಮಧ್ವವಲ್ಲಭನೆ ದುರಾಸೆಯೆಂಬ ಸುಳಿ
ಘಾಸಿಮಾಡದ ಮುನ್ನ ಪ.
ಅಂತಪಾರಗಳಿಲ್ಲವಿದಕಿನ್ನು ಪ್ರತಿ ಕ್ಷಣ
ಚಿಂತನೆಯಿಂದಲಿ ಬಾಧೆಗೊಳಿಸುವುದು
ಕಂತುಜನಕ ನೀನಿತ್ತದನುಂಡು ಸುಖಿಸದೆ
ಭ್ರಾಂತಿ ಬಡಿಸುವದನೆಂತು ವರ್ಣಿಸಲಿನ್ನು ೧
ತನ್ನಿಂದಧಿಕ ಕಷ್ಟ ಪಡುವ ಜನರ ಕಂಡು
ಭಂಡಾಗಿರದಿ ಪರರ ಹೊನ್ನು
ಹೆಣ್ಣುಗಳಲಿ ಕಣ್ಣಿಟ್ಟು ಹಗಲಿರು-
ಳುಂಣಲೀಯದು ನಿದ್ರೆ ಕಣ್ಣಿಗೆ ಬಾರದಿನ್ನು ೨
ಭವರೋಗ ವೈದ್ಯ ನೀನೆಂದು ಸಕಲ ಶ್ರುತಿ
ನಿವಹವು ನಿನ್ನ ಕೊಂಡಾಡುವುದು
ನವವಿಧ ಭಕುತಿ ಮಧ್ವ ತವಕದೊಳೆನಗಿತ್ತು
ಭುವನ ಪಾವನ ಶೇಷಗಿರೀಶಾ ನೀ ದಯದೋರು ೩

ದೇವತಾ ಸ್ವರೂಪರಾದ
೧೬೦
ದಾಸರಾಗಿರೊ ವೈಷ್ಣವ ದಾಸರಾಗಿರೊ
ದಾಸರಾಗಿ ಬಯಲಾಸೆಯ ನೀಗಿ ರ-
ಮೇಶನ ಗುಣವಾರಾಶಿಯೊಳಿರಿಸುವ ಪ.
ಸುಂದರ ಮಾನಾನಂದತೀರ್ಥಮತ
ಸಾಂದ್ರ ಸುಖಾಂಬುಧಿಮಿಂದ ಮಹಾತ್ಮರ ೧
ದಿವ್ಯಲೋಕಜನ ಭವ್ಯೋಭಯವಿಧ
ಕಾವ್ಯರಚನ ಲಾತವ್ಯಯತೀಂದ್ರರ ೨
ಸೀತಾಪತಿ ರಘುನಾಥನ ಮನದೊಳ-
ಗಾತು ಭಜಿಪ ಗಣನಾಥ ಜನಕನ ೩
ಶ್ರೀ ಮಹೇಶ ವಟು ವಾಮನ ಪದಯುಗ
ತಾಮರಸಾಶ್ರಿತ ಸಾಮಜವಾಹನ ೪
ಕಾಕರಟನದೊಳ ಭೀಕರ ಮತವ ನಿ-
ರಾಕರಿಸಿರುವ ಸುಧಾಕರ ಮೂರ್ತಿಯ ೫
ತಂತ್ರ ದೀಪಿಕಾ ಯಂತ್ರವ ರಚಿಸಿದ
ಮಂತ್ರಾಲಯವರ ಮಂತ್ರದೇವತೆಯ ೬
ಗೋಪಿನಾಥನೆ ಭೂಪನೆಂದು ಸಂ-
ತಾಪವ ಬಿಡಿಸುವ ಶ್ರೀಪಾದರ ಪದ ೭
ಮಂದಕಲಿಯ ಕಾಲಿಂದಲೊರಿಸಿದ ಪು-
ರಂದರದಾಸರ ಹೊಂದಿ ಹರಿಯ ನಿಜ೮
ಸುಜನ ಹೃದಂಬುಜ ಸುಖಕರ ದಿನಮಣಿ
ವಿಜಯರಾಜ ಪದ ಭಜನೆಯ ಮಾಡುತ ೯
ಭಂಗುರ ಭವಭಯ ಭಂಗದ ಸುಗುಣ
ತರಂಗನ ಒಲಿಸಿದ ಮಂಗಳ ಮಹಿಮರ ೧೦
ಹರಿಕಥಾಮೃತದ ತೆರೆಗಳೊಳಾಡುವ
ಪರತರಸಾರವ ಸುರಿದ ಮಹಾತ್ಮರ ೧೧
ಸಿಡುಕರ ಸಂಸ್ರ‍ಕತಿ ಕಡಲೊಳು ಮುಳುಗಲು
ಬಿಡದಲೆ ಕೈಪಿಡಿದೊಡೆಯನ ತೋರ್ಪರ ೧೨
ಅರಿಷಡ್ವರ್ಗವ ತರಿದು ಬಿಸುಟು ಶ್ರೀ-
ವರನ ಕೃಪಾರಸ ಸುರಿಸಿದ ಧನ್ಯರ ೧೩
ಮೂಕನ ವಾಗ್ಮಿಯ ಮಾಡಿ ಮುರಾರಿಗೆ
ಸಾಕ ಕೊಟ್ಟಿ ದೀನಾಕರದಾಸರ ೧೪
ಮಾತಿಗೆ ಕಂಸಾರಾತಿನಲಿಯೆ ಜಗ
ನ್ನಾಥರೆಂ¨ ವಿಖ್ಯಾತಿ ಪಡೆದವರ ೧೫
ತಾಪತ್ರಯಗಳ ತಪ್ಪಿಸಿ ವೆಂಕಟ
ಭೂಪನ ಸದಯಾರೋಪಗೈದವರು ೧೬

೩೫೭
ದಿಟ್ಟ ಮುಖ್ಯಪ್ರಾಣನೆ ಜಗಜಟ್ಟಿ ಬಾ ಸುತ್ರಾಣನೆ
ಶ್ರೇಷ್ಠದನುಜಘರಟ್ಟ ಸುಗುಣವಿಶಿಷ್ಟ ಭಕ್ತಶಿಖಾಮಣಿ ಪ.
ವಾಯುಪುತ್ರ ವಿಚಿತ್ರ ಬಲಿಸುರರಾಯರಾಯರ ಗಂಡನೆ
ಪ್ರೀಯರಾಮಪದಾಬ್ಜಮಧುಕರ ಮಾಯಿಕದನಪ್ರಚಂಡನೆ ೧
ಶ್ರೀವರೋತ್ತಮ ಹನುಮ ಭೀಮಕೃಪಾವಲಂಬ ಮಹೋಜನೆ
ಪಾವಮಾನಿ ಪರೇಶ ಪದ್ಮಜ ಭಾವಿ ಯತಿಕುಲರಾಜನೆ ೨
ಶೂರಾಗ್ರಣಿ ಸುಗುಣಿ ಲಕ್ಷುಮಿನಾರಾಯಣದಾಸನೆ
ಭಾರತೀವದನಾರವಿಂದಕೆ ಸೂರ ನಿತ್ಯವಿಲಾಸನೆ ೩

೩೬
ದೀನ ಬಂಧು ಕರುಣಾಸಿಂಧು
ನೀನೆ ಬಂದು ರಕ್ಷಿಸೆಂದು ಪ.
ನಿತ್ಯ ಮಂಗಳಾತ್ಮ ನಿಜ ಭೃತ್ಯಪೋಷಣ ಪರಾತ್ಮ
ಸತ್ಯಕಾಮ ಸತ್ಯಶರಣ್ಯ ನಿತ್ಯ ಕಾರುಣ್ಯ
ಚಿತ್ತಜನಯ್ಯನೆ ಈ ಜಗತ್ತಿನೊಳು ನಿನ್ನ ಪೋಲ್ಪ
ಉತ್ತಮ ವಸ್ತುವ ಕಾಣೆ ಸತ್ಯಭಾಮಾ ವರ ನಿನ್ನಾಣೆ ೧
ಸರಸಿಜಾಸನ ತಾನು ಪರಮ ಭಕುತಿಯಿಂದ
ಸಿರಿವರ ನಿನ್ನ ನಾನಾ ಪರಿಯಿಂದಲಿ
ಶರದೃತುವಿಲಿ ಬಹುಧರವಾಗಿ ಪೂಜಿಸುವ-
ದರಿತು ಪಾಡುವೆನೀಗ ಕರುಣಿಸೆನ್ನ ನೀ ಬೇಗ ೨
ಮತ್ಸಕೇತುಪಿತ ಭಕ್ತವತ್ಸಲ ವೆಂಕಟನಾಥ
ತತ್ಸದೆಂಬೋ ಮಂತ್ರಾಗಮ್ಯ ಕುತ್ಸಿತಾಗಮ್ಯ
ಉತ್ಸವ ಕಾಲದಲಿ ಸಿರಿವತ್ಸ ಬೆನ್ಹಾನಿನ್ನನು ನಿ-
ರ್ಮತ್ಸರದಿ ನಂಬಿದೆ ಗೋವತ್ಸವೈದುವಂತೆ ಬಾರೊ ೩

೧೦
ದೀನ ಬಂಧುವ ಧ್ಯಾನ ಮಾಡುವ
ಹೀನ ಬುದ್ಧಿಯ ಹಿಂದೆ ದೂಡುವ ಪ
ಕಲಿಮಲಾಪಹನೆಂದು ಪಾಡುವ
ಕಲುಷರಾಶಿಯ ಕಳೆದುಕೊಳ್ಳುವ
ಹಲವು ಭವದಲಿ ಬಳಲದಂದದಿ
ನಳಿನನಾಭನ ನಂಬಿಕೊಳ್ಳುವ ೧
ದೇಹ ಗೇಹ ವ್ಯಾಮೋಹ ಭಾರದಿ
ಚೋದಗೊಂಡರೆ ಚಕ್ರಿವೊಲಿವನೆ
ನಾಹಮೀಶ್ವರೊ ಎಂದು ತಿಳಿದು ದಾ-
ಸೋಹಮೆಂಬ ಸನ್ನಾಹಗೊಳ್ಳುವ ೨
ಪಂಕಜಾಪತೇ ಪತಿತ ಪಾವನ
ವೆಂಕಟೇಶದಾಸೌಘ ಜೀವನ
ಕಿಂಕರಾರ್ತಿಹ ಕರುಣದಿಂದಲಾ-
ತಂಕವಿಲ್ಲದೆ ಸ್ವಾಂಕ ಕೊಡುವನು ೩

೨೦೫
ದೀನರಕ್ಷಕ ದೈತ್ಯ ಶಿಕ್ಷಕ ಏನ ಪೇಳಲಿ ಎಂತು ತಾಳಲಿ ಪ.
ಹಗಲು ರಾತ್ರೆಯು ಹಲವು ಚಿಂತೆಯು
ದ್ವಿಗುಣವಾಯಿತು ಧೈರ್ಯ ಕುಂದಿತು
ನಗುವ ವಿಧಿಯನು ನೆನೆಯದಾಸೆಯ
ಬಿಗುವಿನಿಂದ ಬೆಂಡಾದೆ ಕೇಶವ ೧
ಸಂದ ಕಾಲವು ಸುಮ್ಮಗ್ಹೋಯಿತು
ಮುಂದಿನವಧಿಯ ಮರವು ಮುಸುಕಿತು
ಸುಂದರ ಸ್ಮಿತಾನಂದ ಮೂರುತಿ
ಇಂದಿರೇಶ ನೀ ಎಂದು ತೋರುತಿ ೨
ಗಣನೆಯಿಲ್ಲದಗಾಧ ತಪ್ಪನು
ಎಣಿಸಲಾರೆನು ಎಂತು ನುಡಿವೆನು
ವನಜನಾಭ ನೀನಾವ ಯುಕ್ತಿಯ
ನೆನಸಿ ಸಲಹುವೆ ಎಂಬುದರಿಯೆನು ೩
ಅಂತವಿಲ್ಲದಾ ಚಿಂತೆ ಎನ್ನನು
ಭ್ರಾಂತಿಗೊಳಿಪುದು ಭಂಡು ಮಾಳ್ಪುದು
ಕಂತುಜನಕ ಭೂಕಾಂತ ಕರುಣಿಸು
ಸ್ವಾಂತರಂಗದಿ ನಿಂತು ನಿಯಮಿಸು ೪
ನಂಬಿದವರನು ನಿತ್ಯ ಸಲಹುವ-
ನೆಂಬ ಬಿರುದ ನಾನರಿತು ನುಡಿದೆನು
ಶಂಭುವಂದ್ಯ ಶೇಷಾದ್ರಿನಾಥ ಪಾ-
ದಾಂಬುಜಾಶ್ರಿತನೆನಿಸು ಎನ್ನನು ೫

೨೭೪
ದೂರ ಕೇಳೊ ದೊರೆಯೆ ಥಟ್ಟನೆ ಬಾರೊ ಭಕ್ತ ಸಿರಿಯೆ
ಆರು ಜನರು ಬಹುಗಾರುಗೊಳಿಸುವರು ನೀರಜಾಕ್ಷ ನೀನೆ
ಗತಿ ಹರಿಯೆ ಪ.
ಮದನನೆಂಬ ಖುಲ್ಲ ವೈರಿಯು ಮೊದಲನೆಯ ಕಳ್ಳ
ವಿಧವಿಧದಲಿ ಪಿಡಿದೆಳವನ ತ್ವತ್ಪದ ಪದ್ಮ ಪದ
ಸನ್ನಿಧಿಯಲಿ ಬಂಧಿಸಿ ೧
ಕ್ರೋಧನನೆಂಬವನಿವನು ಮಾನಸ ಬೋಧವ ಕೆಡಿಸುವನು
ವ್ಯಾಧಿಯಂತೆ ದೇಹವ ದಹಿಸುವದನು ಮಾಧವ
ಮಧುವತ್ಕರಿದಿ ನಿವಾರಿಸಿ ೨
ತುದಿ ನಡು ಮೊದಲಿಲ್ಲ ಲೋಭ ತಡೆಯುವವರ್ಯಾರಿಲ್ಲ
ಕಡಲಿಗು ಮಿಗಿಲಾಗಿರುವನ ಶೋಷಿಸಿ ಬಿಡುವುದುಚಿತ
ಶ್ರೀಮಡದಿಯ ನಲ್ಲ ೩
ಬಾಹ ಬಾಧೆಗಳನು ತಿಳಿಸದೆ ಚೋಹದಿ ಕೆಡಹುವನು
ಮೋಹವೆಂಬ ಮೂರ್ಖನ ಮುರಿದೊತ್ತಿ ಮನೋಹಿತ
ಮಹಿಮೆಯ ಮಾರ್ಗವ ತಿಳಿಸುತ ೪
ಅಷ್ಟವೇಷವುಳ್ಳ ಐದನೆ ದುಷ್ಟನು ಬಿಡಲೊಲ್ಲ
ಸೃಷ್ಟಿಯೊಳಗೆ ಸರಿ ತನಗಿಲ್ಲೆಂಬುವ ಕೆಟ್ಟ ಮದನನ
ಮುರಿದಟ್ಟು ದಯಾಪರ ೫
ಮತ್ಸ್ಯಘಾತಿಯಂತೆ ಕುತ್ಸಿತ ಮತ್ಸರನೆಂಬುವನು
ಸತ್ಸಂಗಗತಿಗಳನುತ್ತರಿಪನು ಶ್ರೀವತ್ಸ ಬೆನ್ಹನೀ ತಾತ್ಸಾರಗೊಳದಲೆ ೬
ಈ ಶತ್ರುಗಳಿರಲು ತತ್ವ ವಿಲಾಸಗಳೆಂತಹವು
ಶ್ರೀಶ ಕೃಪಾರಸ ಲೇಶವಿತ್ತು ನೀ ಪೋಷಿಸು
ಶೇಷಗಿರೀಶ ಕೃಪಾಂಬುಧಿ೭

೨೪೭
ದೇವ ಕರುಣಾಳು ನೀ ಕಾವಲಾಗಿರುವುದಕೆ
ಆವ ವೇತನ ಕೊಡುವೆ ಶ್ರೀ ವರನೆ ನಿನಗೆ ಪ.
ಮೂಢ ಮಾನವಗೆ ಬಹ ಕೇಡುಗಳು ತಿಳಿಯದು ಖಗ-
ರೂಢ ಕೈಪಿಡಿದು ಕಾಪಾಡುತಿಹ ಬಿರುದ
ಪಾಡಿ ಪೊಗಳುತ ನಮಿಸಿ ಬೇಡಿಕೊಂಬುವೆನು ನಾ
ಮಾಡಿದಪರಾಧಗಳು ನೋಡಲದ್ಭುತವು ೧
ನಡೆ ತಪ್ಪು ನುಡಿ ತಪ್ಪು ನಿಂತಲ್ಲಿ ಬಹು ತಪ್ಪು
ಖಡುಮೋಹ ಕೃತ ತಪ್ಪು ಕಾಮಕೃತ ತಪ್ಪು
ಮಾಡದಿ ಮನೆ ಮಿತ್ರ ಧನ ಒಡವೆಯಾಶೆಯು ತಪ್ಪು
ಒಡೆಯನೀ ಕ್ಷಮಿಸೆಂದು ವಂದಿಸುವೆ ನಿಂದು ೨
ಯುಕ್ತಾಯುಕ್ತವನರಿಯೆ ಎನ್ನಹಂಕೃತಿ ಮರೆಯೆ
ಭಕ್ತಿ ಮುಕ್ತಿದ ಸರ್ವ ಶಕ್ತಿ ಶ್ರೀ ಹರಿಯೆ
ಭಕ್ತವತ್ಸಲ ವೆಂಕಟಾದ್ರಿ ಶೇಖರ ಸಿರಿಯೆ
ಯುಕ್ತಿಯಿಂದಲಿ ಎನ್ನ ಪಾಲಿಸುವ ದೊರೆಯೆ ೩

೧೧೯
ದೇವ ಸಂಜೀವ ಬಾ ಈಗ ನಿನ್ನ ಲಾಹ
ಭಾವವ ತೋರಿ ನೀಡೆನಗೆ ಭೋಗ ಪ.
ಜಾನಕಿವರ ರಾಮ ರಾಜೇಂದ್ರನಡಿಯ ಸೇ-
ವಾನು ಸಂಧಾನದಿ ಪಯೋನಿಧಿಯ ದಾಟಿ ದು-
ರ್ಮಾನಿ ದಶಕಂಧರನ ಧಿಕ್ಕರಿಸಿ ವನಸಹಿತ
ದಾನವರನೆಲ್ಲ ನುಗ್ಗಿಸಿ ಮುದ್ರಿಕೆಯ
ಮಾನನಿಧಿಗಿತ್ತು ವಂದಿಸಿದೆ ಮಣಿವರವ
ಶ್ರೀನಿವಾಸನ ಪಾದಕರ್ಪಿಸುತ ನಲಿದೆ ೧
ಕಟ್ಟಾಜ್ಞೆಯಿಂದ ಕಂಗೆಟ್ಟ ನೃಪವರನು ದಯಾ-
ದೃಷ್ಟಿಯಿಂದಲಿ ನೋಡಿ ದುಷ್ಟ ಬಾರ್ಹದ್ರಥನ
ಮೆಟ್ಟಿ ಕಿಮ್ಮೀರ ಬಕ ಧಾರ್ತರಾಷ್ಟ್ರಾದಿಗಳ
ಕುಟ್ಟಿ ಗದೆಯಿಂದ ಪುಡಿಗೈದೆ ಕ್ರೋಧವಶ
ರಟ್ಟುಳಿಯ ನಡುಗಿಸುತ ಹ್ಯೊದೆ ವಾ-
ಶಿಷ್ಟ ಕೃಷ್ಣಾನಂದನನೆ ತಾತ್ಸರವ್ಯಾಕೆ ಬರಿದೆ೨
ಭಾಗೀರಥೀ ಜನಕ ಭಕ್ತಜನ ಭಯಮೋಕ
ನಾಗಗಿರಿನಾಥನನು ನೆಲೆದೋರು ಗತಶೋಕ
ಶ್ರೀಗುರುವರಾನಂದತೀರ್ಥಾರ್ಯನೀ ಪರಿಯ
ಲಾಗುವುದು ನಿಖಿಳ ಪುರುಷಾರ್ಥ ನಿನ್ನಡಿಗೆ
ಬಾಗಿ ಬೇಡುವೆನಯ್ಯ ಭಾರತಕೃತಾರ್ಥ ೩

೨೧೪
ಧನಿ ಧನೀ ದಯದೋರೊ ಬ್ಯಾಗೆನ್ನ
ಅನಾಥ ರಕ್ಷಕ ಬೇರ್ಯಾರೊ ಪ.
ಜಲಜನಾಭ ನಿನ್ನಲಿ ಮನವಿರಿಸಲು
ಸುಲಭವು ಮೋಕ್ಷಾಂತದ ಫಲವು ಎಂದು
ತಿಳಿದುದು ನೀಯರಿದಿರೆ ದೀನನ ಇಂಥ
ಫಲದಲಿ ತಳಮಳಗೊಳಿಸುವದ್ಯಾತಕೆ ೧
ಆರಿಗೊರೆವದೀ ಕ್ರೂರವೇದನೆಯನ್ನು
ಸೈರಿಸಲಾರೆನು ಸರ್ವೇಶ
ಬಾರಿಬಾರಿಗೆ ಕಂಸಾರಿ ನೀ ಗತಿ ಎಂದು
ಚೀರುವೆ ಚಿನ್ಮಯ ತ್ರಿಗುಣೇಶ ೨
ಘೋರಾಪದ್ಗಣ ವಾರುಧಿಯೊಳಗೀಸ-
ಲಾರದೆ ಮುಳುಗಿದೆ ಮಾರಮಣ
ಪಾರಗಾಣಿಸದಿರೆ ದೂರು ನಿನಗೆ ಬಂದು
ಸೇರದೆ ಬಿಡದು ವೆಂಕಟರಮಣ೩

೩೫೮
ಧನ್ಯನಾದೆನೀದಿನ ನಿನ್ನ ಕಂಡ ಕಾರಣ ಪ.
ಪನ್ನಗಾದ್ರಿವಾಸ ಸುಪ್ರಸನ್ನನಾದ್ದರಿಂದ ನಾ ಅ.ಪ.
ವ್ರತನೇಮ ಜಪ ತಪ ಹಿತಮಾದುದೈ ಸುತಪ
ಕೃತಿಪತಿ ತವ ಕೃಪಾಶತಧೃತಿಲೋಲುಪಾ ೧
ವಿದಿಭವಾದಿಗಳಿಂದ ವಿನಮಿತ ವಿಶ್ವಾನಂದ
ಪದುಮನಾಭ ಗೋವಿಂದ ಪವನನಯ್ಯ ಮುಕುಂದ ೨
ಪ್ರೀಯ ತಪೋವಾಸನನೀಯುವ ದೇವರ ದಾನ
ತೋಯಜಾಕ್ಷ ಲಕ್ಷ್ಮೀನಾರಾಯಣ ಪರಾಯಣ ೩

೩೯೨
(ಧರ್ಮಸ್ಥಳ ಮಂಜುನಾಥನನ್ನು ನೆನೆದು)
ಯಾಕೆನ್ನ ಮೇಲೆ ನಿರ್ದಯ ಶ್ರೀಮಂಜುನಾಥ
ಲೋಕೇಶ ಮಾಡು ನಿರ್ಭಯ ಪ.
ಪಾಕಹಪ್ರಮುಖದಿವೌಕಸಮುನಿಜನಾ-
ನೀಕವಂದಿತಪದಕೋಕನದ ಕೋವಿದ ಅ.ಪ.
ಪಾಪಾತ್ಮಪಾಪಸಂಭವ ನಾನೆಂಬುವದಕಾ-
ಕ್ಷೇಪವೇನಿಲ್ಲೋ ಮಾಧವ
ಶ್ರೀಪರಮೇಶ್ವರ ಕೋಪಕಲುಷಹರ
ತಾಪತ್ರಯಶಮನಾಪದ್ಭಾಂಧವ
ಗೋಪತುರಂಗ ಮಹಾಪುರುಷ ಗಿರೀಶ ೧
ಸೋಮಸುರ್ಯಾಗ್ನಿಲೋಚನ ಸದ್ಗುಣಪುಣ್ಯ-
ನಾಮ ಪಾಪವಿಮೋಚನ
ವ್ಯೋಮಕೇಶಾಚ್ಯುತಪ್ರೇಮ ಮಹಾಮಹಿಮ
ಕಾಮಾರಿ ನಿನ್ನ ನಾ ಮರೆಹೊಕ್ಕೆನು
ಹೇ ವಇಹಾದೇವ ಸೋಮಚೂಡಾಮಣಿ ೨
ಧರ್ಮಮಾರ್ಗನಿಯಾಮಕ ಸತ್ಯಾತ್ಮ ಪರ-
ಬ್ರಹ್ಮ ಸುಜ್ಞಾನದಾಯಕ
ನಿರ್ಮಲ ನಿತ್ಯ ಸತ್ಕರ್ಮಪ್ರೇರಕ ಗಜ-
ಚರ್ಮಾಂಬರಧರ ದುರ್ಮತಿಪ್ರಹರ
ಭರ್ಮಗರ್ಭಜ ಭವಾರ್ಣವತಾರಕ ೩
ಕಪ್ಪ ಕಾಣಿಕೆಗಳನು ತರಿಸುವರ-
ಣ್ಣಪ್ಪದೈವವೆ ದೂತನು
ತಪ್ಪದೆ ಚಂದಯ ಹೆಗ್ಗಡೆಯರ ಮನದೊ
ಳಿಪ್ಪ ದಧಿಮಥನ ತುಪ್ಪದಂತೆಸೆವ
ಕರ್ಪೂರಗೌರ ಸರ್ಪವಿಭೂಷಣ ೪
ಪೊಡವಿಗಧಿಕವಾಗಿಹ ಕುಡುಮಪುರ-
ಕ್ಕೊಡೆಯ ಭಕ್ತಭಯಾಪಹ
ಕಡಲಶಯನ ಲಕ್ಷ್ಮೀನಾರಾಯಣಗತಿ-
ಬಿಡೆಯದವನು ನಿನ್ನಡಿಗೆರಗುವೆ ವರ
ಮೃಡಶಂಕರ ಕೊಡು ಕೊಡು ಮನದಷ್ಟವ ೫

೩೩೫
ಧ್ಯಾನಿಸಿನ್ನು ಶ್ರೀನಿವಾಸನಾ ಶ್ರಿತಕಲ್ಪಭೂಜನ
ಧ್ಯಾನಿಸಿನ್ನು ಶ್ರೀನಿವಾಸನಾ ಪ.
ನಖಮಣಿಶ್ರೇಣಿವಿರಾ-
ಜಿತ ನಳಿನಚರಣಯುಗಳನ
ಸುಕುಮಾರ ಕಮನೀಯಾಂಗನ
ಅಖಿಲ ಲೋಕಕ್ಷೇಮಧಾಮನ ೧
ಪೀತಾಂಬರಧರ ವರ ಜೀ-
ಮೂತನೀಲವರ್ಣನ
ಶ್ರೀತರುಣೀಶುಭವಕ್ಷನ
ಶ್ರೇತವಾಹನಸೂತನ ಖ್ಯಾತನ ೨
ಶಂಖ ಚಕ್ರ ಗದಾ ಪುಷ್ಕ-
ರಾಂಕ ಚತುರ್ಭುಜನ
ಪಂಕಜನಾಭನ ಕೌಸ್ತುಭಾ-
ಲಂಕೃತ ಶ್ರೀವರದೇವನ ೩
ಚಂದ್ರಸಹಸ್ರಸಮಾನನ
ಕುಂದಕುಟ್ಮಿಲರದನನ
ಸುಂದರಾರುಣಾಧರಾರ-
ವಿಂದದಳಾಯತನಯನನ ೪
ಕನಕಕುಂಡಲಕರ್ಣಯುಗನ
ಮಣಿಖಣಿತಕಿರೀಟನ
ಗುಣನಿಧಿ ಲಕ್ಷ್ಮೀನಾರಾ-
ಯಣನ ಸಂಕರ್ಷಣನ ದೃಢದಿ ೫

೬೯
ನಂಬಿದೆ ಧನ್ವಂತ್ರಿ ನಿನ್ನ ಕರುಣಾಂಬುಧಿ
ಚಿನ್ಮಯ ಪರಿಪಾಲಿಸೆನ್ನ ಪ.
ದೇವಾಸುರರೆಲ್ಲ ಸೇರಿ ಏಕ
ಭಾವದಿಂದಲಿ ತಮ್ಮ ಸಾಹಸವ ತೋರಿ
ತಾವಾಗಿ ಕಡೆಯಲಂಬುಧಿಯ ಭವ
ನಾವನ ಸಮಯದಿ ಬಂದಿಯನ್ನೊಡೆಯ ೧
ಕುಲಿಶಧರಗೆ ಯುಕ್ತಿ ಕಲಿಸಿ
ಬಲಿವಲ ಶಂಬರಾದಿ ದೈತ್ಯರ ಮೋಹಗೊಳಿಸಿ
ಕಲಶಪೂರಿತ ದಿವ್ಯ ಸುಧೆಯ ದೇವ
ಬಲಕಿತ್ತು ಸಲಿಸಿದ ಸಾಮ್ರಾಜ್ಯನಿಧಿಯ ೨
ಪೂರ್ಣೇಂದು ಗಣಜಾಯಿ ಸುಮುಖಾ ಶ್ಯಾಮ
ವರ್ಣ ಸುಬಾಲಕ ದುರ್ಜನ ವಿಮುಖಾ
ಸ್ವರ್ಣಾವದಾತ ಸುವಾಸ ದಿವ್ಯ
ಕರ್ಣಾಭರಣಾದಿ ಭೂಷ ಸುನಾಸಾ ೩
ದೀರ್ಘಪೀವರ ದೋರ್ದಂಡ ಪಂಚ
ಮಾರ್ಗಣ ಜನಕ ಪಾಲಿತ ಶುಭ ಶುಂಡಾ
ಭಾರ್ಗವಿ ಜನಿತ ಬ್ರಹ್ಮಾಂಡ ವ್ಯಾಧಿ
ವರ್ಗವ ಓಡಿಸುವರೆ ಸುಪ್ರಚಂಡಾ ೪
ಕಂಬುಗ್ರೀನ ಪರೇಶ ಅರು-
ಣಾಂಬುಜಾಕ್ಷ ಸುಖ ಚಿದ್ಘನ ವೇಷಾ
ನಂಬಿದವರ ಕಾವ ಶ್ರೀಶಯನ
ನಿಂಬಾಗಿ ರಕ್ಷಿಸು ಶ್ರೀ ವೆಂಕಟೇಶಾ ೫

೩೮೦
ನಂಬಿದೆ ನಾಗರಾಜ ಹರಿಯ ಪಾ-
ದಾಂಭೋಜಭಕ್ತಿಭಾಜ ಪ.
ಶಂಭುಶಕ್ರಾದ್ಯರು ಹಂಬಲಿಪರು ನಿನ್ನ
ತುಂಬಿದ ಜೀವಕದಂಬಾಭಿಮಾನಿಯೆ ಅ.ಪ.
ಸಾವಿರ ಜಿಹ್ವೆಯೊಳು ಹರಿಯ ಸ್ತುತಿ
ಗೈವೆ ನಿರತ ಕೃಪಾಳು
ಶ್ರೀವಾಸುದೇವನ ಕರುಣ ನಿನ್ನಲ್ಲೆಷ್ಟು
ದೇವೇಶನಾದರು ಯಾವನು ಬಣ್ಣಿಪ
ಶ್ರೀವಧೂವರನ ಕಮಲಪದ ರಾ-
ಜೀವ ಸೌಂದರ್ಯವನು ತನ್ನಯ
ಸಾವಿರಾಕ್ಷಿಗಳಿಂದ ಕಾಣುತ
ಕೇವಲಾನಂದಾಬ್ಧಿ ಮಗ್ನನೆ ೧
ಶಿರವೊಂದರಲಿ ಬ್ರಹ್ಮಾಂಡ ಸಾಸವೆಯಂತೆ
ಧರಿಸಿದೆ ಸುಪ್ರಚಂಡ
ವರ ರಘುರಾಮನಾವರಜ ಲಕ್ಷ್ಮಣನಾದೆ
ಹರಿ ಕೃಷ್ಣರಾಯನ ಪಿರಿಯನಾಗಿ ಅವ-
ತರಿಸಿ ಭೂಭಾರವನುರೆ ಸಂ-
ಹರಿಸಿ ವೇದ ಪುರಾಣ ತತ್ತ್ವವ
ಶರಣಜನರಿಗೆ ಬೋಧಿಸುವ ಮಹಾ
ಕರುಣಿ ಕಮಲಾಕಾಂತನ ಭಕ್ತನೆ ೨
ಲಕ್ಷ್ಮೀನಾರಾಯಣನ ನಿದ್ರಾಸ್ಪದ
ರಕ್ಷಿಸು ಕೃಪೆಯಿಂದೆನ್ನ
ಸಾಕ್ಷಾದಚಲರೂಪ ನಿನ್ನೊಳು ನೆಲಸಿದ
ಪಕ್ಷಿವಾಹನ ಜಗದಧ್ಯಕ್ಷ ಶ್ರೀನಿವಾಸ
ಮೋಕ್ಷ ಮಾರ್ಗಪ್ರದರ್ಶಿ ಸತತ ಮು-
ಮುಕ್ಷು ಜನಮನಹರ್ಷ ನಿರ್ಜರ-
ಪಕ್ಷ ಸುಫಲಪ್ರದ ಸದಾ ನಿರ-
ಪೇಕ್ಷ ಗುರುವರ ರಾಕ್ಷಸಾಂತಕ ೩

೩೧೫
ನಂಬಿದೆ ನಿನ್ನ ಗಣೇಶ ಜಗ-
ದಂಬಿಕಾತನಯ ವಿಶ್ವಂಭರದಾಸ ಪ.
ಲಂಬೋದರ ವಿಘ್ನೇಶ ಶರ-
ಣೆಂಬುದು ಸುರನಿಕುರುಂಬ ಮಹೇಶ ಅ.ಪ.
ತರುಣಾದಿತ್ಯಪ್ರಕಾಶ ನಿನ್ನ
ಶರಣಾಗತನಾದೆ ಮೋಹನ ವೇಷ
ಸುರುಚಿರ ಮಣಿಗಣ ಭೂಷ ಜಗ
ದ್ಗುರುವೆ ಗುಹಾಗ್ರಜ ಪೊರೆಯೋ ನಿರ್ದೋಷ ೧
ಸಂತಜನರ ಮನೋವಾಸ ಮೋಹ
ಭ್ರಾಂತಿಯಜ್ಞಾನಧ್ವಾಂತವಿನಾಶ
ಶಾಂತಹೃದಯ ಸುಗುಣೋಲ್ಲಾಸ ಏಕ
ದಂತ ದಯಾಸಾಗರ ದೀನಪೋಷ ೨
ಲಕ್ಷ್ಮೀನಾರಾಯಣನೆ ವ್ಯಾಸ ಗುರು
ಶಿಕ್ಷಿತ ಸುಜ್ಞಾನ ತೇಜೋವಿಲಾಸ
ಅಕ್ಷರ ಬ್ರಹ್ಮೋಪದೇಶವಿತ್ತು
ರಕ್ಷಿಸು ದನುಜಾರಣ್ಯ ಹುತಾಶ ೩

೩೧೪
ನಂಬಿದೆ ನಿನ್ನ ಶಾಂಭವೀಸುತ
ಲಂಬೋದರ ಗುರುವರ ಧವಳಾಂಬರಾವೃತ ಪ.
ವಿಘ್ನಭಂಜನ ವಿಶ್ವರಂಜನ
ಮಗ್ನಗೈಸಬೇಡ ಭವದಿ ನಿರ್ಗತಾಂಜನ ೧
ಭಾರ ಯಾರದು ವಿಘ್ನಹರಿಸುವದು
ಭಾರತಾರ್ಥ ಭಾಸ್ಕರಾಚಾರ್ಯ ನಿನ್ನದು ೨
ರಕ್ಷಣೀಯನೆ ಮುಮಕ್ಷುಪ್ರಿಯನೆ
ಲಕ್ಷ್ಮೀನಾರಾಯಣಾಂಘ್ರಿ ಲಕ್ಷಿತಾತ್ಮನೆ

೪೦೮
ನಂಬಿದೆನು ಜಗದಂಬೆ ನಿನ್ನನು ಪಾಲಿಸು ಸರ್ವಾ-
ರಂಭಸೂತ್ರಳೆ ಇಂಬುದೋರಿನ್ನು ಪ.
ಅಂಬುಜಾಂಬಕಿ ಶುಂಭಮರ್ದಿನಿ
ಕಂಬುಗ್ರೀವೆ ಹೇರಂಬ ಜನನಿ ಶೋ-
ಣಾಂಬರಾವೃತೆ ಶಂಭುಪ್ರಿಯೆ ದಯಾ-
ಲಂಬೆ ಸುರನಿಕುರುಂಬಸನ್ನುತೆ ಅ.ಪ.
ಕ್ರೂರದೈತ್ಯವಿದಾರೆ ಮಹದಾಕಾರೆ ಮಂಗಲೇ ವಿಶ್ವಾ-
ಧಾರೆ ಕಲ್ಮಷದೂರೆ ಕದನಕಠೋರೆ ನಿಶ್ಚಲೆ ಪಾರಾ-
ವಾರ ಸಮಗಂಭೀರೆ ಸುಗುಣವಿಹಾರೆ ನಿರ್ಮಲೆ ರತಿಶೃಂ-
ಗಾರೆ ರಿಪುಸಂಹಾರೆ ತುಂಬುರು
ನಾರದಾದಿಮುನೀಂದ್ರ ನುತಚರ-
ಣಾರವಿಂದೆ ಮಯೂರಗಾಮಿನಿ
ಸೂರಿಜನ ಸುಮನೋರಥಪ್ರದೆ ೧
ಮೂಲರೂಪೆ ದಯಾಲವಾಲೆ
ವಿಶಾಲಸುಗುಣಯುತೆ ಮುನಿಜನ-
ಲೋಲತರುಣಮರಾಳೆ ಸಚ್ಚರಿತೆ ನವಮಣಿ
ಮಾಲೆ ಮನ್ಮಥಲೀಲೆ ರಿಪುಶಿರಶೂಲೆ ಸಚ್ಚರಿತೆ ಹಿಮಗಿರಿ-
ಬಾಲೆ ನೀಲತಮಾಲವರ್ಣೆ ಕ-
ರಾಳಸುರಗಿ ಕಪಾಲಧರೆ ಸುಜ-
ನಾಳಿಪಾಲನಶೀಲೆ ಹಿಮಕರಮೌಳಿಶೋಭಿತೆ ಕಾಳಿಕಾಂಬಿಕೆÉ೨
ಶೋಕಮೋಹಾನಾನೀಕದೂರೆ ಪಿನಾಕಿಸುಪ್ರೀತೆ ಕೋಟಿ ದಿ-
ವಾಕರಾಭೆ ಪರಾಕು ಶರಣಜನೈಕಹಿತದಾತೆ ಸುರನರ-
ಲೋಕಮಾತೆ ನಿರಾಕುಲಿತೆ ಸುವಿವೇಕಗುಣವ್ರಾತೆ ಮಾನಸ-
ವಾಕುಕಾಯದಿಂದ ಗೈದಾ
ನೇಕ ದುರಿತವ ದೂರಗೈದು ರ-
ಮಾಳಕಳತ್ರನ ಪಾದಭಕುತಿಯ ನೀ ಕರುಣಿಸು ಕೃಪಾಕರೇಶ್ವರಿ೩
ಈಶೆ ಪಾಪವಿನಾಶೆ ಮಣಿಗಣಭೂರಿಪ್ರದೆ ಶಕ್ತಿವಿ-
ಲಾಸೆ ವಿಗತವಿಶೇಷೆ ಕೃತಜಯಘೋಷೆ ಸರ್ವವಿದೆ ಮನ್ಮನ-
ದಾಸೆಗಳ ಪೂರೈಸು ಸಜನರ ಪೋಷೆ ಕುಂದರದೆ ಶಂಕರೋ-
ಲ್ಲಾಸೆ ಯೋಗೀಶಾಶಯಸ್ಥಿತೆ
ವಾಸವಾರ್ಚಿತೆ ಶ್ರೀಸರಸ್ವತಿ
ದೋಷರಹಿತೆ ಮಹೇಶೆ ಸುಗುಣರಾಶಿ ಸುರತತಿದಾಸಜನಯುತೆ೪
ಸಾಮಗಾನಪ್ರೇಮೆ ರಾಕ್ಷಸ ಭೀಮೆ ರುದ್ರಾಣಿ ಅರಳ-
ಗ್ರಾಮದೇವತೆ ಕ್ಷೇಮದಾಯಿನಿ ತಾಮರಸಪಾಣಿ ಪಶುಪತಿ-
ವಾಮಭಾಗ ಲಲಾಮೆ ಮಂಗಲಧಾಮೆ ಫಣಿವೇಣಿ ಜಯಜಯ
ಶ್ರೀಮಹಾಲಕ್ಷ್ಮಿ ನಾರಾಯಣಿ
ರಾಮನಾಮಾಸಕ್ತೆ ಕವಿಜನ-
ಸ್ತೋಮಕೃತ ಪರಿಣಾಮೆ ಭೌಮೆ ಪುಲೋಮಜಾರ್ಚಿತೆ
ಸೋಮಶೇಖರಿ೫

೪೬೭
ನಂಬಿರೈ ಕರುಣಾಂಬುಧಿ ಕೋಮಲ ಕಂಬುಕಂಧರ ಹರಿಯಪ.
ಯೋಗಿಮನಮುದ ರಾಗ ಮೂರುತಿಯ ದೊರೆಯ
ಪಾಲಿತ ಕೌಂತೇಯ
ಭಾಗವತ ತನಕಾಗಿ ತಾ ದಯವಗೈದ ಭರದಿಂದ ತೋರ್ವ
ಯೋಗ ಮಾಯಾಧೀಶ ಸತ್ಸಕಲಾಗಮಾರ್ಚಿತ
ಭೋಗಿಶಯನ ಸ-
ರಾಗಕಪ್ಪನಿಯೋಗಿಸುವರೆ ಮಹಾಗಿರಿಯಿಂದಲಿ ಸಾಗಿ ಬಂದನ೧
ಮಂದವಾರದಿ ಮಿಂದು ಮಡಿಗಳನು ಉಟ್ಟು ಕಾಣಿಕೆಯನಿಟ್ಟು
ಮಂದರಾಧರ ನೀನೆ ಗತಿಯೆಂದು ಬಂದು ಕೈಮುಗಿದು ನಿಂದು
ವಂದಿಸುತ ಬಲ ಬಂದು ಚರಣದ್ವಂದ್ವಸೇವೆಯ ಕುಂದದರ್ಚಿಸಿ
ದಂದುಗವ ಬಿಡಿಸೆಂದು ಪೇಳ್ದರೆ ಮಂದಹಾಸಾನಂದವೀವನು೨
ಕಾಸುವೀಸದ ಬಡ್ಡಿ ಭಾಷೆಯನು ಬಿಡನು ನಮ್ಮೊಡೆಯನು
ದೇಶದೇಶದಿ ಕಷ್ಟ ತರಿಸುವನು ತಾನು ಭಕ್ತರ ಕಾಯುವನು
ಘಾಸಿಯಾಗದೆ ಧನಿಯ ಹಣವನು
ಸೂಸಿ ಕರುಣಾರಾಸ ರಾಜ್ಯದ
ವಾಸವಾಗಿಹ ಒಕ್ಕಲಿಗರೆಂಬೀ ಸುಮನದಿಂ ಕೇಶವನ ಪದವ೩
ಕಷ್ಟವಿಲ್ಲದೆ ಇಷ್ಟ ದೊರಕುವದು ನೆನೆದು
ಸುಖದಿಂ ಬಾಳುವದು
ದೃಷ್ಟಿಯಿಂದಲಿ ನೋಡು ನಮ್ಮ ದೊರೆಯ ಹರಿಯ
ಪರಿಯ ನೀನರಿಯಾ
ಸಿಟ್ಟುಮಾಡುವ ಸ್ವಾಮಿ
ನಿನ್ನೊಳಗಿಟ್ಟುಕೊಂಡರೆ ಕೆಟ್ಟು ಹೋಗುವಿ
ಒಟ್ಟುಗೂಡಿಸಿ ತಟ್ಟನೆಲ್ಲ ಮುಂದಿಟ್ಟುಯಿರೆ ಕೈಗೊಟ್ಟು ಕಾಯುವ೪
ಮಾನನಿಧಿ ಭಕ್ತರನು ಮನ್ನಿಸುವ ನಲಿವ ಕರುಣವ ಗೈವ
ಭಾನುಕೋಟಿಪ್ರಕಾಶದಿಂದಿರುವ ಮೆರೆವ ಮಹಾನುಭಾವ
ಏನನೆಂಬೆನು ಆದಿ ಶ್ರೀಲಕ್ಷ್ಮೀನಾರಾಯಣ ತಾನೆ ಕಾರ್ಕಳ
ಸ್ಥಾನ ರಾಜಧಾನಿಯಲಿ ಮೆರೆವನನವರತದಿ ಶ್ರೀನಿವಾಸನ೫

೧೨೯
(ಶ್ರೀ ಮಧ್ವಾಚಾರ್ಯರ ಪ್ರಾರ್ಥನೆ)
ನಂಬಿರೊ ಸರ್ವಜ್ಞ ಮುನಿಯಾ ವ್ಯರ್ಥ
ಹಂಬಲಗೊಳದಿರಿ ಹಲವು ಮೋಹದಲಿ ಪ.
ಭೀಮ ವಿಕ್ರಮ ವಾಲಿಯಿಂದ ಬಹು
ತಾಮಸಗೊಂಡ ಸೂರ್ಯಜನನು ಬಂದಾ
ತಾ ಮಾಡಿದನು ಕೃಪೆಯಿಂದ ರಘು
ರಾಮನ ತೋರಿಸಿ ನಲಿಸಿದಾನಂದಾ ೧
ಮಾಗಧನುಪಟಳದಿಂದಾ ಶಿವ
ಯಾಗ ಮಾಡುವೆನೆಂದು ಗಿರಿಗೂಹ ಬಂದಾ
ಸಾಗಿದ ನೃಪವ ವೃಂದಾವೆಲ್ಲ
ಬೇಗ ಬಿಡಿಸಿ ಕಾಯ್ದ ಬಹು ಕೃಪೆಯಿಂದಾ ೨
ಮಾಯಾವಾದವ ಪೇಳ್ವ ಬಾಯಿ ಕೆಟ್ಟ
ನಾಯಿಗಳನು ಸಾಯ ಬಡಿದವರಯಾ
ಈಯರಸನ ಮುಖ್ಯ ಪ್ರಿಯ ಯೀತ
ನ್ಯಾಯವ ನಡಸುವ ವೆಂಕಟರಾಯ ೩

೧೩
ನಂಬು ನಮ್ಮ ಹರಿಯ ನಂಬಿದ-
ರಿಂಬುದೋರುವ ದೊರೆಯಾ
ಹಂಬಲಿಸದೆ ಹಲವಂಗದಿ ವಿಶ್ವ ಕು-
ಟುಂಬಿ ವಾಯು ಪೂಜ್ಯಾಂಬುಜ ಪಾವನ ಪ.
ಕಾಮಧೇನು ಕಲ್ಪತರು ಚಿಂತಾಮಣಿಯಿಂದಪ್ಪ
ಕಾಮಿತಾರ್ಥವೆಲ್ಲ ನಿರವಧಿ ಪ್ರೇಮಿಸಿ ಕೊಡಬಲ್ಲ
ನೇಮದಿ ನಿತ್ಯ ಕಥಾಮೃತ ಸೇವಿಸಲು
ಪಾಮರ ಜನಕೆ ಸ್ವಧಾಮವನೀವನ ೧
ದುರಿತರಾಶಿಗಳನು ನಿಮಿಷದಿ ತರಿವನು ಮಾಧವನು
ಸ್ಮರಿಸುವ ದಾಸರನು ಮರೆಯದೆ ಕರುಣಿಸಿ ಸಲಹುವನು
ಚರಣಾಂಬುಜ ಕಿಂಕರಾಗಿರುವರು
ಕರೆದಲ್ಲಿಗೆ ಬಂದಿರುವ ಮಹಾತ್ಮನ ೨
ಶ್ರೀ ಭೂಮಿಸಹಿತ ಕೈವಶನಾಗುವ ಗುಣಭರಿತಾ
ಯೋಗಿ ಮನೋನುಗತ ಶ್ರೀಮದ್ಭಾಗವತಾಂತಗತಾ
ನೀಗಿ ನಿಖಿಳಭವ ರೋಗವ ಶರಣ ಮ-
ನೋಗತ ಸಲಿಸುವ ಭೋಗ ಗಿರೀಶನ ೩

೧೯೨
ನಕಯಾರಿಗುಸುರಿದರೆನ್ನ ದೂರ ಕೇಳ್ಪರ ಕಾಣೆ ಮಾರಮಣ ಮಾರಜ
ವಾರಿಜಾಂಬಕನೆ ದಯದೋರಿ ಕರವಿಡಿದು ಈ ಬಾರಿ
ಸಲಹೊ ಕೃಪಾ ವಾರಿನಿಧಿ ಕರುಣದಲಿ ಪ.
ಮೂಲ ಪ್ರಕೃತಿಯ ರಮಣ ಕಾಲಕರ್ಮ
ವಿದೂರ ಪಾಲಿತಾಖಿಳ ಸಜ್ಜನ
ಜ್ವಾಲಾ ಕರಾಳನಖರಾಳಿ ವಿದಳಿತ ದೈತ್ಯ
ಪಾಲದಾನವ ಮರ್ದನ ಖೂಳರನು ಸದೆದು ದಯ
ಪಾಲಿಸು ಮನೋರಥವ ನೀಲಕುಂತಲಗೋಪ
ಬಾಲಿಕಾ ಪಾಲಿತ ೧
ಇಂದಿರಾನಂದ ಶರದಿಂದುಮುಖಿಲೋಲ
ವ್ರಜಸುಂದರೀವೃಂದ ವಂದ್ಯ
ಮಂದರೊದ್ಧಾರ ಗೋವಿಂದ ಪಾಲಿತ ಸಕಲ
ವೃಂದಾರಕಾದಿ ವಂದ್ಯ
ಹಿಂದೆ ಮಾಡಿದ ಎನ್ನ ಕುಂದ ನೀನೆಣಿಸಿದರೆ
ಇಂದು ಪೊರೆವರ ಕಾಣೆ ಚಂದ್ರಶೇಖರ ಸಖನೆ ೨
ದೋಷಗಣದೂರ ನಿಶ್ಯೇಷ ಸದ್ಗುಣಭರಿತ ವಾಸವಾರ್ಚಿತ ಪದಾಬ್ಜ
ಶ್ರೀಶ, ವಾಗೀಶ ಗೌರೀಶ ಫಣಿವೀಶಮುಖದಾಸಜನ ಪರಿಪಾಲಕ
ದೋಷರಾಶಿಯ ಕಳೆದು ಪೋಷಿಸುವ ದೊರೆಯೆ ನಿ-
ನ್ನಾಶ್ರಯವೆ ನಂಬಿದೆನು ಶೇಷಭೂಧರ ರಮಣ ೩

೨೩೩
ನಗುವ ಬಗೆಯೇನೊ ಪನ್ನಗ ನಗಾಧೀಶ
ಅಗಣಿತ ಗುಣಾನಂದ ಚಿದ್ಘನ ಪರೇಶ ಪ.
ಜಗದ ಜೀವರಿಗೆ ಬಗೆ ಬಗೆ ವೇಷವ ತೊಡಿಸಿ
ಸೊಗಸಿನಿಂದಲಿ ನೋಡಿ ನಗುತಲಿಹೆಯೊ
ತ್ರಿಗುಣಮಾನಿನಿಯೊಡನೆ ಹಗಲಿರುಳು ಕ್ರೀಡಿಸುತ
ಮಿಗೆ ಹರುಷದಿಂದಿರುವ ಖಗವರಧ್ವಜ ಹರಿಯೆ ೧
ನಾನಾವತಾರದಲಿ ನಂಬಿದ ಸುರಾದಿಗಳಿ-
ಗಾನವಾರಿಧಿಯ ಸ್ನಾನ ಮಾಡಿಸುವಿ
ದೀನತ್ವದಲಿ ನಿನ್ನ ಧ್ಯಾನವೇ ಗತಿಯೆಂದು
ನಾನಿದಿರು ಬಂದೆರಗೆ ಮಾನಿಸದೆ ಮರುಳಾಗಿ ೨
ಅಂತರಾತ್ಮಕನಾಗಿ ಚಿಂತನಾದಿಗಳ ಬಲ
ವಂತದಲಿ ನೀನೆ ಮಾಡಿಸಿದ ಮೇಲೆನ್ನ
ಇಂತು ಬಳಲಿಸುವ ದುರಂತ ಮಹಿಮನೆ ನಿನಗೆ
ಎಂತು ಸರಿದೋರುವುದೊ ಕಂತು ಬ್ರಹ್ಮರ ಜನಕ ೩
ನಾನು ನನ್ನದು ಎಂಬ ಮಾನವಿತ್ತದರಿಂದ
ಈ ನಳಿನಜಾಂಡವದೊಳು ನಾನು ಸಿಲುಕಿಹೆನು
ಮಾನಾಭಿಮಾನಿಗಳ ನೀನೀವುದರಿಂದ
ದೀನತನ ಕಳದು ಸನ್ಮಾನ ಪಾಲಿಸು ದೇವ ೪
ತಂದೆತಾಯಿಗಳು ನಿಜ ಬಂಧುಬಳಗಗಳೆಲ್ಲ
ಒಂದೊಂದು ಜನ್ಮದಲಿ ಬ್ಯಾರೆಬ್ಯಾರಹರು
ಎಂದೆಂದಿಗೂ ನೀನೆ ತಂದೆ ನಿನ್ನರಸಿ ತಾ-
ಯ್ಯೆಂದು ತಿಳಿಹೆನು ಮುಚಕುಂದ ರಕ್ಷಕ ಸ್ವಾಮಿ ೫

೨೭೩
ನಡುನೀರೊಳಗೆ ಕೈಯ್ಯ ಬಿಡುವುದೆ ಸಿರಿನಲ್ಲ
ಕಡೆ ಹಾಯಿಸದೆ ಮೋಸ ಕೊಡುವುದು ತರವಲ್ಲ ಪ.
ನಾನಾ ವಿಧದ ನೀಚಯೋನಿಗಳನು ದಾಟಿ
ಮಾನುಷೋತ್ತಮ ಮಧ್ವಮತದಿ ಪುಟ್ಟಿ
ನೀನೆ ಮುಕ್ತಿದನೆಂಬೊ ಜ್ಞಾನವಂತರ ಭೇಟಿ
ನಾನೈದಬೇಕೆಂದು ಧ್ಯಾನಗೊಂಡಿಹೆನೆಂದು ೧
ವೇದ ವಿಹಿತಕರ್ಮವಾದರು ಕ್ರಮವಾಗಿ
ಸಾಧಿಸಲಿಲ್ಲ ಸಂತತಿಗಳಿಲ್ಲ
ಶ್ರೀದ ನಿನ್ನಯ ದಿವ್ಯ ಪಾದ ಪದ್ಮ ಪರಾಗ
ಮೋದಾನುಭವದಿ ಶುಭೋದಯಗೊಳಲಿಲ್ಲ ೨
ಕೆಲವು ಕಾಲವ ಬಾಲ್ಯದಲಿ ಕಳೆದೆನು ಮತ್ತೆ
ಲಲನೇರ ಮೋಹದಿ ಬಳಲಿದೆನು
ಬಲವು ಕುಂದುತ ದೇಹ ಗಳಿತವಾಗುವುದಿನ್ನು
ನಳಿನಾಕ್ಷ ಪದಪದ್ಮ ನೆಳಲನೈದದ ಮುನ್ನು ೩
ಮೂರೊಂದು ಪುರುಷಾರ್ಥ ತೋರುವ ಪುರುಷ ಶ-
ರೀರವ ಕರುಣಿಸಿದವನೆ ನೀನು
ಮೂರಾರು ವಿಧ ಭಕ್ತಿ ಸಾರುವ ತಿಳಿಸಿ ಕಂ
ಸಾರಿ ನಿನ್ನಯ ಪಾದ ಸೇರುವ ಪರಿಯಂತ ೪
ಸಂಚಿತಾಗಾಮಿ ದುಷ್ರ‍ಕತಗಳನಳಿಸಿ ಪ್ರಾ
ಪಂಚಿಕ ಭೋಗ ಪೂರಣಗೊಳಿಸಿ
ಪಂಚಭೌತಿಕ ಹರ ವಂಚನೆ ಮಾಡದೆ ಶ್ರೀ ವಿ
ರಿಂಚಿವರದ ದೇವ ವೆಂಕಟೇಶ ನೀ ಕರುಣಿಸು ೫

೩೧೬
ನಮೋ ನಮಸ್ತೇ ಉಮಾತನಯ ಕುಮಾರಾಗ್ರಜ ಪ.
ಅಮೋಘ ಶಮದಮಾದಿಗುಣ
ಸಮೂಹ ಗತವಿಮೋಹ ಸದಾ ಅ.ಪ.
ಭಾರತವ ಬಾದರಾಯಣನು ಪೇಳಿದಂತೆ ಬರೆದೆ ಭಾರತವ
ಮಾರಜ ಭ್ರಮೆಯ ದೂರಗೈದ ಸುವಿ-
ಚಾರಧೀರ ಸುರವಾರವಿನುತ ಪದ ೧
ವಂದಿಸುವೆ ವೃಂದಾರಕೇಂದ್ರ ಯೋಗೀಂದ್ರ
ತವಚರಣಕೆ ವಂದಿಸುವೆ
ವೃಂದಾರ ಮಂದಾರ ಚಂದನಚರ್ಚಿತ
ಚಂದ್ರಚೂಡ ಮನೋನಂದ ಮೂರುತಿಯೆ ೨
ಸುಕ್ಷೇಮವ ಸುಜನ ಪಕ್ಷಪಾವನ
ಮುಮುಕ್ಷುಜನಪ್ರಿಯ ಸುಕ್ಷೇಮದ
ಲಕ್ಷ್ಮೀನಾರಾಯಣ ಲಕ್ಷಿತಾತ್ಮನೆ ವಿ-
ಪಕ್ಷರಕ್ಷೋಗಣಶಿಕ್ಷ ಸೂಕ್ಷ್ಮ ಮತೆ ೩

೩೯೮
ನಮೋ ನಮೋ ಕಾಲಭೈರವ ಹರಿಯ ಚರಣ-
ಸಮೀಪದೊಳಗಿದ್ದು ಮೆರೆವ ಪ.
ಸಮೀಚೀನಜ್ಞಾನಭಕ್ತ-
ಸಮೂಹವ ಕಾವ ಲಕ್ಷ್ಮೀ-
ರಮಣನ ಕಾರ್ಯಮಂತ್ರಿ-
ಯು ಮಾಧವನ ಸಮಾನಬಲ ಅ.ಪ.
ಬೆಟ್ಟದೊಡೆಯ ಶ್ರೀನಿವಾಸನ ಪಾದಕಮಲ-
ಮುಟ್ಟಿ ಭಜಿಪ ವೈರಿಮರ್ದನ
ಸೃಷ್ಟಿ ಮೂರರಲ್ಲಿ ಕೀರ್ತಿ-
ಪಟ್ಟ ದಿಟ್ಟ ಧೀರ ಪರಮ
ನಿಷ್ಠ ಪುಷ್ಪ ತುಷ್ಟಿಪ್ರದ ಬ-
ಲಿಷ್ಠ ಶ್ರೇಷ್ಠ ಭೂತಪತಿಯೆ ೧
ಶ್ರೀನಿವಾಸನಾಜ್ಞೆ ಮೀರದೆ ನಡೆಸುವದೆ ಪ್ರ-
ಧಾನ ಕಾರ್ಯ ನಿನ್ನದೆಂಬುದೆ
ತಾನು ಕಿಂಚಿದರಿತು ಸನ್ನಿ-
ಧಾನವನ್ನೋಲೈಸಿ ಬಂದೆ
ದೀನಬಂಧು ಸುಗುಣಸಿಂಧು
ಮಾನತ್ರಾಣವಿತ್ತು ಸಲಹೊ ೨
ಅಂತರಂಗದಲ್ಲಿ ಪ್ರಾರ್ಥನೆ-ಮಾಡಿದರೆ
ಸ್ವಂತ ಬಂದು ಮಾಡು ರಕ್ಷಣೆ
ಅಂತ್ಯಕಾಲದಲ್ಲಿ ಹರಿಯ
ಚಿಂತನೆಗೆ ವಿಘ್ನ ಬಾರ-
ದಂತೆ ಕಾವ ಮಹಾ ತೇಜೋ-
ವಂತ ಹೊಂಕಾರಿ ಸೂರಿ ೩
ಕಾಲಕಾಲದಲ್ಲಿ ಭಕ್ತರ ಮನೋಭೀಷ್ಟ
ಪಾಲಿಸುವ ಚಂದ್ರಶೇಖರ
ಖೂಳ ಜನರ ಗರ್ವಮುರಿವ
ಶೂಲಪಾಣಿ ಸುಗುಣಶ್ರೇಣಿ
ಮೂಲಪತಿಯ ಪಾದಪದ್ಮ
ಮೂಲದೊಳಗೆ ನಲಿವ ಚೆಲುವ ೪
ತೋರಿಕೊಳ್ಳದೆ ಭೂರಿ ಮಹಿಮೆಯ ಭಕ್ತರಿಂಗಾ-
ಧಾರವಾಗಿ ರಾಜಿಸಿರುವೆಯ
ಧೀರ ಲಕ್ಷ್ಮೀನಾರಾಯಣನ
ಸೇರಿದಾನತರ್ಗೆ ಮಂ-
ದಾರ ಮಹೋದಾರ ಗಂ-
ಭೀರ ಧೀರ ಚಾರುಚರಿತ ೫

೪೩೫(ಅ)
ನಮೋ ಯತಿಕುಲಶಿಖಾಮಣಿಯೆ ಸುಗುಣನಿಧಿಯೆ
ಮತಿಮತಾಂವರ ಮಾನಿನೇ ಪ.
ಭುವನೇಂದ್ರತೀರ್ಥ ಯತಿಪ್ರವರಕರಸಂಜಾತ
ಸುವಿವೇಕಿ ವರದೇಂದ್ರಕರಸಂಭವಾಯ
ಅವಿಕಳಾನಂದ ವೈಷ್ಣವನಿವಹ ಗೀರ್ವಾಣ ತ-
ರವ ಸುಕೃತೇಂದ್ರ ಸದ್ಗುರುವೆ ನಮೋಸ್ತುತೇ ೧
ಕಾಶೀಮಠಾದಿಪತಿಯೇ ಸುಸನ್ಯಾಸಿ
ಯೇ ಸ(ತ್ತ್ವ) ಗುಣಭೂಷಾಯ ತೇ
ವ್ಯಾಸ ರಘುಪತಿಚರಣದಾಸವತ್ಪೂಜಕ ವಿ-
ಶೇಷ ಭಕ್ತಿಜ್ಞಾನಶಾಲಿನೇ ತುಭ್ಯಂ ೨
ಆಜಾನುಬಾಹುವೇ ಗೌಡಸಾರಸ್ವತ ಮ-
ಹಾಜನಸಮಾಜಮಂಡಲವಾಸಿನೇ
ರಾಜೀವನಯನಾಯ ನಮಿತಜನನಿಕರ ಸುರ
ಭೂಜಾಯ ಭೂರಿ ರವಿತೇಜಸ್ವಿನೇ ೩
ತುಷ್ಟಾಯ ಭಾಗವತನಿಷ್ಟಾಯ ದ್ವಿಜಕುಲವ
ರಿಷ್ಠಾಯ ಷಡ್ವರ್ಗಜಿಷ್ಣವೇ ತುಭ್ಯಂ
ದುಷ್ಟ ಜನ ದೂರಾಯ ಧೀರಾಯ ಭಕ್ತದ-
ತ್ತೇಷ್ಟಾಯ ಮಹತೇ ಸಹಿಷ್ಣವೇ ಮಹತೇ ೪
ಬ್ರಹ್ಮಚರ್ಯಾದಿ ವ್ರತಧರ್ಮಾತ್ಮನೇ ವಿಹಿತ
ಕರ್ಮಣೇ ಸುಕೃತೇಂದ್ರ ಶರ್ಮಣೇ ತುಭ್ಯಂ
ಬ್ರಹ್ಮಪಿತ ಲಕ್ಷ್ಮೀನಾರಾಯಣಾಂಘ್ರಿಧೃತಿ ಸು-
ನಿರ್ಮಲಾಂತಃಕರಣ ಕರುಣನೀರಧಯೇ೫

ಇಂದ್ರಿಯಾರ್ಥ ಸನ್ನಿಕರ್ಷ
೩೭೦
ನಲಿದಾಡಿದಳ್ ನಳಿನಾಂಬಕಿ
ಒಲಿದೆಮ್ಮನು ಸಲಹಲೋಸುಗ ಪ.
ಸುಲಲಿತ ವೀಣಾಪಾಣಿ
ಜಲಜೋದ್ಭವರ ಮಣಿ ಸುಗುಣಿ ಅ.ಪ.
ಕೃತೀಶಸುತೆ ಕೃಪಾನ್ವಿತೆ
ಶ್ರುತಿಸಮ್ಮತಗೀತೆ
ಪ್ರತಿರಹಿತೆ ಸತಿಪೂಜಿತೆ
ರತಿಯಾಮಿತ ಶೋಭಿತಳೆ ಧೃತಿ ಸಂಭೃತೆ ಮತಿದಾಯಕಿ ೧
ಇಭೇಂದ್ರಗಮೆ ವಿಧುಮಂಡಲ-
ನಿಭಮುಖಿ ಶಿಖಿಯಾನೆ
ಅಭಯಪ್ರದೆ ಅಖಿಳೇಶ್ವರಿ
ಸುಭಜೆ ಶುಭದೆ ವಿಬುಧೆ ಅಭವೆ ಸದ್‍ವಿಭವಾಸ್ಪದೆ ೨
ಪರಾಂಬರಿಸು ಪದಾಶ್ರಿತನ
ಪ್ರಭಾಕರಶತಾಭೆ
ಹರಿ ಲಕ್ಷ್ಮೀನಾರಾಯಣ-
ಶರಣೆ ರತುನಾಭರಣೆ ಕರುಣಾರಸವರುಣಾಲಯೆ ೩

೩೭೧
ನಲಿನಲಿದು ಬಾ ತ್ರಿಜಗದಾಂಬೆ ಪ.
ಮಾನಸದೊಳು ಸುಜ್ಞಾನಬೋಧಳಾಗಿ
ಆತನದೇವಕದಂಬೆ ಅ.ಪ.
ವಿದ್ಯಾ ಬುದ್ಧಿ ವಿನಯ ಮಂಗಳಗಳ
ಸಾಧ್ವಿ ನಿನ್ನಲಿ ಬೇಡಿಕೊಂಬೆ ೧
ನಲಿದೆನ್ನಯ ಜಿಹ್ವಾಗ್ರದಿ ನೆಲಸುತ
ಸುಲಭದೋರೆಯೆ ಸುಲಲಿತವ ಶಿವೆ ೨
ಧೀರ ಲಕ್ಷ್ಮೀನಾರಾಯಣಾಶ್ರಿತೆ-
ಪರಮೇಷ್ಠಿಪರಿರಂಭೆ ೩

ವ್ಯಾಸಕೂಟ-ದಾಸಕೂಟ ನಮನ
೧೫೨
(ಶ್ರೀ ಜಯತೀರ್ಥರ ಪ್ರಾರ್ಥನೆ)
ನಾಕನಾಯಕಟೀಕಾಕೃತ್ಪಾದ ನಾಕನಾಯಕ ಪ.
ನಾಕನಾಯಕ ನಿರಾಕೃತ ತಾಮಸ
ರಾಕಾ ರಮಣ ಸುಧಾಕರ ಮೂರ್ತೆ ೧
ಪೂರ್ಣಮನೀಷಿಮತಾರ್ಣವ
ಘೂರ್ಣನ ಪೌರ್ಣಮಿಯ ವಿಧುವರ್ಣಿತ ಕೀರ್ತೆ ೨
ಕುಂಡಲೀಂದ್ರ ಗಿರಿ ಮಂಡನ ಧೂಷಕ
ಖಂಡನ ದೈಶಿಕ ಪಾಂಡ್ಯಜ ಭೂಪಾ ೩

೪೪೭
ನಾನಾನಂತಪರಾಧಿ ಎನ-
ಗೇನಿಲ್ಲವು ದೃಢಬುದ್ಧಿಪ.
ನೀನೇ ಗತಿ ನಿನ್ಹೊರತು ಕಾವರನು
ಕಾಣೆನು ಕರುಣಾಂಬೋಧಿಅ.ಪ.
ಹಂದಿಯಂತೆ ತಿಂದು ಬೆಳದೆ ಎನ್ನ
ಮುಂದಣ ಗತಿಯನು ಮರೆತೆ
ಹಿಂದಿಲ್ಲವು ಮುಂದಿಲ್ಲವು ಲೋಕದಿ
ನಿಂದ್ಯಾಪಾತ್ರ ತಾನಾದೆ೧
ಮುತ್ತಿತು ಯೆನಗಜ್ಞಾನ ಎನ್ನ
ಚಿತ್ತದಿ ಕೊಡು ನಿನ್ನ ಧ್ಯಾನ
ನಿತ್ಯ ತವಚರಣ ಭಕ್ತಿಜ್ಞಾನವ
ನಿತ್ತು ಕಾಯೊ ಸುತ್ರಾಣ೨
ಗತಿಯಾರಿಲ್ಲನ್ಯತ್ರ ಶ್ರೀ-
ಪತಿಯೆ ಕಾಯೊ ಸುಚರಿತ್ರ
ಕ್ರತುಪಾಲ ಲಕ್ಷ್ಮೀನಾರಾಯಣ ಭಾ-
ರತಿಪತಿನುತ ಸುರಮಿತ್ರ೩

೧೪೯
(ನಾರದ ಪ್ರಾರ್ಥನೆ)
ನಾರದ ಮುನಿಯ ನಂಬಿರೋ ಸಜ್ಜನರೆಲ್ಲ ಪ.
ನಾರದ ಮುನಿಯ ನಂಬಿ ಸೇರಿ ರಮೇಶನ
ಘೋರದುರಿತ ಪರಿಹಾರಗೊಳಿಸುವಂಥ ಅ.ಪ.
ಫಾಲದಿ ತಿಲಕ ನಾಮವು ಕಂಠದ ಮೇಲೆ
ಜೋಲುವ ತುಳಸಿ ಮಾಲೆಯು
ತಾಳ ವೀಣೆಗಳಿಂದ ಕಾಲಾನುಗುಣಸ್ವರ
ಮಾಲೆ ತೋರುತ ಲಕ್ಷ್ಮೀಲೋಲನ ವಲಿಸಿದ ೧
ವೇದೋಪನಿಷತ್ತುಗಳಗಾಂಧರ್ವ ವಿದ್ಯ
ಹಾದಿಲಿ ತರಲು ಬಲ್ಲ
ಬೋಧಿಪ ಪರತತ್ವ ವಾದವ ಸುರಕಾರ್ಯ
ಸಾಧಿಸಿ ಹರಿಯ ಪ್ರಸಾದಕೆ ಪಾತ್ರನಾದ ೨
ಪ್ರಲ್ಹಾದ ಧ್ರುವ ದ್ರೌಪದಿ ಮುಖ್ಯ ವೈಷ್ಣವ
ರೆಲ್ಲರೀತನ ದಯದಿ
ಎಲ್ಲ ಠಾವಲಿ ಲಕ್ಷ್ಮೀವಲ್ಲಭನಿಹನೆಂಬ
ಸೊಲ್ಲ ತಿಳಿದು ಪರಮೋಲ್ಲಾಸ ಪಡೆದರು ೩
ದೇವಾಸುರರ ಬಳಿಗೆ ಪೋಗುವ ತನ್ನ
ಭಾವಾ ತೋರನು ಕಡೆಗೆ
ಆವಾವ ಜನಕನುವೀವ ಮಾತುಗಳಾಡಿ
ಪಾವನಾತ್ಮಕ ಹರಿ ಸೇವಾಫಲವ ಕೊಂಬ ೪
ಬಂದನು ಕಲಿಯುಗದಿ ದಾಸರೊಳು
ಪುರಂದರ ನಾಮದಲೀ
ಮಂದಮತಿಯ ಕಳೆವಂದದಿ ಪ್ರಾಕೃತ
ದಿಂದ ವೆಂಕಟಪತಿಯಂದವ ತಿಳಿಸಿದ ೫

೩೩೨
ನಾರಾಯಣ ನರಸಿಂಹ ಲ-
ಕ್ಷ್ಮೀರಮಣನೆ ಪರಬ್ರಹ್ಮ ಪ.
ಸಾರಭೋಕ್ತನೆ ಸ್ವತಂತ್ರನೆ ದೋಷವಿ-
ದೂರ ಪರಿಪೂರ್ಣಕಾಮ ಅ.ಪ.
ಸತ್ವಾದಿಗುಣಾತೀತ ವಿತತ ಸ-
ರ್ವೋತ್ತಮ ನಿರುಪಮ ಮಹಿಮ
ಪ್ರತ್ಯಗಾತ್ಮ ನಿಗಮಾಗಮವೇದ್ಯ ಸು-
ಹೃತ್ತಮ ಮಂಗಲಧಾಮ ೧
ವಿಧಿಭವೇಂದ್ರಾದಿ ವಿಬುಧಾಶ್ರಿತಪದ-
ಪದುಮ ನೀಲಾಂಬುದಶ್ಯಾಮ
ಹೃದಯಾಬ್ಜಮಧ್ಯಸದನ ಸಾಮಜವ-
ರದ ಯದುವಂಶಲಲಾಮ ೨
ಮಾಯಾತೀತ ಮಹೋನ್ನತ ಸುರಜನ-
ಪ್ರಿಯ ದ್ಯೆತ್ಯೇಯನಿರ್ನಾಮ
ವಾಯುವಾಹನ ಜನಾರ್ದನ ಲಕ್ಷ್ಮೀನಾ-
ರಾಯಣ ತೇ ನಮೋ ನಮಃ ೩

೪೮೫
ತದಿಗೆಯ ದಿವಸ
(ಶೇಷ ದೇವರನ್ನು ಕುರಿತು)
ರಂಭೆ : ನಾರೀಮಣೀ ನೀ ಕೇಳೆ ಈತ-
ನ್ಯಾರೆಂಬುದನೆನಗೆ ಪೇಳೆ
ಕ್ರೂರತನದಿ ತಾ ತೋರುವನೀಗ ಮ-
ಹೋರಗನೆನ್ನುತ ಕೋರಿಕೆ ಬರುವದು೧
ಒಂದೆರಡು ಶಿರವಲ್ಲ ಬಹು
ಹೊಂದಿಹವು ಸಟೆಯಲ್ಲ
ಕಂಧರದಲಿ ಕಪ್ಪಂದದಿ ತೋರ್ಪವು
ಚಂದಿರಮುಖಿ ಯಾರೆಂದೆನಗರುಹೆಲೆ ೨
ಊರ್ವಶಿ : ಕೋಮಲಗಾತ್ರೆ ಮಹಾಮಹಿಮನು ಇವನ-
ಸಾಮಾನ್ಯನೆ ಕಾಣೆ
ಭೂಮಿಯ ಪೊತ್ತ ನಿರಾಮಯನಾದ
ಸುಧೀಮನಿವನು ಜಾಣೆ ೧
ವಾಸುದೇವಗೆ ಈತ ಹಾಸಿಗೆಯವ ನಿ-
ರ್ದೋಷನಿವನು ಜಾಣೆ
ಸಾಸಿರಮುಖದ ವಿಲಾಸನಾಗಿಹ ಮಹಾ-
ಶೇಷನಿವನು ಕಾಣೆ ೨
ಅದರಿಂದಲಿ ಕೇಳ್ ತದಿಗೆಯ ದಿವಸದಿ
ಮಧುಸೂದನನಿವನ
ಅಧಿಕಾನಂದದಿ ಒದಗಿಸಿ ಬರುವನು
ಇದೆಯಿಂದಿನ ಹದನ ೩
ಎಂದಿನಂತೆ ಪುರಂದರವಂದ್ಯ ಮು
ಕುಂದ ಸಾನಂದದಲಿ
ಅಂದಣವೇರಿ ಗೋವಿಂದ ಬರುವನೊಲ-
ವಿಂದತಿ ಚಂದದಲಿ೪
ಕಂಟಕಗಳು ಎಲ್ಲುಂಟೆಂಬಂತೆ ನೃಪ-
ಕಂಠೀರವಗೈದ
ಘಂಟಾನಾದದಿ ಮಂಟಪದೊಳು ವೈ-
ಕುಂಠನು ಮಂಡಿಸಿದಾ ೫
ಕಾಂತಾಮಣಿ ಕೇಳಿಂತೀಪರಿ ಶ್ರೀ-
ಕಾಂತ ನತತಂಡ
ಸಂತವಿಸುತ ಮಹಾಂತಮಹಿಮನೇ-
ಕಾಂತಸೇವೆಯಗೊಂಡ ೬
* * *
ಪರಶಿವನನ್ನು ಕುರಿತು
ರಂಭೆ :ಯಾರಮ್ಮಾ ಮಹಾವೀರನಂತಿರುವನು
ಯಾರಮ್ಮಾ ಇವನ್ಯಾವ ಶೂರ ಯಾವ
ಊರಿಂದ ಬಂದ ಪ್ರವೀರ ಆಹಾ
ಮಾರಜನಕನ ವಿಸ್ತಾರಪೂಜೆಯ ವೇಳ್ಯ
ಧೀರನಂದದಿ ತಾ ವಿಚಾರ ಮಾಡುವನೀತ೧
ಕರದಿ ತ್ರಿಶೂಲವ ಧರಿಸಿ ಮತ್ತೆ
ವರ ಕೃಷ್ಣಾಜಿನವನುಕರಿಸಿ ಹರಿ
ಚರಣಸನ್ನಿಧಿಗೆ ಸತ್ಕರಿಸಿ ಆಹಾ
ಜರಿಯ ದುಕೂಲವ ನಿರಿದುಟ್ಟುಕೊಂಡು ವಿ-
ಸ್ತರವಾದ ತೋಷದಿ ಮೆರದು ನಲಿವ ಕಾಣೆ ೨
ಊರ್ವಶಿ : ಈತನೀಗ ಕಾಲಭೈರವ ಕೇಳೆಲೆಗೆ ನೀರ ಪ.
ಈತನೀಗ ಪೂರ್ವದೊಳಗೆ
ಭೂತನಾಥ ಸೇವೆಯೊಲಿದ
ಓತು ವಿಷ್ಣುಭಕ್ತಿಯಿಂದ
ಪೂತನಾದ ಪುಣ್ಯಪುರುಷಅ.ಪ.
ಊರು ಇವಗೆ ಮೊದಲು ಗಂಗಾ
ತೀರವಾಯ್ತು ವೇಣು ತಾ ವಿ-
ಚಾರದಿಂದ ಪೊದನೈ
ಉದಾರತನದಿ ರಾಮೇಶ್ವರಕೆ
ಸಾರಗ್ರಹಿತ ಮುಕ್ತಿ ಪಥವನು ಕರುಣದಿಂದ
ತೋರಿಸುವನು ವಿಷ್ಣುವೆಂದೆನುತ ಗಿರಿಯ
ನೇರಿ ಕರುಣ ವಾರಿಧಿಯ
ಪದಾರವಿಂದಸೇವೆಗೈದು
ಮಾರಪಿತನ ಭಕ್ತಿಯೊಳು ತಾ ಹೇರಿ
ನಲಿವ ಚಾರುಚರಿತ ೧
ಪರಮಪುರುಷ ಹರುಷದಿಂದೀಪುರಕೆ
ಬರುವ ಕಾಲದಲ್ಲಿ
ಚರಣವನ್ನು ಬಿಡದೆ ಯಿಲ್ಲಿರುವನೈ ಮಹಾತ್ಮನೀತ
ಸ್ಫುರಿತತೇಜೋಮೂರ್ತಿ ಈತನು ಲೋಕದೊಳಗೆ
ಚರಿಸುವ ತ್ರಿಕಾಲಪ್ರಜ್ಞನು ಇವನ ಗುಣವ-
ನರಿವರ್ಯಾರು ಮನುಜಭುಜಂಗರಲಿ
ಮಹತ್‍ಕಾರಣೀಕ
ಪುರುಷನಿವ ಮಹಾ ಬಲಾಢ್ಯ
ಕರುಣವುಳ್ಳ ವಿಷ್ಣುಭಕ್ತ ೨
ಶ್ರೀನಿವಾಸ ಕರುಣದಿಂ
ಪ್ರಧಾನಿಯೆಂದು ನಡೆಸಿಕೊಡುವ
ಏನಗೈದರೀತ ಮನದಿ ತಾನು
ತೋಷಪಟ್ಟು ಇರುವ
ಕಾಣಿಕೆಗಳ ತರಿಸಿ ಇರಿಸುವ ಬೇತಾಳಪ್ರೇತ
ನಾನಾ ಉಪದ್ರವಗಳ ಬಿಡಿಸುವ ಧನಿಯ ಆಜ್ಞೆ
ಏನ ದೊರಕಿತದನು ಬೇಗ ತಾನೆ
ಬಂದು ಪೇಳಿ ಜನರ
ಮಾನಿಸುತ ನಿಧಾನಗೊಳಿಸಿ
ಕ್ಷೋಣಿಯೊಳಗೆ ಕೀರ್ತಿಪಟ್ಟ ೩

೨೮೮
ನಿತ್ಯ ಚಿದಾತ್ಮಕ ಸತ್ಯ ರುಕ್ಮಿಣಿಯರು ಜೊತ್ತಿಲಾಡುತ ತಮ್ಮ ಪತಿಯ
ಉತ್ತಮಗುಣಗಣ ವರ್ಣಿಸುವದಕನುವೃತ್ತರಾಗುತ ವಾದಿಸಿದರು ಪ.
ಅಕ್ಕ ಕೇಳರಿಗಳ ವಶರಾಗಿ ಸೆರೆಯೊಳು
ಸಿಕ್ಕಿದವರ ಮಗನಿವನು
ಚಿಕ್ಕತನದಿ ಗೋವ ವಕ್ಕಲಿಗರು ಬಾಯೊ-
ಳಿಕ್ಕಿದನ್ನವನುಂಡದೇನು ೧
ನಿರಪರಾಧಿಯನೀತ ತರಿದನೆಂಬಕೀರ್ತಿ
ಬರದಂತೆ ಸೆರೆಯೊಳುದಿಸಿದ
ಸುರರೆಲ್ಲ ಗೋಪರಾಗಿರುವುದರಿತು ಸೇವ-
ಕರಿಗೊಲಿವುತ್ತಲಿ ಮೆರೆವ ೨
ಪಾಂಡುಕುಮಾರನ ಭಂಡಿ ಹೊಡಲು ಪಾಲ
ನುಂಡನು ವಿದುರನ ಗೃಹದಿ
ಗಂಡರಾಳುವ ಗರತೇರ ನೆರೆದವನ
ಹೆಂಡರಾಗಿರುವದಿನ್ನೆಂತು ೩
ಭಕ್ತವತ್ಸಲನೆಂಬ ಬಿರುದ ತೋರುವದತಿ
ಶಕ್ತಿ ಹರಿಗೆ ಶೋಭಾಕರವು
ತೊತ್ತಿನ ಮಗನಿಂದಲಿತ್ತ ಕೌರವನೆಂಬ
ತತ್ವ ತೋರಿದನಲ್ಲವೇನೆ ೪
ಧರೆಯನಾಳದೆ ತನ್ನ ಪರಿವಾರ ಸಹಿತಾಗಿ
ಶರಧಿಯೊಳಗೆ ವಾಸವಾಗಿ
ದುರುಳ ಜರಾಸಂಧ ಬರುವ ಭೀತಿಯ ತಾಳಿ
ಲ್ಲಿರುವ ಕಾರಣವೇನೆ ಜಾಣೆ ೫
ಈರೆಂಟು ಮತ್ತೊಂದು ಭಾರಿ ಸಮರದಲ್ಲಿ
ಬಾರುಹದ್ರಥನನ್ನು ಗೆಲಿದ
ಧೀರನೀತನು ಭಕ್ತ ಮಾರುತಿಯಲಿ ಜಯ
ತೋರಲಂತಿರುವನು ಕಾಣೆ ೬
ಜಾರ ಚೋರರಿಗೆಲ್ಲ ಗುರು ನಿಮ್ಮ ಪತಿಯೆಂದು
ವೂರನಾರಿಯರೆಲ್ಲ ನುಡಿವ
ಕ್ರೂರ ಮಾತನು ಕೇಳಲಾರೆನಕ್ಕಯ್ಯ ಯಿ
ನ್ಯಾರಿಗೆಂದುತ್ತರ ಕೊಡುವೆ ೭
ಘತಿತ ಪಾವನ ಪದ್ಮಜಾತಜನಕ ಶ್ರೀ
ಪತಿ ಸುಜನಾನಂದದಾಯಿ
ವಿತತ ವಿಡಂಬನ ತೋರುವ ವೆಂಕಟ
ಪತಿ ದೋಷಹರ ಶೇಷಶಾಯಿ ೮
ಹಸೆಗೆ ಕರೆವ ಮತ್ತು ಆರತಿಯ ಹಾಡುಗಳು


ನಿತ್ಯ ಸುಖಕರ ನೀರಜಾಕ್ಷರ ಭೃತ್ಯರಾಗುವ ಬನ್ನಿರಿ
ಎತ್ತುವನು ಸಂಶಯವಿಡದೆ ಕೃತಕೃತ್ಯರಾಗುವವೆನ್ನಿರಿ ಪ.
ಮೋದಮಯನ ಪ್ರಸಾದವನು ಕೊಂಡಾದರದಿ ಸೇವಿಪುದು
ಪಾದಪದ್ಮಾಮೋದಯುತಾ ತುಳಸೀದಳಗಳನು ಮುಡಿವುದು
ತೇದ ಗಂಧವ ಮಾಧವನಿಗಿರಿಸಾದನಂತರ ಕೊಳುವುದು
ಶ್ರೀಧರನ ಸಂಭ್ರಮದಿ ನೋಡುತ ಬೋಧಕರ ಭಾಗವತ ಕೇಳುತ ೧
ಭೀಕರಿಪ ಮಹ ದುರಿತಗಣ ನಿರಾಕರಿಸುವನು ನಿಮಿಷದಿ
ಕಾಕಜನರ ಕುಯುಕ್ತಿ ಶಕ್ತಿಯ ದೂಕುವನು ದುಷ್ಕೂಪದಿ
ವಾಕುಗಳ ತಪ್ಪುಗಳನೆಣಿಸದೆ ಸಾಕುವನು ಸಂತಸದಲಿ
ಮೂಕಳತ್ರನು ಮಮತೆಯಲಿ ಭಾಗ್ಯಾಕರೆಯ
ಒಡಗೂಡಿ ನಲಿವನು ೨
ಶ್ರೀಶನನು ಭಜಿಸುವದಕೇನಾಯಾಸವಿರುವುದು ಹೇಳಿರಿ
ವಾಸವಾಗಿಹ ಸಕಲ ಹೃದಯಾಕಾಶ ಪದ್ಮದಿ ಕೇಳಿರಿ
ವಾಸುದೇವನ ವರ್ಣನಾಂಶವ ಲೇಶವಾದರು ತಾಳಿರಿ
ಶೇಷ ಗಿರೀಶನ ದಾಸಕೂಟ ಸಮಾಶ್ರಯಣ ಸಂಗ್ರಹಿಸಿ ಬಾಳಿರಿ ೩

೧೭೫
ನಿತ್ಯ ಸುಪ್ರೀತ ಸರ್ವೋತ್ತಮ ಹರಿಯೆ
ಚಿತ್ತಜನಯ್ಯ ಚಿನ್ಮಯ ಎನ್ನ ದೊರೆಯೆ ಪ.
ಅರಿಯೆ ನಾನಾ ವಾಹನಾದಿ ವಿಧಿಯನು
ಮರಿಯೆನು ಮನದಲ್ಲಿ ಮಂದಭಾವವನು
ವರದೇಶ ನಿನ್ನಯ ಚರಣಾರವಿಂದವ
ನೆರೆನಂಬಿದವನೆಂಬ ಪರಿಯಿಂದ ದಯವಾಗು ೧
ಇಂದಿರಾವರವಿಧಿವಂದ್ಯ ಸರ್ವೇಶಾ-
ನಂದ ಚಿದ್ಘನ ನಿತ್ಯ ಸುಂದರ ವೇಷಾ
ಮಂದ ಬುದ್ಧಿಯೊಳೆಂತು ಒಲಿಸುವೆ ಶ್ರೀಶಾ
ತಂದೆ ನೀ ಕರುಣದಿ ಸಲಿಸಭಿಲಾಷಾ ೨
ಅಣುರೇಣು ತೃಣಕಾಷ್ಠ ಪರಿಪೂರ್ಣ ನಿನ್ನ
ನೆನೆದು ವಂದಿಸುವೆ ಚಂದನ ಮೂರ್ತಿಯನ್ನ
ಸನಕಾದಿ ವಂದ್ಯ ಶೇಷಾಚಲನಾಯಕ
ಅನಿಮಿಷ ಪತಿಯೆನ್ನ ಮನೆಯಲ್ಲಿ ನೆಲೆಯಾಗು ೩

೪೬
ನಿಧಿಯು ದೊರಕಿತು ಎನಗೆ ನಿಧಿಯು ದೊರಕಿತು.
ವಿಧಿ ಭವಾದಿ ದೇವರೆಲ್ಲ ಒದಗಿ ಮಾನದಿಂದ ಕಾಯ್ವ ಪ.
ನಿತ್ಯ ಮಂಗಳೆಯನು ತನ್ನುರ ಸ್ಥಳದಲಿ ಧರಿಸಿರುವದು
ಎತ್ತ ನೋಡಲಲ್ಲಿ ನಲಿವ ಭೃತ್ಯಪೂರ್ಣಾರ್ಥ ಕೊಡುವ ೧
ಕಷ್ಟ ಕಲುಷವೆಂಬ ದೊಡ್ಡ ಬೆಟ್ಟವೆಲ್ಲ ಭೇದಿಸುವುದು
ಇಷ್ಟ ಲಾಭ ಪುಷ್ಪ ಜ್ಞಾನ ದೃಷ್ಟಿಸಹಿತ ಕೊಟ್ಟು ಕಾವ ೨
ಹಲವು ಭವದ ತಾಪವನ್ನು ಕಳೆದು ಕೃಪಾರಸವ ಸೂಸಿ
ಚೆಲುವೆ ರಮೆಯ ಕೂಡಿ ಮಮಾಲಯದ
ಮಧ್ಯಪೊಳೆವಪೂರ್ವ ೩
ಸೋತು ಸಕಲ ಜನರ ಮುಂದನಾಥನಾಗೆ ಕರುಣಿ ಜಗ-
ನ್ನಾಥದಾಸರೊಲಿದು ಪರಮ ಪ್ರೀತಿಯಿಂದ ತೋರಿದಂಥ ೪
ಇಹ ಪರತ್ರ ಸುಖವನೀವ ಮಹದುಪಾಸ್ಯ ಪಾದಪದ್ಮ
ವಹಿಸಿದವರ ಸಕಲಭಾಗ್ಯ ನಿವಹಿ ವೆಂಕಟೇಶನೆಂಬ ೫

೪೪೮
ನಿನ್ನ ದಾಸಾನುದಾಸನು ನಾ ಸುಪ್ರ-
ಸನ್ನಾತ್ಮ ನಿಗಮಸನ್ನುತನೆ ಪ.
ಎನ್ನನಂತಪರಾಧಗಳ ಕ್ಷಮಿಸು
ಪೂರ್ಣೇಂದುವಕ್ತ್ರ ಪನ್ನಗಶಯನಅ.ಪ.
ಸಂತಾಪಘ್ನಾನಂತಮಹಿಮ ಜಗ-
ದಂತರ್ಯಾಮಿ ಪರಂತಪನೆ
ಮಂತ್ರಾತ್ಮ ರಮಾಕಾಂತ ಕಲಿಮಲ-
ಧ್ವಾಂತ ಧ್ವಂಸನಾಚಿಂತ್ಯ ಸ್ವತಂತ್ರನೆ ೧
ಬಟ್ಟೆಯೊಳ್ ಕೆಂಡವ ಕಟ್ಟಿ ಸ್ವಗೃಹದಿ ಬ-
ಚ್ಚಿಟ್ಟಂತೆ ಕಾರ್ಯ ದುಷ್ಟರದು
ಗುಟ್ಟರಿಯದೆ ಪರಮೇಷ್ಠಿ ಜನಕ ನಿನ್ನ
ಭ್ರಷ್ಟರಾಚರಣೆಗೆಷ್ಟೆಂಬುವದ್ಯೆ ೨
ಏಳೆರಡು ಲೋಕಪಾಲಕರು ಸರ್ವ
ರೂಳಿಗದ ಜನರು ಮೂಲೇಶ
ಶ್ರೀಲಕ್ಷ್ಮೀನಾರಾಯಣ ನಿರ್ಗುಣ
ಕಾಲನಿಯಾಮಕ ದೈತ್ಯಾಂತಕ ಜಯ೩

೩೮೮
ನಿನ್ನ ಸೇರಿದೆ ಮಹಾಲಿಂಗ ಎನ-
ಗಿನ್ಯಾರು ಗತಿ ಕಾಣೆ ಕರುಣಾಂತರಂಗ ಪಾರ್ವತಿ ಮೋಹನಾಂಗ ಪ.
ನಿನ್ನಂತೆ ಕೊಡುವ ಉದಾರ ತ್ರಿಭು-
ವನ್ನದೊಳಿಲ್ಲದಕ್ಯಾವ ವಿಚಾರ
ಮುನ್ನ ಮಾರ್ಕಾಂಡೇಯ ಮುನಿಯ ಭಯ
ವನ್ನು ಪರಿಹರಿಸಿದೆಯೊ ಸದುಪಾಯ ನಮೋ ಶಿವರಾಯ ೧
ಸರ್ವಾಪರಾಧವ ಕ್ಷಮಿಸು ಮಹಾ-
ಗರ್ವಿತರಾಶ್ರಯಕ್ಕೊಲ್ಲದು ಮನಸು
ಶರ್ವರೀಶಭೂಷ ನಿನ್ನ ಹೊರ-
ತೋರ್ವರಿಲ್ಲ ರಣಮಲ್ಲ ಮುಕ್ಕಣ್ಣ ಕಾಯೊ ಸುಪ್ರಸನ್ನ ೨
ಅಂತರಂಗದ ದಯದಿಂದ ಯುದ್ಧ-
ಮಂ ತೊಡಗಿದೆ ಪಾರ್ಥನೊಳತಿಚಂದ
ಪಂಥದ ನೆಲೆಯನ್ನು ತಿಳಿದು ಸರ್ವ-
ಮಂತ್ರಾಸ್ತ್ರಗಳನಿತ್ತೆಯೊ ಭಕ್ತಗೊಲಿದು
ದೊಡ್ಡದು ನಿನ್ನ ಬಿರುದು ೩
ಸಿದ್ಧಿಸು ಸರ್ವಸಂಕಲ್ಪ ಅಡ್ಡ-
ಬಿದ್ದು ಬೇಡುವೆ ನಿನಗ್ಯಾವದನಲ್ಪ
ಬುದ್ಧಿಯ ನಿರ್ಮಲಮಾಡು ನಿನ್ನ
ಹೊದ್ದಿದವರಿಗಿಲ್ಲೆಂದಿಗು ಕೇಡು ದುಷ್ಟರದ್ಯಾವ ಪಾಡು೪
ಅಂಜಿಕೆ ಬಿಡಿಸಯ್ಯ ಹರನೆ ಪಾ-
ವಂಜಾಖ್ಯವರಸುಕ್ಷೇತ್ರಮಂದಿರನೆ
ಸಂಜೀವನ ತ್ರಿಯಂಬಕನೆ ನವ-
ಕಂಜಾಕ್ಷ ಲಕ್ಷುಮಿನಾರಾಯಣಸಖನೆ
ಸಲಹೊ ಪಂಚಮುಖನೆ ೫

೩೩೩
ನಿನ್ಹೊರತು ಪೊರೆವರಲಿಲ್ಲ ಹರಿ ಮುರಾರಿ ಪ.
ಪೂರ್ಣಾತ್ಪೂರ್ಣ ಕ್ಷೀರಾರ್ಣವ ಶಯನ ವ-
ರೇಣ್ಯ ಸ್ವತಂತ್ರವಿಹಾರಿ ೧
ಜೀವನಿಚಯಕೃತ ಸೇವೆಯ ಕೈಗೊಂಡು
ಪಾವನಗೈವೆ ಖರಾರಿ ೨
ತಾಪತ್ರಯಹರ ಗೋಪಾಲ ವಿಠಲ
ಆಪನ್ನಭಯನಿವಾರಿ ೩
ಪ್ರಾಣನಾಥ ಸರ್ವ ಪ್ರಾಣನಿಯಾಮಕ
ಪ್ರಾಣದಾನಂತಾವತಾರಿ ೪
ಲಕ್ಷ್ಮೀನಾರಾಯಣ ಬ್ರಹ್ಮಾದಿ ವಿ-
ಲಕ್ಷಣ ರಕ್ಷಣಕಾರಿ ೫

೪೬೯
ನಿರ್ಭಯವಾಗಲಿ ಯೋಗಿ ಜಿತಭೋಗಿ ಪ.
ಲಭ್ಯಸುಕೃತವಿರಭ್ಯುದಯವಾಗಿ ಅ.ಪ.
ಸತ್ಯಜ್ಞಾನ ಸುವಿರಕ್ತಿ ಹರಿಭಕ್ತಿ
ಚಿತ್ತದೊಳಿದ್ದರೆ ನಿತ್ಯಾಸಕ್ತಿ೧
ಹೊದ್ದಿದನಿವನು ಬ್ರಾಹ್ಮಣನು ನಮ್ಮವನು
ಇದ್ದರೆ ಪುಣ್ಯವು ಶುದ್ಧಾಂತಃಕರಣನು ೨
ರಕ್ಷಿಸುವದು ನಿನ್ನ ಭಾರ ಸರ್ವಾಧಾರ
ಲಕ್ಷ್ಮೀನಾರಾಯಣ ಲಕ್ಷ ನಮಸ್ಕಾರ೩

೨೦
ನಿರ್ಭಯವಾಯ್ತಿನ್ನು ಎನಗೆ ರತ್ನ
ಗರ್ಭ ಲಕ್ಷ್ಮಿಕಾಂತ ಹೊಣೆಯಾದ ಮನೆಗೆ ಪ.
ಮೂರಾವಸ್ತೆಗಳಲ್ಲಿ ಕಾವ
ಕ್ಷೀರ ವಾರಿಧಿ ವಾಸ ಸ್ವಭಕ್ತ ಸಂಜೀವ
ಕ್ರೂರ ವೈರಿಗಳು ದುರ್ಭಾವ
ದೂರ ಹಾರಿಸಿ ಸುಖವನ್ನು ತಾನೆ ತಂದೀವ ೧
ಕರ್ಣಾಮೃತರಸ ಸುರಿದು ನಿತ್ಯ
ಸ್ವರ್ಣಲಾಭ ಧಾರೆ ಸುಲಭದಿ ಕರದು
ನಿರ್ನಿತ ದೋಷವ ತರಿದು ದು-
ಗ್ದಾರ್ಣವ ಮಂದಿರ ತೋರುವ ಬಿರುದು ೨
ವಿಧಿಭವ ಶಕ್ರಾದಿರಾಜ ಹೃದ್ಗತ
ಸದನದಿ ನೆಲೆಗೊಂಡಾಶ್ರೀಕಲ್ಪಭೂಜಾ
ಸದೆವ ವೈರಿಗಳ ಸಮಾಜ ಬೇಗ
ಒದಗಿ ಪಾಲಿಪ ನಮ್ಮ ವೆಂಕಟರಾಜ ೩

ಸರ್ವದೇವನತಿಯಲ್ಲವು ಕೇಶವನಲ್ಲಿ ಶೇರುವುದೆಂದು

ಗಣೇಶ ಸ್ತವನ
ನೀ ದಯವಾಗು ಶುಭೋದಯ ಗಣಪತಿ
ಕಾದುಕೊಂಡಿರು ಸಂತತಂ ಪ.
ವಾದವಿರಲಿ ನಿಷುಸೀದ ಗಣಪನೆಂಬ
ವೇದಾರ್ಥವ ಪರಿಶೋಧಿಸಿ ನಮಿಸುವೆ ಅ.ಪ.
ಯದ್ಯದ್ವಿಭೂತಿಮದೆಂದು ಪೇಳಿದ ಪರಿಶುದ್ಧವಾದ ವಚನ
ಶ್ರದ್ಧಾಪೂಜಿತ ಸಕಲ ದೇವರೊಳಗಿದ್ದು ಉಲಿವ ಕಥನ
ಮಧ್ವಾಗಮ ಸಂಸಿದ್ಧವಾಗಿರೆ ವೃಥಾ
ಪದ್ಧತಿ ತಿಳಿವದು ದುರಾಧ್ಯರಂತಿರಲಿ ೧
ಸರ್ವದೇವ ನತಿಯೆಲ್ಲವು ಕೇಶವನಲ್ಲಿ ಸೇರುವದೆಂದು
ಯಲ್ಲಾ ಕಡೆಯಲಿ ಚಲ್ಲದೆ ಜಲವ ಬೇರಲ್ಲಿ ಸುರಿಯಿರೆಂದು
ಫುಲ್ಲನಾಭ ಶಿರಿವಲ್ಲಭ ವ್ಯಾಸರ
ಸೊಲ್ಲ ತಿಳಿದು ನಿಂನಲ್ಲಿಗೆ ಸೇರಿದೆ ೨
ವಿಘ್ನಮಹೌಘ ವಿದಾರಣ ಭವಸಂವಿಘ್ನಮನ:ಶರಣಾ
ರುಗ್ಣಾತ್ವಾದಿ ನಿವಾರಣ ಸಂಗದ-ಭಗ್ನಸುರಾರಿ ಗಣಾ
ನಗ್ನ ಚಿದಾತ್ಮಜ ನೀಲಾಭರಣ ಭ-
ಯಾಗ್ನಿ ಶಮನ ನಿರ್ವಿಘ್ನದಿ ಕರುಣಿಸು ೩
ಶುಂಡಾದಂಡನುಮಂಡಿತ ಸತ್ರ‍ಕತ ಪುಂಡರೀಕ ನಯನ
ಅಂಡಜಾಗಮನಾಖಂಡಲ ಸೈನಿಕ ಚಂಡವೈರಿ ಮಥನಾ
ಪಂಡಿತ ಪಾಮರ ಸಮದೃಗಭೀಪ್ಸಿತ
ಚಂಡಕಿರಣ ಶುಭ ಮಂಡಲ ಮಧ್ಯಗ ೪
ವಿಶ್ವಂಭರ ವಿಬುಧೇಶ ಗಣಾರ್ಚಿತ ವಿಶ್ವನಾಥವಿನುತಾ
ವಿಶ್ವಜನಿಸ್ಥಿತಿ ಕಾರಣವಾರಣ ವಿಶ್ವಭೂತಿ – ಶರಣ
ವಿಶ್ವಾಸಾನುಗುಣಾರ್ಥ ವಿಭಾವನ
ವಿಶ್ವದೇವಗತ ವೆಂಕಟರಮಣ ೫

೧೬೪
ನೀತಿಯೆ ಎನ್ನ ಬಾಧಿಸುವುದಿನ್ನು ಪ.
ಎಲ್ಲಿಯೂ ಎನಗೆ ನೀನಲ್ಲದೆ ಬೇರೆ ಗತಿ
ಇಲ್ಲವೆಂಬನ ಸಿರಿನಲ್ಲ ನೀ ಬಿಡುವುದು ೧
ಶ್ರೀಯರಸ ನೀನೆ ತಂದೆತಾಯಿಗಳೆಂದು
ಬಾಯಬಿಟ್ಟೊದರಲು ಕಾಯದೆ ಕಠಿಣ ೨
ಭೂಧರಾಧೀಶಾಯುರ್ವೇದ ವಿದಾಯಕ
ಮಾಧವ ನೀ ಎನ್ನ ವ್ಯಥೆಗೊಳಿಸುವುದು ೩

೪೭೬
ದ್ರೌಪದೀ ವಸ್ತ್ರಾಪಹಾರ
(ವಸ್ತ್ರಾಪಹಾರದ ಸಂದರ್ಭದಲ್ಲಿ ದ್ರೌಪದಿಯು
ಸಭೆಯನ್ನುದ್ದೇಶಿಸಿ ಹೇಳುವ ಮಾತು)
ನೀತಿಯೋ ಪುನೀತಮಾನಸರೇ ಸುಗುಣಾತಿಶಯರೇ
ನೀತಿಯೋ ಪುನೀತಮಾನಸರೇ ಪ.
ದ್ಯೂತ ಕ್ಷತ್ರಿಯ ಜಾತಿಗನುಚಿತ
ಕೈತವದ ವಿಪರೀತ ಮತಿಯಿದು
ಖ್ಯಾತರಿಂಗೀ ರೀತಿ ನ್ಯಾಯವೆ
ಪಾತಕಿ ಘಾತಕಿ ನೀತಿಯೆನಿಸುವುದು೧
ಲೋಕನಿಂದಕನೀ ಕುಠಾರನು
ಭೀಕರನು ಮನವ್ಯಾಕುಲಿಸುವನು
ಶ್ರೀಕರಾತ್ಮರನೇಕರಿರುವಿರಿ
ಯಾಕಿಂತ ಮೌನ ವಿವೇಕಿಗಳಿಗೆ ಹೀಗೆ೨
ನ್ಯಾಯ ಧರ್ಮ ಸಹಾಯಗೈಯ್ಯುವ
ರಾಯರೆಲ್ಲ ಮಹಾಯಶಸ್ವಿಗಳ್
ಈಯವಸ್ಥೆಗೆ ಪ್ರೀಯರಾದಿರೆ
ಕಾಯೋ ಶ್ರೀಲಕ್ಷ್ಮೀನಾರಾಯಣ ನೀಯೆನ್ನ೩

೧೬೮
ನೀನೆ ಗತಿ ಶ್ರೀಪತಿ ನೀನೆ ಗತಿ
ನಿರಾಕೃತ ದಾನವತತಿ ದೀನಾನುಕಂಪಿತ ಮತಿ ಪ.
ಏನೆಂಬೆನು ನಿನ್ನಯ ಕರುಣಾ ಪವಮಾನ ಮತಿಯ
ಜನಾದರಣಾ ದೀನಬಂಧು ದುರಿತೌಘ ನಿವಾರಣ
ಶ್ರೀನಿವಾಸ ಶುಭ ಸಂಚಯ ಕರಣ ೧
ನಿರವಧಿ ಸುಖದಾಯಕ ನಿನಗನ್ಯರು ಸರಿಯಂಬರು
ನರಕದಿ ಹೊರಳುವರು ಚರಣಯುಗ್ಮಸರಸಿಜವಿಂತಿರಲು
ಬರಿದೆ ಭವದಿ ತಿಳಿಯದೆ ಬಳಲುವರು ೨
ಸ್ಮರಣೆ ಮಾತ್ರದಿಂದೊಲಿವ ಮನವರಿತು ಪಾಡಿದರೆ ನಲಿವ
ಸಿರಿಸಮೇತ ಮಂದಿರದೊಳಗಿರುವ
ಉರಗ ಗಿರೀಂದ್ರನ ಶಿರದಲಿ ನಲಿವ ೩

ಪೂರ್ವವೈರಿ
೨೨
ನೀನೆ ಜಗದೀಶ ಶ್ರೀ ವೆಂಕಟೇಶಾ ಪ.
ಪೂರ್ವ ವೈರ ವಹಿಸಿರ್ವ ತಮೋಗ್ರಹ
ಪರ್ವ ಕಾಲದೊಳು ಶರ್ವರೀಶನಿದಿ-
ರಿರ್ವದರಿತು ಸುರ ಸಾರ್ವಭೌಮ ಶತ-
ಪರ್ವದೊಳಸುರನ ಗರ್ವವ ಕಳಿವಿ ೧
ಧರಣಿಗೆ ಭಾರವ ನೆರಹುವ ದೈತ್ಯರು
ಸುರರ ಮಹಾದ್ಬುತ ಧುರದೊಳು ಗೆಲಿತಿರೆ
ತಿರಿಯ ಜನರ ಸುರವರತನುವಾಗುತ
ತಿರಿವಿ ಮದಾಂಧರ ಸರಸೀಜನಯನ ೨
ಹೊಂದಿದ ಭಕ್ತರನೆಂದಿಗು ಕಾಯುವ
ನೆಂದು ವೇಡಮುನಿ ವೃಂದ ಪೊಗಳುವುದು
ಸುಂದರ ಪೂರ್ಣಾನಂದ ಶೇಷಗಿರಿ
ಮಂದಿರ ಸಿರಿ ಗೋವಿಂದ ಮುರಾರೆ ೩

೩೩೪
ನೀಲಮೇಘಶ್ಯಾಮ ರಾಮ
ನಿಖಿಳಲೋಕ ಕ್ಷೇಮಧಾಮ ಪ.
ಪಾಲಿಸೊಲಿದು ಹನುಮಪ್ರೇಮ
ಪಾವನಾತ್ಮ ಸೀತಾರಾಮ ಅ.ಪ.
ಸತ್ಯಸಂಕಲ್ಪಾನುಸಾರ
ಚಿತ್ತಚಿನ್ಮಯಾತ್ಮ ಶ್ರೀಧರ
ನಿತ್ಯಮುಕ್ತ ಪುಣ್ಯನಾಮ
ಪ್ರತ್ಯಗಾತ್ಮ ಪೂರ್ಣಕಾಮ ೧
ಕಮಲನಾಭ ರವಿಶತಾಭ
ಸುಮನಸಾರ್ಚಿತಾಂಘ್ರಿಶೋಭ
ಅಮಿತವಿಕ್ರಮ ಸಮರಭೀಮ
ಶಮಲಶಮನ ಸಾರ್ವಭೌಮ ೨
ಶಾರದೇಂದುಸನ್ನಿಭಾನನ
ಮಾರುತಿಹೃದಯೈಕಸದನ
ಧೀರಲಕ್ಷ್ಮಿನಾರಾಯಣ
ಸೂರಿಜನೋದ್ಧರಣನಿಪುಣ ೩

ಉಡುಪಿಯ ಶ್ರೀಕೃಷ್ಣ
೧೦೧
ನುಡಿಯ ಲಾಲಿಸು ಮಾಧವ
ನುಡಿಯ ಲಾಲಿಸು ಪಾಲಕಡಲಶಯನ ದೇವ
ಕಡಗೋಲ ಪಿಡಿದ ನಮ್ಮುಡುಪಿಯ ಶ್ರೀಕೃಷ್ಣ ಪ.
ಮಾನವ ಮದವನ್ನು ಮಸರಂತೆ ಮಥಿಸಿದ
ಭಾವನ ತೋರುವಿಯೊ ಹಾಗಲ್ಲದಿದ್ದರೆ
ದೇವತಗಳಿಗಮೃತವನುಣಿಸಿದನೆಂಬ
ಸೋವನು ಸೂಚಿಪೆಯೊ ಸೌಭಾಗ್ಯ ಸಿರಿಯೊ
ಸೇವಕರ ಸೇವಾನುಗುಣಫಲ
ನೀವ ತರತಮ ಭಾವವೊ ಭವ
ನಾವ ನಡೆಸುವ ನಿಪುಣತೆಯೊ ದುರಿ
ತಾವಳಿಯ ದೂರೋಡಿಸುವೆಯೊ೧
ಕಲಿಯ ಬಲದಿ ಜ್ಞಾನಕಲೆಯಡಗಲು ದೇವ-
ರ್ಕಳು ಬಂದು ಸ್ತುತಿಸಲಂದು ಸಕಲಸುರ
ತಿಲಕ ವಾಯುವಿನ ಭೂವಲಯದೊಳವ-
ಗೊಳುವರೆ ಪೇಳ್ವೆನೆಂದು ನೀ ಮನಕೆ ತಂದು
ಹಲವು ಭವದಲಿ ಭಜಿಪೆ ಸಜ್ಜನ
ಕುಲಕೆ ಮೋಕ್ಷಾಂತದ ಚತುರ್ವಿಧ
ಫಲವ ನೀಡುವೆನೆಂದು ಪವನನಿ-
ಗೊಲಿದು ಬಂದೀ ನಿಲಯದೊಳಗಿಹೆ ೨
ಸರ್ವಜ್ಞ ಮುನಿಕೃತ ಸಕಲ ಪೂಜೆಗಳನ್ನು
ನಿವ್ರ್ಯಾಜದಲಿ ಕೊಳ್ಳುತ ನಿರ್ವಾಹಗೊಳುತ
ದುರ್ವಾದಿಪಟಲಾದ್ರಿ ಗರ್ವಾಪಹರ ಶತ
ಪರ್ವ ಶಾಸ್ತ್ರವ ಕೇಳುತ ಸಂತೋಷಪಡುತಾ
ನಿವ್ರ್ಯಳೀಕದಿ ಸೇವಿಸುವ ಗುರು ಶರ್ವ
ಪೂರ್ವಸುಪರ್ವ ರಿಪುಗಳ
ನಿರ್ವಿಯೊಳಗಡಿಯಿಡಗೊಡದ ಸುರ
ಸಾರ್ವಭೌಮ ಶುಭೋನ್ನತಿ ಪ್ರದ ೩
ಶ್ರೀನಿಕೇತನ ಸರ್ವ ಪುರುಷಾರ್ಥದಾಯಿಯೆ
ನೀನೆಲ್ಲೆ ನೆಲೆಯದೋರಿ ಇರಲಿನ್ನು ಭಜಿಸದೆ
ನಾನಾ ದೈವಗಳ ಸೇರಿ ಹಲ್ಲುಗಳ ತೋರಿ
ಏನನುಸುರುವೆ ಕೃಷ್ಣ ಬುದ್ಧಿ ವಿ-
ಹೀನತೆಯನದನೊ
ಮಾನಿಸೆನ್ನ ಕಡಪಾನಿಧಿಯೆ ಪವ-
ಮಾನ ವಂದಿತ ಪಾದ ಪಲ್ಲವ ೪
ದ್ವಾರಾವತಿಯೊಳು ಸಂಸಾರಿ ಭಾವವನೆಲ್ಲ
ತೋರಿದ ಕಾರಣದಿ ಅಲ್ಲಿಂದ ಭರದೀ
ವಾರುಧಿ ಮಾರ್ಗದ ಸ್ವಾರಿಯ ನೆವನದಿ
ಪಾರಿವ್ರಾಜರ ಸೇರಿದಿ ತದ್ಭಕ್ತಿಗೊಲಿದಿ
ದೂರ ಭಯದಲಿ ವೆಂಕಟಾದ್ರಿಗೆ
ಬಾರದಿಹ ಸಜ್ಜನರ ಮೇಲ್ಕರು-
ಣಾರಸಾಮೃತ ಸೂಸುತ್ತಿಲ್ಲಿ
ಸರೋರುಹಸ್ಮಿತ ಮುಖ ತೋರುವಿ ೫

೨೬೩
ನೆಚ್ಚಬ್ಯಾಡ ನೀರುಗುಳ್ಳೆಗೆ ಸರಿಯಾದ
ಕುತ್ಸಿತ ದೇಹವೆಂದಿಗು ಸ್ಥಿರವಲ್ಲ ನ-
ಮ್ಮಚ್ಚುತನಾನಂತನ ನೆನವುತ ಅನುಗಾಲ
ಸ್ವಚ್ಛನಾಗಲು ಹರಿ ಮೆಚ್ಚುವನು ಪ.
ಸ್ವಾತಂತ್ರ್ಯ ಲೇಶವಾದರು ನಿನಗಿಲ್ಲದೆ
ಪಾತಕ ಫಲಕಿನ್ನು ಗುರಿಯಾದಿಯಲ್ಲದೆ
ಯಾತರ ಸುಖವೆಂದೀ ಸಂಸಾರ ಕೂಪದಿ
ಪ್ರೀತಿ ಬಡುವಿ ಪಂಚಬಂಧದಲಿ
ವಾತ ಪಿತ್ತ ಶ್ಲೇಷ್ಮ ಪೂಯ ಸೃಕ್ಪೂರಿತ
ಘಾತವಾಗುವುದೊಂದು ನಿಮಿಷಾರ್ಧದಲಿ ಜಗ-
ನ್ನಾಥ ನಂಬಿದರೆಂದಿಗು ಪದಪಂಕ-
ಜಾತಪತ್ರದ ನೆರಳಿರಿಸುವನು ೧
ದೇಹವೆ ಸ್ಥಿರವಿಲ್ಲವಾದ ಮೇಲಿದರ ಸ-
ನ್ನಾಹವಾಗಿರುವದನೇನೆಂದು ಗ್ರಹಿಸುವಿ
ಗೇಹಧನಾಪತ್ಯ ಸ್ನೇಹವೆಲ್ಲವು ವ್ಯರ್ಥ
ಮೋಹವಲ್ಲದೆ ನಿಶ್ಚಯವಲ್ಲವು
ಐಹಿಕಾಮುಷ್ಮಿಕವೆಂಬ ಸಕಲ ಸುಖ
ದೋಹನ ಧೇನು ಸರ್ವೇಶ್ವರ ಹರಿಯ ಸ-
ಮಾಹಿತ ಮನದಿಂದ ಭಜಿಸೆ ನಿನ್ನನು ಪಕ್ಷಿ
ವಾಹ ಕೈ ಬಿಡದೆ ಕಾಪಾಡುವನು ೨
ಒಂದು ದಿವಸ ನೀರೊಳದ್ದದಿದ್ದರೆ ದು-
ರ್ಗಂಧ ಭೂಯಿಷ್ಠವು ಸಹಿಸಲಸಾಧ್ಯವು
ಹಿಂದಿನ ಕರ್ಮಾನುಬಂಧವು ತಿಳಿಯದು
ಮುಂದಿನ ಹೊಂದಿಕೆ ಒಂದಾದರು
ಇಂದಿರಾವರ ವೆಂಕಟೇಶನ ಪಾದಾರ-
ವಿಂದ ಧ್ಯಾನಗಳೆಂಬದೊಂದೆ ಪರಮಸುಖ
ವೆಂದು ತಿಳಿದು ಭಕ್ತಿಯಿಂದ ಭಜಿಸು ನಮ್ಮ
ತಂದೆ ಬಿಡದೆ ಕಾವನೆಂದೆಂದಿಗು ೩

೪೨
ನೆನವಿರೆ ಸಾಕೆನಗೆ ಶ್ರೀಶನ ನೆನವಿರೆ ಸಾಕೆನಗೆ ಪ.
ಘನದುರಿತ ಮಹೋದಯವ ನದಿಯ ದಾಟಲು
ನೆನವಿರೆ ಸಾಕೆನಗೆ ಅ.ಪ.
ಶ್ರೀ ಮಹೀಶ ಸಕಲಾಮರಗಣಸುತ
ಕಾಮದ ಕೈರವದಳಧಾಮ
ರಾಮಚಂದ್ರ ಸರ್ವಾಮಯ ಹರನಿ-
ಸ್ಸೀಮಮಹಿಮ ನಿ:ಶ್ಯಾಮಲ ಮೂರ್ತಿಯ ೧
ನೋಡುವ ಕರುಣ ಕಟಾಕ್ಷದಿ ಸ್ಮರಣೆಯ
ಮಾಡುವ ಜನರನು ಮಮತೆಯಲಿ
ಪಾಡಿ ಪೊಗಳಿ ಕುಣಿದಾಡಲು ತನ್ನನೆ
ನೀಡಿ ನಿತ್ಯದಲಿ ನಲಿದಾಡುವ ಕರುಣಿಯ ೨
ಮಂಗಲಮೋದತರಂಗ ಮಹೋದಧಿ
ಭಂಗುರ ಭವಭಯ ಭಂಗದನ
ಇಂಗಿತದಾವನ ತುಂಗ ಶೇಷಗಿರಿ
ಶೃಂಗವಾಸ ಕನಕಾಂಗದ ಮಕುಟನ೩

೨೬೬
ನೆಲೆಯಾಗಿ ನಿಲಿಸೆನ್ನ ನಿಲಯದಿ ಶ್ರೀಕಾಂತ
ನಳಿನ ನಯನೆ ಸಿರಿ ಲಲನೆಯರೊಡಗೂಡಿ ಪ.
ಸೂಕ್ತ ಪುರಾಣ ಭಾರತಗಳು ಪೊಗಳುವ
ಭಕ್ತ ವತ್ಸಲತೆಯ ಬಹುಮತಿಯ
ನಿತ್ಯ ಕೊಂಡಾಡುವ ಭೃತ್ಯಜನರ ಬೇಗ
ಹೆತ್ತ ತಾಯಿವೊಲೆತ್ತಿ ಪಾಲಿಪ ಹರಿ ೧
ವಿಧಿ ವಿಹಿತಗಳಾದ ಸದಮಲ ಕೃತಗಳ
ಮುದದಿ ಮಾಡುವ ಸರ್ವ ಬುಧ ಜನರ
ಸದನಕ್ಕೆ ಕರತಂದು ವಿಧವಿಧ ಪೂಜೆಯ
ಒದಗಿ ಮಾಡುವ ಪೂರ್ಣ ನಿಧಿಮತಿಗಳನಿತ್ತು ೨
ಬಂದ ಅತಿಥಿಗಳ ನಿಂದಿಸದಲೆ ಅಭಿ
ವಂದಿಸಿ ಸತ್ಕರಿಸುತ ಫಲವ
ಕುಂದಿಲ್ಲದಾನಂದ ಸಂದೋಹದಾಯಿ
ಮುಕುಂದಗರ್ಪಿಸಿ ಸುಖದಿಂದ ಚರಿಸುವಂತೆ ೩
ಅಹಿತಲ್ಪ ಶಯನನೀ ವಹಿಸಿದ ದಾಸರ
ದೃಹಿಣಾದಿ ಸುರರು ಸಂಗ್ರಹಿಸುವರು
ಗಹನ ಹೃದ್ಗುಹಗತ ಕುಹಕ ವೈರಿಗಳನ್ನು
ಬಹು ದೂರೋಡಿಸಿ ಮಹಾಮಹಿಮ ನೀ ಕರುಣದಿ ೪
ಚತುರ ಹಸ್ತಗಳಿಂದ ಚತುರ್ವಿಧ ಫಲರಸ
ಸ್ತುತಿಸುವ ದಾಸರೀ ಗತಿ ಬೇಗದಿ
ಸತತ ಸುರಿವ ನಾಗಪತಿ ಗಿರಿನಿಲಯ ಶ್ರೀ
ಪತಿ ನೀನೆ ಎನಗೆ ಸದ್ಗತಿಯಾಗಿ ಪೊಳವುತ್ತ ೫

೧೨
ನೋಡಿ ನಿತ್ಯಾನಂದಕರನ
ಬೇಡಿ ಪದ್ಮಾಭೂಮಿವರನ ಪ.
ಭಾನು ಕೋಟಿ ಭಾಸ ಸತ್ಯ
ಮಾನ ಮುಖ್ಯ ಪ್ರಾಣವಾಸ
ಧ್ಯಾನಿಸುವರ ದೈನ್ಯನೋಡಿ
ತಾನೆಯೆದ್ದು ಬರುವ ವೋಡಿ ೧
ಕರಿಯ ಮೊರೆಯ ಕೇಳಿ ಬಹಳ
ತ್ವರೆಯ ತಾಳಿ ತಾನೆ ಬಂದ
ನರನ ರಥವ ನಡಿಸಿ ನಿಂದ
ತರಳಗಭಯವಿತ್ತ ಛಂದ ೨
ದಾಸರ ದಾಕ್ಷಿಣ್ಯ ಮೀರಾ
ದೋಷಗಳನು ಮನಕೆ ತಾರಾ
ಶೇಷಗಿರಿಯೊಳಿರುವ ಶ್ರೀನಿ-
ವಾಸ ನಮ್ಮನು ಕಾವ ಧೀರಾ ೩

೧೨೭
ನೋಡಿಕೊಳ್ಳಿ ಕರುಣವ ಬೇಡಿಕೊಳ್ಳಿ
ನೋಡಿ ನರಸಿಂಹಾಕೃತಿಯ ಥರಮಾಡಿ ರಣದಲಿ
ವೈರಿಯನು ಚಂ-
ಡಾಡಿ ಧರಣಿಗೆ ಕೆಡಹಿ ಗದೆಯಲಿ ತೋಡಿ ನಾಭಿಯ
ಕರುಳ ತೆಗೆವುದ ಪ.
ಆರು ಮೂರಕ್ಷೋಹಿಣಿಯು ಬಹು ದೂರ ಓಡುತ
ಭಯದಿ ನಡುಗಲು
ಕೌರವಾನುಜರನು ಕೆಡಹಿ ರಿಪು ವೀರರೆದೆ ಝಲ್ಲೆನಲು ರಂಗದಿ
ಹಾರಿ ಕುಣಿವುತ ಗದೆಯ ಕೈಕೊಂಡಾರುಭಟಿಸುವ ಸಿಂಹನಂದದಿ
ಧೀರ ರುದರಾವತಾರ ಸಂಗರ ಧೀರ ಖಳ ಪರಿವಾರ ದಹನನ ೧
ಘೋರರೊಂದಾಗೆಸೆದ ಪೂರ್ವದ ಕ್ರೂರ ವಾಗ್ಬಾಣಗಳ ತಿರುಹಿಸಿ
ದಾರಧರ್ಷಕ ನೀಚನನು ಕೈ ದೋರಿ ಕರೆವುತ ಕಾಳಗಕೆ
ಸುರ ವೈರಿಗಳ ಕಳೆಗುಂದುವಂದದಿ ಚೀರಿ ಚಪ್ಪಳಿಸುತ್ತ ಖಳನನು
ಧಾರುಣಿಯ ಮೇಲಪ್ಪಳಿಸಿ ಬಹು ಧೀರತನದಿಂದೆಡೆಯ ಬಗೆವದ ೨
ರಿಪು ಭಯಂಕರ ಭೀಮ ಹರುಷದಿ ದ್ರುಪದಜೆಗೆ
ಸಕಲಾರ್ಥ ಸಲಿಸುತ
ಅಪರಿಗಣ್ಯ ಗುಣಾಬ್ಧಿದನುಧಿಪಹಜಾನ ಮನದಲ್ಲಿ ನೆನೆವುತ
ಸ್ವಪರಿವಾರವ ಕಾವ ಕಮಲಾಂಬಕನ ಮುಖ
ಪಂಕಜವ ನೋಡುತ
ಜಪಿಸಿ ಭುಜಗಾದ್ರಿಪನ ಪಡೆದನು ಕಪಟ ಕಲಿಯನು
ಸದೆದೆ ದೇವನ ೩

೪೪೯
ನೋಡಿದೆ ಮನದಣಿಯೆ ಶ್ರೀನಿವಾಸನ
ನೋಡಿದೆ ಮನದಣಿಯೆಪ.
ನೋಡಿದೆನು ಶೇಷಾದ್ರಿಯಿಂದೊಡ-
ಗೂಡಿ ಭಕ್ತರ ಬೀಡಿನೊಳು ನಲಿ
ದಾಡಿ ಮೆರೆವ ಸಗಾಢ ದೈತ್ಯವಿ
ಭಾಡ ಶ್ರೀಹರಿ ರೂಢಿಗೊಡೆಯನ ಅ.ಪ.
ಶರಣರಪೇಕ್ಷೆಯನು ಕೊಟ್ಟುಳುಹಲು
ಕರುಣಾಳು ನಿಜದಿ ತಾನು
ಸ್ಥಿರತೆಯೊಳು ಸ್ವಪ್ನದಲಿ ತಾ ಗೋ
ಚರಿಸಿ ಭರವಸೆಯಿತ್ತು ವೆಂಕಟ
ಗಿರಿಯವೋಲ್ ಸಾನ್ನಿಧ್ಯ ವದನಾಂ-
ಬುರುಹದಲಿ ಮೆರೆದಿಹನ ಚರಣವ ೧
ಲಲನೆ ಲಕ್ಷ್ಮಿಯು ಬಲದಿ ಶೋಭಿಪ ವಾಮ
ದೊಳಗೆ ಗಣಪ ಮುದದಿ
ಒಲವಿನಿಂ ಗರುಡಾಂಕ ಮೃದುಪದ
ನಳಿನದಾಶ್ರಯದಿಂದ ವಾಯುಜ
ಬಳಗ ಚಾತುರ್ದೇವತೆಯರಿಂ-
ದೊಳಗೆ ಪೂಜೆಯಗೊಂಬ ದೇವನ ೨
ಕುಂಡಿಲಕೊಳದೊಳಿಹ ಪ್ರಾಣೇಶ ಮುಂ-
ಕೊಂಡು ಪಟ್ಟಣಕೆ ಬಹ
ಕೆಂಡದಂದದೊಳುರಿವ ಶತಮಾ-
ರ್ತಾಂಡದೀಪ್ತಾ ಮುಖಂಡ ಭೃತ್ಯನ
ಕೊಂಡುಯಿದಿರಲಿ ಮಂಡಿಸಿದನಖಿ
ಳಾಂಡಕೋಟಿ ಬ್ರಹ್ಮಾಂಡನಾಥನ ೩
ನೀಲಮೇಘಶ್ಯಾಮಲ ಕೌಸ್ತುಭವನ
ಮಾಲಕಂಧರಶೋಭನ
ನೀಲ ಮಾಣಿಕ ವಜ್ರ ಮುತ್ತಿ
ಸಾಲ ಸರ ಪೂಮಾಲೆಗಳ ಸುಖ
ಲೀಲೆಯಿಂದೊಪ್ಪಿರುವ ಭಕ್ತರ
ಕೇಳಿಯಲಿ ನಲಿದಾಡುತಿಹನನು ೪
ಕಾಣೆನು ಪ್ರತಿನಿಧಿಯ ನಮ್ಮೊಡೆಯ ಲ-
ಕ್ಷ್ಮೀನಾರಾಯಣ ಹರಿಯ
ಕಾಣಿಕೆಯ ಕಪ್ಪಗಳ ತರಿಸುತ
ಮಾನಿಸುತ ಭಕ್ತಾಭಿಮತವನು
ತಾನೆ ಪಾಲಿಸಿ ಮೆರೆವ ಕಾರ್ಕಳ
ಶ್ರೀನಿವಾಸ ಮಹಾನುಭಾವನ ೫

೮೧
(ಕಾಣೂರು ಮಠದ ನರಸಿಂಹ)
ನೋಡಿರಯ್ಯ ನರಸಿಂಹ ಮೂರ್ತಿಯ
ಪಾಡಿರೋ ಕೀರ್ತಿಯನು ಪ.
ಚಿಕ್ಕವನ ಗೋಳಿಕ್ಕಿಸುತಲತಿ ಸೊಕ್ಕಿದಸುರನನು ಧಿಕ್ಕರಿಸುತಿಹ
ಕಕ್ಕುಲತೆಯಿಂದುಕ್ಕಿ ರೋಷವನು ಮಿಕ್ಕ ದೇವರ ಲೆಕ್ಕಿಸದವನ
ತಿಕ್ಕಿ ತೊಡೆಯೊಳಗಿಕ್ಕಿ ನಖಗಳನಿಕ್ಕರಿಸಿ
ಸಾಲಿಕ್ಕಿ ತರುವ ಕರುಳಕ್ಕರದಿ ತೆಗೆದ್ಹಕ್ಕಿಗಮನನ ೧
ವೇದಮುಖ ಸುರರೆಲ್ಲ ದೂರದಿ ಕಾದುಕೊಂಡಿರಲು ಸಿರಿನಡು
ಹಾದಿಯಲಿ ಚಿನ್ಮೋದನಿರಕಾಲ್ಹಾದ ಬಡುತಿರಲು
ಪಾದಪದ್ಮಗಳನ್ನು ಭಕ್ತಿರಸಾರದರದಿ ಶಿರಕಿಕ್ಕಿರುವ ಪ್ರ-
ಲ್ಹಾದನನು ಪಿಡಿದೆತ್ತಿ ಪರಮವಿನೋದಗೊಂಡ ಪರಾಪರೇಶನ ೨
ಅರ್ಥಿಯಿಂದಲಿ ಬಂದಿರುವರು ಪೂರ್ಣಾರ್ಥದಾಯಕನಾ
ವ್ಯರ್ಥವೈರದ ದ್ವ್ಯರ್ಧಿದೈತ್ಯರ ಮೂರ್ತಿದಹಿಸುವನಾ
ಅರ್ತಿಹರ ಶೇಷಾದ್ರಿವರ ಪುರುಷಾರ್ಥ ಪಾಲಿಪೆನೆಂದು ವಾಮನ
ತೀರ್ಥ ಕೃತ ಪೂಜಾರ್ಥವಿಲ್ಲಿಗೆ ಕೀರ್ತಿಕರ ನಿಲಯಾರ್ಥದಾತನ ೩

೭೩
(ಶ್ರೀಹರಿಯ ಮೋಹಿನಿ ರೂಪ)
ನೋಡಿರೊ ಸ್ತ್ರೀರೂಪವ ನೋಡಿರೋ ಪ.
ನೋಡಿರೊ ಹರಿಯ ಸ್ತ್ರೀರೂಪ ಸ್ತುತಿ
ಮಾಡಿರೊ ಮಹಿತಾ ಪ್ರತಾಪ ಅಹ
ಜೋಡಾದ ಸತಿಯರ ನೋಡಿ ನಗುತ ನಲಿ-
ದಾಡುವ ಶ್ರೀಕೃಷ್ಣ ಪ್ರಹುಡೆಯಾಗಿರುವುದ ಅ.ಪ.
ಭಾರ್ಗವ ವಾಸರದಲ್ಲಿ ಯತಿ ವರ್ಗವೆಲ್ಲವು ಸೇರುತಿಲ್ಲಿ ಪಂಚ
ಮಾರ್ಗಣಪಿತನಿದಿರಲ್ಲಿ ಅಷ್ಟವರ್ಗೋಪಚಾರಗಳಲ್ಲಿ ವಿಧಿ
ಭರ್ಗ ವಂದ್ಯ ಪ್ರಭು ದುರ್ಗಾರಮಣ ಸತ್ವ
ಸರ್ಗಪಾಲನ ಸನ್ಮಾರ್ಗದಿ ಸ್ತುತಿಪುದ ೧
ಧೀರಮರಾಸುರರಂದು ಕ್ಷೀರವಾರಿಧಿ ತಡಿಯಲ್ಲಿ ಬಂದು ಬಹು
ಭಾರಿ ಮಂದರ ಗಿರಿ ತಂದು ಸರ್ಪಾಧಾರದಿಂದಲಿ
ಕಟ್ಟಿ ನಿಂದು ಸುಧ
ಸಾರವ ತೆಗೆಯಲು ಕಾರುಣ್ಯದಲಿ ದಾನ
ವಾರಿಗಳಿಗೆ ಕೊಟ್ಟ ನಾರಾಯಣಿಯನ್ನು ೨
ಭವನ ಮೋಹಿಸಿದ ಶೃಂಗಾರ ಮೂರು ಭವನದಿ
ನಾಯಕ ಧೀರ ಕಂಜ
ಭವ ಶಿವರಿಗೆ ಮುಖ್ಯಾಧಾರಾ ದಾಸ
ನಿವಹ ರಕ್ಷಿಸು ಗಂಭೀರಾ ಅಹ
ಪವನಾವತಾರನ ಸ್ತವನಕೊಲಿದು ಬಂದ
ಕವಿ ಶೇಷಗಿರಿವಾಸ ಭವಭಯಹಾರಿಯ ೩

೪೮೦
ತ್ರಯೋದಶಿಯ ದಿವಸ
ಊರ್ವಶಿ: ನೋಡೆ ಇಂದಿನ ಉತ್ಸಹದತಿ
ಲೀಲೆ ಪೇಳುವದೇನೆ ಬಾಲೆ
ಆಡಲಾಶ್ಚರ್ಯವು ತೋರುವದಲ್ಲೆ
ಪರಮಾತ್ಮನ ಲೀಲೆ
ಮೂಡ ಗಿರೀಶನು ಪಾಡಿಲ್ಲದ ಪ್ರಭೆ
ಗೂಡಿದ ಮಂಟಪಕ್ಕೇರಿದ ವಿಸ್ತರ೧
ಅಷ್ಟ ಮೂಲೆಗಳಿಂದಲಿ ಶೋಭಿಸುವ
ಕುಂದಣ ಪೂರಿತವಾ-
ದಷ್ಟ ಕಂಬದ ಶೃಂಗಾರದಿಂದಿರುವ
ಹೇಮದ ಬಂದಿತವ-
ದಷ್ಟಸಿಂಹದ ರೂಪಿನ ನೂತನವ
ಪ್ರಜ್ವಲದಿಂದಿರುವ
ಶ್ರೇಷ್ಠವಾಗಿಹ ನಾಗರಹೆಡೆವದನದಿ
ಇಷ್ಟದಿ ನೇತಾಡುವ ಸರಮಾಲೆಯ೨
ಉತ್ತಮ ವೃಕ್ಷಲತಾಳಿಗಳಿಂದ
ಶುಕಪಿಕ ಮುಂತಾಗಿಹ
ಚಿತ್ತಾರ ವಿಚಿತ್ರ ವಿಲಾಸಕದಿಂದ
ಧ್ರುವಮಂಡಲ ಪರಿಯಲಿ
ವೃತ್ತಾಕಾರದಿ ನವಕಲಶಾನಂದ
ನೋಡುವರತಿ ಚಂದ
ಸುತ್ತಲು ಶೋಭಿಪ ಮುತ್ತಿನ ಬಿಂತಿಯ
ಪೊತ್ತು ವಿನೂತನವೆತ್ತಿದ ವಿಸ್ತರ೩
ಚಾತುರ್ ಪುರುಷಾರ್ಥಗಳೋಲಗಿಪಂತೆ
ಮಿನುಗುವದೋರಂತೆ
ಶ್ವೇತದ್ವೀಪನಂತನ ಪುರವೆಂಬಂತೆ
ಕಾಣುವದೆಲೆ ಕಾಂತೆ
ಭೂತಳದೊಳು ನೂತನವೆಂಬಂತೆ
ಕಾಣೆನು ಇದರಂತೆ
ಚಾತುಷ್ಕಂಬದೊಳೂತು ನಡುವೆಯಿಹ
ಕೌತುಕವಾಗಿಹನಾಥರದಾತನ೪
ಕೊಂಬು ನಿಸ್ಸಾಳಗಳ ಭರದಿಂದ
ಬರುವನು ಗೋವಿಂದ
ಹಂಬಲಿಸುವ ಭಕ್ತರ ಮುದದಿಂದ
ಪೊರೆಯುವದಿದು ಚಂದ
ಕೊಂಬ ಕಾಣಿಕೆಗಳ ಸಂಭ್ರಮದಿಂದ
ಭಕ್ತರ ಕೈಯಿಂದ
ಪೊಂಬಣ್ಣದ ದಿವ್ಯಾರತಿ ಕೊಳ್ಳುತ
ಇಂಬಾಗಿಹ ಕರುಣಾಂಬುಧಿ ಭರಿತ೫
ಆಮೇಲೆ ಪಲ್ಲಂಕಿಯನೇರಿದನು
ವೇದವ ಲಾಲಿಪನು
ಪ್ರೇಮನಾಗುತ ಸಂಗೀತಗಳನು
ಕೇಳುತ ಸುತ್ತುವನು
ತಾ ಮಮಕಾರದಿ ಬರುವನು ಮೇಣು
ಕೋಮಲಕಾಯವ ಸಂತತ ಮಂಡಿಸಿ
ಸಾಮಗಾನ ಲೋಲೋಪ್ತಿಯೊಳಿರುವನು೬
ಕಾಂತೇ ತದನಂತರ ಪೂಜೆಯಗೊಂಡ
ಭಕ್ತರ ಸಮುದಾಯಕೆ
ಸಂತೋಷ ಬೀರುತ ಭವಭಯಖಂಡ
ತದನಂತರ ಗೈದೇ-
ಕಾಂತ ಸೇವೆಯ ತಾ ಕೈಕೊಂಡ
ಸಂತಸದಲಿ ಶ್ರೀಕಾಂತನು ಭಕುತರ
ಚಿಂತಿತವೆಲ್ಲ ನಿರಂತರ ಕೊಡುವನು೭

೪೬೮
ನ್ಯಾಯದ ನುಡಿ ನರಲೀಲೆಗಿದು ಬಲ್ಲವರಲಿ ಸಲ್ಲದು
ನ್ಯಾಯದ ನುಡಿ ನರಲೀಲೆಗಿದು ಪ.
ಮಾಯಾತೀತ ಮನೋಭವತಾತ ಪ
ರಾಯಣ ತವ ಗುಣ ನಾನೆಂತರಿವೆನು ಅ.ಪ.
ಬಲಿಯನು ಮೆಟ್ಟಿದ ಬಾಂಬೊಳೆ ಪುಟ್ಟಿದ ಪಾದ ಶ್ರೀದ
ಚೆಲುವೆ ರಮಾಕರನಳಿನಾಶ್ರಯಕರಮಾದ
ಜಲಜಭವಾದಿ ಸುರಾಳಿಗಳರ್ಚಿಪ
ಸುಲಲಿತ ತವ ಪದದೊಲವೆಂತರಿವೆನು ೧
ಶರಣಾಗತಜನ ದುರಿತನಿವಾರಣ ನೀನು ಇನ್ನೇನು
ತರುಣೀಮಣಿಯಳ ಸೆರೆಯನು ಬಿಡಿಸುವದಿನ್ನು
ಕರುಣಾಕರ ನಿನ್ನ ಸ್ಮರಿಸುವಳನುದಿನ
ಸ್ಥಿರಚರ ಜೀವಾಂತರ ಪರಿಪೂರ್ಣನೆ೨
ಆಕ್ಷೇಪಿಸದಿರು ರಕ್ಷಿಸು ರಘುಕುಲಚಂದ್ರ ರಾಜೇಂದ್ರ
ಲಕ್ಷ್ಮೀನಾರಾಯಣ ಸದ್ಗುಣ ಗಣಸಾಂದ್ರ
ಈಕ್ಷಿಸು ಕರುಣಾಕಟಾಕ್ಷದಿ ಪೂರ್ವದ
ಲಕ್ಷಣ ಹೊಂದಲಿ ಲಕ್ಷ್ಮಣಾಗ್ರಜನೆ೩

೩೧೮
(ಪಡುಬಿದ್ರೆಯ ಗಣೇಶ)
ಮಾಡೆನ್ನೊಳು ಕರುಣ ಗಜಾನನ ಪ.
ಮೂರ್ಖನೆನ್ನುತಲೆನ್ನ ಧಿಕ್ಕರಿಸದಿರು
ಶಕ್ರವಿನುತ ಚರಣ ಗಜಾನನ ೧
ಹರಿನಾಭೀ ಕಮಲಾಕಾಶಾತ್ಮನೆ
ಗಿರಿಜಾಂಕಾಭರಣ ಗಜಾನನ ೨
ಭಾರತಾರ್ಥ ತತ್ವಾರ್ಥ ಪ್ರಬೋಧನೆ
ಸೂರಿಜನೋದ್ಧರಣ ಗಜಾನನ ೩
ಕಡಲಶಯನ ಲಕ್ಷ್ಮೀನಾರಾಯಣ ಸಖ
ಪಡುಬಿದ್ರೆನಿಕೇತನ ಗಜಾನನ ೪

೧೯೬
ಪತಿತ ಪಾವನ ನೀನೆ ಗತಿಯೆನಗೆ ಕೇಳು
ಅತಿ ನೀಚ ತರತಮನಾದವಗೆ ಪ.
ಮನವೆಂಬೊ ಸಾರಥಿ ಸ್ಥಿರವಲ್ಲವು
ದುರುಳ ದಶೇಂದ್ರಿಯಾಶ್ವಗಳಿರವು
ಹುರುಳಿಲ್ಲದಂತೆ ದುರ್ವಿಷಯಾಂಧಕೂಪಕೆ
ಸರಿದು ಪೋಗುತಲೆನ್ನ ಕೆಡಹುವವು ೧
ಅನ್ಯರಿಗುಸುರೆ ಲಜ್ಜಾಕರದ
ಅನ್ಯಾಯ ಕೃತ್ಯದಿಂದಲಿ ನೆರೆದ
ಮುನ್ನಿನ ನರಕಯಾತನೆಗಳ ತರಿವದ
ನಿನ್ನ ಚರಣಕೊಪ್ಪಿಸಿದೆ ವರದ ೨
ದಾಸದಾಸ್ಯವನೆಲ್ಲ ದಯಮಾಡು ಪ-
ರೇಶ ಪರಾತ್ಪರ ಮೂರುತಿಯೆ
ಲೇಶಾಯಾಸವಿಲ್ಲದೆ ಸಲಹುವ ಜಗ-
ದೀಶ ಶೇಷಾಚಲವಾಸಿ ಹರೇ ೩

೬೩
(ಅನಂತಚತುರ್ದಶಿಯ ದಿನದ ಪ್ರಾರ್ಥನೆ)
ಪದ್ಮನಾಭ ಪರಿಪಾಲಿಸು ದಯದಿಂದ
ಪದ್ಮಜಾದಿ ವಂದ್ಯ ಪರಮ ದಯಾಳೊ
ಪದ್ಮಿಯಳರಸ ಹೃತ್ಪದ್ಮನಾಮಕ ಸ್ವರ್ಣ
ಸದ್ಮ ವೃತ್ತಿಪದಪದ್ಮವ ತೋರೊ ಪ.
ಚಿಂತಿತದಾಯಕ ಸಂತರ ಕುಲದೈವ
ಕಂತು ಜನನಿಯೊಡಗೂಡಿ ನೀನು
ನಿಂತು ಎನ್ನಲಿ ಕೃಪೆ ಮಾಡೆಂದು ನಮಿಪೆ ಧು-
ರಂತ ಮಹಿಮ ನಿನ್ನ ಚರಣಾಬ್ಜಯುಗಲಾ ೧
ಆದಿ ಮಧ್ಯಾಂತವಿದೂರ ನಿನ್ನಲಿ ಮಹ
ದಾದಿ ತತ್ವಗಳೆಲ್ಲ ನಿಂತಿಹವು
ಆದಿ ಭೌತಿಕ ಮೊದಲಾದ ತಾಪಗಳನ್ನು
ಶ್ರೀದ ನೀ ಬಿಡಿಸಲು ಸದರವಾಗಿಹವು ೨
ಒಂದರಿಂದೊಂದಾದರಿಂದ ಮೂರು ಮೂರ್ತಿ
ಇಂದಿರೆ ಸಹಿತಾವಿರ್ಭೂತನಾಗಿ
ಮುಂದಿನ ಮಹದಾದಿ ತತ್ವವ ನಿರ್ಮಿಸಿ
ನಿಂದನಂತಾಸಂತರೂಪನಾದವನೆ ೩
ತ್ರಿವಿಧ ಜೀವಿಗಳನ್ನು ಭವ ಚಕ್ರದೊಳು ತಂದು
ನವ ನವ ಕರ್ಮಗಳನೆ ಮಾಡಿಸಿ
ಅವರ ಯೋಗ್ಯತೆ ಮೀರದಲೆ ಫಲಗಳನಿತ್ತು
ನೆವನವಿಲ್ಲದೆ ನಿತ್ಯ ತೃಪ್ತನಾಗಿರುವಿ ೪
ಮಛ್ವಾದ್ಯನಂತವತಾರಗಳನೆ ಮಾಡಿ
ಸ್ವೇಚ್ಛೆಯಿಂದ ಸುಜನರ ಸಲಹಿ
ಕುಚ್ಛಿತ ಜನರಿಗೆ ತುಚ್ಛಗತಿಯನೀವೆ
ಸ್ವಚ್ಛ ಬ್ರಮ್ಹಾದಿಕ ವಿವ್ಛಾ(?)ವಿಷಯನೆ ೫
ನಾನಾವತಾರದಿ ನಂಬಿದ ಸುರರಿಗೆ
ಆನಂದವಿತ್ತು ರಕ್ಷಿಪೆ ಕರುಣದಿ
ದಾನವರಿಗೆ ಅಧ:ಸ್ಥಾನವ ನೀಡುವಿ
ಮಾನವರನು ಮಧ್ಯಗತರ ಮಾಡಿಸುವಿ ೬
ಹಿಂದೆ ಮುಂದಿನ ಭವದಂದವ ತಿಳಿಯದ
ಮಂದಾಗ್ರೇಸರ ನಾನಾದೆಂಬುದನು
ಅಂಧಕರಾರಣ್ಯದಿಂದ ಮೂಢನಾದಂ
ದಿಂದ ಬಿನ್ನೈಪೆನು ಇಂದಿರಾಧವನೆ ೭
ಮಾಡುವ ಕರ್ಮವು ನೋಡುವ ವಿಷಯಗ-
ಳಾಡುವ ಮಾತು ಬೇಡುವ ಸೌಖ್ಯವು
ನೀಡುವ ದಾನವೋಲ್ಯಾಡುವ ಚರ್ಯವ
ನೋಡಲು ತಾಮಸ ಪ್ರಹುಡನಾಗಿಹೆನು ೮
ಆದರು ನಿನ್ನಯ ಪಾದಾರವಿಂದ ವಿ-
ನೋದ ಕಥಾಮೃತ ಪಾನದೊಳು
ಸ್ವಾದ ಲೇಶದಾದರ ತೋರ್ಪದ-
ನಾದಿ ಮೂರುತಿ ನೀನೆ ತಿಳಿಸಬೇಕದನೂ ೯
ಇದರಿಂದಲೇ ಮುಂದೆ ಮದನನಯ್ಯನೆ ನಿನ್ನ
ಪದವ ಕಾಣುವೆನೆನುತೊದರುವೆನು
ಹೃದಯ ಮಂಟಪದಿ ನೀ ಹುದುಗಿರುವುದರಿಂದ
ಕದವ ತೆರೆದು ತೋರೊ ವಿಧಿಭವವಿನುತಾ ೧೦
ಕನ್ನೆ ಸುಶೀಲೆಯ ಕರಸೂತ್ರ ರೂಪದ
ನಿನ್ನ ತಿಳಿಯದೆ ಕೌಂಡಿಣ್ಯನಂದು
ಮನ್ನಿಸದಿರೆ ಮದ ಮೋಹಗಳೋಡಿಸಿ
ನಿನ್ನ ರೂಪವ ತೋರ್ದ ನಿಜಪೂರ್ಣ ಸುಖದಾ ೧೧
ಬ್ರಹ್ಮಾದಿಗಳನೆಲ್ಲ ನಿರ್ಮಿಸಿ ರಕ್ಷಿಸಿ
ತಮ್ಮಗತಿಗಳನ್ನು ನಿಮಿಷದಿ ಕೊಡುವ
ತಮ್ಮ ತಾವರಿಂಇÀಇದ ನಿಮ್ಮ ಸ್ತುತಿಪರೆ ಕು-
ಕರ್ಮಿ ನಾನೆಂದಿಗಾದರೂ ಶಕ್ತನಹುದೆ ೧೨
ಅದು ಕಾರಣದಿಂದ ಪದುಮನಾಭ ನಿನ್ನ
ಪದ ಕಮಲಗಳಲಿ ರತಿಯನಿತ್ತು
ಸದರದಿ ಸಲಹಯ್ಯ ವಿಧುಶೇಖರಾರ್ಚಿತ
ಮದನನಯ್ಯ ಮರುದಾದಿ ವಂದಿತನೆ ೧೩
ದೋಷರಾಶಿಗವಕಾಶನಾದರೂ ಯೆನ್ನ
ಶ್ರೀಶ ನಿನ್ನ ದಾಸದಾಸನೆಂದು
ಘೋಷವಾದುದರಿಂದ ಪೋಷಿಸಬೇಕಯ್ಯ
ಶೇಷಗಿರೀಶ ಸರ್ವೇಶ ನೀ ದಯದಿ ೧೪

೧೮೦
(ಸಂತತಿ ಪ್ರಯುಕ್ತ ಪ್ರಾರ್ಥನೆ)
ಪರಮ ಪಾವನ ರೂಪ ಪಾಲಿಸು ಕುಲದೀಪ
ಪರಿಹರಿಸಖಿಳತಾಪ
ದುರಿತರಾಶಿಗಳೆಲ್ಲ ತರಿದು ತ್ವತ್ಪದ ಸೇವಾ-
ದರವಿತ್ತು ಸಲಹುವ ಕರುಣಿ ವೆಂಕಟಭೂಪ ಪ.
ಮಾತಾ ಪಿತರು ನೀನೆ ಮಹದೇವಿಯರಸನೆ
ಪಾತಕ ಪರಿಹಾರನೆ
ಭೂತ ಭಾವನ ಭುವನೈಕಾಧಿಪತಿ ಜಗ-
ನ್ನಾಥದಾಸರು ತೋರ್ದ ರೀತಿಯ ತಿಳಿಸುವೆ ೧
ನಿನ್ನ ಪಾದಾಂಬುಜ ಸೇರಿದ ದಾಸರ
ಇನ್ನು ನೀ ಬಿಡಲಾರದೆ
ಉನ್ನತ ಸುಖಗಳ ತನ್ನಂತೆ ಪಾಲಿಪ
ಘನತೆ ತೋರ್ಪ ಪ್ರಸನ್ನ ವರದರಾಜ ೨
ಮಾಧವ ಮನೆ ಮೊದಲಾದುದೆಲ್ಲವು ನಿನ್ನ
ಪಾದಕರ್ಪಿಸಿದೆನಿಂದು
ನೀ ದಯಾಂಬುಧಿಶೇಷ ಭೂಧರಪತಿ ಮಂಗ
ಳೋದಯಕರ ಸಂಪದಾದಿ ಪೂರಣಗೈವ ೩

೪೦೯
ಪರಮೇಶ್ವರಿ ಪಾರ್ವತಿಸತಿ
ವರದೆ ಶ್ರೀವನದುರ್ಗಾ ಪ.
ತರುಣಾರುಣಶತಕೋಟಿ
ಕರುಣಾನನೆ ಮಾಂ ಪಾಹಿ ಅ.ಪ.
ಜಗದ್ಭರಿತೆ ಜನಾರ್ದನಿ
ಜಗದೇಕ ಶರಣ್ಯೆ
ನಿಗಮಾಗಮಶಿರೋರತುನೆ
ಮಿಗೆ ಕೈಯುಗಮಂ ಮುಗಿವೆಯಗಜೆ ಶ್ರೀಜಗದಂಬಿಕೆ ೧
ಸದಾನಂದೆ ಸರೋಜಾಕ್ಷಿ
ಸದಾವಳಿಸನ್ನುತೆ
ತ್ರಿದಶಾರ್ಚಿತೆ ತ್ರಿಗುಣಾತ್ಮಕಿ
ಸದಯೆ ಹೃದಯೆ ಮುದದಿಂ ಪದನಂಬಿದೆ ಪದುಮಾಲಯೆ೨
ವಿರಾಜಿಸುವ ವಿಶ್ವೋತ್ತಮ
ವರಚಿತ್ರಪುರೇಶ್ವರಿ
ಹರಿಲಕ್ಷ್ಮೀನಾರಾಯಣಿ
ಕರುಣಾಭರಣೆ ಶರಣೋದ್ಧರಣೆ ಶ್ರೀಚರಣಾಂಬುಜೆ೩

೩೩೬
ಪರಾತ್ಪರ ಪರಮ ಪಾವನನೆ
ಪರಾಕು ಫಣಿಶಯನ ಪಾಪಘ್ನ ಪ.
ಸುರಾಸುರಾರ್ಚಿತ ಪುರಾಣಪುರುಷೇ-
ಷ್ಟರ ನಿರಾಮಯ ಮುರಾರಿ ಶ್ರೀಹರಿ ಅ.ಪ.
ನಯವೀತಭಯ ಪಾರ್ಥಪ್ರಿಯ ಸರ್ವ
ನಿಯಾಮಕ ಚಿನ್ಮಯ
ದಯಾವಂತ ಜಯಾಕಾಂತ
ಹಯಾಸ್ಯ ಪಯೋಬ್ಧಿಶಯನ ವಿಯಾನ ೧
ರಮಾರಮಣ ನಮಸ್ತೇ ನಿರುಪಮ ಮಹಿಮ
ಸುಮೇಧ ಸುರೋತ್ತಮ
ಮಮಾಪರಾಧ ಕ್ಷಮಾ ಕುರು ವಿ-
ರಾಮ ನಿಯಮ ಪದುಮದಳನಯನ ೨
ಗುಣಾರ್ಣವ ಶರಣಾಗತಭರಣ ನಿ-
ರ್ಗುಣ ಶ್ರೀ ಲಕ್ಷ್ಮೀನಾರಾಯಣ
ಪ್ರಾಣ ಸುತ್ರಾಣ ದೇವ
ಗಣಾಗ್ರಣಿಯಾನಂದ ಗೋವಿಂದ ೩

೪೫೦
ಪಾಲಿಸಯ್ಯಾ ಫಣಿಗಿರಿವಾಸಜೀಯಾ ಪ.
ಪಾಲಿಸೈ ಪಾಲಾಬ್ಧಿಶಾಯಿ ಸುಳೀನೀರದನಿಭಶರೀರ ಶ್ರೀ
ಲೋಲ ಮೋಹನಲೀಲ ದುರ್ಜನ
ಕಾಲ ಕಾಮಿತಫಲಪ್ರದಾಯಕ ಅ.ಪ.
ಮುನ್ನ ಮಾಡಿದ ಕರ್ಮದಿಂದಲಿ ಬನ್ನಪಟ್ಟೆನು ಶ್ರೀಹರಿ
ಇನ್ನು ನಿನ್ನಯ ಚರಣಯುಗವನು ನಿರ್ಣಯದಿ ನಂಬಿದ ಪರಿ
ಉನ್ನತೋನ್ನತವಪ್ಪ ತೆರದಲಿ ಮನ್ನಿಪುದು ನೀ ಕೃಪೆದೋರಿ
ಬನ್ನ ಪಡುವುದು ಸಾಕು ಸಂತತ ನಿನ್ನನೆ ನೆರೆನಂಬಿದೆನು ಹರಿ ೧
ವಾತಪಿತ್ತಕಫಾದಿ ರೋಗದ ವ್ರಾತದಿಂದ ಬಲು ನೊಂದೆನು
ಧಾತುಬಲವತಿ ತಗ್ಗಿ ಉಷ್ಣೋಪೇತದಿಂದಲಿ ಬೆಂದೆನು
ಚಾತುರ್ಥಿಕ ಜ್ವರಾತಿಶಯದಲಿ ಶೀತಸ್ಥಾನದಿ ನಿಂದೆನು
ಈ ತೆರದ ಕಷ್ಟಗಳು ಬಾರದ ರೀತಿಯಲಿ ಪರಿಹರಿಸು ಸಂತತ ೨
ನಿನ್ನನೆ ಮರೆಹೋಗುವ ತೆರದಲಿ ನಿನ್ನ ಸ್ಮರಣೆಯ ಮಾಡುವ
ನಿನ್ನ ಭಕ್ತರ ಮೇಳದಲಿ ಸಂಪನ್ನನಾಗುತ ಕೂಡುವ
ನಿನ್ನ ಮೂರ್ತಿಯ ನೊಡುವದು ಮತ್ತೆನ್ನ ಕಾಮಿತ ಬೇಡುವ
ನಿನ್ನನೇ ಧ್ಯಾನಿಸುವ ಮತಿಸಂಪನ್ನವನು ನೀನಿತ್ತು ಕರುಣದಿ೩
ವೀರ ವೈಷ್ಣವ ಮಾರ್ಗದೊಳು ಸಂಚಾರ ಮಾಡುವ ತೆರದಲಿ
ಮಾರುತಿಯ ಚರಣಾರವಿಂದದದಿ ಸೇರಿ ನಿನ್ನನು ಧರೆಯಲಿ
ಭೂರಿ ಮಹಿಮೆಯ ವರ್ಣಿಸುವ ಸಾಕಾರ ಮತಿಯನು ಎನ್ನಲಿ
ಪ್ರೇರಿಸುತ ಕರುಣಾರಸಾಮೃತ ಬೀರಿ ಭೀತಿಯ ಪರಿಹರಿಸುತ್ತಲಿ೪
ಕೊಂಚ ಧನವನು ಕೊಟ್ಟು ಎನಗೆ ಪ್ರಪಂಚವಹ ಗೃಹ ಗೈದಿಸಿ
ಮುಂಚೆಮಾಡಿದ ಪಾಪವನು ನಿರ್ಲಚದಿಂದಲೆ ಛೇದಿಸಿ
ವಂಚಿಸುವ ಬಂಧುಗಳ ಮನವನು
ಮಿಂಚಿಯೆನ್ನೊಳು ಮೋದಿಸಿ
ಪಂಚಬಾಣನ ಪಿತನೆ ಮಂಗಳ ವಾಂಛಿತವನೆನಗಿತ್ತು ವಿಭವದಿ೫
ಕಷ್ಟದಲಿ ನಿನ್ನ ಧ್ಯಾನ ಬಾರದು ತುಷ್ಟಿಯಲಿ ನಾ ಧ್ಯಾನಿಪೆ
ಇಷ್ಟವೇ ನೀನಿತ್ತೆಯಾದರೆ ಕಷ್ಟಗಳ ನಾ ದೂಷಿಪೆ
ಶ್ರೇಷ್ಠ ಕಾರ್ಕಳ ಪುರದಿ ಭಕ್ತರ ಒಟ್ಟುಗೂಡುತ ತೋಷಿಪೆ
ಭ್ರಷ್ಟಲೋಭದ ಬಂಧುಗಳು ಎನ್ನೊಳಿಷ್ಟವಾಗುವ ತೆರದಿ ದ್ರವ್ಯವ೬
ಕಾಲಭೈರವ ಪೇಳಿದಂದದಿ ನಾಲಿಗೆಯೊಳು ತಪ್ಪು ನೋಡದೆ
ಪಾಲಿಸುತ ಇಷ್ಟಾರ್ಥವನು ಕೈ ಮೇಳವಿಸು ತಪ್ಪು ನೋಡದೆ
ನೀಲಗಿರಿ ಸಮನಾಗಿ ಕಾರ್ಕಳದಾಲಯವ ನೀ ಮಾಡಿದೆ
ಲೋಲ ಲಕ್ಷ್ಮೀನಾರಾಯಣಾಶ್ರಿತಪಾಲ
ಪಡುತಿರುಪತಿ ಪುರೇಶನೆ ೭

೧೪೫
ಪಾಲಿಸು ತಪ್ಪಾ ಗೌರಿ ಪಾವನಕಾರಿ ಭಾವಲೋಚನ
ನಾರಿ ನೀನಿಲ್ಲಿ ನೆಲೆದೋರಿ
ನಿಲಿಸು ಮಂಗಳಕಾರಿ ಬಾಲರೊಳ್ಮುನಿಸು
ಸಲ್ಲದು ದೈತ್ಯಕುಲದಾರಿ ಪ.
ಮೂಢನಾದೆನು ನಿನ್ನ ಮಹಿಮೆಯನರಿಯದೆ
ಆಡಲಾರೆನು ಮಹಾಪರಾಧವ
ಕೂಡಿದ ಜನರೊಳೀಕುಗ್ಗಿಸದೆನ್ನ ನೀ ದಯ-
ಮಾಡಿ ರಕ್ಷಿಸುವುದೆಂದು ಬೇಡಿಕೊಂಬೆನು ತಾಯೆ ೧
ಲೋಕವಂದಿತೆ ನಿನಗ್ಯಾಕೆ ಕೋಪವು ಪೂರ್ವ
ರಾಕೇಂದು ಮುಖಿ ಭುವ(?)ನೈಕನಿಧೆ
ವ್ಯಾಕುಲತೆಯ ಬೇಗ ಓಡಿಸಿ ಕರುಣದಿ
ಸಾಕುವುದುಚಿತವೆನ್ನನು ಶರ್ವನೊಡಗೂಡಿ ೨
ರಮ್ಮೆಯರಸ ವೆಂಕಟೇಶನ ಕರುಣದಿ
ಹಮ್ಮುಗೊಳ್ಳದೆ ಹಗಲಿರಳಿನಲಿ
ನಿಮ್ಮೆಲ್ಲರನು ಪಾಡಿ ಪೊಗಳುವೆನೆಂಬುದ
ಅಮ್ಮ ನೀ ತಿಳದಿರಲಿಮ್ಮನಗೊಳದೆನ್ನ ೩

೪೭೦
ಪಾಲಿಸು ನಮ್ಮನು ಪರಬ್ರಹ್ಮ ಶ್ರೀ-
ಲೋಲಾನಂತ ಗುಣಾಲಯನೇ ಪ.
ನೀಲಾಭ್ರದಾಭ ಕಾಲನಿಯಾಮಕ
ಮೂಲೇಶ ಪುರುಷ ಮೂರ್ಲೋಕಾಧಿಪ ಅ.ಪ.
ಉತ್ತಮ ಗುಣಗಳು ಬತ್ತಿಪೋದುವೈ
ದೈತ್ಯರ ಗುಣವು ಪ್ರವರ್ಧಿಪುದು
ಚಿತ್ತಸಾಕ್ಷಿ ತವ ಭಕ್ತಿಕಥಾಮೃತ
ನಿತ್ಯ ನಿತ್ಯ ಸವಿಸುತ್ತ ಹಿಂಬಾಲಿಸೆ೧
ಭಾಗವತ ಜನರ ಯೋಗಕ್ಷೇಮ ಸಂ
ಯೋಗೋದ್ಯೋಗಿ ನೀನಾಗಿರಲು
ಕೂಗುವಾಸುರರ ಕೂಡೆ ಕೂಡಿಸದೆ
ಭೋಗಿಶಯನ ಭವರೋಗಭೇಷಜನೆ೨
ಪಾವನಕರ ನಾಮಾವಳಿ ವರ್ಣಿಪ
ಸೇವಕ ಜನರ ಸಂಭಾವಿಸುವ
ಕೇವಳಾನಂದ ಠೀವಿಯ ಪಾಲಿಸು
ಶ್ರೀವಾಸುದೇವ ದೇವಕೀತನಯ]೩
ಶುದ್ಧತಮೋಗುಣಬದ್ಧ ದೈತ್ಯ ಪ್ರ-
ಸಿದ್ಧರಾಗಿಹರು ಮದ್ಯಪರು
ಬುದ್ಧಿಜ್ಞಾನ ಸಮೃದ್ಧಿ ಭಕ್ತಿಯಿಂ-
ದುದ್ಧರಿಸೈ ಗುರು ಮಧ್ವವಲ್ಲಭನೆ೪
ಕೇಶವಾಚ್ಯುತ ಪರೇಶ ಹೃದ್ಗುಹನಿ-
ವಾಸ ವಾಸವಾದ್ಯಮರನುತ
ಶ್ರೀಶ ಶ್ರೀವೆಂಕಟೇಶ ಭಕ್ತಜನ
ರಾಶ್ರಯಸ್ಥಿತ ದಿನೇಶ ಶತಪ್ರಭ ೫
ಮಂಗಲ ಜಗದೋತ್ತುಂಗರಂಗ ಮಾ
ತಂಗವರದ ನೀಲಾಂಗ ನಮೋ
ಅಂಗಜಪಿತ ಲಕ್ಷ್ಮೀನಾರಾಯಣ
ಸಂಗೀತಪ್ರಿಯ ವಿಹಂಗ ತುರಂಗನೆ ೬

೪೫೧
ಪಾಲಿಸು ಪರಮಪಾವನ ಪದ್ಮಾವತೀರಮಣ
ಪಾಲಿಸು ಪಯವಾರಿಧಿವಾಸ ಪದ್ಮಗದಾಧರ ಕೌಸ್ತುಭಭೂಷ ಪ.
ನೀಲನಿಭಾಂಗನಿಖಿಲಸುರ ಮುನಿಜನಜಾಲಪಾಲ
ಪಾಹಿಪಾರ್ಥಸಾರಥಿಅ.ಪ.
ಮದನಜನಕ ಮಹಿಮಾಂಬುಧಿ ನಿನ್ನ
ಪದಕಮಲವ ನಾ ಸ್ಮರಿಸದೆ ಎನ್ನ
ಮದಮುಖತನವನು ಒದರುವದೆನ್ನ
ಪದುಮನಾಭ ರಕ್ಷಿಸು ನೀ ಮುನ್ನ
ಸದಯಾಂಬುಧಿ ನೀನಲ್ಲವೆ ನಿನ್ನೊಳು ಕ್ರೋಧ
ಉದುಭವಿಸುವುದು ನಿಜವೇ ಭಕ್ತವಾತ್ಸಲ್ಯ
ಇದಕೆ ನೀ ಊನ ತರುವೆ ಸಾಕು ಈ ಮರವೆ
ಒದಗಿಸು ಸರ್ವಮನಸಿನೊಳ್ ಪುದು-
ಗಿದಿಷ್ಟಾರ್ಥಗಳ ನೀ ದಯವಿಡುತ ಇಹಪರಗತಿಗಾ-
ಸ್ಪದವಾದ ಸಂಪದವ ನೀ ಕೊಡು ತ್ವರಿತ ತ್ರೈಲೋಕ್ಯದಾತ
ಮಧುಸೂದನ ಮಂದರಗಿರಿಧರ ನೀ-
ರದ ನಿಭ ನಿರ್ಮಲ ನಿಜರೂಪ ಗುಣ
ಸದನಾಚ್ಯುತ ರವಿಕುಲದೀಪ ನಿರ-
ವಧಿ ಆನಂದ ರಸಾಲಾಪ
ಬುಧಜನೋಪಲಾಲಿತ ಲೀಲಾಯತ
ಉದಧಿಶಾಯಿ ಮಾನದ ಮಧುಸೂದನ೧
ನಾಮಸ್ಮರಣೆಯೆ ನರಕೋದ್ಧಾರ
ನೇಮವಿಲ್ಲೆಂಬುದು ನಿನ್ನ ವಿಚಾರ
ಸಾಮಾರ್ಥದ ಗುಣಕೆಲ್ಲನುಸಾರ
ಪಾಮರ ಮನಕಿದು ಈ ಗುಣಭಾರ
ಶ್ರೀಮನೋಹರನೆ ಲಾಲಿಸೊ ಚಾತುರ್ಥಿಕ ಜ್ವರದಿ
ಭ್ರಾಮಕನಾದೆ ಪಾಲಿಸೊ ದಾರಿದ್ರ್ಯವೆಂಬ
ಸೀಮೆಯಿಂದಲಿ ದಾಟಿಸೊ ಸುಕೀರ್ತಿಯ ಮೆರೆಸೊ
ಸಾಮಗಾನಲೋಲ ಸುಜನ
ಸ್ತೋಮ ಭಾಗ್ಯನಿಧಿಯೆ ಎನ್ನ ಮನದ ಅಜ್ಞಾನವೆಂಬ
ತಾಮಸ ಪರಿಹರಿಸಿ ಜ್ಞಾನೋದಯದ ಸದಾನಂದ
ಈ ಮಹಾಭಾಗ್ಯಗಳೆಲ್ಲ ನೀನಿತ್ತಿರೆ
ನೀ ಮಾಡುವುದೆಲ್ಲವು ಸಹಜ ಗುಣ
ಧಾಮಾಶ್ರಿತ ನಿರ್ಜರಭೂಜ ಸುಜನ
ಸ್ತೋಮಾರ್ಕಾಮಿತ ವಿಭ್ರಾಜ
ಶ್ರೀಮಚ್ಛೇಷಾಚಲ ಮಂದಿರ ಸು-
ತ್ರಾಮಾರ್ಚಿತ ಸದ್ರಾಮ ಶ್ರೀರಾಮ೨
ಉಡುವ ಸೀರೆಯ ಸೆಳೆಯಲು ದ್ರುಪಜೆಯ
ಕೊಡಲಿಲ್ಲವೆ ಬಹುವಸನ ಸಂತತಿಯ
ಹಿಡಿಯವಲಕ್ಕಿಗೆ ದ್ವಾರಕ ಪತಿಯ
ಕಡು ಸರಾಗವಾಯ್ತಿಂದಿನ ಪರಿಯ
ಬಿಡುತ ಬೆಟ್ಟದ ಮಧ್ಯದಿ ನಿಂತರೆ ನಿನ್ನ
ಬಿಡುವರ್ಯಾರಯ್ಯ ಶೀಘ್ರದಿ ಮನಸಿನಿಷ್ಟ
ಕೊಡು ದಯವಿಟ್ಟು ಮುದದಿ ಕರುಣಾವುದಧಿ
ಕಡುಲೋಭಿತನ ಬಿಡು ಮಹರಾಯ
ಅಡಿಗಳಿಗೆರಗುವೆನು ಜಗದಯ್ಯ ಪೂರ್ವಾರ್ಜಿತ ಕರ್ಮ
ವಡಂಬಡಿಸಿ ರಕ್ಷಿಸು ದಮ್ಮಯ್ಯ ಪಂಢರಿರಾಯ
ಒಡೆಯ ಶ್ರೀ ಲಕ್ಷ್ಮೀನಾರಾಯಣ
ನಡುನೀರೊಳು ಕೈಬಿಡುವೆಯ ನೀ
ತೊಡಕೊಂಡ ಬಿರುದೇನಯ್ಯ ಈ
ಕಡು ಕೃಪಣತನ ಸಾಕಯ್ಯ
ಪೊಡವಿಯೊಳಗೆ ಪಡುತಿರುಪತಿಯೆಂಬ
ದೃಢಕಾರ್ಕಳದೊಡೆಯ ಶ್ರೀನಿವಾಸನೆ೩

೧೯೪
ಪಾಲಿಸೆನ್ನನು ಶ್ರೀ ಲೋಲ ಸದ್ಗುಣ ವಿಶಾಲ
ಕಾಲತನುಜ ನೃಪಾಲ ಯದುಕುಲ ಬಾಲಸುಂದರ ಲೀಲ ನೀಲ ಪ.
ಶ್ರೀರಮಣನೆ ನಿನ್ನ ಚರಣ ಸದ್ಗುಣಗಣ
ವಾರಿಧಿಗಣನೆ ನೀನೆಂದು ಸಿರಿದೇವಿಯಂದು
ಪಾರವಿಲ್ಲದ ತವ ಚರಿತ್ರೆಯ ಸಾರಗಳನೀಕ್ಷಿಸಲು ನಯನಾಂ-
ಭೋರುಹಜ ಸೇಚಿತ ಸರೋರುಹ
ಪಾದ ಹತಮಾಂಸಾರಕೇಶವ ೧
ಶ್ರುತಿ ತತಿಗಳನೈದಸುರನ ಕೊಂದ
ದಿತಿಜಗೋಸುಗ ನಗಧರನ ಕೃಪಹಾರ ಹಣನ
ದಿತಿಜಹರ ಸುರತತಿಗೆ ರಾಜ್ಯವನತಿ ವಿಲಾಸದೊಳಿತ್ತ ಭಾರ್ಗವ
ಸುತನೆ ಹನುಮತಸ್ತುತನೆ ಮನ್ಮಥಪಿತನೆ
ಬಾಧ್ಯನೆ ಅತುಳಹಯನೆ ೨
ಬ್ರಹ್ಮ ರುದ್ರೇಂದ್ರಾದಿ ಸುರರು ನಿನ್ನಯ ಪಾದ
ನಿರ್ಮಲ ರಜೋದ್ಧಾರಕರ ಬಿನ್ನಪವ ಕೇಳ್
ಗಜ ಚರ್ಮ ವಸ್ತ್ರ ಸಮಧ್ವಜಾಸನ ನಿನ್ನ ದಾಸರ ದಾಸರೊ-
ಳೆನ್ನ ಸೇರಿಸಿ ಮುನ್ನ ಪೊರೆಯೆಲೊ
ಷಣ್ಮುಖಾತ್ಮಜ ಜಯನ ಗಿರಿಗನೆ ೩

೩೯೯
ಪಾಲಿಸೈ ವಿಶಾಲಗುಣಭರಿತ ನಿನ್ನಯ ಚರಿತ
ಕಾಲಭೈರವ ನುತಿಪೆ ನಾ ಸತತ
ಕಾಲಕಲ್ಪಿತ ಲೀಲೆಯರಿತು ಸು-
ಶೀಲತನವನು ಮೆರೆಯಲೋಸುಗ
ಸ್ಥೂಲಸೂಕ್ಷ್ಮಾಕೃತಿಯ ಧರಿಸಿದ
ಮೂಲಿಕಾ ಶ್ರೀನಿವಾಸ ಭೈರವ ೧
ಪರಮಪಾವನ ಕ್ಷೇತ್ರದಲ್ಲಿರುತ ಐತಂದು ಮತ್ತಾ-
ವೀರ ಶ್ರೀರಾಮನ ಸೇತು ನೋಡುತ್ತ
ಧರೆಯ ಸಂಚರಿಸುತ್ತ ಬರುತಿರೆ
ಮಿರುಪ ಶೇಷಾಚಲ ನಿರೀಕ್ಷಿಸಿ
ಭರದಿ ಗಿರಿಮೇಲಡರಿ ಶ್ರೀಶನ
ಚರಣಕಾನತನಾಗಿ ಸ್ತುತಿಸಿದೆ ೨
ಸುರವರೇಶನು ನಿನಗೆ ಪ್ರೀತಿಯಲಿ ಮಂತ್ರತ್ವದಲ್ಲಿ
ಇರಿಸಿ ಮೆರೆಸಿದೆ ಕೀರ್ತಿಕರವಲ್ಲಿ
ತ್ವರಿತದಿಂ ನೀನೆಲ್ಲ ದೇಶದ
ಪರಿಪರಿಯ ಕಾಣಿಕೆಯ ತರಿಸುತ
ಹರಿಯ ದರುಶನಗೈವ ಮೊದಲೆ
ಹರುಷದಿಂದಲಿ ಪೂಜೆಗೊಂಬುವೆ ೩
ಶರಣರನು ನೀ ಕಾಯ್ವೆ ಮಮತೆಯಲಿ ಅಲ್ಲಲ್ಲಿರುತಲಿ
ಧರಿಸಿ ಮೃದುತರವಾದ ವಾಕ್ಯದಲಿ
ಕರೆಸಿ ಒಬ್ಬೊಬ್ಬರ ವಿಚಾರಿಸಿ
ಸರಸದಿಂದಲಿ ಪೊಗಳಿಕೊಳ್ಳುತ
ನರರ್ಗೆ ಸೋಂಕಿದೆ ಭೂತಪ್ರೇತದ
ಭಯಗಳನು ಪರಿಹರಿಸಿ ಪಾಲಿಪೆ ೪
ಭೂತಳದೊಳಧಿಕವಾಗಿರ್ಪ ಕಾರ್ಕಳಕಧಿಪ
ಖ್ಯಾತ ವೆಂಕಟಪತಿಗೆ ಸಖಿಯಷ್ಪ
ಖ್ಯಾತಿಯಿಂ ದೊರೆಯಿದಿರಿನಲಿ ಸಂ-
ನಿಧಿಸನ್ನುತನಾಗಿ ಮೆರೆದಿಹೆ
ಓತು ಕರುಣದೊಳೊಲಿದು ಪಾಲಿಪ
ದಾತ ಲಕ್ಷ್ಮೀನಾರಾಯಣಾಪ್ತನೆ ೫

೪೫೨
ಪಾಲಿಸೊಲಿದು ಲಕ್ಷ್ಮೀಲೋಲ ವೆಂಕಟಪತಿ
ಪಾಲಾಬ್ಧಿಶಯನ ಕೃಪಾಳು ಪರೇಶ ಪ.
ಆಲಸ್ಯವಜ್ಞಾನಜಾಲ ಪರಿಹರಿಸು
ನೀಲನೀರದನಿಭ ಕಾಲನಿಯಾಮಕಅ.ಪ.
ಪ್ರೇರಕ ಪ್ರೇರ್ಯನು ಮೂರು ವಿಧ ಜೀವರಾ-
ಧಾರಾಧೇಯಾಪಾರ ಮಹಿಮನೆ
ಸಾರಭೋಕ್ತ್ರವೆಯೆನ್ನ ಘೋರ ದುರಿತಭಯ
ದೂರಮಾಡುತ ಭಕ್ತಿ ಸಾರವನೀಯುತ೧
ಪಾಪಾತ್ಮಕರೊಳು ಭೂಪಾಲಕನು ನಾ
ಕಾಪಾಡೆನ್ನನು ಗೋಪಾಲ ವಿಠಲ
ಶ್ರೀಪದದಾಸ್ಯವ ನೀ ಪಾಲಿಸು ಭವ
ತಾಪಪ್ರಭಂಜನ ಹೇ ಪರಮಾತ್ಮನೆ೨
ಶ್ರೇಷ್ಠರ ಸಂಗವ ಕೊಟ್ಟೆನ್ನ ರಕ್ಷಿಸು
ಕಷ್ಟಪಟ್ಟೆನು ಬಹಳ ಸೃಷ್ಟಿಗೊಡೆಯನೆ
ಮುಷ್ಟಿಕಾರಿಯೆ ಎನ್ನಿಷ್ಟ ಬಾಂಧವ ನೀನೆ
ಕೃಷ್ಣಗೋವಿಂದನೆ ಬೆಟ್ಟದೊಡೆಯ ಹರಿ೩
ಆಶೆಗೆ ಸಿಕ್ಕಿ ಹರಿದಾಸನೆಂದೆನಿಸಿದೆ
ದೋಷಸಮುದ್ರದೊಳೀಜಾಡುವೆನು
ಕೇಶವ ತವಪದ ದಾಸಜನರ ಸಹ
ವಾಸವ ಕೊಡು ಮಹಾಶೇಷಪರಿಯಂಕನೆ೪
ಛತ್ರಪುರೈಕಛತ್ರಾಧಿಪ ನಿನ್ನ
ಪ್ರಾರ್ಥಿಸುವೆನು ಪರಮಾರ್ಥಹೃದಯದಿ
ಕರ್ತ ಲಕ್ಷ್ಮೀನಾರಾಯಣ ಗುಣನಿಧಿ ಶ್ರೀ
ವತ್ಸವಕ್ಷಸ್ಥಲ ಕೌಸ್ತುಭಾಭರಣನೆ೫

೩೩೭
ಪಾಹಿಮಾಂ ರಾಮಚಂದ್ರ ಅಚಲಾಂ ಭಕ್ತಿಂ
ದೇಹಿ ಕಲ್ಯಾಣಸಾಂದ್ರ ಪ.
ಶ್ರೀಹರಿ ನಾಗಾರಿವಾಹನ ಶ್ಯಾಮಲ-
ದೇಹ ರಾಕ್ಷಸ ಸಮೂಹ ವಿದಾರಕ ಅ.ಪ.
ಸಜ್ಜನ ಕಲ್ಪವೃಕ್ಷ ಪಾಪಾಂಕುರ-
ಭರ್ಜನ ವಿಬುಧಪಕ್ಷ
ಧೂರ್ಜಟಿಸಖ ದೂಷಣಾರಿ ದ್ಯುಮಣಿಕೋಟಿ-
ಪ್ರಜ್ವಲಿಪ ಪರಮ ಜಗಜ್ಜೀವನಧಾಮ
ನಿರ್ಜರೇಂದ್ರ ಪ್ರಮುಖ ಸುರಗಣ ಪೂಜ್ಯ
ಪೂರ್ಣಬ್ರಹ್ಮ ರಘುವಂ-
ಶೋರ್ಜಿತಾತ್ಮ ಮಹಾಮಹಿಮ ರಿಪುದುರ್ಜಯ
ಜಯಾಕಾಂತ ಪ್ರಭುವೆ ೧
ವೇದೋದ್ಧಾರಣ ಕೂರುಮ ವರಾಹ ಪ್ರ-
ಹ್ಲಾದವರದ ಗುಣಧಾಮ
ಸಾಧುವಟುವೇಷವಿನೋದ ಭಾರ್ಗವ ಬಹು
ಕ್ರೋಧಿ ಕ್ಷತ್ರಿಯಕುಲ ಭೇದಿ ರಾವಣಾಂತಕ
ಯಾದವಕುಲಾಂಬೋಧಿಚಂದ್ರ
ಕುವಾದಿಜನದುರ್ಬೋಧಬದ್ಧವಿ-
ರೋಧ ಕಲಿಮಲಸೂದನಾಚ್ಯುತ
ಶ್ರೀಧರ ರಮಾಮೋದಮಾನಸ ೨
ಕಾಶಿಮಠಸ್ಥ ಯತಿ ಪರಂಪರ್ಯ-
ಭೂಷಣ ಶುದ್ಧಮತಿ
ಶ್ರೀ ಸುಕೃತೇಂದ್ರ ಸನ್ಯಾಸಿ ಪೂಜಿತಪಾದ
ವಾಸುದೇವ ತವ ದಾಸ್ಯವ ಪಾಲಿಸು
ಶೇಷಶಯನ ವಿಲಾಸ ಪರಮದಯಾಸಮುದ್ರ
ಸುಭದ್ರ ಶ್ರವಣ ಪ-
ರೇಶ ಭವ ರುಗ್ಭೇಷಜನೆ ನರಕೇಸರಿಯೆ ಶ್ರೀ ವ್ಯಾಸ ರಘುಪತಿ ೩
ಪಾರಗಾಣರು ನಿನ್ನಯ ಬ್ರಹ್ಮಾದ್ಯರು
ಭೂರಿಗುಣದ ಮಹಿಮೆಯ
ಸೂರಿಜನಪ್ರೀತ ಸೀತಾನಯನ ಚ-
ಕೋರಚಂದ್ರನು ಮಹೋದಾರ ಶಾಙ್ರ್ಗಧರ
ಮೀರಣಾತ್ಮಜವರದ ನತಮಂದಾರ ಕೈರವಶ್ಯಾಮ ರಾಮನ ೪
ಪ್ರಣವರೂಪ ನಿರ್ಲೇಪ ನಿತ್ಯಾತ್ಮದು-
ರ್ಜನವನೋದ್ದಹನೋದ್ದೀಪ
ಮನುಕುಲಮಣಿ ಮುನಿಗಣ ಸಮಾಹಿತ ಜನಾ-
ರ್ದನ ಬ್ರಹ್ಮಾದ್ಯಖಿಳ ಚೇತನರು ನಿನ್ನಾಧೀನ
ಜನುಮ ಜನುಮಕೆ ಲಕ್ಷುಮಿನಾರಾಯಣ
ಚಿದಾನಂದೈಕ ದೇಹನೆ
ಮನ ವಚನ ಕಾಯದಲಿ ಧ್ಯಾನಿಪ ಘನ
ಭಕುತಿ ಭಾಗ್ಯವನು ಪಾಲಿಸು ೫

೩೩
ಪುಂಡರೀಕಾಂಬಕ ಪರಮದಯಾಳೊ ಬ್ರ-
ಹ್ಮಾಂಡರರಸನಾಥ ಬಿನ್ನಹ ಕೇಳೊ ಪ.
ನಂಬಿದವನು ಬಲ್ಲೆ ನಿನ್ನ ಪಾದವನು
ಇಂಬಾಗಿ ಸಲಹುವಿ ಎನ್ನ ಮಾನವನು
ಕುಂಬಾರ ಜನರೆಂಬ ಕುಹಕದ ನುಡಿಯ
ಶಂಭುವಂದಿತ ತಾಳಲಾರೆ ಎನ್ನೊಡೆಯ ೧
ಅಜ ಭವೇಂದ್ರಾದಿ ಲೋಕೇಶರು ನಿನ್ನ
ಭಜಿಸಿ ಪೊಂದಿಹರತ್ಯಧಿಕ ಭಾಗ್ಯವನ್ನು
ಕುಜನರು ಕುತ್ಸಿತಾಹಂಕಾರವನ್ನು
ತ್ಯಜಿಸುವಂದದಿ ಎನ್ನೊಳಾಗು ಪ್ರಸನ್ನ ೨
ಗರುಡಗಮನ ಗಜರಾಜನ ಪೊರೆದಂತೆ
ತ್ವರೆಯಿಂದೆನ್ನನು ಕಾಯ್ದರಹುದು ನಿಶ್ಚಿಂತೆ
ಉರಗರಾಜೇಂದ್ರ ಶಿಖರ ಸನ್ನಿವಾಸ
ಸಿರಿಯರಮಣ ಶುಭಕರ ಶ್ರೀನಿವಾಸ ೩

೬೪
(ಪೆರ್ಡೂರು ಶ್ರೀ ಅನಂತಪದ್ಮನಾಭ)
ಪೆರಡೂರ ಶ್ರೀ ಪದ್ಮನಾಭ ಚರಣವೆನ್ನ
ಶಿರದೊಳಿಟ್ಟು ಪಾಲಿಸು ಮಾತ ಲಾಲಿಸು ಪ.
ಆದಿಭೌತಿಕಾದಿ ನಾನಾ ಬಾಧೆಯಿಂದ ಬಳಲಿ ಬಹಳ
ನೊಂದೆನು ಇಲ್ಲಿ ಬಂದೆನು
ಮೋದ ಮೂರ್ತಿ ನಿನ್ನ ಕರುಣವಾಗಲೆಂದು ಕೈಯ್ಯ ಮುಗಿದು
ಬೇಡುವೆ ಮಹಿಮೆ ಪಾಡುವೆ
ಕಾದರೊಳ್ಳಿತಿನ್ನು ನಿನ್ನ ಪಾದಸೇವೆ ಮಾಳ್ಪುದನ್ನು
ವೇದವೇದ್ಯ ವಿಹಗಗಮನ ಮಾಧವ ಮಛ್ಛಾದಿರೂಪ ೧
ಮರುಳು ಭೂಪ ಮನದೊಳಿಟ್ಟ ದುರುಳ ಭಾವವನ್ನು ಬಿಡಿಸಿ
ಸಲಹಿನ್ನು ಕೊಟ್ಟು ಫಲವನ್ನ
ಒರಳಿನಲ್ಲಿ ಕೊರಳ ಸಿಕ್ಕಿ ನರಳುವಂತಾಗಿರುವ ಕಷ್ಟ
ಪರಿಯಾಯ ಸ್ವಾಮಿಯರಿಯೆಯ
ಶರಣು ಶರಣು ಎಂದು ಮುಂದೆ ಹೊರಳಿ ಬೇಡಿಕೊಂಡು ನಿಂದೆ
ಚರಣ ಪದ್ಮದಾಸರನ್ನು ಮರಿಯದೆ ಮಾನಿಸುವ ತಂದೆ ೨
ರಾಜಕದಳಿಮಾಲಿಕಾ ವಿರಾಜಕಂಠ ಭಕ್ತ ಕಲ್ಪ
ಭೂಜನೆ ರಾಜ ರಾಜನೆ
ಮೂಜಗನ್ನಿವಾಸ ಪೂರ್ಣ ರಾಜರಂತರಾತ್ಮ ವ್ಯಸನ
ರಾಜಿಯ ಕಡಿಸು ಬೋ ಜೀಯಾ
ಈ ಜಗತ್ತಿನಲ್ಲಿ ನಿನ್ನ ಸೋಜಿಗವನರಿವರುಂಟೆ
ತೇಜದಾಯಿ ವೆಂಕಟಾದ್ರಿ ರಾಜನೀನೆಂದರಿದೆ ನಿಂದು ೩

೫೦೮
ಪೊರೆಯುವುದೆಮ್ಮನು ನರಹರಿ ನೀನು
ಸ್ಮರಿಪೆವು ತವ ಪದಸರಸಿಜಗಳನು ಪ.
ತರಳ ಪ್ರಹ್ಲಾದನು ಮೊರೆಯಿಟ್ಟು ತಾನು
ಕರೆಯಲಾಕ್ಷಣ ಬಂದೆ ತ್ವರಿತದಿ ನೀನು ೧
ದುರುಳ ಹಿರಣ್ಯಕಸುರನನು ಸೀಳಿ
ಸುರರನ್ನು ಸಲಹಿದೆ ಕರುಣವ ತಾಳಿ ೨
ಮಿತ್ರ ಮಂಡಳಿ ಶತಪತ್ರಕೆ ನೀನು
ಮಿತ್ರನಂತೆಸಗು ವಿಮಿತ್ರತೆಯನ್ನು ೩
ಕಾರುಣ್ಯಾಮೃತವಾರಿಧೇ ಮೂರ್ತೇ
ವರ ಲಕ್ಷುಮಿನಾರಾಯಣ ಸತ್ಕೀರ್ತೇ ೪

೪೫೪
ಪೋಗಿ ಬರುವೆನು ಎನ್ನ ಮನೆಗೆ ಜಗದೀಶ
ಭಾಗವತಪ್ರಿಯ ಭಾಗೀರಥೀಜನಕ ಪ.
ವರುಷವರುಷಕೆ ನಿನ್ನ ದರುಶನವನಿತ್ತೆನ್ನ
ಕರುಣಿಸೈ ಶೇಷಾದ್ರಿವರ ಶ್ರೀನಿವಾಸ
ದುರಿತ ಕೋಟಿಗಳ ಸಂಹರಿಸಿ ನಿನ್ನಯ ಕರುಣಾ
ವರ ಪ್ರಸಾದವನೀಯೊ ಜನ ಮೆಚ್ಚುವಂತೆ ೧
ಜಯ ಹೊಂದಿಸುತ ಮನದ ಭಯವೆಲ್ಲ ಪರಿಹರಿಸಿ
ನಿಯಮತಿಯೀಯೊ ನೀರಜನಾಭನೆ
ದಯಮಾಡೊ ತವ ಪಾದಸೇವೆಯನ್ನಿತ್ತೆನಗೆ
ಪ್ರಿಯನಾಗು ಶ್ರೀಹರಿಯೆ ಭಯನಿವಾರಣನೆ೨
ನೀನೆ ಗತಿಯೆನಗೆ ಶ್ರೀನಿವಾಸನೆ ಭಕ್ತಾ
ಧೀನ ನೀನೆಂಬ ಬಿರುದುಂಟಾದಡೆ
ಮಾನಿಸೈ ಶ್ರೀಲಕ್ಷ್ಮೀನಾರಾಯಣನೆ ನಿನ್ನ
ಧ್ಯಾನ ಸೌಭಾಗ್ಯಗಳನಿತ್ತೆನ್ನ ಸಲಹೊ ೩

೩೬೦
ಪ್ರಾಣನಾಥ ನಮಾಮಿ ಸಾಷ್ಟಾಂಗ
ಪಾತುಮಾಂ ಪವಮಾನಿ ಕೃಪಾಂಗ ಪ.
ದಾತಾರ ರಘುನಾಥದೂತ ವಿಖ್ಯಾತ
ಸೀತಾಮಾತಾಪದಾಬ್ಜ ಪ್ರಣೀತಾ-
ನೇಕವಾನರಯೂಥ ಸುಶೀಲ
ಭೂತಳ ಭೂರಿಜೀವನಪಾಲ ೧
ಆಂಜನೇಯ ಸುರಂಜನ ಮೂರ್ತಿ
ಕಂಜನಾಭದಾಶ್ರಯವರ್ತಿ
ಭಂಜನಾಸುರನಿಕರ ನಿರ್ಲೇಪ
ರಂಜನಾತ್ಮ ನಿರಂಜನರೂಪ ೨
ಕರಕೃತಾಂಜಲಿಮನೋಹರ ಶುಭಕಾಯ
ವರ ಲಕ್ಷ್ಮೀನಾರಾಯಣ ಪ್ರೀಯ
ಪರಮ ಪಾವನ ನೇತ್ರಾವತಿ ನದೀತೀರ
ವರ ಮಣಿಪುರಮುಖ್ಯ ಪ್ರಾಣ ಸಾಕಾರ ೩

೪೫೩
ಪ್ರಾಣಾಂತರ್ಗತಪ್ರಾಣ ಅಣು
ರೇಣುಚರಾಚರಪೂರ್ಣ ಪ.
ಕಾಣೆನು ನಿನ್ನ ಸಮಾನ ಮಾನದ ಪು-
ರಾಣಪುರುಷ ಸುತ್ರಾಣ ವರೇಣ್ಯಅ.ಪ.
ಪಂಕಜನಾಭ ಶ್ರೀವೆಂಕಟರಮಣನೆ
ಕಿಂಕರಜನಮನಃಪ್ರೇಮದನೆ
ಶಂಕರಾದಿ ಸುರಸಂಕುಲ ಸೇವಿತ
ಶಂಖ ಸುದರ್ಶನ ಗದಾಬ್ಜಹಸ್ತನೆ ೧
ಪಾಪಿಯು ನಾ ನೀ ಪಾಪಹ ಪಾವನ
ರೂಪ ಪರಾತ್ಪರ ಗೋಪಾಲ
ಕಾಪಾಡೆಮ್ಮ ಸಮೀಪಗನಾಗಿ ಜ-
ಯಾಪತಿ ಗೋಪತಿ ಶ್ರೀಪತಿ ನೀ ಗತಿ ೨
ಚಟುಳ ನೇತ್ರಾವತಿತಟ ನಿಕಟ ಪ್ರಕಟ
ವಟಪುರವರ ವೆಂಕಟಧಾಮ
ವಟುವಾಮನ ಲಕ್ಷ್ಮೀನಾರಾಯಣ
ಪಟುವೀರ್ಯ ತಮಃಪಟಲನಿವಾರಣ ೩

೪೧೦
ಫಣಿವೇಣಿ ಶುಕಪಾಣಿ ವನಜಾಕ್ಷಿ ರುಕ್ಮಿಣಿಪ.
ಈರೇಳುಲೋಕದ ಮಾತೆ ಭೂಲೋಲಭೀಷ್ಮ ಕಜಾತೆ
ಗುಣಶೀಲೆ ಗುಣಾತೀತೆ ತ್ರಿದಶಾಲಿಸನ್ನುತೆ೧
ಶ್ರೀವಾಸುದೇವನ ರಾಣಿ ಲೋಕೇಶಮುಖ್ಯರ ಜನನಿ
ಸುಪ್ರಕಾಶಿನಿ ಕಲ್ಯಾಣಿ ಕಲಹಂಸಗಾಮಿನಿ೨
ಸುವಿಲಕ್ಷಣೈಕನಿಧಾನಿ ಮೀನಾಕ್ಷಿ ಪಲ್ಲವಪಾಣಿ
ಸುಕ್ಷೇಮಸುಖದಾಯಿನಿ ಲಕ್ಷ್ಮೀನಾರಾಯಣಿ೩

೩೪೩
(ಬಂಟ್ವಾಳದ ವೆಂಕಟೇಶ ದೇವರನ್ನು ನೆನೆದು)
ವಂದಿಸುವೆನು ಶ್ರೀನಿವಾಸ ಶ್ರೀ ವೆಂಕಟೇಶ
ವಂದಾರುನಿಚಯಮಂದಾರ ಸದಾ- ಪ.
ನಂದೈಕನಿಧಿವಿಲಾಸ
ಚಂದ್ರಾದಿತ್ಯಸಹಸ್ರಪ್ರಕಾಶ
ಹೊಂದಿದೆ ನಿನ್ನ ಪರೇಶ ಶ್ರೀ ವೆಂಕಟೇಶ ೧
ಶಾಂತಾತ್ಮನಿಯಮ ಸಂತಾಪಪ್ರಶಮ
ಸಂತಜನಮನೋಲ್ಲಾಸ
ಭ್ರಾಂತಿಜ್ಞಾನವಿತಾನವಿನಾಶ
ಚಿಂತನೀಯ ನಿರ್ವಿಶೇಷ ಶ್ರೀ ವೆಂಕಟೇಶ ೨
ಶ್ರೀಧರಾಚ್ಯುತ ಸುಮೇಧನಾಮಕ ಪ-
ಯೋಧಿಶಯನ ಪರಮೇಶ
ವೇದಾಂತವೇದ್ಯ ನಿತ್ಯ ನಿರ್ದೋಷ
ಸಾಧು ಕೌಸ್ತುಭಮಣಿಭೂಷ ಶ್ರೀ ವೆಂಕಟೇಶ೩
ನೀರಜನಾಭ ನೀಲಾಭ್ರದಾಭ
ಶ್ರೀರಾಮ ತ್ರಿದಶಗಣಪೋಷ
ಪ್ರಾರಬ್ಧಕರ್ಮ ಬೋಧೋದ್ಭಾಸಾ-
ಪಾರಮಹಿಮ ಜಗದೀಶ ಶ್ರೀ ವೆಂಕಟೇಶ ೪
ನೇತ್ರಾವತಿ ಸುಪವಿತ್ರಚಿತ್ರಸು-
ಕ್ಷೇತ್ರ ವಟಪುರನಿವಾಸ
ಕರ್ತ ಲಕ್ಷ್ಮೀನಾರಾಯಣನೀತ
ಪಾರ್ಥಸಾರಥಿ ಪೃಥಗೀಶ ಶ್ರೀ ವೆಂಕಟೇಶ ೫

೪೮೮
ಊರ್ವಶಿ : ಬಂದ ಕಾಣೆ ಗೋವಿಂದ ಕ್ಷೀರ-
ಸಿಂಧುಶಯನ ವನದಿಂದ
ಇಂದಿರೇಶ ಮುದದಿಂದ ಮೌನಿಮುನಿ-
ವೃಂದದಿಂದ ಸ್ತುತಿವಂದನೆಗೊಳ್ಳುತ೧
ಏಸು ಲೋಭಿಯೊ ತಿಮ್ಮಶೆಟ್ಟಿ ಒಂದು
ಕಾಸಿಗೆ ಮಾರುವ ರೊಟ್ಟಿ
ದಾಸರ ಕೂಡಿ ಜಗಜಟ್ಟಿ ಬಹು
ದೇಶವ ತಿರುಗುವ ಶೆಟ್ಟಿ
ದೂಷಣಾರಿ ಪಾದಾಶ್ರಿತಜನರಭಿ-
ಲಾಷೆ ಸಲಿಸಿ ಇಲ್ಲಿ ತೋಷದಿ ನಿಂತವ೨
ದೊಡ್ಡವನೈ ಮಹಾರಾಯ ಹಳೆ
ದುಡ್ಡಿಗೆ ನೀಡುವ ಕೈಯ
ಅಡ್ಡಿಗೈದರೆ ಬಿಡನಯ್ಯ ಇವ
ಬಡ್ಡಿಕೇಳುವ ತಿಮ್ಮಯ್ಯ
ದಡ್ಡುಕೇಸಕ್ಕಿಯ ಮಡ್ಡಿಪ್ರಸಾದವ
ಗುಡ್ಡೆಯ ಮೇಲಿದ್ದು ದುಡ್ಡಿಗೆ ಕೊಡುವವ೩
ತಿರುಪತಿಗೆ ಪ್ರತಿಯಾಗಿ ಪಡು
ತಿರುಪತಿಯೆಂದಿಹ ಯೋಗಿ
ಮೆರಸುವನೈ ಸ್ಥಿರವಾಗಿ ಶ್ರೀ
ವರ ವೆಂಕಟ ಲೇಸಾಗಿ
ಶರಣರು ಏನೆಂದು ಸಂತೋಷಿಪ
ಕರುಣಾಕರ ಚಪ್ಪರ ಶ್ರೀನಿವಾಸನು೪
ಈ ಪರಿಯಲಿ ಒಲಿದಿಪ್ಪಾ ಬಹು
ವ್ಯಾಪಾರಿ ತಿಮ್ಮಪ್ಪಾ
ಕಾಪಟ್ಯರಿಗೆ ತಾನೊಪ್ಪನಮ್ಮ
ಗೋಪಾಲಕ ಜಗದಪ್ಪ
ಶ್ರೀಪರಮಾತ್ಮ ನಾನಾಪರಿ ವಿಭವದಿ
ಗೋಪುರದಲಿ ತಾ ವ್ಯಾಪಿಸಿ ನಿಂದನು೫
ರಂಭೆ : ನಾರೀವರ್ಯಾರಮ್ಮ ನೋಡಲು
ಸಾರಹೃದಯರಮ್ಮ
ತೋರಣಛತ್ರಚಾಮರ ಬಿರುದುಗಳಿಂದ
ಭೂರಿ ವಿಭವದಿಂದ ಸಾರಿಬರುವರಮ್ಮ೧
ಕರದಿ ಕಲಶವಿಹುದು ಶಾಲಿನ
ನಿರಿ ಮುಂದಿರುತಿಹುದು
ಬೆರಳಿನೊಳುಂಗುರು ವರ ದ್ವಾದಶನಾಮ
ಧರಿಸಿ ಸಮಂತ್ರೋಚ್ಚರಿಸುತ ಬರುವರು೨
ಮಂದಿಗಳೊಡ್ಡಿನಲಿ ಬರುವರು
ಮಂದಸ್ಮಿತದಲಿ
ಚಂದದಿ ಜನಗಳ ಸಂದಣಿ ಮಧ್ಯದಿ
ಇಂದಿರೆಯರಸನ ಧ್ಯಾನದಿ ಬರುವರು೩
ಹಿಂಗದೆ ಬರುತಿಲ್ಲಿ ಮನಸಿನ
ಇಂಗಿತವರಿತಿಲ್ಲಿ
ಬಂಗಾರದ ಭೂಷಣಸಮುದಾಯದಿ
ಅಂಗಜಪಿತನಿಗೆ ಶೃಂಗಾರಗೈವರು೪
ಊರ್ವಶಿ : ಕಾಂತೆ ಕೇಳ್ ನಾನೆಂತು ವರ್ಣಿಸಲಿ
ವಿಪ್ರೋತ್ತಮರ ಗುಣ-
ಕೆಂತು ಸೈರಣೆಯಾಂತು ನಾನಿರಲಿ
ಚಿಂತಿತಾರ್ಥವನೀವ ಲಕ್ಷ್ಮೀ-
ಕಾಂತ ಶ್ರೀನಿವಾಸನಂಘ್ರಿಯ
ಸಂತಸದಿ ಪೂಜಾದಿ ಸತತಿ-
ಯಾಂತಕೊಂಡಿಹೇಕಾಂತಭಕ್ತರು೧
ಒಂದು ಭಾಗ ಪುರಾಣಿಕರು ತಾವೆಂದು
ಕೀರ್ತಿಯನು ಧರಿಸಿ ಮ-
ತ್ತೊಂದು ಭಾಗದಿ ಜೋಯಿಸರು
ತಾವೆಂದು ಧರ್ಮವನು ಪಾಲಿಸಿ
ಸಿಂಧುಶಯನನ ಚಾರುಚರಣ-
ದ್ವಂದ್ವಕಾನತರಾಗಿ ಲೋಕದಿ
ವಂದ್ಯರೆನಿಸಿಯಾನಂದ ಪರರಿವ-
ರೆಂದು ಶ್ರೀಗೋವಿಂದ ನಡೆಸುವ೨
ವೇದಶಾಸ್ತ್ರಪುರಾಣತರ್ಕವನೋದಿ ಬಲ್ಲವರು ವಿಪ್ರರಿ
ಗಾದಿ ಗೌಡಸಾರಸ್ವತ ಋಗ್ವೇದಿ ಬ್ರಾಹ್ಮಣರು ಇವರಲಿ
ವಾದಗೈವ ಕುವಾದಿಗಳ ಮನ-
ಭೇದಿಸುತ ನಿಜವಾದ ಮಾರ್ಗವ
ಶೋಧನೆಗೆ ತಾವೈದಿಸುವ ಮಹಾ
ಸಾಧುಗಳಿಂದ ದೃಢವಾದ ಮಾತಿದು೩
ಅಂಬುಜಾಕ್ಷಿಯೇನೆಂಬೆ
ಮೇಗರೆಡಂಭಮಾತಲ್ಲ ಧನಿಯ ಕು-
ಟುಂಬವೆನುತಲಿ ತುಂಬ ಕೀರ್ತಿಯ
ಗೊಂಬರೆ ಎಲ್ಲ ಸಂತಸ
ಸಂಭ್ರಮದಿ ವೇದ್ಯಾಂಬುನಿಧಿಯಲಿ
ತುಂಬಿರುವರೀ ಕುಂಭಿನಿಯೊಳು ಜ-
ಸಂಬಡುವುದು ವಾಸಿಷ್ಠಗೋತ್ರಜ-
ರೆಂಬ ವಿಪ್ರಕದಂಬಪೂಜ್ಯರು೪
ರಂಭೆ : ಬಾಲೇ ನೀ ಪೇಳಿ ದಿನದ ಲೀಲೆಯೇನೆಂದೆನಗೆ
ಆಲಯದೊಳಿದ್ದ ಜನಜಾಲವಿಂದೀ ನೆಲೆಗೆ೧
ಮೇಳವಿಸುತ್ತ ಕೂಡಿರುವರು ಪೇಳೆಲೆ ಸುಶೀಲೆ
ಆಲೋಚಿಸಲರಿದಾ ಕಮಲಾಲೋಲನ
ಮಹಾಲೀಲೆ೨ ಕೇಳುವೆನರಿದಾಲಸ್ಯವ ತಾಳಬೇಡ ಸಖಿಯೇ
ಮೂರ್ಲೋಕದೊಳಗೆ ಇಂಥ
ಲೀಲೆಯ ನಾನರಿಯೆ೩
ಫಾಲೇಂದು ಕುಂದದ ವರ್ಣಕೋಲು ಚಾಮರಗಳ
ನಲುಗಿಸಿಕೊಂಡು ಬಗ್ಗಿ ಪೇಳುವರು ಸ್ತೋತ್ರಗಳು೪
ಚಂಡವೈಶ್ವಾನರನ ತೇಜಾಖಂಡದಿಂದೋರಂತೆ
ಮಂಡಲೈದರೊಳಗೆ ಪ್ರಭೆಗೊಂಡಿಹುದು ಕಾಂತೆ೫
ಪಾದುಕೆಯ ಮುಂದೆಯಿರಿಸಿ ಮೋದದಿಂದಿಕ್ಕೆಲದಿ
ಆದಿನಾರಾಯಣ ಮದುಸೂದನನೆ ಮುದದಿ೬
ಕಾದುಕೊಳ್ಳೆನುತ ಸ್ತುತಿಸಿ ಪಾದಕೆರಗುವರು
ನಾದಿನಿ ಕೇಳಿದರ ಪರಿಯನೀ ದಯದಿಂದುಸುರು೭
ಊರ್ವಶಿ :ಭಾವೇ ನೀ ಕೇಳೆ ಇದನು ತ್ರೈಲೋಕ್ಯ-
ದೇವನಾಗಮನವೆಲ್ಲನೂ
ದೀವಟಿಗೆ ಸೇವೆಯೆಂದು ಪೇಳುವರು
ಭಾವುಕರು ಮನದೊಳಂದು೧
ಕೇಳಿದರೆ ಆಲ
ಸಾಯನವನು ಸುರಿದು
ಆಯತವನು ವರ್ಣಿಸುವಡೆ ಬಾಯಿಯು
ಸಾವಿರ ಸಾಲದು
ಶ್ರೀಯರಸನ ಮಹಿಮೆಯರಿವದಾರಿಗಳವಲ್ಲ೩
ಜಯಜಯ ಭಕ್ತಸುಪೋಷಣ ಜಯಜಯ
ದೈತ್ಯವಿನಾಶನ
ಜಯಜಯ ಜಾಹ್ನವಿತಾತ ಜಯಜಯ ಜಗದಾತ
ಜಯಜಯ ರವಿಶತತೇಜ ಜಯಜಯ
ಆಶ್ರಿತ ಸುರಭೂಜ
ಜಯಜಯ ನಾದದಿಯೇರ್ದ ನಿರ್ಭಯ
ತೋರುತ ಒಲಿದು೪
* * *
ವಾರೀಜನೇತ್ರೆ ಕಳ್ ಭೂರಿವಿಭವವನ್ನು ನೋಡೆ ತಂಗಿ ಭಕ್ತ-
ರೋರಂತೆ ಬಂದು ಕರೆಯುವಾನಂದವ ನೋಡೆ ತಂಗಿ೧
ಸೇವೆಯ ಕೈಕೊಳ್ಳು ಎನುತಡ್ಡಬಿದ್ದರು ನೋಡೆ ತಂಗಿ ಭಕ್ತಿ
ಭಾವದಿ ನೀ ದಯಮಾಡೆಂದು ಪೇಳ್ದರು ನೋಡೆ ತಂಗಿ ೨
ದೇವಕಾರುಣ್ಯ ಸುಭಾವದಿ ಶರಣರ್ಗೆ ನೋಡೆ ತಂಗಿ ಪ್ರತಿ-
ಭಾವವ ತೋರಿ ಗೋಪುರ ಸೇವೆಗೊಂಡರು ನೋಡೆ ತಂಗಿ೩
ಪಲ್ಲಂಕಿಯಲಿ ಭಕ್ತಸುಲಭವೇರುವನು ನೋಡೆ ತಂಗಿ ರಥ-
ದಲ್ಲಿ ತಾನೇರುತ್ತ ಮೆಲ್ಲನೆ ಬರುವನು ನೋಡೆ ತಂಗಿ೪
ಭೇರಿನಗಾರಿಮೃದಂಗೊಂದು ಕಡೆಯಲ್ಲಿ ನೋಡೆ ತಂಗಿ ರಥ
ಮೌರಿ ಪಟಿಹ ತಂಬಟೆಯೊಂದು ಕಡೆಯಲ್ಲಿ ನೋಡೆ ತಂಗಿ೫
ಸಾಲಿನೊಳೆಸೆವ ಬೊಂಬಾಳ ಹಿಲಾಲುವ ನೋಡೆ ತಂಗಿ ಜನ-
ಜಾಲಗಳೆಲ್ಲರು ಮೇಳವಿಸಿರುವರು ನೋಡೆ ತಂಗಿ೬
ಪಟ್ಟದರಸನಾಗಮವನ್ನು ಕಾಣುತ ನೋಡೆ ತಂಗಿ ತಮ್ಮ-
ಪಟ್ಟವನು ಶೃಂಗರಿಸಿದರೇನೆಂಬೆ ನೋಡೆ ತಂಗಿ೭
ಕಟ್ಟಿದ ಗೂಡುದೀಪದ ಚಮತ್ಕಾರ ನೋಡೆ ತಂಗಿ ಹೇಮ-
ಬೆಟ್ಟವ ಇಳೆಗೆ ತಂದೊಟ್ಟಿಹರೆಂಬಂತೆ ನೋಡೆ ತಂಗಿ೮
ಚಿತ್ತೈಸಿದನಿಲ್ಲಿ ನಿತ್ಯ ಉತ್ಸಹಲೋಲ ನೋಡೆ ತಂಗಿ ಭಕ್ತ-
ರರ್ತಿಯ ಸಲಿಸಿ ಪ್ರವರ್ತಕನಾದನು ನೋಡೆ ತಂಗಿ೯
ಕಾಣಿಕೆಯಾರತಿಗಳನೆಲ್ಲ ಕೊಳ್ಳುತ ನೋಡೆ ತಂಗಿ ಬಂದ
ಶ್ರೀನಿವಾಸನು ಭಕ್ತರ ಒಡನಾಡುತ್ತ ನೋಡೆ ತಂಗಿ೧೦
ಯಾವಾಗಲು ಬರುವವನಲ್ಲ ಧನಿಯೆಂದು
ನೋಡೆ ತಂಗಿ ನಮ್ಮ
ದೇವರು ಬಂದರೆಂದುರುತರ ತೋಷದಿ ನೋಡೆ ತಂಗಿ೧೧
ಜೋಡಿಸಿ ಕೈಗಳ ಭಯದಿ ಬಗ್ಗಿ ನೋಡೆ ತಂಗಿ ದಯ-
ಮಾಡೆಂದು ಹರಿಯನ್ನು ಬೇಡಿಕೊಂಡೊಯ್ದರು ನೋಡೆ ತಂಗಿ೧೨

೪೩೩
ಬಂದನು ಸರದಾರ ಸರದಾರ
ಅಂಧಕರಿಪು ಸುಕುಮಾರಪ.
ಶರಣಾಗತಜನಸುರಮಂದಾರ ದುರಿತಾರಣ್ಯಕುಠಾರ
ಸುರನರಾದಿತ್ರೈಲೋಕೋದ್ಧಾರ ಗಿರಿಜಾಂಕಾಲಂಕಾರ೧
ವಲ್ಲೀದೇವಿಮನೋಹಾರ ಒಲ್ಲದಜನಕತಿದೂರ
ಬಲ್ಲವವೇದವೇದಾಂತದ ಸಾರ ಖುಲ್ಲದನುಜ ಸಂಹಾರ೨
ಸುಕ್ಷೇತ್ರಪಾವಂಜಾಖ್ಯಪುರವರ ಸುಜ್ಞಾನನಿಧಿ ಗಂಭೀರ
ಲಕ್ಷ್ಮೀನಾರಾಯಣನ ಕಿಂಕರ ರಕ್ಷಿಸು ನಮಿತಕುಬೇರ೩

೪೩೫
ಬಂದೆ ಭಗವತ್ಪಾದಯುಗಾರ
ವಿಂದಕೆ ಮಿಳಿಂದನಾಗಿ
ವಂದನೀಯರೆ ಯತಿಕುಲಾಬ್ಧಿ
ಚಂದ್ರರ ಭುವನೇಂದ್ರತೀರ್ಥರೆ೧
ಪರಮ ಪಾವನ ಭುವನೇಂದ್ರರ
ಕರಸಂಜಾತ ವರದೇಂದ್ರರ
ಕರಸರೋರುಹಭವರೆ ಮಹಾ
ಕರುಣಾಂತಃಕರಣ ಧೀರರೆ೨
ಸುಮತೀಂದ್ರಾದಿ ಯತೀಂದ್ರರ
ವಿಮಲ ಹೃದಯಕಮಲಭಾಸ್ಕರ
ಅಮಮ ನಿಮ್ಮ ಕಾಂಬ ಯೋಗ
ಅಮಿತ ಸುಕೃತ ಭೋಗಪೂಗ೩
ಪೂರ್ಣಪ್ರಜ್ಞಾಚಾರ್ಯವರ್ಯ
ಸನ್ನುತ ಮತಧೈರ್ಯ ಧುರ್ಯ
ಧನ್ಯನಾದೆನು ನಾನಿಂದು
ಸನ್ನಿಧಾನವನು ಕಂಡೆನು೪
ಶ್ರೀಶ ಲಕ್ಷ್ಮೀನಾರಾಯಣ
ವ್ಯಾಸ ರಘುಪತಿಯ ಚರಣೋ-
ಪಾಸಕರೆ ಪಾವನರೆ
ಕಾಶೀವಇಠಾಧೀಶ್ವರರೆ ೫

೧೪೨
(ಬಪ್ಪನಾಡ ದುರ್ಗಾಪರಮೇಶ್ವರಿ)
ಬಪ್ಪನಾಡ ಭದ್ರಕಾಳಿ ತಪ್ಪು ಕ್ಷಮಿಸಿ ಸಲಹಮ್ಮ ನ-
ಮ್ಮಪ್ಪ ಶ್ರೀನಿವಾಸ ದೇವನಪ್ಪುತಾನಂದಾಬ್ಧಿಗಿಳಿದ ಪ.
ಸರಸಿಜಾಸನಾದಿ ದೇವ ವರರ ನೀನೆ ಸಲಹುವಿ
ದುರುಳ ಜನರ ತರಿದು ಭೂಮಿ ಭರವನೆಲ್ಲ ಇಳುಹುವಿ
ಹರಿಯ ನೇಮದಿಂದಲಿಂಥ ಚರಿಯ ತೋರ್ಪಮಾಯೆ ಅಲ್ಯ-
ಲ್ಲಿರುವ ಶತ್ರು ಪುಂಜವ ಕತ್ತರಿಪದೇನಾಶ್ಚರ್ಯ ತಾಯೆ ೧
ಶಂಬರಾರಿ ಪಿತನಪಾದ ನಂಬಿಕೊಂಡ ರಾತಿಯ
ಅಂಬೆ ನಿನ್ನ ಕರುಣದಿಂದ ಸಂಭವಿಸಿದ ಖ್ಯಾತಿಯ
ಡಂಬತನದ ಶುಂಭ ನೀಶುಂಭ ದಮನೆ ಶಕ್ತಿ ನಿನ-
ಗೆಂಬುದೇನು ದಾಸದಾಸನೆಂಬದರಿತು ಸಲಹು ದೇವಿ ೨
ಮೂಢಮತದಿ ಮುಂದೆ ಹೋಗಿ ಮಾಡಿದಂಥ ಕುಂದನು ಪ್ರ-
ಹುಡೆ ಕ್ಷಮಿಸಬೇಕೆಂದಿಂದು ಓಡಿ ಬಂದು ನಿಂದೆನು
ಮೂಡಲಾದ್ರಿವಾಸನಡಿಯ ಪಾಡುವನೆಂದೆನ್ನನು ಕಾ-
ಪಾಡಿ ಕಡೆಹಾಯಿಸುವದೆಂದು ಬೇಡಿಕೊಂಬೆ ಭಯಹರಾಂಬೆ ೩

೧೫೬
ಬರಿದೆ ಮೋಹದೊಳು ಬೆರೆದೆ ನಮ್ಮ
ಗುರುವಾದಿರಾಜಾರ್ಯ ಚರಣಗಳ ಮರೆದೆ ಪ.
ಸರ್ವಜ್ಞಗುರುಮತವ ನಿರ್ವಹಿಸಿ ಮಾಯಿಗಳ
ಗರ್ವವನು ಮುರಿದು ರವಿ ಶರ್ವ
ಗಣಪತಿಶಕ್ತಿ ಪೂರ್ವದೇವತೆಗಳನು
ಸರ್ವ ಪರರೆಂದೊರೆವ ದುರ್ವಾದಿಗಳ ಭಂಗಿಸಿ ಹಯವದನ-
ನೋರ್ವ ಪರ ದೈವವೆನಿಸಿ ಮೆರೆವಂಥ
ಪಾರ್ವತೀವರವಂದ್ಯಪದ ಪಾತ್ರನೆನಿಸದೆ ೧

ಅಂತರ್ಬಹಿಃಶತ್ರು ಸಂತತಿಯ ಗೆಲುವ
ಸಾಂತಕನ ಹೃದಯ ಕಮಲಾಂತದಲಿ
ತೋರಿಸುವ ಚಂತಿತಾಭೀಷ್ಟಗಳ
ನಿಂತು ಪಾಲಿಸುವ ಸುರ ಚಿಂತಾಮಣಿಯನು
ಪರಮಾಂತರಂಗದಿ ಕೊಡುವ
ಕಂತುಕೃತ ಬಾಧೆಯನ್ನು ನಿಲದಂತೆ ಸಂತೈಸಿಸುವರನ್ನು ಕಾವ ಕ-
ಲ್ಪಾಂತದಲಿ ಪವಮಾನನಾಗುವನ ಮರೆದೆ ೨
ಮೂರಾರು ಎಂಬತ್ತು ಭಾರಿ ಕಲ್ಪಗಳಲ್ಲಿ ಶ್ರೀ ರಮಾರಮಣಪದ
ವಾರಿಜಗಳನು ಭಜಿಸಿ ತೋರಿ ವೈಷ್ಣವ ತತ್ವ ಸಾರವನು ಸಮಧರಿಸಿ
ಮಾರುತನ ಮತವೆ ಮಧುವೈರಿಪ್ರಿಯಕರವೆನಿಸಿ ಧೀರ ಕವಿ
ವೀರನಾಗಿರುವ ಸೋದೆಯಲಿ ತೋರಿ ತನ್ನಿರವ
ಶುಭಕರವಜ್ಞಾನ ಸುಖ
ಸಾರ ವೆಂಕಟಪತಿಯ ಮನದಿ ಧರಿಸಿರುವ ೩

೪೫೫
ಬಾ ದೀನವತ್ಸಲ ಲಕ್ಷ್ಮೀನಿವಾಸ ಶ್ರೀವೆಂಕಟೇಶ
ಮಾಧವ ಮಧುರಿಪು ಮಾನುಷವೇಷ ಶರಣಾಗತಪೋಷಪ.
ವೇದಾಗಮ್ಯ ದಯೋದಧಿ ಗೈದಪ-
ರಾಧ ಕ್ಷಮಿಸಿ ಸುಗುಣೋದಯನಾಗುತಅ.ಪ.
ಅನಾಥ ಜನರ ಕಾಮಧೇನು ಕಾಯೊ ಎಮ್ಮನು
ದಾನವಕಾನನಕಲ್ಪಕೃಶಾನು ಸರ್ವೋತ್ತಮ ನೀನು
ಆನತಜನ ಸುತ್ರಾಣಿಸುವಂತೆ ಪ್ರ-
ದಾನಿಯಂತೆ ಶತಭಾನು ಪ್ರಕಾಶದಿ೧
ಕೋಟಿ ಬ್ರಹ್ಮಾಂಡವ ಕಾಯುವ ಮಹಿಮ ಸದ್ಗುಣಗಣಧಾಮ
ಹಾಟಕವಸನ ಕೈರವಶ್ಯಾಮ ಮುನಿಮನವಿಶ್ರಾಮ
ಕಾಟಕ ಮನಸಿನ ಮಾಟವ ನಿಲ್ಲಿಸಿ
ಘೋಟಕಾಸ್ಯ ನರನಾಟಕಧಾರಿ೨
ಸೇನಾನಾಯಕನಿಲ್ಲದ ಸೇನೆ ಕಂಡರೆ ತಾನೆ
ಭೂನಾಥಗಿಲ್ಲವೇನು ಬೇನೆ ಉಂಟೆಂಬುದು ನೀನೆ
ಕಾಣಿಸದೆಮ್ಮಲಿ ಮೌನವ ಮಾಳ್ಪರೆ
ದೀನಜನರ ದುಮ್ಮಾನಗೊಳಿಸುವರೆ ೩
ಹಿಂದೆಮ್ಮ ಕಾಯ್ದವ ನೀನೆ ಹರಿ ಸುರನರ ಕೈವಾರಿ
ಮಂದಜ್ಞಾನಿಗಳ ತಪ್ಪನು ಮಾರಿ ಮೂರ್ಲೋಕೋದ್ಧಾರಿ
ಹೊಂದಿದವರಿಗೆಂದೆಂದಿಗು ಬಿಡನೆಂ-
ಬಂದವ ತೋರಿ ಆನಂದವ ಬೀರುತ ೪
ಸರ್ಪಾದ್ರಿಯಿಂದ ಓಡಿಬಂದ ಕಾರ್ಕಳದೊಳು ನಿಂದ
ಚಪ್ಪರ ಶ್ರೀನಿವಾಸ ಮುಕುಂದ ಪರಿಪೂರ್ಣಾನಂದ
ಒಪ್ಪಿಸಿದೆಮ್ಮಭಿಪ್ರಾಯವ ತಿ-
ಮ್ಮಪ್ಪ ಲಕ್ಷ್ಮೀನಾರಾಯಣ ಸಲಿಸಲು ೫

೩೩೯
ಬಾ ಬಾ ಬಾ ಹರಿಯೇ ಮೂರ್ಲೋಕದ ದೊರೆಯೇ ಪ.
ಸರ್ವೋತ್ತಮ ಸರ್ವಾಂತರ್ಯಾಮಕ
ಸರ್ವಾಧಾರ ಪ್ರವೀರ ಶೂರವರ ೧
ನಿತ್ಯಮುಕ್ತ ಪರಿಪೂರ್ಣಗುಣಾರ್ಣವ
ಸತ್ಯನಿಯಾಮಕ ಸತ್ಯವಾದರೆ ತ್ವರೆ ೨
ರೂಪತ್ರಯ ಭವತಾಪಶಮನ ಸ-
ದ್ವ್ಯಾಪಕ ಸ್ಥಾಪಕ ಶ್ರೀ ಪುರುಷೋತ್ತಮ ೩
ಭಜಕರ ಭಾಗ್ಯನಿಧಿಯು ನೀನೆಂಬುದು
ನಿಜವಾಗಿರೆ ಶ್ರೀ ರುಜುಗಣೇಶಪತಿ ೪
ಶ್ರೀಲಕ್ಷ್ಮೀನಾರಾಯಣ ನಿರ್ಗುಣ
ಮೂಲೇಶ ಮುಕುಂದ ಮುನೀಂದ್ರವಂದಿತ ೫

೨೫೬
ಬಾಯಿಂದಾಗುವುದು ಭವಾಭವ ತಿಮ್ಮ
ರಾಯನ ನಾಮವ ನುಡಿಯುತಲಿರು ಜೀವಾ ಪ.
ರಸನೆಯ ಗೆಲಿದರೆ ವಿಷಯ ನಿವರ್ತಿಸಿ
ವಶವಾಹುದಿತರೇಂದ್ರಿಯಗಳೆಂದು
ವಸುದೇವ ಸುತನು ವಾಸವಿಗೆಂದು ನುಡಿಯ ಧ್ಯಾ-
ನಿಸುತ ಜಾಗೃತನಾಗು ಮುಸುಕಿನೊಳಿಹ ಜೀವಾ ೧
ನೋಡು ಲೋಕರಿಗಡರ್ವ ಭವ ಕಂಡು ನಿಂದೆಯ
ಮಾಡಿ ಪಿಕವದು ಕೊಂಡಾಡುವುದಾ
ಜೋಡಾ ಕರ್ಮವ ಮಾಳ್ಪ ದಿವ್ಯ ಜಿಹ್ವೆಯ ವಶ
ಮಾಡದಿದ್ದರೆ ನಗೆಗೀಡಾಹುದಿದರಿಂದ ೨
ಮಧ್ವವಲ್ಲಭನಿಗರ್ಪಿತವಾದ ನೈವೇದ್ಯ
ಶುದ್ಧ ತೀರ್ಥ ತುಳಸಿಯ ಸಹಿತ
ಮೆದ್ದರೆ ಬಹಿರಂತಃ ಶುದ್ಧಿಯಾಗುವುದು ನಿ-
ಷಿದ್ಧ ಭಕ್ಷಣದಿಂದ ನೀಚನೆಂದೆನಿಸುವ ೩
ಶ್ರೀಯರಸನ ಜಿಹ್ವೆಯಲಿ ಪೊಗಳಲು ಯಮ
ರಾಯನಾಳ್ಗಳು ನೋಡಲಂಜುವರು
ಮಾಯಾ ಪ್ರಪಂಚದಿ ಮರುಳಾದ ಜನರೊಳು
ನ್ಯಾಯವಾಡಲು ನಾನಾಪಾಯವ ಘಟಿಸುವ ೪
ಕ್ಷೇತ್ರ ಕಳತ್ರಾದಿಗಳ ಬಿಟ್ಟು ತಿರುಗುವ
ತೀರ್ಥಯಾತ್ರೆಯ ಮಾಡುವುದಕಧಿಕಾ
ಸ್ತೋತ್ರದಿಂದ ಶ್ರೀ ಕಳತ್ರನ ಕರುಣೈಕ
ಪಾತ್ರರ ಮಾಳ್ಪ ವಿಚಿತ್ರ ಸನ್ನಹವಾದ ೫
ಹಲವು ಕರ್ಮದ ಶಾಸ್ತ್ರ ನೆಲೆಯರಿಯದೆ ತ-
ತ್ಫಲವಾಗಬೇಕೆಂಬ ಛಲವಿಡೀವ
ಕಲಿಯೊಳಗುದಿಸಿದ ಜನರಿಗೆ ಗತಿಯಾಗಿ
ಜಲಜನಾಭನ ನಾಮ ನೆಲೆಯಾಗಿ ನುಡಿವಂಥ ೬
ನಾಮಕೀರ್ತನೆಗೈಯ್ಯೆ ನಲಿವುತ ಬಹ ನಮ್ಮ
ಶ್ರೀಮಹೀಯರಸ ವೆಂಕಟರಾಜನು
ಕಾಮಿತಾರ್ಥವ ನೀಡಲ್ಲಧಿಕ ಸಾಧನವಿದು
ಪಾಮರತೆಯ ಬಿಟ್ಟು ಪರಮಾರ್ಥದ ಗುಟ್ಟು ೭

೯೮
ಬಾಯೊಳುಂಗುಷ್ಟವನಿಟ್ಟ ಮಾಯಾ ನೋಡಮ್ಮ
ಶ್ರೀಯರಸ ನೀಲಮೇಘ ಛಾಯ ಕೃಷ್ಣರಾಯ ತನ್ನ ಪ.
ಕಂಜಜಾತ ಕಾಶೀಶ ಮೃತ್ಯುಂಜಯಾಯಿ ವಿಷವಲ
ಭಂಜನಾದಿಗಳೀತನಿಗಂಜಿ ಕೊಂಬುವರು
ಮಂಜುಳಾತ್ಮ ನಿಜಕರಕಂಜದಿಂದ ಪಾದವೆತ್ತಿ
ಎಂಜಲ ಮಾಡುವನು ನಿರಂಜನ ತಾ ಲೀಲೆಯಿಂದ ೧
ಪುಟಿತಹಾಟಕ ಮಣಿಘಟಿತ ಕಂಕಣಾಂಗದ
ಕಟಿಸೂತ್ರಗಳನಿಟ್ಟು ನಟನಂದದೀ
ವಟಪತ್ರಶಾಯಿವೋಷ್ಠಪುಟದಿ ಪಾದವನಿಕ್ಕಿ
ಕಟಬಾಯೊಳಮೃತವಾ ಸ್ಫುಟವಾಗಿ ಸುರಿಸುತ ೨
ಲಿಂಗದೇಹಭಂಗತಾಗಿನಂಗವನ್ನು ದೂರಗೈಸಿ
ತುಂಗಮತಿವಂತ ಋಷ್ಯ ಶೃಂಗಾದಿಗಳು
ಅಂಗೀಕರಿಸುವ ನಿತ್ಯ ಮಂಗಳ ದೇವಿಯರ
ಗಂಗೆಯ ಪಡೆದು ಶಿವಂಗ ಶುದ್ಧಿಗೈಸಿ ೩
ರಮೆಯರಸನು ತನ್ನ ಅಮ್ಮನೆಂಬ ಗೋಪಿ ಗೃಹ
ಕರ್ಮರತಳಾಗಿರಲು ಒಮ್ಮನದಿಂದ
ಅಮ್ಮರ ಗಣಾರಾಧಿತ ಕ್ಷಮೆಯನಳದ ಪಾದ
ಸುಮ್ಮಗೆ ಕರದೊಳೆತ್ತಿ ಖಮ್ಮಗಿಹದೆಂದು ತನ್ನ ೪
ಕರಪಲ್ಲವಾಧೃತ ಲೋಕವಂದ್ಯರೂಪ ಫಣಿ-
ಶೇಖರಾದ್ರಿವಾಸ ಭಕ್ತನಾಕ ಭೂರುಹ
ನೀಕರಿಸಿ ದುರಿತವ ಸೋಕದಂತೆ ನಮ್ಮನೀಗ
ಸಾಕುವ ಪರಮ ಕರುಣಾಕರ ಶ್ರೀ ಕೃಷ್ಣ ತನ್ನ ೫

೧೭೮
ಬಾರದ್ಯಾಕೊ ಕೃಪಾಧರ ದೇವ ನಿನಗೆನ್ನೊಳ್ಕರುಣಾ ಪ.
ಸರಸಿಯೊಳಂದು ಬೆದರಿದ
ಕರಿರಾಜನನು ಪೊರೆದ
ಬಿರುದ ನೀ ಮರೆವುದು ನೀತಿಯೇನೊ ವರದ ೧
ತಾಳಲಾರದಂಥ ವೇದನೆ ಇನ್ನು
ಪೇಳಲೇನು ಕಂಸಸೂದನ
ಇಳೆಯ ಮ್ಯಾಲೇಳಲಾರದಂತಾಯ್ತೆನ್ನ ಹದನ೨
ಸಂಕಟಾಬ್ಧಿ ಪರಿಶೋಷಣಾ ಶ್ರೀ
ವೆಂಕಟೇಶ ಚಕ್ರಭೂಷಣ
ಕಿಂಕರರಾತಂಕವನ್ನು ದೂರಿಸುತಿಹದಯ್ಯ ೩

೩೭೨
ಬಾರಮ್ಮ ಸರಸ್ವತಿ ಬಾ ದ್ರುಹಿಣಯುವತಿ
ಬಾ ನಿರ್ಮಲಮತಿ ತೋರಿ ಭಾರತಿ ಪ.
ಅಜನ ಪಟ್ಟದ ರಾಣಿ ಭುಜಗ ಸದೃಶ ವೇಣಿ
ಭಜಕರ ಚಿಂತಾಮಣಿ ಕೀರವಾಣಿ ೧
ವೇದಾಂತರಂಗಿಣಿ ನಾದಸ್ವರೂಪಿಣಿ
ಪ್ರಾದುರ್ಭವಳಾಗು ಸಾಧ್ವೀಕಲ್ಯಾಣಿ ೨
ಅಕ್ಷಯ ಸುಖಭಾಷೆ ಆಶ್ರಿತಕಜನಪೋಷೆ
ಲಕ್ಷ್ಮೀನಾರಾಯಣನ ಸೊಸೆ ಸುವಿಲಾಸೆ ೩

೯೭
ಬಾರೊ ಮನಕೆ ಮುರಾರಿ ಗೋಪಾಲಕೃಷ್ಣ ಬಾರೊ ಬೇಗ ಹದಿ-
ನಾರು ಸಾವಿರದ ನೂರೆಂಟು ನಾರೇರ ಮನೋಹರ ಪ.
ಬಿಂಬರೂಪ ಕರುಣಾಂಬುಧಿ
ನೀಯೆನಗಿಂಬೆಂದರಸುತ ನಂಬಿಹೆನು
ಅಂಬುಜಜನಿ ಶಿವ ಶಂಬರಾರಿಗಳ
ಸಂಬಾಳಿಸುತಿಹ ದೊರೆ ನೀನು
ತುಂಬಿದ ದುರಿತಾಡಂಬರ ಓಡಿಸಿ
ಬೆಂಬಲನಾಗಿರು ಕಂಬ್ವರಧರನೆ೧
ಹಲವು ಭವಗಳಲಿ ಗಳಿಸಿದ ದುಷೃತ
ಬಲೆಯನು ಕೆಡವುತ ಬೇಗದಲಿ
ತಳಮಳಗೊಳಿಸುವ ದೈಹಿಕ ಬಾಧೆಯ
ಕಳದನುಗಾಲವು ಕಾವುತಲಿ
ಸುಲಲಿತ ವಕ್ಷಸ್ಥಳದಲಿ ಭಾರ್ಗವಿ
ಲಲನೆಯನಿರಿಸಿದ ನಳಿನಜ ಜನಕಾ ೨
ಇನ್ನು ಪರೀಕ್ಷಿಪುದುಚಿತವೆ ಸುರಗಣ
ಮಾನ್ಯ ಪರಾಪರ ಮೂರುತಿಯೆ
ನಿನ್ನ ದಾಸರನು ನೀನುಪೇಕ್ಷಿಪುದು
ಚಿನ್ಮಯ ನಿನಗಿದು ಕೀರುತಿಯೆ
ಪನ್ನಗ ಗಿರಿವರ ಪದಯುಗ ಪದ್ಮಗ-
ಳೆನ್ನ ಶಿರದೊಳಿಸುನ್ನತ ಕರುಣದಿ ೩

೪೩೨
ಬಾರೋ ಬಾರೋ ಮನುಕುಲಗುರುಗುಹಾ
ಸೇರಿದಾನತರ್ಗೆ ಚಾರುಸುರಭೂರುಹಪ.
ಮಾನಾಭಿಮಾನ ನಮ್ಮದು ನಿನ್ನಾಧೀನ
ದೀನಜನರ ಸುರಧೇನು ಮಹಾಸೇನ೧
ಶಕ್ತಿ ಕುಕ್ಕುಟವಜ್ರಾಭಯ ಚತುರ್ಭುಜನೆ
ಭಕ್ತಿಜ್ಞಾನವನೀಯೋ ಶಂಕರಾತ್ಮಜನೆ ೨
ಲಕ್ಷ್ಮೀನಾರಾಯಣನ ಧ್ಯಾನಾಭರಣ
ಸುಕ್ಷೇತ್ರಪಾವಂಜಾಧ್ಯಕ್ಷ ರವಿಕಿರಣ೩

೩೩೮
ಬಾರೋ ವೆಂಕಟಗಿರಿನಾಥ| ದಯ-
ದೋರೈ ಭಕುತರ ಪ್ರೀತ ಪ.
ಮಾರಪಿತ ಗುಣಹಾರ ಮಂದರ-
ಧಾರ ದೈತ್ಯಸಂಹಾರ ಸುಜನೋ
ದ್ಧಾರ ಮಮಹೃದಯಾರವಿಂದಕೆ
ಬಾರೋ ಕೃಪೆದೋರೋ ವೆಂಕಟ ಅ.ಪ.
ವೃಷಭಾಸುರನೊಳು ಕಾದಿ ಸಾ-
ಹಸವ ಮೆರೆಸಿದ ವಿನೋದಿ
ವಶಗೈದು ದೈತ್ಯನ ಶಿರವ ಕತ್ತ-
ರಿಸುತಲಿ ನೀನಿತ್ತೆ ವರವ
ವಸುಧೆಯೊಳಗಿಹ ಸುಜನರನು ಮ-
ನ್ನಿಸುತಲಿಷ್ಟವನಿತ್ತು ಕರುಣಾ-
ರಸದಿ ಸಲಹುವ ಬಿಸಜನಾಭ ಶ್ರೀ-
ವೃಷಭಾಚಲವೊಡೆಯ ವೆಂಕಟ ೧
ಅಂಜನೆಯೆಂಬಳ ತಪಕೆ ಭಕ್ತ-
ಸಂಜೀವನೆಂಬ ಶಪಥಕೆ
ರಂಜಿಪ ಪದವಿತ್ತೆ ಮುದದಿ ಖಿಲ-
ಭಂಜನಮೂರ್ತಿ ಕರುಣದಿ|
ಮಂಜುಳಾಂಗ ಶ್ರೀರಂಗ ಸುರವರ
ಕಂಜಭವವಿನುತಾದಿ ಮಾಯಾ-
ರಂಜಿತಾಂಘ್ರಿ ಸರೋರುಹದ್ವಯ
ಅಂಜನಾಚಲವೊಡೆಯ ವೆಂಕಟ ೨
ಶೇಷನ ಮೊರೆಯ ತಾ ಕೇಳಿ ಬಲು
ತೋಷವ ಮನಸಿನೊಳ್ತಾಳಿ
ದೋಷರಹಿತನೆಂದೆನಿಸಿ ಕರು-
ಣಾಶರಧಿಯ ತಾನೆ ಧರಿಸಿ
ಶ್ರೀಶ ಹರಿ ಸರ್ವೇಶ ನತಜನ-
ಪೋಷ ದುರ್ಜನನಾಶ ರವಿಶತ-
ಭಾಸ ಕೌಸ್ತುಭಭೂಷ ವರ ಶ್ರೀ-
ಶೇಷಾಚಲವಾಸ ವೆಂಕಟ ೩
ಮಾಧವವಿಪ್ರ ವಿರಹದಿ ಭ್ರಷ್ಟ
ಹೊಲತಿಗಳನು ಸೇರ್ದ ಮುದದಿ
ಸಾದರದಲಿ ನಿನ್ನ ಬಳಿಗೆ ಬರೆ
ನೀ ದಯಾನಿಧಿ ಕಂಡು ಅವಗೆ
ಶೋಧಿಸುತ ಪಾಪಗಳೆಲ್ಲವ
ಛೇದಿ ಬಿಸುಡುತ ನಿಂದು ವೆಂಕಟ-
ಭೂಧರದ ನೆಲೆಯಾದ ನಾದವಿ-
ಭೇದಬಿಂದು ಕಲಾದಿಮೂರುತಿ ೪
ಧನಪತಿಯೊಳು ತಾನು ಸಾಲ ಕೊಂಡ
ಘನಕೀರ್ತಿಯಿಂದ ಶ್ರೀಲೋಲ
ವನಿತೆ ಪದ್ಮಾವತಿಪ್ರೀತ ಭಕ್ತ-
ಜನಸುರಧೇನು ಶ್ರೀನಾಥ
ವನಧಿಶಯನ ಮುರಾರಿ ಹರಿ ಚಿ-
ಧ್ವನಿನಿಭಾಂಗ ಸುಶೀಲ ಕೋಮಲ
ವನಜನಾಭ ನೀಯೆನ್ನ ಕೃಪೆಯೊಳ-
ಗನುದಿನದಿ ಕಾಯೊ ಕೃಪಾಕರ ೫
ಛಪ್ಪನ್ನೈವತ್ತಾರು ದೇಶದಿಂದ
ಕಪ್ಪವಗೊಂಬ ಸರ್ವೇಶ
ಅಪ್ಪ ಹೋಳಿಗೆಯನ್ನು ಮಾರಿ ಹಣ-
ಒಪ್ಪಿಸಿಕೊಂಬ ಉದಾರಿ
ಸರ್ಪಶಯನ ಕಂದರ್ಪಪಿತ ಭಜಿ-
ಸಿರ್ಪವರ ಸಲಹಿರ್ಪ ಕುಜನರ
ದರ್ಪಹರಿಸುತ ಕಪ್ಪಕಾಣಿಕೆ
ಒಪ್ಪಿಗೊಂಬ ತಿಮ್ಮಪ್ಪಶೆಟ್ಟಿಯೆ ೬
ಚಾರುಚರಣತೀರ್ಥವೀಂಟಿ ನಿನ್ನೊ-
ಳ್ಸಾರಿ ಬರುವ ಪುಣ್ಯಕೋಟಿ
ಸೇರಿದೆ ಕೊಡು ಮನೋರಥವ ಲಕ್ಷ್ಮೀ-
ನಾರಾಯಣನೆನ್ನೊಳ್ದಯವ
ತೋರು ನಿರತ ಸಮೀರಭವ ವರ-
ದಾರವಿಂದದಳಾಕ್ಷ ತಿರುಪತಿ
ವೀರ ವೆಂಕಟರಮಣ ಮದ್ಬಹು-ಭಾರ ನಿನ್ನದು ಪಾಲಿಸೆನ್ನನು ೭

೩೧೭
ಬಾಲಗಜಾನನ ಬಾ ಗುಣಸದನ
ಪಾಲಿತ ತ್ರಿಭುವನ ಬಾಲ ಜಗಜ್ಜೀವನ ಪ.
ರಾಧಾದೇವಿಯಾರಾಧಿಸಿದಳು ನಿನ್ನ
ಆದಿಯೊಳ್ ಕೈಕೊಂಬೆ ಮೋದದಿಂದ ಪೂಜನ ೧
ವಿಘ್ನವಿಭಂಜನ ವಿಧಿಸುರ ರಂಜನ
ಅಗ್ನಿ ಗರ್ಭನಗ್ರಜ ಅಖುವಾಹನ ಮೋಹನ ೨
ಪ್ರಿಯ ಶ್ರೀ ಲಕ್ಷುಮಿನಾರಾಯಣಶರಣ
ಕಾಯೊ ಕಾಮಿತಫಲದಾಯಕ ಸುಮನ ೩

೨೬೪
ಬಿಟ್ಟೆಯಾ ಸ್ವಾಮಿ ಎನ್ನ ಬಿಟ್ಟೆಯಾ
ಬಿಟ್ಟೆಯಾ ಎನ್ನ ಜೀಯ ವ್ಯರ್ಥ ಪ.
ಕೊಟ್ಟೆಯಾ ದುರಿತದ ಕಯ್ಯ ಅಹ
ಕಟ್ಟ ಕಡೆಗು ಕಾವ ನೀನೆಂದು ನಂಬಿಕೆ
ಇಟ್ಟ ದಾಸನ ಇಂಥ ಬಟ್ಟೆಯೊಳಗೆ ದೂಡಿ ಅ.ಪ.
ಅನ್ಯರಿಗಳುಕದ ಶೌರ್ಯ
ಸ್ವಜನೋನ್ನತವಾದ ಗಾಂಭಿರ್ಯ ಜನ
ಸನ್ನುತವಾಗಿಹುದಾರ್ಯ
ನಿನ್ನ ಸನ್ನುತಿ ಗೃಹ ಚಾತುರ್ಯಗಳ
ತನ್ನಂತೆ ಕರುಣಿಸಿ ತಾವಕನೆನಿಸಿರೆ
ಕುನ್ನಿಯ ಮರಿಗಿಂತ ಕಡೆಮಾಡಿ ದಾರಿಯೊಳ್ ೧
ತಲ್ಪದಿಂದೆದ್ದವಸರದಿ ಬೊಮ್ಮ-
ಕಲ್ಪೇಶ ನೀನಿಟ್ಟ ಕ್ರಮದಿ ಸ್ವಲ್ಪ
ಸ್ವಲ್ಪವಾದರು ಕವರ್ಇ ನೆವದಿ ನಾನಾ
ಕಲ್ಪ ಪೂಜೆಯಗೈದು ಮುದದಿ ಶೇಷ
ಕಲ್ಪೇಶ ನಿನಗೆ ಸಮರ್ಪಿಸಿ ಬಾಳ್ದನ-
ನಲ್ಪ ಜನರಿಗೆ ನಿತ್ಯಾಲ್ಪರಿವೊಲ್ಮಾಡಿ ೨
ಬಂದ ಸಜ್ಜನರನು ನೋಡಿ ಮಾನ-
ದಿಂದ ಕುಳ್ಳಿರಿಸಿ ಮಾತಾಡಿ ಮತ್ತೆ-
ನ್ನಿಂದಾದ ಸತ್ಕಾರ ಮಾಡಿ ತಿಳಿ-
ದಂದದಿ ನಿನ್ನನು ಪಾಡಿ ಇದೆ
ಮುಂದೆ ತಾರಕವೆಂದಾ ನಂದಗೊಡಿರಲೆನ್ನ
ಹಂದಿಯಂದದಿ ಮೂಲೆ ಹೊಂದಿಸಿ ಕೆಡ ಹಾಕಿ ೩
ಸಂಧ್ಯಾದಿಗಳನೆಲ್ಲ ಬಿಟ್ಟು ಅನ್ನ
ತಿಂದು ಬೀಳುವೆ ಲಜ್ಜೆಗೆಟ್ಟು ರೋಗ
ಬಂಧಿತ ನರಗಳ ಕಟ್ಟು ಶೂಲ
ದಂದದಿ ಬೀಳುವ ಪೆಟ್ಟು ಇನ್ನು
ಮುಂದೆ ಸಹಿಸಲಾರೆ ಮೋಚಿಸು ಹಾಗಾ-
ದಂದ ಕಾಲಕೆ ಪದ ಹೊಂದಿಸಿಕೊಳದೆನ್ನ ೪
ಮರೆಯಲಿಲ್ಲೆಂದಿಗೂ ನಿನ್ನವೆಂಬು-
ದರಿಯೆಯ ಲೋಕಪಾವನ್ನ ಇನ್ನು
ಕರುಣ ಬಾರದ್ಯಾಕೊ ರನ್ನ ಶೇಷ
ಗಿರಿವರ ನಿತ್ಯ ಪ್ರಸನ್ನ ಬಹು
ಕರಗುತ ಕಣ್ಣೀರ ಸುರುವಿದ ಮಾತ
ಮರೆವುದುಚಿತವಲ್ಲ ಪರಮ ದಯಾಂಬುಧಿ ೫

೨೩೭
ಬಿಡದಿರು ಕೈಯ್ಯ ರಂಗ ಒಡೆಯ ಶ್ರೀ ನರಸಿಂಗ
ಬಡವನ ಮೇಲಪಾಂಗವಿಡುರಮಾಲಿಂಗಿತಾಂಗ ಪ.
ನುಡಿವ ಮಾತುಗಳ ನಿನ್ನಡಿಗಳ ಸ್ತವವೆಂದು
ಒಡಂಬಡೊ ನಿಜ ದಾಸ ಭಿಡೆಯ ಮೀರದ ದೇವ ೧
ವಾರಿಜನಾಭ ನಿನ್ನ ಪ್ರೇರಣೆಯಿಂದ ಸರ್ವ
ಧಾರುಣಿವರರ ದಯಾರಸ ದೊರೆವುದು ೨
ಅಂಬುಜಾಲಧರಬಿಂಬಫಲಾಮೃತ
ಚುಂಬನಲೋಲ ನೀ ಬೆಂಬಲಾಗಿರು೩
ಹರಿ ನಿನ್ನ ಕೃಪಾರಸವಿರಲು ಚತುರ್ವಿಧ
ಪುರುಷಾರ್ಥವೆಲ್ಲ ಸೇರಿ ಬರುವದೆಂದರಿದೆನು ೪
ದುರಿತರಾಶಿಗಳನ್ನು ತರಿವರೆ ಶಕ್ತನಾದಪರಮಪಾವನ ಶೇಷಗಿರಿವರನೆಂದೆಂದಿಗು ೫

೧೭
ಬಿಡು ಬಿಡು ಚಿಂತೆಯ ಮೂಢಾ ನ-
ಮ್ಮೊಡೆಯನುಪೇಕ್ಷೆಯ ಮಾಡ
ಬಡವರ ತಪ್ಪನು ನೋಡ ಸಂ-
ಗಡಲಿಹ ಗರುಡಾರೂಢ ಪ.
ನೆನೆವರ ಮನದಲ್ಲಿರುವ ನಿಜ
ಜನಕೆ ದಯಾರಸ ಸುರಿವ
ಕನವಿಕೆ ಎಂಬುದ ತರಿವ ಸ್ಮರ
ಜನಕ ಸಿರಿಯ ಕರೆತರುವ ೧
ಮಾಡುವ ಕರ್ಮಗಳೆಲ್ಲ ಫಲ
ಕೊಡಿಸುವನು ಸಿರಿನಲ್ಲ
ರೂಢಿಪರೊಳಗಿರಬಲ್ಲ ಬೇ-
ರಾಡುವ ಮಾತೇನಿಲ್ಲ ೨
ನೋಡಲು ಸಿಕ್ಕುವನಲ್ಲ ಬೇ-
ಗೋಡಿ ಪಿಡಿಯಲೊಶನಲ್ಲ
ದೂಡುವ ದೈತ್ಯರನೆಲ್ಲ ದಯ
ಮಾಡಲಿವಗೆ ಸರಿಯಿಲ್ಲ ೩
ಸರ್ವತ್ರದಲಿ ಸ್ಮರಿಸುವನು ರಿಪು
ಪರ್ವತಗಣ ದುಶ್ಚ್ಯವನ
ಗರ್ವಿ ದೈತ್ಯವನದವನ ಸುರ
ಸಾರ್ವಭೌಮನೆಂಬುವನ ೪
ಸತಿಸುತ ಗ್ರಹ ಭೂಧನಕೆ ಶ್ರೀ-
ಪತಿಯೆ ಪಾಲಕನಿದಕೆ
ವ್ಯಥೆಗೊಳದಿರು ದಿನದಿನಕೆ ಸ-
ಮ್ಮತಿನಹಿಗಿರಿಪತಿ ಘನಕೆ ೫

೧೨೦
ಬಿಡೆನು ನಿನ್ನಯ ಪಾದವಾ ಮುಖ್ಯ ಪ್ರಾಣ ಬಿಡೆನು ನಿನ್ನ ಪಾದಾ
ಕಡಲ ಹಾರಿದೆನೆಂಬ ಸಡಗರದಿಂದೆನ್ನ ಕಡೆಹಾಯಿಸದೆ ಬೇಗ ಪ.
ಹದಿನಾಲ್ಕು ಲೋಕದೊಳು ವ್ಯಾಪಕವಾಗಿ
ಮುದದಿಂದ ಹಂಸ ಮಂತ್ರವ ಜಪಿಸುತ
ಮಧುವೈರಿಯನು ಒಲಿಸಿ ಕಡೆಗೆ ಅಜ-
ಪದವನೈದುವಿ ಸುಖದಿ
ವಿಧುಕಳಾಧರ ವಾಸವಾದ್ಯರ ಮುದದಿ ರಕ್ಷಿಸಿ ದೈತ್ಯ ಪುಂಜವ
ಸದೆದು ಪಾಪವನೊದೆದು ಬಲತತಿಗಧಿಪನೆನಿಪ
ವಿಬುಧ ಗಣಾರ್ಚಿತ ೧
ಮತಿವಂತನಾದಮ್ಯಾಲೆ ತ್ವತ್ಪಾದವೇ
ಗತಿಯೆಂದು ನಂಬಿಹೆನು ನೀ-
ನಿತ್ತ ಶಕುತಿಯಿಂದ ಪೂಜೆಯನು ಮಾ-
ಡುತ ನಿನ್ನ ಪ್ರತಿಮೆಯ ನಮಿಸುವೆನು
ವಿತತ ಮಹಿಮನೆ ಪೂರ್ವಭವ ದುಷ್ರ‍ಕತಗಳೆನ್ನನು
ಪತನಗೊಳಿಪದನತುಳ ನೀ ನೋಡುತ್ತ
ಎನ್ನನು ಜತನಮಾಡದೆ ವಿತಥ ಮಾಳ್ಪರೆ ೨
ಹಿಂದೆ ತ್ರೇತಾಯುಗದಿ ಈ ಧರಣಿಗೆ
ಬಂದು ನೀ ಕಪಿರೂಪದಿ ಅರ-
ವಿಂದ ಬಾಂಧವನನು ಸೇರಿದಿ
ಇಂದ್ರ ನಂದನನಿಂಗೆ ರಾಜ್ಯವ
ಇಂದಿರೇಶನ ದಯದಿ ಕೊಡಿಸಿ ಪು-
ರಂದರಗೆ ವರವಿತ್ತ ಬಲದಶ ಕಂಧರನ ಜವದಿಂದ ಗೆಲಿದನೆ ೩
ಸೋಮಕುಲದಲಿ ಜನಿಸಿ ದ್ವಾಪರದಲ್ಲಿ
ಭೀಮನನೆನಿಸಿ ಕೀಚಕರ ನಿ-
ರ್ನಾಮ ಗೊಳಿಸಿ ಜಯಿಸಿ
ಕಿಮ್ಮೀರ ಬಕಮಾಗಧರ ಸೀಳಿಸಿ
ಸಾಮಗಾಯನ ಲೋಲಕೃಷ್ಣನ ಪ್ರೇಮ ರಸಪೂರ್ಣೈಕ ಪಾತ್ರನಿ-
ರಾಮಯನೆ ಧೃತರಾಷ್ಟ್ರತನಯಸ್ತೋಮವನು ತರಿದಮಲರೂಪ ೪
ಕಡೆಯಲಿ ಕಲಿಯುಗದಿ ನೀ ಯತಿಯಾಗಿ
ಮೃಡನ ತರ್ಕವ ಖಂಡಿಸಿ ಜ್ಞಾನಾ
ನಂದಕದಲಿ ಕೃಷ್ಣನ ಸ್ಥಾಪಿಸಿ ಮಾಯಿಗಳನ್ನು
ಬಡಿದು ದೂರದಲೋಡಿಸಿ
ಪೊಡವಿಗಧಿಪತಿ ಪಾವನಾತ್ಮಕ ಒಡೆಯ ಶೇಷಾಚಲನಿವಾಸನ
ದೃಢ ಭಜಕ ಜನ ಸೇವ್ಯನೆಂದಡಿಗಡಿಗೆ
ಮೆರದನೆ ತಡವ ಮಾಡದಲು ೫

೪೨೫
ಬಿನ್ನಪ ಲಾಲಿಸಯ್ಯ ಭಕ್ತಪರಾಧ-
ವನ್ನು ಕ್ಷಮಿಸಬೇಕಯ್ಯ ಪ.
ಅನ್ಯಾಯ ಕಲಿಕಾಲಕ್ಕಿನ್ನೇನು ಗತಿ ಸುಪ್ರ-
ಸನ್ನ ನೀನಾಗು ಸುಬ್ರಹ್ಮಣ್ಯ ಪಾವನಚರಿತಅ.ಪ.
ಮಕ್ಕಳ ಮಾತೆಯಂದದಿ ಕಾಯುವ ಮಹ-
ದಕ್ಕರದಿಂದ ಮುದದಿ
ಸೊಕ್ಕಿನಿಂ ನಡೆವರ್ಗೆ ತಕ್ಕ ಶಿಕ್ಷೆಯನಿತ್ತು
ರಕ್ಕಸಾರಿಯೆ ಹಿಂದಿಕ್ಕಬ್ಯಾಡೆಮ್ಮನು
ದಿಕ್ಕಿಲ್ಲದವರ ಧಿಕ್ಕಾರ ಗೈದರೆ
ಮಿಕ್ಕವರೆಮ್ಮನು ಲೆಕ್ಕಿಪರಿಲ್ಲ ದೇ-
ವರ್ಕಳಮಣಿ ನಿನಗಕ್ಕಜವಲ್ಲವು
ಕುಕ್ಕುಟಧರವರ ಮುಕ್ಕಣ್ಣತನಯ೧
ಜಾತಿ ನೀತಿಯನು ಬಿಟ್ಟು ಡಾಂಭಿಕತನದ
ರೀತಿಗೆ ಪ್ರೀತಿಪಟ್ಟು
ಸೋತು ಹಣವ ಕೊಟ್ಟು ಖ್ಯಾತರೆಂಬುವ ಗುಟ್ಟು
ಮಾತು ಮಾತಿಗೆ ತೋರಿ ಘಾತವ ಗೈವರ್ಮೀರಿ
ಯಾತುಧಾನರ ಗುಣ ಯಾತಕ್ಕರಿಯದು
ಭೂತೇಶ್ವರಸಂಜಾತ ಸುರನರ-
ವ್ರಾತಾರ್ಚಿತ ಪುರಹೂತಸಹಾಯಕ
ನೂತನಸಗುಣವರೂಥ ಪುನೀತ೨
ಯಾವ ಕರ್ಮದ ಫಲವೋ ಇದಕಿ-
ನ್ಯಾವ ಪ್ರಾಯಶ್ಚಿತ್ತವೋ
ಯಾವ ವಿಧವೊ ಎಂಬ ಭಾವವರಿತ ಪುರುಷ
ಈ ವಸುಧೆಯೊಳಿಲ್ಲ ಶ್ರೀವಾಸುದೇವ ಬಲ್ಲ
ದೇವ ಲಕ್ಷ್ಮೀನಾರಾಯಣನ ಪಾದ
ಸೇವಕನೀ ಮಹಾದೇವನ ಸುತ ಕರು-
ಣಾವಲಂಬಿಗಳ ಕಾವ ನಮ್ಮಯ ಕುಲ-
ದೇವ ವಲ್ಲೀಪತಿ ಪಾವಂಜಾಧಿಪ೩

೯೨
ಬೇಗ ಬಾರೊ ಕರುಣಾವಾರಿಧೆ
ಕೃಪೆ ದೋರೊ ನಿನ್ನನು ಸೇರಿದೆ ಪ.
ಜನಕನ ವಲಿಸಿದ ಜಾನಕಿ ವರದ
ಕನಕ ವಿಭೂಷಣ ಕಲ್ಮಷಹರ ಬೇಗ ೧
ದಶಮುಖ ಭಂಜನ ದೈವತರಂಜನ
ಶಶಿಮುಖ ಸೀತಾರಮಣ ನಿರಂಜನ ೨
ಅರಿಗಣ ಕರ್ಷಣ ಅದ್ಭುತ ದರ್ಶನ
ಪರಮ ಪುರುಷ ಶೇಷಗಿರಿಯ ಭೀಮರ್ಶನ ೩

ಆಕ್ರಮದಲ್ಲಿ ಬರುವ ಭಯಂಕರ
೧೮೪
ಬೇಗ ಬಾರೊ ಹರಿ ಕಂಸಾರಿ ಬೇಗ ಬಾರೋ ಹರಿ
ಬೇಗ ಬಾರೊ ಭವರೋಗ ಭೇಷಜ ಕೃಷ್ಣ ಪ.
ಸಾಗರ ಶಯನ ಮನೋಗತ ಫಲಕಾರಿ
ಅಕ್ರಮದಲಿ ಬರುವ ಭಯಂಕರ
ವಕ್ರ ಮುಖವ ತೋರುವ
ನಕ್ರದಂತಿ ಹರಿವು ಚಕ್ರವ ಕರಧೃತ
ಚಕ್ರದಿ ತರಿದು ಪರಾಕ್ರಮವ ತೋರಿ ೧
ದಾಸರ ರಕ್ಷಿಪುದು ಎಂದಿಗು ಶ್ರೀನಿ-
ವಾಸ ನಿನ್ನಯ ಬಿರುದು
ದ್ವೇಷಿ ಜನರ ಮೂಲ ನಾಶಗೈದನುಗಾಲ
ಶ್ರೀಶತ್ವದ ಸೇವಾವಾಸನ ಬೆಳಸುತ್ತ ೨
ನೀ ನೆಟ್ಟು ಬೆಳಸಿರುವ ವೃಕ್ಷವನು ನಿ-
ಧಾನದಿಂದಲಿ ಪೊರವ
ಮಾನ ನಿನ್ನದು ಪದ್ಮಮಾನ ವೆಂಕಟರಾಜ
ದೀನ ಬಂಧು ನಿನಗೇನ ಪೇಳುವದಿನ್ನು ೩

೧೪೬
(ಸುಬ್ರಹ್ಮಣ್ಯ ಸ್ತೋತ್ರ)
ಬ್ರಹ್ಮಣ್ಯ ಪುಂಜವನ್ನು ಕಾವಾ ಮೊರೆಯ ಕೋಳೂ ಸು-
ಬ್ರಹ್ಮಣ್ಯಕ್ಷೇತ್ರಪಾಲದೇವಾ ಪ.
ಶ್ರೀಶನ ಕರುಣ ಪೂರ್ಣಪಾತ್ರ ಷಡ್ವಕ್ತಪಾರ್ವ
ತೀಶಸಂಪ್ರೀತಿಕಾರಿಪತ್ರ ಸುರನಿಕರ ಭಯತ್ರ
ಸೂಸುತ ದೇಹದಿ ವಾಸವಾಗಿಹ ತ್ವ-
ಗ್ದೋಷವ ತರಿವ ಮಹಾಸುರ ದಾರಿ೧
ಸಾಂಬಾಸನತ್ಕುಮಾರನೆನಿಸಿ ಸಾಂಖ್ಯಾಯೋಗಗಳ
ನಂಬಿದ ಭಕ್ತ ಜನಕೆ ಸಲಿಸಿ ದೈತ್ಯರ ಜವಗೆಡಿಸಿ
ಜಾಂಬವತೀವದನಾಂಬುಜ ವಿಕಸನ
ಕುಂಬುಜನಾಭ ಕುಟುಂಬಾಭರಣೀ ೨
ಶೇಷಾದ್ರಿವಾಸಲಕ್ಷ್ಮೀಪತಿಯ ಪೂರ್ಣಾನುಗ್ರಹದಿ
ವಾಸುಕಿಗೊಲಿದು ವಿಪ್ರತತಿಯ ಸಲಹುವ ಭೂಪತಿಯ
ದೋಷವಾರಿ ಧಾರಾತೀರದಲಿ
ನಿವಾಸಗೊಂಡ ನಿನ್ನಾಶ್ರಯ ಕರುಣಿಸು ೩

೨೩೯
(ಬ್ರಹ್ಮಾಂಡ ಪುರಾಣದ ಕರುಣಾಕರ ಸ್ತೋತ್ರದ ಅನುವಾದ)
ಭಾರತಿ ರಮಣ ಹೃತ್ಕಂಬುಜ ಸಂಸ್ಥಿತ
ಶ್ರೀ ರಮಣನೆ ನಮೋ ಎಂದು
ಪುರಾಣ ಬ್ರಹ್ಮಾಂಡದೊಳಗಿನ ಹರಿಕರುಣಾರಸ
ನುತಿ ಪೇಳ್ವೆನಿಂದು ಪ.
ಬೇಡುವೆ ಕರುಣಾವಾರಿಧಿಯೆಂದಿಗೆ
ನಿನ್ನನು ದೂಡದಿರನ್ಯರ ಬಳಿಗೆ
ನೀಡು ನಿನ್ನಯ ಪಾದ ಕಮಲದಿ ರತಿಯ
ಕಾಪಾಡು ದೇಹವ ದಾಢ್ರ್ಯದೊಳಗೆ ೧
ಈಶನು ನೀ ಎನಗೆಂದಿಗು ನಿನ್ನ ದಾಸನಾದುದರಿಂದ
ಕೋಪಾಕ್ರೋಶವಾದರು ಬೇರೊಬ್ಬರ ಕಾಣೆ
ಪೋಷಕರನು ಕೃಪೆಯಿಂದ ೨
ಕರುಣಾವಾರಿಧಿ ನೀನು ತುಷ್ಟನಾಗಿರೆ
ಎನ್ನ ಭರಣಕನ್ಯರಸಡ್ಯೆಯೇನು
ಹರಿಯೆ ನೀ ರುಷ್ಟನಾದರೆ ಕಾವಲುಂಟೆ
ಕಂಬುರುಹಾಕ್ಷಾಶ್ರಿತ ಕಾಮಧೇನು ೩
ನಿನಗೆಣೆಯಿಲ್ಲ ತಪ್ಪುಗಳ ಕ್ಷಮಿಸುವಲ್ಲಿ
ಫಣಿರಾಜಶಯನ ಶ್ರೀಕಾಂತ
ಗುಣಹೀನ ವಂಚಕ ಗೂಢ ಕೃತಘ್ನರೊಳೆಣೆಯಿಲ್ಲ
ಎನಗೆ ಸಿದ್ಧಾಂತ ೪
ಕಲ್ಕಿರುವ ಸ್ವಾಪಲ್ಕಿವರದ ನಿನ್ನ ಶುಲ್ಕದಾಸಗೆ ಭಯವಿಲ್ಲ
ಫಲ್ಕಸ ಪಾವನ ಮನದಿ ನೀಯಿರಲನ್ಯ ಕಲ್ಕಗಳುಂಟೆ ಭೂನಲ್ಲ ೫
ಅಚ್ಚುವ ಅಖಿಳೇಶ ನೀ ನೀಡಲರಿಯದ
ಹೆಚ್ಚಾದರ್ಥಗಳುಂಟೆ ಪೇಳು
ತುಚ್ಛ ಸುಖಗಳ ನಾ ಬಯಸಲು
ತಡಮಾಳ್ಪದಾಶ್ಚರ್ಯ ಕೇಳು ದಯಾಳು ೬
ತಾಯೆ ತನ್ನಣುಗಗೆ ಗರವನಿಕ್ಕೆ ಬೇರೆ ಕಾಯುವರುಂಟೆ ಬೇಗದಲಿ
ಶ್ರೀಯರಸನೆ ನೀನೆ ದಯೆದೋರದಿರಲನ್ಯುಪಾಯವಪ್ಪುದೆ
ಲೋಕದಲಿ ೭
ಭೂತಳದೊಳು ನೀನೆ ದಾತ ಪರಿತ್ರಾತ ಜ್ಞಾತದಯಾನ್ವಿತನೆಂದು
ಕಾತರಗೊಂಡು ಬೇಡುವೆನು ಮನೋರಥವಾತು
ಪಾಲಿಸು ಗುಣಸಿಂಧು ೮
ಸರ್ವತ್ರಾಸ ಮದೃಗುದಾರ ಗುಣಾಬ್ಧಿ
ನೀ ನಿರ್ವಹಿಸುವಿಯೆಂದು ತಿಳಿದೆ
ಶರ್ವವಂದಿತ ಲಕ್ಷ್ಮೀರಮಣ ಯಾತಕೆ ಸುಮ್ಮನಿರ್ವಿ
ಎನ್ನಯ ವಾರ್ತೆಗೊಳದೆ೯
ಆರ್ತ ಬಾಂಧವನೆಂಬ ಶಾಶ್ವತ ಬಿರುದನು ವ್ಯರ್ಥ
ನೀ ಬಿಡದಿರು ಹರಿಯೆ
ಸ್ವಾರ್ಥಾಭಿಲಷಿತವ ಸಾಧಿಪದು ಚಿತ್ತ
ಸರ್ವಾರ್ಥದಾಯಕ ಎನ್ನ ದೊರೆಯೆ ೧೦
ಇಂದಿರೇಶ ದೀನಬಂಧು ದಯಾಸಿಂಧು
ಎಂದು ಪೇಳ್ದೆದು ಶ್ರುತಿ ನಿಂದು
ನೊಂದೆನು ಭವ ಕಡಲಿಂದ ಮೇಲೆತ್ತು ಮುಕುಂದ
ಬೇಗ ಓಡಿ ಬಂದು ೧೧
ನರಹರಿರೂಪದಿ ತರಳನ ಕಾಯ್ದ ಶ್ರೀವರ
ಎನ್ನೊಳ್ಯಾಕೆ ನಿರ್ದಯವು
ಸುರಗೆಯ್ಯೆ ಕೀರ್ತಿ ಧರ್ಮವೆ ನಿನಗಿದು
ಬೇಗ ಪರಿಹರಿಸಾಧ್ಯಾತ್ಮಿಕಾರ್ತಿ ೧೨
ಸುಕೃತಿಗಳನು ಸ್ವಂತ ಜನರ ಮಾಡುವಿ ಎಂಬ
ಶಕುತಿಯದ್ಭುತವಲ್ಲ ಸ್ವಾಮಿ
ಯುಕ್ತಿಹೀನನ ಸಲಹಿದರ ವಿಖ್ಯಾತಿ ಭಕುತಿಗೆ
ಬಹುದು ಸುಪ್ರೇಮಿ ೧೩
ಮೊಂಡನಾದರು ಮಾರ್ಗಕೆ ತರುವುದು
ಪಂಡಿತಜನರು ಲೋಕದಲಿ
ಚಂಡಾಲ ಗ್ರಹದಲ್ಯು ಚಂದ್ರಿಕೆ ಬರುವರ
ಪುಂಡರೀಕಾಕ್ಷ ನೀನರಿವಿ ೧೪
ದಯೆದೋರೆನ್ನಲಿ ದಯಾನಿಧೆ ಶ್ರೀಕಾಂತ
ದಯೆದೋರು ಭೃಂಗಾಳಕಾಂತ
ದಯದೋರು ದಾಸ ಹೃದಂಬುಜ
ದಿನಕಾಂತ ದಯೆದೋರೊ ಬೇಗ ನಿಶ್ಚಿಂತಾ ೧೫
ಶ್ರೀ ಕಮಲಜವಂದ್ಯ ಶೇಷಾದ್ರಿವರಗೆ ಪರಾಕೆಂದು
ಕರಗಳ ಮುಗಿದು
ಈ ಕೃತಿಯನ್ನು ಪೇಳ್ದೆನಿದರ ತಪ್ಪನು ತಿದ್ದಿ
ಸ್ವೀಕರಿಪುದು ಬುಧುರರಿದು. ೧೬

೩೪೦
ಭಕುತಸಂಸಾರಿ ಹರಿ ಶಕಟಸಂಹಾರಿ
ಸಕಲಾಂತರ್ಯಾತ್ಮಕ ಗಿರಿಧಾರಿ ಪ.
ಅಂತರ್ಬಹಿವ್ರ್ಯಾಪ್ತಾನಂತಾವತಾರಿ
ಸಂತಜನರ ಮನೋಭ್ರಾಂತಿನಿವಾರಿ ೧
ನಿಖಿಲ ಬ್ರಹ್ಮಾದಿ ಸುರನಿಕರಕೈವಾರಿ
ಪ್ರಕೃತಿನಿಯಾಮಕ ಪ್ರಭು ಕಂಸಾರಿ ೨
ಘನಕೃಪಾಸಾಗರ ಪ್ರಣತಾರ್ತಿಹಾರಿ
ಅನಘ ಲಕ್ಷ್ಮೀನಾರಾಯಣ ನಿರ್ವಿಕಾರಿ ೩

೧೩೧
(ಭಾರತೀ ಪ್ರಾರ್ಥನೆ)
ಭಕ್ತ ಚಿಂತಾಮಣಿ ಭರತನರಮಣಿ
ಮುಕ್ತಿಸಾಧನ ವೀಣಾಪಾಣಿ ಕಲ್ಯಾಣಿ ಪ.
ವಿದ್ಯಾಮಾನಿನಿ ವಿಭವನಿದಾನಿ
ಸದ್ಯೋಜಾತಸುಪರ್ಣರ ಜನನಿ
ಹೃದ್ಯವರುದ್ಧನಾದ್ಯ ವಿದ್ಯಾವಿದಾರಣಿ ನೀ-
ನಿದ್ದುಮನದಿ ಶುದ್ಧ ಬುದ್ಧಿಯ ಕರುಣಿಸು ೧
ನಾಲಿಗೆಯೊಳು ನಿನ್ನ ಲೀಲೆಯ ತೋರೆ
ಲೋಲನಯನೆ ನೀನಲ್ಲದೆ ಬ್ಯಾರೆ
ಪಾಲಕರನು ಕಾಣೆ ಪವನನೊಲಿವ ಜಾಣೆ
ನೀಲ ಮೇಘ ನಿಭಾನನೆ ನವ ಪ್ರವೀಣೆ ೨
ಅಸು ಗಣವೆಲ್ಲ ನಿನ್ನೊಶದೊಳಗಿಹವು
ಅಸಮಸಾಹಸ ವಾಯು ವಶದಿ ನೀನಿರವು
ಅಸುರಾರಿ ಶೇಷಾದ್ರಿವಶೀಯ ಮೋಹದ ಚಿಕ್ಕ
ಸೊಸೆಯೆ ಸಕಲಜನ ವಶಕರಿ ವರದೆ ೩

೫೪
ಭಕ್ತ ಪರಾಕು ಜೀಯ ವೆಂಕಟರಾಯ
ಭಕ್ತ ಪರಾಕು ಸರ್ವೋದ್ರ‍ವಕ್ತ ನೀನೊಬ್ಬ ಸಾಕು
ಉಕ್ತಿಯ ಕೇಳಬೇಕು ಪಾಲಿಸು ಸಾಕು ಪ.
ಇಂದಿರಾವರ ದೀನ ಬಂಧು ನಿನ್ನ ಪಾದಾರ-
ವಿಂದವೆ ಶರಣವೆಂದು ಹೊಂದಿದೆನಿಂದು
ಮಂದ ಭಾವನೆಯ ಕುಂದು ಕ್ಷಮಿಸು ಯೆಂದು ೧
ಕಾಲ ಕಾಲ ಶುಭ ಲೀಲೆಯರಸವೆಂಬ
ಪಾಲ ಕುಡಿಸುತೆನ್ನನು ಪಾಲಿಸು ಪದ್ಮ
ಲೋಲ ನಿನ್ನಣುಗನನ್ನು ಕೈಪಿಡಿದಿನ್ನು ೨
ತಡೆಯದೆ ಸಕಲಾರ್ಥ ಕೊಡುವೆ ಶ್ರೀ ವೆಂಕಟಾದ್ರಿ
ಒಡೆಯ ನೀನೊಲಿದಿರಲು ವೈರಿಗಳನ್ನು
ಕೆಡವುತ ಸುಖ ಲಾಭವು ಸಿದ್ಧವಾಗಿಹವು ೩

೧೯೭
ಭಕ್ತವತ್ಸಲ ಭವಭಯ ಹರನೆ
ಭಕ್ತಿ ಮುಕ್ತಿದ ಪರಿಪಾಲಿಸು ಧೀರನೆ ಪ.
ಪ್ರತಿದಿನ ಉದಯಾರಂಭಿಸಿ ನಾ ಮಾಡುವ ಪಾಪ
ತತಿಗಳನೆಲ್ಲವ ಭಸಿತಗೈಸಿ
ಪತಿತಪಾವನ ಪರಮಾತ್ಮನ ರೂಪ ಶ್ರೀ-
ಪತಿ ನಿನ್ನ ಪಾದ ಸಂಸ್ರ‍ಮತಿಯಿತ್ತು ಕರುಣಿಸು ೧
ವರದೇಶ ನಿನ್ನಯ ಚರಣಾರವಿಂದವ
ಶರಣೆಂದು ನಂಬಿದ ನರರಿಗಿನ್ನು
ಪುರುಷಾರ್ಥಗಳ ಸೇರಿ ಬರುವರಾಶ್ಚರಿಯವೆ
ಕರಿರಾಜಗೊಲಿದ ಶ್ರೀಕರಮೂರ್ತಿ ದಯವಾಗು ೨
ಘೋರ ಸಂಸೃತಿ ಪಾರಾವಾರ ದಾಟಿಸಲು
ಬೇರಾರಿಲ್ಲ ನಿಜ ದಾಸೋದ್ಧಾರ ಹರೆ
ವಾರಿಜಾಂಬಕ ವೆಂಕಟಾಚಲನಾಯಕ
ಗಾರುಮಾಡದೆ ಬೇಗ ಬಾರೋ ಹೃತ್ಕಮಲದಿ ೩

೧೬೯
ಭಕ್ತಾಧೀನಹರೇ ಭಕ್ತಾಧೀನ ವಿರಕ್ತ ವಿನೋದನ
ಭುಕ್ತಿಮುಕ್ತಿದ ಸರ್ವಶಕ್ತಿ ನೀ ದಯವಾಗು ಪ.
ಚಂಚಲ ಮನದಿ ಪ್ರಾಪಂಚಿಕ ಸುಖದಾಸೆ
ಮಿಂಚಿ ಸಂಸ್ರ‍ಕತಿಯಲಿ ಸಂಚರಿಸಿ
ಮುಂಚಿನ ಭವಗತ ಸಂಚಿತವರಿಯದೆ
ಹಂಚಿಗು ಕಡೆಯಾದೆ ಪಂಚಾತ್ಮನ ನೆನೆಯದೆ ೧
ಘೋರ ಸಂಸ್ರ‍ಕತಿ ಪಾರ ವಾರುಧಿ ಮುಳುಗ್ಯಾಡಿ
ಪಾರುಗಾಣದೆ ಬಹು ಗಾರಾದೆನು
ಶ್ರೀರಮಣನೆ ನಿನ್ನಾಧಾರವಲ್ಲದೆ ಮುಂದೆ
ಬ್ಯಾರೊಂದನರಿಯೆ ಕಂಸಾರಿ ನೀ ಕೃಪೆದೋರು ೨
ಸಿರಿಕಂಜ ಭವ ವಾಯು ಗಿರೀಶಾದಿ ದಿವಿಜರ
ನಿರತ ಪ್ರೇರಿಸುವಂಥ ದೊರೆಯೆ ನಿನ್ನ
ಸ್ಮರಿಸುವೆ ಪರಿವೃತಾಂತರ ನಿಯಾಮಕ ಲಕ್ಷ್ಮೀ-
ವರ ವೆಂಕಟಾದ್ರೀಶ ನಿರುಪಧಿ ಕರುಣಿಸು ೩

೨೭೬
(ಭಕ್ತಿ ಎಂಬ ಸ್ತ್ರೀಯ ವರ್ಣನೆ)
ಸೇರಿರೊ ನವ ನಾರಿಕುಂಜರನನ್ನು
ಧೀರಲಕ್ಷ್ಮೀವರನು ಮಂಟಪವೇರಿ ಮುಂದಕೆ ಬರುವನು ಪ.
ಶ್ರವಣ ಕೀರ್ತನ ಸ್ಮರಣ ಸೇವನ ಪೂಜ ಪ್ರ-
ಣವ ದಾಸ್ಯ ಸಖತ್ವ ಸರ್ವವ ವಹಿಪ ನವವಿಧ ಭಕುತಿಯ೧
ದೂರ ನಿಂತರೆ ತೋರದು ಸರಿಯಾಗಿ
ಸಾರಗೈಯಲು ಸಾಧನೆಗಳಿಂದಾರು ಮೂರಾಗಿರುವುದು ೨
ಜೋಲುವಾ ಸೊಂಡಿಲೆಂಬುದೆ ಸುಜ್ಞಾನ
ಕಾಲುಗಳೆ ಪುರುಷಾರ್ಥವೆನಿಪವು ಬಾಲ ಸದ್ಗುಣಭಾವವು ೩
ಭಕ್ತಿ ಭುಕ್ತಿಗಳೆರಡು ನೇತ್ರಗಳು ವಿ-
ರಕ್ತಿಯುದರವು ವಿಷ್ಣು ಗಾಥಾಸಕ್ತಿ ಸಕಲೇಂದ್ರಿಯಗಳು ೪
ನಿತ್ಯ ನಿರ್ಮಲ ಚರಿತ ಲಕ್ಷ್ಮೀಶನ
ಭೃತ್ಯಪಾದ ರಜಸ್ಸಮೂಹವನೆತ್ತಿ ನಾಲ್ದೆಸೆ ಸುರಿವದು ೫
ಹತ್ತಿರೆಂದಿಗು ಸೇರಲೀಯದು ದು-
ವ್ರ್ವತ್ತ ಜನರನು ದುರಿತ ಕೂಪದಿ ಒತ್ತಿ ಕೆಡುಹುವ ವಹಿಲವು ೬
ಛಲಕೆ ಮೆಚ್ಚುತ ನಲಿವುದು ಮನದಲಿ
ಚೆಲುವ ಶೇಷಗಿರೀಂದ್ರನಾಥನ ವಲಿಸಿ ಕೊಂಡಿಲ್ಲಿಳಿವುದು ೭

೨೭೮
ಭಕ್ತಿಯೆಂಬ ಹೆಣ್ಣ ಶಕ್ತಿಯನ್ನು ನೋಡಿ
ಮುಕ್ತಾಶ್ರಯ ಲಕ್ಷ್ಮೀಪತಿಯನ್ನು ಪಾಡಿ ಪ.
ಸ್ವಾನಂದ ಪರಿಪೂರ್ಣ ಪರಮ ಮಂಗಲಮೂರ್ತಿ
ಶ್ರೀನಿವಾಸಗೆ ಸರ್ವ ಸಂಗವ ಬಿಡಿಸಿ
ತಾನಿರುವಲ್ಲಿಗೆ ಹಿಡಿದೆಳತರಿಸಿ
ಸಾನುರಾಗದಿ ತನ್ನ ಸಂಗಡಲಿರಿಸಿ ೧
ಅಣುರೇಣು ತೃಣಕಾಷ್ಠ ಪರಿಪೂರ್ಣ ಸರ್ವೇಶ
ಗಣನೆಯಿಲ್ಲದ ದಿವ್ಯ ಗುಣಗಳುಳ್ಳವನು
ಎಣಿಸಲು ಇವಳ ಜನರ ದೋಷಗಳನು
ಕ್ಷಣ ಬಿಟ್ಟಗಲದೆ ಇವಳ ಕೂಡಿಹನು ೨
ಭೂಧರ ಗಿರಿವರ ಶೋಭಿತ ಮೂರ್ತಿ
ಮಾಧವ ಪರಿಹರಿಸುವನು ಭವಾರ್ತಿ
ಪಾದ ಪಲ್ಲವಗಳ ನಂಬಿದವರಿಗರ್ಥಿ
ಸಾಧಿಪ ಕರುಣಾಳು ಹರಿಯ ಶ್ರೀಕೀರ್ತಿ ೩

೧೦೫
ಭಜಿಸಿರೊ ಭವಭಂಜನ ಹರಿಯಾ
ರಜತ ಪೀಠ ಪುರದಿ ರಾಜಿಪ ದೊರೆಯಾ ಪ.
ಮುಷ್ಟಿ ಪೃಥುಕವನ್ನು ಕೊಟ್ಟ ಕುಚೇಲಗೆ
ಶ್ರೇಷ್ಠ ಭಾಗ್ಯವನಿತ್ತ ಸಿರಿವರನಾ
ಅಷ್ಟಮಠೀಯರು ಮುಟ್ಟಿ ಪೂಜಿಸುವಂಥ
ವಿಠಲನಿಂದ ಸರ್ವಾಭೀಷ್ಟವ ಪಡೆಯಿರಿ ೧
ಯುಕ್ತಿಯನರಿಯದ ಭಕ್ತರಿಗಿಹಪರ
ಭುಕ್ತಿ ಮುಕ್ತಿದನೆಂಬ ಬಹು ಬಿರುದಾ
ವ್ಯಕ್ತ ಮಾಡುತ ಕಡು ರಿಕ್ತಜನರ ರಕ್ಷಾ
ಸಕ್ತನಾಗಿಹ ಭೈಷ್ಮೀನಕ್ತ ಮಾನಸನನ್ನು ೨
ನಿರುತದಿ ನಿತ್ಯ ಮಧ್ವ ಸರಸಿಯೊಳಗೆ ಮಿಂದು
ಶಿರದಿ ಪಾದೋದಕ ಧರಸಿಕೊಂಡು ಉರಗ ಗಿರೀಶ ಸತ್ಯ
ವರನ ಮೂರ್ತಿಯ ಕಂಡು ಸುರವರ ಪ್ರಾರ್ಥನೆಯ
ವರ ಪ್ರಸಾದವನುಂಡು ೩

೪೭೧
ಭಜಿಸೋ ಹರಿಯ ಭಜಕರ ಭಾಗ್ಯನಿಧಿಯಪ.
ಕಾಲವ ವ್ಯರ್ಥ ಕಳೆವೆ ಕೂಳನು ತಿಂದು ನಲಿವೆ
ಖೂಳರಿಗೆ ನೀನೊಲಿವೆ ಶೀಲವ ಕಂಡು ಪಳಿವೆ೧
ದುಷ್ಟರ ಸಹವಾಸ ಬಿಟ್ಟರೆ ಯಾವ ದೋಷ
ಕೃಷ್ಣನ ಭಕ್ತಿ ಲೇಶ ಹುಟ್ಟದೆ ಹೋಯ್ತೆ ಮೋಸ೨
ಕಾರಣ ಕಾರ್ಯ ದ್ವಯನ ಧಾರಣ ಜಗತ್ರಯನ
ಧಾರಣ ಕೃತ ಭಯನ ಚಾರಣ ಸುರ ಪ್ರಿಯನ೩
ಲಕ್ಷುಮಿನಾರಾಯಣನ ಲಕ್ಷಿಸಿ ಮಾಡೋ ಧ್ಯಾನ
ಲಕ್ಷ್ಮಣನ ಪೂರ್ವಜನ ಅಕ್ಷರ ಪುರುಷೊತ್ತಮನ೪

೭೮
ಭಯಹರ ನರಸಿಂಹ ಪಾಲಿಸು ಮಾತ ಲಾಲಿಸು
ಶತ್ರುಗಳ ಬೇಗ ಜಯಿಸು ಪ.
ಶಿಶುವಾದ ಪ್ರಲ್ಹಾದ ಪೇಳಿದ ಕ್ಷಮೆ ತಾಳಿದ ನಯನುಡಿಗಳ ಕೇಳ್ದ
ಬಿಸಜ ಸಂಭವ ವರ ಬಲದಿಂದ ಕಲಕಲದಿಂದ
ನಿನ್ನ ತೋರೆಂದು ಹಾಟಕ
ಕಶಿಪನುಡಿಯಲತಿ ಭರದಿಂದ ಕರೆದಾಗಲೆ
ಬಂದ ದೈತ್ಯನ ದೇಹದಿಂದ
ಬಿಸಿ ಬಿಸಿ ರಕುತವ ನಖದಿಂದ ಚಲ್ಲುತ ನಿಂದ
ದೀನ ಬಂಧು ಗೋವಿಂದ ೧
ಭವಭಯಬಂಧವಿಮೋಚನ ರಕ್ತಲೋಚನ
ಶತ್ರುಸಂಚಯ ಪಚನ
ದ್ವಯ ಚಿತ್ರಕರ್ಮ ವಿಭಾವನ ದಾಸಜೀವನ
ದಾನವಕೂಟ ಮಥನ
ಲಯ ದೂರ ಷಡ್ವೈರಿಧಾವನ
ಲೋಕಪಾವನ ದಯಕರ ಪಕ್ಷಿಗಮನ
ಮಯ ಶಂಬರಾರಿ ದೈತ್ಯರ ಪೋಲ್ವ ವೈರಿಗಳ
ಗೆಲ್ವ ಶಕ್ತಿಕೊಡುವರೆ ಬಲ್ಲನ ೨
ಈ ಭೂಮಿಗತವೈರಿಜನರೆಲ್ಲಾ ಕೂಡಿಹರಲ್ಲ ಇನ್ನೂ ಹತರಾಗಲಿಲ್ಲ
ನಾ ಬಲಹೀನನೆಂಬುದ ಬಲ್ಲ ಶ್ರೀಭೂನಲ್ಲ ನೀನರಿಯದುದಿ
ಹೋ ಬಲವಾಸಿ ಎನ್ನಯ ಸೊಲ್ಲ
ಲಾಲಿಪರಿಲ್ಲ ಆದರು ಭಯವಿಲ್ಲ
ಭೂಭರ ಹರನ ವೆಂಕಟನಾಥ ಪಾರ್ಥನ
ಸೂತ ರಕ್ಷಿಸು ಜಗನ್ನಾಥ ೩

೩೭೭
ಭಾರತಿ ಭರತನ ರಮಣಿ
ಶಿರಬಾಗುವೆ ತ್ರಿಜಗಜ್ಜನನಿ ಪ.
ಭಾರತ ಭಾಗವತಾರ್ಥ ಬೋಧಿನಿ
ಶಾರದೇಂದುನಿಭವದನಿ ಅ.ಪ.
ಹರಿಗುರುಗಳಲಿ ಸದ್ಭಕ್ತಿ ದೃಢ
ಕರುಣಿಸು ಸರಸಿಜನೇತ್ರಿ
ಗಿರೀಶಾದಿ ಸರ್ವಸುರೌಘಪ್ರಣೇತ್ರಿ
ಶರಣು ಶರಣು ಸುಪವಿತ್ರಿ ೧
ಕಾಳಿ ದ್ರೌಪದಿ ಸುನಾಮೆ ನಮ್ಮ
ಪಾಲಿಸು ಭೀಮಪ್ರೇಮ
ಶ್ರೀ ಲಕ್ಷ್ಮೀನಾರಾಯಣನ ಭೃತ್ಯೆ
ಕಾಲತ್ರಯ ಕೃತಕೃತ್ಯೆ ೨

೩೭೮
ಭಾರತಿ ಭಾಗ್ಯವತಿ ಜಯತಿ ಪ.
ಸೂರಿಜನೋದ್ಧರೆ ಸುಗುಣಾಲಂಕಾರ
ಸಾರಸದಳನೇತ್ರಿ ಜಯತಿ ೧
ಚಿತ್ರಚರಿತ್ರೆ ಚಿತ್ಸುಖಗಾತ್ರೆ
ಸೂತ್ರನಾಯಕನ ಸತಿ ಜಯತಿ ೨
ಅನಘ ಲಕ್ಷ್ಮೀನಾರಾಯಣನ ಶ್ರೀಚರಣಾ-
ವನತರ್ಗೆ ನೀನೆ ಗತಿ ಜಯತಿ ೩

೧೨೧
ಭಾರತೀಶ ಕರುಣಾರಸ ಭೂಷಾ
ಖರಾರಿ ದಯಾರಸ ಪೂರಿತ ವೇಷಾ ಪ.
ಅಕ್ಷಪೂರ್ವಜನ ರುಕ್ಷಶರಾಹತಿ ವಿಕ್ಷತಕಪಿಗಳನೀಕ್ಷಿಸುತ
ರೂಕ್ಷನ ನುಡಿ ಕೇಳ್ದಾಕ್ಷಣದೊಳಗರೆಲಕ್ಷಯೋಜನಕೆ ಲಂಘಿಸುತ
ಅಕ್ಷಯ ಸಂಜೀವನ ಗಿರಿಯನು ನಿಜವದಾಕ್ಷದಿ
ಕರತಲದೊಳಗಿಡುತ
ಅಕ್ಷಿನಿಮೋಘಕೆ ಲಕ್ಷಕೊಡದೆ ನಿಜಪಕ್ಷದ ಜನರನು ರಕ್ಷಿಸಿದ ೧
ಮೂರನೆಯ ಯುಗದೋಳ್ವಾರಿಧಿ ವಾಸನ
ಸೇರಿ ದುರಾಕೃತ ಕೌರವರ
ಧಾರುಣಿಗೊರಗಿಸಿ ಘೋರ ರೂಪ ಕಿಂಮೀರನ ರಕ್ತನ ಕಾರಿಸುತ
ಭಾರಿಗದೆಯ ಪಿಡಿದಾರುಭಟಿಸಿ ಬಹುವಾರಣ ತತಿಗಳ ಹಾರಿಸುತ
ನಾರಿಗೆ ಸಕಲ ಮನೋರಥ ಸಲಿಸಿದ ಧೀರ
ವೀರಜಗಧೀರಣ ಮೂರ್ತೆ ೨
ಹಿಂಡುಗೂಡಿದಾ ಖಂಡಲ ರಿಪುಗಳು ಖಂಡ ಪರಶುಹರಿತಾನೆನುವ
ಭಂಡಮಾತ ಭೂಮಂಡಲ ಮಧ್ಯದಿ ಪುಂಡುತನದಿ ಪ್ರಸ್ತಾಪಿಸುವ
ಪಂಡಿತ ಮಾನಿಗಳೆನಿಸಿದ ಮೈಗಳ ಖಂಡಿಸಿ ತತ್ವವ ಬೋಧಿಸುವ
ಕುಂಡಲೇಂದ್ರಗಿರಿ ಮಂಡನ ಬಹು
ಬ್ರಹ್ಮಾಂಡಕೋಟಿಪತಿಯನುತಿರುವ ೩

೧೨೨
ಭಾರತೀಶನ ಸೇರಿರೋ ಭವವಾರಿಧಿ ದಾಟುವರೆ
ವಾರಿಜಾಕ್ಷನಪಾರಮಹಿಮಾ ಸಾರನಾಮಕ ಸಾರ ತೋರುವ ಪ.
ತುಂಗ ವಿಷಯಾಂಗಜನಿತೋತ್ತುಂಗ ತರಂಗದೊಳು
ಅಂಗಜಾತ ತಿಮಿಂಗಿಲನು ತಾನುಂಗುವ ನಿಮಿಷದೊಳು
ಮಂಗಳಾತ್ಮಕ ಮಾರುತನ ಸದಪಾಂಗಲೇಶವನೈದೆ ಸುಲಭದಿ
ಅಂಗುಟಾಗ್ರವ ತೋಯಲೀಯದೆ
ರಂಗನಿರವನು ತೋರಿ ಸಲಹುವ ೧
ತ್ರೇತೆಯೊಳಗಿನ ಜಾತನಿಗೆ ರಘುನಾಥನ ತೋರಿಸಿದ
ಕಾತುರದ ಪುರಹೂತನನು ಯದುನಾಥನಿಗೊಪ್ಪಿಸಿದಾ
ಭೂತನಾಥನ ವಾಕ್ಯಬಲದಿಂದಾತ್ಮ ಜೀರಿಗೈಕ್ಯಪೇಳುವ
ಪಾತಕಿಗಳನು ಗೆದ್ದು ತ್ರಿಜಗನ್ನಾಥ ಮುತ್ತಿದನೆಂದು ಮೆರಸಿದಿ ೨
ಸೂತ್ರನಾಮಕ ಪ್ರಣವನಾಯಕ ಕ್ಷತ್ರಪುರದೊಳಿರುವಾ
ಶತ್ರುತಾಪನ ಶೇಷಗಿರಿ ಪತಿಪುತ್ರನೆನಿಸಿ ಮೆರೆವಾ
ಚಿತ್ರಕರ್ಮ ಚಿರಂತನಾಣುಗ ಪುತ್ರಮಿತ್ರಕಳತ್ರ ಭಾಗ್ಯದ
ನೇತ್ರ ವಿಷಯ ಪರತ್ರ ರಕ್ಷಕ ಧಾತ್ರಪದಸತ್ಪಾತ್ರನೆನಿಸುವ ೩

೧೫೫
(ಶ್ರೀ ವಾದಿರಾಜರ ಪ್ರಾರ್ಥನೆ)
ಭಾವಿಭಾರತಿವರನೆ ದಾಸನ ಬೇಗ ಕಾವ ಕಲುಷಹರನೆ
ದೇವ ಋಜು ಗಣನಾಥನೀಪರಿ ಸಾವಕಾಶಕೆ ಸಮಯವಲ್ಲಿದು ಪ.
ಅರಿಷಡ್ವರ್ಗದಿ ಸಿಲುಕಿ ಕ್ಷಣಕ್ಷಣ ಕರಗಿ ಕುಂದುತ ಬಂದೆನು
ಮರಿಯಾದಿಯಂಬುದ ಮರತು ಮನದಿ
ನಾನಾ ಪರಿಯ ಕ್ಲೇಶದಿ ನೊಂದೆನು ಮುಂದೇನು
ದುರಿತಾರಾಶಿಗಳನ್ನು ಬೇಗದಿ ತರಿದು ಸಜ್ಜನಗುಣವ ಸುಲಭದಿ
ಪೊರೆದನೆಂಬೈತಿಹ್ಯ ವಚನದಿ ಭರವಸದಿ ನಂಬಿರುವೆ ನಿನ್ನನು ೧
ತುರಗ ವದನ ದೇವನ ವಲಿಸಿ ದೇವ ನರವರ ಸಂಘವನು
ಸರಸಿಜ ವದನ ನಿ:ಸೃತ ವಾಕ್ಸುಧಾರಸ
ಕರದು ತಂಪೇರಿಸಿ ಸರಿಯೆನಿಸಿದನೆ
ಹರಿಯೆ ತಾನೆಂದೊದರಿಕೊಂಡಿಹ ನರಕಭಾಜಿಗಳಾದ ಮೈಗಳ-
ನರಿದು ವಾದದಿ ಮುರಿದು ಹಲ್ಲನು ಸಿರಿವರನ ಸತ್ಕರಿಸಿ ಪೂಜಿಪ೨
ವನಜಾಕ್ಷ ರಾಮಭಕ್ತನಾಗಿಹ ವಿಭೀಷಣಗೆ ಮಾರುತಿಯಿಂದುತ್ತ-
ಮನು ನೀನೆಂದುದನುಗಾಲ ಜಪಿಸುವೆನೆನುವದನರಿತು
ಮುಂದಿನ ಫಲ ನೀಡೆಂದು
ಮಣಿದು ಬೇಡುವೆ ನಿನ್ನ ಪದಯುಗ ವನರುಹಗಳನುವಶ್ಯದಾಯಕ
ಮನದಿ ವೆಂಕಟನಾಥನಂಘ್ರಿಯ ನೆನೆವ ಭಾಗ್ಯವ ನಿತ್ಯ ಕರುಣಿಸು ೩

೧೨೬
(ಭೀಮಸೇನ ಪ್ರಾರ್ಥನೆ)
ಭೀಮಸೇನ ಸಕಲಸತ್ವಧಾಮ ರಕ್ಷಿಸೆನ್ನ ಬೇಗ
ಸಾಮಗಾನ ಲೋಲ ಕೃಷ್ಣ ಪ್ರೇಮರಸಕೆ ಪಾತ್ರನಾದ ಪ.
ಮಂಗಲಾಚರಿತ್ರ ನಿನ್ನ ಅಂಗಸಂಗದಿಂದ ಬಹು
ತುಂಗ ಗಿರಿಯು ಒಡೆದು ಶತಶೃಂಗವೆನಿಸಿತು
ಅಂಗುಲಿ ಪ್ರಹಾರದಿಂದ ಶಿಂಗತತಿಗಳನ್ನು ಬಹಳ
ಭಂಗಬಡಿಸಿ ಬಾಲಲೀಲ ರಂಗದಲ್ಲಿ ಬಲುಹ ತೋರ್ಪ ೧
ಹಸಿದ ವೇಳೆಯಲ್ಲಿ ಮೆದ್ದ ವಿಷದ ಭಕ್ಷ್ಯ ಜೀರ್ಣಗೊಳಿಸಿ
ಉಶನ ಮಂತ್ರದಿಂದ ಹಲ್ಲ ಮಸೆಯುತಾ ಬಂದ
ಅಸುರ ವೇಶದಷ್ಟಾಕ್ಷಿಗಳ ಮಶಕದಂತೆ ಬಡಿದು ಕೆಡಹಿ
ಕುಶಲದಿಂದ ನಿದ್ರೆಗೈದ ಅಸಮಶಕ್ತಿ ಪೂರ್ಣಮೂರ್ತಿ ೨
ನಗಗಳ ಮೇಲೇರುತ್ತ ಹಣ್ಣುಗಳನೊಂದೊಂದಾಗಿ ಕರದಿ
ತೆಗೆದು ತಿಂಬ ಕೌರವರನು ನಗುತ ನೋಡುತಾ
ನೆಗೆದು ಬೀಳ್ವ ತೆರದಿ ತರುಮೂಲಗಳಾ ತುಳಿದು ಕೆಡಹಿ ದೇವಾ-
ರಿಗಳ ಧೈರ್ಯ ಕುಂದುವಂತೆ ಚಿಗದು ಸರ್ವ ಫಲವ ಕೊಂಡ ೩
ಗೂಗೆಯಂತೆ ನಿನ್ನ ಬಳಿಗೆ ಸಾಗಿ ಬಂದು ಶಕುನಿಮುಖರು
ಯೋಗನಿದ್ರೆ ತಿಳಿಯದೆ ಚೆನ್ನಾಗಿ ಬಂಧಿಸಿ
ಭಾಗೀರಥಿಯ ಜಲದಿ ದೂಡೆ ವೇಗದಿ ಪಾತಾಳವೈದಿ
ನಾಗಕನ್ಯೆರಿತ್ತ ರಸವ ಬೇಗ ಸವಿದು ತಿರುಗಿ ಬಂದ ೪
ದುರುಳರಿಂದ ರಚಿತವಾದ ಅರಗಿನ ಮನೆಗೆ ಹೋಗಿ
ಅರಿಯದಂತೆ ಕೆಲವು ಕಾಲ ನಿರುತಕಿನಿಸಿಲಿ
ಇರುಳಿನಲ್ಲಿ ತಾನೆ ಅಗ್ನಿ ಇರಿಸಿ ಬೇಗಲೆದ್ದು ಸಹೋ
ದರರನೆತ್ತಿ ಬಹು ಯೋಜನಕೆ ಸರಿದು ಪೋದ ಶಕ್ತರರಸ ೫
ಡೊಂಬಿಮಾಳ್ಪನೆಂದು ಬಹಳ ಡಂಬರದಿಂದಿದಿರಾ ಹಿ-
ಡಿಂಬನೆಂಬ ಸಕಲ ಸುರ ಕದಂಬ ವೈರಿಯ
ಅಂಬರದೊಳಗೈದಿ ವಜ್ರಕಂಬದಂತೆ ಹೊಳವ ಬಹು
ಸ್ತಂಭದಿಂದ ಕೆಡಹುತ ಹೈಡಿಂಬನೆಂಬ ಮಗುವ ಪಡೆದ ೬
ಏಕಚಕ್ರ ನಗರ ದೊಳ್ವೈದಿಕರಂತೆ ವಾಸವಾಗಿ
ಪೋಕ ಬಕನ ಬಾಧೆಯಿಂದ ಶೋಕಗೊಳುವರ
ಸಾಕುವೆನೆಂದೆದ್ದು ನಾನಾ ಶಾಖ ಭಕ್ಷಾನ್ನಗಳ ತಾನೆ
ಸ್ವೀಕರಗೊಂಡಸುರನನ್ನು ಸೋಕಿ ಸೀಳಿ ಬಿಸುಟ ದೊರೆಯೆ ೭
ಕಪಟ ವಿಪ್ರ ವೇಷದಿಂದ ದ್ರುಪದಸುತೆಯನೊಲಿಸಿ ಕೃದ್ಧ
ನೃಪರ ಗೆದ್ದು ರುಕ್ಮಿಣೀಶ ಕೃಪೆಯಾ ಬಲಕೊಂಡು
ಅಪರಿಗಣ್ಯ ಪೌರುಷಕಿಂನುಪಮೆಯಿಲ್ಲವೆಂದು ಸರ್ವ
ಖಪತಿವರರು ಪೊಗಳುತಿರಲು ತ್ರಿಪುರವೈರಿಯಂತೆ ಮೆರೆದ ೮
ಅಂಧ ನೃಪನ ಮಾತ ಕೇಳಿ ಇಂದ್ರಪ್ರಸ್ಥ ಪುರಕೆ ರಾಜ
ನೆಂದು ನಿಂದು ಮಗಧಾದಿಗಳ ನೊಂದೆ ನಿಮಿಷದಿ
ಕೊಂದು ರಾಜಸೂಯಮೇಧದಿಂದ ಸಕಲಯಜ್ಞೇಶಗೋ-
ವಿಂದನ ಸಂತುಷ್ಟಿ ಬಡಿಸಿ ಮುಂದಿನ ಜಪದವ ಕೊಂಡ ೯
ದ್ಯೂತ ನೆವದಿ ಸಕಲ ರಾಜ್ಯ ಸೋತು ವನಕೆ ಪೋಗಿ ಲಕ್ಷ್ಮೀ-
ನಾಥ ಕರುಣ ಬಲದಿಂದ ಸುರವ್ರಾತವಡಗಿಸಿ
ಭೂತನಾಥನೋರದಿ ಬಹಳ ಖ್ಯಾತ ಕೀಚಕಾದಿಗಳನು
ಘಾತಿಸಿ ಗಂಧರ್ವನೆಂದಜ್ಞಾತವಾಸ ಕಳದ ಧೀರ ೧೦
ದುರುಳ ಕೌರವರನು ಗದೆಯ ತಿರುಹಿ ಕೆಡಹಿ ಧರಣಿಭರವ
ಸುರಪಸೂನು ಸಹಿತಲ್ಲಿಳುಹಿ ಪರಮ ಹರುಷದಿ
ಹರಿಯ ನೇಮದಿಂದ ನಾಗಪುರವನಾಳಿ ವಿಷ್ಣುಭಕ್ತಿ
ಭರವ ತೋರಿ ಸುಜನ ತತಿಯ ಪೊರೆದು ಪದ್ಮಜಾತನಾಹ೧೧
ದುಷ್ಟವೈರಿ ಜನರ ಗೆದ್ದು ಅಷ್ಟ ಭಾಗ್ಯ ಸಹಿತ ದೇಹ
ಪುಷ್ಟಿ ಜ್ಞಾನ ದೃಷ್ಟಿಗಳನು ಕೊಟ್ಟು ಕರುಣಿಪಾ
ಸೃಷ್ಟಿಗೊಡೆಯ ಸರ್ಪರಾಜ ಬೆಟ್ಟದಲ್ಲಿ ನಿಂದು ಭಕ್ತ-
ಭೀಷ್ಟವರದನೊಲಿಪ ತೆರದಿ ಸುಷ್ಠುಪ್ರೇಮವಿಟ್ಟು ಕಾಯೊ ೧೨

೪೯೫
ಮಂಗಲಂ ಜಯ ಶುಭಮಂಗಲಂ ಪ.
ಶ್ರೀಗೌರೀಸುಕುಮಾರನಿಗೆ
ಯೋಗಿವರೇಣ್ಯ ಶುಭಾಕರಗೆ
ರಾಗ ಲೋಭ ರಹಿತಗೆ ರಜತೇಶಗೆ
ಭಾಗೀರಥಿಸುತ ಭವಹರಗೆ ೧
ಪಾಶಾಂಕುಶ ವಿವಿಧಾಯುಧಗೆ
ಪಾಶದರಾರ್ಚಿತ ಪಾವನಗೆ
ವಾಸರಮಣಿಶತಭಾಸಗೆ ಈಶಗೆ
ಭಾಸುರ ತನಕ ವಿಭೂಷಣನಿಗೆ೨
ಶೀಲ ಸುಗುಣಗಣ ವಾರಿಧಿಗೆ
ನೀಲೇಂದೀವರಲೋಚನೆಗೆ
ಲೋಲ ಲಕ್ಷ್ಮೀನಾರಾಯಣ ರೂಪಗೆ
ಶಾಲಿ ಪುರೇಶ ಷಡಾನನಗೆ ೩

೫೦೧
ಮಂಗಲಂ ಜಯಜಯ ಮಾಧವ ದೇವಗೆ
ಅಂಗಜನಯ್ಯ ಪಾಂಡುರಂಗ ವಿಠಲನಿಗೆ ಪ.
ಪುಂಡರೀಕವರಗೆ ಪೂರ್ಣಾತ್ಪೂರ್ಣಗೆ
ಪಂಡರಿಪುರವರ ಪುಂಡರೀಕಾಕ್ಷಗೆ ೧
ನಾಮದೇವಾದಿ ಸಂತಸ್ತೋಮ ಪರಿಣಾಮ ಶ್ರೀ-
ರಾಮದಾಸನ ಪ್ರಿಯ ಶ್ರೀರಾಮಗೆ ೨
ಏಕನಾಥನಾಲಯ ಚಾಕರನಾದವಗೆ
ಗೋಕುಲಪಾಲಗೆ ಗೋಮಿನಿಲೋಲಗೆ ೩
ಮಂದರಧಾರಗೆ ಮಥುರಾನಾಥಗೆ
ಕಂದರ್ಪ ಶತಕೋಟಿ ಸುಂದರರೂಪಗೆ ೪
ರುಕುಮಿಣಿಕಾಂತಗೆ ರುಜುಗಣಾಧೀಶಗೆ
ಭಕ್ತವತ್ಸಲನಿಗೆ ಲಕ್ಷುಮಿನಾರಾಯಣಗೆ ೫

೫೦೨
ಮಂಗಲಂ ಮಂಗಲಂ ಭವತು ತೇ
ಮಂಗಲಂ ಮಂಗಲಂ ಪ.
ಅಂಗಜ ರೂಪಗೆ ಅಖಿಲ ಲೋಕೇಶಗೆ
ಶೃಂಗಾರಮೂರ್ತಿಗೆ ಶ್ರೀಕಾಂತಗೆ
ಸಂಗೀತ ಲೋಲಗೆ ಸಾಮಜವರದಗೆ
ಬಂಗಾರಗಿರಿವಾಸ ಭವಭವ ಹರಗೆ ೧
ಕೃತ್ರಿಮ ರಕ್ಕಸ ಮೊತ್ತ ಸಂಹರಗೆ
ಭಕ್ತರ ಹೃದಯದಿ ಬೆಳಗುವಗೆ
ಸತ್ಯಾತ್ಮಕನಿಗೆ ಸತ್ಯನೇತ್ರನಿಗೆ
ಚಿತ್ತಜಪಿತ ಚಿನುಮಯ ಮೂರ್ತಿಗೆ ೨
ಉತ್ತಮ ಗೌಡಸಾರಸ್ವತ ವಿಪ್ರರಿಂ
ನಿತ್ಯ ಪೂಜೆಯಗೊಂಬ ನೀಲಾಂಗಗೆ
ಛತ್ರಾಖ್ಯಪಟ್ಟಣ ಮಸ್ತಕ ಮಕುಟಗೆ
ಕರ್ತ ಲಕ್ಷ್ಮೀನಾರಾಯಣ ಗುಣಾಂಬುಧಿಗೆ ೩

೫೦೩
ಮಂಗಲಂ ಮಂಗಲಂ ಭವತು ತೇ ಮಂಗಲಂ ಪ.
ವಿಜ್ಞಾನಶಕ್ತಿ ಪ್ರಕಾಶಗೆ ಈಶಗೆ
ಸಜ್ಜನನಿವಹಾರಾದಿತಗೆ
ಅಜ್ಞಾನತಿಮಿರಮಾರ್ತಾಂಡ ಪ್ರಚಂಡಗೆ
ಮೂಜದೊಡೆಯ ಮನೋಜ್ಞ ಮೂರುತಿಗೆ ೧
ಚಂದ್ರಶೇಖರಸುಕುಮಾರಗೆ ಮಾರನ
ಸುಂದರರೂಪ ಪ್ರತಾಪನಿಗೆ
ನಿಂದಿತ ಖಲಜನವೃಂದವಿದಾರಗೆ
ಸ್ಕಂದರಾಜ ಕೃಪಾಸಿಂಧು ಪಾವನಗೆ ೨
ತಾರಕದೈತ್ಯಸಂಹಾರಗೆ ಧೀರಗೆ
ಶೂರಪದ್ಮಾಸುರನ ಗೆಲಿದವಗೆ
ಸೇರಿದ ಭಕ್ತರ ಸುರಮಂದಾರಗೆ
ನಾರದಾದಿ ಮುನಿವಾರವಂದಿತಗೆ ೩
ವಲ್ಲೀವಲ್ಲಭನಿಗೆ ಒಲಿದರ್ಗೆ ವರದಗೆ
ಎಲ್ಲ ಭೂತಾಶ್ರಯ ಬಲ್ಲವಗೆ
ಖುಲ್ಲದಾನವರಣಮಲ್ಲ ಮಹೇಶಗೆ
ಬಿಲ್ಲುವಿದ್ಯಾಧೀಶ ಭೀಮವಿಕ್ರಮಗೆ ೪
ಕಂಜಾಕ್ಷ ಲಕ್ಷ್ಮೀನಾರಾಯಣ ತೇಜಗೆ
ಮಂಜುಳಕಾಂತಿ ವಿರಾಜನಿಗೆ
ನಂಜುಂಡನ ಕರಪಂಜರಕೀರ ಪಾ-
ವಂಜೆ ಕ್ಷೇತ್ರಾದಿವಾಸ ಸುರೇಶನಿಗೆ ೫

೩೯೦
ಮಂಗಲಂ ಮಹಾಲಿಂಗ ದೇವನಿಗೆ ಗಂಗೋತ್ತಮಾಂಗಗೆ ಪ.
ತುಂಗಬಲ ಭದ್ರಾಂಗ ಸದಯಾ-
ಪಾಂಗ ಭಕ್ತಜನಾಂಗರಕ್ಷಗೆ
ಅಂಗಜಾರಿ ಕುರಂಗಹಸ್ತಗೆ
ಸಂಗೀತ ಪ್ರೇಮಾಂತರಂಗ ನಿಸ್ಸಂಗಗೆ ೧
ವಾಮದೇವಗೆ ವಾಸವಾದಿ ಸು-
ಧಾಮ ವಿಬುಧಸ್ತೋಮ ವಿನುತಗೆ
ವ್ಯೋಮಕೇಶಗೆ ಸೋಮಚೂಡಗೆ
ಭೀಮವಿಕ್ರಮಗೆ ಹೈಮವತಿಪತಿಗೆ ೨
ಪ್ರಾಣಪತಿ ಲಕ್ಷ್ಮೀನಾರಾಯಣ-
ಧ್ಯಾನಪರಗೆ ಪಾವಂಜೆಗ್ರಾಮ ಪ್ರ-
ಧಾನಪುರುಷಗೆ ದೀನಜನಸಂ-
ತಾನಗೀಶಾನಗೆ ಜ್ಞಾನಿ ಜಗದ್ಗುರುವಿಗೆ ೩

೪೧೧
(ಬಪ್ಪನಾಡಿನ ಪಂಚದುರ್ಗೆ)
ಮಂಗಲಂ ಶ್ರೀಪಂಚದುರ್ಗೆಗೆ ಜಯ
ಮಂಗಲಾರತಿಯೆತ್ತಿ ಶ್ರೀಮಹೇಶ್ವರಿಗೆಪ.
ಶಂಖಚಕ್ರಶೂಲಾಂಕುಶಪಾಣಿಗೆ
ಶಂಕರನಂಕಾಲಂಕಾರಿಗೆ
ಕುಂಕುಮಬೊಟ್ಟಕಸ್ತೂರಿ ಲಲಾಟೆಗೆ
ಪಂಕಜಗಂಧಿ ಶ್ರೀಪಾರ್ವತಿಗೆ೧
ಕೋಕಿಲಗಾನೆಗೆ ಕೋಕಪಯೋಜೆಗೆ
ಶ್ರೀಕಂಠನರ್ಧಾಂಗಿ ಶ್ರೀಗೌರಿಗೆ
ಏಕದಂತನ ಜನನಿಗೆ ಜಗದಂಬೆಗೆ
ಲೋಕನಾಯಕಿ ಶ್ರೀಮಹಾಕಾಳಿಗೆ೨
ಕಂಜದಳಾಕ್ಷಿಗೆ ಕಲಧೌತಗಾತ್ರೆಗೆ
ಕುಂಜರಗಮನೆ ಕಂಧರಜಾತೆಗೆ
ಮಂಜೀರನೂಪುರರಣಿತಪದಾಬ್ಜೆಗೆ
ನಂಜುಂಡನ ಮನಮಂಜುಳೆಗೆ೩
ಅಂಗಜರೂಪೆಗೆ ಮಂಗಲದಾತೆಗೆ
ಭೃಂಗಕುಂತಳೆ ಸರ್ವಮಂಗಲೆಗೆ
ಬಂಗಾರಮಕುಟೋತ್ತಮಾಂಗದಿ ಧರಿಸಿದ
ಸಂಗೀತಲೋಲೆಗೆ ಶರ್ವಾಣಿಗೆ೪
ರೂಢಿಗಧಿಕ ಬಪ್ಪನಾಡಿಗೊಡತಿಯಾಗಿ
ಮೂಡಿತೋರಿದ ಶ್ರೀಮುಕಾಂಬಿಕೆಗೆ
ಕ್ರೋಡಾವತಾರ ಲಕ್ಷ್ಮೀನಾರಾಯಣ ಸೊಸೆ
ಬೇಡಿದಿಷ್ಟವನೀವ ಸರ್ವೇಶೆಗೆ೫

೩೦೮
ಮಂಗಳ ಇಂದಿರಾವರನಿಗೆ ಜಯ
ಮಂಗಳ ವೃಂದಾವನಶಾಯಿಗೆ ಪ.
ಆಷಾಢ ಶುಕ್ಲೈಕಾದಶಿಯಾರಂಭಿಸಿ ನಾಲ್ಕು
ಮಾಸವು ನೆಲೆಗೊಂಡ ನಳಿನಾಕ್ಷಗೆ
ದಾಸ ಮನೋರಥದಾಯಿ ವೃಂದಾವನ
ವಾಸಿ ದಾಮೋದರ ಶ್ರೀಶನಿಗೆ ೧
ಹಲವು ವಿಧದ ಪುಷ್ಪಗಳಿಕಿಂತ ಅಧಿಕ ಶ್ರೀ
ತುಳಸಿ ಎಂದು ಎಲ್ಲ ತಿಳಿಯಿರೆಂದು
ನೆಲೆಯದೋರಿ ಮೂಲದಲಿ ಪವಡಿಸಿದಂಥ
ನಳಿನಾಕ್ಷ ಗೋಪಾಲ ಕೃಷ್ಣನಿಗೆ ೨
ವಿಧಿಭವ ಶಕ್ರಾದಿ ಬುಧರು ಪರಾಕೆಂದು
ವಿವಿಧ ವಿಧ ಸ್ತುತಿಸುತ ಕಾದಿರಲು
ಮುದದಿಂದಲೆದ್ದು ಮುಖಾಬ್ಜ ತೋರುವ ನಮ್ಮ
ಪದುಮನಾಭ ವೆಂಕಟರಾಯನಿಗೆ ೩

೩೦೯
ಮಂಗಳಂ ಮಂಗಳಂ ಲಕ್ಷ್ಮೀಶಗೆ ಮಂಗಳಂ
ಮಾಕಮಲಾಸನ ವಂದಿತ ಶೃಂಗಾರಶೇಖರ ತುಂಗಗಿರೀಶ ಪ.
ಶ್ರೀಲೋಲ ಶುಭಗುಣಜಾಲಪಾಲಿತ ಸತ್ವ
ಶೀಲ ಸುಂದರ ವನಮಾಲ
ನೀಲಕುಂತಲ ನಿರ್ಜಿತಾಳಿ ಕುಲಾನನ
ಲೀಲಾಮೃತ ಕಪೋಲ ಗೋಪಾಲ ೧
ಶರಣಾಗತ ರಕ್ಷಕರಣ ಧುರೀಮ ಮ-
ದ್ಫರಣ ತ್ರಿಲೋಕೀ ಧಾರಣ
ಕರುಣಾಮೃತ ಹರ ತರುಣಾರ್ಕ ಕೋಟಿಭಾ
ಭರಣ ರಮಾಧೃತ ಚರಣಾರವಿಂದ ೨
ಪದ್ಮಾವರ ನಿತ್ಯ ಪದ್ಮ ಸರೋವರ
ಪದ್ಮ ನಿರಂತರ ಸಂಚಾರ
ಪದ್ಮನಾಭ ಹೃತ್ಪದ್ಮ ಸುಸಂಸ್ಥಿತ
ಪದ್ಮ ಪತ್ರ ನೇತ್ರ ಪದ್ಮಜ ಜನಕ ೩
ಇಂದಿರಾವರ ಪೂರ್ಣೇಂದು ನಿಭಾನನ
ವಂದನೀಯ ವಾಸುದೇವ
ಮಂದಿರೆ ಮಮ ನಿತ್ಯಾನಂದದಾಯಿ ನಿಜ
ಬಂಧುತಯಾಸ್ಥಿತ ಮಂದಹಸಿತೆ ೪
ದಾಸೀಕೃತ ಕಂಜಜೇಶಾಹೀಶ ವಿ-
ವೇಶಾಮರೇಶ ರಮೇಶಾ
ಶೇಷ ಭೂಧರ ನಿಜ ವಾಸ ದಯಾರಸ
ಮಾಶುಪ್ರವರ್ಷಯ ಹೇ ಶ್ರೀನಿವಾಸ ೫

೫೦೫
ಮಂಗಳಾರತಿಯ ಮಾಡಿರೊ ಶ್ರೀನಿವಾಸಗೆ ಪ.
ಸಂಗಸುಖದ ಭಂಗವೆಲ್ಲ
ಹಿಂಗಿತೆಂದು ಹೊಂಗಿ ಮನದಿ ಅ.ಪ.
ಘಟ್ಟಿಹೃದಯ ತಟ್ಟೆಯಲ್ಲಿ
ಕೆಟ್ಟ ವಿಷಯ ಬತ್ತಿ ಮಾಡಿ
ಶ್ರೇಷ್ಠ ಜ್ಞಾನ ತೈಲವೆರೆದು
ವಿಷ್ಣುನಾಮ ಬೆಂಕಿ ಉರಿಸಿ ೧
ಶ್ರದ್ಧೆಯಿಂದ ಎತ್ತಿ ಮನದ
ಬುದ್ಧಿಪ್ರಕಾಶಗಳು ತೋರಿ
ಎದ್ದ ಕಾಮಕ್ರೋಧಗಳನು
ಅದ್ದಿ ಪಾಪಗೆದ್ದು ಮನದಿ ೨
ತತ್ತ್ವಪ್ರಕಾಶಗಳ ತೋರಿ
ಚಿತ್ತಮಾಯಕತ್ತಲೆಯನು
ಕಿತ್ತುಹಾಕಿ ಹರಿಯ ಮೂರ್ತಿ
ಸ್ವಸ್ಥ ಚಿತ್ತದಿಂದ ನೋಡಿ ೩

೩೨೧
(ಮಂಗಳೂರಿನ ಗಣೇಶನನ್ನು ನೆನೆದು)
ಶ್ರೀ ಗಜವಕ್ತ್ರ ಪವಿತ್ರ ನಮೋ ಮನುಮಥಜಿತಸುತನಯ ಪ.
ಬಾಗುವೆ ಶಿರ ಶರಣೌಘಶರಣ್ಯ ಸು-
ರೌಘಸನ್ನುತ ಮಹಾಗುಮ ಸಾಗರ ಅ.ಪ.
ಸಿದ್ಧಸಮೂಹಾರಾಧ್ಯ ಪದದ್ವಯ ಶೋಭ ಸೂರ್ಯಾಭ
ಶುದ್ಧಾತ್ಮ ಫಣಿಪಬದ್ಧ ಕಟಿ ವಿಗತಲೋಭ
ಹೃದ್ಯಜನದುರಿತಭಿದ್ಯ ವಿನಾಯಕ
ವಿದ್ಯಾದಿ ಸಕಲ ಬುದ್ಧಿಪ್ರದಾಯಕ ೧
ಏಕದಂತ ಚಾಮೀಕರ ಖಚಿತ ವಿಭೂಷ ಗಣೇಶ
ಪಾಕಹ ಪ್ರಮುಖ ದಿವೌಕಸಪೂಜ್ಯ ವಿಲಾಸ
ಶೋಕರಹಿತ ನಿವ್ರ್ಯಾಕುಲ ಮಾನಸ
ಲೇಖಕಾಗ್ರಣಿ ಪರಾಕೆನ್ನ ಬಿನ್ನಪ ೨
ವರಮಂಗಲಪುರ ಶರಭಗಣೇಶ್ವರ ಧೀರ ಉದಾರ
ಸುರುಚಿರ ಶುಕ್ಲಾಂಬರಧರ ವಿಘ್ನವಿದಾರ
ಹರಿ ಲಕ್ಷ್ಮೀನಾರಾಯಣಶರಣರ
ಗುರು ಗುಹಾಗ್ರಜ ಮನೋಹರ ಸುಚರಿತ ೩

೩೫೯
(ಮಂಗಳೂರಿನ ಪ್ರಾಣದೇವರನ್ನು ನೆನೆದು)
ಪಾಲಿಸೆನ್ನ ಪಾವಮಾನಿ ಪಾವನಾತ್ಮ ಸುಜ್ಞಾನಿ ಪ.
ಮೂರ್ಲೋಕದ ಸಚರಾಚರಜಾಲದಂತರಂಗ ಕರುಣಿ ಅ.ಪ.
ಮೂರವತಾರವ ಗೈದು ಮುರಾರಿಯ ಪೂಜಿಸಿದೆ
ಪಾರಮೇಷ್ಠಿಪದ ಪೊಂದಿದೆ ಭಾರತಿಮನೋಹರ ೧
ಪಾರಗಾಣರು ನಿನ್ನ ಮಹಿಮೆ ಫಾಲನಯನಾದಿಗಳು
ಕ್ರೂರಕರ್ಮಿಗಳೇನರಿವರು ಶ್ರೀರಾಮಶರಣ್ಯ ೨
ಪುರಹೂತಾದ್ಯಮರಾರ್ಚಿತ ಪೂರ್ವಮಧ್ವಂಸ
ಅರಿವರ್ಗಗಳತಿಕ್ರಮವ ಧಿಕ್ಕರಿಸೈ ಸುಜ್ಞಾನವಿತ್ತು ೩
ಸರ್ವಾಪರಾಧಗಳನು ಸಾಧುವರದ ಕ್ಷಮಿಸು
ಗರ್ವಹಂಕಾರವೀಯದೆ ಗಜವರದನ ಭಕ್ತಿಯಿತ್ತು ೪
ಕರಣೀಕಾಗ್ರಣಿ ಮಂಗಲಪುರವರ ಪ್ರಾಣೇಶ
ವರ ಲಕ್ಷ್ಮೀನಾರಾಯಣ ಶರಣಾಗತರೀಶ ೫

೪೮೨
ಪೂರ್ಣಿಮೆಯ ದಿನ
(ಗರುಡ ದೇವರನ್ನು ಕುರಿತು)
ರಂಭೆ :ಮಂದಗಮನೆ ಪೇಳಿದಂದವನೆಲ್ಲ ಸಾ-
ನಂದದಿ ತಿಳಿದೆನೆ ಬಾಲೆ
ಇಂದಿದು ಪೊಸತು ಮತ್ತೊಂದು ವಾಹನ ವೇರಿ
ಮಂದರಧರ ಬಹನ್ಯಾರೆ೧
ಅಕ್ಕ ನೀ ಕೇಳಲೆ ರಕ್ಕಸವೈರಿಯ
ಪಕ್ಕದ ಮೇಲೇರಿಸುತ
ಅಕ್ಕರದಿಂದ ಕಾಲಿಕ್ಕಿ ಬರುವನೀತ
ಹಕ್ಕಿಯಂತಿಹನೆಲೆ ಜಾಣೆ೨
ಘೋರನಾಸಿಕದ ಮಹೋರಗ ಭೂಷಣ
ಧಾರಿವನ್ಯಾರೆಂದು ಪೇಳೆ
ಮಾರಜನಕಗೆ ವಾಹನನಾಗುವನೀತ
ಕಾರಣವೇನೆಂದು ಪೇಳೆ೩
ಊರ್ವಶಿ : ಈತನೆ ಮಹಾತಿಬಲ ಕಾಣೆ ಶ್ರೀವಿಷ್ಣುವಿಂಗೆ
ಕೇತನನಾದ ಪುನೀತನೆಲೆ ಜಾಣೆ
ಭೀತಿರಹಿತವಿಖ್ಯಾತಿ ಸರ್ಪಾ-
ರಾತಿ ಸೂರ್ಯಾನ್ವಯನ ಬಲಗಳ
ಚೇರಿಸಿದ ನಿಷ್ಕಾತುರನ ಹರಿ
ಪ್ರೀತ ವಿನತಾ ಜಾತ ಕಾಣಲೆ೪
ಗಂಡುಗಲಿ ಮಾರ್ತಾಂಡತೇಜಮಖಂಡ
ಬಲನಿವನು ಮಾತೆಯ
ಲಂಡಲೆಯ ಪರಿಖಂಡನಾರ್ಥದಿ
ಚಂಡವಿಕ್ರಮನು ನೇಮವ
ಗೊಂಡು ಬಳಿಕಾಖಂಡಲಾದ್ಯರ
ತಂಡವೆಲ್ಲವನು ಕೋಪದಿ
ಗಿಂಡುಗೆದರಿಯಜಾಂಡವೆಲ್ಲವ
ನಂಡಲೆದು ಕರದಂಡನಾಭನ
ಕಂಡು ಮೆಚ್ಚಿಸಿ ಅಮೃತಕುಂಭವ
ಕೊಂಡುಬಂದವನಂಡಜಾಧಿಪ೫
ವಾರಿಜಾಸನೆ ವಾಸುದೇವನು
ಭೂರಿವೈಭವದಿ ಗರುಡನ
ನೇರಿ ಪೂರ್ಣಮಿವಾರದಲಿ ಸಾಕಾರವನು
ದಯದಿ ತೋರುತ
ಸ್ವಾರಿ ಬರುತ ಶೃಂಗಾರಮೂರುತಿ ಭೇರಿಗಳ
ರವದಿ ಸನಕ ಸ-
ನಾರದಾದಿಮುನೀಂದ್ರವಂದಿತ
ಚಾರುಚರಣವ ತೋರಿ ಭಕ್ತರ
ಘೋರ ದುರಿತವ ಸೊರೆಗೊಳ್ಳಲು
ಶ್ರೀರಮಾಧವ ಮಾರಜನಕನು೬

೪೯೬
ಮಗಳೆ ಜಾನಕಿ ನಿನ್ನ ಸುಗುಣಸನ್ಮೋಹನ್ನ
ಖಗಕುಲರನ್ನ ಮನೋರಮಣ
ಮನೋರಮಣ ಕಾಂತ ಶ್ರೀರಾಮನ
ಅಗಲದಿರು ಕಾಣೆ ಮರಿಯಾನೆ ಶೋಭಾನೆ ೧
ಪತಿಯೇಳ್ವ ಮೊದಲು ಜಾಗ್ರತೆಯಾಗಿ ಯೆದ್ದು ಗೃಹ-
ಕೃತ್ಯಕೆಲ್ಲಕ್ಕನುಸರಿಸಿ
ಅನುಸರಿಸಿ ನಡೆ ನೀ ಮಗಳೆ
ಹಿತವಾಗಿ ಬಾಳು ಪತಿಯೊಳು ಶೋಭಾನೆ ೨
ಗಂಡನ ಮಾತಿಗೆ ದುರ್ಚಂಡಿಸದಿರು ಮಗಳೆ
ಗಂಡನುಣ್ಣದ ಮೊದಲು ನೀ
ಮೊದಲು ನೀನುಣ್ಣದಿರು
ಪುಂಡರೀಕಾಕ್ಷಿ ಪುಣ್ಯರಾಶಿ ಶೋಭಾನೆ ೩
ಮುಗುಳು ನಗೆಯ ಬೀರು ಜಗಳವ ಮಾಡದಿರು
ಜಗದೊಳು ಕೀರ್ತಿಯುತಳಾಗು
ಯುತಳಾಗು ಬಂಧುಗಳಲಿ ನೀ
ಹಗೆಯ ಮಾಡದಿರು ಕೃಪೆದೋರು ಶೋಭಾನೆ ೪
ವೃದ್ಧ ಮಾವನ ಪಾದ ಹೊದ್ದಿ ಸೇವೆಯ ಮಾಡು
ಸುದ್ಧ ಭಾವದೊಳು ನಡೆ ಮಗಳೆ
ನಡೆ ಮಗಳೆ ನಿತ್ಯಸುಮಂಗಲೆ
ಮುದ್ದಾಗು ಬಂಧು ಬಳಗಕ್ಕೆ ಶೋಭಾನೆ ೫
ಅತ್ತೆಯ ಮಾತಿಗೆ ಪ್ರತ್ಯುತ್ತರ ಕೊಡದಿರು
ಪ್ರತ್ಯೊಬ್ಬಳೆ ಸ್ಥಳದಿ ನಿಲದಿರು
ನಿಲದಿರು ನೀರಜಗಂಧಿ
ಸತ್ಯ ವಚನವನೆ ಸವಿಮಾಡು ಶೋಭಾನೆ ೬
ಮೈದುನರನ್ನು ತನ್ನ ಮಕ್ಕಳೆಂಬಂತೆ ನೋಡು
ಸಾಧುಭಾವದದಲಿ ನಡೆ ಮಗಳೆ
ನಡೆ ಮಗಳೆ ಪಂಕ್ತಿಯಲಿ
ಭೇದ ಮಾಡದಿರು ಕೃಪೆದೋರು ಶೋಭಾನೆ ೭
ಕಂಡರೆ ಶಿಷ್ಟರ ದಂಡ ನಮಸ್ಕರಿಸು
ಹಿಂಡು ದಾಸಿಯರ ದಣಿಸದಿರು
ದಣಿಸದಿರು ಉತ್ತಮಳೆಂದು ಭೂ-
ಮಂಡಲದಿ ಕೀರ್ತಿಪಡು ಪೂರ್ತಿ ಶೋಭಾನೆ೮
ಚಂಡಿತನವ ನಿನ್ನ ಗಂಡನೊಳ್ಮಾಡದಿರು
ಗಂಡಸರ ಮುಂದೆ ಸುಳಿಯದಿರು
ಸುಳಿಯದಿರು ಸಂತತ ಸೌಖ್ಯ-
ಗೊಂಡು ಬಾಳಮ್ಮ ಸೀತಾಭಾಮಾ ಶೋಭಾನೆ ೯
ಕ್ಷಮೆಯಲ್ಲಿ ಧಾತ್ರಿಯುಂಬ ಕ್ರಮದಲ್ಲಿ ಮಾತೆ ಸುರತ
ಸಮಯದಿ ವೇಶ್ಯಾ ತರುಣಿಯಳ
ತರುಣಿಯಳ ತೆರದಿ ರಾಮನ ಸತಿಯಂ-
ತೆ ಮಾಡವ್ವ ಸುಖಂ ಜೀವಾ ಶೋಭಾನೆ ೧೦
ಲಕ್ಷ್ಮೀನಾರಾಯಣರಂತೆ ಸೀತಾರಾಮರು ನೀವು
ಕುಕ್ಷಿ ಈರೇಳು ಜಗವನ್ನು
ಜಗವನ್ನು ನಮ್ಮನ್ನು ಸರ್ವರ
ರಕ್ಷಣ್ಯ ಮಾಡಿ ಸುಖಿಯಾಗಿ ಶೋಭಾನೆ ೧೧

೪೯೧
ಮುಕ್ಕೋಟ ದ್ವಾದಶಿಯ ದಿವಸ
(ಮಾರ್ಗಶಿರ ಶುದ್ಧ ದ್ವಾದಶಿಯ ಉತ್ಸವ)
ರಂಭೆ : ಮತಿವಂತೆ ಪೇಳೀತನ್ಯಾರೆ ದೇವ
ವ್ರತತಿಯಧಿಪನಂತೆ ನೀರೆ ತೋರ್ಪ
ಅತಿಶಯಾಗಮ ಬಗೆ ಬ್ಯಾರೆ ರತ್ನ
ದ್ಯುತಿಯಾಭರಣವ ಶೃಂಗಾರ ಆಹಾ
ಶ್ರುತಗೊಲಿಸೆನಗೆ ಆಶ್ರಿತ ರಕ್ಷಾರ್ಥಿತನ ಸಂ-
ಗತಿ ಸ್ರ‍ಮತಿ ತತಿಗಳ ಮತಿಗಗೋಚರನಂತೆ ೧
ಊರ್ವಶಿ : ಲಾಲಿಪುದೆಲೆಗೆ ಪೇಳುವೆನು ನೂತನವ
ಲೋಲ ಲೋಚನನ ನಾಟಕ ಸತ್ಕಥನವ
ಮೇಲಾಗಿ ಜಗದಿ ಶೋಭಿಪ ಶೇಷಾದ್ರಿಯಲಿ
ಬಾಲಾರ್ಕಸದೃಶನೀತನು ಇರ್ಪನಲ್ಲಿ
ನೀಲನಿಭಾಂಗನು ನೆನೆವರ ಪಾಪವ
ಘೋಲುಘಡಿಸಲೆಂದೆನುತಲಿ ಭಾರ್ಗವ
ಕೋಲಿಂದೆಸಗಿದ ಧರಣಿಗೆ ಬಂದು ಸ-
ಲೀಲೆಗಳೆಸಗುವ ಜಾಲವಿದೆಲ್ಲ ೨
ಸರಸಿಜಗಂಧಿ ಕೇಳ್ ದಿಟದಿ ತನ್ನ
ಅರಮನೆಯಿಂದ ಸದ್ವಿಧದಿ ಈರ್ವ-
ರರಸಿಯರ್ ಸಹಿತ ಮಿನಿಯದಿ ಅತಿ
ಭರದಿಂದ ಸೂರ್ಯನುದಯದಿ ಆಹಾ
ಉರುತರ ಹೇಮಪಲ್ಲಂಕಿಯೊಳಡರಿ
ತ್ವರಿತದಿ ಪೋಗುವ ಭರವಿದೆಲ್ಲಿಗೆ ಪೇಳೆ೩
ಊರ್ವಶಿ : ಮದ್ದಾನೆಗಾತ್ರೆ ಲಾಲಿಸಿ ಕೇಳು ಮಾತ
ಬದ್ಧ ನೀ ಪೇಳ್ದ ಮನದ ಶಂಕಾವ್ರಾತ
ತಿದ್ದಿಪೆ ಕೇಳು ಮಾರ್ಗಶಿರ ಮಾಸದೊಳು
ಶುದ್ಧ ದ್ವಾದಶಿ ಸೂರ್ಯ ಉದಯ ಕಾಲದೊಳು
ಭದ್ರಭವನವನು ಪೊರಟು ವಿನೋದದಿ
ಅದ್ರಿಧರನು ಸಜ್ಜನರೊಡಗೂಡಿ ಉ-
ಪದ್ರಿತ ಪಾಪವ ಛಿದ್ರಿಪ ಸ್ನಾನಕೆ
ರೌದ್ರಿತ ರಾಮಸಮುದ್ರದ ಬಳಿಗೆ ೪
ರಂಭೆ : ಆರರೆ ಆಶ್ಚರ್ಯವಾಯ್ತೆನಗೆ ಅತಿ
ಪರಮ ಮಹಿಮೆನೆಂದ ಮೇರೆಗೆ ಘನ-
ತರ ಸ್ನಾನವೇನಿದು ಕಡೆಗೆ ವೃತ
ದಿರವೋ ಉತ್ಸವವೋ ಪೇಳೆನಗೆ ಆಹಾ
ತರುಣಿ ರನ್ನಳೆ ನಿನ್ನ ಚರಣಕ್ಕೆ ನಮಿಪೆ ಈ
ಪರಿಗಳ ಸಾಂಗದಿಂದರುಹಬೇಕೆನಗಿನ್ನು ೫
ಊರ್ವಶಿ : ಅಕುಟಿಲೆ ಬಾಲೆ ಯೌವನವಂತೆ ಕೇಳೆ
ಸಕಲಾಂತರ್ಯಾತ್ಮನೀತನು ಸತ್ಯಶೀಲೆ-
ಪ್ರಕಟ ವ್ರತವಿದಲ್ಲ ಅಂಜನಾದ್ರಿಯಲಿ
ಭಕುತವತ್ಸಲನು ಉತ್ಸವಿಸುವನಲ್ಲಿ
ವಿಕಳಹೃದಯ ನರನಿಕರಕಸಾಧ್ಯವೆಂ
ದ್ಯುಕುತದಿ ಈ ಧರೆಯಲ್ಲಿ ಪ್ರತ್ಯೇಕದಿ
ಅಖಿಳೋತ್ಸವ ಮಸ್ತಕಕಿದು ವೆಗ್ಗಳ
ಮುಕುಟೋತ್ಸವವೆಂದೆನುತಲಿ ರಚಿಸುವ ೬
ರಂಭೆ : ನಳಿನಾಕ್ಷಿ ಲಾಲಿಪುದಿನ್ನು ಸ್ನಾನ
ವೊಲವಿಂದ ಗೈದ ಮೇಲಿವನು ತನ್ನ
ರಮಣಿಯರ್ಸಹಿತಂದಣವನು ಏರಿ
ನಿಲುನಿಲುತ್ಯಾಕೆ ಬರುವನು ಆಹಾ
ಪೊಳಲೊಳಗಿಹ ಜನನಿಳಯದ ದ್ವಾರದಿ
ಕಳಕಳವೇನಿದ ತಿಳುಪೆನಗೀ ಹದ೭
ಊರ್ವಶಿ : ಕುಂದರದನೆ ಬಾಲೆ ಚದುರೆ ಸೈ ನೀನು
ಮಿಂದು ತೋಷದಿ ಅಂದಣವನ್ನೇರಿ ತಾನು
ಇಂದೀ ಪುರದೊಳಿರ್ಪ ಜನರ ದೋಷಗಳ
ಕುಂದಿಸಲೆಂದವರವರ ದ್ವಾರದೊಳು
ನಿಂದಿರುತಲ್ಲಿಯದಲ್ಲಿ ಆರತಿಗಳ
ಚಂದದಿ ಕೊಳುತೊಲವಿಂದ ಕಾಣಿಕೆ ಜನ-
ವೃಂದದಿ ಕೊಡುತಾನಂದ ಸೌಭಾಗ್ಯವ
ಒಂದಕನಂತವ ಹೊಂದಿಸಿ ಕೊಡುವ ೮
ರಂಭೆ : ಸರಸಿಜಾನನೆ ಮತ್ತೇನಿದನು ತನ್ನ
ಅರಮನೆಯಲ್ಲಿ ಭೂದ್ವಿಜನರನು ಸರ್ವ
ಪುರಜನ ಸಹಿತೊಳಗಿವನು ನಾನಾ
ತರದಿ ಮೆರೆವ ಭೋಜನವನು ಆಹಾ-
ಕರಿಸಿ ಆಮೇಲೆ ರಾತ್ರಿಯಲಿ ಸಾಲಿನಲಿ ವಿ-
ಸ್ತರದ ಲಾಜದ ರಾಸಿಗಿರದೆ ಪೂಜಿಪುದ್ಯಾಕೆ ೯
ಊರ್ವಶಿ : ಮಂಗಲಾನನೆ ಲೇಸು ನುಡಿದೆ ಕೇಳ್ ನೀನು
ಗಂಗಾಜನಕ ತನ್ನ ಗೃಹದಿ ವಿಪ್ರರನು
ಹಿಂಗದೆ ಕರೆಸಿ ವಿಪ್ರರನೆಲ್ಲ ಬರಿಸಿ
ಸಂಗಾತದಲಿ ಆರೋಗಣೆ ಗೈದು ಮೆರೆಸಿ
ಅಂಗಣದಲಿ ರಾತ್ರೆಯಲಿ ವಿನೋದದಿ
ಕಂಗೊಳಿಸುವ ಉರಿದರಳ ಸಮೂಹಕೆ
ರಂಗಪೂಜೆಯನುತ್ತಂಗವಿಸುವ ನಿಗ-
ಮಂಗಳೊಡೆಯನು ವಿಹಂಗಮಾರೂಢ ೧೦
ರಂಭೆ : ಅಮಮ ಮತ್ತೇನಿದ ಪೇಳು ಶ್ವೇತ-
ಕುಮುದಾಪ್ತ ಠಾವಿನ ವೋಲು ಬಂದು
ಆದರಿಸಲಿದರ ಮಧ್ಯದೊಳು ತನ್ನ
ರಮಣಿಯರ್ ಸಹಿತ ತೋಷದೊಳು ಆಹಾ
ವಿಮಲವನ್ನೇರಿನ್ನೆಲ್ಲಿಗೈದುವನೆಂಬಾ-
ಗಮವ ಪೇಳೆನೆಗೆ ನೀ ನಮಿಪೆ ನಿನ್ನಂಘ್ರಿಯ ೧೧
ಊರ್ವಶಿ : ಥೋರ ಕನಕುಂಭಕುಚಭಾರೆ ಕೇಳೆ
ಶ್ರೀ ರಮಾರಮಣ ಪೂಜೆಯಗೊಂಡಾ ಮೇಲೆ
ಚಾರು ಈ ಹೂವಿನ ತೇರನೇರುತಲಿ
ಕೇರಿ ಕೇರಿಯೊಳಾರತಿಗೊಳ್ಳುತಲಿ
ಭೋರಿಡುತಿಹ ವಾದ್ಯಧ್ವನಿ ಘನತರ
ಭೇರಿ ಮೃದಂಗಾದ್ಯಖಿಳ ವಿನೋದದಿ
ಸ್ವಾರಿಗೆ ತೆರಳುವ ಕ್ರೂರ ನರರ ಆ-
ಘೋರ ಪಾಪ ಜರ್ಝರಿಸಲೆಂದು ೧೨
ರಂಭೆ : ಅರವಿಂದಾಕ್ಷಿಯೆ ಮತ್ತೇನಿದನು ತನ್ನ
ಅರಮನೆಯಿದಿರು ರಥವನು ತಾನು
ಭರದೊಳಗಿಳಿದಂದಣವನು ಏರಿ
ಮೆರೆವಾಲಯದ ಸುತ್ತುಗಳನು ಆಹಾ
ತಿರುಗುವನ್ಯಾಕೆ ಭೂದ್ವಿಜರ ಘೋಷದಿ ವಾದ್ಯ-
ಭರಿತ ಗಾಯನ ಭೇರಿ ಧ್ವನಿಗಳೇನಿದ ಪೇಳೆ೧೩
ಊರ್ವಶಿ : ಕೃಷ್ಣಾಂಕ ವದನೆ ಕೇಳೆಲೆ ಪೇಳ್ವೆ ನಿನಗೇ
ದುಷ್ಟಮರ್ದನ ರಥವಿಳಿವುತ್ತಲಾಗೇ
ಅಷ್ಟದಿಗ್ಭಾಗದಿ ಗೃಹಸುತ್ತಿನೊಳಗೆ
ಅಷ್ಟಾವಧಾನವ ರಚಿಸುತ್ತ ಕಡೆಗೆ
ಶ್ರೇಷ್ಠನು ರತ್ನಾಸನದಿ ಗ್ರಹದಿ ಪರ
ಮೇಷ್ಟಜನಕೆ ಸಂತೋಷಾನಂದದಿ
ಸೃಷ್ಟಿಯ ಜನರ ಅನಿಷ್ಟವ ತ್ಯಜಿಸುತ
ಇಷ್ಟವನೀವ ಯಥೇಷ್ಟ ದಯಾಬ್ಧ ೧೪
ರಂಭೆ : ಅರಿತೆನಾ ಸ್ವಚ್ಛ ಚಿತ್ತದಲಿ ಇನ್ನು
ಹರಿ ಏಕರೂಪನೆನ್ನುತಲಿ ಲಕ್ಷ್ಮೀ
ಕರವೆನಿಸುವ ಕಾರ್ಕಳದಲಿ ಭಾಗ್ಯೋ-
ದಯ ದೇವಾಲಯದ ಮಧ್ಯದಲಿ ಆಹಾ
ತ್ವರಿತದಿ ನುತಿಸಿರೊ ಗುರು ನಾರಸಿಂಹ ಶ್ರೀ-
ಕರ ವೆಂಕಟೇಶನ ಚರಣಕಮಲಗಳ ೧೫

೧೧೪
(ತುಳಸೀ ದೇವಿ ಪ್ರಾರ್ಥನೆ)*
ಮದ್ದಾನಿಕ್ಕಿದೇನೆ ಹರಿಗೆ ಮುದ್ದು ತುಳಸಾ ದೇವಿ
ಶುದ್ಧಾಮನದಿ ಪೂಜಿಸುವರಾ ಸಿದ್ಧವಾಗಿ ಕಾಯುವಿ ಪ.
ಕಮಲ ಮಲ್ಲಿಕಾದಿ ನಾನಾ ಸುಮನ ತತಿಗಳಿಂದಾ
ಕ್ರಮದಿ ಪೂಜೆ ಮಾಡಿ ನಿತ್ಯ ನಮಿಸೆ ಭಕ್ತಿಯಿಂದಾ
ಅಮಿತ ಮಹಿಮ ನಿನ್ನ ಹೊರತು ಕ್ಷಮಿಸನು ಮುಕುಂದಾ
ಭ್ರಮಿತನಾದ ನಿನ್ನ ಮೇಲೆ ಕಮಲೇಶ ಗೋವಿಂದ ೧
ಆದಿ ಲಕ್ಷ್ಮಿದೇವಿಯನ್ನು ಉರದೊಳಿಟ್ಟು ನಿನ್ನ
ಪಾದದಲ್ಲಿ ಧರಿಸಿದನೆಂದಾದಿಪುರಷನನ್ನ
ಬೋಧಿಸಿ ಕರ್ಣದಲ್ಲಿ ಮಸ್ತಕಾಧಿರೋಹವನ್ನ
ಸಾಧಿಸಿ ತದ್ಭಕ್ತಜನರಿಗಾದಿ ಬಹು ಪಾವನ್ನ ೨
ಸಂತತ ಹನ್ನೆರಡು ಕೋಟಿ ಸ್ವರ್ಣಪುಷ್ಪದಿಂದಾ-
ನಂತಾಭವದಿ ಪೂಜಿಸುವುದಕ್ಕಿಂತಲಧಿಕಾನಂದಾ
ಕಂತುಜನಕಗಹುದು ಕೋಮಲಾಂಶದಳಗಳಿಂದಾ
ಇಂತು ಶೇಷಗಿರೀಶಗಾದಿ ಕಾಂತೆ ಮೋಹದಿಂದಾ ೩

೧೭೬
(ಮನೆಬಾಗಿಲ ಮೇಲೆ ಶ್ರೀನಿವಾಸ ಮೂರ್ತಿ)
ಮಧುರತಾದಾಯಕ ಮಾಮವ ಮಾಧವ ನಿಧಿಗಿರಿನಾಯಕ
ವಿಧಿಭವ ಮಘವನ್ಮುಖ ಸುರವಂದಿತ
ಪದಕಮಲಾಶ್ರಿತ ಪರುಷಸುಖದಾಯಕ ಪ.
ಬಲಿಯ ದೃಢಕೆ ಮೆಚ್ಚಿ ಬಾಗಿಲ ಕಾಯ್ದನಿ-
ರ್ಮಲ ಕರುಣಾಮೃತ ವಾರಿಧೆ
ಸುಲಭದಿ ಮುಂದಿನ ವಲಭಿತ್ಪದವನು
ಸಲಿಸುತ ನೀನೀ ನಿಲಯದಿ ಸೇರಿದಿ ೧
ಮಾಕಳತ್ರ ಮಮತಾನರಮೋಹ ನಿ-
ರಾಕರಿಸಖಿಳ ಸುಖಾಕರನೆ
ಸ್ವೀಕರಿಸೆನ್ನಯ ಸರ್ವ ಸಮರ್ಪಣ
ಬೇಕು ಸರ್ವದಾ ತ್ವಜನ ತರ್ಪಣ ೨
ಭೂರಮೇಶ ಗೃಹದ್ವಾರದಿ ನೀ ನೆಲೆ-
ದೋರಲು ದುರಿತವು ಸೇರದಲೆ
ದೂರೋಡುವದೆಂದರಿತು ನಂಬಿದೆನು
ನೀರಜಾರಮಣ ಶೇಷ ಗಿರೀಶ ೩

೧೦೦
ಮನದೊಳಗಿರು ಹರಿಯೆ ಮೂರ್ಲೋಕ ದೊರೆಯೆ ಪ.
ಮನೆದೊಳಿ(?)ಗಿರು ಬಹು ಜನರು ಪೇಳುವ ದೂರು
ಎಣಿಸಲು ಶಕ್ತನಾರು ಮುಖಾಬ್ಜ ತೋರು ಅ.ಪ.
ನಿರ್ಗುಣ ಮೂರ್ತಿ ನೀನು ಪ್ರಾಕೃತ ಗುಣಸರ್ಗದಿ ಬರುವುದೇನು
ಸರ್ಗರಕ್ಷಣ ಪಾಪವರ್ಗವೆಲ್ಲವನು ನಿಸರ್ಗ ಮೀರದೆ ಮಾಳ್ಪ
ದುರ್ಗಮದ್ಭುತಕರ್ಮ ದೀರ್ಘದರ್ಶಿ ಮುನಿವರ್ಗಕೊಲಿದು ನಿಜ
ಮಾರ್ಗ ತೋರ್ಪ ಶ್ರೀ ಭಾರ್ಗವೀ ರಮಣಾ ೧
ಜಲದೊಳಗಾಡಿದನು ಬೇರನು ಕಿತ್ತಿ ಖಳರನು ಸೀಳಿದನು
ನೆಲನನಳೆದು ತಾಯಿ ತಲೆಯ ತರಿದು ನಿಜಲಲನೆಗೋಸುಗ ದೈತ್ಯ
ಕುಲವ ಸಂಹರಿಸಿದ ಶಿಲೆಯನು ರಕ್ಷಿಸಿ ಕಳವಳಿಸಿದ ಕಪಿ
ತಿಲಕನ ಸ್ನೇಹವ ಬಳಸಿದನೆಂಬುದು ೨
ಬಾಗಿಲ ಮುಚ್ಚಿದರೆ ಗೋಡೆಯ ಹಾರಿ ಹೋಗಿ ಮನೆಯ ಒಳಗೆ
ಬಾಗಿಲ ಮರೆಯಲಿ ಬಾಗಿನೋಡುತ ಮೆಲ್ಲಗಾಗಿ ಬೆಣ್ಣೆಯ ಮೆದ್ದು
ಸಾಗಿ ಬರುತಲಿರೆ ನಾಗವೇಣಿಯರು ಹಿಡಿಯಲು ನೀವಿಯ
ನೀಗಿ ಪುರುಷರನು ಕೂಗಿದನೆಂಬರು೩
ತೊಟ್ಟಿಲೊಳಗೆ ಮಲಗಿ ನಿದ್ರೆಯಗೈವ ಪುಟ್ಟ ಶಿಶುಗಳನೆಲ್ಲ
ತಟ್ಟಿ ಎಬ್ಬಿಸಿ ಕಣ್ಣಾಕಟ್ಟಿ ವಸ್ತ್ರದಿ ತಾನೆ ಚಿಟ್ಟನೆ ಚೀರಿ ಒ-
ತ್ತಟ್ಟು ಎಲ್ಲರು ಕೂಡಿ ಕಟ್ಟಿದ ಕರುಗಳ ಬಿಟ್ಟ ಮೊಲೆಗೆ ಒಳ-
ಗಿಟ್ಟ ಹಾಲು ಮೊಸರೊಟ್ಟಿಲಿ ಸವಿವುದೆ ೪
ವಿದ್ಯೆಯ ಕಲಿಯೆಂದರೆ ಅಮ್ಮಯ್ಯ ಎನಗೆ ನಿದ್ದೆ ಬರುವುದೆಂಬುವಿ
ಹೊದ್ದಿಸಿ ತಟ್ಟಿದರೆದ್ದು ಓಡುವಿ ಗೋಪೆರಿದ್ದ ಠಾವಿಗೆ ನಾನಾ
ಬದ್ಧವನು ಸುರುವಿ ಸಿದ್ಧವಾಗಿ ಕಾದಿರೆ ಕೈಗೆ ಸಿಕ್ಕದೆ
ಉದ್ಧವ ಗೃಹದೊಳು ಬೌದ್ಧನಂತಿರುವಿ ೫
ಕುದುರೆಯ ಹತ್ತಿದರೆ ಯಾರಾದರೂ ಕದನವ ಮಾಡಲಿಹರೆ
ಹೃದಯ ಮಂಟಪದಿ ನೀ ಸದರವಾಡುತಲಿರೆ
ಒದಗದು ದುಷ್ಕೀರ್ತಿ ಮದನ ಜನನಿವರ ಮದಮತ್ಸರಗಳ
ಒದೆದು ತೀವ್ರದಲಿ ಪದಯುಗ ಪಾಲಿಸುವುದಯ್ಯ ಗಿರೀಶ ೬

೪೫೬
ಮನವು ನಿನ್ನಲಿ ನಿಲ್ಲಲಿ ಅನುದಿನ ನಿನ್ನ ನೆನೆದು
ಮನವು ನಿನ್ನಲಿ ನಿಲ್ಲಲಿ ಪ.
ದುಃಖ ಸುಖ ಲೆಕ್ಕಿಸದೆ ಮುಖ್ಯ ಫಲ ಮುಂದರಿಸೆ
ಮಿಕ್ಕುತ್ತ ಸೊಕ್ಕಿ ಮೋಹಕ್ಕೆ ಸಿಕ್ಕದೆ ೧
ನಿನ್ನ ಗುಣ ವರ್ಣಿಸುತ ನಿನ್ನವರ ಮನ್ನಿಸುತ
ನಿನ್ನ ಪಾವನ್ನ ಲಾವಣ್ಯ ಧ್ಯಾನಿಸೆ ೨
ಸಂತೋಷ ನಿರಂತರವು ಸಂತ ಜನ ಸಹವಾಸವು
ಶಾಂತತ್ವವಾಂತು ಮಹಾಂತಧೈರ್ಯದಿ೩
ಭಕ್ತಿ ಸುವಿರಕ್ತಿ ಜ್ಞಾನ ಮುಕ್ತಿಗೆ ಮುಖ್ಯ ಕಾರಣ
ಚಿತ್ತದೊಳಿತ್ತೆಲ್ಲ ಹೊತ್ತು ಹೊತ್ತಿಗೆ೪
ಪ್ರಿಯ ಶ್ರೀಲಕ್ಷುಮಿನಾರಾಯಣ ಪರಾಯಣನ
ಧೈರ್ಯದಂತರ್ಯ ಗಾಂಭೀರ್ಯ ಭಾವದಿ೫

೫೦೯
ಮನವೆ ಶ್ರೀನಾರಾಯಣನನು ಸ್ಮರಿಸದೆ
ಮಾಯಾಪಾಶಕೆ ಸಿಲುಕುವರೇ ಪ.
ವನಜನಾಭನ ಪದ ವನರುಹಯುಗ್ಮವ
ಅನುದಿನ ನೆನೆಯದೆ ಒಣಗುವರೇ
ವನಿತಾಲಂಪಟನಾಗುತ ಸಂತತ
ಮನಸಿಜಯಂತ್ರಕೆ ಮನಮರಗುವರೇ ಅ.ಪ.
ತುಂಡು ಸೂಳೆಯರ ದುಂಡುಕುಚವ ಪಿಡಿದು
ಗಂಡಸುತನವನು ಕೆಡಿಸುವರೆ
ದಂಡಧರನ ಬಾಧೆ ಹೆಂಡತಿಯನು ಪಡ
ಕೊಂಡು ವೇದನೆಯನು ತಾಳುವರೆ
ಕಂಡು ಕಂಡು ನೀ ಗುಂಡಿಗೆ ಬಾಳ್ವರೆ
ಹೆಂಡಿರ ಸುಖರಸ ಉಂಡರು ಸಾಲದೆ ೧
ಬಂದ ಸುಖಕೆ ನೀ ಮುಂದುವರೆಯುತಲಿ
ಮಂದ ಅಸಮ ದುಃಖ ತಾಳುವರೇ
ಬಂದುದೆನ್ನ ಕಣ್ಣ ಮುಂದೆಯನುಭವಿಪೆ
ಎಂದಿಗೆನ್ನಾಜ್ಞೆಯು ಬಂದಪುದೋ ನಿಜ ೨
ಇಷ್ಟು ದಿನದಿ ನೀ ಭ್ರಷ್ಟೆಯರಲಿ ಮೋಹ
ಪಟ್ಟ ಭಾಗ್ಯವನೆಲ್ಲ ತೋರೊ ನೀನು
ಕಷ್ಟ ಮಾನಧನ ನಷ್ಟವಲ್ಲದೆ ಎಳ್ಳಿ-
ನಷ್ಟು ಸುಖವನ್ನು ಕಾಣೆನಿನ್ನು
ಇಷ್ಟಾರ್ಥಗಳೆಲ್ಲ ದೊರೆಕುವುದೈ ಪರ
ಮೇಷ್ಠಿ ಪಿತನ ಮನಮುಟ್ಟಿ ನೀವ್ ಭಜಿಸಿರೊ ೩
ವಿಷಯ ಪಳಂಚಿತನಾಗುವ ಸಂತತ
ಪಂಚಡಕೀರನು ಆಗುವರೇ
ಮುಂಚೆ ಮಾಡಿದ ಕರ್ಮ ಸಾಲದೆಂದೆನುತಲಿ
ಸಂಚಿತ ಪಾಪವ ಸಂಗ್ರಹಿಸುವರೇ
ಚಂಚಲಾಕ್ಷಿಯರ ಚಪಲದ ಮಾತನು
ವಂಚನೆ ಎಂಬುದು ತಿಳಿಯದೆ ಇರುವರೆ ೪
ಸಾರಿಸಾರಿ ಕೈ ಮುಗಿದು ಬೇಡುವೆನು ವಿ-
ಕಾರ ದುರ್ಬುದ್ಧಿಯ ಬಿಡು ಎಂದು
ಭಾರಿ ತಪ್ಪುಗಳ ಕ್ಷಮಿಸಿ ಕಾವ ಲಕ್ಷ್ಮೀ
ನಾರಾಯಣ ನೀನೇ ಗತಿಯೆಂದು
ಪಾರಮಾರ್ಥಿಕ ವಿಚಾರವ ಮಾಡುತ
ಶ್ರೀ ರಮೇಶನ ಚರಣಾರವಿಂದವ ಸೇರೋ ೫

೨೭೭
ಮನೆಯ ನಿರ್ಮಲಗೈದು ಮೋದಬಡಿಸುವುದು
ವನಜನಾಭನ ಭಕ್ತಿಯಂಬವಳ ಬಿರಿದು ಪ.
ಬಾಯಿಮೊದಲಾದೈದು ಬಾಗಿಲುಗಳಲ್ಲಿ
ವಾಯುವಂದ್ಯನ ಚರಿತ ವರ್ಣನಾದಿಗಳಾ
ಛಾಯಗೊಂಬುವ ತೆರದಿ ಚಿತ್ರಕೃತ್ಯವನೂ
ನೋವಿಕ್ಷದೋಲ್ ರಚಿಸಿ ನಿತ್ಯ ನಲಿವುದನು ೧
ಬುದ್ಧಿ ದೀಪವನು ಬಹು ಶುದ್ಧಕನು ತಾ
ತದ್ದಾರಿ ಮನವ ಮೇಲುದ್ಧರಿಸಿಕೊಳುತಾ
ಸಿದ್ಧಗಮ್ಯನ ಪದಕೆ ಸರಿಯಾಗಿಸುತಾ
ಬದ್ಧ ಬೊಗಳುತಾ ಜನರ ಬಾಯಿ ಮುಚ್ಚಿಸುತಾ ೨
ದೋಷ ದುಷ್ರ‍ಕತ ಕೆಸರ ಲೇಶವಿಡಗೊಡಳು
ಆಶೆಯೆಂಬುವ ಬಲೆಯ ಕೊೈಸಿ ಬಿಸುಟುವಳು
ಈಶ ಮಾನಿತ್ವಕವಕಾಶವೇನಿಡಳು
ಕೇಶವನ ಕರತಂದು ಕಾವಲಿರಿಸುವಳು ೩
ಇವಳಾಶ್ರಯವ ಪೊಂದಲ್ಯಾರಭಯವಿಲ್ಲ
ನವರೂಪಳನ್ನುಸರಿಸಿ ನಲಿವ ಸಿರಿನಲ್ಲ
ತವಕದಿಂದಲಿ ತಾನೆ ಓಡಿ ಬಂದೆಲ್ಲಾ
ಯುವತಿಯರ ಕೂಡಿ ತಾ ಪಾಡುವರೆ ಬಲ್ಲಾ ೪
ಕಂಜನಾಭನ ಕರುಣ ಪಂಜರದೊಳಿರಿಸಿ
ಸಂಜೀವನೌಷಧವ ಸುಲಭದೋಳ್ ಕುಡಿಸಿ
ಅಂಜಿಕೆಯ ಬಿಡಿಸಿ ರಿಪು ಪುಂಜವನ ಕಡಿಸಿ
ಮಂಜುಳಾತ್ಮಕ ಮಾಧವನ ಮುಂದೆ ಕರಿಸಿ ೫
ದಾನ ವ್ರತಾದಿಗಳನೇನ ಮಾಡಿದರು
ಶ್ರೀನಿವಾಸನ ಕರುಣ ಸಾಧ್ಯವಾಗಿರದು
ನೀನೆ ರಕ್ಷಕನೆಂಬ ಧ್ಯಾನದಲಿ ಮೆರದು
ಜ್ಞಾನ ಭಕ್ತಿಗಳಿಂದ ನಲಿವುದೇ ಬಿರುದು ೬
ಯುಕ್ತಿಯಿಂದಲಿ ನೋಡಲೆಲ್ಲ ಶಾಸ್ತ್ರದಲಿ
ಭಕ್ತಿಯೋಗವ ಪೇಳ್ವವೇಕಮತ್ಯದಲಿ
ಭುಕ್ತಿ ಮುಕ್ತಿಯ ಶೇಷ ಭೂಧರೇಶನಲಾ
ಸಕ್ತಿಯಿರೆ ಸಕಲಾರ್ಥವೀವನುತ್ಸವದಿ ೭

೩೯೧
ಮನ್ನಿಸೆನ್ನ ಮಹಾಲಿಂಗ ದೇವೋತ್ತುಂಗ
ಪುಣ್ಯಶ್ಲೋಕ ನಿನ್ನ ವರ್ಣಿಪೆ ಮುಕ್ಕಣ್ಣ ಪ.
ಭಕ್ತಪಾರಿಜಾತ ಶಕ್ತಿದೇವಿಪ್ರೀತ
ಸತ್ಯಧರ್ಮಯೂಥ ಸ್ವಾಮಿಲೋಕನಾಥ ೧
ವಂದನೀಯ ಕೃಪಾಸಿಂಧು ದಿವ್ಯರೂಪ
ಚಂದ್ರಚೂಡ ಸಾಂದ್ರಾನಂದ ವೈಷ್ಣವೇಂದ್ರ ೨
ಮಾರವೈರಿ ಲಕ್ಷ್ಮೀನಾರಾಯಣಪ್ರೇಮಿ
ಸಾರತತ್ತ್ವಬೋಧ ಸಾಧುಸುಪ್ರಸೀದ ೩

೨೨೩
ಮರುಳನಾಗಿ ಬಂದು ತೀರ್ಥಪುರಕೆ ಸೇರಿದೆ
ಕರಸಿಕೊಳ್ಳೊ ಮನೆಗೆ ಬೇಗ ಕರುಣವಾರಿಧೆ ಪ.
ಸರಸಿಜಾದಿ ವಂದ್ಯ ನಿನ್ನ ಚರಣಕಮಲವ
ಮರಳಿ ಮರಳಿ ಬೇಡಿಕೊಳುತ ಮಹಿಮೆ ಕೇಳುತ
ಸ್ವರಗಳಿಂದ ಪೊಗಳುತಿರುವ ಸುಖವ ತ್ಯಜಿಸುತ ೧
ಮೂಲೆ ನಾಲ್ಕರಲ್ಲಿ ಪುಷ್ಪಮಾಲೆಯಿರಿಸುತ
ಮೇಲುಗಟ್ಟು ಬಿಗಿದು ದೀಪಮಾಲೆ ಬೆಳಗುತ
ಗಾಳಿದೇವನೆಂದ ತತ್ವಮೂಲ ತಿಳಿವುತ
ಶ್ರೀಲಲಾಮ ನಿನ್ನ ಪೂಜೆ ಮಾಡದೇಳುತ ೨
ಇಂದಿರೇಶ ಎನ್ನ ತಪ್ಪನೊಂದ ನೋಡದೆ
ತಂದೆ ಎನ್ನ ಕರಸಿಕೊಳ್ಳೊ ಹಿಂದೆ ದೂಡದೆ
ಚಂದನ ಸ್ವರೂಪ ಪರಾನಂದ ಕಾರಣಾ
ಬಂದು ಕಾಯೊ ಭುಜಗ ಗಿರೀಶ ಭಕ್ತಭೂಷಣ ೩

೨೫೩
ಮರುಳುತನವಿದ್ಯಾಕೆ ಮನವೆ ಮಂದಭಾವದಿ ಶ್ರೀ-
ಧರೆಯರಸ ಸ್ವೇಚ್ಛೆಯಿಂದ ಪೊರೆವ ತಾನೆ ಕರುಣದಿ ಪ.
ಹಲವು ವಿಧದ ವೃಕ್ಷವಿರಲು ಕೆಲವು ಕೆಲವು ಕಾಲ ನಾನಾ
ಫಲಗಳನ್ನು ತೋರ್ಪುದು ಶ್ರೀ ಲಲನೆಯರ ಸನಿಚ್ಛೆಯಿಂದ ೧
ಛಳಿಯು ಬಿಸಿಲು ಮಳೆಯು ಗಾಳಿ ಸುಳಿವದ್ಯಾರ ಕೃತ್ಯವೆಂದು
ತಿಳಿದು ನೋಡಲಿನ್ನು ವ್ಯರ್ಥ ಫಲವಗೊಳ್ಳುತಳಲದಿರು ೨
ಸತ್ಯ ಸಂಕಲ್ಪಾನುಸಾರ ಭೃತ್ಯವರದ ಕರುಣದಿಂದ-
ಲಿತ್ತುದೆ ಸಾಕೆಂದು ತಿಳಿವದುತ್ತಮ ಸಾಂಗತ್ಯ ಬಯಸು ೩
ಹಸಿದ ವೇಳೆಯಲ್ಲಿ ತಾಯಿ ಬಿಸಿಯ ಹಾಲ ತಣಿಸಿ ತನ್ನ
ಶಿಶುವಿಗೀವ ತೆರದಿ ಭಕ್ತವಶನ ಮೇಲೆ ಭಾರವಿರಿಸು ೪
ನೆನೆವ ಜನರ ಮನದೊಳಿರುವ ವನಜನಾಭ ವೆಂಕಟೇಶ
ವಿನಯದಿಂದ ಕಾವನೆಂಬ ಘನವ ತಿಳಿದು ಪಾಡಿ ಪೊಗಳು ೫

೧೧೩
ಮರೆಯದಿರು ಮಹಾಮಾಯೆ ಮಾರುತನ ತಾಯೆ
ಕರುಣಿಕರಕಮಲವನು ಶಿರದೊಳಿರಿಸುತ ಕಾಯೆ ಪ.
ಪುಷ್ಟಿಕರಿ ನೀ ಪೂರ್ಣ ದೃಷ್ಟಿಯಿಡಲೀಗಖಿಳ
ಕಷ್ಟ ಪರಿಹಾರಗೈವುತಿಷ್ಟಾಪೂರ್ತಿಗಳು
ಸ್ಪಷ್ಟವಾಗುವವು ಸಕಲೇಷ್ಟದಾಯಕ ನಮ್ಮ
ವಿಠ್ಠಲನ ಸೇವೆಗುತ್ರ‍ಕಷ್ಟ ಸನ್ನಹವಹದು ೧
ಲೋಕನಾಯಕಿಯೆ ಕರುಣಾಕಟಾಕ್ಷವನಿರಿಸು
ಭೀಕರಿಸುತಿಹ ಮನದ ವ್ಯಾಕುಲವ ಹರಿಸು
ಪಾಕ ಶಾಸನ ಪೂಜೈ ಪದಕಂಜ ಭಕ್ತಜನ
ಶೋಕಸಾಗರ ಶೋಷಣೈಕ ನಿಧಿ ಹರಿಸಹಿತ ೨
ಹಿಂದೆ ಬಹು ಥರದಿ ನಾನೊಂದ ಪರಿಯನು ಮನಕೆ
ತಂದು ದಯದೋರಿ ನೀ ಬಂದಿರುವಿ ಮನೆಗೆ
ಮುಂದೆನ್ನ ಬಿಡದೆ ಗೋವಿಂದ ವೆಂಕಟಪತಿಯ
ಹೊಂದಿರುವನಲಿ ಮಮತೆಯಿಂದಿಲ್ಲಿ ನೆಲೆಯಾಗು ೩

೧೫
ಮರೆಯದಿರೆಲೊ ಮನುಜಾ ಮಾಧವನನ್ನು
ಮರೆಯದಿರೆಲೋ ಶುದ್ಧ ಮರುಳೆ ಮಾತನು ಕೇಳು
ಪರಿಪರಿಯಲಿ ನಮ್ಮ ಪೊರೆವ ಕಾರುಣಿಕನ ಪ.
ತನ್ನ ಸೇವೆಗೆ ಸಾಧನವಾಗಿಹ ದೇಹ-
ವನ್ನು ಪಾಲಿಸಿದವನ
ಯಿನ್ನು ನೀ ತಿಳಿಯದೆ ಅನ್ಯ ದೈವಗಳನ್ನು
ಮನ್ನಿಸಿ ಮನದಣಿದನ್ನ ನಾಯಕನನ್ನು ೧
ಹಸ್ತ ಪಾದಾದಿಗಳ ಕೊಟ್ಟದರಿಂದ
ವಿಸ್ತರಿಸಿರುವಾನಂದ ತೋರುವ ಸುರ
ಮಸ್ತಕ ಮಣಿಯನು ಮರೆತು ಮೂಢರ ಸೇರಿ
ಬಸ್ತಕನಂತೆ ನಿರಸ್ತನಾಗದೆಯೆಂದು ೨
ಮನೆಯಲಿ ನಿಲಿಸಿರುವ ವಾಕ್ಕಾಯಕರ್ಮ
ಮನದಲಿ ತುಂಬಿರುವ ನಮ್ಮಯ ಸರ್ವ
ವನು ತನಮನ ತಾನೆ ನೆನೆದು ಪಾಲನೆ ಗೈವ
ವನಜನಯನ ಲಕ್ಷ್ಮಿಯಿನಿಯನ ಮಹಿಮೆಯ ೩
ದುರಿತರಾಶಿಯನರದು ದುರ್ ಹೃದಯರ
ತರಿದು ಕಾಲಿಂದಲೊದೆದು
ಸಿರಿ ಸಹಿತವಾಗಿ ನಮ್ಮಲ್ಲಿರುವನ ಸರ್ವಾಮಯ
ಹರ ಪದದಲ್ಲಿ ಭಾರವಿರಿಸು ವಿಚಾರಿಸು ೪
ಬಿಡು ಬಿಡು ಭ್ರಾಂತಿಯನು ಮುರಾಂತಕನ-
ಲ್ಲಿಡು ನಿನ್ನ ಚಿಂತೆಯನು
ಕಡಿವನು ವೈರಿಗಳ ಕೊಡುವನು ಶುಭಗಳ
ಒಡೆಯ ವೆಂಕಟಪತಿ ತಡಿಯ ತೋರುವನೆಂದು ೫

೧೪
ಮರೆಯಬಾರದು ನಮ್ಮ ಮುರವೈರಿಯ
ಕರುಣಾಕರ ಸಿರಿವರನಾದ ದೊರೆಯ ಪ.
ಪರಿಕಿಸುವನು ನಾನಾ ತರದಿಂದಲಿ
ಜರಿವನು ಮತ್ತೆ ನೇವರಿಸುವನು
ಸುರ ನರೋರಗ ಪಕ್ಷಿಯಿರೆ ತರು ಮೊದಲಾಗಿ
ಪೊರೆವ ಮೆರೆವ ಕರೆದಲ್ಲಿ ಬರುವ ೧
ಬಡತನದಲಿ ಭಾಗ್ಯಕಾಲದಲಿ
ಕಡು ಕಷ್ಟದಲಿ ಸೌಖ್ಯ ವೇಳೆಯಲಿ
ಅಡವಿಯಲಾದರು ಅರಮನೆಯಲ್ಯಾದ-
ರೊಡೆಯ ಸಲಹನೆ ಮೀರನು ಭಿಡೆಯ ೨
ಸರ್ವ ಸ್ವತಂತ್ರ ಶ್ರೀ ರಮಣೀಶ
ನಿರ್ವಹಿಸುವನು ನಂಬುವರಾಶಾ
ಭರ್ವಸವಿಡು ಶೇಷ ಪರ್ವತೇಶ್ವರನಲಿ
ನೀರ್ವಾಣೇಶ ಸರ್ವರೊಳಿರುವ ೩

೩೬೧
ಮರೆಯಲಿನ್ನೆಂತುಪಕಾರ ಮಾರುತಿ
ಮರೆಯಲಿನ್ನೆಂತುಪಕಾರ ಪ.
ವಿಧಿ ಮುಂತಾದ ತ್ರಿದಶರಿಂದೆನ್ನಯ
ಸದಮಲಪ್ರಾಣಾಧಾರ ೧
ಬ್ರಹ್ಮಚರ್ಯವ್ರತಧರ್ಮನಿಯಾಮಕ
ನಿರ್ಮಲ ವಜ್ರಶರೀರ ೨
ದಾಸವರ್ಯ ಗುಣರಾಶಿ ತ್ವದೀಯ ವಿ-
ಶ್ವಾಸವಿನ್ನೆಷ್ಟೊ ಗಭೀರ ೩
ವ್ಯಾಪ್ತಮಾದಾಪದಕಾಪ್ತ ನಿನ್ನುಪಕೃತಿ
ಸಪ್ತಸಾಗರದಿಂದಪಾರ ೪
ಶ್ರೀಲಕ್ಷ್ಮೀನಾರಾಯಣನು ಹನುಮನ
ಆಲಿಂಗಿಸಿದನುದಾರ ೫

೪೧೨
ಮಹಾಮಾಯೆ ಗೌರಿ ಮಾಹೇಶ್ವರಿಪ.
ವಇಹಾದೇವಮನೋಹಾರಿ ಶಂಕರಿ
ಮಹಾಪಾಪಧ್ವಂಸಕಾರಿ ಶ್ರೀಕರಿ
ಮಾಂ ಪಾಹಿ ಪಾಹಿ ಶೌರಿಸೋದರಿಅ.ಪ.
ಕಾಮಕೋಟಿಸುಂದರಿ ಶುಭಕರಿ ಕರಿಕುಂಭಪಯೋಧರಿ
ಕಾಮಿತಪ್ರದೆ ಕಂಬುಕಂಧರಿ
ಹೇಮಾಲಂಕಾರಿ ಹೈಮವತಿ ಕುವರಿ೧
ಭಾನುಕೋಟಿಭಾಸ್ಕರಿ ಭವಹರಿ ಭಜಕಾಮೃತಲಹರಿ
ಸ್ಥಾಣುವಲ್ಲಭೆ ದನುಜಸಂಹಾರಿ
ಜ್ಞಾನಾಗೋಚರಿ ಜಗತ್ರಯೇಶ್ವರಿ೨
ಪೂರ್ವದೇವಭೀಕರಿ ಭ್ರಾಮರಿ ಪುಳಿನಾಖ್ಯ ಪುರೇಶ್ವರಿ
ಸರ್ವಲಕ್ಷ್ಮೀನಾರಾಯಣೇಶ್ವರಿ
ಸರ್ವಸಹಚರಿ ಶಶಾಂಕಶೇಖರಿ೩

೩೭೬
ಮಾತೆ ಸರಸ್ವತಿ ಮಂಜುಳ ಮೂರುತಿ
ಚೇತನಾತ್ಮಕಿ ಭಾರತಿ ಪ.
ಪ್ರೀತಿಯಿಂದೀವುದು ಪೀತಾಂಬರಧರನ
ಸಾತಿಶಯದ ಭಕುತಿ ಅ.ಪ.
ಗುರುಹಿರಿಯರ ಕಂಡು ಬಿರುನುಡಿ ನುಡಿಸದೆ
ಕರುಣಿಸೆನಗೆ ಸನ್ಮತಿ
ಪರಮಪಾವನ ವೈಷ್ಣವರ ಪಾದಾಂಬುಜ ಮಧು-
ಕರದಂತಿರಲಿ ಮದ್ರತಿ ೧
ಶ್ರೀಶನ ಮೂರ್ತಿ ತಾರೇಶನಂದದಿ ಹೃದಯಾ-
ಕಾಶದೊಳು ಕಾಣುತಿ
ದೂಷಣ ಕಾಮಾದಿ ಕ್ಲೇಶವ ಬಿಡಿಸುತ್ತ
ಗೈಸಮ್ಮ ಹರಿಯ ಸ್ತುತಿ ೨
ಮನುಜರ ರೂಪದಿ ದನುಜರು ಭೂಮಿಯೊಳ್
ಜನಿಸಿದರ್ಜಲಜನೇತ್ರಿ
ಅನಘ ಲಕ್ಷುಮಿನಾರಾಯಣನ ದಾಸರಿಗೆಲ್ಲ
ಜನನಿಯೆ ನೀನೆ ಗತಿ ೩
ಭಾರತಿದೇವಿಯ ಸ್ತುತಿ

೨೧೨
ಮಾಧವ ರಕ್ಷಿಸು ಮಧುಸೂದನ ವೃಥಾ
ಕ್ರೋಧವ್ಯಾಕೊ ಸುರ ಸೌಖ್ಯ ಸಾಧನ ಪ.
ದೇಹದಲ್ಲಿ ಬಲ ಕುಂದುತಲಳುವೆ ಮುಂದ-
ಕ್ಕಾಹ ರೀತಿ ತಿಳಿಯದೆ ಬಳಲುವೆ
ಮೋಹ ಪಾಶದಲಿ ಸಿಕ್ಕಿ ನರಳುವೆ ಚಿತ್ಸಂ-
ದೋಹ ಎಂದು ತವಪಾದ ನೆಳಲೀವೆ ೧
ಯಾತಕಿಂತು ಸಾವಕಾಶ ಮಾಡುವಿ ದೀನ
ನಾಥ ಬಹು ಪರಿಕಿಸಿ ನೋಡುವಿ
ಪಾತಕಾಂಶವಿರಲು ನೀಡಾಡುವಿ ಎನ್ನ
ಮಾತನ್ಯಾಕೆ ಮರೆತು ಮುಂದೋಡುವಿ ೨
ನಿತ್ಯವಾದ ನಿನ್ನ ಸೇವೆ ನಡೆಸಲು ತಕ್ಕ
ಶಕ್ತಿಯಿಲ್ಲ ಸ್ವರವನ್ನೆತ್ತರಿಸಲು
ಒತ್ತಿ ಬಹ ವಿಧ ವಿಧ ಕೊರೆತವು ಗಂಡ
ಕತ್ತರಿಯಂದದಿ ಕ್ಲೇಶ ಭರಿತವು ೩
ಎತ್ತಬಾರದೇನೊ ಮೇಲೆ ಸಿರಿನಲ್ಲ ಹೀಗೆ
ಭೃತ್ಯನನ್ನು ಬಿಡುವುದು ಥರವಲ್ಲ
ದತ್ತ ಸ್ವಾತಂತ್ರ್ಯವರಿಯದ ಕ್ರಮವೆಲ್ಲ ತೀರಿ
ಕತ್ತಲೆ ಮುಸುಕಿದಂತಿರುವುದಲ್ಲ ೪
ಮಾಯಕ ಮೋಹದಿ ಸಿಕ್ಕಿ ನೊಂದೆನು ತಿಮ್ಮ
ರಾಯ ಶೇಷ ಗಿರೀಶ ಕೇಳ್ಮುಂದೇನು
ಬಾಯ ಬಿಟ್ಟು ಬಿರಿನುಡಿಯಂದೆನು ಲಕ್ಷ್ಮೀ
ಪ್ರೀಯನೆಣಿಸದಿರದ ನೊಂದೆನು ೫

೪೨೬
ಮಾಮವ ಮಮ ಕುಲಸ್ವಾಮಿ ಗುಹ
ನತಜನ ದುರಿತಾಪಹ ಪ.
ಭೀಮವೀರ್ಯ ನಿಸ್ಸೀಮಪರಾಕ್ರಮ
ಧೀಮತಾಂವರ ನಿರಾಮಯ ಜಯ ಜಯಅ.ಪ.
ಜ್ಞಾನಶಕ್ತಿ ಶತಭಾನುಭಾಸುರ ಪ್ರಸನ್ನ ಪಾವನ್ನ
ಮೀನಕೇತನಸಮಾನ ಸಹಜ ಲಾವಣ್ಯ
ಗಾನಲೋಲ ಕರುಣಾನಿಧಿ ಸುಮನಸ-
ಸೇನಾನಾಥ ಭಾವನಿಸುತ ಸುಹಿತ೧
ಪಟುತರಶಕ್ತಿ ಕುಕ್ಕಟ ಕುಲಿಶಾಭಯಶಯ ನಿರಪಾಯ
ನಿಟಿಲಾಕ್ಷತನಯ ನಿಗಮಜ್ಞ ಬಾಹುಲೇಯ
ಕುಟಿಲ ಹೃದಯ ಖಲಪಟಲವಿದಾರಣ
ತಟಿತ್ಸಹಸ್ರೋತ್ಕಟರುಚಿರ ಮಕುಟ೨
ಪಾವಂಜಾಖ್ಯ ಪವಿತ್ರ ಕ್ಷೇತ್ರಾಧಿವಾಸ ಸರ್ವೇಶ
ದೇವ ಲಕ್ಷ್ಮೀನಾರಾಯಣಸ್ಮರಣೋಲ್ಲಾಸ
ಸೇವಕ ವಿಬುಧಜನಾವಳಿಪಾಲಕಕೇವಲ ಸುಖಸಂಜೀವ ಜೀವನದ೩

೪೬೧
ಸಾಯಬೇಕೊಂದು ದಿನ ಎಲೆ ಮನ ಪ.
ಮಾಯಾಮಮತೆಯ ಜಾಯಾದಿಗಳ ಸ-
ಹಾಯವಿದ್ಧರೀ ಕಾಯವ ತೊರೆದು ೧
ಎಷ್ಟು ಬದುಕಿದು ಗಟ್ಟ್ಯಾಗಿದ್ದರೂ
ಪಟ್ಟವಾಳಿದರು ಬಿಟ್ಟೆಲ್ಲವನು ೨
ಕರ್ತ ಲಕ್ಷ್ಮೀನಾರಾಯಣನ ಪಾದ
ಭಕ್ತಿಸಾಧನೆಯೊಳ್ ನಿತ್ಯನಾಗಿರು ೩

೪೧೩
ಮಾಯಾಮಯ ಜಗವೆಲ್ಲ ಇದ-
ರಾಯತ ತಿಳಿದವರಿಲ್ಲಪ.
ಕಾಯದಿಂ ಜೀವನಿಕಾಯವ ಬಂಧಿಸೆ
ನೋಯಿಸುವಳು ಸುಳ್ಳಲ್ಲಅ.ಪ.
ತಿಳಿದು ತಿಳಿಯದಂತೆ ಮಾಡಿ ಹೊರ-
ಒಳಗಿರುವಳು ನಲಿದಾಡಿ
ಹಲವು ಹಂಬಲವ ಮನದೊಳು ಪುಟ್ಟಿಸೆ
ನೆಲೆಗೆಡಿಸುವಳೊಡಗೂಡಿ ೧
ಯೋಷಿದ್ರೂಪವೆ ಮುಖ್ಯ ಅ-
ಲ್ಪಾಸೆಗೆ ಗೈವಳು ಸಖ್ಯ
ದೋಷದಿ ಪುಣ್ಯದ ವಾಸನೆ ತೋರ್ಪಳು
ಜೈಸಲಾರಿಂದಶಕ್ಯ೨
ಕರ್ತ ಲಕ್ಷ್ಮೀನಾರಾಯಣನ
ಭೃತ್ಯರ ಕಂಡರೆ ದೂರ
ಚಿತ್ಪ್ರಕೃತಿಯಿಂದ ಪ್ರೇರಿತಳಾಗಿ ಪ-
ರಾರ್ಥಕೆ ಕೊಡಳು ವಿಚಾರ೩

೨೯೭
ಮಾರುತನಿಗೆ ಮಂಗಳಾರತಿಯೆತ್ತುವ ಧೀರರೆಲ್ಲರು
ನೋಡುವರೆ ಬನ್ನಿ
ಶ್ರೀರಮಣೀಯ ಕುಮಾರನೆನಿಸಿದಂಥ ಭಾರತಿವರ
ಶೇಷಾಧರ ಕೂರ್ಮನಿಗೆ ಪ.
ಇಂದ್ರಾದಿ ಶರದಿಂದ ನೊಂದ ಕಪಿಗಳನ್ನು
ತಂದ ಸಂಜೀವನ ಗಿರಿಯಿಂದಲೀ
ಮಂದ ಭಾವವ ಕಳದಂದು ಪರ್ವತವನ್ನು
ನಿಂದಲ್ಲಿಂದಲೆ ಹಿಂದಕ್ಕೆ ಬಿಸುಟಂಥ೧
ವೈಷ್ಣವರಿಗಳೊಳು ಶ್ರೇಷ್ಠನೆನಿಸಿದಂಥ
ದುಷ್ಟ ಜರಾಸಂಧ ಕಷ್ಟ ವೃತ್ತಿ ಬಡಿಸಿದಂಥ
ಮೆಟ್ಟಿ ಮುರಿದು ಪರಮೇಷ್ಠಿ ಯಾಗವ ಮಾಡಿ
ಕೃಷ್ಣಗೆ ಪರಮ ಸಂತುಷ್ಟಿ ಬಡಿಸಿದಂಥ ೨
ಮೂರೇಳು ದುರ್ಭಾಷ್ಯ ಖಂಡಿಸಿ ಕೃಷ್ಣನ
ದ್ವಾರಕಪುರದಿಂದಿಲ್ಲಿಗೆ ಕರಿಸಿ
ಧಾರುಣೀಶ ವೆಂಕಟಾಚಲಪತಿಯೆಂದು
ತೋರಿದ ಸಜ್ಜನಾಧಾರ ಯತೀಂದ್ರಗೆ ೩

೪೭೭
(ಧ್ರುವನು ಜನಿಸಿದಾಗಿನ ಜೋಗುಳ ಹಾಡು)
ಮುತ್ತಿನ ಸರಪಣಿ ಹಸ್ತದಿ ಪಿಡಿದು
ಮತ್ತೈದೆಯರೆಲ್ಲ ಸುತ್ತಲೂ ನೆರೆದು
ಪುತ್ರರತ್ನವ ತಂದು ತೊಟ್ಟಿಲೊಳಿಟ್ಟು
ಮತ್ತಕಾಶಿನಿಯರು ತೂಗಿದರೊಟ್ಟು ಜೋ ಜೋ ೧
ಮಾರನ ಹೋಲ್ವ ಶೃಂಗಾರನೆ ಜೋ ಜೋ
ಧಾರುಣಿಪತಿ ಸುಕುಮಾರನೆ ಜೋಜೋ
ಸಾರಸನೇತ್ರಪವಿತ್ರನೆ ಜೋ ಜೋ
ಚಾರುಮೋಹನ ಶುಭಗಾತ್ರನೆ ಜೋಜೋ ಜೋಜೋ ೨
ಜೋ ಜೋ ಮಕ್ಕಳ ಕಂಠಾಭರಣ
ಜೋ ಜೋ ಸುರತರುಪಲ್ಲವಚರಣ
ಜೋ ಜೋ ಸಜ್ಜನ ಹೃದಯಾನಂದ
ಜೋ ಜೋ ಉತ್ತಾನಪಾದನ ಕಂದ ಜೋ ಜೋ೩
ತೃವಿ ತೃವಿ ಲಕ್ಷ್ಮೀನಾರಾಯಣ ಶರಣ
ತೃವಿ ತೃವಿ ಪರಿಪೂರ್ಣ ಸದ್ಗುಣಾಭರಣ
ತೃವಿ ತೃವಿ ಸುಸ್ಮಿತವದನವಿಲಾಸ
ತೃವಿ ತೃವಿ ಚಂದಿರಕಿರಣ ಪ್ರಕಾಶ ಜೋ ಜೋ ೪

ಮುಯ್ಯದ ಹಾಡುಗಳು
೨೮೬
ನೋಡೆ ಧರಣಿ ನಿನ್ನ ಬೀಗರೋಡಿ ಬರುವುದಾ
ಕಾಡು ಜನರು ನಗುವ ರೀತಿ ಮಾಡಿ ಮೆರೆವುದಾ ಪ.
ಸುತ್ತ ನಾಲ್ಕು ಮುಖದಿ ವೇದ ತತ್ವ ಪೇಳ್ವ ಹಂಸ ಪಕ್ಷಿ
ಹತ್ತಿಕೊಂಡು ಬಂದ ಹಳಬ ಮುತ್ಯನೊಬ್ಬನು
ಹಸ್ತದೊಳಗಕ್ಷಮಾಲೆಯೆತ್ತಿ ಮಣಿಗಳೆಣಿಸುವಗಿ
ನ್ನೆತ್ತ ಪೂಜೆಯಿಲ್ಲವೆಂಬರತ್ಯಾಶ್ಚರ್ಯವರಿಯೆಯ ೧
ಮತ್ತೊಬ್ಬನ ನೋಡೆ ಮುದಿಯೆತ್ತನೇರಿ ಬರುವನಿವನ
ಜೊತೆಯಲಿರುವ ಭೂತಗಣವು ಸುತ್ತ ಮೆರೆವುದ
ಬತ್ತಲಿದ್ದು ಭಸ್ಮ ಪೂಸಿ ಕೃತ್ತಿವಾಸನನಾದ ಫಾಲ
ನೇತ್ರ ರುಂಡಮಾಲಶೂಲವೆತ್ತಿ ಕುಣಿವ ಮುತ್ಯತನವ ೨
ಗರುವದಿಂದ ಗಜವನೇರಿ ಬರ್ವನ ನೋಡಮ್ಮ ಶತ
ಪರ್ವವನ್ನು ಪಿಡಿದ ಸಕಲ ಗೀರ್ವಾಣೀಶನ
ಸರ್ವಾವಯವದಲ್ಲಿ ಕಣ್ಣಾಗಿರ್ವದೇನೊ ತಿಳಿಯದು ನಿ
ಗರ್ವಿ ಶಿರೋಮಣಿಯೆ ಈತ ಪರ್ವತಾರಿಯೆಂಬುವುದನು ೩
ಠಗರು ಕೋಣನೆಗಳ ಮೇಲೆ ಸೊಗಸಿನಿಂದಲೇರ್ದ ಕೆಲಸ
ಬಗೆ ಬಗೆ ಬೈರೂಪ ವರ್ಣನೆಗಳು ಸಾಕಿನ್ನು
ಸುಗುಣೆ ಮೊದಲೆ ತಿಳಿಯದೆ ನೀ ಮಗಳನೀವ ಭಾಷೆ ಕೊಟ್ಟ
ಬಗೆಯ ಪೇಳೆ ಭಾಗ್ಯದ ಹಮ್ಮಿಗೆ ತಕ್ಕಂಥ ನಗೆಯ ಕೇಳೆ ೪
ಎರಡು ಮಗುಗಳದರಳೊಂದು ಬಿರುದ ಹೊಟ್ಟೆ ಮೇಲೆ ಕಟ್ಟಿ
ದುರಗ ಬೆಳೆವ ಪೋರ ನೋಡೆ ಕರಿಯ ಕುವರನು
ಕಿರಿಯ ಕೂಸಿನೊಂದು ನವಿಲ ಮರಿಯನೇರುತ್ತಾರು ಮುಖದಿ
ಮೆರೆವ ಛಂದವೇನನೆಂಬೆ ಥರವೆ ನಿನಗೆ ಮಿಸುಣಿ ಗೊಂಬೆ ೫
ಅಳಿಯನ ಸಂಸ್ಥಿತಿಯ ನೋಡಿ ತಿಳಿವದೆಂತು ಸುಲಭವಲ್ಲ
ಹಲವು ಜನರ ಕೂಡಿಕೊಂಡು ಸುಳಿವರೆ ಬಲ್ಲ
ನೆಲೆಯ ಕಾಣದಖಿಳ ವೇದ ಕುಲವು ಭ್ರಮೆಯ ತಾಳ್ವದಿಂಥಾ
ಕುಲವೆಂದರಿಯಳಾಗಿ ಲೋಕ ಚೆಲುವೆ ಮಗಳನಿತ್ತೆಯಲ್ಲೆ ೬
ಆದರೀತ ಭಕ್ತಜನರ ಕಾದುಕೊಳುವನೆಂಬ ಗುಣವ
ಶೋಧಿಪರಿಗೆ ಸಕಲಾನಂದ ಸಾಧಕನೆಂದು
ಬೋಧಗೊಳದೆ ನುಡಿದ ಸ್ವಾಪರಾಧವೆಲ್ಲ ಕ್ಷಮಿಸಿ ನಮ್ಮ
ಶ್ರೀದ ವೆಂಕಟಾದ್ರಿನಾಥ ಕಾದುಕೊಳಲಿ ಕರುಣವಿಡಲಿ ೭

೩೪೨
(ಮೂಲ್ಕಿಯ ನರಸಿಂಹ ದೇವರು)
ರಕ್ಷಿಸು ಮನದಾಪೇಕ್ಷೆಯ ಸಲಿಸುತ
ಲಕ್ಷ್ಮೀನರಹರಿ ರಾಕ್ಷಸವೈರಿ ಪ.
ಅಕ್ಷಮ ದುಶ್ಯೀಲ ದುವ್ರ್ಯಾಪಾರದಿ
ಕುಕ್ಷಿಂಭರನೆಂದುಪೇಕ್ಷೆಯ ಮಾಡದೆ ಅ.ಪ.
ಉಭಯ ಶುಚಿತ್ವವು ಊರ್ಜಿತವೆನೆ ಜಗ-
ದ್ವಿಭು ವಿಶ್ವಂಭರ ವಿಬುಧಾರಾದ್ಯ
ಶುಭಮತಿ ಸಂಸ್ಥಿತಿಯಭಯವ ಪಾಲಿಸೊ
ತ್ರಿಭುವನಮೋಹನ ಪ್ರಭು ನೀನನುದಿನ೧
ತಂದೆಯ ಮುನಿಸಿನ ಕಂದನ ಸಲಹುತ
ಸಿಂಧುಶಯನ ನಿತ್ಯಾನಂದ ಗುಣಾಬ್ಧೇ
ಹಿಂದಣ ಪಾಪವು ಮುಂದೆಸಗದ ರೀತಿ
ಮಂದರಾದ್ರಿಧರ ಮಾಮವ ದಯಾಕರ ೨
ಪಾಪಾತ್ಮರಲಿ ಭೂಪಾಲಕನು ನಾ
ಶ್ರೀಪತಿ ಕರುಣದಿ ಕಾಪಾಡುವುದು
ಗೋಪೀರಂಜನ ಗೋದ್ವಿಜರಕ್ಷಣ
ಕಾಪುರುಷರ ಭಯ ನೀ ಪರಿಹರಿಸಯ್ಯ ೩
ಸರ್ವೇಂದ್ರಿಯ ಬಲ ತುಷ್ಟಿ ಪುಷ್ಟಿಯಿತ್ತು
ಸರ್ವಾಂತರ್ಯದೊಳಿರುವನೆ ಸಲಹೊ
ದುರ್ವಾರಾಮಿತ ದುರ್ವಿಷಯದಿ ಬೇ-
ಸರ್ವೇನು ಪನ್ನಗಪರ್ವತವಾಸನೇ ೪
ಶರಣಾಗತನಾಗಿ ಸೆರಗೊಡ್ಡಿ ಬೇಡುವೆ
ವರ ಮೂಲಿಕಪುರ ದೊರೆಯೇ
ಹರಿ ಲಕ್ಷ್ಮೀನಾರಾಯಣ ತ್ರಿಜಗ
ದ್ಭರಿತ ಉತ್ಪ್ರೇರಕ ಸ್ಥಿರಭಕ್ತಿಯನಿತ್ತು ೫

೩೩೧
(ಮೂಲ್ಕಿಯ ನರಸಿಂಹದೇವರು)
ನಂಬಿದೆ ನಿನ್ನ ಇಂಬಿದೆಯೆಂದು
ಅಂಬುಜಾಯತಾಂಬಕ ತ್ರ್ಯಂಬಕ ಸನ್ನುತ ಪ.
ಕಂಬದಿಂದ ಕಾಣಿಸಿದ
ಗಂಭೀರಗುಣಾಂಭೋನಿಧಿ ಡಿಂಬೋದ್ಧರ ನರಮೃಗವರ ಅ.ಪ.
ಭಾನುಕೋಟಿ ಭಾಸ್ಕರ ಪವ-
ಮಾನನಯ್ಯ ಪ್ರಾಣದ ಸುತ್ರಾಣ ಸುಗುಣ
ದೀನಜನಸಂತಾನ ಮಾನದ
ಆನಂದ ಗುಣಾನಂತ ವಿತಾನಾಬ್ಧಿಶಯ ಹರಿ ೧
ಎಷ್ಟೊ ಪಾಪಿ ಕನಿಷ್ಠನೆಂದು
ಬಿಟ್ಟರೇನು ಬಿರುದು ಹಿರಿದು ಬರುವುದು
ಸೃಷ್ಟಿಕರ್ತರಿಷ್ಟಹರ್ತ
ಮುಷ್ಟಿಕಭಿದ ತುಷ್ಟಿಪ್ರದ ವಿಠಲ ಕೈಗೊಟ್ಟುಳುಹು ೨
ಚಿತ್ತಸಾಕ್ಷಿ ಚಿನುಮಯಾತ್ಮ
ಸತ್ಯರೂಪ ಸದಯೋದಯ ಸದುಪಾಶ್ರಯ
ದೈತ್ಯಭಂಜನ ಸತ್ಯರಂಜನ
ಕ್ಷೇತ್ರಜ್ಞ ಪವಿತ್ರಕಥಾಸ್ತೋತ್ರಾರ್ಹ ಶ್ರೀವತ್ಸಾಂಕಿತ ೩
ಮೂಲಿಕಾಪುರ ಮೌಳಿರುತುನ
ನೀಲೇಂದೀವರಶ್ಯಾಮಲ ಕಲಿಮಲಭೀಷಣ
ಕಾಲಕಾಲ ವಿಶಾಲ ಭುಜಬಲ
ಮೂಲೇಶಮುನೀಂದ್ರಾರ್ಚಿತ ಶ್ರೀಲಕ್ಷುಮಿನಾರಾಯಣ ೪

೩೮೯
(ಮೂಲ್ಕಿಯ ಮಹಾಲಿಂಗೇಶನನ್ನು ನೆನೆದು)
ಪಿಡಿಯೆನ್ನ ಕೈಯ ಜಗನ್ಮಯ
ಪಿಡಿಯೆನ್ನ ಕೈಯ ಪ.
ಪಿಡಿಯೆನ್ನ ಕೈಯ ನಿನ್ನಡಿದಾವರೆಯಲ್ಲಿ
ದೃಢವಾದ ಮನವ ಬೆಂಬಿಡದೆನಗೀಯಯ್ಯ ಅ.ಪ.
ಪಾಮರಮತಿಯ ಪಾಪಾತ್ಮರ ಸೀಮಾಧಿಪತಿಯ
ಕಾಮುಕಪರದಾರಭ್ರಾಮಕತಾಮಸ-
ಧಾಮನ ಕಪಟವಿಶ್ರಾಮ ಕುಧೀಮನ
ವ್ಯೋಮಕೇಶ ಭಗತ್ಪದಾಶ್ರಿತನ ಮಮಕಾರದಲಿ ಪಾಲಿಸು
ಹೈಮವತಿಪತಿ ಕಾಮಹರ ಸುತ್ರಾಮವಂದಿತ ಸೋಮಶೇಖರ ೧
ದುಷ್ಟದುರ್ಜನನ ದುರಾಚಾರ ಭ್ರಷ್ಟಜೀವನನ
ಮೆಟ್ಟಿದ ನೆಲಮುನಿಯುವನ ಕೃತಘ್ನ ಕ-
ನಿಷ್ಟಕಾಯುಷ್ಯದ ಘಟ್ಟಿಚೇತನನೆನ್ನ
ತಟ್ಟನೆ ದಯವಿಟ್ಟು ಸರ್ವಾಭೀಷ್ಟದಾಯಕನಾಗಿ ಕರುಣಾ-
ದೃಷ್ಟಿಯಿಂದಲಿ ನೋಡು ಸನ್ಮನವಿಷ್ಟರಸ್ಥ ಶಿವಾಷ್ಟಮೂರುತಿ೨
ಸತ್ಯಬಾಹಿರನ ಪ್ರಪಂಚ ಪ್ರ-ವೃತ್ತಿಯೊಳಿಹನ
ಅತ್ಯಂತ ಪಾಪಿ ಕುಚಿತ್ತ ಮದಾಂಧನು-
ನ್ಮತ್ತ ಮಾತಂಗವಿರಕ್ತಿವಿಹೀನನ
ಎತ್ತಿ ಎನ್ನತ್ತಿತ್ತ ನೋಡದೆ ಮತ್ತೆ ಕಾವ ಸಮರ್ಥರಾರೈ
ಸತ್ತ್ವನಿಧಿಸುರಮೊತ್ತ ಪೂಜಿತ ಮೃತ್ಯುಹರ ಶ್ರೀಕೃತ್ತಿವಾಸನೆ ೩
ಎಣಿಸಲು ಬೇಡ ಎನ್ನಪರಾಧ ಗಣಿತಕ್ಕೆ ಕೂಡ
ಗುಣಗಣನಿಧಿ ಲಕ್ಷ್ಮೀನಾರಾಯಣಸಖ
ದಣಿಯಲೊಲ್ಲೆ ದಯಮಾಡೆನಗೀಗಲೆ
ಫಣಿಪಕುಂಡಲ ಪಾರ್ವತೀಪತಿ ಪ್ರಣತಜನಮಂದಾರ ನಿರ್ಮಲ
ಪ್ರಣವರೂಪನೆ ಮೌಕ್ತಿಕಾಪುರ ಮಣಿಮಹಾಲಿಂಗೇಶ ಬೇಗನೆ ೪

೨೭೨
ಮೋಸಗೊಳ್ಳದಂತೆ ಕಾಯೊ ಶ್ರೀಶ ಕರುಣಾಳೊ
ಆಶಾಮಗ್ನಮನವ ಹೃಷೀಕೇಶ ನಿನ್ನ ಪದದಲ್ಲಿರಿಸು ಪ.
ಹಾದಿ ಬೀದಿಯಲ್ಲಿ ತಿರುಗಿ ಬಾಧೆಗೊಂಡು ಬಳಲಿ ಕಡೆಗೆ
ಬೂದಿಯ ಮೇಲೊರಗಿ ಶಾಂತವಾದ ಶ್ವಾನವದು
ಕಾದುಕೊಂಡು ಬಾಗಿಲಲ್ಲಿ ಕಾದಲುದರ ತುಂಬುವುದಕೆ
ಸಾದರ ಕೊಂಡನ್ಯದಿ ರಸಾಸ್ವಾದನ ಗೈವಂತಾಗಿಹುದು ೧
ಕರ್ಣಧಾರರಹಿತ ನಾವೆ ಅರ್ಣವದಿ ಭ್ರಮಿಸುವಂತೆ
ದುರ್ನಿವಾರ ಮನಸಿನಿಂದ ಶೀರ್ಣನಾದೆನು
ಸ್ವರ್ಣಗರ್ಭಪಾಲಕನು ಪರ್ಣವರವಾಹನ ಹೃದಯಾ-
ಕರ್ಣಿಕಾದರಲ್ಲಿ ನಿಂತು ನಿರ್ಣಯವ ತಿಳಿಸು ಬೇಗ ೨
ಆಸೆಗೊಂಡು ದುರ್ವಿಷಯದಿ ಬೇಸರದೆ ಭ್ರಾಂತಿಯಿಂದ
ದೋಷ ದುರಿತಂಗಳಿಗವಕಾಶನಾದೆನು
ದಾಸನೆಂಬ ದೃಷ್ಟಿಯಿಂದ ಕ್ಲೇಶವೆಲ್ಲ ಓಡಿಸಯ್ಯ
ಶೇಷಗಿರಿವರ ಶಿಖರಾವಾಸ ನೀನೆ ಶರಣ ಜೀಯಾ ೩

೨೫೦
ಮೋಸಗೊಳ್ಳದಿರು ಮನವೆ ಹೇಸಿಕೆಯಲಿ
ದೋಷವನ್ನು ತಿಳಿಯದೆ ಕೀಳಾಸೆ ಕೆಲಸ ಮಡುವಿನಲ್ಲಿ ಪ.
ಫುಲ್ಲ ಪದ್ಮದಂತೆ ಪೊಳೆವ
ಚೆಲ್ವ ಮುಖವೆಂಬೀ ಸುರಿವ
ಜೊಲ್ವಿ ಶೀಗೆಬೀಜ ಪೋಲ್ವ
ಹಲ್ಲ ಸಾಲನೆಲ್ಲಿ ಮರತಿ ೧
ಗೆಜ್ಜೆ ಕಾಲುಂಗುರಗಳಿಟ್ಟು
ಲಜ್ಜೆ ತೋರಿ ನಗುತ ಬರಲು
ಹೆಜ್ಜೆಯನ್ನೆ ನೋಳ್ಪೆ ಹೊಲಸು
ಖಜ್ಜಿಯ ಕಲೆಯ ಮರೆತಿ ೨
ವಿಟರ ನೋಡುತ ಘಟ
ಘಟನೆ ಬರುವಾಕೆಯ
ಘಟನೆ ಬಯಸಿ ದುಸ್ಸಂ-
ಕಟಗೊಂಬದ್ಯಾಕೆ ಮರೆತಿ ೩
ಅಕ್ಷಿಯನ್ನು ತಿರುಹುತ್ತ
ಸೂಕ್ಷ್ಮ ವಸ್ತ್ರ ಸುತ್ತಿ ವೇಶ್ಯಾ
ಲಕ್ಷಣವ ಕಂಡು ಶುಂಭ
ಮಕ್ಷಿಕಾ ವಿಹಾರ ಬಲದಿ ೪
ವರನಾರಿಯೆಂಬುದೊಂದೆ
ಮರುಳು ಭಾವನೆ ಮೋಹ
ಕರವಲ್ಲದೆ ಬೇರೊಂದು
ಸರಸತನವಿಲ್ಲಿಂದು ೫
ಈಶನಿತ್ತದುಂಡು ನಿತ್ಯ
ತೋಷಗೊಳ್ಳದಹೋರಾತ್ರಿ
ಘಾಸಿ ಮಾಡದಿರು ಭಾರ-
ತೀಶನ ಪದವ ಸೇರು ೬
ಬೇಡ ಬೇಡವಿನ್ನು ಭ್ರಾಂತಿ
ಮಾಡು ಮೋಹಾಗ್ನಿಗೆ ಶಾಂತಿ
ಬೇಡು ಶೇಷಾದ್ರೀಶನಡಿಯ
ಕೊಡುವಾಭೀಷ್ಟ ನಮ್ಮೊಡೆಯ೭

೧೫೮
(ಶ್ರೀ ಸುಜ್ಞಾನೇಂದ್ರ ಪ್ರಾರ್ಥನೆ)
ಯತಿವರ ಸುಜ್ಞಾನೇಂದ್ರರ ಪಾದ ಸ್ರ‍ಮತಿಯಿಂದಾಯ್ತೆನಗಾನಂದ
ಕ್ಷಿತಿಜಾವರ ರಘುಪತಿಯು ಕಟಾಕ್ಷಿಸಿ
ಅತಿಶಯ ತೋರಿಲ್ಲಿಗೆ ಬಂದ ಪ.
ಶಮದಮಯಮನಿಯಮಾದಿ ಮಹಾಗುಣ ಸಮುದಾಯಾಶ್ರಯ
ಮೂರ್ತಿಯನು
ನಮಿಸುವ ಜನರಿಗೆ ಸುಮತಿಯ ನೀಡುತ ಸುಮನಸರೀವರು
ಕೀರ್ತಿಯನು
ಕಮಲದಳಾಕ್ಷನು ಕರುಣಾರಸದಿಂದಮಿತ ಸುಖವ
ತಾ ಕರುಣಿಸಿಹನು
ಭ್ರಮೆಗೊಳಿಸದೆ ಭಾವಿಸಲು ಯತೀಂದ್ರರ
ಕ್ಷಮಿಸುವನಖಿಳಪರಾಧವನು ೧
ಬೋಧಿಪ ವೇದಾಂತಾದಿ ತಂತ್ರಗಳ ಸಾಧಿಸಿ
ಗೆಲುವನು ವಾದಿಗಳ
ಶೋಧಿಸಿ ಮನವ ಸಮಾಧಿಯೊಳಚ್ಚುತಮೋದಿಸುವಂದದಿ
ಸ್ತೋತ್ರಗಳ
ಸಾದರದಲಿ ತಾ ಮಾಡುತ ನಶ್ವರ ಬೋಧರ ಶಾಸ್ತ್ರದ ಕರ್ಮಗಳ
ಪಾದಾನತರಿಗೆ ಪರಮಕರುಣದಿಂದೋದಿಸಿ ತಿಳಿಸುವ ಧರ್ಮಗಳ ೨
ಅಜಭವನುತ ದಿಗ್ವಿಜಯ ರಾಘವನ ಪದಪಂಕಜ ಭೃಂಗಾಯತನ
ಸುಜನೇಂದ್ರಾರ್ಯ ಕರಾಂಬುಜಜಾತನ
ಭಜಿಸಿರೊ ಭಕ್ತಜನಾರ್ದನನ
ನಿಜ ಜನರಿಗೆ ಸುರಕಲ್ಪತರುವೋಲಿದಿರಲಿ ತೋರ್ಪ ಶುಭಾಕೃತನ
ಭುಜಗ ಗಿರೀಶನ ಭಜನೆಯ ಮಾಳ್ಪೆ
ಸದ್ವಿಜಜನ ಮಂಡಲಮಂಡಿತನ ೩

೨೧೫
ಯಾಕಿಂತುಪೇಕ್ಷಿಸುವಿ ಪರಮ ಕರು-
ಣಾಕರ ಶಿಕ್ಷಿಸುವಿ ಪ.
ಹಿಂದಿನಾಪತ್ತುಗಳ ಸಮಯದಿ ನೀ
ಬಂದೆನ್ನ ಕಾಯ್ದುದಿಲ್ಲವೆ
ತಂದೆ ನೀನೆಂದು ನಂಬಿದ ಮೇಲೆನ್ನ ನೀನು
ಇಂದಿಂತುಪೇಕ್ಷಿಪುದೆ ೧
ಭವರೋಗಹಾರಿ ನಿನ್ನ ಭಕ್ತನಿಗಿಂಥ
ಭವಣೆಯು ನಿಲುವುದುಂಟೆ
ಕವಿ ಸನಕಾದ್ಯರಂತೆ ದೈಹಿಕ ದು:ಖ
ಸಹಿಸಲು ಶಕ್ತಿಯುಂಟೆ ೨
ಸೈರಿಸಲಾರೆ ಇನ್ನು ವೇದನೆಯಾ
ಶೌರೀ ನೀ ದಯದೋರಿನ್ನು
ಬರಗರಸಮಂಡನ ಕೃಪಾಕಟಾಕ್ಷ
ದೋರೊ ಸುರಾರಿಖಂಡನ ೩

೮೦
ಯಾಕುಪೇಕ್ಷಿಸುವಿ ಕರುಣೈಕನಿಧಿ ನರಸಿಂಹ
ಭೀಕರಿಪ ವೈರಿ ಪುಂಜನನ
ಶ್ರೀಕರನೆ ನೀನೆನಗೆ ಶರಣೆಂದು ನಂಬಿದೆನು
ಸಾಕಬೇಕಯ್ಯ ದಾಸರನು ಪ.
ಹುಡುಗ ಪ್ರಲ್ಹಾದ ಜಗದೊಡೆಯ ನೀನಹುದೆಂಬ
ನುಡಿಯಲಾಲಿಸುತವನ ಪಿತನು
ಕಡಿವೆನೆಂದೆದ್ದು ಮುಂದಡಿಯಿಟ್ಟು ಮುಂದರಸಿ
ದೃಢ ಮುಷ್ಟಿಯಿಂದ ಖಂಬವನು
ಬಡಿಯುತಿರೆ ಶತಕೋಟಿ ಸಿಡಿಲಂತೆ ಗರ್ಜಿಸುತ
ಘುಡುಘುಡಿಸಿ ಬಂದು ದೈತ್ಯನನು
ಪಿಡಿದೆತ್ತಿ ತೊಡೆಯ ಮೇಲ್ ಕೆಡಹಿ ದಶನಖದಿಂದ
ಒಡಲ ಬಗೆದನೆ ನೀಚರನು ೧
ನರಸಿಂಹನೆಂಬ ಈರೆರಡು ವರ್ಣವ ಜಪಿಸೆ
ದುರಿತ ದೂರೋಡುತಿಹವೆಂದು
ಸರಸಿಜೋದ್ಭವ ಶಂಭು ಸುರನಾಥ ಮುಖ್ಯಮುನಿ
ವರರು ಕೊಂಡಾಡುತಿಹರಿಂದು
ಅರಿತದನು ತ್ವತ್ಪಾದ ಸರಸಿಜವೆ ಶರಣೆಂದು
ದೊರೆ ನಿನ್ನ ನಂಬಿಕೊಂಡಿಹೆನು
ಅರಿಭಾವ ಸಾಧಿಸುವ ದುರುಳರನು ಪಿಡಿದವರ
ಕರುಳ ತೆಗೆದೆತ್ತಿ ಬೀರದನು ೨
ಅತಿ ಸೂಕ್ಷ್ಮಯಂದಗ್ನಿ ಗತಿಯನ್ನುಪೇಕ್ಷಿಸಲು
ವಿತತವಾಗುವುದು ಕ್ಷಣದೊಳಗೆ
ಜತನ ಮಾಡುವರದರ ಗತಿಯನಳಿಸುವುದು ಸ-
ಮ್ಮತವಾಗಿರುವುದು ಜಗದೊಳಗೆ
ಪತಿತಪಾವನ ಶೇಷಗಿರಿರಾಜ ನೀ ಯೆನಗೆ
ಗತಿಯಾಗಿ ಸಲಹುವುದರಿಂದ
ವಿತಥಾಭಿಲಾಷೆಯಾತತಾಯಿಗಳ ತ್ವರೆಯಿಂದ
ಹತಮಾಡಿಸು ಶ್ರೀ ಮುಕುಂದ ೩


ಯಾಕೆ ಸುಮ್ಮನೆ ಹೊತ್ತ ಕಳೆವಿರಿ ಲೋಕವಾರ್ತೆಯಲಿ
ಶ್ರೀಕರನ ಸರ್ವತ್ರ ಸ್ಮರಿಸುತ
ನಾಕ ಭೂಗತ ಸೌಖ್ಯ ಬಯಸದೆ ಏಕಚಿತ್ತದಿ ನಂಬಲನುದಿನ
ಸಾಕುವನು ಸಕಲೇಷ್ಟದಾಯಕ ಪ.
ಸ್ನಾನ ಜಪ ದೇವಾರ್ಚನ ವ್ಯಾಖ್ಯಾನ ಕರ್ಮಗಳು
ದಾನ ಧರ್ಮ ಪರೋಪಕಾರ ನಿಜಾನುಪಾಲನವು
ಏನು ಮಾಡುವುದೆಲ್ಲ ಲಕ್ಷ್ಮೀಪ್ರಾಣನಾಯಕ ಮಾಳ್ಪನೆಂದರಿ-
ದಾನು ನನ್ನದು ಎಂಬ ಕೀಳಭಿಮಾನ ತಾಳದೆ ಧ್ಯಾನ ಮಾಡಿರಿ ೧
ಪೊಟ್ಟಿಯೊಳಗಿಂಬಿಟ್ಟು ಚೀಲದಿ ಕಟ್ಟಿ ಬಿಗಿದಿರುವ ಕಾಲದಿ
ಕೊಟ್ಟು ಬುತ್ತಿಯನಿಟ್ಟು ಬಾಯೊಳು ಧಿಟ್ಟ ತಾ ಪೊರೆವ
ವಿಠಳ ಕರುಣಾಳು ಕಾಯನೆ ಥಟ್ಟನೊದಗುವ ತನ್ನ ದಾಸರ
ಬಿಟ್ಟುಕೊಡ ದುರಿತೌಘರಾಶಿಯ ರಟ್ಟು
ಮಾಡುವ ರಾಜನಿರುತಿರೆ ೨
ಪಾಪವೆಂಬುದೆ ಪಂಕಜಾಕ್ಷ ರಮಾಪತಿಯ ಮರವು ಪುಣ್ಯ
ಕಲಾಪವೆಂಬುದೆ ಪೂರ್ವ ಗಿರಿವರ ಭೂಪತಿಯ ನೆನಪು
ಈ ಪರಿಯ ಶ್ರುತ್ಯರ್ಥಸಾರ ಪದೇ ಪದೇ ಮನದಲ್ಲಿ ಗ್ರಹಿಸುತ
ಕೋಪ ತಾಪ ಮಹಾಪದಂಗಳ ಕಲಾಪ
ಹೊಂದದೆ ಭೂಪರಂತಿರಿ ೩

೪೫೭
ಯಾಕೆನ್ನೊಳು ಪಂಥಾ ಶ್ರೀಕಾಂತಾ ಪ.
ಯಾಕೆ ಪಂಥ ಲೋಕೈಕನಾಥ ದಿ-
ವಾಕರಕೋಟಿಪ್ರಭಾಕರ ತೇಜನೇ ಅ.ಪ.
ಪೂರ್ವಾರ್ಜಿತ ಕರ್ಮದಿಂದಲಿ
ಇರ್ವೆನು ನರಜನ್ಮ ಧರಿಸುತ
ಗರ್ವದಿಂದ ಗಜರಾಜನಂತೆ ಮತಿ
ಮರ್ವೆಯಾಯ್ತು ನಿನ್ನೋರ್ವನ ನಂಬದೆ
ಗರ್ವಮದೋನ್ಮತ್ತದಿ ನಡೆದೆನು
ಉರ್ವಿಯೊಳೀ ತೆರದಿ ಇದ್ದೆನಾದರೂ
ಸರ್ವಥಾ ಈಗ ನಿಗರ್ವಿಯಾದೆಯಹ
ಪರ್ವತವಾಸ ಸುಪರ್ವಾಣ ವಂದಿತ ೧
ಯಾರಿಗಳವಲ್ಲ ಮಾಯಾ
ಕಾರ ಮಮತೆ ಸಲ್ಲ ಸಂತತ
ಸಾರಸಾಕ್ಷ ಸಂಸಾರಾರ್ಣವದಿಂದ
ಪಾರಗೈದು ಕರುಣಾರಸ ಸುರಿವುದು
ಭಾರವಾಯ್ತೆ ನಿನಗೆ ನತ ಮಮ
ಕಾರ ಹೋಯ್ತೆ ಕಡೆಗೆ ಏನಿದು
ಭಾರಿ ಭಾರಿ ಶ್ರುತಿ ಸಾರುವುದೈ ದಯ
ವಾರಿಧಿ ನೀನಿರಲ್ಯಾರಿಗುಸುರುವುದು ೨
ಬಾಲತ್ವದ ಬಲೆಗೆ ದ್ರವ್ಯದ
ಶೀಲವಿತ್ತೆ ಎನಗೆ ಆದರೂ
ಪಾಲಿಸುವರೆ ನಿನಗಾಲಸ್ಯವೆ ಕರು-
ಣಾಳು ಶ್ರೀಲಕ್ಷ್ಮೀಲೋಲ ಮಮ ಮನಕೆ
ಸಾಲದೆರಡು ಮೂರು ನಿನ್ನಯ
ಮೂಲ ಸಹಿತ ತೋರು ಮುನಿಕುಲ
ಪಾಲ ಶ್ರೀಲಕ್ಷ್ಮೀನಾರಾಯಣ ಗುಣ
ಶೀಲ ಕಾರ್ಕಳ ನಗರಾಲಯವಾಸನೇ ೩

೪೫೮
ಯಾಕೊ ದಯಬಾರದು ಹರಿ ನಿನಗ್ಯಾಕೊ ದಯಬಾರದು ಪ.
ಶ್ರೀಕರ ಲೋಕೇಶ ಏಕಾನೇಕ ಸ್ವರೂಪಅ.ಪ.
ಕಾಮಿತಾರ್ಥದಾಯಕರ ಸ್ವಾಮಿ ಲೋಕನಾಯಕ
ಭೀಮವಿಕ್ರಮ ಶ್ರೀರಾಮ ನಿರಾಮಯ೧
ಸುಂದರಿನಾಥ ಸುರೇಂದ್ರವಂದಿತ
ಕಂದನ ಕಂದಾರವಿಂದದಳನಯನ ೨
ಅಕ್ಷರಬ್ರಹ್ಮ ಸಂರಕ್ಷಿಸು ನಮ್ಮ
ಪಕ್ಷೀಂದ್ರವಾಹನ ಲಕ್ಷ್ಮೀನಾರಾಯಣ೩

೧೬೨
(ಜಗನ್ನಾಥದಾಸರ ಪ್ರಾರ್ಥನೆ)
ಯಾತಕಿನ್ನನಾಥನೆಂಬುವುದು ಕರುಣಾಳು ಜಗ
ನ್ನಾಥದಾಸರ ಸೇರಿಕೊಂಬುವುದು ಪ.
ಭೀತಿಕರ ಬಹು ಜನ್ಮಕೃತ ಮಹಾ
ಪಾತಕಾದಿಗಳನ್ನು ಭೇದಿಸೆ
ಮಾತುಳಾಂತಕನಂಘ್ರಿ ಕಮಲದಿ
ನೀತಭಕ್ತಿಯ ನೀಡಿ ಸಲಹುವ ಅ.ಪ .
ಘೋರತರ ಸಂಸಾರಪಾರಾವಾರ ದಾಟಿಸುವ ಲಕ್ಷ್ಮೀ
ನಾರಸಿಂಹನ ನಿತ್ಯ ಪೂಜಾ ಭಾರ ವಹಿಸಿರುವ
ಮೂರು ಲೋಕಾಧಾರ ದುರಿತೌಘಾರಿ ಕೃಷ್ಣಕಥಾಮೃತಾಬ್ಧಿಯ
ಸಾರ ತೆಗೆದು ಖರಾರಿ ಕರುಣವ ಬೀರಿ ಸುಜನೋದ್ಧಾರ ಮಾಡಿದ ೧
ಶ್ರೀ ರಮಾಪತಿ ಸರ್ವ ಸುಗುಣಾಧಾರ ದಯದಿಂದ ಒಲಿಯಲು
ಸೇರಿ ಬರುವುದು ಸರ್ವಸಂಪತ್ಸಾರವಾನಂದ
ಕಾರುಣಿಕತನದಿಂದಲಿಂತುಪಕಾರ ಮಾಡಿದ ದೀನಜರಿಗೆ
ಧೀರ ಶೇಷಗಿರೀಂದ್ರನಿರವನು ತೋರಿದನು ನಿಜಭಕ್ತ ಬುಧರಿಗೆ ೨

೨೬೨
ಯಾತಕೀಹಂಕಾರವು ಸರ್ವವು ಜಗನ್ನಾಥನ ಪರಿವಾರವು ಪ.
ಸ್ವಾತಿಯ ಮಳೆಯೊಳು ಸುರಿವಂಥ ನೀರನು
ಜಾತಕ ಪಕ್ಷಿಗೆ ದೊರಕುವ ತೆರದೊಳಿಂನ್ಯಾತಕೀ ಅ.ಪ.
ಈಶ ಪ್ರೇರಣೆಯಿಲ್ಲದೇಸು ಮಿಡುಕಿದರು
ಶ್ವಾಸ ಬಿಡಲು ಸಲ್ಲದು
ಘಾಸಿಗೊಂಡರೆ ನುಂಗಲೋಸುಗ ಮನುಜಗಿ-
ನ್ನೇಸು ನಂಬಿಕೆ ಇಹದು ಮೂರ್ಖತ್ವ ಸರಿದು
ಘಾಸಿಗೊಳದೆ ರಮೇಶನಿತ್ತದೆ ಲೇಸೆನುತ ಅವನಂಘ್ರಿಕಮಲದ
ದಾಸಜನರೊಡನಾಡಿಕೊಳದೆ ದುರಾಸೆ ಕಡಲೊಳಗೀಸಲಾರದೆ ೧
ತಾನೆಂಬ ಹಂಕೃತಿ ತಾಳ್ವ ಮನುಜಗಿಂತ
ಹೀನರ ಕಾಣೆನಿನ್ನು ಯಾ-
ಕೆನಲನ್ನಪಾನದೊಳಿಚ್ಛೆಯನು ತಡೆಯಲನು-
ಮಾನಗೊಳುವನಾತನ ಸ್ವಾತಂತ್ರ್ಯವೇನು
ಶ್ರೀನಿಕೇತನ ಮನದೊಳನುಸಂಧಾನಗೊಳಿಸುವ ತೆರವಹುದು ಪವ
ಮಾನನಿದಕಧಿಕಾರಿಯಂದು ಮಹಾನುಭಾವನ
ಮಹಿಮೆಯರಿಯದೆ ೨
ವಾರುಧಿಯೊಳಗೆ ಸಂಚಾರಮಾಡುತ ಪರಿ-
ವಾರವ ಸೇರಿರುವ
ಉದಕ ಮಾತ್ರಧಾರಿ ಪ್ರಾಣಿಯ ಥರವ. . . .
ಯೋಚಿಸುವ ನಿತ್ಯದಿ. . . .
ಶ್ರೀ ರಮಣ ಚರಣಾರವಿಂಧಾಧರವೆ ಗತಿಯೆಂದು ನಂಬು ಖ-
ರಾರಿ ವೆಂಕಟರಮಣ ಕರುಣದಿ ತೋರುವನು
ತನ್ನಿರವ ಮನದಲಿ ೩

೨೪೫
ಯಾತಕೆನ್ನ ಮೇಲಿನ್ನು ಪಂಥ ಸಾಕೊ ಶ್ರೀಕಾಂತ ಪ.
ಘೋರ ಷಡ್ವೈರಿಗಳಾರುಭಟಿಗಳನ್ನು
ದೂರಗೈದರೆ ನಿನ್ನ ಮಂದಿರವನು
ಸಾರಿಸಿ ಶುಚಿಗೈವನಿಂದಿರಾ-
ವರ ಬಾರೊ ಭಕ್ತ ಕುಮುದ ಚಂದಿರಾ
ಶ್ರುತಿ ಸಾಗರಾ ಲೋಕೈಕ ಸುಂದರಾ ೧
ವ್ಯರ್ಥವಾಗಿ ಬಹಿರರ್ಥದಿ ಮಾನಸ
ವರ್ತಿಸದಿರೆ ನಿನ್ನ ನೋಡುವೆ ಬಹ-
ಳರ್ಥಿಯಿಂದಲಿ ಪಾಡಿ ಪೊಗಳುವೆ ಮೋಹ
ಕಾರ್ಥ ಶಾಸ್ತ್ರವ ದೂರ ದೂಡುವೆ ಪುರು-
ಷಾರ್ಥದಾಯಕ ನಿನ್ನ ಕೂಡುವೆ ೨
ವಿತತ ಮಹಿಮ ವೆಂಕಟೇಶನೆಯನಗೆ ನೀ
ಪತಿಯೆಂದು ಸಂಭ್ರಮಗೊಂಬೆನು ಭೂ-
ಪತಿಯಲಿ ನೀನಿಹೆಯೆಂಬೆನು ಸಮ
ರತಿಯಿಂದ ಪುರುಷ ಸುಖವುಂಬೆನು ಭಕ್ತಿ
ಸತಿಯರ ಭರವನಿಂತು ಕಾಂಬೆನು ೩

೧೯೩
ಯಾರಿಗುಸರಲೇನು ದುರಿತಾರಿ ನೀನೆ ರಕ್ಷಿಸು ಕಂ-
ಸಾರಿ ನೀನೆ ರಕ್ಷಿಸು ಮುರಾರಿ ನೀನೆ ರಕ್ಷಿಸು ಪ.
ಭಾರಿ ಭಾರಿ ನಿನ್ನ ಪದವ ಸೇರಿದವರ ಕಾಯ್ದ ದೊರೆಯೆ ಅ.ಪ.
ಪತಿಗಳೈವರಿದಿರೆ ಪತಿವ್ರತೆಯ ಖಳನು ಸೆಳೆಯೆ ಲಕ್ಷ್ಮೀ-
ಪತಿಯೆ ನೀನೆ ಕಾಯ್ದೆಯಲ್ಲದೆ ಗತಿಯದಾರು ತೋರ್ದರಯ್ಯ ೧
ಪಿತನ ತೊಡೆಯೊಳಿದ್ದ ಸುತನ ಸತಿಯು ಕಾಲಿನಿಂದೊದೆಯೆ
ಖತಿಯೊಳೈದಿ ಭಜಿಸೆ ಅತಿಶಯದ ವರವನಿತ್ತೆ ೨
ದನುಜ ಕೋಪದಿಂದ ತನ್ನ ತನುಜನನ್ನು ಬಾಧೆಗೊಳಿಸೆ
ಮನುಜ ಸಿಂಹನಾಗಿ ಭಕ್ತಗನುಪಮಾದ ಹರುಷವಿತ್ತೆ ೩
ಮಕರ ಬಾಧೆಯಿಂದ ಕರಿಯು ಸಕಲಕರ್ತನೆನುತಲೊದರೆ
ಅಖಿಳ ದೈವಂಗಳಿರಲು ಬಕವಿರೋಧಿ ನೀನೆ ಪೊರೆದೆ ೪
ಮೀನ ಕೂರ್ಮ ಕ್ರೋಢ ಸಿಂಹ ಬ್ರಾಹ್ಮಣೇಂದ್ರ ರಾಮಕೃಷ್ಣ
ಮಾನನಿಧೆ ಬುದ್ಧ ಕಲ್ಕಿ ದಾನವಾರಿ ಸಲಹೊ ಎನ್ನ ೫
ಸರ್ವಲೋಕ ಜನಕ ನಿನ್ನ ಸರ್ವಕಾಲದಲ್ಲಿ ನೆನೆವೆ
ಶರ್ವ ಗರ್ವಾದಿ ವಿನುತ ಸರ್ವಸೌಖ್ಯ ನೀಡು ಹರಿಯೆ ೬
ಶ್ರೀಶ ಕಂಜಜೇಶ ಪನ್ನಗೇಶ ನಿರ್ಜರೇಶ ಮುಖ್ಯ
ದಾಸವರದ ಶೇಷ ಭೂಧರೇಶ ಎನ್ನ ಸಲಹೊ ಬೇಗ ೭

೧೩೫
ಯೇಸು ಧನ್ಯನೊ ಹರ ತಾನೇಸು ಧನ್ಯನೊ
ವಾಸವಾದಿ ಸುರರಿಗಿಂತ ಕೇಶವನ ಕರುಣ ಪಾತ್ರ ಪ.
ವೇದವಿನುತನಮಲ ಪದ್ಮ
ಪಾದ ಮೋದಿಸ್ವರ್ಧುನಿಯ
ಸಾದರದಿ ಶಿರದಿ ಧರಿಸಿ
ಮೋದ ಬಡುವ ಮುಕ್ಕಣ್ಣಾ ೧
ಶ್ರೀಶನನ್ನು ಭಜಿಪ ಮುಖ್ಯ
ದಾಸತಾನೆಂದರಿಯಿರೆಂದು
ಹಾಸಿಕೆಯ ಹೆಗಲ ಮೇಲೆ
ಭೂಷಣಗೊಂಡಮಿತ ಮಹಿಮ ೨
ಅಂಹೊಮೋಪಾಹನರ
ಸಿಂಹನನ್ನು ಹೃದಯಕಮಲ
ಸಿಂಹಾಸನದೊಳಿರಿಸಿ ದಿವ್ಯ
ಜಿಂಹ್ಮೆಯಿದ್ದನವಗೈವ ೩
ಘೋರ ಸಂಸಾರಾಬ್ಧಿ ಭಯ
ತಾರಕವಾಗಿರುವ ರಾಮ
ತಾರಕ ಮಂತ್ರೋಪದೇಶ
ತಾರಕ ರಘುವಾರ ದೇವ ೪
ಪಂಕಜಾಕ್ಷ ಪರಮ ಕರುಣಿ
ವೆಂಕಟಾದ್ರಿವಾಸ ಹರಿಯಾ
ಕಿಂಕರ ಭಕ್ತಿ ಜನರಾ
ತಂಕವಾರಾ ಶಂಕರ ೫

೪೮
ರಂಗಾ ಮನೆಗೆ ಬಂದ ಪರಮ ಮಂಗಳದಾಯಿ
ಹಿಂಗಿತು ದಾರಿದ್ರ್ಯವಿನ್ನು ಶೃಂಗಾರ ಭುಜಂಗ ಶಾಯಿ ಪ.
ಫುಲ್ಲ ಪದ್ಮನಾಭ ಸಿರಿನಲ್ಲಕೃಷ್ಣ ತನ್ನ ಪಾದ
ಪಲ್ಲವೆ ಶರಣೆಂದು ನಿಲ್ಲೆ ಧೈರ್ಯದಿ
ಮೆಲ್ಲ ಮೆಲ್ಲಕಾಗಿ ತನ್ನ ವಲ್ಲಭೆಯ ಕೂಡಿ ಎನ್ನ
ಸೊಲ್ಲ ಲಾಲಿಸುತ ಕಂಸದಲ್ಲಣ ತಡವಿಲ್ಲದಂತೆ ೧
ಆರುವೆನನೆಂಬ ಹುಣ ಘೋರಭಾವದಿಂದಲುಂಡು
ಗಾರುಮಾಳ್ಪ ಸಮಯದಲ್ಲಿ ಚೀರುತಿರುವುದ
ಮಾರಜನಕ ಲಾಲಿಸಿ ಕೃಪಾರಸದಿ ಸಲಹಿ ನಿಜ ಪಾ
ದಾರವಿಂದ ಯುಗ್ಮವನ್ನು ತೋರಿ ತಿರುಗಿ ಕಳುಹಿದಂಥ ೨
ಭಕ್ತಾಭರಣನೆಂಬ ಬಿರುದ ವ್ಯಕ್ತವಾಗಿ ತೋರಿ ಸರ್ವೋ
ದ್ರ‍ವಕ್ತ ಮಹಿಮ ತನ್ನೊಳ್ಪರಮಾ ಮತಿಯನಿತ್ತು
ಯುಕ್ತಿಯಿಂದ ಯೋಗ ಮಾಯಾ ಶಕ್ತಿಯರಸ ವೆಂಕಟೇಶ
ದ್ರ‍ವಕ್ತತನವ ಬಿಡಿಸಿ ನಿತ್ಯ ಮುಕ್ತ ರಮೆಯ ಕೂಡಿ ನಗುತ ೩

೪೭೯
ಉತ್ಥಾನ ದ್ವಾದಶಿಯ ದಿವಸ
(ಕಾರ್ತೀಕ ಶುದ್ಧ ದ್ವಾದಶಿಯ ಉತ್ಸವ)
ರಂಭೆ ಮಾನಿನೀ ಈತನಾರೆಂದೆನೆಗೆ ಪೇಳೆ ಮಾನಿನೀ ಪ.
ಮಾನಿನೀಮಣಿ ಈತನ್ಯಾರೆ ಕರು
ಣಾನಿಧಿಯಂತಿಹ ನೀರೆ ಹಾ ಹಾ
ಭಾನುಸಹಸ್ರ ಸಮಾನಭಾಷಿತ ಮ-
ಹಾನುಭಾವನು ಸುಪ್ರವೀಣನಾಗಿಹ ಕಾಣೆ ೧
ಭಯಭಕ್ತಿಯಿಂದಾಶ್ರಿತರು ಕಾಣಿ-
ಕೆಯನಿತ್ತು ನುತಿಸಿ ಪಾಡಿದರು ನಿರಾ-
ಮಯ ನೀನೇ ಗತಿಯೆಂದೆಲ್ಲವರು ಹಾ ಹಾ
ಭಯನಿವಾರಣ ಜಯ ಜಯವೆಂದು ನುತಿಸೆ ನಿ-
ರ್ಭಯ ಹಸ್ತ ತೋರುತ ದಯಮಾಡಿ ಪೊರಟನೆ೨
ಭೂರಿ ವಿಪ್ರರ ವೇದ ಘೋಷದಿಂದ
ಸ್ವಾರಿಗೆ ಪೊರಟ ವಿಲಾಸ ಕೌಸ್ತು-
ಭಾರತ್ನ ಹಾರ ಸುಭಾಸ ಹಾ ಹಾ
ಚಾರುಕಿರೀಟಕೇಯೂರಪದಕಮುಕ್ತಾ
ಹಾರಾಲಂಕಾರ ಶೃಂಗಾರನಾಗಿರುವನು೩
ಸೀಗುರಿ ಛತ್ರ ಚಾಮರದ ಸಮ
ವಾಗಿ ನಿಂದಿರುವ ತೋರಣದ ರಾಜ
ಭೋಗ ನಿಶಾನಿಯ ಬಿರುದ ಹಾ ಹಾ
ಮಾಗಧ ಸೂತ ಮುಖ್ಯಾದಿ ಪಾಠಕರ ಸ-
ರಾಗ ಕೈವಾರದಿ ಸಾಗಿ ಬರುವ ಕಾಣೆ೪
ಮುಂದಣದಲಿ ಶೋಭಿಸುವ ಜನ
ಸಂದಣಿಗಳ ಮಧ್ಯೆ ಮೆರೆವ ತಾರಾ
ವೃಂದೇಂದುವಂತೆ ಕಾಣಿಸುವ ಹಾಹಾ
ಕುಂದಣ ಖಚಿತವಾದಂದಣವೇರಿ ಸಾ-
ನಂದದಿ ಬರುವನು ಮಂದಹಾಸವ ಬೀರಿ೫
ತಾಳ ಮೃದಂಗದ ರವದಿ ಶ್ರುತಿ
ವಾಲಗ ಭೇರಿ ರಭಸದಿ ಜನ
ಜಾಲ ಕೂಡಿರುವ ಮೋಹರದಿ ಹಾಹಾ
ಸಾಲು ಸಾಲಾಗಿ ಬೊಂಬಾಳ ದೀವಟಿಗೆ ಹಿ-
ಲಾಲು ಪ್ರಕಾಶದಿ ಲೋಲನಾಗಿಹ ಕಾಣೆ ೬
ಊರ್ವಶಿ:ಈತನೆ ಭಾಗ್ಯನಿಧಿ ನೋಡೆ ನೀ ಮುದದಿಪ.
ಈತನೆ ಈರೇಳು ಲೋಕದ
ದಾತ ನಾರಾಯಣ ಮಹಾ ಪುರು-
ಹೂತ ಮುಖ್ಯಾಮರ ವಿನುತ ನಿ-
ರ್ಭೀತ ನಿರ್ಗುಣ ಚೇತನಾತ್ಮಕಅ.ಪ.
ಮೀನ ರೂಪವೆತ್ತಾ ಮಂದರ ಪೊತ್ತ
ಭೂನಿತಂಬಿನಿಯ ಪ್ರೀತ
ಮಾನವಮೃಗಾಧಿಪ ತ್ರಿವಿಕ್ರಮ
ದಾನಶಾಲಿ ದಶಾನನಾರಿ ನ-
ವೀನ ವೇಣುವಿನೋದ ದೃಢ ನಿ-
ರ್ವಾಣ ಪ್ರವುಢ ದಯಾನಿಧಿ ಸಖಿ ೧
ವಾರಿಜಾಸವಾನವಂದಿತ ಶ್ರೀಪಾದಯುಗ್ಮವ
ತೋರಿಕೊಂಬುವ ಸಂತತ
ಕೇರಿಕೇರಿಯ ಮನೆಗಳಲಿ ದಿ-
ವ್ಯಾರತಿಯ ಶೃಂಗಾರ ಭಕ್ತರ-
ನಾರತದಿ ಉದ್ಧಾರಗೈಯಲು
ಸ್ವಾರಿ ಪೊರಟನು ಮಾರಜನಕನು ೨
ಮುಗುದೆ ನೀ ನೋಡಿದನು ಕಾಣಿಕೆಯ ಕ-
ಪ್ಪಗಳ ಕೊಳ್ಳುವನು ತಾನು
ಬಗೆಬಗೆಯ ಕಟ್ಟೆಯೊಳು ಮಂಡಿಸಿ
ಮಿಗಿಲು ಶರಣಾಗತರ ಮನಸಿನ
ಬಗೆಯನೆಲ್ಲವ ಸಲ್ಲಿಸಿ ಕರುಣಾ
ಳುಗಳ ದೇವನು ಕರುಣಿಸುವ ನೋಡೆ೩
ರಂಭೆ :ದೃಢವಾಯಿತೆಲೆ ನಿನ್ನ ನುಡಿಯು ಸುರ
ಗಡಣ ಓಲಗಕೆ ಇಮ್ಮಡಿಯು ಜನ-
ರೊಡಗೂಡಿ ಬರುತಿಹ ನಡೆಯು ಹಾ ಹಾ
ಮೃಡ ಸರೋಜ ಸುರಗಡಣ ವಂದಿತ ಕ್ಷೀರ
ಕಡಲ ಶಯನ ಜಗದೊಡೆಯನಹುದು ಕಾಣೆ೧
ಮದಗಜಗಮನೆ ನೀ ಪೇಳೆ ದೇವ
ಸದನವ ಪೊರಡುವ ಮೊದಲೇ ಚಂದ-
ನದ ಪಲ್ಲಂಕಿಯ ತಂದು ಮ್ಯಾಲೆ ಹಾ ಹಾ
ಮುದದಿಂದ ಬಾಲಕರೊದಗಿ ಸಂತೋಷದಿ
ಚದುರತನದಿ ಪೋಗುವನು ಪೇಳೆಲೆ ನೀರೆ೨
ಊರ್ವಶಿ: ನಾರೀಮಣಿ ನೀ ಕೇಳೆ ಚಕ್ರೋತ್ಸವ
ಶ್ರೀರಮಾಧವನ ಲೀಲೆ
ಘೋರ ದೈತ್ಯಕುಠಾರ ಲಕ್ಷ್ಮೀ
ನಾರಾಯಣನ ಬಲಕರ ಸರೋಜದಿ
ಸೇರಿ ಕುಳಿತ ಗಂಭೀರ ದಿನಪನ
ಭೂರಿತೇಜದಿ ಮೆರೆವುದದು ತಿಳಿ೧
ದೊರೆಯು ಬರುವನು ಎಂದು ಎಲ್ಲರಿಗೆ ಗೋ-
ಚರಿಸುವನೊಲಿದು ಇಂದು
ತರ ತರದ ಆರತಿಗಳನು ನೀವ್
ಧರಿಸಿ ನಿಂದಿರಿಯೆಂದು ಜನರಿಗೆ-
ಚ್ಚರಿಗೆಗೋಸುಗ ಮನದ ಭಯವಪ-
ಹರಿಸಿ ಬೇಗದಿ ಪೊರಟು ಬಂದುದು
ರಂಭೆ :ಸರಸಿಜನಯನೆ ನೀ ಪೇಳೆ ಸೂರ್ಯ
ಕಿರಣದಂತಿಹುದೆಲೆ ಬಾಲೆ ಸುತ್ತಿ
ಗೆರಕವಾಗಿಹುದು ಸುಶೀಲೆ ಆಹಾ
ಹರಿಯ ವೈಕುಂಠ ನಗರದಂತೆ ಜ್ಯೋತಿ ವಿ-
ಸ್ತರವಾಗಿ ಸುತ್ತಿನೊಳ್ ಮೆರೆವುದಿದೇನೆಲೆ ೧
ಊರ್ವಶಿ:ಸಾದರದಲಿ ನೀ ಕೇಳೆ ಕಾರ್ತಿಕ ಶುದ್ಧ
ದ್ವಾದಶಿಯೊಳಗೆ ಬಾಲೆ
ಮಾಧವನ ಪ್ರೀತ್ಯರ್ಥವಾಗಿ ಶು-
ಭೋದಯದಿ ಸಾಲಾಗಿ ದೀಪಾ
ರಾಧನೆಯ ಉತ್ಸಹದ ಮಹಿಮೆಯ
ಸಾದರದಿ ನೀ ನೋಡೆ ಸುಮನದಿ೧
ನಿಗಮಾಗಮದ ಘೋಷದಿ ಸಾನಂದ ಸು-
ತ್ತುಗಳ ಬರುವ ಮೋದದಿ
ಬಗೆ ಬಗೆಯ ನರ್ತನ ಸಂಗೀತಾ
ದಿಗಳ ಲೋಲೋಪ್ತಿಯ ಮನೋಹರ
ದುಗುಮಿಗೆಯ ಪಲ್ಲಂಕಿಯೊಳು ಕಿರು೨
ನಗೆಯ ಸೂಸುತ ನಗಧರನು ಬಹ
ಚಪಲಾಕ್ಷಿ ಕೇಳೆ ಈ ವಸಂತ ಮಂ-
ಟಪದಿ ಮಂಡಿಸಿದ ಬೇಗ
ಅಪರಿಮಿತ ಸಂಗೀತ ಗಾನ ಲೋ-
ಲುಪನು ಭಕ್ತರ ಮೇಲೆ ಕರುಣದಿ
ಕೃಪೆಯ ಬೀರಿ ನಿರುಪಮ ಮಂಗಲ
ಉಪಯಿತನು ತಾನೆನಿಸಿ ಮೆರೆವನು೩
ಪಂಕಜಮುಖಿ ನೀ ಕೇಳೆ ಇದೆಲ್ಲವು
ವೆಂಕಟೇಶ್ವರನ ಲೀಲೆ
ಶಂಕರಾಪ್ತನು ಸಕಲ ಭಕ್ತಾ
ತಂಕವನು ಪರಿಹರಿಸಿ ಕರ ಚ
ಕ್ರಾಂಕಿತನು ವೃಂದಾವನದಿ ನಿ
ಶ್ಯಂಕದಿಂ ಪೂಜೆಯಗೊಂಡನು೪
ಕಂತುಜನಕನಾಮೇಲೆ ಸಾದರದಿ ಗೃ-
ಹಾಂತರಗೈದ ಬಾಲೆ
ಚಿಂತಿತಾರ್ಥವನೀವ ಲಕ್ಷ್ಮೀ
ಕಾಂತ ನಾರಾಯಣನು ಭಕುತರ
ತಿಂಥಿಣಿಗೆ ಪ್ರಸಾದವಿತ್ತೇ-
ಕಾಂತ ಸೇವೆಗೆ ನಿಂತ ಮಾಧವ೫

೩೧
ರಕ್ಷಿಸು ಕಮಲದಲಾಕ್ಷನೆ ಎನ್ನ ಪಕ್ಷಿವರಧ್ವಜ ನಂಬಿದೆ ನಿನ್ನ
ಋಕ್ಷವೈರಿಗಳ ಪುಂಜವ ಮೆಟ್ಟಲುಪೇಕ್ಷೆ
ಯಾಕೆ ಪರಮಾಸ್ಪದರನ್ನ ಪ.
ಉತ್ತರೆ ಗರ್ಭದಿ ಸುತ್ತಲು ತಿರುಗಿ ತೆತ್ತಿಯ ಕಾಯ್ದ
ಮಹೋತ್ತಮ ಶಕ್ತ
ಭಕ್ತರ ಭಯ ಬಿಡಿಸುವ ದುರ್ವೃತ್ತರ ಕತ್ತರಿಸುವ
ದೂರೊತ್ತು ರಮೇಶ ೧
ತಾಪತ್ರಯ ನಿರ್ಮೂಲನ ದೇವ ವ್ಯಾಪಕನೀ
ದೊರೆಯೆಂಬುವ ಭಾವ
ನಾ ಪರಿಕಿಸಿ ತಿಳಿದೆನೊ ಭವ ನಾವ
ಭೂಪತಿ ನೀನೆ ನಿರುತದಿ ಕಾವ ೨
ಸರ್ವಾಗ್ರಹ ತತ್ವೇಶ ನಿಯಂತ್ರ ಗೀರ್ವಾಣಾರ್ಚಿತ ಪದ ಶ್ರೀಕಾಂತ
ನಿರ್ವಾಹಕ ನೀನಲ್ಲದೆ ವೇಂಕಟ ಪರ್ವತ ರಿಪು ಗರ್ವ ನಿಕೃಂತ ೩

೪೧೪
ರಕ್ಷಿಸು ಮಹಮಾಯೆ ಕರುಣ ಕ-
ಟಾಕ್ಷದಿಂದಲಿ ತಾಯೆ ಪ.
ದಾಕ್ಷಾಯಿಣಿ ದೈತ್ಯಾಂತಕಿ ವರ ನಿಟಿ-
ಲಾಕ್ಷನ ರಾಮಿ ನಿರೀಕ್ಷಿಸು ಜನನೀಅ.ಪ.
ವಾಸವಮುಖವಿನುತೆ ರವಿಸಂ-
ಕಾಶೆ ಸುಗುಣಯೂಥೇ
ಭಾಸುರಮಣಿಗಣಭೂಷೆ ತ್ರಿಲೋಕಾ-
ಧೀಶೆ ಭಕ್ತಜನಪೋಷೆ ಪರೇಶೆ೧
ಗುಹಗಣಪರಮಾತೆ ದುರಿತಾ-
ಪಹೆ ದುರ್ಜನ ಘಾತೆ
ಬಹುಕಾಮಿತಪ್ರದೆ ಭಜಕಜನೋರ್ಜಿತೆ
ಮಹಿತೆ ಯೋಗಿಹೃದ್ಗುಹನಿವಾಸಿನಿಯೆ೨
ಶುಂಭಾಸುರಮಥಿನಿ ಸುರನಿಕು-
ರುಂಬಾರ್ಚಿತೆ ಸುಮನಿ
ರಂಭಾದಿಸುರನಿತಂಬಿನೀ ಜನಕ-
ದಂಬಸೇವಿತಪದಾಂಬುಜೆ ಗಿರಿಜೆ೩
ಅಷ್ಟಾಯುಧಪಾಣಿ ಸದಾಸಂ-
ತುಷ್ಟೆ ಸರಸವಾಣಿ
ಸೃಷ್ಟಿಲಯೋದಯಕಾರಿಣಿ ರುದ್ರನ
ಪಟ್ಟದ ರಾಣಿ ಪರಾಕು ಕಲ್ಯಾಣಿ೪
ನೇತ್ರಾವತಿ ತಟದ ವಟಪುರ-
ಕ್ಷೇತ್ರಮಂದಿರೆ ಶುಭದಾ
ಸುತ್ರಾಣಿ ಲಕ್ಷ್ಮೀನಾರಾಯಣಿ ಸ-
ರ್ವತ್ರ ಭರಿತೆ ಲೋಕತ್ರಯನಾಯಕಿ೫

೪೫೯
ರಕ್ಷಿಸು ಶ್ರೀ ಲಕ್ಷ್ಮೀವೆಂಕಟರಮಣ ರಾಕ್ಷಸ ಸಂಹರಣ
ಪಕ್ಷೀಂದ್ರವಾಹನ ವಾಸುಕಿಶಯನ ವಾರಿಜದಳನಯನಪ.
ತ್ರ್ಯಕ್ಷಾದಿ ವಿಬುಧಪಕ್ಷ ಪರಾತ್ಪರ
ಸುಕ್ಷೇಮನಿಧಿ ಕೃಪೇಕ್ಷಣದಿಂ ಸದಾಅ.ಪ.
ವೇದಬಾಹಿರರಾಗಿ ಖಲರು ಬಹು ಬಾಧಿಸುವರು
ಸಾಧನೆಯೆಲ್ಲ ಕೆಡಿಸುವರು ರಿಪುಗಳಾರ್ವರು
ಆದಿಮೂರ್ತಿ ತವಪಾದಾಶ್ರಯ ಸು-
ಬೋಧಾಮೃತರಸ ಸ್ವಾದುಗೊಳಿಸುತಲಿ೧
ಸರ್ವಾಪರಾಧಂಗಳ ನೀ ಕ್ಷಮಿಸು ಸುಜನರನುದ್ಧರಿಸು
ಪೂರ್ವಾರ್ಜಿತ ಪಾಪಂಗಳ ಪರಿಹರಿಸು ಸದ್ಭಕ್ತಿಯೊಳಿರಿಸು
ಸರ್ವತ್ರ ವ್ಯಾಪ್ತ ಸಂತಕೃತ ಸ್ತೋತ್ರ
ದುರ್ವಾರ ದುರಿತ ದುರ್ಗನಿಗ್ರಹನೆ೨
ಸತ್ಯಾತ್ಮ ಪಾವನ ಪಂಕಜನಾಭ ನೀಲಾಭ್ರದಾಭ
ಸತ್ವಾದಿಗುಣವರ್ಜಿತ ಮಹಾಶೋಭ ಶರಣಾಗತ ಸುಲಭ
ಚಿತ್ತವಾಸ ಶ್ರೀವತ್ಸಾಂಕಿತ ಪರ-
ಮಾರ್ಥಬೋಧ ಮಹತ್ತತ್ತ್ವನಿಯಾಮಕ೩
ಪವಮಾನಾಂತರ್ಗತ ಪಾಪ ವಿನಾಶ ಪೊರೆಯೊ ಜಗದೀಶ
ಅವಿಕಾರ ಲೀಲಾನಂತವಿಲಾಸ ಶತಸೂರ್ಯ ಪ್ರಕಾಶ
ಕವಿಜನಾನಂದಭವನ ಭವಭಯಾ-
ರ್ಣವ ಬಾಡಬ ಮಾಧವ ಮಧುಸೂದನ೪
ಚಿತ್ರಾಖ್ಯಪುರಮಂದಿರ ಸುಖರೂಪ ಯಾದವ ಕುಲದೀಪ
ಕರ್ತಾಕಾರಯಿತ ಸುಗುಣಕಲಾಪ ಪರಮ ಪ್ರತಾಪ
ಸುತ್ರಾಣ ಲಕ್ಷ್ಮೀನಾರಾಯಣ ಪರ
ವಸ್ತು ಶಾಶ್ವತ ಪವಿತ್ರ ಚರಿತ್ರ೫

೧೮೬
ರಥಾರೂಢ ವೆಂಕಟಗಿರಿನಾಯಕ ಪಥವ ತೋರೊ ಬೇಗ
ಮುಂದಿನ ಪಥವ ತೋರೊ ಬೇಗ ಪ.
ಪೃಥಾ ಕುಮಾರನ ರಥಾಶ್ವ ನಡಸುತ
ಕಥಾಕ್ರಮದಿ ಮನೋರಥಾವ ಸಲಿಸಿದ ಅ.ಪ.
ರಮಾಕಮಲಭವ ಉಮಾರಮಣ ಶ್ರೀ-
ಕ್ಷಮಾದಿ ನಾಯಕ ವಂದ್ಯ
ನಮೋ ನಮೋಯೆಂದೊದರುವೆ ಅನುದಿನ
ಕ್ಷಮಾಕರನೆ ಪದ ಕಮಲ ಪಾಲಿಸು ೧
ನೃಪಾಧಮನು ಲಸದುಪಾಯದಿಂದಲಿ
ಅಪಾಯ ಚಿಂತನೆ ಮಾಡುತಿರೆ
ತಪೋನಿಧೀಶನದಪಾರ ಮಹಿಮನೆ
ಕೃಪಾಕಟಾಕ್ಷದಿ ಸುಪಾದ ತೋರಿದ ೨
ಅಡಾವಡಿಯಿಂದ ಧಡಾಧಡನೆ ಬಂದು
ಒಡೆಯ ನಿನ್ನಡಿಗಳ ಮೇಲೆ ತನು
ಕೆಡಹಿದ ಮ್ಯಾಲೆ ತಡವ್ಯಾತಕೊ ಪದ
ಕೊಡೋ ಮೂಡಲಗಿರಿ ಒಡೆಯ ಶ್ರೀನಿಧೆ ೩

೧೪೦
(ಕುಂಜಾರು ದುರ್ಗಾ)
ರಮೇ ರಜನೀಕರಾಭಮುಖಿ ಕ್ಷಮಿಸೆನ್ನವಗುಣವಾ
ವಿಮಾನಗಿರಿವರೆ ನಮಿಪೆ ಯಶೋದಾ ಕುವರಿ ಹೃದ್ಗತ
ತಮೋ ನಿವಾರಿಣಿ ಪ.
ಸರೋರುಹಸ್ಮಯ ಹರಾತಿ ಸುಂದರ ಸುರಾಸುರಾರ್ಚಿತ
ಚರಣಯುಗೇ
ಪರಾಪರೇಶ್ವರಿ ಮುರಾರಿ ನಿನ್ನನು ಬರುವ ಸಮಯದಲಿ
ಕರತಂದಿರಿಸಿದ ೧
ದುರಾಭಿಲಾಷಾ ಭರಾಶಿ ಸಂಭೃತ ಸುರಾರಿನಾಯಕ
ಶಿರೋಹರೆ
ನರಾಧಿನಾಥರ ಕರುಣವೆನ್ನ ಮೇಲಿರುವ ತೆರದಿ
ಮನವಿರಿಸು ಕಟಾಕ್ಷದಿ ೨
ಸರೋಜಭವಪುರ ಹರ ಶಕ್ರಾದಿಕ ಸುರೇಡ್ಯ ವೆಂಕಟಗಿರಿ ವರನಾ
ಪುರಂಧ್ರಿ ಪುಷ್ಕಳ ವರಪ್ರದಾಯಿನಿ ಚರಂತನಾನುಗಪರಾತ್ಮದರ್ಶಿನಿ ೩

೧೫೭
(ಶ್ರೀ ರಾಘವೇಂದ್ರ ಪ್ರಾರ್ಥನೆ)
ರಾಘವೇಂದ್ರ ತೀರ್ಥ ಬೋಧಿಸು ಭಾಗವತಗತಾರ್ಥ
ರಾಘವ ಪಾದಾಂಬುಜ ಲಬ್ದಾರ್ಥ
ಸರಾಗದಿ ಪಾಲಿಸು ನಿಜಪುರುಷಾರ್ಥ ಪ.
ತುಂಗಾ ತಟವಾಸಾ ರಾಘವಶಿಂಗನ ನಿಜದಾಸ
ಪಂಗುಬಧಿರ ಮುಖ್ಯಾಂಗ ಹೀನರ-
ನಪಾಂಗನೋಟದಿ ಶುಭಾಂಗರ ಮಾಡಿಪ ೧
ಪಾದೋದಕ ಸೇವಾರತರಿಗಗಾಧ ಫಳಗಳೀವ
ಬೂದಿ ಮುಖದ ದುರ್ವಾದಿಗಳೋಡಿಸಿ
ಸಾಧುಜನರಿಗಾಲ್ಹಾದ ಬಡಿಸುತಿಹ ೨
ಭುಜಗ ಧರಾಧಿಪನ ವಲಿಸಿದ ಸುಜನ ಶಿರೋಮಣಿಯೆ
ನಿಜಪದಯುಗಳವ ಭಜಿಸುವ ಜನರಿಗೆ
ವಿಜಯದನೆನಿಸುವ ದ್ವಿಜಕುಲನಂದನ ೩

೮೮
ರಾಮ ನಿನ್ನಯ ದಿವ್ಯ ನಾಮವೇ ಗತಿಯೆಂಬೆ
ಪಾಮರನೆಂದೆನ್ನ ಪಾಲಿಸು ತಂದೆ ಪ.
ಸುರರಾಜನಂಗಸಂಗವಗೈದು ಶಿಲೆಯಾದ
ವರಮುನಿ ಗೌತಮನರಸಿಯು ನಿನ್ನ
ಚರಣಾರವಿಂದ ಸಂಸ್ಪರ್ಶಮಾತ್ರದಿ ದಿವ್ಯ
ತರುಣಿಯಾಗಿಹಳೆಂಬ ಪರಿಯ ನಂಬಿದೆನು ೧
ಪ್ರಥಮ ವರ್ಣವು ಪಾಪ ತತಿಗಳ ತರಿವುದು
ಜತನ ಮಾಡುವುದನ್ಯ ವರ್ಣವೆಂದೆನುತ
ಸ್ರ‍ಮತಿಗಳು ನಿತ್ಯ ಸಂಸ್ತುತಿಮಾಳ್ಪವದರಿಂದಾ-
ಶ್ರಿತ ಕಲ್ಪತರು ನೀನೆ ಗತಿಯೆಂಬೆ ನಿರತಾ ೨
ನಿನ್ನ ನಾಮಾಮೃತವನ್ನೇ ಕುಡಿಸಿ ನಿತ್ಯ ಘನ್ನ ಪಾತಕಗಳ
ನಿರ್ನಾಮಗೊಳಿಸು
ಪನ್ನಗಾಚಲನಾಥ ಪರಿಪೂರ್ಣ ಕೃಪೆಯಿಂದ
ಮನ್ನಿಸಿ ಮನಸನ್ನು ನಿನ್ನಲ್ಲಿ ಇರಿಸು ೩

೧೧೬
ರಾಮ ಪದಾಂಬುಜ ಭೃಂಗ ಭಕ್ತ
ಕಾಮಿತಾರ್ಥದ ಮಂಗಳಾಂಗ
ತಾಮಸಬಲ ನಿಗ್ರಹಣ ಪತಂಗ ಭ
ವಾಮಯಹರ ಭಾರತಿ ಮುಖ ಸಂಗ ಪ.
ಜ್ಞಾನ ಬಲೈಕ ಸುರೂಪ ಪದ್ಮಾ
ಮಾನ ಸೇವರಾತಿ ಭೂಪ
ಭಾನುಸರಣ ಸುಪ್ರತಾಪ ದೈತ್ಯ
ಕ್ಷೋಣಿ ಸಂದರ್ಶಿತ ಕೋಪ
ಜಾನಕಿವರನ ನಿಜಾನುಗನೆನಿಪ ಮ-
ಹಾನುಭಾವ ಪವಮಾನ ದಯಾಪರ ೧
ಇಂದು ಕುಲದಿ ತಾ ಜನಿಸಿ ನಿಜ
ಬಂಧುಗಳನು ಸತ್ಕರಿಸಿ
ಇಂದಿರೆಯರಸನ ಒಲಿಸಿ ಜರಾ-
ಸಂಧ ಮುಖರನು ಸಂಹರಿಸಿ
ಒಂದೇ ಕ್ಷಣದಿ ಸೌಗಂಧಿಕ ಕುಸುಮವ
ತಂದು ಮಡದಿಗಾನಂದ ತೋರಿದ ೨
ಕಲಿಯುಗದೊಳು ತಾ ಬಂದು ಮಾಯಿ
ಬಲಿ ಭುಜರನು ಗೆಲವಂದು
ಜಲಜನಾಭವ ಕರೆತಂದು ರೌಪ್ಯ
ನಿಲಯದಿ ಸ್ಥಾಪಿಸಿ ನಿಂದು
ಚೆಲುವ ಶೇಷಗಿರಿ ಪತಿಗತಿಯೆಂದು
ನೆಲೆಯ ತೋರಿದ ಪುರುಕರುಣಾಸಿಂಧು ೩

೪೭೨
ರಾಮ ರಾಮೆನ್ನಿರೊ ಸೀತಾಪತಿ ರಾಮ ರಾಮೆನ್ನಿರೊಪ.
ಗಂಗೆಯೊಳ್ ಮುಳುಗಲ್ಯಾಕೆ ನಡೆದು ಬಲು
ಭಂಗವ ಪಡುವುದ್ಯಾಕೆ
ಮಂಗಲದಾತ ನರಸಿಂಗನ ನಾಮವ
ಹಿಂಗದೆ ನೆನೆದರಿಷ್ಟಂಗಳ ಕೊಡುವ೧
ಉಪವಾಸ ಮಾಡಲ್ಯಾಕೆ ಕಪಟದೊಳು
ಗುಪಿತದಿ ಕುಳ್ಳಲ್ಯಾಕೆ
ಉಪಮೆರಹಿತ ಶ್ರೀಪತಿ ಕೃಷ್ಣರಾಯನ
ಜಪಿಸಿ ಬಂದರೆ ಜನ್ಮ ಸಫಲವಾಗುವುದಲ್ಲೋ೨
ಧ್ರುವನು ಸದ್ಗತಿ ಪಡೆದ ಕರುಣದಿಂದ
ಪವಮಾನಿಗೆ ಒಲಿದ
ಭುವನ ಈರಡಿ ಮಾಡಿ ಬಲಿಯನ್ನು ಸಲಹಿದ
ಬವರದೊಳಗೆ ದಾನವರನ್ನು ಮಡುಹಿದ೩
ಯಾತ್ರೆಗೆ ಪೋಗಲ್ಯಾಕೋ ಕಾವಡಿ ಪೊತ್ತು
ತೀರ್ಥಸ್ನಾನಗಳ್ಯಾತಕೋ
ಕರ್ತು ಮಾಧವ ಶತಪತ್ರನಾಭನ ಸಂ-
ಕೀರ್ತನಾದಿಗಳೆ ಪರತ್ರಸಾಧನವಲ್ಲೊ೪
ಭೂರಿಯಾಯಾಸವ್ಯಾಕೋ ಬರಿದೆ ಸಂ-
ಸಾರವ ನಂಬಲ್ಯಾಕೋ
ಮಾರಾರಿಸಖ ಲಕ್ಷ್ಮೀನಾರಾಯಣನನ್ನು
ಸೇರಿ ಭಜಿಪರ ಉದ್ಧಾರಮಾಡುವ ಶ್ರೀ೫

ಶ್ರೀರಾಮಚಂದ್ರ
೮೬
ರಾಮಾ ರಘುವೀರ ನಾಮಾಮೃತವ ಪಾಲಿಸು
ವಾಮಾಂಗಿಕೃತರಾಮ ಸೋಮಧರ ಕಾಮದ
ಕೈರವಧಾಮ ನಿರಾಮಯ ಪ.
ಕಾಮಧೇನು ಕಲ್ಪತರು ಚಿಂ-
ತಾಮಣಿ ನೀನಪ್ಪ
ತಾಮಸಜನ ನಿರ್ಧೂಮ ಜನಕಜಾ
ಕಾಮ ಸಕಲ ಗುಣಧಾಮಧೀಶ್ವರ ೧
ಕಂಜಾಯತನಯನ ಗುರು ಪ್ರಾ-
ಭಂಜನಿ ಭುಜಗಮನ
ಮಂಜುಳ ಸಿಜಂನ್ಮಂಜೀರದ್ವಯ
ರಂಜಿತ ಪದ ಭಕ್ತಾಂಜಲಿ ಫಲದಾ ೨
ಮಂಗಲತರರೂಪ ಸೀತಾ-
ಲಿಂಗನ ಹೃತತಾಪ
ಇಂಗಿತ ಫಲದ ಭುಜಂಗಮಹೀಧರಶೃಂಗವಾನ ಮಾತಂಗ ಭಯಾವಹ ೩

೩೬೨
ರಾಮಾನಾಮಾಮೃತಪಾನಸುಖಧಾಮನು ಮುಖ್ಯಪ್ರಾಣ
ಸೋಮಶೇಖರಮುಖ್ಯಾಮರಸಂಕುಲಸ್ವಾಮಿ ಮಹಾಸುತ್ರಾಣ ೧
ಯಾವತ್ಕಾಲ ಕಳೇವರದೊಳನಿಲ ತಾವದ್ಧರಿಸನ್ನಿಧಾನ
ದೇವಬ್ರಹ್ಮ ಸುಜನಾವಳಿಸುಖದ ಮಹಾಪ್ರಭು ಪವಮಾನ ೨
ಲಕ್ಷ್ಮಣಪ್ರಾಣದಾತಾರ ನಿಭೃತಮೋಕ್ಷಹೃದಯ ಪರಿಪೂರ್ಣ
ಲಕ್ಷ್ಮೀನಾರಾಯಣಾಂಘ್ರಿಭಕ್ತಿದಕ್ಷ ಲೋಕೈಕಧುರೀಣ ೩

ರುದ್ರದೇವರ ಪ್ರಾರ್ಥನೆ
೧೩೩
ಫಾಲಲೋಚನ ಎನ್ನ ಪಾಲಿಸು ಬೇಗ
ನೀಲಕಂಧರ ಕರುಣಾಳು ಕೇಳೀಗ ಪ.
ಬಂದ ಮೋಕ್ಷಕೆ ಹೇತುವೆಂದು ಪುಟ್ಟಿದ ಮನ
ಮಂದಿರ ನೀ ಎನ್ನ ಕುಂದನೆಣಿಸದಿರು ೧
ತುಂಬಿತ್ತೆನ್ನುವ ಶಶಿಬಿಂದಾ ಕೂಡಿಟ್ಟಿದೀ-
ಡಂಬ ನೀನೆಂತು ತ್ರಯಂಬಕನಾಗುವಿ ೨
ರಾಮಚಂದ್ರನ ದಿವ್ಯ ನಾಮಾಮೃತವ ನಿತ್ಯ
ನೇಮದಿ ಪನ್ನಂಗ ಲಲಾಮನ ಸೇವಿಸುವಿ ೩
ಪಾವನಾತ್ಮಕ ಲಕ್ಷ್ಮಿಧಾಮನ ಸಹಸ್ರ
ನಾಮವ ನಿನ್ನಂತೆ ಸುತ್ರಾಮ ತಾನರಿಯನು ೪
ವೈಷ್ಣವಾಗ್ರಣಿ ನೀನು ಕೃಷ್ಣನ ಪ್ರೀತಿಗಾಗಿ
ದುಷ್ಟರಿಗೊರವಿತ್ತು ಭ್ರಷ್ಟಗೊಳಿಸುವಿ ೫
ಜೇಡಿ ಮೈಯಲಿ ಧರಿಸಿ ಮೂಢರ ಮೋಹಿಸುವಿ
ನೋಡುವಿ ಮನದಿ ಗರೂಡಗಮನನ ೬
ವೆಂಕಟೇಶನ ಪಾದ ಪಂಕಜ ಭಜಿಸುತಕಿಂಕರವರದನಾದ ಶಂಕರರಾಯ ೭

೨೮೭
ಲಕುಮಿವಲ್ಲಭ ಹರಿಯ ಮಂದಿರದಿಂದ ಬಕುಳೆ ಬಂದ ಪರಿಯ
ವಿಕಸಿತಮುಖಿ ಧರಣಿಯು ಕಂಡು
ನಗುತ ಸದ್ಯುಕುತಿಯಿಂದಲಿ ಪೇಳ್ದಳು ಪ.
ಯಾರು ಬಲ್ಲರಿವನ ಸಂಸ್ಥಿತಿಯನ್ನು ನೀರೆ ನೀ ಪೇಳ್ವದನ
ನಾರಿಯ ಕೊಡುವರೆ ನಂಬಿಕೆ ಪೊಂದಲು
ದಾರಿಯ ಪೇಳೆ ಜಾಣೆ ೧
ಕ್ಷೀರಾಂಬುಧಿವಾಸನ ಸಕಲಗುಣ ವಾರುಧಿ ವರದೇಶನ
ಸಾರಿ ಸಾರಿಗೆ ಸರ್ವ ಸುರಮುನೀಶ್ವರರೆಲ್ಲ ಸೇರಿ ಬಾಳುವರೀತನ ೨
ಮಾತಿಗೆ ದೊರೆಯನಂತೆ ಮನೋಗತಿ ನೀತಿಯು ನಡೆಯದಂತೆ
ಜಾತಿ ಗೋತ್ರ ಬಂಧು ಜನರಿಲ್ಲದವನಿಗಿನ್ಯಾತಕೆ ಪರಿಣಯವು ೩
ಭೂತೇಂದ್ರಿಯ ಮನವು ಬಲಿಷ್ಠ ಮಹಾತತ್ವ ಹಂಕೃತಿಯು
ಶ್ರೀ ತರುಣಿಯ ಗುಣ ತ್ರಯಮುಖ ತತ್ವ ಸಂಘಾತವೀತನಿರಲು ೪
ಗುಣಹೀನನಿವನೆಂಬೊರು ನೀರೊಳಗೊಂಡು
ಮನೆಯ ಕಟ್ಟಿದನೆಂಬೊರು
ವನಜ ಮುಖಿಯನಿತ್ತರೆಂದು ರಕ್ಷಿಪನೆಂಬದನು
ನಿಜವಾಗಿ ಪೇಳು ೫
ಸಕಲ ಜಗನ್ನಿವಾಸ ಸಾಂಗೋಪಾಂಗ ಮುನಿಗಳ ಸರಿವನಂತೆ
ತನುಮನದಲಿ ತನ್ನ ನೆನೆವರ ಕೃತ್ಯಗಳನು ತಾನೆ ಮಾಳ್ಪನಂತೆ ೬
ಮನೆವಾರ್ತೆಗಳ ಬಿಟ್ಟು ಸಂಚರಿಸುವ ಮುನಿಗಳ ಸರಿವನಂತೆ
ತನುಮನದಲಿ ತನ್ನ ನೆನೆವರ ಕೃತ್ಯಗಳನು ತಾನೆ ಮಾಳ್ಪನಂತೆ ೭
ದಾಸರ ಪಾಲಿಪುದು ಎಂದೆಂದಿಗು ಶ್ರೀಶನ ಮಹಬಿರುದು
ದೋಷದೂರನಾದರಿಂದ ಮೌನಿ ಮನೋವಾಸನಾಗಿಹ ನೆರದು ೮
ಹಲಬರ ಮಾತಕೇಳಿ ಮಹಾಂಬುಧಿ ಜಲದೊಳು ಸುಳಿವಂತೆ
ಕುಲಹೀನನಾಗಿ ಕಲ್ಪಾಂತದೊಳಿರುವಗೆ ಲಲನೆಯ ನಿಪ್ಪುದೆಂತೆ ೯
ಸದಯಾನಲೋಕದಿಂದ ಮಂದಿರ ಪೊತ್ತು
ಸುಧೆಯನು ತಾನೆ ತಂದ
ಮದ ಮುಖ ದೈತ್ಯರ ಮುರಿದು ಸುರರಿಗತಿ
ಮುದವ ತೋರಿದ ಮುಕುಂದ ೧೦
ಅಡವಿಯೊಳಿರುವನಂತೆ ಗೆಡ್ಡೆಯ ತಿಂದು
ಹೊಡದಾಡಿ ಬರುವನಂತೆ
ಸಿಡುಕೋಪಿ ಜನರ ಸಂಗಡ ಕಾದುವವನಿಗೆ ಮಡದಿಯ
ಕೊಡುವದೆಂತೆ ೧೧
ಮಗುವಿನ ಮಾತ ಕೇಳಿ ತಕ್ಷಣ ನರಮೃಗನಾಗಿ ಕೋಪತಾಳಿ
ಬಗೆದು ಬಲಿಷ್ಠ ದೈತ್ಯನು ಸುಲಭದಿ ಬೇಗ ತೆಗೆದನು ಕರುಳನಂತೆ ೧೨
ಸಿರಿಯನಾಳುವನಾದರೆ ದೈತ್ಯರ ಮುಂದೆ ತರಿವುದು ಸರಿಯೆ ನೀರೆ
ಮರುಳು ಮಾತುಗಳಾಡಲ್ಯಾತಕೆ ಸುಮ್ಮನೆ ಥರವಲ್ಲ ಹಿಂದೆ ಸಾರೆ ೧೩
ಕೃತ್ರಿಮ ದ್ವಿಜನಿವನು ಭೂಭಾರಕ ಕ್ಷತ್ರ ಸಮೂಹವನು
ಶಸ್ತ್ರ ಪಿಡಿದು ಬುಡ ಕತ್ತ್ರಿಸಿ ಮಡುಗಳ ನೆತ್ರದಿ ರಚಿಸಿದನು ೧೪
ದಾನವರನು ಗೆಲಲು ಚಪಲ ಬುದ್ಧಿ ವಾನರರನು ಒಲಿಸಿ
ಮಾನಿನಿಯನು ತಂದನೆಂದು ಸರ್ಪರು
ಪೇಳ್ವ ಹೀನವಾರ್ತೆಗಳೇನಿದು ೧೫
ಧರೆಯ ಭಾರವನಿಳುಹಿ ಸಕಲ ಸುರವರ ಮುನಿಗಳ ಸಲಹಿ
ಕರುಣಿಯೆಂಬ ಕೀರ್ತಿ ತರುವಗೋಸುಗಲಿಂಥ
ತೆರವ ತೋರಿದ ಕೃಷ್ಣನು ೧೬
ಜೈನರ ಸಭೆಯೊಳಗೆ ಮೈಯೊಳು ವಸ್ತ್ರಹೀನನಾಗಿರುವ ಬಗೆ
ನಾನರಿಯೆನೆ ಬಹು ಮಾನ ಬಿಟ್ಟವನಿಗೆ ಏನೆಂದು ಮಗಳೀವನೆ ೧೭
ಕಲಿಯಂತ್ಯ ಸಮಯದಲ್ಲಿ ಮ್ಲೇಂಛರನೆಲ್ಲ
ಕೊಲುವನು ಖಡ್ಗದಲಿ
ನೆಲನ ಶುದ್ಧಿಯಗೈದು ನಿಖಿಳ ಭೂದೇವರ
ಕುಲವನುದ್ಧರಿಸುವನು ೧೮
ಏನೆಂದರು ಮನದಿ ನಿರ್ಣಯ ತೋರದೇನು ಮಾಡಲಿ ಕೆಳದಿ
ಮಾನುಷ್ಯ ಭ್ರಮೆಯನು ಕಳೆವಂತೆ ಪೇಳಮ್ಮ
ಮಾನಿನಿ ಶಿರೋಮಣಿಯೆ ೧೯
ದೋಷ ಲೇಶಹೀನನು ಸಕಲಗುಣ ಭೂಷಿತ ಶ್ರೀವರನು
ಶೇಷ ಗಿರೀಶನೆನಲು ತನ್ನ ಮಗಳೀವ ಭಾಷೆಕೊಟ್ಟಳು ಧರಣಿ ೨೦

೪೭
ಲಕ್ಷುಮಿ ನಾರಾಯಣ ಸಂರಕ್ಷಿಸು ಎನ್ನನು ಬೇಗ ಪ.
ಪಕ್ಷ್ಮ(?)ಗಳಕ್ಷಿಗಳನು ಕಾವಂದದೊಳಕ್ಷಯ ನಿಧಿಯ ಸ-
ಮಕ್ಷದಿ ತೋರುತ ಅ.ಪ.
ಅರ್ಭಕನಾ ಮೋರೆ ಕೇಳಿ ಕರ್ಬುರ ಚರ್ಮನ ಸೀಳಿ
ಗರ್ಭೀತ ಕರುಳ ಮಹಾರ್ಭಟದಿಂ ತೆಗದುರ್ಬಿಗೆ ಬೀರಿದ
ನಿರ್ಭಯಕಾರಿ ೧
ಮಣಿಗರ್ಭ ಮೂರ್ತಿಗೆ ನೀ ಎಣೆಯಾಗಿಲ್ಲಿಗೆ ಬಂದು
ಕುಣಿಯಲು ನಿಧಿ ಸಂದಣಿಗೊಳದಿರೆ ಲಕ್ಷಣಕೆ ಕೊರತೆಯಂ-
ದೆಣಿಸರೆ ಸುಜನರು ೨
ಶಕ್ರ ಚತುಷ್ಕರ ಸಿರಿಯು ಚಕ್ರಗದಾಬ್ಜರ ಪರಿಯು
ವಕ್ರ ಮತಿಯ ರಿಪುಚಕ್ರವ ತರಿವ ಪರಾಕ್ರಮ ಕರುಣೋ-
ಪಕ್ರಮ ತೋರುತ ೩
ಅಂಬುಜನಾಭನೆ ನಿನ್ನ ನಂಬಿದ ಭಾವನೆಯೆನ್ನ
ತುಂಬಿದ ಜಗದೊಳಗಿಂಬುಗೊಂಡಿಹ ನಿನಗೆಂಬುದೇನು ಪೀ-
ತಾಂಬರ ಧಾರಿ೪
ಎರಡೊಂದು ಋಣಬಂಧ ಪರಿಹರಿಸೊ ಗೋವಿಂದ
ಶರಣಾಗತ ಸುರತರು ಕರುಣಾರಸವಿರಿಸು ಶೇಷಗಿರಿ-
ವರ ತ್ವರೆಯಿಂದ ೫

೪೦
ಲಕ್ಷುಮೀನಾರಾಯಣ ಜಯಲಕ್ಷುಮೀ ನಾರಾಯಣ
ಲಕ್ಷುಮೀನಾರಾಯಣ ಜಯ ಲಕ್ಷುಮೀ ನಾರಾಯಣ ಪ.
ಸರ್ವ ಲೋಕ ಶರಣ್ಯ ಶಾಶ್ವತ ಶರ್ವವಂದಿತ ಪಾದ ದಾನವ
ಗರ್ವಹರಣ ಗದಾದಿ ಧಾರಣ ಪರ್ವತಾರಿ ವರ ಪ್ರದ ೧
ನಂಬಿಕೊಂಡಿಹೆ ನಿನ್ನ ದಿವ್ಯ ಪದಾಂಬುಜಗಳನು ಸರ್ವಕಾಲದಿ
ಅಂಬುಜಾಲಯೆ ಸಹಿತ
ಮನದೊಳಗಿಂಬುಗೊಳು ಕಮಲಾಂಬಕ ೨
ಆರು ಸಂಖ್ಯೆಯ ಕಳ್ಳರೆನ್ನನು ಗಾರುಮಾಡುವರಾದರಿಂದತಿ
ಧೀರ ನಿನ್ನ ಪದಾರವಿಂದಕೆ ದೂರುವೆನು ರಘುವೀರನೆ ೩
ದುರ್ಮತಿಗಳಾದಸುರಹರಣಕೆ ಭರ್ಮಗರ್ಭನು ಬಂದು ಸ್ತುತಿಸಲು
ಧರ್ಮಸಂಸ್ಥಾಪಿಸುತ ಬಹು ಶುಭಕರ್ಮ ತೋರುವ ಕರುಣಿಯೆ ೪
ಸಪ್ತ ಋಷಿಗಳ ಕೂಡಿಕೊಂಡತಿ ಭಕ್ತಿಯಿಂದಲಿ ನಿನ್ನ ಭಜಿಸಿದ
ಸತ್ಯವ್ರತನಿಗೆ ಸಕಲ ಶ್ರುತಿಗಳ ತತ್ವ ತಿಳಿಸಿದ ಮತ್ಸ್ಯನೆ ೫
ಅಮರದೈತ್ಯರು ಅಂಬುನಿಧಿಯೊಳು ಭ್ರಮಣಗೊಳಿಸಲು
ಮುಳುಗಿಕೊಂಡಿಹ
ಅಮಿತಗುರು ಮಂದರವ ಧರಿಸುತ ಅಮೃತರಸ ತೆಗೆದಿತ್ತನೆ ೬
ಧಾತ್ರಿಯನು ಕದ್ದೊಯ್ದ ಹಾಟಕನೇತ್ರ
ದೈತ್ಯನ ತರಿದು ಬಿಸುಟು ವಿ-
ಧಾತೃನಾಸಾಕುಹರ ಜನಿತ ಪವಿತ್ರ ಯಜ್ಞ ವರಾಹನೆ ೭
ಹುಡುಗ ಪೇಳಿದ ಮಾತಿನಿಂದಲಿ
ಘಡುಘಡಿಸಿ ಕಂಬದೊಳು ಬಂದ
ಸಿಡಿಲಿನಂತಿಹ ನಖದಿ ದೈತ್ಯನ ಒಡಲ ಬಗೆದನು ಕೋಪದಿಂದ ೮
ಮಾಣಿಯಂದದಿ ಪೋಗಿ ಭೂಮಿಯ
ದಾನಕೊಂಡನಾನೆವನದಿ
ದಾನವಾಹೃತ ಧರೆಯ ಕಸ್ಯಪಸೂನುಗಳಿಗೊಲಿದಿತ್ತನೆ ೯
ದುಷ್ಟಭೂಭುಜಭಾರದಿಂದತಿ ಕಷ್ಟಪಡುತಿಹ ಧರೆಯ ಕರುಣಾ
ದೃಷ್ಟಿಯಿಂದಲಿ ನೋಡಿ ಕೊಡಲಿಯ
ಪೆಟ್ಟಿನಿಂದಲಿ ನೃಪರ ಕಡಿದ ೧೦
ನೀರಜಾವದನಾರವಿಂದ ಮಹಾ ರಸಾಸ್ವಾದನ ಪದ
ಕಪಿವೀರನಿಗೆ ಸ್ವಾರಾಜ್ಯ ನೀಡಿದ ಮಾರುತಿಗೆ ದಯ ಮಾಡಿದ ೧೧
ಬಾಲ ಲೀಲೆಯ ತೋರಿ ಗೋಪಕ ಬಾಲೆಯರ ಕೂಡಾಡಿದೆ
ಖೂಳಕಂಸನ ಕೆಡಹಿ ದಾನವಮೂಲ ಕಿತ್ತು ಬಿಸಾಡಿದೆ ೧೨
ಜೈನರನು ಮೋಹಿಸುವೆನೆಂದನುಮಾನವಿಲ್ಲದೆ ನಗ್ನನಾಗಿ
ಹೀನ ಬುದ್ಧಿಯ ತಿಳಿಸಿ ತ್ರಿಪುರವ ಹಾನಿಗೈಸಿದ ಬೌದ್ಧನೆ ೧೩
ಮಂಗಳಾಯನ ನಿನ್ನ ಕರುಣಾಪಾಂಗ
ಸುಧೆಯನು ಕರೆದು ಶಿರದಲಿ
ತುಂಗ ವಿಷಯ ತರಂಗ ತಪ್ಪಿಸು ಅಂಗಭಂಗವ ಶಿಂಗನೆ ೧೪
ಮಿಂಚಿನೊಡ್ಡಿದ ಮೇಷನಂದದಿ ಪಂಚವರ್ಣದ ತುರಗವೇರಿ
ಸಂಚರಿಸಿ ಮ್ಲೇಂಛರನು ಕೊಲ್ಲಿಸಿ ಲಾಂಛಜೀವನ ವರದನೆ ೧೫
ಮಂದಿರದಿ ನೀ ಬಂದು ರಕ್ಷಿಪೆ ಎಂದು ಸಕಲಾನಂದಗೊಂಡಿಹೆ
ಇಂದಿರೇಶನೆ ಎಂದಿಗೂ ಈ ಅಂದದಿಂದಲಿನಿಂದ ಸಲಹು ೧೬
ಕೇಶವಾದಿ ದ್ವಿದಶರೂಪವು ಮಾಸಗಳಿಧಿಷ್ಠಾನನಿಗೆ ಪ-
ರೇಶ ಕಡೆಯಲಿರುವ ಕಾರ್ತಿಕವಾಸ ದಾಮೋದರ ಹರನೆ ೧೭
ಛಳಿಯೊಳೇಳುತ ಮುಳುಗಿ ಜಲದಲಿ
ಬಳಲಿ ಕರ್ಮವ ಮಾಡಲಾರೆ
ನಳಿನಜಾರ್ಜಿತ ನಿನ್ನ ಪಾದದ ನೆಳಲನಂಬಿ ಸುಮ್ಮನಿರುವೆ ೧೮
ಅಖಿಳದೋಷ ನಿವಾರಣಾದ್ಭುತ ಸಕಲಸದ್ಗುಣಧಾರಣಾ
ಮಕರ ಕುಂಡಲ ಧಾರಿ ವೆಂಕಟಶಿಖರ ವರ ಸುಖಕಾರಣಾ ೧೯

೧೪೮
(ನವಗ್ರಹ ಸ್ತೋತ್ರ)
ಲಕ್ಷ್ಮೀನೃಸಿಹ್ಮ ನೀ ರಕ್ಷಿಸೆನ್ನನುಸ್ವೀಯ ಪಕ್ಷಪಾತದಿ
ಸತ್ಕಟಾಕ್ಷವಿರಿಸು
ರೂಕ್ಷಹಾಟಕ ಕಶಿಪುವಕ್ಷೋವಿದಾರೈಕ
ದಕ್ಷನಖವಜ್ರಿರಿಪುಪಕ್ಷದಹಿಸು
ಶೀಕ್ಷಮಾಲಾಗ್ರಥಿತ ಕಕ್ಷಸಂಚಾರಿಗ್ರಹ ರಕ್ಷಾಕೃತೇ
ವಿರೂಪಾಕ್ಷ ಶರಣು
ಸೂಕ್ಷ್ಮ ಕಾಲಾದ್ಯುಪಾದಿಗಳಿಂದ ದಿನಮಾಸ
ಪಕ್ಷವೃತ್ವಯನ ಸಂವತ್ಸರಾಖ್ಯ
ಅಕ್ಷೀಣ ಬಲ ಧೈರ್ಯ ಶಕ್ತಿ ಮೊದಲಾಗಿ
ದಯಮಾಡು ಶರಣೆಂದು ನಮಿಪೆ ನಿನ್ನ ೧
ವೈದೀಕ ಕರ್ಮಗಳ ಹಾದಿ ತೋರುತಲತ್ಯಗಾಧ
ತೇಜೊರಾಶಿಯಾಗಿ ಮೆರೆವ
ಬೋಧಿಸುವ ಕಮಲ ಮೊದಲಾದಸದ್ವಸ್ತುಗಳ
ಬಾಧಿಸುವ ಘೂಕ ತಸ್ಕರರ ಗಣವ
ಮಾಧವನ ಪದ್ಮಾಸನಾದಿ ಕೃತ ಮಂಡಲದಿ
ನಾದಿಪತಿ ಗ್ರಹರಾಜ ನಿನ್ನ ಪದವ
ಸಾದರದಿ ನಿತ್ಯದಲಿ ನಮಿಸುವೆನು ದೇಹಗತ
ವ್ಯಾಧಿಗಳ ಪರಿಹರಿಸು ಪಾವನಾತ್ಮ
ನೀ ದಯಾನಿಧಿಯೆಂದು ನಂಬಿ ಇರುವುದ ಬಲ್ಲಿನಿರುತದೀ
ಸಲಹೆನ್ನ ನಿರ್ಮಲಾತ್ಮ೨
ತಾರಾಗಣೇಶ ತಂಪೇರಿಸುವ ಸರ್ವರಿಗೆ
ನೀರುಮರಬಳ್ಳಿಸಕಲೌಷಧಿಗಳ
ಸಾರಕಧಿಪತಿಯೆ ನಿಶಿವಾರಿಧಿಗೆ ಮಗನಾಗಿ
ತಾರೆಗೊಲಿದಾಕೆಯಲಿ ಬುಧನಪಡದೇ
ಆರುಗ್ರಹಗಳಿಕಿಂತಲತಿ ಪ್ರಗತಿಯಿಂದಲೀರಾರು
ರಾಶಿ ಸಂಚಾರ ಮಾಳ್ಪೆ
ಮಾರನಿಗೆ ಮಂತ್ರಿಯಂದದಿ ತೋರಿ ಮಂದರನು ಸ್ತ್ರೀಯ
ಮೋಹದ ಬಲೆಯ
ಸೇರಗೊಳಿಪೆ ಘೋರ ತಾಪವ ಬಿಡಿಸಿ ಗತಿಯಾಗಿ ಸಲಹು
ನೀರಜಾಕ್ಷ ಸಮನೋಜ ಮಾದೇವಿಸಹಜ ೩
ಭೂಮಿದೇವಿಯ ಪುತ್ರ ಬರುರಕ್ತತರಗಾತ್ರ ಸೋಮಾರ್ಕ
ಗುರುಮಿತ್ರ ಸಜ್ಜನತ್ರ
ಈ ಮಹೀಯೊಳಗೆ ನಿನ್ನ ಪೋಲ್ವ ಶಕ್ತರ ಕಾಣೆ
ವ್ಯಾಮೋಹಗೊಳಿಸದಿರು ದಂಡಪಾಣಿ
ಸಾಮಥ್ರ್ಯ ಶಕ್ತಿ ಸೌಭಾಗ್ಯಗಳ ಕರುಣಿಪನೆ ಸ್ವಾಮಿ ಗುಹ
ರಾಜಕರುಣಾ ಪಾತ್ರನೆ
ಕಾಮಚಾರಜ ಬಹುವಿಧಾಮಯವ ಪರಿಹರಿಸಿ ನೀ
ಮನೋಹರ್ಷ ಪಾಲಿಸು ಧೀರನೆ
ಈ ಮಹೇಶ ಕರುಣ ಮೊದಲಾಗಿ ಘಟಿಸು
ಕಮನೀಯ ಕಾಂತಿ ಕುಹಕಜನವಾರಿ೪
ಉದಕಗಳಿಗಭಿಮಾನಿ ಬುಧ ನಿನ್ನ ಪಾದಯುಗ
ಪದುಮಗಳಿಗೆರಗುವೆನು ಪಾಲಿಸೆಂದು
ಮಧು ವಿರೋಧಿಯ ಮನೋಭವನಣುಗ ಮಾತಿನಲಿ
ಚದುರತೆಯನಿತ್ತು ಚಾತುರ್ಯಗೊಳಿಸು
ಅಧಿಪತಿಗಳೊಡನಾಡಲತಿ ಸೂಕ್ಷ್ಮಮತಿಯೀವ
ಸದಯಾವಲೋಕ ನೀನೆಂದು ತಿಳಿದೆ
ವಿಧವಿಧದಿ ವಿಷ್ಣು ತತ್ವದ ರಹಸ್ಯವ ತಿಳಿಸಿ ಮದಮೋಹ
ಮಾತ್ಸರ್ಯವೆಲ್ಲಬಿಡಿಸು
ಪದುಮನಾಭನ ಪಾದ ಪಂಕಜವನೆನವ ಸನ್ಮುದವರಿತು ಸಲಹು
ಸ್ವರ್ಣವರ್ಣ ಸುಲಲಿತಾಂಗ ೫
ಸುರಗಣಾರಾಧ್ಯಪದಸ್ವರ್ಣಾಂಗ ಶುಭಧಾಯಿ ಮೃದುಭಾಷ
ಮಂತ್ರಜ್ಞ ಚೂಡಾಮಣಿ
ಮದಮತ್ತ ದೈತ್ಯರನು ಸದೆದು ದೂರೋಡಿಸುವ
ಸದುಪಾಯಗಳ ತಿಳಿಸಿ ಸುರರ ಕಾವ
ಉದಿತನಾಗಿರೆ ಸಕಲ ಬುಧರಿಗನುಕೂಲ ನಿತ್ಯದಲಿ
ನಿಖಿಳ ಗ್ರಹೋನ್ನತ ಶಕ್ತಿಯೇ
ಪದುಮಾರಮಣನ ಹೃತ್ಸದನದಲಿ ಕಾಲಕಾಲದಿ ಭಜಿಸಿ
ಸಕಲಾರ್ಥ ಪಡದೀವನೆ
ಸುಧೆಯ ಸೇವಿಸುತ ಶಕ್ರಸದನೈಕ ಪೂಜ್ಯಗುರು ಮುದದಿಂದ
ನಿನ್ನ ನಮಿಸುವೆನು ನೀನೊಲಿದು ಸಲಹೊ೬
ದೇವದಾನವ ವಂದ್ಯ ದೈತ್ಯಗುರುವೆನಿಪ ಭೂದೇವವರ
ಭಾರ್ಗವನೆ ಭಜಿಪೆ ನಿನ್ನ
ಆವ ಕಾಲಕು ಶುಭಗ್ರಹನೆಂಬ ಖ್ಯಾತಿಯನು ಕಾವದುತ್ತಮವೆನ್ನ
ತಪ್ಪು ಮರತು
ಪಾವನತ್ವವ ಪೊಂದಲಖಿಳ ಜೀವರಗಿವರ ಭಾವನೆಯೆ
ಮುಖ್ಯವೆಂಬರ್ಥವರಿತು
ದಾವ ಕಾಲಕು ರಮಾಭೂವರನ ಮನವರಿತು
ಸೇವೆಗನುಕೂಲನಾಗಿರುವೆ ಕುರಿತು
ಈ ವಸುಧೆಯಲಿ ಲೇಶನೋವನೀಯದೆ ನಮ್ಮ ಠಾವಿಯಲಿ
ಕಾಪಾಡು ಕರುಣ ವಹಿಸು೭
ದಿನಪನಂದನನಾದ ಶನಿಯೆ ನಿನಗೊಂದಿಪೆನು
ಮುನಿಸದಿರು ನಮ್ಮಮೇಲೆಂದೆಂದಿಗು
ನೆನಸುತಿಹ ಕಾರ್ಯಗಳಿಗನುಕೂಲನಾಗು ಸುಮ್ಮನೆ ಪೀಡಿಸುವ
ನಿನ್ನ ಘನವ ತ್ಯಜಿಸು
ಕಿನಿಸಿಂದ ನೀ ಭಂಗ ನೆನಸಿದರೆ ತಾಳುವರೆ ಮನುಜರೆಂದಿಗು
ಶಕ್ತರಹರೆ ಪೇಳು
ವನಜನಾಭನ ನಾಮ ನೆನೆವ ದಾಸರ ಮೇಲೆ ಮನವರಿತು
ಮನ್ನಿಸುವ ಮಮತೆ ತಾಳು
ಕನಸಿಲಾದರು ಕ್ರೋಧವಿಡದೆ ಕಾಪುವುದೆಂದು ನಿರುತದಿಂ
ಕೈ ಮುಗಿದು ಬೇಡಿಕೊಳುವೆ ೮
ಸೂರ್ಯ ಚಂದ್ರಮರ ಮಾತ್ಸರ್ಯದಿಂದೋಡಿಸುವ
ವೀರ್ಯ ವಹಿಸಿದ ರಾಹು ಕೇತುಗಳನು
ಮರ್ಯಾದಿಯಿಂದ ಪೂಜಿಸುವೆ ಕಾರ್ಯಗಳಲ್ಲಿ ಸ್ಥೈರ್ಯ
ಶೌರ್ಯಾದಿಗಳ ದಯ ಮಾಡಿರಿ
ಆರ್ಯಾನುಕೃತ ಸಂಪ್ರದಾಯವನು ಸರ್ವದಾ
ಧಾರವೆಂದಿತ್ತಹರ್ಯಜ್ಞೆಯಿಂದ
ಪ್ರೇರ್ಯನಾದುದರಿಂದ ಪದ್ಯದಿಂದೊರದೆಮದ
ನಾರ್ಯತನವೇನಿವರೊಳಿದ್ದರರಿತು
ಸೂರ್ಯಾದಿ ಸಕಲ ಗ್ರಹೇಶ ವೆಂಕಟಪತಿಯು ಸರ್ವ
ಮಂಗಳವಿತ್ತು ಸೌಖ್ಯ ಪಾಲಿಸಲಿ೯

೨೯೮
(ಲಾಲಿ ಹಾಡು)
ಲಾಲಿ ರಘುಕುಲವೀರ ರಾಕ್ಷಸಗಣಾರಿ
ಲಾಲಿ ಜಗದೇಕ ಸುಂದರ ಸೇತುಕಾರಿ
ಲಾಲಿ ನಗಚಾಪ ಹೃತ್ಕಮಲ ಸಂಚಾರಿ
ಲಾಲಿ ಸುಗುಣಾಂಬುನಿಧಿ ಸುಜನಾರ್ತಿ ಹಾರಿ ಪ.
ಧರಣಿ ಭಾರವನು ಬೇಗಿಳುಹಬೇಕೆಂದು
ಸರಸಿಜಾಸನ ಮುಖ್ಯ ಸುರರು ನಡೆತಂದು
ಸಿರಿವರನೆ ನಿನ್ನ ಪ್ರಾರ್ಥನೆ ಮಾಡಲಂದು
ಧರೆಯೊಳವತರಿಸಿ ರಾಜಿಸಿದೆ ಗುಣಸಿಂಧು ೧
ದರಚಕ್ರ ಶೇಷರನು ಸರಿಯಾಗಿ ತನ್ನಾ
ವರಜಪದವೈದುತವತರಿಸಿರಲು ಮುನ್ನ
ಭರತ ಶತ್ರುಘ್ನ ಲಕ್ಷ್ಮಣರೆಂಬರನ್ನ
ಚರಣ ಸೇವಕರೆನಿಸಿ ಪೊರದಿ ಗುಣರನ್ನ ೨
ಶ್ರೀ ರಾಮ ಸೀತಾವರಾಶ್ರಿತ ಪ್ರೇಮ
ಮಾರುತಿಗೆ ವಿಧಿಪದವನಿತ್ತ ಗುಣಧಾಮ
ಘೋರ ರಾವಣ ಮುಖ್ಯ ದಿತಿಜ ನರ್ದೂಮ
ಭೂರಮಣ ಶೇಷಗಿರಿವರ ಪೂರ್ಣಕಾಮ ೩

೨೮೦
ಲಾಲಿ ನಿತ್ಯಾನಂದ ಲಾವಣ್ಯ ಕಂದ
ಲಾಲಿ ಭೃತ್ಯಾರ್ತಿ ವಾರಣನೆ ಗೋವಿಂದ
ಲಾಲಿ ಜೀಯಾ ಪ್ರತ್ಯಗಾತ್ಮ ಮುಕುಂದ
ಲಾಲಿ ರಮಾಧೃತ ಚರಣಾರವಿಂದ ಲಾಲಿ ಪ.
ಆದಿ ಮಧ್ಯಾಂತ ವಿದೂರನಾಗಿಹನ
ವೇದಾಂತ ವೇದ್ಯ ವೈಭವ ಪಕ್ಷಿಗಮನ
ಆದಿ ಭೌತಿಕಾದಿ ತಾಪ ಕಳಿವವನ
ಮೋದದಿ ಪಾಡಿ ತೂಗುವೆನು ಮಾಧವನ ೧
ಈರಾರು ದಿಗ್ಗಜವೆಂಟು ಕಾಲುಗಳು
ಪಾರಾವಾರಗಳೆಂಬ ಪೊಳೆವ ಪೊಟ್ಟಿಗಳು
ಧಾರಾರೂಪ ಭಾಗೀರಥಿ ಸರಪಣಿ
ಸೇರಿಸಿ ಡೋಲ ಶೃಂಗಾರ ಗೈಯುವೆನು ೨
ನಿರ್ಮಲವಾದೇಳು ಹಲಿಗೆಗಳಿರುವ
ಭರ್ಮಗಿರಿಯೆ ಸಿಂಹಾಸನವನಿಟ್ಟಿರುವ
ಧರ್ಮಾರ್ಥ ಕಾಮ ಮೋಕ್ಷಗಳೆಂಬ ಫಲವ
ಮರ್ಮವನರಿತು ಕಟ್ಟುವೆ ಒಳ್ಳೆಯ ರಥವ ೩
ಸೂರ್ಯ ಚಂದ್ರಮರೆಂಬ ಧಾರಾದೀಪಗಳು
ತಾರಕಿಗಳು ಸುತ್ತಲಿರುವ ಚಿನ್ಹೆಗಳು
ವಾರಿಜ ಭವ ಜಯ ಜಯವೆಂಬ ಭರವು
ನೀರಜಾಲಯೆ ಕೂಡಿ ಪಾಡುವ ಸ್ವರವು ೪
ಕೋಟಿ ಭಾಸ್ಕರ ರಾಭ ಕೋಟೀರ ಕುಂಡಲ
ಪಾಟಲಾಧರ ಮುಕುರರಾಭ ಕಪೋಲ
ನೀಟರ ನಾಸ ನಳಿನ ಪತ್ರ ನೇತ್ರ ಜ-
ಲಾಟ ಕೇತನ ಚಾಪ ಧಾಟಿ ಭ್ರೂಯುಗಳ ೫
ಪೂರ್ಣ ಮಾಲಾನಂತ ಪೌರ್ಣಮಿಯ ವಿಧು
ವರ್ಣ ಮುಖಾಬ್ಜಸುಪರ್ಣವರೋಹ
ಕರ್ಣ ಹೀನ ಕಶಿಪೂ ಪರಿಶಯನ ದು-
ಗ್ಧಾರ್ಣವ ಮಂದಿರ ಸ್ವರ್ಣ ನಿಭಾಂಗ ೬
ಕಂಬು ಸುಗ್ರೀವ ವಿಲಂಬಿತ ವನಮಾಲ
ಅಂಬುಜ ಚಕ್ರ ಗದಾಕರ ಹಸ್ತ
ತುಂಬಿದ ವಕ್ಷವಲಂಬಿ ಕೌಸ್ತುಭ ಜಗ-
ದಂಬೆಯ ಧರಿಸಿರುವಾಂಬುಜ ನಾಭ ೭
ವಿತತ ರೇಖಾತ್ರಯಯುತಮೃದುದರ ಮಧ್ಯ
ಗತ ಕಿಂಕಿಣೀ ಜಾಲ ಕಾಂಚಿ ಕಲಾಪ
ಅತುಲ ಪೀತಾಂಬರಾವೃತ ಪೀವರೋರು ಸಂ-
ಗತ ಜಾನುಜಂಘಾ ಗುಲ್ಘಾಕರ ಮೂರ್ತಿ ೮
ಸಿಂಜನ ಜೀರ ರಂಜಿತ ಚರಣ
ಕಂಜಾಂಕುಶಕೇತು ರೇಖಾಲಂಕರಣ
ಮಂಜುಳ ಮೃದು ಪಾದತಳ ಮುಕ್ತಾಭರಣ
ಸಂಜೀವನ ರಾಜ ಸಂಪ್ರೀತಿ ಕರಣ ೯
ಔತ್ತಾನಪಾದಿಯನಾಧಾರಗೊಂಡು
ನಿತ್ಯ ತೂಗಾಡುವ ತೊಟ್ಟಿಲ ಕಂಡು
ಭೃತ್ಯ ವರ್ಗದ ಹಿಂಡು ಬಹು ತೋಷಗೊಂಡು
ಸತ್ಯಭಾಮೆಯ ಕಾಂತನಾಡುವ ಚೆಂಡು ೧೦
ಪತಿತ ಪಾವನ ಪರಮಾನಂದ ರೂಪ
ಸತತ ತಾನೆ ಪರಿಹರಿಸುವ ತಾಪ
ವಿತತ ಮಹಿಮ ವೆಂಕಟಾಚಲ ಭೂ
ಗತಿಯಾಗಿ ತೋರುವ ತನ್ನ ಪ್ರತಾಪ ೧೧

೧೬೬
ಲಾಲಿಪುದೆನ್ನ ಸೊಲ್ಲ ಲಕುಮಿಯ ನಲ್ಲ
ನೀಲ ನೀರದ ನಿಭ ನಿರುಪಮ ಮಲ್ಲ ಪ.
ಉದಯದೋಳೇಳುತ ಉಚಿತ ಕರ್ಮಗಳ
ಸದರದಿ ಮಾಡದೆ ಸಾಧುಪೂಜೆಗಳ
ಮದ ಮುಖತನದಿಂದ ಮನೆಯಲ್ಲಿ ತಿರುಗುವೆ-
ನಿದನು ನಿನ್ನಯ ಸೇವೆಯೆಂಬ ಭಾವನೆಯಿತ್ತು ೧
ಕೀಟಕೆ ಸಾಮ್ರಾಜ್ಯ ಪದವಿಯನಿತ್ತಿ
ಹಾಟಕಕಶಿಪನ ಮಗನ ಮೇಲೆತ್ತಿ
ಆಟದ ನೆವದಿಂದ ಶಕಟನ ತರಿದಿ ಕಿ-
ರೀಟಿ ವರದ ಭವ ದಾಟುವಂದದಿ ತೋರಿ೨
ಅನುಗಾಲ ತವ ಪಾದ ವನರುಹಗಳನು
ನೆನೆದು ಪೂಜಿಸುವದಕನುಕೂಲಗಳನು
ಮನೆಗಧಿಪತಿ ನೀನು ಮಾಡಿ ರಕ್ಷಿಪುದಿನ್ನು
ವನಜ ಭವಾರ್ಚಿತ ವೆಂಕಟಾಚಲನಾಥ ೩

೨೪೬
ಲಾಲಿಸೆನ್ನ ವೃತ್ತಾಂತ ಲಕ್ಷುಮಿಯ ಕಾಂತ
ಬಾಲನೊಳಿಂಥಾ ಪಾಂಥ ಬ್ಯಾಡ ಭೃಂಗಾಳ ಕಾಂತ ಪ.
ಕೊಟ್ಟ ಮಾನವ ನೀನೆ ಕೊಡರೆ ತಡವರು
ಸೃಷ್ಟಿಯ ಒಳಗಾರು ಶ್ರೀ ರಮಣ
ವಿಠಲ ನಿನಗಿನ್ನು ವಿವರಿಸಿ ಪೇಳ್ವದೇನು
ಭ್ರಷ್ಟಗೊಳಿಸದಿರು ಭಯಹರ ಬೇರಿನ್ನಾರು ೧
ಏಸು ತಪ್ಪಿದ್ದರೂ ದಾಸ ಬಿಡನೆಂಬ
ಲೇಸಿನ ಬಿರುದೆಂತು ಮಾನುವದು
ಈ ಸಮಯದೀ ಕರುಣಾ ಸಮುದ್ರನೆ ಎನ್ನ
ಘಾಸಿ ಮಾಡದೆ ಗರುಡಾಸನ ಕೃಪೆದೋರು೨
ನಡಿಯುವದಳವಲ್ಲ ತಡೆಯುವರೊಶವಲ್ಲ
ನಡಿವ ಕಾರ್ಯಗಳೆಲ್ಲ ನುಗ್ಗಿತಲ್ಲ
ಬಿಡದೆ ಮಾಡುವ ದಾನ ಧರ್ಮಗಳಿಗೆ ಇಂಥ
ತೊಡಕು ಬಂದರೆ ಮುಂದೆ ತಾಳುವದೆಂತೋ ತಂದೆ ೩
ಮಾನವರೊಳಗೊಬ್ಬ ಮರುಳುಗೊಂಡಾದರು
ತಾನಿಟ್ಟ ತರುವನು ತೆಗಿಯನೆಂಬ
ಮಾನಿತ ನುಡಿಯಿದ್ದು ಮೊದಲಿನಿಂದ ನೀನು ಕಾದು
ದೀನನ ಬಿಡದಿಂದು ದಯದೋರು ಕೃಪಾಸಿಂಧು ೪
ತೋರುವದಿಲ್ಲುಪಾಯ ಭೋರೆನುತಿದೆ ಮಾಯ
ಗಾರಗೊಂಡಿತು ಕಾಯ ಕರ ಕರಿಯಾ
ಹಾರಿಸು ಹಲಧರನನು ವೆಂಕಟರಾಯ
ದೂರು ನಿನ್ನ ಪದಕೆ ಬಾರದಂದದಿ ಜೀಯ ೫

೭೪
(ಮೋಹಿನಿ ಅವತಾರ)
ಲೋಕನಾಯಕಿ ಹೆಣ್ಣಾ ನೋಡಮ್ಮ ಸತ್ಯ
ಲೋಕೇಶ ಬೊಮ್ಮನೀಕೆ ಮಗನಮ್ಮ ಪ.
ಶೋಣಿತ ಶುಕ್ಲ ಸಂಮ್ಮಂಧಗಳಿಲ್ಲ ಇಂಥಾ
ಜಾಣತನವು ಬೇರೊಬ್ಬಗಿಲ್ಲ
ವಾಣೀಶ ಶಂಭು ಮುಖ್ಯ ಸುರರೆಲ್ಲ ತತ್ವ
ಕಾಣದೆ ನಿತ್ಯಮೆಣೀಸುವವರಲ್ಲ ೧
ಮೂಢ ದೈತ್ಯರ ಮೋಹಿಸಲಿಕಂದು ಒಳ್ಳೆ
ಪಾಡಾದ ಸಮಯಕೊದಗಿ ಬಂದು
ಮೂಡಿ ಸುಧೆಯ ಕಲಶ ತಂದು ತಡ
ಮಾಡದೆ ಸುರರಿಗಿಕ್ಕಿದಳಂದು ೨
ಶಿವನು ಮರಳುಗೊಂಡ ಶೃಂಗಾರಸಾರ
ಭುವನೈಕರಕ್ಷ ದೀನಮಂದಾರ
ಪವನವಂದಿತೆ ಪದ್ಮೆಗಾಧಾರ ನಿತ್ಯ
ನವಯವ್ವನೆಗೆ ನಾವು ಪರಿವಾರ ೩
ಭಸ್ಮೋದ್ಧೂಳಿತ ದೇಹಭವನಂದು ವರವ
ಭಸ್ಮಾಸುರನಿಗಿತ್ತೋಡುವ ಬಂದು
ವಿಸ್ಮಯಗೊಂಡು ನೀನೆ ಗತಿಯೆಂದು ಪೇಳೆ
ಭಸ್ಮಗೈದಳು ದೈತ್ಯಾಧಮನಂದು ೪
ನಾಗಗಿರಿಯ ಶಿಖರದ ಮೇಲೆ ನೆಲೆ
ಯಾಗಿ ಶೋಭಿಪಳತ್ಯದ್ಭುತ ಬಾಲೆ
ಶ್ರೀಗುರು ಶಿವಮುಖ್ಯ ಸುರಪಾಲೆ ದಯ
ವಾಗಿ ತೋರ್ಪಳು ತನ್ನ ಶುಭಲೀಲೆ ೫

ದೇವ -ದೇವತಾ ಸ್ತುತಿ
ಬ್ರಹ್ಮದೇವರು
೩೫೨
ವಂದಿಸುವೆ ಜಗದ್ಗುರುವೆ ಮಂದಜಾಸನ ಬ್ರಹ್ಮ
ನಂದಿವಾಹನಶೇಷಗರುಡರ ತಂದೆ ಸುಗುಣೋದ್ದಾಮ ಪ.
ಚತುರವದನ ಶ್ರೀಹರಿಯ ಪ್ರಥಮ ಪುತ್ರ ವಿಧಾತ್ರ
ಸತತ ಭಕ್ತಿಯೋಗೀಶಿರೋರತುನ ವಾಣೀಕಳತ್ರ
ನೂರುಕಲ್ಪ ತಪವಗೈದ ಸಾರಋಜುಗಣೇಶ
ಪಾರಮಾರ್ಥಜ್ಞಾನನಿಧಿ ಗಂಭೀರ ಸತ್ತ್ವವಿಲಾಸ ೨
ಶ್ರೀ ಲಕ್ಷ್ಮೀನಾರಾಯಣನ ದಾಸಜನವರೇಣ್ಯ
ವಾಸವಾದಿ ನಿರ್ಜರೌಘಪೋಷಕಾಗ್ರಗಣ್ಯ ೩

೩೨೦
ವಂದೇ ಶ್ರೀ ಗೌರಿನಂದನ ಸುರನರ
ವೃಂದವಂದಿತಚರಣ ಗಜಾನನ ಪ.
ಶಂಕರೋಲ್ಲಾಸ ಪಾಶಾಂಕುಶಧರ ಕರ
ಪಂಕಜ ಸುವಿರಾಜ ರವಿತೇಜ ೧
ಜಂಭಾರಿಸಂನುತ ಜಾಹ್ನವೀಧರಸುತ
ಲಂಬೋದರ ಸುಂದರ ಕೃಪಾಕರ ೨
ಸುಕ್ಷೇಮಧಾಮ ಶ್ರೀ ಲಕ್ಷ್ಮೀನಾರಾಯಣನ
ಪಕ್ಷೈಕಪಾವನ ಸುಧೀಷಣ ೩

೪೯೮
ವರವ ಕೊಡೆ ತಾಯೆ ವರವ ಕೊಡೆ ಪ.
ಶರಧಿಯ ಕನ್ನೆ ನೀ ಕೇಳೈ ಸಂಪನ್ನಳೆ
ಸೆರಗೊಡ್ಡಿ ಬೇಡುವೆನಮ್ಮ ವರವ ಕೊಡೆ
ನೆರೆ ನಂಬಿದೆನು ನಿನ್ನ ಚರಣಕಮಲವನು
ಪರಿಹರಿಸೆಮ್ಮ ದಾರಿದ್ರ್ಯ ಕಷ್ಟವ ತಾಯೆ೧
ಹೊಳೆವಂಥ ಅರಸಿನ ಹೊಳೆವ ಕರಿಯ ಮಣಿ
ಸ್ಥಿರವಾಗಿ ಕಟ್ಟುವಂಥ ವರವ ಕೊಡೆ
ತಾಳೋಲೆ ಹೊನ್ನೋಲೆ ತೊಳೆದೊಯ್ದ ಬಿಚ್ಚೋಲೆ
ಯಾವಾಗಲಿರುವಂಥ ವರವ ಕೊಡೆ ೨
ಬಾಗಿಲ ತೋರಣ ಮದುವೆ ಮುಂಜಿ ನಾಮಕರಣ
ಯಾವಾಗಲಾಗುವಂಥ ವರವ ಕೊಡೆ
ಬಂಧುಬಳಗ ಹೆಚ್ಚಿ ಹೆಸರುಳ್ಳ ಮನೆ ಕಟ್ಟಿ
ಉಂಡಿಟ್ಟಿಡುವಂಥ ವರವ ಕೊಡೆ ೩
ಹಾಲ ಕರೆಯುವ ಮೇಲಾದ ಸರಳೆಮ್ಮೆ
ಸಾಲಾಗಿ ಕಟ್ಟುವಂಥ ವರವ ಕೊಡೆ
ಕಂಡಕಂಡವರಿಗೆ ಕರೆದು ಮೃಷ್ಟಾನ್ನವ
ತಿಳಿ ನೀರು ಕೊಡುವಂಥ ವರವ ಕೊಡೆ ೪
ಲಕ್ಷ್ಮೀನಾರಾಯಣನ ವಕ್ಷಸ್ಥಳದಲ್ಲಿ
ಲಕ್ಷ್ಮಣವಾಗಿರುವಂಥ ಮಹಾಲಕ್ಷ್ಮಿ
ಅಷ್ಟೈಶ್ವರ್ಯವು ಪುತ್ರಸಂತಾನವ
ಕೊಟ್ಟು ರಕ್ಷಿಸುವವಮ್ಮ ವರವ ಕೊಡೆ ೫

ವರ್ಷ ವರ್ಧಂತಿಗಳು
೨೨೫
(ಆಚಾರ್ಯರ ೨೧ನೇ ವರ್ಷದ ವರ್ಧಂತಿ ಸಮಯ)
ನಿನ್ನ ನಂಬಿದೆ ಶರದಿಂದುವದನ
ಎನ್ನ ಪಾಲಿಸು ವರಕುಂದರದನ
ಮುನ್ನ ಪಾತಕಿಯಾದಜಾಮಿಳನು
ತನ್ನ ಚಿಣ್ಣನ ಕರೆದರೆ ಮನ್ನಿಸಿದವನೆಂದು ಪ.
ನರ ಧ್ರುವಾಂಬರೀಷ ಪ್ರಹ್ಲಾದ ಮುಖ್ಯರನ-
ವರತ ನಿನ್ನನಾಧರಿಸಿದರವರ
ಪೊರೆದನೆಂಬೀ ಮದಗರುವ ಭಾರದಲತಿ-
ಕಿರಿದಾಗಿಹ ಎನ್ನ ಮರೆವುದುಚಿತವೆ ೧
ಹತ್ಯ ಪ್ರಮುಖ ದುಷ್ರ‍ಕತ್ಯಗಳಿರಲಿ
ನಿತ್ಯ ಪರಧನಾಸಕ್ತನಾಗಿರಲಿ
ಭಕ್ತವತ್ಸಲ ನಿನ್ನ ಸ್ಮರಣೆ ಮಾತ್ರದಿ ಪಾಪ
ಮುಕ್ತಿದೋರಲು ಪೂರ್ಣಶಕ್ತಿಯಾಗಿಹೆ ಎಂದು ೨
ತುರುಗಳೆಣಿಸಿದಂತೆ ಕರುಗಳ ಗುಣವ
ಮರೆದಂತೆ ಜನನಿ ತನ್ನಯ ಬಾಲನನುವ
ಕರುಣಾಳು ನೀ ಮುನಿಸಿಂದ ಕರುಣಿಸದಿರೆ ಎನ್ನ
ಪೊರೆವರಿನ್ಯಾರಿಹರುರಗಾದ್ರಿಯರಸ ಕೇಳ್ ೩

೨೨೬
(೩೨ನೇ ವರ್ಷದ ವರ್ಧಂತಿ)
ಶ್ರೀಶ ಆಶಾಪಾಶದಿಂದಲಿ ಘಾಸಿಯಾದೆ ಬರಿದೆ
ವಾಸವಾರ್ಜಿತ ಪಾದಪಂಕಜ ದಾಸಪೋಷಣ ಭೂಷಣಾಚ್ಯುತ ಪ.
ಮತ್ತೆರಡು ಮೂವತ್ತು ವರುಷಗಳುತ್ತಮ ಕೃತ್ಯದಲಿ
ಸತ್ಯ ಶೌಚಾಚಾರ ಭಕ್ತಿಗಳಿತ್ತು ಕೃಪಾರಸದಿ
ಭೃತ್ಯನನು ಪೊರೆದಿತ್ತ ಮೋಹದ
ಕತ್ತಲೆಯ ವಶಕಿತ್ತು ಬಿಡುವುದೇ ಶ್ರೀಶ ೧
ನಿನ್ನ ಚರಣಾನನ್ಯ ಶರಣರ ಮುನ್ನ ಪೊರೆದ ತೆರದಿ
ಇನ್ನು ಪೊರೆವುದಕೇನುಪೇಕ್ಷ ಪ್ರ-
ಪನ್ನ ಪಾಲಯದಿ ಚಿನ್ಮಯಿನಂದೈಕ ಭರಿತ ಮ-
ರುನ್ಮನೋ ಭವ ತಾತ ಮಾಧವ ೨
ಮೀನ ಕೂರ್ಮ ವರಾಹ ನರಹರಿ ವಾಮನ ಭಾರ್ಗವನೆ
ರಾಮಕೃಷ್ಣ ಜನಾದಿ ಮೋಹನೆ ಕಾಮಗಾಶ್ವ ಚರನೆ
ರಾಮ ವಿಧುರಿತ ಪಾಪಚಯ ಕಮ-
ಲಾ ಮನೋಹರ ಸುಂದರಾನನ ೩
ಕಾಲ ಕರ್ಮವಿದೂರ ಯಮುನಾಕೂಲ ಕೇಳೀಲೋಲಾ
ಪಾಲಿತಾಮರವೃಂದ ಮಂದ ಮರಾಳಗಮನ ಶೀಲಾ
ನೀಲ ಮೇಘ ನಿಭಾಂಗ ಪಂಕಜ
ಮಾಲಯದುಕುಲಬಾಲ ಪಾಲಯ ೪
ನೀರಜಾಸನ ನಿಮ್ನನಾಭ ಸುರಾರಿವನ ಕುಠಾರಾ
ಪಾರತಂತ್ರ್ಯವಿದೂರ ಸದ್ಗುಣಸಾರ ಜಾರ ಚೋರ
ವಾರಿಜಾಸನ ವಂದ್ಯ ಕರುಣಾ
ಪೂರ ಸುರಪರಿವಾರ ಪಾಲಯ ೫
ತಂದೆ ತಾಯಿ ಗುರು ಬಂಧು ಸೋದರನಂದನ ಸಖನೆಂದು
ಮುಂದೆ ಭವಭಯದಿಂದ ನಿನ್ನನು ಹೊಂದಿದೆ ನಾ ಬಂದು
ಹಿಂದೆ ಮಾಡಿದ ಕುಂದನೆಣಿಸದೆ
ಇಂದು ಕರಪಿಡಿ ಎಂದು ಬಯಸುವೆ ೬
ದೋಷ ದೂರ ವಿಶೇಷ ಗಿರೀಶ ಸುರೇಶ ವಿನುತ ಚರಣಾ
ಏಸು ಪೇಳುವುದಿನ್ನು ಎನ್ನನು ಪೋಷಿಸು ಬಹು ಕರುಣಾ
ಶೇಷಗಿರಿ ನಿಲಯಾಕುವರದ ಕೃ-
ಪಾಶ್ರಯನೆ ತವದಾಸ ಪಾಲಿಸು ೭

೪೨೭
ವಲ್ಲೀದೇವಿಯ ವಲ್ಲಭನೆ
ಬಲ್ಲಿದ ಭಕ್ತರ ಸುಲ್ಲಭನೆ ಪ.
ಸಲ್ಲಲಿತ ಪಾದಪಲ್ಲವ ಭಜಿಸುವ-
ರೆಲ್ಲರ ಮನಸಿನೊಳುಲ್ಲಸನೆಅ.ಪ.
ವೃಂದಾರಕಮುನಿವಂದಿತನೆ
ಕಂದರ್ಪಾಮಿತಸುಂದರನೆ
ಸ್ಕಂದನೆ ಸಚ್ಚಿದಾನಂದನೆ ಪಾರ್ವತೀ-
ನಂದನ ಸದ್ಗುಣಮಂದಿರನೆ ೧
ತಾರಕದೈತ್ಯ ಸಂಹಾರಕನೆ
ಸೇರಿದ ಭಕ್ತೋದ್ಧಾರಕನೆ
ಮಾರಾರಿಯ ಸುಕುಮಾರನೆ ಧೀರನೆ
ಚಾರು ಮಯೂರ ತುರಂಗಮನೆ೨
ಲಕ್ಷುಮಿನಾರಾಯಣ ಪ್ರಿಯನೆ
ರಕ್ಕಸರಿಂಗತಿದುಃಖದನೆ
ಕುಕ್ಕುಟವಜ್ರಾಭಯಶಕ್ತಿಹಸ್ತನೆ
ಪ್ರಖ್ಯಾತ ಪಾವಂಜಾಖ್ಯ ಪುರವರನೆ ೩

೩೭೩
ವಾಣಿ ವರದೆ ಶಾರದೆ
ನಿನ್ನ ಚರಣವ ಸೇರಿದೆ ಪ.
ಎನ್ನ ನಾಲಿಗೆಯೊಳ್ನೆಲಸು
ಹರಿಲೀಲೆಯನ್ನು ನುಡಿಸು ೧
ಅತಿರೋಹಿತ ವಿಜ್ಞಾನಿ
ವೇದವ್ಯೂ ಹಕಭಿಮಾನಿ ೨
ಲಕ್ಷ್ಮೀನಾರಾಯಣನ ಸೊಸೆ
ಸರ್ವಾಧಾರ ಭಕ್ತಿವಿಲಾಸೆ೩

೮೨
ವಾಮನಾವತಾರ
ವಾಮನನನು ನೆನೆ ಹೇ ಮನವೇ ವಟು
ವಾಮನನನು ನೆನೆ ಹೇ ಮನವೇ
ಕಾಮಪೂರಣ ಲಕ್ಷ್ಮೀಧಾಮನ ಮರೆಯದೆ ಪ.
ಶ್ಯಾಮಸುಂದರ ಸುರ ಪ್ರೇಮದಿ ಕಶ್ಯಪ
ಧಾಮವಾ ಬೆಳಗುತ ಬಂದ
ಭೂಮಿಯನಳದ ಸುತ್ರಾಮಗಿತ್ತ ನಿ
ಸ್ಸೀಮ ಸಾಹಸ ಗೋವಿಂದ ನೀ ಸಲಹೆಂದು ೧
ಬಲಿಯ ದೃಢಕೆ ಮೆಚ್ಚಿ ಸಲಹುತ ಮುಂದಿನ
ವಲಭಿದಾಗುವೀ ನೀನೆಂದ
ಕಲುಷಾಪಹಪದಕಮಲವ ಶಿರದೊಳು
ನಿಲಿಸಿ ಬಾಗಿಲೊಳು ನಿಂದವ ನೀನೆಂದು ೨
ಶ್ರೀ ಭೂಮಿಯುತ ಮುಕ್ತಾಭರಣಾಶ್ರಿತ
ಸೌಭಾಗ್ಯಕರ ಲೀಲಾ
ಆಭೀರರ ಕನ್ನೆಯರೊಲಿಸಿದ ಪದ್ಮ-
ನಾಭ ವೆಂಕಟಪತಿ ಪರಮ ಪುರುಷನೆಂದು ೩

ವಾಯುದೇವರ ಪ್ರಾರ್ಥನೆ
೧೧೫
ಪ್ರಾಣಪತೇ ಪರಿಪಾಲಯ ಮಾಂಪ್ರಾಣಪತೇ ಪರಿಪಾಲಯ ಮಾಂ
ಕಮಲಾಲಯ ಕರುಣೈಕಾಲಯ ಭೂಮನ್ಯೆ ಪ.
ಋಜುಗಣನಾಯಕ ಭುಜಗಭೂಷಣ
ದ್ವಿಜರಾಜಾಹಿಪರಾಜಾ ೧
ಭಾರತೀಶ ಕರುಣಾರಸ ಭೂಷಣ
ವಾರಿಜಾಸನ ಸಮಾಂಶಾ ೨
ಕಪಿವರ ನೃಪವರ ಯತಿವರ ರೂಪ
ಅಪಗತ ದುರಿತ ಸುರೂಪ ೩
ರಾಮಕೃಷ್ಣ ವ್ಯಾಸಾಮಲ ಮಂಗಲ
ನಾಮಕ ಶ್ರೀಪತಿ ದೂತ ೪
ವೆಂಕಟೇಶ ಚರಣಾಂಬುಜ ಮಧುಪ ವಿ-
ಶಂಕ ಶಂಕರಾತಂಕ ನಿವಾರಣ ೫

೩೧೯
ವಾರಣವದನ ತ್ರೈಲೋಕ್ಯಸುಮೋಹನ ವಾರಣವದನ ಪ.
ವಾರಿಜಾಕ್ಷ ವರಗುಣಾಕರ
ವಾರಿಜಾಕ್ಷಿ ವರದಾಯಕ ಸನ್ನುತ
ನಾರದಾದಿ ಮುನಿವಂದಿತ ಪದಯುಗ ಅ.ಪ.
ಸುಂದರಾಂಗ ಸುಕಲಾನ್ವಿತ ನಿಭಚರಣ
ಕಟಿಶೋಭಿತ ವ್ಯಾಳಸ-
ಬಂಧನಾಬ್ಧಿ ಶತಕೋಟಿಸದೃಶ ಕಿರಣ
ಚಂದನಾಂಗಾರ್ಚಿತ ಸುಮನೋಹರ
ಮಂದಹಾಸ ಮಹಿಮಾಂಬುಧಿಚಂದಿರ ೧
ಕಂಬುಗ್ರೀವ ಕಮನೀಯ ಕರಾಂಬುರುಹ
ಪಾಶಾಂಕುಶಧರ ವರ
ಶಂಬರಾರಿಜಿತುತನಯ ಮಧುರಗೇಹ
ಜಂಭಭೇದಿವಂದಿತ ಅತ್ರಿವಂದಿತ
ಲಂಬೋದರ ವಿಘ್ನಾಂಬುಧಿ ಕುಂಭಜ ೨
ಚಾರುಭಾರ ಕನ್ಯಾಪುರವರ ನಿಲಯ
ಮೃಕಂಡುಜದ ಮುನಿವರ
ಸಾರಮಂತ್ರಸ್ಥಾಪಿತ ಮಂಗಲ ಕೆರೆಯ
ವರಕಪಿತ್ಥಫಲೋರಸಭುಂಜಿತ
ಧೀರ ಲಕ್ಷ್ಮೀ ನಾರಾಯಣಸಖಸುತ ೩

೪೮೬
ಚೌತಿಯ ದಿವಸ
ರಂಭೆ : ವಾರಿಜಗಂಧಿನಿ ನೋಡಿತ್ತ ಶ್ರುತಿ-
ಮೌರಿ ರಭಸದಿ ಲಕ್ಷ್ಮೀಕಾಂತ
ಭೂರಿ ವೈಭವದಿ ಪೊರಟನೆತ್ತ ಯಾವ
ಕಾರಣವೆಂದು ಪೇಳೆಲೆ ಸತ್ಯ ೧
ಊರ್ವಶಿ : ದೇವಿ ಕೇಳೆಲೆ ಸುಮ್ಮಾನದಿಂದ ಕುಲ-
ದೇವರ ಪೂಜೆಗೋಸುಗ ಬಂದ
ಪಾವನಮೂರ್ತಿಯಾದುದರಿಂದ ನಮ್ಮ
ಕಾವನು ಕರುಣಾಕಟಾಕ್ಷದಿಂದ೨
ರಂಭೆ : ನೂತನವಾಯ್ತೆ ಕೇಳಲೆ ಜಾಣೆ ಜಗ-
ನ್ನಾಥನಿಗ್ಯಾವ ಕುಲವು ಕಾಣೆ
ರೀತಿಯನರುಹಬೇಕೆಲೆ ಬಾಲೆ ಸರ್ವ
ಚೇತನಾತ್ಮನ ನಾಟಕದ ಲೀಲೆ೩
ಊರ್ವಶಿ : ಪಾಂಡವರಾಯುಧಗಳನ್ನೆಲ್ಲ ಪೊತ್ತು-
ಕೊಂಡ ಕಾರಣದಿ ಪೂಜೆಗಳೆಲ್ಲ
ಕಂಡು ಪೊಗಳಲು ಕವಿಗು ಸಲ್ಲ ಇನ್ನು
ಪುಂಡರೀಕಾಕ್ಷನವನೆ ಬಲ್ಲ೪
ರಂಭೆ : ರಾಜವದನೆ ಪೂಜೆಯಾದ ಮೇಲೆ ಅಂ-
ಭೋಜನಾಭನು ತಾಕ್ಷ್ರ್ಯನ ಮೇಲೆ
ರಾಜಬೀದಿಯೊಳ್ ಬರುವದೇನೆ ಇಂಥ
ಸೋಜಿಗವೇನು ಪೇಳೆಲೆ ಜಾಣೆ೫
ಊರ್ವಶಿ : ಪಟಹ ಡಿಂಡಿಮವಾದ್ಯರವದಿಂದ ತಂ-
ಬಟೆನಿಸ್ಸಾಳರವದಿ ಬರುವ ಚಂದ
ಸಟೆಯಲ್ಲ ಕೇಳು ಕರುಣದಿಂದ ನಮ್ಮ
ಕಟಕ ರಕ್ಷಿಸಲು ಬರುವ ಗೋವಿಂದ೬
ರಂಭೆ : ಬಳಿಕ ಪಲ್ಲಂಕಿಯೇರಿದ ಕಾಣೆ ಜನ-
ಗಲಭೆಗಳಿಂದ ಪೋಗುವದೇನೆ
ನಲವಿನಿಂದಲಿ ಪೊರಟೆಲ್ಲಿಗೆನೆ ಮಹಾ-
ಜಲಜನಾಭನ ಮಹಿಮೆಯ ಜಾಣೆ೭
ಊರ್ವಶಿ :ಚಾಪಲನೇತ್ರೆ ಚೌತಿದಿನದಿ ಕೆರೆ-
ದೀಪವೆಂದೆನುತ ಭಕ್ತರು ಮುದದಿ
ಶ್ರೀಪರಮಾತ್ಮ ವಿಲಾಸದಿ ಭಕ್ತ-
ರಾಪೇಕ್ಷೆಗಳನು ಸಲ್ಲಿಸುವಂದದಿ೮
ರಂಭೆ : ಸೋಮಾರ್ಕಜ್ಯೋತಿಹಿಲಾಲುಗಳು ಜನ-
ಸ್ತೋಮ ಜೇನುಂಡೆ ಬಿರುಸು ಮಿಗಿಲು
ವ್ಯೋಮಕೇಶಗಳ ಪೊಗಳತೀರದು ಸರಿ
ಭೂಮಿಯೊಳ್ ಕಾಣೆನೆಂಬಂತಾದುದು೯
ಅಮಮ ಇದೇನೆ ಇಂದಿನ ಲೀಲೆ ಜನ-
ರಮರಿಕೊಂಡಿಹರೇನಿದು ಬಾಲೆ
ಸಮವಿಲ್ಲ ಇಂತೀ ವೈಭೋಗಕ್ಕೆಲೆ ನ-
ಮ್ಮಮರಾವತಿಗಿಂತಧಿಕ ಬಾಲೆ೧೦
ಊರ್ವಶಿ : ಸಾರ್ಥಕಾಗುವದು ಜನ್ಮವು ಕಾಣೆ ಸಕ-
ಲಾರ್ತಿ ಹರಣವಾಗ್ವದು ಜಾಣೆ
ಕೀರ್ತಿತರಂಗಮಾಗಿಹುದೇನೆ ಶೇಷ-
ತೀರ್ಥವೆಂದರೆ ಕೇಳಿದು ಪ್ರವೀಣೆ೧೧
ರಂಭೆ : ಏಸು ದೊಡ್ಡಿತೆ ಕೇಳಲೆ ಬಾಲೆ ಅನಂ-
ತಾಸನದಂತೆ ಮರೆವುದಲ್ಲೇ
ನಾಸಿರ ದೀಪಸೋಪಾನದಲೆ ಮಹಾ-
ಶೇಷನಿಹನು ಮಧ್ಯದೊಳಿಲ್ಲೇ೧೨
ಊರ್ವಶಿ : ಕರುಣಾಕರನು ನಮ್ಮೆಲ್ಲರನು ನಿತ್ಯ
ಪೊರೆಯಲೋಸುಗ ಬಂದನು ತಾನು
ಸುರುಚಿರ ಮಂಟಪವೇರಿದನು ಭೂ-
ಸುರರಿಂದ ವೇದಘೋಷವ ಕೇಳ್ವನು೧೩
ದೃಷ್ಟಾಂತವಾಗಿ ಪೇಳುವದೇನೆ ಬ್ರಹ್ಮ
ಸೃಷ್ಟಿಗೆ ಪೊಸತಾಗಿಹುದು ಕಾಣೆ
ಕಟ್ಟಿಸಿದವನು ಪುಣ್ಯೋತ್ತಮನು ಪರ-
ಮೇಷ್ಠಿ ಜನಕನ ಕೃಪೆಯಿನ್ನೇನು೧೪
ಭಜಕರ ಮುಖದಿಂದೆಲ್ಲ ತಾನು ಭೂ-
ಭುಜನಾಗಿ ನಡೆಸುವನಿದನೆಲ್ಲನು
ನಿಜವಾಗಿ ನಿತ್ಯ ಸಾಕಾರವನು ತೋರಿ
ತ್ರಿಜಗವನೆಲ್ಲ ರಕ್ಷಿಸುತಿಹನು೧೫
ರಂಭೆ : ಬಿಡದೆ ಇನ್ನೊಂದು ಕೇಳುವೆ ನಾರಿ ಜಗ-
ದೊಡೆಯ ಪೊರಡುವ ಕಾಲದಿ ಭಾರಿ
ಬೆಡಿಖಂಬ ಧ್ವನಿಯು ಇದೇನೆ ಪೇಳೆ ಇಂಥ
ಕಡು ಬೆಡಗನು ಉಸುರೆಲೆ ಬಾಲೆ೧೬
ಊರ್ವಶಿ: ಜನರು ಎಲ್ಯಾದರಂಜಿದÀ ಭಯವ ತಮ್ಮ
ತನುವಿಗೆ ಸೋಂಕಲದನೆಲ್ಲವ
ಮನದಿ ಝುಮ್ಮೆನಿಸಿ ಬೆಚ್ಚೋಡಿಸುವ ಖಂಬ-
ಧ್ವನಿಯೆಸಗಿದರು ಕೇಳಿದರಂದವ೧೭
ತಿರುಗಿಯೇರಿದನು ಪಲ್ಲಂಕಿಯಲ್ಲಿ ಸುತ್ತು-
ಬರುವನು ವೇದನಿನಾದದಲಿ
ವರರತ್ನ ಖಚಿತ ಮಂಟಪದಲ್ಲಿ ನಿಂತ
ನಿರವದಿ ಸುಖದಾಯಕನಲ್ಲಿ೧೮
ಶರಣರ ಪಾಪ ಮನಕೆ ತಾರ ದುಡಿದ
ವರ ಭೇರಿಗೆರೆವ ಬಿಸಿನೀರ
ವರಲಕ್ಷ್ಮೀನಾರಾಯಣಧೀರ ಸುರು-
ಚಿರ ಸಿಂಹಾಸನವೇರಿದ ವೀರ೧೯

೪೫
ವಾರಿಜಾಸನ ವಂದ್ಯ ಚರಣಾ ಲಕ್ಷ್ಮೀ-
ನಾರಾಯಣ ಎನ್ನೊಳಿರಿಸು ಸತ್ಕರುಣಾ ಪ.
ಶ್ರೀರಮಣಿಯ ಕೂಡಿ ನೀನು ದಯ
ದೋರಲನ್ಯರಿಗೆಂದರಂಜೆ ನಾನು
ದಾರಿದ್ರ್ಯ ಭಯ ದೋಷಗಳನು
ದೂರ ಹಾರಿಸಿ ಪೊರೆವ ಸಕಲ ಸುರಧೇನು೧
ನಿನ್ನಂಥ ದಾತರಿನ್ನಿಲ್ಲ ಪರ-
ಮೋನ್ನತ ಪದವ ಧ್ರುವನಿಗಿತ್ತಿಯಲ್ಲ
ಮುನ್ನ ಕುಚೇಲನ ಸೊಲ್ಲ ಕೇಳಿ
ಅನ್ಯರಿಗೊಲಿಯದ ಸಿರಿಯಿತ್ತಿಯಲ್ಲ ೨
ಇಂದಿರಾವರ ವೆಂಕಟೇಶ ನೀ
ಬಂದುದರಿಂದಾದುದೆನಗೆ ಸಂತೋಷ
ಹೊಂದಿದೆ ನಿನ್ನನು ಶ್ರೀಶ ಪೂ-
ರ್ಣೇಂದು ವದನ ಕರುಣಾರಸ ಭೂಷಾ ೩

೧೪೩
ವಿಜಯ ಭೈರವಿ ತಾಯೆ ವಿಶ್ವೇಶಿ ಮಹಾಮಾಯೆ
ಸ್ವಜನನೆಂದೆನ್ನ ಕಾಯೆ
ಕುಜನ ಕೃತ್ಯಗಳನ್ನು ಕಾಲಿಂದಲೊರಸು ಕಂ-
ಬುಜನೇತ್ರೆ ಕರುಣಾಸುಧೆಯ ನೀಡು ದಯಮಾಡು ಪ.
ಪರಿ ಪರಿಯಲಿ ದೇಹ ಕರಗಿಸುತಿಹ ನಾನಾ
ದುರಿತ ಕಾರಣವೇನೆಂದರಿಯದಲೇ
ಮರುಗುತಲಿರೆಯಿಂದಿನಿರುಳ ಸ್ವಪ್ನದಿ ಬಂದು
ಹರಿಯ ಚಿತ್ತದ ರೀತಿಯರುಪಿ ತ್ವರಿತದಿ ೧
ಶರಣು ಜನ ಮಂಥಾರ ಶಾಶ್ವತ
ತರಣಿ ಕೋಟಿ ಸಮಾನ ಭಾಸುರ
ಚರಣ ಕಮಲಗಳನ್ನು ಶಿರದಲಿ
ನಿರಪದಿಯೊಳಿಟ್ಟಿರವ ತೋರಿಸು ೨
ಪಂಚ ವಿಂಶತಿ ತತ್ವ ಪರಿಭಾಸೆ ಪುರುಶಕ್ತಿ
ಪಾಂಚ ಭೌತಿಕ ದೇಹ ಗತ ಬಾಧೆಯ
ಕೊಂಚವಲ್ಲದೆ ಹರವಂಚವಾಗಿರುವೆ ವಿ-
ರಿಂಚಿಯ ಜನನಿ ನಿಷ್ಕಿಂಚನ ಜನವಂದ್ಯೆ ೩
ಪಾಂಚಜನ್ಯೋದಕವ ಸೇಚಿಸಿ
ಪಂಚಕರಣಕೆ ಮಾರ್ಗ ಸೂಚಿಸಿ
ಪಂಚವರ್ನದ ಶು ……. * ೪

೮೭
ವಿಜಯ ಸಾರಥಿ ವಿಶ್ವಾಧೀಶ್ವರ
ವಿಜಯ ಪಾಲಿಸು ಸತತಂ
ವಿಜಯಧ್ವಜ ವೆಂಕಟಗಿರಿ ನಾಯಕಿ
ಅಜಿತ ಸಕಲಸುರವೈರಿ ವಿದಾರಣ ಪ.
ವೀರಾಗ್ರಣಿ ರಘುವೀರ ವಿದಾರಿತ
ಘೋರದಿತಿಜ ಪರಿವಾರ
ನೀರಜಾಕ್ಷ ವಾರಾಂಬುಧಿ ಬಂಧನ ಶೌರಿ ಮನೋರಥ
ಕಾರಣ ಧಾರಣ
ಸೀರಜಾನನ ಮುಖಾರವಿಂದ ಮಧುಪೂರಿತ
ವದನ ಖರಾರಿ ಕೃಪಾಕರ್ರ(?) ೧
ಲಕ್ಷ್ಮಣ ಪೂರ್ವಜ ಋಕ್ಷವಿನುತ ಕಮ
ಲಾಕ್ಷ ಶೂರ್ಪನಖ ಶಿಕ್ಷಾ
ದಕ್ಷಿಣ ದುರಿತಾರಣ್ಯ ರಮಾಸ್ಪದವಕ್ಷಸ್ಥಳ ವಿಭವೈಕನಿಭೆ
ಅಕ್ಷವಿಘಾತಿ ಕಟಾಕ್ಷದಾಯಿ ಶುಭಲಕ್ಷಣ
ಜಯ ದ್ವಿದಶಾಕ್ಷ ವಿಘಾತನ ೨
ರಾಮಾಭಿದ ರಮಣೀಯ ಗುಣಾರ್ಣವ
ಕಾಮಿತ ಫಲದಾವನಭೂಮಾ
ನಾಮಾಮೃತರತ ಚಂದ್ರಲಲಾಮ
ಭವಾಮಯಹರ ಭಜಕಾಶ್ರಯಧಾಮಾ
ಶ್ರೀಮಹೀಶ ಶೇಷಾಚಲವಾಸ ಮಮಾಲಯಗತ
ಮಾರುತಿಕೃತ ಕಾಮಾ ೩

೨೮೪
(ವಿಜಯದಶಮಿ)
ಜಯಜಯ ದೇವ ಹರೆ ಜಯಜಯದೇವ ವಿ-
ಜಯರಥ ಭೂಷ ಭಯಹರ ಭಕ್ತ ಜನಾಶ್ರಯ ಶ್ರೀಶ ಪ.
ಕೀಟಕ ಶಕುನಿಯ ಕೂಟಭಾವನದ ಕಾ-
ದಾಟದಿ ಸೋತು ಮಹಾಟವಿಯ
ದಾಟಿ ಧರ್ಮಲಿ ವಿರಾಟನಲ್ಲಿ ಸೇರಲು ಕಿ-
ರೀಟಿಗೆ ಜಯವಿತ್ತ ಖೇಟಗಮನ ಕೃಷ್ಣ ೧
ಸಮಯಬಂಧವ ದಾಟಿ ಶಮಿಯ ಪೂಜಿಸುತ ಸಂ-
ಭ್ರಮದೊಳಾಸನವೇರ್ದ ಯಮಸುತನ
ನಮಿಸಿದ ನೃಪತಿಯ ಭಯ ಪರಿಹರಿಸಿದ
ಸುಮನಸ ಗಣವಂದ್ಯ ಸರ್ವಾಂತರಾತ್ಮಕ ೨
ಸಾರಥಿ ತಾನೆಂದು ಸೇರಿ ಪಾಂಡವರಿಗೆ
ಕೌರವರನ್ನು ಸಂಹಾರ ಗೈಸಿ
ಭಾರತೀಶಗೆ ಭೂಮಿ ಸೇರಿಸಿ ಸಲಹಿದ
ವಾರುಧಿಶಯನ ವೆಂಕಟಗಿರಿ ನಾಯಕ ೩

೯೯
ವಿಠಲ ಓಡಿ ಬಾರೊ ತೊಟ್ಟಿಲನೇರೊ
ಪುಟ್ಟ ಕಮಲದಂಥ ಬಟ್ಟ ಮುಖವ ತೋರೊ ಪ.
ಜಟ್ಟಿಯಂದದಿ ಭುಜ ತಟ್ಟಿ ಹುಂಕರಿಸುತ ಅ-
ರಿಷ್ಟ ವೃಷಭನನ್ನು ಮೆಟ್ಟಿ ಮಡುಹಿದಂಥ ೧
ಹೇಷಿಕ ಭೀಷಣ ಕೇಶಿಯಂಬಸುರನ
ಘಾಸಿಮಾಡಿದ ತೋಳ ಬೀಸುತ ಭರದಿಂದ ೨
ಮಂದಹಾಸದಿ ಶರದಿಂದು ಕಾಂತಿಯ ಗೆಲ್ವ
ಸುಂದರ ಮುಖ ಪೂರ್ಣಾನಂದ ಗೋಪಿಯ ತಂದ ೩
ಮೀಸಲ ನೊರೆಹಾಲ ಕಾಸಿ ಸಕ್ಕರೆ ಕೂಡಿ
ವಾಸ ಚೂರ್ಣವನಿಕ್ಕಿ ಶ್ರೀಶನಿನ್ನೊಶಕೀವೆ ೪
ನಿತ್ಯ ಸುಖಾಂಬುಧೆ ನಿರವಧಿ ಫಲದ ಸ-
ರ್ವೋತ್ತಮ ಶೇಷಾದ್ರಿ ಶಿಖರೀಶ ಶ್ರೀನಿವಾಸ ೫

೫೮
(ಗೋಕರ್ಣಮಠದ ವಿಠಲ ದೇವರು)
ವಿಠ್ಠಲದೇವಾ ವಿಬುಧ ಸಂಜೀವ
ರಟ್ಟು ಮಾಡದಿರೆನ್ನ ರಿಭುಗಳ ಕಾವಾ ಪ.
ಪಾಂಡವಸೂತ ಪರಮವಿಖ್ಯಾತಾ
ಪುಂಡಲೀಕಗೆ ಸರ್ವ ಪುರುಷಾರ್ಥದಾತಾ ೧
ಸ್ವರ್ಣವದಾತ ಸುವರ್ಣವರೂಥಾ
ಗೋಕರ್ಣಮಠೀಯ ದುಗ್ಧಾರ್ಣವನಾಥ ೨
ಆಶ್ರಿತ ಸುರ ವೃಕ್ಷ ಅಸುರೇಶ ವನದಕ್ಷ
ಸ್ವಾಶ್ರಯ ಕೊಡು ಶೇಷಗಿರಿಶಿಖರಾಧ್ಯಕ್ಷ ೩


(ವಿನಾಯಕ ಚತುರ್ಥಿಯಂದು ಶರ್ವಿನ ಗಣಪತಿಯನ್ನು ನೆನೆದು)
ಗಣಪತೀ ಕೊಡು ನಮಗೆ ಶ್ರೀಶನಲಿ ಮತಿ ಪ.
ತನು ಮನದಲಿ ಶ್ರೀವಿನಿಯನ ಸ್ಮರಿಸಲು
ವುಣಿಸುವ ಸುಖ ಸಂದಣಿಗಣ ನಿರವಧಿ ೧
ವಿಘ್ನ ಸಮೂಹವ ವೋಡಿಸಿ ಭವಭಯ
ಭಗ್ನಗೈಸಿ ನಿರ್ವಿಘ್ನದಿ ಕರುಣಿಸು ೨
ಪರಶು ಪಾಶಾಂಕುಶಧರ ಕರುಣಾಕರ
ಸಿರಿವರ ವೆಂಕಟವರ ವಲಿವಂದದಿ ೩
ಶ್ರೀಹರಿ ಸಂಕೀರ್ತನ ; ನಾಮ ಮಹಾತ್ಮೆ

೬೦
(ಯರ್ಡನಾಡ ವಿಷ್ಣುಮೂರ್ತಿ)
ವಿಷ್ಣುಮೂರ್ತಿ ಪಾಲಿಸೆನ್ನ ಜಿಷ್ಣು ಸಾರಥಿ ಪ.
ಶಿಷ್ಟರಾಯಸದ ಸಜ್ಜನರ ಮೇಲ್ಕರುಣಾ
ದೃಷ್ಟಿಯಿಂದಲಿ ಉಭಯಾರ್ಥದ ಪುರದಿ
ಕಷ್ಟಪಾಶವ ಕಡಿದರಿಗಳ ಗೆಲಿಸುತ
ಭೀಷ್ಟ ಕೊಡುವ ಸರ್ವೋತ್ರ‍ಕಷ್ಟ ಪರೇಶಾ ೧
ಕ್ಷೋಣಿಸುತೆಯ ಚೂಡಾಮಣಿಯ ಬೇಗದಿ ತಂದ
ಪ್ರಾಣನಾಥನು ಸುಪ್ರವೀಣನೆಂದದಿರು
ಕಾಣಿಕೆ ಕಪ್ಪ ಪೂಜೆಗಳ ತನ್ಮತದಿಂದ
ಮಾನಿಸಿಕೊಳುತಿಹ ಮನ್ಮಥ ಜನಕ ೨
ನಿನ್ನ ಕಟಾಕ್ಷ ಸಂಪೂರ್ಣ ಪೊಂದಿಹರಾ
ಹೆಂಣಾ ತಂದಿಹನಾ ಮೇಲಿರಿಸು ಪದ್ಮ ಕರಾ
ಪನ್ನಗಚಲವಾಸ ಪವಮಾನವಂದಿತ
ನಿನ್ನ ದಾಸರ ದಾಸ್ಯ ದಯಮಾಡು ಸುಪ್ರೀತ ೩

೩೪೪
ವೆಂಕಟರಮಣ ವೇದಾಂತಕೋಟಿವಂದ್ಯ
ಶಂಕರಪ್ರಿಯ ಪತಿ ಏಳೆನ್ನುತ ಪ.
ಪಂಕಜಮುಖಿ ಪದ್ಮಾವತಿ ಸರ್ವಾ-
ಲಂಕಾರದ ನಿದ್ದೆ ಸಾಕೆನ್ನುತ ಅ.ಪ.
ಮಂಗಲಚರಿತ ಭುಜಂಗಶಯನ ನಿ-
ನ್ನಂಗದಾಯಾಸವ ಪರಿಹರಿಸಿ
ಪೊಂಗಲಶದಿ ಉಷ್ಣೋದಕ ಗಂಧ ತೈಲಾ-
ಭ್ಯಂಗಮಾಡುವರೇಳು ಶೃಂಗಾರದ ಮೂರ್ತಿ ೧
ದಧಿಯ ಪೃಥುಕದಲಿ ಹದಗೈದು ಮಧುರದಿ
ಮಧುಸೂದನ ನಿನ್ನ ಪದದ ಮುಂದೆ
ಸದ್ ಹೃದಯರು ತಂದಿಹರು ಸಮರ್ಪಿಸೆ
ಮದಜನಕ ನಿನ್ನ ಓಲೈಸುವರಯ್ಯ ೨
ಸಣ್ಣಕ್ಕಿಯನು ದಿವ್ಯಾನ್ನ ಪಾಕವ ಮಾಡಿ
ಚೆನ್ನಾದ ಗೋಕ್ಷೀರವನ್ನು ತಂದು
ಉನ್ನತ ಮಹಿಮನೆ ಉಣ್ಣೆಂದು ಲಲಿತ ಸು-
ವರ್ಣಪಾತ್ರೆಯೊಳು ತಂದಿಹರು ಶ್ರೀಹರಿಯೇ ೩
ವಿಧವಿಧ ಷಡುರಸಭರಿತ ಮನೋಹರ
ಸುಧೆಗೆಯಿಮ್ಮಡಿ ಮಧುರತ್ವದಲಿ
ಮೃದುವಾದ ಉದ್ದಿನ ದೋಸೆಯ ಸವಿಯೆಂದು
ಪದುಮನಾಭನೆ ನಿನ್ನ ಹಾರೈಸುವರಯ್ಯ ೪
ಸಕ್ಕರೆ ಕದಳಿ ಉತ್ತಮ ಫಲಗಳ ತಂದು
ರಕ್ಕಸವೈರಿಯೆ ನಿನ್ನ ಮುಂದೆ
ಚೊಕ್ಕಟವಾಗಿಡೆ ಲೆಕ್ಕ ಲೇಖನಗಳ
ಒಕ್ಕಣಿಪರು ವಾಸುದೇವ ನೀನೇಳಯ್ಯ೫
ಸಾರಹೃದಯ ಗೌಡಸಾರಸ್ವತ ವಿಪ್ರ
ಭೂರಿ ವೇದಾದಿ ಮಂತ್ರದ ಘೋಷದಿ
ಶ್ರೀರಮಣನೆ ದಯೆದೋರೆಂದು ಕರ್ಪೂರ-
ದಾರತಿಯನು ಪಿಡಿದಿಹರು ಶ್ರೀಹರಿಯೇ ೬
ಭಾಗವತರು ಬಂದು ಬಾಗಿಲೊಳಗೆ ನಿಂದು
ಭೋಗಿಶಯನ ಶರಣಾದೆನೆಂದು
ಜಾಗರದಲಿ ಮದ್ದಳ ತಾಳರಭಸದಿ
ರೇಗುಪ್ತಿರಾಗ ಸಂಗೀತ ಪಾಡುವರಯ್ಯ ೭
ಕರುಣಾಸಾಗರ ನಿನ್ನ ಚರಣದ ಸೇವೆಯ
ಕರುಣಿಸೆಂದೆನುತಾಶ್ರಿತ ಜನರು
ಕರವ ಮುಗಿದು ಕಮಲಾಕ್ಷ ನಿನ್ನಯ ಪಾದ-
ಸ್ಮರಣೆಗೈಯುತ ನೋಳ್ಪಾತುರದಿಂದ ಹರುಷದಿ ೮
ನಾನಾ ಜನರು ಬಂದು ಕಾಣಿಕೆ ಕಪ್ಪವ
ಶ್ರೀನಿವಾಸನೆ ನಿನ್ನ ಪದಕೆ ಒಪ್ಪಿ
ದಾನವಾಂತಕ ನಿನ್ನ ದಯವೊಂದೆ ಸಾಕೆಂದು
ಧ್ಯಾನಮಾಳ್ಪರು ದಯಮಾಡೆಂದು ಹರಿಯೇ ೯
ನೀನೆ ಗತಿಯೆಂದು ನಿನ್ನ ನಂಬಿಹರು ಲ-
ಕ್ಷ್ಮೀನಾರಾಯಣ ಪುರುಷೋತ್ತಮನೆ
ಮಾನದಿ ಭಕ್ತರ ಸಲಹಯ್ಯ ಸಂತತ
ಶ್ರೀನಿವಾಸನೆ ಬೇಗ ಏಳು ಶ್ರೀಹರಿಯೆ ೧೦

೫೩
ವೆಂಕಟೇಶ ದೀನ ದಯಾಳೊ ಪ.
ಶ್ರೀರಮಣೀಕರ ನೀರರುಹಾರ್ಚಿತ
ವಾರಿಜಭವ ಶಿವವಂದಿತ ಪಾದ ೧
ವರ ಸುದರ್ಶನ ಧಾರಕರಾಂಬುಜ
ದ್ವಿರದ ವರ ಪುರಂದರ ಪದದಾಯಕ೨
ವೀಶಗಮನ ಭುಜಗೇಶ ಶಯನ ಜಗದೀಶ ಪನ್ನಗ ಗಿರೀಶ ದಯಾಪರ ೩

೫೧
ವೆಂಕಟೇಶ ನೀ ಕರುಣಿಸಿ ಮಾನಸ ಶಂಕೆಯೆಲ್ಲವ ಓಡಿಸು
ವಂಕುಬೂದಿಯ ಬಿಡಿಸುತ ನಿನ್ನಯ ಕಿಂಕರಾಶ್ರಯ ಕೊಡಿಸು ಪ.
ಎಷ್ಟು ಬಂದರೂ ತೃಪ್ತಿಯ ಪಡದ ಕ-
ನಿಷ್ಟ ಭಾವನೆಯಿಂದಲೀ
ಭ್ರಷ್ಟನಾದೆನು ಬಹು ವಿಧವಾಕೃತ
ನಿಷ್ಠುರಾಗ್ನಿಯ ಹೊಂದಲಿ
ಕೃಷ್ಣ ನೀ ಕರಪಿಡಿವುತ ಕರುಣಾ
ದೃಷ್ಟಿಸಂಗತ ಧೀರತೆಯಿಂದಲಿ ೧
ಮೂರು ತಾಪಗಳುರುಬೆಗೆ ಸಿಲುಕುತ
ಗಾರುಗೊಂಡೆನು ಶ್ರೀಶನೆ
ಸೇರಿದುದಂಗದಿ ದಿನ ದಿನ
ಮೀರಿತೊ ಗ್ರಹವಾಸನೆ
ಮಾರನಂದನ ಎನ್ನ. . . . . .ತಿ
ಭಾರವೆ ಭವವಾರುದಿ ಶೋಷನೆ ೨
ಸರ್ವದಾ ನಿನ್ನ ಪಾದಾಂಬುಜರತಿ
ಇರ್ವರೊಂದನೆ ಪಾಲಿಸು
ಮರ್ಮವೆಂದಿಗು ಮನಸಿಗೆ ಘಟಿಸದೆ
ನಿವ್ರ್ಯಳೀಕದಿ ಲಾಲಿಸು
ಸರ್ವಲೋಕ ಸುಖಾಕರ ಫಣಿಪತಿ
ಪರ್ವತಾಲಯ ಪರಮ ಕೃಪಾಕರ ೩

೬೮
(ಧನ್ವಂತ್ರಿಯ ಪ್ರಾರ್ಥನೆ)
ವೇದ ವೇದ್ಯ ವೈದ್ಯನಾದನು ಭಕ್ತಜನ್ಮಾದಿ ವ್ಯಾಧಿಗಳನ್ನು
ಬಾಧಿಸಿ ದುಗ್ಧ ಮಹೋದಧಿ ಮಥಿಸಿದ ಸಮಯದಿ ಪಾರಿಜಾ
ತೋದಯವಾದ ಮೇಲಾದರದಿ ಪ.
ಧೀರದಿತೆಯಸುರಾರಿ ನಾಯಕರೆಲ್ಲ
ಸೇರಿ ಕ್ಷೀರಾಂಬುಧಿ ತೀರದ ತಡೆಗಾಗಿ
ಭಾರಿ ಮಂದರವೆತ್ತಿ ತಾರಲಾರದೆ ಮಧ್ಯ
ದಾರಿಯೊಳಗೆ ಬಿದ್ದು ಚೀರಲಂದು
ನೀರದನಿಭ ಕೃಪೆದೋರಿ ಬಂದಲ್ಲಿ ಸ-
ರ್ಪಾರಿಯ ಶಿರದ ಮೇಲೇರಿಸಿ ಗಿರಿಯ ಗಂ-
ಭೀರ ರವದಿ ಮುಂದೆ ಸಾರಿದ ಸುರಮೋದ-
ಕಾರಿ ಸಂಸ್ರ‍ಕತಿ ಭಯವಾರಣನು ೧
ಅಮರದೈತ್ಯರ ಭುಜ ಭ್ರಮಣೆಗೆ ನಿಲ್ಲದ
ಕ್ಷಮೆಯಧರನ ಕಂಡು ಸುಮನಸ ಗಣಕಾಗಿ
ಕಮಠಾವತಾರದಿಂದಮಿತಭಾರವ ಲಕ್ಷ್ಮೀ
ರಮಣ ಬೆಂಬನಿಂದಲಾಕ್ರಮಿಸಿದ್ದನೂ
ಕ್ಷಮೆಯಿಂತು ತೋರಿ ಸಂಭ್ರಮದಿಂದ ಸುರಕಲ್ಪ-
ದ್ರುಮಕಂಠರತ್ನ ಚಂದ್ರಮ ಮುಖ್ಯರುದಿಸಲು
ರಮೆಯೊಂದು ರೂಪದಿ ನಮಿಸುತ್ತ ಬರೆ ತನ್ನ
ರಮಣೀಯ ಮದುವಿಯಾ ಕ್ರಮವ ತೋರಿ ೨
ಇಂತು ವಿವಾಹದನಂತರದಲಿ ಶ್ರೀ-
ಕಾಂತನು ದೇವರ್ಕಳಂತವರಿತು ನಿ-
ರಂತರ ಬೋಧ ಚಿನ್ಮಯನು ನಿರ್ಭಯದಿ ಧ-
ನ್ವಂತರಿಯಾದುದನೆಂತೆಂಬೆನು
ಕಂತುಕೋಟಿಯ ಗೆಲುವಂತೆ ಸಕಲ ಸುಜ
ನಾಂತರ್ಬಹಿರ್ಗತ ಸಂತಾಪಗಳ ಬಲ-
ವಂತದಿಂದಲಿ ಕಳವಂಥ ಮೂರುತಿಯಾಗಿ
ನಿಂತನು ನಿಖಿಳ ವೇದಾಂತೇಶನು ೩
ಮಣಿಮಯ ಮಕುಟ ಕಿರೀಟ ಕುಂಡಲ ಹಾರ
ವನರುಹಾಂಬಕ ವಲ್ಲುಹಾಸ ಕೌಸ್ತುಭಧರ
ಕನಕ ಪೀತಾಂಬರ ಕರಿ ಕರೋರುತರ
ಕ್ಷಣಿತ ಕಿಂಕಿಣಿ ಕಾಂಚೀವರ ಮಂಜೀರಾ
ಸುನಸ ಸುಂದರದಂತ ಶುಭನೀಲಕೇಶಾಂತ
ವನಜ ಸಂಭವನೀಗರುಹುತಾಯುರ್ವೇದಾಂತ
ನೆನೆಸುವವರಪಮೃತ್ಯುಹಾರಿ ರೂಪವ ತೋರಿ
ವಿನಯದಿ ವಿಬುಧಾರ ಸೇರಿದನು ೪
ಘೋರ ಪಾತಕ ಸಂಘಾಧಾರದಿಂದ್ಯಮಪರಿ
ವಾರವೆಂದೆನಿಪತ್ತಿ ಸಾರವ ಸ್ಮಾರಕ್ಷಯೋರಗಜ್ವರಕಫ
ಗೂರು ಪ್ರಮೇಹಾದಿ ವಾರಕ ವರಸುಖ ಕಾರಕನು
ಥೋರ ಕರದಿ ಸುಧಾಪೂರಿತ ಕಲಶವ
ತೋರಿ ದಾನವ ಮೋಹಕಾರಿ ನಾರಾಯಣಿ ಸ್ತ್ರೀ
ರೂಪದಿಂದ ದೈತ್ಯಾರಿಗಳಿಗೆ ಕೊಟ್ಟ
ಧೀರ ವೆಂಕಟ ಶಿಖರಾರೂಢನು ೫

೬೬
(ಶ್ರೀ ವೇದವ್ಯಾಸರನ್ನು ನೆನೆದು)
ವ್ಯಾಸರೂಪಿಯಾದ ಶ್ರೀನಿವಾಸನ ನಂಬಿ ಪ.
ದ್ವಾಪರಾಂತದಿ ದೈತ್ಯಜನರ ಪ್ರತಾಪದಿಂದಲಿ ಜ್ಞಾನತತ್ವ ಪ್ರ-
ದೀಪ ಮಾಲಿನ್ಯವನು ಪೊಂದಿರಲು ಕ್ಷೀರಾಬ್ಧಿ ತಡಿಯಲಿ
ಗೋಪತಿಗಳೊಡಗೂಡಿ ತವಕದೊಳು ಅಜ ಬಂದು ಸ್ತುತಿಸಲು
ತಾಪ ಶಮಿಸುವೆನೆಂಬಭಯವಿತ್ತಾಪರಾಶಗೊಲಿದು ಕರುಣಿಸಿ
ಭೂಪವಸುಸುತೆಯಲ್ಲಿ ಪರಮ
ಕೃಪಾಪಯೋನಿಧಿರೂಪ ತೋರಿದ ೧
ಆರು ಮೂರು ಪುರಾಣಗಳ
ಮಹಾಭಾರತಾಮೃತ ಸಹಿತ ವಿರಚಿಸಿ
ಮೂರು ವಿಧ ಜೀವಿಗಳಿಗನುಗುಣವಾಗಿ
ತೋರ್ಪಂತೆ ಬಹು ಗಂ-
ಭೀರ ಸಾರವನಿಟ್ಟು ಪರಿಜನವಾ ತತ್ವೋಕ್ತಿಯಿಂದ ಪ-
ರೋರು ಭಾವವ ತಿಳಿಸಿ ದೈತ್ಯರ ಗಾರಗೊಳಿಸುತ ಅನವರತ ಸಂ-
ಸಾರ ಚಕ್ರದಿ ತಿರುಗುವವರ ವಿಚಾರ ಭ್ರಮೆಗೊಂಬಂತೆ ತಿಳಿಸಿದ ೨
ಶುದ್ಧ ಸಾತ್ವಿಕರಾದ ಜೀವರನುದ್ಧರಿಸಬೇಕೆಂದು ಶ್ರುತಿಗಣ
ಬದ್ಧ ಸೂತ್ರವ ನಿರ್ಮಿಸುತ್ತದನು ಸಿದ್ಧಾಂತ ಮಾಡಲು
ಮಧ್ವಮುನಿವರಗಿತ್ತು ನಿಯಮವನು ನಿರ್ನೈಸಿ ತಿಳಿಸುತ
ಬೌದ್ಧ ಜನ ಮುಖ ದುರ್ಮತಿಗಳಂನದ್ದಿ(?)
ಪಾತಾಳಕೆ ಸುರೋತ್ತಮ
ಸಿದ್ಧ ಸೇವಿತ ಶೇಷಗಿರಿಯೊಳಗಿದ್ದು ಭಜಕರನುದ್ಧರಿಸುತಿಹ ೩

೩೯೩
ಶಂಕರ ಗುರುವರ ಮಹದೇವ ಭವ-
ಸಂಕಟ ಪರಿಹರಿಸಯ್ಯ ಶಿವ ಪ.
ಸಂಕಲ್ಪ ವಿಕಲ್ಪಮನೋನಿಯಾಮಕ
ಕಿಂಕರಜನಸಂಜೀವ ಅ.ಪ.
ಭಾಗವತರರಸ ಭಾಗೀರಥೀಧರ
ಬಾಗುವೆ ಶಿರ ಶರಣಾಗುವೆ ಹರ
ಶ್ರೀ ಗೌರೀವರ ಯೋಗಿಜನೋದ್ಧರ
ಸಾಗರಗುಣಗಂಭೀರ ೧
ರಾಯ ಲಕ್ಷ್ಮೀನಾರಾಯಣ ಭಕ್ತಿಪ-
ರಾಯಣ ತ್ರಿನಯನ ಪುರಹನ
ಕಾಯಜಮಥನ ಮುನೀಂದ್ರ ಸಿದ್ಧಜನ-
ಗೇಯಸ್ವರೂಪೇಶಾನ ೨

೩೯೪
ಶಂಕರ ಶಿವಶಂಕರ ಶಿವಶಂಕರ ಶಿವಶಂಕರ
ಕಿಂಕರೇಷ್ಟಪ್ರಧಾನಶೀಲ ವೃಷಾಂಕ ಮಹಲಿಂಗೇಶ್ವರ ಪ.
ವ್ಯೋಮಕೇಶ ಭವಾಬ್ಧಿತಾರಕ ರಾಮನಾಮೋಪಾಸಕ
ಸಾಮಜಾಜಿನವಸನಮಂಡನ ಸ್ವಾಮಿ ತ್ರಿಜಗನ್ನಾಯಕ
ಭೀಮಬಲ ಸುತ್ರಾಮಮುಖ ಸುರಸ್ತೋಮ ವಿನುತಪದಾಂಬುಜ
ಸೋಮಸೂರ್ಯಾನಲಯನ ನಿಸ್ಸೀಮ ಮಹಿಮ ಮಹಾಭುಜ೧
ಭಜಕಜನಸೌಭಾಗ್ಯದಾಯಕ ವಿಜಯಪಾಶುಪತಾಸ್ತ್ರದ
ಭುಜಗಭೂಷಣ ಭುವನಪೋಷಣ ರಜತಗಿರಿಶಿಖರಾಸ್ಪದ
ವೃಜಿನಹಾಮಲ ಸ್ಫಟಿಕಸನ್ನಿಭ ಕುಜನವಿಪಿನದವಾನಲ
ವಿಜಿತಕಾಮ ವಿರಾಗಿಯೋಗಿ ವ್ರಜಕುಟುಂಬ ಮಹಾಬಲ ೨
ನೀಲಕಂಠ ನಿರಾಮಯಾಭಯಶೂಲಧರ ಸುಮನೋಹರ
ಶೈಲರಾಜಸುತಾಧರಾಮೃತಲೋಲ ಲೋಕಧುರಂಧರ
ಕಾಲಕಾಲ ಕಪಾಲಧರ ಕರುಣಾಲವಾಲ ಮಹೇಶ್ವರ
ಪಾಲಿತಾಖಿಳಸಿದ್ಧ ಮುನಿಜನಜಾಲ ಜಾಹ್ನವಿಶೇಖರ ೩
ಕೃತ್ತಿವಾಸ ಗಿರೀಶ ಶ್ರುತಿತತ್ತ್ವಾರ್ಥಬೋಧ ಗುಣೋದಯ
ದೈತ್ಯಮೋಹಕ ಶಾಸ್ತ್ರಕೃತ್ಪ್ರಮಥೋತ್ತಮ ವಿರತಾಶ್ರಯ
ಸತ್ಯಸಂಕಲ್ಪಾನುಸಾರ ನಿವೃತ್ತಿಮಾರ್ಗ ಪ್ರವರ್ತಕ
ಮೃತ್ಯುಹರ ಹರ ಮೃಡ ನಮೋಸ್ತು
ನಮೋಽಸ್ತು ಸುಮನನಿಯಾಮಕ ೪
ಪಂಡಿತೋತ್ತಮ ಪವನಶಿಷ್ಯ ಮೃಕಂಡುತನಯಭಯಾಪಹ
ಚಂಡಿಕಾಧವ ಶಿವ ದಯಾರ್ಣವ ಖಂಡಪರಶು ಸುರಾರಿಹ
ಚಂಡಭಾನುಶತಪ್ರಕಾಶಾಖಂಡವೈರಾಗ್ಯಾಧಿಪ
ಕುಂಡಲೀಂದ್ರ ಪದಾರ್ಹನಗ ಕೋದಂಡವಿದೃಶ ಮಹಾನ್‍ತಪ ೫
ಮಂಗಲಪ್ರದ ದಕ್ಷಕೃತಮುಖಭಂಗ ಭಾಗವತೋತ್ತಮ
ಜಂಗಮಸ್ಥಾವರಹೃದಿಸ್ಥ ಶುಭಾಂಗ ಸತ್ಯಪರಾಕ್ರಮ
ಲಿಂಗಮಯ ಜಯಜಯತು ಗಿರಿಜಾಲಿಂಗಿತಾಂಗ ಸದೋದಿತ
ಸಂಗರಹಿತಾಚ್ಯುತಕಥಾಮೃತ ಭೃಂಗವತ್ಸೇವನರತ ೬
ಭರ್ಗ ಭಾರ್ಗವ ಋಷಿಪ್ರತಿಷ್ಠಿತ ಸ್ವರ್ಗಮೋಕ್ಷ ಫಲಪ್ರದ
ನಿರ್ಗತಾಖಿಲದುರಿತ ಭೂಸುರವರ್ಗಪಾಲನಕೋವಿದ
ದುರ್ಘಟಿತಧುರಧೀರ ಭವಸಂಸರ್ಗದೂರ ಸನಾತನ
ನಿರ್ಗುಣೈಕಧ್ಯಾನಪರ ಸನ್ಮಾರ್ಗಭಕ್ತಿನಿಕೇತನ ೭
ಚಾರುಪಾವಂಜಾಖ್ಯಕ್ಷೇತ್ರಾಧಾರದಾಂತದಯಾಕರ
ನೀರಜಾಸನತನಯ ಲಕ್ಷ್ಮೀನಾರಾಯಣಕಿಂಕರ
ವಾರಿನಿಧಿಗಂಬೀರ ದೀನೋದ್ಧಾರ ಧಾರ್ಮಿಕಜನಹಿತ
ವಾರಣಾಸ್ಯಕುಮಾರಗುರು ಗೌರೀರಮಣ ಸುದೃಢವ್ರತ ೮

೪೧೫
ಶಂಕರಿ ಸರ್ವೇಶ್ವರಿ ಮೃಗಾಲಂಕಶೇಖರಿ ಜಯ ಜಯಪ.
ಶಾಂಭವಿದೇವಿ ಸುರಕದಂಬಸಂಜೀವಿ
ಅಂಬುಜಾಯತಾಕ್ಷಿ ಖಲಶುಂಭಮರ್ದಿನಿ೧
ಬುದ್ಧಿದೇವತೆ ಸುರಸಿದ್ಧಸನ್ನುತೆ
ಅದ್ರಿಜಾತೆ ರುದ್ರಪ್ರೀತೆ ಶುದ್ಧ ಭಾಗವತೆ೨
ಧ್ಯೇಯರೂಪಿಣಿ ಮಹಾದೇವ ಮೋಹಿನಿ
ಶ್ರೀಯಶೋದೆ ಲಕ್ಷ್ಮೀನಾರಾಯಣಭಗಿನಿ ೩

೩೯೫
ಶರಣಾಗತನಾದೆನು ಶಂಕರ ನಿನ್ನ
ಚರಣವ ಮರೆಹೊಕ್ಕೆನು ಪ.
ಕರುಣಿಸೈ ಕರಿವದನಜನಕಾ-
ವರಕದಂಬಪೂಜ್ಯ ಗಿರಿವರ-
ಶರಸದಾನಂದೈಕವಿಗ್ರಹ
ದುರಿತಧ್ವಾಂತವಿದೂರ ದಿನಕರ ಅ.ಪ.
ಹಸ್ತಿವಾಹನವಂದಿತ ವಿಧುಮಂಡಲ-
ಮಸ್ತಕ ಗುಣನಂದಿತ
ಸ್ವಸ್ತಿದಾಯಕ ಸಾವಇಗಾನಪ್ರ-
ಶಸ್ತ ಪಾವನಚರಿತ ಮುನಿಹೃದ-
ಯಸ್ಥಧನಪತಿಮಿತ್ರ ಪರತರ-
ವಸ್ತು ಗುರುವರ ಶಾಸ್ತಾವೇಶ್ವರ ೧
ಮಂದಾಕಿನೀ ಮಕುಟ ಶಿವ ಶಿವ ನಿತ್ಯಾ-
ನಂದಮ್ನಾಯ ಕೂಟ
ಚಂದ್ರಸೂರ್ಯಾಗ್ನಿತ್ರಿಲೋಚನ
ಸಿಂಧುರಾಸುರಮಥನ ಸ್ಥಿರಚರ-
ವಂದಿತಾಂಘ್ರಿಸರೋಜ ಉದಿತಾ-
ರ್ಕೇಂದುಶತನಿಭ ನಂದಿವಾಹನ ೨
ನೀಲಕಂಧರ ಸುಂದರ ಸದ್ಗುಣವರು-
ಣಾಲಯ ಪರಮೇಶ್ವರ
ಕಾಲ ಕಾಲ ಕಪಾಲಧರ ಮುನಿ-
ಪಾಲ ಪದ್ಮಜವಂದಿತಾಮಲ-
ಲೀಲ ಡಮರು ತ್ರಿಶೂಲಪಾಣಿ ವಿ-
ಶಾಲಮತಿವರ ಭಾಳಲೋಚನ ೩
ಮಾರಸುಂದರ ಸಂಕರ ಶ್ರೀಲಕ್ಷ್ಮೀ-
ನಾರಾಯಣಕಿಂಕರ
ಮಾರಹರ ಮಹನೀಯ ಶ್ರುತಿಸ್ರ‍ಮತಿ-
ಸಾರ ವಿಗತಾಮಯ ಮಹೋನ್ನತ
ವೀರ ರಾವಣಮದನಿಭಂಜನ
ಚಾರುತರವರಭಾರ ಪುರಹರ ೪

(ಕುಮಟಾದಲ್ಲಿಯ ಶಾಂತೇರಿ ಕಾಮಾಕ್ಷಿ)
೪೧೬
ಶಾಂತೇರಿ ಕಾಮಾಕ್ಷಿ ತಾಯೇ ಅ-
ನಂತಪರಾಧವ ಕ್ಷಮಿಸು ಮಹಮಾಯೇ ಪ.
ಸರ್ವಭೂತಹೃದಯಕಮಲ ನಿವಾಸಿನಿ
ಶರ್ವರೀಶಭೂಷೆ ಸಲಹು ಜಗದೀಶೆ೧
ಮೂಲ ಪ್ರಕೃತಿ ನೀನೆ ಮುನಿದು ನಿಂತರೆನ್ನ
ಪಾಲಿಸುವವರ್ಯಾರು ಪರಮ ಪಾವನ್ನೆ೨
ನಿನ್ನಾಧೀನವು ನಿಖಿಲ ಬ್ರಹ್ಮಾಂಡವು
ಮನ್ನಿಸು ಮಹಾದೇವಿ ಭಕ್ತಸಂಜೀವಿ೩
ಗೋವೆಯಿಂದ ಬಂದೆ ಗೋವಿಂದಭಗಿನಿ
ಸೇವಕಜನರಿಂದ ಸೇವೆ ಕೈಕೊಂಬೆ೪
ಪೃಥ್ವಿಗುತ್ತಮ ಕುಮಟಕ್ಷೇತ್ರನಿವಾಸಿನಿ
ಕರ್ತ ಲಕ್ಷ್ಮೀನಾರಾಯಣೀಕಲ್ಯಾಣಿ೫

೪೧೭
ಶಾಂತೇರಿ ಕಾಮಾಕ್ಷಿ ಲಕ್ಷ್ಮೀಕಾಂತನ ಸೋದರಿ
ಸಂತಜನರ ಭಯನಿವಾರಿ ಕಂತುಸಹಸ್ರ ಸುಂದರಿ ಪ.
ಬಂಗಧಿ ದೇವಿ ಸುಪ್ರಸಿದ್ಧೆ ಮಹೇಶ್ವರಿ
ಶುದ್ಧ ಶ್ರೀಹರಿಭಕ್ತಿಜ್ಞಾನ ಶ್ರದ್ಧೆಯ ನೀಡಮ್ಮ ಶಂಕರಿ ೧
ಪಂಚಾಸ್ಯನಾರಿ ಪಾವನೆ ಕಾಂಚನಾಭೆ ಗೌರಿ
ಪಂಚ ಮಹಾಪಾಪವಿದಾರಿ ಪಾಹಿಮಾಂ ಶ್ರೀವಿಶ್ವಂಭರಿ ೨
ಸುಕ್ಷೇತ್ರ ಕುಮಟಾಖ್ಯ ನಗರಾಧ್ಯಕ್ಷೆ- ದೇವಿ ಭವಾನಿ
ತ್ರೈಕ್ಷನ ರಾಣಿ ಕಲ್ಯಾಣಿ ಲಕ್ಷ್ಮೀನಾರಾಯಣಿ೩

೩೭೪
ಶಾರದೆ ಸರ್ವ ವಿಶಾರದೆ ಶ್ರೀ ಪ.
ಋಜುಗಣಸ್ಥೆ ಪಂಕಜಭರಮಣಿ
ತ್ರಿಜಗಜ್ಜನನಿ ಸುಖವಾರಿಧೆ ೧
ವಾಗಭಿಮಾನಿ ವಾಣಿ ಫಣಿವೇಣಿ
ಯೋಗಿನಿ ಜ್ಞಾನಸೌಭಾಗ್ಯದೆ ೨
ಪ್ರಿಯ ಲಕ್ಷ್ಮೀನಾರಾಯಣಕಿಂಕರಿ
ಶ್ರೇಯಸ್ಕರಿ ಸದ್ಭೂರಿದೆ ೩

೨೬೧
ಶುಕಮುನಿ ಕರ್ಣಾಧಾರನ ಕೂಡಿ
ಅನುಗತ ಭವಸಿಂಧು ಭಯವ ದೂಡಿ ಪ.
ಅಂತಪಾರವೆಂದಿಗಿಲ್ಲವು ನಾನಾ
ಭ್ರಾಂತಿ ಸುಳಿಗಳು ತುಂಬಿರುವವು
ಚಿಂತಾಪರಾಕ್ರಾಂತಿಯಳವು ಪೋಕ
ಕಂತು ತಿಮಿರ ಬಾಧೆ ಬಹಳವು
ಅಂತರಂಗದಿ ಲಕ್ಷ್ಮೀಕಾಂತನೆಂಬ ನಾವೆ
ಯಂತಾದರು ತಂದು ಪಂತರಗೊಳಿಸುವ ೧
ಸ್ವರ್ಗಾದಿ ಸುಖವೆಂದು ದ್ವೀಪವು ನಾನಾ
ಮಾರ್ಗದ ಕರ್ಮ ಕಲಾಪವು
ನಿರ್ಗಮಗೊಳುವ ಸಂತಾಪವು ವೈರಿ
ವರ್ಗ ಜನಿತ ಮತಿಲೋಪವು ಇಂತು
ದೀರ್ಘವಾದ ದುಃಖ ವರ್ಗ ತಪ್ಪಿಸಿ ಶ್ರೀ ಭೂ
ದುರ್ಗಾವರ ಸಂಸರ್ಗವಿತ್ತು ಕಾವ ೨
ತಾನೆ ಕರ್ತುವೆಂದು ಪೇಳದೆ ಮೋಹ
ಧಾನೀ ಕೂಪದ ಮಧ್ಯ ಬೀಳದೆ
ಹೀನ ಕರ್ಮಗಳನ್ನು ಬೆಳಸದೆ ಸವ
ಮಾನ ಜನ ವಿರೋಧ ಮಾಡದೆ
ದೀನಬಂಧು ಸರ್ವದಾನವಾರಿ ಲಕ್ಷ್ಮಿ
ಪ್ರಾಣನಾಯಕ ವೆಂಕಟೇಶನ ನೆನೆಯಿಲಿ ೩

ಶೇಷದೇವರು
೩೭೯
ಖಗರಾಜ ಮಹೋಜ ಸತ್ತ್ವಧಾಮ
ಭಕ್ತಿಭಾವ ರವಿತೇಜ ಜಿತಕಾಮ ಪ.
ನಿಗಮಾಗಮಯೋಗತತ್ತ್ವ ಪ್ರಾಜ್ಞ
ಮಹಾಭಾಗ ನಾಗಾಂತಕ ಮನೋಜ್ಞ ೧
ಸಾಮಗಾನಪ್ರವೀಣ ವೈನತೇಯ
ಹರಿಧ್ಯಾನೈಕತಾನ ಶುಭಕಾಯ ೨
ವರಲಕ್ಷ್ಮೀನಾರಾಯಣನ ವರೂಥ
ಹರಿಪಕ್ಷ್ಯೆಕದೀಕ್ಷ ಪ್ರಖ್ಯಾತ ೩

೩೪೫
ಶ್ಯಾಮಸುಂದರ ಶ್ರೀಮಾಧವ
ಕಾಮಿಸುವಳಾ ಕಾಮಿನಿಯು ಪ.
ಭಾಮಾಮಣಿಯು ನಿನ್ನನೀಕ್ಷಿಸದೆ
ಯಾಮಯಾಮಕೆ ತಾಮಸಗೊಂಬಳು ಅ.ಪ.
ಚಂದನಾದಿ ಸೌಗಂಧಕುಸುಮ ವಿಷ-
ದಂದವೆಣಿಸುವಳು ಚಂದ್ರಮುಖಿ
ಮಂದಾನಿಲ ಮಕರಂದ ಪಾನರಸ-
ವೊಂದನೊಲ್ಲಳ ಪ್ರಿಯಸಖಿ
ನಂದನ ಕಂದನೆ ವಂದನೆ ವಲ್ಲಭಗೈವಳು ೧
ಹಾರ ಹೀರ ಬಂಗಾರ ಭೂಷಣವ
ಭಾರವೆಂದು ಶೃಂಗರಿಸಳು
ಕೀರಕೀಕಿ ಪಿಕ ಚೀರುಸ್ವನ ಶರ-
ಧಾರೆಯೆಂದು ತಾ ಸೈರಿಸಳು
ಕಾರುಣ್ಯವಾರಿಧೆ ಬಾರದೆ ಬಾಯಾರಿರುವಳು ೨
ಮೀನಧ್ವಜನುರುಬಾಣದುರುಬೆಗೆ
ಕ್ಷೀಣವಾಗಿಹಳು ಮೀನಾಕ್ಷಿ
ಭಾನುತೇಜ ಲಕ್ಷ್ಮೀನಾರಾಯಣ
ಧ್ಯಾನಿಸುವಳು ನಿನ್ನ ಪ್ರಾಣಸಖಿ
ಮಾನಾಭಿಮಾನಾಧೀನವನಿನ್ನೊಳಗಿಟ್ಟಿಹಳು ೩

ಶ್ರೀ ಗಣೇಶ ಪ್ರಾರ್ಥನೆ
೩೧೦
ಅಗ್ರಪೂಜಾ ವಿಘ್ನರಾಜ
ಅಗ್ನಿಜಾಗ್ರಜ ಮಹೋಜ ಪ.
ಲಗ್ನವಾಗಲಿ ಹರಿಪದಾಬ್ಜ
ನಿಗ್ರಹೀತ ಕಾಮಬೀಜಅ.ಪ.
ಭಾನುತೇಜ ಭಕ್ತಿಭಾಜ
ಧ್ಯಾನಗಮ್ಯ ಮುನಿಸಮಾಜ
ದೀನಕಾಮದ ಕಲ್ಪಭೂಜ
ಗಾನಲೋಲ ಭಾವ ನಿಯಾತ್ಮಜ ೧
ಚತುರಭುಜ ಸಚ್ಚರಿತ ವಿರಜ
ಯತಿವರೇಣ್ಯಗಣ ವಿರಾಜ
ಮತಿಮತಾಂವರ ನತಬಿಡೌಜ
ಕ್ರತುಭುಜಾರ್ಚಿತಾಂಘ್ರಿ ಪಂಕಜ ೨
ರುಕುಮಿಣೀಜ ರುದ್ರಗಣವ್ರಜ
ಭಕುತ ವತ್ಸಲ ಮನೋಜ
ಮುಖಮತಂಗಜ ಮೂಷಿಕಧ್ವಜ
ಲಕುಮಿನಾರಾಯಣ ಗುಣಜ್ಞ ೩

೨೯೫
ಶ್ರೀ ಮಹಿದೇವಿಯರು ಸತ್ಯಭಾಮಾ ರುಕ್ಮಿಣಿಯರೆಂಬ
ನಾಮಗೊಂಡು ನಮ್ಮ ಕೃಷ್ಣ ಸ್ವಾಮಿಯನ್ನು ಸೇವೆ ಮಾಳ್ಪ
ಕಾಮದಿಂದ ಕರವ ಪಿಡಿಯಲಾ ಮಹಾರುಂಧತಿಯ ಕೂಡಿ
ಭಾಮೆಯರೆಲ್ಲ ನಲಿವುತ ೧
ನೇಮದಿಂದ ನೀಲ ಖಚಿತ ನಿರ್ಮಲಾರತಿಗಳನೆತ್ತಿ
ಸಾಮಗಾನಲೋಲಗೆ ಶ್ರುತಿಗಳರ್ಥವರಿತು ಪುಣ್ಯ
ನಾಮನ ಹರಿಸಿ ನುಡಿದರು ೨
ವೇದ ತಂದು ಮಂದರಾಖ್ಯ ಭೂಧರವ ನೆಗಹಿ ಧರೆಯ
ಕಾದು ಕುಂಭದಿಂದಲುದಿಸಿ ಸಾಧುತನದಿ ಬಲಿಯ ಗೆದ್ದು
ಕ್ರೋಧದಿಂದ ಕೊಡಲಿ ಪಿಡಿದು ಕಪಿಗಳನ್ನು ಕೂಡೆ ಕುಬ್ಜೆ
ನೋಡಿ ಕಾಪಾಡಿ ಒಡನಾಡಿ ೩
ಮೂಢಜನರ ಮೋಹಿಸಿ ಮುಂದೋಡಿ ಮ್ಲೇಚ್ಛ ಜನರ ಮಡುಹಿ
ಆಡುವ ಬಾಲಕರ ತೆರೆವ ಮಾಡಿ ಮೋದದಿಂದ ಲಕ್ಷ್ಮಿ
ಕೂಡಿ ಕ್ರೀಡಿಸುತ ಸುಖಿಯಾಗು ೪
ಕಲಿಯ ಕಾಲದಲ್ಲಿ ಬಹಳ ಬಳಲುವ ಸಜ್ಜನರೆಲ್ಲ
ಸುಲಭದಿಂದ ಸಲಹಿ ಖ್ಯಾತಿ ಗೊಳುವೆನೆಂದು ವೆಂಕಟಾದ್ರಿ
ಕುಲವೆಲ್ಲ ಕರಸಿ ಚೆಲುವೆ ಪದ್ಮಜಾತೆಯನ್ನು
ಒಲಿಸಿ ನಂಬಿದವರ ಸೌಖ್ಯ ಜಲಧಿಯೊಳ್ಯೋಲಾಡಿಸುತ
ಫಲವನೀವನೆಂಬ ಕೀರ್ತಿಬಲವಾಗಿ ಪಡದು ಸುಖಿಯಾಗು ೫

ಅತ್ಯಧಿಕ ಕೋಪದಲಿ
೩೨
ಶ್ರೀ ರಮಣ ಸರ್ವೇಶ ತ್ವಚ್ಚರ-
ಣಾರವಿಂದವ ನಂಬಿರುವನಲಿ
ಘೋರ ಭಾವವ ತಾಳ್ದ ಹೂಣನ ದೂರ ಓಡಿಸುವ
ಭಾರ ನಿನ್ನದು ಪರಮ ಕರುಣಾ
ವಾರುಧಿಯೆ ನೀನಲ್ಲದೆನಗೆ-
ನ್ನಾರುಗತಿ ನರಸಿಂಹ ಜಯ ಜಯ ವಿಜಯ ಸಾರಥಿ ೧
ಸುಗುಣ ಸಜ್ಜನ ಶಿರೋಮಣಿ
ಮಗುವು ಪ್ರಹ್ಲಾದನ ಪದಾಂಬುಜ
ಯುಗವ ನೆನೆವುದನರಿತು ತತ್ಪಿತನೆಂದು ರೋಷದಲಿ
ನೆಗೆದು ಬಂಡೆಯ ಝಳಪಿಸುತ ಬರೆ
ಧಗಧಗಿಸಿ ಕಂಬದಲಿ ತೋರುತ
ಬಗೆದಿ ದೈತ್ಯನ ಕರುಳ ಜಯ ಜಯ ವಿಜಯಸಾರಥಿ ೨
ದೋಷಿ ದೈತ್ಯಾವೇಷದಿಂದಲಿ
ವಾಸವಾದಿ ಸಮಸ್ತ ದಿವಿಜರ
ಘಾಸಿಗೊಳಿಸಿದ ದಶಶಿರನ ತದ್ವಂಶಜರ ಸಹಿತ
ನಾಶಗೈದು ನಿರಾಪರಾಧಿ ವಿ-
ಭೀಷಣಗೆ ಸಾಮ್ರಾಜ್ಯವಿತ್ತ ಪ-
ರೇಶ ಸೀತಾಕಾಂತ ಜಯ ಜಯ ವಿಜಯಸಾರಥಿ ೩
ಪೂತನಾ ಬಕ ಶಕಟ ಧೇನುಕ
ಪಾತಕಿ ಶಾರಿಷ್ಠ ಕೇಶಿಕಿ-
ರಾತ ಕಂಸಾಂಬಷ್ಟ ಮುಷ್ಟಿಕ ಮಲ್ಲ ಚಾಣೂರ
ಕಾತರದ ಶಿಶುಪಾಲ ಮುಖ್ಯರ
ಘಾತಿಸಿದ ಗರುಡಧ್ವಜನೆ ಪುರು-
ಹೂತ ಸುತನನು ಕಾಯ್ದೆ ಜಯ ಜಯ ವಿಜಯಸಾರಥಿ ೪
ಅತ್ಯಧಿಕ ಕೋಪದಲಿ ಪ್ರಜ್ವಲಿ
ಸುತ್ತ ದ್ರೌಣಿಯು ಕಮಲ ಜೌಸ್ತ್ರವ
ನುತ್ತರೆಯ ಗರ್ಭದಲಿ ಬಿಡದೆ ಸುತ್ತಿಕೊಂಡಿರಲು
ಸತ್ಯಭಾಮಾಕಾಂತ ಕರುಣದಿ
ತೆತ್ತಿಯನು ಕಾಪಾಡಿದಖಿಳೋ-
ತ್ಪತ್ತಿರಕ್ಷಣಕಾರಿ ಜಯ ಜಯ ವಿಜಯಸಾರಥಿ ೫
ಇರುವೆ ಮೊದಲು ಬ್ರಹ್ಮಾಂತರಾಗಿಹ
ಸುರನರಾಸುರ ಮುಖ ಪ್ರಪಂಚ ದೊ-
ಳಿರುವೆ ಸರ್ವೇಂದ್ರ್ರಿಯ ನಿಯಾಮಕ ಸರಿವ ಕೃತ್ಯವನು
ಅರಿತು ಮಾಡಿಸಿ ನೋಡಿ ನಗುತಿಹ
ಪರಮ ಮಂಗಳ ಚರಿತ ನೀ ಯನ-
ಗಿರಲು ಭಯವ್ಯಾಕಿನ್ನು ಜಯ ಜಯ ವಿಜಯಸಾರಥಿ ೬
ಆದರೀ ತೆರದಿಂದ ನಿನ್ನಯ
ಪಾದ ಪಂಕಜಗಳನು ಪೊಗಳಿದ-
ರಾದುದೊಂದಾಶ್ಚರ್ಯ ನೋಡಲಿ ಸುಜನರಾದವರು
ಮೋದ ಭೋದಿ ದಯಾಬ್ಧಿ ವೆಂಕಟ
ಭೂಧರೇಶನೆ ಸತತ ನಮ್ಮನು
ಕಾದಿರುವೆ ಕಮಲೇಶ ಜಯ ಜಯ ವಿಜಯಸಾರಥಿ೭

೨೮೯
ಶ್ರೀ ರಮಣಿವರ ಹರಿಯೆ ಬಾ
ಸಮೀರಣ ಮಂತ್ರಿಯ ದೊರೆಯೆ ಬಾ
ವಾರುಧಿಶಯನ ವರಾಭವ ಕಂಬ್ವರಿಧಾರಿಬಾ
ದುರ್ಜನ ವೈರಿ ಬಾ ದೈತ್ಯ ವಿದಾರಿ ಬಾರೆಂದು
ಹಸೆಗೆ ಕರೆವೆನು ಶೋಭಾನೆ ೧
ಭಕ್ತಾಭಿಲಷಿತದಾಯಿ ಬಾ
ಮುಕ್ತಾಶ್ರಯ ಫಣಿಶಾಯಿ ಬಾ
ಯುಕ್ತಿಯಿಂದ ದುರ್ವೃತ್ತನ ಮೂಲೆಯೊಳೊತ್ತಿದ ಬಾ
ವರ ಸಂಪತ್ತಿದ ಬಾ ವಿವಿಧ ಶುಭಾತಿದ ಬಾರೆಂದು
ಹಸೆಗೆ ಕರೆವೆನು ಶೋಭಾನೆ ೨
ದುಷ್ಟಜನಾಟವಿ ಕಾಲನ ಬಾ
ಶಿಷ್ಟ ಮನೋರಥ ಪಾಲನ ಬಾ
ಶ್ರೇಷ್ಠ ನಾಗ ಪತಿ ಬೆಟ್ಟದೊಡೆಯ ಸಂ-
ದೃಷ್ಟಾ ಬಾ ನೃತ್ಯವರಕಾಷ್ಠ ಬಾ
ಹೂಣನ ಮೆಟ್ಟುತ ಬಾ
ಹಸೆಯ ಜಗುಲಿಗೆ ಶೋಭಾನೆ ೩

೨೯೦
ಶ್ರೀ ವಲ್ಲಭ ಸರ್ವೇಶ್ವರ ಬಾ ಪಾವನ ಚರಿತ ಪರಾತ್ಪರ ಬಾ
ಸೇವಕ ಜನರಿಗೆ ಸಕಲಾನಂದಗಳೀವ ಬಾ ರುಕ್ಮನ ಭಾವಾ ಬಾ
ಸೃತಿನವನಾವ ಬಾ ನಮ್ಮನು ಕಾವನೆ ಬಾ ಎಂದು
ಹಸೆಗೆ ಕರೆವೆನು ಶೋಭಾನೆ ೧
ಅರಿದರ ಪದ್ಮ ಗದಾಧರ ಬಾ
ನರಪತಿಗಳೊಳಿಹ ಶ್ರೀಧರ ಬಾ
ಶರಣಾಗತ ಪರಿಪಾಲನೆಂಬ ಬಿರುದಿರುವನೆ ಬಾ
ಸಂಪತ್ಕರನೆ ಬಾ ಸಾಮಜವರದನೆ ಬಾ
ಶ್ರೀ ನರಹರಿಯೆ ಬಾರೆಂದು
ಹಸೆಗೆ ಕರೆವೆನು ಶೋಭಾನೆ ೨
ಮಂದರಧರ ಮಧುಸೂದನ ಬಾ
ಇಂದಿರೆಯಳನೊಡಗೂಡುತ ಬಾ
ಸುಂದರ ತರ ಹರಿ ಚಂದನ ರೂಪದಿನಿಂದಿವ ಬಾ
ಕರುಣಾ ಸಿಂಧುವೆ ಬಾ ಆಪದ್ಬಾಂಧವ ಬಾ
ಪಾಂಡವ ಬಂಧುವೆ ಬಾ ವೆಂಕಟ ಮಂದಿರ ಬಾರೆಂದು
ಹಸೆಗೆ ಕರೆವೆನು ಶೋಭಾನೆ ೩

೧೯೮
ಶ್ರೀ ವೆಂಕಟಾಚಲಪತಿ ನಿನ್ನ ಪಾದವೆ ಎನಗೆ ಗತಿ ಪ.
ಧರ್ಮ ತತ್ವವನರಿಯೆ ಬಹು
ದುಷ್ಕರ್ಮವ ನಾ ತೊರೆಯೆ
ಭರ್ಮದಾಸೆ ಮರೆಯೆ ಆ ದೇವ
ಶರ್ಮವ ನಿಜ ದೊರೆಯೆ ೧
ಅಮಿತ ಪಾಪಿ ನಾನು ಸಂಸೃತಿ
ಶಮಿತ ದುರಿತ ನೀನು
ನಮಿಪೆ ನಿನ್ನಡಿಗಳನು ಕಮಲಾ-
ರ್ಕ ಮಿತ್ರನೆ ಸಲಹೆನ್ನು ೨
ಸುತರ ಕುಚರಿತಗಳ ಮಾತಾ
ಪಿತರುಗಳೆಣಿಸುವರೆ ಯೋನ:
ಪಿತರು ಎಂಬ ಸಂಶ್ರುತಿ ಗೀತಾರ್ಥವ
ವಿತತವ ಮಾಡುವರೆ ೩
ಎನ್ನಪರಾಧಗಳನೆಣಿಸಲು
ಷಣ್ಮುಖಗಳ ವಡದು
ಬಿನ್ನಹ ಮಾಡುವೆ ನಿನ್ನ ದಾಸನೆಂ-
ದೆನ್ನ ಪೊರೆಯೊ ದೊರೆಯೆ ೪
ಪನ್ನಗಾಚಲವಾಸ ಬಹು ಕಾ-
ರುಣ್ಯ ಸಾಗರೇಶ
ಇನ್ನುಪೇಕ್ಷಿಸದೆ ಎನ್ನ ಪಾಲಿಸು ಪ್ರ-
ಸನ್ನ ವೆಂಕಟೇಶ ೫

೩೬೩
ಶ್ರೀ ಸೀತಾಪತಿದಾಸವರ್ಯ ಜೀ-
ವೇಶ ನಿಜ ವಿಲಾಸ ಪ.
ಭಾಸುರ ಮಣಿಗಣಭೂಷಣ ದಿತಿಸುತ-
ಭೀಷಣ ಸಜ್ಜನಪೋಷಣ ಕಪಿವರ ಅ.ಪ.
ಕಂಜಸಖೋಪಮ ಕಮಲಾನನಾನತ
ಸಂಜೀವನ ಹನುಮಾ
ಮಂಜುಳ ವಜ್ರಶರೀರ ವೀರ ಹರಿ-
ರಂಜನಾಂಜನಾಸುತ ಸದ್ಗುಣಯುತ ೧
ನಿಗಮಾಗಮ ಪಾರಂಗತ ರಾಮಾ-
ನುಗ ಪಾವನರೂಪ
ಭಗವಜ್ಜನ ಭಾಗ್ಯೋದಯ ಭಾರತಿ
ದೃಗುಚಕೋರಚಂದ್ರಮ ತ್ರಿಗುಣಾತ್ಮಕ ೨
ಅಜಪದನಿಯತ ಭೂಭುಜಪತಿ ಪಾಂಡುತ-
ನುಜ ಸುರವ್ರಜವಿನುತ
ಕುಜನಧ್ವಾಂತನೀರಜಸಖ ಗರುಡ-
ಧ್ವಜಶರಣ್ಯ ಶಾಶ್ವತ ತ್ರಿಜಗನ್ಮಯ ೩
ವರಕಾರ್ಕಳಪುರ ಗುರು ವೆಂಕಟಪತಿ
ಚರಣಾಗ್ರೇ ವಿರಾಜ
ಹರಿ ಲಕ್ಷ್ಮೀನಾರಾಯಣ ನಿಜಪದ
ಶರಣಭರಣಯುತ ಕರುಣಾಕರ ೪

೨೨೨
ಶ್ರೀಕರ ನೀನೆ ಗತಿಯಲ್ಲದೆ ಬ್ಯಾರಾಕರವಿಲ್ಲ ಕೃಪಾಕರನೆ
ಭೀಕರದೋರುವ ಬಹುವಿಧ ದುರಿತ
ನಿರಾಕರಿಸಯ್ಯ ಪರಾಪರನೆ ಪ.
ರಾಜಿಕ ದೈಹಿಕ ದೈವಿಕರೆಲ್ಲ ಮ-
ಹೋಜಸ ನಿನ್ನೊಶವಾಗಿಹವು
ಪೂಜಿಸದೆನ್ನ ಸಭಾಜಿಸು ಮಂಗಲ
ಭಾಜನ ಶತ್ರು ಪರಾಜಯ ಮಾಡಿಸು ೧
ಹಲವಂಗದಿ ನಾ ಬಳಲುವ ಚಿಂತೆಯು
ತಿಳಿಯದೆ ಚಿನ್ಮಯ ಜಲಜ
ಸುಲಭದಿ ಸಂಪತ್ಫಲಗಳ ವರ್ಧಿಸಿ
ನೆಲೆದೋರೆನ್ನೊಳು ಸುಕಟಾ ೨
ರೋಗಭಯಂಗಳ ನೀಗುತ ಭಕ್ತಮ-
ನೋಗತ ಫಲಸಂಯೋಗಗಳ
ಬೇಗದಿ ನೀಡು ಕರಾಗತ ಮಾಡು ಸು-
ನಾಗ ಗಿರೀಂದ್ರ ಸರಾಗ. . . . . . ೩

೭೭
ನರಸಿಂಹಾವತಾರ
ಶ್ರೀದ ಶಂಕರ ಹೃದಯ ಕಮಲ ಸ
ಮಾಧಿರೂಢ ಪದಾಬ್ಜ ಪೂರ್ಣ ಸು
ಬೋಧ ಶಿಷ್ಯ ಜನಾರ್ತಿ ಭಂಜನ ಮಾಧವ ಮುರಾರೆ
ವ್ಯಾಧಿ ಪೀಡೆಯ ಪರಿಹರಿಸು ಮಹ
ದಾದಿ ತತ್ವಯಂತ್ರೆ ನುತ ಪ್ರ
ಲ್ಹಾದ ರಕ್ಷಕ ನರಹರಿಯೆ ದಹಿಸಖಿಳ ಶತ್ರುಗಳ ೧
ಪ್ರಳಯಕಾಲದ ರವಿ ಸಮೂಹದ
ಕಳೆಗು ಮಿಗಿಲಾಗಿರುವ ಮುಖದೊಳ್
ಥಳತಳಿಪ ದಂಷ್ಟ್ರಗಳ ತೋರುತ ಕಳೆದು ವದನವನು
ಛಲದಿ ಚೀರುತ ದಾನವನ ಕಂ-
ಗಳನು ಮುಚ್ಚಿಸಿ ಪಿಡಿದು ತಿಕ್ಕಿದ
ಬಲ ಪಯೋನಿಧಿ ನರಹರಿಯೆ ದಹಿಸಖಿಳ ಶತ್ರುಗಳ ೨
ಕಂಭದೊಳಗಂದಾದ ರವ ಕೇ-
ಳ್ದಂಬುಜಾಸನ ಮುಖ್ಯ ದಿವಿಜ ಕ-
ದಂಬ ಭಯಗೊಂಡಂಬರದ ಮೇಲಿಂಬುಗೊಂಡಿರಲು
ಜಂಭ ವೈರಿಯ ಜರಿದು ಕೆಡಹಿದ
ಕುಂಭಿ ಕುಂಭ ಭುಜದ್ವಯನ ಮುರಿ
ದಂಬುಜಾಲಯರಮಣ ನರಹರಿ ದಹಿಸಖಿಳ ಶತ್ರುಗಳ ೩
ಅಡಿಯಿಡುವ ರಭಸಕೆ ದಿಗಿಭಗಳು
ನಡು ನಡುಗಲು ನಿಶಾಮುಖದಿ ಕೆಂ
ಗಿಡಿಯನುಗುಳುತಲಾದಿ ದೈತ್ಯನ ಪಿಡಿದು ಖತಿಯಿಂಗ
ತೊಡೆಯೊಳಿಕ್ಕೀರೈದು ಖರತರ
ಕೊಡಲಿಯಂತಿಹ ನಖಗಳಿಂದ
ನೊಡಲ ಬಗೆದಿಹ ನರಹರಿಯೆ ದಹಿಸಖಿಳ ಶತ್ರುಗಳ ೪
ವರರಥಾಂಗಾದಿಗಳ ದ್ವಾದಶ
ಕರದಿ ಧರಿಸುತಲೆರಡು ಕರದೊ
ಳ್ಕರುಳಮಾಲೆಯ ಪಿಡಿದು ಮಿಕ್ಕಾದೆರಡು ಹಸ್ತಗಳ
ಬೆರಳ ಕೊನೆಗಳ ತಿರುಹಿ ದಾನವ
ಸುರವರನಖ ಮುಖದಿಂದ ಬಿಚ್ಚಿದ
ನಿರವಧಿಕ ಬಲಪೂರ್ವ ನರಹರಿ ದಹಿಸಖಿಳ ಶತ್ರುಗಳ ೫
ದತ್ತ ಸ್ವಾತಂತ್ರ್ಯವನು ಮೀರ್ದಾ
ಪತ್ತು ಘಟಿಸುವ ಕಾಲದಲಿ ಪುರು-
ಷೋತ್ತಮನ ನೆನೆದವರ ಕೈಪಿಡಿದೆತ್ತುತಿಹನೆಂದು
ನಿತ್ಯ ಶಾಸ್ತ್ರಾದಿಗಳ ಶೋಧಿಸು
ತುತ್ತುಮರು ಮೊದಲೆಂದ ಪೌರಾ-
ಣೋಕ್ತಿಗಳ ನಿಜದೋರು ನರಹರಿ ದಹಿಸಖಿಳ ಶತ್ರುಗಳ ೬
ಶೇಷಶಿಖರನಿವಾಸ ತತ್ಪದ
ದಾಸರನು ಕಾಪಾಡಿ ಸಲಹುವ
ಭಾಷೆಯನು ನೀ ಮರೆಪರೆ ಮದುಪಾಸ್ಯ ಸರ್ವೇಶ
ಈಷದಂಜದ ದ್ವೇಷಿ ದುರ್ಜನ
ನಾಶಗೈಸುವುದುಚಿತವೈ ಸವ
ಕಾಶವ್ಯಾತಕೆ ನರಹರಿಯೆ ದಹಿಸಖಿಳ ಶತ್ರುಗಳ ೭

ಔತ್ತರೇಯನ ಕಾಯ್ದು ದ್ರೌಣಿ
೩೪
ಶ್ರೀಧರಾಕರ ಕಂಜ ಸೇವಿತ
ಪಾದ ಪದ್ಮಜ ಪದದ ಪುರು ಕರು-
ಣೋದಧಿಯೆ ಲಾಲಿಪುದು ಪಾಮರನೆಂಬ ಬಿನ್ನಪವ
ಸೋದರ ಸ್ಥಿತ ಸಕಲ ಬ್ರಹ್ಮಾಂ-
ಡಾದಿ ಪತಿ ನೀನರಿವಿಯಾದರು
ಮಾಧವನೆ ಮನದಿರವ ಪೇಳ್ವೆನು ಮನುಜಭಾವದಲಿ ೧
ಏಸುಜನ್ಮದ ಸುಕೃತ ಫಲವೋ
ದೋಷದೂರನೆ ನಿನ್ನ ಪದವನು
ಮೀಸಲಳಿಯದೆ ಸೇವೆ ಮಾಳ್ವದು ಲೇಸುಲೇಸೆಂದು
ದಾಸಕೂಟದಿ ಸೇರಿ ಮನೆಯಲಿ
ವಾಸವಾಗಿರಲಿದರ ಮಧ್ಯಮ
ರಾಶೆ ಬಲೆಯಲಿ ಸಿಲುಕಿದೆನು ಕರುಣಾ ಸಮುದ್ರಹರಿ ೨
ತನ್ನಿಕೃಷ್ಟ ಮನೋವಿಕಾರಗ-
ಳಿನ್ನು ಬಿಡದಲೆ ಪೀಡಿಸುವ ಪರಿ
ಯನ್ನು ಪರಮ ಕೃಪಾಳು ನೀನೆಂದೊರವೆನಖಿಳೇಶ
ಮಾನ್ನವರ ಮಧ್ಯದಲಿ ಮಾನದಿ
ಎನ್ನ ಕಾಪಾಡುವದು ಭಾರವೆ
ತನ್ನ ಫಲಗಳ ತಾನೆ ಕೆಡಹುವದುಚಿತವೇ ತೆಗೆ ೩
ಯುಕ್ತಿಯಲಿ ನಿನ್ನಂಥ ದೇವರ
ನೆತ್ತ ನೋಡಲು ಕಾಣೆ ದಾನವ
ರೆತ್ತಿ ವೈದಮೃತವನು ಸುಲಭದೊಳಿತ್ತೆ ದಿವಿಜರಿಗೆ
ಔತ್ತರೇಯನ ಕಾಯ್ದ ದ್ರೌಣಿಯ
ನೆತ್ತಿಯೊಳಗಿನ ರತ್ನ ಭೀಮನಿ
ಗಿತ್ತ ಪರಿಯನು ಪಠಿಸಿ ತಿಳಿದೆನು ಪಾವನಾತ್ಮಕನೆ ೪
ಬ್ರಹ್ಮತೇಜೋ ವೃದ್ಧಿ ಬಲಿಯೊಳು
ಬ್ಯಾಡ ಸಂಗರ ನಮಗೆನುತ ನಿ-
ಮ್ಮಮ್ಮನೊಳ್ ನುಡಿದಂದು ಕಶ್ಯಪನಿಂದಲವತರಿಸಿ
ಬ್ರಹ್ಮಚಾರಿಯ ರೂಪದಿಂದೀ
ಕ್ಷಮ್ಮೆಯನು ಸೆಳೆದಿಂದ್ರಗಿತ್ತಮ-
ಹಾನ್ಮಹಿಮ ನಿನಗಾವದಘಟಿತ ನೀರಜಾರಮಣ೫
ನಾರದರ ನುಡಿ ನಿಜವೆನುತ ಮೂ-
ರಾರು ಭಕ್ತಿಯ ತಾಳ್ದ ಮನುವಿನೊ-
ಳಾರುಭಟಿಸುತ ಕಾಶ್ಯಪನು ಮದವೇರಿ ನಿಂದಿರಲು
ಯಾರು ತಿಳಿಯದ ತೆರದಿ ಕಂಭದಿ
ತೋರಿ ನರ ಮೃಗ ರೂಪವನು ಹೆ-
ಮ್ಮಾರಿ ದೈತ್ಯನ ತರಿದು ತ್ವತ್ಪದವಿತ್ತೆ ದಾಸನಿಗೆ ೬
ಏನು ಶ್ರಮವಿಲ್ಲದಲೆ ಪಿಡಿದು ದ-
ಶಾನನನ ತೊಟ್ಟಿಲಿಗೆ ಕಟ್ಟಿ ಪ್ರ-
ವೀಣತೆಯ ತೋರಿಸಿದ ವಾಲಿಯ ಪಕ್ಷವನು ತ್ಯಜಿಸಿ
ದೀನ ಬಾಂಧವನೆಂಬ ಬಿರುದನು
ದಿಟವೆ ನಿಶಿತದ್ರಾಜ್ಯ ಪದವಿಯ
ಭಾನುಜನಿಗೊಲಿದಿತ್ತ ಭಕ್ತಜನಾರ್ತಿ ಭಂಜನನೆ ೭
ಶಬ್ದಗೋಚರವಾದ ಕಥೆಗಳು
ಬದ್ಧವೆಂಬುದು ಪೂರ್ವದನುಭವ
ಸಿದ್ಧವಾಗಿಹುದೆನಗೆ ಸಜ್ಜನಲಬ್ಧಪದ ಪದ್ಮ
ಬುದ್ಧಿಹೀನತೆಯಿಂದ ನುಡಿದರು
ಮಧ್ವವಲ್ಲಭ ನಿನ್ನ ದಾಸನ-
ನುದ್ಧರಿಸು ನೀನಲ್ಲದೆನಗಿನ್ನಾರು ಗತಿ ಹರಿಯೆ೮
ಒಡೆಯರೆಂಬರನೆಲ್ಯುಕಾಣದೆ
ಉಡುವದುಂಬುದಕೇನು ದೊರೆಯದೆ
ಗಿಡವ ನಿಲುಕದ ಬಳ್ಳಿಯಂದದಿ ಬಡುವ ಕಷ್ಟವನು
ತಡೆಯಲಾರದೆ ತಳಮಳಿಸುತಿರೆ
ಪಿಡಿದು ಕರವನು ಕಾಯ್ದೆಯೆನ್ನನು
ನುಡಿವದೇನಖಿಳಾಂಡ ನಾಯಕ ನಿನ್ನ ಮಹಿಮೆಯನು ೯
ಮಾರಿಯಂದದಿ ಮಧ್ಯದೊಳಗೊ-
ಬ್ಯಾರುವೇನೆಂಬಧಮ ಹೂಣನು
ತೀರಿಸುವೆನೆಂದೆನ್ನೊಳಿಲ್ಲದ ದೂರ ಸಂಗ್ರಹಿಸಿ
ಗಾರಗೊಳಿಸುವದರಿತು ಕಕ್ಷವ
ಹಾರಿಸುತ ಸುರವಂದ್ಯ ಮೂರ್ತಿಯ
ತೋರಿ ತಂದಿಲ್ಲಿರಿಸಿ ಪೊರೆದವನ್ಯಾರು ಪೇಳ್ದೊರೆಯೆ ೧೦
ಶ್ರೀಶ ನಿನ್ನ ಪದಾಬ್ಜ ಪೊಗಳುವ
ದಾಸ ಕೂಟದಿ ಸೇರಿ ಸೇವೆಯ
ಬ್ಯಾಸರದೆ ನಡೆಸುತಿರೆ ಮತ್ತೊಬ್ಬಾಸುರನ ತೆರದಿ
ದ್ವೇಷದಿಂದಿರೆ ದೂರ ಓಡಿಸಿ
ದುರಿತ ಭಯಗಳ ಪರಿಹರಿಸಿದ ಮ-
ದೀಶ ನೀನೆಂದನವರತ ನಂಬಿರುವೆ ಶ್ರೀಪತಿಯ ೧೧
ಇಷ್ಟು ಪರಿಯಿಂದೆನ್ನ ರಕ್ಷಿಸು-
ತಿಷ್ಟ ಫಲಗಳನೀವ ವೆಂಕಟ
ಬೆಟ್ಟದೊಡೆಯನೆ ಬೇಡಿಕೊಂಬುವೆ ಒಂದು ಕೃತ್ಯವನು
ದುಷ್ಟ ಮಾನವ ನುಡಿಯಕಾಡನು
ಸುಟ್ಟು ಸೂರೆಯಗೈದು ನಾ ಮನ
ಸಿಟ್ಟ ತೆರದಲಿ ತೋರು ಚಿತ್ತವ ಸೃಷ್ಟಿಕರ ಶ್ರೀಶ ೧೨

೨೦೩
ಶ್ರೀನಿಕೇತನ ಲಕ್ಷ್ಮೀ ಕಾಂತನ ಪದಪದ್ಮ
ಧ್ಯಾನ ಮಾಡುತ ಎನ್ನ ಸ್ಥಿತಿಯ
ದೀನಭಾವನೆಯಿಂದಲೊರೆವೆನು ಗುರುಪವ
ಮಾನ ಪಾಲಿಸಲಿ ಸನ್ಮತಿಯ ಪ.
ತಾನು ತನ್ನದೆಂಬ ಹೀನ ಭಾವನೆಯಿಂದ
ನಾನಾ ಯೋನಿಗಳಲ್ಲಿ ಚರಿಸಿ
ಮಾನವ ಜನ್ಮವನೆತ್ತಲು ಮುಂದಾದ-
ದೇನೆಂಬೆ ಗರ್ಭದೊಳುದಿಸಿ ೧
ಮಾತಾಪಿತರುಗಳು ಮೋಹದಿ ರಮಿಸಲು
ಕೇತ ತತಿಗೆ ಸರಿಯಾಗಿ
ಆತು ಬಂದಿಹೆನು ಗರ್ಭದಿ ಮೆಲು ನರ
ವ್ರಾತ ಬಂಧಕೆ ಗುರಿಯಾಗಿ ೨
ಸೇರಿದ ಕ್ರಿಮಿ ಪರಿವಾರ ಕಚ್ಚುತಲಿರೆ
ಚೀರಲಾದರು ಶಕ್ತಿಯಿರದೆ
ಭಾರ ವಸ್ತುವು ಕಣ್ಣಸಾರವು ತಡೆಯದೆ
ಗಾರುಗೊಂಡೆನು ಗರ್ಭದೊಳಗೆ ೩
ಮೂರರಾ ಮೇಲೆ ಮತ್ತಾರುಮಾಸಗಳಿಂತು
ಭಾರಿ ಭವಣೆಗೊಂಡು ಕಡೆಗೆ
ಭೋರನೆ ಭೂಮಿಗೆ ದೂರಿ ಬಂದೆನು ಮಲ
ಧಾರೆಯಾ ಕೂಡಿ ಮೈಯೊಳಗೆ ೪
ಹೇಸಿಗೆ ಮಲಮೂತ್ರ ರಾಶಿಯ ಒಳಗೆ ದು-
ರ್ವಾಸನೆ ಬರುವ ಗೆರಸಿಯ
ಹಾಸಿಗೆ ಒಳಗೆ ಹಾಕಿರುತಿರೆ ದೇಹದ
ಲೇಶ ಸ್ವಾತಂತ್ರ್ಯವೇನಿರದೆ ೫
ಮೂಸಿ ಮುತ್ತುವ ನುಸಿಮುತ್ಕುಣ ಬಾಧೆಗೆ
ಘಾಸಿಗೊಳುತ ಬಾಯ ತೆರದೆ
ದೋಷ ಶಂಕಿಸಿ ಮೈಯೊಳಿಕ್ಕಿದ ಬರೆಗಳ
ಬಾಸಲೆಯುನು ತಾಳ್ದೆ ಬರಿದೆ ೬
ನಾಲ್ಕು ಕಾಲುಗಳಿಂದ ನಾಯಿಗೆ ಪರಿಯಾಗಿ
ಸೋಕಿದೆ ಸರ್ವತ್ರ ತಿರುಗಿ
ಸಾಕುವ ಜನರೆಡಬಲಗಾಲ ತುದಿಯಿಂದ
ದೂಕಿದರಲ್ಲಿಯೆ ಸುಳಿದೆ ೭
ವಾಕುಗಳೆಂಬ ಕೂರಂಬನು ಸಹಿಸಿ ಪ-
ರಾಕೆಂದು ಪರರ ಸೇವಿಸಿದೆ
ಮಾಕಳತ್ರನೆ ನಿನ್ನ ಕೃಪೆಯಾದ ಬಳಿಕ ಮೋ-
ಹಾಕಾರ ಮಡುವಿನೊಳಿಳಿದೆ ೮
ಈಗಲಾದರು ದೇಹ ಭೋಗವೆ ಬಯಸುತ
ನೀಗಿದೆ ವ್ರತ ನೇಮಾದಿಗಳ
ಸಾಗದ ಫಲ ತನಗಾಗಬೇಕೆಂಬ ಮ-
ನೋಗತಿಯಿಂದ ಕರ್ಮಗಳ ೯
ಮೂಗಭಾವನೆಯನ್ನು ನೀಗದೆನಿಸಿ ಮುಂ-
ದಾಗಿಯಾಡುವೆ ಮಥನಗಳ
ಕಾಗೆಯು ಕುಂಭದ ಜಲ ಕುಕ್ಕುವಂತೆ ಬೆಂ-
ಡಾಗಿ ಕೊಂಡೆನು ಝಗಳಗಳ ೧೦
ಕಂತುಜನಕ ಕಂಜನಾಭ ವೆಂಕಟರಾಜ
ಚಿಂತಾಮಣಿ ಸುರತರುವೆ
ಎಂತಾದರು ನಿನ್ನ ದಾಸ್ಯ ಸೇರಿದ ಮೇಲೆ
ಇಂತುಪೇಕ್ಷಿಸುವುದು ಥರವೆ ೧೧
ಭ್ರಾಂತಿ ಎಂಬುದ ಬಿಡಿಸಿನ್ನಾದರು ಲಕ್ಷ್ಮೀ
ಕಾಂತ ಕಾರುಣ್ಯ ವಾರುಧಿಯೆ
ಚಿಂತಿತದಾಯಿ ಎನ್ನಂತರಂಗದಿ ಬೇಗ
ನಿಂತು ನಲಿಯೋ ನಿತ್ಯ ವಿಧಿಯೆ ೧೨

೨೯೧
ಶ್ರೀನಿಕೇತನ ಸರ್ವಪತಿಯು ಸಕಲ ಸಜ್ಜನಾನಂದ
ಕರುಣಾ ಮೂರುತಿಯ ಕಂಠೇಧೃತ ಸತಿಯ
ಮಾನಸ ವಿರಚಿತ ಮಣಿ ಮಯ ಪೀಠದಿ
ಧ್ಯಾನಿಸಿ ಪರಮಾನುರಾಗದಿ ಪಾಡುತ
ಮಾನಿಸಿ ಕರೆವೆ ಮುದದಿಂದ ಶೋಭಾನೆ ೧
ಸಕಲ ಲೋಕಾಧಿನಾಥ ದೇವಾ
ಸೃತಿ ವನ ವಿಧಿ ನಾವ
ವಿಕಸಿತ ಮುಖ ಕಂಜಭಾವ ಭಕ್ತರ ಸಂಜೀವ
ಮಕರ ಕುಂಡಲ ಶುಭ ಮುರುವಿಲಾಸಿತ
ಮುಕುರ ಕಪೋಲ ಸುಶೋಭಿತ ಕರುಣದಿ
ಭಕುತಿಯನಿತ್ತು ದಯವಾಗು ೨
ಕಂಧರಲಂಬಿ ವನಮಾಲಾ ಮಧ್ಯಸ್ಥ
ಕೌಸ್ತುಭೇಂದಿರಾಸಕ್ತ ವಕ್ಷೋಲೀಲ
ಕರುಣಾಲವಾಲ ಬಂದಹರಾರಿದ
ರೆಂದಿವರ ಶುಭಾನಂದ ಕಾದಿದರ
ಸುಂದರ ಶುಭಕರ
ನಿಂದೀ ಮಂಟಪಕೆ ದಯವಾಗು ೩
ವಿಧಿಯಾಸನಾದ ಕಂಜನೆ
ಗದಾ ಗಂಭೀರ ವೃತ್ತ
ಮೃದು ನಾಭ ವಾಸಃ ಶೋಭ
ಕರ ಭೋರ್ವಬ್ದಾಭ
ನದಿಯ ಪಡದ ಶುಭ ಪದಯುಗ ಕಂಜವ
ಹೃದಯದಿ ತೋರುತ
ಸದಯದೊಳಗರಿಗಳ ಸದೆವುತ ಹಸೆಗೆ ದಯವಾಗು ೪
ಆನಂದ ಪರಿಪೂರ್ಣ ಮೂರ್ತಿ ಸುರವರ ನುತಕೀರ್ತಿ
ಶ್ರೀನಿಧಿ ಪರಿಹರಿಸಾರ್ತಿ ಪರಿಪೂರಿಸುತರ್ಥಿ
ದೀನ ಬಂಧು ಸ್ವಜನಾನುಕಂಪ ಕರ್ಣಾನುಜಸಾರಥಿ
ಶೇಷ ಗಿರೀಶ ಸುಮ್ಮಾನವ್ಯಾಕಿನ್ನು ಹಸೆಗೇಳು ೫

೨೩೪
ಶ್ರೀನಿವಾಸ ನಿನ್ನ ಕರುಣಾ ಏನೆಂದು ಸ್ತುತಿಪೆ ಪ.
ಮಾನವರೊಳಗತಿ ಹೀನಬುದ್ಧಿಯಲಿ
ಏನೊಂದು ಮಾರ್ಗ ಕಾಣದೆ ಬಹು ಬಳಲಿ
ನಾನಾ ಚಿಂತೆಗಳಿಂದ ಧ್ಯಾನಿಪ ಸಮಯದಿ
ತಾನಾಗಿ ಕರುಣಿಸಿ ಮಾನ ಪಾಲಿಸಿದಿ ೧
ಹುಣಾರುವೆನ್ನನು ನಾನಾ ತರದೊಳು
ಮಾನಹಾನಿಯ ಮಾಡಿ ಮರಳಿ ಬಾಧಿಸಲು
ತಾನೆಂದು ಪೇಳುವರಿಲ್ಲದಂತಿರಲು
ನೀನೆ ಬಂದೊದಗಿ ರಕ್ಷಿಸಿದೆ ಕೃಪಾಳು ೨
ತದನಂತರದಲಿ ಕಷ್ಟದ ಬಾಧೆ ಸಹಿಸದೆ
ಮದರಾಶಿಯೆಂಬ ಪಟ್ಟಣಕೆ ನಾ ಸರಿದೆ
ಸದರವಲ್ಲೆಂದು ತಿಳಿದು ನಿನಗೊದರೆ
ವಿಧಿಪಿತ ನೀನಲ್ಯು ಪ್ರೇರಿಸಿ ಪೊರೆದೆ ೩
ಸಿರಿವರ ನಿನ್ನಯ ಪರಮ ಮಂಗಳಮೂರ್ತಿ
ಹರುಷದಿಂದಲಿ ನೋಡಿ ಬರಲು ನಾನಿಲ್ಲಿ
ದೊರೆತನದಲಿ ಮಾನಿತಪದಲ್ಲಿ
ಇರಿಸಿ ನಿರಂತರ ಕಾವುದ ಬಲ್ಲಿ೪
ಶರಣಾಗತ ರಕ್ಷಾಕರನೆ ಮಂದಿರದ
ವರನಾಗಿ ಸಲಹುವ ದೊರೆ ನಿನ್ನ ಬಿರುದ
ತರಳ ಬುದ್ಧಿಯೊಳೆಂತು ವರ್ಣಿಪೆ ವರದ
ಕರುಣಾ ಸಾಗರ ವೆಂಕಟಾದ್ರಿಯೊಳ್ಮೆರೆದ ೫

೧೯೦
ಶ್ರೀನಿವಾಸ ಪೂರಿಸಭಿಲಾಷ ಪ್ರಾಣ ಪಾಲೇಶ
ಏನಿದು ಸಾವಕಾಶ ಪ.
ಹಿಂದಿನ ಪ್ರಹ್ಲಾದ ಮೈಥಿಳ ಮತ್ತಜಾಮಿಗಳ ಭಾರತ ಕುಂಡಗೋಳ-
ಗಾಂದಿನೀಸುತ ಧ್ರುವ ಪಾರ್ಶದಿ ಅಂಬರೀಷಾದಿ ಭಕ್ತರುಗಳಂತೆ
ಇಂದಿರಾಧವನ ನಂಬಿದರಂತೆ ಸುಖಿಸಿದಂತೆ
ಎಂದೀ ಶ್ರುತಿ ಪುರಾಣಗಳ
ಇಂದು ನಾ ನಿಜವೆಂದು ಗ್ರಹಿಸಿದೆ ನಿನ್ನ ಬಯಸಿದೆ
ಆದರೆ ನನ್ನನು ಬರಿದೆ
ಸುಂದರಾಂಗ ನೀನುಪೇಕ್ಷಿಪೆ ಅತಿ ಪರೀಕ್ಷಿಪೆ
ಇದು ರೀತಿಯೆ ನಿನಗೆ೧
ಭೂಮಿಜನುಪಟಳಕಳಲುತ ಅತಿ ಬಳಲುತ
ಬಂದಡಿಗಡಿ ಇಡುತ
ಸಾಮಜವಾಹನ ಬೇಡಿದಭೀಷ್ಟ ನೀಡಿದ ಬಳಿಕಾತನು ನುಡಿದ
ಕಾಮಕ್ರೋಧವ ಮಾತುಗಳನ್ನು ಕೃತಾಘಗಳನ್ನು
ಒಂದನಾದರು ಮನಕೆ
ಶ್ರೀಮಹೀಯರಸ ನೀನೆನಿಸದೆ ತಪ್ಪ ಎಣಿಸದೆ
ಅಭಯವನಿತ್ತು ಪೊರೆದೆ
ನಾ ಮಾಡಿದಪರಾಧವು ಅತಿ ಸ್ವಲ್ಪವು ಅದಕೆಣೆಯಾಗದಿರಲು
ಕಾಮಜನಕ ನೀನೀ ತೆರದಲಿ ಮುನಿಸಿದರಿಲ್ಲಿ
ಪಾಲಿಪರ ಕಾಂಬೆನೆಲ್ಲಿ ೨
ಪಾರ್ಥಗೆ ಸಾರಥಿಯೆನಿಸುತ ರಥ ನಡಸುತ ಕುರುಸೇನೆಯೊಳಿರುತ
ತೀರ್ಥಪಾದ ನಿನ್ನ ವಿಗ್ರಹ ಕಂಡು ಆಗ್ರಹದಿಂದ ಗಾಂಗೇಯ ನಗುತ
ಸ್ವಾರ್ಥಗೋಸುಗ ನಿನ್ನ ಹಣೆಯಿಂದ ಕ್ರೂರ ಕಣೆಯಿಂದ
ಶೋಣಿತವ ಹರಿಸಲು
ಶಾತ್ರವ ಭಾವವ ಸಹಿಸದೆ ಚಕ್ರ ವಹಿಸಿದೆ ಸ್ವೀಯ
ನಿಯಮದ ತೊರಿದೆ
ಭಕ್ತವತ್ಸಲತೆಯ ತೋರಿದೆ ಸುಖವಾರಿದ ವೆಂಕಟಾದ್ರಿಯೊಳ್ಮೆರೆದೆ ೩

೧೬೭
ಶ್ರೀನಿವಾಸ ಭಕ್ತಪೋಷಣಭೂಷ ಮನ್ಮಂದಿರವಾಸ
ಶ್ರೀನಿವಾಸ ಪಾದಾತನ ಜನರನು
ಸಾನುರಾಗದೊಳ್ಮಾನಿಸಿ ಸಲಹುವ ಪ.
ಬಾಲತ್ವದಿಂದ ಬಹುವಿಧವಾದ ಭಕ್ತಿಯನಿತ್ತು
ಲಾಲಿಸಿ ಪೊರೆದ ಪೂಜ್ಯಪಾದ ಈ ಮಧ್ಯದೊಳಾದ
ಧಾಳಿಗಳನು ನಿರ್ಮೂಲಗೈದ ಕರು-
ಣಾಳು ರಾಜ ನಿನ್ನಾಳಾಗಿಹೆನು ೧
ಪಂಚಭೌತಿಕವಾದ ತನುವಿಂದ ಆಗುವ ತಪ್ಪ
ಕಿಂಚಿನ ವರದ ನೀ ದಯದಿಂದ ಕ್ಷಮಿಸೈ ಗೋವಿಂದ
ವಂಚಿಸಿ ದಾನವದಿತಿಜರ ಸುರರಿಗೆ
ಹಂಚಿದಿ ಸುಧೆಯನು ಶುಭಕರದಿಂದ ೨
ಕಮಲಾಬ್ಜಭವರುದ್ರೇಂದ್ರಾದಿಗಳು ಪಾದಯುಗ ಕಲ್ಪ
ದ್ರುಮ ನಿನ್ನ ನೆಳಲನಾಶ್ರೈಸಿಹರು ಕರುಣಾರಸದೋರು
ನಮಿಸುವೆ ಎಂಬೀ ಮಮತೆಯಿಂದ ಎ-
ನ್ನಮಿತಪರಾಧವ ಕ್ಷಮಿಸುವ ಹರಿಯೆ ೩
ಇಂದ್ರಿಯಂಗಳ ಭಾವನೆ ಬಹುಘೋರ ಅದರಲ್ಲಿ ಮುಳುಗಿದ-
ರಿಂದಿರಾಧವ ನೀನೆ ಬಹುದೂರ ಆ ರೀತಿಯ ಭಾರ
ಹೊಂದಿದ ದಾಸರಿಗೆಂದು ತಾರಾ-
ಮಂದರಾದ್ರಿಧರಾ ಮಾಧವಧೀರ ೪
ಚರಣ ಸಂಸ್ಮರಣೆ ಮಾತ್ರ ಬೇಕು ಇದರಿಂದ ಸರ್ವ
ಪುರುಷಾರ್ಥ ಲಬ್ಧಿಗಿನ್ನು ಸಾಕು ಇರುವುದೆ ಈ ನಾಕು
ಉರಗ ಗಿರೀಂದ್ರನ ಶಿರದಲಿ ಮಂಡಿಸಿ
ಮೆರೆವ ಸುಖಾಂಬುಧಿ ಸುರವರ ನಾಥ೫

೧೮೯
ಶ್ರೀನಿವಾಸ ಸುಜನೋದ್ಧಾರ ಏನು ತಾತ್ಸಾರ
ನಾನು ನಿನ್ನ ದಾಸನೆಂದು ಮಾನವರು ನುಡಿದ ಮೇಲೆ ಪ.
ಪುಟ್ಟಿದಾಕ್ಷಣಾದಿಯಾಗಿ ದುಷ್ಟಸಂಗಕೊಳಗಾಗಿ
ನಷ್ಟಪ್ರಜ್ಞೆಯಿಂದ ಬಹು ಕಷ್ಟಿಯಾದೆನು
ಕೃಷ್ಣ ಶಬ್ದ ವಾಚ್ಯಪರಮೇಷ್ಠಿ ಜನಕ ನಿನ್ನ ಮನ
ಮುಟ್ಟಿ ಭಜಿಸದೆ ಬಯಲೆಷ್ಟವ ಬಯಸುವೆನಲ್ಲೊ ೧
ದಾನಧರ್ಮ ಜಪತಪ ಮೌನ ಮೊದಲಾದ ಸ-
ತ್ಸಾಧನ ಹೀನನಾದರು ನಿನ್ನಾನುರಾಗದಿ
ಮನಮುಟ್ಟಿ ಕ್ಞಣವಾದರು ಧ್ಯಾನಿಸಲು ಸಕಲವಂದ್ಯ
ಮುನಿಗಮ್ಯ ಪದವನೀವಾತನು ನೀನೆಂದೊಂದೆ ತಿಳಿದೆ ೨
ಮನವಚನ ಕಾಯಕಾದನುದಿನ ಕೃತವಾದ
ಘನ ಪಾಪಂಗಳಿಗೆ ನಾ ಕೊನೆಗಾಣೆನು
ದನುಜಾರಿ ರಾಮ ಅನಿಮಿತ್ತಬಂಧು ಎಂಬ
ಘನತೆ ತೋರಿಸಿ ನಿನ್ನ ತನಯನೆಂದೆಂನ ಸಲಹೊ ೩
ವೀರವೇದೋದ್ಧಾರ ವರಮಂದರಧರ ನರ
ಹರಿಕುಬ್ಜಾಕಾರ ಪೃಥ್ವೀಭಾರವಾರಕ
ವಾರುಧಿ ಬಂಧಕಯದು ವೀರ ತ್ರಿಪುರ ಸ್ಮರ
ಹರನಿಂದ ತರಿಸಿದ ತುರಗವೇರಿದ ಧೀರ ೪
ಮಂದಮತಿಯಾದ ಎನ್ನ ಬಂಧುವಾಗಿ ಕೈಯ ಪಿಡಿದು
ಮುಂದು ಗಾಣಿಸುವೆನೆಂದು ಹಿಂದೆ ರಕ್ಷಿಸಿ
ಇಂದು ಎನ್ನ ಕುಂದನೆಣಿಸಿ ತಂದೆ ನೀನುಪೇಕ್ಷಿಸಲು
ಮುಂದೆ ಕಾಯ್ವರಾರೊ ಕರುಣಾಸಿಂಧು ಅನಿಮಿತ್ತ ಬಂಧು ೫
ಮಾನಗೇಡಿನಿಂದ ದ್ವೇಷಿ ಮಾನವಾಧಮರ ಮುಂದೆ
ಶ್ವಾನಕಿಂತ ಕಡೆಯಾಗಿನ್ನೇನು ಮಾಡಲೊ
ನೀನೆ ಗತಿಯೆಂಬ ಮನೋಧ್ಯಾನದಿಂದ ಬಂದೆ ನಿಂದು
ಕಾನನದ ಶಿಶುವಿದೆಂದು ಮಾನಿಸಿ ರಕ್ಷಿಸೊ ತಂದೆ ೬
ಘಾಸಿಗೊಳಿಸುತೀ ಆಶಾಪಾಶದಿಂದ ಎನ್ನ ಬಿಡಿಸಿ
ದಾಸರ ದಾಸ್ಯವನಿತ್ತು ಪೋಷಿಸೆನ್ನುತ
ಶೇಷ ನಗವಾಸ ವೆಂಕಟೇಶ ನಿನ್ನ ಬಳಿಗೆ ಬಂದು
ಮೀಸಲಾಗಿಹೆನು ಶ್ರೀನಿವಾಸ ಬೇಗ ಸಲಹೊ ಬಂದು ೭

ಲಕ್ಷ್ಮೀದೇವಿಯ ಪ್ರಾರ್ಥನೆ
೧೧೦
ಶ್ರೀನಿವಾಸನ ಕರುಣಾನು ಸಂಸರಣಿ
ಜ್ಞಾನ ಭಕ್ತಿಗಳನ್ನು ಪಾಲಿಸಂಭರಣಿ ಪ.
ಅಜಭವಾದಿಗಳಿಗೆ ನಿಜಪದದಾಯಿನಿ
ವೃಜಿನ ಸಮೂಹ ನಿವಾರಿಣಿ
ಕುಜನ ಕುಠಾರಿಣಿ ಕುಂಜರ ಗಮನೆ ಪಾಲು
ದಧಿವಾಸನ ಕೂಡಿ ಸದನದಿ ನೆಲೆಗೊಳ್ಳೆ ೧
ಆರಿಗೆ ನಿನ್ನ ಕರುಣಾರಸ ದೊರೆವದೊ
ದೂರಾಗುವುದವರ ದುರಿತಂಗುಳು
ನೀರಜಾಲಯೆ ನಿನ್ನ ಸೇರಿಕೊಂಡಿಹ ಎನ್ನ
ವೈರಿ ಜನರು ಬೇಗ ಗಾರಾಗದುಳಿವರೆ ೨
ನೀನೊಲಿಯಲೂ ಸರ್ವ ಮಾನವರೊಳಗತಿ
ಮಾನ ಮಹತ್ವಾದಿ ಸದ್ಗುಣವೂ
ತಾನಾಗಿ ಬರುವವಿಂನೇನೆಂದು ನಿನ್ನ ಮಹಿ-
ಮಾನು ವರ್ಣನೆ ಮಾಳ್ಪೆ ದೀನ ದಯಾಕಲೆ ೩
ಮಂದಿರದೊಳಗೆ ನೀ ನಿಂದು ನಗುತ ನಲಿ
ವಂದ ನೋಡುತ ಮಿತ್ರ ಬಂಧುಗಳು
ಮಂದರಧರ ತಾನೆ ನಿಂದು ರಕ್ಷಿಸನೆಂದಾ
ನಂದ ಪೂರಿತ ಮನದಿಂದ ಸೇರಿರುವರು ೪
ಸರಸಿಜನಾಭ ಶ್ರೀಹರಿಯು ನಿನ್ನನ್ನೆ ಮುಂ
ದಿರಿಸಿ ಚತುರ್ವಿಧ ಪುರುಷಾರ್ಥವಾ
ಕರುಣಿಪೆನೆಂದು ಕಂಠಸರದ ಮಧ್ಯೂರದಲಿ
ಧರಿಸಿ ಶೋಭಿಪ ಶೇಷಗಿರಿವರ ಶಿಖರದಿ ೫

೩೦
ಶ್ರೀಪತಿ ಭಯಹಾರಿ ರಕ್ಷಿಸು ತಾಪತ್ರಯವಾರಿ
ಕೋಪಲೇಶನ ಮನೋನುಪಹಾರಿ ಭೂಪತಿರೂಪವಿಹಾರಿ ಪ.
ಸಕಲ ಭುವನ ಕರ್ತ ಕೇಶವ ಅಖಿಳ ಜನನಿ ಭರ್ತಾ
ಭಕುತ ಪಾಲನ ಮಹಾಧುರಧರ್ತಾ
ಭಕುತಿಯ ಪಾಲಿಸು ಭಯ ಪರಿಹರ್ತಾ ೧
ಕಾಮಿತ ಫಲದಾಯಿ ತುಲಸೀಧಾಮ ಶೇಷಶಾಯಿ
ತಾಮರಸಾಸನ ದೇವನ ತಾಯಿ
ಶ್ರೀ ಮಹೇಶನೀ ತ್ವರಿತದಿ ಕಾಯಿ೨
ನಾಗಭೂಧರೇಶ ಕರುಣಿಸು ಬೇಗದಿ ಸರ್ವೇಶ
ರಾಗ ರೋಗ ಗಣ ನೀಗು ನಿನ್ನಡಿಗೆ
ಬಾಗುವೆ ಲಕ್ಷ್ಮೀಶ ೩

೧೫೩
(ಶ್ರೀಪಾದರಾಯರ ಪ್ರಾರ್ಥನೆ)
ಶ್ರೀಪಾದ ಭೂಪ ಶ್ರುತಿಸಲ್ಲಾಪ
ಗೋಪಿನಾಥ ಪದ ಪಂಕಜ ಮಧುಪ ಪ.
ವ್ಯಾಸ ಮುನೀಂದ್ರಾರ್ಪಿತ ಶುದ್ಧ ತಂದ್ರ
ದಾಸನ್ನ ಮಾಡೆನ್ನ ಸರ್ವಸ್ವತಂತ್ರ ೧
ಶುದ್ಧ ವೇದಾಂತಾಂಬುಧಿಯನ್ನು ಕಡೆದೀ
ಮಧ್ಯ ನಾಮಾಮೃತ ಮೇಲೆತ್ತಿ ಸುರಿದೀ ೨
ಪತಿತ ಪಾವನ ವೆಂಕಟೇಶನ ಬಹುವಿಧ
ಸ್ತುತಿಯಿಂದ ಲೋಲಿಸಿದ ಯತಿ ಕುಲದೀಪ ೩

೩೮೧
ಶ್ರೀಮದನಂತಸ್ವಾಮಿ ರಕ್ಷಿಸು ಪುಣ್ಯ-
ನಾಮ ಸರ್ವಾಂತರ್ಯಾಮಿ ಪ.
ಸೋಮಾರ್ಕಕಾಮಸೂತ್ರಾಮ ಪ್ರಮುಖಸುರ-
ಸ್ತೋಮವಂದಿತ ಭೀಮಬಲ ಗುಣ-
ಧಾಮ ವರನಿಸ್ಸೀಮ ಮಹಿಮನೆ ಅ.ಪ.
ಅಂತರ್ಬಹಿವ್ರ್ಯಾಪ್ತನೆ ಸತತ ರಮಾ-
ಕಾಂತಗೆ ಪರಮಾಪ್ತನೆ
ಚಿಂತಿಪ ಭಕ್ತರ ಚಿಂತಾಮಣಿ ನಿ-
ಶ್ಚಿಂತನೊಂದೆ ಶಿರದಿ ಸಾಸವೆ-
ಯಂತೆ ಲೋಕವನಾಂತುಕೊಂಡಿಹೆ ೧
ರಾಮನ ಸೇವೆಗಾಗಿ ಲಕ್ಷ್ಮಣನೆಂಬ
ನಾಮವ ತಾಳ್ದ ಯೋಗಿ
ಯಾಮಿನೀಚರರ ನಿರ್ನಾಮಗೈದ ವೀರಲ-
ಲಾಮ ನಿರ್ಜಿತಕಾಮ ಸಜ್ಜನ-
ಪ್ರೇಮ ಭೌಮ ನಿರಾಮಯನೆ ಜಯ ೨
ಸಂಕರ್ಷಣ ಸುಗುಣಾ-ಭರಣ ನಿ-
ಶ್ಯಂಕ ವೈರಿಭೀಷಣ
ಶಂಕರಾದಿಸುರಸಂಕುಲನುತಪಾದ-
ಪಂಕಜನೆ ತಾಟಂಕಗೋಪಾ-
ಲಂಕೃತಾಂಗ ಶುಭಂಕರನೆ ಜಯ ೩
ಸಾರತತ್ತ್ವಬೋಧನೆ ಶರಣುಜನ
ವಾರಿಧಿಚಂದ್ರಮನೆ
ಘೋರಭವಾರ್ಣವತಾರಕನಮಲ ಪಾ-
ದಾರವಿಂದದ ಸೌಂದರ್ಯ ನಿಜ
ಭೂರಿ ನೇತ್ರಗಳಿಂದ ಕಾಣುವೆ ೪
ಮಂಜುಳ ನಗರೇಶನೆ ಭಕ್ತಭಯ-
ಭಂಜನ ಸುವಿಲಾಸನೆ
ಕಂಜಾಕ್ಷಸಖ ಲಕ್ಷ್ಮೀನಾರಾಯಣನ ತೇಜಃ-
ಪುಂಜ ಭಗವದ್ಭಕ್ತಜನಮನೋ-ರಂಜನಾತ್ಮ ನಿರಂಜನನೆ ಜಯ ೫

೧೭೪
ಶ್ರೀರಮಣನೆ ಎನ್ನುದ್ಧಾರ ಮಾಡುವ ಪೂರ್ಣ
ಭಾರವೇ ನಿನಗಿಹದೊ
ಹೇರನೊಪ್ಪಿಸಿದಂಥ ಹಳಬ ವರ್ತಕಗೆ ಸ-
ರ್ಕಾರ ಸುಂಕಗಳುಂಟೆ ವಾರಿಜ ನಯನ ಪ.
ಆವ ಕಾಲಕು ಲಕ್ಷ್ಮೀಭೂವರ ತವ ಪಾದ
ಸೇವಕನಾಗಿಹೆನು ನಿನ್ನಲಿ ಮನೋ-
ಭಾವವಿರಿಸಿಹೆನು ನನಗುಸುರಲೇನು
ಜೀವನಕೆ ನೀನಿತ್ತ ಕರ್ತು-
ತ್ವಾವಲಿಗಳಿಂದೇನ ಮಾಳ್ಪದ
ನೀ ವಳಗೆ ನಿಂತಿದ್ದು ನಿನ್ನ ಕ-
ಲಾವಿಶೇಷದಿ ನಡಸಿ ನಟಿಸುವಿ೧
ಈ ಹದಿನಾಲ್ಕು ಲೋಕೇಶ ನೀ ಎನಗಿತ್ತ
ದೇಹವ ಧರಿಸಿಹೆನು ಇದರ ಸ-
ನ್ನಾಹವಾಗಿರುವುದನು ಸುಖದು:ಖಗಳನು
ಚೋಹಗೊಳದನುಭವಿಸಿ ಸುಖ ಸಂ-
ದೋಹಗೊಳಲ್ಯಾಡುತ್ತಿರೆ ಮುಂ-
ದಾಹ ಬಾಧೆಯ ಬಿಡಿಸಹಮ್ಮಮ
ಮೋಹ ಬಲೆಯನು ಕಡಿದು ಸಲಹುವ ೨
ಜನನಿ ಜನಕ ಗೃಹ ವನಿತೆ ಒಡವೆ ಭೂಮಿ
ಧನವಸ್ತ್ರ ಧಾನ್ಯಗಳು ನಾನಾ ವಿಧ
ವಿನಯದಿ ಸಂಪದವು ಸ್ವರ್ಗಾದಿ ಸುಖವು
ತನುಮನಗಳೊಡಗೂಡಿ ಮನ್ಮಥ
ಜನಕ ನಿನಗೊಪ್ಪಿಸಿ ನಿರಂತರ
ನೆನವೆ ನಿನ್ನ ಪದಾಬ್ಜಯುಗ್ಮವ
ವನರುಹಾಂಬಕ ವೆಂಕಟೇಶ್ವರ ೩

೧೧೧
ಶ್ರೀರಮಣಿ ದಯದೋರು ಬ್ರಹ್ಮ ಸಮೀರಜನ ನೀ ಬೇಗ
ಮೂರುತಾಪದ ದೂರಗೈಸಿ ಸರೋರುಹಾಕ್ಷನ ಸಾರಗೈಸುತ ಪ.
ಶ್ರೀನಿವಾಸನ ಸರ್ವಸೇವೆಯ ತಾನೆ ಮಾಳ್ಪೆನೆಂದು
ಭಾನುಕೋಟಿ ಸಮಾನಭಾಸ ವಿಮಾನವಾಗಿ ನಿಂದು
ಪಾನಶಯನ ಸುಗಂಧ ಮಾಲ್ಯ
ಮಹಾನಭೀಯ ಸಮಸ್ತ ವಸ್ತು ವಿ-
ಧಾನರೂಪಿಣಿಯಾಗಿ ಭಕ್ತಜನಾನುವರ್ತಿಯ ಭಾವ ಗ್ರಹಿಸಿದ ೧
ಹಾರಕಟಕ ಕಿರೀಟವರ ಕೇಯೂರ ಬಾಹುಪುರಿಯು
ಚಾರುತರ ಗಂಭೀರರವ ಶೃಂಗಾರದ ನೂಪುರವ
ಮಾರನೈಯ್ಯನ ಮುದ್ದು ಹಸ್ತದಿ ವಾನೈಜಾರಿಗದಾಬ್ಜರೂಪದಿ
ಸೇರಿ ಶೋಭಿಪ ಶಕ್ತಿ ನಿನ್ನ ಪದಾರವಿಂದವ ನಂಬಿ ನಮಿಪೆನು ೨
ಮಂದಮತಿಯಾದೆನ್ನ ಬಹುವಿಧ ಕುಂದ ನೋಡದಿಂದೂ ಹರಿ
ಚಂದನಾತ್ಮಕ ವೆಂಕಟೇಶನು ಬಂದಿಲ್ಲಿಹನೆಂದು
ಕುಂದು ಕೊರತೆಯ ಕಷ್ಟ ಬಲಮುರಿಯೆಂದು
ಮುನಿಜನವೆಂದ ಮಹಿಮೆಯ
ನಿಂದು ತೋರುತ ಸನ್ನಿಹಿತಳಾಗೆಂದು ಚರಣದ್ವಂದ್ವ ಪೊಗಳುವೆ ೩

೪೬೦
ಶ್ರೀರಮಾಧವಾಶ್ರೀತಜನಪಾಲಿತ
ಮಾರಕೋಟಿರೂಪ ವಾರಿಧಿಶಯನ
ಮುರಾರಿ ಕೇಶವ ಶ್ರೀಮ-
ನ್ನಾರಾಯಣ ನೀರಜದಳಲೋಚನಪ.
ಮಾನುಷತ್ವವಾಂತ ಸಮಯದಿ
ಹೀನ ಭೋಗದ ಚಿಂತೆ ನಾನು
ನೀನೆಂಬಾಭಿಮಾನದಿ ಮನಸು ನಿ-
ಧಾನವಿಲ್ಲದೆ ಅನುಮಾನದಿಂದಿಹುದೈ
ಏನು ಕಾರಣ ಹೃದಯನಳಿದೊಳು
ನೀನೆ ನೆಲಸಿಕೊಂಡೀ ನರಯೋನಿಗೆ
ನೀನೆ ಬರಿಸಿಯವಮಾನ ಬಡಿಸುವದು
ಊನವಲ್ಲವೆ ಪದದಾಣೆ ಸತ್ಯವಿದು೧
ಬಾಲಕತನದೊಳಗೆ ಕಾವ್ಯದ
ಶೀಲವಿತ್ತೆಯೆನಗೆ ಕೀಳುಮಾಡದೆ ಯೆನ್ನ
ಬಾಲಭೂಷಿತಂಗಳ ಕೇಳೈ
ಶ್ರೀಲಕ್ಷ್ಮೀಲೋಲ ವೆಂಕಟರಾಯ
ಕಾಲಕಾಲಪ್ರಿಯ ಪಾಲಿಸೊಲಿದು ಕರು-
ಣಾಲವಾಲ ನತಪಾಲಶೀಲ ಮುನಿ
ಜಾಲವಂದ್ಯ ವನಮಾಲದಾರಿ ಜಗ
ಮೂಲಸ್ವರೂಪ ವಿಶಾಲ ಗುಣಾರ್ಣವ೨
ಹಿಂದಾದುದನರಿಯೆ ಇದರಿಂ
ಮುಂದಾಗುವುದು ತಿಳಿಯೆ ಹಿಂದು
ಮುಂದಿಲ್ಲದೆ ಬಂಧನದೊಳು ಬಲು
ನೊಂದೆನೈ ನಿನಗಿದು ಚಂದವೆ ಶ್ರೀಹರಿ
ತಂದೆ ತಾಯಿ ಬಂದು ಬಾಂಧವ ಬಳಗ ನೀ
ನೆಂದು ನಿನ್ನಯ ಪದದ್ವಂದ್ವವ ಭಜಿಪಾ
ನಂದಸುಜ್ಞಾನದಿಂದೆಂದಿಗೂ ಸುಖ
ದಿಂದಿರುವಂದದಿ ತಂದೆ ನೀ ಪಾಲಿಸು೩
ಧಾರಿಣಿಗಧಿಕವಾದ ಮೆರೆವ ಕು
ಮಾರಧಾರೆಯ ತಟದ ಚಾರುನೇತ್ರಾವತಿ
ತೀರ ಪಶ್ಚಿಮ ಭಾಗ ಸಾರಿ
ತೋರುವ ವಟಪುರದೊಳು ನೆಲಸಿಹ
ವೀರ ವೆಂಕಟಪತಿ ವಾರಿಜನಾಭ ಖ-
ರಾರಿ ತ್ರಿದಶಗಣವಾರವಂದ್ಯ ಭಾ-
ಗೀರಥೀಪಿತ ದುರಿತಾರಿ ದೈತ್ಯಸಂ-
ಹಾರಿ ಶ್ರೀಲಕ್ಷ್ಮೀನಾರಾಯಣ ಹರಿ೪

೩೪೭
ಶ್ರೀರಾಮ ಜಯರಾಮ ಜಯತು
ಜಯತು ಸೀತಾರಾಮ ರಾಮ ಚರ-
ಣಾರವಿಂದದ ಭಕ್ತಿ ದೃಢವಾಗಿ ಕೊಡು ಜಯ ರಾಮ ರಾಮ
ಕ್ರೂರಕಾಮಾದಿಗಳ್ಸೂರೆಗೊಂಬರು ಸೀತಾರಾಮ ರಾಮ ರಾವ-
ಣಾರಿ ನೀನಲ್ಲದೆ ಯಾರಿಲ್ಲ ಗತಿ ಜಯ ರಾಮ ರಾಮ ೧
ಬುದ್ಧಿ ಜ್ಞಾನ ಶಕ್ತಿ ಸಿದ್ಧಿದಾಯಕ ಸೀತಾರಾಮ ರಾಮ ಗುಣ-
ವೃದ್ಧಿಕಾರಣ ಭಕ್ತಿಶ್ರದ್ಧೆಯ ಕೊಡು ಜಯ ರಾಮ ರಾಮ
ಬಿದ್ದೆನಜ್ಞಾನಸಮುದ್ರಮಧ್ಯದಿ ಸೀತಾರಾಮ ರಾಮ ಎನ್ನ-
ನುದ್ಧರಿಸುವರೆ ಪ್ರಸಿದ್ಧ ನೀನೆ ಜಯ ರಾಮ ರಾಮ ೨
ನಿನ್ನ ನಾಮವೆ ಪ್ರಸನ್ನ ಪಾವನ ಸೀತಾರಾಮ ರಾಮ ಸ-
ರ್ವೋನ್ನತ ಮಹಿಮವರೇಣ್ಯ ಶಾಶ್ವತ ಜಯ ರಾಮ ರಾಮ
ನಿನ್ನಾಧೀನವು ನಿಖಿಲ ಜಗವು ಸೀತಾರಾಮ ರಾಮ ಪರಿ-
ಪೂರ್ಣಾತ್ಪೂರ್ಣವರೇಣ್ಯ ಶಾಶ್ವತ ಜಯ ರಾಮ ರಾಮ ೩
ಸ್ವಾಂತರಂಗಭಕ್ತಿಚಿಂತಾಮಣಿ ಸೀತಾರಾಮ ರಾಮ ಆತ್ಮ-
ತಂತ್ರನಿಯಂತ್ರ ಸರ್ವಾಂತರಾತ್ಮಕ ಜಯ ರಾಮ ರಾಮ
ಭ್ರಾಂತಿ ತ್ಯಜಿಸುವುದಕೆಂತುಪಾಯವು ಸೀತಾರಾಮ ರಾಮ ಏ-
ಕಾಂತಸ್ಮರಣೆಯ ನಿರಂತರ ಕೊಡು ಜಯ ರಾಮ ರಾಮ ೪
ಮುಖ್ಯ ಸಚಿವ ಮಹಾ ಮುಖ್ಯಪ್ರಾಣನು
ಸೀತಾರಾಮ ರಾಮ ದುಷ್ಟ-
ರಕ್ಕಸಾಳಿಯ ಸೊಕ್ಕಡಗಿತು ಜಯ ರಾಮ ರಾಮ
ಕರ್ಕಶಕಲಿಕಾಲ ಮಿಕ್ಕಿ ಬಂದುದು ಸೀತಾರಾಮ ರಾಮ ಮನ-
ಸೊಕ್ಕಿ ಮೋಹದ ಬಲೆಗೆ ಸಿಕ್ಕಿಬಿದ್ದುದು ಜಯ ರಾಮ ರಾಮ ೫
ದಾಸಜನರ ಹೃದಯಸ್ಥಿತ ಸೀತಾರಾಮ ರಾಮ ಶ್ರೀನಿ-
ವಾಸ ನಿನ್ನವರಭಿಲಾಷೆಯ ಕೊಡು ಜಯ ರಾಮ ರಾಮ
ವಾಸವ ಮುಖ್ಯ ವಿಬುಧಾಸುರನುತ
ಸೀತಾರಾಮ ರಾಮ ಸಾಧು-
ವಾಸಸಂತೋ ಪ್ರಕಾಶವ ಕೊಡು ಜಯ ರಾಮ ರಾಮ ೬
ಜ್ಞಾನವಜ್ಞಾನವು ಭಾನುತಿಮಿರ ಸೀತಾರಾಮ ರಾಮ ಸತ್ಯ-
ಜ್ಞಾನ ಭಕ್ತಿಭಾಗ್ಯ ನೀನಿತ್ತು ಪೊರೆ ಜಯ ರಾಮ ರಾಮ
ಹೀನರೈವರು ಸ್ವಾಧೀನಗೊಂಬರು ಸೀತಾರಾಮ ರಾಮ ಪವ-
ಮಾನವಾಹನ ನಿನ್ನ ಧ್ಯಾನವ ಕೊಡು ಜಯ ರಾಮ ರಾಮ ೭
ಚಿತ್ತಕೆ ನಿಲವಿಲ್ಲ ಚಿಂತೆ ಹಲವು ಸೀತಾರಾಮ ರಾಮ ತವ
ಭೃತ್ಯನಾಗಿರುವ ಸದ್ಭಕ್ತಿಯ ಕೊಡು ಜಯ ರಾಮ ರಾಮ
ಬತ್ತಿಹೋಗಲಿ ಮೋಹದುತ್ತುಂಗಾರ್ಣವ
ಸೀತಾರಾಮ ರಾಮ ಪರ-
ವಸ್ತುತ್ವದೇಕಾಸಕ್ತಿಯ ಕೊಡು ಜಯ ರಾಮ ರಾಮ ೮
ಆಧಿವ್ಯಾಧಿ ಭವಾಂಬೋಧಿಕುಂಭಜ ಸೀತಾರಾಮ ರಾಮ ತವ
ಪಾದಾಂಭೋಜಪ್ರಸಾದಪಾಲಿಸು ಜಯ ರಾಮ ರಾಮ
ಸಾಧುಸಂಗಸುಖಬೋಧೆಯ ಕೊಡು ಸೀತಾರಾಮ ರಾಮ ಕಲಿ-
ಬಾಧೆ ಪರಿಹರಿಪ ಹಾದಿ ತೋರಿಸು ಜಯ ರಾಮ ರಾಮ ೯
ಧ್ಯಾನವಿರಲಿ ಎನ್ನ ಮಾನಸದಲಿ ಸೀತಾರಾಮ ರಾಮ ವಿಷ
ಯಾನುಭವದಿ ಬಲು ಹಾನಿಯಾದೆನು ಜಯ ರಾಮ ರಾಮ
ದೀನಜನರ ಕಾಮದೇನು ರಘುವರ ಸೀತಾರಾಮ ರಾಮ ಖಲ-
ದಾನವಾರಣ್ಯಕೃಶಾನು ಮಾನದ ಜಯ ರಾಮ ರಾಮ ೧೦
ದುಷ್ಟರ ಸಂಗದಿಂದೆಷ್ಟೊ ನೊಂದೆನು ಸೀತಾರಾಮ ರಾಮ ಸುವಿ-
ಶಿಷ್ಟರ ಸಂಗವ ಕೊಟ್ಟು ಸಲಹೊ ಜಯ ರಾಮ ರಾಮ
ಭ್ರಷ್ಟ ಪ್ರಕೃತಿಯನ್ನು ಕುಟ್ಟಿ ಕಳಚು ಸೀತಾರಾಮ ರಾಮ ಪರ-
ಮೇಷ್ಟ್ಯಾದಿ ಸುಮನಸರಿಷ್ಟದಾಯಕ ಜಯ ರಾಮ ರಾಮ ೧೧
ತನ್ನ ಕೇಡು ತಾನರಿಯದಾದೆ ಸೀತಾರಾಮ ರಾಮ ಸುಪ್ರ-
ಸನ್ನ ನಿನ್ನ ಸ್ಮರಣೆಯನಿತ್ತು ಪೊರೆ ಜಯ ರಾಮ ರಾಮ
ಹಣ್ಣೆಂದು ದೀಪವ ತಿನ್ನ ಪೋದೆನು ಸೀತಾರಾಮ ರಾಮ ಹೆಣ್ಣು
ಹೊನ್ನಿಗಾಗಿ ಪರವನ್ನು ಮರೆತೆ ಜಯ ರಾಮ ರಾಮ ೧೨
ನಿತ್ಯ ನಿನ್ನ ದಾಸ್ಯವಿತ್ತು ರಕ್ಷಿಸು ಸೀತಾರಾಮ ರಾಮ ಯಾವ-
ಚ್ಚಿತ್ತ ತವ ಧ್ಯಾನದಿ ತೃಪ್ತಿಯಾಗಲಿ ಜಯ ರಾಮ ರಾಮ
ಸತ್ಯಾತ್ಮರ ಸಂಗಸತ್ವ ವರ್ಧಿಸು ಸೀತಾರಾಮ ರಾಮ ಪರ-
ಮಾರ್ಥವಿಚಾರ ಸತ್ತತ್ತ್ವವರುಹು ಜಯ ರಾಮ ರಾಮ ೧೩
ಕರ್ತಾಕಾರಯಿತನು ಭರ್ತಾರನು ಸೀತಾರಾಮ ರಾಮ ಪುರು-
ಷಾರ್ಥರೂಪ ತವ ಭಕ್ತಿ ಪ್ರಾರ್ಥನೆ ಜಯ ರಾಮ ರಾಮ
ಪ್ರತ್ಯಗಾತ್ಮ ಮನೋವೃತ್ತಿಯೊಳಿರು ಸೀತಾರಾಮ ರಾಮ ಸ್ವಾಮಿ-
ಭೃತ್ಯನ್ಯಾಯದಿ ನಿಯಮಿಸುತ್ತ ನಡೆಸು ಜಯ ರಾಮ ರಾಮ ೧೪
ಅಕುಟಿಲ ಗುಣಗಳ ಪ್ರಕಟಿಸೆನ್ನೊಳು
ಸೀತಾರಾಮ ರಾಮ ವಾಯು-
ಸಖಸ್ಪರ್ಧಾತ್ಮಕ ಸಾಧುಪ್ರಕೃತಿಪಾಲಿಸು ಜಯ ರಾಮ ರಾಮ
ಲಕ್ಷುಮಿನಾರಾಯಣ ತ್ರಿಕಣಕುದ್ಧಾಮನೆ
ಸೀತಾರಾಮ ರಾಮ ಬ್ರಹ್ಮಾ-
ದ್ಯಖಿಳ ಚೇತನಾತ್ಮಕ ಸರ್ವೋತ್ತಮ ಜಯ ರಾಮ ರಾಮ ೧೫

೪೩
ಶ್ರೀವರ ಶುಭಗುಣನಿಚಯ ರಮಾಸ್ವದ
ಪಾಲಯ ಮಾಂ ಸತತಂ ಪ.
ನೀಲ ಮೇಘ ಶೋಭ ಸುಖ ಕಲ್ಲೋಲ ನಿತ್ಯಲಾಭ
ಲೋಲಾಂಬಕ ಕಮಲಾಲಯವರ ಕರು
ಣಾಲವಾಲ ಮಾತಾಲಿಸು ತ್ವರಿತದಿ ೧
ಮಂದಹಾಸದಿಂದ ಮೆಚ್ಚಿದ ಸುಂದರೇಶ ವೃಂದ
ಹೊಂದುತ ಹೊಸ ಪರಿಯಿಂದ ರಮಿಸಿ ಸ್ವಾ-
ನಂದವಿತ್ತ ಗೋವಿಂದ ಮುಕುಂದ ೨
ದಾಸಾನಂದಕರ ನಿತ್ಯವಿಲಾಸಿತ ಸುರನಿಕರ
ಶ್ರೀಶಯನ್ನನಕಲುಷಿತ ಪೂರಿಸು
ಶೇಷಗಿರಿಯ ಶ್ರೀವಾಸ ಪರಾತ್ಪರ ೩

೩೫
ಶ್ರೀಶ ಕರುಣಾಭೂಷ ಶ್ರೀನಿವಾಸ ರಕ್ಷಿಸು
ಆಶಾಲೋಭಜ್ಞಾನಮೋಹಪಾಶ ಬಿಡಿಸೋ ವೀಶಗಮನ ಪ.
ತಂದೆ ತಾಯಿ ಸಹಜ ಮುಖ್ಯ ಬಂಧ ಬಳಗವೆಲ್ಲವು ನೀ-
ನೆಂದು ತಿಳಿದು ಭರವಸದಿ ಇಂದು ನಂಬಿದೆ
ಇಂದಿರೇಶ ತನ್ನ ಮನಕೆ ಬಂದ ತೆರವ ಮಾಳ್ಪ ಭವ-
ಸಿಂಧು ಪೊತ್ತ ನಿನ್ನ ದಾಸನೆಂದು ತಿಳಿದಾನಂದಗೊಳಿಸು ೧
ನಿಗಮವೇದ್ಯ ನಿನ್ನೊಳಿರುವ ಅಘಟಿತಘಟನ ಶಕ್ತಿ
ಬಗೆಯ ತೋರಿ ಪೊರೆವಿ ಎನ್ನ ಮಗುವಿನಂದದಿ
ಅಗಣಿತಾನಂದ ಚಿದಾತ್ಮ ಜಗದಿ ನಿನ್ನ ಪೋಲ್ವ ಕರುಣಾ
ಳುಗಳನೆಲ್ಯೂ ಕಾಣೆ ಶಕ್ರಾದಿಗಳು ಸೇರುವರು ನಿನ್ನನೆ ೨
ಸರಸಿಜಾಕ್ಷ ಪಾದಪದ್ಮ ಸ್ಮರಣೆ ಮಾತ್ರದಿಂದ ಸರ್ವ
ಪುರುಷಾರ್ಥಂಗಳೆಲ್ಲ ಸೇರಿ ಬರುವುದೆಂಬುದಾ
ಅರಿಯದಂಥ ಮೂಢರೆಲ್ಲ ಬರಿದೆ ಬಯಲು ಭ್ರಾಂತಿಗೊಳಿಸುವ
ಉರಗ ಶಿಖರವಾಸ ನೀನೆ ದೊರೆಯೆಂದು ನಾನೊರೆವೆ ಶ್ರೀಶ ೩

೭೦
ಸಂಜೀವನೌಷಧ ಸುಲಭದಿ ದೊರೆತಮ್ಯಾ-
ಲಂಜುವದ್ಯಾಕಿನ್ನು
ಕುಂಜರ ವರದಾಯಿ ಕುಬ್ಜೆಗೊಲಿದ ನಮ್ಮ
ಕಂಜನಾಭನ ಪಾದಕಂಜರ ನೆನವೆಂಬ ಪ.
ಕಲಾನಿಯಮವಿಲ್ಲ ಕುಡಿದರೆ ಖೈಂಯಲ್ಲ
ನಾಲಿಗೆ ತುದಿಯೊಳಗಿರುವುದೆಲ್ಲಾ
ಸಾಲಾಗಿ ನಿಲುವುದು ಸರಿಯಾದ ವ್ರಯದಿಂದ
ಪಾಲಗಡಲನಾಥ ಪಾಲಿಸಿ ಕುಡಿಸುವ ೧
ವ್ಯತ್ಯಾಸದಿಂದಲಪಥ್ಯವಾಗದು ಭ್ರಮೆ
ಪಿತ್ತಶಾಂತಿಯನೀವುದು
ತುತ್ತು ತುತ್ತಿಗೆ ನಮ್ಮ ಸತ್ಯವರನ ಪೆಸ-
ರೆತ್ತಲು ಭವರೋಗ ಕತ್ತರಿಸುವ ದಿವ್ಯ ೨
ಅಡವಿಯೊಳಗೆ ಪೋಗಿ ಕಡಿದು ತರುವುದಲ್ಲ
ಅಡಿಗೆಗಿಕ್ಕುವ ಪಾಕ ಮಾಳ್ಪುದಲ್ಲ
ಕುಡಿದು ನೋಡಿದರತಿ ಕಡುಮಧುರವು ನಮ್ಮ
ಒಡೆಯ ವೆಂಕಟರಾಜನಡಿಗಳ ನೆನೆವೆಂಬ ೩

ಸಂಪ್ರದಾಯದ ಹಾಡುಗಳು
೨೮೧
(ಗುರುವಾರದ ಶುಭದಿನದಂದು)
ಅಂಗಿರಾವುತನನ್ನು ನೋಡಿರೊ ನಿತ್ಯ
ಮಂಗಳ ಮಹಿಮೆಯ ಪಾಡಿರೊ ಪ.
ಗುರುವಾಸರ ಬಂದು ಒದಗಲು ನಾನಾ
ಪರಿಯ ಪುಷ್ಪಗಳ ತಂದಿರಿಸಲು
ದೊರೆಯು ಗೌರಾಂಗಿಯ ಧರಿಸಲು ನೋಡೆ
ದುರಿತ ರಾಶಿಗಳ ಪರಿಹರಿಸಲು ೧
ಶಂಖ ಚಕ್ರ ಗದಾಬ್ಜ ಗದೆಗಳನು ನಿಃ-
ಶಂಕೆಯಿಂದ ಧರಿಸಿರುವನು
ಮಂಕು ಮನುಜರಿಗೆ ದೊರಕುವಾ-
ತಂಕಗಳೆಲ್ಲ ಪರಿಹರಿಪನಾ ೨
ಇಂದಿರೆಯನು ಮೋಹಗೊಳಿಸುವ ಪೂರ್ಣಾ
ನಂದ ವೆಂಕಟರಾಜನಿರುತಿಹ
ಚಂದವ ನೆನೆವುತ್ತ ಸ್ತುತಿಸುವ ಭವ
ಬಂಧಗಳೆಲ್ಲ ಕತ್ತರಿಸುವ ೩

೩೦೪
ಸಕಲ ಸದ್ಗುಣಪೂರ್ಣ ಶ್ರೀನಿವಾಸ ವಿಕಸಿತ ಕಮಲವದನ
ಮಕರ ಕುಂಡಲಮಣಿ ಮಕುಟ ಕೌಸ್ತುಭಾ ಹಾರ
ಅಖಿಳ ಜಗದಾಧಾರ ಅಂಬುಜಾಕ್ಷ
ಎಲ್ಲಿ ನೋಡಿದರು ಸಿರಿ ನಲ್ಲ ನಿನ್ನ ಸಮಾನ
ರಿಲ್ಲವೆಂಬುದ ಸರ್ವ ಶ್ರುತಿ ತತ್ವವ
ಬಲ್ಲ ಬುಧರಿಂದರಿದು ಸೊಲ್ಲಸೊಲ್ಲಿಗೆ ತ್ರಿಜಗ
ಮಲ್ಲ ನಿನ್ನಯ ಪಾದ ಪಲ್ಲವವÀ ನಂಬಿದೆನು ೧
ಚಕ್ರ ಶಂಖಾಬ್ಜಧರ ವಿಕ್ರಯ ವಿರಾಟರೂ-
ಪಾ ಕ್ರಾಂತ ಸಕಲ ಭೂಚಕ್ರವನ್ನು
ಶಕ್ರಗೊಲಿದಿತ್ತತಿಪರಾಕ್ರಮ ತ್ರಿವಿಕ್ರಮನೆ
ಶುಕ್ರ ಶಿಷ್ಯನಿಗಧಿಕ ಶುಭವ ಪಾಲಿಸಿದಿ ೨
ಜಯ ಜಯ ಜಗನ್ನಾಥ ಜಾನಕೀವರ ಸರ್ವ
ಭಯ ನಿವಾರಣ ಭಕ್ತ ಕಲ್ಪತರುವೆ
ಲಯದೂರ ಲಾವಣ್ಯ ಚಯಮಮಾಲಯದಲ್ಲಿ
ದಯವಾಗು ಜ್ಞಾನ ಸುಖಮಯ ವೆಂಕಟೇಶ ೩

೪೯೦
ಷಷ್ಠಿಯ ದಿವಸ
(ಶ್ರೀ ವೆಂಕಟೇಶನ ಅವಭೃಥ ಸ್ನಾನ)
ರಂಭೆ :ಸಖಿಯೆ ಕೇಳೀಗ ಸಲುಗೆವಂತಳೆ
ಮುಕುತಿದಾಯಕ ಮೂಲಪುರುಷಗೆ೧
ಭೇರಿಶಬ್ದವು ನಗಾರಿಘರ್ಜನೆ
ಮೌರಿತಾಳವು ಮೃದಂಗಶಬ್ದವು ೨
ಉದಯಕಾಲದಿ ಒದಗಿ ಭಕುತರು
ಪದುಮನಾಭನ ಪಾಡಿ ಪೊಗಳ್ವರು೩
ಭೂರಿಮಂಗಲಕರದ ಶಬ್ದವು
ಸೇರಿ ಕಿವಿಯೊಳು ತೋರುವುದಲ್ಲೆ೪
ನಿದ್ದೆಬಾರದು ನಿಮಿಷಮಾತ್ರಕೆ
ಎದ್ದು ಪೇಳೆಲೆ ಏಣಲೋಚನೆ೫
ಸುಮ್ಮನೀನಿರು ಸುಳಿಯಬೇಡೆಲೆ
ಎಮ್ಮುವುದು ನಿದ್ರೆ ಏನ ಪೇಳಲಿ೬
ಬೊಮ್ಮಸುರರಿಗು ಪೊಗಳತೀರದು
ತಿಮ್ಮರಾಯನ ಮಹಿಮೆ ದೊಡ್ಡಿತು೭
ನಿನ್ನೆ ದಿವಸದ ನಿದ್ರೆವಿಹುದೆಲೆ
ಕಣ್ಣಿಗಾಲಸ್ಯ ಕಾಂಬುವದಲ್ಲೇ೮
ಬಣ್ಣಿಸುವದೆಲೆ ಬಹಳವಿಹುದಲೆ
ಪನ್ನಗವೇಣಿ ಪವಡಿಸೆ ನೀನು೯
ಏಳು ಏಳಮ್ಮ ಅಲಸ್ಯವ್ಯಾತಕೆ
ಕಾಲಿಗೆರಗುವೆ ಹೇಳಬೇಕಮ್ಮ೧೦
ಊರ್ವಶಿ : ಯಜಯ ವೆಂಕಟರಮಣ
ಜಯಜಯ ವಾಧಿಶಯನ
ಜಯಜಯ ದೈತ್ಯವಿನಾಶ ಜಯಜಯ ಶ್ರೀನಿವಾಸ೧
ಗಂಧಕಸ್ತೂರಿಪುಣುಗಚಂದನಪನ್ನೀರುಗಳ
ಹೊಂದಿಸಿ ತೋಷದಿ ಮಂದರಧರಗೆ೨
ಆಕಾಶರಾಯನ ಮಗಳು ಹರುಷದಿಂದೊಡಗೂಡಿ
ಶ್ರೀಕರ ವೆಂಕಟಪತಿಯು ಸರಸವಾಡಿ೩
ಶ್ರೀದೇವಿ ಭೂದೇವಿ ಮಾಧವ ಸಹಿತಲಿ
ಸಾದರದಿಂದಲಿ ಸರಸವಾಡಿ೪
ಬಡನಡು ಬಳುಕುತಲಿ ಎಡಬಲದಲಿ ಸುಳಿದು
ಕಡಲೊಡೆಯಗೆ ಲಕ್ಷ್ಮಿ ಚೆಲ್ಲಿದಳಾಗ೫
ಛಲದಿ ಪದ್ಮಾವತಿಯು ಜಲಜನಾಭನ ಮೇಲೆ
ಒಲವಿನಿಂದಲಿ ಬಂದು ಚೆಲ್ಲಿದಳಾಗ೬
ಭರದಿ ಶ್ರೀದೇವಿಯು ಸರಸಿಜಮುಖದಲ್ಲಿ ಪರಮ ಸುಸ್ನೇಹದಿ ಬೆರಸಿದಳಾಗ೭
ಭೂದೇವಿ ಭುಲ್ಲವಿಸಿ ಮಾಧವನ ಮುಖದೊಳಗೆ
ಮೋದದಿಂದಲಿ ಬಂದು ಚೆಲ್ಲಿದಳಾಗ೮
ಸುತ್ತುಮುತ್ತಲು ಇವರ ಆರ್ತಿಯಿಂದಲಿ ಹರಿಯು
ವೃತ್ತಕುಚವ ನೋಡಿ ಚೆಲ್ಲಿದನಾಗ ೯
ಝಣಝಣಾಕೃತಿಯಿಂದ ಮಿನುಗುವಾಭರಣದ
ಧ್ವನಿಯ ತೋರುತ ಬಲು ಸರಸವಾಡಿ೧೦
ಓಕುಳಿಯಾಡಿದ ನೀರಾನೇಕಭಕ್ತರು ಮಿಂದು
ಏಕಮಾನಸರಾಗಿ ಪೊರಟರು ಕಾಣೆ೧೧
* * *
ಆಡಿದರೋಕುಳಿಯ ಶರಣರೆಲ ಆಡಿದರೋಕುಳಿಯಪ.
ಕಾಡುವ ಪಾಪವ ಓಜಿಸಿ ಹರಿಯೊಳ-
ಗಾಡಿ ನಿತ್ಯಸುಖ ಬೀಡಿನ ಮಧ್ಯದಿ೧
ಅಬ್ಬರದಿಂದಲಿ ಉಬ್ಬಿ ಸಂತೋಷದಿ
ಒಬ್ಬರ ಮೈಗಿನ್ನೊಬ್ಬರು ಚೆಲ್ಲುತ ೨
ಚೆಂಡು ಬುಗರಿನೀರುಂಡೆಗಳಿಂದಲಿ
ಹಿಂಡು ಕೂಡಿ ಮುಂಕೊಂಡು ಪಿಡಿಯುವರು೩
ಸುತ್ತುಮುತ್ತ ಒತ್ತೊತ್ತಿ ಮುತ್ತಿ ಜಲ-
ವೆತ್ತಿ ಚಿತ್ತತನುನೆತ್ತಿಗೆ ಸೂಸುತ್ತ೪
ರಂಭೆ : ನಾರಿ ಕೇಳೀಗ ಭೂರಿಭಕುತರು
ಶ್ರೀರಮಾಧವ ಸಹಿತ ಬಂದರು೧
ಭಾವ ಶ್ರೀಹರಿ ಪ್ರತಿರೂಪದೋರುತ
ದೇವ ತಾನೆ ನಿದ್ರ್ವಂದ್ವನೆನ್ನುತ ೨
ಹೇಮಖಚಿತವಾದಂದಣವೇರಿ
ಪ್ರೇಮಿಯಾಗುತ ಪೊರಟು ಬರುವನು ೩
ವಲ್ಲಭೆಯರ ಕೂಡಿ ಈ ದಿನ
ಫುಲ್ಲನಾಭನು ಪೊರಟನೆತ್ತಲು೪
ಊರ್ವಶಿ : ನಾರಿ ನೀ ಕೇಳಿದರಿಂದ ಈಗ
ಭೂರಿಭಕುತರಾನಂದ
ಶ್ರೀರಮಾಧವ ಮಿಂದ ನೀರಿನೊಳಾಡುತ್ತ
ಓರಂತೆ ತುಳಸಿಮಾಲೆಯ ಧರಿಸುತ್ತ
ಭೇರಿಡಂಕನಗಾರಿಶಬ್ದ ಗಂ-
ಭೀರದೆಸಕವ ತೋರಿಸುತ್ತ ವೈ-
ಯಾರದಿಂದಲಿ ರಾಮವಾರ್ಧಿಯ
ತೀರದೆಡೆಗೆಲೆ ಸಾರಿ ಬಂದರು೧
ವರದಭಿಷೇಕವ ರಚಿಸಿ ಬಕು-
ತರ ಸ್ನಾನವನನುಕರಿಸಿ
ಭರದಿಂದ ಪೂಜಾಸತ್ಕಾರ ಸೇವೆ ಕೈಗೊಂಡು
ತ್ವರಿತದಿ ನಗರಾಂತರಕನುವಾದನು
ಬರುತ ದಿವ್ಯಾರತಿಗೊಳ್ಳುತ
ಚರಣ ಸೇರಿದ ಭಕ್ತರಿಷ್ಟವ
ನಿರುತ ಪಾಲಿಸಿ ಮೆರೆವ ಕರುಣಾ-
ಕರ ಮನೋಹರ ಗರುಡವಾಹನ೨
ರಂಭೆ : ಸರಸಿಜಾನನೆ ಈ ಸೊಲ್ಲ ಲಾಲಿಸೆ
ಕರವ ಮುಗಿಯುತ್ತಕೈಯ ತೋರುತ೧
ಪರಮಪುರುಷ ಗೋವಿಂದ ಎನುತಲಿ
ಹೊರಳುತುರಳುತ ಬರುವದೇನಿದು೨
ಊರ್ವಶಿ :ಅಂಗದಾಯಾಸವೆಲ್ಲವನು ಪರಿ-
ಭಂಗಿಪ ಸೇವೆಯೆಂಬುದನು
ಅಂಗಜಪಿತಚರಣಂಗಳ ರಜದಲಿ೧
ಹೊಂಗಿ ಧರಿಸಿ ಲೋಟಾಂಗಣ ಎಂಬರು
ರಂಗನಾಥನ ಸೇವೆಗೈದ ಜ-
ನಂಗಳಿಗೆ ಭಯವಿಲ್ಲವದರಿಂ-
ದಂಗವಿಪ ಲೋಲೋಪ್ತಿ ಕೋಲಾ-
ಟಂಗಳನು ನೀ ನೋಡು ಸುಮನದಿ೨
* * *
ಕೋಲು ಕೋಲೆನ್ನಿರೊ ರನ್ನದ
ಕೋಲು ಕೋಲೆನ್ನಿರೊಪ.
ಪಾಲಾಬ್ಧಿಶಯನ ನಮ್ಮಾಲಯಕೆದ್ದು ಬಂದ
ಲೀಲೆಗಳಿಂದ ಜನಜಾಲಗಳೆಲ್ಲರು೧
ಗುಂಗಾಡಿತಮನನ್ನು ಕೊಂದು ವೇದವ ತಂದು
ಬಂಗಾರದೊಡಲನಿಗಿಟ್ಟನು ನಮ್ಮ ದೇವ೨
ಅಡ್ಡಿಮಾಡದೆ ಸುರವಡ್ಡಿಗೆ ಸುಧೆಯಿತ್ತು
ಗುಡ್ಡೆಯ ಬೆನ್ನಿಲಿ ಧರಿಸಿದ ನಮ್ಮ ದೇವ೩
ರೂಢಿಯ ಕದ್ದನ ಓಡಿಸಿ ತನ್ನಯ
ದಾಡೆಯಿಂದಲೆ ಸೀಳ್ದ ಕಾಡವರಾಹನಮ್ಮ೪
ಸಿಂಗನ ರೂಪತಾಳಿ ಹೊಂಗಿ ಕಂಬದಿ ಬಂದು
ಬಂಗಾರಕಶ್ಯಪುವಂಗವ ಕೆಡಹಿದ೫
ಗಿಡ್ಡನಾಗುತ ಕೈಯೊಡ್ಡಿ ದಾನಕೆ ಮನ-
ಸಡ್ಡಿಮಾಡದೆ ಮೇಣು ದೊಡ್ಡವನಾದನಮ್ಮ೬
ಕಾಮಧೇನುವಿಗಾಗಿ ಕಾರ್ತವೀರ್ಯನ ಕೊಂದು
ಭೂಮಿಯ ಬುಧರಿಗೆ ಪ್ರೇಮದಿನಿತ್ತನಮ್ಮ೭

೨೩೧
(೪೧ನೇ ವರ್ಷದ ವರ್ಧಂತಿ)
ಸತ್ಯ ಸಂಕಲ್ಪಾನುಸಾರದಿ ನಡೆಸುವುದುತ್ತಮ ಬಿರುದಾದರು
ಭೃತ್ಯನ ಬಿಟ್ಟನೆಂಬಪಕೀರ್ತಿ ಬರದಂತೆ ಚಿತ್ತದಲ್ಲಿರಲಾದರು ಪ.
ಕಳೆದಿತು ಐದೆಂಟು ಮೇಲೊಂದು ವತ್ಸರ
ಬೆಳೆದಿತು ಬಲು ಮತ್ಸರ
ನೆಲನ ಮೇಲಡಿಯಿಡಲಿಲ್ಲ ಶಕ್ತಿಯು ಇಂಥ
ಛಲದಿ ತೋರುವಿ ತಾತ್ಸಾರ
ಬಳುಕಿ ಬಾಡಿದ ದೇಹವುಳುಹಲುತ ಸೇವಾ
ಫಲಕೆ ಕಾರಣವೆಂಬೆನು
ನಳಿನನಾಭನೆ ನಿನ್ನ ಮನವೆಂತಿರುವುದೆಂದು
ತಿಳಿಯದೆ ಬಳಲುವೆನು ೧
ವಾತ ಪಿತ್ತ ಶ್ಲೇಷ್ಮ ವಯಿನು ತಪ್ಪಿದ ಬಳಿ-
ಕ್ಯಾತರಗುಣವಪ್ಪುದು
ಭೂತಪಂಚಕ ಸನ್ನಿಪಾತ ಸೂಚಿಸುವಂತೆ
ಕಾತರತೆಯು ತಪ್ಪದು
ಈ ತೆರದಲಿ ದೇಹ ರೀತಿಯಾಗಿರುವುದ
ನೀ ತಿಳಿದಿರಲೆನ್ನಯ
ಮಾತ ಕೇಳದೆ ಲಕ್ಷ್ಮೀನಾಥ ತಾತ್ಸಾರವಿಂತು
ನೀತಿಯಾಗದು ಚಿನ್ಮಯ ೨
ಜನನ ಮರಣ ಜೋಡಾಗಿರುವುದೆಂಬ ಸಿದ್ಧ
ನಿನಗಿದು ಸುಲಭಸಾಧ್ಯ
ಮನೆವಾರ್ತೆ ಮಡದಿ ಮಕ್ಕಳು ಮುಂತಾದುದಕೆಲ್ಲ
ವನಜಾಕ್ಷ ನೀನೆ ಬಾಧ್ಯ
ಕನಸಿಲಾದರು ನಿನ್ನ ನೆನವ ತಪ್ಪಿಸದಿರು
ವಿನಯ ವೆಂಕಟರಾಯನೆ
ನಿನಗಿಲ್ಲದಪಕೀರ್ತಿ ಎನಗಿಲ್ಲ ಮಹದಾರ್ತಿ
ಘನಕಲ್ಪ ಸುರಭೂಜನೆ ೩

೪೧೮
ಸರಸೀರುಹಾಂಬಕಿ ನಿನ್ನ ಪಾದ-
ಸರಸಿಜಗಳ ಸ್ಮರಿಸುವೆ ಪೊರೆಯೆನ್ನಪ.
ಕಾಳಾಹಿವೇಣಿ ಕಲಕೀರವಾಣಿ
ಫಾಲಾಕ್ಷನ ರಾಣಿ ಪರಮಕಲ್ಯಾಣಿ೧
ಕಣ್ಮಯಜಾತೆ ಹಿರಣ್ಮಯ ಖ್ಯಾತೆ
ಕಣ್ಮುಖ ವರಕರಿ ಷಣ್ಮುಖಮಾತೆ೨
ಕಣ್ಮನದಣಿಯೆ ಕೊಂಡಾಡುವೆ ಪಾಡುವೆ
ಮನ್ಮನೋರಥದಾಯೆ ಚಿನ್ಮಯೆ ಚೆಲುವೆ೩
ಕಂಬುಕಂಧರಿ ನಿನ್ನ ನಂಬಿದೆ ಶಂಕರಿ
ಕುಂಭಪಯೋಧರಿ ಶಂಭುಮನೋಹರಿ೪
ಸಿರಿ ಕಾತ್ಯಾಯಿನಿ ಗೌರಿ ಭವಾನಿ
ಹರಿಸರ್ವೋತ್ತಮ ಲಕ್ಷ್ಮೀನಾರಾಯಣ ಭಗಿನಿ೫

೩೭೫
ಸರಸ್ವತಿ ದೇಹಿ ಸನ್ಮತಿ ಪ.
ವಿಧಿಸತಿ ಸುವ್ರತಿ ಶ್ರೀಮತಿ ಭಾರತಿ ಅ.ಪ.
ನಿಗಮವೇದ್ಯನನು ನಿತ್ಯ ಪೊಗಳುತಿ
ಜಗದೀಶ್ವರಿ ಜಲಜಾಯತನೇತ್ರಿ
ಭಗವತಿ ಪವಿತ್ರಿ ಸಾವಿತ್ರಿ ಗಾಯತ್ರಿ
ಸರಸ್ವತಿ ದೇಹಿ ಸನ್ಮತಿ ೧
ಶರ್ವೇಂದ್ರಪೂರ್ವ ಗೀರ್ವಾಣತತಿ
ಸರ್ವದಾಚರಿಸುವುದು ತವ ಸ್ತುತಿ
ಸದ್ಭಕ್ತಿ ವಿರಕ್ತಿ ತ್ರಿಶಕ್ತಿ ದೇವಕಿ
ಸರಸ್ವತಿ ದೇಹಿ ಸನ್ಮತಿ ೨
ಲಕ್ಷ್ಮೀನಾರಾಯಣನ ಮೂರುತಿ
ಲಕ್ಷಿಸಿ ಮನದೊಳಾನಂದದೊಳಿರುತಿ
ಗುಣವತಿ ಸುಗತಿ ಸುಧೃತಿ ವಿಧಾತ್ರಿ
ಸರಸ್ವತಿ ದೇಹಿ ಸನ್ಮತಿ ೩

ಸರಸ್ವತಿ ಸ್ತುತಿ
೩೬೬
ಅಂಬ ಬ್ರಹ್ಮಾಣಿ ನಿನ್ನ ನಂಬಿದೆನು ವಾಣಿ ವದ-
ನಾಂಬುಜದಿನೀನಿಂಬುಗೊಂಡು ಪರಾಂಬರಿಸು ಜನನೀ ಪ.
ಶೋಕಭಯದೂರೆ ಭಕ್ತಾನೀಕಮಂದಾರೆ ಜಗ-
ದೇಕನಾಥೆ ಪಿನಾಕಿಮುಖ್ಯ ದಿವೌಕಸಾಧರೆ ೧
ಶಾರದೆ ವರದೆ ಶ್ರುತಿಸಾರೆ ಸುಗುಣನಿಧೇ ಮಮ-
ಕಾರ ಮೋಹವಿಕಾರಭಿದೆ ಜಂಭಾರಿವಿನುತಪದೆ ೨
ಮಂಗಲಪ್ರದೆ ಸಾರಂಗನೇತ್ರೆ ಬುಧೆ ಕನ-
ಕಾಂಗಿ ಸದಯಾಪಾಂಗಿ ಹಂಸತುರಂಗಿ ಸರ್ವವಿದೆ ೩
ಪುಸ್ತಕಪಾಣಿ ನಮಸ್ತೇ ಕಲ್ಯಾಣಿ ಪರ-
ವಸ್ತುವಿನ ಗುಣವಿಸ್ತರೈಕಪ್ರಶಸ್ತಫಣಿವೇಣಿ ೪
ಪ್ರೀಯೆ ಶ್ರೀ ಲಕ್ಷ್ಮೀನಾರಾಯಣೀಪ್ರೇಮಿ ನಿಧಿ-
ಜಾಯೆ ಚತುರೋಪಾಯೆ ಪಾವನಕಾಯೆ ನಿಷ್ಕಾಮಿ ೫

೩೪೯
ಸರ್ವ ಸ್ವತಂತ್ರನು ಹರಿ ನಿಜವಾದ ದಾರಿ ಪ.
ಸರ್ವಜೀವ ಹೃದಯಾಕಾಶ ವಿಧಿ ಶರ್ಮಾದಿ ಸುರ ಕೈವಾರಿ
ಸರ್ವ ನಾಮಕ ಸದೋದಿತ ಶೌರಿ ಸರ್ವ ವಿಭೂತಿ ವಿಹಾರಿ ೧
ಸತ್ಪಾದಿಗುಣ ಪ್ರವರ್ತನಕಾರಿ ಸುಹೃತ್ತಮ ದುರಿತಾಪಹಾರಿ
ತತ್ವೇಶ ನಿಚಯಸ್ತುತ್ಯ ಮುರಾರಿ ಸತ್ಯಾತ್ಮಕ ನಿರ್ವಿಕಾರಿ ೨
ಲಕ್ಷ್ಮೀನಾರಾಯಣ ನಿರ್ಗುಣ ಸುವಿಲಕ್ಷಣ ದೀನೋದ್ಧಾರಿ
ಮೋಕ್ಷಾಶ್ರಯ ಕಲಿಕಲುಶನಿವಾರಿಸಾಕ್ಷಿರೂಪ ಗಿರಿಧಾರಿ ೩

೨೫೧
ಸರ್ವವು ಹರಿಗೊಪ್ಪಿಸಿದರೆ ನಿಶ್ಚಿಂತೆ
ಗರ್ವದಿಂದಲಿ ವ್ಯರ್ಥ ಕೆಡದಿರು ಭ್ರಾಂತೆ ಪ.
ಲೇಶ ಸ್ವತಂತ್ರವನಿತ್ತದ ನಂಬೀ
ಶಾಭಿಮಾನದಿ ಮಾಡುವ ಡೊಂಬಿ
ದೋಷಗಳಿಂದಾಹ ಫಲವೆ ನೀನುಂಬಿ
ವಾಸುದೇವನ ಮೂರ್ತಿಯನೆಂತು ಕಾಂಬಿ ೧
ಹಸುತೃಷೆ ನಿದ್ರೆ ತಡೆಯಲೊಲ್ಲಿ ಯಾಕೆ
ದಶಕರಣಗಳು ದುರ್ವಿಷಯದಿ ನೂಕೆ
ವಶವಿಲ್ಲದಲೆ ಬಿದ್ದು ಬಳಲುವಿ ಯಾಕೆ
ವಸುದೇವ ಸುತನ ಮರೆಯದಿರು ಜೋಕೆ ೨
ಸತ್ಯ ಸಂಕಲ್ಪನಲ್ಲದೆ ಕರ್ತನಾವ
ತತ್ವೇಶರರಿತು ಕರ್ಮವ ಮಾಳ್ಪ ಸೋವ
ನಿತ್ಯ ನೀ ವರಿತ ಹಮ್ಮಮತೆಯ ಭಾವ
ಹತ್ತದಂತಿರೆ ಕಾವ ಕರುಣಾಳು ದೇವ ೩
ಒಡೆಯರಿಲ್ಲದೆ ಪೋದ ವೃಕ್ಷದ ಫಲವ
ಬಡಿದು ತಿಂಬುವರು ಕಂಡವರೆಲ್ಲ ನೋಡು
ಬಿಡದೆ ಮಾಡುವ ಕರ್ಮ ಮಡದಿ ಮೊದಲುಗೊಂಡು
ಕಡಲಶಯನಗರ್ಪಿಸುತ ಕಷ್ಟ ದೂಡು ೪
ವಹಿಸು ಭಾರವ ಲಕ್ಷ್ಮೀಕಾಂತನ ಮೇಲೆ
ಇಹರಹರಾದರದಿಂದ ತಲ್ಲೀಲೆ
ಮಹಿಮೆಯ ಪೊಗಳಿ ತೂಗಾತನೂಯ್ಯಾಲೆ
ಅಹಿಪತಿ ಗಿರಿರಾಜ ಎತ್ತುವ ಮೇಲೆ ೫

೫೫
ಸರ್ವಸಾರಭೋಕ್ತ ಸಕಲ ಮಂಗಲದಾಯಿ ವೆಂಕಟೇಶ
ನಿರ್ವಹಿಸುವವ ನೀನೆ ನಿತ್ಯಕರ್ಮಗಳಿಂದ ವೆಂಕಟೇಶ ಪ.
ದೇವರ್ಷಿ ಪಿತೃಗಣರೊಳಗಿದ್ದು ರಾಜಿಪ ವೆಂಕಟೇಶ
ಭೂವರರಲ್ಲಿ ವಿಭೂತಿರೂಪನು ನೀನೆ ವೆಂಕಟೇಶ
ಸೇವಕ ಜನರನು ಸುಲಭದಿ ಸಲಹುವ ವೆಂಕಟೇಶ
ಭವನಾವ ನಿನ್ನ ಪಾದ ಪದ್ಮವೆ ಗತಿ ಎಂಬೆ ವೆಂಕಟೇಶ ೧
ಇಂದಿರಾಧವ ಯದುನಂದನನೆನಿಸಿದೆ ವೆಂಕಟೇಶ
ಸುಂದರ ವಿಗ್ರಹ ಸುಗುಣೇರ ಒಲಿಸಿದೆ ವೆಂಕಟೇಶ
ಹಿಂದೆ ಮುನ್ನ ಭವದಂದವನರಿಯೆನು ವೆಂಕಟೇಶ
ಮಂದಮತಿಯ ಕರ್ಮಕುಂದನು ಕ್ಷಮಿಸಯ್ಯ ವೆಂಕಟೇಶ ೨
ಸ್ವೋದರಗತ ಜಗದಾಧಾರಗುಣನಿಧಿ ವೆಂಕಟೇಶ
ಭೂಧರಗಿರಿವರ ಶೋಭಿತ ಮೂರುತಿ ವೆಂಕಟೇಶ
ಶ್ರೀಧರಾಕಾಂತ ನಿನ್ನಾಧಾರ ನಂಬಿದೆ ವೆಂಕಟೇಶ೩

೨೩
ಸಾಕು ನೀನೋಬ್ಬನೆ ಲೋಕನಾಯಕನೆ
ಯಾಕನ್ಯ ದೈವವ ಭಜಿಸುವ ಸುಮ್ಮನೆ ಪ.
ಪಾಕಶಾಸನ ಸೂನು ಪರಮಾದರದಿಂದ
ನೀಕರಿಸುತ ಯದು ಬಲಿ ಸಹಾಯವನು
ಶ್ರೀಕರ ನೀನೊಬ್ಬನೆ ಸಾರಥಿಯಾಗೆ
ಸಾಕೆಂದವರ ಬೊಮ್ಮನೆ ವೈರಿಗಳನ್ನು
ವ್ಯಾಕುಲಗೊಳಿಸಿ ಭೂಮಿಪನಾದ ಸುಮ್ಮನೆ ೧
ನೀನೊಬ್ಬನೊಲಿದರೆ ನಿಖಿಳ ದೈವಗಳೆಲ್ಲ
ತಾನಾಗಿ ಪರಮಾನುಕೂಲರಾಗುವರು
ಏನೆಂದು ಪೇಳ್ವದಿನ್ನು ಸಕಲ ಸುರ
ಧೇನುತ್ಮನ್ಮಹಿಮೆಯನ್ನು ಪಾದ ಪದ್ಮ
ಧ್ಯಾನ ಮಾನವನಿತ್ತು ಪಾಲಿಸೆನ್ನನು ೨
ಅಖಿಳಾಂಡಕೋಟಿ ಬ್ರಹ್ಮಾಂಡ ನಾಯಕನೆಂದು
ನಿಖಿಳ ದೈವಗಳು ನಿನ್ನನೆ ಪೊಗಳುವವು
ಸಕಲಾರ್ಥದಾಯಿ ನೀನು ನಾಮ ಸ್ರ‍ಮತಿ
ಸುಖವನ್ನೆ ಪಾಲಿಸಿನ್ನು ಉದಯಗಿರಿ
ಶಿಖಿರ ಸಂವಾಸನುಮಾನವ್ಯಾಕಿನ್ನು ೩

೧೧
ಸಾಕು ಸಾಕು ಬಿಡು ಬಡಿವಾರಾ ನಮ್ಮ
ಶ್ರೀಕರ ದಾಸರ ಬಿಡಲಾರಾ ಪ.
ಚಂಚಲಾಕ್ಷಿಯೊಳ್ ಚದುರತೆ ತೋರುತ
ಮಂಚದ ಮೇಲ್ಕುಳ್ಳಿರಲಂದು
ಮಿಂಚಿದ ಮೊರೆ ಕೇಳಿ ಮದಗಜನನು ಕಾಯ್ದ
ಪಂಚ ಬಾಣ ಪಿತ ವಂಚಿಸನೆಂದಿಗು ೧
ಶಂಭುಮುನಿಯು ಕೋಪಾಡಂಬರವನು ತೋರಿ
ಅಂಬರೀಷಗೆ ಶಾಪವ ಕೊಡಲು
ನಂಬಿದ ಭಕ್ತ ಕುಟುಂಬಿ ಸುದರ್ಶನ
ನೆಂಬಾಯುಧದಿಂದ ಸಂಬಾಳಿಸಿದನು ೨
ಎಲ್ಲ ವೇದಶಿರಗಳಲಿ ನೋಡೆ ಸಿರಿ-
ನಲ್ಲ ವೆಂಕಟಗಿರಿವರ ಹರಿಗೆ
ಎಲ್ಲವು ಸರಿಮಿಗಿಲಿಲ್ಲದೆ ತೋರುವ
ಖುಲ್ಲ ದೈವಗಣವಿಲ್ಲೆ ಸೇರುವವು ೩

ದಾಸಕೂಟ ವರ್ಣನೆ
೧೫೯
ಸಾಟಿಯುಂಟೆ ಶ್ರೀನಿವಾಸನ ದಾಸಕೂಟದ ಮ್ಯಾಳಕೆ
ಬೂಟಕದ ಮಾತಲ್ಲ ಕೇಳಿರಿ ಭಜನೆ ಮಾಡುತ ತಾಳಕೆ ಪ.
ವಾಸುದೇವನ ವರ್ಣಿಸಲು ಕಮಲಾಸನಾದಿ ಸುರೇಂದ್ರರು
ದಾಸಜನರ ಸಮೂಹದೊಳಗಾವಾಸವಾಡುತ ನಲಿವರು
ಸೂಸುತಿಹ ಗಂಗಾದಿನದಿಗಳು ಬ್ಯಾಸರದೆ ಬಂದಿರುವವು
ಕೇಶವನ ಕೊಂಡಾಟ ಧರೆಯೊಳು ಮೀಸಲಳಿಯದೆ ಮಧುರವು ೧
ಬಾರಿಸುತ ತಂಬೂರಿ ತಾಳವ ನಾರದರ ಸಂಸ್ಮರಿಸುತ
ಭೂರಿ ಕಿಂಕಿಣಿ ಮದ್ದಳೆಯ ಶೃಂಗಾರ ರಸವನು ಸುರಿಸುತಾ
ವಾರಿಜಾಕ್ಷನ ಪರಮಮಂಗಳ ಮೂರುತಿಯ ಮುಂದಿರಿಸುತ
ಮಾರುತನ ಮತವರಿತು ಬಹುಗಂಭೀರ ಸ್ವರದಿಂದರುಹುತಾ ೨
ಹಿಂದೆ ಗಳಿಸಿದ ಹಲವು ದುರಿತವು ಕುಂದುವುದು ನಿಮಿಷಾರ್ಧದಿ
ಅಂದಿನಂದಿನ ದೋಷದುಷ್ರ‍ಕತವೊಂದು ನಿಲ್ಲದು ಕಡೆಯಲಿ
ಇಂದಿರಾಧವ ಶೇಷ ಭೂಧರ ಮಂದಿರನು ಮಹ ಹರುಷದಿ
ಮುಂದೆ ನಲಿವುತ ಮನಕೆ ಪೂರ್ಣಾನಂದವೀವನು ನಗುತಲಿ ೩

೩೬೪
ಸಾಮಧಾನವು ಸಾಮಧಾನ ಪವಮಾನ
ಶ್ರೀಮನ್ಮಹಾಸುಗುಣಧಾಮ ಸುತ್ರಾಣ ಪ.
ಲೋಕ ಮುಳುಗುವದು ನೀನೀ ಕೆಲಸಮಂಗೈಯೆ
ಸಾಕುವವರ್ಯಾರು ಜಗದೇಕವೀರ
ಶ್ರೀಕಾಂತಸುಪ್ರೀತ ಶೋಕಮೋಹವಿಧೂತ
ಸಾಕು ಬಿಡು ಸೈರಿಸು ಪರಾಕು ಮುಖ್ಯಪ್ರಾಣ ೧
ಜಗಕೆ ನೀನಾಧರ ಜನ್ಮ ಮೃತಿಭಯದೂರ
ಚಾಗಮಾಗಮವಿಚಾರ ನಿತ್ಯಶೂರ
ಸುಗುಣನಿಧಿ ಲಕ್ಷುಮಿನಾರಾಯಣನ ಕಿಂಕರನೆ
ಮಗುಚಬೇಡೈ ಧರೆಯ ಮುಗಿವೆ ನಾ ಕೈಯ೨

೩೪೮
ಸಾರ ಸಾರ ಸಾರ ಹರಿಯಪಾರ ಮಹಿಮ ನಾಮ
ಘೋರಸಂಸಾರಾಬ್ಧಿಶೀಘ್ರೋತ್ತಾರನೌಕಾಧಾಮ ೧
ವಿಧಿಭವಾದ್ಯಮರೌಘ ಧ್ಯಾನಾಸ್ಪದ ಕಲ್ವದ್ರುಮ
ಪರಮಾಖಿಲ ಭಕ್ತಭವಯಕುಧರವಜ್ರೋಪಮ ೨
ಭಕ್ತಿ ಜ್ಞಾನ ವೈರಾಗ್ಯ ಭಾಗ್ಯ ನಿವೃತ್ತಿ ಸುಖ ನಿಸ್ಸೀಮ
ಕರ್ತ ಲಕ್ಷ್ಮೀನಾರಾಯಣನ ಭೃತ್ಯವರ್ಗಕ್ಷೇಮ ೩

೨೧೧
ಸಿಟ್ಟು ಮಾಡುವುದೆಂದಿಗು ಸಲ್ಲ ಪೂರ್ಣ
ದೃಷ್ಟಿಯಿಂದಲಿ ನೋಡು ಸಿರಿನಲ್ಲ ಪ.
ಮೋಹ ಪಾಶ ಮಿಕ್ಕು ಬಿಗಿದಿಹುದು ರಿಪು
ವ್ಯೂಹ ಸುತ್ತಮುತ್ತ ನೆಗದಿಹುದು
ದೇಹದಿ ದಿನದಿನ ಬಲಕುಂದಿ ಬಂತು ಚಿ-
ದ್ದೇಹ ನೀನೊಲಿವ ಸನ್ನಹಗೊಳ್ವದೆಂತೊ ೧
ಒಂದು ಸತ್ಕರ್ಮ ಸಾಧಿಸುವಲ್ಲಿ ಬೇಗ
ಬಂದು ಸೇರುವುದು ಪಾತಕ ಝಲ್ಲಿ
ಮಂದರಧರ ಮಧುಸೂದನ ಮನದಿ ನೀ
ನಿಂದು ಸಾರ್ಥಕ ಮಾಳ್ಪ ತೆರವೆಲ್ಲ ಬಲ್ಲಿ ೨
ಹಿಂದೆ ಮುಂದಿನ ಸರ್ವ ಕರ್ಮಫಲ ಎನ್ನ
ತಂದೆ ಸ್ವೀಕರಿಸಿ ಮಾಡಿಸು ನಿರ್ಮಲ
ಇಂದಿರೇಶ ವೆಂಕಟೇಶನೆ ತ್ವಚ್ಚರ-
ಣೆಂದೀವರ ನೆರಳಿರಿಸನುಗಾಲ ೩

೩೨೨
ಸಿದ್ಧಿದಾಯಕ ವಿಘ್ನರಾಜ ಸುಪ್ರ
ಸಿದ್ಧ ಮಹಿಮಯೋಗಿಹೃದ್ಯ ರವಿತೇಜ ಪ.
ಬಾದರಾಯಣ ಸುಪ್ರಸಾದ ಸತ್ಪಾತ್ರ
ಶ್ರೀಧರೋಪಾಸನಶೀಲ ಸುಪವಿತ್ರ ೧
ಭೋಗೀಂದ್ರಭೂಷಣ ನಾಗೇಂದ್ರವದನ
ಭಾಗವತರ ಭಾಗ್ಯಸದನ ಜಿತಮದನ ೨
ಸರ್ವಾಪರಾಧವ ಗುರುವರ್ಯ ಕ್ಷಮಿಸಯ್ಯ
ಸರ್ವೋತ್ತಮ ಲಕ್ಷ್ಮೀನಾರಾಯಣಪ್ರಿಯ ೩
ಶ್ರೀಹರಿ ಸಂಕೀರ್ತನ

೧೮೫
ಸಿರಿದೇವಿ ವರಗೋವಿಂದ ಕರುಣದಿಂದ ಪೊರೆಯೊ
ಬೇಗದಿ ಮುಕುಂದ ಪ.
ನಿರುಪಾಯದಲಿ ನಿನ್ನ ಚರಣಾಬ್ಜಯುಗವನ್ನು ಸ್ಮರಣೆ
ಮಾಡುವ ಭಾಗ್ಯ ಕರುಣಿಸೊ ಕೃಪೆಯಿಂದ ಅ.ಪ.
ದೊರೆತನದಲಿ ನೋಡಲು ಬ್ರಹ್ಮಾಂಡ ಕೋಟಿ
ನಿರುತ ನಿನ್ನೊಳಗಿಹವು
ಸರಸಿಜ ಭವಮುಖರು ನಿನ್ನಪಾಂಗಮಸ್ಮರಣೆಯಿಂದಲಿ ಬಾಳ್ವರು
ಸಿರಿದೇವಿ ನಿನ್ನ ಸೇವಾದರದಿಂದ ಮಣಿಮಯಾಭರಮ
ಪೀತಾಂಬರದಿಸರಿರವ ರೂಪಿಯಾಗಿ
ಥರಥರದಲಿ ನಿನ್ನ ಚರಣಕಮಲ ಮಧುಕರನ ತೆರದಿ
ಹೊಂದಿರುವಳು ನಗುತ ೧
ನಿತ್ಯ ಸಂತೃಪ್ತರೂಪ ಸಕಲ ಲೋಕ ವ್ಯಾಪ್ತನಾಗಿರುವ ಭೂಪ
ಜ್ಞಪ್ತಿ ಮಾತ್ರದಿ ಎನಗೆ ಒಲಿವ ಪರಮಾಪ್ತ ನೀನಿರುತಿರಲು
ಕ್ಲುಪ್ತ ಪ್ರಭುವ ಬಿಟ್ಟು ತಪ್ತ ಹೃದಯನಾಗಿ ಲುಪ್ತವೃತ್ತಿಯ
ನೆನೆದು ಮರುಳಾದೆನು
ಸಪ್ತವಾಹನ ಚತುಸ್ಸಪ್ತ ಕರಣಗಳ ಸುಪ್ತಿಯ ಬಿಡಿಸಿ
ವಿಲಿಪ್ತಿಯ ಸಲಿಸು ೨
ಹಿಂದೆ ಮುಂದಿನ ಭವದ ಪರಿಗಳೆನಗೊಂದು
ತೋರದೊ ವರದ
ನೊಂದೆನು ಬಹು ಥರದ ಬಾಧೆಗಳಿಂದ ತಂದೆ
ನಿನ್ನನು ಮರೆದ
ಕುಂದ ನೀ ಮನಸಿಗೆ ತಂದರನಾಥನ ಮುಂದೆ
ಕಾಯುವರ ಕಾಣೆ ನಿನ್ನಾಣೆ
ಪೊಂದಿಹ ದುರಿತದ ವೃಂದಗಳೋಡಿಸಿ ತಂದೆ ನೀ
ಸಲಹೊ ಪುರಂದರಗೊಲಿದ ೩
ಧರ್ಮಮಾರ್ಗವ ತೊರೆದು ಶೃತ್ಯದಿತ ಸತ್ಕರ್ಮಗಳ ಮರೆದು
ನಿರ್ಮಲರನು ಜರಿದು ನೀಚರನೆಲ್ಲ ಭರ್ಮಗೋಸುಗ ತರಿದು
ಶರ್ಮಹೊಂದದೆ ಪೂರ್ವ ಕರ್ಮಫಲವನುಂಡು ಸ್ವರ್ಮಹೀ
ಸುಖವ ನೀಗಿ ನಾ ಬಾಗಿ
ಭರ್ಮ ಗರ್ಭಕೃತ ಮರ್ಮವನರಿಯದೆ ಹಮ್ರ್ಯದ ಕೂಪದ
ಕೂರ್ಮನಂತಿರುವೆ ೪
ಆಸೆಯೆಂಬುದು ಎನ್ನನು ನಾನಾವಿಧ ಕ್ಷೇಶಬಡಿಸುವುದಿನ್ನು
ಘಾಸಿಗೆ ಒಳಗಾದೆನು ಕೈಯಲಿ ಒಂದು ಕಾಸಿಲ್ಲದವನಾದೆನು
ದ್ವೇಷಿಗಳೆನಗವಕಾಶವ ಕೊಡರಿನ್ನು
ಶ್ರೀಶ ನೀ ಕರುಣಿಸಿನ್ನು ಸದ್ಗತಿಯನ್ನು
ಶೇಷಗಿರಿಯ ಶ್ರೀನಿವಾಸ ನಿನ್ನ ನಂಬಿ ಮೋಸದಿ
ಸುಜನಪಹಾಸಗೊಳಿಸದೆ ೫

೧೮೮
ಸಿರಿದೇವಿ ವರಬೇಗ ಕರುಣಿಸೊ ದಯದಿಂದ
ಶರಣಾಗತ ಪರಿಪಾಲನೆಂಬಿ ಘನ ಬಿರುದಿಹದೊರೆ
ನರಹರಿಕರುಣಾಕರ ಪ.
ಕರಿರಾಜ ಮೊರೆಯಿಡುವ ಸ್ವರವ ಕೇಳುತಲಂದು
ಸಿರಿಯೊಳಗುಸುರದೆ ಗರುಡನ ಪೆಗಲೇರಿ
ಸರಸಿ ತಡಿಗೆ ಬಂದು ಕರಿಯನುದ್ಧರಿಸಿದಿ ೧
ಘೋರ ಕಿಂಕರರಿದಿರು ಸಾರೆಜಾಮಿಳ ಭಯದಿ
ನಾರಾಯಣನೆಂದು ಬೇಡಿದ ಮಾತ್ರದಿ
ವಾರಿಜಭವಪಿತ ಪಾರಗಾಣಿಸಿದಿ ೨
ತರಳ ಪ್ರಹ್ಲಾದನನು ಹಿರಣ್ಯಕನು ಬಾಧಿಸಲು
ಹರಿ ನೀನೆ ಗತಿಯೆನುತಿರೆ ಕಂಭದಿ
ಇರವ ತೋರಿ ಬಹು ಪರಿಯಲಿ ಸಲಹಿದಿ ೩
ಹರಿಣಾಕ್ಷಿ ದ್ರೌಪದಿಯು ದುರುಳ ಸೀರೆಯ ಸೆಳೆಯೆ
ಹರಿಕೃಷ್ಣ ಸಲಹೆನೆ ಸೀರೆಯ ಮಳೆ
ಗರದಂದದಲಿತ್ತು ಪರಿಪಾಲಿಸಿದೆ ೪
ಎನ್ನ ದುಷ್ರ‍ಕತದಿಂದ ನಿನ್ನ ನಾಮದ ಮಹಿಮೆ
ಭಿನ್ನವಾಗುವದೆ ನಿನ್ನ ಪದಾಂಬುಜ
ವನ್ನು ನಂಬಿದ ಮೇಲಿನ್ನುದಾಸೀನವೆ ೫
ಪಾಕಶಾಸನನಘವ ನೀಕರಿಸಿ ಸಲಹಿದನೆ
ಭೀಕರವಾಗದೆ ಸಾಕು ಸಾನುಭವ
ನೂಕೆಲೊ ಕೃಪಣ ದಯಾಕರ ಮೂರುತಿ ೬
ಒಳಗೆ ನೀ ತಳಿಸುತಲಿ ಗಳಿಸಿ ಪಾಪಗಳೆನಗೆ
ತಳಮಳಗೊಳಿಸುತ ಬಳಲಿಪದುಚಿತವೆ
ಉಳುಹಿನ್ನಾದರು ನಳಿನನಾಭ ಹರಿ ೭
ಬಡವ ಮಾನವನೊಬ್ಬ ಪಡೆಯ ತನ್ನವರನ್ನು
ಕೆಡಲು ಬಿಡನು ಜಗದೊಡೆಯ ನೀ ಎನಗಿರೆ
ತಡವ ಮಾಡಿ ಕಂಡ ಕಡೆಯಲಿ ಬಿಡುವುದೆ ೮
ನಿನ್ನ ಕಥಾಮೃತಸಾರವನ್ನೆ ಶಿರದಿ ಧರಿಸಿ
ಇನ್ನು ಬಳಲಿದರೆ ನಿನ್ನ ಘನತೆಗಿದು
ಚೆನ್ನಾಗುವುದೆ ಪ್ರಸನ್ನ ಮುಖಾಂಬುಜ ೯
ಮಾನಾಮಾನವ ತೊರೆದು ನಾನಾ ದೇಶದಿ ತಿರಿದು
ಶ್ರೀನಿವಾಸ ನಿನ್ನಾನನ ದರುಶನ-
ವನು ಮಾಡಿದ ಮೇಲೇನಿದು ತಾತ್ಸಾರ ೧೦
ಆಶಾಪಾಶವ ಬಿಡಿಸಿ ಮನದಾಸೆಗಳ ಪೂರೈಸಿ
ದಾಸದಾಸನೆಂಬೀ ಸೌಖ್ಯವನಿತ್ತು
ಪೋಷಿಸು ಶೇಷಗಿರೀಶನೆ ತವಕದಿ ೧೧

೪೨೮
ಸುಬ್ಬರಾಯ ಸುಜನಪ್ರಿಯ ಕರ್ಬುರಾಂತಕ
ನಿರ್ಭಯವನು ಪಾಲಿಸಯ್ಯ ನಿರ್ಗತಮಾಯ ಪ.
ಗೌರೀಕುಮಾರ ಪಾರಾವಾರಗಭೀರ
ಮಾರನವತಾರ ತಾರಕಾರಿ ಶ್ರೀಕರ೧
ಪಂಕಜಾಕ್ಷ ಪಾಹಿಮಾಂ ಶ್ರೀಶಂಕರಾತ್ಮಜ
ಕುಂಕುಮಾರುಣವರ್ಣ ಪೂರ್ಣಾಲಂಕೃತ ವಿರಜ೨
ಪೃಥ್ವಿಗುತ್ತಮ ಪಾವಂಜಾಖ್ಯ ಕ್ಷೇತ್ರಮಂದಿರ
ಕರ್ತ ಲಕ್ಷ್ಮೀನಾರಾಯಣಭೃತ್ಯ ಸುಂದರ೩

೪೨೯
ಸುಬ್ರಹ್ಮಣ್ಯ ಸ್ವಾಮಿ ತೇ ನೌಮಿ ಶರಣಾಗತರ್ಗೆ
ನಿರ್ಭಯವ ಪಾಲಿಸು ಪ್ರೇಮಿಪ.
ಅಭ್ರವಾಹನಾದಿದೇವ ಸಭ್ಯ ಸಂಭಾವಿತ ಜಗ-
ದಭ್ಯುದಯ ತೇಜೋಮಯ ಕರ್ಬುರಾಂತಕ ನಿಶ್ಯೋಕಅ.ಪ.
ಭಾವಭಕ್ತಿಭಾಗ್ಯಶೂನ್ಯರು ನಿನ್ನಯ ಪದ
ಸೇವೆಗಾಲಸ್ಯವ ಮಾಳ್ಪರು
ಕೇವಲ ದುರ್ಜನರು ಬಾರರು ದೇವದೇವ ನಿನ್ನ ಕರು-
ಣಾವಲಂಬಿಗಳನೆಲ್ಲ ಕಾವನೆ ಮಹಾನುಭಾವನೆ ೧
ಚಂದ್ರಸೂರ್ಯರಿರುವ ತನಕ ಸ್ಥಾನಿಕ ವಿಪ್ರ-
ರಿಂದ ಪೂಜೆಗೊಳೈ ಷಣ್ಮುಖ
ವಂದನೀಯ ಪಾರ್ವತಿಯ ನಂದನ ನಳಿನಾಯತಾಕ್ಷ
ಇಂದುಶೇಖರಕುಮಾರ ಸ್ಕಂದನೆ ನಿತ್ಯಾನಂದನೆ ೨
ಪಾವಂಜಾಖ್ಯಸುಕ್ಷೇತ್ರವಾಸ ಪೊರೆಯೊ ಪರಮೇಶ
ಕೇವಲ ವಿಜ್ಞಾನಪ್ರಕಾಶ
ಭಾವಜೋಪಮ ಲಾವಣ್ಯ ಕೋವಿದಾಗ್ರಗಣ್ಯ ಮಹಾ-
ದೇವ ಲಕ್ಷ್ಮೀನಾರಾಯಣನ ಸೇವಕ ಬುದ್ಧಿದಾಯಕ ೩

೩೦೩
ಸುರರ ಮೊರೆಯನೆಲ್ಲ ಕೇಳಿ
ತರಳನೆ ವನದಿ ನರಹರಿ ರೂಪವ ತಾಳಿ ತೋರುತ ಧಾಳಿ
ದುರುಳನ ಒಡಲನು ನಖದೊಳು ಸೀಳಿ
ಕರುಳ ಮಾಲೆಯನು ಕೊರಳೊಳು ಧರಿಸಿದ
ಸಿರಿವರಗಾರತಿಯ ಬೆಳಗಿರೆ ಶೋಭಾನೆ ೧
ದುರಿತಾದ್ರಿಗಳನು ತರಿವ
ಸ್ಮರಿಸುವ ದಾಸರ ಪೊರೆವ
ಕರುಣಾಮೃತವನು ಶಿರದೊಳು ಸುರಿವಾ
ಅರಿಪುಂಜವ ಕತ್ತರಿಸುತ ಮೆರೆವ
ಕರವ ಪ್ರಲ್ಹಾದನ ಶಿರದೊಳಗಿರಿಸಿದ
ಸರಸ ವರಗಾರತಿಯ ಬೆಳಗಿರೆ ಶೋಭಾನೆ ೨
ಸುಲಲಿತ ಪದ್ಮೆಯ ವಕ್ಷ ಸ್ಥ
ಳದಲಿ ನೆಲೆಗೊಳಿಸಿದಗೆ
ಕಳವಳಿಸುವ ಭಕ್ತೌಘನ ಬೇಗದಿ
ಸಲಹುತಹೋಬಲ ನಿಲಯದಿ ಶೋಭಿಪ
ಚೆಲುವ ಶೇಷಗಿರಿ ವರನಿಗೆ ರತ್ನದ
ತಳಿಗೆಯೊಳಾರತಿಯ ಬೆಳಗಿರೆ ಶೋಭಾನೆ ೩

೭೨
(ಸೂರ್ಯನಾರಾಯಣನ ಪ್ರಾರ್ಥನೆ)
ಸೂರ್ಯಬಿಂಬಗತ ನಾರಾಯಣನನು
ಸೇರಿರುವೆನು ಸತತ
ಹಾರ ಮಕುಟ ಕೇಯೂರ ಕುಂಡಲಧರ
ಸಾರಸಜಾಸನ ಹೈರಣ್ಯವಪುಷನ ಪ .
ಸರ್ಗಸ್ಥಿತಿಗತಿ ಕಾರಣವ್ಯಾಹೃತಿ ಗರ್ವವೇದ್ಯ ಚರಣಾ
ಭರ್ಗ ಶಬ್ದಿತ ತೇಜೋಧಾರಣ ಸ್ವರ್ಗವಾಸಿ ಶರಣಾ
ಭಾರ್ಗವಿ ಮುಖ ಸಂಸರ್ಗಾನನ ಮತಿ
ವರ್ಗಕೇತ್ವತೈದ ಮಾರ್ಗವ ತೋರಿಸು ೧
ಸೂರಿಗಮ್ಯಪದ ವಾರಿಜಸುರಪರಿವಾರ ನಿನ್ನ ಕರುಣಾ
ತೋರು ಭೌತಿಕ ಶರೀರ ದಾಢ್ರ್ಯ ಮೂರಾರು ಭಕುತಿ ನವ
ನಾರದಾದಿ ಮುನಿವಂದಿತ ನಿನ್ನಾ-
ಧಾರವ ನಂಬಿದೆ ನೀರಜ ಬಾಂಧವ ೨
ಈ ಜಗದೊಳು ಬಹು ಸೋಜಿಗದೋರುವ ರಾಜರಾಜ ನೀನೆ
ರಾಜಸೂಯಯುತ ವಾಜಿಮೇಧ ಕೃದ್ರಾಜನ ಮೈದುನನೆ
ಓಜೋಬಲ ಬಹು ತೇಜದ ಪನ್ನಗ
ರಾಜ ಗಿರೀಂದ್ರ ವಿರಾಚಿತ ಕರುಣಿಸು ೩

೩೦೬
ಸೃಷ್ಟಿಗೊಡೆಯನಿಗೆ ಜಯ ಮಂಗಳಂ ಕಾಲುಂ-
ಗುಷ್ಠ ಚೀಪುವವನಿಗೆ ಶುಭ ಮಂಗಳಂ
ನೀಲ ಮೇಘ ನಿಭ ವಿಗ್ರಹ ಶುಭ ಕ-
ಮಲಾಲಯ ರಮಣನಿಗೆ ಜಯ ಮಂಗಳಂ
ಬಾಲಕ ರೂಪದಿಂದಾಲದೆಲೆಯ ಮೇಲೆ
ಲೀಲೆ ತೋರುವ ಗೋಪಾಲನಿಗೆ ೧
ನೀಲಳಕಗಳ ಸಿರಿಮುಡಿಗಟ್ಟಿ ಮ-
ರಾಳ ಸಿಂಘಗಳಿಂದದಲಂಕರಿಸಿ
ಕಾಲದಿಂದಿಗೆ ಗೆಜ್ಜೆ ಘಲ ಘಲಿಸುತ ತನ್ನ
ಕಾಲಕರದೊಳೆತ್ತಿ ಕುಣಿಸುವಗೆ೨
ವಾರಿಜ ಭವಪಿತ ಮಾರಕೋಟಿ ಶೃಂ-
ಗಾರ ಮೂರುತಿ ಮುಖವಾರಿಜವ
ತೋರುವ ಸುಧಾರಸ ವಾರುಧಿ ಗೋಪಕು-
ಮಾರ ಶೇಷಾಚಲಧಾರನಿಗೆ ೩

ಪೌರಾಣಿಕ ಕಥನ
೪೭೪
ಸಂಕ್ಷಿಪ್ತ ರಾಮಾಯಣ
ಸೃಷ್ಟಿಯಲಿ ಕಡು ದುಷ್ಟ ರಾವಣ ಕಟ್ಟಳೆಯ ಕಂಗೆಡಿಸಲು
ಅಷ್ಟರೊಳು ಭಯಪಟ್ಟು ದಿವಿಜರು ಒಟ್ಟುಗೂಡುತ ಸ್ತುತಿಸಲು
ಥಟ್ಟನೆ ದಯವಿಟ್ಟು ದಶರಥಪಟ್ಟಮಹಿಷಿಯೊಳುದಿಸಲು
ದಿಟ್ಟ ಕೌಶಿಕನಿಷ್ಟಿಯನು ಕೈಗೊಟ್ಟು ಸಲಹಿದ
ಶ್ರೇಷ್ಠಧನುಜಘರಟ್ಟಗಾರತಿಯ ಬೆಳಗಿದರು೧
ಹಾದಿಯೊಳು ಶಿಲೆಯಾದಹಲ್ಯೆಯ
ಪಾದರಜದಿಂ ಪೊರೆಯುತ
ಸಾಧಿಸಿದ ಧನು ಭೇದಿಸುತ ಹಿತಳಾದ ಸೀತೆಯ ಒಲಿಸುತ
ಕ್ರೋಧದಿಂದೆದುರಾದ ಪರಶುವನಾ ದಯಾನಿಧಿ ಗೆಲ್ಲುತ
ಸಾಧುಮಾರ್ಗವಿನೋದ ಸೀತಾಹ್ಲಾದ ಪಾಪವಿರೋಧ
ದಾನವಸೂದನಗಾರತಿಯ ಬೆಳಗಿದರು ೨
ಚಿಕ್ಕ ತಾಯಿಯ ಸೊಕ್ಕುನುಡಿಗತಿಸೌಖ್ಯವನು ಹೋಗಾಡುತ
ಘಕ್ಕನನುಜನ ನಿಜಸತಿಯತಾ ಸೌಖ್ಯದಿಂದೊಡಗೂಡುತ
ಒಕ್ಕಣಿಸುವಡಶಕ್ಯವಾದ ವನಕ್ಕೆ ತಾ ಸಂಚರಿಸುತ
ಮಿಕ್ಕಿ ಬಂದಾ ರಕ್ಕಸಿಯ ಕುಚದಿಕ್ಕೆಲವ ಖಂಡಿಸಿದ ಪ್ರಭುಗೆ
ಮಾಣಿಕ್ಯದಾರತಿಯ ಬೆಳಗಿದರು ೩
ಧೂರ್ತ ಖರತ್ರಿಶಿರಾದಿ ದಾನವ ಮೊತ್ತವನು ಸಂಹರಿಸುತ
ದೈತ್ಯಮಾಯಾವೃತ್ತಿಮೃಗವನು ಮತ್ತಕಾಶಿನಿ ಬೇಡುತ
ಸತ್ತ್ವನಿಧಿ ಬೆನ್ನಟ್ಟಿ ಸೀತೆಯ ದೈತ್ಯಪತಿ ಕೊಂಡೋಡುತ
ಮತ್ತೆ ಕಾಣದೆ ಕೋಪದಿಂದರಸುತ್ತ ಬಂದ ಮಹಾತ್ಮ ರಾಮಗೆ
ಮುತ್ತಿನಾರತಿಯ ಬೆಳಗಿದರು ೪
ತೋಯಜಾಕ್ಷಿಯ ಸುದ್ದಿ ಪೇಳ್ದ ಜಟಾಯುವಿಗೆ ಗತಿ ತೋರುತ
ವಾಯುತನುಜಸಹಾಯದಿಂ ಕಪಿರಾಯ ಸಖ್ಯವ ಮಾಡುತ
ನ್ಯಾಯಗರ್ಭಿತ ಸಾಯಕದಿ ಮಹಕಾಯ ವಾಲಿಯ ಕೊಲ್ಲುತ
ಪ್ರಾಯಶದಿ ಗಿರಿಯೊಡ್ಡಿ ಶರಧಿಗುಪಾಯದಿಂ ಬಂಧಿಸಿದ
ಜಾನಕೀಪ್ರಿಯಗಾರತಿಯ ಬೆಳಗಿದರು ೫
ಮನವಿವೇಕವ ನೆನೆದು ಬಂದಾ ಧನುಜಪತಿ ಸೋದರನಿಗೆ
ಇನಶಶಿಗಳುಳ್ಳನಕ ಲಂಕಾವನಿಯ ಪಾಲಿಸುತ ಮಿಗೆ
ರಣದಿ ರಾವಣಕುಂಭಕರ್ಣರ ಹನನಗೈಯುತ ಲೋಕಕೆ
ಸನುಮತದಿ ಪಾವಕನ ಮುಖದಿಂದನಘೆ
ಸೀತೆಯ ವಿನಯ ಗೈದಗೆ
ಕನಕದಾರತಿಯ ಬೆಳಗಿದರು

ಮೇರುಗಿರಿನಿಭ ಇಂದ್ರಪುಷ್ಪಕಾವೇರಿ ತಾ ಸಾಕೇತಕೆ
ಸೇರಿ ಸಾನುಜರಿಂದ ಧರ್ಮದ ಮೇರೆದಪ್ಪದೆ ಸುಜನಕೆ
ಸಾರಸಂಪದವಿತ್ತು ಲೋಕೋದ್ಧಾರನಾಗುತ್ತಖಿಳಕೆ
ನೀರಜೇಕ್ಷಣ ಕರುಣಪಾರಾವಾರ ಶರಧೀಗಂಭೀರ ಲಕ್ಷುಮೀ
ನಾರಾಯಣ ರೂಪ ಜಯ ಜಯ ೭

೫೬
(ಮಂಗಳೂರಿನ ಶ್ರೀ ವೆಂಕಟರಮಣ ದೇವರನ್ನು ನೆನೆದು)
ಸೇರಿರಯ್ಯ ಸುರ ವೈರಿ ವಿದಾರಣ ವೀರ ವೆಂಕಟಪತಿಯಾ ಪ.
ವಾರಿಜಾಸನ ವಂದ್ಯಾ ಸಚ್ಚರಣಾ ಕರುಣಾ ಶರಣಾ
ಸುಜನಾರ್ತಿ ವಾರಣಾ
ತೋರುತಿಪ್ಪನು ಕೌಸ್ತುಭಾಭರಣ ಭುಜಗಾ ಸ್ತರಣಾ
ಮೃತ್ಯಬ್ಧಿತಾರಣ
ಧೀರತನದಿ ಕಠಾರಿ ನಡುವಿಗೆ ಸೇರಿ ದಟ್ಟಿಯನುಟ್ಟು ಕೊಂಕಣ
ವೀರ ಸೇವೆಯ ಕೊಂಡು ಪಕ್ಷಿಯ ಸೇರಿ ಭಂಡಿಯ
ಸ್ವಾರಿ ಬರುವನ ೧
ಮೆಲ್ಲಮೆಲ್ಲನೆ ಮುಂದರಿಸಿ ಬರುವಾ ಕಮಲಾ ಕರವಾ
ಪಿಡಿವುತ್ತ ನಡುನಡು-
ವಿಲ್ಲಿ ಫಲಪುಷ್ಪದಾರತಿಯ ತರುವಾ ಭರವಾ ಸರಿವಾ
ಮತ್ತಲ್ಲಿ ಮೆರೆವಾ
ಖುಲ್ಲ ಜನರೆದೆ ಝಲ್ಲೆನಲು ಸಿರಿನಲ್ಲ ದಾಸರ ಮಸ್ತಕದಿ ಕರ
ಪಲ್ಲವವನಿರಿಸೆಲ್ಲರನು ತಡವಿಲ್ಲದಲೆ ಸುಖದಲ್ಲಿ ಸಲಹುವÀ ೨
ಮಂಗಳಾಭಿದ ಪಟ್ಟಣಾಧೀಶಾ ಪದ್ಮಾ ಪುರುಷಾ ಶ್ರೀ ವೆಂಕಟೇಶಾ
ತುಂಗವಿಧಿ ಮಾಲಿಕಾಭೂಷಾ ಅತಸೀ ಭಾಸಾ ಸ್ಮಿತಪೂರ್ಣಭಾಷಾ
ಇಂಗಿತಗಳರಿತೀವ ಸೌಖ್ಯ ತರಂಗಗಳ ಸುರ ಸಾರ್ವಭೌಮ ಕು-
ರಂಗ ನಯನಾಲಿಂಗಿತಾಂಗ ಮತಂಗಜಾವರಮೋಹಿರೂಪನ ೩

೨೪
ಸೈ ಸೈ ಶರಣಾಗತ ವತ್ಸಲ ನೀ
ನೋಯಿಸಬಂದಸುರೆಗೆ ನಿರ್ಮಲ ಸುಖವಿತ್ತಿ ಪ.
ಬೆನ್ನಿನ ಮೇಲೆ ಬೆಟ್ಟವ ಪೊರಿಸಿದ ಸುರ-
ರನ್ನು ಕಾಪಾಡಿ ಸುಧೆಯನುಣಿಸಿದಿ ನೀ ೧
ಹಂಜಿಯಂದದಿ ತಲೆ ನರತಿಹ ಬ್ಯಾಡತಿ
ಯಂಜಲ ಸವಿದ ನಿರಂಜನ ಮೂರುತಿ೨
ಅಟ್ಟಿ ಬರುತ ನಿನ್ನ ಕಟ್ಟಿದ ಗೋಪೆಗೆ
ಪೊಟ್ಟೆಯೊಳಿಹ ಸರ್ವ ಲೋಕವ ತೋರಿದಿ ೩
ಅಗ್ರಜ ಭಾರ್ಯಳನುಳುಪಿ ಕೊಲ್ಲಿಸಿದಂಥ
ಸುಗ್ರೀವನ ಕೂಡೆ ಸಖ್ಯವ ಬೆಳಸಿದಿ ೪
ಭೂಮಿಯೊಳಿನ ಸರ್ವ ಪಾತಕಿ ಪತಿಯಾದ-
ಜಾಮಿಳನನು ತನ್ನ ನಿಲಯಕೆ ಕರೆಸಿದಿ ೫
ವಿಧ ವಿಧದನ್ನವ ಕುರುಪತಿಯಲಿ ಬಿಟ್ಟು
ವಿದುರನ ಮನೆಯಲಿ ಕುಡುತೆ ಪಾಲುಂಡುವ ೬
ಕಂಡವರನು ಕೊಂದಿಹ ಕ್ರೂರನ ಮುನಿ
ಮಂಡಲದಲಿ ಪ್ರಚಂಡನೆಂದೆನಿಸಿದಿ ೭
ಕುಂತಿಯ ಕುವರನ ಕುದುರೆಯ ನಡೆಸುತ
ಅಂತರಂಗ ಸಖ್ಯವ ಬೆಳೆಸಿದಿ ನೀ ೮
ಖುಲ್ಲ ಚೇಷ್ಟೆಯ ಮಾಡಿ ಕಲ್ಲಾಗಿ ಬಿದ್ದ ಅ-
ಹಲ್ಯೆ ಪತಿವ್ರತೆ ಎಂಬ ಬಿರುದ ಕೊಟ್ಟ್ಟಿ ೯
ತಂದೆಯ ಕೊಲ್ಲಬೇಕೆಂದು ಸನ್ನಹಗೈದ
ಕಂದನ ಸ್ವಾಂಕದೊಳಂದು ಕುಳ್ಳಿರಿಸಿದಿ ೧೦
ಎಷ್ಟೊ ಪಾಪಗಳಟ್ಟುಳಿ ಬಿಡಿಸಿರೆ
ಭ್ರಷ್ಟನೆಂದೆನ್ನೊಳು ನಿಷ್ಠುರವ್ಯಾತಕೆ ೧೧
ಮುನ್ನಿನ ಬಿರುದುಗಳನ್ನು ಬೇಕಾದರೆಎನ್ನನು ರಕ್ಷಿಸು ಪನ್ನಗ ಗಿರಿವರ ೧೨

೪೩೦
ಸ್ಕಂದಗುರು ಸ್ಕಂದಗುರು ಸುರ-
ವೃಂದ ಮುನಿಜನರು ವಂದಿಪರುಪ.
ಮಂದರಧರ ಗೋವಿಂದನ ಶರಣರ
ಸಂದೋಹಕಾವ ವೃಂದಾರಕತರುಅ.ಪ.
ತಾಮಸರು ದ್ವೇಷ ಬೇಡುವರು
ಕಾಮಿತ ಕೇಳ್ವರು ರಾಜಸರು
ಸ್ವಾಮಿ ಶ್ರೀಹರಿಯ ಭಕ್ತಿಜ್ಞಾನವ
ಪ್ರೇಮದಿ ಕೇಳ್ವರು ಸಾತ್ವಿಕರು೧
ವಿಘ್ನಹರನು ನಿನ್ನಗ್ರಜನು ವಿಬು-
ಧಾಗ್ರಣಿಯೆನಿಸುವೆಯೊ ನೀನು
ಉಗ್ರ ತ್ರಿಯಂಬಕತಾತನು ಖ್ಯಾತನು
ದುರ್ಗಾದೇವಿಯೆ ಜನನಿ ನಿರುಪಮಳು೨
ತಾರಕಾಂತಕ ನಿಶ್ಯೋಕ ಲಕ್ಷ್ಮೀ-
ನಾರಾಯಣನಿಗೆ ಸಖ
ಭೂರಿನಿಗಮಾರ್ಥಸಾರ ಕೋವಿದನೆ
ಧೀರನೆ ವೀರ ಮಹಾರಣಶೂರನೆ೩

೩೫೦
ಸ್ಮರಣೆಯೊಂದಿರೆ ಸಾಲದೆ ಶ್ರೀಹರಿನಾಮ ಪ.
Àರುಣಾಕರ ನಿಜ ಶರಣ ರಕ್ಷಾಮಣಿ
ತರಣಿಕೋಟಿಭಾಸುರ ಶ್ರೀನಾರಾಯಣನ ೧
ಕಾಲನವರ ಕಂಡು ಬಾಲನ ಕರೆದಗೆ
ಸಾಲೋಕ್ಯವಿತ್ತ ಶ್ರೀನಾರಾಯಣನ ೨
ತರಳ ಪ್ರಹ್ಲಾದನು ಕರೆಯೆ ಕಂಬದಿ ಬಂದು
ನರಮೃಗೇಂದ್ರನಾಗಿ ಪೊರೆದ ನಾರಾಯಣನ ೩
ಮಾತೆಯ ಸವತಿಯ ಮಾತಿಗಾಗಿ ಬಂ-
ದಾತನ ಕಾಯ್ದ ಶ್ರೀನಾಥ ನಾರಾಯಣನ ೪
ಮೊಸಳೆಯ ಬಾಧೆಗೆ ಹಸಿದು ಕೂಗಲಾಗಿ
ಬಸವಳಿದಿಹನ ರಕ್ಷಿಸಿದ ನಾರಾಯಣನ ೫
ಕಾದೆಣ್ಣೆಯೊಳು ಕರುಣೋದಯದಿ ಸುಧನ್ವ-
ಗಾದರಿಸಿ ರಕ್ಷಿಸಿದಾದಿನಾರಾಯಣನ ೬
ಮಾರಜನಕ ರಮಾರಮಣ ಲಕ್ಷ್ಮೀ-
ನಾರಾಯಣನ ಪಾದಾರವಿಂದಯುಗ ೭

೧೦೭
ಸ್ಮರಿಸಿರೊ ನಮ್ಮ ನರನ ಸಾರಥಿಯ
ಪರಿಹರಿಸುವನು ತಾಪತ್ರಯ ವ್ಯಥೆಯ ಪ.
ರಣಮಂಡಲದಲ್ಲಿ ಗುಣಗುವ ಕುಂತಿಯ
ತನುಜನ ನೋಡುತ ವಿನಯದಿಂದ
ಘನತತ್ವವನು ಪೇಳಿ ಅಣುಮಹದ್ಗತ ವಿಶ್ವ-
ತನುವ ತೋರಿದ ಸತ್ಯ ವಿನಯ ಶ್ರೀ ಕೃಷ್ಣನ ೧
ಸುರನದೀ ತನುಜನ ಶರದಿಂದ ರಕ್ತವ
ಸುರಿವಂದ ತೋರಿ ಶ್ರೀಕರ ಚಕ್ರವ
ಧರಿಸಿ ಓಡುತ ತನ್ನ ಚರಣ ಸೇವಕನೆಂಬ
ಹರುಷ ತಾಳಿ ಬೇಗ ತಿರುಗಿ ಬಂದವನ ೨
ವಿಜಯ ಸಾರಥಿಯಂದು ಭಜಿಸುವ ದಾಸರ
ವಿಜಯ ಪೊಂದಿಸುವನಂಡಜ ರಾಜಗಮನ
ಅಜ ಭವವರದ ಕಂಬುಜನಾಭ ಕಮಲೇಶ
ಭುಜಗ ಧರಾಧೀಶ ಭಜನೀಯಪಾದನ ೩


ಸ್ಮರಿಸೊ ಹರಿನಾಮ ಏ ಮನುಜಾ
ಸ್ಮರಿಸೋ ಹರಿನಾಮ
ನಿರವಧಿ ಸುಖಧಾಮ ಪರಮ ಪುರುಷಗಿದು
ಪರಿಪೂರ್ಣ ಪ್ರೇಮ ಪ.
ತರಳ ಪ್ರಹ್ಲಾದನ ಪೊರದು ಪಾಂಚಾಲಿಗೆ
ತ್ವರಿತದೊಳಕ್ಷಯವಿತ್ತು
ಸರಸಿಯೊಳಗೆ ಕರಿರಾಜನ ಸಲಹಿದ
ನರ ಕಂಠೀರವ ಕರುಣಿಸುವನು ಬೇಗ ೧
ಹಲವು ಜನ್ಮಗಳಲ್ಲಿ ಗಳಿಸಿದ ದುಷ್ರ‍ಕತ
ಗಳನೆಲ್ಲ ನಿರ್ಮೂಲಗೊಳಿಸುವುದು
ಜಲಜ ಸಂಭವ ಮಾಳ್ಪ ಕೆಲಸದಿ ಸಿಲುಕದೇ
ನೆಲೆಗೊಂಡು ಸೌಖ್ಯವ ಸಲಿಸಬೇಕಾದರೆ ೨
ಕಲಿಕೃತ ಕಲ್ಮಷ ಬಲೆಯಿಂದ ಮೋಚನ-
ಗೊಳಿಸಲು ಹರಿನಾಮವಲ್ಲದಿನ್ನು
ಚಲಿತ ಚಿತ್ತದ ಕರ್ಮಬಲದಿಂದಲಾಹದೆ
ನಳಿನನಾಭನೇ ನೀ ಬೆಂಬಲನಾಗು ತನಗೆಂದು ೩
ಉದಯಾರಂಭಿಸಿ ಮತ್ತೊಂದು ದಯ ಪರ್ಯಂತ
ವಿಧಿವಿಹಿತಗಳೆಲ್ಲ ಸದರವೇನೊ
ಪದುಮನಾಭನ ನಾಮ ಒದಗಿದರದು ಪೂರ್ಣ-
ವದರಿಂದ ಸರ್ವರ ಹೃದಯ ನೀ ಮರೆಯದೆ ೪
ಸಂಚಿತಾಗಾಮಿಗಳಂಚುವಂ ದಿತಿಜರ
ಸಂಚಯಕನುದಿನ ಸ್ಮರಿಸುವರ
ಕಿಂತಿತಾರಬ್ದ ಪ್ರಪಂಚವ ತ್ವರಿತದಿ
ಮಿಂಚಿನಂದದಿ ತೋರಿ ಪರಿಹಾರಗೊಳಿಪರೇ ೫
ಕರುಣಾಭಿಮಾನಿಗಳರಿತು ಮಾಡಿಸುತಿಹ
ನಿರತ ಕೃತ್ಯಗಳೊಂದು ಮೀರದಲೆ
ಹರಿಯಾಜ್ಞೆ ಇದು ಯೆಂದು ಚರಿಸುತಲನುದಿನ
ಪರಮೋತ್ತಮ ಕಾರ್ಯಧುರವಿದೆ ತನಗೆಂದು ೬
ನಾಗ ಗಿರೀಂದ್ರನ ನೆನೆದರೆ ಇಹಪರ
ಭೋಗ ಸಾಮ್ರಾಜ್ಯವು ಸ್ಥಿರವಾಹುದು
ವಾಗೀಶನ ಪರಮಾಗಮ ಸಿದ್ಧಾಂತ-
ವಾಗಿಹದಿದೆಯೆಂದು ನೀ ಗುರುತವನಿಟ್ಟು ೭

೧೯೯
(ಸ್ವಪ್ನದಲ್ಲಿ ಶ್ರೀಹರಿಯ ಭಾವನೆ ತುಂಬಿ ಬಂದಾಗ)
ನಂಬಿದೆನೊ ಸ್ವಾಮಿ ನಂಬಿದೆನೊ ಪ.
ಅಂಬುಜಾಕ್ಷ ಸ್ವಪ್ನದಿ ನೀ ತುಂಬಿದಾನಂದ ವಾರ್ತೆಯ ಅ.ಪ.
ಈರೇಳು ಲೋಕದ ಜನಕೆ
ಮೂರಾವಸ್ಥೆಗಳಲಿ ನೀನೆ
ಪ್ರೇರೇಪಿಸುವನೆಂದು ವೇದ ಸಾರವಾಗಿದೆ
ನಾರದಾದಿ ಸಕಲ ಮುನಿ
ವೀರರೆಲ್ಲ ಸ್ವಪ್ನವು ನಿ-
ಸ್ಸಾರವಲ್ಲವೆಂದು ಪೇಳ್ವಾಧಾರದಿಂದ ಭ್ರಮೆಯ ಬಿಟ್ಟು ೧
ನಾನು ನನ್ನದೆಂಬ ಬಹು
ಹೀನ ಮತಿಯ ಪೇಳ್ವ ನರಗೆ
ತಾನಾಗಿ ಬಂದುಸುರಲನುಮಾನಕರವೆಂದು
ಶ್ರೀನಿಕೇತನ ನಿನ್ನ ಚರಣ
ಮಾನಿಯೆಂದು ಮನ್ನಿಸಿ
ಸ್ವಪ್ನಾನುಸರಿಸಿ ಶುಭವ ಪೇಳಿ ದೀನಭಾವ ಕಳೆವಿಯೆಂದು ೨
ಇಂದಿರೇಶ ಎನ್ನೊಳಿರುವ
ಕುಂದನೊಂದನೆಣಿಸದೆ ಈ
ಅಂದದಿಂದಲೆಂದೆಂದಿಗು ತಂದೆ ಕರುಣಿಸು
ಸುಂದರಾಂಗ ಶೇಷಗಿರಿ
ಮಂದಿರ ನಿನ್ನ ಪಾದಾರ
ವಿಂದ ಭಕ್ತಿ ಇತ್ತು ನಿತ್ಯಾನಂದಗೊಳಿಸಿ ಸಲಹೊ ಬೇಗ ೩

೭೫
(ಶೇಷಶಾಯಿಯ ವರ್ಣನೆ)
ಸ್ವರಮಣನೆನುತಲಿ ಮೊರೆಯಲು ಶ್ರುತಿಗಳು
ಹೊರಳುವದೇನುಚಿತ
ಅರೆ ನಿಮಿಷವು ನಿನ್ನುರವ ಬಿಟ್ಟಗಲದೆ
ಇರುವಳು ರಮೆ ನಿರತ ಪ.
ಕವಿಗಳು ಗುಣರಸ ಸವಿದು ಸುಖಭರದಿ
ದಿವಿಜರ ಲೆಕ್ಕಿಸರೂ
ಪವಿಧರ ಪಾಲಕ ರವಿ ಉದಿಸಿದ ಬಳಿ
ಕವಿಕುಲ ಮಲಗುವರೆ ೧
ಇಂದಿರೆ ನಿನ್ನನು ಹೊಂದುತ ಪರಮಾ-
ನಂದದಿ ಮುಳುಗಿರಲು
ಎಂದಿಗು ಮಲಗದ ಸುಂದರ ವಿಗ್ರಹ
ಇಂದು ನೀ ಮಲಗುವರೆ ೨
ದೋಷವಿದೂರ ಅಶೇಷ ಸುರಾರ್ಚಿತ
ದಾಸ ಜನಾನಂದ
ಶೇಷಗಿರಿ ವಿಶೇಷಾಸನ ಯಿ-
ನ್ನೇಸು ಶಯನ ಚಂದ ೩

೧೩೭
ಸ್ವಾಮಿ ನಿನಗೆ ಶರಣನೆಂಬೆ ಸೋಮನಾಥಾ ಸಕಲ
ಕಾಮಿತಾರ್ಥವಿತ್ತು ಸಲಹೊ ಸೋಮನಾಥಾ ಪ.
ಹರಿಯ ಕರುಣಾ ಬಲದಿ ನೀನು ಸೋಮನಾಥಾ ಸರ್ವ
ಸುರರಿಗೆಲ್ಲ ಧೊರೆಯಾಗಿರುವಿ ಸೋಮನಾಥ
ಕರುಣಿಯೆಂದು ನಿನ್ನ ಪಾದ ನಂಬಿ ಸೋಮನಾಥ
ಮೊರೆಯ ಹೊಕ್ಕೆ ನಿಂದು ಬಂದು ಸೋಮನಾಥ ೧
ವಿಘ್ನರಾಜ ನಿನ್ನ ಮಗನು ಸೋಮನಾಥಾ ಬೇಗ
ಭಸ್ಮಗೈಸು ವೈರಿಗಳನು ಸೋಮನಾಥಾ
ಮಗ್ನನಾದೆ ಮಹಾಂಬುಧಿಯೊಳ್ ಸೋಮನಾಥಾ ಸರ್ವ
ವಿಘ್ನವೋಡಿಸೈ ಕೃಪಾಳೊ ಸೋಮನಾಥ ೨
ಶಂಕರ ಕೈಪಿಡಿಯೊ ತ್ರಿಪುರ ಬಿಂಕವಾರಿ ಶ್ರೀ-
ವೆಂಕಟಾದ್ರಿನಾಥನ ಮನೋನುಸಾರೀ
ಕಿಂಕರನೆಂದೆನಿಸೆನ್ನ ಮೃಗಾಂಕಧಾರೀ ಪಾದ-
ಪಂಕಜವ ನೀಡು ಸರ್ವಾತಂಕಹಾರೀ ೩

೪೬೨
ಸ್ವಾಮಿ ಪರಾಕು ಮಹಾಸ್ವಾಮಿ ಸಜ್ಜನಪ್ರೇಮಿಪ.
ಕ್ಷೀರಸಾಗರಶಯನ ನಿವಾಸಾಪಾರಗುಣಗಣಾಶ್ರಯ
ಪಾರಮೇಷ್ಠಿ ಪ್ರಮುಖಾಮರಪೂಜಿತ ಚಾರು
ಪದಾಬ್ಜದ್ವಯ ದನು-
ಜಾರಿ ಧನಂಜಯಪ್ರಿಯ ಮದವಾರಣಕೃತನಿರ್ಭಯ ನಮ್ಮ
ದೂರನು ಲಾಲಿಸು ಚಿನ್ಮಯ ಜಯ೧
ದುಷ್ಟ ನಿಶಾಚರರಟ್ಟುಳಿ ಘನ ಕಂಗೆಟ್ಟುದು ಸುರಮುನಿಗಣ ಆ
ಭ್ರಷ್ಟರು ಮಾಡುವ ನಿಷ್ಠುರಕೆ ಮೈಗೊಟ್ಟೆವು ಸಂಕರ್ಷಣ ನಾವಿ-
ನ್ನೆಷ್ಟೆಂಬುದು ದುರ್ಗುಣವಶ ಬಿಟ್ಟೆವು ಸುರಪಟ್ಟಣ ನಮ್ಮ
ಕಷ್ಟವು ಪದಕರ್ಪಣ ಪರಾಯಣ ೨
ಅಂತರಂಗ ಬಹಿರಂಗ ಭ್ರಷ್ಟದನುಸಂತತಿ ಸಂತತಿ ಭಾರಿ ಬಲು
ಭ್ರಾಂತಿ ವಿಜ್ಞಾನ ವಿತಾನ
ಧುರೀಣರ್ಸಂತಾಪಿಪರು ಮುರಾರಿ ನಮ್ಮ
ಸಂತೈಸೈ ಗಿರಿಧಾರಿ ಶ್ರೀಕಾಂತ ಕೃಪಾರ್ಣವ ಶೌರಿ ಜಗ-
ದಂತ ವಿಹಾರಿ ನಿರಂತ ಪರಂತಪ೩
ಚೆನ್ನಕೇಶವ ಚರಾಚರಾತ್ಮ ಚೈತನ್ಯರೂಪ ಶ್ರೀರಂಗ ನಮ್ಮ
ಬಿನ್ನಪ ಲಾಲಿಸು ತ್ರಿಭುವನವನ್ನು ಸನ್ನುತ ಶುಭಾಂಗ ಸ-
ರ್ವೋನ್ನತ ಮಹಿಮ ತರಂಗ ದುರಿತಾನ್ವಯ
ತಿಮಿರ ಪತಂಗ ಸುಪ್ರ
ಸನ್ನ ಸದೋದಿತ ವಿಹಂಗ ತುರಂಗ೪
ನೀಲೇಂದೀವರ ಶ್ಯಾಮಲ ಕೋಮಲ
ಕಾಲನಿಯಾಮಕ ಪ್ರಾಣ ನಿ
ನ್ನೋಲಗ ಸೇವಕರಾಳಿಯೂಳಿಗವ ಕೇಳು ತ್ರಿಲೋಕತ್ರಾಣ ನತ
ಪಾಲ ಪರೇಶ ಪುರಾಣ ಶ್ರೀಲೋಲ ವಿಗತ ಪರಿಮಾಣ ಹೃದ-
ಯಾಲಯಮಣಿ ಲಕ್ಷ್ಮೀನಾರಾಯಣ ೫

೨೧೩
ಸ್ವಾಮಿ ಯಾತಕೆನ್ನೊಳುಪೇಕ್ಷೆ ಮಾಡುವಿ
ದೀನನಾಥ ಸುಮ್ಮನೆ ನಿಂತು ನೋಡುವಿ ಪ.
ನಡೆವನ ಕಣ್ಣ ಕಟ್ಟಿ ಕೆಡಹುವುದುಚಿತವೆ
ಒಡೆಯ ನಿನ್ನಡಿಗಳ ಪೊಗಳುವ ಪಾಡಿ
ನುಡಿವ ಕಾರ್ಯಕೆ ಬಾಡಿ ಬಳಲುತ ನಾ
ಪಡುವ ಶ್ರಮವ ನಿತ್ಯ ನೋಡುತ
ಬಡವನ ಬಿಡದಿರು ಕಡಲಶಯನ ನಿಜ
ಮಡದಿ ಸಹಿತನಾಗಿ ಶ್ರೀಶನೆ ಕೃಪೆ
ಯಿಡು ಕಂಜಕರ ಶ್ರೀನಿವಾಸನೆ೧
ಭಾವಜ ಪಿತ ನಿನ್ನ ಸೇವೆ ಮಾಳ್ಪರಿಗೆಂದು
ನೋವ ನೀಡದೆ ಕಾವ ಬಿರುದನು ಭವ
ಸಾರÀ ನೀ ಮರೆವುದು ನೀತಿಯೆ ಎನ್ನ
ನೀ ವಿಧ ಮಾಳ್ಪುದು ಖ್ಯಾತಿಯೆ
ಪಾವನ ಚರಿತ ಪುರಾಣ ಪುರುಷ ಮಹ
ದೇವ ನೀ ಕರಪಿಡಿದೆನ್ನನು ಕರು-
ಣಾವಲಂಬನವಿತ್ತು ಪೊರೆವುದು ೨
ಹುರುಳಿಲ್ಲದೆ ಬಹು ದುರುಳ ಭಾವನೆಯಿಂದ
ಸರಿದು ಹೋಗುವ ಪಂಚ
ಕರಣಕೆ ನೀನರಸನಲ್ಲವೆ ಭಕ್ತಾ-
ಭರಣಕೆ ನಿನ್ನೊಳಿರಿಸು ಮಾರ್ಗವನಂತ:-
ಕರಣಕೆ ತರಿದು ಪಾಪಗಳನು-
ದ್ಧರಿಸೆನ್ನ ವೆಂಕಟಗಿರಿವರ ದೀನಾರ್ತಿ
ವಾರಣ ಚಕ್ರಧರ ಸಕಲಾನಂದ ಕಾರಣ ೩

೪೩೧
ಸ್ವಾಮೀ ರಕ್ಷಿಸು ಸುಬ್ರಹ್ಮಣ್ಯ
ಕಾಮಿತಪ್ರದ ಸುರಸ್ತೋಮಾಗ್ರಗಣ್ಯಪ.
ಜನ್ಮ ಜನ್ಮಾಂತರದ ಕರ್ಮಾನುಸಾರದಿಂ
ದುರ್ಮತಿಗೆಳಸಿಯಹಮ್ಮಮತೆಯಲಿ
ದುರ್ಮದಾಂಧನಾದೆ ದುರಿತ ದೂರವಿರಿಸು
ನಿರ್ಮಲಜ್ಞಾನೋಪದೇಶವನಿತ್ತೆನ್ನ೧
ಪ್ರತ್ಯಗಾತ್ಮನ ನಾಮ ಕೀರ್ತನೆ ಗೈಯುತ್ತ
ಭಕ್ತಿಸೌಭಾಗ್ಯವಿರಕ್ತಿಯ ನೀಡು
ಭೃತ್ಯವತ್ಸಲ ಭವಭಯಹರ ಗಿರಿಜಾ-
ಪುತ್ರನೆ ಪರಮಪವಿತ್ರ ಸುಚರಿತ್ರನೆ೨
ಸುರಲೋಕವನು ಕಾವ ಧುರಧೀರ ಪ್ರಭು ನಿನಗೀ
ನರಲೋಕವನು ಕಾವದುರು ಕಷ್ಟವೇನು
ಪರಿಶುದ್ಧ ಸ್ಥಾನಿಕಧರಣೀಸುರಕುಲ-
ಗುರುವೆಂದು ಚರಣಕ್ಕೆ ಶರಣಾಗತನಾದೆ೩
ಸಾಕುವಾತನು ನೀನೆ ಸಲಹುವಾತನು ನೀನೆ
ಬೇಕು ಬೇಡೆಂಬುವರ ನಾ ಕಾಣೆ ದೊರೆಯೆ
ಲೋಕೇಶ ಸುಕುಮಾರ ಶೋಕಮೋಹವಿದೂರ
ನೀಕರಿಸದೆಯೆನ್ನ ಸ್ವೀಕಾರ ಮಾಡಯ್ಯ೪
ಪೃಥ್ವಿಯೊಳ್ಪಾವಂಜೆ ಕ್ಷೇತ್ರಾಧಿವಾಸನೆ
ಸುತ್ರಾಮಾದಿ ಸುರಮೊತ್ತ ಪೂಜಿತನೆ
ಕರ್ತ ಲಕ್ಷ್ಮೀನಾರಾಯಣನ ಸಾರೂಪ್ಯನೇ
ದೈತ್ಯದಲ್ಲಣ ವಲ್ಲೀದೇವಿ ಮನೋಹರನೆ೫

೪೯
ಸ್ವಾರಿಯ ಹೊರಟ ಮುರಾರಿ ವಯ್ಯಾರಿ
ಭೋರನೆ ನಿಜಪರಿವಾರವೆಲ್ಲವೂ ಸೇರಿ ಪ.
ಮಕರಕುಂಡಲಧರ ವಿಕಸಿತ ಮುಖಪದ್ಮ
ಚಕಿತ ಕೌಸ್ತುಭ ಶುಭ ವನಮಾಲಿ
ಭಕುತ ವತ್ಸಲನೆಂಬ ಬಿರುದು ತೋರುತ ನಮ್ಮ
ಶಕುತಿಗೆ ಸರಿಯಾದ ಸೇವೆ ಕೊಳ್ಳುವೆನೆಂದು ೧
ಒಡೆಯನೀ ಗತಿಯೆಂಬ ಬಡವ ಭಕ್ತರನೆಲ್ಲು
ಬಿಡನೆಂದು ಭವಸಿಂಧು ಪೊತ್ತನಿಂದು
ತಡವ ಮಾಡದಲೆ ಸಂಗಡ ಬಂದೀ ನಿಲಯದಿ
ನಡು ಮನೆಯಲಿ ನಿಂದು ಕೊಡುವೆ ಸೌಖ್ಯವನೆಂದು ೨
ತುಳಸಿಧಾಮ ಸುಶೋಭಿತ ನಮಗೆ ಬೆಂ-
ಬಲವಾಗಿರುವ ಸರ್ವ ಸ್ಥಳಗಳಲಿ
ಅಲಸನಾಗದೆ ಶೇಷಾಚಲವಾಸನು ಶ್ರೀಭೂ-
ಲಲನೆಯರೊಡಗೂಡಿ ನಲಿವ ಸಂಭ್ರಮದಿಂದ ೩

೩೬೫
ಹನುಮದ್ಭೀಮ ಮಧ್ವನಾಮ ಪ್ರಣತಕಲ್ಪದ್ರುಮ
ಘನಕೃಪಾಳು ಭಕ್ತಚಿಂತಾಮಣಿ ಯೋಗೀಂದ್ರಲಲಾಮ ಪ.
ಭಾರತಿಪತಿ ನಿಖಿಲವಿಶ್ವಾಧಾರ ಭಾವೀಬ್ರಹ್ಮ
ಸಾರತತ್ತ್ವ ವೇದಾರ್ಥಕೋವಿದ ಧೀರ ಜೀವೋತ್ತಮ ೧
ಭರ್ಗವಾಸವಾದಿ ದಿವಿಜವರ್ಗಸುಖಧಾಮ
ನಿರ್ಗುಣೋಪಾಸಕ ಮೋಕ್ಷಮಾರ್ಗದರ್ಶಿ ನಿಷ್ಕಾಮ ೨
ಸೂತ್ರನಾಮಕ ವಾಯುದೇವ ವಿಚಿತ್ರಕರ್ಮನಿಸ್ಸೀಮ
ಕರ್ತಲಕ್ಷ್ಮೀನಾರಾಯಣನ ಭೃತ್ಯ ಸಾರ್ವಭೌಮ ೩

೪೭೩
ಹರಿಧ್ಯಾನವೆ ಗಂಗಾಸ್ನಾನ ವಿಷ-
ಯಾನುಭವ ಜಯವೆ ಮೌನ
ಪ್ರಾಣೇಶನೆ ಸರ್ವೋತ್ತಮ ವೇದ ಪು-
ರಾಣ ಪ್ರಮಾಣವೆ ಜ್ಞಾನ೧
ಮತ್ತರ ಸಂಗ ಪ್ರವೃತ್ತಿಯೊಳಿರದೆ ನಿ-
ವೃತ್ತಿಯೊಳಿರುವುದೆ ಮಾನ
ಸತ್ಯಾತ್ಮನ ರೂಪದೊಳು ಭೇದರಾ-
ಹಿತ್ಯವೆ ಸರ್ವಸಮಾನ೨
ಕರ್ತ ಲಕ್ಷ್ಮೀನಾರಾಯಣನ ಪಾದ
ಭಕ್ತಿ ವಿರಹಿತನೆ ಹೀನ
ಚಿತ್ತಜೋದ್ಭವ ಪರಾತ್ಪರ ತ್ರಿಜಗವು
ಪ್ರತ್ಯಗಾತ್ಮನಾಧೀನ ೩


ಹರಿನಾಮ ಜಪಕಿನ್ನು ಸರಿಯಾದುದಿಲ್ಲ
ಸರಸಿಜಾಸನಿದರ ಸಾರವನು ಬಲ್ಲ ಪ.
ಬಡವಾಗ್ನಿ ಸುತ್ತಿದರು ಕೊಡುವದನುಪಮ ತಂಪ
ನಡುನೀರೊಳಗೆ ಮುಳುಗಲುಡುಪವಹದು
ಕಡುಭಯದ ಕಾಡಲ್ಲಿ ಮಿಡುಕುತಿಹ ಸಮಯದಲಿ
ಒಡೆಯನನು ನೆನೆದವನ ಕಡೆಹಾಯಿಸುವ ನಮ್ಮ ೧
ಘೋರ ರಿಪು ರಾಜಾಗ್ನಿ ಘೋರಾಹಿ ಪಕ್ಷಿ ಮೃಗ
ಮಾರಿ ಮೊದಲಾದಭಯಕಾರಿಗಳನು
ದೂರ ಓಡಿಸಿ ದಡವ ಸೇರೆ ಸಲಹುವ ನಮ್ಮ
ಕಾರುಣ್ಯ ನಿಧಿಯನ್ನು ಸಾರಿಸಾರಿಗೆ ನೆನೆವ ೨
ಆವ ಕಾಲಕು ಸುಖವನೀವ ಶೇಷ ಗಿರೀಶ
ಶ್ರೀವರನ ಸರ್ವತ್ರ ಸ್ಮರಿಸಿರೆಂದು
ದೇವಋಷಿಯೆಂದುದನು ದಿಟವೆನುತ ನಂಬುವರ
ಕಾವನನುಭವ ಸಿದ್ಧ ಕಮಲಾಕ್ಷ ಗತಿಯೆಂಬ ೩

೪೦೦
(ಶ್ರೀಹರಿಯ ಷಣ್ಮಹಿಷಿಯರ ಸ್ತುತಿ)
ಹರಿಮಾನಿನಿಯರಾರು ಮಂದಿ
ಸುಪ್ರವೀಣೆ ಲಕ್ಷಣೆ ಕಾಳಿಂದಿ
ಜಾಣೆ ಸಖಿವಿಂದೆ ಜಾಂಬವತಿಯರಿಗೆ
ನಾ ನಮಿಸುವೆ ಮನದೊಳಗೆ೧
ತಮ್ಮ ಪತಿಯರಿಂದೊಡಗೂಡಿ
ಮನ್ಮಾನಸಮಂ ಮನೆಮಾಡಿ
ನಿರ್ಮಲ ಬುದ್ಧಿಯ ಪ್ರೇರೇಪಿಸಲಿ
ಸುಮ್ಮಾನ ಪಾಲಿಸಲಿ೨
ಭಕ್ತಿ ವಿರಕ್ತಿ ಜ್ಞಾನ ಮ-
ಚ್ಚಿತ್ತದೊಳಿರಲಿ ಧ್ಯಾನ
ಕರ್ತ ಲಕ್ಷ್ಮೀನಾರಾಯಣನ ನಾಮ-
ಕೀರ್ತನೆಗೈವುದೆ ನೇಮ೩
ದುರ್ಗಾದೇವಿಯ ಸ್ತುತಿ

೧೧೨
ಹರಿಯ ವಕ್ಷಸ್ಥಳದೊಳಿರುವ ವರಲಕ್ಷುಮಿಯು
ಬರುವ ಸಂಭ್ರಮವನ್ನು ನೋಡಿ
ಪರಿಪರಿಯ ಸೌಭಾಗ್ಯ ನಿರುಪಾಧಿಯಲಿ ಕೊಡುವ
ಪರಮ ಕರುಣಾಕರೆಯ ಪಾಡಿ ಪ.
ಮಾರುತನ ಜನನಿ ಗಜವೇರಿ ಸಂಭ್ರಮದಿ
ಹೆದ್ದಾರಿ ಮಧ್ಯದಿ ಸ್ವಾರಿ ಬರುತಾ
ಮಾರಜನಕ ಕೂಡಿ ಮಹಪೂಜೆ ಕೈಗೊಳುತ
ದಾರಿದ್ರ್ಯ ದೈನ್ಯವೋಡಿಸುತಾ
ಯೀರೆರಡು ಪುರುಷಾರ್ಥ ಸೇರಿ ನಿರುಪಧಿ
ಸ್ವರ್ಣಧಾರೆಯನು ಸರ್ವತ್ರ ತರುತಾ
ನಾರಿಯನು ಜಯ ಮಂಗಳಾರತಿಯ ಬೆಳಗುತಿರೆ
ಸಾರಿಸಾರಿಗೆ ವರವ ಕೊಡುತ ೧
ಉಭಯ ಸುಖ ಕೊಡುವೆನೆಂದಭಯ ನೀಡುತ
ಶುಕ್ಲನಭಮಾಸಭೃಗುವಾಸರದಲಿ
ತ್ರಿಭುವನೇಶ್ವರಿ ಸ್ವವಲ್ಲಭನ ಕೂಡುತ ಬರಲು
ಶುಭಲಗ್ನಸಂಜೆ ವೇಳ್ಯದಲಿ
ಲಭಿಸಿದರ್ಹಣದಿಂದ ಅಭಿಷೇಕ ಮೊದಲಾದ
ವಿಭವದಲಿಪೂಜಿಸುವುದೆಂದು
ತ್ರಿಭುವನಕೆ ಗುರುವಾದ ವಿಭುರಜನ ಗಿರೀಶ
ವಲ್ಲಭೆಗೆಂದ ವಚನ ತಿಳಿದಿಂದು ೨
ಈಶವಕ್ಷಸ್ಥಳನಿವಾಸಿ ವಿಧುನಿಭ ಮಂದಹಾಸಿ
ಲಕ್ಷ್ಮೀದೇವಿಯನು
ಸೂಸುತಿಹ ಭಕ್ತಿ ವಿಶ್ವಾಸದಿಂದರ್ಚಿಸಲು ಪೋಷಿಪಳು
ತನ್ನ ದಾಸರನು
ದೋಷಗಳ ತರಿದು ಮನದಾಸೆಗಳ ಪೂರೈಸಿ
ಮೀಸಲಳಿಯದ ಸೌಖ್ಯಗಳನು
ಶೇಷಗಿರಿವರ ಕೃಪಾರಾಶಿಯ ದಯಾರಸವಿಲಾಸದಿಂದಿತ್ತು
ಮೆರೆವುದನು ೩

೨೧
ಹರಿಯೆ ನಿನಗನ್ಯ ದೈವರು ಸರಿಯೆ
ಮೂರ್ಲೋಕ ದೊರೆಯೆ ಪ.
ಭೂತಿದೇವತಿಯು ನಿನ್ನರಸಿಯು ಮೂರ್ಲೋಕದೊಳು
ಖ್ಯಾತೆಯಾಗಿರುವ ಭಾರತಿ ಸೊಸೆಯು ಸುತೆ ಭಾಗೀರಥಿಯು
ಭೂತೇಶನ ಪಡೆದವನಣುಗನು ಪುರು
ಹೂತ ಮುಖ್ಯರು ಸಕಲೋತ್ತಮನೆಂಬರು ೧
ನಿನ್ನ ಪೋಲುವ ಕರುಣಾಳುಗಳನ ಕಾಣೆನು ಮೋಹವ
ಅನ್ಯಾಯ ಘಟಿತ ಕರ್ಮಗಳನ್ನ ಮಾಡುವ ಎನ್ನನ್ನ
ಮನ್ನಿಸಿ ಪಾವನ ಮಾಡುವದನ್ನ
ಅನ್ಯರು ತಿಳಿವರೆ ಸುರಗಣ ಮಾನ್ಯ ೨
ಸ್ರ‍ಮತಿ ಮಾತ್ರದಿಂದ ಪಾತಕ ಬಂಧ ನಿರ್ಮೋಕಗೈವ
ವಿತತಾಚಿದಾನಂದ ಮುಕುಂದ ಪಾಲಿಸು ಕೃಪೆಯಿಂದ
ಕ್ಷಿತಿವರಗತ ಬಹು ಮತಿಯನು ಕರುಣಿಪ
ಹಿತ ಶೇಷಾಚಲಪತಿ ಗೋವಿಂದ ೩

೨೮
ಹರಿಯೆ ನಿನ್ನದ್ಭುತ ಚರಿಯವನರಿವುದು ವರಗುರಿಯಿಂದಹರೆ
ಸರಸಿಜಾಸನ ಶಿವ ಸುರನಾಥ ವಂದಿತ
ಕರುಣಿಸೆನ್ನೊಳು ದೊರೆಯೆ ಪ.
ನಾನು ನನ್ನದೆಂಬ ಮಾನದಿಂದಲಿ
ನಾನಾ ಯೋನಿಗಳಲ್ಲಿ ಪೋಗುವ
ಮಾನವರುಗಳ ಪೂರ್ವದ ವಂಶಧರರಾದ
ಸೂನುಗಳಿಂತು ಮಾಳ್ಪ
ದಾನ ಧರ್ಮಗಳನ್ನು ತಾನಾಗಿ ವಸು
ಶಿವ ಭಾನು ನಾಮಗಳಿಂದಲಿ
ಸಾನುರಾಗದಿ ಕೊಂಡು ಸಕಲಪಿತರುಗಳಿಗಾನಂದ ಪಾಲಿಸುವಿ ೧
ಬುದ್ಧಿಪೂರ್ವಕವಾಗಿ ಮಾಡುವ ಕರ್ಮವ ಶುದ್ಧಭಾವಗಳಿಂದಲಿ
ತದ್ದಿನ ಕಾಲದಿ ನಡೆಸುತ ತಾನೆಂಬ ಬದ್ಧಹಂಕೃತಿ ತಾಳದೆ
ಪ್ರದ್ಯುಮ್ನ ಸಂಕರ್ಷಣ ವಾಸುದೇವ ನೀನುದ್ಧರಿಸೆನ್ನನುತ
ತಿದ್ದಿ ಸಮರ್ಪಣೆ ಗೈದವರೆಲ್ಲ ಸರಿ ಶುದ್ಧ ಮಾಡುವ ವಿತತ ೨
ಈ ವಿಧದಲಿ ಕರ್ಮಕೋವಿದರಾಡಿದ ಭಾವವೆ ನಿಜವೆನ್ನುತ
ಸಾವಧಾನದಿ ನಿನ್ನ ಪಾದಕಂಜವೆ ಭವನಾವೆವೆಂಬೆನು ಸತತ
ಶ್ರೀವರ ಶೇಷಾದ್ರಿ ಶಿಖರಾದ್ರಿವಾಸ ಪರಾಪರಗಣ ವಿನುತ
ಕಾವಾತ ನೀನೆ ಕರ್ಮಗಳ ಕುಂದುಗಳಿಂದ ಪಾವನಾತ್ಮಕ ಸ್ವರತ ೩

೨೦೭
ಹರಿವಾಸುದೇವನೆ ಬ್ಯಾಸರಿಲ್ಲದೆ ದಾಸನ ಮೊರೆ ಕೇಳು
ಜಗದೀಶ ನನ್ನ ಸಮಾನ ಕರುಣಾಭೂಪರುಂಟೆ ಪೇಳು ಪ.
ಕಾಲಕಾಲಕೆ ಪೇಳಲಂಜುವೆ ಶ್ರೀಲಲಾಮ ಹರಿಯೆ ಆದರೆ
ಬೀಳಗೊಳಿಸುವ ದೇಹಬಾಧೆಯು ತಾಳಲಾಪ ಹೊರೆಯೆ
ಎರಡೇಳು ಭಕ್ತಿಯ ಮ್ಯಾಳವರಿಯದೆ ಹಾಳು ಮೋಹ ತೆರೆಯೆ
ಮುಳಿಗೇಳಲಾರೆನು ಮಾಧವನೆ ಕರುಣಾಳು ಕಾಯೊ ದೊರೆಯೆ ೧
ಯಾರ ಧನವಿನ್ಯಾರ ಭೂಮಿಯು ಯಾರ ವಸ್ತುಗಳಿವು
ಕುಂಬಾರ ಭಾಂಡಗಳಂತೆ ನಶ್ವರ ತೋರಲ್ಯಾಕೆ ಫಲವು ಲಘು
ನೀರಗುಳ್ಳೆಯ ಪೋಲ್ವ ದೇಹಕೆ ಸೇರಿದ ಸನ್ನಹವು ಬಿಳಿ
ಧಾರೆ ಗೋಪುರ ದಾರೆ ಗೊಂಬೆಯು ಭಾರ ಪೊತ್ತ ಥರವು ೨
ಅದರಿಂದ ವೆಂಕಟಮಂದಿರನೆ ನಿನ್ನಿಂದ ಮಾತ್ರ ತಿಳಿಸು
ಹರಿ ಚಂದನಾತ್ಮಕ ಮೂರ್ತಿ ತಾಪಗಳಿಂದ ಬ್ಯಾರೆಗೊಳಿಸು ದ್ವಿಜ
ವೃಂದ ರಕ್ಷಕನೆಂಬ ಬಿರುದನು ಎಂದೆಂದಿಗು ಘಳಿಸು ಭವ
ಬಂಧ ಮೋಚಕ ನಿನ್ನ ಸೇವಾನಂದವಾರ್ಧಿಗಿಳಿಸು ೩


ಹರಿಹರಿ ಹರಿಯೆನ್ನಿ ಮಂದರಧರನೆ ಗತಿಯೆನ್ನಿ
ದೀನ ದಯಾಕರನು ದಿವಿಭುವಿ ಪ.
ಮಾನ ಭರಾಕರನು
ನೀನೆಂದೊರವರನು ದುರಿತ-
ಹೀನರ ಮಾಡುವನು ೧
ತರಳನ ಮೊರೆ ಕೇಳಿ ವರ ನರ
ಹರಿಯ ರೂಪವ ತಾಳಿ
ದುರುಳ ಹಿರಣ್ಯಕನಾ ಕರುಳನು
ಕೊರಳೊಳು ಧರಿಸಿದನಾ ೨
ಗಜರಾಜನ ಕಾಯ್ದಾ ಬಾಣನ ಭುಂಜ
ಪುಂಜವ ಕೊಯ್ದಾ
ಗಜಪುರವರಗೊಲಿದಾ ಚರಣಾಂ-
ಬುಜವೀವುತ ನಲಿದಾ ೩
ನೆನೆದಲ್ಲಿಗೆ ಬರುವಾ ನಂಬಿದ
ಜನರ ಸಂಗಡವಿರುವಾ
ಅನುಗಾಲವು ಪೊರೆವಾ
ಮನಸಿಜ ಜನನಿಯನಪ್ಪಿರುವಾ ೪
ದಾಸರ ಸಲಹುವದು ಶೇಷ ಗಿ-
ರೀಶನ ಮಹಾ ಬಿರುದು
ದೋಷಗಳನು ತರಿದು ಈರೆರ-
ಡಾಸೆ ಪೂರಿಪ ನೆರೆದೂ ೫

೨೯೬
ಹರಿಹರಿಯಂದು ಸ್ಮರಿಸಿ ಉರಗೇಂದ್ರ ವರಮಂಚ ಮಿಗಿಲೇರಿಸಿ
ಸಿರಿವರನ ಮೂರ್ತಿಯಿರಿಸಿ ತೂಗುವೆನು
ಚರಣದೊಳದೃಷ್ಟಿಯಿರಿಸಿ ಪ.
ಅಕ್ಷಯಗುಣ ಪೌರುಷ ಅನವರತ ರಕ್ಷಿಸುವುದೆನ್ನಾಶ್ರಿತ
ರಾಕ್ಷಸಾಂಬುಧಿವಿಶೋಷ ಭಕ್ತಜನ ರಕ್ಷಾವಿನೋದ ಭೂಪ ೧
ಏನೆಂಬೆನದ್ಭುತವನು ಬಹು ಸೂಕ್ಷ್ಮ ದಾನಯಜ್ಞಾದಿಗಳನು
ಧ್ಯಾನಿಸುತ ತ್ವತ್ಪದವನೀ ಚರಿಸಲನ್ಯೂನವಹ ವಿಸ್ಮಯವನು ೨
ವರ ಶ್ರುತಿಸ್ರ‍ಮತಿಗಳರಿತು ವಿಧಿಯೋಳಾಚರಿಸಿದರು ಫಲವ ಕುರಿತು
ಸಿರಿವರನೆ ನಿನ್ನ ಮರೆತು ಇರಲದಿಹ ಪರಕಲ್ಲವಾದಸರಿತು ೩
ನಂಬಿಕೊಂಡಿರುವೆ ಹರಿಯೆ ಭಕ್ತಜನಕೆಲ್ಲ
ಬಾಗಿ ಪೊರೆವ ದೊರೆಯೆ
ಹಂಬಲಿಸಿ ತರಳ ಕರಿಯೆ ಲೋಹಕೃತ
ಕಂಭದಲಿ ತೋರ್ದ ಸಿರಿಯೆ ೪
ಆನಂದ ಭರಿತ ಮೂರ್ತಿ ಅವಗುಣಗಳೇನೊಂದನೆಣಿಸದರ್ಥಿ
ಶ್ರೀನಿಧಿಯೆ ಮಾಡು ಪೂರ್ತಿ ಶೇಷಾದ್ರಿ ಮಾನಿಮರುದೀಡ್ಯ ಕೀರ್ತಿ ೫

೨೨೧
ಹರೇ ಕೃಷ್ಣ ಲೋಕನಾಯಕ ಪಾಲಿಸೆನ್ನ
ದೊರೆ ಸರ್ವ ಸೌಖ್ಯದಾಯಕ ಪ.
ಮೂಢ ಚಿಂತೆ ಎಂಬುದೋಡಿಸು ಕರುಣವಿರಿಸು
ಸದಾ ನಿನ್ನ ಸ್ರ‍ಮತಿಯ ನೀಡಿಸು
ಉದಾಸೀನಭಾವದೂಡಿಸು ಭೂಪ ನಿನ್ನ
ಪದಾಬ್ಜವನು ಶಿರದೋಳಾಡಿಸು ೧
ಪರಮನೋವೃತ್ತಿ ತಿಳಿಯದೆ ನಿತ್ಯದಲ್ಲಿ
ಕರಗಿ ಕಲ್ಮಶವನು ತಾಳಿದೆ
ಮರುಗಿ ಮುಗ್ಗಿ ಮುಂದುಗಾಣದೆ ತತ್ವ ತಿಳಿಯ-
ದಿರುವೆ ನಿಂತು ಕಂಪುಗೊಳ್ಳದೆ ೨
ಈಶ ನೀನೊಬ್ಬನಲ್ಲದೆ ದಾಸನನ್ನು
ಪೋಷಿಸುವರ ಕಾಣೆ ಲೋಕದಲಿ
ಬೇರಿನ್ನು ಬೇಡವೆನ್ನಲಿ ವೆಂಕಟಾದ್ರಿ
ಭೂಪ ಬೇಗ ಕಾಯೊ ಕರುಣದಿ ೩

೩೯೬
ಹರೇ ಶಂಕರ ಪಾರ್ವತೀವರ ಪಾಲಿಸು ನೀ ಎನ್ನ ಪ.
ದುರಿತರಾಶಿಗಳ ದೂರಮಾಡು ಗಿರಿ-
ವರ ಮಹಾನುಭಾವ ಶಿವಶಿವ ಅ.ಪ.
ತ್ರಿಗುಣಾತ್ಮಕ ತ್ರಿದಶಾಲಯ ಪೂಜಿತ
ನಿಗಮಾಗಮವಿನುತ
ಅಗಜಾಲಿಂಗಿತ ಆಶೀವಿಷಧರ
ಮೃಗಧರಾಂಕ ಚೂಡ ಹೃದ್ಗೂಢ ೧
ಸರ್ವೋತ್ತಮ ಹರಿಯಹುದೆಂಬ ಜ್ಞಾನವ
ಸರ್ವಕಾಲಕ್ಕೀಯೊ
ದುರ್ಮತಗಳನೆಲ್ಲ ದೂರ ಮಾಡೊ ಕರಿ-
ಚರ್ಮಾಂಬರಧರ ಪ್ರವೀರ ೨
ಸಂಜೀವನ ಲಕ್ಷ್ಮೀನಾರಾಯಣ ಮಣಿ-
ರಂಜಿತ ನಿರ್ಲೇಪ
ಮಂಜುಳಕದಿರೆಯ ಮಂಜುನಾಥ ಭವ-
ಭಂಜನ ಹರಿಪ್ರಿಯ ಜಯ ಜಯ ೩

೬೭
(ಹಯವದನ ಪ್ರಾರ್ಥನೆ)
ಹಾರುತ ಬಂದಿಹ ಹಯಮುಖ ಮೂರುತಿಯನು ನೋಡಿ
ಮಾರುತ ವಂದಿತ ಮಹಿಮೆಯ ತೋರುವ ಕಾಪಾಡಿ ಪ.
ವೇದವ ಕದ್ದ್ಯೊದಸುರನ ಹಾದಿಯೊಳಡ್ಡಗಟ್ಟಿ
ಮೇದಿನಿಗೊರಗಿಸಿ ಶ್ರುತಿಯನು ಕಾದನು ಜಗಜಟ್ಟಿ
ವೇಧಗೆ ಪರತತ್ವಂಗಳ ಬೋಧಿಸಿ ಮನಮುಟ್ಟಿ
ಶ್ರೀಧರ ದುರ್ಜನರೆದೆಗಳ ಭೇದಿಸುವನು ಮೆಟ್ಟಿ೧
ವಾದಿನೃಪ ಯತೀಂದ್ರ ಮನೋಲ್ಲಾಸದಿ ಪದಾಂಭೋಜ
ಸಾಧಿಸುವನು ಸಕಲಾರ್ಥನ ಸ್ವಜನಕೆ ಸುರರಾಜ
ಸ್ವೋದರಗತ ವಿಶ್ವಂಭರ ಶಮಿತದುರಿತ ಬೀಜ
ವ್ಯಾಧಿಯ ಹರಸುವ ವಿಭವಾಸಾದಿತ ಗಜರಾಜ ೨
ಹೇಷಾ ನಿಭೃತಾಶಾನತ ಕೋಶಾಸ್ಪದ ರೂಪ
ದೋಷಾಂಬುಧಿಶೋಷಾದ್ಭುತ ವೇಷಾಸುರ ತಾಪ
ವೀಶಾಹಿ ಗಣೇಶಾದ್ಯಮರೇಶಾರ್ಚಿತ ಪಾದ
ಶೇಷಾಚಲ ಭೂಷಾಗಮ ಭಾಷಾಮಿತವಾದ ೩

೨೭೯
ಹಿರಿಯ ಮಗಳಿಂದ ಶ್ರೀಕರನಪದ ಸೇರೊ
ಬರಿದೆ ಯೋಚನೆಯಿಂದ ಬೇಸರಗೊಳದಿರು ಪ.
ಕಾಮಕ್ರೋಧಗಳನ್ನು ಭೌಮಿಯಲಿ ದೂಡುವಳು
ವ್ಯಾಮೋಹ ಮದಲೋಭ ಮತ್ಸರಗಳಿಂ
ಸೀಮೆಯಿಂಧೊರಗ್ಹಾಕಿ ಡಂಭಹಿಂಸಾನೃತದ
ನಾಮವಡಗಿಸಿ ಪೂರ್ಣ ಕಾಮನನು ತೊರೆವ ೧
ಭಾವ ಶುದ್ಧಿ ವಿವೇಕ ಬಾಲಕರನೆತ್ತುವಳು
ಪಾವನತ್ವವ ಮಾಡಿ ತೂಗುತಿಹಳು
ದಾವ ಕುಲಕು ದಶೇಂದ್ರಿಯ ದುಷ್ಟ ತುರಗಗಳ
ಭಾವ ಕೆಡದಂದದಲಿ ಕಾವ ಕಮಲಾನನದ ೨
ತನುವೆಂಬ ಮನೆಯ ಶುದ್ಧಿಯ ಗೈದು ಸುಜ್ಞಾನ
ವೆನಿಸುತಿಹ ದೀವಿಗೆಯ ತೋರುತಿಹಳು
ವನಜನಾಭನ ಮೂರ್ತಿ ಮನದೊಳಗೆ ನೆಲೆತೋರ್ಪ
ವಿನಯ ವೆಂಕಟಪತಿಯ ನೆನವೆನಿಪ ಹರಿಭಕ್ತಿ ೩

೨೭೦
ಹುರುಡು ನಿನಗೆ ಥರವೇನೊ ಸ್ವಾಮಿ
ಗರುಡವಾಹನ ಸುರಧೇನು ಪ.
ಕುರುಡ ಕಾಣದೆ ಕೂಪದಲಿ ಬಿದ್ದರೆತ್ತದೆ
ಮೊರಡುತನದಿ ಮುಖ ನೋಡುತ ನಗುವಂಥ ಅ.ಪ.
ಜ್ಞಾನಮಾರ್ಗವ ಕಾಣದಿರುವ ದೀನ ಮಾನವನಿಗೆ ಮೋಹಭರವ
ತಾನೆ ಕಲ್ಪಿಸಿ ತತ್ವದಿರುವ ಮುಚ್ಚಿ ನಾನಾ ಯೋಗಿಗಳಲ್ಲಿ ತರುವ
ಮಾನವು ಸರಿಯೆ ಮಹಾನುಭಾವ ನಿನ್ನ
ದೀನ ಬಂಧುತ್ವಕೆ ಹಾನಿ ಬಾರದೆ ಕೃಷ್ಣ ೧
ಇಂದ್ರಿಯಾರ್ಥ ಸನ್ನಕರ್ಷವೆಂಬ ಬಂಧನದಲ್ಲಿ ಸಿಕ್ಕಿ ಬೀಳ್ವ ನಾನಾ
ತಂದ್ರ ಸಾಗರ ಮುನಿಗಳ ಬಹು ಮಂಜನು ಮಾಯೆಯ ಗೆಲ್ವ
ಹೊಂದಿಕೆಯನು ಸುಖ ಸಾಂದ್ರ ನೀನರಿಯೆಯ
ಇಂದ್ರಾದಿಗಳನು ಎಂದೆಂದಿಗೂ ಸಲಹುವಿ ೨
ಅದರಿಂದ ಸರ್ವಕಾಲದಲಿ ನೀನೆ ಒದಗಿ ಪೊಳೆವುತ್ತ ಮನದಲಿ
ಪದಯುಗವಿರಿಸಿ ಶಿರದಲಿ ದಾಸಪದವ ಪಾಲಿಸು ಕರುಣದಲಿ
ವಿಧಿ ಭವ ವಂದ್ಯ ವೆಂಕಟಗಿರಿನಾಯಕ
ಪದುಮಾಲಯೆ ಕೂಡಿ ಸದನದಿ ನೆಲೆಯಾಗು ೩

೬೫
(ಹೆಬ್ಬುರಿ ಶ್ರೀ ಅನಂತಪದ್ಮನಾಭ)
ಹೆಬ್ಬುರಿ ಪದ್ಮನಾಭಾ ನಂಬಿದೆನು ಪದಾಬ್ಜವ ಪೂರ್ವಶೋಭಾ
ಕೊಬ್ಬಿದ ಶತ್ರು ಪುಂಜಗಳನ್ನು ದೂರದಿ ದಬ್ಬಿ
ದಯಾರಸ ಉಬ್ಬಿಪಾಲಿಸು ದೇವಾ ಪ.
ಯೋಗಿ ಹೃನ್ಮಂಡಲದಿ ನಿತ್ತಂದದಿ
ಸಾಗಿ ಬಂದಿರುವಿಯಲ್ಲಿ
ನಾಗಶಯನ ನಿನ್ನ ನೆಲೆಯರಿಯದ ತಪ್ಪ
ನೀ ಪಾಲಿಪುದೆಂದು ಬಾಗಿ ಬೇಡುವೆ ನಿಂದು ೧
ಈ ಕ್ಷಮೆ ಮೇಲಿಲ್ಲದಾ ಲೋಕೋತ್ತರ-
ದಾಶ್ಚರ್ಯ ತೋರುವುದು
ಪಕ್ಷಿಧ್ವಜ ನಿನ್ನ ಪಾದಪದ್ಮಗಳಲ್ಲಿ
ನಕ್ಷತ್ರ ಮಾಲೆಗಳುರುಳುವದೇನಿದು ೨
ಪಾಂಡವ ಸಾರಥಿಯೆ ನಿನ್ನಯ ಮೂರ್ತಿ
ಕಂಡೆನು ಶ್ರೀಪತಿಯೆ
ಕೌಂಡಿಣ್ಯ ಮುನಿಯನು ಕಾಪಾಡಿದಖಿಳ ಬ್ರ-
ಹ್ಮಾಂಡ ನಾಯಕ ನಿನ್ನ ದಾಸ್ಯವ ದಯಮಾಡು ೩
ಹೆಬ್ಬುಲಿಯಂತಿರುವ ಹೂಣ ಭೂಪ
ನಬ್ಬರವಡಗಿಸುತ
ಸಭ್ಯರ ಸಲಹುವ ಭಾರ ನಿನ್ನದಯ್ಯ
ಕಬ್ಬು ಬಿಲ್ಲನೆ ಪಿತ ಕರುಣ ವಾರಿಧಿ ಕೃಷ್ಣ ೪
ನೀನೆ ಸದ್ಗತಿಯೆಂಬರ ಕಾವುದಕನು-
ಮಾನವ್ಯಾತಕೊ ಭೂವರ
ದೀನ ಬಂಧು ಶೇಷಗಿರಿನಾಥ ದಯದಿಂದ
ಮಾನಸ ಫಲವ ಪೂರಣಗೈಸು ಗೋವಿಂದ ೫

೫೦೪
ಹೇಮದ ತೊಟ್ಟಿಲ ಭಾಮೆಯರ್ಹೂಡಿ
ಕೋಮಲ ಕಾಂಚನಧಾಮವ ಮಾಡಿ
ಕಾಮಜನಕನೊಳು ಕಾಮಿತ ಬೇಡಿ
ಪ್ರೇಮದಿ ತೂಗಿದರ್ನಾಮದಿ ಪಾಡಿ ಜೋ ಜೋ ೧
ಚೆನ್ನಿಗರರಸ ಮೋಹನ್ನ ಸುಶೀಲ
ಕನ್ನಡಿ ಕದಪಿನ ಕಮನೀಯ ಬಾಲ
ಪುಣ್ಯವೃಕ್ಷಗ ಫಲ ಪೂರ್ಣೇಂದು ಲೀಲ
ನಿನ್ನ ರಕ್ಷಿಸಲಿ ಪ್ರಸನ್ನ ಗೋಪಾಲ ಜೋ ಜೋ ೨
ಕೆಂದಾವರೆಯಂತೆ ಚೆಂದುಳ್ಳ ಚರಣ
ಚಂದಿರವದನ ಗೋವಿಂದನ ಶರಣ
ಮುಂದಿನ್ನು ಸೌಭಾಗ್ಯ ಹೊಂದೆನ್ನ ತರುಣ
ಕಂದ ಕಂದರ್ಪನ ಸುಂದರಾಭರಣ ಜೊ ಜೋ ೩
ಶ್ರೇಯಾರೋಗ್ಯ ದೀರ್ಘಾಯು ಸಂಪೂರ್ಣ
ನ್ಯಾಯ ನೀತಿ ಸದುಪಾಯ ಸಂಪನ್ನ
ಪ್ರೀಯನೆ ಕರ್ಣಾಂತಾಯತನಯನ
ಕಾಯಲಿ ಲಕ್ಷ್ಮೀನಾರಾಯಣ ನಿನ್ನ ಜೋ ಜೋ೪

೨೫೨
ಹೊಂದದಿರುವಿ ಯಾಕೆ ಮನವೆ ಇಂದಿರೇಶನ
ಹಿಂದೆ ಮುಂದೆ ಸುಖವನೀವ ಮಂದರಾದ್ರಿಧರನ ಬೇಗ ಪ.
ಸುತ್ತಿ ಬರುವಿ ನೀ ಮತ್ತೆ ವಿಷಯದಿ
ಎತ್ತಲಾದರೀಶನಂಥ ವೃತ್ತಿ ದೊರೆವುದುಂಟೆ ನಿನಗೆ ೧
ತೋಷಗೊಳುವೆನೆಂಬಾಸ್ಥೆ ತಾಳುವಿ
ದೋಷಗಳಲಿ ಸಿಲುಕಿ ಬಹಳ ಘಾಸಿಯಾಗಿ ನೊಂದುಕೊಳುವಿ ೨
ಅರಿಯದಾದಿ ನೀ ಹರಿಯ ಗುಣಗಳ
ಚರಣಪದ್ಮ ಮಧುರ ರಸವ ಸುರಿವ ಸುಖವನೆಂದು ತಿಳಿವಿ ೩
ಕೇಳು ನುಡಿಯನು ಕರುಣಾಳು ಒಡೆಯನು
ತಾಳ ತನ್ನ ನಂಬಿದವರ ಗೋಳ ಬಿಡಿಸಿ ಸಲಹುತಿಹನು ೪
ಭ್ರಾಂತಿಗೊಳದಿರು ಶ್ರೀಕಾಂತನಲ್ಲಿರುಕಂತುಜನಕ ವೆಂಕಟೇಶ ಚಿಂತಿತಾರ್ಥವಿತ್ತು ಕಾವ ೫

೨೮೫
(ಹೋಳಿ ಪದ)
ಧುಮ್ಮಿಶಾಲೆನ್ನಿ ನಮ್ಮ ರಮ್ಮೆಯರಸ ಕೃಷ್ಣನಡಿಯ
ಒಮ್ಮನದಿ ನೆನೆದು ಸಕಲ ಕರ್ಮಕಲುಷವ ಕಳಿಯಿಸಿ ಪ.
ಸತ್ಯ ರಮಣ ನಿಗಮ ಸ್ರ‍ಮತಿ ಗಣೋಕ್ತ ಕರ್ಮಕರಣ ಭವಿ
ಷ್ಯೋತ್ತರ ಪುರಾಣವಚನವೆತ್ತಿ ಜಗಕೆ ತಿಳಿಸಿದಾ
ಒತ್ತಿ ಬರುವ ವಿಘ್ನಗಣವ ಕತ್ತರಿಸುವ ಹೋಳಿಯೆಂಬ
ಉತ್ತಮದ ವ್ರತವು ಜಗವ ಸುತ್ತಿಕೊಂಡು ಮೆರೆವುದು ೧
ವಿಧಿಯ ಸ್ತುತಿಗೆ ಮೆಚ್ಚಿ ಕರುಣಾಸುಧೆಯ ಸುರರ ಮೇಲೆ ಕರದು
ಮಧುರೆಯಲ್ಲಿ ಜನಿಸಿ ಬಂದ ಮಧುಮುರಾರಿ ಮರ್ದನ
ಯದುಕುಲೇಶ ಕೃಷ್ಣಗೋಪ ಚದುರೆಯರನು ಒಲಿವೆನೆಂದು
ಮದನನು ಹುಣ್ಣಿವೆಯ ಹಬ್ಬ ಸದರದಿಂದ ರಚಿಸಿದ ೨
ಮೇಲು ಬೆಲೆಗಳುಳ್ಳ ಬಿಳಿಯ ಶಾಲೆಗಳನು ಧರಿಸುತ ಗು
ಲಾಲ ಪುಡಿಯ ಸುರಿವ ಗೋಪ ಬಾಲಜನರ ಕೂಡುತ
ನೀಲ ಬಟ್ಟೆಯ ಗಜ ಮೇಲಾಳುತನವ ನಡೆಸುತಿರಲು
ಶ್ರೀ ಲಲಾಮ ವಾರನಾರಿ ಜಾಲವನ್ನು ಕರೆಸಿದ ೩
ಸಿರಿಯ ಮುಡಿಯ ಮೇಲೆ ನವಿಲಗರಿಯ ಗೊಂಚಲಿರಿಸಿ ನಾನಾ
ಪರಿಯ ಪುಷ್ಪ ಮಾಲೆಗಳನು ಧರಿಸಿ ಕಂಠ ಮಧ್ಯ
ಸ್ಮರನ ಕಣೆಗಳಂತೆ ಪೋಕ ಥರವ ತೋರ್ಪ ಪದವ ಸಪ್ತ
ಸ್ವರದಿ ಕೂಡಿ ವಾಡಿ ಬೀದಿ ತಿರುಗಿ ಬಂದ ಕೃಷ್ಣನು ೪
ಶಿಷ್ಟ ಸಂಗ್ರಹೀತ ಕಾರ್ಯ ಶ್ರೇಷ್ಠವಾಗಿ ತಿಳಿಯಿರೆಂದು
ದುಷ್ಟ ದಮನ ನರನೊಳೆಂದ ಸ್ಪಷ್ಟ ಗೀತ ವಚನವ
ಶಿಷ್ಟ ಜನರು ಗ್ರಹಿಸಿ ನಡದರಷ್ಟ ಭಾಗ್ಯವಿತ್ತು ಶೇಷ
ಬೆಟ್ಟದೊಡೆಯ ಹರಿಯು ಕರುಣಾ ದೃಷ್ಟಿಯಿಂದ ಪೊರೆವನು ೫

೨೪೧
ಹ್ಯಾಗೆ ಕಾಂಬೆ ನಿನ್ನ ಪಾದವ ಶ್ರೀನಿವಾಸ
ಯೋಗಿ ಗಮ್ಯ ರೂಪ ಮಾಧವಾ
ರಾಗ ರೋಗ ಸಾಗರಸ್ತನಾಗಿ ಮುಳುಗಿ ಬಾಯ ಬಿಡುವೆ
ನಾಗರಾಜಗೊಲಿದ ತೆರದಿ ಬೇಗಲೊದಗಿ ಬಂದು ಕಾಯೊ ಪ.
ಮನಸು ಎನ್ನ ವಶಕೆ ಬಾರದೆ ಭಕ್ತಿ ಸಾ-
ಧನಗಳೆನಗೆ ಸೇರಿ ಬಾಹದೆ
ನೆನಸಿಕೊಳುವ ಕಾರ್ಯ ದೊರೆಯದೆ ಸರ್ವಕಾಲ
ತನುವ ಕೆಡಿಸಿ ವ್ಯರ್ಥಮಾಡಿದೆ
ಕನಲಿ ಕೂಗುತಿರುವ ಶಿಶುವ ಜನನಿ ಕರದೊಳೆತ್ತುವಂತೆ
ವನರುಹಾಕ್ಷ ಒದಗಿ ಎನ್ನ ಮನಕೆ ದಿವ್ಯ ಮೂರ್ತಿ ದೋರೊ ೧
ಹಲವು ವಿಧದ ಭವದಿ ಬಂದೆನು ಕಡೆಗೆ ದುಷ್ಟ
ಕಲಿಯ ಬಾಧೆಯಿಂದ ನೊಂದೆನು
ಮಲಿನ ಮೋಹದೊಳಗೆ ನಿಂದೆನು ತ್ಯಾಜ್ಯವಾದ
ಫಲಗಳೆಲ್ಲ ತಂದು ತಿಂದೆನು
ಗಾಳಿಗೆ ಸಿಲುಕಿದೆಲೆಯ ತೆರದಿ ಹೊರಲುಗಾಣೆನೀ ದೇಹ
ಗಳಿತವಾಗೆ ನಿನ್ನ ಪಾದ ನೆಳಲ ಬಯಸಿ ಬೇಡಿಕೊಳುವೆ ೨
ಗಣನೆಯಿಲ್ಲವಾದ ಮರಗಳು ಇರಲು ಪುರು
ತನುವಿನಂತೆ ಮುಖ್ಯವಾವದು
ಅನುಭವಾತ್ಮ ಸುಖವನೀವದು ಆದರೇನು
ಕನಸಿನಂತೆ ಕಾತಿರುವುದು
ಅನಘನಮೂರ್ತಿ ನಿನ್ನ ಪಾದ ವನಜಯುಗವನಿತ್ತು ಎನ್ನ
ಮನದೊಳದಯವಾಗು ಮಾರಜನಕ ಮೂಡಲದ್ರಿವಾಸ೩

ಪಂಚೇಂದ್ರಿಯ
೨೩೮
ಹ್ಯಾಗೆ ಕಾಂಬೆನು ಹಂಸಯೋಗಗಮ್ಯನೆ ನಿನ್ನ
ವಾಗೀಶಪಿತ ದಯವಾಗೋ ಮೋಹನ ಪ.
ಮನವು ನಿನ್ನಯ ಸೇವೆಗನುವಾಗಿ ನಿಲದು ಸ-
ಜ್ಜನ ಸಂಗ ಸಲ್ಲಾಪವನು ಮಾಡಗೊಡದು
ಘನಮೋಹಕೊಳಗಾದ ತನುವ ಪಿಡಿವುದು ಶ್ರೀ-
ವನಿತೆಯರಸ ನಿನ್ನ ನೆನವೆಂತು ಬಹುದೊ ೧
ಪಂಚೇಂದ್ರಿಯಗಳನ್ನು ಹಂಚಿ ದುರ್ವಿಷಯಕ್ಕೆ
ವಂಚನೆಗೊಳಿಸಿ ಪ್ರಪಂಚದೋಳಿರಿಸಿ
ಪಂಚಬಾಣನ ಶುಕಚುಂಚುವೇದದಿ ತ್ವಂಚ
ಹಂಚಗೊಳಿಸಿ ಮೋಹ ಮಿಂಚಿಕೊಂಡಿಹುದೊ ೨
ದೀರ್ಘಾದಿ ಸಹಿತಾದಿ ವರ್ಗಗಳನು ಗೆಲುವ
ಮಾರ್ಗ ಕಾಣದೆ ದುಸ್ಸಂಸರ್ಗದಿ ಸಿಲುಕಿ
ಭರ್ಗ ವಂದ್ಯನೆ ಗುಣಸರ್ಗದ ಬಲೆಯಿಂದ
ನಿರ್ಗಮಗೊಂಡಪವರ್ಗವೆಂತಹುದೊ ೩
ದಿನದಿನದೊಳಗಾಹತನುವ ನೋಡಲು ಮುಂದಿ
ನನುಭವವನು ಕಾಂಬದನು ನಾನೇನರಿಯೆ
ಜನರ ರಕ್ಷಾದಿಕರ್ತನೆ ನೀನೆ ಬಲ್ಲಿ ಮುಂ-
ದಿನ ಕಾರ್ಯವಹದೆಂತೊ ವನಜಲೋಚನನೆ ೪
ಸತಿ ಸುತಾದಿಗಳೆಲ್ಲ ಹಿತರೆಂದು ಗ್ರಹಿಸುವ
ಮತಿಹೀನ ಜನಕೆ ದುರ್ಗತಿಯು ತಪ್ಪುವದೆ
ಅತುಳ ಮಹಿಮ ಭಕ್ತಹಿತನಾದ ವೆಂಕಟ
ಪತಿ ನೀನೆ ಎನಗೆ ಸದ್ಗತಿ ತೋರೊ ಹರಿಯೆ ೫

೧೨೮
ಅತ್ಯದ್ಭುತ ಹುಡುಗ ಭೀಮಪ್ಪ ತಾ-
ನಿತ್ತ ವಿಪ್ರಗೆತ್ತಿ ಕಡಗ
ಸುಕಣಾಂಗಣದಲಿ ತೋರ್ದ ಬೆಡಗ
ದುರ್ಮತ್ತ ದುಶ್ಯಾಸನ ತತ್ತಿಗೆ ಗಿಡಗ ಪ.
ಕಂತು ಜನಕ ಕೃಷ್ಣನು ಭೀಮನೊಳಿ-
ಹೈಕಾಂತದ ಭಕ್ತಿಯನೂ
ಅಂತರಂಗದಿ ಧರ್ಮಜನಿಗರುಪುವೆನೆಂದು
ಚಿಂತಿಸಿ ನಡೆತಂದನು ಮಾಧವನು ೧
ಕೃತ್ರಿಮ ದ್ವಿಜವೇಷದಿ ಬಂದನು ಒಂದು
ರಾತ್ರಿಯಲಿ ಯಮಜನಲಿ
ಸತ್ರಗೋಸುಗವಾಗಿ ತಿರುಗಿ ಬಂದಿರುವೆ ಸ-
ರ್ವತ್ರ ನಿನ್ನಲ್ಲಿಗೆಂದನು ಶ್ರೀಧರನು ೨
ಕೇಳುತ ಯಮಜ ತಾನು ತದ್ಧನವನ್ನು
ನಾಳೆ ಕೊಡುವೆನೆಂದನು
ಲಾಲಿಸಿ ಮರುತಜನಾಲಯವೈದೆ ಸು-
ನೀಲ ಕಂಕಣವ ಸಲೀಲದಿ ತೆಗೆದಿತ್ತ ೩
ಅಂದಿರುಳಲಿ ಭೀಮನು ಸಂತೋಷದಿ
ನಂದಿ ಘೋಷವ ಗೈದನು
ಇಂದೇನು ಚಿತ್ರವಿದೆಂದು ಧರ್ಮಜ ಕೇಳೆ
ಮುಂದಿನ ಸ್ಥೈರ್ಯದಾನಂದವೆಂದೊರೆದನು ೪
ನಿರ್ಮಲಾತ್ಮಕ ಕೃಷ್ಣನು ಈ ಪರಿ
ಧರ್ಮ ಮರ್ಮವ ತೋರಿದನು
ಸ್ವರ್ಮಹೀಶ ದೇವಶರ್ಮವರದ ಚಿತ್ರ
ಕರ್ಮ ವೆಂಕಟಗಿರಿ ಹಮ್ರ್ಯನಿಂತೊಲಿಸಿದ ೫

೪೨೩
(ಕೊಕ್ರಾಡಿ ಸುಬ್ರಹ್ಮಣ್ಯ)
ಕಾಯೊ ಸುಬ್ರಹ್ಮಣ್ಯ ಸಜ್ಜನ-
ಪ್ರೀಯ ಸುರವೇಣ್ಯ ಪ.
ತೋಯಜಾಕ್ಷ ನಿಖಿಲಾಮರಸೇವಿತ
ಶ್ರೇಯಸ್ಕರಫಲದಾಯಕ ಶಂಕರ ಅ.ಪ.
ನಿತ್ಯಾನಂದಕರ ನಿಜಾಶ್ರಿತ-
ವತ್ಸಲ ರಣಶೂರ
ಕೃತ್ತಿವಾಸಸುತ ದೈತ್ಯಾಂತಕ ರಿಪು-
ಮತ್ತಗಜೇಂದ್ರಮೃಗೋತ್ತಮ ಸಂತತ ೧
ನಿಗಮಾಗಮವಿನುತ ನೀರಜ-
ದೃಗಯುಗ ಸಚ್ಚರಿತ
ಅಗಜಾಲಿಂಗನ ಅಘಕುಲನಾಶನ
ಸುಗುಣಾಂಬುಧಿ ತ್ರೈಜಗದೋದ್ಧಾರಕ೨
ಅಂಬುಧಿಗಂಭೀರ ಧೀರ ತ್ರೀ-
ಯಂಬಕ ಸುಕುಮಾರ
ತುಂಬುರು ನಾರದಯೋಗಿಸಭಾಂಗಣ-
ಸಂಭಾವಿತ ಚರಣಾಂಬುಜಯುಗಳ೩
ಅಂಗಜ ಶತರೂಪ ಸಮರೋ-
ತ್ತುಂಗಸುಪ್ರತಾಪ
ಗಂಗಾಸುತ ವೇದಾಂಗಪಾರಜ್ಞ
ಮಂಗಲಚರಿತ ವಿಹಂಗಾರೂಢಾ೪
ಶಕ್ರಾರಾತಿಹರ ತ್ರಿಜಗ-
ಚ್ಚಕ್ರಾನಂದಕರ
ಚಕ್ರಾಂಕಿತ ಶ್ರೀಲಕ್ಷ್ಮೀನಾರಾಯಣ-
ವಿಕ್ರಮಸಿಂಹ ಕೊಕ್ರಾಡಿ ಪುರೇಶ್ವರ೫
ಪಾವಂಜೆಯ ಸುಬ್ರಹ್ಮಣ್ಯ

ಇನ್ನಾದರೂ ಬುದ್ಧಿ ಬಾರದು
೨೪೯
ಇನ್ನಾದರೂ ಬುದ್ಧಿ ಬಾರದು ಜನಕೆ
ಕಣ್ಣಾರೆ ಕಂಡರು ಮರವುದು ಮನಕೆ ಪ.
ಉದರದಲ್ಲಿ ರಚಿಸುವರ್ಯಾರು ರೂಪಾ-
ತದಧೀನವಾಗಿ ಬರುವದೆಂದು ತಾಪ
ಮದ ಮೋಹಾದಿಗಳೆಂತು ಮಸುಕುವದೆಂತರಿ-
ತಿದ ನೋಡಿದರೆ ಕರ್ತ ತೋರುವ ಭೂಪ ೧
ಕಾರಣ ಸಾಮಥ್ರ್ಯಯಿದ್ದರು ಕಾರ್ಯ
ತೋರದು ಕೆಲರಿಗೆ ತನ್ನಂತಾಗುವದು
ವಾರಿಧಿ ಶಯನನ ವಶವಾದರಿಂದಹಂ-
ಕಾರದಿಂದಲಿ ತನ್ನಿಂದಹದೆಂಬ ಮೋಹದಿ ೨
ರಕ್ಷಕರಿಲ್ಲದ ಶಿಶು ಬದುಕುವುದು
ಲಕ್ಷ ಜನರ ಯತ್ನದಲಿ ಮತ್ತೊಂದಿರದು
ಲಕ್ಷ್ಮೀರಮಣ ವೆಂಕಟೇಶನ ಗತಿಯೆಂದಾ-
ಪೇಕ್ಷಿಸದಿರೆ ಕುಕ್ಷಿಯೊಳಗಿಟ್ಟು ಸಲಹುವಾ ೩

ಹಾಡಿನ ಹೆಸರು :ಇನ್ನಾದರೂ ಬುದ್ಧಿ ಬಾರದು
ಹಾಡಿದವರ ಹೆಸರು :ಕುಸುಮಾ ಕೆ. ಎಂ.
ಸಂಗೀತ ನಿರ್ದೇಶಕರು :ಹೇಮಂತ್ ಬಿ. ಆರ್.
ಸ್ಟುಡಿಯೋ :ಗಣೇಶ್ ಕುಟೀರ್, ಬೆಂಗಳೂರು

ನಿರ್ಗಮನ

ಏನು ಮಾಡಲಿನ್ನು ನೀನಲ್ಲದೆ
೨೪೦
(ಮದ್ರಾಸಿನ ತಿರ್ವಳಕೇಣಿ ಪಾರ್ಥಸಾರಥಿ)
ಏನು ಮಾಡಲಿನ್ನು ನೀನಲ್ಲದೆ ಯಾದಾರ ಬೇಡಲಿನ್ನು ಪ.
ಮಾನಿನಿ ದ್ರೌಪದಿ ಮೊರೆಯಿಡುವುದ ಕೇಳಿ
ನಾನಾ ವಸ್ತ್ರಗಳಿತ್ತ ನರನ ಸಾರಥಿ ದೇವ ಅ.ಪ.
ನೀನಿತ್ತ ಸೌಭಾಗ್ಯದ ಗರ್ವದಿ ಎನ್ನ
ಧ್ಯಾನಾದಿಗಳ ಮಾಡದೆ
ನಾನಾ ವಿಧದ ದುರ್ಮಾನುವಾದುದರಿಂದ
ನೀನೆ ಸದ್ಗತಿಯೆಂದು ಧ್ಯಾನಿಸಿಲ್ಲಿಗೆ ಬಂದೆ ೧
ಬಡತನದಿಂದಿರಲು ಸಕಲ ಸುರ-
ರೊಡೆಯ ನೀ ಕೈ ಪಿಡಿದು
ಕೊಡಲು ಭಾಗ್ಯವ ರೂಢಿ ಮದದಿ ನಿನ್ನನು ಬಿಟ್ಟು
ಕಡೆಗೆ ನಿನ್ನಯ ಪಾದದೆಡೆಗೆ ಬಂದೆನು ದೇವ ೨
ಪಶ್ಚಿಮ ವಾರಿಧಿಯ ತೀರದಲಾದ ದುಶ್ಚರಿತ್ರೆಯ ತಾಳದೆ
ಆಶ್ಚರ್ಯತಮವಾದ ಸಚ್ಚರಿತ್ರನೆ ನಿನ್ನ
ನೆಚ್ಚಿ ಬಂದಿಹೆನೊ ವಿಪಶ್ಚಿತರೊಡೆಯನೆ ೩
ನಕ್ಷತ್ರಗಳಂದಿಂದಲು ಯೆನ್ನಪರಾಧ-
ವಕ್ಷಯವಾಗಿರಲು
ಅಕ್ಷರಿ ವಂದ್ಯ ನೀ ಲಕ್ಷ ಬಿಡುವುದೆ ಕ-
ಟಾಕ್ಷದಿಂದಲಿ ನೋಡಿ ರಕ್ಷಿಸು ಕರುಣದಿ ೪
ಎಷ್ಟು ಕರ್ಮಿಯಾದರು ನಿನ್ನಲಿ ಮನ-
ವಿಟ್ಟು ಬಂದಿರುವೆನಲ್ಲ
ದುಷ್ಟಮರ್ದನ ಶಿಷ್ಟರಕ್ಷಣ ಭಾಜಕ ಜ-
ನೇಷ್ಟದಾಯಕ ಸೃಷ್ಟ್ಯಾದೃಷ್ಟಕರ್ತ ೫
ನಟನ ಮಾಡುವ ಬೊಂಬೆಯ ಪೋಲುವ ಯೆನ್ನ
ಹಟದಿಂದ ದಣಿಸುವುದೆ
ವಟಪತ್ರ ಶಾಯಿ ಧೂರ್ಜಟಿ ವಂದ್ಯ ಅಂಜಲಿ
ಪುಟನಾಗಿ ಬೇಡುವೆ ಘಟಿಸೊಭಿಲಷಿತವ ೬
ಎಂದಿಗಾದರು ನಿನ್ನಯ ಪಾದಯುಗಾರ-
ವಿಂದ ದರ್ಶನವಾಗಲು
ಸಂದೇಹಿಲ್ಲದ ಭವ ಸಿಂಧುವ ದಾಟುವೆ-
ನೆಂದು ಬಂದಿರುವೆ ಸನಂದನಾದಿ ವಂದ್ಯ ೭
ಮೀನ ಕೂರ್ಮ ವರಾಹ ನಾರಸಿಂಹ
ವಾಮನ ಶ್ರೀ ಭಾರ್ಗವ
ರಾಮಕೃಷ್ಣ ಬೌದ್ಧ ಕಲ್ಕಿಯಂಬ ದಿವ್ಯ
ನಾಮಗಳನು ಬಿಟ್ಟು ಕಾಮಲಾಲಸನಾಗಿ ೮
ಒಂದು ನಿಮಿಷವಾದರು ತತ್ವಾಧಾರ
ವಿಂದ ದರ್ಶನ ಮಾಡಲು
ಹೊಂದಿದಘಗಳೆಲ್ಲ ಬೆಂದು ಹೋಗುವುದೆಂದಾ-
ನಂದತೀರ್ಥಚಾರ್ಯರೆಂದ ನುಡಿಯ ನಂಬಿ ೯
ದ್ವೇಷಿ ಮಾನವರ ಮುಂದೆ ನಾನಾ ವಿಧ
ಕ್ಲೇಶವ ತಾಳ್ದೆ ಹಿಂದೆ
ಘಾಸಿಯಾಗಿ ನಾನಾ ದೇಶ ದಾಟಿ ಬಂದೆ
ಮೀಸಲಾದೆ ನಿನ್ನ ದಾಸ ದಾಸ್ಯನೆಂದೆ ೧೦
ಜನರೊಳು ಪ್ರಮಿತನಾಗಿ ಬಾಳಿದ ಮಾನ-
ವನು ಮಾನಹೀನನಾಗಿ
ತನುವ ಪೊರೆದನತಿ ಘನಕ್ಲೇಶವೆನುತ ಅ-
ರ್ಜುನನಿಗೆ ಉಪದೇಶವನು ಪೇಳಿದವ ನೀನೆ ೧೧
ಯುಕ್ತಿ ಒಂದನು ಕಾಣೆನು ದೇಹದಿ ದೃಢ
ಶಕ್ತಿಯಿಲ್ಲದವ ನಾನು
ಮುಕ್ತಾಶ್ರಯ ಸರ್ವ ಶಕ್ತಿ ನೀನಿಹ ಪರ-
ಭುಕ್ತಿ ಮುಕ್ತಿದನೆಂಬ ವಿರಕ್ತಿಯಿಂದಲಿ ಬಂದೆ ೧೨
ಕಾಸೆಲ್ಲ ವ್ಯಯವಾಯಿತು ಎನಗೆ
ಪರದೇಶವಾಸವಾಯಿತು
ಆಸೆ ಬಿಡದುದರ ಘೋಷಣೆಗಿನ್ನವ-
ಕಾಶವೊಂದನು ಕಾಣೆ ಶ್ರೀಶ ನೀನರಿಯೆಯ ೧೩
ನಿಲ್ಲಲಾಶ್ರಯವನು ಕಾಣೆ ಪೋಗುವೆನೆಂದ-
ರೆಲ್ಯು ಮಾರ್ಗವನು ಕಾಣೆ
ಬಲ್ಲಿದ ವೈರಿಗಳಲ್ಲಿ ತುಂಬಿಹರರಿ-
ದಲ್ಲಣ ನೀ ಎನ್ನ ಸೊಲ್ಲ ಲಾಲಿಸು ಕೃಷ್ಣ ೧೪
ಅಶನವಸನ ಕಾಣದೆ ದೇಶವ ಸುತ್ತಿ
ಬಸಿದು ಬೆಂಡಾಗಿಹೆನು
ಉಶನಾಂಇÀರ್ಇ ಶಿಷ್ಯನ ವಶದಿಂದೆತ್ತಿ ಪೃಥ್ವಿಯ
ದಶನಾಯಕರಿಗಿತ್ತ ಅಸಮಸಾಹಸ ದೇವ ೧೫
ಮಾಡಿದಪರಾಧಕೆ ಮಾನಹಾನಿ
ಮಾಡಿದುದು ಸಾಲದೆ
ಬೇಡುವೆ ದೈನ್ಯದಿ ಪಾಡುವೆ ಮಹಿಮೆಯ
ರೂಢಿಯೊಳಗೆ ದಯಮಾಡು ಇನ್ನಾದರು ೧೬
ಇನ್ನಾದರೂ ಮನದಿ ಪಶ್ಚಾತ್ತಾಪ
ವನ್ನು ತಾಳೊ ದಯದಿ
ಕಣ್ಣ ಕಟ್ಟಿ ಕಾಡಿನೊಳು ಬಿಟ್ಟ ತೆರದೊಳಿಂ-
ತೆನ್ನನು ಬಳಲಿಪದನ್ಯಾಯವಲ್ಲವೆ ೧೭
ನಷ್ಟವೇನಹುಣನು ಎನ್ನಲಿ ಕ್ರೋಧ
ಬಿಟ್ಟು ಬಾಧಿಸುತ್ತಿರಲು
ಕೃಷ್ಣ ನೀ ಕರುಣದಿ ಕಷ್ಟ ಬಿಡಿಸಿ ಕಡೆ
ಗಿಷ್ಟು ತಾತ್ಸಾರದಿಂದ ಕಷ್ಟಗೊಳಿಸಿದೆ ೧೮
ಇಂದ್ರಾದಿ ಸುರರುಗಳು ಕೆಲವು ಕಾಲ
ನೊಂದು ಭಾಗ್ಯವ ಪಡದು
ಇಂದಿರೇಶ ನಿನ್ನ ಬಂಧಕ ಶಕ್ತಿಯಾ
ನಂದ ತಿಳಿದಂತೆ ಮಂದನಾನರಿವೆನೆ ೧೯
ಆನೆಯ ಭಾರವನು ಹೊರಲು ಸಣ್ಣ
ಶ್ವಾನ ಸಹಿಸಲಾಪದೆ
ದೀನ ಮಾನವನೆಂದು ಧ್ಯಾನಿಸಿ ಮನದಲಿ
ಘನ್ನ ದುಖ್ಖವ ಕಳೆಯಾನಂಥ ಮೂರುತಿ೨೦
ನೀನಿತ್ತ ಮಾನವನು ನೀ ಕಳದುದ
ಕಾನು ಮಾಡುವದೇನಯ್ಯ
ದಾನವಾರಿ ಸುರಧೇನು ನಿನ್ಡಿಗಳ
ಧ್ಯಾನ ಮಾಡುತಲಿ ಸುಮ್ಮಾನದಿಂದಿರುವೆನು ೨೧
ಸಾಕು ಸಾಕು ಮಾಡಿದೆ ಎನ್ನನು ಬಹು
ನೀಕರಿಸುತ ದೂಡಿದೆ
ಬೇಕಾದರೆ ಭಕ್ತ ನೀ ಕಪಾಲನ ಪ-
ರಾಕೆಂಬ ಬಿರುದಿಂದ ಸಾಕುವದುಚಿತವೆ ೨೨
ಅಂಬರೀಷವರದ ಸ್ವಭಕ್ತ ಕು-
ಟುಂಬಿಯಂಬ ಬಿರುದ
ನಂಬಿದ ಮೇಲೆನಗಿಂಬುದೋರದೆ ವೃಥಾ
ಡಂಬರವ್ಯಾಕಿನ್ನು ಶಂಬರಾರಿಯ ಪಿತ ೨೩
ಹಂಸವಾಹನ ಜನಕ ದಾಸಮದ-
ಭ್ರಂಶಕನೆಂದನ-
ಕ ಸಂಶಯವಿಲ್ಲದೆ ತಿಳಿದೆನು ಮಾತುಳ
ಕಂಸ ಮರ್ದನ ವಿಪಾಂಸ ಶೋಭಿತ ದೇವ ೨೪
ತರಳ ಪ್ರಹ್ಲಾದ ಧ್ರುವಾದಿಗಳನೆಲ್ಲ
ಪೊರೆದನೆಂಬ ಕಥೆಯ
ಹಿರಿಯರು ಪೇಳ್ವರು ಭರವಸೆ ಎನಗಿಲ್ಲ
ಸಿರಿನಲ್ಲ ನೀಯೆನ್ನ ಬರಿದೆ ಬಿಟ್ಟದ ಕಂಡು೨೫
ವಿಜಯಸಾರಥಿ ನಿನ್ನಯ ಮೂರ್ತಿಯ ಕಂಡು
ಭಜಿಸಿದ ಮೇಲೆನ್ನನು
ವಿಜಯ ಪೊಂದಿಸದಿರೆ ತ್ರಿಜಗವು ನಗದೇನೊ
ಭುಜಗ ಭೂಷಣ ವಂದ್ಯ ದ್ವಿಜರಾಜ ಗಮನನೆ ೨೬
ಕುಂದಣ ವರ್ಣವಾದ ಕೇತಕಿಯನು
ಗಂಧಕೆ ಮರುಳನಾಗಿ
ಬಂದು ಕುಸುಮಧೂಳಿಯಿಂದ ಲಂಡನಾದ
ತುಂದಿಲೋದರ ಮಿಳಿಂದನಂದದಿ ಸಿಕ್ಕಿ ೨೭
ಬೇಡುವದೇನೆಂದರೆ ನಿನ್ನನು ಧ್ಯಾನ
ಮಾಡಿ ಪಾಡುವ ಭಾಗ್ಯವ
ನೀಡು ನೀಚರನೆಂದು ಬೇಡದಂದದಿ ಮಾಡು
ರೂಢಿಯೊಳಗೆ ದಯಮಾಡು ನೀ ನಿರುಪದಿ ೨೮
ಇನ್ನು ತಾ ತಾಳಲಾರೆ ಕ್ಷಣೆ ಕ್ಷಣೆ
ನಿನ್ನ ಪೊಗಳಲಾರೆ
ಪನ್ನಗಾಚಲವಾಸ ಪರಮ ಪುರುಷ ಪ್ರ-
ಸನ್ನ ವೆಂಕಟೇಶ ಪಾಲಿಸು ಕೃಪೆಯಿಂದ ೨೯

ಹಾಡಿನ ಹೆಸರು :ಏನು ಮಾಡಲಿನ್ನು ನೀನಲ್ಲದೆ
ಹಾಡಿದವರ ಹೆಸರು : ರಮಾ ಪಿ., ದೀಪ್ತಿ ಶ್ರೀನಾಥ್
ಸಂಗೀತ ನಿರ್ದೇಶಕರು :ವಸಂತಾ ಪಿ. ಎಸ್.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಯಾತಕೀ ಅಹಂಕಾರವು ಸರ್ವವು
೨೬೨
ಯಾತಕೀಹಂಕಾರವು ಸರ್ವವು ಜಗನ್ನಾಥನ ಪರಿವಾರವು ಪ.
ಸ್ವಾತಿಯ ಮಳೆಯೊಳು ಸುರಿವಂಥ ನೀರನು
ಜಾತಕ ಪಕ್ಷಿಗೆ ದೊರಕುವ ತೆರದೊಳಿಂನ್ಯಾತಕೀ ಅ.ಪ.
ಈಶ ಪ್ರೇರಣೆಯಿಲ್ಲದೇಸು ಮಿಡುಕಿದರು
ಶ್ವಾಸ ಬಿಡಲು ಸಲ್ಲದು
ಘಾಸಿಗೊಂಡರೆ ನುಂಗಲೋಸುಗ ಮನುಜಗಿ-
ನ್ನೇಸು ನಂಬಿಕೆ ಇಹದು ಮೂರ್ಖತ್ವ ಸರಿದು
ಘಾಸಿಗೊಳದೆ ರಮೇಶನಿತ್ತದೆ ಲೇಸೆನುತ ಅವನಂಘ್ರಿಕಮಲದ
ದಾಸಜನರೊಡನಾಡಿಕೊಳದೆ ದುರಾಸೆ ಕಡಲೊಳಗೀಸಲಾರದೆ ೧
ತಾನೆಂಬ ಹಂಕೃತಿ ತಾಳ್ವ ಮನುಜಗಿಂತ
ಹೀನರ ಕಾಣೆನಿನ್ನು ಯಾ-
ಕೆನಲನ್ನಪಾನದೊಳಿಚ್ಛೆಯನು ತಡೆಯಲನು-
ಮಾನಗೊಳುವನಾತನ ಸ್ವಾತಂತ್ರ್ಯವೇನು
ಶ್ರೀನಿಕೇತನ ಮನದೊಳನುಸಂಧಾನಗೊಳಿಸುವ ತೆರವಹುದು ಪವ
ಮಾನನಿದಕಧಿಕಾರಿಯಂದು ಮಹಾನುಭಾವನ
ಮಹಿಮೆಯರಿಯದೆ ೨
ವಾರುಧಿಯೊಳಗೆ ಸಂಚಾರಮಾಡುತ ಪರಿ-
ವಾರವ ಸೇರಿರುವ
ಉದಕ ಮಾತ್ರಧಾರಿ ಪ್ರಾಣಿಯ ಥರವ. . . .
ಯೋಚಿಸುವ ನಿತ್ಯದಿ. . . .
ಶ್ರೀ ರಮಣ ಚರಣಾರವಿಂಧಾಧರವೆ ಗತಿಯೆಂದು ನಂಬು ಖ-
ರಾರಿ ವೆಂಕಟರಮಣ ಕರುಣದಿ ತೋರುವನು
ತನ್ನಿರವ ಮನದಲಿ ೩

ಹಾಡಿನ ಹೆಸರು :ಯಾತಕೀ ಅಹಂಕಾರವು ಸರ್ವವು
ಹಾಡಿದವರ ಹೆಸರು :ಮಾನಸಿ ಪ್ರಸಾದ್
ಸಂಗೀತ ನಿರ್ದೇಶಕರು :ವಸಂತಾ ಪಿ. ಎಸ್.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಲಾಲಿ ನಿತ್ಯಾನಂದ
೨೮೦
ಲಾಲಿ ನಿತ್ಯಾನಂದ ಲಾವಣ್ಯ ಕಂದ
ಲಾಲಿ ಭೃತ್ಯಾರ್ತಿ ವಾರಣನೆ ಗೋವಿಂದ
ಲಾಲಿ ಜೀಯಾ ಪ್ರತ್ಯಗಾತ್ಮ ಮುಕುಂದ
ಲಾಲಿ ರಮಾಧೃತ ಚರಣಾರವಿಂದ ಲಾಲಿ ಪ.
ಆದಿ ಮಧ್ಯಾಂತ ವಿದೂರನಾಗಿಹನ
ವೇದಾಂತ ವೇದ್ಯ ವೈಭವ ಪಕ್ಷಿಗಮನ
ಆದಿ ಭೌತಿಕಾದಿ ತಾಪ ಕಳಿವವನ
ಮೋದದಿ ಪಾಡಿ ತೂಗುವೆನು ಮಾಧವನ ೧
ಈರಾರು ದಿಗ್ಗಜವೆಂಟು ಕಾಲುಗಳು
ಪಾರಾವಾರಗಳೆಂಬ ಪೊಳೆವ ಪೊಟ್ಟಿಗಳು
ಧಾರಾರೂಪ ಭಾಗೀರಥಿ ಸರಪಣಿ
ಸೇರಿಸಿ ಡೋಲ ಶೃಂಗಾರ ಗೈಯುವೆನು ೨
ನಿರ್ಮಲವಾದೇಳು ಹಲಿಗೆಗಳಿರುವ
ಭರ್ಮಗಿರಿಯೆ ಸಿಂಹಾಸನವನಿಟ್ಟಿರುವ
ಧರ್ಮಾರ್ಥ ಕಾಮ ಮೋಕ್ಷಗಳೆಂಬ ಫಲವ
ಮರ್ಮವನರಿತು ಕಟ್ಟುವೆ ಒಳ್ಳೆಯ ರಥವ ೩
ಸೂರ್ಯ ಚಂದ್ರಮರೆಂಬ ಧಾರಾದೀಪಗಳು
ತಾರಕಿಗಳು ಸುತ್ತಲಿರುವ ಚಿನ್ಹೆಗಳು
ವಾರಿಜ ಭವ ಜಯ ಜಯವೆಂಬ ಭರವು
ನೀರಜಾಲಯೆ ಕೂಡಿ ಪಾಡುವ ಸ್ವರವು ೪
ಕೋಟಿ ಭಾಸ್ಕರ ರಾಭ ಕೋಟೀರ ಕುಂಡಲ
ಪಾಟಲಾಧರ ಮುಕುರರಾಭ ಕಪೋಲ
ನೀಟರ ನಾಸ ನಳಿನ ಪತ್ರ ನೇತ್ರ ಜ-
ಲಾಟ ಕೇತನ ಚಾಪ ಧಾಟಿ ಭ್ರೂಯುಗಳ ೫
ಪೂರ್ಣ ಮಾಲಾನಂತ ಪೌರ್ಣಮಿಯ ವಿಧು
ವರ್ಣ ಮುಖಾಬ್ಜಸುಪರ್ಣವರೋಹ
ಕರ್ಣ ಹೀನ ಕಶಿಪೂ ಪರಿಶಯನ ದು-
ಗ್ಧಾರ್ಣವ ಮಂದಿರ ಸ್ವರ್ಣ ನಿಭಾಂಗ ೬
ಕಂಬು ಸುಗ್ರೀವ ವಿಲಂಬಿತ ವನಮಾಲ
ಅಂಬುಜ ಚಕ್ರ ಗದಾಕರ ಹಸ್ತ
ತುಂಬಿದ ವಕ್ಷವಲಂಬಿ ಕೌಸ್ತುಭ ಜಗ-
ದಂಬೆಯ ಧರಿಸಿರುವಾಂಬುಜ ನಾಭ ೭
ವಿತತ ರೇಖಾತ್ರಯಯುತಮೃದುದರ ಮಧ್ಯ
ಗತ ಕಿಂಕಿಣೀ ಜಾಲ ಕಾಂಚಿ ಕಲಾಪ
ಅತುಲ ಪೀತಾಂಬರಾವೃತ ಪೀವರೋರು ಸಂ-
ಗತ ಜಾನುಜಂಘಾ ಗುಲ್ಘಾಕರ ಮೂರ್ತಿ ೮
ಸಿಂಜನ ಜೀರ ರಂಜಿತ ಚರಣ
ಕಂಜಾಂಕುಶಕೇತು ರೇಖಾಲಂಕರಣ
ಮಂಜುಳ ಮೃದು ಪಾದತಳ ಮುಕ್ತಾಭರಣ
ಸಂಜೀವನ ರಾಜ ಸಂಪ್ರೀತಿ ಕರಣ ೯
ಔತ್ತಾನಪಾದಿಯನಾಧಾರಗೊಂಡು
ನಿತ್ಯ ತೂಗಾಡುವ ತೊಟ್ಟಿಲ ಕಂಡು
ಭೃತ್ಯ ವರ್ಗದ ಹಿಂಡು ಬಹು ತೋಷಗೊಂಡು
ಸತ್ಯಭಾಮೆಯ ಕಾಂತನಾಡುವ ಚೆಂಡು ೧೦
ಪತಿತ ಪಾವನ ಪರಮಾನಂದ ರೂಪ
ಸತತ ತಾನೆ ಪರಿಹರಿಸುವ ತಾಪ
ವಿತತ ಮಹಿಮ ವೆಂಕಟಾಚಲ ಭೂ
ಗತಿಯಾಗಿ ತೋರುವ ತನ್ನ ಪ್ರತಾಪ ೧೧

ಹಾಡಿನ ಹೆಸರು :ಲಾಲಿ ನಿತ್ಯಾನಂದ
ಹಾಡಿದವರ ಹೆಸರು :ನಾಗಮಣಿ ಎಸ್., ಚಂದ್ರಿಕ, ನಂದಿನಿ, ರಮಾ ಪಿ.
ರಾಗ :ರಾಗಮಾಲಿಕೆ
ಸಂಗೀತ ನಿರ್ದೇಶಕರು :ನಾಗಮಣಿ ಶ್ರೀನಾಥ್ ಎಂ.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಸಿಟ್ಟು ಮಾಡುವುದೆಂದಿಗು ಸಲ್ಲ
೨೧೧
ಸಿಟ್ಟು ಮಾಡುವುದೆಂದಿಗು ಸಲ್ಲ ಪೂರ್ಣ
ದೃಷ್ಟಿಯಿಂದಲಿ ನೋಡು ಸಿರಿನಲ್ಲ ಪ.
ಮೋಹ ಪಾಶ ಮಿಕ್ಕು ಬಿಗಿದಿಹುದು ರಿಪು
ವ್ಯೂಹ ಸುತ್ತಮುತ್ತ ನೆಗದಿಹುದು
ದೇಹದಿ ದಿನದಿನ ಬಲಕುಂದಿ ಬಂತು ಚಿ-
ದ್ದೇಹ ನೀನೊಲಿವ ಸನ್ನಹಗೊಳ್ವದೆಂತೊ ೧
ಒಂದು ಸತ್ಕರ್ಮ ಸಾಧಿಸುವಲ್ಲಿ ಬೇಗ
ಬಂದು ಸೇರುವುದು ಪಾತಕ ಝಲ್ಲಿ
ಮಂದರಧರ ಮಧುಸೂದನ ಮನದಿ ನೀ
ನಿಂದು ಸಾರ್ಥಕ ಮಾಳ್ಪ ತೆರವೆಲ್ಲ ಬಲ್ಲಿ ೨
ಹಿಂದೆ ಮುಂದಿನ ಸರ್ವ ಕರ್ಮಫಲ ಎನ್ನ
ತಂದೆ ಸ್ವೀಕರಿಸಿ ಮಾಡಿಸು ನಿರ್ಮಲ
ಇಂದಿರೇಶ ವೆಂಕಟೇಶನೆ ತ್ವಚ್ಚರ-
ಣೆಂದೀವರ ನೆರಳಿರಿಸನುಗಾಲ ೩

ಹಾಡಿನ ಹೆಸರು :ಸಿಟ್ಟು ಮಾಡುವುದೆಂದಿಗು ಸಲ್ಲ
ಹಾಡಿದವರ ಹೆಸರು :ಗೀತಾ ಬಿ. ಆರ್.
ರಾಗ :ಕಮಾಚ್
ಸಂಗೀತ ನಿರ್ದೇಶಕರು :ಶ್ರೀನಿವಾಸ್ ಟಿ.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ