Categories
ರಚನೆಗಳು

ಭಾವತರಕರು

೧೨೮
ಅಪ್ಪಾ ಕೇಳೊ ನಿನ್ನ ಗುರುತ ನೀನೆ ತಪ್ಪಿದೆಪ್ಪ | ತುಪ್ಪ ಹಾಲು ಬಿಟ್ಟು ನೀ ಅಡವಿಯ ಸೊಪ್ಪು ಮೆಲಬ್ಯಾಡಪ್ಪ ಪ
ತನುವ ನೆಚ್ಚಲಿ ಬ್ಯಾಡಾ ಹಿಂದಿನ ತನುವೇನಾದೀತಪ್ಪ | ವನಿತೆ ಸುತರು ಮನೆಯ ಪಶುವು ರಿಣ ಸಂಬಂಧಿಗಳಪ್ಪ | ಮನದೊಳು ಅನುದಿನ ನೆನೆದು ಮಾಡುವ ಕರ್ಮವು ನಿನಗಿಲ್ಲಪ್ಪ | ಚಿನುಮಯಾತ್ಮಕ ಬ್ರಹ್ಮನು ನೀನು ಅನುಮಾನ ಇದಕಿಲ್ಲಪ್ಪ ೧
ವೇದ ಶಾಸ್ತ್ರ ನಿಗಮಾಗಮವ ಶೋಧಿಸಿ ನೀ ನುಡಿಯಪ್ಪ | ಸಾಧು ಸಂತರ ಸೇವಿಸಿ ನಿತ್ಯ ಬೋಧಾಮೃತವ ಕುಡಿಯಪ್ಪ | ನಾದ ಬಿಂದು ಕಲಾತೀತರು ಹಾಡುವ ಪದವ್ಯಾಕಪ್ಪ | ಸಾಧು ಪುರುಷರು ಹೋದ ಹಾದಿಯ ಹಿಡಿದು ಮುಕ್ತಿ ಪಡೆಯಪ್ಪ ೨
ಇಂದು ನಾಳೆ ಎಂಬುವದೊಂದು ಸಂಶಯ ನಿನಗೆ ಬ್ಯಾಡಪ್ಪ | ಕುಂದು ಕೊರತೆಯು ಇಲ್ಲಾತನಿಗೆ ಆನಂದವೆ ಸ್ವಾದವಪ್ಪ | ಬಂದು ಹೋಗಿ ನೀ ಭವಸಾಗರದೊಳು ಬಹು ಪರಿಯಿಂದಲಿ ನೊಂದೆಪ್ಪ | ತಂದೆಯಾದ ಭವತಾರಕನ ಹೊಂದಿ ದಿನವ ಕಳೆಯಪ್ಪ ೩

 

೧೪೫
ಆ ಪರ ಪುರುಷರಾಚರಣೆ ಬೇರೆ |ಈ ಪಾಪಿ ಜನಕೆ ಮತ್ತೊಂದು ಬಗೆದೋರೆ ಪ
ಚಿಂತೆಯೆಂಬುದು ಚಿತ್ತದಲ್ಲಿಲ್ಲಾ | ಅಂತರಂಗದಿ ಆನಂದದಲಿಹರೂ | ಸಂತ ಸಮೂಹದಿ ಶಾಂತದಿ ಒಡಗೂಡಿ | ಕಂತುಹರನ ಯೋಗ ಮಾಡುತಿಹರೂ ೧
ಸತ್ತು ಹುಟ್ಟುವರಲ್ಲ ಮತ್ತೆ ಕಾಡುವರಲ್ಲ |ಸತ್ಯವಲ್ಲದೆ ಮಿಥ್ಯವಾಡಲಿಲ್ಲ | ಮತ್ತೆ ಮಾಯಾ ಮೋಹ ಕತ್ತಲಿ ಕಳೆದು | ನಿತ್ಯ ವಸ್ತುವಿನೊಳು ಪೂರ್ಣರಾಗಿಹ ೨
ಬೇಕೆಂದು ಬೇಡರು ಬೇಕೆಂದು ಮಾಡರು |ಕಾಡು ಮಂದಿಗಳೊಡನೆ ಮಾತನಾಡರು | ಲೋಕನಾಯಕ ಭವತಾರಕನ ಚರಣವ | ಏಕಾಂತದಲಿ ಪೂಜಿಸುತಿಹರು ೩

 

೧೫೫
ಆರೂಢನಾದ ಯೋಗಿಯ ಬಗೆಯಿದು | ಈ | ರೂಢಿಯೊಳು ಜನಕಿನ್ನು ಕಾಣಿಸದು ಪ ಮಾತುಗಳ ಆಡನು | ಮೌನಗಳ ಮಾಡನು | ನೀತಿ ಅನೀತಿಗಳೆಂಬುದ ನೋಡನು | ಯಾತರೊಳು ತನಗೆ ಸಂಪ್ರೀತಿಯೆಂಬುವದಿಲ್ಲ | ದಾತನಾಗಿನ್ನಾತ ಚರಿಸುತಿಹನು ೧
ವೇದಗಳ ನೋಡನು ಶಾಸ್ತ್ರಗಳ ಕೇಳನು | ನಾದ ಬಿಂದು ಕಳಾತೀತ ತಾನು | ಸಾಧು ಸಂತರ ಸಂಗದೊಳು ಬೋಧದಲಿ ನಲಿವುತಲಿ | ಆದ್ಯನಾದಿ ತಾನೆಂದು ತಿಳಿದಿಹನು ೨
ವಂದಿಸಲು ಹಿಗ್ಗನು | ನಿಂದಿಸಲು ತಗ್ಗನು | ಬಂದದಕೆ ತಾ ಹಿಂದು ಮುಂದಾಗನು | ತಂದೆ ಭವತಾರಕನ ಚರಣಾರವಿಂದವನು | ಹೊಂದಿ ಪೂರ್ಣಾನಂದದೊಳಗಿಹನು ೩

 

೧೨೪
ಆವ ಕರ್ಮವಿಲ್ಲ ಆವ ಧರ್ಮವಿಲ್ಲವೋ |ಕೇವಲಾನಂದಭಾವ ಬೋಧದಲ್ಲಿ ಬೆರೆಯಲು ಪ
ತನುವು ಬೇರೆ ಮನವು ಬೇರೆ | ಮನದ ಒಳಗೆ ನೆನಹು ಬೇರೆ | ತನುವು ಮನವು ನೆನವಿಗಿನ್ನು | ಸಾಕ್ಷಿಯಾಗಿಹ | ಚಿನುಮಯಾತ್ಮ ತಾನೆ ತನಗೆ | ಜನನ ಮರಣ ಎಂಬುದೆಲ್ಲ | ಮನದ ಆಟವೆಂದು ತಿಳಿದು | ಉನ್ಮನದಿ ಘನದಿ ನಲಿವಗೆ ೧
ಸತ್ಯ ಶರಣರಡಿಯ ಪಿಡಿದು | ತತ್ತ್ವ ಶಾಸ್ತ್ರವನ್ನು ತಿಳಿದು |ನಿತ್ಯಾನಿತ್ಯವನು ವಿವರಿಸುತಲಿ | ಭಕ್ತಿಯಿಂದಲಿ ||
ನಿತ್ಯ ಪೂರ್ಣ ವಸ್ತು ತಾನೆ | ಮತ್ತೆ ಬೇರೆ ಇಲ್ಲವೆಂದು |ಚಿತ್ತದಲ್ಲಿ ತಿಳಿದುಕೊಂಡು | ಮಿಥ್ಯವೆಲ್ಲ ಕಳೆದಗೆ ೨
ಹಿಂದಾದುದ ನೆನಿಸಲಿಲ್ಲ | ಮುಂದೆ ಒಂದು ಬಯಸಲಿಲ್ಲ |ಬಂದುದೆಲ್ಲ ಸುಖವು ಎಂದು ಶಾಂತದಿಂದಲಿ ||
ತಂದೆ ಭವತಾರಕನ | ಹೊಂದಿ ಪೂರ್ಣ ವಸ್ತುವಾಗಿ |ಬಂಧನವನು ಕಡಿದು ಕೊಂಡು | ಆನಂದದಲಿರುವವಗೆ ೩

 

೧೫೨
ಆವದಾದರು ಏನು ಲಿಂಗವಾದರು ಆಯ್ತು | ಆವ ಕುಲವದು ಏನು ಜ್ಞಾನಿ ಕರ್ಮವು ಹೋಯ್ತು ಪ
ಆವ ಅನ್ನವು ಏನು ಉಣಲ್ಹಸಿವು ಹೋಯಿತು | ಆವ ಮುದ್ರೆಯು ಏನು ಧ್ಯಾನಾನಂದವ ತೋರಿತು ೧
ಆವ ವಸ್ತ್ರವು ಏನು ಶೀತ ಬಾಧೆ ನೀಗಿತು | ಆವ ಅಗ್ನಿ ಏನು ದಿವ್ಯ ಕಾಂತಿ ಬೆಳಗಿತು ೨
ತಂದೆ ಭವತಾರಕನ ಪಾದ ಸೋಂಕಲಾಯಿತು | ಮುಂದೆ ಭವಕೆ ಬಾರದಂತೆ ಹೊಂದಿಕೊಂಡು ಹೋಯಿತು ೩

 

೧೪೪
ಇಂದು ಶಿವಯೋಗಾ ಶಿವಯೋಗಾ | ಮುಂದಿಲ್ಲವು ತನು ಭೋಗಾ ಪ
ಕೋಟಿ ತೀರ್ಥದಲಿ ಮುಣುಗಿ ಬಂದು | ಕೀಟಕ ಜನರರಿಯರು ಎಂದೆಂದೂ ೧
ಎಲ್ಲಿಹುದರಿದರೆ ಗೋಕರ್ಣ | ಇಲ್ಲದಾಯ್ತು ದೇಹದ ವರ್ಣ ೨
ಭವತಾರಕನ ಭಜಕನು ಬಲ್ಲಾ | ಭವದೊಳು ಇದ್ದರೂ ಭಯ ಅವಗಿಲ್ಲಾ ೩

 

೧೦೪
ಇದು ಎಲ್ಲಾ ಇದು ಎಲ್ಲಾ ಏನಾರೆಂಬುದ ಬಲ್ಲ್ಯಾ ಪ
ತನುವಿದು ಮೊದಲಿಗೆ ನಿನ್ನದಲ್ಲಾ || ತನು ಸಂಬಂಧದ ಗುರುತು ಬಿಡಲಿಲ್ಲಾ ೧
ನಿಜವೆನುತಲಿ ಆಶೆಯ ಕಚ್ಚಿ ಅಜಹರಿಹರರಾದರು ಕೇಳೇ ಹುಚ್ಚಿ ೨
ಗುರುಭವತಾರಕನ ನಿಜವಾದ ಭಕ್ತಾ | ಅರಿತು ಆದನು ಜೀವನ್ಮುಕ್ತಾ ೩

 

೧೧೫
ಇದು ಏನೊ ನಿನ್ನ ಮತೀ ಮತೀ | ಇದರಿಂದಾಗದು ಗತೀ ಗತೀ ಪ
ಸತಿಸುತರತಿಶಯ ಹಿತವರು ಎನುತಲಿ | ಬಣ್ಣಿಸಿತೊ ನಿನ್ನ ಸ್ಥಿತೀ ಸ್ಥಿತೀ |
ಸತಿ ಸುತರಿಂದಲಿ ಗತಿಯನ್ನು ಪಡೆದ ಕೇಳ ಬಲ್ಲೆಯಾ ಕಥೀ ಕಥೀ ೧
ಸಂಚಿತ ಪ್ರಾರಬ್ಧ ಕ್ರಿಯಮಾಣಾ | ತೀರಲಿಲ್ಲವೋ ಮಿತೀ ಮಿತೀ |
ಪಂಚ ದಶಾಕ್ಷರೀ ಮಂತ್ರವ ಜಪಿಸಲು | ನೀ ಪರಶಿವನೆಂಬುದೋ ಶ್ರುತೀ ಶ್ರುತೀ ೨
ಆದಿ ಮೂರ್ತಿ ಭವತಾರಕ ದೇವನ | ಪೂಜಿಸಿ ಮಾಡೊ ಸ್ತುತೀ ಸ್ತುತೀ |
ಅರಿಯದಿರ್ದರರ್ಚಕರನು ಸೇವಿಸಿ |ಆಗು ನೀ ಭೂಪತೀ ಭೂಪತೀ ೩

 

೧೦೫
ಇದು ಏನೋ ನಿನ್ನ ಗುಡೀ ಗುಡೀ |ಒಳಗಿನ ಕಸವನು ಹೊಡೀ ಹೊಡೀ ಪ
ಹಗಲಿರುಳೊ ನೀ ಬದುಕ ಮಾಡಿ |ಏನು ಗಳಿಸಿದ್ಯೋ ಹುಡೀ ಹುಡೀ ||
ಜಗದೊಳು ದೇವನ ತಿಳಿಯಲೊಲ್ಲಿ |ತಿಳಿದೀತೊ ಅಲ್ಲಿಗೆ ನಡೀ ನಡೀ ೧
ಹಸಿದು ಬಂದು ನೀ ವಸ್ತಿಯಾಗಿಳಿದರೆ |ಮತ್ತೇನಾರ ಕೊಡೂ ಕೊಡೂ ||
ಅಸ್ತಮಯಾದಿತು ಉದಯದಲೆದ್ದು |ತಪ್ಪದೆ ಇಲ್ಲೆಂಬೊ ನುಡೀ ನುಡೀ ೨
ನಾಕು ಕಾಯದೊಳು ಎರಡಿಟ್ಟನು ನೀ |ಎರಡನೆ ದೇವರಿಗೊಡೀ ಒಡೀ ||
ಲೋಕಪಾಲಕ ಭವತಾರಕನಂಘ್ರಿಯ |ಈ ಕಾಯದಿ ದಯಾ ಪಡೀ ಪಡೀ ೩

 

೧೪೬
ಇನ್ನೇನು ಕೇಳುತಿ ಛೀ ಹುಚ್ಚ ಮರುಳೆ ಪ
ಆರನು ಕಟ್ಟಿನ್ನು ಆರನು ಬಿಟ್ಟಿನ್ನು | ಆರಕ ಆರಿಟ್ಟು ಆರಳಿದು | ಆರು ಚಕ್ರವ ಮೀರಿರುವ | ಮೂರು ಗುಣಕೆ ದೂರಿರುವವನ ೧
ವೇದಾಗಮವನು ಶೋಧಿಸಿ ಅನುದಿನ | ಸಾಧು ಪುರುಷರ ಸಂಗದಲಿ |ಭೇದವ ಬಿಟ್ಟು ನಾದವನಾಲಿಸಿ | ಬೋಧದೊಳಗೆ ಲಯಗೊಂಡ ಮಹಾತ್ಮನ ೨
‘ತತ್ತ್ವಮಸಿ’ ಮಹಾವಾಕ್ಯದ ವಿವರವ |ಸತ್ಯದಿ ತಿಳಿ ನೀ ಬೋಧದಲಿ | ಕರ್ತೃ ಸದ್ಗುರು ಭವತಾರಕನಂಘ್ರಿಯ | ನಿತ್ಯ ಪೂಜಿಸಿ ಶಾಂತಿ ಪೊಂದಿದವನ ೩

 

೧೪೩
ಇಲ್ಲವಾಯಿತು ಸಾಧು ಜನಕೆ ಎಲ್ಲಾ | ಇಲ್ಲವೆಂಬುದವರ ಚಿತ್ತದೊಳಗಿಲ್ಲಾ ಪ
ತನುವಿಲ್ಲ ಮನವಿಲ್ಲ, ಮನದೊಳಗೆ ನೆನವಿಲ್ಲ | ಬಿನುಗಿನ ಸುಖವ ಬಯಸಲಿಲ್ಲ |ಅನುಮಾನ ಎಂಬುವದಲ್ಲಿ ಜನಿಸುವದಿಲ್ಲ |ಚಿನುಮಯಾತ್ಮಕರಾಗಿ ಚರಿಸುತಿಹರೆಲ್ಲ ೧
ವ್ರತನೇಮಗಳಿಲ್ಲ ಪ್ರತಿಮೆ ಪೂಜೆಗಳಿಲ್ಲ | ಸತಿ ಸುತರೆಲ್ಲ ಹಿತವರೆಂದೆನಿಸಲಿಲ್ಲ | ಪತಿತಪಾವನ ರಘುನಾಥ ನೀನನ್ನದಲೆ |ಮಿತಿಯ ಆಯುಷ್ಯ ಕಳೆದರಲ್ಲ ೨
ಪಾಪ ಪುಣ್ಯಗಳಿಲ್ಲ ಕೋಪತಾಪಗಳಿಲ್ಲ | ರೂಪ ಕುರೂಪಗಳ ನೋಡಲಿಲ್ಲ | ಆ ಪರಬ್ರಹ್ಮ ಮೂರ್ತಿ ಭವತಾರಕನ | ವ್ಯಾಪ ಕಾಣದೆ ಅನ್ಯ ಕಾಣಲಿಲ್ಲ ೩

 

೧೦೧
ಇಷ್ಟು ಸುಳ್ಳೆಂಬೋದು ತಿಳಿಯಲಿಲ್ಲ | ಕಷ್ಟವಿದರೊಳಗು ಎಳ್ಳಷ್ಟು ಸುಖವಿಲ್ಲ ಪ
ಮಡದಿ ಮಕ್ಕಳು ಮನೆಮಾರೆಲ್ಲ ಸುಳ್ಳು | ಹಡೆದ ತಾಯಿ ತಂದೆ ಮೊದಲೇ ಸುಳ್ಳು | ಒಡ ಹುಟ್ಟಿದ ಅಣ್ಣ-ತಮ್ಮಂದಿರು ಸುಳ್ಳು |ಒಡವೆ ವಸ್ತುಗಳೆಲ್ಲ ಕಡೆ ತನಕ ಸುಳ್ಳು ೧
ಆನೆ ಕುದುರೆ ಸೇನೆ ದೌಲತು ಸುಳ್ಳು | ನಾನು ನೀನೆಂಬ ಅಜ್ಞಾನವೇ ಸುಳ್ಳು | ಮೌನ ಹಿಡಿವುದು ಸುಳ್ಳು | ಸ್ವಾನುಭವಕೆಲ್ಲ ಸುಳ್ಳು ೨
ಕೊಟ್ಟು ಕೊಂಡೋದು ಸುಳ್ಳು | ಕೆಟ್ಟದೊಳ್ಳೇದೆಂಬುವದು ಸುಳ್ಳು | ಧಿಟ್ಟ ಭವತಾರಕನ ಮುಟ್ಟಿ ಪೂಜಿಸಿನ್ನು | ಬಟ್ಟ ಬಯಲಾಗಿ ತಾ ಘಟ್ಟ್ಯಾದನು ೩

 

೧೦೬
ಈ ತನು ನೀನಲ್ಲಾ ನೀನಲ್ಲಾ |ತನುವಿನ ಗುಣವು ಇದುವೆ ಎಲ್ಲಾ ಪ
ರೂಪಕ ಬಂದಿತು ಸ್ಥೂಲ ಸೂಕ್ಷ್ಮ |ರೂಪವು ಒಂದೇ ಬೀಜದ ಮೂಲಾ ೧
ಕಾರಣ ದೇಹದೊಳಗೆ ಒಂದೇ | ಮಹಾ ಕಾರಣದಲಿ ನೋಡಿಂದೇ ೨
ತನುಮನ ಧರ್ಮದ ಜ್ಞಾನವ ಬಿಟ್ಟು |ಉನ್ಮನದಿ ನೀ ಲಕ್ಷಿಸು ಲಕ್ಷಿಟ್ಟು ೩
ತನುಮನ ಕರಣಗಳ್ ನಿನಗೆ ಬ್ಯಾರೆ |ತನುಮನ ನಿನಗಿಹುದೆಂದೆನಲಾರೆ ೪
ಗುರುಭವತಾರಕ ದೇವನು ಒಲಿದರೆ |ತೋರುವನರಿವಿನ ನಿಜ ಭಾವಾ ೫

 

೧೪೯
ಎಂಥ ಮಾತನಾಡಿದಿ ಎಲಾ ನೀನು | ಛೀ | ಸಂತನಾದ ಮೇಲೆ ಮುಂಚಿನದೇನೊ ಪ
ಊರ ಮುಂದಿನ ಕೆರೆ ಭಾವಿಯ ನೀರು |ಊರೆಲ್ಲ ಬಳಕಿಗೆ ತಾವು ತರುವರು | ಪಾರಮಾರ್ಥಿಕರ ಪಾದೋದಕ ಮಾಡಲು | ನೀರೆಂದು ಅದಕಿನ್ನು ದಾರಾಡುವರು ? ೧
ಕಲ್ಲಲ್ಲಿ ಲಿಂಗವ ಮಾಡಿದರೇನೊ | ಲಿಂಗವಲ್ಲದೆ ಕಲ್ಲು ಎಂಬುವರೇನೊ | ಬಲ್ಲ ಸತ್ಪುರುಷರ ಬಗೆಯನರಿತು | ತನ್ನಲ್ಲಿ ಬ್ರಹ್ಮವ ಕಂಡವನೀಗ ನರನೇನೊ ೨
ಕಾಮರ ಅಡವಿಯೊಳಿರುವದಾ ತಂದು | ಕಾಮಿಸಿ ಪಾದುಕ ಮಾಡಲು ಎಂದು | ಸ್ವಾಮಿ ಸದ್ಗುರು ಭವತಾರಕ ಮೆಟ್ಟಲು | ಭೂಮಿ ಜನರಡ್ಡ ಬೀಳ್ವರಿದೇನೋ ೩

 

೯೭
ಎಲ್ಲ ಮಾಡಿದವ ನೀನೊ ನಾನೊ |ಅಲ್ಲ ಅಹುದು ಎಂದು ಆಡುವದೇನೊ ಪ
ಪುಣ್ಯಕೆ ಉಗ್ರ ಪಾಪವ ರಚಿಸಿದೆ |ಪುಣ್ಯದಿಂದಲಿ ಪಾಪವ ಕಳೆದೆ ೧
ಸತ್ಯದೊಳಗೆ ಒಂದು ಮಿಥ್ಯವ ಪುಟ್ಟಿಸಿದೆ |ಸತ್ಯದಿಂದಲಿ ಆ ಮಿಥ್ಯ ಹರಿಸಿದೆ ೨
ಅರಿವಿನೊಳಗೆ ಒಂದು ಮರವನು ಬೆರಸಿದೆ |ಗುರು ಭವತಾರಕನಾಗಿ ತಾರಿಸಿದೆ ೩

 

೧೧೭
ಏನ ನೋಡಿದೆ ದೇವಿ ಏನ ನೋಡಿದೆ | ಹೀನ ಜನರು ಭಜಕರ ಮಾನಹಾನಿ ಮಾಡುವದನ ಪ
ಹಿಂದೆ ದನುಜ ಕುಲವನೆಲ್ಲ | ಕೊಂದು ನಿನ್ನವರಿಗೆ ಆ- |
ನಂದ ಪದವಿಯಿತ್ತು ದಯಾ | ಸಿಂಧು ಎಂದು ನಂಬಿ ಇದ್ದೆ ೧
ಖಳರ ನಾಲಿಗೆಯನ್ನು ಮತ್ತೆ | ಸೆಳೆದು ಸೀಳಿ ಬಿಸುಟುತಿರಲು |
ಉಳಿವುದಿಲ್ಲ ಮತವು ಎಂದು | ತಿಳಿಯವಲ್ಲದೇನೆ ನಿನಗೆ ೨
ತಂದೆ ಭವತಾರಕನ ಪಾದ | ಹೊಂದಿದವರ ಹೆಸರನ್ನು |
ಮುಂದೆ ತಗಿಯದ್ಹಾಂಗ ನೀನು | ಇಂದು ತೋರು ಮಹಿಮೆಗಳನು ೩

 

೧೧೦
ಏನು ಇವನದು ಗುಮಾನ ರಾಮಾ |ನೀನೆ ನೋಡಿದೆಲ್ಲ ? ಉಳಿದಿತೇ ಮಾನಾ ? ಪ
ದಶಕಂಠನಿಂದ ಬಲ್ಲಿದನೇ ?ಪಶುಪತಿ ಇವಗೇನು ವರವ ಕೊಟ್ಟಿಹನೇ ? ೧
ಯಾತಕ ಅಂಜುವಿ ನೀನು ಮಹಾ |ಪಾತಕ ಹತ್ತದ ಕೊಂದರೆ ಏನೋ ೨
ಗುರುಭವತಾರಕನ ತಂದೆ ನೀ |ವರವ ಕೊಟ್ಟು ಮಾತು ಅರಿತುಕೋ ಇಂದೇ ೩

 

೧೩೪
ಏನು ಮಾಡಿದಿ ಲಿಂಗವೇ ಭವ | ಭಂಗವಾಗುವದು ಅಂಗವಯ್ಯೋ ಪ
ಅಗ್ಗವಾದರು ಸಂತರು ಲಾಭವನು | ಮುಗ್ಗು ಜೋಳವ ಕೊಟ್ಟಿತು |
ಗೊಗ್ಗಯ್ಯನೆಂಬರೇ ಕಡೆಯಲ್ಲಿ ನಿನಗೆ ಅಗ್ಗಳವದಕಿಂತ ಒಂದುಂಟು ಗಂಟು ೧
ಸಕಲ ಶಾಸ್ತ್ರಗಳ ಬಲ್ಲೆ | ಮಿಕ್ಕ ಕಾಪುರುಷರಂತೇನು ಕಲ್ಲೇ |
ಪ್ರಕಟಿಸುವರಾರಿಲ್ಲೆ ನಿನಗಿನ್ನು ಶಿವ ಶಿವಾನುಭವ ನೀನ್ಯಾಕ ಒಲ್ಲೆ ಇಲ್ಲೇ ೨
ಹುಚ್ಚರೇ ಭವತಾರಕನ ಭಕ್ತರು ? ನೆಚ್ಚುವರೆ ಸಂಸಾರವ ?
ಮೆಚ್ಚುವರೆ ಶ್ರುತಿಯುತರು ಈ ಮಾತಿಗೇ ? ಎಚ್ಚರಿಕೆ ಇನ್ನಾರ ಹಿಡಿಯೊ ಬೇಗ ಈಗ ೩

 

೧೧೪
ಏಳು ಏಳೆನುತ ಭಾನು ಬರುತಿಹ |ಹೇಳುವರ್ಯಾರಿಲ್ಲ ನಿಮಗೆ ಜ್ಞಾನವ ಪ
ಇರುಳೆಲ್ಲ ನೀವಿನ್ನು ವಿಷಯಕೆ ಮರುಳಾಗಿ |ಹರಟಿಯೊಳಗೆ ಸೊರಗುತಿಹರೀ ||
ತರಳಾಕ್ಷಿಯರ ಅಂಗಸಂಗಕೆ ಬೆಂಡಾಗಿ |ಬರದ ಆಯುಷ್ಯ ಬರಿದೇ ಕಳೆವಿರೀ ೧
ಮಾಡಲಿಲ್ಲವು ಧ್ಯಾನ ಯೋಗ ಜಪ ತಪ |ನೀಡಲಿಲ್ಲವು ದಾನ ಧರ್ಮವ ||
ನೋಡಲಿಲ್ಲವು ಸಾಧುಸಂತರ ನಡತೆಯ |ಕೇಡ ಬಂದಿತು ಮುಂದೆ ನೋಡಲು ೨
ತಂದೆ ಭವತಾರಕನೆ ಹಿಂದಾದುದಾಗಲಿ |ಮುಂದಾರ ನೀವಿನ್ನು ಒಂದು ನಿಮಿಷವು ||
ಗೊಂದಲ ಬಿಟ್ಟು ಅರಿತು ಕೊಂಡು | ಹೊಂದಿರಿ ಪೂರ್ಣ ಆನಂದವನೆಂದು ೩

 

೧೦೦
ಕಲಿಯುಗದೊಳು ಕಂಡೆನು ನಿನ್ನೊಬ್ಬನ | ಕಲಿವಾಳದನಿಂಗಪ್ಪ ||
ಕಲಿತ ಬುದ್ಧಿಯು ಕಡೆಯಲಿ ನಿನ್ನ |ಕೆಲಸಕೆ ಏನೂ ಬಾರದಪ್ಪ ಪ
ಎತ್ತು ಎಮ್ಮಿ ಆಕಳ ಹೋರಿ | ಜತನ ಮಾಡೀದೆಪ್ಪ ||
ಮೃತ್ಯು ದೇವತೆಗೆ ತುತ್ತು ಇದರೊಳು | ಮುಕ್ತಿ ನಿನಗಿಲ್ಲಪ್ಪಾ ೧
ಹೊಲಮನಿಯೆಂದು ನಲಿನಲಿದಾಡುತ | ಒಲಒಲ ಗುಟ್ಟುವಿಯಪ್ಪಾ ||
ಹೊಲಮನಿ ಸಾಧಿಸಿ ಸಂಗಡ |ಒಯ್ದಿಲ್ಲಾ ನಿಮ್ಮಪ್ಪಾ ೨
ಶುದ್ಧವಾಗಿ ನೀ ಕೋಶವ ಕಲಿತು | ಬದ್ಧವ ತಿಳಕೋಳಪ್ಪಾ ||
ಬುದ್ಧಿವಂತನು ನೀ ಸ್ವರ್ಗದ ಸುದ್ದಿಯು | ಸ್ವಲ್ಪವು ನಿನಗಿಲ್ಲಪ್ಪಾ ೩
ರೋಗವ ನೀಗಿಸಿ ಜನರಿಗೆ ಭೋಜನ | ಭೋಗವನ್ನು ನೀ ಪಡೆದೆಪ್ಪಾ ||
ಹೋಗದು ಕರ್ಮವು ಇದರಲಿ ಮುಂದಿನ | ಆಗಮ ಮಹಿಮೆಯ ತಿಳಕೋಳಪ್ಪಾ ೪
ಅಪರೂಪದ ನರದೇಹಕೆ ಬಂದು | ವಿಪರೀತ ವಿದ್ಯಾಕಪ್ಪ ||
ಗುಪಿತದಿ ಭವತಾರಕನ ಭಕ್ತರ |ಕೃಪೆಯನು ನೀ ಸಂಪಾದಿಸಪ್ಪಾ ೫

 

೧೫೦
ಕಾಲ ಕರ್ಮವ ಕಾಲಿಲೊದೆದವ | ಕತ್ತಲಿಗಂಜುವನೇ |
ಆಲಿಯ ಮೇಲಕೆ ನಿಲಿಸಿದ ಪುರುಷನು | ಬಾಲೆರ ಬಯಸುವನೇ ಪ
ಅಮೃತ ನದಿಯೊಳು ತೃಪ್ತ್ಯಾದ ಮಹಾತ್ಮನು | ಅಂಬಲಿ ಸುರಿಯುವನೇ |
ಕುಂಭಕ ವಾಯುವ ನಿಲಿಸಿದ ಸಜ್ಜನ | ಕುಂಭಿನಿಗುದಿಸುವನೇ೧
‘ತತ್ತ್ವಮಸಿ’ ಮಹಾವಾಕ್ಯವ ತಿಳಿದವ | ಮಿಥ್ಯಕೆ ಮೆಚ್ಚುವನೇ |
ನಿತ್ಯನಿತ್ಯದಿ ಇರುವವನೂ | ಅನಿತ್ಯಕೆ ಮೆಚ್ಚುವನೇ ೨
ವೇದಾಗಮವನು ಶೋಧಿಸಿದವನು | ಭವ ಬಾಧೆಗೆ ಬೀಳುವನೇ |
ಆದಿ ಮೂರ್ತಿ ಭವತಾರಕ ಭಜಕನು | ಭೇದವ ಮಾಡುವನೇ ೩

 

೧೧೬
ಕೀಳಬಾರದೇ ಹಲ್ಲ | ಆಳುವಾಡತಿನ್ನುಮತವ ಏಳಲ ಮಾಡುವವರ ಪ
ಮೂರು ಮೂರ್ತಿಗಳನೆ ಕರೆದು | ಸಾಯದಂಥ ದನುಜರನ್ನು |
ತಾಯಿ ನೀನೆ ಕೊಂದು ಸುರ ನಿ- | ಕಾಯವನ್ನು ಕಾಯಲಿಲ್ಲ ೧
ಯಾಕೆ ಬಾರದಿನ್ನು ಕ್ರೋಧ | ಮೂಕಳಾದೆ ಮಾತನಾಡು |
ಲೋಕಪಾಲಳೆಂಬ ಬಿರುದ | ಸಾಕು ಮಾಡಿದೇನೇ ಇಂದು ೨
ಇಂದು ನೀನು ಸುಮ್ಮನಿರಲು | ಮುಂದೆ ದಾರಿಗುಸುರಲಿನ್ನು |
ತಂದೆ ಭವತಾರಕನ | ನಿಂದೆ ಮಾಡುವವರ ಹಲ್ಲ ೩

 

೧೦೨
ಕೇಳು ಮಗನೆ ನಾ ಹೇಳುವೆ ನಿನಗಿದ -| ನೇಳಲ ಮಾಡದಿರೋ ||
ಭಾಲಾಕ್ಷನ ನೀ ತಿಳಿಯದೆ ಈ ಭವ ಕೊಳ್ಳವ ಬೀಳದಿರೊ ಪ
ಹರುಷ ವಿಷಾದವು ಮನಸಿನದೆಂಬರೆ | ಮನಕೆ ತಗುಲಿತೆಂತಾ ||
ಸ್ಪರಿಶ ಶಬ್ದವು ರೂಪವು ರಸ ಗಂಧದಿ | ತೋರಿತು ಭ್ರಾಂತೀ೧
ಹಸಿವು ತೃಷವು ಜೀವನದೆಂಬರೆ ಜೀವನಕದು ಉಂಟೇ ||
ವಿಷಯ ಸುಖವು ಕಳೆದಾನಂದದ ಬೋಧದೊಳಗುಂಟೇ ೨
ಜರೆ ಮರಣವು ತನುವಿನದೆಂಬರೆ | ತನುವದು ಒಂದಲ್ಲಾ ||
ಚಿನುಮಯ ಭವತಾರಕನೊಲಿದರೆ ಶೇಡೋರ್ಮಿಗಳೇನಿಲ್ಲಾ ೩

 

೯೮
ಕೊಂಬುವರಿಲ್ಲೆನ್ನ ಸರಕ | ಇಂಬಿಲ್ಲ ಇಡಲಿಕ್ಕೆ |ಹೂರಲಾರೆ ಮುದುಕ ನಾ ಪ
ಹರನೊಳು ಗಿರಿಜೆಯು ತಾ | ಮೋಹಿಸಿ ಸೆರೆಯಾದಳು | ವರ ಮುನಿಗಳು ಅರಣ್ಯಕೆ ಪೋದರು ಸುರರು ಸೇವಿಸಲಿನ್ನು | ಸೆರೆ ಸಿಕ್ಕಿರುವರಲ್ಲಾ | ಧರೆಯೊಳು ಲೋಗರಿಗೆ |ಗುರುತಿಲ್ಲಾ ಇದರೊಳು ೧
ಕೊಂಡವರಿಗೆ ಲಾಭವು ಒಂದಕ್ಕೆ ನಾಲ್ಕು | ಇಸಗೊಂಡವರಿಗೆಂಟು ಮಡಿಯಹುದು ||
ಪುಂಡತನದಲಿ ಕಸಗೊಂಡೇನೆಂದವರಿಗೆ | ಮಂದಮತಿಗಳಿಗೆಂದಿಗೂ ದೊರೆಯದು ೨
ತಂದೆ ಸದ್ಗುರು ಭವತಾರಕನ ಭಜಕ- | ರಿಂದು ಈ ವಾರ್ತೆಯನು ಕೇಳಿದರೆ | ಬಂದು ವಂದಿಸೆನ್ನ ||
ಆನಂದವ ಬಡಿಸುವರು | ಎಂದು ಆಗುವದೋಹಾಗೆಂದು ಯೋಚಿಸುವೆ ೩

 

೧೨೫
ಗಂಡ ಎನಗೆ ಹಾದರ ಮಾಡೆಂದು ಹೇಳಿದನು | ಭೂಮಂಡಲದೊಳಗೆಂಥ ಪುಣ್ಯ ಪುರುಷನವ್ವಾ ಪ
ಹತ್ತು ಮಂದಿಯೊಳಗೆ ನಾನು | ಗುತ್ತಿಗಿಲಿದ್ದೆನೇ | ಮತ್ತೆ ಎನ್ನ ಕರೆದು ಒಯ್ದು | ಬ್ಯಾರೆ ಇಟ್ಟನೇ | ಅತ್ತ ಇತ್ತ ನೋಡ ಬೇಡ | ಇನ್ನು ಎಂದನೇ | ಕತ್ತಲೆಯ ತೆಗೆದು ಸುತ್ತ | ಬೆಳಕ ತಂದನೇ ೧
ಆರು ಮನಿಯ ಮೇಲಕಿನ್ನು | ಏರು ಎಂದನೇ | ಆರು ಮಂದಿ ನಾದಿನೇರ ಮೂಗ ಕೊಯ್ದನೇ | ಮೂರು ಕೋಣೆಯೊಳಗೊಬ್ಬನ | ತೋರಿ ಕೊಟ್ಟನೇ | ಆರ ಅಂಜಿಕೇನವನೊಳು | ಸೇರು ಎಂದನೇ ೨
ತಂದೆ ಭವತಾರಕನು ತಾನು | ಇಂದು ಬಂದನೇ | ಒಂದು ಮಾತಿನಿಂದ ಜೀವವನ್ನು ಕೊಂದನೇ | ಹಿಂದೆ ಹತ್ತಿ ಬಾರದಂತೆ ಮುಂದೆ ನಿಂತನೇ | ಕುಂದು ಕೊರತೆಯೆಲ್ಲ ತೆಗೆದು | ಆನಂದವಿಟ್ಟನೇ ೩

 

೧೩೬
ಗಣಪತಿ ಶಾರದೆಗೆರಗಿದೆ ಇಂದೇ | ಇಬ್ಬರ ಹೃದಯದಿ ಕರುಣದಿ ಬಂದೆ |
ನುಡಿಸಿದರ್ವಚನವ ಒಂದೊಂದು ತಂದೆ | ಕೇಳಿರಿ ಜನರೆಲ್ಲಾ ಕಿವಿಗೊಟ್ಟು ಬಂದೆ ೧
ನರನಾಗಿ ಬಂದು ನೀ ಮಾಡಿದಿ ಏನಾ | ತಿಳಿಯದೆ ಬೊಗಳುವಿಯಾತಕೆ ಶ್ವಾನಾ |
ಎಳ್ಳಷ್ಟು ಇಲ್ಲದೆ ಹೋಯಿತು ಜ್ಞಾನಾ | ಇನ್ನಾದರೂ ಮಾಡೊ ಸದ್ಗುರುವಿನ ಧ್ಯಾನಾ೨
ಮಾಡಲಿಲ್ಲಾ ಪುಟ್ಟಿ ನೀ ದಾನ ಧರ್ಮಾ | ಮಾಡಿದಿ ತಿಳಿಯದೆ ನೀ ಕೆಟ್ಟ ಕರ್ಮಾ |
ಆಡಿದಿ ನೀ ಸಾಧುಸಂತರಿಗೊರ್ಮಾ | ನೋಡಿಕೊ ನಿನಗಿಲ್ಲದಾಯ್ತು ಶರ್ಮಾ ೩
ಮಾಡಿದ ಬದುಕನು ಸುಮ್ಮನೆ ಕಳೆದೆ | ಮಾಡುವಾಗ ಬಹು ನಿಜವೆಂದು ತಿಳಿದೆ |
ನೋಡದೆ ಪೂರ್ವದ ಸುಕೃತವನಳಿದೆ | ರೂಢಿಯೊಳಗೆ ಪಾಮರನಾಗಿ ಬೆಳೆದೆ ೪
ಮಾಡುವ ಕರ್ಮಕೆ ಮನವೇ ಸಾಕ್ಷೀ | ಮಾಡುವಿ ಜಪ ನಿನಗ್ಯಾಕೀ ರುದ್ರಾಕ್ಷೀ |
ಮಾಡಿದನೇ ಗುರು ಹೀಗೆಂದು ದೀಕ್ಷಾ | ಆಡಲ್ಯಾತಕೊ ನಾಳೆ ಆದೀತೋ ಶಿಕ್ಷಾ ೫
ಹುಣಶಿ ಹಣ್ಣ ಹಚ್ಚಿ ಬೆಳಗಿದಿ ಗಿಂಡೀ | ಎಣಕೀ ಶರಣ ಮಾಡಿ ಅಲ್ಲೇನು ಕಂಡೀ |
ಸಂತರ ನಿಂದಾ ಬಲು ಮಾಡಿ ಉಂಡೀ | ಅಂತರಂಗದಿ ಇರು ಛೇ ಹುಚ್ಚ ಮುಂಡೀ ೬
ಹಗಲೂ ಇರುಳೂ ಎದ್ದುಂಬುವಿ ಕೂಳೂ | ಕೂಳಿಗೆ ಆದಿ ನೀ ಒಬ್ಬರ ಆಳೂ |
ಬಲು ಮಂದಿ ಮನೆಯನು ಮಾಡಿದಿ ಹಾಳೂ |ಏನು ಪುಣ್ಯ ಬಂದದ ಅದನಾರ ಹೇಳು ೭
ಹಗಲೂ ಇರುಳೂ ಎದ್ದು ಮಾಡಿದಿ ಬದಕಾ | ಮಾಡುತ ಮಾಡುತ ಆದೆಲ್ಲೊ ಮುದುಕಾ |
ಸಾಯುವ ತನಕಾ ಬಿಡಲಿಲ್ಲೊ ಚುದಕಾ | ಸತ್ತಮೇಲೆ ನೀ ಆಗುವಿ ಶುನಕಾ ೮
ಏನೇನಿಲ್ಲದೆ ಹೋಯಿತು ಬುದ್ಧೀ | ಶಾಸ್ತ್ರ ಪುರಾಣದಿ ಕೇಳಿಲ್ಲ ಸುದ್ದೀ |
ಇರುಳ ಕಂಡ ಕುಣಿ ಹಗಲ್ಯಾಕೆ ಬಿದ್ದೀ | ಮರುಳಾದ್ಯಾ ಯಮ ನಾಳೆ ಕೊಂದಾನೊ ಗುದ್ದೀ ೯
ಸಂಸಾರ ನಂಬಿದಿ ನಿಜದಲಿ ಹ್ಯಾಂಗ | ಸದ್ಗುರು ಪಾದವ ನಂಬೋ ನೀ ಹಾಂಗ ||
ಸಂಶಯಾ ಅದಕಂಜಿ ಬಿಟ್ಟರೆ ಈಗ |ಕಾಂಶಿಲಿ ಬಡಿದಾರು ತಿಳಿದೀತು ಆಗ ೧೦
ಬೆಳಕಿನೊಳಗ ಒಂದು ನೋಡುವ ಕಣ್ಣು | ಕತ್ತಲಿಯೊಳ ಗೊಂದು ಕಾಂಬುವ ಕಣ್ಣು |
ಕತ್ತಲಿ ಬೆಳಕನ್ನು ನೋಡುವ ಕಣ್ಣು | ಅದ ಬಿಟ್ಟು ಏನ ನೋಡುತಿ ಮಣ್ಣು ೧೧
ಓದುವಿ ಅನುದಿನ ಶಾಸ್ತ್ರ ಪುರಾಣಾ | ಅದರೊಳಗಿನ ಮಾತ ತಿಳಿಯದೆ ಕೋಣಾ ||
ಅರ್ಥವ ಹೇಳುವಿ ಮಂದಿಗೆ ಜಾಣಾ | ರುವ್ವಿಯ ಬೇಡಲು ಹೋಯಿತು ಪ್ರಾಣಾ೧೨
ಕಂಡರೆ ನೋಡುವಿ ಹೆರವರ ಹೆಣ್ಣು | ಚೆಲುವೆಂದೂ ಇಟ್ಟೆಲ್ಲೊ ಆಕೆಗೆ ಕಣ್ಣೂ |
ಆದರೆ ಹತ್ತ್ಯಾವೊ ಆಕೆಯ ಹುಣ್ಣು | ಕಡೆಯಲಿ ಬಿದ್ದಿತು ಬಾಯಲಿ ಮಣ್ಣು ೧೩
ನಿತ್ಯ ತೆಗೆದುಕೊಳ್ಳುವಿ ದೇವರ ತೀರ್ಥಾ | ಮತ್ತಿನ್ನು ಬಿಡಲಿಲ್ಲ ಮನದ ಸ್ವಾರ್ಥಾ ||
ಕತ್ತೆಯ ಹಾಂಗ ನೀನೊದರುವಿ ವ್ಯರ್ಥಾ | ಎಂದೆಂದಿಗೂ ದೊರೆಯದು ಆ ಪರಮಾರ್ಥಾ ೧೪
ತನುವು ನಾನೆಂಬುವಿ ತನುವಿದು ತೊಗಲು | ತನುವಿಗೆ ಅವ ನೋಡು ಒಂಬತ್ತು ಹುಗಲು |
ಚಿಂತಿ ಮಾಡುವದ್ಯಾಕೊ ಹಗಲೂ ಇರುಳೂ | ನಿನ್ನಾಧೀನವು ಹೀಗೆಂದು ಇರಲು ೧೫
ದೂರ ಹೋಗದಿನ್ನು ಆಗದು ಕಾಶೀ | ದೂರ ಮಾಡಿ ಕಳಿ ನೀನು ಮೂರಾಶಿ |
ತೀರದು ಶಿವಯೋಗ ಪುಣ್ಯ ರಾಶಿ | ಸೇರುವಿ ಸಾಯುಜ್ಯದಲಿ ಮಿರಾಶಿ ೧೬
ತಂದೆಗೆ ಬಿಡದಿನ್ನು ಮಗನಲ್ಲಿ ಮಾಯಾ | ಮಗಗಿನ್ನು ಹತ್ತಿದೆ ಸ್ತ್ರೀಯರ ಮಾಯಾ |
ಸ್ತ್ರೀಯರಿಗೆ ಹತ್ತಿದೆ ದುಡ್ಡಿನ ಮಾಯಾ | ದುಡ್ಡಿನಂತೆ ಮಾಡೊ ಮನಕೆ ನಿರ್ಮಾಯಾ ೧೭
ಮೀಶಿಯ ಹುರಿ ಮಾಡಿ ಮೇಲಕೆ ನೋಡಿ | ಕಾಲಾಗ ಸಿಕ್ಕವು ಮೋಹದ ಬೇಡಿ ||
ಮಾಡಬಾರದಂಥ ಕೆಲ್ಸವ ಮಾಡಿ | ಸಿಕ್ಕಿದೆಲ್ಲೊ ಗಾಂಡೂ ಇನ್ನೆತ್ತ ಓಡೀ ೧೮
ಸಂತರ ಸಂಗವ ಮಾಡಲು ಒಲ್ಲೆ | ಭ್ರಾಂತಿಯ ಬಲಿಯೊಳು ಸಿಲ್ಕಿದೆ ಇಲ್ಲೆ ||
ಶಾಂತಿಯ ತಿಳಿಯದೆ ಕ್ರೂರವ ಬಲ್ಲಿ | ಕಂತುಹರನ ಪಾದ ದೊರೆವುದಿನ್ನೆಲ್ಲಿ ೧೯
ಕಾಮನ ಸುಡುವುದು ನೋಡು ಹೀಂಗಲ್ಲಾ | ಕಾಮನ ಶಿವ ಸುಟ್ಟರವ ಸಾಯಲಿಲ್ಲ ||
ಕಾಮನು ಸುಡುವ ಮೂರು ಲೋಕವನೆಲ್ಲ | ಕಾಮರಹಿತ ಭವತಾರಕ ಬಲ್ಲ ೨೦
ಕಟ್ಟಿದಿ ಮನೆಯನು ನೀ ಬಲು ಛಂದಾ | ಬಿಟ್ಟು ಹೋಗುತಿ ಇದದಾವಂದಾ ||
ತೊಟ್ಟಿಲೊಳಗೆ ಇದ್ದ ಹೇಳಿದ ಕಂದಾ | ಎಷ್ಟಂತ ಹೇಳಲಿ ನೀ ಮತಿಮಂದಾ ೨೧
ಯಾತಕಗಳಿಸಿದ್ಯೊ ಹೊನ್ನಿನ ಹೂಜಿ | ಪಾತಕ ಬರುವದು ಬಿಡಬ್ಯಾಡ ವಾಜಿ |
ನೀತಿಯಿಂದಲಿ ಮಾಡು ನೀ ಗುರು ಪೂಜಿ | ಯಾತನ ಬಡಿಸುವ ನಾಳಿನ ಪಾಜಿ ೨೨
ಒದರುವಿ ಯಾತಕೆ ಬಾಯನು ಕಿಸ್ತು | ಬೆದರ ಬೇಡಾದುದಕೆನ್ನು ಅಸ್ತು ||
ಚತುರ ತನದಲಿ ಸಾಧಿಸು ನೀ ವಸ್ತು |ಆದರಿಂದಲಾಗುವದು ಆ ಮನ ಸ್ವಸ್ತು ೨೩
ಯಾತಕೆ ಆಡುವಿ ಸುಮ್ಮನೆ ಹೋಳಿ | ಪಾತಕ ಬರುವದು ತಿಳಿಯದೆ ಕೋಳಿ ||
ನೀತಿಯಿಂದಲಿ ತತ್ತ್ವ್ವ ಮಾತನು ಕೇಳಿ | ಘಾತಕ ಯಮ ನಾಳೆ ಬರುವನು ದಾಳಿ ೨೪
ಮಾಡುವಿ ಸುಮ್ಮನೆ ಈ ಭವ ಬಿಟ್ಟಿ | ಮಾಡದೆ ದಾನ ಧರ್ಮವ ಕೆಟ್ಟೀ ||
ಮಾಡಿದುದೆಲ್ಲಾ ನೀ ಜೋಕಿಲಿ ಇಟ್ಟಿ | ಮಾಡಲು ಬಾಧೆಯ ನೀ ಬಾಯ ಬಿಟ್ಟಿ ೨೫
ನೆನೆದರೆ ದೃಢದಲಿ ರಾಮ ನಾಮ | ತನುವಿದು ಮುಂದೆ ಬಾರದು ನೇಮ ||
ಮನದೊಳು ಪುಟ್ಟಿತು ತಾನೆ ನಿಷ್ಕಾಮ | ಘನಸುಖ ತೋರಿತು ಅದು ಸಾರ್ವಭೌಮ ೨೬
ಹುಟ್ಟಿ ಹುಟ್ಟಿ ನೀ ಯಾತಕೆ ಸತ್ತೀ | ಹುಟ್ಟುತ ಸಾವುತ ನಿತ್ಯದಿ ಅತ್ತೀ ||
ಹುಟ್ಟು ಸಾವನ್ನು ಕಳೆಯಲೊ ಕತ್ತೀ | ಕೆಟ್ಟಿಯೊ ಇನ್ನಾರ ಬೆಳಿ ಧರ್ಮಾ ಬಿತ್ತೀ ೨೭
ಶಾಸ್ತ್ರ ಪುರಾಣವ ಓದುವಿ ಬರಿದೇ | ಉತ್ತಮ ಸ್ತ್ರೀಯರ ಕಂಡು ನೀ ಕರೆದೆ ||
ನಿನ್ನೊಳು ತಿಳಿದು ನೀ ನೋಡುದು ಮರೆದೇ | ಸಾಧು ಸಂತರುಗಳ ಸೇವೆಗೆ ಮರೆದೆ ೨೮
ಪಡಿ ಜೋಳಕೊಬ್ಬರ ಅಡಿಗಳ ಹಿಡಿವೆ | ಕೊಡುವದಿಲ್ಲೆಂದರೆ ದವಡಿಯ ಕಡಿವೆ ||
ಕೊಟ್ಟರೆ ಮನದೊಳು ಸಂತೋಷ ಪಡುವೆ | ಕೆಟ್ಟ ಮಾರ್ಗದಿಂದ ಕಡೆ ತನಕಾ ನಡಿವೆ ೨೯
ಭವತಾರಕನೆಂಬುದಾತನ ಬಿರುದು | ಭವ ಪರಿಹರಿಸುವದಿದು ಏನು ಅರಿದು ||
ಭವದೊಳು ಬಿಟ್ಟರು ನಾಮವ ಮರೆದು | ಭವಕಿನ್ನು ಕರಸ್ಯಾರೊ ಆತನ ಬರದು ೩೦
ಮಾಡಿದೆ ಏನು ಬದುಕನು ಹೇಳು | ಮಾಡಿದುದೆಲ್ಲಾ ತಿಂದೆಲ್ಲಾ ಕೂಳು ||
ಕೂಳಿಗಾಗಿ ಆದಿ ಒಬ್ಬರ ಆಳು | ನೋಡಿ ಏನು ಸದ್ಗತಿಯ ಹೇಳು ೩೧
ಮನದೊಳು ಗಳಿಸಿದಿ ಕೆಂಚೀ ಹೊನ್ನು | ಗಳಿಸಿದವರು ಏನು ಒಯ್ದಾರು ಇನ್ನು ||
ಬಿಟ್ಟು ಹೋದರು ಹ್ಯಾಂಗ ಬಲ್ಲೆಲ್ಲಾ ನೀನು | ನಿಷ್ಠೆಯಿಂದಲಿ ಒಮ್ಮೆ ಹರಗುರು ಎನ್ನು ೩೨
ಮಾಡಲಿಲ್ಲ ಒಂದು ನರನಾಗಿ ಯೋಗಾ | ಮಾಡುವಿ ಸುಖವೆಂದು ಸ್ತ್ರೀಯರ ಭೋಗಾ |
ಆಡಲ್ಯಾಕೆ ಆಯುಷ್ಯ ಹಾರಿತು ಬೇಗಾ | ನೋಡಿಕೊಳ್ಳೊ ಇನ್ನು ತಿಳಿದೀತು ಈಗಾ ೩೩
ಮಾಡುವಿ ಬಹು ಪರಿ ಸಂಸಾರ ಯುಕ್ತಿ | ಮಾಡಲು ಒಲ್ಲ್ಯೋ ಶ್ರೀ ಗುರು ಭಕ್ತಿ ||
ಹೋಯಿತೊ ದೇಹದೋಳ್ ನಿನ್ನ ಶಕ್ತಿ | ಸಾಧಿಸಲರಿಯೊ ನೀ ಜೀವನ್ಮುಕ್ತಿ ೩೪
ಪಾಡುವಿ ಯಾತಕೆ ಅನುದಿನ ವೇದಾ | ಸಾಧಿಸಿ ತಿಳಿಯದೆ ಜೀವಶಿವ ಭೇದಾ ||
ಕಾದಾಡಿ ಕೊಂಬುವದು ಸುಮ್ಮನೆ ವಾದಾ |ಬ್ಯಾಡಿನ್ನು ಶೋಧಿಸು ನಿನ್ನೊಳು ಬೋಧಾ ೩೫
ತನು ಮನ ಧನವದಾರೆನ್ನದು ಎಂಬೆ | ಹೋಗುತ ವೈಲಿಲ್ಲಾ ನೀ ಮದುರಿಂಬೆ ||
ತನುವಿನಿಂದಲಿ ಬಹು ಕರ್ಮವನುಂಬೆ | ಮನದಿಂದ ಈ ಭವ ಬೀಜವ ಕೊಂಬೆ ೩೬
ಗುರು ಭವತಾರಕನಂಘ್ರಿಯ ಭಜಿಸು | ಅರಿವಿಲಿ ಮಾಯಾ ಮರವನು ತ್ಯಜಿಸು ||
ಧ್ಯಾನ ಮುದ್ರೆಯೋಳ್ ಮನವನು ನಿಲಿಸು | ಜಗವಿದು ನಿಜವೇ ನೋಡೆಲು ಕನಸು ೩೭
ರೂಪದೊಳಗಿಲ್ಲಾ ಗುಣವೊಂದು ತೃಣವು | ಗುಣದೊಳಗಿಲ್ಲವು ರೂಪದ ಅಣುವು ||
ರೂಪ ನಾಮಕ್ರಿಯಾ ಆದೀತು ಹೆಣವು | ಆ ಪರಬ್ರಹ್ಮನೆ ತಿಳಿಯಿನ್ನು ಪ್ರಣವು ೩೮
ಗುರು ಭವತಾರಕ ದೇವನ ಪಾದ | ಅರಿತು ಪೂಜಿಸಿದವ ಪರಶಿವನಾದ ||
ಅನುಭವಿ ಬಲ್ಲನು ಆ ಸುಖ ಸ್ವಾದ | ತನ್ನೊಳು ಆಲಿಸುತಲಿ ನಿಂತ ನಾದ ೩೯

 

೧೬೩
ಗುಡಿಯ ತುಂಬ ದೇವರ ಕಂಡೆ | ಅಡಿಯಿಡಗೊಡದೆನ್ನ ಹಿಡಿಕೊಂಡಿತಕ್ಕ ಪ
ಕೈಯಿಲ್ಲ ಕಾಲಿಲ್ಲ ಮೂಗಿಲ್ಲ ಮಾರಿಲ್ಲ | ಮೈಯೆಲ್ಲ ನೋಡಲು ಮರಿಯಾದೆ ಇಲ್ಲ |
ಸೈಯೆನಿಸಿ ಜಗಕೆಲ್ಲಕೆ ಮಿಗಿಲಾದ ದೇವರು | ವೈಯಾರ ಇಲ್ಲದೆ ಸಿಕ್ಕಿತಕ್ಕ ೧
ಹೆಣ್ಣಲ್ಲ ಗಂಡಲ್ಲ ಹಣ್ಣಲ್ಲ ಕಾಯಲ್ಲ | ಹೂವಿಲ್ಲದೆ ಪೂಜೆಗೊಂಡಿಹುದಕ್ಕ |
ಪೂಜೆಯ ಮಾಡುವ ಪೂಜಾರಿಯ ನುಂಗಿತು | ಮೂಜಗದೊಳು ಇದು ಸೋಜಿಗವೆನ್ನಿ ೨
ಅರಿತು ನೋಡಲು ಬೆರೆತು ನಿಂತಿಹುದಲ್ಲ | ಮರೆತು ಹೋಯಿತು ನಾನೆಂಬುವದೆಲ್ಲ |
ಗುರುತವ ಬಲ್ಲದು ಗುರು ಭವತಾರಕ | ಭಜಕರ ಹೊರತು ತಿಳಿಯದು ಜನಕೆ ೩

 

೧೫೩
ಗುರುಭಜಕರಿಗೆ ದುರಿತ ಬರುವದುಂಟೆ ? | ಸುರತರುವಿನಲಿ ದಾರಿದ್ರ್ಯ ಗುಣ ಉಂಟೆ ಪ ನಾಗನೇರಿದವಗೆ ಅಂಜಿಕೆಯುಂಟೆ | ಯೋಗ ಪುರುಷನಿಗೆ ಪೂರ್ವ ಕರ್ಮ ಉಂಟೆ ||
ಆಗಮದಿ ನಡೆವವಗೆ ಅನ್ಯ ಮಾರ್ಗವುಂಟೆ | ರೋಗವಿಲ್ಲದವನಿಗೆ ಪಥ್ಯ ಉಂಟೆ ೧
ವೇದಾಂತ ತಿಳಿದವಗೆ ಭೇದಬುದ್ಧಿಗಳುಂಟೆ | ಸಾಧು ಸಂಗದಲಿ ದುರ್ವಾದವುಂಟೆ | ಬೋಧ ನೆಲೆಗೊಂಡವಗೆ ಕ್ರೋಧ ಜನಿಸುವದುಂಟೆ | ನಾದ ಬಿಂದು ಕಳಾತೀತಗೆಣೆಯುಂಟೆ ೨
ತಂದೆ ಭವತಾರಕನ ಹೊಂದಿರಲು ಭಯವುಂಟೆ | ಇಂದುಧರನಲ್ಲಿ ಸಂದೇಹವುಂಟೆ | ಕುಂದು ಹೆಚ್ಚೆಂಬೋದು ಅಲ್ಲಿ ಜನಿಸುವದುಂಟೆ | ಒಂದೆ ಬ್ರಹ್ಮವ ಕಂಡ ಮಹಿಮಗೆರಡುಂಟೆ ? ೩

 

೧೫೮
ಗುರುವರ ನಿನ್ನಯ ಕರ ಶಿರ ಸೋಂಕಿದರೆ | ದುರಿತ ತೃಣಕೆ ನಾ ಮೊರೆಯಿಡಲೇಕೆ ? ಪ
ಕರುಣಾಕರನೆಂದು ವರ್ಣಿಸುತಿವೆ ಶ್ರುತಿ | ಕರುಣಿಸೆನುತ ಮತ್ತೆ ಮೊರೆಯಿಡಲೇಕೆ ಅ.ಪ
ಪಾವನ ಮಾಡೆನುತಲಿ ಪರುಷಕೆ ಲೋಹಾ | ಸೇವಿಸಲ್ಯಾಕೆ ಹರುಷದಿ ದಿನ ದಿನ | ಸ್ಪರ್ಶವು ಕಾರಣವಲ್ಲದೆ ಅದರೊಳು | ದರುಶನ ನಿರುತದಲಿರುತಿರ ಬೇಕು ೧
ಶ್ವೇತ ಮಧ್ಯದಿ ಬಿದ್ದ ಸೂಕ್ತಿಕವದು ತಾ | ಸ್ವಾತಿಯುದಕಕೆ ಜ್ಯೋತಿ ಮೌಕ್ತಿಕವದು | ಪ್ರೀತಿಯಿಂದ ಸವಿ ಮಾತಾಡಬೇಕು ೨
ಕತ್ತಲೆಯನು ಪರಿಹರಿಸೆನುತಲಿ | ಮತ್ತೆ ಭಾಸ್ಕರಗೆ ಪ್ರಾರ್ಥಿಸಬೇಕೆ ? | ಕರ್ತೃ ಸದ್ಗುರು ಭವತಾರಕ ಒಲಿದರೆ | ಮಿಥ್ಯವೀ ದೇಹದ ಸಾಧನ ಯಾಕೆ ? ೩

 

೧೩೭
ಚಿಂತಿ ಮಾಡಬೇಡ ಭ್ರಾಂತ ಮನುಜಾ | ನಿ- | ಶ್ಚಿಂತಿಯ ಪಥ ಕೇಳಿನ್ನು ಪ
ಅಂತರಂಗದಲಿ ಶಾಂತಿಯ ತಾಳಿ | ಅಂತರಾತ್ಮನು ನೀನೆನ್ನು | ಸತಿಸುತರಿಗೆ ಗತಿಯೇ ನಂಬಿದೆ | ಗತಿಯಿದ್ದದ್ದಾಗುವದೆನ್ನು | ಅತಿಶಯ ದುಷ್ಕರ್ಮಿಗಳು ನಿಂದಿಸೆ | ಕೃತ ಪೂರ್ವದ ಫಲವೆನ್ನು ||
ಸತತ ದ್ರವ್ಯವ ಬಯಸಿ ಗಳಿಸಿದೆ | ಗತಿಯಾಗುವದದು ಏನು ? | ಪತಿತ ಪಾವನ ರಘೂನಾಥನ | ನಾಮವ ಗುಪಿತದಿ ಜಪಿಸೊ ನೀನು ೧
ಅಣ್ಣ ತಮ್ಮ ತಾಯಿ ತಂದೆ ಬಳಗದ | ಕಣ್ಣು ಮುಂದಿರಬೇಡಿನ್ನು | ಬಣ್ಣ ಬಣ್ಣ ಮಾತುಗಳಾಡಲು | ಪುಣ್ಯವು ಅದರಲಿ ಏನು ? || ಹೆಣ್ಣು ನೋಡಿ ಮನದಲಿ ಹಿಗ್ಗುವಿ | ಮಣ್ಣು ಕೂಡಿತದು ಏನು ? | ಹಣ್ಣು ಹಾಲು ಮೃಷ್ಟಾನ್ನಕಿಂತ ನೀ | ಉಣ್ಣು ಬ್ರಹ್ಮಾನಂದಾಮೃತವನ್ನು ೨
ಅಂಶವುಳಿಯಬೇಕೆಂದರೆ ಈ ಜಗ- | ದಂಶವು ನನ್ನದು ಎನ್ನು | ಮಾಂಸಪಿಂಡ ಮುಖಾಂಡ ದಹನವು ಹುತಾಶನಗಾಹುತಿ ಎನ್ನು | ಕಂಸನ ತಂಗಿಯ ಮಗ ಪಾರ್ಥಗೆ ಹೇಳಿದ | ಸಂಶಯವ್ಯಾತಕೆ ಇನ್ನು | ಹಂಸ ಪರಮರ ಐಕ್ಯವ ತಿಳಿಯದೆ | ಹಂಸೋಹಂ ಎಂದರದೇನು ? ೩
ನೋಡಿದುದೆಲ್ಲಾ ಪುಸಿಯೆಂದು | ಮಾಡೋ ನಿಶ್ಚಯವಿನ್ನು | ಆಡಬೇಡ ಅನೃತ ವಚನವನು | ಆಡುತಲಿರು ಸತ್ಯವನು | ಕೂಡಬೇಡ ಕಾಮಂದಿಯ ಸಂಗ | ಕೇಡು ತಪ್ಪದದಿನ್ನು | ರೂಢಿಯೊಳಗೆ ನರನಾಗಿ ಪುಟ್ಟಿ | ಮಾಡುತ ನಡಿ ಧರ್ಮವನು ೪
ವೇದಾಂತದ ಮಹಾ ಶ್ರವಣದ ವಾಕ್ಯವ | ಸಾಧು ಮುಖದಿ ಕೇಳಿನ್ನು | ಭೇದನಾದವ ನೀಗಿ ಕಳೆದು ನಿಜ | ಬೋಧದೊಳಗೆ ನಿಲ್ಲಿನ್ನು || ನಾದ ಬಿಂದು ಕಳಾತೀತಗೆ ಹಾಡುವ ಪದವನು | ಶೋಧಿಸುವದು ಇನ್ನೇನು ? | ಆದಿ ಮೂರ್ತಿ ಭವತಾರಕ ದಯೆ ಪಡಿ | ನಾದವನಾಲಿಸು ನೀನು ೫

 

೧೩೯
ತನ್ನ ತಾ ತಿಳಿದು | ಧನ್ಯನಾಗೊ ಬಗೆ ಇದು | ಖಿನ್ನವಳಿದು ಪೂರ್ಣ ಬ್ರಹ್ಮವನ್ನು ಕಾಂಬುದು ಪ
ತತ್ತ್ವ ಶಾಸ್ತ್ರವನ್ನು ಓದಿ | ಭಕ್ತಿಯಿಂದ ಮನನ ಮಾಡಿ | ಯುಕ್ತಿ ಭಾವವೆಲ್ಲ ಕಳೆದು ಮುಕ್ತನಾಗುತಾ ||
ನಿತ್ಯವಾದ ವಸ್ತು ತಾನೆ | ಮತ್ತೆ ಬೇರೆ ಇಲ್ಲವೆಂದು | ಸತ್ಯ ಶರಣರಡಿಯ ಪಿಡಿದು ಚಿತ್ತದಲ್ಲಿ ನಲಿವುದು ೧
ಆಶೆ ಮೂರರಲ್ಲಿ ಇನ್ನು | ಬೇಸರಾಗಿ ವಿಷಯದ | ವಾಸನೆಗಳ ಜರಿದು ಪಾಶ ಕ್ಲೇಶವಳಿಯುತ ||
ನಾಸಿಕಾಗ್ರದಲ್ಲಿ ಮನವ | ಸೂಸದಂತೆ ನಿಲಿಸಿ ಜಗ- | ದೀಶನಾಟವನ್ನು ನೋಡಿ ನಾದ ಘೋಷ ಕೇಳ್ವುದು ೨
ಹಿಂದೆ ಒಂದು ನೆನೆಸದಿನ್ನು | ಮುಂದೆ ಉಳಿದ ಕರ್ಮವನ್ನು | ಬಂದುದೆಲ್ಲ ಉಂಡು ಗೆದ್ದು ಹರುಷದಿಂದಲಿ ||
ತಂದೆ ಭವತಾರಕನ | ಹೊಂದಿ ಸದಾನಂದದಿಂದ | ಮುಂದೆ ಭವಕೆ ಬೀಳದಂತೆ ಛಂದದಿಂದ ನಲಿವುದು ೩

 

೧೬೦
ತನ್ನ ತಾನು ಕಂಡರೆ ಜೀವಶಿವರೆಂಬ ಭೇದವೆಲ್ಲಿಹುದೋ ಪ
ಶ್ರವಣ ಮನನ ನಿದಿಧ್ಯಾಸವು ಬಲಿದರೆ | ಭುವನದ ಜನಪದ ಪುಸಿಯಹುದೊ ೧
ರೂಪನಾಮಕ್ರಿಯಾ ವರ್ಣಗಳು | ಕಾಯದಿ ತೋರಲು ನಿಜವಲ್ಲಾ ೨
‘ತತ್ತ್ವಮಸಿ’ ಮಹಾ ವಾಕ್ಯವು ಬಂದರೆ | ಮಿಥ್ಯೆಗಳೆಲ್ಲಾ ನೀಗುವವು ೩
ಆಗಮದಲಿ ಶಿವಯೋಗವ ಮಾಡಲು | ಈಗಲೆ ಜೀವನ್ಮುಕುತಿಯು ಸಿಗುವದೊ ೪
ಭವತಾರಕನ ಕರುಣವ ಪಡೆದರೆ | ಜನನ ಮರಣ ಭಯ ಹಿಂಗುವದೊ ೫

 

೧೪೨
ತಿಳಿದರೆ ನೀ ಶಿವ ದಿಟಾ ದಿಟಾ | ತಿಳಿಯದೆ ಕಳೆದ್ಯೋ ಘಟಾ ಘಟಾ ಪ
ವೇದ ಶಾಸ್ತ್ರಾಗಮವನು ಓದಿ | ಏನು ಕಲಿತಿಯೋ ಹಟಾ ಛಲಾ |
ಸಾಧು ಸಂತರು ಮನೆಗೆ ಬಂದರೆ | ಬಯ್ಯುವಿ ಆ ಕ್ಷಣ ಥಡಾ ಥಡಾ ೧
ದಾನ ಧರ್ಮ ಪರ ಉಪಕಾರಿಲ್ಲದೆ | ಯಾತಕ ಈ ಮನಿ ಮಠಾ ಮಠಾ |
ಸ್ವಾನುಭವ ಸುಜ್ಞಾನವಿಲ್ಲದೆ | ಮೌನವ ಧರಿಸಿದ್ಯೋ ಶಠಾ ಶಠಾ ೨
ಶ್ರೀ ಭವತಾರಕನಂಘ್ರಿಯ ಪೂಜಿಸು | ಈ ಭವ ಚಿನ್ನದ ಪುಟಾ ಪುಟಾ ||
ಹರ ಗುರುನಾಥನ ಸ್ಮರಣೆಯ ಮಾಡದೆ ಒದರುವಿ ಸುಮ್ಮನೆ ವಟಾ ವಟಾ ೩

 

೧೧೩
ತಿಳಿಸುವ ಮಾತಲ್ಲಾ | ತಿಳಿಸದೆ ತಿಳಿಯುವ ಮಾತಲ್ಲಾ | ತಿಳಿಸದೆ ತಿಳಿಯದು |
ತಿಳಿಯದು ನಿನಗದು | ತಿಳಿಸದೆ ತಿಳಿಯದು | ತಿಳಿಯದೆ ಹೊಳೆಯದು ಪ
ಎಚ್ಚರ ನೀ ಮರೆತಿ ಮದ ಮತ್ಸರದಲೀ ಬೆರತೀ | ಅಚ್ಚ ಹೇಸಿಕೀ ದೇಹ ಮುಚ್ಚಿದ ಚರ್ಮಕ್ಕೆ |
ನಿಶ್ಚಯವೆಂದರಿವೆ ಛೇಕರವೇ ೧
ಭೇದವಳಿಯಲು ಬೇಕೊ ಮನದ ವಿವಾದ ಕಳೆಯಲು ಬೇಕೊ |
ಸಾಧುಸಂತರ ಸಂಗ ಸೇವಿಸಿ ತತ್ತ್ವದ್ಹಾದಿ ಹಿಡಿಯ ಬೇಕೊ |ನೀನೆ ಹೀಗ್ಯಾಕೊ ೨
ಸಾಧಿಸುವದು ಯುಕ್ತಿ | ನಿಜಾನಂದ ಬೋಧ ಮುಕ್ತಿ |
ಆದಿಮೂರ್ತಿ ಭವತಾರಕ ದೇವ ಪಾದವಪೂಜಿಸಿ ನೀವ್ | ತಿಳಿದೆ ಭಜಿಸದಲೇ ೩

 

೧೩೫
ತೀರ್ಥವು ಬೇಡಾ ಕ್ಷೇತ್ರವು ಬೇಡಾ ಜಪ ತಪ ಯೋಗವು ಬೇಡಾ ಪ
ಸ್ನಾನ ಸಂಧ್ಯಾವಂದನೆ ಪೂಜಾ ವ್ರತನೇಮಗಳು ಬೇಡಾ |
ದಾನ ಧರ್ಮ ಪರ ಉಪಕಾರ ಶಾಸ್ತ್ರ ಪುರಾಣಗಳು ಬೇಡಾ |
ಸ್ವಾಮಿ ಸದ್ಗುರು ಭವತಾರಕನ ಭಜಕರ ಪಾದವ ನೀ ಬಿಡಬೇಡಾ ೧
ಸತ್ಯವು ಸಂಸಾರವು ಜಗವಿದು ಮಾಡೆಂಬರು ನೋಡೀಜನರು |
ಮಿಥ್ಯವು ಸರ್ವವು ಜಗದೀಶನನು ತಿಳಿಯೆಂಬುವರಾ ಸಜ್ಜನರು ||
ಜಾಗ್ರದಿ ಸ್ವಪ್ನದಿ ಬಳಲುತ ನಲಿವುತ ಚರಿಸುವರಾ ಕಾರ್ಮಿಕರು |
ತುರ್ಯಾವಸ್ಥೆಯೋಳ್ ಮರೆದು ತಮ್ಮನು ಇರುತಿಹರಾ ಸಾಧುವರು ೨
ವೇದಾಗಮಗಳ ಮಾತಿದು ತಿಳಿ ಕರ್ಮಾ ಧರ್ಮಾ ದೇವರು ಭಕ್ತಿ |
ವೇದಾಂತದ ವಾಕ್ಯದ ಸಾರ ನಿವೃತ್ತಿಯ ಅರಿವುದೆ ಜೀವನ್ಮುಕ್ತಿ ||
ಇದರ ಹಂಚಿಕೆ ಮಾಡುತ್ತಿಹುದೇ ಅದುವೆ ಶಾಸ್ತ್ರದ ಯುಕುತೀ |
ಸದಮಲ ಬೋಧಾನಂದವೆ ಬಲಿದರೆ ನಿಜವೇ ತಾ ಅವ್ಯಕ್ತಿ ೩
ವೇದಶಾಸ್ತ್ರ ಅನುದಿನ ಓದಿ ಸಾಧಿಸಿದೇನೊ ಅದರಲಿ ಏನಾ |
ವಾದವನರಸುತ ಸಕಲರ ಜಯಿಸಲು ಆದಿತೆ ಲೋಕದಿ ಮಾನಾ ||
ಸಾಧು ಸಂತರ ಸೇವಿಸದಿದ್ದರೆ ತಿಳಿಯದು ಬ್ರಹ್ಮಜ್ಞಾನಾ |
ಆದಿ ಮೂರ್ತಿ ಭವತಾರಕ ಭಜಕರ ಕೇಳೋ ನಿನ್ನ ಖೂನಾ ೪
ಸಂಸಾರವ ಸದ್ಧರ್ಮದಲಿ ಸಾಧು ಸಂತರಂತೆ ನೀ ಮಾಡೊ |
ಸಂಶಯವಳಿದು ಸರ್ವವು ಶಿವನೆಂದರಿದು ಅವರೊಳು ಕೂಡೊ |
ಸತ್ತು ಹುಟ್ಟುವ ಕಟ್ಟಳೆಗಳನು ಕಿತ್ತಿ ಈಡ್ಯಾಡೊ |
ನಿತ್ಯದಿ ಭವತಾರಕನ ಭಜಕರ ಸಂಗದಲಿ ಲೋಲ್ಯಾಡೊ ೫
ಗುರು ವರನಲಿ ಸತ್ಪುರುಷರ ಬಳಿಯಲಿ ಅರಸಬಾರದು ಇಷ್ಟಾ |
ಕುಲ ವಯ ಕ್ರಿಯಾ ಕರ್ಮವ ತಾಪತ್ರಯಗಳನೆಣಿಸುವ ಭ್ರಷ್ಟಾ |
ಅನುಭವ ಜ್ಞಾನದಿ ಬೋಧದಿ ಲಕ್ಷ್ಯವೀಕ್ಷಿಸುವವನೆ ಶ್ರೇಷ್ಠಾ |
ಇನಿತನು ಬಿಟ್ಟು ನಿಂದಿಸುವವನೆ ಭವದಲಿ ಬಡುವನು ಕಷ್ಟಾ ೬
ಆರು ಶಾಸ್ತ್ರವ ಮಾಡಿದ ಕರುಣದಿ ಆ ನಿಜಗುಣ ಶಿವಯೋಗಿ |
ಆರು ಓದಿ ತಿಳಿದವರೊಳು ನಿಂದರು ಜನ್ಮವ ನೀಗಿ |
ಬಾರದು ಭವದೊಳು ಎಂದಿಗೆ ತಿರುಗೀ ಹೋದರು ಶಿವನೊಳಗಾಗಿ |
ಆದಿ ಮೂರ್ತಿ ಭವತಾರಕ ಭಜಕರ ಸೂರ್ಯನ ಬಲ್ಲದೆ ಗೂಗಿ ೭
ಅವರಿಗೆ ತೊಗರಿಗೆ ದಳ ಮೂರಾದರೆ ಶಿವಪೂಜೆಗೆ ತರಬಹುದೇ ? |
ಜೌಡಲಕಾಯೀ ರುದ್ರಾಕ್ಷಿಯೊಳಿರೆ ಜಪ ಮಾಲಿಗೆ ತರಬಹುದೇ ? |
ತಿಳಿಯದ ಪಾಮರ ಅರ್ಚನೆ ಮಾಡಲು ಭವ ದೋಷವು ಅಳಿವಹುದೇ? |
ಗುರು ಭವತಾರಕ ಭಜಕರ ಬೋಧವು ಧರೆಯೊಳು ನರರಿಗೆ ಇಹುದೇ ? ೮
ಮಾತು ಸತ್ಯವಾದರೆ ಆತಗೆ ಶಿವನೆನು- ತಿಹರೀ ಜಗ ಜನರೂ |
ಭೂತಭವಿಷ್ಯತ್ ಹೇಳಲು ಭಕ್ತಿಯೊಳಾತಗೆ ನಡಕೊಂಬುವರೂ |
ಭೂತಳದೊಳು ಭವತಾರಕ ಭಕ್ತರ ನೀತಿ ಮರೆತ ಪಾಮರರೂ |
ನೂತನ ಖ್ಯಾತಿಯ ಕೊಂಡಾಡುತ ಬಹು ಪಾತಕಕೆಳಿ ಎಂಬುವರೂ ೯
ಸಿದ್ಧಿಯನೊಂದು ತೋರಲು ಪಾದದಿ ಬಿದ್ದು ಕರ ಮುಗಿಯುವರೂ |
ಬುದ್ಧೀ ಬುದ್ಧೀ ಎನುತಲಿ ಬೇಡದೆ ಇದ್ದಲ್ಲೊಯ್ದು ಕೊಡುವರು |
ಬದ್ಧರಲ್ಲದೆ ಈ ಭವ ಮಾಲೆಯ ಗೆದ್ದರೆ ನೋಡೀ ಜನರೂ |
ಶುದ್ಧ ಮೂರ್ತಿ ಭವತಾರಕ ಭಜಕರು ಇದ್ದ ಸ್ಥಿತಿಯನರಿಯರು ೧೦
ಆಡುವರಾಟವ ಬಾಲರ ಮನೆಯಲಿ ಮಾಡುತ ಬ್ರಹ್ಮಾಂಡವನೂ |
ನೋಡರು ಹಿರಿಯರು ಸಟೆಯೆಂದೇ ದಿಟ ಮಾಡುವರಿಹದಾಟವನೂ |
ಪಾಡಲ್ಲೆನುತಲಿ ತಿಳಿದವರೊಳು ಬೇಡುವರಾ ನಾಕವನೂ |
ರೂಢಿಯೊಳಗೆ ಭವತಾರಕ ಭಜಕರು ನೋಡರು ಪುಸಿಯೆಂದದನೂ ೧೧
ಹತ್ತಿಗೆ ಇಲ್ಲವು ಬತ್ತಿಗೆ ಇಲ್ಲವು ಮತ್ತರಬಿಗೆ ಮುಡಚಟ್ಟೂ |
ಸತ್ಯ ಸರ್ವವು ಬ್ರಹ್ಮವು ಎಂದೇ ಚಿತ್ತದಿ ತಿಳಿವುದ ಬಿಟ್ಟೂ |
ಮಿಥ್ಯಾಜ್ಞಾನಕೆ ಬಿದ್ದು ಹೊರಳಿ ಹೋಗುವಿರೇನೊ ಕೆಟ್ಟೂ |
ನಿತ್ಯ ಪೂರ್ಣ ಭವತಾರಕನಂಘ್ರಿಯ ಹೊಂದದೆ ತಿಳಿಯದು ಗುಟ್ಟೂ ೧೨
ಸಂಚಿತ ಪ್ರಾರಬ್ಧ ಕ್ರಿಯಮಾಣಾ ಜನರಿಗೆ ಬರೆದನು ಬ್ರಹ್ಮಾ |
ಮುಂಚೆ ಶಿರವನು ನೀಗಿದಾ ಬರದವರಾರೊ ಆತಗೆ ತಮ್ಮಾ |
ಮಿಂಚಿನಂತೆ ಜೀವನಕೆ ತಗಲುವಾ ಮಾಡುವ ಕರ್ಮಾ ಧರ್ಮಾ |
ಹಂಚಿಕೆ ತಿಳಿಯದೆ ನುಡಿವರು ಮರುಳರು ವಂಚನೆ ಬಿಡು ಇದು ವರ್ಮಾ ೧೩
ದೇವ ನೈವೇದ್ಯವು ಖೊಬ್ಬರಿ ಸಕ್ಕರಿ ಪನಿವಾರವು ನೋಡಿ | ಆವ ಕುಲದವನಾದರೂ ಏನು |
ಇಲ್ಲದ ಹಂಚಿಕೆ ಮಾಡೀ ಭಾವಿಸಿ ಮೃಷ್ಟಾನ್ನವನಿಟ್ಟರೂ ಕುಲಧರ್ಮದಲ್ಲಿ ನೋಡೀ |
ಕೇವಲ ಭವತಾರಕನ ಭಜಕರ ಮುಂದೆ ರಹಸ್ಯವ ಮಾಡೀ ೧೪

 

೧೨೬
ತೋರಿದ ಶ್ರೀ ಗುರು ಪರಬ್ರಹ್ಮವ | ನೋಡಿದೆ ನಾನು ಎನ್ನೊಳಗೆ |
ಆಡಲ್ಯಾಕೆ ಅಗಣಿತ ಶಾಸ್ತ್ರವ | ಓದಿ ಕಾಣಲಿಲ್ಲ ಪ
ಆಸನ ಬಲಿದು ಶ್ವಾಸವ ನಿಲಿಸಿ | ನಾಸಿಕಾಗ್ರದಲ್ಲಿ |
ಸೂಸಿದ ಮನ ಹಿಡಿ ಭ್ರೂ ಮಧ್ಯದಲಿ | ನೋಡು ಪ್ರಕಾಶಿಪುದು ಅಲ್ಲಿ ೧
ರೂಪವು ಒಂದೇ ವ್ಯಾಪಕವಾಯಿತು | ಈ ಜಗ ಜನದೊಳಗೆ |
ಆ ಪರ ವಸ್ತುವು ದೀಪಿಸುತಿಹುದದಕೆ | ಪಾಪ ಪುಣ್ಯವೆಲ್ಲೀ ? ೨
ವೇದಗಳನುದಿನ ವರ್ಣಿಸುತಿರುವವು | ಆಗಮೋಕ್ತದಲ್ಲಿ |
ಸಾಧು ಮೂರ್ತಿ ಭವತಾರಕ ದೇವನು | ಭೋಧಿಸಿದನು ಇಲ್ಲೀ ೩

 

೧೬೪
ದೃಷ್ಟಿಯೊಳಗೆ ದೃಷ್ಟಿ ನಿಂತಿತು | ನೋಡಲಿನ್ನು ದೃಶ್ಯ ನಷ್ಟವಾಯಿತು |
ಕಷ್ಟವೆಲ್ಲ ಕಡೆಗೆ ಸಾರಿ | ಅದೃಷ್ಟವನ್ನು ಮೀರಿ ನಿಂದು ನಿಷ್ಠೆಯಲ್ಲಿ ತುಷ್ಟಿಯಾಯ್ತು ನೀ ನೋಡು ಸಖಿಯೆ ಪ
ಐದು ಮಂದಿ ಅಗಲಿ ಹೋದರೆ | ಐದಕೈದು ಕೂಡಿ ಬಂದು ಕೂಡದಾದರೆ | ಐದರೊಳಗೆ ನೋಡಲಿನ್ನು ||
ಐದು ಐದು ತಾನೆ ಅಲ್ಲ | ಐದನೇದರಲ್ಲಿ ನಿಂತೆನೇ | ನೀ ಕೇಳಿದೇನೆ ? ೧
ಕರ್ಮವೆಲ್ಲ ಕಾಣದಾಯ್ತು | ಧರ್ಮವೊಂದು ಸರ್ವಕಾಲ ತೂಗಿ ನಿಂತಿತು |ಶರ್ವನಲ್ಲದಿನ್ನು ಮತ್ತೆ |
ಉರ್ವಿಯಲಿ ಪೇಳದಾಗಿ ಪರ್ವತಾಗ್ರ ಭೂಮಿ ಒಂದು ನಿರ್ವಿಕಾರ ತೋರಿತಲ್ಲಾ ೨
ಹಿಂದೆ ಎಂದು ಕಂಡಿದಿಲ್ಲ | ಈ ಸೋಜಿಗವನ | ಮುಂದೆ ದಾರಿಗುಸುರಲೀಗತೀ |
ತಂದೆ ಭವತಾರಕನ | ಹೊಂದಿದವರ ಕೇಳಿದೇನೆ | ಎಂದು ಎಂದು ಹೀಗೆಂಬರೆ | ನೀ ಬಲ್ಲಿಯೇನೇ ೩

 

೧೫೯
ದೇವನಲ್ಲವೇನೋ ಸದ್ಗುರು ಮಹಾದೇವನಲ್ಲವೇನೋ | ಆದಿಯೋಳ್ ಸಿದ್ಧರು ಹೋದ ದಾರಿಯ |
ತೋರಿ ಭೇದವ ಬಿಡಿಸಿದ ಮೂರುತಿ ಪ
ನರಜನ್ಮದೊಳಗೆ ಬಂದು ನೀನು | ಪ್ರಪಂಚದ ಕಡಲು ಮಧ್ಯದಿ ನಿಂದು |
ಅರಿತು ಮರೆತು ಒಮ್ಮೆ ಗುರುವೆಂದು ನೆನೆದರೆ | ಗುರುತಿಟ್ಟು ಅವರಿಗೆ ಪರತರ ತೋರುವ ೧
ಆಶಾಪಾಶವ ಬಿಡಿಸಿ ಮಾಡಿದ | ದೋಷ ಭವಂಗಳ ಕರ್ಮವ ಕೆಡಿಸಿ |
ನ್ಯಾಸ ಧ್ಯಾಸದಿ ಜಪ ಮಾಡೆ ಗುರು |ಬೋಧ ಪ್ರಕಾಶವ ತೋರಿದ ಈಶನು ೨
ಭಕ್ತಿ ಜ್ಞಾನವ ಹಿಡಿದು ನಂಬಿದಗೆ | ಮುಕ್ತಿಯ ನಿಶ್ಚಯದಿ ಪಾಲಿಸುವ |
ಕರ್ತೃ ಸದ್ಗುರು ಭವತಾರಕ ಧರೆಯಲಿ | ಪ್ರತ್ಯಕ್ಷವಾದಂಥ ಪರಬ್ರಹ್ಮರೂಪನು ೩

 

೧೫೧
ಧನವಗಳಿಸಬೇಕೆಂಥಾದು | ಈ | ಜನರಿಗೆ ಕಾಣಿಸದಂಥಾದು ಪ
ಹರಿಹರ ಬ್ರಹ್ಮಾದಿಗಳೆಲ್ಲ | ಹೌದಹುದಹುದೆಂಬಂಥಾದು ಅ.ಪ
ಕೊಟ್ಟರೆ ಹತ್ತಿರದಂಥಾದು | ತನ್ನ ಬಿಟ್ಟು ಹೊರ ಹೋಗದಂಥಾದು ||
ಬಿಚ್ಚಿದ ಗಂಟನು ಬಯಲೊಳಗಿಟ್ಟರೆ | ಮುಟ್ಟಬಾರದಾರಿಂಥಾದು ೧
ಕರ್ಮವು ಬಾರದಂಥಾದು | ಜನರೋರ್ವರು ತೋರಿಸದಂಥಾದು |
ನಿರ್ಮಲವಾದ ಮನಸಿಗೆ ದಾನ | ಧರ್ಮವ ಮಾಡಿಸುವಂಥಾದು ೨
ಮರವನು ತಾರದಂಥಾದು | ನಿಜದರಿವಿನೊಳಗೆ ಇರುವಂಥಾದು |
ಗುರು ಭವತಾರಕ ಭಜಕರ ಕಣ್ಣಿಗೆ | ತೊರಹಿಲ್ಲದೆ ತುಂಬಿದಂಥಾದು ೩

 

೧೫೪
ನಾದವನಾಲಿಪ ಯೋಗಿಯ ನೋಡಿ | ಕಕುಲ ಮಾಡಬ್ಯಾಡಿ ಪ ಪಂಚಭೂತದ ಸಂಚಿತ ಬಿಟ್ಟು |
ಪಂಚಾದಶಿಯಲಿ ಮನವಿಟ್ಟು ೧ ಪರಮ ವೈರಾಗ್ಯದ ಭೋಗಿ | ಪರಶಿವ ರೂಪನೆ ತಾನಾಗಿ ೨ ಇಹಪರವೆರಡೆಂಬುದ ಕಡಿದು | ಹಂಸೋಹಂ ಎಂಬನ ಪಿಡಿದು ೩
ಭವ ಭಯ ಸಂಶಯಗಳನೆ ಜರಿದು |ಭವತಾರಕನಂಘ್ರಿಯ ಬೆರೆದು ೪
ತಾರಕ ಮಂತ್ರವ ಜಪಿಸುತಲಿರಲು | ಅರಿತು ಜ್ಞಾನಿಯಾಗುವನೆನಲು ೫

 

೧೨೯
ನಿತ್ಯ ಸುಖವಿದೂ ನೋಡು ನಿತ್ಯ ಸುಖವಿದೂ | ಚಿತ್ತದಲ್ಲಿ ಮಾಯ ಮೋಹ ಕತ್ತಲೆಯ ಕಾಣದಿಹುದು ಪ
ತನುವು ತಾನಲ್ಲವೆಂದು | ಮನದಿ ಉನ್ಮನಸಿನಿಂದ |
ಬಿನುಗು ವಿಷಯಗಳನೆ ಕೊಂದು | ಚಿನುಮಯಾತ್ಮನಾದೆ ಎನಲು ೧
ಆಶೆಮೂಲವನ್ನು ಅಳಿದು | ಕೋಶ ಪಂಚಕಗಳ ಕಳೆದು |
ಪಾಶವೆಂದು ತುಳಿದು ಲಕ್ಷ ಈಶನಲ್ಲಿ ಬೆರೆದ ಮೇಲೆ ೨
ತಂದೆ ಭವತಾರಕನ | ಹೊಂದಿ ಪೂರ್ಣ ಬ್ರಹ್ಮನಾಗಿ |
ಮುಂದೆ ಮೂರು ದೇಹ ಬಿಟ್ಟು | ಒಂದು ಗೂಡಿ ಬ್ರಹ್ಮನಲ್ಲಿ ೩

 

೧೨೦
ನೀ ಬಲು ಒಳಗೆ ಒಳಗೆ | ಇಲ್ಲವು ಜಗದೊಳು ನಿನ್ನಂಥಾಕಿ ಎಂಥಾಕಿ ಎಂಥಾಕಿ ಪ
ಕಣ್ಣಿನೊಳಗೆ ನೀ ಬರುವೆ |ಕಣ್ಣ ತೆರೆದರೆ ಕಾಣಿಸದಿರುವೆ ೧
ನಿನ್ನಯ ರೂಪವು ಮುಚ್ಚಿ |ಎಲ್ಲಾ ರೂಪಕೆ ತಗಲಿತು ಮಚ್ಚಿ ೨
ಭವತಾರಕ ಭಜಕರಿಗೊಲಿವೆ |ಭಾವಿಕ ಜನರಾನಂದದಿ ನಿಲುವೆ ೩

 

೧೨೩
ನೀ ಬ್ರಹ್ಮ ನೀ ಬ್ರಹ್ಮ ನಿನಗ್ಯಾತಕೀ ಕರ್ಮ ಪ
ತನುವಿದು ನೋಡಲು ಮೊದಲೆಲ್ಲಿತ್ತು |ತನುವಿಗೆ ತಗಲದೆ ಬಂದಿಯಾ ಹೊತ್ತು ೧
ಮಾಡುವಿ ಪಠಣವ ಅನುದಿನ ವೇದಾ |ಅದರೊಳು ಹೇಳಿತ್ತೇ ? ಜೀವ ಶಿವ ಭೇದಾ ೨
ಗುರು ಭವತಾರಕ ಭಕ್ತನಾದರೆ |ಆಗುವಿ ನೀ ಜೀವನ್ಮುಕ್ತಾ ೩

 

೧೨೨
ನೋಡಿದ್ಯಾ ಈ ದೇಹಕೆ ಬಂದು | ನೋಡಿದ್ಯಾ ನೋಡಿದ್ಯಾ |
ನೋಡದವನ ನೀ ನೋಡುವೆ ಎಂದರೆ | ನೋಡುವಿ ಎಂದಿಗೆ ನೋಡಿದ್ಯಾ ಪ
ಒಬ್ಬವರ್ಯಾರೂ ತೋರುವದಲ್ಲ | ತೋರಿಸಿಕೊಂಡರದು ತಾನಲ್ಲ |
ತೋರಡಗುವದಕೆ ಮೀರಿರುವದು ಎಂದು | ಸಾರುತಿಹುದು ಶ್ರುತಿಸಾರವೆಂದು ೧
ರೂಪವನ್ನು ಕಲ್ಪಿಸಲಿಲ್ಲಾ | ಚಿದ್ರೂಪವನು ಸರ್ವರೊಳೆಲ್ಲಾ |
ಪಾಪ ಪುಣ್ಯಕೆ ವ್ಯಾಪಕನಾದ | ದೀಪ ಪ್ರಕಾಶನ ಬೋಧಿಪ ಬಲ್ಲಾ ೨
ಕರೆದರೆ ಎತ್ತೆತ್ತ ಬಾರ ಮತ್ತೆ | ಮರೆದರೆ ಎತ್ತೆತ್ತ ಹೋಗನು ದೂರ |
ಗುರು ಭವತಾರಕ ಶಿರದೊಳು ಕರವಿಟ್ಟು | ವರದ್ಹೇಳಿದ ವಸ್ತು ಪರಿಪೂರ್ಣವಾಗೆ ೩

 

೧೨೧
ನೋಡು ನಿನ್ನೊಳು ನೀ ನೋಡು | ಸಾಕು ಸಾಕು ಈ ಲೋಕದ ನಡವಳಿ | ಯಾಕಬೇಕು ಪಿನಾಕಿಯ ಭಜಿಸೋ ಪ
ನೋಡೊ ಸದ್ಗುರುವಿನ ಸೇವೆಯ ಮಾಡೋ | ನೀಡೋ ತನುಮನಧನವನು ನೀ | ಕೂಡೋ ಸಂತರ ಸಂಗದಿ ಬೇಗ | ಆಡಲ್ಯಾಕೆ ಅಗಣಿತ ಸಂಪದ ಕೈಗೂಡುವದೋ ಅದ | ಬೇಡದೆ ಬೇಗನೆ ೧
ಆಶೆ ಹಿಡಿದು ಆದಿ ಘಾಸಿ ಮನದೊಳು | ಮೀಸಿಯ ತಿರುವಿದಿ ಪಂಥವ ಹೆಚ್ಚಿಸಿ | ಸಾಸಿರ ನಾಮದಿ ಒಂದನು ನೆನೆಯದೆ | ಕ್ಲೇಶ ಬಡುವಿ ಜಗದೀಶನು ಒಲಿವನೆ ? ೨
ಹಿಂದೆ ಜನ್ಮ ನೊಂದೆ ಸದ್ಗತಿ ಪಡೆಯದೆ | ಮುಂದೆ ಸಾಧಿಸು ಶಿವ ತತ್ತ್ವವ ಒಂದೇ | ತಂದೆ ಸದ್ಗುರು ಭವತಾರಕನಂಘ್ರಿಯ |ಹೊಂದಿ ನಿಜಾನಂದ ಬೋಧದಲಿರು ನೀ ೩

 

೧೦೩
ಪಂಚಾಕರಣಿಯ ಹಂಚಿಕೆಗಳನು ನಿ- | ರ್ವಂಚನೆಯಲಿನೀ ಮಾಡೋ ||
ಸಂಚಿತ ಪ್ರಾರಬ್ಧ ಕ್ರಿಯಮಾಣಾ | ಪ್ರಪಂಚದಿ ಈಡ್ಯಾಡೋ ಪ
ಸ್ಥೂಲಕೆ ಭೋಗಕೆ ಸಾಕ್ಷಿಯು ಸೂಕ್ಷ್ಮವು | ಕಾರಣದಲಿ ಸಾಕ್ಷೀ ||
ಭೋಗಾಪೇಕ್ಷೆಯು ಸೂಕ್ಷ್ಮವು ನೀನಿತುದುಹ ಕಾರಣ ಲಕ್ಷೀ ೧
ಸ್ಪರ್ಶದಿ ಶಬ್ದವು ಶಬ್ದಾಸ್ಪರ್ಶವಿದು | ರೂಪವು ತೋರಿತು ರೂಪವು ರಸದಲಿ || ಗಂಧದಿ ಕಾಣಿಸಿತೊ ೨
ಕರ್ಮದಿ ರೂಪವು ರೂಪದಿ ಕರ್ಮವು | ಕರ್ಮರೂಪಕ್ಕೇ || ವ್ಯಾಪಕ ಭವತಾರಕನೆಂದರಿಯದೆ ಕಲಾಪವ್ಯಾಕೀ ಮನಕೆ ೩

 

೧೩೧
ಪಾಲು ಪಾಲು ಇದು ಯಾತರ ಪಾಲು | ಪಾಲು ಹಂಚ್ಯಾನೊ ಶಿವ ಮೊದಲೇ ಪ
ದೇಹ ನೋಡೆಲೂ ಮೃತ್ತಿಕೆ ಪಾಲು |ಜೀವ ನೋಡೆಲೊ ವಾಯುವಿನ ಪಾಲು ೧
ಪುಣ್ಯ ನೋಡೆಲೊ ಸುಖದ ಪಾಲು | ಪಾಪ ನೋಡೆಲೊ ದುಃಖದ ಪಾಲು ೨
ಭಕ್ತಿ ನೋಡೆಲೊ ಮುಕ್ತಿಯ ಪಾಲು |ಭಕ್ತ ಭವತಾರಕನ ಪಾಲು ೩

 

೧೨೭
ಬಂದಿಯಾತಕೋ ಈ ಭವದೊಳು | ನೊಂದಿಯಾತಕೋ ನೀನೊಂದನರಿಯೆ ||
ಬಂದಿಯಾತನು ನೀ ಮತಿಮಂದನಾಗದೆ | ಗತಿ ಮುಂದೇನೆಂದು ತಿಳಿಯದಲೆ ಪ
ನಾ ನಾ ಎನುತಲಿ ನಾನಾ ಯೋನಿಯೊಳು | ಜನಿಸಿ ಬಂದು ನೀ ಹೀನನೆನಿಸಿಕೊಂಡು ||
ಅಜ್ಞಾನದೊಳಗೆ ಬೆರೆತು ನೀ – | ನಾರೆಂಬದನರಿಯಲಿಲ್ಲವು ಗುರುತು |
ಜ್ಞಾನಿ ಪುರುಷರ ಕೇಳುವದನೆ ಮರೆತು | ಇನ್ನು ಸದ್ಗತಿಗೆ ಆದಿಯೊ ಹೊರತು | ನೀ ಇದನರಿತು ೧
ಆರರೊಳಗೆ ಬಿದ್ದು ಆರನು ನೋಡದೆ | ಆರು ಚಕ್ರದ ಮೇಲೆ ಏರಿ ಮ್ಯಾಲಕಿನ್ನು | ತೋರುತಿಹುದು ನೋಡು ರೂಪವಲ್ಲೀ | ಧಾರುಣಿಯೊಳಗೆಲ್ಲ ಅದರ ವ್ಯಾಪವು | ತೋರಿದಾಕ್ಷಣ ಅಳಿದ್ಹೋಯ್ತು ಪಾಪ | ಇದನು ಬಿಟ್ಟು ಮೂರ ನೆನಿಸಿ ಕೆಟ್ಟೀ | ಬಯಸಿ ನೊಂದೀ ೨
ನರ ತನು ದೊರೆಕೋದು ಬರಿದೇನೊ | ಎರಡಿನ್ನು ಸರಿಯಾಗೊ ತನಕ | ಬರುವದೇನೊ ಸುಮ್ಮನೆ ಮರುಳಾಗ ಬ್ಯಾಡ || ಸರಿಸು ಅಸ್ಥಿರವೆಂದು ನೀ ಬೇಗದಲಿ | ಸಂಚಿತವೆಲ್ಲ ಕೂಡಿ ಬಂದಿತಿನ್ನೇನು | ಗುರು ಭವತಾರಕನ ಭಜಿಸು ನಿನ್ನ | ಮನಸಿನಿಂದಲಿ ೩

 

೧೪೦
ಬಂದು ನೊಂದೆನು ನಾನು | ಮುಂದೆ ರಕ್ಷಿಸು ನೀನು | ಎಂದೆಂದೂ ತಾರದಂತೆ | ತಂದೆ ಸದ್ಗುರು ನಿನ್ನ ಹೊಂದಿದೆನು | ಪರಮಾನಂದವನು ಪಾಲಿಸೀಗ ಬೇಗ ಪ
ಎನ್ನವಗುಣದೋಷಗಳ | ಅರಸುವದ್ಯಾಕೆ | ನಿನ್ನ ಪಾದವ ನಂಬಿದೆ || ಚಿನ್ನಕ್ಹತ್ತಿದ ಟೆಂಕ ಭಿನ್ನವಾಗುವದುಂಟೆ | ಇನ್ನು ಬ್ಯಾರೆನ್ನಬಹುದೆ ಇಹುದೆ೧
ಉರಿಯ ಮುಟ್ಟಿ ಕಾಷ್ಠವನು | ಮರಳಿ ತರಬಹುದೇ | ಪರಮ ತತ್ತ್ವವ ತಿಳಿಯದೆ || ಹರಿವ ಶರಧಿಗೆ ಜಲವು ಹಲವು ಕೂಡಿದರದರ | ವಿವರದಲಿ ನೋಡಲರಿದೇ ಜರಿದೆ ೨
ಚಿತ್ತ ಕಮಲವ ನಿನ್ನ ಪಾದಕರ್ಪಿಸಿದೆನೋ | ಸತ್ಯದಲಿ ಮತ್ತೆ ಪಾತಕವು ಯಾರಿಗೆ | ಕರ್ತೃ ಭವತಾರಕನು ಕೊಟ್ಟ ಕುದುರೆಯ ಮೇಲೆ | ಎಷ್ಟೊಂದು ಹೇರಲಿಂದು ತಂದು ೩

 

೧೫೭
ಬಂದುದ ಕೊಂದರೆ ಹೋಗಲಿ ಮತ್ತೇ | ಹೋದುದೆಲ್ಲಾ ಹೋಗಲಿ ಶಿವನೆ ಪ
ಮನದ ಆಶೆಗಳು ಕಡಿಯಲಿ ಶಿವನೆ | ಉನ್ಮನಾನಂದಕೆ ನಡೆಯಲಿ ಶಿವನೆ ||
ಘನವಾದ ಘನವನು ಹಿಡಿಯಲಿ ಮುಂದೆ ಜನನದ ಬಾಧೆಯು ನೀಗಲಿ ಶಿವನೆ ೧
ಬಂದು ಹೋಗುದೆಲ್ಲ ನೀಗಲಿ ಶಿವನೆ |ಎಂದೆಂದು ನಿಜವೆಂಬುದಾಗಲಿ ಶಿವನೆ ||
ಮಂದ ಮತಿತ್ವ ಹೋಗಲಿ ಜಗವು | ಇಂದುಧರನ ಸಮತೂಗಲಿ ಶಿವನೆ ೨
ಪರಿ ಪರಿ ಕಲ್ಪನೆ ಜರೆಯಲಿ ನಾ | ಪರಮಾತ್ಮನೊಳಗಿನ್ನು ಬೆರೆಯಲಿ ಶಿವನೆ ||
ಗುರುಭವತಾರಕ ದೊರೆಯಲಿ ನಾ | ಪರಪುರುಷನೆಂದು ಅರಿಯಲಿ ಶಿವನೆ ೩

 

೧೪೧
ಬಾರೋ ಬೇಗನೆ ರಾಮಾ ನೀ ಬಾ ಪ
ಏಕೆ ಪಂತರ ಮನೆಯೊಳು ನೀರ ತಂದೆ | ಲೋಕದೊಳಗೆ ನಿನ್ನ ಮಹಿಮೆಗೆ ಕುಂದೇ೧
ಅಂದು ಕಬೀರನ ಸತಿಗಾಗಿ ಹಿಂದೆ | ಛಂದಾಗಿ ಕೊತವಾಲನಾಗಿ ಬಂದೆ ೨
ಗುರು ಭವತಾರಕ ಎನ್ನ ತಂದೆ | ಆರು ಮುನಿದರೂ ಏನಿಲ್ಲ ಮುಂದೆ ೩

 

೯೬
ಬ್ರಹ್ಮ ಬೇರೆ ಪರಬ್ರಹ್ಮ ಬೇರೆ | ಕ್ರಿಯಾ ಕರ್ಮ ಬೇರೆ | ಬ್ರಹ್ಮದೊಳಗೆ ಕ್ರಿಯಾಕರ್ಮವಿಲ್ಲ |ಕರ್ಮ ಬ್ರಹ್ಮವಲ್ಲ ಪ
ಶಿವನೊಳು ನೋಡಲು ಜಗವೇ ಇಲ್ಲ | ಜಗ ಶಿವನಲ್ಲ. ಶಿವನೂ ಜಗವೂಎಂಬೊ ಮಾತು ಸಲ್ಲ | ಅರಿದಾತನೆ ಬಲ್ಲ ೧
ಬೀಜದಿ ನೋಡಲು ವೃಕ್ಷವೆ ಇಲ್ಲ | ವೃಕ್ಷಬೀಜವಲ್ಲ | ವೃಕ್ಷ ಬೀಜದಿ ಫಲಸ್ವಾದವಿಲ್ಲ |ತಿಂದಾತನು ಬಲ್ಲ ೨
ಪಾಮರ ನರರೆಲ್ಲ ಭವತಾರಕನ ಭಕ್ತರಲ್ಲ | ಭವತಾರಕನ ಭಕ್ತನು ನರನಲ್ಲ | ಗುರುನಾಥನೆ ಬಲ್ಲ ೩

 

೧೪೮
ಮತವಿದು ಮುಚ್ಚಿ ಮುಚ್ಚಿಲ್ಲಾ | ಹುಚ್ಚರಾದರು ಈ ಜನರೆಲ್ಲಾ ಪ
ಶಿವ ಹೇಳಿದನೋ ಶಾಂಭವಿಗೆ | ಜವನ ಭಯವಿಲ್ಲಾ ಅನುಭವಿಗೆ ೧
ನಡೆದರೆಲ್ಲಾ ಸಂತರು ಹಿಂದೆ | ಪಡೆದರು ಸದ್ಗತಿ ಇದರಲಿ ಒಂದೆ ೨
ಭವಪಾತಕಿಗೆ ಅರಿವೇ ಇಲ್ಲಾ | ಭವತಾರಕ ತಾ ಮರೆ ಮಾಡಿಲ್ಲಾ ೩

 

೯೯
ಮಾಡಿದ್ಯಾ ಇಂದಿಗೆ ಹೀಂಗ | ಆಗದ್ಹಾಂಗ || ಕೂಡಿ ದುರ್ಜನರೆಲ್ಲ ನಗುವ ಪರಿಯಲಿ ಪ
ಏನು ಕಂಡು ಒಲಿದೀ ನೀ ಅವಗೆ | ಖಳನ ಘಾತಕಮನದವಗೆ |
ತಾನು ದಾರೆಂದು ವಿಚಾರಿಸದಧಮಗೆ |ಸಾನುಕೂಲಾಗಿ ಸರ್ವ ಬಗೆಯಲಿ ೧
ಸಾಧು ಸಂತರು ಎಂಬುದನರಿಯಾ | ಭೇದವಾದ ಕುಬುದ್ಧಿಯಮರೆಯಾ ||
ಕಾದಾಡಿ ಕರ್ಮದ ಹಾದೀ ಹಿಡಿಯದ | ವಾದಕಂಜದ ಜನ ಸಾಧಕನಿಗೆ ೨
ಹಿಂದಿನ ಗುಣಗಳ ಬಿಟ್ಟ್ಯಾಕೋ | ಮಂದಿಗೆ ಪದವಿಯ ಕೊಟ್ಟ್ಯಾಕೋ ತಂದೆ ಸದ್ಗುರು |
ಭವತಾರಕನಂಘ್ರಿಯ | ಹೊಂದಿದವರಿಗಭಿಮಾನವಿಲ್ಲದಂತೆ ೩

 

೧೩೩
ಮಾಡುವುದೆಲ್ಲ ವಿವಾದಕೆ ಕಾರಣ | ಸಾಧಿಸುವದೆ ಬ್ರಹ್ಮಾ ಪ
ಸಾಧು ಜನರ ಸುಸಮಾಧಿಯ ಬೋಧವು ಬಾಜಾರವೇನೋ ತಮ್ಮಾ ಅ.ಪ
ಮನದೊಳು ತನದೊಳು ನಯನಗಳಿರುತಿರೆ | ಮನ ಬಯಸಿದದೊಂದು |
ಘನ ಜ್ಯೋತಿಯ ತಾ ತಾರದೆ ತೋರದು | ಸನ್ಮುಖದಲಿ ನಿಂದೂ ೧
ಅರಿವುದು ಕರಣದಿ ಬೆರೆವುತ ನಿನ್ನ | ಅರಿಯದಲಿರುತಿಹುದೂ |
ಪರಮ ಪುರುಷರಾಚರಿಸುವ ಪರಿಯಲಿ | ಗುರುಪದ ಸಾರುವದೋ೨
ತಪ್ಪದೆ ನೆಲಕೆ ಭಗುರಿಯನೆ ಎಸೆವರೆ | ಜಪ್ಪಿಸುವರೆ ಹೇಳಾ |
ದಪ್ಪನೆ ಗುರು ಭವತಾರಕ ತ್ರಯ ಜಗದಪ್ಪನ ನೀ ಕೇಳಾ ೩

 

೧೧೯
ಮೊಚ್ಚೆ ಮೊಚ್ಚೆಲಿ ಹೊಡೆಯಿರಿ ಇವನ | ನೆಚ್ಚಿದೆತನುವಿದನೆಂಬುವನ ||
ಹುಚ್ಚ ನಾಯಿಯೋಲ್‍ಎಚ್ಚರವಿಲ್ಲದೆ | ಅರ್ಚಕ ಜನರನು ಬೊಗಳುವನ ಪ
ದಾನಧರ್ಮ ಪರ ಉಪಕಾರಿಲ್ಲದ | ಮಾನುಷನಾಗಿಬಾಳುವನ ||
ತಾ ಅಜ್ಞಾನ ಮಾರ್ಗದಿ ನಡೆದು |ಜ್ಞಾನವ ಪರರಿಗೆ ಹೇಳುವನ ೧
ಸತಿಸುತರತಿಶಯ ಹಿತವರು ಎನುತಲಿ | ಸತತವು ಅವರೊಳುಮರಗುವನ |
ಮಿತಿಯಿಲ್ಲದೆ ಧನಧಾನ್ಯವ ಬೇಡುತ |ಕ್ಷಿತಿಯ ಮೇಲೆ ತಿರುಗುವನ೨
ಕರುಣವ ಪಡೆಯದೆ ಭವತಾರಕನ | ನರ ತನುಗಳನುಸ್ತುತಿಸುವನ |
ಪರಿಪರಿ ಸಂಸಾರದ ವಿಷಯದಲಿ |ನಿರುತದಿ ಮನವನು ಮಥಿಸುವನ ೩

 

೧೪೭
ಯೋಗಿ ಬಂದನೇ ಶಿವಯೋಗಿ |ಭೋಗ ಸುಖವ ತ್ಯಾಗ ಮಾಡಿ | ಆಗಮೋಕ್ತದಿಂದ ನಡಿವ ಪ
ತಮ್ಮ ತಾವು ಮರೆತ ಜನರ | ಹಮ್ಮಿನೊಳಗೆ ಬಿದ್ದಿರುವವರ | ಕರ್ಮವನ್ನು ಕಡಿದು ಹಾಕಿ | ಪರ |ಬ್ರಹ್ಮ ತೋರಬೇಕೆಂದು ೧
‘ತತ್ತ್ವಮಸಿ’ ಮಹಾವಾಕ್ಯದ ವಿವರವ | ಮತ್ತೆ ತಿಳಿಸಿ ಮಾಯ ಮೋಹ | ಕತ್ತಲೀಯ ಕಳೆದು ಹಾಕಿ | ನಿತ್ಯ ಸುಖವನು ನಿಲಿಸುವಂಥ ೨
ತಂದೆ ಭವತಾರಕನ ಪಾದ | ಹೊಂದಿದವರಿಗೆಲ್ಲರಿಗೆ | ಪರಮಾ- | ನಂದ ಪದವಿಯ ತೋರಿ | ದಯಾಸಿಂಧು ಮತ್ರ್ಯದೊಳಗೆ ೩

 

೧೧೨
ವಿಷಯ ಸುಖ ಇನ್ನೂ ವಿಷವಾಗಲಿಲ್ಲ | ನಿರ್ವಿಷಯಬೋಧಾನಂದ ದೊರೆಯಲೇ ಇಲ್ಲ ಪ
ತನುವ ಧರಿಸಿ ಬಂದು ತನುವ ಕಳೆಯಲಿಲ್ಲ | ಮನದಿ ವಿಚಾರಿಸಿ ಮನವಳಿಯಲೇ ಇಲ್ಲ |
ನೆನಹು ನೆಲೆಗೊಂಡು ನಿಜಕೆ ನಿಲ್ಲಲಿಲ್ಲ | ಚಿನುಮಯಾತ್ಮಕನಾಗಿ ಚರಿಸಲೇ ಇಲ್ಲ ೧
ಪಾಪ ಪುಣ್ಯಗಳ ಕಲಾಪ ಹೋಗಲಿಲ್ಲ | ವ್ಯಾಪಕ ತಾನೆಂದು ತಿಳಿಯಲೇ ಇಲ್ಲ |
ರೂಪ ನಾಮ ಕ್ರಿಯಾ ವ್ಯಾಪವಳಿಯಲಿಲ್ಲ |ಆ ಪರ ವಸ್ತುವು ಗೋಚರಿಸಲೇ ಇಲ್ಲ ೨
ಗುರು ಭವತಾರಕ ಗುರುತು ತೋರಿಸಲಿಲ್ಲ | ಗುಪಿತದ ಮಾರ್ಗವು ಸಿಗಲೇ ಇಲ್ಲ |
ಅಪರಿಮಿತದ ವಸ್ತು ಅಡಗಿ ನಿಂದಿತಲ್ಲ | ವಿಪರೀತ ಮಾಯಾ ಬಲಿ ಹಬ್ಬಿತಲ್ಲ ೩

 

೧೬೨
ಶಿವನ ನೋಡಿದೆ ಶಿವರಾತ್ರಿಯಲಿ | ನಾ | ಶಿವನಾದೆ ನಾಕೂ ಪಾತ್ರೆಯೋಳ್ ಪ
ನಾದವು ತುಂಬಿದೆ ಶ್ರೋತ್ರದಲ್ಲಿ | ದಿವ್ಯ ರೂಪವು ತುಂಬಿದೆ ನೇತ್ರದಿ ೧
ತಿಳಿಯದೆ ಮೊದಲು ಶಾಸ್ತ್ರದಲ್ಲಿ | ತಿಳಿದಿತು ಬೋಧ ಮಾತ್ರದಲ್ಲಿ ೨
ಕರುಣಿಸಿದನು ಈ ಕ್ಷೇತ್ರದಲ್ಲಿ | ಭವತಾರಕ ಕೃಪೆ ಮಾತ್ರದಲೀ ೩

 

೧೬೧
ಶ್ರುತಿ ಮತವ ಕೇಳಿ ನೀ ಮರುಳಾಗಬೇಡ | ಶ್ರುತಿಯುತರ ಸಂಗ ಬಿಡಬೇಡ ಪ
ಮಾಡಿದನ್ನವು ಎಲ್ಲ ಪ್ರಸಾದವೆ ನೋಡು | ಆಡುವ ವಚನ ಅಕ್ಷರ ಮಂತ್ರವೇ |
ರೂಢಿಯೋಳ್ ಜನರೆಲ್ಲ ಸಾಧು ಸತ್ಪುರುಷರೇ | ಬೇಡುವವರೆಲ್ಲ ಫಲಗಳ ಕೊಡುವರೇ ೧
ಜಲವೆಲ್ಲ ತೀರ್ಥವೇ ಸ್ಥಳವೆಲ್ಲ ಕ್ಷೇತ್ರವೇ |ಶಿಲೆಯೆಲ್ಲ ತಿಳಿದರದು ಶಿವಲಿಂಗವೇ |
ಹಲವು ಮತದಿ ಸಾಯೋದು ಜಪಮುಕ್ತಿಯೇಕುಲವೆಲ್ಲ ಕಾಷ್ಠವದು ಶ್ರೀ ಗಂಧವೇ ೨
ವೇದಾಗಮವ ಶೋಧಿಸಿ ನಿನ್ನೊಳು | ನಾದಬಿಂದು ಕಳಾತೀತ ನೀನಾಗಿ |
ಆದಿ ಮೂರ್ತಿ ಭವತಾರಕ ಪಾದದ |ಬೋಧದಲಿ ಸುಖಿಯಾಗೊ ಮನುಜಾ ೩

 

೧೦೮
ಸಾಯವಲ್ಲದೋ ಮನಸು | ಕಾಯದೊಳಗೆ ಕುಳಿತುಕೊಂಡು | ಬಾಯ ಬಿಡಿಸುತಿಹುದು ಜನಕೆ ಪ
ಕಾಲಿಲ್ಲದೆ ಆಡುತಿಹುದು | ನಾಲಿಗಿಲ್ಲದೆ ನುಡಿಯುತಿಹುದು |
ಕಣ್ಣಿಲ್ಲದೆ ನೋಡುತಿಹುದು | ಕರ್ಣವಿಲ್ಲದೆ ಕೇಳುತಿಹುದು ೧
ಎತ್ತ ಹೋದರೆನ್ನ ಬೆನ್ನ | ಹತ್ತಿಬಂದು ಕಾಡುತಿಹುದು |
ಕಿತ್ತಿ ಇದರ ಬೇರನೆನಗೆ ಮತ್ತೆ ತೋರಿಸುವವರ ಕಾಣೆ ೨
ತಂದೆ ಭವತಾರಕನ ಭಜಕರಿದನು ಕೊಂದರಂತೆ |
ಇಂದು ಶರಣು ಹೊಕ್ಕು ಅವರ | ಹಿಂದೆ ಕಳೆಯಬೇಕಿದನ ೩

 

೧೦೭
ಸುಖವಿಲ್ಲ ಆತ್ಮಕೆ ಈ ದೇಹದಿಂದ |ಸುಖವ ಪಡೆವುದು ದೇಹ ಈ ಆತ್ಮದಿಂದ ಪ
ಕರ್ಮದೊಳು ಜನಿಸಿ ಬಂದದ್ದು ಈ ದೇಹ |ಕರ್ಮಕ್ಕೆ ಅನುಕೂಲವಾಗುವದು ಈ ದೇಹ |
ಕರ್ಮವನು ಕಡೆ ತನಕ ಮಾಡುತಿರುವದು ದೇಹ ೧
ನಾಮರೂಪದಲ್ಲಿ ನಿಲಿಸಿಹುದು ಈ ದೇಹ |ನೇಮನೀತಿಯನ್ನು ನಡೆಸುವದು ಈ ದೇಹ ||
ಕಾಮ ಕ್ರೋಧದಲ್ಲಿ ಕುಂದಿ ಕುಂದಿ ಬೆಂದು |ಪ್ರೇಮದಲಿ ವೈರಾಗ್ಯ ತೊರೆ ತೊರೆದು ೨
ಹಿಂದೆ ಬಂದಿದ್ದು ಈ ದೇಹ ಮುಂದೆ ನಿಂತಿದ್ದು ಈ ದೇಹ |ಎಂದೆಂದೂ ಬಿಡನು ಜೀವನು ಈ ದೇಹ ||
ತಂದೆ ಗುರು ಭವತಾರಕನ ಪಾದಾರವಿಂದವ |ಹೊಂದಿದವರಿಗೆ ಇಲ್ಲೋ ಈ ನಾಲ್ಕು ದೇಹ ೩

 

೧೫೬
ಹರ ಹರ ಹರ ಹರ ಶ್ರೀ ಗುರುನಾಥಾ | ಪರಿಹರಿಸುವ ಈ ಭವ ಭವಹರ ಪ
ಕಾಮಿತ ಜನರನು ಕಂಡರೆ ಕರೆವ | ಕಾಮಿತ ಫಲ ಕಲ್ಪನೆಗಳ ಜರೆವ ೧
ಶಿರದೊಳು ತನ್ನಯ ಕರಕಮಲಿಡುವ | ಮರಳಿ ಜನಿಸದ ಪದವಿಯ ಕೊಡುವ ೨
ಭವ ಭಯ ಸಂಶಯ ಬೀಜವ ಹುರಿವ | ಭವತಾರಕನಾಗಿಳೆಯೊಳು ಬರುವ ೩

 

೧೦೯
ಹಿಡಿ ಜ್ಞಾನಾ ಹಿಡಿ ಜ್ಞಾನಾ | ಬಿಡು ಬಿಡು ಬಿಷಯದ ಧ್ಯಾನಾ ಪ
ಉತ್ತಮ ಮನುಷ್ಯ ಜನ್ಮಕೆ ಬಂದೆ |ಸತ್ಯ ಮಿಥ್ಯಾ ತಿಳಿಯದೆ ನೊಂದೆ ೧
ತನುವಿದು ನೋಡಲು ಮಣ್ಣಿಗೆ ಎರವು | ಮನದೊಳು ಮುಸುಕಿತು ಮಾಯಾ ಮರವು೨
ಗುರುಭವತಾರಕ ಭಕ್ತನ ಪಾದಾ | ಪೂಜಿಸಿ ಆಲಿಸು ಬೋಧದ ನಾದಾ ೩

 

೧೩೦
ಹಿಡಿ ಹಿಡಿ ಹಿಡಿ ನೀ ಬ್ರಹ್ಮಜ್ಞಾನ | ಬಿಡು ಬಿಡು ಬಿಡು ನೀ ಸಂಸಾರ ಧ್ಯಾನ |
ಕಡೆಯಲ್ಲಿ ನಿನ್ನ ಕಳಹುವರಲ್ಲಿಗೆ | ಬಿಡದಿರು ಸದ್ಗುರುವಿನ ಧ್ಯಾನ ಪ
ಯಾತಕೆ ಕಲಿತ್ಯೋ ಬಹು ಯುಕ್ತಿಗಳ | ಬರಿ ಮಾತಿಲಿ ಆಗದು ನಿಜ ಮುಕ್ತಿ |
ನೀತಿಯಿಂದ ನೀ ಅರಿತು ನೋಡಲು | ಸ್ವಾತ್ಮದ ಜ್ಞಾನವು ಆಗುವದಿದಕೆ೧
ಸತಿ ಸುತರಾ ನೀ ನೋಡಿ ಹಿಗ್ಗುತಿ | ಮಿತಿಯಿಲ್ಲದೆ ಅವರಿಗೆ ತಗ್ಗುತಿ |
ಗತಿಯ ಕೊಡುವ ಸಂತರು ಬಂದರೆ | ಮೋತಿಯ ತಿರುವಿ ವ್ಯಸನಕೆ ತಗ್ಗುತಿ ೨
ಸಾಧು ಪುರುಷರ ಸಂಗವ ಹಿಡಿಯೊ | ಬೋಧಾಮೃತವನು ನೀ ಕುಡಿಯೊ |
ಆದಿಯಲಿ ಭವತಾರಕ ಭಜಕರು | ಹೋದ ಹಾದಿಯ ನೀ ಹಿಡಿಯೊ ೩

 

೧೩೮
ಹಿಡಿ ಹಿಡಿ ಹಿಡಿ ಭಕ್ತಿ | ಹಿಡಿ ಭಕ್ತಿ | ಪಡಿ ಪಡಿ ಪಡಿ ಜೀವನ್ಮುಕ್ತಿ ಪ
ಗುರುವರನು ತಾ ಪರಶಿವನೆಂದು | ಅರಿದು ಪೂಜಿಸು ಮನದೊಳಗಿಂದು ೧
ವ್ರತನೇಮಗಳೊಳು ಫಲವಿಲ್ಲಾ | ಸದ್ಗತಿ ನಿನಗದರೊಳಗಾಗುವದಿಲ್ಲ ೨
ಭವತಾರಕನ ಭಜಕರ ನೋಡು | ಕಂಡರೆ ಕರೆದರ್ಚನೆಯನು ಮಾಡು ೩

 

೧೧೮
ಹೆಡಗುಡಿ ಕಟ್ಟಿ ಹೊಡೆಯಿರಿ ಇವನ | ಬಡತನ ಸಂತರಿಗ್ಹೇಳುವನ ಪ
ಸೆಡಗರದಲಿ ಸಂಸಾರವ ಮಾಡುತ ಬಿಡದಾಶೆಯಲೀ ಮರಗುವನ ಅ. ಪ
ಅನ್ನವ ಬೇಡುವ ಅತಿಥಿಯು ಬಂದರೆ | ನಿನ್ನೆ ನಾ ಉಪವಾಸೆಂಬುವನ |
ಅನ್ಯಾಯದಲಿ ಪಾಪವ ಗಳಿಸಿ |ನಾಯ್ ಕುನ್ನಿಯಂತೆ ಎಲ್ಲರ ಬೊಗಳುವನ ೧
ವಸ್ತ್ರವ ಕೊಡು ಎಂದವರಿಗೆ ಹರಕೊಂ- | ದೊಸ್ತ್ರವ ತೆರೆದು ತೋರುವನ |
ವೇಶ್ಯಾ ಸ್ತ್ರೀಯರ ಕಂಡರೆ ಕರೆದು | ಉತ್ತಮ ವಸ್ತ್ರವನೀಯುವನ ೨
ಮಂತ್ರವ ಅರಿಯದೆ | ತಂತ್ರವ ಮಾಡುತ | ಅಂತರ ಪೂಜೆಯ ಅರಿಯದವನ |
ಅಂತರಂಗದಿ ಭವತಾರಕನಂಘ್ರಿಯ | ಶಾಂತದಿಂದಲಿ ಧ್ಯಾನಿಸದವನ ೩

 

ಇದು ಏನೊ ನಿನ್ನ
೧೧೫
ಇದು ಏನೊ ನಿನ್ನ ಮತೀ ಮತೀ | ಇದರಿಂದಾಗದು ಗತೀ ಗತೀ ಪ
ಸತಿಸುತರತಿಶಯ ಹಿತವರು ಎನುತಲಿ | ಬಣ್ಣಿಸಿತೊ ನಿನ್ನ ಸ್ಥಿತೀ ಸ್ಥಿತೀ |
ಸತಿ ಸುತರಿಂದಲಿ ಗತಿಯನ್ನು ಪಡೆದ ಕೇಳ ಬಲ್ಲೆಯಾ ಕಥೀ ಕಥೀ೧
ಸಂಚಿತ ಪ್ರಾರಬ್ಧ ಕ್ರಿಯಮಾಣಾ | ತೀರಲಿಲ್ಲವೋ ಮಿತೀ ಮಿತೀ |
ಪಂಚ ದಶಾಕ್ಷರೀ ಮಂತ್ರವ ಜಪಿಸಲು | ನೀ ಪರಶಿವನೆಂಬುದೋ ಶ್ರುತೀ ಶ್ರುತೀ ೨
ಆದಿ ಮೂರ್ತಿ ಭವತಾರಕ ದೇವನ | ಪೂಜಿಸಿ ಮಾಡೊ ಸ್ತುತೀ ಸ್ತುತೀ |
ಅರಿಯದಿರ್ದರರ್ಚಕರನು ಸೇವಿಸಿ |ಆಗು ನೀ ಭೂಪತೀ ಭೂಪತೀ ೩

 

ಹಾಡಿನ ಹೆಸರು :ಇದು ಏನೊ ನಿನ್ನ
ಹಾಡಿದವರ ಹೆಸರು :ಮಹಾಲಕ್ಷ್ಮಿ ಶರ್ಮ
ರಾಗ :ಮಿಶ್ರ ಪೀಲು
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ಶ್ರೀನಿವಾಸ್ ಬಿ. ವಿ.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಎಲ್ಲ ಮಾಡಿದವ
೯೭
ಎಲ್ಲ ಮಾಡಿದವ ನೀನೊ ನಾನೊ |ಅಲ್ಲ ಅಹುದು ಎಂದು ಆಡುವದೇನೊ ಪ
ಪುಣ್ಯಕೆ ಉಗ್ರ ಪಾಪವ ರಚಿಸಿದೆ |ಪುಣ್ಯದಿಂದಲಿ ಪಾಪವ ಕಳೆದೆ ೧
ಸತ್ಯದೊಳಗೆ ಒಂದು ಮಿಥ್ಯವ ಪುಟ್ಟಿಸಿದೆ |ಸತ್ಯದಿಂದಲಿ ಆ ಮಿಥ್ಯ ಹರಿಸಿದೆ ೨
ಅರಿವಿನೊಳಗೆ ಒಂದು ಮರವನು ಬೆರಸಿದೆ |ಗುರು ಭವತಾರಕನಾಗಿ ತಾರಿಸಿದೆ ೩

 

ಹಾಡಿನ ಹೆಸರು :ಎಲ್ಲ ಮಾಡಿದವ
ಹಾಡಿದವರ ಹೆಸರು :ಅಜಯ್ ವಾರಿಯರ್
ರಾಗ :ಜೋಗ್
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ಶ್ರೀನಿವಾಸ್ ಬಿ. ವಿ.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಕಾಲ ಕರ್ಮವ ಕಾಲಿಲೊದೆದವ
೧೫೦
ಕಾಲ ಕರ್ಮವ ಕಾಲಿಲೊದೆದವ | ಕತ್ತಲಿಗಂಜುವನೇ |
ಆಲಿಯ ಮೇಲಕೆ ನಿಲಿಸಿದ ಪುರುಷನು | ಬಾಲೆರ ಬಯಸುವನೇ ಪ
ಅಮೃತ ನದಿಯೊಳು ತೃಪ್ತ್ಯಾದ ಮಹಾತ್ಮನು | ಅಂಬಲಿ ಸುರಿಯುವನೇ |
ಕುಂಭಕ ವಾಯುವ ನಿಲಿಸಿದ ಸಜ್ಜನ | ಕುಂಭಿನಿಗುದಿಸುವನೇ೧
‘ತತ್ತ್ವಮಸಿ’ ಮಹಾವಾಕ್ಯವ ತಿಳಿದವ | ಮಿಥ್ಯಕೆ ಮೆಚ್ಚುವನೇ |
ನಿತ್ಯನಿತ್ಯದಿ ಇರುವವನೂ | ಅನಿತ್ಯಕೆ ಮೆಚ್ಚುವನೇ ೨
ವೇದಾಗಮವನು ಶೋಧಿಸಿದವನು | ಭವ ಬಾಧೆಗೆ ಬೀಳುವನೇ |
ಆದಿ ಮೂರ್ತಿ ಭವತಾರಕ ಭಜಕನು | ಭೇದವ ಮಾಡುವನೇ ೩

 

ಹಾಡಿನ ಹೆಸರು :ಕಾಲ ಕರ್ಮವ ಕಾಲಿಲೊದೆದವ
ಹಾಡಿದವರ ಹೆಸರು :ಮಡಿಕೇರಿ ನಾಗೇಂದ್ರ ಎಂ. ಎ.
ರಾಗ :ಸಿಂಧುಭೈರವಿ
ಸಂಗೀತ ನಿರ್ದೇಶಕರು :ಶ್ರೀನಿವಾಸ್ ಟಿ.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಗುಡಿಯ ತುಂಬ
೧೬೩
ಗುಡಿಯ ತುಂಬ ದೇವರ ಕಂಡೆ | ಅಡಿಯಿಡಗೊಡದೆನ್ನ ಹಿಡಿಕೊಂಡಿತಕ್ಕ ಪ
ಕೈಯಿಲ್ಲ ಕಾಲಿಲ್ಲ ಮೂಗಿಲ್ಲ ಮಾರಿಲ್ಲ | ಮೈಯೆಲ್ಲ ನೋಡಲು ಮರಿಯಾದೆ ಇಲ್ಲ |
ಸೈಯೆನಿಸಿ ಜಗಕೆಲ್ಲಕೆ ಮಿಗಿಲಾದ ದೇವರು | ವೈಯಾರ ಇಲ್ಲದೆ ಸಿಕ್ಕಿತಕ್ಕ ೧
ಹೆಣ್ಣಲ್ಲ ಗಂಡಲ್ಲ ಹಣ್ಣಲ್ಲ ಕಾಯಲ್ಲ | ಹೂವಿಲ್ಲದೆ ಪೂಜೆಗೊಂಡಿಹುದಕ್ಕ |
ಪೂಜೆಯ ಮಾಡುವ ಪೂಜಾರಿಯ ನುಂಗಿತು | ಮೂಜಗದೊಳು ಇದು ಸೋಜಿಗವೆನ್ನಿ ೨
ಅರಿತು ನೋಡಲು ಬೆರೆತು ನಿಂತಿಹುದಲ್ಲ | ಮರೆತು ಹೋಯಿತು ನಾನೆಂಬುವದೆಲ್ಲ |
ಗುರುತವ ಬಲ್ಲದು ಗುರು ಭವತಾರಕ | ಭಜಕರ ಹೊರತು ತಿಳಿಯದು ಜನಕೆ ೩

 

ಹಾಡಿನ ಹೆಸರು :ಗುಡಿಯ ತುಂಬ
ಹಾಡಿದವರ ಹೆಸರು :ಸುರೇಖಾ ಕೆ. ಎಸ್.
ರಾಗ :ಕಲಾವತಿ ಮಿಶ್ರ
ತಾಳ :ರೂಪಕ
ಶೈಲಿ :ಜನಪದ
ಸಂಗೀತ ನಿರ್ದೇಶಕರು :ಶ್ರೀನಿವಾಸ್ ಬಿ. ವಿ.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಗುರುಭಜಕರಿಗೆ ದುರಿತ
೧೫೩
ಗುರುಭಜಕರಿಗೆ ದುರಿತ ಬರುವದುಂಟೆ ? | ಸುರತರುವಿನಲಿ ದಾರಿದ್ರ್ಯ ಗುಣ ಉಂಟೆ ಪ
ನಾಗನೇರಿದವಗೆ ಅಂಜಿಕೆಯುಂಟೆ | ಯೋಗ ಪುರುಷನಿಗೆ ಪೂರ್ವ ಕರ್ಮ ಉಂಟೆ ||
ಆಗಮದಿ ನಡೆವವಗೆ ಅನ್ಯ ಮಾರ್ಗವುಂಟೆ | ರೋಗವಿಲ್ಲದವನಿಗೆ ಪಥ್ಯ ಉಂಟೆ ೧
ವೇದಾಂತ ತಿಳಿದವಗೆ ಭೇದಬುದ್ಧಿಗಳುಂಟೆ | ಸಾಧು ಸಂಗದಲಿ ದುರ್ವಾದವುಂಟೆ |
ಬೋಧ ನೆಲೆಗೊಂಡವಗೆ ಕ್ರೋಧ ಜನಿಸುವದುಂಟೆ | ನಾದ ಬಿಂದು ಕಳಾತೀತಗೆಣೆಯುಂಟೆ ೨
ತಂದೆ ಭವತಾರಕನ ಹೊಂದಿರಲು ಭಯವುಂಟೆ | ಇಂದುಧರನಲ್ಲಿ ಸಂದೇಹವುಂಟೆ |
ಕುಂದು ಹೆಚ್ಚೆಂಬೋದು ಅಲ್ಲಿ ಜನಿಸುವದುಂಟೆ | ಒಂದೆ ಬ್ರಹ್ಮವ ಕಂಡ ಮಹಿಮಗೆರಡುಂಟೆ ? ೩

 

ಹಾಡಿನ ಹೆಸರು :ಗುರುಭಜಕರಿಗೆ ದುರಿತ
ಹಾಡಿದವರ ಹೆಸರು : ಅಮರನಾಥ
ರಾಗ :ಮೋಹನ ಕಲ್ಯಾಣಿ
ತಾಳ :ಖಂಡಛಾಪು ತಾಳ
ಶೈಲಿ :ಕರ್ನಾಟಕ
ಸಂಗೀತ ನಿರ್ದೇಶಕರು:ಕೃಷ್ಣಮೂರ್ತಿ ಎಸ್.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ತಿಳಿಸುವ ಮಾತಲ್ಲಾ ತಿಳಿಸದೆ
೧೧೩
ತಿಳಿಸುವ ಮಾತಲ್ಲಾ | ತಿಳಿಸದೆ ತಿಳಿಯುವ ಮಾತಲ್ಲಾ | ತಿಳಿಸದೆ ತಿಳಿಯದು | ತಿಳಿಯದು ನಿನಗದು | ತಿಳಿಸದೆ ತಿಳಿಯದು | ತಿಳಿಯದೆ ಹೊಳೆಯದು ಪ
ಎಚ್ಚರ ನೀ ಮರೆತಿ ಮದ ಮತ್ಸರದಲೀ ಬೆರತೀ | ಅಚ್ಚ ಹೇಸಿಕೀ ದೇಹ ಮುಚ್ಚಿದ ಚರ್ಮಕ್ಕೆ | ನಿಶ್ಚಯವೆಂದರಿವೆ ಛೇಕರವೇ ೧
ಭೇದವಳಿಯಲು ಬೇಕೊ ಮನದ ವಿವಾದ ಕಳೆಯಲು ಬೇಕೊ | ಸಾಧುಸಂತರ ಸಂಗ ಸೇವಿಸಿ ತತ್ತ್ವದ್ಹಾದಿ ಹಿಡಿಯ ಬೇಕೊ |ನೀನೆ ಹೀಗ್ಯಾಕೊ ೨
ಸಾಧಿಸುವದು ಯುಕ್ತಿ | ನಿಜಾನಂದ ಬೋಧ ಮುಕ್ತಿ |ಆದಿಮೂರ್ತಿ ಭವತಾರಕ ದೇವ ಪಾದವಪೂಜಿಸಿ ನೀವ್ | ತಿಳಿದೆ ಭಜಿಸದಲೇ ೩

 

ಹಾಡಿನ ಹೆಸರು :ತಿಳಿಸುವ ಮಾತಲ್ಲಾ ತಿಳಿಸದೆ
ಹಾಡಿದವರ ಹೆಸರು :ರಮೇಶ್‍ಚಂದ್ರ
ಸಂಗೀತ ನಿರ್ದೇಶಕರು :ಹೇಮಂತ್ ಬಿ. ಆರ್.
ಸ್ಟುಡಿಯೋ :ಗಣೇಶ್ ಕುಟೀರ್, ಬೆಂಗಳೂರು

ನಿರ್ಗಮನ

 

ದೇವನಲ್ಲವೇನೋ ಸದ್ಗುರು
೧೫೯
ದೇವನಲ್ಲವೇನೋ ಸದ್ಗುರು ಮಹಾದೇವನಲ್ಲವೇನೋ | ಆದಿಯೋಳ್ ಸಿದ್ಧರು ಹೋದ ದಾರಿಯ | ತೋರಿ ಭೇದವ ಬಿಡಿಸಿದ ಮೂರುತಿ ಪ
ನರಜನ್ಮದೊಳಗೆ ಬಂದು ನೀನು | ಪ್ರಪಂಚದ ಕಡಲು ಮಧ್ಯದಿ ನಿಂದು | ಅರಿತು ಮರೆತು ಒಮ್ಮೆ ಗುರುವೆಂದು ನೆನೆದರೆ | ಗುರುತಿಟ್ಟು ಅವರಿಗೆ ಪರತರ ತೋರುವ ೧
ಆಶಾಪಾಶವ ಬಿಡಿಸಿ ಮಾಡಿದ | ದೋಷ ಭವಂಗಳ ಕರ್ಮವ ಕೆಡಿಸಿ | ನ್ಯಾಸ ಧ್ಯಾಸದಿ ಜಪ ಮಾಡೆ ಗುರು |ಬೋಧ ಪ್ರಕಾಶವ ತೋರಿದ ಈಶನು ೨
ಭಕ್ತಿ ಜ್ಞಾನವ ಹಿಡಿದು ನಂಬಿದಗೆ | ಮುಕ್ತಿಯ ನಿಶ್ಚಯದಿ ಪಾಲಿಸುವ | ಕರ್ತೃ ಸದ್ಗುರು ಭವತಾರಕ ಧರೆಯಲಿ | ಪ್ರತ್ಯಕ್ಷವಾದಂಥ ಪರಬ್ರಹ್ಮರೂಪನು ೩

 

ಹಾಡಿನ ಹೆಸರು : ದೇವನಲ್ಲವೇನೋ ಸದ್ಗುರು
ಹಾಡಿದವರ ಹೆಸರು :ವೆಂಕಟೇಶ ಗೋಡ್ಖಿಂಡಿ
ಸಂಗೀತ ನಿರ್ದೇಶಕರು :ಪ್ರವೀಣ್ ಗೋಡ್ಖಿಂಡಿ
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಧನವಗಳಿಸಬೇಕೆಂಥಾದ್ದು
೧೫೧
ಧನವಗಳಿಸಬೇಕೆಂಥಾದು | ಈ | ಜನರಿಗೆ ಕಾಣಿಸದಂಥಾದು ಪ
ಹರಿಹರ ಬ್ರಹ್ಮಾದಿಗಳೆಲ್ಲ | ಹೌದಹುದಹುದೆಂಬಂಥಾದು ಅ.ಪ
ಕೊಟ್ಟರೆ ಹತ್ತಿರದಂಥಾದು | ತನ್ನ ಬಿಟ್ಟು ಹೊರ ಹೋಗದಂಥಾದು ||
ಬಿಚ್ಚಿದ ಗಂಟನು ಬಯಲೊಳಗಿಟ್ಟರೆ | ಮುಟ್ಟಬಾರದಾರಿಂಥಾದು ೧
ಕರ್ಮವು ಬಾರದಂಥಾದು | ಜನರೋರ್ವರು ತೋರಿಸದಂಥಾದು |
ನಿರ್ಮಲವಾದ ಮನಸಿಗೆ ದಾನ | ಧರ್ಮವ ಮಾಡಿಸುವಂಥಾದು ೨
ಮರವನು ತಾರದಂಥಾದು | ನಿಜದರಿವಿನೊಳಗೆ ಇರುವಂಥಾದು |
ಗುರು ಭವತಾರಕ ಭಜಕರ ಕಣ್ಣಿಗೆ | ತೊರಹಿಲ್ಲದೆ ತುಂಬಿದಂಥಾದು ೩

 

ಹಾಡಿನ ಹೆಸರು :ಧನವಗಳಿಸಬೇಕೆಂಥಾದ್ದು
ಹಾಡಿದವರ ಹೆಸರು :ಉದಯ ಅಂಕೋಲ
ಸಂಗೀತ ನಿರ್ದೇಶಕರು :ಶ್ರೀನಿವಾಸ್ ಬಿ.ವಿ
ಸ್ಟುಡಿಯೋ : ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಪಾಲು ಇದು ಪಾಲು
೧೩೧
ಪಾಲು ಪಾಲು ಇದು ಯಾತರ ಪಾಲು | ಪಾಲು ಹಂಚ್ಯಾನೊ ಶಿವ ಮೊದಲೇ ಪ
ದೇಹ ನೋಡೆಲೂ ಮೃತ್ತಿಕೆ ಪಾಲು |ಜೀವ ನೋಡೆಲೊ ವಾಯುವಿನ ಪಾಲು ೧
ಪುಣ್ಯ ನೋಡೆಲೊ ಸುಖದ ಪಾಲು | ಪಾಪ ನೋಡೆಲೊ ದುಃಖದ ಪಾಲು ೨
ಭಕ್ತಿ ನೋಡೆಲೊ ಮುಕ್ತಿಯ ಪಾಲು |ಭಕ್ತ ಭವತಾರಕನ ಪಾಲು ೩

 

ಹಾಡಿನ ಹೆಸರು :ಪಾಲು ಇದು ಪಾಲು
ಹಾಡಿದವರ ಹೆಸರು :ಪಲ್ಲವಿ ಎಂ. ಡಿ.
ರಾಗ :ಶುಭಪಂತುವರಾಳಿ
ತಾಳ :ಆದಿ ತಾಳ
ಶೈಲಿ :ಜಾನಪದ
ಸಂಗೀತ ನಿರ್ದೇಶಕರು :ಶ್ರೀನಿವಾಸ ಬಿ. ವಿ.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಯೋಗಿ ಬಂದನೇ ಶಿವಯೋಗಿ
೧೪೭
ಯೋಗಿ ಬಂದನೇ ಶಿವಯೋಗಿ |ಭೋಗ ಸುಖವ ತ್ಯಾಗ ಮಾಡಿ | ಆಗಮೋಕ್ತದಿಂದ ನಡಿವ ಪ
ತಮ್ಮ ತಾವು ಮರೆತ ಜನರ | ಹಮ್ಮಿನೊಳಗೆ ಬಿದ್ದಿರುವವರ |
ಕರ್ಮವನ್ನು ಕಡಿದು ಹಾಕಿ | ಪರ |ಬ್ರಹ್ಮ ತೋರಬೇಕೆಂದು ೧
‘ತತ್ತ್ವಮಸಿ’ ಮಹಾವಾಕ್ಯದ ವಿವರವ | ಮತ್ತೆ ತಿಳಿಸಿ ಮಾಯ ಮೋಹ |
ಕತ್ತಲೀಯ ಕಳೆದು ಹಾಕಿ | ನಿತ್ಯ ಸುಖವನು ನಿಲಿಸುವಂಥ ೨
ತಂದೆ ಭವತಾರಕನ ಪಾದ | ಹೊಂದಿದವರಿಗೆಲ್ಲರಿಗೆ | ಪರಮಾ- |
ನಂದ ಪದವಿಯ ತೋರಿ | ದಯಾಸಿಂಧು ಮತ್ರ್ಯದೊಳಗೆ ೩

 

ಹಾಡಿನ ಹೆಸರು :ಯೋಗಿ ಬಂದನೇ ಶಿವಯೋಗಿ
ಹಾಡಿದವರ ಹೆಸರು :ನಂದಿತಾ ಸಿ. ಎಸ್.
ಸಂಗೀತ ನಿರ್ದೇಶಕರು :ಹೇಮಂತ್ ಬಿ. ಆರ್.

ನಿರ್ಗಮನ

 

ಶಿವನ ನೋಡಿದೆ
೧೬೨
ಶಿವನ ನೋಡಿದೆ ಶಿವರಾತ್ರಿಯಲಿ | ನಾ | ಶಿವನಾದೆ ನಾಕೂ ಪಾತ್ರೆಯೋಳ್ ಪ
ನಾದವು ತುಂಬಿದೆ ಶ್ರೋತ್ರದಲ್ಲಿ | ದಿವ್ಯ ರೂಪವು ತುಂಬಿದೆ ನೇತ್ರದಿ ೧
ತಿಳಿಯದೆ ಮೊದಲು ಶಾಸ್ತ್ರದಲ್ಲಿ | ತಿಳಿದಿತು ಬೋಧ ಮಾತ್ರದಲ್ಲಿ ೨
ಕರುಣಿಸಿದನು ಈ ಕ್ಷೇತ್ರದಲ್ಲಿ | ಭವತಾರಕ ಕೃಪೆ ಮಾತ್ರದಲೀ ೩

 

ಹಾಡಿನ ಹೆಸರು :ಶಿವನ ನೋಡಿದೆ
ಹಾಡಿದವರ ಹೆಸರು :ಸಹನಾ ರಾಮಚಂದ್ರ, ಮಾನಸಿ ಪ್ರಸಾದ್
ರಾಗ :ರೇವತಿ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ಕೃಷ್ಣಮೂರ್ತಿ ಎಸ್.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಸಾಯವಲ್ಲದೋ ಮನಸು
೧೦೮
ಸಾಯವಲ್ಲದೋ ಮನಸು | ಕಾಯದೊಳಗೆ ಕುಳಿತುಕೊಂಡು | ಬಾಯ ಬಿಡಿಸುತಿಹುದು ಜನಕೆ ಪ
ಕಾಲಿಲ್ಲದೆ ಆಡುತಿಹುದು | ನಾಲಿಗಿಲ್ಲದೆ ನುಡಿಯುತಿಹುದು |
ಕಣ್ಣಿಲ್ಲದೆ ನೋಡುತಿಹುದು | ಕರ್ಣವಿಲ್ಲದೆ ಕೇಳುತಿಹುದು ೧
ಎತ್ತ ಹೋದರೆನ್ನ ಬೆನ್ನ | ಹತ್ತಿಬಂದು ಕಾಡುತಿಹುದು |
ಕಿತ್ತಿ ಇದರ ಬೇರನೆನಗೆ ಮತ್ತೆ ತೋರಿಸುವವರ ಕಾಣೆ ೨
ತಂದೆ ಭವತಾರಕನ ಭಜಕರಿದನು ಕೊಂದರಂತೆ |
ಇಂದು ಶರಣು ಹೊಕ್ಕು ಅವರ | ಹಿಂದೆ ಕಳೆಯಬೇಕಿದನ ೩

ಹಾಡಿನ ಹೆಸರು :ಸಾಯವಲ್ಲದೋ ಮನಸು
ಹಾಡಿದವರ ಹೆಸರು :ಉದಯ್ ಅಂಕೋಲ
ರಾಗ : ಮಿಶ್ರ ಶಿವರಂಜನಿ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ಶ್ರೀನಿವಾಸ್ ಬಿ. ವಿ.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಹಿಡಿ ಜ್ಞಾನಾ ಹಿಡಿ
೧೦೯
ಹಿಡಿ ಜ್ಞಾನಾ ಹಿಡಿ ಜ್ಞಾನಾ | ಬಿಡು ಬಿಡು ಬಿಷಯದ ಧ್ಯಾನಾ ಪ
ಉತ್ತಮ ಮನುಷ್ಯ ಜನ್ಮಕೆ ಬಂದೆ |ಸತ್ಯ ಮಿಥ್ಯಾ ತಿಳಿಯದೆ ನೊಂದೆ ೧
ತನುವಿದು ನೋಡಲು ಮಣ್ಣಿಗೆ ಎರವು | ಮನದೊಳು ಮುಸುಕಿತು ಮಾಯಾ ಮರವು೨
ಗುರುಭವತಾರಕ ಭಕ್ತನ ಪಾದಾ | ಪೂಜಿಸಿ ಆಲಿಸು ಬೋಧದ ನಾದಾ ೩

ಹಾಡಿನ ಹೆಸರು :ಹಿಡಿ ಜ್ಞಾನಾ ಹಿಡಿ
ಹಾಡಿದವರ ಹೆಸರು :ಅನಂತ ಕುಲಕರ್ಣಿ
ರಾಗ :ಮಧ್ಯಮಾವತಿ
ತಾಳ :ರೂಪಕ ತಾಳ
ಶೈಲಿ:ಜಾನಪದ
ಸಂಗೀತ ನಿರ್ದೇಶಕರು :ಶ್ರೀನಿವಾಸ್ ಬಿ. ವಿ.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *