Categories
ಕಗ್ಗ ರಸಧಾರೆ

ಡಿವಿಜಿ ಯವರ ಮಂಕುತಿಮ್ಮನ ಕಗ್ಗಗಳು – ಸಂಪೂರ್ಣ ೯೪೫ ಕಗ್ಗಗಳು

ಮಂಕುತಿಮ್ಮನ ಕಗ್ಗಗಳನ್ನು ಆಡಿಯೋ ರೂಪದಲ್ಲಿ ಕೇಳಲು ಇಲ್ಲಿ ಕ್ಲಿಕ್ಕಿಸಿ.

ಹುಲ್ಲಾಗು ಬೆಟ್ಟದಡಿ; ಮನೆಗೆ ಮಲ್ಲಿಗೆಯಾಗು |
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ ||
ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ |
ಎಲ್ಲರೊಳಗೊಂದಾಗು – ಮಂಕುತಿಮ್ಮ || ಕಗ್ಗ ೧ ||

ಶರಧಿಯೊಳಗಣ ವಸ್ತುಗಳನಲಚಿ ಜಾಲಿಸುವ |
ತೆರೆಯಂತೆ ವಿಶ್ವಸತ್ತ್ವದ ಲಹರಿ ನಮ್ಮ ||
ಹೊರಗೊಳಗುಗಳಲಿ ಸಂತತ ನೆರೆದು ಹರಿಯುತ್ತ |
ಭರಿಸುತಿರುವುದು ಬಾಳ – ಮಂಕುತಿಮ್ಮ || ಕಗ್ಗ ೨ ||

ನೀಲ ವಿಸ್ತರವಿರಲು ನಕ್ಷತ್ರ ಬಿಂದು ಸೊಗ |
ಶೈಲದಚಲತೆಯಿರಲು ಝರಿಯ ವೇಗ ಸೊಗ ||
ಬಾಳು ಬಯಲಂತಿರಲು ಮನೆಯಚ್ಚುಕಟ್ಟಿಂಬು |
ವೈಲಕ್ಷಣದ ಚೆಂದ – ಮಂಕುತಿಮ್ಮ || ಕಗ್ಗ ೩ ||

ಬಹುವಿದ್ಯೆ ಬಹುತರ್ಕ ಬಹುನೇಮ ಬೇಕಿಲ್ಲ |
ವಹಿಸೆ ಜೀವನಭರವನದು ಹಗುರೆನಿಪವೊಲ್ ||
ಸಹನೆ ಸಮರಸಭಾವವಂತಃಪರೀಕ್ಷೆಗಳು |
ವಿಹಿತವಾತ್ಮದ ಹಿತಕೆ – ಮಂಕುತಿಮ್ಮ || ಕಗ್ಗ ೪ ||

ಕೊಳಕೆಂದು; ಹುಳುಕೆಂದು; ಹೇಸಿಗೆಯ ಹುಳುವೆಂದು |
ಇಳೆಯೊಳಾವುದರೊಳಮಸಹ್ಯಪಡಬೇಡ ||
ಬೆಲೆಯುಂಟು ಕೊಳೆಗಮೀ ಜೀವಸಾಮಗ್ರಿಯಲಿ |
ಕೊಳೆ ಶುಚಿಖ್ಯಾಪಕವೊ – ಮಂಕುತಿಮ್ಮ || ಕಗ್ಗ ೫ ||

ಎಲ್ಲೆಲ್ಲಿಯುಂ ಮೋಹಸಂಭ್ರಾಂತಿಗಳ ಕವಿಸಿ |
ಸಲ್ಲದ ಕುಮಾರ್ಗದೊಳು ನಿನ್ನ ತಾಂ ನಡಸಿ ||
ಗೆಲ್ಲಲಿಲ್ಲಿವನಾ ಪರೀಕ್ಷೆಯೊಳಗೆಂದು ವಿಧಿ |
ಸೊಲ್ಲಿಪುದು ಸರಿಯೇನೊ? – ಮಂಕುತಿಮ್ಮ || ಕಗ್ಗ ೬ ||

ಕ್ಷಿತಿರುಹಕೆ ಸುಮಫಲಮುಹೂರ್ತ ನಿಶ್ಚಿತವೇನು? |
ಮತಿಮನಂಗಳ ಕೃಷಿತಪಃಫಲವುಮಂತು ||
ಸತತಕೃಷಿ; ಬೀಜಗುಣ; ಕಾಲವರ್ಷಗಳೊದವೆ |
ಪ್ರತಿಭೆ ವಿಕಸಿತವಹುದೊ – ಮಂಕುತಿಮ್ಮ || ಕಗ್ಗ ೭ ||

ಯುಕ್ತಿಸಾಮ್ರಾಜ್ಯದಲಿ ಭಕ್ತಿ ಬಡ ಪರದೇಶಿ |
ಶಕ್ತಿ ಚತುರತೆಯುಡುಗಿ ನೀನು ಸೋತಂದು ||
ಉತ್ಕ್ರಮಣದರೆಮನದಿ ದೈವವನು ಪಿಡಿದೇನು? |
ಭಕ್ತಿ ರಕ್ತದಿ ಪರಿಗೆ – ಮಂಕುತಿಮ್ಮ || ಕಗ್ಗ ೮ ||

ಸಾಕುಸಾಕೆನಿಸುವುದು ಲೋಕಸಂಪರ್ಕಸುಖ |
ಸೋಕಿದೆಡೆ ತುರಿಯನೆಬ್ಬಿಸುವ ತುರುಚಿಯದು ||
ಮೂಕನವೆ ತುರಿಸದಿರೆ; ತುರಿಯುತಿರೆ ಹುಣ್ಣುರಿತ |
ಮೂಕನಪಹಾಸ್ಯವದು – ಮಂಕುತಿಮ್ಮ || ಕಗ್ಗ ೯ ||

ಬುದ್ಧಿಮಾತಿದು ನಿನಗೆ : ಸಿದ್ಧನಿರು ಸಕಲಕ್ಕಮ್ |
ಎದ್ದು ಕುಣಿಯಲಿ ಕರ್ಮ; ದೈವ ನಿದ್ರಿಸಲಿ ||
ಅದ್ಭುತಗಳರಿದಲ್ಲ; ಭವ್ಯಕ್ಕೆ ಹದ್ದಿಲ್ಲ |
ಸಿದ್ಧನಾಗೆಲ್ಲಕಂ – ಮಂಕುತಿಮ್ಮ || ಕಗ್ಗ ೧೦ ||

ಸ್ರವಿಸುವುದು ಜೀವರಸ ಹೃದಯಗರ್ತದ ತಳದಿ |
ಕಿವಿಗಾ ರಹಸ್ಯದುಲಿ ಕಾವ್ಯಗಾನಗಳಿಂ ||
ಭುವನದಾಚಿನ ರಹಸ್ಯದ ಕೀರ್ತಿ ವೇದಗಳ |
ರವದಿನೆಂದಾರ್ಷಮತ – ಮಂಕುತಿಮ್ಮ || ಕಗ್ಗ ೧೧ ||

ಸಾಜಗುಣವೆಂದುಪೇಕ್ಷಿಪೆಯ ನಿನ್ನವಗುಣವ? |
ಸಾಜವನು ಬಿಟ್ಟಲುಗದಿಹುದು ಮೃಗಕೀಟ ||
ಸಾಜವಂ ಶಿಕ್ಷಿಸುತೆ ಲೋಕಸಂಸ್ಥಿತಿಗದನು |
ಯೋಜಿಪುದೆ ನರಮಹಿಮೆ – ಮಂಕುತಿಮ್ಮ || ಕಗ್ಗ ೧೨ ||

ಬಾನೊಳಿರುವುದೆ ಪಕ್ಷಿ ಪಾರ್ವ ದಾರಿಯ ನಕ್ಷೆ? |
ಮೀನು ನೀರೊಳು ನುಸುಳೆ ಪಥನಿಯಮವಿಹುದೆ? ||
ಏನೊ ಜೀವವನೆಳೆವುದೇನೊ ನೂಕುವುದದನು |
ನೀನೊಂದು ಗಾಳಿಪಟ – ಮಂಕುತಿಮ್ಮ || ಕಗ್ಗ ೧೩ ||

ವಿಷಯಸನ್ನಿಧಿಗಿಂತ ಮಸಣಸನ್ನಿಧಿ ಲೇಸು |
ವಿಷದೂಟಕಿಂತುಪೋಷಿತವೆ ಲೇಸಲ್ತೆ? ||
ತೃಷೆ ಕನಲೆ; ಜೀವ ಬಿಸಿಬಾಣಲಿಗೆ ಬಿದ್ದ ಹುಳು |
ಶಿಶು ಪಿಶಾಚಿಯ ಕೈಗೆ – ಮಂಕುತಿಮ್ಮ || ಕಗ್ಗ ೧೪ ||

ಕತ್ತಲೆಯೊಳೇನನೋ ಕಂಡು ಬೆದರಿದ ನಾಯಿ |
ಎತ್ತಲೋ ಸಖನೊರ್ವನಿಹನೆಂದು ನಂಬಿ ||
ಕತ್ತೆತ್ತಿ ಮೋಳಿಡುತ ಬೊಗಳಿ ಹಾರಾಡುವುದು |
ಭಕ್ತಿಯಂತೆಯೆ ನಮದು – ಮಂಕುತಿಮ್ಮ || ಕಗ್ಗ ೧೫ ||

ಅರೆಗಣ್ಣು ನಮದೆಂದು ಕೊರಕೊರಗಿ ಫಲವೇನು? |
ಅರೆಬೆಳಕು ಧರೆಯೊಳೆಂದೊರಲಿ ಸುಖವೇನು? ||
ಇರುವ ಕಣ್ಣಿರುವ ಬೆಳಕಿನೊಳಾದನಿತ ನೋಡಿ |
ಪರಿಕಿಸಿದೊಡದು ಲಾಭ – ಮಂಕುತಿಮ್ಮ || ಕಗ್ಗ ೧೬ ||

ಮೇಲೆ ಕೆಳಗೊಳಗೆ ಬಳಿ ಸುತ್ತಲೆತ್ತೆತ್ತಲುಂ |
ಮೂಲೆಮುಲೆಯಲಿ ವಿದ್ಯುಲ್ಲಹರಿಯೊಂದು ||
ಧೂಲಿಕಣ ಭೂಗೋಳ ರವಿ ಚಂದ್ರ ತಾರೆಗಳ |
ಚಾಲಿಪುದು ಬಿಡು ಕೊಡದೆ – ಮಂಕುತಿಮ್ಮ || ಕಗ್ಗ ೧೭ ||

ಅಣು ಭೂತ ಭೂಗೋಲ ತಾರಾಂಬರಾದಿಗಳ |
ನಣಿಮಾಡಿ ಬಿಗಿದು ನಸು ಸಡಿಲವನುಮಿರಿಸಿ ||
ಕುಣಿಸುತಿರುವನು ತನ್ನ ಕೃತಿಕಂತುಕವನದರೊ |
ಳಣಗಿರ್ದು ಪರಬೊಮ್ಮ – ಮಂಕುತಿಮ್ಮ || ಕಗ್ಗ ೧೮ ||

ರಾಮನುಚ್ಛ್ವಾಸವಲೆದಿರದೆ ರಾವಣನೆಡೆಗೆ? |
ರಾಮನುಂ ದಶಕಂಠನೆಲರನುಸಿರಿರನೆ? ||
ರಾಮರಾವಣರುಸಿರ್ಗಳಿಂದು ನಮ್ಮೊಳಗಿರವೆ? |
ಭೂಮಿಯಲಿ ಪೊಸತೇನೊ? – ಮಂಕುತಿಮ್ಮ || ಕಗ್ಗ ೧೯ ||

ಪದರಪದರಗಳಿಹುವು ಗಂಟುಗಂಟುಗಳಿಹುವು |
ಹೃದಯದಲಿ ಬುದ್ಧಿಯಲಿ ವಾಕ್ಚರ್ಯೆಗಳಲಿ ||
ಇದಮಿತ್ಥಮೆಲ್ಲಿಹುದು ಮನುಜಸ್ವಭಾವದಲಿ? |
ವಿಧಿಯ ಕೈಚಿತ್ರವದು – ಮಂಕುತಿಮ್ಮ || ಕಗ್ಗ ೨೦ ||

ಸಮತೆಸಂಯಮಶಮಗಳಿಂ ಭವವನೋಲಗಿಸೆ |
ಸಮನಿಪುದು ಮತಿಯ ಹದವಾತ್ಮಾನುಭವಕೆ ||
ಮಮತೆಯಳಿವಿಂ ಜ್ಞಾನ; ಪಾಂಡಿತ್ಯದಿಂದಲ್ಲ |
ಶ್ರಮಿಸಿಳೆಯ ಗಾಣದಲಿ – ಮಂಕುತಿಮ್ಮ || ಕಗ್ಗ ೨೧ ||

ರಾವಣನ ಹಳಿವವನೆ; ಜೀವವನೆ ಬಿಸುಡಿಸುವ |
ಲಾವಣ್ಯವೆಂತಹುದೊ? ನೋವದೆಂತಹುದೊ? ||
ಬೇವಸವ ಪಟ್ಟು ತಿಳಿ; ತಿಳಿದು ಹಳಿಯುವೊಡೆ ಹಳಿ |
ಗಾವಿಲನ ಗಳಹೇನು? – ಮಂಕುತಿಮ್ಮ || ಕಗ್ಗ ೨೨ ||

ಪಾರಿಜಾತವ ಕಂಡು ನಿಡುಸುಯ್ದು; ಪದಗಳಿಂ |
ಶೌರಿಕಥೆಯನು ಹೆಣೆದು ತೃಪ್ತನಹನು ಕವಿ ||
ಊರಿನುದ್ಯಾನಕದ ತರಿಸಿ ಬೆಳಸುವ ಕಾರ್ಯ- |
ಧೀರನಲ ರಾಜ್ಯಕನು – ಮಂಕುತಿಮ್ಮ || ಕಗ್ಗ ೨೩ ||

ಕಾಳನುದಯದಿ ಬಿತ್ತೆ ಸಂಜೆಗದು ಪೈರಹುದೆ? |
ಪಾಲುಂಟು ಕಾಲಂಗೆ ನಮ್ಮ ಕೃಷಿಗಳಲಿ ||
ವೇಳೆ ಗಡು ಮರೆತಾತುರದಿನ್ ಅಡುಗೆ ಪಕ್ಕಹುದೆ? |
ತಾಳುಮೆಯೆ ಪರಿಪಾಕ – ಮಂಕುತಿಮ್ಮ || ಕಗ್ಗ ೨೪ ||

ಹೆಸರು ಹೆಸರೆಂದು ನೀಂ ಬಸವಳಿವುದೇಕಯ್ಯ? |
ಕಸದೊಳಗೆ ಕಸವಾಗಿ ಹೋಹನಲೆ ನೀನು? ||
ಮುಸುಕಲೀ ಧರೆಯ ಮರೆವೆನ್ನನ್; ಎನ್ನುತ ಬೇಡು |
ಮಿಸುಕದಿರು ಮಣ್ಣಿನಲಿ – ಮಂಕುತಿಮ್ಮ || ಕಗ್ಗ ೨೫ ||

ಸಂದೇಹವೀ ಕೃತಿಯೊಳಿನ್ನಿಲ್ಲವೆಂದಲ್ಲ |
ಇಂದು ನಂಬಿಹುದೆ ಮುಂದೆಂದುಮೆಂದಲ್ಲ ||
ಕುಂದು ತೋರ್ದಂದದನು ತಿದ್ದಿಕೊಳೆ ಮನಸುಂಟು |
ಇಂದಿಗೀ ಮತವುಚಿತ – ಮಂಕುತಿಮ್ಮ || ಕಗ್ಗ ೨೬ ||

ಒರ್ವನೆ ನಿಲುವೆ ನೀನುತ್ಕಟಕ್ಷನಗಳಲಿ |
ಧರ್ಮಸಂಕಟಗಳಲಿ; ಜೀವಸಮರದಲಿ ||
ನಿರ್ವಾಣದೀಕ್ಷೆಯಲಿ; ನಿರ್ಯಾಣಘಟ್ಟದಲಿ |
ನಿರ್ಮಿತ್ರನಿರಲು ಕಲಿ – ಮಂಕುತಿಮ್ಮ || ಕಗ್ಗ ೨೭ ||

ಪ್ರಾಕ್ತನದ ವಾಸನೆಯೆ ಮನಕೆ ಮೊದಲಿನ ಮಂತ್ರಿ |
ಯುಕ್ತಿಗಳ ತನಗೊಪ್ಪುವಂತೆ ತಿರುಗಿಪುದು ||
ಸೂಕ್ತವೆನಿಪುದು ಸಹಜರುಚಿ ತನ್ನ ತರ್ಕವನೆ |
ಗುಪ್ತದೊಳು ಕುಟಿಲವಿದು – ಮಂಕುತಿಮ್ಮ || ಕಗ್ಗ ೨೮ ||

ವ್ಯಸನಕಾರಣವೊಂದು ಹಸನಕಾರಣವೊಂದು |
ರಸಗಳೀಯೆರಡಕಿಂತಾಳವಿನ್ನೊಂದು ||
ಭೃಶವಿಶ್ವಜೀವಿತಗಭೀರತೆಯ ದರ್ಶನದ |
ರಸವದದ್ಭುತಮೌನ – ಮಂಕುತಿಮ್ಮ || ಕಗ್ಗ ೨೯ ||

ಪ್ರೀತಿಮಹಿಮೆಯ ಚಿತ್ರರೀತಿಯಂ ವಾಲ್ಮೀಕಿ |
ನೀತಿಸೂಕ್ಷ್ಮದ ಗಹನಮಾರ್ಗಮಂ ವ್ಯಾಸರ್ ||
ಗೀತೆಯಲಿ ವಿಶ್ವಜೀವನರಹಸ್ಯವನವರ್ |
ಖ್ಯಾತಿಸಿಹರದು ಕಾವ್ಯ – ಮಂಕುತಿಮ್ಮ || ಕಗ್ಗ ೩೦ ||

ಭೌತವಿಜ್ಞಾನಿ ರವಿತಾರೆಧರೆಗಳ ಚಲನ |
ರೀತಿ ವೇಗವನಳೆದು ಶಕ್ತಿಗಳ ಗುಣಿಪನ್ ||
ಪ್ರೀತಿರೋಷಗಳನವನಳೆವನೇನ್? ಅವ್ಯಕ್ತ |
ಚೇತನವನರಿವನೇಂ? – ಮಂಕುತಿಮ್ಮ || ಕಗ್ಗ ೩೧ ||

ಆಶೆಗಳ ಕೆಣಕದಿರು; ಪಾಶಗಳ ಬಿಗಿಯದಿರು |
ಕ್ಲೇಶದ ಪರೀಕ್ಷೆಗಳಿಗೆನ್ನ ಕರೆಯದಿರು ||
ಬೇಸರದ ಪಾತಕಸ್ಮೃತಿಯ ಚುಚ್ಚದಿರ್; ಎನ್ನು- |
ತೀಶನನು ಬೇಡುತಿರೊ – ಮಂಕುತಿಮ್ಮ || ಕಗ್ಗ ೩೨ ||

ಒಂದು ಕೊಂಬೆಯು ಬಾಡಲಿನ್ನೊಂದು ಚಿಗುರುವುದು |
ಸಂದಿಹುದು ಚಿರನವತೆಯಶ್ವತ್ಥಮರಕೆ ||
ಎಂದೆಂದುಮಂತಿರುವುದೀ ವಿಶ್ವವೃಕ್ಷವದ |
ರೊಂದು ರೆಂಬೆಯೊ ನೀನು – ಮಂಕುತಿಮ್ಮ || ಕಗ್ಗ ೩೩ ||

ಹೆಸರು ಹೆಸರೆಂಬುದೇಂ? ಕಸುರು ಬೀಸುವ ಗಾಳಿ |
ಹಸೆಯೊಂದು ನಿನಗೇಕೆ ಬ್ರಹ್ಮಪುರಿಯೊಳಗೆ? ||
ಶಿಶುವಾಗು ನೀಂ ಮನದಿ; ಹಸುವಾಗು; ಸಸಿಯಾಗು |
ಕಸಬೊರಕೆಯಾಗಿಳೆಗೆ – ಮಂಕುತಿಮ್ಮ || ಕಗ್ಗ ೩೪ ||

ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ |
ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ ||
ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ |
ಶಾಸ್ತ್ರಿತನದಿಂದಲ್ಲ – ಮಂಕುತಿಮ್ಮ || ಕಗ್ಗ ೩೫ ||

ಕಾಲನದಿಯಲಿ ನಮ್ಮ ಬಾಳದೋಣಿಯು ಮೆರೆದು |
ತೇಲುತ್ತೆ ಭಯವ ಕಾಣದೆ ಸಾಗುತಿರಲು ||
ಗಾಳಿಯಾವಗಮೊ ಬಂದೆತ್ತಣಿನೊ ಬೀಸುತ್ತ |
ಮೇಲ ಕೀಳಾಗಿಪುದು – ಮಂಕುತಿಮ್ಮ || ಕಗ್ಗ ೩೬ ||

ಮಂದಿರದ ಶಿಲ್ಪಿ ಯಂತ್ರಗಳ ಯೋಜಕ ರಾಜ್ಯ- |
ಸಂಧಾನಿ ವಿಜ್ಞಾನಿಯುದ್ಯೋಗದಾನಿ ||
ಮಂದಿಮುಂದಾಳು ಜನಬಾಂಧವ್ಯಪೋಷಕನು |
ಸೌಂದರ್ಯಕರರಿವರು – ಮಂಕುತಿಮ್ಮ || ಕಗ್ಗ ೩೭ ||

ಮುಂದೇನೊ; ಮತ್ತೇನೊ; ಇಂದಿಗಾ ಮಾತೇಕೆ? |
ಸಂದರ್ಭ ಬರಲಿ; ಬಂದಾಗಳಾ ಚಿಂತೆ ||
ಹೊಂದಿಸುವನಾರೊ; ನಿನ್ನಾಳಲ್ಲ; ಬೇರಿಹನು |
ಇಂದಿಗಿಂದಿನ ಬದುಕು – ಮಂಕುತಿಮ್ಮ || ಕಗ್ಗ ೩೮ ||

ಸೆರೆಬಿದ್ದು ಧರ್ಮಪಾದಪ ನಿಲದು ಮತಗಳಲಿ |
ಜರೆಯಿಂದ ಬರಡಹುದು ಮಠದ ನೆರಳಿನಲಿ ||
ಪರಸತ್ತ್ವರಸ ವಿಶ್ವಜೀವನದ ಬೇರ್ಗಳಿಂ |
ನೆರೆಯಲಾ ತರು ಸೊಂಪು – ಮಂಕುತಿಮ್ಮ || ಕಗ್ಗ ೩೯ ||

ಹೊಸಹೊಸಬನಾಗುವನನುಕ್ಷಣಂ ಮಾನವನು |
ವಸುಧೆಯಾ ಮೂಸೆಯಲಿ ಪುಟಪಾಕವಾಂತು ||
ರಸಮೂರ್ತಿಯಾಗುವನು ಜಗದಾತ್ಮಮತಿ ಬೆಳೆಯೆ |
ಕಸವೆಲ್ಲ ಕಳೆದವನು – ಮಂಕುತಿಮ್ಮ || ಕಗ್ಗ ೪೦ ||

ಆವ ಬೇಳೆಯದಾವ ನೀರಿನಲಿ ಬೇಯುವುದೊ! |
ಆವ ಜೀವದ ಪಾಕವಾವ ತಾಪದಿನೋ! ||
ಆ ವಿವರವನು ಕಾಣದಾಕ್ಷೇಪಣೆಯದೇನು? |
ದೈವಗುಟ್ಟದು ತಿಳಿಯೆ – ಮಂಕುತಿಮ್ಮ || ಕಗ್ಗ ೪೧ ||

ಹಾಲ ಕಾಯಿಸಿ ಹೆಪ್ಪನಿಕ್ಕಿ ಕಡೆದೊಡೆ; ಮೊದಲು |
ಮೇಲೆ ಕಾಣದ ಬೆಣ್ಣೆ ತೇಲಿ ಬರುವಂತೆ ||
ಬಾಳನೀ ಜಗದ ಮಂತುವು ಕಡೆಯಲೇಳುವುದು |
ಆಳದಿಂದಾತ್ಮಮತಿ – ಮಂಕುತಿಮ್ಮ || ಕಗ್ಗ ೪೨ ||

ಮಕ್ಕಳ ಭವಿಷ್ಯಕ್ಕೆ ಕಕ್ಕುಲಿತಗೊಳಬೇಡ |
ಪಕ್ಕಾಗುವುದು ಭಾಗ್ಯವೆಂತೆಂತೊ ಜಗದಿ ||
ದಕ್ಕಿತೇಂ ಕುರುಪಾಂಡುತನಯರ್ಗೆ ರಾಜ್ಯಸುಖ? |
ದಿಕ್ಕವರಿಗವರವರೆ – ಮಂಕುತಿಮ್ಮ || ಕಗ್ಗ ೪೩ ||

ಮನಸು ಬೆಳೆಯಲಿ ಭುಜಿಸಿ ನೂರು ನೂರನುಭವವ |
ಹೊನಲು ನೂರೀ ಬಾಳ ಕಡಲನುಬ್ಬಿಸಲಿ ||
ತನುಬಂಧ ಕಳಚಿ; ಜೀವವಖಂಡಚೇತನದ |
ಕುಣಿತದಲಿ ಕೂಡಿರಲಿ – ಮಂಕುತಿಮ್ಮ || ಕಗ್ಗ ೪೪ ||

ಮುತ್ತಿರುವುದಿಂದು ಭೂಮಿಯನೊಂದು ದುರ್ದೈವ |
ಮೃತ್ಯು ಕುಣಿಯುತಲಿಹನು ಕೇಕೆಹಾಕುತಲಿ ||
ಸುತ್ತಿಪುದು ತಲೆಯನನುದಿನದ ಲೋಕದ ವಾರ್ತೆ |
ಎತ್ತಲಿದಕೆಲ್ಲ ಕಡೆ? – ಮಂಕುತಿಮ್ಮ || ಕಗ್ಗ ೪೫ ||

ಜಾನಪದ ಶಿಷ್ಟಿಯಲಿ; ಸಂಪತ್ಸಮಷ್ಟಿಯಲಿ |
ಜ್ಞಾನಸಂಧಾನದಲಿ; ಮೌಲ್ಯ ಗಣನೆಯಲಿ ||
ಮಾನವತೆ ಮಾನುಷ್ಯ ಧಾರ್ಮಿಕತೆಯೆದ್ದುನಿಲೆ |
ಆನಂದ ಧರೆಗಂದು – ಮಂಕುತಿಮ್ಮ || ಕಗ್ಗ ೪೬ ||

ನರಜೀವನದ ರಣದಿ ವಿಧಿಯ ಬಲವೊಂದು ಕಡೆ |
ಚಿರವಿವೇಕದಿ ಬೆಳೆದ ನಲುಮೆಯೊಂದು ಕಡೆ ||
ಉರುಬುತಿರೆ ಪುರುಷಂಗೆ ನಲುಮೆಯುಳಿತವೆ ಗೆಲವು |
ಪುರುಷತನವೇ ವಿಜಯ – ಮಂಕುತಿಮ್ಮ || ಕಗ್ಗ ೪೭ ||

ಸ್ಥೂಲ ಸೂಕ್ಷ್ಮವಿವೇಕರಹಿತೇಷ್ಟ ಬಂಧುಜನ |
ಕಾಲದಂಷ್ಟ್ರಕೆ ನಿನ್ನ ಮೃದುಗೊಳಿಪ ಭಟರು ||
ಸಾಲವನು ನಿನ್ನಿಂದ ಸಲಿಸಿಕೊಳಬಂದವರು |
ತಾಳುಮೆಯಿನವರೊಳಿರು – ಮಂಕುತಿಮ್ಮ || ಕಗ್ಗ ೪೮ ||

ಬಾಳ ಹಳಿವುದದೇಕೆ? ಗೋಳ ಕರೆವುದದೇಕೆ? |
ಬಾಳಿದಲ್ಲದೆ ತಪ್ಪದೇನ ಮಾಡಿದೊಡಂ ||
ಕೇಳಿಯದು ಬೊಮ್ಮನಾಡಿಪನು ನೀನದರೊಳಗೆ |
ಪಾಲುಗೊಳಲಳಬೇಡ – ಮಂಕುತಿಮ್ಮ || ಕಗ್ಗ ೪೯ ||

ಇಲ್ಲಿ ಚೆನ್ನಲ್ಲಿ ಚೆನ್ನೆಲ್ಲೊ ಚೆನ್ನೆನುತೆಣಿಸಿ |
ಹುಲ್ಲುಬಯಲೊಂದೆಡೆಯಿನೊಂದಕ್ಕೆ ನೆಗೆದು ||
ಮೆಲ್ಲದೆಯೆ ಧಾವಿಸುತ ದಣಿವ ಕರುವನು ಪೋಲ್ತೊ- |
ಡೆಲ್ಲಿಯೋ ಸುಖ ನಿನಗೆ? – ಮಂಕುತಿಮ್ಮ || ಕಗ್ಗ ೫೦ ||

ಇಂದ್ರಿಯವ ಜಯಿಸಿದೆಯೊ? ಮಂದವೋ ನಿನ್ನಕ್ಷಿ? |
ಸೌಂದರ್ಯ ಯಕ್ಷಿಣಿಯೆ ನಿನ್ನ ತೊರೆದಿಹಳೋ? ||
ಅಂಧನೆ ವಿರಕ್ತನ್; ಅಪ್ಸರೆಯ ಕಾಣದನೆ ಯತಿ |
ಕಂಡು ಕೆರಳದನಾರೊ! – ಮಂಕುತಿಮ್ಮ || ಕಗ್ಗ ೫೧ ||

ಪುಣ್ಯಪಾಪದ ಮಿಶ್ರ ನರಜಂತುವವನ ನೆಲೆ |
ಮಣ್ಣು ಕರುಳುಗಳೆಸಕವವನ ಮೈದೊಡವು ||
ಬಣ್ಣಬಣ್ಣದ ವಸ್ತ್ರ; ಬಿಳ್ಪೊಡನೆ ಕಪ್ಪಿಹುದು |
ಕಣ್ಣ ದುರುಗುಟಿಸದಿರು – ಮಂಕುತಿಮ್ಮ || ಕಗ್ಗ ೫೨ ||

ಸೌಂದರ್ಯ ಬಾಂಧವ್ಯಗಳು ಸತ್ಯವಲ್ಲದೊಡೆ |
ಕುಂದುವಡೆಯದ ಸತ್ಯವಿಳೆಯೊಳಿನ್ನೆಲ್ಲಿ? ||
ಗಂಧಾನಿಲಂಗಳವು ಪರಸತ್ತ್ವಪುಷ್ಪದವು |
ಸಂದೇಹವೇನೆಲವೊ – ಮಂಕುತಿಮ್ಮ || ಕಗ್ಗ ೫೩ ||

ಹೊಟ್ಟೆರಾಯನ ನಿತ್ಯದಟ್ಟಹಾಸವೊ ಬಾಳು |
ಧೃಷ್ಟ ಧಣಿಯೂಳಿಗಕೆ ಸೊಟ್ಟು ಮೈಬಾಗು ||
ಹಿಟ್ಟಿಗಗಲಿದ ಬಾಯಿ; ಬಟ್ಟೆಗೊಡ್ಡಿದ ಕೈಯಿ |
ಇಷ್ಟೆ ನಮ್ಮೆಲ್ಲ ಕಥೆ – ಮಂಕುತಿಮ್ಮ || ಕಗ್ಗ ೫೪ ||

ಬರೆವ ಹಲಗೆಯನೊಡೆದು ಬಾಲಕನು ತಾನದನು |
ಮರಳಿ ಜೋಡಿಪೆನೆನ್ನುತಾಯಾಸಗೊಳುತ ||
ಸರಿಚೌಕಗೈವಾಟದಲಿ ಜಗವ ಮರೆವಂತೆ |
ಪರಬೊಮ್ಮ ಸೃಷ್ಟಿಯಲಿ – ಮಂಕುತಿಮ್ಮ || ಕಗ್ಗ ೫೫ ||

ಘನತತ್ತ್ವವೊಂದಕ್ಕೆ ದಿನರಾತ್ರಿ ಮನಸೋತು |
ನೆನೆಯದಿನ್ನೊಂದನೆಲ್ಲವ ನೀಡುತದರಾ ||
ಅನುಸಂಧಿಯಲಿ ಜೀವಭಾರವನು ಮರೆಯುವುದು |
ಹನುಮಂತನುಪದೇಶ – ಮಂಕುತಿಮ್ಮ || ಕಗ್ಗ ೫೬ ||

ಸರಕಾರ ಹರಿಗೋಲು; ತೆರೆಸುಳಿಗಳತ್ತಿತ್ತ |
ಸುರೆ ಕುಡಿದವರು ಕೆಲರು ಹುಟ್ಟು ಹಾಕುವರು ||
ಬಿರುಗಾಳಿ ಬೀಸುವುದು; ಜನವೆದ್ದು ಕುಣಿಯುವುದು |
ಉರುಳದಿಹುದಚ್ಚರಿಯೊ! – ಮಂಕುತಿಮ್ಮ || ಕಗ್ಗ ೫೭ ||

ಸೃಷ್ಟಿಯದ್ಭುತಶಕ್ತಿಯುಳ್ಳೊರ್ವನಿರಲು ನ- |
ಮ್ಮಿಷ್ಟಗಳನರಿತು ನೀಡುವುದವನಿಗರಿದೇಂ? ||
ಇಷ್ಟವಾತನೊಳುದಿಸುವಂತೆ; ಚೋದಿಪುದೆಂತು? |
ಕಷ್ಟ ನಮಗಿಹುದಷ್ಟೆ – ಮಂಕುತಿಮ್ಮ || ಕಗ್ಗ ೫೮ ||

ಏನಾದೊಡೆಯುಮಪ್ಪುದುಂಟು; ಸಿದ್ಧನಿರದಕೆ |
ಭಾನು ತಣುವಾದನು; ಸೋಮ ಸುಟ್ಟಾನು ||
ಕ್ಷೋಣಿಯೇ ಕರಗೀತು; ಜಗ ಶೂನ್ಯವಾದೀತು |
ಮೌನದಲಿ ಸಿದ್ಧನಿರು – ಮಂಕುತಿಮ್ಮ || ಕಗ್ಗ ೫೯ ||

ಬಹಿರಂತರಗಳೊಂದು ಭೂತಭವ್ಯಗಳೊಂದು |
ಇಹಪರಂಗಳುಮೊಂದು ಚೈತನ್ಯವೊಂದು ||
ಬಹುಪಾತ್ರನಾಟಕದಿ ಮಾಯೆ ಶತವೇಷಗಳ |
ವಹಿಸಲೀವಳು ಪತಿಗೆ – ಮಂಕುತಿಮ್ಮ || ಕಗ್ಗ ೬೦ ||

ಶುನಕ ಬೆಂಬತ್ತಿತಲ ಧರ್ಮಜನ ಕಡೆವರಂ |
ನಿನಗಂತು ಸಂಗಡಿಗನೊರ್ವನೆಡೆಬಿಡದನ್ ||
ಇಣಿಕಿ ನೋಡರದಾರುಮೆನ್ನುವೆಡೆ ಕಾದಿಹನು |
ಅಣಕಿಗ ಮನಸ್ಸಾಕ್ಷಿ – ಮಂಕುತಿಮ್ಮ || ಕಗ್ಗ ೬೧ ||

ಬನ್ನಬವಣೆಗಳ ತಾನೆನಿತೆನಿತು ಪಟ್ಟಿರೆಯು |
ಮಿನ್ನೊಮ್ಮೆ ಮತ್ತೊಮ್ಮೆ ಹೊಸ ಸಾಹಸಗಳಿಂ ||
ಸನ್ನಹಿಸುವಂ ಸುಮ್ಮನಿರಲೊಲದೆ ಮಾನವನು |
ಚಿನ್ಮಯತೆಯಾತ್ಮಗುಣ – ಮಂಕುತಿಮ್ಮ || ಕಗ್ಗ ೬೨ ||

ಸುತ್ತಿ ಸುತ್ತುವ ಖಗವ ಗೂಡ ನೆನಪೆಳೆಯುವುದು |
ಗೊತ್ತುನೂಲ್ ಪಿಡಿದಿಹುದು ದನವ ಬಯಲಿನಲಿ ||
ತತ್ತ್ವವೊಂದರ ಹಿಡಿತಕೊಗ್ಗದಿಹ ಬಾಳೇನು? |
ಕಿತ್ತ ಗಾಳಿಯ ಪಟವೊ – ಮಂಕುತಿಮ್ಮ || ಕಗ್ಗ ೬೩ ||

ನಟಿಪುದೊಮ್ಮೊಮ್ಮೆ ಮರುಕವ ದೈವ ಮನುಜರಲಿ |
ಕಟುಕನಿನಿಸಕ್ಕಿಯನು ಹಕ್ಕಿಗೆರಚುವವೋಲ್ ||
ತುಟಿ ಸುಟ್ಟು ರಸನೆಗೆಟುಕದ ಕೀರು ದೈವಕೃಪೆ |
ತಟವಟವೊ ಸೃಷ್ಟಿದಯೆ – ಮಂಕುತಿಮ್ಮ || ಕಗ್ಗ ೬೪ ||

ಜೀವನದ ಪರಿಪೂರ್ಣದರ್ಶನವದೊಂದಿಹುದು |
ಭೂವ್ಯೋಮ ವಿಸ್ತರದ ಮಿತಿಯ ಮೀರ್ದುದದು ||
ದೇವ ನರ ಪಶು ಸಸಿಗಳೆಲ್ಲ ಕುಣಿಯುವರಲ್ಲಿ |
ಭಾವಿಸಾ ಚಿತ್ರವನು – ಮಂಕುತಿಮ್ಮ || ಕಗ್ಗ ೬೫ ||

ಇನ್ನೇನು ಮತ್ತೇನು ಗತಿಯೆಂದು ಬೆದರದಿರು |
ನಿನ್ನ ಕೈಯೊಳಗಿಹುದೆ ವಿಧಿಯ ಲೆಕ್ಕಣಿಕೆ? ||
ಕಣ್ಣಿಗೆಟುಕದೆ ಸಾಗುತಿಹುದು ದೈವದ ಸಂಚು |
ತಣ್ಣಗಿರಿಸಾತ್ಮವನು – ಮಂಕುತಿಮ್ಮ || ಕಗ್ಗ ೬೬ ||

ಜಗದ ಬಂದೀಗೃಹದಿ ಬಿಗಿಯುತಿರೆ ವಿಧಿ ನಿನ್ನ |
ನಿಗಮ ಸತ್ಕಲೆ ಕಾವ್ಯಗಳ ಗವಾಕ್ಷಗಳಿಂ ||
ಗಗನದೊಳನಂತದರ್ಶನದೆ ಮುಕ್ತಿಯನೊಂದು |
ನಗುನಗಿಸಿ ಲೋಕವನು – ಮಂಕುತಿಮ್ಮ || ಕಗ್ಗ ೬೭ ||

ಪುಸಿಯ ನೀಂ ಪುಸಿಗೈದು ದಿಟವ ಕಾಣ್ಬವೊಲೆಸಗೆ |
ಮುಸುಕ ತಳೆದಿಹನು ಪರಬೊಮ್ಮನೆನ್ನುವೊಡೆ ||
ಒಸೆದೇತಕವನೀಯನೆಮಗೊಂದು ನಿಜಕುರುಹ |
ನಿಶೆಯೊಳುಡುಕರದವೊಲು? – ಮಂಕುತಿಮ್ಮ || ಕಗ್ಗ ೬೮ ||

ತನ್ನ ಮನದಾಟಗಳ ತಾನೆ ನೋಡುತ ನಗುವ |
ತನ್ನೊಳಗೆ ತಾನಿರ್ವರಾದವೊಲು ಬಾಳ್ವ ||
ಚಿನ್ಮಾತ್ರವನು ಬೇರೆ ಬಗೆದು ಜಾನಿಪ ಚತುರ |
ಧನ್ಯತೆಯ ಕಂಡವನು – ಮಂಕುತಿಮ್ಮ || ಕಗ್ಗ ೬೯ ||

ಮೃತ್ಯುವಿಂ ಭಯವೇಕೆ? ದೇಶಾಂತರಕ್ಕೊಯ್ವ |
ಮಿತ್ರನಾತಂ; ಚಿತ್ರ ಹೊಸದಿರ್ಪುದಲ್ಲಿ ||
ಸಾತ್ತ್ವಿಕದಿ ಬಾಳ್ದವಂಗೆತ್ತಲೇಂ ಭಯವಿಹುದು? |
ಸತ್ರ ಹೊಸದಿಹುದು ನಡೆ – ಮಂಕುತಿಮ್ಮ || ಕಗ್ಗ ೭೦ ||

ಕೃತ್ರಿಮವೊ ಜಗವೆಲ್ಲ | ಸತ್ಯತೆಯದೆಲ್ಲಿಹುದೊ? |
ಕರ್ತೃವೆನಿಸಿದನೆ ತಾಂ ಗುಪ್ತನಾಗಿಹನು ||
ಚತ್ರವೀ ಜಗವಿದರೊಳಾರ ಗುಣವೆಂತಹುದೊ! |
ಯಾತ್ರಿಕನೆ; ಜಾಗರಿರೊ – ಮಂಕುತಿಮ್ಮ || ಕಗ್ಗ ೭೧ ||

ತಂದೆಮಕ್ಕಳಿಗೆ ಹದಗೆಟ್ಟುದನು ಕಾಣೆಯಾ? |
ಹೊಂದಿರುವರವರ್ ಅಹಂತೆಯು ಮೊಳೆಯುವನಕ ||
ತಂದೆಯಾರ್ ಮಕ್ಕಳಾರ್ ನಾನೆಂಬುದೆದ್ದುನಿಲೆ? |
ಬಂಧ ಮುರಿವುದು ಬಳಿಕ – ಮಂಕುತಿಮ್ಮ || ಕಗ್ಗ ೭೨ ||

ಆವ ಕಡೆ ಹಾರುವುದೊ! ಆವ ಕಡೆ ತಿರುಗುವುದೊ! |
ಆವಾಗಳಾವಕಡೆಗೆರಗುವುದೊ ಹಕ್ಕಿ! ||
ನಾವುಮಂತೆಯೆ ಸೃಷ್ಟಿಕೃತ್ರಿಮದ ಕೈಗೊಂಬೆ |
ಜೀವಮಾರ್ಗವನೂಹ್ಯ – ಮಂಕುತಿಮ್ಮ || ಕಗ್ಗ ೭೩ ||

ಮೋಕ್ಷದಾಶೆಯೊಳಮತ್ಯಾತುರತೆಯೊಳಿತಲ್ಲ |
ಶಿಕ್ಷೆ ಬಹುಕಾಲ ನಡೆಯದೆ ಮೋಕ್ಷವಿಲ್ಲ ||
ಲಕ್ಷ್ಯ ತಪ್ಪದೆ ಚರಿಸು ಸಾಮಾನ್ಯಧರ್ಮಗಳ |
ಮೋಕ್ಷ ಸ್ವತಸ್ಸಿದ್ಧ – ಮಂಕುತಿಮ್ಮ || ಕಗ್ಗ ೭೪ ||

ನಾನೆಂಬುದೊಂದಂಶವಿತರ ಜಗವೊಂದಂಶ |
ನಾನು ನೀನುಗಳಳಿದ ಸರ್ವೈಕ್ಯವೊಂದು ||
ಧ್ಯಾನಿಸುತ್ತೈಕ್ಯವನು ಪಾಲಿಸುವುದುಭಯವನು |
ಜಾಣಿನಾ ನಾಟಕವೊ – ಮಂಕುತಿಮ್ಮ || ಕಗ್ಗ ೭೫ ||

ಸತತಮಾರ್ಗಣೆ; ಸಿದ್ಧಿಯಂತಿರಲಿ; ಮಾರ್ಗಣೆಯೆ |
ಗತಿ ಮನುಜಲೋಕಕ್ಕೆ; ಜಗದ ಜೀವವದು ||
ಕೃತಕಾಮರೆಲ್ಲರಾದೊಡೆ ಕೃತ್ಯವುಳಿಯದೊಡೆ |
ಕಥೆ ಮುಗಿವುದಲ ಜಗಕೆ? – ಮಂಕುತಿಮ್ಮ || ಕಗ್ಗ ೭೬ ||

ಧರ್ಮವೆಂಬುದದೇನು? ಕರ್ಮವೆಂಬುದದೇನು? ||
ಬ್ರಹ್ಮಾಂಡಕಥೆಯೇನು? ಜೀವಿತವಿದೇನು? |
ಬ್ರಹ್ಮವೆಲ್ಲಕು ಮೂಲ ಮಾಯೆ ತತ್ಕೃತಿಜಾಲ |
ಬ್ರಹ್ಮವೇ ಜೀವನವೊ – ಮಂಕುತಿಮ್ಮ || ಕಗ್ಗ ೭೭ ||

ಏಸು ಸಲ ತಪವಗೈದೇಸು ಬನ್ನವನಾಂತು |
ಕೌಶಿಕಂ ಬ್ರಹ್ಮರ್ಷಿಪದಕರ್ಹನಾದನ್? ||
ಘಾಸಿಪಡುತಿನ್ನೊಮ್ಮೆ ಮತ್ತೊಮ್ಮೆ ಮರಮರಳಿ |
ಲೇಸಾಗಿಸಾತ್ಮವನು – ಮಂಕುತಿಮ್ಮ || ಕಗ್ಗ ೭೮ ||

ದಿನದಿನವು ಹಳಸುವುವು; ದಿನದಿನವು ಕೊಳೆಯುವುವು |
ಮನುಜಕುಲದೆಲ್ಲ ಕೃತಿವಿಜಯವಿಭವಗಳು ||
ಅನುದಿನವು ಮತ್ತವನು ತೊಳೆದು ಹೊಸತೆನಿಸುವುದೆ |
ಜನುಮಸಫಲತೆ ನಿನಗೆ – ಮಂಕುತಿಮ್ಮ || ಕಗ್ಗ ೭೯ ||

ಮಿತಿಯನರಿತಾಶೆ; ಸಮುಚಿತವ ಮರೆಯದ ಯತ್ನ |
ತೈತಿಕ್ಷೆ ಕಷ್ಟಾಂಶದಪರಿಹಾರ್ಯತೆಗೆ ||
ಮೃತಿಯೆ ಜೀವನಕಥೆಯ ಕೊನೆಯಲ್ಲವೆಂಬರಿವು |
ಹಿತಗಳಿವು ನರಕುಲಕೆ – ಮಂಕುತಿಮ್ಮ || ಕಗ್ಗ ೮೦ ||

ಇರುವುದರೊಳಾದನಿತು ಸೊಗವ ಪಡೆವೊಡೆ ಲೋಗರ್ |
ಅರಿಗೆ ಮೊದಲ್ ಇಹಕೆ ಪರದಾವರಣವಿಹುದನ್ ||
ಪರಮಾರ್ಥಗಣಿತದಿಂದಿಹದರ್ಥಗಳನೆಣಿಸೆ |
ಸರಿ ಲೋಕಬಾಂಧವ್ಯ – ಮಂಕುತಿಮ್ಮ || ಕಗ್ಗ ೮೧ ||

ಭೌತವಿಜ್ಞಾನ ವಿವರಗಳಿನೇನಾತ್ಮಂಗೆ? |
ಪ್ರೇತಪ್ರಯಾಣಕಥೆಯೆಂತಿರ್ದೊಡೇನು? ||
ಜಾತಿ ನೀತಿ ಸಮಾಜ ವರ್ಗಭೇದದಿನೇನು? |
ಘಾತಿಯಿಲ್ಲಾತ್ಮಂಗೆ – ಮಂಕುತಿಮ್ಮ || ಕಗ್ಗ ೮೨ ||

ಬೀಳುವುದ ನಿಲ್ಲಿಪುದು; ಬಿದ್ದುದನು ಕಟ್ಟುವುದು |
ಹಾಲೊಡೆಯೆ ಕಡೆದದನು ತಕ್ರವಾಗಿಪುದು ||
ಹಾಳ ಹಾಳಾಗಿಪುದು; ಹಳದ ಹೊಸತಾಗಿಪುದು |
ಬಾಳಿಗಿದೆ ಚಿರಧರ್ಮ – ಮಂಕುತಿಮ್ಮ || ಕಗ್ಗ ೮೩ ||

ಉಪ್ಪಿಷ್ಟು ಹುಳಿಯಿಷ್ಟು ಕಾರ ಸಿಹಿಯಷ್ಟಿಷ್ಟು |
ಒಪ್ಪಿರ್ದೊಡದು ಭೋಜ್ಯವಂತು ಜೀವಿತಮುಂ ||
ತಪ್ಪು ಸರಿ ಬೆಪ್ಪು ಜಾಣಂದಕುಂದುಗಳ ಬಗೆ |
ಯಿಪ್ಪತ್ತು ಸೇರೆ ರುಚಿ – ಮಂಕುತಿಮ್ಮ || ಕಗ್ಗ ೮೪ ||

ಕಟ್ಟಡದ ಪರಿಯನಿಟ್ಟಿಗೆಯೆಂತು ಕಂಡೀತು? |
ಗಟ್ಟಿ ನಿಲದದು ಬೀಳೆ ಗೋಡೆ ಬಿರಿಯುವುದು ||
ಸೃಷ್ಟಿಕೋಟೆಯಲಿ ನೀನೊಂದಿಟಿಕೆ; ಸೊಟ್ಟಾಗೆ |
ಪೆಟ್ಟು ತಿನ್ನುವೆ ಜೋಕೆ – ಮಂಕುತಿಮ್ಮ || ಕಗ್ಗ ೮೫ ||

ಜ್ವಾಲಮಾಲಾಕುಲ ಜಗದ್ರೂಪ ತಾಂಡವದಿ |
ಲೀಲೆಯಿಂ ಜೀವತೆಯನಾಂತು ಪರಬೊಮ್ಮಂ ||
ತಾಳಲಯಮೇಳನದಿನೊಮ್ಮೆ ರಭಸದಿನೊಮ್ಮೆ |
ಲೋಲನಾಗಿರ್ಪನೆಲೊ – ಮಂಕುತಿಮ್ಮ || ಕಗ್ಗ ೮೬ ||

ಹೊರಗೆ ಹೊಳೆವೊಂದು ಹೊಳಪಿನ ಕಿರಣವೆನ್ನೆದೆಯೊ- |
ಳುರಿಯನೆಬ್ಬಿಸಿ ಹೊಗೆಯನೆರಚಿ ಕಣ್ಗಳಿಗೆ ||
ಕೆರಳಿಪುದು ಕರಣಗಳ; ಮರಳಿಪುದು ಹರಣಗಳ |
ಹೊರಮೋಹವೊಳದಾಹ – ಮಂಕುತಿಮ್ಮ || ಕಗ್ಗ ೮೭ ||

ಜಗದ ಸಂತಾಪ ಸಂತಸ ಸಂಭ್ರಮಂಗಳುಲಿ |
ಬಗಿದು ನರನೆದೆಯ; ಜೀವವ ಪಿಡಿದು ಕುಲುಕೆ ||
ಸೊಗಯಿಪುದು ಮನಸಿಗದು ಕವಿಕಲಾರಸಿಕರ್ಗೆ |
ಜಗ ಸೂರ್ಯಂ ನೀಂ ಕಮಲ – ಮಂಕುತಿಮ್ಮ || ಕಗ್ಗ ೮೮ ||

ಬಾಂದಳದ ಬಾಗು; ರವಿಕಿರಣಗಳ ನೀಳ್ಕೋಲು |
ಇಂದುಮಣಿನುಣ್ಪು; ತಾರೆಗಳ ಕಣ್ಮಿನುಗು ||
ಚೆಂದದಂಗಾಂಗಭಾವದಿ ಮೊದಲ ಪಾಠವಿವು |
ಸೌಂದರ್ಯಗುರು ಪ್ರಕೃತಿ – ಮಂಕುತಿಮ್ಮ || ಕಗ್ಗ ೮೯ ||

ಅಗೆದು ಗೊಬ್ಬರವಿಕ್ಕಿ ನೀರೆರೆದು ತೋಟಿಗನು |
ಜಗಿವ ಮುಳ್ಳಿರಿತಗಳ ಸೈರಿಸೆ ಗುಲಾಬಿ ||
ನಗುವುದೊಂದರೆನಿಮಿಷ; ನಗಲು ಬಾಳ್ಮುಗಿಯುವುದು |
ಮುಗುಳು ದುಡಿತಕೆ ತಣಿಸು – ಮಂಕುತಿಮ್ಮ || ಕಗ್ಗ ೯೦ ||

ಅದರಿಂದ ನೀತಿ ನಯವದರಿಂದ ಕುಲಗೋತ್ರ |
ವದರಿಂದ ರಾಜ್ಯ ಮಠ ಧರ್ಮ ಸಂಸ್ಥೆಗಳು ||
ಒದವುವದರಿಂದೆ ಮಮತಾನಾಶದವಕಾಶ- |
ವದರಿನಾತ್ಮವಿಕಾಸ – ಮಂಕುತಿಮ್ಮ || ಕಗ್ಗ ೯೧ ||

ಕಂಡ ದೈವಕ್ಕೆಲ್ಲ ಕೈಯ ಮುಗಿದೇನಹುದು? |
ಚಂಡಚತುರೋಪಾಯದಿಂದಲೇನಹುದು? ||
ತಂಡುಲದ ಹಿಡಿಯೊಂದು ತುಂಡುಬಟ್ಟೆಯದೊಂದು |
ಅಂಡಲೆತವಿದಕೇನೊ? – ಮಂಕುತಿಮ್ಮ || ಕಗ್ಗ ೯೨ ||

ಕಾಯಕವ ಚರಿಸುತ್ತ; ಮಾನಸವ ಸಯ್ತಿಡುತ |
ಆಯಸಂಬಡಿಸದವೊಲಂತರಾತ್ಮನನು ||
ಮಾಯೆಯೊಡನಾಡುತ್ತ; ಬೊಮ್ಮನನು ಭಜಿಸುತ್ತ |
ಆಯುವನು ಸಾಗಿಸೆಲೊ – ಮಂಕುತಿಮ್ಮ || ಕಗ್ಗ ೯೩ ||

ಬ್ರಹ್ಮವೇ ಸತ್ಯ; ಸೃಷ್ಟಿಯೆ ಮಿಥ್ಯೆಯೆನ್ನುವೊಡೆ |
ಸಂಬಂಧವಿಲ್ಲವೇನಾ ವಿಷಯಯುಗಕೆ? ||
ನಮ್ಮ ಕಣ್ಮನಸುಗಳೆ ನಮಗೆ ಸಟೆ ಪೇಳುವೊಡೆ |
ನೆಮ್ಮುವುದದಾರನೋ? – ಮಂಕುತಿಮ್ಮ || ಕಗ್ಗ ೯೪ ||

ಮೇರುಪರ್ವತಕಿಹುವು ನೂರೆಂಟು ಶಿಖರಗಳು |
ದಾರಿ ನೂರಿರಬಹುದು; ನಿಲುವ ಕಡೆ ನೂರು ||
ಸಾರು ನೀಂ ಯಾತ್ರಿಕರಿಗೆಲ್ಲ ಕೆಳೆಯಾಗಿರುತೆ |
ಮೇರುಸಂಸ್ಕೃತಿಯೆ ಬಲ – ಮಂಕುತಿಮ್ಮ || ಕಗ್ಗ ೯೫ ||

ಬಡಗಿ ಬೇಸಾಯಿ ಕರ್ಮಿಗರೇನು ಯೋಗಿಗಳೊ! |
ಮುಡುಪವರ ಮನಸೆಲ್ಲ ಕೈಯ ದುಡಿತಕ್ಕೆ ||
ಬಿಡುವಿರದು ಬಣಗು ಚಿಂತೆಗೆ; ಬುತ್ತಿ ಹಂಗಿರದು |
ಕಡಿದಲ್ಲವರ್ಗೆ ಬಾಳ್ – ಮಂಕುತಿಮ್ಮ || ಕಗ್ಗ ೯೬ ||

ಜಡವೆಂಬುದೇನು? ಸೃಷ್ಟಿಯಲಿ ಚೇತನ ಸುಪ್ತಿ |
ಅಡಗಿ ನಿದ್ರಿಪುದಲ್ಲಿ ಚೈತನ್ಯದಗ್ನಿ ||
ಮಿಡಿಯೆ ಪರಸತ್ತ್ವ ವಿದ್ಯುದ್ದೀಪ್ತಿಯದನಾಗ |
ನಡೆವುದದು ಜೀವಿವೊಲು – ಮಂಕುತಿಮ್ಮ || ಕಗ್ಗ ೯೭ ||

ವಿಷಯಭೋಗವಿರಕ್ತಿ; ವಿಶ್ವಲೀಲಾಸಕ್ತಿ |
ಕೃಷಿಗೆ ಸಂತತ ದೀಕ್ಷೆ; ವಿಫಲಕೆ ತಿತಿಕ್ಷೆ ||
ವಿಷಮದಲಿ ಸಮದೃಷ್ಟಿ; ವಿವಿಧಾತ್ಮ ಸಂಸೃಷ್ಟಿ |
ಕುಶಲಸಾಧನಗಳಿವು – ಮಂಕುತಿಮ್ಮ || ಕಗ್ಗ ೯೮ ||

ಒಳಿತೆಂದು ಸೊಗಸೆಂದು ಜಗವು ಮೆಚ್ಚುವುದೆಲ್ಲ |
ಕಲೆ ಕಣಂಗಳು ಮಾತ್ರ ಪೂರ್ಣಂಗಳಲ್ಲ ||
ನಲಿವು ಚೆಲುವುಗಳ ಪರಿಪೂರ್ಣ ಮೂಲಾಕೃತಿಯೆ |
ಪರಬೊಮ್ಮನೆನ್ನುವರು – ಮಂಕುತಿಮ್ಮ || ಕಗ್ಗ ೯೯ ||

ಮುಕ್ಕೋಟಿ ದೇವತೆಗಳಾಳುತಿಹ ಲೋಕದಲಿ |
ದಿಕ್ಕುಗಾಣದೆ ಜೀವಿಯಲೆವುದಚ್ಚರಿಯೇಂ? ||
ಒಕ್ಕಟ್ಟನೊಡೆಯರೇ ಕಲಿಯದಿರೆ ನಮ್ಮ ಗತಿ- |
ಗಿಕ್ಕಟ್ಟು ತಪ್ಪುವುದೆ? – ಮಂಕುತಿಮ್ಮ || ಕಗ್ಗ ೧೦೦ ||