Categories
ತ್ರಿಪದಿಗಳು

ಸರ್ವಜ್ಞನ ತ್ರಿಪದಿಗಳು

ಸರ್ವಜ್ಞ ವಚನ 1 :
ಆಡದೆಲೆ ಕೊಡುವವನು | ರೂಢಿಯೊಳಗುತ್ತಮನು
ಆಡಿ ಕೊಡುವವನು ಮಧ್ಯಮನು – ಅಧಮ
ತಾನಾಡಿಯೂ ಕೊಡದವನು ಸರ್ವಜ್ಞ||

ಸರ್ವಜ್ಞ ವಚನ 2 :
ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೆ ಮೇಲು
ಮೇಟಿಯಿಂ ರಾಟಿ ನಡೆದುದಲ್ಲದೆ ದೇಶ
ದಾಟವೇ ಕೆಡುಗು ಸರ್ವಜ್ಞ||

ಸರ್ವಜ್ಞ ವಚನ 3 :
ಯಾತರ ಹೂವಾದರು । ನಾತರೆ ಸಾಲದೆ
ಜಾತಿ- ವಿಜಾತಿಯೆನಬೇಡ – ಶಿವನೊಲಿ
ದಾತನೇ ಜಾತಿ ಸರ್ವಜ್ಞ||

ಸರ್ವಜ್ಞ ವಚನ 4 :
ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ ?
ಜಾತಿವಿಜಾತಿಯೆನಬೇಡ ದೇವನೊಲಿದಾತನೇ
ಜಾತ ಸರ್ವಜ್ಞ||

ಸರ್ವಜ್ಞ ವಚನ 5 :
ಅನ್ನ ದೇವರ ಮುಂದೆ | ಇನ್ನು ದೇವರು ಉಂಟೆ
ಅನ್ನವಿರುವನಕ ಪ್ರಾಣವು – ಜಗದೊಳ
ಗನ್ನವೇ ದೈವ ಸರ್ವಜ್ಞ||

ಸರ್ವಜ್ಞ ವಚನ 6 :
ಕೊಟ್ಟಿದ್ದು ತನಗೆ , ಬಚ್ಚಿಟ್ಟಿದ್ದು ಪರರಿಗೆ
ಕೊಟ್ಟಿದ್ದು ಕೆಟ್ಟಿತೆನಬೇಡ , ಮುಂದೆ
ಕಟ್ಟಿಹುದು ಬುತ್ತಿ , ಸರ್ವಜ್ಞ||

ಸರ್ವಜ್ಞ ವಚನ 7 :
ಸಾಲವನು ತರುವಾಗ । ಹಾಲು – ಹಣ್ಣುಂಬಂತೆ ।
ಸಾಲಿಗನು ಬಂದು ಎಳೆದಾಗ ಕಿಬ್ಬದಿಯ ।
ಕೀಲು ಮುರಿದಂತೆ ಸರ್ವಜ್ಞ||

ಸರ್ವಜ್ಞ ವಚನ 8 :
ವಿದ್ಯೆ ಕಲಿಸದ ತಂದೆ । ಬುದ್ಧಿ ಹೇಳದ ಗುರುವು ।
ಬಿದ್ದಿರಲು ಬಂದ ನೋಡದಾ ತಾಯಿಯೂ ।
ಶುದ್ಧ ವೈರಿಗಳು ಸರ್ವಜ್ಞ||

ಸರ್ವಜ್ಞ ವಚನ 9 :
ಮೂರ್ಖಂಗೆ ಬುದ್ಧಿಯನು ।
ನೂರ್ಕಾಲ ಹೇಳಿದರೆ ಬೋರ್ಕಲ್ಲ ಮೇಲೆ ಮಳಿಗರಿದರಾ ಕಲ್ಲು ।
ನೀರ್ಕೊಳ್ಳಬಹುದೆ ಸರ್ವಜ್ಞ||

ಸರ್ವಜ್ಞ ವಚನ 10 :
ಕತ್ತೆಂಗ ಕೋಡಿಲ್ಲ । ತೊತ್ತಿಗಂ ಗುಣವಿಲ್ಲ ।
ಹತ್ತಿಯಾ ಹೊಲಕ ಗಿಳಿಯಿಲ್ಲ ಡೊಂಬನಿಗೆ ।
ವೃತ್ತಿಯೇ ಇಲ್ಲ ಸರ್ವಜ್ಞ||

ಸರ್ವಜ್ಞ ವಚನ 11 :
ಉಣ ಬಂದ ಲಿಂಗಕ್ಕೆ । ಉಣಲ್ಲಿಕ್ಕದಂತರಿಸಿ
ಉಣದಿರ್ಪ ಲಿಂಗಕ್ಕುಣ ಬಡಿಸಿ – ಕೈಮುಗಿವ
ಬಣಗುಗಳ ನೋಡ ಸರ್ವಜ್ಞ||

ಸರ್ವಜ್ಞ ವಚನ 12 :
ಭೂತೇಶಗೆರಗುವನು ಜಾತಿ ಮಾದಿಗನಲ್ಲ
ಜಾತಿಯಲಿ ಹುಟ್ಟಿ ಶಿವನಿಗೆ ಶರಣೆನ್ನ
ದಾತ ಮಾದಿಗನು ಸರ್ವಜ್ಞ||

ಸರ್ವಜ್ಞ ವಚನ 13 :
ಜಂಗಮನು ಭಕ್ತತಾ । ಲಿಂಗದಂತಿರಬೇಕು ।
ಭಂಸುತ ಪರರ ನಳಿವ ಜಂಗಮನೊಂದು ।
ಮಂಗನೆಂದರಿಗು ಸರ್ವಜ್ಞ||

ಸರ್ವಜ್ಞ ವಚನ 14 :
ಅಂಜದಲೆ ಕೊಂಡಿಹರೆ ನಂಜು ಅಮೃತವದಕ್ಕು
ಅಂಜಿ ಅಳುಕುತಲಿ ಕೊಂಡಿಹರೆ, ಅಮೃತವು
ನಂಜಿನಂತಕ್ಕು ಸರ್ವಜ್ಞ||

ಸರ್ವಜ್ಞ ವಚನ 15 :
ಮೇರುವಿಂಗೆಣೆಯಿಲ್ಲ । ಧಾರುಣಿಕೆ ಸರಿಯಿಲ್ಲ ।
ತಾರಕೆನಿಗಿಂತ ಹಿತರಿಲ್ಲ, ದೈವತಾ ।
ಬೇರೊಬ್ಬನಿಲ್ಲ ಸರ್ವಜ್ಞ||

ಸರ್ವಜ್ಞ ವಚನ 16 :
ಸೋರುವ ಮನೆ ಹೊಲ್ಲ। ಜಾರೆ ಸತಿಯಿರಹೊಲ್ಲ।
ಹೋರುವ ಸೊಸೆಯ ನೆರೆ ಹೊಲ್ಲ, ಕನ್ನದ ।
ಸೂರೆಯೇ ಹೊಲ್ಲ ಸರ್ವಜ್ಞ||

ಸರ್ವಜ್ಞ ವಚನ 17 :
ಏನು ಮನ್ನಿಸದಿರಲು । ಸೀನು ಮನ್ನಿಸಬೇಕು ।
ಸೀನು ಮನ್ನಿಸದೆ ಹೋಗಿಹರೆ ಹೋದಲ್ಲಿ।
ಹಾನಿಯೇ ಬಕ್ಕು ಸರ್ವಜ್ಞ||

ಸರ್ವಜ್ಞ ವಚನ 18 :
ಎಣಿಸುತಿರ್ಪುದು ಬೆರಳು
ಗುಣಿಸುತಿರ್ಪುದು ಜಿಹ್ವೆ ಮನಹೋಗಿ ಹಲವ ನೆನೆದರದು ಹಾಳೂರ
ಶುನಕನಂತಕ್ಕು ಸರ್ವಜ್ಞ||

ಸರ್ವಜ್ಞ ವಚನ 19 :
ಕತ್ತೆಯರಚಿದಡಲ್ಲಿ। ತೊತ್ತು ಹಾಡಿದಡಲ್ಲಿ।
ಮತ್ತೆ ಕುಲರಸಿಕನಿರುವಲ್ಲಿ ಕಡು ನಗೆಯ।
ಹುತ್ತ ಕಾಣಯ್ಯ ಸರ್ವಜ್ಞ||

ಸರ್ವಜ್ಞ ವಚನ 20 :
ಹಲವು ಮಕ್ಕಳ ತಂದೆ । ತಲೆಯಲ್ಲಿ ಜುಟ್ಟವದೆ ।
ಸತಿಗಳಿಗೆ ಜಾವವರಿವವನ
ಹೆಂಡತಿಗೆ ಮೊಲೆಯಿಲ್ಲ ನೋಡಾ ಸರ್ವಜ್ಞ||

ಸರ್ವಜ್ಞ ವಚನ 21 :
ಲಿಂಗವ ಪೂಜಿಸುವಾತ | ಜಂಗಮಕೆ ನೀಡದೊಡೆ
ಲಿಂಗದ ಕ್ಷೋಭೆ ಘನವಕ್ಕು – ಮಹಲಿಂಗ
ಹಿಂಗುವುದು ಅವನ ಸರ್ವಜ್ಞ||

ಸರ್ವಜ್ಞ ವಚನ 22 :
ಕುಲವನ್ನು ಕೆಡಿಸುವದು ಛಲವನ್ನು ಬಿಡಿಸುವದು
ಹೊಲೆಯನಾ ಮನೆಯ ಹೊಗಿಸುವದು ಕೂಳಿನಾ
ಬಲವ ನೋಡೆಂದ ಸರ್ವಜ್ಞ||

ಸರ್ವಜ್ಞ ವಚನ 23 :
ನೆತ್ತಿಯಲಿ ಉಂಬುವದು । ಸುತ್ತಲೂ ಸುರಿಸುವುದು।
ಎತ್ತಿದರೆ ಎರಡು ಹೋಳಹುದು, ಕವಿಗಳಿದ।
ಕುತ್ತರವ ಪೇಳಿ ಸರ್ವಜ್ಞ||

ಸರ್ವಜ್ಞ ವಚನ 24 :
ಸೀತಧಾತುಗಳುಂಟು । ಜಾತಿಹವು ಕುಕ್ಷಿಗಳು ।
ಪಾತಕರು ಮರದಿ ತಿರಿದುಂಬ ನಾಡಿಗೆ ।
ಏತಕ್ಕೆ ಬಹರು ಸರ್ವಜ್ಞ||

ಸರ್ವಜ್ಞ ವಚನ 25 :
ಕನಕದಿಂ ಹಿರಿದಿಲ್ಲ। ದಿನಪನಿಂ ಬೆಳಗಿಲ್ಲ।
ಬೆನಕನಿಂದಧಿಕ ಗಣವಿಲ್ಲಪರದೈವ ।
ತ್ರಿಣಯನಿಂದಿಲ್ಲ ಸರ್ವಜ್ಞ||

ಸರ್ವಜ್ಞ ವಚನ 26 :
ತನುವನ್ನು ಗುರುವಿಂಗೆ। ಮನವನು ಲಿಂಗಕ್ಕೆ।
ಧನವ ಜಂಗಮಕೆ ವಂಚಿಸದ ಭಕ್ತಂಗೆ।
ಅನಘ ಪದವಹುದು ಸರ್ವಜ್ಞ||

ಸರ್ವಜ್ಞ ವಚನ 27 :
ಒಂದರೊಳಗೆಲ್ಲವು ಸಂದಿಸುವದನು ಗುರು
ಚಂದದಿಂ ತೋರಿಕೊಡದಿರಲು ಶೊಷ್ಯನವ
ಕೊಂದನೆಂದರಿಗು ಸರ್ವಜ್ಞ||

ಸರ್ವಜ್ಞ ವಚನ 28 :
ಸಂದಿರ್ದ ಮಾಸವನು । ಕುಂದದಿಮ್ಮಡಿ ಮಾಡಿ ।
ಅಂದಿನಾ ತಿಥಿಯ ನೊಡಗೂಡಲಾ ತಾರೆ ।
ಮುಂದೆ ಬಂದಿಹುದು ಸರ್ವಜ್ಞ||

ಸರ್ವಜ್ಞ ವಚನ 29 :
ಊರಿಂಗೆ ದಾರಿಯ | ನಾರು ತೋರಿದರೇನು
ಸಾರಾಯಮಪ್ಪ ಮತವನರುಹಿಸುವ ಗುರು
ಆರಾದೊಡೇನು ಸರ್ವಜ್ಞ||

ಸರ್ವಜ್ಞ ವಚನ 30 :
ಕುತ್ತಿಗದು ಹರಿದಿಹುದು । ಮತ್ತೆ ಬರುತರೇಳುವದು ।
ಕಿತ್ತು ಬಿಸುಡಲು ನಡೆಯುವದು ಕವಿಜನರ ।
ಅರ್ತಿಯಿಂ ಪೇಳಿ ಸರ್ವಜ್ಞ||

ಸರ್ವಜ್ಞ ವಚನ 31 :
ಕೆಟ್ಟಹಾಲಿಂದ ಹುಳಿ । ಯಿಟ್ಟಿರ್ದ ತಿಳಿಲೇಸು ।
ಕೆಟ್ಟ ಹಾರುವವನ ಬದುಕಿಂದ ಹೊಲೆಯನು ।
ನೆಟ್ಟನೇ ಲೇಸು ಸರ್ವಜ್ಞ||

ಸರ್ವಜ್ಞ ವಚನ 32 :
ಕತ್ತಿಗದು ಹರಿದಿಹುದು। ಮತ್ತೆ ಬರುತೇಳುವದು।
ಕಿತ್ತು ಬಿಸಾಡಲದು ನಡದು,ಕವಿಜನರು ।
ಅರ್ತಿಯಿಂ ಪೇಳಿ ಸರ್ವಜ್ಞ||

ಸರ್ವಜ್ಞ ವಚನ 33 :
ನೇತ್ರಗಳು ಕಾಣಿಸವು । ಶ್ರೋತ್ರಗಳು ಕೇಳಿಸವು ।
ಗಾತ್ರಗಲು ಎದ್ದು ನಡೆಯುವವು ಕೂಳೊಂದು ।
ರಾತ್ರಿ ತಪ್ಪಿದರೆ ಸರ್ವಜ್ಞ||

ಸರ್ವಜ್ಞ ವಚನ 34 :
ಖುಲ್ಲ ಮಾನವ ಬೇಡಿ । ಕಲ್ಲುತಾ ಕೊಡುವದೇ ।
ಸೊಲ್ಲರಿವ ಶಿವನ ಬೇಡಿದಡೆ ಬಯಸಿದುದು ।
ನೆಲ್ಲವನು ಕೊಡುವ ಸರ್ವಜ್ಞ||

ಸರ್ವಜ್ಞ ವಚನ 35 :
ಉತ್ತೊಮ್ಮೆ ಹರಗುವುದು ಬಿತ್ತೊಮ್ಮೆ ಹರಗುವುದು
ಮತ್ತೊಮ್ಮೆ ಹರಗಿ ಕಳೆದೆಗೆದು ಬೆಳೆಯೆ
ತನ್ನೆತ್ತರ ಬೆಳವ ಸರ್ವಜ್ಞ||

ಸರ್ವಜ್ಞ ವಚನ 36 :
ಆತುಮದ ಲಿಂಗವನು
ಪ್ರೀತಿಯಲಿ ಪೂಜಿಪಗೆ ಆತಂಕವಿಲ್ಲ ಭಯವಿಲ್ಲ
ದಶವಿಧದ ಪಾತಕಗಳಿಲ್ಲ ಸರ್ವಜ್ಞ||

ಸರ್ವಜ್ಞ ವಚನ 37 :
ತೆಂಗು ಬಟ್ಟಲು ನುಂಗಿ। ಮುಂಗುಲಿಯನಿಲಿನುಂಗಿ।
ಗಂಗೆವಾಳುಕರ ಹರ ನುಂಗಿ ಜಗವು ಬೆಳ।
ದಿಂಗಳಂತಿಕ್ಕು ಸರ್ವಜ್ಞ||

ಸರ್ವಜ್ಞ ವಚನ 38 :
ಓಂಕಾರ ತಾನಲ್ಲ । ಹ್ರಾಂಕಾರ ಮುನ್ನಲ್ಲ
ಆಂಕಾಶತಳವ ಮೀರೆಹುದು – ಹರಿಯಜರು
ತಾಂ ಕಾಣರಯ್ಯ ಸರ್ವಜ್ಞ||

ಸರ್ವಜ್ಞ ವಚನ 39 :
ತನ್ನ ತಾನರಿದವಂಗೆ ಭಿನ್ನ ಭಾವನೆಯಿಲ್ಲ
ತನ್ನವರು ಇಲ್ಲ ಪರರಿಲ್ಲ, ತ್ರೈಭುವನವೇ
ತನ್ನೊಳಗೆ ಇಹುದು ಸರ್ವಜ್ಞ||

ಸರ್ವಜ್ಞ ವಚನ 40 :
ಸೊಡರು ಲಂಚವ ಕೊಂಡು । ಕೊಡುವ ದೊಪ್ಪಚಿ ಬೆಳಗ ।
ಪೊಡವಿಗಂ ಸೂರ್ಯ ಬೆಳಗೀವೋಲ್ಲಂಚವನು ।
ಹಿಡಿಯದವ ಧರ್ಮಿ ಸರ್ವಜ್ಞ||

ಸರ್ವಜ್ಞ ವಚನ 41 :
ಒಡಲ ದಂಡಿಸಿ ಮುಕ್ತಿ। ಪಡೆವೆನೆಂಬುವನೆಗ್ಗ।
ಬಡಿಗೆಯಲಿ ಹುತ್ತ ಹೊಡೆಯಲಡಗಿಹ ಸರ್ಪ।
ಮಡಿದಿಹುದೆ ಹೇಳು ಸರ್ವಜ್ಞ||

ಸರ್ವಜ್ಞ ವಚನ 42 :
ನುಡಿಸುವದಸತ್ಯವನು । ಕೆಡಿಸುವದು ಧರ್ಮವನು ।
ಹಿಡಿಸಿವದು ಕಟ್ಟಿ ಒಡಿಲ ತಾ ಲೋಭವಾ ।
ಹಡಣ ಕಾಣಯ್ಯ ಸರ್ವಜ್ಞ||

ಸರ್ವಜ್ಞ ವಚನ 43 :
ಊರಿಗೆ ದಾರಿಯ । ನಾರು ತೋರಿದರೇನು
ಸಾರಾಯಮಪ್ಪ ಮತವನರಿಹಿಸುವ ಗುರು
ಆರಾದೊಡೇನು ಸರ್ವಜ್ಞ||

ಸರ್ವಜ್ಞ ವಚನ 44 :
ಬಡವನೊಂದೊಳು ನುಡಿಯ ನುಡಿದಿಹರೆ ನಿಲ್ಲದದು ।
ಕೊಡೆಯನೆಳಲಾತ ನುಡಿದಿಹರೆ ನಾಯಕನ ।
ನುಡಿಯಂಬರೆಲ್ಲ ಸರ್ವಜ್ಞ||

ಸರ್ವಜ್ಞ ವಚನ 45 :
ಮೀರಿ ಬೆಳೆಯಲ್ಕೆನಗೆ । ಅರಿ ಬಣ್ಣವನುಡಿಸಿ
ಮೂರು ರುಚಿದೋಳು ಶಿವ – ತನ್ನನು
ತೋರದೇ ಹೋದ ಸರ್ವಜ್ಞ||

ಸರ್ವಜ್ಞ ವಚನ 46 :
ಒಬ್ಬರಿದ್ದರೆ ಸ್ವಾಂತ । ಇಬ್ಬರಲಿ ಏಕಾಂತ ।
ಇಬ್ಬರಿಂದೊಬ್ಬನರಿದು ಬೇರೊಬ್ಬನಿಂ ।
ಹಬಿ ಲೋಕಾಂತ ಸರ್ವಜ್ಞ||

ಸರ್ವಜ್ಞ ವಚನ 47 :
ಅರೆ ಕಲ್ಲಿನ ಮೇಲೆ । ಮರವು ಹುಟ್ಟಿದ ಕಂಡೆ।
ಮರದ ಮೇಲೆರಡು ಕರ ಕಂಡೆ, ವಾಸನೆಯು।
ಬರುತಿಹುದ ಕಂಡೆ ಸರ್ವಜ್ಞ||

ಸರ್ವಜ್ಞ ವಚನ 48 :
ಕತ್ತೆ ಬೂದಿಯಲಿ ಹೊರಳಿ ಮತ್ತೆ ಯತಿಯಪ್ಪುದೇ ?
ತತ್ವವರಿಯದಲೆ ಭಸಿತವಿಟ್ಟವ ಶುದ್ಧ
ಕತ್ತೆಯಂತೆಂದ ಸರ್ವಜ್ಞ||

ಸರ್ವಜ್ಞ ವಚನ 49 :
ಲೀಲೆಯಿಂ ಕಣ್ಣಿಲ್ಲ । ಗಾಲಿಯಿಂ ಬಟುವಿಲ್ಲ ।
ವಾಲಿಯಿಂದಧಿಕ ಬಲರಿಲ್ಲ ಪರದೈವ ।
ಶೂಲಿಯಿಂದಿಲ್ಲ ಸರ್ವಜ್ಞ||

ಸರ್ವಜ್ಞ ವಚನ 50 :
ಸಾಲವನು ಕೊಂಬಾಗ ಹಾಲುಹಣ್ಣುಂಡಂತೆ
ಸಾಲಿಗನು ಬಂದು ಎಳೆವಾಗ ಕಿಬ್ಬದಿಯ
ಕೀಲು ಮುರಿದಂತೆ ಸರ್ವಜ್ಞ||

ಸರ್ವಜ್ಞ ವಚನ 51 :
ಇಂದ್ರನಾನೆಯನೇರೆ । ಒಂದುವನು ಕೊಡಲರೆಯ
ಚಂದ್ರಶೇಖರನು ಮುದಿಯೆತ್ತ – ನೇರೆ ಬೇ
ಕೆಂದುದನು ಕೊಡುವ ಸರ್ವಜ್ಞ||

ಸರ್ವಜ್ಞ ವಚನ 52 :
ಭಿಕ್ಷವ ತಂದಾದೊಡಂ ಭಿಕ್ಷವನಿಕ್ಕುಣಬೇಕು
ಅಕ್ಷಯಪದವು ತನಗಕ್ಕು ಇಕ್ಕದೊಡೆ
ಭಿಕ್ಷುಕನೆಯಕ್ಕು ಸರ್ವಜ್ಞ||

ಸರ್ವಜ್ಞ ವಚನ 53 :
ಗುರುವಿನಾ ಸೇವೆಯನು । ಹಿರಿದಾಗಿ ಮಾಡದಲೆ ।
ಹರಿದಾಡಿ ಮುಕ್ತಿ ಪಡೆಯುವಡೆ ಸ್ವರ್ಗ ತಾ ।
ಹಿರಿಯ ತವರಹುದೆ ಸರ್ವಜ್ಞ||

ಸರ್ವಜ್ಞ ವಚನ 54 :
ಲಿಂಗಪೂಜಿಸುವಾತ ಜಂಗಮಕ್ಕೆ ನೀಡಿದೊಡೆ
ಲಿಂಗದಾ ಕ್ಷೇಮ ಘನವಾಗಿ ಆ ಲಿಂಗ
ಹಿಂಗದಿರುತಿಹುದು ಸರ್ವಜ್ಞ||

ಸರ್ವಜ್ಞ ವಚನ 55 :
ನಿದ್ದೆಯಲಿ ಬುದ್ಧಿಲ್ಲ ಭದ್ರೆಗಂ ತಾಯಿಲ್ಲ ।
ಕದ್ದು ಕೊಂಬಂಗೆ ಬದುಕಿಲ್ಲ ।
ಮರಣಕ್ಕೆ ಮದ್ದುಗಳೆ ಇಲ್ಲ ಸರ್ವಜ್ಞ||

ಸರ್ವಜ್ಞ ವಚನ 56 :
ಅರಿತು ಮಾಡಿದ ಪಾಪ । ಮರೆತರದು ಪೋಪುದೇ ।
ಮರೆತರಾಮರವ ಬಿಡಿಸುವದು, ಕೊರೆತೆಯದು ।
ಅರಿತು ನೋಡೆಂದ ಸರ್ವಜ್ಞ||

ಸರ್ವಜ್ಞ ವಚನ 57 :
ಎತ್ತಾಗಿ ತೊತ್ತಾಗಿ । ಹಿತ್ತಿಲದ ಗಿಡವಾಗಿ
ಮತ್ತೆ ಪಾದದ ಕೆರವಾಗಿ – ಗುರುವಿನ
ಹತ್ತಿಲಿರು ಎಂದು ಸರ್ವಜ್ಞ||

ಸರ್ವಜ್ಞ ವಚನ 58 :
ಒಂದನ್ನು ಎರಡೆಂಬ। ಹಂದಿ ಹೆಬ್ಬುಲಿಯೆಂಬ।
ನಿಂದ ದೇಗುಲವು ಮರನೆಂಬ ಮೂರ್ಖ ತಾ।
ನೆಂದಂತೆ ಎನ್ನಿ ಸರ್ವಜ್ಞ||

ಸರ್ವಜ್ಞ ವಚನ 59 :
ಕೊಡುವಾತನೇ ಮೃಢನು | ಪಡೆವಾತನೇ ನರನು
ಒಡಲು-ಒಡವೆಗಳು ಕೆಡೆದು ಹೋಗದ ಮುನ್ನ
ಕೊಡು ಪಾತ್ರವನರಿದು ಸರ್ವಜ್ಞ||

ಸರ್ವಜ್ಞ ವಚನ 60 :
ಉಕ್ಕುವದು ಸೊಕ್ಕುವದು ಕೆಕ್ಕನೇ ಕೆಲೆಯುವದು
ರಕ್ಕಸನವೋಲು ಮದಿಸುವದು ಒಂದು ಸೆರೆ
ಯಕ್ಕಿಯಾ ಗುಣವು ಸರ್ವಜ್ಞ||

ಸರ್ವಜ್ಞ ವಚನ 61 :
ಅಡಿಯನಿಮ್ಮಡಿ ಮಾಡಿ ।
ಒಡಕೂಡಿ ಹನ್ನೊಂದು ತಡೆಯದಿನ್ನೂರು ಹತ್ತಕ್ಕೆ ಭಾಗಿಸಲು ।
ನಡೆವ ಗಳಿಗಕ್ಕು ಸರ್ವಜ್ಞ||

ಸರ್ವಜ್ಞ ವಚನ 62 :
ನೋಡಿದರೆ ಎರಡೂರು । ಕೂಡಿದಾ ಮಧ್ಯದಲಿ।
ಮೂಡಿಹ ಸ್ಮರನ ಮನೆಯಲ್ಲಿ ಜಗವು ಬಿ ।
ದ್ದಾಡುತಲಿಹುದು ಸರ್ವಜ್ಞ||

ಸರ್ವಜ್ಞ ವಚನ 63 :
ತಾಗಿ ಬಾಗುವದರಿಂ । ತಾಗದಿಹುದು ಲೇಸು ।
ತಾಗಿ ಮೂಗೊಡದು ಬುಗುಟಿದ್ದು ಬಾಗುವದು ।
ಹೇಗನಾ ಗುಣವು ಸರ್ವಜ್ಞ||

ಸರ್ವಜ್ಞ ವಚನ 64 :
ಮಲಯಜದ ಮರದೊಳಗೆ ಸಲೆ ಗಂಧವಿಪ್ಪಂತೆ
ಸುಲಲಿತವು ಆದ ಶರಣರಾಹೃದಯದಲಿ
ನೆಲಸಿಹನು ಶಿವನು ಸರ್ವಜ್ಞ||

ಸರ್ವಜ್ಞ ವಚನ 65 :
ಒಕ್ಕಲಿಕ ನೋದಲ್ಲ । ಬೆಕ್ಕು ಹೆಬ್ಬುಲಿಯಲ್ಲ ।
ಎಕ್ಕಿಯಾ ಗಿಡವು ಬನವೆಲ್ಲ ಇವು ಮೂರು ।
ಲೆಕ್ಕದೊಳಗೆಲ್ಲ ಸರ್ವಜ್ಞ||

ಸರ್ವಜ್ಞ ವಚನ 66 :
ಮಾತು ಬಲ್ಲಹ ತಾನು । ಸೋತುಹೋಹುದ ಲೇಸು ।
ಮಾತಿಂಗೆ ಮಾತು ಮಥಿಸಲ್ಕೆ ವಿಧಿ ಬಂದು ।
ಆತುಕೊಂಡಿಹುದು ಸರ್ವಜ್ಞ||

ಸರ್ವಜ್ಞ ವಚನ 67 :
ಅಕ್ಕರವ ಕಲಿತಾತ ಒಕ್ಕಲನು ತಿನಕಲಿತ
ಲೆಕ್ಕವ ಕಲಿತ ಕರಣಿಕನು ನರಕದಲಿ
ಹೊಕ್ಕಿರಲು ಕಲಿತ ಸರ್ವಜ್ಞ||

ಸರ್ವಜ್ಞ ವಚನ 68 :
ಕಳ್ಳನೂ ಒಳ್ಳಿದನು । ಎಲ್ಲ ಜಾತಿಯೊಳಿಹರು ।
ಕಳ್ಳನೊಂದೆಡೆಗೆ ಉಪಕಾರಿ, ಪಂಚಾಳ ।
ನೆಲ್ಲರಲಿ ಕಳ್ಳ ಸರ್ವಜ್ಞ||

ಸರ್ವಜ್ಞ ವಚನ 69 :
ಮೊಬ್ಬಿನಲಿ ಕೊಬ್ಬಿದರು । ಉಬ್ಬಿ ನೀ ಬೀಳದಿರು ।
ಒಬ್ಬರಲಿ ಬಾಳ ಬಂದಲ್ಲಿ ಪರಸತಿಯು ।
ತಬ್ಬ ಬೇಡೆಂದ ಸರ್ವಜ್ಞ||

ಸರ್ವಜ್ಞ ವಚನ 70 :
ಪಾಪ – ಪುಣ್ಯಗಳೆಂಬ । ತಿಣ್ಣ ಭೇದಗಳಿಂದ ।
ತಣ್ಣಗೀ ಜಗವು ನಡೆದಿಹುದು ಅಲ್ಲದಡ ।
ನುಣ್ಣಗಾಗಿಹುದು ಸರ್ವಜ್ಞ||

ಸರ್ವಜ್ಞ ವಚನ 71 :
ಉರಿ ಬಂದು ಬೇಲಿಯನು । ಹರಿದು ಹೊಕ್ಕುದ ಕಂಡೆ।
ಅರಿಯದದು ಬಗೆಗೆ ಕವಿಕುಲದ ಶ್ರೇಷ್ಠರುಗ।
ಳರಿದರಿದ ಪೇಳಿ ಸರ್ವಜ್ಞ||

ಸರ್ವಜ್ಞ ವಚನ 72 :
ತತ್ವಮಸಿ ಹುಸಿದಿಹರೆ । ಮುತ್ತೊಡೆದು ಬೆಸದಿಹರೆ ।
ಉತ್ತಮರು ಕೆಡಕ ಕಲಿಸಿದರೆ ಲೋಕ ತಾ ।
ನೆತ್ತ ಸಾಗುವದು ಸರ್ವಜ್ಞ||

ಸರ್ವಜ್ಞ ವಚನ 73 :
ಸತ್ತಕತ್ತೆಯ ಹೊತ್ತ । ಕೆತ್ತಣದ ಹೊಲೆಯನವ ।
ಉತ್ತಮನು ಎಂದು ಹೆರರೊಡನೆ ಹೊತ್ತವನೆ ।
ನಿತ್ಯವೂ ಹೊಲೆಯ ಸರ್ವಜ್ಞ||

ಸರ್ವಜ್ಞ ವಚನ 74 :
ವಿಷಯದಾ ಬೇರನ್ನು । ಬಿಸಿಮಾಡಿ ಕುಡಿದಾತ ಪಶು
ಪತಿಯು ಅಕ್ಕ ಶಶಿಯಕ್ಕು ಮೈಯ್ಬಣ್ಣ
ಮಿಸಿನಿಯಂತಕ್ಕು ಸರ್ವಜ್ಞ||

ಸರ್ವಜ್ಞ ವಚನ 75 :
ಹೇಡಿಂಗೆ ಹಿರಿತನವು। ಮೂಢಂಗೆ ಗುರುತನವು।
ನಾಡ ನೀಚಂಗೆ ದೊರೆತನವು, ದೊರೆತಿಹರೆ।
ನಾಡೆಲ್ಲ ಕೆಡುಗು ಸರ್ವಜ್ಞ||

ಸರ್ವಜ್ಞ ವಚನ 76 :
ಅಗ್ಗ ಸುಗ್ಗಿಗಳುಂಟು । ಡೊಗ್ಗೆ ಮಜ್ಜಿಗೆಯುಂಟು।
ಹೆಗ್ಗುಳದ ಕಾಯಿ ಮೆಲಲುಂಟು ಮೂಢನಾ।
ಡೆಗ್ಗೆನ್ನಬಹುದೆ ಸರ್ವಜ್ಞ||

ಸರ್ವಜ್ಞ ವಚನ 77 :
ನಾಲ್ಕು ಹಣವುಳ್ಳತನಕ । ಪಾಲ್ಕಿಯಲಿ ಮೆರೆದಿಕ್ಕು ।
ನಾಲ್ಕು ಹಣ ಹೋದ ಮರುದಿನವೆ,
ಕೋಳದಲಿ ಸಿಲ್ಕಿದಂತಕ್ಕು ಸರ್ವಜ್ಞ||

ಸರ್ವಜ್ಞ ವಚನ 78 :
ಮೊಸರು ಇಲ್ಲದ ಊಟ । ಪಸರವಿಲ್ಲದ ಕಟಕ ।
ಹಸನವಿಲ್ಲದಳ ರತಿಕೂಟ ಜಿನನ ಬಾಯ್ ।
ಕಿಸುಕುಳದಂತೆ ಸರ್ವಜ್ಞ||

ಸರ್ವಜ್ಞ ವಚನ 79 :
ಅತ್ತೆ ಮಾಡಿದ ತಪ್ಪು । ಗೊತ್ತಿಲ್ಲದಡಗಿಹುದು ।
ತೊತ್ತದನು ಮಾಡಿದಾಕ್ಷಣದಿ ಸುತ್ತಲುಂ ।
ಗೊತ್ತಿಹುದು ನೋಡ ಸರ್ವಜ್ಞ||

ಸರ್ವಜ್ಞ ವಚನ 80 :
ಕರೆವಾಸೆ ಗೊಲ್ಲಂಗೆ । ನಿರಿಯಾಸೆ ಸೂಳೆಗೆ।
ಒರೆಯಾಸೆ ಕತ್ತಿಯಲಗಿಂಗೆ, ಹಾದರಕೆ।
ಮರೆಯಾಟದಾಸೆ, ಸರ್ವಜ್ಞ||

ಸರ್ವಜ್ಞ ವಚನ 81 :
ಮುತ್ತು ಮೂಗುತಿಯೇಕೆ। ಮತ್ತೆ ಹರಳುಗಳೇಕೆ।
ಕತ್ತೆಯ ಕೊಳೆಗೆ ಮಡಿಯೇಕೆ, ದೊರೆತನವು।
ತೊತ್ತಿಗೇಕೆಂದ ಸರ್ವಜ್ಞ||

ಸರ್ವಜ್ಞ ವಚನ 82 :
ಎಲುವಿಲ್ಲ ನಾಲಿಗೆಗೆ । ಬಲವಿಲ್ಲ ಬಡವಂಗೆ ।
ತೊಲೆ ಕಂಭವಿಲ್ಲ ಗಗನಕ್ಕೆ, ದೇವರಲಿ ।
ಕುಲಭೇದವಿಲ್ಲ ಸರ್ವಜ್ಞ||

ಸರ್ವಜ್ಞ ವಚನ 83 :
ಊರು ಸನಿಹದಲಿಲ್ಲ। ನೀರೊಂದು ಗಾವುದವು।
ಸೇರಿ ನಿಲ್ಲುವರೆ ನೆಳಲಿಲ್ಲ, ಬಡಗಲ ।
ದಾರಿ ಬೇಡೆಂದ ಸರ್ವಜ್ಞ||

ಸರ್ವಜ್ಞ ವಚನ 84 :
ಕೋಡಗವು ಕುದುರೆಯಲಿ। ನೋಡನೋಡುತ ಹುಟ್ಟಿ।
ಕಾಡಾನೆಗೆರಡು ಗರಿ ಮೂಡಿ ಗಗನದಿರಿ।
ದಾಡುವುದ ಕಂಡೆ ಸರ್ವಜ್ಞ||

ಸರ್ವಜ್ಞ ವಚನ 85 :
ಬಟ್ಟಲದ ಬಾಯಂತೆ। ಹುಟ್ಟುವುದು ಜಗದೊಳಗೆ।
ಮುಟ್ಟದದು ತನ್ನ ಹೆಂಡಿರನು, ಕವಿಗಳಲಿ।
ದಿಟ್ಟರಿದ ಪೇಳಿ ಸರ್ವಜ್ಞ||

ಸರ್ವಜ್ಞ ವಚನ 86 :
ತನ್ನ ಸುತ್ತಲು ಮಣಿಯು।ಬೆಣ್ಣೆ ಕುಡಿವಾಲುಗಳ।
ತಿನ್ನದಲೆ ಹಿಡಿದು ತರುತಿಹುದು ಕವಿಗಳಿದ ।
ನನ್ನಿಯಿಂ ಪೇಳಿ ಸರ್ವಜ್ಞ||

ಸರ್ವಜ್ಞ ವಚನ 87 :
ಕಳ್ಳಿಯೊಳು ಹಾಲು, ಮುಳು ಗಳ್ಳಿಯೊಳು ಹೆಜ್ಜೇನು
ಎಳ್ಳಿನೊಳಗೆಣ್ಣೆ ಹನಿದಿರಲು, ಶಿವಲೀಲೆ
ಸುಳ್ಳೆನ್ನಬಹುದೆ? ಸರ್ವಜ್ಞ||

ಸರ್ವಜ್ಞ ವಚನ 88 :
ಆಗಿಲ್ಲ ಹೋಗಿಲ್ಲ, ಮೇಗಿಲ್ಲ ಕೆಳಗಿಲ್ಲ
ತಾಗಿಲ್ಲ ತಪ್ಪು ತಡೆಯಿಲ್ಲ ಲಿಂಗಕ್ಕೆ
ದೇಗುಲವೆ ಇಲ್ಲ ಸರ್ವಜ್ಞ||

ಸರ್ವಜ್ಞ ವಚನ 89 :
ಬಿಂದುವ ಬಿಟ್ಟು ಹೋ । ದಂದು ಬಸುರಾದಳವ
ಳಂದದಿಯಷ್ಟಾದಶ ಮಾಸ – ಉದರದಲಿ
ನಿಂದು ನಾ ಬೆಳೆದೆ ಸರ್ವಜ್ಞ||

ಸರ್ವಜ್ಞ ವಚನ 90 :
ಉಂಬಳಿಯ ಇದ್ದವನು ಕಂಬಳಿಯ ಹೊದೆಯುವನೇ?
ಶಂಭುವಿರಲಿಕ್ಕೆ ಮತ್ತೊಂದು ದೈವವ
ನಂಬುವನೇ ಹೆಡ್ಡ ಸರ್ವಜ್ಞ||

ಸರ್ವಜ್ಞ ವಚನ 91 :
ಕಾಯ ಕಮಲದ ಸಜ್ಜೆ, ಜೀವರತನುವೆ ಲಿಂಗ
ಭವ ಪುಶ್ಪದಿಂ ಶಿವಪೂಜೆ ಮಾಡುವರ
ದೇವರೆಂದೆಂಬೆ ಸರ್ವಜ್ಞ||

ಸರ್ವಜ್ಞ ವಚನ 92 :
ಹಲ್ಲಮೇಲಿನ ಕೆಂಪು । ಕಲ್ಲ ಮೇಲಿನ ಹಾಂಸೆ ।
ಮಲ್ಲಿಗೆಯ ಅರಳತನಿಗಂಪು ಹೊಸಮೋಹ ।
ನಿಲ್ಲವು ಕಾಣಾ ಸರ್ವಜ್ಞ||

ಸರ್ವಜ್ಞ ವಚನ 93 :
ನಿಜ ವಿಜಯ ಬಿಂದುವಿನ । ಧ್ವಜಪತಾಕೆಯ ಬಿರುದು ।
ಅಜ ಹರಿಯು ನುತಿಸಲರಿಯರಾ ಮಂತ್ರವನು ।
ನಿಜಯೋಗಿ ಬಲ್ಲ ಸರ್ವಜ್ಞ||

ಸರ್ವಜ್ಞ ವಚನ 94 :
ಮೂರು ಗಾವುದವನ್ನು ಹಾರಬಹುದೆಂದವರ ।
ಹಾರಬಹುದೆಂದು ಎನಬೇಕು, ಮೂರ್ಖನಾ ।
ಹೋರಾಟ ಸಲ್ಲ ಸರ್ವಜ್ಞ||

ಸರ್ವಜ್ಞ ವಚನ 95 :
ಹಂಗಿನ ಹಾಲಿನಿಂ । ದಂಬಲಿಯ ತಿಳಿ ಲೇಸು।
ಭಂಗಬಟ್ಟುಂಬ ಬಿಸಿಯಿಂದ ತಿರಿವರ।
ಸಂಗವೇ ಲೇಸು ಸರ್ವಜ್ಞ||

ಸರ್ವಜ್ಞ ವಚನ 96 :
ನಡೆಯುವುದೊಂದೇ ಭೂಮಿ ಕುಡಿವುದೊಂದೇ ನೀರು
ಸುಡುವಗ್ನಿಯೊಂದೇ ಇರುತಿರಲು ಕುಲಗೋತ್ರ
ನಡುವೆ ಎತ್ತಣದು? ಸರ್ವಜ್ಞ||

ಸರ್ವಜ್ಞ ವಚನ 97 :
ನಲ್ಲೆತ್ತು ಬಂಡಿ ಬಲ । ವಿಲ್ಲದಾ ಆರಂಭ ।
ಕಲ್ಲು ಕಳೆಗಳನು ಬಿಟ್ಟವನು ಹೊಲದೊಳಗೆ ।
ಹುಲ್ಲನೇ ಬೆಳೆವ ಸರ್ವಜ್ಞ||

ಸರ್ವಜ್ಞ ವಚನ 98 :
ಕಾಯಕವು ಉಳ್ಳವಕ । ನಾಯಕನು ಎನಿಸಿಪ್ಪ ।
ಕಾಯಕವು ತೀರ್ದ ಮರುದಿನವೆ, ಸುಡುಗಾಡ ।
ನಾಯಕನು ಎನಿಪ ಸರ್ವಜ್ಞ||

ಸರ್ವಜ್ಞ ವಚನ 99 :
ನಲ್ಲ ಒಲ್ಲಿಯನೊಲ್ಲ । ನೆಲ್ಲಕ್ಕಿ ಬೋನೋಲ್ಲ ।
ಅಲ್ಲವನು ಒಲ್ಲ । ಮೊಸರೊಲ್ಲ ಯಾಕೊಲ್ಲ ।
ಇಲ್ಲದಕೆ ಒಲ್ಲ ಸರ್ವಜ್ಞ||

ಸರ್ವಜ್ಞ ವಚನ 100 :
ಪ್ರಥಮದಲಿ ಹುಲಿಯಂತೆ। ದ್ವಿತಿಯದಲಿ ಇಲಿಯಂತೆ।
ತೃತಿಯದಲಿ ತಾನು ಕಪಿಯಂತೆ, ಕವಿಗಳಲಿ ।
ಮತಿವಂತರರುಹಿ ಸರ್ವಜ್ಞ||