Categories
Tatvapadagalu ಕನಕದಾಸರು ಮತ್ತು ಮಹಿಪತಿರಾಯರ ತತ್ವಪದಗಳು

ಮಹಿಪತಿರಾಯರ ಅಕಾರಾದಿ ತತ್ವಪದಗಳು

ಅರ್ತುಕೊಳ್ಳಿರಯ್ಯ ನೀವು ಹರಿಯ ನಾಮಾಮೃತ
ಅರ್ತರಿಯದ್ಹಾಂಗೆ ಇರಬೇಕು ಮರ್ತ್ಯ ದೊಳಗೆ
ಅರ್ಥಿಯಾಗಿದೆ ಬನ್ನಿ ಅರ್ತುನೋಡುವ ಗುರುಮೂರ್ತಿಯಿಂದ
ಅರಿತುಕೊಳ್ಳಿರೈಯ್ಯಾ ನೀವು ಹರಿಯ ನಾಮಾಮೃತ
ಅರುಹು ಅಂಜನಾಗದನಕಾ
ಆದಿತತ್ವದ ಸಾರ ತಿಳಿಯದೆ ಭೇದಾಭೇದವಿದ್ಯಾತಕೆ
ಆನೆ ಬಂತಿದಕೋ ಮಹಾಮದ್ದಾನೆ ಬಂತಿದಕೋ
ಇಂದೆನ್ನ ಜನ್ಮ ಪಾವನವಾಯಿತು
ಇದ್ದರಿರಬೇಕು ಸಂಸಾರಸುಖದಲ್ಹೀಗೆ
ಇದೇ ನೋಡಿ ಸ್ವತ್ಯಶುದ್ಧ ಮಡಿ
ಇದೇ ನೋಡಿರೋ ಸುಸ್ನಾನ ಸದ್ಬೋಧದಲಿಹುದು ಮನಾ
ಇದೇ ನೋಡಿರೋ ನಮ್ಮ ಊಟ ಮೇದಿನೊಯೊಳು ಪ್ರಗಟ
ಇನ್ನೇನಿನ್ನೇನು ಎನಗಿನ್ನು ಇನ್ನೇನಿನ್ನೇನು
ಇವನಾ ಕಂಡಿರ್ಯಾ ನಮ್ಮ ನವನೀತ ಚೋರನ
ಉಂಬುವ ಬನ್ನಿರೋ ನೀಟ ಅನುಭವದೂಟ
ಉದಯವಾಯಿತು ಹೃದಯ ಕಮಲದೊಳಗೆ
ಎಚ್ಚರಿಲ್ಲೀ ಮನಕೆ ಯೋಚಿಸಿ ನೊಡದು ಚಿದ್ಘನಕೆ
ಎದ್ದಿರ್ಯಾ ನೀವಿನ್ನೆದ್ದಿರ್ಯಾ
ಎದ್ದಿರ್ಯಾ ನೀವಿನ್ನೆದ್ದಿರ್ಯಾ ಎದ್ದೆವು ನಾವಿನ್ನು ಸದ್ಗುರು ಕೃಪೆಯಿಂದ
ಏನಾಯಿತೇನಾಯಿತು ಮನವೆ
ಏನೆಂದ್ಹೇಳಲಿ ಸ್ವಾನಂದ ಮಹಿಮೆಯು
ಏನು ಸಾಧಿಸುವುದೇನರಿದು
ಏನೆಂದುಸರಲಿ ನಾ ನೆರೆ ಸಂತರಾ
ಏನೊ ಎಂತೊ ತಿಳಿಯದು
ಏನೋ ಮನವೆ ನೀಹೀಂಗಾದಿ
ಏಳುತಲೆದ್ದು ಮನವೆ ನೀ ವಲೀ ನಿಜಖೂನ
ಒಂದು ಪಥವ ಹೊಂದಲರಿಯರೀ ಮನುಜರು
ಒಂದೆ ಸುಪಥವೆ ಲೇಸು ಸದ್ಗುರು ಭಕುತಿಗೆ
ಕಡೆವ ಬನ್ನಿ ಸಡಗರದಿಂದ ಘುಡುಘುಡಿಸಿ
ಕಂಡು ಕಾಣಬೇಕು ಪಿಂಡ ಬ್ರಹ್ಮಾಂಡದೊಡೆಯನ
ಕಂಡೆನು ಕೌತುಕವ ಏನೆಂದ್ಹೇಳಲಿ ಸೋಜಿಗವ
ಕಂಡೆ ನಾನೊಂದು ಕೌತುಕವ
ಕಣ್ಣಹಬ್ಬವಾಯಿತು ಇಂದು ಆನಂದ ಬ್ರಹ್ಮದಾಟವು ಕಣ್ಣಿಲೆ ಕಂಡಿತು
ಕೊಂಡಿರ್ಯಾ ನೀವು ಕೊಂಡಿರ್ಯಾ
ಕಂಡೆವೆಯ್ಯ ನಿಮ್ಮ ಗುರುಪುಣ್ಯ ಚರಣಮಹಿಮೆ
ಕಾಡುತಲಿಹುದು ಬೆಡಗಿನ ಕೋಡುಗ
ಕಾಣಬಹುದಕೆ ಕನ್ನಡಿಯಾಕೆ ಭಿನ್ನವಿಲ್ಲದೆ ನೋಡಿ
ಕೇಳಿಕೊ ಗುರುಬುದ್ಧಿ ಮನವೆ ಕೇಳಿಕೊ ಗುರುಬುದ್ಧಿ
ಕೌತುಕವು ನೋಡಿ ಮಹಾ ಗುರುನಾಮ ಮಹಿಮೆಯು
ಗುರುಭಕುತಿಯಲಿ ಮನವು ಸ್ಥಿರವಗೊಳ್ಳಲಿಬೇಕು
ಜಾಣತನದ ಮಾತು ಏನು ಕೆಲಸವಯ್ಯ ಖೂನ ನೋಡಿ
ಜ್ಞಾನಗುರು ಶುದ್ಧ ಮಡಿವಾಳ
ಜ್ಞಾನವಿಲ್ಲದೆ ಬಾಳೊಂದು ಸಾಧನವೆ
ಜ್ಞಾನದ ನಡಿಬ್ಯಾರೆ ತತ್ವಜ್ಞಾನದ ನಡಿ ಬ್ಯಾರೆ
ಜ್ಞಾನದ ಬಲು ಹುಚ್ಚು ಘನ ಗುರುದಯದೊಲವಿನ ಮೆಚ್ಚು
ತನ್ನರಿಯದವ ಜ್ಞಾನದ ಮಾತಾಡಿದರೇನು
ತಾನಾರು ತನುವು ಆರು ತಿಳಿದು ನೋಡಿ
ತಾನಾ ತಂದನಾನಾ ತಾನಾ ತಂದನಾನಾ
ತಾನೆ ತಾನದನಮ್ಮ ಎನ್ನೊಳು ಘನಬ್ರಹ್ಮ
ತಿಳಿದು ನೋಡೊ ನಿನ್ನೊಳಗೆ ನಿಜಬಣ್ಣ
ದತ್ತ ದತ್ತೆನಲು ಹತ್ತಿ ತಾ ಬಾಹನು
ದ್ವೈತ ಅದ್ವೈತೆಂದು ಹೊಡೆದಾಡದಿರೊ ಪ್ರಾಣಿ
ಧನಲಂಪಟಗೆ ಎಲ್ಲಿಹುದು ಗುರುಕೃಪೆಯ ಜ್ಞಾನ
ನುಡಿದಂತೆ ನಡಿಯಬೇಕು
ನಡಿ ನೋಡುವ ಮನವೆ ಹರಿಯ
ನಿಜ ಗುಹ್ಯದ ಮಾತು
ನಿಮ್ಮಿಂದ ಗುರು ಪರಮ ಕಲ್ಯಾಣವು
ನಿನ್ನೊಳು ನೀನೆ ನಿನ್ನೊಳು ನೀನೆ
ನಿನ್ನೊಳು ನೋಡಾನಂದವ ಎನ್ನ ಮನವೆ ಚೆನ್ನಾಗಿ ಚಿನ್ಮಯವ
ನೆನೆ ಕಂಡ್ಯ ಮನವೆ ಸದ್ಗುರು ದಿವ್ಯ ಪಾದ
ನೋಡಿ ನಿಮ್ಮೊಳು ನಿಜಾನಂದ ಬೋಧ
ನೋಡು ಮನವೆ ನಿನ್ನೊಳಾಡುವ ಹಂಸ
ನೋಡು ಮನವೆ ನಿನ್ನೊಳಾಡುವ ಹಂಸನ
ಬರುದೆ ಭ್ರಮೆಯಗೊಂಡ್ಯೊ ಮರುಳ ಮನುಜ ನೀನು
ಬಲಗೊಳ್ಳಿರೊ ಭಾವ ಭಕ್ತಿಯಿಂದ ನೆಲೆಗೊಂಡು
ಬಾಟ ಪಕಡೋ ಸೀದಾ
ಬಿಡೋ ಬಿಡು ಮನುಜ ಭ್ರಾಂತಿಯ
ಬೆಡಗು ಅಗಮ್ಯವಿದು ಶ್ರೀಗುರುವಿನ ಬೆಡಗು ಅಗಮ್ಯವಿದು
ಬೆಳಗಿನೊಳು ಬೆಳಗಾಯಿತು ನೋಡಿ
ಭಕ್ತಿಗೆ ಮೂರು ಗುಣಗಳು ಬೇಕು ಯುಕ್ತಿವಂತರು ಕೇಳಿ
ಮನಮರಿಯಲಿದ್ದವಗೆಲ್ಲಿಹುದು ಆತ್ಮದ ಖೂನ
ಮನವೇನೆಂಬುದನರಿಯೋ ಮನುಜ
ಮನದಿಂದಲಿ ಮನನೋಡಿ
ಮಾತು ಬಿಡಬೇಕು ನೀತಿ ಹಿಡಿಬೇಕು
ಮಾತಿನಂತಲ್ಲನುಭವ ಜ್ಞಾನ ಮರುಳಜನ ಬಲ್ಲವೇನ
ಮಾಡಬಾರದು ನೋಡಿ ಕೇಡಿಗರ ಸಂಗ
ಮುತ್ತು ಕೊಳ್ಳಿರೋ ಉತ್ತಮರೆಲ್ಲ
ಮೈಹೋಳು ನೀ ಬಂದು ಮೈ ಮರಿಯಬ್ಯಾಡವೋ
ಯುಕ್ತಿಯಿಂದ ಭಕ್ತಿ ಮಾಡಲಿಕ್ಕೆ ಶಕ್ತನಲ್ಲ ನಾ
ವ್ಯರ್ಥವಲ್ಲವೇ ಜನ್ಮ ವ್ಯರ್ಥವಲ್ಲವೆ
ವಸ್ತು ಕಂಡೆನು ಒಂದು ಕರ್ತೃ ಸದ್ಗುರುವಿನ ಕೃಪೆಯಿಂದ
ವಸ್ತು ಒಂದೆ ಅದೆ ಅನಾದಿಯಿಂದ
ಸತ್ಯದಾ ನಡಿ ಹಿಡಿರೋ ಮನುಜರು
ಸುಮ್ಮನಿರಬೇಕು ಸುಜ್ಞಾನಿ ಜಗದೊಳಗೆ
ಸಾಧುರ ಮಹಿಮೆಯು ಸಾಧಿಸದೆ ತಿಳಿಯದು
ಸ್ವಯಂ ಭಾನು ಉದಯವಾದ ನೋಡಿ
ಸ್ವಾನುಭವದ ಸುಖ ಸಾಧಿಸಿ ನೋಡಿರೋ ನೇಮದಿಂದ
ಸ್ವಾನಂದದ ಸುಖ ಏನೆಂದ್ಹೇಳಲಿ ಕೌತುಕ
ಸಾರಿ ಚೆಲ್ಯದ ನೋಡಿ ಹರಿರೂಪದ ಮಹಿಮ
ಸಾವಧಾನವೆಂದು ಶ್ರುತಿಸಾರುತಿದೆಕೊ ಸಾವಧಾನ
ಸಿದ್ಧಾಂತವಿದು ನೋಡಿ ಸದ್ಗುರುವಿನ ಕೃಪೆಯು
ಸೋಜಿಗವಾಯಿತು ಸದ್ಗುರುವಿನ ಕೃಪೆ ಹೇಳಲೇನು
ಹತ್ತಿಲಿಹ ವಸ್ತುನೋಡೊ ಮನವೆ
ಹಸಗೀಡಾಗದಿರು ಮನವೆ ವಿಷಯವಾಸನೆ ಕೂಡ
ಹಣ್ಣು ಕೊಳ್ಳಿರೋ ಪುಣ್ಯವಂತರು ಹಣ್ಣು ಕೊಳ್ಳಿರೋ
ಹತ್ತಿಲಿಹ ವಸ್ತುನೋಡೊ ಮನವೆ
ಹಿಡಿಯಬ್ಯಾಡಿ ಮೌನ ಪಡೆದುಕೊಳ್ಳಿ ಖೂನ
ಹೊಂದು ಮನವೆ ಹೊಂದೆನ್ನ ಮನವೆ
ಹೊಂದಬೇಕು ನಿಜನೋಡಿ ತಂದೆ ಗುರುನಾಥ
ಹೊಂದಿ ಸುಖಿಸು ಹರಿಯ ಪಾದ
ಹಸಗೀಡಾಗದಿರು ಮನವೆ ವಿಷಯವಾಸನೆ ಕೂಡ

Categories
Tatvapadagalu ಕನಕದಾಸರು ಮತ್ತು ಮಹಿಪತಿರಾಯರ ತತ್ವಪದಗಳು

ಕನಕದಾಸರ ಅಕಾರಾದಿ ತತ್ವಪದಗಳು

ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ
ಅಡಿಗೆಯನು ಮಾಡಬೇಕಣ್ಣ ನಾನೀಗ ಜ್ಞಾನ
ಅರಿಗಳವಲ್ಲಾತ್ಮ ಯೋಗಸಿದ್ಧಿ
ಅಹುದಾದರಹುದೆನ್ನಿ ಅಲ್ಲವಾದರಲ್ಲವೆನ್ನಿ
ಆರಿಗಾರಿಲ್ಲವಾಪತ್ಕಾಲದೊಳಗೆ
ಆರುಸಂಗಡ ಬಾಹೋರಿಲ್ಲ
ಆರು ಬದುಕಿದರಯ್ಯ ಹರಿ ನಿನ್ನ ನಂಬಿ
ಆರು ಬಾಳಿದರೇನು ಆರು ಬದುಕಿದರೇನು
ಆವ ಕರ್ಮವೊ ಇದು ಆವ ಧರ್ಮವೊ
ಆಸೆ ತರವಲ್ಲ ದಾಸನಾಗೊ ಭವಪಾಶ ನೀಗೊ
ಇಷ್ಟು ದಿನ ಈ ವೈಕುಂಠ ಎಷ್ಟು ದೂರವೆನ್ನುತ್ತಿದ್ದೆ
ಊರಿಗೆ ಬಂದರೆ ದಾಸಯ್ಯ ನಮ್ಮ
ಎಂದಿದ್ದರೀ ಕೊಂಪೆಯೆನಗೆ ನಂಬಿಕೆಯಿಲ್ಲ
ಎಂದೆಂದು ಇಂಥ ಚೋದ್ಯ ಕಂಡದ್ದಿಲ್ಲವೊ
ಎಂಥಾ ಟವಳಿಗಾರನಮ್ಮ
ಎನ್ನ ನುಡಿ ಪುಸಿಯಲ್ಲ ಈ ಜಗದೊಳು
ಎರಡು ಸಾವಿರದ ಜಿಹ್ವೆಯುರಗ ಪೊಗಳಿದ ಹರಿಯೆ
ಏಕೆ ನುಡುಗಿದೆ ತಾಯೆ ಭೂಮಿ ನಡುರಾತ್ರಿಯೊಳು
ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಎಲ್ಲಿಂದ ಬಂದೆ ಮುಂದೆತ್ತ ಪಯಣ
ಎಲ್ಲಿ ನೋಡಿದರಲ್ಲಿ ರಾಮ
ಎಳ್ಳುಕಾಳಿನೊಷ್ಟು ಭಕ್ತಿ ಎನ್ನೊಳಗಿಲ್ಲ
ಏನುಬರುವುದೊ ಸಂಗಡೇನು ಬರುವುದೊ
ಏನೂ ಇಲ್ಲದ ಎರಡು ದಿನದ ಸಂಸಾರ
ಏನಿದೆತ್ತಣ ಬಯಕೆ ಎಲೊ ಮಂಕುಜೀವ
ಏನು ಮಾಡಲಯ್ಯ ಬಯಲಾಸೆ ಬಿಡದು
ಒಂಭತ್ತು ಹೂವಿಗೆ ಒಂದೇ ನಾಳವು ಚಂದಮಾಮ
ಒಡವೆ ಹೋಯಿತು ಮನ ದೃಢವಾಯಿತು
ಒಲ್ಲೆನೆಂದರಾಗುವುದೆ ಅಲ್ಲಿ ಪಡೆದು ಬಂದುದ
ಓಹೊ ಎನ ಜೀವಾ ಮೈಯೆಲ್ಲಾ ನವ ಗಾಯ
ಕಣಿಯ ಹೇಳ ಬಂದೆ ನಾರಾಯಣನಲ್ಲದಿಲ್ಲವೆಂದು
ಕಷ್ಟಪಟ್ಟರೂ ಇಲ್ಲ ಕಳವಳಿಸಿದರಿಲ್ಲ
ಕುಲ ಕುಲ ಕುಲವೆನ್ನುತಿಹರು
ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ
ಕೆಂಪು ಮೂಗಿನ ಪಕ್ಷಿ ತಂಪಿನೊಳಿರುವುದು ನೆಂಪು ಬಲ್ಲವರು ಪೇಳಿ
ಕೇಶವನೊಲುಮೆಯು ಆಗುವ ತನಕ ಹರಿ
ಕ್ಷಮಿಸುವುದೆಮ್ಮ ತಪ್ಪುಗಳ ಸ್ವಾಮಿ
ಜಪವ ಮಾಡಿದರೇನು ತಪವ ಮಾಡಿದರೇನು
ಡಿಂಬದಲ್ಲಿರುವ ಜೀವ ಕಂಬಸೂತ್ರ ಗೊಂಬೆಯಂತೆ
ಡೊಂಕು ಬಾಲದ ನಾಯಕರೇ ನೀವೇನೂಟ ಮಾಡಿದಿರಿ
ತನು ನಿನ್ನದು ಜೀವನ ನಿನ್ನದೊ
ತಲ್ಲಣಿಸದಿರು ಕಂಡ್ಯ ತಾಳು ಮನವೆ
ತಾನ್ಯಾರೋ ತನ್ನ ದೇಹವ್ಯಾರೋ
ತಿಳಿಯಬಾರದೆಲ ಮನವೆ ತೀರ್ಥಯಾತ್ರೆಯ ಫಲವು
ತೀರ್ಥ ಪಿಡಿದವರೆಲ್ಲ ತಿರುನಾಮಧಾರಿಗಳೆ
ತೊರೆದು ಜೀವಸಬಹುದೆ ಹರಿ ನಿನ್ನ ಚರಣಗಳ
ದಾಸನಾಗಬೇಕು ಸದಾಶಿವನ ದಾಸನಾಗಬೇಕು
ದಾಸಾರ್ಯರ ದಾಸರ ದಾಸ ನಾನು ಬಾಡದೀಶ ಕಾಯ್ದುಕೊಳ್ಳೊ
ದುರ್ಜನರ ಸಂಗ ಎಂದಿಗೊಲ್ಲೆನು ಹರಿಯೆ ಇಂಥ
ದ್ರೋಹಿಗಳ ವಿವರವನು ನಾ ಪೇಳ್ವೆನಯ್ಯ
ನನ್ನವ್ವ ಕಲ್ಲ ಬಿಡೆ ಈ ಧೋತ್ರವು ಚೆನ್ನಾಗಿ ಒಗೆಯಬೇಕು
ನಂಬ ಬೇಡಿ ಸಿರಿಯ ತನ್ನದೆ
ನಾನು ನೀನು ಎನ್ನದಿರೋ ಹೀನಮಾನವ
ನಾಮ ಮುಂದೋ ಸ್ವಾಮಿ ವಿಭೂತಿ ಮುಂದೊ
ನಾರಾಯಣ ಎಂಬ ನಾಮದ ಬೀಜವನು ನಾಲಿಗೆಯಾ
ನಾವು ಕುರುಬರು ನಮ್ಮ ದೇವರೊ ಬೀರಯ್ಯ
ನಿಜವರಿತು ಲಿಂಗವನು ಪೂಜೆ ಮಾಡುವರಾರು
ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ
ನೆಚ್ಚದಿರು ಸಂಸಾರ ನೆಲೆಯಲ್ಲವೀ ಕಾಯ
ನೇಮವಿಲ್ಲದ ಹೋಮ ಇನ್ನೇತಕೆ
ಪಕ್ಷಿ ಬಂದಿದೆ ಗಂಡಭೇರುಂಡ ತನ್ನ
ಪಕ್ಷಿಯ ಕುರುಹ ಬಲ್ಲರು ಪೇಳಿರಿ ತನ್ನ
ಪಥ ನಡೆಯದಯ್ಯ ಪರಲೋಕಸಾಧನಕೆ
ಪರಮಪುರುಷ ನೀ ನೆಲ್ಲಿಕಾಯಿ
ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು
ಬಯಲ ಬಾವಿ ನೀರಿಗ್ಹೊಂಟಾಳೊಬ್ಬ ಬಾಲಿ
ಬರಿದೆ ದೂರು ಬಂದಿದೆ ಪಾಂಡವರಿಗೆ
ಬಲ್ಲವರು ಪೇಳಿರಿ ಲೋಕದ ಈ ಪದನು
ಬಲ್ಲವರು ಪೇಳಿರೈ ಬಹುವಿಧದ ಚತುರತೆಯ
ಬಾಯಿ ನಾರಿದ ಮೇಲೆ ಏಕಾಂತವೆ
ಬಿತ್ತಾಕ ಹೋದಲ್ಲಿ ಬಿಡದೆ ಮಳೆ ಹೊಡೆದು
ಮಗನಿಂದ ಗತಿಯುಂಟೆ
ಮಗುವಿನ ಮರುಳಿದು ಬಿಡದಲ್ಲ
ಮರವನು ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ
ಮಾಡು ದಾನ ಧರ್ಮ ಪರ ಉಪಕಾರವ ಮರೆಯದಿರೆಚ್ಚರಿಕೆ
ಮುತ್ತು ಬಂದಿದೆ ಕೇರಿಗೆ ಜನರು ಕೇಳಿ
ಮುತ್ತುಗಳಾ ಹಣ್ಣು ಕಾಯಾದ ಬಳಿಕಿನ್ನು
ಮೂರು ಬೀಜವು ಬಿತ್ತಿ ಸಹಜ ಬೀಜವು ತೋರಿ
ಮೂವರೇರಿದ ಬಂಡಿ ಹೊರೆ ನೆರೆಯದು
ಮುಳ್ಳು ಮೊನಿಯ ಮ್ಯಾಲ ಮೂರು ಕೆರಿಯ ಕಟ್ಟಿ
ಯಾತರವನೆಂದುಸಿರಲಿ
ಯಾರಿಗಾರುಬಹರು ಸಂಗಡ ಮುಂದೆ
ಲಟಪಟ ನಾ ಸೆಟೆಯಾಡುವೆನಲ್ಲ
ವ್ಯರ್ಥವಾಯಿತಲ್ಲ ಜನ್ಮವು ಸಾರ್ಥಕವಾಗಲಿಲ್ಲ
ಸಂಸಾರ ಸಾಗರವನುತ್ತರಿಸುವಡೆ
ಸತ್ಯವಂತರ ಸಂಗವಿರಲು ತೀರ್ಥವ್ಯಾತಕೆ
ಸದರವಿಲ್ಲವೆ ನಿಜಯೋಗ ಸಚ್ಚಿದಾನಂದ
ಸ್ನಾನ ಮಾಡಿರೊ ಜ್ಞಾನತೀರ್ಥದಲ್ಲಿ
ಸಾಧುಸಜ್ಜನ ಸತ್ಯಗುಣಕಿದಿರುಂಟೆ
ಹಣ್ಣು ಕೊಂಬುವ ಬನ್ನಿರಿ ಹರಿದಾಸರು
ಹರಿ ನಿನ್ನ ಪದಕಮಲ ಕರುಣದಿಂದಲಿ ಎನಗೆ
ಹಲವು ಜೀವನವ ಒಂದೆಲೆ ನುಂಗಿತು
ಹೂವ ತರುವರ ಮನೆಗೆ ಹುಲ್ಲ ತರುವೆ
ಹೆಣ್ಣಗಳೊಳು ಹೆಮ್ಮೆಕಾರಿಕೆ ಸತ್ಯ
ಹೇಗಿದ್ದು ಹೇಗಾದೆಯೊ ಆತ್ಮ

Categories
Tatvapadagalu ಕನಕದಾಸರು ಮತ್ತು ಮಹಿಪತಿರಾಯರ ತತ್ವಪದಗಳು

ಮಹಿಪತಿರಾಯರ ತತ್ವಪದಗಳು

ಗುರು ಪರಮ ಕಲ್ಯಾಣವು
ನಿಮ್ಮಿಂದ ಗುರು ಪರಮ ಕಲ್ಯಾಣವು
ನಿಮ್ಮಿಂದಲೆನಗೆ ಘನ ಪರಿಪೂರ್ಣವು | ||ಪ||
ಹುರಿದು ಭವಬೀಜ ಧರೆಯೊಳು ದಯ ಕರುಣದಲಿ
ಪರಮ ಆನಂದ ಸುಖ ಮಳೆಯಗರೆದು
ಕರ್ಮಪಾಶಗಳೆಂಬ ಕರಿಕಿಬೇರವ ಕಿತ್ತಿ
ಹರಗಿ ಬಿತ್ತಲು ನಾಮ ತಾರಕುಪದೇಶದಲಿ | ||1||
ವರ ಪ್ರತಾಪದ ಬೆಳೆಯು ತುಂಬಿ ತುಳುಕುವ ಸಿರಿಯು
ಸರ್ವಮಯವೆಂಬ ತೆನೆಗಳು ತುಂಬಿ
ಏರಿ ಸುಷುಮ್ನನಾಳದ ಮಂಚಿಕೆಯ ಮೆಟ್ಟಿ
ಪರಿಪರಿ ಅವಸ್ಥೆ ಹಕ್ಕಿಗಳ ಹಾರಿಸಲಾಗಿ | ||2||
ಮುರಿದು ಭೇದಾಭೇದಾವೆಂಬ ಗೂಡಲೊಟ್ಟಿ
ಅರಿವು ಕಣದಲ್ಲಿ ಥರಥರದಲಿಕ್ಕಿ
ಜ್ಞಾನವೈರಾಗ್ಯವೆಂಬೆರಡೆತ್ತುಗಳ ಹೂಡಿ
ಸರ್ವಗುಣ ತೆನೆ ತೆಗೆದು ತುಳಿದು ರಾಶಿ ಮಾಡಿಸಲಾಗಿ | ||3||
ಸರ್ವಮಯವೆಂಬ ರಾಶಿಯು ಒಬ್ಬುಳಿ ಮಾಡಿ
ತೂರಿ ತರ್ಕ ಭಾಸಗಳೆದು
ಮಿಥ್ಯಾ ಪ್ರಪಂಚವೆಂಬ ಕಾಳನು ಕಡೆ ಮಾಡಿ
ಸಫಲ ಸಹಕಾರದಲಿ ಸುಗ್ಗಿ ಮಾಡಿಸಲಾಗಿ | ||4||
ಏಕೋಬ್ರಹ್ಮದ ಗತಿ ನಿಧಾನ ರಾಶಿಯು ದೋರಿ
ಜನ್ಮ ಮರಣದ ಕೊಯಿಲಿಯ ಸುಟ್ಟು ಉರುಹಿ
ಸದ್ಗತಿ ಮುಕ್ತಿ ಸುಕಾಲ ಸಾಧನವಿತ್ತು
ಮೂಢ ಮಹಿಪತಿ ಪ್ರಾಣ ಸದ್ಗೈಸಲಾಗಿನ್ನು | ||5||

ನೋಡು ಮನವೆ
ನೋಡು ಮನವೆ ನಿನ್ನೊಳಾಡುವ ಹಂಸನ
ಇಡಾಪಿಂಗಳ ಮಧ್ಯನಾಡಿವಿಡಿದು | ||ಪ||
ಆಧಾರವಂ ಬಲಿದು ಸ್ವಾಧಿಷ್ಠಾನವ ದಾಟಿ
ಹಾದಿವಿಡಿದು ನೋಡು ಮಣಿಪುರದ
ಒದಗಿ ಕುಡುವ ಅನಾಹತ ಹೃದಯಸ್ಥಾನವ
ಸಾಧಿಸಿ ನೋಡುವದು ವಿಶುದ್ಧವ | ||1||
ಭೇದಿಸಿ ನೋಡುವದಾಜ್ಞಾ ಚಕ್ರ ದ್ವಿದಳ
ಸಾಧಿಸುವದು ಸುಖ ಸಾಧುಜನ
ಆಧಾರದಲಿಹ ತಾ ಅಧಿಷ್ಠಾನವ ನೋಡು
ಅಧಿಪತಿ ಆಗಿ ಹಾಧೀನ ದೈವವ | ||2||
ಮ್ಯಾಲಿಹ ಬ್ರಹ್ಮಾಂಡ ಸಹಸ್ರದಳ ಕಮಲ
ಹೊಳೆಯುತಿಹ ಭಾಸ್ಕರ ಪ್ರಭೆಯು ಕೂಡಿ
ಮೂಲಸ್ಥಾನದ ನಿಜನೆಲೆನಿಭವ ನೋಡು
ಬಾಲಕನೊಡೆಯ ಮಹಿಪತಿಸ್ವಾಮಿಯ | ||3||

ಸದ್ಗುರು ಸಮರ್ಥ
ಅರಿತುಕೊಳ್ಳಿರೈಯ್ಯಾ ನೀವು ಹರಿಯ ನಾಮಾಮೃತ
ಗುರ್ತು ಮಾಡಿಕೊಂಡುವ ಪೂರ್ಣ ಸದ್ಗುರು ಸಮರ್ಥ | ||ಪ||
ಒಳ್ಳೆಒಳ್ಳೆವರು ಬಂದು ಕೇಳಿರೊ ನೀವಿನ್ನು
ತಿಳದುಕೊಳ್ಳಿ ಇದಕೆ ಬೀಳುವುದಿಲ್ಲಾ ಹಣ ಹೊನ್ನು
ಉಳ್ಳ ಬುದ್ಧಿಯಿಂದ ನೀವು ತೆರೆದುನೋಡಿ ಕಣ್ಣು
ಕೊಳಲರಿಯದವನ ಬಾಯಾಗ ಬೀಳುದು ಮಣ್ಣು | ||1||
ಬ್ರಹ್ಮಸುಖ ಇದೇ ಇದೇ ನೋಡಿರೋ ಸಾಕ್ಷಾತ
ಸಮ್ಯಕ್ ಜ್ಞಾನ ಪ್ಯಾಟಿಯೊಳು ತುಂಬಿ ತುಳಕುತ್ತ
ಒಮ್ಮನ ಮಾಡಿಕೊಂಡು ಬಂದು ಕೊಳ್ಯಮೃತ
ನೇಮದಿಂದ ಕೊಳ್ಳಲಿಕ್ಕೆ ದೋರದು ಸ್ವಹಿತ | ||2||
ಇಹಪರನರ್ಥಕಿದೆ ಕೇಳಿರೋ ನೀವೆಲ್ಲ
ದೇಹ ಅಭಿಮಾನಿಗಿದು ಸಾಧ್ಯವಾಗುವುದಿಲ್ಲ
ಸೋಹ್ಯವರಿತು ಸೂರೆಗೊಂಡು ಮಹಿಮ ತಾನೆ ಬಲ್ಲ
ಗುಹ್ಯವಾಕ್ಯ ತಿಳಿದುನೋಡಿ ಮಹಿಪತಿ ಸೊಲ್ಲಾ | ||3||

ನವನೀತ ಚೋರ
ಇವನಾ ಕಂಡಿರ್ಯಾ ನಮ್ಮ ನವನೀತ ಚೋರನ
ಅವನ ಕಂಡರದೇಳಿ ಹವಣಿಸಿ ಹಿಡಿದುಕೊಂಬಾ | ||ಪ||
ನಾಕು ಬೀದಿಯೊಳಗೆ ಸಾಕು ಸಾಕು ಮಾಡಿದ
ಸೋಂಕದೆ ಕೈಯ್ಯಗೊಡಾ ಬೇಕೆಂದಾರು ಮಂದಿಗೆ | ||1||
ಹದಿನೆಂಟು ಸಂಧಿಯೊಳು ಶೋಧಿಸಿನೋಡಿದರೆ
ಸಾಧಿಸಿ ಬಾರನಿವ ಮದನ ಮೋಹನ ನೋಡಿ | ||2||
ತಾನೆ ಸಿಕ್ಕುವ್ಹಾಗೊಂದು ಮನಗೂಡಬೇಕು ತಂದು
ದೀನ ಮಹಿಪತಿ ಸ್ವಾಮಿ ಅನಕಾ ದೋರತಾ ಬಂದು | ||3||

ಹಣ್ಣು ಕೊಳ್ಳಿರೋ
ಹಣ್ಣು ಕೊಳ್ಳಿರೋ ಪುಣ್ಯವಂತರು ಹಣ್ಣು ಕೊಳ್ಳಿರೋ
ಹಣ್ಣು ಕೊಳ್ಳಿರಯ್ಯಾನಂತ ಗುಣಮಹಿಮೆಯುಳ್ಳ | ||ಪ||
ಹಣ್ಣು ಬಂದದೆ ನೋಡ್ಯಾನಂದೋ ಬ್ರಹ್ಮಪ್ಯಾಟಿಯಿಂದ
ಕಣ್ದೆರದು ಕೊಂಡವರು ಧನ್ಯ ಧನ್ಯರೊ | ||1||
ಹಣ್ಣಿಗೊಂದು ಹೆಸರು ಇಲ್ಲ ಇನ್ನೊಂದು ಕೊಸರು ಇಲ್ಲ
ಚೆನ್ನಾಗಿ ಉನ್ಮನವಾಗಿ ಹಣ್ಣ | ||2||
ಅಣ್ಣಗಳ ಬಂದು ಕಣ್ಣುಗೆಟ್ಟು ಹೋಗಬ್ಯಾಡಿ
ಸಣ್ಣ ದೊಡ್ಡರೊಳಗಿಹ ಹಣ್ಣು | || 3||
ಉತ್ತಮರುದ್ದೇಶವಾಗಿ ಮತ್ತೆ ಹತ್ತುಭಾರೆ ಬಂದು
ತುತ್ತಿಗೊಮ್ಮೆ ಬಾಯದೆರೆವ ಹಣ್ಣು | ||4||
ಬಿತ್ತಿ ಬೆಳೆದ ಫಲವಲ್ಲ ಹೊತ್ತು ಮಾರುವುದಲ್ಲ
ಚಿತ್ತದೊಳಗ್ಹತ್ತಿಲಿಹ ಹಣ್ಣು | ||5||
ನಾಲ್ಕು ಮಂದಿ ತಿಳಿಯದೆ ಹೋಕಹೋದರಾರು ಮಂದಿ
ಪುಕಸಾಟಿ ದಣಿದರ್ಹದಿನೆಂಟು ಮಂದಿ ಕಾಣಿರೊ | ||6||
ಹಣ್ಣು ಕೊಂಡ ಮಹಿಪತಿಯು ಪುಣ್ಯ ಪೂರ್ವಾಜಿತ
ತಾನೆ ಧನ್ಯ ಧನ್ಯನಾದ ಗುರುಕೃಪೆಯಿಂದ ಕಾಣಿರೊ | ||7||

ಆದಿ ತತ್ವದ ಸಾರ
ಆದಿ ತತ್ವದ ಸಾರ ತಿಳಿಯದೆ ಭೇದಾಭೇದವಿದ್ಯಾತಕೆ
ವೇದ ಉಪನಿಷದ್ವಾಕ್ವರಿಯದೆ ಗಾಧ
ಸೂಸುವದ್ಯಾತಕೆ ಹರಿಭಕುತಿಗೆ | | |ಪ||
ಮೂಲದಲಿ ಮನಮೈಲ ತೊಳಿಯದೆ ಬಲಮುಣುಗುವುದಿದ್ಯಾಕೆ
ಬಲುವ ಭಾವದ ಕೀಲ ತಿಳಿಯದೆ ಮಾಲಿಜಪಕೈಯಲ್ಯಾತಕೆ
ನೆಲೆಯುಗೊಳ್ಳದೆ ಮೂಲ ಮೂರ್ತಿಯ ಮ್ಯಾಲೆ ತಲೆ ಮುಸುಕ್ಯಾತಕೆ
ಹಲವು ಜನ್ಮ ಹೊಲಿಯು ತೊಳಿಯದೆ ಶೀಲಸ್ವಯಂಪಾಕ್ಯತಕೆ | || 1||
ಹರಿಯ ಚರಣಾಂಬುಜನವರಿಯದೆ ಬರಿಯ ಮಾತಿನ್ಯಾತಕೆ
ಗುರುವಿನಂಘ್ರಿಯ ಗುರುತವಿಲ್ಲದೆ ಶರಣಸಾವಿರವ್ಯಾತಕೆ
ತುರಿಯಾವಸ್ಥೆಯೊಳರಿತು ಕೂಡದೆ ತೋರಿಕೆಯ ಡಂಭವ್ಯಾತಕೆ
ತರಣೋಪಾಯದ ಸ್ಮರಣಿ ಇಲ್ಲದೆ ತರ್ಕಭೇದಗಳ್ಯಾತಕೆ | ||2||
ಅಂತರಾತ್ಮದ ತಂತುವಿಡಿಯದೆ ಗ್ರಂಥಪಠಣಗಳ್ಯಾತಕೆ
ಕಂತುಪಿತನಾರ್ಚನೆಯನರಿಯದೆ ತಂತ್ರ ಮಂತ್ರಗಳ್ಯಾತಕೆ
ಸಂತತ ಚಂತಾಯಕನಾ ನೆನೆಯದೆ ಮಂತ್ರಮಾಲೆಗಳ್ಯಾತಕೆ
ಪಂಥವರಿಯದೆ ಪರಮಯೋಗದಾನಂತ ವ್ರತವಿದುವ್ಯಾತಕೆ | ||3||
ಸೋಹ್ಯವರಿಯದೆ ಶ್ರೀಹರಿಯ ನಿಜಬಾಹ್ಯರಂಜನೆವ್ಯಾತಕೆ
ಗುಹ್ಯಮಹಾಮಹಿಮೆಯು ತಿಳಿಯದೆ ದೇಹ ಅಭಿಮಾನ್ಯಾತಕೆ
ಸಾಹ್ಯವಿಲ್ಲದೆ ಶ್ರೀಹರಿಯ ದೇಹದಂಡವ್ಯಾತಕೆ
ಮಹಾವಾಕ್ಯದಿತ್ಯಥವರಿಯದೆ ಸಾಯಸಬರುವದ್ಯಾತಕೆ | | 4||
ಭಾಗ್ಯಭಕುತಿ ವೈರಾಗ್ಯವಿದು ನಿಜಯೋಗಾನಂದದ ಭೂಷಣ
ಶ್ಲಾಘ್ಯವಿದು ತಾ ಇಹಪರದೊಳು ಸುಗಮ ಸುಪಥಸಾಧನ
ಭೋಗ್ಯಭೋಗದ ಸಾರ ಸುಕವಿದು ಯೋಗಿ ಮಾನಸಜೀವನ
ಬಗೆಬಗೆಯಲನುಭವಿಸಿ ಮಹಿಪತಿಯೋಗ್ಯನಾಗೋ ಸನಾತನ | || 5||

ನುಡಿದವು ಪರಮಾರ್ಥ
ಎಚ್ಚರಿಲ್ಲೀ ಮನಕೆ ಯೋಚಿಸಿ ನೊಡದು ಚಿದ್ಘನಕೆ | ||ಪ||
ನುಡಿದವು ಪರಮಾರ್ಥ ನಡೆಯೊಳಗಿಲ್ಲದೆ ನುಡಿದರ್ಥ
ಹಿಡಿದು ವಿಷಯದ ಸ್ವಾರ್ಥಬಡುವುದು ಶ್ರಮತಾನೆ ವ್ಯರ್ಥ | ||1||
ಓದುದು ವೇದಾಂತ ಭೇದಿಸಿ ತಿಳಿಯದೆ ಅದರಂತ
ವಾದ ಮಾಡುದು ಭ್ರಾಂತ ಸಾಧಿಸಿ ನೋಡದು ತನ್ನೋಳು ತಾ | | |2||
ಜನ ಕೇಳುದು ಬುದ್ಧಿ ತನಗ ಮಾಡಿಕೊಳ್ಳದು ಸಿದ್ಧಿ
ಕಾಣದ್ದೇಳುದು ಸುದ್ಧಿ ಜ್ಞಾನಕ ಬಾರದು ತಾ ತಿದ್ದಿ | || 3||
ತೊಟ್ಟು ಉತ್ತಮ ವೇಷ ಮುಟ್ಟಿಗಾಣದೆ ಸ್ವಪ್ರಕಾಶ
ತುಟ್ಟಿಲಿ ಜಗದೀಶ ಗುಟ್ಟಿಲಿ ಬಲಿವದು ಧನದಾಶೆ | || 4||
ಎಚ್ಚರಿಸಿತು ಖೂನ ನಿಶ್ಚಲ ಮಹಿಪತಿಗೆ ಗುರುಜ್ಞಾನ
ಹುಚ್ಚುಗೊಂಡಿತು ಮನ ನೆಚ್ಚಿ ನಿಜಾನಂದದ ಘನ | || 5||

ಸದ್ಗುರು ಕೃಪೆಯಿಂದ
ಎದ್ದಿರ್ಯಾ ನೀವಿನ್ನೆದ್ದಿರ್ಯಾ
ಎದ್ದೆವು ನಾವಿನ್ನು ಸದ್ಗುರು ಕೃಪೆಯಿಂದ | | |ಪ||
ಶುದ್ಧಿ ಮೆರದು ಭವ ನಿದ್ದಿಯಗಳೆದು
ಕಾಯಮಂದಿರದೊಳು ಮಾಯ ಮುಸುಕು ತೆಗೆದು
ಚೆನ್ನಾಗಿ ಮಲಗಿದ್ದ ಜನ್ನ ಹಾಸಿಗೆ ಬಿಟ್ಟು
ತನ್ನ ತಾ ತಿಳಿವ್ಹಾಂಗೆ ಕಣ್ಣೆರೆದಿನ್ನು
ಎದ್ದಿದ್ದರೆ ನೀವಿನ್ನು ಶುದ್ಧ ಬದ್ಧರಾಗಿ
ಮನದಲ್ಲಿ ಇನಕೋಟಿ ತೇಜನ ಕಾಣುಹಾಂಗೆ
ದೀನ ಮಹಿಪತಿ ಸಾಮಿ ಮನೋಹರ ಮಾಡೊಹಾಂಗೆ | ||1||

ಗುರು ಮಾರ್ಗ
ಏನು ಸಾಧಿಸುವುದೇನರಿದು
ಜ್ಞಾನಗಮ್ಯ ಗುರು ಮಾರ್ಗದೊರೆಯಲರಿಯದು | ||ಪ||
ನೀತಿಶಾಸ್ತ್ರವನೋದಿ ಪಂಡಿತನಾಗಲಿಬಹುದು
ಶ್ರುತಿ ಸ್ಮೃತಿಗಳ ತಿಳಿದು ತರ್ಕಸ್ಯಾಡಲಿಬಹುದು
ಅತಿ ಬಲ್ಲತನದಿ ಯತಿಯೆನಿಸಿಕೊಳಲಿಬಹುದು
ಕ್ಷಿತಿಯೊಳು ಮೆರೆಯಲಿಬಹುದು
ಸುತತ್ವ ಜ್ಞಾನಖೂನ ದೊರೆಯಲರಿಯದು | | 1||
ಗೃಹತ್ಯಾಗ ಮಾಡಿ ಸಂನ್ಯಾಸಿ ಆಗಲಿಬಹುದು
ದೇಹ ದಂಡಿಸಿ ವನವಾಸಿಯಾಗಲಿಬಹುದು
ಗುಹ್ಯಗೊಪೆಯಲಿ ಸೇರಿ ತಪಸಿಯೆನಿಸಲಿಬಹುದು
ಬಾಹ್ಯನಿಷ್ಠೆಯದೋರಬಹುದು
ಸೋಹ್ಯ ಸದ್ಗುರುಮಾರ್ಗ ದೊರೆಯಲರಿಯದು | || 2||
ಹಲವು ಕುಟಿಲದ ವಿದ್ಯವನು ಸಾಧಿಸಲಿಬಹುದು
ಜಲದೊಳಗೆ ಮುಳುಗಿ ಮಂತ್ರವನು ಜಪಿಸಲಿಬಹುದು
ಸೀಲಿ ಸಾಲ್ವಳಿಯ ಸುಶಕುನ ಪೇಳಲಿಬಹುದು
ಮ್ಯಾಲೆ ಜನರಜಿಸಲಿಬಹುದು
ಮೂಲ ಮುಕ್ತಿ ಕೀಲ ತಿಳಿಯಲರಿಯದು | ||3||
ಪೃಥ್ವಿಯನೆ ತಿರುಗಿ ಬಹುಭಾಷೆಯಾದಲಿಬಹುದು
ಮತಿವಂತನಾಗಿ ಕವಿತ್ವಮಾಡಲಿಬಹುದು
ಗೀತರಾಗವು ಜಂತ್ರದೊಳು ನುಡಲಿಬಹುದು
ಚದುರಂಗ ಪಗಡ್ಯಾಡಿ ಗೆಲಬಹುದು
ಮತ್ತ ಮನ ಬೆರವ ಘನಸುಖವು ದೊರೆಯಲರಿಯದು | ||4||
ಶರತನದಲಿ ಪರಾಕ್ರಮ ಹಿಡಿಯಲಿಬಹುದು
ಧೀರಗುಣದಲಿ ಮಹಾಧೀರನೆನಿಸಲಿಬಹುದು
ನೂರ್ಬಲದ ಪೌರುಷಲಿ ರಾಜ್ಯನಾಳಲಿಬಹುದು
ಸಿರಿಸೌಖ್ಯದೊಳಿರಲಿಬಹುದು
ಸಾರ ಸುಜ್ಞಾನ ದೊರೆಯಲರಿಯದು | ||5||
ಪರ್ವತಾಗ್ರದಲೇರಿ ಧರೆಗೆರಗಲಿಬಹುದು
ಹರಿವ ನದಿಯನೆ ಹಾರಿ ಹೋಗಲಿಬಹುದು
ಮರೊವುತಿಹ್ಯ ಸರ್ಪದಾ ವಿಷವು ಧರಿಸಲಿಬಹುದು
ಕ್ರೂರ ಮೃಗದೊಳು ತಿರುಗ್ಯಾಡಬಹುದು
ಪರಮ ಜ್ಞಾನ ವೈರಾಗ್ಯ ಪಥ ದೊರೆಯಲರಿಯದು | |6||
ಪೊಡವಿಯೊಳು ಹಲವು ವಿದ್ಯಾವ ಸಾಧಿಸಲುಬಹುದು
ಬಡದ ಬವಣಿಯ ಬಟ್ಟು ನಾಡ ಶೋಧಿಸಬಹುದು
ಗೂಢ ವಿದ್ಯದ ಮಾತು ಆಡಿ ತೋರಿಸಬಹುದು
ಹಿಡಿದು ಮೌನವ ಕೂಡಬಹುದು
ಮೂಢಮಹಿಪತಿ ಒಡಿಯನ ಕೃಪೆ ಪಡೆವದೆ ದುರ್ಲಭವು | ||7||

ಸಂತರು
ಏನೆಂದುಸರಲಿ ನಾ ನೆರೆ ಸಂತರಾ
ಸ್ವಾನುಭವಗಳನುವಾಗೀ
ಮಾನಿಸರೋಲುಸೆಲೆ ಮಾನಿಸ ಸ್ಥಿತಿಯಲಿ
ತಾನಿಹ ಉನ್ಮನಿಯಾಗಿ | ||ಪ||
ಕಾಮವು ಹರಿಪದ ತಾಮರಸವ ನಿ
ಷ್ಕಾಮದ ಭಕುತಿಗಳಲ್ಲಿ
ಆ ಮಹಾ ಕೋಪವು ಈ ಮನಸಿನ ಗುಣ
ನೇಮಿಸಿ ಶಿಕ್ಷಿಸುವಲ್ಲಿ
ಆ ಮೋಹ ಲೋಭವು ಯಾಮವಳಿಯದಾ
ನಾಮ ಕೀರ್ತನೆಯಲ್ಲಿ
ತಾ ಮರೆಯದ ಅತಿ ವ್ಯಾಮೋಹ ತನ್ನಯ
ಪ್ರೇಮದ ಕಿಂಕರರಲ್ಲಿ | ||1||
ಮದವತಿ ಇಂದ್ರಾದಿ ಪದಗಳ ಸಿದ್ದಿಗೆ
ಳಿದಿರಡೆ ಕಣ್ಣೆತ್ತೆ ಲೆಕ್ಕಿಸರು
ವದಗಿಹ ಮತ್ಸರ ಕುದಿವಹಂಕಾರದ
ಮೊದಲಿಗೆ ತಲೆಯೆತ್ತಿಸುಗುಡರು
ಇದರೊಳು ಸುಖದುಃಖ ಉದಿಸಲು ಹರಿಯಾ
ಜ್ಞದೆಗತಿಗಡ ಸಮಗಂಡಿಹರು
ಉದಕದಲಿ ಕಮಲದ ಎಲೆಯಂದದಿ
ಚದುರತೆಯಿಂದಲಿ ವರ್ತಿಪರು | | |2||
ಜಲದೊಳು ಕಬ್ಬಿಣಸಲೆ ಮುದ್ದಿಯ ನೆರೆ
ನಿಲಿಸದೆ ನಿಲ್ಲದೆ ಮುಣುಗುವುದು
ಇಳೆಯೊಲಗದೆ ತಿದ್ದಲು ಪಾತ್ರೆಯಾ ಪರಿ
ನಳನಳಿಸುತ ತೇಲುತಲಿಹುದು
ಕಳೆವರ ವೃತ್ತಿಯ ಕಳೆ ಸುವೃತ್ತಿಯ ಮಾಡಿ
ಬೆಳಗಿನ ಘನದೊಳು ಮನ ಬೆರೆದು
ನಲವರು ಮಹಿಪತಿ ವಲುಮೆಯ ಪಡೆಯದ
ಹುಲು ಮನುಜರಿತಿದು ಭೇದಿಸದು | | |3||

ಒಂದು ಪಥ
ಒಂದು ಪಥವ ಹೊಂದಲರಿಯರೀ ಮನುಜರು
ಇಂದಿರೇಶನ ಪಾದವ ಕಾಣದೆ ಕೆಡುವರು | | |ಪ||
ಒಂದರೆ ಘಳಗಿ ನಾನೆವೆ ಮಾಡಿದೆನೆಂಬರು
ಒಂದರೆ ಘಳಗಿ ಪ್ರಾಚೀನವೆಂಬರು
ಒಂದರೆ ಘಳಗಿ ಈಶ್ವರ ಸೂತ್ರವೆಂಬರು
ಒಂದರೆ ಘಳಗಿ ತಾ ಏನೋ ಎಂತೆಂಬರು | ||1||
ಒಮ್ಮೆ ಜಾಗೃತಿಯೊಳಿದೇ ನಿಜವೆಂಬರು
ಒಮ್ಮೆ ಸ್ವಪ್ನದೊಳಿದೇ ಖರೆ ಎಂಬರು
ಒಮ್ಮೆ ಸುಷುಪ್ತಿಯೊಳಿದೇ ಸತ್ಯವೆಂಬರು
ಒಮ್ಮೆ ಇದರ ಶುದ್ಧಿ ತಿಳಿಯದಂತಿಹರು | | |2||
ಒಂದು ತಿಳಿದರ ಸಕಲವು ಒಂದಾಗಿ ದೋರುವುದು
ಒಂದರೊಳಗ ಸಕಳ ದೊರೆಕೊಂಬುದು
ಒಂದಾಗಿ ಸಲಹುವ ಮಹಿಪತಿ ಸ್ವಾಮಿಯ
ತಂದೆ ಸದ್ಗರು ಭಾಸ್ಕರ ಕೋಟಿ ತೇಜನು | ||3||

ಕೊಂಡಿರ್ಯಾ ನೀವು
ಕೊಂಡಿರ್ಯಾ ನೀವು ಕೊಂಡಿರ್ಯಾ
ಮಂಡಲದೊಳು ವಸ್ತು ಕೊಂಡಿರ್ಯಾ | ||ಪ||
ಕೊಳಬೇಕಾದರ ನೀವು ತಿಳಿದುಕೊಂಡು ಬನ್ನಿ
ತಿಳಿಯದಿದ್ದರೆ ಖೂನ ಕೇಳಿ ಸದ್ಗುರುವಿನ
ಬೆಲೆಯು ಹೇಳುವುದಲ್ಲ ನೆಲೆಯ ತಿಳಿಯುವದಲ್ಲ
ಅಳೆದು ಕೊಡುವುದಲ್ಲ ಕೊಳಗ ಎಣಿಸುವುದಲ್ಲ
ತೂಕ ಮಾಡುವುದಲ್ಲ ಲೆಕ್ಕ ಇಡುವುದಲ್ಲ
ಇಟ್ಟು ಮಾರುವುದಲ್ಲ ಕೊಟ್ಟರ್ಹೋಗುವುದಲ್ಲ
ಪಂಡಿತರಿಗೆ ಪ್ರಾಣ ಕೊಂಡವರಿಗೆ ತ್ರಾಣ
ಹೇಳಿ ನಾ ನಿಮಗೊಂದು ಸುಲಭವಾಗಿಂದು
ಒಮ್ಮನವಾದರ ಸುಮ್ಮನೆಬಾಹುದು
ಸಾಧು ಸಜ್ಜನರಿಗೆ ಸಾಧ್ಯವಾಗುದಿದು
ಸಾರಿ ಚೆಲ್ಲೇದ ಮಹಿಪತಿ ವಸ್ತುಮಯಮಿದು | ||1||

ಜಾಣತನದ ಮಾತು
ಜಾಣತನದ ಮಾತು ಏನು ಕೆಲಸವಯ್ಯ ಖೂನ ನೋಡಿ
ಪ್ರಾಣನಾಯಕನ ತಿಳಿಯುದೊಂದೆ ಜ್ಞಾನಾಭ್ಯಾಸ ಮಾಡಿ | ||ಪ||
ಕರಿಮಣಿ ಒಂದಿಲ್ಲದೆ ಹೆಂಗಸಿಗೆ ಸರಮುತ್ತು ಯಾಕೆ
ಸಾರ ಸಂಜೀವನಿಲ್ಲದೆ ನೂರು ಗಿಡಮೂಲಿಕೆ ಯಾಕೆ
ನೆರೆ ಇಲ್ಲದೆ ಸಾಧುಸಜ್ಜನರ ಸರ್ವಬಳಗವ್ಯಾಕೆ
ಪರಮ ತತ್ವಜ್ಞಾನ ಒಂದಿಲ್ಲದೆ ಸುರಿಯುವ ಮಾತಿನ್ನ್ಯಾಕೆ | ||1||
ಪ್ರಾಣವಿಲ್ಲದ ಸುಂದರವಾದ ಶರೀರವ್ಯಾಕೆ
ಖೂನವಿಲ್ಲದೆ ನೂರು ಕಾಲ ಬದುಕುವುದ್ಯಾಕೆ
ಸ್ವಾನುಭವದ ಸುಖ ನೆಲೆಗೊಳ್ಳದೆ ಒಣ ಡಂಭವ್ಯಾಕೆ
ತಾನಾಗಿಹ ವಸ್ತು ದೊರಕಿಲ್ಲದೆ ನಾ ನೀನೆಂಬುದ್ಯಾಕೆ | ||2||
ಶ್ರೀಹರಿ ಮಹಿಮೆಯ ಸೋಹ್ಯ ತಿಳಿಯದೆ ದೇಹವ್ಯಾಕೆ
ಗುಹ್ಯಗುರುತವಿಲ್ಲದೆ ಸಾಯಸಬಡುವದ್ಯಾಕೆ
ಸಾಹ್ಯಮಾಡುವ ಸದ್ವಸ್ತು ನೋಡದ ಕಣ್ಣು ನೋಟವ್ಯಾಕೆ
ಮಹಿಪತಿಸ್ವಾಮಿ ಸದ್ಗುರುಪಾದ ಕಾಣದ ಜನ್ಮವ್ಯಾಕೆ | || 3||

ಜ್ಞಾನದ ನಡಿ ಬ್ಯಾರೆ
ಜ್ಞಾನದ ನಡಿ ಬ್ಯಾರೆ ತತ್ವಜ್ಞಾನದ ನಡಿ ಬ್ಯಾರೆ | ||ಪ||
ದೇಹದಂಡನೆ ಮಾಡಿದರೇನು
ಬಾಹ್ಯರಮಜನೆ ದೋರಿದರೇನು | | |1||
ಶಬ್ದ ಜ್ಞಾನ ಸೂರಾಡಿದರೇನು
ಲಬ್ದಾ ಲಭೇಲಾಡಿದರೇನು | ||2||
ರಿದ್ದಿ ಸಿದ್ದಿಯ ದೋರಿದರೇನು
ಗೆದ್ದು ಮಂತ್ರಾಂತ್ರಸೋಲಿಪರೇನು | ||3||
ಮಾತು ಗೀರ್ವಾಣ ಆಡಿದರೇನು
ಭೂತ ಭವಿಷ್ಯ ಹೇಳಾಡಿದರೇನು | | |4||
ವ್ರತ ತಪ ತೀರ್ಥಾಶ್ರೈಸಿದರೇನು
ಕೃತ ಕೋಟ್ಯಜ್ಞಾವ ಮಾಡಿದರೇನು | ||5||
ಯೋಗಾಯೋಗಾಚರಿಸಿದರೇನು
ಭೋಗ ತ್ಯಾಗ ಮಾಡಿದರೇನು | ||6||
ಏನು ಸಾಧನೆ ಮಾಡಿದ ಫಲವೇನು
ಖೂನ ದೋರದೆ ಮಹಿಪತಿಗುರು ತಾನು | || 7||

ಜ್ಞಾನ ಗುರು ಶುದ್ಧ ಮಡಿವಾಳ
ಜ್ಞಾನ ಗುರು ಶುದ್ಧ ಮಡಿವಾಳ
ಮನ ಮೈಲಿ ತೊಳೆವ ನಿರ್ಮಳ | ||ಪ||
ದೃಢ ಮಾಡುವ ಬಂಡೆಗಲ್ಲು
ತೊಡೆವ ಸುಭೋಧ ಸಬಕಾರ ಮೇಲು
ಹಿಡಿದು ಹಿಂಡುವ ಮನ ಮೈಲು
ಕುಡುವ ವೈರಾಗ್ಯದ ಬಿಸಿಲು | ||1||
ಉದ್ದಿ ಒರಸುವ ಸಬಕಾರ ಕೈಯ
ಎದ್ದಿ ವಿವೇಕ ಉದರ ನಿಶ್ಚಯ
ಶುದ್ಧದೋರಿಸಿ ಸಾಂಪ್ರದಾಯ
ಸಿದ್ಧ ಮಾಡುವ ಗುರು ನಮ್ಮೈಯ್ಯ | ||2||
ಆಶಿ ಎಂಬುದು ಹಾಸಿ ಒಣಗಿಸಿ
ಹಸನಾಗಿ ಘಳಿಗೆ ಕೊಡಿಸಿ
ಭಾಸಿ ಕೊಡುವ ತಾ ಘಟ್ಟಿಸಿ
ಲೇಸು ಲೇಸಾಗಿ ಅನುಭವಿಸಿ | ||3||
ಶುದ್ಧ ಮಾಡಿದ ಮನ ನಿಶ್ಚಯ
ಸಿದ್ಧ ಸಾಕ್ಷಾತ್ಕಾರ ನಮ್ಮಯ್ಯ
ಸದ್ಬೋಧಿಸಿದ ಜ್ಞಾನೋದಯ
ಸದ್ಗೈಸಿದ ಮಹಿಪತಿಯ | | |4||

ಕಣ್ಣಿಲ್ಲದವ ಕನ್ನಡಿ ಪಿಡಿದರೇನು
ತನ್ನರಿಯದವ ಜ್ಞಾನದ ಮಾತಾಡಿದರೇನು
ಕಣ್ಣಿಲ್ಲದವ ಕನ್ನಡಿ ಪಿಡೆದರೇನು | ||ಪ||
ಧೈರ್ಯವಿಲ್ಲದವ ಕೈಯಲಿ ಶಸ್ತ್ರ ಹಿಡಿದರೇನು
ಸ್ಥೈರ್ಯವಿಲ್ಲದವ ತಪಸ್ಯಾದರೇನು
ಮರ್ಯಾದಿಲ್ಲದವ ಗುರು ಸನ್ನಿಧವಿದ್ದರೇನು
ಕಾರ್ಯಕೊದಗದ ಬಂಟ ಬಲ್ಲಿದನಾದರೇನು | ||1||
ಗಂಡನಿಲ್ಲದ ನಾರಿ ಸುಗುಣ್ಯುದ್ದಂಡಾದರೇನು
ಷಂಡ ಸಾವಿರ ಹೆಣ್ಣು ಮದುವ್ಯಾದರೇನು
ಖಂಡಿಸದೆ ಅನುಮಾನ ಪಂಡಿತನೆನಿಸಿದರೇನು
ಕಂಡು ಕಾಣದ್ಹೆಳವನ ಕೊಂಡಾಡಲೇನು | ||2||
ಭಾನುಕೋಟಿ ತೇಜನಂಘ್ರಿ ಗುರುತಲ್ಲದರಿವೇನು
ಅನುಭವಿಸಿಕೊಳ್ಳದ ನರಜನ್ಮವೇನು
ದೀನ ಮಹಿಪತಿಸ್ವಾಮಿ ಕಾಣದ ಕಂಗಳವೇನು
ಜ್ಞಾನ ಉಂಟುಮಾಡಿಕೊಳ್ಳದವನ ಬಾಳಿವೇನು | ||3||

ಆರು ತಿಳಿದು ನೋಡಿ
ತಾನಾರು ತನುವು ಆರು ತಿಳಿದು ನೋಡಿ | ||ಪ||
ತಾನಾರು ತನುವಾರು
ತನ್ನೊಳೂ ತಾನೆ ತಿಳಿದು ನೋಡಿ
ಘನ ಬ್ರಹ್ಮದೊಳು ಮನ ಬರೆದಾತ ಶರಣನು | ||1||
ಕಾಯದೊಳಿಹ್ಯ ಕಳವಳಗಳೆದು
ಮಾಯ ಮೋಹದ ಮಲಗಳ ತೊಲೆದು
ದೇಹ ವಿದೇಹವಾದಾತ ಶರಣನು | | |2||
ಭ್ರಾಂತಿಯ ಅಭಾವಗಡಿದು
ನೀತಿ ಸುಪಥದ ಮಾರ್ಗವ ಹಿಡಿದು
ಜ್ಯೋತಿ ಸ್ವರೂಪವ ಕಂಡಾತ ಶರಣನು | | |3||
ಭಾವ ಭಕ್ತಿಯ ಕೀಲವ ತಿಳಿದು
ಹ್ಯಾವ ಹೆಮ್ಮೆಯ ಮೂಲವನಳಿದು
ಜೀವ ಶಿಶುವು ತಿಳಿದಾತ ಶರಣನು | || 4||
ಜಾತಿಯ ಕುಲಗಳ ಭೇದವ ತಿಳಿದು
ಯಾತನೆ ದೇಹದ ಸಂಗವನಳಿದು
ಮಾತಿನ ಮೂಲವ ತಿಳಿದಾತ ಶರಣನು | || 5||
ಸೋಹ್ಯ ಸೊನ್ನೆಯ ಸೂತ್ರವಿಡಿದು
ಲಯ ಲಕ್ಷ್ಮಿಯ ಮುದ್ರೆಯ ಜಡಿದು
ಧ್ಯೇಯ ಧ್ಯಾತವ ತಿಳಿದಾತ ಶರಣನು | ||6||
ನಾದದಿಂದ ಕಳೆಯ ಮುಟ್ಟಿ
ಸಾಧಿಸಿ ಉನ್ಮನ ಮೆಟ್ಟಿ
ಆದಿತತ್ವದ ಗತಿ ತಿಳಿದಾತ ಶರಣನು | ||7||
ಆಧಾರ ದೃಢದಿಂದ ಅರಹುತನಾಗಿ
ಮಧ್ಯ ಮುಪ್ಪರದಲಿ ಸ್ಥಿತಿವಾಗಿ
ಊರ್ಧ್ವ ಮಂಡಲಗತಿ ಬೆರೆದಾತ ಶರಣನು | ||8||
ಬಾಹ್ಯಾಂತ್ರ ಪರಿಪೂರ್ಣ ಘನಮಯಗಂಡು
ಸಾಯೋಜ್ಯ ಸದ್ಗತಿ ಸವಿಸುಖನುಂಡು
ಮಹಿಪತಿ ಗುರುಮನಗಂಡಾತ ಶರಣನು | | |9||

ತಿಳಿದು ನೋಡೋ
ತಿಳಿದು ನೋಡೊ ನಿನ್ನೊಳಗೆ ನಿಜಬಣ್ಣ
ಬೆಳಗಿನೊಳು ಬೆಳಗುದೋರುತಿಹ್ಯ ಜಗಜೀವನ | | |ಪ||
ಒಳಗೆ ವಿಷ ಮ್ಯಾಲೆ ವೇಷ ಇಳೆಯೊಳ್ಯಾಕೆ ಸೋಗು
ಕಳೆದು ಕೋಪ ಅಳಿದು ತಾಪ ತಿಳಿದು ನಿಜವಗು | ||1||
ಕೈಯೊಳು ಜಪ ಮೈಯೊಳು ಕೋಪ ಬಾಯೊಳಗ್ಯಾಕ ಮಂತ್ರ
ದೇಹ್ಯೂಳಗಿಹ್ಯ ಸೋಹ್ಯವ ತಿಳಿದು ಧ್ಯಾನಿಸೊ ಸೂತ್ರಾಂತ್ರಾ | ||2||
ಮುಸುಕಿನೊಳು ಹಸಕವಿಟ್ಟು ಠಸಕದೋರಬ್ಯಾಡೊ
ಉಸುರಿನೊಳು ಹಸನುಗೊಂಡು ಮೀಸಲು ಮನ ಮಾಡೊ | ||3||
ಹಿಡಿದು ಜನ ಪಡೆದಗುಣ ಒಡನೆ ಕೊಡೊ ಸುಪಥ
ಹಿಡಿದು ಗುರುಪಾದ ಮಹಿಪತಿ ನೋಡೊ ಸ್ವಹಿತ | || 4||

ದ್ವೈತ ಅದ್ವೈತೆಂದು ಹೊಡೆದಾಡದಿರೊ
ದ್ವೈತ ಅದ್ವೈತೆಂದು ಹೊಡೆದಾಡದಿರೊ ಪ್ರಾಣಿ
ಚೇತಿಸಿ ಬ್ಯಾರಿಹ ವಸ್ತುಗಾಣಿ | ||ಪ||
ದ್ವೈತ ಎನಲಿಕ್ಕೆ ತಾಂ ಅದೆವೆ ಅದ್ವೈತ
ಅದ್ವೈತ ಎನಲಿಕ್ಕೆ ಅದನೆ ತಾ ದ್ವೈತ | || 1||
ಹಿಂದು ಮುಂದಾಗಿ ಆಡುಸುತಿಹ ನಿಜಖೂನ
ಎಂದಿಗಾದರು ತಿಳಿಗುಡದು ಪೂರ್ಣ | | |2||
ಅತಿಸೂಕ್ಷ್ಮ ತಿಳುವಾದರಲ್ಲೆ ಬಿದ್ದದ ಮಲಕು
ನೇತಿ ನೇತೆಂದು ಸಾರುತಿದೆ ಶ್ರುತಿ ಇದೆಕ ತಿಳಕೊ | ||3||
ದ್ವೈತ ಎಂದವನೆ ತಾಂ ಪರಮ ವೈಷ್ಣವನಲ್ಲ
ಅದ್ವೈತನೆಂದವನೆ ತಾಂ ಪರಮ ಸ್ಮಾರ್ತನಲ್ಲ | ||4||
ಸ್ಮಾರ್ತ ವೈಷ್ಣವರ ಈ ಮತ ಗುರು ಮಧ್ವಮುನಿ ಬಲ್ಲ
ಅರ್ತು ಸ್ಥಾಪಿಸುವುದು ಮನುಜಗಲ್ಲ | ||5||
ಮೂರುವರಿ ಮೊಳದ ದೇಹದ ಶುದ್ಧಿ ನಿನಗಿಲ್ಲ
ದೋರುವವರೆ ತರ್ಕಸ್ಯಾಡುವ ಸೊಲ್ಲ | ||6||
ದ್ವೈತ ಅದ್ವೈತಕ ಬ್ಯಾರಿಹ ಗುರು ಗುಟ್ಟು
ಚಿತ್ತ ಶುದ್ಧಾಗಿ ಮಹಿಪತಿಯ ಮುಟ್ಟು | ||7||

ಬಾಟ ಪಕಡೋ ಸೀದಾ
ಬಾಟ ಪಕಡೋ ಸೀದಾ
ನ ಪಡೇ ತೇಥೆ ಬಾಧಾ
ಇದುವೆ ಗುರನಿಜ ಬೋಧಾ
ಸ್ವಸುಖ ಸಮ್ಮತವಾದಾ | ||ಪ||
ಬಂದಗೀ ಕರ್ತಾ ಕರಕೇ ಝೂಟಾ
ತಿಳಿಯದು ನಿಜ ಘನದಾಟ
ಮರ್ಮ ನ ಕಳತಾ ಕರಣೀ ಖೋಟಾ
ಕೇಳಿ ಶ್ರೀಗುರುವಿಗೆ ನೀಟಾ | ||1||
ಜಾನ ಬೂಝಕರ ಚಲನಾ ಭಾಯಿ
ಲಕ್ಷ್ಯ ಲಾವುನೀ ಗುರುಪಾಯಿ
ಇದು ಎಲ್ಲರಿಗೆ ದೋರುದೇನಯ್ಯ
ಹೆ ಸಮಝೇ ವಿರಲಾ ಕೋಯಿ | ||2||
ತಿಳಿದು ನೋಡಿ ಶ್ರೀಗುರು ಕೃಪೆಯಿಂದ
ಹುವಾ ಖುದಾಕ ಬಂದಾ
ಮಹಿಪತಿಗಾಯಿತು ಬಲು ಆನಂದಾ
ಹರೀಮ್ಹಣಾ ಗೋವಿಂದಾ | ||3||

ಇದೇ ನೋಡಿ ಸತ್ಯ ಶುದ್ಧ ಮಡಿ
ಇದೇ ನೋಡಿ ಸ್ವತ್ಯ ಶುದ್ಧ ಮಡಿ
ಸದಾ ಸರ್ವದಾ ಇದೇ ಮಾಡಿ | ||ಪ||
ಅರಹು ಎಂಬುದೆ ಮಡಿ ಉಡಿ
ಮರಹು ಮೈಲಗಿ ಮುಟ್ಟಬ್ಯಾಡಿ
ಗುರುಸ್ಮರಣೆ ಎಂಬ ನಿಷ್ಠೆಯೊಳಗೂಡಿ
ಪರಬ್ರಹ್ಮ ಸ್ವರೂಪವ ನೋಡಿ | ||1||
ಕಾಮಕ್ರೋಧದ ಸ್ಪರ್ಶವ ಬ್ಯಾಡಿ
ನೇಮ ನಿತ್ಯ ಇದನೇ ಮಾಡಿ
ಶಮದಮೆವೆಂಬುದು ಕೈಗೂಡಿ
ಪ್ರೇಮಭಾವ ಭಕ್ತಿಯ ಮಾಡಿ | | |2||
ಮಿಥ್ಯಾ ಬೂಟಕಿ ಮಡಿ ಮಾಡಬ್ಯಾಡಿ
ಚಿತ್ತಚಿದ್ಘನ ಸಮರಸ ನೋಡಿ
ನಿತ್ಯ ಮಹಿಪತಿಗಿದೆ ಮಡಿ ನೋಡಿ
ಸತ್ಯ ಸನಾತನ ಪದ ಕೊಡಿ | | |3||

ಸುಮ್ಮನಿರಬೇಕು ಸುಜ್ಞಾನಿ
ಸುಮ್ಮನಿರಬೇಕು ಸುಜ್ಞಾನಿ ಜಗದೊಳಗೆ
ಹಂಸೋಹಂ ಭಾವದ ಉಸಿರೊಡಿಯದ್ಹಾಂಗೆ | ||ಪ||
ಎಲ್ಲದೋರ್ವದು ಮರೆದು ಎಲ್ಲರೊಳಗಿಹದರಿದು
ಎಲ್ಲರೊಳಗೆಲ್ಲ ತಾನಾಗಬೇಕು
ಎಲ್ಲರೊಳು ತಾನಾಗಿ ಎಲ್ಲ ತನ್ನೊಳಗಾಗಿ
ಬೆಲ್ಲ ಸವಿದ ಮೂಕನಂತಾಗಬೇಕು | 1||
ಬಲ್ಲತನವನು ನೀಡಿ ಬಲ್ಲನೆ ತಾನಾಗಿ
ಬಲ್ಲರಿಯನೆಂಬುದನು ಈಡ್ಯಾಡಬೇಕು
ಬಲ್ಲರಿಯದೊಳಗಿದ್ದನೆಲ್ಲ ತಿಳಕೊಳ್ಳಬೇಕು
ಸೊಲ್ಲಲ್ಹೇಳುವ ಸೊಬಗ ಬೀರದಿರಬೇಕು | ||2||
ಸೋಹ್ಯ ಸೂತ್ರವ ತಿಳಿದು ಬಾಹ್ಯರಂಜನಿ ಮರೆದು
ದೇಹ ವಿದೇಹದಲಿ ಬಾಳಬೇಕು
ಮಹಿಗೆ ಮಹಿಪತಿಯಾಗಿ ಸ್ವಹಿತ ಸದ್ಗುರವಾದ
ಶ್ರೀಹರಿ ಗುರುತನುಂಡು ಸುಖದಲಿ ಸುಖಿಸಬೇಕು | ||3||

ಸಿದ್ಧಾಂತವಿದು ನೋಡಿ
ಸಿದ್ಧಾಂತವಿದು ನೋಡಿ ಸದ್ಗುರುವಿನ ಕೃಪೆಯು
ಬುದ್ಧಿವಂತರು ಬಲ್ಲರಧ್ಯಾತ್ಮ ಸುಖವು | || ಪ||
ಕಾಲಿಲ್ಲದಾಕಳವು ಬಾಲಮುಖದಲಿ ಬಂದು
ಕಾಳರೂಪದ ಹುಲಿಯನೆ ನುಂಗಿತು
ಮೇಲುವರಿಯಲಿ ಬಂದು ಜಲದೊಳಗಿನ ಕಪ್ಪೆ
ಮೂಲಸರ್ಪದ ಹೆಡೆಯು ನುಂಗಿದುದು ನೋಡಿ | ||1||
ಬಾಲ ಇಲ್ಲದ ಇಲಿಯು ಜಾಲಹಾಕುತ ಬಂದು
ಸ್ಥೂಲ ಬೆಕ್ಕಿನ ತಲೆಯನೆ ಮುರಿಯಿತು
ನಾಲಿಗಿಲ್ಲದ ಮೊಲವು ನಿಲುಕಿ ಜಪ್ಪವ ಹಾಕಿ
ಭಲೆ ಶ್ವಾನನ ಗಂಟಲ್ಹಿಡಿದಿಹುದು ನೋಡಿ | || 2||
ದಿವ್ಯಯೋಗದ ಮಾತು ಕಿವಿ ಇಲ್ಲದವ ಕೇಳಿ
ಕಣ್ಣಿಲ್ಲದವ ಕಂಡು ಬೆರಗಾದನು
ಕೌತುಕವ ಕಂಡು ಮಹಿಪತಿಯು ತನ್ನೊಳು
ತಾನು ತ್ರಾಹಿ ತ್ರಾಹಿಯೆಂದ ಮನದೊಳು | | |3||

ಮುತ್ತು ಕೊಳ್ಳಿರೋ
ಮುತ್ತು ಕೊಳ್ಳಿರೋ ಉತ್ತಮರೆಲ್ಲ | ||ಪ||
ಜ್ಞಾನ ಸಮುದ್ರದಲಿನ್ನು ಧ್ಯಾನವೆಂಬ ಸಿಂಪಿನೊಳು
ಘನಗುರಕರುಣದ ಮಳೆಯಾದ ಮುತ್ತು ಕೊಳ್ಳಿರೋ | ||1||
ಪಿಂಡ ಬ್ರಹ್ಮಾಂಡವೆಂಬ ಗಡ್ಡೆಯೊಳಿನ್ನು
ಪುಟ್ಟಿ ಭಕ್ತಿ ಭಾವ ಹಡಗದೊಳು ಬಂದ ಮುತ್ತು ಕೊಳ್ಳಿರೋ | ||2||
ಸಾಧು ಸಜ್ಜನರೆಂಬ ಮುತ್ತಿನ ಜೋಹರೇರ ಕೈಯ
ನಿಜಹಸ್ತ ಸ್ಪರ್ಶವಾದ ನೀವು ಮುತ್ತು ಕೊಳ್ಳಿರೋ | ||3||
ಅತ್ತಲಿತ್ತಲಾಗದೆ ಈ ಮುತ್ತು ಜತನ ಮಾಡಿ
ನಿಮ್ಮ ಚಿತ್ತ ಮನದೊಳು ಇಟ್ಟುಕೊಳ್ಳಿರೋ | ||4||
ತನುಮನಧನವರ್ಪಿಸಿಕೊಂಡಿಹ ಮುತ್ತು
ಮಹಿಪತಿ ಇಹಪರವಸ್ತು ಮುತ್ತು ಕೊಳ್ಳಿರೋ | ||5||

ಕಂಡೆ ನಾನೊಂದು ಕೌತುಕವ
ಕಂಡೆ ನಾನೊಂದು ಕೌತುಕವ | ||ಪ||
ಆಯಿ ಅಜ್ಜನ ನುಂಗಿದ ಕಂಡೆ
ನಾಯಿ ಲಜ್ಜೆಯ ಹಿಡಿದುದ ಕಂಡೆ
ಕಾಯಿ ಹೆಜ್ಜೆಯನಿಕ್ಕುತ ಜಗದೊಳು ರಾಜ್ಯ
ಪ್ರದಕ್ಷಿಣೆ ಮಾಡುದು ಕಂಡೆ | | |1||
ಇರುಹೆ ವಿಷ್ಣುನ ನುಂಗಿದ ಕಂಡೆ
ನರಿಯು ರಾಜ್ಯನಾಳುದ ಕಂಡೆ
ಅರಿಯು ಮರಿಯ ನುಂಗಿದ ಕಂಡೆ
ಕುರಿಯಿಂದ ಪರಲೋಕಯೆಯ್ದಿದ ಕಂಡೆ | || 2||
ಇಲಿಯು ಯುಕ್ತಿಯದೋರುದ ಕಂಡೆ
ಹುಲಿಯು ಭಕ್ತಿಯ ಮಾಡುದ ಕಂಡೆ
ಇಳೆಯೊಳು ಮಹಿಪತಿ ಕಲೇವರದೊಳಿನ್ನು
ಮುಕ್ತಿ ಸಾಧನದೊಂದು ಬೆಡಗ ಕಂಡೆ | ||3||

ಏನೆಂದ್ಹೇಳಲಿ ಸೋಜಿಗವ
ಕಂಡೆನು ಕೌತುಕವ ಏನೆಂದ್ಹೇಳಲಿ ಸೋಜಿಗವ | || ಪ||
ಅಜ ನುಂಗಿತು ಗಜವ ವಾಜಿ ನುಂಗಿತು ಈ ಮೂಜಗವ
ರಾಜ್ಯ ನುಂಗಿತು ಪ್ರಜರ ಸಂಜೀವ ನುಂಗಿತು ಸಂಜೀವ | ||1||
ಇಲಿಯು ನುಂಗಿತು ಮೊಲವ ಹಲ್ಲಿ ನುಂಗಿತು ಹಲವು ಕುಲವ
ಜಲ ನುಂಗಿತು ಜಲವ ಹುಲಿ ನುಂಗಿತು ಈ ಮಾರ್ಬಲವ | ||2||
ಅರಿಯು ನುಂಗಿತು ಮರವ ನೊರಜ ನುಂಗಿತು ಗಿರಿಪರ್ವತವ
ಇರಹು ನುಂಗಿತು ಸರ್ವ ಬೆರಗಾಯಿತು ಮಹಿಪತಿಜೀವ | ||3||

ಬೆಡಗಿನ ಕೋಡುಗ
ಕಾಡುತಲಿಹುದು ಬೆಡಗಿನ ಕೋಡುಗ
ಬಡವರಿಗಳವಲ್ಲ ಪೊಡವಿಯಲಿ | ||ಪ||
ಮಾಯದ ಮುಖವದು ಮೋಹದ ನಾಶಿಕ
ಮಾಯ ಮಕರ ಕಿವಿಗಣ್ಣುಗಳು
ಹ್ಯಾವ ಹೆಮ್ಮೆಯು ಹುಬ್ಬು ಕಪಿ ಕಣ್ಣ ಯೆವೆಗಳು
ಬಾಯಿ ನಾಲಿಗೆ ಹಲ್ಲು ಬಯಕಿಗಳು | | |1||
ಗರ್ವಗುಣ ಶಿರ ಗಾತ್ರ ಸರ್ವಾಂಗವು ದುರುಳ
ದುರ್ಬುದ್ಧಿಯ ಬೆರಳುಗಳು
ಎರಡು ತುಟಿಗಳೆಂಬ ನಿಂದೆ ದೂಷಣಗಳು
ಕೊರಳ ಕುತ್ತಿಗೆ ದುಷ್ಕರ್ಮಗಳು | ||2||
ಹಣೆಯು ದಾಡಯು ಗಲ್ಲ ಪ್ರಪಂಚ ಶೋಭಿತ
ಕಣ್ಣ ಭಾವಗಳಿವು ಚಂಚಲವು
ಬಣ್ಣ ಬಣ್ಣದಿ ಕುಣಿದಾಡುವ ಕಪಿ
ಗುಣ ಏನೆಂದ್ಹೇಳಲಿ ಕಪಿ ವಿವರಣವು | ||3||
ಉದರ ಬೆನ್ನುಗಳಿವು ಸ್ವಾರ್ಥ ಬುದ್ಧಿಗಳು
ಮದ ಮತ್ಸರಗಳೆಂಬ ಕೈಗಳು
ಪಾದ ಕಾಲುಗಳಿವು ಕಾಮಕ್ರೋಧಗಳು
ಮೇದಿನಿಯೊಳು ಕುಣಿದಾಡುವುದು | ||4||
ಆಶೆಯೇ ಪಂಜವು ವಾಸನೆ ಬಾಲವು
ಮೋಸ ಮೂಕರ ಗುಣಕೇಶಗಳು
ಏಸು ಮಂದಿಯ ಕಪಿ ಘಾಸಿಯ ಮಾಡಿತು
ಮೋಸಗೈಸಿತು ಭವಪಾಶದಲಿ | | |5||
ಅಶನವ್ಯಸನ ತೃಷಿ ಕಪಿಗಿದು
ಭೂಷಣ ಮೀಸಲಾಗಿಡಿಸಿತು ಸುವಾಸದ
ಹಸಗೆಡಿಸುವುದು ಯತಿಮುನಿಗಳ ತಪಸವ
ಮುಸುಕಿತು ಮೋಸವು ಕಪಿಯಿಂದಲಿ | ||6||
ಕಂಡದ್ದು ಬೇಡುತ ಅಂಡಲಿಯುತಿಹುದು
ಮಂಡಲದೊಳು ತಾ ಕಾಡುತಲಿ
ಪಿಂಡ ಬ್ರಹ್ಮಾಂಡದಿ ಲಂಘಿಸುತಿಹುದು
ಹಿಡಿದು ಬಿಡದು ಮುಷ್ಟಿ ಬಿರುದುಗಳ | ||7||
ಪುಂಡತನದಿ ಬಲು ಮಂಡವಾಗಿಹುದು
ಹಂಡೀಗತನದಲಿ ಬಾಳುವುದು
ಭಂಡಿನಾ ಆಟಿಗೆ ಗಂಡಾಗಿಹುದು
ಕಂಡ ಕಡಿಗೆ ಹರಿದಾಡುತಲಿ | ||8||
ಮೂಢ ಮಹಿಪತಿಯು ಕಾಡುವ ಕಪಿಗಿನ್ನು
ಜಡಿಸೀದ ಗುರು ಜ್ಞಾನಸಂಕೋಲೆಯ
ಕಾಡುವ ಕಪಿ ಕೈಯ ಬಿಡಿಸಿದ ಗುರು ಎನ್ನ
ಕಡೆಯ ಮಾಡಿದ ಬ್ರಾಹ್ಮಣ ಜನ್ಮದಲಿ | ||9||

ಕಡೆವ ಬನ್ನಿ ಸಡಗರದಿಂದ
ಕಡೆವ ಬನ್ನಿ ಸಡಗರದಿಂದ ಘುಡುಘುಡಿಸಿ
ದೃಢವೆಂಬುದು ಕಡುಕಂಬನೆ ಮಾಡಿ ನಡನಡಿಸಿ
ನುಡಿ ನಿಜ ಒಡನೆ ಪಡಗವ ತಂದು ಜಡದಿಡಸಿ ಜಡದಿಡಸಿ
ಹುಡುಕಿ ತೆಗೆದಡುಕುವ ನವನೀತ ಗಡಬಡಿಸಿ ಹಡಬಡಿಸಿ | ||ಪ||
ಮೀಸಲಮನ ಕೆನೆ ಮೊಸರನೆ ಮಾಡಿ ಶೋಧಿಸಿ ಶೋಧಿಸಿ
ವಾಸನೆ ಮೊಸರ ಕರಣೆಕುಸಕಿರಿದು ಮರ್ದಿಸಿ ಮರ್ದಿಸಿ
ಮೋಸಹೋಗದೆ ದುರಾಶದ ಕಿಲ್ಮಿಶ ಝಾಡಿಸಿ ಝಾಡಿಸಿ
ಧ್ಯಾಸ ಬಲಿದು ಸುವಾಸನೆಕಳಲ ಕಡೆವದಾರಂಭಿಸಿ | ||1||
ನಾಮದಿವ್ಯ ಮಂತವ ಕಟ್ಟಿ ವಿಷಮ ಬಿಡಿಸಿ ವಿಷಮ ಬಿಡಿಸಿ
ನೇಮದಿಂದ ಸುಪ್ರೇಮದರವಿಗೆ ಘಮಗುಡಿಸಿ ಘಮಗುಡಿಸಿ
ಶಮೆದಮೆವೆಂಬ್ಹಗ್ಗನೆ ಸಮವಿಡಿದು ಧಿಮಿಗುಡಿಸಿ ಧಿಮಿಗುಡಿಸಿ
ಶ್ರಮಜನ್ಮದ ಹರುವ ಕ್ರಮಗೊಂಡಾಹಂ ಬಿಡಿಸಿ | | |2||
ನಾವು ನೀವೆಂಬ ಹೊಲೆಗುಡತಿಯ ನೆರೆಬಿಡಿಸಿ ನೆರೆಬಿಡಿಸಿ
ಸಾವಧಾನದಲಿ ಅನುಭವಾಮೃತ ನಿಜಕುಡಿಸಿ ನಿಜಕುಡಿಸಿ
ಭಾವದಲಿ ಸದ್ಗುರು ದಯ ನವನೀತ ಝಲ್ಲಿಸಿ ಝಲ್ಲಿಸಿ
ಸವಿಸವಿಗೊಂಡು ಸುವಿದ್ಯ ಸಾರಾಯವ ಅನುಭವಿಸಿ | ||3||
ಕಡೆವ ಕುಶಲಿ ಒಬ್ಬಳೇ ಬಲು ನಿಜ ಜ್ಞಾನಶಕ್ತಿ ಶಕ್ತಿಯಿಂ
ಒಡಗೂಡಲು ನಿಜಬಾಹುದು ಕೈಗೂಡಿ ಸದ್ಗತಿ ಸದ್ಗತಿ
ಪಡಕೊಂಡರು ಇದರಿಂದಲಿ ಮುನಿಜನ ವಿಶ್ರಾಂತಿ ವಿಶ್ರಾಂತಿ
ಕೊಂಡಾಡಿದ ಅನುಭವಸ್ತುತಿ ಮೂಢ ಮಹಿಪತಿ | | |4||

ಕಾಣಬಹುದಕೆ ಕನ್ನಡಿ ಯಾಕೆ
ಕಾಣಬಹುದಕೆ ಕನ್ನಡಿ ಯಾಕೆ ಭಿನ್ನವಿಲ್ಲದೆ ನೋಡಿ
ತನ್ನೊಳು ಘನಬ್ರಹ್ಮವಿರಲಿಕ್ಕೆ ಅನುಮಾನವು ಬ್ಯಾಡಿ | ||ಪ||
ಕುಂಭಿನಿಯೊಳು ಘನಹೊಳೆಯುತ ತುಂಬಿ ತುಳುಕುತಲ್ಯಾದೆ
ಉಂಬವರಿಗಿದಿರಿಡುತ ಬಿಂಬಿಸುತಲ್ಯಾದೆ
ಹಂಬಲಿಸಿದರೆ ತನ್ನೊಳಗೆ ತಾ ಗುಂಭಗುರುತವಾಗ್ಯಾದೆ
ಡಿಂಬಿನೊಳಗೆ ನಿಜದೋರುತ ಇಂಬು ತಾನೆ ಆಗ್ಯಾದೆ | ||1||
ಹೇಳುವ ಮಾತಿನ ಮಾತಿಲ್ಲ ಕೇಳಿರಯ್ಯ ಚೆನ್ನಾಗಿ
ಒಳಹೊರಗಿದು ಭಾಸುತಿಹದೆಲ್ಲಾ ಸುಳುವು ಬಲ್ಲಾತ ಯೋಗಿ
ಕಳೆಕಾಂತಿಗಳ ಅನುಭವವೆಲ್ಲಾನು ತಿಳಿಯಬಲ್ಲವ ಭೋಗಿ
ಹೊಳೆವುತಿಹದು ಸರ್ವಮಯವೆಲ್ಲಾ ಮೊಳೆಮಿಂಚು ತಾನಾಗಿ | | |2||
ಇಲ್ಲೆವೆ ಎರಡು ಹಾದಿಯ ಕಟ್ಟಿ ಗುಲ್ಲುಮಾಡದೆ ನೋಡಿ
ಮ್ಯಾಲಿಹ ಸ್ಥಾನಸ್ಥಾನವ ಮುಟ್ಟಿ ಮೂಲಸ್ಥಾನವ ಕೂಡಿ
ಗೋಲ್ಹಾಟ ಮಂಡಲವನು ದಾಟಿ ಅಲ್ಲಿಯೆ ಮಹಿಪತಿ ನೋಡಿ
ಅಲ್ಲಿಯೆ ಮನ ತಾಮ ಮನಿಕಟ್ಟಿ ಫುಲ್ಲನಾಭನ ಕೂಡಿ | ||3||

ಸಾಧುರ ಮಹಿಮೆಯು
ಸಾಧುರ ಮಹಿಮೆಯು ಸಾಧಿಸದೆ ತಿಳಿಯದು
ಭೇದಿಸದಲ್ಲದೆ ಹೊಳೆಯದಿದು | ||ಪ||
ತೆಂಗಿನ ಫಲದಂತವರ ಸಂಗದಸುಖ
ಹಿಂಗದಂತನುದಿನ ಅನುಭವಿಸುವದಲ್ಲದೆ | ||1||
ಬಂಡೆಯೊಳಿದ್ದದ ತಾ ಒಡೆದು ಪ್ರಾಶಿಸಿದಂತೆ
ಕಡಲೊಳಗಿದ್ದ ರತ್ನ ಮುಳುಗಿ ತೆಗೆದಂತೆ | || 2||
ಅಂತರಾತ್ಮ ಸುಖ ಮಹಾತ್ಮರಿಗಲ್ಲದೆ
ಮೂಢಾತ್ನರಿಗಿದು ಎಲ್ಲಿಹುದು | ||3||
ಸಾಧು ಸಂತರ ನಿಜದಾಸ ಮಹಿಪತಿಗಿನ್ನು
ಸಾಧು ಸಂಗತಿ ಜೀವನ್ಮುಕ್ತಿಯು | || 4||

ಜನ್ಮ ವ್ಯರ್ಥವಲ್ಲವೆ
ವ್ಯರ್ಥವಲ್ಲವೇ ಜನ್ಮ ವ್ಯರ್ಥವಲ್ಲವೆ
ಕರ್ತು ಸದ್ಗುರು ಪಾದ ಅರ್ತು ಬೆರೆಯದವನ ಜನ್ಮ | ||ಪ||
ಇಡಾ ಪಿಂಗಳೆರಡು ಥಡಿಯ ಮಧ್ಯಸುಷಮ್ನದಲಿ
ಗುಪ್ತವಾಹಿನಿಯ ಸುಸ್ನಾನ ಮಾಡಿದವನ | ||1||
ಪಿಂಡ ಬ್ರಹ್ಮಾಂಡ ಭ್ರೂಮಧ್ಯ ತ್ರೀವೇಣಿ ಕ್ಷೇತ್ರ
ಪುಣ್ಯಸಂಗಮದ ತೀರ್ಥಯಾತ್ರೆ ಮಾಡದವನ ಜನ್ಮ | 2||
ಆರು ಸೋಪಾನವೇರಿ ಮೂರು ಗೋಪುರುವ ದಾಟಿ
ಮೇಲುಗಿರಿಯಲಿಹ ಮಹಿಪತಿಯ ಮೂರ್ತಿ ನೋಡದವನ ಜನ್ಮ | ||3||

ಮಾತು ಬಿಡಬೇಕು
ಮಾತು ಬಿಡಬೇಕು ನೀತಿ ಹಿಡಿಬೇಕು
ಪ್ರೀತಿಯಿಂದಧ್ಯಾತ್ಮ ನಿಜಸ್ಥಿತಿಗೂಡಬೇಕು | ||ಪ||
ಕೋಟಿ ಮಾತಾದೇನು ಕೋಟಿಲಿದ್ದಾವೇನು
ನೋಟ ನೆಲೆಗೊಳದ ಶಾಸ್ತ್ರಪಾಠ ಮಾಡಿನ್ನೇನು | ||1||
ಪಡಿಯದೆ ಸಂಜೀವ ಗಿಡಮೂಲವ್ಯಾತಕೆ ಸರ್ವ
ನಡಿಯು ಜ್ಞಾನವರಿಯದಿಹ ನುಡಿಯಾತಕೆ ಬೀರ್ವ | ||2||
ನಡೆನುಡಿ ಒಂದೆ ಮಾಡಿ ದೃಢ ಭಾವನೆ ಕೂಡಿ
ಒಡನೆ ಬಾಹ್ವ ಮಹಿಪತಿಯ ಒಡಿಯ ಕೈಗೂಡಿ | ||3||

ಆತ್ಮದ ಖೂನ
ಮನಮರಿಯಲಿದ್ದವಗೆಲ್ಲಿಹುದು ಆತ್ಮದ ಖೂನ
ತನುವನಾಗಿದ್ದವಗೆಲ್ಲಿಹುದು ಜ್ಞಾನ | | |ಪ||
ನಿಗಮ ಓದಿದರೇನು ಆಗಮ ಹೇಳಿದರೇನು
ಬಗೆ ಬಗೆ ವೇಷ ಜಗದೊಳುದೋರಿದರೇನು | ||1||
ಮಠವು ಮಾಡಿದರೇನು ಅಡವಿ ಸೇರಿದರೇನು
ಸೆಠೆ ಮಾಡಿ ಸಂಸಾರ ಹಟವಿಡಿದರೇನು | ||2||
ನಿಗದಿ ಹಾಕಿದರೇನು ಗಗನಕ್ಹಾರಿದರೇನು
ಮಿಗಿಲಾಗಿದೋರಿ ಗವಿಯ ಪೊದ್ದರೇನು | |3||
ಗುಹ್ಯ ಸೇರಿದರೇನು ಬಾಹ್ಯ ಮೆರೆದರೇನು
ದೇಹ ದಂಡಿಸಿ ಹರವ ತೊರೆದರೇನು | | 4||
ಮನಕೆ ಮೀರಹ ಸ್ಥಾನ ಘನಸುಖದಧಿಷ್ಠಾನ
ದೀನಮಹಿಪತಿ ನೀ ಸಾಧಿಸೊ ಗುರುಜ್ಞಾನ | || 5||

ಭಾವ ಭಕ್ತಿಯಿಂದ ನೆಲೆಗೊಂಡು
ಬಲಗೊಳ್ಳಿರೊ ಭಾವ ಭಕ್ತಿಯಿಂದ ನೆಲೆಗೊಂಡು
ಮೂಲವಿಡಿದು ನಿಜಮೂಲ ಮೂರ್ತಿಯ ಬಲಗೊಳ್ಳಿ | ||ಪ||
ಏರಿ ನೋಡಿ ಆರುಚಕ್ರದಾಟಿ ತೋರುತಿಹ
ಪೂರ್ಣಾನಂದ ಶ್ರೀಗುರುಮೂರ್ತಿಯ ಬಲಗೊಳ್ಳಿ | ||1||
ಸೆರಗವಿಡಿದು ನೋಡಿ ಕರಗಿಮನ ಅರವಿನೊಳು
ಬೆರೆದು ಕೂಡಿ ಹರಿ ಪರಬ್ರಹ್ಮನ ಬಲಗೊಳ್ಳಿ | ||2||
ಆಸಿಯನೆ ಜರೆದು ನಿರಾಸಿಯಲ್ಲಿ ಧ್ಯಾಸವಿಡಿದು
ಲೇಸಾಗಿ ಕೂಡಿರೊ ವಾಸುದೇವನ ಬಲಗೊಳ್ಳಿ | ||3||
ಮೂರು ಗುಣಕೆ ಮೀರಿ ತೋರುತಿಹ ನಿರ್ಗುಣನ
ನೆರೆದು ಕೂಡಿ ನಿಜ ನಿರುಪಮನ ಬಲಗೊಳ್ಳಿ | ||4||
ಸಹಸ್ರದಳ ಮಂಟಪದೊಳು ಸೋಹ್ಯವರಿತು
ಸಾಯಸದಿಂದ ಶ್ರೀಹರಿಯ ಬಲಗೊಳ್ಳಿ | ||5||
ತಾನೆ ತಾನಗಿಹ ತನುವಿನೊಳು ಆನಂದೋಬ್ರಹ್ಮ
ಜ್ಞಾನದಿಂದ ನೋಡಿ ಜ್ಞಾನಸಾಗರನ ಬಲಗೊಳ್ಳಿ | ||6||
ಮನವಿಡಿದು ಮಾಡಿರೊ ಧ್ಯಾನ ಮೌನ ಅನುದಿನ
ಅನುಕೂಲವಾಗುವ ಅನಂತ ಗುಣನ ಬಲಗೊಳ್ಳಿ | ||7||
ಕಣ್ದೆರೆದು ನೋಡಿ ತನ್ನೊಳಗೆ ತಾನೆ ತಿಳಿದು
ತನುಮನರ್ಪಿಸಿ ಗುರುಮೂರ್ತಿಯ ಬಲಗೊಳ್ಳಿ | ||8||
ಗುರು ಕರುಣದೊಲವಿನಿಂದ ಪಡೆದು ಪೂರ್ಣ
ಹರಿಯು ಸುಖ ಸುರ್ಯಾಡಿ ಪರಮಾನಂದ ಸುಪಥ | ||9||
ಅರ್ತುಕೂಡಿದ ನೋಡಿ ಅರ್ತಿಯಿಂದ ಮಹಿಪತಿಯ
ಬೆರ್ತುಕೂಡಿದ ಮನ ಕರ್ತುಗುರುವಿನ ಬಲಗೊಳ್ಳಿ | ||10||

ಗುರು ಕೃಪೆಯ ಜ್ಞಾನ
ಧನ ಲಂಪಟಗೆ ಎಲ್ಲಿಹುದು ಗುರುಕೃಪೆಯ ಜ್ಞಾನ
ತನು ಲಂಪಟಗೆ ಎಲ್ಲಿಹುದು ತನ್ನೊಳು ಖೂನ | ||ಪ||
ವಿಷಯ ಲಂಪಟಗೆ ಎಲ್ಲಿಹುದು ತಾ ವಿರಕ್ತಿಯು
ದೆಸೆಗೆಟ್ಟವಗೆ ಎಲ್ಲಿಹುದು ಯುಕ್ತಿಯು
ಮುಸುಕಿದ ಮಾಯದವಗೆಲ್ಲಿಹುದು ಮುಕ್ತಿಯು
ಹುಸಿಯಾಡವವಗೆಲ್ಲಿಹುದು ಋಷಿಭಕ್ತಿಯು | || 1||
ಮರುಳುಗುಂಟೆ ಅರಿವು ರಾಜಸನ್ಮಾನ
ತರಳಗುಂಟೆ ಭಯವು ಘಟಸರ್ಪದ
ಎರಳೆಗುಂಟೆ ಖೂನ ಮೃಗಜಲವೆಂಬುವದ
ಸೋರೆಗುಂಟೆ ಮಾತು ಚಾರ್ತುಯದ | | |2||
ಕನಸು ಕಾಂಬವಗೆ ಎಲ್ಲಿಹುದು ತಾನಿಹ ಸ್ಥಾನ
ಮನದಿಚ್ಚೆಯಿದ್ದವಗೆ ಎಲ್ಲಿ ಧ್ಯಾನ
ದೀನಮಹಿಪತಿ ಸ್ವಾಮಿ ಕಾಣದವಗೆಲ್ಲಿ ಘನ
ಅನುಭವಿಸಿಕೊಳದೆ ಜನ್ಮಕೆ ಬಂದಿದೇನ | ||3||

ಶ್ರೀಗುರುವಿನ ಬೆಡಗು
ಬೆಡಗು ಅಗಮ್ಯವಿದು ಶ್ರೀಗುರುವಿನ ಬೆಡಗು ಅಗಮ್ಯವಿದು | ||ಪ||
ಶೂನ್ಯಾಕಾರದ ಬಾಲೆ ಗಗನವ ಹಡೆದಳು
ಏನೆಂದ್ಹೇಳಲಿ ಸೋಜಿಗ ಘನಲೀಲೆಯು | ||1||
ವ್ಯೋಮಸುಂದರಿ ಜನಿಸಿದಳು ಮಾರುತನ
ಭೀಮ ಪರಾಕ್ರಮನ ನೇಮದಿಂದಲಿ | ||2||
ನಿಜ ವಾಯುಕುಮಾರಿ ಜನಿಸಿದಳು ತಾನೊಂದು
ತೇಜಪುಂಜದ ರೂಪವ ಮೂಜಗದೊಳು | ||3||
ಥಳಥಳಿಸುವ ತೇಜದ ಖನಿಯ ಹಡೆದಳು
ಜಲಮಯದ ರೂಪವ ನಲಿದಾಡುವ | | |4||
ನಿರಾಕಾರದ ಕೂಸು ಭೂಮಿ ಹಡೆದುದ ಕಂಡು
ಬೆರಗಾದ ಮೂಢ ಮಹಿಪತಿಯ ಗುರುಜ್ಞಾನದ | ||5||
ಬೆಡಗು ತೋರಿದ ಗುರು ಒಡಿಯ ಸರ್ವೋತ್ತಮನು
ಪೊಡವಿಯೊಳಗೊಂದು ಸೋಜಿಗ ಗೂಢವಾಗಿಹ | ||6||
ಕೌತುಕವನು ಕಂಡು ಕೈ ಮುಗಿದು ಮಹಿಪತಿ
ತ್ರಾಹಿ ತ್ರಾಹಿ ತ್ರಾಹಿಯೆಂದ ಮನದೊಳಿನ್ನು | ||7||

ಗುರುನಾಮ ಮಹಿಮೆಯು
ಕೌತುಕವು ನೋಡಿ ಮಹಾ ಗುರುನಾಮ ಮಹಿಮೆಯು
ಬಯಲು ವಿದ್ಯವು ಕೇಳಿ ಭಾವಿಕರಲ್ಲ | |ಪ||
ಶೂನ್ಯ ಮಂಡಲದಿ ವಿಶೂನ್ಯ ಬೀಜದ ವೃಕ್ಷ
ಮಾನ್ಯಮೋನದಲಿ ಬೆಳೆಯುತಿಹ ವೃಕ್ಷ ನೋಡಿ | ||1||
ಬಯಲು ಭಾವದ ಪುಷ್ಪ ನಿರ್ಬೈಲ ಸಾಫಲವು
ಸುವಾಸನೆಯ ಗೊಂಚಲವು ಜಡಿವೃತ | ||2||
ದಿವ್ಯಾಮೃತ ಫಲವು ಸವಿಯು ಸೇವಿಸುವದಕೆ
ಹೊಯಲುವಾದರು ಮಹಾ ಮಹಿಮರಿದು ನೋಡಿ | |3||
ತಾಯಿ ಇಲ್ಲದ ಶಿಶುವು ಕಾಯವಿಲ್ಲದೆ ಬಂದು
ಕೈಯವಿಲ್ಲದೆ ಕೊಂಡು ಸೇವಿಸುವದು | ||4||
ಬಾಯಿ ಇಲ್ಲದೆ ನುಂಗುವದು ಕಂಡು ಮಹಿಪತಿಯು
ಕೈಯ ಮುಗಿದನು ಗುರುವಿಗೆ ತ್ರಾಹಿಯೆಂದು | || 5||

ವಸ್ತು ಕಂಡೆನು ಒಂದು
ವಸ್ತು ಕಂಡೆನು ಒಂದು ಕರ್ತೃ ಸದ್ಗುರುವಿನ ಕೃಪೆಯಿಂದ | ||ಪ||
ತೇಜಪುಂಜದ ರೂಪ ಮೂಜಗದೊಳಗಿದು ಅಪರೂಪ
ನಿಜ ನಿರ್ವಕಲ್ಪ ಸುಜನರ ಹೃದಯಕ ಸದ್ಛನದೀಪ | ||1||
ರೂಪಕ ನೆಲೆಯಿಲ್ಲ ವ್ಯಾಪಕವಿದು ಜಗದೊಳಗೆಲ್ಲ
ಗುಪಿತಜ್ಞಾನಿಯು ಬಲ್ಲ ಜಪತಪಕಿದು ಸಿಲ್ಕುವದಲ್ಲ | | |2||
ಜ್ಞಾನಕ ಸಾಹೀತ ಮುನಿಜನ ಹೃದಯದಿ ಸದೋದಿತ
ಧ್ಯನಕೆ ಆಯಿತು ಮನಕಾಮನವಿದು ಪೂರಿತ | || 3||
ಮೂರಕೆ ವಿರಹಿತ ಮೂರುಲೋಕವು ವಂದಿತ
ಪರಮ ಸಾಯೋಜ್ಯತ ತಾರಕವಸ್ತು ಸಾಕ್ಷಾತ | | |4||
ಬೈಲಿಗೆ ನಿರ್ಬೈಲ ಭಾವಿಕ ಬಲ್ಲನು ಇದರ್ಹೊಯಿಲ
ಮಹಪತಿಗನುಕೂಲ ಜೀವನ್ಮುಕ್ತಿಗೆ ಇದು ಮೂಲ | ||5||

ಬೆಳಗಿನೊಳು ಬೆಳಗಾಯಿತು
ಬೆಳಗಿನೊಳು ಬೆಳಗಾಯಿತು ನೋಡಿ
ಥಳಥಳಿಸುತ ಮನದೊಳಗೆ ಹೊಳೆಯುತ
ಒಳಹೊರಗೇಕೋಮಯದಲಿ ಝಳಿಝಲಿಸುತಿಹದು ಜಗದೊಳಗೆ | ||ಪ||
ಸುಳಿವುದೋರಿದ ಸದ್ಗುರು ಕೃಪೆಯ ಹೇಳಲಿನ್ನೇನದರ ಖೂನ
ತಿಳಿದೇನೆಂದರೆ ಎಳೆಯು ಸಿಲುಕದು ಬಲು ಸೂಕ್ಷ್ಮ ಸುಜ್ಞಾನ
ಹೇಳಿ ಕಿತ್ಯಾಡುವ ಮರುಳರಿಗೆ ತಿಳಿಯದಿದರನುಸಂಧಾನ
ಕಳೆಯದ ಕಲ್ಪನೆ ಅನುಮಾನಿಗಳಿಗೆ ತಿಳಿಯುವುದೆ ಸದ್ಗತಿ ಸಾಧನ | | |1||
ಬೆಳಗಿ ಬೆಳಗು ಬೆರೆದವನೆ ತಾ ಕುಲಕೋಟಿಗಳು ಧನ್ಯ
ಮಳೆಮಿಂಚಿನ ಕಳೆಕಾಂತಿಗಳಿಡುತದೋರಿದ ಸದ್ಗುರು ಪುಣ್ಯ
ಹೇಳಿಹ ಗುಹ್ಯ ವಾಕ್ಯದನುಭವ ಬಂತೆನ್ನೊಳು ತಾರ್ಕಣ್ಯ ಬೆಳಗು ಬೈಗಿಲ್ಲದ
ಬೆಳಗಿನ ಪ್ರಭೆ ತಿಳಿದವನೆ ಮೂಲೋಕದೊಳಗೆ ಮಾನ್ಯ | ||2||
ಬೆಳಗಿನೊಳು ಬೆರಗಾದನು ಮಹಿಪತಿ ಆಶ್ಚರ್ಯವ ನೋಡಿ
ತೊಳಲಿ ಬಳಲುವ ನಿದ್ರೆಯಗಳೆದನು ತಾ ಈಡ್ಯಾಡಿ
ಬೆಳಗೇ ಬೆಳಗಾಯಿತು ಘನಗುರುದಯ ಮನದೊಳು ನಿಜ ಒಡಮೂಡಿ
ಬೀಳುವ ತಿಮಿರಾಂಧವ ಭವಪಾಶವ ಕಳೆದೆನು ಸದ್ಗುರು ಪಾದವ ಕೂಡಿ | ||3||

ನೋಡಿ ನಿಮ್ಮೊಳು
ನೋಡಿ ನಿಮ್ಮೊಳು ನಿಜಾನಂದ ಬೋಧ
ಕೂಡಿ ಕರುಣಾಸಿಂಧು ಶ್ರೀಗುರುಪಾದ | ||ಪ||
ಇಡಾ ಪಿಂಗಳ ಮಧ್ಯ ನೋಡಿ ಈಗ
ನಾಡಿ ಸುಷಮ್ನವಿಡಿದು ಕೂಡಿ ಬ್ಯಾಗ
ನೋಡಬಲ್ಲಿದೆ ಬ್ರಹ್ಮಾನಂದ ಭೋಗ
ಗೂಢವಿದ್ಯವಿದು ತಾ ರಾಜಯೋಗ
ಒಡನೆ ತಿಳಿಯುವದಲ್ಲ ಷಡಚಕ್ರ ಭೇದವಲ್ಲ
ಬಡವರಿಗಳವಲ್ಲ ಗೂಢಿನ ಸೊಲ್ಲ | ||1||
ಪಿಡಿದು ಮನ ಮಾಡಿ ದೃಢ ನಿಶ್ಚಯ
ಬಿಡದೆ ಭೇದಿಸಿನೋಡಿಸುಜ್ಞಾನೋದಯ
ಇಡದು ತುಂಬ್ಯದೆ ವಸ್ತು ಜ್ಯೋತಿರ್ಮಯ
ಪಡೆದುಕೊಳ್ಳಿರೊ ಗುರುಕರುಣ ದಯ
ಮನ ಉನ್ಮನ ಮಾಡಿ ಘನಸುಖದೊಳು ಕೂಡಿ
ಅನಿಮಿಷದಲಿ ನೋಡಿ ಅನುದಿನ ನಲಿದಾಡಿ | ||2||
ಮೂರು ಗುಣರಹಿತ ಮೂಲರೂಪ
ತೋರುತಿಹ್ಯದು ನಿಜ ನಿರ್ವಿಕಲ್ಪ
ತರಳ ಮಹಿಪತಿ ಪ್ರಾಣ ಪಾಲಿಪ
ಹೊರೆದು ಸಲಹುವ ಗುರುಕುಲದೀಪ
ಭಾವಿಕರಿಗೆ ಜೀವ ಕಾವ ಕರುಣದೇವ
ಸರ್ವರೊಳಗೀವ್ಹ ಶ್ರೀ ವಾಸುದೇವ | ||3||

ತಾನೆ ತಾನಾದನಮ್ಮ
ತಾನೆ ತಾನದನಮ್ಮ ಎನ್ನೊಳು ಘನಬ್ರಹ್ಮ | | |ಪ||
ಕಣ್ಣಿಲೆ ನೋಡಲಿಕ್ಕೆ ಕಣ್ಣಿನೊಳಾದನಮ್ಮ
ಕಣ್ಣಿಗೆ ಕಣ್ಣಾಗಿ ಪೂರ್ಣ ಕಾಣಿಸಿದಾನಂದೋಬ್ರಹ್ಮ
ಅಣುರೇಣುದೊಳು ವ್ಯಾಪಿಸಿ ಜನಮನದೊಳು ತುಂಬಿಹ
ತನುಮನದೊಳು ತಾನೆ ತಾನಮ್ಮ | ||1||
ಎತ್ತ ನೋಡಿದತ್ತ ಸುತ್ತ ಸೂಸುವನಮ್ಮ
ನೆತ್ತಿಯೊಳಗೆ ಪೂರ್ಣ ಮೊತ್ತವಾದ ಪರಬ್ರಹ್ಮ
ಅತ್ತಿತ್ತಗಲದೆ ಎನ್ನ ಹತ್ತಿಲಿಹ ಅನುದಿನ ಸಂತತ
ಸದ್ಗುರು ಪೂರ್ಣ ಅಂತರಾತ್ಮದೊಳಗಿಹನಮ್ಮ | | |2||
ನಾನು ನಾನೆಂಬುದಿದು ಇಲ್ಲದಾಯಿತು ನಮ್ಮ
ತಾನೆ ತಾನಾದ ನಿಜ ಓಮಿತ್ಯೇಕಾಕ್ಷರ ಬ್ರಹ್ಮ
ಚೆನ್ನಾಗಿ ಮಹಿಪತಿಗೆ ಸನ್ಮತಸುಖದೋರಿತು
ಉನ್ಮನವಾಗೈನ್ನೊಳಗೆ ಘನಸುಖ ಹೊಳೆಯಿತು ಸಂಭ್ರಮ | ||3||

ಕಂಡೆವಯ್ಯ ನಿಮ್ಮ ಗುರು ಪುಣ್ಯ
ಕಂಡೆವೆಯ್ಯ ನಿಮ್ಮ ಗುರುಪುಣ್ಯ ಚರಣ ಮಹಿಮೆ
ಮಂಡದೊಳು ಗುರುಕೃಪಿಯಿಂದ | ||ಪ||
ಕಣ್ಣ ಮುಚ್ಚಿದರೆ ತಾ ಕಣ್ಣಿನೊಳಗದೆ
ಕಣ್ದೆರೆದರೆ ಕಾಣಿಸುತದೆ
ಸಣ್ಣ ದೊಡ್ಡದರೊಳು ತುಂಬಿತುಳುಕುತದೆ
ಬಣ್ಣ ಬಣ್ಣದಲೆ ಭಾಸುತಲ್ಯದೆ | |1||
ಆಲಿಸಿ ಕೇಳಲು ಹೇಳಗುಡುತಲ್ಯದೆ
ತಾಳಮೃದಂಗ ಭೇರಿ ಭೋರಿಡುತ
ಒಳಹೊರಗೆ ಧಿಮಿಧಿಮಿಗೊಡುತಲ್ಯದೆ
ಹೇಳಿನ್ನೇನು ಕೌತುಕವ | ||2||
ಸುಳಿ ಸುಳಿದಾಡುತ ಹೊಳೆಯುತ ಎನ್ನೊಳಗೆ
ಥಳಥಳಿಸುವ ತೇಜಃಪುಂಜವಿದು
ಮಳೆಮಿಂಚಿನ ಪರಿ ಕಳೆದೋರುತಲ್ಯದೆ
ಝಳಝಳಿಸುತ ಎನ್ನ ಮನದೊಳಗೆ | ||3||
ತುತ್ತಾಯಿತಾ ಮಾಡಿ ನಿತ್ಯ ಸಲುಹುತದೆ
ಎತ್ತ ಹೋದರೆ ತನ್ನಹತ್ತಿಲ್ಯದೆ
ದತ್ತವುಳ್ಳವಗೆ ತಾ ಪ್ರತ್ಯಕ್ಷವಾಗ್ಯದೆ
ಮೊತ್ತವಾಗ್ಯದೆ ತನ್ನ ನೆತ್ತಿಯೊಳಗೆ | ||4||
ಧನ್ಯಗೈಸಿತು ಎನ್ನ ಪ್ರಾಣ ಜೀವನವಿದು
ಚೆನ್ನಾಗಿ ಪೂರ್ಣ ಗುರುಕೃಪೆಯಿಂದ
ಕಣ್ಣಾರೆ ಕಂಡೆ ಭಾನುಕೋಟಿಪ್ರಕಾಶ
ನಿಮ್ಮ ಧನ್ಯಧನ್ಯವಾದ ಮಹಿಪತಿಯು | | |5||

ಹೃದಯ ಕಮಲದೊಳಗೆ
ಉದಯವಾಯಿತು ಹೃದಯ ಕಮಲದೊಳಗೆ | ||ಪ||
ಗುರುಕರುಣಾನಂದಬೋಧ ಅರುಣೋದಯವಾಯಿತು
ಸ್ಮರಣಿಗರವು ದೊರೆಯಿತು ಹರಿಯ ಚರಣದ | ||1||
ಸಮ್ಯಜ್ಞಾನದ ಪ್ರಭೆ ಸಮ್ಯವಾಗಿದೋರಿತು
ತಾಮಸನಿದ್ರೆ ಹರಿಯಿತು ತಿಮಿರಾಂಧದ | ||2||
ಥಳಥಳಿಸುವ ರವಿಕೋಟಿ ಬೆಳಗಾಯಿತು
ಹೊಳೆಯುತ ತೇಜೋನ್ಮಯವು ಒಳಗೊರಗೆಲ್ಲ | ||3||
ಒದಗಿ ಬಂತೆದುರಿಟ್ಟು ಮೊದಲೆ ಪುಣ್ಯದ ಫಲ
ಉದಯವಾಯಿತದೃಷ್ಟವು ಸದೃಷ್ಟವಾಗಿ | || 4||
ಸದ್ಗತಿ ಸುಖವಿದು ಸದೋದಿತವಾಯಿತು
ಸಾಧಿಸಿ ಮಹಿಪತಿಗೆ ಸದ್ಗುರು ಕೃಪೆಯು | ||5||

ಆನೆ ಬಂತಿದಕೋ
ಆನೆ ಬಂತಿದಕೋ ಮಹಾಮದ್ದಾನೆ ಬಂತಿದಕೋ
ಸ್ಥಾನಂದದಲಿ ಮೆಲ್ಲಮೆಲ್ಲನೆ ಅಡಿಗಳ
ತಾನಿಡುತೊಲವುತಲಿ ನೋಡಮ್ಮ | | |ಪ||
ಕರಿಯ ಬಣ್ಣದಲೊಪ್ಪುತ
ಕಿರಗೂದಲು ಶಿರದಲಿ ಹೊಳೆವುತ
ಪೆರೆನೊಸಲೊಳು ಕೇಸರದ ಕಸ್ತೂರಿ ರೇಖೆ
ಕರುಣ ಭಾವದ ಕಂಗಳು ನೋಡಮ್ಮ | || 1||
ಝಳಝಳಿಪಂಬರದಿ ಫಣ ಫಣವೆಂಬ
ಚೆಲುವ ಗಂಟೆಯರವದಿ
ಒಲಿದು ತನ್ನಯ ನಿಜಶರಣರ ಅನುಮತದಲಿ
ನಲಿದಾಡುತಲಿ ನೋಡಮ್ಮ | | |2||
ದುಷ್ಟಜನರು ತೊಲಗಿ ಎನುತ ಮುಂದೆ
ಶಿಷ್ಟಜನರು ಒದಗಿ
ಅಟ್ಟಹಾಸದಿ ಬಂದರಿದೆ ಮಹಿಪತಿ ಜನ
ಇಷ್ಟದೈತ ಎನಿಪ ನೋಡಮ್ಮ | |3||

ಹೊಂದು ಮನವೆ
ಹೊಂದು ಮನವೆ ಹೊಂದೆನ್ನ ಮನವೆ
ಬಂದು ಪಥಭಾಗ್ಯ ಸೇರೆನ್ನ ಮನವೆ | ||ಪ||
ಮೂರೊಂದು ಪಾಲಾಗದಿರೆನ್ನ ಮನವೆ
ಮೂರೆರಡು ಬಟ್ಯಾಗದಿರು ಮನವೆ | ||1||
ಮೂರು ಆರು ಪರಿ ಆಗದಿರೆನ್ನ ಮನವೆ
ಮೂರೆರಡರಲಿ ಅಡರದಿರು ಮನವೆ | || 2||
ಮೂರು ಸೆರಗ ಹಿಡಿದರೆನ್ನ ಮನವೆ
ಮೂರರೊಳಗೆ ತೊಳಲದಿರು ಮನವೆ | ||3||
ಮೂರು ಬಟ್ಟೆಗಳನ್ನು ಮರಿಯೆನ್ನ ಮನವೆ
ಮಹಿಪತಿ ಗುರುಪಾದ ಪೊರಿ ಎನ್ನ ಮನವೆ | ||4||

ವಸ್ತು ನೋಡೊ ಮನವೆ
ಹತ್ತಿಲಿಹ ವಸ್ತು ನೋಡೊ ಮನವೆ
ನಿತ್ಯ ನಿಜನಿರ್ಗುಣವ ಕೂಡೊ ಮನವೆ | ||ಪ||
ಅತ್ತಲಿತ್ತಲಾಗದಿರು ಮನವೆ
ಚಿತ್ತ ಚಂಚಲ ಮಾಡದಿರೆನ್ನ ಮನವೆ
ಉತ್ತುಮ ಸುಪಥ ನೋಡು ಮನವೆ
ನೆತ್ತಿಯೊಳಿಹ ಸುವಸ್ತು ಕೂಡೊ ಮನವೆ | || 1||
ಹೋಕಹೋಗದಂತೆ ಎನ್ನ ಮನವೆ
ಏಕರಸವಾಗಿ ಕೂಡೊ ಎನ್ನ ಮನವೆ
ನಾಲ್ಕು ಶೂನ್ಯವ ಮೆಟ್ಟಿ ನೋಡು ಮನವೆ
ಜೋಕೆಯಿಂದ ಜ್ಯೋತಿರ್ಮಯ ಕೂಡೊ ಮನವೆ | ||2||
ಧನ್ಯವಿದು ರಾಜಯೋಗ ಮನವೆ
ಭಿನ್ನವಿಲ್ಲದೆ ಬೆರೆದು ಕೂಡೊ ಮನವೆ
ಚೆನ್ನಾಗಿ ಚಿನ್ಮಯ ನೋಡು ಮನವೆ
ಅನ್ಯಪಥವಿನ್ಯಾತಕೆ ನೋಡು ಮನವೆ | ||3||
ಗರ್ವಗುಣ ಹಿಡಿಯದಿರು ಮನವೆ
ನಿರ್ವಿಕಲ್ಪನ ತಿಳಿದು ನೋಡು ಮನವೆ
ಪೂರ್ವಪುಣ್ಯದ ಹಾದಿ ಇದು ಮನವೆ
ಸರ್ವರೊಳು ವಸ್ತುಮಯ ಒಂದೆ ಮನವೆ | | 4||
ದೃಷ್ಟಿಸಿ ಆತ್ಮನ ನೋಡು ಮನವೆ
ಪುಷ್ಟವಾಗಿ ಘನದೋರುವದು ಮನವೆ
ಭ್ರಷ್ಟವಾಗಿ ಬಾಳಬ್ಯಾಡ ಮನವೆ
ನಿಷ್ಠನಾಗಿ ನಿಜನೆಲೆಯಗೊಳ್ಳು ಮನವೆ | |5||
ಏರಿ ಆರು ಚಕ್ರ ನೋಡು ಮನವೆ
ಪರಮಾನಂದ ಸುಪಥ ಕೂಡೊ ಮನವೆ
ಆರು ಅರಿಯದ ಹಾದಿ ಮನವೆ
ತೋರಿಕೊಡುವ ಸದ್ಗುರು ಎನ್ನ ಮನವೆ | | |6||
ಹರಿಭಕ್ತಿಯೊಳಗಿರು ಮನವೆ
ಸಿರಿ ಸದ್ಗತಿ ಸುಖವ ಕೂಡೊ ಮನವೆ
ಗುರುವಾಕ್ಯ ನಂಬಿ ನಡೆ ಮನವೆ
ಪರಲೋಕಕ್ಕೆ ಸೋಪಾನವಿದು ಮನವೆ | ||7||
ಪರದ್ರವ್ಯಗಲ್ಪದಿರು ಮನವೆ
ಪರಸತಿಯ ನೋಡದಿರೆನ್ನ ಮನವೆ
ಪರರ ನಿಂದ್ಯ ಮಾಡದಿರು ಮನವೆ
ದಾರಿ ಹೋಗದಿರು ದುಷ್ಟರ ನೀ ಮನವೆ | ||8||
ಸಜ್ಜನರ ಸಂಗ ಮಾಡೊ ಮನವೆ
ಹೆಜ್ಜೆವಿಡಿದು ಪರಲೋಕ ಕೂಡೊ ಮನವೆ
ಭೆಜ್ಜರಿಕೆ ಹಿಡಿಯೊ ಎನ್ನ ಮನವೆ
ದುರ್ಜನರ ಸಂಗ ಮಾಡಬ್ಯಾಡೊ ಮನವೆ | ||9||
ಕಂಗಳ ತೆರೆದು ನೋಡು ಮನವೆ
ಮಂಗಳಾತ್ಮನ ಶ್ರೀಪಾದ ಕೂಡೊ ಮನವೆ
ಹಿಂಗದಂತೆ ಕೂಡೊ ಬ್ಯಾಗೆ ಮನವೆ
ಗಂಗೆಯೊಳು ಜಲಬೆರೆದಂತೆ ಮನವೆ | |10||
ಭೇದ ಬುದ್ಧಿಯ ಮಾಡಬ್ಯಾಡ ಮನವೆ
ಸಾಧುಸಂತರ ಸುಬೋಧ ಕೇಳು ಮನವೆ
ಭೇದಿಸಿ ತಿಳಿದುನೋಡು ಮನವೆ
ಸದಮಲ ಬ್ರಹ್ಮ ಸೂಸುತಿದೆ ಮನವೆ | ||11||
ಯುಕ್ತಿ ನಿನಗಿದು ನೋಡು ಮನವೆ
ಭಕ್ತವತ್ಸಲ ಸ್ಮರಿಸು ಮನವೆ
ಮುಕ್ತಿಯಿಂದಧಿಕ ಸುಖ ಮನವೆ
ಭಕ್ತಿರಸದೊಳು ಮುಳಗ್ಯಾಡು ಮನವೆ | ||12||
ಲೇಸು ಲೇಸು ಮಹಿಪತಿ ಸು ಮನವೆ
ದಾಸನಾಗಿರುವ ವಾಸುದೇವನ ಮನವೆ
ಭಾಸಿ ಪಾಲಿಪನ ಕುಡೊ ಎನ್ನ ಮನವೆ
ಭಾಸ್ಕರ ಮೂರ್ತಿಯ ನೋಡು ಮನವೆ | ||13||

ಹಸಗೀಡಾಗದಿರು ಮನವೆ
ಹಸಗೀಡಾಗದಿರು ಮನವೆ ವಿಷಯವಾಸನೆ ಕೂಡ | ||ಪ||
ಸತ್ಯವೆಂದೆನಬ್ಯಾಡ ದೃಶ್ಯ ಮಿಥ್ಯಾಮಾಯದ ಮೋಡ
ನಿತ್ಯಾನಿತ್ಯ ವಿವೇಕವಿಚಾರದ ಸತ್ಯ ಸುಪಥ ಕೂಡೊ
ನಿತ್ಯವಾಗಿಹದ ಸತ್ಯ ಸುಪಥ ಕೂಡೊ | ||1||
ಹೊನ್ನು ಹೆಣ್ಣಿನ ಕೂಡ ನೀ ದಣ್ಣನೆ ದಣಿಬ್ಯಾಡ
ಸುಣ್ಣ ಸಾರಿಸಿ ಮ್ಯಾಲೆ ಬಣ್ಣದೋರುವದಕ್ಕೆ ಕಣ್ಣಗೆಟ್ಟಿರಬ್ಯಾಡ
ಮಣ್ಣೆಂದರಿಯದೆ ಕಣ್ಣಗೆಟ್ಟಿರಬ್ಯಾಡ | ||2||
ಗುಹ್ಯಗೂಢವ ತಿಳಿಯೊ ನಾ ದೇಹವೆಂಬುದನಳಿಯೊ
ಮಹಿಪತಿ ನಿನ್ನೊಳು ಮಹಾಗುರುಕೃಪೆಯಿಂದ ಸೋಹ್ಯ ತಿಳಿದು ನೋಡೊ
ಶ್ರೀಹರಿಯ ಮಹಿಮೆ ಸೋಹ್ಯ ತಿಳಿದು ನೋಡೊ | ||3||

ನಿನ್ನೊಳಾಡುವ ಹಂಸ
ನೋಡು ಮನವೆ ನಿನ್ನೊಳಾಡುವ ಹಂಸ
ಇಡಾಪಿಂಗಳ ಮಧ್ಯನಾಡಿವಿಡಿದು | | |ಪ||
ಆಧಾರವಂ ಬಲಿದು ಸ್ವಾಧಿಷ್ಠಾನವ ದಾಟಿ
ಹಾದಿವಿಡಿದು ನೋಡು ಮಣಿಪುರದ
ಒದಗಿ ಕುಡುವ ಅನಾಹತ ಹೃದಯ ಸ್ಥಾನವ
ಸಾಧಿಸಿ ನೋಡುವದು ವಿಶುದ್ಧವ | | |1||
ಭೇದಿಸಿ ನೋಡುವದಾಜ್ಞಾಚಕ್ರ ದ್ವಿದಳ
ಸಾಧಿಸುವದು ಸುಖ ಸಾಧುಜನ
ಅಧರದಲಿಹ ತಾ ಆದಿಷ್ಠಾನವ ನೋಡು
ಆಧಿಪತಿ ಆಗಿಹಾಧೀನ ದೈವವ | ||2||
ಮ್ಯಾಲಿಹ ಬ್ರಹ್ಮಾಂಡ ಸಹಸ್ರದಳ ಕಮಲ
ಹೊಳೆಯುತಿಹ ಭಾಸ್ಕರ ಪ್ರಭೆಯ ಕೂಡಿ
ಮೂಲಸ್ಥಾನದ ನಿಜ ನೆಲೆ ನಿಭವ ನೋಡುವ
ಬಾಲಕನೊಡೆಯ ಮಹಿಪತಿ ಸ್ವಾಮಿಯ | ||3||

ಏನಾಯಿತೇನಾಯಿತು ಮನವೆ
ಏನಾಯಿತೇನಾಯಿತು ಮನವೆ
ನಾನೆಂಬುದೇನಾಯಿತು | || ಪ||
ಕರಿಯು ನುಂಗಿದ ಬೆಳವಲವಣ್ಣಿನಂತಾಯಿತು
ಅಪ್ಪಿನೊಳುಪ್ಪು ಬೆರೆದಂತಾಯಿತು ಮನವೆ
ಕಪ್ಪುರವ ಸುಟ್ಟುರುಹಿಟ್ಟಂತಾಯಿತು
ಮಹಿಪತಿಯ ಮನವೆ ಕೇಳೆನ್ನಾ ಮನವೆ
ಎನ್ನೊಳು ಘನಬ್ರಹ್ಮ ತಾನಾಯಿತು | || 1||

ಏನೊ ಎಂತೊ ತಿಳಿಯದು
ಏನೊ ಎಂತೊ ತಿಳಿಯದು
ಸ್ವಾನಂದದ ಸುಖದಾಟ | ||ಪ||
ಒಳಗೊ ಹೊರಗೊ ಬೈಗೊ ಬೆಳಗೊ
ಕಾಳೊ ಬೆಳದಿಂಗಳವೊ
ಮಳಿಯೊ ಮಿಂಚೊ ಹೊಳಪೊ ಸಳವೊ
ತಿಳಿಯದ ಕಳೆಕಾಂತಿಗಳು | ||1||
ಉದಿಯೊ ಅಸ್ತೊ ಆದ್ಯೊ ಅಂತ್ಯೊ
ಮಧ್ಯೊ ತಾ ತಿಳಿಯದು
ತುದಿಮೊದಲಿಲ್ಲದೆ ಸದಮಲ ಬ್ರಹ್ಮವು
ಉದಿಯವಾಗಿಹದು ನೋಡಿ | ||2||
ಜೀವೋ ಭಾವೋ ಶಿವೊ ಶಕ್ತೋ
ಆವದು ತಾ ತಿಳಿಯದು
ಘವಘವಿಸುವ ಅವಿನಾಶನ ಪ್ರಭೆಯಿದು
ಮಹಿಪತಿ ವಸ್ತುಮಯವೊ | ||3||

ಗುರು ಭಕುತಿಯಲಿ ಮನವು
ಗುರು ಭಕುತಿಯಲಿ ಮನವು ಸ್ಥಿರವಗೊಳ್ಳಲಿಬೇಕು
ಅರಿತು ಸದ್ಭಾವದಲಿ ದೃಢಗೊಳ್ಳಬೇಕು | | |ಪ||
ನಿಶ್ಚಯವಿಡಬೇಕು ದುಶ್ಚಲವ ಬಿಡಬೇಕು
ನಿಶ್ಚಿಂತದಲಿ ನಿಜಸುಖ ಪಡಿಯಬೇಕು | ||1||
ನಂಬಿ ನಡಿಯಬೇಕು ಡಂಭಕವ ಬಿಡಬೇಕು
ಹಂಬಲಿಸಿ ಅಂಬುಜಾಕ್ಷನ ನೋಡಬೇಕು | ||2||
ವಿಶ್ವಾಸವಿಡಬೇಕು ವಿಷಗುಣವ ಬಿಡಬೇಕು
ವಿಶ್ವವ್ಯಾಪಕನ ವಿಶ್ವದಿ ನೋಡಬೇಕು | ||3||
ರತಿಪ್ರೇಮ ಬಿಡಬೇಕು ಅತಿ ಹರುಷಪಡಬೇಕು
ಸ್ತುತಿಸ್ತವನವನು ಪಾಡಿ ಗತಿ ಪಡಿಯಬೇಕು | ||4||
ಆರು ಜರಿಯಬೇಕು ಮೂರು ಹರಿಯಬೇಕು
ಅರಿತು ಗುರುಪಾದ ಮಹಿಪತಿ ಬೆರಿಯಬೇಕು | ||5||

ದತ್ತ ದತ್ತೆನಲು ಹತ್ತಿ ತಾ ಬಾಹನು
ದತ್ತ ದತ್ತೆನಲು ಹತ್ತಿ ತಾ ಬಾಹನು
ಚಿತ್ತದೊಳಗಾಗುವ ಮತ್ತೆ ಶಾಶ್ವತನು
ದತ್ತ ಉಳ್ಳವನ ಹತ್ತಿಲೇ ಇಹನು
ವೃತ್ತಿ ಒಂದಾದರೆ ಹಸ್ತಗುಡುವನು | ||ಪ||
ಎತ್ತ ನೋಡಿದರೆ ಮೊತ್ತವಾಗಿಹ ತಾಂ
ಉತ್ತಮೋತ್ತಮರನೆತ್ತುವ ತಾಯಿ ತಾ
ಅತ್ತಲಿತ್ತಾಗದೆ ಹತ್ತಿಲೆ ಸೂಸುತ
ಮುತ್ತಿನಂತಿಹನು ನೆತ್ತಿಲಿ ಭಾಸುತ | ||1||
ದತ್ತನೆಂದೆನಲು ಕತ್ತಲೆ ಪೋಗುದು
ಮೃತ್ಯು ಅಂಜುತಲಿ ಭೃತ್ಯನಾಗಿಹುದು
ದತ್ತನಿಂದಧಿಕ ಮತ್ತು ತಾ ಒಂದು
ಉತ್ತಮರಿಗೆ ತಾ ಸತ್ಯಭಾಸುದು | ||2||
ಒತ್ತಿ ಉನ್ಮನಿಯಾವಸ್ಥಿಯೊಳಾಡುವುದು
ಸ್ವಸ್ತಮನಾದರೆ ವಸ್ತು ಕೈಗೂಡುವುದು
ಬಿತ್ತಿ ಮನ ಗುರುಭಕ್ತಿ ಮಾಡುವುದು
ದತ್ತ ತನ್ನೊಳು ತಾನೆವೆ ಭಾಸುವುದು | ||3||
ದತ್ತ ದತ್ತೆಂದು ತಾ ಅರ್ತ ಮಹಿಪತಿಯು
ಬೆರ್ತ ನೋಡಿದ ಮನವು ಸುಮೂರ್ತಿಯು
ಮರ್ತ್ಯ ದೊಳಿದುವೆ ಸುಖ ವಿಶ್ರಾಂತಿಯು
ಮರ್ತು ಹೋಗುವುದು ಮಾಯದ ಭ್ರಾಂತಿಯು | ||4||

ಯುಕ್ತಿಯಿಂದ ಭಕ್ತಿ ಮಾಡಲಿಕ್ಕೆ
ಯುಕ್ತಿಯಿಂದ ಭಕ್ತಿ ಮಾಡಲಿಕ್ಕೆ ಶಕ್ತನಲ್ಲ ನಾ
ಮುಕ್ತಿಯೋಗ್ಯ ಮಾಡೊ ಭಾವಭೋಕ್ತ ಕೃಪಾನಿಧೆ | ||ಪ||
ಧ್ಯಾನ ಮೌನ ಸ್ನಾನ ಸಂಧ್ಯಾ ಖೂನ ಗುರುತು ಅರಿಯೆ ನಾ
ನ್ಯೂನ ಪೂರ್ಣ ನೋಡದೆನ್ನ ರಕ್ಷಿಸೋ ದಯಾನಿಧೆ | ||1||
ಹೀನದೀನ ಜ್ಞಾನಶೂನ್ಯ ದಾನಧರ್ಮ ಅರಿಯೆ ನಾ
ನೀನೆ ಕಾಯಬೇಕು ಎನ್ನ ಕರುಣದಿ ಕೃಪಾನಿಧೆ | ||2||
ದುರುಳ ದುರ್ವಾಸನೆಯ ದುರಾಚಾರಿ ದುರಾತ್ಮ ನಾ
ತರಣೋಪಾಯ ತೋರಿಸೆನ್ನ ಹೊರೆಯ ದಯಾನಿಧೆ | ||3||
ಅರುಹುಕುರುಹನರಿಯದಿಹ ಮರುಳ ಮಂಕ ತರಳ ನಾ
ಕರವ ಪಿಡಿದು ಧರೆಯೊಳಿನ್ನು ತಾರಿಸೊ ದಯಾನಿಧೆ | || 4||
ಆಶಪಾಶದಲ್ಲಿ ವಾಸವಾದ ದೋಷರಾಶಿ ನಾ
ಭಾಸಿ ಪಾಲಿಸು ಪುಣ್ಯ ಪ್ರಕಾಶಿಸೊ ದಯಾನಿಧೆ | ||5||
ಏಸು ಜನ್ಮ ಮೋಸಹೋಗಿ ಘಾಸಿಯಾದ ಜೀವ ನಾ
ದಾಸರೊಡನೆ ಕೂಡಿಸೊ ಭಾಸ್ಕರ ದಯಾನಿಧೆ | | |6||

ಹೊಂದಿ ಸುಖಿಸು
ಹೊಂದಿ ಸುಖಿಸು ಹರಿಯ ಪಾದ | ||ಪ||
ನಾನಾ ಪುಣ್ಯ ನಿಧಾನದಿ ಧರೆಯೊಳು
ಮಾನವ ಜನುಮಕೆ ನೀನೀಗ ಬಂದು
ಶ್ವಾನ ಸೂಕರ ಪರಿ ತಾ ನಿಜವರಿಯದೆ
ಜ್ಞಾನಶೂನ್ಯವಾಗಿ ನೀನಿಹುದಣ್ಣ | | |1||
ಹಿಡಿವರೆ ಭ್ರಾಂತಿಯ ಜಡಿವರೆ ಮಮತೆಯ
ನುಡಿವರೆ ಪುಸಿಯನು ಬಿಡುವರೆ ಸತ್ಯವ
ಇಡುವರೆ ದುರ್ಗಣ ಸಿಡುವರೆ ಬೋಧಕೆ
ಕೆಡುವರೆ ಮರವಿಲಿ ಮಡಿವರೆ ವ್ಯರ್ಥ | ||2||
ಮೂರುದಿನ ಸಂಸಾರದೊಳಗೆ
ಕಂಸಾರಿಯ ಭಕ್ತಿಯ ಸೇರಿ ಭವಾಬ್ದಿಯ
ಪಾರವಗಾಂಬುದು ಸಾರಸ್ವಹಿತ
ಸಹಕಾರ ಮಹಿಪತಿ ಸಾರಿದ ಬೋಧ | ||3||

ಅರ್ತುಕೊಳ್ಳಿರಯ್ಯ ನೀವು
ಅರ್ತುಕೊಳ್ಳಿರಯ್ಯ ನೀವು ಹರಿಯ ನಾಮಾಮೃತ
ಗುರ್ತು ಮಾಡಿಕೊಡುವ ಪೂರ್ಣ ಸದ್ಗುರು ಸಮರ್ಥ | ||ಪ||
ಒಳ್ಳೆಒಳ್ಳೆವರು ಬಂದು ಕೇಳಿರೋ ನೀವಿನ್ನು
ತಿಳಿದುಕೊಳ್ಳಿ ಇದಕೆ ಬೀಳುವುದಿಲ್ಲಾ ಹಣ ಹೊನ್ನು
ಉಳ್ಳ ಬುದ್ಧಿಯಿಂದ ನೀವು ತೆರೆದು ನೋಡಿ ಕಣ್ಣು
ಕೊಳ್ಳಲರಿಯದವನ ಬಾಯಾಗ ಬೀಳುದು ಮಣ್ಣು | ||1||
ಬ್ರಹ್ಮಸುಖ ಇದೇ ಇದೇ ನೋಡಿರೊ ಸಾಕ್ಷಾತ
ಸಮ್ಯಕ್‍ಜ್ಞಾನ ಪ್ಯಾಟಿಯೊಳು ತುಂಬಿ ತುಳುಕುತ್ತ
ಒಮ್ಮನ ಮಾಡಿಕೊಂಡು ಬಂದು ಕೊಳ್ಯಮೃತ
ನೇಮದಿಂದ ಕೊಳ್ಳಲಿಕ್ಕೆ ದೋರುದು ಸ್ವಹಿತ | | |2||
ಇಹಪರ ಸಾರ್ಥಕಿದೆ ಕೇಳಿರೊ ನೀವೆಲ್ಲ
ದೇಹ ಅಭಿಮಾನಿಗಿದು ಸಾಧ್ಯವಾಗುವುದಲ್ಲ
ಸೋಹ್ಯವರಿತು ಸೂರೆಗೊಂಡ ಮಹಿಮ ತಾನೆ ಬಲ್ಲ
ಗುಹ್ಯವಾಕ್ಯ ತಿಳಿದು ನೋಡಿ ಮಹಿಪತಿ ಸೊಲ್ಲ | ||3||

ಸತ್ಯದಾ ನಡಿ ಹಿಡಿರೋ
ಸತ್ಯದಾ ನಡಿ ಹಿಡಿರೋ ಮನುಜರು
ಸತ್ಯದಾ ನಡಿಗಿನ್ನು ಮತ್ತೊಂದು ಭಯವಿಲ್ಲ | ||ಪ||
ಸತ್ಯದಾ ನಡಿಗಿನ್ನು ಸತ್ಯ ನುಡಿಯಲು ಬೇಕು
ಸತ್ಯಂ ಸತ್ಯ ಶರಣರೆಲ್ಲಾ ಎತ್ತಾಡಿಸುವಂತೆ | | 1||
ಕೈಯಾರ ಕೊಂಡಿನ್ನು ಬಾಯಾರಬ್ಯಾಡಿರೊ
ಮೈಯೊಳಗಿಹ ಕಾವನಯ್ಯನ ಮರಿಯಬ್ಯಾಡಿ | ||2||
ಹುಸಿಯಾಡಿ ನೀವಿನ್ನು ಘಾಸಿಗೆ ಬೀಳಲಿಬ್ಯಾಡಿ
ವ್ಯಸನಕಾಗಿ ಬಿದ್ದು ದೆಶೆಗೆಟ್ಟು ಹೊೀಗಬ್ಯಾಡಿ | | |3||
ಆಶೆಯ ಕೊಟ್ಟು ನಿರಾಶಯ ಮಾಡಲಿಬ್ಯಾಡಿ
ಮೋಸ ಮುರುಕದಿದ ಘಾಸಿ ಮಾಡಲಿಬ್ಯಾಡಿ | || 4||
ಘಟ್ಟಿಸಿ ಒಬ್ಬರ ಹೊಟ್ಟೆ ಹೊರಿಯಬ್ಯಾಡಿ
ಸಿಟ್ಟಿಲಿ ನೆಂಟರ ತುಟ್ಟಿಸಿ ಬಿಡಬ್ಯಾಡಿ | ||5||
ಗುಟ್ಟನೊಳಿಹ ಮಾತು ತುಟ್ಟಿಗಿ ತರಬ್ಯಾಡಿ
ಹೊಟ್ಟಿಲೆ ಹಡೆದವರ ಕಟ್ಟಿಗೆ ತರಬ್ಯಾಡಿ | | |6||
ಲೆತ್ತ ಪಗಡಿ ಆಡಿ ಹೊತ್ತುಗಳಿಯಲಿಬ್ಯಾಡಿ
ತುತ್ತ ಕುಡಿಯೊಳಿದ್ದಾಪತ್ತ ಬಡಲಿಬ್ಯಾಡಿ | ||7||
ಹರಿಹರ ಭಕ್ತಿಗೆ ಬ್ಯಾರೆ ನೋಡಲಿಬ್ಯಾಡಿ
ಗುರುಕೃಪಿ ಪಡೆದಿನ್ನು ಗುರುತಿಟ್ಟು ನೋಡಿರೊ | ||8||
ಅನ್ನ ಬೇಡಿದವಗಿಲ್ಲೆನಬ್ಯಾಡಿ
ಹೊನ್ನು ಹೆಣ್ಣಿನ ಮ್ಯಾಲೆ ಕಣ್ಣಿಟ್ಟು ಕೆಡಬ್ಯಾಡಿ | ||9||
ಅಂತರಾತ್ಮದ ಪರಮಾತ್ಮನ ತಿಳಕೊಳ್ಳಿ
ಸ್ವಾತ್ಮಸುಖದ ಸೂರ್ಯಾಡಿಕೊಳ್ಳಲಿಕ್ಕೆ | | |10||
ಸ್ವಹಿತ ಸುಖದ ಮಾತು ಸಾಧಿಸಿಕೊಳ್ಳಲಿಕ್ಕೆ
ಮಹಿಪತಿ ಹೇಳಿದ ಮಾತು ಮನ್ನಿಸಿ ತಿಳಕೊಳ್ಳಿ | ||11||

ಮೈಯ ಮರಿಯಬ್ಯಾಡವೋ
ಮೈಹೋಳು ನೀ ಬಂದು ಮೈ ಮರಿಯಬ್ಯಾಡವೋ
ಮಹಿಮನಂದನಂಘ್ರಿಯ ಬಿಡಬ್ಯಾಡವೋ | ||ಪ||
ಮಾಯಾ ಮೋಹದೊಳು ಸಿಲ್ಕಿ ದೇಹ ಭ್ರಮೆಯಗೊಂಡು
ಕಾಯಸೌಖ್ಯಕೆ ಬಾಯಿದೆರೆಯಬ್ಯಾಡವೋ | || 1||
ಹೊನ್ನು ಹೆಣ್ಣು ಮಣ್ಣಿಗಾಗಿ ಬಣ್ಣ ಬಣ್ಣ ಪರಿಯಲಿನ್ನು
ಕಣ್ಣುಗೆಟ್ಟು ಕುರುಡನಂತೆ ದಣಿಯಬ್ಯಾಡವೋ | ||2||
ನಾನು ನೀನು ಎಂಬ ಭಾವ ಮಹಿಪತಿಗಳೆದು
ಭಾನುಕೋಟಿ ತೇಜನಂಘ್ರಿ ಬೆರೆದು ಮನಕೂಡವೊ | ||3||

ಮಾಡಬಾರದು ನೋಡಿ
ಮಾಡಬಾರದು ನೋಡಿ ಕೇಡಿಗರ ಸಂಗ
ಬೇಡಿ ಕಾಡದೆ ಬಾಹುದಭಿಮಾನ ಭಂಗ | ||ಪ||
ಹೊಟ್ಟಿಯನು ಹೊಕ್ಕು ಕಟ್ಟಿಗೆ ತಂದು ನಿಲಿಸುವರು
ಗುಟ್ಟಿಲಿಹ ಮಾತು ತುಟ್ಟಿಗೆ ತಾಹರು
ಕೊಟ್ಟಿದೆನೆ ಬಾಯಾರಿ ಬಟ್ಟೆಗೆಳತಾಹರು
ನಟ್ಟಿಸ್ನೇಹದ ಬಳಕಿ ತುಟ್ಟಿಸುವರು | | |1||
ಬೆಲ್ಲ ಬಾಯಲಿ ಸುರಿಸಿ ಎಲ್ಲರನು ಮೋಹಿಸುತ
ಅಲ್ಲಹುದು ಮಾಡಿ ಗೆಲವಿಸಿಕೊಂಬರು
ಸಲ್ಲದರ ಕೈವಿಡಿದು ಇಲ್ಲದನೆ ಸ್ಥಾಪಿಸುತ
ಬಲ್ಲಿದರ ಭ್ರಮೆಗೆಡಿಸಿ ಅಣಕವಾಡುವರೋ | | |2||
ಏನನಾದರೆ ಕೊಟ್ಟು ಹೀನಮನುಜರ ಸಂಗ
ಮನ್ನಣೆಯಲಿದ್ದು ತಾಂ ತ್ಯಜಿಸಿ ಬ್ಯಾಗ
ದೀನಮಹಿಪತಿ ಪ್ರಾಣದೊಡೆಯ ಶ್ರೀನಿಧಿಚರಣ
ನೆನೆವರ ನೆರೆಲಿದ್ದು ಸುಖಿಸುವುದು ಲೇಸು | ||3||

ಧನ ಲಂಪಟಗೆ ಎಲ್ಲಿಹುದು
ಧನ ಲಂಪಟಗೆ ಎಲ್ಲಿಹುದು ಗುರುಕೃಪೆಯ ಜ್ಞಾನ
ತನು ಲಂಪಟಗೆ ಎಲ್ಲಹುದು ತನ್ನೊಳು ಖೂನ | ||ಪ||
ವಿಷಯ ಲಂಪಟಗೆ ಎಲ್ಲಿಹುದು ವಿರಕ್ತಿಯು
ದೆಸೆಗೆಟ್ಟವಗೆ ಎಲ್ಲಿಹುದು ಯುಕ್ತಿಯು
ಮುಸುಕಿದ ಮಾಯದವಗೆಲ್ಲಿಹುದು ಮುಕ್ತಿಯು
ಹುಸಿಯಾಡುವವಗೆಲ್ಲಿಹುದು ಋಷಿ ಭಕ್ತಿಯು | ||1||
ಮರುಳಗುಂಟೆ ಅರಿವು ರಾಜಸನ್ಮಾನದ
ತರಳಗುಂಟೆ ಭಯವು ಘಟಸರ್ಪದ
ಎರಳೆಗುಂಟೆ ಖೂನ ಮೃಗಜಲವೆಂಬುವದ
ಸೋರೆಗುಂಟೆ ಮಾತು ಚಾತುರ್ಯದ | ||2||
ಕನಸು ಕಾಂಬವಗೆ ಎಲ್ಲಿಹುದು ತಾನಿಹ ಸ್ಥಾನ
ಮನದಿಚ್ಛೆ ಇದ್ದವಗೆ ಎಲ್ಲಿ ಧ್ಯಾನ
ದೀನಮಹಿಪತಿಸ್ವಾಮಿ ಕಾಣದವಗೆಲ್ಲಿ ಘನ
ಅನುಭವಿಸಿಕೊಳದೆ ಜನ್ಮಕೆ ಬಂದಿದೇನ | ||3||

ಎದ್ದಿರ್ಯಾ ನೀವಿನ್ನೆದ್ದಿರ್ಯಾ
ಎದ್ದಿರ್ಯಾ ನೀವಿನ್ನೆದ್ದಿರ್ಯಾ ಎದ್ದೆವು ನಾವಿನ್ನು ಸದ್ಗುರು ಕೃಪೆಯಿಂದ
ಶುದ್ಧಿ ಮೆರೆದು ಭವನಿದ್ರಿಯಗಳದನ್ನೆದ್ದಿರ್ಯಾ
ಕಾಯ ಮಂದಿರದೊಳು ಮಾಯಾಮುಸುಕು ತೆಗೆದಿನ್ನೆದ್ದಿರ್ಯಾ
ಚೆನ್ನಾಗಿ ಮಲಗಿದ್ದ ಜನ್ಮಹಾಸಿಗಿ ಬಿಟ್ಟು ಇನ್ನೆದ್ದಿರ್ಯಾ
ಮನದಲ್ಲಿ ಇನಕೋಟಿತೇಜನ ಕಾಣ್ವ್ಹಾಂಗೆ ಇನ್ನೆದ್ದಿರ್ಯಾ
ಎದ್ದಿದ್ದರೆ ನೀವಿನ್ನು ಶುದ್ಧಬುದ್ಧರಾಗಿ ಇನ್ನೆದ್ದಿರ್ಯಾ
ತನ್ನ ತಾ ತಿಳಿವ್ಹಾಂಗೆ ಕಣ್ದೆರೆದಿನ್ನು ಇನ್ನೆದ್ದಿರ್ಯಾ
ದೀನಮಹಿಪತಿಸ್ವಾಮಿ ಮನೋಹರ ಮಾಡ್ವ್ಹಾಂಗ | ||||

ಇದೇ ನೋಡಿರೋ
ಇದೇ ನೋಡಿರೋ ಸುಸ್ನಾನ ಸದ್ಬೋಧದಲಿಹುದು ಮನಾ | ||ಪ||
ಜ್ಞಾನವೆಂಬುದೆ ಪುಣ್ಯನದಿ ಮನ ನಿರ್ಮಲ ಮಾಡುದು ನಾದಿ
ನಾನ್ಯಃ ಪಥವೆಂಬುದು ಓದಿ ಖೂನದೋರದು ಸುಪಥದ ಹಾದಿ | ||1||
ಜ್ಞಾನಭಾಗೀರಥೀ ಸ್ನಾನಮಾಡಿ ಮನಮೈಲ ಹೋಯಿತು ನೋಡಿ
ಘನ ಪುಣ್ಯೊದಗಿತು ಕೈಗೂಡಿ ಅನುದಿನ ಮನ ಮುಳಗ್ಯಾಡಿ | || 2||
ನಿತ್ಯ ಮಹಿಪತಿಗಿದೆ ಸುಸ್ನಾನ ನಿತ್ಯ ಸದ್ಗುರು ನಿಜಧ್ಯಾನ
ಉತ್ತಮೋತ್ತಮಿದೆ ಸಾಧನ ಹಿತದೋರುತಿದೆ ನಿಧಾನ | || 3||

ಮೂರು ಗುಣಗಳು ಬೇಕು
ಭಕ್ತಿಗೆ ಮೂರು ಗುಣಗಳು ಬೇಕು ಯುಕ್ತಿವಂತರು ಕೇಳಿ
ಮುಕ್ತಿ ಶೀಲವ ತಿಳಿದು ನಿಜವಿರಕ್ತತನದಲಿ ಬಾಳಿ | ||ಪ||
ಪ್ರೇಮ ಪ್ರೀತಿ ರತಿ ನೇಮದಲಿ ಶ್ರೀಸ್ವಾಮಿ ಚರಣದಲಿಡಬೇಕು
ಸೌಮ್ಯ ಸಮಾಧಾನದಲಿ ತಾನಮೃತವನು ಹಿಡಿಯಬೇಕು
ರೋಮರೋಮವನು ಕೋಮಲವಾಗಿ ನಿರ್ಮಲದಲಿ ನಡಿಬೇಕು
ಶಮೆದಮೆಯಲಿ ತಾ ಕ್ಷಮೆಯನು ಪಡೆದು ಸಮದೃಷ್ಟಿಗುಡಬೇಕು | || 1||
ನಿತ್ಯನಿತ್ಯ ವಿವೇಕವ ತಿಳಿದು ಪಥ್ಯದಲಿ ನಡಿಯಬೇಕು
ಚಿತ್ತವೃತ್ತಿ ಸುವೃತ್ತಿಯ ಮಾಡಿ ಸತ್ಯದಲಿ ನುಡಿಯಬೇಕು
ಉತ್ತಮೋತ್ತಮ ವಸ್ತುದ ನಿಜಸುಖ ಹೃತ್ಕಮಲದಲಿಡಬೇಕು
ಭಕ್ತಿಗೆ ಭಾವನೆ ಬಲಗೊಂಡು ವೈರಾಗ್ಯದ ಸುಖ ತೊಡಬೇಕು | ||2||
ಸೋಹ್ಯ ಸೊನ್ನಿಯ ಸೂತ್ರವ ತಿಳಿದು ಸ್ಥಾಯಿಕನಾಗಿರಬೇಕು
ಧ್ಯೇಯಧ್ಯಾತಧ್ಯಾನವ ತಿಳಿದು ಮಾಯದ ಮೊನಿ ಮುರಿಯಬೇಕು
ನ್ಯಾಯ ನೀತಿಯ ನೆಲೆನಿಭವನು ಉಪಾಯದಲಿ ಅರಿಯಬೇಕು
ಪಾಯಕನಾಗನುದಿನ ಮಹಿಪತಿ ಗುರುಪಾದದಿ ಸ್ಥಿರವಿರಬೇಕು | || 3||

ಮನವೇನೆಂಬುದನರಿಯೋ ಮನುಜ
ಮನವೇನೆಂಬುದನರಿಯೋ ಮನುಜ
ಮನವೇನೆಂಬುದನು | ||ಪ||
ಮನವೇನೆಂಬುದನನುಭವಕೆ ತಂದು
ಖೂನದಲಿಡದೆ ಜ್ಞಾನದಲಿ
ನಾನಾ ಶಾಸ್ತ್ರವ ಓದಿ ನೀ ಅನುದಿನ
ಏನು ಘಳಿಸಿದ್ಯೊ ಮರುಳ ಮನುಜಾ | ||1||
ಉತ್ಪತ್ತಿ ಸ್ಥಿತಿ ಲಯ ಕರ್ತರೆಂದನಿಸಿ
ಪ್ರತ್ಯೇಕವರನು ತೋರುತಲಿ
ಮತ್ತೆ ಬ್ಯಾರ್ಯಾದ ಪರಬ್ರಹ್ಮೆಂದು ತಾ
ಚಿತ್ತ ಭ್ರಮಿಸುದು ದಾವುದೊ ಮನುಜ | ||2||
ಏಕೋವಿಷ್ಣುವೆಂದೆನಿಸಿ ಮುಖದಲಿ
ಪೋಕ ದೈವಕೆ ಬಾಯದೆರೆಸುತಲಿ
ನಾಕು ವೇದವ ಬಲ್ಲವನೆಂದೆನಿಸಿ
ವಿಕಳಿಸುತಿಹುದು ದಾವುದೊ ಮನುಜ | ||3||
ಉತ್ತಮೋತ್ತಮರ ಕಂಡಾಕ್ಷಣ ಹರುಷದಿ
ನಿತ್ಯಿರಬೇಕಿ ಸಹವಾಸವೆನಿಸಿ
ಮತ್ತೊಂದುರಘಳಿಗಾಲಸ್ಯವ ತೋರಿ
ಒತ್ತಿ ಆಳುವುದು ದಾವುದೊ ಮನುಜ | ||4||
ಪಾಪವ ಮಾಡಬಾರದು ಎಂದೆನಿಸಿ
ವ್ಯಾಪಿಸಗೊಡದೆ ಕಾಣದನಕ
ಉಪಾಯದಲಿ ಅಪಸ್ವಾರ್ಥವು ಇದಿರಿಡೆ
ಅಪಹರಿಸುವುದು ದಾವುದೊ ಮನುಜ | ||5||
ಪ್ರಾಚೀನವೆ ತಾ ನಿಜವೆಂದರುಹಿಸಿ
ಆಚರಣೆಯ ಬ್ಯಾರೆ ತೋರುತಲಿ
ನೀಚ ಊಚಕೆ ಹೊಡೆದಾಡಿಸುತ
ನಾಚಿಸುತಿಹುದು ದಾವುದೊ ಮನುಜ | ||6||
ಸುಗುಣ ನಿರ್ಗುಣ ಬ್ಯಾರೆರಡನೆ ತೋರಿ
ಬಗೆಬಗೆ ಸಾಧನ ತೋರಿಸುತ
ಬಗೆದೊಂದೆವೆ ಭಕುತಿಗೆ ನೆಲೆಗೊಳಿಸಿದ ಪ್ರಗತಿ
ತೋರುವುದು ದಾವದೊ ಮನುಜ | | |7||
ಧ್ಯಾನಕೆ ಕೂಡಿಸಿ ಮೌನವ ಹಿಡಿಸಿ
ಅನುದಿನ ಜಪವನು ಮಾಡಿಸುತ
ಘನವಾಗಿಹ ಅನುಭವ ಸುಖದಾಟದ
ಖೂನದೋರಿಸುದು ದಾವುದೊ ಮನುಜ | ||8||
ಮರವಿಗೆ ತಾನೆ ಅರಿವೇ ಕೊಟ್ಟು
ಅರಿವು ಮರವಿನೊಳಾಡಿಸುತ
ತಿರುವು ಮರವಿನಂಕುರದ ಕುರುಹಿನ
ಇರುಹು ತೋರಿಸುದು ದಾವುದೊ ಮನುಜ | || 9||
ಮನವಿನ ಮೂಲವು ತಿಳಿವದು
ಭಾನುಕೋಟಿ ಪ್ರಕಾಶನ ಕರುಣದಲಿ
ನಾನು ನಾನೆಂಬವರಿಗೆ ಇದರ
ಖೂನ ಲೇಶ ತಿಳಿಯದೊ ಮನುಜ | || 10||
ಹರಿಯೆ ಗುರುವೆಂದರುಹಿಸಿ ಆತ್ಮದಿ
ಶರಣಹೊೀಗುವ ಭಾವನೆದೋರಿ
ತರಳಮಹಿಪತಿ ಗುರದಯ ಪಡಕೊಂಡಿಂದು
ಯೋಗ್ಯನಾಗುವರಿದೊಂದೆ ಮನುಜ | | |11||

ಅರ್ಥಿಯಾಗಿದೆ ಬನ್ನಿ
ಅರ್ಥಿಯಾಗಿದೆ ಬನ್ನಿ ಅರ್ತು ನೋಡುವ ಗುರುಮೂರ್ತಿಯಿಂದ
ನಿತ್ಯವಾಗಿ ಪೂರ್ಣ ಬೆರೆತು ಕೂಡುವಾ ಬನ್ನಿ ಗುರ್ತದಿಂದ | ||ಪ||
ಸೂರ್ಯನಿಲ್ಲದೆ ಸುಪ್ರಕಾಶ ತುಂಬಿದೆ ಹೇಳತೀನ
ತೂರ್ಯಾವಸ್ಥೆಯೊಳು ಬೆರೆದು ಕೂಡಿದ ಜ್ಞಾನಿಬಲ್ಲ ಖೂನ
ಬರಿಯ ಮಾತನಾಡಿ ಹೊರೆಯ ಹೇಳುವುದಲ್ಲ ಅರಹು ಸ್ಥಾನ
ಪರಿಯಾಯದಿಂದ ಪರಿಣಮಿಸಿ ನೋಡಿ ಪರಮ ಪ್ರಾಣ | | |1||
ಚಂದ್ರನಿಲ್ಲದೆ ಬೆಳದಿಂಗಳು ಬಿದ್ದಿದೆ ಬಲು ಬಹಳ
ಇಂದ್ರಾದಿಗಳೆಲ್ಲ ಹರುಷದಿ ನೋಡುವರು ಸರ್ವಕಾಲ
ಸುಂದರವಾದ ಸುವಸ್ತು ಒಳಗೊಂದಿದೆ ಅಚಲ
ಸಾಂದ್ರವಾಗಿ ಸುಖ ತುಂಬಿ ತುಳುಕುತಿದೆ ಥಳಥಳ | ||2||
ಮನದ ಕೊನೆಯಲಿದ್ದ ಘನ ಸುಖ ನೋಡಿರೋ ನೆನೆದು ಬೇಗ
ಸ್ವಾನುಭವದಲನುಭವಿಸುವದು ಬ್ರಹ್ಮಭೋಗ
ನಾ-ನೀನೆಂಬುವ ಮಾತು ಏನು ತಾಳುವದಲ್ಲ ರಾಜಯೋಗ
ದೀನ ಮಹಿಪತಿಸ್ವಾಮಿ ತಾನೆತಾನಾದ ಸದ್ಗುರುವೀಗ | | |3||

ಉಂಬುವ ಬನ್ನಿರೋ
ಉಂಬುವ ಬನ್ನಿರೋ ನೀಟ ಅನುಭವದೂಟ | ||ಪ||
ಎಡಿಯು ಬಡಿಸಿ ಪೂರ್ಣ ಗೂಡಿನೊಳಿಟ್ಟಿದೆ ಖೂನ
ನೋಡಿ ನಿಮ್ಮೊಳು ನಿಧಾನ ಮಾಡಿ ಭೋಜನ | ||1||
ತುತ್ತು ಕೊಂಬುದು ಬ್ಯಾಗ ಸತ್ಸಂಗದಲಿ ನೀವೀಗ
ಅತಿಶಯಾನಂದ ಭೋಗ ಉತ್ತಮ ಯೋಗ | ||2||
ಕಲ್ಪನೆಂಬುದು ನೊಣ ಬೀಳಗೊಡದೆ ಜತನ
ಬಳೆದುಕೊಂಡುಂಬುವ ಜಾಣ ಕಳೆದನು ಮಾನ | ||3||
ಸವಿಸವಿ ಮಾಡಿಕೊಂಡು ಸೇವಿಸುವುದು ಮನಗಂಡು
ಪಾವನಾಗಬೇಕು ಉಂಡು ಸವಿ ಸೂರೆಗೊಂಡು | ||4||
ಉಂಡು ಮಹಿಪತಿ ನೋಡಿ ಕೊಂಡಾಡಿದಾನಂದಗೂಡಿ
ಮಂಡಲದೊಳಿದೇ ಮಾಡಿ ಬಿಡದೆ ಸೂರ್ಯಾಡಿ | ||5||

ಸೋಜಿಗವಾಯಿತು
ಸೋಜಿಗವಾಯಿತು ಸದ್ಗುರುವಿನ ಕೃಪೆ ಹೇಳಲೇನು
ನಿಜಗುಹ್ಯದ ಮಾತು ಗುರುತವಾಗಿಹ ಸಾಧು ಬಲ್ಲ ಖೂನ | | |ಪ||
ನೀಗದ ನೀಗಿತು ಹೋಗದ ಹೋಯಿತು ತ್ಯಾಗಲ್ಯೊಂದು
ಬಾಗದ ಬಾಗಿತು ಸಾಗದ ಸಾಗಿತು ಯೋಗಲ್ಯೊಂದು
ಆಗದ ಆಯಿತು ಕೂಗದ ಕೂಗಿತು ಈಗಲ್ಯೊಂದು
ತೂಗದ ತೂಗಿತು ಸುಗಮ ತಾ ತೋರಿತು ಜಗದೊಳೊಂದು | ||1||
ಹರಿಯದ ಹರಿಯಿತು ಮುರಿಯದ ಮುರಿಯಿತು ಹುರಿಯಲೊಂದು
ಮರೆಯದ ಮರೆಯಿತು ಅರಿಯದ ಅರಿಯಿತು ಅರವಿಲೊಂದು
ಸುರೆಯದ ಸುರಿಯಿತು ಗರೆಯದ ಗರಿಯಿತು ತ್ಯರಿಯಲೊಂದು
ಜರಿಯದ ಜರಿಯಿತು ಬೆರಿಯದ ಬೆರೆಯಿತು ಕುರಿವಿಲೊಂದು | ||2||
ಜಾರದ ಜಾರಿತು ಮೀರದ ಮೀರಿತು ಹಾರಲೊಂದು
ತೋರದ ತೋರಿತು ಸೇರದ ಸೇರಿತು ಸಾರಲೊಂದು
ಬೀರದ ಬೀರಿತು ಸಾರಸದೋರಿತು ಕರದಲೊಂದು
ತರಳ ಮಹಪತಿಗ್ಹರುಷವಾಯಿತು ಗುರುಕರುಣಲಿಂದು | ||3||

ವಸ್ತು ಒಂದೆ ಅದೆ
ವಸ್ತು ಒಂದೆ ಅದೆ ಅನಾದಿಯಿಂದ
ಸ್ವಸ್ತ ಮಾಡಿಕೊಳ್ಳಿ ಗುರು ಮುಖದಿಂದ | ||ಪ||
ಹೂವಿಲ್ಲದೆ ಫಲವಾಗುವ ಕಾಯಿ
ಠಾವಿಲ್ಲದೆ ಮ್ಯಾಲೆ ಮುಚ್ಚ್ಯಾದೆ ಮಾಯಿ
ಭಾವಿಕರಿಗಾದೆವು ಪಾಯಿ
ಠಾವಿಕಿ ಮಾಡಿಕೊಬೇಕು ತಾಯಿ | ||1||
ಬೀಜಿಲ್ಲದೆ ಫಲ ನಿಜವಾಗ್ಯದೆ
ಮೂಜಗದೊಳು ರಾಜಿಸುತ್ತದೆ
ಸೂಜಿಮೊನೆಗಿಂತ ಸಣ್ಣವ್ಯಾಗದೆ
ವಾಜಿಹೀನರ ವರ್ಜಿಸುತ್ತದೆ | ||2||
ನೋಡೆನೆಂದರೆ ನೋಟಕತೀತ
ಹಿಡಿದೇನಂದರೆ ಸಿಕ್ಕದು ಸ್ವಸ್ಥ
ಪಡೆದುಕೊಂಡವರಿಗೈದೆ ಆಯಿತ
ಮೂಢ ಮಹಿಪತಿ ಗುರು ನಿಜಹಿತ | ||3||

ಮಾತಿನಂತಲ್ಲನುಭವ ಜ್ಞಾನ
ಮಾತಿನಂತಲ್ಲನುಭವ ಜ್ಞಾನ ಮರುಳಜನ ಬಲ್ಲವೇನ
ಯತಿಮುನಿಗಳು ಸಾಧಿಸುವ ಖೂನ ಮನೋನ್ಮನದ ಸಾಧನ | || ಪ||
ನುಡಿಜ್ಞಾನ ತೋರಬಹುದು ನಾಡ ಲೋಕದೊಳೆಲ್ಲ
ನುಡಿಜ್ಞಾನದೆ ದುರ್ಲಭವದು ಆಡಿ ದೋರಲಿಕ್ಕಿಲ್ಲ
ಗೂಢ ಗುಹ್ಯ ನಿಜಬೋಧಿದು ಒಡೆದ್ಹೇಳುವದಲ್ಲ
ಒಡನೆ ಸದ್ಗುರು ಘನ ದಯದಲಿದು ಪಡದವನೆ ತಾಂ ಬಲ್ಲ | | |1||
ಕಲಿತಾಡುವ ಮಾತಿಗೆ ಸಿಲುಕದ ಮೂಲ ವಸ್ತುದ ಖೂನ
ನೆಲೆನಿಭವೆ ತಾ ಅಗಮ್ಯಿದು ಬಲು ಸೂಕ್ಷ್ಮಸ್ಥಾನ
ಬಲಿಯದೆ ರೇಚಕ ಪೂರ್ವಿದು ನೆಲೆಗೊಳ್ಳುದು ಸಾಧನ
ನಿಲಕಡ್ಯಾಗದೆ ಕುಂಭಕಲಿದು ಬಲಿಯದು ಗುರುಜ್ಞಾನ | ||2||
ಸ್ವಾನುಭವ ಸುಖ ಸಾಧಿಸಿ ಅನುದಿನದಿ ನೋಡಿ
ಮನಗೆದ್ದು ಜನಕೆ ಮೋಹಿಸುವ ಅನುಭವ ಹೇಳಬ್ಯಾಡಿ
ಭಾನುಕೋಟಿತೇಜನೊಲಿದು ತಾ ಖೂನಾಗುವ್ಹಾಂಗ ಮಾಡಿ
ದೀನ ಮಹಿಪತಿ ಸ್ವಾಮಿ ಮನಗಂಡು ಮನೋಹರ ಕೊಂಡಾಡಿ | ||3||

ಜ್ಞಾನವಿಲ್ಲದೆ ಬಾಳೊಂದು ಸಾಧನವೆ
ಜ್ಞಾನವಿಲ್ಲದೆ ಬಾಳೊಂದು ಸಾಧನವೆ
ಗಾಣದೆತ್ತಿನಂತೆ ಕಾಣದಿಹ್ಯದೊಂದು ಗುಣವೆ | ||ಪ||
ತನ್ನನರಿಯಲಿಲ್ಲ ಬನ್ನವಳಿಯಲಿಲ್ಲ
ಕಣ್ಣದೆರೆದು ಖೂನಗಾಣಲಿಲ್ಲ
ಸಣ್ಣದೊಡ್ಡರೊಳೇನೆಂದು ತಿಳಿಯಲಿಲ್ಲ
ಬಣ್ಣ ಬಣ್ಣ ಶ್ರಮ ಬಿಡುವುದುಚಿತವಲ್ಲ | || 1||
ಶಮೆದಮೆಗೊಳ್ಳಲಿಲ್ಲ ಕ್ಷಮೆಯು ಪಡೆಯಲಿಲ್ಲ
ಸಮದೃಷ್ಟಿಯಲಿ ಜನವರಿಯಲಿಲ್ಲ
ಸಮರಸವಾಗಿ ಸದ್ಛನವ ನೋಡಲಿಲ್ಲ
ಭ್ರಮೆ ಅಳಿದು ಸದ್ಗುರುಪಾದಕೆರಗಲಿಲ್ಲ | ||2||
ಗುರುಕೃಪೆ ಇಲ್ಲದೆ ಗುರುತಾಗುವುದಲ್ಲ
ಗುರುತಿಟ್ಟು ನೋಡಿಕೊಂಡವನೇ ಬಲ್ಲ
ಗುರು ಭಾನುಕೋಟಿ ತೇಜನಂಘ್ರಿ ಕಂಡವನೆಬಲ್ಲ
ತರಳ ಮಹಿಪತಿ ಸ್ವಾಮಿ ಸುಖ ಸೋರ್ಯಾಡುವದೆಲ್ಲ | | |3||

ಒಂದೆ ಸುಪಥವೆ ಲೇಸು
ಒಂದೆ ಸುಪಥವೆ ಲೇಸು ಸದ್ಗುರು ಭಕುತಿಗೆ | ||ಪ||
ಪಿಡಿದರೆ ದೃಢ ಗುರು ಭಕುತಿ ಸಾಕು
ಷಡದರುಷಣ ಗೂಢವ್ಯಾತಕೆ ಬೇಕು
ನಡಿನುಡಿಯಲಿ ನಿಜ ಭೇದಿಸಬೇಕು
ಪಡಕೊಂಡರೆ ಬಾಹುದು ಘನಥೋಕಾ | ||1||
ಒಂದರಿಯದೆ ನಿಜದೋರುದು ಖೂನ
ಸಂದಿಸಿ ಬೆರೆವುದು ಮನ ಚಿದ್ಘನ
ತಂದೆ ಸದ್ಗುರು ದಯದನುಸಂಧಾನ
ಎಂದೆಂದಿಗೆ ಅದ ತಾ ನಿಧಾನ | ||2||
ಒಂದಾಗುದೆ ನಿಜಗುರು ದಯ ಕರುಣ
ವಂದಿಸಿ ನೋಡಬೇಕಿದೆ ಘನಸ್ಫುರುಣ
ಹೊಂದಿ ಬದುಕಿರೊ ಮಹಿಪತಿ ಗುರುಚರಣ
ಚಂದವಿದೆ ಇಹಪರ ಭೂಷಣ | || 3||

ಇದ್ದರಿರಬೇಕು ಸಂಸಾರ ಸುಖದಲ್ಹೀಗೆ
ಇದ್ದರಿರಬೇಕು ಸಂಸಾರ ಸುಖದಲ್ಹೀಗೆ
ಪದ್ಮಪತ್ರವು ಜಲದೊಳಗಿದ್ಹಾಂಗೆ | | |ಪ||
ನಡಿನಡಿಯಬೇಕ್ಹೀಂಗೆ ತಡಿಯೊಳರಿಬಿಡದ್ಹಾಂಗೆ
ನುಡಿನುಡಿಯಬೇಕು ಹರಿನುಡಿಸಿದ್ಹಾಂಗೆ
ಪಡೆದರಿದೇ ಪಡಿಯಬೇಕು ಹರಿ ಒಡಲ ಹುಗುವ್ಹಾಂಗೆ
ಅಡಗಡಿಗೆ ಹರಿಕೂಡಿ ಬಿಡದಗ್ಹಲದ್ಹಾಂಗೆ | ||1||
ಇಡಗಿ ಇಡಬೇಕ್ಹೀಂಗೆ ಇಡಗರಿಗುಡಿಸಿದ್ಹಾಂಗೆ
ತುಡಗಿ ತುಡಬೇಕ್ಹೀಂಗೆ ತುಡಮಾಡಿಸದ್ಹಾಂಗೆ
ಉಡಗಿ ಉಡಬೇಕ್ಹೀಂಗೆ ಉಡಿಗರಿಗುಡಿಸಿದ್ಹಾಂಗೆ
ಮುಡಗಿ ಮುಡಿಬೇಕ್ಹಾಂಗ್ಹರಿಗೆ ಮುಡಿಸದ್ಹಾಂಗೆ | ||2||
ಉಂಡರುಣಬೇಕ್ಹೀಂಗೆ ಉಂಡದರಿಗುಣಸಿದ್ಹಾಂಗೆ
ಕೊಂಡುದಕೋ ಹರಿಗೆ ಕೊಡಿಸಿದ್ಹಾಂಗೆ
ಮಂಡಣಿಯ ಮಾಡ್ಹೀಂಗೆ ಹರಿಗೆ ಮಂಡಿಸಿದ್ಹಾಂಗೆ
ಕೊಂಡು ಕೊಂಬುದು ಹರಿಕಂಡು ಒಲುವ್ಹಾಂಗೆ | ||3||
ಮಲಗಿ ಏಳುವದ್ಹೀಂಗೆ ಮಲಗರಿಗೇಳಿಸಿದ್ಹಾಂಗೆ
ತಿಳವು ತಿಳವದು ಹರಿ ತಿಳಿಸಿದ್ಹಾಂಗೆ
ಸುಳವು ಸುಳವರು ಹರಿಸುಳಸ್ಯಾಡಿದ್ಹಾಂಗೆ
ಒಲವು ಮಾಡುವದ್ಹೀಂಗೆ ಹರಿಯ ಒಲಿವಾದ್ಹಾಂಗೆ | ||4||
ರತಿಪಿಡಿದು ಹೀಂಗೆ ಹರಿಗತಿಯಾಗುವ್ಹಾಂಗೆ
ಅತಿಹರುಷಬಡು ಹರಿನೋಡುವ್ಹಾಂಗೆ
ಸಥಿಯ ಪಡೆದವುದು ಹೀಂಗರಿಯು ಸಥಿನಡಿಸಿದ್ಹಾಂಗೆ
ಸ್ತುತಿ ಮಾಡುವ ಮಹಿಪತಿ ಪ್ರತಿಗಾಣದ್ಹಾಂಗೆ | ||5||

ಅರ್ತರಿಯದ್ಹಾಂಗೆ ಇರಬೇಕು
ಅರ್ತರಿಯದ್ಹಾಂಗೆ ಇರಬೇಕು ಮರ್ತ್ಯ ದೊಳಗೆ | ||ಪ||
ಬಲ್ಲೆನೆಂಬ ಬಡಿವಾರ ಸಲ್ಲದು ತಾ ಅಹಂಕಾರ
ಬಲುಸೂಕ್ಷ್ಮ ಗುರುಪಾರಾವಾರ ತಿಳಿಯಲು ವಿಚಾರ | ||1||
ತರ್ಕತೆ ದೋರಲು ಖೂನ ಅರ್ತ್ಯುಳ್ಳವರ ನಿಧಾನ
ಸರ್ಕನೆ ತಿಳಿವದು ಖೂನ ತಾರ್ಕಣ್ಯದ ಧನ | ||2||
ಹಲವು ಮಾತಾಡಿದಂತೆ ಬಲುವಾ ಭಾವದೋರಿತು
ನೆಲೆಯುಗೊಳಬೇಕು ತಿಳುವಂತೆ ಎಲಿಮರಿಕಾಯಂತೆ | ||3||
ಬಲ್ಲತನಕೆ ದೂರ ಸುಲಭ ಸುಜ್ಞಾನ ಸಾರಾ
ಅಲ್ಲಹುದೇನ ತಾ ವಿಚಾರ ಬಲು ತುಂಬ್ಯಾದ ಸ್ಥಿರ | ||4||
ಅರ್ತು ಅರಿಯದ್ಹಾಂಗಿದ್ದು ಗುರ್ತುಹೇಳದೆ ನೀ ಸದ್ದು
ಬೆರ್ತು ಮಹಿಪತಿ ನಿಜಹೊಂದು ಅರ್ಥಿ ನಿನಗೊಂದು |||5||

ನಿನ್ನೊಳು ನೀನೆ
ನಿನ್ನೊಳು ನೀನೆ ನಿನ್ನೊಳು ನೀನೆ
ನಿನ್ನೊಳು ನೀನೆ ನೋಡಿ ಪೂರ್ಣ
ಚೆನ್ನಾಗೇನಾರೆ ಮಾಡು ಪ್ರಾಣಿ | || ಪ||
ಕಾಯಕ ವಾಚಕ ಮಾನಸದಿಂದ
ಸ್ಥಾಯಿಕನಾಗಿ ನೋಡಿ ಸ್ಥಾಯಿಕನಾಗಿ ನೋಡಿ
ಮಾಯಿಕಗುಣದೋರುದು ಬಿಟ್ಟು
ನಾಯಕನಾಗಿ ಕುಡು ಪ್ರಾಣಿ | ||1||
ಸೆರಗ ಬಿಟ್ಟು ಮರಗಬ್ಯಾಡ
ಕರಗಿ ಮನ ಕೂರು ಕರಗಿ ಮನ ಕೂಡು
ಎರಗಿ ಗುರು ಪಾದಕಿನ್ನು
ತಿರುಗಿ ನಿನ್ನ ನೋಡು ಪ್ರಾಣಿ | ||2||
ಮರೆವು ಮಾಯ ಮುಸುಕ ಬಿಟ್ಟು
ಅರುವಿನೊಳು ಕೂಡು ಅರುವಿನೊಳು ಕೂಡು
ತರಳ ಮಹಿಪತಿ ನಿನ್ನ
ಗುರುತು ನಿಜ ಮಾಡು ಪ್ರಾಣಿ | ||3||

ನುಡಿದಂತೆ ನಡಿಯಬೇಕು
ನುಡಿದಂತೆ ನಡಿಯಬೇಕು
ಪಿಡಿದು ಸುಪಥ | || ಪ||
ಸಾಧಿಸಿ ತಿಳಿಯದೆ ತನ್ನೊಳು ಖೂನ
ಬೋಧಿಸಿ ಹೇಳುದು ಇನ್ನೊಬ್ಬರಿಗೇನ
ಆದಿ ತತ್ವದ ಗತಿಯ ನಿಜಸ್ಥಾನ
ಭೇದಿಸುವುದು ಸದ್ಗುರು ಕೃಪೆ ಜ್ಞಾನ | ||1||
ನಡೆನುಡಿ ಒಂದಾದರೆ ಬಲು ಮೇಲು
ದೃಢಭಕ್ತಿಗೆ ಒಂದಿದೆ ತಾ ಕೀಲು
ಪಡೆವದು ಮನಮಾಡಿ ಮೀಸಲು
ಬಿಡದೆ ಮಾಡುವ ಗುರು ದಯ ಕೃಪಾಳು | ||2||
ಹೇಳಿಕಿಗಿದೆ ಬಿದ್ದದೆ ಬಲುಜನ
ತಿಳುಹಿಸಿಕೊಡಲಿಕ್ಕಿಲ್ಲದೆ ಜ್ಞಾನ
ತಿಳಿವು ತಿಳಿದರೆ ತನ್ನೊಳು ನಿಧಾನ
ಹೊಳವ ಮಹಿಪತಿ ಗುರು ನಿಜ ಚಿದ್ಘನ | | |3||

ಬರುದೆ ಭ್ರಮೆಯಗೊಂಡ್ಯೊ
ಬರುದೆ ಭ್ರಮೆಯಗೊಂಡ್ಯೊ ಮರುಳ ಮನುಜ ನೀನು | ||ಪ||
ಎರಹವಿನ ಮನೆಯೊಳು ಮರಹು ಮರೆಯಗೊಂಡು
ಗರವು ಹಿಡಿದು ನಿನ್ನ ಕುರುಹು ತಿಳಿಯಲಿಲ್ಲ
ಹರೆದು ಭ್ರಾಂತಿಗೆ ಬಿದ್ದು ಸೊರಗಿ ದಣಿದೆಲ್ಲ | | |1||
ಏನು ಮರುಳಗೊಂಡ್ಯೊ ಹೀನ ಯೋನಿಯ ಮುಖಕೆ
ಕಾನನದೊಳು ಪೊಕ್ಕು ಖೂನ ತಿಳಿಯದೆ ನಿನ್ನ
ಜನುಮಜನುಮ ಬಂದ್ಯೊ ಜ್ಞಾನ ಶೂನ್ಯದಲಿ | || 2||
ನಾನು ನನ್ನದು ಎಂದು ಏನು ಗಳಿಸಿಕೊಂಡ್ಯೊ
ಸ್ವಾನುಭವದ ಸುಖ ಅನುಭವಿಸದೆ ಹೋಗಿ
ಸ್ವಾನ ಸೂಕರ ಯೋನಿ ಮುಖಸೋಸಿದೆಲ್ಲ | | |3||
ಹೊನ್ನು ಹೆಣ್ಣಿನ ಸವಿಯು ಬಣ್ಣಿಸಿ ನೀ ಬಯಸಿದಲ್ಲ
ಮಣ್ಣೇ ಮಾಣಿಕವೆಂದು ದಣ್ಣನೆ ದಣುವರೆ
ಕಣ್ಣಗೆಟ್ಟರೆ ಬ್ಯಾಡೊ ತನ್ನೊಳರಿಯದೆ | || 4||
ಮುತ್ತಿನಂಥ ಜನುಮ ವ್ಯರ್ಥಗಳಿಯಬ್ಯಾಡ
ಅರ್ತು ಸದ್ಗುರು ಪಾದ ಬೆರ್ತು ಮಹಿಪತಿ ಪೂರ್ಣ
ಸಾರ್ಥಕ ಮಾಡಿಕೊಳ್ಳೊ ಗುರುತುವರಿತು ನೀ | ||5||

ಬಿಡೋ ಬಿಡು ಮನುಜ
ಬಿಡೋ ಬಿಡು ಮನುಜ ಭ್ರಾಂತಿಯ
ಪಡಕೊ ನಿನ್ನೊಳು ತಿಳಿಯುವ್ಹಾಂಗ ಸದ್ಗುರು ಭಕ್ತಿಯ | | |ಪ||
ಬುಡದಲಿ ಫಲವಿರಲಿಕ್ಕೆ ಅಡರುವದ್ಯಾಕೊ ತುದಿಗೆ
ಪಡಬ್ಯಾಡೋ ನಾನಾ ಸಾಯಸಾ ತೊಡಕಿ ಬೀಳುವ | ||1||
ಕಾಶಿಗೆ ಹೋಗಬೇಕೆಂದು ಕಾಸಿನ ಚಾಲವರಿಕ್ಯಾಕ
ಆಸಿ ಅಳಿದರೊಂದೇ ಸಾಕು ಭಾಸುದು ತನ್ನೊಳಗೆ | ||2||
ದೇವರೆ ತಾ ದೂರಿದ್ದರೆ ಆವದೊ ನಿನ್ನ ಕಾವ ದೈವ
ಠಾವಿಕಿ ಮಾಡಿಕೊಳ್ಳೊ ಸಾವಧವಾಗಿ | ||3||
ತಿಳಿಯದಿದ್ದರೆ ಸ್ವಕೀಲು ಕೇಳಿಕೊ ಸದ್ಗುರುವಿಗೆ ನೀಟ
ಹೇಳಿಕೊಡುವ ಸ್ವಾಮಿ ಬೆಳಗ ತಾ ಝಾಡಿ | ||4||
ಸಾಯಾಸವಿಲ್ಲದೆ ಮಹಿಪತಿಗೆ ಶ್ರಯದೋರಿತು ಗುರುವಾಕ್ಯದಲಿ
ಆಯಿತು ಮಾಡಿದ ಗುರು ತಾಯಿತಂದೆನಗೆ | || 5||

ನಡಿ ನೋಡುವ ಮನವೆ
ನಡಿ ನೋಡುವ ಮನವೆ ಹರಿಯ | ||ಪ||
ಬೇಡಿಕೊಂಬುವೆ ಜೀವದ ದೊರಿಯ
ಕೂಡಿಕೊಂಬುವ ಪ್ರಾಣದ ಸಿರಿಯ | ||1||
ಇಡಾಪಿಂಗಳ ಮಧ್ಯ ನಡುವ
ಜಾಡೆ ಪಿಡಿದು ಕೂಡಿಕೊಂಬುವ | ||2||
ದೃಢ ಪಿಡಿದು ಷಡಚಕ್ರ ಸೋಪಾನವೇರಿ
ಗೂಢವಾಗಿಹ್ಯ ನಿಜ ನೋಡುವ | ||3||
ಬ್ರಹ್ಮಾನಂದ ಸುಖ ಸಾಮ್ರಜ್ಯವಾಗಿಹ್ಯ
ನಿರ್ಮನದಲಿ ಬೆರೆದಾಡುವ | ||4||
ಸಹಸ್ರದಳದಲಿಹ್ಯ ಮಹಿಪತಿ ಸ್ವಾಮಿಯ
ಸೋಹ್ಯ ತಿಳಿದು ಸುಖದಲಿರುವ | ||5||

ಮನದಿಂದಲಿ ಮನ ನೋಡಿ
ಮನದಿಂದಲಿ ಮನ ನೋಡಿ
ಮನವರಿತು ಘನ ಕೂಡಿ | | |ಪ||
ಮನಸಿನಿಂದ ತಾ ನೋಡುವ ಖೂನ
ಮನ ಮರೆಯಲದೆ ನಿಧಾನ
ಮನವರಿಯದೆ ಇಹುದ್ಯಾತರ ಜ್ಞಾನ
ಮನವೇ ಸ್ವಹಿತ ಕಾರಣ | ||1||
ಮನದ ಕೊನಿಯಲಿದೆ ಘನ ಸುಖದಾಟ
ಅನುದಿನ ನೋಡುದು ನೀಟ
ಸ್ವಾನುಭವದಲಿದು ನೋಡುವ ನೋಟ
ಮುನಿಜನರ ಸುಖದೂಟ | ||2||
ಮನೋನ್ಮನದೊಳಗದೆ ಘನ ಸ್ಫೂರ್ತಿ
ಜ್ಞಾನಕಿದೆ ಮನೆ ವಾರ್ತಿ
ಮನದೊಳಗಿಹ್ಯ ಮಹಿಪತಿ ಗುರುಮೂರ್ತಿ
ಮನಕಾಗಿಹ ತಾಂ ಸಾರ್ಥಿ | ||3||

ಸಾವಧಾನವೆಂದು ಶ್ರುತಿ ಸಾರುತಿದೆಕೊ
ಸಾವಧಾನವೆಂದು ಶ್ರುತಿಸಾರುತಿದೆಕೊ ಸಾವಧಾನ
ಸಾವಧಾನವಗಿ ಸಾಧಿಸಿ ಶ್ರೀಹರಿ ಸ್ವರೂಪ ಜ್ಞಾನ | ||ಪ||
ಕಾಯದ ಕಳವಳ ಕಂಗೆಡಿಸದೆ ಮುನ್ನೆ ಸಾವಧಾನ
ಮಾಯಮೋಹದ ಭ್ರಮೆದೋದ ಮುನ್ನೆ ಸಾವಧಾನ | ||1||
ಅಸನ ವ್ಯಸನ ಕೂಡಿ ಹಸನ ಕೆಡದ್ಹಾಂಗ ಸಾವಧಾನ
ವಿಷಯ ವಿಭ್ರಮದೊಳು ವಶವಗುಡದ್ಹಾಂಗ ಸಾವಧಾನ | ||2||
ನಿದ್ರಿವೆಂಬುದು ತನ್ನ ಬುದ್ಧಿಗೆಡಿಸದ್ಹಾಂಗ ಸಾವಧಾನ
ಸದ್ಯ ತಾನಾರೆಂದು ಶುದ್ಧಿ ತಿಳುವ್ಹಾಂಗ ಸಾವಧಾನ | ||3||
ಸ್ವಹಿತ ಸದ್ಗುರು ಪಾದ ರಕ್ಷಿಸುವದರಲಿ ಸಾವಧಾನ
ವಿಹಿತಿದೆ ಮಹಿಪತಿ ಶ್ರಮಪಡುವ ನಿತ್ಯ ಸಾವಧಾನ | ||4||

ತಾನಾ ತಂದನಾನಾ ತಾನಾ
ತಾನಾ ತಂದನಾನಾ ತಾನಾ ತಂದನಾನಾ
ತಾನಾ ತಂದನಾನಾ ತಾನಾ ತಂದನಾ ನಾ | ||ಪ||
ತಾನಾ ತಂದನಾನಾ ತಾನೆಂಬುವದರ ಖೂನ
ಏನೆಂದರಿಯ ಹೀನ ಮನುಜ ಪಾಮರ ಪೂರ್ಣ | ||1||
ತಾನೆಂಬುದೆ ತಾ ದೈವ ನಾನೆಂಬುದೆ ತಾ ಜೀವ
ಜ್ಞಾನದಿಂದ ತಿಳಿವ ಅನುಭವ ಆಶ್ರೈಸುವ | ||2||
ತಾನೆ ತಂದರ ನಾನಾ ತನ್ನಿಂದವೇ ಜೀವನ
ನಾನೆಂಬುದವಗುಣ ಜನ್ಮಕಿದೆ ಸಾಧನ | ||3||
ತಾನೆ ತಂದರ ತಾರಕ ನಾನೆಂದರೆ ನರಕ
ಜ್ಞಾನ ಗುರುಮುಖ ಖೂನ ತಿಳಿವುದು ಸುಖ | ||4||
ತಾನೆಂದವ ತಾ ಬ್ರಹ್ಮ ನಾನೆಂದರ ಅಹಮ್ಮ
ಅನುಭವದಿಂದ ವರ್ಮ ಖೂನಾದರ ಸಂಭ್ರಮ | ||5||
ತಾನೆಂದರೆಸ ಅರ್ಕ ನಾನೆಂದರೆ ತಾ ತರ್ಕ
ಹೀನಗುಣ ಸಂಪರ್ಕ ಏನೆಂದರಿಯ ಮೂರ್ಖ | ||6||
ತಾನೆಂದರೆ ತಾಂ ಮಾನ್ಯ ನಾನೆಂದರಮಾನ್ಯ
ಖೂನ ಮಾಡಿ ತಾರ್ಕಣ್ಯ ಅನುಭವಿಸಲು ಧನ್ಯ | ||7||
ತಾನೆಂದರೆ ತಾ ಬಂದೆ ನಾನೆಂದು ಬಲು ನೊಂದೆ
ಅನೇಕ ಜನ್ಮದಿಂದ ದಣಿದು ನಾ ಸಾಕೆಂದೆ | ||8||
ತಾನೆಂಬುದು ಸುಜ್ಞಾನ ನಾನೆಂಬುದು ಅಜ್ಞಾನ
ತಾನೆಂದರೆ ಅಣುರೇಣು ನಾನೆಂದರನುಮಾನ | ||9||
ತಾನೆಂಬುದ ತೋರಿಸಿ ನಾನೆಂಬುದ ಮರಸಿ
ತಾನೆತನಾದ ಋಷಿ ಆನಂದೊ ಬ್ರಹ್ಮ ಸೂಸಿ | ||10||
ತಾನೆ ತಾನಾಗಿ ಒಂದೆ ಖೂನ ದೋರಿದ ತಂದೆ
ಭಾನುಕೋಟಿ ತೇಜೊಂದೆ ಪೂರ್ಣ ಮಹಿಪತಿಗೊಂದೆ | ||11||

ಕೇಳಿಕೊ ಗುರು ಬುದ್ಧಿ
ಕೇಳಿಕೊ ಗುರು ಬುದ್ಧಿ ಮನವೆ ಕೇಳಿಕೊ ಗುರು ಬುದ್ಧಿ
ಕೇಳಿ ನಡೆಯದಿದ್ದರೆ ನೀನು ಜನ್ಮಕ ಜಾರಿ ಬಿದ್ದಿ ಮನವೆ | ||ಪ||
ವೇದಕ ನಿಲುಕದ ಹಾದಿಯದೋರುವ ಸದ್ಗುರುವಿನ ಸುಬುದ್ಧಿ
ಸಾಧಿಸಿ ನೋಡಲು ತನ್ನೊಳಗೆ ತಾ ಎದುರಿಡುವುದು ಸುಶುದ್ಧಿ
ಭೇದಿಸದಲ್ಲದೆ ತಿಳಿಯದು ಎಂದಿಗೆ ಆದಿ ತತ್ವದ ನಿಜ ಶುದ್ಧಿ
ಮೊದಲಿಗೆ ಸಾಧಿಸಿ ಕೇಳಿ ನಡೆದರೆ ಸದ್ಗುರು ಸುಬೋಧದಲಿ ಗೆದ್ದಿ | | |1||
ತರುಣೋಪಾಯಕೆ ಸಾಧನವೇ ಮುಖ್ಯ ಗುರು ಬುದ್ಧಿಯ ವಿಶೇಷ
ಪರಗತಿ ಸಾಧನ ಪಡೆದೇನಂದರೆ ಗುರು ಮಾತ ಉಪದೇಶ
ಅರಿತು ನಡಿಯೊಳು ಅರವ್ಹಿನ ಮನೆಯೊಳು ದೋರುದು ತಾ ಹರುಷ
ಎರಡಿಲ್ಲದ ಕೇಳಿಕೊಂಡರ ಹರಿದ್ಹೋಗುದು ಭವ ಬಂಧಪಾಶ | | 2||
ಕರುಣಿಸಿ ಕರೆದು ಬೀರುವ ನಿಜನುಡಿ ದೋರುವ ಗುರು ಘನಸೌಖ್ಯ
ಸುರಮುನಿ ಜನರಿಗೆ ಬಲು ಅಗಮ್ಯದೋರುವದೆ ಆಠಕ್ಯ
ತರಳ ಮಹಿಪತಿ ಮನವೆ ಕೇಳು ಗುರುರಾಯನ ಸುವಾಕ್ಯ
ಶರಣು ಜನರಿಗೆ ಗುರುತಾಗಿದು ತಾ ಪರ ಗೆಲಿಸುವದು ನಿಜ ಮುಖ್ಯ | ||3||

ನಿನ್ನೊಳು ನೋಡಾನಂದವ
ನಿನ್ನೊಳು ನೋಡಾನಂದವ ಎನ್ನ ಮನವೆ ಚೆನ್ನಾಗಿ ಚಿನ್ಮಯವ
ಇನ್ನೊಂದಿಹವೆಂಬನ್ಯ ಪಥವಳಿದು
ಉನ್ಮನಿಯೊಳು ಘನಸುಖ ಅನುಭವಿಸುತ | | |ಪ||
ಕಂಗಳ ಕೊನೆಯ ಮೆಟ್ಟಿ ಮುಂಗಡಿಯಲಿಹ
ಮಂಗಳಾತ್ಮಕನ ನೋಡಿ ಲಂಘಿಸಿ ಮೂಲ ಸ್ಥಾನವ
ತುಂಗ ವಿಕ್ರಮನ ಸಂಗ ಸುಖವನರಿದು
ಹಿಂಗದೆ ಅನುದಿನ ಇಂಗಿತವಾಗಿ ನೀ
ಗಂಗೆಯೊಳು ಜಲ ಬೆರೆದಾ ಸುಸಂಗದಿ | || 1||
ನಾನು ನಾನೆಂಬದಳಿದು ನಿನ್ನೊಳು ನೀನೆ
ಏನೆಂದು ತಿಳಿದು ನೋಡು ಆನಂದೋ ಬ್ರಹ್ಮದಾಟವು
ತಾನೆ ತಾನಾಗಿ ತನುವಿನೊಳು ತೋರುವದು
ಘನ ಗುರುವಚನಾನುಭವದಲಿ ಸೇವಿಸಿ
ಸ್ವಾನುಭವದ ಸುಖದಲಿ ಲೋಲ್ಯಾಡುತ | || 2||
ಮರೆದು ಮಾಯದ ಮಾಟವ ಅರಿತು ನೋಡು
ಬೆರೆದು ದಾಂಟಿ ತ್ರಿಕೂಟವ ತೋರುವ ದಿವ್ಯ ಭಾವವ
ತಾರಕಗುರು ಸಾರುವ ಕರುಣ ನೋಟವ
ಅರವಿನೊಳಿರು ಮಹಿಪತಿ ಗುರು ಪಾದದಿ
ಪರಮಾನಂದದಿ ಸುಖ ಸೂರ್ಯಾಡುತ | ||3||

ಎನಗಿನ್ನು ಇನ್ನೇನಿನ್ನೇನು
ಇನ್ನೇನಿನ್ನೇನು ಎನಗಿನ್ನು ಇನ್ನೇನಿನ್ನೇನು | ||ಪ||
ಎನ್ನೊಳು ಗುರು ತನ್ನ ಮರ್ಮವು ತೋರಿದ ಇನ್ನೇನಿನ್ನೇನು
ಮುನ್ನಿನ ಕರ್ಮವು ನಿರ್ಮೂಲವಾಯಿತು ಇನ್ನೇನಿನ್ನೇನು
ಎನ್ನೊಳು ಘನಬ್ರಹ್ಮವಸ್ತು ತಾನಾಯಿತು ಇನ್ನೇನಿನ್ನೇನು
ನಾನು ನಾನೆಂಬುದು ನೆಲಿಯು ತಾನಾಯಿತು ಇನ್ನೇನಿನ್ನೇನು
ಏನೆಂದು ತಿಳಿಯದ ಅನುಮಾನ ಗಳೆಯಿತು ಇನ್ನೇನಿನ್ನೇನು
ಪರಮ ತತ್ವದ ಗತಿ ನೆಲೆ ನಿಭ ತೋರಿತು ಇನ್ನೇನಿನ್ನೇನು
ಎನ್ನೊಳಾತ್ಮ ಖೂನ ಕುರುಹವು ತಿಳಿಯಿತು ಇನ್ನೇನಿನ್ನೇನು
ಕನಸು ಮನಸು ಎಲ್ಲ ನಿನ್ನ ಸೇವೆ ಆಯಿತು ಇನ್ನೇನಿನ್ನೇನು
ಹಗಲಿರುಳೆಂಬುದು ಹಗರಣವಾಯಿತು ಇನ್ನೇನಿನ್ನೇನು
ಅರಹು ಮರಹಿನ ಇರುವು ತಿಳಿಯಿತು ಇನ್ನೇನಿನ್ನೇನು
ಭಾವದ ಬಯಲಾಟ ನಿಜವಾಗಿ ದೋರಿತು ಇನ್ನೇನಿನ್ನೇನು
ಜೀವಶಿವನ ಗತಿ ಸೋಹ್ಯವು ತಿಳಿಯಿತು ಇನ್ನೇನಿನ್ನೇನು
ಆಯವು ದಾಯವು ಸಾಹ್ಯವು ದೋರಿತು ಇನ್ನೇನಿನ್ನೇನು
ಜೀವನ್ನ ಜಾತಿಯ ಕೀಲವು ತಿಳಿಯಿತು ಇನ್ನೇನಿನ್ನೇನು
ಜನ್ಮ ಮರಣದಾ ಜಂತ್ರವು ಮುರಿಯಿತು ಇನ್ನೇನಿನ್ನೇನು
ಸಂದೇಹ್ಯ ಸಂಕಲ್ಪ ಸೂಕ್ಷ್ಮವು ಹರಿಯಿತು ಇನ್ನೇನಿನ್ನೇನು
ಮರಣದ ಗತಿಗಳ ಮಂತ್ರವು ತಿಳಿಯಿತು ಇನ್ನೇನಿನ್ನೇನು
ಸುಷಮ್ನ ನಾಳದ ಸೂಕ್ಷ್ಮವು ದೋರಿತು ಇನ್ನೇನಿನ್ನೇನು
ಇಮ್ಮನವಿದ್ದದು ಒಮ್ಮನವಾಯಿತು ಇನ್ನೇನಿನ್ನೇನು
ಆಧಾರ ಚಕ್ರದ ಹಾದಿಯು ತಿಳಿಯಿತು ಇನ್ನೇನಿನ್ನೇನು
ಸದ್ಗುರು ಕೃಪೆಯಾದಾ ಸಾಧನವಾಯಿತು ಇನ್ನೇನಿನ್ನೇನು
ಭವಕೆ ಗುರಿಯಾಗುವ ಬಾಧೆಯು ಅಳಿಯಿತು ಇನ್ನೇನಿನ್ನೇನು
ಅಂತರಾತ್ಮನ ಸೂತ್ರಾಂತ್ರವು ತಿಳಿಯಿತು ಇನ್ನೇನಿನ್ನೇನು
ಮಹಿಪತಿ ಜೀವನ್ನ ಪಾವನ್ನವಾಯಿತು ಇನ್ನೇನಿನ್ನೇನು
ಎನ್ನೊಳು ಭಾಸ್ಕರ ಗುರು ತಾನೆಯಾದನು ಇನ್ನೇನಿನ್ನೇನು | ||1||

ಇಂದೆನ್ನ ಜನ್ಮ ಪಾವನವಾಯಿತು
ಇಂದೆನ್ನ ಜನ್ಮ ಪಾವನವಾಯಿತು
ತಂದೆ ಶ್ರೀಗುರು ನಿಮ್ಮ ಚರಣ ದರುಶನದಿ | ||ಪ||
ಅರ್ಕ ಮಂಡಲಗಳು ರವಿಶಶಿ ಕಿರಣವು
ಝಳಝಳಿಸುವ ಪ್ರಭೆ ನೋಡಿ ಅನಿಮಿಷದಾದೃಷ್ಟಿಲೆನ್ನ
ಲಕ್ಷಿಯೊಳು ಸಾಕ್ಷಾತ್ವಸ್ತು ಗತಿಯು ನಿಮ್ಮ
ಪ್ರಕಾಶವನು ಕಂಡಾಂಧತ್ರಗಳದಿನ್ನು | | |1||
ಓಂಕಾರ ಮೊದಲಾದ ದ್ವಾದಶ ನಾದದಾ
ಭೇದದಾ ಘೋವನು ಕೇಳಿನ್ನೀ ದೃಶ್ಯದಾ ಕರ್ಣಲೆನ್ನಾ
ಲಯಲೀಲೆಯೊಳು ಸಾದೃಶ್ಯ ಮೂರ್ತಿಯು ನಿಮ್ಮ
ಶ್ರುತಿಗಳು ಕೇಳಿ ಬಧಿರತ್ವವಾಗಳಿದಿನ್ನು | || 2||
ಇಪ್ಪತ್ತೊಂದು ಸಾವಿರ ಆರುನೂರದಾ
ಜಪವನ್ನು ತಿಳಿದು ಪ್ರಣಮ್ಯಲೆನ್ನ
ಸುಷಮ್ನದೊಳು ಪ್ರಾಣೇಶ ಮೂರ್ತಿ ನಿಮ್ಮ
ಮಂತ್ರವನು ತಿಳಿದು ಪಿಶಾಚತ್ವ ಕಳೆದಿನ್ನು | ||3||
ಸ್ತುತಿ ಸ್ತೌತ್ಯ ಸ್ಮರಿಸುವ ದಿವ್ಯ ನಾಮಾಮೃತವ
ನುಡಿದು ಪಯಸ್ವನೀ ಜಿಹ್ವೆಲೆನ್ನ
ಸ್ಮರಣೆ ಚಿಂತನೆಯೊಳು ಸ್ಥುರಣ ಮೂರ್ತಿ
ಸ್ಮರಿತ ಗತಿವರಿತು ಮೂಕತ್ವ ಕಳೆದಿನ್ನು | | |4||
ಚಿನ್ಮಯ ಚಿದ್ರೂಪ ಕಂಡು ಬೆರಗಾಗಿ ಮನ
ಭ್ರಾಂತಿ ಅಜ್ಞಾನವನ್ನು ಜರಿಯಲೆನ್ನ
ಏಕೋದೇವ ಈತ ವಿಶ್ವಾತ್ಮ ಹಂಸನೆಂದು
ಸಂದೇಹ ಸಂಕಲ್ಪ ಬಾಧೆಯಾಗಳದಿನ್ನು | || 5||
ಭಕ್ತಿ ಮುಕ್ತಿ ಉದಾರಿ ಆತ್ಮದಲಿ ಸಾರಿ ದೋರಿ
ನಿಜ ಬೋಧಾಮೃತ ಬೆರೆದು ತಾರಿಸಲೆನ್ನ
ಗರ್ಭಪಾಶದ ಬಲಿಯು ಹರಿದು ಧರೆಯೊಳಿನ್ನು
ಉತ್ಪತ್ತಿ ಸ್ಥಿತಿ ಲಯದ ಬೀಜವನ್ನು ಹುರಿದಿನ್ನು | ||6||
ಭಾಸ್ಕರ ಸ್ವಾಮಿಯ ಕರುಣಾಳು ಮೂರ್ತಿಯ
ಮೂಢ ಮಹಿಪತಿಯ ಕೃಪಾಂಬುಧಿಯು
ಕರುಣದಭಯ ಹಸ್ತವನು ಶಿರಸದಲ್ಲಿಡಲಾಗಿ
ಧನ್ಯನಾದೆನು ಸತಿಪತಿ ಸಹಿತವಾಗಿನ್ನು | ||7||

ನಿಜ ಗುಹ್ಯದ ಮಾತು
ನಿಜ ಗುಹ್ಯದ ಮಾತು
ಸಾಧುರಿಗಲ್ಲದೆ ತಿಳಿಯದು ಗೊತ್ತು | ||ಪ||
ಕಣ್ಣಿಲೆ ಕಂಡು ಹೇಳದ ಮಾತು
ಪುಣ್ಯವಂತರಿಗಿದೆ ಹೊಳಿದೀತು
ಇನ್ನೊಬ್ಬರಿಗೇನ ತಿಳಿದೀತು
ಚಿನ್ಮಯದ ವಸ್ತು | ||1||
ನೀತಿಗೆ ನಿಜವಾಗಿಹ ಮುಕುಟ
ಮಾತಿಗೆ ಮುಟ್ಟಿದವನೆ ಬಲು ನಿಗಟ
ಮತಿಹೀನರಿಗೆ ಒಗಟ
ಯತಿಜನರಿಗೆ ಪ್ರಗಟ | ||2||
ಸೋಹಂ ಸೊನ್ನೆಯ ಮಾತನೆ ಕೇಳಿಕೊ
ಗುಹ್ಯ ಗುರುತು ಹೇಳುವ ಗುರು ಬಳಿಕೊ
ಮಹಿಪತಿ ನಿನ್ನೊಳು ನೀ ತಿಳಕೊ
ಸಿದ್ದದ ಬಲು ಬೆಳಕೊ | ||3||

ಏನೆಂದ್ಹೇಳಲಿ ಸ್ವಾನಂದ ಮಹಿಮೆಯು
ಏನೆಂದ್ಹೇಳಲಿ ಸ್ವಾನಂದ ಮಹಿಮೆಯು
ಏನೆಂದ್ಹೇಳಲಿ ಮಾ | || ಪ||
ವೇದಲ್ಲ ವಾದಲ್ಲ ಭೇದ ಮಾಡುವದಲ್ಲ
ಸಾಧಕರಿಗೆ ತಾ ಸಿಲುಕುದುಮಾ
ಓದಲ್ಲ ಶೋಧಲ್ಲ ಗಾದಿಯ ಮಾತಲ್ಲ
ಭೇದಿಸಿದರೆ ತಾನು ತಿಳಿವದು ಮಾ | ||1||
ಧ್ಯಾನಲ್ಲ ಮೋನಲ್ಲ ಸ್ನಾನ ಸಂಧ್ಯಾನಲ್ಲ
ಜ್ಞಾನಹೀನರಿಗಿದು ತಿಳಿಯದು ಮಾ
ನಾನಲ್ಲ ನೀನಲ್ಲ ನಾನುಡಿದ ಮಾತಲ್ಲ
ಅನುಭವ ಸಿದ್ಧನು ಬಲ್ಲನು ಮಾ | ||2||
ಸೇವಲ್ಲ ಸೂತ್ರಲ್ಲ ಬಾಹ್ಯ ನೋಟಕೆ ಅಲ್ಲ
ಮಹಿಪತಿ ನಿನ್ನೊಳು ತಿಳಿವದು ಮಾ
ಕೌತುಕವನು ಕಂಡು ಮಹಾ ಗುರುಕೃಪೆಯಿಂದ
ಸಾಯೋಜ್ಯ ಸದ್ಗತಿ ಪಡೆವದು ಮಾ | ||3||

ಅರುಹು ಅಂಜನಾಗದನಕಾ
ಅರುಹು ಅಂಜನಾಗದನಕಾ
ಪರಗತಿ ದೊರೆಯದು ಗುರುಕೃಪೆ ಆಗದನಕಾ | ||ಪ||
ಕಣ್ಣು ಕಂಡು ಕಾಣದನಕಾ
ಅನುಮಾನ ಹೋಗದು ಉನ್ಮನವಾಗದನಕಾ
ಜ್ಞಾನ ಉದಯವಾಗದನಕಾ
ಮನ ಬೆರಿಯದು ಘನ ಮಯಾಶ್ಚರ್ಯವಾಗದನಕಾ | ||1||
ತನ್ನೊಳು ತಾ ತಿಳಿಯದನಕಾ
ಭಿನ್ನವಳಿಯದು ಅನುಭವ ಸುಖ ಹೊಳೆಯದನಕಾ
ನೆನವು ನೆಲೆಗೊಳ್ಳದನಕಾ
ಘನಪ್ರಭೆಯು ಹೊಳಿಯದು ಧ್ಯಾನ ನಿಜವಾಗದನಕ | ||2||
ಏರಿ ತ್ರಿಪುರ ನೋಡದನಕಾ
ಗುರು ಮಹಿಮೆ ತಿಳಿಯದು ತಾ ದೃಢಗೊಳ್ಳದನಕಾ
ಮುರಹರಿಯಗುಡದನಕಾ
ಹರಿಯದು ಜನ್ಮಗುರುಚರಣವ ನೋಡದನಕಾ | ||3||

ಇದೇ ನೋಡಿರೋ ನಮ್ಮ ಊಟ
ಇದೇ ನೋಡಿರೋ ನಮ್ಮ ಊಟ ಮೇದಿನೊಯೊಳು ಪ್ರಗಟ | | |ಪ||
ಪ್ರೇಮ ತಟ್ಟಿ ಬಟ್ಟಲು ತಳಗಿ ಕಾಮಕ್ರೋಧ ಸುಟ್ಟು ಬೆಳಗಿ
ನಾಮ ಸಾರಘೃತದೊಳು ಮುಳಗಿ ನೇಮದಿಂದ ಬಡಸುವಾದಡ್ಹಗಿ | ||1||
ಪಂಚಭಕ್ಷ ಪರಮಾನ್ನಾ ಮುಂಚೆ ಬಡಸುವದು ಗುರು ವಚನ
ಮುಂಚೆದೋರಿತು ಮೃಷ್ಟಾನ್ನ ಸಂಚಿತ ಪುಣ್ಯಸಾಧನ | |2||
ತತ್ವಸಾರದೊಂದೇ ತುತ್ತು ಅತಿ ಹರುಷಗೊಂಡಿತು
ನಿತ್ಯ ತೃಪ್ತಹೊಂದಿತು ಹಿತ ಮಹಿಪತಿಗಾಯಿತು | ||3||

ಜ್ಞಾನದ ಬಲು ಹುಚ್ಚು
ಜ್ಞಾನದ ಬಲು ಹುಚ್ಚು ಘನ ಗುರುದಯದೊಲವಿನ ಮೆಚ್ಚು | ||ಪ||
ಮಾಡದ ಮಾಡಿಸಿತು ನೋಡಿದರೇನ ತಾಂ ನೋಡಿಸಿತು
ಕೂಡದ ಕೂಡಿಸಿತು ಬಿಡದಾಗಿಹ್ಯದ ಬಿಡಿಸಿತು | ||1||
ತನ್ನ ತಾನರಸಿತು ಇನ್ನೊಂದರನೆ ಮರೆಸಿತು
ಭಿನ್ನ ಭೇದ್ಹರಿಸಿತು ಚಿನ್ಮಯದ ಸುಖ ಬೆರೆಸಿತು | || 2||
ಕಾಣದ ಕಾಣಿಸಿತು ಉಣದೂಟನೆ ತಾ ಉಣಿಸಿತು
ಅನುಮಾನಗಳಿಸಿತು ಘನ ಮಹಿಪತಿಗೆ ನುಡಿಸಿತು | ||3||

ಹಿಡಿಯಬ್ಯಾಡಿ ಮೌನ
ಹಿಡಿಯಬ್ಯಾಡಿ ಮೌನ ಪಡೆದುಕೊಳ್ಳಿ ಖೂನ
ಒಡೆದು ಹೇಳುತಾನೆ ನೋಡಿ ಸದ್ಗುರು ನಿಧಾನ | ||ಪ||
ಅಹಂಭಾವ ಬಿಟ್ಟು ಸೋಹ್ಯ ಕೇಳಿ ಗುಟ್ಟು
ದೇಹ ಅಭಿಮಾನ ಸುಟ್ಟು ಜಯಸಿ ರತಿವಿಟ್ಟು | ||1||
ಮಾಡಿ ಗುರುಭಕ್ತಿ ನೋಡಿ ಗತಿಮುಕ್ತಿ
ಕೊಡುವ ಮಹಿಪತಿಸ್ವಾಮಿ ಸದ್ಗತಿ ಸುಯುಕ್ತಿ | ||2||

ಹೊಂದಬೇಕು ನಿಜ ನೋಡಿ
ಹೊಂದಬೇಕು ನಿಜ ನೋಡಿ ತಂದೆ ಗುರುನಾಥ
ಒಂದು ಮನದಲಿ ಕಿವಿಗೊಟ್ಟು ಕೇಳಿ ಬೋಧ | ||ಪ||
ಪರಧನ ಪರಸತಿಯರ ಬಿಟ್ಟರೆ ಸಾಕು ಹೇಸಿ
ತೋರುವುದು ತನ್ನೊಳು ಪ್ರತ್ಯಕ್ಷ ವಾರಣಾಸಿ
ಸುರಿಮಳೆಗರೆವುದು ಹೆಜ್ಜೆಜ್ಜಿಗೆ ಪುಣ್ಯದ ರಾಶಿ
ಅರಿತು ಏಕರಸವಾಗಿ ಸದ್ಗುರು ಸ್ಮರಿಸಿ | | |1||
ಜನ್ಮಕೆ ಬಂದ ಮ್ಯಾಲೆ ಪುಣ್ಯಪಥ ಸಾಧಿಸಿ
ಸನ್ಮತ ಸುಖಸಾರದೊಳು ಮನ ಭೇದಿಸಿ
ಉನ್ಮನವಾಗಿ ಜೀವನ ಸದ್ಗತಿಗೈದಿಸಿ
ಜನ್ಮಕೆ ಬೀಳುವ ಭವಬಂಧನ ಛೇದಿಸಿ | || 2||
ಸಾಯಾಸದಿಂದ ಸಾಧಿಸಬೇಕು ಸಾಧು ಸಂಗ
ಗುಹ್ಯಗುರುತ ನೋಡಲಿಬೇಕು ಅಂತರಂಗ
ಬಾಹ್ಯಾಂತ್ರದೋರುತಿದೆ ಸದ್ಗುರು ಪ್ರಾಣಲಿಂಗ
ಮಹಿಪತಿಗಾಯಿತು ನೋಡಿ ಭವ ಭಯ ಭಂಗ | | |3||

ಏಳುತಲೆದ್ದು ಮನವೆ ನೀ ವಲೀ ನಿಜಖೂನ
ಏಳುತಲೆದ್ದು ಮನವೆ ನೀ ವಲೀ ನಿಜಖೂನ
ಕುಲಕೋಟಿ ಉದ್ದರಿಸುವ ನೆಲೆನಿಭ ಸ್ಥಾನ
ಬೆಳಗಾಗಲಿಕ್ಕೇರಿತು ನೀ ಒಳಿತಾಗಿ ಪೂರ್ಣ
ತಿಳಕೊಂಡು ಮಾಡು ಗುರುಮೂರ್ತಿಗೆ ಸುನಮನ | ||ಪ||
ಒಳಮುಖನಾಗರಿಯೋ ನೀ ಸುಲಲಿತ ಜ್ಞಾನ
ಅಲೇಶ ಮಾಡದೆ ನೀ ಬ್ಯಾಗ ಬಲಿ ನಿಜಧ್ಯಾನ
ಥಳಥಳಗುಡತಲ್ಯದ ಒಳಿತಾಗಿ ಪೂರ್ಣ
ತಿಳಕೊಂಡು ಮಾಡು ಗುರುಮೂರ್ತಿಗೆ ಸುನಮನ | ||1||
ತೊಳಿಬೇಕೆಲೊ ಮನದ ಹೀನ ಮಲಿನ ಗುಣ
ಕಳಿಬೇಕು ನೋಡುಳಿದು ಕರ್ಮ ತಮಂಧತನ
ಕಳೆಕಾಂತಿಯುಳ್ಳ ಕರುಣಾರ್ಣವ ಸ್ವಾಮಿ ಪೂರ್ಣ
ತಿಳಕೊಂಡು ಮಾಡು ಗುರುಮೂರ್ತಿಗೆ ಸುನಮನ | | |2||
ಸಲೆ ಮೊರೆಹೊಕ್ಕು ನೀ ಸದಾಬಲಿ ಭಕ್ತಿ ಪೂರ್ಣ
ನೆಲೆಗೊಂಡಿರೊ ಅನುದಿನ ಸದ್ವಸ್ತು ಶರಣ
ಸಕಳ ಸುರವುತಲ್ಯದೆ ಬಲ್ಲ ಸ್ವಾಮಿ ಕರುಣ
ತಿಳಿಕೊಂಡು ಮಾಡು ಗುರುಮೂರ್ತಿಗೆ ಸುನಮನ | || 3||
ಇಳೆಯೊಳಿದೆ ಸಕಲಪುಣ್ಯಶಿರೋನಿಧಾನ
ಘಳಿಸುವದೊಂದೆ ಸುಫಳಿತ ಸುದಿವ್ಯ ಘನ
ತಿಳಿಯೊ ಸುಮನವೆ ಮಹಪತಿಸ್ವಾಮಿ ಪೂರ್ಣ
ಒಲುವಾಂಗೆ ಮಾಡು ಗುರುಮೂರ್ತಿಗೆ ಸುನಮನ | | |4||

ನೆನೆ ಕಂಡ್ಯ ಮನವೆ
ನೆನೆ ಕಂಡ್ಯ ಮನವೆ ಸದ್ಗುರು ದಿವ್ಯ ಪಾದ
ಖೂನ ತೋರುವದಿದೆ ನಿಜ ಬೋಧ | ||ಪ||
ನೆನೆಯಬೇಕೊಂದೆ ಭಾವದಿಂದೆ
ತಾನೆ ತಾನಾಗುವ ಗುರು ತಾಯಿತಂದೆ | ||1||
ಘನ ಸುಖ ಕೊಡುವ ಅನುಭವದಲಿಡುವ
ಜನನ ಮರಣದ ಬಾಧಿಯ ಮೂಲಗಡೆವ | | |2||
ಗುರುವಿಂದಧಿಕ ಬ್ಯಾರಿಲ್ಲ ಸುಖ
ತಿರುಗಿ ನೋಡಲು ತನ್ನೊಳಾದ ತಾ ಕೌತುಕ | ||3||
ಇದೆ ನಿಜ ಬೋಧ ಸ್ವಸುಖದ
ಭೇದಿಸಿದವರಿಗಿದೆ ಸುಪ್ರಸಾದ | || 4||
ಗುರುತಾ ತೋರುವ ಸುರಿಮಳೆಗರೆವ
ತರಳ ಮಹಿಪತಿಸ್ವಾಮಿ ಅನುದಿನ ಹೊರೆವ | ||5||

ಏನೋ ಮನವೆ ನೀಹೀಂಗಾದಿ
ಏನೋ ಮನವೆ ನೀಹೀಂಗಾದಿ | || ಪ||
ಏನೋ ಮನವೆ ನೀಹೀಂಗಾದಿ
ಸ್ವಾನಂದ ಸುಖ ತಿಳಿಯದೆ ಬಳದಿ
ಮಾನುಭವರ ವಿಡಿನಿಜ ಹಾದಿ
ಜ್ಞಾನದಲಳಿಯೋ ಭವ ವ್ಯಾಧಿ | || 1||
ಮಂದ ಮತಿತನ ಬಿಡು ಗುಣದಾ
ಹೊಂದೋ ಸದ್ಗುರುವಿನ ಪಾದಾ
ಛಂದದಿ ಪಡಿಯೋ ನಿಜ ಬೋಧಾ
ಸಂದೇಹ ಬಿಡಿಸೆಚ್ಚರಿಸುವದಾ | ||2||
ಹೊಗೆ ಅಗ್ನಿಯ ಮುಸುಕಿಹ ಪರಿಯಾ
ಜನದೊಳು ವಿವೇಕದ ಮಾಯಾ
ಬಿಗಿದಾವರಿಸಿಹುದು ನೋಯಾ
ಬ್ಯಾಗನೆ ತಿಳಿ ಗೆಲುವ ಉಪಾಯಾ | ||3||
ಮುಂದ ಹಾಕಿದ ಹೆಜ್ಜೆಯನು
ಹಿಂದಕ ತಿರುಗಿಸದಿರು ನೀನು
ನಿಂದಿಸಲೊಂದಿಸಲಾರೇನು
ಮುಂದಗಿಡದೆ ಬೆರಿ ವಸ್ತುವನು | | |4||
ನಿನ್ನ ಸುದ್ದಿಯು ತಾ ನಿನಗಿಲ್ಲಾ
ಇನ್ನಾರೆ ತಿಳಿತನು ಸ್ಥಿರವಲ್ಲಾ
ಮುನ್ನಿನ ಪರಿಕೆಡುವುದು ಸಲ್ಲಾ
ಮನ್ನಿಸು ಮಹಿಪತಿ ಜನ ಸೊಲ್ಲಾ | | |5||

ಸ್ವಾನುಭವದ ಸುಖ
ಸ್ವಾನುಭವದ ಸುಖ ಸಾಧಿಸಿ ನೋಡಿರೋ ನೇಮದಿಂದ
ಘನ ಗುರು ಕೃಪೆಯಿಂದ ಅನುಭವಿಸಲು ಬ್ರಹ್ಮಾನಂದ | ||ಪ||
ಶಿಖಾ ಮಧ್ಯದಲಿ ಪೂರ್ಣ ಸುಖಗರವುತಲ್ಯದೆ ಸಂತ್ರಾಧಾರಿ
ಸಕಲವೆಲ್ಲಕೆ ಸನ್ಮತವಾಗಿ ತೋರುವುದೊಂದೇ ಪರಿ
ಶುಕಾದಿ ಮುನಿಗಳು ಪ್ರಕಟಿಸಿ ಹೇಳಿಹರು ಖೂನದೋರಿ
ಬೇಕಾದರೆ ಇದು ನೋಡಬೇಕು ಷಡುಚಕ್ರವೇರಿ | ||1||
ಸಾಮಾನ್ಯವಲ್ಲವಿದು ಸಹಸ್ರ ಕೋಟಿಗೊಬ್ಬ ಬಲ್ಲ ಖೂನ
ಕಾಮಾಂಧದೊಳಗಿದ್ದ ಮನುಜ ಪ್ರಾಣಿಗಳು ಬಲ್ಲವೇನ
ತಾಮಸಿಗಳಿಗಿದು ತಾರ್ಕಣ್ಯವಾಗುವದಲ್ಲ ಗಮ್ಯಸ್ಥಾನ
ಸ್ವಾಮಿ ಸದ್ಗುರು ದಯಮಾಡಿದರುಹುದು ಸಮ್ಯಗಜ್ಞಾನ | || 2||
ಶಿರೋ ರತ್ನವಾಗಿ ವಂದಿಸಿಕೊಂಬುವದಿದೆಲ್ಲಕೆ ಪೂಜ್ಯ
ಹರುಷಗೈಸುವ ಪುಣ್ಯ ಪರಮ ಭಕ್ತರಿಗಿದೆವೆ ಸಾಯೋಜ್ಯ
ತರಳ ಮಹಿಪತಿಗಿದೆ ಸ್ವ ಸುಖದೋರುವ ಸುಸಾಮ್ರಾಜ್ಯ
ಶಿರದಲಿ ಕರವಿಟ್ಟು ತೋರಿದ ಗುರು ಭಾನುಕೋಟಿತೇಜ | ||3||

ಸ್ವಾನಂದದ ಸುಖ ಏನೆಂದ್ಹೇಳಲಿ ಕೌತುಕ
ಸ್ವಾನಂದದ ಸುಖ ಏನೆಂದ್ಹೇಳಲಿ ಕೌತುಕ | ||ಪ||
ಒಡೆದು ಹೇಳುವದಲ್ಲ ಹಿಡಿದು ತಾ ಕೊಡಲಿಕ್ಕಿಲ್ಲ
ಪಡೆದುಕೊಂಡವನೆ ಬಲ್ಲ ಗೂಡಿನ ಸೊಲ್ಲ | ||1||
ಸಕ್ಕರಿ ಸವಿದಂತೆ ಮೂಕ ಪ್ರಕಟಿಸೇನೆಂದರೆ ಸುಖ
ಯುಕುತಿಗೆ ಬಾರದು ನಿಶ್ಸಂಕ ಸುಖ ಅಲೌಕಿಕ | || 2||
ಮುನಿಜನರ ಹೆಜ್ಜೆಮಟ್ಟು ಏನೆಂದ್ಹೇಳಲಿ ನಾ ಗುಟ್ಟು
ಅನುದಿನ ಮಹಿಪತಿ ಗುಟ್ಟು ಘನ ಕೈಗೊಟ್ಟು | || 3||

ಸಾರಿ ಚೆಲ್ಯದ ನೋಡಿ
ಸಾರಿ ಚೆಲ್ಯದ ನೋಡಿ ಹರಿ ರೂಪದ ಮಹಿಮ | ||ಪ||
ತುಂಬಿ ತುಳುಕುತದೆ ಕುಂಭಿನಿಯೊಳು ಪೂರ್ಣ
ಇಂಬುದೋರುತಲ್ಯದೇ ಡಿಂಬಿನೊಳಗೆ ತನ್ನ
ಹಂಬಲಿಸಿ ನೋಡಿರ್ಯೋ ಗುಂಭ ಗುರುತವ | ||1||
ಬಳೆದುಕೊಂಬುವಂತೆ ಹೊಳೆವುತದೆಲ್ಲ ಕಡಿಯ
ಥಳಥಳಗುಡುತ ಸುಳುವು ತೋರುತಲ್ಯದೆ
ಝಳಝಳಿಸುವ ಪ್ರಭೆ ಮಳೆ ಮಿಂಚುಗಳು | ||2||
ಇಡಿದು ತುಂಬೇದ ನೋಡಿ ಅಡಗಡಗಾನಂದದಲಿ
ಅಡಿಮೇಲು ತಿಳಿಯದೆ ಎಡಬಲದೊಳಾದ
ಮೂಢ ಮಹಿಪತಿ ಪ್ರಾಣ ಬಿಡದೆ ಸಲಹುತ | ||3||

ಸ್ವಯಂ ಭಾನು ಉದಯವಾದ
ಸ್ವಯಂ ಭಾನು ಉದಯವಾದ ನೋಡಿ
ಶ್ರೇಯ ಸುಖ ಬೀರುತ ಸದೋದಿತ ಮೂಡಿ | ||ಪ||
ಪೂರ್ವ ಪುಣ್ಯಾಚಲದಿ ಉದಯವಾದ
ತೋರ್ವ ಭವಬಂಧವೆಂಬ ಕಗ್ಗತ್ತಲೆ ಹರಿಸಿದ | ||1||
ಹೃದಯ ಕಮಲವಾಯಿತು ಸುವಿಕಾಸ
ದ್ವಿಧಾ ಭಾವೆಂಬ ಚಕ್ರವಾ ಕೊಂದಾಯಿತು ಹರುಷ | ||2||
ಸಂಚಿತ ಪ್ರಾಲಬ್ಧ ಕ್ರಿಯಮಾಣ
ವಂಚನಿಲ್ಲದಾಯಿತು ಸಮರ್ಪಣ ಆರ್ಘ್ಯದಾನ | ||3||
ಮಹಿಪತಿಗಾಯಿತು ಆನಂದೋದಯ
ಸ್ವಹಿತದೋರಲು ಬಂದೆನಗೆ ತತ್ವೋಪಾಯ | ||4||

ಕಣ್ಣ ಹಬ್ಬವಾಯಿತು ಇಂದು
ಕಣ್ಣ ಹಬ್ಬವಾಯಿತು ಇಂದು ಆನಂದ ಬ್ರಹ್ಮದಾಟವು ಕಣ್ಣಿಲೆ ಕಂಡಿತು | ||ಪ||
ಕಣ್ಣಿಗೆ ಕಾಣಿಸದಿನ್ನೊಂದು ಕಣ್ಣಿನೊಳಗೆ ಕಣ್ಣಿ ಆಯಿತು ವಸ್ತು ಒಂದು
ಕಣ್ಣಿಗೆ ಕಣ್ಣು ಕಾಣಬಂದು ಕಾಣಿಸಿ ನಿಜ ಪುಣ್ಯಗೈಸಿತು ಎನಗಿಂದು | ||1||
ಕಣ್ಣಿನೊಳುದೋರಿತು ಖೂನ ಭಿನ್ನವಿಲ್ಲದೆ ಹೊಳೆಯುತಿಹ್ಯದು ನಿಜ ಘನ
ಕಣ್ಣಿಗಾಯಿತು ನಿಜ ಧ್ಯಾನ ಕಣ್ಣಿಗೆ ಕಣ್ಣು ನೋಡಲಿಕ್ಕಾಯಿತುನ್ಮನ | ||2||
ಕಣ್ಣಿಗೆ ಕಣ್ಣೀಭಾವವಾದ ಕಣ್ಣಿನೊಳಗೆ ಚೆನ್ನಾಗಿ ಕಣ್ಣುಗುರತಾದ
ಕಣ್ಣೀ ಉಂಡಿತು ಸವಿಸ್ವಾದ ಚಿಣ್ಣಮಹಿಪತಿಗಾಯಿತು ಪೂರ್ಣ ಗುರುಬೋಧ | ||3||

ಕಂಡು ಕಾಣಬೇಕು
ಕಂಡು ಕಾಣಬೇಕು ಪಿಂಡ ಬ್ರಹ್ಮಾಂಡದೊಡೆಯನ | ||ಪ||
ಹಿಂದು ಮಾತಾಡಿನ್ನೇನು ಕಂಡು ಕಾಣುವುದೇ ಖೂನ
ಮಂದಿಯ ಮರೆಯಲಿಹ್ಯ ಮಂಡಲೇಶನ | || 1||
ಷಡರಸನ್ನದ ಖೂನ ಬಡಿಸಿಟ್ಟದೆ ನಿಧಾನ
ಒಡಲು ತುಂಬಿದ ಪೂರ್ಣ ಒಡಂಬಡದು ಪ್ರಾಣ | ||2||
ದಿಂಡಿಲಿಟ್ಟದೆ ವಸ್ತ್ರ ಥಂಡಥಂಡಾದ ವಿಚಿತ್ರ
ಕೊಂಡು ತೊಡುದಲ್ಲದೆ ಗಾತ್ರ ಬಡದು ಸಂತೃಪ್ತಿ | ||3||
ಸಂದುಕುದಲ್ಲಿಟ್ಟದೆ ವಸ್ತು ಸುಂದರವಾದ ಸಮಸ್ತ
ಸಂಧಿಸಿಡದೆ ಸಾಭ್ಯಸ್ತ ಹೊಡೆದು ಮನ ಸ್ವಸ್ತ | ||4||
ಗಂಟ್ಟಿಲಿಟ್ಟದೆ ಧನ ಕಂಟಲೆ ತುಂಬಿ ನಿಧಾನ
ಕೊಟ್ಟು ಕೊಂಡಾದರೆ ಪೂರ್ಣ ಕಟ್ಟಿದು ಕಾಮನ | ||5||
ಕೂಪಲ್ಯಾದೆ ಉದಕ ಅಪೂರ್ವದ ಅಮೋಲಕ
ಅರ್ಪಿಸಿಕೊಳ್ಳದನಕ ತೃಪ್ತಿ ಹೊಂದದು ಲೋಕ | ||6||
ಕಂಡು ಕಾಣದೆ ಖಂಡಿಸಿತು ಅನುಮಾನ
ಕೊಂಡಾಡು ಮಹಿಪತಿ ಪೂರ್ಣ ಉಂಡುಟ್ಟು ಘನ | ||7||

Categories
Tatvapadagalu ಕನಕದಾಸರು ಮತ್ತು ಮಹಿಪತಿರಾಯರ ತತ್ವಪದಗಳು

ಕನಕದಾಸರ ತತ್ವಪದಗಳು

ಮುತ್ತು ಬಂದಿದೆ ಕೇರಿಗೆ
ಮುತ್ತು ಬಂದಿದೆ ಕೇರಿಗೆ ಜನರು ಕೇಳಿ
ಭಕ್ತಿಯುಳ್ಳವರೆಲ್ಲ ಕಟ್ಟಿಕೊಳ್ಳಿ ಸೆರಗಿನಲ್ಲಿ | ||ಪ||
ಥಳಥಳಿಸುವ ಮುತ್ತು ಕಮಲ ನೇತ್ರದ ಮುತ್ತು
ಕಲುಷ ಪರ್ವತಕ್ಕಿದು ಕುಲಿಶವಾಗಿಪ್ಪ ಮುತ್ತು
ಹಲಧರಾನುಜನೆಂಬ ಪವಿತ್ರ ನಾಮದ ಮುತ್ತು
ಒಲಿದು ಭಜಿಪರ ಭವ ತರಿದು ಕಾಯುವ ಮುತ್ತು | ||1||
ಅಂಜದಿದ್ದವರಿಗೆ ಅಂಜಿಕೆ ತೋರುವ ಮುತ್ತು
ಭಂಜಿಸಿದ ಇತರ ಭಯವ ತೋರುವ ಮುತ್ತು
ಸಂಜೀವರಾಯರ ಹೃದಯದೊಳಗಿಹ ಮುತ್ತು
ಕಂಜಭವಾದಿಗಳೆ ಶಿರಸಾ ವಹಿಸುವ ಮುತ್ತು | ||2||
ಜ್ಞಾನವೆಂಬೊ ದಾರದಲ್ಲಿ ಪೋಣಿಸಿ ನೋಡುವ ಮುತ್ತು
ಜ್ಞಾನಿಗಳ ಮನದಲ್ಲಿ ಮೆರೆವ ಮುತ್ತು
ಆನಂದತೀರ್ಥರ ಮನದಲೊಪ್ಪುವ ಮುತ್ತು
ಶ್ರೀನಿಧಿ ಆದಿಕೇಶವನೆಂಬೋ ಆಣಿಯ ಮುತ್ತು | ||3||

ಇಷ್ಟು ದಿನ ಈ ವೈಕುಂಠ
ಇಷ್ಟು ದಿನ ಈ ವೈಕುಂಠ ಎಷ್ಟು ದೂರವೆನ್ನುತ್ತಿದ್ದೆ
ದೃಷ್ಟಿಯಿಂದ ನೋಡಿದೆ ನಾ ಸೃಷ್ಟಿಗೀಶ ಶ್ರೀರಂಗಶಾಯಿ | || ಪ||
ವನ ಉಪವನಗಳಿಂದ ಘನ ಸರೋವರಗಳಿಂದ
ಕನಕ ಗೋಪುರಗಳಿಂದ ಘನ ಶೋಭಿತನೆ ಶ್ರೀರಂಗಶಾಯಿ | ||1||
ಎಂಟು ಏಳು ಕಳೆದುದರಿಂದ ತುಂಟರೈವರ ತುಳಿದುದರಿಂದ
ಕಂಟಕನೊಬ್ಬನ ಕೊಲಿಸಿದುದರಿಂದ ಬಂಟನಾಗಿ ಬಂದೆನು ಶ್ರೀರಂಗಶಾಯಿ | ||2||
ವಜ್ರ ವೈಢೂರ್ಯ ತೊಲೆಗಳ ಕಂಡೆ ಪ್ರಜ್ವಲಿಪ ಮಹದ್ವಾರವ ಕಂಡೆ
ನಿರ್ಜರದ ಋಷಿಗಳ ಕಂಡೆ ದುರ್ಜನಾಂತಕ ಶ್ರೀರಂಗಶಾಯಿ | ||3||
ರಂಭೆ ಊರ್ವಶಿ ಮೇಳವ ಕಂಡೆ ತುಂಬುರು ನಾರದರ ಕಂಡೆ
ಅಂಬುಜೋದ್ಭವ ಪ್ರಮುಖರ ಕಂಡೆ ಶಂಬರಾರಿ ಪಿತನೆ ಶ್ರೀರಂಗಶಾಯಿ | | |4||
ನಾಗಶಯನ ಮೂರುತಿಯ ಕಂಡೆ ಭೋಗಿ ಭೂಷಣ ಸಖನ ಕಂಡೆ
ಭಾಗವತರ ಸಮ್ಮೇಳವ ಕಂಡೆ ಕಾಗಿನೆಲೆಯಾದಿಕೇಶವ ರಂಗಶಾಯಿ | ||5||

ಡಿಂಬದಲ್ಲಿರುವ ಜೀವ
ಡಿಂಬದಲ್ಲಿರುವ ಜೀವ ಕಂಬಸೂತ್ರ ಗೊಂಬೆಯಂತೆ
ಎಂದಿಗಿದ್ದರೊಂದು ದಿನ ಸಾವು ತಪ್ಪದು | || ಪ||
ಹುಟ್ಟಿತೇನು ತಾರಲಿಲ್ಲ ಸಾಯತೇನು ಒಯ್ಯಲಿಲ್ಲ
ಸುಟ್ಟು ಸುಟ್ಟು ಸುಣ್ಣದ್ಹರಳು ಆಯಿತೀ ದೇಹ
ಹೊಟ್ಟೆ ಬಲು ಕೆಟ್ಟದೆಂದು ಎಷ್ಟು ಕಷ್ಟ ಮಾಡಿದರು
ಬಿಟ್ಟು ಹೋಗುವಾಗ ಗೇಣು ಬಟ್ಟೆ ಕಾಣದು | ||1||
ಹತ್ತು ಎಂಟು ಲಕ್ಷ ಗಳಿಸಿ ಮತ್ತೆ ಸಾಲದೆಂದು ಪರ
ರರ್ಥಕಾಗಿ ಆಸೆಪಟ್ಟ ನ್ಯಾಯ ಮಾಡ್ವರು
ಬಿತ್ತಿ ಬೆಳಸುದೆಂಬೊ ವ್ಯರ್ಥ ಚಿಂತೆಯನ್ನು ಮಾಡೆ
ಸತ್ತುಹೋದ ಮೇಲೆ ಅರ್ಥ ಯಾರಿಗಾಹುದೋ | ||2||
ಹೊನ್ನು ಹೆಣ್ಣು ಮಣ್ಣು ಮೂರು ತನ್ನಲಿದ್ದು ಉಣ್ಣಲಿಲ್ಲ
ಅಣ್ಣ ತಮ್ಮ ತಾಯಿತಂದೆ ಬಯಸಲಾಗದೊ
ಅನ್ನವಸ್ತ್ರ ಭೋಗಕಾಗಿ ತನ್ನ ಸುಖವ ಕಾಣಲಿಲ್ಲ
ಮಣ್ಣುಪಾಲು ಆದಮೇಲೆ ಯಾರಿಗಾಹುದೊ | ||3||
ಬೆಳ್ಳಿ ಬಂಗಾರಿಟ್ಟುಕೊಂಡು ಒಳ್ಳೆ ವಸ್ತ್ರ ಹೊದ್ದುಕೊಂಡು
ಚಳ್ಳಪಿಳ್ಳಿ ಗೊಂಬೆಯಂತೆ ಆಡಿಹೋಯಿತು
ಹಳ್ಳ ಹರಿದು ಹೋಗುವಾಗ ಗುಳ್ಳೆ ಬಂದು ಒಡೆಯುವಂತೆ
ಉಳ್ಳೇ ಪೊರೆಯಂತೆ ಕಾಣೊ ಸಂಸಾರದಾಟವು | ||4||
ವಾರ್ತೆ ಕೀರ್ತಿಯೆಂಬೊವೆರಡು ಸತ್ತ ಮೇಲೆ ಬಂದವಯ್ಯಾ
ವಸ್ತು ಪ್ರಾಣ ನಾಯಕನು ಹ್ಯಾಂಗೆ ದೊರಕುವನು
ಕರ್ತೃ ಕಾಗಿನೆಲೆಯಾದಿಕೇಶವನ ಚರಣಕಮಲ
ನಿತ್ಯದಲ್ಲಿ ಭಜಿಸಿ ಸುಖಿಯಾಗಿ ಬಾಳೆಲೋ | | |5||

ನಾರಾಯಣ ಎಂಬ ನಾಮದ ಬೀಜ
ನಾರಾಯಣ ಎಂಬ ನಾಮದ ಬೀಜವನು ನಾಲಿಗೆಯಾ
ಕೂರಿಗೆ ಮಾಡಿ ಬಿತ್ತಿರಯ್ಯಾ | ||ಪ||
ಹೃದಯ ಹೊಲವನು ಮಾಡಿ ತನುವ ನೇಗಿಲು ಮಾಡಿ
ತನ್ವಿರಾ ಎಂಬ ಎರಡೆತ್ತು ಹೂಡಿ
ಜ್ಞಾನವೆಂಬೊ ಮಿಣಿಯ ಕಣ್ಣಿ ಹಗ್ಗವ ಮಾಡಿ
ಮನವೆಂಬ ಧಾನ್ಯವ ನೋಡಿ ಬಿತ್ತಿರಯ್ಯಾ | | |1||
ಕಾಮಕ್ರೋಧಗಳೆಂಬ ಗಿಡಗಳನು ತರಿಯಿರಯ್ಯಾ
ಮದ ಮತ್ಸರವೆಂಬ ಪೊದೆಯ ಇರಿಯಿರಯ್ಯಾ
ಪಂಚೇದ್ರಿಯಗಳೆಂಬ ಮಂಚಿಕೆಯ ಹಾಕಿರಯ್ಯಾ
ಚಂಚಲವೆಂಬ ಹಕ್ಕಿಯ ಓಡಿಸಿರಯ್ಯಾ | || 2||
ಉದಯಾಸ್ತಮಾನವೆಂಬ ಎರಡು ಕೊಳಗವ ಮಾಡಿ
ಆಯುಷದ ರಾಸಿಯನು ಅಳೆಯಿರಯ್ಯಾ
ಇದು ಕಾರಣ ಕಾಗಿನೆಲೆಯಾದಿಕೇಶವನ
ಮುದದಿಂದ ನೆನೆನೆನೆದು ಸುಖಿಯಾಗಿರಯ್ಯಾ | ||3||

ಸಂಸಾರ ಸಾಗರ
ಸಂಸಾರ ಸಾಗರವನುತ್ತರಿಸುವಡೆ
ಕಂಸಾರಿ ನಾಮವೊಂದೆ ಸಾಕು ಮನವೆ | ||ಪ||
ಯತಿಯಾಗಬೇಡ ನೀ ವೈರಾಗ್ಯವನೆ ಪಿಡಿದು
ಸತತ ವ್ರತವ ಮಾಡಿದೆನೆಂಬ ಹಮ್ಮು ಬೇಡ
ಶೃತಿಸ್ಮೃತಿಯನು ನೋಡಿದೆನೆಂಬ ಚೇಷ್ಟೆಯು ಬೇಡ
ರತಿ ಪತಿ ಪಿತ ನಾಮವೊಂದೆ ಸಾಕು ಮನವೆ | ||1||
ತನುವ ದಂಡಿಸಿ ತುದಿಯ ಕೋಡುಗಲ್ಲಿನ ಮೇಲೆ
ವನಿತೆಯನು ಬಿಟ್ಟು ತಪವಿರಲು ಬೇಡ
ಅನುದಿನವು ನೀರೊಳಗೆ ಮುಳುಗಿ ನಡುಗಲು ಬೇಡ
ವನಜನಾಭನ ನಾಮ ನೆನೆ ಕಂಡ್ಯ ಮನವೆ | ||2||
ತೀರ್ಥಯಾತ್ರೆಯ ಮಾಡಿ ಬಹು ವಿಧದಿ ಬಳಲಿ ಕೃ
ತಾರ್ಥನಾದೆನೆಂಬೊ ಹೆಮ್ಮೆ ಬೇಡ
ಪಾರ್ಥಸಾರಥಿ ಕಾಗಿನೆಲೆಯಾದಿಕೇಶವ ಸಂ
ಕೀರ್ತನೆಯ ಮಾಡಿ ಸುಖಿಯಾಗೊ ಮನವೆ | ||2||

ಅಡಿಗೆಯನು ಮಾಡಬೇಕಣ್ಣ
ಅಡಿಗೆಯನು ಮಾಡಬೇಕಣ್ಣ ನಾನೀಗ ಜ್ಞಾನ
ದಡಿಗೆಯನ್ನು ಮಾಡಬೇಕಣ್ಣ | | |ಪ||
ಅಡಿಗೆಯನು ಮಾಡಬೇಕು ಮಡಿಸಬೇಕು ಮದಗಳನ್ನು
ಒಡೆಯನಾಜ್ಞೆಯಿಂದ ಒಳ್ಳೆ ಸಡಗರದಿ ಈ ಮನೆಯ ಸಾರಿಸಿ | ||1||
ತನ್ನ ಗುರುವನ್ನು ನೆನೆಯಬೇಕಣ್ಣ ತನು ಭಾವವೆಂಬ
ಭಿನ್ನ ಕಲ್ಮಶವಳಿಯಬೇಕಣ್ಣ
ಒನಕೆಯಿಂದ ಕುಟ್ಟಿ ಕೇರಿ ತನಗೆ ತಾನೆ ಅದ ಕೆಚ್ಚ
ನನುವರಿತು ಇಕ್ಕಬೇಕು ಅರಿವರ್ಗವೆಂಬ ತುಂಟರಳಿಸಿ | | |2||
ತತ್ವಭಾಂಡವ ತೊಳೆಯಬೇಕಣ್ಣ ಸತ್ಯಾತ್ಮನಾಗಿ
ಅರ್ತಿ ಅಕ್ಕಿಯ ಮಥಿಸಬೇಕಣ್ಣ
ಕತ್ತರಿ ಮನವೆಂಬ ಹೊಟ್ಟನು ಎತ್ತಿ ಒಲೆಗೆ ಹಾಕಿ ಇನ್ನು
ಹೊತ್ತಿಕೊಂಡಿಹ ಮಮತೆಯನ್ನು ಎತ್ತಿ ಹೆಸರ ಹಿಂಗಿಸುತಲಿ | | |3||
ಜನನ ಸೊಂಡಿಗೆ ಹುರಿಯಬೇಕಣ್ಣ ನಿಜವಾಗಿ ನಿಂತು
ತನುವ ತುಪ್ಪವ ಕಾಸಬೇಕಣ್ಣ
ಕನಕಗಿರಿ ನೆಲೆಯಾದಿಕೇಶವದಾಸ
ಕನಕನ ಕಟ್ಟಳೆಯೊಳು ನಿಂತು ಸುಖದ ಪಾಕವನು ಚಂದಿಂದ ಸವಿದುಣ್ಣಲಿಕ್ಕೆ | ||4||

ಎಲ್ಲಿಂದ ಬಂದೆ
ಎಲ್ಲಿಂದ ಬಂದೆ ಮುಂದೆತ್ತ ಪಯಣ
ಇಲ್ಲಿ ನಿನಗೆಷ್ಟು ದಿನವಾಲಸ್ಯ ಮರುಳೆ | | |ಪ||
ಮಾತೆಯುದರದೊಳು ನವಮಾಸ ಮಲಮೂತ್ರದೊಳು
ಯಾತನೆಯು ಯೋನಿಮುಖ ಮಾರ್ಗವಿಡಿದು
ಭೂತಳಕೆ ಬಂದ ಹದನೇನು ತೀರಿಸಿಕೊಂಡೆ
ಜಾತಿ ಯಾವುದು ನಿನ್ನ ಪೆಸರೇನು ಮರುಳೆ | ||1||
ಮುಂದ್ಯಾವ ಪಥವ ಸೇರುವೆ ಮರುಳೆ ಸಾಕಿನ್ನು
ಹಿಂದೆ ನೆರವಾಗಿ ನಿನಗಾಪ್ತರುಂಟೆ
ಒಂದುಗೂಡಿದ ಸತಿಸುತರೆಲ್ಲ ವರ್ಜಿಪರು
ನಿಂದು ಮಾತಾಡು ಬಳಲಿದೆ ಬರಿದೆ ಮರುಳೆ | ||2||
ಬರವುದ್ಯಾತಕೆ ಇನ್ನ ಸ್ಥಳವೆಲ್ಲಿ ನೆಲೆಯಾಗಿ
ಇರುವ ಮಂದಿರವ್ಯಾವುದದನೆನಗೆ ಪೇಳೊ
ಧರೆಯೊಳಗೆ ವರ ಕಾಗಿನೆಲೆಯಾದಿಕೇಶವನ
ಸಿರಿ ಚರಣಕಮಲವನು ನೆರೆನಂಬಿ ಸುಖಿಸೊ | | |3||

ಎಲ್ಲಿ ನೋಡಿದರಲ್ಲಿ ರಾಮ
ಎಲ್ಲಿ ನೋಡಿದರಲ್ಲಿ ರಾಮ
ಇದ ಬಲ್ಲ ಜಾಣರ ದೇಹದಲ್ಲಿ ನೋಡಣ್ಣ | || ಪ||
ಕಣ್ಣೆ ಕಾಮನ ಬೀಜ ಈ
ಕಣ್ಣಿಂದಲೆ ನೋಡು ಮೋಕ್ಷ ಸಾಮ್ರಾಜ್ಯ
ಕಣ್ಣಿನ ಮೂರುತಿ ಬಿಗಿದು ಒಳ
ಗಣ್ಣಿಂದಲೆ ದೇವರ ನೋಡಣ್ಣ | ||1||
ಮೂಗೇ ಶ್ವಾಸ ನಿಶ್ವಾಸ ಈ
ಮೂಗಿನಿಂದಲೆ ಕಾಣೊ ಯೋಗ ಸನ್ಯಾಸ
ಮೂಗನಾದರೆ ವಿಶೇಷ ಒಳ
ಮೂಗಿಲಿ ನೋಡಣ್ಣ ಲೀಲಾವಿಲಾಸ | ||2||
ಕಿವಿಯೇ ಕರ್ಮಕೆ ದ್ವಾರ ಈ
ಕಿವಿಯಿಂದಲೆ ಕೇಳೊ ಮೋಕ್ಷದ ಸಾರ
ಕಿವಿಯೇ ಕರ್ಮಕುಠಾರ ಒಳ
ಗಿವಿಯಲ್ಲಿ ಕಾಣೋ ನಾದದ ಬೇರ | ||3||
ಬೊಮ್ಮ ಮಾಡಿದ ತನು ಬಿಟ್ಟು ವಿಶ್ವ
ಕರ್ಮನು ಮಾಡಿದ ಬೊಂಬೆಯುನಿಟ್ಟು
ಸುಮ್ಮನೆ ಕೂಗುಗಳಿಟ್ಟು ಅದ
ನಂಬುವನೆಂಬೋನೆ ಹೋಗ ಕಂಗೆಟ್ಟು | ||4||
ರೂಢಿಯೊಳಗೆ ಶುದ್ಧ ಮೂಢ ಈ
ಕಾಡುಕಲ್ಲುಗಳನ್ನು ನಂಬಲುಬೇಡ
ನಾಡಾಡಿ ದೈವಗಳೆಲ್ಲ ನಮ್ಮ
ಬಾಡದಾದಿಕೇಶವನೊಬ್ಬನೆ ಬಲ್ಲ | | |5||

ಒಡವೆ ಹೋಯಿತು
ಒಡವೆ ಹೋಯಿತು ಮನ ದೃಢವಾಯಿತು
ಹಿಡಿದರೋಡುವ ಕಳ್ಳ ಬಿಡದೆ ಕದ್ದುಕೊಂಡು ಹೋದ | ||ಪ||
ಆರು ಜೋಡಿನ ಓಲೆಯಿತ್ತು ಮೂರು ಮುತ್ತಿನ ಮೂಗುತಿಯಿತ್ತು
ಮೇಲೆ ಇಪ್ಪತ್ತು ನಾಲ್ಕು ಸರವು ಒಂದಿತ್ತು
ಈರೈದು ತಾಳಿಗಳಿತ್ತು ಬಿರುದಿನ ಕಪ್ಪೆಂಟಿತ್ತು
ದಾರಿ ನೋಡಿಕೊಂಡು ಇದ್ದ ಛಾಯನೆಂಬ ಕಳ್ಳ ಕದ್ದ | ||1||
ಎಪ್ಪತೆರಡು ಸಾವಿರ ಸೂತ್ರದ ಹಸ್ತಕಟ್ಟು ಎರಡಿತ್ತು
ಕಪ್ಪು ಬಿಳಿಪು ಕೆಂಪು ವರ್ಣದ ಪದಕ ಒಂದಿತ್ತು
ಒಪ್ಪವಿತ್ತು ಹಸ್ತಕಡಗ ಆಶಾಪಾಶವೆರಡಿತ್ತು
ಒಪ್ಪವನ್ನು ಸಾಧಿಸಿ ನೇತ್ರನೆಂಬ ಕಳ್ಳ ಕದ್ದ | | |2||
ಹುಟ್ಟು ಸಾವು ಎರಡು ಎಂಬ ಘಟ್ಟಿ ತೂಕದ ನಗವಿತ್ತು
ಕಷ್ಟ ಸುಖ ಕರ್ಮಗಳೆಂಬ ಸಂಚಿಗಳಿತ್ತು
ಅಷ್ಟು ಇಷ್ಟು ಚಿಲ್ಲರೊಡವೆ ಪೆಟ್ಟಿಗೆಯಲಿ ತುಂಬಿತ್ತು
ದೃಷ್ಟಿ ನೋಡಿಕೊಂಡು ಇದ್ದ ಧರ್ಮನೆಂಬ ಕಳ್ಳ ಇದ್ದ | ||3||
ಎಲ್ಲ ಒಡವೆ ಹೋಯಿತಾದರು ಪುಲ್ಲಳಾಗಿ ಮೆರೆಯುತಾಳೆ
ಚೆಲ್ವನೊಬ್ಬ ಪುರುಷನ ಕಂಡು ತಾಳಲಾರದೆ
ಬಲ್ಲಿದವಳು ಈಕೆಯೆಂದು ಇವಳ ಬಗೆ ತಿಳಿಯಿತೆಂದು
ಕೊಲ್ಲಬಾರದೆನುತು ಹೇಳಿ ಮನೆಯ ಬಿಟ್ಟು ಹೊರಗಟ್ಟಿದ | ||4||
ಇಂಥಾ ಒಡವೆ ಹೋಯಿತೆಂದು ಚೋದ್ಯಪಟ್ಟು ನೋಡುತಿರಲು
ತಂತ್ರ ಮಾಡಿ ಆದಿಕೇಶವ ಹರಿಯು ತಾ ಬಂದು
ತಂತ್ರವನು ಹೇಳಿ ಜ್ಞಾನ ಮಾರ್ಗವನ್ನು ಬಿಟ್ಟುಕೊಟ್ಟು
ಸಂತಸದಿಂದ ಇರು ಎಂದು ಚಿಂತೆ ಬಿಡಿಸಿ ಸಲೆ ಸಲಹಿದ | | |5||

ನಾಮ ಮುಂದೋ
ನಾಮ ಮುಂದೋ ಸ್ವಾಮಿ ವಿಭೂತಿ ಮುಂದೋ | ||ಪ||
ಭೂಮಿ ಆಕಾಶ ಪೊತ್ತೊ ಆಕಾಶ ಭೂಮಿಯ ಪೊತ್ತೊ
ಭೂಮಿಯು ಮುಂದೊ ಆಕಾಶ ಮುಂದೊ ಸ್ವಾಮಿ | ||1||
ತಿತ್ತಿ ಇಕ್ಕಳ ಪೊತ್ತೊ ಇಕ್ಕಳ ತಿತ್ತಿಯ ಪೊತ್ತೊ
ಇಕ್ಕಳ ಮುಂದೊ ತಿತ್ತಿಯು ಮುಂದೊ ಸ್ವಾಮಿ | ||2||
ಬೀಜ ವೃಕ್ಷವು ಪೊತ್ತೊ ವೃಕ್ಷ ಬೀಜವು ಪೊತ್ತೊ
ಬೀಜವು ಮುಂದೊ ವೃಕ್ಷವು ಮುಂದೊ ಸ್ವಾಮಿ | | |3||
ಗಂಡ ಹೆಂಡತಿ ಪೊತ್ತೊ ಹೆಂಡತಿ ಗಂಡಾನ ಪೊತ್ತೊ
ಗಂಡನು ಮುಂದೊ ಹೆಂಡತಿ ಮುಂದೊ ಸ್ವಾಮಿ | | |4||
ಕನಕನು ಹೇಳಿದ ಬೆಡಗು ಕಂಡವರು ನೀವ್
ಕೇಳಿ ತಿಳಿದು ನಿಮ್ಮ ಮನದಲ್ಲಿ ನೋಡಿ | | |5||

ಮುತ್ತುಗಳಾ ಹಣ್ಣು
ಮುತ್ತುಗಳಾ ಹಣ್ಣು ಕಾಯಾದ ಬಳಿಕಿನ್ನು
ಮತ್ತೊಂದು ಚೋದ್ಯ ಕೇಳಿ
ಚಿತ್ರದ ಹೂವಿನ ಹವಳ ಕಾಯಾಗುವ
ಅರ್ಥವು ತಿಳಿದು ಪೇಳಿ | ||ಪ||
ಸುಟ್ಟ ಬೀಜವ ಬಿತ್ತಿ ಬೆಳೆಯಬಾರದ ಕಾಯಿ
ಬೆಟ್ಟದಿ ಸಾರವನು
ತೊಟ್ಟು ಇಲ್ಲದ ಹಣ್ಣು ಮುಟ್ಟಿ ಕೊಯ್ವನು ಒಬ್ಬ
ಹುಟ್ಟು ಬಂಜೆಯ ಮಗನು | ||1||
ಒಣಗಿದ್ದ ಮರನೇರಿ ಹಣ್ಣು ಕಾಯನು ಮಗನು
ದಣಿಯದೆ ಮೆದ್ದಿಳಿದ
ರಣದಲ್ಲಿ ತಲೆಹೊಯ್ದ ರುಂಡವು ಬೀಳಲು
ಹೆಣನೆದ್ದು ಕುಣಿದಾಡಿತು | ||2||
ಕಣ್ಣಿಲ್ಲದಾತನು ಕಂಡು ಪಿಡಿದ ಮೃಗ
ಕೈಯಿಲ್ಲದಾತನೆಚ್ಚ
ಮಣ್ಣಲಿ ಹೊರಳುವ ಕಾಲಿಲ್ಲದಾತನು
ಗಣ್ಯವಿಲ್ಲದೆ ಪಿಡಿದ | | |3||
ಎಲ್ಲಾರೂ ಹೇಳಿರಿ ಕನಕ ಹೇಳಿದ ಮಾತ
ಎಲ್ಲಾರೂ ಗ್ರಹಿಸಿಕೊಳ್ಳಿ
ಬೆಳ್ಳಿ ಕಣ್ಣಿನವಗೆ ತಿಳಿಯಲಾರದ ಮಾತು
ಬಲ್ಲಾದಿಕೇಶವನು | ||4||

ಒಂದೆಲೆ ನುಂಗಿತು
ಹಲವು ಜೀವನವ ಒಂದೆಲೆ ನುಂಗಿತು
ನೆಲೆಯಾದಿಕೇಶವರಾಯ ಬಲ್ಲನೀ ಬೆಡಗ | || ಪ||
ಹರಿಯ ನುಂಗಿತು ಹರ ಬ್ರಹ್ಮರ ನುಂಗಿತು
ಸುರರಿಗುಂಟಾದ ದೇವರ ನುಂಗಿತು
ಉರಿಗಣ್ಣ ಶಿವನ ಒಂದೆಲೆ ನುಂಗಿತೆಲೊ ದೇವ
ಹರಿಯ ಬಳಗವ ಒಂದೆಲೆ ನುಂಗಿತು | ||1||
ಎಂಟು ಗಜವ ನುಂಗಿ
ಉಂಟಾದ ಗಿರಿಯ ತಲೆಯ ನುಂಗಿತು
ಕಂಠವ ಪಿಡಿದ ಬ್ರಹ್ಮನ ನುಂಗಿತೆಲೊ ದೇವ
ಎಂಟಾರು ಲೋಕ ಒಂದೆಲೆ ನುಂಗಿತು | || 2||
ಗಿಡವ ನುಂಗಿತು ಗಿಡದೊಡ ತೊಟ್ಟ ನುಂಗಿತು
ಗಿಡವಿನ ತಾಯ ತಂದೆಯ ನುಂಗಿತು
ಬೆಡಗ ಬಲ್ಲವರೆ ಪೇಳಿ ದೇವ ಕನಕದಾಸ ಎ
ನ್ನೊಡೆಯಾದಿಕೇಶವ ಬಲ್ಲನೀ ಬೆಡಗ | || 3||

ಮೂರು ಬೀಜವು ಬಿತ್ತಿ
ಮೂರು ಬೀಜವು ಬಿತ್ತಿ ಸಹಜ ಬೀಜವು ತೋರಿ
ರಾಯರಿಗೆ ಒಂದು ಪಾಲು ರಾಜ್ಯಕ್ಕೆ ಎರಡು | ||ಪ||
ಕರಿಯ ಬೀಜಕೆ ಕಾಯಿ ಬಿಳಿಯ ಬೀಜಕೆ ಬೇರು
ಮತ್ತೊಂದು ಬೀಜಕ್ಕೆ ಹದಿನೆಂಟು ಬೇರು
ರಂಜಕದ ಬೇರಿಗೆ ರಾಗ ಮುವತ್ತೆರಡು
ಕುಂಜರದ ಗಮನೆಯರ ಪೇಳು ಗೋವಿಂದನೆ | ||1||
ಐದು ಮಾರಿನ ಮೇಲೆ ವೈದಿಕರೆಂಬುವರು
ಐದು ದೀವಿಗೆ ಗಾಳಿ ಬೀಸಲಿ ಎಂದು
ಧೂಳಿ ಹಾರಿದ ಮಣ್ಣ ಮೇಲೆ ಮುದ್ದೆಯ ಕಲಸಿ
ಆದ ಲೋಲ ಭವರು ಪೇಳಿ ಸೊಬಗಿನ ಬೆಡಗ | ||2||
ಎರಡು ನಂದಿಯ ಹೂಡಿ ಗರುಡ ತಾ ಹೊಲನೇರಿ
ಹೊರಗೆ ಮುಚ್ಚಿದ ಕೋಲು ನೆರೆದಿಯೆಂದು
ಹರಿಯ ದಾಸರ ಕನಕ ಹಾಕಿದ ನುಡಿಕೆಯ
ಆದಿಕೇಶವನಾಣೆ ಬಲ್ಲವರು ಹೇಳಿ | ||3||

ಮೈಯೆಲ್ಲಾ ನವ ಗಾಯ
ಓಹೊ ಎನ ಜೀವಾ ಮೈಯೆಲ್ಲಾ ನವ ಗಾಯ|
ಗಾಯ ಕಟ್ಟುವರಿಲ್ಲ ಗಾಳಿ ಹಾಕುವರಿಲ್ಲ | || ಪ||
ಮಾಡಿಲ್ಲ ಮಳೆಯಿಲ್ಲ ಮರದ ಮ್ಯಾಲೆ ನೀರ ಕಂಡೆ|
ಕಾಡು ಸುಡುವುದು ಕಂಡೆ ಬೂದಿಯ ಕಾಣಲಿಲ್ಲ | ||1||
ಬಿತ್ತಲಿಲ್ಲ ಬೆಳೆಯಲಿಲ್ಲ ನೆಟ್ಟು ನೇರ ತೋರಲಿಲ್ಲ|
ಹೊತ್ತುಕೊಂಡು ತಿರುಗಿದರೆ ರೊಕ್ಕದಾ ಪ್ರಾಣಿಯನ್ನು | ||2||
ಅಡಿಕೆಯಷ್ಟು ಆಕಳಣ್ಣ ಹಿಡಿಕೆಯಷ್ಟು ಕೆಚ್ಚಲಣ್ಣ|
ಕರದಾರ ಕರಿತೈತಿ ರಂಜಣಗಿ ಹಾಲಣ್ಣ | ||3||
ಮೂರು ಮೊಳದಾ ಬಳ್ಳಿಗೆ ಆರು ಮೊಳದ ಕಾಯಣ್ಣ|
ಕಾಯಿ ಕೊಯ್ಯುವ ಕುಡುಗೋಲು ಹದಿನಾರು ಮೊಳವಣ್ಣ | ||4||
ಊರ ಮುಂದೆ ಹಿರಣ್ಯಕನ ಕೊರಳ ಕೊಯ್ವುದ ಕಂಡೆ|
ಕೊರಳ ಕೊಯ್ವುದ ಕಂಡೆ ರಕುತವ ಕಾಣಲಿಲ್ಲ | ||5||
ಕಾಗಿನೆಲೆಯ ಕನಕದಾಸ ಹೇಳಿದಂಥ ಮುಂ|
ಡಿಗೆಯ ಬಲ್ಲನು ಆದಿಕೇಶವನೊಬ್ಬನೆ | | |6||

ಒಂಭತ್ತು ಹೂವಿಗೆ ಒಂದೇ ನಾಳವು
ಒಂಭತ್ತು ಹೂವಿಗೆ ಒಂದೇ ನಾಳವು ಚಂದಮಾಮ
ತುಂಬಿ ನಾಳತುದಿ ತುಂಬಿ ಭಾನಪ್ರಭೆ ಚಂದಮಾಮ | ||ಪ||
ಕದರು ಗಾತರ ಕಂಭ ತೆಕ್ಕೆಗಾತರ ಹೂವು ಚಂದಮಾಮ
ಆನೆಗಾತರ ಕಾಯಿ ಒಂಟೆಗಾತರ ಹಣ್ಣು ಚಂದಮಾಮ | ||1||
ಕಾಲಿಲ್ಲದಾತನು ಹತ್ತಿದನಾ ಮರ ಚಂದಮಾಮ
ಕೈಯಿಲ್ಲದಾತನು ಕೊಯ್ದನು ಆ ಹಣ್ಣು ಚಂದಮಾಮ | ||2||
ನೆತ್ತಿಲ್ಲದಾತನು ಹೊತ್ತಾನು ಆ ಹಣ್ಣು ಚಂದಮಾಮ
ತಳವಿಲ್ಲದಾ ಗೂಡಲಿಳಿಸದನಾ ಹಣ್ಣು ಚಂದಮಾಮ | || 3||
ಮಾರ್ಗ ತಪ್ಪಿ ಮಾರ್ಗ ಹಿಡಿದು ನಡೆದರು ಚಂದಮಾಮ
ಸದ್ದಿಲ್ಲದಾ ಸಂತೇಲಿಳಿಸಿದರಾ ಹಣ್ಣು ಚಂದಮಾಮ | ||4||
ರೊಕ್ಕವಿಲ್ಲದಾತ ಕೊಂಡಾನು ಆ ಹಣ್ಣು ಚಂದಮಾಮ
ಮೂಗಿಲ್ಲದಾತನು ಮೂಸಿದ ಆ ಹಣ್ಣು ಚಂದಮಾಮ | | |5||
ಕಣ್ಣಿಲ್ಲದಾತನು ಕೆಂಪಾನೆ ಹಣ್ಣೆಂದ ಚಂದಮಾಮ
ಅಂಗವಿಲ್ಲದಾತ ನುಂಗಿದನಾ ಹಣ್ಣು ಚಂದಮಾಮ | || 6||
ಬಾಯಿಲ್ಲದವ ತಿಂದು ಬಸಿರಲ್ಲಿ ಇಂಬಿಟ್ಟು ಚಂದಮಾಮ
ಸುಲಭ ಪದವಿದು ನಳಿನಜಾಂಡದೊಳು ಚಂದಮಾಮ| | |7||
ಗುರುವಿನ ಮಹಿಮೆಯ ಗುರುವೆ ತಾ ಬಲ್ಲನು ಚಂದಮಾಮ
ಮೂಢನಾದವನೇನು ಬಲ್ಲನು ಈ ಮಾತು ಚಂದಮಾಮ| ||8||

ಮರವನು ನುಂಗುವ ಪಕ್ಷಿ
ಮರವನು ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ | ||ಪ||
ಒಂಟಿ ಕೊಂಬಿನ ಪಕ್ಷಿ ಒಡಲೊಳಗೆ ಕರುಳಿಲ್ಲ
ಗಂಟಲು ಮೂರುಂಟು ಮೂಗು ಇಲ್ಲ|
ಕುಂಟು ಮನುಜನಂತೆ ಕುಳಿತಿಹುದು ಮನೆಯೊಳಗೆ
ಎಂಟು ಹತ್ತರ ಭಕ್ಷ್ಯ ಭಕ್ಷಿಸುವುದು | ||1||
ನಡುವೆ ಕಲಿಯುಂಬುವುದು ನಡುನೆತ್ತಿಯಲಿ ಬಾಯಿ
ಕಡುಸ್ವರಗಳಿಂದ ಗಾನಮಾಡ್ವದು|
ಅಡವಿಯಲಿ ಹುಟ್ಟುವುದು ಅಂಗವೆರಡಾಗುವುದು
ಬಡತನ ಬಂದರೆ ಬಹಳ ರಕ್ಷಿಪುದು | || 2||
ಕಂಜವದನೆಯರ ಕರದಲ್ಲಿ ನಲಿದಾಡುವುದು
ಎಂಜಲನುಣಿಸುವುದು ಮೂರ್ಜಗಕೆ|
ರಂಜಿಪ ಶಿಖಾಮಣಿ ಸಿಂಹಾಸನದ ಮೇಲಿರ್ಪ
ಸಂಜೀವ ಪಿತ ಆದಿಕೇಶವನೆ ಬಲ್ಲ | || 3||

ಕೆಂಪು ಮೂಗಿನ ಪಕ್ಷಿ
ಕೆಂಪು ಮೂಗಿನ ಪಕ್ಷಿ ತಂಪಿನೊಳಿರುವುದು ನೆಂಪು ಬಲ್ಲವರು ಪೇಳಿ
ಹಂಪೆಯ ವಿರೂಪಾಕ್ಷ ಲಿಂಗನಲ್ಲಿ ಝಂಪಿಯನಾಡುತಿದೆ | ||ಪ||
ಆರು ತಲೆಯು ಹದಿನಾರು ಕಣ್ಣುಗಳುಂಟು
ಮೂರು ಮೂರು ನಾಲಗೆ
ಬೇರೆ ಹನ್ನೆರಡು ಕಣ್ಣು ಕಿವಿಗಳುಂಟು
ಸೇರಿತು ತೆಂಕಲಾಗೆ | | |1||
ಬಲೆಯ ಬೀಸಿದರು ಸಿಕ್ಕದು ಆ ಮೃಗ
ಜಲದೊಳು ತಾ ನಿಲ್ಲದು
ನೆಲನ ಮೇಲಿರುವುದು ನಿಂತರೆ ಸಾವುದು
ಕುಲದೊಳಗಾಡುತಿದೆ | ||2||
ಸಕಲ ಕಲೆಯು ಬಲ್ಲ ಸೀತಳ ಮಲ್ಲಿಗೆ
ಬೇರೆಬೇರೆನಬಹುದು
ಚೆನ್ನಕೇಶವನಲ್ಲಿ ಕೃಪೆಯುಂಟಾದರೆ
ಅಲ್ಲುಂಟು ಇಲ್ಲಿಲ್ಲವೆ | | |3||

ನನ್ನವ್ವ ಕಲ್ಲ ಬಿಡೆ
ನನ್ನವ್ವ ಕಲ್ಲ ಬಿಡೆ ಈ ಧೋತ್ರವು ಚೆನ್ನಾಗಿ ಒಗೆಯಬೇಕು
ಮುನ್ನ ಮಾಡಿದ ಪಾಪಕರ್ಮ ಹೋಗುವಹಾಗೆ
ಚೆನ್ನಕೇಶವನ ಪ್ರಸಾದಕ್ಕೊದಗಬೇಕು | ||ಪ||
ಉಟ್ಟ ಧೋತ್ರವು ಮಾಸಿತು ಮನದೊಳಗಿರುವೊ
ದುಷ್ಟರೈವರುಗಳಿಂದ ಕಷ್ಟದುರಿತಗಳು
ಬಿಟ್ಟು ಹೋಗುವಹಾಗೆ ಮುಟ್ಟಿ ಜಲದೊಳು
ಗಟ್ಟ್ಯಾಗಿ ಒಗೆಯಬೇಕು | ||1||
ವೇದವನೋದಬೇಕು ಮನದೊಳಗಿದ್ದ
ಭೇದವ ಕಳೆಯಬೇಕು
ಸಾದರಣೆಯಿಂದ ತಿಳಿದು ನಿಶ್ಚಯವಾಗಿ
ಕ್ರೋಧಕರ್ಮಗಳೆಲ್ಲ ಬಿಟ್ಟು ಹೋಗುವ ಹಾಗೆ | || 2||
ವೇಲಾಪುರದ ಚೆನ್ನಕೇಶವ ಸೇವೆಗೆ
ಆಲಸ್ಯವನು ಮಾಡದೆ
ಕೋಲ ಹಿಡಿದು ದ್ವಾರಪಾಲಕನಾಗುವೆ
ನೀಲಕುಂತಳೆ ಕಲ್ಲ ಬಿಟ್ಟು ಆ ಕಡೆ ಸಾರೆ | || 3||

ಪಕ್ಷಿ ಬಂದಿದೆ
ಪಕ್ಷಿ ಬಂದಿದೆ ಗಂಡಭೇರುಂಡ ತನ್ನ
ಕುಕ್ಷಿಯೊಳೀರೇಳು ಜಗವನಿಂಬಿಟ್ಟಂಥ
ಜಾತಿ ಸೂತಕವೆಂಬ ತ್ರಿಮಲಕ್ಕೆ ಶೂಲದಂತಿಹ ಪರವಸ್ತು | ||ಪ||
ತಿರುಮಂತ್ರೋದಯವೆಂಬ ಆಸನವನೆ ಹೊತ್ತು ತಾ
ಹರುಷದಿಂದ ವೈಷ್ಣವರೆಡೆಯ ಪಾಡಿ|
ಪರವ ತೋರುವನೆಂದು ಪಾಕವನೆತ್ತು ತಾ
ಹರಿಹರ ಬ್ರಹ್ಮಾದಿಗಳ ಪುಟ್ಟಿಸಿದಂಥ ಪರವಸ್ತು | ||1||
ಅಕಾರ ಊಕಾರ ಮಕಾರ
ಸಾಕಾರದಿಂದ ಪರಮ ರೂಪ ತಾಳಿ|
ಆಕಾರ ಕ್ರಿಯನಾಮ ಮಕಾರವನು
ಓಂಕಾರದಿಂದ ಪುಟ್ಟಿಸಿದಂಥ ಪರವಸ್ತು | | |2||
ಪಾಖಂಡವೆಂತೆಂಬ ಪರವಾದಿಗಳನ್ನು
ಲೋಕದೊಳಗೆ ತಮ್ಮೊಳಗೈಕ್ಯಮಾಡಿ ವಾ|
ಸಕ ಒಡೆಯ ತಿರುವಕೋವಲೂರಿನಂದಾ
ದಿಕೇಶವರಾಯ ತಾನಾದ ಪರವಸ್ತು | ||3||

ಬೆಳದಿಂಗಳಾಯಿತಮ್ಮ
ಎಂದೆಂದು ಇಂಥ ಚೋದ್ಯ ಕಂಡದ್ದಿಲ್ಲವೊ | ||ಪ||
ಅಂಗಡಿ ಬೀದಿಯೊಳೊಂದು ಆಕಳ ಕರು ನುಂಗಿತು
ಲಂಘಿಸುವ ಹುಲಿಯ ಕಂಡ ನರಿಯು ನುಂಗಿತು | ||1||
ಹುತ್ತದೊಳಾಡುವ ಸರ್ಪ ಮತ್ತ ಗಜವ ನುಂಗಿತು
ಉತ್ತರ ದಿಶೆಯೊಳು ಬೆಳದಿಂಗಳಾಯಿತಮ್ಮ | | |2||
ಯೋಗ ಮಾರ್ಗಿ ಕಾಗಿನೆಲೆಯಾದಿಕೇಶವರಾಯ
ಭಾಗವತರ ಬೆಡಗಿದು ಬೆಳದಿಂಗಳಾಯಿತಮ್ಮ | | |3||

ಬಲ್ಲವರು ಪೇಳಿ
ಬಲ್ಲವರು ಪೇಳಿರಿ ಲೋಕದ ಈ ಪದನು
ಪುಲ್ಲಶರನನು ರಂಗ ಪೆತ್ತ ಮಹಿಮೆಯನು | || ಪ||
ಗರಿಯುಂಟು ನೋಡಿದರೆ ಪಕ್ಷಿಕುಲ ತಾನಲ್ಲ
ಧರೆಯ ಬೆನ್ನಲಿ ಶಿರವ ಮಡಗಿಕೊಂಡಿಹುದು
ಬರಿಗಾಲ ಭಾರದಲಿ ನಡೆಯಲೊಲ್ಲದು ಮುಂದೆ
ಎರಡು ಮೈ ಒಂದಾಗಿ ಕೂಡಿಕೊಂಡಿಹುದು | ||1||
ಇಳೆಯಲ್ಲಿ ಒಂದು ಪದ ಗಗನದಲಿ ಒಂದು ಪದ
ಕುಲವೈರಿಗಳ ಕೊಂದು ನಲಿದಾಡುತಿಹುದು
ಹೊಲದೊಳಗೆ ಜೋಡಗಲಿ ತಿರುಗಾಡುತಿಹುದು ಅದು
ಕಳದೊಳಗೆ ಕಬ್ಬುಗಳ ಹರಡಿಕೊಂಡಿಹುದು | ||2||
ಜನಿಸಿದಾ ಬಳಿಯಲ್ಲಿ ತಾ ಲಜ್ಜೆದೊರದಿಹುದು
ಕುಣಿದಾಡುತಿದೆ ಹರಿಯ ತಲೆ ತುರುಗವೇರಿ
ಕನಕನೊಡೆಯನು ಕಾಗಿನೆಲೆಯಾದಿಕೇಶವನ
ಜನಕೆ ನಿತ್ಯವು ಪ್ರಸಾದವನು ಕೊಡುತಿಹುದು | || 3||

ಮೂವರೇರಿದ ಬಂಡಿ
ಮೂವರೇರಿದ ಬಂಡಿ ಹೊರೆ ನೆರೆಯದು
ದೇವಕೀ ನಂದನನು ತಾನೊಬ್ಬ ಬಲ್ಲ | ||ಪ||
ಆಡಿ ಪೊತ್ತವನೊಬ್ಬ ನೋಡಿ ತಿರುಗಿದವನೊಬ್ಬ
ಓಡಾಡಿದವನೊಬ್ಬ ಈ ಮೂವರು
ಆಡಿದವಗೆ ಕಿವಿಯಿಲ್ಲ ನೋಡಿದವನ ಮಗ ಪಾಪಿ
ಓಡಾಡಿದವನೊಬ್ಬ ಓಡನಯ್ಯ | ||1||
ಮಾಯಕಾರನು ಒಬ್ಬ ಕಾಯ ಬಡಲಿಗನೊಬ್ಬ
ಕಾಯ ಗಿರಿ ಪೊತ್ತವನೊಬ್ಬ ಈ ಮೂವರು
ಮಾಯಕಾರಗೆ ರೂಪ ಕಾಯ ಬಡಲಿಗ ಚೆಲ್ವ
ಕಾಯ ಗಿರಿ ಪೊತ್ತವನು ಕಡು ಧರ್ಮಿಯು | ||2||
ಹರಿಗೆ ಮಾವನು ಆದ ಹರಿಗಳಿಯ ತಾನಾದ
ಹರಿಯು ತನ್ನೊಳಗೆ ತಾ ಹರಿಯೊಳಗೆ ಇಪ್ಪ
ಹರಿಯ ರೂಪವ ತಾಳಿ ಇರುಳು ದೈತ್ಯನ ಕೊಂದ
ಸಿರಿಧರನು ಕಾಗಿನೆಲೆಯಾದಿಕೇಶವರಾಯ | ||3||

ಪಕ್ಷಿಯ ಕುರುಹ ಬಲ್ಲರು ಪೇಳಿರಿ
ಪಕ್ಷಿಯ ಕುರುಹ ಬಲ್ಲರು ಪೇಳಿರಿ ತನ್ನ
ಮಕ್ಕಳಿಗೆ ವೈರಿ ಮೂಜಗದೊಳಗೆಲ್ಲ | ||ಪ||
ಬಣ್ಣ ಬಣ್ಣದ ಪಕ್ಷಿ ಅದಕೆ ವೆಜ್ಜಗಳುಂಟು
ಕಣ್ಣು ಮುಚ್ಚಲಿಲ್ಲ ತೆರೆಯಲಿಲ್ಲ
ಹುಣ್ಣಿಮೆ ಮುಂದಿನ ಬೆಳಗಲಿ ಬಾಹೋದು
ತಣ್ಣನೆ ಹೊತ್ತಲಿ ತವಕಗೊಂಬುವುದು | || 1||
ಕೆಂಬಲ್ಲಿನ ಪಕ್ಷಿ ಕೊಂಬುದು ರಸಗಳ
ಹಂಬಲ ಮಾಳ್ಪುದು ಹರುಷದಿಂದ
ತುಂಬಿ ವರ್ಣನ ತೆತ್ತವೆ ನಾಲ್ಕು ರವೆ ಎಂಟು
ಜಾಂಬವರು ಮೆಚ್ಚುವರು ಜಾಣರಿಗಳವಲ್ಲ | ||2||
ಉಂಡರೂ ದಣಿಯದು ಊರ ಸೇರದ ಪಕ್ಷಿ
ಮಂಡೆಯ ಮೇಲೆರಡು ಕೋಡದಕೆ
ಗುಂಡಿಗೆಯಲಿ ಮೂಲಗಳುಂಟು ಧರೆಯೊಳು
ಗಂಡನ ನುಂಗುವುದು ಗಜಮುಖದ ಪಕ್ಷಿ | || 3||
ಗಿಡ್ಡ ಮೀಸೆಗಳುಂಟು ಗರುಡ ಎಂದೆನಬೇಡಿ
ಒಡ್ಡನಪ್ಪಿ ಬಾಹೋದು ವರುಷಕೊಮ್ಮೆ
ಗುಡ್ಡದೊಳಿರುವುದು ದೊರೆಗಳಿಗಂಜದು
ಹೆಡ್ಡರಿಗಳವಲ್ಲ ಹೇಮವರ್ಣದ ಪಕ್ಷಿ | ||4||
ಹಕ್ಕರಿಕೆ ಗರಿಯಂತೆ ಹರವು ರೆಕ್ಕೆಗಳುಂಟು
ಒಕ್ಕಲು ಮೇಲದು ಒಲಿದವಗೆ
ದಿಕ್ಕಿನಲ್ಲಿ ಕಾಗಿನೆಲೆಯಾದಿಕೇಶವನ
ಮುಕ್ಕಣ್ಣನವತಾರ ಹನುಮಂತ ಬಲ್ಲ | || 5||

ಬಲ್ಲವರು ಪೇಳಿರೈ
ಬಲ್ಲವರು ಪೇಳಿರೈ ಬಹು ವಿಧದ ಚತುರತೆಯ
ಎಲ್ಲರಿಗು ಸಮ್ಮತವು ಏಕಾಂತವಲ್ಲ | || ಪ||
ಕಂಕಣಕೆ ಮೊದಲೇನು ಕಾರ್ಮುಗಿಲ ಕಡೆಯೇನು
ಶಂಕರನ ಮೊಮ್ಮಗನ ಮುಖದ ಸಿರಿಯೇನು
ಪಂಕಜಕೆ ಕುರುಹೇನು ಪಾರ್ಥಿಯಳ ತಪವೇನು
ಅಂಕಿತಕೆ ಗುರುತೇನು ಅಜನ ಗುಣವೇನು | | |1||
ಕಲಿಗಳಿಗೆ ಕಣ್ಣೆನು ಕಾವನಿರುಹುಗಳೇನು
ಲಲನೆಯರ ಒಲಿಸುವ ಇದೇನು
ನೆಲಗಳಿಗೆ ಸಾಕ್ಷಿಯೇನು ನ್ಯಾಯದಾ ಪರಿಯೇನು
ಬಲವ ನಿಲಿಸುವುದೇನು ಭಾಗ್ಯವು ಇದುಯೇನು | || 2||
ಸತ್ಯಕ್ಕೆ ಕುರುಹೇನು ಪೃಥ್ವಿಗೆ ಕಡೆಯೇನು
ಚಿತ್ತವನು ಸೆಳೆದೊಯ್ವ ಕಪಟವು ಇದೇನು
ಮರ್ತ್ಯ ದೊಳು ಕಾಗಿನೆಲೆಯಾದಿಕೇಶವನಂಘ್ರಿ
ಅರ್ತಿಯಿಂದಲಿ ಕೂಡಿದುದಕೆ ಫಲವೇನು | ||3||

ನಾ ಸೆಟೆಯಾಡುವೆನಲ್ಲ
ಲಟಪಟ ನಾ ಸೆಟೆಯಾಡುವೆನಲ್ಲ
ವಿಠಲನ ನಾಮವ ಮರೆತು ಪೋದೆನಲ್ಲ | ||ಪ||
ಶೇಷಗಿರಿಯ ಮೇಲೆ ಸವುತೆಯ ಬಿತ್ತಿ
ದೇವಗಿರಿಯ ಮೇಲೆ ಅವತಾರವಿಕ್ಕಿ
ಹಾಳೂರಿನೊಳಗೊಬ್ಬ ಕುಂಬಾರ ಸತ್ತ
ಗೋಕರ್ಣದೊಳಗೊಬ್ಬ ಪರದೇಶಿ ಅತ್ತ | | |1||
ಆ ಸಮಯದಿ ಮೂರು ರಾಯರ ಕಂಡೆ
ಕುಪ್ಪುಸ ತೊಟ್ಟ ಕೋಳಿಯ ಕಂಡೆ
ಬೆಳ್ಳಕ್ಕಿ ಬೆರಣಿಯ ಮಾಳ್ಪುದ ಕಂಡೆ
ನರೆಸೂಳೆಗೆಯ್ವುದ ಕಣ್ಣಾರೆ ಕಂಡೆ | ||2||
ನುಸಿಯೊಂದು ರೊಟ್ಟಿಯ ಸುಡುವುದ ಕಂಡೆ
ಆಡೊಂದು ಮದ್ದಳೆ ಬಡಿವುದ ಕಂಡೆ
ಕಪ್ಪೆ ತತ್ಥೈಯೆಂದು ಕುಣಿವುದ ಕಂಡೆ
ಬಾಡದಾದಿಕೇಶವನ ಕಣ್ಣಾರೆ ಕಂಡೆ | || 3||

ಏನಿದೆತ್ತಣ ಬಯಕೆ
ಏನಿದೆತ್ತಣ ಬಯಕೆ ಎಲೊ ಮಂಕುಜೀವ
ನೀನರಿತರೆ ಪೇಳು ನಿಜವನೆನಗೆ | ||ಪ||
ಎಂಟೆರಡು ಮಾರುತರು ಎಡೆಯೆಡೆಗೆ ಬರುತಿರಲು
ನೆಂಟರೈವರು ಕೂಡಿ ಆಕ್ರಮಿಸುತಿಹರು
ದಾಂಟುವುದಶಕ್ಯ ಎರಡೊಂದು ಬಲೆಗಳಲಿ
ಕಂಟಕದಿ ಕಡು ತಾಪದಿಂದ ಬಳಲುವರು | ||1||
ಆರೆರಡು ದಂಪತಿಗಳು ದಾರಿಯೊಳು ನಿಂದಿಹವು
ಆರು ಮೂರು ತುರುಗಳು ದಾರಿಗೊಂಡವು
ಮೂರೆರಡನೀಡಾಡಿ ಕೋರುವುದು ಎನ್ನಾಣೆ
ಸಾರಿ ಏನೇನಹುದೆಂಬುದನು ನೋಡು | || 2||
ಪರರನ್ನು ನಿಂದಿಸದೆ ಪರಕೆ ಯೋಗ್ಯ ನೀನಾಗಿ
ಪರರ ಪಾಪಗಳ ನೀ ಕಟ್ಟಿಕೊಳ್ಳದೆ
ಪರಮಾತ್ಮ ಕಾಗಿನೆಲೆಯಾದಿ ಕೇಶವರಾಯ
ಪರಹಿತಕೆ ಸಖನೆಂದು ಭಜಿಸಲೊ ಮನುಜ | ||3||

ಎಂದಿದ್ದರೀ ಕೊಂಪೆಯೆನಗೆ ನಂಬಿಕೆಯಿಲ್ಲ
ಎಂದಿದ್ದರೀ ಕೊಂಪೆಯೆನಗೆ ನಂಬಿಕೆಯಿಲ್ಲ
ಮುಂದರಿತು ಶ್ರೀಹರಿಯ ಭಜಿಸುವುದು ಲೇಸು | ||ಪ||
ಎಲುವುಗಳು ತೊಲೆಯಂತೆ ಏಕನರಗಳ ಸೂತ್ರ
ಮಲಮೂತ್ರ ಮಾಂಸದ ಮೇಲೆ ಹೊದಿಕೆ
ಕಲಕಲನೆ ತಿರುಗಿ ನಾಲಿಗೆ ಘಂಟೀಪರಿಗಳು
ಕೆಲಕಾಲಕೀ ಕೊಂಪೆ ಕಾಣದ್ಹೋಗುವುದು | ||1||
ಪಿಂಡಗಳು ಒಂಭತ್ತು ಕೆಲಬಂಟರೈವರು
ದಂಡೆತ್ತಿರುವ ಕ್ರೋಧ ಮತ್ಸರಗಳು
ಮಂಡಲಾಧಿಪ ನಮ್ಮ ಮನ್ಮಥನಾರಣ್ಯವಿದು
ಬೆಂಡಾಗಿ ಹೋಗುವರು ಅರಿಯದೀ ಕೊಂಪೆ | ||2||
ತನುವಿನೊಳು ಶೃಂಗಾರ ಕೊಂಡಾಡಲಳವಲ್ಲ
ಬನ್ನಬಡುತಲಿ ಬಹಳ ಚೆನ್ನಿಗನು
ರನ್ನ ಸಿರಿ ಕಾಗಿನೆಲೆಯಾದಿಕೇಶವರಾಯ
ಇನ್ನುಂಟೆ ಜಗದೊಳು ನಿನ್ನ ಪೊಗಳುವರು | ||3||

ನಾನು ನೀನು ಎನ್ನದಿರೋ
ನಾನು ನೀನು ಎನ್ನದಿರೋ ಹೀನ ಮಾನವ
ಜ್ಞಾನದಿಂದ ನಿನ್ನ ನೀನೆ ತಿಳಿದುನೋಡೆಲೊ ಪ್ರಾಣಿ | ||ಪ||
ಹೆಣ್ಣು ಹೊನ್ನು ಮಣ್ಣು ಮೂರು ನಿನ್ನವೇನೆಲೊ
ಅನ್ನದಿಂದ ಬಂದ ಕಾಮ ನಿನ್ನದೇನೆಲೊ
ಕರ್ಣದಿಂದ ಬರುವ ಘೋಷ ನಿನ್ನದೇನೆಲೊ
ನಿನ್ನ ಬಿಟ್ಟು ಹೋಹ ಜೀವ ನಿನ್ನದೇನೆಲೊ | | |1||
ಹಲವು ಜನ್ಮದಿಂದ ಬಂದಿರುವನು ನೀನೆಲೊ
ಮಲದ ಗರ್ಭದಲ್ಲಿ ನಿಂದಿರುವನು ನೀನೆಲೊ
ಜಲದ ದಾರಿಯಲ್ಲಿ ಬಂದಿರುವನು ನೀನೆಲೊ
ಕುಲವು ಜಾತಿಗೋತ್ರಗಳುಳ್ಳುವನು ನೀನೆಲೊ | ||2||
ಕಾಲ-ಕರ್ಮ ಶೀಲ-ನೇಮ ನಿನ್ನದೇನೆಲೊ
ಜಾಲವಿದ್ಯೆ ಬಯಲಮಾಯೆ ನಿನ್ನದೇನೆಲೊ
ಕೀಲು ಜಡಿದ ಮರದ ಬೊಂಬೆ ನಿನ್ನದೇನೆಲೊ
ಲೋಲ ಆದಿಕೇಶವನ ಭಕ್ತನಾಗೆಲೊ | ||3||

ದಾಸನಾಗಬೇಕು
ದಾಸನಾಗಬೇಕು ಸದಾಶಿವನ ದಾಸನಾಗಬೇಕು | ||ಪ||
ದಾಸನಾಗಬೇಕು ಕ್ಲೇಶ ಪಂಚಕವಳಿದು
ಆಸೆಯಲ್ಲಿ ಮನಸೂಸದೆ ಸರ್ವದಾ | | |1||
ಇನಿತು ಈ ಜಗವೆಲ್ಲ ಈಶ್ವರನ ಮಯವೆಂದು
ಘನವಾದ ಮೋಹದ ಗಡಿಯನ್ನು ದಾಂಟುತ್ತ | ||2||
ತನವು ಅಸ್ಥಿರವೆನ್ನುತ ತಿಳಿದು ಶಂಕರನ ಹೃದಯ ಕಾಣುತ
ಘನವಾದ ಇಂದ್ರಜಾಲ ಮಹಿಮೆಯನ್ನು ತಾ
ಬಿನುಗು ಸಂಸಾರದ ಮಮತೆಯನು ಬಿಡುತ | ||3||
ಆರು ಚಕ್ರದಿ ಮೆರೆವ ಅಖಂಡನ
ಮೂರು ಗುಣವ ತಿಳೀದು
ಆರು ಮೂರು ಹದಿನಾರು ತತ್ತ್ವವ ಮೀರಿ
ತೋರುವ ಕಾಗಿನೆಲೆಯಾದಕೇಶವನಡಿ | ||4||

ಕೇಶವನೊಲುಮೆ
ಕೇಶವನೊಲುಮೆಯು ಆಗುವ ತನಕ ಹರಿ
ದಾಸರೊಳಿರುತಿರು ಹೇ ಮನುಜ | ||ಪ||
ಕ್ಲೇಶ ಪಾಶಂಗಳ ಹರಿದು ವಿಲಾಸದಿ
ಶ್ರೀಶನ ನುತಿಗಳ ಪೊಗಳುತ ಮನದೊಳು | || 1||
ಮೋಸದಿ ಜೀವರ ಘಾಸಿ ಮಾಡಿದ ಪಾಪ
ಕಾಶಿಗೆ ಹೋದರೆ ಹೋದೀತೆ
ಶ್ರೀಶನ ಭಕುತರ ದೂಷಿಸಿದಾ ಫಲ
ಕಾಸು ಕೊಟ್ಟರೆ ಬಿಟ್ಟೀತೆ | ||2||
ಭಾಷೆಯ ಕೊಟ್ಟು ನಿರಾಶೆಯ ಮಾಡಿದಾ ಫಲ
ಕ್ಲೇಶವಗೊಳಿಸದೆ ಇದ್ದೀತೆ
ಭೂಸುರಸ್ವವ ಹ್ರಾಸ ಮಾಡಿದ ಫಲ
ಏಸೇಸು ಜನುಮಕು ಬಿಟ್ಟೀತೆ | | |3||
ಜೀನನ ವಶದೊಳು ನಾನಾ ದ್ರವ್ಯವಿರೆ
ದಾನಧರ್ಮಕೆ ಮನಸಾದೀತೆ
ಹೀನ ಮನುಜನಿಗೆ ಜ್ಞಾನವ ಬೋಧಿಸೆ
ಹೀನ ವಿಷಯವಳಿದ್ಹೋದೀತೆ | | |4||
ಮಾನಿನಿ ಮನಸು ನಿಧಾನವಿರದಿರೆ
ಮಾನಾಭಿಮಾನಗಳುಳಿದೀತೆ
ಭಾನುಪ್ರಕಾಶನ ಭಜನೆಯ ಮಾಡದ
ಹೀನಗೆ ಮುಕುತಿಯು ದೊರಕೀತೆ | ||5||
ಸತ್ಯಧರ್ಮಗಳ ನಿತ್ಯವು ಬೋಧಿಸೆ
ತೊತ್ತಿನ ಮನಸಿಗೆ ಸೊಗಸೀತೆ
ತತ್ತ್ವದ ಅರ್ಥ ವಿಚಿತ್ರದಿ ಪೇಳಲು
ಕತ್ತೆಯ ಚಿತ್ತಕೆ ಹತ್ತೀತೆ | | |6||
ಪುತ್ತಳಿ ಬೊಂಬೆಯ ಚಿತ್ರದಿ ಬರೆದರೆ
ಮುತ್ತನು ಕೊಟ್ಟರೆ ನುಡಿದೀತೆ
ಕತ್ತುರಿ ತಿಲಕವನೊತ್ತಿ ಫಣೆಯೊಳಿಡೆ
ಅರ್ತಿಯು ತೋರದೆ ಇದ್ದೀತೆ | ||7||
ನ್ಯಾಯವ ಬಿಟ್ಟನ್ಯಾಯವ ಪೇಳುವ
ನಾಯಿಗೆ ನರಕವು ತಪ್ಪೀತೆ
ತಾಯಿತಂದೆಗಳ ಬಲು ನೋಯಿಸಿದ
ನ್ಯಾಯಿಗೆ ಮುಕುತಿಯು ದೊರಕೀತೆ | ||8||
ಬಾಯಿ ಕೊಬ್ಬಿ ಬಯ್ಯುವ ಮನುಜಗೆ
ಘಾಯವು ಆಗದೆ ಬಿಟ್ಟೀತೆ
ಮಾಯವಾದಗಳ ಬೋಧಿಪ ಮನುಜಗೆ
ಹೇಯ ನರಕವು ತಪ್ಪೀತೆ | ||9||
ಸಾಧುಸಜ್ಜನರ ನೋಯಿಸಿದ ಮಾಯಾ
ವಾದಿಗೆ ನರಕವು ತಪ್ಪೀತೆ
ಬಾಧಿಸಿ ಬಡವರ ಅರ್ಥವನೊಯ್ವಗೆ
ವ್ಯಾಧಿಯು ಕಾಡದೆ ಬಿಟ್ಟೀತೆ | ||10||
ಭೇದವೆಣಿಸಿ ಬಲು ಕ್ಷುದ್ರವ ಕಲಿತರೆ
ಮೋದವೆಂದಿಗು ಆದೀತೆ
ಕದ್ದು ಒಡಲ ಪೊರೆಯುವನ ಮನೆಯೊಳ
ಗಿದ್ದದು ಹೋಗದೆ ಉಳಿದೀತೆ | ||11||

ನೇಮವಿಲ್ಲದ ಹೋಮ
ನೇಮವಿಲ್ಲದ ಹೋಮ ಇನ್ನೇತಕೆ
ರಾಮನಾಮವು ಇರದ ಮಂತ್ರವೇತಕೆ | | ಪ||
ನೀರ ಮುಣುಗಲು ಯಾಕೆ ನಾರಿಯಳ ಬಿಡಲೇಕೆ
ವಾರಕೊಂದುಪವಾಸ ಮಾಡಲೇಕೆ
ನಾರಸಿಂಹನ ದಿವ್ಯ ನಾಮವನು ನೆನೆದರೆ
ಘೋರ ಪಾತಕವೆಲ್ಲ ತೊಲಗಿ ಹೋಗುವುದು | ||1||
ಅಂಬರವ ತೊರೆಯಲೇಕೆ ತಾಂಬೂಲ ಬಿಡಲೇಕೆ
ಡಂಬಕದ ವೃತ್ತಿಯಲಿ ಇರಲೇತಕೆ
ಅಂಬುಜನಾಭನನ ಭಾವದಲಿ ನೆನೆದರೆ
ಇಂಬುಂಟು ವೈಕುಂಠವೆಂಬ ಪುರದೊಳಗೆ | | |2||
ಬಂಧದೊಳಗೆ ಬಿದ್ದು ಹರಿಯನೆ ನೆನೆಯುತಿರೆ
ಬೆಂದು ಹೋಗುವುದು ದುರಿತಂಗಳೆಲ್ಲ
ಬಂದ ಪಾಪಗಳೆಲ್ಲ ನಿಲ್ಲದೆ ಕಳೆದಾವು
ಚೆಂದಾಗಿ ನೆಲೆಯಾದಿಕೇಶವನ ನೆನೆಯೆ | ||3||

ಪಥ ನಡೆಯದಯ್ಯ
ಪಥ ನಡೆಯದಯ್ಯ ಪರಲೋಕ ಸಾಧನಕೆ
ಮನ್ಮಥನೆಂಬ ಖಳನು ಮಾರ್ಗವ ಕಟ್ಟಿ ಸುಲಿಯುತಿರೆ | ||ಪ||
ತನರೋಮ ಗಿಡವೃಕ್ಷ ಥಳಥಳಿಪ ಭುಜಲತೆಯ
ವನಸಿಂಹ ಗಜಮೃಗಗಳಿಂದೊಪ್ಪುವ
ವನಿತೆಯರ ಕಾಯ ಕಾಂತಾರವೆಂಬ ಮಾರ್ಗದಲಿ
ಘನಕುಚಗಳೆಂಬೊ ಕಣಿವೆಯ ಮಧ್ಯ ಸೇರಿಹನು | ||1||
ಗಿಳಿ ನವಿಲು ವಸಂತ ಭ್ರಮರಗಳು ಒಂದಾಗಿ
ಬಲದೊಡನೆ ಮದನ ಮಾರ್ಗವ ಕಟ್ಟಲು
ಬಲವುಳ್ಳ ಭಕ್ತ ಮುನಿ ಸಂನ್ಯಾಸಿ ಯೋಗಿಗಳು
ಸುಲಿಸಿಕೊಂಡರು ಕೆಲರು ಸಿಕ್ಕಿದರು ಸೆರೆಯ | ||2||
ಕಾಳಗದೊಳಿದಿರಿಲ್ಲ ಸುರರು ದಾನವರು ಕ
ಟ್ಟಾಳು ಮನ್ಮಥನ ಚಲದಂಕ ಬಿರುದು
ಹೇಳಲಿನ್ನೇನು ಬಾಡದಾದಿಕೇಶವರಾಯ
ನಾಳಸಂಗಡ ಹೋದರಾವ ಭಯವಿಲ್ಲ | ||3||

ಎರಡು ದಿನದ ಸಂಸಾರ
ಏನು ಇಲ್ಲದ ಎರಡು ದಿನದ ಸಂಸಾರ
ಜ್ಞಾನದಲಿ ದಾನಧರ್ಮವ ಮಾಡಿರಯ್ಯಾ | || ಪ||
ಹಸಿದು ಬಂದವರಿಗೆ ಅಶನವೀಯಲು ಬೇಕು
ಶಿಶುವಿಗೆ ಪಾಲ್ಬೆಣ್ಣೆಯುಣಿಸಬೇಕು
ಹಸನಾದ ಭೂಮಿಯನು ಧಾರೆ ಎರೆಯಲು ಬೇಕು
ಪುಸಿಯಾಡದಲೆ ಭಾಷೆ ನಡೆಸಲೇ ಬೇಕು | ||1||
ಕಳ್ಳತನಗಳ ಮಾಡಿ ಒಡಲು ಹೊರೆಯಲು ಬೇಡ
ಕುಳ್ಳಿರ್ದ ಸ್ಥಳದಿ ಕುತ್ಸಿತವು ಬೇಡ
ಒಳ್ಳೆಯವ ನಾನೆಂದು ಬಲು ಹೆಮ್ಮೆ ಬೇಡ
ಬಾಳ್ವೆ ಸ್ಥಿರವೆಂದು ನೀ ನಂಬಿ ಕೆಡಬೇಡ | || 2||
ದೊರೆತನವು ಬಂದಾಗ ಕೆಟ್ಟ ನುಡಿಯಬೇಡ
ಸಿರಿ ಬಂದ ಕಾಲಕ್ಕೆ ಬಲು ಮೆರೆಯಬೇಡ
ಸಿರಿವಂತನಾದರೆ ನೆಲೆಯಾದಿಕೇಶವನ
ಚರಣ ಕಮಲವ ಸೇರಿ ಸುಖಿಯಾಗು ಮನುಜ | ||3||

ತನು ನಿನ್ನದು
ತನು ನಿನ್ನದು ಜೀವನ ನಿನ್ನದೊ
ಅನುದಿನದಲ್ಲಿ ಬಾಹೊ ಸುಖದುಃಖ ನಿನ್ನದಯ್ಯ | ||ಪ||
ಸವಿನುಡಿ ವೇದ ಪುರಾಣ ಶಾಸ್ತ್ರಗಳ
ಕಿವಿಗೊಟ್ಟು ಕೇಳುವ ಕಥೆ (ಸ್ಥಿತಿ) ನಿನ್ನದು
ನವ ಮೋಹನಾಂಗೇರ ರೂಪವ ಕಣ್ಣಲಿ
ಎವೆಯಿಕ್ಕದೆ ನೋಡುವ ನೋಟ ನಿನ್ನದಯ್ಯ | ||1||
ಒಡಗೂಡಿ ಗಂಧ ಕಸ್ತೂರಿ ಪರಿಮಳಂಗಳ
ಬಿಡದೆ ಲೇಪಿಸಿಕೊಂಬುವುದು ನಿನ್ನದು
ಷಡುರಸದನ್ನಕ್ಕೆ ನಲಿದಾಡುವ ಜಿಹ್ವೆ
ಕಡು ರುಚಿಗೊಂಡರೆ ಆ ರುಚಿ ನಿನ್ನದಯ್ಯ | ||2||
ಮಾಯಾ ಪಾಶದ ಬಲೆಯೊಳಗೆ ಸಿಲುಕಿರುವಂಥ
ಕಾಯ ಪಂಚೇಂದ್ರಿಯಂಗಳು ನಿನ್ನವು
ಕಾಯಜಪಿತ ಕಾಗಿನೆಲೆಯಾದಿಕೇಶವ
ರಾಯ ನೀನಲ್ಲದೆ ನರರ ಸ್ವತಂತ್ರವೆ | || 3||

ಸುಜ್ಞಾನಿಗಳ ಕೂಡೆ
ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ
ಸುಜ್ಞಾನಿಗಳ ಕೂಡೆ ಜಗಳವೇ ಲೇಸು | ||ಪ||
ಉಂಬುಡುವುದಕಿಲ್ಲದರಸಿನೋಲಗಕಿಂತ
ತುಂಬಿದೂರೊಳಗೆ ತಿರುದುಂಬುವುದೆ ಲೇಸು
ಹಂಬಲಿಸಿ ಹಾಳ್ಹರಟೆ ಹೊಡೆವುದಕಿಂತ ಹರಿ
ಯೆಂಬ ದಾಸರ ಕೂಡೆ ಸಂಭಾಷಣೆಯೆ ಲೇಸು | ||1||
ಒಡನೆ ಹಂಗಿಸುವನೋಗರವನುಂಬುದಕಿಂತ
ಕುಡಿ ನೀರು ಕುಡಿದುಕೊಂಡಿರುವುದೇ ಲೇಸು
ಬಿಡದೆ ಬಾಂಧವರೊಡನೆ ಕಡಿದಾಡುವುದಕಿಂತ
ಅಡವಿಯೊಳಗಜ್ಞಾತ ವಾಸವೇ ಲೇಸು | || 2||
ಮಸೆಯುತಿಹ ಮತ್ಸರದ ನೆರೆಯೊಳಿರುವುದಕಿಂತ
ಹಸನಿಲ್ಲದ ಹಾಳು ಗುಡಿಯೆ ಲೇಸು
ಬಿಸಜಾಕ್ಷ ಕಾಗಿನೆಲೆಯಾದಕೇಶವರಾಯ
ವಸುಮತಿಯೊಳು ನಿನ್ನ ದಾಸತ್ವವೆ ಲೇಸು | || 3||

ಸತ್ಯವಂತರ ಸಂಗವಿರಲು
ಸತ್ಯವಂತರ ಸಂಗವಿರಲು ತೀರ್ಥವ್ಯಾತಕೆ
ನಿತ್ಯ ಜ್ಞಾನಿಯಾದ ಮೇಲೆ ಚಿಂತೆ ಯಾತಕೆ | | |ಪ||
ತಾನು ಉಣ್ಣದೆ ಪರರಿಗಿಕ್ಕದ ಧನವಿದ್ಯಾತಕೆ
ಮಾನಹೀನನಾಗಿ ಬಾಳ್ವ ಮನುಜನ್ಯಾತಕೆ
ಜ್ಞಾನವಿಲ್ಲದೆ ನೂರುಕಾಲ ಬದುಕಲ್ಯಾತಕೆ
ಮಾನಿನಿಯ ತೊರೆದ ಮೇಲೆ ಭೋಗವ್ಯಾತಕೆ | ||1||
ಮಾಡು ಕೇಳದೆ ಮಲೆತು ನಡೆವ ಮಕ್ಕಳ್ಯಾತಕೆ
ಪ್ರೀತಿಯಿಲ್ಲದೆ ಎಡೆಯಲಿಕ್ಕಿದ ಅನ್ನವ್ಯಾತಕೆ
ನೀತಿಯರಿತು ನಡೆಯದಿರುವ ಬಂಟನ್ಯಾತಕೆ
ಸೋತು ಹೆಣ್ಣಿಗೆ ಹೆದರಿ ನಡೆವ ಪುರುಷನ್ಯಾತಕೆ | ||2||
ಸನ್ನೆಯರಿತು ನಡೆಯದಿರುವ ಸತಿಯು ಯಾತಕೆ
ಮನ್ನಣಿಂದ ನಡೆಸದಿರುವ ದೊರಯು ಯಾತಕೆ
ಮುನ್ನ ಕೊಟ್ಟು ಪಡೆದಿನ್ನು ಬಯಸಲ್ಯಾತಕೆ
ಚೆನ್ನ ಆದಿಕೇಶವನಲ್ಲದ ದೈವವ್ಯಾತಕೆ | || 3||

ಇನ್ನ್ಯಾತರ ಕುಲವಯ್ಯ
ಯಾತರವನೆಂದುಸಿರಲಿ
ಜಗನಾಥ ಮಾಡಿದನೊಂದ ನರ ರೂಪವಯ್ಯ | ||ಪ||
ಇಂದ್ರಿಯ ಸೂತಕ ದುರ್ಗಂಧ ಮಲಮೂತ್ರ
ಬಂದ ಠಾವಿನ ನಿಜ ಗುರುತನರಿಯೆ
ಬಂದದ್ದು ಬಚ್ಚಲಗುಣಿ ತಿಂದದ್ದು ಮೊಲೆ ಮಾಂಸ
ಅಂಧಕ ತನಗಿನ್ನೇತರ ಕುಲವಯ್ಯ | ||1||
ಒಂಭತ್ತು ರಂಧ್ರದೊಳೊಸರುವ ಹೊಲಸಿನ
ತುಂಬಿ ಹೊರಡುವ ಮಲ ತುಳುಕುತಲಿ
ಇಂಬಿಲ್ಲದ್ಹೊಲೆಗೊಂಡವೆಂಬ ಠಾವಿಲಿ ಬಂದ
ಡಂಭಕ ತನಗಿನ್ನ್ಯಾತರ ಕುಲವಯ್ಯ | | |2||
ಕರುಳ ಖಂಡ ನರನಾರುವ ಚ
ರ್ಮರೋಹಿತ ಪಂಜರ ಹುರುಳಿಲ್ಲವೋ
ನರರುಹಪೊತ್ತು ತಿರುಗುವಂಥಾ
ತಿರುಕ ತನಗಿನ್ನ್ಯಾತರ ಕುಲವಯ್ಯ | ||3||
ನೆಟ್ಟು ಮೊಟ್ಟೆ ಭಾರಬಂಧನ ಸಿದ್ಧಿಗೆ
ಕಟ್ಟದೆ ಕಪಿಗಳು ತೊಗಲ ಬೊಕ್ಕಣವು
ಇಷ್ಟರೊಳಗೆ ಬಂದ ವಿವರವರಿಯದಿಂಥ
ಭ್ರಷ್ಟಗೆ ತನಗಿನ್ನ್ಯಾತರ ಕುಲವಯ್ಯ | ||4||
ಹಚ್ಚಡದ ಮೇಲೆ ಲಕ್ಷಣವಿಟ್ಟಂತೆ
ಹೆಚ್ಚು ಕಡಿಮೆ ಎಂದು ಹೆಣಗಾಡುತ್ತ
ನಿಚ್ಚ ಕಾಗಿನೆಲೆಯಾದಿಕೇಶವನ
ಹುಚ್ಚದಾಸಗೆ ಇನ್ನ್ಯಾತರ ಕುಲವಯ್ಯ | ||5||

ಜೀವ ಯಾವ ಕುಲ
ಕುಲ ಕುಲ ಕುಲವೆನ್ನುತಿಹರು
ಕುಲವ್ಯಾವುದು ಸತ್ಯ ಸುಖವುಳ್ಳ ಜನರಿಗೆ | || ಪ||
ಕೆಸರೊಳು ತಾವರೆ ಪುಟ್ಟಲು ಅದ ತಂದು
ಬಿಸಜನಾಭನಿಗರ್ಪಿಸಲಿಲ್ಲವೆ
ಹಸುವಿನ ಮಾಂಸದೊಳುತ್ಪತ್ತಿ ಕ್ಷೀರವು
ವಸುಧೆಯೊಳಗೆ ಭೂಸುರರುಣ್ಣಲಿಲ್ಲವೆ | | |1||
ಮೃಗಗಳ ಮೈಯಲ್ಲಿ ಪುಟ್ಟಿದ ಕಸ್ತೂರಿ
ತೆಗೆದು ಪೂಸುವರು ಭೂಸುರರೆಲ್ಲರು
ಬಗೆಯಿಂದ ನಾರಾಯಣನ್ಯಾವ ಕುಲದವ
ಅಗಜವಲ್ಲಭನ್ಯಾತರ ಕುಲದವನು | | |2||
ಆತ್ಮ ಯಾವ ಕುಲ ಜೀವ ಯಾವ ಕುಲ
ತತ್ತ್ವೇಂದ್ರಿಯಗಳ ಕುಲ ಪೇಳಿರಯ್ಯ
ಆತ್ಮಾಂತರಾತ್ಮ ನೆಲೆಯಾದಿಕೇಶವ
ಆತನೊಲಿದ ಮೇಲೆ ಯಾತರ ಕುಲವಯ್ಯ | || 3||

ನಾವು ಕುರುಬರು
ನಾವು ಕುರುಬರು ನಮ್ಮ ದೇವರೊ ಬೀರಯ್ಯ
ಕಾವ ನಮ್ಮಜ್ಜ ನರಕುರಿ ಹಿಂಡುಗಳ | ||ಪ||
ಅಷ್ಟ ಮದ ಮತ್ಸರಗಳೆಂತೆಂಬ ಟಗರುಗಳು
ದೃಷ್ಟಿ ಜೀವಾತ್ಮನೆಂಬೊ ಆಡು
ಸೃಷ್ಟಿ ಪ್ರಸಿದ್ಧವೆಂತೆಂಬುವಾ ಹೋತಗಳು
ಕಟ್ಟಿ ಕೋಲಿನಲಿ ಇರುತಿರುವ ನಮ್ಮಜ್ಜ | || 1||
ವೇದ ಶಾಸ್ತ್ರ ಪುರಾಣವೆಂತೆಂಬ ಶ್ವಾನಗಳು
ಕಾದಿದ್ದು ನಮ್ಮಜ್ಜ ಹಿಂಡಿನೊಳಗೆ
ಹಾದಿಗಾಣದೆ ಕೂಗಿ ಬಾಯಾರಿ ಕಾಲ್ಗೆರಗೆ
ಆದರಿಸಿ ಅಂಬಲಿಯನೆರೆವ ನಮ್ಮಜ್ಜ | | |2||
ಅರಿಯೆಂಬ ಮರಿಗಳು ಹಿಂಡಿನೊಳಗೆ ಬಂದು
ಮಾರಿ ವ್ಯಾಘ್ರವೆಂತೆಂಬ ತೋಳ ಹೊಕ್ಕು
ಕುರುಬ ಹಿಂಝಾವದಲಿ ಕುರಿಯ ಮುರಿವುದ ಕಂಡು
ಅರಿತು ಅರಿಯದ ಹಾಗೆ ಇರುವ ನಮ್ಮಜ್ಜ | || 3||
ಹುಟ್ಟೋದಕೆ ಮೊದಲಿಲ್ಲ ಸಾಯೋದಕೆ ಕೊನೆಯಿಲ್ಲ
ಹುಟ್ಟು ಸಾವಿನ ಹೊಲವು ಬಲ್ಲ ನಮ್ಮಜ್ಜ
ಅಷ್ಟು ಪ್ರಾಣಿಗಳಿಗೆ ಇಷ್ಟು ಅಂಬಲಿ ಮಾಡಿ
ಹೊಟ್ಟೆ ತುಂಬಿದ ಹಾಗೆ ಕರೆವ ನಮ್ಮಜ್ಜ | ||4||
ಕಲಿಯುಗಕೆ ಗೌಡನಿವ ಸಂಗಾತಿ ಮಂತ್ರಿಸುತ
ಕಲಿಯುಗಂಗಳನೆಲ್ಲ ಮರೆತನೀತ
ಜಲಜಾಕ್ಷ ಕಾಗಿನೆಲೆಯಾದಿಕೇಶವನ ಮನ
ವೊಲಿಸಿ ಭಜಿಸಿದವನು ಹುಚ್ಚು ಕುರುಬ | | |5||

ಜಪವ ಮಾಡಿದರೇನು
ಜಪವ ಮಾಡಿದರೇನು ತಪವ ಮಾಡಿದರೇನು
ಕಪಟ ಗುಣ ವಿಪರೀತ ಕಲುಷವಿದ್ದವರು | || ಪ||
ಆದಿ ಗುರುವರಿಯದೆ ಅತ್ತಲಿತ್ತಲು ತೊಳಲಿ
ವೇದಶಾಸ್ತ್ರಗಳೋದಿ ಬಾಯಾರಲು
ಆದಿಯನು ಕಾಣದಿಂದಿರುತ್ತಿದ್ದು ಹಲವೆಂಟು
ವಾದ ತರ್ಕದೊಳಿದ್ದ ಭೇದವಾದಿಗಳು | | |1||
ನುಡಿ ನಡೆವ ಕಾಲದಲಿ ದಾನಧರ್ಮ ಮಾಡದೆ
ಅಡವಿಯೊಳು ಕೆರೆ ತುಂಬಿ ಬತ್ತಿದಂತೆ
ಮಡದಿ ಮಕ್ಕಳಿಗೆಂದು ಒಡವೆ ವಸ್ತ್ರಗಳಿಸೆ
ಹಿಡಿಯಲಾ ಯಮನವರ ಕಟ್ಟಿಗೊಳಗಾಗಿ | ||2||
ಛಳಿ ಮಳೆ ಅತಿಕಾರುಗತ್ತಲೆಯೊಳಗಿದ್ದು
ಇಳಿ ಮುಳುಗಿ ನದಿಯೊಳಗೆ ಜಪವ ಮಾಡಿ
ಕಳವಳಿಸಿ ನೂರೆಂಟು ತೊಳಲಿ ಬಳಲಬೇಡ
ನಳಿನಾಕ್ಷ ಆದಿಕೇಶವನ ನೆನೆ ಮನವೆ | | |3||

ನೆಚ್ಚದಿರು ಸಂಸಾರ
ನೆಚ್ಚದಿರು ಸಂಸಾರ ನೆಲೆಯಲ್ಲವೀ ಕಾಯ
ಅಚ್ಯುತನ ನಾಮವನು ನೆನೆದು ಸುಖಿಯಾಗೊ | ||ಪ||
ಗಳಿಸದಿರು ಸೀಮೆಯನು ಗಳಿಸದಿರು ದ್ರವ್ಯವನು
ಗಳಿಸದಿರು ನೀ ದುರಿತರಾಸಿಗಳನು
ನಳಿನನಾಭನ ದಿವ್ಯನಾಮವನು ನೆನೆನೆನೆದು
ನೆಲೆಯಾದ ಪರಮಪದವಿಯ ಪಡೆಯೊ ಮನವೆ | ||1||
ನೋಡದಿರು ಪರಸತಿಯ ಕೂಡದಿರು ದುರ್ಜನರ
ಆಡದಿರು ಮಾತುಗಳ ಗರ್ವದಿಂದ
ಬೇಡದಿರು ಕೈಯ ಹಿಂದಕೆ ತೆಗೆವ ಲೋಭಿಯನು
ಕೊಂಡಾಡದಿರು ಬೀದಿಗೂಳುಂಬ ದೈವಗಳ | ||2||
ನಾನಾ ಜನ್ಮದಿ ಬಂದ ನಾಟಕದ ಬೊಂಬೆಯಿದು
ಮಾನಕ್ಕೆ ನೀ ಮೆಚ್ಚಿ ಮರುಳಾಗದೆ
ಜಾಣತನದಿಂ ಕಾಗಿನೆಲೆಯಾದಿಕೇಶವನ
ಮಾನಸದಲಿ ನೆನೆದು ಸುಖಿಯಾಗು ಮನವೆ | ||3||

ಮಗುವಿನ ಮರುಳಿದು
ಮಗುವಿನ ಮರುಳಿದು ಬಿಡದಲ್ಲ
ಈ ಜಗದೊಳು ಪಂಡಿತರಿದ ಬಿಡಿಸಿ | ||ಪ||
ನೀರನು ಕಂಡರೆ ಮುಳುಗುತಿದೆ ತನ್ನ
ಮೋರೆಯ ತೋರದೆ ಓಡುತಿದೆ
ಧಾರಿಣಿ ಅಲ್ಲಲ್ಲಿ ಅಳೆಯುತಿದೆ ದೊಡ್ಡ
ಭೈರವಾಕಾರದಿ ಕೂಗುತಿದೆ | ||1||
ಪೊಡವಿಯ ಕೊಟ್ಟರೆ ಬಿಸುಡುತಿದೆ ತನ್ನ
ಕೊಡಲಿಯೊಳ್ ಭೂಪರ ಕಡಿಯುತಿದೆ
ಅಡವಿ ಕೋತಿಗಳ ಕೂಡುತಿದೆ ಚೆಲ್ವ
ಮಡದಿಯರನು ಹಿಡಿದೆಳೆವುತಿದೆ | ||2||
ಉಟ್ಟಿದ್ದ ವಸ್ತ್ರವ ಬಿಸುಡುತಿದೆ ತನ್ನ
ದಿಟ್ಟ ತೇಜಿಯನೇರಿ ನಲಿಯುತಿದೆ
ಸೃಷ್ಟಿಯೊಳು ಭೂಸುರರ ಪೊರೆವ ಜಗ
ಜಟ್ಟಿಯಾದಿಕೇಶವರಾಯನಂತೆ | || 3||

ತಿಳಿದವನೆ ಪರಮ ಯೋಗಿ
ತಾನ್ಯಾರೋ ತನ್ನ ದೇಹವ್ಯಾರೋ
ದಿವ್ಯ ಜ್ಞಾನದಿಂದ ತಿಳಿದವನೆ ಪರಮ ಯೋಗಿ| ||ಪ||
ಸೂತಿಕಾವಸ್ಥೆಯಲಿ ನವಮಾಸ ತುಂಬಿದ ಬಳಿಕ
ಧಾತುವಿನ ಬಿಂಬೊಡೆದು ಬೆಳೆದು ಬಂದು
ಪಾತಕವೆ ಒಂದು ಮೂರುತಿಯಾದ ತನುವೆಂದು
ತಾ ತಿಳಿದು ಸಿಕ್ಕದವನೆ ಪರಮ ಯೋಗಿ | ||1||
ಅಸ್ಥಿಪಂಜರ ಚರ್ಮದ ಹೊದಿಕೆ ನರವಿನೊಳು
ವಿಸ್ತರಿಸಿ ಬಿಗಿದ ಮಾಂಸದ ಬೊಂಬೆಯು
ರಕ್ತ ಮಲಮೂತ್ರ ಕೀವಿನ ಪ್ರಳಯದೊಡಲೆಂದು
ಸ್ವಸ್ಥದಿಂ ತಿಳಿದವನೆ ಪರಮ ಯೋಗಿ | || 2||
ಘೋರ ನರಕದ ತನುವು ಎಂದು ಮನದಲಿ ತಿಳಿದು
ಗೇರು ಹಣ್ಣಿನ ಬೀಜದಂತೆ ಹೊರಗಿದ್ದು
ಮಾರಪಿತ ಕಾಗಿನೆಲೆಯಾದಿಕೇಶವನ ಪಾದ
ವಾರಿಜವ ನೆನೆದವನೆ ಪರಮ ಯೋಗಿ | ||3||

ಬಯಲ ಬಾವಿ
ಬಯಲ ಬಾವಿ ನೀರಿಗ್ಹೊಂಟಾಳೊಬ್ಬ ಬಾಲಿ
ಹರಿಯೋ ಹೊಳಿ ನೀರಿಗ್ಹೊಂಟಾಳೊಬ್ಬ ಬಾಲಿ | | |ಪ||
ಕಾಲಿಟ್ಟು ಮೊಗಿಬ್ಯಾಡ ಕೈಯಿಟ್ಟು ಹೊರಬ್ಯಾಡ
ನೀರಿಲ್ಲದೆ ಮನಿಗೆ ಬರಬ್ಯಾಡ | ||1||
ಸತ್ತದ್ದು ತರಬೇಡ ಜೀವದ್ದು ಕೊಲಬ್ಯಾಡ
ಬಾಡಿಲ್ಲದೆ ಮನಿಗೆ ಬರಬ್ಯಾಡ | | |2||
ಕಾಗಿನೆಲಿ ಕನದಾಸ ಹಾಕಿದ ಮುಂಡಿಗಿ
ಬಲ್ಲಂಥ ಒಡೆಯರು ಒಡೆದು ಹೇಳಿರಣ್ಣ | | |3||

ಬಿತ್ತಾಕ ಹೋದಲ್ಲಿ
ಬಿತ್ತಾಕ ಹೋದಲ್ಲಿ ಬಿಡದೆ ಮಳೆ ಹೊಡೆದು
ಜತ್ತಿಗೆ ತೊಯ್ದು ಮಿಣಿ ತೊಯ್ದು | | |ಪ||
ಜತ್ತಿಗೆ ತೊಯ್ದು ಮಿಣಿ ತೊಯ್ದು ಉಡಿಯಾಗಿನ
ಬಿತ್ತಬೀಜ ತೊಯ್ದು ಮೊಳಕೆ ಹೊಡೆದೊ | ||1||
ಬಿತ್ತಲಿಲ್ಲ ಬೆಳೆಯಲಿಲ್ಲ ಮೊಳದುದ್ದ ತೆನೆ ಹಾಯ್ದೊ
ಮೆತ್ತಗೆ ಮೇಯಾಕ ಬಂದ ಗಿಣಿರಾಮ ನಿಬ್ಬೆರಗಾಗಿ ನಿಂತ | ||2||
ಕಾಗಿನೆಲೆ ಕನಕದಾಸ ಹಾಕಿದ ಮುಂಡಿಗೆಯ
ತೂಗಿ ಒಡಚದಿದ್ದರೆ ಗೆಣೆಯ ಆದಿಕೇಶವನಾಣೆ | ||3||

ನಿಜ ನೇಮ ನಿಷ್ಠೆಯೊಳು
ನಿಜವರಿತು ಲಿಂಗವನು ಪೂಜೆ ಮಾಡುವರಾರು
ನಿಜ ನೇಮ ನಿಷ್ಠೆಯೊಳು ನಿಂದವರ ತೋರು | ||ಪ||
ಆತ್ಮವೆಂವುದರೊಳಗೆ ಅಮೃತ ಚಿಲುಮೆಯ ತೆಗೆದು
ನೀತಿ ಮಾರ್ಗವೆನ್ನುವ ಕೊಡನ ಪಿಡಿದು
ಮೂತೆರದ ಭೇದಗಳ ಕಡಿದು ಕಣ್ಣಿಯ ಮಾಡಿ
ಚಿತ್ ಲಿಂಗಕಗ್ಗವಣಿ ತಂದವರ ತೋರು | ||1||
ಪಂಚ ಪ್ರಾಣಗಳ ಗೊತ್ತುಗುರಿ ಜಾಡನು ತಿಳಿದು
ಪಂಚಾಕ್ಷರಿಯೆಂಬ ಅರಮನೆಯೊಳಗೆ
ಪಂಚಭೂತಗಳೆಂಬ ಬಯಲ ಜಗಲಿಯೇರಿ ಪ್ರ
ಪಂಚಧರ ಚಿಹ್ನೆಯನು ಕಾಣುವರ ತೋರು | ||2||
ಮೂಲವಾಸನೆಯಳಿದು ಕಾಯ ವಾಸನೆ ಕಳೆದು
ಮೇಲೆ ಕಾರುಣ್ಯನೆಲೆಯೆಂಬುದನು ಕಂಡು
ನಾಲಗೆಯಿರದ ಗಂಟೆ ನಾದದಲೆಯನು ಕೇಳಿ
ಸಲೆ ಸೂರ್ಯಚಂದ್ರರೆಡೆ ಸುಳಿದವರ ತೋರು | || 3||
ಅಂತರಂಗದೊಳಗೆ ಅಷ್ಟ ಜ್ಯೋತಿಯನಿಟ್ಟು
ದಂತಿ ಎಂಟನು ಪಿಡಿದು ತರಿದು ಬಿಸುಟು
ಆಂತರ್ಯದ ಸಂತತ ಭೇರಿ ಶಬ್ದವ ಕೇಳಿ
ಅಂತರಾತ್ಮ ಲಿಂಗವ ಪೂಜಿಪರ ತೋರು | | |4||
ಪರಬ್ರಹ್ಮ ತನ್ನೊಳಗೆ ಪರಿಪೂರ್ಣವಾಗಿರಲು
ಪರಂಜ್ಯೋತಿ ಲಿಂಗವ ಬಯಸಿ ನೋಡು
ವರ ಬಾಡಬಂಕಾಪುರದ ಆದಿಕೇಶವನ
ಕುರಿತು ತಿಳಿಯೊ ಹಳೆಗನ್ನಡದ ಸೊಬಗ | || 5||

ಮುಳ್ಳು ಮೊನಿಯ ಮ್ಯಾಲ
ಮುಳ್ಳು ಮೊನಿಯ ಮ್ಯಾಲ ಮೂರು ಕೆರಿಯ ಕಟ್ಟಿ
ಎರಡು ಹೂಳು ಒಂದು ತುಂಬಲೆ ಇಲ್ಲ | ||ಪ||
ತುಂಬದ ಕೆರೆಗೆ ಮೇಯಾಕ ಬಂದವು ಮೂರು ಎಮ್ಮಿ
ಎರಡು ಗೊಡ್ಡು ಒಂದು ಕಂದು ಹಾಕಿ ಕರುವೇ ಇಲ್ಲ | || 1||
ಕರುವಿಲ್ಲದ ಎಮ್ಮಿಯ ಕೂಡಿದರ ಮೂವರು ಹೆಣ್ಮಕ್ಕಳಾ
ಇಬ್ಬರು ಬಂಜಿಯರು ಒಬ್ಬಾಕಿ ಹಡೆದೇ ಇಲ್ಲ | ||2||
ಹಡೆಯದ ಹೆಣ್ಣ ಕೂಡಿಕೊಂಡರು ಮೂವರು ಕುಂಬಾರರು
ಇಬ್ಬರು ಚೊಂಚರು ಒಬ್ಬಗೆ ಕೈಯೇ ಇಲ್ಲ | || 3||
ಕೈಯಿಲ್ಲದ ಕುಂಬಾರ ಮಾಡಿಕೊಟ್ಟ ಮೂರು ಮಡಿಕಿಗಳ
ಎರಡು ದದ್ದು ಒಂದಕೆ ತಳವೆ ಇಲ್ಲ | || 4||
ತಳವಿಲ್ಲದ ಮಡಕಿಗಿ ಕೊಟ್ಟಾರ ಮೂರು ರೊಕ್ಕ
ಎರಡು ನಕಲು ಒಂದು ಸವಕಲು | ||5||
ಸವಕಲು ರೊಕ್ಕದಾಗ ಕುಚ್ಚಲಿಕೆ ತಂದಾರ ಮೂರ ಕಡುಬ
ಎರಡು ಕುದಿಯಲಿಲ್ಲ ಒಂದು ಬೇಯಲಿಲ್ಲ | ||6||
ಬೇಯದ ಕಡುಬಿಗಿ ಬಂದಾರ ಮೂವರು ಬೀಗರ
ಇಬ್ಬರು ಬೊಚ್ಚರು ಒಬ್ಬಗೆ ಹಲ್ಲೇ ಇಲ್ಲ | ||7||
ಹಲ್ಲಿಲ್ಲದ ಬೀಗನಿಗೆ ಕೊಟ್ಟಾರ ಮೂರು ಚಿಕಣಿ ಅಡಕಿ
ಎರಡು ಗೋಟು ಒಂದು ಸಿಡಿದು ಕಾಣೆಯಾಯಿತು |
ಕಾಣೆಯಾದ ಅಡಿಕಿಯ ನೋಡಾಕಂತ ಹೋಗ್ಯಾರ ಮೂರ ಮಂದಿ ||8||
ಇಬ್ಬರು ಒಂಚೊರಿ ಒಬ್ಬಗೆ ಕಣ್ಣೇ ಇಲ್ಲ |
ಕಣ್ಣಿಲ್ಲದವನ ಕರೆತರಬೇಕಂತ ಹೋಗ್ಯಾರ ಮೂರ ಮಂದಿ
ಇಬ್ಬರು ಕುಂಟರು ಒಬ್ಬಗೆ ಕಾಲೇ ಇಲ್ಲ | ||9||
ಕಾಲಿಲ್ಲದವನ ಹೊತ್ತು ತರಬೇಕಂತ ಹೋಗ್ಯಾರ ಮೂರು ಮಂದಿ
ಇಬ್ಬರು ಲಂಡರು ಒಬ್ಬ ಮೊಂಡ | ||10||
ಕಾಗಿನೆಲೆ ಕನಕದಾಸ ಹಾಕಿದ ಮುಂಡಗಿ
ಇದ ತಿಳಿದವ ಜಾಣ ಒಡೆದು ಹೇಳಿದವ ಕೋಣ | || 11||

ಪರಮ ಪುರುಷ
ಪರಮ ಪುರುಷ ನೀ ನೆಲ್ಲಿಕಾಯಿ
ಸರಸಿಯೊಳಗೆ ಕರಿ ಕೂಗಲುಕಾಯಿ | | |ಪ||
ಹಿರಿದು ಮಾಡಿದ ಪಾಪ ನುಗ್ಗೆಕಾಯಿ
ಹರಿ ನಿನ್ನ ಧ್ಯಾನ ಬಾಳೆಕಾಯಿ
ಸರುವ ಜೀವರಿಗುಣಿಸಿಯುಂ ಬದನಕಾಯಿ
ಅರಿಷಡ್ವರ್ಗಗಳೊದಗಿಲಿಕಾಯಿ | | |1||
ಕ್ರೂರ ವ್ಯಾಧಿಗಳೆಲ್ಲ ಹೀರೆಕಾಯಿ
ಘೋರ ದುಷ್ಕೃತಗಳು ಸೋರೆಕಾಯಿ
ಭಾರತ ಕಥೆ ಕರ್ಣ ತುಪ್ಪಿರೆಕಾಯಿ
ವಾರಜಾಕ್ಷನೆ ಗತಿಯೆಂದಿಪ್ಪೆಕಾಯಿ | ||2||
ಮುರಹರ ನಿನ್ನವರು ಅವರೆಕಾಯಿ
ಗುರು ಕರುಣಾಮೃತ ಉಣಿಸಿಕಾಯಿ
ವರ ಭಕ್ತವತ್ಸಲನೆಂಬ ಹೆಸರಕಾಯಿ
ಸಿರಿಯಾದಿಕೇಶವ ನಿನ್ನ ನಾಮ ಮೆಣಿಸೆಕಾಯಿ | ||3||

ಮಗನಿಂದ ಗತಿಯುಂಟೆ
ಮಗನಿಂದ ಗತಿಯುಂಟೆ
ನಿಗಮಾರ್ಥ ತತ್ವವಿಚಾರದಿಂದಲ್ಲದೆ | ||ಪ||
ತ್ರಿಗುಣರಹಿತ ಪರಮಾತ್ಮನ ಧ್ಯಾನದಿ
ಹಗಲಿರುಳು ನಿತ್ಯಾನಂದಿಂದ
ಬಿಗಿದು ಪ್ರಪಂಚವಾಸನೆಯ ಬಿಟ್ಟವರಿಗೆ
ಮಗನಿದ್ದರೇನು ಇಲ್ಲದಿದ್ದರೇನಯ್ಯ | ||1||
ಲಲನೆ ಪುರುಷರು ಕೂಡಿ ತಂತಮ್ಮ ಕಾಮಕ್ಕೆ
ಸಲುವಾಗಿ ಕೂಡಲು ಶುಕ್ಲರಕ್ತ
ಮಿಳಿತವಾದ ಪಿಂಡಪೂರ್ವದ ಗತಿಯಿಂದ
ನೆಲಕೆ ಬೀಳಲು ಅದು ಸಲಹಿ ರಕ್ಷಿಪುದೆ | ||2||
ಪರಮ ದುಷ್ಟನಾಗಿ ಮೆರೆದು ಸ್ವಧರ್ಮವ
ಗುರುಹಿರಿಯರ ಸಾಧುಗಳ ನಿಂದಿಸಿ
ಬೆರೆದನ್ಯ ಜಾತಿಯ ಪರನಾರಿಯರ ಘೋರ
ನರಕದಿ ಹಿರಿಯರ ನೂಕಿಸಿ ಬೀಳುವ | ||3||
ಸತ್ಯ ಒಬ್ಬ ಪುತ್ರ ಶಾಂತಿ ಒಬ್ಬ ಪುತ್ರನು
ವೃತ್ತಿನಿಜ್ರಹನೊಬ್ಬ ಸಮಚಿತ್ತವೊಬ್ಬ
ಉತ್ತಮರೀ ನಾಲ್ಕುಮಕ್ಕಳಿದ್ದ ಮೇಲೆ
ಹೆತ್ತರೇನು ಇನ್ನು ಹೆರದಿದ್ದರೇನಯ್ಯ | ||4||
ಸುತರಿಲ್ಲದವರಿಗೆ ಸದ್ಗತಿಯಿಲ್ಲವೆಂಬಂತೆ
ಕೃತಕ ಶಾಸ್ತ್ರವು ಲೌಕಿಕ ಭಾವಕೆ
ಕ್ಷಿತಿಯೊಳು ಕಾಗಿನೆಲೆಯಾದಿಕೇಶವ ಜಗ
ತ್ಪತಿಯ ಸದ್ಗತಿಯಿಲ್ಲದ್ಹೋಗೋದೆ | ||5||

ತಿಳಿಯಬಾರದೆಲ ಮನವೆ
ತಿಳಿಯಬಾರದೆಲ ಮನವೆ ತೀರ್ಥಯಾತ್ರೆಯ ಫಲವು
ಸುಲಭದಲಿ ಸದ್ಗತಿಯ ಸೂರೆಗೊಂಬುವರಿಗಲ್ಲದೆ | ||ಪ||
ನೂರೆಂಟು ತಿರುಪತಿಯ ಯಾತ್ರೆಯನು ಮಾಡುವುದು ನಾನೊಲ್ಲೆ
ವಾರದೊಂದ್ಹೊತ್ತು ಉಪವಾಸಗಳ ನಾನೊಲ್ಲೆ
ರೇಣುವೆಯನುಂಡು ಕಡೆಯ ಬಾಗಿಲ ಕಾಯ್ವ
ಗೌಡಿಯ ಮಗನ ಮಗನಿಗೆ ಮಗನೆನಿಸಬೇಕೆನ್ನನು | || 1||
ಪಂಚಾನ್ನ ಪರಮಾನ್ನ ಶಾಲ್ಯನ್ನ
ಶಾಕಾನ್ನ ನವರಸಾನ್ನಗಳು ಬೇಕೆಂಬ ಆಸೆಯನು ನಾನೊಲ್ಲೆ
ಚಂಚಲದ ಭ್ರಾಂತಿಯನು ಕರೆದೊಯ್ದು
ದಾಸೋಹವನು ಮಾಳ್ಪ ಸುಜನರ ಭಕ್ತರ ಮನೆಯ
ಬಿಂಕದ ಬಾಗಿಲ ಕಾಯ್ವ ಗೌಡಿಯ ಮಗನ ಮಗನಿಗೆ ಮಗನೆನಿಸಬೇಕೆನ್ನನು | || 2||
ಪಟ್ಟೆ ಪಟ್ಟಾವಳಿಯ ಸಾದರದ ಮಡಿಗಳನು
ದುಕೂಲದುಕಾನಿಗಳ ನಾನೊಲ್ಲೆ
ಸುಷ್ಟಿಯೊಳಗನವರತ ನಿಮ್ಮ ಕೀರ್ತನೆಯನು
ಮಾಳ್ಪ ಭಜಕರ ಸ್ತುತಿಕರ ಮಗನ ಮಗನಿಗೆ ಮಗನೆನಿಸಬೇಕೆನ್ನನು | ||3||
ಮುತ್ತಿನನಾಭರಣದ ತಾಳಿ ಪದಕವನು ನಾನೊಲ್ಲೆ
ಈ ಯಜಮಾನತನದಹಂಕಾರವನು ನಾನೊಲ್ಲೆ
ನಿತ್ಯ ಯಾತ್ರೆಯ ಮಾಳ್ಪ ಕಡೆಯ ಬಾಗಿಲ ಕಾಯ್ವ
ಗೌಡಿಯ ಮಗನ ಮಗನಿಗೆ ಮಗನೆನಿಸಬೇಕೆನ್ನನು | | |4||
ಆಶೆಪಾಶಗಳೆಂಬ ಹಲವು ಜಂಜಡಗಳ ನಾನೊಲ್ಲೆ
ಈ ದೇಶಗಳಲ್ಲಿ ತಿರುಗಲೊಲ್ಲೆ
ದೇಶಾಧಿಪತಿ ಕಾಗಿನೆಲೆಯಾದಿಕೇಶವರಾಯನ
ದಾಸೋಹವನು ಮಾಳ್ಪ ಸುಜನರ ಭಕ್ತರ ಮನೆಯ
ಬಿಂಕದ ಬಾಗಿಲ ಕಾಯ್ವ ಗೌಡಿಯ ಮಗನ ಮಗನಿಗೆ ಮಗನೆನೆಸಬೇಕೆನ್ನನು | | 5||

ಕ್ಷಮಿಸುವುದೆಮ್ಮ ತಪ್ಪುಗಳ
ಕ್ಷಮಿಸುವುದೆಮ್ಮ ತಪ್ಪುಗಳ ಸ್ವಾಮಿ
ಕ್ಷಮಶೀಲವೆಂಬ ದಾಸೋಹ ಬಿರುದಿನೊಳು
ಕಮಲಜ ಹರಿರುದ್ರ ವಿಮಲ ಸುರರ ಸಾಧು
ಸಮರಲ್ಲೆಂಬುವ ಶ್ರುತಿ ಸರಿಬಂತು ಸ್ವಾಮಿ | || ಪ||
ಶರಧಿಯೊಳಿರುತಿರ್ಪ ಚರಜೀವಿಗಳ ಗುಣ
ಕರಿಸಿ ಇಷ್ಟೊಂದು ಪೇಳಲುಬಹುದು
ಸಿರವರದನ ಅಂತಕಃರಣಕೊಪ್ಪಿದ ನಿಮ್ಮ
ಇರವನೆ ತಿಳಿಯಲೀ ನರರ ವಶವೇ ಸ್ವಾಮಿ | ||1||
ಆಢಕದೊಳಗಂಬರವನೆ ಅಳೆದು ಲೆಕ್ಕ
ಕೂಡಿದ ಮತಿಯ ಪೇಳಲುಬಹುದು
ರೂಢಿಗೇಶನ ಸೇವೆ ಮಾಡಿದ ಮುಕ್ತರ
ಈಡಿಲ್ಲವೆಂಬುದಿನ್ನಿತರರರಿವರೆ ಸ್ವಾಮಿ | ||2||
ಈ ಶರೀರದೊಳಿಪ್ಪ ಕೇಶಗಳೆಲ್ಲವ
ಬೇಸರದೆಣಿಸಿ ಹೇಳಲುಬಹುದು
ಶೇಷಶಯನ ಕಾಗಿನೆಲೆಯಾದಿಕೇಶವ
ದಾಸರ ಮಹಿಮೆಯೆ ಕಾಣಲಿಕಾಗದೊ ಸ್ವಾಮಿ | | |3||

ಯಾರಿಗಾರುಬಹರು ಸಂಗಡ
ಯಾರಿಗಾರುಬಹರು ಸಂಗಡ ಮುಂದೆ
ಮೀರಿ ನಡೆದ ಸಂಚಿತ ಕರ್ಮವಂತೆಕಂತೆ ಮುಂಗಡ | ||ಪ||
ಬರೆದ ಬರೆಹ ತೊಡೆದ ಮೇಲೆ ಕರೆದರಾಗ ಹೋಗಬೇಕು
ನೆರೆದು ಸುತ್ತಮುತ್ತ ಕುಳಿತ ಪರಮ ಬಂಧುವರ್ಗವೆಲ್ಲ
ಇರಿಸಬೇಡಿ ಸುಡುಸುಡೆಂಬರು ಸುಟ್ಟ ಬಳಿಕ
ಭರದಿ ಬಂದು ಮನೆಯೊಳೆಂಬರು ಪಾಪಿ ಸತ್ತ
ತರುಣಿ ಕೆಟ್ಟಳೆಂದುಕೊಂಬರೈ ಆತ್ಮ | ||1||
ಸತಿಯು ಸುತರು ಪುತ್ರಿ ಮಿತ್ರರತಿಶಯದೊಳು ತಂದೆ ತಾಯಿ
ಅತಿ ವಿನೋದಗೈವ ಭಾವ ಜತನವೆಂಬೊ ಅತ್ತೆ ಮಾವ
ವ್ಯಥೆಗೆ ಹುಟ್ಟಿದಣ್ಣ ತಮ್ಮನು ಈ ದೇಹ ತಾನು
ಪಥವಳಿಗೆ ಮುಟ್ಟಲಮ್ಮರು ಬರಿದೆ ನಾವು
ವ್ಯಥೆಗೆ ಸಿಕ್ಕಿದೆ ಹುಮ್ಮರು ಆತ್ಮ | ||2||
ಕಟ್ಟಿದರ್ಧ ಕರೆವ ಎಮ್ಮೆ ಕೊಟ್ಟಕೊಂಡ ಸಾಲಕದನು
ಪೊಟ್ಟುಮಾಡಿ ಮಕ್ಕಳೊಡನೆ ಅಷ್ಟು ಹೇಳಿ ಸಾವತನಕ
ದುಷ್ಟ ಧರ್ಮವನು ಮರೆವರೆ ಆದಿಕೇಶವನ
ಮುಟ್ಟಿ ಭಜಿಸಿ ಕಡೆಗೆ ಬಿಡುವರೆ ಆತ್ಮ | ||3||

ಮಾಡು ದಾನ ಧರ್ಮ
ಮಾಡು ದಾನ ಧರ್ಮ ಪರ ಉಪಕಾರವ ಮರೆಯದಿರೆಚ್ಚರಿಕೆ
ಕೇಡ ನೆನೆಯಬೇಡ ನಂಬಿದವರ ಮೇಲೆ ಕೆಡುವೆ ನೀನೆಚ್ಚರಿಕೆ | | |ಪ||
ಬಾಳು ಒಡನಾಡಿ ಮುಂದೆ ಕೆಡಲು ಬೇಡ ಮೋಸ ನೋಡೆಚ್ಚರಿಕೆ
ನಾಡೊಳು ಸುಜನರ ನೋಡಿ ನಡೆ ಕಂಡ್ಯ ನಟನೆ ಬೇಡಚ್ಚರಿಕೆ | ||1||
ಚೆನ್ನಾಗಿ ಬದುಕಿದೆ ಗಳಿಸಿದೆ ನಾನೆಂಬ ಹೆಮ್ಮೆ ಬೇಡಚ್ಚರಿಕೆ
ನಿನ್ನಾಯು ಮುಗಿಯಲು ಯಮದೂತರು ಬಂದು ಎಳೆಯುವರೆಚ್ಚರಿಕೆ | ||2||
ಹೆಣ್ಣು ಹೊನ್ನು ಮಣ್ಣು ನಿನ್ನನಗಲಿಸಿ ಹೋಗುವರೆಚ್ಚರಿಕೆ
ಮುನ್ನ ಮಾಡಿದ ಪುಣ್ಯ ನೆನ್ನ್ಹತ್ತಿ ಬರುವುದು ಮುಂದೆ ನೋಡೆಚ್ಚರಿಕೆ | | |3||
ಒಬ್ಬರಂತೆಲ್ಲರ ನೋಡಿ ಸತ್ಕರ್ಮದಿ ಉಬ್ಬು ಬೇಡಚ್ಚರಿಕೆ
ಕಬ್ಬು ಬಿಲ್ಲನ ಪಿತನ ಏಕಾಂತಭಾವದಿ ನೆರೆನಂಬು ಎಚ್ಚರಿಕೆ | ||4||
ತಿಂದೋಡಿ ಬಂಧು ಬಳಗ ತಪ್ಪಿಸಿಕೊಂಬರೆಂದು ನೋಡೆಚ್ಚರಿಕೆ
ಎಂದೆಂದು ಅಗಲದ ಬಂಧು ಶ್ರೀಹರಿ ನಮಗೆಂದು ನೋಡೆಚ್ಚರಿಕೆ | ||5||
ಕಾಲನ ದೂತರು ಯಾವಾಗ ಎಳೆವರೊ ಕಾಣದು ಎಚ್ಚರಿಕೆ
ಬೇಲೂರು ಪುರವಾಸ ನೆಲೆಯಾದಿಕೇಶವನಾಳಾಗು ಎಚ್ಚರಿಕೆ | | |6||

ಆರಿಗಾರಿಲ್ಲವಾಪತ್ಕಾಲದೊಳಗೆ
ಆರಿಗಾರಿಲ್ಲವಾಪತ್ಕಾಲದೊಳಗೆ
ವಾರಿಜಾಕ್ಷನ ನಾಮ ನೆನೆ ಕಂಡ್ಯ ಮನವೆ | | |ಪ||
ಹಸಿದು ಬಳಲುವಾಗ ಹಗೆಯಕೈ ಸಿಕ್ಕಿದಾಗ
ದೆಸೆಗೆಟ್ಟು ಬಹು ವ್ಯಾಧಿಯಲಿ ಇರುವಾಗ
ಅಸಮಾನನಾದಾಗ ಅತಿ ಭೀತಿ ಬರುವಾಗ
ಬಿಸಜನಾಭನ ನಾಮ ನೆನೆ ಕಂಡ್ಯ ಮನವೆ | ||1||
ಸಾಲದವರೆಳೆವಾಗ ಚಾಡಿ ಮಾತಿಗೆ ಭೂಪ
ಘುಳಿಘುಳಿಸುತತಿ ಕೋಪದಲಿ ಇರುವಾಗ
ಮೇಲು ತಾನರಿಯದೆ ನಿಂದೆ ಹೊಂದಿರುವಾಗ
ನೀಲಮೇಘಶ್ಯಾಮನ ನೆನೆ ಕಂಡ್ಯ ಮನವೆ | | |2||
ಪಂಥದಲಿರುವಾಗ ಪದವಿ ತಪ್ಪಿರುವಾಗ
ದಂತಿ ಮದವೇರಿ ಬೆನ್ಹತ್ತಿದಾಗ
ಕಂತುಪಿತ ಕಾಗಿನೆಲೆಯಾದಿಕೇಶವನ
ನಿಶ್ಚಿಂತೆಯಿಂದಲಿ ನೀನು ನೆನೆ ಕಂಡ್ಯ ಮನವೆ | ||3||

ಎಲ್ಲಾರು ಮಾಡುವುದು ಹೊಟ್ಟೆಗಾಗಿ
ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ | ||ಪ||
ವೇದ ಶಾಸ್ತ್ರ ಪಂಚಾಂಗ ಓದಿಕೊಂಡು ಪರರಿಗೆ
ಬೋಧನೆಯ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ | ||1||
ಚಂಡ ಭಟರಾಗಿ ನಡೆದು ಕತ್ತಿ ಢಾಲು ಕೈಲಿ ಹಿಡಿದು
ಖಂಡ ತುಂಡ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ | ||2||
ಅಂಗಡಿಗಳನ್ನೆ ಹೂಡಿ ವ್ಯಂಗ್ಯ ಮಾತುಗಳಾಡಿ
ಭಂಗ ಬಿದ್ದು ಗಳಿಸುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ | ||3||
ಕುಂಟೆ ತುದಿಗೆ ಕೊರಡು ಹಾಕಿ ಹೆಂಟೆ ಮಣ್ಣು ಸಮಮಾಡಿ
ರೆಂಟೆ ಹೊಡೆದು ಬೆಳೆಸುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ | ||4||
ಬೆಲ್ಲದಂತೆ ಮಾತನಾಡಿ ಎಲ್ಲರನ್ನು ಮರುಳುಮಾಡಿ
ಸುಳ್ಳು ಬೊಗಳಿ ತಿಂಬುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ | ||5||
ಕೊಟ್ಟಣವ ಕುಟ್ಟಿಕೊಂಡು ಕಟ್ಟಿಗೆಯ ಹೊತ್ತುಕೊಂಡು
ಕಷ್ಟಮಾಡಿ ತಿಂಬುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ | ||6||
ಸನ್ಯಾಸಿ ಜಂಗಮ ಜೋಗಿ ಮೊಂಡ ಬೈರಾಗಿ
ನಾನಾ ವೇಷಗಳೆಲ್ಲ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ | ||7||
ಹಳ್ಳದಲ್ಲಿ ಕುಳಿತುಕೊಂಡು ಕಲ್ಲು ದೊಣ್ಣೆ ಹಿಡಿದುಕೊಂಡು
ಕಳ್ಳತನವ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ | ||8||
ಅಂದಣ ಪಲ್ಲಕ್ಕಿ ಏರಿ ಮಂದಿ ಮಾರ್ಬಲ ಕೂಡಿ
ಚೆಂದದಿಂದ ಮೆರೆಯುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ | ||9||
ಉನ್ನತ ನೆಲೆಯಾದಿಕೇಶವನ ಧ್ಯಾನವನು
ಮಾಡುವುದು ಮುಕ್ತಿಗಾಗಿ ಆನಂದಕಾಗಿ | ||10||

ಊರಿಗೆ ಬಂದರೆ ದಾಸಯ್ಯ
ಊರಿಗೆ ಬಂದರೆ ದಾಸಯ್ಯ ನಮ್ಮ
ಕೇರಿಗೆ ಬಾ ಕಂಡ್ಯ ದಾಸಯ್ಯ | ||ಪ||
ಕೋಲು ಕೊಳಲು ಕೈಲಿ ದಾಸಯ್ಯ
ಕಲ್ಲಿಗೆ ವರವಿತ್ತೆ ದಾಸಯ್ಯ
ಮಲ್ಲನ ಮರ್ದಿಸಿ ಮಾವನ ಮಡುಹಿದ
ನೀಲಮೇಘ ಶ್ಯಾಮ ದಾಸಯ್ಯ | ||1||
ಕೊರಳೊಳು ವನಮಾಲೆ ದಾಸಯ್ಯ ಬಲು
ಗಿರಿಯನು ನೆಗಹಿದೆ ದಾಸಯ್ಯ
ಇರುಳು ಹಗಲು ನಿನ್ನ ಕಾಣದೆ ಇರಲಾರೆ
ಮರುಳು ಮಾಡುವಂಥ ದಾಸಯ್ಯ | | |2||
ಆದಿನಾರಾಯಣ ದಾಸಯ್ಯ
ಒಂದು ಸಾಸಿರ ನಾಮದ ದಾಸಯ್ಯ
ನಂದಗೋಕುಲದೊಳು ಹುಟ್ಟಿ ಗೋವ್ಗಳ ಕಾಯ್ದ
ಆದಿಕೇಶವರಾಯ ದಾಸಯ್ಯ | ||3||

ಕುಲ ಕುಲವೆಂದು ಹೊಡೆದಾಡದಿರಿ
ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ
ಕುಲದ ನೆಲೆಯನೇನಾದರು ಬಲ್ಲಿರ | || ಪ||
ಹುಟ್ಟದ ಯೋನಿಗಳಿಲ್ಲ ಮೆಟ್ಟದ ಭೂಮಿಗಳಿಲ್ಲ
ಅಟ್ಟು ಉಣ್ಣದ ವಸ್ತುಗಳಿಲ್ಲ
ಗುಟ್ಟು ಕಾಣಿಸ ಬಂತು ಹಿರಿದೇನು ಕಿರಿದೇನು
ನೆಟ್ಟನೆ ಸರ್ವಜ್ಞನ ನೆನೆ ಕಂಡ್ಯ ಮನುಜ | | |1||
ಜಲವೆ ಸಕಲ ಕುಲಕ್ಕೆ ತಾಯಲ್ಲವೆ
ಜಲದ ಕುಲವನೇನಾದರು ಬಲ್ಲಿರಾ
ಜಲದ ಬೊಬ್ಬುಳಿಯಂತೆ ಸ್ಥಿರವಲ್ಲವೀ ದೇಹ
ನೆಲೆಯನರಿತು ನೀ ನೆನೆ ಕಂಡ್ಯ ಮನುಜ | ||2||
ಹರಿಯೆ ಸರ್ವೋತ್ತಮ ಹರಿಯೆ ಸರ್ವೇಶ್ವರ
ಹರಿಮಯವೆಲ್ಲವೆನುತ ತಿಳಿದು
ಸಿರಿ ಕಾಗಿನೆಲೆಯಾದಿಕೇಶವರಾಯನ
ಚರಣ ಕಮಲವ ಕೀರ್ತಿಸುವನೆ ಕುಲಜ | ||3||

ದುರ್ಜನರ ಸಂಗ
ದುರ್ಜನರ ಸಂಗ ಎಂದಿಗೊಲ್ಲೆನು ಹರಿಯೆ ಇಂಥ
ಸಜ್ಜನರ ಸಂಗದೊಳಗಿರಿಸೆನ್ನ ರಂಗ | ||ಪ||
ಉಂಡ ಮನೆಗೆರಡ ಎಣಿಸುವಾತನ ಸಂಗ
ಕೊಂಡಯವ ಪೇಳಿ ಕಾದಿಸುವನ ಸಂಗ
ತಂದೆತಾಯನು ಬೈದು ಜರಿದು ಬಾಧಿಸುವನ ಸಂಗ
ಇಂಥ ನಿಂದಕರ ಸಂಗ ಬಹು ಭಂಗ ರಂಗ | | |1||
ನಂಬಿದ ಠಾವಿನಲಿ ಕೇಡನೆಣಿಪನ ಸಂಗ
ಸಂಭ್ರಮದಿ ಜಗಳ ಕಾಯುವನ ಸಂಗ
ಹಂಬಲಿಸಿ ಭವದ ಸುಖ ಮೆಚ್ಚಿದಾತನ ಸಂಗ
ರಂಭೆ ಸ್ತ್ರೀಯರ ನೋಡಿ ಮೋಹಿಪನ ಸಂಗ | ||2||
ಕುಳಿತಿಹ ಸಭೆಯೊಳು ಕುಹಕ ಮಾಡ್ವನ ಸಂಗ
ಬಲು ಬೇಡೆ ಕೊಡದಿಹ ಲೋಭಿ ಸಂಗ
ಕುಲಹೀನರ ಕೂಡೆ ಸ್ನೇಹ ಬೆಳಿಪನ ಸಂಗ
ಹಲವು ಮಾತಾಡಿ ಆಚರಿಸದವನ ಸಂಗ | ||3||
ಗುರುಸತಿಗೆ ಪರಸತಿಗೆ ಎರಡು ಎಣಿಪನ ಸಂಗ
ಗುರು ನಿಂದೆ ಪರ ನಿಂದೆ ಮಾಳ್ಪನ ಸಂಗ
ಪರಹಿತಾರ್ಥದ ಧರ್ಮ ಪಡೆಯದಾತನ ಸಂಗ
ಇಂತ ಪರಮ ಪಾಮರರ ಸಂಗ ಬಹು ಭಂಗ ರಂಗ | ||4||
ಆಗಮ ಮಹಾತ್ಮೆಯನು ಅರಿಯದಾತನ ಸಂಗ
ಯೋಗಿಜನ ಗುರುಗಳನು ನಿಂದಿಪನ ಸಂಗ
ರಾಗದ್ವೇಷಾದಿಯಲಿ ಮುಣುಗೇಳುವನ ಸಂಗ
ಕಾಗಿನೆಲೆಯಾದಿಕೇಶವ ಬಿಡಿಸೀ ಭಂಗ | ||5||

ಏಕೆ ನುಡುಗಿದೆ ತಾಯೆ
ಏಕೆ ನುಡುಗಿದೆ ತಾಯೆ ಭೂಮಿ ನಡು ರಾತ್ರಿಯೊಳು
ಪೊಡವಿಗೊಡೆಯನ ರಾಣಿ ಪರಮ ಕಲ್ಯಾಣಿ | | |ಪ||
ಗುರುಹಿರಿಯನು ಕಂಡು ಮರುಕಿಸುವ ಮೊರೆಯನು
ಅರೆಮತಿಗೆ ಒಂದಂಗ ಭಾಷೆಗಳ ಮಾಡಿ
ಚರಣಕೆರಗದ ಮನುಜರನಿರಿಸಬಾರದೆಂದೆನುತ
ಮರ ಮುರಿದು ಒರಗಿ ಸಾಯಲಿ ಎಂದು ನಡುಗಿದೆಯ | ||1||
ಉತ್ತಮರ ಹೊಟ್ಟೆಯೊಳು ಬಗುಳೊ ಶ್ವಾನನು ಹುಟ್ಟಿ
ಹೆತ್ತವರ ನಿರ್ಬಂಧಕೊಳಗುಮಾಡಿ
ಅತ್ತೆ ಮಾವನ ಕೀರ್ತಿಯನು ಕೊಂಡಾಡಧಮರ
ಹೊತ್ತು ಇರಲಾರನೆಂದು ಮತ್ತೆ ನಡುಗಿದೆಯ | ||2||
ಕಳ್ಳತನವನು ಕಲಿತು ಕಾಲೋಚಿತವ ಕೇಳ್ದು
ಸುಳ್ಳು ಮಾತುಗಳಾಡಿ ಒಡಲ ಪೊರೆವಾತ ತಾಳಿ
ಕೊಳ್ಳದೆನ್ನ ಅವಗುಣಂಗಳ ಬಿಟ್ಟು ಇಂಥ
ಸುಳ್ಳು ಮನುಜರ ಹೊರಲಾರೆನೆಂದು ನಡುಗಿದೆಯ | ||3||
ಮುರಹರನ ಸ್ಮರಣೆಯನು ಮಾಡದೆ ಕಲಿಯುಗದಿ
ಸಲೆ ಭಕ್ತಿಯಿಂ ಶಾಸ್ತ್ರವನೋದದೆ
ಲಲನೆಯರಮೇಲೆ ದೃಷ್ಟಿಯ ಬಿಡುವ ಹೊಲೆಯರನು
ಹೊರಲಾರನೆಂದು ನೀನೊಲಿದು ನಡುಗಿದೆಯ | ||4||
ಧರೆಯೊಳಗೆ ಕರ್ಮಿಗಳು ಹೆಚ್ಚಿ ಕವಿತ್ವವ ಕಲಿತು
ನರಕುರಿಗಳೆಲ್ಲ ನಡೆಗೆಟ್ಟರೆಂದು
ಗುರುವೆ ಕೇಳಯ್ಯ ಕನಕಪ್ರಿಯ ತಿರುಪತಿಯ
ಗಿರಿಯಾದಿಕೇಶವನೆ ಒಲಿದು ನಿಲ್ಲಿಸಿದ | || 5||

ಡೊಂಕು ಬಾಲದ ನಾಯಕರೇ
ಡೊಂಕು ಬಾಲದ ನಾಯಕರೇ ನೀವೇನೂಟ ಮಾಡಿದಿರಿ | ||ಪ||
ಕಣಕ ಕುಟ್ಟೋ ಅಲ್ಲಿಗೆ ಹೋಗಿ ಹಣಕಿ ಇಣಕಿ ನೋಡುವಿರಿ
ಕಣಕ ಕುಟ್ಟೋ ಒನಕಿಲೆ ಹೊಡೆದರೆ ಕುಂಯಿ ಕುಂಯಿ ರಾಗವ ಪಾಡುವಿರಿ | | |1||
ಹುಗ್ಗಿ ಮಾಡೋ ಅಲ್ಲಿಗೆ ಹೋಗಿ ತಗ್ಗಿ ಬಗ್ಗಿ ನೋಡುವಿರಿ
ಹುಗ್ಗಿ ಮಾಡೋ ಸೌಟಲಿ ಹೊಡೆದರೆ ಕುಂಯಿ ಕುಂಯಿ ರಾಗವ ಪಾಡುವಿರಿ | ||2||
ಹಿರಿಯ ಹಾದಿಲಿ ಓಡುವಿರಿ ಕರೇ ಬೂದಿಯಲಿ ಹೊರಳುವಿರಿ
ಸಿರಿ ಕಾಗಿನೆಲೆಯಾದಿಕೇಶವರಾಯನ ಸ್ಮರಿಸದವರ ಗತಿ ತೋರುವಿರಿ | | |3||

ಸಾಧು ಸಜ್ಜನ
ಸಾಧು ಸಜ್ಜನ ಸತ್ಯಗುಣಕಿದಿರುಂಟೆ
ಆದಿಕೇಶವನ ಪೋಲುವ ದೈವವುಂಟೆ | ||ಪ||
ಸತ್ಯವ್ರತವುಳ್ಳವಗೆ ಮೃತ್ಯು ಭಯವುಂಟೆ
ಚಿತ್ತ ಶುದ್ಧಿಯಿಲ್ಲದವಗೆ ಪರಲೋಕವುಂಟೆ
ಈ ತನು ಹಾರೈಸುವಗೆ ಮುಕ್ತಿಯೆಂಬೋದುಂಟೆ
ಆತ್ಮನಿವೇದನಕಧಿಕ ಭಕ್ತಿಯುಂಟೆ | ||1||
ಸುತಲಾಭಕಿನ್ನಧಿಕ ಲಾಭವುಂಟೆ
ಮತಿರಹಿತನೊಳು ಚತುರತ್ವವುಂಟೆ
ಪತಿಸೇವೆಗಿಂತಧಿಕ ಸೇವೆಯುಂಟೆ
ಸತಿಯಿಲ್ಲದವಗೆ ಸಂಪದವೆಂಬುದುಂಟೆ | || 2||
ಪಿಸುಣಗಿನ್ನಧಿಕ ಹೊಲೆಯನುಂಟೆ
ವಸುಧೆಯೊಳನ್ನ ದಾನಕೆ ಸರಿಯುಂಟೆ
ಅಸನವ ತೊರೆದ ಯೋಗಿಗೆ ಭಯವುಂಟೆ
ವ್ಯಸನವಿರುವ ನೃಪನಿಗೆ ಸುಖವುಂಟೆ | || 3||
ಧನಹೀನಗಿನ್ನಧಿಕ ಹೀನನುಂಟೆ
ಮನವಂಚಕ ಕಪಟಿಗೆ ನೀತಿಯುಂಟೆ
ಸನುಮಾನಿಸುವ ಒಡೆಯನೆಂಬೋಗೆ ಬಡತನವುಂಟೆ
ವಿನಯವಾಗಿಹ ಸಂಗದೊಳು ಭಂಗವುಂಟೆ | ||4||
ಹರಿಭಕ್ತಿಯಿಲ್ಲದವಗೆ ಪರಲೋಕವುಂಟೆ
ಪರಮ ಸಾತ್ತ್ವಿಕ ಗುಣಕ್ಕೆ ಪಿರಿದುಂಟೆ
ಗುರುಸೇವೆಗಿಂತಧಿಕ ಸೇವೆಯುಂಟೆ
ವರದಾದಿಕೇಶವನಲ್ಲದೆ ದೈವವುಂಟೆ | | |5||

ಆರು ಸಂಗಡ ಬಾಹೋರಿಲ್ಲ
ಆರು ಸಂಗಡ ಬಾಹೋರಿಲ್ಲ
ನಾರಾಯಣ ನಾಮ ನೆರೆಬಾಹೋದಲ್ಲದೆ | ||ಪ||
ಹೊತ್ತು ನವಮಾಸ ಪರ್ಯಂತ ಗರ್ಭದಲಿ
ಅತ್ಯಂತ ನೋವು ಬೇನೆಗಳಿಂದಲಿ
ತುತ್ತು ವಸ್ತ್ರವನಿಕ್ಕಿ ಸಲಹಿದಾ ತಾಯ್ತಂದೆ
ಹೊತ್ತುಗಳೆವರಲ್ಲದೆ ಬೆನ್ಹತ್ತಿ ಬಹರೆ | ||1||
ಗುರು ಬಂಧು ಬುಧಜನರು ನಿಂತಗ್ನಿ ಸಾಕ್ಷ್ಯಾಗಿ
ಕರವಿಡಿದು ಧಾರೆಯನೆರೆದುಕೊಂಡ
ತರುಣಿ ಇನಿಯನ ಹರಣ ಹೋಗಲು ತಾ ಕಂಡು
ಬರುವುದಕ್ಕಂಜಿ ದಾರುಗತಿಯೆಂಬುವಳು | || 2||
ಮನೆ ಮಕ್ಕಳು ತಮ್ಮ ಧನಕೆ ಬಡಿದಾಡುವರು
ಧನಕಾಗಿ ನಿನ್ನನೆ ನಂಬಿದವರು
ಅನುಮಾನವೇಕೆ ಜೀವನ ತೊಲಗಿದಾಕ್ಷಣದಿ
ಮುನ್ನೊಂದು ಅರೆಘಳಿಗೆ ನಿಲ್ಲಗೊಡರು | || 3||
ಸುತ್ತಲೆ ಕುಳ್ಳಿರ್ದ ಮಿತ್ರ ಬಾಂಧವರೆಲ್ಲ
ಹೊತ್ತು ಹೋದೀತು ಹೊರಗೆ ಹಾಕೆನುವರು
ಹಿತ್ತಲಾ ಕಸಕಿಂತ ಅತ್ತತ್ತ ಈ ದೇಹ
ಹೊತ್ತುಕೊಂಡೊಯ್ದು ಅಗ್ನಿಯೊಳು ಬಿಸುಡುವರು | | 4||
ಹರಣ ಹಿಂಗದ ಮುನ್ನ ಹರಿಯ ಸೇವೆಯ ಮಾಡಿ
ಪರಗತಿಗೆ ಸಾಧನವ ಮಾಡಿಕೊಳ್ಳಿ
ಕರುಣನಿಧಿ ಕಾಗಿನೆಲೆಯಾದಿಕೇಶವನ
ನಿರುತದಲಿ ನೆನೆನೆನೆದು ಸುಖಿಯಾಗೊ ಮರುಳೆ | ||5||

ಎಳ್ಳುಕಾಳಿನೊಷ್ಟು ಭಕ್ತಿ ಎನ್ನೊಳಗಿಲ್ಲ
ಎಳ್ಳುಕಾಳಿನೊಷ್ಟು ಭಕ್ತಿ ಎನ್ನೊಳಗಿಲ್ಲ
ಕಳ್ಳರಿಗೆ ಕಳ್ಳನಂತೆ ಬೆಳ್ಳಕ್ಕಿಯಂದದಿ ಡಂಭ | || ಪ||
ಗಾಣದೆತ್ತಿನಂತೆ ಕಣ್ಣಮುಚ್ಚಿ ಪ್ರದಕ್ಷಿಣೆಯ ಮಾಡಿ
ಕಾಣದೆ ತಿರುಗುವೆನೆರಡು ಕಣ್ಣಿದ್ದು ನಾನು
ಮಾಣಿಕ್ಯದ ರಾಶಿಯಲ್ಲಿ ಅಂಧಕರೈವರು ಕೂಡಿ
ಆಣಿಮುತ್ತ ಹಿಡಿದು ಹಿಡಿದು ಬಿಡುವಂತೆ ಭ್ರಮಿತನಯ್ಯ | ||1||
ಗಂಡುಮುಳುಕನ್ಹಕ್ಕಿಯಂತೆ ಕಂಡ ಕಂಡ ನೀರ ಮುಳಗಿ
ಮಂಡೆ ಶೂಲೆ ಬಾಹೋದಲ್ತೆ ಗತಿಯ ಕಾಣೆನೊ
ಮಂಡೂಕನಂದದಿ ನೀರತಡಿಯಲ್ಲಿ ಕುಳಿತು ಹಾಗೆ
ಮುಂಡ ಮುಸುಗನಿಕ್ಕಿ ಮೂಗು ಹಿಡಿದು ಬಿಡುವೆ ಭ್ರಮಿತನಯ್ಯ | | |2||
ಇಕ್ಕಳದ ಕೈಲಿ ಪಿಡಿದ ಕಾದ ಕಬ್ಬಿಣದಂತೆ
ಸಿಕ್ಕಿ ಸಿಡಿಮಿಡಿಗೊಂಬೆ ಗತಿಯ ಕಾಣದೆ
ಹೊಕ್ಕಳ್ಹೂವಿನ ಕನಕನೊಡೆಯನಾದಿಕೇಶವನ
ಮರೆಹೊಕ್ಕೆ ಎನ್ನ ಮನ್ನಿಸೊ ನೀ ದೇವ ದೇವೋತ್ತಮ | | |3||

ನೀ ಮಾಯೆಯೊಳಗೊ
ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ
ನೀ ದೇಹದೊಳಗೊ ನಿನ್ನೊಳು ದೇಹವೊ ಹರಿಯೆ | ||ಪ||
ಬಯಲೊಳಗೆ ಆಲಯವೊ ಆಲಯದೊಳಗೆ ಬಯಲೊ
ಬಯಲು ಆಲಯವೆರಡು ನಯನದೊಳಗೊ
ನಯನ ಬುದ್ಧಿಯೊಳಗೊ ಬುದ್ಧಿ ನಯನದೊಳಗೊ
ನಯನ ಬುದ್ಧಿಗಳೆರಡು ನಿನೊಳಗೊ ಹರಿಯೆ | ||1||
ಸವಿಯು ಸಕ್ಕರೆಯೊಳಗೊ ಸಕ್ಕರೆಯು ಸವಿಯೊಳಗೊ
ಸವಿಯು ಸಕ್ಕರೆ ಎರಡು ಜಿಹ್ವೆಯೊಳಗೊ
ಜಿಹ್ವೆ ಮನಸಿನೊಳಗೊ ಮನಸು ಜಿಹ್ವೆಯೊಳಗೊ
ಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ | ||2||
ಕುಸುಮದಲಿ ಗಂಧವೊ ಗಂಧದಲಿ ಕುಸುಮವೊ
ಕುಸುಮ ಗಂಧಗಳೆರಡು ಆಘ್ರಾಣದೊಳಗೊ
ಅಸಮಭವ ಕಾಗಿನೆಲೆಯಾದಿಕೇಶವರಾಯ
ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೊ ಹರಿಯೆ | | |3||

ಒಲ್ಲೆನೆಂದರಾಗುವುದೆ
ಒಲ್ಲೆನೆಂದರಾಗುವುದೆ ಅಲ್ಲಿ ಪಡೆದು ಬಂದುದ
ನೆಲ್ಲವನುಂಡು ತೀರಿಸಬೇಕು ಹರಿಯೆ | ||ಪ||
ತಂದೆತಾಯಿ ಬಸಿರಿಂದ ಬಂದ ದಿನ ಮೊದಲಾಗಿ
ಒಂದಿಷ್ಟು ಸುಖವನೆ ಕಾಣೆ ನಾ ಹರಿಯೆ
ಬಂದುದನೆಲ್ಲವನುಂಡು ತೀರಿಸದೆ ಭ್ರಮೆ
ಗೊಂಡ ಮೇಲೇನುಂಟು ಹಗೆಯ ಜೀವನವೆ | | 1||
ಎಮ್ಮರ್ಥ ಎಮ್ಮ ಮನೆ ಎನ್ನ ಮಕ್ಕಳು ಎಂಬ
ಹೆಮ್ಮೆ ನಿನಗೇತಕೊ ವ್ಯರ್ಥ ಜೀವನವೆ
ಬ್ರಹ್ಮ ಫಣೆಯೊಳು ಬರೆದ ವಿಧಿಯು ತಪ್ಪುವುದುಂಟೆ
ಸುಮ್ಮನೆ ಇರುಕಂಡ್ಯ ಹಗೆಯ ಜೀವನವೆ | ||2||
ಅಂತರಂಗದಲ್ಲಿ ಅರ್ಧದೇಹದ ಒಳಗೆ
ಚಿಂತೆಯಾತಕೊ ನಿನಗೆ ಪಂಚರೈವರೊಳಗೆ
ಕಂತುಪಿತ ಕಾಗಿನೆಲೆಯಾದಿಕೇಶವರಾಯ
ಅಂತರಂಗದಿ ನೆಲೆಗೊಳುವ ತನಕ | ||3||

ಏನು ಬರುವುದೊ
ಏನು ಬರುವುದೊ ಸಂಗಡೇನು ಬರುವುದೊ
ದಾನಧರ್ಮ ಮಾಡು ಬಹು ನಿದಾನಿ ಎನಿಸಿಕೊಳ್ಳೊ ಮನುಜ | ||ಪ||
ಹೆಂಡರಿಲ್ಲ ಮಕ್ಕಳಿಲ್ಲ ಮಂಡೆ ತುಂಬ ಬಂಧುಬಳಗ
ಕಂಡು ಬಿಡಿಸಿಕೊಂಬರಾರೊ ದಿಂಡಿಯಮನ ದೂತರೆಳೆಯೆ
ಬಂಡಿ ತುಂಬ ಇದ್ದ ಧನವು ಹಿಂದೆ ಉಳಿವುದಲ್ಲೊ ನಿನ್ನ
ಪೊಂದಿಕೊಂಡು ಬರುವ ವಸ್ತು ಕೀರ್ತಿ ಅಪಕೀರ್ತಿ ಎರಡೆ | ||1||
ಎನ್ನದೆಂದು ತನ್ನದೆಂದು ಹೊನ್ನು ಹೆಣ್ಣು ಮಣ್ಣಿಗಾಗಿ
ಘನ್ನವಾಗಿ ಬಾಯಬಿಡುತ ಬಂದೆ ಮೋಹವಾ
ಸನ್ನುತದಲಿ ಪರಹಿತಾರ್ಥ ಮಾಡಿ
ಪುಣ್ಯ ಪಡೆಯಿನಿತು ಮುಂದೆ ಕಿರುಕುಳದ ಕೂಪದಲ್ಲಿ ಕೆಡಲು ಬೇಡ ಮನುಜ| ||2||
ಬತ್ತಲಿಂದ ಬರುತಿಹರು ಬತ್ತಲಿಂದ ಪೋಗುತಿಹರು
ಕತ್ತಲೆ ಕಾಲ ಬೆಳಕು ಮಾಡೆ ಹೊತ್ತ ಕಳೆದರು
ಸತ್ತರಿಲ್ಲ ಹೆತ್ತರಿಲ್ಲ ಹೊತ್ತುಕೊಂಡು ಹೋದರಲ್ಲೆ
ಮತ್ತೆ ದೇಹ ಮಣ್ಣುಗೂಡಿದಂತೆ ಕೆಡಲು ಬೇಡ ಮನುಜ | ||3||
ಕಟ್ಟಲಿಲ್ಲ ಬಿಚ್ಚಲಿಲ್ಲ ಕಷ್ಟಪಟ್ಟು ಬಾಳಲಿಲ್ಲ
ಸುಟ್ಟುಸುಟ್ಟು ಸುಣ್ಹದ್ಹರಳು ಆಯಿತೀ ಕಾಯ
ಬಿಟ್ಟು ಹೋಗುವಾಗ ಬೊಟ್ಟ ಬಟ್ಟೆ ನಿನಗೆ ಹೊಂದಲಿಲ್ಲ
ದೃಷ್ಟಿ ನೋಟ ಕಟ್ಟಕಡೆಗೆ ಬಟ್ಟ ಬಯಲಾಗುತಿದೆ | ||4||
ಗುರುವದೋರಿನಿಂದ ನೀನು ಬರಿದೆ ಕಾಲ ಕಳೆದೆ
ಮುಂದರಿದು ನೋಡು ನರರ ತನುವು ದೊರಕಲರಿಯದು
ನೆರೆ ಮಹಾಮೂರ್ತಿ ಒಡೆಯ ಪರಮಗುರು ಚೆನ್ನಾದಿಕೇಶವ
ಚರಣ ಭಜಿಸಿ ಚಂಚಲವಳಿದು ವರವ ಪಡೆದು ಹೊಂದು ಮುಕುತಿ | ||5||

ತಲ್ಲಣಿಸದಿರು ಕಂಡ್ಯ ತಾಳು ಮನವೆ
ತಲ್ಲಣಿಸದಿರು ಕಂಡ್ಯ ತಾಳು ಮನವೆ
ಎಲ್ಲರನು ಸಲಹುವನು ಶ್ರೀನಿವಾಸ | ||ಪ||
ಬೆಟ್ಟದಾ ತುದಿಯಲ್ಲಿ ಹುಟ್ಟಿದ ವೃಕ್ಷಕ್ಕೆ
ಕಟ್ಟೆಯನು ಕಟ್ಟಿ ನೀರೆರೆದವರು ಯಾರೊ
ಹುಟ್ಟಿಸಿದ ದೇವ ತಾ ಹೊಣೆಗಾರನಾಗಿರಲು
ಗಟ್ಯಾಗಿ ರಕ್ಷಿಪನು ಇದಕೆ ಸಂಶಯವಿಲ್ಲ | ||1||
ನವಿಲಿಗೆ ಚಿತ್ರ ಬರೆದವರು ಯಾರೊ
ಪವಳದ ಲತೆಗೆ ಕಂಪಿಟ್ಟವರು ಯಾರೊ
ಸವಿಮಾತಿನರಗಳಿಗೆ ಹಸುರು ಬರೆದವರು ಯಾರೊ
ಇವೆಲ್ಲ ಮಾಡಿದ ದೇವ ಸಾಕಲಾರದೆ ಬಿಡುವನೆ | ||2||
ಕಲ್ಲಿನಲಿ ಹುಟ್ಟಿ ತಾ ಕೂಗುವ ಕಪ್ಪೆಗೆ
ಅಲ್ಲೆ ಆಹಾರವ ತಂದೀಯುವವರಾರು
ಬಲ್ಲಿದನು ನೆಲೆಯಾದಿಕೇಶವರಾಯ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ | | |3||

ಬಾಯಿ ನಾರಿದ ಮೇಲೆ
ಬಾಯಿ ನಾರಿದ ಮೇಲೆ ಏಕಾಂತವೆ
ತಾಯಿ ತೀರಿದ ಮೇಲೆ ತೌರಾಸೆಯೆ | ||ಪ||
ಕಣ್ಣು ಕೆಟ್ಟ ಮೇಲೆ ಕಡುರೂಪ ಚೆಲ್ವಿಕೆಯೆ
ಬಣ್ಣಗುಂದಿದ ಮೇಲೆ ಬಹುಮಾನವೆ
ಪುಣ್ಯ ತೀರಿದ ಮೇಲೆ ಪರಲೋಕ ಸಾಧನವೆ
ಸುಣ್ಣವಿಲ್ಲದ ವೀಳ್ಯ ಅದು ಸ್ವಾಮಯವೆ | ||1||
ಕಿಲುಬಿನಾ ಬಟ್ಟಲೊಳು ಹುಳಿ ಕಲಸಿ ಉಣಬಹುದೆ
ಚಳಿಯುರಿಗೆ ಚಂದನದ ಲೇಪ ಹಿತವೆ
ಮೊಲೆಬಿದ್ದ ಹೆಣ್ಣಿನೊಳು ಮೋಹಕ್ಕೆ ಸೊಗಸಹುದೆ
ಬೆಲೆಬಿದ್ದ ಸರಕಿನೊಳು ಲಾಭ ಉಂಟೆ | ||2||
ಪಥ್ಯ ಸೇರದ ಮೇಲೆ ನಿತ್ಯ ಸುಖವೆನಬಹುದೆ
ಸತ್ತ್ವ ತಗ್ಗಿದ ಮೇಲೆ ಸಾಮರ್ಥ್ಯವೆ
ಪೃಥ್ವಿಯೊಳು ಕಾಗಿನೆಲೆಯಾದಿಕೇಶವ ನಿನ್ನ
ಭಕ್ತಿಯಿಲ್ಲದ ನರಗೆ ಮುಕ್ತಿಯಹುದೆ | || 3||

ಅಹುದಾದರಹುದೆನ್ನಿ
ಅಹುದಾದರಹುದೆನ್ನಿ ಅಲ್ಲವಾದರಲ್ಲವೆನ್ನಿ
ಬಹು ಜನರು ನೆರೆ ತಿಳಿದು ಪೇಳಿ ಮತ್ತಿದನು | ||ಪ||
ದೇವರಿಲ್ಲದ ಗುಡಿಯು ಪಾಳುಬಿದ್ದಂಗಡಿಯು
ಭಾವವಿಲ್ಲದ ಭಕುತಿ ಅದು ಕುಹಕಯುಕುತಿ
ಹೇವವಿಲ್ಲದ ಹೆಣ್ಣು ಗಜುಗ ಬೆಳೆದ ಕಣ್ಣು
ಸೇವೆಯರಿಯದ ಧಣಿಯು ಕಲ್ಲು ಖಣಿಯು | ||1||
ಧರ್ಮವಿಲ್ಲದ ಅರಸು ಮುರಿದ ಕಾಲಿನ ಗೊರಸು
ನಿರ್ಮಲಿಲ್ಲದ ಮನಸು ತಾ ಕೊಳಚೆ ಹೊಲಸು
ಶರ್ಮವಿಲ್ಲದ ಗಂಡು ಕರಿಯ ಒನಕೆಯ ತುಂಡು
ಮರ್ಮವಿಲ್ಲದ ಮಾತು ಒಡಕುಮಡಕೆ ತೂತು | | |2||
ಮಕ್ಕಳಿಲ್ಲದ ಸಿರಿಯು ಕೊಳೆತ ತೆಂಗಿನ ತುರಿಯು
ಸೌಖ್ಯವಿಲ್ಲದ ಊಟ ಅದು ಕಾಳಕೂಟ
ಒಕ್ಕಲಿಲ್ಲದ ಊರು ಕೊಳೆತು ನಾರುವ ನೀರು
ಸೊಕ್ಕಿ ನಡೆಯುವ ಭೃತ್ಯ ಅವ ಕ್ರೂರಕೃತ್ಯ | || 3||
ಕಂಡು ಕರೆಯದ ನಂಟ ಒಡಕು ಹರವಿಯ ಕಂಠ
ಉಂಡು ನಗದಿಹ ಮೋರೆ ಅದು ಕಹಿಯ ಸೋರೆ
ದಂಡಿಗಂಜುವ ಬಂಟ ಮೊನೆಯು ಕೆಟ್ಟಿಹ ಕಂಟ
ಗಂಡಗಂಜದ ನಾರಿ ಅವಳೆ ಹೆಮ್ಮಾರಿ | ||4||
ಬಿಟ್ಟು ನಡೆಯುವ ಗೆಣೆಯು ಹರಕು ತೊಗಲಿನ ಮಿಣಿಯು
ಕೊಟ್ಟು ಪೇಳುವ ದಾತ ಅವ ಹೀನಜಾತ
ಸೃಷ್ಟಿಯೊಳು ಕಾಗಿನೆಲೆಯಾದಿಕೇಶವನಂಘ್ರಿ
ಮುಟ್ಟಿ ಭಜಿಸದ ನರನು ಅವನೆ ವಾನರನು | || 5||

ಎನ್ನ ನುಡಿ ಪುಸಿಯಲ್ಲ
ಎನ್ನ ನುಡಿ ಪುಸಿಯಲ್ಲ ಈ ಜಗದೊಳು | || ಪ||
ಅರವಿಂದವಿಲ್ಲದಿಹ ಕೊಳವು ತಾ ಕಂಗೊಳದು
ಹರಿಣಾಂಕನಿಲ್ಲದಹ ಇರುಳು ಮರುಳು
ಸ್ವರಭೇದವಿಲ್ಲದಿಹ ಸಂಗೀತ ವಿಂಗೀತ
ಸರಸವಿಲ್ಲದ ಸತಿಯ ಭೋಗ ತನರೋಗ | ||1||
ಪಂಥಪಾಡುಗಳನರಿಯದ ಬಂಟನವ ತುಂಟ
ಅಂತರವರಿಯದಾ ವೇಶಿ ಹೇಸಿ
ದಂತಿಯಿಲ್ಲದ ಅರಸು ಮುರಿದ ಕಾಲಿನ ಗೊರಸು
ಅಂತಸ್ಥವಿಲ್ಲದ ಪ್ರಧಾನಿ ಮದ್ಯಪಾನಿ | | |2||
ಮಾಗಿಯಲಿ ಸತಿಯನಗಲಿದ ಕಾತನವ ಭ್ರಾಂತ
ಪೂಗಣಿಯ ಗೆಲಿಯದಿಹ ನರ ಗೋಖರ
ಭೋಗಿಸದೆ ಇಹಪರಕೆ ಗಳಿಸಿದರ್ಥ ಅಪಾರ್ಥ
ಕಾಗಿನೆಲೆಯಾದಿಕೇಶವನ ಮುಕ್ತ | | |3||

ಸದರವಿಲ್ಲವೆ ನಿಜ ಯೋಗ
ಸದರವಿಲ್ಲವೆ ನಿಜ ಯೋಗ ಸಚ್ಚಿದಾನಂದ
ಗುರು ದಿಗಂಬರನ ಸಂಯೋಗ | | |ಪ||
ಅಡಿಯನಂಬರ ಮಾಡದನಕ ಅಗ್ನಿ
ಕಿಡಿಯೆದ್ದು ಮೇಲಣ ಕೂಡನುಕ್ಕದನಕ
ಒಡನೆರಡೊಂದಾಗದನಕ ಅಲ್ಲಿ
ಒಡಗೂಡಿ ಅಂಗನೆ ನುಡಿ ಕೇಳದನಕ | || 1||
ನಾಡಿ ಹಲವು ಕಟ್ಟದನಕ ಬ್ರಹ್ಮ
ನಾಡಿಯೊಳು ಪೊಕ್ಕು ಮುಳುಗಾಡದನಕ
ಕಾಡುವ ಕಪಿ ಸಾಯದನಕ ಸತ್ತ
ಓಡಿನೊಳಗೆ ರಸ ಕಟ್ಟಿದನಕ | | |2||
ಅರಿಕುಂಭ ಕಾಣದನಕ ಅಲ್ಲಿ
ಸಾಧಿಸಿ ಭೇದಿಸಿ ಸವಿಯುಣ್ಣದನಕ
ಭೇದವು ಲಯವಾಗದನಕ ಬಾಡ
ದಾದಿಕೇಶವ ನಿಮ್ಮ ನೆಲೆಗಾಣದನಕ | | |3||

ವ್ಯರ್ಥವಾಯಿತಲ್ಲ ಜನ್ಮವು
ವ್ಯರ್ಥವಾಯಿತಲ್ಲ ಜನ್ಮವು ಸಾರ್ಥಕವಾಗಲಿಲ್ಲ
ಅರ್ಥದಾಸೆಯಲಿ ಪೃಥ್ವಿಯೊಳಗೆ ಸುತ್ತಿ
ಮತ್ತನಾಗಿ ಬಲು ಕೃತ್ಯಗಳನು ಮಾಡಿ | ||ಪ||
ಹರಿಯ ನೆನೆಯಲಿಲ್ಲ ಹರುಷದಿ ಗರುವ ಪುಟ್ಟಿತಲ್ಲ
ಪರಮ ಮೂಢರಲಿ ನಿರುತ ಸಂಗ ಮಾಡಿ
ಗುರುಹಿರಿಯರ ದಯ ದೊರೆಯದೆ ಸುಮ್ಮನೆ | ||1||
ಏನು ಪೇಳಲೇನು ಎನಗೆ ಹೀನ ಬಿಡದ ಮುನ್ನ
ಶ್ವಾನಗಿಂತ ಬಲು ಮಾನಗೆಟ್ಟು ನಾ
ದೀನನಾಗಿ ಮನೆಮನೆಗಳ ತಿರುಗಿ | | |2||
ಭಾಗವತರ ಪಾದಕ್ಕೊಂದಿನ ಬಾಗಿ ನಡೆಯಲಿಲ್ಲ
ರಾಗರಂಗು ಭಕ್ತಿಭಾವದೊಳು
ಬೀಗಿ ಚನ್ನಕೇಶವನನು ನೆನೆಯದೆ | ||3||

ದಾಸರ ದಾಸ
ದಾಸಾರ್ಯರ ದಾಸರ ದಾಸ ನಾನು ಬಾಡದೀಶ ಕಾಯ್ದುಕೊಳ್ಳೊ | ||ಪ||
ಗುಟ್ಟು ಮಾಡಿಕೊಂಡರದೆ ಕಂಡವರಿಗೆ ಕಾರ್ಪಣ್ಯ
ಬಟ್ಟು ಬಡವನಾದೆನಲ್ಲಯ್ಯ
ಕೈಗೊಟ್ಟು ರಕ್ಷಿಸುವರಿಲ್ಲ ಜನ್ಮ ಜನ್ಮಂಗಳಲಿ
ಪುಟ್ಟುವಂತೆ ಮಾಡಬೇಡ ಮಾಧವ ಮನ್ನಿಸೊ ಎನ್ನ | || 1||
ಮಡದಿ ಮಕ್ಕಳೆಂಬ ಪಾಶ ಮಮತೆ ಎನ್ನ ಕೊರಳು ಸುತ್ತಿ
ಬಿಡದೆ ಸುತ್ತಿಕೊಂಡಿತಲ್ಲಯ್ಯ
ಪಡೆದ ದ್ರವ್ಯವೆಲ್ಲ ವಸ್ತು ಕ್ಷೇತ್ರಂಗಳ ಕಾಣದೆ ನಿತ್ಯ
ನಡೆದು ವಿಸ್ತರಿಸಲಾರೆ ನೀಲಮೇಘಶ್ಯಾಮ ನಿನ್ನ | | |2||
ಘೋರ ಸಂಸಾರವೆಂದೆಂಬ ವಾರಿಧಿಯೊಳಗೆ ಬಿದ್ದು
ಪಾರುಗಾಣದನಾದೆನಲ್ಲಯ್ಯ
ಧೀರ ಕರ್ತನಾದ ಬಾಡದಾದಿಕೇಶವೇಶ ಸರ್ವ
ಸಾರಿದೆ ಸಲಹೊ ಎನ್ನುದ್ಧಾರಿ ಮುದ್ದುಕೃಷ್ಣ ನಿನ್ನ | | |3||

ಹೂವ ತರುವರ ಮನೆಗೆ
ಹೂವ ತರುವರ ಮನೆಗೆ ಹುಲ್ಲ ತರುವೆ
ಆವ ಪರಿಯಲಿ ಸಲಹೊ ದೇವ ಚಿನ್ಮಯನೆ | || ಪ||
ಈರೇಳು ಜನುಮದಿಂ ದಾಸನಾಗಿಹೆ ನಾನು
ಸೇರಿದೆನೊ ತವ ಶರಣರ ಸೇವೆಗೆ
ಘೋರ ದುರಿತಗಳೆಂಬ ವಾರಿಧಿಯ ಬತ್ತಿಸಿ
ನಾರಸಿಂಹನೆ ದಯದಿ ಸಲಹೆನ್ನ ಸ್ವಾಮಿ | || 1||
ರಂಗನಾಥನೆ ನಿನ್ನ ಡಿಂಗರಿಗನೋ ನಾನು
ಡಂಗುರವ ಹೊಯಿಸಯ್ಯ ದಾಸನೆಂದು
ಭಂಗಪಡಿಸದೆ ನಿನ್ನ ಶರಣರೊಳಗಿಂಬಿಟ್ಟ
ಗಂಗೆ ಜನಕನೆ ಕಾಯೊ ಚರಣಕೆ ಶರಣು | |2||
ಎಷ್ಟು ಮಾಡಲು ನಿನ್ನ ಬಂಟನೋ ವೈಷ್ಣವರ
ಹುಟ್ಟುದಾಸಿಯ ಮಗನು ಪರದೇಶಿಯೋ
ಸೃಷ್ಟಿಗೊಡೆಯನೆ ಕಾಗಿನೆಲೆಯಾದಿಕೇಶವನೆ
ಕೈಬಿಟ್ಟೆಯಾದರೆ ನಿನಗೆ ಹರಿದಾಸರಾಣೆ | ||3||

ಹಣ್ಣು ಕೊಂಬುವ ಬನ್ನಿರಿ
ಹಣ್ಣು ಕೊಂಬುವ ಬನ್ನಿರಿ ಹರಿದಾಸರು
ಹಣ್ಣು ಕೊಂಬುವ ಬನ್ನಿರಿ | ||ಪ||
ಚೆನ್ನ ಬಾಲಕೃಷ್ಣನೆಂಬ
ಕನ್ನೆಗೊನೆ ಬಾಳೆಹಣ್ಣು | ||ಅಪ||
ಸುತ್ತೇಳು ಲೋಕದಿ ಸುರರು ಬಿತ್ತಿದ ಹಣ್ಣು
ಭಕ್ತರ ಬಾಯೊಳು ನೆನೆವ ಹಣ್ಣು
ಅರ್ತಿಯುಳ್ಳವರೆಲ್ಲ ಕೊಳ್ಳಿಬೇಕಾದರೆ
ನಿತ್ಯ ಮಾಧವನೆಂಬ ಅಚ್ಚಮಾವಿನ ಹಣ್ಣು | ||1||
ಅಜನ ಪಡೆದ ಹಣ್ಣು ಗಜವ ಕಾಯ್ದ ಹಣ್ಣು
ನಿಜಮುನಿಗಳಿಗೆ ತೋರಿಸಿದ ಹಣ್ಣು
ತ್ರಿಜಗವಂದಿತ ಪಾಲ್ಗಡಲೊಡೆಯನೆ ಹಣ್ಣು
ಸುಜನ ಭಕ್ತರೆಲ್ಲ ಕೊಳ್ಳ ಬನ್ನಿರಿ | ||2||
ತುರುವ ಕಾಯ್ದ ಹಣ್ಣು ಉರಗನ ತುಳಿದಾ ಹಣ್ಣು
ಕರೆದರೆ ಕಂಬದೊಳು ಓಯೆಂಬ ಹಣ್ಣು
ಮರುಗುವ ಧ್ರುವನಿಗೆ ಪಟ್ಟಗಟ್ಟಿದ ಹಣ್ಣು
ಕರುಣಾಳು ಕಾಗಿನೆಲೆಯಾದಿಕೇಶವ ಹಣ್ಣು | || 3||

ತೊರೆದು ಜೀವಿಸಬಹುದೆ ಹರಿ
ತೊರೆದು ಜೀವಸಬಹುದೆ ಹರಿ ನಿನ್ನ ಚರಣಗಳ
ಮರೆಯ ಮಾತೇಕಿನ್ನು ಅರಿತು ಪೇಳುವೆನು | ||ಪ||
ತಾಯಿತಂದೆಯ ಬಿಟ್ಟು ತಪವ ಮಾಡಲುಬಹುದು
ದಾಯಾದಿ ಬಂಧುಗಳ ಬಿಡಲುಬಹುದು
ರಾಯ ತಾ ಮುನಿದರೆ ರಾಜ್ಯವನು ಬಿಡಬಹುದು
ಕಾಯಜನಪಿತ ನಿನ್ನ ಅಡಿಯ ಬಿಡಲಾಗದು | | |1||
ಒಡಲು ಹಸಿಯಲು ಅನ್ನವಿಲ್ಲದಲೆ ಇರಬಹುದು
ಪಡೆದ ಕ್ಷೇತ್ರವ ಬಿಟ್ಟು ಪೋಗಬಹುದು
ಮಡದಿ ಮಕ್ಕಳ ಕಡೆಗೆ ತೊಲಗಿಸಿಯೆ ಬಿಡಬಹುದು
ಕಡಲೊಡೆಯ ನಿನ್ನಡಿಯ ಗಳಿಗೆ ಬಿಡಲಾಗದು | || 2||
ಪ್ರಾಣವನು ಪರರು ಬೇಡಿದರೆತ್ತಿ ಕೊಡಬಹುದು
ಮಾನದಲಿ ಮನವ ತಗ್ಗಿಸಲುಬಹುದು
ಪ್ರಾಣನಾಯಕನಾದ ಆದಿಕೇಶವರಾಯ
ಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದೊ | ||3||

ಕಷ್ಟಪಟ್ಟರೂ ಇಲ್ಲ
ಕಷ್ಟಪಟ್ಟರೂ ಇಲ್ಲ ಕಳವಳಿಸಿದರಿಲ್ಲ
ಭ್ರಷ್ಟಮಾನವ ಹಣೆಯ ಬರೆಹವಲ್ಲದೆ ಇಲ್ಲ | || ಪ||
ಸಿರಿವಂತನ ಸ್ನೇಹ ಮಾಡಿ ನಡೆದರಿಲ್ಲ
ಪರಿಪರಿಯಲಿ ವಿದ್ಯೆ ಕಲಿತರಿಲ್ಲ
ನರಿಯ ಬುದ್ಧಿಯಲಿ ನಡೆದುಕೊಂಡರು ಇಲ್ಲ
ಅರಿಯದೆ ಹಲವ ಹಂಬಲಿಸಿದರಿಲ್ಲ | || 1||
ಕೊಂಡೆಗಾರಿಕೆಯನ್ನು ಹೇಳಿ ನಡೆದರಿಲ್ಲ
ಕಂಡಕಂಡವರಿಗೆ ಕೈಮುಗಿದರಿಲ್ಲ
ಗಂಡುಗತ್ತರಿಯನ್ನು ಕೊರಳಿಗಿಟ್ಟರು ಇಲ್ಲ
ಚಂಡನಾದರೂ ಇಲ್ಲ ಪರಿಹಾಸ್ಯವಲ್ಲ | ||2||
ಕಟ್ಟಾಳು ಕಡು ಜಾಣನಾಗಿ ಪುಟ್ಟಿದರಿಲ್ಲ
ಬೆಟ್ಟಗಳನು ಕಿತ್ತಿಟ್ಟರಿಲ್ಲ
ಸೃಷ್ಟಿಯೊಳು ಕಾಗಿನೆಲೆಯಾದಿಕೇಶವರಾಯ
ಕೊಟ್ಟವರಿಗೆ ಉಂಟು ಕೊಡದವರಿಗೆ ಇಲ್ಲ | | |3||

ಆರು ಬಾಳಿದರೇನು
ಆರು ಬಾಳಿದರೇನು ಆರು ಬದುಕಿದರೇನು
ನಾರಾಯಣ ಸ್ಮರಣೆ ನಮಗಿಲ್ಲದನಕ | || ಪ||
ಉಣ್ಣ ಬರದವರಲ್ಲಿ ಊರೂಟವಾದರೇನು
ಹಣ್ಣು ಬಿಡದ ಮರಗಳು ಹಾಳಾದರೇನು
ಕಣ್ಣಿಲ್ಲದವಗಿನ್ನು ಕನ್ನಡಿಯಿದ್ದು ಫಲವೇನು
ಪುಣ್ಯವಿಲ್ಲದವನ ಪೌಢಿಮೆ ಮೆರೆದರೇನು | | |1||
ಅಕ್ಕರಿಲ್ಲದವಗೆ ಮಕ್ಕಳಿದ್ದು ಫಲವೇನು
ಹೊಕ್ಕು ನಡೆಯದ ನಂಟತನದೊಳೇನು
ರೊಕ್ಕವಿಲ್ಲದವಗೆ ಬಂಧುಗಳು ಇದ್ದರೇನು
ಮರ್ಕಟನ ಕೈಯೊಳಗೆ ಮಾಣಿಕ್ಯವಿದ್ದರೇನು | ||2||
ಅಲ್ಪ ದೊರೆಗಳ ಜೀತ ಎಷ್ಟು ಮಾಡಿದರೇನು
ಬಲ್ಲಂಥವಿಲ್ಲದವನ ಬಾಳ್ವೆಯೇನು
ಕಲ್ಪಕಲ್ಪಿತ ಕಾಗಿನೆಲೆಯಾದಿಕೇಶವನ
ಸ್ವಲ್ಪವೂ ನೆನೆಯದ ನರನಿದ್ದರೇನು | ||3||

ಸ್ನಾನ ಮಾಡಿರೊ ಜ್ಞಾನತೀರ್ಥದಲ್ಲಿ
ಸ್ನಾನ ಮಾಡಿರೊ ಜ್ಞಾನತೀರ್ಥದಲ್ಲಿ
ಮಾನವರೆಲ್ಲ ಮೌನದೊಳಗೆ ನಿಂದು | || ಪ||
ತನ್ನ ತಾನರಿತುಕೊಂಬುದೆ ಒಂದು ಸ್ನಾನ
ಅನ್ಯಾಯ ಮಾಡದಿರುವುದೊಂದು ಸ್ನಾನ
ಅನ್ನದಾನವ ಮಾಡುವುದೊಂದು ಸ್ನಾನ ಹರಿ
ನಿನ್ನ ಧ್ಯಾನವೆ ನಿತ್ಯ ಗಂಗಾಸ್ನಾನ | ||1||
ಪರಸತಿಯ ಭ್ರಮಿಸದಿದ್ದರೆ ಒಂದು ಸ್ನಾನ
ಪರನಿಂದೆಯ ಮಾಡದಿದ್ದರೊಂದು ಸ್ನಾನ
ಪರೋಪಕಾರ ಮಾಡುವುದೊಂದು ಸ್ನಾನ
ಪರತತ್ವವನರಿತುಕೊಂಬುದೆ ಒಂದು ಸ್ನಾನ | || 2||
ಸಾಧು ಸಜ್ಜನರ ಸಂಗವೆ ಒಂದು ಸ್ನಾನ
ಭೇದಾಭೇದವಳಿದಡೆ ಒಂದು ಸ್ನಾನ
ಆದಿಮೂರುತಿ ಕಾಗಿನೆಲೆಯಾದಿಕೇಶವನ
ಪಾದ ಧ್ಯಾನವೆ ನಿತ್ಯ ಗಂಗಾಸ್ನಾನ | ||3||

ಎರಡು ಸಾವಿರದ ಜಿಹ್ವೆಯುರಗ ಪೊಗಳಿದ ಹರಿಯೆ
ಎರಡು ಸಾವಿರದ ಜಿಹ್ವೆಯುರಗ ಪೊಗಳಿದ ಹರಿಯೆ
ಪರಂಜ್ಯೋತಿ ಪರಬ್ರಹ್ಮ ಪರಮಪುರುಷ ಓಂ ಎಂದು | ||ಪ||
ಹುಟ್ಟು ಬಣ್ಣ ಒಂದರೊಳಗೆ ಕಟ್ಟು ಬಣ್ಣ ಒಂದು ಮಾಡಿ
ಕಟ್ಟಿ ಕುಟ್ಟಿ ಕಾಸಿ ಕರಗಿ ಮೂರು ಬಣ್ಣವ
ಮುಟ್ಟಿ ಮಾಡಿ ನಾಲ್ಕು ಬಣ್ಣ ಒಪ್ಪವಿಕ್ಕಿ ಅದರ ಮೇಲೆ
ಗಟ್ಟಿಯಾಗಿ ನೆಲೆಗೆ ನಿಂತವೈದು ಬಣ್ಣವು
ಸೃಷ್ಟಿಯಾರೇಳು ಬಣ್ಣ ಎಂಟು ಒಂಬತ್ತರೊಳಗೆ
ನೆಟ್ಟನೆ ಹತ್ತು ಹನ್ನೊಂದು ಹನ್ನೆರಡು ತೋರುವ
ಘಟ್ಟಿ ಹದಿಮೂರು ಹದಿನಾಲ್ಕು ಹದಿನೈದರಿಂದ
ಕಟ್ಟಕಡೆಗೆ ನಿಂದ ಹದಿನಾರು ಬಣ್ಣ ಓಂ ಎಂದು | || 1||
ಭದ್ರಕಂಬ ಒಂದರೊಳಗೆ ಉದ್ದವಾದ ಕೊನೆಯ ಮೇಲೆ
ಸಿದ್ಧಿಯಾದ ಚಿಗುರು ಹೂವು ಕಾಯಿ ಹಣ್ಣನು
ಮೆದ್ದು ಹೋದ ಪಕ್ಷಿ ಬಂದು ಹದ್ದು ಹಿಡಿದು ಉದ್ದಕೆತ್ತಿ
ಬುದ್ಧಿ ಹೀನನಾಗಿ ಬೆಳೆದು ಧರೆಗೆ ಬಿದ್ದುದ
ಕದ್ದು ಮತ್ತೊಬ್ಬ ತರುತಿದ್ದ ದಾರಿಯನ್ನು ಕಟ್ಟಿ
ಒದ್ದು ಹಿಡಿದು ಗುದ್ದಿ ನೂಕಿ ಸೆಳೆದುಕೊಂಡುದ
ಸಾಧ್ಯವಾಯಿತೆಂದು ತನ್ನ ಮನೆಗೆ ತಂದು ಸತಿಗೆ ಕೊಡಲು
ಶುದ್ಧವಾಗಿ ಸುಟ್ಟು ಮಡಗಲೆದ್ದು ಹಾರಿ ಹೋಯಿತೆಂದು | ||2||
ತಿಳಿಯುತಿಹುದು ತಿಳಿಯದಿಹುದು ಬೆಳೆಯುತಿಹುದು ಬೆಳೆಯದಿಹುದು
ಹೊಳೆಯುತಿಹುದು ಹೊಳೆಯದಿಹುದು ಸುಳಿಯದಿಹುದು
ತಿಳಿದ ನಾಲ್ಕು ದಿಕ್ಕಿನಲಿ ಹೊಳೆದ ಎಂಟು ದಿಕ್ಕ ತೋರಿ
ಬಳಸಿ ಸುತ್ತ ತಿರುಗುತಿಹುದು ಬಳಲಿ ಬಳಲದೆ
ಒಳಗೆ ಹೊರಗೆ ತೋರುತಿಹುದು ಅಳಿದ ವಸ್ತು ಮುಟ್ಟದಿಹುದು
ಕಳವಳಂಗೆ ಎರಡು ಗುಣವ ತೋರಿ ಮೆರೆವುದು
ತಿಳಿದು ನೋಡೆ ಕೈಗೆ ಸಿಕ್ಕಿ ಒಳಗೆ ಬಯಲ ತೋರುತಿಹುದು
ಪ್ರಣವ ಒಂದು ಕೋಟಿ ನುಂಗಿ ಉಗುಳಿತಿಪ್ಪುದೋಂ ಎಂದು | ||3||
ತತ್ತಿಯಾದ ಬ್ರಹ್ಮನೀಗೆ ದಿಕ್ಕು ಅಖಿಲಾಂಡವೆಲ್ಲ
ಹೆತ್ತ ತಂದೆಗಾದವನೆ ನಿತ್ಯವುಳ್ಳವ
ಸತ್ತು ಹುಟ್ಟಲಿಲ್ಲವೆಂದು ಅತ್ತ ನೋಡಿ ಇತ್ತ ತಿರುಗಿ
ತತ್ತಿಯೊಳಗೆ ಬೆಳೆದವೆಲ್ಲ ಸತ್ತವೆನ್ನುತ
ಸತ್ತುಹೋದ ದೀಪದಂತೆ ಉತ್ಪತ್ತಿಯಾದವಗೆ
ಸತ್ತು ಸತ್ತು ಹುಟ್ಟುವುದು ತಪ್ಪದೆನ್ನುತ
ಎತ್ತಿ ಜಗವ ನುಂಗಿ ತನ್ನ ಹೊಟ್ಟೆಯೊಳಿಂಬಿಟ್ಟುಕೊಂಡು
ಕತ್ತಲೆಗೆ ಕರ್ತೃವೆಂಬ ಜಗವಸತ್ಯ ಕೇಳಿರೋ ಎಂದು | ||4||
ಪಂಕಜನ ತಾಯಿ ಸುತನ ಅಂಕದಲ್ಲಿ ಹುಟ್ಟಿ ಜಗವ
ಮಂಕು ಮಾಡುತಿಪ್ಪ ಮಾಯೆ ಹತ್ತು ಶಂಕೆಯ
ಶಂಕೆಕಾರ ಶತ್ರುಮಿತ್ರರಿಬ್ಬರಿಗಾಧಾರವೆಂದು
ಕುಂಕರದಿಪ್ಪತ್ತೊಂದು ಕೋಟಿ ಪಾಶವು
ಓಂಕಾರದೊಳಗೆ ಪುಟ್ಟಿ ಓಂಕಾರದೊಳಗೆ ಬೆಳೆದು
ಓಂಕಾರದೀ ಜಗವ ಎತ್ತಿ ಮೆರೆವುದೋ ಎಂದು | | |5||
ಪ್ರಣವ ಒಂದರೊಳಗೆ ಒಂದು ಕೋಟಿಯನು ತೋರಿ ಪಡೆಯ
ಕುಣಿಕೆಯೊಳಗೆ ಎಂಟು ಕೋಟಿಯನ್ನು ತೋರುತ
ತೃಣವ ಹಿಡಿದು ಬರೆಯುತಿಪ್ಪ ಒಂದು ರೋಮ ಕೂಪದಲ್ಲಿ
ಕುಣಿಕೆಯೊಳಗೆ ಜಗದ ಜೀವರಾಶಿ ಎಲ್ಲವ
ಸುಳಿದ ವಿಷ್ಣು ಬ್ರಹ್ಮನೆಂಬ ಹಣೆಯ ಕಣ್ಣ ರುದ್ರನೆಂಬ
ಮಣೆಯಗಾರರೆಪ್ಪತ್ತೇಳು ಕೋಟಿ ಸಂಖ್ಯೆಯು
ಹಣೆಯ ಕಾಣದವರ ಕೀಲಿನೆಣಿಕೆಯಲ್ಲಿ ಹೊಲಬುದಪ್ಪಿ
ಪ್ರಣವ ಒಂದು ಕೇಳುತ್ತಿಪ್ಪ ಪರಬ್ರಹ್ಮ ಓಂ ಎಂದು | ||6||
ನಳಿನಜಾಂಡವೊಂದರೊಳಗೆ ಭುವನ ಪದಿನಾಲ್ಕು
ಬಸುರೊಳಗೆ ಇಂತು ತಮ್ಮ ಸುಳಿ ನಾಭಿ ಕಮಲ ಮಧ್ಯದಿ
ತಿಳಿದು ನೋಡು ಇತ್ತ ಕೆಳಗೆ ಪಾದ ಮೇಲೆ ಮಸ್ತಕವು
ತೊಳಲಿ ಕಾಣೆ ವೇದವೆಂದು ಬಳಲಿ ಬಳಲದೆ
ಪ್ರಳಯ ಕೋಟಿ ಪ್ರಾಣಿಗಳಿಗೆ ಹೊಳವುಗಾಣಲೀಸದಂತೆ
ಬೆಳೆದು ಹೋಗುವ ಗತಿಯೆಂಬುದಿತ್ತಲರಿಸುತ
ಕಳವಿನವರು ಬಂದು ಇಳೆಯ ಮೇಲೆ ನಿಂದು
ಬಿಳಿಗಿರಿವಾಸ ತಿರುಮಲೇಶ ಆದಿಕೇಶವ ತಾನೆಯೆಂದು | ||7||

ನಂಬ ಬೇಡಿ ಸಿರಿಯ
ನಂಬ ಬೇಡಿ ಸಿರಿಯ ತನ್ನದೆ | ||ಪ||
ನಂಬಬೇಡಿ ಸಿರಿಯ ತನ್ನದೆ
ದೆಂದು ನಿಮಿಷದೊಳಗೇನಹುದೊ
ಡಂಬತನವಿದೇಕೆ ಹರಿಯ ಪಾ
ದಾಂಬುಜವನು ಭಜಿಸಿ ನರರು | | |ಅಪ||
ಜಲಧಿಯನ್ನು ಪೀರ್ದ ಮುನಿಯ
ಜನನಿ ಪೆಸರ್ಗೆ ಕಿವಿಯನಾಂತ
ಖಳನ ಬಲವ ನಂಬಲಾತು
ತಲೆಯ ತವಿಸಿದವನ ಸಿರಿಯು
ಗಳಿಗೊಯೊಳಗೆ ಕೀಲು ಸಡಿಲದೆ ಎಣಿಕೆ ಇಲ್ಲದ
ದಳವು ಯಮನನಗರಗೈದದೆ ದೈವಕೃಪೆಯು
ತೊಲಗಲೊಡನೆ ದಾಳಿವರಿಯದೆ ಕೇಳಿ ಜನರೆ | ||1||
ಅಂಧರಾಯನಾತ್ಮಜರು
ಮದಾಂಧರಾಗಿ ಮಲೆತು ಗೋತ್ರ
ಬಂಧುಗಳನು ಲೆಕ್ಕಿಸದೆ
ಇಭಪುರಿಯನಾಳಿದ ನೃಪತಿ ಕೌರ
ವೇಂದ್ರನರಸುತನವು ತೊಡೆಯದೆ ಸಕಲ ಸೈನ್ಯ
ಬಂಧು ಬಳಗ ರಣದಿ ಮಡಿಯದೆ ಶೌರಿ ಮನಿಯ
ಲಂದು ಅವನ ಪದವು ಮುರಿಯದೆ ಕೇಳಿ ಜನರೆ | ||2||
ಧರಣಿಯ ಮುನ್ನಾಳ್ದ ನಹುಷ
ಸಗರರೆನಿಪ ಭೂಪತಿಗಳು
ಸಿರಿಯ ಜಯಸಲಿಲ್ಲ ಮಿಕ್ಕ
ನರರ ಪಾಡಿದೇನು ನೀವು
ಬರಿದೆ ಭ್ರಾಂತರಾಗಬೇಡಿರೊ ಎಂದಿಗಾದರು
ಸ್ಥಿರವಿದಲದಲವೆಂದು ತಿಳಿಯಿರೊ ಶ್ರೀ ಕಾಗಿನೆಲೆಯ
ವರದ ಕೇಶವನನು ಭಜಿಸಿರೊ ಕೇಳಿ ಜನರೆ | ||3||

ಯೋಗ ಸಿದ್ಧಿ
ಅರಿಗಳವಲ್ಲಾತ್ಮ ಯೋಗ ಸಿದ್ಧಿ
ಸೇರಿ ಸುಜ್ಞಾನದಲಿ ಸವಿದುಂಬಗಲ್ಲದೆ | ||ಪ||
ರಜಸು-ತಾಮಸವೆಂಬ ರಯವನೆಲ್ಲವ ಕಳೆದು
ಗಜಬಜಿಸುವ ಪಂಚಭೂತಗಳ
ರಜನಿಗೆ ಸಿಲ್ಕದೆ ಪರಬ್ರಹ್ಮನ ಬಲು
ನಿಜವ ತಿಳಿಯಬಲ್ಲ ನಿರ್ವಾಣಗಲ್ಲದೆ | | |1||
ಭಿನ್ನ ಭೇದಗಳೆಂಬ ಬಲು ಸಂಶಯ ಕಳೆದು
ತನ್ನೊಳಗೆ ತಾ ತಿಳಿದು ತಾರಕ ಬ್ರಹ್ಮವ
ಚೆನ್ನಾಗಿ ನೀ ನೋಡು ಚೆಲುವ ಕಂಗಳಿಂದ
ತನ್ನಗ್ನಿಯೊಳಗಿರುವ ಪ್ರೌಢರಿಗಲ್ಲದೆ | | |2||
ಆಕಾರ ಉಕಾರ ಮಕಾರ ಎಂತೆಂಬ
ಓಂಕಾರಕೆ ಕೂಡಿ ಎರಡಿಲ್ಲದ
ಸಾಕಾರ ಕಾಗಿನೆಲೆಯಾದಿಕೇಶವನ
ಆಕಾರದೊಡನಾಡುವರಿಗಲ್ಲದೆ | | |3||

ಬಯಲಾಸೆ ಬಿಡದು
ಏನು ಮಾಡಲಯ್ಯ ಬಯಲಾಸೆ ಬಿಡದು
ಮಾನವ ಮೃಗೇಂದ್ರ ರಾಮಚಂದ್ರ ರಕ್ಷಿಸಯ್ಯ | ||ಪ||
ಜ್ಯೋತಿರ್ಮಯವಾದ ದೀಪದಾ ಬೆಳಕಿಗೆ
ಕಾತರದಿ ಬೀಳುವ ಪತಂಗದಂತೆ
ಧಾತುಗೆಟ್ಟು ಬೆಳ್ಳಿ ಬಂಗಾರದಲ್ಲಿ ಮೆರೆವ
ಧೂರ್ತೆಯರ ನೋಡುವೀ ಚಕ್ಷುರಿಂದ್ರಿಯಕೆ | | |1||
ಅಂದವಹ ಸಂಪಗೆಯ ಅರಳಪರಿಮಳವುಂಡು
ಮುಂದುವರಿಯದೆ ಬೀಳ್ವ ಮಧುಪನಂತೆ
ಸಿಂಧೂರ ಗಮನೆಯರ ಸಿರಿಮುಡಿಯೊಳಿಪ್ಪ ಪೂ
ಗಂಧ ವಾಸಿಸುವ ಘ್ರಾಣೇಂದ್ರಿಯಕ್ಕೆ | | |2||
ಕಾಳಗದ ತುದಿಯೊಳಿಪ್ಪ ಭೂನಾಗನಂ ಕಂಡು
ಪ್ರಾಣಾಹುತಿಯೆಂದು ಸವಿವ ಮೀನಿನಂತೆ
ವಾಣಾಕ್ಷಿಯರ ಚೆಂದುಟಿಯ ಸುಧೆಯ ಸವಿದು
ಜಾಣತನದಲಿ ನಲಿವ ಜಿಹ್ವೇಂದ್ರಿಯಕೆ | | |3||
ದಿಮ್ಮಿಡುವ ಘಣಘಣಾಯೆಂಬ ಘಂಟೆಯ ರವಕೆ
ಚೆಮ್ಮುಗೊಳ್ಳುತ್ತಿರುವ ಆ ಹರಿಣದಂತೆ
ರಮ್ಮಣೇರ ರಂಜಕದ ನುಡಿಯನ್ನು ಕೇಳಿ ಬಲು
ಪ್ರಣಮ್ಮವೆಂದು ತೋಷಿಸುವ ಕರ್ಣೇಂದ್ರಿಯಕೆ | ||4||
ತ್ವಕ್ಕು ಮೊದಲಾದ ಪಂಚೇಂದ್ರಿಯದೊಳು ಸಿಕ್ಕಿ
ಕಕ್ಕುಲತೆಗೊಂಬುದಿದ ನೀನು ಬಿಡಿಸೊ
ಸಿಕ್ಕಿಸಿ ನೋಡದಿರು ಆದಿಕೇಶವರಾಯ
ದಿಕ್ಕಾಗಿ ನಿನ್ನಂಘ್ರಿಯೊಳಗಿರಿಸೆನ್ನ ಮನವ | ||5||

ದ್ರೋಹಿಗಳ ವಿವರವನು ನಾ ಪೇಳ್ವೆನಯ್ಯ
ದ್ರೋಹಿಗಳ ವಿವರವನು ನಾ ಪೇಳ್ವೆನಯ್ಯ | | |ಪ||
ಕೂಡಿದೆಡೆಯಲಿ ಕಪಟನೆನಿಸುವನೆ ದ್ರೋಹಿ
ಮಾಡಿದುಪಕಾರವನು ಮರೆವ ದ್ರೋಹಿ
ಚಾಡಿ ಕೊಂಡೆಗಳಾಡಿ ತಿರುಗವವನೆ ದ್ರೋಹಿ
ರೂಢಿಯೊಳು ಬಾಳುವರ ಸಹಿಸದವ ದ್ರೋಹಿ | ||1||
ಸತಿಯಳನು ಬಿಟ್ಟು ಪರಸತಿಯ ಬಯಸುವ ದ್ರೋಹಿ
ಹೆತ್ತವರೊಳು ಕಲಹ ಮಾಡುವನೆ ದ್ರೋಹಿ
ಯತಿಗಳನು ಸಂತತ ನಿಂದೆ ಮಾಡುವ ದ್ರೋಹಿ
ಸತಿಯನ್ನು ಪರರಿಗೆ ಇತ್ತವನೆ ದ್ರೋಹಿ | || 2||
ಹೊನ್ನಿದ್ದು ಅನ್ನದಾನ ಮಾಡದವನೆ ದ್ರೋಹಿ
ಚೆನ್ನಾಗಿ ಗುರುಸತಿಯ ಬಯಸಿದವ ದ್ರೋಹಿ
ಸನ್ನುತಾಂಗ ನೆಲೆಯಾದಿಕೇಶವನ
ತನ್ನೊಳಗೆ ತಾ ತಿಳಿದು ಸುಖಿಸದವ ದ್ರೋಹಿ | ||3||

ಬದುಕಿದೆನು ಬದುಕಿದೆನು
ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು
ಪದುಮನಾಭನ ಪಾದದೊಲುಮೆ ಎನಗಾಯಿತು | ||ಪ||
ಹರಿತೀರ್ಥ ಪ್ರಸಾದ ಎನ್ನ ಜಿಹ್ವೆಗೊದಗಿತು
ಹರಿಯ ನಾಮಾಮೃತ ಕಿವಿಗೊದಗಿತು
ಹರಿಯ ದಾಸರು ಎನ್ನ ಬಂಧುಬಳಗಾದರು
ಹರಿಯ ಶ್ರೀಮುದ್ರೆ ಆಭರಣವಾಯಿತು | ||1||
ಮುಕುತರಾದರು ಎನ್ನ ನೂರೊಂದು ಕುಲದವರು
ಮುಕುತಿ ಮಾರ್ಗಕ್ಕೆ ಯೋಗ್ಯ ನಾನಾದೆನೊ
ಅಕಳಂಕ ಶ್ರೀಹರಿ ಭಕುತಿಗೆ ಮನ ಬೆಳೆದು
ರುಕುಮಿಣಿಯರಸ ಕೈವಶನಾದನೆನಗೆ | | |2||
ಇಂದೆನ್ನ ಜೀವಕ್ಕು ಸಕಲ ಸಂಪದವಾಯ್ತು
ಮುಂದೆನ್ನ ಜನ್ಮ ಸಫಲವಾಯಿತು
ತಂದೆ ಶ್ರೀ ಕಾಗಿನೆಲೆಯಾದಿಕೇಶವರಾಯ
ಬಂದೆನ್ನ ಹೃದಯದಲಿ ನೆಲೆಯಾಗಿ ನಿಂತ | | |3||

ಆಸೆ ತರವಲ್ಲ ದಾಸನಾಗೊ
ಆಸೆ ತರವಲ್ಲ ದಾಸನಾಗೊ ಭವಪಾಶ ನೀಗೊ
ಶರೀರ ತಾನಲ್ಲ ತನ್ನದಲ್ಲ | ||ಪ||
ಅತ್ತಲ್ಲೊ ಇತ್ತಲ್ಲೊ ಎತ್ತಲ್ಲೊ ಈ ಸಂಸಾರ
ಬತ್ತಲೆಗೆ ಬತ್ತಲಿಹಪರವಿಲ್ಲ ಮಿತಿ ಮೇರೆ ಇಲ್ಲ
ಕತ್ತಲೆ ಕಳವಳದೊಳು ಕಾಣಬಾರದೆಂದು
ಸತ್ಯವೆಂಬೊ ದಾರಿಯನೆ ಸೇರಲಿಲ್ಲ ಲೇಸು ತೋರಲಿಲ್ಲ
ಉತ್ತಮವಾದ ವೊಮ್ಮನೇಯ ಓಂಕಾರವನ್ನು
ಚಿತ್ತದಲಿ ಗ್ರಹಿಸಿ ನೀನು ಬಾಳಲಿಲ್ಲ ಜನ್ನಗಳೆಯಲಿಲ್ಲ
ಹೊತ್ತು ಒಯ್ವರೊ ಕಾಡಿಗೆ ಅಗಲಿ ಹೋಗುವೆ ಕಾಯ
ನಿತ್ಯವೆಂದು ಸತ್ಯವೆಂದು ನಂಬಬೇಡ ಈ ಡಂಭ ಬೇಡ | ||1||
ಆಯಿತೋ ಹೋಯಿತೋ ಏನಾಯಿತೋ ಈ ದೇಹಕೆ
ತಾಯಿ ಯಾರೋ ಮತ್ತೆ ತಂದೆ ಯಾರೊ
ಮಾಯದೊಳಗೆ ಸಿಲುಕಿ ಬಲುಕಾಲದಿಂ ಶ್ರೀ ರಘು
ರಾಯನೆಂಬ ವಸ್ತುವಿನ ಸ್ಮರಣೆ ಬಿಟ್ಟು ಭವದಿ ಮಮತೆ ಇಟ್ಟು
ನಾಯಿ ಬಾಯ ಅರವೀಯಂತೆ ನಾನಾಕೋಟಲೆಯಲ್ಲಿ ಬಿದ್ದು
ಸಾಯುತ ಬಾಳುತ ನೀ ನೋವುದೇನೊ ಮುಂದೆ ಫಲವೇನೊ
ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ತ್ರೈಲೋಕ್ಯದೊಡೆಯನೆ ಪುಣ್ಯ
ದಾಯಕನು ಹರಿಯೆಂದು ಧನ್ಯನಾಗೊ ಜಗನ್ಮಾನ್ಯನಾಗೊ | ||2||
ಕಾಶಿ ವಾರಣಾಸಿ ಕಂಚಿ ಕಾಳಹಸ್ತಿ ರಾಮೇಶ್ವರ
ದೇಶ ದೇಶ ಸುತ್ತಿದರೆ ಫಲವೇನೊ ಈ ಛಲವೇನೋ
ದೋಷ ನಾಶ ಕೃಷ್ಣವೇಣಿ ಗಂಗೆ ಗೋದಾವರಿ ಭವ
ನಾಶನೆ ಯಮುನೆಯ ವಾಸದಲ್ಲಿ ಉಪವಾಸದಲ್ಲಿ
ಮೀಸಲಾಗಿ ನಿಂತು ಜಪ ಹೋಮ ತಪಗಳನ್ನೆಲ್ಲ
ಏಸು ಬಾರಿ ಮಾಡಿದರೆ ಬಾಹೋದೇನೊ ಅಲ್ಲಿ ಹೋಹೋದೇನೊ
ವಾಸುಕಿಶಯನನ ನೆನೆಸಿ ಒಳಗಿದ್ದ ಹಂಸನ
ಲೇಸ ಕಂಡು ಮೋಸಬಡದೆ ಯುಕ್ತನಾಗೊ ನೀ ಮುಕ್ತನಾಗೊ | ||3||
ಅಂದಿಗೋ ಇಂದಿಗೋ ಒಮ್ಮೆ ಸಿರಿ ಕಮಲೇಶನನ್ನು
ಒಂದು ಬಾರಿಯಾದರೂ ನೆನೆಯಲಿಲ್ಲ ಮನದಣಿಯಲಿಲ್ಲ
ಬಂದು ಬಂದು ಭ್ರಮೆಗೊಂಡು ಮಾಯದಿ ಮೋಹಕ್ಕೆ ಬಿದ್ದು
ನೊಂದುಕೊಂಡು ದೇಹದಲ್ಲಿ ಬ್ರಂಹ್ಮಾಂಡ ಅಲ್ಲೆ ಪಿಂಡಾಂಡ
ಇಂದು ಹರಿಯ ಧ್ಯಾನಮಾಡಿ ವಿವೇಕದಿ ತಿಳಿದು ನೀನು
ಇಂದು ಮಣಿದು ಮುಕುಂದನ ಬೇಡು ಕಂಡ್ಯ ನೀ ನೋಡು ಕಂಡ್ಯ | ||4||
ನೂರು ಬಾರಿ ಹರಿಯ ಬೇಡಿ ನೀರೊಳಗೆ ಮುಣುಗಲೇಕೆ
ನಾರಿಯರ ಮನದಿ ಸದಾ ಧ್ಯಾನಮಾಡಿ ದುರ್ಬುದ್ಧಿ ಕೂಡಿ
ಸೋರೆಯೊಳಗೆ ಮದ್ಯ ತುಂಬಿ ಮೇಲೆ ತುಳಸಿ ಪುಷ್ಪಮಾಲೆ
ಗೀರು ಗಂಧ ಅಕ್ಷತೆಯ ಧರಿಸಿದಂತೆ ನೀ ಮೆರೆಸಿದಂತೆ
ಗಾರು ಮಾತಲ್ಲ ಇನ್ನಾರು ಬ್ರಹ್ಮ ಪಿಡಿದು ಸಾರ
ಸೂರೆಗೊಂಡು ಶುದ್ಧನಾಗಿ ಶಮನದಿಂದ ನೀಸುಮನದಿಂದ
ನಾರಾಯಣಾಚ್ಯುತನಂತಾದಿಕೇಶವನೆಂದು
ಬಾರಿಬಾರಿಗೆ ನೆನೆದು ಭವದೂಡೊ ಮುಂದೆ ಮುಕ್ತಿ ಕೊಡೊ | ||5||

ಹೇಗಿದ್ದು ಹೇಗಾದೆಯೊ ಆತ್ಮ
ಹೇಗಿದ್ದು ಹೇಗಾದೆಯೊ ಆತ್ಮ
ಯೋಗೀಶನಾಂದಪುರದಲಿರುವುದ ಬಿಟ್ಟು | | |ಪ||
ಬಸಿರ ಹಳ್ಳಿಗೆ ಬಂದು ಮಾಸನೂರಲಿ ನಿಂದು
ಕುಸುಕಾಡಿ ನುಡಿದು ನೆಲಬಟ್ಟೆವಿಡಿದು
ಕಿಸುಕದರಿವೆಯ ಪೊದ್ದು ಮಲಮೂತ್ರದಲಿ ಬಿದ್ದು
ವಸುಧೆಯಲಿ ದಿನಗಳೆದೆಯಲ್ಲ ಆತ್ಮ | || 1||
ಎಳೆಗೆರೆಯಲಿ ಆಡಿ ಯೌನದೂರಿಗೆ ಬಂದು
ಥಳಥಳಿಪ ಅಸ್ತಾದ್ರಿ ನೆಳಲ ಸೇರಿ
ಅಳಲು ಸುತ ಬೆಳೆದು ದಾರಿದ್ರ್ಯ ಪೇಟೆಗೆ ಬಂದು
ಹಳೆಯ ಬೀಡಿಗೆ ಪಯಣವೇ ಆತ್ಮ | || 2||
ಗನ್ನಗತಕದ ಮಾತು ಇನ್ನು ನಿನಗೇತಕೋ
ಮುನ್ನ ಮಾಡಿದ ಕರ್ಮಭರದೊಡಲಿದೆ
ಉನ್ನತದ ಕಾಗಿನೆಲೆಯಾದಿಕೇಶವ ಸುಪ್ತ
ಸನ್ನ ಮೂರುತಿಯ ಭಜಿಸಲೊ ಆತ್ಮ | ||3||

ಆವ ಕರ್ಮವೊ ಇದು
ಆವ ಕರ್ಮವೊ ಇದು ಆವ ಧರ್ಮವೊ
ಆವ ಕರ್ಮವೆಂದರಿಯೆ ಹಾರುವರಿವರು ಬಲ್ಲರೆ | ||ಪ||
ಸತ್ತವನು ಎತ್ತ ಪೋದ
ಸತ್ತು ತನ್ನ ಜನ್ಮಕೆ ಪೋದ
ಸತ್ತವನು ಉಣ್ಣುವನೆಂದು
ನಿತ್ಯ ಪಿಂಡವಿಕ್ಕುತೀರಿ | ||1||
ಎಳ್ಳು ದರ್ಭೆ ಕೈಲಿ ಪಿಡಿದು
ಪಿತರ ತೃಪ್ತಿ ಪಡಿಸುತೀರಿ
ಎಳ್ಳು ಮೀನು ನುಂಗಿ ಹೋಯಿತು
ದರ್ಭೆ ನೀರೊಳು ಹರಿದು ಹೋಯಿತು | ||2||
ಎಡಕೆ ಒಂದು ಬಲಕೆ ಒಂದು
ಎಡಕೆ ತೋರಿಸಿ ಬಲಕೆ ತೋರಿಸಿ
ಕಡು ಧಾವಂತ ಪಡಿಸಿ
ಕಟಿಯ ಹಸ್ತದೊಳಗೆ ಪೀಡಿಸುತೀರಿ | ||3||
ಮಂತ್ರಾಕ್ಷತೆಯ ಕೈಗೆ ಕೊಟ್ಟು
ಮೋಕ್ಷವನ್ನು ಹಾರೈಸುವಿರಿ
ಮಂತ್ರವೆಲ್ಲೊ ಅಕ್ಷತೆಯೆಲ್ಲೊ
ಮೋಕ್ಷವೆಲ್ಲೊ ಮರ್ತ್ಯ ವೆಲ್ಲೊ | | |4||
ಹೇಳುವವನು ಅವಿವೇಕಿ
ಕೇಳುವವನು ಅಜ್ಞಾನಿ
ಹೇಳುವ ಕೇಳುವ ಇಬ್ಬರ ಸೊಲ್ಲ
ಆದಿಕೇಶವಮೂರ್ತಿ ಬಲ್ಲ | ||5||

ತೀರ್ಥ ಪಿಡಿದವರೆಲ್ಲ ತಿರುನಾಮಧಾರಿಗಳೆ
ತೀರ್ಥ ಪಿಡಿದವರೆಲ್ಲ ತಿರುನಾಮಧಾರಿಗಳೆ
ಜನ್ಮ ಸಾರ್ಥಕವಿಲ್ಲದವರೆಲ್ಲ ಭಾಗವತರೆ | | |ಪ||
ಮೂಗ್ಹಿಡಿದು ನೀರೊಳಗೆ ಮುಳುಗಿ ಜಪತಪವ ಮಾಡಿ
ವೇದಶಾಸ್ತ್ರ ಪುರಾಣಗಳನೋದಿ ತಿಳಿದು
ಬಾಗಿ ಪರಸ್ತ್ರೀಯರಿಗೆ ಭ್ರಮಿಸಿ ಕಣ್ಣಿಡುವಂಥ
ನೀತಿ ತಪ್ಪಿದವರೆಲ್ಲ ದೇವ ಬ್ರಾಹ್ಮಣರೆ ಕೃಷ್ಣ | ||1||
ಪಟ್ಟೆ ನಾಮವ ಬಳೆದು ಪಾತ್ರೆ ಕೈಯಲಿ ಪಿಡಿದು
ಗುಟ್ಟಿನಲಿ ರಹಸ್ಯವ ಗುರುತರಿಯದೆ
ಕೆಟ್ಟ ಕೂಗನು ಕೂಗಿ ಬಗುಳಿ ಬಾಯಾರುವಂಥ
ಹೊಟ್ಟೆಗುಡ ಮೃಗಗಳೆಲ್ಲ ಶ್ರೀವೈಷ್ಣವರೆ ಕೃಷ್ಣ | | |2||
ಲಿಂಗ ಲಿಂಗದೊಳಗಿರುವ ಚಿನ್ಮಯವ ತಿಳಿಯದೆ
ಲಿಂಗಾಂಗದಾ ನೆಲೆಯ ಗುರುತರಿಯದೆ
ಜಂಗಮ ಸ್ಥಾವರದ ಭಾವವನು ತಿಳಿಯದೆ
ಭಂಗಿ ಮುಕ್ಕಗಳೆಲ್ಲ ಲಿಂಗವಂತರಹರೆ | ||3||
ಅಲ್ಲಾ ಖುದಾ ಎಂದು ಆತ್ಮದಲಿ ತಿಳಿಯದೆ
ಮುಲ್ಲಶಾಸ್ತ್ರದ ನೆಲೆಯ ಗುರುತರಿಯದೆ
ಜಳ್ಳು ಕೂಗನು ಕೂಗಿ ಬಗುಳಿ ಬಾಯಾರುವಂಥ
ಕಳ್ಳ ತುರುಕರಿಗೆಲ್ಲ ವೀರ ಸ್ವರ್ಗವುಂಟೆ ಕೃಷ್ಣ | | |4||
ಹಾಸ್ಯಗಳನು ಕಲಿತು ಘೋಷವಸ್ತ್ರಗಳ್ಹಾಕಿ
ಆಸೆಗಳ ತೊರೆದೆವೆಂದು ತಪಸು ಕುಳಿತು
ವಾಸುವೆಯ ಗುರುಕೃಪಾ ಗುರುತರಿಯದಂಥ
ವೇಷಧಾರಿಗಳೆಲ್ಲ ಸನ್ಯಾಸಿಗಳಾಗಬಲ್ಲರೆ ಕೃಷ್ಣ | ||5||
ಆರು ಚಕ್ರದ ನೆಲೆಯ ಅಷ್ಟಾಂಗ ಯೋಗದಲಿ
ಮೂರು ಮೂರ್ತಿಯ ಮೂರು ಕಡೆಯೊಳಿರಿಸಿ
ಮಾರನಯ್ಯ ನೆಲೆಯಾದಿಕೇಶವನ
ಸಾರಿ ಭಜಿಸಿದವರಿಗೆ ಮನದ ಕೊರತೆಯುಂಟೆ | | |6||

ಆರು ಬದುಕಿದರಯ್ಯ ಹರಿ
ಆರು ಬದುಕಿದರಯ್ಯ ಹರಿ ನಿನ್ನ ನಂಬಿ
ತೋರು ಈ ಧರೆಯೊಳಗೆ ಒಬ್ಬರನು ಕಾಣೆ ಕೃಷ್ಣ | ||ಪ||
ಕಲವಹ ಬಾರದ ಮುನ್ನ ಕರ್ಣನೊಬ್ಬನ ಕೊಂದೆ
ಸುಲಭದಲಿ ಕೌರವರ ಮನೆಯ ಮುರಿದೆ
ನೆಲನ ಬೇಡಲು ಪೋಗಿ ಬಲಿಯ ಭೂಮಿಗೆ ತುಳಿದೆ
ಮೊಲೆಯನುಣ್ಣಲು ಪೋಗಿ ಪೂತನಿಯ ಕೊಂದೆ | ||1||
ಕರುಳೊಳಗೆ ಕತ್ತರಿಯನಿಟ್ಟು ಹಂಸಧ್ವಜನ
ಸರಸದಿಂ ಮಗಳ ಗಂಡನ ಕೊಲಿಸಿದೆ
ಮರುಳಿನಿಂದಲಿ ಪೋಗಿ ಭೃಗುಮುನಿಯ ಕಣ್ಣೊಡೆದೆ
ಅರಿತು ನರಕಾಸುರನ ಹೆಂಡತಿಯ ತಂದೆ | ||2||
ತಿರಿದುಂಬ ದಾಸರ ಕೈಯ ಕಪ್ಪವ ಕಟ್ಟಿಸಿಕೊಂಡೆ
ತಿರುಮಲಾಚಾರ್ಯ ಶ್ರೀಗುರುವೆ ಬಲ್ಲ
ವರಕಾಗಿನೆಲೆಯಾದಿಕೇಶವನ ಭಜಿಸಿದರೆ
ತಿರಿವೆನೆಂದರೆ ತಿರುಪೆ ಕೊಳ್ಪುಟ್ಟದೈ ಕೃಷ್ಣ | | |3||

ಬರಿದೆ ದೂರು ಬಂದಿದೆ ಪಾಂಡವರಿಗೆ
ಬರಿದೆ ದೂರು ಬಂದಿದೆ ಪಾಂಡವರಿಗೆ
ಕೊಂದವರಿವರು ಕೌರವರೆಂಬಪಕೀರ್ತಿ | ||ಪ||
ಮುನ್ನಿನ ವೈರದಿ ಕಡು ಸ್ನೇಹವ ಮಾಡಿ
ಉನ್ನಂತ ಲೆತ್ತ ಪಗಡೆಯಾಡಿಸಿ
ತನ್ನ ಕುಹಕದಿಂದ ಕುರುಬಲವನೆ ಕೊಂದ
ಘನ್ನ ಘಾತಕ ಶಕುನಿಯೋ ಪಾಂಡವರೊ | ||1||
ಮರಣ ತನ್ನಿಚ್ಛೆಯೊಳುಳ್ಳ ಗಂಗಾಸೂನು
ಧುರದೊಳು ಷಂಡನ ನೆಪದಿಂದಲಿ
ಸರಳಮಂಚದ ಮೇಲೆ ಮಲಗಿ ಮೊಮ್ಮಗನ
ಕೊರಳ ಕೊಯ್ದವನು ಭೀಷ್ಮನೋ ಪಾಂಡವರೊ | ||2||
ಮಗನ ನೆಪದಿ ಕಾಳಗವ ಬಿಸುಟು ಸುರ
ನಗರಿಗೈದಲು ವೈರಾಗ್ಯದಲಿ
ಜಗವರಿಯಲು ಕುರುವಂಶಕ್ಕೆ ಕೇಡನು
ಬಗೆದುಕೊಂಡವ ದ್ರೋಣನೋ ಪಾಂಡವರೊ | ||3||
ತೊಟ್ಟ ಬಾಣವ ತೊಡಲೊಲ್ಲದೆ ಮಾತಿಗೆ
ಕೊಟ್ಟ ಭಾಷೆಗೆ ಐವರ ಕೊಲ್ಲದೆ
ನೆಟ್ಟನೆ ರಣಮುಖದಲಿ ತನ್ನ ಪ್ರಾಣವ
ಬಿಟ್ಟುಕೊಂಡವ ಕರ್ಣನೋ ಪಾಂಡವರೊ | ||4||
ಮಥಿನಿಸಿ ಸೂತತನವ ಮಾಡಿ ರಣದೊಳು
ಅತಿಹೀನಗಳೆಯುತ ರವಿಸುತನ
ರಥದಿಂದಿಳಿದು ಪೋಗಿ ಕೌರವಬಲವನೆ
ಹತಮಾಡಿಸಿದವ ಶಲ್ಯನೋ ಪಾಂಡವರೊ | ||5||
ಜಲದೊಳು ಮುಳುಗಿ ತಪವ ಮಾಡಿ ಬಲವನ್ನು
ಛಲದಿಂದೆಬ್ಬಿಸಿ ಕಾದುವೆನೆನ್ನುತ
ಕಲಿ ಭೀಮಸೇನನ ನುಡಿಕೇಳಿ ಹೊರವಂಟು
ಕುಲವ ಕೊಂದವನು ಕೌರವನೊ ಪಾಂಡವರೊ | ||6||
ಕೌರವ ಪಾಂಡವರಿಗೆ ಭೇದಪುಟ್ಟಿಸಿ
ಕುರುಕ್ಷೇತ್ರದಿ ಫೌಜೊಡ್ಡಿ ಕಾದಿಸಿ
ಸಂಶಯವಿಲ್ಲದೆ ಕುರುಬಲವನೆ ಕೊಂದ
ಹಿಂಸಕನಾದಿಕೇಶವನೊ ಪಾಂಡವರೊ | ||7||

ಹೆಣ್ಣಗಳೊಳು ಹೆಮ್ಮೆಕಾರಿಕೆ ಸತ್ಯ
ಹೆಣ್ಣಗಳೊಳು ಹೆಮ್ಮೆಕಾರಿಕೆ ಸತ್ಯ
ಕಣ್ಣುಕಟ್ಟಿಲ್ಲ ಕವಿಗಳ ಕವಡಲ್ಲ | | |ಪ||
ಪತಿಗೆ ಶೃಂಗರವೇನು ಶೃಂಗರದಲಿ ರತಿಯೇನು
ರತಿಯಲ್ಲಿ ಮೊದಲೇನು ಮೊದಲಿಗೆ ತುದಿಯೇನು
ಜತೆಗೆ ಮತ್ಸರವೇನು ಮತ್ಸರದಲಿ ಕಥೆಯೇನು
ಕತೆಯಲ್ಲಿ ಕಾಂಬುದೇನು ಕಂಡರೆ ಫಲವೇನು | ||1||
ಮನಕೆ ಮುಮ್ಮರೆಯೇನು ಮುಮ್ಮರೆಗೆ ನೆನಹೇನು
ನೆನೆದರೆ ನಂಬಿಗೆಯೇನು ನಂಬಿದರೆ ಅಳವೇನು
ಅಳವಿಗೆ ಕಳವಳವೇನು ಕಳವಳದಲಿ ಕನಸೇನು
ಕನಸಿನಲಿ ಕಾಂಬುದೇನು ಕಂಡರೆ ಭಯವೇನು | ||2||
ಮೊ..ಕೆ ಮೊದಲೇನು ಮೊದಲಿಗೆ ನಿಲುಗಡೆಯೇನು
ನಿಲುಗಡೆಗೆ ಸವಿಯೇನು ಸವಿಯಲ್ಲಿ ಸುಖವೇನು
ಅಲರಂಬಿಗೆ ನಲಿವೇನು ನಲಿವಿಗೆ ಗೌಪ್ಯವೇನು
ಸಲೆ ಆದಿಕೇಶವ ನಿನಗೆ ಸೋಲೆಂದರೇನು | | |3||

ಹರಿ ನಿನ್ನ ಪದಕಮಲ
ಹರಿ ನಿನ್ನ ಪದಕಮಲ ಕರುಣದಿಂದಲಿ ಎನಗೆ
ದೊರಕಿತೀ ಗುರಸೇವೆ ಹರಿಯೆ
ಗುರುಮಂತ್ರ ಮೂಲ ಸದ್ಗುರು ಮೂರ್ತಿ ನೀನಾಗಿ
ಬಳಿಯ ಸೇರಿಸಿದೆ ಹರಿಯೆ | ||ಪ||
ಮೊದಲು ನಿನ್ನುಪದೇಶಕೆದುರಿಸೀ ತಿರುಗೆ
ನೀನದನೆಲ್ಲ ಕ್ಷಮಿಸಿದೆಯೊ ಹರಿಯೆ
ಸುದತಿಮಕ್ಕಳ ಮೋಹ ಮದವೇರಿ ನಾನಿರಲು
ಪದುಮಾಕ್ಷ ನೀ ಬಂದು ಪದೇಪದೆಗೆ ಸಾರಿದೆಯೊ | ||1||
ಅರಿಗಳು ದಂಡೆತ್ತಿ ಬರಲು ನಾನವರೊಡನೆ
ಪರಿ ಪರೀ ಹೋರುತಿರಲು
ದುರಳರೆನ್ನನು ಜೈಸಿ ಹರಿದಟ್ಟಿ ಬಂದೆನ್ನ
ಧರೆಗುರುಳಿಸಿದರೊ ಹರಿಯೆ | ||2||
ಸಾರಿ ಹೊರಡುವ ಛತ್ರಿ ಭೇರಿ ತಮ್ಮಟೆಗಳು
ಭೋರೆಂಬ ವಾದ್ಯಗಳು ಹರಿಯೆ
ವೀರ ರಾಹುತ ಬಲದ ಭಾರವನು ತರಿದಹಂ
ಕಾರನು ಮುರಿದೆ ಹರಿಯೆ | ||3||
ದೊರೆತನವ ಬಿಡಿಸಿ ಸುಸ್ಥಿರ ಮಾರ್ಗವನೆ ತೋರಿ
ಪರಿಪಾಲಿಸಿದೆಯೆನ್ನ ಹರಿಯೆ
ದುರಳತನದಲಿ ಜನರ ಪರಿ ಪರೀ ಬಾಧಿಸಿ
ಸೂರೆಗೊಂಬುದು ಪರಿಹಾರವಾಯಿತು ಹರಿಯೆ | ||4||
ನೀರು ಶುಕ್ತಿಯ ಸೇರಿ ತೋರ ಮುತ್ತಾದ ಪರಿ
ಸೇರಿಸೊ ನಿನ್ನಂಘ್ರಿ ಹರಿಯೆ
ಆರಿಗಂಜುವನಲ್ಲ ಅಧಿಕಪುರಿ
ಕಾಗಿನೆಲೆಯಾದಿಕೇಶವರಾಯನಾದ ಶ್ರೀಹರಿಯೆ | ||5||

ಎಂಥಾ ಟವಳಿಗಾರನಮ್ಮ
ಎಂಥಾ ಟವಳಿಗಾರನಮ್ಮ
ಗೋಪ್ಯಮ್ಮ ಕೇಳೆ
ಎಂಥಾ ಟವಳಿಗಾರನಮ್ಮ | ||ಪ||
ಹಣವನ್ನು ಕೊಟ್ಟೇನೆಂದು
ಗುಣದಿಂದ ಎನ್ನ ತಂದ
ಹಣವ ಕೇಳಿದರಲ್ಲಿ ಹಣವೆ
ಇಲ್ಲವೆ ಪಲ್ಲಣವೆ ತಲ್ಲಣವೆ
ಕುದುರೆಯ ಬೊಕ್ಕಣವೆ ಹೋಗೆನುತಾನೆ | ||1||
ಕೊಪ್ಪಾನು ಕೊಟ್ಟೇನೆಂದು
ಒಪ್ಪಿಸಿ ಎನ್ನ ತಂದ
ಕೊಪ್ಪಾನು ಕೇಳಿದರಲ್ಲಿ ಕೊಪ್ಪ
ಊರಮುಂದಿನ ತಿಪ್ಪ
ಕೇರಿಯೊಳಗಿಹ ಕೆಪ್ಪ
ಕೇರಿಯ ಹುಳಿಸೊಪ್ಪ ಹೋಗೆನುತಾನೆ | ||2||
ಬಳೆಯನ್ನು ಕೊಟ್ಟೇನೆಂದು
ಬಲು ಮಾತಿಲಿ ತಂದ
ಬಳೆಯ ಕೇಳಿದರಲ್ಲಿ ಬಳೆಯೆ
ಊರ ಮುಂದಿನ ಗಾಳಿಯೆ
ಗದ್ದೆಯೊಳಗಿನ ಕಳೆಯೆ
ಕೈಕಾಲು ಹಿಡಿದು ಸೆಳೆಯೆ ಹೋಗೆನುತಾನೆ | ||3||
ವಾಲೆಯ ಕೊಟ್ಟೇನೆಂದು
ವಾಲಗದಿಂದ ತಂದ
ವಾಲೆಯ ಕೇಳಿದರಲ್ಲಿ ವಾಲೆ
ಕನ್ನಡಿಯ ಕಪೋಲೆ
ಕಿವಿಗಿಟ್ಟಾ ಸುವಾಲೆ
ನಿನ್ನ ಕಾಲಿಗೆ ಸಂಕೋಲೆ ಹೋಗೆನುತಾನೆ | ||4||
ಕಡಗವ ಕೊಟ್ಟೇನೆಂದು
ಸಡಗರದೆನ ತಂದ
ಕಡಗ ಕೇಳಿದರಲ್ಲಿ ಕಡಗ
ಅಂಬರದಲಿ ಗುಡಗ
ಮುಂಗೈ ಮೇಲಿನ ಗಿಡುಗ
ಎತ್ತಿನ ಮ್ಯಾಲಿನ ಧಡಗ ಹೋಗೆನುತಾನೆ | ||5||
ಬುಗುಡೀಯ ಕೊಟ್ಟೇನೆಂದು
ಬೆಡಗಿನಿಂದ ಎನ್ನ ತಂದ
ಬುಗ್ಡೀ ಕೇಳಿದರಲ್ಲಿ ಬುಗ್ಡಿ
ಪಾಂಡವರಾಡ್ದ ಪಗ್ಡಿ
ಅಸುರರೋಳು ಕಾದಾಡಿ
ಛೀ ಅತ್ತ ಹೋಗು ಧಗ್ಡಿ ಹೋಗೆನುತಾನೆ | ||6||
ಆದಿಕೇಶವನ ಮೇಲೆ
ಆಣೆಯಿಟ್ಟು ಕರೆತಂದ
ಆಣೆಯೆಲ್ಲಿಹುದೆಂದು ಬರೆದ
ಆನಂದದಿಂದಲಿ ಬೆರೆದ
ಬೀದಿಲಿ ಬಂದು ಕರೆದ
ಹೀಂಗೆ ಧರೆಯೊಳು ಮೆರೆದ ಶ್ರೀಕೃಷ್ಣರಾಯ | ||7||

ಕಣಿಯ ಹೇಳ ಬಂದೆ
ಕಣಿಯ ಹೇಳ ಬಂದೆ ನಾರಾಯಣನಲ್ಲದಿಲ್ಲವೆಂದು
ಸಿಕ್ಕ ಬಣಗು ದೈವದ ಗೊಡವೆ ಬೇಡ ನರಕ ತಪ್ಪದು | | |ಪ||
ಎಕ್ಕನಾತಿಯರ ಕಾಟ ಜಕ್ಕಿಯರು ಕನ್ಯೆಯರು
ಸೊಕ್ಕಿನಿಂದ ಸೊಂಟಮುರುಕ ಬೈರೇ ದೇವರು
ಮಿಕ್ಕ ಮಾರಿ ಮಸಣಿ ಚೌಡಿ ಮೈಲಾರಿ ಮೊದಲಾದ
ಇಂಥ ಠಕ್ಕು ದೈವದ ಗೊಡವೆ ಬೇಡ ನರಕ ತಪ್ಪದು | ||1||
ಸುತ್ತಣವರ ಮಾತ ಕೇಳಿ ಗುತ್ತಿಯ ಎಲ್ಲಮ್ಮಗೊಲಿದು
ಬತ್ತಲೆ ದೇವರ ಮುಂದೆ ಬಲಿಯ ನೋಡಿರೊ
ಮತ್ತೆ ಬೇವಿನುಡಿಗೆಯನ್ನು ಅರ್ತಿಯಿಂದ ಉಟ್ಟುಕೊಂಡು
ಮುಕ್ತಿಕಾಂಬೆವೆಂಬ ಆಸಕ್ತಿ ಬೇಡಿರೊ | | |2||
ತೂಳದವರ ಮಾತ ಕೇಳಿ ಖೂಳರೆಲ್ಲರು ಕೂಡಿಕೊಂಡು
ಹಾಳು ಮಾಡಿ ಕೈಯಲ್ಲಿದ್ದ ಹೊನ್ನು ಹಣಗಳ
ಬಾಳುತಿಪ್ಪ ಕೋನ ಕುರಿಯ ಏಳ ಬೀಳ ಕೊರಳ ಕೊಯ್ದು
ಬೀಳಬೇಡಿ ನರಕಕೆಂದು ಹೇಳಬಂದೆನೊ | | |3||
ಹೊಳ್ಳದ ಬಿಚ್ಚೇರು ತಾವು ಸುಳ್ಳರೆಲ್ಲರು ಕೂಡಿಕೊಂಡು
ಬೆಳ್ಳನ ಬೆಳತನಕ ನೀರತಡಿಯಲ್ಲಿ ಕುಳಿತು
ಗುಳ್ಳಗೊರಜೆ ಕೂಡಿ ತಿಂದು ಕಳ್ಳು ಕೊಡನ ಬರಿದು ಮಾಡಿ
ಇಂಥ ಪೊಳ್ಳು ದೈವದ ಗೊಡವೆ ಬೇಡ ನರಕ ತಪ್ಪದು | ||4||
ಪೊಡವಿಗಧಿಕ ವಿಜಯನಗರದೊಡೆಯ ಕಟ್ಟೆ ವೆಂಕಟೇಶ
ಕಡು ಚೆಲ್ವ ಸತ್ವದ ಧೀರ ಕನಕನೊಡೆಯನ
ಬಾಡದಾದಿಕೇಶವನ ಪಾದ ಬಿಡದೆ ಭಜಿಸಿರೊ
ಇಂಥ ಜಡದೈವದ ಗೊಡವೆ ಬೇಡ ನರಕ ತಪ್ಪದು | ||5||