Categories
Tatvapadagalu ಶಂಕರಾನಂದ ಯೋಗಿ ಮತ್ತು ಶಂಕರಾರ್ಯರ ತತ್ವಪದಗಳು

ಅಕಾರಾದಿ ತತ್ವಪದಗಳು

ಅಧಿಕಾರಿಯೆನಿಸುವನು
ಅಬ್ಬಬ್ಬಿನ್ನೆಂಥಾವನೋ ಈ ಕಾಮ
ಅಭಿವಂದಿಸುವೆನಷ್ಟ ತನುವಾಗಿ ತ್ರೈಜಗಕೆ
ಅಂಬ ನೀನು ಜಾಣೆ
ಅಮನಸ್ಕ ಯೋಗವಿದು
ಅರಿವುದೆ ಚಂದ ಬ್ರಹ್ಮಾನಂದ
ಅರಿತವ ನಿಜಮುಕ್ತ
ಆಮಮ ಮಾಯಾ ಮಹಿಮೆ

ಆಗದರಿಯದಾಗಲರಿಯದೂ
ಆದಿ ಅಂತ್ಯದೊಳಿಲ್ಲದಿರುವ
ಆನಂದ ಪದವಿಯನು ಹೇಳಲಾರಿಂದಹುದು
ಆನಂದವಾನಂದವಾಯಿತು
ಆನಂದವನದೊಳಾಡುವನ್ಯಾರೆ
ಆಗದಾಗದಾಗದೂ ಯಲ್ಲರಿಂದ
ಆತ್ಮನ ಬೆರೆತ ಮಹಾತ್ಮಗೆ
ಆತ್ಮ ಚಿಂತನೆಯ ಮಾಡೋ
ಆದರವನು ಬಿಡಬ್ಯಾಡಮ್ಮ ಗುರು

ಇಲ್ಲೇ ಕೈವಲ್ಯ ಕಾಣಿರೋ
ಇಲ್ಲ ಇಲ್ಲ ಇಲ್ಲ ಮುಕ್ತಿ ಒಬ್ಬರಿಗೂ

ಎಲ್ಲಾ ರೂಪವು ತಾನಂತೆ
ಎಲ್ಲಿಹನೆಂದು ಪೂಜಿಸಲಿ
ಎಷ್ಟು ಮಾತ್ರ ಭವದ ಕಡಲದು
ಎಂದಿಗೆ ದುಃಖವ ಕೂಡದೆ ಬಾಳುವೆ
ಎಂದು ಕಾಣದೊಂದು ಸ್ವಪ್ನಾ

ಏನು ಹೇಳಲಮ್ಮಾ ಸದ್ಗುರು ದಯ
ಏನು ಹೇಳಲಿ ದಿವ್ಯ ಶಿವಮಂತ್ರ ಮಹಿಮೆಯನು
ಏನು ಹೇಳಲಿ ಪೂರ್ಣ
ಏಳಯ್ಯ ಬೆಳಗಾಯಿತು
ಏಕೆ ನಿಜದೊಳಗೇಕನಾಗದೆ

ಐದು ಸುತ್ತಿನ ಕೋಟೆಯ ಪುರ

ಓದಬಾರದೆ ತರಳ

ಕರ್ಮಕೋಟಲೆಗಳಿಲ್ಲಾ
ಕಾಂತೆ ನೋಡು ನಿನ್ನ ದಿವ್ಯ
ಕೂಡಿದೆ ಗುರುಪದವ
ಕರವೆತ್ತಿ ಬೆಳಗುವೆನು ಕರ್ಪೂರ ಜ್ಯೋತಿ
ಕರ್ಮಕೂಪದಿ ಬಿದ್ದು ಕೆಡಬೇಡವೆಲೊ
ಕೇಳಬೇಕು ನಾದ ಕೇಳಬೇಕು
ಕೆಡಬೇಡ ನರನಾಗಿ ಜೀವ
ಕೆಡುವುದುಚಿತವೆ
ಕೇಳು ಮಾನಿನಿ ರನ್ನೆ
ಕೇಳು ವತ್ಸನೆ
ಕೇಳೆಲೋ ಸಿದ್ಧಾಂತ ವಾಕ್ಯ
ಕೇಳೆಲೋ ವೇದಾಂತ ವಾಕ್ಯ
ಕೇಳಿದಾಗಲೆ ಹೇಳಬಾರದೂ
ಕೇಳಿದಾಗಲೆ ಹೇಳ್ವ ಸದ್ಗುರುವು
ಕೊಬ್ಬಿ ನೀ ಕೆಡಬೇಡವೋ
ಕೋತಿ ಮನವ ನಂಬಬಹುದೆ
ಕೈವಲ್ಯ ನವನೀತೆಚಿಂಬತುಲ ಪೆಸರದಕೆ

ಗುರು ಪರಬ್ರಹ್ಮಾ
ಗುರು ಬೋಧೆ ತ್ರೈವಿಧವಾಗಿ
ಗುರು ಶಂಕರ ನಿಮ್ಮಡಿ ಕಿಂಕರನೀ
ಗುರು ಶೇವೆ ಕೊನೆಸಾಗಲಿಲ್ಲಾ
ಗುರುವಿನ ಲಕ್ಷಣವಾ
ಗುರುವಿನಂಘ್ರಿಯೊಳಗೆ ನಮ್ಮ
ಗುರು ಪಾದದಿ ಬೆರದು
ಗುರು ಪಾದದೊಳು ಮನ ಬೆರೆಯಲಿಲ್ಲಾ
ಗುರು ಪಾದದೊಳು ಮನವಿಂಗಿ
ಗುರುವೆ ನಂಬಿರುವೆ ಯೆಂದಿರುವೆ
ಗುರುವೇ ಪರಶಿವನು
ಗುರುವೇ ಯನುಮನವೆ
ಗುರುವೇ ಗತಿಯನ್ನು ಮನವೇ
ಗುರುಚರಣ ಪ್ರಣವ
ಗುರುದೇವ ನೀನೆ ದೀನರ ಬಂಧು
ಗುರುದೇವ ನೀನೋರ್ವ ನಿಜದೇವನೈ

ಚಿನ್ಮಯ ಸುಖಸಾಗರ ನೀನಾಗಿ
ಚಿಂತಾಮಣಿ ಸಿಕ್ಕಿತು ಶ್ರೀಗುರುವೆಂಬ

ಜಗದುದಯದಂತ್ಯದೊಳು ತುಂಬಿದೆ
ಜ್ಞಾನ ಹದ ನಿರ್ಣಯವ
ಜ್ಞಾನವಿಲ್ಲದ ಮೂಢ
ಜ್ಞಾನಾಮೃತ ಸಿಕ್ಕಿತು
ಜ್ಞಾನಮೊಂದಿಲ್ಲದಿನ್ನೇನಿರ್ದೊಡೇನು ಮಿತಿ
ಜ್ಞಾನವೊಂದೇ ಸಾಕು ಮುಕ್ತಿಗೆ
ಜ್ಞಾನಾಗ್ನಿ ಸರ್ವ ಕರ್ಮಗಳ ಸುಟ್ಟು
ಜ್ಞಾನಿ ಜಗದೊಳು
ಜ್ಞಾನಿಯಜ್ಞಾನಿಗಳಾ ಭಾವಲಕ್ಷಣ
ಜ್ಞಾನಿಯಾದೇನೆಂದೂ ಬರಿದೇ
ಜಾಗ್ರದಲ್ಲಿ ಜಾಗ್ರನಾಗಿ
ಜಾತಿ ಸೂತಕವೆಂಬ ಮಾತಿಲ್ಲ
ಜೋ ಜೋ ಸದಾನಂದ
ಜ್ಯೋತಿ ಬೆಳಗುತಿದೇ
ಜೀವಿ ಕರ್ಮದ ಭೋಗ
ಜೀವ ಈಶ್ವರರಿಬ್ಬರೂ
ಜೀವ ಈಶರಿಗೈಕ್ಯ
ಜೀವನೀ ಸರ್ವಾಧರನು

ಪಿಡಿಯೆಲೊ ಸುಜ್ಞಾನ ಮಾರ್ಗವ
ಭಜಿಸು ಹೃದಯದಿ ದೇಶೀಕೇಂದ್ರನ
ಪಾಹಿ ಶ್ರೀಗುರುರಾಜ ಸಂತತ
ಪಾಲಿಸು ಗುರುನಾಥ
ಪುರುಷಕಣಿಯೆಂಬ ರತ್ನ
ಪಂಚಕೋಶಗಳಿಂದ ಕೂಡಿರುವದೀ ಕಾಯ
ಪಂಚಾಗ್ನಿಯೊಳಗೆ ತಪಿಸುವ
ಪರಮ ಬ್ರಹ್ಮಾನಂದ ಭರಿತದಿ
ಪರಮನು ನಿನ್ನೊಳಗೊಂದಿಹುದು
ಪರಮಯೋಗಿ ಲಕ್ಷಣ
ಪರಮ ದಯಾನಿಧಿಯೇ
ಪರಮಾತ್ಮನರುಹಿನೊಳಗಿರು
ಪರಿಣಯವು ಯನಗಾಯ್ತು
ಪೇಳು ನಿನ್ನನು ಭೂತಿಯಾ
ಪೋಗಿ ಬಾಳುವ ಬನ್ನಿರೋ
ಪೊರೆಯೆನ್ನ ಶಂಕರನೇ
ಪೊರೆಯೆನ್ನ ಪ್ರಭುವೆ

ಫಲವೇನದರಿಂದ

ಬಲ್ಲೋಡೀ ತತ್ವದೊಳ್ ಕೂಡಿ
ಬಲುಸುಲಭವು ಬ್ರಹ್ಮವಿದ್ಯೆ
ಬಲ್ಲವರಲ್ಲದೆ ಯಲ್ಲಾರರಿಯರು
ಬುದ್ಧಿ ಸಾಧ್ವೀಮಣಿಯು
ಬ್ರಹ್ಮ ಭಾವನೆಯುದಿಸಿ
ಬ್ರಹ್ಮವಾನೆನ್ನುತಲರಿಯೈ
ಬ್ರಹ್ಮವ ತಂದು ತೋರಲು
ಬ್ರಹ್ಮ ತಾನೆಂದರಿಯಲಾಗೀ
ಬ್ರಹ್ಮೋಪದೇಶವಾಯಿತಮ್ಮ
ಬಂದು ಕೂತಿಹಳು ನೋಡಿ
ಬಂಧ ಮೋಕ್ಷದ ವಿವರ
ಬರಿದೆ ನಾ ಶಿವನೆಂದೊಡವ ಶಿವನಲ್ಲ
ಬರಿದೆ ತೋರದು ನಿಜಾನಂದ
ಬಹು ಕಷ್ಟವೆಂದು ಪೇಳುವೆನು
ಬಹು ಚಂದ ಬಹು ಚಂದ
ಬಿಚ್ಚಿ ಪೇಳಿರಿದರರ್ಥ ಬಲ್ಲ ಜಾಣರು
ಬಿಡು ಬಿಡು ರಾಜಸ ಪೂಜೆಯನು
ಬಿಡು ಬಿಡಿನ್ಯಾತರ ಜ್ಞಾನ
ಬಿಡದೈ ದುಃಖ ಬಿಡದೈ
ಬಾಯ ಬ್ರಹ್ಮದಿಂದ ಮುಕ್ತಿಯೇ
ಬ್ಯಾಡವೋ ಯೆಂದೆಂದಿಗು
ಬಾರಮ್ಮ ಗುರುಸೇವೆ ಮಾಡುವ
ಬೋಧಿಸೈ ಶ್ರೀಗುರುವೇ ಬಳಲುವೆ ನಿನ್ನೊಳು ಬೆಳಗುವಾನಂದವ

ಭವರೋಗಕ್ಕೌಷುಧವಿತ್ತ
ಭಯ ನಿವಾರಣವಾಯಿತಿಂದು
ಭಯವದೇತಕೆ ಮಗಳೆ
ಭಂಗವೇತಕೆ ಪಡುವೆ
ಭಜನೆ ಬ್ರಹ್ಮಾನಂದರಸವು
ಭಜನೆಯ ಮಾಡುವ ಬನ್ನಿರೊ
ಭಜಿಸು ಭಕ್ತರ ಬಂಧು ವೆನಿಪನ
ಭಜಿಸು ಬಿಡದೆ ನೀ ಗುರುನಾಥನ
ಭಕ್ತಳಾಗು ಭಕ್ತಳಾಗು ಭಕ್ತಳಾಗು
ಭಕ್ತಿಯು ನಿಲಬೇಕು
ಭಾನಭಾಸ್ಯ ವಿಧಾನವರಿತ
ಭ್ರಾಂತನಾಗಬೇಡ
ಭೂತ ಭೌತಿಕವೆನಿಪ ದೇಹದೊಳು

ಮನ ವಿರಕ್ತಿಗೆ ಮುಕ್ತಿಯಲ್ಲಿದೆ
ಮನದಿ ವಿಕಾರವಿಲ್ಲ
ಮನವ ಜರಿಯಬೇಡಣ್ಣ
ಮನವ ಜೈಸಲರಿದು
ಮನವು ನಾಶವಾಗೂವನ್ನ
ಮುಳುಗಿ ಹೋದೆಯಲ್ಲೋ ಭವದಲಿ
ಮೂರು ವಿಧದಿ ಶಿಷ್ಯರಿಂಗೆ
ಮಂಗಳಂ ನಿತ್ಯ ಮಂಗಳಂ
ಮಂಗಳಂ ಜಯ ಮಂಗಳಂ
ಮಂಗಳವಾಗಿ ಇದೆ
ಮಂಗಳಾರತಿ ತಂದು ಬೆಳಗೇ ನಮ್ಮ
ಮರುಜಮಣಿಯೆಂಬ ರತ್ನ
ಮರಣದಲಿ ಕೈಲಾಸವನು ನೋಡಿ
ಮಾಡಬಾರದೂ ಮುಂದೆ ಕೇಡು ತನಿಗದೂ
ಮಾಡಿದೈ ಶ್ರೀಗುರುವೆ ಮಾಡಿದೈ
ಮಾತು ಮಾತಿಗೆ ಶಂಕರ
ಮಾತಿನಿಂದಾಗದು ಮುಕ್ತಿ
ಮೀರಿ ಪೋಗುವರಾರು
ಮಿಥ್ಯ ಮಾಯೋಪಾಧಿಯೆನಿಸಿರುವ ಜೀವ
ಮೌನದೊಳಿರುಯೆಂದನು

ತನುವೂ ಇಂದ್ರಿಯಂಗಳೊಂದು
ತನುವೆ ತಾನೆಂದರಿತು ಭವದೊಳ್ಯಾತಕೆ ಬರುತೆ
ತನಯ ಬ್ರಹ್ಮದ ಸೃಷ್ಟೀ
ತಾನಾರೋ ತನ್ನ ತತ್ವವ ಕಾಣದಿರೆ
ತನ್ನ ಯೋಚನೆಯಂತೆ
ತನ್ನ ತಾ ತಿ ತನ್ನ ತಿಳಿದೊಡವ ಯೋಗಿ
ತನ್ನೊಳರಿಯಲುಬೇಕು ಆತ್ಮನ
ತನ್ನೊಳಿರುವಾತ್ಮನನು ತಾ ಕಾಣದವನು
ತನ್ನೊಳಿಹವಾತ್ಮನನು
ತನ್ನೊಳಿಹುದು ತತ್ವವೆಲ್ಲ
ತೂರಿ ಬಾರೋ ಪೋಗಿ ತೂರಿ ಬಾರಂಣ
ತತ್ವಮಸಿಯೆಂಬ ವಾಕ್ಯತ್ರಯವ ವಿರತಿಬೋಧೆಯು ಪರತಿಯು
ತಾನೆ ತಾನಾಗಬೇಕು
ತಾನೆನ್ನ ಬಹುದೇ ಈ ದೇಹವ
ತಿಳಿಯಬಾರದೆ ಹೀಗೆ
ತಿಳಿದು ಭಕ್ತಿ ಮಾಡು
ತೋರದು ಸುಖ ಮಾನಸೇಂದ್ರ
ತೋರಿಯಡಗುವಂಥ ಜಳ್ಳು
ತೆರೆದ ಬಾಗಿಲ ಸುಂಕವಿಲ್ಲದ

ದೇವರು ನೀನಮ್ಮ
ದೇಹವೆ ನಾನೆಂಬ ಮೋಹವ ತೋರಿದೆ

ಧನ್ಯನಾದೆನೂ | ನಾನು |
ಧರೆಯೊಳಗೆ ಪಂಚ ಮಲಗಳು
ಧಾರುಣಿಯೊಳು ಬಂದ

ನಂಬು ನಂಬೆಲೊ ಮನ್ಮಜಾ
ನರನೋ ವಾನರನೋ
ನರನೆಂದು ತನ್ನ ಪೇಳುವನು ನೋಡೆ
ನಾ ಬೇರೆ ಶಿವನೆ ಬೇರೆಂದು
ನಾ ಬೇರೆ ಶಿವನೆ ಬೇರೆಂದು
ನಾನು ನಾನೆಂದು ಗರ್ವದಲಿ ಮೆರೆಯದೆ
ನಾನೆಂಬುದೊಂದೆ ಕಾಣುವುದಲ್ಲಿನ್ನೇನಿಲ್ಲವೋ
ನಾಳೆಯೆಂಬನ ಮನೆ ಹಾಳು
ನಿನ್ನ ನೀನರಿಯದೆ ಭಿನ್ನವಾಯಿತು
ನಿನ್ನಲ್ಲೇ ನೋಡು ಪರಬ್ರಹ್ಮನ
ನಿನ್ನ ಹಿತಕೋಸುಗವೆ ಪೇಳುವೆ
ನಿನ್ನೋಳ್ ನೋಡದೆ ನಿನ್ನ
ನಿಂದಿಸುವರು ನಮ್ಮ ಬಂಧು ಕುಲ
ನೀನಾರೊ ನೋಡು ನೋಡೆಲೊ ಜೀವ
ನೀರೆ ನೀ ತೋರೆ
ನೋಡಮ್ಮ ನೋಡು ಪರಮಾತ್ಮನ
ನೋಡಬಾರದೇ ಬ್ರಹ್ಮವ
ನೋಡು ನೋಡು ನಿನ್ನೊಳಿರುವ
ನೋಡು ನೋಡೀಗಲೆ ಜೀವ |
ನೋಡು ಜೀವ ನಿನ್ನ ಘನವ ಕೂಡಿ
ನೋಡುನೋಡಲೆ ಮಾನಸೇಂದ್ರನೆ

ಯಲ್ಲಾ ಪರಬ್ರಹ್ಮವೆನಬೇಕು
ಯಲ್ಲರ ಮನೆದೋಸೆ ತೂತು
ಯಂಥ ಪುರುಷನಿವನೆಲೆ ಕಾಂತೆ
ಯಂಥದ್ದೀ ಕಲಿಕಾಲವು
ಯಾವ ಲೋಕದ ಭಕ್ತಿಯೋ
ಯಾವ ಕರ್ಮವೋ ಶಿವ ಶಿವ
ಯಾರಿಗು ತಿಳಿಯದು ನಮ್ಮೂರು
ಯಾರಿಗು ತಿಳಿಯದು ನಮ್ಮೂರು
ಯಾಕೆ ಭ್ರಮಿಸಿ ವರಿಸಿ ಧರಿಸಿ ಜನಿಸಿ ಸಾಯುವೇ
ಯಾಕೆ ತಿಳಿಯದೋದೆ
ಯಾಕೆನ್ನ ಮರೆತಿರುವೆ
ಯಾತರ ಬದುಕಿದಕೆತಕೆ ಬಳಲುತ
ಯಾತಕೆ ಮಲ ದೇಹವ ನಾನೆನ್ನುತ
ಯಿನ್ನಾದರೀ ಜನ್ಮಕೆ
ಯಿವನ್ಯಾರೋ ನೋಡು ಬಾರಮ್ಮ
ಯಿಂದು ವದಗುವ ದುಃಖ
ಯಿದುಯೀಗ ಸಮಯಾ
ಯೆಲೆ ದೇಹವೆ ನಿನ್ನೊಳು ನಾ ಸೇರಲು
ಯೆಂತು ಮುಕ್ತನಾಗಬೇಕಣ್ಣ
ಯೆಂತು ಮುಕ್ತನಾಗಬೇಕಣ್ಣ
ಯೆಂತಿಹುದೊ ಪರವಸ್ತು

ರಕ್ಷಿಸೊ ಯನ್ನನು
ರಕ್ಷಿಸೈ ಕಾರುಣ್ಯ ಸಿಂಧುವೆ
ರತ್ನ ಬಂದಿದೆ ನೋಡಿರೋ
ರಾಮಚಂದ್ರಾಯ ನಮೋ
ರೂಪು ನಾಮಂಗಳ ಕಳಿಯೋ
ರಾಜಯೋಗಿಯು ನಿತ್ಯ ರಾರಾಜಿಸ್ಮತ

ಲಾಲಿ ನಿಜ ತತ್ವವನು ಮರೆತಿರುವ ಕಂದ
ಲಿಂಗ ಪೂಜೆಯ ಮಾಡಿರೋ
ಲಿಂಗವ ನೋಡಮ್ಮಾ ತನುವಿನ

ವಂದಿಪೆ ನಿಮಗೆ ಗುರುನಾಥ
ವರ ಪಂಚಮುದ್ರೆಗಳ
ವರ ಶಿಷ್ಯ ಲಕ್ಷಣವಾ
ವತ್ಸಾ ಕೇಳೋ ವತ್ಸಾ
ವಾಣಿ ಪಾಣಿ ಮಾಣಿ ಮೂರು

ಶರಣಾಗತ ವಜ್ರ ಪಂಜರಾ
ಶಿವ ಪದವಿ ಸೂರೆಗೊಂಬೆ
ಶಿವ ಜೀವರು ಎಂದೆರಡಿಲ್ಲ
ಶಿವನು ನಾನೆನ್ನಬಹುದೇ
ಶಿವನೆ ಪಾಲಿಸು ಯನ್ನನೂ
ಶಿವನೆಂಬ ಕಲ್ಪವೃಕ್ಷ ಇರಲಾಗಿ
ಶಿವ ಮಂತ್ರವೊಂದೇ ಸಾಲದೇ
ಶಿವಯೆಂಬ ಕಾಮಧೇನು ಇರಲಾಗಿ
ಶಿವಜೀವರೈಕ್ಯದನುವರಿತ ಸಂಮ್ಯಜ್ಞಾನಿ
ಶಿವರಾತ್ರಿ ಸಂಗವಾಯ್ತು
ಶುಭಮಂಗಳಂ
ಶ್ರೀ ಗುರು ವಚನ ಸುಧಾರಸವನು
ಶ್ರೀ ಗುರುಸೇವೆಯ ಮಾಡೆಲೊ
ಶ್ರೀ ಗುರುವಿನ ಬೋಧೆ

ಸಾಧನ ಚತುಷ್ಟಯಂಗಳು
ಸಾಧು ಶೇವೆಯೊಳಾಡೊ ಮನುಜಾ
ಸಾರ ಸಾರ್ಸಂಸಾರವೆಲ್ಲಿ
ಸಾರುತಿದೆ ಶ್ರುತಿ
ಸುಮ್ಮನಾಗದು ನಿಜಾನಂದ
ಸುಮ್ಮನೆ ಬ್ರಹ್ಮನಾಗುವನೆ
ಸುಮ್ಮನೆ ಮಾಡಿದನು
ಸುಮ್ಮನಿರಲು ಮುಕ್ತನಹುದು
ಸರ್ವರಧಿಕಾರಿಗಳು ಯೆನಿಸಿಕೊಂಬರು
ಸೂನು ಕೇಳ್ ತತ್ವಮಸಿ ವಾಕ್ಯಾರ್ಥವನು
ಸ್ಮರಣೆ ಮಾಡೆಲೋ ಪಾಲಿಸೆನ್ನನು ಕರುಣದಿಂದ
ಸುಡಬೇಕು ಬಿಡದೆ ಸುಡಬೇಕು
ಸಟೇಪಟೇ ಹಿಂದು ಸಟೇ ಪಟೆ
ಸೇವೆಯ ಮಾಡೋ
ಸಿಕ್ಕದೂ ಬ್ರಹ್ಮದಕ್ಕದೂ
ಸ್ಥಿರಮುಕ್ತಿ ಸಂಪದಕೇ
ಸಂಕಟಹರನಾವ ನಮ್ಮೀ ಶಂಕರ ಗುರುದೇವ
ಸಂಸಾರದೊಳು ಮುಕ್ತಿ ಸಿದ್ಧ

ಹುವ್ವಾ ಚೆಲ್ಲಾಡುವೆನು
ಹ್ಯಾಗಿದ್ದರು ಚಂದ
ಹೇಳಿ ಬಾರೆ ಜಾಣೆ ಸದ್ಗುರುವಿನ ಲೀಲೆ
ಹೇಳಿ ಬಾರೋ ಪೋಗಿ ಹೇಳಿ ಬಾರಣ್ಣ
ಹಂಸನಾಗಲೋ | ಪರಮ

Categories
Tatvapadagalu ಶಂಕರಾನಂದ ಯೋಗಿ ಮತ್ತು ಶಂಕರಾರ್ಯರ ತತ್ವಪದಗಳು

ಶಂಕರಾನಂದ ಪದ್ಧತಿ

ಭಜಿಸು ಬಿಡದೆ ನೀ ಗುರುನಾಥನ
ಭಜಿಸು ಬಿಡದೆ ನೀ ಗುರುನಾಥನ
ಭಜಿಸು ಬಿಡದೆ ಗುರುನಾಥನ ನೀಂ
ತ್ಯಜಿಸೆಲೊ ಯೆರಡೆಂಬ ಮಾತನ ನೀಂ
ಭಜಿಸು ಬಿಡದೆ ಗುರುನಾಥನಾ ||ಪ||
ಹಿಂದು ಮುಂದು ಕಾಣದೆಮ್ಮ |
ಬಂಧನವ ಬಿಡಿಸಿ ನಿತ್ಯಾ
ನಂದವ ತೋರಿದ ನಿಜತಾತನ | ಭಜಿಸು ||1||
ನಿಜವನರಿಯದಿರಲು ಪುಟ್ಟಿ |
ಅಜನ ಸೃಷ್ಟಿಯಿಂದ ಬಂದ
ರುಜೆಯ ಕೆಡಿಸಿದ ಪರಮಾತ್ಮನ ನೀ
ಭಜಿಸು ಬಿಡದೆ ಗುರುನಾಥನ ||2||
ಅಲ್ಲಿ ಇಲ್ಲಿ ಯೆಂಬ ಸೊಲ್ಲ
ಸುಳ್ಳು ಮಾಡಿದೆ ಪುಣ್ಯ ಪಾಪ
ವಿಲ್ಲದಂತೆ ಗೈದ ಮಾಯ ತೀತನ ನೀ
ಭಜಿಸು ಬಿಡದೆ ಗುರುನಾಥನ ||3||
ತೋರಿ ಕೆಡುವ ದೃಶ್ಯವನ್ನು
ಮೀರಲಿಚ್ಛೆಯುಳ್ಳ ಅಧಿ
ಕಾರಿ ಪುರು ಪುಣ್ಯ ಪಾರಿಜಾತನ ನೀಂ
ಭಜಿಸು ಬಿಡದೆ ಗುರುನಾಥನ ||4||
ಶಂಕೆಯನ್ನು ಹರಿಸಿ ಗುರು
ಶಂಕರಾರ್ಯನೆನಿಸಿ ಜನ್ಮ
ಸಂಕಟವ ಕೆಡಿಸಿದಮಳಾತ್ಮನ ನೀಂ
ಭಜಿಸು ಬಿಡದೆ ಗುರುನಾಥನ ||5||

ಗುರುದೇವ ನೀನೋರ್ವ ನಿಜ ದೇವನೈ
ಗುರುದೇವ ನೀನೋರ್ವ ನಿಜ ದೇವನೈ
ಗುರುದೇವ ನೀನೋರ್ವ ನಿಜ ದೇವನೈ | ನಿನ್ನ |
ಚರಣದೋಳ್ಮೆರೆಯದ | ನರನೆ ಪಾಮರನೈ | ಗುರುದೇವ ||ಪ||
ತಿರುಕನಂದದಿ ಪುರ ಪುರಗಳ ತಿರುಗುತ |
ನರಳುವ ತರಳನ ಹರನ ಮೀರಿಸಿದೈ | ಗುರುದೇವ ||1||
ಕರಣವ ಕರಗಿಸಿ ಮರುಗಿದ ಮುನಿಗಳು |
ಅರಸಿ ತಾವರಿಯದ ಸಿರಿಯ ತೋರಿಸಿದೈ || ಗುರುದೇವ ||2||
ಗುರುಶಂಕರನೆ ಕರುಣ ತೋರಲು ತಾನೆ |
ಗುರುವೆಂಬ ನಾಮವ ಧರಿಸಿ ಬಂದಿಹನೈ || ಗುರುದೇವ ||3||

ಮಾಡಿದೈ ಶ್ರೀಗುರುವೆ ಮಾಡಿದೈ
ಮಾಡಿದೈ ಶ್ರೀಗುರುವೆ ಮಾಡಿದೈ
ಮಾಡಿದೈ ಶ್ರೀಗುರುವೆ ಮಾಡಿದೈ ||ಪ||
ತೊಡಗಿದ ಮರವೆಯ ಕೆಡಿಸಿ | ಮುನ್ನಿ |
ನೊಡಲಿನ ತೊಡಕನು ಬಿಡಿಸಿ |
ಕರ್ಮಕ್ಕೊಡೆಯದ ಕವಚವ ತೊಡಿಸಿ | ಮುಂದೆ |
ಪೊಡವಿಯೊಳವ | ರೊಡಗೂಡಿ ಮಾಡುವ |
ಕೆಡುತನಗಳನೆಲ್ಲ | ಗುಡಿಸುವೊ ವೀರನ |
ಮಾಡಿದೈ ಶ್ರೀಗುರುವೇ ಮಾಡಿದೈ ||1||
ಮರಣ ಭೀತಿಯ ಕೊಚ್ಚಿ ಕೇರಿ | ದೊಡ್ಡ |
ಸುರಪದಂಗಳನೆಲ್ಲ ತೂರಿ | ದುಃಖ |
ಬೆರೆಯದಾನಂದವ ತೋರಿ | ಮುಂದೆ |
ದುರುಳರಂತರ ದುಃಖದುರಿ ಬಂದು ಕವಿದರು |
ಕರಗದೆ ಕರಿಯ ಕಲ್ಲರೆಯಂತೆ ಚಿತ್ತವ ||
ಮಾಡಿದೈ ಶ್ರೀಗುರುವೆ ಮಾಡಿದೈ ||2||
ಬಂಧನ ಬಂದ ಬಗೆಯನು | ಕರ್ಮ |
ದಿಂದದು ಕೆಡದ ಪರಿಯನು | ನಿಜಾ |
ನಂದದೊಳಿರುವ ಸಾರವನು | ತೋರಿ |
ಸಂದಿಗೊಂದಿನೊಳಿರ್ದ ಸಂದೇಹಂಗಳ ಕೊಂದು |
ತಂದೆ ಗುರು ಶಂಕರನೋಳ್ |
ಹೊಂದಿ ಬೆಳಗುವಂತೆ || ಮಾಡಿದೈ ||3||

ಗುರುಪಾದದೊಳು ಮನವಿಂಗಿ
ಗುರುಪಾದದೊಳು ಮನವಿಂಗಿ
ಗುರುಪಾದದೊಳು ಮನವಿಂಗಿ | ಬಂಧ
ತೊರದು ಪೋಯಿತು ನೋಡೆ ತಂಗಿ |
ಹೊರಗೆಂಬವಳಗೆಂಬ | ಹೊರವಳಸಂದೆಂಬ |
ಬಿರುಕಿನೊಳೆನ್ನ ತುಂಬಿರುವಂತೆ ಮಾಡಿದ | ಗುರು ||ಪ||
ತಾಪಕೋಪಂಗಳ ಕೆಡಿಸಿ | ಬಳಿಕ |
ರೂಪು ನಾಮಂಗಳ ಸುಡಿಸಿ |
ದೂಪದೀಪಗಳೆಂಬಾ | ರೋಪವೆಲ್ಲವನು ನಿ|
ರ್ಲೇಪವೆನಿಸಿ ನೀ ಚಿ | ದ್ರೂಪನೆಂದರುಪಿದ || ಗುರು ||1||
ತನ್ನಾನಂದದ ಸಾರ ಬೆಸಗಿ | ಮನ |
ವಿನ್ನೆಲ್ಲು ಪೋಗದಂತೆಸಗಿ |
ಭಿನ್ನವೆಂಬುವ ನುಡಿ ಶೂನ್ಯವಾಯಿತು ಯೆಂಬ |
ಯೆನ್ನಲ್ಲಿಯೆ ಜಗವೆನ್ನಲ್ಲಿ ತೋರಿದ || ಗುರು ||2||
ಗುರುವೆಂಬ ನಾಮವ ಧರಿಸಿ | ಹೊಟ್ಟೆ |
ಹೊರೆಯುವ ಜನ್ಮವ ಹರಿಸಿ |
ಹರುಷವನೇರಿಸಿ ಹರನೊಳು ಸೇರಿಸಿ |
ಮರಣ ಜನ್ಮಂಗಳ ಗೋ | ಚರಿಸದಂತೆಸಗಿದ || ಗುರು ||3||
ಮೂರು ಮೂರ್ತಿಗಳಲ್ಲು ಕೂಡಿ | ನಾ |
ಸೇರಿಕೊಂಡಿರುವಂತೆ ಮಾಡಿ |
ತೋರುವ ಬಗೆಯನು ತೋರಿಸಿ ನಮ್ಮಲ್ಲೇ |
ತೋರಿಸಿ ಬೇರೇನು ತೋರದಂತೆಸಗಿದ ||4||
ಮರಣ ಜನ್ಮಂಗಳ ಸುಟ್ಟು | ನಿಜ |
ಗುರು ದೂಷಕರಿಗಿದ ಕೊಟ್ಟು |
ಮರವೆಯ ಬ್ಯಾರಿಟ್ಟು ಅರುಹಿಗೆ ಬ್ಯಾರಿಟ್ಟು |
ಗುರು ಶಂಕರನ ಗುಟ್ಟು | ಅರಿಯದವನ ಬಿಟ್ಟು || ಗುರು ||5||

ಅಂಬ ನೀನು ಜಾಣೆ
ಅಂಬ ನೀನು ಜಾಣೆ
ಅಂಬಾ ನೀನು ಜಾಣೆ | ನಂಬಿದೆನು ಕಾಣೆ |
ಇಂಬಿಲ್ಲದೆ ಲೋಕವಾಗೆ | ತುಂಬಿಕೊಂಡೆ ನೀನೆ || ಅಂಬಾ ||ಪ||
ನಿನ್ನ ಕೂಡಿದಾಭಾಸಾ ತಾನೀಶನಾದ ಕಾಣೆ |
ನಿನ್ನ ತಿಳಿದ ಮೇಲೆ ಜನ್ಮ ಪಾಶವಿನ್ನುಂಟೇನೆ ||1||
ಮಾಯೆಯೆಂದು ಪೇಳಿ ನಿನ್ನ ತಾಯಿಯಂದೊಡೇನೆ |
ಮಾಯೆಯೆಂದು ಪೇಳುವಲ್ಲೆ ಕಾಯವಿಲ್ಲ ಕಾಣೆ ||2||
ಅಲ್ಲಿ ಇಲ್ಲಿ ತೋರಿತೆಂಬುದೆಲ್ಲ ನೀನೆ ಕಾಣೆ |
ಇಲ್ಲ ಉಂಟು | ಉಂಟಲ್ಲೆಂಬುದಲ್ಲದವಳು ನೀನೆ ||3||
ಹೊನ್ನು ಹೆಣ್ಣು ಸಂಪತ್ತಿದು | ನಿನ್ನ ಮಹಿಮೆ ಕಾಣೆ |
ಯನ್ನೊಳು ನೀನಿರ್ದ ಮೇಲೆ ಭಿನ್ನವಿನ್ನುಂಟೇನೆ ||4||
ಮರೆತು ನಿನ್ನ ಕಾರ್ಯವನ್ನು ಮರಣವಾಯ್ತು ಕಾಣೆ |
ಗುರು ಶಂಕರನೋಳ್ ಕೂಡಿ ನೀನೆ ಪರಿಪರಿಯಾದೆ ಕಾಣೆ ||5||

ಯೆಂತು ಮುಕ್ತನಾಗಬೇಕಣ್ಣ
ಯೆಂತು ಮುಕ್ತನಾಗಬೇಕಣ್ಣ
ಯೆಂತು ಮುಕ್ತನಾಗಬೇಕಣ್ಣ |
ಯಿಂತಾದ ಮೇಲ್ತಾನೆಂತು ಮುಕ್ತನಾಗಬೇಕಣ್ಣ |
ಕಂತೆ ಬೊಂತೆಗೆ ಚಿಂತೆ |
ರೋಗದ ಚಿಂತೆ ಮುಪ್ಪಿನ ಚಿಂತೆ |
ಬಡತನ ಚಿಂತೆ ಸತ್ತರೆ ಚಿಂತೆ |
ಪರಿಚಿಂತೆಯೆಂಬೀ ಸಂತೆಯೋಳ್ತಾನೆಂತು ||ಪ||
ಚಿಕ್ಕಪುಟ್ಟವರಿಲ್ಲದಿಹ ಚಿಂತೇ ನೆರೆಹೊರೆಯಮನೆಯೊಳು |
ವಕ್ಕಲಿರುವರ ಮಾತುಗಳ ಚಿಂತೆ |
ಮಕ್ಕಳಾಗದ ಚಿಂತೆ ಬಳಿಕಾ |
ಮಕ್ಕಳಿಗೆ ದಿಕ್ಕೆಂಬ ಚಿಂತೆಯು |
ಮಕ್ಕಳೆಲ್ಲಾ ವಕ್ಕಲೋಗಲು |
ಬಿಕ್ಕಿ ಬಿಕ್ಕಿ ಅಳುವ ಚಿಂತೆಯೊಳ್ ||1||
ಹೋಮ ನೇಮ ಸ್ನಾನಗಳ ಚಿಂತೆ | ಮನದೊಳಗೆ ಪುಟ್ಟುವ |
ಕಾಮಿತಾರ್ಥಗಳಿಲ್ಲದಿಹ ಚಿಂತೆ |
ಭಾಮೆಯಿಲ್ಲದ ಚಿಂತೆ |
ಭಾಮೆಗೆ ಪ್ರೇಮವಿಲ್ಲದ ಚಿಂತೆ |
ಪ್ರೇಮಕೆ ಹೇಮವಿಲ್ಲದ ಚಿಂತೆ |
ಹೇವಕೆ ಭೂಮಿಯಿಲ್ಲದ ಚಿಂತೆಯೊಳು |
ತಾನೆಂತು ಮುಕ್ತಾನಾಗಬೇಕಣ್ಣ ||2||
ದಿಕ್ಕು ತೋರದೆ ದುಃಖಿಸುವ ಚಿಂತೆ | ಗುರು ಶಂಕರಾರ್ಯನ |
ಸಿಕ್ಕು ತಿಳಿಯದೆ ಲೆಕ್ಕಿಸುವ ಚಿಂತೆ |
ಅಕ್ಕಿಯಿಲ್ಲದ ಚಿಂತೆ |
ಅಕ್ಕಿಗೆ ರೊಕ್ಕವಿಲ್ಲದ ಚಿಂತೆ |
ರೊಕ್ಕವು ಸಿಕ್ಕಲಿಲ್ಲದ ಚಿಂತೆ ಸಿಕ್ಕಲು |
ಮುಕ್ಕ ತಾನಾಗಿರುವ ಚಿಂತೆಯೊಳೆಂತು ಮುಕ್ತಾನಾಗಬೇಕಣ್ಣಾ ||3||

ಯಾಕೆ ಭ್ರಮಿಸಿ ವರಿಸಿ ಧರಿಸಿ ಜನಿಸಿ ಸಾಯುವೇ
ಯಾಕೆ ಭ್ರಮಿಸಿ ವರಿಸಿ ಧರಿಸಿ ಜನಿಸಿ ಸಾಯುವೇ
ಯಾಕೆ ಭ್ರಮಿಸಿ ವರಿಸಿ ಧರಿಸಿ ಜನಿಸಿ ಸಾಯುವೇ |
ಸಾಕು ಸದ್ಗುರುವ ಪಿಡಿಯೊ ಬ್ರಹ್ಮನಾಗುವೆ ||ಪ||
ವಡಲ ಪಿಡಿದು | ಬರಿದೆ ಭ್ರಮಿಸಿ ಕೆಡುವ ಜೀವನು |
ವಡಲ ಕಳದು ತನ್ನ ತಿಳಿದೊಡವನೆ ಪರಮನೂ || ಯಾಕೆ ||1||
ಇಂದು ನಾಳೆ | ಎಂಬ ಮತಿಯು ಬಂಧವೆನಿಪುದು |
ಬೆಂದು ಪೋದ ನರ ಶರೀರ ಮುಂದೆ ಜನಿಸದೂ || ಯಾಕೆ ||2||
ನೀನೆ ನಿನಗೆ ಮಿತ್ರನಲ್ಲ | ಧನ್ಯರಿಲ್ಲವೋ |
ನೀನೆ ನನ್ನ ಶರೆಯ ಬಿಡಿಸಬೇಕು ಸತ್ಯವೂ || ಯಾಕೆ ||3||
ಜಗವು ಜನಿಸಿದಂದವರಿಯದವನ ತನುವಿದು |
ಬಗೆಯೆ ಕಮ್ಮಾರ ಕರದಿ ಪಿಡಿದ ತಿದಿಯಿದೂ ||4||
ತನ್ನೊಳಿಹುದು ಸೃಷ್ಟಿ ಬೀಜ ತನ್ನ ತಿಳಿದೊಡೆ |
ಭಿನ್ನವೆಂದೊಡಿಲ್ಲ ನೋಡು ಭವಕೆ ನಿಲುಗಡೆ ||5||
ಜ್ಞಾನವಿಲ್ಲದವನ ಪೂಜೆ ಸುಕೃತವೆನಿಸದು |
ಶ್ವಾನ ಸುರತದಂತೆ ತುದಿಗೆ ಬಂಧವೆನಿಪುದು ||6||
ಶೇರಿ ಶಂಕೆಯಲ್ಲಿ ಭ್ರಮಿಸಿ ಕೆಡುವ ಮನಸಿಗೆ |
ತೋರು ಶಂಕರಾರ್ಯನಡಿಯ ಮರಳೆ ಧರಣಿಗೆ ||7||

ಪಂಚಾಗ್ನಿಯೊಳಗೆ ತಪಿಸುವ
ಪಂಚಾಗ್ನಿಯೊಳಗೆ ತಪಿಸುವ
ಪಂಚಾಗ್ನಿಯೊಳಗೆ ತಪಿಸುವ |
ವಂಚಕರ ಮನಕ್ಕೆ ಮನವನೀಯದೆ ತೊಡಗಿದ |
ಕಂಚುಕವಹ ಕೋಶಂಗಳ ಪಂಚಕವನು ಕಳೇದು ನೋಡೈ |
ಹೊಂಚಿ ನಿನ್ನಲ್ಲಿ | ಮಿಂಚುವದು ಪ್ರಪಂಚ ನೋಡಲ್ಲಿ |
ಪಂಚ ವಿಧದ ನಿನ್ನ ಲಾಂಭನವರಿತೊಡೆ
ಸಂಚಿತವಳಿದು | ಪ್ರಪಂಚವ ಹಾರಿ
ವಿರಿಂಚಿ ಎನಿಸುವೆ | ಚಿತ್ಸುಖವೆಂಬ ಮಂಚದೊಳಿರುವೆ ||1||
ವ್ಯರ್ಥವ ಮಾಡಿದೆ ದೇಹವ |
ಮಿಥ್ಯಾ ಕರ್ಮದಲಿ ಬಳಲಿ ಬಳಲಿದೆ |
ಮತ್ತೀ ಮತ್ರ್ಯಕೆ ಬಾರದ ತೆರದಲಿ |
ಸತ್ಯಾರ್ಥವನು ತಿಳಿದು ನೋಡು |
ತತ್ವಜ್ಞರಲ್ಲಿ | ಗೊತ್ತಹುದು ನಿತ್ಯತ್ವ ನಿನ್ನಲ್ಲಿ |
ಸತ್ತು ಚಿತ್ತಾನಂದ ನಿತ್ಯಾ ಖಂಡವು ಎಂಬ ತತ್ವ ನೀನಾಗಿ |
ಸರ್ವೋತ್ತಮನೆನಿಸಿ ನಿಶ್ಚಿಂತನಾಗಿರುವೆ |
ಪೇಳಿಹುದಿದು ತತ್ವಮಸಿಯೊಳಗೆ ||2||
ಪರಿಪರಿ ಲೋಕವ ಸುತ್ತಿದೆ |
ಪರಿ ಪರಿ ತೀರ್ಥದಲ್ಲಿ ಮುಳುಗಿ ಬಳಲಿದೆ ಬರಿದೇ |
ಪರಿಪರಿಯಾಗುವ ಚಿತ್ತಕೆ ಚರಶಕ್ತಿಯ ಕೊಟ್ಟು ನಿಜವ |
ನರಿಯದೆ ಪೋದೆ | ಪರಿಪರಿ ಯೋನಿ ಶರೆಗೊಳಗಾದೆ |
ಬೆರೆಯದೆ ನೀ ಮುಂದಾದರು ಪುಸಿಯೊಳು ನಿಜ
ವರಿತು | ನಿಶ್ಚಲದಿ ನಿಂದಿರು ನಿತ್ಯಾನಂದ ಶ್ರೀ
ಶರಧಿ ಮಧ್ಯದೊಳು | ದೊರೆಯುವುದಿದು ಗುರು ಶಂಕರನೋಳು ||3||

ಸಾರ ಸಾರ್ಸಂಸಾರವೆಲ್ಲಿ
ಸಾರ ಸಾರ್ಸಂಸಾರವೆಲ್ಲಿ
ಸಾರ ಸಾರ್ಸಂಸಾರವೆಲ್ಲಿ
ತೂರಿಸೇರ್ನಿಸ್ಸಂಗದಲ್ಲಿ |
ಬೆರೆ ಗತಿಯೆಂಬುವುದಿನ್ನೆಲ್ಲಿ |
ತೋರದೆಲ್ಲೆಲ್ಲಿ | ಮೂರು ನಿಮಿಷದಾಟದಲ್ಲಿ |
ತೋರಿ ಕೆಡುವೊ ಕಾಯದಲ್ಲಿ |
ಸೇರಿಸುಖಿಯೆಂಬುವನ್ಯಾರಲ್ಲಿ |
ತೋರಿಸವನೆಲ್ಲ || ಸಾರು ||ಪ||
ಎಷ್ಟು ನರರಾಳಿದರೀ ಧರೆಯೊಳ್ |
ಎಷ್ಟು ಮುಂದಾಳುವರಾ ಪರಿಯೋಳ್ |
ಅಷ್ಟರಳಿದರಳಿಯದುಳವೀ ಸೃಷ್ಟ್ಯಾಕೃತಿಯೊಳು |
ಕಟ್ಟಕಡೆಯೊಳೆಲ್ಲ ಕೆಟ್ಟು ನಷ್ಟವಾಗಿ ಪೋಗಲಿನ್ನು
ಪುಟ್ಟದವರೋಳ್ | ನಷ್ಟನಾಗದ | ಧಿಟ್ಟರಾರುಂಟು ಸಾರು ||1||
ನೂರು ಕಲ್ಪಾಯುವ ಕೂಡಿರ್ದ |
ಮೇರು ಶಿಖರಾಗ್ರವನೇರಿರ್ದ ಸೇರಿ |
ಗಗನಾಂಡವ ಕೂಡಿದ ತನು ಜಾಲಗಳೆಲ್ಲ |
ಬೇರು ಕಡಿದ ಮೇಲೆ ವೈಕ್ಷ |
ಜಾರುವಂತೆ ಕರ್ಮಕ್ಷಯದಿಂ ಮೀರಿ |
ಕೆಡಲೀ ನರದೇಹಕೆ ಸುಸ್ಥಿರವೆಂಬುದುಂಟೇ || ಸಾರು ||2||
ಕರಣವಿರುವೋ ತನಕ ನೀನು
ಮರಣ |ಜನ್ಮಂಗಳ ವಾಯನು
ಧರಿಸಿ | ಬೇಕೆಂದಿಗು ತಪ್ಪದು ನಿನೆಲ್ಲಿರ್ದೊಡದೇನೈ |
ಪರಮಗುರು ಶಂಕರನಂಘ್ರಿಯನು |
ಬೆರತು ಮರತಾಗಲೆ ದೃಶ್ಯವನು
ನಿರುತ | ನಿತ್ಯಾಖಂಡಾನಂದಾಂಬುಧಿಯಾಗುವೆ || ನೀನು ಸಾರ ||3||

ಯಾರಿಗು ತಿಳಿಯದು ನಮ್ಮೂರು
ಯಾರಿಗು ತಿಳಿಯದು ನಮ್ಮೂರು | ಸುಖ
ಸಾರವೆ ಆಗಿದೆ ನಮ್ಮೂರು |
ಆರರ ನೆಲೆಯ ನಮ್ಮೂರು | ಹದಿ
ಮೂರರ ಮೇಲಿದೆ ನಮ್ಮೂರು ||1||
ನಾಥರ ಕೂಡದು ನಮ್ಮೂರು | ಬಹು
ನಾಥರಿಗದು ನೆಲೆ ನಮ್ಮೂರು ||
ಮಾತಿಗೆ ಸಿಲುಕದು ನಮ್ಮೂರು | ಯಮ
ದೂತರ ಮಾರಿಯ ನಮ್ಮೂರು ||2||
ಲಕ್ಷದೆ ಸಿಲುಕದು ನಮ್ಮೂರು | ಬಹು
ಲಕ್ಷಣವಾಗಿದೆ ನಮ್ಮೂರು |
ಸಾಕ್ಷೀಯ ಮೀರಿದೆ ನಮ್ಮೂರು | ಈ
ಕುಕ್ಷಿಯಲಡಗಿದೆ ನಮ್ಮೂರು ||3||
ಕಳೆದುಳಿಯುವದೆ ನಮ್ಮೂರು | ದು
ರ್ಮಲವಿಲ್ಲದ ನೆಲೆ ನಮ್ಮೂರು |
ಕಳೆಮೇಲಿಲ್ಲವೋ ನಮ್ಮೂರು | ಬಹು
ಥಳಥಳಿಸುವುದೆ ನಮ್ಮೂರು | ಯಾರಿಗು ತಿಳಿಯದು ||4||
ಕಣ್ಣಿಗೆ ಕಾಣದು ನಮ್ಮೂರು | ಬಹು
ಬಣ್ಣಾಗಳಾದುದುನಮ್ಮೂರು |
ಭಿನ್ನವು ಸುಡುವುದು ನಮ್ಮೂರು | ಸುರ
ಕಿನ್ನರರಿಯದ ನಮ್ಮೂರು | ಯಾರಿಗು ತಿಳಿಯದು ||5||
ತೋರುವದಲ್ಲಾ ನಮ್ಮೂರು | ಪುಸಿ
ತೋರದ ನಿಜಪದ ನಮ್ಮೂರು |
ಪಾರವ ಮೀರಿದೆ ನಮ್ಮೂದರು | ನಿಜ
ಧೀರರ ಗರುಡಿಯೆ ನಮ್ಮೂರು ||6||
ಸಂಕಟವಿಲ್ಲದ ನಮ್ಮೂರು | ಆ
ತಂಕವ ಮೀರಿದೆ ನಮ್ಮೂರು
ಸುಂಕವ ಕೇಳದು ನಮ್ಮೂರು | ಗುರು
ಶಂಕರನರಮನೆ ನಮ್ಮೂರು ||7||

ದೇಹವೆ ನಾನೆಂಬ ಮೋಹವ ತೋರಿದೆ
ದೇಹವೆ ನಾನೆಂಬ ಮೋಹವ ತೋರಿದೆ ಹಾಹಾ ಮಾಯೆಯೇ |
ವೂಹಿಸಲೀ ನಿನ್ನ ಸಾಹಸವಳವಲ್ಲ ಹಾಹಾ ಮಾಹೆಯೆ ||1||
ಹಂಸನೊಳಿಲ್ಲದ ಸಂಸಾರ ಕೂಡಿದೆ ಹಾಹಾ ಮಾಯೆಯೇ |
ಸಂಶಯ ಕಟ್ಟಿ ವಿಧ್ವಂಸನ ಮಾಡಿದೆ ಹಾಹಾ ಮಾಯೆಯೇ ||2||
ಮರಶಿಲೆಗಳನೆಲ್ಲ ಸುರವರರೆನಿಸಿದೆ ಹಾಹಾ ಮಾಯೆಯೆ |
ಪರಿಪೂರ್ಣನೊಳು ಸೇರಿ ಪರಿಪರಿ ಬಗೆಯಾದೆ ಹಾಹಾ ಮಾಯೆಯೇ ||3||
ಜಾತಿಯೆಂಬುದನೊಂದು ಮಾತಿನೋಳ್ ನಿಲಿಸಿದೆ ಹಾಹಾ ಮಾಯೆಯೇ |
ರೀತಿಯ ಕೆಡಿಸಿ ಭವ ಭೀತಿಯ ತೋರಿದೆ ಹಾಹಾ ಮಾಯೆಯೇ ||4||
ಹಿಂದು ಮುಂದಿಲ್ಲದೆ ಸಂದಿನೋಳ್ತೋರುವೆ ಹಾಹಾ ಮಾಯೆಯೇ |
ಹಿಂದು ಮುಂದಿದ್ದವ ಬಂದರೆ ಹಾರುವೆ ಹಾಹಾ ಮಾಯೆಯೆ ||5||
ಪರಮನೊಳಿಲ್ಲದ ಮರೆಯನೆ ಹಾಹಾ ಮಾಯೆಯೆ |
ಶರೀರತೊಡಿಸಿ ಜನ್ಮ ಸೆರೆಯೊಳು ಕೂಡಿದೆ ಹಾಹಾ ಮಾಯೆಯೇ ||6||
ಅರಿಯುವೆನೆಂದು ನಿನ್ನರಸಲು ಪುಸಿಯಪ್ಪೆ ಹಾಹಾ ಮಾಯೆಯೆ |
ಬರಿ ಭ್ರಮೆಯಿಂದ ಶ್ರೀಗುರು ಶಂಕರನೋಳಿರ್ಪೆ ಹಾಹಾ ಮಾಯೆಯೆ ||7||

ಜ್ಞಾನಮೊಂದಿಲ್ಲದಿನ್ನೇನಿರ್ದೊಡೇನು ಮಿತಿ
ಜ್ಞಾನಮೊಂದಿಲ್ಲದಿನ್ನೇನಿರ್ದೊಡೇನು ಮಿತಿ | ಗಾಣದೀ |
ನಿಶ್ಚಲಾನಂದ ಬೆಳಗುವದೇ ||ಪ||
ರಾಮನಾಮವ ಪೇಳಿದಂತೆ ಪಠಿಸುವದು ಶುಕ |
ಹೇಮ ಲೋಷ್ಟಗಳ ಸಮದರ್ಶಿಕೇಳ್ ಶುನಕ |
ತಾಮಸವ ಬಿಟ್ಟು ಮೌನವ್ರತಿಯು ತಾನು ಬಕ |
ಭೂಮಿಯನು ಬಳಸುವದು ಪಕ್ಷಿ ಕೊನೆ ತನಕ ||1||
ಮಡದಿ ಮಕ್ಕಳ ಮಮತೆ ಬಿಟ್ಟು ಕ್ರಿಮಿ ಚರಿಸುವದು |
ಜಡೆಗಳನು ಧರಿಸಿ ವಟವೃಕ್ಷ ತಪಿಸಿವದು |
ಯಡೆಬಿಡದೆ ಮತ್ಸ್ಯ ನೀರೊಳಗೆ ತಾ ಮುಳುಗಿಹುದು |
ವಡಲ ಸುಖ ತೊರದ ಬಗೆ ಹುಚ್ಚರೊಳಗಿಹುದು ||2||
ಪುರವ ಸೇರದೆ ಕಾಡಿನೊಳು ಚರಿಸುವದು ನರಿಯು |
ಪರಿಪರಿಯ ಪರ್ಣ ಭಕ್ಷಣ ನೇಮಿಕರಿಯು |
ಚರಿಸುವದು ಗಗನ ಮಂಡಲದಲ್ಲೆ ತಿತ್ತಿರಿಯು |
ಗುರುಶಂಕರನ ಪಿಡಿಯದವನೆ ನರಕುರಿಯು ||3||

ನಾನೆಂಬುದೊಂದೆ ಕಾಣುವುದಲ್ಲಿನ್ನೇನಿಲ್ಲವೋ
ನಾನೆಂಬುದೊಂದೆ ಕಾಣುವುದಲ್ಲಿನ್ನೇನಿಲ್ಲವೋ ತಂದೆ |
ಧ್ಯಾನದೊಳ್ ಮೌನದೋಳ್ | ಸ್ನಾನಾಪಾನಂಗದೋಳ್ |
ದಾನದೊಳದರ ವಿಧಾನದೋಳ್ | ಮೌನಾದೋಳ್ನಾನೆಂಬುವದೊಂದೇ ||ಪ||
ತನುಜಾಭಿಮಾನದೊಳು | ಪೇಳುವ ನಾನಾ |
ಜನದಾಭಿದಾನದೊಳು |
ನೆನಸಿನೋಳ್ ಕನಸಿನೋಳ್ |
ಮನಸಿನ ಲಯದೊಳು |
ಮನನದೊಳ್ | ಜನನದೊಳ್
ಗಣನೆಯೊಳ್ | ಕೊನೆಯೊಳು || ನಾನೆಂಬುವದೊಂದೇ ||1||
ಅರುಹು ಮರವೆಹಳೊಳು | ಲೋಕದ ಕುಲ |
ಗುರು ಹಿರಿ ಕಿರಿಯರೊಳು |
ನರರೂಳ್ವಾ ನರರೊಳ್ |
ಬೂವರರೋಳ್ | ಪಾಮರರೊಳು |
ಸುರರೊಳ್ ಕಿನ್ನರರೊಳ್| ವಾಗ್ವರ ಹರಿಹರರೊಳು || ನಾ ||2||
ತನುವಿದು ನಾನೆಂಬಲ್ಲಿ ನಾನೆಲ್ಲೆಂದೀ |
ತನುವ ಬೇರಿರಿಸುವಲ್ಲೀ | ತನು ಸಾಕ್ಷಿಯಾದಲ್ಲಿ |
ತನು ಕಾಣಾದಿರುವಲ್ಲಿ ಚಿನುಮಯ |
ಗುರು ಶಂಕರನ ನಿಜಸ್ಥಿತಿಯೊಳು || ನಾ ||3||

ಸಟೇಪಟೇ ಹಿಂದು ಸಟೇ ಪಟೆ
ಸಟೇಪಟೇ ಹಿಂದು ಸಟೇಪಟೇ ಮುಂದು
ಸಟೇಪಟೇ ಸಂದು ಸಟೇಪಟೇ |
ಕುಟಿಲ ಮಾನಸನಾಗಿ ದಿಟವ ತಾನರಿಯದೆ
ಪಿಟಿಪಿಟಿ ಎಂಬುದು ಸಟೇಪಟೇ ||ಪ||
ಮೂರು ಮೂಲೆಯ ಕೂಟ ಸಟೇಪಟೇ |
ಅಲ್ಲಿ ಸೇರಿದ ತಾರಕ ಸಟೇಪಟೇ |
ಪಾರಮಾರ್ಥಿಕದಲ್ಲಿ ಬೇರೆ ಬೇರೆನಿಸುತ |
ತೋರಿ ಕೆಡುವುದೆಲ್ಲ ಸಟೇಪಟೇ ||1||
ವಂದನವೆಂಬುದು ಸಟೇಪಟೇ | ಅಲ್ಲಿ
ಹೊಂದಿದ ದೇವರು ಸಟೇಪಟೇ |
ಹಿಂದುಮುಂದಿಲ್ಲದೆ ಸಂದಿನೊಳಗೆ |
ತೋರುವಂದ ಚಂದಗಳೆಲ್ಲ ಸಟೇಪಟೇ ||2||
ಧ್ಯಾನ ಮೌನಗಳೆಲ್ಲ ಸಟೆಪಾಟೆ |
ನಿತ್ಯ ಸ್ನಾನ ಮೌನಗಳೆಲ್ಲ ಸಟೆಪಟೆ |
ತಾನೊಬ್ಬನಲ್ಲದಿನ್ನೇ ನೊಂದು ತೋರದ |
ನಾನಾ ದೇವರು ಎಲ್ಲ ಸಟೆಪಾಟೆ ||3||
ಪರವಿಹವೆಂಬುದು ಸಟೇಪಟೇ | ತಾನು
ತಿರುಗುವನೆಂಬುದು ಸಟೇಪಟೇ |
ಗುರು ಶಂಕರನ ನಿಜವರಿಯದೆ |
ಪೇಳುವ ಪರಿಕಲ್ಪನೆಗಳೆಲ್ಲ | ಸಟೇಪಟೇ ||4||

ಎಲ್ಲಾ ರೂಪವು ತಾನಂತೆ
ಎಲ್ಲಾ ರೂಪವು ತಾನಂತೆ | ಶಿವ
ನೆಲ್ಲೆಲ್ಲೂ ತುಂಬಿಹನಂತೆ |
ಅಲ್ಲಲ್ಲರಸುತ ಗುಡಿಗಳ ತಿರುಗುವ |
ಕಳ್ಳರ ಕಣ್ಣಿಗೆ ಕಲ್ಲಂತೆ ||ಪ||
ದೃಶ್ಯವಿದಾದವ ತಾನಂತೆ |
ದೃಶ್ಯಾವನರಿವನು ತಾನಂತೆ |
ದೃಶ್ಯಾದೃಶ್ಯಗಳೆರಡರ ನಡುವೆ |
ಶಾಶ್ವತನಾದವ ತಾನಂತೆ ||1||
ಕಳವಳಗಳು ತನಗಿಲ್ಲಂತೆ |
ಮೊಳೆಯುವದಿನ್ನೊಂದಿಲ್ಲಂತೆ |
ಒಳಹೊರಗುದಿಸುವ | ಕಲ್ಪಿತರೂಪವ |
ಬೆಳಗಿಸಿ ತಾ ಬೆಳಗುವನಂತೆ ||2||
ಕುಂದೆಂಬುದು ತನಗಿಲ್ಲಂತೆ |
ಮುಂದೊಂದಾದವ ತಾನಂತೆ |
ಮುಂದೊಂದಾವಂದರೊಳೊಡಗೊಡುವ |
ಸಂದಿನೊಳಗು ಸೇರಿಹನಂತೆ ||3||
ಕಣ್ಣೆಂಬುದು ತನಗಿಲ್ಲಂತೆ |
ಕಣ್ಣಿಗೆ ಕಣ್ಣಾಗಿಹನಂತೆ |
ಕಣ್ಣ ತೆರೆದು ತನ್ನರಸುವರಿಗೆ ತಾ |
ಬಣ್ಣ ಬಣ್ಣವಾಗಿಹನಂತೆ ||4||
ಕಳೆದುಳಿಯುವುದೇ ತಾನಂತೆ |
ಉಳಿವನ ಕಳೆಯುವರಿಲ್ಲಂತೆ |
ಕುಲ ಶೀಲಗಳೆಂಬ | ಕೊಳೆಯಿಲ್ಲದೆ |ನಿ
ರ್ಮಲದೊಳಗಿರುವನು ತಾನಂತೆ ||5||
ಕಿಂಕರನಾದವ ತಾನಂತೆ |
ಶಂಕರನಾದವ ತಾನಂತೆ |
ಮಂಕನು ಬಿಡಿಸುತ ಕಿಂಕರರಿಗೆ |
ಗುರುಶಂಕರನಾದವ ತಾನಂತೆ || ಎಲ್ಲಾ ||6||

ಐದು ಸುತ್ತಿನ ಕೋಟೆಯ ಪುರ
ಐದು ಸುತ್ತಿನ ಕೋಟೆಯ ಪುರಕ |
ನಾದಿಯಿಂತಾನರಸನಾಗಿ |
ಬಾಧೆಯಿಲ್ಲದೆ ಒಬ್ಬನೆ ನೆಲಸಿರುವಾ |
ಓಂ ಗುರು ಶಂಕರಾರ್ಯ
ವಾದವಡಗಿದ | ಜನರಿಗೆ ಕಾಣಿಸುವ ||1||
ಒಂದೊಂದು ಕೋಟೆಯ ಬಾಗಿಲಿನೋಳ್ |
ಹೊಂದಿ ತಾನೇ ತನ್ಮಯನಾಗಿ |
ಹಿಂದು ಮುಂದು ನೋಡದೆ ಕಾದಿರುವಾ ||
ಓಂ ಗುರು ಶಂಕರಾರ್ಯ |
ಮುಂದೆಯಿರುವರ ತನ್ನಂತೆ ಭಾವಿಸುವಾ ||2||
ಕುಳಿತುವೂಳಿಗದವರನು ಚಲಿಸುವ | ಚಾರರೈವರನು |
ಬಲದ ಭಟರೈವರ ತಾಕೂಡಿರುವ |
ಓಂಗುರುಶಂಕರಾರ್ಯ |
ಕುಲವ ತೋರಿದ ತಾಯಿಗೆ ತಗ್ಗಿರುವಾ ||3||
ತನ್ನ ಸತಿಯೋಳ್ಕೂಡಿಕೊಂಡು |
ಮುನ್ನಿರ್ದವಳನಪ್ಪಿಕೊಂಡು |
ಕಂಣನೂರಿಗೆ ಮೇಲೆ ಗತಿಗೊಂಡು |
ಓಂಗುರು ಶಂಕರಾರ್ಯ |
ಭಿನ್ನಿ ಭಿನ್ನಿಸಿಕೊಂಡು ತಿರುಗುವನು ||4||
ಬಂಣವ ಮೈಗೆ ಬೊಳಕೊಂಡಿರುವ |
ತನ್ನ ತಿಳಿಯದೆ ಕಳೆಗುಂದಿರುವ |
ಹೆಂಣು ಹೊನ್ನಿನ ವೇಷ ಧರಿಸಿರುವ |
ಓಂಗುರು ಶಂಕರಾರ್ಯ |
ನಿನ್ನ ಕೂಡಿದೊಡವನೀಗ ನಿಜದೇವ ||5||
ದೇಶದೇಶವನೆಲ್ಲ ಸುತ್ತಿ |
ನಾಶತೀತನನಾ ನೋಡಿ ಬಂದೆ |
ನಾಶರಹಿತನು ಶರೀರದೊಳಗುಂಟು |
ಓಂಗುರು ಶಂಕರಾರ್ಯ |
ಕೋಶ ಕಳದವಗೀ ಮರ್ಮ ಗೊತ್ತುಂಟು ||6||

ಹೇಳಿ ಬಾರೆ ಜಾಣೆ ಸದ್ಗುರುವಿನ ಲೀಲೆ
ಹೇಳಿ ಬಾರೆ ಜಾಣೆ ಸದ್ಗುರುವಿನ ಲೀಲೆ | ಬೇರೆ ಕಾಣೇ
ಕಾಲ ಕರ್ಮಗಳಿಲ್ಲದಾಲಯದೊಳಗಿರ್ದ |
ಮೇಲುಮಂಚದ ಮೇಲೆ ಲೀಲೆಯೊಳಿಹಳೆಂದು |
ಹೇಳಿ ಬಾರೆ ಜಾಣೆ ||1||
ಹಿಂದಿದ್ದವನು ಕೆಟ್ಟ ಮುಂದಿರುವನು ಬಿಟ್ಟ |
ಬಂದಾವಗೆಡೆಗೊಟ್ಟಾನಂದದೊಳಿಹಳೆಂದು ||
ಹೇಳೆ ಬಾರೆ ಜಾಣೆ ||2||
ಅವರಿವರೊಡಗೂಡಿ ಆವರಿವರಂತಾಡಿ |
ಅವರವಿವರಮಾಡಿ ಸವಿನೋಡುತ್ತಿಹಳೆಂದು ||
ಹೇಳಿ ಬಾರೆ ಜಾಣೆ ||3||
ನೆರೆಹೊರೆಗಳು ಹೋಗಿ | ಪುರಕೆ ತಾನರಸಾಗಿ |
ಗುರುಶಂಕರನಿಗಾಗಿ | ಸಿರವ ನೀಗಿಹಳೆಂದು ||
ಹೇಳಿಬಾರೆ ಜಾಣೆ ||4||

ಕೇಳಿ ತೋರದ ಜ್ಞಾನವ
ಕೇಳಿ ತೋರದ ಜ್ಞಾನವ |
ಪೇಳುವೆನು ಮೂಲಧರ್ಮ ಜ್ಞಾನವ ||
ಕೇಳಿದಂದದೊಳಿರ್ದವ | ಜಗದೊಳಗೆ |
ಫಾಲ ಲೋಚನನಾಗುವ ||ಪ||
ಸತಿಯೆಂಬ ಮೋಹ ಪೋಗಿ | ಯನಗಿವನು |
ಪತಿಯೆಂಬ ಮಮತೆ ನೀಗಿ |
ಸತಿಪತಿಗಳೊಂದೆಯಾಗಿ | ಸುಖಿಸುವ |
ಚತುರ ನಿಸ್ಸಂಗಯೋಗಿ ||1||
ಮನವು ಪರಿಶುದ್ಧಮಾಗಿ | ಸಂಪದವು |
ಕನಸಿನಾಕಾರವಾಗಿ |
ಕನಕ ಕಸದಂತೆಯಾಗಿ | ಬಾಳಿದೊಡೆ |
ಮನುಜನವ ರಾಜಯೋಗಿ || ಕೇಳಿ ತೊರದ ಜ್ಞಾನವ ||2||
ಚರ್ಮದ ಹಾರಕಾಗಿ | ಪ್ರಾರಬ್ಧ
ಕರ್ಮವಿದ್ದಂತೆಯಾಗಿ
ನಿರ್ಮಮತೆಯಿಂದ ಮುಂದೆ ಸಾಗಿ| ನಿಂತವನು
ಮರ್ಮವಿಜ್ಞಾನ ಯೋಗಿ || ಕೇಳಿ ತೊರದ ||3||
ಪತಿಹತವು ಭಿನ್ನವಾಗಿ ಅದರಿಂದ |
ಸತಿಗೆ ಬೇಸರಿಕೆಯಾಗಿ |
ಸತಿಪತಿಗಳಿಬ್ಬರಾಗಿ | ಕೂಡಿದವ |
ಕ್ಷಿತಿಯೊಳಗೆ ಜನ್ಮರೋಗಿ ||4||
ಮರವೆ ಮುಂದಿಲ್ಲವಾಗಿ | ಜಗವೆಲ್ಲ |
ಪರಿಪೂರ್ಣ ಭಾವವಾಗಿ |
ಅರುಹಿನೊಳು ನಿಂತ ಯೋಗಿ |
ಮೆರೆಯುವನು ಗುರು ಶಂಕರಾರ್ಯನಾಗಿ ||5||

ಯಿವನ್ಯಾರೋ ನೋಡುಬಾರಮ್ಮ
ಯಿವನ್ಯಾರೋ ನೋಡು ಬಾರಮ್ಮ | ಕಂಣು |
ಕಿವಿ ಕಾಲು ಮೂಗು ಯೇನೊಂದಿಲ್ಲವಮ್ಮ || ಯಿವ ಪ||
ಕೋಣೆ ಮನೆಯೊಳು ಕೂತಿರುವ | ನೋಡು |
ಕಾಣುವನವನ ಕಟ್ಟುವನ್ಯಾವನಿರುವ |
ಮಾನಮೇಯಗಳ ಬಿಟ್ಟಿರುವ | ಬಾರೆ |
ನಾನು ನೀನೊಂದೆನ್ನ ಕರೆಯುವ || ಇವ ||1||
ತಂದೆ ತಾಯಿಗಳಿಲ್ಲದವನು | ತಾನು |
ಹಿಂದು ಮುಂದಿರ್ದುದರಿಯದೆ ಬಂದಿಹನು |
ಮುಂದು ಹಿಂದಿಲ್ಲವಾಗಿಹನು |
ತಾನೆ ಮುಂದಾಗಿ ಹಿಂದುಳಿಯದೆ ಮಿಡುಕುವನು || ಯಿವ ||2||
ಶರೀರವಿಲ್ಲದೆ ಕಾಣಿಸುವನು | ತನ್ನ |
ಪರಿಕಿಸುವರನು ತನ್ನಂತೆ ಮಾಡುವನು |
ಚರಣವಿಲ್ಲದೆ ಚರಿಸುವನು | ನಿಮ್ಮ |
ಗುರುಶಂಕರಾರ್ಯನಾನೆಂದು ಪೇಳುವನು || ಯಿವ ||3||

ಜೀವ ನೀಸರ್ವಾಧರನು
ಜೀವ ನೀಸರ್ವಾಧರನು ಕೇಳಿ ಸಂಸಾರ |
ಭಾವ ನಿನ್ನೊಳಗಿಲ್ಲ ಜೀವ |
ಭಾವ ಭೇದಗಳಿಂದ ತೋರುವ ಜಗವನು |
ಭಾವಿಸು ಪುಸಿಯೆಂದೆ ಜೀವ |ಪ||
ತಾತ ಜಾಮಾತ ಮಾತುಳಸುತ ಹಿತರೆಂಬ |
ಮಾತಿನೊಳಗು ನೀನೆ ಜೀವ |
ರೀತಿ ತೋರದ ಬರಿ ಮಾತಿನ ಬಗೆ ಬಗೆ |
ಜಾತಿಯೊಳಗು ನೀನೆ ಜೀವ |
ಸೂತಕವಳಿದೀಗ ಪೂತನಾದನುಯೆಂಬ |
ನೀತಿಯೊಳಗು ನೀನೆ ಜೀವ ||1||
ಬಾಲತ್ವದೊಳು ಸತಿ ಲೀಲಾವಸ್ಥೆಯೊಳಂತ |
ರಾಳದೊಳಗು ನೀನೆ ಜೀವ |
ಕೀಳೆಂಬ ಬಳಿಕೀಗ ಮೇಲೆಂಬ ವ್ಯವಹಾರ |
ಕಾಲದೊಳಗು ನೀನೆ ಜೀವ |
ಕಾಲಕರ್ಮಗಳಿಂದ ಕೀಳು ಮೇಲಾದಲೋ|
ಕಾಳಿಯೊಳಗು ನೀನೆ ಜೀವ | ಜೀವನೀ ||2||
ನೆನಪಿನೊಳಗು ಮೇಣಾ ಕನಸಿನೋಳದರಮೇ |
ಲಿನ ಸುಪ್ತಿಯೊಳು ನೀನೆ ಜೀವ |
ತನಿ ನಿದ್ರೆಯಡಗಿದುನ್ಮನಿಯೆಂಬ ತುರ್ಯಾತೀ |
ತನ ಭಾವದೊಳು ನೀನೆ ಜೀವ |
ಜನನದೊಳ್ ಪ್ರಾರಬ್ಧದನುಭವದೊಳು ತನು |
ವಿನ ಮೃತಿಯೊಳು ನೀನೆ ಜೀವ | ಜೀವ ನೀನಾನಂದ ||3||
ವನಿತಾದಿ ವಿಷಯ ರೂಪವನಾಂತು ಚರಿಸುವ |
ಮನಸಿನೊಳಗು ನೀನೆ ಜೀವ |
ಜನಿಸಿ ಮಾನಸ ಪೂಜೆಯೊಳು ತೋರ್ಪ ದೇವರ |
ಗಣನೆಯೊಳಗು ನೀನೆ ಜೀವ |
ಮನಸಿನ ವಿಷಯ ವೃತ್ತಿಗಳೆಲ್ಲ ಮುಳುಗಿದ |
ಘನ ಮೌನದೊಳು ನೀನೆ ಜೀವ |
ಘನವಲ್ಲದುದನೆಲ್ಲ ಘನವಾಗಿ ಮಾಡುವ |
ಘನ ಮಹಿಮನು ನೀನೆ ಜೀವ ||4||
ಅರುಹು ಮರವೆಗಳ ಕುರುಹಿಟ್ಟು ಬೆಳಗಿಸು |
ವರುಹಿನೊಳಗು ನೀನೆ ಜೀವ |
ನರನಾಗ ಶುನಕ ಸೂಕರ ಖಗ ಕೀಟ |
ವಾನರ ದೇಹದೊಳು ನೀನೆ ಜೀವ |
ಸುರಸಿದ್ಧ ಗರುಡ ಕಿನ್ನರ ವಿಧಿಹರಿ |
ಪುರಹರ ನಾಮದೊಳು ನೀನೆ ಜೀವ |
ಪರವೆಂಬುದಡಗಿ ನಿಂತಿರುವ ಶ್ರೀ |
ಗುರು ಶಂಕರ ಪದದೊಳು ನೀನೆ ಜೀವ ||5||

ರೂಪು ನಾಮಂಗಳ ಕಳಿಯೋ
ರೂಪು ನಾಮಂಗಳ ಕಳಿಯೋ | ನೀನಲ್ಲುಳಿಯೋ ಜನ್ಮ |
ತಾಪವಿಲ್ಲದ ನಿತ್ಯಾನಂದದೋಳ್ ಸುಳಿಯೋ || ರೂಪು ||ಪ||
ಪಾಪ ನಾಶನಿಯೊಳು ಕೂಡಿ | ಸ್ನಾನವ ಮಾಡೀ |
ಪುಣ್ಯ ಪಾಪ ಮಲವನ್ನೆಲ್ಲ ನಿರ್ಮೂಲ ಮಾಡಿ || ರೂಪ ||1||
ಯಿದು ಯಿಲ್ಲದ ಪರಿಯಾಗಿ | ಸದ್ದು ಪೋಗಿ |
ಮುಂದೆ ವುದ್ಧರಿಸೆಂಬ ವಾಸನೆಯಲ್ಲ ನೀಗಿ || ರೂಪ ||2||
ಹಿಂದು ಮುಂದಿನ ಕೀಲ ಬಿಡಿಸಿ | ಮಲವ ಗುಡಿಸಿ |
ಮುಂದೆ | ನಿಂದಿರುವದರೊಳಾನಂದವ ಬೆರೆಸಿ || ರೂಪ ||3||
ಮರಣ ಜನ್ಮಂಗಳು ಪೋಗಿ | ವೊಂದೆಯಾಗಿ |
ನಮ್ಮ | ಗುರು ಶಂಕರಾರ್ಯನೋಳ್ ಬೆರದೇಕನಾಗಿ | ರೂಪು ||4||

ಪೋಗಿ ಬಾಳುವ ಬನ್ನಿರೋ
ಪೋಗಿ ಬಾಳುವ ಬನ್ನಿರೋ |
ನಮ್ಮೂರೊಳು ರೋಗವಿಲ್ಲವು ಕಾಣಿರೋ |
ತ್ಯಾಗ ವಿಯೋಗಾನುರಾಗ ಭೋಗಗಳೆಂಬ |
ಸಾಗರವನು ದಾಂಟೆ ಯೋಗಿಗಳೊಂದಾಗಿ ||ಪ||
ಬರವೆಂಬ ಭಯವಲ್ಲಿಲ್ಲಾ | ಕಳ್ಳರ ಕಾಟ
ಸೆರೆಮನೆ ದೊರೆಗಳಿಲ್ಲಾ |
ಕೊರತೆಯಾಗಲು ಬೇರೆ | ಸಿರಿವಂತರಲ್ಲಿಲ್ಲಾ |
ಮರಣ ಜನ್ಮಗಳ ಪೊತ್ತಿರುವೋ ಭವಿಗಳಿಲ್ಲ ||1||
ನೆರೆಹೊರೆ ಎಂಬುದಿಲ್ಲ | ಕಿಂಕರ ಭಾವ
ವರಿಸಿ ನೋಡಿದೊಡಲ್ಲಿಲ್ಲಾ |
ಬರುವೊ ಸಂಕಟವಿಲ್ಲ ಮರುಳು ಮಾಡುವರಿಲ್ಲ |
ನರಕ ನಾಕಗಳೆಂಬ ಪರಿಕಲ್ಪನೆಗಳಿಲ್ಲ ||2||
ಚಳಿಗಾಳಿ ಮಳೆಗಳಿಲ್ಲಾ | ಸೂತಕದಿಂದ
ಬಳಲುವೊ ಕೊಳೆಗಳಿಲ್ಲಾ |
ಕುಲ ಜಾತಿಗೆಳೆಯುವ ಬಳಗದ ಸುಳುಹಿಲ್ಲ |
ನೆಲಸಿಹರಲ್ಲಿ ಸತ್ಕುಲದ ಸಜ್ಜನರೆಲ್ಲ ||3||
ಬರುವೊ ತಾಪಂಗಳಿಲ್ಲಾ | ನೋಡಲು ನಿತ್ಯ
ಪರಿಪೂರ್ಣಾನಂದವೆಲ್ಲ |
ನರಕುರಿಗಳೊಳಿದನರಿತವರ್ಯಾರಿಲ್ಲ |
ಧರೆಯೊಳಿದನು ನಮ್ಮ ಗುರು ಶಂಕರನೆ ಬಲ್ಲ || ಪೋಗಿ ||

ತನ್ನೊಳಿಹುದು ತತ್ವವೆಲ್ಲ
ತನ್ನೊಳಿಹುದು ತತ್ವವೆಲ್ಲ | ಯಿದ
ತನ್ನನರಿತ ಯೋಗಿ ಬಲ್ಲ |
ತನ್ನ ಮೂಲವ ಕಂಡವನನ್ಯ ಭಾವವು ತೋರೆ |
ಜನ್ಮ ಮರಣಗಳ ಭಯವೆಂಬುದಿನ್ನಿಲ್ಲ ||ಪ||
ಅನ್ನಮಯಾಂಗ ತಾನಲ್ಲ | ಪ್ರಾಣ |
ತನ್ಮನೋದೀ ಬೀಜವಲ್ಲ |
ಭಿನ್ನವ ಕಳದೆಲ್ಲ | ಸನ್ಮಯವಾಗಲು |
ಉನ್ಮನಿ ಪದ ಪೋಗಿ | ಚಿನ್ಮಯವಹುದೆಲ್ಲ ||1||
ಗಣಿಸೆ ದೇವರು ಬೇರೆಲ್ಲಿಲ್ಲಾ | ತನ್ನ
ಮನದೊಳು ನೆಲಸಿಹರೆಲ್ಲ |
ಮನದೊಳು ಬೆಳಗುವ ಚಿನುಮಯನರಿಯದೆ |
ಕನಸಿನ ಕಥೆಗಳ ಗುಣಿಸಿ ಕೆಟ್ಟರು ಎಲ್ಲ ||2||
ಮನವು ಸೇರದೆ ಬೇರೊಂದಿಲ್ಲ | ನೋಡು |
ಮನವೆ ಈ ಜಗವಾಯಿತಲ್ಲ |
ಮನದ ಬಯಕೆಯಂತೆ | ತೋರುವ |
ಜಗವೆಲ್ಲ ಮನದೊಳಡಗೆ ಮನಕಾಧಾರವೇನಿಲ್ಲ ||3||
ವಡವೆ ಕಾಲದಿ ಚಿನ್ನವಿಲ್ಲ | ನೋಡ
ಲೊಡವೆಗಳದನು ಬಿಟ್ಟಿಲ್ಲ |
ವಡಲಿನ ಮಡಿಯೊಳು ಮೃಢನು ಕಾಣಿಸಲಿಲ್ಲ |
ಮೃಢನ ಬಿಟ್ಟರೆ ಬೇರೆ ಜಡವದಲಿರದಲ್ಲ ||4||
ಮರವೆಯೆಂಬುದು ಬೇರೆ ಇಲ್ಲಾ | ಅದ
ನರಿತವನಿಗೆ ಜನ್ಮವಿಲ್ಲ |
ಅರುಹು ಮರವೆಗಳೊಂದರೊಳು ಮತ್ತೊಂದಿಲ್ಲ |
ಅರುಹಿನ ಕುರುಹನು ಗುರು ಶಂಕರನೆ ಬಲ್ಲ || ತನ್ನೊಳಿ ||

ತಾನೆನ್ನಬಹುದೇ ಈ ದೇಹವ
ತಾನೆನ್ನಬಹುದೇ ಈ ದೇಹವ ತಾನೆನ್ನ ಬಹುದೆ ||ಪ||
ಜ್ಞಾನ ಮೂರುತಿ ತಾನು | ಕಾಣತೆಲ್ಲವನಿಲ್ಲಿ
ಪ್ರಾಣ ಹಾರಿದ ಮೇಲೆ ಹೂಣುವ ಹೆಣವಿದು || ತಾನೆನ್ನ ||ಅ||
ನಿತ್ಯನಲ್ಲೆಂದೆ ಸುಪ್ತಿಯೊಳಿದ್ದ| ಸತ್ವವ ಕೊಂದೆ
ಮೃತ್ತಿಕೆಯನು ತಂದೆ| ಭೃತ್ಯನಾನದಕೆಂದೆ
ಸತ್ತು ಹುಟ್ಟುತ ಬಂದೆ | ಪೃಥ್ವಿಯೊಳಗೆ ಬೆಂದೆ ||
ಯಾರುನೀ ಪೇಳೈ | ದೇಹವ ಬಿಟ್ಟು
ಬ್ಯಾರೇ ನೀನೇಳೈ| ತೋರುವಿ ತನುವಿಗೆ
ಬೇರೆ ನೀನಾದೊಡೆ | ಹಾರೀತಿ ಜಗವೆಲ್ಲ ತೊರಲಿನ್ನೇನಿಲ್ಲ ||
ಪೊರೆಯೋ ಶ್ರೀಹರಿಯೇ ಎಂಬುವದೊಂದೆ
ಹರಿಯ ನೀನರಿಯೇ | ಹರಿ ಇರುವಂದವ
ನರಿಯಲು ನೀ ನಮ್ಮ ಗುರು ಶಂಕರಾರ್ಯನೊಳ್
ಬೆರೆಯೋ ನರಕುರಿಯೇ || ತಾನೆನ್ನ ||

ನೋಡು ನೋಡು ನಿನ್ನೊಳಿರುವ
ನೋಡು ನೋಡು ನಿನ್ನೊಳಿರುವ|
ಕೇಡು ತೊರಾದಾನಂದವ |
ಕೂಡು ಗುರುಪಾದಾಂ ಭೋಜವ |
ಮೂಢನಾಗಿ ಕೆಡದೀರು ಜೀವಾ ||ಪ||
ನಾಡಿನವರೋಳ್ ಕೂಡಬ್ಯಾಡಾ |
ಓಡುವವರಂ ತೋಡಬ್ಯಾಡಾ |
ನೋಡುವೋ ಭಾಗ್ಯವನೇ ಪೊಡದೂ |
ಕೂಡಿ ಕೂಡದವನಾಗೋ ಜೀವಾ ||1||
ನಾಕ ಸುಖದೊಳ್ ಕೂಡಬ್ಯಾಡಾ |
ಲೋಕದವರಂತಾಡಬ್ಯಾಡ |
ಬೇಕು ಬೇಡೆಂಬುದನೀ ಕಳೆದು |
ಏಕವೇವಾದ್ವಯಮಾಗೋ ಜೀವಾ ||2||
ಮೋಹಿಯಾಗಿ ತಿರುಗಬೇಡ |
ದೇಹವೇ ನಾನೆನ್ನ ಬ್ಯಾಡ |
ದೇಹ ನಾಸ್ತಿಯ ನೀ ತಿಳಿದೂ |
ದೇಹವಿಲ್ಲದವನಾಗೋ ಜೀವಾ ||3||
ಮುಂದೆ ಪೋಗಿ ಕೂಡಬ್ಯಾಡ |
ಹಿಂದಿನಂಶಮುಳಿಸಬ್ಯಾಡ |
ಹಿಂದೆಮುಂದೆಂಬುವ ಬಂಧುಗಳ |
ಹೊಂದುವರಿಗಾಶ್ರಯವಾಗೋ ಜೀವಾ ||4||
ಧರೆಯ ತಿರುಗೀ ಬಳ¯ಬ್ಯಾಡ |
ಬರಿದೇ ನೇಮಾ ಮಾಡಬ್ಯಾಡ |
ಪರಮ ಗುರು ಶಂಕರನೋಳ್ ಬೆರೆತು |
ಮರಣ ಜನ್ಮಂಗಳ ನೀಗೋ ಜೀವಾ ||5||

ಗುರುಶೇವೆ ಕೊನೆ ಸಾಗಲಿಲ್ಲಾ
ಗುರುಶೇವೆ ಕೊನೆ ಸಾಗಲಿಲ್ಲಾ | ಈ
ಮರಣ ಭೀತಿಯು ಪೋಗಲಿಲ್ಲಾ |
ಕರಣವ ಬೇರಿಟ್ಟು ಭರಣವದರೊಳಗಿಟ್ಟು |
ಸಿರಿತನವನು ಸುಟ್ಟು ಚರಿಸುವರ್ಯಾರಿಲ್ಲ ||ಪ||
ಕೇಳಿದರ್ಥವು ನಿಲ್ಲಲಿಲ್ಲಾ | ಮುಂದೆ
ಕೇಳಲೇನದು ಫಲವಿಲ್ಲಾ |
ಕಾಲುಗಳುದಿಸಿಲ್ಲಾ ಗಮನವೆಂತವ ಬಲ್ಲಾ |
ಕೀಳು ಮೇಲರಿಯದೆ ಪಾಳಾಯ್ತು ಜಗವೆಲ್ಲಾ ||1||
ರಾಗಾದಿಗಳು ಪೋಗಲಿಲ್ಲಾ | ಸುಖ
ವಾಗಲೆಂದೊಡೆ ಸಾಗೋದಲ್ಲಾ |
ರೋಗ ಪೋಗದ ರಸ ಸೇವಿಸಿ ಫಲವಿಲ್ಲಾ |
ಯೋಗ ನಿಲ್ಲದೆ ಶಿರ ಬಾಗಿದೊಡೇನಿಲ್ಲಾ ||2||
ಹರುಷ ತನ್ನೊಳಗೇರಲಿಲ್ಲಾ | ಸಾಧು
ಚರಣ ಕೈವಶವಾಗಲಿಲ್ಲಾ |
ನರಭಾವ ಕೆಡಲಿಲ್ಲಾ ಕೊರತೆಗೆ ಕಡೆಯಿಲ್ಲ |
ಗುರು ಶಂಕರನೋಳು ತನ್ನೆರಕ ತೋರಿಸಲಿಲ್ಲಾ || ಗುರು ||3||

ನಿಂದಿಸುವರು ನಮ್ಮ ಬಂಧು ಕುಲ
ನಿಂದಿಸುವರು ನಮ್ಮ ಬಂಧು ಕುಲ | ನರ |
ಹಂದಿಗಳೊಡನೆ ನಮಗೇನು ಛಲ |
ಸಂದುಗೊಂದಿಲ್ಲದಾನಂದರಸವೆ ತುಂಬಿ
ಬಂಧುರವಾಗಿದೆ ನಮ್ಮ ಬಲ |
ಬಂದಿರುವೀ ಭವ ಬಂಧವಳಿಯದ |
ವಂದನೆಯಿಂದೆಮಗೇನು ಫಲ ||ಪ||
ಎಲ್ಲೆಲ್ಲಿಯು ಯೆಡೆಯಿಲ್ಲದ ಮೂರ್ತಿಗೆ |
ಕಲ್ಲಿನ ಮನೆಯಿಂದೇನು ಫಲ |
ಸಲ್ಲಲಿ ತಾನೊಂದಲ್ಲಸಿತಾತ್ಮಗೆ |
ಬೆಲ್ಲವ ತೋರಿದೊಡೇನು ಫಲ ||1||
ಮಾರಜನಕಗಾಕಾರವ ಕಾಣದೆ |
ಆರತಿ ಬೆಳಗಿದೊಡೇನು ಫಲ |
ಮೂರು ಗುಣಂಗಳ ಮೀರಿದ ಪದದೊಳು |
ಸೇರದ ಸುಖದಿಂದೇನು ಫಲ ||2||
ಪರಮ ಪುರುಷ ತನ್ನ ಕರುಣದಿ ನೆಲಸಿರೆ |
ಧರೆಯನು ತಿರುಗಿದೊಡೆ ಏನು ಫಲ |
ಮರಣವು ಬಂದಿಹ | ಪರಿಯನು ತಿಳಿಯದೆ |
ಶರಣನು ಯೆಂದೊಡದೇನು ಫಲ ||3||
ದೇವರು ಬೆಳಗುವ | ಭಾವವ ತಿಳಿಯದೆ |
ಬಾವಿಗೆ ತಿರುಗಿದೊಡೇನು ಫಲ |
ಜೀವನುಯೆಂಬುವ | ಭಾವವು ಪೋಗದೆ |
ಕೋವಿದನಾದೊಡದೇನು ಫಲ ||4||
ಹೊರವಳಗೆಂಬುದ | ಧರಿಸಿದ ಮಾಯೆಯ |
ನರಿಯದ ಮತಿಯಿಂದೇನು ಫಲ |
ವರಗುರು ಶಂಕರನಡಿಯೊಳು ಬೆರೆಯದ |
ನರದೇಹವು ಯಿದ್ದೇನು ಫಲ ||5||

ವಂದಿಸೈ ಗುರು ಶಂಕರಾರ್ಯನ
ವಂದಿಸೈ ಗುರು ಶಂಕರಾರ್ಯನ | ವಂದಿಸನುಪಮಕಾರ್ಯನ |
ವಂದಿಸಜ್ಞಾನಾಂಧ ತಮ | ನಿರ್ಬಂಧ ಮಾರಣ ಸೂರ್ಯನಾ ||ಪ||
ನಿಂದನೆಯ ಮಾಡಿದೊಡೆ ಯಮ ಭಟ |
ರಿಂದ ಬಂಧಿತನಾಗುವೆ |
ವಂದನೆಯ ಮಾಡಿದೊಡೆ | ನೀನಾ ವಂದ್ಯನಿಗೆ ಭಟನಾಗುವೆ |
ನಿಂದು ಯೋಗವ ಸಾಧಿಸಿದೊಡದ |
ರಿಂದ ದೇಹವ ಬೆಳಸುವೆ |
ತಂದೆ ಗುರು ಶಂಕರನ ಭಜಿಸಾ |
ನಂದಮಯ ನಾಗುಳಿಯುವೆ ||1||
ತಿರುಗಿ ತೀರ್ಥ ಕ್ಷೇತ್ರಗಳ ನೆರೆ |
ಹೊರೆಗೆ ಸರಿಯೆನೆ ಬಾಳುವೆ |
ಧರಣಿ ದಾನವ ಮಾಡೆ ನೀನಾ |
ಧರಣಿಯನು ಮುಂದಾಳುವೆ |
ವರಿಸಿ ಯಜ್ಞದಿ ಕೂಡೆ ನಾಕವ |
ತಿರುಗಿ ಧರಣಿಗೆ ಬೀಳುವೆ |
ಸ್ಮರಿಸು ಗುರು ಶಂಕರನ ಯಡೆಬಿಡ |
ದಿರುವ ಮೃತ್ಯುವ ಸೀಳುವೆ ||2||
ಹೆಮ್ಮೆಯಲಿ ಮೆರೆದಾಡಿದೊಡೆ ಕಾ |
ಡೆಮ್ಮೆಯೇ ಮುಂದಾಗುವೆ |
ಸುಮ್ಮಾನಿರ್ದೊಡೆ ಕಲ್ಲು ಮರಗಳ |
ತಮ್ಮನಾಗುತ ಬೆಳೆಯುವೆ |
ಸಮ್ಮತಿಸೆ ಕರ್ಮಗಳನದರಿಂ |
ನೆಮ್ಮದಿಯ ನೀಗಾಡುವೆ |
ನಮ್ಮ ಗುರುಶಂಕರನ ಪಿಡಿ ಪರ |
ಬೊಮ್ಮವೇ ನೀನಾಗುವೆ ||3||

ನಿನ್ನೋಳ್ ನೋಡದೆ ನಿನ್ನ
ನಿನ್ನೋಳ್ ನೋಡದೆ ನಿನ್ನ | ಬಣ್ಣ ಬಾಡಿತು ಜೀವಾ |
ಮಣ್ಣಿನಂಗಿಯ ಬಿಚ್ಚೋ | ನೀನೇ ನಿಜದೇವಾ ||ಪ||
ತನುವೆಂಬುದು ನೀನಲ್ಲ | ತನು ಧರ್ಮವು ನಿನದಲ್ಲ |
ತನು ಮಣ್ಣಾದಾರು ನೀನು ಮಣ್ಣಾಗುವನಲ್ಲ ||1||
ಹನನವಾಯಿತು ಹಿಂದೆ | ಜನನವಾಯಿತು ಮುಂದೆ |
ತನು ಧರ್ಮವಿದು ನಿಂದೆ | ಮನ ನೆನಸಿ ನೀತಂದೆ ||2||
ತನು ನೋಡಲು ಮೊಲಪಾತ್ರ | ತನು ಹಿಂಡಿದ ರಸಮೂತ್ರ |
ತನು ಚಂಚಲಿಸಲು ಮಾತ್ರ | ನಿಟಿದಾಯಿತು ಸೂತ್ರ ||3||
ಪ್ರಾಣವೆಂಬುದು ಸೂಲು | ತ್ರಾಣಾವಾಯ್ತದರೊಳು |
ಜ್ಞಾನಾ ಮೂರುತಿಯೊಳು | ಕಾಣದಿದು ಕೇಳು ||4||
ಮನವೆಂಬುದು ನೀನಲ್ಲ | ಮನ ಸುಪ್ತಯೊಳಿರಲಿಲ್ಲಾ |
ಮನವೇ ಈ ಜಗವೆಲ್ಲಾ | ನಿನಗೇ ತೊಡಕಿಲ್ಲಾ ||5||
ಅಹಮೆಂಬುದೆ ಬಳಿಕಲ್ಲಿ | ಅಹಮಾದಿಯ ಬೆರೆತಲ್ಲಿ |
ಬಹುವಾಯ್ತಿದೆ ನಿನ್ನಲ್ಲಿ | ಸಹಜಾಶ್ರಯದಲ್ಲಿ ||6||
ಇದು ಹಮ್ಮದು ನೀನಲ್ಲ | ಇದು ನಿನ್ನನರಿಯದಲ್ಲ |
ವದಗೀದರಿಂದೆಲ್ಲ | ಇದು ನಿನ್ನೊಳಗಿಲ್ಲಾ ||7||
ಪೆರತೇ ನೊಂದಿಲ್ಲಾ | ಪರಮಾನಂದವೆ ಎಲ್ಲಾ |
ಪರಮಾರ್ಥವಿದನೆಲ್ಲಾ | ಗುರುಶಂಕರ ಬಲ್ಲಾ || ನಿನ್ನೊಳ್ ||

ಭ್ರಾಂತನಾಗಬೇಡ
ಭ್ರಾಂತನಾಗಬೇಡ | ನಿಜದೊಳು
ಶಾಂತನಾಗೊ ಮೂಢ |
ಸಂತತ ಬಹುವಿಧ ಚಿಂತೆಯ ಪುಟ್ಟಿಸಿ |
ಯಿಂತಿರುವೀ ಮಲಯಂತ್ರವ ಮೋಹಿಸಿ ಪ||
ಸ್ನಾನ ಹರಿಯಲಿಲ್ಲಾ | ಮಡಿಯ
ವಿಧಾನ ದೊರೆಯಲಿಲ್ಲಾ |
ಮಾನವ ನೆಂಬಭಿದಾನವು ಬಂದರು |
ಧ್ಯಾನದ ಹರಿಯ ನಿಧಾನವ ಕಾಣದೆ ||1||
ಹರಕೆ ಮಾಣಲಿಲ್ಲಾ | ಕಣ್ಣಿಗೆ
ಹರಿಯು ಕಾಣಲಿಲ್ಲಾ |
ಹರಿಹರ ನಾಮದ ಶರೀರದೊಳಡಗಿಹ |
ಸ್ಥಿರ ಚಿನ್ಮೂರ್ತಿಯ | ನರಿಯದೆ ಬಳಲುತ ||2||
ಭಜನೆ ತೀರಲಿಲ್ಲಾ | ಜನ್ಮದ
ರುಜೆಗೆ ಪಾರವಿಲ್ಲಾ |
ಅಜಹರಿ ರುದ್ರರ ಭಜನೆಗಳೆಂಬುದು |
ಸುಜನರು ಪೇಳುವ ನಿಜಕೆಂದರಿಯದೆ ||3||
ಖಂಡವಳಿಯಲಿಲ್ಲಾ | ತನ್ನೊಳ
ಖಂಡ ಮೊಳೆಯಲಿಲ್ಲ |
ಚಂಡಿಸಿ ನೀನಾರೆನಲದನರಿಯದೆ |
ಭಂಡನಾಗಿ ಮಲಭಾಂಡವ ತೋರುತ ||4||
ವಳಗೆ ತೊಳೆಯಲಿಲ್ಲಾ | ಮನಸಿನ
ಕಳವಳ ಕೆಡಲಿಲ್ಲಾ |
ಮೊಳೆಯುವ ಕುಲಛಲ | ಮನವನು ಶೆಳೆಯುವ |
ಕುಲಗುರು ಶಂಕರನಡಿಗಳ ಪಿಡಿಯದೆ || ಭ್ರಾಂತ ||

ಯಾತರ ಬದುಕಿದಕೆತಕೆ ಬಳಲುತ
ಯಾತರ ಬದುಕಿದಕೇತಕೆ ಬಳಲುತ |
ಪಾತಕಿಯಾಗುವೆ ಎಲೆ ಮನುಜಾ ||ಪ||
ಚೇತನವಿಲ್ಲದ ಭೂತನ ಶಿವನೆಂಬ |
ನೀತಿವಂತನೆ ಮಾಯೆಯ ತನುಜಾ |
ಮಾತಿನೋಳ್ ತೋರುತ | ರೀತಿಯೊಳ್ ಹಾರುತ |
ಪೂತನಾದೆನು ಎಂಬುವದನುಜಾ ||1||
ಮುಕ್ತಿಗೆ ಪರಮ ವಿರಕ್ತಿಯೆ ಬೇಕದು |
ಯುಕ್ತಿಗೆ ಕೈ ಸೇರುವುದಲ್ಲ |
ಭಕ್ತಿಗೋಡದ ನಿಜಶಕ್ತಿಗೂಡಿದ |ಗುರು
ಭಕ್ತ ನಿಗದು ದೂರದೊಳಿಲ್ಲಾ ||2||
ಬೆಳೆದವು ಮಲದೊಳು | ಬೆಳಗವು ನಿಜದೊಳು |
ಮುಳುಗಿವೆ ಮೋಹದಿ ಕರಣಗಳು |
ಸುಳಿಯವು ಸುಖದೊಳು | ಉಳಿಯವು ತನುಗಳು |
ಕಳೆಯವು ಮುಂದಕು ಜನ್ಮಗಳು ||3||
ಕಾತರ ಕೆಡಲಿಲ್ಲಾ | ಪ್ರೀತಿ ಜನಿಸಲಿಲ್ಲಾ |
ಮಾತಿನೊಳಾಯಿತು ಫಲವೆಲ್ಲಿ |
ಭೀತಿ ವಾರ್ತೆಗಳಿಲ್ಲ| ದಾತ್ಮ ತತ್ವವನೆಲ್ಲ |
ನಾಥನು ಗುರುಶಂಕರ ಬಲ್ಲಾ || ಏತರ ||

ಏಕೆ ನಿಜದೊಳಗೇಕನಾಗದೆ
ಏಕೆ ನಿಜದೊಳಗೇಕನಾಗದೆ | ಶೋಕಿಸುವೆ ಎಲೆ ಜೀವನೇ |
ಏಕವೆಂಬುದೆ ಬೇಕು ಎಂದಿಗು | ಸಾಕು ಬಿಡು ಪುಸಿ ಭಾವನೆ ||ಪ||
ಮರುಳನಾಗುವ ಹರಿಯ ಬೆಳಗುವ | ಠಾವು ಕಣದೆ ಬಿದ್ದರೆ |
ದುರುಳನೆನಿಸುವ ಕರಣದೊಳಗವ | ನೆರಡು ಭಾವಗಳಿದ್ದರೆ |
ಯರಡನೆಯ ಮಾತಾಡಬೇಡೆಂ |ದರುಪುವರು | ಪೇಳ್ ಬದ್ದರೆ
ಮರಣ ಜನ್ಮವ | ಪೊತ್ತು ತಿರುಗುವ ಕುರುಡರೆಲ್ಲರು ಶುದ್ಧರೆ ||1||
ಒಂದು ನುಡಿಯೊಳು ನಿಂದ ಮನುಜನು | ವಂದ್ಯನಾಗುತ ಬಾಳುವ |
ಅಂದು ಮುಂದಿಂದೆಂದು ನುಡಿದವ | ನಿಂದ್ಯನಾಗುತ ಬೀಳುವ |
ಹೊಂದದವರನು ಒಂದು ಮಾಡಲು | ಬಂಧು ನಮಗಿವನೆನಿಸುವ |
ಸಂದು ಹುಡುಕುವ ಮಮದಮತಿ ಯಮ | ಬಂಧನಕೆ ಗುರಿಯಾಗುವ ||2||
ಭಾವದೊಳಗೆರಡಿದೊಡ್ಡದು ಬಹು | ಭಾವಗಳ ಕಲ್ಪಿಸುವುದೈ |
ಠಾವು ಗಾಣದೆ ಶಿವನ ಶಿಲೆಯೊಳು | ಭಾವಿಸಿದೊಡೇನಿರ್ಪುದೈ |
ಸಾವು ಹುಟ್ಟುಗಳಂದವರಿಯದ | ದೇವರಿಂದೇನಪ್ಪುದೈ |
ದೇವ ಗುರುಶಂಕರನ ಭಜಿಸಿನ್ನಾವ | ದುಃಖವು ತೋರದೈ || ಯಾಕೆ ||

ಹೇಳಿಬಾರೋ ಪೋಗಿ ಹೇಳಿಬಾರಣ್ಣ
ಹೇಳಿ ಬಾರೋ ಪೋಗಿ ಹೇಳಿಬಾರಣ್ಣ |
ಪೇಳಿದರರ್ಥವನೊಳಗೆ ಶಾಂತವ |
ತಾಳಿ ಚಿಂತಿಸಿ ನೋಡಿರೆಂದು || ಹೇಳಿ ಬಾರೋ ||ಪ||
ಹಿಂದೆ ಜನಿಸದೆ ಮುಂದೆ ಸಾಯದೆ |
ಹಿಂದು ಮುಂದುಗಳೆಂಬ ಯರಡರ |
ಸಂದಿನೊಳಗಿಹ ಶಿವನ ಕಂಡರೆ |
ವಂದನೆಗಳಿನ್ನೇತಕೆಂದು || ಹೇಳಿ ||1||
ಪ್ರಜ್ಞೆಯೆಂಬುವ ಖಡ್ಗ ಪಿಡಿದು |
ವಿಘ್ನ ಹೋತನ ಶಿರವ ಕಡಿದು |
ಅಜ್ಞ ಭಾವವ ಕಳದು ನಿಂತೊಡೆ |
ಯಜ್ಞಕೋಟಿಗಳಾಯಿತೆಂದು ||2||
ಯಿಹಪರಂಗಳು ಯೆಂಬ ದುಷ್ಟ |
ಗ್ರಹಗಳನು ಯಡೆಬಿಡದೆ ಬಂಧಿಸಿ |
ಅಹಮಿನೊಳಗದು ಮುಳುಗಿ ನಿಂತರೆ |
ಗ್ರಹಣ ತರ್ಪಣವಾಯಿತೆಂದು ||3||
ಯೆಂಟು ಗೇಣಿನ ಹಟ್ಟಿಯೊಳು ಮೂ |
ರೆಂಟು ಮೂಲೆಯ ಕೋಣೆಯೊಳಗಿಹ |
ಗಂಟು ಕಾಣದೆ ಬರಿದೆ ಘಂಟೆಗೆ |
ಭಂಟರಾಗಿ ಕೆಟ್ಟರೆಂದು ||4||
ಪಂಚ ಪದರದ ಚೀಲದೊಳಗೆ |
ಹೊಂಚಿ ಮಿಂಚುತ್ತಿರುವ ರತ್ನದ |
ಪಂಚ ವರ್ಣವ ತಿಳಿದ ಯೋಗಿಗೆ |
ಪಂಚ ಸೂತಕವಿಲ್ಲವೆಂದು ||5||
ಯಿಲ್ಲವೆಂಬುದ ಕಂಡು ಕಂಡು |
ಕಲ್ಲು ಬೊಂಬೆಗಳನ್ನು ಪೂಜಿಸೆ |
ಕಲ್ಲೆ ಶಿವನೋ ಶಿವನೆ ಕಲ್ಲೋ |
ಬಲ್ಲೊಡೆದ ನೀವ್ ಪೇಳಿರೆಂದೂ ||6||
ಹಿಂದೆ ಪುಟ್ಟದ ಹಿರಿಯರಿಲ್ಲ |
ಮುಂದೆ ಪುಟ್ಟುವ ಕಿರಿಯರಿಲ್ಲ |
ಸಂದುಗೊಂದಿಯ ಸಂಗವಿಲ್ಲಿದು |
ಹೊಂದಿದರೆ ಬಹು ಚಂದವೆಂದು ||7||
ಯಲ್ಲರೊಳು ತಾ ಸೇರಬೇಕವ |
ರೆಲ್ಲರೂ ವೊಡ್ಯಾಡಬೇಕು |
ಅಲ್ಲಿಯಿಲ್ಲೊಂದಾಗಬೇಕಿದು |
ಯಿಲ್ಲದಿರ್ದೊಡೆ ಸುಳ್ಳದೆಂದು ||8||
ಮೂರು ಪುರಗಳ ಮೂರು ಗುಣಗಳ |
ಮೂರು ಮಲಗಳ ಮೂರವಸ್ಥೆಯ |
ಮೂರು ಭಟರನು ಮೀರಿ ಬೆಳಕಿನ |
ದಾರಿಯಲಿ ವೋಡ್ಯಾಡಿರೆಂದು ||9||
ನಾನು ಯೆಂಬೀ ವಸ್ತುಯಿಲ್ಲದೆ |
ನೀನು ಯೆಂಬುವದಿಲ್ಲವದರಿಂ |
ನೀನೆ ನಾನೆಂದರಿಯದೆಸಗುವ |
ಧ್ಯಾನ ಮೌನಗಳೇತಕೆಂದು ||10||
ಯೆಂದಿಗಾದರು ಸಾವು ತಪ್ಪದು |
ಯೆಂದು ತಿಳಿಯದ ಮೇಲೆ ಸುಮ್ಮನೆ |
ಯಿಂದು ನಾಳೆಯೆಂದು ಕಳದರೆ |
ಮುಂದೆ ಯಮ ಕಾದಿರುವನೆಂದು ||11||
ಬಾಲನಾಗುತ ಬೆಳದು ಯೌವ್ವನ |
ತಾಳಿ ಬಳಿಕೀ ತನುವು ಮುಪ್ಪಿನ |
ಚೀಲವಾಗುತ ಕೆಡಲು ನೀವಾ |
ಕಾಲ ಪಾಶದಿ ಬೀಳ್ವಿರೆಂದು ||12||
ಮರಣವೆಂಬುದ ಸ್ಮರಿಸಿಕೊಂಬಿರಿ |
ಧರೆಯ ಸುಖವಿನ್ನೇತಕೆಂಬಿರಿ |
ಮರತು ಮರಣವ ಮರಳಿ ಭೋಗದಿ |
ಬೆರತು ದುಃಖಿಗಳಾದಿರೆಂದು ||13||
ಮುಂದೆ ಬರುವದು ಮುಪ್ಪು ಅಲ್ಲಾ |
ನಂದವೆಂಬುದೆಯಿಲ್ಲವದರಿಂ |
ಮಂದ ಬುದ್ಧಿಯ ಬಿಟ್ಟು ನಿತ್ಯಾ |
ನಂದ ಪದದಲಿ ಸೇರಿರೆಂದೂ ||14||
ಮಂಕುತನ ನಿಮಗೇತಕೆ ಬಿಡು |
ವಾತಂಕವಿಲ್ಲದೆ ನಮ್ಮ ಸದ್ಗುರು |
ಶಂಕರಾರ್ಯನ ಪದವ ಸೇರಿ |
ಶಂಕೆಯಿಲ್ಲದೆ ಬಳಿರೆಂದು ||15||

ಭಂಗವೇತಕೆ ಪಡುವೆ
ಭಂಗವೇತಕೆ ಪಡುವೆ | ನೀನಿ |
ಸ್ಸಂಗಿಯಾಗು ಮನವೇ |
ರಂಗು ಗೂಡಿ ಬಹಿ | ರಂಗವಾಗಿತನು |
ಸಂಗದಿಂದ ನಿಜಲಿಂಗವ ಕಾಣದೇ ||ಪ||
ಬಂಧು ಬಳಗವೆಂದು | ಸಡಗರ |
ದಿಂದ ಬಳಲಿ ನೊಂದು | ಸಂದು ತಿಳಿಯದೆ |
ಹಿಂದುವುಳಿಯದೆ | ಯೆಂದಿನಂತಲೆ |
ಹೊಂದು ತನುಗಳ || ಭಂಗ ||1||
ಆತ್ಮ ಭಾವವಳಿದು | ಯಿಲ್ಲದ |
ಜಾತಿಯಲ್ಲೆ ಸುಳಿದು | ಛಾತಿ ಪೋಗಿ ಯಮ |
ಭೀತಿಗಾಗಿ ಬಹು ನಾಥನಾಗಿ | ಕಡು
ಪಾತಕಿಯಾಗುತ || ಭಂಗ ||2||
ಶಂಕೆಯಲ್ಲಿ ಪಳಗಿ | ಪಾಪದ |
ಪಂಕದಲ್ಲಿ ಮುಳುಗಿ | ಸಂಕಟಾಟವಿಗೆ |
ಬೆಂಕಿಯಾದ ಗುರು | ಶಂಕರಾರ್ಯನಿಗೆ |
ಕಿಂಕರನಾಗದೆ | ಭಂಗವೇಕೆಪಡುವೆ ||3||

ವಂದನಂ ಗುರುವೀರನೇ
ವಂದನಂ ಗುರುವೀರನೆ | ನಿನ
ಗೊಂದನಂ ಸುಖಸಾರನೇ
ಬಂಧ ಮೋಕ್ಷಗಳೆಂಬ ಎರಡರ
ಸಂದು ತೋರಿದ ಧೀರನೇ ||ಪ||
ತನ್ನ ನಿಜವನು ನೋಡನೂ | ಈ
ಭಿನ್ನವಳಿಯದ ಮನುಜನು
ನಿನ್ನ ಪಾದವ ಕಂಡ ಮನುಜನು |
ಜನ್ಮವಳಿದಾರೂಢನೂ ||1||
ಹಿಂದೆ ಸುಕೃತವ ಮಾಡಿದೆ | ಅದ
ರಿಂದ ನಿನ್ನೋಳು ಕೂಡಿದೆ
ಬಂಧವಿಲ್ಲದ ಪೂರ್ಣ ಸಹಜಾ
ನಂದ ಪದವಿಯ ನೋಡಿದೇ ||2||
ತಂದೆ ತಾಯಿಗಳಾದರೂ | ಬಹು
ಮಂದಿ ಕಳದು ಪೋದರು |
ತಂದೆ ಸದ್ಗುರು ಶಂಕರಾರ್ಯನ |
ಹಿಂದೆ ನಿಲ್ಲುವ ದೇವರು ||3||

ಯಾತಕೆ ಮಲದೇಹವ ನಾನೆನ್ನುತ
ಯಾತಕೆ ಮಲದೇಹವ ನಾನೆನ್ನುತ
ಪಾತಕಿಯಾಗುವೆ ಎಲೆ ಜೀವಾ |
ಭೀತಿಯ ಕಳೆಯದ ಕರ್ಮದ ಕಥೆ ಬರಿ |
ಮಾತೆಂಬುದೆ ಯೋಗಿಯ ಭಾವ || ಪಲ್ಲವಿ ||
ಭಿನ್ನದ ಜಗವನು ಚಿನ್ಮಯವೆನಿಸುವ
ನಿನ್ನ ನಿಜಾಕಾರವ ಬಿಟ್ಟೆ |
ಮಣ್ಣಿನ ಬಣ್ಣಕೆ ಮೋಹಿಸಿ ತಿರುಗುತ
ಜನ್ಮ ಜರಾಬಂಧವ ತೊಟ್ಟೆ || ಯಾತಕೆ ||1||
ಮಾತಿನೊಳುದಿಸುವ ಮೈಲಿಗೆಯಂ ನೀ
ಸೂತಕಿಯೆಂದೊಡೆ ಹೊರಗಾದೆ
ಆತ್ಮನು ನೀನು ಸಮಸ್ತ ವಿಕಾರಾ
ತೀತನು ಎಂದೊಡೆ ಬೆರಗಾದೆ || ಯಾತಕೆ ||2||
ಜನಿಸಿದೆನೆಂದೊಡೆ ಮಾಂಸ ಮಲಂಗಳ
ತನುವಿನ ರೂಪವೆ ನೀನಾದೆ |
ತನುವಿನ ಸಂಗವ ಕಳೆದುಳಿದರೆ ಸುಖ
ಚಿನುಮಯನೆನಿಸುತ ಶಿವನಾದೆ || ಯಾತಕೆ ||3||
ಪರಿಪರಿ ದೇವರ ಪದಕೆರಗಿದರುಂ
ಮರಣದ ಭಯ ಬೆಂಬಿಡಲಿಲ್ಲಾ |
ಮರೆವೆಯ ಮೂಲವ ಮುರಿದರೆ ಮುಂದಕೆ
ಶರಣನೆಂಬುವ ಕೆಡು ನುಡಿಯಿಲ್ಲಾ || ಯಾತಕೆ ||4||
ಎಣಿಸುತ ದೇವರ ನಾಮವ ಲೆಕ್ಕದಿ
ಗುಣಿಸಲು ಕತ್ತಲೆ ಬಲವಾಯ್ತು
ಜನಿಸುವ ಸಾಯುವ ಮೋಹವ ಕಳೆದರೆ
ತನುವಿನ ದುಃಖಕೆ ಕೊನೆಯಾಯ್ತು || ಯಾತಕೆ ||5||
ಬೆಳದರು ಗಂಗಾ ತೀರದಿ ತನುವಿದು
ಕಳೆಯುವ ಕಳವಳ ಕಳದೀತೇ
ತಿಳಿದೊಡೆ ತನ್ನೊಳಗಿಹ ತತ್ವವತ
ನ್ನೆಳೆಯುವ ಮೃತ್ಯುವು ಸುಳಿದೀತೆ || ಯಾತಕೆ ||6||
ಶಂಕೆಯ ಪರೆಹರಿಸದ ಜಡ ಮೂರ್ತಿಗೆ
ಕಿಂಕರ ನಾನೆಂಬುದೆ ರೋಗ
ಶಂಕರ ಗುರುವಿಗೆ ಶರಣೆನಲದು ಭವ
ಸಂಕಟ ಪರಿಹಾರಕ ಯೋಗ || ಯಾತಕೆ ||7||

ತಾನಾರೋ ತನ್ನ ತತ್ವವ ಕಾಣದಿರೆ
ತಾನಾರೊ ತನ್ನ ತತ್ವವ ಕಾಣದಿರೆ ಮುಂದೆ |
ಮಾಣದೀ ಮರಣವಾಗುವ ದೇಹವು |
ತಾನಾಗಿ ಜಗವೆಲ್ಲ ಭಿನ್ನವಿಲ್ಲದ ಸಹಜಾ |
ನಂದಪದವೆ ನಿಲ್ಲುವ ಯೋಗವು ||ಪ||
ಕುಣಿಸುತಂಗಗಳ ಮುಂದೆದೆಯನೋಡುತ ತಾನು |
ತನ್ನವಾಗಿ ಭವದುಃಖದೊಳು ಬೀಳುವ |
ತನು ಸಂಗವನು ತನ್ನ ಮನದಿಂದ ಕಳದಲ್ಲಿ |
ಜನಿಸಿ ಸಾಯದ ರೂಪವನು ತಾಳುವ ||1||
ಮನೆಯೊಳಿರುವ ತಾನಾ ಮನೆಯಾಗದಿರುವಂತೆ |
ತನುವಿನೊಳಿಹ ತಾನು ತನುವಾಗನು |
ತನು ಮಾಂಸಮಯವಾಗಿ ಬೆಳಗುವಂದದಿ ತಾನು
ಚಿನುಮಯನಾಗಿ ನಿಂದೊಡೆ ಸಾಯನು ||2||
ಜನಿಸುವ ದೇಹ ತಾನಾಗಲು ತನ್ನೊಳು |
ಕೊನೆಗಾಣದಿಹ ಸಾವು ನೆಲೆಯಾಯಿತು |
ಮನವನಿಟ್ಟರೆ ಶಂಕರಾರ್ಯನ ಪದದೊಳು |
ಜನಿಸಿ ಸಾಯುವ ದುಃಖ ಹತವಾಯತು ||3||

ಸುಮ್ಮನೆ ಬ್ರಹ್ಮನಾಗುವನೆ
ಸುಮ್ಮನೆ ಬ್ರಹ್ಮನಾಗುವನೆ | ಮೂಲ
ಬ್ರಹ್ಮೆಲ್ಲ ಲಯವಾಗಿ ವುಳಿಯದೆ ತಾನೆ ||ಪ||
ಸುಮ್ಮನಿರ್ದರು ಸುಖಿಸುವನೆ | ಯಿದು |
ನಮ್ಮದೆಂಬುದನು ಕೊಂಡಿರುವ ಸಾಹಸನೆ |
ಹೊಂದಿರುವ ಚಿದ್ರಸನೆ ||1||
ಸುಮ್ಮಾನವನು ಮೀರಿದವನೆ | ಮೃತ್ಯು |
ಸಂಹಾರಿಯಾಗಿ ತಾಂಡವದೊಳಿರುವನೆ |
ಕುಂಡಿಲಿಯ ಮೀರುವನೆ ||2||
ಪುಸ್ತಕವನು ಮುಚ್ಚಲಿಲ್ಲ | ತಾನಾ |
ಪುಸ್ತಕದೊಳಗೆಲ್ಲ ಶಿವನಾಗಲಿಲ್ಲ |
ತನ್ನೊಳಗಾಗಲಿಲ್ಲ ||3||
ಮರಣ ಭೀತಿಯ ಬೇರ ಸುಡದೆ | ತನ್ನ |
ಪರಮಾನಂದವನೆ ಇಲಲ್ಲಿಯು ನೆಡದೇ |
ಶರೀರದೊಳಭಿಮಾನ ಕೆಡದೆ | ನಮ್ಮ |
ಗುರುಶಂಕರನಿಗೆ ಚಿತ್ತವನು ವೊಪ್ಪಿಸದೆ |
ವಿತ್ತವನು ವೊಪ್ಪಿಸದೆ || ಸು ||4||

ನಿನ್ನ ನೀನರಿಯದೆ ಭಿನ್ನವಾಯಿತು
ನಿನ್ನ ನೀನರಿಯದೆ ಭಿನ್ನವಾಯಿತು ನಿನ್ನ ಬಂಣ ಜೀವ |
ಭಿನ್ನದೊಳ್ ಬೆಳಗುವ ನಿನ್ನ ನೀ ತಿಳಿದೊಡೆ ನೀನೆ ದೇವ ಪ||
ತರುಣಿ ಸುತರನೆಲ್ಲ ಹಿತರೆಂದು ಕೂಡುವೆ ಮೋಹಿಯಾಗಿ |
ನರಕದೊಳ್ ಬಹುದುಃಖದುರಿಯಲ್ಲಿ ಬಾಡುವೆ | ದೇಹಿಯಾಗಿ ||1||
ತಾಪಕ್ಕೆ ಸಿಲುಕದೆ ರೂಪು ನಾಮಗಳಿಂದ ಪಾಪಿಯಾಗಿ |
ರೂಪು ಕೆಟ್ಟರೆ ನೀನೆರ್ಲೇಪನಾಗುವೆ ಸುಖ | ರೂಪಿಯಾಗಿ ||2||
ಜನಿಸಿ ಸಾಯುವ ಮಾಂಸ ತನುವೇ ನಾನೆಂದಲ್ಲಿ | ಬದ್ಧನಾದೆ |
ತನುಮೋಹ ಕೆಟ್ಟು ನೀ ಚಿನುಮಯನಾಗಲಿ | ಶುದ್ದನಾದೆ ||3||
ಧರೆಯ ದೇವರಿಗೆಲ್ಲ ಯರಗಿದರೀ ಬಂಧ | ಪೋಗಲಿಲ್ಲ |
ಕೊರತೆ ತೋರದ ನಿತ್ಯ ನಿರತಿಶಯಾನಂದ | ವಾಗಲಿಲ್ಲ ||4||
ವಡಲ ಮೋಹದ ಮೂಲ ಕೆಡದೆ ನೀ ಸುಮ್ಮನೆ | ಮುಕ್ತನಲ್ಲಾ |
ನುಡಿಯಿಂದ ನೀ ಜಗದೊಡೆಯನೆಂಬುವ ಮಾತು | ಭುಕ್ತಿಗೆಲ್ಲಾ ||5||
ಮನದಲ್ಲಿ ವಿಷಯದ ಮನನವಿದ್ದರೆ ಬ್ರಹ್ಮ | ನಾಗಲಾರೆ |
ಆಣಿಮಾದಿ ಸಿದ್ದಿಯ ತೃಣದಂತೆ ತೋರಿದೊ | ಡಾಗ ಧೀರ ||6||
ಮರಣ ಭೀತಿಯ ಪೊತ್ತು ಮರುಳನಾಗಿರೆ ಜನ್ಮ | ರೋಗಿಯಾದೆ |
ಗುರು ಶಂಕರನ ಪಾದ ದೊರತೊಡಲ್ಲಿಗೆ ನಿತ್ಯ | ಭೋಗಿಯಾದೆ ||7||

ಬರಿದೆ ತೋರದು ನಿಜಾನಂದ
ಬರಿದೆ ತೋರದು ನಿಜಾನಂದ | ಈ
ಶರೀರವ ಮರಿಯದೆ ಪರಿಯದೀ ಬಂಧ ||ಪ||
ಯರಡಿಲ್ಲವದರಿಂದ ಮರೆತ | ಮುಂದೇ |
ಮರವೆಯ ರೂಪು ನಾಮಗಳಲ್ಲಿ ಬೆರತ | ನೇಮಗಳಲ್ಲಿ ಬೆರೆತ |
ಚರಿಸುತೆ ಜಗವಾದ ನೀತ | ಯಿದ |
ನರಿತವನಖಿಲ ಯೋಗದೊಳು ಪ್ರಖ್ಯಾತ | ಭೋಗದೊಳು ವಿಖ್ಯಾತ ||1||
ನಂದೆಂದಂದನು ತಾನೆ ಭ್ರಾಂತ | ತನ್ನ
ಹಿಂದು ಮುಂದೆಲ್ಲ ರೂಪಿಲ್ಲದೆ ನಿಂತ | ದೀಪಿಲ್ಲದೆ ನಿಂತ |
ಮುಂದಾದನದರೊಳನಂತ ಯಿವನಾ
ನಂದವರಿತವನೀಗ ನಿಶ್ಚಿಂತ | ತಾನಾಗ ನಿಶ್ಚಿಂತ ||2||
ಯಿಲ್ಲವೆನ್ನುವರಲ್ಲಿರುವನು ನಾನು |
ಬಲ್ಲೆನೆಂಬುವರೊಳಗಿಲ್ಲವಾಗುವನು | ಯೆಲ್ಲೆಲ್ಲೋ ಪೋಗುವನು |
ಯೆಲ್ಲೆಲ್ಲು ತುಂಬಿ ತೂಗುವನು | ದೃಷ್ಟಿ
ಯಿಲ್ಲದೆ ತನ್ನ ನೋಡಿದರೆ ಕಾಣುವನು | ಕೂಡಿದರೆ ಕಾಣುವನು ||3||
ಬರಿ ಮಾತಿನೊಳು ಬ್ರಹ್ಮವಿಲ್ಲ | ನಿಜ |
ವರಿತವನೊಳು ಬೇರೆ ಕಳವಳವಿಲ್ಲ | ವೀ| ಕಳವಳವಿಲ್ಲ |
ಶರಿರವಾಯಿತು ಲೋಕವೆಲ್ಲ |
ಯಿದನು ಗುರುಶಂಕರನ ಬೇಡಿ ಬೆರದಾತಬಲ್ಲ | ಕೂಡಿಬೆರದಾತ ಬಲ್ಲ ||4||

ಸಾಧು ಶೇವೆಯೊಳಾಡೊ ಮನುಜಾ
ಸಾಧು ಶೇವೆಯೊಳಾಡೊ ಮನುಜಾ | ಭೇದ |
ವಾದವಾಡಿದೊಡೆ ನೀ ಜಗದೊಳು ದನುಜ |
ಮೂಜಗದೊಳು ಧನುಜ ||ಪ||
ವಾದವಾಡುತ ಮೂಢನಾಗಿ | ನಾನಾ |
ವೇದಶಾಸ್ತ್ರಗಳ ಪಾಡುತ ಮೂಢನಾಗಿ | ನೋಡುತ ಗೂಢನಾಗಿ |
ಬೀದಿ ಬಂಧನವೆಲ್ಲ ಪೋಗಿ | ಗುರು |
ಬೋಧೆಯಿಂ ಜಗವ ತೊಟ್ಟಿಲೊಳಿಟ್ಟು ತೂಗಿ | ದೃಷ್ಟಿಯೊಳಿಟ್ಟು ತೂಗಿ ||1||
ವಂದಾದ ಬಯಲಳವಟ್ಟು | ಅಲ್ಲಿ |
ಹೊಂದಿ ತುಂಬಿರುವ ತನ್ನೊಳು ದೃಷ್ಟಿಯಿಟ್ಟು | ಭಿನ್ನವನೆಲ್ಲ ಬಿಟ್ಟು |
ಬಿಂದು ನಾದಗಳೆಲ್ಲ ಕೆಟ್ಟು | ತಾನು |
ಮುಂದಾಗುವಂದ ತನ್ನೊಳಗಳವಟ್ಟು | ಜನ್ಮದ ಮೂಲ ಸುಟ್ಟು ||2||
ನಿಲುಗಡೆ ಕಾಣದ ಧರ್ಮ | ಮಾಡಿ |
ಫಲವೇನು ನೋಡದೆ ಪ್ರಾರಬ್ಧ ಕರ್ಮವೀ ಪ್ರಾರಬ್ಧ ಕರ್ಮ |
ತಿಳಿಯಬೇಕೊಳಗಿನ ಮರ್ಮ | ಅಲ್ಲಿ |
ವಳಗೊರಗೆಂಬುದೆ ಬಹು ಪಾಪಕರ್ಮ | ದುಸ್ತರ ಘೋರ ಕರ್ಮ ||3||
ಮರಣ ಭೀತಿಯ ನೀಗಾಡು | ಅಂತಃ |
ಕರುಣದ ಕಳವಳ ವಡಗಿತೆ ನೋಡು | ಅಲ್ಲಡಗಿತೆ ನೋಡು |
ಹರಶರಣರನೆ ಕೊಂಡಾಡು | ನಮ್ಮಾ |
ಗುರು ಶಂಕರಾರ್ಯನ ಕರುಣವ ಬೇಡು | ಆ ಚರಣವ ಬೇಡು ||4||

ಗುರುವೆ ನಂಬಿರುವೆ ಯೆಂದಿರುವೆ
ಗುರುವೆ ನಂಬಿರುವೆ ಯೆಂದಿರುವೆಯಾದೊಡೆ | ಮುಂದೆ |
ಮರವೆ ಮೋಹವ ಹೊಂದಿರುವೆ ನೀ ಮನವೆ |
ಯರಡು ಕಾಣದ ಹುಟ್ಟು ಕುರುಡರಾಡುವ ದೊಡ್ಡ |
ಸುರ ಪದವಿಗಳು ಸುಸ್ತಿರವೆ ದುಸ್ತರವೆ ||ಪ||
ನಿನ್ನ ನೀನರಿಯದೆ ಕೇಳನ್ಯವಾಗಿಹ ಶಿವ |
ನನ್ನು ನೀ ಕಾಣುವ ಪರಿಯಂತು ಮನವೇ |
ಭಿನ್ನವಾಗಿಹ ಶಿವನನ್ನು ಕಾಣದೆ ಪೂಜೆ
ಯನ್ನು |ಮಾಡುವೆನೆಂಬ ಮರುಳಾಟ ತರವೇ ||1||
ನೀನಿಲ್ಲದಿರಲಿನ್ನು ಹೂಣುವ ಹೆಣವಿದ |
ನಾನೆಂದು ಪೇಳುವೆ ನೋಡಿದು ನಿಜವೇ |
ಜ್ಞಾನ ಮೂರುತಿ ನಿನ್ನ ಕಾಣದಿದೇಹವೆ |
ನೀನಾಗಿ ನಾನಾಭಿದಾನ ಹೊಂದಿರುವೆ ||2||
ಪರವಸ್ತುವಿನ ಗೊತ್ತು ಗುರಿಯ ನೀನರಿಯದೆ |
ನರಕ ನಾಕಗಳೆಂದು ತಿರುಗಾಡುತಿರುವೇ |
ತೊರದು ಸಂಕಲ್ಪವ ಧರಿಸುವ ಕರ್ಮವ |
ಗುರುಶಂಕರನ ಕೂಡು ಪರಮನಾಗಿರುವೇ ||3||

ಗುರುವೇ ಗತಿಯನ್ನು ಮನವೇ
ಗುರುವೇ ಗತಿಯನ್ನು ಮನವೇ | ತತ್ವ |
ಗುರುವಿನ ಪದಕಿಂತ ಪೆರತೊಂದು ಘನವೆ ||ಪ||
ಮರವೆಯಿಂ ಮರುಳನಾಗಿರುವೆ |
ಮೂಳೆ ನರಮಾಂಸ ತನುವ ನಾನೆಂಬುದು ತರವೇ |
ಅರಿಯದೆ ಹಿಂದೆ ನೊಂದಿರುವೆ | ಮುಂದೆ
ಕೊರತೆಯಿಲ್ಲದೆ ನಿಜಾನಂದದೊಳಿರುವೆ ||ಅ||
ಧನ ಧಾನ್ಯ ಬಂಧು ಭಾಗ್ಯಗಳು | ನಿನ್ನ |
ಘನವನೀನರಿಯದ ಮಾಯಾಕಾರ್ಯಗಳೂ |
ಕೊನೆಗಾಣದಿರುವ ದುಃಖಗಳು | ಅಲ್ಲಿ |
ಮನವಿಟ್ಟ ನರನಿಗೆ ಬಿಡದು ಕೋಳಗಳು ||1||
ತನ್ನತಾ ತಿಳಿವ ಸಾಹಸವ | ಬಿಟ್ಟು |
ನೀನೆಂದು ದೃಶ್ಯವಾಗುವ ಬೀದಿ ಕಸವ |
ಧ್ಯಾನಿಸುತ್ತಿರುವ ಮಾನಸವ | ಬಿಟ್ಟು |
ನೀನೆಯಾದರೆ ಸೇವಿಸುವೆ ಸಿದ್ಧ ರಸವ ||2||
ಕುರುಹಿಲ್ಲವದು ಶೂನ್ಯವಲ್ಲ |
ನಿತ್ಯ ನಿರತಿಶಯಾನಂದ ನುಡಿಯೊಳಗಿಲ್ಲ |
ಪರವಾದಿ ಯಿದನೇನ ಬಲ್ಲ | ಅಲ್ಲಿ |
ಗುರುಶಂಕರನ ಬಿಟ್ಟು ಪೆರತೆಂಬುದಿಲ್ಲ ||3||

ಗುರುವೇ ಯನುಮನವೆ
ಗುರುವೇ ಯನುಮನವೆ | ನಿತ್ಯಾನಂದ |
ಪರವಸ್ತು ನೀನಾಗುವೆ | ಮರಣ ಜನ್ಮಗಳೆಂಬ |
ಸೆರೆಯೊಳು ಸಿಲುಕಿದ | ನರರ ಹಾದಿಯ ಬಿಟ್ಟು |
ಮರವೆಯ ಮುರಿದಿಟ್ಟು || ಗುರು ||ಪ||
ಧೀರತ್ವವನೆ ತಾಳಿ ಲೋಕವನೆಲ್ಲ |
ಮೀರಿ ಮೃತ್ಯುವನೆ ಸೀಳಿ |
ತೋರಿ ಕೆಡುವ ರೂಪು | ಸೇರಿ ವೋಡಾಡುವಾ |
ಧಾರ ವಸ್ತುವಿನ ವಿಸ್ತಾರವ ನೋಡುತ ||1||
ನಾನೆಂಬುದನುಳಿದು | ನಂದೆಂಬಭಿ |
ಮಾನ ಮೋಹ ಕಳೆದು |
ನಾನಾ ಭೇದಗಳಿಂದ ಕಾಣುವೀ ಜಗದ ನಿ |
ಧಾನ ವಸ್ತುವಿನಭಿ ದಾನವ ಪಾಡುತ ||2||
ಪಾರಮಾರ್ಥಿಕವನೆ ತೊಟ್ಟು | ದೇಹೇಂದ್ರಿಯ |
ಕರಣಾತ್ಮತೆಯ ಬಿಟ್ಟು | ವಿರತಿ ವಸ್ತ್ರವನುಟ್ಟು |
ಕೊರತೆಯೆಂಬುದ ಸುಟ್ಟು | ಭರಣವಿದನು ನಮ್ಮ |
ಗುರುಶಂಕರನೊಳಿಟ್ಟು ||3||

ಬಹು ಕಷ್ಟವೆಂದು ಪೇಳುವೆನು
ಬಹು ಕಷ್ಟವೆಂದು ಪೇಳುವನು | ಮೂಢ |
ಸಹಜವಾಗಿರುವ ಈ ಬ್ರಹ್ಮ ಭಾವವನು ||ಪ||
ಬಹುಮಾನದೊಳಗೆ ತಾ ಕೂಡಿ | ಅದಕೆ |
ಬಹು ಶಾಸ್ತ್ರಂಗಳ ನೋಡುತಲೆ ವೋಡಾಡಿ | ಅಲ್ಲಲ್ಲೆ ವೋಡ್ಯಾಡಿ |
ದಹರದೋಳ್ ಕತ್ತಲೆ ಮೂಡಿ | ತಮ್ಮ
ವಿಹಿತವನರಿಯದ ಮರುಳರ ನೋಡಿ ||ಅ||
ಮೋಹಾತ್ಮರಲ್ಲೆ ಸೇರುವನು | ವಳಗೆ |
ಸೋಹಮ್ಮೆಂದಾಡುವ ನಿಜವನರಿಯನು |
ಸಾಹಸಿಯೆಂದು ಪೇಳುವನು | ತನ್ನ |
ದೇಹವ ಕೊಟ್ಟು | ಮೃತ್ಯುವಿಗೆ ಪಾಮರನು ||1||
ಸಾಕಾರದಲಿ ಮಗ್ನನಾಗಿ | ಬ್ರಹ್ಮ |
ಕ್ಕಾಕಾರವಿಲ್ಲವಾಗಲು ಭ್ರಾಂತನಾಗಿ |
ಯೆಕತ್ವ ತೋರದೆ ಪೋಗಿ | ತೋರಿ |
ಹಾಕಾರದಂತೆ ಕೂಗುವ ಮೂರ್ಖನಾಗಿ ||2||
ನರ ಹರಿ ತಾನೆಯಾಗಿಹನು | ಯಿದ
ನ್ನರಿಯದೆ ಹರಿಯೆ ಬಾರೆಂದು ಕೂಗುವನು |
ಹರಿಯನ್ನೇ ಇವನು ಕಾಣುವನು | ನಮ್ಮ |
ಗುರು ಶಂಕರನ ಪಾದದೊಳು ಸೇರದವನು ||3||

ಬಿಡದೈ ದುಃಖ ಬಿಡದೈ
ಬಿಡದೈ ದುಃಖ ಬಿಡದೈ | ಎಂದೆಂದಿಗೂ |
ಬಿಡದೈ ದುಃಖ ಬಿಡದೈ ||ಪ||
ಕಡೆಯ ಕಾಣದ ಕರ್ಮದೊಡಲಿದು ತಾನಾಗಿ
ಮಡದಿ ಮಕ್ಕಳ ಬಿಟ್ಟು ಅಡವಿಗೆ ಪೋದರೂ ||1||
ತಾನಾರೊ ತನ್ನ ನಿಧಾನವ ನರಿಯದೇ |
ನಾನಾ ದೇವರನೆಲ್ಲ ಧ್ಯಾನ ಮಾಡಿದರಿನ್ನೂ ||2||
ದೇಹವೆ ನಾನೆಂಬ | ಮೋಹವ ಕಳೆಯಾದೇ |
ಆಹಾರವ ಬಿಟ್ಟು ಸಾಹಸಿಯಾದರೂ ||3||
ಮರಣ ಭೀತಿಯು ಪೋಗೀ | ಪರಮನೆ ತಾನಾಗೀ |
ನಮ್ಮ ಗುರು ಶಂಕರಾರ್ಯನೋಳ್ | ಬೆರಯುವ ತನಕಾ ||4||

ಸಂಕಟಹರನಾವ ನಮ್ಮೀ ಶಂಕರ ಗುರುದೇವ
ಸಂಕಟಹರನಾವ | ನಮ್ಮೀ | ಶಂಕರ ಗುರುದೇವ |
ಬೆಂಕಿಯ ಕಿಡಿಗಳು ಭೋಂಕರಿಸುತಿರೆ ಭ |
ಯಂಕರರಾ ಯಮ ಕಿಂಕರರೆಸಗುವ ||ಪ||
ಮಾಂಸದ ತನುವೆಲ್ಲ | ಆ ಪರಹಂಸನ ಘನವೆಲ್ಲಿ |
ಸಂಶಯ ಹರಿಸುವ ನಿ | ಜಾಂಶವ ನರಿಯದೆ |
ವಂಶಕೆ ಬಳಲುವ | ಸಂಸಾರದೊಳಿಹ ||1||
ಡಂಭವೆ ಹಿತವಾಗಿ | ಗುರು ಚರ |
ಣಾಂಬುಜಗಳ ನೀಗಿ |
ರಂಭೆಯ ಸುಖದಾ | ಡಂಬರ ಮುಗಿಯಲು |
ಹಂಬಲಿಸುತ ಮಲ | ಕುಂಭದಿ ಜನಿಸುವ ||2||
ಬಚ್ಚಲೊಳಗೆ ಮೂಡಿ | ಆ ಪದ |
ಕಿಚ್ಚುಗಳೊಳು ಬಾಡಿ | ನಿಶ್ಚಲ ಪದದೊಳ |
ಗೆಚ್ಚರವಿಲ್ಲದೆ | ಹೆಚ್ಚಿದ ಮರಣಕೆ |
ಬೆಚ್ಚುತ ಬಳಲುವ | ಸಂಕಟಹರನಾವ ||3||

ಗುರುವಿನಂಘ್ರಿಯೊಳಗೆ ನಮ್ಮ
ಗುರುವಿನಂಘ್ರಿಯೊಳಗೆ ನಮ್ಮ | ಕರಣ ಸೇರಿತು |
ಜನ್ಮ | ಮರಣ ಹಾರಿತು ||ಪ||
ಮಕ್ಕಳಿಲ್ಲವೆಂಬ ಮಮತೆ | ದುಃಖವಾಯಿತು |
ನಮ್ಮ | ದಿಕ್ಕು ತೋರಿತು ||1||
ಬಿಡಿಸಿ ನಡೆಯ ತೋರಿ ಬರಿದೆ |
ನುಡಿಯಬೇಡಿರೋ | ಸಂತ |
ರಡಿಯ ಕೂಡಿರೋ ||2||
ಮುಖದಿ ಮಾತ್ರ ತೋರಿ ಕೆಡುವ |
ಸುಖವು ಕಾಣಿರೋ | ಯಿದರ |
ಸುಖವ ಮಾಣಿರೋ ||3||
ಯೆಂತೊ ಬಂತು ಮನುಜ ದೇಹ |
ಚಿಂತೆಹರಿಪುದು | ಮುಂದು |
ಕಿಂತು ದೊರೆಯದು ||4||
ಪರಮ ಗುರುವಿನಂಘ್ರಿಯಲ್ಲಿ |
ಸಿರವನಿರಿಸದೇ | ಬಂಧಹರಿಸದೆ |
ಬರಿದೆ ಹರಿವುದೆ ||5||
ಅಂಗ ಸಂಗವಿರಲು ಲಿಂಗ |
ಭಂಗವಾಗದು | ಜನ್ಮವಿಂಗಿ |
ಪೋಗದು | ಗುರುವಿನಂಘ್ರಿ ||6||
ಗಂಡ ಹೆಂಡಿರೆಂದು ಕೂಡಿ |
ಭಂಡರಾದರು ಬರಿದೆ |
ಖಂಡರಾದರು ||7||
ಬಚ್ಚಲನ್ನು ಮುಚ್ಚಿ ಬರಿದೇ |
ಹುಚ್ಚರಾದಿರಿ | ಮುಂದ |
ಕೆಚ್ಚರಾಗಿರಿ ||8||
ಕನಕವಾಗಿ ಬಂದು ಕಳ್ಳ |
ತನವ ಕಲಿಸಿತು | ತನ್ನ |
ಘನವನು ಗುಡಿಸಿತು ||9|||
ಬಾಲೆಯೆನಲು ಬಿಡದ ಕಂಠ |
ಶೂಲವಲ್ಲವೇ | ಅವಳಿ |
ಗಾಳೆಯಗುವೆ ||10||
ಶಂಕರಾರ್ಯ ಪೊರೆಯೊಯೆನದೆ |
ಮಂಕು ಕಳೆಯದು | ಮನದ |
ಶಂಕೆ ಪೋಗದು ||11|

ನಾ ಬೇರೆ ಶಿವನೆ ಬೇರೆಂದು
ನಾ ಬೇರೆ ಶಿವನೆ ಬೇರೆಂದು ಪೇಳಿದೊಡಲ್ಲಿ |
ನೀ ಬೇರೆಯಾದ ಮರ್ಮವ ತೋರಿಸೋ ||ಪ||
ಲಾಭಾಲಾಭಗಳಲ್ಲಿ ಬಳಲುವಿ ಮನಸಿಗೆ |
ನೀ ಬೇರೆಯಾಗಿ ಭೇದವ ಹಾರಿಸೋ ||ಅ||
ನಿನ್ನೋಳ್ ತೋರಿತೋ ಮೇಣಾ |ಶಿವನೋಳ್ ತೋರಿತೊ ಭೇದ |
ನಿನ್ನೊಳೆಂದರೆ ನೀನೆ ಯರಡಾದೆಯಲ್ಲ |
ಭಿನ್ನವಾಶಿವನೊಳುಂಟಾಯಿತೆಂದೊಡೆ ಶಿವನೆ |
ಭಿನ್ನಸಿ ಜೀವನಾದಂತಾಯಿತಲ್ಲ ||1||
ಬಳಲುತೀ ವಿಷಯದೊಳಿಹ ಬುದ್ಧಿ ವೃತ್ತಿಯ |
ಶಳಕೊಂಡುದ ಹರಾಕಾಶದಿ ಸೇರಲು |
ಬೆಳಸಿಕೊಂಬ ವಸ್ತುವೆ ಕಾಣದಿರಲಲ್ಲಿ |
ವಳ ಹೊರಗೆಂಬ ಭೇದವ ತೋರಿಸು ||2||
ತನಿ ನಿದ್ರೆಯೊಳಗು ನೀನೋರ್ವನೆ ನಿನ್ನೊಳು |
ಮನವು ಸೇರಲ್ಕಲ್ಲಿ ನೀನೋರ್ವನೇ
ಮನವೆಲ್ಲಿ | ಪೋಗಿ ಕೂಡಿದೊಡಲ್ಲಿಯುಂ ನೀನೆ |
ಮನದಿ ತೋರುವ ದೇವರೊಳಗೆಲ್ಲ ನೀನೆ ||3||
ನಿನ್ನ ತೇಜವ ಕೂಡಿ ಘನವಾನಾದ ಶಿವ |
ಭಿನ್ನವೆಂದೊಡೆ ನೋಡು ಮಂಣಾಗುವ |
ಭಿನ್ನಾಕಾರವು ತನ್ನಿಂದುದಿಸಿ ತೋರುವದಿದ |
ನನ್ಯವೆಂಬುವನು ಪಾಮರನಾಗುವ ||4||
ವೊಂದೆ ಮುಂದೆರಡಾಗುವಂದವನರಿಯದ |
ವಂದನೆಯಿಂದ ಬಂಧನ ಪೋಗದು |
ತಂದೆ ಸದ್ಗುರು ಶಂಕರಾರ್ಯನೋಳ್ ಬೆರತೊಡೆ |
ಮುಂದೆ ಬಂಧನವು ತನ್ನೊಳು ತೋರದು ||5||

ಗುರು ಪಾದದಿ ಬೆರದು
ಗುರು ಪಾದದಿ ಬೆರದು | ನೀನಿರೆ |
ಮರಣದ ಭಯವಿರದು |
ಪರಿಪರಿ ವಿಷಯವ ನರಸುತ ತಿರುಗುವ |
ಮರುಳಾಟವನಳಿದು ||ಪ||
ಸಿರಿ ಬರಗಳು ಪೋಗಿ | ಗುರುವಿನ |
ಕರುಣವೆ ಹಿತವಾಗಿ |
ಕರಣದೊಳಿರುವಾವರಣಕೆ ಸಿಲುಕದೆ |
ಹೊರಗೊಳಗೊಂದಾಗಿ ||1||
ಭ್ರಾಂತಿಯ ಜಗವಳಿದು | ಈ ಮಲ |
ಯಂತ್ರವ ಕಳೆದುಳಿದು |
ಕಾಂತಾಕನಕವ ಚಿಂತೆಯ ಕಳದುಪ |
ಶಾಂತಿಯ ಗುಣ ಬಲಿದು ||2||
ಕುರುಡರ ನಡೆ ಬಿಟ್ಟು | ದೃಷ್ಟಿಯ |
ಪರಮಾರ್ಥದೊಳಿಟ್ಟು |
ಕರಣವ ಬೆಳಗಿಪ | ಗುರು ಶಂಕರನಿಗೆ |
ಪೆರತೆಂಬುದ ಸುಟ್ಟು || ಗುರುಪಾದದಿ ಬೆರದು ||3||

ಕೂಡಿದೆ ಗುರುಪದವ
ಕೂಡಿದೆ ಗುರು ಪದವ | ನಾನೀ |
ಗಾಡಿದೆ ನೀಭವವ |
ಮಾಡಿದೆ | ಮನಸಿಗೆ ಪರಮನೋಳೈಕ್ಯವ |
ನೋಡಿದೆ ನಿಜ ಸುಖವ ||ಪ||
ಚಿತ್ತವನೊಳ ಶಳದು | ಸುಖಮಯ |
ಚಿತ್ಭ್ರಭೆಯೊಳು ಸುಳಿದು |
ಚಿತ್ತಿನ ಪರಿಪೂರ್ಣತ್ವವ ತಳೆದು | ಸ |
ರ್ವೋತ್ತಮನಾಗುಳಿದು ||1||
ಹೊರ ವೃತ್ತಿಯ ಬಿಟ್ಟು | ಹೃದಯಾಂ |
ತರದೊಳಗದ ಸಿಟ್ಟು |
ಪರಮನ | ಪ್ರಭೆಯೊಳು ಬೆಳಗುವ ದೃಶ್ಯವ |
ಪರವೆಂಬುದ ಸುಟ್ಟು ||2||
ನಾನೆ ಜಗವಾಗಿ | ಜಗದೊಳ |
ನಾನೆ ನಿಜವಾಗಿ |
ನಾನೆ ನನ್ನನು ನೋಡುತ ಕೂಡುತ |
ನೀನೆಂಬುದ ನೀಗಿ ||3||
ಬೆಳಕಿಗೆ ಬೆಳಕಾಗಿ | ಮನಸಿನ |
ಕಳವಳಗಳು ಪೋಗಿ |
ವಳ ಹೊರಗೆಂಬುವ | ಭಾವಗಳಿಲ್ಲದೇ |
ಥಳ ಥಳಿಸುವನಾಗಿ ||4||
ಮರಣವು ನಮಗಿಲ್ಲ | ಮುಂದುಪ |
ಕರಣವು ಬೇಕಿಲ್ಲ |
ಕರಣವು ಗುರು ಶಂಕರನೊಳಡಗಲು |
ಯರಡೆಂಬುವದಿಲ್ಲ ||5||

ಯಂಥ ಪುರುಷನಿವನೆಲೆ ಕಾಂತೆ
ಯಂಥ ಪುರುಷನಿವನೆಲೆ ಕಾಂತೆ | ಬೇರೆ
ಚಿಂತಿಸುವರಿಗೆ ಕಾಣಿಸನಂತೆ
ಕುಂತಿಹನಂತೆ ವೋಡುವನಂತೆ | ಮುಂದೆ
ನಿಂತವರೊಡನೆ ಕೂಡುವನಂತೆ
ಅಂತರಂಗವ ಬಲ್ಲವನಂತೆ | ನ್ನೊ
ಳಂತವೆಂಬುದೆ ಕಾಣಿಸದಂತೆ ||ಪ||
ನಿಂತು ಕೂತಿರವುದೊಬ್ಬನೊಳಂತೆ | ನೀ
ನೆಂತು ನೋಡಿದರಂತಿರುವನಂತೆ
ಭ್ರಾಂತು ಕೂಡಲು ಮೂಡಿದನಂತೆ | ತನ
ಗಿಂತಲಧಿಕವೆ ಕಾಣಿಸದಂತೆ ||1||
ಇಲ್ಲೆ ಇದ್ದರು ಯಿಲ್ಲದವನಂತೆ | ತೋರಿ
ಯೆಲ್ಲೆಲ್ಲು ಬಿಡದೆ ತುಂಬಿಹನಂತೆ
ಬೆಲ್ಲದೊಳಿರುವ ಸಿಹಿ ಇವನಂತೆ | ಇವ
ನಿಲ್ಲದೆ ರುಚಿಯೆ ಕಾಣಿಸದಂತೆ ||2||
ಕರಣದೊಳಗೆ ಮರೆತವನಂತೆ | ನಿಂತು
ಮರುಳನಾಗುವದು ಲೀಲೆಗಳಂತೆ
ಗುರು ಶಂಕರನೊಳು ಭಿನ್ನಿಸದಂತೆ | ತನ್ನ
ಭರಣವೆಂಬುವದು ಹೊಂದಿಹುದಂತೆ ||3||

ಶಿವರಾತ್ರಿ ಸಂಗವಾಯ್ತು
ಶಿವರಾತ್ರಿ ಸಂಗವಾಯ್ತು | ಅಲ್ಲಿರುವ
ಶಿವನೊಡನೆ ಸಂಗವಾಯ್ತು |
ಹವನ ಬಹಿರಂಗವಾಯ್ತು ಬಾಧಿಸುವ
ಶಿವ ದೇಹ ಭಂಗವಾಯ್ತು || ಶಿವ ||ಪ||
ಉಪವಾಸಿಯಾಗಿ ನಾನು | ಬಿಡಿಸಿ | ತಂ
ದುಪಚಾರ ಬಿಲ್ವಗಳನೂ |
ಗುಪಿತ ಶಿವಮಂದಿರವನು | ಸೇರಿ ಮಂ
ಟಪದ | ಬಾಗಿಲು ತೆರೆದೆನು || ಶಿವ ||1||
ಸಂಗಿಸದೆ ಖಂಡದಲ್ಲಿ | ಕೂಡಿ ಬಹಿ
ರಂಗ ಬ್ರಹ್ಮಾಂಡದಲ್ಲಿ |
ಮಂಗಳಾಕಾರದಲ್ಲಿ | ಬೆಳಗುತಿಹ |
ಲಿಂಗವನ್ನು ಕಂಡೆನಲ್ಲಿ || ಶಿವ ||2||
ಪಾತಾಳ ಭುವನಗಳನೂ | ಗಗನಾಂಡ
ಭೇತಾಳ ಭೂತಗಳನೂ |
ಭೂತಾದಿ ಕಾಲಗಳನೂ | ಬಳಸಿ ಚಿ |
ಜ್ಯೋತಿ ರೂಪಾಯ್ತು ತಾನು || ಶಿವರಾತ್ರಿ ||3||
ಅಭಯವೆ ತೋರುತಿಹುದು | ಎಲ್ಲೆಲ್ಲೂ
ಶುಭ ಮಹೋದಯವಾದುದು |
ಸಭೆಯ ಸಂಸರ್ಗವಿರದೂ | ಅಮೃತದಿಂ |
ದಭಿಷೇಕವಾಗುತಿಹುದು || ಶಿವ ||4||
ಘಂಟೆಯನು ಬಡಿಯಲಿಲ್ಲಾ | ಅದು | ಬಹಳ
ಕಂಟಕವೇ ತೋರಿತಲ್ಲಾ
ಕುಂಟರೀ ನೆಂಟರಿಲ್ಲಾ ದೀಪಗಳ
ನಂಟಿಸುವನ್ಯಾವನಿಲ್ಲಾ || ಶಿವ ||5||
ಗಾತ್ರವೇ ಕಾಣಲಿಲ್ಲ | ವದರಿಂದ
ಪಾತ್ರೆಗಳನಿರಿಸಲಿಲ್ಲಾ |
ಪಾತ್ರೆಗವಕಾಶವಿಲ್ಲಾ | ಶಿವನ ಬಳಿ
ರಾತ್ರಿಯೇ | ತೋರಲಿಲ್ಲಾ || ಶಿವ ||6||
ಭೇದವಲ್ಲಿಲ್ಲವಾಯ್ತು | ಮಂತ್ರ ಪಠ
ನಾದಿಗಳು ಬ್ಯಾಡವಾಯ್ತು |
ಪಾದವೇ ಭುವನವಾಯ್ತು | ಅದರಿಂದ
ಪಾದ್ಯವೇ ಶೂನ್ಯವಾಯ್ತು || ಶಿವ ||7||
ಪಂಚಪಾತ್ರೆಗಳ ತೊಳೆದೇ| ಆಗಾಮಿ
ಸಂಚಿತಂಗಳನೂ ಕಳೆದೇ
ಪಂಚಾಮೃತವ ಸವಿದೇ ಹರಿಹರ ವಿ |
ರಂಚಿ ರೂಪವನು ತಳದೇ || ಶಿವ ||8||
ಮರಣ ಜನ್ಮಂಗಳಿಲ್ಲಾ | ಮುಂದುದರ |
ಭರಣ ದುಃಖಂಗಳಿಲ್ಲಾ |
ಬರುವೊ | ತಾಪಂಗಳಿಲ್ಲಾ | ಇದನು ಸ
ದ್ಗುರು ಶಂಕರಾರ್ಯ ಬಲ್ಲಾ || ಶಿವ ||9||

ಲಿಂಗವ ನೋಡಮ್ಮಾ ತನುವಿನ
ಲಿಂಗವ ನೋಡಮ್ಮಾ ತನುವಿನ |
ಸಂಗವು ಬೇಡಮ್ಮ
ಭಂಗಪಡುವ ವಿವಿಧಾಂಗದೊಳಿದ್ದರು |
ರಂಗು ಕೆಡದ ಬಹು ಮಂಗಳಕರ ಶಿವ | ಲಿಂಗವ ನೋಡಮ್ಮಾ ||ಪ||
ಕಂಗಳನೊಡಗೂಡಿ | ಬಗೆಬಗೆ
ರಂಗಾಗುತ ಮೂಡಿ
ಅಂಗದೊಳಗು ಬಹಿರಂಗದೊಳಗು ಬೆಳ
ದಿಂಗಳವೋಲ್ ಭುವ
ನಂಗಳ ಬೆಳಗಿಪ | ಲಿಂಗವ ನೋಡಮ್ಮ ||1||
ಖಂಡವೆನಿಸುತಿಲ್ಲೀ | ಈ ಮಲ
ಭಾಂಡದ ಒಡಲಲ್ಲಿ
ಪಿಂಡವಳಿಯ ಗಗನಾಂಡದ ಪರಿಯೇ |
ಕಾಂಡವೆನಿಸಿ ಬ್ರಹ್ಮಾಂಡವ ಬಳಸುವ ||2||
ಸಡಗರದೊಳಗಿಹುದು| ಇದು ಬಹು
ವಡಲೊಳಗಡಗಹುದು |
ಎಡಬಲದೊಡಲಿನ ಬುಡವನು ಕಡಿದೊಡೆ |
ಪೊಡವಿಯ ಕೋಟೆಗೆ
ಎಡೆಯಾಗುವ ಘನ ಲಿಂಗವ ನೋಡಮ್ಮಾ ||3||
ತನುವಿನೊಳಗೆ ಮೂಡಿ | ಚಲಿಸುವ
ಮನಸಿನೊಡನೆ ಕೂಡಿ |
ಕನಕಧನಾಂಗನೆ | ಮನೆಗಳ ರೂಪದಿ |
ಜನಿಸುತ ತೋರುವ ಜಗವಾಗಿರುವೀ ||4||
ಎರಡೆಂಬುದ ಪಿಡಿದು | ಬರಿದೆ
ಸೆರೆಯೊಳಡಗಿಹುದು
ಕರಣವು ಗುರು ಶಂಕರನೋಳು ಬೆರೆತರೆ |
ತೆರೆ ಕೊರೆಯಿಲ್ಲದೆ | ನಿರವದಿ ಯೆನಿಸುವ |
ಲಿಂಗವ ನೋಡಮ್ಮ | ತನುವಿನ ಸಂಗವ ಬೇಡಮ್ಮ ||5||

ನೋಡು ಜೀವ ನಿನ್ನ ಘನವ ಕೂಡಿ
ನೋಡು ಜೀವ ನಿನ್ನ ಘನವ ಕೂಡಿ ನಿಜದೊಳು |
ಮೂಢನಾಗಿ ಭ್ರಮಿಸಿ ಬೀಳ ಬೇಡ ಭವದೊಳು ||ಪ||
ಭಿನ್ನವೆಂಬುದುದಿಸಿ ಬೆಳಗುವಂದವರಿಯದೆ |
ಜನ್ಮ ಮರಣ ಬಾಧೆಯಿಂದ ನೊಂದು ತಿರುಗಿದೆ ||1||
ತನಗೆ ತಾನುಯೆನಲು ತನಗೆ ಮರಣ ತೊಡಗದೇ |
ಜನಿಸಿದಾತನಲ್ಲವಾಗೆ ಧರಣಿ ನಡುಗದೆ ||2||
ನೆನಸಿದಾಗ ಬರುವ ದೇವರಿರುವ ಠಾವಿನೋಳ್ |
ಮನವ ನಿಲ್ಲಿಸಿದೊಡೆ ಕಳದವಖಿಳ ದುಃಖಗಳ್ ||3||
ಸೃಷ್ಟಿಗೆಲ್ಲ ಬೀಜ ತನ್ನ ದೃಷ್ಟಿಯಾಗದೆ |
ಹುಟ್ಟಿ ಕೆಡುವ ಕಷ್ಟ ತನ್ನ ಬಿಟ್ಟು ಪೋಪುದೇ ||4||
ಜ್ಞಾನವಿರಲು ಮರವೆಯಿಂದ ಮರಣವಾಗದು |
ಕಾಣದಿರುವ ದೈವದಿಂದ ದುರಿತ ಪೋಗದು ||5||
ಶಿವನು ತನ್ನ ಭಾವ ಬಿಡದ ಬಗೆಯನರಿತರೇ |
ಅವನ ಮುಂದೆ ಲೋಕನಾಥರೆಲ್ಲ ತಿರುಕರೆ ||6||
ಶಂಕರಾರ್ಯನಂಘ್ರಿಗಳಲಿ | ತನುವ ಸೇರಿಸು |
ಶಂಕೆಯೆಂಬ ಕಾಡಿನಿಂದ | ವನವದಾಟಿಸು ||7||

ನೀನಾರೊ ನೋಡು ನೋಡೆಲೊ ಜೀವ
ನೀನಾರೊ ನೋಡು ನೋಡೆಲೊ ಜೀವ | ನೀನಾಗದೇವ |
ನೀನಿರದಿರೆ ಹೆಣವೆನಿಸುತ ಭಿನ್ನಿಸಿ |
ಕಾಣುವ ಈ ಮಲಕಾಯವ ಕಳದು ||ಪ||
ಮಲಮಾಂಸಾಸ್ತಿತಿಗಳೊಂದೆಡೆಯೊಳು ಮೂಡಿ |
ಆಕಾರವಿಲ್ಲದ | ಕುಲ ಜಾತಿ ವ್ರತ ಸೂತಕದಿಂ ಕೂಡಿ |
ವಳಹೊರಗೆಲ್ಲಿಯು ಮಲಮಯವೆನಿಸುತ |
ಚಲಿಸುವ ತನು ಧರ್ಮವ ನೀಗಾಡಿ ||1||
ಹೆಂಣು ಗಂಡುಗಳೆಂಬುವ ಭಾವಗಳು | ನಾನಾ ವಿಚಿತ್ರದ |
ಬಂಣಾಕಾರದಿ ಕೂಡಿದ ಕವಲುಗಳು |
ಬಂಣಿಸಿ ಕೊಂಬುವ ಬಗೆ ಬಗೆ ಕಳೆಗಳು |
ಮಂಣಾಗುವದಿವು ನೀನಿರದಿರಲು ||2||
ಯಿದರೊಳ್ ನಿಲ್ಲುವ ನಿಜ ಕಳೆಯೊಂದಿಲ್ಲ | ಮತ್ತೀ ಶರೀರವು
ಮೊದಲಿಲ್ಲ | ಮಣ್ಣೆನಿಸಿದ ಮೇಲಿಲ್ಲ |
ಮೊದಲಿರದೆ ನೀನಿದು ಬರಲಿಲ್ಲ |
ವದಗಿತು ಮರವೆಯೊಳಿದು ನೀನಲ್ಲ ||3||
ಹೃದಯಾಕಾಶದ ಮಧ್ಯದ ಗುರಿಯಿಟ್ಟು | ಪರಿಪೂರ್ಣನಾಗುತ |
ಯಿದಮಾಕಾರದ ಭೇದವನೀ ಬಿಟ್ಟು |
ವಿಧ ವಿಧ ರೂಪವ ಧರಿಸುವ ಚಿತ್ತವ |
ಸದಮಲ ಗುರು ಶಂಕರನೊಳಗಿಟ್ಟು ||4||

ನೋಡು ನೋಡೀಗಲೆ ಜೀವ
ನೋಡು ನೋಡೀಗಲೆ ಜೀವ | ನಿನ್ನ ನಿಜವ ಮುಂದೆ
ಮೂಢನಾಗಿರಲು | ಹೊಂದುವೆ ನೀಚ ತನುವ ||ಪ||
ಮರಣವಾಗುವ ದೇಹದಲ್ಲಿ ಸುಖವೆಲ್ಲಿ | ಮೃತ್ಯು |
ಹರನಾಗಿ ಬಾಳುವ ಸುಖ ಮೋಕ್ಷದಲ್ಲಿ ||1||
ಕೊರತೆ ತೋರಲು ಭೋಗವೆಲ್ಲ | ಹರ್ಷವಿಲ್ಲ | ದುಃಖ |
ಬೆರೆಯದಾನಂದ ಮೋಕ್ಷವ ಬಿಟ್ಟರಿಲ್ಲ ||2||
ಸ್ಥಿರವಿಲ್ಲದಿರುವ ಸಂಸಾರ | ನಿಸ್ಸಾರ | ತಾನು
ಹರನಂತೆ | ವಿಹರಿಸುವದೆ ಮೋಕ್ಷ ಸಾರ ||3||
ಶಿರಬಾಗಿಸುವನೆಂತು ಭೋಗಿ | ಜನ್ಮರೋಗಿ | ನಮ್ಮ |
ಗುರು ಶಂಕರನ ಕೂಡಿದವ ರಾಜ ಯೋಗಿ ||4||

ನರನೋ ವಾನರನೋ
ನರನೋ ವಾನರನೋ | ಪಾಮರನಿವ |
ಭರಣವ ಹರಿಸುವ | ಮರಣ ಭೀತಿಯ ಪೊತ್ತು |
ತರುಣಿಸುತರ ತಬ್ಬಿ | ಮರುಳನಾಗಿರುವಾತ ||ಪ||
ಮಡದಿ ಮಕ್ಕಳು ಮನೆ | ವಡವೆ ವಸ್ತುಗಳಿಂದ |
ಧೃಡವಾದೀ ಸುSದೊಳು | ನಡುಗುತ್ತ ಬಾಳುವ ||1||
ಸಿರಿತನವನು ದೊಡ್ಡ | ದೊರೆತನವನು ಕೂಡಿ |
ಮರಣದ ಭಯವಂತಃ | ಕರಣದೊಳಿರುವಾತ ||2||
ಹಣವಂತ ದೊಡ್ಡ | ಘನವಂತನಾಗುತ |
ಹೆಣದ ಸುದ್ದಿಯ ಕೇಳಿ | ತನುವ ತಗ್ಗಿಸುವಾತ ||3||
ನರನು ತಾನದರೊಳು | ಪುರುಷನೆಂದಾಡುತ |
ಗುರು ಶಂಕರನ ಬಿಟ್ಟು | ನರಕದೊಳ್ ಬೀಳುವಾತ ||4||

ನರನೆಂದು ತನ್ನ ಪೇಳುವನು ನೋಡೆ
ನರನೆಂದು ತನ್ನ ಪೇಳುವನು ನೋಡೆ |
ಕುರಿಯಂತೆ ತಾನು ಸಾಯುವನು |
ಅರುಹಿನಿಂಹರನಾಗಿ | ಮರಣವ ಹರಿಸಿದೆ |
ನರಜನ್ಮವನು ನೀಗಿ | ನರಕಕ್ಕೆ ಗುರಿಯಾಗಿ ||ಪ||
ಧೀರ ನಾನೆಂದು ತಿರುಗುವನು | ಬಂತು
ಮಾರಿ ನೋಡಲು ಕೊರಗುವನು |
ಈರೇಳು ಲೋಕವ | ಮೀರಿ ತಾನಿಲ್ಲದೆ |
ಘೋರ ಮೃತ್ಯುವಿಗೆ ಈ | ಸಾರ ದೇಹವ ಕೊಟ್ಟು ||1||
ಜಾಣನೆನ್ನುತ ಕೊಬ್ಬಿ ಮೆರೆವ | ಹೆಣವ |
ಕಾಣುತ್ತ ಮಲವನ್ನೆ ಬಿಡುವ |
ಜ್ಞಾನದಿಂ ಹರನಾಗಿ | ಹಾನಿಯಂ ಹರಿಸದೆ |
ನಾನಾ ದುಃಖಗಳಿಂದ | ಪ್ರಾಣ ಕಳೆಯುತ್ತ ||2||
ಹುರಿ ಮಾಡುತ್ತಿರುವ ರೋಮಗಳ | ಮತ್ತೊ
ಬ್ಬರಿಗೆ ಜೋಡಿಸುವ ಹಸ್ತಗಳ |
ಗುರು ಶಂಕರನ ಕೂಡಿ | ಮರಣವ ಹರಿಸದೆ |
ಮರೆವೆಯಿಂ ಕುರಿ ನಾಯಿ ನರಿಯಾಗಿ ಪುಟ್ಟುತ್ತ ||3||

ಜ್ಞಾನವಿಲ್ಲದ ಮೂಢ
ಜ್ಞಾನವಿಲ್ಲದ ಮೂಢ |
ಕಾಣುವ ಬಗೆಯೆಂತು | ದೈವವನ್ನು |
ಧ್ಯಾನ ಮಾಡುತ ಕೂಡಿ |
ನಾನಾ ತತ್ವದೊಳು ತನ್ನ | ಭಾವವನ್ನು ||ಪ||
ದೇಹಾಭಿಮಾನಿಯು ಸೋಹಂ ಯೆಂದೊಡೆ ಶಿವ | ನಾಗಲಾರ |
ದೇಹ ಮೋಹ ಬಿಟ್ಟ |
ಸಾಹಸಿ ವಿಷಯಕ್ಕೆ | ಬಾಗಲಾರ ||1||
ನರನಂತೆ ಬಳಲುತ್ತ | ಹರನು ತಾನೆಂದವ | ದೈತ್ಯನಾದ |
ಮರವೆತೋರದೆ ಜಗ
ದ್ಭರಿತನಾದವ ಕೃತ | ಕೃತ್ಯನಾದ ||2||
ನಂದು ಯೆಂಬಭಿಮಾನ | ಮುಂದೆ ನಿಂದಿರುವಲ್ಲಿ | ಮೋಕ್ಷವಿಲ್ಲ |
ನಿಂದಿಲ್ಲದೆಲ್ಲತನ್ನಾನಂದ |
ವಾದಲ್ಲಿ | ಸಾಕ್ಷಿಯಿಲ್ಲ ||3||
ಕಾಣುವೀ ಜಗವು ತನ್ನಾ | ನಂದವಾದಲ್ಲಿ ಲಿಂಗವಾದ |
ಧ್ಯಾನದೊಳ್ ವಿಷಯಾಭಿ |
ಮಾನವು ನಿಂದಲ್ಲಿ | ಭಂಗವಾದ ||4||
ತನು ಮನೋರೂಪೆಲ್ಲಿ | ಚಿನುಮಯವದರೆ | ಶಿಷ್ಟನಾದ |
ಮನದೊಳು ವಿಷಯದ |
ಮನನ ಬೆರದಿದ್ದರೆ | ಭ್ರಷ್ಟನಾದ ||5||
ಮರವೆ ಸುಪ್ತಿಯು ಪೋಗೆ | ಹರನು ನಾನೆಂದೊಡೆ | ಸತ್ಯವಾಯ್ತು |
ಬೆರೆತು ದುಃಖದಲಿ ನಾ |
ಪರಮಾತ್ಮನೆನೆ ಬ್ರಹ್ಮ | ಹತ್ಯವಾಯ್ತು ||6||
ಪರಮಾತ್ಮನೊಳು ಮನ | ಬೆರತವ ವಿಷಯವ | ಕೂಡಲಾರ |
ಗುರು ಶಂಕರಾರ್ಯನೋಳ್ |
ಬೆರೆಯದಾತನು ತನ್ನ | ನೋಡಲಾರ ||7||

ಶಿವನು ನಾನೆನ್ನಬಹುದೇ
ಶಿವನು ನಾನೆನ್ನಬಹುದೇ | ಪಾಮರನಿವ |
ಶಿವನೂ ನಾನೆನ್ನಬಹುದೇ ||
ಶವ ಶರೀರವ | ವಿಷಯ ಸುಖದನು |
ಭವದೊಳಗೆ | ತಾನಿಟ್ಟು ಬಳಲುತ |
ಶಿವನೊಳಂಗವನೊಂದು ಮಾಡದೆ |
ಭವಿಯೆನಿಸಿ | ದುಃಖಿಸುವ ಜೀವನು ||ಪ||
ಸೊಹಂಭಾವವು ನಿಲ್ಲದೇ | ಯಿಂದ್ರಿಯ ಭೋಗ |
ಮೋಹಂಗಳನು ಕೊಲ್ಲದೆ | ತಾನೆಂಬ ಮೂಲ |
ಹಂಕರವ ತಳ್ಳದೇ ಪರಿಪೂರ್ಣನಾಗದೆ |
ಸಾಹಸವೆಲ್ಲವನು ಕೊಳೆಯುವ |
ದೇಹ ಭೋಗದೊಳಳಿಟ್ಟು | ಪುಸ್ತಕ
ದೊಹೆಯಿಂ ಬ್ರಹ್ಮನಲಿ ತೂಗುತ |
ದೇಹಿ ತಾನಾಗಿರುವ ಜೀವನು || ಶಿವ ||1||
ಯೇಕಾಕಾರವು ತೋರದೆ | ಲೋಕಗಳು ತ |
ನ್ನೇಕಾಂಶದೊಳ ಸೇರದೆ | ಮಧ್ಯದೊಳಿರುವ |
ಲೋಕಧಾರನ ಮೀರದೆ ನಿ | ದುಃಖನಾಗದೆ |
ಬೇಕು ಯೆನಿಸುವ | ವಿಷಯ ಭೋಗವ |
ಸಾಕು ಮಾಡದೆ ಮುಳುಗಿ ವಿಷಯದೋ |
ಳೇಕಮೇವೈಯೆನುತ ಬಾಯೊಳು |
ಶೋಕದಲಿ ಬಿದ್ದಿರುವ ಜೀವನು || ಶಿವ ||2||
ಹೊರಗೊಳಗೊಂದಾಗದೆ | ಮುಂದಿಹದೃಶ್ಯ |
ಪರವೆಂಭ ಭ್ರಮೆ ಪೋಗದೆ | ಕಾಣುವದು ತ |
ನ್ನರುಹಿನ ಬೆಳಕಾಗದೇ ಪರ ಮಾತ್ರನಾಗದೆ |
ಪರಿಪರಿ ತಾಪತ್ರಯಾಗ್ನಿಯೊ | ಳುರುಳಿ ಹೊರಳಾಡುತ್ತ |
ನುಡಿಯೊಳಗಿರುವ ಶಿವನೊಳು |
ಶಿರವ ತೂಗುತ ಮರೆತು | ಗುರುಶಂಕರನ ಜೀವನು | ಶಿವ ||3||

ಕೆಡಬೇಡ ನರನಾಗಿ ಜೀವ
ಕೆಡಬೇಡ ನರನಾಗಿ ಜೀವ | ನಿ
ನ್ನೊಡಲ ಕಂಡರೆ ನೀನೆ ದೇವ |
ಮಡದಿ ಮಕ್ಕಳು ಯೆಂದು |
ವಡಲ ಮೋಹದಿ ನಿಂದು |
ಪಿಡಿಯೆ ಕಾಲನು ಬಂದು |
ಕಡೆಗೆ ಧರೆಯೊಳು ಬೆಂದು ಪ||
ಮನ ಮುಟ್ಟಿ ಧರ್ಮದೊಳು ಕೂಡಿ | ನೀ |
ಘನವಾದ ಪುಣ್ಯಗಳ ಮಾಡಿ |
ಮನು ಮಂತ್ರಗಳ ಪಾಡಿ |
ಯೆಣಿಸಿ ನಿಯಮದಿ ಬಾಡಿ |
ತನು ಬಿಡಲ್ ಪ್ರೇತತಾ |
ನೆನಿಪ ಕರ್ಮವ ಮಡಿ ||1||
ಮಡಿಯಾಗಿ ಭಕುತಿಯಿಂದ ಕೂಡಿ |
ನೀ | ಹುಡುಕಿ ದೇವರನೆಲ್ಲ ನೋಡಿ |
ಮೃಢನ ಪೂಜೆಯ ಮಾಡಿ |
ಬಿಡದೆ ಮುಕ್ತಿಯ ಬೇಡಿ |
ಕಡೆಗೆ ನರಕದ ಹಾದಿ |
ಗಿಡುವ ಕರ್ಮದೊಳಾಡಿ ||2||
ಶಿರ ಬಾಗಿದ ಪುಣ್ಯವೆಷ್ಟು | ನೀ |
ಪರಕೆಂದು ಮಾಡಿದ್ದವಷ್ಟು |
ಮರಣವಾಗಲು ಕೆಟ್ಟ |
ದುರಿತಕ್ಕೆ ವಳಪಟ್ಟು |
ನರಕ ಮಾರ್ಗವ ಕೊಟ್ಟು |
ಗುರು ಶಂಕರನ ಬಿಟ್ಟು ||3||

ಭಕ್ತಿಯು ನಿಲಬೇಕು ಅದು ನಿಜ
ಭಕ್ತಿಯು ನಿಲಬೇಕು | ಅದು ನಿಜ |
ಮುಕ್ತಿಯ ಕೊಡಬೇಕು |
ಯುಕ್ತಿಗೆ | ಗೋಚರ ವಾಗದ ಸೃಷ್ಟಿಯು |
ಶಕ್ತಿಯು ತನ್ನೊಳು ತೋರಿದ ಗುರುಪದ || ಭಕ್ತಿ ||ಪ||
ಶಾಶ್ವತನಂ ಮಾಡಿ | ತನ್ನೊಳ
ಗೀಶ್ವರನಂ ಕೂಡಿ |
ದೃಶ್ಯವು ದೃಕ್ಕಿನೊಳಡಗಲು ನಿಲ್ಲುವ |
ವಿಶ್ವಾಧಾರನ ತೋರಿದ ಗುರುಪದ | ಭಕ್ತಿಯು ||1||
ಸಂದೇಹವ ಕೆಡಿಸಿ | ತೊಡಪಿದ |
ಬಂಧನವನು ಬಿಡಿಸಿ |
ಸಂದಿಲ್ಲದ ಚಿದ್ಭಯಲೊಳು ಸಹಜಾ |
ನಂದವ ತೋರಿದ ಸದ್ಗುರುವಿನ ಪದ || ಭಕ್ತಿಯು ||2||
ಚಿನ್ಮಯ ನೀನೆಂದು | ತೋರಿಸಿ
ಜನ್ಮಗಳನು ಕೊಂದು |
ಬಿನ್ನಿಸಿ ಕಾಣುವ ಜಗದ ವಿಚಿತ್ರವ |
ತನ್ನಾನಂದವ ಮಡಿದ ಗುರುಪದ || ಭಕ್ತಿಯು ||3||
ತತ್ವಗಳನು ಮೀರಿ | ನಾನಿಹ ತತ್ವಾರ್ಥವ ತೋರಿ |
ಮರ್ತ್ಯನ ಮರಣದ | ಮೋಹವ ತೊಲಗಿಸಿ |
ಮೃತ್ಯುಂಜಯನಂ ಮಾಡಿದ ಗುರುಪದ || ಭಕ್ತಿಯು ||4||
ಸಾಕಾರವಾ ತೊಟ್ಟು | ಬೆಳಗುವ |
ಲೋಕವನೊಳಗಿಟ್ಟು |
ಲೋಕಾ |ಲೋಕ ಜಗತ್ತುಗಳನು | ತ
ನ್ನೇಕಾಂಶದಿ |ತೋರಿದ ಮಹಾ ಗುರುಪದ || ಭಕ್ತಿಯು ||5||
ತಿಳಿದೊಡೆ ವೊಂದಾಗಿ | ಮರತರೆ |
ವಳಹೊರ ಸಂದಾಗಿ |
ಬೆಳಗುತ | ನಾನಾ ಬ್ರಹ್ಮಾಂಡಗಳನು |
ಬಳಸಿಹ | ಪರಮಾತ್ಮನ ತೋರಿದ ಗುರುಪದ || ಭಕ್ತಿಯು ||6||
ಶಂಕೆಗಳನು ತೊಳದು | ಸಾಯುವ |
ಸಂಕೋಲೆಯ ಕಳದು |
ಸಂಕಟ ಬರುವಾ | ತಂಕವ ಹರಿಸುವ |
ಶಂಕರ ಗುರುಪದ | ಕಿಂಕರನಾಗುವ || ಭಕ್ತಿಯು ||7||

ಎಂದಿಗೆ ದುಃಖವ ಕೂಡದೆ ಬಾಳುವೆ
ಎಂದಿಗೆ ದುಃಖವ ಕೂಡದೆ ಬಾಳುವೆ |
ಬಂಧನದಲಿ ಬಾಡುವ ಮನವೆ |
ಕುಂದದೆ ನಿನ್ನೊಳು ಬೆಳಗುವ |ಸಹಜಾ
ನಂದವ ಕಾಣದೆ ನೀ ಕೆಡುವೆ ||ಪ||
ಬೆಳಗಾಯಿತು ಯೆನ | ಕಳೆಯನು ಕಳೆಯುತ |
ಬೆಳೆಯುವ ತನು ಬೀಳದುಳದೀತೆ |
ವಳಗಿರುವನು ಬಿಡೆಲಿದು ಹೆಣವೆನ್ನುತ |
ಬಳಗವು ಹತ್ತರ ಸುಳದೀತೆ ||1||
ಸರಿಯೆನಿಸುವ ತೆರನಿರಬೇಕೆನ್ನುತ |
ಪರಿ ಪರಿಬಳಗವ ಪೊತ್ತಿರುವೆ |
ಮರಣದ ಭಯಬಂದಿದರೊಳು ಬೆರತಿರೆ |
ಕೊರಗುತನೀ | ಹೊರಳುತ್ತಿರುವೆ | ಎಂದಿಗೆ ||2||
ತರಳರು ಸತಿಹಿತರೆನ್ನವರೆನ್ನುತ |
ಬೆರತಿವರೊಳು ಮರವೆಯೊಳಿರುವೇ |
ಬೆರತರೆ ಗುರುಶಂಕರನೊಳು ಚಲಿಸದೆ |
ಹರಿಸುವ ಮೃತ್ಯುವ ಮೀರಿರುವೆ ||3||

ನೋಡಮ್ಮ ನೋಡು ಪರಮಾತ್ಮನ
ನೋಡಮ್ಮ ನೋಡು ಪರಮಾತ್ಮನ | ಕೂಡಿ ನೋಡುಮ್ಮ ಪ||
ನೋಡುವ ದೃಷ್ಟಿಯೆಲ್ಲಿಂದಾದುದು | ಯಿದು
ಕೂಡಿದಲ್ಲೆಲ್ಲ ಬೆಳಕಾಗುವದು | ಮುಂದೆ
ನಾಡಾಗುವಲ್ಲಿಲ ಸತ್ವವಾರದು| ಇದು
ಮೂಡುವ ಮೂಲದೊಳು ಮನ ವೇಕಾವಾಗಿ ಬೆರದು ||ಅ||
ತನುವೆ ತಾನೆಂಬ ಭಾವ ಪೋದರೆ
ಕೆಡುವ ವನಿತಾದಿ ವಸ್ತು ಬೇಡವಾದರೆ| ಮುಂದೆ
ಮನದಲ್ಲಿ ಸತ್ವ ನೆಲೆಯಾದರೆ| ತನ್ನ
ತನುವಿನಿಂದೆಳೆಯುವ ಮೃತ್ಯುವೆಂಬುವನಾರೆ ||1||
ತಾನೆಂಬ ವಸ್ತು ದೇಹವಾಗದು | ಮುಂದೆ
ತಾನಿಲ್ಲದಿರೆ ದೇಹ ತೋರುದು
ಭಿನ್ನ ಧ್ಯಾನಕ್ಕಾಧಾರದಲ್ಲಿ ಸೇರದು | ಸತ್ಯ
ಜ್ಞಾನಾನಂದವೆಯಾಗಿ ಪರಿಪೂರ್ಣವಾಗಿಹುದು ||2||
ಮರಣಾದಿ ಬಂಧದೊಳು ಸೇರದೇ | ದೇಹ
ಪರಿತಾಪದಿಂದ ತಾನು ತೋರದೆ| ತನ್ನ
ಪರಿಪೂರ್ಣಭಾವವ ಮೀರದೆ | ನಮ್ಮ
ಗುರು ಶಂಕರನ ಕೂಡಿದವರೋಳ್ ತಾನಾಡುತಿದೆ ||3||

ಜ್ಯೋತಿ ಬೆಳಗುತಿದೇ
ಜ್ಯೋತಿ ಬೆಳಗುತಿದೇ | ನಿತ್ಯಾನಂದ |
ಜ್ಯೋತಿ ಬೆಳಗುತಿದೇ | ಭೂತಾದಿ |
ತೈಜಸ ವೈಕಾರಿಕದೊಳು | ಸಂಜಾತಮಾಗಿದ |
ಪಿಂಡ ಬ್ರಹ್ಮಾಂಡವನು ಮೀರಿ ||ಪ||
ತರಣಿ ಚಂದ್ರಾನಲ ತಾರೆ ಮಿಂಚುಗಳೆಂಬ |
ಪರಿಪರಿ ಬೆಳಕಿನ ಬಳಗವ ನೊಳಗೊಂಡು ||1||
ರಂಗುಗೆಡದೆ ಮಲ ಸಂಗವಿಲ್ಲದೆ ವಿವಿ |
ಧಾಂಗದೊಳಾಡುವ ಮಂಗಳಾತ್ಮಕ ಪೂರ್ಣ ಜ್ಯೋತಿ ||2||
ಅಂಗಕೆ ಸಿಲುಕದ | ಸಂಕರವೆನಿಸಿದ |
ಶಂಕರ ಗುರುವೆಂಬಾ | ತಂಕವಿಲ್ಲದ ಪರಂಜೋತಿ ||3||

ಸುಡಬೇಕು ಬಿಡದೆ ಸುಡಬೇಕು
ಸುಡಬೇಕು ಬಿಡದೆ ಸುಡಬೇಕು | ಕಡೆಗಾಣದಿಹ ಕರ್ಮ |
ದೊಡಲ ಪಾಮರರನ್ನು ||ಪ||
ಕೆಡದಂತೆ ದೇವರನ್ನೊಡಲಲ್ಲಿ ತಡೆಯದೆ |
ಮಡಿಯೆಂದು ಹೆಜ್ಜೆಯನ್ನಿಡುತ ಹಾರುವರನ್ನು ||1||
ಮನದಲ್ಲಿ ಬೆಳಗುವ | ಚಿನುಮಯನ್ನರಿಯದೆ |
ತನು ಸೂತಕವ ತೊಟ್ಟು | ಜನಿಸಿ ಸಾಯುವರನ್ನು | ಸುಡಬೇಕು ||2||
ಭಾವರೂಪಿನ ಮಹಾ | ದೇವನೋಳ್ ಬೆರೆಯದೆ |
ದೇವರಿಗು ಮಡಿಯೆಂದು | ಭಾವಿಗೆಳೆಯುವರನು ||3||
ನರನಾಗಿ ಶಂಕರ ಗುರುವಿನೋಳ್ |
ಬೆರೆಯದೇ ಮರಣಾವಾಗುತ ತಾವು | ಮರಳಿ ಪುಟ್ಟುವರನು ||4||

ಯಂಥದ್ದೀ ಕಲಿ ಕಾಲವು
ಯಂಥದ್ದೀ ಕಲಿ ಕಾಲವು | ದು |
ರ್ಗತಿಗೆಳೆಯುವಂಥಾದ್ದೆ ಬಹುಮೇಳವು |
ಅಂತರಂಗದೊಳು ಶಿವ ಶಾಂತಿಯ ಪಡಿಯದ |
ಭ್ರಾಂತರೆಲ್ಲರು ಪೂಜ್ಯರಂತೆ | ಭೂಸುರರಂತೆ ||ಪ||
ಹರನ ಮಾಡದೆ ಗಾತ್ರವ | ಮೋಹಿಗಳಾಗಿ |
ಧರಿಸಿ ಪಾತಕ ಸೂತ್ರವ | ಮರಣ ಜನ್ಮಗಳಲ್ಲಿ |
ಬೆರತು ಸೂತಕದಲ್ಲಿ | ಮರಳಿ ವೈತರಣಿಯಲ್ಲಿರುವರೇ ದ್ವಿಜರಲ್ಲಿ ||1||
ಭಿನ್ನಾಕಾರವ ತಳ್ಳದೆ ದೇವರು ಬಂದ |
ತನ್ನಂಗದೊಳು ನಿಲ್ಲದೆ |
ಬೆನ್ನಂಟಿರುವ ಶಿವನನ್ನು ತಾ ಬೆರೆಯದ |
ಜನ್ಮ ಕರ್ಮಿಗಳೆಲ್ಲ | ಮಾನ್ಯರಾದವರಂತೆ ||2||
ದೃಢವಾದ ಮಡಿನಿಲ್ಲದೆ | ಶಂಕರದೇವ |
ನಡಿಯಲ್ಲಿ ಶಿರ ಬಾಗದೇ | ವಡಲ ಸೂತಕದಿಂದ |
ಕೆಡುವ ಪಾಪಿಗಳೆಲ್ಲ| ಮಡಿಯ ಮಾನವರಂತೆ ||3||

ತೂರಿ ಬಾರೋ ಪೋಗಿ ತೂರಿ ಬಾರಂಣ
ತೂರಿ ಬಾರೋ ಪೋಗಿ | ತೂರಿ ಬಾರಂಣ ||ಪ||
ತೋರುವೀ ಜಗವೆಲ್ಲ | ಶಿವನಾಕಾರವೆಂಬ ಜಾನವೀಎರೆ ||ಅ||
ಮೂರು ಗುಣಗಳು ಕೂಡಿ ಮಾಡುವ
ಮೂರು ದೇಹಗಳಲ್ಲಿ ಬೆಳಗುವ
ಮೂರು ಲಿಂಗಗಳಲ್ಲಿ ಬೆರೆಯದೆ ||ತೂರಿ ||1||
ಸೃಷ್ಟಿ ಕೋಟಿಯೊಳಿರುವ ದೇವರ | ನಷ್ಟು
ತನ್ನಂಗದಲಿ ಬೆಳಗಿಸು
ವಿಷ್ಟಲಿಂಗವ ಬಿಟ್ಟು ಬರಿದೆ
ಶ್ರೇಷ್ಟರೆಂಬೀ ಭ್ರಷ್ಟ ಭವಿಗಳ ||2||
ತಾನು ತನುವಲ್ಲೆಂಬ ಮ್ಯಕೆ
ಜ್ನಾನರೂಪ ಪ್ರಾಣಲಿಂಗ
ಧ್ಯಾನವಿಲ್ಲದೆ ಪೂಜ್ಯರೆಂಬುವ
ಮಾನವಾಧಮರಾದ ಭವಿಗಳು ||3||
ಭಾವನೆಯೊಳುಂಟಾದ ಜಗವನು
ಭಾವದಲಿ ಲಯಪಡಿಸಿ ಬೆಳಗುವು
ಭಾವಲಿಂಗದೊಳೈಕ್ಯವಾಗದೆ
ಭಾವಿಯೊಳು ಮುಳುಗಿರುವ ಭವಿಗಳ ||4||
ಎಷ್ಟು ಕರ್ಮಗಳನ್ನು ಮಾಡಿದ
ರೆಷ್ಟು ನಿಯಮದಿ ಬಾಡಿದರು ತನ
ಬಿಟ್ಟರೆ ತಾವ ಪ್ರೇತರಾಗುವ
ನಷ್ಟ ಸೂತಕ ಮಷ್ಟ ಭವಿಗಳ ||5||
ಹುಟ್ಟು ಸೂತಕದಿಂದ ದೇಹದ
ನಷ್ಟ ಸೂತಕದಿಂದ ಮಧ್ಯದ
ಮುಟ್ಟು ಸೂತಕದಿಂದ ಕೆಟ್ಟು ನೀ
ಕಷ್ಟವಾಗಿಹ ದುಷ್ಟ ಭವಿಗಳ ||6||
ವೇದಗಳನೋದಿದರು ಘಂಟಾ
ನಾದಗಳ ಮಾಡಿದರು ಪುಣ್ಯವ
ಸಾಧಿಸಿದರುಂ ತುದಿಗೆ ನರಕದ
ಹಾದಿಗಿಳಿಯುವ ಕರ್ಮ ಭವಿಗಳ ||7||
ಸಂಕಟದ ಮೂಲವನು ಮುರಿಯುವ
ಶಂಕರಾರ್ಯನ ಬಿಟ್ಟು ಪರಿಪರಿ
ಶಂಕೆಯಿಂ ಕಣ್ಕಾಣದೇ ಭವ
ಪಂಕದಲಿ ಮುಳುಗಿರುವ ಭವಿಗಳ ||8||

ಮರಣದಲಿ ಕೈಲಾಸವನು ನೋಡಿ
ಮರಣದಲಿ ಕೈಲಾಸವನು ನೋಡಿ
ನರ ಜೀವರಾಗಿಯು
ನರಕ ಮಾರ್ಗವ ಕೂಡಿ ಕೆಡಬೇಡಿ ||ಪ||
ಧರಿಸಿ ನಿಯಮವ ಬಾಡಿದಿರಿ | ಪುರ
ಹರನ ಪೂಜೆಯ ಮಾಡಿದಿರಿ ತನು
ದುರಿತಗಳ ನೀಗಾಡಿದಿರಿ
ಸುಸ್ಥಿರದ ಮುಕ್ತಿಯ ಬೇಡಿದಿರಿ ನೀವ್ ||ಅ||
ವರಿಸಿ ಕನ್ಯಾದಾನಗಳ ಮಾಡಿ | ಸ್ನಾನಗಳ ಮಾಡುತ
ಚರಿಸಿ ನಾನಾ ಕ್ಷೇತ್ರಗಳ ನೋಡಿ
ದುರಿತ ತೊಲಗಿತು ಧನ್ಯರಾದಿರಿ
ಹರನ ಲೋಕ ನಿವಾಸರಾದಿರಿ
ಮರಳಿ ಸಂಕಲ್ಪವನು ಮಾಡದೆ
ನರಕ ಮಾರ್ಗ ಪ್ರೇತರಾಗದೆ ||1||
ಸತ್ಕಥಾ ಶ್ರವಣಾದಿಗಳ ಮಾಡಿ ಶಿವರಾತ್ರಿ ಮೊದಲಾ
ದುತ್ತಮ ವ್ರತ ಪುಣ್ಯಗಳ ಕೂಡಿ
ಚಿತ್ತವಿದು ಪರಿಶುದ್ಧವಾಯಿತು
ಮೃತ್ಯು ಮಾರ್ಗವು ದೂರವಾಯಿತು
ಕತ್ತಲೆಯ ಮಾತುಗಳ ಕೇಳದೆ
ಮತ್ತು ವೈತರುಣಿಯಲಿ ಬೀಳದೆ ||2||
ಸಂಕಟದಿ ಸಾಯುವರು ಮಾನವರು ದರ್ಭೆಗಳ ಪಿಡಿದೆಮ
ಕಿಂಕರರು ಪುರಗಳನು ಸೇರಿದರು
ಕಿಂಕರರು ಮಾಡುವರು ಬಹುವಿಧ
ಶಂಕೆಗಳ ಹೆಚ್ಚಿಸುತ ನರಕದ
ಬೆಂಕಿಯಲಿ ಮುಳುಗಿಸುವರದರಿಂ
ಶಂಕರಾರ್ಯನ ಪದವ ಭಜಿಸುತ ||3||

ಮಂಗಳಾರತಿ ತಂದು ಬೆಳಗೇ ನಮ್ಮ
ಮಂಗಳಾರತಿ ತಂದು ಬೆಳಗೇ ನಮ್ಮ |
ಲಿಂಗದೇಹದ ನಾಯಕಗೇ |
ಕಂಗಳಿಂ ದೃಶ್ಯದೊಳು | ಸಂಗವಾಗಲ್ಕೆ ಬಹಿ |
ರಂಗದಲಿ ಕೂಡಿದ | ವಿವಿಧಾಂಗನಾಗಿರುವನಿಗೆ ||ಪ||
ಕಣ್ಣಿಲ್ಲದವನಾಗಿ ಜನಿಸಿ | ಬಹು
ಕಣ್ಣಾಗಿ ಜಗವನಾವರಿಸಿ |
ಮಂಣಿನಂಗಿಯು ಧರಿಸಿ | ಬಂಣವದರೊಳಗಿರಿಸಿ |
ಸಂಣವನುಯೆನಿಸಿ ತಾ ಬಂಣಗೆಟ್ಟಿರುವನಿಗೆ ||1||
ಮೂಲವಿಲ್ಲದೆ ಮೂಡಿದವಗೆ | ಯಲ್ಲ |
ಮೂಲೆಯೊಳ್ ತುಂಬಿ ತುಳುಕುವಗೇ |
ಕಾಲಕರ್ಮದೊಳಾಡಿ | ಮಾಲೆಯಂತದ ಮಾಡಿ |
ಪಾಳು ಮನೆಯೊಳು ದೀಪ | ಜ್ವಾಲೆಯಂತಿರುವನಿಗೆ ||2||
ಮರತು ತನ್ನನು ತಿರುಗುವನಿಗೇ | ತನ್ನ
ನರಿತೊಡೆ ಜಗವ ನುಂಗುವಗೆ |
ಗುರು ಶಂಕರಾರ್ಯನೊಳ| ಗೆರಕತನಗುಂಟಾಗೇ |
ಪರಿಪೂರ್ಣನಾಗಿ | ತುಂಬಿರುವ ನಿಶ್ಚಲನಿಗೆ ||3||

ಆದರವನು ಬಿಡಬ್ಯಾಡಮ್ಮ ಗುರು
ಆಡಿರವನು ಬಿಡಬ್ಯಾಡಮ್ಮ | ಗುರು |
ಬೋಧ ತಿಳಿದು ಗುದ್ಯಾಡಮ್ಮ ||ಪ||
ಆದರವನು ನಿನ್ನಾಲಯದೊಳಗಿಟ್ಟು |
ಸಾಧಿಸಿ ಸಮರಸಗೂಡಮ್ಮ ||ಅ||
ತೊಡೆಗಳೆರಡು ಕೀಲ್ಜಡಿಯಮ್ಮ | ನಡು |
ಸಡಲಿಸಿ ಅಂತರಕೇರಮ್ಮ |
ಜಡಿದು ಜಡಿದು ಕೂಡಿ ಕಾಮನ ಬಾಣದಿ |
ಜಡರೋಗ ಬಿಟ್ಟು ನೀನಡಿಯಮ್ಮ ||1||
ಕಕ್ಕಸಕುಚದಿಂದೊತ್ತಮ್ಮ | ತೋಳ್
ತೆಕ್ಕೆಯನೆಲ್ಲವ ಸುತ್ತಮ್ಮ |
ಹೊಕ್ಕು ನೀ ಬಿಡದೆ ತಾರಕ ಚಂದ್ರನ |
ವೊತ್ತಿಮೊತ್ತಿ ಮೀಸಲಳಿಯಮ್ಮ ||2||
ನಂಟನ ನಡತೆ ನಡೆಯಮ್ಮ | ಕೂಡಿ |
ಗಂಟು ಬಿಚ್ಚಿ ಕೂಸ ಪಡಿಯಮ್ಮ |
ಅಂಟಿ ನೀಬಿಡದೆ ಮೋಹದ ಗಂಡನ |
ಗುಂಪುಗೂಡಿ ಗುರು ಸೇರಮ್ಮ ||3||
ಗರತಿ ಗಂಡನ ಶರಗಿಡಿಯಮ್ಮ | ನಿನ್ನ|
ಗುರುವಿನ ಮಂಚಕೆ ನಡಿಯಮ್ಮ |
ಅರಿತು ಅರಿತು ನೀಂ ಗುರುಶಂಕರಾರ್ಯನ |
ಚರಣ ಪಿಡಿದು ಮುಕ್ತಿ ಪಡಿಯಮ್ಮ ||4||

ಹುವ್ವಾ ಚೆಲ್ಲಾಡುವೆನು
ಹುವ್ವಾ ಚೆಲ್ಲಾಡುವೆನು | ಸದ್ಗುರುವಿನ ಮೇಲೆ
ಹುವ್ವಾ ಚೆಲ್ಲಾಡುವೆನು ||ಪ||
ಹುವ್ವಾ ಚೆಲ್ಲಾಡುವೆ | ಹುಟ್ಟಿದಾಕ್ಷಣ ಬಂದು |
ದೇವರ ಧರಿಸಿದ |
ಜೀವನ್ಮುಕ್ತನ ಮೇಲೆ ||ಹುವ್ವಾ ||ಅ||
ವಳಹೊರಗೆನ್ನದೆ | ಹೊಳೆವ ಚಿಜ್ಯೋತಿಯ
ಬೆಳಗುವ ಮಹಿಮನ |
ತಿಳಿದ ಪ್ರಕಾಶನ ಮೇಲೆ ||1||
ಕಾರಣಕಾಂಕ್ಷೆಯ ಸ | ತ್ಕರುಣದಿಂ ಖಂಡ್ರಿಸಿ
ಪರತತ್ವದರುಹಿನ |
ಪರಮಾ ಪ್ರಕಾಶನ ಮೇಲೆ ||2||
ಷಡುಸ್ಥಲ ಬ್ರಹ್ಮನು | ಷಡುವರ್ನತೀತನು
ನುಡಿವ ಪಂಚಾಕ್ಷರಿ
ದೃಢ ಮುಕ್ತಿಕಾಂತನ ಮೇಲೆ ||3||
ಮನ್ಮಯಮೂರ್ತಿ ಜ| ಗನ್ಮಯ ರೂಪನೆ
ಸನ್ಮುನಿವಂದ್ಯ ಶ್ರೀ
ಸದ್ಗುರು ಶಾಂತನ ಮೇಲೆ ||4||

Categories
Tatvapadagalu ಶಂಕರಾನಂದ ಯೋಗಿ ಮತ್ತು ಶಂಕರಾರ್ಯರ ತತ್ವಪದಗಳು

ಶ್ರೀಗುರು ಶಂಕರಾರ್ಯರ ತತ್ವಪದಗಳು

ಶ್ರೀಗುರು ವಚನ ಸುಧಾರಸವನು
ಶ್ರೀಗುರು ವಚನ ಸುಧಾರಸವನು ಸವಿ |
ದಾಗಳಹುದು ನರರಿಗೆ ಮುಕುತಿ |
ಭೋಗಾ ಬೋಗಾಭಿಯೋಗವನೀಗಿ ಶಿವ ಜೀವ
ಯೋಗಾನುರಾಗ ತತ್ಪರ ಚಿತ್ತನಾಗಿ ||ಪ||
ತೊರೆದು ವಿಷಯವನಿ | ರ್ವಿಷಯಾಂಕುರವನು ಸು |
ಸ್ಥಿರಮತಿ ಎಂಬ ಸುಕ್ಷೇತ್ರದೊಳು |
ಕರಿಗೊಂಡು ನೆಲಸಿ ಸಜ್ಜನ ಸಂಘವೆಂಬ ಪು |
ಷ್ಕರವೆರದಭಿವೃದ್ಧಿಗೊಳಿಸೆಂದು ಪೇಳುವ || ಶ್ರೀಗುರು ||
ನಿರಹಂತೆ ಎಂಬ ಪಾತಿಯ ಕಟ್ಟಿ |
ಮರವೆಯಂಬುರುಕಂಟಟಿಕವನೆಲ್ಲ |
ನೆರೆ ಶೋಧಿಸಿ | ಅರಿವರ್ಗವೆಂಬ
ಬಾಧಕ ಕೀಟಕವ ಕೊಂದು ಗುರುಭಕ್ತಿ |
ಯಂಬಭಿವೃತಿಗಟ್ಟಿ ಪೊರೆ ಎಂಬ || ಶ್ರೀಗುರು ||
ಭೇದವಾದಗಳೆಂಬ ಚೋರಾರ ನಿಜತತ್ವ |
ಭೋಧೆಯಂಬುರು ಖಡ್ಗದೊಳು ತರಿದೂ |
ಸಾಧಿಸಿ ಮುಕ್ತಿ ಎಂಬುವ ಫಲವನು ಸವಿದಾ |
ನಾದಿ ಶ್ರೀಗುರು ಶಂಕರನ ಕೊಡೆಂದುಸುರುವ || ಶ್ರೀಗುರು ||

ಬಿಡು ಬಿಡು ರಾಜಸ ಪೂಜೆಯನು
ಬಿಡು ಬಿಡು ರಾಜಸ ಪೂಜೆಯನು | ಮೊದ
ಲೊಡಲಭಿಮಾನವ ತೊರೆ ನೀನು |
ಮಡದಿಯ ಕಾಣದೆ | ಮಿಡುಕುತ ಮನದಲಿ |
ಮೃಡನಡಿ ಪೂಜಿಸಿ ಫಲವೇನೂ ||ಪ||
ಹರನೊಳು ಚಿತ್ತವನಿಡಲಿಲ್ಲಾ | ಶಿವ
ಶರಣರಿಗರ್ಥವ ಕೊಡಲಿಲ್ಲಾ |
ಮರಣದ ಭೀತಿಗೆ ಶಿವಪೊರೆಯಂದರೆ |
ನರಕದ ಯಾತನೆ ಬಿಡದಲ್ಲಾ ||1||
ಆಗಮ ಧರ್ಮಂಗಳ ತೊರೆದು | ಸತಿ
ಭೋಗದಿ ಸ್ಮೃತಿಯಿಲ್ಲದೆ ಮೆರೆದು |
ರೋಗವು ಬಂದರೆ ಹರ ಪೊರೆಯೆನಲಾ |
ರೋಗವು ನಿನ್ನ ಕೊಲ್ಲದೆ ಬಿಡದೂ ||2||
ದೃಢತರ ಶಿವಭಕ್ತಿಯ ಬಿಟ್ಟು | ನಿಜ
ಮಡದಿಯ ಮೋಹಕೆ ಒಳಪಟ್ಟು |
ಸಡಗರದೊಳಗಿರೆ ಧೂತರು |
ಬರಲವರೂಡ ನೋಡುವೆ ಎಲ್ಲವ ಬಿಟ್ಟು ||3||
ತರುಣಿಗೆ ಮುತ್ತಿನ ಮಾಲೆಗಳೂ | ಪುರ
ಹರನಿಗೆ ಹತ್ತಿಯ ಜೂಲುಗಳೂ |
ಸರಿ ಸರಿ ನೀ ಮಾಡುವ ಈ ಭಕ್ತಿಗೆ |
ಹುರಿವರು ನಿನ್ ಯಮನಾಳುಗಳೂ ||4||
ಸಿರಿಯೊಳು ಶಿವನಾಮವ ತೊರೆದೂ | ಅತಿ
ಹರುಷದಿ ಕಣ್ಕಾಣದೆ ಮೆರೆದು |
ಬರ ಬಂದರೆ ಶಿವ ಪೊರೆ ಎಂದರೇ |
ನಿನ್ನನು ನರಕದೊಳಿರಿಸುವ ಮುರಿದೂ ||5||
ಹರನೊಳು ಚಿತ್ತವನಿಡಲಿಲ್ಲಾ | ಶಿವ
ಶರಣರ ಸೇವೆಯು ಹಿತವಿಲ್ಲಾ |
ತರಳರ ಪೊರೆಯೋ ಶಿವ ನೀನೆಂದರೆ |
ಪುರಹರ ಕೇಳ್ನಿನ್ನಾಳಲ್ಲಾ ||6||
ದಾಸರಿಗನ್ನವ ನೀಡಲಿಲ್ಲಾ | ಪರ
ದೂಷಣೆಗಳ ನೀ ಬಿಡಲಿಲ್ಲಾ |
ಕಾಸನು ತೋರಿಸಿ ಶಿವನೇ |
ಪೊರೆಯನಲಾ ಶಿವನಿಗೆ ಬಡತನವಿಲ್ಲಾ ||7||
ಪಾಪದ ಕೃತ್ಯವು ಕೆಡಲಿಲ್ಲಾ | ಪರಿ
ತಾಪವಗೈವುದು ಬಿಡದಲ್ಲಾ |
ದೀಪವ ಹಚ್ಚಿಸಿ ಶಿವನೆ ಪೊರೆಯನಲಾ |
ಪರಮಗೆ ಕತ್ತಲೆಯಲ್ಲಾ ||8||
ಸಿರಿಬರಗಳು ಸಮನಾಗಿಲ್ಲಾ | ಈ
ಶರೀರ ಭ್ರಾಂತಿಯ ಬಿಡಲಿಲ್ಲಾ |
ಬರಿದೇ ದುಃಖವು ಹರಿಯಲಿ ಎಂದರೆ |
ಗುರುಶಂಕರ ನಿನ್ನೊಶನಲ್ಲಾ ||9||

ವಂದಿಪೆ ನಿಮಗೆ ಗುರುನಾಥ
ವಂದಿಪೆ ನಿಮಗೆ ಗುರುನಾಥ | ಮೊದ
ಲೊಂದಿಪೆ ನಿಮಗೆ ಗುರುನಾಥ
ಹಿಂದುಮುಂದರಿಯದ ನಿಮ್ಮ
ಕಂದನಾದ ಯನ್ನ ನಿತ್ಯಾ
ನಂದದಲ್ಲಿ ಸೇರಿಸು ಗುರುನಾಥ ||ಪ||
ಈಶ ನಿಮ್ಮ ದಾಸರಿಗೆ
ದಾಸನಾದ ಯನ್ನ ಭವ
ಪಾಶವನ್ನು ಹರಿಸೊ ಗುರುನಾಥ ||ವಂದಿಪೆ ||1||
ಭೇದವಾದವಾದಿಗಳ |
ಹಾದಿಯನ್ನು ಬಿಡಿಸಿ ನಿಮ್ಮ
ಪಾದವನ್ನು ಪಾಲಿಸೋ ಗುರುನಾಥ ||2||
ಲೀಲೆ ಹಿಂದ ನಿನ್ನ ಪಾದ
ಧೂಳಿಯನ್ನು ಸಿರದ ಮ್ಯಾಲೆ
ಬೀಳುವಂತೆ ಮಾಡೊ ನೀ ಗುರುನಾಥ ||3||
ಅಲ್ಲಿಯಿಲ್ಲಿಯಿರುವ ದೇವ
ರೆಲ್ಲ ಬಂದು ನಿನ್ನ ಪಾದ
ದಲ್ಲೆ ನಿಂತರಲ್ಲೋ ಗುರುನಾಥ ||4||
ಗುರುವೆ ನಿಮ್ಮ ಚರಣದಲ್ಲಿ
ಕರಣವಿಟ್ಟೆನಯ್ಯ ಮುಂದೆ
ಮರಣವನ್ನು ಬಿಡಿಸೋ ಗುರುನಾಥ ||5||
ತಂದೆ ತಾಯಿ ದೈವ ನೀನೆ
ಯೆಂದು ನಿನ್ನ ಚರಣದೊಳ
ಗಿಂದು ಬಂದು ನಿಂದೆನೋ ಗುರುನಾಥ ||6||
ಗುರುವೆ ನಿಮ್ಮ ಚರಣದಲ್ಲಿ
ಶಿರವನಿಟ್ಟ ನರನು ಪುರ
ಹರನ ಮೀರುವನು ಗುರುನಾಥ ||7||
ಮಂಕನಾದೊಡೇನು ನಿಮ್ಮ
ಕಿಂಕರನಾದೊಡೆ ಗುರು
ಶಂಕರನಾಗುವ ಗುರುನಾಥ ||8||

ಮಾಡಬಾರದೂ ಮುಂದೆ ಕೇಡು ತನಿಗದೂ
ಮಾಡಬಾರದೂ ಮುಂದೆ ಕೇಡು ತನಿಗದೂ
ಬೇಡಿ ಫಲವ ಡಂಭದಿಂದ
ಕೂಡಿ ಕಾಮ್ಯ ಪೂಜೆಗಳನ್ನು | ಮಾಡಬಾರದೂ ||ಪ||
ಸುತನೊಳಿರುವ ಹಿತವ ಪ್ರಮಥ
ಪತಿಯೊಳಿಟ್ಟು ತನ್ನ ದೇಹ
ಮಜತಿಯ ಧನವ ಕೊಡದೆ ಶಿವಗೆ
ಸುತರ ಹಿತವ ಬಯಸಿ ನುತಿಯ| ಮಾಡಬಾರದೂ ||1||
ಸಿರಿಯ ಹರುಷವಿರಲು ತನಗೆ
ಮರತು ಹರನ ಚರಣಗಳನು
ಮರಣ ಭೀತಿ ಬರಲು ಹರನೆ
ಪೊರೆಯೊಯೆಂಬ ಕಾಮ್ಯ ಜಪವ | ಮಾಡಬಾರದೂ ||2||
ಪರಮ ಸದ್ಗುರು ಶಂಕರಾರ್ಯನ
ಚರಣ ಕೃಪೆಗೆ ದೂರನಾಗಿ
ಧರೆಯ ಭೋಗಕ್ಕಾಗಿ ಬರಿದೆ
ಶಿರಿಯ ಬಯಲಸಿ ಕ್ರೂರ ತಪವ | ಮಾಡಬಾರದೂ ||3||

ಯಾವ ಲೋಕದ ಭಕ್ತಿಯೋ
ಯಾವ ಲೋಕದ ಭಕ್ತಿಯೋ | ಇದ
ಕಾವ ಲೋಕದ ಮುಕ್ತಿಯೋ |
ಭಾವದೊಳು ಪರಿಶುದ್ಧವಿಲ್ಲದಿ
ದ್ಯಾವ | ಪರಿಯ ವಿರಕ್ತಿಯೋ ||ಪ||
ರೋಗ ಬಂದರೆ ಸತಿಗೆ ವೈದ್ಯರಿ
ಗಾಗಿ | ಧನವನು ಸುರಿಸುವೇ
ಯೋಗಿ ಸೇವೆಗೆ | ಎನಲು ಶಿರವನು |
ಬಾಗಿ ಭೂಮಿಗೆ | ಕೊರಗುವೇ
ಭೋಗಿಸಲು ವಿಷಯವನು | ಹಂದಿಯ
ಜೋಗಿಯಂದದಿ ತಿರುಗುವೇ |
ನಾಗಶಯನನ ಗುಡಿಗೆ ಬಾರೆನ
ಲಾಗುತಿರಲದು ಎನ್ನುವೆ ||1||
ಬಾಲ ತರುಣಿಯ ಕೇಳಿಗಾದರೆ |
ಲೀಲೆಯಿಂದೊಡ್ಯಾಡುವೆ |
ಕಾಲ ಕಂಠನ ಗುಡಿಗೆ ಬಾರೆನೆ |
ಕಾಲು ಉಳಿಕಿದೆ ಎನ್ನುವೆ |
ಸೂಳೆಯರ ಕುಣಿದಾಟಕಾದರೆ |
ಶಾಲು ಜೋಡಿಯ ಹೊದಿಸುವೆ |
ಪಾಲನಯನನ ಸೇವೆಗೆಂದರೆ
ನಾಳೆ ಬಾರೆಂದುಸುರುವೆ ||2||
ನೋಡಿ ವಿಷಯದ ರೂಢಿ ಸುಖವನು |
ಕೂಡಿ ಭೇದವ ತೊಟ್ಟರೈ
ನಾಡೆ ಕರ್ಮದಿ | ಕೂಡಿ ದುಃಖದ
ಕಾಡಿನೊಳು ಕಾಲಿಟ್ಟರೈ |
ಕೇಡು ತೋರದ ರೂಢಮಾದಾ
ರೂಢ | ಮಾರ್ಗವ ಬಿಟ್ಟರೈ
ಮೂಢ ಮನುಜರು | ಮಾಡಿ ಪೂಜೆಯ
ಬೇಡಿ ಫಲ ಕೆಟ್ಟರೈ ||3||
ಧಾರಿಣಿಯ ಸುಖಕಾಗಿ ಲಜ್ಜೆಯ |
ತೊರೆದು ನೀಚರಿಗೆರಗುವೇ |
ಬಾರಿ ಬಾರಿಗು ಭಕ್ತಿಯಿಂದವ |
ರಿರುವ ಠಾವಿಗೆ ತಿರುಗುವೇ |
ಮೀರಿ ಹೂಂಕರಿಸಿದರು |
ಧರೆಯೊಳಗುರುಳಿ ದುಃಖಿಸಿ ಕೊರಗುವೇ |
ವೀರ ಗುರುಶಂಕರನ ಭಜಿಸೆನೆ |
ಬರಿದೆ ನಿದ್ರೆಯೊಳೊರಗುವೆ || ಯಾವ || ||4||

ಯಿನ್ನಾದರೀ ಜನ್ಮಕೆ
ಯಿನ್ನಾದರೀ ಜನ್ಮಕೆ | ಬೆಸರಿಕೆ |
ನಿನ್ನೊಳಗೆ ತೋರದೇಕೆ | ನಿನ್ನ
ಮಾನಸದ ಬಯಕೇ ಯೆಲ ಜೀವ |
ಶೂನ್ಯಮಾಗದು ಯಾತಕೇ ||ಪ||
ಪಡಿಯದಿಹ ಪದವಿಯಿಲ್ಲಾ | ನೀನಿನ್ನು |
ನುಡಿಯದಿಹ ನುಡಿಗಳಿಲ್ಲ |
ಕೊಡದಿರುವ ದಾನವಿಲ್ಲ |
ನೋಡದಿಹ ಬೆಡಗು ಬೇರೊಂದಿಲ್ಲಾ ||1||
ಕೂಡದಿಹ ಕುಲವದಿಲ್ಲ | ಕಂಣಿನಿಂ |
ನೋಡದಿಹ ನೋಟವಿಲ್ಲ |
ಆಡದಿಹ ಆಟವಿಲ್ಲ | ನೀಬಿಡದೆ |
ಮಾಡದಿಹ ಪಾಪವಿಲ್ಲ ||2||
ಹೊಂದದಿಹ ನರಕವಿಲ್ಲ | ಯಮ ನಿನ್ನ |
ಬಂಧಿಸದ ಪಾಶವಿಲ್ಲ |
ವಂದಿಹದ ದೈವವಿಲ್ಲ | ನೀನರಿಯ |
ದಂದಚಂದಗಳಿಲ್ಲ ||3||
ತಿಳಿಯದಿಹ ವಸ್ತುವಿಲ್ಲ| ಅನುಭವಿಸ
ದಿರುವ | ವಿಷಯಂಗಳಿಲ್ಲ |
ಅರಿಯದಿಹ ತತ್ವವಿಲ್ಲ | ನೀನೋದ |
ದಿರುವ ವಿದ್ಯೆಗಳೆ ಯಿಲ್ಲ ||4||
ಪಠಿಸದಿಹ ಮಂತ್ರವಿಲ್ಲ | ಸಾಧಿಸದ |
ಚಟುಲ ತಂತ್ರಗಳಿಲ್ಲ |
ನಟಿಸಿದಿಹ ನಡತೆಯಿಲ್ಲ | ತೋರಿಸದ |
ಪಟುಮಹಾ ಮಹಿಮೆಯಿಲ್ಲ ||5||
ವಿರಚಿಸದ ಕರ್ಮವಿಲ್ಲ | ನೀಹೊಂದ |
ದಿರುವ ಯೋನಿಗಳೆ ಯಿಲ್ಲ |
ತಿರುಗದಿಹ ಲೋಕವಿಲ್ಲ | ನಿನ್ನ ಸುಡ |
ದಿರುವ ಸುಡುಗಾಡೆ ಯಿಲ್ಲ ||6||
ನೋಡಿದುದನೇ ನೋಡುವೇ | ತಿಂದು
ತೇಗಾಡಿದುದನೇ | ತಿನ್ನುವೆ |
ಬೇಡಿದುದನೇ ಬೇಡುವೇ | ಹಿಂದೆ ನೀ
ಗಾಡಿದುದದನೇ ಆಡುವೆ ||7||
ಯಿನಗಿರಿಯೊಳೊಂದನಿಟ್ಟು | ಅಸ್ತಗಿರಿ
ತನಕ | ಸೊನ್ನೆಗಳನಿಟ್ಟು |
ಗಣಿಸಲಾ ಲೆಕ್ಕದಷ್ಟು | ತನುಗಳೊಳು |
ಜನಿಸೀ ಕಷ್ಟಪಟ್ಟು ||8||
ತನುವ ಬೇರಿರಿಸಲಿಲ್ಲ | ನಿನ್ನಾ ನಿಜ
ವನು | ನೀನು ಕಾಣಲಿಲ್ಲಾ |
ಜನನವನು ಹರಿಸಲಿಲ್ಲ | ಗುರು ಶಂಕ
ರನ ಪದದಿ ಬೆರೆಯಲಿಲ್ಲ ||9||

ಯಾವ ಕರ್ಮವೋ ಶಿವ ಶಿವ
ಯಾವ ಕರ್ಮವೋ ಶಿವ ಶಿವ |
ದ್ಯಾವ ಕರ್ಮವೋ | ||ಪ||
ಭಾವಕೆ ಶಿಲುಕದ ಭವ್ಯ ಚಿದಾತ್ಮನ |
ಭಾವಿಸಿ ಬಂಧವ ಬಾವಿಲಿ ಮುಳುಗುವು |
ದ್ಯಾವ ಕರ್ಮವೋ ||ಅ.ಪ||
ಮೂರು ಗುಣಂಗಳ | ಮೀರಿದ ಶಿವನೊಳು |
ಸೇರದೆ ಮಡಿಯೆಂದು |
ಹಾರುತ ತಿರುಗುವುದು| ಯಾವ ಕರ್ಮವೋ ||1||
ಅಂಡವಿದನು ಪಿಂಡಾಂಡದೊಳರಿಯದೆ |
ಚಂಡಿಸುತೀ ಮಲ |
ಭಾಂಡವ ತೊಳುಯುವುದು| ಯಾವ ಕರ್ಮವೋ ||2||
ಈಶನೊಳಿಲ್ಲದ | ಪಾಶವ ಕಲ್ಪಿಸಿ |
ದೊಷಿಯೆನುತ ಉಪ |
ವಾಸದಿ ಬಳಲುವುದು | ಯಾವ ಕರ್ಮವೋ ||3||
ಒಡಲಿನ ತೊಡಕನು | ಬಿಡಿಸುವ ಗುರುವರ |
ನಡಿಗಳ ಪಿಡಿಯದೆ |
ಮಡಿ ಮಡಿ ಎಂಬುವುದು| ಯಾವ ಕರ್ಮವೋ ||4||
ಸಾಕ್ಷಿ ಎನಿಸುತೀ ಕುಕ್ಷಿಯೊಳಡಗಿಹ |
ವಿರೂಪಾಕ್ಷನ ಕಾಣದೆ |
ಅಕ್ಷತೆ ಎರಚುವುದು| ಯಾವ ಕರ್ಮವೋ ||5||
ತಿಳಿಯದೆ ತತ್ವವ | ಕಳೆಯದೆ ಮೋಹವ |
ಸುಳಿಯದೆ ಸುಖದೊಳು |
ಚಳಿಯೊಳು ಮುಳುಗುವುದು| ಯಾವ ಕರ್ಮವೋ ||6||
ಪುರದೊಳು ನೆಲಸಿದ | ಪುರುಷನ ಶೋಧಿಸಿ |
ಹರಿಸದೆ ಜನ್ಮವ |
ಮರವನು ಸುತ್ತುವುದು| ಯಾವ ಕರ್ಮವೋ ||7||
ಎಂದಿಗೂ ತೊಲಗದೆ | ಬಂದಿರುವೀ ಭವ |
ಬಂಧನವಳಿಯದೆ |
ವಂದನೆ ಮಾಡುವುದು| ಯಾವ ಕರ್ಮವೋ ||8||
ಗಾತ್ರದೊಳಿಹ ನಿಜ | ಸೂತ್ರವ ಕಾಣಕದೆ |
ಪಾತ್ರೆಯ ತೊಳೆಯುತ |
ಮೂತ್ರದೊಳುರುಳುವುದು| ಯಾವ ಕರ್ಮವೋ ||9||
ಸೋಹಂ ಭಾವದೊಳೂಹೆಗೆ ಶಿಲುಕದೆ |
ಮೋಹವ ಹರಿಸದೆ |
ದೇಹವ ಬಾಧಿಪುದು| ಯಾವ ಕರ್ಮವೋ ||10||
ಕರಣದ ಧರ್ಮದಿ | ಬೆರೆತು ಮರತು ತನ್ನ |
ನರಕ ನಾಕಗಳಗೆ |
ತಿರುಗುತ ಬಳಲುವುದು| ಯಾವ ಕರ್ಮವೋ ||11||
ಕಲ್ಪಿಸಿ ಜಾತಿಯ ಜಲ್ಪಿಸಿ ಭೇದವ |
ನಲ್ಟನು ಎನಿಸಿ |
ವಿಕಲ್ಪದಿ ಕೂಡುವುದು| ಯಾವ ಕರ್ಮವೋ ||12||
ನಿತ್ಯ ಚಿದಾತ್ಮನ | ತತ್ವವನರಿತು ಮ |
ಹತ್ವವ ಪಡಿಯದೆ |
ಮೃತ್ತಿಕೆಗೆರಗುವುದು| ಯಾವ ಕರ್ಮವೋ ||13||
ಕೂಡದೆ ಗುರುವನು | ನೋಡದೆ ನಿಜವನು |
ನಾಡಿನ ಶಿಲೆಗಳ |
ಬೇಡುತ ತಿರುಗುವುದು| ಯಾವ ಕರ್ಮವೋ ||14||
ಕರ್ಮದಿ ಬೆರೆಯದ | ನಿರ್ಮಲ ತಾನೆಂಬ |
ಮರ್ಮವನರಿಯದೆ |
ಚರ್ಮವ ತೊಳೆಯುವುದು| ಯಾವ ಕರ್ಮವೋ ||15||
ಚಿನುಮಯ ಶಿವ ತನ್ನ | ನೆನೆಯುವ ಮನುಜರ |
ಮನದೊಳು ನೆಲಸಿರೆ |
ವನದೊಳು ತಪಿಸುವುದು| ಯಾವ ಕರ್ಮವೋ ||16||
ಸ್ಥಿರದೊಳು ಗುರುಶಂಕರನೊಳು ಬೆರೆಯದೆ |
ಉರು ಸಂಸಾದರ |
ಶೆರಯೊಳು ಶಿಲುಕುವದು| ಯಾವ ಕರ್ಮವೋ ||17||

ಎಲ್ಲಿಹನೆಂದು ಪೂಜಿಸಲಿ
ಎಲ್ಲಿಹನೆಂದು ಪೂಜಿಸಲಿ | ಶಿವ |
ನಿಲ್ಲದ ಠಾವ ತೋರಿಸಲಿ |
ಕಲ್ಲಿನೊಳಗೊ ಮಂಣಿನಲ್ಲೊ ಲೋಹಗಳಲ್ಲೋ |
ಹುಲ್ಲಿನೊಳಗೊ ಮರದಲ್ಲೊ ನೀರೊಳಗೊ ||ಪ||
ನಿಲಿಸದೆಡೆಯೊಳು ನಿಲ್ಲುವನು | ತನ್ನ |
ಕಳುಹಲಾಕ್ಷಣದೋಳೋಡುವನು |
ನಿಲಿಸುವ ಕಳಿಸುವ ಭ್ರಾಂತಿಯ ಮೂಲವ |
ತಿಳಿದವರೊಡನೆ ತಾನೆರಕವಾಗಿಹನು ||1||
ಯೇನೆಸಗಲು ಸುಮ್ಮನಿಹನು | ಬರಿ |
ಧ್ಯಾನ ಮಾಡಿದರು ವೊಪ್ಪುವನು |
ಧ್ಯಾನ ಪುಟ್ಟಿದ ಮೂಲ ಮರ್ಮವನರಿತ |
ಸುಜ್ಞಾನಿಗಳೊಡನೆ ತಾ ಸರಸವಾಡುವನು ||2||
ಮೆರೆಸಿದಲ್ಲೆಲ್ಲ ಮೆರೆಯುವನು | ನೀರೊ
ಳಿರಿಸದೊಡಲ್ಲೆ ಮುಳುಗಿಹನು |
ಮೆರೆಸಲಿರಿಸಲು ಶಿವನು ವಶನಲ್ಲೆಂಬು |
ದರಿತವರೊಡನೆ ತಾ ಬೆರೆತುಕೊಂಬುವನು ||3||
ಮಲಗಿಸಿದಲ್ಲಿ ಮಲಗುವನು | ಚರ್ಮ |
ದೊಳು ಸುತ್ತಿಟ್ಟರಲ್ಲೆ ಯಿರುವನು |
ಛಳಿಗಾಳಿ ಬಿಸಿಲು ಕತ್ತಲೆಯೊಳು ಕರೆದರು |
ಬಳಲಿಕೆ ತೋರದೆ ತಾನೋಡಿ ಬರುವನು ||4||
ಅಲ್ಲುಂಟಿಲ್ಲಿಲ್ಲೆಂಬುದಿಲ್ಲ | ಶಿವ |
ನಲ್ಲದ ವಸ್ತುವೆಯಿಲ್ಲ |
ಯಿಲ್ಲಿಲ್ಲವಲ್ಲುಂಟೆಂದರಸುವ ಮೂಢರಿ |
ಗಲ್ಲಲ್ಲಿ ತದ್ಭಾವದಂತಿಹನಲ್ಲಾ ||5||
ಈ ವಿಧದಿಂದಲಾ ಶಿವನೂ | ನಮ್ಮ |
ಭಾವನೆಯೊಳಗೆ ಕೂಡಿಹನು |
ಭಾವಿಸದೀ ಜಡದೊಳಗೆನ್ನ ನಿಮ್ಮೊಳು |
ಭಾವಿಸಿ ಶಿವನೆ ನೀವಾಗಿರೆನ್ನುವನು ||6||
ಯೆಸೆವ ಕೈಕಾಲವನಿಗಿಲ್ಲ | ನೀ |
ಕಲ್ಪಿಸಿದೊಡೆ ಬ್ಯಾಡೆಂಬೊನಲ್ಲ |
ಅಸಮ ಶ್ರೀ ಗುರುಶಂಕರಾರ್ಯನೋಳ್ ಬೆರೆದೇಕ |
ರಸನಾಗಲಾ ಶಿವ ತಾನಹನಲ್ಲಾ ||7||

ಫಲವೇನದರಿಂದ
ಪಶುಪಕ್ಷಿ ಮೊದಲಾದ ಜನ್ಮವ ಕಳಕೊಂಡೆ | ಫಲವೇನದರಿಂದ |
ಅಸಮಾನವಾದ ಮಾನವ ಜನ್ಮ ಪಡಕೊಂಡೆ | ಫಲವೇನದರಿಂದ ||1||
ಅದರೊಳುತ್ತಮವಾದ ಪುರುಷನೆ ನೀನಾದೆ | ಫಲವೇನದರಿಂದ |
ಮುದದರಿಂದದರೊಳು ನಾ ವಿಪ್ರನೆಂದೆನಿಸಿದೆ | ಫಲವೇನದರಿಂದ ||2||
ವರವೇದ ಮಾರ್ಗ ನಿಷ್ಟೆಯನನುಸರಿದಿದೆ | ಫಲವೇನದರಿಂದ |
ಹಿರಿದಾದಾಗಮ ಶಾಸ್ತ್ರಂಗಳನೆಲ್ಲ ಕಲಿತೆ | ಫಲವೇನದರಿಂದ ||3||
ಬೇಕಾದ ಯಜ್ಞವ್ರತಗಳೆಲ್ಲ ಮಾಡಿದೆ | ಫಲವೇನದರಿಂದಾ |
ನಾಕಲೋಕಕೆ ಪೋಗಿ ರಂಭೆಯೋಳ್ಸುಖಿಸಿದೆ | ಫಲವೆನದರಿಂದಾ ||4||
ಕುಂಭಿಸಿ ಮರುತನ ಬಿಡದೆ ಬಂಧಿಸಿದೇ | ಫಲವೇನದರಿಂದ |
ಯಿಂಬಾಗಿ ತನುವ ಶತಕಲ್ಪ ನಿಲ್ಲಿಸಿದೇ | ಫಲವೇನದರಿಂದ ||5||
ಮಾನವರೊಳಗತಿ ಮಾನ್ಯನೆಂದೆನಿಸಿದೆ | ಫಲವೇನದರಿಂದ |
ಗಂಗಾದಿ ಪುಣ್ಯ ತೀರ್ಥದೊಳೆಲ್ಲ ಮುಳುಗಿದೆ | ಫಲವೇನದರಿಂದ ||6||
ನಾನಾ ದಾನಗಳ ನಿಧಾನಿಸಿ ಮಾಡಿದೆ | ಫಲವೇನದರಿಂದ |
ಅಂಗದೊಳಿರುವ ಪಾಪವನೆಲ್ಲ ಕಳಕೊಂಡೆ | ಫಲವೇನದರಿಂದ ||7||
ಶೇರಿ ಸುಷುಮ್ನೆಯ ತಾರಕವನು ಕಂಡೆ | ಫಲವೇನದರಿಂದ |
ತೋರಿತು ನಿನ್ನ ಬೆಳಕೆ ಬೇರೆ ವಿಧವಾಗಿ | ಫಲವೇನದರಿಂದ ||8||
ಗುರುಶಂಕರಾರ್ಯನೋಳ್ ಬೇರದೇಕನಾಗಿ |
ನಿನ್ನಯ ನಿಜವನು ಕಾಣದೆ | ಫಲವೇನದರಿಂದ |
ಮರಣ ಜನ್ಮವ ಕಳಿಯದೆ ಕರ್ಮ ಮಾಡಲು | ಫಲವೇನದರಿಂದ ||9||

ಮಂಗಳಂ ಜಯ ಮಂಗಳಂ
ಮಂಗಳಂ ಜಯ ಮಂಗಳಂ |
ಶುಭ ಮಂಗಳಂ ಮುಕ್ತಿಗಧೀಶನಿಗೆ |
ವಡಲಿದು ನೀನಲ್ಲ ವಡಲಿಗಾಶ್ರಯನಲ್ಲ |
ವಡಲ ವಿಲಕ್ಷಣನೆಂದರುಪಿ |
ವಡಲಿನ ತೊಡಕನು ಬಿಡಿಸಿ ನಮ್ಮೆಲ್ಲರ |
ಮೃಢನ ಮಾಡಿದ ನಿಜದೇವನಿಗೆ ||
ಮಂಗಳಂ ಜಯ ಜಯ ಮಂಗಳಂ ||ಪ||
ದೇಹವೆ ದೇಹದ ಮೋಹವ ಮೋಹದ |
ಸಾಹಸಂಗಳನೆಲ್ಲ ನೆರೆ ಕಳೆದು |
ವೂಹೆಗೆ ಸಿಲುಕದ ಸೋಹಂ ಕಳದುಳುಮೆಯ |
ನೇಹಂಸನೊಳು ತೋರಿಸಿದ ಮೂರ್ತಿಗೆ || ಮಂಗಳಂ ||1||
ಜನನ ಮರಣಗಳ ತನುವಿನೊಳಡಗಿಸಿ |
ಮನಸಿಗೆ ರಾಗಾದಿಗಳನೊಪ್ಪಿಸಿ |
ಕನಸು ನೆನಸುಗಳೊಂದನು ಮಾಡಿ ಕೆಡಿಸದೆ |
ಮ್ಮನು ಸಮ್ಮತದಿಗುಳಿಸಿದ ನಿಜದೇವಗೆ || ಮಂಗಳಂ ||2||
ಓಂಕಾರವನು ಸತ್ವಾಹಂಕಾರದೊಳಗಿಟ್ಟು |
ಹುಂಕಾರವನು ಬಿನ್ನಪದೊಳಿಟ್ಟು |
ಕಿಂಕರರೆಮ್ಮ ಶುಭಂಕರ ಶ್ರೀಗುರು |
ಶಂಕರನೊಳಗಿಟ್ಟ ಪರಮಾತ್ಮಗೇ || ಮಂಗಳಂ ||3||

ಗುರುದೇವ ನೀನೆ ದೀನರಬಂಧು
ಗುರುದೇವ ನೀನೆ ದೀನರ ಬಂಧು | ಸ್ಥಿರ |
ಕರುಣಾ ಸಿಂಧು | ಗುರುದೇವ ನೀನೆ ದೀನರ ಬಂಧು ||ಪ||
ಕೊರತೆಯ ಪಡಿಸದೆ ಶರೀರವ ಬಿಡಿಸಿದೇ
ಶರೆಯೊಳು ನಡಿಸದೆ ಮರೆವೆಯ ಕೆಡಿಸಿದೆ |
ಹರುಷವ ಹರಿಸದೇ ಹರನೊಳು ಬೆರೆಸಿದೆ |
ಧರಣಿಗೆ ಮರುಳದ ಪರಿಯೊಳು ಪರಿದೇ || ಗುರು ||1||
ನಿನ್ನೊಳು ಶೇರದೆ ಜನ್ಮವ ತೂರಿದೆ |
ಯನ್ನಣೆ ಬಾರದೇ ವುನ್ನತಿಗೇರಿದೆ |
ಧನ್ಯತೆ ತೋರದೆ ಮಾನ್ಯರ ಮೀರಿದೆ |
ಯಿನ್ನೊಂದರಿಯದೆ ನಿನ್ನೊಳು ಬೆರದೆ || ಗುರು ||2||
ಗುರು ಚರಣಕೆ ನಿಜ ಶರೀರವ ಮಾರದೆ |
ಪರಮಾನಂದದ ಶಿರಿತನ ಬಾರದೆ |
ಕರಣಧರ್ಮವನರಿತದಕೇರದೇ |
ಗುರು ಶಂಕರಪದ ದೊರೆವುದೆ ಬರಿದೇ || ಗುರು ||3||

ಬರಿದೆ ನಾ ಶಿವನೆಂದೊಡವ ಶಿವನಲ್ಲ
ಬರಿದೆ ನಾ ಶಿವನೆಂದೊಡವ ಶಿವನಲ್ಲ |
ಸ್ಥಿರಮುಕ್ತಿ ಸುಖವ ಸದ್ಗುರು ಪುತ್ರಬಲ್ಲ ||ಪ||
ಮರವೆ ಸಂಶಯಗಳೆಂಬುದು ಕೆಡಲಿಲ್ಲ |
ಹೋಮನೇಮಗಳೊಂದು ಬಯಲಾಗಲಿಲ್ಲ |
ನಾಮ ರೂಪುಗಳಲ್ಲಿ ಪುಸಿ ತೋರಲಿಲ್ಲ |
ಪ್ರೇಮಾಸ್ತಿಭಾತಿ ತನ್ನೊಳು ಹೊಂದಲಿಲ್ಲ ||1||
ಜರೆಮೃತಿ ಜನನ ದೇಹದೊಳಡಗಿಲ್ಲ |
ಹರಣಕ್ಕೆ ಕ್ಷುಧೆತೃಷೆಗಳ ಕೊಡಲಿಲ್ಲ |
ಕರಣದೊಳ್ ಸುಖ ದುಃಖಗಳ ನೀಡಲಿಲ್ಲ |
ಅರಿವ ಸಾಕ್ಷಿತ್ವ ತನ್ನೊಳು ಕೂಡಲಿಲ್ಲ ||2||
ಮನದ ಮೋಹವು ಮನಸಿನದಾಗಲಿಲ್ಲ |
ತನು ಧರ್ಮವೆನ್ನದೆಂಬುದು ಕೆಡಲಿಲ್ಲ |
ಕನಸುಜಾಗರವೆರಡೊಂದಾಗಲಿಲ್ಲ |
ಚಿನುಮಯನಾಗುತ ತಾ ನಿಲ್ಲಲಿಲ್ಲ || ಬರಿದೆ ||3||
ನಶ್ವರ ಮಾಯಾ ಮೋಹವು ಕೆಡಲಿಲ್ಲ |
ದೃಶ್ಯವೆಂಬುದು ಪೋಗಿ ದೃಕ್ಕಾಗಲಿಲ್ಲ |
ದೃಶ್ಯಾದೃಶ್ಯಗಳ ಮೂಲವ ಕಾಣಲಿಲ್ಲ |
ವಿಶ್ವಾಕಾರತ್ವ ತನ್ನೊಳು ತೋರಲಿಲ್ಲ ||4||
ಯಲ್ಲಾವಂದೆಂಬುದೊಳಗೆ ನಿಲ್ಲಲಿಲ್ಲ |
ಯಿಲ್ಲಲ್ಲಿಗೆಳೆವ ಭ್ರಾಂತಿಯ ಕೊಲ್ಲಲಿಲ್ಲ |
ಯೆಲ್ಲೆಲ್ಲಿಯು ತಾನೆ ತಾನಾಗಲಿಲ್ಲಾ |
ಸಲ್ಲಲಿ ತಾನಂದದೊಳು ಕೂಡಲಿಲ್ಲಾ || ಬರಿದೆ ||5||
ಪರಮ ನಾನೆಂಬರಿವನು ಮರತಿಲ್ಲ |
ಮರವೆಗಾಶ್ರಯವಾವುದದು ತೋರಲಿಲ್ಲ |
ಪರವೆಂಬ ನುಡಿ ಬೆಂದು ಬೂದಿಯಾಗಲಿಲ್ಲ |
ಗುರು ಶಂಕರನೋಳೈಕ್ಯತನಿಗಾಗಲಿಲ್ಲಾ || ಬರಿದೆ ||6||

ಗುರು ಪಾದದೊಳು ಮನ ಬೆರೆಯಲಿಲ್ಲಾ
ಗುರು ಪಾದದೊಳು ಮನ ಬೆರೆಯಲಿಲ್ಲಾ |
ಪಾಪಿ ಅರಿಯನಲ್ಲಾ | ಜನ್ಮ ಹರಿಯಲಿಲ್ಲ |
ಸ್ಥಿರಮುಕ್ತಿ ಸುಖವದು ದೊರೆಯಲಿಲ್ಲ |
ಪಾಪಿ ಅರಿಯನಲ್ಲಾ ||ಪ||
ಜೀವ ಶಿವರಿಗೆ ಭೇದ ಮಾಡಬೇಡ | ಅದ | ನೋಡಬೇಡ |
ಭಾವಿಸಿ | ಕರ್ಮದೊಳು ಕೂಡಬ್ಯಾಡಾ | ವೋಸ್ಯಾಡಬ್ಯಾಡಾ ||1||
ಯರಡೆಂಬ ಭ್ರಾಂತಿಯು ಪೋಗಲಿಲ್ಲಾ | ಜನ್ಮ ನೀಗಲಿಲ್ಲ |
ಗುರುಪಾದ ಶೇವೆ ಕೊನೆ ಸಾಗಲಿಲ್ಲಾ | ಬ್ರಹ್ಮನಾಗಲಿಲ್ಲಾ ||2||
ತನ್ನ ಮರತು ತನುವ ತೊಳದರೇನು | ಬೂದಿ ಬೊಳದರೇನು |
ಭಿನ್ನಿಸಿಗೈದ ಧ್ಯಾನ ಬಲ್ತರೇನು | ವೇದ ಕಲ್ತರೇನು ||3||
ರೂಪು ನಾಮ ಬಿಟ್ಟಮೇಲೆ ಕೋಪವಿಲ್ಲಾ | ಪುಣ್ಯ ಪಾಪವಿಲ್ಲ |
ಆ ಪರಬ್ರಹ್ಮದೊಳು ತಾಪವಿಲ್ಲಾ | ಅಧ್ಯಾರೋಪವೆಲ್ಲಾ ||4||
ಸತ್ಯವನರಿತ ಮೇಲೆ ನೀತಿಯಲ್ಲ | ಕುಲಜಾತಿಯಿಲ್ಲ |
ಮಿಥ್ಯೆಯ ಕಳದ ಮೇಲೆ ರೀತಿಯಿಲ್ಲಾ | ಲೋಕ ಭೀತಿಯಿಲ್ಲ ||5||
ತಾನಾರುಯೆಂಬುದ ತಿಳಿಯಬೇಕು | ಭೇದವಳಿಯಬೇಕು |
ನಾನತ್ವ ಭಾವವನುಳಿಯಬೇಕು | ಜನ್ಮ ಕಳಿಯಬೇಕು ||6||
ಜ್ಞಾನವಿಲ್ಲದ ಬರಿ ಮೌನವೇಕೆ | ಜಪ | ಧ್ಯಾನವ್ಯಾಕೆ |
ತಾನೇ ತಾನಾದ ಮೇಲೆ ಮಾನ ಬೇಕೇ | ಗಂಗಾಸ್ನಾನ ಬೇಕೆ ||7||
ಅಂತನಿಲ್ಲದ ಮೇಲೆ ಚಿಂತೆಯಿಲ್ಲ | ಬೇರೆ ಶಾಂತಿಯಿಲ್ಲ |
ಭ್ರಾಂತಿಯ ಕಳದ ಮೇಲೆ | ಪಂಥವಿಲ್ಲ ತನ್ನಂತೆಯಲ್ಲ ||8||
ಲಿಂಗ ತಾನಾದಮೇಲೆ ಭಂಗವಿಲ್ಲ | ಪಾಪ ಸಂಗವಿಲ್ಲ |
ಅಂಗವ ಕಳದಮೇಲೆ ರಂಗನಿಲ್ಲ | ನರಸಿಂಗನಿಲ್ಲ ||9||
ಸಂಶಯವಳಿಯ ದೇಹ ಬುದ್ಧಿಯಿಲ್ಲಾ | ಜಗದ ಸುದ್ದಿಯಿಲ್ಲಾ |
ಸಂಸಾರದೊಳಗವ ನಿದ್ದುಯಿಲ್ಲಾ | ಮುಂದೆ ಬದ್ಧನಲ್ಲಾ ||10||
ಗುರು ಶಂಕರಾರ್ಯನ ಚರಣದಲ್ಲಿ | ಶಿರವನಿರಿಸಿದಲ್ಲಿ |
ಮುರಳೀ ಜನ್ಮಿಸನೀ ಧರಣಿಯಲ್ಲಿ | ಬೆರೆವ ಪರಮನಲ್ಲಿ ||11||

ಸಾರುತಿದೆ ಶ್ರುತಿ
ಸಾರುತಿದೆ ಶ್ರುತಿ ಸಾರುತಿದೆಲ್ಲೊ
ಪರಮಾರ್ಥ ಜ್ಞಾನವಿಲ್ಲದೆ
ನೂರು ಸಾವಿರ ದೇಹದೊಳಗತಿ
ಘೋರ ತಪದಿಂ ತಪ್ತನಾದರು
ತೋರದಾತ್ಮಾನಂದವೆಂದೂ || ಸಾರು ||
ತನ್ನ ನಿಜವನು ತಿಳಿಯಲಾರದೆ
ಭನ್ನ ಭಾವನೆಯಿಂದ ಕಲ್ಮರ
ಮಂಣು ಬೊಂಬೆಗಳನ್ನು ಪೂಜಿಸೆ
ಜನ್ಮಬಾಧೆಯು ತೊಲಗದೆಂದು || ಸಾರು ||1||
ಓದಿ ವೇದವ ಜೀವ ಪರಮರ
ಭೇದವಳಿಯದ ಮನುಜ ಧರೆಯೊಳು
ವೇದ ಭಾರವ ಪೊತ್ತು ತಿರುಗುವ
ಮಾದಿಗರ ಮನೆ ಕತ್ತೆ ಎಂದೂ || ಸಾರು ||2||
ಜಾತಿ ನೀತಿಗಳಿಲ್ಲದಾತ್ಮಗೆ
ಜಾತಿಯನು ಕಲ್ಪಿಸುತ ಕರ್ಮದ
ಮಾತನಾಡುವ ನರನೆ ಕಾಲನ
ದೂತಪಾಷಕೆ ಬದ್ಧನೆಂದೂ || ಸಾರು ||3||
ಕಂದ ಮೂಲವ ತಿಂದು ನದಿಯೊಳು |
ಮಿಂದು ಭೂದಿಯ ಧರಿಸಿ ಪಿಟಿ ಪಿಟಿ
ಎಂದು ಮಂತ್ರವ ಜಪಿಸಿದರು ಭವಭಂದ
ವೆಂದಿಗೂ ಹರಿಯದೆಂದೂ || ಸಾರು|| ||4||
ತತ್ವಮಸಿ ವಾಕ್ಯಾರ್ಥದೊಳಗಿನ
ತತ್ವವರಿಯದೆ ಶಂಭು ಪೂಜೆಯ
ಹತ್ತು ಸಾವಿರ ವರುಷಗೈದರು
ಮೃತ್ಯುವೆಂದಿಗು ತಪ್ಪದೆಂದೂ ||5||
ತನುವೆ ತಾನೆಂದರಿತು ತನ್ನೊಳು
ತನುವಿಗುಸುರಿದ ಜಾತಿ ಕರ್ಮವ
ನೆಣಿಸಿ ಕರ್ಮಾಗ್ನಿಯಲಿ ಬೇಯುವ
ಮನುಜನಿಗೆ ಭವ ತೊಲಗದೆಂದು || ಸಾರು ||6||
ನಾನು ನೀನದಿದೆಂಬ ಭಾವಗ
ಳೇನು ತೋರದ ಸಚ್ಚಿದಾನಂ
ದಾನುಭವ ಸುಜ್ಞಾನ ತಳೆದಿಹ
ಮಾನವನೆ ಪರಮಾತ್ಮನೆಂದೂ || ಸಾರು ||7||
ಸತ್ಯ ವಸ್ತುವ ಮರೆತು ಮಿಥ್ಯೆಯ
ಮಾಯೆಯೆಂದುಸುರುತ್ತ ಕರ್ಮಕೆ
ಭೃತ್ಯರಾಗಿಹ ಮೂಢ ಮನುಜರು
ಸತ್ತು ಜನಿಸುತ್ತಿರುವರೆಂದೂ || ಸಾರು ||8||
ಬಾಧೆಗೊಳಿಸುತ ತನುವ ಸಮ್ಯ
ಗ್ಬೋಧೆಯಿಲ್ಲದೆ ಬಹು ವ್ರತಂಗಳ
ಸಾಧಿಸಿದರದರಿಂದಲೀ ಭವ
ಬಾಧೆ ಎಂದಿಗು ತೊಲಗದೆಂದು || ಸಾರು ||9||
ಎಷ್ಟು ದಿನಧರೆಯೊಳಗೆ ಬಾಳ್ದರು
ನಷ್ಟವಾಗದೆ ನಿಲ್ಲದೀತನು
ಭ್ರಷ್ಟರಿದನರಿತರಿತು ತತ್ವವ
ಬಿಟ್ಟು ಬರಿದೇ ಕೆಟ್ಟರೆಂದು || ಸಾರು ||10||
ಸ್ವರ್ಗ ಭೋಗವ ಬಯಸಿ ನಿರ್ಮಲ
ನಿರ್ಗುಣಾದ್ವಯ ವಸ್ತುವನು ಹರಿ
ಭರ್ಗ ನಾಮಾದಿಗಳ ಪೂಜಿಸುವವರಿಗಪ
ವರ್ಗವೆಂದಿಗು ದೊರೆಯದೆಂದು || ಸಾರು ||11||
ಪರಮ ಸದ್ಗುರು ಶಂಕರಾರ್ಯನ
ಚರಣ ಕಮಲವ ಪಿಡಿದು ತತ್ವವ
ನರಿತು ಬ್ರಹ್ಮಾನಂದದೊಳಗಿಹ
ನರನೆ ಸಾಕ್ಷಾದೀಷನೆಂದು || ಸಾರು ||12||

ಶಿವ ಜೀವರು ಎಂದೆರಡಿಲ್ಲ
ಶಿವ ಜೀವರು ಎಂದೆರಡಿಲ್ಲ ಪರ
ಶಿವಮಯವೇ ಈ ಜಗವೆಲ್ಲಾ ||
ಭವ ಕಾನನಶನ ದಹಿಸುವ ಮಂತ್ರವ
ಭುವನದೆ ಗುರುಪುತ್ರನೇ ಬಲ್ಲ ||ಪ||
ದಾನವ ಮಾಡಿದರೇನುಂಟು ಬರಿ
ಮೌನದೊಳಿರ್ದೊಡೆ ಏನುಂಟು |
ಜ್ಞಾನದಿ ವಸ್ತುವನರಿತೊಡೆ ಸಾಕು
ಮಾನಕೆ ಶಿಲುಕದ ಸುಖಮುಂಟು || ಶಿವ ||1||
ನದಿಯೊಳು ಮುಳುಗಿದರೇನುಂಟು ಬಳಿ
ಕದರಿಂ ನಡುಗುವ ಚಳಿಯುಂಟು |
ಸದಮಳ ವಸ್ತುವೆ ತಾನೆಂದರಿತೊಡೆ
ಅದು ನಿತ್ಯಾನಂದದ ಗಂಟು || ಶಿವ ||2||
ವೇದಗಳೋದಿದರಲ್ಲೇನು ಬಿಳಿ
ಬೂದಿಯ ಬೊಳಿದರು ಯಮ ಬಿಡನು |
ಭೇದವು ತೋರದೆ ವಿಮಲ ಜ್ಞಾನವ
ಸಾಧಿಸಿದರೆ ಶಿವನಾಗುವನು || ಶಿವ ||3||
ಉತ್ತಮ ಕರ್ಮವಗೈದವರು ಕೇಳ್
ಮತ್ತೀ ಧರಣಿಗೆ ಬರುತಿಹರು |
ತತ್ವದ ಮರ್ಮವನರಿತಿಹ ಧೀರರು
ನಿತ್ಯಾನಂದದಿ ಬೆರಯುವರು || ಶಿವ ||4||
ದೇಶವ ಸುತ್ತಿದರೇನಿಲ್ಲ ಭವ
ಕಾಶಿಯೊಳಗಿದ್ದರು ಬಿಡದಲ್ಲ |
ಈ ಸಕಲವು ಪಸಿಯೆಂದರಿತೊಡೆ ಜಗ
ದೀಶನೇ ತಾನಾಗುವನಲ್ಲ || ಶಿವ ||5||
ನಂದನರಿಂದಲು ಭವ ಕೆಡದು ಸಂಧ್ಯಾ
ವಂದನೆ ನಿಜ ಮುಕ್ತಿಯ ಕೊಡದು |
ಕುಂದದೆ ಶಿವ ತಾನೆಂದೊರಿತೊಡೆ ಆ
ನಂದವು ಬ್ಯಾಡೆಂದರು ಬಿಡದು || ಶಿವ ||6||
ಉರುತರ ಕರ್ಮವಗೈದವರು ಕೇಳ್
ಪರಿಪರಿ ಯಜ್ಞದ ದೀಕ್ಷಿತರು
ಮರವೆಯ ತೋರದೆ ನಿಜ ಸುಖದೊಳಗಿಹ
ಗುರುಪುತ್ರನ ಪದ ಕಿಂಕರರು || ಶಿವ ||7||
ಗಂಟೆಯ ಬಡಿದರು ಗುಡಿಯಲ್ಲಿ ಯಮ
ಭಂಟರು ಬೇರೆ ಬಿಡರಿಲ್ಲಿ
ಕಂಟಕವೆನಿಸಿದ ಮಾಯೆಯ ಕಳೆದರೆ
ಗಂಟಾಗುವದದು ಇಹ ಪರದಲ್ಲಿ || ಶಿವ ||8||
ಎರಡೆಂಬುವನಿಗೆ ಕಡೆ ಇಲ್ಲ ಈ
ಧರಣಿಗೆ ಬರುವುದು ಬಿಡದಲ್ಲ |
ಗುರು ಶಂಕರನಡಿಗಳ ಪಿಡಿದವರಿಗೆ
ಮರಳೀ | ಸಂಸ್ಕೃತಿ ಭಯವಿಲ್ಲ || ಶಿವ ||9||

ಚಿನ್ಮಯಸುಖಸಾಗರ ನೀನಾಗಿ
ಚಿನ್ಮಯಸುಖಸಾಗರನೀನಾಗಿ |
ನಿನ್ನೊಳಗಿಹ ಮಾಯೆಗೆ ವಶನಾಗಿ ||1||
ಅನ್ಯೋನ್ಯಾಧ್ಯಾಸಕೆ ಗುರಿಯಾಗಿ |
ನಿನ್ನ ನಿಜತ್ವಕೆ ನೀ ಹೊರಗಾಗಿ ||2||
ಅನ್ಯಾಯದ ಕರ್ತತ್ವಕೆ ಪೋಗಿ |
ನಿನ್ನಾನಂದದ ಘನತೆಯ ನೀಗಿ ||3||
ಮುನ್ನಿಲ್ಲದ ಬಂಧನ ಬರಲಾಗಿ |
ಜನ್ಮದ ಕರ್ಮಿಯ ನಡೆಹಿತಮಾಗಿ ||4||
ಸನ್ಮಾರ್ಗವಿದೆನ್ನುತ ಬೆರಗಾಗಿ |
ವರ್ಣಾಶ್ರಮ ಧರ್ಮಗಳೊಂದಾಗಿ ||5||
ನಿನ್ನೊಳು ಸೇರಲು ವಿಧ ವಿಧಮಾಗಿ |
ಪುಣ್ಯ ಕರ್ಮದೊಳು ಮತಿಯುಂಟಾಗಿ ||6||
ಧನ್ಯನು ನಾನೆನ್ನುತ ಬೆರಗಾಗಿ |
ಕಣ್ಣಿಲ್ಲದೆ ಕುರುಡನಿಗೆಣೆಯಾಗಿ ||7||
ಮಂಣಿನ ಬೊಂಬೆಗಳಿಗೆ ಶಿರಬಾಗಿ |
ಯಿನ್ನೀ ಭಾರವ ಪೊತ್ತವನಾಗಿ ||8||
ರನ್ನಮಯದ ಸ್ವರ್ಗಕೆ ನೀ ಪೋಗಿ |
ವುನ್ನುತನೆನಿಸುತ ಸುರರೊಳಗಾಗಿ ||9||
ಕನ್ನೆಯರೊಲುಮೆಗೆ ಪರವಶನಾಗಿ |
ಮನ್ನಣೆಯಿಂ ಭೋಗಿಸುತಿರಲಾಗಿ ||10||
ಪುಣ್ಯದ ಫಲ ತೀರುತ ಬರಲಾಗಿ |
ಯಿನ್ನದಕಿಂದ್ರನು ನಿರ್ದಯನಾಗಿ ||11||
ನಿನ್ನಾ ದೇಹವ ಛೇದಿಸಲಾಗಿ |
ಕಣ್ಣೀರಿಲಿ ಕೈತೊಳೆಯುವನಾಗಿ ||12||
ಜನ್ಮಗಳೆತ್ತಿದೆ ಬಗೆ ಬಗೆಯಾಗಿ |
ಚಿನ್ಮಯ ಗುರು ಶಂಕರನ ಕೃಪೆ ನೀಗಿ ||13||

ನೋಡಬಾರದೇ ಬ್ರಹ್ಮವ
ನೋಡಬಾರದೇ ಬ್ರಹ್ಮವ ನೋಡಬಾರದೇ |
ಆಡುತ ಪಾಡುತ ಬೇಡುತ ಕಾಡುತ |
ಓಡುತ ನೋಡುತ ನಾಡೊಳು ಕೂತಿದೆ ||ಪ||
ನಿರುಪಮ ನಿರ್ಗುಣ ನಿತ್ಯ ನಿರಾಶ್ರಯ |
ನಿರಘ ನಿರಂಜನ ನಿರವಧಿಯಾಗಿದೆ || ನೋ ||1||
ನಶ್ವರಮಾಯೆಯ ವಶ್ಯವಗೊಳಿಸಿ | ಮ
ಹೇಶ್ವರನೆನಿಸುತ ವಿಶ್ವವೆಯಾಗಿದೆ || ನೋ ||2||
ತಾಪಕೆ ಸಿಲುಕದೆ ವ್ಯಾಪಿಸಿ ಗುಣದೊಳು |
ಶ್ರೀಪತಿ ವಿಧಿಹರ ರೂಪವ ಧರಿಸಿದೆ || ನೋ ||3||
ಮಲಿನದ ವಿದ್ಯೆಯ ಕಲತು ಮರತು ತನ್ನ |
ತಿಳಿಯದೆ ತತ್ವವ ಕಳವಳಿಸುತಲಿದೆ || ನೋ ||4||
ಶೇರಿತಾಮಸಿಯೊಳು ಧಾರುಣಿ ಜಲಶಿಖಿ |
ಮಾರುತ ಗಗನಾಕಾರವ ಧರಿಸಿದೆ || ನೋ ||5||
ಯಿಂದ್ರಾದ್ಯುತ್ತಮ ಬಂಧುರ ತನುಗಳ |
ಹೊಂದಿ ಮನುಜರಿಂದ ವಂದಿಸಿಕೊಳುತಿದೆ || ನೋ ||6||
ವಿಧವಿಧಮರ್ತ್ಯಾದ್ಯಧಮಮ ದೇಹವ ಸೇರಿ |
ಸದಮಳಪೂಜಾ ವಿಧಿಯನು ಪಿಡಿದಿದೆ || ನೋ ||7||
ನಿಜದೊಳಗಿಲ್ಲದ ವೃಜಿನವ ಕಲ್ಪಿಸಿ |
ಅಜಹರಿರುದ್ರರ ಭಜಿಸುತ ಕೂತಿದೆ || ನೋ ||8||
ದಾಸನೆನಿಸಿ ಸನ್ಯಾಶಿಯೆನಿಸಿ ಪರ |
ದೇಶಿಯೆನಿಸುತೀ ವೇಷವ ಧರಿಸಿದೆ || ನೋ ||9||
ತಾತ ಕರುಣಿ ತನುಜಾತ ಮಾತುಳರೆಂಬೀ |
ಮಾತುಗಳಿಂ ವಿಪರೀತ ಭಾವದೊಳಿದೆ || ನೋ ||10||
ಬೆರತು ಕರಣದೊಳಗರಿಯದ ಮೂಢನ |
ಪರಿಯೊಳು ಸುಮ್ಮನೆ ಶರಿರದೊಳಡಗಿದೆ || ನೋ ||11||
ವಿದ್ಯಾವಿದ್ಯೋಪಾಧಿಯ ಕಳದರೆ |
ಶುದ್ಧ ಚಿದಾನಂದಾದ್ವಯನೆನಿಸಿದೆ || ನೋ ||12||
ಕುಂಭಿಣಿ ಕೋಟಿಯೋಳಿಂಬಿಲ್ಲದೆ ತಾ |
ನಂಬರದಂದದಿ ತುಂಬಿ ತುಳುಕುತಿದೆ || ನೋ ||13||
ಗುರು ಶಂಕರನೊಳು ಬೆರಿಯದ ಮನುಜರಿ |
ಗರಿಯದ ಪರಿಯೊಳು ಮರೆಯೊಳು ಕೂತಿದೆ || ನೋ ||14||

ತನ್ನ ತಾ ತಿಳಿಯಬೇಕು
ತನ್ನ ತಾ ತಿಳಿಯಬೇಕು | ಕೇಳದರಿಂದಾ |
ಜನ್ಮವ ಕಳಿಯಬೇಕು |
ಮುನ್ನಿರ್ದಶಿವ ಜೀವ |
ಭಿನ್ನತ್ವವಳಿದು ಮ |
ಹೋನ್ನತಾನಂದಸ |
ಚಿನ್ಮಯ ಭಾವದಿ || ತನ್ನ ||ಪ||
ಮರಣ ಜನ್ಮಂಗಳಲಿ | ಜಾ
ಗರಸ್ವಪ್ನ | ಸುಪ್ತಿ ಮೂರ್ಛಾವಸ್ಥೆಯೊಳು |
ಅರಿಯೆ ನಾನರಿಯುವೆ |
ನರಿತೆನೆಂಬೆಡೆಯಲ್ಲಿ |
ಪರ ದಿನಮಾಸ ಸಂವ |
ತ್ಸರ ಕಲ್ಪಾದಿಗಳಲ್ಲಿ || ತನ್ನ ||1||
ಘನ ತಿಮಿರದಿ ಕುಳಿತು | ಮುಸುಕಿಟ್ಟು ಕಂ |
ಣನು ಮುಚ್ಚುತೊಳಬೆರತು |
ಕನಸಿನ ಪರಿಯೊಳು |
ಮನಸಿನ ಭಾವದಿ |
ಜನಿಸಿ ತೋರುವ ಜಗ
ತ್ತಿನ | ತೋರ್ಕೆ ಕಾಲದಿ || ತನ್ನ ||2||
ಮನದೊಳು ವಿಧಿ ಶೇರಲು | ಮಾನಸವನು |
ದಿನ ವಿಷಯದಿ ಕೂಡಲು |
ಧನ ಧಾನ್ಯವನಿತೆ |ವಾ
ಹನ ವಸ್ತ್ರಾಭರಣಂಗ
ಳನುಭವದಿಂದ | ಸಂ
ಜನಿಸುವ ಸುಖದೊಳು || ತನ್ನ ||3||
ಕದಿದಮೆನಿಸಿಕೊಳುತ | ನಾನಾ |
ವಿಧವಸ್ತುಗಳ ನೋಡುತ |
ಯಿದು ಜಗವಿದು ರೂಪ |
ವಿದು ದೀಪವಿದು ನೇತ್ರ |
ವಿದು ಬುದ್ಧಿಯೆಂದರಿತು |
ವಿಧಿಸುವ ನುಡಿಯೊಳು || ತನ್ನ ||4||
ಮತಿಯೋಳ್ ಸತ್ವವು ಕೂಡಲು |
ಸತ್ಕರ್ಮ ಸಂತತಿಗಳಧಿಕ ಮಾಗಲು |
ಅತಿ ಭಕ್ತಿಯೊಳು ಗೌರಿ |
ಪತಿ ಪದಗಳ ಪೂಜಿ
ಸುತ | ನಮಿಸುತ ನಿಂದು |
ನುತಿಸುವ ಕಾಲದಿ || ತನ್ನ ||5||
ನಿರುತವೀ ಬುದ್ಧಿಯೊಳು | ತಾಮಸ ಗುಣ |
ಕರಿಗೊಂಡು ನೆಲೆಗೊಳಲು |
ಅರಿವರ್ಗ ದಿಂದನು |
ಸರಿಸಿ ಸಂಜನಿಸುವ |
ದುರಿತ ಕರ್ಮಗಳು |
ಗೋಚರಿಸುವ ಸಮಯದಿ || ತನ್ನ ||6||
ಹರಿಯದೀ ಪ್ರಾರಬ್ಧವ | ಮೀರದೆ ನಾನಾ |
ಪರಿಯೊಳು ಕುಣಿದಾಡುವಾ |
ಕರಣ ಧರ್ಮಂಗಳ |
ನರಿತಲ್ಲಿ ಬೆರೆಯದೆ |
ಗುರು ಶಂಕರಾರ್ಯನೋಳ್ |
ಬೆರೆದೇ ಕಮಯನಾಗಿ || ತನ್ನ ||7||

ತನ್ನ ತಿಳಿದೊಡವ ಯೋಗಿ
ತನ್ನ ತಿಳಿದೊಡವ ಯೋಗಿ | ತಾನೆ |
ತನ್ನ ಮೂಲವ ಕಾಣದವ ಜನ್ಮ ರೋಗಿ |
ಯೆಂದಿಗೂ ಜನ್ಮರೋಗಿ || ತನ್ನ ||ಪ||
ಕರದು ಕೊಡುವ ದಾನದಲಿ | ಮತ್ತೆ |
ಶಿರವಿದು ಶಿವನಿಗೊಂದಿಸುವ ಕಾಲದಲ್ಲಿ |
ಚರಣದ ತೀರ್ಥಯಾತ್ರೆಯಲಿ | ಬಾಯ |
ತೆರೆದು ಶಿವನ ನುತಿಸುವ ಸಮಯದಲ್ಲಿ || ತನ್ನ ||1||
ನಾನಾ ಚಿತ್ರಗಳ ನೋಟದಲಿ | ಬಳಿಕೀ |
ವೀಣಾದಿ ಗಾನ ಧ್ವನಿಯ ಕೇಳುವಲ್ಲಿ |
ನಾನಾಗಂಧವ ಮೂಸುವಲ್ಲಿ | ವೊಳ್ಳೆ |
ಜೇನುಸಕ್ಕರೆ ಭಕ್ಷ್ಯಂಗಳ ರುಚಿಯಲ್ಲಿ || ತನ್ನ ||2||
ವೊಂದಾಗಿ ನಿಶ್ಚೈಸುವಲ್ಲಿ | ಕಂಡು |
ತಿಂದು ಕೇಳಿದ ವಸ್ತುಗಳ ಬಯಸುವಲ್ಲಿ |
ಹಿಂದೆ ನಡೆದ ಸಂಸ್ಕೃತಿಯಲ್ಲಿ | ತನ್ನ |
ಮುಂದೆ ನಿಲ್ಲಿವರಿಲ್ಲೆಂಬುವ ನುಡಿಯಲ್ಲಿ || ತನ್ನ ||3||
ಕುಜನ ದುಷ್ಕರ್ಮ ಕೂಟದಲಿ | ತನ್ನ |
ದ್ವಿಜನೆಂದು ಜನರು ಪೂಜಿಸಿವ ಕಾಲದಲೀ |
ರುಜೆಯಿಂದ ತಪಿಸುವೆಡೆಯಲಿ | ಕೂಡಿ |
ಸುಜನರೊಡನೆ ಮಾಡುವಖಿಳಯಜ್ಞದಲಿ ||5||
ಪರವಿಹವೆಂಬುದ ನೀಗಿ | ಪುಣ್ಯ ದುರಿಯ |
ಶಬ್ದಂಗಳೆರಡು ಬೂದಿಯಾಗಿ |
ಅರಿವಿನ ರೂಪನಾಗಿ | ನಮ್ಮ |
ಗುರುಶಂಕರಾರ್ಯನೊಳ್ ಬೆರದೇಕನಾಗಿ || ತನ್ನ ||6||

ಭಾನಭಾಸ್ಯ ವಿಧಾನವರಿತ
ಭಾನ ಭಾಸ್ಯ ವಿ | ಧಾನವರಿತ ಸಮ್ಯ |
ಜ್ಞಾನಿಯೆ ಪರಶಿವನು |
ಸ್ನಾನ ಮೌನ | ಧ್ಯಾನ ಯಜ್ಞವಿ |
ಧಾನ ನುತಿಸಂಧಾನ ಜಪತಪ |
ಮೌನ ನಿಯಮಗಳೇನು ತೋರದ ನೂನ|
ಸುಖರಸ ಪಾನದೊಳಗಿಹ ಭಾನ ಭಾಸ್ಯ ||ಪ||
ವೊಂದರೊಳಗೈದಾಯಿತೆಂಬುವದು | ಶೃತ್ಯುಕ್ತ ಗುರುಮುಖ |
ದಿಂದ ನಿಶ್ಚಯಮಾಗಿ ತೋರಲದು | ಮಧ್ಯಾತನೂ ಭವ |
ನಂದದಲಿ ತದ್ಭಿನ್ನವನು ತಿಳಿದು | ಪರಿಪೂರ್ಣ ಭಾವದಿ |
ನಿಂದು ವಾಸನೆ | ಬೆಂದು ಮಾಯೆಯ |
ಕೊಂದು ಭೇದವ | ತಿಂದು ಕರ್ಮಿಯು |
ಹೊಂದಲಾಗದ | ಮಂದಬ್ರಹ್ಮಾ |
ನಂದ ಕಡಲೊಳು | ಮಿಂದು ಸುಖಿಸುವ || ಭಾನ ||1||
ಕೋಶತದ್ಧರ್ಮಂಗಳನು ತಿಳಿದೂ | ನಿಜ ಬೋಧೆಯಿಂದಾ |
ಕೋಶಗಳೊಳೊಂದೊಂದನೆರೆ ಕಳೆದು | ತನ್ನೇತಿಯಿಂ ಪರ |
ಶೇಷಗೊಳಿಸಿದ ವಸ್ತುವನು ಪಿಡಿದು | ತನ್ನಿರ್ಮಲತ್ವದಿ |
ಕ್ಲೇಶ ಪಂಚಕ | ದೋಷಗಳನ ಧ್ಯಾಸ ಮಾಡದ |
ಶೇಷ ಮಾಯಾ ಪಾಶ ಬಂಧದಿ | ನಾಶದಿಂ ಜಗ |
ದೀಶನಾಗಿ ಸಂತೋಷದೊಳಗಿಹ || ಭಾನ ||2||
ಕ್ರೂರ ಕರ್ಮವಿಧಾನಗಳು ಪೋಗಿ | ಗುರು ಶಂಕರಾರ್ಯನ |
ಶೇರಿ ಭೇದಾಭೇದಗಳ ನೀಗಿ | ನಾನಾ ವಿಚಿತ್ರದಿ |
ತೋರುವೀ ಜಗವೆಲ್ಲ ದೃಕ್ಕಾಗಿ | ಪ್ರಾರಬ್ಧದೊಡನೆಯು |
ಹೋರಿ ನಿಜ ಜಯ | ಬೇರಿನಾದವ | ಬೀರಿ ಶಂಕೆಯ |
ಮೀರಿ ಬಿಧಿಯನು | ಹಾರಿಕರ್ಮವ | ರೂರಿತತ್ವದಿ ಶೇರಿ |
ನಿಜಸುಖ | ತೋರಿ ಬೆಳಗುವ | ಭಾನ ||3||

ಜ್ಞಾನವೊಂದೇ ಸಾಕು ಮುಕ್ತಿಗೆ
ಜ್ಞಾನವೊಂದೇ ಸಾಕು ಮುಕ್ತಿಗೆ | ಮಿಕ್ಕಾದ ಮೌನ |
ಧ್ಯಾನ ನೇಮಗಳೆಲ್ಲ ಭುಕ್ತಿಗೆ ||ಪ||
ನಾನು ನನ್ನದು ಯೆಂಬ ಜಗದಭಿ |
ಮಾನವಿಲ್ಲದೆ ನಿಖಿಲ ಬಂಧನ |
ಮಾನಸದ ಕಲ್ಪಿತವೆ ಸರಿಯನು |
ಮಾನವಿನ್ನಿದಕಿಲ್ಲವೆಂಬುವ | ಜ್ಞಾನಮೊಂದೇ ||ಅ||
ಶುಕ್ತಿಯಲಿ ರಜತತ್ವ ತೋರ್ಪಂತೇ | ಈ ಜಗವು ಮಾಯಾ |
ಶಕ್ತಿಯಿಂ ಕಾಣುವದು ನಿಜದಂತೇ |
ಯುಕ್ತಿಯಿಂದೀ ನಾಮರೂಪ |
ವ್ಯಕ್ತಿ ಜಾತವ ಕಳೆದು ವ್ಯಕ್ತಾವ್ಯಕ್ತ ಲಕ್ಷಣ |
ಶಕ್ತಿ ಕಾರ್ಯೋನ್ಮುಕ್ತನೇ ನಾನೆಂಬ ಸಮ್ಯ || ಜ್ಞಾನ ||1||
ಮೃತ್ತಿನಲಿ ಕಲ್ಪಿಸಿದ ವಸ್ತುಗಳು | ಬೇರೆಯೆನಿಸಿ ತೋರದೆ |
ಮೃತ್ತೆಯಾಗಿಯೆ ಬೆಳಗುವಂದದಲಿ |
ತತ್ವದಿಂದಾಶ್ರಯವ ಕಲ್ಪಿತ |
ಮೊತ್ತದಿಂ ನೆರೆ ಕಳಿಯೆ ಭ್ರಮೆಯಿಂ |
ಚಿತ್ತಿನಲಿ ಕಲ್ಪಿಸಿದ ಜಗವಿದು |
ಚಿತ್ತೆಯಾಗುವದೆಂಬ ಪೂರ್ಣ || ಜ್ಞಾನ ||2||
ಪರಮ ಸದ್ಗುರು ಶಂಕರಾರ್ಯನಲೀ | ಮನವಿಟ್ಟು ತತ್ವವ |
ನರಿತು ನಿಜಗುರು ಚರಣ ಕಮಲದಲಿ |
ನಿರುವಮಿತ ನಿರ್ಗುಣ ನಿರಂಜನ |
ನಿರಘ ನಿಧ್ರ್ವಯ ನಿತ್ಯ ನಿರ್ಮಲ |
ನಿರವಧಿಕ ನಿರ್ಮಾಯ ನಿಷ್ಕ್ರಿಯ|
ನಿರತಿಶಯ ನಾನೆಂಬ ದಿವ್ಯ || ಜ್ಞಾನ ||3||

ಸುಮ್ಮನಾಗದು ನಿಜಾನಂದ
ಸುಮ್ಮನಾಗದು ನಿಜಾನಂದ | ಬಾಯ
ಬೊಮ್ಮವನುಡಿಯೆ ತಪ್ಪದು ಭವ ಬಂಧ |
ಕಾಮಾದಿಗಳನು ಬಿಡದೆ | ಪುಸಿ |
ನಾಮು ರೂಪುಗಳ ಭ್ರಾಂತಿಯ ಮೂಲ ಕೆಡದೆ |
ತಾಮಸವೃತ್ತಿಯ ಸುಡದೆ | ಸರ್ವಂ |
ಪ್ರೇಮಸ್ವರೂಪವೆಂಬುವ ಭಾವ ಬರದೇ || ಸುಮ್ಮ ||1||
ನಾನು ನೀನೆಂಬುದನುಳಿದು | ಧ್ಯಾತೃ |
ಧ್ಯಾನ ಧ್ಯೇಯಗಳೆಂಬ ತ್ರಿಪುಟಿಯ ಕಳದು |
ನಾನತ್ವ ಭಾವವ ತೊರದು | ಸಮ್ಯ
ಜ್ಞಾನದಿಂ ಶಿವನೆ ತಾನಾಗದೆ ಬರಿದೇ || ಸುಮ್ಮ ||2||
ಹಿತಶತೃಗಳ ಸಮವೆನಿಸಿ | ನಿಂದಾ |
ಸ್ತುತಿಗಳೆರಡನು ತಾನೆಂದಾಗಿ ಗಣಿಸಿ |
ಮಾತಿಗೆ ಧೃಡತೆಯಳವಡಿಸಿ | ಭೇದ
ಗತಿಯ ಮರಸುವ ಸುಜ್ಞಾನ ಮುದಿಸದೆ || ಸುಮ್ಮ ||3||
ಚನ್ನಾಗಿ ತಿಳಿದು ತತ್ವವನು | ಯಲ್ಲ |
ತನ್ನಂತೆ ಭಾವಿಸಿ ತೊರದು ಕ್ರೋಧವನು |
ಮುನ್ನಿರ್ದ ಭೇದಭಾವವನು | ಬಿಟ್ಟು |
ಹೊನ್ನಿನಂದದಿ ಶುದ್ಧನಾಗದೆ ಬರಿದೇ || ಸುಮ್ಮ ||4||
ಕರಣ ತತ್ವಗಳ ತಿಳಿಯದೇ ಕಾಯ |
ಕರಣ ಕಾರ್ಯಗಳೆನ್ನದೆಂಬುದು ಕೆಡದೆ |
ಪರಜೀವ ಭೇದವಳಿಯದೆ | ತಾನು
ಗುರು ಶಂಕರಾರ್ಯನ ಪದದಿ ಬೆರೆಯದೆ ||5||

ಪರಮನು ನಿನ್ನೊಳಗೊಂದಿಹುದು
ಪರಮನು ನಿನ್ನೊಳಗೊಂದಿಹುದು |
ಪರಿಕಿಸಲದೆ ಮಾಯೆಯು ಯೆನಿಸುವದು ||ಪ||
ಪರಮಾರ್ಥವನೆಲ್ಲವ ಮುಚ್ಚುವದು | ಯಿವರು |
ಪರಮಾತ್ಮನನಿಲ್ಲೆನಿಸುವದು| ||ಅಪ||
ಪರಿಪರಿ ಲೋಕವ ಸುತ್ತಿಹುದು |
ಸ್ಥಿರಕರ್ಮಿಗೆ ಕುಲಗುರುವಾಗಿಹುದು |
ಶರೀರವೆ ನಾನೆಂದೆನಿಸುತ್ತಿಹುದು |
ಪರಸುಖದಾಸೆಯ ಪುಟ್ಟಸುತಿಹುದು ||1||
ಗುರುವಿನ ಮಾರ್ಗವನದು ಮರಸುವದು |
ಕುರುಹಿಲ್ಲದ ಪಾಪವ ಹೊರಿಸುವದು
ಪರಮ ಪಾಪಿಯು ನಾನೆಂದೆನಿಸುವದು |
ಮರಶಿಲೆಗಳ ದೆವರ ಮಾಡುವದು ||2||
ಶರಣಾಗಿರು ನೀನಿದ ಕೆನ್ನುವದು |
ಗಿರಿಗುಹೆವನವಾಸವ ಗೈಸುವದು |
ಪರಿ ಪರಿ ತೀರ್ಥದಿ ಮುಳುಗಿಸುತಿಹುದ |
ಬರಿ ಜಾತಿಯ ಪಾಶದಿ ಬಿಗಿಯುವದು ||3||
ವಿರಚಿಸಿ ಸ್ವರ್ಗವ ನೋಡೆನ್ನ ವದು |
ಸುರಪಥವಿದರೊಳು ಸುಖಿಸೆನ್ನುವದು |
ವಿರಚಿಸಿ ಸ್ವರ್ಗವ ನೋಡೆನ್ನುವದು |
ಸುರಪಥವಿದರೊಳು ಸುಖಿಸೆನ್ನುವದು ||4||
ಶಿರಿಯನು ತೋರಿಸಿಕೊಲ್ಲುತ್ತಿಹುದು |
ವುರು ಸಂಸಾರಕೆ ಹೊಣೆಯಾಗಿಹುದು |
ಮರದೊಡೆಯೆಲ್ಲೆಲ್ಲಿಯು ತಾನಿಹುದು |
ಗುರುಶಂಕರ ಸುತನಿಗೆ ಕಾಣಿಸದು ||
ಬಿಡುಬಿಡು ದೇಹಾತ್ಮದ ಮತಿಯು ||5||

ಸುಮ್ಮನಿರಲು ಮುಕ್ತನಹುದು
ಸುಮ್ಮನಿರಲು ಮುಕ್ತನಹುದು | ಪರ |
ಬೊಮ್ಮವೆ ತಾನೆಂಬ ಮರ್ಮವ ತಿಳಿದು |
ಸುಮ್ಮನಿರಲು ಮುಕ್ತನಹುದು ||ಪ||
ಹಮ್ಮಿನ ಮೂಲವ ಸುಟ್ಟು | ಕರ್ಮ |
ಸಮ್ಮತವಾದ ಹಾದಿಯನೆಲ್ಲ ಬಿಟ್ಟು |
ಬೊಮ್ಮದ ನಿಜವಳವಟ್ಟು | ಶಿವೋ |
ಹಮ್ಮೆಂಬೊ ನಿಜಬೋಧೆ ಕವಚವ ತೊಟ್ಟು ||1||
ಕೋಶ ಪಂಚಕ ಮರ್ಮ ತಿಳಿದು | ಮತ್ತಾ |
ಕೋಶಾ ಪಂಚಕದೊಳಗೊಂದೊಂದ ಕಳದು |
ಈಶ ಜೀವರ ಬೇಧವಳಿದು | ಜಗ |
ಧೀಶನೆ ನಾನೆಂಬ ಮರ್ಮವ ತಿಳಿದು |
ಸುಮ್ಮನಿರಲು ಮುಕ್ತನಹುದು ||2||
ಜಾತಿ ನೀತಿಯ ಭ್ರಾಂತಿ ಪೋಗಿ | ವಿಷ |
ಯಾತಿಶಯದ ಭೋಗಂಗಳನೆಲ್ಲ ನೀಗಿ |
ಆತ್ಮಾನುಭವ ದೃಢಮಾಗಿ | ನೆಲಸಿ |
ಕಾತರಗೊಳದೆ ನಿಶ್ಚಲ ಚಿತ್ತನಾಗಿ ಸುಮ್ಮನಿರಲು ||3||
ಲೋಕಾದಿ ವಾಸನೆ ಬಿಟ್ಟು | ಪರ
ಲೋಕದಾಸೆಯ ಮೂಲವನು ಮೊದಲೆ ಸುಟ್ಟು |
ಶೋಕ ಮೋಹಂಗಳೆಲ್ಲ ಕೆಟ್ಟು | ಸನ್ನಿ |
ರಾಕಾರ ಬ್ರಹ್ಮ ಭಾವನೆಯಳವಟ್ಟು || ಸುಮ್ಮ ||4||
ಪರಮಾನಂದದ ತುದಿಗೇರಿ ಮುನ್ನ |
ಶರೀರದೊಳಿರ್ದಭಿಮಾನವ ತೂರಿ |
ಪರಿಪೂರ್ಣ ಭಾವನೆ ತೋರಿ ನಮ್ಮ
ಗುರು | ಶಂಕರಾರ್ಯನ ಪದದೊಳು ಸೇರಿ || ಸುಮ್ಮ ||5||

ಬಿಡಿ ಬಿಡಿ ಭಯವಿನ್ಯಾತಕೆ
ಬಿಡೀ ಬಿಡೀ ಭಯವಿನ್ಯಾತಕೆ ||ಪ||
ಪೊಡವಿಗೊಡೆಯನಾದ ಮೃಡನೊಳು ಬೆರೆದಿರಿ |
ಬಿಡೀ ಬಿಡೀ ಭಯವಿನ್ಯಾತಕೆ ||ಅ||
ವಡಲನು ದಂಡಿಸಿ | ಮಡಿಯೊಳು ಬಳಲುವ |
ತೊಡಕಿನೋಳ್ ಸಿಲುಕದೆ |
ದೃಢದಿಂ ಗುರುವರನಡಿಗಳ ಪಿಡಿದಿರಿ || ಬಿಡಿ ||1||
ತನುವೆ ನಾನೆನ್ನುವ | ಘನತರಾ ಜ್ಞಾನವ |
ಮನನದಿಂ ಕಳೆಯಲಿ | ನೆನಸಿನ ಜಗವಿದು |
ಕನಸಿನೊಳಾದುದು || ಬಿಡೀ ||2||
ಮಾಣದೆ ವಿಷಯವ | ಕಾಣುತ ಬಯಸುವ |
ಮಾನಸದ ಕ್ರಿಯೆಯೊಳು | ನಾನೆಂಬುವಭಿ
ಮಾನವು ತೊಲಗಿತು || ಬಿಡಿ ||3||
ಕುಂದದೆ ಶಿವನೆ ತಾನೆಂದರಿತದರೊಳು |
ಸಂದೇಹಂ ತೊಲಗಲು | ಯೆಂದಿಗು ಕೆಡದಾ |
ನಂದವು ಲಭಿಸಿತು || ಬಿಡಿ ||4||
ನಿರುತ ಶಿವಾನಂದ | ಪರಿ ಪರಿವಿಧದಿಂದ |
ಮರಿಯದೆ ಸ್ಮರಿಸುವ | ಗುರು ಶಂಕರನೋಳು |
ಕರಣಗಳಡಗಿತು || ಬಿಡಿ ||5||

ನೀರೆ ನೀ ತೋರೆ
ನೀರೆ ನೀ ತೋರೆ ನಾ | ಕೋರುವವರನಾ ||ಪ||
ಮೂರು ಗುಣಂಗಳ ಮೀರಿ ಬೆಳಗುವವನಾ ||ಅಪ||
ರುಚಿಸಿ ಯಲ್ಲವನು | ತಾ ಶುಚಿಯಾಗಿರುವನ
ವಚಿಸಲು ಶೃತಿಗನಿರ್ವಚನೀಯ ಪರನಾ| ನೀರೇ ||1||
ಮರಣ ಜನ್ಮಗಳೆಂಬೀ ಸೆರೆಯಿಲ್ಲದವನಾ
ಕರಣ ಸಂಕಲ್ಪದಿಂ ನರನೆನಿಸುವನಾ ||ನೀರೆ ||2||
ಕಲು ಕರ್ಮದೊಳು ನಿರ್ಮಲನಾಗಿರುವನಾ
ತಿಳಿಯದೆ ತತ್ವವ ಕಳವಳಿಸುವವನ ||ನೀರೇ ||3||
ಪಿರಿದಾದ ಮಾಯೆಯ ಮುರಿದಿಕ್ಕಿದವನ
ಶರಿರ ನಾನೆಂದವತರಿಸಿ ಬಂದವನ ||ನೀರೇ ||4||
ವಡಲಿನ ಬೆಡಗನು ಪಿಡಿದು ಮಿಡುಕುವನ
ತಡೆ ಬಿಡುಗಡೆ ನುಡಿ ನಡೆಯಿಲ್ಲದವನ ||ನೀರೇ ||5||
ಅಂದಿಂದೆನ್ನದೆ ತಾನೆಂದಿಗಿರುವವನ
ಕುಂದು ತೋರದ ಪರಮಾನಂದ ಚಿದ್ಘನನಾ ||ನೀರೆ ||6||
ಕರಣ ಕಾರ್ಯಂಗಳನರಿವ ಸಾಕ್ಷಿಕನ
ಗುರು ಶಂಕರಾರ್ಯನೋಳ್ ಬೆರೆದುಕೊಂಡಿರುವನ ||ನೀರೇ ||7||

ಆನಂದವನದೊಳಾಡುವನ್ಯಾರೆ
ಆನಂದವನದೊಳಾಡುವನ್ಯಾರೆ| ಆಡುವನಾರೆ
ನೋಡುವೆ ತೋರೆ ಬೇಡುವೆ ನೀರೆ
ಆನಂದವನದೊಳಾಡುವನ್ಯಾರೇ ||ಪ||
ಮಾನಮೇಯಗಳಿಗೆ ಶಿಲುಕನಂತೆ ಅಭಿ
ಮಾನಾವಮಾನಗಳಿಲ್ಲವಂತೆ ಜಪ
ಧ್ಯಾನಾದಿಗಳಿಗೆ ಗೋಚರಿಸನಂತೆ| ಅವ
ಧಾನಿಗಳಿಗೆ ಬಹು ದೂರನಂತಮ್ಮಮ್ಮ ||1||
ಮೂರು ಕಾಲದೊಳು ತಾನಿರುವನಂತೆ |ತನ್ನ
ಮೀರಿದ ವಸ್ತು ಬೇರಿಲ್ಲವಂತೆ | ಇಲ್ಲಿ
ತೋರುವ ಜಗವೆಲ್ಲ ತಾನೆಯಂತೆ| ದೊಡ್ಡ
ಮಾರಿಯ ಮುರಿದು ನುಂಗಿದನಂತೆ ಕಾಣಮ್ಮ ||2||
ವಂದು ಜಾತಿಯೊಳು ತಾ ಸೇರನಂತೆ | ತನ್ನ
ಹಿಂದುಮುಂದರಿಯದೀಗಾದನಂತೆ ಬಹು
ಮಂದಿಗೊಬ್ಬನಿಗೆ ಕಾಣಿಸುವನಂತೆ | ತನ್ನಾ
ನಂದವ ಕಂಡವರಿಲ್ಲವಂತಲ್ಲಮ್ಮ ||3||
ಕಾಶಿಯೊಳಗು ನೆಲಶಿರುವನಂತೆ | ಜಗ
ದೀಶರಿಗೆಲ್ಲ ನಿವಾಸನಂತೆ | ಮಾಯಾ
ಪಾಶ ಕಳದರತಿ ಸುಲಭನಂತೆ ದೇಹ
ವಾಸನೆಗವ ಯಮಪಾಶನಂತಮ್ಮಮ್ಮ ||4||
ಐದು ಸುತ್ತಿನದೊಂದು ಕೋಟೆಯಂತೆ| ಇಪ್ಪ
ತ್ತೈದು ಕೀಲುಗಳಿಂದದಾಯಿತಂತೆ| ಹೊರ
ಬೀದಿ ಬಾಗಿಲು ನಾಲ್ಕೈದುಂಟಂತೆ | ಅಲ್ಲಿ
ಭೇದಿಸಿ ಬಂದು ಶೇರಿದನಂತೆ ನೋಡಮ್ಮ ||5||
ಹಿಂದೆ ಗುರು ಶಂಕರನೊಳ್ ಬಂದ ಕಾಣೆ| ವಿದ್ಯಾ
ನಂದಪದದೊಳು ನಿಂದ ಕಾಣೇ |ನಿಜಾ
ನಂದ ಶ್ರೀಗುರುವಿನ ಕಂದಕಾಣೆ ತನ್ನಾ
ನಂದವರಿತ ಶಿವಾನಂದ ಕಾಣಮ್ಮಮ್ಮ ||6||

ಬ್ಯಾಡವೋ ಯೆಂದೆಂದಿಗು
ಬ್ಯಾಡವೋ ಯೆಂದೆಂದಿಗು | ಬ್ಯಾಡವೋ |
ನೋಡಿದೆಲ್ಲೊಂದೆಂಬದಾಗಿ | ಶೃತಿ |
ಪಾಡುತಿಹುದು ದೃಢಮಾಗಿ | ಲೋಕ |
ರೂಢ ಚಿದ್ರೂಪ ನೀನಾಗಿ | ಬರಿದೆ |
ನಾಡಿನೊಳಿರುತಿರ್ಪ ಕಾಡಕಲ್ಲಿಗೆ ಕೈಯ್ಯ |
ಜೋಡಿಸಿ ಫಲಗಳ | ಬೇಡುವ ಬಾಧೆಯು |
ಬ್ಯಾಡವೋಯೆಂದೆಂದಿಗು ||ಪ||
ತಿಳಿವಿನಂಶಕೆ ಮನ ಕೊಡದೆ | ದೇಹ |
ದೊಳಗಿನ ತತ್ವವರಿಯದೆ | ದುಃಖದೊಳಗೆ |
ಶಿಲುಕಿ ನೀನು ಬರಿದೆ | ಆಹಾ ಛಳಿಗಾಳಿ |
ಮಳೆಯೊಳು | ಮುಳುಗಿ ನೀರೊಳು ಮೈಗೆ |
ಬೊಳದು ಬೂದಿಯನೆಲ್ಲ | ಬಳಲುವ ಬಾಧೆಯು ||1||
ಧರೆಯ ತೀರ್ಥದೊಳೆಲ್ಲ ಮುಳುಗಿ | ನಾನಾ
ಪರಿಯ ಕಲ್ಗಳಿಗೆಯಲ್ಲ ಯರಗಿ | ತನ್ನ
ಮರತು ಕರ್ಮಗಳಲ್ಲಿ ಕೊರಗಿ | ನಿತ್ಯ
ನಿರುಪಮ ವಸ್ತುವ | ನರಿಯದೆ ಭವಿಯಾಗಿ |
ನರಕಗಳಿಗೆ | ತಿರುಗುವ ಬಾಧೆಯು ||2||
ಅಲ್ಲುಂಟಿಲ್ಲಿಲ್ಲೆಂಬುದಿಲ್ಲ | ನೋಡ
ಲೆಲ್ಲೆಲ್ಲು ತುಂಬಿಹನಲ್ಲ | ಶಿವ
ನಲ್ಲದ ವಸ್ತುವೆ ಯಿಲ್ಲ | ಯಿಲ್ಲಿ
ಯೆಳ್ಳು ಧರ್ಬೆಗಳ ಕೈ |
ಯ್ಯಲ್ಲಿ ಪಿಡಿದು ನೀರ ಚಲ್ಲಿದೊಡೇನದರಲ್ಲುಂಟೆ ಕೈವಲ್ಯ ||3||
ದೇಶಿಕ ನಂಘ್ರಿಯ ಪಿಡಿಯದೆ | ಪಂಚ
ಕೋಶ ಧರ್ಮಗಳ ಬೇರಿಡದೆ | ಜಗ
ಧೀಶ ತಾನೆಂಬುದರಿಯದೆ | ಛೀ ಛೀ
ಮಾಸಮಾಸದೊಳುಪವಾಸದಿ |ಬಳಲುತ
ದೇಶದೇಶವ ಸುತ್ತಿ ಘಾಸಿಯಾಗುವ ಬುದ್ಧಿ ||4||
ಗುರು ಶಂಕರಾರ್ಯನ ಪದವ | ಪಿಡಿ
ದರಿತು ನಿನ್ನೊಳಗಿಹ ನಿಜವ | ನೀನು
ಬೆರಸದೆ ಕ್ರಿಯದಿ ಮಾನಸವ | ನಿತ್ಯ
ನಿರುಪಮ ವಸ್ತುವ ನರಿತು | ನಿಶ್ಚಿಂತೆಯೊ
ಳಿರದೆ ಕ್ಷೇತ್ರಗಳಿಗೆ | ತಿರುಗುವ ಬಾಧೆಯು ||5||

ಪರಿಣಯವು ಯನಗಾಯ್ತು
ಪರಿಣಯವು ಯನಗಾಯ್ತು |
ಮರಣವಿಲ್ಲದ ವರನ ವರಿಸಿ |
ನಾನಿತ್ಯ ಮುತ್ತೈದೆಯಾದೆನು |
ಸುಖಿಯೆ ಬಹು ಪುಣ್ಯ ಫಲದಿ ||ಪ||
ಕೂಡಿ ನಾನಾಮತದ ವಾದಿಗಳು ಬಂದು |
ಬೇಡಿದರು ಪುತ್ರಿಯನು ಕೊಡಿಯಮಗೆ ಯೆಂದು ||1||
ಜಾತಿಕೂಟಗಳೈಕ್ಯವಾಗುವದ ನೋಡಿ |
ಮಾತು ಕೊಟ್ಟರು ಲಗ್ನ ನಿಶ್ಚಯವ ಮಾಡಿ ||2||
ಪರತತ್ವವೆಂತೆಂಬ ಯಣ್ಣೆಯನು ಬೊಳದು |
ದುರಿತಜಾಲಗಳೆಂಬ ಕೊಳೆಯಲ್ಲ ಕಳೆದು ||3||
ಗುರುಭಕ್ತಿಯೆಂಬ ಸಂಕಲಿಕೆಯನು ವುಡಿಸಿ |
ಕರುಣ ಶಾಂತಿಗಳೆಂಬ ಕುಪ್ಪಸವ ತೊಡಿಸಿ ||4||
ಪರಮಾರ್ಥವೆಂಬ ಸೂತ್ರವನು ಅನುಸರಿಸಿ |
ಸ್ಥಿರಬುದ್ಧಿಯೆಂಬ ಬಾಸಿಂಗವನು ಧರಿಸಿ ||5||
ಪೂರ್ವ ಸುಕೃತಗಳೆಂಬ ತರುಣಿಯರು ಮುದದಿ |
ಶೇರಿಸಿದರೆನ್ನನದ್ವೈತ ಮಂಟಪದಿ ||6||
ಗುರುದೀಕ್ಷೆಯೆಂಬಗ್ನಿ ಗುಂಡವನೆ ಯಿಟ್ಟು |
ಮರವೆಯೆಂಬ ಸಮ್ಮಿತ್ತುಗಳನೆಲ್ಲ ಸುಟ್ಟು ||7||
ಪರಮ ಪಾಪಿಯ ಕಣ್ಗೆ ಗೋಚರಿಸದಿರುವ |
ಕರದಿ ಕಟ್ಟಿದನು ಸೋಹಮೆಂಬ ಕಂಕಣವ ||8||
ಮತ್ತೆ ಸುಮುಹೂರ್ತದಲಿ ಕಟ್ಟಿದನುಗಳದಿ |
ತತ್ವಮಸಿಯೆಂಬ ಮಾಂಗಲ್ಯವನು ಮುದದಿ ||9||
ಸಾರತರ ದಶವಿಧದ ನಾದಗಳು ಮೊಳಗೆ |
ಧಾರೆಯರದರು ಯನ್ನ ಪರಮ ಪುರುಷನಿಗೆ ||10||
ಅಜ್ಞ ಭಾವನೆಯೆಂಬ ಬಾಲ್ಯವನು ಕಳದು |
ಸುಜ್ಞಾನವೆಂಬ ಘನ ಯೌವ್ವನವ ತಳೆದು ||11||
ತೊರದು ಹೊರಗಣ ಸಕಲ ಬಂಧು ಬಳಗವನು |
ಸ್ಮರಿಸುತಿರ್ದೆನು ಯನ್ನ ಗುರುಚರಣಗಳನು ||12||
ಮುಂದೈದು ದಿನಕೆ ಶೋಭನವು ನಿಶ್ಚಯಮಾಯ್ತು |
ಸಂದೇಹವೆಂಬ ಹುಡುಗಾಟ ಬಯಲಾಯ್ತು ||13||
ಮೀರಿ ಪ್ರಾರಬ್ಧವೆಂತೆಂಬ ಲಜ್ಜೆಯನು |
ಯೇರಿದೆನು ಆನಂದವೆಂಬ ಮಂಚವನೂ ||14||
ಯಾರು ಸರಿ ಯನಗಿನ್ನೂ ಜನನ ಮರಣಗಳಿಲ್ಲ|
ತೋರಿದಲ್ಲಿನ ಸುಖವ ಪರಶಿವನೆ ಬಲ್ಲ ||15||
ಪರತರಾನಂದೈಕರಸ ಮೀರಿ ಬರೆ ಬಿಡದೇ |
ಮರತು ದೇಹವ ಶಂಕರಾರ್ಯನೋಳು ಬೆರದೇ ||16||

ಗುರು ಶಂಕರ ನಿಮ್ಮಡಿ ಕಿಂಕರನೀ
ಗುರು ಶಂಕರ ನಿಮ್ಮಡಿ ಕಿಂಕರನೀ |
ನರ ಕಿಂಕರಾಟಕೇ ಅಂಜುವನೇ |
ಮರಿಯದೆ ನಿಮ್ಮನೆ ಸ್ಮರಿಸುವ ನಿಮ್ಮಯ |
ತರಳನ ಪೊರೆಯುವ ಪ್ರಭು ನೀನೆ || ಗುರು ಪ||
ಆದಿ ಅನಾದಿಯ ಮೀರಿದ ತತ್ವವು |
ಬೂದಿಯ ಬೊಳದರೆ ದೊರದೀತೆ |
ಭೇದಿಸಿ ನಿಜದೊಳು ಸಾಧಿಸಿದೀ ಭವ |
ನಾದವ ಕೇಳ್ದರೆ ಪೋದೀತೆ |
ವಾದವನುಳಿಯದೆ ತೋರದ ಸುಖ ಬರಿ |
ವೇದಗಳೋದಿದರಾದೀತೇ |
ಶೋಧಿಸಿ ನಿಜವರಿತವನ ಮನವು ಪರ |
ವಾದಿಗಳಿಗೆ ಬೆರಗಾದೀತೆ || ಗುರು ||1||
ಮರ್ಮದ ಮನದೊಳು ಮನೆ ಮಾಡಿರೆ ಯಮ |
ಧರ್ಮನ ಭಯವದಕಂಟೀತೆ |
ಮರ್ಮವನರಿಯದ ಮನಸಿನ ಮಲಿನವು |
ಚರ್ಮವು ತೊಳದರೆ ಪೋದೀತೆ |
ನಿರ್ಮಲಮಾಗಿಹ ನಿರ್ಗುಣ ತತ್ವವು |
ಕರ್ಮಿಗಳಿಗೆ ಹಿತಮಾದೀತೆ |
ಕೂರ್ಮನ ಕುಂತಳ ನಿಜಮಾದರು |
ಕರ್ಮದ ಗತಿ ತನಾಗಾದೀತೇ || ಗುರು ||2||
ತಾನೇ ತಾನಾಗಿಹ ಮಹಾತ್ಮನ |
ನಾನಾ ವಿಧಿಗಳು ಕಟ್ಟೀತೆ |
ಮಾನವರಾಡುವ ಕೆಡು ನುಡಿಗಳು ಸು |
ಜ್ಞಾನಿಯ ಕಿವಿಯೊಳು ನೆಟ್ಟೀತೇ |
ಹೀನನಿಗರುಪಿದ ತತ್ವವು ಗುರುವಿನ |
ಮಾನವ ಕಳಿಯದೆ ಬಿಟ್ಟೀತೇ |
ಜ್ಞಾನಿಯ ಮನದೊಳು ಪರಶಿವನಿದಿರೊಳು |
ಕಾಣಿಸಿದರು ಭ್ರಮೆ ಪುಟ್ಟೀತೇ || ಗುರು ||3||
ಭಿನ್ನವ ಕಳಿಯದ ಪುರುಷನಿಗೀ ಭವ |
ಬೆನ್ನಂಟದೆ ಬೇರುಳದೀತೇ |
ಚಿನ್ಮಯನಾದಗೆ ಮಣ್ಣಿನ ಪ್ರಥುಮೆಯು |
ಕಣ್ಣೊಳಗಾದರು ಸುಳದೀತೆ |
ಮುನ್ನಿನ ಮರೆವೆಯ ಕಳದರೆ ಮುಂದಕೆ |
ಪುಣ್ಯ ಪಾಪಂಗಳು ಬೆಳದೀತೆ |
ತನ್ನಾನಂದದತುದಿಯನು ತಿಳೀದೊಡೆ |
ಜನ್ಮದ ಬೇರಿನ್ನುಳದೀತೆ || ಗುರು ||4||
ಹೊರಳು ಕಮಲದೊಳು ಮುಳುಗುವ ಹಂದಿಗೆ |
ಪರಮಳರಸ ಸೊಬಗೆನಿಸೀತೆ |
ನರಪತಿಪಟ್ಟವ ನಾಯಿಗೆ ಕೊಟ್ಟರೆ |
ಹರುಷದಿ ರಾಜ್ಯವನಾಳೀತೆ |
ತೊರದು ಪತಿಯ ಪರಪುರುಷರ ಕೆಡಿಸುವ |
ದುರುಳೆಗೆ ಸೀಲವು ಸೊಗಸೀತೆ |
ಗುರುಚರಣಾಂಬುಜ ಸೇವೆಯು
ಪಾಪಿಷ್ಟರ ಮನಸಿಗೆ ಹಿತಮಾದೀತೆ || ಗುರು ||5||

ತನುವೆ ತಾನೆಂದರಿತು ಭವದೊಳ್ಯಾತಕೆ ಬರುತೆ
ತನುವೆ ತಾನೆಂದರಿತು ಭವದೊಳ್ಯಾತಕೆ ಬರುತೆ |
ತನುವಿ ಲಕ್ಷಣನೆಂದು ತಿಳಿದು ಸುಖಿಯಾಗೈ ||ಪ||
ಘಟವ ಕಾಣುವ ನರನು ಘಟವಲ್ಲವೆಂತಂತು |
ಘಟದಂತೆ ನಿನಗನ್ಯಮಾಗಿ ತೋರುತ್ತ |
ಕುಟಿಲ ಮಾಯಾಕಾರ್ಯವೆನಿಸಿದೀ ತನುವೆತ್ತ |
ದಿಟವೆನಿಸಿದಮಳಾತ್ಮ ನೀನೆತ್ತ ||1||
ತನು ದೃಶ್ಯಮಾಗಿಹುದು | ನೀನದಕೆ ದೃಗ್ರೂಪ |
ತನುವು ಲಯವಾಗುವದು ಲಯರಹಿತ ನೀನು |
ತನು ಮಾಂಸಮಯಪಿಂಡ ನೀನು ನಿರ್ಮಲರೂಪ |
ತನು ಮೂತ್ರಮಯ ನೀನು ಮೂತ್ರರಹಿತನಾಗುತಿಂತು ||2||
ಯಿಲ್ಲದಿಹ ಜಾತಿಯಿಂ ಕೂಡಿರುವುದೀ ತನುವು |
ಸೊಲ್ಲಿಡದೆ ನಿನ್ನೊಳಗೆ ಜಾತಿಧರ್ಮಗಳು |
ಹುಲ್ಲಿಗಿಂತ ನಿಕೃಷ್ಞಮಾಗಿರುವುದೀ ತನುವು |
ಸಲ್ಲಲಿತ ಚಿದ್ರೂಪು ನೀನಾಗುತಿಂತೂ ||3||
ತನುಜರಾ ಮರಣ ರೋಗಾದಿಗಳಿಗಾಲಯವು |
ಜನನಾದಿ ವಿಕೃತಿ ತೋರದ ವಸ್ತು ನೀನು |
ತನು ರುಧಿರಮೇದೋಸ್ತಿವರಮಜ್ಜಮಯ ಕೂಪ |
ವನುಪಮಾನಂದ ಸದ್ರೂಪು ನೀನಾಗಿ ||4||
ನಿರುಪಮ ನಿರಾಲಂಬ ನಿತ್ಯ ನಿರ್ಮಲ ಬುದ್ಧಿ |
ಕರುಣಾದಿ ದೃಶ್ಯಾಸಾಕ್ಷಿಕನಾ ನೀನು |
ಗುರು ಶಂಕರಾರ್ಯನೊಳ್ ಬೆರದೇಕನಾಗದೇ |
ಮರತು ನಿನ್ನಯ ನಿಜವ ಕರ್ಮದೊಳು ಸಿಲುಕಿ ||5||

ನಾನೇ ನಾನಲ್ಲದಿನ್ನೇನೊಂದು ತೋರದು
ನಾನೇ ನಾನಲ್ಲ ದಿ| ನ್ನೇನೊಂದು ತೋರದು
ನಾನೆನ್ನ ನಿಜವನು | ಧ್ಯಾನಿಸಿ ನೋಡೆ
ಮಾನ ಮೇಯಗಳೆಂದು ಕಾಣುವೀ ತ್ರಿಪುಟಿಯ
ಭಾನು ತೋರದ ಸಚ್ಚಿ | ದಾನಂದ ನಿಧಿಯೊಳು | ನಾನೇ ನಾನಲ್ಲ ||ಪ||
ನಿರವಧಿಕನು ನಾನೇ | ನಿರತಿಶಯನು ನಾನೇ
ವಿರಚಿಸಿ ಮಾಯೆಯ | ಬೆರೆತವ ನಾನೇ
ಪರಿ ಪರಿ ರೂಪವ ಧರಿಸಿದವನು ನಾನೇ
ಪರಮನೆನಿಸಿ ಜಗವ ಪೊರೆಯುವನು ನಾನೇ ||1||
ಆನನರಹಿತ ನಾನೆ | ಘನಮಹಿಮನು ನಾನೇ
ಮನು ಮುನಿಗಂಧರ್ವ | ವಿನುತನು ನಾನೇ
ಗಣನವಿದೂರ ನಾನೆ | ಗುಣಸಿಹಿತನು ನಾನೆ
ವನಜಾಕ್ಷವಿಧಿ ರುದ್ರ | ರೆನಿಸಿದವನು ನಾನೇ ||2||
ಮಲಿಲನ ಸತ್ವವು ನಾನೇ | ಕಲತದರೊಳು ನಾನೇ
ಮುಲನಜೀವನು ಯೆಂದು ತಿಳಿದವ ನಾನೇ
ತಿಳಿಯದೆ ತತ್ವವ | ಕಳವಳಿಲಸುವನು ನಾನೇ
ಬಳಸಿ ಜನ್ಮಗಳನ್ನು ಬಳಲಿಲದವನು ನಾನೇ ||3||
ಪಾರಮಾರ್ಥಿಕ ನಾನೇ | ಮೂರು ಕಾಲವು ನಾನೇ
ಸಾರುವೀ ಶೃತಿ ನಾನೇ | ಪುರುಷನು ನಾನೇ
ಕಾರ್ಯಕರ್ತನು ನಾನೇ | ಪ್ರೇರಿಸುವನು ನಾನೇ
ಮೂರು ಮೂರ್ತಿಗಳನ್ನು | ಮೀರಿದವನು ನಾನೇ ||4||
ದೇಹ ರೂಪನು ನಾನೇ | ದೇಹಿಯಾದವ ನಾನೇ
ಸೋಹಂಮೆಂದರಿಯದ | ಮೋಹಿಯು ನಾನೇ
ಸಾಹಸವನು ತಳೆ | ದೂಹಿಸಿ ತತ್ವವ
ಕೋಹಮ್ಮೆಂದರಿತು ನಿ| ರ್ಮೋಹಿಯಾದವ ನಾನೇ ||5||
ರೂಢ ದೃಶ್ಯವು ನಾನೇ | ನೋಡುವ ದೃಕ್ಕು ನಾನೇ
ಗೂಢವೆಲ್ಲವ ಬಲ್ಲಾ | ರೂಢನು ನಾನೇ
ಆಡುತ ಪಾಡುತ | ವೋಡುತ ಬೇಡುತ
ನೋಡುತ ನಾಡೊಳು | ಕೂಡಿರುವನು ನಾನೇ ||6||
ಈ ಜಗವೆಲ್ಲ ನಾನೇ | ಮೂಜಗದೀಶ ನಾನೇ
ಪೂಜಿಸುವನು ನಾನೇ | ಪೂಜ್ಯನು ನಾನೇ
ಭೋಜಿಸುವನು ನಾನೇ | ಭೋಜ್ಯ ರೂಪನು ನಾನೇ
ಈ ಜೀವಶಿವರಂತೆ | ರಾಜಿಸುವನು ನಾನೇ ||7||
ನೆನಸಿನೊಳಗು ನಾನೇ | ಕನಸಿನೊಳಗು ನಾನೇ
ತನಿ ನಿದ್ರೆಯೊಳು ನಾನೇ | ಕೊನೆಯೊಳು ನಾನೇ
ಧನ ಮನೋಧಾನ್ಯವ | ಹನವಸ್ತ್ರಭೂವಾರಿ
ಕನಕಾದಿ ರೂಪಿನಿಂ | ಜನಿಸಿದವನು ನಾನೇ ||8||
ಅರುಹು ರೂಪನು ನಾನೇ | ಮರವೆಯಾದವ ನಾನೇ
ಅರುಹು ಮರವೆಗಳೋಳಿರುವನು ನಾನೇ
ಗುರು ಶಂಕರಾರ್ಯನೋಳ್ | ಬೆರದೇಕಮಯನಾಗಿ
ಪರಿಪೂರ್ಣಭಾವದಿಂ | ದಿರುವನು ನಾನೇ ||9||

ಸೂನು ಕೇಳ್ ತತ್ವಮಸಿ ವಾಕ್ಯಾರ್ಥವನು
ಸೂನು ಕೇಳ್ ತತ್ವಮಸಿ ವಾಕ್ಯಾರ್ಥವನು ಪೇಳ್ವೆ |
ನೀನದನು ಮನನ ಮಾಡುತ ಮುಕ್ತನಾಗೈ ||ಪ||
ಅಕಲಂಕ ಶಕ್ತಿತ್ವ ಸಕಲ ಜಗದವನತ್ವ |
ಸಕಲ ಲೋಕೇಶತ್ವ ಸರ್ವಜ್ಞತ್ವಾದಿ |
ಸಕಲ ಸದ್ಗುಣಯುಕ್ತ ಚೈತನ್ಯವೇ |
ಶಾಸ್ತ್ರನಿಕರದಿಂ ತ್ವಂ ಪದಕೆ ವಾಚ್ಯಾರ್ಥವಹುದೂ ||1||
ತನುಕರಣ ಮೊದಲಾದ ದೃಶ್ಯಾಭಿಮಾನದಿಂ |
ಘನಹಮ್ಮಿನೊಡನೆ ತದಾತ್ಮ್ಯವನು ತಳೆದು |
ಅನುಭವಿಪ ಕರ್ತ್ಯತ್ವಧರ್ಮಯುತ ಚೈತನ್ಯ |
ಗಣಿಸಲಾ ತ್ವಂ ಪದಕೆ ವಾಚ್ಯಾರ್ಥವಹುದು ||2||
ನಿರುಪಮ ನಿರಾಕಾರ ನಿರ್ಗುಣ ನಿರಾಧಾರ |
ನಿರತಿಶಯ ನಿದ್ರ್ವಂದ್ವ ನಿಶ್ಚಲಾಖಂಡ |
ಪರತರಾನಂದೈಕರಸ | ಪರಬ್ರಹ್ಮವೇ
ಪರಿಕಿಸಲು ತತ್ಪದಕೆ ಲಕ್ಷ್ಯಾರ್ಥವಹುದು ||3||
ಕರಣೇಂದ್ರಿಯಾದಿ ದೇಹತ್ರಯಾವಸ್ಥಾದಿ |
ಪರಿಪರಿಯ ದೃಶ್ಯಕ್ಕೆ ಸಾಕ್ಷಿ ತಾನಾಗಿ |
ಮರಣಾದಿಧರ್ಮವೇನಿಲ್ಲದಿಹ ಕೂಟಸ್ಥ |
ಪರಮ ಚೈತನ್ಯ ತ್ವಂಪದ ಕೆಲಕ್ಷ್ಯಾರ್ಥವಹುದೂ ||4||
ಪರಿವಿಡಿದು ಪದಯುಗದೊಳಿಹ ವಿರುದ್ಧಾಂಶವನು |
ತೊರದು ಭಯ ಚೈತನ್ಯಗಳನೊಂದುಮಾಡಿ |
ಗುರುಶಂಕರಾರ್ಯನೇ ನೀನೆನುತ ಬೋಧಿಸುವ |
ಪರತತ್ವಸಿ ಪದಕೆ ಮುಖ್ಯಾರ್ಥವಹುದು ||5||

ತಾನೆ ತಾನಾಗಬೇಕು
ತಾನೆ ತಾನಾಗಬೇಕು | ತನ್ನೊಳಗೆ ಬ್ರ |
ಹ್ಮಾನಂದ ತೋರಬೇಕು |
ನಾನಾ ವಿಧಾನ ಭಾನಗಳಲ್ಲಿ ಸೇರಿದ |
ಮಾನಸವನು ಕಳ | ದೇನೊಂದು ತೋರದೆ ಪ||
ವುಂಡು ಪವಾಸಿಯಾಗಿ | ಲೋಕವನೆಲ್ಲ |
ಕಂಡು ಕಣ್ಣಿಲ್ಲವಾಗಿ | ಖಂಡವೆನಿಸುವ ಬ್ರ |
ಹ್ಮಾಂಡವೆಲ್ಲವನು ಪಿಂ | ಡಾಂಡವೆನಿಸಿ ತಾನ |
ಖಂಡ ತೇಜದಿಗೂಡಿ ||1||
ಅನ್ನಮಯಾದಿಯೊಳು | ಚಿನ್ಮಯನುತ |
ತನ್ಮಯನಾಗಿರುಲು | ತನ್ಮಯವಳಿದೆಲ್ಲ |
ಸನ್ಮಯವಾಗಲ | ನನ್ಯ ಭಾವದೊಳು ಮ |
ನೋನ್ಮನಿಯನು ಮೀರಿ ||2||
ಪರನಾರಿವಳ ಬೆರದು | ಮಾಡುವನಾನಾ |
ಪರಧರ್ಮಗಳ ತೋರದು | ಮರೆವೆಯ ಮೂಲವ |
ಮುರಿದು ಸೋಹಂಭಾವ | ದರುಹಿನೊಡನೆನಮ್ಮ |
ಗುರುಶಂಕರನ ಬೆರದ ||3||

ಮನವೇನು ಪುಣ್ಯವ ಮಾಡಿ
ಮನವೇನು ಪುಣ್ಯವ ಮಾಡಿ ಗುರುವಿನ | ಪದವ ಸೇರಿತೇ
ಮಾನುನೀ ಮಣಿಯೆ ಯಿಂದಿಗೆ ಬಂಧ ತೊಲಗಿತೇ ||ಪ||
ವಂದರೊಳಗಿದೆಲ್ಲ ಬಳಸು| ವಂದ ತೋರಿತೆ
ಕುಂದದೆನ್ನೊಳಗೆ ಬ್ರಹ್ಮಾ | ನಂದ ತೋರಿತೇ ||1||
ದೀಹದೊಡನೆ ಮೊದಲೊಳಿದ್ದ ಸಂಗ ಪೋಯಿತೇ
ಮೋಹವೇರಿಸೂವೊ ಲಿಂಗ ಭಂಗವಾಯಿತೇ ||2||
ಕಲ್ಲಿನೊಳಗೆ ಕಂಡ ದೇವ| ರೆಲ್ಲಿಗೋಡಿತೇ
ಅಲ್ಲಿಯಿಲ್ಲಿರುವುದೆನ್ನಲ್ಲಿ ಕೂಡಿತೇ ||3||
ಪೇಳಲಾರೆನು ಸಖಿಯೆ ಪರಮ | ಸುಖದ ಮೂಲವ
ಫಾಲಲೋಚನನೆ ಬಲ್ಲ | ಗುರುವಿನಾಳವ ||4||
ತನುವ ಕೂಡಿ ಕಳೆವ ಬೀಜ | ಗಣಿತ ದೊರಕಿತೆ
ಜನಿಲಸಿ ಸಾಯುವುದಿದೆಲ್ಲ | ತನುವಿಗಾಯಿತೆ ||5||
ನೂರು ಕೋಟಿ ಜನ್ಮ ಸುಕೃತ | ರಾಸಿ ಫಲಿಸಿತೇ
ಮೂರು ಮೂರ್ತಿಗಳ ಪದವಿ | ತುಚ್ಛವೆನಿಸಿತೇ ||6||
ಅಂಕೆಯಿಲ್ಲದೆ ಮೆರೆವ ಮನವ | ಹರುಷವೆಂಬುದು
ಶಂಕರಾರ್ಯನಲ್ಲಿ ಸೇರಿ | ಪರಮನಾದುದು ||7||

ಆನಂದವಾನಂದವಾಯಿತು
ಆನಂದವಾನಂದವಾಯಿತು |
ಬ್ರಹ್ಮಾನಂದವಾನಂದವಾಯಿತು ||ಪ||
ನಾನು ನೀನದಿದಮೆಂತೆಂಬುವ | ಮನದಿ |
ಮಾಣದೆ ಘೋರಮೃತ್ಯು ಪಾಶವ | ತುದಿ |
ಗೂಣೆಯಿಲ್ಲದೆ ಕೊರಳೊಡ್ಡಿದ | ಸಮ್ಯ |
ಜ್ಞಾನರಹಿತ ಕರ್ಮಿಗಳಿಗೆ ಗೋಚರಿಸದ ||1||
ಮೋಹಾದಿಗಳು ಹಮ್ಮಿಗಾಗಲು |
ಸ್ಥೂಲ ದೇಹಕ್ಕೆ ಕುಲಜಾತಿ ಸೇರಲು | ಮಾಯಾ |
ಸಾಹಸವೆಲ್ಲ ವ್ಯರ್ಥಮಾಗಲೂ ಯನಗೆ |
ಸೋಹಂಭಾವನೆಯುಳಿದಿನ್ನೇನು ತೋರದಿರ |
ಲಾನಂದ ವಾನಂದದಾಯಿತು ||2||
ಅಲ್ಲುಂಟಿಲ್ಲಿಲ್ಲವೆಂಬ ಭಾವವ |
ಮೀರಿ ಯೆಲ್ಲೆಲ್ಲು ತುಂಬಿ ತುಳಿಕಾಡುವ | ಕರ್ಮ |
ದಲ್ಲಿರ್ಪನಿಗೆ ದೂರವಾಗುವ | ನಿತ್ಯ
ಸಲ್ಲಲಿತಾ ಖಂಡ ಚಿತ್ತೆ ನಾನಾದ ಮೇಲೆ ||3||
ಮನಸಿಗಾಯಿತು ಸಂಕಲ್ಪಾದಿಗಳ್ ಲಿಂಗ |
ತನುಗತವಾಯ್ತು ಸುಖದುಃಖಗಳ್ | ಪ್ರಾಣ |
ಘನಧರ್ಮವಾಯ್ತು ಕ್ಷುತ್ಪಿಪಾಶೆಗಳ್ | ತಿಳಿಯ |
ಲಿನಿತಕ್ಕೆ ಸಾಕ್ಷಿತ್ವವೆನಗಾಯ್ತೆಂದರಿತ ಮೇಲೆ ||4||
ಮನದ ಬಯಕೆಯೆನ್ನದೆನ್ನದೆ | ಕರಣ |
ತನುಧರ್ಮಕರ್ಮದೊಳು ಸೇರದೇ | ಕರ್ಮಿ |
ಜನನ ದುರುಕ್ತಿಗೆ ಬೆಚ್ಚದೆ ತೋರ್ಪಿ
ನೆನಸಿನ ಜಗವನು | ಕನಸಿನಂತರಿತ ಮೇಲೆ ||5||
ಧೀರತ್ವವನು ಪರಿಭಾವಿಸಿ | ಶೃತಿ |
ಸಾರದರ್ಥವ ಪರಿಶೋಧಿಸಿ | ದ್ವೈತ |
ಮಾರಿಯ ಪೆಸರ ನಿರ್ಮೂಲಿಸಿ | ಬಳಿಕ |
ಮೂರುಮೂರ್ತಿಗಳನು ಮೀರಿ | ನಾನಿಲ್ಲಲಾಗಿ ||6||
ಪರಜೀವ ಭೇದವೆಂಬುದಿಲ್ಲದೇ | ದೃಶ್ಯ |
ಕರಣಾದಿ ಭಾವನೆ ತೋರದೇ | ನಾನು |
ಗುರು ಶಂಕರಾರ್ಯನೋಳ್ | ಬೆರದೇಕನಾದ ಮೇಲೆ ||7||

ಕುಲಜಾತಿ ಛಲವೆಂಬುದುಳಿಯದಂತಳಿದ ಮೇಲಿನ್ನೇನಿನ್ನೇನು
ಕುಲಜಾತಿ ಛಲವೆಂಬುದುಳಿಯದಂತಳಿದ ಮೇಲಿನ್ನೇನಿನ್ನೇನು
ಮಲವಿಲ್ಲದಿರುವೊ ನಿಶ್ಚಲಮೊಂದೆ ನಿಲ್ಲುವದಲ್ಲೇನಲ್ಲೇನು ||1||
ಮೂಲಕುಂಡಲಿಯಿರುವ ಮೂಲವ ಕಂಡಮೇಲಿನ್ನೇನಿನ್ನೇನು
ಮೇಲಾದ ತಾರಕದೊಳು ತಾನೆ ನಿಲ್ಲುವನಲ್ಲೇನಲ್ಲೇನು ||2||
ಮರಣ ಜನನ ಭರಣದೊಳು ತಾನಿರ್ದಮೇಲಿನ್ನೇನಿನ್ನೇನು
ಅರಿವುಮರವೆಗಳನರಿವಾತನಾಗುವನಲ್ಲೇನಲ್ಲೇನು ||3||
ಕಣ್ಣುಬೆಳಕುಯಿಲ್ಲದೆಲ್ಲವ ಕಂಡ ಮೇಲಿನ್ನೇನಿನ್ನೇನು
ತನ್ಮಯವೆಲ್ಲವೀ ಚಿನ್ಮಯವಾಗುವುದಲ್ಲೇನಲ್ಲೇನು ||4||
ಧನ ಸತಿಸುತರೆಲ್ಲರೆನಗಾಗೆಂದರಿತ ಮೇಲಿನ್ನೇನಿನ್ನೇನು
ವನಿತಾದಿ ವಿಷಯಸುಖವು ಬೇರೆಂದೆನಿಸದಿನ್ನಲ್ಲೇನಲ್ಲೇನು ||5||
ಅಂದಿಂದು ಹಿಂದೆಮುಂದಿಲ್ಲದುದಾಗಲಿನ್ನೇನಿನ್ನೇನು
ಯೆಂದಿಗುಯಿಲ್ಲೆಂಬುದಿಲ್ಲಾ ತಾನಾಗುವನಲ್ಲೇನಲ್ಲೇನು ||6||
ಪುರದೊಳಗಿರುವನು ಹೊರಗೆಲ್ಲ ನಿಂತ ಮೇಲಿನ್ನೇನಿನ್ನೇನು
ಹೊರಗಿನ ಜಗವಿದು ಪುರದೊಳು ಸೇರುವದಲ್ಲೇನಲ್ಲೇನು ||7||
ಮುನ್ನಿರ್ದ ಮುದುಕಿಯ ಮುರಿದು ನುಂಗಿದ ಮೇಲಿನ್ನೇನಿನ್ನೇನು
ತನ್ನ ಮುಂದಿರುವೊತಳವಾರನ ಕಾಣುವನಲ್ಲೇನಲ್ಲೇನು ||8||
ತಳವಾರನೊಳಗಿನ ಕೊಳೆಯಲ್ಲ ಕಳದ ಮೇಲಿನ್ನೇನಿನ್ನೇನು
ವುಳಿದ ಶ್ರೀಗುರು ಶಂಕರಾರ್ಯನಾಗುವನಲ್ಲೇನಲ್ಲೇನು ||9||

ಬಲ್ಲೋಡೀ ತತ್ವದೊಳ್ ಕೂಡಿ
ಬಲ್ಲೋಡೀ ತತ್ವದೊಳ್ ಕೂಡಿ | ನೀವು |
ಅಲ್ಲಲ್ಲಿ ಬೆರತು ಸುಮ್ಮನೆ ಕೆಡಬೇಡಿ ಪ||
ಸೊಲ್ಲಿಡಲದು ವೇದ್ಯವಲ್ಲ | ಅದಿ |
ನ್ನೆಲ್ಲಿ ನೋಡಿದರು ಕಣ್ಣಿಗೆ ಕಾಂಬೊದಲ್ಲ |
ಯೆಲ್ಲೆಲ್ಲು ತಾನೆ ತಾನಲ್ಲ | ಅದ |
ರುಲ್ಲಾಸವನೆ ನೋಡಿ ಈ ಜಗವೆಲ್ಲ ||1||
ವಂದಾಗಿ ಐದೆನಿಸುವದು | ಬಳಿ |
ಕೊಂದಾಗಿ ಮುಂದೆ | ಮೂರೆನಿಸಿ ಕೊಂಬುವದು |
ಬಂಧನವನು ಕಲ್ಪಿಸುವದು | ಅದರೋಳ್ |
ಹೊಂದಿಯಿಲ್ಲದ ಚಿತ್ರಂಗಳನೇ ನೋಡುವದು ||2||
ರೂಪು ನಾಮಗಳದಕಿಲ್ಲ | ಅಧ್ಯಾ |
ರೋಪದೊಳರಸಿದೊಡದು ಸಿಕ್ಕೋದಲ್ಲಾ |
ತಾಪತ್ರಯಂಗಳಲ್ಲಿಲ್ಲ | | ದೂಪ |
ದೀಪ ನೈವೇದ್ಯಕ್ಕೆ ಅದು ವೇದ್ಯವಲ್ಲ ||3||
ಕಾಶಿಯೊಳರಸಿದೊಡಿಲ್ಲ| ವುಪ |
ವಾಸದಿಂ ಬಳಲುವರಿಗೆ ಸುಲಭವಲ್ಲಾ |
ನಾಶವೆಂಬುವದದಕಿಲ್ಲ | ಮಾಯಾ |
ಪಾಶಕಳದರದು ಗೂಢಮಾಗಿಲ್ಲಾ ||4||
ಅರಸಿ ಕಾಣರು ಲೋಕಾಯತರು | ಅದ |
ನರಿತವರೆಲ್ಲ ದೇಹವನೆ ಬಿಡುವರು |
ಪರಕಿಸುತದನೆ ಹಿಗ್ಗುವರು | ಅದರ
ಶಿರಿಯ ಕಂಡವರಿನ್ನು ಮರಳಿ ಜನ್ಮಿಸರು ||5||
ಕಳದುಳಿಯುವದೇ ತಾನಹುದು| ನೋಡ |
ಲೊಳ ಹೊರಗೆಲ್ಲು ತಾ ತುಂಬಿಕೊಂಡುಹುದು |
ತಿಳಿಯದೆ ಕಳವಳಿಸುವದು | ಅದು |
ತಿಳಿದೊಡೆ ಲೋಕವೆಲ್ಲವ ಕೆಡಿಸುವದು ||6||
ಮೂರು ದೇವರ ಮೇಲಿರುವದು | ಬೇರೆ |
ಬೇರಾಗಿ ಮೂರು ಲೋಕಗಳನಾಳುವದು |
ಆರನೆ ನೆಲೆಯೆ ತಾನಹುದು | ಯಿಲ್ಲಿ |
ತೋರುವ ಜಗವೆಲ್ಲ ತಾನೆ ತಾನಹುದು ||7||
ಯಡಬಲದೊಡೆಯರ ಪಿಡಿದು | ಕಟ್ಟಿ |
ನಡುವೆ ಮೇಲಿರುವೆನ್ನೆರಡನ್ನಲ್ಲೆ ತಡದು |
ಬಡಗಲ ಗುಡಿಯೊಳು ಸುಳಿದು | ಸುಧೆಯ |
ಕುಡಿದೊಡೇನದು ಬೆರಿನ್ನೆಲ್ಲಿ ಕಾಣಿಸದು ||8||
ಮರಣ ಜನ್ಮಗಳದಕಿಲ್ಲ | ಕಾಯ |
ಕರಣ ಕಾರ್ಯಗಳೊಳು | ಬೆರೆಯುವದಲ್ಲ |
ಮರೆಯೊಳಗದು ನೆಲಸಿಲ್ಲ | ಯಿದನು
ಗುರು ಶಂಕರಾರ್ಯನೋಳ್ | ಬೆರೆದಾತ ಬಲ್ಲಾ ||9||

ಬೋಧಿಸೈ ಶ್ರೀಗುರುವೇ
ಬೋಧಿಸೈ ಶ್ರೀಗುರುವೇ | ಬೋಧಿಸೈ |
ಸಾಧನಂಗಳನೆಲ್ಲ ಪಡದು | ಗುರು |
ಪಾದಪದ್ಮಂಗಳ ಪಿಡಿದು | ನಾನಾ |
ವಾದಿಮತಗಳನು ತಡದು | ಪುಸಿ |
ಭೇದಭಾವಗಳನು | ಬಾಧಿಸಿ ತತ್ವವು |
ಶೋಧಿಸಿ ಬ್ರಹ್ಮವ |ಸಾಧಿಸಿ ಸುಖಿಸೆಂದು ||ಪ||
ದಿನಗಳೊಂದರೊಳುವೊಂದಿಲ್ಲ |
ಜಾಗ್ರಕ್ಕನಸುಗಳೆರಡು ವೊಂದಲ್ಲ | ಕಳದ |
ತನುಗಳೀತನುವಾಗದಲ್ಲಾ | ನೀನು |
ದಿನ ಮಾಸ ಯುಗಸರ್ವ | ತನುಗಳೊಳೆಡಬಿಡ |
ದನುಸರಿಸಿದರೆ ಸದ್ರೂಪನು ನೀನೆಯಹುದೆಂದು ||1||
ಪೊಳೆವ ಸ್ವಪ್ನದ ಜಗವೆಲ್ಲ |
ಜಾಗ್ರತ್ಕಳೆಯಂತೆ ಕಾಣುತಹುದಲ್ಲ | ಅಲ್ಲಿ |
ಬೆಳಗಿಪ ವಸ್ತುವೆಯಿಲ್ಲ | ಅದು |
ತಿಳಿಯೆ ನಿನ್ನನುಪಮ | ಬೆಳಕಿನ ಬಲದಿಂದ |
ಬೆಳಗಲು ನೀನೆ ನಿ | ರ್ಮಲ ಚಿದ್ರೂಪನುಯೆಂದು ||2||
ನಂದನ ಸತಿ ಹಿತರೆಲ್ಲ | ನಿನ್ನಾ |
ನಂದಕ್ಕೋಸುಗವೆ ಕೇಳೆಲ್ಲ| ಹಿತ |
ಮೊಂದು ನಿನಗಧಿಕವಾದ್ದಿಲ್ಲ | ಯಿಲ್ಲಿ |
ಸಂದೆಹವೇಕಿನ್ನು | ಯೆಂದಿಗು ಕೆಡದ ಆ |
ನಂದ ಸ್ವರೂಪ ನಾನೆಂದು ಭಾವಿಸುಯೆಂದು ||3||
ಪಿಡಿವ ಧರ್ಮಂಗಳೊಂದಿಲ್ಲ | ನೀನು |
ಬಿಡುವ ಬಾಧಕಗಳೇನೆಲ್ಲ | ಮುಂದೆ |
ಪಡೆವ ಸದಗತಿ ಬೇರೊಂದಿಲ್ಲ | ನಿನಗೆ |
ವಡಲಿಲ್ಲ ಮಡಿಯಿಲ್ಲವಡಿಯಿಲ್ಲವೆಡೆಯಿಲ್ಲ |
ತಡೆಯಿಲ್ಲ ಕಡೆಯಿಲ್ಲ ನಡೆನುಡಿಯಿಲ್ಲೆಂದು ||4||
ಕರಣ ಕಾರ್ಯವು ನಿನ್ನದಲ್ಲ | ನಾಕ |
ನರಕವಾಸದ ತೊಡಕಿಲ್ಲ | ನಿನ್ನ |
ಪರಿಪೂರ್ಣಾನಂದವಿದೆಲ್ಲ | ನಿನಗೆ |
ಶಿರಿಯಿಲ್ಲ ಶರೆಯಿಲ್ಲ ಪುರವಿಲ್ಲಪರವಿಲ್ಲ |
ಕುರುಹಿಲ್ಲ ಜರೆ ಇಲ್ಲ ತೆರೆಕೊರೆಯಿಲ್ಲೆಂದು ||5||
ಧರೆ ಮೊದಲಹ ದೃಶ್ಯವೆಲ್ಲ | ನಿನ್ನಿಂ |
ದುರುಹಿಸಿ ಕೊಂಬುದಿದೆಲ್ಲ | ನಿನ್ನ |
ನರಿವ ವಸ್ತುವು ಬೇರೊಂದಿಲ್ಲ | ನೀನು |
ಪರಮಸಾಕ್ಷಿಯು ನಿನ್ನೊ | ಳಿರದು ದೃಶ್ಯದ ಧರ್ಮ |
ವರಿದೊಡೀ ಮರ್ಮವ | ಮರಣವಿನ್ನಿಲ್ಲೆಂದು ||6||
ನಿನ್ನ ನಿಜವನೆಲ್ಲ ತಿಳಿದು | ಜಗ |
ವನ್ನು ಕನಸಿನಂತೆ ಕಳದು | ಪುಸಿ |
ಜನ್ಮಾದಿ ಬಂಧವ ತೊಳಿದು | ನೀನು |
ಮುನ್ನಿರ್ದಶಿವ ಜೀವ | ಭಿನ್ನತ್ವವಳಿದು ಮ |
ಹೋನ್ನತಾನಂದ ಸ| ಚ್ಚಿನ್ಮಯಾನಾಗೆಂದು ||7||
ವಾಸನೆಗಳನೆಲ್ಲನುಳಿದು | ಪಂಚ |
ಕೋಶಧರ್ಮಂಗಳ ತಿಳಿದು | ಮಿಥ್ಯಾ |
ಧ್ಯಾಸತ್ರಯವ ನೇತಿಗಳೆದು | ಬಳಿಕ |
ಕ್ಲೇಶ ಪಂಚಕ ಮಾಯಾ ಪಾಶಕ್ಕೆ ಸಿಲುಕದೆ |
ನಾಶಹಿತಜಗಧೀಶ ನೀನಾಗೆಂದು ||8||
ಪರಲೋಕದಾಸೆಯ ಬಿಟ್ಟು | ನಿಜ |
ಗುರುಬೋಧೆಯಲಿ ಮನವಿಟ್ಟು ನಾನು |
ಶರೀರವೆಂಬುವ ಭ್ರಾಂತಿ ಕೆಟ್ಟು | ಪೂರ್ಣ |
ಪರಮ ನಾನೆಂಬುದ | ಮರಿಯದೆ ದೃಢಮಾಗಿ |
ಗುರು ಶಂಕರಾರ್ಯನೋಳ್ | ಬೆರೆದೇಕನಾಗೆಂದು ||9||

ಬಳಲುವೆ ನಿನ್ನೊಳು ಬೆಳಗುವಾನಂದವ
ಬಳಲುವೆ ನಿನ್ನೊಳು | ಬೆಳಗುವಾನಂದವ |
ತಿಳಿಯದೆ ಸುಮ್ಮನ್ಯಾತಕೆ ಜೀವನೇ ||ಪ||
ಪರಿಭವದೊಡಗೂಡಿ | ಚರಿಸುವೊ ದೇಹದ |
ಹೊರವಳಗಣ ಮರೆವೆಯ ಕಾರ್ಯವ |
ನರಿತಲ್ಲಿ ಬೆರೆಯದೆಲ್ಲವನು ಬೆಳಗಿಸುವ |
ವರ ಪರಂಜ್ಯೋತಿ ಸ್ವರೂಪನೆ ನೀನಾಗಿ ||1||
ಕರಣದೊಳಡಿಯೂರಿ | ಪರಮಾಗುತಿಂದ್ರಿಯಾಂ |
ತರದಿಂದ ಪೊರಟು ಬಾಹ್ಯದ ರೂಪವ |
ಧರಿಸಿ ಯಲ್ಲರೊಳು ತುಂ | ಬಿರುವೆನೆಡಂಬು ಭಯವ |
ಮರೆಸುವ ಪರಿಪೂರ್ಣಾನಂದವೆ ನೀನಾಗಿ ||2||
ಗುಣ ಫಣಿಯೊಳು ಮನ | ಸಿನ ಭಾವ ಭಾವದಿ |
ಜನಿಸಿ ತೋರುವೊ ಕಲ್ಪಿತನ ಮೂಲಕೆ |
ಮನೆಯಾಗಿ ಜನನ ಬಾಧೆ ತೋರದ |
ಚಿನುಮಯ ಶಂಕರಾರ್ಯನ ರೂಪೆ ನೀನಾಗಿ ||3||

ಗುರುವೇ ಪರಶಿವನು
ಗುರುವೇ ಪರಶಿವನು ಲೋಕದಿ ತನ್ನ |
ನರಿದಾತನೆ ಮುಕ್ತನು |
ಮರಣ ಜನನ | ದುಃಖ ದುರಿಯಿಂದ ತಪಿಸುವ |
ತರಳನ ನಿಜಸುಖ | ಶರಧಿಯೊಳಿರಿಸಿದ 1||
ರೂಪು ನಾಮಂಗಳನು | ಭಾವಿಸಿಕೊಂಡು |
ತಾಪದೊಳಿರಲು ನಾನು |
ಪಾಪ ಪುಣ್ಯಂಗಳ | ಲೇಪನವಲ್ಲದ ನೀನು |
ಆಪರಸುಖ | ಸಚ್ಚಿದ್ರೂಪನೆಂದರುಪಿದ ||2||
ಕರಣ ಧರ್ಮಂಗಳನು | ನಿನ್ನೊಳಗಧಿ |
ಕರಿಸಿಕೊಂಡಿರಲು ನೀನು |
ವರಚಿದ್ಘನಾನಂದ | ಶರಧಿಯಾಗಿಹ ನಿನ್ನ |
ನುರುದುಃಖ ಚಯವನು | ಸರಿಸಿತೆಂದರುವಿದ ||3||
ಯೆಂದಿಗಾದರು ಕೆಡದೇ ನಾನಿರಲೇಬೇ |
ಕೆಂದು ಭಾವಿಸುವೆಯಾಗಿ |
ಸಂದೇಹವೇಕಿನ್ನು | ಕುಂದಿಲ್ಲ ಪರಮಾ |
ನಂದ ಸ್ವರೂಪ ನೀನೆಂದು | ಪೇಳಿದ ಸದ್ಗುರುವೆ ಪರಶಿವನು ||4||
ನಿರುತವೀ ತನು ನಾನೆಂದು | ಭಾವಿಸಿಕೊಂಡು |
ಮರುಳನಾಗಿರಲು ನೊಂದು |
ಪರತತ್ವ ಮರ್ಮದ | ಸರಣಿ ಬೋಧಿಸಿಯನ್ನ |
ಗುರು ಶಂಕರಾರ್ಯನೋಳ್ | ಬೆರೆಯುವಂತೆಸಗಿದ ||5||

ಯಲ್ಲಾ ಪರಬ್ರಹ್ಮವೆನಬೇಕು
ಯಲ್ಲಾ ಪರಬ್ರಹ್ಮವೆನಬೇಕು |
ಬೇರೊಂದಿಲ್ಲವೆಂಬುವ ದೃಢವಿರಬೇಕು |
ಇಲ್ಲಿಲ್ಲಿ ತೋರುವು | ದೆಲ್ಲ ಪರಬ್ರಹ್ಮ |
ನುಲ್ಲಾಸವೆಯೆಂದೆನಬೇಕು 1||
ಪರಮ ನಾನೆಂಬುದರಿಬೇಕು | ಅದ |
ನರಿಬೇಕಾದರೆ ಗುರು ಬೇಕು |
ಗುರು | ದೊರೆಯಲಾತನ |
ಚರಣದೊಳಗೆ ತನ್ನ |
ಶಿರವನು ಮರಸದಿಟ್ಟಿರಬೇಕು ||2||
ರೂಪು ನಾಮಂಗಳ ಬಿಡಬೇಕು | ಅದ್ಯಾ
ರೋಪದೊಳದನು ಕಟ್ಟಬೇಕು |
ಆಪರಂಜ್ಯೋತಿ ಸ್ವರೂಪವೆ ತಾನಾಗಿ |
ಪಾಪ ಪುಣ್ಯಗಳೆಲ್ಲ ಕೆಡಬೇಕು ||3||
ವಡಲು ನಾನಲ್ಲೆಂಬ ನುಡಿ ಬೇಕು| ತಾನು |
ನುಡಿದ ನುಡಿಗೆ ತಕ್ಕ ನಡೆಬೇಕು |
ವಡಲಿನ ತೊಡಕನು ಬಿಡಿಸಿದ ಗುರುವರ |
ನಡಿಯೊಳಗಾವಡಲ ನೀಡಬೇಕು ||4||
ತಾನೆಂಬ ನುಡಿಯ ಬದ್ದಿಸಬೇಕು | ಸಮ್ಯ |
ಜ್ಞಾನದಿಂದದನು ತಿದ್ದಿಸಬೇಕು |
ಮಾನ ಮೇಯಗಳೆಂಬುದೇನು ತೋರದ |
ಸಚ್ಚಿದಾನಂದ ಭವ ಸಿದ್ಧಿಸಬೇಕು ||5||
ಆರುನಾನೆಂದು ಶೋಧಿಸಬೇಕು |
ಮುಂದೆ ತೋರುವ ಜಗವ ಬಾಧಿಸಬೇಕು |
ಬೇರೇನು ತೋರದೆ | ಈರೇಳು ಲೋಕವ |
ಮೀರಿದ ಪದವ ಸಾಧಿಸಬೇಕು ||6||
ಜಾತಿ ಸೂತಕ ಭ್ರಾಂತಿ ಬಿಡಬೇಕು | ಮನವ |
ಸ್ವಾತ್ಮಾನುಭಾವದೊಳಗಿಡಬೇಕು |
ಭೀತಿ ತೋರದೆ ಪರಿ | ಪೂತನಾಗುತತನು |
ಜಾತ ಕರ್ಮಂಗಳನು ಸುಡಬೇಕು ||7||
ವಂದಿಸುವರನು ಬಂಧಿಸಬೇಕು | ತನ್ನ |
ನಿಂದಿಸುವರಿಗೆ ವಂದಿಸಬೇಕು |
ನಿಂದೆ ವಂದನೆಯೆಂಬ ಬಂಧನವಿಲ್ಲದಾ |
ನಂದ ಭಾವದೊಳು ಹೊಂದಿರಬೇಕು ||8||
ಅರುಹು ತನ್ನೊಳು ನೆಲಸಿರಬೇಕು | ಕಾಯ |
ಕರಣ ಕಾರ್ಯದೊಳೆಚ್ಚರಿರಬೇಕು |
ಗುರು ಶಂಕರಾರ್ಯನೋಳ್ | ಬೆರದೇಕನಾಗಿ ತಾ |
ಹೊರವಳಗೆಲ್ಲ ತುಂಬಿರಬೇಕು ||9||

ಲಾಲಿ ಲಾಲಿ ಮಾಯಾ
ಲಾಲಿ ಲಾಲಿ ಮಾಯಾ | ಲೋಲಲಾಲಿ |
ಕಲಾಕರ್ಮವೆಲ್ಲ ನಿನ್ನ | ಲೀಲೆ ಲಾಲಿ ||ಪ||
ಸತ್ಯಲಾಲಿ | ನಿಹತಾ | ನಿತ್ಯ ಲಾಲಿ |
ಮೃತ್ಯು ದೇವೀ ನಿನ್ನ ಪಾದ | ಭೃತ್ಯೆಲಾಲಿ ||1||
ದೀಪಲಾಲಿ | ಘನಚಿದ್ರೂಪ ಲಾಲಿ |
ತಾಪಕೋಪ ನಿನ್ನೊಳಧ್ಯಾರೋಪಲಾಲಿ ||2||
ಪ್ರೇಮಲಾಲಿ | ಸುಖ | ಸೀಮಲಾಲಿ |
ಕಾಮಿತಾರ್ಥಕ್ಕೆಲ್ಲ ನೀನೆ ಧಾಮಲಾಲಿ ||3||
ನಿತ್ಯಲಾಲಿ | ಲೋಕಾ ಪಠ್ಯಲಾಲಿ |
ನಿತ್ಯಾನಿತ್ಯವೆಲ್ಲ ನಿನ್ನ | ಕೃತ್ಯಲಾಲಿ ||4||
ಪೂರ್ಣ ಲಾಲಿ | ಪಂಚ | ವರ್ಣಲಾಲಿ |
ವರ್ಣೋಪಾಧಿಯಿಂದ ನೀ ಬಹು | ವರ್ಣ ಲಾಲಿ ||5||
ಈಶಲಾಲಿ | ಕೋಶಾ | ವಾಸ ಲಾಲಿ |
ಪಾಶವೆಂಟು ಕಳಿಯೆ ನೀ ಸ | ರ್ವೇಶ ಲಾಲಿ ||6||
ಕಂದಲಾಲಿ | ಗಳಿತ ಬಂಧ ಲಾಲಿ
ಸಂದು ತಿಳಿದೊಡೆಲ್ಲ ನಿನ್ನಾ | ನಂದಲಾಲಿ ||7||
ದೇವಲಾಲಿ ಪೂರ್ಣ | ಭಾವಲಾಲಿ |
ಭಾವ ಭಾವಾವಳಿಯೆ ನೀ ನಿ | ರ್ಭಾವಲಾಲಿ ||8||
ಶರಣ ಲಾಲಿ | ಮಿಥ್ಯಾ | ವರಣ ಲಾಲಿ |
ಗುರು ಶಂಕರ ಸತ್ಕರುಣಾ ಭರಣೋ | ದ್ಧರಣ ಲಾಲಿ ||9||

ಜ್ಞಾನಿಯಾದೇನೆಂದೂ ಬರಿದೇ
ಜ್ಞಾನಿಯಾದೇನೆಂದೂ ಬರಿದೇ |
ಜ್ಞಾನವಿಲ್ಲಾದುಸುರಾಲವನು |
ಜ್ಞಾನಿಯಹನೇ ಮಾನಾವಳಿದೊಡವನೇ ಜ್ಞಾನಿಯೂ ||ಪ||
ಪಂಚಮಾದಿಯಲ್ಲಿ ಮೊಳದು |
ಪಂಚದಿಕ್ ಷಟ್‍ತ್ರಯದಿಂ ಮೆರದು |
ಪಂಚ ಧರ್ಮಾಶ್ರಯಮಾಗಿರುವೀ ಪಂಚಾಂಗದಿ ಶೇರಿ ||
ಪಂಚ ರೂಪಾಮಾದ ನಿಜವ |
ಪಂಚ ಸ್ವರೂಪದಲಿ ನಿಲಿಸಿ |
ಸಂಚಿತಾಗಾಮಿಗಳ ಕಳದೊಡವನೆ ಜ್ಞಾನಿಯೂ ||1||
ಹಿಂದೆಯಿಲ್ಲದ್ದಲ್ಲವಾಗಿ |
ಮುಂದಕಿಲ್ಲದ್ದಿಲ್ಲವಾಗಿ |
ಯೆಂದಿಗೂಯಿಲ್ಲವೆಂಬುವದು ಇಲ್ಲದೇ ಪೋಗಿ |
ವೊಂದು ಮತ್ತೊಂದಲ್ಲೆಂಬುದರೋಳ್ |
ಹೊಂದದಿರುವಾ ಭಾವಾತನ್ನೋಳ್ |
ಹೊಂದಿ ನಿಶ್ಚಂಚಲನಾಗಿರ್ದೋಡವನೇ ಜ್ಞಾನಿಯು ||2||
ಓಡುವನೋಳುದಿಸಿದವನ |
ಕೂಡಿ ಮೂಡೀರೂ ಪಾದವನ |
ಗೂಢಸತ್ವಾಸತ್ವಾಧಿಕದೋಳ್ ಸಂಭಾವಿಪುದೆಲ್ಲ |
ರೂಢದಿಂದಾವನ ದೃಶ್ಯತೆಗೆ |
ಬೀಡುಗೊಂಡು ಜ್ವಲಿಸುತಿಹುದೋ |
ನೋಡಲವನೇ ನಾನೆಂದರಿತೋಡವನೇ ಜ್ಞಾನಿಯೂ ||3||
ಸ್ಥೂಲವಿಲ್ಲಾದುಂಟಾದುಂಟು |
ಸ್ಥೂಲವಿಲ್ಲೆಂದದನೇ ಕಳದು |
ಮೂಲವಿಲ್ಲಾದುಂಟಾದುಂಟು |
ಮೂಲವಿಲ್ಲೆಂದು ಮೂಲವಂ ಮೇಲಿನೊಳಾ ಮೂಲ |
ಮೂಲವಿಲ್ಲಾದುಂಟಾದುಂಟು |
ಮೂಲ ಮೂಲಾವಿಲ್ಲೆಂದುಳದೊಡವನೇ ಜ್ಞಾನಿಯು ||4||
ವಂದರೋಳ್ಮೂರಾಯಿತೈ | ಮುಂ
ದೊಂದರೋಳ್ಮೂರಾಗಲ್ಲಲಿಂ |
ನ್ನೊಂದರಿ ಮೂರಾಯಿತಿದು ಬೇರೊಂದಾರಿಂದೆಂದು |
ಕುಂದು ತೋರಿದಂತೆ ತಿಳಿದು |
ಸಂದು ತೋರಾದಂತೇ ತಾನೇ |
ನಿಂದು ನಿತ್ಯಾ | ನಂದನಾದೋಡವನೇ ಜ್ಞಾನಿಯಾ ||5||
ಯಿಂತು ಬಹಿರಂತರಗಳೊಳಗೆ |
ಭ್ರಾಂತಿಯಳಿದು ವಂದಾಗಿಸುವ |
ತ್ವಂತದಂಶಧ್ವಂಸದಿಂನಿರ್ಧ್ವಂಸಾಂಶದಿ ಕೂಡಿ |
ಪಂಥವಳಿದುಯಿದುಮೆಂಬುದುತಂ |
ನಂತೆಯಾಗಿ ಗುರು ಶಂಕರನೋಳ್ |
ಚಿಂತೆಯಿಲ್ಲದೆರಕನಾದೊಡವನೆ ಜ್ಞಾನಿಯು ||6||

ಲಿಂಗ ಪೂಜೆಯ ಮಾಡಿರೋ
ಲಿಂಗಪೂಜೆಯ ಮಾಡಿರೋ |
ನಿಮ್ಮೊಳು ನಿಜ ಲಿಂಗಪೂಜೆಯ ಮಾಡಿರೋ ||ಪ||
ಅಂಗದೊಳು ಸಂಗಿಸದೆ ಗುಡಿಯೊಳು
ತಂಗದಲೆ ನಿಸ್ಸಂಗದಲಿ ಬಹಿ|
ರಂಗಲಿಂಗವ ನುಂಗಿ ಮಂಗಳ
ಕಂಗಳಿಗೆ ಉತ್ತುಂಗವೆನಿಸುವ ||ಅ ಪ||
ಮಡಿಯೆಂಬ ತೊಡಕಿಲ್ಲದ | ವೂರೂರಿನ
ಗಿಡಬುಡಗಳ ಸೇರದ | ಈ ಜಡಪೂಜೆ |
ಗಡಿಯಿಲೆಡೆ ಕೊಡದ | ಭೂಲೋಕದೊಳಗಿನ
ಅಡವಿಮಡುಕಡಲುಗಳ ತಡಿಯೊಳ|
ಗಡಗಿರುವ ಕೆಡುತನಗಳಿಲ್ಲದೆ
ಮುಡುಪು ಮುಡಿ ವಡವೆಗಳ ಬಯಸದ
ವಡಲುನಡೆತಡೆ ಬಿಡುಗಡಿಲ್ಲದ | ಲಿಂಗ ||1||
ಧ್ಯಾನಕ್ಕೆ ಗುರಿಯಾಗದ | ಸಕ್ಕರೆ ಹಾಲು |
ಜೇನುಗಳನು ಕೋರದಾ | ಶುದ್ಧೋದಕ
ಸ್ನಾನಕ್ಕೆ ಶಿರವೀಯದ | ತೋರುವ ನಾನಾ
ಮಾನಾಮೇಯಗಳೆಂಬ ತ್ರಿಪುಟಿ ವಿ
ಧಾನ ಜಪತಪಮೌನು ಸುಮಾನಸದಿ ಸುಳಿಯದ ||2||
ಮರೆಯೊಳು ನೆಲಸಿರದ | ಪ್ರಾಕಾರಗೋ
ಪುರ ಮಂಟಪದವ ಸೇರದ | ಅಕ್ಷತೆ ವಸ್ತ್ರಾ
ಭರಣವಿಡಲು ಕಾಣದ
ಮೆರಸುವರ ಮನೆಯೋಳು
ಶಿರಿಯು ನೆಲೆಗೊಂಡಿರಲು ಹರುಷದಿ
ನರರ ಭುಜಗಳನೇರಿ ಮನೆ ಮನೆ
ತಿರುತಿರುಗಿ ಮೆರೆಮೆರೆದು ಭರದಲಿ
ಮರಿದೆ ಗುಡಿಯೊಳಗೊರಗಿ ಕೊರಗದ ||3||
ರೂಪು ನಾಮಗಳಿಲ್ಲದ | ಹಾರತಿ ನಂದಾ
ದೀಪಂಗಳಿಗೆ ಕಾಣದಾ | ಕಲ್ಪಿಸುವದ್ಯಾ
ರೂಪಕ್ಕಾಧಾರಮಾದ | ಭಿನ್ನಿಸಿಗೈವ
ದೂಪ ದೀಪಗಳೆಂಬ ಕರ್ಮದ
ಲೇಪವಿಲ್ಲದೆ ತ್ರಿಗುಣಂಗಳ ಸಂ
ತಾಪಕ್ಕಾಸ್ಪದ ಕೊಡದೆ ಘನ ಚಿ
ದ್ರೂಪ ಸುಖಮಯಮಾಗಿ ಬೆಳಗುವ ||4||
ಹೊರವಳಗೊಂದೆಯಾಗಿ | ಅಂಬರದಂತೆ
ಪರಿಪೂರ್ಣಖಂಡಮಾಗಿ | ನಿತ್ಯಾನಂದಾ
ಪರಿಮಿತಾನಾದಿಯಾಗಿ
ಬೇರೇನು ತೋರದ
ನಿರುಪಮಿತ ನಿರ್ಗುಣ ನಿರಂಜನ
ನಿರತಿಶಯ ನಿರ್ಮೋಹಮೆನಿಸುವ
ಪರಮ ಗುರು ಶಂಕರನ ಚರಣದಿ
ಬೆರತ ಗುರು ಪುತ್ರನಿಗೆ ಕಾಣುವ || ಲಿಂಗ ||5||

ಲಾಲಿ ನಿಜ ತತ್ವವನು ಮರೆತಿರುವ ಕಂದ
ಲಾಲಿ ನಿಜ ತತ್ವವನು ಮರೆತಿರುವ ಕಂದ |
ಲಾಲಿ ಕೂಟಸ್ಥನನು ತಿಳಿಯುವದೆ ಚಂದ || ಲಾಲಿ ||ಪ||
ಪಂಚ ಲಕ್ಷಣ ಮೂರ್ತಿಯು ಕಾಣೆನೆಂದೆ |
ಪಂಚ ಕೋಶಗಳೆಂಬ ಪಂಜರದಿ ನಿಂದೇ |
ಸಂಚಿತಾಗಾಮಿಗಳು ತೊಡಗೆ ನಿನ್ಹಿಂದೇ |
ಪಂಚ ದುಃಖದಿ ಸಿಲುಕಿನೊಂದೆ ನೀ ಹಿಂದೆ || ಲಾಲಿ ||1||
ಜಾತಿ ಕುಲವಣ್ಣಾ ಶ್ರಮಗಳೆಂಬುದೆಲ್ಲಾ |
ಜಾತಮಾದೀ ತೋರ ತನುವಿನೊಳಗೆಲ್ಲ |
ಖ್ಯಾತಿಯಿಂದ ಕಲ್ಪಿತವಿದೆಂದು ನಿಜವಲ್ಲ |
ಆತ್ಮ ನೀನೆದರ ಸಂಪರ್ಕ ನಿನಗಿಲ್ಲ || ಲಾಲಿ ||2||
ಅಂಧಬಧಿರತೆಯಂಬ ಧರ್ಮಂಗಳೆಲ್ಲಾ |
ಹೊಂದಿಹುದು ನೇತ್ರಾದಿ ದಿಂದ್ರಿಯದೊಳೆಲ್ಲ |
ಸಂದೇಹವಿದು ಮನಸಿಗಾಯ್ತು ನಿನಗಿಲ್ಲ |
ನಂದು ನಾನೆಂಬುದಮ್ಮಿನದು ನಿನದಲ್ಲ || ಲಾಲಿ ||3||
ಆರು ನಾಲ್ಕುರ ಕೂಟದಿಂದ ಬೇರೊಂದು |
ತೋರೆ ಸಂಸಾರ ಭಾರವ ಪೊತ್ತು ನಿಂದು |
ಬೇಗಿರುವದನೆ ಕಾಣದದನೆ ನಿಜವೆಂದು |
ಸೇರಿದೈ ಮಾಂಸಮಯ ಕಾಯದೊಳಗೆ ಬಂದು || ಲಾಲಿ ||4||
ಪರಮಾರ್ಥವಲ್ಲದು ಭಯರ ಭಾವಪೋಗಿ |
ಪರಿಹರಿಸಲಾಗದವನೊಳಗೆ ವೃಂದಾಗಿ |
ಪರಿಪೂರ್ಣ ಭಾವ ನಿನ್ನೊಳಗೆಯಿಂಪಾಗಿ |
ಹರನಾಗು ಗುರು ಶಂಕರನೊಳಗೇಕನಾಗಿ || ಲಾಲಿ ||5||

ಯೆಲೆ ದೇಹವೆ ನಿನ್ನೊಳು ನಾ ಸೇರಲು
ಯೆಲೆ ದೇಹವೆ ನಿನ್ನೊಳು ನಾ ಸೇರಲು |
ಮುಳುಗಿಸಿ ಯನ್ನನು ನೀ ಬೆಳದೇ |
ಕಳಿಯಲು ನಿನ್ನನು ಘನ ಸುಖಮಯ ನಿ |
ರ್ಮಲನಾಗುತ ನಾ ಬೇರುಳದೇ || ||ಪ||
ಪೇಳಲು ಮನಸಿಗಗೋಚರಮಾಗಿಹ |
ಲೀಲೆಗಳೆಲ್ಲಾ ಯನಗಾಯ್ತು |
ಬೋಳಿಸಿ ತಲೆಯನು ಧಳಿಯೊಳು ಮುಳುಗುವ |
ಕೋಳೆಗಳೆಲ್ಲಾ ನಿನಗಾಯ್ತು || ||1||
ಯೆಂದಿಗು ಕುಂದನು ಹೊಂದದ ಬ್ರಹ್ಮಾ
ನಂದದ ಯೋಗವು ಯನಗಾಯ್ತು |
ನಿಂದನವಂದನ ಸಂಧ್ಯಾ
ವಂದನ ರೋಗವು ನಿಗಾಯ್ತು || ||2||
ಸತ್ಯನು ಚಿದ್ರೂಪನು ಆನಂದನು
ನಿತ್ಯ ಖಂಡನು ನಾನಾದೆ |
ಮಿಥ್ಯವು ಜಡವೀ ದುಃಖವು
ಮತ್ತಮನಿತ್ಯವು ಖಂಡವು ನೀನಾದೆ || ||3||
ನಿರುಪಮಾ ನಿರ್ಗುಣ ನಿತ್ಯ ನಿರಾಶ್ರಯ
ವರಚಿನ್ಮಾತ್ರನು ನಾನಾದೆ |
ಕುರುಡನು ಕುಂಟನು ಬಧಿರನು ಭಂಡನು
ತಿರುಕನು ಮೂಗನು ನೀನಾದೆ || ||4||
ಭೌತಿಕ ಪಾತಕವಿಲ್ಲದ ತ್ರಿಗುಣಾ
ತೀತ ಶ್ರೇಷ್ಠನು ನಾನಾದೆ |
ಸೂತಕ ಬಂದರೆ ಕುಲದಲಿ ಕೂಡದ
ಜಾತಿ ಭ್ರಷ್ಟನು ನೀನಾದೆ || ||5||
ಕರ್ಮಕೆ ಸಿಲುಕದ ನಿಜಸುಖ ಪದವಿಯ
ಧರ್ಮವು ಯನ್ನೊಳಗುಂಟಾಯ್ತು |
ಮರ್ಮವನರಿಯದೆ ಜಾತಿಗೆ ಕೊರಗುವ
ಕರ್ಮವು ನಿನ್ನೊಳಗುಂಟಾಯ್ತು || ||6||
ಶುದ್ಧ ಚಿದಾತ್ಮನು ನೀನೆಂದುಸುರುವ
ವಿದ್ಯದ ಕೂಟವು ಯನದಾಯ್ತು |
ವದ್ದರೆ ವೊಬ್ಬನ ಪಾತಕವೆಂಬೀ
ವುದ್ದದ ಗೂಟವು ನಿನಗಾಯ್ತು || ||7||
ಹೊರವಳಗಾಗುವ ಮರವೆಯ ಕಾರ್ಯವ
ನರಿಯುವ ಸಾಕ್ಷಿಯು ನಾನಾದೆ |
ಪರಿ ಪರಿ ತೀರ್ಥದಿ ಮುಳುಗುತ
ಧರೆಯನು ತಿರುಗುವ ದೀಕ್ಷಿತ ನೀನಾದೆ || ||8||
ಕುಲಛಲವೆಂಬೀ ಮೊಳೆಯಿಲ್ಲದ ನಿ
ರ್ಮಲ ತನುವೇ ಯನಗಾಯ್ತು |
ಹೊಲೆಯನು ವಿಪ್ರನು ಶೂದ್ರನು ಯೆಂಬುವ
ಕುಲ ಸೀಲದ ಮೊಳೆ ನಿನಗಾಯ್ತು || ||9||
ತೆರೆಕೊರೆಯಿಲ್ಲದ ಖಂಡಾಕಾರದೊ
ಳಿರುವದು ಯನ್ನಯ ನಡೆಯಾಯ್ತು |
ಅಂದಿಂದೆನ್ನದೆ ಯೆಂದೆಂದಿಗು
ವಂದಂದದೊಳಿರುವದು ಯನಗಾಯ್ತು || ||10||
ಹಂದಿಯೆ ಮೊದಲಾದಾಕಾರಗಳನು
ಹೊಂದುತ ಕೆಡುವದು ನಿನಗಾಯ್ತು |
ಹಿತರೊಳಗಹಿತ ನೀನೆಂದು ಸುರುವ
ಶೃತಿ ಸಮ್ಮತವೆ ಯನದಾಯ್ತು | ||11||
ಸತತೋಪಾಸ ಕ್ಷೇತ್ರ ನಿವಾಸ
ವ್ರತಗಳು ನಿನಗುಂಟಾಯ್ತು |
ರಾಗದೊಳಿಲ್ಲದ ಮಾಯಾ ವಿಷಯದ
ಭೋಗವ ಬಯಸಲು ನೀ ಬಂದೆ |
ಶ್ರೀಗುರು ಶಂಕರ ನಡಿಗಳಿಗೀ ಶಿರ ಬಾಗಿದ ನಿಮುಷಕೆ ನೀಬೆಂದೆ ||12||

Categories
Tatvapadagalu ಶಂಕರಾನಂದ ಯೋಗಿ ಮತ್ತು ಶಂಕರಾರ್ಯರ ತತ್ವಪದಗಳು

ಶಂಕರಾನಂದ ಯೋಗಿಯವರ ಉತ್ತರ ಕೈವಲ್ಯ ನವನೀತವು

ಪಾಲಿಸು ಗುರುನಾಥ
ಪಾಲಿಸು ಗುರುನಾಥ | ಕರುಣದಿ |
ಪಾಲಿಸು ಗುರುನಾಥ ||ಪ||
ಪಾಲಿಸು ಯನ್ನನು ಪಾವನ ಚರಿತನೆ |
ನೀಲತೋಯದ ಮಧ್ಯ ರಾಜಿಸುವಾತ್ಮನೆ || ಪಾಲಿಸು ||ಅ||
ನಾಮ ರೂಪುರಹಿತ | ಆತ್ಮಾ |
ರಾಮ ತ್ರಿಜಗಭರಿತ |
ಕಾಮಿತದಾಯಕ ಕರ್ಮವಿದೂರನೆ |
ಪ್ರೇಮಾಸ್ತಿ ಭಾತಿಯ ರೂಪನೆ ನಿರಘುನೆ ||ಪಾಲಿಸು ||1||
ದುರಿತ ತಿಮಿರ ಚಂದ್ರಾ | ವಂದಿತ |
ಸುರಮುನಿ ದೇವೇಂದ್ರಾ |
ವುರುಭವರುಜೆಗೌಷಧನೆಂದೆನಿಪನೆ |
ಪರಮಾದ್ವೈತ ಪ್ರಭೋದ್ಯನೆ ಪರಮನೆ || ಪಾ ||2||
ಮೂರು ಲೋಕ ಪ್ರಭುವೆ | ಭಕ್ತೋ |
ದ್ಧಾರಕನೆನಿಸಿರುವೇ |
ಚಾರು ಹೃದಯ ಸಿಂಹಾಸನಮದ್ಯದಿ |
ಭೂರಿಯಾನಂದದಿ ಕುಳಿತಿಹ ದೇವನೆ || ಪಾಲಿಸು ||3||
ಪಂಚ ಸೂತಕ ದೂರ | ಮಿತ್ಯಪ್ರ |
ಪಂಚ ಕಲುಷದೂರ |
ಸಂಚಿತ ಮೂಲಜ್ಞಾನ ಕುಠಾರನೆ |
ಪಂಚಬ್ರಹ್ಮ ಸ್ವರೂಪನೆ ನಿರಘನೆ || ಪಾಲಿಸು ||4||
ಗುರುಶ್ರೀ ಮಹಲಿಂಗ |
ರಂಗನೇ ಪರಿಭವ ಭಂಗಾ |
ನಿರುತಾ ಖಂಡ ನಿರಂಜನಾದ್ವಯನೇ |
ನಿರುಪಮ ನಿರ್ಗುಣ ರೂಪಕನೆ || ಪಾಲಿಸು ||5||

ಬಲ್ಲವರಲ್ಲದೆ ಯಲ್ಲಾರರಿಯರು
ಬಲ್ಲವರಲ್ಲದೆ | ಯಲ್ಲಾರರಿಯರು |
ಮಲ್ಲಿಕಾರ್ಜುನ ಪೂರ್ಣಬ್ರಹ್ಮ ನೀನೆಂಬುದನೂ ||ಪ||
ರಾಮಚಂದ್ರನು ಬಲ್ಲ | ರಾಮದೂತನು ಬಲ್ಲ |
ಭೀಮನಾನುಜ ಬಲ್ಲ | ಭೀಮ ಬಲ್ಲ |
ವಾಮದೇವನು ಬಲ್ಲ | ರೋಮರುಷಿ ಬಲ್ಲ |
ಕಾಮಿತದಾಯಕ ಪ್ರಭುವು ನೀನೆಂಬುದನೂ ||1||
ಅನಿಮಿಷೇಂದ್ರನು ಬಲ್ಲಾ | ಮುನಿವಾಸಿಷ್ಠನು ಬಲ್ಲ |
ಘನ ನಾಗೇಂದ್ರನು ಬಲ್ಲ | ದಕ್ಷ ಬಲ್ಲ |
ಕನಕ ಕಶ್ಯಪು ಬಲ್ಲ | ಘನ ಭಗೀರಥ ಬಲ್ಲ|
ಅನುಪಮಾನಂದ ಸುಧಾಬ್ಧಿ ನೀನೆಂಬುದನು ||2||
ವರಶುಕ ಮುನಿ ಬಲ್ಲ | ಉರಗರಾಜನು ಬಲ್ಲ |
ಗಿರಿಜೆಯ ಪಿತ ಬಲ್ಲ | ಸ್ಮರನು ಬಲ್ಲ |
ಮರುತ ಸಖನು ಬಲ್ಲ | ತರಣಿಯ ಸುತನು ಬಲ್ಲ |
ನಿರುಪಮ ನಿರ್ಗುಣ ಬ್ರಹ್ಮ ನೀನೆಂಬುದನು ||3||
ಧನುಜ ರಾವಣ ಬಲ್ಲ | ಅನಘ ಬಾಣನು ಬಲ್ಲ |
ವಿನುತಾಗಸ್ತ ್ಯನು ಬಲ್ಲ | ಗುರುವು ಬಲ್ಲಾ |
ಘನ ಸುಧಾಕರ ಬಲ್ಲ | ವಿನುತ ಧನಪತಿ ಬಲ್ಲ |
ಅನಘನಚ್ಯುತಪ್ರತರ್ಕ್ಯ ನೀನೆಂಬುದನೂ | ||4||
ರಸನಾಧಿಪತಿ ಬಲ್ಲ | ಯೆಸೆಯುವಾನಿಲ ಬಲ್ಲ |
ಬಿಸಜ ಸಖನು ಬಲ್ಲ | ವಿಧಿಯು ಬಲ್ಲಾ |
ವಸುದೇವ ಸುತ ಬಲ್ಲ | ವಸುಧೆಗೊಡೆಯನಾದ |
ಪಶುಪತಿ ಗುರುಮಹಲಿಂಗ ನೀನೆಂಬುದನೂ ||5||

ಶರಣಾಗತ ವಜ್ರ ಪಂಜರಾ
ಶರಣಾಗತ ವಜ್ರ ಪಂಜರಾ | ಪಾಹಿ |
ಪುರಹರ ಭವಹರ ಶ್ರೀ ಚಂದ್ರಶೇಖರಾ ||ಪ||
ಸುರಕೋಟಿ ವಂದಿತಾ ಚರಣಾ | ಭಕ್ತ |
ದುರಿತ ದುಃಖಾರಣ್ಯ ಶಮನ ಸಂಸ್ಮರಣ |
ವುರಗ ಕಂಕಣ ಮಣಿ ಭೂಷಣ | ಶಂಭು |
ನಿರಘ ನಿತ್ಯಾನಂದ ಪಾರ್ವತೀ ರಮಣ ||1||
ವರಗೌರಿ ಹೃದಯವಿಹಾರಾ | ಯಿಂದ್ರ |
ಸಸಿಜೋದ್ಭವ ಮುಖ್ಯ ಚೇತೋವಿಹಾರ |
ಸುರಮುನಿ ಹೃದಯ ಸಂಚಾರ | ಚಾರು |
ಪರಬ್ರಹ್ಮಾನಂದ ಶರಧಿ ಸುಧಾಕರ ||2||
ಚರಣಶೇವಕ ಪ್ರಾಣನಾಥ | ಘೋರಾ |
ದುರಿತ ಕರ್ಮಾಭ್ರ ಜಂಝಾ ಮಾರುತಾ ||
ಸುರಸಿದ್ದ ಮುನಿಗುಣವಂದಿತಾ | ಶ್ರೀ |
ಗುರುರಂಗಲಿಂಗ ಸನ್ಮೋಕ್ಷ ಪ್ರದಾತಾ ||3||

ಪಾಹಿ ಶ್ರೀಗುರುರಾಜ ಸಂತತ
ಪಾಹಿ ಶ್ರೀ ಗುರು ರಾಜ ಸಂತತ |
ಪಾಹಿಮಾಂ ಭವಶೋಷಿತಾ |
ಪಾಹಿಬ್ರಹ್ಮ ಜ್ಞಾನ ಬೋಧಿತ |
ಪಾಹಿ ಮೂಜಗ ಪೂಜಿತಾ ||ಪ||
ಅತ್ಯತಿಷ್ಟದ್ದಶಾಂಗುಲ ಸ್ಥಿತ |
ತತ್ವಮಸಿ ಸಂಬೋಧಿತಾ |
ನಿತ್ಯ ಪೂರ್ಣಾಖಂಡಮಂಡಿತ |
ಭಕ್ತ ಹೃದಯ ವಿರಾಜಿತಾ ||1||
ಜ್ಞಾನ ಬೋಧಕ ಕರ್ಮನಾಶಕ |
ಹೀನ ಜನ್ಮೋತ್ತಾರಕಾ |
ಜ್ಞಾನ ಶಕ್ತಿ ಹೃದಯ ವ್ಯಾಪಕ |
ಜ್ಞಾನ ಭೂಮಿ ಪ್ರಕಾಶಕಾ ||2||
ಶರೀರ ಮೋಹ ಭ್ರಾಂತಿನಾಶನ |
ನಿರುಪಮಾತ್ಮ ನಿರಂಜನಾ |
ಪರಮ ಗುರು ಮಹಲಿಂಗ ಸಜ್ಜನ |
ದುರಿತ ಭವ ಭಯ ಭಂಜನಾ || ಪಾಹಿ ಶ್ರೀ ಗುರು ||3||

ಗುರುವಿನಲಕ್ಷಣವಾ
ಗುರುವಿನಲಕ್ಷಣವಾ | ಕ್ರಮದಿಂ
ದೊರೆಯುವೆನಾನೀಗಾ ||ಪ||
ವರಭಕ್ತಿ ಭಾವದಿಂದಾಲಿಸು ನೀನೂ |
ಗುರುಕುಲ ವಾಸನೆ ಮಾನಸ ರಾಜನೆ ||ಅ||
ಪರಲೋಕದಾಸೆಯನೂ ತೋರಿಸಿ|
ವರಕಾಮ್ಯ ವ್ರತಗಳನೂ |
ವರೆಯುತ ಶಿಷ್ಯನ ದ್ರವ್ಯವಶಳೆಯುವ |
ಪುರುಷನೆ ಕಾಮ್ಯದ ಗುರುವೆನಿಸುವನು ||1||
ವರಜ್ಞಾನ ಖಂಡದಿಂದಾ ಖಂಡ್ರಿಸಿ |
ವುರುಕರ್ಮ ಸಂಕೋಲೆಯಾ |
ಪರಮ ಜೀವೈಕ್ಯ ಜ್ಞಾನವ ಬೋಧಿಪ |
ಗುರುವೇ ಕಾರಣ ಗುರುವೆನಿಸುವನೂ ||2||
ತನುವಭಿಮಾನವನೂ | ಬಿಡಿಸುತ |
ಘನತತ್ವ ಬೋಧನೆಯಿಂದಾ |
ಅನುಪಮ ಗುರು ರಂಗನಾಥ ಕೈವಲ್ಯವ |
ವಿನಯದಿ ಪಾಲಿಪ ವಿಹಿತ ಗುರುವೆನಿಪನು || ಗುರುವಿನ ಲಕ್ಷಣವಾ ||3||

ಶ್ರೀ ಗುರುವಿನ ಬೋಧೆ
ಶ್ರೀ ಗುರುವಿನ ಬೋಧೆಯಾಲಿಸಿದಾತನಿ |
ಗಾಗಲಹುದು ಜೀವನ್ಮುಕ್ತಿ ||ಪ||
ಗುರು ದೇವತಾ ಭಕ್ತಿಯಲಸದೆ ನೀ ಮಾಡು|
ವಿರತಿ ಭಾಗ್ಯವ ನಿತ್ಯ ಕಾಪಾಡು|
ಪರಹಿಂಸೆಗಳ ಮಾಡದಿರು| ಸತ್ಯವನಾಡು |
ವರಶಾಂತಿ ಪತ್ನಿಯ ಕೊಡೆಂದು ಬೆಸಸುವ|| ಶ್ರೀ ಗುರುವಿನ ||1||
ಪರರ ನಿಂದನೆಯಾತ್ಮಸ್ತುತಿಯ ಮಾಡದಲಿರು|
ದುರುಳ ಸಂಗದೊಳಿರಬೇಡವೆಂದಿಗೂ|
ವುರುಕ್ರೋಧ ಮೊದಲಾದಂಥ ಶತೃಗಳನು|
ವರಶಾಂತಿ ಖಡ್ಗದಿ ಶೀಳೆನ್ನುತುಸುರುವ || ಶ್ರೀ ಗುರುವಿನ ||2||
ಸ್ತುತಿನಿಂದೆಗಳನೊಂದೆ ಸಮದಿ ಭಾವಿಸುತ ಸಂ |
ಸೃತಿಯ ಸ್ವಪ್ನದ ಪರಿ ಪುಸಿಯೆನ್ನುತರಿತು|
ಸತತಾತ್ಮಾನಾತ್ಮಾ ವಿಚಾರವಗೈಯ್ಯುತ್ತಾ|
ಮತಿಯೊಳಾತ್ಮನ ಹೊಂದಿರೆನ್ನುತಲೊರೆಯುವ || ಶ್ರೀ ಗುರು ವಿನ ||3||
ವುಸುರದಿರನ್ಯರೊಳದ್ವೈತ ಬೋಧೆಯ |
ಕುಶಲದಿ ನಿನ್ನೊಳಗಾನಂದಿಸುತ್ತಾ |
ಅಸಮಮುಕ್ತಾಂಗನಾಮಣಿಯನ್ನ ಕೂಡೆನ್ನು |
ತೊಸೆದು ಸಂಬೋಧನೆಯನು ಮಾಡುವ || ಶ್ರೀ ಗುರುವಿನ ||4||
ತಾರಕ ಸಾಂಖ್ಯಾಮನಸ್ಕ ಯೋಗಗಳ ವಿ|
ಚಾರದಿಂದಲಿ ನಿನ್ನ ನಿಜವರಿತು |
ಧೀರ ಶ್ರೀಗುರು ಮಹಾಲಿಂಗರಂಗನ ಹೊಂದಿ |
ಭೂರಿ ಬ್ರಹ್ಮಾನಂದನಾಗಿರೆಂದರುಪುವ || ಶ್ರೀ ಗುರುವಿನ ಬೋದೆ ||5||

ಭಜಿಸು ಹೃದಯದಿ ದೇಶೀಕೇಂದ್ರನ
ಭಜಿಸು ಹೃದಯದಿ ದೇಶೀಕೇಂದ್ರನ |
ಭಜಿಸು ಮುನಿಕುಲ ಚಂದ್ರನ |
ಭಜಿಸು ಸದ್ಗುಣ ಸಾಂದ್ರನಾ ||ಪ||
ಸ್ಫುರಿಪ ಸಚ್ಚಿತ್ಸುಖ ನಿರಾಶ್ರಿತ |
ಪರಮಹಂಸ ಗತಿಸ್ಥಿತಾ |
ಶರಣ ಹೃತ್ಸರಸೀರುಹಾಶ್ರಿತ |
ನಿರಘ ಪಾಲಿಸು ಯೆನ್ನುತಾ ||1||
ಖ್ಯಾತಿ ವಾಗ್ಮಾನಸಕೆ ದೂರನ |
ಪಾತಕಾ ಭಶ್ವಸನನ |
ನೇತಿ ವಚನಸುವೇದ ಮುನಿಜನ |
ಪ್ರಾತವಂದಿತನನುದಿನ ||2||
ದುರಿತತಿಮಿರ ಪ್ರಚಂಡ ತಪನನ |
ವರ ಮುಕುತಿ ಪದವೀವನ ||
ಸುರಗಣಾರ್ಚಿತ ಚರಣಕಮಲನ|
ಪರಮ ಶ್ರೀಗುರು ರಂಗನ || ಭಜಿಸು ||3||

ವರ ಶಿಷ್ಯ ಲಕ್ಷಣವಾ
ವರ ಶಿಷ್ಯ ಲಕ್ಷಣವಾ | ನೊರೆಯುವೆನು ನಾನೀಗ |
ಮರೆಯದಾಲಿಸು ಭಕ್ತಕುಲ ಪ್ರದೀಪಕನೇ ||ಪ||
ಧರೆಯೊಳಾತ್ಮ ವಿಚಾರ | ದೊಳಗೆ ಮನಮುಳುಗೀ |
ನಿರುತಯಿಹಪರ ಸುಖಗಳೆರಡನು ನೀಗೀ |
ವರಶಮಾದಿಯಷಟ್ಕ | ಸಂಪನ್ನನಾಗೀ |
ಪುರುಷಾರ್ಥ ಬಯಸುವನೇ | ಶಿಷ್ಯನೆನಿಸುವನೂ ||1||
ಚಿತ್ತದೊಳು ಸ್ತ್ರೀಸಂಗ | ದಾಸೆಯನ್ನಳಿದೂ |
ನಿತ್ಯ ವಾಪ್ತಾಂಗಾದಿ | ಗುರುಶೇವೆಗೈದು ||
ತತ್ವಮಸಿ ವಾಕ್ಯವನೂ | ವಿಸ್ತರದಿ ತಿಳಿದು |
ಮುಕ್ತನಹೆನೆಂಬಾತ ಶಿಷ್ಯನೆನಿಸುವನೂ || ವರಶಿಷ್ಯ ||2||
ಗುರುವಚನ ಶಾಸ್ತ್ರಗಳಾ | ನಂಬಿಕೊಂಡಿರುತ |
ವರ ಶರೀರೋಪಾಧಿಗಳನಳಿದು ಸತತ |
ನಿರುತ ವಾಸನೆ ಮೂರ | ತೊರೆದುಯಿರುವಾತ |
ಗುರು ರಂಗಲಿಂಗನಿಗೆ ಶಿಷ್ಯನೆನಿಸುವನೂ||
ವರಶಿಷ್ಯ ಲಕ್ಷಣವಾ ||3||

ಗುರುಬೋಧೆ ತ್ರೈವಿಧವಾಗಿ
ಗುರುಬೋಧೆ ತ್ರೈವಿಧವಾಗಿ | ತಾನೇ |
ಸ್ಫುರಣಿಯಪ್ಪುದು ಶಿಷ್ಯರಧಿಕಾರದಂತೆ ||ಪ||
ಅಧಮನಿಗೊರೆದ ಬೋಧೆಯು ಕಾದ ಕಬ್ಬಿ|
ಣದ ಮೇಲೆರೆದ ನೀರಿನಂದದಲಿ |
ತುದಿಗೆ ನಾಶನಮಪ್ಪುದಲ್ಲದೆ ಶಿಷ್ಯನ |
ಹೃದಯದಿ ಲವಮಾತ್ರವಾದರೂ ನಿಲ್ಲದು || ಗುರುಬೋಧೆ ||1||
ಮಧ್ಯಮನಿಗೆ ಬೋಧೆ ಮಾಡಿದಧ್ಯಾತ್ಮ |
ವಿದ್ಯವು ಜಲದೊಳಗಾಜ್ಯದ ಬಿಂದು|
ಬಿದ್ದರೆ ಹೆತ್ತುಕೊಂಬಂದದಿ ಶಿಷ್ಯನ |
ಬುದ್ಧಿಯೊಳತಿ ಮಾಂದ್ಯಮಾಗಿ ನಿಲ್ಲುವುದು || ಗುರುಬೋಧೆ ||2||
ವುತ್ತುಮಗೊರದಾತ್ಮ ವಿದ್ಯವು ನಿರ್ಮಲ |
ಶುಕ್ತಿಯೊಳಗೆ ಸ್ವಾತಿ ಜಲಬಿಂದು ಜೋಕಿ |
ಮುತ್ತಾದ ಚಂದದಿ ಶಿಷ್ಯನ ಹೃದಯದಿ |
ನಿತ್ಯ ಶ್ರೀ ಗುರು ರಂಗನಾಗಿ ನಿಲ್ಲುವದು || ಗುರುಬೋಧೆ ||3||

ಪಿಡಿಯೆಲೊ ಸುಜ್ಞಾನ ಮಾರ್ಗವ
ಪಿಡಿಯೆಲೊ ಸುಜ್ಞಾನ ಮಾರ್ಗವ ನೀನು|
ಪಿಡಿದರೆ ಸೇರುವೆಯಪವರ್ಗವ ||ಪ||
ಬಿಡದೆ ಮಾಡುವ ಕರ್ಮಫಲದಿಂ |
ದಡರಿ ಸ್ವರ್ಗಕ್ಕೆ ಮರ್ತ್ಯಕಿಳಿಯುತ |
ತುಡುಗುದನವಿನ ಪರಿಯ ತಿರುಗುತ |
ಕ್ವಡುವೆ ನೀನದರಿಂದಲೀಗಲೆ ||ಅ||
ಅನಘ ಕೇಳೀ ಕಲಿಯುಗದೀ | ನರ |
ಮನುಜರು ಚಿತ್ತ ಶುದ್ಧಿಯ ದ್ವಾರದಿ |
ಅನುದಿನಾತ್ಮನ ಸೇವೆಗೈಯಲು |
ತನುವ ಧ್ಯಾನವಗೈಯ್ಯೆಮನವನು |
ವಿನುತ ಶಾಸ್ತ್ರವ ಗ್ರಹಿಸೆ ಬುದ್ದಿಯ |
ವನಜಭವನಿತ್ತಿರುವದರಿತು|| ಪಿಡಿಯಲೋ ||1||
ಅನಿಮಿತ್ತಾನಂತ ದೇಹಗಳ ಕಾ |
ಲನಿಗಿತ್ತು ನೀ ಕೆಟ್ಟು ಹೋದೆಲ್ಲೋ ಮೂಳ |
ಮನವೊಲಿದು ಮದನಾರಿಗೊಂಡು |
ತನುವನೊಪ್ಪಿಸಿ ತಪವಗೈದೊಡೆ |
ತನು ಸಹಸ್ರಗಳಿಂದ ಮಾಡಿದ |
ಘನ ತರದ ಪಾತಕವು ಹರಿವುದು || ಪಿಡಿಯಲೋ ||2||
ಯೋಗಧ್ಯಾನಾಧಿಕರ್ಮವನು | ಯಜ್ಞ |
ಯಾಗಾದಿ ಬಲು ಕೋಟಿಗಳನು |
ನೀಗಿ ನಿರ್ಮಲನಾಗಿ ಘನಶಿವ |
ಯೋಗದೊಳು ಮನ ಮುಳುಗಿ ಬ್ರಹ್ಮವೇ |
ಯಾಗಿ ಬಹಳ ಜ್ಞಾನ ರೂಪದ |
ಮೂಗ ಮಾರಿಯ ಗೆಲುವೆಯದರಿಂ || ಪಿಡಿಯೆಲೊ ||3||
ಭೂರಿ ಗಾಳಿಯು ಬಂದ ಕಾಲದಿ | ಧಾನ್ಯಾ |
ತೂರಿಕೊಳ್ಳಲು ಬೇಕೆಂಬುವ ಚಂದದಿ |
ಧೀರಗುರುವಿನ ಸೇರಿದಾಗಲೆ |
ಭೂರಿಬ್ರಹ್ಮ ವಿಚಾರಪಾರಾ |
ವಾರನೆನಿಸುತ ಸೂಕ್ಷ್ಮದಿಂದಲೆ |
ಸಾರಿ ಮೋಕ್ಷವ ಪಡೆಯಬೇಕೈ || ಪಿಡಿಯಲೋ ||4||
ಪರಮಸಾಲೋಕ್ಯಾದಿ ಪದವಿಯ | ಮೀರಿ |
ದುರುತರ ಸಾಯುಜ್ಯ ಘನ ಮುಕುತಿಯ |
ನೆರೆಪಡೆವನುತ್ತಮನು ಕೀಟವು |
ವರಭ್ರಮರ ಧ್ಯಾನದಲಿ ಭ್ರಮರವೇ
ಧರೆಯೊಳಾದಂತತುಳ ಸೋಹಂ |
ಸ್ಮರಣೆಯಿಂ ಗುರು ರಂಗನಾಗುವೆ || ಪಿಡಿಯಲೋ ||5||

ಯಿದುಯೀಗ ಸಮಯಾ
ಯಿದುಯೀಗ ಸಮಯಾ | ಕೇಳೆಲೊ ಪುತ್ರ |
ಯಿದುಯೀಗ ಸಮಯಾ ||ಪ||
ಯಿದುಯೀಗಸಮಯ ಜಗ ಭ್ರಾಂತಿಯಳಿದು |
ಪದುಳ ಸದ್ಗತಿ ಹೊಂದಲೀ ಜಗದೊಳಗೆ|| ಯಿದು |ಅ||
ಪರಮೇಷ್ಟಿಯಿಂದಾ | ನಿರ್ಮಿತವಾಗಿರುವ ಜನ್ಮದೊಳು |
ಮರವೆಯ ಪಶು ಪಕ್ಷಿ ಮೃಗ ಜನ್ಮವಲ್ಲದೆ|
ಅರುವಿನ ಜನ್ಮ ಬಂದಿರೆ ಮುಕ್ತವಾಗಲು ||ಯಿದು ||1||
ತರಳ ನೀನಲ್ಲಾ| ವೃದ್ಧನು ರೋಗಿ |
ಮರುಳನಾಗಿಲ್ಲಾ| ಕರುಣೇಂದ್ರಿಯಗಳೊಂದು ಲೋಪವಾಗಿಲ್ಲ|
ವರಕಾಯ ದೃಢವಾಗಿ ಶೋಭಿಪುದಾಗಿ ||ಯಿದು ||2||
ಕರ್ಮ ಫಲವ| ಲೋಗರಿಗೆಲ್ಲ|
ಪೇರ್ಮೆಯಿಂದೀವಾ| ಬ್ರಹಾದಿಗಳಿಗೊಮ್ಮೆಗೋಚರಿಸದ ಪರ|
ಬ್ರಹ್ಮದಿ ಬೆರತು | ಜೀವತ್ವವನಳಿಯಲು || ಯಿದುಯೀಗ ||3||
ಭುವನ ಬ್ರಹ್ಮಾಂಡ| ಪಿಂಡಾಂಡದಿ|
ತವೆ ತುಂಬಿಕೊಂಡು| ರವಿ ಶಶಿಕೋಟಿ ಕಾಂತಿಗೆ ಕಾಂತಿಯಾಗಿರು|
ವ ವಿರಳಾತ್ಮನ ಗುರು ಮುಖದಿಂದಲರಿಯಲು ||ಯಿದು ||4||
ವುರುದಾರಿದ್ರನಿಗೆ| ಘನರತ್ನವು |
ದೊರತಂತೆ ನಿನಗೆ | ಗುರು ರಂಗನೆಂಬ ರತ್ನವು ದೊರಕಲು|
ವರಮುಕ್ತಿ ರಾಜ್ಯವ ಸುಲಭದಿ ಪಡೆಯಲು ||ಯಿದು ||5||

ನಂಬು ನಂಬೆಲೊ ಮನ್ಮಜಾ
ನಂಬು ನಂಬೆಲೊ ಮನುಜಾ | ಗುರುಪಾದವ |
ನಂಬು ನಂಬೆಲೊ ಮನುಜಾ ||ಪ||
ಡಂಭಕ ಸಂಸಾರ ಬಾಧೆಯನ್ನಳಿದು ಯೀ|
ಕುಂಭಿಣಿಯೊಳು ಮುಕ್ತನಾಗಬೇಕಾದರೆ || ನಂಬು ||ಅ||
ನಗುರೋರಧಿಕವೆನ್ನುತ | ಶೃತ್ಯಾಗಮ |
ಪೊಗಳುತ್ತಲಿರೆ ಸಂತತ |
ಮೃಗಧರನಗಧರ |ಮುಖ್ಯರು ಪೂಜಿಸಿ |
ಜಗದೊಳು ಪ್ರಖ್ಯಾತರಾಗಿ || ನಂಬು ||1||
ಮುಟ್ಟಾಲು ಗುರುಪಾದವ ಪೂರ್ವದ ಕರ್ಮ |
ನಷ್ಟವಪ್ಪುದು ಧ್ಯಾನವ |
ನಿಷ್ಟೆಯೀಂ ಮಾಡಲು ಬೆಟ್ಟದಷ್ಟಘವೆಲ್ಲ|
ಸುಟ್ಟು ಜ್ಞಾನೋದಯವಾಗುವುದದರಿಂದ || ನಂಬು ||2||
ಧರೆಯ ಜೀವರಿಗೆ ಬಂದ | ಅಜ್ಞಾನವ |
ಹರಿಸುವೆ ನೀಗಲೆಂದು |
ಶಿರಕರ ಚರಣಾದಿಗಳಿಂದ ಪರಬ್ರಹ್ಮ|
ಗುರು ರೂಪದಿಂದವತಾರಗೈದಿಹನಾಗಿ || ನಂಬು ||3||
ಗುರುವೇ ಮಾತಾಪಿತನೂ | ಕುಲದೇವನೂ |
ಗುರುವೆ ತಾರಕ ರೂಪನು |
ಹರ ಮುನಿದರೆ ಗುರು ಕಾಯುವನಿಂಥ |
ಗುರು ಮುನಿದರೆ ಹರ ಕಾಯಲಾರನು ಮುನ್ನ || ನಂಬು ||4||
ಚಾರು ವೇದಾಂತವನ್ನು | ವಿಸ್ತರವಾಗಿ |
ಭೂರಿ ಸಿದ್ಧಾಂತವನ್ನು |
ಮೀರದೆ ಬೋಧಿಪ ಕರುಣ ಸಾಗರನಾದ |
ಕಾರಣ ಗುರು ಮಹಲಿಂಗನ ಚರಣವ || ನಂಬು ನಂಬೆಲೊ ಮನುಜ ||5||

ಕೇಳೆಲೋ ವೇದಾಂತ ವಾಕ್ಯ
ಕೇಳೆಲೋ ವೇದಾಂತ ವಾಕ್ಯ | ಸತ್ಯವಾಕ್ಯ ||ಪ||
ಕನ್ಯದಾನವಗೈದು ಪುಣ್ಯವ ಮಾಡಿದರೂ |
ತನ್ನ ತಾನರಿಯದೊಡಿಲ್ಲಾ | ಮುಕ್ತಿಯಿಲ್ಲಾ ||1||
ಅಗ್ನಿಷ್ಟೋಮವಗೈದು | ದೀಕ್ಷಿತನೆನ್ನಿಸಿ |
ಸ್ವರ್ಗಕ್ಕೈದಾತನಿಗಿಲ್ಲಾ || ಮುಕ್ತಿಯಿಲ್ಲಾ ||2||
ಮಾನಿನಿಯಳಿದು | ಸನ್ಯಾಸಿ ತಾನಾದರೂ |
ಜ್ಞಾನವೊಂದಿಲ್ಲದೊಡಿಲ್ಲ | ಮುಕ್ತಿಯಿಲ್ಲ ||3||
ಕುಂಡಲಿ ಭೇದಿಸಿ | ಮಂಡೆಯೊಳಮೃತವ |
ನುಂಡುಂಡು ದಣಿದವಗಿಲ್ಲ | ಮುಕ್ತಿಯಿಲ್ಲ ||4||
ಮಹಲಿಂಗ ಗುರುವಿನೋಳ್ಬೆರೆಯದೆ ಲೋಕದಿ |
ಮಹಿಮೆಯ ತೋರಿದೊಡಿಲ್ಲಾ | ಮುಕ್ತಿಯಿಲ್ಲ ||
ಕೇಳೆಲೋ ವೇದಾಂತ ವಾಕ್ಯ ||5||

ಕೇಳೆಲೋ ಸಿದ್ಧಾಂತ ವಾಕ್ಯ
ಕೇಳೆಲೋ ಸಿದ್ಧಾಂತವಾಕ್ಯ | ಸತ್ಯವಾಕ್ಯ ||ಪ||
ಮೂರೊಂದುಗೂಡುತ್ತಾ | ಮುಕ್ತಿ ದ್ವಾರವ |
ಸೇರಲು ನಿಜಮುಕ್ತಿ ಸಿದ್ಧಾ| ಮುಕ್ತಿಸಿದ್ಧಾ || ಕೇಳೆಲೋ ||1||
ಲಿಂಗಚಕ್ರದಿ ಸೇರಿ | ಲಿಂಗದೇಹವು ತಾನೆ |
ಭಂಗವಾಗಿರೆ ಮುಕ್ತಿಸಿದ್ಧ | ಮುಕ್ತಿಸಿದ್ಧಾ ||2||
ಸತ್ತು ಚಿತ್ತೆಂಬುವ | ವುತ್ತಮಾನ್ನಾಮೃತ |
ತೃಪ್ತನಾಗಿರೆ ಮುಕ್ತಿಸಿದ್ಧ | ಮುಕ್ತಿಸಿದ್ಧಾ ||3||
ಹೆಣ್ಣು ಹೊನ್ನು ಮಣ್ಣಿ | ನಾಶೆಯನಳಿದಂತಾ |
ಪೂರ್ಣಕಾಮಗೆ ಮುಕ್ತಿಸಿದ್ದ | ಮುಕ್ತಿಸಿದ್ಧಾ || ಕೇಳೆಲೋ ||4||
ನಿರುತ ಶುದ್ಧಾದ್ವೈತ | ಗುರು ರಂಗನಾಗಿರೆ |
ಪರಮ ಜೀವನ್ಮುಕ್ತಿ ಸಿದ್ದಾ | ಮುಕ್ತಿಸಿದ್ಧಾ || ಕೇಳೆಲೋ ||5||

ಸರ್ವರಧಿಕಾರಿಗಳು ಯೆನಿಸಿಕೊಂಬರು
ಸರ್ವರಧಿಕಾರಿಗಳು ಯೆನಿಸಿಕೊಂಬರು ಮಗನೆ |
ವುರ್ವಿಗತಿಶಯವಾದ ಮುಕ್ತಿ ಹೊಂದಲಿಕೆ ||ಪ||
ನೆರೆ ಜಾಣನಾಗಿರಲಿ ಮೂರ್ಖನಾಗಿರಲಿ |
ಸಿರಿವಂತನಾಗಿರಲಿ ದಾರಿದ್ರನಾಗಿರಲಿ |
ಹಿರಿಯನೆಂದೆನಿಸಿರಲಿ ಕಿರಿಯನೆಂದೆನಿಸಿರಲಿ |
ವುರು ನಿರಕ್ಷರಕುಕ್ಷಿ ಶಾಸ್ತ್ರಿಯಾಗಿರಲಿ || ಸರ್ವರಧಿಕಾರಿಗಳು ||1||
ಆದಿವರ್ನದ ಕ್ಷತ್ರಿ ವೈಶ್ಯನಾಗಿರಲಿ |
ಶೂದ್ರ ಹೂಣಕಿರಾತ ಮ್ಲೇಂಛನಾಗಿರಲಿ |
ಭೇದ ಮತ ಚಾರ್ವಾಕ ಕೌಳನಾಗಿರಲಿ |
ವ್ಯಾಧ ಕಟುಕಾಂಬಷ್ಟಭ್ರಷ್ಟನಾಗಿರಲಿ || ಸರ್ವ ||2||
ಕುಲದಿ ಹೊಗಳಿಸಿಕೊಳಲಿ ಕುಲಗೇಡಿಯಾಗಿರಲಿ |
ಯಿಳೆಯೊಳಗೆ ಪಾಷಾಂಡಿ ಪಾಪಿಯಾಗಿರಲಿ |
ಬಲು ಕೃಪಣನಾಗಿರಲಿ | ಧರ್ಮಿಯಾಗಿರಲಿ |
ಹೆಳವ ಕುಂಟ ಕುರೂಪಿ ಚಲುವನಾಗಿರಲಿ || ಸರ್ವರಧಿಕಾರಿಗಳು ||3||
ಬಲಿ ಶೂರನಾಗಿರಲಿ ರಣಹೇಡಿಯಾಗಿರಲಿ |
ಬಲವಂತನಾಗಿರಲಿ ಬಲಹೀನನಾಗಿರಲಿ |
ಲಲನೆ ಪುಂಶ್ಚಲಿಗ ರತಿ ವೇಶ್ಯಳಾಗಿರಲಿ |
ಯಿಳೆಯೊಳೆಲ್ಲರ ಮನೆಯ ದಾಸನಾಗಿರಲಿ ||4||
ಮೇದಿನಿಯ ಭೋಗಾಭಿಲಾಷೆಯನು ನೀಗಿ |
ಸಾದರದಿ ಮೋಕ್ಷಾಭಿಲಾಷೆಯುತನಾಗಿ |
ಸಾಧು ಸಂಘವ ಬೆರೆತು ಅರಿವರ್ಗವಳಿದು |
ಆದಿಗುರು ರಂಗನಡಿ ಭಕ್ತಿಯೊಂದಿರಲು ||
ಸರ್ವರಧಿಕಾರಿಗಳು ಯೆನಿಸಿಕೊಂಬರು ಮಗನೆ ||5||

ಅಧಿಕಾರಿಯೆನಿಸುವನು
ಅಧಿಕಾರಿಯೆನಿಸುವನು | ಜೀವನ್ಮುಕ್ತಿ |
ಗಧಿಕಾರಿಯೆನಿಸುವನು ||ಪ||
ವಿದಿತ ಶಮಾದಿ ಸದ್ಗುಣದಿಂದಲೊಪ್ಪುತ |
ಹೃದಯದೊಳಿಹಪ ದಾಸೆಯನಳಿಯುತ || ಅಧಿಕಾರಿ ||ಅ||
ವುರಿಯುವ ತಾಪತ್ರಯಾಗ್ನಿ ಮಧ್ಯದಿ ಬಿ |
ದ್ದುರುಳಿ ದುಃಖಾಶ್ರುವಿಂ ಕೈತೊಳೆಯುತಲಿ |
ಪರತತ್ವ ಬೋಧಾಮೃತದಿಂದ ತಣಿಸುವ |
ಗುರುಚರಣ ಸೇರಿ ಸುಖಿಸಬೇಕೆಂಬಾತ || ಅಧಿಕಾರಿ ||1||
ಮುತ್ತುಮಾಣಿಕ ಹೇಮ ಭೂಮಿ ಕಾಮಿನಿಯರ|
ನಿತ್ಯಭೋಗಂಗಳು ಶಾಶ್ವತವಲ್ಲೆಂದು |
ಚಿತ್ತದೊಳರಿವುತ್ತವುಗಳತ್ಯಕ್ತಗೈದು |
ನಿತ್ಯವಾದಾತ್ಮನ ಹೊಂದಬೇಕೆಂಬಾತ ||ಅಧಿಕಾರಿ ||2||
ಧರಣಿಮಂಡಲದೊಳಗಧಿಕವೆಂದೆನಿಸುವ |
ವರಚಕ್ರವರ್ತ್ಯಾದಿಗಳ ಪದವಿಗಳೊಂದು |
ಸ್ಥಿರವಿಲ್ಲವೆನ್ನುತ ಗುರುರಂಗನಡಿ ಹೊಂದಿ|
ಪರಮ ಬ್ರಹ್ಮಾನಂದ ಹೊಂದಬೇಕೆಂಬಾತ || ಅಧಿಕಾರಿಯೆನಿಸುವನು ||3||

ಶ್ರೀ ಗುರುಸೇವೆಯ ಮಾಡೆಲೊ
ಶ್ರೀ ಗುರುಸೇವೆಯ ಮಾಡೆಲೊ ವುರುಭವ |
ರೋಗವಳಿದು ಮುಕ್ತನಾಗುವೆಯದರಿಂದ ||ಪ||
ತನುವ ದಂಡಿಸಿ ಗುರುಪೂಜೆಯಗೈಯುತ್ತ |
ಮನವ ನಿಲ್ಲಿಸಿ ಗುರುಮಂತ್ರವ ಜಪಿಸುತ್ತ|
ಧನವನೊಪ್ಪಿಸಿ ಗುರುವಿನಿಷ್ಟಾರ್ಥವ ಸಲಿಸುತ್ತ
ತನುಮನಧನವನೀಪರಿಯಿತ್ತು ಮುದದಿಂದ || ಶ್ರೀ ಗುರುಸೇವೆಯ ||1||
ಗುರುಭಕ್ತಿಯೆಂಬುವ ಮನೆಯೊಳಗಿರುತ |
ವಿರತಿಯೆಂಬುವ ತಂದೆಯನ್ನು ಪೋಷಿಸುತ |
ವುರುಶಾಂತಿಯೆಂಬ ಸತಿಯ ಕೂಡಿರುತ |
ವರಜ್ಞಾನವೆಂಬ ಪುತ್ರನ ಪಡೆದನುದಿನ || ಶ್ರೀ ಗುರುಸೇವೆಯ ||2||
ಸತ್ಯವೆಂಬ ಮಾತೆಯನ್ನು ಪಾಲಿಸುತಲಿ |
ನಿತ್ಯಸಾಧುಗಳೆಂಬ ನೆಂಟರ ಬೆರದು |
ಚಿತ್ತಶುದ್ಧಿಯದೆಂಬ ಕರ್ಮವನು ನಡೆಸುತ್ತ |
ನಿತ್ಯ ಗೃಹಸ್ತ ಧರ್ಮವ ಬಿಡದನುದಿನ || ಶ್ರೀ ಗುರುವ ಸೇವೆಯ ||3||
ನಿರುತವೀಪರಿಯ ಸಂಸಾರಗೈವಗೆ ಮುಕ್ತಿ |
ಕರತಲಾಮಲಕದಂತಾಗುವುದಲ್ಲದೆ |
ತರುಣಿಸುತರನುಳಿದಡವಿಯ ಸೇರುವ |
ಬರಡುವಿರಕ್ತಿಯಿಂ ಗತಿಯಾಗದದರಿಂದ || ಶ್ರೀ ಗುರುವ ಸೇವೆಯು ||4||
ಆರು ವರ್ಗಗಳಷ್ಟಮದಗಳ ತುಳಿದು |
ಕಾರಣ ಗುರು ಮಹಲಿಂಗನೋಳ್ಬೆರೆದು |
ಭೂರಿಬ್ರಹ್ಮಾನಂದ ಸುಧೆಯನು ಸವಿದು |
ಧಾರುಣಿಯೊಳಗೆಲ್ಲರಂತೆ ನೀನಿರುತ || ಶ್ರೀ ಗುರುವಿನ ಸೇವೆಯು ||5||

ಏಳಯ್ಯ ಬೆಳಗಾಯಿತು
ಏಳಯ್ಯ ಬೆಳಗಾಯಿತು | ಶಿವನೇ |
ಏಳಯ್ಯ ಬೆಳಗಾಯಿತು ||ಪ||
ಏಳು ಕಲಿಮಲಹರಣ | ಏಳು ಭವಭಯ ಹರಣ |
ಏಳು ಶರಣರ ಶರಣ | ಏಳುವುನ್ಮನಿಯೋಗ |
ನಿದ್ರೆಯಲಿಹನೇ | ಯೇಳಯ್ಯ ||ಅ||
ವರಭೋಧೆಯೆಂತೆಂಬ ವರುಣನುದಯಿಸುತಿರಲು |
ವುರತರಾ ಜ್ಞಾನ ತಮವಿರದೆ ಓಡುತಿದೆ |
ದುರಿತವೆಂಬುವ ಕೌಸಿಕವು ಕಂಗೆಡುತಲಿದೆ |
ಪರನಾದವೆಂತೆಂಬ ಕೋಳಿ ಕೂಗುತಿದೆ | ಏಳಯ್ಯ ||1||
ಅರಿವರ್ಗಮದವೆಂಬ ನಕ್ಷತ್ರವಡಗುತಿದೆ |
ದುರಿತ ಕರ್ಮಗಳೆಂಬ ಕುಮುದಗಳು ಕೊರಗುತಿವೆ |
ಪರಿಪರಿಯ ಸಂಸಾರವೆಂಬ ಕನಸಳಿಯುತಿದೆ |
ಚರಿಪ ಚೇತೋಚಂದ್ರ ಕಳೆಯು ತಾನಡಗುತಿದೆ | ಏಳಯ್ಯ ||2||
ತಿಳಿ ಹೃದಯವೆಂತೆಂಬ ತಾಮರಸವರಳುತಿದೆ |
ಲಲಿತಶಮೆದಮೆ ಜೊಕ್ಕವಕ್ಕಿಯಾಡುತಿದೆ |
ಸಲೆಷಡಕ್ಷರವೆಂಬ ಭ್ರಮರ ಝೇಂಕರಿಸುತ್ತಿದೆ |
ತಳತಳಿಪ ಚಿತ್ಸೂರ್ಯನುದಯವಾಗಿಹನು | ಯೇಳಯ್ಯ ||3||
ನಿತ್ಯ ಬ್ರಹ್ಮಾನಂದ ನಗರಿಗೊಡೆಯನೆ ಶಿವನೆ |
ವುತ್ತುಮದ ಶೃಂಗಾಟವೆಂಬ ಸಿಂಹಾಸನದಿ |
ಅರ್ಥಿಯಿಂದಲಿ ಕುಳಿತು ತತ್ವವೆಂತೆಂಬ |
ಪೃಥ್ವಿ ಜನರನು ಪರಿಪಾಲಿಸಭವಾ || ಯೇಳಯ್ಯಾ ||4||
ನಿನ್ನ ಸನ್ನಿಧಿಯಲ್ಲಿ ಕಾದುಕೊಂಡಿರುವೆನಗೆ |
ಮುನ್ನ ಬ್ರಹ್ಮಾತ್ಮೈಕ್ಯವನ್ನು ಬೋಧಿಸುತ |
ನನ್ನಿಯಿಂದಲಿ ಸಲಹೋ ಗುರು ಮಹಾಲಿಂಗ |
ನೆನ್ನಿಸಿರುತಿಹ ಚಿನ್ಮೂಲಗಿರಿವಾಸನೇ ಶಿವನೇ |
ಯೇಳಯ್ಯಾ ಬೆಳಗಾಯಿತು ||5||

ಶಿವಮಂತ್ರವೊಂದೇ ಸಾಲದೇ
ಶಿವಮಂತ್ರವೊಂದೇ ಸಾಲದೇ |
ಭವದುರ್ಗಮುರಿದು | ಮುಕ್ತಿರಾಜ್ಯವನ್ನೀವ | ಶಿವಮಂತ್ರ ||ಪ||
ಘನದಿ ಮಾರ್ಕಾಂಡೇಯನನ್ನು ಸಲಹಿದ ಮಂತ್ರ |
ಸನಕ ಶೌನಕ ಮುಖ್ಯರೊಲಿದು ಪಾಡುವ ಮಂತ್ರ |
ಘನಪಾತ ಕಾರಣ್ಯಜ್ವಲನವೆನಿಸಿಹ ಮಂತ್ರ |
ಧನದ ಮಿತ್ರನ ಮನದ ಕೊನೆಯೊಳಾಡುವ ಮಂತ್ರ | ಶಿವಮಂತ್ರ ||1||
ಮುನಿವರರಹೃದ್ಯಾನಗಮ್ಯವೆನಿಸುವ ಮಂತ್ರ |
ದನುಜ ಮನುಜರು ಮುದದಿ ಪಾಡುತಿಹ ಮಂತ್ರ |
ವನಜಸಂಭವ ಭಜಿಸುತಾನಂದಿಸುವ ಮಂತ್ರ || ಶಿವಮಂತ್ರ ||2||
ನರಕದೊಳಗಿದ್ದವರ ಸೆರೆಯ ಬಿಡಿಸಿದ ಮಂತ್ರ |
ದುರಿತಲತೆಗಾಲವಿತ್ತವೆನಿಸುವ ಮಂತ್ರ |
ಪರಮಜ್ಞಾನವನೀವ ಪಂಚಾಕ್ಷರೀಮಂತ್ರ |
ವರಗೌರಿ ಹೃತ್ಪದ್ಮ ವಿಕಸನ ಸುಮಂತ್ರ || ಶಿವಮಂತ್ರ ||3||
ಅರ್ಥಿಯಿಂದಲಿ ಬಾಣನನ್ನು ಸಲಹಿದ ಮಂತ್ರ |
ನಿತ್ಯ ದಶಕಂಠನಿಗೆ ಯಿಷ್ಟವಾಗಿಹ ಮಂತ್ರ |
ಮೃತ್ಯುಭಯವನು ಹರಿಸಿ ನಿತ್ಯಸಲಹುವ ಮಂತ್ರ |
ಭೃತ್ಯರಂಗಿಷ್ಟಾರ್ಥವನ್ನೀವ ಮಂತ್ರ || ಶಿವಮಂತ್ರ ||4||
ವರ ಭಕ್ತಜನಕೊಲಿದು ಮುಕ್ತಿಯೀಯುವ ಮಂತ್ರ |
ಸುರನರೋರುಗರ್ಥಿಯಿಂದ ಭಜಿಸುವ ಮಂತ್ರ||
ದುರಿತ ಕೋಟಿಗಳನ್ನು ಪರಿಹರಿಪ ಶಿವಮಂತ್ರ |
ಗುರುಮಹಾಲಿಂಗವನೆಂಬುವ ದಿವ್ಯಮಂತ್ರ || ಶಿವಮಂತ್ರ ||5||

ರಾಮಚಂದ್ರಾಯ ನಮೋ
ರಾಮಚಂದ್ರಾಯ ನಮೋ | ಹರಯೇ |
ರಾಮಚಂದ್ರಾಯ ನಮೋ ||ಪ||
ರಾಮಶ್ರೀ ರಘುರಾಮ |
ದಶರಥರಾಮ ಭಾರ್ಗವರಾಮ ನಿರ್ಜಿತ |
ಕಾಮ ಪಾವನನಾಮ ಭಕ್ತರ |
ಪ್ರೇಮ ಪಾಲಿಸು ಮೂರು ಕಾಲದಲೀ ||ಅ||
ಬಾಲ್ಯದಿಂದೀ ಜಿಂಹೆ ಷಡ್ರುಚಿಯ ಸವಿಯುತ್ತ |
ಖೂಳಕು ಹಕಿಗಳೊಡನೆ ವಾದಿಸುವುದಲ್ಲದೇ |
ಮೇಲೆನಿಪ ನಿಮ್ಮ ನಾಮಾಮೃತ ರಸಾಯನವ |
ಲೀಲೆಯಿಂದಲಿ ಸವಿಯಲೊಲ್ಲದೈ ಹರಿಯೇ ||1||
ಹೀನ ಮಾಯಾಂಗನೆಯ ನಿಜರೂಪವೀ ನೇತ್ರ |
ತಾನರಸಿ ನೋಡುತ್ತಲಾನಂದಿಸುವದಲ್ಲದೆ |
ಭಾನುಕೋಟಿ ಪ್ರಕಾಶ ಚಿದ್ರೂಪ ವೀಕ್ಷಿಸುತ |
ಜ್ಞಾನದಿಂದಾನಂದ ಹೊಂದದೈ ಹರಿಯೇ ||2||
ಪರಿಪರಿಯ ಶೃಂಗಾರ ವರ್ಣನೆಗಳಾಲಿಸುತ
ಹರುಷಪಡುತಿಹುದಲ್ಲವೀ ಕಿವಿಯು ನಿಮ್ಮ
ಪರಮ ಚರಿತಾಮೃತವನೊಲಿದೀಂಟುತಲಿ
ಪರಮ ಬ್ರಹ್ಮಾನಂದ ಹೊಂದದೈ ಹರಿಯೇ ||3||
ಕ್ರೋಧಿ ಕುಹಕಿಗಳೊಡನೆ ಬೆರೆಯುತ್ತ ನಿಜಮುಕ್ತಿ |
ಹಾದಿಯರಿಯದೆ ಭವದಿ ಬೀಳ್ವುದಲ್ಲದೆ ಮನವು |
ಸಾಧು ಸಜ್ಜನರ ಸಂಗದಿಂದ ಪರಮಾತ್ಮ |
ಭೋಧೆಯೊಳಗನುದಿನವು ಸುಖಿಸದೈ ಹರಿಯೇ ||4||
ಮತಿವಿಹೀನತೆಯಿಂದ ದುಷ್ಕೃತವಗೈಯ್ಯುತ್ತ |
ಪತಿತನಾದೆನು ಮುನ್ನಿನಪರಾಧಗಳ ಕ್ಷಮಿಸಿ |
ಪತಿತ ಪಾವನನೆಂಬ ನಿನ್ನ ಕೀರ್ತಿಯ ಮೆರಸಿ |
ಸತತ ಪಾಲಿಸುಯನ್ನ ಗುರು ಮಹಾಲಿಂಗ ಶ್ರೀರಂಗಾ | ||5||

ತನಯ ಬ್ರಹ್ಮದ ಸೃಷ್ಟೀ
ತನಯ ಬ್ರಹ್ಮದ ಸೃಷ್ಟೀ | ಯನು ನೋಡ ಹೋದರೆ |
ಘನ ವಿಚಿತ್ರವದಾಗಿ ತೋರುವದು ಜಗದೀ ||ಪ||
ಕೆಸರೊಳುದಿಸಿದ ಕಮಲ |
ವಸಮ ಬ್ರಹ್ಮಾದಿಗಳ |
ಯೆಸೆವ ಮಸ್ತಕದಲ್ಲಿ ಶೋಭಿಸುತ್ತಿಹುದು ||
ನುಸಿಯ ಮಣ್ಣೊಳುದಿಸಿರುವ |
ಮಿಸುನಿ ಮೂಲೋಕದೊಳ |
ಗಸಮಲಕ್ಷ್ಮಿಯದೆನಿಸಿ ರಾರಾಜಿಸುತ್ತಿಹುದು || ತನಯ ||1||
ವನದಿ ಚರಿಸುವ ಮೃಗದ |
ಬಿನುಗು ರಕ್ತವು ಹರಿಯ |
ಫಣೆಗೆ ತಿಲಕವದೆನಿಸಿ ಶ್ರೇಷ್ಠಮಾಗಿಹುದು |
ಹೆಣದ ಬೂದಿಯು ನಮ್ಮ ಶಿ |
ವನ ಫಣೆಯೊಳಗಿಡುವ |
ಘನ ತ್ರಿಪುಂಡ್ರವದೆನಿಸಿ ಪೂಜ್ಯಮಾಗಿಹುದು ||2||
ನೊಣವಿನೆಂಜಲು ದೇವ |
ಗಣಕೆ ಪಂಚಾಮೃತವ|
ದೆನಿಸುವಭಿಷೇಕಕ್ಕೆ ಯೋಗ್ಯವೆನಿಸಿಹುದು |
ದನವಿನಂಗದಿ ಜನಿಪ |
ಬಿನುಗು ಗೋರೋಜಿನವು |
ಘನತರೌಷಧ ಯೋಗ್ಯವೆನಿಸಿಕೊಂಡಿಹುದು ||3||
ಮುತ್ತು ಚಿಪ್ಪಿನೊಳುದಿಸಿ |
ರತ್ನ ಕಲ್ಲೊಳಗುದಿಸಿ |
ಪೃಥ್ವಿಯೊಳಗತಿ ಶ್ರೇಷ್ಠಮೆನಿಸಿಕೊಂಡಿಹುದು ||
ಮತ್ತೆ ಪುಳವಿಂದುದಿಸಿ |
ದುತ್ತಮದ ಪಟ್ಟುವದು |
ನಿತ್ಯ ನಿರ್ಮಲ ಮಡಿಯದೆನಿಸಿಕೊಂಬುವುದು ||4||
ಜನನಿ ರಕ್ತವು ಮೂತ್ರ |
ಗುಣಿಯೊಳಗೆ ಜನಿಸಿರುವ |
ಮನುಜ ಸಾಕ್ಷಾತ್ಪರ ಬ್ರಹ್ಮನೆನಿಸಿಕೊಂಬುವನು |
ಯೆನಲಾಗಿ ಜ್ಞಾನಿಗಳ ಜಾತಿಯ ಗೋತ್ರ |
ವೆಣಿಸದಲೆ ಗುರು ರಂಗನೆಂದರಿಯಬೇಕು ||5||

ಸೇವೆಯ ಮಾಡೋ
ಸೇವೆಯ ಮಾಡೋ | ಸತ್ಪುರುಷರ |
ಸೇವೆಯ ಮಾಡೋ ||ಪ||
ಸೇವೆಯ ಮಾಡಲು ಜೀವತ್ವವಳಿದೂ |
ಕೇವಲ ಬ್ರಹ್ಮತ್ವವೆ ನಿಲ್ಲುವದಾಗಿ || ಸೇವೆಯ ||ಅ||
ಸಾಧುಗಳಿವರೋ | ಬ್ರಹ್ಮಾನಂದ |
ಬೋಧೆಯೊಳಿಹರೋ |
ಆದಿ ಪರಬ್ರಹ್ಮಾ ಬೋಧಿಸಲೋಸುಗ |
ಮೇದಿನಿಯೊಳಗವತಾರಗೈದಿಹರೋ || ಸೇವೆಯ ||1||
ವರ ಜ್ಞಾನಮಯರೂ | ನಿರ್ಮಲರೂ |
ಸ್ಥಿರಮುಕ್ತರಿವರೂ |
ನಿರುತಾಖಂಡೈಕರಸಮಯರೆನಿಸಿರೆ |
ಗುರುಭಕ್ತಿಯಲಿ ಬೆರೆತಾನಂದ ವಡಿಯುವೆ || ಸೇವೆ ||2||
ಬಿನುಗು ಜೀವನಿಗೇ | ಯೀಶನಿಗೈಕ್ಯ |
ವೆನಿಸಿಕೊಂಬುದನೂ |
ಅನುಪಮ ತತ್ವಮಸೀತಿ ವಾಕ್ಯಂಗಳ |
ವಿನುತ ವಾಚ್ಯಾರ್ಥ ಲಕ್ಷ್ಯಾರ್ಥವನೊರೆವರು || ಸೇವೆಯ ||3||
ವರಛಿದ್ರ ಘಟದೀ | ರಾಜಿಪದೀಪ |
ದುರಿವಂತೆ ಪ್ರಾಣ |
ಕರಣಾದಿಗಳ ಸಾಕ್ಷಿಯಾಗಿಹನಾತ್ಮನೆಂ |
ದೊರೆಯುವ ಶೃತಿ ವಾಕ್ಯದನುಭವಗೈವರು ||4||
ವಾದಂಗಳಳಿದೂ ನಿತ್ಯಾನಂದ |
ಬೋಧೆಯ ತಿಳಿದು |
ಮೋದಾದಿ ಬ್ರಹ್ಮಾನುಸಂಧಾನಗೈದೊಡೆ |
ಆದಿ ಶ್ರೀಗುರು ರಂಗನಾಗುವೆಯದರಿಂದ || ಸೇವೆಯ ||5||

ಯಲ್ಲರ ಮನೆದೋಸೆ ತೂತು
ಯಲ್ಲರ ಮನೆ ದೋಸೆ ತೂತು | ಪೇಳ |
ಲೆಳ್ಳಷ್ಟು ಹುರುಡಿಲ್ಲ ಲೋಗರ ಮಾತು ||ಪ||
ಮೂರು ಲೋಕಂಗಳಿಗೊಡೆಯ | ನಾದ |
ಧೀರ ವಿಷ್ಣುವಿನರಸಿ ಲಕ್ಷ್ಮೀದೇವೀ |
ಹಾರೈಸಿ ರಾಜರ ಮನೆಯಲ್ಲಿ ಸೇರಿ |
ವಾರಿಜಾಕ್ಷನಿಗವಮಾನ ಮಾಡಿದಳೂ ||1||
ಮೂರು ಕಣ್ಣಿನ ದೇವನ| ಪತ್ನಿ |
ಗೌರಿಯು ನಿಜಪತಿಯಾಗ್ನೆಯ ಮೀರಿ |
ಕ್ರೂರ ದಕ್ಷನಯಜ್ಞ ಶಾಲೆಗೆ ಹೋಗಿ |
ಘೋರಾಗ್ನಿ ಕುಂಡದಿ ಪ್ರಾಣ ನೀಗಿದಳೂ ||2||
ಯಿಳೆಯನು ಸೃಷ್ಟಿಸುವ ಜನ | ರಾಣಿ |
ಬಲು ಗಯ್ಯಾಳಿಯು ನಾಚಿಕೊಳ್ಳದೊಬ್ಬರಿಗೂ |
ವೊಲಿದಲ್ಪ ಜಾತಿ ಮಾನವರ | ಮುಖ್ಯ |
ತಲೆವಾಗಿಲೊಳು ಸುಳಿದಾಡುತ್ತಲಿಹಳು || ಯಲ್ಲರ ||3||
ಸುರಪತಿಯಾದಿ ನಿರ್ಜರರ | ಗುರು |
ವರನ ಹೆಂಡತಿ ತಾರೆ ಚಂದ್ರನಿಂದ |
ತರಳನೋರ್ವನ ಪಡೆದಿಳೆಯೊಳು ತಾನು |
ಪರಮ ಪತಿವ್ರತೆಯೆನಿಸಿಕೊಂಡಿಹಳೂ || ಯಲ್ಲರಮನೆ ||4||
ಅನಿಮಿಷೇಂದ್ರನು ಕಾಮದಿಂದ | ಒಂದು|
ದಿನ ಗೌತಮನ ಸತಿಯನು ಮೋಹಿಸೇ |
ಮುನಿವರ ನಿಕ್ಕಿದ ಶಾಪದಿಂ | ದಿವ್ಯ |
ತನುವೆಲ್ಲ ಯೋನಿಮಯವಾಯಿತು ||5||
ಪಿತೃವಾಕ್ಯವನು ಪಾಲಿಸೆ | ರಾಮ |
ಯೆತಿವೇಷದಿಂದಟವಿಯೊಳಿದ್ದಾಗ |
ಸತಿಯನ್ನು ತಾ ಕಳಕೊಂಡು | ರೋಧಿ
ಸುತ ಕ್ಷಿತಿಯನು ಚಲಿಸುತ ಬಳಲಿದನು ||6||
ಸುರರ ಬಾಳ್ವಿಕೆ ಹೀಗಿರಲು | ಮಿಕ್ಕ |
ನರರಬಾಳ್ವಿಕೆಯನ್ನು ಹೇಳಲೇನಿಹುದು |
ಅರಿತು ಈ ವಿಪರೀತವೆಲ್ಲವ | ನಮ್ಮ |
ಗುರು ಮಹಾಲಿಂಗ ಸಾಕ್ಷಿಯಾಗಿಯಿಹನು |
ಯೆಲ್ಲರ ಮನೆ ದೋಸೆ ತೂತು ||7||

ಕರ್ಮಕೂಪದಿ ಬಿದ್ದು ಕೆಡಬೇಡವೆಲೊ
ಕರ್ಮಕೂಪದಿ ಬಿದ್ದು ಕೆಡಬೇಡವೆಲೊ ಮನುಜ |
ನಿರ್ಮಲಾತ್ಮ ಜ್ಞಾನ ಪಡೆಯದಂಧಕನಂತೆ ||ಪ||
ಕಾಯವೇ ನಿಜಕಾಶಿಯಾತ್ಮ ವಿಶ್ವೇಶ್ವರನು |
ಕಾಯದೊಳು ಸುಜ್ಞಾನ | ಗಂಗೆರಾಜಿಪುದನ್ನು |
ಆಯದಿಂದರಿತು ಸ್ನಾನಾರ್ಚನೆಗೈಯ್ಯದೆ |
ಕಾಯಕ್ಲೇಶದಿ ತಿರುಗುವಗೆ ಮುಕ್ತಿಯಾಗುವುದೇ || ಕರ್ಮ ||1||
ನಿತ್ಯ ತತ್ವವಿಚಾರದೊಳಗಿರುವವನುತ್ತಮನು |
ಮತ್ತೆ ಶಾಸ್ತ್ರಾರ್ಥದೊಳಗಿಹನು ಮಧ್ಯಮನು |
ನಿತ್ಯ ಮಂತ್ರದ ಚಿಂತೆಯೊಳಗಿರ್ಪನಧಮನು |
ತೀರ್ಥಗಳ ಭ್ರಾಂತನಧಮಾನಧಮನೆನ್ನಿಸುವನು || ಕರ್ಮ ||2||
ಮೀನಿನಂದದಲಿ ನೀರ ಮುಳುಗಲೇನಹುದು |
ಧ್ಯಾನವನು ಬಕದಂತೆ ಮಾಡಲೇನಹುದು |
ಭಾನುಕೋಟಿ ಪ್ರಕಾಶನಾಗಿರುವಾತ್ಮನಂ |
ಜ್ಞಾನ ನೇತ್ರದಿ ತನ್ನೊಳರಿತುಕೊಳ್ಳದೆ ಮನುಜ || ಕರ್ಮ ||3||
ತನ್ನ ತಾನರಿತವನೆ ನಾರಾಯಣನು |
ಎನ್ನುತ್ತ ಶೃತಿ ತತಿಗಳೆಲ್ಲ ಸಾರುತ್ತಿರಲು |
ವುನ್ನತದ ನರಜನ್ಮದೊಳು | ನಿನ್ನನರಿಯದೆ |
ಕುನ್ನಿಸೂಕರ ಜನ್ಮದಲ್ಲಿ ತಿಳಿಯುವೆಯಾ || ಕರ್ಮ ||4||
ದೇಹದಿ ವಾಸನಾ ತ್ರಯಗಳನು ಕಳಿಯೆ |
ಸೋಹಮೆಂಬುವ ಜ್ಞಾನಜೋತಿಯದು ಬೆಳಗೆ |
ಮೋಹರಾಗದಿ ಕತ್ತಲೆಯದಡಗುತ್ತ |
ದೇಹಸಾಕ್ಷಿಕ ಗುರು ಮಹಾಲಿಂಗನಾಗುವೆಯಾಗಿ ||5||

ಮೀರಿ ಪೋಗುವರಾರು
ಮೀರಿ ಪೋಗುವರಾರು ವಿಧಿಯ ನಿಯಮವನು |
ಮೂರು ಮೂರ್ತಿಗಳಾದಿಯಾಗಿ ಸುರ ನರರೊಳು ||ಪ||
ಹರಿಯು ಹತ್ತವತಾರವೆತ್ತಿ ಲೋಕದೊಳು |
ಪರಿಪರಿಯಶ್ರಮೆಗೆ ತಾ ಮೈಗೊಟ್ಟನು |
ಪರಮೇಷ್ಟಿ ಗರ್ವದಿಂ ಶಿವನ ನಿಂದಿಸಿ ತನ್ನ |
ಶಿರವೈದರೊಳಗೊಂದ ಕಳಕೊಂಡನಾಗೀ ||1||
ಹರನು ಬ್ರಹ್ಮಕಪಾಲವನ್ನು ಕರದೊಳು ಪಿಡಿದು |
ಮರುಳನಂದದಿ ಮೂರು ಲೋಕಗಳ ಚರಿಸಿದನು |
ವರದಿವಾರಕರನಿಲ್ಲದೆಡೆಯಿಲ್ಲದೆ ಮಹಾ |
ಗಿರಿಯ ಬಳಸುತ್ತಲಿರುವಂತೆನಲಾಗಿ || ಮೀರಿ ||2||
ಸುರಪತಿಯು ಗೌತಮನ ಸತಿಯ ಮೋಹಿಸಿ ತನ್ನ |
ಶರೀರವೆಲ್ಲವ ಯೋನಿಮಯವೆನಿಸಿಕೊಂಡ |
ವರಸುಧಾಕರ ತನ್ನ ಗುರು ಸತಿಯ ಬಯಸಿ |
ಧರಣಿಯೊಳು ಕ್ಷಯರೋಗಿಯೆನಿಸಿಕೊಂಡಿರುವನಾಗಿ ||ಮೀರಿ ||3||
ಧರಣಿಪತಿಯಾಗಿದ್ದ ಕೌರವೇಶ್ವರನು |
ಕೊರಗಿ ರಣ ಭೂಮಿಯಲಿ ಮಡಿದನಿಳೆಯರಿಯೆ |
ಪರಮಸತ್ಯವ್ರತರೆನಿಸಿಕೊಂಡಿರ್ದ |
ವರ ಪಂಚಪಾಂಡವರು ತಿರಿದುಂಡರೆನಲಾಗಿ || ಮೀರಿ ||4||
ಸ್ಮರನುಮಾಪತಿಯ ತಪವ ಕೆಡಿಸಲು ಪೋಗಿ |
ವುರಿಗಂಣಿನಿಂದುರಿದು ಭಸ್ಮವಾದ |
ಹಿರಿಯರೀ ಪರಿವಿಧಿಯ ವಶವಾದರೆನಲಾಗಿ |
ನರರು ಮೀರುವದುಂಟೆ ಗುರುರಂಗನಾಗ್ನೆಯನೂ || ಮೀರಿಪೋಗುವರಾರು ||5||

ಧಾರುಣಿಯೊಳು ಬಂದ
ಧಾರುಣಿಯೊಳು ಬಂದ ಪ್ರಾರಬ್ಧಗಳನುಂಡು |
ತೀರಿಸಬೇಕಲ್ಲದಾರಿಗು ತಪ್ಪದು ||ಪ||
ಶರಧಿಯಳೊದಿಸಿದ ಲಕ್ಷ್ಮಿಯ ಹರಿ ತಂದ |
ವುರು ವಿಷವನು ಪುರಹರನುಂಡನೂ |
ವರ ಕುಬೇರಗೆ ಸಖನಾದಂಥ ಪರಶಿವ |
ತಿರಿದುಂಡಾನೆಂಬುವದಾರೇನರಿಯರೇ || ಧಾರುಣಿ ||1||
ಕ್ಷೀರಶರಧಿ ವಾಸ ಹರಿಯುಗೊಲ್ಲರ ಮನೆ
ನೀರ ಮಜ್ಜಿಗೆಯನು ಬೇಡಿದಾನು |
ವಾರಿಜಾಸನ ಶಿರವ ಶಿವನು ಖಂಡ್ರಿಸುವಾಗ |
ಯಾರಾದರೂ ಬಂದು ಬಿಡಿಸಿದರೆ || ಧಾರುಣಿ ||2||
ಯಲ್ಲಾರಂತೆ ಯಾಗವ ರಚಿಸಿದ ದಕ್ಷತಾ |
ನಲ್ಲೆಮಡಿದ ವೀರಭದ್ರನಿಂದಾ |
ಬಲ್ಲಿದ ಬಲಿ ಚಕ್ರವರ್ತಿ ಯಾಗದೊಳು |
ಯಲ್ಲಾ ರಾಜ್ಯವ ಕಳಕೊಂಡನೆಂದೆನಲಾಗಿ || ಧಾರುಣಿ ||3||
ನಿರುಪಮ ಲಂಕೆಯನು ಕಳಕೊಂಡ ರಾವಣ |
ವರವಿಭೀಷಣ ಲಂಕಾಧೀಶನಾದ |
ಸುರಲೋಕಕೈದುವ ಕಾಲದಿ ಧರ್ಮಜ |
ನರಕ ಕೂಪವನು ನೋಡಿದನು || ಧಾರುಣೀ ||4||
ಘನಪರಾಕ್ರಮಿಯಾದ ಶ್ರೀರಾಮಚಂದ್ರನು |
ವನವಾಸದೊಳು ಬಹು ಶ್ರಮೆಪಟ್ಟನು |
ಯೆನಲಾಗಿ ಶ್ರೀಗುರು ರಂಗನಾಗ್ನೆಯನು |
ಅನುಭವಿಸದೆ ಮೀರಿ ನಡೆಯುವರುಂಟೆ || ಧಾರುಣಿಯೊಳು ||5||

ತನ್ನ ಯೋಚನೆಯಂತೆ
ತನ್ನ ಯೋಚನೆಯಂತೆ ಕಾರ್ಯ ಸಿದ್ಧಿಪುದೇ |
ಮುನ್ನಲೀಶ್ವರನಾಗ್ನೆಯಂತಲ್ಲದೆ || ಪ ||
ವರಶುಕ್ರನಲ್ಲಿ ಮೃತ ಸಂಜೀವಿನಿ ವಿದ್ಯ |
ವಿರಲು ಗುರುಸುತ ಪಡೆದ ಬಳಿಕ ಜೊತೆಯೊಳಗಿದ್ದ |
ಗುರುಪುತ್ರಿ ದೇವಯಾನೆಯ ವರಿಸದಿರಲವಳು |
ನೆರೆ ಶಪಿಸಲಾವಿದ್ಯೆ ಸಿದ್ಧಿಸದೆ ಹೋಯಿತೆನಲು || ತನ್ನ ||1||
ಬಲಿಚಕ್ರವರ್ತಿ ವಾಮನಮೂರ್ತಿಗದ್ವರದಿ |
ಯಿಳೆಯ ಮೂರಡಿ ಮಾಡಿಕೊಡವ ದಾನವನು |
ನಿಲಿಸಲೋಸುಗ ಯತ್ನವಂಗೈದ ಶುಕ್ರನು |
ಕಳೆದುಕೊಂಡನು ತನ್ನ ಕಣ್ಣೊಂದನೆನಲೂ || ತನ್ನ ||2||
ವರ ತ್ರಿಶಂಕುವು ತನ್ನ ಬಂಧುಸಹ ಸುರಪುರಕೆ |
ಗುರು ವಸಿಷ್ಟನು ಕಳುಹಲಿಲ್ಲವೆನ್ನುತ ತಿರ |
ಸ್ಕರಿಸಲಾ ಗುರುಶಪಿಸೆ ಕೌಶಿಕನು ಬೇರೊಂದು |
ಸುರಚಿರ ಸ್ವರ್ಗವನು ರಚಿಸಿತ್ತನೆನಲೂ || ತನ್ನ ||3||
ಗಿರಿಯಚಿನ್ನವಗೈದು ಲೋಕೋಪಕಾರವಂ |
ನೆರೆ ಮಾಡಬೇಕೆಂದು ನಾಗಾರ್ಜುನನುಯೆಂಬ |
ವರ ಸಿದ್ಧಿಪುರುಷ ಮಾಡಿದ ಯತ್ನ ಸಿದ್ಧಿಸದೇ |
ಹರಿಯ ಚಕ್ರಕ್ಕೆ ತನ್ನ ಸಿರವಿತ್ತನೆನಲೂ || ತನ್ನ ||4||
ವಸುಧೆಯೊಳಗೆಂದಿಗೂ ಪ್ರಸಿದ್ಧರಾಗಿದ್ದ |
ಅಸಮ ಶೂರರ ಸಾಹಸವು ಸಾಗಲಿಲ್ಲವೆನಲಾಗಿ |
ವಸುಧೀಶ ಗುರುಮಹಾಲಿಂಗ ರಂಗನಡಿ |
ಬಿಸಜವನು ಚಿಂತಿಸಲು ಸುಖವಪ್ಪುದಲ್ಲದೆ || ತನ್ನ ಯೋಚನೆಯಂತೆ ||5||

ಯಿಂದು ವದಗುವ ದುಃಖ
ಯಿಂದು ವದಗುವ ದುಃಖ ವಲ್ಲೆನೆನಲಾಗುವದೆ |
ಹಿಂದಿನವರತಿ ದುಃಖಪಟ್ಟಿಹುದ ನೋಡಲು ||ಪ||
ದಶರಥ ಮಹಾರಾಜ ರಾಮಚಂದ್ರನಿಗೆ
ಸಸಿನೆಪಟ್ಟವ ಕಟ್ಟಲೆಸಗಿದ್ದ ಲಗ್ನದಲಿ |
ಒಸೆದು ಭೂಮಿಜೆಯನುಜಸಹಿತ ಕಾನನಕೆ |
ವ್ಯಸನದಿಂ ಪೊರಮಟ್ಟನೆನಲು ಜಗವರಿಯೆ || ಯಿಂದು ||1||
ಧರಣಿಯೊಳಗೇಕ ಚಕ್ರಾಧೀಶನಾಗಿದ್ದ |
ವರಹರಿಶ್ಚಂದ್ರ ಭೂಪತಿಯು ತನ್ನ ನಿಜ |
ತರುಣಿಸಹಿತ ಕಾಶಿಯೊಳು ಜೀವಿಸುತ |
ದುರುಳ ಚಾಂಡಾಲಗಾಳಾಗಿ ಶ್ರಮಪಟ್ಟನೆನಲೂ ||2||
ವರ ದ್ವಾರಕಿಯೊಳಿದ್ದಾಗ ಗೋವರ್ಧನ |
ಗಿರಿಯ ಬೆರಳಿಂದೆತ್ತಿ ಗೋವಳರನೆಲ್ಲ |
ಪೊರೆದ ಶ್ರೀಕೃಷ್ಣಗಾರು ದಿಕ್ಕಿಲ್ಲದಡವಿಯಲಿ |
ಮರದಡಿಯ ಬೇಡನಿಂದಸುವಳಿದನೆನಲೂ || ಯಿಂದು ||3||
ಧುರಧೀರ ಪಾಂಡವರ ವಂಶದೊಳಗುದಿಸಿ |
ಹರಿಭಕ್ತನೆಂದೆನುತ ಖ್ಯಾತಿಯಾಗಿದ್ದ |
ವರಪರೀಕ್ಷದ್ರಾಜ ಮುನಿಯ ಶಾಪದ ಬಲದಿ |
ವುರಗನಿಂದಲಿ ಮೃತ್ಯುವಶ ನಾದನೆನಲೂ ||4||
ಸುರಪದವಿಯಲ್ಲಿದ್ದನಹುಷರಾಯನು |
ಮುನ್ನಲಜಗರದ ದೇಹವ ತೊಟ್ಟು ದುಃಖಿಸಿದನದರಿಂದ |
ನೆರೆ ಜಾಣನಾದವನು ಗುರು ರಂಗನಡಿಯೆಂಬ |
ಸುರತರುವನಾರೈಸಿ ಬದುಕಬೇಕಲ್ಲದಲೇ || ಯಿಂದು ವದಗುವ ||5||

ಬುದ್ಧಿ ಸಾಧ್ವೀಮಣಿಯು
ಬುದ್ಧಿ ಸಾಧ್ವೀಮಣಿಯು | ಆರ್ಯನಿಗಡ್ಡ |
ಬಿದ್ದಿಂತು ಬೆಸಗೊಂಡಳು ||ಪ||
ಬಿದ್ದುಹೋಗುವ ದೇಹವೆಂತೆಂಬ ಗೃಹದೊಳ |
ಗಿದ್ದು ಸಂಸಾರದಿ ಬೇಯಲಾರೆನುಯೆಂದು || ಬುದ್ಧಿಸಾಧ್ವಿ ||ಅ||
ಆಶೆಮೋಹವು ಯೆಂಬುವ | ಅತ್ತೆಯು ಮಾವ |
ಘಾಸಿ ಮಾಡುವರೊ ದೇವ |
ದೋಷಮತ್ಸರವೆಂಬುವತ್ತಿಗೆ ನಾದಿನಿ |
ಲೇಶವಾದರೂ ಕರುಣಿಸದೆ ಕಾದುವರೆಂದು || ಬುದ್ಧಿ ||1||
ವುರುಮದವೆಂತೆಂಬುವ | ಗಂಡನು ಮಾಯಾ |
ಸೆರೆಯೊಳು ಹಾಕಿರುವ |
ನಿರತಹಂಕಾರವೆಂಬುವ ಮಗನೆನ್ನ |
ವರ ಶಾಂತರೊಡನಾಡಗೊಡಿಸನೆಂದೆನ್ನುತ || ಬುದ್ಧಿ ||2||
ಅರಿವರ್ಗ ಬಂಧುಗಳು | ವೇದಿಸುತಿರೆ |
ಕೊರಗುವೆ ಹಗಲಿರಳು |
ಪರಿಪರಿ ಪಾಪಕಾರ್ಯಗಳ ಮಾಡಿಸುತೆನ್ನ |
ನರಕಾರ್ಣವದೊಳು ಹಾಕುವರಿವರೆಂದು || ಬುದ್ಧಿ ||3||
ಹಾಳು ಸಂಸಾರದಲ್ಲಿ | ತೋರುವ ಸುಖ |
ಶಾಲ್ಮಲಿ ಕುಸುಮದಂತೆ |
ಮಾಲಿನ್ಯ ಭ್ರಮೆಯಿಂದ | ತೋರ್ಪುದಲ್ಲದಲಾವ |
ಕಾಲಕ್ಕು ತೋರದು | ನಿಜಸುಖವೆನ್ನುತ್ತ || ಬುದ್ಧಿ ||4||
ಶತಕೋಟಿ ಕಲ್ಪದಿಂದ | ಜನ್ಮಗಳೆತ್ತಿ |
ಅತಿ ಬಳಲಿದೆನು ಮುಂದೆ |
ಕ್ಷಿತಿಯೊಳು ಜನ್ಮವ ಸಾಕು ಮಾಡೆನ್ನನು |
ಸತತ ಪಾಲಿಸು ಗುರು ರಂಗನೆಂದೆನ್ನುತ || ಬುದ್ಧಿ ಸಾಧ್ವೀಮಣಿಯು ||5||

ಭಯವದೇತಕೆ ಮಗಳೆ
ಭಯವದೇತಕೆ ಮಗಳೆ
ಭಯವದೇತಕೆ ಮಗಳೆ ಭವಮಾಲೆಯಾ |
ಭಯ ನಿವಾರಣ ಭರ್ಗ ನಿನ್ನೊಳಿರುತಿರಲೂ ||ಪ||
ವರ ಮೃಗೇಂದ್ರನ ಧ್ವನಿಗೆ ಮೃಗಗಳಟವಿಯ |
ಲಿರದೆ ದಿಕ್ಕುಗಳರಸಿ ಪೋಗುವಂದದಲಿ |
ಹರನ ಮಂತ್ರೋಚ್ಚರಣ ಮಾತ್ರದಿಂದಷ್ಟಗುಣ |
ಹರಿದು ಪೋಪುದು ಪೇಳೆ ಪೆಸರಿಲ್ಲದಂತೆ || ಭಯ ||1||
ತನುವಿನೊಳಗಿರುವಾತ್ಮ ಪತಿಯೆಂದು ಭಾವಿಸುತ |
ತನುವೆ ಗೃಹ ಪ್ರಾಣಗಳೆ ಸೇವಕರು ನಿತ್ಯ |
ಅನುಭವಿಪ ವಿಷಯಗಳೆ ಪೂಜೋಪಚಾರಗಳು ನೀನು |
ಅನುದಿನವು ಚರಿಪುದೆ ಪ್ರದಕ್ಷಿಣೆಯದಾಗಿರಲೂ ||2||
ನಿತ್ಯ ಮಾಡುವ ಕರ್ಮ ಯೀಶ್ವರಾರ್ಪಣವೆಂದು |
ಸತ್ಯಶಾಂತ್ಯಾದಿ ಸಖಿಯರನು ಕೂಡಿರುತೆ |
ನಿತ್ಯ ಗುರುಭಕ್ತಿ ವ್ರತವನಾಚರಿಸುತ್ತ
ಮೃತ್ಯು ಹರಗುರುರಂಗ ಪದಭಕ್ತಳೆನಿಸಿರಲೂ ||3||

ಕೇಳು ಮಾನಿನಿರನ್ನೆ
ಕೇಳು ಮಾನಿನಿ ರನ್ನೆ | ಮನವಿಟ್ಟು |
ಕೇಳು ಮಾನಿನಿ ರನ್ನೆ ||ಪ||
ಕೇಳು ಶ್ರೀಗುರು ವಾಕ್ಯ | ಮುಕ್ತಿ ಬೇಕಾದರೆ |
ಹಾಳುಕಥೆಗಳಿಂದ ಕಾಲವ ಕಳೆಯದೆ || ಕೇಳು ||ಅ||
ತನುವು ನಿಲ್ಲುವದಲ್ಲ | ನವರತ್ನ |
ಕನಕ ಬರುವುದಿಲ್ಲ |
ಮನೆಮಕ್ಕಳು ಬಹು ಭಾಗ್ಯಗಳಿದ್ದರು |
ತೃಣವಾದರೂ ಹಿಂದೆ ಬಾರದು ರಮಣಿ ಕೇಳು ||1||
ತರುಣಿಯಲ್ಲ ನೀನು | ಸುಂದರ |
ಪುರುಷನಲ್ಲ ನೀನು |
ಶರೀರಾದಿಗಳನ್ನು ಕುರುಹಿಟ್ಟು ನೋಡುವ |
ಪರವಸ್ತುವಾನೆಂದರಿಯಲೆ ಕಾಂತೆ || ಕೇಳು ||2||
ಆರು ಗುಣವ ಕಳೆದು | ದೇಹದ |
ಮೂರು ಮಲವ ತೊಳೆದು |
ಮೂರು ವಾಸನೆಯೆಂಟು ಮದಗಳ ತುಳಿದು |
ಭೂರಿ ಬ್ರಹ್ಮಾನಂದ ಪಡೆಯೆಲೆ ತರುಣಿ ||3||
ದುರಿತಕರ್ಮವಳಿದು | ಜ್ಞಾನವ |
ಗುರುವಿಂದಲಿ ತಿಳಿದು |
ಪರಮ ಪುರುಷನೆಂಬ ಪತಿಯೊಳು ರಮಿಸುತ |
ಪರಮ ಪತಿವ್ರತೆಯಾಗಿರು ಮಗಳೆ || ಕೇಳು ||4||
ವಾದಭೇದವಳಿದು | ನಿರ್ಗುಣ |
ವಾದ ಬ್ರಹ್ಮವ ತಿಳಿದು |
ಆದಿ ಶ್ರೀಗುರು ಲಿಂಗನ ಹೃದಯದಿ |
ಮೋದದಿ ಧ್ಯಾನಿಸು ವರಹಂಸಗಮನೆ || ಕೇಳು ಮಾನಿನಿ ರನ್ನೆ ||5||

ಭಕ್ತಳಾಗು ಭಕ್ತಳಾಗು ಭಕ್ತಳಾಗು
ಭಕ್ತಳಾಗು ಭಕ್ತಳಾಗು ಭಕ್ತಳಾಗು | ವೀರಕ್ತಳಾಗು |
ಅರ್ಥಿಯಿಂದ ಗುರುಸೇವಾಸಕ್ತಳಾಗು | ನಿತ್ಯ ಮುಕ್ತಳಾಗು ||ಪ||
ಜಾರಳಾಗಿ ಚೋರಳಾಗಿ ಮಾರಿಯಾಗೀ | ಕೆಡಬೇಡ |
ದೂರುತನ್ಯರನು ಘೋರ |
ನರಕದಲ್ಲೀ ಬೀಳಬ್ಯಾಡ ||1||
ದೂಷಣೆಗೆ ಭೂಷಣೆಗೆ ಹಿಗ್ಗಿತಗ್ಗದೇ | ದುಷ್ಟಳಾಗದೇ |
ಹೇಸಿ ಜನ್ಮರೋಗದಿಂದ |
ಕೊರಗಿ ಕೊರಗಿ ಸತ್ತುಹೋಗದೆ ||2||
ಭೇದಕರ್ಮ ಜಾತಿಗೋತ್ರ ಸೂತಕದಲೀ | ಸಾಯಬೇಡ |
ಸಾಧುಸೇವೆಯಿಂದ ಜ್ಞಾನ ಮಾರ್ಗವರಿತೂ |
ಸುಖಿಯಾಗು ||3||
ಅಷ್ಟಪಾಶಮದಗಳ | ದುಷ್ಟರೈವರ |
ದೂರಗೈದು | ನಿಷ್ಟೆಯಿಂದ
ಶ್ರೇಷ್ಟ ಗುರು ರಂಗನಡಿಯಾಮನದೊಳಿಟ್ಟು || ಭಕ್ತ ||4||

ಕಾಂತೆ ನೋಡು ನಿನ್ನ ದಿವ್ಯ
ಕಾಂತೆ ನೋಡು ನಿನ್ನ ದಿವ್ಯ |
ಲೋಚನಾಗ್ರದೀ | ವುರಿವ |
ರತ್ನಕುಂಭ ಜೋತಿಯಂಥ ಚಿತ್ಪ್ರಕಾಶವಾ ||ಪ||
ವಾಣಿ ಲಕುಮಿ ಗೌರಿಪತಿಯ | ರಿಂದ್ರ ಚಂದ್ರರ ಯೋಗಿ
ಮೌನಿರುಷಿಯತೀಶ್ವರರಾಂಗೀರಸ ಭಾರ್ಗವ |
ವೈನತೇಯ ಫಣಿಗಣೇಶ ಯಕ್ಷಸಿದ್ಧರ | ಹೃದಯ |
ಧ್ಯಾನಗಮ್ಯವಪ್ರತರ‍್ಕ್ಯಬ್ರಹ್ಮಭಾಸವಾ || ಕಾಂತೆ ||1||
ವರಪ್ರವಾಳ ವಜ್ರಪಚ್ಚೆ ದೀಪದಂದದೀ | ಬೆಳಗು
ತಿರುವ ನೀಲ ಜೋತಿ ಮುತ್ತಿನಂದದೀ |
ಬರಿಯ ಸ್ವರ್ಣರಾಸಿ ರುಚಿಯು ಮುಚ್ಚಿ ಯೋಗಿಯಾ ಮೈಯ್ಯ
ಮರಸುತಚ್ಛ ಸುಖವನೀಯುವಾತ್ಮ ಜೋತಿಯಾ || ಕಾಂತೆ ||2||
ಕೋಟಿಪಾತಕಾಭ್ರಜಂಝಮರುತವೆನಿಪುದೂ | ಜಗದಿ |
ಪಾಟಿಯಿಲ್ಲದ ಜೀವಬ್ರಹ್ಮರೈಕ್ಯಸುಖವದೂ |
ಶ್ರೇಷ್ಟ ಸದ್ಗುರುಲಿಂಗನ ಕರುಣರಸವಿದೂ |
ಚೂಟಿಯಿಂದ ಸಾಧಿಸಿದೊಡೆ ಮುಕ್ತಿಯಪ್ಪುದೂ ||3||

ಏನು ಹೇಳಲಮ್ಮಾ ಸದ್ಗುರು ದಯ
ಏನು ಹೇಳಲಮ್ಮಾ | ಸದ್ಗುರು ದಯ |
ಏನು ಹೇಳಲಮ್ಮಾ ||ಪ||
ಏನು ಹೇಳಲಮ್ಮ ಶ್ರೀ ಗುರುವಿನ ಮಹಿಮೆಯ |
ಜ್ಞಾನಬೋಧೆಯೊಳೆನ್ನ ಭವಬೀಜವಳಿದಾ || ಏನು ||ಅ||
ಶರಣು ಮಾಡಿದೆನು | ಕರ್ಣಾದಲ್ಲಿ |
ವರೆದು ಮಂತ್ರವನೂ |
ಕರುಣದಿ ಷಣ್ಮುಖಿ ಮುದ್ರೆಯ ಸೂಚಿಸಿ |
ಪರನಾದ ಕಳೆಬಿಂದು ನೋಡೆಂದು ಪೇಳಿದ || ಏನು ||1||
ತನುವು ನೀನಲ್ಲಾ | ಪ್ರಾಣೇಂದ್ರಿಯ |
ಮನವು ನೀನಲ್ಲಾ |
ಯೆನುತ ಬೋಧಿಸಿ ದೇಹದಭಿಮಾನ ಬಿಡಿಸಿ |
ತನುಮನ ಸಾಕ್ಷಿ ವಸ್ತುವು ನೀನೆಂದರುಪಿದ || ಏನು ||2||
ಘನ ಪುಣ್ಯಪಾಪ| ಯನಗುಂಟೆಂದು |
ಮನಸಿಗಂಟಿದ್ದ |
ಬಿನುಗು ಮೈಲಿಗೆ ಜ್ಞಾನ ತೀರ್ಥದಿ ತೊಳದು |
ಅನುದಿನ ಮಡಿಯಾಗಿ ನೀನಿರೆಂದರುಪಿದ || ಏನು ||3||
ಗುರುಪುತ್ರಿಯೆನೆಸಿ | ಶಾಂತಿಯದೆಂಬ ||
ವರತಿಲಕವಿರಿಸಿ |
ಕರುಣವೆಂತೆಂಬ ಪೀತಾಂಬರದುಡಿಗೆಯ |
ವಿರತಿವಡ್ಯಾಣವಧರಿಸೆಂದು ಪೇಳಿದ || ಏನು ||4||
ಭಯನಿವಾರಣನೂ | ಸಂಕಲ್ಪವ |
ಬಯಲುಮಾಡಿದನೂ |
ಬಯಲು ಬ್ರಹ್ಮಾನಂದದೊಳು ಮುಳುಗಿಸಿದನು |
ಜಯಗುರು ಮಹಲಿಂಗರಂಗಕೃಪಾಂಗನು || ಏನು ||5||

ಬಾರಮ್ಮ ಗುರುಸೇವೆ ಮಾಡುವ
ಬಾರಮ್ಮ ಗುರುಸೇವೆ ಮಾಡುವ | ನಿತ್ಯ |
ನಿತ್ಯ ಭೂರಿ ಬ್ರಹ್ಮಾನಂದ ಹೊಂದುವ || ಬಾರಮ್ಮ ||ಪ||
ಯೆಂದಿಗಾದರು ಸಾವು ತಪ್ಪದು | ಗುರು |
ಹೊಂದದೆ ನಿಜಮುಕ್ತಿ ದಕ್ಕದು |
ಸುಂದರ ತನುವಿದು ನಿಲ್ಲದು | ಮೋಹ |
ಬಂಧನದಿಂ ಸುಖ ನಿಲ್ಲದು ||1||
ಗಂಗೆ ಯಮುನೆ ಸ್ನಾನಗೈಯ್ಯುವ | ಅಲ್ಲಿ |
ಭಂಗಾರ ಮಹಲಿನೊಳಾಡುವ |
ಹಿಂಗದೆ ಕಳೆ ಬಿಂದು ನೋಡುವ | ನಿತ್ಯ |
ಮಂಗಳವಾದ್ಯವ ಕೇಳುವ || ಬಾರಮ್ಮ ||2||
ವರಹಂಸಕಲ್ಪವನೇರುವ | ಬ್ರಹ್ಮ |
ಪುರದೊಳುಯ್ಯಾಲೆಯಾಡುವ |
ನೆರೆಸೂಕ್ಷ್ಮ ದ್ವಾರವ ತೆರಿಯುವ | ಅಲ್ಲಿ |
ಪರಮಾತ್ಮನೊಳು ಕೂಡಿ ಸುಖಿಸುವ || ಬಾರಮ್ಮ ||3||
ಜೀವಭಾವನೆ ತಾನೆಯಳಿವುದು | ಆತ್ಮ |
ಭಾವನೆ ಸ್ಥಿರವಾಗಿ ನಿಲುವುದು |
ಸಾವು ಹುಟ್ಟೆಂಬುವದಳಿವುದು | ನಿತ್ಯ |
ಕೇವಲಾನಂದವೆ ನಿಲುವುದು || ಬಾರಮ್ಮ ||4||
ನಿತ್ಯಗುರು ರಂಗನ ಸೇರುವ | ಚಿತ್ತ |
ವೃತ್ತಿಗಳನೆಲ್ಲವನಳಿಯೂವ |
ಸತ್ತು ಚಿದಾನಂದ ವಸ್ತುವ ಸೇರಿ |
ಮುಕ್ತಿ ರಾಜ್ಯದಿ ಮನೆ ಮಾಡುವ || ಬಾರಮ್ಮ ||5||

ಪೇಳು ನಿನ್ನನುಭೂತಿಯಾ
ಪೇಳು ನಿನ್ನನುಭೂತಿಯಾ | ಶಿವಭಕ್ತಿ |
ಲೀಲೆಯಿಂದರಿತಿರ್ದರೆ | ಕಾಂತೆ ಪೇಳು ||ಪ||
ಶಿವಲಿಂಗಮೆಲ್ಲಿರುವುದು | ರತ್ನಮಯ |
ಶಿವ ಕರಂಡವದಾವುದು | ಮತ್ತೆ |
ಶಿವಸೂತ್ರ ಗ್ರಂಥಿಯೆಲ್ಲಿಯಡಗಿಹುದು |
ಶಿವನ ಭೂತಿಯದಾವುದು | ಕಾಂತೆ ||1||
ಶಿವನೆಂಟು ತನುಗಳೆಲ್ಲಿ | ಕೂಡಿಹವು |
ಶಿವನಕ್ಷಿಮಣಿ ಯಾವುದು | ತರಳೆ |
ಶಿವನಡಿಯ ಪಿಡಿದು | ಪೂಜಿಸುವದೆಂತು |
ಶಿವಕಳೆಯ ಜೋತಿ ಕಾಂಬುದೆಲ್ಲಿ | ಸಖಿಯೆ ||2||
ಗಂಗೆಯಮುನೆ ಸರಸ್ವತಿ | ನದಿಗಳಾ |
ಸಂಗಮದೆಲ್ಲಾಗುತಿಹುದು | ಕಾಶೀ |
ಲಿಂಗರಾರಾಜಿಪುದೆಲ್ಲಿ | ನಿನ್ನೊಳಗೆ |
ಹಿಂಗದು ಸುರೀಗೆನ್ನೊಳು | ಚದುರೆ ||3||
ಚರಿಪ ಹಂಸಗಳೆರಡು | ಕೂಡಿಕೊಂ |
ಡಿರಲುಪಾಯವದು ಯೇನು | ಮನದಿ |
ಪರಮ ಜೀವರುಗಳೆಂಬಾ | ಕಲ್ಪನೆಗ |
ಳೆರಡಿರುವ ಮಾರ್ಗವೇನು | ತರಳೆ ||4||
ಶಿವಶಕ್ತಿ ಕೂಟವೆಲ್ಲಿ | ಆಗುವುದು |
ಶಿವನ ಚಿತ್ಕಳೆ ಯಾವುದು | ನಮ್ಮ |
ಶಿವಮಹಾಲಿಂಗ ಗುರುವು | ಬೋಧಿಸಿದ |
ಶಿವಜ್ಞಾನವಾವುದುಸುರೆ | ಚದುರೆ ||5||

ಬ್ರಹ್ಮೋಪದೇಶವಾಯಿತಮ್ಮ
ಬ್ರಹ್ಮೋಪದೇಶವಾಯಿತಮ್ಮ | ನಿರ್ಗುಣಪರ |
ಬ್ರಹ್ಮೋಪದೇಶವಾಯಿತಮ್ಮ ||ಪ||
ಕರ್ಮದ ಕತ್ತಲೆ ಮೂಲವ ಕೆಡಿಸಿ |
ನಿರ್ಮಲ ಜ್ಞಾನದ ಜೋತಿಯ ನಿಲಿಸಿ |
ಹಮ್ಮಿನ ತನುಗುಣವೆಲ್ಲವ ಹರಿಸಿದ
ಚಿನ್ಮಯ ರೂಪಿನ ಗುರುಮುಖದಿಂದ || ಬ್ರಹ್ಮೋಪ ||ಅ||
ಗುರುವೇ ಬ್ರಹ್ಮನು ಶ್ರೀವಿಷ್ಣು | ಶ್ರೀ ಪರಮೇಶ |
ಗುರುವೇ ನಿಜ ದೈವವೆನ್ನುತ |
ಹರುಷದೊಳಾಪ್ತಾಂಗಾದಿ ಚತುರ್ವಿಧ |
ಗುರುವಿನ ಸೇವೆಯ ಗೈಯುತಲಿರಲು |
ಪರಿಪರಿ ಸಂಶಯವೆಲ್ಲವ ಬಿಡಿಸಿ |
ಪರವಸ್ತುವೆನ್ನೊಳು ತೋರಿದ ಗುರುವು || ಬ್ರಹ್ಮೋ ||1||
ಪಂಚಾಮುದ್ರೆಯನು ಬಿಡಿಸಿದ | ರಹಸ್ಯವಾಗಿ |
ಪಂಚಾಕ್ಷರಿಯರ್ಥವ ಬೋಧಿಸಿದಾ |
ಪಂಚಬ್ರಹ್ಮರ ಕರದೊಳು ಪೂಜಿಸಿ |
ಪಂಚಾಮೃತ ನೈವೇದ್ಯಮಾಡಿಸಿ |
ಪಂಚ ಸೂತಕಗಳನು ಬಿಡಿಸುತ |
ಸಂಚಿತಕರ್ಮವನಳಿದನು ಗುರುವು || ಬ್ರಹ್ಮೋಪ ||2||
ಪುತ್ರಕಾಮೇಷ್ಟಿಯ ಫಲದಿಂದ | ವುತ್ತಮನಾದ |
ಪುತ್ರನ ಪಡೆದರ್ಥಿಯಿಂದ |
ವುತ್ತಮ ಸ್ವರ್ಗಕೆ ಪೋದರು ಪುನರಪಿ |
ಮರ್ತ್ಯಕೆ ಬೀಳುವೆಯದರಿಂ ಸಖಿಯೆ |
ಸ್ವಾತ್ಮಾ ಜ್ಞಾನ ಸುಪುತ್ರನ ಪಡೆದರೆ |
ಮುಕ್ತಿಯು ಲಭಿಸುವುದೆಂದನು ಗುರುವು || ಬ್ರಹ್ಮೋಪ ||3||
ಹತ್ತೂ ವಿಷಯದಿ ಕೂಡಿರುವ | ಮಾನಸವನ್ನು |
ಸತ್ತೂಚಿತ್ತಾನಂದದಿ ಬೆರೆಸಿ|
ನಿತ್ಯಾನಂದವ ಪಡೆಯೆಂದು ಬೋಧಿಸಿ
ಸತ್ತು ಹುಟ್ಟುವ ಕರ್ಮವ ಬಿಡಿಸಿ |
ಮಿಥ್ಯ ಪ್ರಪಂಚದ ಭ್ರಾಂತಿಯ ಕೆಡಿಸಿ |
ಮೃತ್ಯು ಬಾಧೆಯ ಪರಿಹರಿಸಿದ ಗುರುವು || ಬ್ರಹ್ಮೋಪ ||4||
ನಾಮರೂಪಿಗೆ ಮೋಹಿಸದೆ | ಮನದೊಳಗಾತ್ಮ |
ರಾಮನೆ ತಾನೆಂದರಿಯುತ್ತ |
ತಾಮಸ ಗುಣದೊಳು ಬೆರೆಯದಲೆಂದಿಗು |
ಪಾಮರ ಸಂಗವ ಮಾಡದೆ ಸಂತತ |
ನೇಮದಿ ಬ್ರಹ್ಮಾನಂದದಿ ಸುಖಿಸೆಂದು |
ಸ್ವಾಮಿ ಶ್ರೀಗುರು ಮಹಲಿಂಗನು ತಿಳುಪಿದ || ಬ್ರಹ್ಮೋಪ ||5||

ವತ್ಸಾ ಕೇಳೋ ವತ್ಸಾ
ವತ್ಸಾ ಕೇಳೋ ವತ್ಸಾ | ನೀನು |
ಮಿಥ್ಯ ದೇಹವ ನಂಬಿ ಕೆಡಬೇಡೆಂದಿಗು || ವತ್ಸಾ ||ಪ||
ಜನನಿಯು ಜನಕರುಂಡನ್ನದಿಂದಲಿ ಸಂ|
ಜನಿಸಿದ ಶುಕ್ಲಶೋಣಿತದಿಂದಲಾಕಾರ |
ವೆನಿಸಿ ತೊಂಬತ್ತಾರು ಅಂಗುಲದುದ್ದದ |
ತನುವಿದು ಷಟ್ಕೋಶ ಪಿಂಡವೆಂದೆನಿಸಿದೆ || ವತ್ಸಾ ||1||
ತರುಣ ವಾರ್ಧಿಕ ವೃದ್ಧ ಕುರುಡ ಕುಂಟನು ರೋಗಿ |
ಗುರುಶಿಷ್ಯ ಮಠಪತಿ ಸನ್ಯಾಸಿಯೆನಿಸುತ |
ಪುರುಷ ಸ್ತ್ರೀ ಕುಲಜಾತಿ ನಾಮ ರೂಪಾಂತು |
ಪರಿಪರಿ ನಟಿಸುತ್ತಲಿದೆ ಸ್ಥೂಲ ತನುವು ||2||
ಕರುಣೇಂದ್ರಿಯಗಳು ಪ್ರಾಣಗಳೆ ರೂಪಾಗಿ |
ಶರೀರದೊಳಿರ್ದತಿ ಪಾಪ ಪುಣ್ಯವಗೈದು |
ನರಕ ಸ್ವರ್ಗಕೆ ನಿತ್ಯ ರಾಟವಾಳದ ಪರಿ |
ತಿರುಗುತ್ತಲಿಹುದತಿ ಸೂಕ್ಷ್ಮ ತನುವು |
ಯರಡು ದೇಹಾಧಾರಮಾದ ಕಾರಣ ದೇಹ ||3||
ವರಮಾಯ ಮೊದಲಾದ ತೃಷೆಯನು ತೂರಿ |
ವುರುಜೀವ ಗುಣಧರ್ಮ ಕರ್ಮವ ಮೀರಿ |
ವರಬ್ರಹ್ಮಾನಂದದೊಳು ಮಗ್ನನಾಗಿರು | ವತ್ಸಾ ||4||
ಚಾರುಶಾಲ್ಮಲಿ ಕುಸುಮದ ಪರಿ ಭ್ರಮೆಯಿಂದ |
ತೋರುವ ವಿಶ್ವಭೋಗಕೆ ಸಿಕ್ಕದೆಂದಿಗು |
ಈರೇಳು ಲೋಕಂಗಳಲಿ ರಾರಾಜಿಸುತಿಹ |
ಧೀರ ಶ್ರೀಗುರು ರಂಗನಾನೆಂದು ಸುಖಿಸೈ || ವತ್ಸಾ ||5||

ಆತ್ಮನ ಬೆರೆತ ಮಹಾತ್ಮಗೆ
ಆತ್ಮನ ಬೆರೆತ ಮಹಾತ್ಮಗೆ ಸುಖಸಂ |
ಪ್ರಾಪ್ತಿಯದಾಗುವದೇನರಿದೇ ||ಪ||
ಆತ್ಮನ ಬೆರೆಯದ ಮೂಢಗೆ ದುಃಖವೆ |
ಪ್ರಾಪ್ತಿಯಾಗುವದೇನರಿದೇ ||ಅ||
ಗುರುಪದಸುರತರುವಿರೆ ಗುರು ಸುತರಿಂ |
ಗುರುಭವ ತಾಪವದಡರೀತೇ |
ಗುರುಕೃಪ ಸುರಭಿಯ ಪಡದಿಹ ಭಕ್ತಂ |
ಗುರುಭವ ಬರ ತಲೆದೋರೀತೇ |
ಗುರುಚಿಂತಾರತ್ನವ ಪಡೆದ ಪುಣ್ಯಾತ್ಮಂ |
ಗುರುಭವ ದಾರಿದ್ರ್ಯವದಾವರಿಸೀತೆ || ಆತ್ಮನ ಬೆರೆತ ||1||
ಸುರಪತಿ ಪದ ತೃಣವೆಂಬ ವಿರಕ್ತಿಗೆ |
ನರಪತಿ ಪದವಿಯ ಭ್ರಮೆಯುಂಟೆ |
ಗುರುಕುಲ ವಾಸದೊಳಿಹ ಗುರುಪುತ್ರಗೆ |
ನರಕುಲದಭಿಮಾನವದುಂಟೆ |
ಕರಿಯ ಕುಂಭಸ್ಥಳ ಮೌಕ್ತಿಕ ಭಕ್ಷಿಪ |
ಹರಿ ಹುಲುಮೃಗ ಭಕ್ಷಿಪದುಂಟೆ |
ಗುರುವರನಮೃತ ಪ್ರಸಾದವ ಸವಿದವ |
ನರರೆಂಜಲ ತಿಂಬುವದುಂಟೆ ||2||
ಶರೀರದಿ ಜೋತಿರ್ಲಿಂಗ ಪೂಜಿಸುವನು |
ಮರಳ ಲಿಂಗಾರ್ಚನೆಗೆಳಸುವನೆ |
ನಿರುಪಮ ಜ್ಞಾನಸ್ನಾನವಗೈವನು |
ಹರಿಯುವ ಕೊಳೆನೀರ ಮುಳುಗುವನೆ |
ವರಯೋಗಾಮೃತ ಸವಿವ ಮುನೀಶ್ವರ |
ನೆರೆಮನೆ ಮಜ್ಜಿಗೆ ಬಯಸುವನೇ |
ಗುರು ರಂಗನೆನಿಸಿದ ಬ್ರಹ್ಮಜ್ಞಾನಿಯು |
ಪರಿಪರಿ ಕರ್ಮದಿ ಕೊರಗುವನೇ || ಆತ್ಮನ ಬೆರತ ಮಹಾತ್ಮಗೆ ||3||

ಭೂತ ಭೌತಿಕವೆನಿಪ ದೇಹದೊಳು
ಭೂತ ಭೌತಿಕವೆನಿಪ ದೇಹದೊಳು
ಭೂತ ಭೌತಿಕವೆನಿಪ ದೇಹದೊಳು ಪರಬೊಮ್ಮ |
ಸಾತಿಶಯದಿ ವಿರಾಜಿಸುವನೆಂತೆನಲು ||ಪ||
ತಿಲದೊಳಗೆ ತೈಲ ಮರದೊಳಗ್ನಿಯು ಪುಷ್ಪ |
ದೊಳಗೆ ಗಂಧವು ಕ್ಷೀರದೊಳಗೆ ಘೃತವು |
ಫಲದೊಳಗೆ ರಸಭರಿತವಾಗಿರುವ ಛಂದದಲಿ |
ಹಲವು ದೇಹದೊಳಾತ್ಮ ಭರಿತನಾಗಿಹನು ||1||
ತನುವಿನೊಳು ಪ್ರಾಣ ಪ್ರಾಣದೊಳು ಮನವು |
ಮನದೊಳಗೆ ಜೀವ | ಜೀವನೊಳು ಶಿವನು |
ಘನದೊಳಾ ಜೀವೇಶ ಸಾಕ್ಷಿಯೆಂದೆನಿಸು |
ತನುಪಮಾತ್ಮನು ತಾನೆ ರಾರಾಜಿಸುತ್ತಿಹನು ||2||
ಕರಣದೊಳು ಪ್ರತಿಫಲಿಸುತಿಂದ್ರಿಯಂಗಳ ಮುಖದಿ |
ಪರಿಪರಿಯ ವಿಷಯವನುಭವಿಸುತ್ತ ನೀರಿನೊಳ |
ಗಿರುವ ನಳಿನದಳವು ನೀರಂಟದ ಪರಿಯ |
ಪರಮಗುರು ಮಹಲಿಂಗ ನಿರ್ಲೇಪನಾಗಿಹನೂ || ಭೂತ ಭೌತಿಕ ||3||

ಜ್ಞಾನವೊಂದೇ ಸಾಕು ಮುಕ್ತಿಗೆ
ಜ್ಞಾನವೊಂದೇ ಸಾಕು ಮುಕ್ತಿಗೆ | ಮಿಕ್ಕ |
ಸ್ನಾನಜಪಾದಿಕರ್ಮಗಳಿಂದ ಫಲವಿಲ್ಲ ||ಪ||
ವನಿತೆಯ ಬಿಡಲೇಕೆ ಧನವನಳಿಯಲೇಕೆ |
ಘನ ಯಙ್ಞವ್ರತತೀರ್ಥಯಾತ್ರೆಗಳೇಕೆ |
ತನುವದಂಡಿಸಿ ತಪವಗೈಯ್ಯಲಿದೇಕೆ |
ತನುಮನ ಸಾಕ್ಷೀ ಪರಮಾತ್ಮ ತಾನೆಂಬ || ಜ್ಞಾನ ||1||
ಹೀನತನುವಾನಲ್ಲವಿಂದ್ರಿಯ ಗುಣವಲ್ಲ |
ನಾನು ಪ್ರಾಣಗಳಲ್ಲ ಪುರುಷ ಸ್ತ್ರೀಯಲ್ಲ |
ನಾನೆ ಪ್ರತ್ಯಗ್ವಸ್ತುವೆನ್ನುತಲರಿತು |
ಸಾನುರಾಗದಿ ಶಿವೋಹಂ ಶಿವೋಹಂಯೆಂಬ || ಜ್ಞಾನ ||2||
ಹಲವು ಕುಂಭದ ಜಲದೊಳಗೊಬ್ಬ ಚಂದಿರ |
ಹಲವು ಬಿಂಬಗಳಾಗಿ ತೋರುತಲಿರುವಂತೆ |
ಹಲವು ಜೀವರ ಚಿತ್ತದೊಳು ಪ್ರತಿಬಿಂಬಿಸಿ |
ಪೊಳೆವ ಸಚ್ಚಿದ್ರೂಪ ತಾನೆಂಬ ನಿಶ್ಚಲ || ಜ್ಞಾನ ||3||
ವರತೀರ್ಥ ಮಾತ್ರದಿ ಸ್ವರ್ಣಮೃದ್ಘಟದೊಳು |
ತರಣಿ ಗಗನದಂತೆ ಸಮತೆವೆತ್ತಿರುವ |
ಪುರುಷ ಚಾಂಡಾಲನಾದರೂ ದ್ವಿಜನಾದರು |
ಗುರು ಸ್ವರೂಪವದೆಂದು ಭಾವಿಸುವದ್ವೈತ ||4||
ಯಿಳೆಯೊಳಯಸ್ಕಾಂತ ಸನ್ನಿಧಿಯಲಿ ಸೂಜಿ |
ಚಲಿಸುವ ಪರಿಯನ್ನ ಸನ್ನಿಧಾನದಲ್ಲಿ |
ಹಲವು ಕರಣೇಂದ್ರಿಯ ಚಲಿಸುತ್ತಲಿದ್ದರು |
ಚಲನರಹಿತ ಗುರು ರಂಗನಾಗಿಹನೆಂಬ || ಜ್ಞಾನವೊಂದೇ ಸಾಕು ||5||

ದೇವರು ನೀನಮ್ಮ
ದೇವರು ನೀನಮ್ಮ | ಜೀವದ |
ಭಾವನೆ ಬಿಡು ತಮ್ಮ || ಪ||
ಆವ ಕಾಲಕು ನೀ ಪರಬೊಮ್ಮ |
ಆವ ಬಾಧೆ ನಿನಗಿಲ್ಲವೊ ತಮ್ಮ ||ಅ||
ತನುವಿದು ನಾನೆಂದು | ಆತ್ಮನ |
ನೆನೆಯದೆ ಮರೆತಂದು |
ತನುವೆ ನಾನೆಂಬುವ ಮರೆದಾವಾಗಲು |
ಅನುಪಮ ವಸ್ತುವೆ ನಾನೆಂದರಿಯೈ || ದೇವರು ||1||
ಪಳಕುನೀಲಪಟವಾ | ಹೊಂದಿರೆ |
ಮಲಿನವೆನಿಸದಂತೆ |
ಹೊಲೆತನುವಂಟಿಯು ಅಂಟದೆ ನಿರ್ಮಲ |
ಪಳುಕಿನ ಪರಿಯಿಹೆನ್ನುತಲರಿಯೈ || ದೇವರು ನೀನಮ್ಮ ||2||
ಮರದೊಳು ಸಿಖಿಯಿರಲು | ಶಿಖಿಯಲಿ |
ಮರವಿಲ್ಲದ ಪರಿಯ |
ಪರಿಪರಿ ಸಂಸಾರದೊಳು ನೀನಿರ್ದರು |
ಪರಿಕಿಸಲದು ನಿನಗಿಲ್ಲೆಂದರಿಯೈ || ದೇವರು ||3||
ಕಲಶದಿ ತುಂಬಿರುವ | ವ್ಯೋಮವು |
ಕಲಶವಂಟದ ಪರಿಯ |
ಹೊಲೆತನುವಿಂದ್ರಿಯದೊಳು ಬೆರತಿದ್ದರು |
ಬಲು ಬಯಲಾಗಿಹೆನ್ನುತಲರಿಯೈ || ದೇವರು ನೀನಮ್ಮ ||4||
ತರಣಿ ಸಕಲ ಜಗದಾ | ಕಾರ್ಯಕೆ |
ನೆರೆ ಸಾಕ್ಷಿಯೆನಿಪಂತೆ |
ಕರಣಾದಿಗಳಿಗೆ ಸಾಕ್ಷಿಕನೆನಿಸುವ |
ಗುರು ಮಹಲಿಂಗನೆ ನಾನೆಂದರಿಯೈ || ದೇವರು ನೀನಮ್ಮ ||5||

ತನ್ನೊಳಿಹವಾತ್ಮನನು
ತನ್ನೊಳಿಹವಾತ್ಮನನು | ಶೃತಿಗಳನುಭವದಿಂದ |
ತನ್ನೊಳರಿತ ಮಹಾತ್ಮ | ಮುಕ್ತನಾಗುವನು ||ಪ||
ಹರುಷದಿಂ ಶೃತಿಗಳೊಳ “ಗಂಗುಷ್ಟ ಮಾತ್ರಃ |
ಪುರುಷೋಮಧ್ಯ ಆತ್ಮನಿತಿಷ್ಟತಿ” |
ಯೆಂದುದ್ಘೋಷಿಸೆ ಮೆರೆವಸಂಣ ವತ್ಯಂಗುಲದ ತನು ಮಧ್ಯದೊಳಗಾ |
ಪುರುಷ ಸಕಲ ಶಕ್ತ್ಯಾತ್ಮಕನೆನಿಸಿಪ್ಪನಾಗಿ || ತನ್ನೊ ||1||
ಅಣುವಿನೊಳಗಣು ಮಹತ್ತಿನೊಳಗೆಯು ಮಹ |
ತ್ತೆನಿಸಿಕೊಂಡು ಬ್ರಹ್ಮಾದಿ ತೃಣವಾಂತವಾಗಿರುವ |
ತನುವಿನೊಳಗಾನಂದ ಕೋಶವೆಂತೆಂಬು |
ವನುಪಮಿತ ಗುಹೆಯೊಳಗೆ ನೆಲೆಸಿರ್ಪನೂ || ತನ್ನೊ ||2||
ಹಲವು ಗೋವಿನ ಹಾಲು ರುಚಿಯೊಂದೆ ಯೆನಿಪಂತೆ |
ಹಲವು ದೇಹದೊಳಾತ್ಮನೊಬ್ಬ ರಾರಾಜಿಪನು |
ಮಲಿನ ಮನಸಿನ ಜೀವಗುಣವ ಸುಜ್ಞಾನ ಜಲದಿಂ |
ತೊಳೆಯಲಂತರ್ಬಾಹ್ಯ ಭಾವಿಸುವದಾಗಿ ||3||
ತಿಲದೊಳಗೆ ತೈಲ ಪಾಲೊಳಗೆ ಘೃತವು
ಸಲೆಯಡಗಿದಂತಾತ್ಮ ದೇಹದೊಳಗಿಹುದಂ |
ತಿಳಿದು ಮನವೆಂಬ ಮಂತಿನಿಂ ಮಥಿಸಿದೊಡೆ |
ಥಳಥಳಿಪ ಪರವಸ್ತು ಗೋಚರಿಪುದಾಗೀ ||4||
ಯಿದುವೆ ನಿಷ್ಕಳ ಬ್ರಹ್ಮವಿದುತಾನೆಯೆಂಬುದನು |
ಪದುಳ ಶ್ರೀಗುರು ಮಹಾಲಿಂಗನಿಂದರಿತು |
ಮುದದಿಂದಲನುಭವಿಸಲಮೃತತ್ವ ಸಿದ್ಧಿಸುವ |
ದಿದು ಅಮೃತ ಬಿಂದೂಪನಿಷದ್ವಾಕ್ಯಸಾರಂ ||5||

ಬ್ರಹ್ಮ ಭಾವನೆಯುದಿಸಿ
ಬ್ರಹ್ಮ ಭಾವನೆಯುದಿಸಿ |
ಹಮ್ಮಳಿದ ಸತ್ಪುರುಷ |
ಬ್ರಹ್ಮವಲ್ಲದೆ ಮರ್ತ್ಯನೆನಿಸನೆಂದಿಗೆಯು ||ಪ||
ತರುಣಿ ವೇಷವನಾಂತ |
ಪುರುಷ ಸ್ತ್ರೀಯೆನ್ನಿಸದೆ |
ಪುರುಷನೇ ನಿಜವೆನಿಸಿ ರಾರಾಜಿಸುವ ಪರಿಯ |
ವುರು ಜೀವ ಭಾವವನು |
ಧರಿಸಿರುವ ಪರಮಾತ್ಮ |
ಪರಮನಲ್ಲದೆ ಜಗದಿ ಜೀವನೆನ್ನಿಸನು ||1||
ದಾರು ದಂತಿಯ ಪರಿಯ |
ತೋರುತ್ತಲಿದ್ದರೆಯು |
ದಾರುವಲ್ಲದೆ ದಂತಿಯಾಗದಿರುವಂತೇ ಭೂರಿವಿಶ್ವದ ಪರಿಯ|
ತೋರುತ್ತಲಿದ್ದರು ವಿಷ್ಣು |
ಚಾರು ಹರಿಯಲ್ಲದಲೆ ವಿಶ್ವವೆನ್ನಿಸನೂ ||2||
ಮರದಿಂದ ರಚಿಸಿರುವ |
ಹರಿರೂಪ ವಿಗ್ರಹವು |
ಮರವದಲ್ಲದೆ ಹರಿಯುಯೆನ್ನಿಸದ ಪರಿಯಾ |
ಗುರುಲಿಂಗನ ವರ ಶಿಷ್ಯನಾದವನು |
ಗುರುವೆನಿಪನಲ್ಲದಲೆ ನರನೆನಿಸ ಜಗದೀ || ಬ್ರಹ್ಮ ಭಾವನೆಯುದಿಸಿ ||3||

ಬಾಯ ಬ್ರಹ್ಮದಿಂದ ಮುಕ್ತಿಯೇ
ಬಾಯ ಬ್ರಹ್ಮದಿಂದ ಮುಕ್ತಿಯೇ | ವೋದಿಕಲಿತ |
ಬಾಯ ಬ್ರಹ್ಮದಿಂದ ಮುಕ್ತಿಯೇ ||ಪ||
ಮಾಯಾಜಾಲಗಳನು ತಿಳಿದು |
ಕಾಯಕರ್ಮ ಮಲವ ತೊರೆದು |
ಜಾಯೆಸುತರ ಮೋಹವಳಿದು |
ಹೇಯಜೀವ ಭಾವವಳಿಯದೆ ||ಅ||
ಆಸೆ ಮೋಹ ಮದವ ಕೊಲ್ಲದೆ | ನಿತ್ಯಮುಕ್ತಿ |
ಯಾಶೆ ಭಕ್ತಿ ಭಾವವಿಲ್ಲದೆ |
ವಾಸನೆಗಳು ಮೂರು ಬಲಿದು |
ಕ್ಲೇಶವೈದರಲ್ಲಿ ಸುಳಿದು |
ಪಾಶವೆಂಟರಿಂದ ಬಗಿದು |
ಘಾಸಿಯಾಗುತ್ತಿರುವ ನರಗೆ ||1||
ನಾಮರೂಪು ಭ್ರಾಂತಿಯಳಿಯದೆ | ಪ್ರೇಮಾಸ್ತಿ ಭಾತಿ |
ಧಾಮದಲ್ಲಿ ಮುಳುಗಿ ಸುಖಿಸದೆ |
ಕಾಮಕ್ರೋಧದಲ್ಲಿ ತೊಳಲಿ |
ನೇಮಸೀಮೆಯಲ್ಲಿ ಬಳಲಿ |
ಹೇಮ ಭೂಮಿ ಕಾಮಿನಿಯರ |
ಪ್ರೇಮತೊಡರಿ ಬಿಡದ ನರಗೆ || ಬಾಯ ಬ್ರಹ್ಮದಿಂದ ||2||
ಜ್ಞಾನಿ ಶ್ರೀಗುರು ರಂಗನ ಬೆರೆಯದೆ | ದ್ವಿಜ ಕಿರಾತ |
ಶ್ವಾನವೆಂಬ ಭೇದವಳಿಯದೆ |
ಹೀನಕರ್ಮದಲ್ಲಿ ಕುದಿದು |
ಜ್ಞಾನ ಮಾರ್ಗವನ್ನು ತೊರೆದು |
ಸ್ವಾನುಭಾವಿಗಳನು ಜರೆದು |
ಜ್ಞಾನಿಯಂತೆ ನುಡಿವ ನರಗೆ || ಬಾಯ ||3||

ಆತ್ಮಚಿಂತನೆಯ ಮಾಡೋ
ಆತ್ಮಚಿಂತನೆಯ ಮಾಡೋ | ಸೋಹಮ್ಮೆನ್ನು |
ತಾತ್ಮಚಿಂತನೆಯ ಮಾಡೋ ||ಪ||
ಆತ್ಮ ಚಿಂತನೆಯಿಂದಲಮೃತತ್ವ ದೊರೆವುದು |
ಮಿಥ್ಯ ಮಾಯಾಭ್ರಮೆಯಡಗಿ ಹೋಗುವುದಾಗಿ || ಆತ್ಮ ||ಅ||
ತನುವಿಂದ್ರಿಯಗಳಭಿಮಾನವನು ಬಿಟ್ಟು |
ಮನದೊಳಗಾತ್ಮಾಭಿಮಾನವೆಯಳವಟ್ಟು |
ಕನಕ ಕಾಮಿನಿ ಭೂಮಿಯಾಶೆಯ ಕಳೆದು |
ಮನದಿ ತೋರುವ ಜೀವ ಭಾವನೆಯ ತೊಳದು ||1||
ಜರೆಮರಣವ ಜಡದೇಹಕ್ಕೆ ವೊಪ್ಪಿಸಿ |
ವುರುತೃಷೆ ಕ್ಷುಧೆಗಳ ಪ್ರಾಣಕ್ಕೆ ವೊಪ್ಪಿಸಿ |
ನೆರೆಸುಖ ದುಃಖವ ಮನಸಿಗೆಂದರಿತು |
ನಿರುತ ಸಾಕ್ಷಿವಸ್ತುವಾನೆನ್ನುತರಿತು ||2||
ಮರೆವೆ ಸಂಶಯ ವಿಪರೀತವ ತಿಳಿದು |
ವರ ಶ್ರವಣಾದಿಗಳಿಂದವ ಕಳೆದು |
ಪರಮನೆ ತಾನೆಂಬ ಭಾವನೆ ಸಲೆನಿಂದು |
ನಿರುತಾಖಂಡೈಕರಸಭಾವದೊಳು ನಿಂದು || ಆತ್ಮ ||3||
ಶರೀರವಿಂದ್ರಿಯ ಚಿತ್ತಾಹಂಕೃತಿಕ್ರಮವಾಗಿ |
ಮರಣ ಮೂರ್ಛೆ ನಿದ್ರೆ ಯೋಗದೊಳಿರವಾಗಿ |
ಅರಿಯಲಿವೆಲ್ಲವಾನಾತ್ಮ ವರ್ಗಗಳೆಂದು |
ಪರಮನಿಗಧ್ಯಾಸದಿಂದ ತೋರುವದೆಂದು || ಆತ್ಮ ||4||
ಮಿಥ್ಯಜೀವೇಶ್ವರ ಜಗವೊಂದು ತೋರದ |
ಮತ್ತೆ ಪ್ರಾಗ್ಭಾವಾದಿ ಭೇದಂಗಳೊಗೆಯದ |
ನಿತ್ಯಕಾಲತ್ರಯಾಬಾಧ್ಯತಾನೆಂದು |
ಧಾತ್ರಿ ಶ್ರಿಗುರುರಂಗ ಲಿಂಗನಾಗಿ ನಿಂತು || ಆತ್ಮ ಚಿಂತನೆಯ ಮಾಡೋ ||5||

ಮಾತಿನಿಂದಾಗದು ಮುಕ್ತಿ
ಮಾತಿನಿಂದಾಗದು ಮುಕ್ತಿ | ಪರ |
ಮಾತ್ಮನುಸಂಧಾನಿಗಪ್ಪುದು ಮುಕ್ತಿ ||ಪ||
ಹೆತ್ತಮಾತೆಯ ಕುಟ್ಟಬೇಕು | ಜ್ಞಾನ |
ಪುತ್ರನ ಪಡೆದುಸದ್ಗತಿ ಹೊಂದಬೇಕು |
ಹತ್ತು ಮಂದಿಯ ಕಟ್ಟಬೇಕು | ಶಾಂತಿ |
ಪತ್ನಿಯನನುದಿನ ಕಾಪಾಡಬೇಕು ||1||
ಕರಣ ವಿಜಯನಾಗಬೇಕು | ಜೀವ |
ಪರಮನೊಳೈಕ್ಯವನರಿತಿರಬೇಕು |
ಮರಣ ಭೀತಿಯ ಬಿಡಬೇಕು | ಸುಟ್ಟ |
ಅರಿವೆಯ ಪರಿ ಲೋಕದೊಳಗಿರಬೇಕು || ಮಾತಿನಿಂದಾಗದು ಮುಕ್ತಿ ||2||
ಅಂಗದಾಸೆಯ ಬಿಡಬೇಕು | ತನ್ನ |
ಲಿಂಗದೇಹವು ಭಂಗವಾಗಲು ಬೇಕು |
ಸಂಗರಹಿತನಾಗಬೇಕು | ಗುರು |
ರಂಗನೆ ತಾನೆನ್ನುತ್ತರಿತಿರಬೇಕು | ಮಾತಿನಿಂದಾಗದು ಮುಕ್ತಿ ||3||

ಅರಿತವ ನಿಜಮುಕ್ತ
ಅರಿತವ ನಿಜಮುಕ್ತ | ಬ್ರಹ್ಮವ |
ನರಿತವ ಗುರುಭಕ್ತ ||ಪ||
ನಿರುತನಿಜಾತ್ಮ ವಿಚಾರವಗೈಯುತ |
ಪರಿಪರಿಯ ಭ್ರಮೆಯಳಿಯುತ್ತಾ ||ಅ||
ಭೂತ ಪಂಚಕಗಳ | ಗುಣಸಂ |
ಜಾತ ಸುತತ್ವಗಳ |
ನೇತಿ ನೇತಿ ಮಹವಾಕ್ಯ ವಿಶೇಷಿತ |
ಆತ್ಮನೆ ತಾನೆಂತೆನ್ನುತ ಹೃದಯದಿ | ಅರಿತವ ||1||
ಜೀವಪರಮರೆಂಬ | ಭೇದದ |
ಭಾವನೆಯತಿಗಳೆದು |
ಭಾವದಿ ತ್ರಿಪದಿಚ್ಛೇದಗಳೊಗೆಯದ |
ಲಾವಗನಿತ್ಯಾಖಂಡ ತಾನೆನ್ನುತ ||2||
ಕನಕದ ವಡವೆಗಳ | ಕರಗಿಸೆ |
ಕನಕವೆವುಳಿವಂತೆ
ತನುವಿದು | ಅಳಿದರು ಅಳಿಯದಲುಳಿಯುವ |
ಅನುಪಮ ಬ್ರಹ್ಮವೆ ನಾ ನಿಜವೆನ್ನುತ || ಅರಿತವ ||3||
ಮೃತ್ತ್ತಿಕೆಯಿಂದಾದ | ಘಟಗಳು |
ಮೃತ್ತಿಕೆಯೆನಿಪಂತೆ |
ಚಿತ್ತುವಿನೊಂದಿಗೊಗೆದೀ ಜಗವೆಲ್ಲವು |
ಚಿತ್ತವೆ ನಿಜವೆಂದೆನ್ನುತ ಚಿತ್ತದಿ ||4||
ನಿರುಪಮ ನಿರ್ಗುಣನು | ನಿರ್ಮಲ |
ನಿರಘನಿರಾಶ್ರಯನು |
ಪರಮ ಪರಾತ್ಪರ ಪಾವನಯೆನಿಸುವ |
ಗುರು ಮಹಲಿಂಗನೆ ತಾನೆಂದೆನ್ನುತ || ಅರಿತವ ||5||

ಆಗದರಿಯದಾಗಲರಿಯದೂ
ಆಗದರಿಯದಾಗಲರಿಯದೂ | ಮುಕ್ತಿ ಪದವಿ |
ಯಾಗದಾನಕರ್ಮ ಕೋಟಿಯಿಂ ||ಪ||
ಆಗಮಂಗಳರಿದೊಡೇನು |
ಯೋಗಿಯಾದೊಡೇನು ನಿತ್ಯ |
ಭೋಗಿಯಾದೊಡೇನು ಜನ್ಮ |
ರೋಗ ಹರಿವ ಜ್ಞಾನವಿಲ್ಲದೆ || ಆಗದರಿಯದಾಗಲರಿಯದೂ ||ಅ||
ಯೆದುರಿಗಿರುವ ಪಂಚಭಕ್ಷವಾ | ನುಂಣದದನು |
ವದೆದು ಭಿಕ್ಷಕೆ ಪೋಪನಂದದಿ |
ಹೃದಯ ಕಮಲದಲ್ಲಿ ಪೊಳೆವ |
ಸದಮಲಾತ್ಮನನ್ನು ಮರೆದು |
ಬದಲು ದೈವವನ್ನು ಕಲ್ಪ್ಪಿಸಿ |
ಮುದದಿ ಪೂಜೆಗೈವ ಕರ್ಮಿಗೆ || ಆಗದರಿಯದಾಗಲರಿಯದೂ ||1||
ಕಳ್ಳ ಹಣಗಳಂಥ ಕರ್ಮದ | ಮಾರ್ಗದಿಂದ |
ಯೆಳ್ಳುಮಾತ್ರ ಜ್ಞಾನವುದಿಸದು |
ಒಳ್ಳೆ ಚಿನ್ನದಂಥ ಜ್ಞಾನವ |
ಬಲ್ಲ ಗುರುವಿನಿಂದಲರಿಯ |
ಲೆಲ್ಲ ಬ್ರಹ್ಮವೆಂಬ ಜ್ಞಾನ |
ವುಲ್ಲಾಸದಿಂದ ನಿಲ್ಲುವದಾಗಿ || ಆಗದರಿಯದಾಗಲರಿಯದೂ ||2||
ನಾನು ನನ್ನ ತನುವಿದೆಂಬುವ | ಅಜ್ಞಾನದಿಂದ |
ತಾನೆ ಸಾಕ್ಷಾದ್ಬ್ರಹ್ಮವೆಂಬುವ |
ಜ್ಞಾನದಿಂದ ಮುಕ್ತಿಯಲ್ಲದೆ |
ನಾನ್ಯಃ ಪಂಥಯೆನಲು ಶೃತಿಯು |
ತಾನೆ ತನ್ನ ನಿಜವ ಮರೆದು | ಹೀನಕರ್ಮಗೈಯ್ಯುವಾತಗೆ || ಆಗ ||3||
ಚಿತ್ಪ್ರಕಾಶ ವೃಕ್ಷಮೂಲದೀ |ಮುದದಿ ಕುಳಿತು |
ಮಿಥ್ಯನಾಮ ರೂಪವಳಿಯುತೆ |
ಆಸ್ತಿಭಾತಿ ಪ್ರಿಯದಿ ಬೆರೆದು |
ವಸ್ತುಧ್ಯಾನ ರಸವ ಸವಿದು |
ಮತ್ತನಾಗಿ ದ್ವೈತ ಭೇದ |
ವೃತ್ತಿಯಳಿದ ಖಂಡನಾಗದೆ | ಆಗ ||4||
ಅಂತರಂಗದಿ ಶ್ರೀಗುರು ರಂಗನ | ಬೆರೆದು ನಿತ್ಯ |
ಶಾಂತಿ ಚಿತ್ತನಾಗಿ ತನ್ನಯಾ |
ಕಾಂತೆಕನಕ ಗೃಹದ ಮೋಹ |
ಭ್ರಾಂತಿಯುಡುಗಿ ವಿಮಲಬ್ರಹ್ಮ |
ಚಿಂತೆಯಲ್ಲಿ ಮುಳುಗಿ ಅನ್ಯ |
ಚಿಂತೆಯಳಿದ ಜ್ಞಾನಿಗಲ್ಲದೆ || ಆಗಲರಿಯದಾಗಲರಿಯದು ||5||

ಯೆಂತಿಹುದೊ ಪರವಸ್ತು
ಯೆಂತಿಹುದೊ ಪರವಸ್ತು | ವೆಂದು ಚಿಂತಿಸಲ್ಯಾಕೆ |
ಅಂತುಯಿಂತಿಹುದೆನ್ನಬಾರದಂತಿಹುದು ||ಪ||
ಪುರುಷ ಸ್ತ್ರೀಯಂತಿಲ್ಲ | ಪಶು ಪಕ್ಷಿಯಂತಿಲ್ಲ |
ಗಿರಿಮರಗಳಿಂತಿಲ್ಲ ಗುಡಿಗಳಂತಿಲ್ಲ |
ಕರಿದು ಬಿಳಿದಾಗಿಲ್ಲ | ಕರಕೆ ಸಿಕ್ಕುವದಲ್ಲ |
ನಿರುತ ಭಾವಾತೀತವೆನಿಸಿಕೊಂಡಿಹುದು || ಯೆಂತಿಹು ||1||
ಮಳೆಗೆನೆನೆಯುವದಲ್ಲ | ಬಿಸಿಲಿಗೊಣಗುವದಲ್ಲ |
ಛಳಿಗೆ ನಡುಗುವುದಲ್ಲ | ತಾ ಸುಡುವದಲ್ಲ |
ಬಿಸಿಲಿಗೊಣಗುವದಲ್ಲ | ಹೊರಗೆ ಸುಳಿಯುವುದಲ್ಲ |
ವಳಗೆ ಹೊರಗೊಂದಾಗಿ | ತಾನೆ ಬೆಳಗುತ್ತಿಹುದು ||2||
ಅದಕೆ ಮಾತಾಪಿತರು | ಸತಿಪುತ್ರರಿಲ್ಲ |
ಅದಕೆ ದೇಹಗಳಿಲ್ಲ ವಿಂದ್ರಿಯಗಳಿಲ್ಲ |
ಅದಕೆ ಪ್ರಾಣಗಳಿಲ್ಲ ಬುದ್ಧಿಮನವಿಲ್ಲ |
ಸದಮಲಾದ್ವಯ ವಸ್ತುವೆನಿಸಿ ರಾಜಿಪುದು ||3||
ಕಣ್ಣಿಲ್ಲ ಕೈಯಿಲ್ಲ | ದೀಕ್ಷಿಸುವುದೀಯುವದು |
ಮುನ್ನ ಪಾದಗಳಿಲ್ಲ | ಸಂಚರಿಸುತಿಹುದು |
ವುಣ್ಣುವುದು ತಾನಲ್ಲ ಹಸಿದಿರುವುದಲ್ಲ |
ನಿರ್ಣಯಿಸಲದು ನಿತ್ಯ ತೃಪ್ತನೆನಿಸಿಹುದು ||4||
ಅಲ್ಲುಂಟು ಯಿಲ್ಲಿಲ್ಲವೆನದೆ ಕಾಲತ್ರಯದಿ |
ಯೆಲ್ಲೆಲ್ಲು ಪರಿಪೂರ್ಣವಾಗಿ ತುಂಬಿಹುದು |
ಬಲ್ಲವರ ಹೃದಯದೊಳ | ಗುಲ್ಲಾಸಮಾಗಿರುತ |
ಸಲ್ಲಲಿತ ಗುರುರಂಗನೆನಿಸಿ ರಾಜಿಪುದು || ಎಂತಿಹುದೊಪರವಸ್ತು ||5||

ಭವರೋಗಕ್ಕೌಷುಧವಿತ್ತ
ಭವರೋಗಕ್ಕೌಷುಧವಿತ್ತ | ಭಕ್ತ |
ಭವಹರ ಶ್ರೀ ಗುರುದೇವ ಪ್ರತ್ಯಕ್ಷಾ ||ಪ||
ಮರವೆಯೆಂತೆಂಬುವ ಸನ್ನಿಪಾತಕದ |
ಜ್ವರದಿ ತನ್ನನು ಮರೆದಿರೆ ತತ್ವಮಸಿಯೆಂಬ |
ಪರಮ ಚಂದ್ರಾಮೃತ ಘುಟಿಕೆಯನಿತ್ತು |
ಪರಿಹರಿಸಿದನೆನ್ನ ಜನ್ಮ ಜಾಡ್ಯವನು ||1||
ವುರುತರಾವಿದ್ಯೆಯೆಂಬುವ ಪರೆ ಮುಚ್ಚಿ |
ಪರವಸ್ತು ಕಾಣದಂಧಕನಂತೆ ಬಳಲುತ |
ಲಿರವುದ ಕಂಡಪರೋಕ್ಷವೆಂತೆಂಬುವ |
ಪರಮಜ್ಞಾನಾಂಜನೆ ಹಾಕೆನ್ನ ಪೊರೆದ ||2||
ಅರುಣನುದಿಸಲಂಧಕಾರ ತಾನಡಗುವ |
ಪರಿಯಹೃದ್ಗಗನದಿ ಚಿತ್ಸೂರ್ಯನುದಿಸೆ
ಹರಿದು ಮಾಯಾಕಾಳಿಕೆ ನಮ್ಮಶ್ರೀಮ
ದ್ಗುರುರಂಗ ಲಿಂಗನೋಳ್ಬೆರೆದೇಕವಾದೆನು ||3||

ಬ್ರಹ್ಮವಾನೆನ್ನುತಲರಿಯೈ
ಬ್ರಹ್ಮವಾನೆನ್ನುತಲರಿಯೈ | ಸರ್ವಂ |
ಬ್ರಹ್ಮಮಯಂ ಜಗವೆನ್ನಲು ಶೃತಿಯು ||ಪ||
ಅಲೆಗಳು ಬುದ್ಬುಧ ಶೈತ್ಯ ಮಧುರಬಿಂದು |
ಸುಳಿ ಮೊದಲಾಗಿಹುದೊಂದೆ ಜಲವೆನಿಪಂತೆ |
ಹಲವು ಬಗೆಯ ಜೀವೇಶ್ವರ ಜಗವೆಲ್ಲವು |
ಪೊಳೆವ ಚಿನ್ಮಯ ವಸ್ತುವೊಂದೆಯಾಗಿಹುದಾಗಿ ||1||
ಯರಕದ ಪ್ರತಿಮೆಯ ಪೀಠವಾಹನ ವಸ್ತ್ರ |
ಧರಿಸಿದಾಯುಧವೊಂದೆ ಲೋಹವೆನಿಪಂತೆ |
ಪರಿಪರಿಭೇದದಿ ತೋರುವೀ ಜಗವೆಲ್ಲ |
ಪರಮ ಸಚ್ಛಿದ್ರೂಪವೆನಿಸಿರಾಜಿಪುದಾಗಿ ||2||
ವಿನುತ ಕುಂಡಲ ಚೌರಿ ಪದಕತಾಟಂಕವು |
ಘನ ಮುಕುಟಾದಿಯ ಚಿನ್ನವೊಂದೆನಿಪಂತೆ |
ತನುಕರಣೇಂದ್ರಿಯ ವಿಷಯ ಕಾರ್ಯಗಳೆಲ್ಲ |
ಚಿನುಮಯನುಳಿದನ್ಯವಿಲ್ಲವೆನ್ನಿಪುದಾಗಿ ||3||
ತನಿಬೆಲ್ಲದಿಂದಾದ ನಿಂಬೆದಾಳಿಮ ಬಾಳೆ |
ಪನಸ ಜಂಬೀರಾದಿ ರುಚಿಯೊಂದೆನ್ನಿಸಿದಂತೆ |
ಘನಶೈವಶಾಕ್ತ ಸೌರಾದಿ ದೇವರುಗಳೆಂ |
ದೆನಿಸುತೊಬ್ಬಾತ್ಮನೇ ರಾಜಿಸುತಿಹನಾಗಿ ||4||
ಈ ಪರಿಯಲಿ ವಿಶ್ವ ವ್ಯಾಪಕತ್ವದಿ ನಾಮ |
ರೂಪಗಳಾಂತು ವಿಲಾಸದಿಂದಲಿ ಸರ್ವ |
ವ್ಯಾಪಕವೆನಿಸಿ ಬ್ರಹ್ಮಾಂಡ ಪಿಂಡಾಂಡದೊ |
ಳಾ ಪರಮಾತ್ಮನೆ | ಗುರುರಂಗನೆನಿಪನಾಗಿ || ಬ್ರಹ್ಮ ||5||

ಏನು ಹೇಳಲಿ ಪೂರ್ಣ
ಏನು ಹೇಳಲಿ ಪೂರ್ಣ | ಬ್ರಹ್ಮ ವಿಲಾಸವ |
ನಾನಾ ರೂಪಾಂತಿಹುದು ||ಪ||
ತಾನೆ ಜಗದಾಕಾರವೆನ್ನಿಸಿ |
ಮಾನವರು ಪಶು ಪಕ್ಷಿ ಮೊದಲಾದ |
ಹೀನ ಜನ್ಮಗಳನ್ನು ಯೆತ್ತುತ |
ತಾ ನಿರಂತರ ನಟಿಸುತಿಹುದು ||ಅ||
ಪರಮ ನಿರ್ಗುಣ ಬ್ರಹ್ಮ | ಮಾಯಾಕಲ್ಪಿತವಾದ |
ವರಸತ್ವಗುಣದೊಳಗೆ |
ಬೆರೆತು ಯೀಶನು ಮಲಿನ ಸತ್ವದಿ |
ಬೆರೆತು ಜೀವನು ಯೆನಿಸಿ ನಾನಾ |
ಪರಿಯ ತೋರುತ ಸರ್ವಕಾಲದಿ |
ವರ ಜಗನ್ಮಯವೆಸಿಕೊಂಡಿದೆ || ಏನು ||1||
ಹರಿಹರಬ್ರಹ್ಮೇಂದ್ರ | ಚಂದ್ರಭಾಸ್ಕರನು |
ಸುರರು ದಿಕ್ಪಾಲಕರು |
ಚರಿಪ ಗ್ರಹಗಳು ಗರುಡಗಂಧರ್ವ ಸುರ ಕಿನ್ನರ |
ನರರು ಪಶುಪಕ್ಷಿಗಳು ಮೊದಲಹ |
ಪರಿಪರಿಯ ರೂಪಾಂತು ತೋರ್ಪುದು || ಏನು ||2||
ಪುರುಷ ಸತಿಯು ಮಗನು | ಮೊಮ್ಮಗ ಮತ್ತೆ |
ಮರಿಮಗನೆನಿಸುತಲಿ |
ಕುರುಡ ಕುಂಟನು ಹೆಳವ ಮೂಗನು |
ಪರಮ ಭೋಗಿಯು ತ್ಯಾಗಿ ಯೋಗೀ |
ಶ್ವರನು ಬಡವನು ಭಾಗ್ಯವಂತನು |
ದೊರೆಯು ಮಂತ್ರಿಗಳೆನಿಸಿ ನಟಿಪುದು | ಯೇನು ||3||
ಯೆತ್ತ ಮಾತೆಯು ಮಗಳು | ಮೊಮ್ಮಗಳೆಂದೆನ್ನಿ |
ಸುತ್ತಲತ್ತಿಗೆ ಸೊಸೆಯು |
ಮತ್ತೆಯು ಸುವಾಸಿನಿಯು ವಿಧವೆಯು |
ಯೆತ್ತು ಯೆಮ್ಮೆಯು ಕೋಣ ಕುರಿಗಳು |
ಕತ್ತೆ ಕುದುರೆಯು ತೋಳವೆಂದೆನಿ |
ಸುತ್ತ ಚರಿಸುತ್ತಿಹುದು ಜಗದೊಳು || ಯೇನು ||4||
ಘನಸಿಂಹ ಶಾರ್ದೂಲ | ಹುಲಿಕರಡಿಯು ಜಿಂಕೆ |
ಶುನಿಸೂಕರಾದಿಗಳು |
ಮನುಜ ಕೃತವರ್ಣಾಶ್ರಮಂಗಳು |
ಮನೆತನವು ಕುಲಗೋತ್ರನೀತಿಯು |
ಬಿನುಗು ಚಾಂಡಾಲಾದಿಜಾತಿಗ |
ಳೆನಿಸಿ ನಾನಾ ಪರಿಯನಟಿಪುದು || ಯೇನು ||5||
ನಿತ್ಯ ಚಿದಾನಂದ ನಿಜವಸ್ತುಯೆಂದೆನಿ | ಸುತ್ತ ರಾಜಿಸುತಿಹುದು |
ಸತ್ಯ ಜೀವನ್ಮುಕ್ತಿ ರೂಪಿನ |
ತತ್ವಮಸಿ ವಾಚ್ಯಾರ್ಥಗಳನು
ಮತ್ತೆ ಲಕ್ಷ್ಯಾರ್ಥವನು ಬೋಧಿಸಿ |
ವುತ್ತಮದ ಗುರುವೆನಿಸಿಕೊಂಡಿದೆ || ಯೇನು ||6||
ಮೂರು ಲೋಕದಿ ತುಂಬಿ | ಮುಮ್ಮೂರ್ತಿಗಳ ಪ್ರಾಣಾ |
ಧಾರವೆಂದೆನಿಸುತ್ತಿದೆ |
ಮೂರು ವರ್ಣಕೆ ಬೇರೆಯೆನಿಸುತ |
ಮೂರು ಗುಣಗಳ ಮೂರವಸ್ಥೆಯ |
ಮೂರು ತನುಗಳಹೊಂದಿ ಹೊಂದದೆ |
ಮೂರು ಕಾಲದಿ ಸಾಕ್ಷಿಯೆನಿಸಿದೆ || ಯೇನು ||7||
ವರಜಾಗ್ರ ಮೊದಲಾದ | ಮೂರವಸ್ಥೆಗಳೊಳ |
ಗರಿಯದೊಂದನು ಮತ್ತೊಂದು |
ಅರಿಯೆ ಸರ್ವಾವಸ್ಥೆಗಳ ತಾ |
ನರಿಯುತಲನುಸ್ಯೂತವಾಗಿ |
ಪರಮ ತೂರ್ಯವದೆನಿಸಿ ಸರ್ವರ |
ಶರಿರದೊಳ ಹೊರಗೆಲ್ಲ ತುಂಬಿದೆ || ಯೇನು ||8||
ಯಲ್ಲ ಲೋಕಗಳೊಳ | ಗೆಡೆದೆರಪಿಲ್ಲದೆ |
ಯಲ್ಲ ಪದವಿಗಳೊಳು |
ಯಲ್ಲ ದೇಶಗಳೆಲ್ಲ ಕಾಲಗ |
ಳೆಲ್ಲ ವಸ್ತುಗಳೆಲ್ಲ್ಲ ಕರ್ಮಗ |
ಳೆಲ್ಲ ಧರ್ಮಗಳೆಲ್ಲ ಕಾರ್ಯಗ |
ಳಲ್ಲಿ ವಂದೇಸಮದಿ ತುಂಬಿದೆ || ಏನು ||9||
ಚಿನ್ನವೊಂದೇ ನಾನಾ | ವಸ್ತುಗಳಾದಂತೆ |
ಭಿನ್ನಭಿನ್ನಾಕೃತಿಯಿಂ |
ಮುನ್ನ ಬ್ರಹ್ಮಾಂಡಂಗಳೆನಿಸುತ |
ಲಿನ್ನು ಪಿಂಡಾಂಡಂಗಳೆನಿಸುತ |
ನನ್ನಿಯಿಂ ಪರಬೊಮ್ಮ ತಾನೆ |
ಹಂಣಿಕೊಂಡಾನಂದಿಸುತ್ತಿದೆ || ಯೇನು ||10||
ಧರೆಯೊಳೀ ಪರಿಯಾತ್ಮ | ಭರಿತನಾಗಿಹನೆಂಬೊಂ |
ದರಿಯದ ಜ್ಞಾನದಿಂದಾ |
ಗಿರಿಯ ಗುಹೆಯನು ಸೇರಿ ನಾನಾ |
ಪರಿಯ ತಪವನುಗೈದು ಬಳಲುವ |
ಅರೆಮರುಳನಾದವನಿಗೆಂದಿಗು |
ಪರಮ ಜೀವನ್ಮುಕ್ತಿ ದೊರೆಯದು || ಯೇನು ||11||
ಅನಘನದ್ವಯ ಗುರು | ಮಹಲಿಂಗನೀ ಪರಿ |
ಘನದಿ ರಾಜಿಸುತ್ತಿಪ್ಪನು |
ಯೆನುತಲನುಭವದಿಂದಲರಿತಿಹ |
ಮನುಜ ಯೋಗಿಸುಭೋಗಿಯಾಗಲಿ |
ಮನಸಲಿಲ ಸೈಂಧವವು ಬೆರದಂ |
ತನುಪಮಾತ್ಮನ ಬೆರೆದು ಸುಖಿಸುವ || ಯೇನು ಹೇಳಲಿ ಪೂರ್ಣ ||12||

ಬಹು ಚಂದ ಬಹು ಚಂದ
ಬಹು ಚಂದ | ಬಹು ಚಂದ | ಬಹು ಚಂದ ನೀ|
ನಿಹಪರದಾಸೆಯ ತೊರದರೆ ಕಂದ ||ಪ||
ದುಷ್ಟರ ಸಂಗವ ಮೊದಲತಿಗಳೆದು |
ಅಷ್ಟಮದಂಗಳ ಭೂಮಿಗೆ ತುಳಿದು |
ಕಷ್ಟದ ಕರ್ಮತ್ರಯಂಗಳ ತೊಳದು |
ದೃಷ್ಟಿಯೊಳಾತ್ಮನ ತೇಜದಿ ಬೆರೆತಿರೆ || ಬಹು ||1||
ಮುನ್ನಿನ ವಾಸನೆಗಳು ಹರಿದೋಗಿ |
ವುನ್ಮನಿ ಯೋಗದಿ ದ್ವೈತವ ನೀಗಿ |
ಚಿನ್ಮಯ ಚಿತ್ಸುಖ ಸಾಗರನಾಗಿ |
ಜನ್ಮಜರಾಮರಣಂಗಳನಳಿದಿರೆ || ಬಹು ಚಂದ ||2||
ದೇಹಧ್ಯಾಸವನೊಮ್ಮಿಗೆ ಕೆಡಿಸಿ |
ಮೋಹಾದಿಗಳೆಂಬ ಬುಡವನು ಬಿಡಿಸಿ |
ಕೋಹಂ ಭ್ರಮೆಯ ವಿಚಾರದಿ ನಿಲಿಸಿ |
ಸೋಹಂ ಭಾವನೆಯಳವಡಿಸಿರಲು || ಬಹು ||3||
ಜ್ಞಾನದಿ ವಸ್ತುವ ತನ್ನೊಳು ಬೆರೆದು |
ನಾನಾ ವರ್ಣಾಶ್ರಮಗಳ ಮರೆದು |
ಕಾಣುವ ವಿಶ್ವವ ಪುಸಿಯೆಂದರಿದು |
ಮೌನ ಸಮಾಧಿಯ ಬೆಡಗರಿತಿರಲು || ಬಹು ಚಂದ ||4||
ಗುರು ರಂಗ ತಾನೆಂತೆಂಬುದೆ ಸತ್ಯ |
ಪರಿಕಲ್ಪಿತ ಭಾವನೆಗಳು ಮಿಥ್ಯ |
ನಿರಘ ನಿರಂಜನನೆನಿಸುತ ವತ್ಸ |
ನಿರುತ ನಿರಾಲಂಬ ವಿಗ್ರಹನಾಗಿರೆ ||
ಬಹು ಚಂದ | ಬಹು ಚಂದ | ಬಹು ಚಂದ ||5||

ಹ್ಯಾಗಿದ್ದರು ಚಂದ
ಹ್ಯಾಗಿದ್ದರು ಚಂದ ಜ್ಞಾನಿಯು |
ಜನ್ಮರೋಗವನಳಿದು | ಬ್ರಹ್ಮಾನಂದ ತಾನಾಗಿರೆ || ಹ್ಯಾಗಿದ್ದರು ||ಪ||
ಯೋಗದೊಳಿರೆ ಚಂದ | ಭೋಗದೊಳಿರೆ ಚಂದ |
ಯೋಗವನರಿಯದಿದ್ದರೆಯು ಚಂದ |
ತ್ಯಾಗಿಯಾದರು ಬಹುಲುಬ್ದನಾಗಿದ್ದರು |
ರಾಗಿಯಾದರೂ ವಿರಾಗಿಯಾಗಿದ್ದರು || ಹ್ಯಾಗಿದ್ದರೂ ||1||
ಮನೆಯೊಳಿದ್ದರು ಚಂದ | ಮಠದೊಳಿದ್ದರು ಚಂದ |
ಮನೆಮಠದಾಸೆಯನಳಿದರು ಚಂದ |
ಧನವಂತನಾಗಿರೆ ಧನಹೀನನಾಗಿರೆ |
ಜನ ಸಂಗದೊಳಿರೆ | ಜನ ಸಂಗವಳಿದರೆ | ಹ್ಯಾಗಿದ್ದರು ||2||
ಓದುತ್ತಲಿರೆ ಚಂದ | ಬರೆಯುತ್ತಲಿರೆ ಚಂದ |
ಓದದೆ ಬರೆಯದಲಿದ್ದರು ಚಂದ |
ವಾದಿಸುತ್ತಿದ್ದರು ವಾದವನುಳಿದರು |
ವೇದಾಂತಿಯಾದರು | ಸಿದ್ಧಾಂತಿಯಾದರು || ಹ್ಯಾಗಿದ್ದರು ||3||
ಕುಲದೊಳಿದ್ದರು ಚಂದ | ಕುಲವ ಬಿಟ್ಟರು ಚಂದ |
ಸಲೆಕರ್ಮ ನಡೆಸಲು ಬಿಡಲದು ಚಂದ |
ಬಲು ಶೂರನಾದರು | ರಣಹೇಡಿಯಾದರು |
ಯಿಳೆಯಾಣ್ಮನಾದರು | ಸಲೆ ಭಂಟನಾದರೂ || ಹ್ಯಾಗಿದ್ದರು ||4||
ತಿರಿದು ತಿನ್ನುತಿರೆ ಚಂದ | ಕರೆದಿಕ್ಕುತಿರೆ ಚಂದ|
ಗಿರಿಗುಹಾಂತರ ವಾಸಿಯಾಗಿರೆ ಚಂದ |
ಗುರುಭಕ್ತನಾದರು | ಗುರುಶಿಷ್ಯನಾದರೂ |
ಗುರುಮಹಲಿಂಗರಂಗನೆ ತಾನಾಗಿದ್ದರೆ | ಹ್ಯಾಗಿದ್ದರು ಚಂದ ||5||

ಜ್ಞಾನಿ ಜಗದೊಳು
ಜ್ಞಾನಿ ಜಗದೊಳು ಸರ್ವ ಭೋಗದೊಳಿದ್ದರೇನ |
ಜ್ಞಾನಿಯಂದದಿ ಮೋಹಕೊಳಗಾಗದಿರುವಂ ||ಪ||
ತರಣಿ ತನ್ನಯ ಕಿರಣದಿಂದಲಿ ಜಲವ |
ನುರೆಶಳದು ಜಲದ ಕಲ್ಮಷವನಂಟದಿರ್ಪಂತೆ |
ಕರಣೇಂದ್ರಿಯಗಳ ಮುಖದಿ ನಾನಾ ವಿಷಯಗಳ |
ಬೆರೆತು ತದ್ವಿಷಯಗಳ ಬೆರೆಯದಂತಿಹನು | ಜ್ಞಾನಿ ||1||
ವುರಿವಸಿಖಿ ಸಕಲ ಕಾಷ್ಟಗಳ ತಿಂದುತೇಗುತ್ತ |
ಧರಣಿಯೊಳಗುಜ್ವಲಿಸುತಿರುವ ಚಂದದಲಿ |
ಪರಿಪರಿಯ ಭೋಗದೊಳು ಸುಖಿಸುತ್ತಲಿರ್ದರು |
ನಿರುತ ರಾರಾಜಿಸುತಲಿರುವ ಸ್ವಪ್ರಕಾಶದಲೀ ||2||
ಅನಿಲ ನಿತ್ಯ ಸುಗಂಧ ದುರ್ಗಂಧದೋಳ್ ಬೆರೆತು |
ಯಿನಿತು ವಾಸನೆಯಂಟದಲೆ ಶುಚಿಯೆನಿಸಿದಂತೆ |
ಅನುಭವಿಪ ವಿಷಯಗಳ ಪಾಪಪುಣ್ಯಂಗಳ ವಾ |
ಸನೆಯ ನಂಟದೆಂದೆಂಗೆಯು ಶುಚಿಯೆನ್ನಿಸಿರುವಂ ||3||
ಮಳೆಗೆ ನೆನೆಯದೆ ಬಿಸಲಿಗೊಣಗದೆಂದಿಗೆಯು |
ಬೆಳಕುಗತ್ತಲೆಯ ನಂಟದಿಹ ನಭದಂತೆ |
ಹಲವು ಸಂಸಾರ ಸುಖ ದುಃಖಗಳನಂಟದೆ |
ಯಿಳೆಯೊಳಾನಂದ ಸಿಂಧುವಾಗಿ ರಾಜಿಸುವ ಸತತಂ || ಜ್ಞಾನಿ ||4||
ಯಿಂದ್ರಜಾಲವ ತೋರ್ಪನತಿ ವಿಚಿತ್ರವಾ |
ದಿಂದ್ರಸಭೆ ಪುಸಿಯೆಂದು ತಿಳಿದಿರುವ ಚಂದದಲಿ |
ಇಂದ್ರ ಜಾಲದ ಪರಿಯ ತೋರುವೀ ಜಗಮಿಥ್ಯ |
ವೆಂದು ಗುರು ರಂಗಲಿಂಗನಡಿಯ ನಂಬಿರುವಾ || ಜ್ಞಾನಿ ||5||

ರಾಜಯೋಗಿಯು ನಿತ್ಯ ರಾರಾಜಿಸುತ್ತ
ರಾಜಯೋಗಿಯು ನಿತ್ಯ ರಾರಾಜಿಸುತ್ತ |
ರಾಜನಂದದಲಿ ಭೂಚಕ್ರವಾಳುವನು ||ಪ||
ಭೂಮಿಯೇ ನವರತ್ನಮಯದ ಹಾಸಿಗೆಯೆನಿಸಿ |
ಸೋಮಾರ್ಕ ತಾರೆಗಳ ಸಾಲುದೀಪಗಳೆನಿಸಿ|
ನೇಮದಿಂ ಬೀಸುತಿಹ ಪವನವೇ ವ್ಯಜನವೆನಿಸಿ |
ಕಾಮಾದಿ ಚೋರಗ್ರಹಗಳಿರದೋಡುತಿರೆ || ರಾಜಯೋಗಿಯು ||1||
ಶರೀರವೆಂಬುವ ದಿವ್ಯ ರಥದಲ್ಲಿ ಕುಳಿತಿರಲು |
ಮೆರೆಯುವಿಂದ್ರಿಯ ಪಂಕ್ತಿ ತುರಗವೆನಿಸಿರಲು |
ಹರಿವ ಮನವೇ ಪಗ್ಗ ಬುದ್ದಿ ಸಾರಥಿಯಾಗೆ |
ಪರಿಪರಿಯ ಭೋಗಂಗಳನನುಭವಿಸುತಿರುವಾ || ರಾಜಯೋಗಿಯು ||2||
ಘನಯೋಗ ನಾಲ್ಕೆಂಬ ಕನಕವಿಷ್ಟರವೇರಿ |
ವಿನಯಗುಣವೆಂತೆಂಬ ಮಂತ್ರಿಯೊಡಗೂಡಿ |
ಬಿನುಗು ಭವವೆಂಬ ಶತೃಗಳ ಹೊರಡಿಸುತೆ |
ವಿನುತ ಶಾಂತ್ಯಾದಿ ಪ್ರಜೆಗಳನು ಪಾಲಿಸುತೆ || ರಾಜಯೋಗಿಯು ನಿತ್ಯ ||3||
ವುರು ದುಃಖವೀವಂಥ ಭಾಗ್ಯಲಕ್ಷ್ಮಿಯನು |
ಕರಣ ಕ್ರಯದಿಂ ಕೋರದಾನಂದವೀವ |
ವರಮೋಕ್ಷ ಲಕ್ಷ್ಮಿಯಂನೆಡೆ ಬಿಡದೆ ಸತತ |
ನಿರುಪಮಾನಂದದೊಳಗೋಲಾಡುತ್ತಲಿರುವ ||4||
ಸತ್ಯ ವೈರಾಗ್ಯ ಬೋಧೋಪರತಿಯನಗಲದೆ |
ನಿತ್ಯವು ಸಮಾಧಿ ಶಾಂತ್ಯಾದಿ ಜೀವ ರತ್ನ ಪೂರಿತದಿ |
ಭಂಡಾರವನು ಬಳಸುತ್ತಲರ್ಥಿಯಿಂ |
ಮೆರೆವ ಗುರು ಮಹಾಲಿಂಗ ತಾನಾಗಿ || ರಾಜ ||5||

ಪರಮ ಯೋಗಿ ಲಕ್ಷಣ
ಸಿಕ್ಕದೂ ಬ್ರಹ್ಮ ದಕ್ಕದೂ | ಕೇಳಯ್ಯ ಮಗನೇ |
ಸಿಕ್ಕದೂ ಬ್ರಹ್ಮ ದಕ್ಕದೂ ||ಪ||
ಸಿಕ್ಕದೊಂದಾ ಖಂಡ ನಿತ್ಯಾ |
ವ್ಯಕ್ತ ನಿರ್ಗುಣ ತತ್ವವೆನಿಸುತ |
ದೃಕ್ಕು ದರ್ಶನವೆಂಬ ತರ್ಕದ |
ವಾಕ್ಯಗಳಿಗತಿ ದೂರವೆನಿಸಿರೆ || ಸಿಕ್ಕದೂ ||ಅ||
ಆದಿಯಿಂದದ್ವೈತವೆನಿಸುತ |
ಸಾದರದಿ ಭೂಲೋಕ ಭುವರ್ಲೋ |
ಕಾದಿಭುವನಾಂತರ್ಯ ಬಾಹ್ಯದಿ |
ಬೋಧೆಯಿಂ ತಾನೊಂದೆ ತುಂಬಿರೆ ||1||
ಭುವನದೊಳಗವಿಕಾರ ಕನಕವೇ |
ವಿವಿಧ ವಸ್ತುಗಳಾದ ಚಂದದಿ |
ಭುವಿಯು ದಿವಿರವಿ ಶಶಿಯದೆನ್ನಿಸು |
ತವಿರಳದಿ ಶೋಭಿಸುವದಾಗಿ ||2||
ವಾಸನ ತ್ರಯದಾಸೆಯಡಗಿ |
ಭಾಸುರಾದ್ವಯ ಪೂರ್ಣ ಬ್ರಹ್ಮದಿ |
ಲೇಸಿನಿಂದ ಸಮಾಧಿ ಹೊಂದದೆ |
ಬೇಸರಿಲ್ಲದೆ ನುಡಿವ ಮಾತಿಗೆ ||3||
ಶರೀರದೊಳು ರಾಜಿಸುವ ವಸ್ತುವ |
ನರಿಯಲಾರದೆ ಪಿಡಿವೆನೆಂದರೆ |
ಭರಧಿ ತನ್ನನು ಮರೆದದಶಮನ |
ಪರಿಯ ಪರಿಹಾಸವಾಗುವದರಿಂ ||4||
ನಿರುಪಮಾಖಂಡೈ ಕರಸದೊಳು |
ಬೆರೆತು ಸಹಜಾನಂದ ಶ್ರೀಮ |
ತ್ಪರಮಗುರು ಮಹಲಿಂಗನಾಗದೆ |
ಬರಡು ಕರ್ಮದಿ ಕುದಿವ ನರನಿಗೆ || ಸಿಕ್ಕದೂ ಬ್ರಹ್ಮ ದಕ್ಕದೂ ||5||

ಸುಮ್ಮನೆ ಮಾಡಿದನು
ಸುಮ್ಮನೆ ಮಾಡಿದನು | ಶ್ರೀಗುರುವೆನ್ನ |
ಸುಮ್ಮನೆ ಮಾಡಿದನು ||ಪ||
ಸಮ್ಮನೆ ತರ್ಕವನು ಮಾಡದೆ |
ಬ್ರಹ್ಮಸೂತ್ರದಿ ಪೇಳುವಂದದಿ |
ಬ್ರಹ್ಮ ಭಾವನೆಯಿಂದ ಮುಕ್ತಿಯ |
ಹರ್ಮ್ಯದೊಳು ಸುಖಿಸೆಂದು ಭೋಧಿಸಿ || ಸುಮ್ಮನೆ ||ಅ||
ಘನತರದ ಮನಸ್ಕವ | ಸಾಧಿದಲಾತ್ಮಾ |
ನನು ಬೆರೆಯುವ ಮರ್ಮವ |
ಮನವ ಲಯಿಸುವ ಜ್ಞಾನಮುದ್ರೆಯ |
ನನುಪಮಿತ ಯೋಗಿಗಳ ಸ್ಥಿತಿಯನು |
ಯನಗೆ ಕ್ಷರುಣಿಪುದೆಂದು ಬೆಸಗೊಳ |
ಲನುನಯದಿ ಸರ್ವವನು ಬೋಧಿಸಿ || ಸುಮ್ಮನೆ ||1||
ನಿದ್ರೆಯೊಳಗೆ ಮನವು ಲಯಿಸುತ ಮತ್ತೆ |
ಯೆದ್ದರೆ ತೋರುವುದು |
ಮುದ್ರೆ ಸಾಧನೆಯಿಂದ ಬ್ರಹ್ಮದಿ |
ಭದ್ರಪಡಿಸಲು ಹೊರಗೆ ಬಂದೊಡ |
ವಿದ್ಯೆಯನು ಹೊಂದುವನು ಅದರಿಂ |
ಶುದ್ಧಲಯವಲ್ಲೆಂದು ಬೋಧಿಸಿ ||2||
ವರಮಹ ವಾಕ್ಯದಲ್ಲೀ | ಪೇಳಿರುವಂತೆ |
ನೆರೆವೃಕ್ಷ ಮೂಲದಲ್ಲೀ |
ಭರದಿ ಕೂಡುತ ಕರ್ಮಧರ್ಮವ |
ತೊರೆದು ಸಚ್ಚಿದ್ವಸ್ತುವಿದುಯೆಂ |
ದರಿದು ಸೋಹಂಭಾವದಲಿ ಮುಳು |
ಗಿರೆ ಮನೋಲಯವೆಂದು ಬೋಧಿಸಿ ||ಸುಮ್ಮನೆ ||3||
ತರಳ ಕೇಳೀಪರಿಯ | ಸಾಧಿಪಯೋಗಿ |
ತರುಣಿಯ ಕುಲಜಾತಿಯ |
ಮರೆದು ಬಾಲಕನಂತೆ ಯಿರುವನು |
ವರವಿಧಿ ನಿಷೇಧಂಗಳಿಲ್ಲದೆ |
ಧರಣಿಯೊಳಗುನ್ಮತ್ತನಂದದಿ |
ಯಿರಲದುನ್ಮನಿಯೆಂದು ಬೋಧಿಸಿ || ಸುಮ್ಮನೆ ||4||
ವೇಷ ಭಾಷಾದಿಗಳನು |ಹೊಂದದೆ ನಿತ್ಯ |
ಪೈಶಾಚಿಯಂತಿರುವನು |
ಲೇಸಿನಿಂದೀ ಪರಿಯ ತ್ರಿವಿಧ |
ಭಾಸುರಾದ್ವಯ ಸ್ಥಿತಿಯ ಹೊಂದಿವಿ |
ಲಾಸ ಪಡುವರು ಯೆಂದು ಮಹಲಿಂಗ |
ದೇಶೀಕೇಂದ್ರನು ಕ್ರಮದಿ ಬೋಧಿಸಿ || ಸುಮ್ಮನೆ ||5||

ಧನ್ಯನಾದೆನೂ ನಾನು
ಧನ್ಯನಾದೆನೂ | ನಾನು |
ಧನ್ಯನಾದೆನೂ || ಪ||
ಧನ್ಯನಾದೆ ಧನ್ಯನಾದೆ |
ಧನ್ಯನಾದೆ ಜನ್ಮವಳಿದು || ಧನ್ಯನಾದೆನೂ ||ಅ||
ಆರುಮತದ ವಾದಿಗಳೆಲ್ಲ |
ಬೇರೆಬೇರೆಗೈವ ಭಾವಕೆ |
ಮೀರಿದಾತ್ಮ ನಾನೆಯೆಂಬ |
ಭೂರಿ ಜ್ಞಾನಮುದಿಸಿತಾಗಿ || ಧನ್ಯನಾದೆನೂ ||1||
ಘೋರ ಸಂಸಾರ ದುಃಖ |
ವಾರಿನಿಧಿಗೋಷ್ಪದವದೆನಿಸಿ |
ಪಾರಮಾರ್ಥ ತತ್ವಸುಖದ |
ಸಾರವನ್ನು ಸೂರೆಗೊಂಡು || ಧನ್ಯನಾದೆನೂ ||2||
ಘನತರಾ ಜ್ಞಾನನಸಿದು |
ವಿನುತ ಬ್ರಹ್ಮ ಜ್ಞಾನ ಬಲಿದು |
ಅನುಪಮಾತ್ಮನಲ್ಲಿ ಬೆರೆದು |
ಮನದಿ ಜಗದ ಭ್ರಾಂತಿ ಹರಿದು || ಧನ್ಯನಾದೆನೂ ||3||
ಖಂಡಖಂಡವಳಿದು ನಿತ್ಯಾ |
ಖಂಡ ಬ್ರಹ್ಮದಲ್ಲಿ ಬೆರೆತು |
ದಂಡಧÀರನ ಪಾಶವನ್ನು |
ಖಂಡಿಸಿ ಬ್ರಹ್ಮಚಕ್ರದಿಂದ || ಧನ್ಯನಾದೆನೂ ||4||
ಯನ್ನ ಪೂರ್ವಪುಣ್ಯ ಫಲವ |
ದಿನ್ನುಲಭಿಸಿತೀಗಲಹಹ |
ಮಾನ್ಯ ಶ್ರೀಗುರು ರಂಗಲಿಂಗನ |
ಪೂರ್ಣಕೃಪಾಲಬ್ಧವಾಗೆ |
ಧನ್ಯನಾದೆನೂ ನಾನು| ಧನ್ಯನಾದೆನೂ ||5||

ಶುಭಮಂಗಳಂ
ಶುಭಮಂಗಳಂ | ಶಿವಶಿವ | ಶುಭಮಂಗಳಂ ||
ಅಂಬುಜಾಸನ ವಂದ್ಯ | ಗೌರಿ | ನಾಥಮಂಗಳಂ ||ಪ||
ಈಶಮಂಗಳಂ | ಅಂಬರ | ಕೇಶ ಮಂಗಳಂ |
ಪಾಶಭಂಜನ ಭಕ್ತ ಹೃದಯ ನಿ |
ವಾಸ ಮಂಗಳಂ ||1||
ಶರ್ವ ಮಂಗಳಂ | ಸರ್ವಾ | ಧಾರಮಂಗಳಂ |
ಸರ್ವಜಗದಾರಾಧ್ಯಸಚ್ಚಿ |
ದ್ರೂಪ ಮಂಗಳಂ ||2||
ದೇವಮಂಗಳಂ | ಶ್ರೀ ಮಹ | ದೇವಮಂಗಳಂ |
ಭಾವರಹಿತ ಸದಾಶಿವಾತ್ಮಕ |
ನಿತ್ಯಮಂಗಳಂ ||3||
ಸತ್ಯಮಂಗಳಂ | ಸಹಜಾ | ನಂದಮಂಗಳಂ |
ನಿತ್ಯನಿರ್ಗುಣ ಶಾಂತ |
ಭಕ್ತೋದ್ಧಾರ ಮಂಗಳಂ ||4||
ಲಿಂಗಮಂಗಳಂ | ಭವಭಯ | ಭಂಗಮಂಗಳಂ |
ಅಂಗರಹಿತ ಶುಭಾಂಗ |
ಗುರುಮಹಾಲಿಂಗ ಮಂಗಳಂ ||5||

ಮಂಗಳಂ ನಿತ್ಯ ಮಂಗಳಂ
ಮಂಗಳಂ ನಿತ್ಯ ಮಂಗಳಂ |
ಗುರುರಾಜನಿಂಗೆ ಮಂಗಳಂ | ನಿತ್ಯಮಂಗಳಂ ||ಪ||
ಕಂಗಳಾಗ್ರ ಪ್ರದೀಪ ಜೋತಿ |
ರ್ಲಿಂಗ ಭವ ಮಾತಂಗ ಕೇಸರಿ |
ಸಂಗಹರಸದ್ರೂಪ ಶ್ರೀಮು |
ಕ್ತಾಂಗನಾಮಣಿ ಹೃನ್ನಿವಾಸಗೆ || ಮಂಗಳಂ ||ಅ||
ಶಾಸ್ತ್ರ ವೇದಾಗಮಗಳರಿಯದೆ |
ಸ್ವಸ್ಥದಿಂದನುಭವದೊಳರಿಯುವ |
ಅಸ್ತಿಭಾತಿ ಪ್ರಿಯವದೆನಿಸುವ |
ವಸ್ತು ನೀನೆಂದೊರೆದ ಗುರುವಿಗೆ || ಮಂಗಳಂ ||1||
ಕ್ಷೀರಸಾಗರದಲ್ಲಿ ತೆರೆನೊರೆ |
ತೋರಿಯಳಿವಂದದಲಿ ಬ್ರಹ್ಮದಿ |
ತೋರಿಯಳಿವುದು ತ್ರಿಜಗವೆಂಬುವ |
ಸಾರತತ್ವವನೊರೆದ ಗುರುವಿಗೆ || ಮಂಗಳಂ ||2||
ಮೆರೆವ ಜಾಗರಣಾದ್ಯವಸ್ಥೆಗ |
ಳರಿಯೆ ಪುಸಿಯಿದನರಿವ ತುರ್ಯನು |
ಪರಮತುರ್ಯಾತೀತ ನೀನೆಂ |
ದೊರೆದ ಸಚ್ಚಿದ್ರೂಪ ಗುರುವಿಗೆ || ಮಂಗಳಂ ||3||
ನಿರುತಭಾಂಡಾಂತರ್ಯ ಬಾಹ್ಯದಿ |
ವರಗಗನ ತುಂಬಿರುವ ಚಂದದಿ |
ನೆರೆ ಚತುರ್ದಶ ಭುವನದೊಳು ಕಿ |
ಕ್ಕಿರಿದು ತುಂಬಿಹ ಪರಮ ಗುರುವಿಗೆ || ಮಂಗಳಂ ||4||
ಸತ್ಯಸಹಜಾನಂದ ಸಾಗರ |
ಪ್ರತ್ಯಗಾತ್ಮಚಿದಂಬರೇಶ್ವರ |
ಪೃಥ್ವಿಪಾಲಕ ಸರ್ವಭಕ್ತರ |
ಮೃತ್ಯು ಹರಗುರುರಂಗ ಲಿಂಗಗೆ ಮಂಗಳಂ ||5||

Categories
Tatvapadagalu ಶಂಕರಾನಂದ ಯೋಗಿ ಮತ್ತು ಶಂಕರಾರ್ಯರ ತತ್ವಪದಗಳು

ಶಂಕರಾನಂದ ಯೋಗಿ ಮತ್ತು ಶಂಕರಾರ್ಯರ ತತ್ವಪದಗಳು

ಪೊರೆಯೆನ್ನಪ್ರಭುವೆ
ಪೊರೆಯೆನ್ನಪ್ರಭುವೇಶ್ರೀಗುರುವೆಂಬ
ವರಕಲ್ಪತರುವೇ ||ಪ||
ಕರುಣಾಕಟಾಕ್ಷವೀಕ್ಷಣದಿಂದಲೆನ್ನಯ |
ದುರಿತದುರ್ಗುಣವೆಣಿಸದೆಕೃಪೆಯಿಂದಲಿ ||ಪೊರೆಯೆನ್ನ|| ||ಅ.ಪ||
ಗುರುಬಂಧುಮಿತ್ರ | ಗೋತ್ರವುಸೂತ್ರ |
ಗುರುವೆಪವಿತ್ರ | ಗುರುಬ್ರಹ್ಮಗುರುವಿಷ್ಣುಗುರುಪರಶಿವನೆಂದು
ವರಲುವಶ್ರುತಿನಂಬಿನಿಮ್ಮಡಿನಂಬಿದೆ ||1||
ತಂದೆತಾಯಿಗಳು | ನಂಬಿದಮಿತ್ರ|
ಬಂಧುವರ್ಗಗಳು | ಎಂದಿದ್ದರೆನ್ನನುಬಿಟ್ಟೋಗುವರುನೀನು
ಎಂದೆಂದುಬಿಡವನಲ್ಲೆನುತನಂಬಿದೆನಯ್ಯ ||2||
ನಾರಿಮಕ್ಕಳನು | ತನುಮನವನು |
ಭೂರಿಭಾಗ್ಯವನು | ಮೀರಿದಮಾನಾಭಿಮಾನವೊಪ್ಪಿಸಿಕೊಟ್ಟ
ಹೇರನೊಪ್ಪಿಸಿದವನಿಗೆಸುಂಕವುಂಟೆ ||3||
ಸಗುಣನಿರ್ಗುಣನೇ | ನಿರ್ಮಲನೇ | ನಿಗಮವಂದಿತನೇ |
ಅಗಣಿತಕಿಲ್ಬಿಷವಳಿದುಪಾಲಿಸುವನೆ|
ಸುಗುಣಿಮುಕ್ತಿಯಗಣಿವರಚಿಂತಾಮಣಿಯೇ ||4||
ಶಿರಿಸೊಬಗೆಂಬ | ಮೋಹವುದುಃಖ
ದುರಿತವೆಂತೆಂಬ | ಶರಧಿಯದಾಂಟಿಸಿಮುಕ್ತಿಪಾಲಿಪೆನೆಂಬ
ಬಿರುದುಪೊತ್ತಿಹಗುರುಮಹಲಿಂಗರಂಗನೆ ||5||

ಪರಮದಯಾನಿಧಿಯೇ
ಪರಮದಯಾನಿಧಿಯೇ | ಶ್ರೀಗುರುನಿತ್ಯ
ಪರಮಪಾವನಮೂರ್ತಿಯೇ ||ಪ||
ದುರಿತಅಜ್ಞಾನವನಳಿದುಸುಜ್ಞಾನವ
ವರದೆನಿನ್ನಂಥದಯಾಳುಂಟೆ
ಜಗದೊಳುಪರಮದಯಾನಿಧಿಯೆ ||ಅ.ಪ|
ಇಳೆಯಭೋಗಂಗಳೆಂಬಾ | ಆಸೆಯಮೋಹ
ಬಲುರಾಗದ್ವೇಷವೆಂಬ |
ಸುಳಿಯಸಂಸಾರಸಾಗರದಿತಡಿಗಾಣದೆ
ಮುಳುಗಿಪೋಗುತಲಿರೆಕರವಿಡಿದೆತ್ತಿದೆ ||1||
ವರಪುಣ್ಯವನುಗಳಿಸಿ | ಸ್ವರ್ಗವನೇರಿ
ಉರುಭೋಗವನ್ನನುಭವಿಸಿ|
ತಿರುಗಿಮತ್ರ್ಯಕೆಬಂದುಬಳಲಿಬಾಯಾರದೆ
ಸ್ಥಿರಮುಕ್ತನಾಗೆಂದುಕರೆದುಬೋಧಿಸಿದಂಥ ||2||
ಹಠಯೋಗಾದಿಗಳಿಂದಲೆಲೋಕಕ್ಕೆಮೆಚ್ಚು
ಚಟುಲಸಿದ್ಧಿಗಳಿಂದಲಿ |
ಸಟೆಯುಜೀವನ್ಮುಕ್ತಿಯದರಿಂದಲೆನ್ನುತ
ಘಟಿತವಾಗಿಹರಾಜಯೋಗಬೋಧಿಸಿದಂಥ ||3||
ಚಿನ್ನವಾಭರಣವಾಗಿ | ತೋರುವಪರಿ|
ಯುನ್ನತಜಗವಿದಾಗಿ
ನನ್ನಿಯಿಂಪರಮಾತ್ಮನೊಬ್ಬತೋರುವನೆಂಬ
ಸನ್ನುತಜ್ಞಾನವನ್ನುಬೋಧಿಸಿದಂಥ ||4|
ಸರ್ವತತ್ವಂಗಳನ್ನು | ವೇದಾಂತದ
ಸರ್ವರಹಸ್ಯವನ್ನು |
ಸರ್ವಕ್ಕಧಿಕವಾದಅಪರೋಕ್ಷಜ್ಞಾನವ
ಸರ್ವಶ್ರೀಗುರುರಂಗನಾಗಿಬೋಧಿಸಿದಂಥ ||5||

ಗುರು ಪರಬ್ರಹ್ಮಾ
ಗುರು ಪರಬ್ರಹ್ಮಾ | ಸರ್ವರಿಗು ಶ್ರೀ |
ಗುರು ಪರಬ್ರಹ್ಮಾ ||ಪ||
ಗುರುವೆ ಸಾಕ್ಷಾತ್ ಪರಬ್ರಹ್ಮನಲ್ಲದೆ ಬೇರಿಲ್ಲ |
ಪರತತ್ವವೆಲ್ಲ ಪ್ರಕಾಶ ಮಾಡುವನಾಗಿ ||ಅ.ಪ||
ಭವಬೀಜ ಸುಡುವ | ಇಷ್ಟಾರ್ಥವ |
ಜವದಿ ಪಾಲಿಸುವ | ಶಿವ ಪಂಚಾಕ್ಷರಿ ಮಂತ್ರ ಗೋಪ್ಯದಿಂದರುಹುತೆ
ನವವಿಧ ಭಕ್ತಿಯರದಿ ಮುಳುಗೆಂಬುವ ||1||
ನರಲೋಕ ಸುಖವು | ಭೋಗವು ರೋಗ|
ದುರಿತ ಭಯವು | ವರ ಇಂದ್ರ ಪದವಿಯು ಪರಶತ್ರುಗಳ ಭಯ
ಉರುವೈರಾಗ್ಯೊಂದೆ ನಿರ್ಭಯವೆಂದು ಬೋಧಿಪ ||2||
ಅಲೆಯ ನಿಲಿಸಿ | ಅಜ್ಞಾನದ
ಮೂಲವ ಕೆಡಿಸಿ | ನೀಲಯೋಯದ ಮಧ್ಯೆ ಅಪೋಜೋತಿಯನು
ಲೀಲೆಯಿಂ ತಾರಕ ತ್ರಯವ ಸೂಚಿಸುವಂಥ ||3||
ಧರೆಮೊದಲಾದ ಭೂತಗಳಿಂದ |
ವಿರಚಿತಮಾದ | ನೆರೆ ಪಂಚವಿಂಶತಿ ತತ್ವಸಂಕುಲವೆಲ್ಲ
ವರಸಾಂಖ್ಯ ಯೋಗದಿ ವಿವರಿಸಿ ಹೇಳುವ ||4||
ಮರವೆಯ ತೆಗೆಸಿ | ಬ್ರಹ್ಮಜ್ಞಾನ
ಗುರುವಿನೊಳಿರಿಸಿ | ಗುರು ಮಹಲಿಂಗರಂಗನೆ ನೀನೆಂದರುವಿತ್ತು
ಉರತರದಮನಸ್ಕ ಮುದ್ರೆ ಸೂಚಿಸುವಂಥ ||ಗುರು ||5||

ಅಭಿವಂದಿಸುವೆನಷ್ಟ ತನುವಾಗಿ ತ್ರೈಜಗಕೆ
ಅಭಿವಂದಿಸುವೆನಷ್ಟ ತನುವಾಗಿ ತ್ರೈಜಗಕೆ |
ಪ್ರಭುವಾಗಿ ರಾಜಿಪ ಪರಬ್ರಹ್ಮಲಿಂಗಕೆ ||ಪ||
ಧರೆಯು ಗಿರಿ ತೃಣ ಅಗಿಲು ಚಂದನವೃಕ್ಷ |
ಪರುಷರತ್ನವು ರಜತ ಸ್ವರ್ಣ ಪಾಶಾಣ
ವರತ್ವಕ್ಕು ನಖರೋಮ ಮಾಂಸಾಸ್ಥಿಗಳು ಎನಿಸಿ
ಪರಿಯ ಪೆಸರ್ವಡೆದ ಪೃಥ್ವಿಲಿಂಗಕ್ಕೆ || ಅಭಿ ||1||
ವಾರಿನಿಧಿ ನದಿನದಗಳಮೃತ ಮೊಲೆಹಾಲು |
ಕ್ಷೀರ ದಧಿಘೃತ ತೈಲಮದ ವಿಷವು ಮಧ್ಯ |
ವೀರ್ಯ ಶೋಣಿತ ಮಜ್ಜೆ ಪಾದರಸವೆನಿಸಿ |
ತೋರಿ ದ್ರವಿಸುತ್ತಿರ್ಪ ಅಪ್ಪು ಲಿಂಗಕ್ಕೆ || ಅಭಿ ||2||
ಕಡಲೊಳಗೆ ಕಲ್ಲೊಳಗೆ ಮರದೊಳಗೆ ಮಾನವರ |
ಒಡಲೊಳಗೆ ಕಾಮಿಗಳ ಮನದೊಳಗೆ ಜ್ಞಾನಿಗಳ |
ನುಡಿಯೊಳಗೆ ಯೋಗಿಗಳ ಕಣ್ಣೊಳಗೆ ರಾಜಿಸುತ|
ಲಡಗಿಕೊಂಡಿರ್ಪಮಲತರ ಜ್ಯೋತಿರ್ಲಿಂಗಕ್ಕೆ || ಅಭಿ ||3||
ಶರದಿ ಸಪ್ತಕ ಮೇಘಚಯ ಜೀವಕೋಟಿಗಳ |
ವರನಾಸಿಕವು ಜನನಿಯರ ಗರ್ಭಪಿಂಡದಲಿ |
ನಿರತಷ್ಟದಿಕ್ಕಮೃತ ವಿಷ ಕೊಳಂಗಳಲಿ |
ತೆರಪುಯಿಲ್ಲದೆ ಚರಿಸುತಿಹ ವಾಯುಲಿಂಗಕ್ಕೆ|| ಅಭಿ ||4||
ಕಲಶಘಟ ಮಠವೇಘ ಕುಟಿ ಬಿಡಾರದೊಳು |
ಸಲೆ ಸ್ವರ್ಗಮತ್ರ್ಯ ಪಾತಾಳ ಲೋಕದೊಳು |
ನೆಲೆಯಾಗಿ ಗ್ರಹಗಳಿಗೆ ಬೀಡಾಗಿ ಕಿಕ್ಕಿರಿದು |
ಚರಿಸಿದಾವಾಗ ತುಂಬಿದಾಕಾಶ ಲಿಂಗಕ್ಕೆ || ಅಭಿ ||5||
ಬಲನೇತ್ರ ಬಲಶ್ವಾಸದ್ವಾದಶಾದಿತ್ಯನೆನಿಸಿ |
ಸಲೆ ಕರ್ಮಸಾಕ್ಷಿ ಜೀವಗಳಾಯುವಳಿಯುವ |
ಕೊಳಗತ್ರೈಮೂತ್ರ್ಯಾತ್ಮನೆನಿಸಿ |
ಬೆಳಗುವ ಹಿರಣ್ಮಯನೆನಸುವಾದಿತ್ಯ ಲಿಂಗಕ್ಕೆ ||ಅಭಿ ||6||
ಎಡನೇತ್ರ ಎಡಶ್ವಾಸ ಗಗನಮಣಿಯೆನಿಸಿ
ಬಿಡದೆ ವೃದ್ಧಿ ಕ್ಷಯದಿ ಸಸ್ಯಾಧಿಪತಿಯೆನಿಸಿ
ಉಡುಪತಿ ಕಳಾ ನಿಧಿಯು ಅಮೃತಕರನೆನಿಸಿ
ಪೊಡವಿಯೊಳು ರಾಜಿಸುತಿಹ ಸೋಮ ಲಿಂಗಕ್ಕೆ ||ಅಭಿ ||7||
ನೆರೆ ಸಗುಣ ನಿರ್ಗುಣನು ತತ್ಸಾಕ್ಷಿಯೆನಿಸಿ |
ಗುರು ಮಹಾಲಿಂಗನೆಂದೆನಿಸಿ ಭಕ್ತರಂ |
ಪೊರೆವ ದಕ್ಷಿಣಾ ಮೂರ್ತಿಯೆನಿಸಿ
ಸೂಕ್ಷ್ಮದಿಂದಿರುವಷ್ಟದಳ ಕಮಲಸ್ಥಿತಾತ್ಮ ಲಿಂಗಕ್ಕೆ || ಅಭಿ ||8||

ಕೈವಲ್ಯ ನವನೀತೆಂಬತುಲ ಪೆಸರದಕೆ
ಕೈವಲ್ಯ ನವನೀತೆಂಬತುಲ ಪೆಸರದಕೆ |
ಓವಿ ಒಂದರ್ಥಮಂ ಲಾಲಿಪುದಭಿಜ್ಞರ್ ||ಪ||
ಉರುತರಾಮ್ನಾಯವೆಂಬ ಮೊಲೆ ನಾಲ್ಕುಳ್ಳ |
ಪರಭೋಮವೆಂಬೊಂದು ಕಾಮಧೇನಿರಲು |
ಸುರಸಿತಷ್ಟೋತ್ತರ ದಶಸಾಸಿರುಪನಿಷತ್ |
ವರ ಕ್ಷೀರಶರಧಿ ಪರಿ ಜಗ ಭರಿತಮಾಗಿತ್ತು ||1||
ಅದರೊಳು ಮಹಾವಾಕ್ಕೆಂಬ ಸವಿಪಾಲ್ತೆಗೆದು ||
ಬುಧ ಜನರು ಆಧ್ಯಾತ್ಮ ಶಾಸ್ತ್ರವೆಂದೆಂಬ |
ಸದಮಲದ ಭಾಂಡದೋಳ್ತುಂಬಿ ಮಥನಗ್ನಿಯಂ |
ಹದವಾಗಿ ಕಾಸಿರಲವಕ್ಕುಡಿತೆ ಗ್ರಹಿಸಿದೆನು | ಕೈವಲ್ಯ || ||2||
ಮೂಲ ಶ್ರೀ ಗುರು ಬೋಧಯೆಂಬ ಹೆಪ್ಪನು ಕೊಡಲು |
ಪೇಳಲೇನ್ ದಿವ್ಯ ಕೆನೆಮೊಸರಾಯಿತದಕೆ
ಕೇಳಿಸುತ ಸುಜ್ಞಾನವೆಂಬ ಮಂತನು ಭಕ್ತಿ |
ತಾಳಿ ಸೋಹಂ ಹಗ್ಗ ಸುತ್ತಿ ಕಡೆಯಲ್ಕೆ ||3||
ಕರಗಿ ಅಜ್ಞಾನ ಆವರಣೆಂಬ ಗಡ್ಡೆಗ
ಳ್ನಿರುಪಮದ ಅಪರೋಕ್ಷ ಜ್ಞಾನವೆಂತೆಂಬ
ಉರುತರದ ನವನೀತ ಬಂತೆನ್ನ ಕರತಲಕ್ಕೆ
ದುರಿತ ಕರ್ಮವುಯೆಂಬ ತಕ್ರ ಕೆಳಗಿಳಿದು ||4||
ಘನದಿ ಆ ನವನೀತ ತೆಗೆದು ಮೂಜಗದೊಳಗೆ |
ತನಗನ್ಯವಹ ವಸ್ತುವಿಲ್ಲವೆಂಬುವ ನಿಜದ |
ಅನುಭೂತಿಯಿಂ ಕಾಸಿದಮಲ ಘೃತವನ್ನು |
ಅನಘ ಗುರು ಮಹಲಿಂಗರಂಗನಿಗೆ ಒಪ್ಪಿಸಿದೆ |
ಕೈವಲ್ಯ ನವನೀತವೆಂಬತುಲ ಪೆಸರಿದಕೆ ||5||

ಭಜನೆಯ ಮಾಡುವ ಬನ್ನಿರೊ
ಭಜನೆಯ ಮಾಡುವ ಬನ್ನಿರೊ |
ಸದಾಶಿವನ ಭಜನೆ ಮಾಡುವ ಬನ್ನಿರೋ ||ಪ||
ಭಜನೆ ಮಾಡುವ ನಿತ್ಯ | ಸುಜನರೆಲ್ಲರೂ ಕೂಡಿ |
ಕುಜನ ಸಂಗವ ದೂರ ಮಾಡಿ | ಸದ್ಭಕ್ತಿಯಿಂ || ಭಜನೆ ||
ಶತಕೋಟಿ ಪಾಪವನು | ಮಾಡಿದ ಮಹ |
ಪತಿತರು ನಾವು ನೀನು
ಪತಿತ ಪಾವನನೆಂಬ ಬಿರುದುಳ್ಳ ದೇವನು |
ಕ್ಷಿತಿಯೊಳುತ್ತಮ ಗತಿ ತೋರೆಂದು ಶಿವನ | ಭಜನೆ ||1||
ಘಡು ಘುಡಿಸುತ ಬರುವ ಯಮನಾಳ್ಗಳಂ
ಕಡಿದು ಮಾಡುತ ಕೋಪವ |
ಝಡಿದು ಶೂಲದಿ ಭಕ್ತರನು ಕೈಯ್ಯ ಪಿಡಿದು |
ಕಡುಗರಣದಿ ಪೊರೆಯುವ ಮೃತ್ಯುಂಜಯನ |
ಭಜನೆ ಮಾಡುವ ಬನ್ನಿರೋ ||2||
ಪಂಚವಿಂಶತಿ ತತ್ವದಿ ತಾನಿರ್ದು ಪ್ರ
ಪಂಚದೋಳಾನಂದದಿ ||
ಪಂಚವಿಂಶತಿ ಲೀಲೆ ತೋರಿ ತನ್ನ ಭಕ್ತರ
ಸಂಚಿತ ಕರ್ಮವನುರಹಿದ ಶಿವನ| ಭಜನೆ ||3||
ಕಷ್ಟ ಕರ್ಮಗಳ ನೋಡಿ ನಿಮಿಷಾರ್ಧದಿ |
ಸುಟ್ಟು ನಿರ್ಮೂಲವ ಮಾಡಿ |
ಇಷ್ಟಾರ್ಥಗಳನಿತ್ತು ಕರುಣದಿ ಪಾಲಿಪ |
ಅಷ್ಟದಳದ ಪದ್ಮದಲ್ಲಿರುವ ಶಿವನ || ಭಜನೆ ||4||
ಕರುಣರಸವನೆ ಬೀರಿ | ಯೋಗವು ತತ್ವ |
ನೆರೆ ಶಾಂತಿ ವಿರತಿ ತೋರಿ |
ಧರೆಯೊಳಧಿಕ ಜ್ಞಾನ ಬೋಧಿಸಿ ಪೊರೆಯುವ |
ಗುರು ಮಹಲಿಂಗನೆ ನೀನೆಂದು ಶಿವನ ಭಜನೆ ||5||

ಸ್ಮರಣೆ ಮಾಡೆಲೋ
ಸ್ಮರಣೆ ಮಾಡೆಲೋ | ನಾಮ
ಸ್ಮರಣೆ ಮಾಡೆಲೋ ||ಪ||
ಸ್ಮರಣೆ ಮಾಡು ಭವದ ಬಲೆಯ
ಹರಿಯೊ ಶಿವನೆ ಶಿವನೆಯೆನುತ ||ಅ.ಪ||
ಮನದೆ ರಾಗ ದ್ವೇಷಗೈಯ್ಯ
ದನೃತ ವಚನುಡಿಯದಿನಿತು
ತನುವಿನಿಂ ಅಹಿಂಸನಾಗಿ
ದಿನವು ಕರಣ ಶುದ್ಧಿಯಿಂದ ||1||
ಯೆಳೆಯ ಭೋಗಕ್ಕೆಳೆವ ಮನವ
ಶಳದು ಆತ್ಮನಲ್ಲಿ ನಿಲಿಸಿ
ಕಲಿಯ ಕಲ್ಮವಳಿವುದಿದನು
ಘಳಿಲದು ಮನದಿ ಭಕ್ತಿಯಿಂದ ||2||
ಭಕ್ತಪಾಲಕನೆಂಬ ಬಿರುದು |
ಪೊತ್ತುಯಿಹನ ನಂಬಿ ನಿತ್ಯ
ಮುಕ್ತಿ ಭಾಗ್ಯ ಸೂರೆಗೊಂಬ
ಯುಕ್ತಿಯಿದನು ಅರಿತು ಮನದಿ ||3||
ಭೃಂಗ ಸಂಗದಿಂದ ಕೀಟ
ಅಂಗಭಾವವಳಿದು ಅಂತ
ರಂಗದಲ್ಲಿ ನೆನೆದು ಸಾಕ್ಷಾದ್
ಭೃಂಗವಾದ ಪರಿಯ ಮನದಿ ||4||
ಕಂಗಳೂರಿನಲ್ಲಿ ಪೊಳೆವ
ಮಂಗಳ ಪ್ರಭಾವನಾದ
ತುಂಗಶ್ರೀ ಗುರು ರಂಗಲಿಂಗಗೆ
ಅಂಗಮೂರನಿತ್ತು ನಿತ್ಯ ||5||

ಪಾಲಿಸೆನ್ನನು ಕರುಣದಿಂದ ತ್ರಿಪುರಸುಂದರೀ
ಪಾಲಿಸೆನ್ನ ಕರುಣದಿಂದ | ತ್ರಿಪುರಸುಂದರೀ | ನಿನ್ನ
ಬಾಲನೆಂದು ಯೆನ್ನ ಕೈಯ್ಯ ಬಿಡದೆ ಶಂಕರೀ || ಪ ||
ಹರನ ಶಕ್ತಿ ಹರಿಯ ಶಕ್ತಿ ಅಜನ ಶಕ್ತಿಯೇ | ವ್ಯೋಮ |
ಧರಣಿ ಶಕ್ತಿ ಸಲಿಲ ಶಕ್ತಿ ಜ್ವಲನ ಶಕ್ತಿಯೆ ||
ಕರಣ ಶಕ್ತಿ ಪ್ರಾಣ ಶಕ್ತಿ ಜೀಜ ಶಕ್ತಿಯೂ |
ಎನಿಸಿ ಧರೆಯು ಜೀವಿಗಳನು ಪೊರೆವ ಲೋಕ ಜನನಿಯೆ || ಪಾಲಿಸು ||1||
ಆದಿ ಶಕ್ತಿ ಭೋಗಶಕ್ತಿ ಭಾಗ್ಯಶಕ್ತಿ | ತರ್ಕ
ವಾದ ಶಕ್ತಿ ಕ್ರೋಧಶಕ್ತಿ ಶಾಂತಿ ಶಕ್ತಿಯೆ |
ವೇದಶಕ್ತಿ ಮಂತ್ರಶಕ್ತಿ ತಂತ್ರ ಶಕ್ತಿಯೂ | ಎನಿಸಿ |
ಮೋದದಿಂದಲೆಮ್ಮ ಪೊರೆವ ಲೋಕಜನನಿಯೆ || ಪಾಲಿಸು ||2||
ಧ್ಯಾನ ಶಕ್ತಿ ಧಾತೃ ಶಕ್ತಿ ಧೈರ್ಯಶಕ್ತಿಯೆ | ಶ್ರವಣ
ಘ್ರಾಣ ಶಕ್ತಿ ಸ್ಪರ್ಶಶಕ್ತಿ ಈಕ್ಷಶಕ್ತಿಯೆ |
ಜ್ಞಾನ ಶಕ್ತಿ ಕಾರ್ಯಶಕ್ತಿ ಇಚ್ಛಾಶಕ್ತಿಯೂ | ಎನಿಸಿ
ಸಾನುರಾಗದಿಂದ ಪೊರೆವ ಸರ್ವಲೋಕ ಜನನಿಯೆ | ಪಾಲಿಸು ||3||
ಮನನ ಶಕ್ತಿ ಶ್ರವಣಶಕ್ತಿ ಬೋಧಶಕ್ತಿಯೇ | ದೇವಿ |
ಗಣದ ಶಕ್ತಿ ಮಹಿಮೆಶಕ್ತಿ ಯೋಗಶಕ್ತಿಯೇ |
ಪ್ರಣವ ಶಕ್ತಿ ಬಿಂದುಶಕ್ತಿ ನಾದಶಕ್ತಿಯೂ | ಎನಿಸಿ
ಜನಗಳೀಪ್ಸಿತಾರ್ಥವೀವ ಲೋಕ ಜನನಿಯೆ ||4||
ಸರ್ವ ಕರ್ತ ಸರ್ವ ಭೋಕ್ತ ಸರ್ವನಿಯಮಳೂ | ಎನಿಸಿ
ಸರ್ವಕಾಲದಲ್ಲಿ ಚಂದ್ರ ಚಂದ್ರಿಕೆ ಚಂದದಿಂ |
ಸರ್ವಶ್ರೀ ಗುರು ರಂಗಲಿಂಗನು ಅಗಲದೆ | ಇರುತ |
ಸರ್ವ ಭಕ್ತರನ್ನು ಪೊರೆವ ಲೋಕ ಜನನಿಯೆ | ಪಾಲಿಸೆನ್ನ ||5||

ಪೊರೆಯೆನ್ನ ಶಂಕರನೇ
ಪೊರೆಯೆನ್ನ ಶಂಕರನೇ | ಲೋಕ ಶಂಕರನೇ |
ಚರಣ ಕಿಂಕರರ ಕಿಂಕರ ನಾನು ಶಿವನೇ ||ಪ||
ಗುರುಬ್ರಹ್ಮ ಗೋಶಿಶುವು ಭ್ರೂಣ ಹತ್ಯಗಳು |
ವರಸ್ವರ್ಣ ಚೋರತ್ವ ವಿವಿಧ ಪಾಪಗಳು |
ಪರಧನವು ಪರಸತಿಯಂ ಕೆಡಿಸಿ ಮೋಸಗಳು |
ಆರಿಸಿ ಮಾಡಿದ ಪಾಪ ಕ್ಷಮಿಸಿ ಚಿತ್ತದೊಳು ||1||
ದುರಿತವಿಲ್ಲದೆ ಪುಣ್ಯವಣು ಮಾತ್ರವಿಲ್ಲ |
ವರಸೋಡರಿನಿಂದುಡುಕಿ ನೋಡೆಯೆದೆಯಲ್ಲಾ |
ಸ್ಮರಣ ಮಾತ್ರದಿ ಕೈಯ್ಯ ಬಿಡುವ ಶಿವನಲ್ಲ |
ಪೊರೆವನೆಂಬುವ ಶ್ರುತಿಯ ನಂಇಯಿಹನಲ್ಲ ||2||
ನಿನ್ನ ಸತಿ ಮಕ್ಕಳನು ನಿನ್ನ ಭಕ್ತರನು ನಿನ್ನ |
ಮಂತ್ರಾಗಮವು ಗುರು ಪ್ರಸಾದವನು |
ನಿನ್ನನರಿತ ಜ್ಞಾನಿಗಳಾ ದೂಷಣೆಯ ನಾನು |
ಮುನ್ನೆಷ್ಟು ಮಾಡಿದೆನೋ ಅದ ಕ್ಷಮಿಸಿ ನೀನು ||3||
ಎನ್ನಂಥ ಪತಿತ ಮೂಲೋಕದೊಳಗಿಲ್ಲ |
ನಿನ್ನಂಥ ಪತಿತ ಪಾವನನು ಮುನ್ನಿಲ್ಲ |
ವೆನುತಲಿ ನಿಮ್ಮಡಿಯ ಪಿಡಿದು ಇಹೆನಲ್ಲ |
ಯೆನ್ನ ಬಿಡಲಪಕೀರ್ತಿ ತಪ್ಪುವದೆಯಿಲ್ಲ ||4||
ಒಂದು ಬಿನ್ನಪವನ್ನೂ ಲಾಲಿಪುದು ಮುನ್ನ |
ಮಂದಮತಿಯಾದೆನ್ನ ಅಪರಾಧ ನಿನ್ನ |
ಕಂದನೆನ್ನುತ ಕ್ಷಮಿಸಿ ಪಾಲಿಸೆನ್ನ ತಂದೆ |
ಗುರು ಮಹಲಿಂಗ ವರಸುಪ್ರಸನ್ನ ||5||

ರಕ್ಷಿಸೊ ಯನ್ನನು
ರಕ್ಷಿಸೊ ಯನ್ನನೂ | ಅಕ್ಷಯ ಗುಣ ಪೂರ್ಣ |
ಭಕ್ತ ಬಂದೂ | ನಿನ್ನಾ
ಕುಕ್ಷಿಯೋಳ್ ಇಂಬಿಟ್ಟೂ | ಇಕ್ಷಚಾಪಹರ ಭಕ್ತಬಂಧು ||ಪ||
ಅಘದ್ವಾಂತ ರವಿ ಮೂರು |
ಜಗಕಾದಿ ಒಡೆಯನೆ ಭಕ್ತ ಬಂದೂ ನಿನ್ನಾ
ಬಗೆಗಾಣದೊರಲ್ವವೂ | ನಿಗಮಜಾಲಂಗಾಳೂ || ಭಕ್ತ ಬಂಧು ||1||
ಶಶಿ ಮುಖಿಯರ ಮೋಹ
ವ್ಯಸನದಿ ಮುಳುಗಿದೆ | ಭಕ್ತ ಬಂಧು ಮೋಹ
ವಿಷಯ ವಿಷವ ಮಾಡೋ | ಶಶಿಕಂಧರ ಯನ್ನಾ || ಭಕ್ತ ||2||
ಮನದೀ ನಿಶ್ಚಯವಿಲ್ಲಾ |
ಗುಣ ಮೊದಲಿಗೆಯಿಲ್ಲಾ | ಭಕ್ತ ಬಂದೂ | ಸತ್ಯಾ
ಗುಣ ಮಾರ್ಗ ತೋರಿಸೋ | ಮುನಿಕುಲಸೇವ್ಯನೇ || ಭಕ್ತ ||3||
ನರರ ಸೇವೆಯಗೈದು |
ನರಕ ಭಾಜನನಾದೇ |ಭಕ್ತ ಬಂಧು |
ಗುರುಹಿರಿಯರಡಿದಾವರೆ | ಕರುಣಾದಿ ತೋರಿಸೋ | ಭಕ್ತ ||4||
ಹರಿದಾಡೋ ಯಿಂದ್ರಿಯಾ |
ಕರಣಗಳ್ತುಳಿದು ನೀ | ಭಕ್ತಬಂಧು | ನಿನ್ನ
ಚರಣಾಬ್ಜ ಧ್ಯಾನದೋಳಿರಿಸೆನ್ನ ಗುರುಮಹಲಿಂಗ| ಭಕ್ತಬಂಧು ||5||

ಯಾಕೆನ್ನ ಮರೆತಿರುವೆ
ಯಾಕೆನ್ನ ಮರೆತಿರುವೆ ಕರುಣದಿಂ ಪೊರೆಯದೆಲೆ |
ಲೋಕನಾಯಕ ಸರ್ವ ಭಕ್ತ ಜನಬಂಧು ||ಪ||
ರವಿಯೋರ್ವ ಧರೆಗೆ ಗಗನ ಪಾತಾಳ ಲೋಕಕ್ಕೆ |
ಕವಿದ ಕಾರ್ಗತ್ತಲೆಯನುರುಹಿ ನಿಮಿಷದಲ್ಲಿ |
ತವೆ ಪಾಪಿ ಪುಣ್ಯಾತ್ಮ ಮೊದಲಾದ ಜೀವರ್ಗೆ |
ಲವಲವಿಕೆಯಿಂ ಕಾಣ ಬರುತಿಹನು ಪ್ರತಿದಿನದೀ || ಯಾಕೆ ||1|
ನೀ ಕೋಟಿ ರವಿಯಂತೆ ಬೆಳಗುತಿರೆ ಕಂಗಳಿಂ |
ನಾ ಕಾಣದಂತಾಯ್ತು ಕರ್ಮದಿಂದಕಟಾ |
ನೀ ಕರುಣಿ ತತ್ಕರ್ಮ ಹರಿಸುತ್ತೆ ತವೆಮೂರ್ತಿ |
ಸಾಕಾರ ದರುಶನವೀಯದಲೆ ಪುರಹರನೆ || ಯಾಕೆ ||2|
ಸುರರು ಅಮೃತವ ನರರು ಅನ್ನವ ಭ್ರಮರ ಪುಷ್ಪವ
ಉರಗ ಪವನವ ಕುಮುದ ಕಮಲಗಳ್ ಜಲವ
ನಿರುತಲಾಶ್ರೈಸಿ ಜೀವಿಸುವಾ ಪರಿಯಲಿ ನಿನ್ನ |
ಚರಣಗಳನಾಶ್ರಯದಿ ಜೀವಿಸುವದರಿತು || ಯಾಕೆ ||3|
ವರಹಂಸೆ ಪದ್ಮಗಳ ಜಾತಕವು ಮೇಘವನು |
ನೆರೆಕಮಲ ಭಾಸ್ಕರನ ಚಂದ್ರನ ಚಕೋರಂ |
ಅರಿವ ಲತೆ ವೃಕ್ಷವನು ಪತಿವ್ರತೆಯು ಪುರುಷನನು |
ಮರೆಯದಾಶ್ರಯಿಸಿ ಇರುವಂತೆ ನಂಬಿರುವದರಿತು || ಯಾಕೆ ||4|
ನಿರುತ ನಿನ್ನಾಶ್ರಯಿಸಿದೆನ್ನ ಚಿತ್ತದ ನಿಜವ |
ನರಿಯದವನೆನಲಿಕ್ಕೆ ಸರ್ವಜ್ಞ ಮೂರ್ತಿ |
ಕರಣಸಾಕ್ಷಿಕ ವೇದ ಪ್ರತಿಪಾದ್ಯನೆನಿಸಿರುವ |
ಪರಮಗುರು ಮಹಲಿಂಗರಂಗ ಭವಭಂಗಾ || ಯಾಕೆನ್ನ ||5|

ರಕ್ಷಿಸೈ ಕಾರುಣ್ಯ ಸಿಂಧುವೆ
ರಕ್ಷಿಸೈ ಕಾರುಣ್ಯ ಸಿಂಧುವೆ |
ರಕ್ಷಿಸೈ ಕುಲಬಂಧುವೆ ||ಪ||
ರಕ್ಷಿಸೆನ್ನಯ ಕೈಯ ಬಿಡದೇ |
ಪಕ್ಷಪಾತವ ಮಾಡದೆ ||ಅ||
ಮಾನಪ್ರಾಣ ಧನವು ನಿನ್ನದು
ಹಾನಿವೃದ್ಧಿಯು ನಿನ್ನದು ||
ಜ್ಞಾನ ಮೇಣಜ್ಞಾನ ನಿನ್ನದು |
ದಾನ ಧರ್ಮವು ನಿನ್ನದು ||1||
ಭೋಗ ಭಾಗ್ಯವು ಗುಣವು ನಿನ್ನದು |
ರಾಗ ರಸ ರುಚಿ ನಿನ್ನದು ||
ರೋಗ ದುಃಖ ವ್ಯಸನ ನಿನ್ನದು |
ತ್ಯಾಗ ಕೃಪಣತೆ ನಿನ್ನದು ||2||
ಯನ್ನ ಭವರೋಗವನು ಹರಿಸೊ |
ಉನ್ನತದ ಸುಖ ತೋರಿಸೋ ||
ಚನ್ನ ಶ್ರೀ ಗುರು ರಂಗಲಿಂಗನೆ |
ಯನ್ನ ದೇವರ ದೇವನೆ ||3||

ಶಿವನೆ ಪಾಲಿಸು ಯನ್ನನೂ
ಶಿವನೆ ಪಾಲಿಸು ಯನ್ನನೂ | ಜಗದೊಡೆಯ
ಶಿವಪದವಿಯಿತ್ತು ಮುದದೀ | ಘನದೀ ||ಪ||
ಶಿವ ಬ್ರಹ್ಮ ವಿಷ್ಣು ರುದ್ರ | ಇಂದ್ರ ಶಶಿ |
ಶಿವ ಮಹಿಗೆ ಭೋಜ ಬೀಜವಾಗಿ
ಶಿವಭೋಜ್ಯ ಭೋಕ್ತನೆನಿಸಿ | ಸರ್ವದಲಿ |
ಶಿವಶಕ್ತಿಯಾಗಿ ಪೊರೆವ | ಜಗವ || ಶಿವ ||1||
ಶಿವನಗರಿಗೊಡೆಯ ಮೃತ್ಯುಂ | ಜಯನಿರಘ
ಶಿವಶರಣ ಕಾಮಧೇನು | ನೀನು |
ಶಿವ ಭವಾಂಭೋನಿಧಿಯ ಕುಡಿವ | ಬಡಬಾಗ್ನಿ |
ಶಿವ ಸಚ್ಚಿದಾನಂದ ಮೂರ್ತಿ | ಕೀರ್ತಿ || ಶಿವ ||2||
ನಿಮ್ಮ ಮೂರ್ತಿ ಧ್ಯಾನ ಮನದೊಳಗೆ |
ಶಿವಮಂತ್ರ ಪಠಣೆ ಜಿಹ್ವೆಯಲ್ಲಿ |
ಶಿವಪೂಜೆ ಕರದಿಗೈವ ಭಕ್ತಿಯನು |
ಶಿವ ಕರುಣಿಸೈ ಯನಗೆ ಇಂದು ಬಂದು || ಶಿವ ||3||
ಶಿವಭಕ್ತ ಬಂಧುವೆನಿಸಿ ಜೀವರ್ಗೆ |
ಶಿವ ಕ್ಷೇತ್ರವೆಂಬ ಕಾಶಿ | ಸ್ಥಲದಿ
ಶಿವನೆ ತಾರಕಮಂತ್ರವಂ ಬೋಧಿಸುತ|
ಶಿವಲೋಕವೀವ ಪ್ರಭುವೇ ಗುರುವೆ || ಶಿವ ||4||
ಶಿವಪಾದಾಂಭೋರುಹವನು ನೆನೆನೆನೆದು |
ಶಿವ ಸುಖಾಮೃತವ ಸವಿ ನೀನೆಂದು |
ಶಿವನೆ ಗುರು ಮಹಲಿಂಗನೆಂದೆನಿಸಿ |
ಶಿವಭಕ್ತ ಸುಧೆಯ ನೆರೆದು ಕರೆದು || ಶಿವನೆ ||5||

ಏನು ಹೇಳಲಿ ದಿವ್ಯ ಶಿವಮಂತ್ರ ಮಹಿಮೆಯನು
ಏನು ಹೇಳಲಿ ದಿವ್ಯ ಶಿವಮಂತ್ರ ಮಹಿಮೆಯನು
ಮಾನಸೇಂದ್ರನ ಭಜಿಸಿ ಭವನಾಶಿಯಾಗೈ ||ಪ||
ಗುರು ಬ್ರಹ್ಮವಧೆ ಪಾಪವೆಂಬ ಕಾರ್ಗತ್ತಲೆಗೆ |
ಉರಿವ ಮಧ್ಯಾಹ್ನಾರ್ಕ ಮಂಡಲವು ಯೆನಿಸುತ |
ಸುರೆಯ ಸೇವನೆ ದೋಷವೆಂಬತುಲ ಮೇಘಕ್ಕೆ |
ಉರುತರ ಪ್ರಚಂಡ ಮಾರುತವು ಯೆನಿಸಿಹುದು ||1||
ಕನಕತಸ್ಕರ ಪಾಪವೆಂಬ ತುಲ ಪರ್ವತಕೆ |
ಮೊನೆಯಾದ ವಜ್ರಾಯುಧವೆನಿಸಿಹುದೂ ||
ವಿನುತ ಗುರುಸತಿ ಗಮನ ಪಾಪವೆಂಬುವ ಜಗಕೆ |
ಜನಜನಿತ ಪಂಚಾನನವು ಯೆನಿಸಿರುವುದು ||2||
ಅನೃತ ಭಾಷಾಲತೆಗೆ ಗಂಡುಗೊಡ್ಲೆನಿಸಿ |
ಘನಪಾತಕಾರುಣ್ಯ ಕಾಲಾಗ್ನಿಯೆನಿಸಿ
ಮುನಿ ವಿಪ್ರ ಗುರು ವೇದವೇದಾಂತ ದೂಷಣೆಯ |
ನೆನಹೆಂಬ ಸರ್ಪಕ್ಕೆ ಹಸಿದ ಗರುಡನೆನಿಸಿರುವದು ||3||
ಪರಸತಿ ಸ್ವಮಾತೃ ತನ್ನ ಭಗಿನಿ ಸಂಗಮವು |
ಪರಧನವು ಗೃಹ ಗ್ರಾಮ ಅನ್ನ ವಂಚನೆಯು ||
ಉರುಭ್ರೂಣ ಗೋಹತ್ಯೆ ಮೊದಲಾದ ಅಘವೆಂಬ |
ದುರುಳ ರಕ್ಕಸಕೋಟಿ ಶಿರಚಕ್ರವೆನಿಸಿರುವುದು ||4||
ಅಡಿಗಡಿಗೆ ನಡೆನುಡಿಗೆ ಮನದಿ ನೆನೆದರೆ ಸಾಕು |
ಮಡಿಯ ಮೈಲಿಗೆಯೆಂಬ ತಡೆಬಡೆಗಳಿಲ್ಲ |
ಕಡು ಸುಲಭ ಯಮ ಭಟರ ಕಡೆವಸಿತ ಖಡ್ಗವಿದು |
ಮೃಡರೂಪ ಮಹಲಿಂಗ ಗುರು ಪ್ರಸಾದವಿದು ||5||

ಭಜಿಸು ಭಕ್ತರ ಬಂಧುವೆನಿಪನ
ಭಜಿಸು ಭಕ್ತರ ಬಂಧುವೆನಿಪನ
ಭಜಿಸು | ಬ್ರಹ್ಮಾನಂದನ ||ಪ||
ಭಜಿಸು ಕರುಣಾ ಸಿಂಧುವೆನಿಪನ |
ಭಜಿಸು ತ್ರೈಜಗಭರಿತನ ||ಅ ಪ||
ವೇದ ಪುರುಷನ ವೇದವೇದ್ಯನ
ವೇದ ಆಗಮವಂದ್ಯನ |
ವೇದ ಜನಕ ವೇದರೂಪನ ವೇದ ಪಾಠಕ ವಂದ್ಯನ ||1||
ಭಕ್ತ ಪ್ರಿಯನ ಭಕ್ತಭಾಗ್ಯನ
ಭಕ್ತ ಹೃದಯ ವಿಹಾರನ |
ಭಕ್ತ ಜನಕನ ಪುತ್ರನ ಭಕ್ತ ಜನ್ಮಕುಠಾರನ ||2||
ಯೋಗಬೋದ್ಯನ ಯೋಗ ಸಾಧ್ಯನ
ಯೋಗಮುದ್ರಕರಾಬ್ಜನ ಯೋಗಪ್ರಿಯನ
ಯೋಗಸಿದ್ಧನ ಯೋಗ ದೀಕ್ಷಾಬದ್ಧನ ||3||
ಧ್ಯಾನ ಪ್ರೀತನ ದಾನ ಪಾತ್ರನ
ಧ್ಯಾನ ಫಲಪ್ರದ ಖ್ಯಾತನ
ಧ್ಯಾನ ಧಾತೃ ಧ್ಯೇಯರೂಪನ ಧ್ಯಾನ ನಿತ್ಯಾನಂದನ ||4||
ಜ್ಞಾನಗಮ್ಯನ ಜ್ಞಾನನೇತ್ರನ
ಜ್ಞಾನ ಸಾಗರ ಚಂದ್ರನಾ |
ಜ್ಞಾನಿ ಗುರುಮಹಲಿಂಗ ರಂಗನ ಜ್ಞಾನಿ ದಕ್ಷಿಣ ವಕ್ತ್ರನ | ಭಜಿಸು ||5||

ಮಾತು ಮಾತಿಗೆ ಶಂಕರ
ಮಾತು ಮಾತಿಗೆ ಶಂಕರ| ಶ್ರೀ ಗುರುವೆ ಸ
ರ್ವೋತ್ತಮನೆನಬಾರದೆ ||ಪ||
ಜೋತಿ ಸಂಗದಿ ವುರಿದೋಗ್ವ ಕರ್ಪುರದಂತೆ
ಪಾತಕರಾಸಿದಿಂತುರಿದು ಹೋಗುವದಾಗಿ |ಮಾತು ||ಅ.ಪ||
ಸ್ನಾನವ ಮಾಡುವಾಗ | ನೇಮದಿ ಆತ್ಮ
ಧ್ಯಾನ ಮಾಡುವಾಗ |
ಜಾಣತನದಿ ಅನ್ನವುಂಡು ಗಂಗಾಮೃತ
ಪಾನವ ಮಾಡುವ ಕಾಲದಿ ಮನವೆ |ಮಾತು ||1||
ಬಿಸಜಾಕ್ಷಿ ನೋಡುವಾಗ | ಕೂಡುತ ನಿತ್ಯ
ವಸೆದು ಮಾತಾಡುವಾಗ
ಬಸುರಿಲಿ ಬಂದ ಸುಮಗನ ಮುದ್ದಿಸುವಾಗ
ಹಸನಾದ ವಸ್ತ್ರಂಗಳನುಡುವಾಗ ಮನವೆ |ಮಾತು ||2||
ಬೆಟ್ಟವನೇರುವಾಗ | ಕಾಲೂರಿದಲ್ಲಿ
ಥಟ್ಟನೆ ಬೀಳುವಾಗ
ಅಷ್ಟಭೋಗದಿ ನಿತ್ಯ ಲೋಲುಪ್ತಿ ಪಡೆವಾಗ
ದಟ್ಟ ದಾರಿದ್ರ ಬಂದಾಗಲು ಮನವೆ ||ಮಾತು ||3||

ಗುರುಚರಣ ಪ್ರಣವ
ಗುರುಚರಣ ಪ್ರಣವವೆಂತೆಂಬ ಮರ್ಮವನು
ಶ್ರೀಗುರುವಿನಿಂದರಿತು ಪೂಜೆಸುವನುತ್ತಮನು ||ಪ||
ಶಿರವಧಿಕವೆನಿಸಿರಲಾ ಚರಣ ಪೂಜೆಂತೆನಲು |
ಶಿರವು ಜ್ಞಾನಸ್ಥಾನ ನಿರ್ಗುಣೆನಿಸುವುದು |
ಚರಣ ಕರ್ಮಸ್ಥಾನ ಸಗುಣವೆನಿಸಿಹುದಾಗಿ
ಚರಣ ಪೂಜಿಸಲಾಯ್ತು ಪ್ರಣವ ರೂಪಿಂದ ||1||
ತಾರಕದ ಪರಂಜ್ಯೋತಿ ಕರ್ನ ಕುಂಡಲ ಮತ್ತೆ |
ಚಾರುಬಿದಿಗೆಯ ಚಂದ್ರ ಬಂದು ರೂಪವಾಗಿ |
ತೋರಿ ಅಜಹರಿರುದ್ರ ಈಶ್ವರ ಸದಾಶಿವರು |
ಮೀರದಲೆ ದೇವತೆಗಳು ಯೆನಿಸಿ ರಾಜಿಪರು ||2||
ಅಲ್ಲಿ ಭಕ್ತಿಯು ನಿಂತ ಪುರುಷನಿಗೆ ಶ್ರೀ ಗೌರಿ
ವಲ್ಲಭನು ವೊಲಿದು ವರಕಾಮ್ಯ ಮೋಕ್ಷವನು
ಒಲ್ಲೆನೆಂದರು ಕರೆದು ಕೊಡುವೆನೆಂಬುದನು |
ಬಲ್ಲ ಹರ ಗುರುಭಕ್ತರೊಲಿದು ಪೂಜಿಪರೂ ||3||
ಚರಣ ಪ್ರಣವಾಕಾರವೆನಿಸಿ ಭಕ್ತರ್ಗೆಲ್ಲ |
ಚರಣರಜದುರಿತಗಿರಿ ವಜ್ರವಾಗಿರುತ
ಚರಣ ತೀರ್ಥಖಿಳ ರುಜೆಗೌಷಧವು ಯೆನಿಸುತ್ತ |
ಚರಣ ಪೂಜೆಯೆ ಸರ್ವಕಧಿಕವೆನಿಸಿಹುದು ||4||
ಇಂತು ಶ್ರೇಷ್ಠತ್ವಲ್ಲಿ ಅಡಗಿರುವುದನ್ನರಿತು |
ಕಂತು ಹರನಚ್ಚುತನು ಅಜ ಮುಖ್ಯರಾದವರು |
ಪಿಂತೆಸಿರದೊಳಗಾಂತು ಕೊಂಡಾಡಿ ಪೂಜಿಪರು |
ಸಂತಸದಿ ಗುರು ಮಹಾಲಿಂಗನಡಿಗಳಂ ||5||

ಕರವೆತ್ತಿ ಬೆಳಗುವೆನು
ಕರವೆತ್ತಿ ಬೆಳಗುವೆನು | ಕರ್ಪೂರ ಜ್ಯೋತಿ |
ಕರವೆತ್ತಿ ಬೆಳಗುವೆನು || ಪ ||
ಧರಣಿ ಪಾವನಕಾಗಿ | ಅವತಾರವನು ಗೈದ |
ಕರುಣ ಸಾಗರನಾದ | ಶ್ರೀಗುರು ಮೂರ್ತಿಗೆ ||ಅ||
ವರನಂದಿ ಖಗಹಂಸ | ವಾಹನನೆನ್ನಿಸಿ |
ಕರದಿ ತ್ರಿಶೂಲ ಕಮಂಡಲ ವರಚಕ್ರ |
ನಿರುತ ಉಮೆಯು ರಮೆ | ಭಾರತಿ ಹೊಂದಿಹ |
ವರಪ್ರಣವಾತ್ಮಕ | ಗುರು ಪಾಹಿಮಾಂ ಎಂದು ||1||
ಗುರು ಮಹಲಿಂಗ ರಂಗನೆ ಮೂರು ರೂಪಾಗಿ |
ಇರುವನೆಂಬುವ ಮರ್ಮ ಸೂಚಿಪನೆಂಬಂತೆ |
ಶಿರ ಮೂರರಿಂದಲಿ ಅವತಾರವನುಗೈದ |
ಪರಮ ದತ್ತಾತ್ರೇಯ | ಗುರು ಪಾಹಿಮಾಂ ಎಂದೂ ||2||

ನಿನ್ನ ಹಿತಕೋಸುಗವೆ ಪೇಳುವೆ
ನಿನ್ನ ಹಿತಕೋಸುಗವೆ ಪೇಳುವೆ |
ಯನ್ನ ಮಾನಸರಾಜನೇ ||ಪ||
ಮುನ್ನವಿರತಿಯ ಧನವನಾರ್ಜಿಸು |
ನಿನ್ನದಾಗಿದೆ ಮುಕ್ತಿಯು ||ಅ.ಪ||
ಸ್ವಪ್ನದಂದದಿ ರಾಜ್ಯಲಕ್ಷ್ಮಿಯು |
ಸ್ವಪ್ನದಂದದಿ ಭಾಗ್ಯವು |
ಸ್ವಪ್ನದಂದದಿ ಪುತ್ರ ಸತಿಯರು |
ಸ್ವಪ್ನದಂದದಿ ಪ್ರಾಯವು ||1||
ದುಃಖ ಜನನವು ಮರಣ ಕಾಲದಿ |
ದುಃಖ ಬಹು ರೋಗಂಗಳಿಂ |
ದುಃಖ ಶತ್ರುಗಳಿಂದಲನುದಿನ |
ದುಃಖಮಯ ಸಂಸಾರವು ||2||
ದುಃಖ ಧನವನಾರ್ಜಿಸುವ ಕಾಲದಿ |
ದುಃಖ ರಕ್ಷಿಪ ಕಾಲದಿ |
ದುಃಖ ಚೋರರು ಅಗ್ನಿಭಯ ಬಹು |
ದುಃಖ ಒಬ್ಬರಿಗೀಯಲು ||3||
ನಿತ್ಯವಲ್ಲವು ಹೆಣ್ಣು ಹೊನ್ನುಗಳ್ |
ನಿತ್ಯವಲ್ಲವು ಮಣ್ಣಿದು |
ನಿತ್ಯ ಮೃತ್ಯುವುಯೆನಿಸಿ ತ್ರಿಜಗವ |
ನಿತ್ಯ ನುಂಗುತಲಿರುವುದು ||4||
ಈಷಣತ್ರಯದಾಸೆಯಿಂದಲೆ |
ಘಾಶಿಯಾಗುವದೀ ಜಗಂ |
ಆಸೆ ಶ್ರೀಗುರು ರಂಗನಲ್ಲಿಡು |
ಈಶನಾಗುವೆ ಸಂತತಂ ||5||

ವಾಣಿ ಪಾಣಿ ಮಾಣಿ ಮೂರು
ವಾಣಿ ಪಾಣಿ ಮಾಣಿ ಮೂರು
ಕಟ್ಟಿದವನು | ಶ್ರೇಷ್ಟನಪ್ಪನು ||ಪ||
ವಾಣಿ ಪಾಣಿ ಮಾಣಿ ಮೂರು
ಬಿಚ್ಚಿದವನು | ಭ್ರಷ್ಟನಪ್ಪನು ||ಅ.ಪ||
ಸುಳ್ಳು ಠಕ್ಕು ಚಾಡಿ ಕುಹಕವಾಡಬೇಡ |
ವಾಕ್ಕಿನಿಂದ | ಒಳ್ಳೆ ನುಡಿಯು |
ಮಂತ್ರಧ್ಯಾನ ಬಿಡಲು ಬ್ಯಾಡಾ |
ಮನಸಿನಿಂದ || ವಾಣಿ ||1||
ಕಳುವು ಹಿಂಸೆ ಕೊಲೆಗಳನ್ನು |
ಮಾಡಬ್ಯಾಡಾ ಹಸ್ತದಿಂದ |
ಸಲಿಗೆಯಿಂದ ಬೇಡಿದರೆ |
ಕೊಡುವ ಶಂಭು ದೃಢದಿ ನಂಬು || ವಾಣಿ ||2||
ಮೋಹ ಬಿಡು ಕಾಮಿನಿಯರ |
ಕೂಟದಲ್ಲಿ | ನೋಟದಲ್ಲಿ |
ಮೋಹವಿಡು ಗುರು ರಂಗನಡಿಯಲ್ಲಿ |
ಮನಸಿನಲ್ಲಿ || ವಾಣಿ ||3||

ಮನ ವಿರಕ್ತಿಗೆ ಮುಕ್ತಿಯಲ್ಲಿದೆ
ಮನ ವಿರಕ್ತಿಗೆ ಮುಕ್ತಿಯಲ್ಲದೆ |
ತನು ವಿರಕ್ತಿಗೆ ಯಿಲ್ಲವು ||ಪ||
ಮನವೆ ಬಂಧವು ಮೋಕ್ಷ ಪದವಿಗೆ |
ಮನವೆ ಕಾರಣವೆನಿಪುದು ||ಅ.ಪ||
ಮನದಿ ಮೋಹವು ಆಶೆಯಳಿದವ |
ಮನೆಯೊಳಿದ್ದರು ಮುಕ್ತನು
ಮನದಿ | ಮೋಹವು ಆಶೆಯುಳ್ಳವ |
ವನದೊಳಿದ್ದರು ಬದ್ಧನು | ಮನ ||1||
ತನುವು ಧನದಭಿಮಾನವಳಿದವ |
ಮನೆಯೊಳಿದ್ದರು ಮುಕ್ತನು |
ತನುವು ಧನದಭಿಮಾನವುಳ್ಳವ |
ಮನದೊಳಿದ್ದರು ಬದ್ಧನು || ಮನ || ||2||
ಆಶೆಯಿಂದಲಿ ಮನಕೆ ಬಂಧವು |
ಆಶೆಯಳಿಯಲು ಮುಕ್ತಿಯು |
ಆಶೆ ಗುರು ಮಹಲಿಂಗನಲ್ಲಿಡೆ |
ಈಶನಾಗುವೆ ಸಂತತಂ || ಮನ || ||3||

ಅಬ್ಬಬ್ಬಿನ್ನೆಂಥಾವನೋ ಈ ಕಾಮ
ಅಬ್ಬಬ್ಬಿನ್ನೆಂಥಾವನೋ | ಈ ಕಾಮನು |
ಅಬ್ಬಬ್ಬಿನ್ನೆಂಥಾವನೋ | ||ಪ||
ಮಬ್ಬು ಕಣ್ಣಿಗೆ ಮುಚ್ಚಿ ಮೋಹ ಬಲೆಯ ಬೀಸಿ
ಒಬ್ಬೊಬ್ಬರನು ಗೋಣ ಮುರಿಯುವ ಪಿಡಿದು | ಅಬ್ಬಬ್ಬ ||ಅ.ಪ||
ಘನತಪಗೇಡಿಯೆಂದು ಕಿಡಿಗಣ್ಣಿನ
ಘನತಾಪ ಜ್ವಾಲೆಯಿಂದ ತ್ರಿನಯನನು
ಸುಟ್ಟು ಬೊಟ್ಟಿಟ್ಟರು ಸಾಯದೆ |
ಮನಸಿಜನೆನಿಸಿ ಮೂಲೋಕವ ಸುಡುವನು ||1||
ಸತ್ತ ನಾಯರಿಯನು | ಪ್ರತ್ಯಕ್ಷ ತಾ
ಹೆತ್ತಾ ಮಗಳನರಿಯನು |
ಅತ್ತೆ ಅತ್ತಿಗೆ ತಾಯಿ ತಂಗಿಯೆಂದೆಣಿಸದೆ |
ನಿತ್ಯ ಭೋಗಿಸಿ ನೀತಿಗೆಟ್ಟು ಸಂಚರಿಸುವ ||2||
ಪತಿವ್ರತೆಯರ ಕೆಡಿಸಿ | ಯೋಗವು ಧ್ಯಾನ
ವ್ರತ ನೇಮಂಗಳ ಮರೆಸಿ |
ಸ್ಥಿತಿಗತಿ ಕೆಡಿಸುತ್ತ ಸೂಳೆರ ಬಾಗಿಲೆ |
ಗತಿಯೆಂದು ತಿರಿದುಂಬ ಪರಿಮಾಡ್ವನಹಹ ||3||
ನೆರೆ ಪಂಚ ಬಾಣದಿಂದ| ಮೋಹಾದಿಗಳ |
ಪರಮ ಸಹಾಯದಿಂದ |
ವರಜ್ಞಾನ ರತ್ನಾ ಹಾರಿಯನ್ನಿಸುತಲಿ |
ಧರೆಯೊಳು ಪ್ರಖ್ಯಾತಿಯಾಗಿಹ ಪುರುಷನು ||4||
ಧೀರ ಶ್ರೀ ಗುರುರಂಗನ ಪಾದದಿ ಭಕ್ತಿ
ತೋರದಿರುವ ಮೂಢನ |
ನಾರಿ ಮೋಹವದೆಂಬ ಬಲೆಯೊಳು ತಾ ಕಟ್ಟಿ |
ಚೂರಿಯಿಲ್ಲದೆ ಕೊರಳನು ಕೊಯ್ವ ಮೆಟ್ಟಿ ||5||

ಬಿಡು ಬಿಡಿನ್ಯಾತರ ಜ್ಞಾನ
ಬಿಡು ಬಿಡಿನ್ಯಾತರಜ್ಞಾನ | ನಿನ್ನ
ನಡೆ ನುಡಿಯೊಂದಾಗದಿಹುದೆ | ಅಜ್ಞಾನ | ಬಿಡು ||ಪ||
ಗುರುಭಕ್ತಿ ನೆಲೆಯಾಗಿಯಿಲ್ಲ | ನಾನೇ |
ಗುರುವೆಂದು ಹಮ್ಮಿನಿಂದುರಿಯುವೆಯಲ್ಲ |
ಕರುಣ ಶಾಂತಿಯು ಸತ್ಯವಿಲ್ಲ | ಕೆಟ್ಟ
ಅರಿವರ್ಗ ಮದ ಹೆಚ್ಚಿ ಮೆರೆಯುವೆಯಲ್ಲ || ಬಿಡು ||1||
ಚದುರನೆಂದೆನಿಸಿಕೊಂಡಿರುವೆ | ದಿವ್ಯ |
ಪದುಮದಿಂದೊಪ್ಪುವ ಮುಖದಿ ಶೋಭಿಸುವೆ||
ಮಧುರ ವಾಕ್ಯವನಾಡುತಿರುವೆ | ನಿನ್ನ
ಹೃದಯದಿ ಕತ್ತಿಯನ್ನಿಟ್ಟುಕೊಂಡಿರುವೇ || ಬಿಡು ||2||
ತನುವಿನಾಶೆಯ ಬಿಡಲಿಲ್ಲ | ಹೇಸಿ
ಮನದ ಸಂಕಲ್ಪಾಗಳ್ ಬೋಳಾಗಲಿಲ್ಲ |
ಅನುಮಾನವನು ಬಿಡಲಿಲ್ಲ | ನಮ್ಮ
ಗುರು ಮಹಲಿಂಗನೋಳ್ | ಸಮರಸವಿಲ್ಲ || ಬಿಡು ||3||

ಜಾಗ್ರದಲ್ಲಿ ಜಾಗ್ರನಾಗಿ
ಜಾಗ್ರದಲ್ಲಿ ಜಾಗ್ರನಾಗಿ ಗುರುವಿನಂಘ್ರಿಯಾ ಹೊಂದು |
ಶೀಘ್ರದಿಂದ ದಾಟಿಸುವನು ಭವದ ಶರಧಿಯಾ ||ಪ||
ಬೂರುಗಾದ ಫಲವ ಗಿಣಿಯು |
ಆರು ಮಾಸ ಹೂವು ಕಾದು |
ಹಾರಿ ಪೋದುದಿನಿತು ಸಾರವರಿಯದಾ ಪರಿ |
ಘೋರ ಸಂಸಾರ ವೃಕ್ಷದ ಫಲವು |
ನೂರು ವರುಷ ಕಾಯ್ದರಿಲ್ಲವೆಂಬುದರಿತುಕೋ ||1||
ಶರಧಿ ಅಲೆಗಳುಡುಗಿದಾಗ ಸ್ನಾನಗೈಯ್ಯುವೆನೆಂದು |
ಮರುಳನೋರ್ವ ಕಾಯ್ದ ಪರಿ ಸಂಸಾರವೆಂಬುವ
ಶರಧಿಯಲಿ ಪುತ್ರಮಿತ್ರ ಗೋತ್ರ ಬಾಂಧವರೆಂಬ
ತೆರೆಗಳುಡುಗಿದಾಗ ಶಿವನ ಭಜಿಪೆನೆನ್ನದೆ ||2||
ಕೋಟಿಗೊಂದು ಮಾತು ಪೇಳ್ವೆ ಜಗವಿದೆಲ್ಲವು ಮಿಥ್ಯೆ
ಬೂಟಕಿದನು | ಸ್ವಪ್ನದಂತೆಂದರಿತು ನಿನ್ನಯ |
ದೃಷ್ಟಿಯೊಳಗೆ ಗುರು ಮಹಾಲಿಂಗರಂಗನ ಕಂಡು |
ನಿಷ್ಠೆಯಿಂದ ಭಜಿಸಿ ನಿತ್ಯ ಮುಕ್ತನಾಗೆಲೋ ||3||

ತಿಳಿದು ಭಕ್ತಿ ಮಾಡು
ತಿಳಿದು ಭಕ್ತಿ ಮಾಡು ಗುರು ಪಾದದಲ್ಲಿ | ಮನಸಿನಲ್ಲಿ |
ಬಲವಂತ ಮಾಘಸ್ನಾನವಲ್ಲಾ | ಕೇಳೊ ಸೊಲ್ಲಾ ||ಪ||
ಕೋಪತಾಪದಿಂದ ಸತ್ಯ ಜ್ಞಾನನಾಶ | ಯಮ ಪಾಶ |
ತಾಪಸೋತ್ತಮರ ಸೇವೆ ಕ್ಲೇಶನಾಶ | ಭವನಾಶಾ ||1||
ಆಶತ್ರಯದಿಂದ ನೀನು | ಘಾಶಿಯಾಗುವೆ | ಮೋಸ ಹೋಗುವೆ |
ಈಶನಲ್ಲಿ ಆಸೆ ಇಡು ಹೇಸಿ ಜೀವವೇ | ಮುಕ್ತನಾಗುವೆ ||2||
ತನುತ್ರಯ ಬೆಳಗುವ | ಆತ್ಮನೊಬ್ಬನೂ ಸತ್ಯವೆಂದೂ |
ಕನಸಿನಂತೆ ತೋರ್ಪ ಜನ | ಮಿತ್ಯವೆಂದೂ | ಮನಸಂದೂ ||3||
ಗುರುದೇವ ಸರ್ವ ತತ್ವ | ಬೋಧಕರ್ತ ಕೇಳೊ ಮರ್ತ್ಯಾ |
ಗುರುಪಾದ ಹೊಂದದಿರೆ ಜನ್ಮ ವ್ಯರ್ಥ | ಇದು ಸತ್ಯಾ ||4||
ಸಲೆ ಗುರು ಮಹಲಿಂಗ ರಂಗ ಬಂದಾ | ದಯದಿಂದಾ |
ಕಳಚುವನು ಭಕುತರ | ಭವಬಂಧಾ | ಕ್ರಮದಿಂದಾ ||5||

ನಾಳೆಯೆಂಬನ ಮನೆ ಹಾಳು
ನಾಳೆಯೆಂಬನ ಮನೆ ಹಾಳು | ನೀನು
ನಾಳೆತನಕಿರುವುದು | ನಿಜವೇನು ಹೇಳು ||ಪ||
ಕ್ಷಣ ಭಂಗುರವು ಯನ್ನಿಸಿದೆ | ನಿನ್ನ
ತನುವು ಆಚಂದ್ರಾರ್ಕವಾಗಿ ನಿಲ್ಲುವದೆ
ದಿನವು ರೋಗದಿ ಸಾಯುತ್ತಿದೆ | ಇದನು
ಮನದೊಳಗರಿತು ಶೀಘ್ರದಿ ಮುಕ್ತನಾಗದೇ ||1||
ಹಾಳು ವಾದವ ಮಾಡಬಲ್ಲೆ| ನಿನ್ನ |
ಮೂಲ ತತ್ವವ ಕಿವಿಯೊಳಲೊಲ್ಲೆ|
ಖೂಳ ಕುಹಕ ವಿದ್ಯೆ ಬಲ್ಲೆ | ಎಷ್ಟು
ಹೇಳಲು ಆಸೆ ಮೋಹವ ಬಿಡಲೊಲ್ಲೆ ||2||
ಕೊಡಬೇಕಾದರೆ ನಾಳೆಯೆಂಬೆ | ಕಟ್ಟಿ
ಇಡಬೇಕಾದರೆ ಯನ್ನದೀಗಲೆ ಯೆಂಬೆ |
ಮಡದಿ ಮಕ್ಕಳಿಗಿರಲೆಂಬೆ | ನಾಳೆ |
ಜಡಿಯವ ಯಮಭಟರುಗಳಿಗೆ ಯೇನೆಂಬೆ ||3||
ಬರುವ ಕಾಲದಿ ಬರಿಗೈಯಿ | ನೀನು
ಹೊರಡುವ ಕಾಲದೊಳಗೆ ಬರಿಗೈಯ್ಯಿ |
ಪರರನ್ನು ಜರಿಯುವ ಬಾಯಿ | ಇಹ
ಪರ ಕಾಣದಾಡುವ | ತಲೆ ಹುಳಿತ ನಾಯಿ ||4||
ವಿರತಿ ಸದ್ಭಕ್ತಿಯ ತಾಳು | ಕೆಟ್ಟ
ದುರಿತಾದಿ ಕುದಿಯುವುದ್ಯಾತರ ಬಾಳು |
ಸ್ಥಿರ ಮುಕ್ತಿ ಕಾಂತೆಯನಾಳು | ನಮ್ಮ
ಗುರು ಮಹಲಿಂಗನಾ ವಚನವ ಕೇಳು ||5||

ಕೆಡುವುದುಚಿತವೆ
ಕೆಡುವುದುಚಿತವೆ | ಮೃಢ
ನಡಿಯಾ ಪಿಡಿಯದೇ | ಕೆಡುವದುಚಿತವೇ ||ಪ||
ಒಡಲೊಳು ಭವನಡಿ ನೆನೆಯುತಲೀ ಭವ
ಕಡಲನು ದಾಂಟದೆ ಮೂಢತೆಯಿಂದಲಿ ||ಅ.ಪ||
ಸ್ಥಿರವಿಲ್ಲಾ ತನುವಿದು | ಮರಳಿ ತಾ ಬಾರದೂ |
ಅರಿತರೆ ಈ ಜನ್ಮದೊಳು ಮುಕ್ತಿ ಸಾಧನ |
ಮರೆತರೆ ಘನ ನರಕಾರ್ಣವ ಶಾಸನ || ಕೆಡು ||
ಮಾನಿನಿ ಭ್ರಮೆಯಲೀ | ಶ್ವಾನನಂದದಲೀ |
ಓಣಿಓಣಿಯೊಳಾಡಿ ಕೆಡುವೆ ನೀ ಮತಿಗೆಟ್ಟು |
ಮೀನು ಗಾಣಕೆ ಸಿಕ್ಕಿ ಪ್ರಾಣ ಬಿಟ್ಟಂತೆ || ಕೆಡು ||2||
ಮಾನಾಭಿಮಾನದಿ ಜ್ಞಾನವ |ನೀಗಿದಿ
ಮಾಣುಮಾಣೆಲೋ ನಿನ್ನ ಜಾಣತನಂಗಳ
ಜ್ಞಾನಿಗಳೊಡನಾಡಿ ನೀಗೋ ದುರ್ಗುಣಗಳ || ಕೆಡು ||3||
ನಾನೆಂ¨ ಗರ್ವದಿ ನೀನುಬ್ಬಿ ಉರಿಯದೇ
ಧ್ಯಾನ | ಜಪವ ಗುರು ಭಕುತಿಯ ಮಾಡುತ |
ನೂನವಿಲ್ಲದ ಪದ ಸೇರಿಕೊ ನೋಡಿ || ಕೆಡು ||4||
ವಾಸನದೂರನು | ಭಾಸುರ ತೇಜನು
ಪಾಶ ಛೇದಕ ಪರಮೇಶನು ಯೆನಿಸಿದ
ದೇಶಿಕ ಮಹಲಿಂಗನರಿಯದೆ ಬರಿದೆ || ಕೆಡು ||5||

ಕೊಬ್ಬಿ ನೀ ಕೆಡಬೇಡವೋ
ಕೊಬ್ಬಿ ನೀ ಕೆಡಬೇಡವೋ | ಮತ್ತೊಬ್ಬರ
ನ್ನುಬ್ಬಿ ಆಡಲಿ ಬ್ಯಾಡವೋ ||ಪ||
ಮಬ್ಬು ಕಣ್ಣಿಗೆಮುಚ್ಚಿ | ಮರೆತರೆ ಶಿವಧ್ಯಾನ
ಹೆಬ್ಬುಲಿಯಂತೆ ನುಂಗುವ ಯಮನವನ ||ಅ||
ಕಾಸುವೀಸಂಗಳನೂ | ಕೂಡಿಸಿ ಧನದ |
ರಾಸಿಯ ಮಾಡಿ ಮಾಡಿ |
ಆಸೆಯಿಂದಿರೆ ವೀಸದಾನವ ಮಾಡದೇ | ಕಾಲ
ಪಾಶಕ್ಕೆ ಗುರಿಯಾಗಿ ಕೆಟ್ಟೆಲ್ಲೋ ಪ್ರಾಣಿ ||1||
ಎಂಟು ಮಂದಿಗಳ ಕಟ್ಟೀ | ಎಚ್ಚರದಿಂದಾ |
ತುಂಟರೈವರನು ಕಟ್ಟೀ |
ನೆಂಟರಿಷ್ಟರಭಿಮಾನವ ದೂರಿಟ್ಟೂ
ಬಂಟನಾಗದೆ ಶಿವ ಶರಣಾರ ಪಾದಾದೀ ||2||
ನಿನ್ನೊಳಡಗಿರುವಾ | ಗರ್ವವು ಕ್ರೋಧ
ವಿನ್ನು | ಮತ್ಸರವ ನೀಗಿ |
ಉನ್ನತ ಶಾಂತಿಯ ಪಡೆಯದೊಳ
ಗನ್ಯರ ಗುಣ ದೋಷವೆಣಿಸಿ ನೀ ಸುಮ್ಮನೆ ||3||
ಪರಮಗುರು ಮಹಲಿಂಗನ |
ಚರಣ ನಂಬಿಹಗೊಬ್ಬಗಲ್ಲದೆ | ಸದಮಲ
ವಿರತಿಯಿಂದ | ಎದೆ ಏರಿ ತುಳಿದು ಕಾಡುವ ಗುಣಗಳು
ಮೂರ| ಬಡಿಯಬೇಕಲೆ ಮೋಹ ಭಯಲಜ್ಜೆ ಮೂರ ||4||
ಸಾಧಿಸುತೀ ಪರಿಯಾ | ನಿನ್ನೊಳು ನೀನೇ |
ಛೇದಿಸಿ ಮದ ಗರ್ವವಾ |
ವೇದ ಪುರುಷಗುರು ಮಹಲಿಂಗರಂಗನ |
ಪಾದಪಲ್ಲವ ಪಿಡಿದು ಸುಖಿಯಾಗೋ ಮನುಜಾ ||5||

ಕೇಳಿದಾಗಲೆ ಹೇಳಬಾರದೂ
ಕೇಳಿದಾಗಲೆ ಹೇಳಬಾರದೂ | ಪರಬ್ರಹ್ಮ ವಿದ್ಯವ
ಕೇಳಿದಾಗಲೆ ಹೇಳಬಾರದೂ ||ಪ||
ಕೇಳಿದಾಗಲೆ ಹೇಳಬಾರದು
ಹೇಳಿದಾ ಪರಿಯಿರದೆ ಗುರುವಿಗೆ
ಹೇಳುವೆನು ತಿರುಮಂತ್ರವೆಂಬುವ |
ಖೂಳನಾದಧಿಕ ಪ್ರಸಂಗಿಗೆ | ||ಅ ಪ||
ಗುರುವರನ ಭಕ್ತಿಯಲಿ ಪೂಜಿಸದೆ | ತನು ಮನವು ಧನವನು |
ಗುರುವಿನಡಿ ಕಮಲಕ್ಕೆ ಒಪ್ಪಿಸದೆ ||
ನಿರುತ ಶಾಸ್ತ್ರಾಗಮಗಳೋದಿ |
ಹಿರಿಯರನು ನಿಂದಿಸುತ ಗರ್ವದಿ |
ಬರಿಯ ಮಾತಿನ ಬಣವೆ ವೊಟ್ಟುತ |
ಅರಿತು ಅರಿಯದ ನರಕದುಳುವಿಗೆ || ಕೇಳಿ ||1||
ಆರು ವರ್ಗದಿ ಕುದಿದು ಸಾಯುತ್ತ |ಹಗಲಿರುಳು ಬಳಲುತ |
ಮೂರು ತಾಪದಿ ಮುಳುಗಿ ತೇಲುತ್ತ |
ನಾರಿ ಮಕ್ಕಳ ಮೋಹವಡಗದೆ ||
ಸೇರುವೆನು ನಿಜ ಮುಕ್ತಿಯೆನುತಲಿ |
ದೂರುತನ್ಯರ ತನ್ನ ಗುಣವಿ |
ಸ್ತಾರದಿಂದಲಿ ಹೊಗಳಿಕೊಂಬಗೆ || ಕೇಳಿ ||2||
ಈಶನಡಿಯಲಿ ಭಕ್ತಿಯಿಲ್ಲದಲೆ | ದುರ್ಮಾರ್ಗತನದಲಿ
ರೋಷ | ಹೆಚ್ಚುವ ಶಾಂತಿಯಿಲ್ಲದಲೆ |
ದೂಷಿಸುತ ಮಹಾಸಾಧು ನಡೆಗಳ |
ಮೋಸ ಹಾದರ ಕಳವು ಪರಧನ |
ದಾಶೆಯಲಿ ಮನ ಮುಳುಗಿ | ಜ್ಞಾನದ
ದೇಶವರಿಯದ ಹೇಸಿ ಮೂಳಗೆ || ಕೇಳಿ ||3||
ಜ್ಞಾನಗುರುವೆಂತೆಂದು ನಂಬುತ್ತ| ಹಂನೆರಡು ವರುಷವು
ನ್ಯೂನವಿಲ್ಲದೆ | ಸೇವೆಗೈಯ್ಯುತ್ತ
ಏನು ಹೇಳಲು ನಂಬಿಕಿಲ್ಲದೆ |
ಹೀನ ವಿಷಯದಿ ಸಿಲ್ಕಿಯನುದಿನ |
ಗಾಣದೆತ್ತಿನ ಪರಿಯ ತಿರುಗುತ |
ಜ್ಞಾನ ಹೊಂದದ ಮೂರ್ಖ ಮನುಜಗೆ || ಕೇಳಿ ||4||
ಧರೆಯ ಭೋಗವು ರೋಗವೆಂದೆನುತ ತನ್ನೊಳಗೆ ಅರಿತು |
ಸ್ಥಿರದ ಮುಕ್ತಿಯ ಹೊಂದಬೇಕೆನುತ ||
ಸದೆ ಬಡಿಯಲಿ ಬೇಕು | ವಾಸನೆ ಮೂರ
ಪರಮ ಪಾತಕರಿಂಗೆ ಬ್ರಹ್ಮವ |
ನಿರುತ ಬೋಧಿಸೆ ಹಬ್ಬದದರಿಂ || ಕೇಳಿ ||5||

ಕೇಳಿದಾಗಲೆ ಹೇಳ್ವ ಸದ್ಗುರುವು
ಕೇಳಿದಾಗಲೆ ಹೇಳ್ವ ಸದ್ಗುರುವು | ಸುಜ್ಞಾನ ಮಾರ್ಗವ |
ಕೇಳಿದಾಗಲೆ ಹೇಳ್ವ ಸದ್ಗುರುವು ||ಪ||
ಕೇಳಿದಾಗಲೆ ಹೇಳ್ವ ಶಿಷ್ಯಗೆ ಲೀಲೆಯಿಂದಧಿಕಾರವರಿತು |
ಕೇಳಿದವರಿಗೆ ಹೇಳ್ವುದಲ್ಲದೆ |
ಪೇಳ್ವದಿನ್ನ್ಯಾರಿಂಗೆ ಜಗದೊಳು || ಕೇಳಿದಾಗಲೆ ||ಅ.ಪ||
ತನುವು ಧನ ಮನವಿತ್ತು ಗುರುವರಗೆ | ಆಧ್ಯಾತ್ಮ ಶ್ರವಣದಿ
ಜನಿಸಿ ಬ್ರಹ್ಮಜ್ಞಾನ ಮನದೊಳಗೆ |
ಯೆನಿತು ಅಭಿಮಾನಿಡದೆ ರಾಜ್ಯದಿ |
ತೃಣಸಮಾನದಿ ಕಂಡು ಧರಣಿಯ |
ಘನದಿ ಆಳಿದ ಜನಕನಂದದಿ |
ಮನವು ನಿಲಿಸುವ ಪ್ರೌಢನಾದರೆ || ಕೇಳಿ ||1||
ಬಾಲತನದಲಿ ಬ್ರಹ್ಮ ಬೋಧಿಸಿದ ಪ್ರಣವಾಕ್ಷರಕ್ಕೆ ವಿ |
ಶಾಲ ಅರ್ಥವ ತಾನೆ ಬೋಧಿಸಿದ
ಬಾಲಕನ | ಜ್ಞಾನಕ್ಕೆ ಹರ್ಷವ
ತಾಳಿ ಪರಶಿವ ನಿಜವನರುಹಲು |
ಕೇಳಿ ಮುಕ್ತಿಯ ಪಡೆದ ಗುಹನಂ |
ತ್ಹೇಳಿ ಕೇಳ್ವಧಿಕಾರಿಯಾದೊಡೆ || ಕೇಳಿ ||2||
ಧರೆಯೊಳುತ್ತಮ ವ್ಯಾಸಮುನಿವರನ |ಪ್ರಿಯಪುತ್ರನೆನ್ನಿಸಿ
ಪರಮ ಶಾಂತಿಯೊಳ್ಹೊಂದಿ | ಪರಶಿವನ
ತರುಣಿ ಮೋಹದ ಬಲೆಗೆ ಶಿಲ್ಕದೆ |
ಉರುತಪವ ತಾ ಗೈದು ಜ್ಞಾನವ |
ಧರಿಸಿ ಮಕ್ತಿಯ ಪಡೆದ ಶುಕಮುನಿ |
ಪರಿಯ ವಿರತಿಯೊಳಿರುವದಾದರೆ || ಕೇಳಿ ||3||
ತೊರೆದು ತನ್ನ ಮಗನೆಂಬ ಭ್ರಾಂತಿಯನು | ಕಪಿಲ ಮುನಿಯಲಿ |
ಇರಿಸಿ ತನ್ನ ಗುರುವೆಂಬ ಭಾವವನು |
ಅರಿತು ಯೋಗವು ಪರಮ ಜ್ಞಾನವ
ನಿರುತ ಸರ್ವವು | ಬ್ರಹ್ಮವೆಂಬುವ |
ಅರಿವು ಮರೆಯದ ದೇವಹೂತಿಯ
ಪರಿಯ ನಿಶ್ಚಲನಾಗ್ವನಾದಡೆ || ಕೇಳಿ ||4||
ಧರೆಯೊಳಾರಾದೊಡೆಯು ಮುಕ್ತಿಯನು | ಹೊಂದುವೆನು ಯೆನ್ನುತ |
ತರಿದು ಮದಗುಣ ಮೋಹ ವ್ಯಸನವನು |
ಪರಮ ಗುರು ಮಹಲಿಂಗರಂಗನ ಚರಣ ಸೇವೆಯೊಳಿರಲು ಕರ್ಮವು |
ಹರಿದು ನಿರ್ಮಲವಾದ ಮನವನು |
ಪರಿಕಿಸಲು ಕರ್ಪೂರವಾಗಿರೆ || ಕೇಳಿ ||5||

ನಾನು ನಾನೆಂದು ಗರ್ವದಲಿ ಮೆರೆಯದೆ
ನಾನು ನಾನೆಂದು ಗರ್ವದಲಿ ಮೆರೆಯದೆ |
ನೀನು ನೀನೆಂದು ಶಿರ ಬಾಗೊ | ಗುರುವರಗೆ ||ಪ||
ನಾನೆನುತ ರಾವಣನು ಅಸುವಳಿದ ಅವನನುಜ |
ನೀನೆನುತ ಲಂಕೆಯೊಳು ಸ್ಥಿರಜೀವಿಯಾದ |
ನಾನೆಂದ ಕೌರವನ ಮನೆಗೆ ಹೋದನೆ ಕೃಷ್ಣ
ನೀನೆಂದು ನೆನೆದ ವಿದುರನ ಮನೆಯ ಪಾಲುಂಡ || ನಾನು ||1||
ನಾನೆಂದ ಶಿಶುಪಾಲ ಶಿರವಿತ್ತ ಚಕ್ರಕ್ಕೆ |
ನೀನೆಂದ ದ್ರೌಪದಿಯ ಮಾನ ಕಾಯ್ದನು ಹರಿಯು |
ನಾನೆಂದ ದೈತ್ಯರಿಂಗಾಯ್ತು ವರ ಪಡೆಹಾಳು |
ನೀನೆಂದ ದೇವತೆಗಳಿಗಾಯ್ತು ಸ್ಥಿರಬಾಳು || ನಾನು ||2||
ತವೇ ಸಜ್ಜೆ ಶಿರ ಬಾಗದಲೆ ಬೆಳೆದು ಲೋಕದೊಳು |
ನವಧಾನ್ಯದೊಳು ಸೇರದ್ಹೊರಗಾಯ್ತು ನೋಡು |
ಭುವನದೊಳು ಶಿರಬಾಗಿ ಬೆಳೆದ ಭತ್ತವು |
ನಮ್ಮ ಶಿವನ ನೈವೇದ್ಯಕ್ಕೆ ಯೋಗ್ಯವಾದುದನರಿತು || ನಾನು ||3||
ದೇಶಿಕೇಂದ್ರನೆ ನನಗೆ ಮುಕ್ತಿಯೆಂತಾಗ್ವುದೆನೆ |
ನಾ ಸತ್ತರಾಗ್ವುದೆಂದ ಗುರುವರನ |
ಆಶಯವನರಿಯದಲೆ ಮೂರ್ಖ ಶಿಷ್ಯನು ಒಮ್ಮೆ |
ಮೋಸದಿಂ ಗುರುವಧೆಯ ಗೈದನಿದನರಿತು || ನಾನು ||4||
ನಾನೆ ಪ್ರಾಜ್ಞನು ಯೆಂಬ ಗರ್ವಗಿರಿಯನು ಏರಿ |
ಹೀನನಾಗಲು ಬೇಡವೆಲೋ ಮಾನವ |
ಮಾನಾಭಿಮಾನ ಸುಖದುಃಖವೆಲ್ಲವನು |
ಜ್ಞಾನಿ ಗುರು ಮಹಲಿಂಗನಿಗೊಪ್ಪಿಸಲು ಸುಖಿಯಪ್ಪೆ || ನಾನು ||5||

ಮುಳುಗಿ ಹೋದೆಯಲ್ಲೋ ಭವದಲಿ
ಮುಳುಗಿ ಹೋದೆಯಲ್ಲೋ ಭವದಲಿ |
ಮುಳುಗಿ ಹೋದೆಯಲ್ಲೋ ||ಪ||
ತಿಳಿಯದೆ ಜ್ಞಾನವ | ಗುರು ಮುಖದಿಂದಲಿ |
ಹೊಲೆತನುವಾ ನೆಂಬೀ | ಮೋಹಕೆ ಶಿಲ್ಕಿ| ||ಅ ಪ||
ಕುಲಛಲ ಗೋತ್ರಗಳು | ಪಿತಸುತ
ಲಲನೆಯ ಮೋಹದೊಳು
ಸಿಲುಕಿನ ಮನವನು ತೆಗೆಯದೆ | ನರಕದ
ಹುಳುವಿನ ಪರಿ | ಸಂಸಾರದ ಕೂಪದಿ ||1||
ಓದಿ ತರ್ಕಶಾಸ್ತ್ರ ತತ್ವದ |
ಹಾದಿ ತಿಳಿಯದಿರಲು
ಸಾಧಿಸಿ ಶಿವರಾಮೆನುತ ಗಂಭೀರದಿ |
ಓದಿದ ಗಿಣಿ ಮಲ ತಿಂದಂತಿಹುದು ||2||
ಪಾಯಸವನು ಕೊಡಲು | ತಿನ್ನದ
ನಾಯಿಕುನ್ನಿಯಂತೆ |
ರಾಯ ಶ್ರೀ ಗುರು ಮಹಲಿಂಗನೆ ನಿನ್ನಯ |
ಕಾಯದಿ ಇರುವದ ಕಾಣದೆ ವ್ಯರ್ಥದಿ ||3||

ಜಾತಿ ಸೂತಕವೆಂಬ ಮಾತಿಲ್ಲ
ಜಾತಿ ಸೂತಕವೆಂಬ ಮಾತಿಲ್ಲ | ಸುಜ್ಞಾನ ಮರ್ಗದಿ |
ಜಾತಿ ಕರ್ಮಾದಿಗಳು ಮೊದಲಿಲ್ಲ ||ಪ||
ಜಾತಿಗೋತ್ರಕೆ ಬದ್ಧರಾಗುತ | ಆತ್ಮನರಿಯದ ಕರ್ಮಿಗಲ್ಲದೆ |
ಜಾತಿ ಕಲ್ಪನೆಯಳಿದು ಆತ್ಮ |
ಜ್ಯೋತಿಯಲಿ ಮುಳುಗಿದ ಮಹಾತ್ಮಗೆ || ಅ.ಪ ||
ಬ್ರಹ್ಮ ಬೀಜವೆ ಸರ್ವ ಯೋನಿಯೊಳು | ಪುಟ್ಟಿರುವದೆಂಬುವ |
ಮರ್ಮವರಿಯದ ಮೂಢ ಜನರುಗಳು ||
ನಮ್ಮ ಕುಲ ಮೇಲೆನುತ ವಂದಿಸಿ |
ನಿಮ್ಮ ಕುಲ ಕೀಳೆನುತ ನಿಂದಿಸಿ
ಹಮ್ಮು ಮದ ಮತ್ಸರದಿ ಸಾಯುತ |
ಒಮ್ಮೆ ನರಕಕೆ ಯಿಳಿವರಲ್ಲದೆ || ಜಾತಿ ||1||
ಇಲ್ಲ ಜಾತಿಯು ಸ್ವರ್ಗ ನರಕದೊಳು | ತ್ರೈಮೂರ್ತಿಗಳಿಗು |
ಇಲ್ಲ ಜಾತಿಯು ತೀರ್ಥಕ್ಷೇತ್ರದೊಳು ||
ಯೆಲ್ಲ ಬ್ರಹ್ಮೆಂಬರುವು ಯಿಲ್ಲದೆ |
ಯಿಲ್ಲದುಂಟೆಂತೆಂಬ ಕಂಗಳು
ಇಲ್ಲದಿಹ ಘಾತಕಗಳ ನಡೆಯೊಂ |
ದಲ್ಲದಲೆ ಸುಜ್ಞಾನ ಪಥದೊಳು || ಜಾತಿ ||2||
ಅನ್ನಮಯದೀಕಾಯವೆಂಬುದು | ಸರ್ವರಿಗು ವೊಂದೆ |
ಭಿನ್ನವಲ್ಲದೆ ತೋರಿಯಡಗುವುದು ||
ಮುನ್ನಲೇ ಅಂಡಜವು ಸ್ವೇದಜ |
ಉನ್ನತುದ್ಭಿಜವರಜರಾಯುಜ |
ಎನ್ನುತೀ ಪರಿ ನಾಲ್ಕು ಜಾತಿಯ |
ನನ್ನಿಯಿಂದಜ ಸೃಜಿಸಿಯಿರಲು || ಜಾತಿ ||3||
ಜಾತಿ ವರ್ಣವು ಗೋತ್ರಷನ್ಮತವು | ಅಜ ಸೃಷ್ಟಿಯಲ್ಲವು |
ಖ್ಯಾತಿ ಜೀವಿಗಳಿಂದ ನಿರ್ಮಿತವು ||
ಜಾತಿ ಅಜ ನಿರ್ಮಿತವದಾದೊಡೆ |
ಮಾತಿನಿಂದಲಿ ಕೆಡದು ಜಗಪ್ರ |
ಖ್ಯಾತಿಯಾಗಿಹ ಮನುಜ ನಿರ್ಮಿತ |
ಜಾತಿ ಗೋತ್ರವು ಕೆಡುವುದದರಿಂ || ಜಾತಿ ||4||
ಕರದಿ ಕುಂಭವು ಕುಂಭದೊಳು ಕ್ಷೀರ | ಪ್ರತ್ಯೇಕವಾಗಿ
ಇರುವ ಪರಿಯಾತ್ಮನಿಗೆ ಬೇರಾಗಿ |
ಶರೀರ ಕುಲವರ್ಣಾಶ್ರಮಂಗಳು |
ಬರಿದೆ ತೋರಡಗುವವು ಅಲ್ಲದೆ |
ಪರಮಗುರು ಮಹಲಿಂಗರಂಗನೋಳ್ ||ಪ||
ರಿಕಿಸಲು ಲವಮಾತುವಿಲ್ಲವು || ಜಾತಿ ||5||

ಧರೆಯೊಳಗೆ ಪಂಚ ಮಲಗಳು
ಧರೆಯೊಳಗೆ ಪಂಚ ಮಲಗಳು ಪ್ರಸಿದ್ಧವಾಗಿಹವು |
ಅರಿಯಬೇಕು ಮುಮುಕ್ಷುವಾದಿಯೊಳಗೆಲ್ಲವನು || ಪ ||
ಉರುತರಾನಾವ ಕಾರ್ಮಿಕವು ಮಾಯಾ ಮಾಯೆಯ
ವರತಿರೋಧಾನವೆನುತಲೈದಿಹವು ಇವುಗಳೋಳ್
ಪರಮ ಬ್ರಹ್ಮಜ್ಞಾನ ಜನಿಸಿದಂತಡಿಗಡಿಗೆ
ಮರವೆಗೆಳಸುವದೆ ಆಣವಮಲವದೆನಿಸುವದು ||1||
ಗುರುವರನ ಮುಖದಿಂದಲಧ್ಯಾತ್ಮ ಶಾಸ್ತ್ರಗಳ |
ನರಿಯಬೇಕೆಂತೆಂಬ ಮತಿಯಿರಲ್ಕದನು |
ಸ್ಥಿರಗೊಡದೆ ವಿಷಯಂಗಳ ನೆನೆಸುತ್ತ ತಿರುಗದು |
ಉರುತರದ ಕಾರ್ಮಿಕದ ಮಲವು ಯೆನಿಸುವುದು || ಧರೆ ||2||
ಬಾಲ್ಯ ಯೌವನ ವಾರ್ಧಿಕದೊಳ್ಹಗಲಿರುಳು |
ಹಾಳು ಕಥೆ ಕಿವಿಗಿಳಿಯಲಾನಂದ ಸ್ಫುರಿಸುತ್ತ |
ಕೇಳುಗೊಡದೆಲೆ ಬ್ರಹ್ಮ ತತ್ವಗಳ ಕಿವಿಯೊಳಗೆ
ಶೂಲ | ಹೊಡೆದಂತಿಹುದೆ ಮಾಯಾಮಲವೆನ್ನಿಸುವುದು || ಧರೆ ||3||
ದುರುಳ ಸಂತತಿ ದ್ರೋಹ ಚಿಂತನೆಯು ದ್ಯೂತ |
ನಿರುತ ಕೊಂಡೆಯು ಕಪಟ ದುರಿತಕರ್ಮಗಳೆನಿಪ |
ಭರಿತಪೇರ್ಮಡುವಿನೊಳು ಮುಳುಗಿ ಮನವೆಂದೆಂದು |
ಹೊರ ಸೂಸದಿಹುದೇ ಮಾಯೆಯ ಮಲವೆನ್ನಿಸುವುದು || ಧರೆ ||4||
ಪರಮ ಗುರುಮಹಲಿಂಗನೊಬ್ಬ ತ್ರೈಜಗದೊಳಗೆ |
ಭರಿತನಾಗಿಹನೆಂಬ ಜ್ಞಾನವನೆ ಸರ್ವರಿಗು |
ಮರಸಿ ಪರಿಪರಿಯ ದೇವರಂ ಪೂಜಿಸುವ ಮತಿಯಿತ್ತು |
ಮರಳಿ ಜನ್ಮವ ಕೊಡುವುದೆ ತಿರೋಧಾನಮಲವು || ಧರೆ ||5||

ತೋರದು ಸುಖ ಮಾನಸೇಂದ್ರ
ತೋರದು ಸುಖ ಮಾನಸೇಂದ್ರ | ನೀನು|
ತಾರಕ ಬ್ರಹ್ಮದಿ ಮುಳುಗದೆ ಸುಮ್ಮನೆ ||ಪ||
ಹರಿದಾಡುವಿಂದ್ರಿಯ ಕರಣಗಳನು ಕಟ್ಟಿ
ಅರಿಗಳಾರ್ವರನೆಂಟು ಮದಗಳ ಶಿರ ಮೆಟ್ಟಿ
ಸ್ಥಿರ ಕಾಯನಾಗಿ ಚಿತ್ರಾಸನದಲಿ ಕುಳಿತು
ಅರುವಿಂದ ದೃಷ್ಟಿಯ ನಿಲ್ಲಿಸಿ ನೋಡದೆ | ತೋರದು ||1||
ವರ ಗಂಗೆಯಮುನೆ ಸಂಗಮದೊಳಗಿಳಿದು
ಪರಿಭವಕೋಟಿ ದುಷ್ಕರ್ಮವ ತೊಳದು
ವರನೀಲಗಿರಿ ಮಧ್ಯದಶನಾದ ತಿಳಿದು
ವರಬಿಂದು ಕಲರುಚಿಯೊಳು ನಲಿದು ನೀ ಮುಳುಗಾದೆ ||2||
ವರಚಂದ್ರ ಸೂರ್ಯಬೀದಿಗಳಲ್ಲಿ ತೂರಿ
ಶಿರದೊಳಗಿರುವಜ ರಂಧ್ರವನೇರಿ
ಭರದಿ ಪಶ್ಚಿಮ ದಿಕ್ಕಿನೊಳು ರಾಜಿಸುತಲಿಪ್ಪ
ವರಮೋಕ್ಷಾಂಗನೆ ಕೂಡಿ ಆನಂದ ಪಡಿಯದೆ ||3||
ಅನುದಿನವಾ ಮೋಕ್ಷಕಾಂತೆಯ ಕೂಡುತ್ತ
ಕ್ಷಣಿಕವೀಳ ಸಂಸಾರವೆಂದನುಭವಿಸುತ್ತ
ಜನನ ಮರಣವೆಂಬ ಎರಡನ್ನು ತೊಳೆಯುತ್ತ
ಅನುಪಮದ್ವಯ ಬ್ರಹ್ಮಚಿಂತನೆಗೈಯದೆ ||4||
ದೇಹವನಾನೆಂಬುವ ಭ್ರಾಂತಿಯ ನೀಗಿ
ಸೋಹಂ ಭಾವದಿ ಚಿತ್ತ ನಿಶ್ಚಲವಾಗಿ
ಮೋಹ ಮತ್ಸರ ಪಾಶಗಳು ವುರಿದೋಹಿ
ಮೋಹರಹಿತ ಗುರು ರಂಗನೋಳ್ ಬೆರೆಯದೆ ||5||

ವರ ಪಂಚಮುದ್ರೆಗಳ
ವರ ಪಂಚಮುದ್ರೆಗಳ | ಶ್ರೀ ಗುರುವಿಂದ
ಲರಿತು ಸಾಧಿಸೆ ಮುಕ್ತನು ||ಪ||
ಕರಣ ನಿಗ್ರಹವೆಂಬ ಭಸ್ಮವ
ಧರಿಸಿ ಕೃಷ್ಣಾಜಿನದಿ ವಿಜನದಿ
ಸ್ಥಿರ ಕಳೇಬರನಾಗಿ ಕುಳಿತು
ಪರಮ ಬ್ರಹ್ಮಾತ್ಮೈಕ್ಯ ನಿಷ್ಠೆಯೋಳ್ ||ಅ.ಪ.||
ಕಣ್ಣು ರೆಪ್ಪೆಯ ಪಾಟನು | ನಿಲ್ಲಿಸಿ ಮನ
ಪವನದೊಳಗೆ ಸೇರಿಸಿ
ತನ್ನ ಶಿರವನು ಎತ್ತಿ ನೋಡಲು
ನನ್ನಿಯಿಂಫಾಲದೊಳುರವಿ ಶಶಿ
ಯುನ್ನತದ ಕಳೆ ಬಿಂದು ತೋರ್ಪುದು
ಮುನ್ನ ಖೇಚರಿ ಮುದ್ರೆ ಲಕ್ಷ್ಯದಿ |ವರ ||1||
ಎರಡು ಕಂಗಳ ಕೊನೆಯ ನೋಟವನೊಯ್ದು
ಇರಿಸೆ ನಾಶಿಕ ತುದಿಯೋಳ್
ಅರಿವ ಮನಪವನೆರಡು ನಿಂತು
ವುರಿವುದಮಲ ಜ್ಯೋತಿ ಬಾಹ್ಯದಿ
ವುರುತರಾನಂದಮೃತ ಸುರಿವುದು
ಪರಮ ಭೂಚರಿಮುದ್ರೆ ಲಕ್ಷ್ಯದಿ |ವರ| ||2||
ನಯನಂಗಳರ್ಧ ಮುಚ್ಚಿ | ಭ್ರೂಮಧ್ಯದೋ|
ಳುಯಚಿಲತ್ತಮರುತನಾಗಿ
ನಿಯಮ ಕಾಲವು ನೋಡಿ ಭ್ರಾಂತಿಯು
ಲಯಿಸೆ ವಿದ್ರುಮ ತಾರೆ ಮಿಂಚುಗ
ಳ್ಬಯಲಿನಲಿ ವಿಭ್ರಾಜ ಮಾನದಿ
ಪ್ರಿಯದಿ ತೋರಲು ಮಧ್ಯಲಕ್ಷದಿ |ವರ| ||3||
ಆರು ಅಂಗುಳಿಯಿಂದಲಿ | ಬಿಚ್ಚಿರುವಂಥ
ಆರು ದ್ವಾರಗಳ ಮುಚ್ಚಿ
ಚಾರು ಆಜ್ಞಾ ಸ್ಥಾನವೇರಲು
ಭೇರಿ ನಾದ ಮೃದಂಗ ವಾದ್ಯವು
ತೋರುವುದು ಪರಬಿಂದು ಕಳೆಯು
ಚಾರುಷಣ್ಮುಖಿ ಮುದ್ರೆ ಲಕ್ಷ್ಯದಿ | ವರ| ||4||
ಮನಸಿನೊಳಗೆ ಲಕ್ಷವು | ಬಾಹ್ಯದಿ ನಿತ್ಯ
ಅನಿಮಿಷ ದೃಷ್ಟಿಯಿರೆ
ಬಿನುಗುಯಿಂದ್ರಿಯ ವಿಷಯವುಡುಗುತ
ಘನ ಪರಂಜೋತಿ ಪ್ರಕಾಶದಿ
ಅನಘ ಗುರು ಮಹಲಿಂಗ ತೋರ್ಪನು
ವಿನುತ ಶಾಂಭವಿ ಮುದ್ರೆ ಲಕ್ಷ್ಯದಿ | ವರ| ||5||

ಶಿವ ಪದವಿ ಸೂರೆಗೊಂಬೆ
ಶಿವ ಪದವಿ ಸೂರೆಗೊಂಬ | ಕಂಗಳೊಳು |
ಶಿವಜ್ಯೋತಿ ಕಂಡ ಪುರಷಂ | ನಿಮಿಷಂ |
ಶಿವ ಪದವಿ ಸೂರೆಗೊಂಬ ||ಪ||
ಶಿವನಕ್ಷಿಮಣಿ ಭಸ್ಮವಂ ಧರಿಸಿ | ಮನ
ಶಿವ ಷಡಾಕ್ಷರಿ ಮಂತ್ರದೀ ನಿಲಿಸಿ |
ಶಿವಕೂಟದಲ್ಲಿ ದೃಷ್ಟೀ ಅಗಲದಿಹ |
ಶಿವಯೋಗ ಪೂರ್ಣಕಾಮಾ | ಭೀಮಾ || ಶಿವ ||1||
ಶಿವಪ್ರಣವ ನಾದಸುಧೆಯಾ | ಸೂರೆರಣಡಿದಿದ್ಬುಚಿನ |
ಶುಚಿಯಾ ಕಂಡುರದು |
ಶಿವನ ಚಿತ್ಕಳೆ ಶರಧಿಯೊ |
ಳೀಸಾಡಿ ಶಿವಜ್ಞಾನ ತೃಪ್ತನಾದ ಮೋದ || ಶಿವ ||2||
ಶಿವ ಜೀವರತ್ನ ವಜ್ರ | ಮಾಣಿಕ್ಯ |
ಶಿವ ಚಂದ್ರ ಸೂರ್ಯ ಕೋಟಿಯಂತೆ |
ಶಿವನ ಪೂರ್ಣ ಪ್ರಕಾಶದಿ ಮುಳುಗಿದ |
ಶಿವ ತಾನೆ ತಾನಾದ ಸ್ವಸ್ಥಾ ಚಿತ್ತ || ಶಿವ ||3||
ಶಿವ ಪುರುಷ ಲಿಂಗದಂತೆ ಭಕ್ತರ್ಗೆ |
ಶಿವಕಲ್ಪ ವೃಕ್ಷದಂತೆ ಇರುವ |
ಶಿವನೆ ಪ್ರವಿಮಲಭೂತಿಯನರಿತಾತ |
ಶಿವಸದಾನಂದ ಮೂರ್ತಿ ಕೀರ್ತಿ || ಶಿವ ||4||
ಶಿವನೆ ತಾರಕರೂಪದೀ ಅಣುವಾಗಿ |
ಶಿವದಾರತೂರಿ ಹೊರಗೆ | ಒಳಗೆ |
ಶಿವಮಹಾಲಿಂಗರಂಗ ಗುರುವಾಗಿ |
ಶಿವಪುರದಿ ಬೆಳಗೆ ಬಂದು ನಿಂದು || ಶಿವ ||5||

ಕೇಳಬೇಕು | ನಾದ ಕೇಳಬೇಕು
ಕೇಳಬೇಕು | ಕೇಳಬೇಕು | ಕೇಳಬೇಕು ನಾದ ಕೇಳಬೇಕು |
ಮೂಲಾ ಬ್ರಹ್ಮದಿ ಮನಲೈಸಬೇಕು ಆಲೈಸಬೇಕು ||ಪ||
ವಾಚಾದಿಂದಾಲಿ ಮುಕ್ತಿಯಾಗುವುದೇ | ವಸ್ತು ತೋರುವುದೇ |
ಯೋಚಿಸಿ ದೃಷ್ಟಿ ಮನ | ನಿಲ್ಲಿಸಾದೆ ಧ್ಯಾನ ಬಲಿಸಾದೆ ||1||
ಒಡಲಿನೊಳಗೆ ಪರಶಿವನಿಹನು | ತಾನೆ ಸಾಕ್ಷಿಯಿಹನು |
ಪೊಡವಿ ಮಾನವನಿದ ಕಾಣದಿಹನು | ಮುಂದುಗಾಣದಿಹನು ||2||
ಅಷ್ಟಾಮದಂಗಳನಟ್ಟಬೇಕು | ಬಲ್ಘಟ್ಟಿಬೇಕು |
ಭ್ರಷ್ಟಾರಾ ದೈವರ ಕಟ್ಟಬೇಕು | ಬೇಗ ಕುಟ್ಟಬೇಕು ||3||
ಸೂಸುತಿಹ ವಾಯು ಕಂಡು | ಹಿಡಿಯಬೇಕು | ಅಲ್ಲಿ ತಡಿಯಬೇಕು |
ಬಾಸೂರ ಪ್ರಭೆಯೊಳು | ಹೊಳೆಯಬೇಕು | ನಿಜವ ತಿಳಿಯಬೇಕು ||4||
ಕಂಗಳ ಮಧ್ಯದಿ ಕಾಣಬರುವ | ಕಳೆಗೂಡಿ ಬರುವ
ಶೃಂಗಾರ | ಗುರು ಮಹಲಿಂಗನಿರುವ | ತಾನಿಂದು ಮೆರೆವ ||5||

ಓದಬಾರದೆ ತರಳ
ಓದಬಾರದೆ ತರಳ ಓದಬಾರದೇ
ಓದಿನೊಳಗಣೋದು ಶ್ರೀಗುರು
ಬೋಧಿಸಿರುವ ಅರ್ಥವರಿತು ||ಪ||
ಮೂರು ನದಿಯ ನಡುವೆ ಮಿಂದು
ಚಾರು ಬ್ರಹ್ಮಗಿರಿಯ ಮಠದ
ಆರು ಮೆಟ್ಟುಲುಗಳೇರಿ ಸಣ್ಣ
ದ್ವಾರವನ್ನು ತೆರೆದು ನೋಡಿ ||1||
ಜಲಜವಾರು ಕಂಡುವೊಳಗೆ
ಪೊಳೆವ ವಕಾರಾದಿಯಾಗಿ
ಸಲೆಕ್ಷಕಾರದಂತ್ಯವರಿತು
ದಳದೊಳಕ್ಷರೈವತ್ತನ್ನು | ಓದ | ||2||
ಈಡೆಪಿಂಗಳಯೆಂಬುವಂತಾ
ನಾಡಿಯರಡು ಪಡೆದು ಬ್ರಹ್ಮ
ನಾಡಿಯ ಮಧ್ಯೆ ಕುಳಿತು ಮುದದಿ
ನೋಡಿ ಸೋಹಂ ಸೋಹಂ ಎನುತ ||3||
ಚಾರುಪಚ್ಚೆ ಹಲಿಗೆ ಮೇಲೆ
ಸಾರಬ್ರಹ್ಮ ಸೂತ್ರ ಪಿಡಿದು
ಮೂರು ಮುಖದ ಕಂಠದಿಂದಾ
ಸಾರಮಂತ್ರ ಪ್ರಣವ ಬರದು | ಓದ| ||4||
ಚಟುಲ ಶ್ರೀಗುರು ರಂಗಲಿಂಗ
ಸ್ಫುಟದಿ ವರೆದ ಮಂತ್ರ ರಾಜ
ಕುಟಿಲವಳಿದು ಭಕ್ತಿಯಿಂದ
ಘಟವುಯೆಂಬೊ ಮಠದಿ ನಿತ್ಯ ಓದಬಾದೆ ತರಳ || ||5||

ಭಜನೆ ಬ್ರಹ್ಮಾನಂದರಸವು
ಭಜನೆ ಬ್ರಹ್ಮಾನಂದರಸವು | ಸೋಹಂ |
ಭಜನೆ ಬ್ರಹ್ಮಾನಂದರಸವು ||ಪ||
ಕಜನಿಚೇತೋರಜನಿ ಹರಣ |
ಸುಜನ ಹೃದಯಾಂಗಣ ಪರಾಯಣ |
ಅಜಸುರೇಂದ್ರ ಮುನೀಂದ್ರ ಸೇವ್ಯನ |
ಭುಜಗಭೂಷಣ ಭವ್ಯ ಶಿವನ | ಭಜನೆ ||ಅ||
ಮೂರೈದು ಗೇಣಿನ ಗುಡಿಯಾ | ಹದಿ |
ನಾರು ಸ್ಥಂಭವು ಸಪ್ತ ಪ್ರಕಾರದೊಳವು |
ದ್ವಾರವೆಂಭತ್ತೈದು ಕಲಶಗ |
ಳಾರು ಮೆಟ್ಲುಗಳೈದು ವರ್ಣದ
ತೋರಣಂಗಳು | ಕಾದುಯಿರುತಿಹ |
ದ್ವಾರಪಾಲಕರೀರ್ವರೊಪ್ಪುವ ||1||
ನವರತ್ನ ಖಚಿತ ಮಂಟಪದ | ದ್ವಾರ
ಆವದಿ ಷಡಂಗುಳಿಯಿಂದಲಿ | ತೆರಿಯೇ
ಪ್ರವಿಮಲಾತ್ಮೇಶ್ವರನು ತೋರುವ |
ತವಕದಿಂದ್ರಿಯ ಕರಣವೆಂಬುವ |
ವಿವಿಧ ಪುರಜನರೆಲ್ಲ ಬಂದು |
ಶಿವನ ಸೇವೆಯೊಳಿಹರು ನಿಂದು ||2||
ಪರಬ್ರಹ್ಮ ದಂಡಿವೀಣೆಯನು ಮಾಡಿ |
ಮೆರೆವೇಳು ಚಕ್ರಗಳ್ಮೆಟ್ಟುಗಳ್ಮಾಡಿ |
ಇರಿಸಿ ಪ್ರಾಣಗಳೆಂಬ ತಂತಿಯ |
ತಿರುವಿ ವಿಷಯಗಳೆಂಬ ಬಿರಡೆಯ |
ಸ್ಮರಣೆಯೆಂಬಂಗುಳಿಯ ಮೀಟುತ |
ವರ ಸರಸ್ವತಿಯಂತೆ ಪಾಡುವ ||3||
ಮೂರು ಮೂರ್ತಿಯ ಸಭೆಯಲ್ಲಿ | ಚಂದ್ರ |
ತಾರೆಯ ಬೆಳಕಿನೊಳಾನಂದದಲ್ಲಿ |
ಸಾರ ಸಂಗೀತಗಳು ಧಣಧಣ |
ಭೇರಿ ಗಂಟೆಯು ತಾಳ ಝಣಝಣ |
ಚಾರು ಘೋಷಕೆ ಬೆದರಿ ಪಾತಕ |
ಊರು ಬಿಟ್ಟೋಡುವದು ಆ ಕ್ಷಣ ||4||
ಶ್ರೀ ಗುರು ಮಹಲಿಂಗರಂಗನ | ಕೃಪೆ |
ಯಾಗಲು ಭಕ್ತನ ಭವನಾಶನ |
ಭೋಗ ಸುಖವಂ ಭಯಸಿ ಜಲದೊಳು |
ಕಾಗೆಯಂದದಿ ಮುಳುಗಲೊಲ್ಲದೆ |
ಯೋಗ ನಿದ್ರೆಯೊಳ್ಮುಳುಗಿ ಉರಗಭವ |
ರೋಗವಳಿದಿಹ ಬ್ರಹ್ಮ ನಿಷ್ಠರ ||5||

ಜೋ ಜೋ ಸದಾನಂದ
ಜೋ ಜೋ ಸದಾನಂದ |
ಮರಸ ಬೋಧೆಯಿಂದಾ | ಜೋ ಜೋ ವಿಶಾಲಾಕ್ಷಿ |
ಪಡೆದವರ ಕಂದಾ | ಜೋ ಜೋ ||ಪ||
ನವ ಮೋಹನಾಂಗಿ ಅನುವರಿತು | ಗುರುವರನೂ |
ಕಿವಿಯೊಳಗೆ ಬಿತ್ತಿದನು | ಮಂತ್ರ ಬೀಜವನೂ |
ತವಶುಕ್ತಿಯಲಿ ಜೋತಿ ಮುತ್ತಾದ ರೀತಿ |
ನವಮಾಸದೊಳು ಮಂತ್ರ ಪಿಂಡ ಪ್ರಖ್ಯಾತಿ | ಜೋ ಜೋ ||1||
ನವಚಕ್ರದೊಳಗಾಡೀ ಕಳಹಂಸ ಶಿಶುವೂ |
ರವಿ ಕೋಟಿ ಕಾಂತಿಯಲಿ ಜನಿಸಿದುತ್ಸಹವೂ | ಜೋ ಜೋ ||
ಶಿವಗಂಗೆಯಲಿ ಮಾಡಿಸಿದರು ಮಜ್ಜನವ |
ನವರತ್ನ ತೊಟ್ಟಿಲೊಳು ಪವಡೀಸಿ ಮಗುವಾ || ಜೋ ಜೋ ||2||
ಹನ್ನೆರಡು ಗೊಣಶಿನ ಪಚ್ಚೆ ಸರಪಣಿಗೆ |
ನನ್ನಿಯಿಂದಲಿ ತೊಟ್ಲು ಕಟ್ಟಿ ಬಾಲಕಗೇ ||
ಚಿನ್ನದುಂಗುರ ವಿರತಿ ಕಸ್ತೂರಿ ಬಟ್ಟೂ |
ಭಿನ್ನ ಭಾವಗಳಳಿದಾ ಆಭರಣವಿಟ್ಟೂ || ಜೋ ಜೋ ||3||
ರವಿ ಚಂದ್ರ ಮಂಡಲವೆ ತಾಟಂಕಮಾಗೇ |
ಕವಿದತುಳ ಚಿತ್ತಳೆತೆ ಪೀತಾಂಬ್ರದುಡಿಗೇ ||
ತವೆಕುಂಕುಮರಿಶಿನವು ಕಾಡಿಗೆಯ ಸೋಗೇ |
ಎವೆಯಿಕ್ಕದೀಕ್ಷಿಸುವ ಜನನಿ ಕಂಗಳಿಗೇ || ಜೋ ಜೋ ||4||
ನೋಡಿದರು ಮುತ್ತೈದೆರೈವರೊಂದಾಗೀ |
ಮಾಡಿ ಮಂಗಳ ಪ್ರಣವ ನಾದಯಿಂಪಾಗೀ ||
ಮಾಡಿ ಆರತಿ ಪಂಚರತ್ನ ಭಾಜನದೀ
ಕೂಡು | ಅಮೃತಾಂಗನೆಯನೆನುತರಸಿ ಮುದದೀ || ಜೋ ಜೋ ||5||
ಆರು ಚಕ್ರದ ಮೇಳಣಾಲಯದಿ ಸುರಿದಾ |
ಸಾರಚೆನ್ನದ ಮೃತ ಸುಧೆಯ ಸೇವಿಸುವ || ಜೋ ಜೋ ||
ಮೂರು ಮಂಡಲ ಮೀರಿದುನ್ಮನೆಯ ಸೇರೀ |
ಭೂ ಆನಂದದಲಿ ಸುಖಸುಪಿ ತೋರಿ || ಜೋ ಜೋ ||6||
ಅರಿವು ಮರವೆಗಳಡಗಿದಮನಸ್ಕವಾಗಿ |
ನಿರುಪಮದ್ವಯ ನಿತ್ಯ ತೃಪ್ತ ತಾನಾಗೀ ||
ಹರಿದು ಭವಮಾಲೆಯನು ಸ್ಥಿರಮುಕ್ತನಾಗಿ |
ಪರಿಪೂರ್ಣ ಪರಬ್ರಹ್ಮ ಶಿಶುವು ತಾನಾಗೀ || ಜೋ ಜೋ ||7||
ಸುಳ್ಳು ಮಾಯಾ ಭ್ರಮೆಗೆ | ದೂರವಾಗಿರುವೇ |
ಮುಳ್ಳು ಮೊನೆಗೆಡೆಯಿಲ್ಲದಂತೆ ತುಂಬಿರುವೇ ||
ಎಲ್ಲಿ ನೋಡಿದಡಲ್ಲೆ ತಾನೆಯಾಗಿರುವೇ |
ಎಲ್ಲ ಜೀವಿಗಳೊಳಗೆ ಒಬ್ಬನಾಗಿರುವೇ || ಜೋ ಜೋ ||8||
ಕನಸಿನಂತೀ ಜಗವು ಪುಸಿಯಾಗಿ ತೋರೀ |
ಕ್ಷಣಿಕವಾಗುವುದೆಂಬ ನಸುನಗೆಯ ಬೀರೀ ||
ವಿನಯದಿಂದಾಡುವನು ಬಾಲ ಲೀಲೆಯನೂ |
ಅನಘ ಗುರು ಮಹಲಿಂಗ ರಂಗನಾತ್ಮಜನು || ಜೋ ಜೋ ||9||

ತೆರೆದ ಬಾಗಿಲ ಸುಂಕವಿಲ್ಲದ
ತೆರೆದ ಬಾಗಿಲ | ಸುಂಕವಿಲ್ಲದ |
ಪುರವುಂಟು | ಬಂದು ನೋಡಿ |
ಹರಿಹರ ಬ್ರಹ್ಮಾದಿಗಳ |
ಕಾವಲದಕುಂಟು |ಬಂದು ನೋಡಿ ||ಪ||
ಪುರಕ್ಕರಸರು ಮುವ್ವರೊಂಬತ್ತು ಬಾಗಿಲು | ಬಂದು ನೋಡಿ |
ಎರಡು ಕಿಟ್ಟಿಗೆ ಸೂರ್ಯ ಚಂದ್ರರ ಬೀದಿಯಾ | ಬಂದು ನೋಡಿ
ವರಚಕ್ರ ಮಧ್ಯದೊಳಿಹ | ಓಂಕಾರೇಶ್ವರ | ಬಂದು ನೋಡಿ
ಕರುಣೀಕರೈವರು | ಕರ ಜೋಡಿಸಿಹರಲ್ಲಿ | ಬಂದು ನೋಡಿ ||1||
ಏಳು ಸುತ್ತಿನ ಕೋಟೆ ಮೇಲೊಂದು ಗವಿಯುಂಟು | ಬಂದು ನೋಡಿ
ಏಳು ಲೋಕಂಗಳನೊಳಗೊಂಡು ಯಿಹುದಲ್ಲಿ | ಬಂದು ನೋಡಿ
ಒಂದು ಏಳೆಡೆ ಸರ್ಪವಲ್ಲಿ ಭೋರು ಗುಟ್ಟುತಲಿದೆ | ಬಂದು ನೋಡಿ ||
ಏಳೆಡೆ ಸರ್ಪನ ತಲೆಯೊಳು ರತ್ನವುಂಟು || ಬಂದು ನೋಡಿ ||2||
ಎರಡು ಪಕ್ಷದೊಳೊಂದೆ ಪಕ್ಷಿಯಾಡುತಲಿದೆ | ಬಂದು ನೋಡಿ
ಎರಡು ರೆಕ್ಕೆಯು ಪುಕ್ಕ ಪಕ್ಷೀಗಿಲ್ಲವು | ಬಂದು ನೋಡಿ
ಧರಣಿ ಜೀವರ್ಕಳಿಗಾಧಾರವಾಗಿದೆ | ಬಂದು ನೋಡಿ
ಕರಸ್ಥಳದೊಳಗಿದೆ ಕರಕೆ ಸಿಕ್ಕುವುದಲ್ಲ | ಬಂದು ನೋಡಿ ||3||
ಗರುಡ ಸರ್ಪಗೆ ಅತಿ ಸ್ನೇಹವುಂಟಾಗಿದೇ | ಬಂದು ನೋಡಿ
ಸುರರಸುರರು ಮಿತ್ರ ಭಾವದೊಳಿರ್ಪರು | ಬಂದು ನೋಡಿ
ಇರುವೆ ಸಿಂಹವ ನುಂಗಿ ತಾನೊಂದೆ ಕುಳಿತಿದೆ |ಬಂದು ನೋಡಿ
ವುರು ವಿಷವಮೃತವು ಆಯಿತೆನೆಂಬೆನು ||ಬಂದು ನೋಡಿ ||4||
ಚಾರು ಭೋಜನ ಶಾಲೆ ತೆರೆದಿದೆ ಎದುರಿಗೆ | ಬಂದು ನೋಡಿ
ಊರ ಜನರು ಉಂಡು ಧಣಿವರಾನಂದದಿ | ಬಂದು ನೋಡಿ
ದೂರದೊಳಿಲ್ಲವು ಜ್ಞಾನ ಭಂಡಾರವು | ಬಂದು ನೋಡಿ
ಧೀರ ಶ್ರೀ ಗುರು ಮಹಲಿಂಗನೊಳಗಿದೆ | ಬಂದು ನೋಡಿ ||5||

ಬಂದು ಕೂತಿಹಳು ನೋಡಿ
ಬಂದು ಕೂತಿಹಳು ನೋಡೀ | ಗಾಯಿತ್ರಿ ನೀ
ವಿಂದು ಕಣ್ದೆರೆದು ನೋಡಿ ||ಪ||
ಒಂದು ನಿಮಿಷವು ಧ್ಯಾನಿಸಲ್ಭವ
ಬಂಧನವ ಕಳಚಿ ಬ್ರಹ್ಮಾ
ನಂದ ಶರಧಿಯೊಳದ್ದಿ ಸಲಹುವೆ
ನೆಂದು ಹೃದಯಾಂಗಣದಿ ಮುದದಿ ||ಅ.ಪ||
ಮೂರು ವರ್ನದ ಕಾಯವು | ಗಾಯತ್ರಿಗೆ
ಆರು ಬಂಣದ ವುಡಿಗೆಯು
ಯೇರಿಸಿರಗಳ ಪಂಚಬ್ರಹ್ಮರ
ಮೇರುವಿಗೆ ಪನ್ನೆರಡು ಗೊಣಸುಗ
ಳ್ಸೇರಿಸಿವುಯ್ಯಾಲೆಯಾಡುತ
ಮೂರು ಲೋಚನೆ ಮುಕ್ತಿ ಕಾಂತಿಯು ||1||
ಮಿಸುನಿಲವಜ್ರಗಳ ರುಚಿ | ಚತುರಾಶ್ರಮೇ
ಲೆಸೆವಾರು ಕಲಶಂಗಳು |
ಅಸಮ ಸಿಂಹಾಸನದಿ ವಾಸಿಯು |
ವಸೆದು ಹತ್ತವತಾರಕೆತ್ತಿದ |
ಮಿಸುಪವಡ್ಯಾಣಿರಿಸಿ ನಡುವಿಗೆ |
ನಸುನಗುತ ಸಾವಿತ್ರಿ ದೇವಿಯು ||2||
ವರಕುಚಯುಗಳ ಮಧ್ಯೆ | ದ್ವಾದಶ ವಜ್ರ
ಸ್ಫುರಿಸಿ ತೋರುವ ಪದಕ
ಯರಡು ಮೂರೈದಾರು ಸೇರಿದ
ಸರವುಯೇಕಾವಳಿಯು ಕಂಠದಿ
ಧರಿಸಿ ವೈಖರಿ ರೂಪಿನಿಂದಲಿ
ವೊರೆವ ಬ್ರಹ್ಮಾತ್ಮೈಕ್ಯ ಸರಸ್ವತಿ ||3||
ನೀಲ ದರ್ಪಣ ಪಿಡಿದು | ಕೆಂಪಿನ ಬಟ್ಟು
ಫಾಲಮಧ್ಯವ ನೋಡಿಟ್ಟು
ವಾಲೆ ಝುಮುಕಿಯು ಶೃತಿಗೆ ಸಿರಸಿನ
ಮೇಲೆ ಸಾಸಿರದಳದ ಪದ್ಮವು
ಲೀಲೆಯಿಂದುನ್ಮನೆಯೊಳಾಡುವ
ಯೇಳುಕೋಟಿ ಸುಮಂತ್ರ ದೇವತೆ ||4||
ಚಿತ್ತ ನಕ್ಷತ್ರದಂತೆ | ವಿಭ್ರಾಜಿಗ
ಮುತ್ತಿನ ಮೂಗುತಿಯು
ಸತ್ತು ಚಿತ್ತಾನಂದ ರೂಪಿಣಿ
ಮಿಥ್ಯೆ ಮಾಯಾಕಲುಷ ಹಾರಿಣಿ
ಕರ‍್ತೃ ಗುರು ಮಹಲಿಂಗರಂಗನ
ಶಕ್ತಿ ಸಾಕ್ಷಾತ್ರಿಪುರ ಸುಂದರಿ | ಬಂದು ಕೂತಿಹಳು ||5||

ರತ್ನ ಬಂದಿದೆ ನೋಡಿರೋ
ರತ್ನ ಬಂದಿದೆ ನೋಡಿರೋ | ಉನ್ನತ ಜೀವ |
ರತ್ನ ಬಂದಿದೆ ನೋಡಿರೋ ||ಪ||
ಪೃಥ್ವಿಗಧಿಕ ಬ್ರಹ್ಮಪುರದಿಂದ ಬಂದಿದೆ
ರತ್ನ ಪರೀಕ್ಷೆಯ ಬಲ್ಲ ಸತ್ಪುರುಷ
ರತ್ನ ಬಂದಿದೆ ನೋಡಿರೋ || ಉನ್ನತ ||ಅ ಪ||
ಶಿರದೊಳಡಗಿದೆ | ಯಾವಾಗಲೂ
ಕರದಲ್ಲಿ ಕಾಣುತ್ತಿದೆ |
ವರಚಂದ್ರ ಸೂರ್ಯ ಬೀದಿಗಳೊಳಗಿಟ್ಟಿದೆ |
ದುರಿತ ಕರ್ಮಗಳಳಿದವಗೆ ಕಾಣುತಲಿದೆ || ರತ್ನ ||1||
ಅಷ್ಟದಳಗಳಿಂದಾ | ಆ ರತ್ನವು
ದಿಟ್ಟವಾಗಿಹುದರಿಂದ |
ದೃಷ್ಟಿಯನಗಲದೆ ನೋಡಿದ ಪುರುಷನು |
ನಷ್ಟ ಪಾತಕನಾಗಿ ಶ್ರೇಷ್ಠನಾಗುವನಂತೆ || ರತ್ನ ||2||
ಕಳ್ಳರ ಭಯವಿಲ್ಲವು ಈ ರತ್ನಕ್ಕೆ |
ಸುಳ್ಳರ ಸುಳುಹಿಲ್ಲವು ||
ಎಲ್ಲೆಲ್ಲಿ ನೋಡಲಲ್ಲಲ್ಲೆಕಾಂಬುದು ತಾನು
ಒಲ್ಲೆನೆಂದರು ಬಿಡದೆದುರಿಗೆ ನಿಲ್ವದು || ರತ್ನ ||3||
ಶಿರದೊಳು ರತ್ನವನ್ನು | ಧರಿಸಿರುವಂಥ |
ಉರಗನ ಹೃದಯವನ್ನು
ಉರಗಭೂಷಣ ಪಕ್ಷಿ ಹಂಸವಾಹನ ಮುಖ್ಯ |
ಸುರಮುನಿ ಹೃದಯದಿ ನಿತ್ಯ ಬೆಳಗುವಂಥ || ರತ್ನ ||4||
ದೊರೆ ದೇಸಾಯಿಗಳಲ್ಲಿಯೂ | ನವಕೋಟಿಯ
ವರ | ನಾರಾಯಣನಲ್ಲಿಯು |
ನೆರೆ ಚಕ್ರವರ್ತಿ ಬೊಕ್ಕಸದೊಳಗಿಲ್ಲ |
ಶ್ರೀ ಗುರು ಮಹಲಿಂಗನ ಭಂಡಾರದೊಳಗಿಹ || ರತ್ನ ||5||

ಭಯ ನಿವಾರಣವಾಯಿತಿಂದು
ಭಯ ನಿವಾರಣವಾಯಿತಿಂದು | ಗುರು
ದಯವೆಂಬ ವಜ್ರಾಂಗಿ ತೊಡಿಸಲು ಬಂದು ||ಪ||
ಆಶಪಾಷದ ಕೈಕಾಲುಡುಗೀ | ನಿಲ್ಲೆ
ಭಾಸುರ ಬ್ರಹೋಪದೇಶವೆಮಗಾಗೀ |
ಸೂಸುವಿಂದ್ರಿಯ ವ್ಯಾಪಾರುಡುಗೀ | ಕಮ
ಲಾಸನಂತರ್ಲಕ್ಷ ಸ್ಥಿರವಾಗಲಾಗೀ | ||1||
ತರಣೀಂದುಗಳ ಗತಿಯಳಿಯೇ | ಕಂಗ
ಳೆರಡರ ನಡುನೀಲ ಜ್ಯೋತಿನಿಂತುರಿಯೇ |
ಹರಿದು ಕತ್ತಲು ಬೆಳಕರಿಯೇ | ಅಲ್ಲಿ |
ವರಬಿಂದು ರುಚಿ ಕೋಟಿ ಮಿಂಚಿನೋಳ್ ಪೊಳೆಯೆ ||2||
ಸಣ್ಣಾ ಸೂಜಿಯ ಗಂಡಿಯೊಳಗೆ | ದೊಡ್ಡ
ಉಣ್ಣಿಮೆಯ ಚಂದ್ರನ ಕಳೆಯುಕ್ಕಿ ಬೆಳಗೇ |
ಕಣ್ಣಾರ ಕಂಡಾಯಿತೊಳಗೇ | ಸುಖಾ
ಬಣ್ಣಿಸಲಸದಳ ಬ್ರಹ್ಮಾದಿಗಳಿಗೇ ||3||
ಏಳು ಕೋಣೆಯ ಮನೆಯಲ್ಲಿ | ಘಂಟೆ
ತಾಳ ಮದ್ದಳೆ ಧಣಧಣ ಘೋಷವಲ್ಲೀ |
ಸಾಲು ದೀವಿಗೆ ಬೆಳಕಲ್ಲೀ | ಆಗ್ವ
ನೀಲಕಂಠನ ಪೂಜೆ ನೋಡಲಿಕ್ಕಲ್ಲೀ ||4||
ಧರಣೀ ಕತ್ತಲು ಮುಸುಕಿರಲೂ | ಸೂರ್ಯ
ಶಿರದೊರಲೆಸರಿಲ್ಲಾದಡಗುವ ವೊಲು |
ಗುರು ಮಹಲಿಂಗನ ಸೇರಲೂ | ಪೂರ್ವ
ದುರುಕರ್ಮರಾಶೀ ನಿಂತುರಿದು ಹೋಗಲೂ ||5||

ಎಷ್ಟು ಮಾತ್ರ ಭವದ ಕಡಲದು
ಎಷ್ಟು ಮಾತ್ರ ಭವದ ಕಡಲದು |
ಗುರುಕೃಪಿರಲು ದಾಂಟಲೊಂದು ಗೋಷ್ಟದವೆನಿಪುದು ||ಪ||
ಅಷ್ಟ ಭೋಗದಾಶೆ ಬಿಟ್ಟು |
ಅಷ್ಟಪಾಶಗಳನ್ನು ಸುಟ್ಟು |
ಅಷ್ಟದಳದ ಕಮಲ ಮಧ್ಯೆ |
ದಿಟ್ಟಿ ಬಲಿದಿತೀಶ್ವರಂಗೆ | ಎಷ್ಟು ಮಾತ್ರ ||ಅ||
ಯೋಗ ಸೂತ್ರವೆಂದು ಸಾಧಿಸಿ | ಈ ಕಾಯವೆಂಬ |
ಯೋಗ ಮಂಟಪವನ್ನು ಶೋಧಿಸಿ
ನಾಗ ಸರ್ಪದೆಡೆಯ ತುಳಿಯೆ |
ನಾಗರತ್ನ ಕಾಂತಿ ಪೊಳೆಯೆ |
ನಾಗಸ್ವರದಿ ಮನವು ಮುಳುಗೆ |
ರಾಗವಳಿದ ಯೋಗಿವರಗೆ || ಎಷ್ಟು ||1||
ಆರು ಬಾಗಿಲನ್ನು ಮುಚ್ಚಲು ದ್ವಿದಳವೇರೆ |
ಆರು ಮೂರು ಕಮ ಬಿಚ್ಚಲು |
ಮೂರು ನದಿಯ ಮಧ್ಯದಲ್ಲಿ
ಮೂರು ಕಾಲಿನ ಹಂಸೆ ಸಣ್ಣ
ದ್ವಾರ ತೆಗೆದು ಬಡಿವ ಘಂಟೆ
ಭೇರಿರವವಕೇಳ್ದ ಯತಿಗೆ ||2||
ದುರುಳ ಸಂತತಿ ದೂರಗೈಯುತ ನಮ್ಮ ಶಿವನ
ಶರಣ ಸಂತತಿಯಲ್ಲಿ ಸೇರುತ |
ಧರೆಯೊಳಧಿಕವೆನಿಸಿ ಮೆರೆವ |
ಪರಮ ಶ್ರೀ ಗುರು ರಂಗಲಿಂಗನ |
ಚರಣ ಕಮಲ ಬೆರೆತು ಜಗವ |
ಮರೆತು | ಮುಕ್ತನಾದ ಯತಿಗೆ ||3||

ಸ್ಥಿರಮುಕ್ತಿ ಸಂಪದಕೇ
ಸ್ಥಿರಮುಕ್ತಿ ಸಂಪದಕೇ |
ಶ್ರೀ ಗುರು ಕೊಟ್ಟೆರಡಕ್ಷರಗಳೇ ಸಾಕು ||ಪ||
ನಿರುತ ನಿರಕ್ಷರಕುಕ್ಷೆಂದುಪೇಕ್ಷಿಸಿ
ವರಮೋಕ್ಷಲಕ್ಷ್ಮಿ ಕೈ ಬಿಡುವಳೆ ಅವನ ||ಅ ಪ||
ನಿಶ್ಚಲನಾಗಿ ಕುಳಿತು | ಕಂಗಳು ಅರೆ
ಮುಚ್ಚಿದುನ್ನತ ಖೇಚರಿ |
ಮಿಂಚಿನೋಳ್ಮನಸಿನ ಚಂಚಲವಡಗಿಸಿ |
ಸಂಚಿತ ಕಳೆದು ನಿಶ್ಚಿಂತನಾಗುವಂಥ ||1||
ಅಕ್ಷರವೆರಡರಿತು ಆಡುವ ಹಂಸ |
ಪಕ್ಷಿಯ ಕಾಲ್ಮುರಿದು |
ಲಕ್ಷವು ಚದರದೆ ಈಕ್ಷಿಸಲಾಕ್ಷಣ |
ನಕ್ಷತ್ರ ಮಳೆ ತನ್ನ ಕುಕ್ಷಿಯೋಳ್ಸುರಿದವಂಥ ||2||
ಭೇದಭೇದಗಳಳಿದು | ತಾರಕಬ್ರಹ್ಮ |
ಬೋಧೆ ತನ್ನೊಳು ತಿಳಿದು |
ಮೋದದಿಂ ಕಳೆಬಿಂದು ನಾದದೊಳ್ಮುಳುಗುತ್ತ |
ಆದಿ ಶ್ರೀ ಗುರು ಮಹಲಿಂಗರಂಗನಾಗಿರುವಂಥ ||3||

ಎಂದು ಕಾಣದೊಂದು ಸ್ವಪ್ನಾ
ಎಂದು ಕಾಣದೊಂದು ಸ್ವಪ್ನಾ | ಕಂಡೆ ರಾತ್ರಿ ಚಿತ್ರವಾಯ್ತೆ
ಸುಂದರಾಂಗಿ | ಏನು ಹೇಳಲಿದರಂದವಾ | ಬ್ರಹ್ಮಾನಂದವಾ ||1||
ಪಾದನಾಲ್ಕೊಂದಾದ | ನವರತ್ನಮಯದ ಮಂಚ ರಚಿಸೀ
ಮೋದದಿಂದ ಹಂಸತಲ್ಪ | ಏರಿ ಒಬ್ಬಳೇ ನಿದ್ರೆಲಿದ್ದೆನೆ ||2||
ಪುತ್ರ ಮಿತ್ರ ಭಾತೃ ಕಳತ್ರಾಭಿಮಾನವ | ಕಳಚಿ ಶ್ರೀ ಗುರೂ |
ಸೂತ್ರ ಕಚ್ಚಿ ನೇತ್ರ ಬಿಚ್ಚಿ ದಿವ್ಯಚಿದ್ಬಿಂದು ರುಚಿಯಾನುಂಡೇನೇ ||3||
ಕಣ್ಣ ಕಪ್ಪಿನ ಭರಣಿಯಲ್ಲಿ | ಚಂದಮಾಮನ ಪ್ರಭೆಯೊಳೊಂದು
ಹೆಣ್ಣು ಬಾಯಿ ತೆರೆದೆನ್ನಾ ನುಂಗಲದಕೇ ಬೆರಗಾದೆನೇ ||4||
ಪಡುವಣಾದ್ರಿಯೇರಲು ಚಿದ್ಭಾನು ವಿಷಯಾ | ಚಕೋರ ರತ್ನವೂ |
ಒಡನೆ ಚೇತೋಪದ್ಮಿನಿಯು ನಕ್ಕ ಭಾವವಾ ನೋಡುತಿದ್ದೆನೆ ||5||
ಎನ್ನ ಪ್ರಾಣಕಾಂತ ಗುರು ಮಹಲಿಂಗಾ ರಂಗದೇವನಾ |
ಭಿನ್ನಪವಿಲ್ಲದಮರ್ದಪ್ಪಿ ಮುಕ್ತಿಭಾಗ್ಯವ ಸೂರೆಗೊಂಡೆನೆ ||6||

ಬಿಚ್ಚಿ ಪೇಳಿರಿದರರ್ಥ ಬಲ್ಲ ಜಾಣರು
ಬಿಚ್ಚಿ ಪೇಳಿರಿದರರ್ಥ ಬಲ್ಲ ಜಾಣರು |
ನಿತ್ಯ ಮುಕ್ತರು ಮುಚ್ಚು ಮೋರೆ ಯಾಕಿನ್ನು |
ಕಂಡ ಮಾತಿಗೆ ಉಂಡ ಸುಖಕೆ ||ಪ||
ಬಿಚ್ಚಿ ಪೇಳಿ ಕಾಯ ಪುರಿಯಲ್ಲಿ | ಮೂರು ಕೆರೆಗಳುಂಟು |
ಅದರಲ್ಲೊಂದು ವೊಯ್ಯೋ ಮಳೆಗಾಲದಲ್ಲು ತುಂಬೋದಲ್ಲಾ |
ವಣಗೋದಲ್ಲಾ ||1||
ಬರಿಗೆರೆಗಳೆರಡರ ಮಧÉ್ಯ | ಜ್ಯೋತಿರ್ಲಿಂಗವಿಹುದು |
ನಿರುತ ದೇವಗಂಗೆಯ ಭಿಷೇಕಗೈವಳೂ | ಶಿವನ ಪ್ರಿಯಳು ||2||
ಪೂಜೆ ಇಲ್ಲ ರಾತ್ರಿಯಲ್ಲು ಹಗಲಲ್ಲು | ಆತ್ಮಲಿಂಗಕ್ಕೇ |
ಪೂಜೆಗೈದರಾತ್ರೆ ಹಗಲು ವಂದೆಯಾಗೀ | ದೃಢವಾಗಿ ||3||
ಹತ್ತು ಎಂಟು ಏಳು ಆರು ಐದು ದಳದಾ | ಪುಷ್ಟ ಕೊಯ್ದು
ಹಸ್ತವಿಲ್ಲದರ್ಥಿಯಿಂದಲರ್ಚಿಸಿದನೂ | ಒಬ್ಬ ಜಾಣನು ||4||
ಹೆತ್ತಮಾತೆ ಶಿರವ ಚಂಡಾಡಿದಾನು | ರಾಮನಂತೆ |
ನಿತ್ಯ ಪೂಜ್ಯನೆನಿಸಿಕೊಂಡನಿಹದಲ್ಲೂ | ಪರದಲ್ಲೂ ||5||
ಕುರುಡ ನಿಂತು ಪೇಳೆ ಬಲು ಬೆರಗಾದಾ | ಹೆಳವಾನು |
ಧರೆಯೊಳಿದ ನೋಡಿದವಗೆ | ನಾಲಿಗಿಲ್ಲಾ | ಪೇಳೆಸಲ್ಲಾ ||6||
ಜಲಕಂಠೇಶ್ವರನಿಂದ ಸುರಿವಾ | ಮೃತವಾನುಂಡ ಪುರುಷ |
ಸಲೆ ಗುರು ಮಹಲಿಂಗ ರಂಗನಹನು ನಿಸ್ಸಂಗನಹನು ||7||

ಮಂಗಳವಾಗಿ ಇದೆ
ಮಂಗಳವಾಗಿ ಇದೆ | ಜಯ ಜಯ
ಮಂಗಳಾವಾಗಿ ಇದೆ ||ಪ||
ಕಂಗಳ ಕೊನೆಯಲ್ಲಿ ಥಳಥಳ ಹೊಳೆಯುವ |
ತಿಂಗಳ ಬೆಳಗಿನ ತಿಳಿರಸವುಕ್ಕುತ | ಮಂಗಳವಾಗಿ ಇದೆ ||ಅ ಪ||
ಆರು ಚಕ್ರವ ಮೀರಿ | ಸೂಕ್ಷ್ಮ |
ದ್ವಾರದೊಳಗೆ ಸೇರೀ |
ಏರಿ ಸಾಸಿರದಳ ಪದ್ಮ ಸಿಂಹಾಸನ |
ಭೂರಿ ಬ್ರಹ್ಮಾನಂದ ಪದವಿಯ ಸೇರಲು ||1||
ವಿರತಿಯೆಂಬುವ ಬತ್ತಿ | ಭಕ್ತಿಯು
ಎರಕವಾಗಿಹ ತೈಲ |
ಎರಡು ವೊಂದಾಗಿರಲರುವೆಂಬ ಜ್ಯೋತಿಯು |
ಉರಿಯಲು ತಾಮಸ ಕತ್ತಲೆಯಳಿದು ||2||
ರವಿಶಶಿ ತಾರೆಗಳ | ಬೆಳಗುವ |
ಪ್ರವಿಮಲ ಚಿತ್ಕಳೆಯು
ಕವಿದೊಳಗೊರಗೆಂದೆಂಬುದ ತೋರದ |
ಅವಿರಳ ಗುರು ಮಹಲಿಂಗನ ತೇಜವೇ ||3||

ಜಗದುದಯದಂತ್ಯದೊಳು ತುಂಬಿದೆ
ಜಗದುದಯದಂತ್ಯದೊಳು ತುಂಬಿದೆ |
ಅಗಣಿತನುಪಮ ಬ್ರಹ್ಮವು ||ಪ||
ಸ್ವಗತ ಭೇದವು ಪೊಗದ ನಿರ್ಗುಣ |
ನಿಗಮ ವಂದಿತ ಬ್ರಹ್ಮವು ||ಅ ಪ||
ಏಕಮೇವಾದ್ವಿತೀಯಮಚಲವು |
ನಾಕನಿಳಯ ಪ್ರಕಾಶವು |
ಶೋಕಹರ ಸರ್ವತ್ರ ಭರಿತವು |
ಲೋಕಸಾಕ್ಷಿಯದೆನ್ನಿಸಿ || ಜಗ ||
ನಿತ್ಯ ಶುದ್ಧ ಪ್ರಭುದ್ಧ | ಮುಕ್ತಂ
ಸತ್ಯಸಂವಿನ್ಮಾತ್ರಕಂ |
ಸತ್ತು ಚಿತ್ತಾನಂದ ರೂಪಂ |
ನಿತ್ಯ ಪೂರ್ಣರದೆನ್ನಿಸಿ || ಜಗ ||
ಉರುತರಾನಂದೈಕ ರಸಮಣಿ |
ನಿರುತ ಶ್ರುತಿಯ ಶಿರೋಮಣಿ |
ನೆರೆ ಅವಿದ್ಯಾಧ್ವಾಂತ ದಿನ ಮಣಿ |
ನಿರಘ ನಿಶ್ಚಲವೆನ್ನಿಸಿ || ಜಗ ||
ಅನಘನಚ್ಯುತ ಅಪ್ರಮೇಯಂ |
ಜನಿರಹಿತ ಜಗದಾಶ್ರಯಂ |
ವಿನುತಜ್ಞಾನಾಜ್ಞಾನಾ ಸಾಕ್ಷಿಯು |
ಪ್ರಣವ ಪರತರವೆನ್ನಿಸಿ || ಜಗ ||
ನೆರೆಯ ವಾಚ್ಯಮ ಸಂಗಭೆದ್ಯನು |
ನಿರುತ ಬೋಧಾ ಬಾಧ್ಯನು |
ಪರಮ ಗುರು ಮಹಲಿಂಗರಂಗನು |
ನಿರುತ ಚಿನಮಯನೆನ್ನಿಸಿ || ಜಗ ||

ಪರಮಾತ್ಮನರುಹಿನೊಳಗಿರು
ಪರಮಾತ್ಮನರುಹಿನೊಳಗಿರು ಮಾನಸೇಂದ್ರ |
ಪರಮಾತ್ಮನಹೆ ನೀನು ಯೋಗಿಕುಲ ಚಂದ್ರ ||ಪ||
ಘನ ಸುಪ್ತಿಯೊಳು ಬೆರೆಯದೆಲೆ ನಸಿಯದಿರುವ |
ಮನದ ವೃತ್ತಿಗಳೆಂಬ ಲಿಂಗತನುಲಯವಾ
ವಿನಯದಿಂದಲಿ | ಹೊಂದಿ ಹೊಂದದಲೆಯಿರುವ
ಅನುಪಮಾದ್ವಯ ಜ್ಞಪ್ತಿಯೆನಿಸಿ ಭಾಸಿಸುವ ||1||
ನಿರುತ ಪ್ರಾರಬ್ಧಗಳನುಣಲು ಬಂದಿರುವ |
ಶರೀರ ಸುಖ ದುಃಖಗಳನನುಭವಿಸುತಿರುವ |
ವರಜೀವ ಭೋಗಕ್ಕೆ ಮನೆಯೊಳಗೆ ಉರಿವ
ನೆರೆಸೊಡರಿನಂದದಲಿ ಸಾಕ್ಷಿಯಾಗಿರುವ ||2||
ವರಜಾಗ್ರ ಮೊದಲಾದ ಮೂರವಸ್ಥೆಯೊಳು |
ನಿರುತ ನೇತ್ರವು ಕಂಠ ಹೃದಯ ಸ್ಥಾನದೊಳು |
ಬೆರೆತು ಜೀವೇಶ್ವರರ ಪಾಲಿಸುತಲಿರು ನೆರೆ ಪ್ರಕೃತಿ
ಪರಮಗುರು ಮಹಲಿಂಗನೆಸಿರುವ ||3||

ಆಮಮ ಮಾಯಾ ಮಹಿಮ
ಆಮಮ ಮಾಯಾ ಮಹಿಮೆ ಅರಿಯಲರಿದೆಂದು |
ನಮಿಸಿ ಬ್ರಹ್ಮಾದಿಗಳು ವಂದಿಸಿದರಂದೂ ||ಪ||
ನಿರುಪಮದ್ವಯ ನಿತ್ಯ ಪರಿಪೂರ್ಣನಾದ |
ಪರಮಾತ್ಮದೊಳಗುದಿಸಿತವ್ಯಕ್ತಮಾದ |
ವರಶಕ್ತಿ ಮಣ್ಣಿನೊಳು ಕಲಶಗಳ ಶಕ್ತಿ |
ಭರದಿ ತೋರುವ ಚಂದದಿಂದ ಚಿಚ್ಛಕ್ತಿ ||1||
ಅದು ಸತ್ತುವಲ್ಲ ಮೇಣದು ಅಸತ್ತಲ್ಲ |
ಅದು ಭಿನ್ನವಲ್ಲ ಮತ್ತದು ಅಭಿನ್ನವಲ್ಲ ||
ಅದಕ್ಕೆ ಅವಯವವಿಲ್ಲ ನಿರವಯವು ಅಲ್ಲ |
ಅದು ಅನಿರ್ವಚನೀಯವೆಂಬುವರು ಯೆಲ್ಲ ||2||
ಜಗವೆ ಸತ್ಯವು ಬ್ರಹ್ಮ ಮಿಥ್ಯವೆಂದೆನಿಸಿ |
ತ್ರಿಗುಣಗರ್ಭಿತಮಾಗಿ ತ್ರೈಲೋಕ ರಚಿಸಿ ||
ಜಗದಿ ಸರ್ವರ ಹೊಂದಿ ಪೂಜೆಗೊಂಬುವುದು |
ನಿಗಮ ಶಿರಗಳ ಮಾತೆಯೆನಿಸಿ ರಾಜಿಪುದು ||3||
ಪಠವ ಬಿಚ್ಚಲು ವಿವಿಧ ಚಿತ್ರ ಕಾಂಬಂತೆ |
ಪಠವ ಮುಚ್ಚಲು ಚಿತ್ರ ಕಾಣದಿರುವಂತೆ |
ಕುಟಿಲದಿಂ ಜಗವ ತೋರುವುದು ತಾನೆ |
ಚಟುಲದಿಂ ಮರೆ ಮಾಡಿಕೊಳ್ಳುವುದು ತಾನೆ ||4||
ಪೂರ್ಣ ಬ್ರಹ್ಮದಿ ಮಿಥ್ಯವಾಗಿ ತೋರಿರುವ |
ಹೀನಮಾಯಾತಮವು ಮುಚ್ಚಿ ಮೂಜಗವ |
ಜ್ಞಾನಹೀನರ ಗೋಣು ಮುರಿದು ನುಂಗುವದು |
ತಾನೆ ಗುರುಮಹಲಿಂಗನೊಳಗೆಯಡಗುವುದು ||5||

ಆದಿ ಅಂತ್ಯದೊಳಿಲ್ಲದಿರುವ
ಆದಿ ಅಂತ್ಯದೊಳಿಲ್ಲದಿರುವ ಪುಸಿಮಾಯ ||
ಆದಿಯಿಂದಾವರಿಸಿತಾತ್ಮ ನಿರ್ಮಾಯ ||ಪ||
ಸದಮಲಾತ್ಮನೊಳಾಯ್ತು ಶುಕ್ತಿಯಲಿ ರಜತ |
ಮುದದಿ ತೋರುವ ಪರಿಯ ಮಾಯಾ ಸಂಜನಿತ ||
ಅದು ಅವಿದ್ಯಾವ್ಯಕ್ತವದು ತ್ರಿಗುಣಮಯವು |
ಅದು ಮೋಹವಜ್ಞಾನ ಜಡ ದುಃಖಮಯವು ||1||
ಎಂದಿಗಿಲ್ಲದ ಪ್ರಕೃತಿಯಾತ್ಮಯಾನಾವರಿಸಿ |
ಕುಂದು ಹೆಚ್ಚಿನ ಮಾಯಾವಿದ್ಯೆಯೆನಿಸಿ ||
ಒಂದು ಸಾತ್ವಿಕ ಒಂದು ರಾಜಸವದೆನಿಸಿ |
ಚಂದದಿಂದೆರಡಾಗಿ ಇಹುದು ನಿಜವೆನಿಸಿ ||2||
ಪರಮ ಸತ್ವ ಪ್ರಧಾನವೆನಿಪ ಮಾಯೆಯೊಳು |
ವರಮೇಘ ಜಲ ಕೂಡಿಕೊಂಡು ಗಗನದೊಳು ||
ಎರಕವಾಗಿರುವಂತೆ ಪ್ರತಿಫಲಿಸಿ ಇಹನು |
ಧರೆಗೆ ಸರ್ವಜ್ಞೆಂಬ ಪೆಸರೊಡೆದು ಆತ್ಮ ||3||
ಮಲಿನಸತ್ವ ಪ್ರಧಾನಗುಣ ಅವಿದ್ಯೆಯೊಳು |
ಕಲಶ ನಭಜಲದೊಳಗೆ ಅಭ್ರತಾರೆಗಳು ||
ಹೊಳೆಯುವಂದದಿ ತಾನೆ ಪ್ರತಿಫಲಿಸಿ ಇಹನು |
ನಿರುತ ಕಿಂಚಿಜ್ಞೆಂಬ ಹೆಸರೊಡೆದು ಆತ್ಮ ||4||
ಭರದಿ ವಿದ್ಯಾವಿದ್ಯವೆಂಬುಪಾಧಿಯನು ಧರಿಸಿ |
ಈಶನ ಜೀವನೆನಿಸಿ ತೋರುವನು ||
ಅರಿಯಲಿಬ್ಬರು ಮಾಯಾ ಮಕ್ಕಳೆಂಬಂತೆ |
ಪರಮ ಗುರು ಮಹಲಿಂಗರಂಗ ಸಾಕ್ಷಿಯಂತೆ ||5||

ಜೀವ ಈಶ್ವರರಿಬ್ಬರೂ
ಜೀವ ಈಶ್ವರರಿಬ್ಬರೂ | ಜನಿಸಿರುವ |
ಭಾವಭೇದವನರಿಯಲೋ ವತ್ಸ | ಜೀವ ಈಶ್ವರರಿಬ್ಬರೂ ||ಪ||
ಸತ್ವ ಗುಣ ಪ್ರತಿಬಿಂಬಿತ |
ಚೈತನ್ಯ ಮತ್ತೆ ಮಾಯಾ ಧಿಷ್ಠಿತ | ಬ್ರಹ್ಮ |
ಸತ್ವಗುಣ ಮಾಯೆ ಮೂರು | ಒಂದಾಗಿ
ಪೃಥ್ವಿಗೀಶ್ವರನೆನಿಸಿದ | ಆತ್ಮ ||1||
ನಿರುತ ಮಾಯೋಪಾಧಿಯೆನಿಪೀಶ
ಗಿರವಾಯ್ತು ಕಾರಣಾಂಗ | ಸುಪ್ತಿ |
ಸ್ಫುರಿಸುವಾನಂದಕೋಶ | ಘನವಾಗಿ |
ಸರ್ವಜ್ಞನೆಂದೆನಿಸಿದಆತ್ಮ ||2||
ಮಲಿನ ಗುಣ ಪ್ರತಿಬಿಂಬಿತ |
ಚೈತನ್ಯ ಮವಿನ ಮಾಯಾಧಿಷ್ಠಿತ | ಬೊಮ್ಮ
ಮಲಿನ ಗುಣ ಮಾಯೆ ಮೂರೂ | ಒಂದಾಗಿ
ಮಲಿನ ಜೀವನು ಎನಿಸಿದ ಆತ್ಮ ||3||
ವರಚಿದಾಭಾಸವೆನಿಪ | ಆಜೀವ |
ಗಿರವಾಯ್ತು ಕಾರಣಾಂಗ || ಸುಪ್ತಿ
ಸ್ಫುರಿಸುವನಂದಕೋಶ | ದೊಳು
ಸೇರಿ ನಿರುತ ಕಿಂಚಿಜ್ಞನಾದಾ | ಆತ್ಮ ||4||
ಕಲಶ ಜಲ ಪ್ರತಿಬಿಂಬಿತ ನಭದಂತೆ |
ಸಲೆಯು ನಿದ್ಯೋಪಾಧಿಯೆನಿಸಿ | ತಾನೆ |
ಹೊಲೆತನುವಿನಭಿಮಾನದಿಂದ |
ಬಳಲಿ ತಿಳಿವ ತಾ ಗುರುಲಿಂಗನೆಂದು ||5||

ಜೀವಿ ಕರ್ಮದ ಭೋಗ
ಜೀವಿ ಕರ್ಮದ ಭೋಗದನುಭವಕೆ ಜಗವನ್ನು |
ತಾ ವಿನೋದದಿಗೈಯ್ಯಲನುವಾದನೀಶ್ವರನೂ ||ಪ||
ಶುದ್ಧ ಸತ್ವಪ್ರಧಾನ ಮಾಯೆಯೊಳು ಬೆರೆತೀಶ
ಶುದ್ಧ ತಾಮಸವಾದ ಗುಣ ಪ್ರಧಾನವದೆನಿಪ |
ಮುದ್ದು ಮಾಯಾದೇವಿಯನು ಕಣ್ತೆರೆದು |
ಬದ್ಧದಿಂದೀಕ್ಷಿಸಿದ ಸೃಷ್ಟಿಯಂ ನೆನೆದು ||1||
ಧರಣಿಯೊಳು ವಟಬೀಜ ನಾಟಿ ನೀರೆರೆಯೆ |
ಸ್ಫುರಿಸುತಂಕುರ ಶಾಖೆ ವೃಕ್ಷವಾದಂತೆ ||
ಭರದಿಂದಲಾ ಬ್ರಹ್ಮಶಕ್ತಿಯಿಂದ ವಿಚಿತ್ರ |
ತರದಖಿಳ ಬ್ರಹ್ಮಾಂಡ ವಿಜೃಂಭಣವದಾಯ್ತು ||2||
ಅದು ಮಹದಹಂಕಾರ ತ್ರಿಗುಣ ಗರ್ಭಿತವು |
ಪದುಳ ಸತ್ವವು ರಜವು ತಾಮಸವು ಯೆನಿಸಿ ||
ಅದರಿಂದ ಶಬ್ದದಿ ಪಂಚತನ್ಮಾತ್ರೆಗಳು |
ವಿದಿತಮಾದವು ಸೂಕ್ಷ್ಮ ಭೂತಂಗಳೆನಿಸಿ ||3||
ವರಸತ್ವ ಗುಣದಿಂದ ಕರಣೇಂದ್ರಿಯಾದಿಗಳು |
ನೆರೆ ರಜೋಗುಣದಿಂದ ಪ್ರಾಣ ಕರ್ಮೇಂದ್ರಿಯಗ ||
ಳುರುತಮೋಗುಣದಿಂದಲೊಂದೊಂದು ಕ್ರಮವಾಗಿ |
ಭರಿತ ನಭ ಮೊದಲಾದ ಭೂತಮೈದೊಗದವು ||4||
ಇದರೊಳಗೆ ಸ್ಥೂಳ ಕಿರಿ ಕಾರಣವು ಯೆನುತ |
ವಿದಿತವಾದವು ತನುತ್ರಯಂಗಳು ತಿಳಿಯ ||
ಲವರೊಳಗೆ ಜೀವಿ ಪರಮಾತ್ಮರಗಲದಲೇ |
ಪದುಳದಿಂದಿಹರದಕ್ಕೆ ಸಾಕ್ಷಿ ಗುರು ಮಹಲಿಂಗನು ||5||

ಕೇಳು ವತ್ಸನೆ
ಕೇಳು ವತ್ಸನ ಜೀವಗಾದ ಜನ್ಮ ಸ್ಥಿತಿಯ |
ಪೇಳುವೆನು ಸೂಕ್ಷ್ಮದಿಂ ಶ್ರುತ್ಯಾನುಭವದಿಂದಾ || ಕೇಳು ||ಪ||
ತಾನೆ ತನ್ನನು ಮರೆತು ಕಲ್ಪಕೋಟಿಗಳಿಂದ
ಹೀನ ತನುವಭಿಮಾನದಿಂ ಸಗ್ಗನಕರದಿ ಕು |
ಯೋನಿಯೆಂಬ ಕುಲಾಲಿಚಕ್ರದಲ್ಲಿ ಶಿಲ್ಕಿ | ಮುಂ
ಗಾಣದೆ ಭವಾರಣ್ಯ ಚರಿಸುತಿರೆ ಸುಕೃತದಿಂದ ||1||
ವರವೃಷ್ಟಿಯಿಂದುಲಿದು ಜೀವ ನವಧಾನ್ಯದೊಳು |
ಬೆರೆತುಂಬುವನ್ನರಸದೊಳಣುವಾಗಿ | ನಿತ್ಯ
ಸುರಿವ ಮಾಯಾ ಬಿಂದು ಧಾರೆಯೊಳು ಕಳೆದುಳಿದು
ವರಜನಕನುದರದಲಿ ಮೂದಿಂಗಳಿರುವಂ ||2||
ಜನನಿ ಜನಕರ ಮೋಹ ಜನಿತ ಕಾಮಾಗ್ನಿಯೊಳು |
ಕ್ಷಣಿಕ ಸಂಯೋಗದಲಿ ಬೆಣ್ಣೆ ಬೆಂಕಿಯ ಶಖೆಗೆ |
ಜಿನಿಗಿಳಿವ ಭಂಗಿಯಲಿ ಶುಕ್ಲರೂಪಿಂದಿಳಿದು |
ಜನನಿರುತ ಕಮಲ ವರಳಿರಲ್ಕದರೊಳಗೆ ನಿಲ್ವಂ ||3||
ವಿನುತ ಶೋಣಿತ ಶುಕ್ಲ ಬೆರೆತು ಬೊಬ್ಬುಳಿಯಾಗಿ |
ಘನಶುಕ್ತಿಯೊಳು ಸ್ವಾತಿ ಬಿಂದು ಮುತ್ತಾದಂತೆ |
ತನುನಯನಕರಚರಣ ಮುಂತಾದ ಸರ್ವಾಂಗ |
ತನಗೆ ತಾನಾಗ್ವುದೇಳು | ಮಾಸಕ್ಕೆ ಜಠರದೊಳು ||4||
ವನಜ ವಿಕಸಿತಮಾಗೆ | ಗಂಧವುದಿಸುವ ಪಾಂಗು |
ತನಪೂರ್ವ ಸುಜ್ಞಾನಮುದಿಸಿ ಚೇತಿಸುತ |
ಜನನಿಯುಂಡನ್ನ ರಸವ ನಾಭಿ ಮುಖದೊಳುಣುತ್ತ |
ಜನನಿ ಜಠರವದೆಂಬ ನರಕದೊಳಗಿರುವಂ ||5||
ಉರುಜರಾಯುಜವೆಂಬ ಚೀಲದಿಂ ಬಿಗಿವಡೆದು |
ಅರಿತು ಪೂರ್ವಾಪರದ ಜ್ಞಾನಾನುಭವವನ್ನು |
ಕೊರಗುತೀಭವ ಬಾಧೆ ನೆನೆಯುತ್ತ ಮನದೊಳಗೆ |
ಹೊರಗೆ ಬರಲೆಡೆಗಾಣದಲೆ ದುಃಖಿಸುತಿರುವಂ ||6||
ತನ್ನ ಮರತಜ್ಞಾನದಿಂದ ಬಂದೆನು ಭವಕೆ |
ಇನ್ನು ಜನನಿಯ ಜಠರದಿಂ ತಾ ಪೊರಮಟ್ಟು |
ಉನ್ನತಾತ್ಮಜ್ಞಾನದಿಂ ಮುಕ್ತನಾಗುವೆನು |
ಎನ್ನುತಲಿ ಶಿವಧ್ಯಾನ ನಿಷ್ಠನಾಗಿರುವಂ ||7||
ನವಮಾಸದೊಳ್ ಯೋನಿಮುಖದಿ ಜನಿಸಿದಾ ಕ್ಷಣದಿ |
ಕವಿದು ಮೋಹವು ಪೂರ್ವಜ್ಞಾನವಂ ಮರೆತು |
ವಿವಿಧ ಬಾಲಕ್ರೀಡೆ ತೋರುತ ಯೌವನದಿ |
ತವೆ ಗರ್ವದಿಂ ಪಾಪಗೈಯ್ಯುತ್ತ ನರಕಕಿಳಿಯುವನು ||8||
ಇರುತಿರುತಲೀ ಪರಿಯಲಂತ್ಯ ಜನ್ಮಕ್ಕೆ |
ವಿರತಿಯು ಪರತಿ ಜ್ಞಾನ ಜನಿಸಿ ತನ್ನೊಳಗೆ |
ಶರಧಿ ಜಲದೊಳು ಜಲವು ಬೆರೆತ ಪರಿಯಾಜೀವ
ಪರಮ ಗುರು ಮಹಲಿಂಗರಂಗನೊಳ್ಬೆರೆವಂ ||9||

ಪಂಚಕೋಶಗಳಿಂದ ಕೂಡಿರುವದೀ ಕಾಯ
ಪಂಚಕೋಶಗಳಿಂದ ಕೂಡಿರುವದೀ ಕಾಯ |
ಪಂಚಕೋಶಗಳಂಟದಿಹನು ನಿರ್ಮಾಯ ||ಪ||
ಕ್ಷೋಣಿಯೊಳು ನಿಜ ಜನಕ ಜನನಿಯರ ಶುಕ್ಲ |
ಶೋಣಿತದಿ ಜನಿಸಿರುವ ತನುವನ್ನ ಮಯಕೋಶ |
ಪ್ರಾಣ ಕರ್ಮೇಂದ್ರಿಯಗಳ್ಹತ್ತು ಒಂದಾಗಿರುತ |
ಪ್ರಾಣಮಯ ಕೋಶವೆಂದೆನಿಸಿಕೊಂಬುವದು ||1||
ಮನವು ಜ್ಞಾನೇಂದ್ರಿಯಗಳೈದು ಒಂದಾಗಿರಲು |
ಘನ ಮನೋಮಯ ಕೋಶವೆಂದೆನಿಸಿಕೊಂಬುವದು |
ವಿನುತ ಬುದ್ಧಿಯು ಪಂಚ ವಿಷಯಂಗಳೊಂದಾಗಿ |
ಜನಜನಿತ ವಿಜ್ಞಾನಮಯ ಕೋಶವೆನ್ನಿಸುವುದು ||2||
ನಿರತ ಪ್ರಿಯ ಮೋದವು ಪ್ರಮೋದ ವೃತ್ತಿಗಳು |
ಬೆರೆತ ಅಜ್ಞಾನಾನಂದಮಯಕೋಶವೆನಿಸಿ |
ವರಕೋಶವೈದಕ್ಕೆ ವೈಲಕ್ಷಣನುಯೆನಿಸಿ |
ಪರಮಗುರು ಮಹಲಿಂಗರಾಜಿಸುತಲಿಪ್ಪಂ ||3||

ಮೂರು ವಿಧದಿ ಶಿಷ್ಯರಿಂಗೆ
ಮೂರು ವಿಧದಿ ಶಿಷ್ಯರಿಂಗೆ |
ಚಾರುಬ್ರಹ್ಮ ಬೋಧಗೈವ |
ಧೀರಾಗುರುವರನಮಳ ಮಹಿಮೆ | ಬಹಳ ಚೋದ್ಯ ||ಪ||
ಗುರುವಿನಾಜ್ಞೆಯನ್ನು ಮೀರದಿರುವ ಶಿಷ್ಯನನ್ನು ಒಮ್ಮೆ |
ಕರುಣದಿಂದ ನೋಡೆ ಶರಧಿಯೊಳಗಣಂಡವೂ
ಹರಿವ ಮತ್ಸ್ಯವ ಕಂಡ ಕ್ಷಣದೊಳಿರದೆ | ಮತ್ಸ್ಯಗಳಾಗ್ವ ಪಾಂಗು |
ಗುರುವೆ ಆಗಿ ಚರಿಸುತಿಪ್ಪ ಸ್ವಪ್ರಕಾಶದಿ ||1||
ದಿನವು ಸೇವೆಗೈಯುತರಲು | ಮನದಿ ನೆನೆಯೇ ಶಿಷ್ಯನನ್ನು
ಘನದಿ ಜಲದೊಳಿರಲು ಕಮಠಾ | ಒಂದು ದಿವಸದ |
ನೆನೆದಕ್ಷಣದೊಳಂಡಗಳೊಡೆದು | ವಿನುತ ಕಮಠವಾಗುವಂತೆ |
ಅನುಪಮದ್ವಯ ಗುರುವೇ ಆಗಿ ಚರಿಸುತಿಪ್ಪನು ||2||
ಗುರುವು ಮುಟ್ಟಲಾಗಿ ಶಿಷ್ಯ ಪರಮಗುರುವೇ ಆಗುತಿಹನು |
ಸ್ಪರುಶದಿಂದ ಅಂಡಗಳೊಡೆದು ಪಕ್ಷಿಯಾದಂತೆ |
ಧರೆಯೊಳಿಂತು ದೃಷ್ಟಿ ಧ್ಯಾನ | ಸ್ಪರ್ಶವೆಂಬ ಮೂರು ವಿಧದಿ |
ಕರುಣಿಸುವನು ಒಬ್ಬ ಶ್ರೀಗುರುರಂಗನೆನ್ನಿಸಿ ||3||

ಸಾಧನ ಚತುಷ್ಟಯಂಗಳುಳ್ಳ
ಸಾಧನ ಚತುಷ್ಟಯಂಗಳುಳ್ಳ ಸಂಪನ್ನಾ |
ಸಾಧಿಸಲು ಮೋಕ್ಷವನು ಅಧಿಕಾರಿ ಮುನ್ನಾ ||ಅ||
ಇದು ಅನೃತ ಜಡ ದುಃಖಮಯ ದೇಹವೆನುತ |
ಸದಮಲಾದ್ವಯ ಬೊಮ್ಮವಿದರೊಳಿಹನೆನುತ |
ವಿದಿತ ಶಾಸ್ತ್ರವಿವೇಕದಿಂದ ಮನನೀಯ |
ಕದಲದಲೆ ನಿಲೆ ಮನದಿ ಪ್ರಥಮ ಸಾಧನೆಯು ||1||
ಧರೆಯ ಭೋಗವೆ ರೋಗವಿದಕಧಿಕ ಮುಂದೆ |
ಸುರಲೋಕ ಸುರಭೋಗ | ಬಲು ರೋಗವೆಂದೇ |
ತೊರೆದೆರಡು ಭೋಗ ಸುಖ ಮಲ ಮೂತ್ರಪಾಯ |
ಮರಳಿ ನೆನೆಯದ ವಿರತಿ ದ್ವಿತೀಯ ಸಾಧನೆಯೂ ||2||
ವರ ಶಮೆಯುದಮೆ ಶಾಂತಿ ದ್ವಂದ್ವದ ತಿತಿಕ್ಷಿ|
ಉರುತರ ಸಮಾಧಾನ ಶ್ರದ್ಧೆಯೊಳು ಲಕ್ಷ್ಯ |
ಇರೆ ಶಮಾದಿಯಷಟ್ಕವೆಂಬ ವಾಸನೆಯು |
ವರ ಮುಮುಕ್ಷುಗಳಿಗೆ ತೃತೀಯ ಸಾಧನೆಯು ||3||
ಉರಿಯ ಮನೆಯಿಂ ಪೊರಟು ಪ್ರಾಣ ರಕ್ಷಣೆಗೆ |
ಹೊರಬೀಳ್ವನಂತಖಿಳ ಸಂಸಾರ ಬೇಗೆ |
ಭರಿಸಲಾರದೇ ಪಿಡಿದು ಗುರುವರನ ಅಡಿಕಮಲ |
ವರಮುಕ್ತಿ ಬಯಸಲದು ಚತುರ್ಥ ಸಾಧನೆಯು ||4||
ಅರಿಯಲೀಪರಿ ನಾಲ್ಕು ಸಾಧನೆಯ ಮಹಲಿಂಗ |
ಗುರು ಹೊಂದಲಿಕೆ ಮೊದಲು ತರುವಾಯಲಾದರು |
ಸ್ಥಿರವಾಗಿ ನೆಲೆಗೊಳೆ ಮುಮುಕ್ಷುವಾದವಗೆ |
ಪರಮೋಕ್ಷ ಸಾಮ್ರಾಜ್ಯ ಪದವಿ ಲಭಿಸುವದು ||5||

ಬಂಧ ಮೋಕ್ಷದ ವಿವರ
ಬಂಧ ಮೋಕ್ಷದ ವಿವರ ಮೊದಲರಿಯೊ ಕಂದ |
ಬಂಧ ಮೋಕ್ಷಕೆ ಮನವೆ ಮೂಲವದರಿಂದ ||ಪ||
ಜನನ ಮರಣ ದಿಟವೆಂಬ ಮರೆವೆಯೇ ಭವಬಂಧ |
ಜನನ ಮರಣ ಸಟೆಯೆಂಬ ಅರಿವೆ ವರಮೋಕ್ಷ |
ಘನವಿರತಿ ಬಿಡೆನೆಂಬ ಸಂಕಲ್ಪವೇ ಬಂಧ |
ಘನವಿರತಿಯು ಪರತಿಯ ನಿಜದರುವೆ ಮೋಕ್ಷ ||1||
ಮಾನ ಅಭಿಮಾನದಲಿ ಕೊರಗುವದೆ ಭವಬಂಧ |
ಮಾನ ಅಭಿಮಾನದ ನಿಲುಗಡೆಯೆ ಮೋಕ್ಷ |
ಜ್ಞಾನ ಅಭ್ಯಾಸವನು ಗೈವನೆಂಬುದೆ ಬಂಧ |
ಜ್ಞಾನ ಅಜ್ಞಾನಕ್ಕೆ ಸಾಕ್ಷಿಯಿರೆ ಮೋಕ್ಷ ||2||
ಕರ್ಮ ಧರ್ಮಗಳೆರಡು ಬಿಗಿದ ಯಮಬಂಧ |
ಕರ್ಮ ಧರ್ಮವ ಗುರುವಿನಿಂ ತಿಳಿಯೆ ಮೋಕ್ಷ |
ಕರ್ಮ ಜ್ಞಾನೇಂದರಿಯವ ಗೆಲುವೆನೆಂಬುದೆ ಬಂಧ |
ಕರ್ಮ ಜ್ಞಾನೇಂದ್ರಿಯಕ್ಕೆ ಸಾಕ್ಷಿಯೇ ಮೋಕ್ಷ ||3||
ಆಶ್ರಮಂಗಳ ವರ್ಣ ಧರ್ಮಂಗಳ ವಿಧಿ ಬಂಧ |
ಆಶ್ರಮಂಗಳು ವರ್ಣ ಧರ್ಮಸಾಕ್ಷಿಯೆ ಮೋಕ್ಷ |
ವಾಸನತ್ರಯದಾಸೆ ಬಿಡದಿಹುದೆ ಬಂಧ |
ವಾಸನತ್ರಯ ನಾಶವಾಗಲದು ಮೋಕ್ಷ ||4||
ಸರ್ವ ಸಂಕಲ್ಪಗಳ ಪಿಡಿದಿಹುದೆ ಬಂಧ |
ಸರ್ವ ಸಂಕಲ್ಪಳಿಯೆ ಕರತಲದಿ ಮೋಕ್ಷ |
ಶರ್ವ ಬೇರಿಹನೆಂಬುವ ಜ್ಞಾನವೇ ಬಂಧ |
ಶರ್ವ ಗುರು ಮಹಲಿಂಗನೊಳು ಬೆರಿಯೆ ಮೋಕ್ಷ ||5||

ತನ್ನೊಳರಿಯಲುಬೇಕು ಆತ್ಮನ
ತನ್ನೊಳರಿಯಲುಬೇಕು ಆತ್ಮನ |
ಮುನ್ನ ಸಮ್ಯಜ್ಞಾನದಿಂ ||ಪ||
ತನ್ನೊಳರಿಯದೆ ಇರಲು ಲೋಕದ |
ಭಿನ್ನವಾದನೆಯಡಗದು ||ಅ ಪ||
ವೇದ ವೇದ್ಯನು ಜ್ಞಾನಸಾಧ್ಯನು
ವೇದಪುರುಷಾವ್ಯಕ್ತನು |
ಭೇದಭಾವನ ಷಣ್ಮತಂಗಳ |
ವಾದ ತರ್ಕಕಸಾಧ್ಯನು ||1||
ವೇದ ಜನಕನು ಕ್ರೋಧರಹಿತನು |
ಆದಿಮಂಗಳ ಮೂರ್ತಿಯು |
ಪಾದನಾಲ್ಕರ ಪ್ರಣವ ಪರತರ |
ವಾದನಿರ್ಗುಣ ಬ್ರಹ್ಮನು ||2||
ನೆನೆಯದೊಣಗದ ಮಳೆಗೆ ಬಿಸಿಲಿಗೆ
ಮೊನೆಕಠಾರಿಗೆ ಸೀಳದ |
ಜನಿಸದಳಿಯದ ಸುಡದ ಸುಳಿಯದ |
ಘನಚಿದಂಬರನಾತ್ಮನಂ ||3||
ದುಃಖವಂಟದ ನಿಜ ಸುಖಡಗದ |
ಉಕ್ಕಿದಾನೆಂದೆನಿಸುವಾ
ಠಕ್ಕು ಮಾಯಾ ಕುಟಿಲ ಜಗವನು |
ಮಿಕ್ಕು ರಾಜಿಸುವಾತ್ಮನಂ ||4||
ಪರೆಯು ಪಶ್ಯಂತಾದಿವಾಕ್ಕಿಗೆ |
ಅರಿವ ಮನಸಿನ ಊಹೆಗೆ |
ಪರೆತೆನಿಸಿ ಪರಿಪೂರ್ಣವಾಗಿಹ |
ಪರಮ ಗುರು ಹಲಿಂಗನಂ ||5||

ಯಾಕೆ ತಿಳಿಯದೋದೆ
ಯಾಕೆ ತಿಳಿಯದೋದೇ | ಮನುಜಾ ನೀ
ಯಾಕೆ ತಿಳಿಯದೋದೇ ||ಪ||
ಯಾಕೆ ತಿಳಿಯೆ ನೀನಾತ್ಮ ಜ್ಞಾನವ |
ಮೂಕನ ಪರಿಯಲಿ ಮೂಲೆಯ ಹಿಡಿದು ||ಅ.ಪ||
ಗಾಣವ ತಿರುಗುತಲೀ ಬಳಲುವ |
ಕೋಣನ ಪರಿಯಲ್ಲಿ |
ಕ್ಷೋಣಿಯ ತಿರುಗುತ ಬಳಲಿದೆಯಲ್ಲದೆ |
ಕ್ಷೋಣಿಯ ಬೆಳಗುವ ಆತ್ಮನ ನಿನ್ನೊಳು ||1||
ಕರತಲರತ್ನವನು | ಅರಿಯದೆ
ನೆರೆಮನೆ ಮಕ್ಕಳನು |
ಶರಗೊಡ್ಡಿ ಬೇಡುವನಂದದಿ ದೇಹದಿ |
ಪರಮನು ಇರುತಿಹ ನೆಲೆಯನು ನಿನ್ನೊಳು ||2||
ಜಲದೊಳು ಮುತ್ತಾದ ಬಳಿಕದು |
ಜಲದೊಳು ಬೆರೆಯುವುದೇ |
ತಿಳಿಯಲಿ ಕಾಪರಿತತ್ವದಿ ಬೆರೆತವ |
ಇಳೆಯೊಳು ಪುಟ್ಟನು ಯೆಂಬುವ ನಿನ್ನೊಳು ||3||
ಕುಲಚಲದಭಿಮಾನ ಕೂಪದಿ |
ಮುಳುಗಿತು ನಿನ್ನ ಜ್ಞಾನ
ಛಳಿಮಳೆ ಬಿಸಿಲಿಗೆ | ಅಳುಕದೆ ಹೊಳೆಯೊಳು |
ಮುಳುಗುವೆಯಲ್ಲದೆ ಆತ್ಮನ ನಿನ್ನೊಳು ||4||
ಕರ್ಮಕೋಟಿಯನು ಬಿಡಿಸಿ |
ಜ್ಞಾನದ ಮರ್ಮವ ನೆರೆ ತಿಳಿಸಿ |
ಕರ್ಮದ ಧರ್ಮದ ಭೀತಿಯ ಬಿಡಿಸುವ |
ನಿರ್ಮಲ ಗುರು ಮಹಲಿಂಗನ ನಿನ್ನೊಳು ||5||

ತನ್ನೊಳಿರುವಾತ್ಮನನು ತಾಕಾಣದವನು
ತನ್ನೊಳಿರುವಾತ್ಮನನು ತಾ ಕಾಣದವನು |
ಕಣ್ಣಿದ್ದು ಕಾಣದಿಹ ಕುರುಡನೆನಿಸುವನು ||ಪ||
ಶರೀರದೊಳು ಪ್ರಾಣಗಳು ಇಂದ್ರಿಯಂಗಳು ವಿಷಯ |
ಮರೆವ ರೂಪಿನ ಮನವು ಅರಿವಿನಾಮತಿಯು |
ವರಚಿತ್ತಹಂಕಾರ ಕರಣದ ವಿಕಾರ |
ಇರುವ ದೇಹದೊಳಾತ್ಮ ತಾ ನಿರ್ವಿಕಾರ ||1||
ಕರಣ ಇಂದ್ರಿಯಗಳಿಗೆ ಪ್ರೇರಕನು ಯೆನಿಸಿ |
ಅರಿವನೆಲ್ಲವ ತಾನೆ | ಸಾಕ್ಷಿಯೆಂದೆನಿಸಿ |
ವರ ಮುಕುರದೊಳು ಮುಖವು ಎಸೆದು ತೋರ್ಪಂತೆ |
ಪರಮ ಸಾತ್ವಿಕ ಬುದ್ದಿಯಲ್ಲಿ ಪರಮಾತ್ಮ ||2||
ಅದು ನೀನೆ ಅಹುದಂದು ತತ್ವಮಸಿ ವಾಕ್ಯ ವಿಧಿಸಿಹುದು
ಅದು ಬ್ರಹ್ಮವದು ಅಪ್ರತಕ್ರ್ಯ
ಅದು ಜ್ಞಾನವದು ಜ್ಞೇಯವದುವೆ ಅವಿನಾಶಿ |
ಅದಕನ್ಯವಿಲ್ಲೆನಲು ವೇದಗಳ ರಾಸಿ ||3||
ವರ ಜಾಗರವು ಸ್ವಪ್ನ ಸುಷುಪ್ತಿಯೊಳು ಕ್ರಮದಿ |
ನರವಿಶ್ವ ತೈಜಸನು ಪ್ರಾಜ್ಞನಾಮಕದಿ |
ಉರು ವಿಷಯವನುಭವಿಪ ಮೂರು ಜೀವರನು |
ಪೆರತಾಗಿ ರಾಜಿಸುವ ತುರ್ಯವೆನಿಸುವನು ||4||
ಭೂತಭೌತಿಕ ವರ್ತಮಾನ ಕಾಲದೊಳು |
ಖ್ಯಾತ ಪ್ರಾಗ್ಭಾವಾದಿ ಘಟವಿಭೇದಗಳು |
ಆತ್ಮದೊಳು ಪೊಗದಿರಲು ಅವ್ಯಕ್ತನಾಗಿ |
ಸಾತಿಶಯ ಮಹಲಿಂಗರಂಗ ಗುರುವೆ ತಾನಾಗಿ ||5||

ಇಲ್ಲೇ ಕೈವಲ್ಯ ಕಾಣಿರೋ
ಇಲ್ಲೇ ಕೈವಲ್ಯಕಾಣಿರೋ | ಮತ್ತಿನ್ನೆಲ್ಲಿ
ಹುಡುಕಿ ನೋಡಿದೊಡಿಲ್ಲ ಕೈವಲ್ಯ | ||ಪ||
ದೇಹವು ದೇವಾಲಯವದರೊಳು ಸೂಕ್ಷ್ಮ |
ದೇಹದೊಳಿಹ ಜೀವ ಶಿವನೆಂದು ಭಾವಿಸಿ |
ಮೋಹರಾಗವು ಯೆಂಬ ನಿರ್ಮಾಲ್ಯ ತ್ಯಜಿಸಿ |
ಸೋಹಮೆನ್ನುತ ಪೂಜೆಗೈವ ಸುಜ್ಞಾನಿಗೆ ||1||
ವರಛಿದ್ರಘಟದಿ ರಾಜಿಸುತಿಪ್ಪ ಜ್ಯೋತಿಯು |
ಉರಿಯಂತತನು ನೇತ್ರ ಮೊದಲಾದ ಇಂದ್ರಿಯ |
ಕರಣಾದಿಗಳಿಗೆ ಸಾಕ್ಷಿಕನಾಗಿ ಸರ್ವತ್ರ |
ಪರಿಪೂರ್ಣ ಭಾವದಿ ಸುಖಿಪಾತ್ಮ ನಿಷ್ಟಂಗೆ ||2||
ಸುಪ್ತಿ ಜಾಗರದೊಳು ತೋರುತಲಿರ್ಪ |
ಚಿತ್ತಹಂಕಾರದಿ ಗುಣಕೆ ಬೇರಿಪ್ಪ |
ಜ್ಞಪ್ತಿ ಸಂವಿನ್ಮಾತ್ರತುರ್ಯಲಕ್ಷ್ಯದಿನಿತ್ಯ |
ತೃಪ್ತ ನಿರಂಜನನಾದ ಚಿನ್ಮಾತ್ರಂಗೆ ||3||
ಉರು ಪುಣ್ಯಪಾಪದ ತೊಡಕಿಲ್ಲವಾಗಿ |
ತೆರೆಮಿತ್ರ ಶತ್ರುಭಾವನ ತೋರದಾಗಿ |
ವರಬಂಧ ಮೋಕ್ಷದ ಕಲ್ಪನೆಯುಡುಗೆ |
ಪರತತರ್ವದೊಳು ಬೆರತಿಹ ಶಿವಜ್ಞಾನಿಗೆ ||4||
ಬಹು ನಾಮರೂಪಿನ ಜಗ ಭ್ರಾಂತಿಯುಡುಗೆ |
ಸಹಜ ಬ್ರಹ್ಮಾನಂದ ಶರಧಿಯೊಳ್ಮುಳುಗಿ |
ಮಹಲಿಂಗರಂಗ ಸದ್ಗುರುವೆ ತಾನಾಗಿ |
ಇಹಪರ ಸಾಕ್ಷಿಯಾದ ಪರೋಕ್ಷ ಜ್ಞಾನಿಗೆ ||5||

ನೋಡು ನೋಡಲೆ ಮಾನಸೇಂದ್ರನೆ
ನೋಡು ನೋಡಲೆ ಮಾನಸೇಂದ್ರನೆ |
ನೋಡು ಮುನಿಕುಲಚಂದ್ರನೆ |
ನಾಡು ನಾಡುಗಳರಸಿ ಬಳಲದೆ |
ನೋಡು ನಿನ್ನೊಳು ಬ್ರಹ್ಮವಾ || ನೋಡು ||ಪ||
ನಿರುಪಮದ್ವಯನಿರಘ ನಿಷ್ಕ್ರಿಯ |
ಭರಿತಸರ್ವಜಗಾಶ್ರಯ |
ನಿರುತ ನಿಷ್ಕಳ ನಿತ್ಯ ನಿಜಪದ
ಪರಮ ನಿರ್ಗುಣ | ಬ್ರಹ್ಮವಾ | ನೋಡು ||1||
ಶಶಿಯು ರವಿ ಹವಿ ಮಿಂಚುಗ್ರಹಗಳು |
ಎಸೆವ ತಾರಾಗಣಗಳ |
ಬಸುರಿನೊಳ ಹೊರಗೆಸೆದು ಬೆಳಗುವ |
ಅಸಮ ಜ್ಯೋತಿ ಪ್ರಕಾಶವ ||2||
ತ್ರಿಗುಣವಲ್ಲದ ತ್ರಿಮಲಮಲ್ಲದ |
ಸ್ವಗತ ಭೇದಗಳೊಗೆಯದ |
ಅಗಣಿತನುಪಮ ಅಪ್ರತರ್ಕ್ಯದ |
ನಿಗಮವಂದಿತ ಬ್ರಹ್ಮವ ||3||
ಕರಣ ಇಂದ್ರಿಯಗಳಿಗೆ ಪ್ರಭುವು |
ಕರಣ ದೋಷಗಳಿಲ್ಲವು |
ಅರಿವು ಮರವೆಯ ಮೇಲಣರಿವು |
ಪರಮ ಸಚ್ಚಿದ್ರೂಪವು ||3||
ಜನನ ಮರಣದ ಜಡರು ಸೋಂಕದ |
ಪ್ರಣವ ಪರತರವೆನಿಸಿದ |
ಅನಘ ಗುರು ಮಹಲಿಂಗರಂಗನು |
ಎನಿಸಿ ರಾಜಿಪ ಬ್ರಹ್ಮವಾ ||4||

ನಿನ್ನಲ್ಲೇ ನೋಡು ಪರಬ್ರಹ್ಮನ
ನಿನ್ನಲ್ಲೇ ನೋಡೋ ಪರಬ್ರಹ್ಮವ
ನಿನ್ನಲ್ಲೆ ನೋಡೋ ||ಪ||
ನಿನ್ನನುಭವ ಜ್ಞಾನದೃಷ್ಟಿಯಿಂದಲಿ ನೋಡು
ನಿನ್ನಲ್ಲೇ ಸಾವಧಾನದಿ ತೋರುತಿಹುದು || ನಿನ್ನಲ್ಲೆ ||ಅ ಪ||
ಚಿನ್ನಾವ ಬಿಟ್ಟು ಆಭರಣಗಳ್| ಮುನ್ನಿಲ್ಲವಾಗಿ
ಮಣ್ಣು ಬಿಟ್ಟರೆ ಮಡಿಕೆಯು ಇಲ್ಲವೆಂಬಂತೆ |
ತನ್ನ ಬಿಟ್ಟರೆ ದೇವರಿಲ್ಲವೆಂಬನುಭೂತಿ ||1||
ಕೆನೆವಾಲಿನಲ್ಲಿ ನವನೀತವು | ಜನಿಸಲಿಕ್ಕದನು |
ಅನುವಾಗಿ ಕಾಸಿದ ತುಪ್ಪದಿ ಮುಖವಾ |
ಕ್ಷಣದಿ ಕಾಣುವ ಪರಶಿವ ತತ್ವ ಕಾಂಬುದು ||2||
ತನುವಿಂದ್ರಿಯಗಳ | ತಾಮಸ ರಜೋ ಗುಣಗಳಿಗಧಿಕ
ವೆನಿಪ ಸಾತ್ವಿಕ | ಮನಕರುಹಿಟ್ಟು ನೋಡಲಾ |
ಮನೆಗೊನೆಯೊಳು | ತುಂಬಿ ತುಳುಕಾಡುತ್ತಿಹುದು ||3||
ಹುಟ್ಟು ಸಾವಿಲ್ಲ | ಮಾಯಾಂಗನೆ ಕಾಟದಕಿಲ್ಲ |
ಎಂಟು ದಿಕ್ಕಿನೊಳಂಟಿ ಅಂಟಾದೆ ತುಂಬಿಹು
ದಂಟು ಮುಟ್ಟಿಗೆ ಸಿಕ್ಕದಲೆ ದೃಕ್ಕಾಗಿಹುದು ||4||
ಕನ್ನಡಿಯಲ್ಲಿ | ಪ್ರತಿಬಿಂಬಿಸಿ | ತನ್ನ ಕಾಂಬಂತೆ
ಉನ್ನತ ಸಾತ್ವಿಕ| ಬುದ್ಧಿಯೊಳ್ಬೆಳಗುವ
ಚನ್ನ | ಶ್ರೀ ಗುರು ಮಹಲಿಂಗ ಸದ್ರೂಪನ ||5||

ಜ್ಞಾನಿಯ ಜ್ಞಾನಿಗಳಾ ಭಾವಲಕ್ಷಣ
ಜ್ಞಾನಿಯ ಜ್ಞಾನಿಗಳಾ ಭಾವಲಕ್ಷಣಂ |
ಸಾನುರಾಗದಿ ನೋಡಿ ಅರಿಯವನಭಿಜ್ಞಂ ||ಪ||
ಹಾಲು ನೀರೊಂದಾಗಿ ಬೆರೆಯೇ ಲೋಕದಲ್ಲಿ |
ಹಾಲು ನೀರಿನ ಭೇದ ತಿಳಿಯದಂದದಲಿ |
ಖೂಳ ದೇಹದೊಳಾತ್ಮ ಬೆರೆತು ಕೊಂಡಿಹನು |
ಜಾಳು ಕರ್ಮಿಯ ಕಣ್ಗೆ ಕಾಣದಡಗಿಹನು ||1||
ಪರಮಾತ್ಮನ ಕಳೆಯನರಿಯದಲೆ ಸತತ |
ತೋರ್ಪ ಜಡತನುವಾತನು | ಎಂದು ಅರಿವಾತ
ಕ್ಷೀರ ನೀರಿನ ಗುಣ ಅರಿಯದಲೆ ಕುಡಿವ |
ಚಾರುಬಕದಂತೆಯ ಜ್ಞಾನಿಯೆನ್ನಿಸುವ ||2||
ಲೀಲೆಯಿಂತನು ಗುಣಗಳನ್ನು ಕಳೆದಿಡುತ |
ಲೋಲ ಆತ್ಮನ ಲಕ್ಷಣವನು ಅರಿವಾತ |
ಹಾಲು ಮಾತ್ರವ ಕುಡಿವ ನೀರನ್ನು ಬಿಡುವ
ಮೇಲ ಹಂಸದ ಪರಿಯ ಜ್ಞಾನಿಯೆನ್ನಿಸುವ ||3||
ದೊರೆಯು ಅಂತಃಪುರದೊಳಿರಲು ದುರ್ಮತಿಯು
ಕರಣಿಕನ ದೊರೆಯೆಂದು ವಂದಿಸುವ ಪರಿಯ |
ವರಹೃದಯ ಭರತಾತ್ಮನರಿಯದಲೆ ಪೊಳೆವ |
ಶರೀರಾತ್ಮಭಾವಿಯ ಜ್ಞಾನಿಯೆನ್ನಿಸುವ ||4||
ದೇಹವೆಲ್ಲವನಾದಿ ಸಿದ್ಧವಾಗಿರುವ |
ಸೋಹಮೆಂಬುವ ಬೋಧೆಯೊಳಗೆ ಮುಳುಗಿರುವ |
ದೇಹಿ ಗುರು ಮಹಲಿಂಗರಂಗನಾಗಿರುವ |
ಮೋಹರಹಿತನೆ ಜಗದಿ ಜ್ಞಾನಿಯೆನ್ನಿಸುವ ||5||

ಬ್ರಹ್ಮವತಂದು ತೋರಲು
ಬ್ರಹ್ಮವ ತಂದು | ತೋರಲು
ಆ ಬ್ರಹ್ಮ ಬೇರಿಹುದೇ ||ಪ||
ಕರ್ಮಕೋಟಲೆಯಲ್ಲಿ ಕೊರಗಿ ಸಾಯದೆ
ಪರ | ಬ್ರಹ್ಮವೆ ತಾನೆಂದು ಅರಿಯಬೇಕಲ್ಲದೆ ||ಅ ಪ||
ಕ್ಷಣಿಕ ಸಂಸಾರ | ಕಲ್ಪಿತ ಮಾಯ |
ಗುಣಕತಿ ದೂರ | ಮಣಿಗಣಸೂತ್ರದಂತಿರುತೆಲ್ಲ ದೇಹದಿ |
ಗಣನೆಗೆ ಬಾರದದ್ವಯನೆನ್ನಿಸಿರುವ ||1||
ನಿಗಮಾಗಮಕ್ಕೆ | ಸಿಕ್ಕದೆ ಮೂರು
ಜಗದಿ ತುಂಬಿರುವ | ಸ್ವಗತಾದಿ ಭೇದತ್ರಯದ ಬಾಧೆಯಿಲ್ಲದೆ |
ಗಗನದಂದದಿ ನಿರವಯವಾಗಿ ಇರುವ ||2||
ತೆಗೆದು ಅಜ್ಞಾನ | ಆವರಣವ |
ನೆರೆ ವೀಕ್ಷೇಪವನು ಅರಿತ ಪರೋಕ್ಷ ಜ್ಞಾನದಿ ತನ್ನ ನಿಜವನು |
ಗುರುಮಹಲಿಂಗನೆಂದರಿಯಬೇಕಲ್ಲದೆ ||3||

ತಿಳಿಯಬಾರದೆ ಹೀಗೆ
ತಿಳಿಯಬಾರದೆ | ಹೀಗೆ ತಿಳಿಯಬಾರದೆ ||ಪ||
ಅಳಿವುದೆಲ್ಲ ಜಗವು ತಾನೆ ||
ಉಳುಮೆಯಾದ ಬ್ರಹ್ಮವೆಂದು ತಿಳಿಯಬಾರದೆ ||ಅ ಪ||
ನೂರು ವರುಷದೊಳಗೆ ಮಡಿದು |
ಭಾರಿ ಭಾರಿ ಭವಕೆ ಬರುವ |
ತೋರದೇಹಮಯಕೆ ದೂರ ಸಾಕ್ಷಿ ಬ್ರಹ್ಮವೆಂದು || ತಿಳಿ ||
ಪ್ರಳಯವಾಗುವನ್ನ ಇರುತ
ಬಳಲಿ ಮೋಹ ರಾಗದಲ್ಲಿ |
ಅಳಿವ ಲಿಂಗ ದೇಹ ನೋಡ್ವ
ಉಳಿಮೆ ಬ್ರಹ್ಮ ತಾನೆ ಯೆಂದು || ತಿಳಿ ||
ನೂರು ಜನ್ಮ ಸುಕೃತ ಫಲದಿ |
ಚಾರು ಜ್ಞಾನವುದಿಸಲಳಿವ |
ಕಾರಣಾಂಗ ಸಾಕ್ಷಿಯಾದ |
ಪೂರ್ಣ ಬ್ರಹ್ಮತಾನೆ ಎಂದು || ತಿಳಿ ||
ಮೂರು ತನುವು ಮೂರು ಶಕ್ತಿ |
ಮೂರವಸ್ಥೆ ಮೂರು ಜೀವ |
ಮೂರು ಗುಣಗಳಂಟದಿರುವ |
ಸಾರಚಿನ್ಮಯ ಬ್ರಹ್ಮವೆಂದು || ತಿಳಿ ||
ಕರುಣಿ ಶ್ರೀಗುರು ರಂಗಲಿಂಗ |
ವರದತತ್ವ ಸಾರತಿಳಿಯೆ |
ನಿರಘನಿತ್ಯ ಮುಕ್ತ ತಾನೆ |
ನಿರುಪಮದ್ವಯ ಬ್ರಹ್ಮವೆಂದು || ತಿಳಿ ||

ಅರಿವುದೆ ಚಂದ ಬ್ರಹ್ಮಾನಂದ
ಅರಿವುದೆ ಚಂದ ||ಪ||
ಅರಿವುದೆ ಚಂದ ನಿರ್ಮಲ ಪ್ರಜ್ಞೆಯಿಂದ |
ಅರಿವು ತಾನಲ್ಲದೆ ಬೆರಿಲ್ಲವೆಲೊ ಕಂದ | ಅರಿವುದೆ ||ಅ ಪ||
ಹೇಳುವದಲ್ಲ | ಕಿವಿ ಕೊಟ್ಟಿನ್ನು |
ಕೇಳುವುದಲ್ಲ ಹೇಳದೆಯಿರಲದು |
ತಿಳಿಯುವದಲ್ಲ | ಹೇಳಿ ವಾಚಕದಿಂದ ಕೆಡಿಸುವದಲ್ಲ ||1||
ಪರಿಪರಿ ನಾಮ ರೂಪುಗಳೆಲ್ಲ | ನೆರೆ ಕಳೆದುಳಿದ
ವರದ್ರಷ್ಟು ದರ್ಶನ ದೃಶ್ಯಾದಿಗಳಿಗೆಲ್ಲ |
ಪೆರತಾದನಿರುಪಮ ನಿರ್ಗುಣ ಬ್ರಹ್ಮವ ||2||
ಹೆಣ್ಣು ಗಂಡಲ್ಲ | ಹೊನ್ನಲ್ಲವು |
ಮಣ್ಣೆಂಬೊದಲ್ಲ | ಹೆಣ್ಣು ಗಂಡಾಗಿ ತುಂಬಿದೆ ಜಗವೆಲ್ಲ |
ಕಣ್ಣಿಗೆ ಕಾಣಿಸುವುದು ನಿಜವಲ್ಲ ||3||
ಧ್ಯಾನದೊಳಿಲ್ಲ | ಧಾರಣೆ ಯೋಗ
ಮೌನದೊಳಿಲ್ಲ | ಧ್ಯಾನಧಾರಣ ಯೋಗಕ್ಕಾದಿ ಅಂತ್ಯದೊಳು |
ತಾನೊಂದು ಸಾಕ್ಷಿಯಾಗಿಹುದು ನಿಶ್ಚಲಮಾಗಿ ||4||
ವರ ಶಾಂತನಾಗಿ | ಮಾನಾಭಿಮಾನ
ಯರಡನ್ನು ನೀಗಿ | ನಿರುತ ಅಖಂಡೈಕ ರಸಮಯನಾಗಿ ಶ್ರೀ |
ಗುರು ಮಹಲಿಂಗರಂಗನೆ ತಾನೆಯಾಗಿ ||5||

ಜ್ಞಾನಾಮೃತ ಸಿಕ್ಕಿತು
ಜ್ಞಾನಾಮೃತ ಸಿಕ್ಕಿತು | ಹೃನ್ನಾಳದಿ |
ಜ್ಞಾನಾಮೃತ ಸಿಕ್ಕಿತು ||ಪ||
ನಾನು ನೀನೆಂಬ ಕತ್ತಲೆ ಹರಿದೋಗಲು ||
ಪೂರ್ಣ ಚಂದ್ರಾನಂದ ಬೆಳಕಿನೊಳ್ಬೆಳಕಾಗಿ || ಜ್ಞಾನಾ ||ಅ.ಪ||
ಕುಹಕ ಕುಟಿಲವಡಗಿ ಶಾಂತಿಯು |ಮೌನ
ಸಹಜ ಸದ್ಗುಣ ಬೆಳಗಿ |
ಇಹ ಭೋಗ ಸಾಮ್ರಾಜ್ಯ ತೃಣಗಣವಾಗೀ |
ಬಹು ಜನ್ಮ ಸುಕೃತದ ಫಲ ಲಭ್ಯವಾಗಿ || ಜ್ಞಾನಾ ||1||
ಚಿನುಮಯಾತ್ಮನ ಆರಣೀ ಮಾಡುತ | ಮೂಲ
ಪ್ರಣವಮೇಲರಣಿ ಮಾಡಿ |
ಮನದಿ ಸೋಹಂ ಭಾವದಿಂದಲಿ | ಮಥಿಸಿ
ಅನುಭವ ಜನಿತ ಚಿನ್ನಾದ ಚಿತ್ಕಳೆಂಬ | ಜ್ಞಾನಾ ||2||
ವರಸಿಂಧು ಮಥನದೊಳು |
ಕೂಡಿದ ರಾಕ್ಷಸರ ಪಡೆಯಡಗಲಾಗಿ |
ವರದೇವ್ತೆಗಳಿಗೆ ದಿವ್ಯಾಮೃತ ಬಂದಂತೆ ||
ಉರುಜೀವತ್ವಳಿಯೆಚಿದಂ ಬುಧಿಯಿಂ ಬಂದ ಜ್ಞಾನಾ ||3||
ಇದು ದಿವ್ಯ ಸಿದ್ಧರಸ | ಚಂದ್ರಾಮೃತ
ವಿದು ಬ್ರಹ್ಮಬೋಧರಸ |
ಇದು ಭವರುಜೆಗೌಷಧವು ನಿಜವೆನ್ನುತ್ತ |
ಮುದದಿ ಸೇವಿಸೆ ವರ ಮುಕ್ತಿಯನೀವಂಥ || ಜ್ಞಾನಾ ||4||
ಕರ್ಮನಿಷ್ಟಗೆ ಸಿಕ್ಕದ | ಸಾಧಿಪ ವ್ರತ
ಕರ್ಮಭ್ರಷ್ಟಗೆ ದಕ್ಕದ |
ಕರ್ಮದ ಬೀಜ ಜ್ವಾಲಾಗ್ನಿಯೂ ದಹಿಸುವ |
ಮರ್ಮವರಿತ ಗುರುರಂಗನ ಕೃಪೆಯೆಂಬ || ಜ್ಞಾನಾ ||5||

ಆನಂದ ಪದವಿಯನು ಹೇಳಲಾರಿಂದಹುದು
ಆನಂದ ಪದವಿಯನು ಹೇಳಲಾರಿಂದಹುದು |
ಆನಂದದೊಳ್ಮುಳುಗಿ ಮನ ಮೌನವಾಗಿರಲು ||ಪ||
ಹಸಿವಿಗನ್ನವು ದೊರೆಯಲಾನಂದ ಸರ್ವರಿಗೆ |
ಪಶುವುಗಳಿಗಾನಂದವೆಳೆಗರುವ ನೆಕ್ಕಲ್ |
ವಿಷಯ ನಿದ್ರಾನಂದ ಮೃಗ ಪಕ್ಷಿಪಶುಗಳಿಗೆ |
ಅಸಮ ಯೋಗಾನಂದ ವರ ಯತೀಶ್ವರಗೆ || ಆನಂದ ||1||
ವರಚಕ್ರವರ್ತಿಮಾನುಷ ದೇವ ಗಂಧರ್ವ |
ಪರಮ ದೇವರ್ಕಗಳಿಂದ್ರ ಬೃಹಸ್ಪತಿಯು |
ಪರಮೇಷ್ಟಿ ನವಬ್ರಹ್ಮಗುರುಗಳ ಮಹದಾನಂದ |
ವಿರುವ ವೊಂದಕ್ಕೊಂದು ನೂರು ಮಡಿಯಧಿಕವೆನಿಸಿ || ಆನಂದ ||
ಅರಿಯಲಿಂತಾನೆಂದ ಪದವಿಗಳು ಜಗದೊಳಗೆ |
ನರಸ್ವಪ್ನದಂತೆ ತೋರಡಗುವದರಿಂದ |
ನಿರುಪಮದ್ವಯ ಪೂರ್ಣ ಬೋಧೆಯಿಂದೊಗೆದ |
ಪರಬ್ರಹ್ಮಾನಂದದೊಳು ಲವಮಾತ್ರದೆನಿಸದಾಗಿ || ಆನಂದ ||
ವೊಳಹೊರಗೆ ಪರಿಪೂರ್ಣ ಕುಂಭ ಜಲದಂತೆ |
ವೊಳಹೊರಗೆ ಮಿಗೆ ಶೂನ್ಯ ಕುಂಭ ನಭದಂತೆ |
ಸಲೆಕರಣ ವೃತ್ತಿ ಬ್ರಹ್ಮಾನಂದ ಶರಧಿಯೊಳು
ಮುಳುಗಿ |ಮೈಮರೆದ ನಿಜಸ್ವಾನುಭವದನುಪಮದ || ಆನಂದ ||
ಸತ್ತೆನಿಸಿ ಜಗದಾದಿ | ಮಧ್ಯದಲಿ ತುಂಬಿರುವ |
ಚಿತ್ತೆನಿಸಿ ಮೂರವಸ್ಥೆಗಳ ಬೇರಿಟ್ಟರಿಯುವ |
ಮತ್ತೆ ಆನಂದವೆನಿಸಿ ಪೆರತೊಂದು ತೋರದಿಹ |
ನಿತ್ಯ ಪರಿಪೂರ್ಣ ಪರಮಗುರು ಮಹಲಿಂಗನಾಗಿರುವ || ಆನಂದ ||

ಶಿವಯೆಂಬ ಕಾಮಧೇನು ಇರಲಾಗಿ
ಶಿವೆಯೆಂಬ ಕಾಮಧೇನು ಇರಲಾಗಿ |
ಭವವೆಂಬ ಬರವು ಉಂಟೆ ವತ್ಸಾ ಶಿವೆಯೆಂಬ ||ಪ||
ಆದಿಪ್ರಣವಾಕೆ ಮುಖವು | ಪಾದಗಳು |
ವೇದನಾಲ್ಕಾರು ಶಾಸ್ತ್ರ ಸ್ಮೃತಿಯು |
ವಾದತರ್ಕಗಳೆ ವುದರಂ | ಪುಚ್ಚದಿಂ
ದಾದರೈವರು ಬ್ರಹ್ಮರು ವತ್ಸ || ಶಿವೆ ||1||
ಮೂಲಕುಂಡಲಿ ಎಬ್ಬಿಸಿ | ವರಬ್ರಹ್ಮ
ನಾಳವನು ದೂರದಲ್ಲಿ | ತಾನೆ |
ಲೀಲೆಯಿಂ ಕಾಣುತಿಹಳು |
ಪರಬ್ರಹ್ಮ ನೀಲತೋಯದ ಮಧ್ಯದಿ | ವತ್ಸ || ಶಿವೆ ||2||
ವರಧರ್ಮ ಆರ್ಥಕಾಮ ಮೋಕ್ಷವಂ |
ಕರೆದು ಭಕ್ತರಿಗೀವುದಂ ಕಂಡು |
ಸುರಲೋಕದವರ ಪೊರೆಯುತ್ತಿರುವಂಥ |
ಸುರಧೇನು ನಾಚುತ್ತಿಹುದೈ | ವತ್ಸ || ಶಿವೆ ||3||
ಮೂಲ ಶಿವಜೀವರೆಂಬ ಮಕ್ಕಳನು |
ಲೀಲೆಯಿಂದ ಪಡೆದು ಜ್ಞಾನವೆಂಬ |
ಪಾಲಿತ್ತು ಎಡಬಿಡದೆಲೆ ಪ್ರೀತಿಯಿಂ |
ಪಾಲಿಸುವ ಲೋಕಜನನೀ | ವತ್ಸ || ಶಿವೆ ||4||
ಮೃತ್ಯುಹರ ಕಾಮಧೇನು ಗುರು | ರಂಗ
ನೊತ್ತಿನೊಳುಯಿರುವದಾಗಿ |
ನಿತ್ಯ ಭಕ್ತಿಯಿಂದಾಶ್ರಯಿಸಿದವರ ಪೊರೆವಂಥ |
ಸತ್ತು ಚಿತ್ತಾನಂದಳು | ವತ್ಸ || ಶಿವ ||5||

ಶಿವನೆಂಬ ಕಲ್ಪವೃಕ್ಷ ಇರಲಾಗಿ
ಶಿವನೆಂಬ ಕಲ್ಪವೃಕ್ಷ ಇರಲಾಗಿ |
ಭವವೆಂಬ ತಾಪವುಂಟೆ || ವತ್ಸ ||
ಶಿವನೆಂಬ ಕಲ್ಪವೃಕ್ಷ ||ಪ||
ಏಳು ಲೋಕಗಳಡಗಿಹ ಈ ವೃಕ್ಷ |
ಮೂಲದಲಿ ಬ್ರಹ್ಮ ಮಧ್ಯದಲಿ |
ಲೀಲೆಯಿಂ ವಿಷ್ಣು ರುದ್ರ ಅಗ್ರದಲಿ |
ಆಲಯವ ಮಾಡಿ ಇಹರು | ವತ್ಸ || ಶಿವ ||
ಆರು ನೆಲೆಗಳ ಭೇದಿಸಿ ತೊಂಭತ್ತು |
ಆರು ಶಾಖೆಗಳೊಳಾಡಿ ಸೂಕ್ಷ್ಮ |
ದ್ವಾರದೊಳಗೆರಡು ಪಕ್ಷಿ ಸೇರಿ ಸುಖ |
ಸಾರ ಉಣ್ಣುತಲಿಪ್ಪವು | ವತ್ಸ || ಶಿವ ||
ವರಜಾಗ್ರತ್ತೆಂಬ ನದಿ ರಾಜಿಸುವ |
ಮರದಿ ಒಂಭತ್ತು ಪುಷ್ಪ | ಅರಳಿ
ವರ ಬಿಂದುಕಳೆ ನಾದವು ಎಂತೆಂಬ |
ಪರಿಮಳವು ಪೊತ್ತೆಸೆವುದು | ವತ್ಸ || ಶಿವ ||
ಪುದಿದ ಅಜ್ಞಾನವೆಂಬ | ಪಣ್ಣೆಲೆಗ
ಳುದುರಿ ಪರಬೊಮ್ಮ ಬೋಧ | ಎಂಬ
ಮೃದುವಾದ ಚಿಗುರೆಲೆಗಳು ನೆರಳಾಗಿ |
ಹೃದಯಕಾನಂದ ಪೂಣ್ಗುಂ ವತ್ಸ | ಶಿವ ||
ಪರಮ ಜ್ಞಾನಾಮೃತವನೇ ತುಂಬಿರುವ |
ವರಮೋಕ್ಷವೆಂಬ ಫಲವಂ ಇತ್ತು |
ಗುರು ಮಹಲಿಂಗನಾ ಭಕ್ತರ್ಗೆ |
ಕರೆದು ಕೊಡುವದರಿಂದಲಿ ವತ್ಸ || ಶಿವ ||

ಚಿಂತಾಮಣಿ ಸಿಕ್ಕಿತು ಶ್ರೀಗುರುವೆಂಬ
ಚಿಂತಾಮಣಿ ಸಿಕ್ಕಿತು ಶ್ರೀಗುರುವೆಂಬ |
ಚಿಂತಾಮಣಿ ಸಿಕ್ಕಿತು ||ಪ||
ಚಿಂತಿಸಲು ಅಜ್ಞಾನ ಪಟಲವ |
ಮುಂತೆ ಛೇದಿಸಿ ಜ್ಞಾನಬೋಧೆಯ |
ಸ್ವಾಂತರಂಗದಿ ತುಂಬಿ ಹಿಂದಣ |
ಭ್ರಾಂತಿಯಲ್ಲವ ಕಳೆದು ರಾಜಿಪ || ಚಿಂತಾ ||ಅ.ಪ||
ಪರುಷವೇದಿಯ ಸೋಂಕಿದ ಕಬ್ಬಿಣ ತಾನೆ |
ವರೆ ಅಪರಂಜಿಯಾದ ಪರಿಯ |
ವರ ಅಮೃತಸ್ತ ಮಸ್ತಕ | ಸ್ಪರಿಶದಿಂ ತನ್ನಂತೆ ಮಾಡುತ
ತರಿದು ಭವಶಾಪವನು ಕರುಣದಿ |
ಸ್ಥಿರ ಮುಕುತಿ ಸಾಮ್ರಾಜ್ಯವಿತ್ತ || ಚಿಂತಾ ||1||
ಶರೀರವು ನಶ್ವರವು ಇಂದ್ರಿಯಾ ಪ್ರಾಣ |
ಕರಣಗಳ್ | ಚಂಚಲವು |
ಅರಿಯಲಿವಕಾಧಾರಮಾಗಿಯೆ |
ಮೆರೆವ ಮುವತ್ತೆಂಟು ಕಳೆಗಳ್ |
ಬೆರೆತು ಬೆಳಗುವ ಸ್ವಪ್ರಕಾಶದ |
ಪರಮಪ್ರತ್ಯಗ್ವಸ್ತುವೆಂಬುವ || ಚಿಂತಾ ||2||
ಕಾಣುವ ನಾದಬಿಂದು ಚಿತ್ಕಳೆಯೊಮ್ಮೆ |
ಕಾಣದೆ ಪೋಪುದೆಂದು |
ಭಾನುವಿಗೆ ವರದೀಪದಾರತಿ |
ಜಾಣರೆತ್ತುವ ಪರಿಯ ಯೋಗದಿ |
ಏನು ಫಲವಿಲ್ಲಮಲಬ್ರಹ್ಮ
ಜ್ಞಾನವೇ | ಶ್ರೇಷ್ಠೆನುತ ವರದ || ಚಿಂತಾ ||3||
ಪುಂಸ್ತ್ರೀ ನಪುಂಸ ಭೇದ ರೂಪಿನ ಭ್ರಾಂತಿ |
ಧ್ವಂಸಗೈಯುತ ಪೂರ್ವದ |
ಸಂಶಯದ ಕರ್ಮವನು ದಹಿಸುತ |
ಹಂಸಹಂಸೋಹಮೆನ್ನುತ್ತ |
ಶಿಂಶುಮಾರದಿ ಆಡುತ್ತಿರುವ |
ಹಂಸಪಕ್ಷಿಯ ಶಿರದಿ ಢಾಳಿಪ || ಚಿಂತಾ ||4||
ಕ್ಷುಧೆ ತೃಷೆ ಮೊದಲಾದ ಆರೂರ್ಮಿಗೆ |
ಮೊದಲೆ ತಾ ಸಾಕ್ಷಿಯಾದ |
ಪದುಳ ಗುರು ಮಹಲಿಂಗನೆನ್ನಿಸಿ |
ಹೃದಯದೊಳ ಹೊರಗೆಲ್ಲ ಭರಿತದಿ |
ಪದುಮ ಶತಕೋಟಿಯಂದದಿ |
ವದಗಿ ಥಳಥಳ ಬೆಳಗುವಂಥ || ಚಿಂತಾ ||5||

ಪುರುಷ ಕಣಿಯೆಂಬ ರತ್ನ
ಪುರುಷ ಕಣಿಯೆಂಬ ರತ್ನ ದೊರೆತವನೆ |
ಧರೆಯೊಳಗೆ ಪುಣ್ಯಾತ್ಮನು ವತ್ಸ |
ಪುರುಷ ಕಣಿಯೆಂಬ ||ಪ||
ಬ್ರಹ್ಮಗಿರಿಯೊಳಗಿರ್ಪುದು | ಅದನರಿತ
ಬ್ರಹ್ಮ ಇಂದ್ರಾದಿ ಸುರರು | ಮುನಿಗಳ್
ಪೇರ್ಮಿಯಿಂ ಋಷಿಸಿದ್ಧರು ಕಾದಿಹರು |
ತಮ್ಮ ಉಜ್ಜೀವನವು ಯೆಂದು | ವತ್ಸ || ಪುರುಷ ||
ಸೃಷ್ಟಿಯೊಳು ಶ್ರೇಷ್ಠವೆನಿಸಿ | ಸುಕೃತಿಗಳು
ದೃಷ್ಟಿ ಗೋಚರಮಪ್ಪುದು | ಇದನು
ಮುಟ್ಟದವರಘವ ಸುಟ್ಟು | ತನ್ನಂತೆ
ಶ್ರೇಷ್ಟತೆಯಗೈಯುತಿಹುದು | ವತ್ಸ | ಪುರುಷ ||
ಪರಮತುರ್ಯನಿಮದು ಇದು ಸತ್ಯ |
ವಿರತಿ ಉಪರತಿಯು ಬೋಧೆಯೆಂಬ |
ಪರಮ ಕಲ್ಯಾಣ ಗುಣದಿಂ | ಬೆಳಗುತಿಹ |
ವರಚಿಹ್ನೆಯಿಂದಿರುವದೂ | ವತ್ಸ || ಪುರುಷ ||
ವರಜ್ಞಾನ ಭೂಮಿಯೆಂಬ ಥಳ ಥಳಿಪ |
ಪರಮ ಜ್ಯೋತಿರ್ಲತೆಗಳು | ನಿತ್ಯ
ಉರು ಸಮಾಧಿಗಳೆಂಬುವ ಅಮೃತಲತೆ |
ಸ್ಫುರಿಸಿ ಪರಿವೇಷ್ಠಿಸಿಹುವು | ವತ್ಸ || ಪುರುಷ ||
ಕಲ್ಲುಕುಣಿಯಲ್ಲ ಬ್ರಹ್ಮವೆಂತೆಂಬ |
ಸಲ್ಲಲಿತ ಜ್ಞಾನರತ್ನ ಜಗದಿ |
ಕಲ್ಲು ಬೆಲ್ಲವ ಮಾಡಿದ|
ಗುರು ರಂಗನಲ್ಲಡಗಿಕೊಂಡಿರ್ಪುದು | ವತ್ಸ || ಪುರುಷ ||

ಮರುಜ ಮಣಿಯೆಂಬ ರತ್ನ
ಮರುಜ ಮಣಿಯೆಂಬ ರತ್ನ ದೊರೆತವಗೆ |
ಮರಣ ಬಾಧೆಗಳಿಲ್ಲವು |
ವತ್ಸ ಮರುಜ ಮಣಿಯೆಂಬ ||ಪ||
ಚಿನುಮಲಾದ್ರಿಯೊಳಿರ್ಪುದೂ | ರವಿಯಂತೆ
ನಿರ್ಮಳದಿ ಬೆಳಗುತಿಹುದು | ಇದಕೆ |
ಮನ್ಮನಿಗಳಜಮುಖ್ಯರೂ ಕಾದಿಹರು ||
ನೆಮ್ಮಿ ತಪವನು ಗೈಯುತ ವತ್ಸ || ಮರು ||1||
ಸತ್ತವರ ಬದುಕಿಸುವದು | ತೃಣವೆನಿಸ
ದುತ್ತಮದ ಜೀವರತ್ನ | ಇದನು
ಅರ್ಥಿಯಿಂ ಪೂರ್ವದವರು | ಪಡೆದು
ತಮ್ಮ ಮೃತ್ಯುಬಾಧೆಯನಳಿದರು | ವತ್ಸ || ಮರು ||2||
ಹಿಂದೆ ರಾವಣ ಯುದ್ಧದೀ ಸೌಮಿತ್ರಿ |
ಕಂದಿ ಮೂರ್ಛಿತನಾಗಿರೆ | ಹನುಮ |
ತಂದ ಸಂಜೀವನದ ಗಿರಿಯಿಂ | ದೆಚ್ಚೆತ್ತ |
ನೆಂದುಕೊಂಬರು ಜಗದೊಳು || ಮರು ||3||
ಇಂದು ಆತ್ಮಾರಾಮನೂ | ಪುಸಿಮಾಯ |
ಬಂದಿಯಿಂ ತಾ ಮರತಿರೇ ಗುರುವು |
ಬಂದು ಪ್ರತ್ಯಕ್ಷ ಕೊಟ್ಟ | ವಾಕ್ಯದಿಂ
ಬಂಧನವೆ ಬಯಲಾಯಿತು | ವತ್ಸ || ಮರು ||4||
ಮೀರಿರುವ ಜಾಡ್ಯಕಿದರ ಸುಳಿಗಾಳಿ |
ದೂರ ಬೀಸಿದ ಮಾತ್ರದಿ ಅವನ |
ಪ್ರಾರಬ್ಧವೆಲ್ಲ ನಸಿದು ನಿರ್ಮಳದಿ |
ಧೀರ ಗುರುರಂಗನಪ್ಪಂ ವತ್ಸ |
ಮರುಜಮಣಿಯೆಂಬ ರತ್ನ | ವತ್ಸ || ||5||

ಅಮನಸ್ಕಯೋಗವಿದು
ಅಮನಸ್ಕಯೋಗವಿದೂ | ಮಾನಸ ರಾಜ |
ಕ್ರಮದಿನೀ ಸಾಧಿಪುದು ||ಪ||
ಅಮಲ ಬ್ರಹ್ಮ ಜ್ಞಾನನಿಧಿ ಬ್ರಹ್ಮ ಇಂದ್ರಾದಿ |
ಪ್ರಮುಖರಿಂ ಪೂಜಿತ ನಿರ್ವಾಣ ಪಥವು ||ಅ ಪ||
ಧರೆಯೊಳು ಪ್ರಖ್ಯಾತಿಯು ಯೋಗಂಗಳೋಳ್ |
ಮೆರೆವ ಶಿಖಾಮಣಿಯು |
ವರಸೂಕ್ಷ್ಮ ಬುದ್ಧಿಗೆ ಸುಲಭವು ಸಾಧ್ಯವು |
ಉರು ಮಂದಬುದ್ಧಿಗೆ ಕಠಿಣವಸಾಧ್ಯವು || ಅಮ ||1||
ಮನವೆ ವಾಸನಮಯವು ಸರ್ವಾರಂಭ |
ಮನವೆ ಮಾಯಾ ಗುಣವು |
ಮನವೆ ಸಂಶಯ ರೂಪ ಜಡವಣು ಮಾತ್ರವು |
ಮನವೆ ನಾಶನವಾಗಲಮನಸ್ಕವೆನಿಪುದು || ಅಮ ||2||
ಅರಿವರ್ಗ ಮದಗುಣವು ನಾಶವು ಕೆಟ್ಟ |
ದುರಿಯ ಕರ್ಮವು ನಾಶವು
ಪರಮ | ಗುಹ್ಯಾದ್ಗುಹ್ಯವೆನಿಸಿಕೊಂಡಿಹುದಿದು |
ಗುರುಮಹಲಿಂಗ ಬೋಧಿಪ ಬ್ರಹ್ಮವಿದ್ಯವು || ಅಮ ||3||

ಮನವ ಜೈಸಲರಿದು
ಮನವ ಜೈಸಲರಿದು | ಜೈಸದೆ
ಘನಸುಖವಳವಡದು ||ಪ||
ಕ್ಷಣದೊಳನರ್ಗಳ ಕಾರ್ಯವಗೈವನು |
ಮನುಜ ಮಾಡದ ಕೆಲಸೀನ್ನೇನಹುದು |
ಮನವ ಜೈಸ ||ಅ ಪ||
ಹುಲಿಯ ಹಾಲು ವಂದು | ಸಾಸಿರ
ಕೊಳಗದಿ ತಂದೊಯ್ದು |
ಇಳೆಯೊಳಗುತ್ತಮ ಶಿವರಾತ್ರಿ ದಿವಸದಿ |
ಮಲಹರಗಭಿಷೇಕ ಮಾಡಲುಬಹುದು | ಮನ ||1||
ಮೊಲದ ಗಿಣ್ಣು | ತಂದು ಪಾಯಸ |
ನಲಿವಿನಿಂದಲಿಗೈದು |
ಸಲೆ ದ್ವೀಪಾಂತ್ರದಿ ಪರುಷಲಿಂಗಕ್ಕೆ |
ನಲವಿಂದ ನೈವೇದ್ಯ ಮಾಡಲುಬಹುದು || ಮನ ||2||
ಜೀವದ ಕೇಸರಿಯ ನಖಗಳ |
ಸಾವಧಾನದಿ ತಂದು
ಭಾವಿಸಿ | ಬಿಲ್ವ ಪತ್ರೆನುತ ಗಜೇಶನಿಗೆ |
ಸಾವಿರ ಮಂತ್ರದಿ ಪೂಜಿಸಬಹುದು || ಮನ ||3||
ಉರುಗನ ಹೆಡೆಯೊಳಗೆ |
ರಾಜಿಪ ಜೀವರತ್ನವನು |
ಧರೆಯೊಳಗಮೃತೇಶ್ವರನಿಗೆ ಉನ್ನತ |
ಸರವನು ಪೋಣಿಸಿ ಅರ್ಪಿಸಬಹುದು || ಮನ ||4||
ಏನು ಮಾಡಿದಡೇನು ಮನಸಿಗೆ |
ತಾನೆ ಸಾಕ್ಷಿ ಇರುವ ಜ್ಞಾನಿ |
ಶ್ರೀಗುರು ಮಹಲಿಂಗನ ಕಾಣ್ದಿರೆ |
ಕೋಣ ಗಾಣವಸುತ್ತಿ ಸತ್ತಂತಹುದು || ಮನ ||5||

ಕೋತಿ ಮನವ ನಂಬಬಹುದೆ
ಕೋತಿ ಮನವ ನಂಬಬಹುದೆ | ಇಂಥ
ಕೋತಿ ಮನದ ಚೇಷ್ಟೆಗೊಳಗಾಗಬಹುದೆ | ಕೋತಿ ಮನವ ||ಪ||
ತನುವೆಂಬೋ ವೃಕ್ಷದೊಳಿಹುದು ದುಷ್ಟ |
ಗುಣವೆಂಬ ಕೊಂಬೆಗಳಿಗೆ ಹಾರುತ್ತಿಹುದು |
ಅನುಮಾನಗಳ ರೂಪಾಗಿಹುದು |
ಒಂದು ಕ್ಷಣದಿ ಈರೇಳು ಲೋಕವ ಸುತ್ತುತ್ತಿಹುದು || ಕೋತಿ ||1||
ದಶದಿಕ್ಕುಗಳ ನೋಡುತಿಹುದು ಒಮ್ಮೆ |
ಬಿಸಜಾಕ್ಷಿಯರ ನೋಡಿ ಪಲ್ಕಿಸಿಯುವುದು |
ವ್ಯಸನವೇಳರ ಪಾಲಾಗಿಹುದು ಕೆಟ್ಟ |
ವಿಷಯಂಗಳೆಂಬ ಪಣ್ಗಳ ಮೆಲ್ಲುತ್ತಿಹುದು | ಕೋತಿ ||2||
ವರಜ್ಞಾನದರಮನೆ ಸೇರದು | ನಿತ್ಯ
ದುರಿತ ಕರ್ಮದ ಬನದೊಳಾಡತ್ತಿಹುದು |
ನರಕದಿ ಬಿದ್ದು ಹೋಗುವುದು ನಮ್ಮ |
ಗುರು ಮಹಲಿಂಗನ ಮರೆತುಕೊಂಡಿಹುದು || ಕೋತಿ ||3||

ಮನವ ಜರಿಯಬೇಡಣ್ಣ
ಮನವ ಜರಿಯಬೇಡಣ್ಣ ನಿನ್ನ |
ಮನವ ನೀನರಿತರೆ ನೀನೆ ಮುಕ್ಕಣ್ಣ |
ಮನವ ಜರಿಯಬೇಡಣ್ಣ ||ಪ||
ಮನವೆ ಭಕ್ತಿಯ ಮಾಡುತ್ತಿಹುದು ಮತ್ತೆ
ಮನವೆ ವಿರಕ್ತಿಯಿಂದೆಲ್ಲ ತೋರೆಯುವದು |
ಮನವೆ ಸದ್ಗುರು ಹೊಂದುತಿಹುದು | ಇಂಥ |
ಮನವೆ ಮಾನಸ ಪೂಜೆಯೊಳು ರಮಿಸುವುದು || ಮನವ ||1||
ಮನವೆ ಹಠವ ಸಾಧಿಸುವದು | ಒಮ್ಮೆ
ಮನವೆ ಯೋಗದಿ ಸಿದ್ಧಿ ಹೊಂದುತಲಿಹುದು |
ಮನವೆ ಮಂತ್ರವ ಜಪಿಸುವುದು | ಇಂಥ |
ಮನವೆ ದೈವವ ಸ್ವಾತಂತ್ರದೊಳಿರಿಸುವುದು || ಮನವ ||2||
ಮನವೆ ಮುದ್ರೆಯ ಸಾಧಿಸುವದು | ನಿತ್ಯಾ
ಮನವೆ ತಾರಕ ಬ್ರಹ್ಮದೊಳು ಬೆರೆಯುವದು |
ಮನವೆ ಮೌನದಿ ಕುಡುರುವದು | ಇಂಥ |
ಮನವೆ ಆತ್ಮನ ನೆನೆದಾನಂದಿಸುವುದು || ಮನವೆ ||3||
ಮನವೆ ತತ್ವಗಳರಿಯುವುದು | ಮತ್ತೆ
ಮನವೆ ಸರ್ವೇಂದ್ರಿಯ ರಾಜನಾಗಿಹುದು |
ಮನವೆ ಸೂಕ್ಷ್ಮದಿ ಸುಳಿಯುವದು |
ಇಂಥ ಮನವೆ ಬ್ರಹ್ಮಾಂಡ ಪಿಂಡಾಂಡವಾಗಿಹುದು || ಮನವ ||4||
ಮನವೆ ಜ್ಞಾನವ ಸಾಧಿಸುವದು | ಖ್ಯಾತಿ
ಮನವೇ ಮುಕ್ತಿಯ ರಾಜ್ಯವನ್ನು ಆಳುವದು |
ಮನವೆ ಬ್ರಹ್ಮನ ಹೊಂದುತಿಹುದು | ಇಂಥ |
ಮನ ಗುರು ಮಹಲಿಂಗನೊಳಗೈಕ್ಯವಹುದು || ಮನವ ||5||

ಮನವು ನಾಶವಾಗೂವನ್ನ
ಮನವು ನಾಶವಾಗೂವನ್ನ |
ಜನಿಸದಾತ್ಮಜ್ಞಾನ ಮುನ್ನಾ |
ಮನವೆ ನಾಶಗೈದಾ ಪುರುಷಾ ಜ್ಞಾನಸಂಪನ್ನ ||ಪ||
ನಿರುತ ನೀರು ಕ್ಷೀರೊಂದಾಗಿ |
ಬೆರೆತಿರುವ ಪರಿ ವಾಯು ಮನವು |
ಎರಡು ಬೆರೆತೊಂದಾಗಿ ಚರಿಸುತಿಪ್ಪ ವದರಲ್ಲಿ |
ಚರಿಸಲೊಂದು ಬಳಿಕಿನ್ನೊಂದು |
ಚರಿಸುತ್ತಿಹುದು | ಮತ್ತಿನ್ನೊಂದು |
ಚರಿಸದಿರಲು ಸುಮ್ಮನಿರುವವೆರಡು ಒಂದಾಗಿ|| ಮನವು ||1||
ವಿನುತಾಷ್ಟಾಂಗಯೋಗದಿ ನಿತ್ಯ |
ತನುವ ದಂಡಿಸುತ್ತಲೆಷ್ಟು |
ಎಣಗಿದರು ವಾಯುಸಾಧ್ಯವಾಗದೆಂದಿಗು |
ಮನವು ನಾಶವಾಗುವದೊಂದೆ
ಕ್ಷಣಕೆ | ಸದ್ಗುರು ಕರುಣಾದಿಂದ |
ಮನವು ನಶಿಸಿಯಾಲಮನಸ್ಕವೆಂದೆನಿಪುದೆಂತೆನೆ || ಮನವು ||2||
ವರಮಾನಸಾ ಸರೋವರದೀ ಭರದಿ |
ಮುಳುಗಿದು ವಾಯಸವೂ |
ಪರಮ ಹಂಸನಾಗುವಂತೇ ಹೀನ ಮನವಿದು |
ಉರುತರಾಮೃತಾಕೊಳದಿ ಒಮ್ಮೆ |
ಹರುಷದಿಂದಾ ಮುಳುಗಲಾಗಿ |
ಪರಮಾತ್ಮನೆ ಆಗಿ ನಿತ್ಯ ಬೆಳಗುತಿಪ್ಪುದು || ಮನವು ||3||
ನಾನಾ ಪುಷ್ಪಕ್ಕೆರಗುವ ಭ್ರಮರ |
ತಾನೆ ಸಂಪಿಗೆ ಪುಷ್ಟಕ್ಕೆರಗಿ |
ಪ್ರಾಣ ಬಿಟ್ಟ ಪರಿಯ ನಾನಾ ಕರ್ಮಧರ್ಮದಿ |
ತಾನೆ ತಿರುಗುವ ಮನವು |
ಪೂರ್ಣ ಬ್ರಹ್ಮದಿ ಮುಳುಗಲಾಗೀ |
ಹೀನ ವಿಷಯ ಮರೆತು ಮಗ್ನತೆಯಾಗುತಿರ್ಪುದು || ಮನವು ||4||
ಮನವು ನಶಿಸಿಯೆ ಪ್ರಾಣೇಂದ್ರಿಯ |
ಗುಣಗಳಿದು ಕೆಡುವುದು ಕರ್ಮ |
ವರ್ಣಗಣಸುಪ್ತಿಯಲ್ಲಿ ಕರದ ಪುಷ್ಟವ |
ಮರದಂತೆ ಮನವಳಿಯಾದ್ವೈತವು |
ತನಗೆ ತಾನೆ ಸಿದ್ಧಿಸುವುದು |
ಅನುಪಮದ್ವಯ ಗುರು ರಂಗನು ತಾನೆಯಾಗುವ || ಮನ ||

ಜ್ಞಾನ ಹದ ನಿರ್ಣಯವ
ಜ್ಞಾನ ಹದ ನಿರ್ಣಯವ ಜ್ಞಾನ ಗುರುವೆ ಬಲ್ಲ |
ಜ್ಞಾನವಿಲ್ಲದ ಮತ್ರ್ಯ ಮನುಜೇನು ಬಲ್ಲ | ಜ್ಞಾನಹದ ||ಪ||
ಧರೊಯೊಳ್ವಜ್ರದ ಗಿರಿಯಾ |
ವರವಜ್ರ ಮೊಳೆಯಿಂದ
ಕೊರೆದು | ಚೂರ್ಣೀಕೃತವಾಗೈದು ಬಿಡುವಂತೆ |
ಗಿರಿಯಂತೆ ಬೆಳೆದಿರುವಾ |
ಉರುಕಲ್ಪಿತದ ಮನವ |
ವರಸೂಕ್ಷ್ಮಮನದಿಂ | ಕೊರೆದು ಬಿಡುವಂಥ || ಜ್ಞಾನ ||1||
ಭವಿಯೊಳುಕ್ಕಿನ ಘಟ್ಟಿ |
ತವೆಯಕ್ಕಿನುಳಿಯಿಂದ ತವಕದಿಂ |ಕತ್ತರಿಸಿ ಹಾಕುವಂದದಲಿ |
ವಿವಿಧ ಸಂಕಲ್ಪಗಳೂ |
ಕವಿದ ತಾಮಸ ಮನವ |
ನವಿನಮಾನಸದಿಂದ ಕತ್ತರಿಸುವಂಥಾ || ಜ್ಞಾನ ||2||
ಜಗದೊಳುದಿಸಿದ ಕೆಸರ |
ಜಲದಿಂದ ತೊಳೆವಂತೆ|
ಹೊಲೆ ಮನದಿ ಜನಿಸಿರುವ | ಮಲತ್ರಯ ಕೇಸರ|
ನಲಿದು ಮನದಿಂ ತೊಳೆಯ
ಸಲೆ ಬ್ರಹ್ಮ ಮಯವಾಗಿ |
ಇಳೆಗಧಿಕ ಮಹಲಿಂಗ ಗುರುವಾಗುವಂಥಾ || ಜ್ಞಾನ ||3||

ಮನದಿ ವಿಕಾರವಿಲ್ಲ
ಮನದಿ ವಿಕಾರವಿಲ್ಲ | ಸುಜ್ಞಾನಿಗೆ
ತನುಗುಣ ದೋಷವಿಲ್ಲಾ ||ಪ||
ಮನ ಚಂಚಲಣುಮಾತ್ರ ಜಡದೃಶ್ಯವೆನಿಪುದು |
ತನುಮನ ಸಾಕ್ಷಿಯಾಗಿಹ ಚಿದ್ರೂಪಗೆ ನಿತ್ಯ ||ಅ ಪ||
ಮೊದಲಂತೆ ಕರಣೇಂದ್ರಿಯಗಳ ದೋಷಂಗಳು
ಮೊದಲಂತೆ ಕಾಮಾದಿ ವಿಷಯ ದ್ವೇಷಗಳು ||
ಮೊದಲಂತೆ ಜೀವಭಾವನ ಗುಣವಂಟವು |
ಸದಮಲ ಬ್ರಹ್ಮದಿ ಮುಳುಗಿರುವುದರಿಂದ || ಮನ ||1||
ಮುಗಿಲು ಗುಡುಗು ಮಿಂಚು ಪವನದಾರ್ಭಟಗಳು |
ಗಗನವಂಟದಪರಿ ಮೂರು ಕಾಲದೊಳು |
ಬಗೆಬಗೆ ವಿಷಯ ಸಂಸಾರದೊಳಿದ್ದರು |
ಜಗದೊಳು ನಿರ್ಲೇಪನಾಗಿರುವದರಿಂದ || ಮನ ||2||
ರವಿ ಶಶಿಯದುರಿಗೆ ರಾಹು ಸಂಚರಿಪಂತೆ |
ತವೆಮನ ಸುಳಿದಾಡುತ್ತಳಿದು ಪೋಗುವದು |
ಪ್ರವಿಮಲಾದ್ವಯನ ಚಲಾವ್ಯಕ್ತನೆನಿಸುವ |
ಶಿವ ಗುರು ಮಹಲಿಂಗನಾಗಿರುವದರಿಂದ ಮನದಿ ವಿಕಾರ || ಮನ ||3||

ಸನಾಗಲೋ | ಪರಮ
ಹಂಸನಾಗಲೋ | ಪರಮ
ಹಂಸನಾಗಲೋ ||ಪ||
ಸೋಹಂ ಸೋಹಂ ಸೋಹಂ ಎನ್ನುತ |
ಧ್ವಂಸಗೈದು ದೈತ್ಯಭಾವಾ ||ಅ||
ಮಾಯೆ ಮೂಲವನ್ನು ತಿಳಿದೂ |
ಮಾಯೆ ಗುಣಗಳನ್ನು ಅಳಿದೂ |
ಮಾಯೆ ಕಳೆಯೆ ತಳೆದು ಮುದದೀ |
ಮಾಯೆದಳೆಗತೀತನಾಗೀ ||1||
ನೀರನುಳಿದು ರಾಜಹಂಸಾ |
ಕ್ಷೀರ ಸವಿಯುವಂತಾ ತೆರದೀ |
ಮೂರು ದೇಹವುಳಿದು ಪೊಳೆವ |
ಸಾರ ತತ್ವಸಾರ ಸವಿವಾ ||2||
ನಿರುತ ಬ್ರಹ್ಮಚರ್ಯ ಶಾಂತೀ |
ಕರವೆನಿಪ್ಪ ಬ್ರಹ್ಮಪುರದೊಳಿರುವ |
ಅಮೃತಕೊಳದಿ ಮುಳುಗಿ ಪರಮಾ |
ಅಮೃತರಸವ ಸವಿವಾ ||3||
ನಿರುತ ಪಾಪ ಪುಣ್ಯವೆಂಬಾ |
ಮೆರೆವ ಕಮಲವನವ ಮೆಲುತ್ತಾ |
ಸ್ಪುರಿಪ ಜ್ಞಾನವೆಂಬ ಮನದೀ |
ಪರಮ ಸುಖದಿ ಚರಿಸುವಂಥಾ ||4||
ಪೂರ್ಣ ಬ್ರಹ್ಮನಲ್ಲಿ ಆಡೀ |
ಪೂರ್ಣ ಬೋಧನಾಗಿ ಉಂಡಾ |
ಅನ್ನ ಅಮೃತ ಮಾಡಿ ಸವಿದ |
ಚನ್ನ ಶ್ರೀ ಗುರು ರಂಗನೆಂಬಾ ||5||

ಇಲ್ಲ ಇಲ್ಲ ಇಲ್ಲ ಮುಕ್ತಿ ಒಬ್ಬರಿಗೂ
ಇಲ್ಲ ಇಲ್ಲ ಇಲ್ಲ ಮುಕ್ತಿ ಒಬ್ಬರಿಗೂ | ಸತ್ಯವಾಗಿ
ಅಲ್ಲವಾದ್ದು ಬೆಲ್ಲವಾಗಿ ಬೆಲ್ಲ ಬೇವು ಆಗೋತನಕ ||ಇಲ್ಲ ||ಪ||
ಭೋಗ ಭಾಗ್ಯ ಆಸೆ ಮೋಹ ವಿಷವಾಗೀ | ತೋರಲಾಗೀ
ಕಾಗೆ ಗೂಗೆ ನಾಯಿ | ಹಂದಿ ಸವಿಯಾಗಿ ಮೆಲ್ಲೊತನಕ || ಇಲ್ಲ ||1||
ಅತ್ತೆ ಸೊಸೆಯಾಗಿ ಹತ್ತು ಐದು ಆಗಿ | ಸುಖವಾಗಿ
ಹತ್ತು ಮಂದಿ ಸತ್ತು ಹೋಗಿ ಬೆತ್ತಲಾಗಿ ನಿಲ್ಲೋತನಕ || ಇಲ್ಲ ||2||
ಕಣ್ಣು ಇದ್ದು ಕಾಣದಿಹ ಕುರುಡನಾಗಿ ಮೂಕನಾಗಿ
ತನ್ನೊಳಿಹ ಗುರು ರಂಗನನ್ನು ತಾನೆ ಕಾಣೊತನಕ || ಇಲ್ಲ ||3||

ಬಲು ಸುಲಭವು ಬ್ರಹ್ಮವಿದ್ಯೆ
ಬಲು ಸುಲಭವು ಬ್ರಹ್ಮವಿದ್ಯೆ | ಗುರು |
ಒಲಿದ್ಹೇಳದಿರಲದು ಬ್ರಹ್ಮಗಸಾಧ್ಯ |
ಬಲು ಸುಲಭವು ಬ್ರಹ್ಮವಿದ್ಯ ||ಪ||
ಶರೀರಾಭಿಮಾನವಳಿದವಗೇ ಒಮ್ಮೆ |
ಉರುಕರ್ಮ ಜ್ಞಾನಾಗ್ನಿಯಲಿ ದಹಿಸಿದವಗೆ |
ಪರಮ ಉನ್ಮನೆಯೊಳಾಡುವಗೇ ಒಮ್ಮೆ |
ಉರುಕರ್ಮ ಜ್ಞಾನಾಗ್ನಿಯಲಿ ದಹಿಸಿದಗೆ |
ಪೊರಮ ಉನ್ಮನೆಯೊಳಾಡುವಗೆ ನಿತ್ಯ |
ವರಶಾಂತಿ ಸಿಂಹಾಸನ ಏರಿದವಗೆ || ಬಲು ||1||
ರಾಗದ್ವೇಷವನಳಿದವಗೆ | ಸರ್ವ |
ತ್ಯಾಗ ಮಾಡುವ ಮರ್ಮವನು ಅರಿತವಗೆ |
ಯೋಗವೆಂಟನು ಮೀರಿದವಗೆ ನಿಗ |
ಮಾಗಮವರಿಯದಾತ್ಮನ ಅರಿತವಗೆ || ಬಲು ||2||
ಮಾನುನಿ ಭ್ರಮೆಯಳಿದವಗೆ | ದಿವ್ಯ |
ಜ್ಞಾನ ಪಂಚಾಮೃತ ಸಾರ ಸವಿದವಗೆ |
ನಾನತ್ವವನು ಆಳಿದವಗೆ | ನಿತ್ಯ
ಭಾನುವಿನಂದದಿ ಸಾಕ್ಷಿಯಾದವಗೆ || ಬಲು ||3||
ಚಿತ್ತವು ಬ್ರಹ್ಮದಿ ಬೆರೆತವಗೇ | ತಾನೆ |
ಸತ್ತು ಸಾಯದ ಪರಿ ಜೀವಿಸುವನಿಗೆ |
ಮೃತ್ಯುಪಾಶವ ಗೆಲಿದವಗೆ | ಘನ |
ಸತ್ತು ಚಿತ್ತಾನಂದ ನಿತ್ಯಪೂರ್ಣನಿಗೆ || ಬಲು ||4||
ಯರಡೆಂಬ ಭೇದವನಳಿದವಗೆ | ಭಾನು
ವರಶಶಿ ಕಳೆ ಹೊಂದಿ ಪೂರ್ಣನಾದವಗೆ |
ಗುರು ರಂಗಲಿಂಗನಾದವಗೆ | ಚಿತ್ತ |
ವರಚಿತ್ರದೀಪದ | ಪರಿ ನಿಂತವನಿಗೆ | ಬಲು ಸುಲಭವು ಬ್ರಹ್ಮವಿದ್ಯೆ ||5||

ವಿರತಿ ಬೋಧೆಯು ಪರತಿಯು
ವಿರತಿ ಬೋಧೆಯು ಪರತಿಯು
ಪರಮ ಜೀವನ್ಮುಕ್ತರಿಂಗೆ |
ನಿರುತ ಅಂಗವೆನಿಸಿ ರಾಜಿಸುತ್ತಲಿಪ್ಪವು ||ಪ||
ಧರೆಯ ಸರ್ವ ಭೋಗದಾಶೆ |
ತೊರೆದು ಮನ ಹಾರದಂತೆ |
ಮರಳಿ ಮನದಿ ನೆನೆಯದಿಹುದೇ ವಿರತಿ ಎನಿಪುದು
ನಿರುತ ಶ್ರವಣಾ ಮನನ ಬಲದಿ |
ಅರಿತೂ ಆತ್ಮಾನಾತ್ಮಾ ವಿವರ
ಶರೀರ ಸಾಕ್ಷಿ ತಾನೆಂದರಿಯುತ್ತಿಹುದೆ ಬೋಧೆಯು || ವಿರತಿ ||1||
ಕರುಣಾ ವಿಷಯಂಗಳನು ಜೈಸಿ |
ನಿರುತಷ್ಟಾಂಗಯೋಗದ ಬಲದಿ |
ಧರೆಯ ಕಾರ್ಯಗಳನು ಮರೆಯಲು ಪರಿತಿಯದು |
ಇರಲು ಮೂರಿಂತಹುದು ಮುಕ್ತಿ |
ವಿರತಿಯು ಪರತಿ ಎರಡು ಇರುತ |
ಪರಮ ಬೋಧೆ ಇಲ್ಲದವಗೆ ಪುಣ್ಯ ಲೋಕವು || ವಿರತಿ ||2||
ಪರಮ ಬೋಧೆಯೊಂದೆ ಇರಲು |
ಮರದ ಕೊಂಬೆ ಮುರಿಯೆ ಕೆಳಗೆ |
ಭರದಿ ಬೀಳ್ವಂತಾಗುತಿಹುದು ಮುಕ್ತಿ ಇದರೊಳು |
ಉರುಪ್ರಾರಬ್ಧದಿಂದ ಕೆಲರ |
ಕರಣ ವೃತ್ತಿಯ ಭೇದವಿರಲು |
ಗುರು ರಂಗನೊಳ್ ಬೆರೆವರೆಲ್ಲಾರೊಂದೆ ಸಮನಾಗಿ || ವಿರತಿ ||3||

ಜ್ಞಾನಾಗ್ನಿ ಸರ್ವಕರ್ಮಗಳ ಸುಟ್ಟು
ಜ್ಞಾನಾಗ್ನಿ ಸರ್ವಕರ್ಮಗಳ ಸುಟ್ಟು
ತಾನೆ |ಪ್ರಜ್ವಲಿಸುತಿಹುದೈ | ವರ ಜ್ಞಾನಾಗ್ನಿ ||ಪ||
ಗುರು ಮಖದಿ ಶಿವಯೋಗಮಂ |
ಸಾಧಿಸುದೆ ಅರಿವರ್ಗ ಮೋಹ ಮನವಂ ಸುಟ್ಟು |
ವರತುರ್ಯ ಪದವಿಯಲ್ಲೀ ರಾಜಿಸುವ |
ಉರುಚಿದಾಗ್ನಿಯ ಕುಂಡದಿ | ಉರಿವ ಜ್ಞಾನಾಗ್ನಿ ||1||
ಭರದಿ ಅಟವಿಯೊಳಗ್ನಿಯು |
ಮೃಗಪಕ್ಷಿ ತರಗುಲ್ಮಲತೆಯ ಸುಡುವ |
ತರದಿ ವರಜಪತಪ ವ್ರತಗಳಂ |
ಸುಟ್ಟುರುಹಿ ನಿರುತ ಕಾಲಾಗ್ನಿಯಂತೆ ಉರಿವ ಜ್ಞಾನಾಗ್ನಿ ||2||
ಪರಮಗುರು ಮಹಲಿಂಗನೇ ತಾನಾಗಿ |
ವರಬ್ರಹ್ಮ ಜ್ಞಾನವೆಂಬ ಶಿಖಿಯಿಂ |
ನೆರೆಸಂಚಿತಾದಿ ಕರ್ಮಗಳ ಸುಟ್ಟು |
ನಿರುತ ಹೃತ್ಕುಂಡದಲ್ಲಿ ಉರುವಾ ಜ್ಞಾನಾಗ್ನಿ ||3||

ಕರ್ಮಕೋಟಲೆಗಳಿಲ್ಲಾ
ಕರ್ಮ ಕೋಟಲೆಗಳಿಲ್ಲಾ | ತನ್ನರಿತ
ನಿರ್ಮಲಾತ್ಮ ಜ್ಞಾನಿಗೇ | ವತ್ಸ ಕರ್ಮ ಕೋಟಲೆಗಳಿಲ್ಲಾ ||ಪ||
ನಾನೆಂಬ ಮಲವು ಮನಕೆ ಅಂಟದಲೆ |
ತಾನೇ ಸಾಕ್ಷಿಕ ಬುದ್ಧಿಯಿಂದರಿತು ||
ಜ್ಞಾನ ವೈರಾಗ್ಯವೆಂಬಾ ಗಂಗೆಯಿಂ |
ತಾನೇ ತೊಳೆಯುವದರಿಂದಲೀ ಯತಿಗೆ || ಕರ್ಮ ||1||
ಮಲವ ತುಳಿದಡಿಯ ತೊಳಿಯಾ ಬೇಕೆಂದು |
ಬಳಲುವ ಜ್ಞಾನಿಯಂತೆ ಮೌಢ್ಯ|
ಹಲವು ಕರ್ಮಂಗಳು ಇಲ್ಲ ಮತ್ತದರ |
ಫಲತ್ಯಾಗ ಮೊದಲೆ ಇಲ್ಲ || ಕರ್ಮ ||2||
ತನಮೋಹವೆಂಬ ಮಾತೇ ಮೃತಳಾಗಿ |
ಘನ ಬೋಧೆಯೆಂಬ ಪುತ್ರಾ ಜನಿಸಿ |
ಜನಿಮೃತಿಯ ಸೂತಕೆರಡು | ಬರಲಾಗಿ |
ಇನಿತು ಕರ್ಮಂಗಳಿಲ್ಲಾ ಯತಿಗೆ || ಕರ್ಮ ||3||
ವಿನುತ ಹೃದಯಾಕಾಶದಿ | ಚಿತ್ತೆಂಬ
ದಿನಮಣಿಯ ಉದಯವಾಗೀ |
ನಿತ್ಯ ಘನ ಪ್ರಕಾಶದೊಳಿರುತಿರೇ | ನಿತ್ಯವಿಧಿ
ಮನದ ಸಂಕಲ್ಪನೆಗಳಿಲ್ಲಾ ಯತಿಗೆ || ಕರ್ಮ ||4||
ಏಕಮೇವಾತ್ಮ ನೀನೆ | ಎಂಬ
ಶೃತಿ ವಾಕ್ಯ ನಿಶ್ಚಯಪಡಿಸಿದಾ |
ಮುದದಿ ಲೋಕೇಶ್ವರೆನಿಪ ಗುರುವು |
ಮಹಲಿಂಗ | ಸಾಕಾರವಾಗಿ ಇರಲು ಯತಿಗೆ || ಕರ್ಮ ||5||

ಆಗದಾಗದು ಎಲ್ಲರಿಂದ
ಆಗದಾಗದು | ಎಲ್ಲರಿಂದ |
ಯೋಗಮಾಯ ಗೆಲುವೆನೆಂಬುದು ||ಪ||
ನೀಗಿ ತಾರಕಾದಿ ಯೋಗ | ಯೋಗರಾನೆಂಬ ಜ್ಞಾನ |
ಯೋಗಮುದ್ರೆ ಬಲಿದುತೈರೈ | ನಾಗಿ ತನ್ನ ಮೈಯ್ಯ |
ಮರೆವುದ ಏವೀತತ್ವಮಸಿಯ | ವಾಕ್ಯನ ವಾಚ್ಯ ಲಕ್ಷ್ಯ|
ತಾ ವವೇಕದಿ ಉಂದರಿಯುತ | ಜೀವಗಣಗಳುಡುಗಿ |
ಮನದಿ ಸಾವಧಾನದಿಂದ ಬ್ರಹ್ಮ | ಭಾವ ನೆಲಸಿ ಮನದಿ ಭಿನ್ನ |
ಭಾವ ಬಯಲು ಆಗುವನ್ನ || ಆಗ ||
ತತ್ವದೊಳಗೆ ತತ್ವವೆನಿಸುತ | ಬೆಳಗುವಂಥ ಅಸ್ತಿಭಾರ
ಪ್ರಿಯವನರಿಯುತ ಮಿಥ್ಯನಾಮರೂಪು ಅಡಗಿ |
ಸತ್ಯ ಸಹಜ ಶಾಂತನಾಗಿ | ಚಿತ್ತಬ್ರಹ್ಮದಲ್ಲಿ ಮಳುಗಿ |
ನಿತ್ಯ ತೃಪ್ತನಾಗುವನ್ನ || ಆಗ ||
ಪರಮ ಶ್ರೀ ಗುರು ರಂಗಲಿಂಗನ ಕರುಣದಿಂದ |
ದೊರೆತ ವಸ್ತು ನೆನೆಯುತನುದಿನ | ಮರೆದು
ಜಗದ ಭ್ರಾಂತಿಯನು | ಬೆರೆತು ಜ್ಞಾನಶಕ್ತಿಯನ್ನು
ಅರಿದು ಭವದ ಬಧೆಯನ್ನು ನಿರುತಪೂರ್ಣನಾಗುವನ್ನ | ಆಗಬಾರದು || ಆಗ ||

ಮಿಥ್ಯ ಮಾಯೋಪಾಧಿಯೆನಿಸಿರುವ ಜೀವನಿಗೆ
ಮಿಥ್ಯ ಮಾಯೋಪಾಧಿಯೆನಿಸಿರುವ ಜೀವನಿಗೆ
ಮಿಥ್ಯ ಸಪ್ತಾವಸ್ಥೆಗಳು ತೋರುತಿಹವೈಸೆ ||ಪ||
ವೊಗೆದು ಮೊದಲ ಜ್ಞಾನವಲ್ಲಿಂದಲಾವರಣ
ಮಿಗಿಲು ವಿಕ್ಷೇಪವು ಪರೋಕ್ಷ ಜ್ನಾನ ಸೋಕ ನಿವೃತ್ತಿವು
ಜಗಕಧಿಕ ಅಪರೋಕ್ಷ ಜ್ಞಾನ ಶೋಕ ನಿವೃತ್ತಿ
ಮಿಗೆ ನಿರಂಕುಶ ತೃಪ್ತಿಯೆನಿಸಿರುವೆಂತೆನಲು ||ಮಿಥ್ಯ ||1|
ವರಪ್ರತ್ಯಗಾತ್ಮನೇ ತಾನೆಂಬ ಜ್ಞಾನವ
ಮರತನ್ಯ ಜಡದೇಹ ತಾನೆಂಬುದಜ್ಞಾನ
ಪರಬೊಮ್ಮನೇಯಿಲ್ಲದಿರಲು ಕಾಣಿಪನೆಂಬ
ಯರಡು ವಿಧವಾದ ಮರವೆಯಾವರಣವೆನ್ನಿಸುವುದು |ಮಿಥ್ಯ ||2||
ನಿರುತ ಕರ್ಮಕೆ ಕರ‍್ತೃಭೋಕ್ತೃಜೀವನುಯೆನುತ
ಕೊರಗಿ ಸುಖ ದುಃಖ ದಾರಿದ್ರನೆಂಬುವದೆ ನಿಕ್ಷೇಪ
ಧರೆಗೆ ಕಾರಣನೊಬ್ಬನಿಹನೆಂದು ಗುರುವಿಂದ
ಅರಿತು ಅರ್ಚಿಸಲದು ಪರೋಕ್ಷ ಜ್ಞಾನವು ||3||
ಘನತತ್ವಮಸಿವಾಕ್ಯ ಗುರು ಬೋಧೆಯಿಂ ತಾನೆ
ವಿನು ಬ್ರಹ್ಮೆಂದರಿಯಲಪರೋಕ್ಷ ಜ್ಞಾನವು
ಚಿನುಮಯಾತ್ಮಕನಾದ ಯನಗೆ ಕರ್ಮದ ಬಾಧೆ
ಯಿನಿತಂಟದೆಂದರಿಯಲದು ಶೋಕ ನಾಶವು ||4||
ಶೋಕವಳಿದಾನಂದ ಪದ ನಿರಂಕುಶ ತೃಪ್ತಿ
ಏಕಮೇವಾತ್ಮ ಗುರುರಂಗನೆನಿಸುವದು
ಶೋಕ ಹರವರ ನಿರಂಕುಶ ತೃಪ್ತಿಯರಡು
ಸಾಕಾರವೆಂದೆನಿಪ ವರ ಪರೋಕ್ಷ ಜ್ಞಾನಕೆ ||ಮಿಥ್ಯ ||5||

ತತ್ವಮಸಿಯೆಂಬ ವಾಕ್ಯತ್ರಯವ
ತತ್ವಮಸಿಯೆಂಬ ವಾಕ್ಯತ್ರಯವ ಗುರು ಮುಖದಿ
ಚಿತ್ತವಗಲದೆ ತಿಳಿಲದವನೆ ಮುಕ್ತಂ ||ಪ||
ನೆರೆಯ ವಿದ್ಯೋಪಾಧಿ ಪ್ರತಿಬಿಂಬ ಜೀವನಯೆನಿಸಿ
ಕರಣವಿಂದ್ರಿಯ ಪ್ರಾಣ ತನುತ್ರಯಾದಿಗಳಂ
ಭರದಿ ಅಭಿಮಾನಿಸುವ ಅಲ್ಪಗುಣವಿಡಿದಿಹುದೆ
ನಿಲರು ತತ್ವಂಪದಕೆ ವಾಚ್ಯಾರ್ಥವೆನ್ನಿಲಸುವದು ||1||
ತನುತ್ರಯ ವಿಲಕ್ಷಣವು ನೆರೆ ಅವಸ್ಥಾತ್ರಯಕೆ
ದಿನವು ಸಾಕ್ಷಿಯು ಪಂಚಕೋಶ ವ್ಯತಿರಿಕ್ತೆನಿಪ
ಘನಸಚ್ಚಿದಾನಂದ ಕೂಟಸ್ಥ ಚೈತನ್ಯವೆ
ವಿನ ತತ್ವಂಪದಕೆ ಲಕ್ಷ್ಯಾರ್ಥವೆನ್ನಿಸುವದು ||2||
ಪರಮ ಸತ್ವಗುಣಾಖ್ಯ ಮಾಯ ಪ್ರತಿಬಿಂಬಿತದಿ
ವರೀಶನೆಂದೆನಿಸಿ ಸರ್ವಜ್ಞ ಮೊದಲಾದ
ಪರಮ ಕಲ್ಯಾಣ ಗುಣಗಳಿಂದೊಪ್ಪುದೆ
ನಿರತ ತತ್ವದಕೆ ವಾಚ್ಯಾರ್ಥವೆನ್ನಿಸುವುದು ||3||
ನಿರುಪಮದ್ವಯ ನಿತ್ಯ ಸಂವಿನ್ಮಾತ್ರ
ನಿರಘ ನಿರ್ಗುಣ ನಿತ್ಯಮುಕ್ತ ನಿರ್ಮಾಯ
ಪರಿಪೂರ್ಣ ಪರತತ್ವವೆನಿಪ ಪರಬೊಮ್ಮವೆ
ನಿರತ ತತ್ವದಕೆ ಲಕ್ಷಾರ್ಥವೆನ್ನಿಸುವದು ||4||
ಅಳಿದು ಈ ಜೀವೇಶರುಭಯ ವಾಚ್ಯಾರ್ಥಗಳ
ವುಳಿಲದ ನಿಲಜ ಚೈತನ್ಯವಸ್ತು ಅಸಿಪದವೆಂದು
ತಿಳಿಯಲದುವೆ ಅಖಂಡರಸ ಚಿತ್ತು ನೀನೆಂದು
ವೊಲಿದು ಬೋಧಿಪನು ಗುರು ಮಹಾಲಿಂಗರಂಗಂ ||5||

ಆಗದಾಗದಾಗದೂ ಯಲ್ಲರಿಂದ
ಆಗದಾಗದಾಗದೂ | ಯಲ್ಲರಿಂದ
ಯೋಗ ಮಾಯೆ ಗೆಲುವೆನೆಂಬುದು ||ಪ||
ನೀಗಿ ತಾರಕಾದಿ ಯೋಗ
ಯೋಗರಾಜನೆಂಬಜ್ಞಾನ
ಯೋಗಮುದ್ರೆ ಬಲಿದು ತೂರ್ಯ
ನಾಗಿ ತನ್ನ ಮೈಯ ಮರೆವುದು | ಆಗದಾಗದಾಗದೂ ||ಅ||
ಓವಿತತ್ವಮಸಿಯ ವಾಕ್ಯದಾ ವಾಚ್ಯಲಕ್ಷ್ಯ
ತಾವಿವೇಕದಿಂದಲರಿಯುತ್ತ
ಜೀವ ಗುಣಗಳುಡುಗಿ ಮನದಿ
ಸಾವಧಾನದಿಂದ ಬ್ರಹ್ಮ
ಭಾವ ನೆಲದಿ ಮನದಿ ಭಿನ್ನ
ಭಾವ ಬಯಲು ಆಗುವನ್ನ | ಆಗದಾಗದಾಗದೂ ||1||
ತತ್ವದೊಳಗೆ ತತ್ವೆನಿಸುತಾ ಬೆಳಗುವಂಥ
ಅಸ್ತಿಭಾತಿ ಪ್ರಿಯವನರಿಯುತ
ಮಿಥ್ಯನಾಮ ರೂಪು ಅಡಗಿ
ಸತ್ಯ ಸಹಜ ಶಾಂತನಾಗಿ
ಚಿತ್ತ ಬ್ರಹ್ಮದಲ್ಲಿ ಮುಳುಗಿ
ನಿತ್ಯ ತೃಪ್ತನಾಗುವನ್ನ | ಆಗದಾಗದಾಗದೂ ||2||
ಪರಮಶ್ರೀ ಗುರು ರಂಗಲಿಂಗನ ಕರುಣದಿಂದ
ದೊರೆತ ವಸ್ತು ನೆನೆಯುತನುದಿನ
ಮರದು ಜಗದ ಭ್ರಾಂತಿಯನ್ನು
ಬೆರತು ಜ್ಞಾನಶಕ್ತಿಯನ್ನು
ಹರಿದು ಭವದ ಭಾಧೆಯನ್ನು
ನಿರುತಪೂರ್ಣನಾಗುವನ್ನ | ಆಗದಾಗದಾಗದೂ ||3||

ಜೀವ ಈಶರಿಗೈಕ್ಯ
ಜೀವ ಈಶರಿಗೈಕ್ಯದನುಭವದ ವಾಕ್ಯ |
ತಾ ವಿವೇಕದೊಳರಿತುಕೊಂಡಾತ ಮುಕ್ತಾ ||ಪ||
ನಿರುತ ವ್ಯಷ್ಟಿ ಸಮಷ್ಟ್ಯೋಪಾಧಿಯೆನಿಸಿರುವ |
ವರಜೀವ ಈಶ್ವರರ ಜನನಿಯೆನಿಸಿರುವ |
ದುರುಳ ಮಾಯಾವಿದ್ಯತ್ಯಜಿಸಲಾತುಮನು |
ನಿರುಪಮದ್ವಯ ಪೂರ್ಣನಾಗಿ ರಾಜಿಪನೂ || ಜೀವ ||1||
ಸ್ವರ್ಣ ಮೃದ್ಘಟ ಯುಗದಿ ತುಂಬಿರುವ ಬಯಲು |
ಸ್ವರ್ಣ ಮೃದ್ಘಟಗಳಿಗೆ ಅಂಟದಿಹವೋಲು |
ಪೂರ್ಣಬ್ರಹ್ಮನು ಅಂಡ ಬ್ರಹ್ಮಾಂಡದೊಳಗೆ |
ನಿರ್ಣಯದಿ ತುಂಬಿಹನು ನಿಜ ಬೋಧೆಯೊಳಗೆ || ಜೀವ ||2||
ಧವಳಗಂಗೆಯು ಕೊಳಕು ನೀರು ಯರಡರೊಳು |
ರವಿ ಬೆಳಗುವಂತಾತ್ಮ ಸರ್ವ ದೇಹದೊಳು |
ಅವಿರಳಾನಂದದಲಿ ತುಂಬಿ ತುಳುಕುವನು |
ತವೆ ಜ್ಞಾನನೇತ್ರಕ್ಕೆ ಗೋಚರೆನಿಸುವನು || ಜೀವ ||3||
ವಿನುತ ಕಟಕವು ಮಕುಟವೆನಿಸಿ ಬಹು ವಿಧದಿ |
ಜನಿಪ ನಾಮಗಳಳಿಯೆ ಕನಕವುಳಿವಂತೆ |
ಗುಣಕಲ್ಪಿತದ ಜೀವ ಈಶ್ವರರನಾಮಾ |
ಅಣಗಲೆಂದಿಗು ತಾನೆ ಯೆನಿಪಾತ್ಮಾರಾಮ || ಜೀವ ||4||
ಮನೆಯ ಬೆಳಗುವ ದೀಪ ಕತ್ತಲಳಿಯುತ |
ಬಿನುಗು ವಿಷಯಗಳೊಂದು ತಲೆದೋರದಂತೆ |
ತನುಮೋಹವಭಿಮಾನಶಿದು ನಿರ್ಮಲದಿ |
ಮನವಿರಲು ಗುರುರಂಗನೆನಿಸುವನು ಜಗದಿ || ಜೀವ ||5||

ಬ್ರಹ್ಮ ತಾನೆಂದರಿಯಲಾಗೀ
ಬ್ರಹ್ಮ ತಾನೆಂದರಿಯಲಾಗೀ |
ಹೆಮ್ಮೆ ಜೀವತ್ವಡಗೂವದೂ |
ಒಮ್ಮೆ ಸೂರ್ಯನು ದಿಸೆ ಕತ್ತಲಡಗುವಂದದಿ ||ಪ||
ಎಂದೀಗಿಲ್ಲದ ಪಗ್ಗದಿ ಸರ್ಪ|
ಎಂದೀಗಿಲ್ಲದ ವಂದ್ಯಾಪುತ್ರ
ಎಂದೀಗಿಲ್ಲದ ಮೂಲದ ಕೋಡು ತೋರಿದಂದದಿ |
ಎಂದೀಗಿಲ್ಲದ ಮಾಯೆಯಿಂದ |
ಎಂದೀಗಿಲ್ಲದ ಜೀವಭ್ರಾಂತಿ |
ಬಂದು ಮುಸುಕಿತಾತ್ಮನಲ್ಲಿ ಬಹಳ ಚೋದ್ಯದಿ || ಬ್ರಹ್ಮ ||1||
ಭರದಿ ಶುಕ್ತಿಯಲು ಕಾಣು |
ತ್ತಿರುವ ಬೆಳ್ಳಿಯಲ್ಲಿ ಗೆಜ್ಜೆ |
ಸರಪಣಿಗಳು ಆಗುವದು ಸತ್ಯವಾದಲ್ಲಿ |
ನಿರುಪಮದ್ವಯ ಬೊಮ್ಮದಲ್ಲಿ |
ಸ್ಫುರಿಪ ಮಾಯಾ ಕಲ್ಪಿತೆನಿಸಿ |
ಮೆರೆವ ಜೀವತನುವು ಸತ್ಯವೆನ್ನಬಹುದೈಸೆ || ಬ್ರಹ್ಮ ||2||
ಜಗದಿ ಮೋಟ ಮರದಿ ಚೋರ |
ಗಗನದೊಳಗೆ ಅರವಿಂದಾವು |
ಬಗೆದು ತೋರಿಯಡಗುತಿರಲು
ಅಗರಾಣದ ಜೀವ ಗುಣವು |
ಒಗೆದು ತೋರಿಯಡಗುತ್ತಿರಲು |
ನಿಗಮ ಭೇದ್ಯನಿಂಗೆ ಅದರ ಸಂಗವಿಲ್ಲವೈ || ಬ್ರಹ್ಮ ||3||
ತಾನೆ ತನ್ನ ಮರೆತು ಎಣಿಸಿ |
ತಾನಿಲ್ಲೆಂದು ಬಳಲುತ್ತಿರಲು |
ನೀನೆ ದಶಮನೆಂದು ಓರ್ವನು ಮರೆತರಿತಂತೆ |
ನೀನು ಕಲ್ಪಿತ ಜೀವನಲ್ಲ |
ನೀನೆ ಪೂರ್ಣಬ್ರಹ್ನನೆನುತ |
ಜ್ಞಾನಿವಾಕ್ಯದಿಂದಲರಿಯೆ ಭ್ರಾಂತಿಲೈಸುಗು || ಬ್ರಹ್ಮ ||4||
ಉರಿವ ಜ್ಯೋತಿಯಿಂದ ಜ್ಯೋತಿ |
ಮೆರೆವ ಸೂರ್ಯನಿಂದ ಸೂರ್ಯ |
ಅರಿಯುವಂತೆ ತನ್ನ ತಾನೇ ಅರಿವ ಜ್ಞಾನಿಯು |
ನಿರುಪಮದ್ವಯ ಬ್ರಹ್ಮನಾಗಿ |
ನಿರುತಾಖಂಡೈಕರ ಸಮಯನಾಗಿ |
ಪರಮ ಶ್ರೀ ಗುರು ರಂಗನೆನಿಸಿ ಚರಿಸುತಿಪ್ಪನು || ಬ್ರಹ್ಮ ||5||

ತನುವೂ ಇಂದ್ರಿಯಂಗಳೊಂದು
ತನುವೂ ಇಂದ್ರಿಯಂಗಳೊಂದು |
ಅನುಪಮಾತ್ಮನಲ್ಲೆಂಬುದನು
ವಿನುತ | ಸೂಕ್ಷ್ಮ ಲಕ್ಷಣದಿಂದ ಅರಿಯಬೇಕೈಸೆ ||ಪ||
ಹಿರಿಯ ಅನ್ನಮಯದ ಕೋಶ |
ಕಿರಿಯ ಪ್ರಾಣಮಯದ ಕೋಶ |
ಚರಿಪ ಮನ ವಿಜ್ಞಾನಮಯವು ಎಂಬ ಕೋಶವು |
ಉರುತರಾನಂದವು ಎನಿಸಿ |
ಸ್ಫುರಿಸುವೈದು ಕೋಶಂಗಳಿಗೆ |
ನಿರುತ ವ್ಯತರಿಕ್ತೆನಿಸಿ ಪೊಳೆಯುತ್ತಿರುವನಾತ್ಮನು || ತನು ||1||
ಘಟವು ನೋಡ್ವ ಪುರುಷ ತಾನೆ |
ಘಟವು ಅಲ್ಲದೆ ಬೇರಿರುವಂತೆ |
ಕುಟಿಲಮಾಯಾ ಕೃತಕ ನಾಮರೂಪು ಉಳ್ಳಂಥ |
ಘಟವ ನೋಡುತ್ತಿರುವ ಆತ್ಮ |
ಘಟವೆಂದಿಗೂ ಅಲ್ಲವೆನಿಸಿ |
ಘಟಕೆ ಸಾಕ್ಷಿಯಾಗಿ ನಿತ್ಯ ಬೆಳಗುತಿಪ್ಪನು || ತನು ||2||
ಎನ್ನ ಮನೆಯು ಪಶುವು ಪತ್ನಿ |
ಚಿನ್ನಾಬೆಳ್ಳಿಯು ಯನ್ನದೆಂಬ |
ಮಾನ್ನವತದ್ವಸ್ತು ಒಂದೂ ಅಲ್ಲದಿರುವಂತೆ |
ಎನ್ನ ತನುವೀದೆಂಬುವಾತ |
ಕುನ್ನಿ ದೇಹ ತಾನಲ್ಲೆನುತ |
ಮುನ್ನ ದೇಹೇಂದ್ರಿಯಕ್ಕೆ ಸಾಕ್ಷಿಯಾಗಿ ಇರುವನು || ತನು ||3||
ನೆರೆದಶೇಂದ್ರಿಯಂಗಳ ದ್ವಾರ |
ಅರಿತ ಶಬ್ದ ಸ್ಪರ್ಶ ರೂಪು |
ಭರದಿ ರಸವು ಗಂಧ ಮತ್ತೆ ನುಡಿಯು ದಾನವು |
ಚರುಪುದಳಿಪುದೊಮ್ಮೆ ಮಲವ |
ವರ ಆನಂದಾದಿಗಳನ್ನು
ಅರಿವ | ನಿತ್ಯಮನದ ಮುಖದಿ ಆತ್ಮಾರಾಮನು | ತನು ||4||
ರವಿಯ ಕಾಂತಿಯಿಂದ ಜಗದಿ |
ವಿವಿಧಕರ್ಮ ನಡೆಸುತ್ತಿರಲಾ |
ರವಿಯು ಸರ್ವಸಾಕ್ಷಿಯಾಗಿ ಬೆಳಗುತ್ತಿರುವಂತೆ |
ಜವದಿ ಇಂದ್ರಿಯ ಕರಣಂಗಳು |
ವಿವಿಧ ಕಾರ್ಯಗೈಯ್ಯುತ್ತಿರಲು |
ಭುವನ ಕೊಡೆಯ ಗುರುರಂಗನು ಸಾಕ್ಷಿಯೆನಿಸಿಹನು || ತನು ||5||

ತೋರಿಯಡಗುವಂಥ ಜಳ್ಳು
ತೋರಿಯಡಗುವಂಥ ಜಳ್ಳು |
ತೂರಿ ಘಟ್ಟಿಯಾಗಿ ಉಳಿದ |
ಸಾರ ಬ್ರಹ್ಮವೆ ತಾನೆಂದರಿಯುವಾತ ಜ್ಞಾನಿಯು ||ಪ||
ಮೆರೆವ ದೇಶೇಂದ್ರಿಯಂಗಳ ಸ್ಫುರಿಪ ವಿಷಯಂಗಳು ದೃಶ್ಯ |
ಪರಿಪರ್ಣ ನಂದಾತ್ಮದೃಕ್ಕು ಎನಿಸಿ |
ಮರೆವನು ಶರೀರ ತ್ರಯಾತ್ರಿ ಗುಣಾದಿಗಳು |
ಅರಿಯೆ ಜೀವತ್ರಯವು ದೃಶ್ಯ |
ನಿರುತಾಖಂಡ ಬ್ರಹ್ಮದೃಕ್ಕೆನ್ನಿಸಿ ಮೆರೆವನು | ತೋರಿ ||1||
ಶರೀರ ದೃಶ್ಯ ನಯನೇಂದ್ರಿಯಕೆ |
ಸ್ಫುರಿಪ ನೇತ್ರವು ದೃಶ್ಯ ಮನಕೆ |
ಚರಿಪ ಮನವು ದೃಶ್ಯ ನಿಶ್ಚಲವಾದ ಬುದ್ಧಿಗೆ |
ಅರಿವಾ ಬುದ್ಧಿಯು ದೃಶ್ಯವಾತ್ಮ |
ನಿರತೃಕ್ಕು ಎನಿಸಿ ಪೊಳೆವ |
ನಿರುಪಮದ್ವಯ ಬ್ರಹ್ಮನಲ್ಲದೆ ಬೇರೆದೃಕ್ಕಿಲ್ಲ || ತೋರಿ ||2||
ಸ್ಪುರಿಪ ಕಾರಣಗಳಂತರ ದೃಶ್ಯ |
ವರಭೂತಂಗಳು ಬಾಹ್ಯಾ ದೃಶ್ಯ |
ಎರಡು ವಿಧದಿ ದೃಶ್ಯವೆನಿಸುವೀ ಪ್ರಪಂಚವ |
ನಿರುತ ಸಾಕ್ಷಿಯಾಗಿ ನೋಡುತ್ತಿರುವ |
ಸಂವಿನ್ಮಾತ್ರನಾದ ಪರಮ |
ಶ್ರೀಗುರು ರಂಗ ಸರ್ವಕ್ಕೆ ದೃಕ್ಕಾಗಿರುವನು || ತೋರಿ ||3||

ಪರಮ ಬ್ರಹ್ಮಾನಂದಭರಿತದಿ
ಪರಮ ಬ್ರಹ್ಮಾನಂದಭರಿತದಿ |
ಧರೆಯೊಳಿಹ ಯೋಗೀಶ್ವರಂ |
ಮೆರೆವ ಸೂರ್ಯನ ಪರಿ ವಿರಾಜಿಸಿ |
ನಿರುತ ಸಾಕ್ಷಿಕನೆನಿಸುವಂ ||ಪ||
ಪರಮಂಗಳ ಶಾಂತಿ ಸ್ನಾನವು |
ವಿರತಿಭಸ್ಮವ ಧರಿಸುವಂ |
ವರ ಪತಿವ್ರತೆ ಭಿಕ್ಷೆ ಕೊಳ್ಳುತ |
ಕರುಣಕರ ಪಾತ್ರೆನಿಸುವಂ || ಪರ ||
ನಿರುತ ತತ್ವವು ಎಂಬ ದೇಶದಿ |
ಚರಿಸುತಾತನ ಪೂರ್ವದ |
ವರಕುಲಗಳಿಪ್ಪತ್ತುವೊಂದನು |
ಭರದಿ ಪಾವನಗೈಯುವಂ || ಪರ ||
ಭಾವಿಸಲಿಕಿಂತಿರುವ ಯೋಗಿಯು |
ಯಾವ ರೋಗವು ದುಃಖದಿಂ |
ಯಾವ ವಿಧದಿಂ ಬಿಡಲು ಘಟವನು |
ವೋವಿ ತಾ ಬಯಲಾಗುವಂ || ಪರ ||
ಕ್ಷೀರ ಕ್ಷೀರವ ಘೃತವು ಘೃತವಂ |
ಸೇರುವಂದದಿ ಯತಿವರಂ |
ಪ್ರಾರಬುಧ ಉಣ್ಣುತಲಿ |
ಅಂತ್ಯಕೆ ಸೇರುವನು ಕೈವಲ್ಯವಂ || ಪರ ||
ಆತಗಿಲ್ಲವು ಶ್ರಾದ್ಧಕರ್ಮ |
ಗಳಾತಗಿಲ್ಲವು ದಹನವು |
ಆತ ಗುರು ಮಹಲಿಂಗನೆನ್ನಿಸಿ |
ಖ್ಯಾತಿ ಪೂಜೆಯ ಗೊಂಬುವಂ || ಪರ ||

ಶಿವಜೀವರೈಕ್ಯದನುವರಿತ ಸಂಮ್ಯಜ್ಞಾನಿ
ಶಿವಜೀವರೈಕ್ಯದನುವರಿತ ಸಂಮ್ಯಜ್ಞಾನಿ |
ವಿವಿಧ ಮಾಯಾ ಭ್ರಮಣೆಗೊಳಗಾಗದಿಹನು ||ಪ||
ಸವಿಪಾಲು ಧದಿ ತಕ್ರ ನವನೀತವಾಗಿರಲು |
ನವನೀತವಾ ತಕ್ರ ಬೆರೆಯದಂದದಲಿ |
ಅವಿರಳಾತ್ಮ ಸಮಾಧಿಯಲ್ಲಿಪ್ಪ ಶಿವಯೋಗಿ |
ವಿವಿಧ ಸಂಸ್ಕೃತಿ ಬೆರೆಯದಂತಿಹನು || ಶಿವ ||1||
ವರ ಇಂದ್ರ ಜಾಲದವ | ಪರಿಪರಿ ಚಿತ್ರಗಳ
ವಿರಚಿಸುವ | ಪುಸಿಯೆಂದು ಅರಿತಿರುವ ತೆರದಿ |
ಹಿರಿಯ ಮಾಯಾಕೃತ ಜಗವಿಂದ್ರಜಾಲವ ಪರಿಯ |
ನಿರುತ ಪುಸಿಯೆಂದರಿತು ತಾ ಸಾಕ್ಷಿಯಾಗಿಹನು || ಶಿವ ||2||
ಧರೆಯೊಳಿಂತಿಹ ಮುಕ್ತ ಮರಳಿ ಪುಟ್ವುವೆನೆಂದು |
ಅರಿಸಿ ತಪವಂಗೈಯ್ಯೆ ಜನಿಸೆ ಜ್ಞಾನಾಗ್ನಿಯಿಂ |
ದುರಿದ ಚಣಕದಪರಿಯ ಸುಟ್ಟಿರುವ ತನುಧರಿಸಿ |
ಗುರು ರಂಗನಾಗಿರುತ ಪ್ರಾರಬುಧ ಕಳೆಯುವನು || ಶಿವ ||3||

ಸಂಸಾರದೊಳು ಮುಕ್ತಿ ಸಿದ್ಧ
ಸಂಸಾರದೊಳು ಮುಕ್ತಿ ಸಿದ್ಧ |
ನಿತ್ಯ ಸಂಸಾರ ಯೋಗಿಯು ಲೋಕ ಪ್ರಸಿದ್ದಾ || ಸಂಸಾರದೊಳು ||ಪ||
ಜಲದೊಳಗುದಿಸಿ ರಾಜಿಸುತಿಪ್ಪ ಕಮಲವು |
ಜಲವಿನಿತಾದರು ಅಂಟದಿರುವಂತೆ |
ಮಲಿನ ಸಂಸಾರದಿ ಮುಳುಗಿ ತಾನಿದ್ದರು |
ಸಲೆಮಾಯ ವಶವಾಗದಾತ್ಮ್ಮಾನುಭವಿಗೆ || ಸಂಸಾರ | |1||
ತೊರೆದು ಮೋಹವುಯೆಂಬ ಮನೆ ಕ್ಷೇತ್ರವನ್ನು |
ಹರಿದು ಮಮತೆ ಎಂಬ ಸತಿ ಸಂಗವನ್ನು |
ಮರೆದು ಹಂಕಾರ ಎಂಬುವ ಮಗನನ್ನು |
ವರಶಾಂತಿ ಎಂಬ ದೇಶದೊಳಿಪ್ಪಗೆ || ಸಂಸಾರ ||2||
ಇರಿಸಿ ತನ್ನಯ ಚಿತ್ತ ಪರಮ ಪುರುಷನೋಳು |
ತ್ವರಿತದಿ ತನ್ನ ಗೃಹಕೃತ್ಯವ ನಡಿಸುವ |
ಉರು ವ್ಯಭಿಚಾರಿಣಿಯ ಪರಿಯಲಿ ಚಿತ್ತವ |
ನಿರುತಾತ್ಮನೊಳಗಿಸಿರುವ ಸತ್ಪುರುಷಂಗೆ || ಸಂಸಾರ ||3||
ಹವಿಯಂತೆ ಭಕ್ಷಿಪ ವಿಷಯಂಗಳೆಲ್ಲವು |
ರವಿಯಂತೆ ಸರ್ವಕ್ಕೆ ಸಾಕ್ಷಿಯಾಗಿರುವ |
ತವೆ ಪುಣ್ಯಪಾಪಂಗಳುಂಟಾಗದೆ ಯಿರುವ |
ಭುವಿಯೊಳಗಿದ್ದು ಇಲ್ಲದ ಮಹಾತ್ಮನಿಗೆ | ಸಂಸಾರ ||4||
ಕುಲಗೊಬ್ಬ ಭಕ್ತ ಕೋಟಿಗೆ ಒಬ್ಬ ಶರಣನು |
ಇಳೆಯೊಳು ಪಾವನನಾಗಿರುತಿಹನು |
ಸಲೆ ಗುರು ಮಹಲಿಂಗನ ಕಾರುಣ್ಯದಿಂದ |
ಮಲಹರನಡಿದಾವರೆಯ ಬಿಡದಿಹನು || ಸಂಸಾರ ||5||