Categories
Tatvapadagalu ಹಾಗಲವಾಡಿ ಮುದ್ವೀರಸ್ವಾಮಿ ಮತ್ತು ಇತರರ ತತ್ವಪದಗಳು

ಸೋಮೆಕಟ್ಟೆ ಚೆನ್ನವೀರಸ್ವಾಮಿ ತತ್ವಪದಗಳ ಅಕಾರಾದಿ

1. ಅಂಗಯ್ಯ ಲಿಂಗ ನೀನೋ
2. ಅಂದೆನೆ ಅನ್ನಲಾಗದು
3. ಅಂಬರದೊಳಗೊಂದು
4. ಅರಿಯದ ಜ್ಞಾನಿಗಳೊಡ
5. ಆಗದಾಗದು ನಿಮ್ಮ ಕರುಣ
6. ಆರಿಗೆಯುವಾರಿಲ್ಲ
7. ಇನಿತೇಕೆ ಕಡುಕೋಪ
8. ಎಂತು ಮಾಡಲಿ ಮೊಗ
9. ಎಂತೆನ್ನ ನೋಡಿಪೊರೆ
10. ಎಂದಿಪ್ಪೆನೋ ಶಿವಶರಣ
11. ಎನಗೆ ನೀತರಬಹುದು
12. ಎನಗೇಕೆ ಆದ್ಯರೋದಿದ
13. ಎಲ್ಲಿಬಾಲೆಎಲ್ಲಲಾಲೆ
14. ಎಲ್ಲಿಯದೋ ಶಿವಭಕ್ತಿ
15. ಎಲೆಮನವೆ ಮರುಗದಿರು
16. ಏಣಲೋಚನ ನೀತೋರೆ
17. ಏತಕೆನ್ನೊಡನೆ ಕೋಪ
18. ಒಲ್ಲದೋಚಿತ್ತ ಒಲ್ಲದೋ
19. ಕರುಣಿ ಕರುಣಿಸಯ್ಯಾ
20. ಕಾವ ಎನ್ನೊಳು ಗರ್ವಬೇಡ
21. ಕೂಗುತಿದೆ ಕುಟಿಲಹೆಚ್ಚಿ
22. ಕೇಳಿರೊ ಸಕಲ ಲೋಕಂಗಳ
23. ಕೊಡುಬೆಗವೆಲೆದೇವ
24. ಕೋಗಿಲೆ ಕಿನ್ನರೇಶಸಖ
25. ಗುರುವೆ ಇಂದಿರಾಧವನಕ್ಷಿ
26. ತನೆ ಶಿವನೆಲಾತನಗೆ
27. ಧರೆಯೊಳಗಿನ್ನು ಪುಟ್ಟಿಸ
28. ನಂಬಿದೆ ನಾ ನಿನ್ನದಯ
29. ನಂಬಿದೆ ನಾನಿನ್ನ ಸಲಹೋ
30. ನಗಗಮನೆ ತೋರೆ ನಿನ್ನಂಗ
31. ನುತಿಸಲಳವೆ ನಾರಿ
32. ನೊಂದೆ ಭವದಿಬಂದು
33. ಪಟುವಾಗುಮನವೆ
34. ಪ್ರಣಮಾಕ್ಷರಂಗಳಾರ
35. ಪಾಲಿಪುದೆನಗೆ ಪಾವಕ
36. ಪಾಲಿಸು ಪದುಳವೆರಸಿ
37. ಪುಟ್ಟಿಸಿದೇಕೆ ಶಂಕರನೆ
38. ಪ್ರೇತಮನವೆ ಪೆರೆದಲೆ
39. ಪೊರ್ದುವದೆ ಕಾಲಕಮರ
40. ಬಂದವನಿದೆ ಕೋಚಾಣೆ
41. ಬದುಕಿದೆನಯ್ಯ ಬದುಕಿದೆ
42. ಬರಿದೆ ಮುನಿಯಸಲ್ಲ
43. ಬರಿದೇಕೆ ಗಳಹುವರೊ
44. ಬಲಿಯನಿಡುವರೆ ಬಾಹಿರದ
45. ಬಲ್ಲಜಾಣರು ಹೇಳಿರೆ
46. ಬಲ್ಲೆನೆಂಬು ಶರಣರಿಂಗಿ
47. ಬಾರೆನ್ನ ಹೃದಯ ಮಂದಿರಕೆ
48. ಬೇಡ ಬೇಡೆಲೆ ಮನವೆ
49. ಭೃಂಗಕುಂತಳೆಯರಾರತಿ
50. ಮಾನಿನಿಯವಗೇತಕೊಲಿದೆ
51. ಮನಿನಿರನ್ನೆ ಬಹುಜ್ಞಾನ
52. ಮುಂದುಗಾಣದೆಈಮನ
53. ಮುಂದೆ ನಾ ಹೋಗುತಲಿ
54. ಮೆಚ್ಚುವರೆ ಅವರನಚ್ಚ
55. ಲಿಂಗಾಂಗ ಸಂಗವೆಲ್ಲ
56. ವಾರಿಜಗಂಧಿ ಕೇಳೆಕನಸ
57. ವಾರಿಜಗಂಧಿನಿ ಬೇಗವರಿಸಿ
58. ಶರಣ ಚರಿತ್ರಕೆ ಸರಿಮಿಗಿಲು
59. ಶರಣನಂಗವೆ ಲಿಂಗಕ್ಷೇತ್ರ
60. ಶರಣು ಶರಣಯ್ಯ
61. ಶರಿರವಿದ್ದೇನು ಫಲ
62. ಶಿವಯೋಗಿ ಶಿವಯೋಗಿ
63. ಸದಮಲ ಶರಣನ
64. ಸರಿಯುಂಟೆ ನಿಮಗೆ
65. ಸಹಜವಹುದೀಮಾತು
66. ಸಾರಿಹೇಳಿದೆ ಸ್ಥಿರವಲ್ಲ
67. ಸಾರಿಹೇಳಿದೆ ಮನವೆ
68. ಸುಖವಾಯಿತೆನಗೆ
69. ಸುಮ್ಮನೆ ಬಿಡನೆಮರಾಜ
70. ಹಮ್ಮುಬಿಡೆಲೋಮನಜ
Categories
Tatvapadagalu ಹಾಗಲವಾಡಿ ಮುದ್ವೀರಸ್ವಾಮಿ ಮತ್ತು ಇತರರ ತತ್ವಪದಗಳು

ಕೆಸ್ತೂರದೇವರ ತತ್ವಪದಗಳ ಅಕಾರಾದಿ

1. ಅನ್ಯವಿನ್ನಲ್ಲ
2. ಅರಿಗಳಾರು
3. ಅರಿದರಿದು ಭಕ್ತಿ
4. ಆಗದಾಗದು ಅಲಗಿನ ಮೊನೆ
5. ಆಸೆಯ ಬಿಡಿಸಯ್ಯ
6. ಇರ್ದು ಫಲವೇನು?
7. ಇರುವರಾಶ್ರಯವೆನಗುಂಟು
8. ಉತ್ತಮಾಧಮರ ನಡೆ
9. ಎಂತಿರ್ದನೆಂತೆಂಬುದ
10. ಎಚ್ಚತ್ತಿರೆಚ್ಚತ್ತಿರು
11. ಎಚ್ಚರಗುಂದದಿರು
12. ಎಚ್ಚರಿಕೆಗುಂದದಿರು
13. ಏವೆನಯ್ಯ ಕಾಯಜೀವಬಾವದಿ
14. ಒಂದೇ ದಿನ ಸಾಲದೆ
15. ಕಂಡೆನಚ್ಚರಿಯ !
16. ಕರುಬದಿರು ಬಾಳುವರ ನೋಡಿ
17. ಕೆಡದಿರು ಭ್ರಮಿಸಿ ಪರಸತಿಯರ
18. ಕೆಟ್ಟರು ಇಷ್ಟಲಿಂಗವ ಪೂಜಿಸದೆ
19. ಕೇಳಿರೊ ಸಚ್ಚರಿತವನು
20. ಕೊಡುಕೊಡುದೇವ
21. ಕ್ಷಣಿಕರ ಗುಣ
22. ಗರ್ವವೇತಕೋ ಬರಿದೆ
23. ಗುರುಪಾದವಿಡಿದು
24. ಜಯಿಸುವದರಿದರಿದು
25. ತಥ್ಯವ ನುಡಿ
26. ತನುಮನವ್ಯಾಪ್ತಿ
27. ತನ್ನ ಗುಣ
28. ತಾಮಸಗಳಿಲ್ಲ ಭಕ್ತರ್ಗೆ
29. ತ್ರಿವಿದಕೆ ತ್ರಿವಿದವ ಸವೆಸುವ
30. ದೂಷಣೆ ಬೇಡ
31. ದೃಡಭಕ್ತರ್ಗಿದು ಬೋದೆ
32. ದೃಷ್ಟವಿದ ನೋಡಿಕೊಳ್ಳಿ
33. ನಂಬು ನಂಬು ನೀ ನಂಬು
34. ನಂಬುಗೆಹೀನರ ಡಂಭಿನ ಭಕ್ತಿ
35. ನರಜನ್ಮ ದೊರಕಿದಾಗಳೆ
36. ನಡೆನುಡಿ ನಿಮ ನಮಗೊಂದೆ
37. ನಡೆನುಡಿ ಶುದ್ಧವೆ
38. ನಿನ್ನವರು ನನ್ನವರು
39. ನಿನಗಿನ್ನಂತಕ ಭಯವಿಲ್ಲ
40. ನುಡಿಯದಿರು
41. ನುಡಿಯದಿಹುದೊಳ್ಳಿತು
42. ನೆನವ ಭಕ್ತರ ಹೃದಯದೊಳಗೆ
43. ನೋಡಿ ಕಂಡಿರು
44. ನೋಡಿದಡೊಂದು ಪಾತಕ
45. ನೋಡುತಿಹುದತಿ ಲೇಸು
46. ನೋಯಲೇತಕೆ ?
47. ಪರಬ್ರಹ್ಮವೆ ಸಾಕಾರ ಶರಣ
48. ಪರಮಾರ್ಥದೊಳು ಪರಿಣಾಮಿ
49. ಪೊರೆಯನೆ ಗುರುಸಿದ್ಧಲಿಂಗ
50. ಫಲವೇನು ಛಲವೇನು
51. ಬದುಕುವದರಿದರಿದು
52. ಬಯಸಿದಡೆ ಬಯಕೆ ಘನ
53. ಬರಿದೆ ಸಂಶಯವೇತಕೆ
54. ಬರೆದೋದಿ ಪಠಿಸಿ
55. ಬಲ್ಲ ಸತ್ಪುರುಷರು
56. ಬಲ್ಲವ ತಾನಾದಡೆ
57. ಬಲ್ಲವರೆ ಸುಕೃತಿಗಳು
58. ಬೆಳಗಬಾರಮ್ಮ ಸುಂದರಿ
59. ಬೇಡ ಕೆಡಬೇಡ
60. ಭಕ್ತ ಜಂಗಮ
61. ಭಕ್ತಿ ವಿರಕ್ತಿಸ್ಥಲ
62. ಭಕ್ತಿ ವಿಶ್ವಾಸಕೋವಿದನೈಮೊಗ
63. ಮಂದಗಮನೆ ಮಾಡು ಮಾಡು ನೀ ಮಾಡು
64. ಮನವೆ ಸರಸವಾಡದಿರು
65. ಮಾಡಿರೋ ಮೃಡನ ಪೂಜೆಯ
66. ಮಾಯೆ ಬೇರಿಲ್ಲ
67. ಮೈಮರೆಯದಿರು
68. ಲಿಂಗಸುಖಸುಖಿ ಶರಣ
69. ಲೋಕನುಡಿಯೇಕೆ ಮನವೆ
70. ಶರಣಪದ್ಧತಿ
71. ಶರಣುಹೊಕ್ಕರ ರಕ್ಷಿಪ
72. ಶಿವನ ನೆನೆಯಿರೋ
73. ಶಿವಭಕ್ತರ್ಗೆ ಸಲ್ಲದು ನಿಂದೆ
74. ಸಂಗ ಬೇಡ ಸಂಗ ಬೇಡ
75. ಸಂಗವಲ್ಲದವರ ಸಂಗಭಂಗ
76. ಸಂಗವಲ್ಲದ ದುಸ್ಸಂಗ
77. ಸಂಗವಸಂಗದ ಬೇದ
78. ಸಂಗವಾಗದು ಶರಣಸಂಗವಲ್ಲದೆ
79. ಸತಿಸುತಯುತಾತ್ಮರಿಗೆ
80. ಸದರವೆ ವೀರಶೈವ
81. ಸದ್ಗುರು ಪೇಳಿದ ಮಾರ್ಗ
82. ಸರಸಿಜಮುಖಿಯೆ
83. ಸರಿಸಮವೆಂಬರು ಬರಿದೆ
84. ಸಲ್ಲದು ಸಹಭೋಜನವೆಲ್ಲರಿಗೆ
85. ಸುಳ್ಳಲ್ಲ ಈ ಮಾತು
86. ಸೊಗಸದು ಮಿಗೆ ತಥ್ಯದ ನುಡಿ
87. ವಂದಿಸಿದಡುಬ್ಬಿ ನಿಂದಿಸಿದರೆಂದೆದೆಗೆಡುವ
88. ಹಾಡಿದಡೇನು ಕೇಳಿದಡೇನು ?
89. ಹುಸಿಕೊಲೆಕಳವು ಬೇರಿಲ್ಲ
90. ಹೇಳಬಾರದು ಹೇಳದಿರಬಾರದು !
Categories
Tatvapadagalu ಹಾಗಲವಾಡಿ ಮುದ್ವೀರಸ್ವಾಮಿ ಮತ್ತು ಇತರರ ತತ್ವಪದಗಳು

ಹಾಗಲವಾಡಿ ಮುದ್ವೀರಸ್ವಾಮಿ ತತ್ವಪದಗಳ ಅಕಾರಾದಿ

1. ಅಂಗಂಗಳಿಂಗಿತವರಿಯೆ
2. ಅಂಗದೊಳಗೆ ಲೀಯವಾಗು
3. ಅಂದವಾಗಿಹ ಬ್ರಹ್ಮಾನಂದದೊಳಗೆ
4. ಅಚ್ಚರಿಯವಾದುದೊಂದ
5. ಅರಿಯಬಾರದೊಂದು ಘನವ
6. ಅರ್ಪಿತತ್ರಯಗಳಿಂಗಿತವನೆಲ್ಲವನು
7. ಆಣವ ಮಾಯಾ ಕಾರ್ಮಿಕ
8. ಆತ್ಮರಾಮ ಆತ್ಮರಾಮ
9. ಆಧಾರತ್ರಯಗಳ ಭೇದವನರಿದು
10. ಆರಿಗಿದು ಸಾಧ್ಯವಹುದು
11. ಆರು ತಿಳಿವಡಸಾಧ್ಯವಹ
12. ಆಶ್ರಯಗಳ ಬಗೆಯರಿದೊಡೆ
13. ಈಶ್ವರಂ ಸಚ್ಚಿದಾನಂದ ಭಾಸ್ವರಂ
14. ಉಣ್ಣಲಾಗದು ಉಣ್ಣದಿರಲಾಗದು
15. ಉಸಿರಲೆನ್ನಳವಲ್ಲ ಶಶಿಮುಖಿಯಳೆ
16. ಎಂತಾ ಕನಸ ಕಂಡೆ ಕಾಂತೆ
17. ಎಂತು ಮರೆವನು ರಮಣಿ
18. ಎಂಥ ಪುಣ್ಯಪುರುಷನಮ್ಮ
19. ಏ ನಲ್ಲೆ ನೀನಿದೇನು ಸೊಲ್ಲೆ
20. ಏನ ಹೇಳಲಿ ತನ್ನ ತಾನೆ ಬೆಳಗುತಿದೆ
21. ಏನೆಂಬೆನೆನ್ನ ಸಿರಿಯ ಚಂದಮಾಮಾ
22. ಒಳಗೆ ಹೊರಗೆ ಬೆಳಗುತಿರ್ಪ
23. ಕಂಡೆನಾ ನಿಗಮ ನಿಗಮಾಳಿ
24. ಕಂಡೆನು ಕರಚೋದ್ಯವ
25. ಕನಸ ನಾ ಕಂಡೆನು ಕೌತುಕ
26. ಕರಿವರ್ಣಣದ ಬಿಳಿವಣ್ಣದ
27. ಕಾಣಿಸುತಿದೆ ನೋಡಮ್ಮ
28. ಕುಲಕ್ಯಾಕೆ ಹೋರುತಿಹರು
29. ಗುರುಕರುಣವನು ಪಡೆದು
30. ಜನನಬಾಧೆಯ ತೊರೆದು
31. ಜೀವನ ಪರಮರೈಕತೆಯನು
32. ಜೋಗಿ ಬಂಧನು ಕಾಣೀರೆ
33. ಜ್ಞಾನಮುದ್ರೆಯ ಮರ್ಮವರಿಯೆ
34. ಜ್ಞಾನೋಪದೇಶದನುವ
35. ತನ್ನ ನಿಜವ ನೆರೆಯರಿದು
36. ತಾರಕ ಜ್ಯೋತಿಯ ನೋಡಿ
37. ತಾಲೆಲೆಲೆ ತಾಲೆಲೆಲೆ
38. ತಿಳಿಯಲರಿದಮಮ ತನ್ನೊಳು
39. ತಿಳಿಯಲರಿಯದೆ ಮೋಕ್ಷಕೆಳಸಿ
40. ತ್ರಿವಿಧ ತೆರನಾದಂಗಲಿಂಗಸಂಗ
41. ದೂರವಲ್ಲವು ಕಾಣಾ ಕಲಧೌತ
42. ಧ್ಯಾನ ಧಾರಣ ಸಮಾಧಿಗಳ
43. ನಲ್ಲನಗಲೆ ನಾನು ಕೇಳೆ
44. ನಲ್ಲನನಗಲಿ ನಾನು ಕೇಳೆಲಗವ್ವಾ
45. ನಾದವನು ಬಿಂದುವನು ಕೇಳಿ
46. ನಿನ್ನ ನಿಜವನು ನೀ ತಿಳಿದು
47. ನುಡಿದಂತೆ ನಡೆವುದೇಕಿಲ್ಲ
48. ಪಂಚಾಕಾಶಗಳ ಪ್ರಪಂಚ
49. ಪೇಳಲಸದಳವೆ ಪೆಂಗಳರನ್ನೆ
50. ಬಂದು ಬೆಗದೊಳೆನ್ನನು ಪಲಿಪುದು
51. ಬರಿದೆ ಚಿಂತಿಸಬೇಡ ಭ್ರಷ್ಟ
52. ಬರಿದೇಕೆ ಬಳಲುವಿರಿ
53. ಬ್ಯಾರೆ ಬಹುವಿಧದ ಕೋಟಲೆಯೊಳಗೆ
54. ಬ್ರಹ್ಮ ಧ್ಯಾನವ ಮಾಡಿ ಬೇಗ
55. ಮರ್ತ್ತಲೋಕಕೆ ಬಂದು
56. ಮಾಡು ಶಿವಪೂಜೆಯ
57. ಮುದ್ರೆಮೂರನು ತಿಳಿದು
58. ಮೂರುತೆರದ ಪದಾರ್ಥಗಳನುವ
59. ಮೂರು ತೆರೆದ ನೋಟದಿಂದೆ
60. ಮೊಗಗಳನೆಲ್ಲವ ಬಲ್ಲ ಮಹಿಮರ
61. ಯಾಕ ಕಕುಲಾತಿ ಮಹಿಮರ
62. ಯೋಗಿಂiಯೆಂದೆನಿಸೆನ್ನನು
63. ಲಿಂಗಾಕಾದ ಬೆಂಬಳಿಯನು
64. ಶರಣು ಶರಣು ಗುರುದೇವನೆ
65. ಶರಣು ಶರಣು ಶರಣಯ್ಯ
66. ಶರಣು ಶರಣು ಶಾಂಕರಿ
67. ಶ್ರೀ ಗುರು ಪದಾಂಭೋಜವನು
68. ಸರಸಿಜಾನನೆ ಕೇಳೊಂದು
69. ಸುಮ್ಮನಪ್ಪುದೆ ನಿಜಮುಕ್ತಿ
70. ಸುಮ್ಮನೆ ದೊರೆವುದೆ ತನಗೆ ಮುಕುತಿ
71. ಸುವ್ವಿ ಸುವ್ವಿ ಸುವ್ವಾಲೆ
72. ಹಲವ ಚಿಂತಿಸಬೇಡ ತಾಳು
73. ಹಲವು ಮಾತುಗಳಿಂದಲೇನು
74. ಹಾರಿ ಹೋಯಿತು ಭ್ರಮರಿ
75. ಹ್ಯಾಂಗೆ ತಾರಕವನರಿಯದೆ ಮುಕ್ತಿ
76. ಹೊಲಬನರಿತು ಜಪಿಸು
77. ಹೋದೆಯ ಸುಖವಾಯಿತೆ

Categories
Tatvapadagalu ಹಾಗಲವಾಡಿ ಮುದ್ವೀರಸ್ವಾಮಿ ಮತ್ತು ಇತರರ ತತ್ವಪದಗಳು

ಸೋಮೆಕಟ್ಟೆ ಚೆನ್ನವೀರಸ್ವಾಮಿಗಳ ತತ್ವಪದಗಳು

ನಂಬಿದೆ ನಾ ನಿನ್ನದಯ
ನಂಬಿದೆ ನಾ ನಿನ್ನ ದಯದಿಂದ ಸಲಹೆನ್ನ
ಶಂಬರಾರಿಯ ಗರ್ವನಾಶ ಈಶಾ
ಶಂಭು ಸರ್ವೇಶ ಭಕ್ತರ ಹೃದಯಾಂಬುಜ ವಾಸ
ಶರಣಜನರೆಂಬವರ್ಗೆ ಲೇಸನೀವ ಮಾಹೇಶ ||ಪ||

ಕನಕಾದ್ರಿನೆಲೆವಾಸ ಇನಕೋಟಿ ಸಂಕಾಶ
ಧನಪತಿಸಖ ನಗಚಾಪ ಪಾಪ
ವನವೀತಿಹೋತ್ರ ತರಣಿಶಶಿಯನಲನೇತ್ರ
ಸಂಜ್ಞಾನಿಗಳ ಮನವನ ಚೈತ್ರ ನಿರ್ಮಲಗಾತ್ರ ||1||

ವಾಗೀಶ ನುತಿಪಾತ್ರ ಸುಜನ ಜನದಗೋತ್ರ
ಭೋಗಿಭೂಷಣ ಬಾಳನೇತ್ರನೆ ದಯ
ವಾಗೀಗ ಸೇರಿದೆ ಕೃಪಾಸಾಗರ
ಬೇಗ ರಕ್ಷಿಪುದೆನ್ನ ರಾಗವಿರಾಗ ಮಾಯಾವಿಯೋಗ ||2||

ಎಸೆವಷ್ಟ ಷಷ್ಟಿ ಲೋಕವ ಪೂರೆವಭವನೆ
ವಸುಧೆಯೊಳಗೆ ಪಟುವಾದ ಮಾಯಾ
ನಿಶಕೆ ದಿನೇಂದ್ರ ದುರಿತಜಲ ಬಿಸಜ ತಾರೇಂದ್ರ
ಮದ್ಗುರು ಚೆನ್ನಬಸವರಾಜೇಂದ್ರ ಮಹಾಮುನೀಂದ್ರ ||3||

ವಾರಿಜಗಂಧಿ ಕೇಳೆ ಕನಸಕಂಡೆ
ನೀರೆ ಪರಾಕಿಲ್ಲದೆ ||ಪ||
ಧಾರುಣಿಯೊಳಗಿರುವ ಮನುಜ ಶ

ರೀರಿಗಳರಿಯದಂತಾ |
ಊರಮಧ್ಯದೊಳೊಂದು ಕುಕ್ಕುಟ ಧ್ವನಿಯ ಮಾಡೆ
ಊರೊಡದುದ ಕಂಡೆನೆ ಸಖಿಯೇ ||1||

ಮಾರಿಯೊಬ್ಬಳು ದ್ವಿದಶ ಪಂಚ ಕು
ಮಾರರೆಲ್ಲರುಸಹಿತ
ದೂರ ಪೋಗುವಳಷ್ಟ ವಾರಣಗೀಳಿಟ್ಟು
ಭೋರನೆದ್ದೋಡುವವೆ ಸಖಿಯೆ ||2||

ಅರವತ್ತು ಆರು ಕೋಟಿ ರಕ್ಕಸರೆಲ್ಲ
ಹರಿದುಹೋಗವರಂಜುತ |
ಹರಿಯವಾಹನಕೇಳಿ ಹೊರಗಾಗಿ ಹೋಗುವ
ಆರಿಗಳಲ್ಲಿರದೇಳ್ವರೆ ಸಖಿಯ ||3||

ಜೀವನ ಮೃಗಸಹಿತ ಮಾವತಿಗ ಚಿತ್
ಪಾವಕನೊಳು ಬೀಳ್ವನೆ |
ಭಾವೆ ಕೇಳೇಳು ಮನ್ನೆಯರಿರುತಿರ್ದು
ಠಾವ ಬಿಟ್ಟೇಳುವರೆ ಸಖಿಯೆ ||4||

ಹರಿತಿಂಬವೈದು ಸುನಿಬಲ್ಲುಕನೊಂದು
ಉರಗ ಮಹಿಷವಿವು |
ಉರವಣಿಸದೆ ಉಪವಾಸದಿಂದಲಿ ಹೋಗಿ
ಮರಣವನೈದುವವೆ ಸಖಿಯೆ ||5||

ಆನೆಯ ಹೆಣ ಬೀಳಲು ವಾನರ ಕಂಡು
ತಾನೆತ್ತಿಕೊಂಡೊಯ್ವದೆ |
ಮಾನಿನಿ ಶರಧಿ ಬರತುಹೋಗಿ ಮುಂದಣ
ಕಾನನ ಸುಡೆ ಬೇವುದೆ ಸಖಿಯೆ ||6||

ಮೇರುವಿನಾಗ್ರದಲ್ಲಿ ಪ್ರಕಾಶದ
ಸೂರ್ಯನುದಯವಾಗಲು |
ವೀರಶ್ರೀಗುರು ಚೆನ್ನಬಸವಲಿಂಗವ ಕಂಡು
ನೀರೆ ನಾನೆಚ್ಚೆತ್ತೆನೆ ಸಖಿಯೆ ||7||

ಪೊರ್ದುವದೆ ಕಾಲಕಾಮರಭಯ
ಪೊರ್ದುವದೆ ಕಾಲಕಾಮರಭಯ ಶರಣಗೆ
ಊರ್ಧ್ವರೇತನ ಬಾಹ್ಯಾಂತರದಿ ತಾಳ್ದವನ ||ಪ||

ಪ್ರಜ್ವಲಿಪ ಜ್ಯೋತಿಯ ಮುಸುಕಬಲ್ಲುದೆ ನಿಸೆ
ವಜ್ರವನ್ನು ಕೊರೆವಸಿಪುತ್ರನುಂಟೇ |
ಧೂರ್ಜಟಿಯ ಕೆಣಕಿಬಾಳುವ ಭೂತಚರವುಂಟೆ
ನಿರ್ಜರರೊಡನೆ ಕಾದುವ ನರರುಂಟೆ ||1||

ದಿನನಾಥನೆಡೆಗೆ ಬರ್ಪುದೆ ತಿಮಿರದ ಮೊತ್ತ
ಅನಲಗಂಜಿಕೆಯುಂಟೆ ತೃಣಸ್ರೇಣಿಯ |
ಕನಸಿನೊಳುಂಟೆ ಕೇಸರಿಗೆ ಕರಿಯಭಯ
ಅನುಮಾಣ್ಯಗುಂಟೆ ಸಂಚಲವಚರದಾ ||2||

ಶರಧಿಗೆ ಅನಿಲನ ಭಯವುಂಟೆ ಲೋಕದಿ
ಗರುಡಗೆ ಉರಗನ ಭಯವದುಂಟೆ |
ಮರುತಗೆ ಮುಖವಾಗಿ ನಡೆವ ರೇಣುಗಳುಂಟೆ
ಸಿರಿವರನಿಗೆ ದರಿದ್ರದ ಭಯವುಂಟೆ ||3||

ಕೇಡಿಲ್ಲದವನಿಗೆ ಕೃತಾಂತನ ಭಯವುಂಟೆ
ರೂಢಿಯೊಳ್ ಚಲಿಸುವ ನರನಭೀತಿ |
ನೋಡಲಾಗಸದಿ ನಡವಗುಂಟೆ ಶಶಿ
ಚೂಡನ ಬಂದು ಪೋರ್ದುವದೆ ದುರ್ಮಾಯೆ ||4||

ಗುರು ಕರುಣದೊಳಿತ್ತ ವರಲಿಂಗವನು ನಿತ್ಯ
ಕರಸರಸಿಜದೊಳು ತಾಳ್ದು ಬಾಳ್ದು |
ಕರುಣಾಂಬುನಿಧಿ ಚೆನ್ನಬಸವಲಿಂಗೇಶನ
ಚಿರಕಾಲ ನೆನಹುಳ್ಳ ಪರಮವಿರತನ ||5||

ಸಹಜವಹುದೀಮಾತು
ಸಹಜವಹುದೀಮಾತು ಶಿವಭಕ್ತಿಯುಳ್ಳವರ
ಬಹಳಮುದ್ದಿನ ಕಂದನಹುದಣ್ಣ ನಾನು ||ಪ||

ಆವಲ್ಲಿ ಗುರುಲಿಂಗ ಜಂಗಮನ ಭಜಿಸಿ ಮ
ತ್ತಾವಲ್ಲಿ ತೀರ್ಥ ಪ್ರಸಾದವನು ಸವಿದು |
ಆವಲ್ಲಿ ಭಸಿತ ರುದ್ರಾಕ್ಷಿ ಮಣಿ ಮಂತ್ರವನು
ಭಾವದೊಳು ಧರಸಿಹರ ಮಗನ ಮಗನಾನಹುದು ||1||

ಎಲ್ಲಿ ಕ್ಷಮೆದಮೆ ಶಾಂತಿ ಎಲ್ಲಿ ಸದ್ಭಕ್ತಿ ಮ
ತ್ತೆಲ್ಲಿ ಸನ್ಮಾರ್ಗ ಸತ್ಪುರುಷರವರ
ಎಲ್ಲಿ ದೇವಾರ್ಚನೆಯ ಮಾಡುವರ ಮೆಲ್ಲಡಿಗೆ
ಸಲ್ಲಲಿತ ಪಾವುಗೆಯ ಪಿಡಿದಿರುವ ಬಂಟನಮಗನು ||2||

ತಂದೆಯೆ ಸದಾಶಿವನು ತಾಯೆ ಗಿರಿಜಾದೇವಿ
ಬಂಧುಬಳಗಗಳೆಲ್ಲ ಪ್ರಮಥರೆಮಗೆ
ತಂದಿಷ್ಟ ಲಿಂಗವನು ಕರದೊಳಿರಿದ ಕೃಪಾ
ನಂದ ಗುರುಚೆನ್ನಬಸವನ ಶಿಷ್ಯನಾನಹುದೂ ||3||

ಪ್ರಣಮಾಕ್ಷರಂಗಳಾರ ಜಪಿಸು
ಪ್ರಣಮಾಕ್ಷರಂಗಳಾರ ಜಪಿಸು ಸರ್ವವೂಸಿದ್ಧಿ
ಹೊಣೆಯಿದಕೆ ನಾ ಮನವೆ ನಂಬು ಎರಡಿಲ್ಲದೆ ||ಪ||

ಓಂ ಎಂಬ ಪ್ರಣಮದಿಂದೋಡುವದು ಭವತಿಮಿರ
ನಾ ಎಂಬ ಪ್ರಣಮದಿಂ ರುಜೆಗಳಳಿಗು |
ಮಾ ಎಂಬ ಪ್ರಣಮದಿಂ ಮಾಯೆ ಕೆಲಸಾರುವದು
ಶಿ ಎಂಬ ಪ್ರಣಮದಿಂ ಕೆಡುಗು ಸಂಸೃತಿಯೂ ||1||

ವಾ ಎಂಬ ಪ್ರಣಮದಿಂದೊಸವಹುದು ನಿಜಭಕ್ತಿ
ಯಾ ಎಂಬ ಪ್ರಣಮದಿಂದೋಡುವುದಜ್ಞಾನ
ಕಾಯ ಗುಣ ಕಳಿದು ಮದಮತ್ತ ಕುಂಜರನೆಂದು
ಕೈಯೆತ್ತಿ ಸಾರುತಿವೆ ಶ್ರುತಿಸ್ಮೈತಿಗಳೆಲ್ಲಾ ||2||

ಇಂತೀ ಷಡಾಕ್ಷರವ ಸಂತಸದಿ ನೀ ಸ್ಮರಿಸು
ಅಂತಕನು ನಿನಗೆ ನಿಜಭಕ್ತನಹನು |
ಕಂತುಪಿತ ನಯನಪದ ಗುರು ಚೆನ್ನಬಸವೇಶ
ಸಂತತಂ ನಿನ್ನ ಕರ ಮನದೊಳಿಹನೂ ||3||

ನಂಬಿದೆ ನಾ ನಿನ್ನ ಸಲಹೋ
ನಂಬಿದೆ ನಾ ನಿನ್ನ ಸಲಹೋ ಸದ್ಗುಣರನ್ನ
ಶಂಬರಾರಿಯ ವೈರಿ ನತಜನ ಸತ್ಕಾರಿ ||ಪ||

ಹರಗಣೆಯೆಂದವಗೆ ಬಿದ್ದ ರಳನರ್ಪಿಸಿದವಗೆ
ಕೆರಹು ಕಾಲಿಂದಲೊದ್ದವಗೆ ಮರವೇರಿ ಹುಲಿಗಂಜಿ
ತರಗಿಟ್ಟವರಿಗೆಲ್ಲ ಹರಗಣ ಪದವಿತ್ತೆ ದೇವ
ಸ್ಮರ ಪುಷ್ಪದರಳಿಂದಲಿಟ್ಟಿವನ ಸುಟ್ಟು
ದರಿಸಿದೆ ಕರುಣಾಂಬುನಿಧಿಯೆ ನಿಮ್ಮುವನು ||1||

ಬಿಲ್ಲಿಂದಹೊಯ್ದ ಅರ್ಜುನಗೆ ಕರುಣವಿತ್ತೆ
ಕಲ್ಲೊಳಿಟ್ಟವಗೆ ನೀನೊಲಿದೆ
ನಲ್ಲೆ ಸತ್ಯಕ್ಕ ಹುಟ್ಟಿಲಿ ಹೆಟ್ಟಲವಳನು
ನಿಲ್ಲದೆ ನಿಮ್ಮೊಳಿಂಬಿಟ್ಟೆ
ಎಲ್ಲಾ ಸಭೆಯ ಮುಂದೆ ಕೊಂದ ಮೂರ್ಕೈಯ್ಯನ
ಮೆಲ್ಲಾನೆ ನಿಮ್ಮ ಮೆಲ್ಲಡಿಯೊಳಿಂಬಿಟ್ಟೆ ||2||

ಜಾಣ ನಂಬಿಗೆ ಹಡಪವ ಹೊತ್ತೆ ನಿಜವುಳ್ಳ
ಬಾಣನ ಬಾಗಿಲಕಾಯ್ದೆ
ಕ್ಷೋಣಿಪ ಕಲಿಗಣ ಬಾಳದಿಂ ಪೊಯ್ದಡೆ
ಮಾಣದೆ ನಿಜಪದವಿತ್ತೆ
ಏಣಾಂಕಧರನೆ ಪಿಟ್ಟವ್ವೆಯ ಬಿಟ್ಟಿಯ
ಜಾಣ ನೀ ಮಾಡಿ ಕೊಂಡೊಯ್ದೆ ಶ್ರೀಗಿರಿಗೆ ||3||

ಹಳ್ಳಯ್ಯ ಮಧುವಯ್ಯ ಚನ್ನಯ್ಯ ಕಕ್ಕಯ್ಯ
ನಲ್ಲಾಳು ಧೂಳಿದೇವಯ್ಯ
ಗೊಲ್ಲಾಳ ತೆಲುಗ ಜೊಮ್ಮಯ ಸ್ವಪಚಯ್ಯರಿವ
ರೆಲ್ಲರ್ಗೆ ಮುಕ್ತಿಯ ನಿತ್ತೆ
ಎಲ್ಲಾ ಲೋಕದೊಳುಳ್ಳ ಜೀವರಾಧಾರನೇ
ಬಲ್ಲ ಮಾಹೇಶ ಚಿತ್ಕೋಶ ಸರ್ವೇಶ ||4||

ಬಾಲರುಗಳೊಲಿದು ಸಲ್ಲೀಲೆಯಿಂದಾಡುತ
ಕೇಳೆಂಬರೆಲೆ ದೇವ ಏಳೇಳು ಜನ್ಮದೊಳು
ಬಾಳಲೋಚನನೆ ನಾ ನಿಮ್ಮ ಆಳಿನಾ
ಆಳು ಕೀಳಾಳು ಕಿಂಕರನಯ್ಯ
ನೀಲಕಂಧರ ಚೆನ್ನಬಸವ ಮಚ್ಚಿವಾ ||5||

ಕೊಡು ಬೇಗವೆಲೆದೇವ ದೃಢಭಕ್ತಿ
ಕೊಡು ಬೇಗವೆಲೆದೇವ ದೃಢಭಕ್ತಿ ಲಂಚವನು
ಕೊಡದೆ ಇರಲು ಕಡುನುಡಿವೆ ನಾ ನಿನ್ನ ||ಪ||

ಪೆತ್ತವರಿಲ್ಲದ ಪುತ್ರನೀನೆಂದೆಂಬೆ
ನೆತ್ತಿಯೊಳೊಬ್ಬಳ ಪೊತ್ತಿಹನೆಂಬೆ |
ನೆತ್ತರು ಸುರಿವ ಕುಂಜರ ಚರ್ಮಾಂಬರನೆಂಬೆ
ಭಕ್ತರಾಲಯದೊಳು ತಿರಿದುಂಬನೆಂಬೆ ||1||

ಉರಿಗಣ್ಣಿನವನೆಂಬೆ ಉರಗ ಭೂಷಣನೆಂಬೆ
ಸರಸಿಜೋದ್ಭವನ ಶಿರವ ಕೊಯ್ದನೆಂಬೆ |
ಸಿರಿವರನಣುಗನನುರುಹಿದನೆಂದೆಂಬೆ
ಗಿರಿನಂದನೆಯ ಕೂಡೆ ಬೆರೆದಿರ್ದನೆಂಬೆ ||2||

ಕೆಂಬಾವಿಭೋಗಗೆ ಮರಳಿ ಹೋದವನೆಂಬೆ
ನಂಬಿಯೆಂಬಗೆ ಹಡಪವ ಹೊತ್ತವನೆಂಬೆ |
ಕುಂಬಾರಗಿದಿರೊಳು ಕುಣಿದಾತನೆಂದೆಂಬೆ
ಅಂಬಲಿಯನು ಚನ್ನನೊಡನುಂಡನೆಂಬೆ ||3||

ಸಿಂಧುಬಲ್ಲಾಳನ ಶಿಶುವಾದನೆಂದೆಂಬೆ
ಚಂದಯ್ಯನಿಗೆ ನುಲಿಯನು ಹೊತ್ತನೆಂಬೆ |
ಕಂದನ ಮಾಂಸವ ಹೇಸದುಂಡವನೆಂಬೆ
ಹಿಂದೊಬ್ಬನರಮನೆಯೊಳು ಕಳ್ದನೆಂಬೆ ||4||

ವ್ಯಾಧನೊಬ್ಬನ ಕಯ್ಯಲೊದಿಸಿಕೊಂಡವನೆಂಬೆ
ಬೂದಿಮಯ್ಯವನೆಂಬೆ ಬಿಳಿದಂಗನೆಂಬೆ
ಕಾದಿಯರ್ಜುನನಿಗೆ ಬೆನ್ನಾದನೆಂದೆಂಬೆ
ಸಾಧಿಸಿ ತ್ರಿಪುರವನು ಸುಟ್ಟಾತನೆಂಬೆ ||5||

ಹುಟ್ಟಲಿ ಕಟವಾಯ ತಿವಿಸಿಕೊಂಡವನೆಂಬೆ
ಹೊಟ್ಟೆಹಿಟ್ಟಿಗೆ ಒಬ್ಬರಾಳಾದನೆಂದೆಂಬೆ |
ಬಟ್ಟ ಕುಚದಿನಿಂದು ಓ ಎಂದನೆಂದೆಂಬೆ
ನೆಟ್ಟನೆ ಸುಡುಗಾಡೊಳಿರ್ದಾತನೆಂಬೆ ||6||

ಎನ್ನ ಮನ್ನಿಸಿ ಭಕ್ತಿಯನ್ನಿತ್ತು ಸಲಹಲು
ನಿನ್ನ ಮೂದೇವರ ದೇವನೆಂದೆಂಬೆ |
ಚಿನ್ನದಗಿರಿಯೊಳು ನಿತ್ಯನಾಗಿಹನೆಂಬೆ
ಚೆನ್ನ ಬಸವನಿಂದಧಿಕರಿಲ್ಲವೆಂಬೆ ||7||

ನುತಿಸಲಳವೇ ನಾರಿ ನೂತನದ ವಯ್ಯಾರಿ
ನುತಿಸಲಳವೇ ನಾರಿ ನೂತನದ ವಯ್ಯಾರಿ
ಸಿತಕಂಠನರ್ಧಾಂಗಿ ಶಿವೆ ಸರ್ವಲಿಂಗಾಂಗಿ ||ಪ||

ಶಕ್ತಕುಲತರು ಚೈತ್ರೆ ಶತಪತ್ರದಳನೇತ್ರೆ
ಭಕ್ತಿರಘಲತವಿತ್ರೆ ಭಳಿರೆ ವಿಮಲಗಾತ್ರೆ |
ಮುಕ್ತಿಜನರುಗಳಿಂಬೆ ಮುಕುರದ ಪ್ರತಿಬಿಂಬೆ
ಯಿಕ್ತಿಬಾರದರಂಬೆ ವಿಶ್ವಜನ ಕುಟುಂಬೆ ||1||

ರಜತಗಿರಿ ನೆಲೆವಾಸೆ ರತಿಪತಿಯಂಗವಿನಾಶೆ
ಭುಜಗ ಪತ್ನಿಯರ ಭೂಷೆ ಭೂರಿದಯಚಿತ್ಕೋಶೆ |
ಭುಜಬಲ ಪ್ರತಾಪೆ ಬಹಳ ಪುಣ್ಯದರೂಪೆ
ಯಜಮಾನ ಶಿವಮೋಪೆ ಈಶನ ತದ್ರೂಪೆ ||2||

ಅರಿವಿನ ಕರುಣದ ಸೋನೆ ಆನತರ ಸುರಧೇನೆ
ಹರಪಟ್ಟದ ಮದ್ದಾನೆ ಅರುಣದಾನನೆ
ಆರಿವರ್ಗ ಸಂಹಾರಿ ಅರಿವುಳ್ಳ ಶರೀರಿ
ಗಿರಿಪತಿಯ ಕುಮಾರಿ ಗೆಲವುಳ್ಳರತಿಕಾರಿ ||3||

ಸಾಮಗಾನದಿ ಪ್ರೀತೆ ಸರ್ವಲೋಕದ ಮಾತೆ
ಸ್ವಾಮಿಯಪೆತ್ತಾತೆ ಸರ್ವಜನ ವಿಖ್ಯಾತೆ
ಶ್ರೀಮಹಾಗಂಭೀರೆ ಶಿವನಮೋದದ ನೀರೆ
ಕಾಮಕ್ರೋಧವಿದೂರೆ ಕರುಣರಸವನುಬೀರೆ ||4||

ಬಲುಜ್ಞಾನ ಸಂಪನ್ನೆ ಭಾವೆಯರ ಕುಲರನ್ನೆ
ಸಲೆನಂಬಿದೆ ಗಿರಿಕನ್ನೆ ಸಲಹೈ ಸದ್ಗುಣರನ್ನೆ |
ಮಲರಹಿತೆ ನಿರ್ಮಾಯೆ ಮುನಿಜನ ಸತ್ಪ್ರಿಯೆ
ಚೆಲುವೆ ಎಮ್ಮನು ಕಾಯೆ ಚೆನ್ನಬಸವನ ತಾಯೆ ||5||

ಮಾನಿನಿಯವಗೇತಕೊಲಿದೆ
ಮಾನಿನಿಯವಗೇತಕೊಲಿದೆ_ಸರ್ವೇಶಗೆ
ನಾನಾರೂಪದವಗೆ_ನೀ ಬರಿದೆ | ||ಪ||

ವದನವೈದೊಗ್ಗಾಗಿರುವಗೆ_ಸರ್ವಾಣಿಕೇಳು
ಹದಿನೈದು ಕಣ್ಣು ನೋಡಲವಗೆ- ಕಾತ್ಯಾಯಿನಿ
ಚದುರೆ ಈರೈದು ಭುಜದವಗೆ-ಅವಗೆಮತ್ತೆ
ಸದನವೆ ಸುಡುಗಾಡು ಕರದೊಳು-ತಲೆಯೋಡು ||1||

ಜಗಕತಿ ದೀನನವನಂತೆ_ಮಾತೆಪಿತರೊ
ಳೊಗೆಯದ ಕುಲಹೀನನಂತೆ_ಪೀತಾಂಬರನ
ಮಗನ ಸುಟ್ಟ ದಿಟ್ಟನಂತೆ_ಅಮ್ಮಮ್ಮ ತನ್ನ
ಪೆಗಲೊಳು ಶಿರಮಾಲೆ_ವನಿತೆ ನೀ ದಯಶಲೆ ||2||

ಕಾಳಕೂಟವ ಕಂಠಕಿಟ್ಟ_ಕಾಳೋರಗನ
ತೋಳಿನಾಭರಣವೆಂದಿಟ್ಟ_ಆತನೊಡಲ |
ಆಳವನೋಡಲದು ಕಷ್ಟ_ಪೇಳಲಿನ್ನೆನು
ಬಾಳದೊಳುರಿಗಣ್ಣು ಮುಡಿಯೊಳೊಲುಮೆವೆಣ್ಣು ||3||

ಕರಿಯಚರ್ಮವನು ಪೊದ್ದಿಹನು_ಆವಾಗಳು
ಮರುಳುವಿಂಡುಗಳೊಳಗಾಡುವನು_ದೊಡ್ಡವನೆಂದು
ಹರಿಯ ಕಣ್ಣಡಿಯೊಳಿಟ್ಟಿಹನು-ಅವಗೆ ಮತ್ತೆ
ಕರದ ಶೂಲದಿ ಪೆಣ ತಿರಿದುಂಬುದುದ ಮಾಣ ||4||

ಮುಡಿಯೆಲ್ಲಬರಿಯ ಕೆಂಜಡೆಯು-ಅದರಮೇಲೆ
ಕಡುಮುದಿ ಬಸವ ಮುಂಗಡೆಯ_ಏರುವಡೊಂದು |
ಉಡುಗಣದೊಡೆಯೆನೊಂದೆಡೆಯ_ನಿರ್ಮಾಯನ
ತೊಡೆಯ ನೀ ನೆರೆನಂಬಿ ಇರುವೆ_ವಿಶ್ವಕುಟುಂಬೆ ||5||

ಹೆಸರಪೇಳಲನಂತ ನಾಮ_ಹುಟ್ಟು ಹೊಂದಿಲ್ಲ
ದಸಮಾಕ್ಷನವನು ನಿಸ್ಸೀಮ_ಮೋಹಿಎಂಬೆನೆ |
ಹುಸಿಯಲ್ಲನೋಡೆ ನಿಃಕಾಮ_ಪೊದವದವ
ದಶದಿಕ್ಕಿವಗಂಬರ ಕರುಣಾ-ಪಾರಾವಾರ ||6||

ಗಿರಿಸುತೆ ಕೇಳಮ್ಮ ಸೋಮೇಶ_ಮಹಿಮನ
ಕುರುಹಿಡಲಾರಿಗಳವಲ್ಲ_ಭಕ್ತರಿಗೆ ತ
ನ್ನಿರವತೋರುವ ರೂಪಿದೆಲ್ಲ_ಎಮ್ಮಯ ನಲ್ಲ
ಕರಕಂಜನನೆಲೆವಾಸ ಗುರುಚೆನ್ನಬಸವೇಶಾ ||7||

ಎಂದಿಪ್ಪೆನೋ ಶಿವಶರಣರೊಳನುದಿನ
ಎಂದಿಪ್ಪೆನೋ ಶಿವಶರಣರೊಳನುದಿನ ಸಲೆ
ಸಂದ ಮಹಾತ್ಮರ ನನೆವುತಾ ||ಪ||

ಅಷ್ಟಮದಂಗಳ ಕಿತ್ತು ಈಡಾಡಿ
ನಿಷ್ಟೆಬಲಿದು ಎನ್ನಂಗದೆ ಮೂಡಿ
ಇಷ್ಟಲಿಂಗದ ಪೂಜೆಯ ಮಾಡಿ
ಮೃಷ್ಟಾನ್ನವ ಶಿವಶರಣರಿಗೂಡಿ ||1||

ಕರಣಾದಿಗುಣಗಳ ಸರ್ರನೆ ಸೀಳಿ
ಗುರುವಿನ ಬೋಧೆಯ ಕಿವಿತುಂಬಕೇಳಿ
ಶರಣರೊಳನುದಿನ ಭಕ್ತಿಯ ತಾಳಿ
ಪರಮ ಪ್ರಸಾದವ ಸವಿದುಂಡು ಬಾಳಿ ||2||

ಅಂಗಭೋಗವನೆಲ್ಲ ಅಲಸದೆ ನೀಗಿ
ಜಂಗಮ ಲಿಂಗದಂಘ್ರಿಗೆ ಶಿರವಾಗಿ
ಲಿಂಗಾಂಗವೆರಡೆಂಬುದಳಿದೇಕವಾಗಿ
ಹಿಂಗದೆ ಶಿವಧ್ಯಾನ ಪರವಶನಾಗಿ ||3||

ಅರಿಷಡುವರ್ಗಂಗಳಿರದೆಲ್ಲ ಬೆಂದು
ಹರನ ಸಂಭಾಷಣೆಗಳು ಮನಸಂದು
ಅರುಹೆಂಬುದನುದಿನ ಹೃದಯದಿಬಂದು
ಪರಮಾನಂದರಸದೊಳು ನಿಂದು ||4||

ಚನ್ನಾಗಿ ಷಡುಸ್ಥಲ ಮಾರ್ಗವನರಿದು
ಎನ್ನಮನಂಗಳ ಲಿಂಗದಿ ತಗದು
ಓಂ ನಮಃಶಿವಾಯೆಂಬ ಪ್ರಣಮವ ತಿಳಿದು
ಚೆನ್ನಬಸವನೆಂಬ ಲಿಂಗವಬೆರದು ||5||

ಬಲ್ಲ ಜಾಣರು ಹೇಳಿರೆ ತಿಳಿದು ನೀವೆಲ್ಲ
ಬಲ್ಲ ಜಾಣರು ಹೇಳಿರೆ ತಿಳಿದು ನೀವೆಲ್ಲ
ಎಲ್ಲೆಲ್ಲು ಇಹುದಲ್ಲ ಇದ ಶಿವನೆ ಬಲ್ಲ ||ಪ||

ತ್ರಿಣಯ ನಿರ್ಮಿತದಲ್ಲ ಕಠಿಣವಾಗಿಹುದಲ್ಲ
ಹಣವೀಯೆ ಬಹುದಲ್ಲ ಮಧುರವಲ್ಲಲ್ಲ |
ಒಣಗಿಕೊಂಡಿಹುದಲ್ಲ ಪಸುರಾಗಿ ಇಹುದಲ್ಲ
ಉಣಲಿಕೆಯಂ ಬಹುದಲ್ಲ ಅದು ಪ್ರಿಯವಲ್ಲ ||1||

ಮಂಗಳಕೆ ಬಹುದಲ್ಲ ಎಲ್ಲರಿಗೆ ಬಹದಲ್ಲ
ಅಂಗಬಿಳ್ಪಾಗಿ ತಾ ತೋರ್ಪುದಲ್ಲ |
ಜಂಗಮಕೆ ಬಹುದಲ್ಲ ಅದರ ಹೆಸರೇನಲ್ಲ
ಅಂಗಡಿಯೊಳಗಿಹುದಲ್ಲ ತಿಂಬುದಲ್ಲಾ ||2||

ವಸುಧೆಯೊಳಗಿಹುದಲ್ಲ ಜಸವೆತ್ತುದಿಹುದಲ್ಲ
ವಸವಲ್ಲದಿದ್ದವರ್ಗೆ ಬೇಕೆನಿಪುದಲ್ಲ ||
ಉಸುರಿದೊಡೆ ಏನಲ್ಲ ಬಹು ಉಷ್ಣವಿಹುದಲ್ಲ
ತಿಸುಳಾಗಿ ಇಹುದಲ್ಲ ಶೀತವಲ್ಲಲ್ಲಾ ||3||

ಹುಟ್ಟಿದೆಡೆಯನು ತಾನು ಬಿಟ್ಟು ಹೋಗುವುದಲ್ಲ
ಗಟ್ಟಿತೂರಾವಳಿಯ ಚರಿಸುತಿಹುದಲ್ಲ
ಕೊಟ್ಟವರ ಕೊಂಡವರ ರಕ್ಷಿಪುದು ತಾನಲ್ಲ
ಸೃಷ್ಟಿಯೊಳು ಸಲಹಿದರ ಹೊರೆವುತಿಹುದಲ್ಲಾ ||4||

ಊರಮುಂದಿಹುದಲ್ಲ ಕೇರಿಯೊಳಗಿಹುದಲ್ಲ
ವಿೂರಿನೋಡಲು ಕೆರೆಯಕೆಳಗಿಪ್ಪುದಲ್ಲಾ |
ಧಾರುಣಿಯನಾಳ್ವರಿಗೆ ಬೇಕೆನಿಸುತಿಹುದಲ್ಲ
ಮಾರಹರ ಗುರುಚೆನ್ನಬಸವೇಶನೇ ಬಲ್ಲಾ ||5||

ಶರಣನಂಗವೆ ಲಿಂಗದ ಕ್ಷೇತ್ರವೆಂಬುದೆ ಚಂದಮಾಮಾ
ಶರಣನಂಗವೆ ಲಿಂಗದ ಕ್ಷೇತ್ರವೆಂಬುದೆ ಚಂದಮಾಮಾ
ಶರಣನ ಶರಿರವೆ ಇಷ್ಟಲಿಂಗವೆಂದರಿವುದೆ ಚಂದಮಾಮಾ||ಪ||

ಚಿರ ಸೂಕ್ಷ್ಮತನು ಪ್ರಾಣಲಿಂಗವೆಂದೆನಿಪುದೆ ಚಂದಮಾಮಾ
ಪರಮ ಕಾರಣ ಕಳೇವರ ಭಾಗಲಿಂಗವು ಚಂದಮಾಮಾ |
ಶರಣನ ಪ್ರಾಣವಾಚಾರ ಲಿಂಗದ ಮನೆ ಚಂದಮಾಮಾ
ಗುರುಲಿಂಗದಾಲಯ ಜಿಂಹ್ವೆ ತಿಳಿದುನೋಡೆ ಚಂದಮಾಮಾ||1||

ಶಿವಲಿಂಗದಾಶ್ರಯ ನಯನ ಸುಬದ್ದಿಸೆ ಚಂದಮಾಮಾ
ಭವನವೆ ತ್ವಕ್ಕು ಜಂಗಮಲಿಂಗದೇವಗೆ ಚಂದಮಾಮಾ |
ಶ್ರವಣ ಪ್ರಸಾದಲಿಂಗದ ಸುಖಧಾಮವು ಚಂದಮಾಮಾ
ಅವಿರಳ ಹೃದಯ ಮಹಾಲಿಂಗದರಮನೆ ಚಂದಮಾಮಾ ||2||

ಆಧಾರದೊಳಗೆ ಸದ್ಯೋಜಾತ ಲಿಂಗವು ಚಂದಮಾಮಾ
ಸ್ವಾಧಿಷ್ಟಾನವೆ ವಾಮದೇವಲಿಂಗದ ಗೃಹ ಚಂದಮಾಮಾ |
ಮೂದೇವರೊಡೆಯನಘೋರಮುಖದಲಿಂಗ ಚಂದಮಾಮಾ
ಭೇದವಿಲ್ಲದೆ ಮಣಿಪೂರಕದೊಳು ತೋರ್ಪ ಚಂದಮಾಮಾ||3||

ಅನಾಹತಚಕ್ರ ತತ್ಪುರುಷ ಲಿಂಗದ ಗೇಹ ಚಂದಮಾಮಾ
ಅನಘನೀಶಾನ್ಯ ಮೂರುತಿ ವಿಶುದ್ಧಿಯೊಳಿಹ ಚಂದಮಾಮಾ |
ಅನುಪಮ ಮಹಾಲಿಂಗವಾಜ್ಞಾ ಚಕ್ರದ ದೊರೆ ಚಂದಮಾಮಾ
ಇನಿದಪ್ಪ ಬ್ರಹ್ಮರಂದ್ರದಲಿ ನಿಃಕಳಲಿಂಗ ಚಂದಮಾಮಾ ||4|

ನಿಚ್ಚ ಶಿಖಿಯೊಳಿಹ ಪರಮ ಶೂನ್ಯದಲಿಂಗ ಚಂದಮಾಮಾ
ಪಚ್ಚಿಮದೊಳಗಿರುವದು ನಿರಂಜಲಿಂಗ ಚಂದಮಾಮಾ |
ಕಿಚ್ಚುಗಣ್ಣಭವಗಾಲಯವಾಗಿ ಶರಣನು ಚಂದಮಾಮಾ
ಬೆಚ್ಚಂತೆ ಗುರುಚೆನ್ನ ಬಸವನೆ ತಾನಾದ ಚಂದಮಾಮಾ ||5||

ಎನಗೇಕೆ ಆದ್ಯರೋದಿದಿ ವಚನ
ಎನಗೇಕೆ ಆದ್ಯರೋದಿದಿ ವಚನ ಗೀತಗಳು
ಮನ ಹಲವುಪುರಿಯಲ್ಲಿ ಚರಿಸಾಡುತಿಹಗೆ ||ಪ||

ಮೂರು ಮಲದಲ್ಲಿ ಹೊದಕುಳಿಗೊಂಡು ನರಳುವಗೆ
ಆರುವರಿಗಳ ತೊಡಕಿನಲ್ಲಿ ಸಿಲ್ಕಿಹಗೆ
ಘೋರಸಂಸಾರ ಸಾಗರದಲ್ಲಿ ಮುಳುಗಿ
ಧಾರುಣಿಯ ಮೇಲೆ ಕುಲಛಲಕೆ ಹೋರುವಗೆ ||1||

ಹಸುಕನಿಗೆ ಹುಸಿಕನಿಗೆ ವಿಷಯ ಉದ್ರೇಕನಿಗೆ
ಪಿಸುಣನಿಗೆ ಕಷ್ಟ ದುರ್ಮುತಿಗೆ ಖಳಗೆ |
ಹಸಿವು ತೃಷೆಗೊಸವಾಗಿ ಅಸುವಿಗೊಸುಧೆಯನರರ
ಹೊಸಬಗೆಯಿಂ ಕೊಂಡಾಡಿ ಉಂಬ ಡಂಬಕಗೆ ||2||

ಆಸಕಗೆ ದೂಷಕಗೆ ಭಾಷೆಹೀನಗೆ ಬರಿಯ
ವೇಷಡಂಬಕಗೆ ಪರರೊಡವೆಗಳನು
ಮೋಸದಿಂ ಕೊಂಬ ಅಘಪಾಶಬದ್ಧ ತ್ರಿವಿಧ
ದಾಸೆಬಿಡದಿಹ ಕಷ್ಟಹೇಸಿ ಮನದವಗೆ ||3||

ಹತ್ತು ಮರುತನ ಬಾಯ ತುತ್ತಾದ ಮಾನಸಗೆ
ಸುತ್ತುವಗೆ ಹಲವು ಪ್ರಪಂಚಿನಲ್ಲಿ ಸತತ
ಹೊತ್ತಿಹೊಗೆಯಾದವಗೆ ಮದನವಿರಹಾಗ್ನಿಯಲಿ
ಹೊತ್ತು ಹೋಕಗೆ ಪರಮಭಕ್ತಿಹೀನಗೆ ||4||

ಅಂಗಭೋಗವ ತೂರಿ ಲಿಂಗದೊಳು ಮನ ಊರಿ
ಲಿಂಗಜಂಗಮಕೆ ತ್ರಿವಿಧವನು ತೋರಿ |
ಮಂಗಳಾತ್ಮಕವಾಗಿ ಗುರುಚೆನ್ನಬಸವೇಶ
ನಂಘ್ರಿ ಕಮಲವನು ನೆರೆಭಜಿಸುವನಿಗಲ್ಲದೆ ||5||

ಮಾನಿನಿರನ್ನೆ ಬಹುಜ್ಞಾನ ಸಂಪನ್ನೇ
ಮಾನಿನಿರನ್ನೆ ಬಹುಜ್ಞಾನ ಸಂಪನ್ನೇ
ಭಾನುಕೋಟಿ ಪ್ರಕಾಶನ ಮೆಚ್ಚಿಸಿ ಪಂಚಾ
ನನ ನಿನಗೆ ಜ್ಞಾನ ಸಾಧನ ಮಾನಿನಿ ||ಪ||

ಕಾಯಜನೆಂಬ ಜಲನಿಧಿ ವಡಬನೆ
ಜೀವಿತೇಶನನಮರ್ದಿಸಿದಾನೆ | ಚೆಲ್ವ
ರಾಯ ಷೋಡಶವುಳ್ಳ ಪ್ರಾಯನೆ ಕಷ್ಟ
ಮಾಯೆಯಗೆಲಿದ ನಿರ್ಮಾಯನೆ | ಬಹು
ಸಾಯಸವುಳ್ಳ ಚಿತ್ಕಾಮನೆ ಕರ್ಮ
ಕಾಯನಲ್ಲದ ಧರ್ಮಕಾಯನೆ | ಪೆತ್ತ
ತಾಯವಗಿಲ್ಲದ ಕಾಯನೆ ನಿನ್ನ
ವಾಯಾರದಿಂದಾತ ಕಾಯ್ವನೆ ||1||

ಮಡಿಯೊಳಗುಡುಗಣದೊಡೆಯನ
ಮುಡಿದನೆ ಕೆಮ್ಮಡುವ ಜಟಾಗ್ರದಿತಾಳ್ದನೆ | ಅವ
ಪೊಡವಿ ಈರೇಳನು ಪಡೆದಾನೆ ಮುಕ್ತಿ
ಗೊಡುವ ಮುಕ್ತಾಂಗನೆಗೊಡೆಯಾನೆ
ಆಡಿ ನಡು ಮುಡಿಯಿಲ್ಲದಘಟಿತಾನೆ
ಎಡದೆಡೆಯಲ್ಲಿ ಮಡದಿಯ ಪಿಡಿದಾನೆ | ಶಶಿ
ವಡಭರ್ಕ ನೇತ್ರುಳ್ಳೆಡೆಯಾನೆ ||2||

ರಾಶಿದೈವಗಳೆಂಬ ವೇಶ್ಯಭುಜಂಗನೆ
ಶೇಷನಾಭರಣ ಮಹೇಶನೆ | ನಭ
ಕೇಶ ಕೈಲಾಸ ನಿವಾಸನೆ ಶಶಿ
ಭೂಷ ವಿಶೇಷ ಪ್ರಕಾಶನೆ ಬಹು
ದೋಷವಿನಾಶ ಸರ್ವೇಶನೆ ಭವ
ಪಾಶರೋಪಗಳಿಲ್ಲದೀಶಾನೆ ಪಾರ್ವ
ತೀಶ ವಿಲಾಸ ಎನ್ನಯ ನೆರೆದೇಶಿಕ ಚೆನ್ನಬಸವೇಶನೆ ||3||

ಒಲ್ಲದೋ ಚಿತ್ತ ವಲ್ಲದೋ
ಒಲ್ಲದೋ ಚಿತ್ತ ವಲ್ಲದೋ | ಬಹು
ಬಲ್ಲವರಲ್ಲದ ಕುಲ್ಲರ ಸಂಗವ ||ಪ||

ಆಸೆಯ ರೋಷದ ವೇಷದಚೋರನ
ಭಾಷೆಹೀನನ ಬಹುದೋಷಾರ್ಥಿಯ |
ದಾಸಿವೇಶಿಯರೆಂಜಲೋಸರಿಸದೆ ತಿಂಬ
ಹೇಸಿಮಾನ್ವನ ಕಂಡ ದೋಸರಿಸುವದಲ್ಲಾ ||1||

ಅಶನ ವ್ಯಸನ ವಿಷಯಗಳೊಳು
ಮುಸುಕಿಹ ಹಸುಕನ ಹುಸಿಕನ ಹಿಸುಕನ
ಆಸುವಿನ ಹಸುಗೆಯ ದೆಸೆಗಾಣಲರಿಯದ
ಕಿಸುವಾಯ ಮನುಜರ ಗಸಣಿಗೊಳಲು ಮನ ||2||

ಗುರುಹಿರಿಯರ ತನ್ನ ಗರುವದಿ ಜರೆವನ
ಕರುಬನ ಕುರುಬನ ಕೊರಮನ
ಗುರುಕೊಟ್ಟಲಿಂಗಕೆ ಶರಣೆನಲರಿಯದೆ
ಪರದೈವಕೆರಗುವ ಮರುಳಮಾನ್ವನ ಕಂಡು ||3||

ತಪಸಿಗಳನೆ ಕಂಡು ಕಪಿಯಂತೇಡಿಸುತಿಹ
ಕಂಪಥ ಪಥಕೆಸಲ್ವವಪರಾಧಿಯ |
ತ್ರಿಪುರಾರಿಯಂಘ್ರಿಯ ಕೃಪೆಗಳ ಪಡೆದು ತಾ
ಕುಪಥ ಪಥಕೆ ಸಲ್ವದುಪಜೀವಿ ಮನುಜರ ||4||

ಗುರುಚೆನ್ನಬಸವನ ಶರಣರ ಚರಣದ
ಕಿರಣದೊಳನುದಿನವಿರದಿಹನ |
ಅರಿವುವಾಚರಣೆಗಳರಿಯದ ಮನುಜರು
ಕರೆದು ಸಾಸಿರ ಹೊನ್ನ ಕೊಡಲವರೊಡನಾಡ್ವರ ||5||

ಕಾವ ಎನ್ನೊಳು ಗರ್ವಬೇಡ
ಕಾವ ಎನ್ನೊಳು ಗರ್ವಬೇಡ ನಿನ್ನನು ಕಾವ
ದೇವ ಎನ್ನೊಳಗಿರುವ ಅರಿಯೆ ನೀನೆಳವ ||ಪ||

ಗಬ್ಬಿತನ ವಡಗೂಡಿ ಕಬ್ಬುವಿಲ್ಲನೆ ಮಾಡಿ
ಉಬ್ಬಿನಿಂದೈದು ಸರಳುಗಳಹೂಡಿ
ಇಬ್ಭಾಗ ಬಾಗಿ ಕುಂಬಿಡುವ ಅಂಬಿನಮೊನೆಗೆ
ತಬ್ಬಿಬ್ಬುಗೊಳರೆಮ್ಮ ಶರಣರಂಗಜನೆ ||1||

ಮೂರು ಮಲಗಳಬಿಟ್ಟು ಆರು ವರಿಗಳಸುಟ್ಟು
ತೋರುವೇಳೆಂಟು ಹತ್ತುಗಳನೆಬ್ಬಟ್ಟಿ |
ಸಾರಸದ್ಗುರು ಪರಮನಂಗಣದೊಳಗಿಂಬಿಟ್ಟು
ಮಿರಿ ಭವ ಕಾಲಕರ್ಮವ ಮೆಟ್ಟಿದವರೋ ||2||

ಬರೆಬೀದಿಯೊಳಗೊಂದು ಕರಿಯು ಸಂಭ್ರಮದಿಂದ
ದರಿದ್ರನದರ ಕ್ರಯವನು ಕೇಳುತಿರಲು |
ಮರುಳುಮಾನವ ನಿನಗೆ ಹುರುಳಿಲ್ಲ ತೊಲಗೆನಲು
ಮರುಗಿ ಮನಕರಗಿ ನಾಚುವನ ತೆರನೆಲವೋ ||3||

ಪೊಡವಿಯೊಳು ಹಡೆಯಬಾರದುದೊಂದು ರತ್ನವಿರೆ
ಬಡವನದ ಕಂಡು ಬಯಸಿದರೆ ಬಹುದೇ |
ಮೃಡನೊಳಗೆ ದೃಢವೆತ್ತು ಒಡವೆರೆದ ಶರಣರೊಳು
ಜಡಕಾವ ತೊಡಗಿದೊಡೆ ಗಡಣೆಗೊಳ್ಳುವರೆ ||4||

ಸ್ಮರಪೋಗು ಲಿಂಗಭೋಗಿಗಳೆತ್ತ ನೀನೆತ್ತ
ಶರೀರಭೋಗಿಗಳತ್ತ ತೊಲಗತ್ತಲೆ
ಗುರುಚನ್ನ ಬಸವೇಶನಿತ್ತ ಭಯವುಂಟೆಮಗೆ
ತೆರಳತ್ತ ಮರುಳು ಚಿತ್ತಜ ಭಂಗಗೆಡದೆ ||5||

ಅಂಬರದೊಳಗೊಂದು ಅಮೃತ
ಅಂಬರದೊಳಗೊಂದು ಅಮೃತದಸಸಿಹುಟ್ಟಿ ರಾಮತಮ್ಮಾ | ರಸ
ದುಂಬಿ ಹಣ್ಣಾಯ್ತು ಸವಿಹೋಗೋಎನ್ನಯ ರಾಮತಮ್ಮಾ ||ಪ||

ಸೊಕ್ಕಜವ್ವನೆ ಅಕ್ಕಯ್ಯನ ನುಡಿಗೇಳಿ ರಾಮತಮ್ಮಾ | ನಾನು
ಹೊಕ್ಕು ಸೇವಿಸೆನದ ಅಕ್ಕ ದಾರಿಯ ಹೇಳು ರಾಮತಮ್ಮಾ |
ಮಿಕ್ಕವರಿಗೆ ಯಿಕ್ಕಲಾರಳವಲ್ಲ ರಾಮತಮ್ಮಾ | ಅಲ್ಲಿ
ಹೊಕ್ಕು ಹೋಗಲುಭಯ ಇಕ್ಕೆಲದಲಿ ಮೇಲೆ ರಾಮತಮ್ಮಾ||1||

ಹೊಳೆಮೂರುಹರಿವುತ ಹೊಳೆ ಇಲ್ಲ ಆಯಾಸ ರಾಮತಮ್ಮಾ | ಮುಂದೆ
ಬಲುಗಳ್ಳನುಂಟೊಬ್ಬ ಕಳೆಯಲವನತ್ತ ರಾಮತಮ್ಮಾ
ಸುಳಿದಾಡುತಿಹರೇಳು ಬಲುಮನ್ನೆಯರಲ್ಲಿ ರಾಮತಮ್ಮಾ | ಅವ
ರುಳಿದು ಮುಂದಕೆ ಹೋಗಿ ಚೆಲುವಕೇಳ್‍ಪ್ರಿಯದ ರಾಮತಮ್ಮಾ ||2||

ಕರಿಯೆಂಟೀಗಳು ಸೊಕ್ಕಿ ಇರುತಿಹವವ ತಪ್ಪಿ ರಾಮತಮ್ಮಾ | ದೊಡ್ಡ
ಕರಡಿಮೈಸನು ಹಲ್ಲುಗಿರವ ಪಂಚಾಸನು ರಾಮತಮ್ಮಾ |
ಮೊರೆವಂತ ಘಟಸರ್ಪ ತಿರುಗುವೈ ಸುನಿ ರಾಮತಮ್ಮಾ | ಅವ
ನೆರೆಗಂಡು ಅಂಜದೆ ಬರೆಮುಂದೆ ಭಯವಿಲ್ಲ ರಾಮತಮ್ಮಾ ||3||

ಪುರವಾರುವುಂಟು ಮುಂದಿರುವದೊಂದಜಪುರ ರಾಮತಮ್ಮಾ | ಹೊಕ್ಕು
ಹರಿಯನಗರದತ್ತ ವರ ರುದ್ರಪುರ ಮುಂದೆ ರಾಮತಮ್ಮಾ |
ಅರಸು ಶಿವನಪುರ ಪರಶಿವಪುರ ಮೇಲೆ ರಾಮತಮ್ಮಾ | ಕೇಳು
ನೆರೆ ಸದಾಶಿವನತ್ತಲಿರುವದಲ್ಲಿಗೆ ದಾರಿ ರಾಮತಮ್ಮಾ ||4||

ಎಣಿಕೆಗಾಣದ ಗುಣಿತಕ್ಕೆ ಸಿಲುಕಿದ ರಾಮತಮ್ಮಾ | ಪುಣ್ಯ
ಪ್ರಣವದ ಫಳವದು ಗೆಣಯ ಕೇಳೆನ್ನಯ ರಾಮತಮ್ಮಾ |
ಗುಣಿಚೆನ್ನ ಬಸವನೆಂಬಿನಿವಣ್ಣುವಿಹುದದ ರಾಮತಮ್ಮಾ | ಬೇಡಿ
ದಣಿದುಂಡು ಸುಖಿಯಾಗು ಮಣಿಎನ್ನಮುದ್ದಿನ ರಾಮತಮ್ಮಾ ||5||

ಲಿಂಗಾಂಗ ಸಂಗವೆಲ್ಲಿಯದೊ
ಲಿಂಗಾಂಗ ಸಂಗವೆಲ್ಲಿಯದೊ-ಮನ
ವಂಗನೆಯರ ಮೇಲೆ ತೊಂಗಿನಿಂದವಗೆ ||ಪ||

ನಡೆ ಹಂಸಗಮನೆಯೆಳೆನುತ-ತೋರೆ
ಜಡಿವ ಜಘನ ಚೆಲ್ವ ವಡದಿಹಳೆನುತ
ಬಿಡದವಳನುವನೆ ನೆನವುತ-ಕಾವ
ಪಿಡಿದೈದು ಬಾಣವ ಗಳಿನುಗಿದವಗೆ ||1||

ಪರಮನಿರವ ನೆರೆಗಂಡು-ಶಿರ
ದರವಿಂದ ಮಂದಿರದೊಳು ಕರಕೊಂಡು |
ಇರದಲ್ಲಿ ಮನ ಕರಿಗೊಂಡ-ಮಹ
ಪರಮಪುರುಷ ರಾಗರಹಿತನಿಗಲ್ಲದೆ ||2||

ಅಂಬುಜಾಕ್ಷಿಯರ ಶೃಂಗಾರವ-ನೋಡಿ
ಶಂಬರಾರಿಯ ಕಲೆಗಿಂಬಿಗೆಳಸುವ |
ನಂಬಿ ಧನವನಲ್ಲಿ ಸವೆವ-ಹಿಂದೆ
ಬೆಂಬಾಗಿ ಪರರಿಗೆ ಸಿಂಬಕನಹಾಗೆ ||3||

ಅನಲಾಕ್ಷನೊಳು ಮನವೆರಸಿ-ತನ
ಗನುದಿನ ಬಹುಭೋಗವನು ಲಿಂಗಕೆನಿಸೀ |
ನೆನವನ್ಯ ಗುಣವನೊತ್ತರಿಸಿ-ದೇವ
ನೆನಹು ನಿಃಪತಿಯಾದ ಶಿವಯೋಗಿಗಲ್ಲದೆ ||4||

ಸತಿಯರ ರತಿಯದುನ್ನತಿಯ-ಜ್ಞಾನ
ಗತಿಯಿಂದ ಹತಮಾಡಿ ಜಿತಕಮ್ಮಗೋಲನ |
ಸಿತಕಂಠ ಚೆನ್ನಬಸವನ-ಪಾದ
ವತಿಶಯದಿಂದಲಿ ನುತಿಪನಿಗಲ್ಲದೆ ||5||

ಬದುಕಿದೆನಯ್ಯ ಬದುಕಿದೆ
ಬದುಕಿದೆನಯ್ಯ ಬದುಕಿದೆ
ಸದಮಲ ಗುರುವಿನ ಕರುಣದಿಂದಲಿ ನಾನು ||ಪ||

ಮಲಬಾಂಡಕಾಯ ಸಲೆ ತನ್ನ ಕರುಣದ
ಸಲಲಿದೊಳಗೆ ಪ್ರಕ್ಷಾಲನವಮಾಡಿ
ಒಲಿದು ಮೂರೇಳು ದೀಕ್ಷೆಯನು ಸುಲಭದಿ ತೋರಿ
ಸುಲಲಿತ ಮಂತ್ರವ ಶ್ರವಣದೊಳಿಡಲಾನು ||1||

ಗುರುತನ್ನ ಶಿರದ ಚಿಕ್ಕಲೆಯ ಲಿಂಗದಿ ತುಂಬಿ
ಒರಸಿ ದುರ್ಲಿಖಿತವ ಭಸಿತದಿಂದ |
ಶಿರದೊಳು ಕರವಿಟ್ಟು ಕರುಣದಿಂದೀಕ್ಷಿಸಿ
ಶರೀರದ ಕರದಲ್ಲಿ ಕೊಡಲಿಷ್ಟಲಿಂಗವ ||2||

ಆದಿಯನಾದಿಯಿಂದತ್ತಾದ ವಸ್ತುವ
ನಾದಬಿಂದು ಕಳೆಗತಿಶಯದ |
ವೇದವೇದಿಸಿ ಕಾಣದಾ ಮಹಲಿಂಗವ
ಭೇದಿಸಿತಂದಿತ್ತ ನಾದಿದೇಸಿಕನಿಂದ ||3||

ವರ ಗುರು ಲಿಂಗ ಜಂಗಮದ ಪಾದೋದ
ಚಿರಸುಪ್ರಸಾದದ ಘನಮಂತ್ರದ
ಪರಮ ವಿಭೂತಿ ರುದ್ರಾಕ್ಷಿಲಿಂಗದ ಇವ
ರಿರವತೋರಲು ಮನ ಶರೀರದೊಳಗೆ ತಾಳ್ದು ||4||

ಇಳೆಯ ತಮಂಧಕೆ ನಳಿನಸಖನು ನೆರೆ
ಗಳಿಲನುದೈಸಿದ ತೆರನಂದದಿ |
ಅಳಿಸೆನ್ನ ಭವಗಳ ಕರಕಮಲದಿ ನಿಂದ
ಭಲರೆ ಮದ್ಗುರು ಚೆನ್ನಬಸವಲಿಂಗವ ಕಂಡು ||5||

ಶರೀರವಿದ್ದೇನುಫಲ
ಶರೀರವಿದ್ದೇನುಫಲ ನರರಿಗೀಧರೆಯೊಳಗೆ
ಪರಮ ಸದ್ಭಕ್ತಿ ತಮ್ಮಂಗಳವಾಗದ ಬಳಿಕಾ ||ಪ||

ಗುರುವಿಲ್ಲದಿರುವಾತನವ ಶುದ್ಧ ಪೆರ್ಭೂತ
ಗುರುವಿನಡಿಯನು ಕಾಣದವನು ಕೋಣ |
ಗುರುವನತಿಪ್ರೇಮದಿಂ ಪಾಡದವ ಬೇಡನವ
ಗುರುದೀಕ್ಷೆಯನು ಪಡೆಯದೊಡಲು ಮೂತ್ರದಕಡಲು ||1||

ಲಿಂಗಪೂಜೆಯ ಮಾಡದವನ ಕರ ಹರಕುಮೊರ
ಲಿಂಗವನು ನೋಡದಾತನ ಕಣ್ಣು ಹುಣ್ಣು
ಲಿಂಗವನು ನುತಿಸದಾತನ ಜಿಂಹ್ವೆಯದು ಗುಹ್ಯ
ಲಿಂಗನೇಹಗಳಿಲ್ಲದವನ ಮನ ಸುಟ್ಟವನ ||2||

ಜಂಗಮವನರಿಯದವ ವಾನರಂ ಪಾಮರಂ
ಜಂಗಮಕ್ಕೆರಗದಾ ತಲೆ ಬೋಳುತಲೆ |
ಜಂಗಮವೆ ಶಿವನೆಂದು ನಂಬದವ ಡೊಂಬನವ
ಜಂಗಮವು ಹೊಗದವನ ಮನೆ ಸುಮ್ಮನೆ ||3||

ವರಪ್ರಸಾದಗಳಿಲ್ಲದುಂಬೂಟ ಡೊಂಬಾಟ
ಚರಪಾದಾಂಬುವ ಕೊಳ್ಳದಾತನೇತ
ಚಿರಭಸಿತವಿಲ್ಲದಾತನಭಾಳ ವರಕೋಳ
ಹರನ ರುದ್ರಾಕ್ಷಿಯಿಲ್ಲದ ಕೊರಳು ಮರದೊರಳು ||4||

ಪ್ರಣಮಪಂಚಾಕ್ಷರವೆ ಪ್ರಾಣಪದವೆಂದರಿದು
ಭಣಿತೆಯೊಳು ತನ್ನ ತನುಮನಧನವನು |
ಮಣಿದು ಗುರುಲಿಂಗಜಂಗಮಕಿತ್ತು ಮುದದಿಂದ
ತ್ರಿಣೆಯ ಮದ್ಗುರು ಚೆನ್ನಬಸವನೊಲಿಸದ ಬಳಿಕ ||5||

ಬೇಡ ಬೇಡಲೆಮನವೆ
ಬೇಡ ಬೇಡಲೆಮನವೆ | ಬೇಡಿಕೊಂಬೆನುನಿನ್ನ
ಮೂಢನಾಗದೆ ಚಂದ್ರಚೂಡನ ನೆರೆನಂಬಿ ಈಡಾಡುಭವಗಳನೂ ||ಪ||

ತನುವೆಂಬುದಿದು ನೋಡು | ನಾನಾ ರುಜೆಯಗೂಡು
ದಿನಬರಲಿರವು ತನ್ನ ಇರಲೀಯವೆಲೊ ನಿನ್ನ ಬಿನುಗುಬುದ್ಧಿಯನೆಬಿಟ್ಟೂ
ತನುಮನಧನಗಳೊಳೆ | ಳ್ಳಿನಿತು ವಂಚನೆಯಿರದೆ
ಘನಗುರುಲಿಂಗ ಜಂಗಮಕೆ ಸಮರ್ಪಿಸಿ ಮನಸಿಜಾರಿಯ ನೆನಯಾ ||1||

ಪರಹಿತಾರ್ಥವ ಮಾಡು | ಪಂಚಾಕ್ಷರಿಯ ಪಾಡು
ಪರತತ್ವವನು ನೋಡು ಪಾಪಂಗಳನೀಡಾಡು ಪರಚಿಂತೆಗಳನೇ ಬಿಡು ||
ಪರಮಾತ್ಮನೊಡಗೂಡು | ಫಲಕಾಂಕ್ಷೆಗಳ ಸುಡು
ಪರಮಭಕ್ತರೊಳಾಡು ಪಂಚಾಕ್ಷರವಕೂಡು ಪರಿಣಾಮದೊಳೋಲಾಡು ||2||

ನಾಹಂ ಎಂಬುದನಳಿದು | ಕೋಹಂ ಎಂಬುದತುಳಿದು
ಸೋಹಂ ಎಂಬುದ ರ್ರನೆ ಸೀಳಿ ಸಹಜ ನಿರ್ದೇಹಿಯಾಗಿರು ಬಹಳಾ ||
ಮೋಹಿಸದಿರು ಜಿಂಹ್ವೆ | ಗುಹ್ಯಲಂಪಟಗಳಿಗೆ
ಸಾಹಸಿಯಾಗಿರು ಕರಣಗುಣದ ಮೇಲೆ ಬಾಹ್ಯಕರ್ಮವ ಹರವೂ ||3||

ಮೂರುಮಲವ ಜರೆ | ಮುಕ್ತಾಂಗನೆಯ ನೆರೆ
ಆರರಿಯನು ತೊರೆ ಅಷ್ಪಮದವನೊದೆ ಸಾರಹೃದಯನಾಗು ||
ಮಾರನಂಬಿಗೆ ಮೆಯ್ಯ | ಮಾರದಿರಲೆ ಪ್ರಿಯ
ವೀರಶೈವಾಚಾರದಲ್ಲಿ ನಿರತನಾಗಿ ಧೀರನಾಗಿರು ಕಂಡಾ ||4||

ಕಡಲ ಮುಡಿಯೊಳಾಂತ | ಭೂರಿದೈವದ ಕಾಂತ
ಮೃಡಗುರು ಚೆನ್ನ ಬಸವನ ಶ್ರೀಪಾದವ ಮಡಗಿ ನೀ ಕರಮನದಿ ||
ನಡವಲ್ಲಿ ನುಡಿವಲ್ಲಿ | ಕೊಡುವ ಕೊಂಬೆಡೆಯಲ್ಲಿ
ಉಡುವ ತೊಡುವ ಹಲವೆಡೆಯೊಳು ನೆಗೆದೊಡೆ ಬಿಡದಪ್ಪಿಕೊಂಬ ನಿನ್ನ ||5||

ಸಾರಿಹೇಳಿದೆ ಮನವೆ
ಸಾರಿಹೇಳಿದೆ ಮನವೆ ಕೇಳೆನ್ನ ಬುದ್ಧಿಯನು
ಮೀರಿನಡೆದರೆ ಶರಣರೊಪ್ಪರೆಲೆ ಮನವೆ ||ಪ||

ಮರೆಯದಿರು ಮಂತ್ರವನು ತೊರೆಯದಿರು ಸುಜನರನು
ಬೆರತುಕೊಂಡಿರದಿರು ಹಿರಿಯನೆಂದು
ಮರುಗದಿರು ವಿಷಯಕ್ಕೆ ನೆರೆಯದಿರು ಪರಸತಿಯ
ಜರೆಯದಿರು ಗುರುಹಿರಿಯರುಗಳ ಕಂಡು ||1||

ಬೇಡದಿರು ಜೀವರನು ಆಡದಿರು ಮೂಢರೊಳು
ಕೂಡದಿರು ಹರಶರಣರಲ್ಲದವರ
ಓಡದಿರು ನಿಂದ್ಯಕ್ಕೆ ಮಾಡದಿರು ಹಿಂಸೆಯನು
ಸೂಡದಿರು ಕುಸುಮವನು ಶಿವಗೀಯದೆ ||2||

ಹುಟ್ಟಿಸದೆಯಿರು ಶರಣರೊಳಗೊಂದು ವಾಸನೆಯ
ಮೆಟ್ಟದಿರು ದುರ್ಗತಿಯ ಬಟ್ಟಿಗಳನು
ಮುಟ್ಟದಿರು ಲಿಂಗಕ್ಕೆ ಅಲ್ಲದುದು ಮತ್ತೊಂದ
ಕೆಟ್ಟಾಡದಿರು ಸಭೆಯನಡುವೆ ಕುಳಿತು ||3||

ಹೋರದಿರು ಹಿರಿಯರೊಳು ಆಡದಿರು ಆನ್ಯರನು
ಬೀರದಿರು ಪ್ರಣವಮಂತ್ರವನು ಭವಿಗೆ
ತೋರದಿರು ನಿನ್ನಿರವ ಧಾರುಣಿಯ ಮನುಜರಿಗೆ
ತಾರದಿರು ಅಪಕೀರ್ತಿಯನು ಗುರುವಿಗೆ ||4||

ಸಟೆಯ ನೀನಾಡದಿರು ದಿಟವನತಿಗಳೆಯದಿರು
ನಟಿಸದಿರು ಪರಿಪರಿಯ ವೇಷಗಳನು
ಕಠಿಣದೊಳು ಒಬ್ಬರನು ನುಡಿಯದಿರು ಕೊಬ್ಬಿನಲಿ
ಪಠಿಸದಿರು ಕಾಮಶಾಸ್ತ್ರಗಳನೊಲಿದು ||5||

ನಂಬಿದರ ಕೆಡಿಸದಿರು ಹಂಬಲಿಸದಿರು ಹಲವ
ನಂಬದಿರು ನಾರಿಯರೊಲುಮೆಗಳನು
ತುಂಬಿಕೊಂಡಿರದಿರು ಹೃದಯದೊಳು ಕ್ರೋಧವನು
ಬೆಂಬಿಡದೆಯಿರು ಮನವೆ ಧರ್ಮಗುಣವ ||6||

ಸುಮ್ಮನಿರದಿರು ಮಾನ್ಯರನು ಕಂಡು ಗರ್ವದಲಿ
ಹಮ್ಮಾಡದಿರು ಹಲವ ಕಲಿತನೆಂದು
ನೆಮ್ಮದಿರು ದೇಹವನು ಸುಮ್ಮನೆ ಕೆಡುವುದನು
ಕಮ್ಮಗೋಲಾರಿಯನು ಮರೆಯದಿರು ಮನವೆ ||7||

ಕರುಬದಿರು ಪರರು ಸಂತೋಷದೊಳಗಿರೆ ಕಂಡು
ಶಿರಬಾಗದಿರು ಅನ್ಯದೈವಂಗಳಿಗೆ
ಸಿರಿಗೆ ನೀ ಹಿಗ್ಗದಿರು ಸಿರಿತೊಲಗೆ ಕುಗ್ಗದಿರು
ಅರಿತರಿತು ಈಯದಿರು ಭವಿಪಾತ್ರಕೆ ||8||

ಜೀವಭಾವವನಳಿದು ದೇವ ಚೆನ್ನಬಸವನಡಿ
ದಾವರೆಯ ನಾವೀಗ ನೆನವುತಿರಲು
ಆವ ಭಯವೆಮಗಿಲ್ಲ ಕಾಮಾರಿ ಕೃಪೆಯಿಂದೆ
ಕೈವಲ್ಯ ಪದವಪ್ಪುದೆಲೆ ಆತ್ಮನೆ ||9||

ಬಂದವನಿದೆಕೋ ಜಾಣೆ
ಬಂದವನಿದೆಕೋ ಜಾಣೆ | ಭಾಳಾಕ್ಷ ನಿನ್ನಾಣೆ
ಮಂದಿರಕೆ ಕರೆತಾರೆ ಮಾನಿನಿ ಬಾರೆ ||ಪ||

ಚಪ್ಪರ ಮಂಚವಹಾಸೆ | ಚಂಪಕದ ಹೂವಸೂಸೆ |
ಕಪ್ಪುಗೊರಳನ ಈಗ ಕರೆ ತಾ ಬೇಗ
ಕಪ್ಪುರಗಂಧಿ ನೀತಂದು | ಕತ್ತುರಿಯನೀಡೆ ಬಂದು
ಇಪ್ಪ ನಿನ್ನಿಚ್ಛೆಗೆ ಇದೇನಂಬುಗೆ ||1||

ಮುಡಿಗೆ ಹೂವನುಸೂಡೆ ಮುದ್ದುಮಾತುಗಳಾಡೆ
ಒಡಲಧರ್ಮವ ಬೀರೆ ಒಲಿವ ನೀರೆ |
ಸಡಗರದಿಂದವಗೆ | ಸೆರಗೊಡ್ಡಿ ತಲೆವಾಗೆ
ತೊಡಿಸುವ ನಿನಗವ ತೋರಹಾರವ ||2||

ಸ್ವರವಚನವ ಪಾಡೆ | ಸಮರಸವನು ಬೇಡೆ
ಚರಣಕೆರಗಿ ಬಾಳೆ ಚೆಲ್ವಗಂಗಳೇ |
ಸರಸವನಾಡಲಿಲ್ಲ | ಸಾರೆ ನಿನಗೆ ಸಲ್ಲ
ತರಳೆ ಬಲ್ಲವಳಲ್ಲ ತಡದನಲ್ಲಾ ||3||

ದೊರೆಗಳೊಳಗೆ ನೀಟ | ದೊರೆವರೆಈಸಾಗಾಟ
ತರವಲ್ಲ ತರಳಾಕ್ಷಿ ತಿಳಿಯ ಈಕ್ಷಿಸಿ |
ಪರಮನ ದಯಪಾರಿ ಪರಿಕಿಸೆ ನೀನೊಯ್ಯಾರಿ
ಉರವಣಿಸಿನ್ನಾದೊಡೆ ಉಪಮೆಯುಳ್ಳಡೆ ||4||

ಉರಿಕಪ್ಪುರದಹಾಗೆ | ಉರಗಧರನೊಳಗೆ
ಬೆರೆಯೆ ಎಂದಿನಹಾಗೆ ಬೇಕಾದಹಾಗೆ
ಗುರುಚೆನ್ನಬಸವನ | ಗುಣವುಳ್ಳ ಮಹೇಶನೊ
ಳಿರು ಪರದಲಿ ಮುಕ್ತಿಯಿರುವುದು ಶಕ್ತಿ ||5||

ಎಲೆಮನವೆ ಮರುಗದಿರು
ಎಲೆಮನವೆ ಮರುಗದಿರು ಪರರು ಜರದಪರೆಂದು
ಸಲೆ ನಿನ್ನ ಮನವನರಿದಿಹ ಪರಮನಿರಲೂ ||ಪ||

ಅತಿರಂಬೆಯಾದೊಡಂ ಯತಿತಾನು ಒಲಿವನೆ
ಪತಿವ್ರತೆಯು ಪರಪುರುಷಗೆಳಸುತಿಹಳೆ
ಅತಿಧರ್ಮಿಯೆನಿಸಿ ಬಾಳುವನು ಪರಹಿಂಸೆಗಳ
ಹತಮಾಳ್ಪನೆಂಬ ಮತಹುಟ್ಟಲವಗುಂಟೆ ||1||

ಪಾವಕನು ಎಂದಡದಂ ಬಾಯಸುಡುವದೆ ಬಂದು
ಪಾವು ಎಂದೊಡೆ ಪಾರಿ ಕಡಿದುದುಂಟೆ
ಸಾವ ವಿಷವೆಂದು ಪೇಳಲು ಜೀವಲಯವಹುದೇ
ರಾವು ಎಂದೊಡೆ ಪಾರಿ ಕಡಿದುದುಂಟೇ ||2||

ವೀರನೊಳಧೈರ್ಯವಿರೆ ವೀರತ್ವಮಾಣ್ಬುದೆ
ವಾರಿಯೆಂದೊಡೆ ಕಿಜ್ಜುವಾರುತಿಹುದೆ
ಮಾರಮರ್ಧನಯೋಗಿ ನಾರಿಯರಿಗೆಳಸುವನೆ ವಿ
ಚಾರವರಿಯದೆ ನೀನು ಮರುಗುತಿರಲೇಕೆ ||3||

ರವಿಯಕಿರಣದ ಮುಂದೆ ತಮಮೆಯ್ಯಗೊಟ್ಟಿಹುದೆ
ಹವಿಯೊಡದೆ ತೃಣಕಾಷ್ಟ ಬಾಳುತಿಹುದೆ
ಆವಿರಳದ ರತ್ನದೊಳು ಪಾಷಾಣನೆಲಸಿಹುದೆ
ಪವಣರಿಯದವ ನುಡಿದಡೇನು ಕುಂದಹುದೆ ||4||

ಸ್ತುತಿಗೇಕೆ ಹೆಚ್ಚುತಿಹೆ ಅತಿನಿಂದ್ಯಕಳುಕುತಿಹೆ
ಸುತಿನಿಂದ್ಯ ದ್ವಿತಿಯೇಕವೆಂದು ತಿಳಿದು
ಮಥನದಿಂದಾರೆನೆಲು ಕತಿಗೊಳದಿರು ಮನವೆ ಅ
ಪ್ರತಿಮ ಚೆನ್ನಬಸವೇಶ ಗತಿಯಿರಲುನಿನಗೆ ||5||

ಬಲ್ಲೆನೆಂಬರಿ ಶರಣರಿಂಗಿತವ
ಬಲ್ಲೆನೆಂಬರಿ ಶರಣರಿಂಗಿತವನರಿಯದನ
ಬೆಲ್ಲವನು ಕಲ್ಲೆಂಬ ಕುಲ್ಲಮಾನವನ ||ಪ||

ಕುರಿಯು ಕಬ್ಬಿನ ರಸದ ಇರವನರಿಯದೆ ಪೋಗಿ
ಗರಿದಿಂಬುದುದರ ಹೆಸರೊಂದು ಪರಿಯೆ |
ಪರಮ ಸಾರಾಮೃತವ ನೆರೆಸವಿದ ಭರಿತನನು
ನರನೆಂದೊಡಾ ಮನುಜ ಕುರಿಯಲ್ಲವೆ ||1||

ಮಿಗೆದೊಡ್ಡ ನಗವಿರಲು ಸುನಿಪೋಗಿ ಬಗುಳಿದೊಡ
ಜಗಳುವುದೆ ಆ ಸುನಿಯ ಪರಿಯದೊಂದೆ
ಅಘಹರನ ನೆರೆಯರಿದ ಸುಗುಣ ಶಿವಯೋಗಿಗಳ
ಬಗೆಯಿಂದ ಗಳಹುವನು ಸುನಿಯಲ್ಲವೆ ||2||

ದಾನಿ ದಾರಿಯೊಳು ಬರೆ ವಾನರಾತನ ಕಂಡು
ದಾನಿಯೆಂದರಿಯದೇಡಿಸುವಗದೇನು
ಜ್ಞಾನಿಗಳ ಜ್ಞಾನವರಿಯದೆ ನುಡಿದನವ ಹೀನ
ಮಾನವನು ಸುದ್ದವಾನರನಲ್ಲವೇ ||3||

ನೆರೆಮರುಳ ಗರಗರನೆ ತಿರುಗಿ ಶಿರದಿರುಗಿದೊಡೆ
ಧರೆದಿರುಗುತಿದೆಯೆಂಬುದು ನಿರವದೇನು
ನರ ತನ್ನೊಳಿರುವ ದುರ್ನೀತಿಯನು ಎಲ್ಲರೀ
ಪರಿಯೆಂದಡಾರಾದೆಡರಿಯಲ್ಲವೆ ||4||

ರವಿಯ ಸಾಪಿಸಿ ಧೂಳಕವಿಯಲಿಡಲದು ತನ್ನ
ಕವಿವುವೆಂಬುದನರಿಯದವ ಜಾಣನೆ
ಭವರಹಿತ ಚೆನ್ನಬಸವೇಶ್ವರನ ಶರಣನು
ಅವಿಚಾರದಿಂ ನುಡಿದು ಭವಕೆ ಗುರಿಯಹನು ||5||

ಏಣಲೋಚನೆ ನೀ ತೋರೆ
ಏಣಲೋಚನೆ ನೀ ತೋರೆ ಪ್ರಾಣೇಶನ
ಕಾಣದೆ ನಾನಿರಲಾರೆನೆ ಮಾನಿನಿ ರನ್ನೆ ||ಪ||

ಇಂದುವದನೆ ಕೇಳಮ್ಮ ನಲ್ಲನಿಲ್ಲದೆ
ಒಂದಿನೊಂದೊರುಷವಾಗಿದೆ ಮಂದಗಮನೆ
ಗಂಧ ಕತ್ತುರಿ ಪುಣುಗು ಘ್ರಾಣೇಂದ್ರಿಯಕೆ
ಒಂದಿನಿತು ಸೊಗಸವೆಲೆ ಮಾನಿನಿ ರನ್ನೆ ||1||

ಚನ್ನಿಗನೊಂದರಗಳಿಗೆ ಕಾಣದೆ ಜಿಂಹ್ವೆ
ಗನ್ನ ನಂಜಾಗಿದೆ ಸಖಿಯ ಮೋಹನ ರನ್ನೆ
ತನ್ನನಲ್ಲದನ್ಯವನೋಡೆ ಕಣ್ಣಿಗೆಯವು
ಭಿನ್ನವಿಟ್ಟು ತೋರುತಿವೆ ಕೋ ಮಾನಿನಿ ರನ್ನೆ ||2||

ರನ್ನ ಬಣ್ಣದೊಡಿಗೆಯೆಲ್ಲ ಅಂಗದೊಳಿರ
ಲುನ್ನಂತ ಹೊರೆಯ ಶಿರದಿ ಹೊತ್ತಹಾಗಿದೆ
ಕಿನ್ನರಿವೀಣೆಯ ಸ್ವರವ ಕೇಳುವದಕೆ
ಚನ್ನೆ ಎನಗಿಚ್ಚೆದೋರವೆ ಮಾನಿನಿ ರನ್ನೆ ||3||

ಗಂಡನಗಲಿದ ವನಿತೆ ಸರ್ವಭೋಗವ
ನುಂಡು ಉಟ್ಟು ಸುಖಿಸುವಳೆ ಪುಣ್ಯಾಂಗನೆ
ಪುಂಡರೀಕ ನಯನದಳೆ ಮಂಡೆಯಿಲ್ಲದ
ಮುಂಡದಂತಾನಿರುತಿಹೆನೆ ಮಾನಿನಿ ರನ್ನೆ ||4||

ಹುಣ್ಣಿಮೆಯದಿನಗಳೆದ ತಾರಾಪನು
ಸಣ್ಣ ನಾಗುವತೆರದೊಳು ಕೇಳಕ್ಕಯ್ಯ
ಬಣ್ಣಿಸಲಿನ್ನೇನು ಹಲವಕಾಮಿಸಿ ತನು
ಬಣ್ಣಗುಂದಿ ಬಡವಾದೆನೆ ಮಾನಿನಿ ರನ್ನೆ ||5||

ದಿನಕರನುದಯವನು ಪಾರುತಲಿರ್ದ
ವನಜದೊಲಾನಿರುತಿಹೆನೆ ಜಾಣೆ ನಿನ್ನಾಣೆ
ಮನಸಿಜವಿದಳನಿಗೆ ನಾ ಮನಸೋತು
ವನಿತೆ ಜೀವಿಸಲಾರೆನೆ ಮಾನಿನಿ ರನ್ನೆ ||6||

ದೇವಾದಿ ದೇವೇಶನ ನಮ್ಮಯ್ಯನ
ದೇವಚೆನ್ನ ಬಸವೇಶನ ಸರ್ವೇಶನ
ಭಾವೆ ನಮ್ಮೀರ್ವರನು ಕೂಡಿಸು ಬೇಗ
ಆವಾಗ ನಾನಗಲೆನಮ್ಮಾ ಮಾನಿನಿ ರನ್ನೆ ||7||

ಬರಿದೆ ಮುನಿಯಸಲ್ಲ
ಬರಿದೆ ಮುನಿಯಸಲ್ಲ ಬಾರೋಮನೆಗೆ ನಲ್ಲ
ಚರಿತೆಯುಳೊಳ್ಳು ಕರ ಚಂದ್ರಶೇಖರ ||ಪ||

ತಳಿರಡಿಯಬಲೆಯ ತರಹರದನೀರೆಯ
ಅಳಿಯರಿ ನಾಶಿಕದ ಆಲರುಮುಖದ
ಎಳೆವರೆಯದ ನಾರಿ ಎದೆಗುಂದಿದಳೀಬಾರಿ
ಕಲಹಬೇಡ ಪಾಲಿಸೊ ಕರದು ಮನ್ನಿಸೋ ||1||

ಮುಗುಳುನಗೆಯ ಮುದ್ದು ಮುಖದ ಕಾಂತೆಯೊಳಿರ್ದು
ಅಗಲಲಾಗದು ನೀನು ಅಂದಗಾರನು|
ಬಗಸೆಗಂಗಳ ಹೊನ್ನ ಬಗರಿಯುರದ ಹೆಣ್ಣ
ನಗೆಗೀಡಮಾಡಿದೆ ನಲ್ಲ ಬರಿದೆ ||2||

ಕರವರೋ ಎಂಬಳು ಕರವೆತ್ತಿಮುಗಿವಳು
ಎರವಿದೇತಕೆ ಸಾರೋ ಏ ನಲ್ಲ ಬಾರೋ
ಬರವನೆ ನೊಡುವಳು ಬರಿದೆ ಹಂಬಲಿಪಳು
ಮರಹಿನ ಮಾತಿದಲ್ಲ ಮನೆಗೆ ಬಾ ನಲ್ಲ ||3||

ಕುಂಜರಗಮನೆಯ ಕಂಜದಳನೇತ್ರೆಯ
ಮಂಜುಳವಾಣಿಯಂ ಮನ್ನಿಸೋಪ್ರಿಯ |
ಕೆಂಜೆಡೆಯಭವ ನಿನ್ನ ಕಳವಳಿಸದ ಮುನ್ನ
ನಂಜುಗೊರಳ ನೀಬಂದು ನಂಬಿಸೋ ಇಂದು ||4||

ಹಲವ ನೀನೆಣಿಸದೆ ಹಗಲಿರುಳೆಂದೆನ್ನದೆ
ಲಲನೆಯನೊಡಗೂಡೋ ಲೇಸ ನೀ ಮಾಡೊ
ಸಲಿಗೆಯವಳ ಸಲಹೋ ಸದ್ಗುಣರನ್ನ
ಚೆಲುವರರಸ ದೇವ ಚೆನ್ನಬಸವಾ ||5||

ಸಾರಿ ಹೇಳಿದೆ ಸ್ಥಿರವಲ್ಲವೀ ಶರೀರ
ಸಾರಿ ಹೇಳಿದೆ ಸ್ಥಿರವಲ್ಲವೀ ಶರೀರ ಮದ
ನಾರಿಯ ನೆನೆಕಂಡ್ಯ ಜೀವವೆ ಜೀವವೆ ||ಪ|

ಮತ್ತ ಮಾನಸನಾಗಿ ನಾನಾಯೋನಿಗಳೊಳು
ಸುತ್ತುತಲಿರುವ ಜೀವವೆ ಜೀವವೆ |
ನೆತ್ತಿಗಣ್ಣಿನ ಶರಣಾಳಿಗೆರಗಿ ಬಪ್ಪ
ಮೃತ್ಯುವ ನೀಗೆಲ್ಲು ಜೀವವೆ ಜೀವವೆ ||1||

ಮುಂದನೆಣಿಸಿ ಮುಂಡೆಯಂತೆ ಚಿಂತಿಸಿನೀನು
ಸಂದೇಹಗೊಳಬೇಡ ಜೀವವೆ ಜೀವವೆ
ಸಂದ ಶರಣರಸಂಗವ ಮಾಡಿ ನೀಂ ಬರಿದೆ
ಬಂದು ಭವವ ಗೆಲ್ಲು ಜೀವವೆ ಜೀವವೆ ||2||

ದಾತ್ರಿ ವಾಹನ ನಿನ್ನ ಕನಕ ಕಾಮಿನಿ ಚೆಲ್ವ
ಪುತ್ರ ಮಿತ್ರರುಗಳು ಜೀವವೆ ಜೀವವೆ |
ವಸ್ತ್ರಭೂಷಣಗಳಸ್ತಿರವೆಂದು ಕಂಡು ತ್ರಿ
ನೇತ್ರನ ನೆನೆಕಂಡ ಜೀವವೆ ಜೀವವೆ ||3||

ನನ್ನವೆಂದೆನ್ನದೆ ತನುಮನಧನಗಳ
ಮಾನ್ಯರಿಗೆಡೆ ಮಾಡು ಜೀವವೆ ಜೀವವೆ |
ಹೊನ್ನು ಹೆಣ್ಣು ಮಣ್ಣ ನಚ್ಚಿ ಮಚ್ಚಿರಬೇಡ
ಓಂ ನಮಃ ಶಿವಾಯೆನ್ನು ಜೀವವೆ ಜೀವವೆ ||4||

ವಿಷಯದಿಚ್ಚೆಗೆ ಪರಸತಿಯರಿಗೆಳಸಿ ಮ
ಣ್ಮಸಿಯಾಗಿ ಕೆಡಬೇಡ ಜೀವವೆ ಜೀವವೆ |
ಅಸುವಳಿಯಲು ದೇಹಿ ಎನಬೇಡ ಪರರಿಗೆ
ಅಸಮಾಕ್ಷನ ನೆನೆ ಜೀವವೆ ಜೀವವೆ ||5||

ಕಾಳುವದಿಂದ್ರಿಯ ಕಾಲಾಡಲೀಸದೆ
ತಾಳೀಶ ಭಕ್ತಿಯ ಜೀವವೆ ಜೀವವೆ |
ಬಾಳುವ ಕಾಲದಿ ಶೂಲಿಯ ಪೂಜಿಸಿ
ಕಾಲನ ಗೆಲು ಕಂಡ ಜೀವವೆ ಜೀವವೆ ||6||

ಕರಣಾದಿ ಗುಣಗಳ ಹರನೊಳು ನಿಲಿಸಿ
ಸ್ಥಿರಚಿತ್ತಪರನಾಗು ಜೀವವೆ ಜೀವವೆ |
ಗುರುಚೆನ್ನ ಬಸವನ ಸ್ಮರಣೆಯಿಂದಿರುತಿರು
ಪರಮನೆ ನೀನಹೆ ಜೀವವೆ ಜೀವವೆ ||7||

ಏತಕೆನ್ನೊಡನೆ ಕೋಪ
ಏತಕೆನ್ನೊಡನೆ ಕೋಪ ಏಣಾಂಕಧರಗೆ ನೀರೆ
ಮಾತುಮನದೊಳಿರ್ದೆನ್ನ ಮಾನಿನಿರನ್ನೆ ||ಪ||

ಒಳಹೊರಗೆರಡಿಲ್ಲದೆನ್ನೊಳು ತಾನಿರುತಿರ್ದು
ಗಳಿಗೆಗೊಮ್ಮೆಮ್ಮೆ ತಪ್ಪನರಸಸಲ್ಲಾ |
ನಳಿನಸಖನು ತಾನು ಜಲಜದಂದದಿ ನಾನು
ಎಳೆವೆರೆದಲೆಯಾಗೆ ಮುಳಿಸು ಸಲ್ಲಾ ||1||

ಉಡುಪಗೆ ಕುವಲಯಕೆರಡಕು ಪಗೆಯುಂಟೆ
ಪೊಡವಿಯೊಳಗೆ ಭಾವೆ ಪೋ ಸತಿ ನುಡಿ |
ಒಡನುಂಡು ಬೇರೆ ಕಯ್ಯ ತೊವುದುಚಿತವಲ್ಲ
ಮಡದಿರನ್ನಳೆ ಶೂಲಿಗರುಹುವುದು ||2||

ಅಪರಂಜಿಯೊಳು ರತ್ನ ರಾಜಿಸುವಂತೆನ್ನೊಳಿರ್ದು
ಉಪಮೆಯೆಯಭವಗೆ ತೊಲಗುವದು |
ಕಪಟವೆಳ್ಳಿನಿತಿಲ್ಲವೆನ್ನೊಳು ನಿನ್ನಾಣೆ ಕೇಳು
ತ್ರಿಪುರವೈರಿಯ ಬೇಗ ಕರೆತಾ ನೀರೆ ||3||

ಸಂದಬಳಿಕ ಹೊನ್ನಿಗೆ ವಟ್ಟವ ಕೇಳುವರೇನೆ
ಇಂದುಮೌಳಿ ಎನ್ನ ಕೂಡಿಯಗಲುವರೆ
ಕಂದುಗೊರಲನಡಿಯ ಕಾಣದೆ ಮನಸು ಅರ
ವಿಂದದೆಲೆಯ ನೀರಿನಂತಿಹುದಮ್ಮ ||4||

ಭಾನುಕೋಟಿ ಶಶಿಕಳೆವರನ ವೈನದಿಂದಲಿ
ನೀನೊಡಗೂಡಿ ಬಂದು ಚಂದಿರಾನನೆ
ದಾನಿ ದಯಾಳು ಚೆನ್ನ ಬಸವದಂಡೇಶಗೆನ್ನ
ಮಾನಿನಿಯವನಕಯ್ಯ ಕೊಟ್ಟುದ್ಧರಿಸೇ ||5||

ಮೆಚ್ಚುವರೆ ಅವರನಚ್ಚ
ಮೆಚ್ಚುವರೆ ಅವರನಚ್ಚ ಲಿಂಗಾಂಗಿಗಳು
ದುಶ್ಚರಿತ ದುರ್ಮಾರ್ಗಿಗಳ ಕಂಡಡೆ ||ಪ||

ಗುರುವಿನೊಳು ತಪ್ಪುಗನ ಲಿಂಗಬಾಹ್ಯನನಘ
ಚರಮೂರ್ತಿಯನು ಕೊಂದ ಜಡಮಾನ್ವನಾ |
ಹರನ ಸದ್ಭಕ್ರರನು ಕುಲವೆತ್ತಿ ನುಡಿದವನ
ಪರಸತಿಯರೊಳೊರ್ತಿಸುವ ಕುರಿಮನುಜನಾ ||1||

ವ್ರತವನೆಡೆಬಿಟ್ಟವನ ವ್ರತಗೇಡಿಗಳ ಮನೆಯ
ಲತಿಪ್ರಿಯದೊಳು ತಿಂಬ ಮತಿಹೀನನ |
ಕೃತಕದಲಿ ಸಜ್ಜನರನತಿನೋಯಿಸುವ ನರನ
ಕ್ಷಿತಿಯೊಳು ಪಶುಗಳಿಗೆ ಸರಿಯೆಂಬರಲ್ಲದೆ ||2||

ಹಣ ಹೊನ್ನು ಹೆಣ್ಣುವನು ಬಣಿತೆಯಿಂದಲಿ ಗಳಿಸಿ
ತ್ರಿಣಯನವರುಗಳಲ್ಲಿಗೈತಂದೊಡೆ
ಹೆಣನಕಚ್ಚುವ ಸುನಿಯ ತೆರನಂತೆ ಗುರಿಡುವ
ಬಣಗು ಮೂಳರ ತಲೆಯ ಸೆಣೆಯದಿಹರೆ ||3||

ಶಿವನಲಾಂಚನವಿಡಿದು ಭವಿಸ್ನೇಹಮಾಡುವನ
ಶಿವಮಂತ್ರವನು ಭವಿಗೆ ಪೇಳುವವನ
ಶಿವಲಿಂಗ ಜಂಗಮನ ಭಜಿಸಿ ನರನೆಂಬುವನ
ಭವಭಾರಿಯವನೆಂದು ಕಳವರಲ್ಲದೆ ||4||

ಅಷ್ಟಾವರಣಂಗಳೊಳು ನೈಷ್ಟೆಯುಳ್ಳವರಾಗಿ
ಸೃಷ್ಟಿ ಪಾಲಕ ಚೆನ್ನಬಸವನಡಿಯ
ಕಷ್ಟಸಂಸ್ಕೃತಿಯಳಿದು ಮುಟ್ಟಿ ಭಜಿಸುವರುಗಳ
ಎಷ್ಟಾದೊಡಂ ಬಿಡದೆ ಪೊಗಳ್ವರಲ್ಲದೆ ||5||

ಆಗದಾಗದು ನಿಮ್ಮ ಕರುಣ
ಆಗದಾಗದು ನಿಮ್ಮ ಕರುಣ ದೇವ
ನೀಗಿ ದುರ್ಗುಣಗಳನು ಶಿವಯೆಂಬಗಲ್ಲದೆ ||ಪ||

ಆಸೆ ಹುಸಿಯನು ಬಿಡದೆ ರೋಷಲೋಭವ ಸುಡದೆ
ಪೂಸರನ ಬಾಣಕ್ಕೆ ಗಾಸಿಯಾಗದೆ ಮುಂದೆ
ಮೋಸ ಹೋಗದೆ ಕೀನಾಸನಿಗೆ
ನಾಶವಾಗದೆ ಅಷ್ಟಮದ ಮೂರುಮಲಗಳಿಂ
ಹೇಸಿ ಪರಧನಕೆ ಪರಸತಿಗೆ ಪರನಿಂದ್ಯಕ್ಕೆ
ವಾಸವಾಗದೆ ನಿಮ್ಮಪದವ ಹೃದಯಾ
ವಾಸದೊಳು ನೆಲೆಗೊಳಿಸಿ ಶಿವಯೆಂಬಗಲ್ಲದೆ ||1||

ತೊಳಲುತಿಹ ಕಾಂಕ್ಷೆಯನು ತುಳಿದುನಿಂದಿರಬೇಕು
ಸುಳಿವುತಿಹ ಸಪ್ತವೆಸನಗಳನಳಿದಿರಬೇಕು
ಬಳಸದಿರಬೇಕು ಷಡ್ಭ್ರಮೆಯ
ತಳೆದಂತಃಕರಣಗಳ ಬಳಕೆಯನು ಬಿಡಬೇಕು
ಹಳಿದು ಷಡುವರ್ಗಗಳ ಸುಳಿಯ ಪರಿದಿಡಬೇಕು
ಕಳವು ದುಶ್ಚರಿತ ದುರ್ಗುಣವನಳಿದು
ತಿಳಿದಂತರಂಗದೊಳು ನಿಮ್ಮನೆನೆವಗಲ್ಲದೆ ||2||

ಗುರುಲಿಂಗಜಂಗಮದಚರಣದೊಳು ತನುನಿಂದು
ವರಸುಪ್ರಸಾದ ಪಾದೋದಕಕ್ಕೆ ಮನಸಂದು
……………………………..ಳುಸಲೆಂದು
ಉರುತರದ ಪ್ರಣಮ ಘನವೆಂದು |
ಧರಿಸಿ ತನುಮನದ…………………………..
ಪರಮಭಕ್ತ ಮಾಹೇಶ ಸುಪ್ರಸಾದಿಯು ಬಂದು
ವರಪ್ರಾಣಲಿಂಗಿ ಶರಣೈಕ್ಯರ್‍ನಿಮ್ಮ
ಸರಿ…………………………………..ಚೆನ್ನಬಸವ ||3||

ಇನಿತೇಕೆ ಕಡುಗೋಪ ವನಿತೆ
ಇನಿತೇಕೆ ಕಡುಗೋಪ ವನಿತೆ ರನ್ನಳಕೂಡೆ
ಮನಸಿಜಾಂತಕನೆ ಬಾರೋ ಏ ಸಂಗಯ್ಯಾ ||ಪಲ್ಲ||

ಸೊಕ್ಕುಜವ್ವನ ಸೋಲ್ಮುಡಿಯ ಭಾವಕಿರನ್ನೆ
ದುಃಖಪಟ್ಟಳು ಬಾರಯ್ಯ ಏ ಸಂಗಯ್ಯ |
ಕರ್ಕಸಕುಚದ ಸೊಂಪೆಸೆವ ಮಾನಿನಿಯಳ
ಮುಕ್ಕಣ್ಣಹರ ಮನ್ನಿಸೋ ಏ ಸಂಗಯ್ಯ ||1||

ತುಂಬಿಗುರುಳ ತರಳಾಕ್ಷಿ ತಲ್ಲಣಿಸಿಹಳು
ತುಂಬಿಸೋ ಮನದ ಸೋವ ಏ ಸಂಗಯ್ಯ |
ತುಂಬುಜವ್ವನದ ಮಾಂದಳಿರ ಪೋಲ್ವಡಿಯಳ
ಶಂಭುಶಂಕರ ಪಾಲಿಸೋ ಏ ಸಂಗಯ್ಯ ||2||

ಬಡನಡುವಿನ ಬಾಳೆಸುಳಿಯಸುವಿನಚೆಲ್ವೆ
ನುಡಿಗುಂದಿಬಡವಾದಳೋ ಏ ಸಂಗಯ್ಯ |
ಮಡಿದಿ ರನ್ನೆಯಳೊಳು ಮನಮುನಿಸನೆಬಿಡೊ
ಮೃಡನೆ ಮುಪ್ಪುರಹರನೆ ಏ ಸಂಗಯ್ಯ ||3||

ನೋಟಕೂಟದೊಳಿರ್ದು ನೋಡದೆ ಬಂದೆ ಇಂದು
ಜೂಟ ನಿನಗೆ ಸಲ್ಲದೊ ಏ ಸಂಗಯ್ಯ |
ಊಟವತೊರದುಮ್ಮಳಿಪ ಭಾವೆಗೆ ನಿನ್ನ
ನೋಟದ ಜೋಡ ಕೂಡಿಸೋ ಏ ಸಂಗಯ್ಯ ||4||

ಬಲುನಂಬಿದಳಬಿಟ್ಟು ಬೆಲೆವೆಣ್ಣೆನೊಳು ಬಂದೆ
ಸುಳುಹುದೋರದೆ ಬಾಲೆಗೆ ಏ ಸಂಗಯ್ಯ |
ಜಲಜಲೋಚನೆ ನಿನ್ನ ನೆನದಳಲುತ ಬಲು
ಬಳಲಿ ಬಾಯಾರುತಿರ್ದಳೋ ಏ ಸಂಗಯ್ಯ ||5||

ನರಿಯ ಮೊಗವು ಉಡುಪನುದಯವಗಂಡ
ವಾರಿಜದಂತಾದುದಲ್ಲೊ ಏ ಸಂಗಯ್ಯ |
ದಾರಿದಾರಿಯ ನೋಡಿ ದ್ರವಗುಂದಿದಳೊ ನಾರಿ
ತೋರಿಸೋ ನಿನ್ನ ಪಾದವ ಏ ಸಂಗಯ್ಯ ||6||

ತರಳೆವೆಣ್ಣಿನ ಕೂಡೆ ತರ್ಕವೇತಕೆ ಪೋಗಿ
ನೆರೆಯೊ ಭಾವಜಹರನೆ ಏ ಸಂಗಯ್ಯ
ಧರೆಯೊಳತ್ಯಧಿಕವೆಂದೆನಿಪ ಕಲ್ಯಾಣದ
ಗುರುಚೆನ್ನಬಸವಲಿಂಗ ಏ ಸಂಗಯ್ಯ ||7||

ಹಮ್ಮುಬಿಡೆಲೊ ಮನುಜ
ಹಮ್ಮುಬಿಡೆಲೊ ಮನುಜ ನೀಡುತಿಹೆನೆಂದೆಂಬ
ಕಮ್ಮಗೋಲಾರಿ ಶರಣರು ನಗುವರೆಲವೊ ||ಪ||

ಗಿರಿಗೆ ಚಳಿಯಾಗೆ ಪೊದಿಸುವರುಂಟೆ ಅಂಬರವ
ಧರೆಗೂರೆಯಗಿ ನಿಲಿಸುವರುಂಟೇ ಕೊರಡ
ಶರಧಿಗತಿತೃಷೆಯಾಗೆ ಜಲವನೆರೆದವರುಂಟೆ
ಸಿರಿಪತಿಗೆ ಒಪ್ರ್ಪಣವ ಕೊಡುವರುಂಟೆ ಮರುಳೆ ||1||

ಭಾನುವಿನುದಯಕ್ಕೆ ಸೊಡರನೆತ್ತುವರುಂಟೆ
ಆನೆಗಂದಳವ ಜಗದಿ ಜೋಡಿಸಿದವರುಂಟೆ
ಮಾನವನೆ ಕೇಳು ದಶದಿಕ್ಕ ಪೊದ್ದಭವನಿಗೆ
ನೀನನ್ನ ವಸ್ತ್ರವನು ಕೊಡುವ ಪರಿಯೆಂತೋ ||2||

ಸುರಭಿಯಿದ್ದವಗೆ ಬರಡಾವ ಕೊಡುವವನಂತೆ
ಪರಮ ಜ್ಯೋತಿರ್ಮಯದ ಲಿಂಗದೆಡೆಗೆ
ವಿರಚಿಸುವದೆಂತೋ ಜ್ಯೋತಿಯನು ಘನತರವಾದ
ಪರಿಮಳದ ಲಿಂಗಕ್ಕೆ ಪುಷ್ಪವಿನ್ನೇಕೋ ||3||

ಮೊಗೆವಾಲ ದುಗ್ಧವಾರಿಧಿಗೆ ನೀಡುವನಂತೆ
ಗಗನ ಮಂಡಲಕೆ ಏಣಿಯನು ಪಿಡಿವ
ಬಗೆಯೆಂತೊ ನಿತ್ಯತೃಪ್ತನಿಗೆ ಉಣಬಡಿಸುವನು
ಜಗದೊಳಾರುಂಟು ಹೇಳೆಲೊ ಮಾನವಾ ||4||

ಭಯಭಕ್ತಿ ಕರುಣ ಕಿಂಕುರ್ವಾಣ ದಾಸೋಹ
ನಯ ಭೃತ್ಯಭಾವ ನಿನ್ನೊಳಗೆ ನೆಲೆಗೊಳಲು
ಲಯಗಮನ ರಹಿತ ಶ್ರೀ ಗುರುಚೆನ್ನಬಸವೇಶ
ದಯದಿಂದ ನಿನ್ನ ರಕ್ಷಿಸುವನನವರತಾ ||5||

ಗುರುವೆ ಇಂದಿರಾಧವನನಕ್ಷಪಾದ
ಗುರುವೆ ಇಂದಿರಾಧವನನಕ್ಷಪಾದ ಪಂಕಜನೆ
ಬಾಲೇಂದುಧರ ವಿವರ್ಜಿತನೆ
ಗುರುವೆ ಕಂದರ್ಪ ದರ್ಪವನದಾವ
ನಿಮ್ಮಯ ಕರುಣದಿಂದೆನ್ನ ಪೊರೆಯೋ ||ಪ||

ಗುರುವೆ ಬೆಂದಮನ ಹಲವ ಹಂಬಲಿಸಿ
ಹಸಗೆಡುತಲಿದೆ ಮುಂದುಗಾಣದೆ ಮೃತ್ಯುಂಜಯನೆ
ಗುರುವೆ ಇಂದುವದನೆಯರ ರತಿಗಳಿಗೆಳಸಿ
ನಿಮ್ಮಡಿಯ ಪೊಂದಲೀಯದು ಹಂದೆ ಮನವು |
ಗುರುವೆ ತಂದೆ ನೀವಲ್ಲದೆನಗಿಲ್ಲವೆನ್ನೊಳಗಿರ್ದು
ಮಂದಮತಿಗಳನು ಅತಿಗಳದು
ಗುರುವೆ ಎಂದೆಂದು ನಿಮ್ಮ ಗೇಹದ
ಚೇಟಿಯಾತ್ಮಜನೆಂದೆನ್ನ ರಕ್ಷಿಸೆಲೆ ಗುರುವೆ ||1||

ಗುರುವೆ ಮನವು ಧರೆ ಕನಕ ವಸ್ತ್ರಾನ್ನಗಳಂ
ಬಯಸಿ ಘನಮುಕ್ತಿಯನು ನೆನೆಯದದಿಕೋ
ಗುರುವೆ ಮನವೆ ಮಹಮಾರಿಯಂದದಿ
ಕಾಡಿಕೊಲುತಲಿದೆ ಮನವೆಂಬ ಹಗೆಗಾರನಯ್ಯಾ |
ಗುರುವೆ ಮನದಿಂದ ನೊಂದೆನಾಂ ಮನದಿಂದ
ಬೆಂದೆನಾಂ ಮನದಿಂದ ಕಂದಿಕುಂದಿದೆನೋ
ಗುರುವೆ ಮನವ ನಿಮ್ಮಂಘ್ರಿಯೊಳು ನಿಲಿಸಿ
ನಿಮ್ಮವನೆಂದು ಮನಸಿಜಾಂತಕನೆ ಕೃಪೆಯಾಗೊ ||2||

ಗುರುವೆ ಹಣ್ಣಿರ್ದ ಮರನನೇರಿದ ಕಪಿಯು
ಕೊನೆಕೊನೆಯ ಹಣ್ಣು ಹಣ್ಣಿಗೆ ಲಂಘಿಪಂತೆ
ಗುರುವೆ ಕಣ್ಣು ಮನ ರೂಪು ರಸ ಗಂಧಾದಿ ದ್ರವ್ಯಗಳ
ಬಣ್ಣಿಸುತ ಪರಿದಾಡುತಿಹುದೂ |
ಗುರುವೆ ಎಣ್ಣೆಯೊಳು ಬಿದ್ದ ನೊಣದಂತೆ
ತ್ರೈಮಲವೆಂಬ ಕಣ್ಣಿಯೊಳು ಸಿಲುಕಿದಾತ್ಮನಿಗೆ
ಗುರುವೆ ಹೆಣ್ಣನರ್ಧಾಂಗದೊಳು ನೆರೆತಾಳ್ದ
ದೇವ ಮುಕ್ಕಣ್ಣ ನೀಯೆನಗೆ ಕೃಪೆಯಾಗು ||3||

ಗುರುವೆ ಕಾಯಗುಣದಿಂದ ಕಣ್ಗೆಟ್ಟು ಮತಿಗೆಟ್ಟು
ನಾಂ ದೇವ ನಿಮ್ಮಡಿಯ ಮರೆಹೊಕ್ಕೆ
ಗುರುವೆ ತೋಯಜಾಪ್ತನ ಸುತನ ಪುರವ ಪುಗದಂತೆ
ಯತಿರಾಯ ನೀ ಮಾಡೋ ಮನವಲಿದು |
ಗುರುವೆ ಕಾಯಜಾಂತನೆ ಕಮನೀಯ ಮಂದಿರನೆ
ನೀ ಕಾಯದಿರೆ ಪರರುಂಬೆ ಎನಗೆ
ಗುರುವೆ ತಾಯಿರಕ್ಕಸಿಯಾಗೆ ಶಿಶುವೆಂತು ಜೀವಿಪುದು
ಮಾಯಾರಿ ನೀನೆ ಕೃಪೆಯಾಗೊ ||4||

ಗುರುವೆ ಮೂರೇಳು ದೀಕ್ಷೆಯನು ಮೂರಂಗಕನುಗೊಳಿಸಿ
ನೂರೊಂದು ಸ್ಥಲಗಳನ್ವಯವಾ
ಗುರುವೆ ತೋರಿ ಲಿಂಗಾಂಗ ಸಮರಸದ ಭೇದವ
ತಿಳುಪಿಬಾರೆನ್ನ ಹೃದಯಮಂದಿಕೆ |
ಗುರುವೆ ವೀರಶೈವಾರ್ನವ ಸುಧಾಕರ ಸಭಾಕರನೆ
ಕಾರಣಾಂಗನೆ ಕರ್ಮಹರನೆ
ಗುರುವೆ ತಾರಕಾಚಲವಾಸ ಗುರುಚೆನ್ನಬಸವೇಶ
ತೋರೆನಗೆ ನಿಮ್ಮೊಳೈಕ್ಯವನೂ ||5||

ನೊಂದೆ ಭವದಿ ಬಂದುಕಾಯೋ
ನೊಂದೆ ಭವದಿ ಬಂದುಕಾಯೋ ಗುರು
ತಂದೆ ಅಭಯವನೆನಗೀಯೋ ||ಪ||

ಶರಣಶ್ರೇಣಿಗಳ ಸಹಾಯ-ಚಂದ್ರ
ಧರನೆ ಈಕ್ಷಿಪುದು ನಿರ್ಮಾಯ |
ಪರತರಸುಕೃತದಬೀಯ-ಮಹ
ದರಿವಿತ್ತು ಪೊರೆ ಗುರುರಾಯ ||1||

ಹೈಮವತಿಯ ಪ್ರಾಣನಾಥ-ಅರಿ
ಭೀಮ ನಂಬಿದೆನೊ ಅಜಾತ |
ತಾಮಸ ಸುರನ ಗೆದ್ದಾತ-ಎನ್ನ
ಪ್ರೇಮದಿ ಪೊರೆಯೋ ಮನ್ನಾಥ ||2||

ಪ್ರಾಣದೆರೆಯ ನೀನೆಲೆಯಯ್ಯ-ಪಂಚ
ಬಾಣನ ಗೆಲಿದ ಎಮ್ಮಯ್ಯ |
ಕಾಣದಂತಿರಲೇತಕಯ್ಯ-ಸುಪ್ರ
ವೀಣ ಪಾಲಿಸುಗೆ ದಮ್ಮಯ್ಯ ||3||

ತ್ರಿಪುರ ಸಂಹರನೆ ಕೇಳೊಲಿದು-ಆಳಿ
ನಪಮಾನವೆಲ್ಲವಾಳ್ದನದು
ಅಪಹಾಸ್ಯವಹುದಿದೆಂದರಿದು-ಪಂಚ
ಲಪನನೆ ಎನ್ನ ರಕ್ಷಿಪುದು ||4||

ಬಿಸಜಾಕ್ಷಿವಂದ್ಯ ಗಿರೀಶ-ತಾಮ
ರಸೋದ್ಭವನ ಗರ್ವನಾಶ |
ಮಸುಳಿಸೋ ಭವವ ಸರ್ವೇಶ-ಚೆನ್ನ
ಬಸವ ಶರಣು ಮನ್ಮಹೇಶಾ ||5||

ಸದಮಲ ಶರಣನ ಶಿವನೆನಿತೆನಿತು
ಸದಮಲ ಶರಣನ ಶಿವನೆನಿತೆನಿತು ಕಾಡಿದೊಡೆ
ಮದನವೈರಿಯನು ಕರಮನದಿ ಪಿಡಿದಿರುವ ||ಪ||

ಭೂತಕಾಯವ ತಾಳ್ದಜಾತ ಗುರುವನು ಕಂಡು
ಜ್ಯೋತಿಲಿಂಗವ ಪಡದು ತನ್ನ ತಾ ತಿಳಿದು
ಘಾತಿಸುವನು ಸಂಸಾರದೇತನೆಯನತಿಗಳದು
ಮಾತಿನೊಳುಶಿವಮಂತ್ರ ನೆಲೆಗೊಂಡ ಮಹಿಮಾ ||1||

ಬ್ರಹ್ಮಾಂಡ ಪಿಂಡಾಂಡದೊರ್ಮವನು ನೆರೆತಿಳಿದು
ತಮ್ಮ ಜ್ಞಾನದ ಪಥದೊಳೆಡೆಯಾಡುತ
ಹಮ್ಮು ಬಿಮ್ಮನೆ ತುಳಿದು ಬ್ರಹ್ಮದಿರವನೆ ಕಂಡು
ಉಮ್ಮಳವನಳಿದು ನಿರ್ಮಲನಾದ ಶಿವಯೋಗಿ ||2||

ಸೀತಾನ್ನಗಳನುಂಡು ತೂತಾಂಬರವ ಪೊದೆದು
ಭೀತಿಯಿಲ್ಲದೆ ಜೀರ್ಣವಾದಾಲಯ
ದಾತ ಸಯನಿಸಿ ತನ್ನ ಆತುಮದ ಲಿಂಗದೊಳು
ಪ್ರೀತಿನೆಲೆಗೊಂಡು ಮೈಮರದ ಸತ್ಪುರುಷ ||3||

ಪರಮಾಮೃತವನುಂಡು ವರಶಾಂತಿರಸವೀಂಟಿ
ಅರಿವಿನಂಬರವನಂಗದೊಳು ಪೊದೆದು |
ಸ್ಥಿರಬುದ್ಧಿಯೆಂಬಡಾಣಿಯೊಳು…. ಅರಿಯೆಂಬ ತ
ಸ್ಕರರ ನೆರೆತಗುಳ್ದ ಪರಮಯೋಗೀಶ ||4||

ಸಾಲುಚಕ್ರಗಳಾಗ್ರದಾಲಯದೊಳಿರ್ಪ ನಿ
ರಾಳವಸ್ತುವನನುಮಿಷದೈಕ್ಕಿನಿಂ
ದಾಲೋಕಿಸುತೆ ನೋಡಿ ಕೀಲೈಸಿಮನವ ಸ
ಲ್ಲೀಲೆಯಿಂದಿರ್ಪ ಚಿದ್ರಸಭರಿತನೂ ||5||

ತನುಮನದ ಗುಣಗಳನು ಅನುಗೂಡಿ ಲಿಂಗದೊಳು
ಕನಸುಮನಸೆಲ್ಲ ಲಿಂಗದ ನೆನಹದಾಗಿ
ತನುತ್ರಯವ ಲಿಂಗತ್ರಯವಮಾಡಿ ಸುಜ್ಞಾನ
ವನಧಿಯೊಳು ಮುಳುಗಿಪ್ಪ ಶರಣಾಗ್ರಗಣ್ಯ ||6||

ಲಿಂಗ ನೋಟವೆ ನೋಟ ಲಿಂಗ ಕೂಟವೆ ಕೂಟ
ಲಿಂಗಭಾವವೆ ಭಾವವಾಗಿ ತನ್ನ
ಲಿಂಗ ಗುರುಚೆನ್ನ ಬಸವೇಶ್ವರನ ಪದವ ಹೆರೆ
ಹಿಂಗದಿರುತಿರ್ಪನತಿ ದಿವ್ಯಯೋಗಿ ||7||

ಪುಟ್ಟಿಸಿದೇಕೆ ಶಂಕರನೆ
ಪುಟ್ಟಿಸಿದೇಕೆ ಶಂಕರನೆ ಎನ್ನುವನು-ಮನ
ಮುಟ್ಟಿ ನಿಮ್ಮಡಿಯನರ್ಚಿಸದ ದುರಾತ್ಮನ ||ಪ||

ಗುರುಹಿರಿಯರಿಗೆ ಶಿರವ ಬಾಗದಧಟನ
ಹರನಂಘ್ರಿ ಧ್ನಾನವಿಲ್ಲದ ಡಂಬಕನನು |
ಚರಲಿಂಗಕೊಲಿದು ಧನವನೀಯದಧಮನ
ಧರೆಯೊಳಿಂತೇತಕಲ್ಲದನ ತಸ್ಕರನಾ ||1||

ಕಲಹಕೆಲ್ಲರಕೂಡೆ ಮಾರ್ಮಲವನ-ಕಷ್ಟ
ಕಲು ಹೃದಯನ ಕಮುಕನನತಿಖಳನ |
ಕಲುಷ ಕಾಯನ ಕಡುಮೂರ್ಖನ ಕುಪಿತನ
ಇಳೆಯೊಳಿಂತಪ್ಪ ದುರ್ನೀತನ ಶಿವನೆ ||2||

ಅಂತರಂಗದಿ ಜ್ಞಾನ ಹೀನನಾಗಿರುವನ
ಕಾಂತೆಯರಿಗೆ ಸತತ ಪಂಬಲಿಸುವನ |
ಶಾಂತಿ ವಚನಗಳಿಲ್ಲದನ ದುರ್ವ್ಯಸನನಾ
ಸಂತತ ನಿಮಗೆ ಪೋಳ್ಪಡಯದ ಗಾವಿಲನ ||3||

ಕರಣ ಗಳಿಚ್ಚೆಗೆ ಪರಿವವನ ದುರುಳನ
ಬರಿದೆ ಬೆಬ್ಬನೆ ಬೆರೆವನ ದುರ್ಬುದ್ಧಿಗನ |
ಗುರುಮಂತ್ರವನು ಪೇಳದತಿಮಂಧನ
ಗಿರಿಜೇಶ ನಿಮ್ಮ ನೆನೆಯದತಿಗಾಂಪನ ||4||

ಪುಟ್ಟಿಸು ಪುಟ್ಟಿಸದಿರು ನೀನಭಯವನ್ನು
ಕೊಟ್ಟು ಪುಟ್ಟೆಂದಡಾನಂಜೆನಂಜೆ |
ಇಷ್ಟಿಲ್ಲದಿರಲೆನ್ನ ಸೃಜಿಸದಿರೆಲೆ ತಂದೆ
ಸೃಷ್ಟಿಗೊಡೆಯ ಚೆನ್ನ ಬಸವಲಿಂಗೇಶ್ವರಾ ||5||

ಎಂತು ಮಾಡಲಿ ಮೊಗದೋರನು
ಎಂತು ಮಾಡಲಿ ಮೊಗದೋರನು-ಚೆಲ್ವ
ಕಾಂತೆಯರೊಡನಾಡಿ ಬಾರನು-ನಲ್ಲಾ ||ಪಲ್ಲ||

ಹಗಲಿರುಳೆಡವಿಡದೆನ್ನೊಡನಿರ್ದಭವನ
ಸೊಗಸು ವಚನಗಳಿಂದೊಲಿಸಿ ತನ್ನ |
ಮೊಗದೊಳು ಮೊಗವಿಟ್ಟು ಬಿಗಿದಪ್ಪಿಕೊಂಡೀಗ
ನಗಸುತೆಯರಸನ ತೊಲಗಲು ಇನ್ನು ||1||

ವರ ಗಂಧ ರಸ ರೂಪ ಸೊಂಕು ಶಬ್ದೇಂದ್ರಿಗ
ಳರಸನಾಗಿರ್ದೆನ್ನೊಡೆಯನ ಜಾಣೆ |
ಸರಸಿಜಾನನೆ ಚೆಲ್ವೆ ಗರವೆ ಗಂಗಾಂಬಿಕೆ
ಶಿರಿವಿಡಿದಬಲೆ ಬಿಡಳು ಇನ್ನು ||2||

ಎಲ್ಲೆಡೆಯೊಳು ತನ್ನ ನೆನಹುಮನದೊಳುಳ್ಳ
ಮೆಲ್ಲೆರ್ದೆಗಾತಿಯ ತೊರದು ತುಂಗ
ಚೆಲ್ವೆಗಂಗಳೆ ಕೇಳು ಪುಲ್ಲಸರನರಿಪು
ಕಲ್ಲ ಮಗಳಿಗೊಲ್ದು ಬಾರನು ಇನ್ನು ||3||

ಧರೆ ನಭ ತಾರೆ ಮುನ್ನೊಗೆಯದಂದಿಂದಲು
ಎರವಿಲ್ಲದಿರುತಿರ್ದನೆನ್ನೊಡನೆ ಚಂದ್ರ
ಧರನೆಲ್ಲಾ ಧರೆಯೊಳಗುರುಳುವ ತರುಣಿಯ
ನೆರೆಮೆಚ್ಚಿ ಮನೆಗೆ ತಾ ಬಾರನು ಇನ್ನು ||4||

ಉಮೆ ಜನ್ಹುಕನ್ನೆಯ ತೊರದೊಂದುನಿಮುಷದಿ
ರಮಿಸೆನ್ನ ಮತ್ತೆ ತಾ ಪೋಗಲಿ ಪ್ರಿಯ |
ಕಲಮದಳಾಂಬಕಿ ವಿಮಳೆ ಕರೆದುತಾರೆ
ರಮಣ ಮದ್ಗುರು ಚೆನ್ನಬಸವ ಭಾವೆ ||5||

ಅರಿಯದಜ್ಞಾನಿಗಳೊಡನಾಡಿ ಕೆಡಬೇಡ
ಅರಿಯದಜ್ಞಾನಿಗಳೊಡನಾಡಿ ಕೆಡಬೇಡ-ಪಿಂತೆ
ಅರಿದರಿದಾಡಿ ಕೆಟ್ಟರ ಕೇಳು ಮನವೇ ||ಪಲ್ಲ||

ಕರಪಾಪಿ ದಕ್ಷಬ್ರಹ್ಮನೊಳಾಡಿ ಹಿಂದಕೆ
ಸರಸಿಜೋದ್ಭವ ಕಮಲಾಕ್ಷ ಸುರರೆರೆಯ ಮುಂತಾ
ದರೆಲ್ಲರು ಭಂಗ ಬಟ್ಟರು |
ಹರನ ಕುಮಾರನ ದೆಸೆಯಿಂದ ಮನವೇ ||1||

ಕೌರವರೊಡನಾಡಿ ತರಣಿಯನಂದನ
ದಾರುಣಿಯರಿಯೆ ಧನಂಜಯನ
ಕ್ರೂರಂಬಿಗೆದೆಗೊಟ್ಟು ಲಯವಾದನವನು ವಿ
ಚಾರ ಹೀನರೊಳಾಡಬೇಡ ನೀ ಮನವೆ ||2||

ಅಚ್ಯುತನೊಡನೆ ಸಂಗವ ಮಾಡಿ ಪವನಜ
ಕಿಚ್ಚಿನೊಳಗೆ ದಶಕಂಠನಿಂದ
ಪುಚ್ಚವ ಸುಡಿಸಿಕೊಂಡವ ಮುಂದುಗೆಟ್ಟನು
ಕೆಚ್ಚೆದೆಯರ ಸಂಗವದು ಭಂಗಮನವೆ ||3||

ಈಶನುದಾಸೀನಗಂಡು ಕೇಶವನೆ ವಿ
ಶೇಷವೆಂದವನ ಸ್ನೇಹವನು ಮಾಡಿ |
ವ್ಯಾಸನು ತೋಳ ನಾಶವಮಾಡಿಕೊಂಡ ನಂ
ದೀಶನಿಂದಂದು ಕಾಶಿಯ ಪುರದೊಳು ||4||

ಅರಿಯದವರ ಸಂಗವಿಂತೆಂದು ಬಿಡದೆಮ್ಮ
ಪರಮ ಗುರುಚೆನ್ನಬಸವೇಶನ |
ಶರಣರ ಸಂಗವ ಮಾಡಲು ನಿನಗಿಹ
ಪರದಲ್ಲಿ ಪರಿಣಾಮದೋರುವುದು ಮನವೆ ||5||

ಧರೆಯೊಳಗಿನ್ನು ಪುಟ್ಟಿಸಬೇಡಿನ್ನಭವ
ಧರೆಯೊಳಗಿನ್ನು ಪುಟ್ಟಿಸಬೇಡಿನ್ನಭವ-ಪುಣ್ಯ
ಗುರು ಹರ ಚರ ನಿಂದ್ಯವನು ಕೇಳಲಾರೆನು ||ಪ||

ವಿದ್ಯಬುದ್ಧಿಯ ಕಲಿಸಿದ ದೇಸಿಕನ ತನ್ನ
ಉದ್ರೇಕದಿಂದ ನುಡಿದು ಕಾಲಿನೊ
ಳೊದ್ದೊದ್ದು ಕೊಲಿಸಿಕೊಂಡೆಕ್ಕಲ ನರಕವ
ಪೊದ್ದುವ ದುಷ್ಕರ್ಮಿಗಳ ನೋಡಲಾರೆನು ||1||

ಮರವೆಯ ಮದದಿ ತನ್ನೊಡೆಯನೆಂದರಿಯದೆ
ಹರನ ನಿಂದಿಸಿ ತರತರದ ಘೋರ
ನರಕದ ಕುಳಿಗೋಗ್ಯವಾಗುವ ಮನುಜರ
ಮರದೊಮ್ಮೆ ನೋಡೆ ದೋಷಗಳು ಸಂಭವಿಪುದು ||2||

ಯತಿಗಳ ಮೇಲೆ ಪೊರ್ದದ ಮಾತ ಪೊರ್ದಿಸಿ
ಕೃತಕದಿಂ ನುಡಿವ ಪಾತಕರ ನೇಮ
ಅತಿಕೋಪದಿಂದ ದೂತರಬಿಟ್ಟು ಕೊಲಿಸುವ
ಕ್ಷಿತಿಯೊಳಾ ಮೊರೆಯ ಕರ್ಣದಿಕೇಳಲಾರೆನು ||3||

ದೊರೆನಿಂದ್ಯ ಮರಣ ಹರನನಿಂದ್ಯ ದಾರಿದ್ರ
ಗುರುನಿಂದ್ಯ ನರಕ ಯತಿಗಳನಿಂದ್ಯ
ವರ ಕುಲಕ್ಷಯವೆಂಬ ಶ್ರುತಿಯುಸುರಲು ಕಂಡು
ಮರಳಿ ವಿಚಾರಿಸುವ ಪಾಪಾತ್ಮರಿರ್ದಡೆಯನ್ನ ||4||

ಗುರುಭಕ್ತಿ ಹರಭಕ್ತಿ ಚರಭಕ್ತಿ ದೊರಕೊಂಡ
ಪರಮಸದ್ಭಕ್ತರುಳ್ಳೊಡೆ ಪುಟ್ಟಿಸು |
ಗುರುಹರಚರ ನಿಂದ್ಯಕರು ಧಾತ್ರಿಯೊಳಗಿರೆ
ತರದಿರವನಿಗೆನ್ನ ಗುರುಚೆನ್ನಬಸವೇಶ ||5||

ಶರಣ ಚರಿತ್ರಕೆ ಸರಿಮಿಗಿಲುಂಟೆ
ಶರಣ ಚರಿತ್ರಕೆ ಸರಿಮಿಗಿಲುಂಟೆ
ಗುರುವಿನಿಂದಧಿಕ ದೇವರುಗಳಿನ್ನುಂಟೆ ||ಪ||

ಬಿಡಿಸಿಕೊಳಲುಬಾರದ ಚದುರತ್ವವೇಕೋ
ದೃಢಚಿತ್ತವಿಲ್ಲದ ಭಕ್ತಿಯದೇಕೋ |
ಮೃಢನ ಧ್ಯಾನಗಳಿಲ್ಲದ ತಪವದೇಕೊ
ನಡೆನುಡಿ ಶುದ್ಧ ವಿಲ್ಲದಾಚಾರವೇಕೋ ||1||

ವ್ರತಗೆಟ್ಟ ಬಳಿಕಿನ್ನು ಶೀಲವಿನ್ನೇಕೋ
ಸತಿಸಂಗುಲುಳ್ಳವಗೆತಿತನವೇಕೋ |
ಮತಿಯಿಲ್ಲದವನಿಗೆ ಶ್ರುತಿಪಾಠವೇಕೋ
ಸಿತಗಳನಡಿಯ ಮರದ ಬುಧರೇಕೋ ||2||

ದಾನವಿಲ್ಲದ ಮೇಲೆ ಧನಿಕನಿದ್ದೇಕೋ
ಸನ್ಮಾನಗಳಿಲ್ಲದ ಧಾಮವದೇಕೋ |
ಜ್ಞಾನವಿಲ್ಲದವನಿಗೆ ಋಷಿತನವೇಕೋ
ಶಿವಾನುಭಾವಿಗಳಿಗೆ ವಿಷಯವಿನ್ನೇಕೋ ||3||

ಲಿಂಗವಿಲ್ಲದ ಮೇಲಿನ್ನಂಗವಿದ್ದೇಕೋ
ಭಂಗವಾದ ಬಳಿಕಭಿಮಾನವೇಕೋ |
ಲಿಂಗ ಸಂಗಿಗಳಿಗೆ ಆಸೆರೋಷಗಳೇಕೋ
ಜಂಗಮ ಭಕ್ತಗೆ ಸ್ತುತಿನಿಂದ್ಯವೇಕೋ ||4||

ಹರಪೂಜೆಯಿಲ್ಲದ ಹಿರಿಯರಿದ್ದೇಕೋ
ಪರಮ ಮಂತ್ರಂಗಳೋದದ ಜಿಂಹ್ವೆಯದೇಕೋ |
ವರಭಸ್ಮವಿಲ್ಲದ ಭಾಳವಿದ್ದೇಕೋ
ಗುರುಚೆನ್ನಬಸವೇಶನ ಮರದ ಮಾನವರೇಕೋ ||5||

ಪಾಲಿಪುದೆನಗೆ ಪಾವಕನೇತ್ರ ಕರುಣದಿ
ಪಾಲಿಪುದೆನಗೆ ಪಾವಕನೇತ್ರ ಕರುಣದಿ
ಮೇಲಾದ ವಿವರಣೆಯನು ಭವ ಭವದಿ ||ಪ||

ಭಕ್ತಿಯೆಂಬುದನು ನಿಂದ್ಯಗಳಿಲ್ಲದನು ವಿ
ರಕ್ತಿಯನಿತ್ತು ಕ್ಷಮತೆಯ ಭಾವನು |
ಯುಕ್ತಿಸಂಜಾತವ ಹಮ್ಮಿಲ್ಲದಿರವನು
ಭಕ್ತದೇಹಿಕದೇವ ನಿಮ್ಮನೆನಹನು ||1||

ಪೃಥುವಿ ಪತಿತ್ವವ ಹರನ ಸದ್ಭಕ್ತಿಯ
ಶ್ರುತಿಶಾಸ್ತ್ರವರಿದಗೆ ನಿಗರ್ವವನು |
ಅತಿರೂಪ ಯವ್ವನವನು ಸುಚಾರಿತ್ರವ
ಸಿತಗಾತ್ರನಡಿಯ ಭಜನೆಯ ನಿರ್ಮಲತೆಯಾ ||2||

ಸಾವದಾನವನು ಸರ್ವರೊಳತಿವಿನಯವ
ದೇವತ್ವವನು ದಯದಾಕ್ಷಿಣ್ಯವ |
ಕಾವನಗೆಲುವ ಬಲ್ಮೆಯ ದೇವರೊಲುಮೆಯು
ಮಾವರನೇತ್ರಾಂಕ ಪಾದ ರಾಜೀವನೇ ||3||

ಗುರುಮಡಿಯನು ಗುಣವನು ಚದುರತೆಯನು
ಪರಮಾನುಭಾವದ ವರಸುಚಿತ್ತವನು |
ದುರಿತಂಗಳಿಗೆ ಒಡುಂಬಡದ ಪೆರ್ಮೆಯ
ಅರಿವುಳ್ಳಮನವ ಶಂಕರನೆ ಸರ್ವೇಶನೆ ||4||

ಚಿರಕಾಲ ಶರಣರ ಸಂಗವ ಸಂತತ
ಪರಿತೋಷವನು ಅಯುಶ್ರೀಯವನು |
ನಿರುತ ಕರ್ಮಜ್ಞಾನವನು ನಿಶ್ಚಿಂತತೆಯನು
ಗುರುಚೆನ್ನಬಸವ ನಿಮ್ಮೊಳು ಪರಮೈಕ್ಯವಾ ||5||

ಎನಗೆ ನೀ ತರಬಹುದು
ಎನಗೆ ನೀ ತರಬಹುದು ಘನವಾದ ದುಃಖವನು
ಮನಸಿಜಾಂತಕನೆ ನಿನ್ನಿಂದ ಬಲ್ಲವರಿಲ್ಲಾ ||ಪ||

ಈ ಜಡಾತ್ಮನು ನಿಮ್ಮಪಾದಂಗಳೆಂಬ ಶುಭ
ರಾಜೀವವನು ಭಜಿಸಿಸುಖಿಯಾಗದೆ |
ಗೋಜುಮನ ಮೂಜಗಂಗಳೊಳೆಲ್ಲ ತೊಳಲುತಲಿ
ಓಜೆಗೆಟ್ಟೊಡಲ ಪೋಷಣೆಯ ಮಾಡುವಗಾಂಪ ||1||

ಮನವು ಮಹದಲ್ಲಿ ತಲ್ಲೀಯವಾಗಿರಲೊಲ್ಲ
ದನುದಿನದಿ ಬಣಗುವಿಷಯಕೆ ಪರಿವುತ |
ಅನುನಯದಿ ನಿಮ್ಮೊಲಿಸಿಕೊಳಲರಿಯದೀಮನಕೆ |
ಕನಕಗಿರಿವಾಸ ವೇದನೆಯಾದ ವಿಘ್ನವನು ||2||

ಬಹುತಪಂಗಳಮಾಡಿ ತನುವದಂಡಿಸಿ ಮನದಿ
ಅಹಿರಾಜನಾಭರಣನಡಿಯ ಪಂಕ
ರುಹವ ಸಲೆನಂಬಿಕೊಂಡಿರದೆ ಮಹಿಸಾರಿದನ
ಸಹವೆಂದು ಭಾವಿಸುವ ನರಗೆ ದೇವರದೇವಾ ||3||

ಪರಮನಿರ್ವಾಣಪದದಲ್ಲಿ ಬೆರದಿರದ ದು
ಶ್ಚರಿತ ಮಾರ್ಗಂಗಳೊಳಗೆಯಾಡುತ |
ಶರರಿದಿರವನು ತಿಳಿದುಕೊಳ್ಳದೆ ಮರವೆಯೊಳಿರ್ಪ
ಮರುಳಮಾನವಗೆ ಮದಹರನೆ ನೀ ಕೋಷದಿಂ ||4||

ಕಡುದುಃಖದಾರಿದ್ರ ಎಡರಂಗಳಂತೋರಿ
ಎಡೆ ಎಡೆಗೆ ನಿನ್ನನೆನ್ನೊಳು ನೆನಿಸಿಕೊಂಡು |
ಪೊಡವಿಯೊಳಗಪ್ರತಿಮನೆನಿಸಿ ಮುಕ್ತಿಯನಿತ್ತೆ
ಮೃಡಮೂರ್ತಿ ಗುರುಚೆನ್ನಬಸವಲಿಂಗೇಶಾ ||5||

ನಾಗಗಮನೆ ತೋರೆ ನನ್ನಂಗದೆರೆಯನ
ನಾಗಗಮನೆ ತೋರೆ ನನ್ನಂಗದೆರೆಯನ
ನಗಚರ್ಮಾಂಬರನಾ
ನಾಗಶಯನನನಂಬಕಪಾದ ಕಮಲನ
ಬೇಗದಿಂದೆನಗೊಲಿದೂ ||ಪ||

ಸುರರೆಯನ ತರುಣನನಣ್ಣನಪ್ಪನ
ಅರಿಯಮೋಹದಪುತ್ರನ
ಧುರದಿಂದ ಸೋತುಹೋದವನಾತ್ಮಜನಸುಟ್ಟು
ಧರಿಸಿದ ಪರಮೇಶನಾ
ಶಿರಹತ್ತರವನವೈರಿಯಾದನ
ಅರಿಯಸೂಡಿದ ದೇವನಾ
ಉರಿಯಸಖನಮಗನನುಜನನೊಡನೆಕಾದಿ
ಧರೆಯೊಳಗೊರವಿತ್ತನಾ ||1||

ಒಡಲಿಲ್ಲದವನ ಒಡಲನುಂಡು ಬಾಳ್ವನ
ಬಿಡದೊರಗಿರುವಾತನ |
ಪೊಡೆಯೊಳೊಗೆದನ ಬಾಣದ ಸಖನಣುಗನ
ಪಿಡಿದಶೂಲದೊಳಿಟ್ಟನಾ |
ಜಡಜ ಸಂಭವನ ಮುಮ್ಮಗನ ಹೆತ್ತವ್ವೆಯ
ಒಡೆಯನ ಮೈದುನನಾ |
ಪೊಡವಿಪಗೆ ಪೊತ್ತುಕೊಂಡಿಹಳ ಮೇಲಿರುವನ
ಪಡೆದಮಗಳಗಂಡನಾ ||2||

ಗಿರಿಯ ಚಾಪವಮಾಡಿ ಉರಗನಪೆದೆಯಿಕ್ಕಿ
ಹರಿಯಂಬಮಾಡಿ ಮೂರು |
ಪುರದಕೀಲ್ಗಳನು ಪರಿಯಲಿಟ್ಟು ದೈತ್ಯರ
ಶರಣುವೊಗಿಸಿಕೊಂಡನಾ |
ಹರಿಯವಾಹನನ ವೈರಿಗೆ ಹಗೆಯಾದನ
ನೆರೆಯರಿದವನಯ್ಯನ |
ಹರಿಮಧ್ಯೆ ಸರಸಿಜ ವದನೆ ನೀಕರತಾರೆ
ಗುರುಚೆನ್ನಬಸವೇಶನಾ ||3||

ಕೋಗಿಲೆ ಕಿನ್ನರೇಶನ
ಕೋಗಿಲೆ ಕಿನ್ನರೇಶನ ಸಖನಾವೆಡೆಯೊಳಿರ್ದಡೆಯು
ನಿನ್ನ ಸ್ವರ ಬಹುಚಂದ ಕೋಗಿಲೆ |
ಕೋಗಿಲೆ ಎನ್ನತನುವೆಂಬ ಮಾಮರದ ಕೊನೆಯೊಳು
ನಿಂದು ಚನ್ನಾಗಿ ಕೂಗಿಕರೆ ಕೋಗಿಲೆ ||ಪ|

ಕೋಗಿಲೆ ಅಪ್ರತಿಮ ಮಹಿಮ ಬಾರೆಂದು
ಭಾವಿಸಿದಲ್ಲಿ ಇಪ್ಪ ಧವ ಬಾರೆಂದು ಕೋಗಿಲೆ |
ಕೋಗಿಲೆ ಮುಪ್ಪುರಂಗಳನು ಜಯಿಸಿದ ದೇವಬಾರೆಂದು
ನೆಪ್ಪಿಂದ ಕರೆ ಚೆಲ್ವ ಕೋಗಿಲೆ |
ಕೋಗಿಲೆ ಸರ್ಪಕಂಕಣನೆ ಸರ್ವೇಶ ಬಾರೆಂದು ಕಂ
ದರ್ಪಜಿತ ಬಾರೆಂದು ಕೋಗಿಲೆ |
ಕೋಗಿಲೆ ಕಪ್ಪುಗೊರಳನೆ ಬಾರ ಭವದೂರ ಬಾರೆಂದು
ವಪ್ಪದಲಿ ಕರೆ ಮುದ್ದು ಕೋಗಿಲೆ | ||1||

ಕೋಗಿಲೆ ಮೃಡನೆಂದು ಮೃತ್ಯುಹರನೆಂದು ಸುರಗಂಗೆಯನು
ಮುಡಿದೀಶ ಬಾರೆಂದು ಕೋಗಿಲೆ |
ಕೋಗಿಲೆ ಉಡುರಾಜ ಧರನೆಂದು ಉಮೆಯವಲ್ಲಭನೆಂದು
ಎಡವಿಡದೆ ಕರೆಯೆನ್ನ ಕೋಗಿಲೆ |
ಕೋಗಿಲೆ ಜಡಜಸಖ ಕುಮುದಸಖ ಮರುತಸಖನೇತ್ರ ಎ
ನ್ನೊಡೆಯ ಬಾ ಬಾರೆಂದು ಕೋಗಿಲೆ
ಕೋಗಿಲೆ ಕಿಡಿಗಣ್ಣನೆಂದು ಕಟ್ಟಾಂಗರಧರನೆಂದು ನೀ
ಕಡುಸೊಬಗಿನಿಂದ ಕರೆ ಕೋಗಿಲೆ | ||2||

ಕೋಗಿಲೆ ವೃಷಭವಾಹನ ಬಾರ ಊರ್ಧ್ವರೇತನೆ ಬಾರ
ಅಸಮಾಕ್ಷ ಬಾರೆಂದು ಕೋಗಿಲೆ |
ಕೋಗಿಲೆ ಬಿಸಜಾಕ್ಷನಯನಪದರಾಜೀವ ಬಾರೆಂದು
ರಸಿಕತನದಿಂದ ಕರೆ ಕೋಗಿಲೆ |
ಕೋಗಿಲೆ ಭಸಿತಾಂಗ ಬಾರ ಬೊಳೆಯರರಸ ಬಾರ ದಿ
ಗ್ವಸನನೆ ಬಾರೆಂದು ಕೋಗಿಲೆ
ಕೋಗಿಲೆ ವಸುಮತಿಯ ಭಕ್ತರಘವನದಾವ ಬಾರೆಂದು
ಉಸಿರೆತ್ತಿ ಕರೆ ನೀನು ಕೋಗಿಲೆ ||3||

ಕೋಗಿಲೆ ಶಂಭುಶಂಕರನೆ ಸಾಕ್ಷಾದ ಪರಶಿವನೆ ಬಾ
ರೆಂಬ ನುಡಿಯನು ಬಿಡದೆ ಕೋಗಿಲೆ |
ಕೋಗಿಲೆ ಕುಂಭಿನಿಯೊಳಿರುವ ಕುಲರಾಶಿಜೀವವ ಪೊರೆವ
ಅಂಬಕತ್ರಯನ ಕರೆ ಕೋಗಿಲೆ |
ಕೋಗಿಲೆ ಕಂಬಳಾಶ್ವತರ ಗಾನಕ್ಕೆ ಮೆಚ್ಚಿದೊಡೆಯನ
ಬೊಂಬಾಳೆ ಸ್ವರವಿಡಿದು ಕೋಗಿಲೆ |
ಕೋಗಿಲೆ ನಂಬಿಗೊಲಿದೊರವಿತ್ತ ಅಘಹರನೆ ಬಾರೆಂದು
ನೀಂ ಬಣ್ಣವಿಟ್ಟು ಕರೆಕೋಗಿಲೆ ||4||

ಕೋಗಿಲೆ ಗಿರಿಧಾಮಗಿರಿಜಾಪ ಗಿರಿರಾಜನಳಿಯ ಬಾ
ಕರುಣದಿಂದಲಿ ಎಂದು ಕೋಗಿಲೆ |
ಕೋಗಿಲೆ ನಿರಜ ನಿರಂಹಕಾರ ನಿಶ್ಚಿಂತ ಬಾರೆಂದು
ಪರಿತೋಷದಿಂದ ಕರೆ ಕೋಗಿಲೆ |
ಕೋಗಿಲೆ ಪರಕೆಪರತರವಾದ ವಸ್ತುವನು ನೆರಕಂಡು
ಕರಕಮಲವನು ಮುಗಿದು ಕೋಗಿಲೆ |
ಕೋಗಿಲೆ ಶರಣಾಗ್ರಗಣ್ಯ ಗುರುಚೆನ್ನಬಸವೇಶ್ವರನ
ಕರದೊಮ್ಮೆ ತೋರೆನಗೆ ಕೋಗಿಲೆ ||5||

ಮುಂದೆ ನಾ ಹೋಗುತಲಿಹೆನೆ
ಮುಂದೆ ನಾ ಹೋಗುತಲಿಹೆನೆ ನೀ ಬಾಹಿಂದೆ
ಇಂದು ನಿರಾಕಾರ ಲಿಂಗದಿ ತನುವೇ ||ಪ||

ನೀನು ನಿರಾಕಾರ ಲಿಂಗವನೊಡಗೂಡಿ
ಸಾನಂದದಿಂದ ನೀ ಪೋಗೆ ಮುಂದೆ |
ನಾನೆಂತು ಬಹೆನು ಸ್ಥೂಲಾಂಗನೊಡಗೂಡಿ
ಏನುಪಮೆಯ ಕಂಡೆ ಪೇಳೆನ್ನ ಮನವೇ ||1||

ಪಂಚ ಮುಖನ ಪಂಚ ಮುಖದಿಂದ ಪುಟ್ಟಿದ
ಪಂಚ ಭೂತಂಗಳನರಿದು ನಿನ್ನ |
ಪಂಚಭೂತವ ಕೂಡಿ ಮೆಲ್ಲಾನೆ ಬಾ ಮುಂದೆ
ಪಂಚ ಬ್ರಹ್ಮವೆಯಾಹೆ ಪರದಲ್ಲಿ ತನುವೆ ||2||

ಉಮ್ಮಳವಿಲ್ಲ ನಿರ್ಮಳವೆಲ್ಲಿಯ ಧಾತ್ರಿಗೆ
ನೆಮ್ಮಿಸಿ ನಮ್ಮಿಬ್ಬರುಗಳನಟ್ಟಿ
ಪೆರ್ಮೆಯ ಸುಖದುಃಖಗಳ ತೋರಿದಾ ಪರ
ಬ್ರಹ್ಮದ ಹೊಲಬಗೇಳುತಲನುರಾಗದಿ ||3||

ಮುನ್ನ ಹೋದವರದಾರಿಯ ಹತ್ತಿ ಹರುಷಾದಿ
ಓಂನಮಃ ಶಿವಾಯೆಂಬ ವಚನವನು |
ಎನ್ನ ಜಿಹ್ವಾಗ್ರದಿ ನೆನವುತ ನಿಜವುಳ್ಳ
ಉನ್ಮನಿ ಎಂದೆಂಬವೂರ ನಾನರಸುತ ||4||

ಹರಿಗಿರಿ ಸುರಪಗಿರಪನಜಗಿಜರೆಲ್ಲ
ಚಿರಕಾಲ ಸಾಧಿಸಿ ಕಾಣದಂತ |
ಪರಮ ಪದವ ತೋರಿ ನಿರಾಕಾರನೆನಿಸಿದ
ವರಗುರು ಚೆನ್ನಬಸವನ ಬೆರೆಯಲಾನನ ||5||

ಕರುಣಿ ಕರುಣಿಸಯ್ಯಾ
ಕರುಣಿ ಕರುಣಿಸಯ್ಯಾ ಎನ್ನ ಸೇರಿ ಬದುಕಬಂದೆ ನಿನ್ನ
ಚರಣ ಸರಸಿರುಹವ ನಾನು ನಂಬಿನಚ್ಚಿ ಶಂಕರಾ ||ಪ||

ಪಾತಕಾದ್ರಿ ಕುಲಿಶ ನೀನು ಪಾಪಪೂರಿತಾಂಗನಾನು
ಭೂತನಾಥ ನೀನು ಭೂತ ಭರಿತವೆ ಯಾನು |
ನೀತಿವಂತ ನೀನನೀತಿವಂತನಾನೆಂದು ಬಿಡದೆ
ಜೋತಿರೂಪ ಸಲಹನಾಥನಾದೆನೆನ್ನುವಾ ||1||

ದುರುಳ ದೃಷ್ಟಿ ಮತ್ತ ಮದಡ ತರುಳ ಮರಳ ದೀನ ಹೀನ
ಕರ ಕನಿಷ್ಟ ನೀನು ಎನ್ನ ಹರಿದು ತೊರೆಯದಭವನೆ |
ಕೊರಳಗರಳ ಉರಗಧರನೆ ಶರಣುವೊಕ್ಕೆನಿಮಗೆ ನಾನು
ವರಕರುಣಾಂಬು ನಿಧಿಯೆ ನೀನು ಪೊರೆವುದಯ್ಯ ಸಂತತ||2||

ಗರುವವೆಂಬ ಶರಧಿಗೈದಿ ಮರವೆಯೆಂಬ ಕರದಿನೀಂಟಿ
ಶರೀರವನ್ನು ಮರದು ಗುರುವೆ ನಿಮ್ಮ ಪಾದದ
ತೆರಹುಗಾಣದಿರುಳು ಪಗಲು ಕರಗಿ ಕೊರಗಿನೊಂದು ಬೆಂದೆ
ತರುಣತರಣಿ ಕಿರಣ ಕರುಣಿಸೆನ್ನನೀಗಳೂ ||3||

ಮಾಡಲೇತಕೆನ್ನ ನೀನು ನೋಡದಿರಲದೇಕೆಯಿದನು
ನೋಡಿದವರು ನಗರೆ ಚಂದ್ರ ಚೂಡ ನಿನ್ನನೆಲ್ಲರು |
ಬೇಡ ನಿಮ್ಮ ಫಲಪದಗಳು ಕಾಡದೆನ್ನ ಭಕ್ತಿ ಪಥದ
ಜಾಡತೋರಿ ರೂಢಿಗೀಶ ಕಾಯ್ವುದಭವ ನಂಬಿದೇ ||4||

ಸಚರವಚರನಿಚಯವನ್ನು ಉಚಿತದಿಂದ ಪೊರೆವೆ ನೀನು
ರಚನೆಗಿಕ್ಕದೆನ್ನದೊಂದು ವಚನಗೇಳ್ವುದೊಡೆಯನೆ |
ಅಚಲ ಕಾಯ ನಿಮ್ಮನೆನ್ನ ಕಚದ ಕೂಪದೊಳಗೆತುಂಬಿ
ಪ್ರಚುರಮೂರ್ತಿ ಚೆನ್ನಬಸವದೇವ ಶರಣು ರಕ್ಷಿಸಾ ||5||

ಪಟುವಾಗು ಮನವೆ ಹೆದರದೆ
ಪಟುವಾಗು ಮನವೆ ಹೆದರದೆ ನಿನ್ನ ನೋಡುವಡೆ
ನಿಟಿಲಾಕ್ಷನೆಂಬ ಪಡುಭಟನು ಜಗಳಕೆ ಬಂದ ||ಪ||

ಆದಿವ್ಯಾಧಿಗಳೆಂಬ ಸುರಗಿಯನು ಚಿಮ್ಮುತಲಿ
ವಾದವೆಂದೆಂಬವಂ ಕುಡಿಯಕಟ್ಟಿ |
ಮೇದಿನಿಯ ಭೋಗವೆಂದೆಂಬ ಹರಿಗೆಯ ತೋರು
ತಾದಿಶಿವನೆಂಬ ಮಾಸಾಳು ಬೆದರಿಸಬಂದಾ ||1||

ಭಕ್ತಿ ಎಂದೆಂಬ ಸಾಧನೆಗಲಿತು ನೀನು ವಿ
ರಕ್ತಿ ಎಂದೆಂಬ ಕಣನೊಳಗೆ ನಿಂದು |
ಯುಕ್ತಿಯೆಂದೆಂಬ ಕಾಸೆಯ ಕಟ್ಟಿನಿಲಲಾಗಿ
ಶಕ್ತಿಯವಗಿನಿತಿಲ್ಲ ನಿನ್ನ ಕೈಯೊಳಗಹನೂ ||2||

ಕಡುನಿರಾಸೆಗಳೆಂಬ ಹರಿಗೆಯನು ಮರೆಗೊಂಡು
ದೃಢಚಿತ್ತವೆಂಬ ಖಡ್ಗವನು ತಳೆದು |
ಒಡನೆ ಭಕ್ತಿಜ್ಞಾನವೈರಾಗ್ಯವೆಂಬ ಮೂ
ರಡಿಯಿಟ್ಟು ನಡೆಮುಂದಕಾತ ನಿನ್ನೊಳಪೊಗುವಾ ||3||

ಹಲವು ಕಂಟಕವೆಂಬ ಬಲುಮೊನೆಗಳಂ ತೋರಿ
ನೆಲದೊಳದಕಳುಕಿದರೆ ತೊಲಗೆಂಬನು
ಕಲಿಯಾಗಿ ಕಲಿ ಕಾಮದೇವರಂತಿರ್ಪರಿಗೆ
ಕಲಹಂಗಳುಳಿದು ಸಖತನವ ನಡಸುವನಾತಾ ||4||

ಅಣುಮಾತ್ರ ಸಂಕೆ ನಿನ್ನಂತರಂಗದಿ ಪುಗದೆ
ಹೆಣಗವನಕೂಡೆ ಭೃತ್ಯತ್ವದೊಡನೆ |
ಮಣಿದಡಿಗೆ ಬಿದ್ದು ಬಿಗಿದಪ್ಪಿಕೊಂಡಿರಂ ಬಿಡದೆ
ತ್ರಿಣಯಮದ್ಗುರು ಚೆನ್ನಬಸವ ನಿನ್ನೊಶವಹನೂ ||5||

ಬಾರೆನ್ನ ಹೃದಯ ಮಂದಿರಕೆ
ಬಾರೆನ್ನ ಹೃದಯ ಮಂದಿರಕೆ-ಮದ
ನಾರಿಯಾರಡಿಮೆಟ್ಟಿದರಳನರ್ಪಿಸುವೆ ||ಪ||

ಹೊಳೆವ ಕೆಂಪಿನ ನಾಲ್ಕುದಳದ-ನಿತ್ಯ
ಕಳೆವೆತ್ತ ಪುಷ್ಪವ ಮನದವಾರಿಯೊಳು |
ತೊಳದು ಸುಚಿತ್ತ ಹಸ್ತದೊಳು-ಪಿಡಿ
ದೆಳೆವೆರೆಧರನೆ ಘ್ರಾಣಿಸಲೆಂದು ಕೊಡುವೆ ||1||

ನೀಲವರ್ನದವಾರುದಳದ ಕುಸು
ಮಾಳಿಗೆಲ್ಲಕೆ ಮಿಗಿಲಾದ ಕಮ್ಮಲರ |
ಲೋಲ ಸುಬುದ್ಧಿ ಹಸ್ತದೊಳುದಯಾ
ಶೀಲ ನಿಮ್ಮಧರದೆಡೆಗೆ ತಂದೀವೆ ||2||

ಕುಂಕುಮವರ್ಣದೀರೈದುದಳವಾ
ಕೊಂಕೇನು ದೋರದ ಕಮಲದ ನಿರ |
ಹಂಕಾರ ಕರದಿ ಶ್ರದ್ಧೆಯೊಳು ತಂದು
ಶಂಕರ ನಿಮಗೆ ನೋಡೆಂದು ಕೊಡುವೆ ||3||

ಧಾತುಗುಂದದ ದ್ವಾದಶೆಶಳ-ಚೆಲ್ವ
ಪೀತವರ್ನದ ಹೂವ ಸುಮನಹಸ್ತದೊಳು |
ಭೂತೇಶ ನಿಮ್ಮಂಗದೆಡೆಗೆ ಬಹು
ಪ್ರೀತಿಯಿಂದಲಿ ತಂದು ನಿಮಗಾನರ್ಪಿಸುವೆ ||4||

ಷೋಡಶದಳದ ಬಿಳಿಪಿನವರ್ನ
ಗೂಡಿ ರಾಜಿಸುತಿರ್ಪ ರಾಜೀವವನು |
ರೂಢೀಶನಿಮ್ಮ ಶ್ರವಣಕೆ ನಲಿ
ದಾಡುತ ಸುಜ್ಞಾನಕರದಿ ತಂದೀವೆ ||5||

ದ್ವಿದಳದೆಸಳ ಮಾಣಿಕ್ಯವರ್ಣ
ವಾದ ಕುಸುಮವನ್ನು ಸದ್ಭಾವಕರದಿ |
ಓದುತ ಪ್ರಣಮಾಕ್ಷರವನುದಿವ್ಯ
ನಾದಮೂರುತಿ ನಿಮ್ಮಭ್ರಕುಟಿಗರ್ಪಿಸುವೆ ||6||

ಲಿಂಗವೆ ನೀವು ನಿರ್ಮಿಸಿದ-ನಿರ್ಮ
ಲಾಂಗದೊಳೊಗೆದ ಕಮಲಷಡ್ವಿಧದೊಳು |
ಹಿಂಗದೆ ನಿಮ್ಮ ಪೂಜಿಪೆನು ಮಹಾ
ಲಿಂಗಮದ್ಗುರು ಚೆನ್ನಬಸವರಾಜೇಂದ್ರ ||7||

ಸುಮ್ಮನೆ ಬಿಡನೆಮರಾಜ
ಸುಮ್ಮನೆ ಬಿಡನೆಮರಾಜ
ಕರ್ಮಿಗಳತಿ ಕೊಬ್ಬ ಮುರಿಯದೆ ||ಪ||

ವರ ಶರಣನಿಗೆರಡು ಬಗೆವನ | ಪುರ
ಹರನ ಸದ್ಭಕ್ತರ ಜರೆದ ಪಾತಕನ
ಹರನ ದೂಷ್ಯವ ಮಾಡಿದನ | ಹಿರಿಯರ
ಬರಿದೆ ಬಂಧಿಸಿ ಬಾಧಿಪನ ||1||

ಯತಿಗೆ ಕಂಟಕವ ತಂದವನ | ಪರ
ಸತಿಯ ಬಯಸುವ ದುರುಳ ಮಾನವನ
ಹಿತಗಹಿತವ ಮಾಡಿದನ | ತನ್ನ
ವ್ರತವ ಬಿಟ್ಟೊಡಲಾಸೆಗೆ ಮಾಡುವನ ||2||

ಲಿಂಗಕೆ ತೋರದುಂಬುವನ | ಲೋಗ
ರಂಗಳೊಡವೆಗಾಸೆ ಮಾಳ್ಪವನ
ಅಂಗಜಗೊಡಲ ಮಾರಿದನ | ಭವಿ
ಯಂಗನೆಯರ ಸಂಗಸುಖಕೆಳಸುವನ ||3||

ನ್ಯಾಯ ಸದ್ಭಾವನೆಯ ತಪ್ಪಿ ನುಡಿದನ | ಪೆತ್ತ
ತಾಯೆಂದೆಲ್ಲರಮುಂದೆ ಜರಿದವನ
ಮಾಯಾಪಾಶದಿ ಕಟ್ಟೊಡೆದನ | ತನ್ನ
ಪ್ರಾಯಮದದಿ ಮಾನ್ಯರುಗಳನೇಡಿಪನ ||4||

ಅಸತ್ಯವನೇ ರಕ್ಷಿಸುವನ | ಹೀನ
ವಿಷಯಕೆ ದಾಸಿವೇಶಿಯೊರೊಳಾಡುವನ
ನೊಸಲಲಿ ವಿಭೂತಿ ಇಲ್ಲದನ | ಚೆನ್ನ
ಬಸವರಾಜೇಂದ್ರನ ನೆನೆಯದಧಮನಾ ||5||

ಕೇಳಿರೋ ಸಕಲ ಲೋಕಂಗಳ ಪೊರೆವ
ಕೇಳಿರೋ ಸಕಲ ಲೋಕಂಗಳ ಪೊರೆವ
ಬಾಳಾಕ್ಷನಿಗೆ ಹರಿ ಸರಿಯೆಂಬ ಮನುಜರು ||ಪ||

ಪರಮ ವಿರತಗೆ ಸಂಸಾರಿ ಸರಿಯೆ
ಹರನಸದ್ಭಕ್ತರಿಗೆ ಭವಿಜಾತಿ ಸರಿಯೆ |
ನಿರುತನ್ನದಾನಿಗೆ ದೀನನು ಸರಿಯೆ
ಅರಿವುಳ್ಳ ಶರಣಗೆ ಜಡನರ ಸರಿಯೆ ||1||

ಕಾಮಧೇನುವಿಗೆ ಗಿಡ್ಡು ಬರಡಾವು ಸರಿಯೆ
ಹೇಮಶೈಲಕೆ ಹುಲ್ಲುಮೊರಡಿಗಳೆಣೆಯೆ
ಸಾಮಜಾರಿಗೆ ಗ್ರಾಮಸಿಂಹ ತಾ ಸರಿಯೆ
ಭೂಮಿಯೊಳಾನೆಗೆ ವರಾಹನು ಸರಿಯೆ ||2||

ಉತ್ತಮ ತೇಜಿಗೆ ಕತ್ತೆ ತಾ ಸರಿಯೆ
ಪೃಥ್ವಿಯೊಳು ವೃಷಭಗೆ ಎತ್ತು ಸರಿಯೆ
ಅತ್ಯಂತ ಗರತಿಗೆ ತೊತ್ತು ತಾ ಸರಿಯೆ
ಮುತ್ತಿನಾ ಮಣಿಗೆ ಗಾಜಿನಮಣಿ ಸರಿಯೆ ||3||

ಸರ್ಪರಾಜಗೆ ನೀರೊಳ್ಳೆಯು ಸರಿಯೆ
ಕಲ್ಪತರುವಿಗೆ ಹೆಮ್ಮರನು ಸರಿಯೆ
ಒಪ್ಪುವಾಶರಧಿಗೆ ಹೊಳೆಗಳು ಸರಿಯೆ
ನೆಪ್ಪುಳ್ಳಚಂದ್ರನಿಗೆ ನಕ್ಷತ್ರ ಸರಿಯೆ ||4||

ಹರಿ ಹತ್ತುಭವದೊಳು ಈಶ್ವರನಡಿಉ
ನೆರೆ ಭಜಿಸಿದನಂದು ಈ ಜಗವರಿಯೆ
ಮರೆಯದೇ ತಿಳಿಯಿರೋ ಈಶನುನ್ನತಿಯ
ಗುರುಚೆನ್ನಬಸವನೆ ಸಕಲಕೆಲ್ಲೊಡೆಯ ||5||

ವಾರಿಜಗಂಧಿನಿ ಬೇಗವರಿಸಿ
ವಾರಿಜಗಂಧಿನಿ ಬೇಗವರಿಸಿ ಚಿತ್ಕಾಂತನ
ಹೃನ್ವಾರಿಜಪೀಠದೊಳಿಟ್ಟು ಬೇಡೆ ಸುಗುಣನಾ ||ಪ||

ಪರಧನ ಪರಸತಿ | ಪರನಿಂದ್ಯೆಗಳಬಿಟ್ಟು
ಪರಮನ ಸ್ಮರಣೆಯೊಳೆರವಿಲ್ಲದುದನು |
ವರಪಾದೋದಕದೊಳು | ಪರಮ ಪ್ರಸಾದದಿ
ಹೆರೆಹಿಂಗದಿಹದಂತ ಪರಮಭಕ್ತಿಯನೂ ||1||

ಅಶನವೆಸನ ವಿಷಯಗಳ ಗುಣವಮಿಕ್ಕು
ಭಸಿತರುದ್ರಾಕ್ಷೆಗಳನಸಮಾಕ್ಷನೊಲವ |
ಅಸಮಸದ್ಗುರುವನು ಪಸರಿಸಿ ಭಜಿಪರ
ಬಿಸರುಹದಡಿಗೆ ನಮಿಸುವ ಯುಕ್ತಿಯನೂ ||2||

ಭಾವದಿಚ್ಚೆಗೆ ಪರಿಯದೆ ಚಿರಕಾಲದಿ
ಈವಗುಣ ಕಾಯ್ವಗುಣ ದೇವಗುಣವ |
ಆವಾಗ ಶಾಂತಿ ಮತ್ತಾವಾಗ ಮುಕ್ತಿಯು
ಪಾವನಾತ್ಮಕ ಚೆನ್ನಬಸವಲಿಂಗವನೂ ||3||

ಅಂಗಯ್ಯಲಿಂಗ ನೀನೋ ನಾನೊ
ಅಂಗಯ್ಯಲಿಂಗ ನೀನೋ ನಾನೊ ನಿರಂಜನಯ್ಯ ನೀನೊ ನಾನೊ
ಜಂಗಮಲಿಂಗ ನೀನೊ ನಾನೊ ||ಪ||

ಕುಲಚಲವನ್ನು ಸುಟ್ಟು ಹಲವು ದೈವವ ಬಿಟ್ಟು
ಸಲೆಸಂದು ಗುರುಕರುಣವನೆಲ್ಲರಿದವನು ||1||

ಇಷ್ಟಲಿಂಗವ ತಿಳಿದು ಭ್ರಷ್ಟಮಾನವ ಬಿಟ್ಟು
ಕಷ್ಟರೈವರನು ನಷ್ಟವ ಮಾಡಿದ ದೇವ ||2||

ಅಂತರಂಗವ ತಿಳಿದು ಭ್ರಾಂತು ಮನವಾ ಬಿಟ್ಟು ಸ್ವ
ತಂತ್ರದಿ ಗುರುಕರುಣದಿ ನಿಶ್ಚಿಂತನಾಗಿದ್ದವ ||3||

ವಿಷಯವೆಂಬುದ ಸುಟ್ಟು ಕಸವೆಂಬಜ್ಞಾನವ ಬಿಟ್ಟು
ವಸವಲ್ಲದವ ಮೂರ ವರ್ಜಿಸಿದವನು ||4||

ಕಾಮಕ್ರೋಧವಸುಟ್ಟು ಪ್ರೇಮದಷ್ಟಮದವ ಬಿಟ್ಟು
ಸಾಮ ಸಪ್ತವ್ಯಸನಗಳ ಕ್ರಮದಿಂದಲಳಿದವ ||5||

ಜಾಗ್ರ ಸ್ವಪ್ನವ ಸುಟ್ಟುಗ್ರನೆಂಬ ಮನವ ಬಿಟ್ಟು
ಶೀಘ್ರದಿ ಶಿವಜ್ಞಾನ ಮಾರ್ಗವಿಡಿದವ ||6||

ಪಂಚಶಕ್ತಿ ಮನದಿಂದ ಹಂಚಿ ದಶವಾಯುಗಳ
ಸಂಚಿತದಲ್ಲಿ ಕಟ್ಟಿ ವಂಚಿಸಲೀಯದವ ||7||

ಜಂಗಮವ ಕಂಡಲ್ಲಿ ಸಂಗನಂತೆ ನಂಬಿ
ಹಿಂಗದಂತರಂಗದೊಳು ಅಂಗೀಕರಿಸಿದವ ||8||

ಪರಬ್ರಹ್ಮ ಗುರುಚೆನ್ನಬಸವರಾಜನ ಪಾದ
ಕರುಣವ ನೆರೆನಂಬಿ ಸ್ಥಿರವಾಗಿ ಬಾಳ್ವವ ||9||

ಎಲ್ಲಿಯದೊ ಶಿವಭಕ್ತಿ ಕುಟಿಲ
ಎಲ್ಲಿಯದೊ ಶಿವಭಕ್ತಿ ಕುಟಿಲ ಮನುಜರಿಗೆ
ಎಲ್ಲಿಯಾದಡೊಬ್ಬ ಸಹಜ ಶಿವಭಕ್ತ ಎಲ್ಲಿಯದೊ ||ಪ||

ದೊಡ್ಡ ಜಂಗಮ ಬರಲು ಅಡ್ಡಡ್ಡ ಬಿದ್ದವಗೆ
ದೊಡ್ಡವಸ್ತ್ರವನಿತ್ತು ಶರಣುಶರಣೆಂಬರು
ಸಡ್ಡೆಮಾಡದೆ ಒಬ್ಬ ಬಡಜಂಗಮನ ಕಂಡು
ಅಡ್ಡಮೋರೆಯ ತೆಗವ ಹೆಡ್ಡ ಮನುಜರಿಗೆ ||1||

ಊರಿನೊಳಗಿರುತಿರ್ಪ ಜಂಗಮಗೆ ಕೀರ್ತಿಸಿ ಬಹಳ
ಸಾರಿ ಭಕ್ತಿಯಾ ಮಾಡಿ ನಮಿಸುತಿಹರು
ದೂರದಿಂದೊಬ್ಬ ಪರದೇಶಿ ಜಂಗಮ ಬರಲು
ಮೋರೆಯನು ತಗ್ಗಿಸುವ ಠಕ್ಕು ಮನುಜರಿಗೆ ||2||

ದೇಶನಾಮವ ಕೇಳಿ ವೇಷ ವಿದ್ಯವ ನೋಡಿ
ಆಶೆ ನಿರಾಶೆಗಳ ವಿವರಿಸುತಲಿ ರೋಷ ಸಮತೆಯನೆಲ್ಲ
ಸಾಸದಲಿ ಬೆಸಗೊಂಡು ಮಾಡಬಹ ಇಂಥ
ಹೇಸಿ ಗುಣಗಳುವುಳ್ಳ ಹೆಡ್ಡ ಮನುಜರಿಗೆ ||3||

ಹೊಗಳಿದರಿಗುಬ್ಬಿ ನಲಿದಾಡಿ ಭಕ್ತಿಯ ಮಾಡಿ
ಹೊಗಳದಿರ್ದದವರ ಸಾಮಾನ್ಯಗಂಡು
ಜಗದೊಳಗೆ ನಾ ಭಕ್ತನೆಂದು ಬೆಬ್ಬನೆ ಬೆರವ
ನಗುವರ ಅರಿಯದ ಇಂಥ ವಿಗಡ ಮನುಜರಿಗೆ ||4||

ಜಂಗಮದಿ ಹಿರಿದು ಕಿರಿದೆನ್ನದರ್ಚಿಸುತಿರ್ಪ
ಮಂಗಳಾತ್ಮಕ ಭಕ್ತರಂಗದೊಳಗೆ
ಅಂಗಜನವೈರಿ ಶ್ರೀಗುರುಚೆನ್ನಬಸವೇಶ
ಹಿಂಗದಿರುತಿರ್ಪ ಅನವರತ ಎಡೆಬಿಡದೆ ||5||

ಅಂದೆನೆ ಅನ್ನಲಾಗದು
ಶಿವಯೋಗಿ ಶಿವಯೋಗಿ
ಭವ ಬಂಧನಂಗಳ ನೀಗಿ ನಿಂದರೆ ||ಪ||

ಇಂದ್ರಿಯಬಾಧೆಯ ಕಳದು ಆತ್ಮದಿ
ಚಂದ್ರಧರನ ಪದವಿಡಿದು ನಿಂದರೆ ||1||

ಮಾಯಾ ಪ್ರಪಂಚವ ಕಳದು ಮನಸಿನ
ಆಯಾಸವ ತಾತಿಳಿದು ನಿಂದರೆ ||2||

ಚೆನ್ನಬಸವನೊಳು ಕೂಡಿ ಮೋಹದ
ಬಿನ್ನಣವನು ಈಡಾಡಿ ನಿಂದರೆ ||3||

ಶಿವಯೋಗಿ ಶಿವಯೋಗಿ
ಶಿವಯೋಗಿ ಶಿವಯೋಗಿ
ಭವ ಬಂಧನಂಗಳ ನೀಗಿ ನಿಂದರೆ ||ಪ||

ಇಂದ್ರಿಯಬಾಧೆಯ ಕಳದು ಆತ್ಮದಿ
ಚಂದ್ರಧರನ ಪದವಿಡಿದು ನಿಂದರೆ ||1||

ಮಾಯಾ ಪ್ರಪಂಚವ ಕಳದು ಮನಸಿನ
ಆಯಾಸವ ತಾತಿಳಿದು ನಿಂದರೆ ||2||

ಚೆನ್ನಬಸವನೊಳು ಕೂಡಿ ಮೋಹದ
ಬಿನ್ನಣವನು ಈಡಾಡಿ ನಿಂದರೆ ||3||

ಕೂಗುತಿದೆ ಕುಟಿಲ ಹೆಚ್ಚಿ ಸಾಗುತಿದೆ
ಕೂಗುತಿದೆ ಕುಟಿಲ ಹೆಚ್ಚಿ ಸಾಗುತದೆ ಹುಸಿಯ ಮಸಕ ಎನ್ನಗುರುವೇ
ಆಗುತಿದೆ ಕೋಪವೆಂಬುದೀಗ ಈಶ ಹರಿಸಯ್ಯ ಎನ್ನ ಗುರುವೆ,
ಜೂಗುತಿದೆ ವಿಷಯಕಾಗಿ ಹೋಗುತಿದೆ ಪರವಧುವಿಂಗೆ ಎನ್ನಗುರುವೇ
ಕೇಗುತಿದೆ ಪರರ ನಿಂದ್ಯಕಾಗಿ ಮನವ ಮಾಣಿಸಯ್ಯ ಎನ್ನಗುರುವೇ||1||

ಬೆಳವುತಿದೆ ಲೋಭ ಹೆಚ್ಚಿ ಸುಳಿವುತಿದೆ ಮಾಯಾಮೋಹ ಎನ್ನಗುರುವೇ
ತೊಳಲುತಿದೆ ಕ್ರೋಧ ನಿಮ್ಮನೆಲೆಯ ಸೇರಲೀಯದೈ ಎನ್ನ ಗುರುವೇ
ಸಲೆ ವಿದ್ಯಭೂವಳೆಯ ತಪಗಳು ಬಳಸಿ ಮುಂದುಗೆಟ್ಟೆ ಕಾಯೊ ಗುರುವೇ
ಕುಲಛಲಧನವು ರೂಪು ಮಲತು ನಿಲ್ವಪ್ರಾಯಮದ ಎನ್ನಗುರುವೇ||2||

ಈಶ ಕಾಮನಾಶ ಕಾಲನಾಶ ಕಮಲವೈರಿಭೂಷ ಎನ್ನಗುರುವೇ
ಕೇಶವನೊಂದಿತ ಶೇಷಭೂಷ ಪಾಲಿಸಯ್ಯ ಎನ್ನ ಗುರುವೇ
ದೇಶರಕ್ಷಣ ನೀನೆನ್ನವಾಸ ಹೃನ್ಮಧ್ಯದಿ ನಿಂದ ಎನ್ನ ಗುರುವೇ
ಸೂಸದಂತಿರಯ್ಯ ಚೆನ್ನಬಸವಲಿಂಗ ದೇಶಿಕ ಎನ್ನ ಗುರುವೇ ||3||

ಸುಖವಾಯಿತೆನಗೆ ಭವರುಜೆಗಳಿಲ್ಲೆಲೆ ಕಾಂತೆ
ಸುಖವಾಯಿತೆನಗೆ ಭವರುಜೆಗಳಿಲ್ಲೆಲೆ ಕಾಂತೆ
ಆಕಳಂಕ ಚಂದ್ರಶೇಖರ ದೇವರಿಂದ ||ಪ||

ನಾರಿ ಕೇಳೆನ್ನ ಕರವಿಡಿದು ನಾಡಿಯನೋಡಿ
ಮೂರು ದೋಷಗಳು ಹೆಚ್ಚಿರಲು ಕಂಡು
ಮೂರುತನುವಿನ ಮೇಲೆ ಮೂರುಮುದ್ರೆಯನೊತ್ತಿ
ಮೂರುಗುಳಿಗೆಯನಿತ್ತು ಅರೈದ ರಮಣಿ ||1||

ಭೂತಪಂಚಕವೆಂಬ ಧಾತು ಹೆಚ್ಚಿರೆ ಕಂಡು
ಜಾತಿಮುತ್ರಗಳಿಂದಲವನು ತೊಡೆದು
ಪ್ರೀತಿಚೂರ್ನವನಿತ್ತು ವಾತಗುಣಗಳ ಕಳೆದು
ಆತ ಸಲಹಿದಕಾಣೆ ಜಾಣೆ ನಿನ್ನಾಣೆ ||2||

ಭವರೋಗದೊಳು ಬಹಳ ನವೆದು ಸಿರನೋವುತಿರೆ
ನವಭಸಿತವನು ಪಣೆಗಿಡಲು ಬೇನೆ
ಭುವನದೊಳಗೆಂದೆಂದು ಬರಬಾರದೆನುತಲಿ
ಯುವತಿ ಸಲಹಿದಕಾಣೆ ಜಾಣೆ ನಿನ್ನಾಣೆ ||3||

ಆಸೆಯೆಂದೆಂಬ ಜ್ವರವೆಗ್ಗಳಿಸುತಿರೆ ಕಂಡು
ಈಶಪದ ಜಲದ ಕಷಾಯವೆರದು
ಶೇಷಪ್ರಸಾದವನು ಸವಿದಿರು ಎಂದೆನುತ
ಬೇಸರಿಸದೆ ಪೇಳಿ ರಕ್ಷಿಸಿದ ಕಮಲಾಕ್ಷಿ ||4||

ಹೆದರದಿರು ಮಗಳೇ ಬಾರೆಂದು ಕರುಣಾಮೃತದ
ಉದಕದಲಿ ಸಿರದೊಳೆದು ಮಹದರುವಿನ
ಹೊದಿಕೆಯನೆ ಹೊದಿಸಿ ಸ್ಥಿರಕಾಲ ಬಾಳೆಂದು
ಚದುರ ಚೆನ್ನಬಸವೇಶನೊರೆದ ಚಿತ್ಕಾಂತೆ ||5||

ಎಂತೆನ್ನ ನೋಡಿ ಪೂರೆದಪೆಯೊ
ಎಂತೆನ್ನ ನೋಡಿ ಪೂರೆದಪೆಯೊ ದೇವರದೇವ
ಪಿಂತೆ ನಾನೇನುವನು ಅರಿದಾತನಲ್ಲ ||ಪ||

ಗುರುಪಾದ ಪಯೋಜಕ್ಕೆ ಸಿರಬಾಗಿದವನಲ್ಲ
ಹರಪೂಜೆಗಳಿಗೆ ಮನ ಸಂದಾತನಲ್ಲ
ಗುರುಹಿರಿಯರುಗಳಿಗೆ ವಸ್ತ್ರಾನ್ನವಿತ್ತವನಲ್ಲ
ಪರಮ ಭಕ್ತಿಯ ನೋಡಿ ಬಾಳಿದವನಲ್ಲ ||1||

ಓದಿದವನಲ್ಲ ಧರ್ಮಶಾಸ್ತ್ರಂಗಳನು
ಓದುವರ ಓದುಗಳ ಕೇಳಿದವನಲ್ಲ
ಆದಿಯ ಪುರಾತರಡಿಗಳ ನೆನೆದವನಲ್ಲ
ವೇದಾಢ್ಯರೊಡನೆ ಕೂಡಾಡಿದವನಲ್ಲ ||2||

ಬರದರಿಯೆ ಗ್ರಂಥಗಳ ಕಂಟವನು ಪಿಡಿದು
ಸ್ಮರಿಸಲರಿಯೆನು ಪ್ರಣವ ಪಂಚಾಕ್ಷರವನು
ಬೆರಸಿ ನಾನರಿಯೆ ಹರಶರಣ ಸಂದೋಹವನು
ತೊರೆದರಿಯೆ ಕಾಮಕ್ರೋಧವನು ಪರಶಿವನೆ ||3||

ಬುಧರಿಗರೆ ಕಾಣೀಕೆಯ ಕೊಟ್ಟರಿಯೆ ಸುಖಮಿರ್ದು
ಮೃದುವಾಕ್ಯದಿಂದೊಬ್ಬರ ಕರದರಿಯೆ
ಮುದದಿಂದ ಜಪತಪಂಗಳ ಮಾಡಲಾನರಿಯೆ
ಒದಗಿಬರುತಿಹ ಭವವ ಗೆಲುವ ತೆರನರಿಯೆ ||4||

ಶರೀರ ವಾಸನೆಗಳನು ತಿಳಿದರಿಯೆ ಗುರುಮುಖದಿ
ಅರಿವು ಮರವೆಗಳೆಂಬ ಕುರುಹನರಿಯೆ
ಜರಿದರಿಯೆ ತ್ರಿವಿಧಮಲಗಳನು ನಾನಾಗಿ
ಪರಿದರಿಯೆ ಆಶೆರೋಷಗಳ ಪರಶಿವನೆ ||5||

ಉಂಡಾಡಿದವನಲ್ಲ ಪರಮಪ್ರಸಾದವನು
ಮುಂಡಾಡಿದವನಲ್ಲ ಮುಕ್ತ್ಯಂಗನೆಯನು
ಕೊಂಡಾಡಿದವನಲ್ಲ ಶರಣರ ನಡವಳಿಯ
ದಂಡಿಸಿದವನಲ್ಲ ತನುಮನಂಗಳನು ||6||

ಯತಿಯಲ್ಲ ವ್ರತಿಯಲ್ಲ ಅತಿಭಕ್ತಿವಿದನಲ್ಲ
ಮತಿವಂತನಾಗಿ ಗುಣವಂತನಲ್ಲ
ಶತಪತ್ರಸಖ ಚಂದ್ರ ಶಿಖಿನೇತ್ರ ಐಸೂತ್ರ
ಸಿತಕಂಠ ಚನ್ನಬಸವೇಶ ನೀನೊಲಿದು ||7||

ಬರಿದೇಕೆ ಗಳಹುವರು ನರರು
ಬರಿದೇಕೆ ಗಳಹುವರು ನರರು ಮುಂದುವರಿಯದೆ
ಶರಣನೆಂಬುವನಲ್ಲ ಎಂದರಿಯದೆ ||ಪಲ್ಲ||

ಆನೆ ಬೆದರುವದೆ ಸೂಕರನು ಗುಡುಗುಟ್ಟಿದರೆ
ಭಾನುವಿಗೆ ಶುನಿ ಬರಿದೆ ಬಗುಳುವಂತೆ
ಹಾನಿಬರುವುದೆ ಚಂದ್ರಮಗೆ ಮಿಂಚುಪೊಳೆಯ
ಭಾನು ನಿಲಿಕುವುದೆ ಕೋಟೆಯಬಾಯಿಗೆ ||1||

ಕಾಗೆ ಕಾಯೆಂದಡೇತಕೆ ಕೊರತೆ ಕೋಗಿಲೆಗೆ
ಕೂಗೆ ಕುಕ್ಕುಟಬಳಗ ನವಿಲಿನಿದಿರಾ
ಚಾಗೆಯೇನದರಿಂದ ಹಗಲಾಯಿತೆಂದು ಮುದಿ
ಗೂಗೆ ಸೂರ್ಯನ ಪಳಿಯ ಕುಂದುಬಹುದೆ ||2||

ತರಣಿ ಬೆದರುವುದೆ ಬಹುತಮದ ಒಡ್ಡಣೆಗಳಿಗೆ
ಮರುತಸಖನಂಜುವನೆ ತೃಣಕಾಷ್ಟಕೆ
ಜಿರ್ರೆನಲು ನೊಣವಿಂಡು ಅಳಿಗಳಿಗೆ ಪೂಜ್ಯವೆ
ಕರಿ ಗೀಳುಗುಟ್ಟೆ ಹರಿ ಸಂಚಲಿಪುದೆ ||3||

ಕತ್ತೆ ಒದ್ದರೆ ಒದೆವರೆ ಮತ್ತೆ ಬಲ್ಲವರು
ತೊತ್ತು ಬೈದರೆ ಗರುವ ಬೈಯ್ಯಬಹುದೆ
ಮತ್ತೊಂದ ಕಿವಿಯೇಡಿಸಿದರೇಡಿಸಬಹುದೆ
ಮತ್ತಮಾನವ ನುಡಿದಡುತ್ತಮಗೆ ಭಯವೆ ||4||

ಅರಿವನನುಗೊಂಡು ಮರವೆಯನು ಧಿಕ್ಕರಿಸಿ
ಪರಮಾನುಭಾವದೊಳು ಲೀಯವಾಗಿ
ಪರಮಗುರು ಚೆನ್ನಬಸವೇಶ್ವರನ ಕೃಪೆಯುಂಟು
ಶರಣನಂಜುವನಲ್ಲ ಎಂದರಿಯದೆ ||5||

ಪ್ರೇತಮನವೆ ಪೆರೆದಲೆಯನಿರಲು
ಪ್ರೇತಮನವೆ ಪೆರೆದಲೆಯನಿರಲು ಬೇರೆ
ಭೂತಜೀವಿಗಳ ಬೇಡುವ ಭ್ರಾಂತನಳಿಯ ||ಪ||

ಕೊಡಲರಿಯರು ಕೊಡದಿರೆ ಇಲ್ಲವೆನ್ನರು
ಬಿಡೆದೆಡೆಯಾಡಿಸುತಿಹರಾಸೆದೋರಿ
ಕಡೆಯಲ್ಲಿ ಕಡುಪಿನಿಂ ಕೊಸರಿ ಕೋಪಿಸಿ, ಹೋಗು
ನಡೆ ಇಲ್ಲವೆಂದು ನಾಚಿಸಿ ನಾಚದೇಕೆ ||1||

ಮೂದಲಿಸುವರು ಮುನ್ನಿತ್ತುದಾಯೆಂದು
ಸಾಧಿಸುವರು ಸೇವೆಗೈವರಾಮೇಲೆ
ಆದರಿಸಿದಯಗುಣವ ಸ್ಮರಿಸುತಾಗ
ಬೀದಿಯ ತೃಣಗಂಡವೊಲು ಕಾಬ ಜನರ ||2||

ಬೇಡಬಹುದೆ ಮಾಡಿ ನೀಡಿ ಮನಸು ನಿಜ
ಗೂಡದ ಗುಣವರಿಯದಿಹ ನೆಪಕವರ
ಬೇಡುವೆ ಬೇಡು ನೀ ಗುರುಚೆನ್ನ ಬಸವ ಈವ
ಕೂಡೆ ಕೂಡಿಹ ಕುರುಹಿನ ಭಕ್ತಿತತಿಯ ||3||

ಪಾಲಿಸು ಪದುಳವೆರಸಿ
ಪಾಲಿಸು ಪದುಳವೆರಸಿ ರಾಜಪೂಜ್ಯನೆ ಗುರುಸಿದ್ಧಲಿಂಗ
ಲೋಲ ನಿಗಮಶಿರದಾಲಯ ನಿರಂಜನ ಗುರುಸಿದ್ಧಲಿಂಗ ||ಪ||

ಶರಣ ಜನರ ಪ್ರಿಯ ಶಾಂತಿಖಡ್ಗ ಧಾರನೆ ಗುರುಸಿದ್ಧಲಿಂಗ
ಹರ ದೂಷಕರ ಹಲ್ಲ ಧರೆಯರಿಯೆ ಮುರಿದನೆ ಗುರುಸಿದ್ಧಲಿಂಗ
ಗುರುಕುಲತಿಲಕ ಗುಹನ ಸಂಪ್ರದಾಯನೆ ಗುರುಸಿದ್ಧಲಿಂಗ
ದುರುಳ ವಿಪ್ರನ ಪಡೆಯ ಮರುಳ್ವಿಂಡಿಗಿತ್ತನೆ ಗುರುಸಿದ್ಧಲಿಂಗ||1||

ಪೊಡವಿಯೀರೇಳರೊಳಗಣಿತ ಮಹಿಮನೆ ಗುರುಸಿದ್ಧಲಿಂಗ
ಮೃಡಶರಣರ ಶಾಂತಿಮುಕುರವಾದಾತನೆ ಗುರುಸಿದ್ಧಲಿಂಗ
ಕಡು ಶೋಭೆಗೆಯ್ವ ಕಾವನ ಹಮ್ಮ ಮುರಿದನೆ ಗುರುಸಿದ್ಧಲಿಂಗ
ಬಡ ಹಮ್ಮಿನವನ ಸಿರವ ಕರದೊಳು ಮೆರೆದನೆ ಗುರುಸಿದ್ದಲಿಂಗ||2||

ಸದಮಲ ಭಕ್ತರ್ಗೆ ಸಗುಣವಾದಾತನೆ ಗುರುಸಿದ್ಧಲಿಂಗ
ಪದನಾಲ್ಕರಿಂದೆ ಪೂಜೆಯಗೊಂಬುವಾತನೆ ಗುರುಸಿದ್ಧಲಿಂಗ
ಮದವೆಂಟಮುರಿದು ಮಾರಾಂತರ ಗೆಲುವನೆ ಗುರುಸಿದ್ಧಲಿಂಗ
ಹೃದಯದಾನಂದದ ಚದುರಿನೊಳ್ಬೆರೆದನೆ ಗುರುಸಿದ್ಧಲಿಂಗ ||3||

ಅತಿಹಿತವಾಗಿ ಆತ್ಮರ ಭೋಗಗೊಂಬನೆ ಗುರುಸಿದ್ಧಲಿಂಗ
ಕೃತಕ ಜೀವರ ಕುಲಗಿರಿ ವಜ್ರಖಡ್ಗನೆ ಗುರುಸಿದ್ಧಲಿಂಗ
ನತಜನ ಕುಲಕಾಮಧೇನುವಾದಾತನೆ ಗುರುಸಿದ್ಧಲಿಂಗ
ದ್ವಿತೀಯ ಶಾಂತವೀರನಾಮದೆ ಮೆರವನೆ ಸಿದ್ಧಲಿಂಗ ||4||

ಅಗಣಿತ ಭೂಕಾಶಿನಿವಾಸ ವಿಶ್ವೇಶನೆ ಗುರುಸಿದ್ಧಲಿಂಗ
ಬಗಸೆಗಂಗಳೊಳು ಮಾನಿಸುವ ಮಹಾತಾರಾಖ್ಯನೆ ಗುರುಸಿದ್ಧಲಿಂಗ
ಬಗೆಬಗೆ ಉರಿವ ಭಾನುಕೋಟಿ ಪ್ರಕಾಶನೆ ಗುರುಸಿದ್ಧಲಿಂಗ
ಅಗಲದೆ ತಿಳಿಯೆ ಚೆನ್ನ ಬಸವ ನೀನೋರ್ವನೆ ಗುರುಸಿದ್ಧಲಿಂಗ||5||

ತಾನೆ ಶಿವನೆಲಾ ತನಗೆ
ತಾನೆ ಶಿವನೆಲಾ ತನಗೆ ಅನುರ್ಯಾರೆಲಾ
ತಾನು ನಾನುಯೆಂಬ ಭೇದ ತಿಳಿದು ನೋಡೆಲಾ
ಸ್ವಾನುಭಾವದಿಂದ ನೀನು ತಿಳಿದುನೋಡೆಲಾ ||ಪಲ್ಲ||

ಅರಿವು ಮರೆವು ಅರಿತು ನೀನು ನಿರುತನಿಲ್ಲೆಲಾ
ಪರಮನಿರುವ ನೆಲೆಯಕಂಡು ಅರಿತುನೋಡಲಾ
ಸಾರವು ಸಂಸಾರದೊಳಗೆ ಸೇರಿ ನೋಡೆಲಾ ||1||

ನಾದಬಿಂದು ಕಳೆಗಳಿಗೆ ಹಾದಿ ನೀನೆಲಾ
ಆದಿ ಅಂತ್ಯ ಅರಿತು ನೋಡೆ ಆತ್ಮ ನೀನೆಲಾ
ಆದಿ ಪ್ರಣಮ ನಿಮ್ಮ ಬೋಧತೀತ ವಿನೋದ ನೋಡೆಲಾ ||2||

ತ್ರಿಪುಟಿಗಿರಿಯ ತುದಿಯ ಮೇಲೆ ಕಾಣುತಾಡೆಲಾ
ಸ್ಪಟಿಕ ಜ್ಯೋತಿವರ್ನದಂತೆ ಹೊಳೆಯುತಿದೆಯಲಾ
ನಿಟಿಲ ಗುರುವು ಚನ್ನಬಸವ ತಾನೆ ತಾನೆಲಾ ||3||

Categories
Tatvapadagalu ಹಾಗಲವಾಡಿ ಮುದ್ವೀರಸ್ವಾಮಿ ಮತ್ತು ಇತರರ ತತ್ವಪದಗಳು

ಕೆಸ್ತೂರದೇವರ ತತ್ವಪದಗಳು

ಬರೆದೋದಿ ಪಠಿಸಿ

ಬರೆದೋದಿ ಪಠಿಸಿ ಬಸವಣ್ಣ ಮೊದಲಾದ ಶಿವ
ಶರಣರುಸುರಿದ ವಚನಗೀತಂಗಳ ||ಪಲ್ಲ||

ಶ್ರುತದೃಷ್ಟವನುಮಾನದಿಂದಿತರ ಸಮಯಗಳ
ಗತಿಗೆಡಿಸಿ ದ್ವೈತವದ್ವೈತಗಳನು
ಕೃತನಿಶ್ಚಯದೊಳಿನಿತು ಸಿತಗಳನ ಶರಣರ
ಪ್ರತಿಮರಿಳೆಯೊಳಗಾಡಿದಾಟವನು ||1||

ಗಣನೇಮ ಸಂಧಿ ಸಮಾಸ ಛಂದಶ್ಯಬ್ದ
ಮಣಿದರ್ಪಣದೊಳೆಲ್ಲ ಹುಡುಕಿ ನೋಡಿ
ಬಣ್ಣಿಸಿ ಹೇಳುವ ಕವಿ ಮಾತಲ್ಲ ಶರಣ
ಸನ್ಮತ4 [ದು] ಸಿರ್ದ ವಚನಂಗಳೆಲ್ಲವ ||2||

ಅಂಗಲಿಂಗವು ಲಿಂಗಸಂಗ ಷಟ್ಸ್ಥಲ ಕುಳಗ-
ಳಿಂಗಿತಗಳರಿದು ಆಚರಿಸಿ ಭವದ
ಭಂಗವನು ಪರಿವ ಪ್ರಸಂಗದಂಗವನು ಹೆರ
ಹಿಂಗದಿರೆ ಸಿದ್ಧಲಿಂಗನೊಲಿವ ||3||

ಕೊಡುಕೊಡುದೇವ
ಕೊಡುಕೊಡು ದೇವ ನೀ ದೃಡವುಳ್ಳ ಭಕ್ತಿಯ
ಮೃಡನಲ್ಲದನ್ಯವನರಿಯದ ಸುಖವ ||ಪಲ್ಲ||

ಗುರುವೆ ನಿಮ್ಮಯ ನಿಜನಿಲವರಿಯದೆ ನಾ
ದುರುಳತನದಿ ಮನ ಹರವರಿಯೊಳಗೆ
ಮರುತನಿದಿರ ದೀಪದಂತಿಹ ದೇಹವ
ಹೊರೆಯದೆ ಗುರುಸೇವೆಗಲಸದ ಸುಖವ ||1||

ಅಂಗದಿಚ್ಛೆಗೆ ಮನ ಭಂಗಬಡದೆ ನಿಜ
ಲಿಂಗವನಂಗದಿ ಕಂಗಳು ತುಂಬಿ
ಮಂಗಳಮಯನಾಗಿ ನೋಡುತ ನಲಿವುತ
ಲಿಂಗಪೂಜೆಗೆ ಮನವಲಸದ ಸುಖವ ||2||

ಕರಣಂಗಳ ಕಾತುರಕಾಗಿ ಅನ್ಯರ ಯುವತಿ
ಪರದ್ರವ್ಯ ಪರನಿಂದೆಗಳಿಗೆ
ಮರುಳಾಗದೆ ಸ್ಮರಹರನವತಾರದ
ಚರಲಿಂಗಭಕ್ತಿಗಾನಲಸದ ಸುಖವ ||3||

ಮತ್ತತನದಿ ಮಮಕರಿಸಿ ಲೋಕದೊಳಿಹ
ವರ್ತನೆಗಳಿಗೊಳಗಾಗದೆ ನಿಮ್ಮ
ಸತ್ತುಚಿತ್ತಾನಂದ ಭಕ್ತಿವಿಶ್ವಾಸದಿಂ
ನಿತ್ಯಪ್ರಸಾದವ ಸೇವಿಪ ಸುಖವ ||4||

ಗರಳವು ವಿಷಯರಸವ ಸೇವಿಸದಿಹ
ಪರಕೆ ಸಾದನವಹ ಗುರುವಿನ ಪಾದ
ಪರಮಾನಂದ ಪರಾಪರ ತಾ ಪರಿಪೂ
ರ್ಣ ಪಾದೋದಕಕ್ಕಲಸದ ಸುಖವ ||5||

ಪರಿಣಾಮಿಸಿ ಪರಿಪರಿಯುಪಚಾರದ
ನೆರವಿಯ ನಂಬದೆ ಮೃಡನ ಶರಣರೊ
ಳೆರವಳಿದಿಹ ನಿಜಶರಣರ ಸಂಗದೊಳ
ನುಭವ ತೃಪ್ತಿಯೊಳಾಡುವ ಸುಖವ ||6||

ಭಕ್ತಿ ಬಾವನೆಯ ವಿರಕ್ತಿಯು ಎನಗಿಲ್ಲ
ನಿತ್ಯ ನಿಮ್ಮಯ ಪಾದರಕ್ಷೆಯ ಹೊರುವ
ಭೃತ್ಯನಾಗಿ ನಾ ಮತ್ತೊಂದನರಿಯೆನು
ಕರ್ತೃ ನೀ ರಕ್ಷಿಸೊ ಗುರು ಸಿದ್ಧಲಿಂಗ ||7||

ಬಲ್ಲ ಸತ್ಪುರುಷರು
ಬಲ್ಲ ಸತ್ಪುರುಷರನರಿವ ಸುಜ್ಞಾನಿ
ಯಿಲ್ಲದ ದ್ವೈತದ ನುಡಿ ಬಲು ಹಾನಿ ||ಪಲ್ಲ||

ಸುಟ್ಟ ಮರದೊಳುಂಟೆ ಮುನ್ನಿರ್ದ ಶಾಖೆ
ಬಿಟ್ಟಿರ್ದ ತ್ರಿವಿದವ ಮುಟ್ಟಲೋಕರಿಕೆ
ಕಟ್ಟಿರ್ದ ಕೌಪಿನೊಳವದಾನ ಜೋಕೆ
ಇಷ್ಟಳವಟ್ಟಿರ್ದಗಾರಣ್ಯವೇಕೆ ||1||

ಜ್ಞಾನಶಕ್ತಿಯ ಕೂಟದಾಟ ಸುಸಂಗ
ದ್ಯಾನದಾರಣದನುಬಾವ ಪ್ರಸಂಗ
ತಾನುತಾನಾದ ಶರಣ ನಿಜಲಿಂಗ
ಕೀನಾಶನ ಹಂಗನಳಿದನಭಂಗ ||2||

ಕಷ್ಟಕಾಮನ ಸುಟ್ಟು ಬಿಟ್ಟ ವಿರತಗೆ
ಬಿಟ್ಟು ಹಿಮ್ಮೆಟ್ಟಿ ತೊಲಗಜ್ಞೆಯೊಳಗೆ
ಅಷ್ಟಮದಂಗಳ ಸುಟ್ಟು ಹರಿದಂಗೆ
ಬಟ್ಟಬಯಲು ಹುಟ್ಟು ಹೊಂದೆಂಬುವವಗೆ ||3||

ಇಂದುವದನೆಗಾಗಿ ಬಿಂದುವ ನೀಗ
ವಂದನೆಗುಬ್ಬಿ ನಿಂದನೆಗೋಡಿಹೋಗ
ಬಂದುದಾನಂದಿಪ ಸುಖ ಲಿಂಗಬೋಗ
ದ್ವಂದ್ವವನಳಿದು ನಿಂದುದುಶಿವಯೋಗ ||4||

ಹುರಿದ ಬೀಜವ ಬಿತ್ತಿದಡೆ ಪಲವಿಲ್ಲ
ಹರಶರಣರು ನರರೊಳಗೊಬ್ಬರಲ್ಲ
ಪರರಾಗುಚೇಗೆಗೆ ಗುರಿಯಹರಲ್ಲ
ಗುರು ಸಿದ್ಧಲಿಂಗವ ನೆರೆ ನಂಬಿರೆಲ್ಲ ||5||

ಭಕ್ತಿ ವಿಶ್ವಾಸಕೋವಿದನೈಮೊಗ
ಭಕ್ತಿವಿಶ್ವಾಸಕೋವಿದನೈಮೊಗ ಬೇರೆ
ತತ್ವವ ತಿಳಿದಹಂಕಾರಿಗೊಲಿಯ ನಹೋ ||ಪ||

ಡೊಂಬಿತಿಯೊಡನುಂಡ ಗುರುವಿನ ಶೇಷವ-
ನುಂಬವರಾರು ವಿಶ್ವಾಸದಿ ನಂಬಿ
ಕುಂಭಕುಚವೆ ಶಂಭುವೆಂದೋದಿ ಪಡಿಹೊನ್ನ
ಕೊಂಬುದು ಚೋದ್ಯವಲ್ಲವೆ ನೆರೆನಂಬಿ ||1||

ಗೂಗೆ ಶ್ರೀಗುರುವೆಂದು ನಂಬಿದವಗೆ ಭವ
ರೋಗವೈದ್ಯನು ತನ್ನ ನಿಜರೂಪುದೋರಿ
ರಾಗರಚನೆಯಿಂದ ಹಾಡಿಯರ್ಚಿಸಿದರ್ಗೆ
ಬೋಗಭುಕ್ತಿಯ ತೋರಿ ಜಾರುವನು ||2||

ವಾದಿಸಿ ದಾಯಾದ್ಯ ಬೋಧಿಸಲ್ಗುರುವಾಗಿ
ಬೇದಿಸಿ ಖಂಡ ಲಗಿನೊಳಿರಿಯಲ್ಕೆ
ಮೂದೇವರೊಡೆಯನೆಂದೆಂಬ ವಿಶ್ವಾಸ ಕೈ
ಗೂಡಿ ಮೆರೆ ದ ಸೇದಿರಾಜನೆಮ್ಮಯ್ಯ ||3||

ಆಡಿನ ಹಿಕ್ಕೆ ಮಳಲು ಬಳ್ಳ ಲಿಂಗವ
ಮಾಡಿ ಮೆರೆದ ಭಕ್ತರಾಡಿಸಿದಂತೆ
ಆಡುತ ರೂಢೀಶ ಪದವಿತ್ತು ನಂಬಿಗೆ ಹೀನ
ಮಾಡಿದ ಭಕ್ತಿ ಡಂಭಕರಿಗೊಲಿಯ ||4||

ಗುರುಚರಲಿಂಗ ಮಾನವನ ರಶಿಲೆ ಯೆಂದು
ತರಣಿಯಣುಗನ ಪುರವ ಸಾರದೆ ನೀ
ಗುರು ಸಿದ್ಧಲಿಂಗವ ಬೆರಸಿದ ಶರಣರ
ಚರಣವಿಡಿದು ಭವಶರಧಿಯ ದಾಂಟು ||5||

ಹೇಳಬಾರದು ಹೇಳದಿರಬಾರದು !
ಹೇಳಬಾರದು ಹೇಳದಿರಬಾರದು
ಬರಿ ಡಾಳಕರನು ಶರಣೆನೆ ನುಡಿದುಸುರಿ ||ಪ||

ಕಟ್ಟಿಕೊಂಡು ಮೇಲನರಿಯದೆ ಶೀಲವ
ಸಿಟ್ಟಾಟ ಸಿಡಿಮಿಡಿಗೊಂಡಾಡಲದು ತಾ
ಬಿಟ್ಟೂಬಿಡದು ಹೊಳೆಯ ಬಿದ್ದ ಕರಡಿಯ
ಮುಟ್ಟಲು ತೊಡರಿಕೊಂಡಂತಾಯಿತಯ್ಯಾ ||1||

ಅಂತರಂಗದ ಭವಿ ಯಾರು ತಮ್ಮೊಳಗವು
ಸಂತತವಿರುತಿರೆ ಶೀಲವ್ರತಗಳು
ಎಂತಳವಡುವದೊ ನಿರ್ದೇಹಿಗಲ್ಲದೆ
ಕಂತುಹರನ ಮೇಲೆ ಭಕ್ತಿನಿಷ್ಠೆಗಳು ||2||

ಭಕ್ತಿ ಜ್ಞಾನವೈರಾಗ್ಯ ಸತ್ಕ್ರೀಗಳ
ನಿತ್ಯನೇಮ ಕೃತ್ಯವಾಗಿ ನಡೆಸದೆ
ಮಿಥ್ಯ ರಾಗದ್ವೇಷ ಬಿಡದೆ ವ್ರತವು ನಿಮ-
ಗೆತ್ತಣ ಮೂದೇವಿ ಬಂದು ಕಲಕಿತೋ ||3||

ಹಾದಿಗೊಂಡು ಹೋಹ ಭೂತವ ಮನೆಯ
ಹೊಕ್ಕು ಹೋಗೆಂಬ ಗಾದೆಯ ಕಥೆ ನಿಮಗಾಯಿತು
ಪಾದವಿಡಿದು ಗುರುವೆಂದಾರಾಧಿಸಿ
ವಾದಿಸದೋಗತಿಗಿಳಿವರ ಕಂಡು ||4||

ಗಮಕದ ಗರ್ವಹಂಕಾರವ ಛೇದಿಸಿ
ಕ್ಷಮೆದಮೆ ಸೈರಣೆಯನು ನೆಲೆಗೊಳಿಸಿ
ಕ್ರಮವರಿದಾಚರಿಸುವ ಸದ್ಭಾವಿಗೆ
ನಮೋಯೆಂದೆದ್ದೆರಗುವೆ ಗುರು ಸಿದ್ಧಲಿಂಗ ||5||

ದೃಡಭಕ್ತರ್ಗಿದು ಬೋದೆ
ದೃಡಭಕ್ತರ್ಗಿದು ಬೋದೆ
ತಮವಡರಿದಗೀ ನುಡಿ ಗಾದೆ ||ಪ||

ಬಿಂಗದ ಹೊರೆಹೊರೆಯಂತೆ | ಲಿಂಗ
ಜಂಗಮದೊಳಗೆಲೆ ಬ್ರಾಂತೆ
ಸಂಗಿಸದಿರಲು ಚಿತ್ಕಾಂತೆ | ನಿನ
ಗಂಗವಾಗದೆ ಪೋಪಳಂತೆ ||1||

ಹಿಡಿದುದು ಶೀಲವ್ರತಗಳು | ಬಲು
ಸೆಡಕಿನೊಳಹಂಕಾರಿಗಳು
ಕೆಡುಕರೆಂದವರೆಡೆಗಳೊಳು | ದುಮ್ಮು
ದುಡುಕೆನುತಿದೆ ಹೃದಯದೊಳು ||2||

ಕೊಂಬುದು ತೀರ್ಥಪ್ರಸಾದ | ಬರಿ
ಡಂಬಕದಿಂದ ಹಸಾದ
ಯೆಂಬುದು ವರ್ತಕ ಬೇದ | ಗುರು
ನಂಬುಗೆ ಹೀನ ಹೀಗಾದ ||3||

ಸೊಡರುಲಿಗೆ ಮರುತನು ಹೊಲ್ಲ | ನಾಡ
ನುಡಿ ಬಡವಗೆ ತರವಲ್ಲ
ದೃಡಹೀನ ವ್ರತಕವ ಸಲ್ಲ | ಅವ
ನೊಡನಾಡಲು ಹುರುಳಿಲ್ಲ ||4||

ಹಾವುಮೆಕ್ಕೆಯ ಹಣ್ಣು ನುಂಪು | ಅಗ
ಡಾವಿನ ಮೊಲೆ ಮೈ ಸೊಂಪು
ಹಾವಿನ ಹೆಡೆಯಡಿ ತಂಪು | ಜಡ
ಬಾವಿ ತಾನಡರಿನ ಜಂಪು ||5||

ಕಾರ್ಯವ ಕುರಿತು ಹಿರಿಯರು | ಬಂದು
ಸೇರಿ ಭಕ್ತಿಯ ಮಾಡುವರ
ಚೋರರೆಂದರಿದು ನಾನವರ | ಕೆಲ
ಸಾರಿ ತೊಲಗಿದೆ ಹೂಸಕರ ||6||

ಇರ್ದ ಗುಣವನಾಡಿದರ | ಬಲು
ದುರ್ಜನರೆಂದು ದೂರುವರ
ನಿರ್ದಯವೆ ಒಡಲಹಾರ | ಗುರು
ಸಿದ್ಧಲಿಂಗನೊಲ್ಲನವರ ||7||

ನೋಡಿದಡೊಂದು ಪಾತಕ
ನೋಡಿದಡೊಂದು ಪಾತಕ ರತಿಗೆಳಸಿ ಮಾ-
ತಾಡಿದಡೈದು ಪಾತಕ ಪರಸತಿಯಾ ||ಪ||

ಸಂದಣಿ ಸಡಗರದಿಂದ ಬಳಗ ತಾಯಿ
ತಂದೆಗಳೊಪ್ಪಿ ಕೊಟ್ಟವನಿಗೆ ತಾನು
ನಿಂದ ಸಬೆಯ ಮುಂದೆ ಬಲಗೈಯ ಕೊಟ್ಟೆನು
ಸೌಂದರವುಳ್ಳಗೆ ಮನಸುಗುಂದುವಳ ||1||

ಸಾಲುಗಂಬಗಳೆರಡಾರು ಚಪ್ಪರ ಮಿಗೆ
ಕೇಲೈರಣೆ ಸಾಕ್ಷಿಯಾಗಿ ಭೂಮದೊಳು
ಹಾಲು ಪ್ರಸಾದವನೊಡನುಂಡು ಗಂಡಗೆ
ಸೋಲದೆ ಹಲಬರಿಗೆಳಸಿ ಹೋಗುವಳ ||2||

ಹಸೆ ನಿಂದ ಪುರುಷನ ಗಸಣಿಗೊಳ್ಳದೆ ತನ್ನ
ವ್ಯಸನಕೆ ರಸಿಕರ ಕಣುತುಂಬಿ ನೋಡಿ ನಸುನಕ್ಕು
ದೆಸೆಯನಾಲಿಸಿ ನೋಡಿ ಸವಿಮಾತಿ-
ನೆಸಕದಿಂದವಗೆ ಮೋಹಿಸಿ ಕರಗುವಳ ||3||

ಬಣ್ಣ ಬಂಗಾರವನಿಕ್ಕಿ ಕೈವಿಡಿದನ
ಕಣ್ಣಿಲಿ ನೋಡಿ ಕೂಡದೆ ಪ್ರೀತಿಯೊಳು
ಬಣ್ಣಿಸಿ ನುಡಿದು ಲಾವಣ್ಯದ ಚೆಲುವನ
ಕಣ್ಣು ಕೈಸನ್ನೆಯ ಮಾಡಿ ಕರೆವಳ ||4||

ಪುರಜನ ಮೆಚ್ಚದೆ ದರೆಯೊಳಕೊಳ್ಳದೆ
ಹರಶರಣರ ಸಂಗವತಿದೂರವಾಗಿ
ಗುರುಸಿದ್ಧಲಿಂಗದ ಕರುಣವ ತಪ್ಪಿಸಿ
ನರಕದ ಕುಳಿಯೊಳು ನೂಕಿ ಬಿಡುವಳ ||5||

ಎಚ್ಚರಿಕೆಗುಂದದಿರು
ಎಚ್ಚರಿಕೆಗುಂದದಿರು ಎಲೆ ಮನವೇ
ಲಿಂಗದೋಳ್ಬೆಚ್ಚು ಬೆರಕಿಲ್ಲದಿಪ್ಪ
ಭಕ್ತರಿಗೆ ಮೆಚ್ಚಿಯೊಡನೊಡನೆ ಬಪ್ಪ
ಅವರವರ ಇಚ್ಛೆಯನು ಸಲಿಸುತಿರ್ಪ
ನಂಬದಿಹ ಕುತ್ಸಿತರ ನಡೆ ಯನೊಪ್ಪ | ಮೃಡನು ||ಪ||

ಮುನ್ನಿನ ಪುರಾತರಾಚರಣೆ ಯಾರಿಗೆ
ಸಾದ್ಯವೆನ್ನುತೆಳತಟವ ಮಾಡಿ
ಕೆಡಬೇಡ ಸನ್ನುತದೊಳವರ ಹಾಡಿ
ಹೊಗಳುತಿಹ ಮಾನ್ಯರಿದ್ದಿರವ ನೋಡಿ
ಜ್ಞಾನಸಂಪನ್ನರಿಗೆ ಶರಣು ಮಾಡಿ
ದೈನ್ಯದಿಂದವರನುಪಚರಿಸಿ ಸ-
ನ್ಮಾನದಿಂ ಮನ್ನಣೆಯ ಮಾಡಿ ಕೂಡಿ
ಘನಕಿರಿದೆನ್ನದೆಲ್ಲರಿಗೆ ನೀಡಿ
ಮಿಕ್ಕ ಶೇಷಾನ್ನ ಸೇವನೆಯ ಮಾಡಿ
ಪರಮಪ್ರಸನ್ನ ಚಿತ್ಸುಖದೊಳಾಡಿ | ಇಂತು ||1||

ತ್ರಿಕಾಲ ಲಿಂಗಪೂಜೆಯು ತ್ರಿವಿದ ಭಕ್ತಿ
ಶಿವದ್ಯಾನ ನುತಶರಣ ಗುಣಸಂಗ
ಅದು ಲೇಸುಯೇಕಾಂತ ನೆನಹು ಲಿಂಗ
ಕರಿಗೊಂಬ ಜೋಕೆ ಭಕ್ತರಿಗಿದಂಗ
ಈ ಮಾರ್ಗ ಲೋಕದವರಿಗೆನ್ನಂಗ
ವ್ಯಾಕುಲದ ದುರ್ವರ್ತಕರ ಕಂಡು
ಭೂತಹಿತ ಸಾಕವರ ಸಂಗಭಂಗ
ದುರ್ಜನರ ವಾಕು ವಿಷವದು ಕಳಿಂಗ
ಅಂತವರೊಳೇಕವಾಗಿಹುದಸಂಗ
ಅದರಿಂದ ಬೇಕು ಜ್ಞಾನಪ್ರಸಂಗ | ನಿನಗೆ ||2||

ಆಗದಾಗದು ಭಕ್ತಿಯೆಮಗೆಂದು ಸಂ-
ಸಾರ ಬೋಗಕ್ಕೆ ಮನವು ಸೋಲ್ತು
ಮರೆಯದಿರು ಆಗಾಗಿ ನಿನ್ನ ಕೂರ್ತು
ಕರದೊಳದೆ ಬೇಗ ಕ್ರೀಪೂಜೆವೆತ್ತು
ಸಕಲ ಸುಖಬೋಗವಂ ಲಿಂಗಕಿತ್ತು
ಶ್ರೀಗುರುಲಿಂಗಜಂಗಮದೊಳತಿ
ಪ್ರೇಮಿಗಳ ಪಾದರಕ್ಷೆಗಳ ಹೊತ್ತು
ಕುಣಿದು ಭವರೋಗ ಬೇರುವನೆ ಕಿತ್ತು
ಗುರುಸಿದ್ಧಲಿಂಗಗಾತ್ಮಾನ್ನವಿತ್ತು
ಸುಖಿಯಾಗಲಿನ್ನಿಲ್ಲ ಕಾಲಮೃತ್ಯು | ನಿನಗೆ ||3||

ಸಂಗವಸಂಗದ ಬೇದ
ಸಂಗವಸಂಗದ ಬೇದವ ತಿಳಿದು ಪ್ರ-
ಸಂಗಿಸಬೇಕವರಿಂಗಿತವರಿದು ||ಪ||

ಸದ್ಭಾವರ ಸಂಬಾಷಣೆ ಕೀಸಿದ
ಕಬ್ಬನು ಸವಿದದ ಮೆಲುವಂತೆ
ದುರ್ಬಾವಿಗಳಿರ್ದೆಡೆಯೊಳು ನಿಂದಡೆ
ಹೆಬ್ಬಿದಿರೊಬ್ಬೆಯ ಸಿಗುರಂತೆ ||1||

ಒಳ್ಪಿನ ನುಡಿಗಳ ಬಲ್ಲವರಿಂಗಿತ
ಕರ್ಪೂರದ ಕರಡಿಗೆಯಂತೆ
ತಪ್ಪಿ ನುಡಿವ ಬೆಪ್ಪರ ಸಂಬಾಷಣೆ
ತಿಪ್ಪೆಯ ಕೆದರಿದ ತೆರನಂತೆ ||2||

ಕ್ಷಮೆದಮೆಯುತ ಸತ್ಪುರುಷರ ನಗೆ ಮಿಗೆ
ಕುಮುದಂಗಳು ಬಿರಿದರಳ್ದಂತೆ
ಕ್ರಮವರುಹಿದ ಗುರುವಿಮುಖರ ನಗೆಹೊಗೆ
ತಿಮಿರದ ನಯನವು ಕೆರಳ್ದಂತೆ ||3||

ಪಕ್ವ ಹೃದಯರೊಳು ತರ್ಕಿಸಿ ನುಡಿದಡೆ
ಸಕ್ಕರೆ ಜೇನುವ ಸವಿದಂತೆ
ವೆಕ್ಕಾಸಿ ಯೊಳಕ್ಕರು ಮಿಗೆ ನುಡಿದಡೆ
ಸೊಕ್ಕಡಿಕೆಯನೆ ಸವಿದಂತೆ ||4||

ಶ್ರದ್ಧೆಯೊಳಿಹ ಸಾತ್ವಿಕರ ಮೃದುನುಡಿ
ಕರ್ಜೂರದ ಸವಿರುಚಿಯಂತೆ
ನಿರ್ದಯ ನಿಷ್ಠೂರಿಯ ನುಡಿ ನೊಣ
ಬಿದ್ದಗಲುಂಡೋಕರಿಪಂತೆ ||5||

ಆವೆಡೆಯೊಳು ಸುಜ್ಞಾನಿಯ ನುಡಿ ಸಿಹಿ-
ಮಾವಿನ ಹಣ್ಣಿನ ರುಚಿಯಂತೆ
ಬಯಿಬಡುಕರೊಳು ನುಡಿದಡೆ ಕಹಿಸೋರೆ
ಬೇವನು ನಾಲಗೆ ಸವಿದಂತೆ ||6||

ಕಾಲೋಚಿತಗಳ ಬಲ್ಲರ ನಡೆನುಡಿ
ಹಾಲಕೆನೆಯ ಚಪ್ಪಿರಿದಂತೆ
ನೂಲಮಾಲೆಯ ಪೋಲರ ನುಡಿಗಳ ಲಾಲಿಸಿ
ಪಾಲಿಸಾ ಗುರು ಸಿದ್ಧಲಿಂಗ ||7||

ಸದರವೆ ವೀರಶೈವ
ಸದರವೆ ವೀರಶೈವದಿ ನಿಂದು
ಮದನಾರಿಯೊಡ್ಡಿದ ಮಾಯೆಯ ಗೆಲುವುದು ||ಪ||

ಜಾತಿಯಳಿದ ಸದ್ಭಕ್ತರ ನಡೆನುಡಿ
ಕೌತುಕವಾಗಿಹುದೀ ಜಗಕೆ
ಸೂತಕದೋರದ ಮದುವರಸಯ್ಯನ
ರೀತಿಯನರಿದಾಚರಿಸುವಗಲ್ಲದೆ ||1||

ಆದಿವ್ಯಾಧಿ ಸ್ತುತಿನಿಂದೆಯ ಗೆಲಿದು
ವಾದವೈಸ್ಯ ಷಡ್ಭ್ರಮೆಗಳ ಹಳಿದು
ಮಾದಾರಚೆನ್ನ ಚೋಳಿಯಕ್ಕನೊಕ್ಕುದನುಂಡ
ಮೂದೇಚರೊಡೆಯನ ಬೆರಸಿ ಕೂಡುವುದು ||2||

ಹಮ್ಮುಬಿಮ್ಮುಗಳವು ಶಿವಭಕ್ತರ
ಸೊಮ್ಮುಗಳಲ್ಲವೆಂದವ ನೇತಿಗಳೆದು
ಪೆರ್ಮೆಯಿಂ ಪರಬ್ರಹ್ಮವೆ ಶಿಶುವಾ
ದಮ್ಮವ್ವೆಯ ದೃಡಭಕ್ತಿಯೊಳಿಪ್ಪುದು ||3||

ಅಂಬಿಕಾಪತಿಗಡಿಗೆಯ ಮಾಡಿದು-
ದುಂಬ ಮಗನ ಕೊಂದೆಳೆದತ್ತಲಿರಿಸಿ
ಶಂಭುಶಿವನನೊಲಿಸಿದ ನಿಂಬ್ಯಕ್ಕನ
ನಂಬುಗೆವಿಡಿದಾಚರಿಸುವಗಲ್ಲದೆ ||4||

ತುಂಬು ಜವ್ವನೆ ರೂಪು ಲಾವಣ್ಯ ನಿ-
ತಂಬಿನಿ ರಜಶೀಲೆಯಾಗಿ ತಾನು
ತ್ರಿಯಂಬಕ ಗುರುಸಿದ್ಧಲಿಂಗವ ಬೆರೆಸಿದ
ನಿಂಬ್ಯಕ್ಕನ ನಿಜಭಕ್ತಿಯೊಳಿಪ್ಪುದು ||5||

ಆಗದಾಗದು ಅಲಗಿನ ಮೊನೆ
ಆಗದಾಗದು ಅಲಗಿನ ಮೊನೆ ಮಿಗೆ
ಶ್ರೀಗುರು ಲಿಂಗ ಜಂಗಮ ಭಕ್ತಿಯೆಂಬುದು ||ಪ||

ಸಲೆ ಶಿವಭಕ್ತರೆಲ್ಲರ ಮಾಡಿ ಭವಿಗಳ
ಸುಳುಹಿಲ್ಲದಲ್ಲಿಗೆ ಭವಿಯಾಗಿ ಬರಲು
ಮಲಹರನಾ ನೆನೆ ಬಿಡದೆ ದೀಕ್ಷೆಯ ಮಾಳ್ಪ
ಕಲಿಗಣನಾಥನ ಚಲ ಘಟಿಸುವುದು ||1||

ಮಂಡಲಪತಿಯೋರುಗಲ್ಲ ರಾಯನ ಕಾಲ
ಪೆಂಡೆಯ ಹಾರ ಹೀರಾವಳಿಯ
ಕೊಂಡೋಡಿ ಬಂದು ಕಳ್ಳರು ಮರೆಹೊಗಲು
ದಂಡಿಸಿ ಕೊಡದಿಹ ಗುಂಡಬ್ರಹ್ಮರ ಛಲ ||2||

ಅಣ್ಣಂಗೆ ತಂಗಿಯ ಮದುವೆಯ ಮಾಡಿ
ಸಣ್ಣ ವಸ್ತ್ರವ ಶಿವಗುಡಲಿತ್ತು
ಬಣ್ಣಿಸಿ ನುಡಿದು ಮುಕ್ಕಣ್ಣನ ನಗಿಸಿ ಕಾ-
ರುಣ್ಯವ ಪಡೆದಗ್ರಗಣ್ಯರ ನಡೆನುಡಿ ||3||

ಚಿಣ್ಣನ ಬಯಸಿ ಬೇಡಲು ಹಿಮ್ಮೆಟ್ಟದೆ
ಭಣ್ಣಿಸಿ ಬಾಣಸ ಮಾಡುಣಲಿತ್ತು
ಕಣ್ಣ ಕಳೆದು ಹರಗರ್ಪಿಸಿ ಮೆರೆದರು
ಕಣ್ಣಪ್ಪ ಶಿರಿಯಾಳ ಚಂಗಳವ್ವೆಯ ದೃಡ ||4||

ಇಷ್ಟಲಿಂಗವಲ್ಲದನ್ಯ ದೈವಂಗಳ
ದೃಷ್ಟಿಸಿ ನೋಡದೆ ಬಾವೆಯ ನರಿದು
ಖಟ್ಟಾಂಗದರ ಭಿಕ್ಷಕೆ ಬಂದು ಹರಿಯನೆ
ಹುಟ್ಟಿಲಿರಿದ ಸತ್ಯಕ್ಕನ ನಿಷ್ಠೆಯು ||5||

ಹೇಳಿ ಹೋದ ತಾಯಿತಂದೆಯ ನುಡಿಗಳ
ಲಾಲಿಸಿ ಕೇಳಿ ಕ್ಷೀರವ ಕಾಸಿ ತಂದು
ಬಾಳಲೋಚನನಿಗೆ ಹಾಲ ಸಲಿಸಿದ
ಕೋಳೂರ ಕೊಡಗೂಸಿನ ನಿಜಭಕ್ತಿಯು ||6||

ಬಣ್ಣಿಸಿ ಮದುವೆಯ ಮಾಡಿ ಜೈನನ ಕೂಡೆ
ಕನ್ನೆಯ ಕಳುಹಲು ದಾರಿಯೊಳು
ಪನ್ನಗದರನ ವಾಲ್ಯವ ಪೊಕ್ಕು ಕೊಂಡಾಡಿ
ಹೆಣ್ಣು ಗಂಡಾದ ಹೇರೂರ ಹೆಣ್ಣಿನ ಛಲ ||7||

ಶಿಕ್ಕು ತೊಡಕ ನೋಡಿ ಕಂಡಿರೆ ಮನೆಯೊಳು
ಪೊಕ್ಕ ಜಂಗಮವನು ಬಿಡೆನೆಂಬ ಬಾಷೆ
ಮಿಕ್ಕುವಿೂರಿ ಹೊಗಲು ಕಾಣುತಿರಿವುದು
ರಕ್ಕಸಬ್ರಹ್ಮನ ಭಕ್ತಿಯಬೇದ್ಯವು ||8||

ಸಂದು ಸಂಕೆಗಳಳಿದಾಡಿನ ಹಿಕ್ಕೆಯ
ತಂದು ಪೂಜಿಸಿ ಪುರಹರನೆಂದು ಬಾವಿಪ
ಕಂದನ ಮುಂದೆ ನಿಂದಿಸಿ ನುಡಿಯಲು ತಮ್ಮ
ತಂದೆಯ ತಲೆಯನೆ ತರಿದ ಗೊಲ್ಲಾಳನಾಟ ||9||

ಅಗಣಿತ ರಾಯಮನ್ನೆಯರೋಲಗದೊಳು
ಹಗೆ ಪರವಾದಿ ಬಿಜ್ಜಳನ ತಾವಿರಿದು
ಜಗದೊಳು ವೀರಾವತಾರದಿ ಮೆರೆದರು
ಜಗದೇವ ಮೊಲ್ಲೆಯ ಬೊಮ್ಮನವರ ಛಲ ||10||

ಬಗೆಬಗೆ ಭಕ್ತಿಯ ಮಾಡಿ ಕೂಡಿ ಮಿಗೆ-
ಯಗಜೆಯ ರಮಣನ ಪಾದಯುಗಂಗಳ
ಹೊಗಳುವ ಶರಣರ ಸಂಗವನಗಲದೆ
ಗುರು ಸಿದ್ಧಲಿಂಗವ ಬೆರೆದವಗಲ್ಲದೆ ||11||

ಕೇಳಿರೊ ಸಚ್ಚರಿತವನು
ಕೇಳಿರೊ ಸಚ್ಚರಿತವನು
ಗುರು ಪೇಳಿದ ಸದ್ಬೋದೆಯನು
ಮೇಳೈಸಾಚರಿಸುವನು
ಭವ ದಾಳಿಯ ಸುಟ್ಟುರುಹಿದನು ||ಪ||

ಮಾತಾಪಿತರಿಂದಾದ
ಶುಕ್ಲ ದಾತು ಶರೀರವು ಬಲಿದ
ಭೂತಗುಣವನತಿಗಳೆದ
ಗುರುಜಾತನು ಲಿಂಗವ ಪಡೆದ ||1||

ಪಡೆದಿಹ ಶಿಷ್ಯನ
ಹಸ್ತದೊಳು ಮೃಡ ನೆಲೆಸಿರೆ ಚಿತ್ತ
ದೃಡ ಘಟಿಸಲು ಮನ
ಸ್ವಸ್ಥಾದಿಂದೆಡವಿಡದರ್ಚಿಪ ಭಕ್ತ ||2||

ಭಕ್ತಗೆ ಪೂಜೆ ತ್ರಿಕಾಲಾ
ಚರತೃಪ್ತಿಯೆ ತನಗದು ಮೂಲ
ತೀರ್ಥಪ್ರಸಾದದಿ ಲೋಲ
ಭಯಭಕ್ತಿಯೊಳಿಪ್ಪುದೆ ಶೀಲ ||3||

ಶೀಲವ್ರತದಿ ನಡೆ ಶುದ್ಧ
ಭವಮಾಲೆಯನೆಲ್ಲವನೊದ್ದ
ಶೂಲಿಯ ನೆನಹು ಸಮೃದ್ದ
ನವಕಾಲನ ಬಾದೆಯ ಗೆದ್ದ ||4||

ಗೆದ್ದು ಜಯಸಿ ಸದ್ಭಾವ
ಮಿಗೆಯಾದ್ಯರ ವಚನನುಬಾವ
ಸಾದ್ಯವಾಗಲು ಮಹಾದೇವ
ಗುರು ಸಿದ್ಧ ಲಿಂಗನೊಲಿದೀವ ||5||

ತನ್ನ ಗುಣ
ತನ್ನಗುಣ ತನ್ನನಹುದಲ್ಲವೆಂದೆನಿಸುವದ
ಕಿನ್ನೋಕಿರ್ವರಿಲ್ಲನ್ಯವಾಗಿ ತನಗೆ ||ಪ||

ಜಿಹ್ವೆಯಿಂದಲಿ ಪರರು ತನ್ನವರದಾಗುವರು
ಜಿಹ್ವೆಯಿಂದಲಿಯು ತನ್ನವರೆ ತನಗೆ
ಅನ್ಯರಾಗುತ್ತಿಹರದೇನು ಕಾರಣ ತನ್ನ
ಜಿಹ್ವೆಯೊಳು ಶುಭವ ನುಡಿಯದ ಕಾರಣ ||1||

ಜಿಹ್ವೆಯಿಂದಲಿ ದುಃಖ ಜಿಹ್ವೆಯಿಂದಲಿ ಸುಖವು
ಜಿಹ್ವೆಯಿಂದಲಿ ಸರ್ವಸಾದ್ಯ ತನಗೆ
ಜಿಹ್ವೆಯಿಂದಲಿ ಸಕಲ ಸಾದನವದಹುದೆಂದು
ಜಿಹ್ವೆಯೊಳ್ ಶುಭವ ನುಡಿವವನುತ್ತಮ ||2||

ಜಿಹ್ವೆಯಿಂದಲಿ ಬಂದ ಜಿಹ್ವೆಯಿಂದಲಿ ಮೋಕ್ಷ
ಜಿಹ್ವೆಯಿಂದಲೆಲ್ಲ ಹಗೆ ಕೆಳೆಯು ತನಗೆ
ಜಿಹ್ವೆಯಿಂದಿಷ್ಟಗುಣವೆಂದರಿದು ಜಿಹ್ವೆಯೊಳ-
ಗನ್ಯರನು ಕೆಡೆನುಡಿಯದವನುತ್ತಮ ||3||

ಜಿಹ್ವೆಯಿಂದಲಿ ಕೋಪ ಜಿಹ್ವೆಯಿಂದಲಿ ಪಾಪ
ಜಿಹ್ವೆಯಿಂದಲಿ ಪುಣ್ಯ ಲೋಪವಹುದು
ಜಿಹ್ವೆಯಿಂ ತನಗೆ ಬಲು ತಪವೆಂದರಿದಿನ್ನು
ಜಿಹ್ವೆಯೊಳು ಲೇಸ ನುಡಿವವನುತ್ತಮ ||4||

ಜಿಹ್ವೆಯಿಂದಲಿ ಶುದ್ಧ ಜಿಹ್ವೆಯಿಂದಲಿ ಪೂಜ್ಯ
ಜಿಹ್ವೆಯಿಂದಲಿ ಪರಮಸಿದ್ಧಿ ತನಗೆ
ಜಿಹ್ವೆಯಿಂ ಪ್ರಣವ ಪಂಚಾಕ್ಷರಿಯ ಬಿಡದೆ ಆ
ಜಿಹ್ವೆಯೊಳ್ ಗುರು ಸಿದ್ಧಲಿಂಗವ ಸ್ಮರಿಸಿರೊ ||5||

ವಂದಿಸಿದಡುಬ್ಬಿ ನಿಂದಿಸಿದರೆಂದೆದೆಗೆಡುವ
ವಂದಿಸಿದಡುಬ್ಬಿ ನಿಂದಿಸಿದರೆಂದೆದೆಗೆಡುವ
ಹಂದೆ ಮನವೆ ದೈರ್ಯಗುಂದದಿರು ನೀ ||ಪ||

ನಗೆಹಾಸ್ಯರಸ ಕಟಕಿ ಪಗುಡಿ ಪರಿಹಾಸಕರು
ಜಗದೊಳಗಗಣಿತವುಂಟು ನೀನವರನು
ಬಗೆಗೊಳ್ಳದನುದಿನದೊಳಗಜೆಯರಸನ ಪಾದ
ಯುಗಳವನೆ ಬಿಡದೆ ಪೊಗಳೆಲೆ ಮನವೆ ||1||

ಚಿತ್ತಶುದ್ಧದಿ ಶರಣ ವರ್ತಿಸುವ ವರ್ತನೆಯ
ಸತ್ಯ ಸದುಹೃದಯರಲ್ಲದೆ ಮಿಕ್ಕಿನ
ಮಿಥ್ಯರಾಗದ್ವೇಷ ಬಿಡದೆ ನುಡಿವವರಿಗಿದಿ
ರುತ್ತರವ ಕೊಡದೆ ಸತ್ತಂತಿರುತಿರು ||2||

ಅಪವಾದದಿಂದಲತಿ ವಿಪರೀತದ ದುಃಖಗಳ
ತ್ರಿಪುರಾರಿ ತಂದೊಡ್ಡಲದ ಗೆಲುವಡೆ
ಸುಪಥ ಸುಜ್ಞಾನ ಸತ್ಪ್ರಣಮಪಂಚಾಕ್ಷರ
ಜಪದ್ಯಾನಮೌನಿಯಾಗಿರು ಸಾರಿದೆ ||3||

ಲಿಂಗಮಧ್ಯದಿ ಜಗವು ಜಗದ ಮಧ್ಯದಿ ಶರಣ
ಲಿಂಗಾಂಗಸಂಗಸುಖಿಯಾಗಿರುತಿಹ
ಇಂಗಿತವನರಿಯದಜ್ಞಾನದಿಂ ನುಡಿವ ಜಡ
ಜಂಗುಳಿಗಳೊಡನೆ ಪ್ರಸಂಗಿಸದಿರು ||4||

ಮತ್ತಮದಕರಿಗಂಜುವದೆ ಸಿಂಹ ಹಾವುಗಳ
ಮೊತ್ತಕಂಜದು ಗರುಡ ಮೂಜಗಕ್ಕೆ
ಕರ್ತ ಗುರುಸಿದ್ಧಲಿಂಗನ ಭಕ್ತಮುಕ್ತಗಿ
ನ್ನೆತ್ತಣದು ಭಯಭೀತಿ ಶಂಕಿಸದಿರು ||5||

ತಥ್ಯವ ನುಡಿ
ತಥ್ಯವ ನುಡಿದೊಡೆ ಮಿಥ್ಯಬಿಡದು
ಪರಮೂರ್ತಿಗಳಲ್ಲದಭಕ್ತಿರಿಗೆ ||ಪ||

ಹಿಡಿದುದ ಬಿಡಲಾರದ ತೊಡಕು
ಬಿಡದಾಚರಿಸುವ ಮನವೊಡಕು
ಒಡೆಯರ ಕಂಡಡೆ ಸಿಡಿಮಿಡಿಗೊಳ್ಳುತ-
ಲಡಿಗೆರಗಗಡಾವಿನ ಹೆಡಕು |1||

ಕಾಲೋಚಿತಕೊಡೆಯನ ಕರೆದು
ಆಲಸ್ಯದೊಳಡಿಗಳ ತೊಳೆದು
ಪಾಲಿಸಿ ತೀರ್ಥವನೆಂದಾ ಒಡೆಯರ
ಪಾದವ ಸೆಳೆವುದದೇತರದು ||2||

ತೀರ್ಥಪ್ರಸಾದವ ಕೊಂಡವರ
ಭೃತ್ಯರಾಗಿ ಮೈಮರೆದು ಪರ
ತತ್ವವೆ ಗುರುಚರವೆನ್ನದವರಿಗಿ-
ನ್ನೆತ್ತಣ ಮುಕ್ತಿಯೊ ವ್ಯರ್ಥರಿರ ||3||

ಸಹಬೋಜನ ಮನೆಮನೆಗೆಲ್ಲ
ವಿವಿರಿಸಿ ನೋಡಲು ನಡೆ ಹೊಲ್ಲ
ಭುವನದಿ ದುರ್ವರ್ತಕ ಬಿಡದವರೊಳು
ಭವಹರ ಶಿವಸವಿದುಣಲೊಲ್ಲ ||4||

ಲಿಂಗದ ಚೇತನ ಜಂಗಮವೆಂದು
ಹಿಂಗದೆ ಸಾರಿದ ಗುರುವಿಂತೆಂದು
ಭಂಗಬಡದೆ ಭಜಿಸಾ ಗುರುಸಿದ್ಧ-
ಲಿಂಗನೊಳವಿರಳದಿಂ ಸಲೆಸಂದು ||5||

ಅರಿಗಳಾರು
ಅರಿಗಳಾರಂತರಂಗದೊಳಡರಿ ಹರಿವುತಿವೆ
ಪರಿಹರಿಸಿ ನಿಲಿಸೊ ಶ್ರೀಗುರುಲಿಂಗವೆ ||ಪ||

ಕಾಮವೆಂಬುನ್ನತದ ಗಜ ಹಸಿದು ಡಾವರಿಸಿ
ಹೇಮಭೂಮಿಯು ಕಾಮಿನಿಯ ಗ್ರಾಸವ
ತಾ ಮಹಾ ಕೊಂಡು ತೃಷೆಯಡಸಿ ವಿಷಯದ ಜಲವ
ಪ್ರೇಮದಿಂ ಕುಡಿದು ಮದವೇರಿ ತಲೆಗೆ ||1||

ಕ್ರೋದವೆಂದೆಂಬ ಹುಲಿಯಾಕಳಿಸಿ ಬಾಯಿಬಿಡುತ
ವೇದಶ್ರುತಿವಚನ ಬಹುಪಾಠದಿಂದ
ಓದಿಯರ್ಥೈಸಿಯನುವರಿದಂತರಂಗದೊಳು
ವೇದಿಸುವ ಹಾದಿಯೊಳಗಡ್ಡಲಾಗಿ ||2||

ಲೋಭವೆಂಬುರಗ ಕಡಿದಾವರಿಸಿ ವಿಷವೇರೆ
ಕಾಬುದಿನ್ನೇನಭವ ಸಹಜಭಕ್ತಿ
ಶೋಭಿಸದೆ ಕರ್ಣದೊಳಗಿಬಗೆಯೆ ತಾಮಸದಿ
ಲಾಭವಿಲ್ಲದೆ ದರ್ಮಲೋಭವಾಯಿತ್ತು ||3||

ಮೋಹವೆಂಬತಿ ಸಿಂಹ ದೇಹವೆಂಬಡವಿಯೊಳು
ಜೀವಬಾವದೊಳಷ್ಟ ಮದಗಳೆಂಬ
ಆಹುತಿಯ ಮೇಹಿನೊಳು ಮೈಮರೆದು ಸತ್ಪಥದ
ತೋಹ ಕಾಣದೆ ತೊಳಲಿ ಬಳಲತಿದೇಕೋ ||4||

ಮದವೆಂಬ ಮರೆ ಶುಷ್ಕಪರ್ಣ ಪ್ರಪಂಚೆಂಬ
ಹುದೀಯ ಕರಿಕೆಯ ಮೇದು ಸತ್ಯವರತ
ಹೃದಯದೊಳು ಮೆಲುಕಿರಿವು
ತಿದಿರುಗಾಣದೆ ನಿಗುರು ನಿಂದಿರುತಿದೆ ||5||

ಮಚ್ಚರವದೆಂದೆಂಬ ಹುಚ್ಚುಗೊಂಡಿಹ ಕರಡಿ
ಹೆಚ್ಚು ಕುಂದಿಗೆ ಹೋರಿ ತೊಡರಿ ಬಿಡದೆ
ದುಶ್ಚರಿತವೆಂಬ ಕೈಕಾಲುಗುರಿನೊಳ್ಗೀರಿ
ಕೆಚ್ಚೆದೆಯ ಬಲುಗಲ್ಲ ಮೊರಡಿಯೊಳಗೆ ||6||

ಇಂತೆಸೆವ ಮೃಗವಾರ ಸಂತವಿಡಲಾರೆ | ಎನ
ಗೆಂತಯ್ಯ ಗುರುಸಿದ್ಧಲಿಂಗ ನಿಮ್ಮ
ಚಿಂತಿಸುವದೊಂದು ಸುಜ್ಞಾನವಿತ್ತುಳುಹಿ | ನಿ
ಬ್ರಾಂತನೆಂದೆನಿಸವರ ಬ್ರಾಂತಳಿವುದು ||7||

ಮೈಮರೆಯದಿರು
ಮೈಮರೆಯದಿರು ಬಂದ ಬವಣೆಯಂ ನಿನ್ನ ನೀ
ವಿವರಿಸಿಯೆ ತಿಳಿದು ನೋಡೆಚ್ಚರಣ್ಣ ||ಪ||

ತಾಯಗರ್ಭದೊಳು ಬಲಿವನ್ನಬರ ನವಮಾಸ
ಕೀವು ನೆಣ ಮಾಂಸ ನೆತ್ತರ ಕ್ರಿಮಿಗಳ
ಹೇಯದಿಂದತಿನೊಂದು ಪೊರಮಟ್ಟು ಭವರೋಗ
ಜೀವಂಗೆ ಗುರುಕರುಣ ವೈದ್ಯವಣ್ಣ ||1||

ಬಾಲನಾಗಿರ್ದು ಮೊಲೆವಾಲನುಂಡೆಲೆಲೆ ನೀ
ಪಾಲ್ಗುಡಿದು ಮೇಲನ್ನಪಾನದಿಂದ
ಬಾಲತ್ವ ಬಲಿದು ಯೌವನ ಕೊಬ್ಬಿಯುಬ್ಬಿನಿಂ
ಕಾಲಂಗೆ ಗುರಿಯಾಗಿ ಕೆಡದಿರೆಲವೋ ||2||

ರೋಗರುಜೆ ಬಡತನಗಳವು ಕೆಲವು ಕಾಲದಿಂ
ಹೋಗಿ ಸಿರಿಸಂಪತ್ತು ಸೌಬಾಗ್ಯದಿಂ
ಆಗಾದ ಕಾಲದೊಳು ಗುರುಲಿಂಗಜಂಗಮಕೆ |
ಬಾಗಿ ಭಕ್ತಿಯ ಬೇಗ ಮಾಳ್ಪುದಣ್ಣ ||3||

ನರೆತೆರೆಗಳಿಡಿದಡಸಿ ಶಿರಬೆನ್ನು ಬರಿ ಬಗ್ಗಿ |
ಕರೆದೊಡೊಂಭತ್ತು ನುಡಿಗೋ ಎನುತಿಹ
ಇವರ ಕಂಡೆಲ್ಲ ಗಹಗಹಿಸುವರು ನಗದ ಮು |
ನ್ನರಿದು ಸಚ್ಚರಿಯದಿಂ ನಡೆವುದಣ್ಣ ||4||

ಬಾಲಲೀಲೆಯೊಳಾಡಿ ಕೆಲೆದುಲಿದೆ ಪ್ರಾಯದಿಂ |
ಮೇಲೆ ಮುಪ್ಪಿನೊಳಾದಡೆಚ್ಚತ್ತಿರು
ಆಲಸ್ಯವೇಕೆ ಸಲೆ ಗುರುಸಿದ್ಧಲಿಂಗವನು |
ಪೂಜಿಸಲು ಭವಮಾಲೆ ಪರಿವುದಣ್ಣ ||5||

ಬಯಸಿದಡೆ ಬಯಕೆ ಘನ
ಬಯಸಿದಡೆ ಬಯಕೆ ಘನ ಬಯಸದಿರು ಬಾರದುದ
ಬಯಸಿದಡೆ ಬಯಸಾತ್ಮ ಶಿವಸುಖವ ನೀ ||ಪ||

ಉಂಡುಟ್ಟು ದಣಿವಾಯಿತೆಂಬುದೆಳ್ಳನಿಸಿಲ್ಲ
ಕಂಡುದನೆ ಬಯಸಿ ಬಾಯಾರುತಿರ್ಪ
ಭಂಡಮನವದಕೆಯದು ಸಹಜವೆಂದರೆ ಮರುಳು-
ಗೊಂಡು ಹರಿದಾಡದಿರು ಮನದಿಚ್ಛೆಗೆ ||1||

ಅಂಬರಾಭರಣವನುಲೇಪನಂ ಷಡುರುಚಿಯು
ತಾಂಬೂಲ ಮಜ್ಜನಾದಿಗಳೆಲ್ಲವ
ಮುಂಬರಿದು ನೆನೆನೆನೆದು ಬಯಕೆ ತೀರದ ಮನದ
ಬೆಂಬಳಿಯೊಳಾಡುವಗೆ ಬಹು ದುಃಖವ ||2||

ಉಂಬುದಂಬಲಿ ಹೊದೆವಡಂಬರವು ಕಂಬಳಿಯು
ಕುಂಭಿನಿಯನಾಳ್ವರಸುತನವ ಬಯಸಿ
ಹಂಬಲಿಸಿ ನೆನೆವ ಮನಕಣುಮಾತ್ರ ನಾಸಿಕ
ವೆಂಬುದೇತಕೆ ಪುಟ್ಟದೊ ಶಿವಶಿವಾ ||3||

ಆಸೆಯಿಂ ಗಾಸಿಯಾಗದರಾರು ದೇಶದೊಳು
ಈಶನಾರೋಪಿಸಿತ್ತದಕೆ ಮಿಗಿಲು
ಆಸೆಗೆಯ್ದಡೆ ಬಯಲ ಭ್ರಮೆಯ ಈಸಿ ಕೈಸಾರ
ದಾಸೆಯಿಂ ಭವಪಾಶವೆಲೆಯಾತ್ಮನೇ ||4||

ಬಂಗಾರಬಣ್ಣ ಮಿಗೆ ಶೃಂಗರಿಸಿ ನಡೆವನ್ಯ-
ರಂಗನೆಯರಂ ಬಯಸಿ ಕಣ್ಗಾಣದೆ
ಅಂಗಜನ ಬಲೆಯೊಳಗೆ ಬಿದ್ದು ಹೊರಳುವ ತಾಪಂ
ಹಿಂಗಿ ಸಲೆ ಗುರುಸಿದ್ಧ ಲಿಂಗನೊಲಿವ ||5||

ಭಕ್ತಿ ವಿರಕ್ತಿಸ್ಥಲ
ಭಕ್ತಿ ವಿರಕ್ತಿಸ್ಥಳವ ಮೃಡ
ವಿಸ್ತರಿಸೊರೆದ ಪಾರ್ವತಿಗತಿಹಿತವ ||ಪ||

ರತಿಯಳಿದವನೆ ವಿರಕ್ತಾ ಶಿವ
ರತಿಯೊಳಗರ್ಥವ ಸವೆದ ಸದ್ಭಕ್ತ
ಸ್ತುತಿನಿಂದೆಗಳುಕ ವಿರಕ್ತಾ ತ
ನ್ನತಿಶಯವನು ತೋರಿ ರೆಯ ಸದ್ಭಕ್ತ ||1||

ನಿರಾಸಕ ಪರಮವಿರಕ್ತಾ ವಿಶ್ವಾಸ
ಹರಿಸಿ ಮಾಳ್ಪ ಜಂಗಮಕೆ ಸದ್ಭಕ್ತ
ಹಾರೈಸನಾರ ವಿರಕ್ತಾ ಗುರುಚರ
ಶೇಷಪ್ರಸಾದದೊಳಗೆ ತೃಪ್ತ ಭಕ್ತ ||2||

ಸವಿಸಪ್ಪೆಗೆಳಸ ವಿರಕ್ತಾ ಪರ
ಯುವತಿಯ ರತಿಗಾಸೆ ಮಾಡ ಸದ್ಭಕ್ತ
ಶಿವದ್ಯಾನ ಘಟಿಸಲ್ವಿರಕ್ತಾ ಸಟೆ
ಕುಹಕ ಪ್ರಪಂಚಿಲ್ಲದವನೆ ಸದ್ಭಕ್ತ ||3||

ಶಾಸ್ತ್ರಕತೀಕ ವಿರಕ್ತ
ಜಾತಿಸೂತಕವಳಿದು ನಿಂದವನೆ ಸದ್ಭಕ್ತ
ಭೀತಿಯಳಿದವನೆ ವಿರಕ್ತ
ಕೀರ್ತಿವಾರ್ತೆಯ ಹೊಗದೆ ಮಾಡುವನೆ ಸದ್ಭಕ್ತ ||4||

ಶ್ರದ್ಧೆ ಸಮೃದ್ಧ ವಿರಕ್ತಾ ತನ್ನೊಳಿರ್ದುದ
ವಂಚಿಸದವನೆ ಸದ್ಭಕ್ತ
ಅದ್ವಯ ಶುದ್ಧ ವಿರಕ್ತಾ ಗುರು
ಸಿದ್ಧಲಿಂಗನೊಲಿದವನೆ ಸದ್ಭಕ್ತ ||5||

ಸದ್ಗುರು ಪೇಳಿದ ಮಾರ್ಗ
ಸದ್ಗುರು ಪೇಳಿದ ಮಾರ್ಗವ ಬಿಡದೆ
ಭರ್ಗನೊಳಗೆ ಮನಮಗ್ನವಾಗಿರು ನೀ ||ಪ||

ಭಸಿತ ರುದ್ರಾಕ್ಷಿಯ ನೊಸಲೊಳಿಟ್ಟು ತೊಟ್ಟು
ಅಸಮಾಕ್ಷಲಿಂಗದೊಳಗೆ ದೃಷ್ಟಿ ನಟ್ಟು
ಸಟೆಯಟಮಟ ಕುಟಿಲವ ಸುಟ್ಟುಬಿಟ್ಟು
ಪಶುಪತಿ ಸಾಮ್ರಾಜ್ಯವ ಪಟ್ಟಗಟ್ಟು ||1||

ಏಕತ್ರಿತಯವೇಕವೆಂಬುದನರಿದು
ಜೋಕೆಗೆಡದೆ ತನುಮನದನವ ಸವೆದು
ಲೋಕವೆ ಲೌಕಿಕವರ್ತನವಳಿದು
ಶ್ರೀಕಂಠನನರ್ಚಿಸು ಮನ ನಲಿದು ||2||

ತಿಲಾಭದ ಪೂಜೆ ದ್ರವ್ಯದ ಕೇಡು
ಪಾತ್ರಾಪಾತ್ರವನರಿದು ನೀ ಮಾಡು
ತೀರ್ಥಪ್ರಸಾದದೊಳಗೆ ಓಲಾಡು
ಪ್ರೀತಿಯೊಳ್ಗುರು ಸಿದ್ಧಲಿಂಗನ ಕೂಡು ||3||

ತ್ರಿವಿದಕೆ ತ್ರಿವಿದವ ಸವೆ
ತ್ರಿವಿದಕೆ ತ್ರಿವಿದವ ಸವೆಸುವ ಭಕ್ತರ
ತ್ರಿವಿದಪ್ರಸಾದ ಹಾರಿ ನಾ ಬಂದೆ ||ಪ||

ನುಡಿದಂತೆ ನಡೆ ನಡೆಯೊಳು ನುಡಿ ಪೂರಿಸಿ
ಮೃಡಶರಣರ್ಗತಿ ಮೋಹದೊಳು
ಅಡಿಗೆರಗುತ ನಿಜ ದೃಡವುಳ್ಳ ಭಕ್ತ
ಬೇಡಿಯಾತುರದಿಂದ ನಾ ಬಂದೆ ||1||

ನಿತ್ಯ ತ್ರಿಕಾಲದಿ ಲಿಂಗವನರ್ಚಿಸಿ
ಭೃತ್ಯತ್ವದೊಳತಿ ಜಂಗಮಕೆ
ತೃಪ್ತಿವಡಿಸುತ್ತಿಹ ಭಕ್ತರಂಗಳದೊಳು
ಚಿತ್ತ ನಲಿದು ಕುಣಿದಾಡುತ ಬಂದೆ ||2||

ಪಂಕ್ತಿಭೇದ ಪಾಕಬೇದವ ಮಾಡದೆ
ಕಂತುಮರ್ದನ ಶಿವರೂಪನೆ ಕಂಡು
ಸಂತೋಷದಿಂ ಮಾಡಿ ನೀಡುವ ಭಕ್ತರ
ಸಂತತ ಹಾಡುತ ಹೊಗಳುತ ಬಂದೆ ||3||

ಕಾಯಗುಣಗಳಳಿದಾವಗ ಗುರುಚರ
ಸೇವೆಗೆ ತನುಮನವಲಸದಿಹ
ಪಾವನ ಶರಣರ ದರುಶನದಿಂ ಭವ-
ರೋಗದ ಮಾಯೆಯ ನೀಗಲು ಬಂದೆ ||4||

ಅಂಗಲಿಂಗ ಲಿಂಗವಂಗದೊಳನುಭವ
ಸಂಗಿಸಿ ಗುರುಸಿದ್ಧ ಲಿಂಗವನು
ಹಿಂಗದಾಲಿಂಗಿಪ ಶರಣರೆ ಶಿವನೆಂದು
ಡಂಗುರವನು ಹೊಯಿದು ಸಾರ ನಾ ಬಂದೆ ||5||

ಅನ್ಯವಿನ್ನಲ್ಲ
ಅನ್ನವಿನ್ನಲ್ಲ ಭಿನ್ನಬಾವಿಯು ತಾನಲ್ಲ
ಪನ್ನಗದರನೊಳಗನನ್ಯವಾಗಿಹ ಭಕ್ತ ||ಪ||

ವಂಚಿಸದೆ ತನುಮನದನ ತ್ರಿವಿದವ
ಪಂಚಮುಖನ ಶರಣರ್ಗಿತ್ತು ಮಿಕ್ಕ
ಸಂಚಿತ ಶೇಷವ ಸೇವಿಪ ಭಕ್ತ ನಿ-
ರ್ವಂಚಕನೆನಗವ ಪ್ರಾಣಚೇತನನು ||1||

ಸ್ತುತಿನಿಂದೆಗಳುಕದೆ ಸತತ ದಾಸೋಹದೊ-
ಳತಿ ನಿಷ್ಠೆ ಬಲಿದಾಧಿವ್ಯಾಧಿ ಬಂದೆಡೆಯು
ಗತಿಗೆಟ್ಟು ಮತಿಗುಂದಿ ಮೈಮರೆಯದ ಸ
ದ್ವ್ರತ ಛಲಬಿಡದಚಲಿತ ನಿತ್ಯಮುಕ್ತ ||2||

ಅತಿಶಯವನು ತೋರಿ ಇತರನು ಮೆಚ್ಚಿಸ
ದೃತಿಗೆಡೆದೊರಕದಂತಿಹ ಪರಿಣಾಮಿ
ರತಿಯಿಂದ ಗುರುಸಿದ್ಧಲಿಂಗನ ಬೆರೆಸಿ-
ದಪ್ರತಿಮ ಶರಣಸಂತತಿಗತಿಹಿತನು ||3||

ಮಾಡು ಮಾಡು ನೀ ಮಾಡು
ಮಾಡು ಮಾಡು ನೀ ಮಾಡು ಸತ್ಪಾತ್ರಕೆ
ಮಾಡಿದ ಪಲ ಕೈಗೂಡುವದಣ್ಣ ||ಪ||

ಅಶ್ವಗೋದಾನ ಭೂಮಿಯು ಕರ್ಣಿಕೆ ಮಿಗೆ
ವಿಶ್ವಾಸದಿಂ ಶರಣರ್ಗಿತ್ತ ಪಲವು
ಶಾಶ್ವತ ಸಿರಿಯನು ಬೋಗಿಪ ಸುಖಿಗಳ
ಸಾಕ್ಷಿದೋರಿ ಸಾರುವ ಶ್ರುತಿಗೇಳಿ ||1||

ಒಂದೊಸ್ತ್ರವ ಶಿವಶರಣರ್ಗೀಯಲ್
ಚಂದ್ರದರನ ಸನ್ನಿಧಿಯೊಳು ತಾನು
ಒಂದೊಂದೆಳೆಗೊಂದು ಸಾವಿರ ವರುಷವು
ಕುಂದದೆಯಿಹನೆಂದೆಂಬೀ ಶ್ರುತಿಗೇಳಿ ||2||

ಅನ್ನವ ನೀಡದೆ ಹೊನ್ನ ದಾನವ ಮಾಡಿ
ಕರ್ಣ ಸುವರ್ಣಗಿರಿಗೆ ಗುರಿಯಾದ
ಉಣ್ಣದುಡದೆ ಮತ್ತಲ್ಲಿರೆ ಪಲವಿ
ಲ್ಲನ್ನದಾನ ಮಿಗಿಲೆಂಬೀ ಶ್ರುತಿಗೇಳಿ ||3||

ಹಿಂದೆ ಮಾಡಿದ ದಾನದರ್ಮದ ಪಲವದ
ರಿಂದವನಿಯನಾಳ್ವರಸಾಗಿ ಕರಿತುರ
ಗಂದಣ ಛತ್ರದ ಮಂದಿಯ ಸಂದಣಿ
ಮುಂದುಗ್ಘಡಣೆಯನರಿದು ||4||

ಅಂಗ ಪ್ರತ್ಯಂಗದೊಳಲಸಿಕೆ ತೋರದೆ
ಸಾಂಗದೊಳಷ್ಟವಿದಾರ್ಚನೆಯ
ಹಿಂಗದೆ ಮಾಡಲ್ಗುರು ಸಿದ್ಧಲಿಂಗ ಬೋ-
ಗಂಗಳ ಕೊಡುವನೆಂಬೀ ಶ್ರುತಿಗೇಳಿ ||5||

ಉತ್ತಮಾದಮರ ನಡೆ
ಉತ್ತಮಾದಮರ ನಡೆ ವರ್ತನೆಯ ಪೇಳ್ವೆ
ಸಮಚಿತ್ತದಿಂ ಕೇಳಿ ಸಾತ್ವಿಕರೆಲ್ಲರು ||ಪ||

ಹಿತವ ಮಾಳ್ಪವರಿಗತಿ ಹಿತವಂತನುತ್ತಮನು
ಪಿತಮಾತೆಯರ ಬೈವ ಸುತನದಮನು
ಅತಿ ಹಸಿದು ಬಂದವರ ಸತ್ಕರಿಸಲುತ್ತಮನು
ಮತಿಗೆಟ್ಟು ಪರಸತಿಗೆಳಸುವನದಮ ||1||

ಆಡಿಯಳುಪದೆ ನುಡಿದು ತಪ್ಪದವನುತ್ತಮನು
ಮಾಡಿ ದರ್ಮವನಾಡಿಕೊಳಲದಮನು
ಬೇಡಿದರ್ಗಣು ಮಾತ್ರ ನೀಡುವವನುತ್ತಮನು
ರೂಢಿಯೊಳು ಶಿವನ ಕೊಂಡಾಡದವನದಮ ||2||

ಬಲ್ಲವರ ಸೊಲ್ಲನಲ್ಲೆನ್ನದವನುತ್ತಮನು
ಸಲ್ಲದಾ ಮಾತ ಸಲಿಸುವನದಮನು
ಎಲ್ಲರೊಳು ಬಿರುನುಡಿಗಳಿಲ್ಲದವನುತ್ತಮನು
ಕಲ್ಲೆದೆಯ ಕಲಕೇತನೆಲ್ಲರಿಂದದಮ ||3||

ಹಿಡಿದ ನೇಮವ ಕಡೆಗೆ ನಡೆಸುವವನುತ್ತಮನು
ಮೃಡಶರಣರಡಿಗೆರಗದವನದಮನು
ಪಡೆದೊಡವೆ ಸತ್ಪಾತ್ರಕಿತ್ತಡವನುತ್ತಮನು
ಕಡು ಲೋಭಿ ಜಡನ ಬೇಡುವನದಮನು ||4||

ಏಕಾಂತ ಪಾತಕವ ನೂಕುವವನುತ್ತಮನು
ಕಾಕುಬುದ್ಧಿಯ ಬಿಡದೆ ಹೋಕನದಮನು
ಲೋಕದೊಳು ಗುರುಸಿದ್ಧಲಿಂಗಹಿತನುತ್ತಮನು
ವಾಕಿನಿಂ ಸಜ್ಜನರ ನೀಕರಿಸಲದಮನು ||5||

ನಂಬು ನಂಬು ನೀ ನಂಬು
ನಂಬು ನಂಬು ನೀ ನಂಬು ತ್ರಿಯಂಬಕ
ನಂಬಿದ ಭಕ್ತರ ಬೆಂಬಿಡನಯ್ಯ ||ಪ||

ನಂಬಿದ ನಂಬಿಗೆ ಹಡಪಿಗನಾದ
ನಂಬಿದ ಕುಂಬಾರನ ಮುಂದೆ ಕುಣಿದ
ಡೊಂಬಿತಿಗೊಲಿದೊಡನುಂಡ ಗುರುವ ನೆರೆ
ನಂಬಿದ ಭಿಲ್ಲಮರಾಯನಿಗೊಲಿದ ||1||

ಅಂಬರವನು ನೆಯ್ದಿತ್ತಗೊಲಿದು ಭವಾಂಬುಧಿ
ಯೆಂಬ ಹೊಳೆಯ ದಾಂಟಿಸುವ
ಅಂಬಿಗ ಚೌಡಗೊಲಿದು ಮಾದಾರನೊ
ಳಂಬಲಿಯುಂಡಭವನ ಪಾದವನು ||2||

ತುಂಬು ಜವ್ವನೆ ನಿಂಬಿಗೊಲಿದು ಮಲುಹಣಿಯ
ಹಂಬಲಿಸುವ ಮಲುಹಣನ ವಿರಹವ
ತುಂಬಿಸಿ ಪರಮಾನಂದಾಂಬುಧಿಯೊಳು
ಶಂಭು ಮೆರೆದ ವರ ಗುರುಸಿದ್ಧಲಿಂಗ ||3||

ಅರಿದರಿದು ಭಕ್ತಿ
ಅರಿದರಿದು ಭಕ್ತಿ ಮೃಡನೊಲಿದವಂಗಲ್ಲದೆ
ದೊರೆಕೊಳ್ಳದು ಬರಿ ಬಾಯ ಭುಂಜಕರಿಗೆ ||ಪ||

ಶಾಸ್ತ್ರಶಬ್ದವ ಕಲಿತು ಮಾತ ಬಣ್ಣಿಸಬಹುದು
ನೀತಿಮಾರ್ಗವ ನುಡಿದು ಹೇಳಬಹುದು
ಗೋತ್ರಬಂದುಗಳು ಬರೆ ಓತು ಮಾಡಲ್ಬಹುದು
ಪ್ರೀತಿಯೊಳ್ ಜಂಗಮಕೆ ಮಾಳ್ಪುದರಿದು ||1||

ಆದಿಯ ಪುರಾತರೋದಿದ ವಚನಗೀತವ
ನ್ನಾದರಿಸಿ ಕೇಳಿ ತಲೆದೂಗಬಹುದು
ಬೇದದೋರದೆ ಜಂಗಮವ ಕಾಣುತಿದಿರೆದ್ದು
ಪಾದಕೆರಗುವ ಭಕ್ತಿನಿಷ್ಠೆಯರಿದು ||2||

ಭಸಿತರುದ್ರಾಕ್ಷಿಗಳ ದರಿಸಿ ಮೃದುವಾಕಿನಿಂ
ಬಸವನಾಮದ ಭಕ್ತನೆನಿಸಬಹುದು
ಹಸಿದು ಜಂಗಮಲಿಂಗ ಬರಲವರ ಸತ್ಕರಿಸಿ
ಗುರು ಸಿದ್ಧಲಿಂಗವೆಂದೆಂಬುವರಿದು ||3||

ಎಚ್ಚತ್ತಿರೆಚ್ಚತ್ತಿರು
ಎಚ್ಚತ್ತಿರೆಚ್ಚತ್ತಿರು ಮನವೆ ನೀನೆಚ್ಚತ್ತಿರೆಚ್ಚತ್ತಿರು
ಮಚ್ಚಿ ಮೈಮರೆಯದೆ ಸತಿಯರಂಗವನರಿ ದರಿದೆ ||ಪ||

ಕ್ಷಣದೊಳಗತಿ ಮುನಿಸು ನಸುನಗೆ
ಕ್ಷಣದೊಳು ಸ್ನೇಹಮೋಹ
ಗುಣಯುತೆಯಂತೆ ಬಣ್ಣಿಸಿ ಪುರುಷನ ಬಾಯ
ಟೊಣೆದಣವುತ್ತಿಹಳು ||1||

ಪ್ರೀತಿಯ ಮಾಡುವಳು ಒಲಿದಂತೆ
ಕಾತರವನು ಪುಟ್ಟಿಸಿ
ದಾತನರಿದು ಸವಿಮಾತಿನ ಸೊಗಸಿಂದ
ನೀತಿಯ ಕೆಡಿಸುವಳು ||2||

ಪುರುಷನೊಲವನರಿದು ಪ್ರಸಂಗಿಸಿ
ಸರಸ ಸಮೇಳದಿಂದ
ಹರುಷವ ತೋರಿ ಜಾರುವಳಾತನ ಪ್ರಾಣ
ಹರಣಕೆ ಹಗೆಯಹಳು ||3||

ನುಡಿಯೊಳಗತಿಹಿತವೆ ತನ್ನ
ಒಡಲೊಳು ದುರ್ಮದವೆ
ಕಡುಗೋಪತನದಿಂದ ಕರಗಿಸಿ ಚಿತ್ತವ
ದೃಡಗೆಡಿಸುತ್ತಿಹಳು ||4||

ಇಂತೆಸಕದ ಕಪಟ ಹೆಂಗಳಿಗೊಲಿ-
ದಂತಕನೊಶನಾಗದೆ
ಸಂತತ ಗುರು ಸಿದ್ಧಲಿಂಗನ ನೆನೆದು ನಿ-
ಶ್ಚಿಂತನಾಗಿರು ಸಾರಿದೆ ||5||

ಮನವೆ ಸರಸವಾಡದಿರು
ನೋಡಿ ಕಾಮಿಸಿ ಸರಸವಾಡದಿರು ಪರಸತಿಯ
ಕೂಡೆ ಮೈಮರೆದೊಮ್ಮೆ ನಿನಗೆ ಮನವೆ
ಕೇಡೆಂಬುದರಿದು ಸುಜ್ಞಾನರೊಡನಾಡಿ
ಭವಬಾದೆಯನು ಪರಿಯೆಲೆಲೆ ಮನವೆ ಮನವೆ ||ಪ||

ದೃಷ್ಟಿಯಿಂ ನೋಡಿ ಮತಿಗೆಟ್ಟು ಪರಸತಿಗಳುಪಿ
ಕೆಟ್ಟವರನರಿ ಜ್ಞಾನ ಹುಟ್ಟಿ ಮನವೆ
ದಿಟ್ಟ ಕೀಚಕನು ಕಣ್ಣಿಟ್ಟು ದ್ರೌಪತಿಗಾಗಿ
ಕಟ್ಟುವಡೆಯಲು ಭೀಮನವನ ಮನವೆ
ಮುಟ್ಟಿ ಹಿಡಿದೊತ್ತಿ ಕೆಡಹಲ್ಕವನ ದೈರ್ಯಂ
ಗೆಟ್ಟು ಸತ್ತುದನರಿದು ನೀನು ಮನವೆ
ಬಿಟ್ಟು ಪರಸತಿಯರೆಂಬವರೆಲ್ಲ ನಿನಗೆ ಒಡ
ಹುಟ್ಟೆಂದು ಬಾವಿಸಲೆ ಮನವೆ ಮನವೆ ||1||

ಸೊಕ್ಕುಜವ್ವನ ಚೆಲುವೆ ರಂಬೆಯೋರ್ವಸಿಗಧಿಕ
ಲಕ್ಷ ಶತಸಹಸ್ರ ಪೆಣ್ಣಿರಲು ಮನವೆ
ಕುಕ್ಕುಟನು ತಾನಾಗಿ ಕೂಗಿ ಮುನಿಪನ ಸತಿಗೆ
ಸಿಕ್ಕಿ ಮೈ ಭಗವಾದ ಸುರನು ಮನವೆ
ಲೆಕ್ಕಿಪಡೆ ನಾಲ್ಕೆರಡು ಕೋಟಿ ಲಾವಣ್ಯದಿಂ
ಕರ್ಕಶ ಕುಚೆಯರಿರುತಿರಲು ಮನವೆ
ಸೊಕ್ಕಿ ರಾವಳ ಸೀತೆಗಳುಪಿ ಕೆಟ್ಟನು ಮನವ
ನಿಕ್ಕದಿರು ಪರಸತಿಯ ರತಿಗೆ ಮನವೆ ||2||

ಹರ ನಿರೂಪಿಸಿಕೊಟ್ಟ ಮಣಿಹದಿಂದೆಮರಾಜ
ಹರಿವಿರಿಂಚಿಗಳಾಗಲವರು ಮನವೆ
ಪರನಾರಿಗೆಳಸಿದರನಿರಿದಿರಿದು ಸುಡುವನೆಂ
ದದನರಿದು ನೀನನ್ಯ ವದುವ ಮನವೆ
ಗುರುಪತ್ನಿಯೆಂಬ ಬಾವವು ಮನಸುಕಾಯವಾ
ಕಿನೊಳಿರಲು ಮೋಕ್ಷವಹುದಿನ್ನು ಮನವೆ
ಸ್ಥಿರಚಿತ್ತದಿಂ ಬೇಗ ಗುರುಸಿದ್ಧ ಲಿಂಗನಂಘ್ರಿಯ
ಸ್ಮರಿಸು ನೀನೆ ಸುಖಿ ಮನವೆ ||3||

ಗುರುಪಾದವಿಡಿದು
ಗುರುಪಾದವಿಡಿದು ಗುರುಪೇಳಿದಂತಿರದೊಡದು
ಕುರುಡ ಕನ್ನಡಿಯ ಪಿಡಿದಂತಾಯಿತು ||ಪ||

ಪರಮಗುರುವಿಲ್ಲದುಪದೇಶವಿನ್ನೇನಾಯಿತು ?
ಹರಣವಿಲ್ಲದ ಶರೀರದಂತಾಯಿತು.
ಚರಲಿಂಗ ತೀರ್ಥಪ್ರಸಾದವಿರಹಿತ ಲಿಂಗ
ಮರದೊಳೊತ್ತಿದ ಲಿಂಗಮುದ್ರೆಯಾಯಿತು ||1||

ಹಸ್ತಮಸ್ತಕವೆಂಬ ವರ್ತಕವದೇನಾಯಿತು?
ಹುತ್ತದೊಳು ಹಸ್ತವಿಟ್ಟಂತಾಯಿತು.
ಭಕ್ತನಾದವ ಭವಿಯ ಬೆರೆದದಮದೈವವಿ-
ನ್ನೆತ್ತ ದೀಕ್ಷೆಯ ಮಾಡಲಿಂತಾಯಿತು. ||2||

ಬಾಷೆಹೀನಗೆ ಮಂತ್ರದುಪದೇಶವೇನಾಯಿತು ?
ಹೂಸ ಹುಂಡನ ಮಾಡಿದಂತಾಯಿತು
ಈಶ ಕರದೊಳಗಿರಲು ಹೇಸಿದೈವವ ನೋನೆ
ವಿೂಸಲನು ಶುನಿ ಮೂಸಿದಂತಾಯಿತು. ||3||

ಪಿಸುಣಂಗೆ ಕ್ರಿಯೆವಿಡಿದುಪದೇಶವೇನಾಯಿತು ?
ಹಿಸುಕಿಮಾಡಿದ ಹಣ್ಣಿನಂತಾಯಿತು.
ಅಸಮಾಕ್ಷಲಿಂಗವನು ದರಿಸಿ ಅಸುಗುಣವಿರಲು
ಪಶುವಿಗೊತ್ತಿದ ಮುದ್ರೆಯಂತಾಯಿತು. ||4||

ನಿಷ್ಠೆಯಿಲ್ಲದೆ ಭಸಿತವಿಟ್ಟಡಿನ್ನೇನಾಯಿತು ?
ಬೆಟ್ಟ ಬೇಗೆಯ ಬೆಳಗಿನಂತಾಯಿತು.
ಕೆಟ್ಟು ನಡೆವನಿಗಿಷ್ಟಲಿಂಗವಂ ಕಟ್ಟಲದು
ಬಿಟ್ಟವನ ನಿಷ್ಠುರನ ಮರೆಹೊಕ್ಕಿತು. ||5||

ಮತ್ತನಿಗೆ ತತ್ವಬೋದೆಯ ಬಿತ್ತಲೇನಾಯಿತು ?
ಮುತ್ತಿನೊಳು ಕರಡು ಬೆರದಂತಾಯಿತು.
ಚಿತ್ತಶುದ್ಧದಿ ಗುರುವ ಹರನೆನ್ನದವ
ಶಾಸ್ತ್ರವಿತ್ತಾದಡೆತ್ತು ಕಲಿತಂತಾಯಿತು. ||6||

ಕಡುಮೂರ್ಖ ಶಿಷ್ಯಗುಪದೇಶಿಸಿದಡೇನಾಯಿತು ?
ಒಡೆದ ಮಡಕೆಯೊಳುದಕದಂತಾಯಿತು.
ದೃಡಚಿತ್ತವಿಲ್ಲದವ ಹಿಡಿದಿರ್ದ ಲಿಂಗವದು
ನಡುಗಿ ಗುರುಸಿದ್ಧಲಿಂಗನೊಳಡಗಿತು. ||7||

ನರಜನ್ಮ ದೊರಕಿದಾಗಳೆ
ನರಜನ್ಮ ದೊರಕಿದಾಗಳೆ ಹರನ ಭಜಿಸಿನ್ನು
ಶರೀರವಳಿಯದ ಮುನ್ನ ಮರುಳು ಮನವೆ ||ಪ||

ಅಷ್ಟ ತನುಗಳ ಶಿವನು ಸೃಷ್ಟಿಮಾಡಲ್ಕಂದು
ಬಿಟ್ಟಗಲಿ ನಿಜವ ಮರೆದಂದಿಂದಲಿ
ಕಷ್ಟ ನಾನಾ ಜಾತಿಯೊಳ್ಪುಟ್ಟಿ ನರಜನ್ಮ
ಕಟ್ಟ ಕಡೆಯಾಟ ಹಿಮ್ಮೆಟ್ಟದಿರು ನೀ ||1||

ಹೊಟ್ಟೆಯಿಂದುಬ್ಬಸದಿ ಪೊರಮಟ್ಟ ದುಃಖವದ
ಬಿಟ್ಟು ಸುಖದೊಳಗಿಪ್ಪ ಠಾವದಕ್ಕೆ
ಹುಟ್ಟಿ ಸುಜ್ಞಾನ ಹೃದಯದೊಳಷ್ಟದಳ ಜೀವ
ನಷ್ಟವಾಗಲು ಭವದ ಬಟ್ಟೆಯಿಲ್ಲ ||2||

ಧರಿಸು ಭಸಿತವ ದುರಿತ ಹರಿದು ಪೋಪುದು ಬೇಗ
ಧರಿಸು ತ್ರಿಯಕ್ಷನಕ್ಷಯಮಾಲೆಯ
ಸ್ಮರಿಸು ಪಂಚಾಕ್ಷರಿಯ ವಾಙ್ಮನದೊಳೆಡವಿಡದೆ
ಗುರುಚರಣಕೆರಗಿ ಕರುಣವನು ಪಡೆಯ ||3||

ಶ್ರೀಗುರುವಿನುಪದೇಶದಾಗುದೋರಿದ ಬಳಿಕ
ಬೇಗ ಲಿಂಗದೊಳಷ್ಟಚಿದಪೂಜೆಯ
ಚಾಗು ಬಲ ಜಯತು ಭವರೋಗವೈದ್ಯನೆಯೆಂದು
ರಾಗದಿಂ ಪಾಡಿ ನೋಡೆಲೆಲೆ ಮನವೆ ||4||

ಲಿಂಗಕ್ಕೆ ಕಳೆಪ್ರಾಣ ಜಂಗಮದವದನದಿಂ
ಲಿಂಗಸಂತೃಪ್ತಿಯೆಂದರಿದರ್ಪಿಸಿ
ಜಂಗಮದ ಶೇಷಪ್ರಸಾದ ಪಾದೋದಕವ
ಹಿಂಗದಿರು ಗುರುಸಿದ್ಧಲಿಂಗನೊಲಿವ ||5||

ಒಂದೇ ದಿನ ಸಾಲದೆ
ಒಂದೇ ದಿನ ಸಾಲದೆ ಶಿವಸುಖವೊಂದೇ ದಿನ ಸಾಲದೆ
ದಂದುಗದೊಳು ಶತವರುಷ ಬಾಳ್ಪುದರಿಂದ ||ಪ||

ಭಿಕ್ಷದಾನ್ಯಗಳೀಯದೆ ಶಿವಸಮಯದಿ
ಪಕ್ಷವಿಲ್ಲದೆ ಲಕ್ಷವರುಷ ಬಾಳ್ಪುದರಿಂದ ||1||

ಗುರುಭಕ್ತಿಯೊಳವಿರಳ ವಿಶ್ವಾಸದಿ ಶಿವ
ಶರಣರಿಗೊಸ್ತ್ರಾನ್ನವ ಸವೆಸುವ ||2||

ಭಸಿತ ರುದ್ರಾಕ್ಷೆಯ ದರಿಸಿ ಲಿಂಗವ ಬಿಡ-
ದಸಮ ಪಂಚಾಕ್ಷರ ಸ್ಮರಣೆಯೊಳಿರುತಿಹ ||3||

ಭಕ್ತಿಯೊಳತಿ ಭೃತ್ಯತ್ವದಿ ಜಂಗಮ
ಕರ್ಪಿಸಿ ತೀರ್ಥಪ್ರಸಾದವ ಸೇವಿಸುವ ||4||

ನಿರ್ದರದೊಳಗಷ್ಟಾವರಣವು ಗುರು
ಸಿದ್ಧಲಿಂಗೇಶನೆಂದರಿದಾಚರಿಸುವ ||5||

ಸೊಗಸದು ಮಿಗೆ ತಥ್ಯದ ನುಡಿ
ಸೊಗಸದು ಮಿಗೆ ತಥ್ಯದ ನುಡಿ ಕೆಲರಿಗೆ
ಅಘ[ಹರ]ಶರಣರ ಗೀತಗಳು ||ಪ||

ಗುರುವಿಗೆ ತನು ಹರನಿಗೆ ಮನ ದನವನು
ಚರಕರ್ಪಿಸಿ ಚರಣಾಂಬುವನು
ಪರಮಪ್ರಸಾದವ ಸೇವಿಪ ಸುಖವದ
ನೊರೆದುಸುರುವ ವಚನಾಗಮವು ||1||

ಭವಿಸಂಗವ ಮಾಡುವ ನಿಂದಕರಿಗೆ
ಪರದನವನು ಪರಯುವತಿಯರ
ಬಯಸಿ ನೆರೆವರಿಗೆ ಶರಣರ ವಚನವು
ಕಿವಿಗೇಳಲು ಸರಳಂಬುಗಳು ||2||

ಉಂಡಮನೆಯ ದೂರುವರಿಗೆ ಹಿರಿಯರ
ಕಂಡಡಿಗೆರಗದೆ ನುಡಿನುಡಿಗ
ಬಂಡುಗೆಡೆದು ಬಾಷ್ಕಳಗೆಡೆವವರಿಗೆ
ಜೊಂಡದು ಪರಮಾರ್ಥದ ನುಡಿಯು ||3||

ಸತಿಸುತಮಾತೆಪಿತರೊಳತಿ ಪ್ರೀತಗೆ
ವ್ರತಗೇಡಿಗೆ ಮತಿಹೀನರಿಗೆ
ಕೃತಕವ ಮಾಡಿ ಕುತರ್ಕವ ಹಣ್ಣುವ
ಗತಿಗೇಡಿಯ ಶ್ರೋತ್ರಕೆ ವಚನ ||4||

ಪಾಪಕೆ ಹೇಸದ ಕೋಪಿಗೆ ಕರ್ಮದ
ಕೂಪದೊಳೋಲಾಡುತಿಹಗೆ
ಲೋಪವು ಶಿವವಚನವು ಗುರುಸಿದ್ಧಲಿಂಗನ
ವ್ಯಾಪಿಸಿ ಹೃದಯದಿ ನೆನೆಯದಗೆ ||5||

ಇರ್ದು ಪಲವೇನು?
ಇರ್ದು ಪಲವೇನು
ಇರ್ದು ಪಲವೇನು ಶರಿರದೊಳವೆಯವು ||ಪ||

ಭವಿಸಂಗ ಭವವೆಂದು ವಿವರಿಸಿ ಪೇಳುವ
ಶಿವರಹಸ್ಯಂಗಳನರಿಯದೆ
ಭುವನದೊಳನ್ಯಮತವನಾಲಿಸಿ ಕೇಳ್ವ
ಕಿವಿಯದು ವ್ಯಾಘ್ರಂಗಳಿಹ ಗವಿ ||1||

ಮುಕ್ಕಣ್ಣನಕ್ಷಿರೂಪಾಗಿಹ ಮಣಿಭಸ್ಮ-
ವಿಕ್ಕಿ ದರಿಸಿ ಶಿವಶರಣರ್ಗೆ
ಅಕ್ಕರಿಂದಡಿಗೆರಗದೆಯಾಭರಣವ
ನಿಕ್ಕಿ ಮೆರೆವ ತ್ವಕ್ಕು ಶ್ರವವಕ್ಕು ||2||

ಪುಣ್ಯವೆ ರೂಪಾದ ಕರಕಮಲದೊಳಗ್ರ
ಗಣ್ಯ ಮೂರುತಿ ಶಿವಲಿಂಗವ
ಬಣ್ಣಿಸಿ ಪಾಡಿ ಪೊಗಳಿ ನೋಡದೆ ಪರ
ವೆಣ್ಣ ನೋಡುವ ಕಣ್ಣೊಡೆದ ಹುಣ್ಣು ||3||

ಯೌವನ ರೂಪಲಾವಣ್ಯಾದಿ ಮೈಮರೆದ-
ಭವಗರ್ಪಿಸದೊಂದನ
ಒಯ್ಯನೆ ಷಡುರುಚಿದ್ರವ್ಯವ ಭುಂಜಿಪ
ಜಿಹ್ವೆಲಂಪಟರಿಗನ್ನವೇವೇಳ್ವೆ ||4||

ಸೂಸುವ ಮರುತನ ಪಾಶವ ಪರಿದು ದು-
ರ್ವಾಸನೆಯಳಿದು ಸುವಾಸನೆಯ
ಈಶನಿಗರ್ಪಿಸಿ ಶೇಷವ ಸುಖಿಸದ
ನಾಸಿಕವದು ತಾನೆ ಮೂಷಕ ||5||

ಸದಮಲಜ್ಞಾನ ಸುದಾಮೃತ ಪರಿಪೂರ್ಣ
ತುದಿಮೊದಲಿಲ್ಲದೆ ಶರೀರದಿ
ಪುದುಗಿರ್ದ ನಿಜವನು ಮುದದಿಂದ ನೆನೆಯದ
ಹೃದಯ ತಾ ಮದನನಿರುವ ಸದನ ||6||

ಶ್ರೋತ್ರನಾಸಿಕಜಿಹ್ವೆನೇತ್ರತ್ವಕ್ಕುಹೃದಯವು
ವಕ್ತ್ರವೆಂದಿವು ಗುರುಸಿದ್ಧಲಿಂಗನ
ಬೇತ್ರವನರಿದಾಚರಿಸುವ ಶರಣರ
ಸ್ತೋತ್ರಕಲಸುವನಪಾತ್ರನು ||7||

ಸಂಗವಲ್ಲದವರ ಸಂಗಭಂಗ
ಸಂಗವಲ್ಲದವರ ಸಂಗಭಂಗವೆಂದು ಹಿಂಗು ನೀನು
ಹಿಂಗದಿರಲು ಭಂಗಬಿಡದು ಸಂಗದಿಂದಲಿ ||ಪ||

ಕಲ್ಲಿನೊಳಗೆ ಕಠಿಣ ಖುಲ್ಲರೊಳಗೆ ಗುಣವನರಸುವ
ಬಲ್ಲವನ ಬಲ್ಲತನವು ಹುಲ್ಲಿಗಿಂತ ಕಷ್ಟವು ||1||

ಮಸಿಗೆ ಕಪ್ಪು ಸಹಜವೆಂದು ಶಿಶುಗಳೆಲ್ಲ ಬಲ್ಲವು
ಪಿಸುಣ ಹುಸಿಕ ದೆಸಕದವರ ಗಸಣಿಸಂಗ ಬೇಡವು ||2||

ಬಚ್ಚಲುದಕ ತಿಳಿಯಲದರ ಕೊಚ್ಚಿ ನಾತ ಹೋಹುದೆ
ಕುಶ್ಚಿತರ ಸಂಗದಿಂದ ರಚ್ಚೆ ನಿನಗೆ ಬಿಡುವದೆ ||3||

ಬೇವಿನೊಳಗೆ ಮದುರ ಜೀವರಲ್ಲಿ ಪರಮಾರ್ಥ ಜಗದ
ಬಯಿಬಡುಕರೊಳಗೆ ನುಡಿಯ ಸಾವದಾನದೆಚ್ಚರುಂಟೆ ||4||

ಜ್ಞಾನಹೀನರೇನ ನುಡಿಯೆ ಮೌನ ಲೇಸು ಜ್ಞಾನಿಗೆ
ಹಾನಿಯಿಲ್ಲ ಗುರುವೆ ಸಿದ್ಧಲಿಂಗ ನಿಮ್ಮ ನೆನೆವಗೆ ||5||

ಸಂಗ ಬೇಡ ಸಂಗ ಬೇಡ
ಸಂಗ ಬೇಡ ಸಂಗ ಬೇಡ
ಲಿಂಗದ ಪ್ರಾಣದ ಜಂಗಮದ್ವೇಷಿಯ ||ಪ||

ಗುರುಕೊಟ್ಟ ಲಿಂಗವಿರೆ ಮಾರಿಗೆ ಹರಸಿ ಹಣವ ತೆಗೆವ
ದುರುಳ ದುರ್ಮಾರ್ಗ ದುಃಕ್ರೂರ ನರಕಿ ನಾಯ ||1||

ಹೃದಯದೊಳಗೆ ಕತ್ತರಿ ಜಿಹ್ವೆಯ ತುದಿಯೊಳು
ಮೃದುವಚನ ಸದಮಲ ಶರಣರ ಕಕ್ಕಸ ನಾಯ ||2||

ದರೆದನವನಿತೆಯರು ಸ್ಥಿರವೆಂದು ಗುರುಲಿಂಗಜಂಗಮದ
ಇರವನರಿಯದೊಂದ ಗಳಹಿ ಕೆಡುವ ನಾಯ ||3||

ಸಾಕಿದವರ ಮರೆದು ಮರುಗುವ ಸೂಕರ ಶುನಕನಂತೆ
ಬೇಕಾದ ಹಿತವರ ನೀಕರಿಸುವ ನಾಯ ||4||

ಹರಶರಣದ್ವೇಷಿಯ ಕಂಡಡೆ ಗುರುಸಿದ್ಧಲಿಂಗೇಶ
ನರಕಜೀವಿಯ ಮಾಳ್ಪ ಪರಿಗಳುಕದ ನಾಯ ||5||

ಗರ್ವವೇತಕೋ ಬರಿದೆ
ಗರ್ವವೇತಕೋ ಬರಿದೆ ಗರ್ವವೇತಕೋ
ಉರ್ವಿಯೊಳಗೆ ಮೆರೆವೆ ಬೆರೆವೆ ಗರ್ವ ಸಲ್ಲದುಜವನ ಗೆಲ್ಲದೆ||ಪ||

ಗರ್ವ ಬೇಡ ಬೇಡ ನಿನ್ನ
ಪೂರ್ವವನ್ನು ತಿಳಿಯೊ ಮುನ್ನ
ಸರ್ವಜೀವರ ಬಸುರುಬೆನ್ನ
ಪರ್ವಿ ಕಡೆಯ ಜನ್ಮ ನಿನ್ನ ||1||

ಹುಟ್ಟಿ ಬೆಳೆಯುತೆದೆಯು ಹಳಿಲು
ಉಟ್ಟು ತೊಟ್ಟು ನಾಲ್ಕು ಹಗಲು
ಇಷ್ಟ ಪೂಜೆಯಿಲ್ಲದಿರಲು
ಅಟ್ಟಿ ಬಂದಿತೆ ಮನದ ಹೊಯಿಲು ||2||

ಹಾವಿನಣಲ ಕಪ್ಪೆ ಹಸಿದು
ಸಾವಸಂಕಟವನು ಮರೆದು
ಬಾಯಬಿಟ್ಟು ನೊಣಕೆ ಪರಿದು
ಜೀವಿಸುವದದೆಂತೊ ಸವಿದು ||3||

ಕಿಚ್ಚಿನೊಳಗೆ ಬಿದ್ದು ಸಾವ
ಅಚ್ಚುಗವನು ಮರೆದು ಜೀವ
ಬೆಚ್ಚದೆಲ್ಲರೊಳಗೆ ಮೆರೆವ
ತುಚ್ಛಬೋಗ ಸಿರಿಯದಾವ ||4||

ಶ್ರದ್ಧೆ ಸತ್ಯಶುದ್ಧವಿನಯ
ನಿರ್ದರದೊಳು ನಿಂದು ಭ್ರಮೆಯ
ಗೆದ್ದು ನಿನ್ನ ಪ್ರಾಣದೊಡೆಯ
ಸಿದ್ಧಲಿಂಗವನ್ನು ನೆನೆಯ ||5||

ಬೇಡ ಕೆಡಬೇಡ
ಬೇಡ ಬೇಡ ಕೆಡಬೇಡ ಸಾರಿದೆ ದೇಹ
ಮೋಡವೆಂದರಿಯದೆ ಬೆರೆವರೆ ||ಪ||

ರೂಢಿಯೊಳಗೆ ರಾಜರಾಳಿ ಪೋದವರ ನೀ
ನೋಡಿ ಮತ್ತಿನ್ನೇಕೆ ಮರೆವರೆ
ಮಾಡು ಸತ್ಪಾತ್ರಕೆ ನೀಡನ್ನವನು ನಿನ
ಗೀಡು ಮುಂದಕೆ ಸತ್ಯಸಂಬಳವಣ್ಣ ||1||

ಅಂದಳ ಛತ್ರಗಳಿಂದ ಪಾಟಕ ಭಟರೊಂ
ದೊಂದು ಪರಿಪರಿದೂಳಿಗದ
ನಿಂದು ಬಿನ್ನೈಸುವ ಗೊಂದಣ ಮಂದಿಯ
ಸಂದಣಿ ಯಾರಿಂದಲಾಯಿತಣ್ಣ ||2||

ಈ ಸಿರಿಸಂಪತ್ತು ಈ ಶೌರ್ಯ ಲಾವಣ್ಯ
ಈಶನ ಪೂಜೆ ಲೇಸಯಿತು
ಮೋಸ ಹೋಗದೆ ಕಾಯ ನಾಶವಾಗದ ಮುನ್ನ
ಲೇಸು ಗುರುಸಿದ್ಧ ಲಿಂಗನ ಭಜಿಸಣ್ಣ ||3||

ಪರಮಾರ್ಥದೊಳು ಪರಿಣಾಮಿ
ಪರಮಾರ್ಥದೊಳು ಪರಿಣಾಮಿಯಾದವಗೆ
ನರರ ಬಾವಿಸಿ ಮನ ಕರಗಲದೇನೊ ||ಪ|

ಲಕ್ಷವೆಂಬತ್ತನಾಲ್ಕನೆ ಜೀವರಾಶಿಯ
ರಕ್ಷಿಸುವಭವನ ಮರೆದೊಂದ ಬಯಸಿ
ಪಕ್ಷಪಾತವನಾಡಿ ಜಗವ ಮಚ್ಚಿಸಿ ನಿನ್ನ
ಕುಕ್ಷಿಯ ಹೊರೆಯಲದೇತಕೊ ಮನವೆ ||1||

ಕೊಟ್ಟ ಬೋಗಂಗಳು ತಪ್ಪವೆಂದವು ಶ್ರುತಿ
ಎಷ್ಟು ಸಾರಿದಡೇನು ಮುಟ್ಟದೆ ಮನವು
ಕಷ್ಟಜನರನಾಸೆಗೆಯಿದು ಮೃಷ್ಟಾನ್ನಕೆ
ತಿಟ್ಟನೆ ತಿರುಗಲದೇಕೆಲೊ ಮನವೆ ||2||

ಆಸೆಯ ಬಿಟ್ಟು ನಿರಾಸೆಯೊಳಿರು ದೇಹ
ಸಾಸಿರವರುಷವಿರದು ಸ್ಥಿರವಲ್ಲ
ಶಾಸ್ವತ ಗುರುಸಿದ್ಧಲಿಂಗವನರ್ಚಿಸಿ
ನೀ ಸುಖಿಯಾಗಿರೆ ಸ್ಥಿರ ಕಂಡ್ಯ ಮನವೆ ||3||

ಜಯಿಸುವದರಿದರಿದು
ಜಯಿಸುವದರಿದಾವಂಗಸದಳ
ಭವಹರ ಶಿವನೊಳ್ಬೆರೆದಂಗಲ್ಲದೆ ||ಪ||

ಹಾವಿನ ವಿಷ ನಿರ್ವಿಷದಿಂದಿಳಿವುದು
ಆಯುಷ್ಯವ ಪಡೆದವರ್ಗೆ
ಬಾವಕಿಯರ ನಯ ಸವಿನುಡಿ ವಿಷ ಬಲು
ಹಾವಿನ ವಿಷದಿಂ ಮೂವಡಿ ವಿಷವದು ||1||

ಕೂಡಿದ ವಿಷವನು ಕುಡಿದವರಿಗೆಯದು
ಕೇಡವು ಕುಡಿಯದವರ್ಗಿಲ್ಲಾ
ಕೂಡದೆ ಕುಡಿಯದೆ ನೋಡಿದ ಪುರುಷರ
ಹೇಡಿಗೊಳಿಸಿ ಕೆಡಹುವ ವಿಷ ಸತಿಯರ ||2||

ಅರಿಗಳ ಗೆಲಬಹುದೊಮ್ಮೆಗೆ ಪಾವಕ
ನುರಿ ಬರಲದ ನಂದಿಸಬಹುದು
ದರೆಯೊಳು ಚೋರರ ತಪ್ಪಿಸಬಹುದೀ
ತರುಣಿಯರತಿ ಚದುರಿನ ಕೌಶಲವ ||3||

ಹುಲಿ ಕಾಡ್ಕೋಣಾನೆಯ ಭಲ್ಲುಕ ಉರೆ
ಹಲವಿದ ಕ್ರೂರಮೃಗವನೆಲ್ಲ
ಬಲೆಯೊಳು ಹಿಡಿತಹ ಮನುಜನ ತನ್ನಯ
ಬಲೆಯೊಳು ಕೆಡಹುವ ಲಲನೆಯ ಬಲುಹನು ||4||

ಕಂಗಳ ದೃಷ್ಟಿಯು ಕರದೊಳು ನೆನಹಿನ
ಲಿಂಗದೊಳಗೆ ಮನ ಮಂತ್ರ
ಸಂಗಿಸಿ ಪ್ರಾಣವು ಗುರುಸಿದ್ಧಲಿಂಗವ
ಹಿಂಗದೆ ನಿಂದ ನಿರಂಗನಿಗಲ್ಲದೆ ||5||

ಎಚ್ಚರಗುಂದದಿರು
ಎಚ್ಚರಗುಂದದಿರು ಲಿಂಗದೊಳೆಚ್ಚರಗುಂದದಿರು
ಮಚ್ಚಿಸಿ ಮೋಹದಿ ಕೆಡಹುವ ಸತಿಯರಿಂದೆಚ್ಚರಗುಂದದಿರು||ಪ||

ನಗೆಯೆಂಬ ಸರಳಿನೊಳು ಮಾತಿನ ಸೊಗಸೆಂಬ ಬಿಲ್ಲಿನೊಳು
ಹಗೆಯಾಗಿ ಪುರುಷನೆಂಬಾ ಮೃಗವನು ತೆಗೆದೆಚ್ಚು ಕೊಲುತಿಹರು ||1||

ಹುಸಿಯೆಂಬ ಕಾಲುಕಣ್ಣಿ ಹದುರಿನ ಎಸಕದ ಬೀಸುವಲೆ
ಹಸನಾಗಿ ನಲ್ಲನೆಂಬಾ ಪಶುವನು ಎಸೆದೆಚ್ಚು ಕೊಲುತಿಹರು||2||

ಕೇಸರಿ ಕರಿಗಳೊಳು ಸ್ನೇಹವು ಲೇಸುಂಟೆ ಎಲೆ ಮರುಳೆ
ಸೂಸಲ ಕಂಪಿಗೆ ಮೂಷಕ ಬಿದ್ದು ತಾ ಗಾಸಿಯಾಗುವ ತೆರದಿ ||3||

ದೀಪದ ರೂಪವ ಕಂಡು ಬಿಳುವ ಆ ಪತಂಗನ ತೆರದಿ
ಪಾಪದ ಪುಂಜವೆ ರೂಪಾದ ಸತಿಯರು ತಾಪದಿ ಕೊಲುತಿಹರು ||4||

ಹುಲ್ಲೆ ಹುಲಿಯ ಸರಸವೆಂದರಿಯದೆ ಬಲ್ಲಡೆ ನಾರಿಯರಾ
ಲಲ್ಲೆಗೆ ಸಿಲುಕದೆ ಗುರುಸಿದ್ಧಲಿಂಗನ ಮೆಲ್ಲಡಿ ದ್ಯಾನದೊಳು ||5||

ಹಾಡಿದಡೇನು ಕೇಳಿದಡೇನು ?
ಓದಿದಡೇನು ಕೇಳಿದಡೇನು ಬಿಡದೆ
ನೋಡಿ ಲಿಂಗದಿ ಮನ ಮೂಡಿ ಮುಳುಗದೆ ||ಪ||

ಇದಿರ ಜರೆದು ತನ್ನ ಮೆರೆವುದೋದುಗಳಲ್ಲ
ಹದಿರು ಚದಿರು ಸದಮದ ಬಿಡದಾ
ಹದನನರಿಯದಿಹುದದು ಓದು ತಾನಲ್ಲ
ಪುದಿದು ಲಿಂಗದಿ ಪ್ರಾಣವೆರೆದುದು ಓದು ||1||

ನುಡಿದಂತೆ ನಡೆ ನಡೆಯೊಳು ನುಡಿದುದೆ ಓದು
ಷಡುವರ್ಗಕರಣವ ಸುಡುವುದೋದು
ಬಿಡದೆ ಲಿಂಗದಿ ಮನವೊಡವೆರೆದುದೆ ಓದು
ದೃಡಚಿತ್ತವಿಲ್ಲದುದೇತರ ಓದು ||2||

ವಚನವ ಹಾಡಿ ತಾ ರಚನೆಯ ನುಡಿದೊಂದ
ಯಾಚಿಸಿ ಬೇಡದೆ ಇಹುದದು ಓದು
ಅಚಲದಿ ಮನಬಾವ ಗುರುಸಿದ್ಧಲಿಂಗನ
ವಚನವರಿದಾಚರಿಸುವುದೆ ಓದು ||3||

ಆಸೆಯ ಬಿಡಿಸಯ್ಯ
ಆಸೆಯ ಬಿಡಿಸಯ್ಯ ಲಿಂಗವೆ | ಎನ್ನ
ವೇಷಕದು ಲೇಸಲ್ಲ ಲಿಂಗವೆ
ಏಸುದಿನವು ಕಾಡಿಬೇಡುವೆ | ನಾ
ಬೇಸತ್ತೆನಲಸಿದೆ ಲಿಂಗವೆ ||ಪ||

ಕರ್ತೃವೇಷವ ಧರೆಸಿಯು | ಎನ್ನ
ಮತ್ರ್ಯರ ಸ್ತುತಿಸಿ ಬಾವಿಸಿ ಬೇಡಿ
ಭಕ್ತಿಯ ಮಾಡಿದೊಡೆ ಸುಯ್ವುದು | ಎನ್ನ
ಕರ್ತುತನಕೆ ಹಾನಿ ಲಿಂಗವೆ ||1||

ವೇಷವ ತಾಳಿ ನಾನೊಬ್ಬರ | ಅಭಿ
ಲಾಷೆಗೆಯ್ಯಲು ಈಯದೊಡೆ ಮತ್ತೆ
ರೋಷದಿಂದ ಮನನೊಂದು ಮರುಗಲು | ಎನ್ನ
ವೇಷಕದು ಹೇಸಿಕೆ ಲಿಂಗವೆ ||2||

ಗೋಸುಂಬೆಯಂತೆನ್ನ ಮನ ಬಲು | ಬರಿ
ವೇಷವ ತೊಟ್ಟು ಮೆರೆವುದೈಸೆ
ಆಸೆಯ ಬಿಟ್ಟು ನಿರಾಸೆಯೊ | ಳಿಹ
ಲೇಸೊಂದ ನೆನೆಯದು ಲಿಂಗವೆ ||3||

ಹರಿ ಸುರ ಸರಸಿಜೋದ್ಭವರೆಲ್ಲ | ನಿಮ್ಮ
ಸ್ಮರಿಸಿ ಪಡೆದರತಿ ಪದಗಳ
ಹರ ನೀನು ಕರಕಮಲದೊಳಿರೆ | ನಾ
ನರರ ಹಾರುವದೇನು ಲಿಂಗವೆ ||4||

ನಿರ್ದರ ನಿಷ್ಠೆಗಳಿಲ್ಲದೆ ನಾನಿ | ರ್ದಲ್ಲಿ
ಪಲವೇನು ಶಿವ ನಿಮ್ಮ
ಹೊದ್ದಲೀಯದು ಬದ್ಧದಾಸೆಯು | ನೀ
ನೊದ್ದು ಸಲಹೈ ಗುರುಸಿದ್ಧಲಿಂಗವೆ ||5||

ದೂಷಣೆ ಬೇಡ
ದೂಷಣೆ ಬೇಡವೊ ನುಡಿಯದಿರಿ
ಈಶನ ಶರಣರ ಕಂಡನುದಿನದಿ ||ಪ||

ಮರ್ತ್ಯದ ಬಳಕೆಯ ಬಳಸದೆ ಶಿವನೊಳು
ಭಕ್ತಿಯೊಳೆರವಳಿದಿಹ ಶರಣ
ಸತ್ಯರ ಸನ್ಮಾರ್ಗರ ಸದುಹೃದಯರ
ಚಿತ್ತವ ಕಲಕುವ ಕತ್ತೆಯು ತಾನೆ ||1||

ಲೋಕದ ವರ್ತನೆಯಳಿದತಿ ಲಿಂಗದೊ
ಳೇಕೀಕರಿಸಿದ ಶರಣರನು
ಶ್ರೀಕಂಠನು ತಾನವರೆಂದೆನ್ನದೆ
ನೀಕರಿಸುವನವ ಸೂಕರ ತಾನೆ ||2||

ಆಸೆಯ ಬಿಟ್ಟು ನಿರಾಸೆಯೊಳಿಹ ಶಿವ
ವೇಷವ ತೊಟ್ಟಿಹ ಶರಣರನು
ದೂಷಣೆ ಮಾಡುತ ನಿಂದಿಸಿ ನುಡಿವವ
ಹೇಸನು ನರಕಕೆ ಶುನಿಯವ ತಾನೆ ||3||

ಬರಡಿಯು ತಾ ಬೇನೆಯನರಿಯಳು ಶಿವ
ಶರಣರ ದೂಷಕನರಿದಪನೆ
ಗುರುಚರಣವ ಪಿಡಿದಭವನ ದ್ಯಾನಿ
ಪರಡಿಗೆರಗದವ ಕರಡಿಯು ತಾನೆ ||4||

ಇರಿಯದ ವೀರನ ಇಲ್ಲದ ಸೊಬಗನು
ಮೆರೆವುತ ಬೆರೆವುತ ಹರವುತಲಿ
ಕರಿಗೊರಳನೊಳೆರವಳಿದಿಹ ಶರಣರ
ತೆರನನರಿಯದವ ಕುರಿಯವ ತಾನೆ ||5||

ಚಪಳತ್ವದೊಳತಿ ನಿಪುಣ ತಾನೆಂ
ದುಪಮೆಗತೀತನ ಶರಣರನು
ಕಪಟದಿ ಹಳಿವುತ ಮುಳಿವುತಿಹನವ
ಸುಪಥವನರಿಯದ ಕಪಿಯವ ತಾನೆ ||6||

ಶೀಘ್ರದೊಳತಿ ಗುರುಸಿದ್ದೇಶ್ವರನ ಅ
ನುಗ್ರಹದಿಂದಾಚರಿಸುವರ
ಉಗ್ರದೊಳತಿಗರ್ವದಿ ಕೆಡೆನುಡಿವವ
ದುರ್ಗುಣ ದುರ್ಜನ ವ್ಯಾಘ್ರನು ತಾನೆ ||7||

ನಡೆನುಡಿ ನಿಮ ನಮಗೊಂದೆ
ನಡೆನುಡಿ ನಿಮ ನಮಗೊಂದೆಂಬ | ಬಾಯಿ
ಬಡುಕರ ನುಡಿಗೆ ಹೇಳುವೆನಿಂಬ ||ಪ||

ಇಂದುದರನ ಪೂಜೆಗಳೆಮಗೆ | ಮನೆ
ಮಂದಿಗೆ ಕುದಿವ ಗೊಜಡು ನಿಮಗೆ
ಹಿಂದುಮುಂದೆಣಿಸದೋಜೆಯು ನಮಗೆ | ಮನ
ಸಿಂದ ಹರಿವ ತೇಜಿಯು ನಿಮಗೆ ||1||

ಗುರುವಚನದಿ ನಡೆವುದು ನಮಗೆ | ಮುಖ
ಸರಸಿಜಕುಚೆಯ ಗಾಡಿಯು ನಿಮಗೆ
ಹರಶೇಷರುಚಿಯ ಮೋಡಿಯು ನಮಗೆ | ಸಿರಿ
ಗರ ಮದುರಚನೆಯಡಗು ನಿಮಗೆ||2||

ಭಸಿತರುದ್ರಾಕ್ಷಿಮಂತ್ರಗಳೆಮಗೆ | ಭೂತ
ಮುಸುಕಿದುಪದ್ರ ಯಂತ್ರವು ನಿಮಗೆ
ಶಶಿದರ ಮುದ್ರೆ ತಂತ್ರವು ನಮಗೆ | ಮೋಹ
ವ್ಯಸನ ನಿದ್ರೆಯ ಜಂತ್ರವು ನಿಮಗೆ ||3||

ಅಜಾತರ ಮನೆಯೂಟವು ನಮಗೆ | ಹರಿ
ಜಾತರೊಳಾಟಕೂಟವು ನಿಮಗೆ
ಜ್ಯೋತಿರ್‍ಲಿಂಗ ಬೇಟವು ನಮಗೆ | ವಿಪ್ರ
ಜಾತಿಗೆಟ್ಟಾಟುವ ದೈವವು ನಿಮಗೆ ||4||

ರುದ್ರನ ಮರೆದು ವಿಷ್ಣುವೆ ನಿಮಗೆ
ಚಿದ್ರೂಪ ಶರಣಗೋಷ್ಠಿಯು ನಮಗೆ
ಬದ್ಧದೈವದ ನಿಷ್ಠೆಯು ನಿಮಗೆ | ಗುರು
ಸಿದ್ಭಲಿಂಗನ ಶ್ರೇಷ್ಠವು ನಮಗೆ ||5||

ತನುಮನವ್ಯಾಪ್ತಿ
ತನುಮನವ್ಯಾಪ್ತಿಯ ಪ್ರಾಣನ ಸಂಚಲ
ದನುವಿನ ಬೇದವನರುಹೆನ್ನ ಗುರುವೆ ||ಪ||

ಜಾಗ್ರಾವಸ್ಥೆಯ ವ್ಯಾಪ್ತಿಯ ಗುರುವಿನ
ನುಗ್ರಹದಿಂದಿಷ್ಟದ ಕ್ರಿಯೆ
ಶೀಘ್ರದಿ ಮಾಡಲು ತನು ಗುರುವೆಂದದ
ನಿಗ್ರಹಿಸುತ್ತಿರುತಿಹುದು ತನುವೆ ||1||

ಸ್ವಪ್ನಾವಸ್ಥೆಯದೆಂತೆನೆ ಮನಸಿನ
ವ್ಯಾಪ್ತಿಯ ವಾಸನೆಯದು ತಾನೆ
ಇಪ್ಪುದನರಿದಾವಾಗಲಿ ಮಂತ್ರದ
ರೌಪ್ಯದ ಜಪಸ್ಮರಣೆಯೆ ಮನಲಿಂಗವು ||2||

ಒಂದೆರಡವಸ್ಥೆಯೊಳೊಂದಿ ಸುಷುಪ್ತಿಯ
ದಂದುಗವಳಿವುದೇತರೊಳು
ಕುಂದದೆ ತನುಮನ ಇಷ್ಟಪ್ರಾಣದ
ಅಂದವು ತಾನೆ ದನಜಂಗಮವು ||3||

ಮೂರವಸ್ಥೆಯ ವಿೂರಿದ ತುರಿಯದ
ತೆರನಾವುದು ಎನಗರಿವಂತದನು
ತೋರಿದ ಗುರು ಮೂರೊಂದಾದುದ ನೀ
ಬೇರೆಡದರಿವುದದೇಕಪ್ರಸಾದವು ||4||

ನಾಲ್ಕವಸ್ಥೆಯ ವಿೂರುವದು ಅದೊಂದೆ
ಏಕಪ್ರಸಾದವು ಪರಿಪೂರ್ಣ
ಏಕೀಕರಿಸಿದ ತುರಿಯಾತೀತ ಸುದಾ
ಕಳೆಯದು ತಾ ಗುರುಸಿದ್ಧಲಿಂಗ ||5||

ನೋಯಲೇತಕೆ ?
ನೋಯಲೇತಕೆ ತನ್ನ ಜರೆದರೆಂದವರೊಳು
ಮಾಯಾಪ್ರಪಂಚವ ಹಳಿವಜ್ಞಾನಿಗಳೊಳು ||ಪ||

ತಾಯಿ ಶಿಶುವಿಗೆ ಹಾಲೆರೆವಾಗ ಮಯಿಮುರಿದೇ
ಳುವ ಶಿಶುವಿನ ಬಾಯನು ತಾ
ಹೊಯಿದು ಸಲಹುತಿಹ ತಾಯ ಕಂಡಡೆ ಶಿಶು ನೋಯದೆ
ತಾಯ ಮೋಹದೊಳಿರುವಂತಿರು ||1||

ಅಕ್ಕರ ಲೆಕ್ಕವು ಕಲಿಯಬೇಕೆಂದೋದ
ಲಿಕ್ಕಿದ ತಂದೆಯು ಮಕ್ಕಳ
ಅಕ್ಷರ ಲೆಕ್ಕವು ಬರಲೆಂದು ಬೈದರೆ ತಂದೆ
ಮಕ್ಕಳೋಳಕ್ಕರಂತಿರು ನೀ ||2||

ಬೆಳೆಗೆ ಕಂಟಕವೆಂದು ಕಳೆಗೆ ಮುಳಿಯೆ ಬೆಳೆ
ಸುಳಿಗಳು ನೂಂಕದೆ ಒಳಗಿಹವೆ
ತಿಳಿದವನಿಯೊಳು ಬೋಗಕೆ ಎಳಸಲು ಹಳಿದು
ಹೇಳುವ ಬೆನ್ನ ಬಳಿಯಲ್ಲವೆ ||3||

ಮುಗ್ಗಿದ ಬಂಟನ ಬಗ್ಗಿ ಕೈವಿಡಿದೆತ್ತಿ
ಸಿಗ್ಗು ಮಾಡುವನೇನೊ ರಣದೊಳಗೆ
ಸದ್ಗುಣಿಗವಗುಣ ವೆಗ್ಗಳಮಾಗಿರೆ
ಮಾರ್ಗವ ಪೇಳುವ ದುರ್ಗುಣಿಯೆ ||4||

ವರ್ಮಬೋದೆಯ ಕೇಳಿ ನಿರ್ಮಳನಾಗದೆ
ದುಮ್ಮಾನ ಬಿಡದಿದೆ ನಿನ್ನೊಳು
ಹಮ್ಮು ಬಿಮ್ಮೇಕೆ ಗುರುಸಿದ್ಧಲಿಂಗವ ನೆಮ್ಮು
ನೀ ನಮ್ಮವನೆಂದೆ ಶರಣರೊಳು ||5||

ಕ್ಷಣಿಕರ ಗುಣ
ಕ್ಷಣಿಕರ ಗುಣಗಳನೆಣಿಕೆಗೆ ತಾರದೆ
ತ್ರಿಣಯನ ಪೂಜಿಸು ದಣಿಯದೆ ನೀ ಮನವೆ ||ಪ||

ಬೇಲ ಬೊಬ್ಬುಲಿ ಮರದಡಿಗಳೊಳಗೆ ಬರಿ
ಗಾಲಿಂದವೆಯಡಿಯಿಡಲು
ಕೀಲಿಸಿ ಮುಳ್ಳು ಮುರಿಯದಿಹವೆ ಬಲು
ಖೂಳರಿಗಂಜಿ ತೊಲಗಿ ಗೆಲು ಮನವೆ ||1||

ಈದ ಹುಲಿಯ ಮೆಳೆಯ ಹೊದರೊಳು ಹುಲ್ಲಿರೆ
ಮೇದು ಜೀವಿಸಿದೆರಳೆಗಳುಂಟೆ ತಾ
ಮೇದಿನಿಯೊಳು ದುರ್ಗುಣಿಗಳ ನುಡಿ ಸಂ
ಪಾದನೆಯೆಂಬುದ ಬಿಡು ಮನವೆ ||2||

ಕಡಜನಿರುವ ಗೂಡನು ಸೋಂಕಿದಡವು
ಕಡಿಯದೆ ಬಿಡವೆಂದರಿದಿನ್ನು
ಕೆಡುಕರ ನಗೆ ಸರಸದ ನುಡಿ ರಚ್ಛೆಗೆ
ತಡವಿಲ್ಲದರಿಂದರಿದಿರು ಮನವೆ ||3||

ವೈರಿವೈರಿಗಳಿದಿರಾಗಿಹ ರಣದೊಳು
ಸಾರಿ ನೋಡಲು ಪರುಸೆಯ ಜನವೆ
ಹೋರುವ ಹೋರಟೆಗಳ ನುಡಿ ಬಿರುಬರು
ಮಾರಿ ತಾ ಬೇರಿಲ್ಲೆಂದರಿ ಮನವೆ ||4||

ಕುಜನರ ಸಂಗವ ತ್ಯಜಿಸಿ ನಿರಂತರ
ತ್ರಿಜಗದೊಡೆಯ ಗುರುಸಿದ್ಧೇಶ್ವರನ
ಯಜಿಸಿ ಭಜಿಸುತಿಹ ಶರಣರ ಪಾದದ
ರಜ ನೀನೆಂಬುದ ನಿಜವಿಡಿ ಮನವೆ ||5||

ನೋಡಿ ಕಂಡಿರು
ನೋಡಿ ಕಂಡಿರು ಮನಸೋಲದೆ ಸತಿಯರು
ಮಾಡುವ ಕೃತಕವ ರೂಢಿಯೊಳು ||ಪ||

ಬೆಚ್ಚಂತೆ ಪುರುಷನ ಇಚ್ಛೆಯೊಳಿರುವಳು
ಕುಶ್ಚಿತ ಕುಹಕವನರುಹಿಸದೆ
ಮಚ್ಚಿ ಮತ್ತೊಬ್ಬಗೆ ಬೇಟವ ಮಾಡುವ
ಕೆಚ್ಚೆದೆಯಳ ಕಂಡು ನಚ್ಚದಿರು ||1||

ಅಪ್ಪನೆಂದೆಂಬುದೊಂದೊಳ್ಪಿನ ನುಡಿಯೊಳ-
ಗಪ್ಪ ಬಾರೇಕೆನ್ನ ಮನೆಯೊಳಗೆ
ಇಪ್ಪುವನಳಿಯನಿಲ್ಲದೊಡೆರವೇತಕೆ
ನ್ನಪ್ಪ ಬಾರೆಂಬವಳೊಪ್ಪವನು ||2||

ಹಬ್ಬ ಬಂದಡೆ ಹಗಲು ಬಂದಿ ಚಿಂತಾಕದಿ
ಸಿಬ್ಬುದಿಯಾಯಿತು ಮುತ್ತಿಲ್ಲದೆ
ಹಬ್ಬದೊಳಗೆ ಮುತ್ತ ಕೊಡುವೆ ಬೇಗ ಬಾ
ರುಬ್ಬಿಲಿ ಬಾರೆಂಬಳೊಬ್ಬನನು ||3||

ತಂದೆ ನೀ ಎನಗೆನ್ನ ಗಂಡಗೆ ಕುಂದನು
ದ್ವಂದ್ವವಾಗಿರದೆನ್ನ ಬಯಕೆಯನು
ಬಂದುಪಚರಿಸಿ ನೋಡದೆ ನುಡಿದೊಡಾನು
ಕಂದಿದೆನೆಂಬವಳಂದವನು ||4||

ಅಂಗದ ರತಿಯೊಳು ಹಿಂಗದೆ ಮುಳು
ಅಂಗನೆಯರ ಸಂಗ ಭಂಗವೆಂದು
ಸಂಗಿಸಿ ಗುರುಸಿದ್ಧಲಿಂಗನ ಶರಣರಿ
ಗಂಜುವೆನಂಜುವೆನೆಲೆಲೆ ಮನವೇ ||5||

ಸತಿಸುತಯುತಾತ್ಮರಿಗೆ
ಸತಿಸುತಯುತಾತ್ಮರಿಗೆ ಯತಿಗಳೆಂದೆಂಬ ನುಡಿ
ಹಿತವಲ್ಲ ಜ್ಞಾನ ಸನ್ಮತವೆಲ್ಲಕೆ ||ಪ||

ಸತಿಸಂಗವೆಮಗಿಲ್ಲವೆಂಬ ಯತಿಗಳು ನೀವು
ಸತಿಯದಾವಳುಯೆಂಬುದರಿಯಿರಲ್ಲ
ಇತರೇತವರಿಯದುಂಡುಂಡೊಂದ ಬಯಸುತಿಹ
ಸತಿ ಕಾಮವೆಂಬುವದನರಿಯಿರಣ್ಣ ||1||

ಸತಿಕಾಯವದಕಿನ್ನು ಪತಿಯಾತ್ಮರಿಬ್ಬರಿಗೆ
ಸುತರಾರುಯೆಂಬುವದನರಿಯಿರಣ್ಣ
ಗತಿಗೆಡಿಸಿ ಕಾಡುತಿಹ ಕರಣಂಗಳಿರುತಿರಲು
ಸುತರೆಮಗೆಯಿಲ್ಲವೆಂದೆಂಬಿರಣ್ಣ ||2||

ತನ್ನೊಳಗೆ ಸತಿಸುತರು ಬೆನ್ನ ಬಿಡದಿರುತಿರಲು
ಇನ್ನಾವ ಸತಿಸುತರು ಹೇಳಿರಣ್ಣ
ಮುನ್ನಮುನ್ನವೆ ತನಗೆ ಅನ್ಯವಹ ಸತಿಸುತರು
ಭಿನ್ನವೆಂಬುದ ನೀವು ತಿಳಿಯಿರಣ್ಣ ||3||

ಗುರುಕರುಣದಿಂದಿಷ್ಟಕರವ ಸಾರಿದ ಬಳಿಕ
ಶರೀರಬಾವನಳಿದು ನೆನಹು ಲಿಂಗ
ದಿರವನರಿದಾವಾಗ ಮಂತ್ರದೊಳು ಕರಿಗೊಂಡು
ಶರಣನವ ಯತಿಯೆಂಬುದರಿಯಿರಣ್ಣ ||4||

ಅಂಗತತ್ವದಂ ಲಿಂಗತ್ವವದುಭಯ
ಸಂಗವು ಶಿವಪದವೆಂಬ ಬೇದವರುಹಿ
ಕಂಗೆಡಿಸುತಿಹ ಕಾಯಕರಣ ಜೀವನುಗ್ರವ
ಹಿಂಗಿಸಿದ ಗುರುಸಿದ್ಧ ಲಿಂಗವಣ್ಣ ||5||

ಸಂಗವಲ್ಲದ ದುಸ್ಸಂಗ
ಸಂಗವಲ್ಲದ ದುಸ್ಸಂಗರ ಸಂಗ ಸು
ಸಂಗಿಗಳಿಗೆಯನು ಸಿಂಗಿಯ ವಿಷವೊ ||ಪ||

ಒಲೆವುತ ಮಲೆವುತ ಉಲಿವುತ ಮಾತನು
ಕೆಲೆವುತ ಸೆಲೆವುತ ಕಲಹವನೆ
ಬಲಿವುತ ಎಲುವಿಲ್ಲದ ನಾಲಗೆಯೊಳು
ಹಲುಬುವ ಗಲಬರ ತೊಲಗಿರುತಿರು ನೀ ||1||

ಹೆಚ್ಚುತ ಹಿಗ್ಗುತ ತುಶ್ಚರ ಕಂಡಡೆ
ಮುಚ್ಚುತ ಮಾನ್ಯರನರಿಯದಿಹ
ಹುಚ್ಚರ ಹೃದಯವು ಕೆಚ್ಚೆಂದವರೊಳ
ಗಿಚ್ಛೆಯ ನುಡಿಯದೆ ನಿಚ್ಚಟದೊಳಗಿರು ||2||

ಪ್ರೀತಿಗಳಿಲ್ಲದ ಮಾತಿನ ಬನ್ನಣೆ
ಹೂತೆಲವದ ಮರನದು ತಾನು
ಜೋತೊರಗಿದಡಿನ್ನೇತಕೆ ಹಿರಿಯರ
ರೀತಿಯನರಿಯದಿರೇತಕೆ ಬಾತೆಯೊ ||3||

ವಿರಸವ ಬಿಡು ಹರುಷದೊಳಿರು ಹಿರಿಯರ
ಸರಸವ ಬಿಡು ಪರನಾರಿಯರ
ಕರ ಸಿತವೆಂದಿರು ಹರನೊಳು ಚಿತ್ತವು
ಬೆರೆದಿಹ ಶರಣರ ಚರಣವ ಬಿಡದಿರು ||4||

ಮೃಡನ ಶರಣರೊಳು ಗಡಣದ ಗರ್ವದ
ಬೆಡಗಿನೊಳಿರದಿರು ಭವವೆಂಬ
ಅಡವಿಯ ಕಡಿದೀಡಾಡಿ ಬಿಸಾಡುವ
ಒಡೆಯನು ಗುರುಸಿದ್ಧನೊಳೆಡೆವಿಡದಿರು ||5||

ಸಂಗವಾಗದು ಶರಣಸಂಗವಲ್ಲದೆ
ಸಂಗವಾಗದು ಶರಣಸಂಗವಲ್ಲದೆ ತ್ರಿವಿದ
ಲಿಂಗದೊಳ್ಬೆರಸಿ ಸಂಗಿಸಲರಿಯದ ಜಡರ ||ಪ||

ಮೋಳೆಯಿಂದೇರಿಗಬ್ಬಸ ಜಾಳುಮಾತುಗಳ
ನಾಡವರ ಮೇಳದೊಳಗಿರಲು ಜ್ಞಾನ
ಬೀಳಹುದು ಗಾಳಿಗಿದಿರಾದ ಸೊಡರದಕಿನ್ನು
ಡಾಳವುಂಟೆ ಕಳೆಗೆ ಸಸಿ ಬೆಳೆವುದೆ ||1||

ಅಸುವಿಲ್ಲದಂಗಕ್ಕೆ ಉಸಿರುಂಟೆ ಹಾವಿಂಗೆ
ವಿಷವಲ್ಲದಮೃತವುಂಟೆ ವ್ಯಸನಿಗೆ
ವಿಷಯವಲ್ಲದೆ ಮತ್ತೆ ಪಶುಪತಿಯ ಶರಣ ಸಮ
ರಸವುಂಟೆ ಹಮ್ಮುಬಿಮ್ಮಳಿಯದವರ ||2||

ಮಸಿ ಕ್ಷೀರದೊಳಗಿರಲು ಹಸನಾಗಬಲ್ಲುದೆ
ಪಿಸುಣಂಗೆ ಜ್ಞಾನಮಾರ್ಗವನುಸುರಲು
ವಿಷಮವಲ್ಲದೆ ಮನಕೆ ಸೊಗಸಲ್ಲ ದ್ವೇಷಿಯ
ಗಸಣಿ ಸಂಗವದೇಕೆ ಬಿಡು ಮೂಡನ ||3||

ಹೆತ್ತ ತಾಯನು ಮಾರಿ ತೊತ್ತ ಕೊಂಡವಳೊಡನೆ
ಹೆತ್ತತಾಯಾಣೆಯಿಡುವನ ತೆರನೊಳು
ಸತ್ಯಶರಣರ ಜರೆದು ಕರ್ತ ಅವರೆನಗೆಂಬ
ಹೊತ್ತು ಹೋಕಿನ ಮತ್ತಮತಿಗಳೊನೆ ||4||

ಉಣ್ಣೆ ಕೆಚ್ಚಲ ಕಚ್ಚಿ ಅಣ್ಣೆವಾಲ್ಸವಿಯದಂ
ತಣ್ಣಗಳು ಗುರುಲಿಂಗಜಂಗಮವನು
ಭಿನ್ನವಿಟ್ಟೇಸು ದಿನ ಪೂಜಿಸುತ್ತಿರಲಗ್ರ
ಗಣ್ಯ ಗುರುಸಿದ್ಧಲಿಂಗನ ಬೆರಸರು ಅವರ ||5||

ಹುಸಿಕೊಲೆಕಳವು ಬೇರಿಲ್ಲ
ಹುಸಿಕೊಲೆಕಳವು ಪಾರಕಾಂಕ್ಷೆ ಬೇರಿಲ್ಲ
ಎಸೆವ ಸದ್ಗುರು ಶಿಷ್ಯಗುಸುರಿದ ಪಥದೊಳು ||ಪ||

ಗುರುಕರಕಮಲಕೆ ಶಿರದ ಚಿತ್ಕಲೆಯನು
ಚರಲಿಂಗ ತೀರ್ಥದಿ ನೆಲೆಗೊಳಿಸಿ
ಪರತತ್ವವಿದರಿಂದ ಪರವಿಲ್ಲವೆಂದುದ
ಮರೆದನ್ಯಕೆರಗೆ ಪುಸಿವುದಲ್ಲವೆ ||1||

ತಪವ್ರತನೇಮದಿಂದುಪವಾಸ ತನಗೆಂದು
ಕಪಿಮನದಿಚ್ಛೆಗೆ ಪರಿಪರಿದು
ಅಪರಮಿತದ್ವಯ ಲಿಂಗ ಸುಪಥಕ್ರೀಯ
ನಪಹರಿಸಲ್ಕದು ಕೊಲೆಯಲ್ಲವೆ ||2||

ಲಿಂಗದ ಚಿತ್ಕಳೆ ಜಂಗಮಭಕ್ತಿಯ
ಹಿಂಗದೆ ಮಾಡೆಲೆ ಮಗನೆಂದು
ಮಂಗಳಗುರು ಪೇಳಿದಂಗವಿದೇನೆಂದು
ಜಂಗಮಕೊಂಚಿಸೆ ಕಳವಲ್ಲವೆ ||3||

ಪರವದು ಮನೆಯೊಳಗನುದಿನವಿರುತಿರ
ಲ್ಗುರು ಚರಲಿಂಗಕೀಯದೆ ಎಮಗೆ
ಪರವದುವಿಲ್ಲೆಂಬ ಮರುಳರೆಲ್ಲರ್ ಕೇಳಿ
ಹರಿಯ ನಾರಿಯು ಪರವದುವಲ್ಲವೆ ||4||

ಧೃತಿಗೆಡದನ್ಯರ ಸ್ತುತಿಸದೆ ಬಂದುದ
ಸಿತಿಕಂಠನಿತ್ತ ಬಾಗ್ಯಗಳೆನ್ನದೆ
ಮತಿಗೆಟ್ಟು ಪರರ ಸಿರಿಯ ನೋಡಿ ಬಯಸುವ
ದತಿಕಾಂಕ್ಷೆಯೆಂಬುದು ತಾನಲ್ಲವೆ ||5||

ಪಂಚಮಹಾಪಾತಕದೊಳು ವರ್ತಿಸಿ
ಪಂಚಾಚಾರದೊಳಧಿಕರೆಂದು
ವಂಚನೆಯಿಂದ ನುಡಿವ ನುಡಿ ಕರ್ಮದ
ಗೊಂಚಲಿದಕೆ ಬೇರೆ ಸಂಚಿಲ್ಲವೊ ||6||

ಗುರುಕರುಣವ ಪಡೆದವರ್ಗಿದು ಮತವಲ್ಲ
ಕರಣದಿಚ್ಛೆಗೆ ಪರಿಯದೆ ಮನವೆ
ಸ್ಥಿರವಾಗಿ ನೆಲೆವಿಡಿ ಶರಣಸತ್ಪಥವ ನೀ
ಗುರುಸಿದ್ಧಲಿಂಗನಂಘ್ರಿಯ ಬಿಡದೆ ||7||

ಲೋಕನುಡಿಯೇಕೆ ಮನವೆ
ಲೋಕನುಡಿಯೇಕೆ ಮನವೆ ಸಾಕು
ಸಂಸಾರವಿನ್ನೇಕೆಂದೆ ಮತ್ತೆ ||ಪ||

ಕಂಡು ಸಂಸಾರ ರಾಜ್ಯೆಂದೆಂದು ಬಿಟ್ಟು
ಕಂಡವರ ನುಡಿ ಮತ್ತೆ ಜಂಜಾಟವಲ್ಲವೆ ||1||

ಚಿದ್ರೂಪಲಿಂಗ ನಿರ್ದರದಿ ನೆಲೆಗೊಳದೆ
ಬದ್ಧವರು ಬದ್ಧರಿನ್ನಿರ್ದ ಮಾತೇಕೊ ||2||

ಹಸ್ತದ ಲಿಂಗ ಚಿತ್ತದೊಳು ನೆಲೆಗೊಂಡು
ತತ್ವವನು ತಿಳಿದು ಮನ ಸ್ವಸ್ತವಾಗಿರದೆ ||3||

ಮಾಡು ನೀ ಜಪವ ಹಾಡು ಗೀತವನು
ನಾಡ ಜಡನುಡಿ ನಿನಗೆ ಬೇಡ ಬಿಡು ಸಾಕು ||4||

ದೇಶದ ಮಾತು ಕಾಸಿನಿತು ಹುರುಳಿಲ್ಲ
ಬೇಸರದೆ ಗುರುಸಿದ್ಧಲಿಂಗವ ನೆನೆಯ ||5||

ನಡೆನುಡಿ ಶುದ್ಧವೆ
ನಡೆನುಡಿ ಶುದ್ಧವೆ ಶರಣಮತ
ನಡೆಯಿಲ್ಲದ ನುಡಿ ಹರಣ ಹತ ||ಪ||

ಬಿಟ್ಟವನಿಗೆ ಮೂತ್ರದ ಬಿಲವೆಂಬುದು
ವಿಷ್ಟಿಸುತಿಹ ಕುಳಿಯೆಂದದನು
ಬಿಟ್ಟು ಮರಳಿ ನೋಡಿದಡೆ ಮನವೆಯದು
ವಿಷ್ಟಿಸಿ ಮುಟ್ಟಿದ ತೆರನಂತೆ ||1||

ಜ್ಞಾನಿಗಳೊಳಗನುಭವ ಸಂಬಾಷಣೆ
ದ್ಯಾನಕೆ ನಯನವ ಬಾಸಣಿಸಿ
ಮಾನಿನಿಯರ ರತಿಗೆಳಸಲು ಚಿತ್ತವು
ಶ್ವಾನಗೆ ನಿದ್ರೆಯು ತಿಳಿದಂತೆ ||2||

ಪಿಂಡಾದಿಯ ಬ್ರಹ್ಮಾಂಡದ ಸೃಷ್ಟಿಯ
ಕಂಡವರೊಳಗಲ್ಲಲ್ಲುಸುರಿ
ಉಂಡುಂಡುದರವ ಹೊರೆವುತಿಹನವ
ಕಂಡುದು ಹುಸಿಯದು ಶಿವಸುಖವ ||3||

ಒಡವೆಯ ಕಂಡವ ಪೊಡವಿಯ ಜನರೊಳು
ಬಡತನವನು ತೋರುವ ತೆರದಿ
ಮೃಡನೊಳು ಚಿತ್ತವು ದೃಡ ಘಟಿಸದವ
ಗಡಣವಳಿದು ನುಡಿಯಡಗಿಹನು ||4||

ಗಣನೇಮದ ಛಂದಸ್ಸುಗಳೊಳಗಣ
ಬಣಿತೆಯ ನುಡಿಯಲ್ಲಲ್ಲಿದರ
ಬಣಿತೆಯ ದಣಿಯುಂಡ ಶಿವಸುಖಿ ಬಲ್ಲನು
ತ್ರಿಣಯನು ಗುರುಸಿದ್ಧಲಿಂಗನೊಳು ||5||

ನಂಬುಗೆಹೀನರ ಡಂಭಿನ ಭಕ್ತಿ
ನಂಬುಗೆಹೀನರ ಡಂಭಿನ ಭಕ್ತಿ
ಶಂಭು ಶಿವನ ಕೃಪೆಯಿಲ್ಲಿಲ್ಲವರಿಗೆ ||ಪ||

ನಗುರೋರಧಿಕಂ ಬಗುರೋರಧಿಕಂ
ಮಿಗೆ ಹೊಗಳುವ ಶ್ರುತಿಮತಗಳನು
ಬಗೆಗೊಳ್ಳದೆ ಗುರುವನು ನರರೆಂಬವ
ಗಘಹರಲಿಂಗದ ಪೂಜೆಯದೇಕೊ |1||

ಜೀವನ ದೃಕ್ಕಿಲಿ ಕೇವಲ ಲಿಂಗವ
ಬಾವಿಸಿ ನೋಡುತ ಶಿಲೆಯೆಂಬ
ಗಾವಿಲ ಮನುಜರು ತಾವದ ಪೂಜಿಸಿ
ಮೂವಿಧಿ ಭವದೊಳು ಬರಲಲದೇಕೊ ||2||

ಬಾವದಿ ಜಂಗಮ ಪರಶಿವನೆಂದು ಸು
ಬಾವದಿ ಪೂಜೆಯ ಮಾಡುವರು
ವಾಯಕೆ ಪೂಜಿಸಿ ಸೇವಿಸಿ ಶೇಷವ
ದೇವನವನಿವನೆಂದೆನಲೇಕೊ ||3||

ಇರಿದು ಪವಾಡದಿ ಕೆಡಹಿದ ಹೆಣನಿಗೆ
ಎರೆದು ಪಾದೋದಕದಿಂದದನು
ಮರೆದೊರಗಿದವರನೆಬ್ಬಿಸಿದಂದವ
ನರಿಯದೆ ತೀರ್ಥವ ನಂಬರದೇಕೊ ||4||

ಪಂಚಾಚಾರದ ನೆಮ್ಮುಗೆಯಿಂದಲಿ
ಪಂಚಾಕ್ಷರಿಯನು ಮನದೊಳಗೆ
ಸಂಚಲವಿಲ್ಲದೆ ಜಪಿಸುವ ಶರಣ ಪ್ರ
ಪಂಚವ ಹೊದ್ದನು ಗುರುಸಿದ್ಧಲಿಂಗ ||5||

ಕೆಟ್ಟರು ಇಷ್ಟಲಿಂಗವ ಪೂಜಿಸದೆ
ಕೆಟ್ಟರು ಗುರುಕೊಟ್ಟ ಇಷ್ಟಲಿಂಗವ ಮನ
ಮುಟ್ಟಿ ಪೂಜಿಸದನ್ಯ ದೈವಭಜನೆಯಿಂದ ||ಪ||

ಹುಟ್ಟಿಸುವವನಜ ಸೃಷ್ಟಿಯಸ್ಥಿತಿಗತಿ
ವಿಷ್ಣುವೆಂದೆಂಬರು ಜಗವೆಲ್ಲಕೆ
ಕಟ್ಟೊಡೆಯನು ಮೃಡ ಕೊಟ್ಟ ಮಣಿಹವನು
ಮುಟ್ಟಿಮಾಡುವರೆಲ್ಲ ದೈವವೆಂದು ||1||

ರೋಗರುಜೆಗಳವು ನಾಗಭೂಷಣನಾಜ್ಞೆ
ಹೋಗುತ ಬರುತಿಹವೆಂದೆನ್ನದೆ
ಲೋಗರ ದೈವಕೆ ಹರಸಿ ಹಣವ ತೆಗೆ
ದಾಗಳೆ ಕಾಲಗೆ ಗುರಿಯಾದರು ||2||

ಮಟ್ಟೆಯ ಬಡಿವ ವಿಪ್ರರ ನುಡಿಗಳ
ಮುಟ್ಟಿ ಗ್ರಹಿಸುತಿಹುದೀ ಜಗದಿ
ಶ್ರೇಷ್ಠವೆನಿಪ ಗುರುನಿಷ್ಠೆಯೊಳಿರದೆ
ಕೆಟ್ಟರಲಾ ಜಡದೇಹಿಗಳು ||3||

ಬಿಡುವೆಣ್ಣು ನಾಡೊಳು ಹಡೆದುಂಬಳಲ್ಲದೆ
ಒಡಗೊಂಡು ಪುರುಷನ ಕೈವಿಡಿದ
ಮಡದಿ ಮತ್ತೊಬ್ಬನೊಳೊಡಗೂಡುವ ತೆರ
ಮೃಡನಲ್ಲದನ್ಯದೈವ ಪೂಜಿಪರು ||4||

ಸೇವಕ ದೈವವ ದೇವರೆಂದರ್ಚಿಪ
ಗಾವಿಲ ಮನುಜರನೇನೆಂಬೆನು
ದೇವರ ದೇವಗಿನ್ನಾವ ದೈವಗಳೆಣೆ
ಪಾವನ ಗುರುಸಿದ್ಧದೇವನಿರೆ ||5||

ಕಂಡೆನಚ್ಚರಿಯ !
ಕಂಡೆನಚ್ಚರಿಯ ಭೂಮಂಡಲದೊಳಗೆಲ್ಲ
ಕೊಂಡಾಡಿ ಕರಿಗುಂದಿ ಬೇಡುವವರ ನೋಡಿ ||ಪ||

ಬೇಡುವ ಯಾಚಕ ಬರುತಿರೆ ಕಂಡವನೇನ
ಬೇಡುವನೆಂದು ಮನದೊಳಗೆ
ಹೇಡಿಗೊಳುತಲವ ಬೇಡದ ಮುನ್ನವೆ
ಬಾಡುತ ಬಳಲುತ ಸುಯಿವುದನು ||1||

ಬೇಡುವದತಿ ಕಷ್ಟ ಬೇಡಿದರಣುಮಾತ್ರ
ನೀಡದೆಯಿರಲದೆ ಕರಕಷ್ಟವೊ
ಬೇಡಿಸಿ ಬೇಡುವರಿಬ್ಬರ ದುಗುಡವ
ನೋಡಿರೆ ಕೊಡದನ ಬೇಡುವದ ||2||

ಗಡಣದ ನುಡಿಯಿಂದ ಕೊಡುವವನೆಡೆಯೊಳು
ಸಡಗರದಿಂದಿತ್ತು ಪೊಡವಿಯೊಳು
ಕೊಡುಗಯ್ಯ ನೀನೆಂದು ಒಡಲಡಿ ಮುಡಿಗಳ
ನುಡಿಗಿ ಪಲ್ಗಿರಿದೊಂದು ಬೇಡುವ ದೈನ್ಯವ ||3||

ವೇದಶ್ರುತಿಗಳಲಿ ಗಾದೆಯ ಕಥೆಗಳ
ನೋಡುತ ಬೇಡುತಲಡಿಗಡಿಗೆ
ಮೇದಿನಿಯೊಳಗಿವ ಪುಣ್ಯಾಧಿಕನೆಂದು
ಹೋದ ಠಾವಿಗೆ ಹೋಗಿ ಕಾಡುವದ ||4||

ಶುದ್ಧರು ಕೇಳುವ ಆದ್ಯರ ವಚನವ
ಬದ್ಧಭವಿಗಳವರಿದ್ದೆಡೆಯ
ಹೊದ್ದಿ ಗೀತವ ಹಾಡಿ ಬೇಡುವ ಯಾಚಕ
ಸಿದ್ಧಲಿಂಗನಿಗೆ ವಿರುದ್ಧನವ ||5||

ಇರುವರಾಶ್ರಯವೆನಗುಂಟು
ಇರುವರಾಶ್ರಯವೆನಗುಂಟೆಮರಾಜನ
ಇರಲಮ್ಮೆ ಶರಣರಂತುವನರಿದು ||ಪ||

ಮಾಯೆ ನೀನಾವ ಠಾವಿನೊಳಿಹೆ ಪೇಳೆಂದು
ಜೀವಿತೇಶ್ವರ ಬೆಸಗೊಳಲವಳು
ಭೂವಳಯದ ಜನ ಗಾವಿಲ ಮನುಜರ
ಕಾಯದೊಳನುದಿನ ನೆಲಸಿಹೆನು ||1||

ಇರುತಿಹೆ ಕಳವು ಪರದ್ರವ್ಯ ಪರನಿಂದೆ
ಪರನಾರಿಗೆಳಸಿ ಪುಸಿವವರೊಳಗೆ
ಸ್ಥಿರಪಟ್ಟ ನಿನಗೆಂದು ಸ್ಮರಹರ ಬೆಸಸಿದ

ಪರಿಯನೊರೆದಳೆಮನಿಗೆ ಮಾಯ ||2||

ಅಪ್ಪಣೆಯಾಯಿತೆನಗೆ ಕರಕಮಲದೊ
ಳೊಪ್ಪುವ ಲಿಂಗದ ನಿಷ್ಠೆಯನು
ತಪ್ಪಿ ಬಿನುಗು ಮಾರಿಮಸಣಿ ದೈವಂಗಳ
ಮಾಳೃವರೊಳಗಾನಿರುತಿಹೆನು ||3||

ಆಸಕರೊಳಗಿರುವೆನು ಪದಬೋಗ ನಿ
ರಾಸಕರೊಳಗಿರಲಂಜುವೆನು
ದೇಶದ ನಡೆನುಡಿ ವರ್ತನೆಗಳೊಳಿಹೆ
ಈಶಭಕ್ತರ ಹೆರಸಾರಿಹೆನು ||4||

ಹಮ್ಮುಬಿಮ್ಮಿನ ಬರು ಹೆಮ್ಮೆಯೊಳಾತ್ಮನ
ಬೊಮ್ಮವೆಂಬವರೊಳಗಿರುತಿಹನು
ನಿರ್ಮಳ ಲಿಂಗದ ವರ್ಮವನರಿದ ಸು
ದರ್ಮಿಗಳೊಳಗಿರಲಂಜುವೆನು ||5||

ಆವಾವ ಮುಖಮುಖದೊಳು ಬರಲೆನ್ನನು
ಹೇವವ ಮಾಡಿ ಹೀಯಾಳಿಸುವ
ಪಾವನ ಶರಣರ ಹೊದ್ದಲಮ್ಮೆನು ದೇಹ
ಮೋಹಿಗಳೊಳಗಾವಗಿರುತಿಹೆನು ||6||

ಇರಲಮ್ಮೆ ಗುರುಭಕ್ತಿ ಲಿಂಗಪೂಜ
ಕರಲ್ಲಿ ಚರಲಿಂಗ ಸೇವೆ ದಾಸೋಹಿಗಳ
ಚರಣಕೆರಗುವರೊಳಿರದಿರು ನೀನೆಂದು
ಗುರುಸಿದ್ಧ ಲಿಂಗನಪ್ಪಣೆಯೆನಗೆ ||7||

ಮಾಡಿರೋ ಮೃಡನ ಪೂಜೆಯ
ನೋಡಿ ಮಾಡಿರೋ ಮೃಡನ ಪೂಜೆಯ
ನೆರೆ ನೋಡಿ ಮಾಡಿರೋ ||ಪ||

ದಿನಮಾಸಗಳರಸಿಗೆಯಾಳಿಗೆ ಸರಿ
ಜನನಮರಣಸ್ಥಿತಿ ಸರಿಯರಸ
ಅನುವರಿದನುದಿನ ಓಲೈಸುವದಿ
ದನರಿದು ಮಾಡಿರೊ ಲಿಂಗಪೂಜೆಯ ||1||

ಮಂಡಲಪತಿಯಾಗಿ ದಂಡಿಗೆಯೊಳು ನೆರೆ
ಮಂಡಿಸಿ ಮಲೆದೊಲೆವುತಿಹನ
ಡೆಂಡಣಿಸುತ್ತಡಿಯಿಡುತಂ ಹೊರುವದ
ಕಂಡು ಪೂಜಿಸಿ ಲಿಂಗದೇವನ ||2||

ತುರಗವನೇರಿಹ ರಾಜಗೆ ಚವರವ
ಭರದಿಂದ ಡಾಳಿಸಿ ಛತ್ರವನು
ಉರಿವ ಬೇಸಿಗೆಯೊಳ್ವಿಡಿದಡಿಯಿಡುತಿಹು
ದೆರಡರ ಸುಕೃತ ದುಃಕೃತಗಳ ||3||

ಸವಿ ರುಚಿಗಳನರಿಯದರಾರಿನ್ನೀ
ಭುವನದೊಳ್ ಜನಿಸಿದ ನರರೊಳು
ಶಿವಶರಣರ್ಗತಿ ಮೋಹದೊಳುಣಿಸಿದ
ಸವಿದ ರುಚಿಯನೀಯದವರ್ಗಿಲ್ಲ ||4||

ವಸ್ತ್ರಾಭರಣ ಸುಪುತ್ರ ವಸ್ತುಗಳೆಲ್ಲ
ಉತ್ತಮ ಲಾವಣ್ಯದ ಸ್ತ್ರೀಯ
ಮೊತ್ತದ ಸಿರಿಸಂಪತ್ತಿನ ಸುಖವಹು
ದರ್ಚಿಸಿ ಗುರುಸಿದ್ದಲಿಂಗವ ||5||

ನಿನಗಿನ್ನಂತಕ ಭಯವಿಲ್ಲ
ಗುಣವಿಲ್ಲದವಗುಣಿಗಳ ಗುಣವದು
ಘಣಿವಿಷಕೆಣೆಯೆಂದರಿಯವರೊಡನೆ ||ಪ||

ಮೋಸಕೆ ಎಚ್ಚರು ರೋಷಿಗೆ ಶಾಂತಿಯು
ವೇಶಿಗೆ ಸಜ್ಜನತನವುಂಟೆ
ದೂಷಕನಾದವ ಹೇಸನು ನರಕಕೆ
ವಿೂಸಲ ಬಲ್ಲುದೆಯಾ ಶುನಿಯು ||1||

ಅರ್ಕನನುದಯವ ಕುಕ್ಕುಟನಲ್ಲದೆ
ಕೊಕ್ಕರನದು ಬಲ್ಲುದೆ ಹೇಳ
ಕರ್ಕಶ ಗೆಲದತಿ ಸೊಕ್ಕುವ ಬಲ್ಲನೆ
ಮುಕ್ಕಣ್ಣನ ಶರಣರ ನಿಲವ ||2||

ಗಿಡಿಬಿಡಿ ತಂಬಟ ಹೊಡೆದಡೆ ಶಬ್ದವು
ಬಿಡಲವು ನಾದಗಳುಡುಗುವವು
ಬಿಡುನುಡಿ ಬಿಂಕದ ನುಡಿ ನಾಲಗೆಯೊಳ
ಗೆಡವಿಡವಿಲ್ಲವು ದೂಷಕಗೆ ||3||

ವೃಷ್ಟಿಪ ಪೃಷ್ಟವು ಕಟ್ಟಿಗೆ ನಿಲುವದೆ
ಕೆಟ್ಟೊಬ್ಬರ ನಿಂದಿಪ ಜಿಹ್ವೆ
ಪೃಷ್ಟಕೆ ಸರಿಯದು ಕಟ್ಟಳೆಗೆಯಿದದು
ಭ್ರಷ್ಟರ ನುಡಿ ತಟ್ಟವು ಶಿವನ ||4||

ಬ್ರಾಂತರ ನುಡಿಗಳನಂತಿಂತೆನ್ನದೆ
ಸಂತತ ಗುರುಸಿದ್ಧೇಶ್ವರನ
ಚಿಂತಿಸಿ ನೆನೆದು ಸಮರ್ಚಿಸು ನಿನಗಿ
ನ್ನಂತಕ ಭಯವಿಲ್ಲೆಲೆ ಮರುಳೆ ||5||

ತಾಮಸಗಳಿಲ್ಲ ಭಕ್ತರ್ಗೆ
ತಾಮಸಗಳಿಲ್ಲ ಭಕ್ತರ್ಗೆಯಣುಮಾತ್ರ
ಪ್ರೇಮದಿಂ ನೆನೆವವರೊಳಿಹ ಬಾಳನೇತ್ರ ||ಪ||

ಅಂಬರಾಭರಣವನು ಲೇಪನ ದರಿಸಿ
ಕುಂಭಿನಿಯೊಳತಿಚೆಲ್ವ ಪ್ರೌಡ ತಾನೆನಿಸಿ
ಅಂಬುಜಾನನೆಯರರ್ತಿಯನು ಮಿಗೆ ಸಲಿಸಿ
ನಂಬಿ ಶಿವಗರ್ಪಿಸಿದ ಸುಖದೊಳೊಡವೆರಸಿ ||1||

ದನದಾನ್ಯದೊಳಗೆ ಸಂಪನ್ನ ಸಿರಿಯಾಳ
ವನಿತೆಚಂಗಳೆಗೂರ್ವ ಸುತನು ಚಿಲ್ಲಾಳ
ಅನಿತು ಶಿಶುವನು ಬೇಡೆ ಶಿವ ಹಸಿವ ತಾಳ
ಎನುತ ಹರಗರ್ಪಿಸಿದರಿನ್ನಾರು ಹೇಳ ||2||

ಅತಿಚೆಲ್ವ ಪಟ್ಟದರಸಿಯ ಬಂದು ಬೇಡೆ
ಸಿತಗಳಗೆ ಬಲ್ಲಾಳನಿತ್ತನವ ಕೂಡೆ
ಸುತನಾಗಿ ಮೊಲೆಯುಣ್ಣಲಾ ಶಿಶುವಿಗೂಡೆ
ಜಿತಕಾಮ ಗುರುಸಿದ್ಧಲಿಂಗ ಕೊಂಡಾಡೆ ||3||

ಏವೆನಯ್ಯ ಕಾಯಜೀವಬಾವದಿ
ಏವೆನಯ್ಯ ಕಾಯಜೀವಬಾವದಿಂದಲಿ ಶಿವನ
ಸೇವೆಗಲಸಿ ಪ್ರಯ ದಿನ ವೃಥಾಯ ಹೋಯಿತು | ಎನಗೆ||ಪ||

ತಾಯ ಗರ್ಭದೊಳಗೆ ಕೀವು ಜಲಮಲಂಗಳ | ಕ್ರಿಮಿಯ
ಹೇಹದೊಳಗೆ ಬಲಿದು ಜನನವಾಗಿ ಬಾಲ್ಯದಿ
ಹಾವು ಚೇಳು ಹವಿಯ ಹೊಯ್ವ ಗೋವ ತಪ್ಪಿಸಿ | ದೇಹ
ಮೋಹದಿಂದ ಬೆಳೆದು ಹೊಳೆದು ತೀವಿತವ್ವ | ಎನಗೆ ||1||

ಹೇಮಭೂಮಿಕಾಮಿನಿಯರ ಸ್ತೋಮ ಸಿರಿಯೊಳು | ಹರನ
ನಾಮವನ್ನು ಪ್ರೇಮದಿಂದ ಸ್ಮರಿಸಲೊಲ್ಲದೆ
ಕಾಮಬಾಣ ತಾಗಿ ಹಲವು ತಾಮಸಂಗಳಿಂ | ಬಿಡದೆ
ಸೋಮದರನ ನೆನೆಯದ ಮನಸ್ಸು ಮಾರಿಯು | ಎನಗೆ ||2||

ಹೀನಸತ್ವಗೆಟ್ಟು ತನು ವಿನಾಶವಾಗ | ಲಾಗ
ದಾನದರ್ಮಶ್ರದ್ಧೆ ಸನ್ಮಾನದಿಂದಲಿ
ಜ್ಞಾನಕ್ರೀಯೊಳಿನಿತು ಲಿಂಗನಿಷ್ಠೆಯೊಳ್ನೆರೆ | ನಿಮ್ಮ
ದ್ಯಾನವೊಂದ ಕರುಣಿಸಭವ ಸಿದ್ಧಲಿಂಗ | ಎನಗೆ ||3||

ಕೆಡದಿರು ಭ್ರಮಿಸಿ ಪರಸತಿಯರ
ನೋಡಿದಡೆ ನೋಡು ಮಾತಾಡು ತಾಯಿಗಳೆಂದು
ನೋಡಿ ಕೆಡದಿರು ಭ್ರಮಿಸಿ ಪರಸತಿಯರ ||ಪ||

ಹಸಿದಡೆಕ್ಕೆಯ ಕಾಯಿ ನಸುಗುನ್ನಿ ತುರುಚೆಯನು
ತುಷವ ಮೆಲುವರೆ ತೃಷೆಗಳಡಸಿತೆಂದು
ವಿಷವ ಕುಡಿದರೆ ವ್ಯಸನ ವಿಷಯ ತೋರಿದಡೆ ಪ
ರಸತಿಯ ರತಿಗೆಳಸುವರೆ ಮರುಳು ಮನವೆ ||1||

ದಾರಿಯೊಳು ಭಯವೆಂದು ಚೋರನೊಳು ಹೊಗುವರೆ
ಗೇರಹರಳಿನ ರಸವ ಲೇಪಿಸುವರೆ
ಹೇರಡವಿಯೊಳು ಕ್ರೂರಮೃಗವಿರಲು ತುರಗವೆಂ
ದೇರುವಂಥದು ಪರರ ನಾರಿ ಮನವೆ ||2||

ಹಾವಿನೊಡತಣ ಸಂಗವಾವಾಗ ವಿಘ್ನವದು
ಪಾವಕನ ಸೋಂಕಿದವ ಬೇವನೋವ
ಭವದೊಳು ಭ್ರಮಿಸಿ ಪರಯುವತಿಯರಿಗಳುಪಿದರ
ಮೂವಿಧಿಯ ನೋಡಿನ್ನು ಬಯಸುವರೆ ಮನವೆ ||3||

ಭೀತಿಯಿಲ್ಲದೆ ಮುನಿಯ ಸತಿಗಾಗಿ ಇಂದ್ರನತಿ
ಕಾತುರವ ಮಾಡಿ ಮೈತೂತಾದನು
ಸೀತೆಗಳುಪಿಯೆ ಕೆಟ್ಟ ರಾವಳನು ದ್ರೌಪತಿಗೆ
ಸೋತು ಹತನಾದ ಕೀಚಕ ನೀಚಮನವೆ ||4||

ಕೆಟ್ಟವರ ದೃಷ್ಟವದನೆಷ್ಟು ಹೇಳಿದಡೇನು
ಕಷ್ಟಮನ ಮಾರಿಯಾಗಿದೆ ಎನ್ನಯ
ಕಟ್ಟಿನೊಳು ನಿಲ್ಲು ದುಃಕೃಷ್ಠವಾಗಿದೆ ಇದನು
ಸುಟ್ಟು ಸಲಹೆನ್ನ ಗುರುಸಿದ್ಧಲಿಂಗ ||5||

ನೋಡುತಿಹುದತಿ ಲೇಸು
ನೋಡುತಿಹುದತಿ ಲೇಸು ಬೇಡಬೇಕೆನಬೇಡ
ನಾಡ ನಡೆವಳಿಯ ಕಂಡು ಜ್ಞಾನಿಗಳು ||ಪ||

ಎಡರುಬಂದರೆ ಹರಸಿ ಒಡೆಯರೆಂದುಣಲಿಕ್ಕಿ
ಎಡರು ಪರಿಹರವಾಗಲಾ ಒಡೆಯರ
ಗಡಣದಿಂದತಿ ಸಿರಿಯೊಳೆಡಹಿ ಕಾಣದ ಜಡರ
ನಡೆವಳಿಯ ನೋಡಿ ಕಂಡು ಜ್ಞಾನಿಗಳು ||1||

ಹಬ್ಬಸ್ಥಿತಿಗಳ ಕುರಿತು ಹರಸಿ ಸೋಮಾರದೊಳ
ಗೊಚ್ಬೊಡೆಯರನು ಕರೆದು ತಂದು ನೀಡಿ
ಸದ್ಭಕ್ತರಾವೆಂದು ಉಬ್ಬಿ ಭಕ್ತರ ಹಳಿವ
ದುರ್ಭವಿಗಳನು ಕಂಡು ಜ್ಞಾನಿಗಳು ||2||

ಗುರು ಕೊಟ್ಟ ಲಿಂಗವದು ಕಿರಿದೆಂದು ದೇಗುಲದ
ಹಿರಿದುದ್ದ ತೋರವಾಗಿಹ ಲಿಂಗಕೆ
ಹರಿದು ಭಕ್ತಿಯ ಮಾಡಿ ಶರಣರನುಬಾವಕಿನ್ನು
ಹಿರಿದು ಹೋರುವರ ಕಂಡು ಜ್ಞಾನಿಗಳು ||3||

ಭಕ್ತರೊಡೆಯರ ನಡುವೆ ಕರ್ತುತೇಜವ ಹೊತ್ತು
ಹತ್ತಿರೊಳು ಸಹಪಂಕ್ತಿಯೊಳಗನ್ನವ
ಮತ್ತೊಂದು ಪರಿಪಾಕ ಪಂಕ್ತಿ ಬೇದದೊಳುಂಬ
ವರ್ತನೆಯ ನೋಡಿ ಕಂಡೂ ಜ್ಞಾನಿಗಳು ||4||

ಇದ್ದ ಗುಣವಾಡಲಿವರುದ್ರೇಕಿಗಳು ಇವರ
ಸುದ್ದಿ ನಮಗೇಕೆಂದು ಹೊದ್ದದವರ
ತಿದ್ದಿ ತಿಳುಹಲ್ಬೇಡ ಗುರುಸಿದ್ಧಲಿಂಗನೊಳ್
ಶುದ್ಧ ತಾವಾಗಿರುತಿಹಜ್ಞಾನಿಗಳು ||5||

ಮಾಯೆ ಬೇರಿಲ್ಲ
ಮಾಯೆ ಬೇರಿಲ್ಲ ಮಾಯೆ ಬೇರಿಲ್ಲ ಮಾಯೆ ಬೇರಿಲ್ಲವೊ
ಕಾಯದಿಚ್ಛೆಗೆ ಪರಿದಾಯಸಗೊಳಿಸುವ ||ಪ||

ನಿಂದಲ್ಲಿ ನಿಲಲೀಯದೆ ಸಂಸಾರ
ದಂದುಗ ದಾಳಿಯೊಳು
ಮುಂದಗೆಡಿಸಿ ನಿಮ್ಮ ನೆನೆಯದ
ಬೆಂದ ಕುಹಕ ಮನವೆ ಮಾಯೆ ||1||

ಇಲ್ಲದುದನೆ ಬಯಸಿ ಬೋಗವ
ತಲ್ಲಣಗೊಳಿಸಿ ಮನ
ನಿಲ್ಲದು ಸುಮನದೊಳು ಲಿಂಗದಿ
ಕುಲ್ಲಕುಹಕ ಮನವೆ ಮಾಯೆ ||2||

ನಿತ್ಯವನೆ ಮರಸಿ ಕೆಡುವ
ಅನಿತ್ಯವ ನೆಲೆವಿಡಿಸಿ
ಸತ್ತು ಹುಟ್ಟುವ ಭವಕೆ ಬರಿಸುವ
ಮೃತ್ಯು ಕುಹಕ ಮನವೆ ಮಾಯೆ ||3||

ವ್ಯಾಪಾರಗಳಳಿದು ಮನದೊಳು
ಕಾಪಾಲಿಯ ನೆನಹು
ವ್ಯಾಪಿಸಿ ಹೃದಯದೊಳು ನಿಲ್ಲದ
ಪಾಪಿ ಕುಹಕ ಮನವೆ ಮಾಯೆ ||4||

ಯಮನಿಗೆ ಹಿತಮಾಯೆ ಮಾಯೆಗೆ
ಯಮನತಿ ಹಿತ ತಾನೆ
ನಮೋನಮೋ ಗುರುಸಿದ್ಧಲಿಂಗವೆ
ಕುಮನವ ಕೆಡಿಸೆನ್ನ ||5||

ಸಲ್ಲದು ಸಹಬೋಜನವೆಲ್ಲರಿಗೆ
ಸಲ್ಲದು ಸಹಬೋಜನವೆಲ್ಲರಿಗದು
ತಲ್ಲೀಯದಿ ಮನ ನಿಲ್ಲದೆ ಲಿಂಗದಿ ||ಪ||

ಇಷ್ಟದೊಳಗರ್ಪಿತವಾಗಿಹ ಷಡುರುಚಿ
ಮುಟ್ಟಲು ಜಿಹ್ವೆ ಪ್ರಸಾದವದು
ಶ್ರೇಷ್ಠವೆಂದರಿದೊಂದು ಬಂದ ಪದಾರ್ಥವ
ಕೊಟ್ಟು ಸೇವಿಪ ಗುರುನಿಷ್ಠರಿಗಲ್ಲದೆ ||1||

ದಾಸಿವೇಶಿಯ ಸಂಗಕೆ ಎಳಸುವ ಭವಿ
ಯಾಶ್ರಯದೊಳಗನ್ನವ ಸವಿವ
ದೋಷಿಗೆ ಲಿಂಗದೊಡನೆ ಸಹಬೋಜನ
ಹೇಸಿಕೆಯವನೊಳಗೀಶನಿರ ||2||

ಹಸ್ತದೊಳಗೆ ಪಿಡಿದಿಹ ಶಿವಲಿಂಗಕೆ
ತುತ್ತನು ಸವಿದರ್ಪಿಸುವದದು
ಸತ್ಯಗೆ ಸನ್ಮಾರ್ಗದಿ ಗುರು ಪೇಳಿದ
ವರ್ತನೆ ಶುದ್ಧದಿ ನಡೆವಂಗಲ್ಲದೆ ||3||

ಪರದನ ಪರಸತಿಗಳಪುವ ಹಿಂಸಕ
ಪರನಿಂದೆಯು ಪರದೈವಗಳ
ಹರುಷದೊಳರ್ಚಿಸಿ ವರಗಳ ಬೇಡುವ
ಮರುಳರು ಹರನೊಡನುಂಬುದದು ||4||

ನಿಷ್ಠೆ ಬಲಿದು ಸದ್ಭಕ್ತರ ಹೃದಯವ
ಬಿಟ್ಟಗಲದೆ ಮೃಡ ನೆಲೆಸಿಹುದು
ನೆಟ್ಟನೆ ಮರೆದಾ ಗುರುಸಿದ್ಧಲಿಂಗನೊಳು
ದೃಷ್ಟಿ ನಟ್ಟ ಸಂತೃಷ್ಟಂಗಲ್ಲದೆ ||5||

ಶರಣಪದ್ಧತಿ
ಶರಣಪದ್ಧತಿಗಿನ್ನು ಸರಿಮಿಗಿಲುಂಟೆ
ಪರತತ್ವಪರಿಣಾಮಿಗೆ ದುಃಖವುಂಟೆ ||ಪ||

ಸದಮಲಜ್ಞಾನಿಗೆ ಕದನ ಕರ್ಕಶವುಂಟೆ
ಹೃದಯಶುದ್ಧಗೆ ಚಿತ್ತ ಕದಡಿದುದುಂಟೆ
ಮೃದುವಚನಗಳಿಂದಧಿಕ ಹಿತವುಂಟೆ
ಹದುಳಿಗನೊಳು ಸದಮದವೆಂಬುದುಂಟೆ ||1||

ವಾಕುದುರ್ಜನದಿಂದಧಿಕ ಹಗೆಯುಂಟೆ
ಸಾಕೆಂದ ಬಳಿಕ ಮತ್ತೇಕಾಂತವುಂಟೆ
ಬೇಕು ಬೇಡೆನ್ನದವಗೆ ಶೋಕಮೋಹಗಳುಂಟೆ
ಲೋಕಾರ್ಥ ಪರಮಾರ್ಥಕೇಕಾರ್ಥವುಂಟೆ ||2||

ಸಟೆಹೂಸಕನ ಭಕ್ತಿ ದಿಟವೆನಲುಂಟೆ
ಕಟಕಿಗೆ ಶಿವದ್ಯಾನ ಘಟಿಸಿದುದುಂಟೆ
ಅಟಮಟ ಬಿಡದೆ ದೂರ್ಜಟಿಯ ದ್ಯಾನವದುಂಟೆ
ಕುಟಿಲಂಗೆ ನಿಟಿಲಾಕ್ಷ ಕೃಪೆಯಾದುದುಂಟೆ ||3||

ಆಸೆಯುಳ್ಳವಗೆ ನಿರಾಸಕತನವುಂಟೆ
ಬೀಸುವ ಮಾರುತಗೊಂದಾಶ್ರಯವುಂಟೆ
ಈಶನ ಶರಣರ್ಗೆ ರೋಷಪಾಶಗಳುಂಟೆ
ಭಾಷೆಹೀನನ ಸಂಗ ಲೇಸಾದುದುಂಟೆ ||4||

ಅರುಣನುದಯಕೆಯಿನ್ನು ಹರಿಯದ ಮಂಜುಂಟೆ
ತರುಣಿಯ ರತಿಯಿಚ್ಛೆ ವಿರತನಿಗುಂಟೆ
ಹರಭಕ್ತಜ್ಞಾನಿಗಳಿಗೆ ಪರಿಭವವುಂಟೆ
ಗುರುಸಿದ್ಧಲಿಂಗನಿಂದಧಿಕರಿನ್ನುಂಟೆ ||5||

ದೃಷ್ಟವಿದ ನೋಡಿಕೊಳ್ಳಿ
ದೃಷ್ಟವಿದ ನೋಡಿಕೊಳ್ಳಿ ಶಿವಲಿಂಗ
ನಿಷ್ಠೆಯೊಳಗಿಹರೆಲ್ಲರು ತಿಳಿದು ||ಪ||

ವೇಶಿಯೆಂದರಿಯದವಳು
ನಿಂದಿರ್ದ ವಾಸಕೈತಂದೊಬ್ಬನು ಬಂದು
ಆ ಸಮಯ ಪತಿಯ ಹೆಸರ
ಬೆಸಗೊಳಲು ಹಾಸ್ಯವಾಯಿತೆಲ್ಲಕೆ ಜಗದಿ ||1||

ಲಿಂಗವಂಗದೊಳಿಲ್ಲದ
ಬರಿ ಕಾಯರಿಂಗಲ್ಲದನ್ಯ ದೈವ ಶಿವನ
ಅಂಗದೊಳು ಹೆರೆಹಿಂಗದೆ
ದರಿಸಿರ್ಪವಂಗನ್ಯ ದೈವವುಂಟೆ ಬಳಿಕ ||2||

ಕೈವಿಡಿದ ಸತಿ ತನ್ನಯ
ಪತಿಯಿರಲು ದುರ್ವಿಕಾರದೊಳೊರ್ವನ
ಬಯಸಿ ಕೈಸನ್ನೆ ಮಾಡಿ ಕರೆಯೆ
ಪತಿ ಕಂಡು ಒಯ್ಯ ನಿರಿ ಯದೆ ಮಾಣ್ಬನೆಯವಳ ||3||

ಪುರುಷರೂಪೆಲ್ಲವೊಂದೆಯೆಂದು
ಪರಪುರುಷರೊಡಗೂಡಬಹುದೆ ಕರಕೆ
ಗುರುವಿತ್ತ ಲಿಂಗಕಿನ್ನು
ಪರದೈವ ಸರಿಯೆಂದು ಭಜಿಸಬಹುದೆಯದನು ||4||

ಪತಿವ್ರತಾಂಗನೆಯಂತೆ ಈ
ಶಿವಲಿಂಗ ವ್ರತವನಾಚರಿಪ ಭಕ್ತ
ಮರಳಿ ಅತಿಶಯವ ಕಂಡನ್ಯಕೆ
ನಮಿಸನವ ಸ್ತುತಿಸಿ ಗುರುಸಿದ್ಧಲಿಂಗನಿರಲು ||5||

ಶರಣುಹೊಕ್ಕರ ರಕ್ಷಿಪ
ಜ್ಞಾನಿಗಳಿಗಿದಿರ ಹೋರಟೆಯಿಲ್ಲಿ ಸಲೆ ಶಿವ
ದ್ಯಾನವಲ್ಲದೆ ಪೆರತನರಿಯರವರು ||ಪ||

ನಿರುಪಾಧಿಕರು ಭೋಗಕೆಳಸಿ ಬಯಸುವರಲ್ಲ
ದರಣಿಯೊಳು ಹರನನರ್ಚಿಪ ಭಕ್ತರು
ಇರುತಿರ್ಪ ಗೃಹದೊಳಗೆ ಭಕ್ತಿ ಭಿಕ್ಷವನುಂಡ
ಪರಮಪ್ರಸಾದದೊಳು ತೃಪ್ತರಾದ ||1||

ಶಯನಕ್ಕೆ ಗವಿದೇಗುಲಗಳುಂಟು ಮಾತಿಂಗೆ
ಶಿವಮಂತ್ರವುಂಟು ತತ್ಸಂಗಕಿನ್ನು
ಅವಿರಳಧ್ಯಾತ್ಮಲಿಂಗದ ಸಂಗವುಂಟೆಂದುದು
ವಿವರಿಸಿದ ಜ್ಞಾನಬೋಧೆಯೊಳಿರುತಿಹರು ||2||

ಭಕ್ತಿಯಿಂ ಬಂದಡೊಂದಂಬರವು ಶೀತಕ್ಕೆ
ಮತ್ರ್ಯದೊಳು ಶರಣುಹೊಕ್ಕರ ರಕ್ಷಿಪ
ಕರ್ತಗುರುಸಿದ್ಧ ಲಿಂಗವ ಸ್ಮರಿಸಿ ತಾಮಸವ
ನೊತ್ತರಿಸಿ ವಿರತಿಯೊಳು ಸ್ವಸ್ಥರಾದ ||3||

ಶಿವನ ನೆನೆಯಿರೋ
ಶಿವನ ನೆನೆಯಿರೊ ಬಿಡದೆ
ಶಿವನ ನೆನೆಯಿರೋ
ಕವಿವ ಕಾರ್ಮುಗಿಲಿನಂತೆ
ಜವನ ದಾಳಿ ಬರುತಲಿದೆಕೊ ||ಪ||

ಗುಡುಗುಡೆಂದು ಗರ್ಜಿಸುತ್ತ
ಸಿಡಿಲಿನಾರ್ಭಟೆಯ ಭಟರು
ಪಿಡಿದ ಖಡ್ಗದಿಂದ ಹೊಡೆದು
ಕೆಡಹುತಿರ್ಪರರಿ ಚಲರಿತ ? ||1||

ಕಡುಗಲಿಗಳು ಯಮನ ಭಟರು
ಕರಿಯ ಮೊರಡಿಯಂತೆ ಬಂದು
ಬಡವರೊಡೆಯ ರಾಜರೆಂಬ ಹಿರಿದು
ಕಿರಿದು ನೋಡರವರು ||2||

ಪ್ರಾಯದೊಳಗೆ ಸಾಯೆನೆಂ
ಬುಪಾಯ ನಿಮ್ಮ ದಾಯವರಿದು
ಪ್ರಯ ಮುಪ್ಪು ಬಾಲರೆನ್ನದೆಳೆವ
ರಾಯು ತೀರಲವರು ||3||

ಸತ್ತಬಳಿಕ ಜೀವತಾನೆ
ಎತ್ತ ಬಲ್ಲುದೆಂದು ನುಡಿವ
ಕತ್ತೆ ಮನುಜರಾಡಲದನು
ತಥ್ಯವೆಂಬುದುಚಿತವಲ್ಲ ||4||

ಮಾತೆಪಿತರು ಸತಿಯು ಸುತರು
ಪ್ರೀತಿಯಿಂದ ಕಾಯ್ವರಸುವ
ಪ್ರೇತಪತಿಯದೂತರೆಳೆವ
ರೀತಿ ಕಾಣಬಾರದವಗೆ ||5||

ಬೆಕ್ಕು ಬಂದು ಇಲಿಯ ಹಿಡಿವ
ಲೆಕ್ಕದಂತೆ ಯಮನ ಭಟರು
ಚಕ್ಕನೆತ್ತಿಯಸುವ ಹುರಿದು
ಮುಕ್ಕುತಿರ್ಪರಣ್ಣಗಳಿರ ||6||

ಗಿಡುಗನಡರಿ ಹಿಡಿದ ಪಕ್ಷಿ
ಬಿಡಿಸಿಕೊಂಬುದೇನೊ ನಿಮ್ಮ
ಒಡಲನುಳುಹಿ ಹರಣವನ್ನು
ಬಿಡದೆ ಪಿಡಿವ ಯಮನ ಭಟರು ||7||

ಎರಳೆಯಿರ್ದ ಠಾವಿಗೆಯಿದಿ
ಹರಿದು ವ್ಯಾಘ್ರನಡರುವಂತೆ
ದುರುಳ ಕಾಲನಾಳ್ಗಳಿಂದ
ಪಿರಿದು ದುಃಖಬಡದೆ ನೀವು ||8||

ಸ್ಥಿರವಿದಲ್ಲ ದೇಹ ನಿಮ್ಮ
ಹರಣದೊಡೆಯ ಸಿದ್ಧಲಿಂಗ
ಸ್ಮರಣೆಯಿಂದ ಜಯಿಸಿ ಕಾಲ
ಭಯವ ನೀಗಿ ಬೇಗಬೇಗ ||9||

ನೆನವ ಭಕ್ತರ ಹೃದಯದೊಳಗೆ
ನಟಿಸಿ ನಟನಾಟಕದ ಪರಿಯ ನೋಡುತ
ನಿಟಲಾಕ್ಷ ಜಗವ ಹುಟ್ಟಿಸಿ ವಿನೋದಿಸುತ್ತ ||ಪ||

ಜವ್ವನದ ಹೆಣ್ಣ ಯವ್ವನ ವಿೂರಿದವಗೆ
ಕೈವಿಡಿಸೆ ತಾಯಿತಂದೆಯ ಬಯ್ದು ಹಣೆಗೆ
ಕೈವೆರಳನಿಟ್ಟು ವಿದಿಬರಹವಿಂತೆನಗೆ
ಅಯ್ಯೋ ಎಂದವಳು ಸುಯಿವಳು ಮನಸಿನೊಳಗೆ ||1||

ತುಂಬಿಜವ್ವನದ ಸೊಬಗಿನ ಚೆಲ್ವೆ ತಾನು
ಅಂಬರಾಭರಣ ತೊಟ್ಟುಟ್ಟಡೇನು
ಲಂಬತನು ದಿನಹೋದ ಪುರುಷ ದೊರಕಿದನು
ಎಂಬ ಹೆಣ್ಣಿನ ಮನಸಿಗಿಂಬಿಲ್ಲವವನು ||2||

ಪುರುಷನಿರವನು ಕಂಡು ಶಿರವನಲುಗುತ್ತ
ನರೆತೆರೆಯ ನೋಡಿ ನಗುತಿಹಳವನ ಚಿತ್ತ
ಹರುಷದಿಂದವಳನಡಿಗಡಿಗೆ ನೋಡುತ್ತ
ಇರೆ ನಾರಿಪುರುಷರಿಬ್ಬರಿಗಸ್ತವ್ಯಸ್ತ ||3||

ಗುಣವುಳ್ಳ ಸತಿಗೆ ಕೈವಿಡಿದವನೆ ಪ್ರಾಣ
ಗುಣಹೀನಸತಿ ಮುಪ್ಪನಣಕಿಸದೆ ಮಾಣ
ಹಣದಾಸೆಗಾಗಿ ಮಾರುವದು ಬಲುಕ್ಷೀಣ
ಎಣೆಯರಿದು ಹೆಣ್ಣುಗಂಡಿಗೆ ಕೊಡುವ ಜಾಣ ||4||

ಕೆಲರನಗಿಸುತ ಕೆಲರನಳಿಸಿ ಜಗದೊಳಗೆ
ಬಲು ವಿನೋದವ ಮಾಡಿ ನೋಡುತಡಿಗಡಿಗೆ
ಸಲೆ ತನ್ನ ನೆನೆವ ಭಕ್ತರ ಹೃದಯದೊಳಗೆ
ನೆಲೆಸಿ ಗುರುಸಿದ್ಧಲಿಂಗನ ಲೀಲೆ ಹೀಗೆ ||5||

ಪರಬ್ರಹ್ಮವೆ ಸಾಕಾರ ಶರಣ
ಗಳಹದಿರೆಲೋ ಶಿವಶರಣರೆಂದರಿಯದೆ
ಮರುಳಮಾನವ ಮೈಮರೆದೊಂದನು ||ಪ||

ಮಾಯಾಕೋಳಾಹಳನೆಂಬ ಬಿರಿದು ಪ್ರಭು
ರಾಯನಿರ್ಮಾಯನೆಂದರಿಯದೆ
ಮಾಯೆಗೆ ಮನಸೋತನೆಂಬ ದ್ರೋಹಿಯ
ಬಾಯತಿವಿದಮೇದ್ಯ ವೃಷ್ಟಿಪ ಕುಳಿಯು ||1||

ಜಗವ ರಕ್ಷಿಸಬಂದನಗಣಿತ ಮಹಿಮಗೆ
ವಿಗಡ ಮಾಯೆಯ ಸಂಗವುಂಟೆಂದೆಂಬ
ಬಗುಳುಗುನ್ನಿಯೆ ಕೇಳು ಜಗಳಬೇಡೀನುಡಿ
ಸೊಗಸಲ್ಲ ಶರಣಸಂಕುಳವೆಲ್ಲಕೆ ||2||

ರೂಪನಿರೂಪಲ್ಲದ ಪರಬ್ರಹ್ಮವೆ ಸಾಕಾರ
ಶರಣನೆಂದರಿಯದ ಜಡರು
ಪಾಪಿಗಳಿಗೆ ಪುಣ್ಯಲೋಪವೆಂದುಸುರ್ದ ಚಿ
ದ್ರೂಪ ಗುರುಸಿದ್ಧಲಿಂಗೇಶ್ವರನು ||3||

ಶಿವಭಕ್ತರ್ಗೆ ಸಲ್ಲದು ನಿಂದೆ
ಸಮಯಾದಿ ಗಳಿಗದಲ್ಲದೆ ನಿಂದೆಯೆಂಬುದದು
ಅಮಮ ಶಿವಭಕ್ತರ್ಗೆ ಸಲ್ಲದೆಲವೊ ||ಪ||

ಗುರುಕರುಣಿಸಿದ ಲಿಂಗ ಕರದೊಳಿಹುದದರ
ಹರಣ ಚರಲಿಂಗವೆಂಬುದನರಿಯದೆ
ಬರಿದೆ ಬಾಷ್ಕಳಗೆಡೆದು ನಿಂದಿಸುತ್ತಿರೆ ನರಕ
ದರೆ ಚಂದ್ರರುಳ್ಳನಕ ಸವೆಯದೆಲವೊ ||1||

ಶೀಲವ್ರತನಿಷ್ಠೆ ಬಲಿದೀ ಲಿಂಗಸಂಗದೊಳು
ಲೋಲುಪ್ತನಾಗೆಂದು ಗುರು ಪೇಳಿದ
ಮೂಲಮಂತ್ರವ ಮರೆದು ನಾಲಗೆಯೊಳತಿ
ಗಳಹಿ ಕಾಲಂಗೆ ಗುರಿಯಾಗಿ ಕೆಡದಿರಲೊ ||2||

ಎಂಜಲುಂಡವ ಹಳೆಯನೆಂದಂಜಿ ತನಗೊಡೆಯ
ನೆಂಬ ವಿಶ್ವಾಸಬಾವವ ಬಲಿದಿಹ
ನಂಜುಗೊರಳಭವ ಜಂಗಮದ ಪ್ರಸಾದವನು
ಭುಂಜಿಸಿದ ಬಳಿಕಂಜದೇಕುಲಿವೆಯೊ ||3||

ಒಂದೊಂದರೊಳು ತ್ರಿವಿಧ ದ್ವಂದ್ವವಾಗಿರುತರ್ಪ
ಸಂದಿಲ್ಲದಿಹ ಶಿವನ ಸಾಕಾರವ
ಇಂದುಧರನೆಂದು ವಂದಿಸಿ ಹಿಂದೆ ನಿಂದಿಸುವ
ಮಂದಮತಿ ಹಂದಿಯೊಡಲೊಳು ಜನಿಸುವ ||4||

ಆಚಾರವನು ಜರೆದು ನೀಚ ನೀನಾಗೆಂದು
ಸೂಚಿಸಿದುದುಂಟೆ ಗುರು ದುರ್ಬೋದೆಯ
ಪೇಚದಿರು ಪೇಚದಿರ್ದಡೆ ಮುಕ್ತಿಯಿಲ್ಲಣು ಮಾತ್ರ
ಗೋಚರಿಸ ಗುರುಸಿದ್ಧಲಿಂಗನೆಲವೊ ||5||

ಕರುಬದಿರು ಬಾಳುವರ ನೋಡಿ
ಕರುಬದಿರು ಬಾಳುವರ ನೋಡಿದೆ ಬರಿ
ಕರುಬಿ ಮರುಗಿದಡಿಲ್ಲ ಪಡೆಯದೊಂದುವನು ||ಪ||

ಮುನ್ನ ಧನಧಾನ್ಯ ವಸ್ತ್ರಾಭರಣ ಷಡುರಸವ
ಪನ್ನಗಧರನ ಶರಣರ್ಗಿತ್ತು ಸಂಪದವ
ಸನ್ನಹಿತ ಸತಿಸಹೋದರ ಪುತ್ರರುತ್ಸಹವ
ಚೆನ್ನಗಿ ಪಡೆದು ಬಾಳುವರ ನೋಡಿಯಿನ್ನು
ಬಯಸಿದರುಂಟೆ ಸುಖದೊಳುನ್ನತಿಯ ||1||

ಮಂಚ ಸುಪ್ಪತ್ತಿಯೊಳೊರಗಿ ಸೇವಕರಿಂದ
ಕುಂಚಕುಡಿ ನೀರಗಿಂಡಿಯ ಪಿಡಿಸಿ ಪದಪಿಂದ
ಮಿಂಚುವಾಭರಣ ತೊಡಿಗೆಯ ಚೆಲ್ವ ಸೊಗಸಿಂದ
ಹಿಂಚಿಲ್ಲದಿಷ್ಟು ವೈಭವವು ಮೊದಲು ಪಂಚಮುಖ
ನಂ ಪೂಜೆಯಮಾಡಿ ಪಡೆದಿಹರ ||2||

ಹಲವು ದೈವದ ಗಂಡ ಬಲುಗಯ್ಯನಂ ನೋಡಿ
ಅಲಸದಾವಾಗಷ್ಟ ವಿದಪೂಜೆಯಂ ಮಾಡಿ
ಸಲೆ ಸದಾ ಗುರುಸಿದ್ಧಲಿಂಗೇಶನಂ ಪಾಡಿ
ಒಲಿಸಲರಿಯದೆ ಹಲುಬಿ ನೀವು ಬರಿದೆ ಸುಲಭದಿಂ
ಬಾಳುವರ ಕಂಡು ಕರಿಗಂದಿ ||3||

ಬದುಕುವದರಿದರಿದು
ಬದುಕುವದರಿದರಿದು ದರೆಯೊಳು ಬದುಕುವದರಿದರಿದು
ಕದನ ಕರ್ಕಶ ಕಪಟಿಗಳಿರ್ದೆಡೆಯೊಳು ||ಪ||

ಸತ್ಯದ ನುಡಿಗಲಸುವರೀ ಮತ್ರ್ಯದ
ವರ್ತನೆಗುಬ್ಬುವೀ ಭಕ್ತನಿರ್ದೆಡೆಯೊಳು ||1||

ಕೊಂಡೆಯ ಕುಹಕರ್ ದಿಂಡೆಯ ದೂರ್ತಪ್ರ
ಚಂಡರು ಪರಿಹಾಸಕರಿರ್ದೆಡೆಯೊಳು ||2||

ಕಲಹಕ್ಕೊಮ್ಮೊಳ ನಾಲಗೆ ನಿಗುರುತ್ತುಲಿ
ತುಲಿದೊಲಿದಾಡುವರಿರ್ದೆಡೆಯೊಳು ||3||

ಬಿರುನುಡಿ ಮೂಗಿನ ಟೆವೆಗಳೊಳೊದರು
ತ್ತುರಿದರೀ ಅರೆಮರುಳರಿರ್ದೆಡೆಯೊಳು ||4||

ಹಿತವಿದಹಿತವಿದೆಂದುಸುರಿದ ಮಾತಿಗೆ
ಕತೆಮಾಡುವ ಕೃತಕಿಗಳಿರ್ದೆಡೆಯೊಳು ||5||

ಕಿರುನಗೆ ಹಾಸ್ಯದಿ ಜರಿದೆಲ್ಲರ ತಾ
ಮರೆದು ಬೆರೆದು ಬೀಗುವರಿರ್ದೆಡೆಯೊಳು ||6||

ಸಲ್ಲದ ಮಾತ ಸಲಿಸುವದಟಿನೊಳು
ಗೆಲ್ಲ ಸೋಲಕೆ ಹೋರುವರಿರ್ದೆಡೆಯೊಳು ||7||

ಒಂದು ನುಡಿಯ ನುಡಿಗಳಿಗೊಂಬತ್ತನು
ಸಂದಿಕ್ಕುವ ನಿಂದಕರಿರ್ದೆಡೆಯೊಳು ||8||

ಶ್ರದ್ಧೆಯೊಳಿಹ ಸಾತ್ವಿಕರ ಕೆಡೆನುಡಿ
ದುದ್ರೇಕಿಗಳವರೆಲ್ಲಿರ್ದೆಡೆಯೊಳು ||9||

ಗುರುಪೇಳ್ದ ಶ್ರೀಪೂಜಾವಿದದೊಳ್ ನಡೆಯದ
ದುರ್ವರ್ತಕರಿರ್ದೆಡೆಯೊಳು ||10||

ಕ್ಷಣದೊಳಗಳಿವ ತನುವ ನಚ್ಚಿಯಾತ
ತ್ರಿಣಯನು ಗುರುಸಿದ್ಧನ ಮರೆದವರೊಳು ||11||

ಬಲ್ಲವ ತಾನಾದಡೆ
ಬಲ್ಲವ ತಾನಾದಡೆ ಬರಿಮಾತಿನ
ಗೆಲ್ಲಸೋಲಕೆ ಹೋರಲದೇಕೊ ||ಪ||

ಅಗಳುದಕವ ಮೊಗೆವರ ಶುಚಿಗಳು ಮಿಗೆ
ಬಗುಳುವ ಶುನಕನ ಕೆಣಕುವರೆ
ಜಗದೊಳಗವಗುಣಿಗಳ ದುರ್ವಾಕ್ಯವ
ಬಗೆಗೊಂಬರೆ ಸುಜ್ಞಾನಿಗಳು ||1||

ತುರುಚನ ನಸುಗುನ್ನಿಯ ಸೋಂಕುವನವ
ಕುರಿಯಲ್ಲದೆ ನೆರೆಬಲ್ಲವರೇ
ಮುರುಕದಿ ಬೆರೆದತಿ ತರಚೆಯ ಮಾಡುವ
ಚಿರುಕರ ಸಂಗವೇಕರಿವುಳ್ಳವಗೆ ||2||

ಮದುಪಾನೀಯ ಮದಹತ್ತಿದಾನೆಯ
ಕೆದಕುವನವ ಬಲು ಹುಚ್ಚನಲ
ಕದನವ ಮಾಡುವ ಕರ್ಕಶ ಕ್ರೋಧಿಗ
ಳಿದಿರೊಳಗಿರಲೆದೆ ದಲ್ಲಣವ ||3||

ನುಗ್ಗೆಯ ಮರದೊಳು ಕೆಚ್ಚುಂಟೆ ಮದ
ವೆಗ್ಗಳ ದುರ್ಗುಣಿಗರಿವುಂಟೆ
ಭರ್ಗನ ಶರಣರನೆಗ್ಗನೆ ನುಡಿವಗೆ
ದುರ್ಗತಿಯಲ್ಲದೆ ಸದ್ಗತಿವುಂಟೆ ||4||

ಅಂಗಕ್ಕಾಚಾರಗಳಿಲ್ಲದೆ ಮಹಾ
ಲಿಂಗವ ಧರಿಸಿಯು ಗುರುಸಿದ್ಧ
ಲಿಂಗನ ಶರಣರರಿಯದ ಜಡ ದು
ಸ್ಸಂಗಿಗಳೊಳು ಹೆರೆ ಹಿಂಗಿಹುದು ||5||

ಸರಿಸಮವೆಂಬರು ಬರಿದೆ
ಸರಿಸಮವೆಂಬರು ಬರಿದೆ ಬೆರೆದತಿ
ಹರಶರಣರ ಪರಿಯರಿಯದೆ ತಾವು ||ಪ||

ಡೊಂಬನು ಮೇಲುಗುಲಾವಿಯನಿಕ್ಕಲು
ಕುಂಭಿನಿಯಾಳ್ವಡೆಯರಸಹನೆ
ಡಂಭಕ ಬರಿವೇಷವ ಹಲ್ಲಣಿಸಿ ತ್ರಿ
ಯಂಬಕ ಶರಣರ ಸರಿಯಹನೆ ||1||

ಪಣ್ಯಾಂಗನೆ ಎಷ್ಟೊಳ್ಳೆವಳಾದಡೆ
ಪುಣ್ಯಾಂಗನೆಗವಳ್ಸರಿಯಹಳೆ
ಬಣ್ಣಿಸಿ ಬಿರುನುಡಿಗಳ ನುಡಿವವ ಮು
ಕ್ಕಣ್ಣನ ಶರಣಂಗೆಣೆಯಹನೆ ||2||

ನಾನಾ ಶಬ್ದವ ನೋಡಿ ಹೇಳುವ ಕವಿ
ಸ್ವಾನುಭಾವಿಗಳಿಗೆ ಸರಿಯಹನೆ
ಜ್ಞಾನಹೀನ ಶಾಸ್ತ್ರವ ಪಠಿಸಲು
ಜ್ಞಾನರೂಡಗೆ ಸರಿಯಹನೆ ||3||

ಕೋಗಿಲದ್ವನಿ ಚೆನ್ನಾದಡೆ ಹಾಡುವ
ರಾಗವ ಬಲ್ಲುದೆ ಅದು ತಾನು
ಆಗಮವರಿಯದೆ ದೂಷಣೆ ಮಾಡುವ
ಹೇಗನು ಶಿವಯೋಗಿಗೆ ಸರಿಯೆ ||4||

ಬಿಂಗಾರವು ಬಂಗಾರಕೆ ಸರಿಯೆ
ಹೊಂಗೆಯ ಮರನದು ತೆಂಗಿಗೆ ಸರಿಯೆ
ಅಂಗದ ಮಲಭಾಂಡೆಯು ಗುರಸಿದ್ಧ
ಲಿಂಗನ ಶರಣರ ಸರಿಯಹನೆ ||5||

ಲಿಂಗಸುಖಸುಖಿ ಶರಣ
ಲಿಂಗಸುಖಸುಖಿ ಶರಣ ಬೋಗಿಯಲ್ಲದೆ
ಜಗದೊಳಂಗಸುಖಿಗಳ ಬೋಗ ರೋಗವಣ್ಣ ||ಪ||

ಸತಿರತಿಯ ಸಂಗಸುಖ ಹಿತವಹುದು ಪುರುಷಂಗೆ
ಸುತರಾಗಿ ದಾರಿದ್ರ್ಯ ವೆಡೆಗೊಳಲು
ಅತಿ ಕಲಹಗೊಂಡು ಸತಿಸುತರೊಳಗೆ ಹೋರುತಿಹ
ಮತಿಹೀನ ಮಾನವರ ಬೋಗ ಬೇಗೆ ||1||

ದನಕನಕವಸ್ತ್ರವಾಭರಣವನುಲೇಪನಂ
ಘನಯೌವನದ ಕೊಬ್ಬಿನುಬ್ಬಿನೊಳಗೆ
ವನಿತೆ ಸುತರೊಳು ಮೋಹ ಸಿರಿ ತೋರಲವರೊಳಗೆ
ಜಿನುಗಿ ತಲೆದೂಗುವನ ಬೋಗ ಹೀಗೆ ||2||

ಕ್ಷಾಮಡಾಮರವಡಸಿದೆಡೆಯೊಳಗೆ ಸತಿಸುತರ
ಪ್ರೇಮವೆಲ್ಲಡಗಿತೊ ಬೋಗಸುಖಿಯ
ನಾಮವೆಲ್ಲವು ನಷ್ಟ ಸ್ತೋಮ ಸಿರಿಬಯಲು ನಿ
ಸ್ಸೀಮ ಗುರುಸಿದ್ಧಲಿಂಗವ ಸ್ಮರಿಸಿರೊ ||3||

ನಿನ್ನವರು ನನ್ನವರು
ಮಾಯೆ ನಿನ್ನವರಿಗೆನ್ನವರುನ್ನತರಲ್ಲೆ
ಮಾಯೆ ನನ್ನವರ ಸಂಗ ನಿನಗಸವಲ್ಲ ನಿಲ್ಲೆ ||ಪ||

ಭೂತಜೀವಬಾವಿಗಳೆಲ್ಲ ನಿನ್ನವರು | ಗುರು
ಜಾತ ಸದ್ಯನ್ಮುಕ್ತರೆಲ್ಲ ನನ್ನವರು
ಕಾತುರದತಿ ಕಾಮಿಗಳೆಲ್ಲ ನಿನ್ನವರು | ಪರಸತಿ
ಮಾತೆಯೆಂದೆಂಬಾತಗಳೆಲ್ಲ ನನ್ನವರು ||1||

ಕುಲ್ಲಕುಹಕಿಗಳೆಲ್ಲ ನಿನ್ನವರು | ನೆರೆ
ಬಲ್ಲ ಸುಜ್ಞಾನಿಗಳೆಲ್ಲ ನನ್ನವರು
ಕಲ್ಲೆದೆ ಕಲಕೇತರೆಲ್ಲ ನಿನ್ನವರು | ಪುಸಿ
ಯಿಲ್ಲದ ಪರಮೂರ್ತಿಗಳೆಲ್ಲ ನನ್ನವರು ||2||

ಮಿಥ್ಯರಾಗದ್ವೇಷಿಗಳೆಲ್ಲ ನಿನ್ನವರು | ಶಿವ
ತತ್ವಾನುಬಾವಿಗಳೆಲ್ಲ ನನ್ನವರು
ಮತ್ತರಾದಜ್ಞಾನಿಗಳೆಲ್ಲ ನಿನ್ನವರು | ನಿತ್ಯ
ಕೃತ್ಯಶೀಲವ್ರತಿಗಳೆಲ್ಲ ನನ್ನವರು ||3||

ಅಂಗವಿಕಾರಿಗಳೆಲ್ಲ ನಿನ್ನವರು | ಲಿಂಗ
ಸಂಗಿಗಳಾದವರೆಲ್ಲ ನನ್ನವರು
ಜಂಗಮವಿರೋಧಿಗಳೆಲ್ಲ ನಿನ್ನವರು | ನಿರಂಗ
ನಿರಾಬಾರಿಗಳೆಲ್ಲ ನನ್ನವರು ||4||

ದುಷ್ಟ ದುರ್ಮಾರ್ಗಿಗಳೆಲ್ಲ ನಿನ್ನವರು | ಲಿಂಗ
ನಿಷ್ಠೆಯ ದಯಾಳ್ದರೆಲ್ಲ ನನ್ನವರು
ಭ್ರಷ್ಟವ್ರತಹೀನರೆಲ್ಲ ನಿನ್ನವರು | ಮನ
ಮುಟ್ಟಿ ಕ್ರೀಯಮಾಡುವರೆಲ್ಲ ನನ್ನವರು ||5||

ಕಾಯ ಮಾಯ ಮೋಹಿಗಳೆಲ್ಲ ನಿನ್ನವರು | ನಿರ್
ಮೋಹಿ ನಿರ್ವಿಕಾರಿಗಳೆಲ್ಲ ನನ್ನವರು
ಬಾಯಬಡುಕ ನಿಂದಕರೆಲ್ಲ ನಿನ್ನವರು | ಶಿವ
ಸೇವೆಯ ಸುಪ್ರೇಮಿಗಳೆಲ್ಲ ನನ್ನವರು ||6||

ಮಸಿಮಣ್ಣ ಹೂಸಿದವರೆಲ್ಲ ನಿನ್ನವರು | ನೊಸಲೊ
ಳೆಸೆವ ಭಸಿತದೂಳಿತರೆಲ್ಲ ನನ್ನವರು
ಪಿಸುಣ ಹುಸಿಕದೆಸಕರೆಲ್ಲ ನಿನ್ನವರು | ಶಿವ
ಬಸವನೆಂದು ಸ್ಮರಿಸುವರೆಲ್ಲ ನನ್ನವರು ||7||

ಅದ್ವೈತ ಹೊಂದಿರ್ದವರೆಲ್ಲ ನಿನ್ನವರು | ಅಸಮ
ರುದ್ರಾಕ್ಷಿಯ ದರಿಸಿರ್ದವರೆಲ್ಲ ನನ್ನವರು
ಕ್ಷುದ್ರ ಕುಟಿಲ ಸಿದ್ಧರೆಲ್ಲ ನಿನ್ನವರು | ಶಾಂತಿ
ಶ್ರದ್ಧೆ ಹೃದಯಶುದ್ಧರೆಲ್ಲ ನನ್ನವರು ||8||

ಸೂತಕದದ್ವೈತಿಗಳೆಲ್ಲ ನಿನ್ನವರು | ಸಪ್ತ
ದಾತು ಮಂತ್ರಶರೀರಿಗಳೆಲ್ಲ ನನ್ನವರು
ಜಾತಿವರ್ಣಾಶ್ರಮಿಗಳೆಲ್ಲ ನಿನ್ನವರು | ಅ
ಜಾತ ವೀರಶೈವರೆಲ್ಲ ನನ್ನವರು ||9||

ಭವಿಸಂಗ ದುಸ್ಸಂಗಿಗಳೆಲ್ಲ ನಿನ್ನವರು | ಭಂಗ
ಭವಿಯ ಹಿಂಗಿ ನಿಂದವರೆಲ್ಲ ನನ್ನವರು
ಶಿವಪುರಾಣದ ದೂಷಕರೆಲ್ಲ ನಿನ್ನವರು | ಗುರು
ಶಿವನೆಂಬ ಸದ್ಭಾವಿಗಳೆಲ್ಲ ನನ್ನವರು ||10||

ಪಾಪಕಂಜದ ಕೋಪಿಗಳೆಲ್ಲ ನಿನ್ನವರು | ಶಿವನ
ರೂಪು ಕಂಡೆದ್ದೆರಗುವರೆಲ್ಲ ನನ್ನವರು
ಕೂಪರಾಪ್ತರ ಮರೆದವರೆಲ್ಲ ನಿನ್ನವರು | ಚಿದ್
ರೂಪರೂಪರಾಪ್ತರೆಲ್ಲ ನನ್ನವರು ||11||

ತರ್ಕಕರ್ಕಶದುಃಖಿಗಳೆಲ್ಲ ನಿನ್ನವರು | ಜ್ಞಾನ
ಪಕ್ಷದ ಬೋದರ್ಕಗಳೆಲ್ಲ ನನ್ನವರು
ಸೊಕ್ಕಿನ ವೆಕ್ಕಾಸಿಗಳೆಲ್ಲ ನಿನ್ನವರು | ಮದ
ಹರ್ಕರೊಳ್ಮನ ಸಿಕ್ಕಿದರೆಲ್ಲ ನನ್ನವರು ||12||

ಶಂಕೆಯ ಸಂಕಲ್ಪಿಗಳೆಲ್ಲ ನಿನ್ನವರು | ನಿರ
ಹಂಕಾರ ನಿಶ್ಯಂಕರೆಲ್ಲ ನನ್ನವರು
ಬಿಂಕದ ಕಳಂಕಿಗಳೆಲ್ಲ ನಿನ್ನವರು | ಭಕ್ತಿ
ಕಿಂಕುರ್ವಾಣದ ಲೆಂಕರೆಲ್ಲ ನನ್ನವರು ||13||

ಆಶಾಪಾಶದ ಹೂಸಕರೆಲ್ಲ ನಿನ್ನವರು | ಮಂತ್ರ
ಸೂಸದ ನಾಸಾದ್ರಿಗಳೆಲ್ಲ ನನ್ನವರು
ದಾಸಿವೇಶಿಯ ಲೇಸಿಗರೆಲ್ಲ ನಿನ್ನವರು | ತೀರ್ಥ
ಶೇಷಪ್ರಸಾದಿಗಳೆಲ್ಲ ನನ್ನರು ||14||

ಚಿತ್ತವಿಭ್ರಮ ದೂರ್ತರೆಲ್ಲ ನಿನ್ನವರು | ನಿಜ
ಭಕ್ತರಾದ ವಿರಕ್ತರೆಲ್ಲ ನನ್ನವರು
ಗುಪ್ತಪಾತಕವರ್ತಕರೆಲ್ಲ ನಿನ್ನವರು | ಶಾಸ್ತ್ರ
ದುತ್ತರಾಗಮೋಕ್ತರೆಲ್ಲ ನನ್ನವರು ||15||

ದುರ್ಗುಣದಗ್ಗಳೆಯರೆಲ್ಲ ನಿನ್ನವರು | ಗುರು
ಮಾರ್ಗದ ಸದ್ಗುಣಿಗಳೆಲ್ಲ ನನ್ನವರು
ನುಗ್ಗು ದೈವಕೆ ಮುಗ್ಗುವರೆಲ್ಲ ನಿನ್ನವರು | ತ್ರಿವಿದವ
ಭರ್ಗನವರ್ಗೀವವರೆಲ್ಲ ನನ್ನವರು ||16||

ಲುಬ್ಧಲೋಭಿಬದ್ಧಕರೆಲ್ಲ ನಿನ್ನವರು | ಆಚಾ
ರೋದ್ಧಾರ ನಿರ್ದಾರಕರೆಲ್ಲ ನನ್ನವರು |
ವೃದ್ಧಾಚರಣೆಯ ಮುಗ್ಧರೆಲ್ಲ ನಿನ್ನವರು | ಗುರು
ಸಿದ್ಧಲಿಂಗನೋಳ್ಸನ್ನರ್ದರೆ ನನ್ನವರು ||17||

ನುಡಿಯದಿಹುದೊಳ್ಳಿತು
ನುಡಿಯದಿಹುದೊಳ್ಳಿತು ನುಡಿದಡೆ ದುಃಖದುರ್ಜನರ
ನುಡಿಯ ಸಂಪಾದಿಸದಿರಾವೆಡೆಯೊಳು ||ಪ||

ಯೆಟ್ಟಿಭೂಮಿಯಲಿ ಬೀಜವ ಬಿತ್ತಿ ಬೆಳಸೆಲ್ಲ
ಕೆಟ್ಟಿತೆಂದೇಕೆ ಮರುಗುವೆ ಲಿಂಗವ
ಕಟ್ಟಿ ಬೋಧಿಸಿದ ಸದ್ಗುರುವರನೊಳಗುತ್ತರವ
ಕೊಟ್ಟು ವಾದಿಪ ಕಷ್ಟಭ್ರಷ್ಟರೊಳಗೆ ||1||

ಕಡಬಡ್ಡಿ ತೆಗೆವಾಗ ನುಡಿನುಡಿಗೆ ಪಲ್ಗಿರಿದು
ಕೊಡುವಾಗ ಸಿಡುಕುಸಿಡಿಮಿಡಿಗೊಳುವ
ಜಡರಂತೆಯಡಿಗೆರಗಿ ಮೃಡನೆಂದು ಜಂಗಮವ
ಕೆಡೆನುಡಿವ ಬಿಡುಬಾಯಿಬಡುಕರೊಳಗೆ ||2||

ಕೊಲ್ಲ್ಯಾವ ಕಾಲ್ಗಟ್ಟಿ ಹುಲ್ಲ ಮೇಯಿಸಿ ಕರೆಯೆ
ತಲ್ಲಣವು ಗುರುಸಿದ್ಧಲಿಂಗೇಶನ
ಮೆಲ್ಲಡಿಯನರಿಯದವರಲ್ಲಿ ಪರಮಾರ್ಥವನು
ಸೊಲ್ಲಿದರೆ ಹುರುಳಿಲ್ಲ ಖುಲ್ಲರೊಳಗೆ ||3||

ನುಡಿಯದಿರು
ನುಡಿಯದಿರು ನುಡಿಯದಿರು ನೀ ಬಲ್ಲೆನೆಂದಿದಿರ
ನುಡಿನುಡಿದು ಬಳಲ ಬೇಡಲೆ ಮದಡು ಮನವೆ ||ಪ||

ಪಂಚಾದಿ ದೈವಪ್ರಪಂಚು ಜೀವರ ಸೃಜಿಸಿ
ಪಂಚಕೃತ್ಯವ ಮಾಳ್ಪೂದೆಂದು ಬೆಸಸಿ
ಹಿಂಚಿಲ್ಲದವರು ಮಾಳ್ಪೂಳಿಗದ ಮಣಿಹಗಳು
ಪಂಚಮುಖನಾಜ್ಞೆಯೆಂದರಿದು ನೀನು ||1||

ಸಲ್ಲದಾಟವನಾಡಿದವರ ಗಲ್ಲವ ಹಿಡಿದು
ಪಲ್ಗಳೆವರುಂಟೆಂಬುದರಿದು ನೀನು
ಗೆಲ್ಲ ಸೋಲದ ಮತಿಗಲ್ಲವಹುದೆಂದೆಂಬ
ತಲ್ಲಣವದೇಕುಮಾವಲ್ಲಭನ ನೆನೆಯ ||2||

ಕಷ್ಟದುರ್ಮಾರ್ಗದಲಿ ಕೆಟ್ಟು ವರ್ತಿಸುತಿರ್ಪ
ಗಟ್ಟುವರ ಗಟ್ಟಿಸುವ ದಿಟ್ಟರುಂಟು
ಬಿಟ್ಟು ಬಿಡು ಸಾಕು ಸಾಕಿದರ ಸುಪಾದನೆಯು
ನಷ್ಟವದರಿಂದರಿವು ಬಟ್ಟ ಬಯಲು ||3||

ಕಾಲನಿಗೆ ಸೇನಬೋವರು ನಾಲ್ವರುಂಟವರು
ಮೂಲೋಕದವರ ದುಃಕೃತ ಸುಕೃತವ
ಕಾಲಕಾಲಕೆ ತಪ್ಪದಂತೆ ಬರೆದೋದು ವಿ
ಶಾಲಮತಿಯುಂಟೆಲೆಲೆ ಹೊಲೆಮನವೆ ||4||

ತಪ್ಪಿ ನಡೆದವರ ಹೊಯಿದಪ್ಪಳಿಸುವವರುಂಟು
ಸತ್ಪುರುಷರಡಿಗೆರಗುತಿಪ್ಪರುಂಟು
ಅಪ್ರತಿಮ ಗುರುಸಿದ್ಧಲಿಂಗನಂಘ್ರಿಯ ಜಾಗ್ರ
ಸ್ವಪ್ನದೊಳು ಜಪಿಸು ನೀ ಬೆಪ್ಪು ಮನವೆ ||5||

ಬಲ್ಲವರೆ ಸುಕೃತಿಗಳು
ಬಲ್ಲವರೆ ಸುಕೃತಿಗಳು ಜಗದಲ್ಲಿ
ಶರಣ ಸುಳಿಯಲು ಪರಶಿವನೆಂದು ||ಪ||

ಬೀಸುವ ವಾಯು ಬೆಂಬಳಿಯ ಗಂದ
ನಾಸಿಕದೊಳಗೆ ಸುವಾಸನೆದೋರಿ
ಲೇಸನೀವಂತತಿ ಶರಣ ಭಕ್ತ
ರಾಶ್ರಯದೊಳು ಸುಳಿವುದು ಹಿತವೆಂದು ||1||

ಬೆಲ್ಲವ ಮೆದ್ದಡೆ ಮದುರವೆಂಬು
ದೆಲ್ಲರರಿದು ಸವಿವರು ಬೆಲ್ಲ ತನ್ನ
ಮೆಲ್ಲಬಾರೆಂದು ಕರೆವುದೆ ತನ್ನ
ಬಲ್ಲ ಭಕ್ತರ ಭಕ್ತಿವತ್ಸನೆಂದು ||2||

ಅಂಗದಾಪ್ಯಾಯನವೀ ಮಿಥ್ಯಾಜೀವ
ರಂಗಳವನು ಹೊಗನೈ ಗುರುಸಿದ್ಧ
ಲಿಂಗದಾಪ್ಯಾಯನ ಮುಂತಾಗಿ ಭಕ್ತ
ರಂಗಳದೊಳು ನಿಲುವುದು ಕೃಪೆಯೆಂದು ||3||

ಎಂತಿರ್ದನೆಂತೆಂಬುದ
ಎಂತಿರ್ದನೆಂತೆಂಬುದಂತರಾಮಿಯೆ ಬಲ್ಲ
ಭ್ರಾಂತರಿರ ನುಡಿಯದಿರಿ ನಿಶ್ಚಿಂತನ ||ಪ||

ಬಾಲನಂತಾರಾರ ಮಾತಾಡಿದುಪಚಾರದೊಳು
ಲೋಲುಪ್ತನಂತೆ ತೋರುವ ತರುಣನು
ಮೆಲನರಿಯದೆ ವಾಕುದೋಷದಿಂ ನುಡಿದು ಭವ
ಮಾಲೆಗೊಳಗಾಗುವದಕ್ರಮವಲ್ಲವೊ ||1||

ವಿಟನಂತೆ ಜಗದೊಳಗೆ ನಟಿಸಿ ತೋರುವ ತಾನು
ನಿಟಿಲಾಕ್ಷನೊಳಗೆ ಸಮರಸವನೈದಿ
ಸಟೆಗೆ ಸಟೆಯನೆ ಬಳಸಿ ದಿಟವ ಘಟಿಸಿಹ ಶರಣ
ಕುಟಿಲನೆಂದೇಕೆ ಭಾವಿಸಿ ಕೆಡುವರು ||2||

ತುಚ್ಛ ಭೋಗವ ಕಚ್ಚಿ ಮಚ್ಚಿದವರಿಗೆ ಶರಣ
ಹುಚ್ಚರಂತವರ ಕಣ್ಗಳಿಗೆ ತೋರ್ಪ
ಸಚ್ಚಿದಾನಂದ ಗುರುಸಿದ್ಧಲಿಂಗದಿ ಮನವ
ಬೆಚ್ಚು ಬೇರಿಲ್ಲದಿರ್ಪ ತನ್ನಿರವ ||3||

ಬರಿದೆ ಸಂಶಯವೇತಕೆ
ಬರಿದೆ ಸಂಶಯವೆತಕೆ ಶ್ರೀಗುರು
ಹರಿದ ಮಲವ ಮರೆದುಂಟೇನ ಸಲ್ಲ ||ಪ||

ಮಲಮಾಯಕರ್ಮಂಗಳನೆಲ್ಲವ
ತೊಲಗಿಸಿ ಲಿಂಗವ ಕರದೊಳಗೆ
ನೆಲೆಗೊಳಿಸಿದ ಶ್ರೀ ಗುರು ಉಪದೇಶದ
ಹೊಲಬರಿಯದ ಬಲು ಮೂಡನಲ ||1||

ಧಾತುಶರೀರವ ನೇತಿಗಳೆದು ಗುರು
ಜಾತನು ತಾನಾಗಿಯು ಮರಳಿ
ಸೂತಕ ಸಂಕಲ್ಪದ ಶಾಸ್ತ್ರಗಳ
ಮಾತಿನ ಮಾಲೆಯದೇತಕೆ ಬಾತೆಯೋ ||2||

ಮಂತ್ರಶರೀರವದಲ್ಲದೆ ಲಿಂಗವ
ನೆಂತಂಗದಿ ದರಿಸುವೆಯಿದರ
ಅಂತುವನಾದಿಯನರಿಯದ ಜೀವ
ಭ್ರಾಂತರ ಮಾತುಗಳಂತಿರಲಿ ||3||

ಸತಿಪತಿಕೂಟದ ರತಿಯೊಳು ಸರಸವು
ಹಿತವಹುದಲ್ಲದಹಿತವಹುದೆ
ಅತಿಶಯ ಲಿಂಗಾಂಗದ ಸಂಬಂದಕೆ
ಪ್ರತಿಯಿನ್ನಾವುದೊ ಮತಿಹೀನ ||4||

ಭಾವದ ಭ್ರಮೆಯಿಂ ನಾನಾ ಜನ್ಮದ
ಬೇವಸಬಡದಿರು ಗುರುಸಿದ್ಧ
ದೇವರ ದೇವನೊಳವಿರಳ
ಭವದೊಳಾವಾಗೇರವಳಿದಿರು ನೀನು ||5||

ಬರಿದೆ ಸಂಶಯವೆತಕೆ ಶ್ರೀಗುರು
ಹರಿದ ಮಲವ ಮರೆದುಂಟೇನ ಸಲ್ಲ ||ಪ||

ಮಲಮಾಯಕರ್ಮಂಗಳನೆಲ್ಲವ
ತೊಲಗಿಸಿ ಲಿಂಗವ ಕರದೊಳಗೆ
ನೆಲೆಗೊಳಿಸಿದ ಶ್ರೀ ಗುರು ಉಪದೇಶದ
ಹೊಲಬರಿಯದ ಬಲು ಮೂಡನಲ ||1||

ಧಾತುಶರೀರವ ನೇತಿಗಳೆದು ಗುರು
ಜಾತನು ತಾನಾಗಿಯು ಮರಳಿ
ಸೂತಕ ಸಂಕಲ್ಪದ ಶಾಸ್ತ್ರಗಳ
ಮಾತಿನ ಮಾಲೆಯದೇತಕೆ ಬಾತೆಯೋ ||2||

ಮಂತ್ರಶರೀರವದಲ್ಲದೆ ಲಿಂಗವ
ನೆಂತಂಗದಿ ದರಿಸುವೆಯಿದರ
ಅಂತುವನಾದಿಯನರಿಯದ ಜೀವ
ಭ್ರಾಂತರ ಮಾತುಗಳಂತಿರಲಿ ||3||

ಸತಿಪತಿಕೂಟದ ರತಿಯೊಳು ಸರಸವು
ಹಿತವಹುದಲ್ಲದಹಿತವಹುದೆ
ಅತಿಶಯ ಲಿಂಗಾಂಗದ ಸಂಬಂದಕೆ
ಪ್ರತಿಯಿನ್ನಾವುದೊ ಮತಿಹೀನ ||4||

ಭಾವದ ಭ್ರಮೆಯಿಂ ನಾನಾ ಜನ್ಮದ
ಬೇವಸಬಡದಿರು ಗುರುಸಿದ್ಧ
ದೇವರ ದೇವನೊಳವಿರಳ
ಭವದೊಳಾವಾಗೇರವಳಿದಿರು ನೀನು ||5||

ಭಕ್ತ ಜಂಗಮ
ಭಕ್ತ ಜಂಗಮವೆರಡೂ
ಅಲ್ಲದ ವ್ಯರ್ಥರು ಬೆಬ್ಬನೆ ಬೆರೆವರದೇಕೊ ||ಪ||

ಪರಮಶ್ರೀಗುರು ವಿರಹಿತ ಲಿಂಗವ
ಕರದೊಳಗರ್ಚಿಸಿ ಪೂಜಿಸುವ
ಮರುಳರು ಶಿವಶರಣರೊಳತಿವಾದಿಸಿ
ಪರಿಭವಭವದೊಳು ಬರುವರದೇಕೊ ||1||

ಭೃತ್ಯನಾಗಿ ಭಕ್ತಿಯ ಮಾಡದೆ ತಾ
ಕರ್ತುವಾಗಿ ಗುರುಚರವಾಗದೆ ಬರಿ
ಮತ್ರ್ಯದ ಬಳಕೆಯ ಬಳಸುತ ಪರಮ ವಿ
ರಕ್ತರ ಕಂಡಹಂಕರಿಸುವರೇಕೊ ||2||

ಲಿಂಗದ ಚಿತ್ಕಲೆ ಜಂಗಮವೆನ್ನದೆ
ಜಂಗಮವಿರಹಿತ ಲಿಂಗವನು
ಅಂಗದಿ ದರಿಸಲು ಗುರುಸಿದ್ಧ
ಲಿಂಗವು ಭಂಗಬಡಿಸುವನೆಂದಂಜರದೇಕೊ ||3||

ಪೊರೆಯನೆ ಗುರುಸಿದ್ಧಲಿಂಗ
ಎರವಾದೀತು ನಿನ್ನ ಗೆಳೆತನ ದೂತೆ
ಬರುವುದು ನಾಳೆನ್ನ ಪ್ರಾಣಕ್ಕೆ ಘಾತೆ ||ಪಲ್ಲ||

ಚಂದ್ರನ ಕಿರಣ ಸೇವಿಸುವ ಚಕೋರ
ಸಾಂದ್ರ ಪಂಕವ ಕಂಡು ಪದುಕುವ ಪಾರ ||1||

ಮುನ್ನ ನಾ ಮಾಡಿದ ಪಾಪವೇನುಂಟು
ತನ್ನಿಮಿತ್ಯದಿ ದನುಜನಿಗಾಯ್ತು ನಂಟು ||2||

ಕೆನೆವಾಲು ಸಕ್ಕರೆ ಸವಿದಂಥ ಬಾಯಿ
ತಿನಲೆಂತು ಮೃತ್ತಿಕೆಯನು ಪೇಳಿ ತಾಯಿ ||3||

ವಿಷವನು ಕುಡಿದೆನ್ನ ಪ್ರಾಣವ ಬಿಡುವ
ಅಸುರನ ಕೂಡಲಾರೆ ಬೀಳ್ವೆ ಮಡುವ ||4||

ಎನ್ನನ್ಯಾತಕೆ ಪುಟ್ಟಿಸಿದ ತಾನಾ ಕಾಂತ
ಮನ್ನಿಸಿ ಪೊರೆಯನೆ ಗುರುಸಿದ್ಧಲಿಂಗ ||5||

ಫಲವೇನು ಛಲವೇನು
ಆದ್ಯರ ವಚನ ಪ್ರಮಾಣವನರಿಯದೆ ಅಲ್ಪ
ಬುದ್ಧಿಗಳಿದ್ದು ಫಲವೇನು ಛಲವೇನು ||ಪ||

ಪಿತಮಾತೆಗತಿಹಿತನಲ್ಲದ ಸುತನವ
ಮತಿವಂತನಾಗಿರ್ದು ಫಲವೇನು
ಸಿತಕಂಠನಂಘ್ರಿಯ ಪೂಜಿಸದವ ಬಲು
ಶ್ರುತಿಪಾಠಕನಾಗಿ ಫಲವೇನು ಛಲವೇನು ||1||

ಪಟ್ಟಣದೊಳು ಕಣ್ಣು ಹೋಗಿಯು ತಳವಾರ
ತಿಟ್ಟನೆ ತಿರುಗ್ಯಾಡಿ ಫಲವೇನು
ಅಟ್ಟಿಯಲೆವ ಕರಣಂಗಳ ಬಾದೆಯನು
ಸುಟ್ಟುರುಹದ ಯೋಗ ಫಲವೇನು ಛಲವೇನು ||2||

ಕೆಟ್ಟಕಾರ್ಯವನುಂಟುಮಾಡದ ಮಂತ್ರಿಯು
ಕಟ್ಟರಸಿನೊಳಿರ್ದು ಫಲವೇನು
ಮುಟ್ಟಿ ಬಂದಡಸಿದ ಶಿವಸಮಯದ ಭಕ್ತಿ
ನಿಷ್ಠೆಹೀನರಿದ್ದಲ್ಲಿ ಫಲವೇನು ಛಲವೇನು ||3||

ಮನ್ನಣೆಯಿಲ್ಲದ ಠಾವಿಲಿ ಷಡುರಸ
ದನ್ನವ ಸವಿದುಂಡು ಫಲವೇನು
ತನ್ನ ನಿಜವನು ತಾನರಿಯದೆ ತಿಳಿಯದೆ
ಭಿನ್ನ ಭವಿಗಳಿರ್ದು ಫಲವೇನು ಛಲವೇನು ||4||

ಕೃತಕದ ಸತಿಯತಿಚೆಲುವಿಯಾದಡೆ ತನ್ನ
ಪತಿಗಲ್ಲದವಳಿರ್ದು ಫಲವೇನು
ಧೃತಿಯಿಂದ ತ್ರಿವಿಧಾದಿ ದಾಸೋಹಿಯಲ್ಲದೆ
ವ್ರತನೇಮ ಶೀಲವು ಫಲವೇನು ಛಲವೇನು ||5||

ಪುಣ್ಯವ ಮಾಡದ ಕರ್ಮಿಯ ಕೈಯಲಿ
ಹೊನ್ನು ಬಹಳವಿರ್ದು ಫಲವೇನು
ಬಣ್ಣಿಸಿ ಪಾಡಿ ಮುಕ್ಕಣ್ಣನ ಸ್ಮರಿಸದೆ
ಡೊಣ್ಣಿಗರಿರ್ದಲ್ಲಿ ಫಲವೇನು ಛಲವೇನು ||6||

ತಾಳದ ಹರತೆಯ ಮೇಳವನರಿಯದೆ
ಗೀಳಿಟ್ಟು ಕೂಗ್ಯಾಡಿ ಫಲವೇನು
ಬಾಳುವಾಗ ಧರ್ಮವ ಮಾಡದೆ ಸತ್ತು
ಹೂಳುವಾಗ ಮಾಡಿ ಫಲವೇನು ಛಲವೇನು ||7||

ಗತಿಗೆಟ್ಟು ರಣದೊಳು ಮುರಿದ ಸುಭಟ ತ
ನ್ನತಿಶಯವನು ಹೇಳಿ ಫಲವೇನು
ಅತಿ ಹಸಿದವರಿಗೆ ಉಣಬಡಿಸದೆ ವಾರ
ತಿಥಿಯೊಳು ಹಾಕಿಸಿ ಫಲವೇನು ಛಲವೇನು ||8||

ಶೃಂಗಾರವುಳ್ಳ ಪ್ರಕಾಶದ ಕನ್ನಡಿ
ಕಂಗಳು ಹಿಡಿದಿರ್ದು ಫಲವೇನು
ಹಿಂಗದೆ ನೆನೆಯದೆ ರಂಗಾದಿ ಗುರುಸಿದ್ಧ
ಲಿಂಗಾಂಕಿತಮಿರ್ದು ಫಲವೇನು ಛಲವೇನು ||9||

ಮಂದಗಮನೆ
ಮಂದಗಮನೆ ತನ್ನ ಗಂಡ ಹೇಗೆ ||ಪ||

ಮಾರನ ರೂಪನು ಬಾರದೆ ನಿಂತನು
ನೀರದಿ ಕರೆ ತಾರೆ ||1||

ಅರೆನಿಮಿಷವು ಯುಗ ಪರಿಮಿತವಾಗಿದೆ
ಮರೆದಿರಲಾರೆನೆ ||2||

ತನುವನು ಒಪ್ಪಿಸಿ ವನಿತೆಯ ಬಿಡುವದು
ಘನವೇನೆ ತನಗಿದು ||3||

ಛಲವೇನೆ ಎನ್ನೊಳು ಸಲಹುದೆ ತನ್ನದು
ಪಲವಿದರಿದವೇನೆ ||4||

ಗುರು ಸಿದ್ಧಲಿಂಗನ ಚರಣ ಸರೋಜಕೆ
ಎರಗಿ ಕರೆದು ತಾರೆ ||5||

ಬೆಳಗಬಾರಮ್ಮ ಸುಂದರಿ
ಬೆಳಗಬಾರಮ್ಮ ಸುಂದರಿ
ನಳಿನಾಂಬರ ಗೌರಿ ಗೌರಿ ||ಪ||

ವೃತ್ತಕುಚದ ನೀರೆ
ಚಿತ್ತಜಾಂತಕಗುರೆ
ಮುತ್ತಿನಾರತಿಗಳ ಸೂಡಿ
ಪ್ರಸಾದವ ನೀಡಿ
ಪರಶಿವನ ಕೊಂಡಾಡಿ ||1||

ಚಂದಿರಮುಖಿ ಕೇಳು
ಇಂದಿನಿರುಳಿನೊಳು
ಚಂದಚಂದದ ಕುಂಚಕೆ ತೋರಿ
ಆಭರಣವನ್ನಿಟ್ಟು ಆರತಿ ಅಳವಟ್ಟು ||2||

ವರ ಷಟ್‍ಸ್ಥಲ ನೆಲೆ
ಗುರುಸಿದ್ಧಲಿಂಗನ ನೆರೆ
ಚರಣಕಮಲವ ಕಂಡೆ
ಚಾಚುತ ಮಂಡೆ
ವರಗಳ ಪಡಕೊಂಡೆ ||3||

ಸುಳ್ಳಲ್ಲ ಈ ಮಾತು
ಸುಳ್ಳಲ್ಲ ಈ ಮಾತು ಶೂಲದರನಾಣೆ ಒಂ
ದೆಳ್ಳು ಗಿಡದಡಿಯ ಏಳ್ನೂರೊಂದು ಎತ್ತು ||ಪ||

ಒಂದೆಳ್ಳು ಒಡೆಯಲು ಒಂಬತ್ತು ಪಾವೆಣ್ಣೆ
ಅದನು ತಂದಳೆಯಲು ಮೂರು ಮಣವಾಯ್ತು
ತಂದು ತುಂಬಿರಲು ಆರು ಬುರುಡೆ ವರೆ ಚೆಲ್ಲಿದವು
ತಂದಾತ ಬಳಸಲು ನೂರೊಂದು ಮಣವಾಯ್ತು ||1||

ಎರಡುತಿಂಗಳ ಹೆಣ್ಣಿಗೊಂದು ದಿವಸದ ಗಂಡು
ಋತುವಾದಳೈದು ತಿಂಗಳು ಬಲಿಯಲು
ಬರೆ ಯೆರೆಯಾದಳೆಮ್ಮ ಸಂದು ಸಂದುಗಳೊಳಗೆ
ಮರಿ ಹುಟ್ಟಿತಯ್ಯ ನವಮಾಸ ಬಲಿದುದು ||2||

ಕರ ನಾಲ್ಕು ಕಿವಿ ಆರು ಕಣ್ಣಾರು ಮೂಗೆರಡು
ಬಾಯಾರು ಬಹುವಿದದ ದೇಹವದಕೆ
ಮೂರು ಬೀದಿಯನಳಿದು ಮೂವತ್ತಾರನೆ ಅರಿದು
ಮೇಲು ಶಿಖರವ ಹತ್ತಿ ಗುರುಸಿದ್ಧಲಿಂಗವಾಯ್ತು ||3||

ಸರಸಿಜಮುಖಿಯೆ
ಸರಸಿಜಮುಖಿಯೆನ್ನರಸ ಸಿದ್ಧೇಶನ
ಕರೆಯದೆ ನೆರೆದು ಬಂದೆ
ವರಬಿಂಬಾಧರೆ ಚಂದ್ರಮುಖಿ ನಾರಿರತ್ನವೆ
ಅರುಹಬೇಡವೆ ಪುಸಿಯೆ ||ಪ||

ಸಿರಿವರನೋವಿಯಗ್ರಜನ ಪುರದ ಪೆಸ
ರರಿತಿರ್ಪ ಮದನಾಸ್ತ್ರವು
ತ್ವರಿತದಿಂ ಚಂದ್ರನೊಳ್ ಎರಗಿ ಪೊರಳುತಿಹ
ಪರಿಯ ಪೇಳಲೆ ಮಾಜದೆ ||1||

ಗುರುಪಯೋದರೆ ಪುರಹರನ ಕರೆಯಲೆಂದು
ಬರದಿಂದ ಪೋಗುತಿರೆ
ಹರುಷದಿಂದಾರಡಿಗಳು ಸುಮಗಂದಕೆ
ಎರಗಿದ ಪರಿಯ ಕಾಣೆ ||2||

ಕಾಲಕಾಲನು ಶಿರಮೂಲದೊಳ್ ದರಿಸಿದ
ಬಾಲಚಂದ್ರನ ಸವಿನೋಟ
ಕಾಲ ಮೋಕ್ಷಗಳರಸನ ತಮ್ಮನಣುಗನೊಳ್
ಲೋಲದಿಂದಲಿ ನಗುವನೆ ||3||

ಕೋಲಾಹಲದಿರ್ಪ ಹಾಲಹಲವನುಂಡು
ಕಾಲಮೃತ್ಯುವಿನಂತಿಹ
ಮೂಲಬ್ರಹ್ಮನ ಕಂಡು ಎರಗಿ ಬಂದೆನು ಇಂದು
ಲೋಲ ಕುಮುದ ಸಾರ್ದನೆ ||4||

ವರಪುಣ್ಯಮಯರಾಗಿ ಮೆರೆಯುವ ಸುರರಿಗೆ
ನಿರುತ ಜೀವನದೊಳಗೆ
ಸರಸಿಜವಾಗಳ ಕುವರನುದ್ಭವಿಸಿ
ಕುರುಹ ಪೇಳೆಲೆ ಮಾಜದೆ ||5||

ಹರನಾಗ್ನಿ ನೇತ್ರದುರಿಯು ತಾಳಲಾರದೆ
ವರಸುದೆಯುಣ್ಣಲೆಂದು
ಭರದಿ ಬಂದೆನ್ನಯದರ ಸುದೆಯುಂಡು ತಾ
ಪರವಶದೊಳು ನಿಂದನೆ ||6||

ಮುತ್ತುಗಳನ್ನು ಬೀರುವ ನಕ್ಷತ್ರಕ್ಕೆ
ಕರ್ತನಾಗಿಹ ರಾಜನು
ರತ್ನ ಬಣ್ಣವ ಪಡುಗಿರಿಳೊಳಗೆ ಮುದ
ವೆತ್ತು ರಾಜಿಸುವನೆನೆ ||7||

ಕಸ್ತೂರಿ ಗಂದವ ಸಮನಗೆ ಶಯ್ಯೊಳಾ
ದಿತ್ಯನ ಬರವ ಕಂಡು
ಮತ್ತೆಲ್ಲಿ ನಿಲ್ಲದೆ ಭಯಗೊಂಡು ಬಂದೆನು
ವೃತ್ತಗಿರಿಯೊಳು ನಿಂದನೆ ||8||

ಕರಿಮುಖ ವಾಕ್ಯಮಂ ಮರೆಗೊಂಡು ಪುರುಷನೊಳ್
ನೆರೆದು ಬರುವರೇನೆ ನೀನು
ವರ ಕಂಗಳಾಣೆ ಎನ್ನೊಳು ಮಾತ ಪುಸಿಯನು
ಒರೆಯಬೇಡಲೆ ಬಾವಕಿ ||9||

ಹರಿಯಜರಿಂದ್ರರಿಂ ಸ್ಮರಿಸಿಕೊಳುವ ಪುರ
ಹರನೆಲೆ ಮಲೆವಾಗ
ಗುರುಸಿದ್ಧಲಿಂಗನು ಎನ್ನೊಳು ಸರಸದಿ
ನೆರೆದು ನಿಶ್ಚಯವು ಕಾಣೆ ||10||

Categories
Tatvapadagalu ಹಾಗಲವಾಡಿ ಮುದ್ವೀರಸ್ವಾಮಿ ಮತ್ತು ಇತರರ ತತ್ವಪದಗಳು

ಹಾಗಲವಾಡಿ ಮುದ್ವೀರಸ್ವಾಮಿ ತತ್ವಪದಗಳು

ಶಾಂಭವಿಯ ನಿಲವು
ಆರಿಗಿದು ಸಾಧ್ಯವಹುದು | ಪಡೆವಡೆ
ಸಾರ ಶಾಂಭವಿಯ ನಿಲವು | ತಾನು ||ಪ||

ಅರುಣ ಮಧ್ಯದೊಳಿಷ್ಟವು | ತಾಂ ಶೀತ
ಕಿರಣದೊಳ್ಪ್ರಾಣಂಗಳ ನಿಲವು
ನಿರುತಾಗ್ನಿಯೊಳ್ಭಾವವು | ಬೆರೆದಿರ್ಪಪರಿಯನರಿವುದೆ ಶಾಂಭವೀ ನಿಜವು ||1||

ಅಂಗದೊಳ್ಗೋಮುಖವದು | ತತ್ಪ್ರಾಣ
ಲಿಂಗಂಗಳೊಳ್ವರ್ತುಳಂ | ನಾಡೆ
ಸಾಂಗದಿಂ ಗೋಳುಕಗಳೊಳುಂ | ಪರಂಜ್ಯೋತಿ
ಯಂಗವರಿವುದೆ ಶಾಂಭವೀ ನಿಜವು ||2||

ತನ್ನೀಕ್ಷಣಂ ಗೋಮುಖಂ | ಶಿವಲಿಂಗ
ದುನ್ನತಿಕೆ ವರ್ತುಳವದು | ತುಂಡಂ
ನನ್ನಿ ಯಿಂದಂ ಗೋಳುಕಂ | ಚುಂಬನಂ
ಸನ್ನಹಿತವದು ಶಾಂಭವೀ ನಿಜವು ||3||

ಒಳಗೆ ನಿಂದಿಹ ಮನವದು | ಬಹಿರ್ದೃಷ್ಟಿ
ಬಳಕೆ ಪಂಚಾನನವದು | ತಾನು
ಹೊಳೆವ ಲಿಂಗಾಂಗ ಸಂಗದೇಕತ್ವ
ಮಿಳಿತ ಶಾಂಭವೀ ನಿಜವುತಾನು ||4||

ಮೂರು ಕೋಣೆಯ ಮಧ್ಯದಿ | ಮುಖಗಳೊ
ಳ್ಚಾರು ಚುಂಬನವು ತಾನು | ತಿಳಿಯೆ
ಸಾರ ಲಿಂಗಾಂಗ ಸಂಗದೇಕತ್ವ
ದಾರೈಕೆಯಿದು ಶಾಂಭವೀ ನಿಜವು ||5||

ಸ್ಥೂಲ ಸೂಕ್ಷ್ಮಂ ಕಾರಣಂ ಬಳಿಕ | ತಾಂ
ಲಾಲಿತೇಷ್ಟ ಪ್ರಾಣವು ಭಾವ
ಮೂಲಿಂಗ ಮೂರಂಗದಾ | ಸಮರಸದ
ಕೀಲನರಿವುದೆ ಶಾಂಭವೀ ನಿಜವು ||6||

ನೋಟ ಬಲಿದವಲೋಕನಂ | ಮನಸಿನೆಡೆ
ಯಾಟವಳಿದಿಹ ಚುಂಬನಂ | ಮರುತ
ದಾಟವಳಿದವಲಂಬನಂ | ತನಗೊಂದು
ಸಾಟಿಯಿಲ್ಲದ ಶಾಂಭವೀ ನಿಜವು ||7||

ಶಾಂಭವಿಯ ಮುದ್ರೆಯೆನಲು | ಲಿಂಗಾಂಗ
ಸಂಬಂಧದಿಂಗಿತವದು | ತಾನು
ಶಾಂಭವೀ ಸತಿಪತಿಗಳ | ಸಮರತಿಯ
ಸಂಭ್ರಮದ ಸಮರಸವದು ತಾನು ||8||

ಇದು ಸಕಲಶಾಸ್ತ್ರಂಗಳೊಳತಿ ಗೋಪ್ಯ
ವಿದು ಮಹಾ ಚೋದ್ಯತರವು | ನೋಡೆ
ಪದುಳದಿಂ ಗುರುಸಂಗನೊಳ್ಬೆರದಿರ್ಪ
ಸದಮಳದರು ಹೆ ಶಾಂಭವೀ ನಿಜವು ||9||

ಪಂಚಾಕಾಶ ಪ್ರಪಂಚ
ಪಂಚಾಕಾಶಗಳ ಪ್ರಪಂಚ ತಾನರಿದೊಡೆ
ಪಂಚಾಕಾಶಗಳೊಳ್ಚಂಚಲವಳಿದಿಹನು ||ಪ||
ಅರಿವುದು ಮೊದಲು ನಿರಾಕಾರವಾಗಿ ತಾ
ನಿರದೆ ರಾಜಿಸುವ ಗುಣರಹಿತಾಕಾಶವನು
ನೆರದಟ್ಟೈಸಿದ ತಮಂಧಾಕಾರ ರೂಪಾಗಿ
ಪಿರಿದು ಕಾಣಿಸುವ ಪರಾಕಾಶವಿದನು ||1||

ಮಿಸುಪ ಕಾಲಾನಲಾ ಸಂಕಾಶವಾಗಿ ಕ
ಣ್ಗೆಸೆದು ಚಕಚಕಿಪ ಮಹದಾಕಾಶವಿದನು
ಪಸರಿಸುವಪರಿಮಿತದ್ಯುತಿಭರಿತವಾಗಿ ರಂ
ಜಿಸುವ ಪರತತ್ವಾಕಾಶವನೆಡವಿಡದೆ ||2||

ನೂರ್ಕೋಟಿ ಸೂರ್ಯಪ್ರಕಾಶದಿಂದಂ ತಾನು
ಮಾರ್ಪೊಳೆವ ಸೂರ್ಯಾಕಾಶವನತಿ ಚತುರತೆಯಿ
ನೇರ್ಪಾಗಿ ತಿಳಿದಾನಂದಿಸುವಾತನದರಂತೆ
ತೋರ್ಪುದಚ್ಚರಿ [ಯ] ದರಿಂಗಿತವೆಂತೆನಲು ||3||

ನಾಶಿಕಾಗ್ರದ ನೆಲೆಯಲ್ಲಿಹ ದೃಷ್ಟಾಂತರ್ಲಕ್ಷ
ಭಾಸುರ ಲಕ್ಷದೊಳು ಜೀವೇಶರೈಕ್ಯತೆಯು
ಸಾಸಿರೆಸಳೊಳೆಸೆವ ತ್ರಿಕೂಟ ಮಧ್ಯದೊ
ಳ್ವಾಸನೆಯಳಿದಿಹ ಮನಸಿಂತೈದಾಕಾಶಗಳು ||4||

ಆಗಸಗಳೈದನರಿವುದೆ ಖೇಚರಿಯು ಭವ
ರೋಗಿಗಳಿಗಿದು ಸಾಧ್ಯವಲ್ಲ ನಿಶ್ಚಯವು
ಯೋಗಿಜನರಿದನರಿದು ನಿಜವಸ್ತುವನು ಪಡೆದು
ಶ್ರೀಗುರುವರ ಸಂಗನೊಳ್ಬೆರದು ರಾಜಿಪರು ||5||

ತಾರಕ ಜ್ಯೋತಿ
ಹ್ಯಾಂಗೆ ತಾರಕವನರಿಯದೆ ಮುಕ್ತಿ ||ಪ||

ಅಗಿನಿಯೋಳ್ಪಲ್ಲಿಲಿ ನೆಲೆಯನರಿದು ಮಿಗೆ
ಪಗಲಾತ್ಮನೊಳಗೆ ಮಾರ್ಪೊಳೆವುತಿಹ
ಸೊಗಸಿನ ತಾವರೆವಗೆಯನಿರುವುದರ
ಬಗೆಯನರಿವ ಯುಕ್ತಿಗಲಿಯದೆ ||1||

ತಳಿಗದಿರನೊಳು ಶಾಂಕರ ವೃಕ್ಷದನುವನು
ತಿಳಿದು ದೇದೀಪ್ಯಮಾನದೊಳೆಸೆದು
ಹೊಳೆವ ತ್ರಿಕೋಣೆಯೊಳಗೆ ವಿರಾಜಿಸುತಿರ್ಪ
ಕಳೆಯ ಬೆಳಗಿನೊಳಗಳಿಯದೆ ||2||

ನಾನೆ ಪರಬ್ರಹ್ಮ ನನೆ ಜಗನ್ನಾಥ
ನಾನೆ ಪರಾಪರ ಪರಮಾತ್ಮನು
ನಾನಲ್ಲದನ್ಯವಿಲ್ಲೆಂದು ಬಗೆದು ಸಚ್ಚಿ
ದಾನಂದ ಸಂಗನೊಳ್ಬೆರೆಯದೆ ||3||

ಅರಿಯಬಾರದ ಘನ
ಅರಿಯಬಾರದೊಂದು ಘನವನರಿದು ಮನದೊಳು | ನಾನು
ಬೆರದು ಭೇದವಿಲ್ಲದಮಲ ಸುಖದೊಳಾಳಿದೆ ||ಪ||

ಸ್ಥೂಲದೇಹವೆನಿಪ ಗಿರಿಯ ಕೊನೆಯ ಮೊನೆಯೊಳು | ಎಸೆವ
ಮೇಲು ಮನೆಯ ಮಧ್ಯದೊಳಗೆ ಥಳಥಳಿಸುತಿಹ
ಜಾಲ ಜ್ಯೋತಿಕಳೆಯ ಬೆಳಗ ಕಂಡು ಕಂಗಳು | ತುಂಬಿ
ಕಾಲ ಕಾಮ ಕರ್ಮಗಳನು ಮೆಟ್ಟಿ ನಿಂದೆನು ||1||

ಸೂಕ್ಷ್ಮ ದೇಹವೆನಿಪ ಶುದ್ಧ ರಾಜಧಾನಿಯೊಳ್ಮಿಸುಪ
ಸೂಕ್ಷ್ಮ ದ್ವಾರದನುವನರಿದು ಪರೀಕ್ಷೆ ಮಾಡಲು
ಪ್ರೇಕ್ಷಿಸುವಡಸಖ್ಯವಾದುದೊಂದು ಚೋದ್ಯವ | ನೋಡಿ
ಮೋಕ್ಷಕಾಂತೆಯೊಡನೆ ಸರಸವಾಡುತಿರ್ದೆನು ||2||

ರಾಮಣೀಯವಾದ ಕಾರಣಾಂಗವೆನಿಸುವ | ಪರಮ
ವ್ಯೋಮ ಮಂಡಲದೊಳು ಮನವು ಲೀನವಾಗಲು
ನಾಮ ರೂಪು ಕ್ರಿಯೆಗಳಳಿದು ಸಂಗಮೇಶನೊಳ್ಬೇಗ
ಸಾಮರಸ್ಯವಾಗಿ ಬಯಲ ಸೇರಿ ಬದುಕಿದೆ. ||3||

ಮೂಲಿಂಗ ಧಾರಣ

ಹಲವು ಮಾತುಗಳಿಂದಲೇನು ಫಲಗಳುಂಟು
ನೆಲೆಯನರಿಯದೆ ಮೂಲಿಂಗಧಾರಣಗಳ ||ಪ||
ಹೊರಗೆ ಶೋಭಾಯಮಾನವಾಗಿ ರಾಜಿಸುತಿರ್ಪ
ಪಿರಿಯರ ಮನೆಯೊಳಿರ್ಪರಸನಿರವ ನೋಡದೆ ||1||

ಒಳಗೆ ತಾನೆಸೆದಿರ್ಪ ಪರಿಯಂಕಾಗ್ರದೊಳಗೆ
ಹೊಳೆವ ನಲ್ಲನೊಡನೆ ಕಡುನೇಹದಿಂ ಕೂಡದೆ ||2||
ಹೊರಗೊಳಗೆಂಬ ಭೇದವಳಿದ ಚಿದಭ್ರದೊಳು
ಮಿರುಗುವ ಗುರುಸಂಗನೊಳಗೆ ತಾಂ ಬೆರೆಯದೆ ||3||

ನಿರ್ಮಲ ಸುಖದೊಳಗಿಹರು
ಆಶ್ರಯಗಳ ಬಗೆಯರಿದೊಡೆ ಜನನ ದೋ
ಷಾಶ್ರಯವಳಿದು ನಿರ್ಮಲ ಸುಖದೊಳಗಿಹರು ||ಪ||

ಕರಕಂಜದೊಳಗೆ ಕಾಂತಿಯ ರಸ ತೊಟ್ಟಿಡುವ
ವರ ಕರ್ಣಿಕೆಯ ತುಟ್ಟ ತುದಿಯರಮನೆಯೆ
ಪರಿಪೂರ್ಣವಾಗಿ ಬೆಳಗುವಿಷ್ಟ ಲಿಂಗಕ್ಕೆ
ನಿರುತನಾಶ್ರಮವಾಗಿ ರಾಜಿಪುದು ||1||

ಕಮಲಯುಗಳ ಮಧ್ಯದೊಳಗೆ ಮಿರುಗುತಿರ್ಪ
ವಿಮಲ ಪರಂಜ್ಯೋತಿಯಗ್ರದೊಳೆಸೆದು
ರಮಣೀಯವಾದ ಹರ್ಮ್ಯವೆ ಪ್ರಾಣಲಿಂಗಕ್ಕೆ
ಸುಮನದಿಂ ತಿಳಿಯೆ ತಾನಾಶ್ರಯವಹುದು ||2||

ಪೆಸರಿಡುವುದಕಸದಳವಾದ ಬಯಲೊಳಾ
ಮಿಸುಪ ರನ್ನದವಣ್ಣದೊಪ್ಪವೆ ತಾನು
ಎಸೆವ ಶ್ರೀಗುರು ಸಂಗಮೇಶನೆನಿಪ ಭಾವ
ದಸಮಲಿಂಗಕ್ಕೆ ತಾನಾಶ್ರಯವಾಗಿಹುದು ||3||

ನಿಜ ಮುಕ್ತನಾಗುವುದು

ಲಿಂಗಾಕಾರದ ಬೆಂಬಳಿಯನು | ಹೆರೆ
ಹಿಂಗದಿರಲು ನಿಜಮುಕ್ತನಾಗುವನು ||ಪ||

ಹಸ್ತಕಮಲದೊಳಗಿರ್ಪ | ಪರ
ವಸ್ತುವಿನೇಕ ರೂಪಿನ ಬಗೆಯದನು
ವಿಸ್ತರದಿಂ ತಾನು ತಿಳಿದು | ಬೇಗ
ಕುಸ್ತರಿಸಲು ಪರದೊಳು ಬೆರದಿಹನು ||1||

ಮನದ ಕೊನೆಯ ಮನೆಯೊಳಗೆ | ಹೊಳೆ
ವನುಪಮ ಪ್ರಾಣಲಿಂಗದ ರೂಪನೆರಡ
ರನುವರಿದು ಪರೀಕ್ಷಿಸಲು | ಮಹಾ
ಘನ ಶಿವಲಿಂಗದೊಳಗೆ ಲೀಯವಹನು ||2||

ಮಾತಿನ ಮೊದಲೊಳಗಿರ್ಪ | ಪರಿ
ಪೋತವಾಗಿಹ ಭಾಗಲಿಂಗ ರೂಪವನು
ಸಾತಿಶಯಾಸ್ಯವೆಂದರಿಯ | ಪರಂ
ಜ್ಯೋತಿಸ್ವರೂಪ ಸಂಗನೊಳೇಕವಹನು ||3||

ಆಧಾರತ್ರಯಗಳ ಭೇದ
ಆಧಾರತ್ರಯಗಳ ಭೇದವನರಿದು ತಾಂ
ಸಾಧಿಸಿದೊಡೆ ಮುಕ್ತಿ ವೇದ್ಯವು ||ಪ||

ಸಕಲ ಚಂಚಲವಳಿದೇಕಾಲೋಕನದೊಳ
ಗಕಳಂಕಮಿಷ್ಟ ಲಿಂಗವನು
ಸುಕರದಿಂ ತಿಳಿದದರೊಳಗಂಗಮಂ ಬಿಡೆ
ವಿಕೃತಿಯಳಿದು ಭವ ಉಡುಗದು ||1||

ಹಲವು ತೆರದ ಭ್ರಮೆಯೊಳಗೆ ತೊಳಲದ ನಿ
ರ್ಮಲ ಮನಸಿನ ತುಟ್ಟ ತುದಿಯೊಳು
ಸುಲಲಿತ ಪ್ರಾಣಲಿಂಗವನನುದಿನದೊಳು
ಒಲಿದು ಭಜಿಸೆ ಪರ ಒದಗುವದು ||2||

ತಟ್ಟು ಮುಟ್ಟಿಲ್ಲದ ವಿಮಲ ಸ್ಪರ್ಶನದೊ
ಳ್ಪುಟ್ಟಿಕೊಂಡಿಹ ಭಾವಲಿಂಗವನು
ಮುಟ್ಟಿ ಪೂಜಿಸೆ ಗುರುಸಂಗನೆಂದೆನಿಸುವ
ಬಟ್ಟಬಯಲು ಸುಖದೊರೆವುದು ||3||

ಮೂಲಿಂಗದಿರವು
ಸುಮ್ಮನಪ್ಪುದೆ ನಿಜಮುಕ್ತಿ | ತಾನು
ಗಮ್ಮನೆ ಮೂಲಿಂಗದಿರವನರಿಯದೆ ||ಪ||

ಲಿಂಗದೊಳಿಟ್ಟ ದಿಟ್ಟಿಯನು | ಹೆರೆ
ಹಿಂಗದಿರಲು ಇಷ್ಟದಂದ ಕಾಣುವದು
ಕಂಗಳಿಚ್ಛೆಗೆ ಹರಿಹರಿದು | ಬಹಿ
ರಂಗದ ಭ್ರಮೆಯೊಳು ಲಿಂಗ ತಾನಿರದು ||1||

ಮಿಸುಪ ಸುಲಿಂಗ ಕಾಂತಿಯನು | ತಾನು
ಒಸೆದು ಪರೀಕ್ಷಿಸಲಮಳತೆಯಹುದು
ಮುಸುಕಿ ಮನೋವೇದ್ಯೆಯೊಳಗೆ | ಬೇಗ
ಹಸಗೆಡಲದು ತನಗೊಸವಾಗುತಿರದು ||2||

ಭಾಗಲಿಂಗದಿ ಬಗೆಯರಿದು | ನಿತ್ಯ
ಸಾವಧಾನದಿ ತಿಳಿದೊಡೆ ಸಾಧ್ಯವಹುದು
ದೇವ ಶ್ರೀಗುರುಸಂಗನಿರವ | ಪರಿ
ಭಾವಿಸದಿರಲು ಕಡೆಗೆ ಸಾರುತಿಹುದು ||3||

ಮೂರುತೆರೆದ ಪದಾರ್ಥಗಳನುವು
ಮೂರು ತೆರದ ಪದಾರ್ಥಗಳನುವ | ನೀರ
ನಾರೈದು ರುಚಿಸಬಲ್ಲಡೆ ಮುಕ್ತನಹನು ||ಪ||

ನಿರುಪಮಾದ್ವಯ ನಿತ್ಯ ನಿರಘ ನಿರಾಮಯ
ಪರಿಪೂರ್ಣ ಪರಮೇಷ್ಟಲಿಂಗವನು
ನಿರುತ ದೃಷ್ಟಿಯನಿಟ್ಟು ಮರೆಯದೆ ನೋಡಲು
ಸುರುಚಿರೇಕ್ಷಣವೆನಿಸುತ ತೃಪ್ತಿಯಹುದು ||1||

ಕುರುಹಿಡಬಾರದ ಕುಸುಮಗದ್ದುಗೆಯಲಿ
ಪರಿದು ರಾಜಿಪ ಪ್ರಾಣಲಿಂಗವನು
ಕರಿಗೊಂಡು ಮನಸು ಬೇರಿಡದೆ ಬೆರದು ತೀವಿ
ದೊರೆವುದು ಜ್ಞಾನತೃಪ್ತಿಯ ಸುಖವು ||2||

ಚಲನೆಯಳಿದು ನಿಂದುರಿವ ಜ್ಯೋತಿಯಂತೆಯೋ
ಲ್ಸಲೆ ವಿರಾಜಿಸುತಿಹ ಭಾವಲಿಂಗವನು
ನಲವಿನಿಂದರಿಯಲು ಗುರು ಸಂಗಮೇಶನೊ
ಳ್ಬಲಿದು ಸೇವಿಪ ಸ್ಪರ್ಶನ ತೃಪ್ತಿಯಹುದು ||3||

ಅರ್ಪಿತತ್ರಯದಿಂಗಿತ
ಅರ್ಪಿತತ್ರಯಗಳಿಂಗಿತವನೆಲ್ಲವನು ನಾಂ
ಒಪ್ಪದಿಂ ಪೇಳ್ವೆ ಲಾಲಿಪುದು ಲಲಿತಾಂಗಿ ||ಪ||

ಇಷ್ಟಲಿಂಗದ ಮುಖವನರಿದು ಸಂಶಯವಳಿದು
ಶಿಷ್ಟವಾಗಿಹ ಪದಾರ್ಥವನಿತ್ತು ಸವಿಯೆ
ಕಷ್ಟ ಸಂಶ್ರುತಿಯ ನಿಟ್ಟೊರಸಿ ಕೆಡಿಸುವ ಮಹೋ
ತ್ಕೃಷ್ಟವಾದಮಲ ಕಾಯಾರ್ಪಿತವದಹುದು ||1||

ಹೃದಯ ಕಮಲದೊಳು ಥಳಥಳಿಸುತಿಹ ಪ್ರಾಣಲಿಂ
ಗದ ಮುಖವನರಿದು ಪದಾರ್ಥವ ಸವಿಸಲು
ಮುದವಲರಿ ಪಾವನಾತ್ಮತೆಯನೈದಿರುತಿರ್ಪ
ಸದಮಲವಹ ಮನೋರ್ಪಿತವು ತಾನಹುದು ||2||

ಲಿಂಗದೊಳ ಹೊರಗೆ ಪರಿಪೂರ್ಣವಾಗಿಹ ಭಾವ
ಲಿಂಗ ಮುಖವರಿದು ತೃಪ್ತಿಯನೈದಲು
ಮಂಗಲಾತ್ಮಕ ಪರಮ ಗುರುಸಂಗಮೇಶನೋ
ಳಂಗೈಸಿ ವಾಕ್ಕೆಂಬಾರ್ಪಣವದಹುದು ||3||

ಜನನಬಾಧೆಯ ತೊರೆದು

ಜನನ ಬಾಧೆಯ ತೊರೆದು ಮೂಲಿಂಗ
ದನುವರಿದು ನಿಂದ ಮೇಲೆ ತನಗೆ ||ಪ||

ನಿರುತ ಭಗದಲಿಷ್ಟವು | ಗುಹ್ಯದೋ
ಳ್ವರ ಪ್ರಾಣ ಹಸ್ತಕುಚವು ನೇತ್ರ
ಸರಸಿಜ ದೊಳ್ವಾಕ್ಕೋಷ್ಟವು | ಭಾವವ
ಧರದೊಳೆ ಸೆದಿಹುದನು ತಿಳಿದ ಮೇಲೆ ||1||

ಆಕಾರವಿಷ್ಟಲಿಂಗಂ | ನಿರುಪಮ ನಿ
ರಾಕಾರ ಪ್ರಾಣಲಿಂಗಂ ಜ್ಯೋತಿ
ರಾಕಾರದೋಂಕಾರವು | ಭಾವಲಿಂ
ಗಾಕಾರವೆಂದು ತಿಳಿದ ಮೇಲೆ ||2||

ಸಕಲಸ್ವರೂಪವಿಷ್ಟಂ | ನಾ5ಡೆ ತಾಂ
ಸಕಲ ನಿಃಕಾಲ ಪ್ರಾಣವು ನೋಡೆ
ಯಕಲಂಕ ನಿಃಕಲವದು | ಭಾವವೆಂ
ಬ್ಯುಕುತಿಯನು ತಿಳಿದು ನಿಂದ ಮೇಲೆ ||3||

ಸ್ಥೂಲತನುವಿಷ್ಟ ಬಂಧಂ | ಮಿರುಗುತಿಹ
ಲೀಲಾತ್ಮ ಸೂಕ್ಷ್ಮ ಬಂಧಂ ಪ್ರಾಣಂ
ಮೇಲೆ ತಾಂ ವಾಚ್ಯಬಂಧಂ | ಕಾರಣದ
ಮೂಲವೆಂದವನು ತಿಳಿದ ಮೇಲೆ ||4||

ಕಲುಷಗುಣದೊಳಗಿಷ್ಟವು | ಬಳಿಕ ಚಂ
ಚಲಗುಣದೊಳಗೆ ಪ್ರಾಣವು ಭಾವಂ
ಸಲೆ ಯಹಂಕೃತಿಯ ಗುಣದೊಳು | ನಿಲವೆಂದು
ನೆಲೆಯ ತಾಂ ತಿಳಿದು ನಿಂದ ಮೇಲೆ ||5||

ಎಸೆವ ನಿರ್ವಿಕಾರವಂ | ಧರಿಸಿಹುದ
ದಸಮೇಷ್ಟ ನಿಶ್ಚಲವನು ಪ್ರಾಣ
ಮಿಸುಪ ನಿಶಬ್ದವನು | ಭಾವತಾಂ
ಒಸೆದು ಧರಿಸಿಹುದ ತಿಳಿದ ಮೇಲೆ ||6||

ಆರು ತೆರದನುಭಾವವಂ | ಗುರುಮುಖದೊ
ಳಾರೈದುಪರಿಕಿ ಸಿದನು ತಾನು
ಸಾರ ಗುರು ಸಂಗನೊಳಗೆ | ವಾರಿಶಿಲೆ
ವಾರಿಯಾದಂತೆ ಯಾದ ಮೇಲೆ ||7||

ಮೂರುಲಿಂಗಗಳಿಂಗಿತ
ಬೇರೆ ಬಹುವಿಧದ ಕೋಟಲೆಯೊಳಗೆ ಬಳಲುವರು
ಮೂರುಲಿಂಗಂಗಳಿಂಗಿತವರಿಯದೆ ||ಪ||

ಸಾರಭಾಗದವಿಷ್ಟ ಗುಹ್ಯವೆಂಬುದರನುವ
ನಾರೈದು ಅದರ ಕಾಂತಿಯ ಬೆಳಗನು
ಮೀರಿದೇಕಾವಲೋಕನದಿಂದಲದ ತಿಳಿಯೆ
ಸಾರುವದು ಪರಮ ಪಾವನ ಸೌಖ್ಯವು ||1||

ಕರಗಳು ಕುಚಗಳು ಮಿರುಪ ಪ್ರಾಣಂಗಳನು
ಧರಿಸಬಾರದ ಸರಸಿಜಗಳೆರಡನು
ನಿರುಪಮ ತ್ರಿಕೋಣೆಯೊಳಗನವರತ ಮನವಳಿಯ
ಲುರುತರ ಮಹಾಸಿದ್ಧಿ ಸಾಧ್ಯವಹುದು ||2||

ಥಳಥಳನೆ ಹೊಳವುತಿಹ ತುಟಿಯ ಮಹಗೋಪ್ಯವನು
ಕಳಕಳಿಸುತಿಹ ವಕ್ಯದತಿಶಯವನು
ವಿಳಸಿತಾಧಿಕ ಭಾವದಾನಂದವೆಂಬುದರ
ಹೊಳವರಿಯೆ ಗುರುಸಂಗನೊಳಗೇಕವಹನು ||3||

ಮೂವತ್ತಾರು ತಾರಕ
ಆರುತಿಳಿಪಡಸಾಧ್ಯವಹ ಮಹಾಘನವ
ಮೂರರೊಳಗಿಹ ಮೂವತ್ತಾರು ತಾರಕವಂ ||ಪ||

ಭಗಧರವಿದೆಂಬುದನು ಭಗಧರಾಶ್ರ[ಯ]ವ
ಭಗಧರದೊಳೆರಕವಾದದಾಲೋಕನವನು
ಬಗೆಯರಿದು ಸಮರಸೈಕ್ಯದೊಳಂಗವಳಿದು ಮಿಗೆ
ಮಘಮಘಿಪ ಪರಂಜ್ಯೋತಿಯುರಿವ ತೇಜವನು ||1||

ತಾಣವೆರಡನು ತಾಣವೆರಡರೊಳಗಿರುತಿರ್ಪ
ತಾಣದೀವಿಗೆಯ ಥಳಥಳಿಪ ಕಾಂತಿಯನು
ಮಾಣದದ ಪರಿಕಿಸುವ ಮರೆಯ ಕಂಗಳುಗಳನು
ಜಾಣತನದಿಂ ತಿಳಿದು ಸುಖಿಪ ಭೇದವನು ||2||

ಈರಾರು ಮುಖಗಳ ಮೂರೆಂಟು ಬಗೆಗಳನು
ಬೇರೆ ಮೂವಿಧದ ಮಹಗೋಪ್ಯದನುವಂ
ಮೂರಾರು ಕೂಡಿ ಮೂವತ್ತಾರು ತೆರದಿಂದೆ
ತೋರುತಿಹ ಗುರುಸಂಗಮೇಶನಿಂಗಿತವಂ ||3||

ನಾಮರೂಪಳಿಯೆ ಜೀವೆಶರೈಕತೆಯು

ಜೀವನ ಪರಮರೈಕತೆಯನು ಮಾಡಿದೆವೆಂಬ
ಕೋವಿದರಾದವರುಗಳು ನೀವೆ ಕೇಳಿರೊ ||ಪ||

ಕರವನು ಶಿರವನು ಶಿರದ ಸಂಗತಿಯನು
ಶಿರದ ಸಂಗವೆ ಮುಖವೆಂಬುದನರಿದು
ಶಿರವನು ಕರವನು ಶಿರದ ಸಂಗವಮಾಡಿ
ದುರುತರ ಸುಖವೆ ಜೀವೇಶರೈಕತೆಯು ||1||

ಅಂಗದೊಳಗೆ ಮೂರ್ಕಂಗಳನು ತಿಳಿದು ಪ್ರಾಣ
ಲಿಂಗದೊಳಾರ್ಕಂಗಳರಿದಿಷ್ಟವೆಂಬಾ
ಲಿಂಗದೊಳ್ಸಪ್ತವಿಂಶತಿ ನೇತ್ರಗಳನು ತಾಂ
ಸಾಂಗದಿಂ ತಿಳಿಯೆ ಜೀವೇಶರೈಕತೆಯು ||2||

ಗೋಮತ್ಸ್ಯ ಕೂರ್ಮಂಗಲಿರವನರಿದು ಬೇಗ
ಪ್ರೇಮದಿಂದವರೋಳ್ಜೀವೇಶರೆಂಬವರ
ಸಾಮರಸ್ಯವ ಮಾಡಿ ಗುರುಸಂಗಮೇಶನೋ
ಳ್ನಾಮ ರೂಪಳಿಯೆ ಜೀವೇಶರೈಕತೆಯು ||3||

ಅಂಗಂಗಳಿಂಗಿತ
ಅಂಗಂಗಳಿಂಗಿತವರಿಯೆ | ಮೂರು
ಲಿಂಗದೊಳಗೆ ನೆರೆ ರಂಗಿಸುತಿಹನು ||ಪ||

ಮೂರೆರಡು ತೆರದಿಂದಲೆಸೆದು | ಪಂಚ
ಸಾರಭೂತವದು ಸ್ಥೂಲಾಂಗವೆನಿಪುದ
ನಾರೈದು ನೋಡಿ ತಾಂ ತಿಳಿಯೆ | ಚಿದಾ
ಕಾರವಾದಂಬುಧಿಯೊಳು ಮುಳುಗಿಹನು ||1||

ಸಪ್ತಪ್ರಕಾರವಾಗಿರ್ಪ | ಚಾರು
ಸಪ್ತಧಾತುಗಳೆ ಸೂಕ್ಷ್ಮಾಂಗವೆಂದದನು
ಜ್ಞಪ್ತಿಯೊಳರಿದು ಪ್ರೇಕ್ಷಿಸಲು | ಮಹಾ
ದೀಪ್ತಿಯೊಳಗೆ ತಾನು ವ್ಯಾಪಿಸುತಿಹನು ||2||

ಭೂತವಿಕಾರ ವಿರಹಿತ | ಪರಿ
ಪೂತವಾದಾತ್ಮಾಂಗವದು ತಾಂ ಕಾರಣದ
ರೀತಿಯಿಂದದ ತಾನು ತಿಳಿಯೆ | ಸ್ವಯಂ
ಜ್ಯೋತಿಸ್ವರೂಪ ಸಂಗನೊಳೇಕವಹನು ||3||

ಅಂಗತ್ರಯದೊಳೆಸೆದಿರ್ಪ
ಮೊಗಗಳನೆಲ್ಲವ ಬಲ್ಲ ಮಹಿಮರ
ಸೊಗಸಿನಂಗತ್ರಯದೊಳಗೆಸದಿರ್ಪ ||ಪ||

ಸಕಲ ಸುಖಗಳೇಕಮತದಿಂದೆ ತಿಳಿದು ತಾ-
ನಕಲಂಕ ಪರಮೇಷ್ಟಲಿಂಗದೊಳು
ವಿಕಳತೆಯಳಿದೇಕಾಗ್ರತೆಯ ಮನಸಿನಿಂದೆ
ಮುಕುತಿವೆಣ್ಣಿನೊಳತಿ ಸಮರಸವ ||1||

ಹತ್ತು ಮುಖದೊಳ್ ಹತ್ತು ತೆರದ ದ್ರವ್ಯಂಗಳ
ವಿಸ್ತರವನು ತಾನು ಮಿಗೆಯರಿದು
ಮತ್ತವನೆರಡು ರೂಪಾಂತಲಿಂಗಂಗಳಿ
ಗಿತ್ತು ಚಿತ್ಕಡಲೊಳು ಮುಳುಗಿಹುದ ||2||

ದಶಶತ ಮುಖಗಳ ಬಗೆಯನರಿದು ತಾ ಮೇ
ಣ್ದ ಶಶರ ವಸ್ತುಗಳಿರವರಿದು
ಕುಶಲದಿಂದಿಷ್ಟವೆನಿಪ ಲಿಂಗಮುಖದೊಳು
ಒಸೆದು ಸವಿದು ಗುರುಸಂಗನೊಳಿಹುದ ||3||

ಕುಲಕ್ಯಾಕೆ ಹೋರುತಿಹರು
ಕುಲಕ್ಯಾಕೆ ಹೋರುತಿಹರು ತಮ್ಮೊಳಿರುತಿರ್ಪ
ಹೊಲೆತನವನು ತಿಳಿಯದೆ ನರರು ||ಪ||

ಅಶನ ವ್ಯಸನ ವಸನಂಗಳು ಮೊದಲಾದ
ಪಸರದೊಳಗೆ ಮುಂಗಾಣದೆ ಮುಳುಗಿ
ಪುಸಿಯ ಸಂಸ್ಕೃತಿಯ ವಿಸರದ ಗಸಣಿಯೊಳು
ಹಸಗೆಡಲದುವೆ ಮಾದಿಗರ ಕುಲವು ||1||

ತನುಕರಣೇಂದ್ರಿಯಗಳ ಪುಂಜದೊಳು ಸಿಲ್ಕಿ
ಕನಲಿ ಕಂಗೆಟ್ಟು ಕರ್ರನೆ ಕರಗಿ
ಮನಸಿನ ಮಾಯೆ ಮಹಾಘನವೆಂದದ-
ರನುವರಿದಿಹುದೆ ಶೂದ್ರತೆಯಹುದು ||2||

ಮರವೆಯರಿವೆಯೆಂಬುಭಯ ಬುದ್ಧಿ ಪೆರತಾಗಿ
ಬರಿಯ ದಿವ್ಯಾಕಾಶರೂಪವಾಗಿ
ಮೆರೆವ ಶ್ರೀಗುರು ಸಂಗಮೇಶನೊಳಗೆ ಮನ
ವೆರಕವಾಗಿಹುದೆ ಬ್ರಾಹ್ಮಣಕುಲವು ||3||

ತಿಳಿಯಲರಿದು ದೇಹಗುಣ ಜಾತಿಗಳ
ತಿಳಿಯಲರಿದಮಮ ತನ್ನೊಳು ತಾನೆ ವಾಣಿಸುಖ
ವಿಳಸಿತಾಧಿಕ ದೇಹಗುಣ ಜಾತಿಗಳನು ||ಪ||

ಬೀಳು ನುಡಿಯದು ಮದೋವಾಯು ತಾಂ ತಿಳಿಯಲಾ
ಗಾಳಿವಾತದು ಸೂಕ್ಷ್ಮ ವಾಚ್ಯವಹುದು
ಪೇಳುವಡಶಕ್ಯವಾದಮೃತವಾಚ್ಯವು ತಾನ
ದಾಳೋಚಿಸಲು ಪರವೆನಿಪ ವಾಚ್ಯವು ||1||

ತೋರ ಶರೀರದ ಸುಖವು ಬಿಂದು ಮಾತ್ರವು ಸೂಕ್ಷ್ಮ ಶ
ರೀರ ಸುಖವು ಪರ್ವತ ಮಾತ್ರವು
ಕಾರಣ ಶರೀರದೊಳಗೆಸೆದು ರಾಜಿಸುವ ಸುಖ
ವಾರೈದು ನೋಡಲಖಂಡಾತ್ಮವು ||2||

ಶುದ್ಧವಲ್ಲದ ಶುದ್ಧವದು ಸ್ಥೂಲದೇಹ ತಾಂ
ಶುದ್ಧಾ ಶುದ್ಧವು ಸೂಕ್ಷ್ಮ ದೇಹ ತಾನು
ಶುದ್ಧವೆಯಾಗಿ ಸದ್ದಡಗಿ ನಿಂದುದೆ ವಿಮಲ
ಬುದ್ಧಿಯಿಂದರಿಯೆ ಕಾರಣದೇಹವು ||3||

ಉರುತರೇಂದ್ರಿಯ ರೂಪವದು ಸ್ಥೂಲದೇಹ ತಾಂ
ಕರಣಸ್ವರೂಪಮಾದುದು ಸೂಕ್ಷ್ಮವು
ಪರಮಾತ್ಮ ನಾನೆಂದು ನಿರುತ ಚಿಂತಿಸುತಿಹುದೆ
ಸುರುಚಿರವೆನಿಪ ತ್ರಿವಿಧ ದೇಹಗುಣವು ||4||

ಲಿಂಗದಿಚ್ಛೆಯ ಮೋಹವಂತ್ಯಜಾನ್ವಯವಂತ
ರಂಗದಿಚ್ಛೆಯ ಮೋಹಶೂದ್ರ ಕುಲವು
ಲಿಂಗಮೋಹವದು ಬ್ರಾಹ್ಮಣಜಾತಿಯಹುದು ಗುರು
ಸಂಗನೊಳ್ಬೆರದಿವನುಳಿಯೆ ಮೋಕ್ಷವಹುದು ||5||

ಸುಮ್ಮನೆ ದೊರೆವುದೆ ಮುಕುತಿ ?
ಸುಮ್ಮನೆ ದೊರೆವುದೆ ತನಗೆ ಮುಕುತಿ ||ಪ||
ಸಕಲಕ್ರಿಯೆಗಳೆಳ್ಳನಿತು ತಪ್ಪದಂತೆ ತಾ

ನಕಲಂಕ ಸಾರಿಷ್ಟಲಿಂಗವನು
ಕಕಮಕಗೊಳ್ಳದೆ ಬಿಡದೆಯರ್ಚಿಸುತಿರ್ಪ
ಬಕುತಿಯು ತನ್ನೊಳು ಬೆಳೆಯದೆ ||1||

ಹದಿನೆಂಟು ತೆರದ ಭಕ್ತಿಗಳನರಿದು ನೆರೆ
ಸದಮಲ ಪ್ರಾಣಲಿಂಗವನನಿಶಂ
ಹೃದಯ ಕಮಲಕರ್ಣಿಕಾಮಧ್ಯದೊಳು ಬೇಗ
ಪದೆದು ಯಜಿಪ ಯುಕ್ತಿಗಲಿಯದೆ ||2||

ಮೂರೆಂಟು ಮೇಲೊಂದ ನೆಲೆಗಳದು ಸುವಿ
ಚಾರದಿಂದಲಿ ಭಾವಲಿಂಗವನು
ಮೀರಿದಮಲ ಜ್ಞಾನದಿಂ ಪೂಜಿಸಿ ಸಲೆ
ಸಾರ ಸಂಗನೊಳಗೆ ಬೆರೆಯದೆ ||3||

ಜಾಣರ ದೇವ
ತನ್ನ ನಿಜವ ನೆರಯರಿದು ಸುಖಿಸುವನೆ
ಜಾಣರದೇವ
ನನ್ನಿಯಿಂದಮಲಾಂಗತ್ರಯವರಿವನೆ
ಜಾಣರದೇವ ||ಪ||

ತ್ಯಾಗಾಂಗದಲಿ ಕ್ರೀಯ ಕ್ರಮವರಿವನೆ | ಜಾಣರದೇವ
ಭೋಗಾಂಗದಲಿ ಭಕ್ತಿಯ ಕಳೆಯರಿವನೆ | ಜಾಣರದೇವ
ಯೋಗಾಂಗದಲಿ ನಿತ್ಯಾ ನಿತ್ಯವರಿವನೆ | ಜಾಣರದೇವ
ಸಾಗಿ ನಿತ್ಯಾನಂದದೊಳು ಮುಕ್ಕು ಮೆರೆವನೆ | ಜಾಣರದೇವ||1||

ಅರು ಕ್ರಿಯಾಚಾರದಿಂ ರುಜೆಯ ಸಂಹರಿಪನೆ | ಜಾಣರದೇವ
ಭಕ್ತಿ ಬಲದಿಂದ ಕ್ಷುಧೆಯ ತ್ಯಜಿಸುವನೆ | ಜಾಣರದೇವ
ಪರಿಪೂರ್ಣಜ್ಞಾನದಿಂ ಮನವನಂಡಲಿವನೆ | ಜಾಣರದೇವ
ನಿರುತ ನಿಜಾನಂದದೊಳು ತೃಪ್ತಿವಡೆವನೆ | ಜಾಣರದೇವ ||2||
ಆರು ವರ್ಗಗಳುರವಣೆಯ ಮಾಣಿಸುವನೆ | ಜಾಣರದೇವ
ತೋರುವ ಕಾಲಕಾಮರ ಮೆಟ್ಟಿ ತುಳಿವನೆ | ಜಾಣರದೇವ
ಮೀರಿದ ಪಂಚೇಂದ್ರಿಯಗಳ ಕೆಡಿಸುವನೆ | ಜಾಣರದೇವ

ಮೂರುಬಗೆಯ ಬೆಳಗಿನೊಳು ಬೆಳಗುವನೆ | ಜಾಣರದೇವ||3||
ಮೀನ ಕಚ್ಛಪ ಖಗಗಳ ಕುರುಹಿಡಿವನೆ | ಜಾಣರದೇವ
ಮೌನದಿಂ ನೋಟ ತಿಳುಪು ಸೋಂಕ ಬಿಡದವನೆ | ಜಾಣರದೇವ
ಮೀನ ಕಚ್ಛಪ ಖಗಗಳ ಪುತ್ರರರಿವನೆ | ಜಾಣರದೇವ
ಸಾನುರಾಗದಿಯವರೊಳು ಬೆರೆದಿರುವನೆ | ಜಾಣರದೇವ ||4||

ಕಲ್ಲಿನಾಥನೇಕರೀಕ್ಷಣವೆಂದು ಬಗೆವನೆ | ಜಾಣರದೇವ
ಸಲ್ಲೀಲೆಯೆ ಮನೋನೇತ್ರವೆಂದುಲಿವನೆ | ಜಾಣರದೇವ
ಮೆಲ್ಲನೆ ವಾಕ್ಯೇಷ್ಟನಭಾವನೆಂಬನೆ | ಜಾಣರದೇವ
ನಿಲ್ಲದೆ ಗುರುಸಂಗನೊಳಗೇಕವಾಹನೆ | ಜಾಣರದೇವ ||5||

ಮೂರು ತೆರದ ನೋಟ
ಮೂರುತೆರದ ನೋಟದಿಂದೆ | ಸಲೆ
ಮೂರುಲಿಂಗಗಳರಿವರಿವುದರಿದು ||ಪ||

ಎವೆಯಾಟದ ಸುಳಿವಳಿದಿಷ್ಟಲಿಂಗವ
ಸುವಿಚಾರದಿಂದ ನಿರೀಕ್ಷಿಸದಿರವು
ತವೆ ರಾಜಿಸುತಿಹ ನೇತ್ರದ್ವಯಗಳವು
ವಿವರಿಸೆ ಬಲೆಯ ಕಂಡಿಯ ತೆರನು ||1||

ಮಿರುಗುವ ಪ್ರಾಣಲಿಂಗದೊಳು ಮನೋದೃಷ್ಟಿ
ಕರಿಗೊಂಡುವೆರಕವಾಗಿರದಿರಲು
ಮೆರೆವ ಮನ್ಮಥನ ಮಂದಿರಕೆ ಸಮಾನವೆಂ
ದೊರೆವರದನು ಶಿವಯೋಗಿಗಳು ||2||

ಅನುದಿನ ಮರೆಯದೆ ಭಾವಸ್ಪರ್ಶೊಷ್ಟು
ವನುವಾಗಿ ನೆಲೆಗೊಂಡು ನಿಲ್ಲದಿರೆ
ಕನಲಿ ಕೂಗುವ ಗೂಗೆಯ ಧ್ವನಿಯಂದದ
ಮನು ತತ್ಪರರು ದಿಃಕರಿಸುತಿಹರು ||3||

ಈಕ್ಷಣ ಮನನ ಸ್ಪರ್ಶನವಿಲ್ಲದಿರೆ ಪ್ರ
ತ್ಯಕ್ಷ ಜಾಲ ಗುಹ್ಯ ಘೂೀಕಂಗಳ
ಮೋಕ್ಷ ಭಾಜನರದನರಿದು ನಿರಾಕರಿ
ಸಕ್ಷಯ ಸುಖದೊಳಿರುತಿಹರು ||4||

ಈ ರೀತಿಯಿಂದ ಗೋಮುಖ ವರ್ತುಳನು
ಸಾರ ಗೋಳಕಗಳನುವನರಿದು
ಭೂರಿ ಚಿತ್ಕಳೆಗಳೊಳಗೆ ಮನವಳಿದಘ
ದೂರ ಸಂಗನೊಳಗೆ ಬೆರದಿಹರು ||5||

ಮೂರಂಗದಿಂದ ಮೂಲಿಂಗಗಳ ಸೇವೆ
ಮೂರು ತೆರನಾದಂಗಕ್ರಮವನರಿದು ನೆರೆ
ಮೂರು ಲಿಂಗಾಸ್ಯದಿ ಸೇವಿಪುದ ವರ್ಣಿಪೆನು ||ಪ||

ಈಕ್ಷಣ ಜ್ಞಾನ ಸ್ಪರ್ಶನ ಮುಖಂಗಳೊ
ಳ್ಸುಕ್ಷೇಮದಿಂ ತ್ಯಾಗಾಂಗನಿಷ್ಟ ಪ್ರಾಣ ಪ್ರ
ತ್ಯಕ್ಷರ ರೂಪ ಭಾವಗಳಿಗಿತ್ತನುಭವಿಗೆ
ಅಕ್ಷಯ ತ್ರಿವಿಧ ಲಿಂಗಾರ್ಪಣವದಹುದು ||1||

ನಲವಿನಿಂ ರೂಪು ರುಚಿ ತೃಪ್ತಿಗಳೆಂದೆಂಬ
ಸುಲಲಿತ ವದನಂಗಳೊಳ್ತ್ಯಾಗಾಂಗವನು
ಒಲಿದರಿದರಿದಿಷ್ಟ ಪ್ರಾಣ ಭಾವಂಗಳಿ
ಗಲಸದೆ ಕೊಟ್ಟನುಭವಿಸಲು ಲಿಂಗಾರ್ಪಣವು ||2||

ತನುಮನ ಮಾರುತಗಳೆಂದೆಂಬಾನನಗಳೊ
ಳನುವರಿದಮಲ ಯೋಗಾಂಗವನತಿ ಭರದಿಂ
ಮನವೊಲಿದಿಷ್ಟ ಸುಭಾವಲಿಂಗಂಗಳಿಗಿ
ತ್ತನುಭವಿಸೆ ಗುರುಸಂಗನೊಳಗೇಕವಹುದು ||3||

ತ್ರಿವಿಧ ಅಂಗ-ಲಿಂಗ ಸಂಗ
ತ್ರಿವಿಧ ತೆರನಾದಂಗಲಿಂಗ ಸಂಗವನರಿದ
ಡವಿರಳಾನಂದ ಪರಮುಕ್ತಿಯಹುದು ||ಪ||

ಹೊರಗೆ ರಾಜಿಸುತಿರ್ಪ ತ್ಯಾಗಾಂಗವನು ತಾನು
ಮೆರೆವ ಲಿಂಗಾಂಗವೆಂಬೀ ವಿಧವನು
ನೆರೆಯರಿದು ಪರಮ ಪರಿತೋಷದಿಂದಿರುತಿರಲು
ದೊರೆವುದನುಪಮ ಮುಕ್ತಿಪದವು ತನಗೆ ||1||

ಅಮಲ ಭೋಗಾಂಗ ತಾಂ ಲಿಂಗವೆಂದೆಂಬ
ಕ್ರಮವ ಮಿಗೆ ತಿಳಿದು ಪರದೊಳಗೆ ಬೆರದಿರಲು
ಭ್ರಮೆಯಳಿದು ಸುಮನ ನೆಲೆಗೊಂಡು ನಿಶಿತತೆಯೊ
ಳಮಿತ ಪರನಿರ್ವಾಣ ಪದವಿ ದೊರಕುವದು ||2||

ನಿರುಪಮ ನಿರಾತಿಶಯ ನಿರವೇದ್ಯ ಪರಿಪೂರ್ಣ
ಪರಮ ಯೋಗಾಂಗವದು ಲಿಂಗಾಂಗವೆಂಬ
ಪರಿಯ ಹೊದ್ದದ ಬಚ್ಚಬರಿಯ ರೂಪೆಂದರಿಯೆ
ಗುರುಸಂಗಮೇಶನೊಳ್ಸಮರಸವದಹುದು ||3||

ಧ್ಯಾನ ಧಾರಣ ಸಮಾಧಿ
ಧ್ಯಾನ ಧಾರಣ ಸಮಾಧಿಗಳನನವರತ ಸಂ
ಧಾನಿಸುತಿಹುದು ನಿಜಮೋಕ್ಷವಾಂಛಿತರು ||ಪ||

ಕರಕಮಲದೊಳಿರ್ದ ನೀಲವರ್ಣದ ಲಿಂಗ
ಸುರುಚಿರ ಕಳೆಯನೀಕ್ಷಿಸುತಿರಲದರೊಳ್
ಶರೀರವ ಬಿಟ್ಟು ಪರವಶದೊಳಿರುತಿರೆ ಚಾರು
ತರವಾದ ಧ್ಯಾನವೆನಿಪ ಯೋಗವದಹುದು ||1||

ಅಧರಸೂತ್ರದಿ ಕವಲ್ವಡೆದು ಬೆಳಗುತಿರ್ಪ
ಸದಮಲ ನೀಲವರ್ಣದ ಲಿಂಗದ್ವಯದೊ
ಳ್ವೊದೆದು ಮನೋಭ್ರಮೆಯಳಿದು ನಿರ್ಮಲವಾಗಿ
ಹುದುಗಿ ಬೆರದನುವೆ ಧಾರಣಯೋಗವಹುದು ||2||

ಆ ತ್ರಿಕೋಣೆಯ ಮಧ್ಯದೊಳಗತಿಶಯವಾದ
ಸೂತ್ರವಿಡಿದು ರಾಜಿಸುವ ನೀಲಜ್ಯೋತಿ
ಗಾತ್ರದೊಳುರಿಯುಂಡ ಕರ್ಪೂರದಂತೆ ಚಿ
ನ್ಮಾತ್ರ ಸಂಗನೊಳೇಕವಹುದೆ ಸಮಾಧಿ ||3||

ಮಾಡು ಶಿವಪೂಜೆಯ
ಮಾಡು ಶಿವಪೂಜೆಯ ನೋಡು ಮೂವಿಧದಿಂದ
ನಾಡಾಡಿಯಲ್ಲವಿದರ ಪರಿ ಹೊಸತು ||ಪ||

ಹೊರಗೆ ರಾಜಿಸುತಿರ್ಪ ಸೂರ್ಯಮಂಡಲದೊಳು
ಮಿರುಗುವ ನೀಲವರ್ಣದ ಜ್ಯೋತಿಕಳೆಯ
ಪರಿಯನರಿದು ಅದರೊಳಗಂಗವನು ಬಿಟ್ಟು
ಕರಿಗೊಂಡು ಹೊರಗೆ ಮರೆದು ನೋಟ ಬಲಿದು ||1||

ತಿಳಿಯಬಾರದ ತಾಣದೊಳಗೆ ಶೋಭಿಸುತಿರ್ಪ
ಚಳಿಗದಿರನ ಮಂಡಲದ ಮಧ್ಯದೊಳಗೆ
ಹೊಳೆವ ನೀಲದವರ್ಣ ಜ್ಯೋತಿಗಳೆರಡರ
ಬೆಳಗಿನೊಳಗೆ ಮನ ಬೆರೆದು ಬೇರಿಡದೆ ||2||

ನುಡಿಯಬಾರದ ನುಡಿಯೊಳಗೆ ಮಿಸುಗುವ ಕೆಂ
ಗಿಡಿಯ ಮಂಡಲದ ಮಧ್ಯದೊಳು ಮಾರ್ಪೊಳೆವ
ಬೆಳಗಿನ ನೀಲವರ್ಣದ ಜ್ಯೋತಿಪುಂಜ
ದೊಳ್ಕಡುಜಾಣಿನಿಂದ ಗುರುಸಂಗನೊಳ್ಬೆರೆದು ||3||

ಬಲ್ಲವರ ಬೆಸಗೊಂಡು ತಿಳಿವುದು
ಬಲ್ಲರೆ ತಿಳಿವುದು ನೀವಲ್ಲದಿದ್ದರೆ ಮತ್ತೆ
ಬಲ್ಲವರುಗಳ ಬೆಸಗೊಂಡು ತಿಳಿವುದು ||ಪ||

ಕರದೊಳಗೆಸೆವ ಕಮಲಸಖಮಂಡಲದ
ಕಿರಣನಿಕರಗಳೊಳ್ಮಿರುಗುತಲಿರ್ಪ
ವರ ನೀಲವರ್ಣವಾಗಿಹದೊಂದು ಜ್ಯೋತಿಯ
ಪರಮಾಲೋಕನದಿಂದರಿವುದ ಕಾಣಿಪರು ||1||

ನೂತನವಾಗಿಹ ಶಿರದೊಳ್ನೆರೆ ರಾಜಿಪ
ಸೀತಕಿರಣಮಂಡಲದೊಳೆಡೆವಿಡದೆ
ಪೂತ ನೀಲದ ವರ್ಣವಾಗಿ ಹೊಳೆವುತಿರ್ಪ
ಜ್ಯೋತಿಗಳೆರಡರಿಂಗಿತವ ಕಾಣಿಪರು ||2||

ವದನದೊಳಗೆ ಶೋಭಿಸುವ ವಹ್ನಿಮಂಡಲದ
ಸದಮಲ ಕಳೆಯ ಬೆಳಗಿನ ಬಳಗದೊಳ್
ಹುದುಗಿ ಗದಗದಿಪ ನೀಲದ ವರ್ಣಜ್ಯೋತಿಯ
ಹೊದರಿನೊಳ್ಗುರುಸಂಗನಿರವ ಕಾಣಿಪರು ||3||

ಸಕಲ ಸುಖಗಳ ತ್ರೈಲಿಂಗಕರ್ಪಿಸಬೇಕು
ಸಕಲ ಸುಖಗಳನುವರಿದನುರಾಗದಿಂ
ದಕಲಂಕ ತ್ರೈಲಿಂಗಕರ್ಪಿಸಬೇಕು ||ಪ||

ಆದಿವ್ಯಾಧಿ ಮಹಾ ದುಃಖಂಗಳನು ಬೇಗದಿ ತಾನು
ಮೂದೆರದ ಲಿಂಗಗಳಿಗರ್ಪಿಸಬೇಕು
ಸಾದರದಿ ಬಾಲವಯೋವಾರ್ಧಿಕಂಗಳನು ತಾನು
ಮೂದೆರದ ಲಿಂಗಗಳಿಗರ್ಪಿಸಬೇಕು ||1||

ಜನನ ಸ್ಥಿತಿ ಮರಣಗಳ ತೊಡಕ ತಿಳಿದು ಮಿಗೆ
ಮನವೊಲಿದು ಮೂರುಲಿಂಗಕರ್ಪಿಸಬೇಕು
ಜಿನಿಗಿಸುವ ಸಂಚಿತಾಗಾಮಿ ಪ್ರಾರಬ್ಧಂಗಳನು
ವಿನಯದಿಂದ ಮೂರುಲಿಂಗಕರ್ಪಿಸಬೇಕು ||2||

ಎಚ್ಚರು ಕನಸು ನಿದ್ರೆಗಳನು ಪ್ರೀತಿಯಿಂದ ನೆರೆ
ಮಚ್ಚಿ ಮೂರುಲಿಂಗಗಳಿಗರ್ಪಿಸಬೇಕು
ಹೆಚ್ಚು ಕಡಿಮೆಯೊಳಗೆ ಮಿಳಿತವಾದ ಶ್ರೀದರಿದ್ರತೆಯನು
ನಿಚ್ಚ ನಿಚ್ಚ ಸಂಗಮೇಶಗರ್ಪಿಸಬೇಕು ||3||

ಮಲತ್ರಯಗಳ ಪಳಿವ ಸಾಧನೆ
ಆಣವ ಮಾಯಾ ಕಾರ್ಮಿಕ ಮಲತ್ರಯಗಳ
ಮಾಣದೆ ಪಳಿವ ಸಾಧನವ ಪೇಳುವೆನು ||ಪ||

ಹಸ್ತಕಮಲದೊಳು ನ್ಯಸ್ತವಾಗೆಸೆದಿರ್ಪ
ವಸ್ತುವಿನಮಲ ರೂಪನು ತಿಳಿದು
ಕುಸ್ತರಿಸೇಕಾವಲೋಕನದಿಂ ನೋಡಿ
ವಿಸ್ತಾರವರಿಯಲಾಣವಮಲವಿರದು ||1||

ಸಿರದ ಮಧ್ಯದೊಳವಿರಳವಾಗಿ ಬೆಳಗುವೆ
ಪರ ಪ್ರಾಣಲಿಂಗವೆರಡನರಿದು
ನಿರುತ ಮನೋದೃಕ್ಕಿನಿಂದೆ ನಿರೀಕ್ಷಿಸಿ
ಪರಿತುಷ್ಟಿವಡೆಯೆ ಮಾಯಾಮಲವಿದೂರ ||2||

ಪ್ರತ್ಯಾಗ್ರನನ ಮಧ್ಯದೊಳಗೆ ಶೋಭಿಸುತಿರ್ಪ
ಪ್ರತ್ಯಕ್ಷ ಭಾವಲಿಂಗವ ಭಜಿಸೆ
ಕೃತ್ಯವಳಿದು ಗುರುಸಂಗಮೇಶ್ವರನೊಳು
ನಿತ್ಯ ಬೆರೆಯಲು ಕಾರ್ಮಿಕಮಲವಿರೆದು ||3||

ಚಿದ್ಘನಲಿಂಗ

ಕಾಣಿಸುತಿದೆ ನೋಡಮ್ಮ | ಕಂಗಳ ಮುಂದೆ
ಕಾಣಬಾರದ ಘನವು
ಪ್ರಾಣಕಲಾಧಾರವಾದ ಚಿದಾಕಾಶ
ಕೋಣೆಯೊಳಗೆ ಜ್ಯೋತಿಯು ||1||

ಕಾಂಚನಾಚಲದ ಮೇಲೆ ಮಿರುಗುತಿಹ
ಮಿಂಚಿನೊಬ್ಬುಳಿಯೊಳಗೆ
ಚಂಚರಿಕನು ಸ್ವರವೆತ್ತಿ ಪಾಡುತಲುರೆ
ಪಂಚವಣ್ಣದೊಳಿಹುದು ||2||

ಪರಶಿವನಂ ಬಕದ ತೆರದಿ ಬಿಲ್ವ
ಸುರುಚಿರದಳದಂದದಿ
ನಿರುಪಮ ವರ್ಣತ್ರಯಾನ್ವಿತಲಿಂಗ ಮಂ
ದಿರ ಮಧ್ಯದೊಳಗೆ ನೀನು ||3||

ಬಿಂಬತ್ರಯದ ತಾರಕ ನಭದೊಳ್
ಗಂಬುಜಾರಿಯ ಮಧ್ಯದ
ಬಿಂಬದೊಳಗೆ ಪ್ರತಿಬಿಂಬಿಪ ಗುರುಸಂಗ
ನೆಂಬ ಚಿದ್ಘನಲಿಂಗವು ತಾನೆ ||4||

ಪ್ರಾಣಲಿಂಗಜ್ಯೋತಿ

ಕಾಣಿಸುತಿದೆ ನೋಡು ಕಂಗಳಾಲಿಯ ನಡು
ತ್ರಾಣ ದೀವಿಗೆಯ ಮೇಲೆ
ಘ್ರಾಣದಗ್ರದ ಗಂಗಾ ಯಮುನಾ ಸರಸ್ವತಿಗಳ
ಕೋಣೆಯೊಳಗೆ ಪ್ರಾಣಲಿಂಗವೆನಿಪ ಜ್ಯೋತಿಯು ||ಪ||

ತಾಲು ಮೂಲ ದ್ವಾದ ಶಾಂತವೆಂದೆನಿಸಿಕೊಂ
ಬಾಲಯದಂಬರದ
ನೀಲ ಬಿಂದುವಿನಂತರಾಳದೊಳಗೆ ಸೂಕ್ಷ್ಮ
ಜಾಲಂದರದೊಳು ಬಲು ಬೆಳಗಬೀರುತಲಿದೆ ||1||

ಬಿಳಿದು ಕರಿದು ಕೆಂಪುವೆರೆದು ರಂಗಿಪ ಮೂರು
ಬಳಸಿನೊಳಗೆ ಮಿರುಪ
ನಳಿನಾಪ್ತ ರಾಜಾಗ್ನಿ ಮಂಡಲತ್ರಯಗಳಿಂ
ಮಿಳಿತವಾಗಿಹ ಮಹಾಮಂಡಲದೊಳಗೀಗ ||2||

ಮತ್ತದರೊಳಗೇಳು ಸುತ್ತುಗಳಿ ಹವದ
ರತ್ತ ನಿಲುಕಿ ನೋಡಲು
ಬಿತ್ತರವಾದ ಮೂವತ್ತೆರಡು ಕುಸುಮಗಳ
ಮೊತ್ತದೊಳಗೆ ಮುದವೆತ್ತು ರಾಜಿಸುತಿದೆ ||3||

ಪುರಬಾಣ ಶಶಿಕಳಾ ಸರಸಿಜಸಖ ನಿಧಿ
ಕರರುತ ಹರಿನಯನ
ಸುರುಚಿರದಳಗಳಿಂದೆಸೆವ ಮನೋಂಬುಜ
ವರ ಕರ್ಣಿಕಾಗ್ರ ತೇಜೋಮಂಡಲದೊಳೀಗ ||4||
ಬಿಂದು ನಾದಾತ್ಮ ವಿದ್ಯಾನಾಮ ಸಚ್ಚಿದಾ
ನಂದ ಮಂಟಪದೊಳಗೆ
ಅಂಗವಟ್ಟಿಹ ಶೂನ್ಯಸಿಂಹಾಸನದೊಳೊಲ
ವಿಂದ ನೆಲಸಿಹ ಸಂಗಮೇಶನೆನಿಪ ಜ್ಯೋತಿ ||5||

ಜ್ಞಾನೋಪದೇಶದನುವು
ಜ್ಞಾನೋಪದೇಶದನುವ ಬ್ರಹ್ಮ
ಜ್ಞಾನಾನುಭಾವಿಗಳಿಗೆ ತಿಳಿಯವೇಳ್ವೆನು ||ಪ||

ವಾಮ ದಕ್ಷಿಣ ಭಾಗಗಳೊಳು ರಾಜಿಸುತಿಹ
ಸೋಮಸೂರ್ಯರ ಮಹಾಧಾಮದೊಳು
ಪ್ರೇಮದಿಂ ನೆಲಸಹ ಸತಿಪತಿಗಳ ದಿವ್ಯ
ನಾಮವನರಿದು ಜಪಿಸಬಲ್ಲಡುಪದೇಶ ||1||

ಆರು ಮೂರಳಿದ ಮೂರೇಳು ಸಾಸಿರವಾದ
ಚಾರುಜಪಗಳ ವಿಗಳ ವಿಚಾರವನು
ವಾರಿಜಭವ ಮೊದಲಾದ ದೇವತೆಗಳಿ
ಗಾರೈದು ಹಸಿಗೆಯ ಮಾಡಲುಪದೇಶ ||2||

ಅದರೊಳು ಶಿವಬೀಜವೆನಿಪಾತ್ಮ ಮಂತ್ರವ
ನದರೊಳಗರಿದಧೋಕುಂಡಲಿಯ
ಪಡೆದು ಜತನದಿಂದ ಲದ ಮೇಲಕಡರಿಸಿ
ಮುದದಿಂದಲಾಡಿಸಬಲ್ಲಡು ಪದೇಶ ||3||

ಬಳಿಕಧೋ ಕುಂಡಲಿಯನಂಡಲೆದು
ಕಳಕಳಿಸುವ ಮಧ್ಯಕುಂಡಲಿಯನು
ತಿಳಿದದನುಳಿದೂಧ್ರ್ವ ಕುಂಡಲಿಯನು ಶಿವ
ನಿಳಯದೊಳಡಗಿಸಬಲ್ಲಡುಪದೇಶ ||4||

ಮೂಲಾವಲೋಕನೀ ಮುದ್ರೆಯ ಬಲದಿಂದ
ಲಾಲಿ ಮಿಡುಕದ ದೃಷ್ಟಿಗಳನು
ಕೀಲಿಸಿ ಭ್ರೂ ಯುಗ ಮಧ್ಯದೊಳಗೆ ಮನೋ
ಚಾಲನೆಯಳಿದು ನೋಡುತಿರಲುಪದೇಶ ||5||

ಆರು ಚಕ್ರಂಗಳ ಮೇಲಕೆ ಮುಖವಾಗಿ
ಮೂರು ಚಕ್ರಂಗಳೊಳಗೆ ಬೆರೆದು
ಆರು ಮೂರೊಂಬತ್ತುವೆನಿಪವೆಲ್ಲೊಂದಾಗಿ
ಮೀರಿದ ಸ್ಥಾನವನರಿಯಲದುಪದೇಶ ||6||

ತಾಲುಮೂಲದ ದ್ವಾದ ಶಾಂತವೆನಿಪ ಸುವಿ
ಶಾಲವಾ ದನುಪಮಾಲಯದೊಳಗೆ
ಲೀಲೆಯಿಂದಲಿ ನಡುನೀರ ಜ್ಯೋತಿಯ ಬಹು
ಜ್ವಾಲೆಯೊಳಗೆ ಮನವಳಿಯೆ ತಾನುಪದೇಶ ||7||

ರವಿರಾಜ ವೈಶ್ವಾನರರ ತೇಜೋಪುಂಜದೊ
ಳವಿರಳ ಹೃದಯಕಮಲದೊಳಗೆ
ರವಿಶತಕೋಟಿ ಸಂಕಾಶವಿರಾಜಿತ
ಶಿವಲಿಂಗದನುಸಂಧಾನದೊಳಿರಲುಪದೇಶ ||8||

ನಸುಗೆಂಪು ಬಿಳಿದು ಕರಿದು ಕೆಂಪು ನಸುಬಿಳಿ
ದಸಮ ಸುರಕ್ತ ಕೃಷ್ಣಗಳಿಂದ
ಎಸೆವ ಹಳದಿ ಮಿಸುನಿಯಬಣ್ಣದತಿಶಯ
ಕುಸುಮ ಗರ್ದುಗೆಯ ಕೊನೆಯನೇರಲುಪದೇಶ ||9||

ಮತ್ತೆಂಟು ದಳದ ಷೋಡಶದಳದಬ್ಜಗ
ಳಿತ್ತೆ ರದೊಳು ನಟ್ಟನಡುವೆಡೆಯ
ಗೊತ್ತಿನ ಶತ ಪತ್ರದೊಳು ಬಿಳಿವಣ್ಣದ
ಬಿತ್ತರವಳಿಯ ನುಡಿಯಕೇಳಲುಪದೇಶ ||10||

ಇಂತು ನಾನಾ ವಿಧವಾಗಿ ತನ್ನಯ ಬಾಹ್ಯಾ
ಭ್ಯಂತರದೊಳಗೆಡೆ ದೆರಹಿಲ್ಲದೆ
ಸಂತತ ಬೆಳಗುವ ಗುರುಸಂಗಮೇಶನ
ಚಿಂತೆಯೊಳಗೆ ಲಯವಾಗಿರಲುಪದೇಶ ||11||

ಆತ್ಮಾರಾಮ
ಆತ್ಮರಾಮ ಆತ್ಮರಾಮ ಆತ್ಮರಾಮ ಆತ್ಮರಾಮ ||ಪ||

ಮೂರೆಸಳಿನ ಬ್ರಹ್ಮಚಕ್ರದೊಳನುಪಮ
ಚಾರುಕರ್ಣಿಕೆಯಗ್ರದಲ್ಲಿ ರಾಜಿಸುವಾತ್ಮ ||1||

ಲಿಂಗಸ್ಥಾನದ ನಾಲ್ಕೆಸಳಿನ ಕಮಲದಿ
ರಂಗಿಸಿ ಪಶ್ಚಿಮ ಮುಖದಿಂದಲೆಸೆವಾತ್ಮ ||2||

ಪಂಚವರ್ಣದ ಪದ್ಮದಂತರದೊಳಗುರೆ
ಮಿಂಚಿನ ಬಳ್ಳಿಯಂದದೊಳು ಬೆಳಗುವಾತ್ಮ ||3||

ಎಂಟೆಸಳಿನ ತಾವರೆಯ ಹೂವಿನ ನಡು
ದಂಟಿನೊಳುರುತರ ದೀಪದಂತುರಿವಾತ್ಮ ||4||

ತಾಲುಮೂಲದೊಳಿಡೆ ಪಿಂಗಳೆಗಳ ಮಧ್ಯ
ದಾಲಯದಾಕಾಶದೊಳಗೆ ಕಾಣಿಸುವಾತ್ಮ ||5||

ಅತಿಶಯವಾದ ಮತ್ತೊಂದೆಡೆಯೊಳಗನು
ಮತಿಸಿ ಮಹಾಶೂನ್ಯಾಕಾರವಾಗಿರುವಾತ್ಮ ||6||

ನೂತನವಾ ದೇಕನಾಳ ಕಂಜದಮಧ್ಯ
ಜ್ಯೋತಿಯೊಳಗೆ ಜ್ಞಾನನೇತ್ರವಾಗಿರುವಾತ್ಮ ||7||

ವರ್ಣತ್ರ ಯಾನ್ವಿ ತವಾದ ಪಂಕೇರುಹ
ಕರ್ಣೀಕಾಗ್ರದೊಳಗ್ನಿಯಂತೆ ರಂಜಿಸುವಾತ್ಮ ||8||

ಪದಿನಾರೆಸಳಿನ ಪಂಕಜ ಕರ್ಣಿಕಾಗ್ರದ
ಸದನದೊಳಗೆ ಮುದದಿ ನೆಲಸಿದಾತ್ಮ ||9||

ನಾದಬಿಂದುಕಳಾತೀತವಾದನುಪಮ
ನಾದಾಲಯದೊಳಗೆ ಹೊಳೆವ ಚಿದ್ವೀಪಾತ್ಮ ||10||

ಹಿಂಗದೆನ್ನೆಯ ಹೃದಯಾಂಗಣದೊಳಗಿರುಹ
ಸಂಗಮೇಶ್ವರನೆನಿಸುವ ಪರಮಾತ್ಮ ||11||

ಯೋಗಿಯೆನಿಸೆನ್ನನು
ಯೋಗಿಯೆಂದೆ ನಿಸೆನ್ನನು | ಪರಮ ಶಿವ
ಯೋಗಿಜನವಂದ್ಯನೆ
ಭೋಗವಿಷಯ ಸುಖಪೂರಕೆಳಸಿ ಭವ
ರೋಗಿಯೆನಿಸದೆ ಪಾವನಚಿತ್ಪ್ರಕಾಶನೆ ||ಪ||

ಪರಮಚೌಪೀಠದೊಳು | ಮಿರುಗುತಿರ್ಪ
ನಿರುಪಮ ನಾದವನು
ತ್ವರಿತದಿ ಬೋಧಿಸಿ ಹೊರಗೆ ರಾಜಿಸುತಿರ್ಪ
ತರುಣಿಯ ಚೊಕ್ಕ ನುಡಿಯ ಕೇಳಲೀಸದೆ ||1||

ಸುರುಚಿರಾಸನ ಮುದ್ರೆಯಿಂ ಮನೋದೃಷ್ಟಿ
ಮರುತಂಗಳನುಗೊಳಿಸಿ
ಸರಸಿಜಾನನೆಯಾಲಿಂಗನವ ಮಾಡುವ ಚಾರು
ತರವಾದ ಕಲೆಯ ಮೋಹನ ಮಾಡಲೀಸದೆ ||2|||

ಮೂರು ಮಂಡಲದ ಮೇಲೆ ಮಿರುಗುತಿರ್ಪ
ಪಾರ ತೇಜವ ತೋರಿಸಿ
ವಾರಿಜಾಕ್ಷಿಯ ರೂಪ ನೋಡಿ ನೀರೆಂದದ
ಸಾರಿ ಮನದೊಳು ಭಾವಿಸಿ ಭ್ರಮೆಗೊಳಿಸದೆ ||3||

ಬಾಲರಂಡೆಯ ಶಿರದಿ ಸುರಿವುತಿರ್ಪ
ಲೋಲ ಚಿದ್ರಸವನೂಡಿ
ಬಾಲೆಯಧರ ಸುಧಾರಸವ ಸೇವಿಸುತಿರ್ಪ
ಲೀಲೆಯೊಳೊಡವೆರಸಿಹ ಸೊಗಸೆಸಗದೆ ||4||

ಸಾಸಿರೆಸಳ ಕಮಲವಲರೆ ದಿವ್ಯ
ವಾಸನೆ ತೀವಿ ಮಿಕ್ಕಾ
ಲೇಸಿನಬಲೆಯುಸುರ್ವಾಸನೆಯನು ನಿಗೆ
ವಾಸಿಪ ಸವಿಗುಡದೆಲೆ ಸಂಗಮೇಶ್ವರಾ ||5||

[/fusion_toggle][fusion_toggle title= “ದೂರವಲ್ಲವು ಕಾಣಾ ಕಲಧೌತ ಪರ್ವತ
ದೂರವಲ್ಲವು ಕಾಣಾ ಕಲಧೌತ ಪರ್ವತವು
ಸೂರ್ಯಚಂದ್ರರ ಮೇಗಡೆಯೊಳು ನೆಲಸಿಹುದು ||ಪ||

ಹಲವು ಕೋಟಲೆಗಳ ನುಳಿದು ನಿರ್ಮಳನಾಗಿ
ಚಲಿಸುವ ಮನವನಂಡಲೆದು ಸೆರೆವಿಡಿದು
ನೆಲೆ ನೆಲೆಗಳ ಹತ್ತಿ ನೆತ್ತಿ ಮಂಡಲದಲ್ಲಿ
ಚೆಲುವ ತಾವರೆಗೊಳದ ತಿಳಿನೀರ ಸವಿಯೆ ||1||

ಮಂತಣದೊಳಗಿದ್ದು ಮಾಯಪಾಶವಗೆಲ್ದು
ಶಾಂತಿ ಪ್ರಣಮಿನಿಯ ಹೃತ್ಸಂತ ದೊಳೆಸೆದು
ಕಾಂತಿಮಯ ಕಮಲದಕರ್ಣೀಕಾ ರೇಖಾಗ್ರ
ದಂತರಾಕಾಶದಾಕಾಶದಿ ಮನವಳಿಯೆ ||2||

ಮರುತನ ದ್ವಾರ ಹೃದ್ವಾರಮೂರ್ಧ್ವದ್ವಾರ
ಪರಮ ಮೋಕ್ಷದ್ವಾರ ಸುಸಿರ ಮಂಡಲದಿ
ಮರುತ ಮನೋದೃಷ್ಟಿಗಳನೊಂದುಗೂಡಿ ಸು
ಸ್ಥಿರವಾಗಿ ನೋಡುತಿರಲು ಕಾಣುತಿಹುದು ||3||

ಆರೆರಡೆಸಳ ಕಮಲದ ತುದಿಯಲಿ ಪದಿ
ನಾರೆರಡೆಸಳ ಕಮಲದ ಕೆಂ ದಾಣದೊಳು
ಮೀರಿದ ದಶಶತಪತ್ರದ ಬಿಳಿವಣ್ಣ
ದಾರಡಿಯ ಧ್ವನಿಯನೆಡೆವಿಡದೆ ಲಾಲಿಸಲು ||4||

ತಾರಾಚಲವೆಂದೆನಲು ದೇವಾಚಲವೆಂದೆನಲು
ಚಾರುತರ ಪೂರ್ಣಾಚಲವೆಂದೆನಲು ತಾನೆ
ಆರಮ್ಯತರವಾದ ಸುರಸದನವೆಂದೆನಲು
ಸಾರ ಶಾಂಭವಲೋಕವೆಂಬ ಪರಸರಹುದು ||5||

ಇನ್ನೇನ ಹೇಳಲಿ ನಿನ್ನ ಬುದ್ಧಿಯ ನಾನು
ನಿನ್ನ ಕಂಗಳ ಮುಂದಣಂಗಣದಲ್ಲಿ
ರನ್ನವೆಟ್ಟುವಿನಾಚೆ ರಂಜಿಸಿ ಬೆಳಗುತಿದೆ
ನಿನ್ನಾಣೆ ಪುಸಿಯಲ್ಲ ಚೆನ್ನಾಗಿ ನೋಡೆ ||6||

ಇದಿಗಿದಿಗೊ ಕಾಣಿತಿದೆ ಗದಗದನೆ ಹೊಳೆವುತಿದೆ
ಮುದದಿಂದೆ ಮೌನಮುದ್ರೆಯೊಳು ಮೈಮರೆದು
ಸದಮಲಾನಂದ ಶ್ರೀಗುರು ಸಂಗಮೇಶ್ವರನ
ಪದಸರಸಿಜದನುಸಂಧಾನದೊಳಿರುತಿರಲು ||7||

ಶರಣು ಶರಣಯ್ಯ ಚೆನ್ನಬಸವೇಶ
ಶರಣು ಶರಣು ಶರಣಯ್ಯ ನಿಮ್ಮ
ಚರಣಕಮಲಕೆ ದಮ್ಮಯ್ಯ
ಕರುಣಸಾಗರ ಚೆನ್ನಬಸವೇಶ ನೀವೆನ್ನ
ಪರಿಭವಂಗಳನು ತೊಲಗಿಸಿರಕ್ಷಿಪುದು ||ಪ||

ಶಶಿರವಿಗಳ ಮಧ್ಯದೊಳಗೆ ಬೆಳ
ಗೆಸೆವ ಮಹಾಜ್ಯೋತಿಯೊಳಗೆ
ಮಿಸುಪ ತಾರಕಬ್ರಹ್ಮರೂಪಾಗಿ ಯೋಗಿಗ
ಳಸಮ ಹೃದಯಕಮಲದೊಳು ರಾಜಿಸುವ ||1||

ತಾಲು ಮೂಲ ದ್ವಾದಶಾಂತ ಕನ[ಕ]
ದಾಲಯದೊಳು ಚೆಲುವಾಂತ
ಜಲಕದೊಳು ಝಗಝಗಿಪ ಕಾಲಾನಲ
ಜ್ವಾಲಾಗ್ರ ದಿವ್ಯ ಪ್ರಕಾಶನಿವಾಸ ||2||

ಉತ್ತರವೆನಿಪ ಶಾಂಭವಿಯ ಮುದ್ರೆ
ಯತ್ತಣಿಂ ಮೂಗಿನ ಕೊನೆಯ
ಗೊತ್ತಿನ ಕೋಣೆಯ ಕುಸುಮ ಗರ್ದುಗೆಯೊಳು
ಬಿತ್ತರದಿಂದೊಷ್ಟಿಮಿಗೆ ನೆಲಸಿರುವ ||3||

ಆರೆರಡೆಸಳಿನ ಕಮಲದ ಪದಿ
ನಾರೆಸಳಿನ ಪಂಕೇರುಹದ
ದ್ವಾರದ ನಡುವಣ ಸಾಸಿರೆಸಳ ಪದ್ಮ
ಚಾರುಕರ್ಣಿಕೆಯೊಳು ಮೊರೆವ ಚಿದ್ಭೃಂಗ ||4||

ಕಂಗಳ ಮುಂಗಡೆಯೊಳಗೆ ತವೆ
ರಂಗಿಸು ವಂಗಣದೊಳಗೆ
ತುಂಗ ಪೂರ್ಣಾಚಲದೊಳು ಮಿರುಗುವ ಗುರು
ಸಂಗನೆನಿಪ ಚೆನ್ನಬಸವರಾಜೇಂದ್ರ ||5||

ತನ್ನ ಬೆಳಗುತಿದೆ ಜ್ಞಾನಜ್ಯೋತಿ
ಏನ ಹೇಳಲಿ ತನ್ನ ತಾನೆ ಬೆಳಗುತಿದೆ
ಜ್ಞಾನಜ್ಯೋತಿಯು ಪಲಬಗೆಗಳಾಗಿ ||ಪ||

ಅಚ್ಚಬೆಳಗೊ ಕಾರ್ಮುಗಿಲ ಮಧ್ಯದೊಳಗುರೆ
ಸ್ವಚ್ಛವಾಗೆಸೆವ ಮಿಂಚಿನ ಬಳ್ಳಿಯೊ
ಮುಚ್ಚಿ ಮುಸುಕಿದ ಪೊಗೆಯ ಬಗೆಯೊ ನಾನಿದ
ರಚ್ಚರಿಯನು ಪೇಳಲಸದಳವು ||1||

ತಾರಾಮಂಡಲವೊ ನಿರ್ಮಲ ಕಲೆಗಳೊ ತಿಳಿ
ನೀರೊ ಕಂಗೊಳಿಪ ಖದ್ಯೋತಂಗಳೊ
ಸೂರ್ಯಬಿಂಬವೊ ದೀವಿಗೆಯೊ ಶಶಿಕಿರಣವೊ
ಮೂರಾರು ರನ್ನಂಗಳಿಂಗಿತವೊ ||2||

ಕಂಗಳಾಗ್ರದ ಸುವರ್ಣದ ಕಂಜಕಿಂಜಲ್ಕೊ
ಶೃಂಗಾರ ದಂಡನಾಳ ಗಳಿರವೊ
ಮಂಗಳಾತ್ಮಕ ಗುರುಸಂಗಮೇಶ್ವರನ ಬೆ
ಡಂಗಿನ ಬೆಳಗಿನ ಮಂಜರಿಯೊ ||3||

ಶಿವಲಿಂಗ ಪೂಜೆಯ ಮಾಡಿ
ಅಂದವಾಗಿಹ ಬ್ರಹ್ಮಾನಂದದೊಳಗೆ ಮುದ
ದಿಂದ ಬೆರೆಯಲದು ಚೆಂದ
ಇಂದು ರವಿ ಶಿಖಿಗಳೊಂದಾದೆಡೆಯೊಳೊಲ
ವಿಂದ ಮಿರುಪ ಶಿವಲಿಂಗ ಪೂಜೆಯ ಮಾಡಿ ||ಪ||

ಗಗನ ಕೋಶದೊಳಗೆ ಪುಗಲಳವಲ್ಲದ
ಸೊಗಸಿನಂಬೋಜ ಪುಷ್ಪದೊಳು
ಮಿಗೆ ರಾಜಿಸುವ ಸೂಕ್ಷ್ಮ ಕರ್ಣಿಕಾಗ್ರದ ಚಾರು
ಖಗರಾಜ ವೈಶ್ವಾನರರ ಬೆಳಗಿನೊಳುರೆ ||1||

ಮತ್ತದರೊಳು ಚೆಲುವೆತ್ತ ವರ್ಣತ್ರಯ
ದತ್ತ ಚಿದಾಕಾಶದೊಳಗೆ
ಬಿತ್ತರವಾದ ವಿದ್ರುಮ ನೀಲರತ್ನಗ
ಳುತ್ತಮ ಸೋಮಪ್ರಕಾಶಗಳನು ನೋಡಿ ||2||

ಮೂಲಾ ವಲೋಕಿನೀ ಮುದ್ರೆಯಿಂದಲಿ ಮನೋ
ಚಾಲನೆಯಳಿದ ವಾಗ
ತಾಲುಚಕ್ರದ ಸುವಿಶಾಲ ಮಂಟಪದೊಳು
ಲೋಲ ಶ್ರೀಗುರು ಸಂಗಮೇಶನಂಘ್ರಿಯೊಳು ||3||

ಶರಣು ಗುರುದೇವನೆ
ಶರಣು ಶರಣು ಗುರದೇವನೆ ನಿಮ್ಮ ಶ್ರೀ
ಚರಣಕಮಲಗಳಿಗನುದಿನವು ||ಪ||

ತತ್ವ ತತ್ವಾತಿಗಳ ಮೊತ್ತಗಳನು ಪೇಳಿ
ಮತ್ತವ ನೆಲೆಗಳೆವ ಬಗೆಯ
ಬಿತ್ತರದಿಂದುಪದೇಶವ ಮಾಡಿದ
ಸತ್ತುಚಿತ್ತಾನಂದಮಯ ಗುರುವೆ ||1||

ನೀಲ ತೋಯದ ನಿರ್ವಿಕಾರ ಕ್ಷಣಿಕ ರುಚಿ
ಜಾಲ ನಿವಾರ ಶೋಕ ಗಳಂದದ
ಜ್ವಾಲಾಗ್ರಕಳೆಯೊಳು ಬೆಳಗುತಿಹ ಬ್ರಹ್ಮದ
ಮೂಲವನೆನಗರುಹಿದ ಗುರವೆ ||2||

ಕಂಗಳ ಕೊನೆಯ ಮೊನೆಯ ಮೇಲೆ ರಂಗಿಪ
ಸಂಗಮೇಶ್ವರನೆಂದೆನಿಸಿ ಪರಮ
ಮಂಗಳಾತ್ಮಕ ದಿವ್ಯ ಲಿಂಗಾನುಸಂಧಾನ
ದಿಂಗಿತವನು ಪೇಳ್ದ ಘನಗುರುವೆ ||3||

ನಿಮ್ಮ ನಿಜವನು ಪೇಳಿರಣ್ಣಾ” open=”n0″]
ಹಲವು ಮಾತುಗಳಿಂದಲೇನು ಸಾಧನವಹುದು
ನೆಲೆಯರಿ ದು ನಿಮ್ಮ ನಿಜವನು ಪೇಳಿರಣ್ಣಾ ||ಪ||

ವಾತಚರವೆನಿಸಿಕೊಂಬುದರ ಪೆಸರೇನು ಖ-
ದ್ಯೋತಾಬ್ಜ ಶರಣನೆ ನಿಪುದರ ನೆಲೆಯೇನು ?
ರೀತಿಯಿಂದದರ ಬಗೆಯನು ಪೇಳಿರಣ್ಣಾ ? ||1||

ಶಿವಬೀಜವೆಂಬೆರಡು ನಿರುತಲಿಹ ನೆಲೆಯಾವು
ದವಿರಳ ತ್ರಿಕೂಟದೊಳು ಸುತ್ತಿರುವುದೇನು ?
ತವೆ ತಾನೆ ಬಿಡದೆ ಪಾಡುತಲಿರ್ಪ ಯುವತಿಯಳ
ಸವಿನುಡಿಯ ಸೊಗಸಿನಿರವನು ಪೇಳಿರಣ್ಣಾ ||2||

ತತ್ವ ಮೂರರ ಮೂಲವೇನು ? ಮೂವತ್ತಾರು
ತತ್ವಗಳ ಲಕ್ಷಿಸುವ ಲಕ್ಷಣವದೇನು ?
ತತವಮಸಿ ವಾಕ್ಯಂಗಳರ್ಥವದು ತಾನೇನು ?
ತತ್ವಜ್ಞರುಗಳೆಂಬವರು ಪೇಳಿರಣ್ಣಾ ||3||

ಬುಡಮೇಲು ಕೊನೆಯು ಕೆಳಗಾಗಿ ರಾಜಿಸುತಿರ್ಪ
ಬುಡದ ಮೊದಲೊಳಡಗಿಹನ ಕುರುಹದೇನು ?
ಬಿಡದೆ ಆತನ ಕೈಯೊಳಗಡಗಿರ್ದ ವಸ್ತುವನು
ನುಡಿಜಾಣರುಗಳೆಂಬವರು ಪೇಳಿರಣ್ಣಾ ||4||

ಆರಣ್ಯದಾವಾನೈಲ್ಯಾಬ್ರ ಮಧ್ಯದೊಳು
ತೋರಿಯಡಗುತಲಿರ್ಪ ಮಿಂಚಿನಿರವೇನು ?
ಭೋರೆನಿಸುತಾರ್ಭಟಿಸುತಿಹ ಗುಡುಗಿನಿರವೇನು ?
ಮೀರಿ ಸುರಿವುತಲಿರ್ಪ ಮಳೆಯ ಪೆಸರೇನು ಪೇಳಿರಣ್ಣಾ ||5||

ಈರಾರು ಬೆರಲುಗಳ ಮೇಲೆ ಬೆಳಗುವದೇನು ?
ಕಾರ್ಮುಗಿಲ ಮಧ್ಯದೊಳು ಮಾರ್ಪೊಳೆವುದೇನು ?
ನೀರ ಬೊಬ್ಬುಳಿಕೆಯೊಗುರಿವುತಿಹ ಸೊಡರೇನು ?
ತಾರಕವನರಿದ ಜಾಣರು ಪೇಳಿರಣ್ಣಾ ||6||

ಲಿಂಗಾಂಗ ಸಂಯೋಗದಿಂಗಿತವದೇನು ? ಸ
ರ್ವಾಂಗದೊಳಹೊರಗೆಲ್ಲ ತುಂಬಿರುವುದೇನು ?
ಕಂಗಳಗ್ರದೊಳೆಸೆವ ಕಮಲನಾಳದೊಳು ಗುರು
ಸಂಗನೊಳ್ಬೆರೆ ದಿಹುದೆ ನಿಜ ಕಾಣಿರಣ್ಣಾ ||7||

ಜ್ಞಾನ ಮುದ್ರೆಯ ಮರ್ಮ
ಜ್ಞಾನಮುದ್ರೆಯ ಮರ್ಮವರಿಯೆ ಗುರುಕೃಪೆಯಿಂದ
ತಾನೆ ಗೋಚರವಹುದು ಪರವಸ್ತುವು ||ಪ||

ಒಳಗೆ ಜ್ಯೋತಿರ್ಲಿಂಗದೊಳ್ಮನವನಳವಡಿಸಿ
ಬಳಿಕ ನಾಸಾಗ್ರವೆಂದೆಂಬ ತಾಣದೊಳು
ಹಳಚದೆವೆಗಳನು ಸುಸ್ಥಿರಗೊಳಿಸಿ ನೋಡುತ್ತಿರಲು
ಥಳಥಳನೆ ಹೊಳೆವ ಜ್ಯೋತಿಯು ಕಾಣುತಿಹುದು ||1||

ಪನ್ನೆರಡು ಬೆರಲುಗಳ ಪರಿಪ್ರಮಾಣದೊಳಗಿರ್ಪ
ಚಿನ್ನದುಪ್ಪರಿಗೆಯಗ್ರದೊಳು ರಾಜಿಸುವ
ಮುನ್ನೀರ ನಡುವೆ ನೋಡುವದಕತಿಶಯವಾಗಿ
ಚೆನ್ನೆಸೆವ ಮಡುವಿನೊಳುರಿಯು ಕಾಣುತಿಹುದು ||2||

ವೇದ ವೇದಾಂತ ಪಂಡಿತರಿಗಸದಳವಾದ
ಮೂದೆರದ ಭುವನಗಳ ಮೀರಿದಂಬರದ
ನಾದಾಲಯದೊಳೆಸೆವ ಗುರುಸಂಗಮೇಶ್ವರನ
ಪಾದಪಂಕಜದೊಳ್ಮನೋಲಯವದಹುದು ||3||

ಕೌತುಕವಾದ ಕನಸ ನಾ ಕಂಡೆ
ಕನಸ ತಾ ಕಂಡೆನು ಕೌತುಕವಾದುದ
ಮನದ ಕೊನೆಯ ಮೊನೆಯೊಳಗೊಂದು ಚೋದ್ಯದ ||ಪ||

ಇಂದುವಿನುದಯದೊಳಿನಕಿರಣವನನ
ವಿಂದ ಕಂಡೆನು ಕೆಂಡದಂದವನದರೊಳು ||1||

ಕತ್ತಲ ಮನೆಯೊಳಗೆತ್ತೆತ್ತ ನೋಡಲು
ಸುತ್ತಮುತ್ತಲು ಬೆಳಗುವ ಜ್ಯೋತಿಯನು ಕಂಡೆ ||2||

ನೀರಮಧ್ಯದ ನೀಲಮೇಘದೊಳಗೆ ಚಿದಾ
ಕಾರವಾದನುಪಮ ತಾರಕಿಯನು ಕಂಡೆ ||2||

ಕಾಶಿಯೆಂದೆನಿಸುವ ಕೇಶಾಂತಪುರದೊಳು
ಭಾಸುರತರ ಸ್ವಯಂಜ್ಯೋತಿ ಲಿಂಗವ ಕಂಡೆ ||3||

ಅಂಬರಾಂತರದ ಚಿದಂಬರಾಚಲದಗ್ರ
ಕುಂಭಿನಿಯೊಳಗೆ ಗುರುಸಂಗಮೇಶನ ಕಂಡೆ ||4||

ಏ ನಲ್ಲೆ!
ಏ ನಲ್ಲೆ ನೀನಿದೇನು ಸೊಲ್ಲೆ
ನಾನಿದ ನಿನಗೆ ಪೇಳುವಡಸದಳವಲ್ಲೆ ||ಪ||

ಮನವನು ತಮದನುವಿದನು | ಮಹಾ
ಘನ ಕಾಸಾರವನು ಕಡಲನು
ದಿನಕರ ಸೋಮಾಗ್ನಿಗಳನು | ಹೊಳೆ
ವನುಪಮ ಸುಶಿರದೊಳುರಿವ ಜ್ಯೋತಿಯನು ||1||

ಕಂಗಳೊಳಗೆ ರಂಜಿಪುದನು | ಮೂರು
ಲಿಂಗಕಾಶ್ರಯವಾಗಿಹುದನು
ಲಿಂಗವೆಂದೆನಿಸಿಕೊಂಬುದನು | ಮಧ್ಯ
ರಂಗಮಂಟಪದೊಳು ನಟಿಸುತಿಹುದನು ||2||

ಪ್ರಾಣವಲಯವನು ಪ್ರಾಣವನು | ಚಾರು
ಫಣಿಯಡಗಿಹ ಕೋಣೆಯದನು
ಕ್ಷಣರುಚಿಯೊಳೆಸೆವುದನು | ತಿಳಿ
ದಣಿಯರದೊಂಬತ್ತು ಮಿಳಿತವಾದುದನು ||3||

ಜಲಮಧ್ಯ ಪಿಂಡವರ್ತಿಯನು | ನೋಡೆ
ಸುಲಲಿತಾನಂದ ವಸ್ತುವನು
ನೆಲಸಿಹ ಶಿವಬೀಜಗಳನು | ಕೂಟ
ದೊಲವನು ಪರಮ ಶ್ರೀಗುರು ಕರುಣವನು ||4||

ಮೂಲ ಪ್ರಕೃತಿಯ ಮೀರಿಹುದನು | ವರ್ಣ
ಜಾಲದೊಳಗೆ ಕಾಣಿಪುದನು
ವಾಲಾಗ್ರ ಸಮವೆನಿಪುದನು | ಕಾಲ
ಕಾಲವೆನಿಪ ಸಂಗಮೇಶನಿರವನು ||5||

ಈಶ್ವರಂ ಸಚ್ಚಿದಾನಂದ
ಈಶ್ವರಂ ಸಚ್ಚಿದಾನಂದ ಭಾಸ್ವರಂ
ನಮಿತ ಕಮಲೇಶ್ವರಂ ಮೇಜಾನೆ ಹೃದಯೇಶ್ವರಂ ||ಪ||

ಕಾರಣಂ ಕಲಿತ ಮತೋದ್ಧಾರಣಂ
ಶರಣ ಮನೋಚಾರಣಂ ಭಸ್ಮರುದ್ರಾಕ್ಷೆಧಾರಣಂ | ಮೇಜಾನೆ ಹೃದಯೇ ||1||

ಸುಂದರಂ ಕ್ಷೇಳಾಲಂಕೃತ ಕಂದರಂ
ರಜತಾಚಲಮಂದಿರಂ ದಿವ್ಯ ಸಂಕಾಶ ಬಂಧುರಂ | ಮೇಜಾನೆ ಹೃದಯೇ ||2||

ತಾರಕಂ ನಿಟಿಲತಟದ್ವಾರಕಂ
ಸುಜ್ಞಾನರಸಪೂರಕಂ ಸಂಗಮೇಶಾಖ್ಯ ಧೀರಕಂ | ಮೇಜಾನೆ ಹೃದಯೇ ||3||

ಏನೆಂಬೆನೆನ್ನ ಸಿರಿಯ
ಏನೆಂಬೆನೆನ್ನ ಸಿರಿಯ ಚಂದಮಾಮಾ | ಪರ
ಮಾನಂದ ಭರಿತನಾದೆ ಚಂದಮಾಮಾ ||ಪ||

ಸುರುಚಿರವಾದಾಸನದಿಂ ಚಂದಮಾಮಾ | ಪರ
ತರ ಮುದ್ರಾನುಸಂಧಾನದಿಂ ಚಂದಮಾಮಾ
ಮರುತ ಮನೋದೃಷ್ಟಿಗಳ ಚಂದಮಾಮಾ | ಮಿಗೆ
ಸ್ಥಿರಗೊಳಿಸಿ ನೋಡುತ್ತಿರೆ ಚಂದಮಾಮಾ ||1||

ಜೀವ ಪರಮರೆಂದೆನಿಪ ಚಂದಮಾಮಾ | ದ್ವೈತ
ಭಾವವಳಿದೇಕವಾಗಿ ಚಂದಮಾಮಾ
ಆ ವಿಮಲಪ್ರಣಮದೊಳು ಚಂದಮಾಮಾ | ಪರಿ
ಭಾವಿಸಿ ಪರಮನಾದೆ ಚಂದಮಾಮಾ ||2||

ನಟ್ಟ ನಡುವಗಲಿನಲ್ಲಿ ಚಂದಮಾಮಾ | ದಿಟ್ಟಿ
ನಟ್ಟು ನಿಟ್ಟಿಸುತ್ತಿರೆ ಚಂದಮಾಮಾ
ಬಟ್ಟಬಯಲ ಬಾನದೊಳಗೆ ಚಂದಮಾಮಾ | ಬೆಳಗು
ದಟ್ಟೈಸಿ ತೋರುತಲಿದೆ ಚಂದಮಾಮಾ ||3||

ಮೂರು ಮಂಡಲದಮೇಲೆ ಚಂದಮಾಮಾ | ಮಿರುಪ
ತಾರಕಾಗ್ರಾಕಾಶದಲ್ಲಿ ಚಂದಮಾಮಾ
ನೀರಜಾರಿ ನಿಲ್ಲದುದಿಸೆ ಚಂದಮಾಮಾ | ಬೇಗ

ಸಾರಾಮೃತದ ಸವಿಯನರಿದೆ ಚಂದಮಾಮಾ ||4||

ಗಿರಿಯ ಕೊನೆಯ ಮೊನೆಯ ಮೇಲೆ ಚಂದಮಾಮಾ | ಮೂರು
ಪರಿವ ನದಿಗಳ ನಡುವೆ ಚಂದಮಾಮಾ
ಉರಿವ ಜ್ಯೋರಿನಿಳಯದೊಳಗೆ ಚಂದಮಾಮಾ | ನಿರುತ
ಗುರುಸಂಗನೊಳಗೆ ಬೆರದೆ ಚಂದಮಾಮಾ ||5||

ಕಂಡೆನು ಕರಚೋದ್ಯವ
ಕಂಡೆನು ಕರಚೋದ್ಯವ | ಕಾಮಿನಿ ಕೇಳ-
ಖಂಡತೇಜೋಮಯದ
ಮಂಡಲಂಗಳ ಸಣ್ಣಗಂಡಿಯೊಳಗೆ ಹೊಳೆ
ದಂಡಲೆವತಿಶಯದ ಕಳೆಯ ||ಪ||

ರನ್ನವೆಟ್ಟುವಿನಗ್ರದಿ | ರಾಜಿಸುತಿಹ
ಮುನ್ನೀರಿನ ನಡುವೆಬಿನ್ನಾ ಣವಾದ
ಮಡುವಿನೊಳುರಿವುತಿಹ
ರನ್ನದೀವಿಗೆಯ ಕಂಡೆ ಸಖಿಯೆ ||1||

ನಿಡಿದಾದ ಬಳ್ಳಿ ಹಾಂಗೆ | ಮಾಮರ ಸಾಲು
ವಿಡಿದಡವಿಯ ನಡುವೆ
ಕಡುಸಣ್ಣಗೆಲಸದ ಬೆಡಗಿನ ಗುಡಿಯೊಳು
ಮೃಡಮೂರ್ತಿಯನು ಕಂಡನು ಸಖಿಯೆ ||2||

ಕಂಗೊಳಿಸುವ ಕದಳಿವನದಡಿ ಬೆಳ
ದಿಂಗಳುದಯವಾಗಲು
ರಂಗಿಪ ಬಟ್ಟಬಯಲ ತುಟ್ಟತುದಿಯೊಳು
ಸಂಗನಿರ ಕಂಡೆನೆ ಸಖಿಯೆ ||3||

ಅಚ್ಚರಿಯವಾದೊಂದು ಕನಸ ಕಂಡೆ
ಅಚ್ಚರಿಯವಾದುದೊಂದು | ಕನಸ ಕಂ
ಡೆಚ್ಚತ್ತು ನೋಡುತಿರಲು
ಮುಚ್ಚೆ ಗೊಂಡೆಚ್ಚ ರುಡುಗಿ | ಮೈಮರದು
ಹುಚ್ಚುಗೊಂಡಿರ್ದೆನಮ್ಮಾ ||ಪ||

ದಂಡ ಕೋಲಿನ ನಾಳದಿ | ಧಗಧಗಿಸಿ
ಕೆಂಡ ಪ್ರಜ್ವಲಿಸಲಾಗಿ
ರಂಡೆಯೋರ್ವಳು ಕೆಂಡವ | ನುಂಗುವದ
ಕಂಡು ನಿಬ್ಬೆರಗಾದೆನು ||1||

ಮೂಲಗ್ರಾಮದೊಳು ಕಿಚು | ಬಲುಹೆಚ್ಚಿ
ನಾಲಗೆಯ ನೀಡಲಾಗಿ
ಸಾಲುಮನೆಗಳು ಬೇಯಲು | ಜ್ವಾಲೆಯ
ಮೇಲೂರು ನಿಂದುರಿಯಿತು ||2||

ನೀರ ಮೇಲಣ ತಾವರೆ | ಕೊಳದೊಳಗೆ
ತಾರಕಿಯನುರಿಯಡರಲು
ತಾರಕಾಗ್ರದಿ ರಂಜಿಪ | ಚಂದ್ರಮನ
ಮೀರಿ ತನ್ಮಯವಾಯಿತು ||3||

ಮೀನ ಬಯೊಳು ಕಿಡಿಗಳು | ಹೊರಹೊಮ್ಮಿ
ಬಾನನೆಲ್ಲವ ಮುಸುಕಲು
ನಾನಿದನು ಕಂಡು ನೋಡಿ | ನನ್ನೊಳಗೆ
ನಾನೆ ವಿಸ್ಮಯಗೊಂಡೆನು ||4||

ಜಗವೆಲ್ಲ ಬೆಳಗೆಸೆಯಲು | ನಾನೊಂದು
ಪೊಗುವ ದೆಸೆಯನು ಕಾಣದೆ
ಬಿಗಿದಪ್ಪಿ ಗುರುಸಂಗನ | ಬೆರೆದು ಮಿಗೆ
ಯಗಲದಿರ್ದೆನು ಭಾವಕಿ ||5||

ನಿನ್ನ ನಿಜವ ತಿಳಿದು ನೋಡಲೆಯಾತ್ಮಾ
ನಿನ್ನ ನಿಜವನು ನೀ ತಿಳಿದು ನೋಡೆಲೆಯಾತ್ಮಾ
ಚಿನ್ಮಯಾನಂದ ಕಳೆಯ ಬೆಳಗ ||ಪ||

ವಾಮ ದಕ್ಷಿಣ ಭಾಗಗಳೊಳು ಬೆಳಗು ತಿರ್ಪ
ಸೋಮ ಸೂರ್ಯರ ಕಲಾಪವ ನಿಲ್ಲಿಸಿ
ಪ್ರೇಮದಿಂದವರ ಕಲೆಯನು ನೀ ನೆಲೆ ಮಾಡಿ
ದಾ ಮಹಾ ವಸ್ತುವಿನೊಳು ಬೆರೆಯೊ ||1||

ವರ್ಣ ಬೀಜವೆ ಗೊಳಕದೊಳು ಯಾರ್ಣವೆ ನಾಳ
ವಾರ್ಣ ಗೋಮುಖ ವರ್ತುಳದಿ ಶಿಕಾರ
ಮಾರ್ಣವೆ ಮಧ್ಯ ನಾರ್ಣವೆ ವೃತ್ತದೊಳಗಿರ್ಪ
ನಿರ್ಣಯವನು ನೀನು ನೆರೆಯರಿಯಾ ||2||

ಲಿಂಗ ಗೋಳಕದೊಳು ಪದಿನಾಲ್ಕು ನಾಳದಿ
ಹಾಂಗೆ ಷೋಡಶ ಗೋಮುಖದಿ ದ್ವಾದಶ
ಮಾಂಗಲ್ಯ ವರ್ತುಳದೊಳು ದಶಮಧ್ಯದೊಳಗಾರು
ಸಾಂಗದಿ ವೃತ್ತ ದಿಂ ನಾಲ್ಕರಿಂಗಿತವನರಿಯಾ ||3||

ಆಸನಸ್ಥಿತನಾಗಿ ಬಳಿಕ ನಾಸಾಗ್ರದಿ
ಬೀಸಲಿಸದೆ ದೃಷ್ಟಿಗಳನೊಂದುಗೂಡಿ
ಸಾಸಿರೆಸಳುಗಳೊಳಗೆ ಮಘಮಘಿಸುವ
ವಾಸನೆಯ ನೀನು ಸಲೆ ಸವಿಯಾ ||2||

ವರ ಬಿಂದು ನಾದಾತ್ಮ ವಿದ್ಯೆಗಳೆಂದೆಂಬ
ನಿರುಪಮ ಚತುರ್ದಳಂಗಳ ಮಧ್ಯದಿ
ನಿರುತ ಬೆಳಗುತಿರ್ಪ ಗುರುಸಂಗಮೇಶನೊ
ಳ್ಬೆರೆದು ಬೇರಿಲ್ಲದೆ ಸುಖಿಯಾಗಿ ಬದುಕಾ ||3||

ಪೇಳಲಸದಳವು
ಪೇಳಲಸದಳವೆ | ಪೆಂಗಳ ರನ್ನೆ
ಕೇಳು ಪೇಳುವೆನು
ಕಾಳೋರಗನ ತಲೆಯೊಳಗೊಬ್ಬ ಗೊರವಿತಿ
ಬಾಳುವ ಬಳಗವೆಲ್ಲರ ಕೊಂದುದ ಕಂಡೆ ||ಪ||

ಹದ್ದು ತಾನುದ್ದಕಾಗಿ ಹಾರಿ ಮೇ
ಲಿದ್ದ ಗೂಡಿನೊಳು ಸೇರಿ
ಸದ್ದೆಲ್ಲಡಗಿ ಮೇಲಿರ್ದ ಬಟ್ಟೆಯ ಬಿಟ್ಟು
ನಿದ್ದೆಗೆಯ್ವುದ ಕಂಡೆಚ್ಚತ್ತು ನಾನಿರ್ದೆನು ||1||

ಪುರದ ಮೇಗಡೆಯೊಳೊಂದು | ಮಾಯದ ನರಿ
ಸ್ವರವೆತ್ತಿ ಕೂಗುತಿರೆ
ಪುರದವರದ ಕೇಳರಸಿಗೆ ಪೇಳ್ವನಿತರೊ
ಳ್ನರಿಯು ಪಟ್ಟಣವನೆಲ್ಲವ ನುಂಗುವದ ಕಂಡೆ ||2||

ಕಣ್ಣಿನ ಮನೆಯೊಳಗೆ | ಕೇಳಲೆ ಹೆಣ್ಣೆ
ಬಣ್ಣಗಾರಿಕೆಯವನು
ಸಣ್ಣ ಬಟ್ಟೆಯೊಳಗೆ ಹೆಣ್ಣುಗಳೊಡಗೂಡಿ
ಹಣ್ಣ ಸವಿದು ಕಣ್ಣೊಳಳಿದುದ ಕಂಡೆನು ||3||

ಮೂರು ಬಣ್ಣಂಗಳಿಂದೆ | ಮಿರುಗುತಿರ್ಪ
ಮೂರು ಮಂಡಲದೊಳಗೆ
ತೋರುವೈವತ್ತೆರಡು ದಳವರ್ಣ ನಿಕರದೊ
ಳಾರೈದು ರುದ್ರರಿರುವದ ನಾ ಕಂಡೆನು ||4||

ಹಿಂದು ಮುಂದೆಡಬಲದೊಳೆಲೆ ತಂಗಿ
ಬಿಂದು ನಾದಾತ್ಮ ವಿದ್ಯೆ
ಯೆಂದೆನಿಸುವ ನಾಲ್ಕುದಳದ ನಡುವೆ ನಿಂದು
ಚಂದದಿಂ ರಾಜಿಪ ಸಂಗನಿರುವ ಕಂಡೆ ||5||

ತುಂಬಿ
ಕರಿವಣ್ಣದ ಬಿಳಿವಣ್ಣದ ಕೆಂಪಿನವಣ್ಣಗಳಿಂದ
ಬೆರೆದು ರಾಜಿಪ ಪರಿಮಳದರಲೊಳಗಿರುವ ತುಂಬಿ ||ಪ||

ಕಡಿದು ಕತ್ತರಿಸಿದ ಬಿದಿರಿನಂದದೊಳಿರ್ಪ
ನಡುನಾಡಿ ದಂಡ ಖಂಡದ ನಾಳದೊಳಗೆ
ಬೆಡಿಗಿನಿಂ ತಳ್ಕನೆ ಹೊಳೆದು ರಾಜಿಸುತಿರ್ಪ
ಕುಡಿಮಿಂಚಿನ ಕೊನೆಯೊಳಗೆಡೆವಿ ಡದಿರು ನಿಜತುಂಬಿ ||1||

ಆರೆರಡೆಸಳು ಪದಿನಾರು ದಳಗಳುಳ್ಳ
ನೀರಜಗಳೆರಡರ ನಡುವೆ ಸಾಸಿರೆಸಳ
ವಾರಿಜದ ಕರ್ಣಿಕಾಗ್ರದ ಸೆಳೆಗೂನೆಯೊಳಗೆ
ಭೋರ್ಮೊರೆವ ನಾದಾಮೃತದೊಲಗಿರು ಸ್ವರತುಂಬಿ ||2||

ಬಿಂದುನಾದಾತ್ಮ ವಿದ್ಯೆಗಳಿಂ ಶೋಭಿಸುತಿರ್ಪ
ನಂದನವನದ ನಡುವಣಸರಸಿಯೊಳಗೆ
ಮಿಂದು ಮನ ನಲಿದು ಶ್ರೀಗುರು ಸಂಗಮೇಶನೊಳ
ಗೆಂದೆಂದು ಬೆರದಿರು ಪರಿನಿರ್ವಾಣ ತುಂಬಿ ||3||

ಉಸಿರಲೆನ್ನಳವಲ್ಲ
ಉಸಿರಲೆನ್ನಳವಲ್ಲ ಶಶಿಮುಖಿಯಳೆ ಕೇಳು
ಹಸನಾಯಿತಿವನನುವು | ಮನವು
ಮಿಸುಪ ಕಂಗಳವನೆಯೊಳಗೆ ರಂಜಿಸುತಿರ್ಪ
ಕುಸುಮಗದ್ದುಗೆಯ ಮೇಲೆ | ಬಾಲೆ ||ಪ||

ವಾರಿನೋಟದಿ ನೋಡಿ ಬೇರುಮಾಡದೆ ಯೆನ್ನ
ಸಾರಿ ಸೆರಗ ಪಿಡಿದು | ಜಡಿದು
ಮೂರು ಬಗೆಯ ತೋರಿ ಮರುಳುಗೊಳಿಸಿದನು
ದೂರ ಮಾಡಿದನಿವನು ಯೆನ್ನುವನು ||1||

ಹರಿಸುರ ಬ್ರಹ್ಮಾದಿಗಳಿಗಸದಳವಾದ
ವರನಾದವನು ಕೇಳಿಸಿ | ಲಾಲಿಸಿ
ಕರುಣದಿಂದರಗಿಳಿಯಿಂ ಮಂತ್ರ ಮಹಿಮೆಯ
ಪರಿಪರಿಯಿಂದಲೋದಿಸಿ | ಬೋಧಿಸಿ ||2||

ಹಲವು ಮಾತಿನ್ನೇನು ಮೇಲುವರಿದು ಚೆಲ್ವ
ಕಲೆಯ ಮೋಹವನೆಸಗಿ | ಮಿಸುಗಿ
ಸಲುಗೆಯಿಂದೆನ್ನ ನೆರದನು ಶ್ರೀಗುರುಸಂಗ
ನೊಲುಮೆಯಿಂದೆನ್ನ ಕೂಡೆ | ನೀ ನೋಡೆ ||3||

ಬಹಿರಂಗದ ಬಳಕೆಯ ನೀಗು
ಲಿಂಗದೊಳಗೆ ಲೀಯವಾಗು | ಬಹಿ
ರಂಗದ ಬಳಕೆಯ ನೀಗು ||ಪ||

ಲೋಚನಾಗ್ರದೊಳಗೆ ನಿಲ್ಲು | ಅಲ್ಲಿ
ಸೂಚಿಪ ಲಿಪಿಯನು ಸೊಲ್ಲು
ನೀಚರ ಸಭೆಯನು ಕೊಲ್ಲು | ಬಹು
ಪ್ರಾಚುರ್ಯಫಳವನು ಮೆಲ್ಲು ||1||

ಅರೆವಿರಿದಂಬಕದಿಂದ | ಮನೋ
ಮರುತಂಗಳಳಿದುದರಿಂದ
ಮಿರುಪ ಜ್ಯೋತಿಯ ಬೆಳಗೊಂದ | ನಿನ್ನೊ
ಳರಿದು ಶ್ರೀಗುರುಕೃಪೆಯಿಂದ ||2||

ಎತ್ತೆತ್ತ ನೋಡಿದಡತ್ತತ್ತ | ರಾಜಿ
ಸುತ್ತಲಿಹುದು ಬೊಮ್ಮ ಮೊತ್ತ
ಮೊತ್ತದೊಳಗೆ ಮುದವೆತ್ತ | ಸಂಗ
ನತ್ತ ಬೆರದು ನಿಜಮುಕ್ತ ||3||

ತಾಲೆಲೆಲೆ
ತಾಲೆಲೆಲೆ ತಾಲೆಲೆಲೆ ತಾಲೆಲೆಲೆ
ತಾಲೆಲೆಲೆ ಲಿಂಗಾತ್ಮಲೆಲೆ ||ಪ||

ಹೊರಗಣ ಶಬ್ದವ ಕೇಳದಂದದಿ | ಬಹು
ಮೊರೆವುತಲಿದೆ ನಾದ ತಾಲೆಲೆ
ಎರಲುಣಿಪೆಡೆಯನು ಪಸರಿಸಿ ಮನೆಯೊಳ
ಗಿರದೆಯಾಡುತಲಿದೆ ತಾಲೆಲೆ3 ||1||

ಕರಣಂಗಳೆಲ್ಲವು ಪರಶಿವಲಿಂಗದ
ಕಿರಣಂಗಳಾದವು ತಾಲೆಲೆ
ಪರಿಪರಿಯಾಗಿಹ ಬಿಂದು ರತ್ನಗಳು
ಸರಗೊಳಿಸಿರುತಿವೆ ತಾಲೆಲೆ ||2||

ಕಂಗಳಿಗತಿಶಯವಾಗಿ ಹೊಳೆವ ಬೆಳು
ದಿಂಗಳು ಮೂಡಿತು ತಾಲೆಲೆ
ತಿಂಗಳವೆಳಗಿಲಿ ತಾರಕಿಗಳು ಮಿಗೆ
ರಂಜಿಸುತಿರುತವೆ ತಾಲೆಲೆ ||3||

ಕತ್ತಲೆ ಮನೆಯೊಳು ಕಣ್ಣುದೆರೆದು ನೋಡೆ
ಹೊತ್ತು ಮೂಡುತಲಿದೆ ತಾಲೆಲೆ
ಎತ್ತೆತ್ತ ನೋಡಲು ತಾವರೆ ಹೂವಿನ
ಗೊತ್ತು ಕಾಣುತಲಿದೆ ತಾಲೆಲೆ ||4||

ತಾವರೆ ಹೂವಿನ ಮೇಲಣ ಕೊಳದೊಳು
ದೇವಾಲಯವಿದೆ ತಾಲೆಲೆ
ದೇವಾಲಯದೊಳು ಗುರುಸಂಗಮೇಶನ
ಭಾವವನರಿದೆನು ತಾಲೆಲೆ ||5||

ನಲ್ಲನನಗಲಿ ನಿಲ್ಲಲಾರೆನಕ್ಕಾ

ನಲ್ಲನನಗಲಿ ನಾನು ಕೇಳೆಲೆಗವ್ವಾ
ನಿಲ್ಲಲಾರೆನಕ್ಕಾ
ಪುಲ್ಲಶರನ ಬಲುಬಿಲ್ಲಿನಟ್ಟುಳಿಗೆರ್ದೆ
ದಲ್ಲಣಗೊಳಿಸುತಿದೆಲ್ಲಿಯ ಕಾಟವೆ ||ಪ||

ಚಿಕ್ಕಪ್ರಾಯದೊಳಾತಗೆ | ಪೆಂಗಳರನ್ನೆ
ಸಿಲ್ಕಿದೆನಳ್ಕರಿಂದೆ
ನಕ್ಕು ನಲಿದು ಮನವಿಕ್ಕಿ ನಾನಿವನೊಳು
ಚೊಕ್ಕಟ ಸವಿಗಲೆ ಮಿಕ್ಕು ತಡೆಯಲಾರೆ ||1||

ಕಂಗಳಾಗ್ರದೊಳೆಸೆವ | ಕಾಮಿನಿ ಕೇಳು
ಮಂಗಳ ಗೃಹದೊಳಗೆ
ಸಿಂಗರಿಸಿದ ಸಿರಿಮಂಚದೊಳಗೆ ಹೆರೆ
ಹಿಂಗದೆ ರಂಗಿಪ ಸಕಲ ಸುಖಗಳಿಂದ ||2||

ಚಿಲಿಪಾಲು ಸಕ್ಕರೆಯಿಂ | ಚೆಲುವೆ ಕೇಳು
ಸುಲಿದ ಬಾಳೆಯ ಪಣ್ಗಳಿಂ
ಕಲಸಿ ಸವಿದು ಪನ್ನೀರನು ಮುಕ್ಕುಳುಸಿ ಬೇಗ
ಚಲುವ ವೀಳ್ಯವ ಮಾಡಿ ಮೊಗದೊಳು ಮೊಗಗೂಡಿ ||3||

ವೀಣೆ ತಂಬೂರಿಗಳಿಂ | ಕೇಳೆಲೆ ಜಾಣೆ
ಜಾಣತನದಿ ನುಡಿಸಿ
ಮಾಣದೆ ಮಿಸುಪ ಸುಗೀತಂಗಳನು ಪಾಡಿ
ಹೂಣೆಹೊಕ್ಕೆರಡಳಿದಿಹ ರತಿಕೇಳಿಯಿಂ ||4||

ಇಂಚರವನು ತೆಗೆದು | ಕೇಳೆಲೆ ನಾರಿ
ಕಂಚುಕಿಯನು ಕಳೆದು
ಮುಂಚೆ ಸೀರೆಯ ಬಿಟ್ಟು ಮೂರುರತ್ನವ ಕೊಟ್ಟು
ಸಂಚಿಂದಲೆನ್ನ ನೆರೆದನು ಸುಗುಣಸಂಗ ||5||

ಉಣ್ಣಲಾಗದು ಉಣ್ಣದಿರಲಾಗದು
ಉಣ್ಣಲಾಗದು ಉಣ್ಣದಿರಲಾಗದು | ಮತ್ತೆ
ಹೆಣ್ಣುಗಳ ಸಂಗವನು ಮಾಡಲಾಗದು ಮಾಡದಿರಲಾಗದು||ಪ||

ಉರ್ವಿಯ ಸೊಗಸ ತಾನು ತಿಳಿಯಲಾಗದು | ಬಳಿ
ಕುರ್ವಿಯ ಸೊಗಸ ತಾನು ತಿಳಿಯದಿರಲಾಗದು
ಸರ್ವರ ಸಂಗತಿಯನು ಮಾಡಲಾಗದು | ಬಳಿ
ಕೊರ್ವನೆವೊಂದೆಡೆಯೊಳಗಿರಲಾಗದು ||1||

ಹೆತ್ತ ಮಗನ ತಾನು ನೆರೆಯಲಾಗದು | ಮತ್ತೆ
ಹೆತ್ತಮಗನ ನೆರೆಯದಿರಲಾಗದು
ಸತ್ತವರ ಮಾತು ತಾನು ಕೇಳಲಾಗದು | ಮತ್ತೆ
ಸತ್ತವರ ಮಾತು ಕೇಳದಿರಲಾಗದು ||2||

ಲಿಂಗಪೂಜೆಯ ತಾನು ಮಾಡಲಾಗದು | ಮತ್ತೆ
ಲಿಂಗಪೂಜೆಯನ್ನು ಮಾಡದಿರಲಾಗದು
ಕಂಗಳವೆಳಗ ತಾನು ಕಳೆಯಲಾಗದು | ಗುರು
ಸಂಗನೊಳು ಬೆರೆವಡಿನಿತಲ್ಲದಾಗದು ||3||

ಶರಣು ಶಾಂಕರಿ
ಶರಣು ಶರಣು ಶಾಂಕರಿ | ಶರಣನೇತ್ರ
ಸರಸಿಜಾಂತರ ಸಂಚಾರಿ

ಶರಣು ಶರಣು ನಿನ್ನ ಚರಣಕಮಲಕೆನ್ನ
ಕರುಣದಿಂ
ಪೊರೆವುದು ಪರಮದಯಾಕಾರಿ ||ಪ||

ಆನತಜನ ಮಂದಾರೆ | ಮಂತ್ರಾಕಾರೆ
ಜ್ಞಾನಸಾಗರೆ ಸುಧೀರೆ
ನೂನ ಬೈಂಧವ ಮೊದಲಾದ ಪಾಶ ವಿದೂರೆ
ನಾನಾ ನಿಗಮ ತಂತ್ರಶಾಸ್ತ್ರ ನಿಕರಸಾರೆ ||1||

ಪಂಕಜದಳನಯನೆ | ಸಂಕಲಿತ ಶ
ಶಾಂಕನಿಭ ವಿಹಸನೆ
ಶಂಕರನಮಲ ನಿಜಾಂಕಸಾಧನೆ | ಸಾರ
ಹ್ರೀಂಕಾರ ಸಿಂಹಾಸನಗ್ರಾನುಸಂಧಾನೆ ||2||

ಚಾರುಚರಿತೆ ಸುಜನ | ಸಂಕುಲಯೂತೆ
ಸೂರಿಜನಾಳಿನೂತೆ
ಮಾರವಿಕಾರರಹಿತೆ ಸಂಗಮೇಶನಿ
ಗಾರಮ್ಮತರಹಿತೆ ಸಕಲಜಗನ್ಮಾತೆ ||3||

ಬೇಗದೊಳೆನ್ನನು ಪಾಲಿಪುದು
ಬಂದು ಬೇಗದೊಳೆನ್ನನು ಪಾಲಿಪುದು ಬಾ
ಲೇಂದುಶೇಖರ ಶಂಕರ
ನಂದನಂದನ ನಯನಾರವಿಂದಾರ್ಚಿತ
ಸುಂದರ ಚರಣಾರವಿಂದ ನಂದಿವಾಹನ ||ಪ||

ಸಗ್ಗದೊರೆಯ ಜಡೆಯನೆ | ಮುಪ್ಪೊಳಲವ
ರಗ್ಗಳಿಕೆಯ ಮುರಿದನೆ
ಸುಗ್ಗಿಗೆಳೆಯನ ಸುಟ್ಟುರುಹಿ ಬೂದಿಯ ಬಲ
ಹಿಗ್ಗಿ ಮೈಯೊಳು ಪೂಸಿ ಜಗದಿ ನಟಿಸಿದನೆ ||1||

ಬಿಡುಗಣ್ಣರಸನ ಗೆಳೆಯನೆ | ಬಗ್ಗದೊಲವ
ನುಡಿಯೊಳ್ತಳೆದ ದೇವನೆ
ನುಡಿವೆಣ್ಣಿನರಸನ ನಡುವಣ ತಲೆಯನು
ಕಡಿದು ಕತ್ತರಿಸಿ ಕೈಯೊಳ್ಪಿಡಿದಭವನೆ ||2||

ಕಂದುಗೊರಲನೆ ಜವನೆರ್ದೆಯನೊಲ
ವಿಂದಲೊದೆದು ಮೆರೆದನೆ
ಗಾಂಧಾರಗಿವಿಯನೆ ಗಾನಸಂಪ್ರೀತನೆ
ಚಂದದಿಂದಲಿ ಗೊಲ್ಲತಿಯ ಮಗಗೊಲಿದನೆ ||3||

ಕುಳಿರ್ವೆಟ್ಟಣುಗಿಯರಸನೆ | ಕುಂದರಿಯದು
ಮ್ಮಳಿಸಿ ಷೋಡಶಬಲೆಯೊಳಿರ್ದನೆ
ಪಳೆವಾತುಗಳನು ಪಾಳ್ಮನೆಹಾಳರೆನಿ
ಸಿಳೆಯೂಳಗತಿ ಮುದದಿಂದ ಶಬರನಾಧೀಶನೆ ||4||

ದೇವಾದಿದೇವನೆ ಯೋಗಿಹೃದಯ
ಜೀವದಿವಾಕರನೆ
ಭಾವವಿದೂರನೆ ಭಕ್ತಮಂದಾರನೆ
ಪಾವನಾತ್ಮ ಸಂಗಮೇಶ್ವರನೆ ನೀನು ||5||

ತಿಳಿಯಲರಿಯದೆ ಬಳಲುವರು
ತಿಳಿಯಲರಿಯದೆ ಮೋಕ್ಷಕೆಳಸಿ ಬಳಲುವರು ತ
ಮ್ಮೊಳು ಪೊಳೆವ ಷಟ್ತಾರೆಗಳ ಬಗೆಯನು ||ಪ||

ಎಸೆವ ಸರ್ಪಾಕಾರವಾಗಿ ರಾಜಿಸುತಲಿ
ರ್ಪಸದೃಶ ಸುವರ್ಣಮಯ ತಾರಕಾಗ್ರದೊಳು
ಮಿಸುಪ ವಸುಮಯ ತಾರೆಯನು ನೆಲೆಗೊಳಿಸಿ ನೋಡೆ3
ಲಸದಿಷ್ಟಲಿಂಗ ತನ್ನೊಶವಪ್ಪುದ ||1||

ಅರುಣೇಂದು ಶಿಖಿಮಂಡಲತ್ರಯಾನ್ವಿತವಾದ
ವರ ನೀಲಮಯ ತಾರೆಗಳ ಮಧ್ಯದಿ
ಪರಮಾಣು ರೂಪಾದ ಪ್ರಾಣಲಿಂಗದ ಪರಿಯ
ನರಿದದರೊಳಗೆ ತಾನು ಬೆರೆದಿರ್ಪುದ ||2||

ಮಿನುಗುತಿಹ ರತ್ನ ಹರಿತಮಯ ತಾರೆಯೆಂ
ಬ ನುಪಮಾಧಾರ ವಾಕ್ಯರೂಪಮಾದ
ಅನಘ ಸನ್ಮುದ್ವೀರದೇಶಿಕೋತ್ತಮನೆನಿಪ
ಘನಭಾವ ಲಿಂಗತಾನಾಗಿರ್ಪುದ ||3||

ಹಾರಿ ಹೋಯಿತು ಭ್ರಮರಿ

ಹಾರಿ ಹೋಯಿತು ಭ್ರಮರಿವ್ಯೋಮಕೆ
ಪರಮಾನಂದ ನಿಕ್ಷೇಪಸ್ಥಾನವ ತಿಳಿದು ತಾ ||ಪ||

ಮೊದಲು ಚೌದಳದೊಳು ಹುದುಗಿ ತೋರುತಲಿರ್ಪ
ಸದಮಳ ವರ್ಣನಾಲ್ಕರ ಮಧ್ಯದಿ
ವಿದಿತ ಕರ್ಣಿಕೆಯ ಕೇಸರದೊಡಗೂಡಿ ತಾ
ಪದುಳದಿಂ ತಾರಕಾಕೃತಿಯಾಗಿ ನಲಿದು ತಾ ||1||

ಆರಕ್ಕರಗಳೊಡಗೂಡಿ ರಾಜಿಸುತಿಹ
ಚಾರು ಕಮಲದೊಳು ತೀಡುತಿಹ
ಸಾರಗಂಧವನುಂಡು ಮೀರಿದ ಸುಖವನು
ಸೇರುತೆ ದಂಡಕಾಕೃತಿಯಾಗಿ ನಲಿದು ತಾ ||2||

ಹತ್ತೆಸಳಿನ ಕಮಲದ ಪ್ರಣವಗಳೊಳು
ಉತ್ತಮ ಕುಂಡವೆನಿಸಿ ಮೆರೆದು
ಒತ್ತಿನ ದ್ವಾದಶ ಪತ್ರದ ಮನುಗಳನು
ಸುತ್ತಿ ತೋರ್ಪರ್ಧಚಂದ್ರಾಕೃತಿಯಾಗಿ ತಾ ||3||

ಅನುದಿನ ಷೋಡಶ ರಣದ ಮಂತ್ರಗಳೊಳಗೆ
ಮಿನುಗುವ ದರ್ಪಣಾಕೃತಿಯಾಗಿ ಬಿಡದೆ
ಘನತರವೆನಿಪ ದ್ವಿದಳದಾಬ್ಜದೊಳಗೆ ತಾ
ಚಿನುಮಯ ಜ್ಯೋತಿರಾಕೃತಿಯಾಗಿ ಹೊಳೆದು ತಾ ||4||

ವಿಲಸಿತ ಮೂರಾರು ಕಮಲಗಳೊಂದಾಗಿ
ಜ್ವಲಿಪ ಹೃತ್ಕಮಲ ಸೌರಂಭದೊಳಗೆ
ನೆಲಸುತೆ ನಲವಿನಿಂ ಕಳೆವೆತ್ತು ತೋರುವ
ಲಲಿತಿಷ್ಟಲಿಂಗ ಭ್ರಮರದೊಡಗೂಡಿ ತಾ ||5||

ಹೋಗಲಾಡಿದೆನು ಭವಮಾಲೆಯ
ಶ್ರೀಗುರು ಪದಾಂಭೋಜವನು ನೆನದು ಮನದೊಳಗೆ
ಹೋಗಲಾಡಿದೆನು ಭವಮಾಲೆಯನು ಜಗದಿ ||ಪ||

ತನುಮಧ್ಯವಾಗಿಹಗವಿರಳಜರಂಧ್ರತನ
ಕನುನಯದಿ ಪರ್ಬಿ ಥಳಥಳಿಸುತಿರ್ಪ
ವನಜಸೂತ್ರದ ತೆರದಿ ಘನತೇಜವಾಗಿರುವ
ಚಿನುಮಯ ಬ್ರಹ್ಮನನು ಎನಗೆ ತೋರಿಸಿದ ||1||

ಭಾನುಸೋಮಾಗ್ನಿ ಮಂಡಲತ್ರಯದಿ ರಂಜಿಸುವ
ಸ್ವಾನುಭಾವದ ಸುಜ್ಞಾನ ಮಂಟಪದ
ಶೂನ್ಯಸಿಂಹಾಸನದಿ ಬೆಳಗುತಿಹ ಲಿಂಗವನು
ಸಾನುರಾಗದೊಳು ಮಾನಸಕೆ ತೋರಿಸಿದ ||2||

ಗಂಧದ್ವಾರದ ತುದಿಯೊಳಂದವಾಗಿಹ ದೃಷ್ಟಿ
ಸಂದಾಗದಂತಿರಿಸಿ ನೋಡುತಿರಲು
ಮಂದೈಸಿದಾತುಮದಿ ಚಂದವಾಗಿಹ ತೋರ್ಪ
ಬಂಧುರದ ರವಿಕೋಟಿ ಬೆಳಗು ತೋರಿಸಿದ ||3||

ಮೊದಲು ನಡೆವಾತ್ಮಮಂತ್ರದ ತುದಿಯ ಮೊದಲೆನಿಸಿ
ಪದುಳದಿಂ ಮೂಲವರ್ಣವನೆ ರಚಿಸಿ
ಇದೆ ಸಚ್ಚಿದಾನಂದವದ ಮರೆಯದಿರು ನೀನು
ಸದಮಳಾತ್ಮಕನೆಂದು ಎನಗೆ ತೋರಿಸಿದ ||4||

ತಾಲುಮೂಲ ದ್ವಾದಶಾಂತದೊಳು ಕಾಣಿಸುವ
ನೀಲಬಿಂದುವಿನ ನಡುತಾಣದೊಳಗೆ
ಬಾಲಶಶಿಯಂತೆ ತಾ ಬೆಳಗುತಿಹ ಜ್ಯೋತಿಯನು
ಲೀಲೆಯಿಂದಿಷ್ಟಲಿಂಗದೊಳು ತೋರಿಸಿದ ||5||

ಕಂಡೆನಾ ಮುದ್ವೀರೇಶನಡಿದಾವರೆಗಳ
ಕಂಡೆ ನಾ ನಿಗಮ ನಿಗಮಾಳಿ ಸಂಸ್ತುತ್ಯನಾ
ಕಂಡೆ ತೇಜೋಮಯ ಕುಂಡಲಿನಿಳಯದಿ | ಕಂಡೆನಾ ||ಪ||

ನಡುನಾಡಿ ದಂಡಾಗ್ರದಲ್ಲಿವ
ಘುಡುಘುಡಿಸುವ ಪರನಾದದಲ್ಲಿ
ಸಡಗರಿಸಿ ರುದ್ರರ ತಂಡಗಳೊಡಗೂಡಿ
ಬಿಡದೆ ರಾಜಿಪ ಮನೋಂಬುಜದ ಮಧ್ಯದೊಳಗೆ ||1||

ತನುತ್ರಯ ಗುಣಗಳವಳಿದು
ಘನತರ ಮುದ್ರೆಬಂಧವ ಬಲಿದು
ಅನುದಿನದೊಳು ಮಿನುಗುವ ಚಿನುಮಯಬ್ರಹ್ಮವ
ಮನವನುನ್ಮನಿಯೊಳು ಲಯಿಸಿ ನಿರೀಕ್ಷಿಸಿ ||2||

ಅರಿಣೇಂದು ಶಿಖಿಮಂಡಲಗಳ
ಪರತರ ನಾದ ಬಿಂದು ಕಳೆಗಳ
ಬೆರೆದುರು ಶೂನ್ಯ ಸಿಂಹವಿಷ್ಟರದೊಳು ರಾಜಿಪ
ಗುರು ಮುದ್ವೀರೇಶನಡಿದಾವರೆಗಳನು ||3||

ಒಂದು ರತ್ನವನು ಕಂಡೆ
ಸರಸಿಜಾನನೆ ಕೇಳೊಂದು ರತ್ನವನು ಕಂಡೆ
ಪರಿಕಿಸಲಸದಳವೆ ||ಪ||

ಒಂದು ರೂಪಾಗಿ ಕಾಣಿಸುತಲಿಹುದು
ನೋಡಲೆರಡು ರೂಪಾಗಿಹುದು
ಮುಂದೆ ಮೂವಿಧವಾಗಿ ಶೋಭಿಸುತಿಹುದಿದ
ರಂದವ ತಿಳಿದನುಭವಿಪ ಕೋವಿದರಾರು ? ||1||

ಗುಹ್ಯರೂಪಾಗಿಹುದೆರಡು ಕರಗಳಿಂದ
ಕುಚಗಳ ಪಿಡಿದಿಹುದು
ಮೋಹವೆರಸಿ ಚುಂಬನವನು ಮಾಡುತಲಿಹುದಾ
ಮಹಾಸುರತಸುಖವನು ಮಾಡುತಲಿಹುದು ||2||

ಹಲವು ಬಣ್ಣಗಳಾಂತು ಸುಳಿದಾಡುತಿಹುದದ
ಘಳಿಲನುಲಿವುತಿಹುದು
ಕಲವಲವಾಗಿಹುದಮಲ ಶ್ರೀಗುರು ಸಂಗ
ನೊಲುಮೆಯ ಶರಣಜನಕೆ ಚೋದ್ಯತರವಲ್ಲ ||3||

ಮುದ್ರೆ ಮೂರನು ತಿಳಿದವ ಯೋಗಿ
ಮುದ್ರೆ ಮೂರನು ತಿಳಿದು ಮುಕ್ತಿರಾಜ್ಯವ ಕಂಡು
ಭದ್ರಮಂಟಪದೊಳಗಿರಬಲ್ಲಡವ ಯೋಗಿ ||ಪ||

ಧರಣಿಯಂಬರವಗ್ನಿ ತತ್ವದಿ ಶಿರವ ಬಲಿದು
ಕರಶಾಖೆ ರುತಗೂಡಿದಾಸನಾಸ್ಥಿರದಿಂದೆ
ವರನಾದ ತೇಜದೊಬ್ಬುಳಿಯು ಪ್ರಜ್ವಲಿಸುತಿರೆ
ಪರಮ ಷಣ್ಮುಖೀಮುದ್ರೆಯೆಂದು ಪೇಳುವರು ||1||

ಸಾಸಿಕಾಗ್ರದ ಮೇಲೆ ನಯನಗಳ ನೆರೆ ಮುಗಿದು
ಸೂಸುತಿಹ ವಾಯುವನು ಸುಮ್ಮನಿರಿಸಿ
ಭಾಸುರದ ಪ್ರಣಮನಾದದೊಳು ಮನ ಲೈಸುತಿರೆ
ಲೇಸೆನಿಪ ಶಾಂಭವಿಯಿದೆಂದು ಪೇಳುವರು ||2||

ಮಂಡಲತ್ರಯದ ಮಂಟಪಗಳೆರಡರ ನಡುವೆ
ಕೆಂಡದಂತಿರ್ಪ ಲಿಂಗದ ಪರಿಯನ
ಕಂಡು ಕಣ್ಮುಚ್ಚಿ ಮೈಮರೆದು ಮನದಣಿದಿರಲು
ಕಂಡವರು ಪೇಳುವರು ಖೇಚರಿಯಿದೆಂದು ||3||

ಷಣ್ಮುಖಿಯ ಶಾಂಭವಿಯ ಖೇಚರಿಯನಾಚರಿಸಿ
ಸಣ್ಣಾದತ್ಯಂಗುಲದ ದೇಹದೊಳಗೆ
ಕಣ್ಮನಕೆ ಗೋಚರಿಪ ಷಣ್ಮಂತ್ರರೂಪಿನಲಿ
ಬಣ್ಣದಕ್ಷರಗಳೆರಡರಿವುದೇನದು ||4||

ಇಂತೇಕವಾಗೆಸೆವ ಪ್ರಣವಪೀಠದ ಮೇಲೆ
ಕಂತುಹರ ಪ್ರಾಣೇಶ ಸಂಗಮನ ನಿಲಿಸಿ
ಸ್ವಾಂತವರಿಯಲು ಸ್ವಾನುಭವ ತಲೆದೋರುತಿದೆ
ಚಿಂತೆಯಾತಕೆ ಮುಕ್ತಿಯೆಂಬುದಿದು ಸಿದ್ಧ ||5||

ಪರಬ್ರಹ್ಮದೊಳು ಮನವ ಬೆರಸಿದವ ಯೋಗಿ
ಗುರುಕರುಣವನು ಪಡೆದು ಬೆರಸಬಲ್ಲಡೆ ಯೋಗಿ
ಪರತರಾನಂದಮಯ ಬ್ರಹ್ಮದೊಳು ಮನವ ||ಪ||

ಧರಣಿಯಗ್ರದ ಜಲಧಿಮಧ್ಯ ಕೃಷ್ಣಾಶ್ರಯದ
ಪುರದ ದ್ವಾರಾವತಿಯ ಅರಮನೆಯೊಳು
ವರದ ವಾಗೀಶ್ವರಿ ಪೀಠಾಗ್ರ ಪ್ರಣವದೊಳು
ನೆರೆದು ರಾಜಿಪನೆ ತಾರಕಯೋಗಿವರನು ||1||

ಮಂಡಲತ್ರಯದೆರಡು ಮಂಟಪದೊಳೆಸೆವುತಿಹ
ಪುಂಡರೀಕಾಗ್ರದೊಳಗಿರ್ಪ ಲಿಂಗವನು
ಕಂಡು ಕಣ್ಣರೆ ಮುಗಿದು ಮನಮುಳುಗಿ ಮೈಮರೆದು
ಖಂಡಿತವನಗಲಿರಲು ರಾಜಶಿವಯೋಗಿ ||2||

ನೆಲನಗ್ಗಿಯಾಗಸಗಳಾರು ತಾಣಗಳಲ್ಲಿ
ಬಲಿದು ಕರಶಾಂಭರುತುಗಳನು ನೋಡಿ
ಜಲಜಸಖ ಶಶಿಬಿಂಬದೊಲು ಕಣ್ಣ ಬೆಳಗಿನೊಳು
ನಲಿದು ಮನವಳಿದವನೆ ಸಂಗಮೇಶ್ವರನು ||3||

ಮುಕ್ತಿ

ನಾದವನು ಬಿಂದುವನು ಕೇಳಿ ಕಂಡುದೆ ಮುಕ್ತಿ
ವೇದವರ ಗುರುಕರುಣವಾದ ಮಹಿಮಂಗೆ ||ಪ||

ಮನೆಯ ಕಂಡಿಯೊಳೈದಿದಿನಕಿರಣದಂತಸ್ತಿ
ಘನದಂಡವಂ ಪೊರ್ದಿ ತನುಮಧ್ಯದಿಂ-
ದನುನಯದೊಳಜ ರುದ್ರ ಪರಿಯಂತ ರಾಜಿಸುವ
ಕನದಮಳ ಬ್ರಹ್ಮದತಿ ಪ್ರಣವ ಘೋಷವನು ||1||

ರವಿ ಸೋಮ ಶಿಖಿ ಬಿಂಬತ್ರಯದಷ್ಟದಳದಲ್ಲಿ
ತವೆ ವಿಕಲಸ್ವರ ವ್ಯಾಪಕಾಕ್ಷರಾತ್ಮಕದಿ
ಕವಿದು ರುದ್ರರು ಶಕ್ತಿಯರು ಸಹಿತ ಸೇವಿಸಲು
ಅವರ ಮಧ್ಯ ಸ್ವರ್ಣಮಯದ ಕರ್ಣಿಕೆಯ ||2||

ಚೌದಳದ ಬತ್ತೀಸ ಕೇಸರಂಗಳ ನಡುವೆ
ಮಾದಳದ ವರ್ಣದ ಸೂಕ್ಷ್ಮ ಕರ್ಣಿಕೆಯೊ
ಳಾದರ ದನಾದಿ ನಾದಾಂತದೊಳ್ಬೆರೆದು ಬೇರಿಲ್ಲ
ದಾದಿ ಹ್ರೀಂ ಕಾರಿಣಿಯ ಅಂಗ ತೇಜವನು ||3||

ಬಲಿದು ಸಿದ್ಧಾ ಸನವನಿರದೆರಡು ಜ್ಯೋತಿಯನು
ಸುಲಭದಲಿ ಶೃಂಗಾಟಕೊಯ್ದು ಭಾವದೊಳು
ಚಲಿಸದಡೆಕಿಲವಿಟ್ಟು ಮನಪವನವನು ನಿಲಿಸಿ
ನಲಿದು ನಾಸಾಗ್ರ ದಿಟ್ಟಿಯೊಳು ಧ್ಯಾನಿ ಸಲು ||4||

ಇಂತಿದರ ಭೇದವನು ತಿಳಿಯಲಾರಳವಲ್ಲ
ಕಂತುರಿಪು ಸಂಗಮೇಶ್ವರ ನೊಲಿದುಯೆನಗೆ
ಮಂತಣದೊಳರುಪೆ ಕಂಡಾನು ಬದುಕಿದೆನು
ಅಂತಕನು ಭಯವಳಿದು ಶರಣರಾಳಾಗಿ ||5||

ಎಂತು ಮರೆವೆನು ಕಂತುರಿಪುವಿನುಪಕಾರವನು
ಹಾಗಲವಾಡಿಮುದ್ವೀರಸ್ವಾಮಿಮತ್ತುಇತರರತತ್ವಪದಗಳು
ಎಂತು ಮರೆವೆನು ರಮಣಿ ಮಾಡಿದುಪಕಾರವನು
ಕಂತುರಿಪು ಸಂಗಮೇಶ್ವರನೊಲಿದು ಎನಗೆ ||ಪ||

ಚಂಡಕರ ಶಶಿ ಶಿಖಿಯ ಮಂಡಲಂಗಳ ಪೊರಗೆ
ಮಂಡನದ ವೇದ ಶಿರದಳದ ಸ್ಥಾನದಲಿ
ತಂಡತಂಡದಿ ವಾಸುದೇವತೆಗಳಿಹ ಹರಿಯ
ಕಂಡೆನದನೇನೆಂಬೆ ಕಮಲದಳನೇತ್ರೆ ||1||

ಎಂಟು ಹದಿನಾರು ಮೂವತ್ತೆರಡು ದಳದಲ್ಲಿ
ಎಂಟು ಶಕ್ತಿಯರು ಹದಿನಾರು ಗಣವರರು
ಎಂಟು ವಿದ್ಯೇಶ್ವರರು ಎಂಟು ದಿಕ್ಪಾಲಕರು
ಎಂಟು ವಸುಗಳು ಇರುವ ಪರಿಕಂಡೆ ಕಾಂತೆ ||2||

ಬಿಂದು ನಾದಾತ್ಮ ವಿದ್ಯ ವರ್ಣದಳದಲ್ಲಿ
ಸಂದಂಬಿಕೇಶ್ವರಿ ಗಣಾನಿ ಮನೋನ್ಮನಿಯ
ಮುಂದೆ ಹ್ರೀಂಕಾರಿಯೆಂಬುಮೆಯೊಡನೆ ಸಹವಾಗಿ
ನಿಂದ ಶಾಂಭವನಿರವ ತೋರಿದನು ಸಖಿಯೆ ||3||

ಗುರುವಿಲ್ಲದಾಗದು
ತಾರಕ ಜ್ಯೋತಿಯ ನೋಡಿ | ಗುರು
ಕಾರುಣ್ಯ ದಿವ್ಯ ಹೃದಯಪೀಠದಲ್ಲಿ ||ಪ||

ಅಕ್ಷಿ ತುಂಬಿದ ವಾಯು ನಿಂದು | ಕೃಷ್ಣ
ವೃಕ್ಷರಂಧ್ರದಿ ಮನ ನಿಶ್ಚಲಗೊಂಡು
ಈಕ್ಷಣದೆರಡೇಕವಾಗಿ ಭ್ರೂ
ಲಕ್ಷವು ಶುದ್ಧಪ್ರಸಾದದೊಳ್ಭಾಗಿ ||1||

ನಾಸಿಕಾಗ್ರದ ದೃಷ್ಟಿಯಿಂದೆ | ಎವೆ
ವೀಸದೆ ಮನವು ಸೂಸದೆ ನಿಂದ ವಾಯು
ಭಾಸುರ ಪ್ರಣಮ ತೇಜದಲ್ಲಿ | ಕೂಡಿ
ಸಾಸಿರದಳ ಕರ್ಣಿಕಾಗ್ರಪೀಠದಲಿ ||2||

ಪಿಂಡಾಂಡದೊಳಗೆಲ್ಲ ತಾನೆ | ಮೂರು
ಮಂಡಲದೆರಡೆಸಳಾಗ್ರಪೀಠದಲಿ
ಗಂಡ ಪ್ರಾಣೇಶ ಸಂಗಮನ | ನೋಡ
ಕಂಡಿಹೆನೆಂದರೆ ಗುರುವಿಲ್ಲದಾಗದು ||3||

ಬೆಕ್ಕಸ ಬೆರಗಾದೆ
ಎಂತಾ ಕನಸ ಕಂಡೆ | ಕಾಂತೆ ರನ್ನಳೆ ಕೇಳೌ
ಶಾಂತ ಸಂಗನೆ ಬಲ್ಲ | ಇಂತಿದರರಿವನು ||ಪ||

ಗಾಡಿಗನೋರ್ವನು ಗಾಡಿಗತನದಿಂದ
ಗಾಡಿಯಿಂ ಹಾವನಾಡಿಸಲು ಕಂಡು
ಕೋಡಗ ಕುಣಿದಾಡೆ ಏಡಿ ಚಪ್ಪಳೆಯಿಕ್ಕೆ
ಆಡುವ ಹಾವನು ಹದ್ದೆತ್ತಿ[ತ್ತ]ಮಮಾ ||1||

ಆಡಾನೆ ನುಂಗಿತು ಕೋಡಗನ ಕುರಿ ನುಂಗಿತು
ಕಾಡಕೋಣನ ಕುಲವ ಇಲಿ ನುಂಗಿತು
ನೋಡ ನೋಡ ಹಾವು ಗಾಡಿಗನ ನುಂಗಿತು
ನೋಡ ಬಂದೈವರ ನೊಣ ನುಂಗಿತಮಮಾ ||2||

ಕೋಟೆಯ ನಾಯಕ ಬೇಟೆಯನಾಡುವೆನೆಂದು
ಕೋಟಲೆಯೊಳು ಹೇಮಕೂಟಕೈದಿ
ಕೋಟಿರಂಗದ ಗಿರಿ ಕೋಟಿಬಾನದ ಗಿರಿ
ಪಾಟಿಯಿಲ್ಲದೆ ಕಂಡು ಲಯವಾದನಂದು ||3||

ಅಣ್ಣ ನಕ್ಕನ ಕೂಡ ಚುನ್ನವನಾಡಲು
ಬಣ್ಣದ ಸೀರೆಯ ಸೆಳೆದುಕೊಂಡು
ಕಣ್ಣ ಮುಚ್ಚುತ ಮೂರು ಸಣ್ಣಗುಳಿಗೆಯನಿತ್ತು
ಬಣ್ಣದ ಮಾತನಾಡಿ ಬಯಲಾದನಮಮಾ ||4||

ಅಕ್ಕನು ತಮ್ಮನು ಚಕ್ಕಂದವಾಡಲು
ಮಕ್ಕಳ ಮೂವರ ಹೆತ್ತುಕೊಂಡು
ದಿಕ್ಕುಗೆಟ್ಟೀರ್ವರ ಚಿಕ್ಕಾಡು ನುಂಗಲು
ಬೆಕ್ಕಸ ಬೆರಗಾದೆ ಸಂಗನೊಳಮಮಾ ||5||

ಎಂಥ ಕನಸ ಕಂಡೆನೆ
ಎಂಥ ಕನಸ ಕಂಡೆನೆ ಶ್ರೀಗುರುವಿನಿಂದ
ಕಂತುನಾಶಕನ ಕಂಡೆನೆ ನೋಡಮ್ಮ ಜಾಣೆ ||ಪ||

ಮೂರು ಪಟ್ಟಣದೊಳಗೆ ಮೂರು ಮನೆಯೊಳು
ಮೂರುಗಂಡರ ಕೂಡಿದೆನೆ
ಮೂರು ಗಂಡರು ಮಾತಾಡಿ ಮೂರೂರ ಸುಟ್ಟು
ಬೇರಿಲ್ಲದ ಒಗೆತನ ಮಾಡಿದೆನೆ ||1||

ನಡೆವ ನಾಡಿಯನು ಬಿಟ್ಟು ಸಂತೋಷದಿಂದ
ನಡೆಯದ ಬಟ್ಟೆಯಲಿ ನಡೆಸಿದನೆ
ನುಡಿ ನೋಟಗಳೆರಡು ಮೊದಲಿನರಿವೆಯ ಬಿಟ್ಟು
ನುಡಿ ನೋಟಗಳೊಂದ ಕಂಡೆನೆ ||2||

ಕಡಲ ಮಧ್ಯದ ಜ್ವಾಲೆಗೆ ತಡೆಯದೆ ನಾನು
ಗುಡಿಗೆ ಹೋಗುವದ ಕಂಡೆನೆ
ಸಡಗರದಿಂದೆ ರಾಜಿಸುವ ಲಿಂಗವ ಕಂಡು
ಗಡಗಡನೆ ನಡುಗಿ ನಿಂದೆನೆ ||3||

ಆರು ಕೇರಿಯ ಕಟ್ಟಿಸಿ ಮೂರು ದೊರೆಗಳು
ಮೂರಾರೊಬ್ಬಟ್ಟೆಯ ಮಾಡಿದರೆ
ಮೂರು ದೊರೆಗಳು ಮಾತಾಡಿ ತ್ರಿಕೂಟಸ್ಥಲದ
ಮೂರು ನದಿಗಳನೆ ಕೂಡಿದರೆ ||4||

ಶೃಂಗಾರವೆಂಬ ಗಿರಿಯೊಳು ರಂಗಿಸುತಿರ್ಪ
ಶ್ರುತಿ ಕೋದಂಡನ ಕಂಡೆನೆ
ಮಂಗಳಾಕಾರದ ಮಾಯವ ನೋಡಲಾರದೆ
ಕಂಗೆಟ್ಟು ಕಣ್ಣ ತೆರದೆನೆ ||5||

ಸಣ್ಣ ಬಣ್ಣವನು ಕಂಡೆನೆ
ಸಣ್ಣ ಗಂಡಿಲಿ ನಾ ಹೋಗಿ ಕೈಲಾಸದೊಳು
ಅಣ್ಣ ಮುಕ್ಕಣ್ಣನ ಕಂಡೆನೆ ||6||

ನೂರೊಂದು ಮಂದಿರದೊಳಗೆ ಬೆಳಗುತಿರ್ಪ
ಆರುಲಿಂಗವ ಕಂಡೆನೆ
ಆರು ಲಿಂಗಗಳೊಡಗೂಡಿ ಒಂದಾಗಿ ತೋರ್ಪ
ಧೀರ ಮುದ್ವೀರನ ಕಂಡೆನೆ ||7||

ಶಾಂತಬ್ರಹ್ಮದಿರವನರಿದೆ
ಒಳಗೆ ಹೊರಗೆ ಬೆಳಗುತಿರ್ಪ ನಳಿನಜ್ಯೋತಿಯುತ್ತುಮಾಂಗ
ದೊಳಗೆ ಮಿಸುಪ ಶಾಂತಬ್ರಹ್ಮದಿರವನರಿದೆನು ||ಪ||

ಗುರುವರೇಣ್ಯನಾಗಿ ಬಂದು ಪರಮಮೋಕ್ಷಾಪೇಕ್ಷರಾದ
ಶರಣಜನಕೆ ತೋರಿ ತತ್ವಮಸಿಯದರ್ಥವನು
ಕರುಣದಿಂದೆ ಮುಕ್ತಿಯಪ್ಪ ಇರವನೊರೆವೆನೆಂದುಯೆನ್ನ
ಕರೆದು ತರಿಸಿ ಪೇಳ್ದ ಸುಖವನೇನಂದಪೆ ||1||

ಚೌಕವಾರು ಹತ್ತು ಯೆಂಟು ಚೌಕಹದಿನಾರುದಳವು
ಚೌಕಮಧ್ಯದಷ್ಟದಳಗಳಾಗಿ ತೋರ್ಪವು
ಭೃಕುಟಿಯೆರಡು ಶಿಖೆಯು ಮೂರು ಪ್ರಕಟಪಶ್ಚಿ-
ಮೈಕ್ಯದಳವು ಚೌಕದಷ್ಟದಳದ ಮಧ್ಯದಲ್ಲಿ ರಾಜಿಪವು ||2||

ಆರು ಮೂರು ಚಕ್ರದಲ್ಲಿ ನೂರುವೊಂದು ಸ್ಥಲಗಳಿಹವು
ಮೂರುಬಿಂಬದಗ್ರ ಶೂನ್ಯಜ್ಞಾನಪೀಠದಲಿ
ಆರು ಸ್ಥಾನದಲ್ಲಿ ನಾಲ್ಕುವಾರು ಹತ್ತುಪತ್ತುವೆರಡು
ಬೇರೆ ಹದಿನಾರು ಪತ್ತು ನಾಲ್ಕು ವರ್ಣವನು ||3||

ತಳೆದು ಮಂತ್ರಮೂರ್ತಿಯಾಗಿ ಬೆಳಗುತಿಹುದು ಮಹಾಲಿಂಗ
ತಿಳಿಯವಹ್ನಿವಾಯು ಮನವನೊಂದುಗುಡುತೆ
ತಳೆದು ಕರಣವೃತ್ತಿಗಳನು ತೊಳೆವ ಆಜ್ಞಾಚಕ್ರದಲ್ಲಿ
ಯುಳುಮೆಯಾಗಿ ನೋಡಿ ಐಕ್ಯವಪ್ಪದೆಂದನು ||4||

ಕರದಿಯಿಷ್ಟ ಲಿಂಗದಲ್ಲಿ ಬೆರದ ಮನವು ಮರಳದಂತೆ
ವರವನಿತ್ತು ಲಿಂಗವಾದ ಸಂಗಮೇಶನ
ಚರಣಕಮಲವರಿದು ಹೃದಯಸರಸಿಯಲ್ಲಿ ನೆನದು ನೆನದು
ಹರುಷ ಶರಧಿಯಲ್ಲಿ ಮುಳುಗಿಯೇಳದಿರ್ಪೆನು ||5||

ಎನ್ನ ಗಂಡ ತನ್ನಂತೆ ಮಾಡಿಕೊಂಡ

ಎಂಥ ಪುಣ್ಯ ಪುರುಷನಮ್ಮ ಏಣಲೋಚನೆ | ಎನ್ನಗಂಡ ತ
ನ್ನಂತೆ ಮಾಡಿ ಎನಗೆ ಬೋಧ ಹೇಳಿದ | ಕೇಳು ಜಾಣೆ ||ಪ||

ಜಾಣೆ ನೀನು ಕೇಳು ಜಗದೊಳಗೆಲ್ಲ ಬೆಳಗುವ
ಮಾಣಿಕ್ಯ ಅಪ್ಪುರಸ ಸಿಕ್ಕಿತೆಂದ | ಎನ್ನ ಗಂಡ
ಪ್ರಾಣದಂತೆ ಜೋಕೆಮಾಡು ಪಾಪಿಗಳಿಗೆ ನೀ ತೋರಬೇಡ
ಪುಣ್ಯವಿರಲ್ಕೆ ಸಿಕ್ಕಿತೆಂದ | ಎನ್ನ ಗಂಡ ||1||

ಅತ್ತಯಿತ್ತ ಸುತ್ತಬೇಡ ಜತ್ತನಾಗಿ ಮನಹೊಂದಿ
ರತ್ನವಿದ್ದ ಸರ್ಪನಂತೆ ಕಾದಿರೆಂದ | ಎನ್ನ ಗಂಡ
ಹತ್ತು ಮಂದಿ ಕಳ್ಳರುಂಟು ಹಿಡಿತಂದು | ಕಟ್ಟಿ ನಿನ್ನ
ಹತ್ತುಹಿಟ್ಟುಕೊಳೆ ವಸ್ತುವ ಇಕ್ಕೆಂದ | ಎನ್ನ ಗಂಡ ||2||

ಎಲ್ಲಿ ಕುಳಿತರೇನು ಎತ್ತ ಹೋದರೇನು ನಿನ್ನ ಬಿಟ್ಟು
ಎಲ್ಲಿಗೆ ಹೋಗುವಂಥದಲ್ಲವೆಂದ | ಎನ್ನ ಗಂಡ
ಬಲ್ಲರೆ ಕೇಳು ಸತ್ಯ ನಿಲಿಸೆರಡ ಕರಿಗಳಲ್ಲಿ
ಸುಳ್ಳಲ್ಲ ಬೇಗ ವಸ್ತು ಸಿಕ್ಕಿತೆಂದ | ಎನ್ನ ಗಂಡ ||3||

ಕಂಗಳಲ್ಲಿ ಕಾರದಲ್ಲಿ ಮನದಲ್ಲಿ ಭಾವದಲ್ಲಿ
ಲಿಂಗದಲ್ಲಿ ತುಂಬಿದಂಥ ವಸ್ತುವೆಂದ | ಎನ್ನ ಗಂಡ
ಹಿಂಗದೆ ಭೇದವ ತಿಳಿದು ಹಿತವಾಗಿ ಸಾಧಿಸಲು
ಮಂಗಳಾಂಗಿ ಕೇಳು ಮೋಕ್ಷ ಕೊಡುವುದೆಂದ | ಎನ್ನ ಗಂಡ||4||

ಕದ್ದುಕೊಂಡು ಹೋಗುವಂಥ ಕಳ್ಳರುಂಟು ಬಹಳ ಮಂದಿ
ನಿದ್ದೆಮಾಡಬೇಡ ರತ್ನವಿಲ್ಲವೆಂದ | ಎನ್ನ ಗಂಡ
ಬುದ್ಧಿವಂತೆ ಕೇಳು ಭ್ರೂಮಧ್ಯದಲ್ಲಿ ನೀ ದೃಷ್ಟಿಯಿಟ್ಟು
ಎದ್ದು ಕಾದಿರೆಂದು ಸಂಗಮೇಶ ಹೇಳಿದಾ ||5||

ನಲ್ಲನಗಲೆ ನಾ ನಿಲ್ಲಲಾರೆನಕ್ಕ

ನಲ್ಲನಗಲೆ ನಾನು ಕೇಳೆಲೆಗವ್ವಾ
ನಿಲ್ಲಲಾರೆನಕ್ಕ
ಪುಲ್ಲಶರನ ಬಹುಬಿಲ್ಲಿನಟ್ಟುಳಿಗೆರ್ದು
ತಲ್ಲಣಗೊಳಿಸುತಿದೆಲ್ಲಿಯ ಕೋಪವೆ ||ಪ||

ಕಂಗಳಗ್ರದೊಳೆಸೆವ ಕಾಮಿನಿ ಕೇಳು
ಮಂಗಳಗೃಹದೊಳಗೆ
ಸಿಂಗರಿಸಿದ ಸಿರಿಮಂಚದೊಳಗೆ ಹೆರೆ
ಹಿಂಗದೆ ರಂಜಿಪ ಸಕಲ ಸುಖಗಳಿಂದ ||1||

ಚಿಲಿಪಾಲು ಸಕ್ಕರೆಯು ಚೆಲುವೆ ಕೇಳು
ಸುಲಿದಬಾಳೆಯ ಪಣ್ಗಳಿಂ
ಕಲಸಿ ಸವಿದು ಪನ್ನೀರನೆ ಮುಕ್ಕುಳಿಸಿ
ಚೆಲುವ ವೀಳ್ಯವಮಾಡಿ ಮೊಗದೊಳು ಮೊಗಗೂಡಿ ||2||

ವೀಣೆ ತಂಬೂರಿಗಳಿಂ ಕೇಳೆಲೆ ನಾರಿ
ಜಾಣತನದಿ ನುಡಿಸಿ
ಮಾಣದೆ ಮಿಸುಪ ಸುಗೀತಂಗಳನು ಪಾಡಿ
ಹೂಣಿ ವಕ್ಕರಳ ತೀವಿಹ ರತಿಕೇಳಿ ||3||

ಇಂಚರವನು ತೆಗೆದರು ಕೇಳೆಲೆ ನಾರಿ
ಕಂಚುಕಿಯನು ಕಳೆದು
ಮುಂಚೆ ಸೀರೆಯ ಬಿಟ್ಟು ಮುತ್ತವ ಕೊಟ್ಟು
ಸಂಚಿಂದಲೆನ್ನ ನೆರದನು ||4||

ಸುಗುಣ ಸಂಗ ನಲ್ಲನನಗಲಿ ನಾನು
ಕೆಳೆಲೆಗವ್ವಾ ನಿಲ್ಲಲಾರೆನಕ್ಕಾ ||5||

ಯಾಕ ಕಕುಲಾತಿ ಬಿಡುತಿ

ಯಾಕ ಕಕುಲಾತಿ ಬಿಡುತಿ ಎಲೆ ಮರುಳೆ
ಯಾಕ ಕಕುಲಾತಿ ಬಿಡುತಿ | ಮೂರು
ಲೋಕವನು ಸಲುವಂಥ ಸಂಗಮೇಶ್ವರ | ನಮ್ಮ
ಸಾಕಲಾರದೆ ಬಿಡುವನೆ ||ಪ||

ಆನಿಗೈದು ಮಣವಿನ ಆಹಾರವನು ಅಲ್ಲಿ
[ತಾನೆ] ತಂದಿರ್ಪರಾರು ?
ಜ್ಞಾನಿಗಳು ಮೊದಲಾದ ಕೆಲವು ಕೀಟಕನೆಲ್ಲವ
ತಾನು ಸಲಹದೆ ಬಿಡುವನೆ? ||1||

ಕಲ್ಲ ಒಳಗಿನ ಕಪ್ಪಿಗೆ ಆಹಾರವನು
ಅಲ್ಲಿ ತಂದಿರ್ಪರಾರು?
ಎಲ್ಲವನು ಜರಿದು ಅರಣ್ಯವನು ಸೇರಿದರೆ
ಅಲ್ಲಿ ಸಲಹದೆ ಬಿಡುವನೆ ? ||2||

ಹೃದಯದೊಳಗಿನ ಶಿಶುವಿಗೆ ಪಾಲು ಬೆಣ್ಣೆ
ಮುದದಿ ನಡಸುವರದಾರು ?
ಹದವನರಿತು ಪರರಿಗೆ ಹಲ್ಲನೆ ತೆರದರೆ
[ಅದ] ಬಲ್ಲರೇನು ನರಪ್ರಜೆಗಳು ? ||3||

ಅಡವಿಯೊಳಗಿನ ಮೃಗಜಾತಿಗಳಿಗೆ ಅಲ್ಲಿನ್ನು
ಪಡಿಯ ನಡಸುವರದಾರು ?
ಗಿಡದಿಂದ ಗಿಡಕೆ ಹಾರುವ ಪಕ್ಷಿಗಳಿಗೆ ತಾನು
ಪಡಿಯ ನಡೆಸದೆ ಬಿಡುವನೆ ? ||4||

ಕಂಡವರ ಕಾಲಿಗೆರಗಿ ಎಲೆ ಮನವೆ
ಮಂಡಿ ದಡ್ಡಾದವಲ್ಲೊ ?
ಭಂಡ ಮನ ಪರರಿಗೆ ಅಂಡಲಿದರೇನು ಫಲ
ಕೊಂಡಾಡೊ ಶಿವನ ಸೊಲ್ಲ ||5||

ಬರಿದೇಕೆ ಬಳಲುವಿರಿ

ಬರಿದೇಕೆ ಬಳಲುವಿರಿ ಲಿಂಗಮೋಹಿಗಳೆಲ್ಲ
ಗುರುಕೊಟ್ಟ ಪ್ರಾಣಲಿಂಗವನರಿಯದೆ ||ಪ||

ವಾಮ ದಕ್ಷಿಣವೆಂಬ ಸೋಮಸೂರ್ಯರ ಮಧ್ಯ
ಸೀಮೆಯೊಳು ಕೃಷ್ಣ ಮಹಾಶ್ರಯವಾದ
ಹೇಮವರ್ಣ ದ್ವಾರಾವತಿಯೆಂಬ ಪಟ್ಟಣದಿ
ಆ ಮಹಾಪ್ರಾಣಲಿಂಗವನರಿಯದೆ ||1||

ತಾಲು ಮೂಲದ್ವಾರದ ಶಾಂತದ ಮಧ್ಯದೊಳು
ಬಾಲೇಂದು ರವಿಕೋಟಿ ಪ್ರಭೆಯನೊಳಕೊಂಡು
ಮೂಲಮಂತ್ರದ ರೂಪು ತಾನೆ ತಾನಾಗಿರ್ಪ
ಶೂಲಿ ಶರಣರೆಂದರಿದುಕೊಳಲರಿಯದೆ ||2||

ಎಲ್ಲಿ ನೋಡಿದಡಲ್ಲಿ ತಾನೆ ರೂಪಾಗಿಹುದು
ಬಲ್ಲವರ ಮನವ ಸೆಳೆವುತ್ತಲಿಹುದು
ಸಲ್ಲಲಿತ ಪ್ರಾಣೇಶಯೆನ್ನೊಡೆಯ ಸಂಗಮೇಶನೆಂಬ
ಚಿಲ್ಲಿಂಗವ ನೀವು ನೆರೆ ನಂಬದೆ ||3||

[/fusion_toggle][fusion_toggle title=ನುಡಿದಂತೆ ನಡೆವುದೇಕಿಲ್ಲ ?

ನುಡಿದಂತೆ ನಡೆವುದೇಕಿಲ್ಲ ನಿನ್ನ
ಬಡಮನದಲಿ ಕೆಡುವುದನೀತಿಯಲ್ಲ! ||ಪ||
ಮಾತಿನೊಳಗೆ ನೀತಿ ನುಡಿವೆ ಹೀಗೆ
ಧಾತುಗೆಟ್ಟು ಭ್ರಷ್ಟ ಆಟದಿ ನಡೆವೆ
ಖ್ಯಾತಿಯನರಿಯದೆ ಜಡದೆ ಬಹು
ನೀತಿಶಾಸ್ತ್ರಗಳಿದ್ದು ಮರದೇಕೆ ಕೆಡುವೆ ||1||

ವಾಕುಪಾಕವಾಯಿತಲ್ಲ ನಿನ್ನ
ಕಾಕುಮನದ ಚೇಷ್ಟೆಯ ಬಿಡೆಯಲ್ಲ
ಸಾಕು ಶಾಸ್ತ್ರದ ಹೋರಟೆಲ್ಲ ಇನ್ನು
ಜೋಕೆತಪ್ಪಲು ಮುಂಕಾಕ ಹೋ ಸಲ್ಲ ||2||

ದೇಹದ ಗುಣಗಳ ಮರೆಯೆ ಆದ
ಹೋಹವೆಂಬುದ ನೋಡಿ ಆನಂದವರಿಯೆ
ಮೋಹಿಸುತಿಹೆ ನರಗುರಿಯೆ ಶಿವ
ಸೋಹವೆಂಬುದ ಕೇಳಿ ಬುದ್ಧಿಯನರಿಯೆ ||3||

ನಿನ್ನೊಳಗೆ ನೀನೆ ನೋಡು ಆಹೋ
ಮುನ್ನಿನ ಪ್ರಮಥರಾಡಿದ ಆಟವಾಡು
ಮನ್ಮಥನ ಬಾಣವ ಶಿಕ್ಷೆಮಾಡು ನಿನ್ನ
ಗನ್ನಗದುಕಿನ ಹೋರಾಟವ ಹೋಗಲಾಡು ||4||

ನುಡಿ ಪುರಾತರವೊಲು ನುಡಿವೆ ನಿನ್ನ
ನಡೆ ಕಿರಾತರವೊಲು ನಡತೆಯ ನಡೆವೆ
ಜಡಮನದೊಳು ಮುಂದುಗೆಡುವೆ ನಮ್ಮ
ಮೃಡಸಂಗಮೇಶನ ನೆನೆ ಮುಕ್ತಿವಡೆವೆ ||5||

ಜ್ಞಾನವನೀಡಾಡಬೇಡ

ಬರಿದೆ ಚಿಂತಿಸಬೇಡ ಭ್ರಷ್ಟ ವೃಥಾ
ಕರೆಕರೆಗೊಂಡರೆ ನಿನಗದು ನಷ್ಟ ||ಪ||

ಇಲ್ಲದ ಬಯಸಲು ಬರದು ಬಹು
ತಲ್ಲಣಿಸಲು ಬೇಡ ನೀನದನರಿದು
ಎಲ್ಲರಿಗೆ ಬಾಯ ಬಿರಿವುದು ಬೇಡ
ಬಲ್ಲತನಕದು ಬಹುಮಾನ ಕಿರಿದು ||1||

ಬರುವಂತದೆಲ್ಲವು ಬಿಡದು ಮತ್ತೆ
ಬರದುದೆಲ್ಲ ಬಾರೆಂದರೆ ಬರದು
ಮೀರಿದ ಮಾತ ನೀ ನುಡಿದು ಮುಂದೆ
ಪಾರಾಗಬೇಡಪಕೀರ್ತಿಯ ಪಡೆದು ||2||

ನೀನೊಂದು ನೆನೆಯಲು ಬೇಡ ದೈವ
ತಾನೊಂದ ನೆನೆವುದು ಕೇಳೆಲೊ ಮೂಢ
ಜ್ಞಾನವನೀಡಾಡಬೇಡ ನಿನ್ನ
ಧ್ಯಾನದಿಂದ ಆ ಸಂಗಮೇಶನ ಕೂಡು ||3||

ಹಲವ ಚಿಂತಿಸಬೇಡ

ಹಲವ ಚಿಂತಿಸಬೇಡ ತಾಳು
ಸುಲಭದಿ ಶಿವಕೃಪೆ ಹೊಲಬಿದ ಕೇಳು ||ಪ||

ತನುವ ಗುರುವಿಗೆ ನೀ ಸಲಿಸು ನಿನ್ನ
ಮನವನು ಲಿಂಗದ ನೆನಹಿನೊಳ್ನಿಲಿಸು
ಧನವ ಜಂಗಮಕೆಂದಿರಿಸು ಇದ
ರನುವ ತಿಳಿದು ಅಂಗದಿ ಆಚರಿಸು ||1||

ಅಸಮ ಪಂಚಾಕ್ಷರಿ ಜಪಿಸು ನಿನ್ನ
ನೊಸಲೊಳು ಭಸಿತವ ಒಸೆದು ನೀ ಧರಿಸು
ಎಸೆವ ರುದ್ರಾಕ್ಷಿಯಲಂಕರಿಸು ಚೆನ್ನ
ಬಸವ ನಾಮ [ವ] ಬಿಡದೆ ಉಚ್ಚರಿಸು ||2||

ತೀರ್ಥಪ್ರಸಾದವ ಸಲಿಸು ಶಿವ
ಭಕ್ರತ ಕಂಡರೆ ಮತ್ತೆ ನೀ ನಮಿಸು
ಮುಕ್ತಿದಾಯಕವಿದ ಪಠಿಸು ನಮ್ಮ
ಕರ್ತ ಮಹಾ ಸಂಗಮೇಶನೊಳ್ಬೆರಸು ||3||

ಜಪಿಸು ಪಂಚಾಕ್ಷರಿಯ

ಹೊಲಬನರಿತು ಜಪಿಸು ಪಂಚಾಕ್ಷರಿಯ ಮಂತ್ರವಂ
ಹಲವು ಪರಿಯ ಪಾಪವೆಲ್ಲ ಹರಿದು ಪೋಪುದು ||ಪ||

ದುರಿತ ಬರಲಿ ದುಃಖ ಬರಲಿ
ಉರಿವ ಕಿಚ್ಚು ಬಂದು ಸುಡಲಿ
ಬರಿಯ ವಾ[ಕು ಗ] ರ್ಜನೆಗಳ ಹೊರಸಿ ಕಾಡಲಿ
ಶಿರದ ಮೇಲೆ ಕರವನಿರಿಸಿ
ಗುರುವುದಳೆದ [ಅ] ಮೃತವಿರಲಿ
ಕರಗಿ ಚಿಂತೆಗಳನು ಮಾಡಿ ಕೊರಗಲೇತಕೆ ? ||1||

ಹಸಿವಿನಲ್ಲಿ ನಿದ್ರೆಯಲ್ಲಿ
ವ್ಯಸನದಲ್ಲಿ ವಿಷಯದಲ್ಲಿ
ಮುಸುಕಿ ಮುಂದುಗೆಡಿಸುತಿರ್ಪ ಕರಣಗುಣದಲಿ
ಹುಸಿಯನಾಡಿ ಅಸುವ ಹೊರೆವ
ಗಸಣಿಗಳಿಗೆ ಸಿಕ್ಕಬೇಡ
ಅಸಮ ಪಂಚಾಕ್ಷರಿಯ ಮರೆದು ಅಸುವ ಬಿಡದಿರು ||2||

ಹಲವು ಮಂತ್ರ ತಂತ್ರಗಳನು
ಕಲಿತರೇನು ಫಲಗಳಿಲ್ಲ
ಒಳಿದು ಓಂ ನಮಃಶಿವಾಯಯೆನಿಪ ಮಂತ್ರವ
ಗೆಲುವಿನಲ್ಲಿ ಮನದಿ ಜಪಿಸಿ
ಸುಲಭದಲ್ಲಿ ಸಂಗಮೇಶ್ವರನ
ಸಲಿಗೆಯಲ್ಲಿ ಬೆರೆಯ ನೆಲೆಯ ಮತವಿದು ||3||

ಹೋದೆಯ ಸುಖವಾಯಿತೆ ?

ಹೋದೆಯ ಸುಖವಾಯಿತೆ ನಿನ್ನ
ಬಾಧಿಪ ವಿಷಯವ ಬಯಲು ಮಾಡಿಕೊಂಡು ||ಪ||

ಒಂದರಿಂದಲಿ ಪುಟ್ಟಿ ಒಂದರಿಂದಲಿ ತೋರಿ
ಒಂದರೊಳಗೆ ಒಂದನಡಗಿಸುತ
ಒಂದೊಂದ ವ್ಯವಹರಿಸಿ ಒಂದೊಂದ ವಿವರಿಸಿ
ಒಂದರ ಮೂಲದಿಂ ಒಡವೆರವುತಲೀಗ ||1||

ಎರಡರ ಮೂಲದಿಂದೆಲ್ಲವನೆ ಕಂಡು
ಇರದೆರಡರ ಭೇದವ ತಿಳಿದು
ಎರಡು ವಿಚಾರದಿ ವ್ಯವಹರಿಸುತಲಾಗ
ಎರಡಕ್ಕೆ ಸಿಕ್ಕದೆ ಎರಹುಕಾರನಾಗಿ ||2||

ಮೂರುರಿಂದಲಿ ಮೂರು ತೋರಿದ ಬಗೆಗಳ
ಮೂರು ಮೂರರ ಭಾವವನೀಕ್ಷಿಸಿ
ಮೂರು ಮೂರನೆ ಮೂರರೊಳಿಂಬಿಟ್ಟು
ಮೂರು ಮೂರನೆ ಮೀರಿ ಮುಂದಕ್ಕೆ ಮುಖವಾಗಿ ||3||

ನಾಲ್ಕರಿಂದಲಿ ನಾಲ್ಕು ಬಗೆ ಬಗೆಯಾದುದು
ನಾಲ್ಕರೊಳಗೆ ನಾಲ್ಕು ನಟಿಸುತಲಿ
ನಾಲ್ಕು ಬಗೆಯ ಮೀರಿ ನಾನಾಪರಿಯ ಬಿಟ್ಟು
ನಾಲ್ಕವನಣಗಿಸಿ ನಟನೆಯ ತೋರುತ ||4||

ಅಯಿದರಿಂದಲಿ ಅಯಿದ ಅಯಿದಾಗಿ ತೋರಲು
ಅಯಿದು ವಿಚಾರದಾಯವನೆ ಕಂಡು
ಅಯಿದು ಅಯ್ದನೆ ತಂದು ಅಯಿದರೊಳಣಗಿಸಿ
ಅಯಿದು ಮುಖದ ಸಂಗಮೇಶನೊಳ್ಬೆರೆದು ನೀ ||5||

ಬ್ರಹ್ಮಧ್ಯಾನವಮಾಡಿ

ಬ್ರಹ್ಮಧ್ಯಾನವ ಮಾಡಿ ಬೇಗ | ನೀವು
ಸುಮ್ಮನಿರಲುಬೇಡ ಸುಖವಹುದೀಗ ||ಪ||

ಮೂರು ಬಗೆಯದೊಂದು ಕೊಟ್ಟ | ಅದ
ಹಾರೈಸಿಕೊಂಡಿರುತಿಪ್ಪವ ಕೆಟ್ಟ
ಮೀರಿ ಹೋದವ ಬಲು [ದಿಟ್ಟ] | ಬೇಗ
ಸೂರೆಗೊಂಡವ ಹೋಗಿ ಮೂರೂರ ಬಿಟ್ಟ ||1||

ಹಲವು ಪರಿಯದೊಂದು ಭಾಂಡ | ಅದು
ನೆಲೆತಪ್ಪಿ ಸುಖವೀವ ಹೊಲಬೊಂದ ಕಂಡ
ಒಲವ ನಿಲಿಪ ಬಹುಲೆಂಡ | ಮುಕ್ತಿ
ನೆಲೆಯನರಿದು ಬೇಗ ಒಡಗೂಡಿಕೊಂಡ ||2||

ಪರಿಪೂರ್ಣವಾಗಿಯನಂತ | ಬಹು
ಶರೀರ ಭೇದವ ಕಂಡು ನೆರದಿಹ ಪಂತ
ವರವ ಪಾಲಿಪ ಮುಕ್ತಿಕಾಂತ | ನಮ್ಮ
ಗುರುಸಂಗಮೇಶ ತಾನಾಗಿ ತಾ ನಿಂದ ||3||

ವ್ಯರ್ಥವಾಗಲಿಬೇಡವೆಲೆ ಮನವ

ಮರ್ತ್ಯಲೋಕಕೆ ಬಂದು ಮೈಮರದು ನೀ ಮುಂದೆ
ವ್ಯರ್ಥವಾಗಲಿಬೇಡವೆಲೆ ಮಾನವ ||ಪ||

ಮೊದಲು ಬ್ರಹ್ಮದಿ ಪುಟ್ಟಿದಾದಿಸ್ಥಿತಿಗಳ ಮರೆದು
ರುಧಿರ ಶುಕ್ಲದಿ ಪುಟ್ಟಿತೆಂಬೆಯಲ್ಲವೊ
ಅದಕೆ ಆಶ್ರಯವಾವುದೆಂದು ತಿಳಿಯದೆ ನೀನು
ಕುದಿದು ಕೋಟಲೆಗೊಂಡು ಕೊರಗಬೇಡೆಲವೊ ||1||

ಜಗವೆಲ್ಲ ಬ್ರಹ್ಮದಿಂದೊಗೆದುದೆಂಬುದ ಬಿಟ್ಟು
ಬಗೆಬಗೆಯ ಶಾಸ್ತ್ರಗಳ ಗಳಹಬೇಡೆಲವೊ
ಸುಗುಣವೆಲ್ಲವು ದೃಶ್ಯವಾಗಿ ಲಯವಪ್ಪುದೆಲೆ
ಮಿಗೆ ಜ್ಯೋತಿ ಬಯಲೊಳಗೆ ಅಡಗುವಂತೆ ||2||

ಹಂದಿ ನಾಯಿ ಮೊದಲಾದ ಹಲವು ಜೀವವು ಬ್ರಹ್ಮ
ದಿಂದೊಗೆದುದಲ್ಲಿ ತಾ ಲಯವಪ್ಪವು
ಕಂದಮೂಲದಿ ಚರನಾಲ್ಕರೊಳು ಗುರುಸಂಗ
ಹೊಂದಿಪ್ಪನೆಂದು ನೀ ತಿಳಿ ಮಾನವ ||3||

ಜೋಗಿ ಬಂದನು ಕಾಣಿರೆ

ಜೋಗಿ ಬಂದನು ಕಾಣಿರೆ
ನಿರಂಜನ ಸ್ವಾಮಿ ಬಂದನು ಕಾಣಿರೆ
ಜಾಗ್ರ ಸ್ವಪ್ನ ನಿದ್ರೆಗಳೆಂಬ ಕಿನ್ನರಿವಿಡಿದು
ಜೋಗಿ ಬಂದನು ಕಾಣಿರೆ ||ಪ||

ಆದಿಪ್ರಣ[ವ] ಸಿಂಗಿ ಓಂಕಾರ ನಾದ
ಮಾಡುವ ನಯನದಿ ಪೂಜಿಪ ಪಾದ
ವೇದಶಾಸ್ತ್ರಗಳಿಗೆ ತಾ [ನಿ] ಲುಕದೆ ಹೋದ | ಭಕ್ತಿ
ಸಾಧಕ ಮುನಿಗಳ ಮನಕೆ ವಿನೋದ ||1||

ನೊಸಲೊಳು ಕಸ್ತೂರಿ ಬಿಸಿಗಣ್ಣ ಜೋಗಿ
ಕುಸುಮಶರನ ಸುಟ್ಟ ಭಸಿತಾಂಗ ಜೋಗಿ
ಮಿಸುನಿಗಪ್ಪರ ತಲೆಯೋಡಿನ ಜೋಗಿ | ಮತ್ರ್ಯ
ವಸುಧೆ ಈರೇಳು ರಕ್ಷಿಸ ಬಂದ ಜೋಗಿ ||2||

ಕಪ್ಪು ಗೊರಳ ನೀಲಕಂಠನೆ ಜೋಗಿ
ಪುಷ್ಪಶರನ ಸುಟ್ಟ ಭಸಿತಾಂಗ ಜೋಗಿ
ಸರ್ಪಭೂಷಣ ಸಕಲಾತ್ಮಕ ಜೋಗಿ | ಮುಕ್ತಿ
ಕರ್ಪೂ[ರ] ಪ್ರಕಾಶದ ಜೋಗಿ ||3||

ನವಕೋಟಿ ಸಿದ್ಧರ ಗುರುನಾಥ ಜೋಗಿ
ಭುವನದೊಳಗೆ ಶಿವಗಿಮ್ಮಡಿ ಜೋಗಿ
ರವಿಕೋಟಿ ತೇಜ ಪ್ರಕಾಶದ ಜೋಗಿ | ಎಮ್ಮ
ಭವಮಾಲೆಗಳ ಖಂಡಿಸ ಬಂದ ಜೋಗಿ ||4||

ಭಂಗರ ಹವಿಗೆ ಶೃಂಗಾರ ಜೋಗಿ
ಸಂಗೀತ ಪ್ರಬಂಧ ನುಡಿಸುವ ಜೋಗಿ
ಜಂಗುಳಿದೈವದ ಪಿತಾಮಹಜೋಗಿ| ಮುಕ್ತಿ
ಯಂಗನೆಯರ ಪ್ರಾಣಲಿಂಗವೆ ಜೋಗಿ ||5||

ಮುದುಕ ತದುಕನಲ್ಲ ಮುನಿಮಹ ಜೋಗಿ
ಹದಿನಾರು ಮರುಷದ ಪ್ರಾಯದ ಜೋಗಿ
ವಿಧಿಯು ಮೃತ್ಯುವಿನೆದೆದಲ್ಲಣ ಜೋಗಿ | ಎನ್ನ
ಹೃದಯಕಮಲ ಪರಶಿವನೆ ಜೋಗಿ ||6||

ಚಿಮ್ಮುರಿದುರುಬಿನ ಕಿನ್ನರಿಜೋಗಿ
ಮನ್ನೆಯರ[ರ]ಸನೊ [ಮಾ] ರಾಯ ಜೋಗಿ
ಇನ್ನು ಲೋಕದ ಮುನಿಯಲ್ಲ ಜೋಗಿ | ಮುಕ್ತಿ
ಹೆಣ್ಣ ಪಂಜರದರಗಿಳಿರಾಮ ಜೋಗಿ ||7||

ಕಣ್ಣು ಮೂಗಿಲಿ ಕರ ಚೆಲುವನೆ ಜೋಗಿ
ಬಣ್ಣಿಸಲಳವಲ್ಲ ಬಗೆ ನಿನ್ನ ಜೋಗಿ
ಹೆಣ್ಣು ಜಾತಿಗಳು ನೋಡಿ ಉಣ್ಣರೊ ಜೋಗಿ | ನಿನ್ನ
ಸಣ್ಣರಾಗಕೆ ಸಿಲ್ಕದವರಾರೊ ಜೋಗಿ ||8||

ಎಂಥ ಚೆಲ್ವಿಕೆ ನೀ ಪಡೆದೆಲ್ಲೊ ಜೋಗಿ
ಚಿಂತೆ ಭ್ರಮೆಗಳಿಟ್ಟು ಬಾರೆಲೋ ಜೋಗಿ
ಮಂತ್ರ ಗಾರುಡಬಲ್ಲ ಮಲೆಯಾಳ ಜೋಗಿ | ನಿನ್ನ
ತಂತ್ರವಾರಿಗಿನ್ನು ತಿಳಿಯವೊ ಜೋಗಿ ||9||

ಆವ ಲೋಕದ ಅರಸಿನ ಮಗನೊ ಜೋಗಿ
ದೇವಲೋಕದ ಪುರುಷರೊಳಗಿಲ್ಲ ಜೋಗಿ
ಗೋವಿಂದರಜಹರಿ ಗುರುವೇನೊ ಜೋಗಿ | ಎಮ್ಮ
ಜೀವರತ್ನವ ಸೂರೆಗೊಳಬಂದ ಜೋಗಿ ||10||

ಮನವ ನೋಡಲು ಬಂದ ಮುನಿಮಹ ಜೋಗಿ
ಮನ್ನೆಯರರಸೇನೊ ಮಲೆಯಾಳ ಜೋಗಿ
ಕನಕಗೃಹದೊಳಗಿನ್ನು ಜಿಜೆಮಾಡೊ ಜೋಗಿ | ಎಮ್ಮ
ಘನಗುರು ಸಂಗಮೇಶ್ವರನೆಂಬೊ ಜೋಗಿ ||11||

ಸುವ್ವಿ ಸುವ್ವಿ ಸುವ್ವಾಲೆ

ಸುವ್ವಿ ಸುವ್ವಿ ಸುವ್ವಾಲೆ
ಸುವ್ವೆಂದು ಪಾಡಿರೆ ಶೂನ್ಯಪ್ರಕಾಶಂಗೆ ||ಪ||

ಚಂಚುವೆಣ್ಣುಗಳೆಲ್ಲ ಕೂಡುತ | ತಮ್ಮ
ಮಿಂಚುಳ್ಳನಯನದಿ ನೋಡುತ
ಪಂಚಮುಖದ ಪರಶಿವನ ಕೊಂಡಾಡುತ
ಗೊಂಚಲ ಹಾವಿನ ಜೋಗಿ ನೀ ಕೇಳೊ ||1||

ಬೇಟಕಾರ್ತಿಯರೆಲ್ಲ ಕುಡುತ | ಸಸಿ
ಜೂಟ ಶಿವನ ಕೊಂಡಾಡುತ
ಆಟ ಬೇಟಗಳೆಲ್ಲ ಶಿವನೊಳಗಲ್ಲದೆ
ಕೀಟಕ ಮನುಜರನೊಲ್ಲೆವೊ ಜೋಗಿ ||2||

ದುಂಡುದೋಳುಗಳನೆತ್ತಿ ಬಳಸುತ | ತಮ್ಮ
ಗಂಡನೆ ಶಿವನೆಂದು ಪಾಡುತ
ಮುಂಡ ಮೂಕೊರೆಯ ದೈವವನರಿಯೆವು
ರುಂಡಮಾಲೆಯ ಜೋಗಿ ನೀ ಕೇಳೊ ||3||

ಸುಲಿಪಲ್ಲ ಬೆಳಗುತ ರಂಜಿಸೆ | ತಮ್ಮ
ತಲೆ ಮೊಲೆಗಳ ತಪ್ಪಿ ನುಣ್ಣಿಸೆ
ಮಲಹರ ಮಂತ್ರವು ಮನದೊಳಗಲ್ಲದೆ
ಹೊಲೆ ಮಾರಿದೈವವನೊಲ್ಲೆವೊ ಜೋಗಿ ||4||

ಬಿದಿರಕ್ಕಿಗಳ ತಂದು ತಳಿಸುತ | ತಮ್ಮ
ಅಧರ ಮಾಣಿಕಗಳ ಬಿಚ್ಚಿ ಪಾಡುತ
ಮದಹಾರ ಮಂತ್ರವು ಮನದೊಳಗಲ್ಲದೆ
ಸದೆಮಾರಿದೈವವನೊಲ್ಲೆವೊ ಜೋಗಿ ||5||

ಸರವರದವರೆಲ್ಲ ಕೂಡುತ | ನಮ್ಮ
ಪರಮ ಶಿವನ ಕೊಂಡಾಡುತ
ಹರಹರಯೆನುತಲಿ ಗುರುಪಾದವಲ್ಲದೆ
ಸುರಿಮಾರಿದೈವವನೊಲ್ಲೆವೊ ಜೋಗಿ ||6||

ಕಂಜವೈರಿಯ ಪೂಜೆಗೆ | ನಾವು
ಮಂಜಿನ ಉದಕವ ತರುವೆವೊ
ಎಂಜಲು ಅಗುಳುಗಳಿಲ್ಲದೆ ಶಿವನಿಗೆ
ಸಂಜೀವದಗ್ಘವಣಿ ತರುವೆವೊ ಜೋಗಿ ||7||

ಗಂಧಾಕ್ಷತೆಗಳ ನೀಡುತಲಿ | ಗೋ
ವಿಂದನ ಪುಷ್ಪವ ಧರಿಸುತ
ತಂದು ಧೂಪದೀಪಾರತಿಗಳನೆತ್ತಿ
ವಂದಿಸಿ ಶಿವನೊಳಗಿರುವೆವೊ ಜೋಗಿ ||8||

ಇಂತೆಂದು ಲಿಂಗಕ್ಕೆ ತಳಿಸುತ | ನಮ್ಮ
ಕಂತುಹರಗೆ ಬೋನ ಮಾಡುತ
ಸಂತೋಷದಿಂದಲಿ ಶಿವನಿಗರ್ಪಿಸಿ ಅ
ನಂತಕಾಲ ಶಿವನೊಳಗಿರುವೆವೊ ಜೋಗಿ ||9||

ನಾಡಾಡಿ ಮನುಜರೆಂಬುತ |ನಮ್ಮ
ಕೂಡಿ ಜಾಣಿಕೆಯನೀಡಾಡಲು
ಹೂಡಿದ ಸರಳು ಬಾಣದಿಂದೆಚ್ಚರೆ
ಮೂಡಿ ಹಾಯ್ವವು ನಿಮ್ಮ ಬೆನ್ನಲಿ ಜೋಗಿ ||10||

ಲೋಕದ ಮನುಜರೆಂಬುತ | ನೀನು
ಜೋಕೆ ಸರಸವನಾಡಲು
ಏಕೋದೇವ ಶಿವನಾದರೇನುಮಿನ್ನು
ನೂಕಿ ಕೆಡಹಿ ಬೀಳಲೆಚ್ಚೆವೊ ಜೋಗಿ ||11||

ಕನ್ನೆವೆಣ್ಣುಗಳನು ಕಾಣುತ | ನೀನು
ಚುನ್ನದ ಸರಸವನಾಡಲು
ಪ್ರನ್ನಂಗಧರ ಶಿವನಾದರೆ ಕೊಲುವೆಮೊ
ಇನ್ನು ಸುಮ್ಮನೆ ಹೋಗು ಕಿನ್ನುರಿ ಜೋಗಿ ||12||

ಪರಶಿವ ರೂಪೆಂದು ತಾಳ್ದೆವು | ನಿಮ್ಮ
ವಿರಸ ಸರಸ ಸಾಕಿನ್ನು
ವರಗುರು ಸಂಗನ ಒಡಲೊಳಗಿರುವೆವು
ಶರಣು ಶರಣಾರ್ಥಿ ಪೋಗಯ್ಯ ಜೋಗಿ ||13||