Categories
ರಚನೆಗಳು

ನಂಜನಗೂಡು ತಿರುಮಲಾಂಬಾ

೧೬
ಅಕ್ಷವಿದ್ಯಾನಿಪುಣ ಅಕ್ಷಯಾತ್ಮಕ ಸುಗುಣ
ಅಕ್ಷಯತರ ಸುವಚನ ಲಸಿತವದನ
ದ್ಯೂತೋದ್ಯೋಗತರ ಖ್ಯಾತ ಸುಗುಣೋಪೇತ
ದೈತ್ಯ ಸಂಕುಲಘಾತ ಪ್ರಾಣನಾಥ
ನರಸೂತ ಸಚ್ಚರಿತವರದಾತವಿಖ್ಯಾತ
ಸುರಸಿದ್ಧ ಸಂಪ್ರೀತ ಮಾರತಾತ
ಗೋಪಾಲ ಕುಲರತ್ನದೀಪ ಗೋಕುಲ ಶರಣ
ಗೋಪಿಕಾಜನಮನದ ತಾಪಶಮನ
ಲೀಲಾ ವಿಭೂತಿಯುಗನಿರತ ಸುಹಿತ
ನೀಲಾಂಬರಾವರಜ ರಾಜರಾಜ
ಕಾಲಾಂಬುದಾಕಾರ ಖಲಕುಠಾರ
ಪಾಹಿಮಾಂ ಶ್ರೀಶೇಷಗಿರಿವಿವಿಭಾಕ್ಷ

೨೫
ಅತ್ತೆಯಣುಗನು ಮತ್ತೆ ಸತ್ಯಾತ್ಮನಿವನೆನುತೆ
ಚಿತ್ತದೊಳು ನೆರೆನಂಬಿ ಪತ್ನಿಯಾದೆ
ಪಲಜನರನೆರೆಬೇಡಿ ಪಲಜನರನುರೆ [ವಧು]ಕಾಡಿ
ಪಲಸತಿಯರ ಕೂಡಿದಿವನಗಾಡಿ
ಅರಿತು ಪೇಳುವರುಂಟೆ ಸರಸಿಯಿವನೆಂದೆನುತೆ
ನೆರೆದು ಜೀವಿಪರುಂಟೆ ಅರರೆ ತಂಟಿ
ಮೋಸಗಾರರೊಳಗಗ್ರೇಸರನು ಈ ವರನು
ವಾಸುದೇವನು ಬಂಧುದ್ವೇಷಿಯಿವನು
ಸ್ತ್ರೀಯರನದಾವಗಮನದೆನಿತೊ ಜರೆವ
ಮಾಯೆಯಿಂದವರೊಡನೆ ಕೂಡಿಮೆರೆವ
ಬಾಯೊಳಗೆ ಸುಬ್ರಹ್ಮಜ್ಞಾನ ಮೊರೆವ
ಜೀಯ ಶೇಷಗಿರೀಶತಾನೆಂದು ನಲಿವ

೨೩
ಅನಘಸಂಪದನೆಂದು ಮನದೊಳಗೆ ನಲಿದಿಂತು
ಜನಕನಿತ್ತನು ಎನ್ನ ನಿನಗಿಂದು
ದಾನಕ್ಕೆ ಕೈನೀಡಿ ದಾನಮಂ ತಾಂ ಬೇಡಿ
ದಾನಿಯಂ ಪಾತಾಳಕೀಡು ಮಾಡಿ
ಮಾನಾಭಿಮಾನವಿಂತೇನೇನುಮಿಲ್ಲದೆಯೆ
ದಾನವನ ಮನೆಗಾವನೇನ ಪೇಳ್ವೆ
ತಿರುಕ ಹಾರುವನಿವಗೆ ಅರಸಿಯಾನಾದೆನೇ
ಮರುಗಲ್ಕೆ ಫಲವೇನೊ ಅರಿಯೆನಿನ್ನು
ಸಟೆನುಡಿಯಿನೆಲ್ಲರಂ ಮರುಳುಗೊಳಿಪ
ಕುಟಿಲಗಾರನದೆಂತು ಸುಖವಪಡಿಪ
ಚಟುಲಮತಿಕೇಳೆನ್ನಮನದಿಷ್ಟ ಸಲಿಪ
ಸಟೆಯಲ್ಲವೆನ್ನೆರೆಯ ಶೇಷಗಿರಿಪ

ಶ್ರೀಹರಿ ಸಂಕೀರ್ತನೆಗಳು
೩೯
ಅಪ್ರಮೇಯ ಎನ್ನ ಪಾಲಿಸೈ
ಅಪ್ಪ ನಿನ್ನ ಪದವ ನಂಬಿರ್ಪೆ ಪಾಲಿಸೈ ಪ
ಸರ್ಪಶಯನ ಕಂದರ್ಪಜನಕ ಕೃಪೆಯ ತೋರಿಸೀಗ ಎನ್ನ
ತಪ್ಪುಗಳನು ಒಪ್ಪಿಸಿರುವೆ ಒಪ್ಪಿಕೊಂಡು ಮನ್ನಿಸೆನ್ನ ಅ.ಪ
ಕರಿಯ ಬಾಧೆಯನ್ನು ಹರಿಸಿದೆ
ತರುಣಿಗಂದು ಕರುಣದಿಂದ ವರವ ನೀಡಿದೆ
ಕರೆಯೆ ಕಂಬದಿಂದ ಬಂದು
ದುರುಳ ದೈತ್ಯನನ್ನು ಕೊಂದು
ತರಳನನ್ನು ಪೊರೆದೆಯೆಂದು
ಶರಣು ಹೊಕ್ಕೆ ದೀನಬಂಧು ೧
ರಾಜೇಂದ್ರ ಪುರವರಾಧಿಪ
ರಾಜ ರಾಜ ಮಾಜದೆನ್ನ ಮೊರೆಯ ಕೇಳುತ
ಸುಜನಪಾಲ ನಿನ್ನ ಪದವ
ಭಜನೆಗೈವೆ ವಿಮಲಮತಿಯ
ಭುಜಗಶಯನ ಕರುಣಿಸೆಂದೆ
ಭಜಕ ರಕ್ಷಕ ರಾಘವೇಂದ್ರ ೨

೩೮
ಅಬ್ಬಬ್ಬ ಈ ವರನ ಅದ್ಭುತಾಕೃತಿ ನೋಡಿ
ಉಬ್ಬುಸವು ಮಿಗಿಲಾಯ್ತು ಸಹಿಪೆನೆಂತು
ಕೆಮ್ಮೀಸೆ ಕೆಂಗಣ್ಣು ಕೆಂಪಾದ ರೋಮಗಳು
ಹೆಮ್ಮಾರಿಯಂದದೊಳು ಮೊರೆವಮಿಗಿಲು
ಕೆನ್ನೀರು ಪಾನದಿಂದುನ್ಮತ್ತನಂದದಿಂ
ಘನ್ನಘಾತಕನಾಗಿ ಮೆರೆವ ಬೀಗಿ
ಕರುಳ ಮಾಲೆಯ ಧರಿಸಿ ಮೆರೆಯುತಿಹನೀ ಸಹಸಿ
ತರತರದಿ ಸುರನರರು ನಡುಗುತಿಹರು
ಸ್ತಂಭವಿದೆ ಜನ್ಮಸ್ಥಲವಾಯಿತಿವಗೆ
ಕುಂಭಿಣೀಯಂಬರಕೆ ಮಧ್ಯದೊಳಗೆ
ಸಂಭ್ರಮದಿ ನೆಲಸಿಹನೆ ಪಡಿಯಮೇಲೆ
ನಂಬಿದೆನು ಶೇಷಗಿರಿವರನ ಲೀಲೆ

೩೭
ಅಮಮಪೇಳುವೆನೇನ ರಮಣನಾಕೃತಿಯನಾ
ಕಮಲ ಪತ್ರಾಂಬಕೀ ಕೇಳು ಸಖೀ
ಹುಳುಕು ಮೋರೆಯ ಮತ್ತೆ ಕೊಳಕು ದೇಹದ ಕಾಂತ
ಹುಳುಕು ಬೇರನು ಮೆಲುವನರೆರೆ ಚಲುವ
ಕೋರೆಯದು ಮೊಳಯುದ್ಧ ಮೀರಿಹುದು ತುಟಿಯನ್ನು
ಕ್ರೂರರೂಪವನಾಂತ ಧೀರನಹುದು
ಪುರದಾಚೆ ಸಂಚಾರ ಮರದಡಿಯೊಳೇ ವಾಸ
ವರಹಗಳೆ ಬಾಂಧವರು ಪರಮಚಿತ್ರ
ಅರರೆ ಬಣ್ಣಿಪೆನೆ ಕೀಟಿರೂಪಧರನ
ಪರಿಯೇನ ಪೇಳ್ವೆನೀ ಕ್ರೂರವರನ
ಗುರುಗಳಾಣತಿಯಿಂದ ಪಡೆದೆನಿವನ
ವರಶೇಷಗಿರಿವಾಸನೆನೆದ ಹದನ


ಆದಿವರಾಹನೇ ಆದಿತ್ಯಸನ್ನಿಭನೆ
ಆದ್ಯಂತರಹಿತನೆ ಸತ್ವಮಯನೆ
ಭವರೋಗ ಭೇಷಣಾಸಕ್ತ ನಾರಾಯಣ
ಭೂರಮಣ ಭಯಹರಣ ಕಲಿತಸುಗುಣ
ಧೀರ ದುರಿತವಿದೂರ ಸಾರ ಜಗದಾಧಾರ
ವಾರಾಶಿಜಾಗಾರ ವೇದಸಾರ
ಕನಕಾಕ್ಷ ಮದಶಿಕ್ಷ ಅನಿಮಿಷಾಧಿಪ ಪಕ್ಷ
ದಾನವಾಳಿವಿಪಕ್ಷ ಶರಣರಕ್ಷ
ಪರಮಪೂರುಷ ನಿತ್ಯ ನಿರ್ವಿಕಲ್ಪ
ಸರಸಿಜಾಯತನೇತ್ರ ವಜ್ರಗಾತ್ರ
ವರಶೇಷಗಿರಿವಾಸ ವೆಂಕಟೇಶ
ಪರಿಪಾಹಿ ಮಾರಮಣ ದಿವ್ಯ ಚರಣ

ಸಂಪ್ರದಾಯದ ಹಾಡುಗಳು
೧೦೭
ಆರತಿಯೆತ್ತಿರೆ ನಾರಿಯರೆಲ್ಲರು
ಶಾರದದೇವಿಗೆ ಭೂರಿಸಂಭ್ರಮದೆ ಪ.
ಬೊಮ್ಮನ ರಾಣಿಯ ನೆಮ್ಮಿಭಜಿಸುವ
ಸುಮ್ಮಾನದಿಂ ಪರಬೊಮ್ಮನ ಪಾಡುವ ೧
ಕರಗಳ ಜೋಡಿಸಿ ಶಿರವನು ಬಾಗಿಸಿ
ಸರಸತಿಗೊಂದಿಸಿ ಪರಮನ ಧ್ಯಾನಿಸಿ ೨
ಪರಮೇಷ್ಟಿದಯಿತೆಗೆ ವರಗುಣಭರಿತೆಗೆ
ಸುರಮುನಿ ಮಾತೆಗೆ ಶರಣಸಂಪ್ರೀತೆಗೆ ೩
ಪಾಡಿರಿ ಗುಣಗಳ ಮೂಡಿದ ಭಕ್ತಿಯಿಂ
ನೋಡಿರಿ ದೇವಿಯ ಬೇಡಿರಿ ವರಮಂ ೪
ವರಶೇಷಗಿರೀಶನ ಹಿರಿಯಸೊಸೆಗಿಂದು
ಮರಕತದಾರತಿ ಹರುಷದಿಂದೆತ್ತಿ ೫

ಲಕ್ಷ್ಮೀ ಸ್ತುತಿಗಳು
೧೨
ಆರೋಗಿಸು ತಾಯೇ ಮೋದದಿ
ಕ್ಷೀರಾಂಬುಧಿ ತನಯೆ ಪ.
ಸಾರಸನಯನೆ ಮದವಾರಣಗಮನೆ
ಸಾರಿ ಚೀಡುವೆ ಸರಾಗದೊಳೀಕ್ಷಿಸು ಅ.ಪ.
ಉಪ್ಪು ಉಪ್ಪಿನಕಾಯಿಕೋಸುಂಬರಿ ಹಪ್ಪಳ ಸಂಡಿಗೆಯ
ತಪ್ಪದೆ ತಂದೊಪ್ಪಿಸುತಿಹೆ ಎನ್ನಪ್ಪನೊಡನೊಪ್ಪದಿ ವ ುಂಡಿಸಿ ೧
ಚಕ್ಕುಲಿ ಕರಜಿಕಾಯಿ ಅತಿರಸ ಸಕ್ಕರೆ ಹೋಳಿಗೆಯಂ
ಅಕ್ರೂರವರದನ ಅರಸಿಯೆ ನೀನಿಂದಕ್ಕರೆಯಿಂದವಲೋಕಿಸಿ
ನಲಿಯುತ ೨
ಕ್ಷೀರ ದಧಿ ನವನೀತ ಘೃತ ಮಧುಸಾರವೆನಿಪ ಪರಮಾನ್ನ
ಕ್ಷೀರಶರಧಿಸುತೆ ನೀ ನೀರಸ ಸಹಿತಾಪಾರ ಕೃಪಾಪಾಯದೊಳೀಕ್ಷಿಸಿ೩
ಮಾದಲ ದಾಡಿಮವು ಮಾವು ನೇರಳೆ ಹಲಸು ಕಿತ್ತಳೆ
ಮೋದದಿ ಮಾಗಿದ ಕದಳೀ ಚಕ್ಕೋತವ ದ್ರಾಕ್ಷಿಯ
ಸವಿನೋಡುತೆ ನಲಿದು೪
ನಿಗಮಾಗಮ ವಿನುತೇ ನಮಿಸುವೆ ನಗಧರ ಸುಪ್ರೀತೆ
ಖಗಪತಿವಾಹನ ಶೇಷಗಿರೀಶನ ಬಗೆ ಬಗೆ
ಗುಣಗಳ ಬಗೆಗೊಳಿಸುತ್ತಲಿ ೫

೫೯
ಇಂದುಸನ್ನಿಭವದನೆ ಕುಂದಕುಟ್ಮಲರದನೆ
ಸಿಂಧೂರಸಮಗಮನೆ ಚತುರವಚನೆ
ಸಿಟ್ಟೇಕೆ ಪೇಳೆ ತರುಣಿ ದಿಟ್ಟಿಸೆನ್ನನು ರಮಣಿ
ದಿಟ್ಟೆ ನೀನೆಲೆ ರಾಣಿ ಕೃಷ್ಣವೇಣಿ
ಕಾವಗೀಯದೆಯೆನ್ನ ಭಾವೆಪಾಲಿಸು ಮುನ್ನ
ಭುವಿಜಾತೆ ಮತಿವಂತೆ, ಪ್ರಾಣಕಾಂತೆ
ಚಪಲೆನೀನಹುದಲ್ಲೆ ಕೃಪಣೆಯೆಂಬುದ ಬಲ್ಲೆ
ವಿಪರೀತಂಮೆಲುನಲ್ಲೆ ಸೊಲ್ಲಿಸಿಲ್ಲೆ
ಕ್ಷೀರಸಾಗರತನಯೆ ಸದಯೆ ಜಾಯೆ
ಸಾರೆ ವೀಳ್ಯವನು ಕೈಗೊಂಡು ನೀನು
ಬೀರು ಸಂತಸವನ್ನು ಬೇಡುತಿಹೆನು
ನೀರೆ ಶೇಷಾದ್ರೀಶನಿವನೆತಾನು

ಚನ್ನಕೇಶವ
೪೦
ಇನ್ನೇನಿನ್ನೇನಿನ್ನು ಯನಗಿನ್ನೇನಿನ್ನೇನಿನ್ನು ಪ.
ಚನ್ನಕೇಶವನಿವನನ್ನು ಹೃದಯದೊಳ್
ಚೆನ್ನಾಗಿ ನೆಲಸಿರಲಿನ್ನೇನ ಬೇಡುವೆ ೧
ಭುವಿಜಾತೆಯೆನ್ನ ಮಾತೆ – ಭುವಿನಾಥನೆನ್ನ ತಾತ
ಇವರೆನ್ನೊಳಿರುತಿರೆ ಭವಕ್ಲೇಶ ಪರಿದಿರೆ ೨
ಅಂಡಜವಾಹನಾಖಂಡಲಾರ್ಚಿತನ
ಪುಂಡರೀಕಾಕ್ಷನ ಕಂಡು ಕೊಂಡಾಡಿದೆ ೩
ಧರೆಯೊಳಧಿಕ ಶೇಷಗಿರಿಯೊಳು ನೆಲಸಿರ್ಪ
ವರದ ಶ್ರೀನರಹರಿ ವರದನೆನ್ನೊಳಿರೆ ೪

೪೨
ಇವನ್ಯಾರೆ ಇವನ್ಯಾರೆ ಧರೆಯೊಳು ಮೆರೆ
ಯುವ ಹೊಸಪರಿ ರೂಪದಿ ಪ.
ಶಂಖಚಕ್ರ ನಾಮಾಂಕಿತಮಾಗಿಹ
ಸಂಕರ್ಷಣ ರೂಪದಿ ಮೆರೆಯುವ ೧
ರವಿಶಶಿ ಬಿಂಬಗಳ್ ಎಡಬಲದೋಳ್
ನವವಿಧದಿಂದಲಿ ಮೆರೆಯುವ ೨
ನಾಡಿನೊಳೀಪರಿ ಗೂಢರೂಪದಿ
ನಾಡಿನ ಭಕ್ತರು ಬೇಡಿದುದೀಯುವ ೩
ಎಣಿಸಿ ಗುಣಿಸಲ್ ತಣಿಯದ ಮಹಿಮನ
ಮಣಿಸುವೆನು ಶೇಷಗಿರೀವರನಿವನ ೪

೪೧
ಇಷ್ಟೇಕೆ ನಿರ್ದಯ ಶ್ರೀಹರಿಯೇ ಸೃಷ್ಟೀಪತಿಯೆ ಪ.
ಮುಟ್ಟಿ ಭಜಿಪರ ನಿಟ್ಟಿಸಿ ನೋಡದೆ
ನಿಷ್ಠುರವಾಗಿಹುದಿಷ್ಟವೆ ನಿನಗಿದು ಅ.ಪ.
ಕಣ್ಣೆವೆ ಮುಚ್ಚದೆ ನೋಡುವುದೇನೋ ನಾನಿನ್ನ
ಸಣ್ಣ ಮಾತುಗಳಾಡಿದೆನೇನೊ
ಬೆನ್ನೊಳಗಿಹ ಗಿರಿಯನ್ನು ತೆಗೆ
ದೆನ್ನ ತಲೆಯ ಮೇಲಿನ್ನೊಗೆಯದಿರು ೧
ಕೋರೆಯ ತೋರುತ ಕೊಸರುವುದೇಕೋ ಶ್ರೀಹರಿ ನೀ
ನೀರೀತಿ ಮಾಡುವ ಬಗೆಯಿನ್ನೇಕೋ
ನೀರಜಭವಪಿತ ನೀನೇನಗೈದರು
ಸೇರಿದೆ ನಿನ್ನನು ಸಾರೆನದಾರನು ೨
ಕೆಂಗಣ್ಣ ಕಿಡಿಯುಗುಳುತ ಹೂಂಕರಿಸಿ ನೋಡಲಂಜುವ
ಸಿಂಗನ್ನ ಪೋಲುವ ಮುಖ ಧರಿಸಿ
ಕಂಗೆಡೆ ಭಯದಿ ಜಗಂಗಳ ನಡುಗಿಪ
ನುಂಗಲು ಬರುವಾಸಿಂಗನ ಬಗೆ ಸಾಕೋ ೩
ಮುನ್ನಾ ಶುಕ್ರನ ಕಣ್ಣನು ತಿವಿದಾ ಪುಲ್ಲಿನತುದಿಯಿಂ
ಎನ್ನೀ ಕಣ್ಣನ್ನು ತಿವಿಯದಿರಣ್ಣಾ
ನಿನ್ನೀಕರದೊಳಿಹ ಘನ ಕೊಡಲಿಗೆ ನೀ
ನಿನ್ನಾರನು ಗುರಿಗೈಯದಿರೆಂಬೆನು ೪
ಶಿಲೆಯಾಗಿದ್ದವಳ ಕಲುಷವ ಕಳೆದು ಪಾವನೆಯೆನಿ
ಕಾಳಿಂಗನ ಫಣೆಯೊಳು ಕುಣಿಕುಣಿದೇ
ಭಳಿರೆನೆ ಬಾಲ ಗೋಕುಲ ಬಾಲೆಯರೆಲ್ಲರ
ಜಾಲವಿದ್ಯೆಯಿಂ ಮರುಳುಗೊಳಿಸಿದೆ ೫
ತರುಣಿಯರ ಮನ ಕಲಕಲು ಬೇಡೈ ಕೈಮುಗಿವೇ
ತುರುಗವನೇರುತ ತರುಬಲು ಬೇಡೈ
ಧರೆಯೊಳು ನೀನೆತ್ತಿದ ಪರಿಪರಿ ರೂಪವ
ಸ್ಮರಿಸಿ ಸ್ಮರಿಸಿ ಮನಬೆರಗಾಗಿದೆ ಹರಿ೬
ಶರಣಾಭರಣನೇ ನೀನೆಂದು ಮನದೆಂದು
ಮರೆಬೇಡುವೆನೈ ಬಳಿಸಂದು
ಬಿರುದನು ನೆನೆದು ಮರೆಯಲಿಬೇಡೈ
ವರಶೇಷಗಿರಿ ದೊರೆನೀನಿಂದು ೭

೪೩
ಎಂತುಟೆಂದಾಡುವೆನು ಕಾಂತನಾ ಚರ್ಯೆಯನು
ಸಂತತವು ಚಿಂತಿಪೆನು ಕಾಂತೆ ನಾನು
ಪಾಲನೂಡಿದಳನ್ನೂ ಪಾಳುಮಾಡಿದನಕಟ
ಬಾಲ ಗೋಕುಲಬಾಲ ಜಾಲಲೋಲ
ಖಲತನದಿ ಗೋಪಿಯರ ನಿಲಯವನು ತಾಪುಗುತೆ
ನಲಿದು ಪಾಲ್ವೆಣ್ಣೆಯನು ಕದ್ದು ತಿಂದು
ಪಿಡಿದು ಬಂದಿಪೆವೆಂದು ನಡೆತಪ್ರ್ಪವರ ಮುಂದು
ಗೊಡದಂದು ಮೈಗರೆದು ಜಡಿವಹಿಂದು
ಕಾಳಿಯಾ ಮಡುವನ್ನು ಕಲಕಿ ಬಂದು
ಕಾಲಮೇಘವಪೋಲ್ವ ರೂಪತಳೆದು
ಲೀಲೆಯಿಂ ಶೇಷಗಿರಿಯಲ್ಲಿ ನಿಂದು
ಜಾಲವನು ಬೀರುತಿಹ ದೀನಬಂಧು ೪

೫೨
ಎತ್ತುವೆನಾರತಿಯ ರಂಗಧಾಮನಿಗೆತ್ತುವೆನಾರತಿಯ ಪ.
ಗೋಕುಲದೊಳು ಬೆಳೆದು ಆಕಳನೆಲ್ಲ ಕಾಯ್ದು
ಪಾಕಶಾಸನನಿಗೆ ಪರಾಕ್ರಮ ತೋರಿದ ನೀರಗೆ ೧
ಮಥುರೆಗೆ ನಡೆತಂದು ಮಾವ ಕಂಸನ ಕೊಂದು
ಮಾತೆಗೆ ಮುದವಿತ್ತ ಮಧುಸೂದನ ಕೃಷ್ಣಗೆ ೨
ಶೇಷಗಿರಿಯಲ್ಲಿ ವಾಸವಾಗಿರುತಿರ್ಪ
ಶೇಷಭೂಷಣನುತ ವೃಷ್ಣಿವಂಶೋತ್ತಮಗೆ ೩

೪೩
ಎಲ್ಲಿಗೆ ಪೋದಪೆ ಮಲ್ಲಿಮರ್ಧನ ಕೃಷ್ಣ
ಗೊಲ್ಲಗೋಪಾಲನೀ ಬಲ್ಲೆನಾನಿದನು ಪ.
ದೇವಕಿಯುದರದಿ ಜನಿಸಿ ಯಶೋದೆಯ
ಕುವರನೆಂದೆನಿಸಿ ಮೆರೆದಂಥ ಸಾಹಸಿ ೧
ಮಧುರೆಯೊಳುದಿಸಿ ನಂದವ್ರಜದಿ ಗೋವ್ಗಳ ಕಾಯ್ದು
ಮದಿಸಿದಸುರರ ಸದೆವಡೆದ ಧೀರ ೨
ಮಾತೆಯ ಮನಕಂದು ಪ್ರೀತಿಪಡಿಸಲೆಂದು
ಮಾತುಲನನೆ ಕೊಂದು ತಾತಗೆ ನೆಲವಿತ್ತ ೩
ರುಕ್ಮನ ಭಂಗಿಸಿ ರುಕ್ಮಿಣಿಯನುವರಿಸಿ
ವಿಕ್ರಮ ತೋರಿದ ಚಕ್ರಧರ ಕೃಷ್ಣ ೪
ತರುಣಿಯ ಮಾನಕಾಯ್ದು ನರಗೆ ಸಾರಥಿಯಾಗಿ
ಧರೆಯಭಾರವೆಲ್ಲ ಪರಿದುಬಂದ ಮಲ್ಲ ೫
ವರಶೇಷಗಿರಿದೊರೆ ನಿನಗೆ ನಾ ಹೊರೆಯೆ
ಕರಿ ಧ್ರುವರನೆ ಪೊರೆದ ವರದನೆಂಬುದ ಮರೆಯೆ ೬

೪೪
ಎಷ್ಟೆಷ್ಟು ಜನ್ಮಗಳ ಕಷ್ಟಂಗಳನು ಸಹಿಸಿ
ನಿಷ್ಠೆಯಿಂ ತಪಗೈಯ್ದ ಶ್ರೇಷ್ಠಫÀಲದಿ
ದುಡುಕನೀತನ ಕರವ ಪಿಡಿದೆ ಪೇಳುವದೇನು
ನಡೆದ ಕಾರ್ಯಕೆ ಮನದಿ ಮಿಡುಕಲೇನು
ಬಟ್ಟೆಗೇ ಗತಿಯಿಲ್ಲ ಪುಟ್ಟಿದಂತಿಹನಲ್ಲ
ಹುಟ್ಟು ನೆಲೆಯರಿತಿಲ್ಲ ದಿಟ್ಟನಲ್ಲ
ಅಹಿಂಸೆಯೆ ಮತ್ರ್ಯರಿಗೆ ಸಹಜಧರ್ಮವದೆಂದು
ಬಹುನೀತಿ ಪೇಳುವನು ಬುದ್ಧನಿವನು
ಬೆತ್ತಲೆಯೆ ಮನೆಮನೆಗೆ ಸುತ್ತುತಿಹನೆ
ಉತ್ತಮಾಂಗನೆಯರ ಚಿತ್ರ ಚಲಿಸಿ
ಮತನೆನ್ನಿಸಿ ನಲಿವ ಉನ್ಮತ್ರನಿವನೆ
ಕರ್ತೃ ಶೇಷಾದ್ರೀಶನೆಸೆದ ಹದನೆ

೩೯
ಏಣಾಕ್ಷಿ ಕೇಳೆನ್ನ ಪ್ರಾಣೇಶನೀತನಂ
ಬಣ್ಣಿಪೆನದೆಂತುಟೊ ಕಾಣೆನಮ್ಮ
ಕುಟಿಲವೇ ಭೂಷಣವು, ಸಟೆಯಿದುವೆ ಕುಲದೈವ
ವಟುವೇಷಧರನಿವನುಅಹುದು ಚಲುವ
ಕೃಪಣರೋಳಗ್ರಣಿಯು ಕಪಟ ಗುಣಗಳ ಗಣಿಯು
ಕೃಪೆಯೆಂಬುದೆಳ್ಳೆನಿತು ಕಾಣದವನು
ನುಡಿದ ನುಡಿಯನು ಮತ್ತೆ ನಡಿಸಲಾರದವರನ
ಪಡೆದೆ ಪೇಳುವೆನೇನು ನಡೆದ ಬಳಿಕ
ಧರಣಿಯೊಳಗಿಂತಪ್ಪ ವರನ ಕಾಣೆ
ತರುಣಿಮಣಿ ಕೇಳೆನ್ನ ಅರಸನಿವನೆ
ತರುಣನೀತನ ಪಡೆದ ಧನ್ಯಳಾನೆ
ವರಶೇಷಗಿರಿವರನೆ ಬಲ್ಲಹದನೆ

೪೪
ಏತಕಿನಿತು ಕೋಪವಾಂತು ಭೀತಿಗೊಳಿಸುವೆ
ರೀತಿಯೇನಿದನಾಥ ನಾಥ ನೀತಿಯೆನಿಪುದೆ ಪ.
ಪರಮದಯಾಕರನು ನೀನೆನುತೊರೆವುದಾಗಮ
ಪರಿಯ ನೋಡಲು, ಕರುಣೆ ನಿನ್ನೊಳಿರುವುದರಿಯೆ ನಾ೧
ಪಾಲನೂಡಿದ ನಾರಿಗಂದು ಕಾಲನೆನಿಸಿದೆ
ಕಾಲಕಾಲ ಶೂಲಿವಿನುತ ನೀಲವರ್ಣನೆ ೨
ವರವನೀವ ವರದನೆಂದೇ ಹಿರಿಯರೊರೆವರು
ಚರಣತಲದಿ ಶಿರವನಿಟ್ಟರು ತೆರೆಯೆ ಕಣ್ಗಳಂ೩
ಅಡಿಯ ಪಿಡಿದು ಬೇಡಿಕೊಂಬೆ ಪೊಡವಿಗೊಡೆಯನೆ
ಬಿಡದೆ ಕೈಯಪಿಡಿದು ಸಲಹೊ ಒಡೆಯ ಬೇಗನೆ ೪
ಶೇಷಶೈಲ ಶಿಖರಧಾಮ ಯದುಕುಲೋತ್ತಮ
ಶೇಷಶಯನ ಸಲಹು ನಮ್ಮ ಸತ್ಯವಿಕ್ರಮ೫

೪೫
ಏತಕೀಪಂಥ ಜಾನಕೀಕಾಂತ
ಭೂತಲನಾಥ ಶಾಂತಸುಸ್ವಾಂತ ಪ.
ಸೊಮಸಮಾನನೆ ತಾಮರಸೇಕ್ಷಣ
ಶ್ರೀಮಾನಿನೀ ಮನೋಮೋಹನ ಸುಂದರ ೧
ಅಂಗಜತಾತ ಮಂಗಳಗಾತ್ರ
ಗಂಗೆಯಪೆತ್ತ ಉತ್ತುಂಗಮಹಿತ ೨
ಮಂದರೋದ್ಧಾರಿ ತಂದೆ ಕಂಸಾರಿ
ಬಂದುಮೈದೋರಿ ಪೊರೆಯೆನ್ನ ಶೌರಿ೩
ವರಶೇಷಗಿರಿದೊರೆ ಶರಣರ ಈ ಮೊರೆ
ಕರಗಿಸಲಾರದೆ ಏನಿದು ಕಲ್ಲೆದೆ ೪

೪೬
ಏನಗೈದೊಡೇನು ನಿನ್ನ ಬಿಡೆನು ನಾನೆಲೈ
ಉದಧಿಶಯನ ಕೇಳೆಲೈ ಈ ಹದನ ಲಾಲಿಸೈ ಪ.
ಎತ್ತ ಪೋದಡತ್ತ ನಿನ್ನ ಬೆನ್ನ ಹತ್ತುವೆ ನಿನ್ನ
ಸುತ್ತಿ ಕಾಡುವೇ ನೀನೆತ್ತ ಪೋಗುವೆ ೧
ಜಲಧಿಯಲ್ಲಿ ವಾಸಗೈದೆ ಬೇಸರಿಲ್ಲದೆ
ಗಿರಿಯಪೊತ್ತೆ ಬೆದರದೆ ನಾರಬೇರತಿಂದೆ
ಮೋದದೆ ನೀ ಏನಗೈದೆ ೨
ಘೋರ ರೂಪಕಲಸದೆ ಕೆನ್ನೀರ ನೀಂಟಿದೆ
ಕರುಳಮಾಲೆ ಧರಿಸಿದೆ ಕಪಟರೂಪ ತಾಳಿದೆ ೩
ನಲಿದು ತಾಯ ತಲೆಯ ಕಡಿದು ಬಲಿದನೆನಿಸಿದೆ
ಜಲಧಿಯನ್ನೆ ಕಟ್ಟಿದೆ ಛಲದಿ ದ್ವಿಜನ ಕೆಡಹಿದೆ ೪
ಜಾರಚೋರನೆನಿಸಿ ಜಗವಗಾರುಗೊಳಿಸಿದೆ
ನಾರಿಯರ ವ್ರತವ ಕೆಡಿಸಿದೆ ಕ್ರೂರನಾಗಿ
ಕುದುರೆಯೇರಿದೆ ಇನ್ನೇನು ೫
ಇಷ್ಟು ಪಾಡುಪಟ್ಟ ನಿನ್ನ ಬಿಟ್ಟು ಪೋದೆನೆ
ದಿಟ್ಟತನಕೆ ಭೀತಿಪಟ್ಟೆನೇ ನಿನ್ನ ಪಿಡಿಯದಿರ್ಪನೆ೬
ಮೋಸಗಾರ ಶೇಷಶೈಲವಾಸನಹುದೆಲೈ
ವಾಸಿಪಂಥವೇನೆಲೈ ಮೀಸಲಾಗಿ ಭಜಿಪೆ ನೋಡಲೈ೭

೪೭
ಏನಿದ್ದರೇನಯ್ಯ ಜ್ಞಾನವಿಲ್ಲದಿರೆ
ಶ್ರೀನಾಥನಂ ನೆನೆಯದಿಹ ಹೀನಮಾನವಗೇ ಪ.
ಗುರುವ ಸೇವಿಸಲಿಲ್ಲ ಹರಿಯ ಧ್ಯಾನಿಸಲಿಲ್ಲ
ಹಿರಿಯರಾಣತಿಯಂತೆ ಚರಿಸಲಿಲ್ಲ
ವರಪುರಾಣಗಳ ಚರಿತವಾಲಿಸಲಿಲ್ಲ
ಅರಿತವರ ಸಂಗತಿಯೊಳ್ವೆರಯಲಿಲ್ಲವಲ್ಲಾ ೧
ಹರಿದಿನವ್ರತಾಚರಣೆಯಾಚರಿಸಲಿಲ್ಲ
ಹರಿಮಹಿಮೆಯನೊಮ್ಮೆ ಕೇಳಲಿಲ್ಲ
ಹರಿಕತೆಯ ಭಕ್ತಿಯೊಳು ಪ್ರಕಟಮಾಡಿಸಲಿಲ್ಲ
ಪರಿಪರಿಯ ಭೋಗದಿಂ ಮರುಳಾದೆನಲ್ಲ ೨
ಅಂಧನಿಗುಂ ಮದಾಂಧನೇಕೇಳು
ಗಂಧವಿಲ್ಲದಾ ಅಗರಿನಂದವೇಂ ಪೇಳು
ಬಂದೇ ದಾನವಿರದ ಧನವೇಕೆ ಪೇಳು
ತಿಂದುಂಡು ಮಲಗುವಾನರಜನ್ಮ ಹಾಳು೩
ಕರ ಚರಣ ಮೊದಲಾದ ಕರಣಂಗಳಂ ಪಡೆದು
ಪರರಿಗುಪಚಾರ ಸ್ಮರಣೆ ತೊರೆದು
ದುರುಳತನದಲಿ ಬರಿದೆ ಮರುಳನಂತಲೆವವಗೆ
ಹರಿಪದವ ಪೊಂದುವಾ ಪರಿಯುಂಟೆ ಪೇಳು ೪
ನಾನು ನನ್ನದಿದೆಂಬಭಿಮಾನವನು ಬಿಟ್ಟೇಳು
ಜ್ಞಾನಿಗಳ ಪರಿಚರೈಯಿಂ ತಿಳಿದುಬಾಳು
ಸೂನೃತವ್ರತಿ ಶೇಷಗಿರಿವರನ ಮೊರೆಬೀಳು
ಆನಂದ ಸಾಮ್ರಾಜ್ಯ ನಿನಗಹುದು ಕೇಳು ೫

೪೫
ಏನೆಂದು ಬಣ್ಣಿಪೆನೆ ಈ ನವ್ಯವಿಗ್ರಹನೆ
ಮನದನ್ನನಾದನೆ ವನಜನಯನೆ
ತೊಳೆದಕೆಂಡದ ಕಾಂತಿ ಮೊಳದುದ್ದ ಮೋರೆಯು
ಕೊಳಗುಳದ ಮನವಿತ್ತು ಮೊಳಗುತಿಹನು
ಕತ್ತಿಯನು ಪಿಡಿದೆತ್ತಿ ಉತ್ತಮಾಶ್ವವ ಹತ್ತಿ
ಅತ್ಯಂತ ರೋಷದಿಂ ಸುತ್ತುತಿಹನು
ಕೊಲೆಗೆ ಹೇಸದ ವರನೆ ಪಲಜನರ ಕಡಿದವನೆ
ಕಲಿತಾನೆ ಎನುತಿಹನೆ ಕಲ್ಕಿಯಿವನೆ
ಇಂತಿರ್ಪ ವರಗೆ ಮನಸೋತು ನಾನು
ಕಾಂತನೆಂದಾಡಿದೆನು ಪೇಳ್ವುದೇನು
ಶಾಂತಗುಣ ಶೇಷಾದ್ರಿನಿಲಯ ತಾನು
ಸಂತತವು ಭಕ್ತರನು ಸಲಹನೇನು

೧೩
ಏಳು ಪೀಠಕೇ ನಳಿನದಳಾಂಬಕೇ ಜಗನ್ನುತೆ ಪ.
ಬಾಲೇಂದುನಿಭ ಫಾ¯ ಶ್ರಿತಪರಿಪಾಲೇ ಕೋಮಲೇ ಅ.ಪ
ಸಿಂಧುನಂದನೆ ಇಂದುಸೋದರಿ
ಕುಂದರದನೆ ಮಂದಗಾಮಿನೀ
ವಂದಿತಾಮರ ವೃಂದಾರ ವೃಂದಾನಂದಪ್ರದೇ ೧
ತೋರಮುತ್ತಿನ ಚಾರುಪೀಠಕೆ
ಸಾರಿಬಾ ವರ ಸಾರಸಾನನೇ
ನಾರೀಮಣಿಯರೆ ಸಾರಿಕರುವರು ಮೀರಿದಾನಂದದಿಂದ ೨
ಶೇಷಶೈಲ ನಿವಾಸಿನೀ ನತ
ಪೋಷಿಣೀ ಜಯಶ್ರೀ ರಮಾಮಣಿ
ಯಾಸಾ ಸಾರಸನೇತ್ರೇ ಕಮಲಾವಾಸೇ ದಯೆತೋರಿಸೇ ೩

೬೭
ಏಳುಪೀಠಕೆ ನಳಿನಸಂಭವೆ ಜಗನ್ನುತೆ ಪ
ಬಾಲೇಂದು ನಿಭಫಾಲೆ ಶ್ರೀತಪರಿಪಾಲೆ ಕೋಮಲೆ ಅ.ಪ.
ಸಿಂಧುನಂದನೆ ಇಂದುಸೋದರಿ ಕುಂದರದನೆ ಮಂದಗಾಮಿನಿ
ವಂದಿತಾಖಿಲವೃಂದಾರಕ ವೃಂದಾನಂದಪ್ರದೆ ೧
ತೋರಮುತ್ತಿನ ಚಾರುಪೀಠಕೆ ಸಾರುಬೇಗನೆ ಸಾರಸಾನನೆ
ನಾರೀರನ್ನೆಯರು ಸಾರಿಕರೆವರು ಮೀರದಾನಂದದಿಂ ೨
ಶೇಷಶೈಲನಿವಾಸಿನೀ ನತಪೋಷದಾಯಿನಿ ಶ್ರೀರಮಾಮಣಿ
ಯಾಸಾಸಾರಸನೇತ್ರೆ ಕಮಲಾವಾಸೇ ದಯೆತೋರಿಸೆ ೩

೪೮
ಕಂದನ ಕೈಪಿಡಿ ಶೌರೀ ವಂದಿಪೆ ಕಂಸಾರಿ ಪ.
ಸರಸಿಜಭವಸನ್ನುತ ಶೌರಿ
ಸುರ ನರವಂದಿತ ಚರಣವ ಕೋರಿ
ಪರಿಪರಿ ಬೇಡುವೆ ನಿನ್ನೆಡೆ ಸಾರಿ
ಅರಿಯದ ಕಂದನ ಪೊರೆ ದಯೆತೋರಿ
ಅರಿಯೆನದಾರನು ಮರೆಯೆನು ನಿನ್ನನು
ಕರುಣಾಕರನೆಂಬೀ ಬಿರುದುಳಿಸಿನ್ನು ೧
ಮನ್ಮಥಪಿತ ಬಾ ಸುಂದರಕಾಯ
ಮನ್ನಿಸು ಎನ್ನಪರಾಧವ ಜೀಯ
ಚಿನ್ಮಯರೂಪನೆ ಚೆನ್ನಿಗರಾಯ
ಅನ್ಯರ ನೆರೆಯೆನು ನೀ ಕೇಳಯ್ಯ
ಎನ್ನೊಳಗೀಪರಿ ಛಲವೇಕಯ್ಯ
ಇನ್ನಾದರು ಕೈಪಿಡಿ ದಮ್ಮಯ್ಯ ೨
ಮಂದರಗಿರಿಧರ ಗೋವಿಂದನೆ ಬಾ
ನಂದಕುಮಾರನೆ ತಡೆಯದೆ ನೀ ಬಾ
ನಂದಿನಿಗೊಲಿದಾನಂದವ ಕೊಡು ಬಾ
ವೃಂದಾವನ ವಿಹಾರನೇ ಬಾ ಬಾ
ಇಂದಿರೆಯರಸನೆ ಶೇಷಗಿರೀಶನೆ
ಇಂದೆನಗೊಲಿದೈ ತಂದೆಯೆ ಭಳಿರೆನೆ ೩

೪೯
ಕನಸಿನಲಿ ಕಂಡೆನು ಹರಿಯ ಇಂದು
ವನಜದಳಾಂಬಕ ದೊರೆಯ ಪ.
ಕನಸಿನಲೆ ಕಂಡೆನು ಮನಸಿಜನಯ್ಯನ
ದನುಜಸಂಕುಲವನೆಲ್ಲವ ಕ್ಷಣದಿಸವರಿದ ಕಡುಗಲಿರಾಮನ ಅ.ಪ.
ವರ ರನ್ನಹಾರ ಕಿರೀಟ ಕೋಟಿತರಣಿಸನ್ನಿಭಸಂಕಾಶ
ಹಾಟಿಕಾಂಬರವಿಭೂಷ ಕೌಸ್ತುಭ ಶ್ರೀವತ್ಸ ಲಾಂಚಿತವಕ್ಷ |
ಕೊರಳೊಳು ಧರಿಸಿರ್ಪ ವರರತ್ನ ಹಾರಂಗಳ್ | ತರುಣಿ
ಶ್ರೀ ತುಳಸೀ ವನಮಾಲೆಯಿಂದೊಲಿಯಲ್ | ಪರಮ
ಮಂಗಳಮೂರ್ತಿವರದ ಹಸ್ತವನೆತ್ತಿ | ಶರಣಜನ ಮೋಹಿಪ
ಪರಿಮೆರೆವ ನವಶಕ್ತಿ | ದುರುಳ ರಕ್ಕಸರ ಬೇರಸವರಿದ
ಪಾರಕೀರ್ತಿ | ಅರಿತೆನಾ ತರಳ ಪ್ರಹ್ಲಾದನಂ
ಪೊರೆದ ಕರುಣಾಮೂರ್ತಿ ೧
ವೇದಪಾರಾಯಣಗೈವ ವರದ್ವಾದಶನಾಮದಿ ಮೆರೆವ
ಮಾಧವನ ಸದ್ಗುಣಗಣವ ಶ್ರುತಿಸಂವಾದ
ಕೀರ್ತನದಿಂ ಮೈಮರೆವ |
ಸಾಧುಸಜ್ಜನವೃಂದ ಭಕ್ತಿಭಾವದಿ ಕೈಕಟ್ಟಿ | ಶ್ರೀಧರಾಚ್ಯುತ
ನಮೋ ನಮವೆಂದು | ಪಾದ ಸಮ್ಮುಖದಿ ನಿಂದು ಭಜಿಪರ
ಪರಮಾದರದೆನೋಡಿ | ಶ್ರೀದೇವಿ ಕೆಲದೋಳ್ ನೆಲಸಿರಲ್
ಮನದಿ ಸಂತಸವು ಮೂಡಿ | ಸಾದರದಿ ಕರೆದಾದರಿಸಿ
ಕಾಂಕ್ಷಿತಾರ್ಥವನೀಡಿ | ಮೋದಗೊಳ್ಳುತಿಹ
ಶ್ರೀಧರನ ಕಂಡು ಮೈಮರೆದೆನೇನಿವನ ನೋಡಿ ೨
ಕನಕಖಚಿತ ರತ್ನಮಂಟಪದ ಮಧ್ಯೆ | ಮಿನುಗುವ ಮಣಿಪೀಠದಿ
ವೈದೇಹಿ | ವನಜಾಕ್ಷಿ ಕುಳಿತಿರಲು ಕೆಲದೊಳ್ ಮರುತಾತ್ಮಜ |
[ನುನಮಿಸ] (ರ)ಲು ಪರಮಸಂಭ್ರಮದಿ ಸೋದರರು ಸಂಸೇವಿಸೆ |
[ವÀನ] ತರಣಿಸುತ ಸಪರಿವಾರ ಸಂಭ್ರಮಿಸೆ, ಶರಣ ವಿಭೀಷ | ಣನು
ಜಯಘೋಷವೆಬ್ಬಿಸೆ ವರವಸಿಷ್ಟಾದೈಖಿಲ | ಮುನಿವರ
ರಾಶೀರ್ವಚಿಸೆ ಸರಸವಚನವೆರಸಿ ರಘುವರ
ನಸುನಗುತಿರೆ ವರಶೇಷಗಿರಿ
ವರನೆ ತಾನೆಂದು ತೋರೆ ೩

೫೦
ಕರುಣಿಸು ಕಾರುಣ್ಯನಿಧಿಯೇ ನಿನ್ನ
ಚರಣವ ನಂಬಿದೆ ಶ್ರೀಪತಿಯೇ ಪ.
ಕರುಣಿಸು ವರಗುಣಾಭರಣಸೇವಕ ಭಯ
ಹರಣನೆ ಸುವಂದ್ಯಚರಣನೆ ರಘುವರ ಅ.ಪ.
ಸರಸಿಜಭವಮುಖ್ಯ ಸುರರು ನಿನ್ನ
ಚರಣವೇಗತಿಯೆಂದಿಹರು
ಸರಸಿಜೊದ್ಬವೆ ನಿನ್ನ ಉರದಲ್ಲಿ ನೆಲೆಸಿರೆ
ಪರಮಮಂಗಳಮೂರ್ತಿ ಪೊರೆಯೆನ್ನ ಕೈಪಿಡಿದೆತ್ತಿ ೧
ಅಂಗಜಜನಕನೆ ನಿನ್ನ
ಪಾದಂಗಳ ನಂಬಿರುವೆನ್ನಾ
ಕಂಗಳಿಗಾನಂದ ಪೊಂಗುವಂದದಿ ಶ್ರೀ
ರಂಗನೆ ದಯಾಪಾಂಗನೆ ಮೈದೋರು ೨
ವರಶೇಷಗಿರಿವಾಸ ನಿನ್ನ ನಿಜ
ಶರಣರ ದಾಸ್ಯದೊಳಿರಿಸೆನ್ನ
ಕರವೆತ್ತಿ ಮುಗಿವೆನು ಭರಿಸೆನ್ನ ದೊರೆ ನೀನು
ದುರಿತ ಕೋಟಿಗಳನ್ನು ಪರಿಹರಿಸೆಂಬೆನು ೩

೧೪
ಕರೆದು ತನ್ನಿ ಭರದಿಬನ್ನಿ ಸಿರಿಯನಿದಿರ್ವಂದು ನೀವು
ಸಿರಿಯನಿದಿರ್ವಂದು ಭರದಿ ಕರೆದುತನ್ನಿ ಮೋದದಿ ಪ.
ಕೋಟಿಸೂರ್ಯಚಂದ್ರರೆನಿತುಂ ಸಾಟಿಯಲ್ಲವೆನಿಸುವ
ನೋಟಮಾತ್ರದಿಂದ ಜಗವ ನಾಟ್ಯರಂಗ ವೆನಿಸುವ ೧
ಕಡಲ ತನಯೆ ಎನಿಸೆ ಮತ್ತೆ ಕಡಲಮಧ್ಯದಲ್ಲಿ ನೆಲಸಿ
ಕಡಲಶಯನನ ಮಡದಿಯಾಗಿ ಬಿಡದೆ ನಮ್ಮ ಪೊರೆವಳ ೨
ಶೇಷಶೈಲವಾಸನುರದಿ ವಾಸವಾಗಿ ಶರಣರ
ಆಸೆಯನ್ನು ನಲಿಸುತಿರುವ ಭಾಸುರಾನನೆ ಲಕ್ಷ್ಮಿಯ ೩

೫೬
ಕಲಭಯಾನೆ ಕಂಜಲೋಚನೆ ಕದವತೆಗೆಯೆಲೆ ಭಾಮಿನಿ
ನಾಂ ಬಳಲಿ ಬಂದೆನು ಭಾಮಿನೀ ಪ.
ಬಳಲಿ ಬಂದರೆ ಒಳ್ಳಿತಾಯಿತು ತಳರ್ವುದಿಲ್ಲಿಂ ನಿಲ್ಲದೆ
ನಾಂ ಕದವ ತೆಗೆಯೆನು ಸಾರೆಲೆ ಅ.ಪ.
ಭಾಪುಭಾಪೆಲೆ ಕೋಪಗೈವುದು ಚಾಪಲ್ಯಾಂಬಕಿ ಯೆನ್ನೊಳು
ಆಹ ! ಚಾಪಲ್ಯಾಂಬಕಿಯೆನ್ನೊಳು
ಓವನಲ್ಲೇ ಕೋಪಸಲ್ವುದೆ ಈ ಪರಿಯೊಳ್ ಪೇಳ್ವುದು
ನೀ ನೀಪರಿಯೊಳ್ ಪೇಳ್ವುದು ೧
ಪಾಪಭೀತಿಯನುಳಿದು ಈ ಪರಿ ಕಪಟನಾಟ್ಯವ ಮಾಳ್ಪರೇ
ನೀಂ ಕಪಟನಾಟ್ಯವ ಮಾಳ್ವರೇ
ಓಪೆÀನೆಂದು ಕೂಗುತಿರುವ ಭೂಪನಾವನು ಸಾರೆಲೋ
ನಾನೋಪೆ ಯಾರಿಗೆ ಸಾರೆಲೊ ೨
ನೀರೆ ಮುಕ್ತಾಹಾರೆ ಸ್ಮರವೈಯ್ಯಾರೆಯಿಂತು ಪೇಳ್ವರೇ
ವೈಯಾರೆಯಿಂತು ಪೇಳ್ವರೆ
ದಾರಿನಡೆದು ದುಡಿದು ಬಂದೆನು ನೀರನಾನೆಲೆ ಶ್ರೀಕರೆ
ಕೇಳ್ ನೀರನಾನೆಲೆ ಶ್ರೀಕರೆ ೩
ಚೋರನಂದದಿ ಸಾರಿ ರಾತ್ರಿಯೊಳು, ದ್ವಾರದೋಳ್ ನಿಂತು ಕೂಗುವೆ
ನೀಂ ಜಾರನಂದದಿ ಕಾಣುವೆ
ಸಾರೆ ಬಂದಿಹ ಕಾರಣವನು ಸಾರಿಪೇಳು ಕೇಳುವೆ
ನೀನಾರು ಪೇಳು ನೋಡುವೆ ೪
ದೇವಿಕೇಳು ವಸುದೇವ ದೇವಕಿಕುಮಾರ ನಾನೆಲೆ ಭಾಮಿನೀ
ಸುಕುಮಾರನಾನೆಲೆ ಭಾಮಿನೀ
ಭಾವಜಾತನ ಬಾಣಕೀಯದೆ ಕಾವುದೆನ್ನನು ಕಾಮಿನೀ
ದಯೆತೋರು ಮನೋಮೋಹಿನೀ೫
ದೇವಕೀಸುತನಾದರೊಳ್ಳಿತು ನಾವು ಬಲ್ಲೆವು ಸಾರುನೀಂ
ಗೋವ ಕಾಯ್ದುದ ಬಲ್ಲೆನಾಂ
ಮಾವನನ್ನೆ ಮಥಿಸಿ ಬಂದ ಮಹಾಮಹಿಮನೆ ಸಾರು ನೀಂ, ಆಹ
ಭಾವಿಸೀ ಭಯಪಡುವೆನೇಂ ೬
ಭೀಷ್ಮಕಾತ್ಮಜೆ ಭೇಷಜಾಂಬಕಿ ಹಾಸ್ಯ ಮಾಡದೆ ಬೇಗನೆ
ಪರಿಹಾಸ ನಿಲ್ಲಿಸು ಸುಮ್ಮನೆ
ಶೇಷಭೂಷಣ ನಮಿತ ಚರಣೆ ಸಂತೋಷ ಪಡಿಸುವದೆನ್ನನು
ನಾಂ ಬೇಡಿಕೊಂಬೆನು ನಿನ್ನನು ೭
ದೋಷವೆಣಿಸದೆ ಪೋಷಿಸೆನ್ನ ಮದೀಶ ಹಾಸ್ಯವ ಮಾಡಿದೆ
ಜೀವಿತೇಶ ನಿನ್ನನು ದೂರಿದೆ
ಶೇಷಶೈಲನಿ ವಾಸ ಎನ್ನನು ಪೋಷಿಸೆಂದಳು ವಿನಯದಿ
ಕೈಪಿಡಿದ ದೇವನ ಮೋದದಿ ೮
ಜಯಜಗನ್ನಾಥ ಭಕ್ತಾಭಯಪ್ರದ ಶ್ರೀಕರ
ಜಯಜಾನಕೀ ಮನೋಹರ
ಜಯ ಸುರೇಶಸು ಪೂಜಿತಾಂಘ್ರಿಯೆ
ಜಯದೇವ ದಯಾಸಾಗರ ಶೇಷಗಿರೀಶ ಶ್ರೀಧರ ೯

೬೨
ಕಲಶಾಬ್ಧಿಜಾತೆ ಸೀತೆಗಾರತಿಯನು ಬೆಳಗುವೆ
ಲಲನಾಮಣಿಯ ಸೇರಿ ಸುಖಿಸಿ ನಲಿದು ಪಾಡುವೆ ಪ
ಸರಸಿಜಾಸನಾದಿವಿನುತೆ, ಸುರವರಾರ್ಚಿತೆ
ಶರದಿಂದುಹಾಸೆÉ ಧರಣಿಜಾತೆ ಕರುಣಿಸೆನ್ನುತೆ ೧
ಕಮಲವದನೆ ಕಮಲನಯನೆ ಕಮಲವಾಸಿನೀ
ವಿಮಲಚರಣೆ ರಾಮರಮಣಿ ಮಧುರಭಾಷಿಣಿ ೨
ಶೇಷಶೈಲಾವಾಸದಯಿತೆ ವಿಶ್ವಸನ್ನುತೆ
ಪೋಷಿಸೆನ್ನ ಜನಕಜಾತೆ ಸೀತೆಯೆನ್ನುತೆ ೩

೧೫
ಕಲಶಾಬ್ಧಿಜಾತೆ ಸೀತೆಗಾರತಿಯನು ಬೆಳಗಿರೆ
ಲಲನಾಮಣಿಯ ಸಾರಿ ನುತಿಸಿ ನಲಿದು ಪಾಡಿರೆ ಪ.
ಸರಸಿಜಾಸನಾದಿ ವಿನುತೆ ಸುರವರಾರ್ಚಿತೆ
ಶರದಿಂದುಹಾಸೆ ಧರಣಿಜಾತೆ ಕರುಣಿಸೆನ್ನುತೆ ೧
ಕಮಲನಯನೆ ಕಮಲವದನೆ ಕಮಲವಾಸಿನಿ
ವಿಮಲಚರಣೆ ರಮಾರಮಣಿ ಮಧುರಭಾಷಿಣಿ ೨
ಶೇಷಶೈಲವಾಸದಯಿತೆ ವಿಶ್ವಸನ್ನುತೆ
ಪೋಷಿಸೆಮ್ಮ ಪ್ರಾಣದಾತೆ ಸೀತೆಯೆನ್ನುತ ೩

೧೪
ಕಾಮಾರಿನುತನಾಮ ಶ್ಯಾಮಸುಗುಣಾರಾಮ
ಕಾಮಿತ ಸುರದ್ರುಮ ಸತ್ಯಕಾಮ
ಅಜನೃಪಾತ್ಮಜ ಬಾಲ ರಜನೀಚರಕಾಲ
ರಜನೀಕರಸುಫಾಲ ಸತ್ಯಶೀಲ
ಪಾದಾಪಹೃತಶಾಪ ಪರಮಪಾವನ ರೂಪ
ಪದ್ಮಾಪ್ತ ಕುಲದೀಪ ವಿಶ್ವರೂಪ
ವಾರಿಜೋದ್ಭವ ತಾತ ವಾರಿಜಾಯತನೇತ್ರ
ವಾರಿಜಾಪ್ತಜ ಮಿತ್ರ ನುತಚರಿತ್ರ
ಪರಮಕರುಣಾಪೂರ ಸತ್ವಸಾರ
ಧರಣಿಜಾ ಮನೋಹರ ಸಮರಶೂರ
ಶರಣಜನರಕ್ಷ ಶ್ರೀವತ್ಸವಕ್ಷ
ವರಶೇಷಗಿರಿವಾಸ ಪಾಹಿಶ್ರೀತ

೫೧
ಕಾಯವ ನೆರೆನಂಬಿ ಕೆಡದಿರು ಮಾಯೆಯ ತಿಳಿದೇಳು ಪ.
ನ್ಯಾಯವನರಿಯದೆ ನೀ ಮಾಯಾಮೋಹವೆ
ಹೇಯಕಾರ್ಯರಿದೊಳಪಾಯದಿ ನರಳುವ ಅ.ಪ.
ತನುಮನಕನಕವಿದು ನಿತ್ಯದಿ ತನದಾಗಿಹುದೆಂದು
ಹೊನ್ನು ಮಣ್ಣು ಹೆಣ್ಣೆಂಬೀ ಮೂರರ ಬಣ್ಣದೆ ಬಗೆಗೆಟ್ಟು
ಕಣ್ಣು ಕಾಣದೆ ಮುಂಬರುತಿಹ ಭಿನ್ನವನೆಣಿಸದೆಯೆ
ಸಣ್ಣತನದಿ ಜೀವನ ವ್ಯರ್ಥವೆನಿಸುವ ೧
ಸುಜನರ ಸಂಗತಿ ತ್ಯಜಿಸಿ ಮದದಲಿ ಕುಜನರ ಕೂಟವ ಬಯಸಿ
ಋಜುಮಾರ್ಗವ ತೊರೆದು ಕಾಲವ ಅಜಗರನಂದದಿ ಕಳೆದು
ಗಜಪತಿ ವರದನ ಪದಪಂಕಜ ಮಹಿಮೆಯ
ನಿಜವರಿಯದೆ ದುರ್ಜೀವನವೆನಿಸುವ ೨
ನೀರಗುಳ್ಳೆಯ ತೆರದಿ ಕರಗುವ ಸಾರವಿಲ್ಲದ ಭವದಿ
ಮೂರುದಿನದ ಬಾಳೆಂದು ನೆನೆಯದೆ ಹಾರಾಡುವರೇ ನಿಂದು
ಮಾರಪಿತನ ಪದಸಾರಸವನು ನೆನೆ [ನೆನೆದು]
ನೀರ ಶೇಷಗಿರಿವರನೆ ಗತಿಯೆನೆ ೩

೧೬
ಕಾಯೌ ಶ್ರೀ ರಮಾದೇವಿಯೆ ಸದಾ
ತೋಯಜಾಂಬಕಿಯೇ ಭಯವ ಬಿಡಿಸಿ ಭರದಿಂದ ೧
ಕ್ಷೀರಾಂಬೋನಿಧಿ ತನಯೇ ತಾಯೇ
ಮಾರನಯ್ಯನರಸಿ ಕರುಣಾವೆರಸಿ ನಲವಿಂದ ೨
ಶಿರೀ ಶೇಷಾದ್ರೀಶ ಮನೋಲ್ಲಸಿತೆ ಕಾಂತೇ
ವಾಸವಾದಿ ವಿನುತೇ ಮಹಿತೇ ವರದಾತೇ ತಾಯೆ ೩

೨೨
ಕುಲಕೆ ತಕ್ಕ ಸ್ವರೂಪ ಚಲುವಿಗೊಪ್ಪುವ ವಿದ್ಯೆ
ಕಲೆಗೆ ಸಲ್ಲುವ ಸುಗುಣ ಭಳಿರೆ ನಿಪುಣ
ಕಿರುಕುಳದೆ ಕೈ ನೀಡಿ ಕರೆಕರೆಯ ತಂದೊಡ್ಡಿ
ಹರಿಸವಾನುವಮೋಡಿ ವರನಗಾಡಿ
ಜೂಜುಗಾರರಿಗೆರೆಯ ಮೋಜಿನೋಳ್ ಸಮನರಿಯ
ಸೋಜಿಗಂ ಮಿಗೆತೋರ್ಕುಮಿನಿತುಸೊರ್ಕು
ನಿಶಿಚರಾಂತಕನೆನುವ ಪೆಸರಾಂತುಮೀತೆರದ
ವಿಷಮವರ್ತನದಿ ಸಂತಸವ ಪಡುವ
ಪರಿಯಿದಚ್ಚರಿಯಾಗಿ ತೋರ್ಕುಮೆನಗೆ
ಪರಿಪರಿಯ ಚಿಂತೆಗಾಕರಮಿದಾಗೆ
ಉರಿಯುತಿಹುದೀಬಗೆಯೊಡಲ ಬೇಗೆ
ವರ ಶೇಷಗಿರೀಶನೆ ಶರಣನೆನಗೆ

ಕೋಲಾಟದ ಪದಗಳು
೧೧೪
ಕುಶಲದಿಂದ ಬಾಳಿರೈ ಯಶವನಾಂತು ಬೆಳಗಿರೈ
ಕುಶೇಶಯಾಕ್ಷನೊಲಿದು ಸಂತೋಷವೀಯಲಿ ಪ.
ಪಿತೃಭಕ್ತರೆನಿಸುತ ಮಾತೃಸೇವೆಗೈಯುತ
ಪುತ್ರಪೌತ್ರಮಿತ್ರರಿಂ ಕಲತ್ರಭಾಗ್ಯದಿಂ೧
ಕಾರ್ಯಸಿದ್ಧಿಯಾಗೆ ನಿಮ್ಮಾರ್ಯಮಾತೆಗೆರಗುತ
ಸಾರಸತ್ಯಧರ್ಮಮಂ ನೀವ್ ಮೀರದಾವಗಂ ೨
ದಾನವೇಂದ್ರನ ತೆರದೊಳು ದಾನಶೂರರೆನ್ನಿಸಿಳೆಯೊಳ್
ದೀನ ದುಃಖಗಳಿಗೆ ನೀವು ಶ್ರೀನಿಧಾನರೆನ್ನುವೋಲ್ ೩
ಈ ಶರತ್ಸಮಾಗಮಂ ದೇಶಮಾತೆಗೆ ಸಂಭ್ರಮಂ
ದೇಶಭಕ್ತರಿಗುತ್ಸವಂ ಇದೇ ನಮಗೆ ಸಂಭ್ರಮಂ೪
ತಂದೆ ಶೇಷಗಿರಿವರಂ ನಂದಿನಿಯ ಕೈಪಿಡಿಯುತಾ
ನಂದದಾಯಕ್ ನೆನಿಸಲೆಂದೆಂದು ಹರಸುತ ೫

೧೧೫
ಕುಶಲಿಯಾಗಿರೈ ಯಶವಪೊಂದಿರೈ ಪ.
ಕುಶಿಕತನುಜ ಯಾಗಪಾಲಕನೊಲವ ಪಡೆಯಿರೈ ಅ.ಪ.
ಕಾಂತಾಪುತ್ರರಿಂ ಅನಂತ ಭಾಗ್ಯಮಂ
ಶಾಂತಚಿತ್ತಮಾಂತುಧರೆಯೊಳನಂತ ಕಾಲಮುಂ ೧
ವಂಶದೀಪನುಂ ಪ್ರಶಂಸನೀಯನುಂ
ಕಂಸದಮನ ಭಕ್ತನುಂ ಎನಿಸಿ ಸಂತತಂ೨
ಶೇಷಗಿರಿವರಂ ಪೋಷಿಸಲ್ಕೆ ತಾಂ
ದೇಶಭಕ್ತರಾಗಿ ಬಾಳಿ ವಾಸಿಪಂಥದಿಂ ೩

೮೧
ಕೈಪಿಡಿದೆನ್ನನು ಕಾಪಿಡು ನಲವಿಂ ಕನ್ನಡ ನುಡಿವೆಣ್ಣೆ ಪ.
ಈ ಪಸುಳೆಗೈದಾ ಪಾಪವದಾವುದು ಕೋಪಿಸದಿರೆನ್ನಾಣೆ ಅ.ಪ
ಮುಳಿವಿಂತೇತಕೆ ನಳಿನದಳಾಂಬಕೆ ಎಳೆಗೂಸಿನ ಮನಕೆ
ಕಳವಳದಿಂದತಿ ಬಳಲಿಕೆಯಾದರು ತಳುವುದಿದೇನಿದು ಸಾಕೇ ೧
ಮಾತೆಯ ಮಮತೆಗೆ ಸೋತು ಭಜಿಸುವೀ ಪೋತನ ನೆರೆನೋಡಿ
ಪ್ರೀತಿಯಿಂ ಕರೆದಾತುಕೋ ನಲ್ವಾತಿನಿಂ ಕೈನೀಡಿ ೨
ಪರಿಪರಿಯೆಡರಿನ ಗಿರಿದುರ್ಗಂಗಳಾವರಿಸಿರುತಿಹುದೆ
ಪರಿಯಿಂದದನುತ್ತರಿಸಿ ಬಂದಪೆ ಕರುಣಿಸು ಭರದೆ ೩
ಕಾರ್ಯ ಕಾರಣ ಕರ್ತೃ ನೀನಹುದಾರ್ಯೆ ಸದಾ ಪೊರೆಯೇ
ಕೋರಿಕೆಗಳನೀಡೇರಿಸಿಯಣುಗರ ನಿರಪಾಯದೆ ಕಾಯೇ ೪
ಭಾಷೆಗೆ ತಪ್ಪಿದ ದೋಷಿಯೆನ್ನುತುಪೇಕ್ಷಿಸಬೇಡೆನ್ನ
ಶೇಷಗಿರೀಶನೆ ಪೋಷಕನಾಗಿರೆ ನಿರ್ದೋಷಿಯೆನಿಸುವೆ ನೀಂ೫

೫೨
ಕೈಯ ತೋರೋ ರಂಗ ಕೈಯ ತೋರೋ ಪ.
ಕೈಯ ತೋರೋ ಕರುಣೆಗಳರಸನೆ ಅ.ಪ.
ಶರಧಿ ಮಥನದಿ ದೇವಾಸುರರಿಗೆ ಮೋಹಿನಿಯೋಲ್
ಸುರರಿಗೆ ಸುಧೆಯಿತ್ತು ಸುರರಿಗಾಸರೆಯನಿತ್ತಾ ೧
ಹರನ ಕರದಲಿ ವಿಧಿಶಿರಕಚ್ಚಿ ಕಾಡುತಿರೆ
ಶಿರಮಂ ಸದ್ಗತಿವೊಂದಿಸಿ ಹರನಂ ನಲವಡಿಸಿದ ೨
ಹರನ ವರದಿ ಭಸ್ಮಾಸುರ ಗರ್ವಿತನಾಗಿ [ಆ]
ಹರನಂ ಬೆನ್ನಟ್ಟಿ ಬರೆ ದುರುಳನ ದಂಡಿಸಿದಾ ೩
ತರಳಧ್ರುವ ತಾಯ ಬಿರುನುಡಿಗೆ ಮನನೊಂದು
ಶರಣೆನೆ ಮೈದೋರಿ ತರಳನ ಮೈದಡಹಿದ೪
ಕಂದ ಪ್ರಹ್ಲಾದನ ತಂದೆಯುಗ್ರದಿ ಜಡಿಯೆ
ಕಂಬದಿಂ ಬಂದು ಖಳನ ಕರುಳನು ಕಿತ್ತೆಸೆದಾ ೫
ಮೊಸಳೆ ಬಾಯೊಳು ಸಿಕ್ಕಿ ಬಸವಳಿದು ಬಾಯ್ಬಿಡುತಿರೆ
ಎಸೆದ ಚಕ್ರದಿ ಸೀಳಿ ನಕ್ರನ ಕರಿಯನುದ್ಧರಿಸಿದ ೬
ಸೊಕ್ಕಿನಿಂ ಬಂದಾ ರುಕ್ಮನ ಗೆಲಿದು ಗೋವಿಂದ
ಚಕ್ರಧರ ರುಕ್ಮಿಣಿಯ ಕೈಪಿಡಿದ೭
ತರುಣಿಯಭಿಮಾನವ ನೆರೆಕಾಯ್ದು ನರನಿಗೆ
ವರಸಾರಥಿಯಾಗಿ ತೇರನೆ ನಡೆಸಿದ ೮
ವರಶೇಷಗಿರಿಯಲ್ಲಿ ಸ್ಥಿರವಾಗಿ ಶರಣರ
ಕರೆದಾದರಿಸಿ ವರಗಳ ಕೊಡುತಿಪ್ಪ ೯

೧೧೬
ಕೊಡಲಾಗದಿದ್ದರೆ ನುಡಿಯುವರೇನಣ್ಣ
ಕಡೆಯಿಂದ ಬಾರೆಂದು ಜಡಿದಿಂದು ಪ.
ದುಡುಕಿದೆವೆನ್ನುತ ಮಿಡುಕದಿರಣ್ಣಯ್ಯ
ಕಡುಮುದದಿಂದಾವು ನಡೆದೇವು
ಕೋಲೇಕೋಲೆ ಮುತ್ತಿನ ಕೋಲೆ ಅ.ಪ
ಗುಣಯುತರೆನಿಸುವ ಹಿರಿಯ ವಂದಿಸ
ಲೆನಂತಲೈ ತಂದೆವು ಮಣಿದೆವು
ಹಣಗಾರರರೆಂದಲ್ಲಿ ಮಣಿಯಲು ಬರಲಿಲ್ಲ
ಹಣದಾಸೆ ನಮಗಿಲ್ಲ ಕೇಳೀಸೊಲ್ಲ ||ಕೋಲೇ|| ೧
ಅಣ್ಣಯ್ಯ ನಿಮಗೀ ಘನತೆಯು ಸಲ್ವುದು
ಗಣ್ಯರಾದಿರಿ ನೀವು ಜಗದೊಳು
ಪುಣ್ಯವಂತೆಯು ನಿಮ್ಮ ಪಡೆದಾಮಾತೆಯು
ಧನ್ಯರಾದಿರಿ ನಿಮ್ಮೀಗುಣದಿಂದ ಕೋಲೆ ೨
ದೋಷರಹಿತ ಶ್ರೀಶೇಷಗಿರೀಶನಾ
ಕೇಶವನೊಲವೊಂದೆಮಗಿರಲಿ
ಭಾಷೆಯ ಕೊಡುವೆವು ದೇಶಸೇವಕರಾವು
ಲೇಸಾಗಲಿಳೆಗೆಂದು ಮನದಂದು ||ಕೋಲೆ||೩

೩೧
ಕೋಪದೊಳು ಜಮದಗ್ನಿ ತಾಪದೊಳು ಮಾರ್ತಾಂಡ
ಭೂಪರೊಳು ರಘುನಾಥನೆನ್ನ ನಾಥ
ದ್ವೇಷದೊಳು ಭಾರ್ಗವನು ರೋಷದೊಳು ದೂರ್ವಾಸ
ಮೋಸದೊಳ್ ಶ್ರೀಕೃಷ್ಣ ಮುದ್ದು ಕೃಷ್ಣ
ಭೋಗದೊಳು ದೇವೇಶ ರಾಗದೊಳು ಗಿರಿಜೇಶ
ತ್ಯಾಗದೊಳು ಶಿಬಿರಾಯ ಮದನಕಾಯ
ಜ್ಞಾನದೊಳು ಜನಕನು ಧ್ಯಾನದಲಿ ದತ್ತರ್ಷಿ
ಸೂನೃತದಿ ಹರಿಶ್ಚಂದ್ರ ಮಾನನಿಧಿಯು
ಧನಿಕನೆಂದೆನಲಷ್ಟಸಿದ್ಧಿದಾತಂದೆ
ಘನವಂತನೆನೆ ಪ್ರಣವಸ್ವರೂಪಗೆ
ಧಣಿಯೆನಲು ಮೂಜಗಕ್ಕೊಡೆಯನಿವನೆ
ಎಣೆಯುಂಟೆ ಶೇಷಾದ್ರಿವಾಸನಿವಗೆ

೧೧೭
ಕೋಲನಾಡೇ ಲೋಲಾಕ್ಷಿ ಬಾರೆ ಪ.
ಕನ್ನಡಿಕದಪುಗಳ್ ಚೆನ್ನಾಗಿ ಪೊಳೆಯಲ್
ಚಿನ್ನದ ಕೋಲ್ಪಿಡಿದು ಚನ್ನೆ ನೀಂ ನಲಿದು ೧
ಪಂಚಬಾಣನಶರ ಹೊಂಚಿಬೀಳುವ ತೆರೆ
ಚಂಚಲಾಕ್ಷಿಯೆ ಅರಸಂಚೆಗಮನದಿಂ೨
ವಿಭವದೆÉೀಳಿಗೆಗಿದು ಶುಭದಿನವಹುದೆಂದು
ಪ್ರಭುವ ಬೇಡಿರಿ ಇಂದು ಅಭಯವೀವನು ಬಂದು ೩
ಶಾರದಾಗಮದಿಂದ ಸಾರವಾಂತಿರುವೆಮ್ಮ
ಭಾರತಾಂಬೆಗೆನಲವೇರೆ ಸಂಭ್ರಮದಿ ೪
ಭಾರತಮಾತೆಗೆ ಭವ್ಯಮೂರುತಿಗೆ
ಭೋರೆನೆ ಜಯಭೇರಿ ಮೊರೆವುದು ಸಾರಿ ೫
ತರಳೆಯರಾವೆಲ್ಲ ಪರಿಶುದ್ಧ ಭಾವದಿ
ವರಶೇಷಗಿರಿದೊರೆಗೆರಗಿ ಸಮ್ಮುದದಿ ೬

೩೮
ಕ್ಷೀರವಾರಿಧಿಜಾತೆ ಚಾರುಸುಂದರಗಾತ್ರೆ ಪ
ಮಾರಜನಕದಯಿತೇ ಸಾರಸಾನನೆ ಮದ
ವಾರಣಗಮನೆ ನಿನ್ನ ತರುಣಿಯರೆಲ್ಲರು ಕರೆ
ವೋರು ವರಮಣಿ ಪೀಠಕೆ
ಬಾರೆಯ ಹಸೆಗೇ ಕರೆ ೧
ಇಂದಿರಾದೇವಿ ಬಾ ಇಂದುಸೋದರಿ ಬಾ
ಕುಂದಣದ ಹಸೆಗೇ
ಮಂದಹಾಸವ ತೋರಿ ಬಂದೆಮ್ಮ ಮನೆಯೊಳು
ಎಂದೆಂದಗು ಬಿಡದಾನಂದವತೋರೆಂದು ೨
ರೂಢಿಗೊಡೆಯ ಗರುಢಾರೂಢನೆಂದೆಸಿದ
ಗಾಡಿಕಾರನ ಕೃಷ್ಣನಾ ಮಡದಿರನ್ನೆಯೆ ನಿನ್ನ
ಪೊಡಮಟ್ಟು ಬೇಡುವ ದೃಢ ಭಕ್ತರ ಕೈ
ಬಿಡದಾದರಿಸುತ್ತ ಬಾರೆಂದು ಹಸೆಗೆ ೩
ಸುರವರಪೂಜಿತ ಚರಣಸರೋಜವ
ನಿರುತ ಸೇವಿಪ ವರವ
ಕರುಣೆಸೆಂದೆನುತಾನು ಕರಮುಗಿದೆರೆವೆನು
ವರಶೇಷಗಿರಿವಾಸನರಸಿನೀಂ ನಲವಿಂದ ಬಾರೆಂದು೪

೧೫
ಕ್ಷೀರಾಬ್ಧಿಜಾರಮಣ ಕ್ಷೀರಾಂಬುನಿಧಿಶಯನ
ಶ್ರೀರಮಾಮಣಿ ಸದನ ಗರುಡಗಮನ
ಕಾಕುತ್ಸ್ಥವಂಶಾಬ್ಧಿ ರಾಕೇಂದು ಗುಣನಿಧೀ
ಪಾಕಾರಿಮುಖದೇವ ನಿಕರಜೀವ
ನಿಟಿಲಾಕ್ಷನುತನಾಮ ಜಟಾವಲ್ಕಲಧಾಮ
ತಾಟಕಾಂತಕರಾಮ ಸಮರಭೀಮ
ಇಂದುಸನ್ನಿಭವದನ ಕುಂದಕುಟ್ಮಲರದನ
ಇಂದೀವರ ಸುನಯನ ಕನಕವಸನ
ಕವಿಜನಮನೋಲ್ಲಾಸ ಶಶಿಸುಹಾಸ
ಪವನನಂದನ ಸೇವ್ಯ ದೇವದೇವ
ಭವಭೀತಿಹರ ಶೇಷಶೈಲನಿಲಯ
ಸುವಿಮಲಯಶಶ್ಚಂದ್ರ ರಾಘವೇಂದ್ರ

೭೧
ಕ್ಷಮಾ ಪ್ರಾರ್ಥನೆ
ಗುರುಹಿರಿಯರೆಡೆಯಲ್ಲಿ ಶಿರಬಾಗಿಸಿನಯದಲಿ
ಎರೆವೆನೀಪರಿಯಲ್ಲಿ ಕರವಮುಗಿದು
ಯತಿನಿಯಮ ಛಂದಸ್ಸು ಗತಿತಾಳಲಯಬಂಧ
ನುತಶಬ್ದ ತತ್ವಾರ್ಥ ಸಂಗತಿಯನು
ವರಕವಿಗಳೊರೆದಿರ್ಪ ತರತರದ ಪ್ರಾಸಗಳ
ವರಲಕ್ಯಣಲಂಕಾರ ಮೆಂಬ
ಪರಿಕರಂಗಳನರಿದು ಪರಿಪರೀಸಿಂಗರಿಸ
ಲರಿಯೆ ಕವಿತಾಮಣಿಯ ಪರಿಯನರಿಯೆ
ಸರಿಸದೋಳ್‍ನಿಂದೆ ನೆಂದರಿಯ ಬೇಡಿ
ಅರಿಯದಾತರಳೆ ರಚಿಸಿದುದನುನೋಡಿ
ಹಿರಿಯರೊಳುಗರುವತೋರಿದೆನೆನ್ನ ಬೇಡಿ
ಸರಿದೋರಿದಂತೆಸಿಗೆ ಕೃಪೆಮಾಡಿ
ಸಮರ್ಪಣೆ
ತ್ವದ್ದತ್ತವಾಚಾ ತವಕಿಂಕರೇಣ
ತ್ಪತ್ಪ್ರೀತಿ ಕಾಮೇನ ಮಯಾಕೃತೇನ |
ಸ್ತೋತ್ರೇಣ ಲಕ್ಷ್ಮೀನೃಹರೇ ಸವಿಷ್ಣುಃ
ಪ್ರೀತೋಭವತ್ಪಂ ಕರುಣಾದ್ರ್ರದೃಷ್ಟಿಃ ||

೧೦
ಗೋವರ್ಧನೋದ್ಧಾರ ಗೋಪಿಕಾಜನಜಾರ
ದೇವಕೀ ಸುಕುಮಾರ ಸೂಕ್ತಿಕಾರ
ರುಕ್ಮಿಣೀ ಮನೋಹರ ರುಕ್ಮಗರ್ವನಿವಾರ
ಚಕ್ರಧರ ಶ್ರೀರಂಗ ಶ್ಯಾಮಲಾಂಗ
ಪಾಂಡುಸುತ ಸನ್ಮಿತ್ರ ಮಾಂಡವ್ಯಸನ್ನುತಾ
ಖಂಡಲಾರ್ಚನಪಾತೃ ನುತಚರಿತ್ರ
ದ್ವಾರಕಾಪುರಿವಾಸ ಧರ್ಮರಕ್ಷಣದೀಕ್ಷ
ವೈರಿಶಿಕ್ಷಣದಕ್ಷ ಶ್ರೀಕಟಾಕ್ಷ
ದ್ರೌಪದೀ ಮಾನದಾ ಪಾಹಿವರದ | ತಾಪತ್ರಯ ಹರಣ
ಭಕ್ತ್ಯಧೀನ | ಆಪನ್ನಿವಾರಣಾಮೋಘ ವಚನ
ಭೋ ಪರಂಧಾಮ ಶ್ರೀ ಶೈಲಧಾಮ

೪೯
ಚಂಡನಾಡುವ ಬಾರೆಲೈ ಪ್ರಾಣೇಶ್ವರ ಪ.
ಮಲ್ಲೆ ಜಾಜಿ ಸಂಪಿಗೆ ಮೇಣ್ ಮಲ್ಲಿಗೆ ಇರುವಂತಿಗೆ
ಚಲ್ವ ಪಾರಿಜಾತದಿಂದ ಚೆಲ್ವನಾಂತು ಮೆರೆಯುತಿರ್ಪ ೧
ಪರಿಮಳಾನ್ವಿತ ಪಾಟಲೀ ಸುರಗಿ ಸೇವಂತಿಗೇ ಸುರಭಿಳÀ
ಕರಮಾಗಿ ಯೆಸವಪರಿಯನೋಡಿ ನಲಿಯುತಾವು ೨
ವಿಮಲಶೇಷಶೈಲವಾಸ ಕಮಲಬಾಂಧವ ಸದೃಶಭಾಸ
ಕಮಲನಾಭ ಭಕ್ತಪಾಲ ರಮಣ ನಿನ್ನ ಕಮಲಪಾಣಿಯಿಂ೩

೨೪
ಚಲುವನಿವನೆಂದೆನುತೆ ಪಲತೆರದೆ ಬಣ್ಣಿಸುತೆ
ನಲಿದಿತ್ತ ಹಲುಗಿರಯಗೆನ್ನ ತಾತ
ಕೆಂಗಣ್ಣು ಕಿಡಿರೋಷ ಸಿಂಗದಾಮುಖಭಾವ
ಭಂಗಿಯನು ಕುಡಿದವೋಲ್ ಕಂಡುಬರುವ
ರುಧಿರ ಪಾನವಮಾಡಿ ಅಧರವಿದು ಕೆಂಪಾಗಿ
ವಿಧವಿಧದಿ ಹೂಂಕರಿಸಿ ಬೆದರಿಸುತಿಹ
ವರರತ್ನಹಾರವನು ತೊರೆದು ರಕ್ಕಸನುರವ
ಹರಿದು ಕರುಳನು ಧರಿಸಿ ಮೆರೆವನಕಟ
ಘೋರವದನನೆ ಎನಗೆ ನೀರನಾಗೆ
ಹಾರಮಳವಡಿಸಿದೆನೆ ಕುಪಿತಗಿವಗೆ
ಸಾರೆ ಫಲವೇನಿನ್ನು ನಡೆದೆಬಗೆ
ಧೀರಶೇಷಗಿರೀಶನೊಡೆಯನೆನಗೆ

೨೯
ಜನಕನೇನೆನುತೆನ್ನ ಘನವಂತನಿವೆನೆಂದು
ಮನದಂದು ಬಳಿಸಂದು ಕೊಟ್ಟನಿಂದು
ವೇಷವನು ನೋಡಿದೊಡೆ ಋಷಿಯಂದಮಾಗಿಹುದೆ
ಭಾಷೆಯಿಂ ಭಾವೆಯೊಲು ಭಾಸಮಹುದೆ
ಚರ್ಯೆಯಿಂ ಭೂಭುಜನ ಪರ್ಯಾಯದಿಂದಿಹನೆ
ಸಾರ್ವಭೌಮನುಮಹನೆ ವೀರ್ಯದಲ್ಲಿ
ವನವಾಸಿಯಿಂತಿವಗೆ ಧನುದಿದ್ದುಫಲವೇನು
ವನಿತೆಯನು ಸಂತವಿಸ ಲರಿಯದವನು
ಹೇಸದಾ ಸ್ತ್ರೀಭುಕ್ತ ಶೇಷವುಂಡು ಬೇಸರದೆ
ವನಮೂಲ ಫಲವತಿಂದು
ವಾಸಿಪಂಥದೊಳಾನೆ ಶೂರನೆಂದು
ಘೋಷಿಸುವ ಶೇಷಗಿರಿವಾಸನೆಂದು

ಭದ್ರಗೀತಾವಳಿಯ ಮೊದಲ ಸೀಸ ಪದ್ಯ
ಭಕ್ತಿ ಗೀತಾವಳಿ
ಸರಸ್ವತಿ ಸ್ತುತಿಗಳು

ಜಯ ಜಯ ಜನನಿ ಜಗದುಜ್ಜೀವಿನಿ ಪ
ಜಯಗೀರ್ವಾಣಿ
ಜಯ ಬ್ರಹ್ಮಾನಂದದಾಯಿನಿ,
ಜಯ ಬ್ರಹ್ಮಾಣಿ ಅ.ಪ
ಆವಳ ಕೃಪೆಯಿಂ ಜೀವಿಪೆಮೋ ಮ
ತ್ತಾವಳ ವ್ಯಾಪನೆಯಿಂ
ದೈವಿಕ ಗುಣಸಂಭಾವಿತರಪ್ಪೆವೋ
ಭಾವಿಪೆವಾದೇವಿಯ ನಾವ್ ೧
ಉಡುವುದು ತೊಡುವುದು ಕೊಡುವುದು
ಹಿಡಿವುದದಾರಿಂದಂ
ನುಡಿವೆಣ್ಣೆನಿಸಿದವಳಾವಳೋ ನಾವವ
ಳೆಡಬಿಡದೆರೆವೋಂ ೨
ತಾಯೆಮಗರಿವಂ ಕಾಯಕೆಬಲಮಂ
ಮಾಯೆಯೆ ಬಿಡಿಸಿನ್ನು
ಕಾಯಜಪಿತ ಶೇಷಾದ್ರೀಶನೆ
ನೆನೆವಾಸನ್ಮತಿಯೆಂದೆಂದುಂ ೩

೫೩
ಜಯ ಜಯ ದ್ವಾರಕಾವಾಸ ಜಯ ಮುನಿಮಾನಸಹಂಸ ಪ.
ಜಯ ಕಂಸಾಸುರವಿಧ್ವಂಸ ಯದುಕುಲಾವತಂಸ ಅ.ಪ.
ಜಯ ವಸುದೇವಕುಮಾರ ಜಯ ವೃಂದಾವನವಿಹಾರ
ಜಯಗೋಪೀಜನಜಾರ ಜಯ ಕೌಸ್ತುಭಮಣಿ ಹಾರ ೧
ಜಯಜಯ ಸನ್ನುತಕಾಯ ಜಯಸುರಮುನಿಗೇಯ
ಜಯ ಸಾಗರನಿಲಯ ಜಯ ಶುಭಗುಣವಲಯ ೨
ಜಯಜಯ ದೈತ್ಯವಿನಾಶ ಜಯ ನುತಶೇಷಗಿರೀಶ
ಜಯಜಯ ಮಂಜುಳಭಾಷ ಜಯ ಪಾಂಡವಪರಿತೋಷ೩

೫೭
ಜಯ ಜಯರಾಘವೇಂದ್ರ ಸಜ್ಜನಪಯೋನಿಧಿಚಂದ್ರ
ಜಯದೇವ ಭೂಸುರವೃಂದ ಸುಗುಣಸಾಂದ್ರ ಪ.
ಕೌಸಲ್ಯಾಪ್ರಿಯ ಬಾಲ ಕೌಶಿಕಕ್ರತುಪಾಲ
ದಶಕಂಠ ಕುಲಕಾಲ ದಾನಶೀಲ
ಶಶಿಮೌಳಿಧನುರ್ಭಂಗ ಭುವಿಜಾ ಮನೋಹರಾಂಗ
[ಋಷಿ] ಮನೋಂಬುಜಭೃಂಗ ಕರುಣಾಂತರಂಗ ೧
ಸಾಕೇತ ಪುರಧಾಮ ಪಾಕಾರಿನುತನಾಮ
ಲೋಕಮೋಹನ ಶ್ಯಾಮ ಕೋದಂಡರಾಮ
ಶ್ರೀಕಾಮಿನೀಸದನ ಭೂವೈಕುಂಠ [ಕಾರಣ]
ಶ್ರೀ ಕೌಸ್ತುಭಾ ಭರಣ ಶೇಷಗಿರಿರಮಣ ೨

ಭದ್ರ ಗೀತಾವಳಿ (ಮದುವೆ ಹಾಡುಗಳು)

ಜಯಜನಕಜಾಮಾತ ಜಯಜಾನಕೀ ಕಾಂತ
ಜಯದುರಿತ ಘನವಾತ ಮದನ ತಾತ
ಜಲಜಾಪ್ತಸಂಕಾಶ ವಿಲಸದ್ಗುಣಾವೇಶ
ಲಲಿತ ಸನ್ರ‍ಮದುಭಾಷ ಪರಮಪುರುಷ
ನತಕಾಮಸುರಧ್ರುಮ ದಿತಿಜಾಬ್ಜಕುಲಸೋಮ
ಕ್ಷಿತಿನಾಥ ರಘುರಾಮ ಸಮರಭೀಮ
ಪಿತೃವಾಕ್ಯಪರಿಪಾಲ ಸತ್ಯವ್ರತ ಸುಶೀಲ
ಮೃತ್ಯುಂಜಯ ವಿನುತ ಮಹಿತ ಚರಿತ
ಭವಭಯಾಂಭುದಿ ತರಣ ಭಕ್ತಭರಣ
ಪವನನಂದನ ಸೇವ್ಯ ದೇವದೇವ
ಸುವಿಮಲ ಯಶಶ್ಚಂದ್ರ ರಾಮಚಂದ್ರ
ಪರಿಪಾಹಿ ಶ್ರೀಶೇಷಗಿರಿವಿಭೂಷ

೫೪
ಜಯಜಯ ನಂದಕುಮಾರ ಜಯ ವೃಂದಾವನ ವಿಹಾರ ಪ
ನಾರಾಯಣ ನಾರಾಯಣ ಜಯ ಗೋವಿಂದ ಹರೆ ಅ.ಪ
ವಾಗೀಶಾರ್ಚಿತಪಾದ ಯೋಗೀಧ್ಯಾನವಿನೋದ
ನಾರಾಯಣ ನಾರಾಯಣ ಜಯಗೋವಿಂದ ಹರೆ ೧
ಲೀಲಾಮಾನುಷರೂಪ ಶ್ರೀಲೋಲಾ ಜಿತಕೋಪ
ನಾರಾಯಣ ನಾರಾಯಣ ಜಯಗೋವಿಂದ ಹರೆ ೨
ಶ್ರೀ ಶೇಷಾಚಲವಾಸ ಶ್ರೀಶ ಜಯ ಸರ್ವೇಶ
ನಾರಾಯಣ ನಾರಾಯಣ ಜಯಗೋವಿಂದ ಹರೆ ೩

೪೭
ಉರುಟಣೆಯ ಹಾಡು
ಜಯಜಯ ಸಾರಸನಯನ ಜಯಜಯ ವಾರಿಧಿಶಯನ
ಜಯಜಯ ಲಕ್ಷ್ಮೀರಮಣ ಜಯ ಭಕ್ತಾಭರಣ ಪ.
ಸ್ಮರತಾತಾ ಶ್ರೀಕಾಂತ ವರದಾತಾ ರಘುನಾಥ
ವರಕಪೋಲವ ತಾರೈ ಅರಿಸಿನ ಹಚ್ಚುವೆನು ೧
ಹರಧನುಖಂಡನ ಶೌರಿ ಸುರರಿಪುಸಂಕುಲ ವೈರಿ
ಕರಪಲ್ಲವತೋರೈ ಅರಿಸಿನ ಪೂಸುವೆನು೨
ಪಾದಾಪ ಹೃತಶಾಪ ಪರಮಪಾವನರೂಪ
ಪಾದಪದ್ಮವ ತಾರೈ ಪೂಜಿಪೆ ನಾನೊಲವಿಂ೩
ಖಲದೈತ್ಯಕುಲಕಾಲ ಬಾಲೇಂದು ನಿಭಫಾಲ
ಸ್ಥಳದೊಳುಮಿಗೆ ಪೊಳೆವ ತಿಲಕವ ತಿದ್ದುವೆನು ೪
ಶಂಭುಸನ್ನುತನಾಮ ಜಂಭಾರಿನುತರಾಮ
ಕಂಬುಕಂಧರ ತೋರೈ ಗಂಧವ ಹಚ್ಚುವೆನು ೫
ಕಮನೀಯ ಮೃದುಲಾಂಗ ಕಮಲಾಕ್ಷ ಶ್ರೀರಂಗ
ನಳವಡಿಪೆ ನಿನ್ನೀಕೊರಳೊಳು ಕಮಲಮಾಲೆಯ ೬
ವರಶೇಷಾಚಲವಾಸ ಶರದಿಂದುನಿಭಹಾಸ
ಕರುಣಿಸುನೀಂಹೃದಯೇಶ ತರಣಿಕುಲಾವತಂಸ ೭

೫೫
ಜಯಜಾನಕೀರಮಣ ಜಯಕೌಸ್ತುಭಾಭರಣ ಪ
ಜಯ ಪಾವನಚರಣ ಜಯ ಕೌಸಲ್ಯಾನಂದವರ್ಧನ
ಜಯ ಭಕ್ತಾಭರಣ ಅ.ಪ.
ಜಗದೋದ್ಧರಣ ಅಪಾರಕರುಣಾ ಅಗಜರ್ಚಿತ ಚರಣ
ಖಗೇಶಗಮನ ಜಲನಿಧಿಶಯನ ಸುರರಿಪು ಸಂಹನನ ೧
ಸೂನೃತಪಾಲ ಜಾನಕೀಲೋಲ ದೀನಜನಾವಾಲ
ದಾನವಕಾಲಾ ಶ್ರೀವನಮಾಲಾ ಮಾನಿತ ಗುಣಶೀಲಾ ೨
ಶೇಷಗಿರೀಶ ಶ್ರಿತಪರಿಪೋಷ ವಾಸವ ಪರಿತೋಷ
ದೋಷವಿನಾಶ ದಶಶಿರಧ್ವಂಸ ಮುನಿಜನ ಮಾನಸಹಂಸ ೩

೧೭
ಜಯತು ಜಯತು ಜಯತು ಪ.
ಜಯತು ಜನಕಜಾತೆಯೆ
ಜಯ ಭಜಕಜನ ಧಾತ್ರಿಯೆ
ಜಯ ಜಡಭವ ನಮಿತ ಮೂರ್ತಿಯೆ
ಜಯ ಜಗನ್ಮಾತೆಯೆ ೧
ಪದ್ಮಸಂಭವೆ ಪದ್ಮಗಂಧಿನಿ
ಪದ್ಮಮಾಲಿನಿ ಪದ್ಮಿನೀ
ಪದ್ಮಲೋಚನೆ ಪದ್ಮವಾಸಿನಿ
ಪದ್ಮನಾಭ ಕುಟುಂಬಿನಿ ೨
ದೋಷರಹಿತ ಶ್ರೀ
ಶೇಷ ಶೈಲನಿವಾಸ ಮನೋಲ್ಲಾಸಿನಿ
ಪೋಷಿಸೆನ್ನ ನಿ
ರ್ದೋಷಿ ಯೆನ್ನಿಸು ನಿತ್ಯನಿರ್ಮಲ ರೂಪಿಣಿ ೩

೧೧೩
ಜಯಮಂಗಳಂ ನಿತ್ಯ ಶುಭ ಮಂಗಳಂ ಪ.
ಸರಸೀರುಹಾಕ್ಷಾಯ ದುರುಳಮದಶಿಕ್ಷಾಯ
ಸುರಮೌನಿ ಪಕ್ಷಾಯಾಧೋಕ್ಷಜಾಯ
ಶರಣನ ರಕ್ಷಾಯ ಕರುಣಾಕಟಾಕ್ಷಾಯ
ಧರಣಿಜಾರಮಣಾಯ ರಾಮಭದ್ರಾಯ ೧
ದಶರಥಾತ್ಮಜಾತಂಗೆ ಕೌಶಿಕ ಕ್ರತು ಪಾಲಕಗೆ
ಶಶಿವದನೆ ಜಾನಕಿಯ ಕೈಪಿಡಿದವಂಗೆ
ಶಶಿಮೌಳಿಚಾಪಮಂ ಮುರಿದ ಅಸಮಬಲನಿಗೆ
ದಶಕಂಠಕಾಲಂಗೆ ರಾಘವೇಂದ್ರನಿಗೇ ೨
ಕಾಕುತ್ಸ್ಥಕುಲಮಂಡನಗೆ ಕಮಲಾಪ್ತ ಕುಲದೀಪಂಗೆ
ಸಾಕೇತನಗರಾಧಿಪಗೆ ಲೋಕೇಶನಿಗೆ
ಪಾಕಶಾಸನಮುಖ್ಯ ನಾಕಪೂಜಿತಚರಣ
ವೈಕುಂಠನಾಯಕ ಶ್ರೀ ಶೇಷಗಿರಿವರಗೆ ೩

೧೮
ಜಯಮಂಗಳಂ ನಿತ್ಯ ಶುಭಮಂಗಳಂ ಪ.
ಹೃದಯವೆಂಬೀ ದಿವ್ಯ ಪದ್ಮಪೀಠದ ಮೇಲೆ
ಪದ್ಮಾಕ್ಷಿ ಪದ್ಮೆಯನು ಕುಳ್ಳಿರಿಸಿ
ಸದಮಲ ಭಾವದಿಂ ಮಧುಕೈಟಭಾಂತಕನ
ಹೃದಯೇಶ್ವರಿಯ ಸೇವೆಗೈವೆ ೧
ಜ್ಞಾನವೆಂಬುವ ದಿವ್ಯ ಜ್ಯೋತಿಯಂ ಮುಂದಿರಿಸಿ
ಧ್ಯಾನವೆಂಬುವ ನಿಲುವುಗನ್ನಡಿಯ ನಿಲಿಸಿ
ದಾನವಾಂತಕ ರಾಮಚಂದ್ರಮನ ಧ್ಯಾನಿಸುತ
ಜಾನಕಿಯ ಬಲಗೊಂಬೆ ಭರದಿ ೨
ನೇಮನಿಷ್ಠೆಯ ಶುದ್ಧ ಹೇಮಕಲಶದಿ
ಮತ್ತೆ ಭಕ್ತಿರಸದ ಪನ್ನೀರ ತುಂಬಿ
ನಾಮಸಂಕೀರ್ತನೆಯ ನಾರಿಕೇಳವ ಬೆರಸಿ
ಶ್ರೀನಾರಿಗಭಿಷೇಕವ ಗೈವೆ ೩
ಚಿತ್ತಶುದ್ಧಿಯ ಶುಭ್ರವಸ್ತ್ರದಿ ನೇವರಿಸಿ
ಸತ್ವಗುಣದ ಪೀತಾಂಬರವನುಡಿಸಿ
ಸತ್ಯವ್ರತನೆಂಬ ರತ್ನ ಕಂಚುಕ ತೊಡಿಸಿ
ಚಿತ್ತಜನ ಜನನಿಯರ ನೋಡಿ ನಲಿವೆ ೪
ಅಂತಃಕರಣ ಶುದ್ಧಿಯ ಅರಿಸಿನವನು ಪೂಸಿ
ಶಾಂತಗುಣದ ತಿಲಕ ತಿದ್ದಿ
ನಂದಮಲ್ಲಿಗೆಯ ದಂಡೆಯನು ಮುಡಿಸುತ್ತ
ಇಂದ್ರಿಯ ನಿಗ್ರಹದ ಗಂಧ ಹಚ್ಚುವೆನು ೫
ಪಂಚಭೂತಾತ್ಮಕದ ಛತ್ರಿಯನು ಪಿಡಿದೆತ್ತಿ
ಪಂಚನಾದಗಳೆಂಬ ವಾದ್ಯಗಳ ನುಡಿಸಿ
ಪಂಚೇಂದ್ರಿಯಂಗಳೇ ಪಂಚಭಕ್ಷ್ಯಗಳಾಗಿನಿ
ರ್ವಂಚನೆಯಿಂದಾರೋಗಿಸೆಂಬೆ ೬
ರೇಚಕವೆಂಬ ವ್ಯಜನದಿಂ ಬೀಸಿ
ತಾರಕ ಚಾಮರವ ಪಿಡಿದು
ಕುಂಭಕವೆಂಬ ಪನ್ನೀರಿನಿಂ ತೋಯ್ಸಿ
ತಾರಕ ಬ್ರಹ್ಮನರಸಿಯಂ ಸೇವಿಸುವೆ ೭
ಭೋಗಭಾಗ್ಯವನೀವ ಭಾಗ್ಯಲಕ್ಷ್ಮಿಗೆ
ವೈರಾಗ್ಯದ ತಟ್ಟೆಯನು ಪಿಡಿದು
ಭಾವದೀವಿಗೆಯ ಕರ್ಪೂರದಾರಿತಯೆತ್ತಿ
ಬಾಗಿವಂದಿಪೆ ತಾಯೆ ಕರುಣಿಸೆಂದು ೮
ವರದಾತೆ ಭೂಜಾತೆ ಸುವಿನೀತೆ ಸುವ್ರತೆ
ವರಶೇಷಗಿರಿವಾಸದಯಿತೆ ಮಹಿತೇ
ಸೆರಗೊಡ್ಡಿ ಬೇಡುವೆನು ಕರಪಿಡಿದು ಸಲಹೆಂದು
ನೆರೆನಂಬಿ ನೆನೆನೆನೆದು ನಲಿವೆನಿಂದು ೯

೫೬
ಜಯಮಂಗಳಂ ಶ್ರೀ ರಘುಕುಲಾಬ್ಧಿಚಂದ್ರ ಭವತು ತೇ
ಶುಭಮಂಗಳಂ ಶ್ರೀರಘುಕುಲಾಬ್ದಿಚಂದ್ರ ಪ.
ಸುರರಿಪುಶಮನ | ಕ್ಷೀರಶರಧಿಶಯನಾ ಕರಿವರನಮನ
ಮುರಹರ ಶ್ರೀ | ಸುರವೈರಿಭಯಂಕರ ಮಾವರಶ್ರೀ |
ಸರಸಿಜಾಕ್ಷ ಸಾಧುಪಕ್ಷ ದುರಳಶಿಕ್ಷ ಶ್ರೀಕಟಾಕ್ಷ ೧
ಭವನುತ ಚರಣ ಭಾರ್ಗವಮದ ಹರಣ
ಭುವಿರ ಜಾರಮಣ ಭಯಹರ | ಪವನಾತ್ಮಜ
ಸಂಸೇವಿತ ಪದಶ್ರೀ | ಕವಿಕುಲಾನ್ವಯಲಲಾಮ
ಕವಿಜನಾಳಿಪೂರ್ಣಕಾಮ ೨
ದಾಸ ಹೃದಯಾವಾಸ | ದಶಶಿರಧ್ವಂಸ ಶಶಿನಿಭಹಾಸ |
ದಶರಥಸುತ | ಶ್ರೀ ವಸುಮತೀಶ ಕುಲವಿಭೂಷ |
ಶೇಷಶೈಲ ಶಿಖರಾವಾಸ ಜಯಮಂಗಳಂ೩

೫೮
ಜಯರಾಮಾ ಜಯರಾಮ ರಘುವಂಶಾಬ್ಧಿ ಸೋಮ ಪ.
ವೈದೇಹಿ ಮನೋಹರ ವೇದವೇದ್ಯ ಶ್ರೀಕರ
ಸಾಧುಜನ ಸುಖಕರ ಮಾಧವ ಮುರಹರ
ಜಯಶೌರೇ ದಿತಿಜಾರೇ ಪರಿಪಾಹಿ ನೃಹರೇ ೧
ನೀರೇರುಹಲೋಚನ ಆನಂದ ಮಯ ಸದನ
ವಾರಾಶಿಬಂಧನ ಅಕ್ಷಯಸುವಚನ
ಸ್ಮರತಾತಾ ವರದಾತಾ ರಮಾಸಮೇತ ೨
ಶೇಷಾದ್ರಿನಿಕೇತನ ಆಶ್ರಿತಪರಿಪಾಲನ
ಕ್ಲೇಶಪಾಶವಿಮೋಚನ ವಾಸವಾರ್ಚಿತಚರಣ
ಶ್ರೀಸತ್ಯಭಾಮಾಧವ ಜಯದೇವಾದ್ಭುತಪ್ರಭಾವ ೩

೧೨
ಜಲಜಾಪ್ತ ಸಂಕಾಶ ಲಲಿತ ಸನ್ರ‍ಮದುಹಾಸ
ಕಲಿಕಲುಷ ವಿಧ್ವಂಸ ಪರಮಹಂಸ
ಶರಣಜನ ಸಂರಕ್ಷ ಸುರವಿರೋಧಿ ವಿಪಕ್ಷ
ಧರ್ಮರಕ್ಷಣ ದೀಕ್ಷ ಶ್ರೀಕಟಾಕ್ಷ
ಸರಸಿಜಾಯತನಯನ ಶರದಿಂದುನಿಭವದನ
ದುರುಳ ಮ್ಲೇಂಛನಿಹನನ ತುರಗವದನ
ಧುರಧೀರ ಶ್ರುತಿಸಾರ ಸುರುಚಿರಾಂಗದ ಹೀರ
ವರಹಾರ ಕಂಧರ ಭಯವಿದೂರ
ಕಮಲಾಸನಾದಿ ಸಂಸೇವ್ಯಮಾನ
ಅಮರಸಂಕುಲತೋಷ ದಿವ್ಯವೇಷ
ವಿಮಲ ಶೇಷಾದ್ರೀಶ ಶ್ರೀನಿವಾಸ
ಮಮ ದೇವ ಪರಿಪಾಹಿ ಪರವಾಸುದೇವ

೬೬
ತರುಣಿಯರೆಲ್ಲರು ಬಾರೆಂದು ಕರೆವರು
ವರಮಣಿಪೀಠಕೆ ಮುದದಿ ಪ.
ಕ್ಷೀರವಾರಿಧಿಜಾತೆ ಚಾರುಸುಂದರಗಾತ್ರೆ ಮಾರಜನಕದಯಿತೆ
ಸಾರಸಾನನೆ ಮದ ವಾರಣಗಮನೆ ನಿನ್ನಅ.ಪ
ಇಂದಿರಾದೇವಿ ಬಾ, ಇಂದು ಸೋದರಿ ಬಾ
ಕುಂದಣದ ಹಸೆಗೆ
ಮಂದಹಾಸವ ತೋರಿ ಬಂದೆಮ್ಮ ಮನೆಯೊಳೆಂದೆಂದಿಗು
ಕುಂದದಾನಂದವ ಬೀರೆಂದು ೧
ನಾಡಿಗೊಡೆಯ ಗರುಡಾರೂಢನೆಂದೆನಿಸಿದ
ಗಾಡಿಕಾರನಾ ಕೃಷ್ಣನ
ಮಡದಿರನ್ನೆಯೆ ನಿನ್ನ ಪೊಡಮಟ್ಟು ಬೇಡುವೆ
ದೃಢಭಕ್ತರ ಕೈ ಬಿಡದಾಧರಿಸುತ್ತ ೨
ಸುರನರಪೂಜಿತ ಚರಣಸರೋಜದಿ
ನಿರುತಸೇವಿಪ ವರವ
ಕರುಣಿಸೆಂದೆನುತಲಿ ಕರಮುಗಿದೆರೆವೆನು
ವರಶೇಷಗಿರಿವಾಸನರಸಿ ನೀನಲಿದಿಂದು ೩

೫೯
ತಾಳು ತಾಳೆಲೊ ಕೋಪ ಜಾಲಮಾಡದೆ ಭೂಪ
ಕೇಳಿಕೊಂಬೆನು ನಿನ್ನ ಕಾಲಪಿಡಿವೆನೊ ಪ.
ಫಾಲಲೋಚನನುತ ಶ್ರೀಲೋಲ ನಿನ್ನನೇ
ಕೇಳಿಕೊಂಬೆನು ಮಾತಕೇಳೋ ಕಾಳುಮಾಡದೆ ಮಾತ ೧
ದುರುಳತನದಲಿ ನಿನ್ನ ತೆರೆದಕಣ್ಣಳನೆಂದು ಜರಿದು ಪೇಳಿದೆನೋ
ತಿರುಗಿ ನಾ ನಿನ್ನ ಗಿರಿಯ ಬೆನ್ನೊಳು ಪೊತ್ತು
ಮೆರೆಯುವ ದಡ್ಡನೆಂದೊರೆದ ಕಾರಣದಿಂದ ೨
ಕೋರೆಯೊಳ್ ಕೊರೆದು ಕೊನ್ನಾರಿಗೆಡ್ಡೆಯ ತಿಂದು
ಚೀರಿಕಂಬವನೊಡೆದು ಬಂದು ಈರೇಳು ಲೋಕಂಗ
ಳೀರಡಿ ಮಾಡಿದೆ ಘೋರವಿಕ್ರಮನೆಂದು ದೂರಿದೆನದರಿಂದ೩
ಹೆತ್ತತಾಯಿಯ ಕೊಂದು ಮತ್ತೆ ಕಪಿಗಳ ಕೂಡಿ
ಸುತ್ತುತ್ತಲಡವಿಯೊಳು ಕತ್ತಲೆಯೊಳು ನಿಂತು ಗೋಪಿಯರ
ಚಿತ್ತವಸೆರೆಗೈದ ಮತ್ತನೆಂದೆನಲಾಗಿ ೪
ಉತ್ತಮಸತಿಯರ ಚಿತ್ತವ ಕಲಕಿದ ಮತ್ತನೆಂದಾಡಿದೆನೋ
ಮತ್ತೆ ಕುದುರೆಯನೇರಿ ಕತ್ತಿಯ ಪಿಡಿದೆತ್ತಿ
ಸುತ್ತುವನಿವನುನ್ಮತ್ತನೆಂದುದರಿಂದ ೫
ಪಿತ್ತವು ತಲೆಗೇರಿ ಮತ್ತೆ ಮತ್ತೆ ನಾನಿನ್ನ
ಒತ್ತೊತ್ತಿಜರಿದೆನೊ ಚಿತ್ತಜಪಿತನೆ ಮತ್ತೊಮ್ಮೆ ಬೇಡುವೆ
ಗತಿನೀನೆ ನಮಗೆಂದು ಪತಿಕರಿಸೆನ್ನಪರಾಧವ ಮನ್ನಿಸಿ ೬
ಇಂದುನಾಂ ಶಿಶುಪಾಲನಂದದೆ ನಿನ್ನನಿಂದಿಸಿ ನಲಿದಾಡಿದೆನೊ
ಕಂದನಿವಗೈದ ಕುಂದುಗಳೆಣಿಸದೆ
ತಂದೆ ಸಲಹಯ್ಯ ಶ್ರೀ ಶೇಷಗಿರಿವರ ೭

೬೭
ದಧಿಚೋರ ನೀ ಮಾಯಕಾರ
ಶ್ರೀಮಾನಿನೀವರ ನಂದಕುಮಾರ ಪ.
ರಾಜರಾಜೇಶ್ವರ ರಾಜ್ಯಾಭಿಷೇಕವ
ಮೂಜಗವರಿಯೇ ಸುರರಾಜನಿಂ ಕೈಗೊಂಡ ೧
ಅಂದೆ ತಿಳಿದೆನು ಸಿಂಧುಶಯನ ನೀನು
ಇಂದಿರೆಯೇ ಭೀಷ್ಮಕನಂದನೆಯೆ ತಾನು ೨
ದೇವಾದಿದೇವ ವಸುದೇವನಂದನ ವಾಸುದೇವ
ದೇವಕೀಸುತ ಭಾವಜತಾತ ೩
ನರಲೀಲಾ ವೈಭವ ಧರೆಗೆಲ್ಲಾ ತೋರುವ
ವರಶೇಷಗಿರೀಧವ ಕರುಣಾಳು ಮಾಧವ ೪

೨೭
ದೃಢಚಿತ್ತದೊಳಗೆನ್ನ ಒಡೆಯನೀತಗೆ ಮುನ್ನ
ಪಡಿಯೆನಿಪರಿನ್ನುಂಟೆ ಪೊಡವಿಯಲ್ಲಿ
ಜನವಾರ್ತೆಯನೆ ಕೇಳಿ ವನಿತೆಯೊಳು ಖತಿತಾಳಿ
ಇನಿತು ಕಾಡಿದ ಚಾಳಿಯೊರೆವೆ ಕೇಳಿ
ಮಡಿವಳನ ನುಡಿಗಾಗಿ ಕಡುಮೂರ್ಖ ತಾನಾಗಿ
ಅಡವಿಗಟ್ಟುವರೇನೆ ಮಡದಿಯನ್ನೆ
ಧರ್ಮಪತ್ನಿಯುಮಂತು ಪೂರ್ಣಗರ್ಭವನಾಂತ
ಅರ್ಧಾಂಗಿಯನ್ನುಳಿದ ನಿರ್ದಯಾತ್ಮ
ದಯೆಯೆಂಬುದಿವನಲ್ಲಿ ತೋರದಿಲ್ಲಿ
ಪ್ರಿಯರಾರು ಮತ್ತಿವಗೆ ಧಾತ್ರಿಯಲ್ಲಿ
ಭಯವಿಲ್ಲ ಮಾತಿನೊಳು ನಯವದಿಲ್ಲ
ಜಯಶೇಷಗಿರಿವಾಸನೆನ್ನನಲ್ಲ

೬೦
ದೇವದೇವನೆ ಓವುದೆಮ್ಮನು ಶ್ರೀವಧೂವರನೇ
ಸಾವಧಾನದಿ ಭಾವಿಸೈ ವಸುದೇವ ಕುವರನೇ ಪ.
ನೀಲಮೇಘಶ್ಯಾಮ ರಮಾಲೋಲ ಪಾಲಿಸೈ
ಬಾಲಗೋಕುಲಬಾಲ ಶ್ರೀ ವನಮಾಲ ಪಾಲಿಸೈ ೧
ಭೋಗಿಶಯನ ಯೋಗಗಮ್ಯ ಸಾಗರಸ್ಥಿತ
ಬಾಗಿ ನಮಿಪೆವು ರಾಗದಿಂ ಪೊರೆ ವಾಗಗೋಚರ ೨
ಘಳಿಲನೈತಹುದಿಳೆಯ ರಮಣ ತಳುವ ಬೇಡುವೈ
ಎಳೆಯರಾವು ಚಲವನರಿಯೆವು ಒಲವನೆರೆವೆವೈ೩
ದೇಶದೇಳ್ಗೆಯೊಳಾಸೆಯಿಂದಿಹ ದಾಸರೆಂದು ನೀಂ
ಲೇಸ ಪಾಲಿಸು ಆಶೆ ಸಲ್ಲಿಸು ಶೇಷಗಿರೀಶನೇ೪

೬೨
ದೇವಾದಿದೇವ ಸದಾ ಮಂಗಳಂ ಪ
ಭಾವಜಾರಿವಿನುತ ಮಹಿತ ದಯಿತಾ ಸಮೇತಅ.ಪ
ಶ್ರೀಭೂನೀಳಾ ಸಮೇತ ಸತತ ವಿಭವಯುತ
ತ್ರಿಭುವನ ಸುಖದಾತ ಶುಭಚರಿತ ೧
ರಾಜೇಂದ್ರಪುರಿಧಾಮ ರಘುರಾಮ ಘನಶ್ಯಾಮ
ರಾಜಶೇಖರನುತನಾಮ ಜಗದಭಿರಾಮ ಪಾವನಗುಣಧಾಮ೨

೬೧
ದೇವಾದಿದೇವನೇ ನಮೋ ನಮೋ
ಪರವಾಸುದೇವನೇ ನಮೋ ನಮೋ ಪ.
ನಿಗಮೋದ್ಧಾರನೇ ನಮೋ ನಮೋ
ನಗಧರನೇ ನಮೋ ನಮೋ
ಜಗದೋದ್ಧಾರ ನಮೋ
ಜಗತ್ಪತಿವರಾಹ ನಮೋ ನಮೋ ೧
ನೃಪಂಚಮುಖಸ್ವರೂಪ ನಮೋ ನಮೋ
ಕಪಟವಟುವಾಮನ ನಮೋ ನಮೋ
ನೃಪತಿ ಕುಲಕುಠಾರ ನಮೋ
ತಪನಕುಲತಿಲಕ ನಮೋ ನಮೋ ೨
ನವನೀತಚೋರ ನಮೋ ನಮೋ
ಭವಬಂಧಮೋಚನ ನಮೋ ನಮೋ
ನವಮೋಹನಾಂಗ ನಮೋ
ವಸುದೇವತನಯ ನಮೋ ನಮೋ ೩
ಬುದ್ಧ ಸ್ವರೂಪ ನಮೋ ನಮೋ
ಸಿದ್ಧಸಂಕಲ್ಪ ನಮೋ ನಮೋ
ಕ್ಷುದ್ರಮ್ಲೇಂಛಹನನ ನಮೋ
ಚಿದ್ವಿಲಾಸ ನಮೋ ನಮೋ ೪
ಸತ್ಯಕಾಮ ವೈಕುಂಠಧಾಮ ನಮೋ ನಮೋ
ನಿತ್ಯತೃಪ್ತ ನಿರ್ಮಲಾತ್ಮ ನಮೋ ನಮೋ
ಕರ್ತೃಶೇಷಗಿರೀಶ ನಮೋ ನಮೋ
ಸತ್ಯಭಾಮಾರಮಾ ನಮೋ ನಮೋ ೫

೧೯
ಧನ್ಯತೆಯಾಂತೆನಿಂದು ದೇವಿಯಕಂಡು
ಮಾನ್ಯತೆ ಪಡೆವೆನೆಂದು ಪ.
ಚಿನ್ಮಯರೂಪನ ಚೆನ್ನೆ ಲಕ್ಷ್ಮಿಯ ಸಂ
ಪನ್ನ ಮೂರ್ತಿಯ ಕಂಡಿನ್ನೆನಗೆಣೆಯಾರೆನೆ ಅ.ಪ.
ನಾಗವೇಣಿಯರೆಲ್ಲರು ಪಾಡುತ ಶಿರ
ಬಾಗಿ ವಂದಿಸುತಿರಲು
ರಾಗದಿಂ ನಲವೇರೆ ಭೋಗಭಾಗ್ಯವನೀವ
ಯೋಗೇಶ್ವರಿಯ ದಯಾಸಾಗರಿಯ ಕಂಡು ೧
ಐದೆಯರತಿಮುದದಿ ವೈದೇಹಿಯೆ ಯೆಮ್ಮ
ಆದರ್ಶ ಮಹಿಳೆಯೆಂದು
ಆದಿಶಕ್ತಿಯೇ ಈ ಶ್ರೀದೇವಿ ನಿಜವೆಂದು
ಆದರಿಸುತ್ತಿರಲಾಮೋದವಾಂತುದರಿಂ ೨
ಅರಿದಾವುದೆಮಗಿಳೆಯೊಳು ಶೇಷಗಿರೀಶನ
ಅರಸಿಯೆಮ್ಮವಳಾದಳು
ಸಿರಿಮೆರೆಯುತಲಿರೆ ಪರದೈವ ಮುಂದಿರೆ
ದುರಿತರೋಗವು ದೂರ ಸರಿದುದು ಮನವಾರ ೩

೪೨
ಧುರಧೀರನಿವನೆಂದು ನೆರೆವೆರೆಯಲೈತಂದು
ಮರುಳಾದೆ ನಾನಿಂದು ಮುಂದೆ ನಿಂದು
ನಾರ್ವಟ್ಟೆಯುಟ್ಟಿರುವ ಅರಣ್ಯದೊಳಗಲೆವ
ನಾರುಬೇರನೆ ಮೆಲುವ ಅರರೆ ಚಲುವ
ಜನಪನಂದನನೆನಿಸಿ ಮುನಿಜನರ ತಾವೆರಸಿ
ವನವನದಿ ಸಂಚರಿಸುತಿರುವ ಸಹಿಸಿ
ಲಲನೆಯನು ಕರೆತರಲು ಪಲವು ಕಪಿಗಳನೆರೆದು
ಜಲಧಿಯನು ಬಂಧಿಸಿದನಲಘುಬಲನೆ
ಇನಿತು ಸಾಹಸವುಳ್ಳ ಸುಗುಣನಿಧಿಗೆ
ಮನವೊಲಿದು ನಾ ಬಂದು ಮೋಸಪೋಗೆ
ಮಿಣುಕಿ ಫಲವೇನಿನ್ನು ಮಿಂಚಿದುದಕೆ
ಧಣಿಯೆನಗೆ ಶೇಷಾದ್ರಿವರನೆ ಸಾಕೆ

ಲೋಕನೀತಿ
೧೦೨
ನಂಬಲಾಗದು ಮಾನವ ಭ್ರಾಂತಿಸುಖವ ಪ.
ನಂಬಲಾಗದು ಮಣ್ಣಬೊಂಬೆಯಂದದ ದೇಹ
ಡಂಭ ಮೋಹಗಳಿಂದ ಮದಿಸುತ ಹಂಬಲಕ್ಕೀಡಾಗುವಂತಿದ ಅ.ಪ.
ನೀರಮೇಲಣಗುಳ್ಳೆ ತೋರಿಹಾರುವ ಬಗೆ
ತೋರುತ್ತಲಳಿವ ಶರೀರದೋಳ್ ಮರುಳಾಗಿ ಪರಿಪರಿ ಭೋಗಂಗಳ
ನಾರೈಸುತ ಸ್ಥಿರವೆಂದು ಭಾವಿಸುತ ಧಾರುಣವಾದ
ಮಾರನಾಟಿದೊಳಾಡುತ ನಲಿಯುತಲಿಕೆ
ಸಾರಿಬರೆ ತನಗಪಮೃತ್ಯುಕಾಲವು
ಮೀರಿದುಬ್ಬುಸವಾಂತು ಮಿಡುಹುತ
ಬೋರಿಡುತ ಬೊಬ್ಬರಿಸಿ ತರಳರ
ಸಾರಿಕೂಗುವ ಕಾಯಧಿರವನು ೧
ನಾನು ನನ್ನದಿದೆಂದಭಿಮಾನದಿಂ ಮತಿಗೆಟ್ಟು
ಜ್ಞಾನವಿಲ್ಲದೆ ಭುವಿಯೊಳ್ ದೀನನಾಗಿ
ಶ್ವಾನನಂದದಿ ತಿರುಗಿ ಗತಿಗಾಣದೆ
ನಾನಾಪರಿಯಿಂ ಸೊರಗಿ ನರಳುತಿಹ
ಹೀನವೆನ್ನಿಪ ಈ ಭ್ರಾಂತಿಜೀವನವನ್ನು
ನೀ ನಿಜವೆಂದು ನಂಬದೆ
ಜ್ಞಾನಿಗಳನಾಶ್ರಯಿಸಿ ಆತ್ಮ
ಜ್ಞಾನ ಲಾಭದಿ ಮನುಜನೆನ್ನಿಸೆ ೨
ಕಾಮಕ್ರೋಧವ ಬಿಟ್ಟು ರಾಮನೊಳ್ ಮನವಿಟ್ಟು
ತಾಮಸಬುದ್ಧಿಯನೀಡಾಡುತೆ ಮತ್ತೆ
ಶಮದಮಾದಿಗಳನಭ್ಯಸಿಸುತೆ
ಕ್ಷಮೆಯನಾಶ್ರಯಿಸುತೆ ಸುಖದುಃಖದೊಳ್
ಸಮಭಾವದಿಂದಿರುತ ಅಮಲನೆನ್ನಿಸುತ
ಕಮಲನಯನ ಶೇಷಾದ್ರಿನಾಥನ |
ವಿಮಲ ಪದದೊಳೈಕ್ಯನಾಗಲು
ಅಮಭಕ್ತಿಯೆ ಮುಖ್ಯ ಸಾಧನ ನಮಗೆ ಈ ಭ್ರಾಂತಿ ಸಲ್ಲದು ೩


ನಕ್ತಂಚರವಿದಾರಿ ಭಕ್ತವತ್ಸಲಶೌರಿ
ವ್ಯಕ್ತಾವ್ಯಕ್ತನಮೋ ವಿಶ್ವಕರ್ತ
ಪಾಹಿ ತ್ರೈವಿಕ್ರಮ ಪರಮಪಾವನನಾಮ
ಅಹಿತಸಂಕುಲಭೀಮ ಪೂರ್ಣಕಾಮ
ಬಲಿಮಂದಿರದ್ವಾರ ತಲನಿಲಯ ಶ್ರೀಧರ
ಜಲಧಿಸಮಗಂಭೀರ ವರದ ಧೀರ
ಪಾಕಶಾಸನ ಪಕ್ಷ ನಾಕಾರಿ ಕುಲಶಿಕ್ಷ
ಶ್ರೀಕಲಾಂಕಿತವಕ್ಷ ಶರಣ ರಕ್ಷ
ಪಂಕಜಾಸನ ಪೂಜಿತಾಂಘ್ರಿಯುಗಳ
ಪಂಕಜೇಕ್ಷಣ ಪಾಹಿ ಪದ್ಮನಾಭ
ಓಂಕಾರ ರೂಪ ಶ್ರೀಶೈಲ[ಗಿರಿ]ಧಾಮ
ಕಿಂಕರಾಭರಣ ಭೋ ಭದ್ರಧಾಮ

೧೯
ನಗಮಂ ನಖಾಗ್ರದಿಂ ನೆಗಪಿ ಸಮ್ಮೋದದಿಂ
ಜಗಕೆ ಚಿತ್ರವ ತೋರ್ದ ಜಗದಧೀಶ
ಗಾರಡಿಗತನದಿಂದ ಭೂರಿ ಸಂಭ್ರಮವಾಂತು
ಕ್ರೂರಫಣಿಗರ್ವಮಂ ಭಂಗಗೈದು
ಶಿಶುರೂಪದಿಂದಮೆ ನಿಶಿಚರರ ಸದೆವಡೆದ
ವಸುದೇವನಂದನಗೆ ವಿಶ್ವಪಿತಗೆ
ಅಣುರೇಣು ತೃಣಕಾಷ್ಟ ಪೂರ್ಣನಾಗಿರುತಿರ್ಪ
ಪ್ರಾಣಕಾಂತಗೆ ನಾನು ಮಣಿವೆ ಮುನ್ನ
ಮುತ್ತಿನಾರತಿಯೆತ್ತಿ ನಲಿವೆನಿಂದು
ಸತ್ಯವಿಕ್ರಮನನ್ನು ಸಾರಿಬಂದು
ಭಕ್ತಿಭಾವದಿ ನಮಿಪೆ ನುತಿಸಿ ಮನದಿ
ಕರ್ತೃಶೇಷಗಿರೀಶನೆನುವೆ ಮುದದಿ

೬೩
ನಮಿಸುವೆನಾಂ ಶ್ರೀ ಹಯವದನಾ ನಿನ್ನ ನಮಿಸುವೆನಾಂ ಪ.
ಕಾಮಜನಕ ಸದಾಶಿವಸನ್ನುತ ಕಾಮಿತ ಶುಭಫಲದಾ ವರದಾ ಅ.ಪ.
ಸಾರಸ ಸಖ ನಿಭ ವದನಾ ಸರಸಿಜನಯನಾ ಶ್ರೀನಾರೀಮಣಿ ಸದನ
ಸಾರಸಭವನುತ ಚರಣ ಮುರಮದ ಹರಣ
ಘೋರತರ ಭವರೋಗ ನಿವಾರಣ ಭೂರಿ ಕರುಣಾರಸ
ಪೂರಿತ ಲೋಚನ ಶರಣಾಗತ ಜನಾರ್ತಿ ಹರಣ
ಚಾರುತರ ಸುಜ್ಞಾನದಾಯಕ ಧೀರ ಗುಣ ಗಂ
ಭೀರ ಸುಮನೋಹರ ಶ್ರೀಹಯವದನಾ ೧
ಕೌಸ್ತುಭ ಮಣಿಹಾರ ಪುಸ್ತಕಧರ ಶ್ರೀಕರ ಶ್ರೀ
ವತ್ಸಾಂಕಿತ ವಕ್ಷ ಸುಂದರ ಪಕ್ಷಿಗಮನ ಪುರು
ಷೋತ್ತಮ ನಮಪೂರ್ಣಕಾಮ
ಭಕ್ತಿವರ್ಧನ ನಿಲಯಾಪ್ರಮೇಯ
ಭಕ್ತಿ ಜ್ಞಾನ ಪ್ರದಾಯಕ ಮುಕ್ತಿ ಮಾರ್ಗ ಪ್ರದರ್ಶಕ
ನಕ್ತÀಂ ಚರರಾಜತಮೋಮಿಹಿರ ಶ್ರೀಹಯಾಸ್ಯ ೨
ಶ್ರೀಶ ಜನಾರ್ದನ ಛಿದ್ವಿಲಾಸ ಕಮನೀಯವೇಷ
ಶ್ರೀ ಶೇಷಾದ್ರಿ ನಿವಾಸ ದಾಸಜನ ಹೃತ್ಪದ್ಮ ವಿ
ಕಾಸ ಕವಿ ಮನೋಲ್ಲಾಸ ಭಾಸ್ಕರಕೋಟಿ ದ್ಯುತಿಭಾಸ
ಕೇಶವ ನಾರಾಯಣ ಜಯಜಯವೆನ್ನುತ
ಮೀಸಲಾಗಿ ಪಾಡುವೆ ಪೊರೆ ದಾತಾ
ಹಯವದನಾ ನಿನ್ನ ನಮಿಸುವೆನಾ ೩


ನಮಿಸುವೇಂ ಜಗದಂಬೆ ನಿನ್ನಂ ಮುದದಿಂ
ದೃಢದಿಂ ಮನವಾರೆ ನಾಂ ಪ
ಉದಯಾದ್ರಿಯೊಳುದಿಸಿದ ನಾರೈ ಮನಿದೆ
ಬಂದೇಂ ಬಳಿಸಂದೇಂ ಪದುಳದಿ ನಿಂದೇಂ ಅ.ಪ
ಮೂಡಿದ ಕತ್ತಲೆಯೋಡಿಸಿ ಭರದಿಂ
ನೋಡೆಚಿರಂ, ನಾಡೆಜಗಂ ಬೆಳಗಲಿ ಬೆಳಕಿಂ ೧
ಭಾಮಿನಿಯರು ಸದ್ಭಾವನೆಯಿಂದಲಿ
ದೇವಿಯ ಸಂಸೇವಿಸಿವೊಲ್ ತಾ ವರವಂ೨
ಶೇಷಗಿರೀಶನ ದಾಸರು ನಾವೆನೆ
ಭಾಷಾನಿಧಿಯಂ ಬಲಗೊಂಡಾಂ ಬೇಡುತ ನಲವಿಂ೩

ಹಿಂದೆ ಅಜಾಮಿಳನೆಂಬ ಬ್ರಾಹ್ಮಣನು
೨೦
ನಮಿಸುವೇಂ ಜಗನ್ಮಾತೆ ನಿನ್ನಂ ಭರದಿಂ
ದ ಮುದದಿಂದ ಮನವಾರೆ ನಾಂ ಪ.
ಕಾಮಜನಕನ ಪ್ರೇಮದ ರಾಣಿಯೆ
ಭೂಮಿಸುತೇ ಶ್ರೀಮಹಿತೆ ಕೋಮಲಗಾತ್ರೆ ೧
ಗಾನವಿನೋದಿನಿ ದಾನವಭಂಜಿನಿ
ಶ್ರೀನಾರಿ ಮೈದೋರಿ ಪೊರೆ ದಯೆತೋರಿ ೨
ದೋಷರಹಿತ ಶ್ರೀ ಶೇಷಗಿರೀಶನ
ದಾಸರ ಸಂತೋಷದಿ ನೀಂ ಪೋಷಿಪುದೆನ್ನುತೆ ೩

೨೧
ನಲಿದೈತಾರೆಂಬೆ ಹೇ ಜಗದಂಬೆ ನಾಂ ಬೇಡಿಕೊಂಬೆ ಪ.
ಒಲಿದೈತರೆ ನೀ ನಲವೇರುತ ನಾ
ನಲಿದಾರಾಧಿಪೆ ಎನ್ನೊಲಿದಂಬೇ ಅ.ಪ.
ಸಿಂಧುನಂದನೆ ಅರವಿಂದನಯನೆ ಇಂದುಸೋದರಿ
ಸಿಂಧುರಗಮನೆ ಸುಗುಣಾಭರಣೆ
ವಂದಿಪೆ ಶರದಿಂದುವದನೆ ಸುರ ವಂದಿತಚರಣೆ ೧
ಅಂದಿಗೆ ಕಾಲುಂಗುರ ಘಲಿರೆನೆ
ಇಂದಿರೆ ತವಪದದ್ವಂದ್ವವ ತೋರಿ
ವಂದಿಸುವೆನ್ನೀಮಂದಿರ ಮಧ್ಯದಿ
ಎಂದೆಂದಿಗು ನೆಲೆಸಿರು ನಂದಿನೀ ಜನನೀ ೨
ಕ್ಷೀರಾಂಬುಧಿ ತನಯೆ ಸೌಭಾಗ್ಯದ ನಿಧಿಯೆ
ಕ್ಷೀರಾಬ್ಧಿಶಯನನ ಜಾಯೆ
ಸಾರಸನಿಲಯೆ ವಂದಿಪೆ ತಾಯೆ
ಬಾರೆಂದು ಕೈಪಿಡಿದೆಮ್ಮನು ಕಾಯಿ ೩
ಸರಸಿಜಾಸನೆ ಸ್ಮರಮುಖ ಜನನಿಯೆ
ಸುರನರಪೂಜಿತೆ ನಾರದ ಗೇಯೆ
ಸಾರಗುಣಭರಿತೆ ಸರಸಿಜಪಾಣಿಯೆ
ಶ್ರೀರಮಣೀ ಪರಿಪಾಲಿಸು ಜನನಿ ೪
ಸೆರಗೊಡ್ಡಿ ಬೇಡುವೆ ಶ್ರೀನಾರೀ ನಿನ್ನೆಡೆ ಸಾರೀ
ಪರತರ ಸುಖ ಸಂಪದವನು ಕೋರೀ
ಕರುಣಾಲಹರೀ ಕೈಪಿಡಿದೆಮ್ಮ
ಪೊರೆ ಮೈದೋರಿ ೫
ಪರಿಪರಿ ವಿಧದಾ ಸಿರಿಸಂಪತ್ತಿಯೋಳ್
ಗುರುದೈವಂಗಳ ಸೇವಾವೃತ್ತಿಯೋಳಿರೆ
ಕರುಣಿಸು ದೃಢತರ ಭಕ್ತಿಯನೆಮಗೀಗಳ್
ವರಶೇಷಗಿರೀಶನ ಮಡದಿಯೆ ಮುದದೋಳ್ ೬

೬೪
ನವನೀರದ ಸುಂದರಶ್ಯಾಮಂ ಕರುಣಾಭರಣಂ ಶರಣಂ ಶರಣಂ ಪ.
ರಜನೀಕರ ಚಾರುಮುಖಾಂಬುರುಹಂ
ರಜನೀಚರ ರಾಜತಮೋಮಿಹಿರಂ
ಅಜನೃಪಾತ್ಮಜ ಬಾಲಕಂ ರಘುನಾಯಕಂ
ಅಜಸುರೇಂದ್ರ ಸುಪೂಜಿತಂ ವರಭುಜಗಭೂಷಣ ಸನ್ನುತಂ ೧
ಪವನಾತ್ಮಜ ಸಂಸೇವಿತ ಚರಣಂ
ಅವನೀಸುತೆ ಮನೋರಮಣಂ
ಕವಿರಾಜ ಸಂಪೂಜಿತಂ ಭೂಸುರವಂದಿತಂ
ಭುವನಮೋಹನವಿಗ್ರಹಂ ಶ್ರೀಮದನುಗ್ರಹಂ ೨
ತರಣಿಕುಲಾಂಬುಧಿ ಚಂದ್ರಂ
ಪರಮೋದಾರ ಗುಣಸಾಂದ್ರಂ
ವರಶೇಷ ಗಿರೀನಿಲಯ ಆನತ ಸುರಸಮುದಾಯಂ
ಕರುಣಾಸಾರಂ ವರದಾಭಯಕರಂ ಧುರಧೀರಂ ಗಂಭೀರಂ೩

೬೫
ನವನೀರದಾಭಗಾತ್ರ ಅವನೀಸುತಾಕಾಂತ ಪ.
ಅಣೋರಣೀಯನೆನಿಸಿ ಅನಂತರೂಪ ಧರಿಸಿ
ಪ್ರಣವ ಸ್ವರೂಪಿ ಮೆರೆವೈ೧
ಅನಾಥನಾಥ ನೀನೇ ಸನಂದನಾದಿನುತನೇ
ವನಜಾಸನನಂ ಪಡೆದವನೇ ೨
ಮದಾಂಧರಾಗಿ ಕೆಡುವ ಪದಚ್ಯುತರ ಪೊರೆವ
ವ ಧನ್ಯ ನೀನೆಲೆದೇವ ೩
ಬಾರಯ್ಯ ಭಕ್ತಭರಣ ತೋರೀಗ ನಿನ್ನ ಚರಣ
ಬಾರೆನ್ನ ಶೇಷಗಿರಿರಮಣ೪

೬೬
ನಾಮರಸಾಯನಂ ಪಿಬ ಹೇ ಮಾನಸ ಶ್ರೀಹರಿನಾಮ ಪ.
ರಾಮನಾಮ ರಸಾಯನಂ ಸಂಸಾರರೋಗ ನಿವಾರಣಂ
ಸಂಚಿತಪಾಪ ವಿಧ್ವಂಸನಂ ನಾಮಸಂಕೀರ್ತನಂ ೧
ಭಕ್ತಾರ್ತಿವಾರಣಂ ಭವಭಯಾಬ್ಧಿತಾರಣಂ
ಭಕ್ತಿ ಮುಕ್ತಿ ಸಾಧನಂ ನಾಮಸಂಕೀರ್ತನಂ೨
ಕ್ಲೇಶಪಾಶ ವಿಮೋಚನಂ ಕಲಿಕಲ್ಮಷ ಭಂಜನಂ
ಶೇಷಾದ್ರೀಶ ಸ್ಮರಣಂ ಸರ್ವೋಪದ್ರವಾರಣಂ ೩

೨೦
ನಾರಗಾ ಎನುತಂದು ಸಾರಲಾ ನುಡಿಕೇಳಿ
ಆರಯ್ದು ಕಯ್ವಿಡಿದು ಕಾಯ್ದೆ ದ್ವಿಜನ
ಗೋವಿಂದ ಪೊರೆ ಎಂದು ಗೋಳಿಟ್ರಗಜರಾಜಗಾ
ದಿವ್ಯದರ್ಶನಾನಂದಮಾಯ್ತು
ಅಕ್ಷಯನೆ ಕಾಪಿಡೆಂದಾಕ್ಷಣವೆ ಪಾಂಚಾಲಿ
ಗಕ್ಷಯಾಂಬರಗಳಿಂ ರಕ್ಷೆಯಾಯ್ತು
ಪಾರ್ಥಸೂತನೆ ನಿನ್ನನರ್ಥಿಯಿಂ ಕೆಲಸಾರ್ದು
ಪ್ರಾರ್ಥಿಸುತ್ತಿರ್ಪೆನೈ ಪರಮಪುರುಷ
ವರಶೇಷಗಿರಿನಿಲಯ ಸುಗುಣವಲಯ
ಶರದಿಂದು ನಿಭವದನ ಚತುರವಚನ
ಸುರವೈರಿಕುಲ ದಮನ ಗರುಡಗಮನ
ಪರಿಪಾಹಿ ಮಮದೇವ ಸುಪ್ರಭಾವ

೮೨
ನೀಂ ಕಟಾಕ್ಷಿಸೆನ್ನನೊಲವಿಂ ಲೋಕನಾಥ ಪಾಲಿಸೈ ಪ.
ಸಂಕಟಂಗಳೆಲ್ಲಮಂ ನಿಷ್ಕಲಂಕ ನೀಂ ನಿವಾರಿಸೈ ಅ.ಪ
ತಾತ ನೀನೇ ನಾಥನೇ ಆತ್ಮಜಾತಂ ನೀನೆಲೈ
ದಾತ ನಿನ್ನ ನಂಬಿದೀಯನಾಥರಂ ಪ್ರೀತಿಯಿಂ೧
ಭಾವಜಾತಜನಕ ಭೂ ದೇವದೇವ ಶ್ರೀಧವ
ಭಾವಿಸುವೆನನನ್ಯಭಾವದೆ ಕಾವುದೈ ಶ್ರೀನಿಧೇ ೨
ಪರಮಪುರಷ ಶೇಷಶೈಲವರದ ಶ್ರೀಕರ
ಪರಿಭವಂಗಳೆಲ್ಲ ಪರಿದು ಪಾಲಿಸೈ ಪರಾತ್ಪರ ೩

೬೦
ನೀತಿಯೇನಿದು ಕಾಂತೆ ಮಾತಿನೊಳ್ ಬಿರುಸೆನಿತೆ
ಘಾತಿಸುವುದಿದೊಳ್ಳಿತೇ ಪ್ರಾಣದಾತೆ
ಈಕಾಲದಬಲೆಯರ ಕಾಕಲಾಪಕೆ ಸೋತು
ಸಾಕಾರನೊಳಗಿಂತು ಕೇಣಮಾಂತು
ನೀನೆರೆವೆÉ ವಸ್ತುಗಳ ನಾನಿತ್ತೆನಾದರೆ
ಕಾನನದ ವಾಸವು ಎನಗೆ ನಿಜವು
ಇದನರಿತು ನೀನೆನ್ನ ಪದುಳದಿಂ ಸುಖಿಯಪ್ಪ
ಹದನನರಿಯದೆ ಬರಿದೆ ಜರಿದೆ ಮುಗುದೆ
ಪ್ರೇಮ ಗೌರವ ಭಕ್ತಿ ಭಾವ ಶುದ್ಧಿ
ನೇಮನಿರತಿಶಯ ಸುಸ್ನೇಹದಿಂದ
ಕೋಮಲತೆಯಯಾಂತೆಸೆವ ಬಗೆಯ ತಾಳ್ದು
ಭಾಮೆಯೆನ್ನಿಸು ಶೇಷಗಿರೀಶಗೊಲಿದು

೪೦
ನೀರೆ ನೋಡಿವನಾರೆ ಘೋರರೂಪವು ಮೀರೆ
ಸಾರೆ ಬಂದಹನರರೆ ನಿಲ್ಲಲಾರೆ
ಮುಪ್ಪಾದಮುಳ್ಳವನೆ ಕಪ್ಪುಬಣ್ಣದ ವರನೆ
ಅಪ್ಪನೇಕಿವಗೆನ್ನನೊಪ್ಪಿಸಿದನೆ
ದಾನವನು ತಾಂ ಬೇಡಿ ದಾನಿನಿಯಂ ತುಳಿದಾಡಿ
ನ್ಯೂನತೆಯ ಪೊಂದಿಸಿದ ಜ್ಞಾನಿಯಿವನೆ
ಗಾತ್ರದೋಳಿವನಂತೆ ಗಾತ್ರಮುಳ್ಳವರಿಲ್ಲ
ಸರ್ವತ್ರ ಬಳಸಿ ನಿಂತಿರ್ಪನಿವನೆ
ತೃಣದಿ ಶುಕ್ರನ ಕಣ್ಣನಿರಿದ ವರನೆ
ಅಣುರೇಣು ತೃಣಾಕಾಷ್ಠ ಪೂರ್ಣನಿವನೆ
ಪ್ರಣವ ಪ್ರತಿಪಾದ್ಯನೆನಿಸುವವನೆ
ಫಣಿತಲ್ಪಿ ಶೇಷಾದ್ರಿವಾಸ ತಾನೆ


ನೀಲಮೇಘಶ್ಯಾಮ ನಿಖಿಲಸದ್ಗುಣಧಾಮ
ಫಾಲಾಕ್ಷನುತನಾಮ ಪೂರ್ಣರಾಮ
ಸರಸಿಜಾಸನವಿನುತ ಸರಸ ಕರುಣಾಭರಿತ
ಪರಮಪಾವನ ಚರಿತ ಪುಣ್ಯಗಾತ್ರ
ಭಾರ್ಗವ ಮದಾಪಹ ಭುವನ ಮೋಹಕ ದೇಹ
ಭಗರ ಕಾರ್ಮಕಭಂಗ ಮಂಗಳಾಂಗ
ಇನಕುಲಾರ್ಣವ ಸೋಮ ತ್ರಿನಯನ ಮನಃ ಪ್ರೇಮ
ಜನನಿಲಯ ಸುವಿರಾಮ ದಿವ್ಯನಾಮ
ಪಾಕಾರಿನುತನಾಮಪರಂಧಾಮರಾಮ
ಸಾಕೇತಪುರಧಾಮ ಕಾಕುತ್ಯರಾಮ
ರಾಕೇಂಧು ನಿಭವದನ ದುರಿತದಮನ
ಶ್ರೀಕಾಂತ ಶೇಷಾದ್ರಿನಿಲಯ ಸದಯ

೩೦
ನುಡಿಯಲ್ಲಿ ರಸತೋರೆ ಉಡಿಯೊಳಗೆ ವಿಷಮಿರೆ
ನಡೆಯಲ್ಲಿ ವಕ್ರಮುರೆ ನೋಡಲರರೆ
ಅನೃತೋಕ್ತಿಯಿಂತಿವಗೆ ಅಮೃತಾನ್ನದಂತಾಗೆ
ಸೂನೃತದಿ ಚಿತ್ತಮಿಗೆ ಬಹುದು ಹೇಗೆ
ನಗಧರಗೆ ಸತಿಯಾದೆ ಹಗರಣಕ್ಕೀಡಾದೆ
ನಗೆಗೇಡಿಗೊಳಗಾದೆ ಜಗದ ಮುಂದೆ
ಪರರ ಬಿನ್ನಣದ ನುಡಿ ಗೆರಕಮಾಗಿರೆ ಕಿವಿಯ
ಪರಿಯದೇಂ ವರ್ಣಿಸುವೆ ನರಿಯೆನಾನು
ಕೋಟಿಜನ್ಮದಿನೋಂತ ಪುಣ್ಯಫಲದಿ
ಬೂಟಕವ ತೋರುವನ ಪಡೆದೆ ಮುದದಿ
ನಾಟಕಪ್ರಿಯನಿಂದೆ ಸುಖೆಪ ಬಗೆಗೆ
ಸಾಟಿಯುಂಟೇ ಶೇಷಗಿರೀಶನಿವಗೆ

೮೩
ನೊಂದೆನಯ್ಯ ನಂದನಂದನ ಪ.
ನೊಂದೆನಕಟ ನಂದಕಂದ
ಹಿಂದು ಮುಂದನರಿಯದಿಂದು
ತಂದೆ ನೀನೆ ರಕ್ಷಸೆಂದೇ ಅನನ್ಯಭಾವದೇ ಅ.ಪ.
ನೋಡಲಿಲ್ಲ ನಿನ್ನಪದವ ಪಾಡಲಿಲ್ಲ ನಿನ್ನ ಗುಣವ
ಮಾಡಲಿಲ್ಲ ನಿನ್ನ ಸೇವೆ ಮೂಢನಂದದಿ
ದೂಡಿಸುಜನರ ಸಂಗವನ್ನು ಬೇಡಿ ಕೃಪಣರ ಕರುಣೆಯನ್ನು
ಕಾಡುಹರಟೆಯಿಂದ ಕಳೆದೆನಕಟ ಕಾಲಮಂ೧
ಉರಿವಕೊಳ್ಳಿಯನ್ನೆ ತುಳಿದೆ ಸುರಿದೆನೀರನುರಿಗೆ ಬರಿದೆ
ಹಿರಿಯರುಕ್ತಿಯ ಮೀರಿನಡೆದೆ ಮೆರೆದೆ ಗರ್ವದೆ
ಶರಣರನ್ನು ಜರಿದು ನುಡಿದೆ ಪರರ ಹಿಂಸೆಗೈದೆ ಮದದೆ
ಪರಮಪಾಪಿಯಾದೆ ನಿನ್ನ ಸ್ಮರಣೆ ಮಾಡದೆ ೨
ಅರಿತು ಅರಿಯದಾಚರಿಸಿದಂಥಾ ದುರಿತಗಳನು ಕುರಿತು
ಕುರಿತು ಪರಿಪರಿಯೊಳೊರಲುತಿಹೆನು ಪರಮಪುರುಷನೇ
ವರದನೆಂಬ ಬಿರುದು ನೆನೆದು ಶರಣುಬೇಡುವ ಕಂದನೆಂದು
ಕರವಪಿಡಿದು ಪೊರೆಯೊ ಶೇಷಗಿರಿಯ ವರದನೆ೩

೮೪
ನೋಡಿದ್ಯಾ ಶ್ರೀರಾಮನ ನೋಡಿದ್ಯಾ ಪ.
ನೋಡಿದ್ಯಾ ನಯನವೆ, ಕೊಂಡಾಡಿದ್ಯಾ ಮನವೆ
ಪಾಡಿದ್ಯಾ ವದನವೆ ಬಾಗಿದ್ಯಾ ಶಿರವೇ ಅ.ಪ.
ಕುವಲಯ ಶ್ಯಾಮ ಸುಂದರನ ಶ್ರೀ
ಭುವಿಜಾತೆಯರಸನ ರಾಘವನ (ವರ)
ಪವಮಾನಸುತ ಸಂಸೇನ್ಯನ
ಭುವಿಯೊಳಗರ್ಚಾವತಾರದಿ ಮೆರೆವಾ
ಸರ್ವವ್ಯಾಪಕ ಶ್ರೀ ರವಿಕುಲ ತಿಲಕನ
ಭುವನಮೋಹನ ವಿಗ್ರಹನಾ ೧
ಪಂಕ್ತಿರಥನಂದನನ ವರ
ಪಂಕೇರುಹ ಪತ್ರೇಕ್ಷಣನ ವರ
ಪಂಕಜಸಖನಿಭ ಭಾಸುರನ ಆಹಾ
ಪಂಕಜಾಸನನ ಪೆತ್ತಾತನ
ಶಂಕರಪ್ರಿಯ ಕೋದಂಡರಾಮನ ೨
ಕೌಶಿಕನೊಡನೈತಂದು
ದುಷ್ಟ ತಾಟಕಿಯನು ತಾ ಕೊಂದು
ಆ ಸುಬಾಹು ಮಾರೀಚರನಂದು ಶಿಕ್ಷಿಸಿ
ಕೌಶಿಕಮುಖ ಪಾಲಕನೆನಿಸಿ
ಬಿಸುಗಣ್ಣೆರೆಯ ನ ಸ್ತುತಿಯನಾದರಿಸಿ
ಎಸೆವ ಮಂಗಳಮೂರ್ತಿ ದಶರಥರಾಮನ ೩
ದೃಢದಿಯಹಲ್ಯೆಯ ಶಾಪಕಳೆದು ಬಂದು
ಮೃಡಧನುವನು ತಾ ಮುರಿದು
ಪೊಡವಿಜಾತೆಯ ಕೈಪಿಡಿದು
ತನ್ನೆ ಶ್ರೀಡಪುಟ್ಟಿದವರ ತನ್ನ
ಪಡೆದ ತಾಯ್ತಂದೆಯರ
ಒಡಗೂಡಿ ಮೆರೆದಂಥ ಒಡೆಯ ರಾಘವನ ೪
ವಾಸವಾನುಜನೆಂದೆನಿಸಿ ಮುನ್ನ
ಕಾಶ್ಯಪಸೂನುವೆನಿಸಿ ಬಂದು
ಮೋಸದಿಂ ದಾನವಂ ಯಾಚಿಸಿ ಬಲಿಯ ಭಕ್ತಿ
ಪಾಶದಿ ತಾ ಸಿಕ್ಕಿ ನಿರುತವು ತನ್ನ ನೆನೆಯುವ
ದಾಸರ ದಾಸನೆಂದೆನಿಸಿದಾತನ ೫
ಗರುಡವಾಹನ ಮುರಹರನ ವರ
ಶರಧಿಬಂಧನ ಕೋವಿದನ ತರಣಿನಂದನ ಸಂಸೇವ್ಯನ
ಪರಶುಧರ ಗರ್ವಹರನಾ ಆಹಾ
ವರಶೇಷಗಿರಿಯಲ್ಲಿ ಮೆರೆವ ವೆಂಕಟನಾ
ಶರಣಾಭರಣ ಶ್ರೀ ನರಹರಿ ರೂಪನ ೬

೨೨
ಪದ್ಮಾಲಯೆ ಪೊರೆಯೆ ಸದಯೆ ಪ.
ಪದ್ಮಸಂಭವೆ ಬೇಡುವೆ ಕೊಂಡಾಡುವೆ ನಿನ್ನ ಪಾಡುವೆ ಅ.ಪ.
ಮನಸಿಜನಯ್ಯನ ಮೋಹದ ರಾಣಿಯೆ
ಮುನಿಸಿಂತೇತಕೆ ಭೂಸುತೆ ಮುನಿಸನ್ನುತೆ ಕರುಣಾನ್ವಿತೆ ೧
ಜೋಡಿಸಿ ಕರಮಂ ಪಾಡುತ ನಿನ್ನಂ
ಬೇಡುವ ಕಂದನ ಪಾಲಿಸೆ ಮೊರೆಲಾಲಿಸೆ ದಯೆತೋರಿಸೆ ೨
ಸುರನರವಂದಿತ ಚರಣಸರೋಜದಿ
ಶರಣೆನ್ನುವ ಕಂದನಂ ವರಿಸೀ ದಿನದಿನಮೆಂದೆನು ೩
ಮಾತೆಯೆ ಮುಳಿದೊಡೆ ಪೋತನ ಪೊರೆವಾ
ದಾತರುಮಿರ್ಪರೆ ನೀನುಡಿ ಗತಿ ನಿನ್ನಡಿ ಅಣುಗರ ಕೈಪಿಡಿ೪
ಪರಮಪಾವನ ಶೇಷಗಿರೀಶನ
ಕರುಣಾರೂಪಿಣಿ ಭಾಮಿನೀ ಶುಭದಾಯಿನೀ ಜಯನಂದಿನೀ೫

೨೩
ಪರಮದಯಾಕರೆ ಪೊರೆಯೆನ್ನನು ಜನನಿ ಪ.
ಪಂಕಜಾಕ್ಷಿ ಪಂಕಜಾಸ್ಯೆ ಪಂಕಜಾಶ್ರಯೆ
ಪಂಕಜೋದ್ಭವಾದಿಜನನಿ ಪಂಕಜಾಲಯೇ ೧
ಪಾಕಶಾಸನಾದಿವಿನುತೆ ಲೋಕವಿಶ್ರುತೇ
ಶೋಕಹರಣೆ ಸಾಕುಯೆಮ್ಮ ಕೋಕಿಲರವೇ ೨
ಸಿಂಧುನಂದನೆ ಇಂದು ಸೋದರಿ ಮಂದಹಾಸಿನಿ
ಕುಂದರದನೆ ವಂದಿಸುವೆನು ಮಂದಗಾಮಿನೀ ೩
ಪೊಡವಿಯಣುಗಿ ಪೊಡಮಡುವೆ ನಿನ್ನಡಿಯೊಳೀಪರಿ
ಕಡುನೇಹದೆ ಪಿಡಿದುಕರವ ಬಿಡದಿರೌ ಸಿರಿ೪
ದೋಷರಹಿತ ಶೇಷಗಿರಿಯ ವಾಸನರಸಿಯೆ
ಶೇಷಭೂಷಣ ನಮಿತಚರಣೆ ಪೋಷಿಸೌ ಜಯೆ೫

೮೫
ಪಾದತೋರೋ ಪದ್ಮಾಕ್ಷ ಬಾರೋ ಪ.
ಪಾದಪದ್ಮವ ತೋರೋ ಪದ್ಮಾಕ್ಷ ಬಾರೋ
ಆದಿಮಧ್ಯಾಂತ ಸ್ವರೂಪ ಮೈದೋರೋ ಅ.ಪ.
ಬಲಿಯನ್ನು ತುಳಿದಂಥ, ಭೂಮಿಯನಳೆದಂಥ
ಶಿಲೆಯಾಗಿದ್ದವಳ ಕಲುಷವ ಕಳೆದಂಥ ೧
ಶಿಶುರೂಪದಿಂದಲೆ ಶಕಟನ ಒದ್ದಂಥ
ಶಶಿಮುಖಿಯಶೋದೆಗೆ ಶಿಶುವೆನಿಸಿ ಮೆರೆದಂಥ ೨
ಗೊಲ್ಲರ ಮನೆಮನೆಗೆ ಕಳ್ಳನಂದದಿಪೊಕ್ಕು
ನಲ್ಲೆಯರ ಕೈಪಿಡಿಗೆ ನಿಲ್ಲದೋಡುವ ಮುದ್ದು ೩
ಕಾಳಿಂಗನ ಫಣೆಯೊಳ್ ಕೋಲಾಹಲದಿ ಕುಣಿದ
ಕಾಳಿಂಗನರಸಿಯರಿಗೆ ತಾಲೀ ಭಾಗ್ಯವನಿತ್ತ೪
ಕರುತುರುಗಳ ಮರೆಸಿ ದೊರೆ ನಿನ್ನರಸಿದ
ಪರಮೇಷ್ಠಿಯೆ ತನ್ನ ಕರದಿಂ ಪೂಜಿಸಿದಂಥ ೫
ಮಾವ ಕಂಸನ ಕೊಂದು ತಾಯಿ ದೇವಕಿ
ವಸುದೇವಸುತ ವಾಸುದೇವನೆಂದೆನಿಸಿದ ೬
ಸಿರಿದೇವಿಯೇ ನಿಜಕರಗಳಿಂದೊತ್ತುವ
ಪರಮಪಾವನ ಪದಸರಸೀರುಹ ೭
ವರಶೇಷಗಿರಿದೊರೆ ಶರಣರ ಮರೆವರೆ
ಶಿರಬಾಗಿ ಬೇಡುವೆ ಭರಿಸೆನ್ನನೆನುವೆ ೮

೮೬
ಪಾಲಿಸೆನ್ನ ಪಂಕಜಾಕ್ಷ ಪತಿತಪಾವನ
ನೀಲಮೇಘಶ್ಯಾಮ ರಮಾಲೋಲ ಜಗನ್ಮೋಹನಾ ಪ
ಭವವಿದಾರ ಭಯವಿದೂರ ಭಾರ್ಗವೀವರ
ಭವ ಸುರೇಶವಂದಿತಾಂಘ್ರಿಯುಗಳ ಶ್ರೀಧರ ೧
ನಿನ್ನನೇ ಮರೆಹೊಕ್ಕೆ ನಾನನ್ಯಭಾವದೆ
ಪನ್ನಗಾದ್ರಿನಿಲಯ ಸಲಹು ಸಾನುರಾಗದೆ ಪಾಲೆಸೆನ್ನ ೨

೨೪
ಪಾಲಿಸೆನ್ನನು ಜಾನಕೀ ಅರವಿಂದ ನಾಯಕಿ ಪ.
ಫಾಲಲೋಚನನುತೆ ತ್ರೈಲೊಕ್ಯ ವಿಖ್ಯಾತೆ
ಬಾಲಾರ್ಕದ್ಯುತಿ ಭಾಸುರಾನನೆ
ನೀಲಾಳಕೆ ನಿತ್ಯನಿರ್ಮಲೆ ಅ.ಪ.
ಜನನಿಯಲ್ಲವೆ ನೀನು ತನುಭವರೊಳು
ಇನಿತು ನಿರ್ದಯವೇನು
ಮನಕೆ ತಾರಲು ನೀನಾಕ್ಷಣದೊಳೇ ದೀನನಂ
ಅನಘ ಸಂಪದವಿತ್ತು ಮೆರೆಯಿಪ
ಘನತೆಯಾಂತವಳಲ್ಲವೇನು ೧
ಬಾಗುತೆ ಶಿರವಿಳೆಗೆ ಬೇಡುವ ಬಗೆ
ಕೂಗು ಬೀಳದೆ ಕಿವಿಗೆ
ಭಾಗವತಾರ್ಚಿತೆ ಭಾರ್ಗವೀ ನಾಮಖ್ಯಾತೆ
ಬೇಗೆಯೆಲ್ಲವ ಪರಿದು ಯೆನ್ನ
ರಾಗದಿಂದಲಿ ನೋಡು ಭರದಲಿ ೨
ನೀನಲ್ಲದನ್ಯರಂ ಕಾಣೆನು ಹಿತರಂ
ಮಾನಿತ ಗುಣಯುತರಂ
ಆನತರಾಗುವ ಸೂನೃತವ್ರತಿಗಳಿ
ಗಾನಂದವಿತ್ತು ಪೊರೆವ
ದಾನಿ ಶೇಷಗಿರೀಶರಮಣಿ ೩

೨೫
ಪಾಲಿಸೇ ಪದ್ಮಾಲಯೇ ಪಾಲಿಸೆ ಪ.
ಪಾಲಿಸು ನಿನ್ನನೆ ಓಲೈಸಿತಿರುವೀ
ಬಾಲೆಯರಭಿಮತ ಪಾಲಿಸುತೊಲವಿಂಅ.ಪ.
ಅಂಬುಜನಾಭನ ರಾಣಿ ನಿನ್ನ ನಂಬಿದೆ ಪಲ್ಲವರಾಣಿ ಚನ್ನೆ
ಕಂಬುಕಂಧರೆ ಫಣಿವೇಣಿ ಎನ್ನ ಬೆಂಬಿಡದಿರು ಕಲ್ಯಾಣಿ ಜನನೀ
ಜಂಭಾರಿ ಪೂಜಿತೆ ಶಂಬರಾರಿಯಮಾತೆ
ಶಂಭುವಂದಿತ ಪಾದಾಂಬುಜಕ್ಕೆರಗುವೆ ೧
ತತ್ವವಿಚಾರವನರಿಯೆ ವರಸತ್ವಗುಣದ ನೆಲೆ ತಿಳಿಯೆ
ಘನ ಸತ್ಯವ್ರತ ಪಿಡಿದರಿಯೆ ತಾಯೇ
ಮತ್ತೇಭಗಾಮಿನಿ ಮರೆಹೊಕ್ಕೆ ನಿನ್ನನೇ
ನಿತ್ಯಸತ್ಯದಿ ನಿನ್ನ ಭಜಿಸುವೆ ಜನನೀ ೨
ಘೋರ ಋಣದ ಭಾದೆ ಕಳೆದು ಎನ್ನ
ಪಾರುಗಾಣಿಸು ಮೋದವಡೆದು ಮುನ್ನ
ದುರಿತವಿದೆನ್ನನು ಬಿಡದು ತಾಯೆ ವರಶೇಷಗಿರಿ
ದೊರೆಯರಸಿ ನಿನ್ನಡಿತಾವರೆಗೆನ್ನನಾರಡಿಯೆನಿಸೆಂದು ಬೇಡುವೆ೩

೮೭
ಪಾಲಿಸೈ ಪದ್ಮಾಕ್ಷ ಪಾದವೇ ಗತಿಯೆನಗೆ ರಾಮಚಂದ್ರಾ
ದೀನಪಾಲಕನೆಂಬೀ ಬಿರುದುಂಟು ನಿನ್ನೊಳ ರಾಮಚಂದ್ರ
ಅನಿಮಿಷ ರೂಪದಿಂದಾಗಮವನು ತಂದ ರಾಮಚಂದ್ರ
ಘನಕೂರ್ಮರೂಪದಿಂ ಗಿರಿಯ ಬೆನ್ನೊಳಗಾಂತ ರಾಮಚಂದ್ರ
ಕನಕಾಕ್ಷನನು ಕೊಂದ ಧರಿಣಿದೇವಿಯ ರಮಣ ರಾಮಚಂದ್ರ
ಹಿರಣ್ಯಕನ ಕರುಳನು ಕೊರಳೊಳು ಧರಿಸಿದ ರಾಮಚಂದ್ರ
ತರಳ ಪ್ರಹ್ಲಾದನ ಕರೆದಾದರಿಸಿದ ರಾಮಚಂದ್ರ
ವಟುರೂಪದಿಂ ಬಂದು ವಸುಧೆಯ ಬೇಡಿದ ರಾಮಚಂದ್ರ
ದಾನಕೊಟ್ಟವಗೆ ಪಾತಾಳ ಪಟ್ಟವ ಕಟ್ಟಿದ ರಾಮಚಂದ್ರ
ಕ್ಷತ್ರಿಯರ ಕುಲಬೇರ ಕತ್ತರಿಸಿದ ದೇವ ರಾಮಚಂದ್ರ
ಧರಿತ್ರಿಯ ಭಾರವ ಪರಿಹರಿಸಿದ ದೇವ ರಾಮಚಂದ್ರ
ವಸುದೇವನಂದನನೆಂದೆನಿಸಿ ಮೆರೆದೆಯೋ ರಾಮಚಂದ್ರ
ಮತ್ತೆಕಾಮಿನಿಯರ ಚಿತ್ತವ ಕಲಕಿದ ರಾಮಚಂದ್ರ
ಉತ್ತಮಾಶ್ವವನೇರಿ ಕಲ್ಕಿಯೆನಿಸಿದ ರಾಮಚಂದ್ರ
ಆದಿಮಧ್ಯಾಂತ ಸ್ವರೂಪ ಸುಂದರರೂಪ ರಾಮಚಂದ್ರ
ವೇದವೇದ್ಯನೆ ನಿನ್ನ ಪಾದವೇ ಗತಿಯೆನಗೆ ರಾಮಚಂದ್ರ
ರಘುಕುಲತಿಲಕನೆ ರಮ್ಯಚರಿತ್ರನೆ ರಾಮಚಂದ್ರ
ಅಘಹರ ಪುರವೈರಿ ಸಂಸ್ತುತಿಪಾತ್ರನೆ ರಾಮಚಂದ್ರ
ಮಾನಾಭಿಮಾನ ನಿನ್ನಾಧೀನಮೆಂಬೆನೈ ರಾಮಚಂದ್ರ
ಏನೊಂದನರಿಯದ ಅಜ್ಞಾನಿ ನಾನಯ್ಯ ರಾಮಚಂದ್ರ
ನೀನಲ್ಲದೆ ಮತ್ತನ್ಯರಾರಿಹರೈ ರಾಮಚಂದ್ರ
ದೀನಪಾಲಕ ನಿನ್ನುಳಿದಾರ ನೆರೆಯೆ ರಾಮಚಂದ್ರ
ವರಶೇಷಗಿರಿದೊರೆ ಮರೆಹೊಕ್ಕು ಬೇಡುವೆ ರಾಮಚಂದ್ರ
ಕರುಣಾಳು ನೀನೆಂಬ ಬಿರುದುಳಿಸೆನ್ನುವೆ ರಾಮಚಂದ್ರ

೮೮
ಪಾಲಿಸೈ ಮುಕುಂದ ಗೋವಿಂದ ಆನಂದದಿಂದ ಪ.
ಮಾರಜನಕನೆ ಕೋರಿ ನಿನ್ನೆಡೆ
ಸಾರಿ ಬೇಡುವೆನೊ
ಗಾರುಗೊಳಿಸದೆ ತೋರು ಕರುಣೆಯ
ಮಾರಹರನುತ ವೀರರಾಘವ ೧
ಭಾನುಕೋಟಿ ಸಮಾನ ಭಾಸುರ
ಜಾನಕೀ ಮನೋಹರ
ದಾನವಾಂತಕ ದೀನರಕ್ಷಕ
ಮಾನನಿಧಿ ಪೊರೆ ಸುಜ್ಞಾನವಾರಿಧಿ ೨
ಶೇಷಶೈಲನಿವಾಸ ಸಜ್ಜನ
ಪೋಷ ಭವಭಯನಾಶನ
ಕ್ಲೇಶಹರಣ ಶ್ರೀಕೇಶವಾಚ್ಚುತ
ಲೇಸು ಬೇಡುವೆ (ನಾ) ಮೀಸಲಿರಿಸಿಹೆ ೩

೨೬
ಪೂಜೆ ಮಾಡುವ ಬನ್ನಿರೆ ರಾಜೀವ ನಯನೆಯ
ಪೂಜೆ ಮಾಡುವ ಬನ್ನಿರೆ ಪ.
ಪೂಜೆ ಮಾಡುವ ಬನ್ನಿ ಮೂಜಗದಂಬೆಯ
ರಾಜರಾಜೇಶ್ವರಿಯ ಪದರಾಜೀವಗಳಿಗೆರಗಿ ವಿನಯದಿ ಅ.ಪ.
ಸನ್ನುತಾಂಗಿಯರೆಲ್ಲರೂ ಬನ್ನಿರೆ ಸಂ
ಪನ್ನ ಗುಣಯುತರು ಚಿನ್ನದ ಕಲಶದೋಳ್ ತುಂಬಿದ
ಪನ್ನೀರಿಂ ಸೆನ್ನಿಯಂ ತೊಳೆದು ಸಿರಿಪದ
ವನ್ನು ಸಂಸ್ಮರಿಸಿ ಹರಿಯನು ೧
ಪ್ರೇಮಗೌರವವೆಂಬ ಹೇಮಾಂಬರವ
ಭಾಮಿನಿಗಳವಡಿಸುವ
ಭಾವರಾಗದ ಕುಂಕುಮ ತಿದ್ದಿಫಾಲದೆ
ದೇವಿ ಪಾಲಿಪುವುದೆಮ್ಮನೆನ್ನುತ
ಭಾವನಾಯೋಗದೊಳ್ ನಲಿಯುತ ೨
ಗುರುಗಳಾಣತಿಯಂದದಿ ಶ್ರೀಪಾದದಿ
ಶರಣು ಬೇಡಿರೆ ಮೋದದಿ
ವರಶೇಷಗಿರೀಶನ ಕರುಣಾರೂಪಿಣಿಯೆನಿಪ
ಪರಮ ಮಂಗಳೆಗೆರಗಿ ಸಂತಸ
ಭರಿತ ಮಾನಸರಾಗಿ ಸಂತತೆ ೩


ಪೊರೆಯಮ್ಮ ವಾಣಿ ತರುಣಿ ವಿಧಿರಾಣಿ ರಮಣಿ ಪ.
ಸರಸ್ವತಿ ನಿನ್ನನೇ ನೆರೆ ಭಜಿಸುತ್ತಿಹ
ಅರಿಯದೀ ತರಳರಂ ಕರುಣದೊಳೀಕ್ಷಿಸು ೧
ದೇವಿ ನಿನ್ನಿಂದ ಲೇ ಜೀವಕೋಟಿಗಳಿಂತು
ಜೀವಿಪುದಾರೆಯೆ ದೇವಿ ಸಂಜೀವಿನಿ ೨
ಜ್ಞಾನಾಧಿದೇವತೆ ಆನಂದಪ್ರದಾತೆ
ಮುನಿಜನ ಸಂಸ್ತುತೆ ವನಜಜದಯಿತೇ ೩
ಸದಯ ನೀಂ ದಯೆಗೈಯೆ ಸದಸದ್ವಿಚಾರಮಂ
ಹೃದಯ ಸಂಶುದ್ಧಿಯಂ ಪದುಳಮಂ ಧೈರ್ಯಮಂ೪
ದೇಶಸೇವೆಗೆಂದು ಆಶಿಪರೊಳಿಂದು
ಶೇಷಗಿರೀಶನ ದಾಸರೆನಿಸೆಂದು ೫

೪೮
ಪ್ರಾಣಾಧಿಕ ಬಾ ಬಾ ನಲವಿಂ ಚಂಡಾಡುವ ಪ.
ಶ್ರೀನಾಯಕ ನೀನೈತರಲಾನಾನತೆಯಾನಂದದಿಂ ಅ.ಪ.
ಬಿಲ್ಲಾಳುಗಳೊಳು ಕಡುಬಿಲ್ಲಾಳು ಬಲ್ಲಿದ ನೀಂ
ಫುಲ್ಲಾಸ್ತ್ರನನಲ್ಲಗಳೆಫುಲ್ಲಸುಮ ಮಾಲೆಯಾಂತು ೧
ವಿಕಸಿತ ನಾನಾವಿಧ ಸುಕುಮಾರ ಪುಷ್ಪಂಗಳಿಂ
ಸುಖಮೀವ ಕಂತುಕವಂ ಸುಕರದಿಂದಾಲಿಂಗಿಸಿ ೨
ಶೇಷಾಚಲಧಾಮ ರಮಾವಾಸಾಶ್ರಿತಪೋಷ ಘನ
ಯಾಸಾ ಸರೋಜಾಕ್ಷ ನಿನ್ನ ದಾಸ್ಯದೊಳೇ ನಿಲ್ಲಿಸೆನ್ನ

೩೨
ಪ್ರಾಣೇಶನೆನ್ನೊಳಗೆ ಕೇಣವಾಂತಿಹನೇಕೆ
ಗೋಣಬಿಗಿವಂತಾಗೆ ನಾಣದೇಕೆ
ಇಲ್ಲದುದನಿವನೊಳಾಂ ಸೊಲ್ಲಿಸಿದೆನೇನಮ್ಮ
ಕಲ್ಲೆದೆಯಿದೇವೆಳ್ವೆ ನಲ್ಲನಿವಗೆ
ಕಂಡಸುದ್ದಿಯ ಪೇಳೆ ಕೆಂಡದಂತಾಗುವರೆ
ಕಂಡುದಿಲ್ಲಕ್ಕಟೀ ಭಂಡತನವ
ನ್ಯಾಯವನು ಸೂಚಿಸಲು ನೋಯುವಂತಾಡುವರೆ
ಜಾಯೆಯೊಳಗೀತೆರದನ್ಯಾಯಮರರೆ
ಕಪಟನಾಟಕ ಸೂತ್ರಧಾರನಿವನೆ
ಸುಪವಿತ್ರ ಕೇಳೆನ್ನ ಪ್ರಾಣಸಖನೆ
ತಪನವಂಶಾಬ್ಧಿ ರಾಕೇಂದುವಿವನೆ
ವಿಪುಲ ಶೇಷಾದ್ರೀಶನೆನಿಪ ವರನೆ

೪೧
ಪ್ರಿಯಸಖಿಯೆ ನೋಡೆನ್ನ ಪ್ರಿಯನಂದವನು ಮುನ್ನ
ಜಯಶಾಲಿಯೆನಿಸಿಹನ ಶೌರ್ಯಧುರನ
ಧರ್ಮಪಥವರಿಯದೆಯೆ ಕರ್ಮನಿಷ್ಠಾಪರನೆ
ನಿರ್ಮಲಾನ್ವಯದಲ್ಲಿ ಜನ್ಮಿಸಿದನೆ
ಪೆತ್ತವಳ ಶಿರವನೆ ಗ್ಗೊತ್ತಿ ಭೂಭುಜಕುಲಕೆ
ಮೃತ್ಯು ರೂಪಾದವನೆ ಮತ್ತನವನೆ
ಘನ್ನ ಘಾತಕನೆನಿಸಿ ಕೆನ್ನೀರಕೊಳನೈದ
ನನ್ನಿಯಿಂ ನಿರ್ಮಿಸಿದ ಘನ್ನನಿವನೆ
ಕಿಡಿಗಣ್ಣ್ಮಲರೆ ಗಂಡುಗೊಡಲಿ ಪಿಡಿದು
ಕಡುಭಯಂಕರನಾಗಿ ಕೃಪೆಯನುಳಿದು
ಸಡಗರದಿ ನಡೆತರ್ಪನಕಟ ಮುಳಿದು
ಒಡೆಯ ಶೇಷಗಿರೀಶನೆನಗೆ ಬಂಧು

೯೦
ಬರಡು ಕಣ್ಗಳಿದ್ದರೇನು ಮನದ ಕಣ್ಣ ತೆರೆಯದ ಪ.
ತರಳಗೊಲಿದ ವರದರಾಜದೊರೆಯ ನಿಜವನರಿಯದ ಅ.ಪ.
ನಾರದಾದಿ ಮೌನಿವರರು ಸಾರಿಬಂದು ಸೇವಿಸಿ
ಸಾರಸಾಕ್ಷನ ಮನವನೊಲಿಸಿ
ಸಾರಭೂತರೆನಿಸಿದರು ಮನದ ಕಣ್ಣ ತೆರೆಯದಿಂತು ೧
ತರಳಗೊಲಿದು ಕಂಬದಿಂದ ಬಂದು
ಹಿರಣ್ಯನುರವ ಬಗೆದು ಕರುಳಮಾಲೆ
ಧರಿಸಿ ಮೆರೆವ ನರಹರಿಯ ಕಾಣದ ೨
ಲೋಕನಾಯಕ ರಂಗನಾಥನ ಏಕಚಿತ್ತದಿ ಸೇವಿಸೆ
ಈ ಕಳಂಕವೆಲ್ಲ ತೊಳೆದು
ಶ್ರೀಕಟಾಕ್ಷಕೆ ಪಾತ್ರನಾಗಲು ೩
ಶರಧಿಶಯನ ಪರಮಪಾವನೆ
ಶರಣರಕ್ಷಕನೀತನ ವರದ ಶೇಷಶೈಲಧಾಮನ
ವರದಿ ಪಡೆವೆ ಮನದಕಣ್ಗಳಂ ೪

೮೯
ಬರಿದೆ ಕಾಲವ ಕಳೆದೆ ನರಹರಿಯ ಧ್ಯಾನಿಸದೆ ಪ.
ಪರಿಪರಿಯ ಮೋದದಲಿ ಮರುಳನಂದದಿ ಮೆರೆದೇ ಅ.ಪ.
ಗುರುವ ಸೇವಿಸಲಿಲ್ಲ ಹರಿಯ ಧ್ಯಾನಿಸಲಿಲ್ಲ
ಹಿರಿಯರೊಲಿವಂತುಪಚರಿಸಲಿಲ್ಲ | ಪರಮ ಭಾಗವತರ
ಚರಣಕ್ಕೆ ನಾನೊಮ್ಮೆ | ಶಿರಬಾಗಿ ನಮಿಸಿ
ಪರಿಚರಿಸಲಿಲ್ಲವಲ್ಲಾ ೧
ಇನ್ನೆನಗೆ ಗತಿಯಾರು – ಮನ್ನಿಸುವರದಾರು
ಇನ್ನದಾರಲ್ಲಿ ಪೇಳುವೆನೆನ್ನ ದೂರು
ನಿನ್ನನೇ ಮೊರೆಹೊಕ್ಕು ನೀನೆ ಗತಿಯೆಂದಿರುವ
ಎನ್ನ ಮನ್ನಿಸಲುಬೇಕು ಪನ್ನಶೇಷಗಿರೀಶ ೨

೬೪
ಬಾರೆಂದು ಹಸೆಗೆ ಕರೆವೆನು
ಕ್ಷೀರಾಬ್ಧಿಶಯನನೆ ಸಾರಸನಯನನೇ ಪ.
ಕ್ಷೀರಾಬ್ಧಿಜಾವರ ಮೇರುಗಂಭೀರನೆ
ನೀರಜಭವಪಿತ ಮಾರಹರಾರ್ಚಿತ
ಚಾರುನೀರದಗಾತ್ರ ಪರಮ ಪವಿತ್ರ ಅ.ಪ
ಧರಣೀಸುರರ ಮೊರೆಗಳನಾಲಿಸಿ
ಧರೆಯೊಳಗವತರಿಸಿ ನರರೂಪಧರಿಸಿ
ಧರಣಿಪ ದಶರಥತರಳನೆಂದೆನಿಸಿ
ಧರೆಯ ಭಾರವನಿಳಿಸಿ ಕರುಣಿಸು ಮನವೆರಸಿ ೧
ಅಸುರೆ ತಾಟಕಿಯ ಅಸುವನಳಿದು ದುಷ್ಟ
ನಿಶಿಚರರನು ಸದೆದು ಅನುಜನೊಡಗೊಂಡು
ಕುಶಿಕನಂದನನ ಕ್ರತುವನು ತಾ ಕಾಯ್ದು
ಅಸಮ ಶೂರನೆನಿಸಿ ಅಮರರ ಮನತಣಿಸಿ ೨
ಶಿಲೆಯ ಶಾಪವಕಳೆದು ಲಲನೆಯ ಪೂಜೆಗೊಲಿದು
ಬಲುಹಿನಿಂದಲೆ ಬಂದು ಹರಧನು ಮುರಿದು
ಲಲನೆ ಜಾನಕಿಯ ನಲವಿನಿಂ ಕೈಪಿಡಿದು
ಬಲುಗರ್ವಿತ ಭಾರ್ಗವ ಮದಮುರಿದೆ ಸಲಹೆನ್ನ ೩
ಈಶವಿನುತ ಶ್ರೀ ಶೇಷಾಚಲ ನಿಲಯನೆ
ದಾಸರಮನದೊಳು ವಾಸವಾಗಿಹನೇ
ವಾಸವಾದ್ಯಮರ ಪೋಷಕನೆನಿಸಿಹನೆ
ಭಾಸುರವದನನೆ ಶ್ರೀಸತೀಸದನನೆ ನೀಂ ನಲಿದು ೪

೧೧೮
ಬಾಲೆಯರೆಲ್ಲರು ಬನ್ನಿರೆ ರನ್ನದ ಕೋಲ್ಗಳನೀವ್ ಪಿಡಿದು ಪ.
ಮೇಲಹ ಪದಮಂ ಪಾಡುವ ಕೋಲಾಹಲ ಸಮಯವಿದು ಅ.ಪ.
ಗಿರಿಸುತೆ ನೀ ಬಾ ಸರಸ್ವತಿ ನೀ ಬಾ
ಶರಧಿತನೂಭವೆ ನೀ ಬಾ ಬಾ
ನೆರೆಮೆರೆವೀ ಶರದುತ್ಸಹಮಂ ಅರಿಪುತು ಜಗಕಿಂದು ೧
ನಿಗ್ರಹಕಾರ್ಯದಿಂದುಗ್ರನಾಗಿಹ ಭರ್ಗನಕೆಲಕೈತಂದು
ವ್ಯಗ್ರತೆಯಿಳಿಸಿ ಪೊರೆ ಶೀಘ್ರದಿ ಗಿರಿಸುತೆ ಸಮಗ್ರ ಭಾರತಮಿಂದು೨
ಸರಸ್ವತಿ ಬಾ ನಿನ್ನರಸನ ಕೆಲಸಾರ್ ಧರೆಯೊಳ್ ಸುಪ್ರಜರಂ
ನೆರೆ ಸೃಜಿಸುವ ವೋಲ್ ಅರುಹು ವಿಚಕ್ಷಣೆ ಅಸುರರ ಪಡೆಯದಿರೆನ್ನು೩
ಶರದಿತನೂಭವೆ ಅರಸಗೆ ನೀನೊರೆ ಪರಿಪರಿ ವಿಧದಿಂದಂ
ಕೊರತೆಯದಿಲ್ಲದೆ ಪೊರೆ ಜಗಮೆನ್ನುತ ಪೊರೆವೆವು ಛಲದಿಂದಂ೪
ಭಾರತ ಜನನಿಯ ಭಾಗ್ಯೋದಯಮಂ ತೋರಿರೆ ಶಕ್ತಿತ್ರಯರೆ
ಭಾರತವೀರರಿಗಾರೋಗ್ಯೈ ಶ್ವರ್ಯಂಗಳ ಕರುಣಿಸಿರೇ ೫
ರಾಷ್ಟ್ರಪ್ರಮುಖರ ಕಷ್ಟಂಗಳ ನಾ ವೆಷ್ಟೆಂದೊರೆದಪೆವೇ
ಸೃಷ್ಟಿ ಸ್ಥಿತಿ ಲಯಕರ್ತರು ನೀವಿರೆ ದೃಷ್ಟಿಸಿರೀಗೆನ್ನುವೆವೆ ೬
ಕನ್ನಡತಾಯಿಯ ಕನ್ನೆಯರಾವು ಉನ್ನತಿಯನ್ನೆಳಸುವೆವು
ಮನ್ನೆಯರ್ ನೀವೆಮ್ಮೋಳಿನ್ನಾವೇಶಿಸೆ ಧನ್ಯರು ಮಾನ್ಯರು ನಾವಹೆವು೭
ಆರ್ಯಮಹಿಳೆಯರೆನೆ ವೀರಮಾತೆಯರೆನೆ ಧಾರುಣಿಯೊಳಗೆಮ್ಮಂ
ಧೈರ್ಯಸ್ಥೈರ್ಯೌದಾರ್ಯ ಗುಣಂಗಳ ಪೂರಿತರಪ್ಪಂತೊಸೆವುದೆಮಗಿನ್ನು ೮
ಒಲಿದೆಮ್ಮನು ನೀವ್ ನೆಲೆಸಿರೆ ನಲವಿಂ ಬಲಗೊಳ್ಳುತ್ತಾನವರತಂ
ಕಲಿಯುಗಮಲ್ಲಿದು ಕೃತಯುಗಮೆನುವೋಲ್ ಬೆಳಗುವೆವೆಲ್ಲೆಡೆಯೋಳ್೯
ಭಾವಿಪೆವೀ ಪರಿದೇವಿಯರೇ ನೀವ್ ಪರಿ ಭಾವಿಸಿ ಮನ್ನಿಸಿರೆ
ಶ್ರೀವರ ಶ್ರೀಶೇಷಗಿರೀವರ ನಾವಗ ಮೋವುಗೆ ಕರುಣಿಸಿರೆ ೧೦

೨೭
ಬಿಜಯಂಗೈವುದು ತ್ರಿಜಗನ್ಮಾತೆಯೆ ದ್ವಿಜರಾಜಾನನೆಯೇ
ಅಜರಾಜಾತ್ಮಜಸುತನರಸಿಯೇ ಶ್ರೀ ಜಾನಕಿಯೇ ಪ.
ಪವನಜ ಗರುಡರ ಬಗೆಯಿಂ ನಿನ್ನಂ ಸೇವಿಸಲಾನರಿಯೆ
ಕವಿಕುಲ ಚೂಡಾಮಣಿಯೋಲ್ ನಿನ್ನನು ಭಾವಿಸಲೆನಗಳವೇ ೧
ನೆಲದೊಳು ನಿನ್ನೀ ನೆಲೆಯಂ ತಿಳಿಯಲ್ ಬಲುಮೆಯದಾರೊಳು ಪೇಳ್
ಚಲದಿಂ ಪೇಳ್ವರು ಕೆಲವರು ನಿನ್ನಂ ಚಂಚಲೆಯನುವೋಲ್ ೨
ಎಂತಾದರು ಸುಸ್ವಾಂತದಿ ನಿನ್ನೀ ಸಂತಾನದೊಳನಿಶಂ
ಶಾಂತ್ಯೌದಾರ್ಯ ಗುಣಾನ್ವಿತೆ ನೀ ಮೆರೆ ಸಂತತಮುಂ ನಲವಿಂ೩
ಎಣಿಸಲ್ಕರಿಯದ ಋಣತಾಪದೊಳಕಟಾ ಹೆಣಗಾಡುತಲಿರುವೀ
ಅಣುಗರ ನೋಡಿ ಕ್ಷಣದೊಳೂ ನಿನ್ನ ಘನತೆ ತೋರಿಸು ದೇವಿ ೪
ತಳುವುದಿದೇತಕೆ ನಳಿನÀದಳಂಬಕೆ ಗಳಿಲನೆ ಬಾರೆಂಬೆ
ಜಲಜಲೋಚನ ಶೇಷಗಿರೀಶನ ಲಲನಾಮಣಿ ಜಗದಂಬೆ ೫

೫೧
ಬೆಳಗುವೆನಾರತಿಯ ನಾಂ ಪ.
ನಳಿನಾಕ್ಷ ರಂಗಗೆ ನಲವಿಂದ ಪಾಡುತೆ ಅ.ಪ.
ಕನಕಪಾತ್ರೆಯೊಳು ಘನಮುತ್ತುರತ್ನಂಗಳು
ಮಿನುಮಿನುಗುತ್ತಿರಲು ಮನಮಂತುಬ್ಬೇರಲು ೧
ನವಭಕ್ತಿಯೋಗಂಗಳಿಂ ನವಭಾವ ಪಾತ್ರಂಗಳಿಂ
ನವನೀತ ಚೋರಗೆ ನಮಿಸುತ್ತೆ ನೇಮದಿಂ ೨
ವರಶೇಷಶೈಲೇಶಗೆ ಶರಣಾಗತಸಂರಕ್ಷಗೆ
ಕರಿರಾಜವರದಗೆ ಸುರರಾಜವಂದ್ಯಗೆ೩

೬೩
ಬೇಡಿಕೊಂಬೆ ಹಸೆಗೇಳೆಲೈ
ಗಾಡಿಪಂಥ ಮಾಡಬೇಡೆಲೈ ಪ.
ಮಾರುತಿಸೇವ್ಯನೆ ಧೀರ ದಾತಾರನೆ
ಕೋರಿ ಭಜಿಪೆ ಬೇಗ ಬಾರೈ ಸುಂದರ ೧
ನಾರಿಯರ್ನಿನ್ನನು ಸಾರಿಕರೆವರೈ
ಧಾರಣಿಜಾತೇಸಹ ಸಾರಿ ಬಾಬಾ ಬೇಗ ೨
ಭವಭಯದೂರನೆ ಭಕ್ತಮಂದಾರನೆ
ಭಾವಜ ಜನಕನೆ ದೇವಾದಿದೇವನೆ೩
ಶೇಷಗಿರೀಶನೆ ದಾಸಜನಾಶ್ರಯನೆ
ವಾಸವವಂದಿತನೆ ಶ್ರೀ ವಾಸುದೇವನೆ ೪

೨೮
ಭಕ್ತ ಮಂದಾರಿಣಿ ಭವಭಯನಿವಾರಿಣಿ
ಭಕ್ತಿಮುಕ್ತಿ ಪ್ರದಾಯಿನಿ ತ್ರಿಭುವನೈಕ ಜನನಿ ಪ.
ಭುವನತ್ರಯಮೋಹಿನಿ ಭಾನುಕೋಟಿಪ್ರಕಾಶಿನಿ
ಭೂರಿಭೂಭುಜ ಸೌಭಾಗ್ಯದಾಯಿನಿ ಪಾಹಿಮಾಂ ಜನನಿ ಅ.ಪ.
ಸಾಮಜಾಧಿಪಗಾಮಿನಿ ಕಾಮಿತಾರ್ಥಪ್ರದಾಯಿನಿ
ರಾಮಣೀಯ ಸ್ವರೂಪಿಣಿ ಕಾಮಜನನಿ ಕಲುಷವಿಭಂಜಿನಿ ೧
ಕನಕವಸನೆ ಕವಿಮನೊಲ್ಲಾಸಿನಿ ಸುಮನಸವರ
ಪರಿತೋಷಿಣಿ ಕೋಮಲತರ ಕೋಕಿಲ ಮೃದುಭಾಷಿಣಿ ೨
ಕಮಲ ಬಾಂಧವ ವಂಶ ಸಂಭವ
ರಾಮಚಂದ್ರ ಸುಪ್ರೇಮಾಕಾಂಕ್ಷಿಣಿ ೩
ವನಜ ಸಂಭವ ಸನ್ನುತೆ ಕನಕಭೂಷಣ ಭೂಷಿತೆ
ಅನಿಲನಂದನ ಸೇವಿತೇ ಘನಕರುಣಾರಸಾನ್ವಿತೇ ೪
ಅನಘ ಸದ್ಗುಣಭೂಷಿತೆ ಅನಿಮಿಷಾಧಿಪ ಪೂಜಿತೆ
ಜನಕ ಭೂಪತಿ ಪೋಷಿತೇ ಘನಶೇಷಾದ್ರೀಶ ದಯಿತೆ೫

೧೦೩
ಭಜಿಸಬಾರದೆ ಹರಿಯ [ಮನವೇ]
ಭಜಕರಕ್ಷಕ ದೊರೆಯ ಪ.
ಗಜಪತಿ ವರದನ ತ್ರಿಜಗಜ್ಜನಕನ
ಅಜಮಿಳ ವರದನ ವಿಜಯನ ಸಖನಾಅ.ಪ.
ಕಾಮಕ್ರೋಧವ ಸುಟ್ಟು [ಶ್ರೀರಾಮನೋಳ್ ಮನನೆಟ್ಟು]
ನೇಮಧರ್ಮದಿ ಬುದ್ಧಿಯನಿಟ್ಟು ತಾಮಸ ಬುದ್ಧಿಯ ಬಿಟ್ಟು ೧
ಸತ್ಯಮಾರ್ಗವ ಬಿಡದೆ ದುಷ್ರ‍ಕತ್ಯದೊಳ್ ಮನಗೊಡದೆ
ಸತ್ವಗುಣಭರಿತ ಜರಾಮೃತ್ಯುರಹಿತ ನಿತ್ಯತೃಪ್ತನನೀಂ ೨
ಇಂದುಧರಸಖಿ ರಘುವರನ ಪದದ್ವಂದ್ವವ ನೆನೆನೆನೆದನುದಿನ ಹೃ
ನ್ಮಂದಿರದೊಳಗಾನಂದದಿ ನೆಲಸಿರುವಂದವ ಮರೆಯದಿನ್ನು ೩
ಪರಮಾಚಾರ್ಯರುಗಳ ನಾಮಸ್ಮರಣೆಯ ಸೌಭಾಗ್ಯದಲಿ
ವರಗುರುಗಳ ಘನ ಕರುಣಾಕಟಾಕ್ಷದಿ ಸಿರಿವರನ ನೆಲೆಯರಿವತನಕ ೪
ವಾತಾತ್ಮಜ ಸಂಸೇವಿತೆಯ ಭೂಜಾತೆಯ ಜನಕಸುತೆಯ ಸೀತೆಯ
ನಿಮಿಕುಲಪೂತೆಯ ತ್ರಿಜಗನ್ಮಾತೆಯ ಶುಭಗುಣಯುತೆಯ [ನಿಗೆ] ೫
ತರುಣಿ ಕುಲಾಂಬುಧಿ ಸೋಮರಾಮ ತ್ರಿಭುವನ ಮೋಹನ ಶ್ಯಾಮ
ವರದ ಶೇಷಾಚಲಧಾಮನ ಸತ್ಯವಿಕ್ರಮ ರಘುರಾಮನ ನೀ ೬

೧೦೪
ಭಜಿಸಿ ಬದುಕೆಲೋ ಮಾನವ
ಶ್ರೀಹರಿನಾಮ ತಾರಕಮಂತ್ರವ ಪ.
ದುರಿತಕೋಟಿಗಳಂ ಪರಿಹರಿಸಿ ನಿಜಪದ
ಸರಸೀರುಹದೊಳಗಿರಿಸಿ ಪೊರೆವನ ೧
ದುರ್ಜನ ನಿಂದೆಗೆ ಲಜ್ಜಿತನಾಗದೆ
ದುರ್ಜನ ದಮನನ ಧ್ಯಾನದೇ ನೀಂ ೨
ಪೊಗಳಲು ಹಿಗ್ಗದೆ ತೆಗಳಲು ತಗ್ಗದೆ
ಬಗೆಕುಂದದೆ ಸಮ್ಮೋದದೇ ನೀಂ ೩
ಅಷ್ಟಮದಂಗಳ ಕಟ್ಟುತೆ ದೃಢದಿ
ದೃಷ್ಟಿನಿಲ್ಲಿಸಿ ನಿಷ್ಠೆಯೋಳ್ ನೀಂ೪
ದೋಷರಹಿತ ಶ್ರೀಶೇಷಗಿರೀಶನ
ದಾಸರವಾಸನೆನ್ನಿಸಿ ಸಂತತಂ ೫

೯೧
ಭಜಿಸೈ ಮಾನಸ ದೊರೆಯ ಶ್ರೀ ನರಹರಿಯ
ಭಜಿಸು ಮಾನಸ ತ್ರಿಜಗದರಸ ಪ.
ನಿಜಭಜಕ ಜನಾಶ್ರಯ ಸುಜನಬಾಂಧವ
ಅಜಮುಖಾರ್ಚಿತ ಪಾದಪಂಕಜ ಅಜಾಮಿಳವರದನಂಘ್ರಿಯ ಅ.ಪ.
ಪವನನಂದನ ಸೇವ್ಯನ ಪದ್ಮಾಕ್ಷನ ಪಾವನಗುಣಶೀಲನ
ಪರಮಾತ್ಮನ ಪತಿತಪಾವನ ನಾಮನ ಅಪಾರ ಮಹಿಮನ
ಸುರನರೋರುಗ ನಮಿತ ಚರಣನ ತರಣಿವಂಶಾಬ್ಧಿ ಚಂದ್ರಮನ
ಪುರವೈರಿ ಪ್ರಿಯಸಖನ ಪರಂತಪ ರಾಘವೇಂದ್ರನ ೧
ಶ್ರೀಕರಮುಖಜಿತಸೋಮನ ದಾನವಕುಲ ಭೀಕರ ಶೌರ್ಯ
ವಿಕ್ರಮನ ಭಯನಾಶನ ಕಾಕುತ್ಸ್ಧಕುಲದೀಪನ ಸುಗುಣಾ ರಾಮನ
ಪಾಕಾರಿವಿನುತ ಸಾಕೇತನಿಲಯನ ರಾಕೇಂದುನಿಭಾಸ್ಯ ಶ್ರೀ ವರನ
ಲೋಕಮೋಹನ ಮೇಘ ಶ್ಯಾಮನ ವೈಕುಂಠಪತಿ ಲಕ್ಷ್ಮೀಶ ಕೇಶವನ೨
ಲೀಲಾಮಾನುಷ ವಿಗ್ರಹನ ಶೈಲಾತ್ಮಜಾನುತರಾಮನ ಸತ್ಯಾತ್ಮನ
ಬಾಲಾರ್ಕದ್ಯುತಿಭಾಸುರನ ಭಕ್ತ್ಯಧೀನನ ಶ್ರೀರಾಮನ
ಪಾಲಲೋಚನನ ಪಂಕಜಾಸನ ಪಾಕಾರಿಮುಖ ನಮಿತ ಚರಣನ
ಶ್ರೀಲೋಲ ಶೇಷಾಚಲನಿಲಯ ಶ್ರೀವೇಂಕಟನ೩

೯೨
ಭಯದೂರ ಧರ್ಮಸಾರ ಭುವನಾಧಾರ ಪ.
ಭಕ್ತಾರ್ತಿಭಂಜನ ಭವಪಾಶಮೋಚನ
ನಕ್ತಂಚರ ದಮನ ವೈಕುಂಠ
ನಿಕೇತನ ಸಾರಿ ಮೈದೋರು ಬಾ ಶ್ರೀರಮಾಮನೋಹರ ೧
ಸಂದಿಗ್ಧ ಸಮಯಂಗಳ್ ಬಂದಿರ್ಪವೇಳೆಯೊಳ್
ನೊಂದಿರ್ಪ ಭಜಕರೊಳ್ ಇಂದೇಕೆ ಸಂದೆಗಂ ಪೇಳ್
ಇಂದಿರಾಮನೋಹರ ನಂದನಕುಮಾರ ೨
ಶ್ರೀನಾಥ ನಿನ್ನಂಘ್ರಿಯೊಳ್ ಅನ್ಯೂನ ಭಕ್ತಿಯಿರಲ್
ಮಾನಾಭಿಮಾನಂಗಳೇನೊಂದನೆಣಿಸದೆ
ಜ್ಞಾನೋದಯಂ ತಾನಾಗೆ ಚಿದಾನಂದಮಪ್ಪುದೈ ೩

೬೧
ಭಳಿರೆ ಮೆಚ್ಚಿದೆ ರಮಣಿ ಒಳಿತು ನಿನ್ನಯ ವಾಣಿ
ಬಲುಹು ತೋರಿದೆ ತರುಣಿ ಒಲಿದೆ ರಾಣಿ
ಮುಳಿದು ಮೂದಲಿಸುತ್ತ್ತ ಹಳಿದು ಹಂಬಲಿಸುತ್ತ
ಬಳಬಳನೆ ಕಣ್ಣೀರನಿಳಿಸುತಳುತೆ
ಕೋರಿದುದ ತಂದೀಯಲಾರದಿಹ ಪುರುಷರಂ
ದೂರುವುದೆ ನಾರಿಯರ ಧರ್ಮವೇನು
ಉಡುಪುತೊಡುವೆಂದೆನುತ ಸಡಗರದಿ ಹಿಗ್ಗುತ
ಬಡಿವಾರ ತೋರುವುದೆ ನಡತೆಯೇನು
ಸಜ್ಜೇಸುಖಶಯೈ ಯಿದನೆ ನಂಬಿ
ಲಜ್ಜೆಯಲಿಕರ್ತವ್ಯವನೆ ಮರೆದು
ದೌರ್ಜನ್ಯಕೀಡಾಗಬಹುದೆ ಸಾಧ್ವಿ
ಸಜ್ಜನೆಯೆನಿಸು ಶೇಷಗಿರೀಶನೆಣಿಸು


ಭಾರತಿ ಪೊರೆಯೆಮ್ಮನು ಕಾರುಣ್ಯಮೂರುತಿ
ಸಾರಸಭವಸತಿ ತೋರಿಸು ಸನ್ಮತಿ ಪ.
ವೀಣಾಪುಸ್ತಕಧಾರಿಣಿ ಪನ್ನಗವೇಣಿ
ವಾಣಿ ಗೀರ್ವಾಣಿ ಜನನೀ
ಜಾಣೆ ಬ್ರಹ್ಮನ ರಾಣಿ ಸುಶ್ರೋಣಿ ಕಲ್ಯಾಣಿ ೧
ನಾರದಮುನಿ ಸನ್ನುತೆ ಸಾರಸನೇತ್ರೇ
ಚಾರುಚರಿತೇ ಸುರಸುತೆ
ಮಾರನಯ್ಯನ ಚರಿತೆ ಸಾರುವಂತೆಸಗು ಮಾತೆ ೨
ನಾಲಿಗೆಯೊಳು ನೆಲಸುತ ನಲಿನಲಿಯುತ
ಮೇಲಹಕೃತಿ ನುಡಿಸುತ
ಪಾಲಿಸು ಶ್ರೀಗಿರಿಲೋಲನ ಸೊಸೆ ನಿರುತ ೩


ಭೃಗುವಂಶಸಂಭೂತ ಜಗತ್ರಯ ವಿಖ್ಯಾತ
ಅಘದೂರ ಪರಶುಧರ ಧೈರ್ಯಸಾರ
ಪರಿಹಾರ ಭಕ್ತಜನಮಂದಾರ
ಭೂಭುಜತರುಕುಠಾರ ಅನುಸಾರ
ರುಚಿಕನಂದನ ಬಾಲ ಶೌಚ ಸತ್ಯಸುಶೀಲ
ದ್ವಿಜಸಂಘ ಪರಿಪಾಲ ದಾನಶೀಲ
ಸಹಸ್ರಭುಜ ವಿದಾರ ಅಹಿತಜನ ಮದಹರ
ವಿಹಿತಪಥ ಸಂಚಾರ ಪಾಹಿಸುಕರ
ಕೃಪಾರ್ಣವ ಭಾರ್ಗವ ಸುಪ್ರಭಾವ
ಕೋಪಜಿತ ಭೂಪಾಲ ದೇವದೇವ
ತಾಪಹರ ಶೇಷಾದ್ರಿ ನಿಲಯ ಸದಯ
ಶ್ರೀಪರಂಧಾಮ ಸತ್ಕೀರ್ತಿ ಕಾಮ

೩೦
ಮಂಗಳ ಪಾಡಿರೆ ಭಾವೆಯರೇ
ರಂಗನ ರಮಣಿಯ ಭಾವಿಸಿರೇ ಪ
ಅಂಗಜಜನನಿಯ ಕೃಪೆಯಿ ಸ-
ತ್ಸಂಗತಿ ಪಡೆದೆವು ನಿಶ್ಚಯಂಅ.ಪ
ಭೋಗವತೀಪತಿಶಾಯಿಯೊಳು ಅನು
ರಾಗಗೊಂಡಿಹ ದೇವಿಯಿವಳ್
ಭಾಗ್ಯಲಕ್ಷ್ಮಿಯ ಪಾದದೊಳು
ಬಾಗುತ ಶಿರವನು ರಾಗದೊಳು ೧
ವೇದಸಾರದ ವಾಕ್ಯದಲಿ
ಮಾಧವಿಯಂ ಸ್ತುತಿ ಮಾಡುತಲಿ
ಭೇದವೆಣಿಸದೆ ಸಲಹೆನ್ನುತಲಿ
ಮಾಧವನಂ ಕೊಂಡಾಡುತಲಿ ೨
ತಾಪತ್ರಯಗಳ ಪರಿಹರಿಸಿ
ಆಪತ್ತುಗಳಿಂದುದ್ಧರಿಸಿ
ಕಾಪಾಡುವಳಿವಳೆಂದೆನಿಸಿ
ಶ್ರೀಪದ್ಮಿನಿಯನು ಸಂಸ್ಮರಿಸಿ ೩
ಶರಣಾಗತ ಸಂರಕ್ಷಕಿಗೆ
ವರಶೇಷಗಿರಿನಿಲಯನಿಗೆ
ಕರುಣಾರೂಪಿಣಿ ಪದ್ಮಿನಿಗೆ
ಕರಗಳ ಮುಗಿಯುತೆ ಮಾಧವಿಗೆ ೪

೭೦
ಮಂಗಳಂ ರಘುರಾಮಗೆ ಜಯಮಂಗಳಂ ಗುಣಧಾಮಗೆ
ಮಂಗಳಂ ಮದನಾರಿವಂದ್ಯಗೆ ಮಂಗಳಂ ಮನ್ನಾಥಗೆ ಪ.
ರಾಮಗೆ ನತಕಾಮಗೆ ಘನಶ್ಯಾಮಗೆ ಸುಪ್ರೇಮಗೆ
ಕಾಮಿತಾರ್ಥಪ್ರದಾತಗೆ ವರರಾಮಣೀಯಕ ರೂಪಗೆ ೧
ಶ್ರೀಶಗೆ ಜಗದೀಶಗೆ ಭಯನಾಶಗೆ ಸರ್ವೇಶಗೆ
ದಾಸಜನಮನೋಲ್ಲಾಸ ಲಕ್ಷ್ಮೀಶಕೇಶವ ಮೂರ್ತಿಗೆ ೨
ಮಾರುತಾತ್ಮಜಪÀರಿಸೇವ್ಯಗೆ ನತಪಾರಿಜಾತ ಸಮಾನಗೆ
ವಾರಿಜಾಯತನೇತ್ರ ಶ್ರೀಶೇಷಶೈಲ ನಿವಾಸಗೆ ೩

೧೦೮
ಮಂಗಳಂ ರಘುರಾಮಗೇ ಜಯಮಂಗಳಂ ಗುಣಧಾಮಗೆ
ಮಂಗಳಂ ಮದನಾರಿವಂದ್ಯಗೆ ಮಂಗಳಂ ಮನ್ನಾಥಗೆ ಪ.
ರಾಮಗೇ ನತಕಾಮಗೆ ಘನಶ್ಯಾಮಗೆ ಸುಪ್ರೇಮಗೇ
ಕಾಮಿತಾರ್ಥಪ್ರದಾತಗೆ ವರ ರಮಣೀಯಕರೂಪಗೆ ೧
ಶ್ರೀಶಗೆ ಜಗಧೀಶಗೆ ಭಯನಾಶಗೇ ಸರ್ವೇಶಗೆ
ರಾಸಮನೋಲ್ಲಾಸ ಲಕ್ಷ್ಮೀಶ ಕೇಶವಮೂರ್ತಿಗೆ ೨
ಮಾರುತಾತ್ಮಜ ಸೇವೆಗೇ ನತಪಾರಿಜಾತ ಸಮಾನಗೆ
ವಾರಿಜಾಯತನೇತ್ರಗೇ ಶ್ರೀ ಶೇಷಶೈಲನಿವಾಸಗೆ ೩

೧೦೯
ಮಂಗಳಂ ಶ್ರೀ ನರಸಿಂಹಗೆ ಜಯಮಂಗಳಂ ಪ್ರಹ್ಲಾದವರನಿಗೆ ಪ.
ತರಳನು ಮೊರೆಯಿಡೆ ಭರದಿಕಂಬದಿಂಬಂದು
ದುರುಳನ ಸದೆವಡೆದು ಕರುಳನು ಧರಿಸಿ
ಧರಣಿಗಚ್ಚರಿಯೆನೆ ತರಳನ ಮನ್ನಿಸೆ
ಸಿರಿಯೊಡಗೂಡಿದ ನರಕೇಸರಿಗೇ ೧
ತ್ರಿಜಗತ್ಪಿತ ನಿನ್ನ ನಿಜಪಾದಾಂಬುಜವ
ಭಜಿಸುವೆ ನೋಡೆನ್ನ ಗಜರಾಜವರದ
ಸುಜನರ ಸಂಗತಿದೊರೆವಂತೆ ಕರುಣಿಸು
ಗಜಾರಣ್ಯಕ್ಷೇತ್ರ ವಿರಾಜಿತನೆ ೨
ದೋಷ ನಿವಾರಣ ಶೇಷಗಿರಿಯಲ್ಲಿ
ದಾಸರ ಕೈ ಬಿಡೆನೆಂದು ಘೋಷಿಸುತಿಹ
ಸರ್ವೇಶನಿಗೆ ಶೇಷಶಯನ ಲಕ್ಷ್ಮೀಶ
ಕೇಶವ ಕಮಲಾಕ್ಷ ಶ್ರೀ ಶ್ರೀನಿವಾಸನಿಗೆ ೩

೨೯
ಮಂಗಳಂ ಶ್ರೀ ಲಕ್ಷ್ಮೀದೇವಿಗೆ ಜಯ
ಮಂಗಳಂ ಪಕ್ಷಿವಾಹನರಾಣಿಗೆ ಪ.
ಮಂಗಳಂ ಮಂತ್ರಮೂರುತಿಗೆ ಶುಭ
ಮಂಗಳಂ ಪರತಂತ್ರರೂಪಿಣಿಗೆ ಅ.ಪ.
ಭಾರ್ಗವಿಗೆ ಭಾಗ್ಯದಾಯಿನಿಗೆ
ಭಾಗವತರ ಪೂಜೆ ಕೈಗೊಂಬಳಿಗೆ
ನಾಗವೇಣಿಗೆ ವರನಾಗಪೂಜಿತೆಗೆ ವರ
ಭೋಗಿಭೂಷಣಸುತೆ ಯೋಗೇಶ್ವರಿಗೆ ೧
ಸೀತೆಗೆ ಮಂಗಳಗೀತೆಗೆ ಭುವಿ
ಜಾತೆಗೆ ಮಂಗಳಂ ಪವನಜಸೇವಿತೆಗೆ
ಮಾತೆಗೆ ಸದ್ಗುಣ ಪೂತೆಗೆ ವರಪ್ರ
ದಾತೆಗೆ ನಿತ್ಯನಿರ್ಮಲೆಗೆ ೨
ವರಶೇಷಗಿರಿವರನ ಉರದಲ್ಲಿ ನೆಲೆಗೊಂಡು
ಶರಣಾಗತರಂ ಪರಿಭಾವಿಸಿ
ಪರತರ ಸುಖಸೌಭಾಗ್ಯವ ಕರುಣಿಸಿ
ಪೊರೆವ ಕಾರುಣ್ಯಮೂರುತಿಗೆ ೩

೧೧೦
ಮಂಗಳಂ ಶ್ರೀಲಕ್ಷ್ಮೀಕಾಂತಗೆ
ಜಯಮಂಗಳಂ ವೈಕುಂಠನಿಲಯಗೆ ಪ.
ಆಮನಸಿಜನಯ್ಯಗೆ ಭುಜಗಭೂಷಣ ಪ್ರಿಯಗೆ
ತ್ರಿಜಗತ್ಪತಿ ಪುರುಷೋತ್ತಮಗೆ ಭಜಕರಕ್ಷಕ ಶ್ರೀ
ವಿಜಯಸಾರಥಿಗೆ ದ್ವಿಜರಾಜಗಮನ ಅಜಾಮಿಳವರದಗೆ ೧
ಆಪನ್ನಿವಾರಣ ಅಪ್ರಮೇಯನಿಗೆ ತಾಪತ್ರಯಹರ
ಶ್ರೀಪತಿಗೆ ತಾಪಸವಂದಿತ ಕೋಪವಿರಹಿತ
ಗೋಪಾಲಕನಂದನ ಯದುಪತಿಗೇ ೨
ಸನಕಾದಿಮುನಿಗಳಿಂದನವರತವು ಪೂಜೆಯನು ಕೈಗೊಂಬ
ವನಜಾಕ್ಷಗೆ ಘನಶೇಷಗಿರಿವಾಸ ಚಿನ್ಮಯರೂಪ ಶ್ರೀ
ವನಜನಾಭವೇಂಕಟಗೆ ಮಂಗಳಂ ಶ್ರೀ ಲಕ್ಷ್ಮೀಕಾಂತಗೆ೩

೧೧೧
ಮಂಗಳಾರತಿಯೆತ್ತಿ ಪಾಡಿರೆ ರಂಗನಾಥನ ನೋಡಿರೇ ಪ.
ಅಂಗನಾಮಣಿಯನ್ನು ಸಲಹಿದ ಪಾಂಡುರಂಗನ ಭಜಿಸಿರೆ ಅ.ಪ.
ನೆರೆದಸಭೆಯೊಳು ಸೆರಗನೆಳೆಯಲು ತರಳೆಭೀತಿಯ ತಾಳಲು
ದುರುಳನೆರಿಗೆಯ ಸೆಳೆಯಲು ಶರಣು ನೀನೇ ವರದನೆನ್ನಲು
ವರವನಿತ್ತಗೆ ಭರದೊಳು ಕರಣವಾರ್ಧಿಗೆ ಮುದದೊಳು ೧
ಅಕ್ಷಯಾತ್ಮಕ ರಕ್ಷಿಸೈ ಶ್ರೀವತ್ಸ ದೀನಳ ಮಾನಮಂ ಕಮ
ಲಾಕ್ಷ ಬೇಡುವೆ ದೈನ್ಯದಿಂ ರಕ್ಷನೀನೆನೆ ಚಪಲಾಕ್ಷಿ
ಆಕ್ಷಣಂ ರಕ್ಷಿಸಿದೈ ಕರುಣದಿಂ ಅಕ್ಷಯಪ್ರದಾನದಿಂ ೨
ನಿತ್ಯನಿರ್ಮಲ ನಿರ್ವಿಕಲ್ಪ ನಿತ್ಯತೃಪ್ತನ ಭಜಿಸಿರೆ
ಭಕ್ತ್ಯಧೀನನ ಬೇಡಿರೆ ಸತ್ಯವಿಕ್ರಮ ಶೇಷಶೈಲ
ನಿಕೇತಗೆ ಜಯವೆನ್ನಿರೇ ಚಿತ್ತಶುದ್ಧಿಯ ಪಡೆಯಿರೇ ೩

೧೭
ಮಂದರೊದ್ಧಾರ ಮುಚುಕುಂದವರದ ಮುಕುಂದ
ಇಂದಿರಾನಂದ ಗೋವಿಂದ ವರದ
ಕಂದನತಿ ದೈನ್ಯದಿಂ ತಂದೆ ಬಾರೆನ್ನಲಾ
ನಂದದಿಂ ಭದಿಂ ಬಂದೆ ಭರದಿಂ
ನಂದಾತ್ಮ ಸಂಜಾತನೆಂದೆನಿಸಿ ನಲವಿನಿಂ
ಬೃಂದಾವನದಿ ನಿಂದೆ ವರದನೆಂದೆ
ಅಂದಂತು ಪಾಂಚಾಲಿಗಂದದಿಂ ದಕ್ಷಯಾ
ನಂದಮಂ ಕೃಪೆಗೆಯ್ದುದರರೆ ಪಿರಿದು
ಅಚ್ಚುತಾನಂತ ಚಿದ್ರೂಪ ವಿಭವ
ಪಚ್ಚಕರ್ಪೂರದಿಂ ಮಿಳಿತವಾಗಿ
ಪೆರ್ಚೆ ಪರಿಮಳ ವೀಳ್ವಮಿದನುಕೊಂಡು
ಮೆಚ್ಚಿ ಪೊರೆಯೆನ್ನ ಶೇಷಾದ್ರಿರನ್ನ

೧೮
ಮಣಿಹಾರಮಂ ತೊರೆದು ದನುಜೇಶನಾಕರುಳ –
ನಣಿಯ ರದಿ ಧರಿಸಿರ್ಪನÀನಘನಿವಗೆ
ವರರತ್ನಹಾರಮಂ ಹರಿಸದಿಂದಳವಡಿಪೆ
ನರಹರಿಯ ಕಂಧರಂ ಮೆರೆಯಲರರೆ
ಜಪಸರವನಾಂತೆಸೆವ ಸುಪವಿತ್ರಗಿಂದಿಡುವೆ
ವಿಪುಲ ಮುಕ್ತಾಸರವನುಪಮೆಮೀರೆ
ಕಮನೀಯಗಾತ್ರಂಗೆ ರಮಣೀಯ ಶ್ಯಾಮಲಗೆ
ಕಮಲಮಾಲೆಯನಲಂಕರಿಪೆನಿಂದು
ಧುರಧೀರನಂ ವೀರ ಶೌರ್ಯನಿಧಿಯ
ಧರಣೀ ಸುರಾಳಿ ಸಮ್ಮೋದಕರನ
ಶರಣಾಗತರಕ್ಷನ ನಮಿತಬಲನ
ವರಶೇಷಗಿರೀಶನಂ ನಮಿಪೆನಿನ್ನು

೨೬
ಮಾತಿನೊಳು ಕಡುಜಾಣ ನೀತಿಯೆಂಬುದ ಕಾಣ
ಪ್ರೀತಿಯಿಲ್ಲದ ಪ್ರಾಣನಾಥನಮ್ಮ
ಕಪಿಜನಗಳೊಡನಾಡಿ ಚಪಲಚಿತ್ತನುಮಾದ
ಕೃಪೆಯಿಲ್ಲವೆಳ್ಳನಿತು ಕೃಪಣನಕಟ
ಸ್ತ್ರೀಹತ್ಯ ನರಹತ್ಯ ಬ್ರಹ್ಮಹತ್ಯವಗೈದ
ಸಾಹಸಿಯೆದೇನೆಂಬೆ ಘನನಿತಂಬೆ
ಪಕ್ಷಪಾತಿಗಳೊಳಗೆ ಈಕ್ಷಿಸಲ್ ಧರೆಯೊಳಗೆ
ದಕ್ಷನೀತಗೆ ಸರಿಯೆ ಪೇಳೆ ಸಖಿಯೆ
ಶರವೊಂದು ನುಡಿಯೊಂದರಿಂದ ನಲಿವ
ತಿರುಕ ಹಾರುವರೊಡನೆ ಚರಿಸುತಿರುವ
ಪರಮಸಾತ್ವಿಕ ಮೂರ್ತಿಯೆಂದು ನುಡಿವ
ವರಶೇಷಗಿರಿವಾಸ ನೆಂದುಮೆರೆವ

೧೧
ಮಾನಿನೀ ವ್ರತಹರಣ ದೀನರಕ್ಷಣ ನಿಪುಣ
ದಾನವ ಕುಲಾಹನನ ವಸನಹೀನ
ತ್ರಿಪುರಾರಿ ವಂದಿತ ತಪ್ತಹೇಮಸುಗಾತ್ರ
ಸುಪವಿತ್ರ ಸುಚರಿತ ಭೇದರಹಿತ
ಮೃತ್ಯುಭಯ ವಿರಹಿತ ನಿತ್ಯ ನಿಷ್ಕಲ್ಮಷ
ಸತ್ವಮಯ ಸ್ವರೂಪ ಬುದ್ಧರೂಪ
ಆನಂದಪರಿಪೂರ್ಣ ಅಬ್ಜಪತ್ರೇಕ್ಷಣ
ಆದ್ಯಂತಕಾರಣ ಅಪಾರಮಹಿಮ
ಭೂತದಯಾಪರ ಧರ್ಮಸಾರ
ಪೂತ ಸದ್ಗುಣಲಸಿತ ದುರಿತದೂರ
ಧಾತ ಸುಕವಿಜನ ಚೈತನ್ಯದಾತ
ಖ್ಯಾತ ಶೇಷಾದ್ರಿವರ ಪಾಹಿಸುಕರ

೧೦೫
ಮಿತಭಾಷಿಯಾಗಿ ಬಾಳು ನೀ ಮನುಜಾ
ಅತಿಭಾಷಿಯೆನಿಸದೆ ಪ.
ಭಾಷೆ ಹೆಚ್ಚಲು ದೋಷಿಯೆನ್ನುತ
ದೂಷಿಸುವರಾಕ್ರೋಶದಿಂದಲಿ
ರೋಷಗೊಳ್ಳುವೆÀ ಗಾಸಿಯಾಗುವೆ
ಶೇಷಶಯನನ ದಾಸನೆÀನಿಪೊಡೆ ೧
ಮೂಲಕಾರಣನಾದ ದೇವನ
ಮೂಲಮಂತ್ರದ ಸಾರವಿದು
ಮೇಲನರಿತು ಸುಶೀಲನೆನ್ನಿಸು
ಕಾಲಪಾಶದಿ ಬೀಳದಂತಿರೆ ೨
ಕಾಕುಮನುಜರ ಕಾಕುಟಾಪಕೆ
ಏಕೆ ಸೇರುವೆ ಜೋಕೆಯಿಂದಿರು
ಮೂಕನಂತಿರು ಲೋಕನಾಥ ನೊ
ಳೈಕ್ಯವಾಗಿ ವಿವೇಕಿಯೆನ್ನಿಸೆ ೩
ನಿತ್ಯವಲ್ಲದ ವಿತ್ತಮನೆಧನ
ಭೃತ್ಯರೆಲ್ಲರ ಸುತ್ತಿನೀಂ
ಮತ್ತನಾಗದೆ ನಿತ್ಯತೃಪ್ತನ
ಸತ್ಯಚರಿತನ ಸತ್ವವರಿವೊಡೆ ೪
ಬಂದು ನುಡಿಯದಿರೆಂದೆ ಸುಮ್ಮನೆ
ಕಂದ ನೀ ಮನದಂದು ಬಿಮ್ಮನೆ
ತಂದೆ ಶೇಷಗಿರೀಶ ನಂಘ್ರಿಯೆ
ನಂಬಿ ನೀ ನಲವಿಂದ ಸುಖಿಪೊಡೆ ೫

ವಿಶೇಷ ಕೀರ್ತನೆಗಳು
೧೨೫
ಮುಟ್ಟಬೇಡಿ ಮುಟ್ಟಬೇಡಿ ಮುರಹರನ ಭಕ್ತರನು ಪ.
ಭ್ರಷ್ಟರಾಗದಿರಿಯೆಂದು ಕಟ್ಟು ಮಾಡಿದ ಯಮನು ಅ.ಪ.
ಹರಿನಾಮ ಪಾರಾಯಣ ನಿರುತರಾಗಿರುತಿಹರ
ಹರಿದಿನ ವ್ರತವನಾಚರಿಸುತಿಹರ
ಹರಿಮಹಿಮೆಯನು ಕೊಂಡಾಡಿ ಪಾಡುತಲಿಹರಂ
ಹರಿದಾಸರಾ ದಾಸ್ಯದೋಳಿರುತಿಹರಂ ೧
ಗುರುಹಿರಿಯರಾಣತಿಗೆ ಶಿರಬಾಗಿ ನಡೆವವರ
ಪರನಾರಿ ಸೋದರರ ಸಚ್ಚರಿತ
ಮುಳ್ಳವರ ಪರಮಾತ್ಮ ತತ್ಮಜ್ಞಾನ
ವರಸತ್ಯಸಂಧರ ಹರಿಶರಣರ ೨
ಪತಿಪಾದ ಸೇವಾನಿರತೆಯಾಗಿಹ ಸತಿಯ
ಪತಿಗತಿಯನನುಸರಿಪ ಸುಗುಣ ಸುವ್ರತೆಯ
ಪತಿಹಿತೆಯಾಗಿ ಹಿತಬಾಂಧವರ ಮಾನಿಸುವ
ಸತೀಸಾಧ್ವಿಯರ ಶ್ರೀಪತಿ ಶರಣೆಯರ ೩
ವಾಸವಾರ್ಚಿತ ಶ್ರೀಶೇಷಗಿರಿವಾಸನ್ನ
ದಾಸ್ಯಭಾವದೊಳಿರುವ ಶರಣರನ್ನು
ಮೋಸತನದಿಂ ನೀವ್ ಪೋಗಿಸೆಣಸಿದರೆ ಅವರಿಂದ
ಘಾಸಿ ಪಡೆಯುವಿರೆಂಞ್ವ ಯಮಧರ್ಮ ನಯದಿಂದ೪

೫೩
ಮುತ್ತಿನಾರತೀ ತಂದೆತ್ತಿಪಾಡುವೆ
ಚಿತ್ತಜಾತ ಜನಕ ರಂಗನಾಥದೇವಗೆ ಪ.
ಭೂಮಿಪಾಲಗೆ ಶ್ರೀ ಭಾಮೆಯರಸಗೆ
ಕಾಮಿತಾರ್ಥ ದಾತ ಮನೋ ಮೋಹನಾಂಗಗೆ ೧
ಕಾಳೀಮಡುವನು ಕಲಕಿ ಬಂದಗೆ
ಬಾಲನಾಗಿ ಗೋವುಗಳನು ಕಾಯ್ದ ಗೊಲ್ಲಗೆ ೨
ಮುರವಿರೋಧಿಗೆ ಕರುಣವಾರ್ಧಿಗೆ
ತರಳ ಧ್ರುವನಿಗೊಲಿದು ಬಂದ ವರದರಾಜಗೆ ೩
ಶರಣರಕ್ಷಣೆ ಸರಸಿಜಾಕ್ಷಗೆ ಪರಮ
ಪಾವನ ಶೇಷಶೈಲ ಶಿಖರ ಧಾಮಗೆ ೪

೧೨೬
ಮುಳಿಯ ಬೇಡಿರಿ ಎನ್ನಪ್ಪಗಳಿರೆ ಕೇಳಿ ಪ.
ಎಳದಂಗೆ ನುಡಿದುದನು ಹಳಿವಿರೇ ಪೇಳೀ ಅ.ಪ.
ಯತಿಗಣಪ್ರಾಸ ಶ್ರುತಿತಾಳ ಲಯ ಸಂಗತಿಯ ನಾನರಿಯೆ ಪುಸಿಯನುಡಿಯೆ
ಶೃತಿ ಸ್ರ‍ಮತಿ ಪುರಾಣ ಇತಿಹಾಸ ಶಾಸ್ತ್ರಗಳ ಗತಿಮಿತಿ ತತ್ವಮದೊಂದನರಿಯೆ
ಅತಿಶಯಿತ ಪಾಂಡಿತ್ಯ ಪ್ರಭೆಯಿಂ ರಾಜಿಪರಲ್ಲಿ
ಕ್ಷಿತಿನಾಥನಾಡಿಸಿದ ಪರಿಯಿದೆಂದೆನುವೆ ವಿನಯದಲಿ ೧
ಅಪ್ಪಗಳಿರೆ ನಿಮ್ಮಡಿಯೊಳೊಪ್ಪಿಸಿರುವೀ ಕೃತಿಯ
ತಪ್ಪೊಪ್ಪುಗಳ ಸಲೆ ನೋಡಿ ನಲವಿಂ
ತಪ್ಪುಳ್ಳೊಡದನೊಪ್ಪದಿಂಸಾವರಿಸಿ ಮುಂ
ದೊಪ್ಪುತಿಹ ಜಸವನಪ್ಪುಗೊಳ್ಳಿರಿ ದಿಟದಿಂ೨
ಕಕ್ಕುಲತೆಯುಳ್ಳೆನ್ನ ಅಕ್ಕತಂಗಿಯರಿಗಿದನು
ಅಕ್ಕರತೆಯಿಂದೊಪ್ಪಿಸಿಹೆನೆಂದರಿಯಿರಿನ್ನು
ಕಕ್ಕಸದಿ ನೋಡದಿರಿ ಧಿಕ್ಕರಿಸಿ ನುಡಿಯದಿರಿ
ಚಿಕ್ಕಮಕ್ಕಳ ನೋಡಿ ತಕ್ಕೈಸಿ ನುಡಿಗಲಿಸಿರಿ
[ಅಕ್ರೂರವರದ ಶೇಷಗಿರಿವರನೆನ್ನ
ಸುಕೃತಕೆ ಸಾಕ್ಷಿಯೆಂಬೆ ಸಾರಿ] ೩

೧೨೮
ಮೇಲನೆಸಗಲಿ ನಿಮಗೆ ಮಾಲಕುಮಿ ಮನ್ನಿಸುಗೆ ಪ.
ಬಾಲಕರು ಬಯಸುವೆವು ಬಾಲೆಯರು ಹರಸುವೆವು ಅ.ಪ.
ಮಾಧವನ ದಯೆಯಿರಲಿ ಯೊಧರಿಗೆ ಜಯವಿರಲಿ
ಸಾಧನವು ಕೈಸೇರೆ ಶ್ರೀಧರನು ಮೈದೋರೆ ೧
ಸಿದ್ಧಿಸಿದಾವ್ರತವೆಂದು ಶುದ್ಧಭಾವದಿ ಬಂದು
ಬದ್ಧಕಂಕಣರಾಗಿ ಶ್ರದ್ಧೆಯಿಂ ಶಿರಬಾಗಿ ೨
ವಾಸುದೇವನ ಸ್ಮರಿಸಿ ಮೀಸಲಂ ತೆಗೆದಿರಿಸಿ
ವಾಸಪಂಥದಿ ಬೇಗ ದಾಸ್ಯಮಂ ಬಿಡಿಸೀಗ ೩
ವಿಜಯದಶಮಿಯು ನಾಳೆ ವಿಜಯಯಾತ್ರೆಗೆ ತೆರಳೆ
ವಿಜಯಸಾರಥಿಯೊಲಿದು ವಿಜಯವೀಯುವನಹುದು ೪
ಘನತೆಗೇರುವ ನಮ್ಮ ವನಿತೆಯರೆ ನಿಮ್ಮ
ಮನೆತನವ ಬೆಳಗಿಸಿರೆ ಇನಿಯರನು ಹುರಿಡಿಸಿರೆ ೫
ಪೌರುಷವು ಪುಟ್ಟುವೋಲ್ ವೀರರಹುದೆನ್ನುವೋಲ್
ವೀರಮಾತೆಯರೆ ನೀಂ ವೀರಪುತ್ರರ ಪಡೆಯಿರೆ ೬
ಮಕ್ಕಳಂ ತಕ್ಕೈಸಿ ತಕ್ಕಂತೆ ನುಡಿಗಲಿಸಿ
ಕಕ್ಕುಲಿತೆಯಿಂ ನೋಡಿ ಅಕ್ಷರಸ್ಥರ ಮಾಡಿ ೭
ಮಹಿಳೆಯರೆ ಮಾದರಿಯ ಗೃಹಿಣಿರಹೆ ಶಾರದೆಯ
ಮಹಿಮೆಯದು ಕರಮೆಸೆಗೆ ವಿಹಿತಮದು ನಿಮ್ಮೊಳಗೆ ೮
ದೇಶದೇಳಿಗೆಯಲ್ಲಿ ಆಸೆ ನಿಮಗಿರುವಲ್ಲಿ
ದೇಶೀಯವ್ರತಧರಿಸಿ ಐಶ್ವರ್ಯಮಂ ಬೆಳಸಿ ೯
ಪತಿ ಸುತ ಸಹೋದರರ ಹಿತವೆಳಸಿ ಬಾಂಧವರ
ಮತವರಿತು ನಡೆಯಿಸಿರೆ ವ್ರತಸಾಂಗವೆನ್ನಿಸಿರಿ ೧೦
ಇನ್ನೇಳಿ ಕೈನೀಡಿ ಸನ್ಮಾನೈಯರೆ ನೋಡಿ
ಧನ್ಯವಾದವ ಮಾಡಿ ಮನ್ನಿಸಿರೆ ದಯೆಗೂಡಿ ೧೧
ಬಾಲಕರು ಬೇಡುವರು ಮೇಲೆನಿಪ ಮಮತೆಯನು
ಶಾಲುಸಕಲಾಸೆಯನು ಬಾಲಕರು ತಾ ಬಯಸರು ೧೨
ತಾಯಿಯರೆ ನೀವಿತ್ತ ತಾಯ್ನಲವನಿತ್ತ
ತಾಯೆಂದುಕೊಳ್ಳುವರು ಈಯಣುಗರ್ ಕೇಳಿದನು ೧೩
ಕನ್ಯೆಯರು ಹಾಡುವರು ಕನ್ನಡವ ಪಾಡುವರು
ಕನ್ನಡಕೆ ಜಯವಾಗಲೆನ್ನುವರು ನಲವೀಗೆ ೧೪
ಹರಕೆಯನು ಸಲ್ಲಿಸಿರೆ ತರಳರಂ ಮನ್ನಿಸಿರಿ
ಮರಳಿ ಬಾರೆಂದೆನಿರೆ ಹರುಷದಿಂ ಬೀಳ್ಕೊಡಿರಿ೧೫
ವರಶೇಷಗಿರಿವಾಸ ಕರುಣದಿಂದಲೆ ಲೇಸ
ಧರೆಗೆಲ್ಲ ಸಂತೋಷ ದಯೆಗೆಯೈ ಸರ್ವೇಶ೧೬

೩೩
ಮೌನಮೇಂ ಪ್ರಾಣೇಶ ಎನ್ನೊಳೀಪರಿರೋಷ
ಇನ್ನೇತಕೀ ದ್ವೇಷ ಜೀವಿತೇಶ
ಅನ್ಯಾಯಮೇಂಗೈದೆ ನಿನ್ನನಾನೇನೆಂದೆ
ನಿನ್ನ ಚರೈಯನೊರೆದೆ ನಿನ್ನ ಮುಂದೆ
ಇಷ್ಟು ಮಾತ್ರದಿಯೆನ್ನ ದಿಟ್ಟಿಸದೆ ನೀಂಘನ್ನ
ಸಿಟ್ಟಿನಿಂ ಕುಳ್ಳಿಹುದೆ ದಿಟ್ಟತನದೆ
ಕರುಣಾಳು ನೀಕೇಳು ತರುಣಿ ನಾ ನಿನ್ನವಳು
ಪರರ ಭಾವಿಸಲೊಲ್ಲೆ ನೀನೆ ಬಲ್ಲೆ
ಇನ್ನಾದೊಡೀ ಪಂಥವುಳಿದು ದಯದಿ
ಕಣ್ತೆರೆದು ನೋಡಿನ್ನು ಮನ್ನಿಸೆನ್ನ
ನಿನ್ನುಳಿದು ಕಾಣೆನಾನನ್ಯರನ್ನು
ಘನ್ನ ಶೇಷಾದ್ರೀಶನಹುದು ನೀನು

೩೧
ರಂಗನಾಯಕಿಗಾರತೀ ಅಂಗನೆಯರು ಬೆಳಗಿರೆ
ಅಂಗಜನಜನನಿಗೆ ಮಂಗಳಗಾತ್ರೆಗೆ ಮಂಗಳವೆನ್ನಿರೆ ಪ.
ಪ್ರೇಮಮಯ ಸ್ವರೂಪೆಗೆ ರಾಮಣೀಯಕ ಮೂರ್ತಿಗೆ
ಪ್ರೇಮತಳೆದಾಮೋದದಿಂ ಕಾಮಿತವೀಯೆನುತಾ ನಮಿಸುತ ೧
ಮಾತೆಯೇ ಪರದೈವವು ನೀತಿತಾನಿದು ಸತ್ಯವು
ವಾತಾತ್ಮಜ ಸಂಸೇವಿತೆ ಸೀತೆಯ ಜಗನ್ಮಾತೆಯೆನ್ನುತ ೨
ಕಾಂತ ಶೇಷಗಿರೀಶನ ಅಂತರಂಗದ ದಯೆಯೆನೆ
ಇಂತೆಮ್ಮ ಸುಸ್ವಾಂತರ್ಕಳೆಂದಂತೆಸಗುವಂತ ಶ್ರೀಕಾಂತೆಯೆ ತಾನೆನೆ೩

೯೩
ರಘುರಾಮ ನೀನೆನ್ನ ಪಾಲಿಸೈ
ಜಗನ್ನಾಯಕ ಜಾನಕೀಪತೇ ಪ.
ಸಾಗರಶಯನ ಸಾರಸನಯನ
ನಾಗವೈರಿಗಮನ ಬಾಗಿ ನಮಿಪೆನಾ ೧
ಯಾಜ್ಞಸೇನಿಯಂದು ಯಾಚಿಸಲೈನಿಂದು
ಅಕ್ಷಯವಸ್ತ್ರದಿಂ ರಕ್ಷಿಸಿದ ಬಂಧು ೨
ವಸುದೆಯೊಳು ಬಂದು ಅಸುರರನ್ನೆ ಕೊಂದು
ವಾಸುದೇವನೆಂದು ಪೆಸರನಾಂತೆಯಂದು ೩
ಪಾಹಿರಾಮರಾಮ ಪಾಹಿಪೂರ್ಣಕಾಮ
ತ್ರಾಹಿ ಸತ್ಯ ಪ್ರೇಮ ತ್ರಾಹಿರಂಗಧಾಮ ೪
ಶೇಷಶೈಲನಿಲಯವಾಸ ವಾದಿಗೇಯ
ವಾಸುದೇವ ಸದಯ ಶ್ರೀಸತೀಪ್ರಿಯ ೫

೪೬
ರಮಣನಾ ವಿಭವವನು ಅಮಮ ವಿವರಿಪೆ ನಾನು
ಕಮಲಾಕ್ಷಿ ಕೇಳ್ನೀನು ಕ್ರಮದೊಳಿದನು
ತನಯರೊಳು ಜಡನೊರ್ವನನಂಗನೆ ಮತ್ತೊರ್ವ
ವನಿತೆ ಚಂಚಲೆಯಚಲೆಯೆನಿಪರವರು
ವಕ್ರಗಮನೆಯೆ ಸುತೆಯು ಚಕ್ರವೆ ನಿಜಾಯುಧವು
ಪಕ್ಷಿಯೇ ವಾಹನವು ದಕ್ಷನಿವನು
ಶರಧಿಯೇ ಮಂದಿರವು ಉರಗವೇ ಹಾಸಿಗೆಯು
ಇರವನರಿಯರದಾರು ಭುವಿಯ ಜನರು
ಬರಿಯ ಮಾತಿಗೆ ಮನವು ಕರಗಿದುದಕೆ
ಅರಿಯದಾನೈತಂದು ನೆರೆದೆನೇಕೆ
ಪರಿಕಿಸಲ್ ಮತಿಭ್ರಮೆಯಿದುವೆ ಸಾಕೆ
ವರಶೇಷಗಿರೀಶನೆ ಸಲಹಬೇಕೆ

೫೭
ರಮಣಿ ಮಂಜುಳವಾಣಿ ಕಮನೀಯ ಸುಶ್ರೋಣಿ
ವಿಮಲ ಪಲ್ಲವಪಾಣಿ ಫಣಿಪವೇಣಿ
ಮೀನಾಕ್ಷಿ ಯೀ ಚಿಂತೆ ನಿನಾಂತುದೇಂಕಾಂತೆ
ಮೌನಮೇಂ ಮತಿವಂತೆ ಬಿರುಸದೆನಿತೆ
ಕುಹಕರುಕ್ತಿಯ ಕೇಳಿ ಕಡುಕೋಪವನು ತಾಳಿ
ಬಹುವಿಧದಿ ಬಳಲಿಸುವೆ ವಿಹಿತವೇನೆ
ಹೆಬ್ಬುಲಿಯ ತೆರದಿಂದ ಬೊಬ್ಬಿರಿದು ಮತಿಯುಳಿದು
ಅಬ್ಬರಿಸಿ ಕೂಗುವರೆ ಅಬ್ಜನೇತ್ರೆ
ಕೈಪಿಡಿದ ರಮಣನೊಳು ಮುನಿಸೆ ತರುಣಿ
ತಾಪಶಮನವ ಮಾಡು ನೋಡು ರಮಣಿ
ಓಪನೆಂದೊಲಿದಾಡು ಕರವನೀಡು
ಭೂಪಶೇಷಾದ್ರೀಶನತ್ತ ನೋಡು

೩೨
ರಾಜಿಸುವೀ ಪೀಠಕೀಗ ದಯಮಾಡು
ರಾಜಮುಖೀ ಬೇಗ ಪ.
ಚಿತ್ರವಿಚಿತ್ರಮಾಗಿ ಮೆರೆವ ರತ್ನಖಚಿತ ಮಂಟಪದಿ
ಕೆತ್ತನೆಯ ಹಸೆಯಮೇಲೆ ರತ್ನಗಂಬಳಿಯ ಹಾಸಿ ೧
ಪರಿಪರಿಯ ರಾಗದಿಂದ ತರುಣಿಯರು ನಿನ್ನ ಪಾಡಿ
ಕರೆಯುತಿಹರೋಳ್ ಕರುಣೆಯಿರಿಸಿ ಅರಸನೊಡನೆ ಸರಸದಿಂದ೨
ಪಂಕಜಾಕ್ಷಿ ನಿನ್ನ ಚರಣಕಿಂಕರರ ಮೊರೆಯ ಕೇಳಿ
ಕನಕಪೀಠದಲ್ಲಿ ಕುಳಿತು ಕಾಂಕ್ಷಿತಾರ್ಥವಿತ್ತು ಸಲಹು ೩
ಪರಮಪುರುಷ ಶೇಷಶೈಲವರದನರಸಿ ನಿನ್ನ ಗುಣವೆ
ಸ್ಮರಿಸಿ ಸ್ಮರಿಸಿ ಕರೆಯುತಿರುವ ತರಳೆಯರಂ ಪೊರೆಯೆ ತಾಯೆ೪

೫೪
ಲಕುಮೀಶ ನಿನಗಾರತಿ ಭಕುತಿಯಿಂದೆತ್ತುವೆ
ಸಕಲರ ಸುಖಕರ ಭಕ್ತರಿಗೊಲಿಯುವ ರುಕ್ಮಿಣಿಯರಸನೆ ಪ.
ರಮಾಪತಿ ನಿನ್ನನು ನಮಿಸಿ ನುತಿಸುತ್ತಿರ್ಪೆನು
ಕಮಲಾಂಘ್ರಿಯ ಭ್ರಮರವೆಂದಮಲನೆ ಕೈಪಿಡಿ
ರಮಣನೆ ನುಡಿ ನುಡಿ೧
ಇನಕುಲಮಂಡನ ವನರುಹಲೋಚನ
ಜನಕಜಾ ಸುಪ್ರೇಮನೆ ಚಿನ್ಮಯರೂಪನೆ
ಮನುಮುನಿ ಸೇವ್ಯನೆ ೨
ಸುರನರ ಪೂಜಿತ ಸರಸಿಜ ಭವಪಿತ
ಕರುಣಾಕರ ನರಕೇಸಂ ಮರೆಹೊಕ್ಕೆನು ಪೊರೆ
ವರಶೇಷಗಿರಿದೊರೆ ೩

೬೮
ಲಾಲಿಮನುಕುಲತಿಲಕ ಮದನಾರಿವಿನುತ
ಲಾಲಿಜನಕಜಾಮಾತ ಜಾನಕೀ ಸಮೇತ ಪ.
ಕೌಸಲ್ಯಾಪ್ರಿಯಬಾಲ ಕನಕಮಯ ಚೇಲ
ಕೌಶಿಕಕ್ರತುಪಾಲ ಕರುಣಾಲವಾಲ
ಪೋಷಿತಾಮರಜಾಲ ಬಾಲೇಂದು ನಿಭಫಾಲ
ದಶಕಂಠಮುಖಕಾಲ ಜಾನಕೀಲೋಲ ೧
ನಾಕೇಶನುತಚರಣ ನಕ್ತಂಚರಶಮನ
ಶ್ರೀಕಾಮಿನೀಸದನ ರಾಜೀವನಯನ
ಲೋಕನಾಯಕ ಸರ್ವ ಲೋಕಪಾಲಕ ದಿವ್ಯ
ಸಾಕೇತಪುರನಿಲಯ ಸನಕಾದಿಗೇಯ ೨
ಈಶಸನ್ನುತ ನಾಮ ನೀಲಮೇಘಶ್ಯಾಮ
ಶೇಷಾದ್ರಿಶಿಖರಧಾಮ ಶ್ರೀರಾಮನಾಮ
ಕ್ಷೇಶಪಾಶವಿರಾಮ ವಿಶ್ವಜನಸುಪ್ರೇಮ
ಕೋಸಲಾಧಿಪರಾಮ ಪರಿಪೂರ್ಣಕಾಮ ೩

೧೧೯
ಲೀಲೆಯಿಂ ಬಾ ಲೋಲಲೋಚನೆ ಕೋಲನಾಡುವ ಪ.
ಶೀಲದಿಂದೆಮ್ಮಾಳ್ವ ಭೂಪಗೆ ಜಯವ ಪಾಡುವ ಅ.ಪ.
ಮಂದಗಮನದಿಂದ ಬಾ ಅರವಿಂದ ಲೋಚನೆ
ಮಂದಿಗಳಿಗಾನಂದ ಸಮಯಮಿಂದು ಪೊಸತೆನೆ ೧
ಬಣ್ಣ ಬಣ್ಣ ಬೆಳೆಗಳಿಂ ಪೊಂಬಣ್ಣ ದುಡುಪಿನಿಂ
ಕಣ್ಮನಂಗಳ ತಣ್ಪುಗೊಳಿಪಳ್ ಜನ್ಮಭೂಮಿತಾಂ ೨
ನವನವೊತ್ಸವದಿರವ ಸೂಚಿಪ ಶರತ್ಸಮಾಗಮಂ
[ತವ] ಮೆರೆವುದರರೆ ಶೇಷಶೈಲವರದನೊಲವಿನಿಂ೩

೧೨೦
ಲೇಸುಲೇಸಿದು ಹರ್ಷವಾದುದು
ಕಾಸನಿತ್ತಿರಿ ಭರದಲಿ ಹಾಗದ ಕಾಸನಿತ್ತಿರಿ ಭರದಲಿ ಪ.
ವಾಸುದೇವನ ದಯೆಯೆ ಸಾಕು
ಕಾಸುಬೇಡಿದವರಲ್ಲ ನಾವ್ ಕೃಪಣರ ಕಾಸಮುಟ್ಟುವರಲ್ಲ ನಾವ್ ಅ.ಪ
ಘನತೆಯೊಂದಿಹ ಧನಿಕರೆಂದು ಗಣಿಸಿಸಾರಿದೆವಿಲ್ಲಿಗೆ
ಮಣಿಯ ಬಂದೆವು ಇಲ್ಲಿಗೆ
ಘನತೆಗೊಪ್ಪುವ ಬಗೆಯ ತೋರದೆ
ಧನದ ಮೋಹದಿ ಮೆರೆದಿರೆ ನೀವ್
ಅಣುಗಿಯರೋಳ್ ಮುಳಿದಿರೇ ೧
ಒಂದು ಹಣವನು ಮುಂದೆ ಎಸೆದಿರೆ
ಮಂದಿಯಿದಿರೋಳ್ ಮೌನದಿಂ ನೀ
ವಿಂದು ಲೋಭದ ಮಂತ್ರದಿಂ
ತಂದೆ ನಿಮ್ಮೀ ಒಂದು ಹಣವನು ಕೈಗೊಂಡು ನೀವೇ ನಲಿಯಿರಿ
ಬಂಧು ಮಿತ್ರರನೊಲಿಸಿರಿ ೨
ಭಳಿರೆ ನೀವೌದಾರ್ಯಗುಣದೊಳು ಬಲಿದರೆನ್ನಿಸಿ ಮೆರೆದಿರೆ
ಕಲಿಗರ್ಣರೆನ್ನಿಸಿ ನಲಿದಿರೆ
ಜಲಜಲೋಚನ ಶೇಷಶೈಲನಿವಾಸನೊಲವಿಂ ಸಂತತಂ
ನಲಿದು ಸುಖಿಸಿರಿ ಸಂತತಂ ೩

೩೩
ವಂದಿಸುವೆನೆಲೆ ತಾಯೆ ವಂದಿತಾಮರೆಯೆ ಪ.
ಶ್ರೀಕಲಶಾಬ್ಧಿಕನ್ಯೆ ಸುರಕುಲಮಾನ್ಯೆ
ಶ್ರೀಕರ ಗುಣಪೂರ್ಣೆ ಶೋಕಾಪಹರಣೆ
ಲೋಕನಾಯಕೆ ಘನ್ನೆ
ಪಾಕಶಾಸನಸುತೆ ಪವನಜಸೇವಿತೆ
ಸಾಕೇತನಿಲಯೆ ಸರಾಗದಿ ರಕ್ಷಿಸು ೧
ಆನತನುತ ಗೀರ್ವಾಣಿ ಅಂಬುಜಪಾಣಿ
ಮಾನಿನೀಮಣಿ ಕಲ್ಯಾಣಿ ಭಯವಾರಿಣಿ
ಭಾವಜಾತ ಜನನೀ
ಭಾಗವತಾರ್ಚಿತೆ ಭಕ್ತಾಭಯಪ್ರದಾತೆ
ಬಾಗುತೆ ಶಿರ ನಿನಗೇಗಳುಂ ಮನವಾರೆ ೨
ಅರಿಯೆನು ನಿನಗೆಣೆಯಾರ ಕಾಣೆನು ಹಿತರ
ಚರಣವ ನಂಬಿದೆ ಮನವಾರ ಪಿಡಿಯೆನ್ನ ಕರವ
ಕರುಣದಿ ನೋಡೆನ್ನಿರವ
ಪರಮಪಾವನ ಶೇಷಗಿರೀಶನ
ಕರುಣಾರೂಪಿಣಿ ಜಗತ್ಕಾರಿಣಿ೩


ವಂದಿಸುವೆವಿಂದು ಮುದದೆ ಶಾರದೆ ಪ.
ವಂದಾರುಮಂದಾರೆ ಎಂದೆಂದಿಗೆಮ್ಮೊಳಿರೆ
ಸಂದೇಹವಿಲ್ಲದಂತೇ ಸುಸ್ವಾಂತೀ ೧
ಮತ್ತೇರಿ ತಲೆಕೆಟ್ಟು ಕತ್ತಲೆಯೊಳು ಬಿದ್ದು
ತತ್ತರಗೊಳ್ವೆವಲ್ಲೇ ಕೋಮಲೆ ೨
ಹಾಲಹಲದಂಥ ಆಲಸ್ಯದಿಂದ ಬೀಗಿ
ಕಾಲೆತ್ತದಂತೊರಗಿರ್ಪೆನೇ ನೊಂದೆನೇ ೩
ಕಂದನ ನುಡಿ ಕೇಳು ಒಂದಿಷ್ಟು ದಯೆ ತಾಳು
ಕುಂದುಗಳೆನಿಸದೇ ಪೊರೆ ಶ್ರೀಕರೇ ೪
ವರಶೇಷಗಿರೀಶನ ಚರಿತಂಗಳನುದಿನ
ಸ್ಮರಿಸಿಕೊಂಡಾಡುವಂತೆ ಮಾಡೆನುತೇ ವಂದಿಸುವೆ೫

೫೮
ವನಜಗಂಧಿಯೆ ನಿನ್ನ ಮನದಸಂದೆಗೆವನ್ನು
ಸನುಮತದಿ ಪೇಳಿನ್ನು ಮುನಿಸಿದೇನು
ಚಾಡಿಮಾತನು ಕೇಳಿ ರೂಢಿಯಿಂ ಖತಿತಾಳಿ
ಕಾಡುತಿಹುದೇಂ ಚಾಳಿ ರೌದ್ರಕಾಳಿ
ಸೂಚನೆಯ ಕೊಡದಿಂತು ವಾಚನದಿ ಬಿರುಸಾಂತು
ರಾಚುತಿರ್ಪೆಯದೇನೆ ನಾಚದಿಂತು
ಮಾನವತಿನೀನೆಂದು ನಾನು ನಂಬಿರಲಿಂದು
ಏನು ಮಾಡಿದೆನೆಂದು ಜರಿದೆ ಬಂದು
ಸಾಕು ಸಾಕೀಬಗೆಯ ಕಠಿಣವಾಕ್ಕು
ಕೋಕಿಲಾರವೆ ನಿನ್ನೊಳಿರುವ ಸೊರ್ಕು
ಸಾಕುಮಾಡಿಹುದೆನ್ನ ನೋಡು ಮುನ್ನ
ಲೋಕೇಶ ಶೇಷಾದ್ರಿ ವರದನೆನ್ನ

೧೨೧
ವನಜನೇತ್ರೆ ಕನಕಗಾತ್ರೆ ಅನುವಿನಿಂ ಬಾ ಮಿತ್ರೆ ಪ.
ವಿನಯದಿಂದ ಜನಕ ಸಾರುವ ಕೋಲನಾಡುವ ಅ.ಪ.
ಆರ್ಯಮಾತೆಯ ಆರ್ಯಧರ್ಮದ ಸಾರವರಿಯುವ
ವೀರಮಾತೆಯ ಭೂರಿಕೀರ್ತಿಯ ಪಾಡಿಸುಖಿಸುವ ೧
ಬೇಗನೇಳಿರೆ ಭಾಗ್ಯೋದಯಮದೀಗ ನೋಡಿರೇ
ಬೀಗಿಮಲಗುವ ರೋಗವುಳಿದು ಸರಾಗದೆ ಪಾಡಿರೇ ೨
ನವಯುಗಮಿದರೋಳ್ ಯುವತಿಯರೆ ನೀವ್ ಸುವಿಚಾರಗೈಯುತ
ಅವನೀಮಾತೆಯ ಭವಿತವ್ಯತೆಗೆ ತವಕಗೊಳ್ಳುತ ೩
ನಿದ್ದೆ ತಿಳಿದೆದ್ದೇಳಿರೆಲೆ ಭದ್ರೆಯರೇ ಭರದಿ
ಶುದ್ಧರಾಗಿ ತಿಲಕತಿದ್ದಿ ವೃದ್ಧರಂ ನಮಿಸಿರಿ೪
ಶ್ರದ್ಧೆಯಿಂ ಕಾರ್ಯಸಿದ್ಧಿಗೊಯ್ಯಿರಿ ಸಿದ್ಧಾರ್ಥರೆನಿಸಿರಿ
ಸದ್ಧರ್ಮ ದೀಕ್ಷಾಬದ್ಧರಾಗಿ ಸುಭದ್ರವಿಳೆಗೊದವಿರಿ೫
ಅರಸರನ್ನು ಸರಸದಿಂದ ಹುರುಡಿಸಿರಿನ್ನು
ಪುರುಷರೆನ್ನಿಸಿ ಕಾರ್ಯಮೆಸಗುವ ತೆರನ ತೋರಿಸಿ ೬
ದೇಶದೇಳ್ಗೆಯೊಳಾಸೆಯಿರಿಸಿ ಲೇಸನೆಸಗಿರಿ
ದೋಷಹರಣ ಶೇಷಗಿರೀಶಗೆ ಮೀಸಲಿರಿಸಿರಿ೭

೩೬
ವನಜಾಕ್ಷಿ ಕೇಳೆನ್ನ ಮನದನ್ನನಂದವನು
ಮನನಲಿದು ಪೇಳುವೆನು ಮಹಿಮೆಯನ್ನು
ತುಚ್ಛಮಾಗಿರುತಿರ್ಪ ಕಚ್ಛಪಾಕಾರದೊಳು
ಇಚ್ಛೆಗೊಂಡವನಿವನೆ ಮಚ್ಚನಯನೆ
ಹೆಡ್ಡತನದಲಿ ಬಂದು ದೊಡ್ಡ ಮಡುವೊಳು ನಿಂದು
ಗುಡ್ಡವನು ಪೊತ್ತಿಹನೆ ದಡ್ಡನಿವನೆ
ಸುರುಚಿರಾಂಗವನಿಂತು ಮರೆಗೈದು ಮುಸುಕಿನಿಂ
ಪರಮಸಂಭ್ರಮವಾಂತು ಮೆರೆಯುತಿಹನೆ
ಕ್ಷೋಣಿಯೊಳಗಿಂತಹರ ಕಾಣೆನಿನ್ನು
ಪ್ರಾಣೇಶನಾಗಿನಾಂ ಪಡೆದೆನಿವನಂ
ಏಣಾಕ್ಷಿ ನಡೆದುದಿನ್ನಾಡಲೇನು
ಜಾಣ ಶೇಷಾದ್ರೀಶನಾಣ್ಮನಹನು

೩೫
ದಶಾವತಾರದ ನಿಂದಾಸ್ತುತಿಗಳು
ವರನ ಚಂದಮದೇನ ವರ್ಣಿಸುವೆನೆಲೆ ಸಖಿಯೆ
ಪರಮಸುಂದರಗಾತ್ರನಿರವ ಕೇಳೆ
ಬಿಚ್ಚಿರುವ ಕಣ್ಗಳಂ ಮುಚ್ಚಲಾರದ ವರಗೆ
ಪಚ್ಚಕರ್ಪೂರದಾ ಕಪ್ಪಿದೇಕೆ
ಕೊಳೆತುನಾರುತಲಿಹಗೆ ಲಲಿತವಸ್ತ್ರಗಳೇಕೆ
ಹೊಲಸು ಮಯ್ಯಿಗೆ ಗಂಧ ಬಳಿಯಲೇಕೆ
ಜಲಧಿಯಲಿ ವಾಸಿಪಗೆ ಪÀಲವಿಧದ ತೊಡವುಗಳೆ
ನೆಲೆಯಿಲ್ಲದಾತಂಗೆ ಲಲನೆ ಸುತರೆ
ಅಜ್ಞಾತಪಾದಕ್ಕೆ ಗೆಜೆ ಗೊಲಸೆ
ವಿಜ್ಞಾನಮಯಗೆ ವಿವಿಧ ಸಿಂಗರವೆ
ಯಜ್ಞಭೋಕ್ತಗೆ ಮತ್ತೆ ಭಕ್ಷ್ಯದೆಡೆಯೆ
ಸೂಜ್ಞ ಶೇಷಾದ್ರೀಶನರಿಯಲಳವೇ


ವರವಾಮನಾಕಾರ ಪರಮಕರುಣಾಸಾರ
ಶರಣಜನಮಂದಾರ ಭಯವಿದೂರ
ಶತಯಾಗ ಸಹಜಾತ ದಿತಿಜಾಳಿ ಘನವಾತ
ಶತಪತ್ರದಳನೇತ್ರ ಚಾರುಗಾತ್ರ
ಕಶ್ಯಪಾತ್ಮಜಯೋಗ ವಶ್ಯ ಸದ್ಗುಣಭೂಷ
ಕ್ಲೇಶನಾಶನ ದಿವ್ಯವೇಷಭಾಷ
ವೇದಗೋಚರ ನಿತ್ಯ ಮೋದದಾಯಕ ನಮಿತ
ಮಾಧುರ್ಯವಾಗ್ವಿಹಿತ ಭೇದರಹಿತ
ಅನಂತ ಕಲ್ಯಾಣಗುಣಾಪ್ರಮೇಯ
ಸನಕಾದಿ ಮುನಿನಿಕರವಂದ್ಯ ಚರಣ
ವನಜಾಕ್ಷ ಶ್ರೀಶೇಷಶೈಲಧಾಮ
ಮನ್ಮೋಹನಾಂಗ ಪರಿಪಾಹಿರಂಗ

ರಾಮ
೬೮
ವರಶರಸಮರೈಕ ಶೂರ ರಾಮ
ಶರಧಿಮದವಿದಾರ ಪ.
ಸದಯ ಹೃದಯ ಪದ್ಮಾವತೀಪ್ರಿಯ
ಪದ್ಮದಳೇಕ್ಷಣ ವೈದೇಹೀರಮಣಅ.ಪ.
ಮಂದರಧರ ಗೋವಿಂದ ಸದಾನಂದ
ಮಂದಸ್ಮಿತ ವದನಾರವಿಂದ ೧
ನೀಲಮೇಘ ವರಶ್ಯಾಮಶರೀರ
ಪಾಲಿತ ಭಕ್ತಜನ ಮಂದಾರ ೨
ಕರುಣಾಕರ ರಮಾವರ ಭವದೂರ
ವರಶೇಷಗಿರಿವರ ಶ್ರೀಧರ ೩

೯೪
ವಾಗೀಶವಂದಿತ ಸಲಹೈ ವರದಾತ ಪೊರೆಯೈ ಪ.
ಕರಿ ಮಕರಿಗೆ ಸಿಕ್ಕಿ ಕರೆಕರೆ ಪಡುತಲಿ
ಹರಿಹರಿ ಪೊರೆಯೆನೆ ಭರದಿ ನೀ ಪೊರೆದೆಯೈ ೧
ದುರುಳನಾ ಸಭೆಯಲಿ ಸೆರಗ ಪಿಡಿದೆಳೆಯೆ
ತರುಣಿಯು ಮೊರೆಯಿಡೆ ತ್ವರಿತದಿಂ ವರವಿತ್ತೈ ೨
ಕಂದನು ಕೂಗಲು ಕಂಬದಿಂ ಬಂದೆಯೈ
ತಂದೆ ನೀನೆಂದೆನೆ ಬಂದು ಕೈಪಿಡಿ ದೊರೆ ೩
ಅರಿಗಳಟ್ಟುಳಿಯಿಂದೆ ಪರಿಪರಿಯಿಂ ನೊಂದೆ
ಅರಿವನು ಕರುಣಿಸಿ ನರಹರಿ ಸಲಹೆಂದೆ ೪
ಶೇಷಭೂಷಣವಿನುತ ಶೇಷಶಯನ ಮಹಿತ
ಶೇಷಶೈಲೇಶನೆ ಪೋಷಿಸೈ ಶ್ರೀಶನೆ ೫


ವಾಣಿಯೆ ಪುಸ್ತಕಪಾಣಿಯೆ ಮಂಗಳ
ವಾಣಿಯೆ ಬ್ರಹ್ಮನ ರಾಣಿಯೆ ವಂದಿಪೆ ಪ.
ವೇದವಿದಿತೇ ತವ ಪಾದವ ಸ್ಮರಿಸುವ
ಸಾಧನೆಯೆಲ್ಲವ ಮೋದದಿ ಪಾಲಿಸು ೧
ಎನ್ನ ನಾಲಿಗೆಯಲ್ಲಿ ಚೆನ್ನಾಗಿ ನೆಲೆಗೊಂಡು
ಅನೃತ ಬಾರದೋಲ್ ಘನ್ನೆ ನೀನಾಡಿಸು ೨
ಪರಮಪಾವನ ಶೇಷಗಿರಿ ವಾಸನ ನಿಜ
ಶರಣರ ಕಥೆ ಪೇಳ್ವ ಪರಿಜ್ಞಾನವಿತ್ತು ನೀಂ೩


ವಾರಿಜಾಸನ ರಾಣಿ ಮಂಜುಳವಾಣಿ ಪುಸ್ತಕ
ಧಾರಿಣೀ ಭವಘೋರ ದುಃಖ ನಿವಾರಿಣಿ ಪ.
ಧಾರಿಣಿಯೊಳು ಕಾಣೆ ನಿನಗೆಣೆಯಾರ ನಾನೆಲೆ
ಗೀರ್ವಾಣಿ ಪಾಲಿಸು ಗುಣಮಣಿ ಅ.ಪ
ಕಾಳಿದಾಸನೆ ಮುಖ್ಯ ಕವಿತಾಲೋಲರೆಲ್ಲರು ಧರೆಯೊಳು
ಜಯಶೀಲರೆನ್ನಿಸಿ ಮೆರೆಯಲು
ಲೋಲಲೋಚನೆ ನಿನ್ನ ಕೃಪೆಯದಲ್ಲೇ ನುಡಿಭರದೊಳು
ಬಂದು ತೋರುವುದೆನ್ನೊಳು ೧
ಪುಸಿಯು ಬಾರದ ತೆರದೊಳೆಮ್ಮಯ ರಸನೆಯಲ್ಲಿರು ಸಂತತಂ
ರಸವ ತೋರುತೆ ಸಂತತಂ
ಎಸೆವ ಶೇಷಗಿರಿಶನಂಘ್ರಿಯ ಭಜಿಸಿ ಬದುಕೆಂದೆನ್ನುತೆ
ವರವ ಪಾಲಿಸು ಸುಪ್ರಿತೆ ೨

೬೯
ವೈಕುಂಠನಾಯಕನೂ ಈ ಮಹಾತ್ಮನು
ವೈಕುಂಠನಾಯಕನು ಪ.
ಪಾಕಶಾಸನತ, ನಾಕಪಾಲಕ ಸರ್ವಲೋಕನಾಯಕ
ಭಕ್ತರಕ್ಷಕ ಶ್ರೀಕಳತ್ರ ಸುಪವಿತ್ರನೀತನು ಅ.ಪ.
ವೆಂಕಟಗಿರಿಯಿಂದ ಅಂಕನಶೆಟ್ಟಿಪುರಕೆ ಬಿಂಕದಿಂದೈತಂದ
ಪಂಕಜನಯನ ಶ್ರೀ ಶಂಕರನುತಿಪಾತ್ರನು ಬೇಡುವವರ
ಕಾಂಕ್ಷಿತಾರ್ಥವನೀವನು ಭಕ್ತರಮನಶಂಕೆಯ ಕಳೆಯುವನು
ತನ್ನಯಪಾದ ಕಿಂಕರರನು ಕಾಯ್ವನೆಂಬುವ
ಕಂಕಣಕರ ಬದ್ಧನಾಗಿಹ ಪಂಕಜಾಸನ ಜನಕ
ಲಕ್ಷ್ಮೀಕಾಂತ ಸರ್ವಾಂತರ್ಯಾಮಿಯಾಗಿಹ ೧
ಬಂದವರೆಲ್ಲ ತಾವು ಬಂದಂತೆ ಮನನೊಂದು ಹಿಂದಿರುಗಿ
ಪೋಗುವರೆಂಬ ಮಾತಿಲ್ಲ ಬಂದು ಬಂದವರಿಗೆಲ್ಲ
ಬೇಡಿದುದಿತ್ತಾನಂದ ದಿಂದವರೀಯುವ ಕಾಣಿಕೆಗಳ ಚೆಂದದಿಂ
ಕೈಗೊಂಬುವ ಗೋವಿಂದನ ಇಂದಿರೇಶನು ಸಿಂಧುಶಯನನು
ಸುರೇಂದ್ರ ವಂದ್ಯ ಕರೀಂದ್ರಪೂಜಿತ ನಂದ ಕಂದ
ಮುಚುಕುಂದ ವರದನು ೨
ಅಂಗವಿಹೀನರಿಗಂಗವ ಸರಿಗೈದು ಇಂಗದ ಭೋಗಭಾಗ್ಯಂಗಳ
ನೀವನು ಕಂಗೆಟ್ಟಿಹರಕಾಯ್ವನು – ಬೇಡುತ್ತಿಹ ಬಂಜೆಗೆ
ಮಕ್ಕಳನು ನೀಡುವನು ತನ್ನ ನಂಬಿದವರ ಕೈಬಿಡನು
ಸತ್ಯಾತ್ಮನು ಮಂಗಳಾಂಗ ಯದುಪುಂಗವ
ಸದಯಾಪಾಂಗ ಶ್ರೀ ರಂಗ
ತುಂಗವಿಕ್ರಮ ಶೇಷಗಿರಿವರ ೩

೩೪
ವೈದೇಹಿ ಪಾಲಿಸೆನ್ನಂ ನಂಬಿದೆ ನಿನ್ನಂ ಪ.
ವೇದವಿದಿತೇ ತವಪಾದವ ಸ್ಮರಿಸುವ
ಸಾಧುಭಾವವನಿತ್ತು ಪರಮಾದರದಿ ಪಿಡಿಯೆನ್ನ ಕರವ ಅ.ಪ.
ಕಾಮಿತಾರ್ಥವ ನೀಡುವಳೆಂಬುವ ಬಿರುದಾಂಕಿತೆಯಾಗಿರುವ
ಕಾಮಜನನೀ ನಿನ್ನ ನಾಮ ಮಂತ್ರಗಳನ್ನು
ನೇಮನಿಷ್ಠೆಯೋಳ್ ಜಪಿಸುವಂದದಿ ಸು
ಪ್ರೇಮದಿಂದಲಿ ವಿಮಲಮತಿಕೊಡು ೧
ಜ್ಞಾನಿಗಳಿಂದ ಜನಕನಂದನೆಯೆನಿಸಿ
ಜಾನಕಿನಾಮವ ಧರಿಸಿ
ದಾನವಕುಲವೆಂಬ ಕಾನನಂಗಳಿಗಂತು ಹವ್ಯ
ವಾಹನನೆನಿಪ ರಾಮನ ಕೈಯಪಿಡಿದ ಪರಮಪಾವನೆ ೨
ಶಮದಮಾದಿಗಳಿಂದ ಮೆರೆಯುತಲಿರ್ಪ
ಕ್ಷಮೆಗೆ ನೀ ನೆಲೆಯೆಂದು
ಯಮಿಕುಲವರ್ಯರು ನಮಿಸಿ ಸ್ತುತಿಸುತ್ತಿಹರು
ವಿಮಲ ಶೇಷಾದ್ರಿನಾಥನ ರಮಣಿ ನಿನ್ನಡಿ ಮಣಿದು ಬೇಡುವೆ ೩

೭೦
ವೈದೇಹೀರಮಣನೆ ನಮೋ ನಮೋ ಪ.
ವೇದವಿದಿತ ಭೇದರಹಿತ ವಿಶ್ವ ಸಂಸ್ತುತ
ಭದ್ರಾದ್ರೀಶ ಲೀಲಾಮಾನುಷ ಅ.ಪ
ವಾಸವಂದಿತ ನಮೋ ನಮೋ
ಭಾಸ್ಕರಾನ್ವಯಲಲಾಮ
ಜಯ ರಾಮಚಂದ್ರ ಕೌಶೇಯ ಪೀತವಾಸಶೋಭಿತ ೧
ದುಷ್ಟದಾನವಾಂತಕ ನಮೋ ನಮೋ
ಶಿಷ್ಟರಕ್ಷಕ, ದೃಷ್ಟಿಸೆನ್ನ ಸೃಷ್ಟಿಕರ್ತನೆ
ಇಷ್ಟಾರ್ಥಗಳ ನೀ ಕೊಟ್ಟು ರಕ್ಷಿಸೈ ೨
ಶ್ರೀಶೈಲವರದನೇ ನಮೋ ನಮೋ
ಶೇಷಶಯನ ಕ್ಲೇಶನಾಶನ ಭೇಷಜಾನನ
ಶ್ರೀಶ ಸರ್ವೇಶ ನಿತ್ಯನಿರಂಕುಶ ೩

೨೧
ಶರಣಜನಮಂದಾರ ಮುರದಾನವವಿದಾರ
ಕರವಿಡಿದು ಕಾಪಿಡೈ ಕಮಲನಾಭ
ಧರೆಯೊಳಾರಿರ್ಪರೈ ಪರಮಸತ್ಯಾತ್ಮರೀ
ಪರಿಯ ನೋಡಲು ನಿನಗೆ ಸರಿಯನರಿಯೆ
ಮೂರಡಿಯ ನೆವದಿ ನೀನಾರಯ್ದು ಭೂಮಿಯಂ
ಧಾರಾವಿಧಿಯಿನಿತ್ತ ದೈತ್ಯವರನ
ಶಿರಮೆಟ್ಟಿ ಪಾತಾಳ ಕುಹರದೊಳ್ ಸೆರೆವಿಡಿದು
ಪರಮ ಜಾಗರದಿಂದ ಕಾಪುಗುಡುವೈ
ಕರಿರಾಜವರದ ಲಕ್ಷ್ಮೀವಿನೋದ
ಕರುಣಾಳು ನೀನೆಂದು ತಿಳಿದೆ ಮನದೆ
ಭರದಿಂದ ಮೈದೋರು ಮುದುವ ಬೀರು
ವರಶೇಷ ಗಿರಿನಿಲಯ ಸುಗುಣವಲಯ

೭೧
ಶರಣು ಶರಣು ಶ್ರೀ ರಾಮಚಂದ್ರನೆ
ಶರಣು ಸುರಮುನಿ ವಂದ್ಯನೆ ಪ.
ಶರಣು ಶ್ರೀ ರಘುಕುಲಾಬ್ಧಿಚಂದ್ರನೆ
ಶರಣು ಸದ್ಗುಣ ಸಾಂದ್ರನೆ ಅ.ಪ
ಕಮಲನಾಭನೆ ಕಮಲನೇತ್ರನೆ
ಕಮಲಸಂಭವೆಯರಸನೆ
ಅಮರವಂದಿತ ವಿಮಲಚರಿತನೆ
ಕುಮುದಸಖಸಮಾನ್ಯನೆ ೧
ಅಂಬುಜಾಸನ ಶಂಭುವಂದಿತ
ಶಂಬರಾರಿಯ ಜನಕನೆ
ಕಂಬುಕಂದರ ನಂಬಿ ಭಜಿಸುವೆ
ಬೆಂಬಿಡದಲೆ ಪಾಲಿಸೈ ೨
ಪಕ್ಷಿವಾಹನ ರಕ್ಕಸಾಂತಕ
ಲಕ್ಷ್ಮೀರಮಣ ಶುಭಲಕ್ಷಣ
ಲಕ್ಷ್ಮಣಾಗ್ರಜ ಸತ್ಯವಿಕ್ರಮ
ರಕ್ಷಿಸೈ ಪುರುಷೋತ್ತಮ ೩
ಪರಮಪಾವನ ಶೇಷಗಿರಿಯೊಳು
ನಿರುತ ನೆಲೆಸಿಹ ಶ್ರೀಶಗೆ
ಶರಣ ಜನರ ಸಚ್ಚರಿತೆಯೋದುವ
ವರವ ಪಾಲಿಸು ದೇವನೇ ೪


ಶಾರದೇಂದು ಸನ್ನಿಭಾನನೇ ಸರಸಿಜಲೋಚನೆ ಪ.
ಶಾರದೇ ಸುವಿಶಾರದೇ ದಯೆಬಾರದೇ ನತಕಾಮದೆ
ಭೂರಿಹರ್ಷದೆ ಬೀರಿ ನಲ್ಮೆಯಾಪಾರ ಸೌಖ್ಯವ ತೋರು ಕೀರ್ತಿಯ ೧
ವಾಣಿ ವೀಣಾಪಾಣಿ ಮಂಜಳವಾಣಿ ಪುಸ್ತಕಧಾರಿಣಿ
ವೇಣುನಾದ ವಿನೋದಿನಿ ಸುಜ್ಞಾನದಾಯಿನಿ ಪಾಹಿ ಜನನೀ ೨
ಮಾತೆ ಮಂಗಳ ಗೀತೆ ಕವಿಸುಪ್ರೀತೆ ಪದ್ಮಜದಯಿತೆ
ಖ್ಯಾತೆ ಶೇಷಗಿರೀಶ ಭಕ್ತಿಪ್ರದಾತೆ ಸದ್ಗುಣಪೂತೆ ಮಹಿತೆ ೩

೯೬
ಶ್ರೀ ರಘುರಾಮ ಬಾರೋ ಪದವನ್ನು ತೋರೋ ಪ.
ದಶರಥಪ್ರಿಯ ಬಾಲ ದಶಮುಖಾಸುರ ಕಾಲ
ಕುಶಿತಾತ್ಮಜ ಮಖಪಾಲ ಶಶಾಂಕನಿಭ ಫಾಲ ೧
ಶತಪತ್ರಾಯತನೇತ್ರ ಶತಪತ್ರಾಪ್ತಜ ಮಿತ್ರ
ಶತಮನ್ಯುಸ್ತುತಿಪಾತ್ರ ಶತಯಾಗ ಸಹಜಾತ ೨
ವರಶೇಷಗಿರಿನಿಲಯ ಶರಣರಕ್ಷಕ ಸದಯ
ಗಿರಿಜಾಧವಪ್ರಿಯ ನತಸುರ ಸಮುದಾಯ ೩

೭೪
ಶ್ರೀ ರಮಣ ಭಯಹರಣ ಭವಾಬ್ಧಿತರಣ
ಸಾರಸಗುಣಭೂರಿ ಕರುಣಾಪೂರಿತೇಕ್ಷಣ ಪ.
ಶರಧಿಶಯನ ಗರುಡಗಮನ
ಶರಣರಕ್ಷಣ ಆರ್ಯಮವಂಶಾರ್ಣವರಾಕಾಸಿತ ಕಿರಣ ೧
ದುರಿತದಮನ ದೀನಭರಣ ಪರಮಪಾವನ
ಸುರಾರಿ ವಿರೋಧಿ ಖರಾರಿ ಪುರಾರಿಪ್ರಿಯ ರಘೋತ್ತಮ ೨
ಅರಿಜನೈಕ ತ್ರೈವಿಕ್ರಮ ಅನಘ
ಚರಿತ ರಾಮಚಂದ್ರ ರಂಗಧಾಮಮಂಗಳಂ ೩
ಭವಂತುತೇಸದಾ ಶ್ರೀನಿಧಾ
ಶ್ರೀರಮಣ ಭಯಹರಣ ಭವಾಬ್ಧಿತರಣ ೪

೧೦
ಶ್ರೀ ಸರಸ್ವತೀ ತಾ ಸುಮತೀ ಭವತೀ ಭಾರತಿ ಪ.
ವಾಣೀ ವೀಣಾಪುಸ್ತಕಪಾಣಿ ಪಂಕಜಾಂಘ್ರಿಯುಗೇ
ಫಣಿವೇಣಿ ಮಂಜುಳವಾಣಿ
ಏಣಾಂಕವದನೆ ಶುಭಗುಣಶ್ರೇಣಿಗೀರ್ವಾಣಿ ಜನನಿ ೧
ನೀರೇ ನಿಗಮಾಗಮ ವಿಚಾರೆ ಘೋರಭವಭಯ
ದೂರೆ ಶುಭ್ರಾಂಬರೆಧಾರೇ
ಸಾರಸಭವ ಹೃತ್ಸರಸವಿಹಾರೇ ಧೀರೇ ಚತುರೆ
ಕರಪಲ್ಲವ ಚತುರೇ ೨
ವರದೇ ರಸನದೆ ನಿಂತವಸರದೇ
ಸರಸದಿನುಡಿ ನಿಜಗುಣದಿ ಸೂನೃತೆ ವ್ರತದಿ
ವರಶೇಷಾದ್ರಿನಿಕೇತನನಂಘ್ರಿಯ ಮರೆಯದೆ ಭಜಿಸುವೆ
ತೆರದಿಂ ಕುಡುವರಮಂ ೩

೧೦೬
ಶ್ರೀಕಾಂತನನ್ನೊಲಿಸುವಾ ಬಗೆಯಾನೊರೆವೆ
ನೀ ಕೇಳೆಲೊ ಮಾನವ ಪ.
ಶ್ರೀಕರಗುಣಯುತ ಪಾಕಶಾಸನವಿನುತ
ಲೋಕೈಕ ವೀರನನ್ನೊಲಿಸುವಾ ತೆರನ ಪೇಳ್ವೆನಾಲಿಸು ಅ.ಪ.
ಶಕ್ತಿ ಸಾಹಸಗಳಿಗೆ ಸೋಲುವನಲ್ಲ ರಕ್ಕಸಾಂತಕಮಲ್ಲ
ಯುಕ್ತಿಮಾರ್ಗಕೆ ಮನವ ಸಿಲುಕಿಪನಲ್ಲ ಭಕ್ತವತ್ಸಲ ಸಿರಿನಲ್ಲ
ವಿತ್ತ ಮೂಲಕದಿಂದ ಚಿತ್ತ ಚಲಿಸುವುದಲ್ಲ
ಮತ್ತೆ ಮಣಿಹೇಮಂಗಳರ್ಥಿಗೊಳ್ಳಿಪುವಲ್ಲ ಲಕ್ಷಣವು
[ಚಿತ್ತ] ತಾನವನ ವಶಗೊಂಬುದಲ್ಲ
ಮುಕ್ತಿದಾಯಕನ ಮೆಚ್ಚಿಸಲ್ ವಿರಕ್ತಿಯಿಂ ಫಲವಿಲ್ಲ
[ಮತ್ತ] ಖಿಲಾಂಡಕೋಟಿ ಬ್ರಹ್ಮಾಂಡನಾಯಕನ ಮೆಚ್ಚಿಸಲ್
ಭಕ್ತಿಯೊಂದೇ ಉತ್ತಮೋಪಾಯ ಕೇಳೆಲೈ೧
ಬಡವಿಪ್ರನೇನಿತ್ತನೈ ಸರ್ವೇಶಗೆ ಭಕ್ತನಾ ಧ್ರುವನು
ದೃಢದಿ ಶೈಶವದೊಳೇ ಅಡವಿಯನಾರಯ್ಯುತೆ
ಪೊಡವೀಶನಡಿಗಿತ್ತ ತೊಡವಾವುದದ ಪೇಳ್
ದೃಢಭಕ್ತಿಯಲ್ಲವಿನ್ನೊಲ ವಾಂತುದಾವುದು
ಕಡು ಭಕ್ತನಾ ವಿದುರ ಪಡೆದನಸುರಾರಿಯಾಲಿಂಗನದ ಸುಖಮಂ
ಮಡದಿಮಣಿ ಪಾಂಚಾಲಿ ಪಡೆದಳಕ್ಷಯಪ್ರದಾನಮಂ
ತಡೆಯೇನು ಪೇಳಾ ಪರಮಾತ್ಮನೊಲ್ಮೆಗಿನ್ನು
ದೃಢಭಕ್ತಿಗಿಂ ಮಿಗಿಲು ತೊಡವಾವುದಿರ್ಪುದೈ ೨
ದಾನವವಂಶದಲಿ ಜನಿಸಿದನಾ [ಸು]ಜ್ಞಾನಿ ಪ್ರಹ್ಲಾದನು
ಸಾನುರಾಗದಿ ಹರಿಯ ಭಕ್ತಿಯಿಂ ಧ್ಯಾನಿಸೆ ಕಂಬದಿಂ
ನುನಿಸಿಯಾಕ್ಷಣದಲ್ಲಿ ಮನುಜಕೇಸರಿಯಾಗಿ
ಘನದಾಕೋಪವನು ತಾಳಿ ದನುಜನ ಉರವ ಸೀಳಿ
ಮನ್ನಿಸುತೆ ಭಕ್ತನಂ ನನ್ನಿಯಿಂ ಮೈದಡಹಿ
ಉನ್ನತೋನ್ನತ ಪದವನಿತ್ತನಾಖಲಕುಠಾರಿಶೌರಿ
ಚನ್ನಶೇಷಾದ್ರಿನಾಥನ ಪದವ ಪೊಂದಲು
ಮುನ್ನ ಭಕ್ತಿಯಿದುವೇ ಮುಖ್ಯಸಾಧನ ಕೇಳೈ ೩

೯೫
ಶ್ರೀನಿವಾಸನೆ ಗಾನಲೋಲನೆ ಸಾನುರಾಗದೊಳೀಕ್ಷಿಸೈ
ಜ್ಞಾನಪೂರ್ಣನೆ ಸೂನುವೆಂಬಭಿಮಾನದಿಂ ಪರಿಪಾಲಿಸೈ ಪ.
ದೀನಪಾಲಕ ದಾನವಾಂತಕ ದೈನ್ಯದಿಂ ಮೊರೆಹೊಕ್ಕೆನೈ
ಜ್ಞಾನಗಮ್ಯನೆ ಭಾನುತೇಜನೆ ನೀನೇ ಗತಿಯೆಂದೆಂಬೆವೈ ಅ.ಪ.
ಸಾರಸಾಕ್ಷನೆ ಶ್ರೀರಮೇಶನೆ ಸಾರಿ ಬಾ ಭವದೂರನೇ
ಗಾರುಗೊಂಡೆವು ಪಾರುಗಾಣಿಸು ನೀರಜೋದ್ಭವ ಜನಕನೆ
ಕಾರ್ಯಕಾರಣ ಕರ್ತೃ ನೀನಹುದಾರಯಲ್ ಜಗದೀಶನೆ
ಬೇರೆ ಕಾಣೆವದಾರ ನಿನ್ನನೆÉೀ ಸಾರೆ ಬೇಡುವೆ ದೇವನೆ ೧
ಭಾರತೀಯರ ಆರ್ಯಧರ್ಮದ ಸಾರ ಸಂಗ್ರಹ ಮಾಡುತೆ
ಆರ್ಯಕೀರ್ತಿಯ ಸಾರಿಪಾಡುತೆ ವೀರನಾದವ ಗೈಯುತೆ
ವೀರಪುರುಷರ ಶೌರ್ಯಸಾಹಸ ಭೂರಿ ವೈಭವವೆಲ್ಲವಂ
ಧೈರ್ಯದಿಂ ನಲವೇರೆ ಕೀರ್ತಿಸಿ ಕಾರ್ಯಸಿದ್ಧಿಯ ಪೊಂದುವೋಲ್೨
ನಿರ್ಗುಣಾತ್ಮನೆ ನಿರ್ವಿಕಲ್ಪನೆ ನಿತ್ಯನಿರ್ಮಲಚರಿತನೆ
ಮಾರ್ಗದರ್ಶಕನಾಗಿ ನಮ್ಮೊಳಗಾವಗಂ ಕೃಪೆ ಗೈವನೇ
ಸಾರ್ವಭೌಮನೆ ಸರ್ವಶಕ್ತನೆ ಶೇಷಶೈಲ ನಿವಾಸನೇ
ಸಾರ್ವಕಾಲದೊಳೋವುದೆಮ್ಮನು ಪಾರ್ವತೀಪತಿ ಮಿತ್ರನೆ ೩

೧೧೨
ಶ್ರೀರಂಗಪುರದೊಳ್ ಮೆರೆವ ಗಂಗಾಪಿತಗೆ ಮಂಗಳಂ
ಶ್ರೀರಂಗನಾಯಕಿ ಮನೊಹರಂಗೆ ಮಂಗಳಂ ಪ.
ವರದೆಕಾವೇರಿ ಸುತ್ತುವರಿಸಿ ಮೆರೆಯಲು
ಉರಗತಲ್ಪದಿ ಶಿರಕೆ ಬಲದಕರವೆ ದಿಂಬಿರಲ್೧
ಚರಣತಲದಿ ಮೆರೆಯೆ ಸಿರಿಯು ಧರೆಯು ಕುಳ್ಳಿರೆ
ಪರಮಭಾಗವತರು ಮುಂದೆ ನೆರೆದು ನಿಂದಿರೆ ೨
ಇಕ್ಕೆಲದಿ ಮೆರೆವ ಗಂಗಾ ಗೌರಿ ಅಕ್ಕತಂಗಿಯರ್
ನಕ್ಕುನಲಿವನೊಂದೆಡೆ ಮುಕ್ಕಣ್ಣ ಸನಿಯದಿ ೩
ಆರ್ತಜನರ ಪೊರೆವನೆಂಬ ಕೀರ್ತಿಗೊಂಡಿಹ
ಕರ್ತೃನೃಹರಿ ತನ್ನರಸಿಯೊಡನೆ ಇತ್ತ ಮೆರೆಯುವ ೪
ಉಭಯಕಾವೇರಿ ಮಧ್ಯದಿ ಪ್ರಭುವು ತಾನೆನೆ
ವಿಭವದಿಂದ ಮೆರೆವನೀಪರಿ ಪ್ರಭೆಯ ಬೀರುತ ೫
ಶರಣಜನರಿಗೆರೆಯ ಶೇಷಗಿರಿಯ ವರದನ
ಕರುಣ ಶರಧಿರಂಗಪುರದ ವರದನೆಂಬೆನೆ ೬

೩೫
ಶ್ರೀರಮಣೀಮಣಿ ಬಾರೌ ಶ್ರೀಕರಮಣಿಪೀಠಕೆ ಪ.
ಸಾರಸದಳನಯನೆ ಸುಗುಣಾಭರಣೆ
ಸಾರಸಭವವಂದಿತಚರಣೆ
ಕ್ಷೀರಸಾಗರನಂದನೇ ವರ
ಕಾರುಣ್ಯಾಮೃತಪೂರಿತ ವದನೆ ೧
ಪವನಾತ್ಮಜಸಂಸೇವಿತಾಂಘ್ರಿಯುಗಳೇ
ಪಾಲಿತಾಮರ ಜಾಲೇ
ಪಾವನಗುಣಶೀಲೇ ಶಶಾಂಕನಿಭಫಾಲೇ
ಪಾಲಿಸುನೀಂ ಪಂಕಜಸುಮಮಾಲೆ ೨
ಕೇಶವಹೃದಯನಿವಾಸಿನೀ ಪದ್ಮಾಸಿನೀ
ಕ್ಲೇಶ ನಿವಾರಿಣಿ ಭುವನೈಕ ಜನನಿ
ಈಶವಿನುತ ಶೇಷಗಿರೀಶ ಮನರಂಜನಿ
ಕಾಂಕ್ಷಿತಾರ್ಥ ಪ್ರದಾಯಿನಿ ೩

ಶ್ರೀಹರಿ
೭೩
ಶ್ರೀರಮಾ ಮನೋಹರ ನಮೋ ನಮೋರ ಪ.
ಸುಜ್ಞಾನಾನಂದ ವಿಮಾನರಂಜನ [ನಮೋ ನಮೋ] ಅ.ಪ
ವಿಧಿಭವಾದಿ ವಂದಿತ ನಮೋ ನಮೋ
ವೇದವಿದಿತ ವಿಶುದ್ಧರೂಪ ವಿಶ್ವವ್ಯಾಪಕ
ವಿದ್ಯಾಧೀಶ ವಿಜ್ಞಾನದಾಯಕ ೧
ಪ್ರಣತಾರ್ತಿಭಂಜನ ನಮೋ ನಮೋ
ದುರಿತಹರಣ ಭಕ್ತಭರಣ ಪರಮಪಾವನ
ವರಶೇಷಾದ್ರೀಶ ವರದವೆಂಕಟ೨

೭೫
ಶ್ರೀರಾಮಾ ರಘುಕುಲಸೋಮ ಕಾಮಿತ ಶುಭಫಲದಾಯಕ ಪ.
ರಮಾರಮಣನೆ ಭೀಮ ಪರಾಕ್ರಮ ಸುಂದರ ಅ.ಪ.
ದಾನವಾಂತಕ ಶ್ರೀ ಜಾನಕೀ ನಾಯಕರಾಮ
ದೀನಾನಾಥ ಪರಿತ್ರಾಣ ಪ್ರಪನ್ನ ಜನಪ್ರಾಣ ೧
ವಾಸವಾನುಜ ಜಗದೀಶ ಪರೇಶ ಪರಾತ್ಪರ
ದಾಸಜನಾಶ್ರಯ ಶ್ರೀಶ ಸರ್ವೇಶ ದಯಾಸಾಗರ ೨
ಮಂಗಳಾತ್ಮಕ ಭವಭಂಗ ಶ್ರೀರಂಗನಾಯಕಿ ರಮಣ
ಅಂಗಜಜನಕ ಪಾಂಡುರಂಗ ಕರುಣಾಂತರಂಗ ೩
ನಾಗೇಶಪಾಲಕ ನಾಗೇಶವರತಲ್ಪನೆ ಶ್ರೀ
ನಾಗಾರಿವಾಹನ ವರನಾಗಾದ್ರಿನಿಕೇತನ ರಾಮಾ ೪

೯೮
ಶ್ರೀಲೋಲ ಶ್ರೀನರಸಿಂಹ ಬಲಗೋಂಬೆನು ನಿನ್ನ ಪ.
ಸಾರರಹಿತವಹ ಘೋರತರ ಸಂಸಾರದಿ ತೊಳಲುತ
ಗಾರುಗೊಂಡಿಹೆನೈ ಶ್ರೀಲೋಲ ಅ.ಪ.
ಚಿಣ್ಣನು ತಾ ಬಣ್ಣಿಸಿ ಕರೆಯೆ ಮನಕದ ತಂದು
ಅನ್ಯದೈವಗಳ ಮರೆದು ತನ್ನನೆ ನೆನೆವ
ಚಿಣ್ಣನಿಗಾಗಿ ಕಂಬದಿ ಬಂದು
ಘನ್ನ ರೋಷದಿ ದೈತ್ಯನ ಸೆಳೆದು
ಕುನ್ನಿಯ ಮುಡಿಯನು ಪಿಡಿದೆತ್ತಿ ಜಡಿದು
ತನ್ನ ತೊಡೆಯೊಳಗಿರಿಸಿ ಖಳನುರ
ವನ್ನು ಬಗೆದು ಕರುಳನು ಕೊರಳೊಳು ಧರಿಸಿದ ೧
ಘೋರರೂಪಕೆ ನಡುಗುತಲಂದು ಸುರಗಣನಿಂದು
ಶರಣೆಂದಾಕಂದನ ಕರೆದು
ಪರಮಾದರದಿಂ ಶ್ರೀದೇವಿಯನೊಡಗೊಂಡು
ಪರತರಾಭಯ ಹಸ್ತವ ನೀಡಿ
ಸರಸದಿ ಕರೆದಾದರಗೂಡಿ ತರಳನೆ ಭಕ್ತಾಗ್ರೇ
ಸರ ನೆನ್ನಿಸಿ ನೆರೆಸುಖಿಸೆಂದೊದವಿದ ೨
ಚಾರು ಚರಿತ ಪ್ರಹ್ಲಾದನ ಆಲಿಸಿ ನಲವಿಂ
ನಾರೀಶ್ರೀಯೊಡನೈತಂದು ಮಾರಹಳ್ಳಿಯೊಳ್ನಿಂದು
ಸಾರಿತನ್ನನೇ ನೆನೆವರನೆಂದೆಂದು
ಕೋರಿಕೆಗಳ ಸಲ್ಲಿಸಿ ಸಲಹುವನೆಂದು
ಸಾರೆಬಂದಿಹೆ ನಿನ್ನೆಡೆಗಿಂದು ಸಾರಸಾಕ್ಷನೆ ನೀ ಕೃಪೆದೋರೆಂದು
ಕೋರಿಭಜಿಪೆ ಶ್ರೀಶೇಷಗಿರಿವರ ದಯಾಸಿಂಧು ೩

೯೭
ಶ್ರೀಲೋಲನೆ ಪರಿಪಾಲಿಪುದೆಮ್ಮನು ಕಾಲವಿಳಂಬಿಸದೇ ಪ.
ತಾಳಲಾರೆವೀ ಖೂಳರ ಬಾಧೆಯ
ಪೇಳಲೆಮಗೀ ನಾಲಿಗೆ ಸಾಲದು ಅ.ಪ
ಅನಿಮಿಷರೂಪದಿಂದಾಗಮವನು ನೀನಜನಿಗೆ ತಂದಿತ್ತೆ ಪೂರ್ವದಿ
ಘನ ಕಚ್ಛಪರೂಪದೊಳಾಗಿರಿಯನು ಬೆನ್ನೊಳಗಾಂತೇ
ಅನಿಮಿಷರೊಡೆಯನ ಮನವನು ತಣಿಸಿದ
ಫನಮಹಿಮನೆ ಶ್ರೀ ವನಜಜ ಜನಕನೆ ಶ್ರೀಲೋಲನೆ ೧
ದುರುಳನ ಕರದಲಿ ಧರಣಿಯು ಸಿಲುಕುತ ಕರೆಕರೆಗೊಳ್ಳುತಿರೆ
ವರಸೂಕರನಾಗುತ ದುರುಳನ ಛೇದಿಸಿ ಧರಣಿಯ ಕೈಪಿಡಿದೆ
ಮತ್ತೆ ತರಳನ ಪೊರೆಯಲು ನರಕೇಸರಿ ರೂಪದಿ
ಹಿರಣ್ಯಕನುದರದ ಕರುಳನು ಕಿತ್ತೆಸೆದೆೀ ಶ್ರೀಲೋಲನೆ ೨
ಕಪಟತನದಲಿ ವಟುವಂದದಿ ಬಂದು ನೆಲವದಾನವ ಬೇಡಿ
ಕಪಟವನರಿಯದೆ ದಾನವ ಕೊಟ್ಟನ ಪಾತಾಳಕೆ ಗುರಿ ಮಾಡಿ
ಅಪರಿಮಿತಾನಂದದಿ ಮೆಚ್ಚಿ ಬಲೀಂದ್ರನ
ಮನೆಬಾಗಿಲ ಕಾಯುವ ಗೊಲ್ಲ ನೀನೆನಿಸಿದೆ ೩
ವರಮುನಿ ಜಮದಗ್ನಿಯ ರೇಣುಕಾಸುತ ಭಾರ್ಗವ ನೀನಾಗಿ
ವರಪರಶುದರನೆಂದೆನ್ನಿಸಿ ಭೂಭುಜರನು ತರಿದಟ್ಟಿ
ಧರಣಿಯ ಭಾರವ ಪರಿದು ಸರಾಗದಿ
ಧರಣೀಸುರರಿಗೆ ಸುರತರುವೆನಿಸಿದ ೪
ಹರವಿರಂಚಿಯರ ವರಗಳ ಗರ್ವದೆ ದಶಶಿರದೈತ್ಯನು
ಮೆರೆದು ಪರಿಪರಿ ವಿಧದಿಂ ಸುರಭೂಸುರರನು
ಕರೆಕರೆಗೊಳಿಸುತಿರೆ ಧರಣಿಪ ದಶರಥ ತನುಭ
ವರೆನ್ನಿಸಿ ನಿಶಿಚರ ಕುಲವನೇ ಸವರಿದ ರಾಘವ ೫
ಅಷ್ಟಮದಂಗಳ ದಟ್ಟಣೆಯಿಂದತಿ ಅಟ್ಟಹಾಸದಿ ಮೆರೆದಾ
ದುಷ್ಟ ಕಂಸನ ಮರ್ಧಿಸಿ ಧರಣಿಯ ಶಿಷ್ಟರ ಪಾಲಿಸಲು
ವೃಷ್ಟಿವಂಶದಿ ಬಂದು ಕೃಷ್ಣನೆನಿಸಿ ತನ್ನ
ಇಷ್ಟರಾದ ಪಾಂಡುಪುತ್ರರ ಸಲಹಿದ೬
ಸಿದ್ದಿ ಸಂಕಲ್ಪದಿ ಬಲಭದ್ರನೆನ್ನಿಸಿ ಭವಬದ್ಧ ಜೀವಿಗಳಂ
ಶುದ್ಧ ಮಾರ್ಗದಿ ಸಂಸ್ಕರಿಸಿ ಜಗವನು ಉದ್ಧರಿಸಲ್ಕಂಡು
ಬುದ್ಧನೆಂದೊಳಿಸಿ ಮೆರೆದ ಸಂಕರ್ಷಣ
ಭದ್ರಮಂಗಳ ಭವ್ಯಸ್ವರೂಪನೆ೭
ಕಲಿಮಲದೋಷವ ತೊಳೆಯಲು ಪುನರಪಿ ಕಳೆಯೆ ನೀನೈತರುವೆ
ಫಲತೆರದಲಿ ಭಕ್ತರ ಸಲಹಲು ಫಲರೂಪಗಳ ಕೈಕೊಳುವೆ
ನೆಲದೊಳು ನಿನ್ನೀ ನೆಲೆಯನು ತಿಳಿಯದೇ
ಹಲುಬುವ ಕಂದನ ಸಲಹೈ ಸಿರಿದೊರೆ ೮

೭೬
ಶ್ರೀವಧೂ ಮನೋಹರಾ ನಮೋ ನಮೋ ಪ.
ದೇವದೇವ ದೇವರೇ ವಸುದೇವನಂದನ
ಭಾವಾತೀತ ವಿಧಿಭವಾರ್ಚಿತ ಅ.ಪ.
ವಾಸವಾರ್ಚಿತಾಂಘ್ರಿಯುಗ ನಮೋ ನಮೋ
ಶ್ರೀಸಮೇತ ಭೂಸಹಿತ ನೀಳಾಸಮನ್ವಿತ
ಶೇಷಾದ್ರೀಶ ಜಯಲೀಲಾಮಾನುಷ ೧
ರಾಜೇಂದ್ರಪುರೀನಾಥ ನಮೋ ನಮೋ
ರಾಜರಾಜ ದ್ವಿರಾಜತೇಜ, ರಾಮಚಂದ್ರ ಭೂಪತಿ
ಜಯರಾಜೇಂದ್ರ ರಾಜರಾಜ ಪೂಜಿತ ೨

೭೭
ಶ್ರೀವರ ಸುಖಕರ ಸುಂದರ ಶ್ಯಾಮ
ಶಿವಸುತ ಶುಭನಾಮ ಮಂಗಳ ಗುಣಧಾಮ ಪ.
ಪಾರಾವಾರತನಯಾರಾಮಾ ಮುರಮದಹರಣ
ಸರೋಜಪತ್ರಾಯತೇಕ್ಷಣ ಮಂಗಳ ಗುಣಧಾಮ ೧
ಭಕ್ತೋದ್ಧಾರಾ ಭುವನಾಧಾರಾ ಭಜಕಜನಮಂದಾರ
[ಶ್ರೀಕರ] ಪರಂಧಾಮ ಮಂಗಳಗುಣಧಾಮ ೨
ವಿಶ್ವಾಧೀಶ ಸುಗುಣಾವೇಶ ಭಾಸ್ಕರಕೋಟಿವಿಭಾಸ
ಶೇಷಾದ್ರೀಶ ಶಶಿಸುಹಾಸ ಚಿದ್ವಿಲಾಸ ಮಂಗಳಗುಣಧಾಮ೩


ಶ್ರೀವಾಣಿ ಕಲ್ಯಾಣಿ ಬ್ರಹ್ಮಾಣಿ ಗೀರ್ವಾಣಿ
ಕೈವಲ್ಯಮಾರ್ಗ ಪ್ರದರ್ಶಿನೀ ಕವಿಜೀವಿನೀ ಮಜ್ಜನನೀ ಪ.
ಕಾಮಿನೀ ಗುಣಭರಣೀ ಕಮನೀಯ ಸುಶ್ರೋಣಿ
ರಾಮಾಣೀಯಕ ಪಲ್ಲವಪಾಣಿ ಕೋಮಲ ಶುಕವಾಣಿ ೧
ಮಂಗಳಂ ವಿಧಿರಮಣೀ ಜಯ ಮಂಗಳಂ ಘನಕರುಣಿ
ಸಂಗೀತ ಶಾಸ್ತ್ರ ವಿಲಾಸಿನೀ ಪರಿಪಾಹಿಮಾಂ ಜನನೀ ೨
ಭುವನೈಕ ಮೋಹಿನಿ ತರುಣಿ ಭಾಷಾಭಿಮಾನಿನಿ ರಮಣಿ
ಶೇಷಶೈಲವಾಸ ಕೀರ್ತನಾಮೋದದಾಯಿನಿ ಜನನಿ ೩

೧೨೩
ಸಖಿ ಬಾರೆ ಬಾರೆ ಬೆಡಗತೋರೆ ನಡೆದು ಬಾರೆಲೆ
ಸುಖದ ಸುಗ್ಗಿಯಿದೆಂದು ಸಾರೆ ಭ್ರಮರಕುಂತಲೆ ಪ.
ಜಲಜಮುಖಿಯೆ ನಲಿದುಬಾರೆ ಕೋಲವಾಡುವ
ಕಲಕೀರಕಂಠದಿಂದ ನಾವು ನಲಿದು ಪಾಡುವ ೧
ಇಳೆಯ ಸುಖದ ಗೆಳೆಯ ಬಂದ ಬಳಿರೆ ಬಾಪುರೆ
ಬೆಳಗುತಿರ್ಪ ದೀಪಾವಳಿಯೆ ಬಲಿಯ ಕೀರ್ತಿಯೆ ೨
ವಿಜಯಯಾತ್ರೆಗೆಂದು ಹರಕೆಯೆತ್ತಿ ಭರದಲಿ
ಅಜಸುರಾರ್ಚಿತಾಂಘ್ರಿಯುಗನ ಭಜಿಸಿಮುದದಲಿ ೩
ನೀರನೆಮಗೆ ಮಾರತಾತನೆಂದು ಸಾರುವಾ
ಶಾರದಾಗಮ ಸಮಯವಿದನು ಸಾರಿಯಾಡುವಾ ೪
ಶೇಷಶೈಲಶಿಖರ ಧಾಮನೆಮ್ಮ ಮೆಚ್ಚುವೋಲ್
ಮೀಸಲೆತ್ತಿಯೊಸಗೆ ಪೇಳಿ ಪೊಸತಿದೆನ್ನುವೋಲ್ ೫

೧೨೨
ಸಖಿಬಾರಿತ್ತಲ್ ಸರೋಜಮುಖಿಯೇ
ಸುಗುಣಗಣಾನ್ವಿತೆಯೇ ಪ.
ಸುಖದಲಿ ಕೋಲಾಡುವ ಬಾ ಬಾ
ಸಖಿಯೇ ಸರೋಜಮುಖಿಯೇ ಅ.ಪ.
[ಸು] ಮತಿನೀ ಬಾ ಶಶಿಮುಖಿ ನೀ ಬಾ
ಸುಮಕೋಮಲೆ ನೀ ಬಾ ಬಾ ದಶರಥ ಸುತನ ಮ
ಹಿಮೆಯಿದೆಂದು ಪೊಗಳುವ ಬಳಿಸಂದು ೧
ಚಿನ್ನದ ಕೋಲಂ ರನ್ನದ ಕೋಲಂ
ನನ್ನಿಯಿಂದಲಿ ಪಿಡಿದು ಚೆನ್ನಿಗನೋವಿಂದು
ಚೆನ್ನಿಗ ನೊಲವಿಂ[ನ್ನೊ]ಳಗಾಯ್ತೆಂದೆನ್ನುವ ನಲಿನಲಿದು೨
ವರಶೇಷಗಿರೀವರನೊಲವಿಂ ಧರೆ
ಮೆರೆವಳು ಮೋಹಿನಿಯೋಲ್ ದೊರೆತುದು ನಮಗೀ
ಶರದಾಗಮ ಮಿಂದರರೇ ಸುಗ್ಗಿಯ ಸಮಯಂ೩


ಸಖಿಯೆ ಲಾಲಿಸು ಎನ್ನ ಸಖನ ವರ್ಣಿಪೆ ಮುನ್ನ
ಸುಖದಾತ ಸುಂದರನ ಪ್ರಾಣಸಖನ
ಜಡನಾಗಿ ತಾ ನಿಂದು ಜಲಜಸಂಭವನಂದು
ಕಡುದೈನ್ಯದಿಂದೆರೆಯಲೊಡನೆ ಬಂದು
ವೇದಗಳ್ಳನು ಪೋದ ಹಾದಿಯನೆ ತಾ ಪಿಡಿದು
ವಾರ್ಧಿಯೊಳ್ಮುಳುಗಿ ಸಮ್ಮೋದದಿಂದ
ಕ್ರೋಧಿರಕ್ಕಸನುರವ ಛೇದಿಸುತೆ ವೇದವ
ನ್ನಾದರಿಸಿ ತಂದೀಯುತ ಜಗಕೆನಲವಿಂ
ನಿರ್ಮಾಣ ಕಾರ್ಯದೋಳ್ ನಿಯಮಿಸಿದನಾ
ಸ್ವರ್ಣಗರ್ಭನನಂತು ಮೀನನಾಗಿ
ಅರ್ಣವದಿ ನೆಲೆಯಾಗಿ ನಿಂತ ಸುಗುಣ
ಘನ್ನಶೇಷಾದ್ರೀಶನೆನ್ನರಮಣ

೧೧
ಸರಸಿಜಭವಸತಿ ಕರುಣಿಸು ಸನ್ಮತಿ
ಹರಿ ಸ್ಮರಣಾಭಿರತಿ
ಪರಮ ಕೃಪಾಕರೆ ವರದಾಭಯಕರೆ
ನೀನಹುದೌ ಸುಕರೆ ಪ.
ಸತ್ಯವೆನಗಿದು ಉತ್ತಮಾಂಗವು ಭಕ್ತಿಯೆ ಫಾಲಸ್ಥಲವು
ಉತ್ತಮೋತ್ತಮ ವಿನಯಮೆಂಬುದೇ ನಾಶಿಕವದು ನಿಜವು ೧
ಜ್ಞಾನವಿವೇಕ ಸುಲೋಚನ ಮಾಗಿರೆ ಆನನ ವಿದರೋಳ್
ತಾನಾಗಿರೆ ವೇದವೆ ವದನವು ಮಾನಸಕತಿ ಸುಖವು ೨
ಬಗೆಗೊಳ್ಳುವ ನಿನ್ನೀ ಬಗೆಬಗೆ ರೂಪವ ಬಗೆಬಗೆದಾನೆವೇಂ
ಸೊಗಸಿತೆ ನಿನ್ನೀ ಬಗೆ ಸೇವೆಗೆ ನಿನ್ನಣುಗರ ವರಿಸೆನುವೇ ೩
ದೇಶಸೇವೆಯೊಳಾಶಿಸುತಿರುವೆಮಗಾಶ್ರಯತರು ನೀನೇ
ಭಾಷಾಮಾನಿನಿ ಬಲಗೊಂಬೆನು ನಿನ್ನನೆ ಶೇಷಗಿರೀವರನಾಣೆ ೪


ಸರಸಿಜಾಯತನೇತ್ರ ಸರಿಯಾರೆ ಧರೆಯೊಳಗೆ
ಪರಮಕಾರುಣಿಕ ಎನ್ನೆರೆಯನಿವಗೆ
ಸುರರು ದಾನವರಂದು ಶರಧಿಮಥನವ ಮಾಡೆ
ಗಿರಿಯ ಭಾರವ ವಹಿಸೆ ಮೊರೆಯನಿಡಲು
ಪೆರ್ಮೆಯಿಂ ಮೈದೋರಿ ಕೂರ್ಮಾವತಾರದಿಂ
ಮೇರುಗಿರಿಯನೆಪೊತ್ತ ಧೀರನಿವನೆ
ಅಪರಾಧವ ಪರಿಹರಿಸಿ ಕಾಪಿಡೆಂದೊರಲುವರ
ಕೈಪಿಡಿದು ಕಾಪಾಡುವಾಪ್ತ ಬಂಧು
ವಂದಾರು ಮಂದಾರನಮರವಿನುತ
ಇಂದಿರಾರಮಣ ನರವಿಂದನಯನ
ಬೃಂದಾರಕಾಂತಿ ಗರ್ವಭಂಗ ಕಂದರ್ಪಜನಕ ಶೇಷಾದ್ರಿನಾಥ

೭೮
ಸರಸಿಜಾಲಯವೆಂಬುವ ಸೊಗಸಿನ [ಶಯನಿಸು] ಪ.
ವರರತ್ನ ಮಂಟಪದೊಳು ಉರಗಪತಿಯಂತು ವರತಲ್ಪವಾಗಿರಲು
ಸಿರಿಯೊಡನೆ ನೀಂ ಶಯನಿಸು ಅ.ಪ
ತಪನ ಶಶಿಗಳೆಂಬುವ ಅಪ್ರತಿಮ [ವೆ
ನಿಸ] ದೀಪಗಳು ಪ್ರಜ್ವಲಿಸಲು
ಚಪಲಾಕ್ಷಿ ಶ್ರೀದೇವಿಯುಪಚಾರದಿಂ ನಲಿದು
ಅಪರಿಮಿದಾನಂದದಿಂ ಶಯನಿಸು ೧
ತುಂಬುರು ನಾರದರೆಂಬುವ ವಂದಿಮಾಗಧರ
ತಂಬೂರಿ ಸ್ವರಗಾನಮಂ | ಸಂಭ್ರಮದಿ ಕೇಳುತ್ತ
ಅಂಬುಜೊದ್ಭವತಾಭ | ಅಂಬುಜಾಸನೆಯೊಡವೆರೆಯುತೆ
ನಲಿಯುತ [ಶಯನಿಸು] ೨
ಗರುಡಪವನಜರೆಂಬುವ ನಿನ್ನಂಘ್ರಿ | ಸರಸಿಜವ
ಸೇವಿಸುವ ವರಭಕ್ತರು ಬಂದು | ಕರಮುಗಿದು ನಿಂದಿರಲು
ವರಯೋಗ ನಿದ್ರೆಯಿಂ | ಕರುಣಿ [ಸುತ] ಜಗಕೆ
ನಲಮಂ[ಶಯನಿಸು] ೩
ವರಶೇಷಗಿರಿ ನಿಲಯನೇ ಜಯಜಯತು | ವರದ
ನಾರಾಯಣನೇ | ಕರುಣಾಭರಣ ಲಕ್ಷ್ಮೀನರಹರಿಯೆ
ನಿ | ನ್ನರಸಿಯೊಡನೆ ನೀಂ ಶಯನಿಸು ೫

೬೯
ಸರಸಿಜಾಲಯವೆನಿಪ ಸೊಗಸಿನ ವರರತ್ನ ಮಂಟಪದೊಳು
ಉರಗಪತಿಯಂತು ವರತಲ್ಪವಾಗಿರಲು
ಸಿರಿದೇವಿಯೊಡನೆ ನೀಂ ಶಯನಿಸು ೧
ತಪನಶಶಿಗಳೆಂಬುವ ಅಪ್ರತಿಮ ದೀಪಗಳು ಪ್ರಜ್ವಲಿಸಲು
ಚಪಲಾಕ್ಷಿ ಶ್ರೀದೇವಿಯುಪಚಾರದಿಂ ನಲಿದು
ಅಪರಿಮಿತಾನಂದದಿಂ ಶಯನಿಸು ೨
ತುಂಬುರ ನಾರದರೆಂಬುವ ವಂದಿಮಾಗದರ ತಂಬೂರಿಸ್ವರಗಾನವ
ಸಂಭ್ರಮದಿ ಕೇಳುತ್ತ ಅಂಬುಜೋದ್ಬವ ತಾತ
ಅಂಬುಜಾನನೆಯೊಡವೆರಸಿ ನಲಿಯುತ ೩
ಗರುಡ ಪವನಜರೆಂಬುವ ನಿನ್ನಂಘ್ರಿಸರಸಿಜವ ಸೇವಿಸುವ
ಪರಮಭಕ್ತರು ಬಂದು ಕರಮುಗಿದು ನಿಂದಿರಲು
ವರಯೋಗನಿದ್ರೆಯಿಂ ಕುಡುತೆ ಮುದವಂ೪
ವರಶೇಷಗಿರಿನಿಲಯನೆ ಜಯಜಯತು ವರದನಾರಾಯಣನೆ
ಕರವಿಡಿದು ಪೊರೆಯೆನ್ನ ದೊರೆ ಮರೆಯೆ ನಾನಿನ್ನ
ಪರಮಮಂಗಳೆಯೊಡನೆ ನೀಂ ಪರುಕಿಸೆನ್ನ ೫

೯೯
ಸರೋಜಲೋಚನಸುರಾರಿ ಮಥನ ಮುರಾರಿ ಮಾರಮಣ
ಪುರಾರಿಮಿತ್ರಾ ನಿರೀಕ್ಷಿಸೆನ್ನ ನಿರಾಕರಿಸದಿರಿನ್ನು ಪ.
ಬಲೀಂದ್ರಗೊಲಿದೆ ಬಾಗಿಲೋಳ್ನಿಂದೆ ಗೊಲ್ಲನು ನೀನಾದೆ
ಬಲೀಂದ್ರ ಪೂಜಾಬಲದಿ ಜಗಮಂ ಕಳೆಯೇರಿಸಿ ಮೆರೆದೆ ೧
ತಳಿರ್ದೋರಣಂಗಳ್ ಎಲೆಬಾಳೆಲೆಗಳ್ ನಳನಳಿಸುವ ಬಗೆಯೊಳ್
ಬೆಳಗುವ ದೀಪಾವಳಿಯಿಂ ಜಗಮಂ ತೊಳಗುವದೆಲ್ಲೆಡೆಯೊಳ್ ೨
ಚಿತ್ತಜಪಿತ ಬಾ ಉತ್ಸವಪ್ರಿಯ ಬಾ ಸತ್ಯವಿಕ್ರಮ ನೀ ಬಾ ಬಾ
ಕೃತ್ತಿಕೋತ್ಸವ ಮಿದಕೈಕೊಳ್ಳೈ ನಿತ್ಯ ತೃಪ್ತನೆ ಬಾರೈ ೩
ಮದಮತ್ಸರಗಳ ಸದೆವಡೆದೇಗಳು ಸದಯನೆ ನೀ ಎಮ್ಮೊಳು
ಸದನವ ಮಾಡೈ ಹೃದಯ ಪೀಠದ ಅಧಿಪತಿ ನೀನಹುದೈ ೪
ಮಾಯಾಪಾಶದಿ ಗಾಯಗೊಂಡೆವು ಜೀಯ ಪಾಲಿಪುದೈ
ಧೈೀಯಮಾರ್ಗದೆ ನಡೆಯಿಸು ನೀ ನಿರಪಾಯದೆ ಸತತಂ೫
ಕೈಪಿಡಿದೆಮ್ಮಂ ಕಾಪಿಡು ನಲವಿಂ ತಾಪತ್ರಯ ಹರ ನೀಂ
ಭೂಪಶೇಷಾದ್ರೀಶನೆ ನೋಡೈ ಶ್ರೀಪಾದದಾಸರನು ೬

೧೨೪
ಸರೋಜಲೋಚನೆ ಸಾರಿತ್ತ ಬೇಗನೆ ಪ.
ನೀಲಕುಂತಲೆ ಬೇಗಬಾರೆ ಕೋಲನಾಡುವ
ನೀಲಮೇಘಶ್ಯಾಮ ನಮ್ಮ ಪಾಲಿಸೆನ್ನುವ೧
ತಂಗಿ ನಮ್ಮಯ ಅಂಗಳದೊಳು ರಂಗನಮುಂದೆ
ಮಂಗಳಂ ಪಾಡುತಾವು ಸಂಗತದಿಂದೆ೨
ಆರ್ಯಮಾತೆಗೆ ಭೂರಿಸಂಭ್ರಮ ತೋರಿ ಮೆರೆಯುವಾ
ಶಾರದೋತ್ಸವ ಆರ್ಯಕೀರ್ತಿಯ ಸಾರವೆನ್ನುವ ೩
ಶೇಷಶೈಲಾವಾಸನೊಲವಿಂ ದೇಶಮಾತೆ ಸಂ
ತೋಷವಾಂತು ಬೆಳಗುವೋಲ್ ಜಯಘೋಷಗೈಯುವ೪

೭೯
ಸಾಕೇತಾಧಿಪ ಸತ್ವಸ್ವರೂಪ
ಶ್ರೀಕರರೂಪ ಜಿತಕೋಪ ಪ
ಕರಧೃತಚಾಪ ಖಂಡಿತತಾಪ
ಪರಂತಪ ಪಾಹಿ ಕವಿಜನಾಲಾಪ ೧
ಅರಿಜನ ಭೀಕರ ಕರಿವರ ಶ್ರೀಧರ
ವರದಾಭಯಕರ ಪರಮಕೃಪಾಕರ ೨
ಇನಕುಲಮಂಡನ ಭಕ್ತಾರ್ತಿಭಂಜನ
ವನರುಹಲೋಚನ ಭವಬಂಧಮೋಚನ ೩
ಕ್ಷಿತಿನಾಥ ರಾಘವ ಸತತ ಸುವೈಭವ
ನುತಶೇಷಗಿರೀಧವ ವಿಜಿತಮನೋಭವ ೪

೧೩
ಸಾಗರ ಸ್ಥಿತನಿಲಯ ಭೋಗೀಶ ಕೃತಶಯ್ಯ
ವಾಗೀಶಸಂಸೇವ್ಯ ಭಜಕಭಾವ್ಯ
ಮುನಿಮನೋಂಬುಜಭೃಂಗ ಘನನೀಲ ಮೃದುಲಾಂಗ
ಅನಘ ಕರುಣಾಪಾಂಗ ಮಂಗಳಾಂಗ
ಆದಿನಾರಾಯಣಾ ಆನಂದ ಪರಿಪೂರ್ಣ
ಆಪನ್ನಿವಾರಣಾ ಅಪ್ರಮೇಯ
ಸುರವಿರೋಧಿಕೃತಾಂತ ಸುರರಾಜವಂದಿತ
ಧರಣೀ ಸುರಾರ್ಚಿತ ದಿವ್ಯಚರಿತ
ಕ್ಷೀರಾಬ್ಧಿಜಾರಮಣ ದೇವ ದೇವ
ಮುರಾರಿ ವಿನುತಾದ್ಭುತ ಪ್ರಭಾವ ಸ್ಮರತಾತ ಸ್ಥಿತಿಕರ್ತ
ನಿತ್ಯವಿಭವ ವರಶೇಷಗಿರಿವಾಸ ಶ್ರೀನಿವಾಸ

೫೫
(ಬಾಗಿಲು ತಡೆ)
ಸಾರಸ ನಿಲಯೆ ಸಾಗರ ತನಯೆ
ಸಾರೆ ಬಂದೆನು ಈಗ ಬೇಗ
ಸಾರಿ ಬಾಗಿಲ ತೆಗೆ ಬೇಗ ಪ.
ಸಾರು ಸಾರೆಲೊ ಸಾರಿಕೂಗುವನಾರೊ
ಸಾರು ನಿಲ್ಲದೆ ನೀನು ಇನ್ನು
ಸಾರು ಬಾಗಿಲ ತೆಗೆ ನಾನು ಅ.ಪ.
ಏಕಿಂತು ಕೋಪವೆ ಕೋಕಿಲಾರವೆ
ನೀಂ ಕಟಾಕ್ಷಿಸು ಎನ್ನ ಮುನ
ಸಾಕುಮಾಡುವುದಿದೆನ್ನ ೧
ಸಾಕು ಸಾಕಿಂತು ಏಕೆ ಕೂಗುತಿರ್ಪೆ
ಕಾಕಲಾಪವಿದೆಲ್ಲ ಸಲ್ಲ
ಕಾಕು ನುಡಿಗಳುಸಲ್ಲ ೨
ಪುಂಡರ ತಡೆವುದ ಕಂಡುಂಟು ಜಗದೊಳು
ಗಂಡನ ತಡೆವರೆ ಭಾಮೆ ರಾಮೆ
ಕಂಡವರೇನೆಂಬರೆ ಭಾಮೆ ೩
ಗಂಡನಾರಿಗೆ ಹೆಂಡತಿಯಾರಿಗೆ
ಪುಂಡಾಟವಾಡದೆ ಪೋಗು ಸಾಗು
ಭಂಡನಾಗಿರ್ಪೆ ಪೋಗು ೪
ವಲ್ಲಭೆ ನಿನ್ನೆದೆ ಕಲ್ಲಾಗಿರುವುದೆ
ನಲ್ಲನಾನಿನಗಲ್ಲೇ ನಲ್ಲೆ
ಬಲ್ಲವಳೆಂಬುವುದೆಲ್ಲೆ ೫
ಬಲ್ಲೆ ಬಲ್ಲೆನೀ ಚಲ್ಲಾಟಗಳ
ಸೊಲ್ಲಿಸು ಬಂದಿಹುದೇನು ಇನ್ನು
ಸೊಲ್ಲಿಸದಾರನ್ನು ೬
ಶಶಿನಿಭವದನೈನಿಶಿಚರದಮನನೆ
ದಶರಥರಾಮನೆ ಸೀತೆ ಖ್ಯಾತೆ
ಪುಸಿಯಲ್ಲವೆಲೆ ಭೀತೆ ೭
ದಶರಥಜನಾದೊಡೆ ದಶೆ ದಶೆ ತಿರುಗೆಲೆ |
ನಿಶಿಚರರಿಲ್ಲಿಹರೇನೈ ಜ್ಞಾನಿ
ವಿಷಮವರ್ತನವೇನೈ ೮
ಅಂಗನೆ ನಿನ್ನ ಮೋಹನಾಂಗನಾದ ಶ್ರೀ
ರಂಗ ನಾನೆಲೆ ಚಪ
ಲಾಕ್ಷಿ ಲಕ್ಷ್ಮಿ | ಭಂಗಿಸಬೇಡೆನ್ನ ಲಕ್ಷ್ಮಿ ೯
ಹಂಗಿಸಬೇಡ ಶುಭಾಂಗ ಮನ್ನಿಸೆನ್ನ
ತುಂಗ ವಿಕ್ರಮ ರಘು ರಾಮ ಶ್ಯಾಮ
ರಂಗ ಕಾರುಣ್ಯಧಾಮ ೧೦
ಈ ಪರಿ ಪೇಳುತೆ ಕೈಪಿಡಿದಳು ತ
ನ್ನೋಪನ ವಂದಿಸಿ ರಾಣಿ ರಮಣಿ
ಕೋಪರಹಿತೆ ಸುವಾಣಿ ೧೧
ಭೂಪಶೇಷಾದ್ರೀಶನು ಕಾಂತೆಯ ಕೈಪಿಡಿದನು
ನಲವೇರೆ ಅರರೆ ತಾಪಸನುತ ನಲವೇರೆ ೧೨

೬೫
ಸಾರಸಾಕ್ಷಿ ಬಾ ಬಾ ಬೇಗ ಸಾರಿ ನೀಂಪ.
ಸಾರಸಾಕ್ಷಿ ಬೇಗ ಚಾರುಪೀಠಕೀಗ ಅ.ಪ.
ಭೇರಿ ತಮ್ಮಟಾದಿ ಭಾರಿವಾದ್ಯಂಗಳೂ
ಭೊರ್ಗರೆಯುತಿರಲು ನೀರೆ ನೀ ಭರದೊಳು ೧
ಭಾವಜಾತಜನನೀ ಭಾರ್ಗವಿ ಕಲ್ಯಾಣಿ
ದೇವದೇವನರಾಣಿ ಶ್ರೀಮತೀ ಪದ್ಮಿನಿ೨
ಕ್ಷೀರವಾರಿಧಿಜಾತೆ ಮಾರವೈರಿವಿನುತೆ
ವಾರಿಜಾಸನ ಮಾತೆ ಸಾರಿ ಬಾ ಪ್ರಖ್ಯಾತೆ ೩
ಶೇಷಶೈಲನಿಲಯೆ ವಾಸವಾದಿಗೇಯೆ
ವಾಸುದೇವಜಾಯೆ ವಸುಮತೀ ತನಯೆ ೪

೩೬
ಸಾರಸಾಕ್ಷಿ ಬಾ ಬಾ ಬೇಗ ಸಾರಿ ನೀಂ ಪ.
ಭೇರಿತಮ್ಮಟಾದಿ ಭಾರಿವಾದ್ಯಂಗಳು
ಭೋರ್ಗರೆಯುತ್ತಿರಲು ನಾರಿ ನಿನ್ನ ಕಾಣಲು ಅ.ಪ.
ಭಾವಜಾದಿ ಜನನೀ ಭಾರ್ಗವೀ ಕಲ್ಯಾಣಿ
ದೇವದೇವನ ರಾಣೀ ಶ್ರೀಮತೀ ಪದ್ಮಿನೀ ೧
ಕ್ಷೀರವಾರಿಧಿಜಾತೆ ಮಾರವೈರಿವಿನುತೆ
ವಾರಿಜಾಸನ ಮಾತೆ ಸಾರಿ ಬಾ ಸುಪ್ರಿತೇ ೨
ಶೇಷಶೈಲನಿಲಯೆ ವಾಸವಾದಿಗೇಯೆ
ವಾಸುದೇವಜಾಯೇ ವಸುಮತೀ ತನಯೇ೩

೩೭
ಸಿರಿಯು ಬರುವ ಸೊಬಗ ನೋಡಿರೆ ಭರದಿ ಬನ್ನಿರೆ
ಶಿರವಬಾಗಿ ಚರಣಕೆರಗಿ ವರವಬೇಡಿರೆ ಪ.
ಕಾಲೊಳಂದಿಗೆ ಗೆಜ್ಜೆ ಪಿಲ್ಲಿ ಘಲಿರುಘಲಿರೆನೆ
ಬಾಲೆಯರ ಬಳಿಗೆ ಬರುವಳೊಲಿದಳೆಂಬೆನೇ ೧
ಮಾತೆಗೆನಿತೋ ಪ್ರೀತಿಯೆಮ್ಮೊಳಗೈತಂದಳೀದಿನಂ
ಪೂತುದರರೆ ಪೂರ್ವಪುಣ್ಯ ತರವಿದೆಂಬೆನಾಂ ೨
ಪರಮಪುರುಷ ಶೇಷಶೈಲವರದನರಸಿಯಿಂ-
ದರರೆ ಒಲಿದಳೆಮಗೆ ಧರೆಯೊಳರಿದುದಿನ್ನದೇನ್ ೩

ಅವತಾರ
೭೨
ಸಿರಿವರ ಘನ ಕರುಣಾಕರ ಪೊರೆಯೈ ಪ.
ನಿಗಮಚೋರನನ್ನು ಕೊಂದು ನಗವಪೊತ್ತನೆ
ವಿಗಡದೈತ್ಯನನ್ನ ಸೀಳಿ ಜಗವನಾಂತನೇ ೧
ಘುಡುಘುಡಿಸಿ ಕಂಬವನು ಒಡೆದುಬಂದನೆ
ಪಿಡಿದು ಖಳನ ಕರುಳಬಗೆದು ಕೊರಳೊಳಾಂತನೆ೨
ಇಂದ್ರಗನುಜನಾಗಿ ದಾನವೇಂದ್ರ ಗೊಲಿದು ನೀಂ
ನಿಂದು ಬಾಗಿಲಕಾವ ಗೊಲ್ಲನಂದಮೇನಿದೈ ೩
ಹಡೆದತಾಯ ಶಿರವಪಿಡಿದು ಕಡೆದ ಭಾರ್ಗವ
ಮಡದಿಚೋರನನ್ನು ಕೊಂದ ಒಡೆಯ ರಾಘವ ೪
ಮಾವ ಕಂಸನ ಕೊಂದ ವಸುದೇವನಂದನ
ಭಾವಮೈದುನರನ್ನು ಕಾಯ್ದ ದೇವ ಮಾಧವ ೫
ಮತ್ತೆ ತ್ರಿಪುರ ಸತಿಯರ ಚಿತ್ತಕಲಕಿದ
ಉತ್ತಮಾಶ್ವವನ್ನೆ ಹತ್ತಿ ಕಲ್ಕಿಯೆನಿಸಿದ ೬
ಉರಗಶಯನ ಗರುಡಗಮನ ಪರಮಪಾವನ
ವರದ ಶೇಷಶಿಖರಧಾಮ ಶ್ರೀನಿಕೇತನ ೭

೫೦
ಸ್ವೀಕರಿಸೈ ವೀಳ್ಯಮಿದನು ಶ್ರೀಕರಾಬ್ಜಪಾಣಿಯಿಂ ಪ.
ಲೋಕನಾಥ ಪಾಲಿಸೆನ್ನ ಶ್ರೀಕಟಾಕ್ಷದಿಂದಲೆ ಅ.ಪ.
ಪಚ್ಚಕರ್ಪೂರಯಾಲದಿಂದ ಹೆಚ್ಚು ವಾಸನೆಯನುತಳೆದ
ಅಚ್ಯುತನೆ ವೀಳ್ಯಮಿದನು ಮೆಚ್ಚಿ ನೀಡುತಿರುವೆನು ೧
ತಟ್ಟೆಯನ್ನು ಪಿಡಿದು ಎನ್ನ ರಟ್ಟೆಗಳಿದು ನೊಂದವೈ
ಸಿಟ್ಟುಮಾಡದೀಗ ದಯದಿ ದಿಟ್ಟಿಸೈ ಮದೀಶನೇ ೨
ಲಲಿತಗಾತ್ರ ಎನ್ನೊಳಿಂತು ಚಲಮಿದೊಳ್ಳಿತೇನೆಲೈ
ಜಲಜನೇತ್ರ ಶೇಷಶೈಲನಿಲಯ ನಿನ್ನ ನಮಿಪೆನೈ ೩

ಕ್ಷೇತ್ರ ಮೇಲುಕೋಟೆ
೮೦
ಹರಿಯ ಕಂಡೆನು ಗಿರಿಯದೊರೆಯ ಕಂಡೆನು ಪ.
ತರಳನನ್ನು ಪೊರೆಯಲೋಸುಗ
ನರಮೃಗಾವತಾರನಾದಅ.ಪ.
ತಿರುನಾರಾಯಣಪುರದ ಗಿರಿಯ ಶಿಖರದಿ
ಚರಣತಲದಿ ತಿರುಕಲ್ಯಾಣಿ
ಮೆರೆಯುತಿರಲು ಹರುಷದಿಂದ ಹರಿಯ ೧
ದಾಸರಾದರ ಹೃದಯಾ ವಾಸನೆನಿಸುವ
ವಾಸವಾದಿ ವಿನುತ ಚರಣ
ಭಾಸುರಾಂಗ ದೋಷಹರಣ ಹರಿಯ ೨
ನಾಗವೈರಿಯ ರೂಪನಾಗೆ ಮೆರೆಯುವ
ಯೋಗಪಟ್ಟಿಯಾಂತು ಪರಮ
ಯೋಗನಿಷ್ಟೆಯಲ್ಲಿ ಕುಳಿತ ಹರಿಯ ೩
ದುಷ್ಟದೈತ್ಯರಂ ಕುಟ್ಟಿ ಕೆಡಹಿದ
ಮುಟ್ಟಿಭಜಿಪ ಭಕ್ತರೆಲ್ಲರ
ಕಷ್ಟಕಳೆದು ಇಷ್ಟವೀವ ಹರಿಯ ೪
ಶೇಷಗಿರಿಯೊಳು ಮತ್ತಾ ಮೇಲುಕೋಟೆಯೊಳ್
ಶೇಷಭೂತರಾಶೇಷ ಭಕ್ತರ
ಪೋಷಿಸುತ್ತಿಹ ಸರ್ವೇಶನೀತನೆ ಹರಿಯ ೫

೧೦೦
ಹರಿಯೆ ಮೂಜಗದ ದೊರೆಯೆ ನಿನಗಿದು ಸರಿಯೆ ಪ.
ಹರಿಯೆ ಮೂಜಗದ ದೊರೆಯೆ ನಿನ್ನನೆ
ಮರೆಯಪೊಕ್ಕವರಲ್ಲಿ ಈ ಪರಿ
ಬರಿಯ ಪಂಥದಿ ಮರುಗದಿರ್ಪುದು
ಸರಿಯೆ ನಿನಗದು ಸರಸವಲ್ಲದುಅ.ಪ.
ಉಕ್ಕಿನ ಕಂಬದಿಂದ ಉದಿಸಿ ಬಂದು
ರಕ್ಕಸನುರವ ಸೀಳಿ ಕರುಳನು ಬಗೆದು
ಉಕ್ಕುವ ಕೋಪದಿಂದ ರಕುತವು ಸುರಿಯೆ
ಭಕ್ತ ಪ್ರಹ್ಲಾದನಾದರದಿ ಕಾಯ್ದು
ಭಕ್ತ ವತ್ಸಲನೆನಿಸಲಹುದು
ಶಕ್ತಿಹೀನತೆಯಿಂದ ಮರೆಹೊಕ್ಕ ಎನ್ನನು [ಕಾಯು]ವುದು ೧
ಒಪ್ಪಿಡಿಯವಲಕ್ಕಿಯ ಒಪ್ಪಿಸಿನಿಂದ
ವಿಪ್ರನ ನಲವಿಂದ ನೋಡುತಲಂತು
ವಿಪುಲಸಂಪದವನ್ನು ಕರುಣಿಸಿದಂಥ
ಅಪ್ರತಿಮ ಸಾಹಸಿಯೆನುತೆ ನಿನ್ನೊಳು
ತಪಿಸಿ ಬೇಡುವ ಎನ್ನೊಳೀಪರಿ
ಒಪ್ಪದೊಪ್ಪದೆನ್ನಪ್ಪ ಕೇಳಿದು ಸರಿಯೇ ಶ್ರೀನರಹರಿಯೇ ೨
ಮಾನಿತÀಧ್ರುವ ಬಾಲನಂ ಮನ್ನಿಸಿ ಪೊರೆದೆ
ಮಾನಿನಿ ಪಾಂಚಾಲಿಯ ಮಾನದಿ ಕಾಯ್ದೆ
ಸಾನುರಾಗದಿಂ ಗಜನಂ ಉದ್ಧರಿಸಿದೆ
ಕ್ಷೋಣಿಯೊಳಗತಿ ದೀನರಾದರ ಸಾನುರಾಗದಿ ಪೊರೆವ ಶ್ರೀಧರ
ದಾನವಾಂತಕ ಶೇಷಗಿರೀಶನೆ ಸೂನುವೆಂಬಭಿಮಾನ ನಿನಗಿರೆ
[ಮಾಣದೆನ್ನನು ಕಾಯೊ] ಹರಿಯೇ ಶ್ರೀನರಹರಿಯೇ೩

೧೨೭
ಹರಿವಾಸರದ ಮಹಿಮೆಯೆನು ಅರಿತಷ್ಟು ಪೇಳುವೆನು
ತರಳರಾಡುವ ನುಡಿಯೆಂದು ಗುರುಜನರು ಮನ್ನಿಸಿರಿನ್ನು ಪ.
ಹಿಂದೆ ತಾನಜಾಮಿಳನು ಮಂದಮತಿಯಾಗಿ ಜಗದಿ
ನಿಂದಿತಾಚಾರದಲಿ ಮನವಿರಿಸಿ ನಲಿದು
ಬಂಧುಮಿತ್ರರ ನುಡಿಗೊಂದಿಷ್ಟು ಕಿವಿಗೊಡದೆ ಮನ
ಬಂದಂತೆ ಚರಿಸಿದರನು ಮದಮೋಹದಿಂದ ೧
ಮಂದರೋದ್ಧರನ ದಿನದಂದು ಮಳೆಬಂದು ತಾನವನ
ಮಂದಿರವ ನೊಳಪುಗಲು ಗಂಗೆಯಂತು
ದಂದುಗದಿನೊಂದು ಮಡದಿ ಮಕ್ಕಳಿಗಾಗಿ
ನಿಂದಂತೆ ತಾನುಪವಾಸ ಜಾಗರದಿ ಕಳೆದು ಮರುದಿನ ದ್ವಾದಶೀ೨
ಅರುಣೋದಯದಲ್ಲಿ
ಮರಣದಾಹದಿ ಹರಿವ ನೀರ ಕುಡಿಯೇ
ಹರಿಗರ್ಪಿಸಿದ ತುಳಸಿದಳವೊಂದದರೊಳಿರೆ
ದುರಿತಕೋಟಿಗಳೆಲ್ಲ ದೂರಸಾರೆ ೩
ಅಂತ್ಯಕಾಲದೊಳೈತಂದ ಅಂತಕನದೂತರಂ ಕಂಡು
ಕಂದನಾರಗ ಬಾರೆನುತ ಕರೆಯೆ
ಬಂದರಾಕ್ಷಣವೆ ತಾವವನ ಸಂತವಿಸೆ
ಇಂದಿರೇಶನಾಣತಿಯಂತೆ ಕಿಂಕರರು ೪
ಅರಿಯದಾಚರಿಸಿದೊಡಂ ಹರಿವಾಸರದ ಮಹಿಮೆ
ಹರಿಪದವವಗಾಯ್ತು ಹರಿಕರುಣೆಯಿಂ
ಹರಿದಿನವ ನಿಷ್ಠೆಯಿಂದಾಚರಿಪ ಶರಣರಿಗೆ
ಪರಮಪದನಾಥನೇ ವಶನಪ್ಪನಯ್ಯಾ ೫
ಹರಿಭಕ್ತ ರುಕ್ಮಾಂಗದನ ಪರಿಭವಿಸೆ ಬರೆ ಮೋಹಿನಿ
ಹರಿದಿನವ್ರತವೆಂದು ಸರಿಯಲಾನೃಪನಂ
ತರಳ ಧರ್ಮಾಂಗದನ ಶಿರವತೆಗೆಯೆಂದೆನಲು
ವರಧರ್ಮದೇವನೇ ಕರವಿಡಿದು ಪೊರೆದಂ೬
ದಶಮಿ ದ್ವಾದಶೀ ದಿನದಲ್ಲಿ ಅಶನವೊಂದೇಸಾರಿ ಏಕಾ
ದಶೀ ದಿನದಲ್ಲಿ ಉಪವಾಸ ಜಾಗರದಿ
ವಸುಧೆಯರಸನ ನೆನೆದು ನಲಿವ ಭಕ್ತರನು
ಕುಸುಮನಾಭನಾ ಶೇಷಗಿರಿವಾಸ ಕೈಬಿಡನೊ ೭

೧೦೧
ಹಸಿವಾಗುತಿದೆಯೆನೆಗೆ ಬಸವಳಿದೆನೆ ಹೀಗೆ ಪ.
ಹಸಿವು ಹೆಚ್ಚಿತು ಅಕಟಾ ತೃಷೆಯಿಂದೆನಗತಿಕಾಟ
ರಸನೆಯೊಳಿನಿತುಂ ರಸಮಿಲ್ಲದಿರೆ
ಪುಸಿಯಲ್ಲಿದು ಒಣಗಿದ ಕಾಷ್ಟಂ ಅ.ಪ.
ಅಂಗಜ ಜನಕ ಶ್ರೀರಂಗನಾಯಕ ನಿಮ್ಮ
ಮಂಗಳನಾಮದ ಪೊಂಗಲ ಸವಿಯದೆ [ಭವ]
ಸಂಗತಾಪದಿಂ ತಪಿಸುತಲಿ ೧
ವಾಸುದೇವನೆ ನಿಮ್ಮ ಸಾಸಿರ ನಾಮಾಮೃತವ
ಲೇಸಾಗಿ ಕುಡಿಯದೆ ಆಸೆಗೆ ಸಿಲುಕುತ
ಮೋಸವೋದೆನೋ ಮರುಳನಂದದಿ ೨
[ಬಂದ] ಅರಿಯದ ಈ ಪಸುಳೆಯನು
ಪರಿಭಾವಿಸಿ ನೋಡಿನ್ನು ವರಶೇಷಗಿರಿದೊರೆ
ವರದ ನಿನ್ನಡಿದಾವರೆಗಾರಡಿಯಂತಿರಿಸೆನ್ನಂ೩


ಹಿರಣ್ಯಕಶ್ಯಪವೈರಿ ಮುರದಾನವವಿದಾರಿ
ದುರಿತರೋಗ ನಿವಾರಿ ಪಾಹಿ ನೃಹರಿ
ನಖಮುಖಮಹಾಯುಧ ಅಖಿಲ ಸಂಪತ್ಪ್ರದ
ನಿಖಿಲ ಲೋಕಾಧೀಶ ಭಕ್ತಪೋಷ | ನೃಪಂಚಮುಖದೇವ
ಸುಪವಿತ್ರ ಶ್ರೀಧವ | ಕೃಪಾರ್ಣವ ಕೇಶವ
ಸುಪ್ರಭಾವ | ಘೋರ ವಿಕ್ರಮರೂಪ ವೈರಿ
ಭಂಜನಕೋಪ | ಸಾರಸುಗುಣ ಕಲಾಪ ವಿಜಿತತಾಪ
ವೇದವೇದ್ಯಸುಭದ್ರ ತರಳೆವರದ
ಸಾಧುಸಮ್ಮತಚರಿತ ಸಿದ್ಧಿದಾತ
ಕ್ಷುದ್ರದೈದ್ಯವಿನಾಶ ಚಿದ್ವಿಲಾಸ
ಭದ್ರಶೇಷಾದ್ರೀಶ ಶ್ರೀನಿವಾಸ

೩೪
ವೀಳ್ಯವೊಪ್ಪಿಸುವುದು
ಹೃದಯೇಶ ನಿನ್ನಂತೆ ಸದಯರಿನ್ನಿಹರೇನು
ವಿಧುಸನ್ನಿಭಾನನಾ ಪದ್ಮನಯನ
ಶ್ಯಾಮಲಾಂಗನೆ ಎನ್ನ ಕಾಮಿತಮಿದೆಲ್ಲಮಂ
ಪ್ರೇಮದಿಂ ಪಾಲಿಸೈ ಕ್ಷೇಮಧಾಮ
ಏಲಾಲವಂಗದಿಂ ಬಾಲ್ಮೆಣಸುಪತ್ರೆಯಿಂ
ಮೇಲೆನಿಸಿ ಘಮಘಮಿಪ ವೀಳ್ಯಮಿದನು
ಮೆಚ್ಚಿ ನೀಡುವೆ ನಾನು ನೆಚ್ಚಿನಿಂ ಕೊಂಡಿದನು
ಅಚ್ಯುತನೆ ನೀನಿನ್ನು ರಕ್ಷಿಸೆನ್ನ
ರನ್ನದಟ್ಟೆಯ ಪಿಡಿದು ನಿಂದು ನಿಂದು
ಖಿನ್ನತೆಯನಾಂತೆನ್ನ ಕರವು ನೊಂದು –
ದಿನ್ನಾದೊಡೆನ್ನ ಕಣ್ದೆರೆದು ನೋಡು
ಚನ್ನಶೇಷಾದ್ರೀಶ ಕರವನೀಡು

೨೮
ಹೆತ್ತವರಿಗೆರವಾಗಿ ಹೆರವರಿಗೆ ಮಗನಾಗಿ
ಚಿತ್ತದೊಳು ನಲಿವವನೆ ಮತ್ತನಿವನೆ
ತುಂಟತನದೊಳಗೆ ಸರಿಯುಂಟೆ ಈತಗೆ ಜಗದಿ
ನಂಟರನು ಗೋಳಿಡುವ ತುಂಟನಿವನೆ
ವಂಚಕರಿಗೆಲ್ಲರಿಗೆ ಸಂಚಕಾರವ ಕೊಡುವ
ಚಂಚಲಾಕ್ಷಿಯರನ್ನೆ ವಂಚಿಸಿರುವ
ಮಾನವರೊಳಿಂತಪ್ಪ ಮಾನಿಯಂ ನಾನರಿಯೆ
ಮೀನಾಂಕ ಸಮರದೊಳ್ ಜಾಣನಿವನೆ
ಜಾರರೋಳ್ ಕಡುಶೂರ ಮಾಯಕಾರ
ಚೋರತನದೊಳು ವೀರ ಭಯವಿದೂರ
ದಾರಿಕಾಯಲು ಧೀರ ಧೈರ್ಯಸಾರ
ಮಾರಪಿತ ಶೇಷಗಿರಿವರನೆ ನೀರ

ಏನಿದ್ದರೇನಯ್ಯ ಜ್ಞಾನವಿಲ್ಲದಿರೆ
೪೭
ಏನಿದ್ದರೇನಯ್ಯ ಜ್ಞಾನವಿಲ್ಲದಿರೆ
ಶ್ರೀನಾಥನಂ ನೆನೆಯದಿಹ ಹೀನಮಾನವಗೇ ಪ.
ಗುರುವ ಸೇವಿಸಲಿಲ್ಲ ಹರಿಯ ಧ್ಯಾನಿಸಲಿಲ್ಲ
ಹಿರಿಯರಾಣತಿಯಂತೆ ಚರಿಸಲಿಲ್ಲ
ವರಪುರಾಣಗಳ ಚರಿತವಾಲಿಸಲಿಲ್ಲ
ಅರಿತವರ ಸಂಗತಿಯೊಳ್ವೆರಯಲಿಲ್ಲವಲ್ಲಾ ೧
ಹರಿದಿನವ್ರತಾಚರಣೆಯಾಚರಿಸಲಿಲ್ಲ
ಹರಿಮಹಿಮೆಯನೊಮ್ಮೆ ಕೇಳಲಿಲ್ಲ
ಹರಿಕತೆಯ ಭಕ್ತಿಯೊಳು ಪ್ರಕಟಮಾಡಿಸಲಿಲ್ಲ
ಪರಿಪರಿಯ ಭೋಗದಿಂ ಮರುಳಾದೆನಲ್ಲ ೨
ಅಂಧನಿಗುಂ ಮದಾಂಧನೇಕೇಳು
ಗಂಧವಿಲ್ಲದಾ ಅಗರಿನಂದವೇಂ ಪೇಳು
ಬಂದೇ ದಾನವಿರದ ಧನವೇಕೆ ಪೇಳು
ತಿಂದುಂಡು ಮಲಗುವಾನರಜನ್ಮ ಹಾಳು೩
ಕರ ಚರಣ ಮೊದಲಾದ ಕರಣಂಗಳಂ ಪಡೆದು
ಪರರಿಗುಪಚಾರ ಸ್ಮರಣೆ ತೊರೆದು
ದುರುಳತನದಲಿ ಬರಿದೆ ಮರುಳನಂತಲೆವವಗೆ
ಹರಿಪದವ ಪೊಂದುವಾ ಪರಿಯುಂಟೆ ಪೇಳು ೪
ನಾನು ನನ್ನದಿದೆಂಬಭಿಮಾನವನು ಬಿಟ್ಟೇಳು
ಜ್ಞಾನಿಗಳ ಪರಿಚರೈಯಿಂ ತಿಳಿದುಬಾಳು
ಸೂನೃತವ್ರತಿ ಶೇಷಗಿರಿವರನ ಮೊರೆಬೀಳು
ಆನಂದ ಸಾಮ್ರಾಜ್ಯ ನಿನಗಹುದು ಕೇಳು ೫

ಹಾಡಿನ ಹೆಸರು :ಏನಿದ್ದರೇನಯ್ಯ ಜ್ಞಾನವಿಲ್ಲದಿರೆ
ಹಾಡಿದವರ ಹೆಸರು :ರಮಾ ಟಿ. ಎಸ್.
ರಾಗ :ಶುದ್ಧ ದನ್ಯಾಸಿ
ತಾಳ :ಖಂಡಛಾಪು ತಾಳ
ಸಂಗೀತ ನಿರ್ದೇಶಕರು :ರಮಾ ಟಿ. ಎಸ್.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ