Categories
ರಚನೆಗಳು

ನಿಡಗುರುಕಿ ಜೀವೂಬಾಯಿ

೧೫೦
ಅನಾಥ ರಕ್ಷಕ ಆಪದ್ಬಾಂಧವ
ಶ್ರೀಪತಿ ಕೇಶವ ಮಾಧವನೆ ಪ
ಮಾತುಳಾಂತಕ ಹರಿ ಮದನ ಗೋಪಾಲನೆ
ಮಾತರಿಶ್ವಪ್ರಿಯ ಹರಿ ಶ್ರೀಶ ಅ.ಪ
ಬಿಟ್ಟ ಕಂಗಳ ಮುಚ್ಚದೆ ತಿರುಗುವ
ಬೆಟ್ಟವ ಬೆನ್ನಿನೊಳಾಂತಿರುವ
ಗಟ್ಟಿನೆಲವ ಕೆದರುತ ಬೇರರಸುವ
ಹೊಟ್ಟೆಯ ಕರುಳನೆ ಬಗೆದಿರುವ೧
ಪೊಡವಿಯ ಬೇಡುತ ಕೊಡಲಿಯ ಪಿಡಿಯುತ
ಪೊಡವಿಪರೆಲ್ಲರ ಗೆಲಿದವನೆ
ಮಡದಿಯನರಸುತ ಕಡಲನು ಕಟ್ಟುತ
ಕಡಹಲ್ದ ಮರನೇರ್ದ ಮೃಡಸಖನೆ೨
ಬುದ್ಧನಾಗಿ ತ್ರಿಪುರರ ಗೆಲಿದವನೆ
ಶುದ್ಧ ಹಯವನೇರಿ ಮೆರೆದವನೆ
ಹದ್ದುವಾಹನವೇರುತ ನಲಿದಾಡುವ
ಪದ್ಮನಾಭ ಪುರುಷೋತ್ತಮನೆ೩
ಅಗಣಿತ ಮಹಿಮನೆ ಖಗವರವಾಹನ
ನಿಗಮವೇದ್ಯ ನಿರ್ಮಲಚರಿತ
ಬಗೆಬಗೆಯಿಂದಲಿ ಭಜಿಸುವ ಭಕುತರ
ಅಘನಾಶನ ಸುಜನರ ಪ್ರಿಯ ೪
ಸೌಮ್ಯ ವತ್ಸರದಿ ಸುಂದರಶ್ಯಾಮನ
ಸಾಮಗಾನಲೋಲನ ಭಜಿಸಿ
ಕಾಮ್ಯಕರ್ಮಗಳ ತ್ಯಜಿಸಲು ಹರುಷದಿ
ಕಮಲನಾಭ ವಿಠ್ಠಲ ಒಲಿವ ೫

ಸಂಪ್ರದಾಯದ ಹಾಡುಗಳು
೧೧೩
ಅನಿರುದ್ಧ ಪ್ರದ್ಯುಮ್ನ ಸಂಕರ್ಷಣ ಜೋ
ವಾಸುದೇವ ನಾರಾಯಣ ಜೋ ಜೋ ಪ
ಕೃತಿಶಾಂತಿ ಜಯ ಮಾಯ ಶ್ರೀಲಕ್ಷ್ಮಿಪತಿ ಜೋ
ಪತಿತ ಪಾವನ ಪುರುಷೋತ್ತಮ ಜೋ ಜೋ ಅ.ಪ
ಕುಂದಣ ಮಯವಾದ ಚಂದ ತೊಟ್ಟಿಲಲಿ
ಚಂದ್ರ ಸೂರ್ಯರ ಗೆಲುವ ಮುಖಕಾಂತೆಯಲಿ
ಇಂದಿರಾಪತಿ ಶ್ರೀಶ ಇಭರಾಜವರದ
ಮೂಕಾಂಬಿಕೆ ಮಲಗೆ ತೂಗುವೆ ಹರುಷದಲಿ ೧
ಸುರರೆಲ್ಲ ನೆರೆದು ಸಂಭ್ರಮಗೊಳುತಿರಲು
ಸುರಗಂಧರ್ವಪ್ಸರ ಸ್ತ್ರೀಯರು ನಾಚುತಿರಲು
ಹರಬ್ರಹ್ಮ ಮೊದಲಾದವರು ಸ್ತುತಿಸುತಲಿರಲು
ಭಳಿರೆ ಜಗನ್ಮಾತೆ ರಕ್ಷಿಸು ರಕ್ಷಿಸೆನಲು ೨
ಘಲು ಘಲು ಘಲುರೆಂಬ ಕಾಲ್ಗೆಜ್ಜೆಗಳಿಂದ
ಥಳ ಥಳ ಹೊಳೆವ ಪೀತಾಂಬರದ ಚಂದ
ಗಿಳಿಗೆಜ್ಜೆ ಹೆರಳು ಬಂಗಾರಗಳಿಂದ
ಹೊಳೆವ ಮೀನ ಬಾವುಲಿ ಸರಗಳ ಚಂದ ೩
ಕನ್ನಡಿ ಕದುಪಿನ ನಗೆಮುಖ ಕಾಂತಿ
ಸಣ್ಣ ಮೂಗುತಿನಿಟ್ಟು ನಲಿಯುತ ಶಾಂತಿ-
ಯನು ತೋರುತ ಭಕ್ತಜನರಿಗೆ ಭ್ರಾಂತಿ
ಯನು ಕಳೆದು ಉದ್ಧರಿಸುವ ಕಾಂತೆ೪
ಕಮಲ ಮುಖಿಯ ಕರಕಮಲದಿ ಅಭಯ
ತೋರುತ್ತ ಭಕ್ತರಿಗೆಲ್ಲ ಉಣಿಸಿ ಅಮೃತವ
ಕಡೆಗಣ್ಣನೋಟದಿ ಜಗವ ಮೋಹಿಸುವ
ಕಮಲನಾಭವಿಠ್ಠಲ ಭಕುತರ ಪೊರೆವ ೫

ಭಗವಂತನ ಅಧಿಷ್ಠಾನ ಎಂದರೆ
೮೫
ಆತ್ಮನಿವೇದನೆ
ಅಪಮೃತ್ಯು ಪರಿಹರಿಸೊ ಶ್ರೀ ವೆಂಕಟೇಶ
ಅಪರಾಧವೆಣಿಸದಲೆ ಉದ್ಧರಿಸೊ ಶ್ರೀಶಾ ಪ
ಅಪರಾಧ ಸಹಸ್ರಗಳ ಮಾಡುತನುದಿನದಿ
ಅಪರಿಮಿತ ಮಹಿಮ ನಿನ್ನನ್ನು ಸ್ಮರಿಸದೆ
ಚಪಲ ಬುದ್ಧಿಗಳಿಂದ ತಪಿಸಿದೆನೊ ಭವದೊಳಗೆ
ಗುಪಿತದಿಂ ಸಲಹಯ್ಯ ಪಿತನೆ ಕೈ ಮುಗಿವೆ ೧
ಪೂರ್ವಕಾಲದೊಳೊಬ್ಬ ರಾಜಶೇಖರ ತನ್ನ
ಮೋಜಿನಿಂದಲೆ ನಿನ್ನ ಸ್ಮರಣೆ ಮರೆತು
ಮೂರ್ಜಗತ್ಪತಿಯ ಪೂಜಿಸದೆ ಕಾಲವ ಕಳೆಯೆ
ಆ ಜವನ ದೂತರೆಳೆ ತಂದರೈ ಹರಿಯೆ ೨
ಅಂದು ಯಮ ಭಟರುಗಳ ಬಂಧನದೊಳಿರೆ ನೃಪನು
ಚಂದದಿಂ ಪಾಪಕರ್ಮಗಳ ನೋಡೆ
ತುಂಬಿದ ಪಾಪವೆ ಬಹಳವಾಗುತಿರಲು
ಇಂದಿರೇಶನ ಪೂಜೆ ಒಂದೆ ದಿನವೆನಲು ೩
ಘುಡು ಘುಡಿಸಿ ಯಮಧರ್ಮ ಕಡುಕೋಪವ ತಾಳಿ
ಬಿಡದೆ ಇವನಿಗೆ ಶಿಕ್ಷೆ ಕೊಡಿರಿ ಎಂದೆನಲು
ನುಡಿದರಾ ಭಟರುಗಳು ಮೊದಲು ಯಾವದು ಎನಲು
ಮೊದಲು ಪುಣ್ಯವು ಎಂದು ನುಡಿದನಾ ನೃಪನು೪
ತಕ್ಷಣವೆ ವಿಷ್ಣುದೂತರು ಬಂದು ನೃಪವರನ
ಚಿತ್ತಜನಯ್ಯನಿಹ ಉತ್ತಮ ಸ್ಥಳಕೆ
ಸತ್ಯವಂತರು ಬಹಳ ಕೀರ್ತಿಸುತ ಶ್ರೀಹರಿಯ
ಮತ್ತೆ ವೈಕುಂಠದಲಿ ಮೆರೆಸಿದರು ಕ್ಷಣದಿ ೫
ಒಡನೆ ಪುಣ್ಯವು ಮುಗಿಯೆ ನಡಿ ನರಕಕೆಂದೆನಲು
ಒಡೆದು ಎದೆ ನಡುಗಿ ಕಳವಳಿಸಿ ನೃಪನು
ನುಡಿದ ಹೀಗೆನುತ ಘರ್ಜಿಸುತ ಯಮದೂತರಿಗೆ
ಬಿಡಿರಿ ನಿಮ್ಮಯ ಸತ್ಯ ನಿಜವಲ್ಲವೆನುತ ೬
ನಾರಾಯಣನ ನೋಡಿದವರಿಗೆ ನರಕ ಭಯ
ನಾರದರೆ ಈ ರೀತಿ ಸಾರಿ ಡಂಗುರವ
ಹೀಗೆನಲು ನುಡಿಕೇಳಿ ಸಾರಿ ಪೇಳಿದರಾಗ
ದೇವ ದೇವನೆ ಇದಕೆ ಉಪಾಯವೇನೆನಲು೭
ಪರಮ ಕೃಪಾಳು ಹರಿ ಪರಮ ಭಕ್ತರನೆಲ್ಲ
ಕರೆದು ಏಕಾಂತದಲಿ ಸರಸವಾಕ್ಯದಲಿ
ಇರಲಿ ಈ ನರನ ವಾಕ್ಯದ ಜಾಣತನವನು
ಸುರ ಲೋಕದವರು ಸ್ತುತಿ ಮಾಡಲೆಂದೆನಲು೮
ಹೀಗೆ ಭಕ್ತರ ಪೊರೆದೆ ಭಾಗವತ ಜನಪ್ರಿಯ
ಬಾಗಿ ನಮಿಸುತಲಿ ವಂದನೆ ಮಾಡುವೆ
ನಾಗಶಯನನೆ ನಿನ್ನ ಮಹಿಮೆಗೆಣೆಗಾಣೆನೊ
ಬೇಗ ಪಾಲಿಸು ಕಮಲನಾಭ ವಿಠ್ಠಲನೆ ೯

ಭಗವಂತನ ಸಂಕೀರ್ತನೆ

ಅಷ್ಟರೊಳಗೆ ಕೃಷ್ಣ ಬಂದನೆ
ಸೃಷ್ಟಿಗೊಡೆಯ ದೇವನು ಪ
ಜಗದುದರ ಜ್ಞಾನಿಗಳ ಧ್ಯಾನಕೆ
ಗೋಚರಾಗೋಚರನಾಗುತಾಪ
ಅಂದಿಗೆ ಕಾಲ್ಗೆಜ್ಜೆ ಸರಪಣಿ
ಬಂದಿ ಕಂಕಣ ತೋಳಬಾಪುರಿ
ಮಂದಹಾಸ ಮುಂಗುರುಳು ಮುಖದ
ಸುಂದರಾಂಗನ ಹುಡುಕುತಿರಲು ೧
ತರಳರೊಡನೆ ಕೂಡಿ ಕೃಷ್ಣ
ಮುರಳಿನಾದ ಗೇಯ್ಯುತಿರಲು
ಸರಸಿಜಾಕ್ಷನ ಕಾಣದೆ ತವಕಿಸಿ
ಹರಿಯ ಹುಡÀÄಕುತಿರಲೆಶೋದೆ ೨
ವತ್ಸಗಳ ಬಾಲಗಳನೆ ಪಿಡಿದು
ಸ್ವೇಚ್ಛೆಯಿಂದ ನಲಿಯುತಿರಲು
ಅಚ್ಚುತನೆಲ್ಲೊ ಕಾಣೆನೆನುತ
ಕೃಷ್ಣ ಕೃಷ್ಣನೆಂದು ಕರೆಯೆ ೩
ಮನೆ ಮನೆಗಳ ಪೊಕ್ಕು ಪಾಲು
ಮೊಸರು ಬೆಣ್ಣೆ ಮೆಲುವೆನೆನುವ
ವನಿತೆಯರ ಸಂತೈಸಿ ಕಳುಹಿ
ತನಯನೆಲ್ಲೆಂದುಡುಕುತಿರಲು ೪
ಬಂದನು ಬಲರಾಮ ಭಯದಿ
ಇಂದಿರೇಶ ಮಣ್ಣು ಮೆಲುವ
ನೆಂದು ಪೇಳೆ ಬಾಯ ತೆಗಿಸಿ
ಕಂಡು ವಿಶ್ವವ ವಿಸ್ಮಯಗೊಳುತಿರೆ ೫
ಸುರಗಂಧರ್ವರು ನೆರೆದರಂಬರದಿ
ಪರಮ ಧನ್ಯಳೆಶೋದೆ ಎನುತ
ಹರಿಯ ಗುಣಗಳನ್ನೆ ಸ್ತುತಿಸಿ
ಹರುಷದಿಂದ ನಲಿಯುತಿರಲು ೬
ಕಮಲ ಸಂಭವ ಜನಕನನೆತ್ತಿ
ವಿನಯದಿಂದ ಮುದ್ದಿಸುತ್ತಿರೆ
ಕಮಲನಾಭ ವಿಠ್ಠಲನ ಸಿರದಿ
ಕಮಲ ಕುಸುಮ ಮಳೆಗರೆದರು7
ಮಂಗಳಂ ಜಯ ಮಂಗಳಂ ಶುಭಮಂಗಳಂ ಶ್ರೀ ಕೃಷ್ಣಗೇ

ಹುಣಿಸೆ ಹಣ್ಣಿನ ಹಿರಿಮೆಯನ್ನು
ವಿಶೇಷ
೧೬೫
ಆ ಹಣ್ಣು ಈ ಹಣ್ಣು ನೆನಸಿ ಫಲವೇನೆ
ಈ ಹುಣಸೇಹಣ್ಣಿಗೆ ಸಮಬಾಹೋದೇನೆ ಪ
ಹಡಗಿಂದ ಬಂದಿತು ಉತ್ತತ್ತಿ ಹಣ್ಣು
ಬಡವರಿಗೆ ಬೇಕಾದ ಬಾಳೆಯ ಹಣ್ಣು
ಕೂತರೆ ಏಳದು ಕುಂಬಳದ್ದಲ್ಲ
ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು ೧
ಮಕ್ಕಳು ಬಯಸುವ ಚಕ್ಕೋತ ಹಣ್ಣು
ಸಕ್ಕರೆ ಸವಿಯಾದ ಅನಾಸಿನ ಹಣ್ಣು
ಜೇನು ತುಪ್ಪದ ರುಚಿ ಹಲಸಿನ ಹಣ್ಣು
ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು ೨
ದಾಹವಡಗಿಸುವದು ದ್ರಾಕ್ಷಿಯ ಹಣ್ಣು
ದೊರೆಗಳು ತಿನ್ನುವ ದಾಳಿಂಬೆ ಹಣ್ಣು
ಫರಂಗಿಯರು ತಿನ್ನುವ ಪನ್ನೇರಳೆ ಹಣ್ಣು
ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು ೩
ಅತಿಮಧುರವಾದ ಕಿತ್ತಲೆ ಹಣ್ಣು
ಯತಿಗಳಿಗಾನಂದ ಸೀತಾಫಲದ್ಹಣ್ಣು
ಅತಿರುಚಿಯಾದ ಅಂಜೂರದ ಹಣ್ಣು
ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು ೪
ಮಾನವಂತರು ತಿನ್ನುವ ಮಾವಿನ ಹಣ್ಣು
ಜ್ಞಾನಿಗಳಿಗೆ ರಾಮನಾಮದ ಹಣ್ಣು
ದೀನಜನರು ತಿಂಬ ಮೂಸುಂಬೆ ಹಣ್ಣು
ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು ೫
ಅಪರೂಪದಲಿ ಬೆಳೆದ ಮಾದಳದ್ಹಣ್ಣು
ಕಪಿಗಳು ತಿನ್ನುವ ಸೀಬೆಯ ಹಣ್ಣು
ತಪಸ್ವಿಗಳಾಹಾರ ಜಂಬುನೇರಳೆಹಣ್ಣು
ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು ೬
ಪರಿ ಪರಿ ಔಪಧಕೆ ಹೆರಳೆಯ ಹಣ್ಣು
ಮರ್ಯಾದೆಗೆ ಕೊಡುವ ನಿಂಬೆಯ ಹಣ್ಣು
ಪರಮ ರೂಪಿಯಾದ ಕರಬೂಜದ್ಹಣ್ಣು
ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು ೭
ಬಡವರಿಗೂ ಈ ಹುಣಸೇ ಹಣ್ಣಿರಬೇಕು
ಬಲ್ಲಿದರಿಗೂ ಹುಣಸೇ ಹಣ್ಣಿರಬೇಕು
ಬಲ್ಲಿದರಿದರ ರುಚಿ ಎಲ್ಲ ಜನರುಗಳು
ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು ೮
ಹುಣಸೇಹಣ್ಣಿಲ್ಲದೆ ಭಾಂಡ ಶುದ್ಧಿಗಳಿಲ್ಲ
ಹುಣಸೇ ಇಲ್ಲದೆ ಸ್ವಯಂಪಾಕ ರುಚಿಯು ಇಲ್ಲ
ಹುಣಸೇ ಮರಕ್ಕಿಂತ ಗಟ್ಟಿ ಮರಗಳಿಲ್ಲ
ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು ೯
ಹುಣಸೇಕಾಯಿಯ ಕುಟ್ಟಿ ರಸವ ಮಾಡುವರು
ಹುಣಸೇಹಣ್ಣನು ಕುಟ್ಟಿ ಅಣಿಮಾಡಿಡುವರು
ಹುಣಸೇಹಣ್ಣಿನ ಬೆಲೆ ಮುಗಿಲಿಗೇರಿರಲು
ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು ೧೦
ಹರಿಯ ಅಪ್ಪಣೆಯಂತೆ ಹುಣಸೆಯ ಮರಹುಟ್ಟಿ
ಪರರಿಗೆ ಉಪಕರಿಸುವದಿದು ಹರಿಯಾಜ್ಞೆ
ವರದ ಶ್ರೀ ಹರಿ ಕಮಲನಾಭ ವಿಠ್ಠಲನಿಚ್ಛೆ
ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು ೧೧

೧೫೪
ಆನಂದ ಆನಂದವು ಈ ಜಗದಿ
ಗೋವಿಂದನ ದಯದಿ ಪ
ಆನಂದವು ಗೋವಿಂದನ ನಾಮವು
ಆನಂದದಿ ಸ್ಮರಿಸುವ ಸುಜನರಿಗೆ ಅ.ಪ
ಬಂಧು ಬಾಂಧವರೆಲ್ಲರು ಕೂಡುತಲಿ ಒಂದೇ ಮನಸಿನಲಿ
ಇಂದಿರೇಶನ ಸ್ಮರಣೆಯ ಮಾಡುತಲಿ
ನಂದ ಯಶೋದೆಯ ಕಂದನೆ ಪರನೆಂದು
ಚಂದದಿ ಕುಣಿದಾಡುತ ಸ್ತುತಿ ಮಾಡಲು
ಇಂದಿರೇಶನು ಭವ ಬಂಧನ ಬಿಡಿಸುವ-
ನೆಂದು ಮನದಿ ಆನಂದ ಪಡುವರಿಗೆ ೧
ಪಕ್ಷಿವಾಹನ ಪುರುಷೋತ್ತಮ ಹರಿಯು ಆನಂದ ವತ್ಸರದಿ
ರಕ್ಷಿಸಿ ಪೊರೆವನು ಭಕುತರ ತ್ವರದಿ
ಅಕ್ಷರೇಢ್ಯ ಕಮಲಾಕ್ಷನೆ ಪರನೆಂ-
ದೀಕ್ಷಿಪ ಭಕುತರ ರಕ್ಷಿಸಿ ಪೊರೆವ ಪ-
ರೀಕ್ಷಿತಗೊಲಿದಂದದಿ ಪರಮಾತ್ಮನು
ರಕ್ಷ ಶಿಕ್ಷಕನೆಂದೆನುವ ಸುಜನರಿಗೆ೨
ಕಮಲಾಪತಿ ಕಾಮನ ಪಿತ ಶ್ರೀಹರಿಯು ಕಾರುಣ್ಯ ನಿಧಿಯು
ಕಮಲಾಕ್ಷನು ಕಾಪಾಡುವ ಸುಜನರನು
ಕಮಲಭವೇಂದ್ರಾದ್ಯಮರರು ಪೊಗಳಲು
ಕಮಲನಾಭ ವಿಠ್ಠಲ ಜಯ ಜಯ ಎಂದು
ಸುಮನಸರೊಡೆಯ ಸುಂದರ ಶ್ರೀಹರಿ ತಾ
ಶ್ರಮ ಪರಿಹರಿಸುವನೆನುವ ಸುಜನರಿಗೆ೩

೧೬೧
ಆರತಿ ಎತ್ತಿರೆ ವೈಯ್ಯಾರಿಯರರಸಗೆ
ಶ್ರೀ ರಮಾಕಾಂತ ಶ್ರೀ ಶ್ರೀನಿವಾಸನಿಗೆ ಪ
ಕೇಶವ ನಾರಾಯಣ ಮಾಧವನಿಗೆ
ಶ್ರೀಶ ಗೋವಿಂದ ವಿಷ್ಣು ಮಧುಸೂದನಗೆ
ಆಸೆಲಿ ತ್ರಿವಿಕ್ರಮ ವಾಮನ ಶ್ರೀಧರಗೆ
ಸೂೀಸಿಲಿ ಹೃಷಿಕೇಶ ಪದ್ಮನಾಭನಿಗೆ ೧
ಧರಣಿಜಪತಿ ದಾಮೋದರ ಸಂಕರ್ಷಣನಿಗೆ
ಪರ ವಾಸುದೇವ ಪ್ರದ್ಯುಮ್ನ ಅನಿರುದ್ಧನಿಗೆ
ಪರುಷೋತ್ತಮ ಅಧೋಕ್ಷಜ ನಾರಸಿಂಹಗೆ
ಸರಸಿಜಾಕ್ಷ ಅಚ್ಚುತ ಜನಾರ್ದನಗೆ೨
ಮಮತೇಲಿ ಸುಜನರ ಪೊರೆವ ಉಪೇಂದ್ರನಿಗೆ
ಶ್ರಮ ಪರಿಹರಿಸುವ ಹರಿ ಶ್ರೀ ಕೃಷ್ಣನಿಗೆ
ಕಮಲದಳಾಕ್ಷಗೆ ಕಮನೀಯ ರೂಪಗೆಕಮಲನಾಭವಿಠ್ಠಲಗೆ ತರುಣಿಯರು ೩

ಶ್ರೀಕೃಷ್ಣನು ಸತ್ಯಭಾಮೆಗಾಗಿ
೧೧೪
ಆರೋಗಣೆಯ ಮಾಡು ಶ್ರೀವೆಂಕಟೇಶ
ಸಾಗರಶಯನನೆ ಸರ್ವವ್ಯಾಪಕ ಕೃಷ್ಣ ಪ
ಗಂಗೆಯ ಜನಕಗೆ ಮಂಗಳ ಅಭಿಷೇಕ
ಸಂಭ್ರಮದಲಿ ಮಾಡಿ ತವಕದಲಿ
ಶಂಭುವಂದಿತಗೆ ಪೀತಾಂಬರನುಡಿಸಿ ಪಾ-
ದಂಗಳನೆ ಪೂಜಿಸುತ ಸ್ತುತಿಪರು
ಇಂದಿರಾಪತಿ ಶೀಘ್ರದಿಂದಲಿ ೧
ಅಪ್ರಮೇಯನೆ ನಿನಗೆ ಅಪ್ಪಾಲು ಅತಿರಸ
ವಪ್ಪಾದ ವಡೆದೋಸೆ ಚಿತ್ರಾನ್ನವೂ
ಸತ್ಯಮೂರುತಿ ನಿನಗೆ ಮುತ್ತಿನಂಥಲಾಡುಓಗರ
ಮತ್ತೆ ಪಾಯಸ ಮೊಸರು ಬುತ್ತಿ ವಿ-
ಚಿತ್ರದಲಿ ತಂದರ್ಪಿಸಿಹರು೨
ಕನಕ ಮಂಟಪದೊಳು ಕರ್ಪೂರದಾರತಿ
ವಿನಯದಿ ಮಾಡುತ್ತ ನಮಿಸುವರು
ಮನಕೆ ಬೇಸರ ಬೇಡ ಕಮಲನಾಭ ವಿಠ್ಠಲ
ಘಮ ಘಮಿಪ ತಾಂಬೂಲ ವೀಳ್ಯವ
ತವಕದಲಿ ಸ್ವೀಕರಿಸು ಶ್ರೀಶಾ ೩

ಭಗವಂತನ ಅಧಿಷ್ಠಾನ
೮೬
ಇಷ್ಟಾದರು ದಯಮಾಡು ಪಂಡರಿನಾಥ
ವಿಠ್ಠಲ ನಿನ್ನ ಪಾದ ಮುಟ್ಟಿ ಪ್ರಾರ್ಥಿಪೆನು ಪ
ದಾನಧರ್ಮವು ಮಾಡಬೇಕೆಂದು ಮನವಿರೆ
ದಾನವಾಂತಕ ಕೃಷ್ಣ ಧನವಿಲ್ಲವಯ್ಯ
ಗಾನಲೋಲನೆ ಭಕ್ತಪಾಲ ನಿನ್ನಯ ಪಾದ
ಧ್ಯಾನವ ಮಾಳ್ಪರ ಪಾದಧ್ಯಾನ ಕೊಡಿಸುದೇವ ೧
ತೀರ್ಥಯಾತ್ರೆಗಳಿಂದ ಪಾರ್ಥಸಾರಥಿ ಕೃಷ್ಣ-
ಮೂರ್ತಿ ಸೇವಿಸಲಸಮರ್ಥನಾಗಿರುವೆ
ಮಾತು ಮಾತಿಗೆ ಕೃಷ್ಣಗೋವಿಂದ ಮಾಧವ
ಶ್ರೀಪತಿ ಶ್ರೀಧರ ಸಲಹೆಂಬ ಸ್ಮರಣೆ ೨
ಜ್ಞಾನಿಗಳೊಡನಾಡಿ ಶ್ರೀನಿವಾಸನೆ ನಿನ್ನ
ನಾನಾಲೀಲೆಗಳ ಧ್ಯಾನಿಸಲಿಲ್ಲ ಹರಿಯೆ
ಜ್ಞಾನಿಗಳರಸ ಭಕ್ತರ ಸುರಧೇನು
ಅಜ್ಞಾನಿಗಳಳಿದು ಸುಜ್ಞಾನಜನರ ಸಂಘ ೩
ಅಗಣಿತ ಮಹಿಮನೆ ನಿಗಮಗೋಚರ ಕೃಷ್ಣ
ಖಗವಾಹನ ಕಂಸಾರಿಯೆ ದೇವ
ಹಗಲು ಇರುಳು ನಿನ್ನ ಬಗೆಬಗೆ ಸ್ತುತಿಪರ
ಪಾದಗಳು ಸೇವಿಪ ಪರಮಲಾಭವನು ೪
ಕರೆ ಕರೆಗೊಳಿಸದೆ ಕಡಲಶಯನನೆ ಎನ್ನ
ತೊಡರುಗಳನೆ ಬಿಡಿಸೆಂದು ಮೊರೆ ಇಡುವೆ
ಮಡುವಿನೊಳ್ ಗಜವನುದ್ಧರಿಸಿ ರಕ್ಷಿಸಿದಂಥ
ಕಮಲನಾಭ ವಿಠ್ಠಲನೆ ನಿನ್ನ ಸ್ಮರಣೆ ೫

ಕುವಲಯಾಪೀಡ ಎಂಬುದು
೧೧೫
ಉಡಿಯ ತುಂಬಿರೆ ಕಡಲೊಡೆಯನ
ಮಡದಿಗ್ಹರುಷದಿ ಪ
ಬಿಡಿಯ ಮುತ್ತು ಬಿಗಿದ ತಟ್ಟೆಯ
ಪಿಡಿದು ಬೇಗದಿಅ.ಪ
ಅಚ್ಚ ಜರಿಪೀತಾಂಬ್ರನುಟ್ಟ ಅಚ್ಚುತನರಸಿಗೆ
ಹೆಚ್ಚಿನ ಆಭರಣ ಧರಿಸಿ ಮೆರೆವ ದೇವಿಗೆ
ಅಚ್ಚುತನ ವಕ್ಷಸ್ಥಳದಿ ವಾಸಿಪ ಲಕುಮಿಗೆ
ಅಚ್ಚಮುತ್ತು ಅರಿಶಿನಡಿಕೆ ಉತ್ತತ್ತಿ ಫಲಗಳು ೧
ನಿಂಬೆ ನೇರಳೆ ಜಂಬು ದ್ರಾಕ್ಷಿ ಕದಳಿ ಫಲಗಳಿಂ
ಅಂಬುಜಾಕ್ಷನರಸಿಗೆ ದಾಳಿಂಬೆ ತೆಂಗು ಸಹಿತದಿ
ಅಂಬುಧಿಯೊಳು ಜನಿಸಿದ ಮುಕುಂದನರಸಿಗೆ
ಅಂಬುಜಾಕ್ಷಿಯರೆಲ್ಲ ನೆರೆದು ಸಂಭ್ರಮಪಡುತಲಿ೨
ಮಾದಳದ ಫಲವು ಮಾವು ಪನೆ್ನರಿಲ ಫಲಗಳ
ಮಾಧವನ ಮಡದಿಗೀಗ ಮಾನಿನಿಮಣಿಯರು
ಕ್ರೋಧಿನಾಮ ಸಂವತ್ಸರದಿ ಸಾಧು ಜನಗಳ
ಆದರಿಸಿ ಕಾವ ಕಮಲನಾಭ ವಿಠ್ಠಲನರಸಿಗೆ ೩

ಮಧ್ವಸರೋವರ :ಉಡುಪಿಯ ಕೃ

ಉಡುಪಿ ಕೃಷ್ಣನ ನೋಡಿರಿ ಶ್ರೀಹರಿ ಚರಿತ
ಸಡಗರವನು ಕೇಳಿರಿ ಪ
ಪೊಡವಿಯೊಳು ಸಮರಿಲ್ಲ ಈತನ
ಉಡುಪ ಮುಖ ಶ್ರೀ ಕೃಷ್ಟರಾಯನ
ಕಡಲತಡಿಯಲಿ ನೆಲಸಿದಾತನ
ಮೃಡಪುರಂದರೊಡೆಯ ದೇವನ ೧
ಮಧ್ವಸರೋವರ ಸ್ನಾನವ ಮಾಡುತ ಮನ
ಶುದ್ದಭಾವದಿ ನಲಿದು
ಮಧ್ವಶಾಸ್ತ್ರÀವ ಸಾಧು ಸಜ್ಜನರಿಗೆ ಪೇಳ್ದ
ಪದ್ಧತಿ ಮೀರದೆ ಶ್ರದ್ಧಾಭಕುತಿಯಿಂದ ೨
ಮಧ್ಯದಲ್ಲಿಹ ಅನಂತೇಶ್ವರನನು
ಶುದ್ಧ ಭಕುತಿಲಿ ನಮಿಸಿ ಸ್ತುತಿಸುತ
ಮುದ್ದು ಕೃಷ್ಣನ ಹೆಜ್ಜೆ ಪಂಙ್ತಯ
ಶ್ರದೆಧ್ ಸಡಗರ ನೋಳ್ಪಸುಜನರು ೩
ಕಾಲಲಂದುಗೆ ಗೆಜ್ಜೆಯು ಕಯ್ಯೊಳು ಕಡ-
ಗೋಲನೇಣನೆ ಪಿಡಿದು
ಬಾಲನಂದದಿ ಗೋಪಾಲರೂಪವ ತೋರ್ದ
ಶ್ರೀ ಲಲಾಮನ ದಿವ್ಯ ಬಾಲಕೃಷ್ಣನ ರೂಪ4
ಬಾಲಯತಿಗಳು ವೇಳೆ ವೇಳೆಗೆ
ಬಾಲಕೃಷ್ಣನ ಪೂಜೆ ಮಾಡುತ
ಬಾಲರೂಪವ ನೋಡಿ ಸುಖಿಪರು
ಶೀಲ ಗುಣ ಸುರವರನ ಸ್ತುತಿಪರು ೫
ಮಧ್ವರಾಯರಿಗೊಲಿದು ಉಡುಪಿಯ ಮಣ್ಣ-
ಗೆಡ್ಡೆಯೊಳಗೆ ಪೊಳೆದು
ಅದ್ವೈತ ಮತದ ಸದ್ದಡಗಿಸಿ ಮೆರೆದಂಥ
ಮುದ್ದು ಸರ್ವಜ್ಞರ ಆಜ್ಞಾಧಾರಕರೆಲ್ಲ6
ಶುದ್ಧ ತತ್ವಜ್ಞರು ರಚಿಸಿದ
ಪದ್ಧತಿಯ ಸಾಧಿಸುತ ಸಂತತ
ಶ್ರದ್ಧೆಯೊಳು ಹರಿಕಾರ್ಯ ನಡೆಸುವ
ಶುದ್ಧಯತಿಗಳ ಸೇವೆಗೊಲಿಯುವ ೭
ಪರಿಯಾಯ ದಿನ ಬರಲು ಶ್ರೀ ಹರಿಯನ್ನು
ಪರಿ ಪರಿ ವಿಧ ಪೂಜಿಸಿ
ಪರಮ ವೈಭವದಿಂದ ಹರಿಯನ್ನು ಕರ ತಂದು
ವರರಥವೇರಿ ಕುಳ್ಳಿರಿಸುವ ಭಕುತಿಯಲಿ8
ಪರಿಪರಿಯ ವಾದ್ಯಗಳು ಮೊಳಗಲು
ಸರುವ ಯತಿಗಳು ನೆರೆದು ಹರುಷದಿ
ಪರಮ ಮಂಗಳ ಮೂರ್ತಿ ಕೃಷ್ಣನ
ಹರುಷದಲಿ ಕೊಂಡಾಡಿ ಸುತ್ತಿಪರು ೯
ಕೊರಳ ಕೌಸ್ತುಭ ಮಾಲೆಯು ವೈಜಯಂತಿಯು
ಮುರುಡಿ ಸರಪಣಿ ಗೆಜ್ಜೆಯು
ಪರಿಪರಿ ರತ್ನಾಭರಣಗಳ್ಹೊಳೆಯುತ
ಜರದ ಪೀತಾಂಬರದಿಂದ ಶೋಭಿಪ ದಿವ್ಯ10
ಕನಕ ಕಸ್ತೂರಿ ತಿಲಕ ಫಣೆಯಲಿ
ಮಿನುಗುತಿಹ ಸ್ತ್ರೀ ರೂಪ ಧರಿಸಿದ
ಕನಕ ಪೀಠದಿ ಮೆರೆದ ಕಮಲ-
ನಾಭ ವಿಠ್ಠಲನ ಸೇವಿಸುವ ಜನ11


ಊದೊ ಕೊಳಲನು ಕೃಷ್ಣ ಊದೊ ಕೊಳಲನು
ವೇದ ವೇದ್ಯ ಊದು ಕೊಳಲ ನಾದ ತುಂಬೆ ನಭದಿ ಕೃಷ್ಣ ಪ
ಮದನ ಜನಕ ಮೋಹನಾಂಗ
ಚದುರೆಯರಿಗೊಲಿದು ವನದಿ
ವಿಧ ವಿಧ ಕ್ರೀಡೆಗಳನಾಡಿ
ಮುದವನಿತ್ತ ಮಧುಸೂದನನೆ ೧
ಗೋಪಿಕಾ ಸ್ತ್ರೀಯರ ವಾಕ್ಯ
ಶ್ರೀಪತಿಯು ಕೇಳಿ ಮುದದಿ
ತಾಪ ಕಳೆದು ಸುರರು ತಲೆಯ
ತೂಗೆ ಹರುಷದಿಂದ
ಕೊಳಲನೂದಿದ ಚಲುವ ಕೊಳಲನೂದಿದ2
ನಾರಿಯರು ನಲಿದು ಬಂದು
ವಾರಿಧಿಯೊಳು ಸರಸವಾಡೆ
ಮಾರಮಣನು ಸೀರೆಗಳನು
ಗಾರು ಮಾಡಿ ಕದಿವರೇನೊ
ತಾರೊ ವಸನವ ದುರುಳ ಕೃಷ್ಣ ತಾರೊ ವಸನವ ೩
ಅಂಗನೆಯರೆ ನಿಮ್ಮ ವ್ರತಕೆ
ಭಂಗವಾದ ಕಾರ್ಯವೆಸಗೆ
ವಂದಿಸಿದರೆ ಕೊಡುವೆನೆಂದು
ರಂಗ ನಲಿದು ನುಡಿದ ಮುದದಿ
ವಸನ ನೀಡಿದ ರಂಗ ವಸನ ನೀಡಿದ4
ತರುಳರೆಲ್ಲ ಕೂಡಿಕೊಂಡು
ಕರುಗಳನ್ನೆ ಪಾಲಿಸುತಿರೆ
ಮರೆಯ ಮಾಡಿ ಕರುಗಳನ್ನು
ದುರುಳತನವು ತರವೆ ಕೃಷ್ಣ
ತಾರೊ ಕರುಗಳ ಕೃಷ್ಣ ತಾರೊ ಕರುಗಳ5
ಮಾತೆಯರನೆ ಅರಸುತಿರಲು
ಪ್ರೀತಿಯಿಂದ ಕರುಗಳನ್ನು
ಜೋಕೆಯಿಂದ ಪಿಡಿದು ತರಲು
ಯಾತಕೀಪರಿ ನಿಂದಿಸುವದು
ನೋಡಿ ಕರುಗಳ ನಿಂತಿರುವದು ನೋಡಿ ಕರುಗಳ6
ಗೊಲ್ಲತಿಯರ ಮನೆಯ ಪೊಕ್ಕು
ಮೆಲ್ಲುತಿರಲು ಬೆಣ್ಣೆ ಮೊಸರು
ನಲ್ಲೆಯರು ಪಿಡಿದು ಹರಿಯ
ನಿಲ್ಲೊ ನಿಲ್ಲೊ ನಿಲ್ಲೊ ಕೃಷ್ಣ
ಚೋರ ಕೃಷ್ಣನೆ ತೋರೊ ನಿಜವ ಜಾರ ಕೃಷ್ಣನೆ ೭
ಚಿಕ್ಕ ಪ್ರಾಯದವರೆ ಕೇಳಿ
ಸೊಕ್ಕಿನಿಂದ ನುಡಿವರೇನೆ
ಬೆಕ್ಕು ತಿಂದ ತೆರವರಿಯದೆ
ಧಿಃಕರಿಸುವುದುಚಿತವಲ್ಲ
ನುಡಿವರೇನೆಲೆ ನಿಷ್ಠುರ ನುಡಿವರೇನೆಲೆ ೮
ಮಕ್ಕಳೆಲ್ಲ ಆಡುತಿರಲು
ಕಕ್ಕು ಬಿಕ್ಕು ಮಾಡಿ ಅವರ
ದಿಕ್ಕು ದಿಕ್ಕುಗಳಿಗೆ ನಡೆಸಿ
ಠಕ್ಕುತನವು ತರವೆ ಕೃಷ್ಣ
ನಡತೆಯಲ್ಲವೊ ತುಡುಗ ಕೃಷ್ಣ ನಡತೆಯಲ್ಲವೊ9
ಮಕ್ಕಳಾಡುತಿರಲು ಮಧ್ಯ
ಸರ್ಪವೆರಡು ಕಾದಿ ಬರಲು
ದಿಕ್ಕು ತೋರದಂತೆ ಭಯದಿ
ದಿಕ್ಕು ದಿಕ್ಕಿಗೆ ಓಡದಿಹರೆ
ದುಡುಕು ನನ್ನದೆ ದೂರುವಿರೆನ್ನ ದುಡುಕು ನನ್ನದೆ10
ಹರಿಯ ಮಾತು ಕೇಳಿ ಮುದದಿ
ಹರುಷದಿಂದ ನಮಿಸಿ ಕೃಷ್ಣಗೆ
ತ್ವರಿತದಿಂದಲಿ ಒಲಿಯೊ ಮುರಳೀ-
ಧರನೆ ಹರುಷದಿಂದ ಕೃಷ್ಣ
ನಮಿಸಿ ಬೇಡುವೆವೊ ಕೃಷ್ಣ ಸ್ಮರಿಸಿ ಪಾಡುವೆವೊ11
ಸರಸವಾಡತಿಹಿರಿ ಎನ್ನ
ಸ್ಮರಣೆಯಿಂದ ತನುವ ಮರೆತು
ಕ್ಷಮಿಪೆ ನಿಮ್ಮ ಗೃಹಕೆ ತೆರಳಿ
ವನಜ ಮುಖಿಯರೆಲ್ಲರು
ತೆರಳಿರೆಂದನು ತರುಣಿಯರೆನ್ನ ಸ್ಮರಿಸಿರೆಂದನು ೧೨
ಕರುಣದಿಂದ ಸಲಹುತಿಹೆನು
ದುರಿತವೆಲ್ಲ ತರಿದು ಮುದದಿ
ಕಮಲನಾಭ ವಿಠ್ಠಲನೆಂದು
ಕುಣಿದು ಪಾಡಿ ವನಿತೆಯರೆನಲಿದು ಪಾಡಿರೆ ನಾರಿಯರೆಲ್ಲ ಕುಣಿದು ಪಾಡಿರೆ ೧೩


ಎಂತು ವರ್ಣಿಸಲಹುದು ಸಿರಿವರನ
ಸಿರಿ ನಾರಸಿಂಹನ ಪ
ಅಂತರಂಗದಿ ಹರಿಯ ಸ್ಮರಣೆಯ
ಸಂತತವು ಬಿಡದಂತೆ ಮಾಡುವ
ಕಂತುಪಿತ ಭಕ್ತರನು ಪೊರೆಯಲು
ನಿಂತಿರುವ ಸಿರಿಕಾಂತನೆನುತಲಿ ಅ.ಪ.
ನಿಷ್ಠೆಯಿಂದಲಿ ಬೆಟ್ಟವೇರುತ್ತ
ಹರಿಭಕುತರೆಲ್ಲರು
ಕಷ್ಟಗಳ ಪರಿಹರಿಸು ಎಂದೆನುತ
ಮನಮುಟ್ಟಿ ಭಜಿಪರು
ಸೃಷ್ಟಿಕರ್ತನೆ ರಕ್ಷಿಸೆಂದೆನುತ
ಇಷ್ಟದಾಯಕ ನಿನ್ನ ಮಹಿಮೆಯ
ಎಷ್ಟು ಪೊಗಳುವರಯ್ಯ ಕೇಶವ
ಭಕ್ತರನು ಉದ್ಧರಿಸಲೋಸುಗ
ಬೆಟ್ಟದಲಿ ಉದ್ಭವಿಸಿದಾತನ ೧
ವಾಸುದೇವನ ಮಹಿಮೆ ಪೊಗಳುತ್ತ ನ-
ರಸಿಂಹ ಲಕ್ಷೀ ನಾರಸಿಂಹ ನ-
ರಸಿಂಹ ನರಸಿಂಹ ಎಂದೆನುತ ಹರಿ-
ದಾಸರೆಲ್ಲರು ಸಾರಸಾಕ್ಷನೆ ನಿನ್ನ ಪೊಗಳುತ್ತ
ದ್ವಾರ ದ್ವಾರದಿ ಪೂಜೆಊಷÉÆಳ್ಳುತ
ಮಾರಪಿತ ಮಹಲಕ್ಷೀ ಸಹಿತದಿ
ದೋರ ರಥÀದೆಡೆಯಲ್ಲಿ ನಿಲ್ಲುತ
ತೇರ ನೇರುವ ಶ್ರೀ ರಮೇಶನ ೨
ಸಾರಪದಕಗಳಿಂದ ಶೋಭಿಸುತ ಝಳಝಳಿಪ
ವಜ್ರದ ತೋರ ಮುತ್ತಿನ ಮಾಲೆ
ಹೊಳೆಯುತ್ತ ಥಳಥಳಿಪ ನೊಸಲಲಿ
ಸಾರ ಕಸ್ತೂರಿ ತಿಲಕ ರಂಜಿಸುತ
ಮಾರ ಬಿಲ್ಲೆಂತೆಸೆವ ಪುಬ್ಬಿನ
ಚಾರುತರ ಶೃಂಗಾರ ನಯನದ
ವಾರೆ ನೋಟÀದಿ ನೋಡಿ ಭಕುತರ ಅ-
ಪಾರ ದುಃಖಗಳನ್ನ ನೀಗುವರ ೩
ಕೋಟಿ ಸೂರ್ಯ ಪ್ರಕಾಶಮಯವಾದ
ನವರತ್ನ ಖಚಿತ ಕಿರೀಟ
ಕುಂಡಲ ಧರಿಸಿ ಅನುವಾದ
ಎಡಬಲದ ಭುಜದಲಿ
ಮಾಟದ ಭುಜಕೀರ್ತಿ ಸುಲಲಿತದ
ನೋಟಕಾಶ್ಚರ್ಯವನೆ ತೋರುತ
ಶ್ರೀ ಕಳತ್ರನು ರಥದಿ ಮೆರೆಯುತ ದಿ-
ವಾಕರನ ಪ್ರಭೆಯಂತೆ ಪೊಳೆಯುವ
ರಮಾ ಮನೋಹರ ರಮೆಯ ರಮಣನ ೪
ಛತ್ರಿ ಚಾಮರಗಳನೆ ಪಿಡಿದಿಹರು ಎಡಬಲದಿ
ಸ್ತುತಿಸುತ ಎತ್ತಿ ಸ್ವರಗಳ ಗಾನಪಾಡುವರು
ಚಿತ್ತೈಸು ಹರಿ ಬಾ ಬಾರಿತ್ತ
ಬಾಬಾರೆಂದು ಕರೆಯುವರು
ಸುತ್ತ ತುಂಬರು ನಾರದರ ಪರಿ
ನೃತ್ಯಗಾನಗಳಿಂದ ಸ್ತುತಿಪರು
ಕರ್ತೃ ಕಮಲನಾಭ ವಿಠ್ಠಲರ-
ಥೋತ್ಸವದಿ ನಲಿನಲಿವ ದೇವನ ೫

ಎಂತು ಶೋಭಿಸುತಿಹಳು ಈ ಕನ್ನಿಕೆ

ಎಂತು ಶೋಭಿಸುತಿಹಳು ಈ ಕನ್ನಿಕೆ
ಸಂತೋಷದಿಂದಲಿ ಸುರರು ಸ್ತುತಿಸುತಿರಲು ಪ
ಮಂಧರಗಿರಿ ತಂದು ಸಿಂಧುವಿನೊಳಗಿಟ್ಟು
ಚಂದದಿಂ ಮಥಿಸಲಮೃತ ಪುಟ್ಟಲು
ಬಂದು ದಾನವರ ಪಹರಿಸಬೇಕೆನುತಿರಲು
ನಿಂದರು ಸುರರು ಮುಂದೋರದೆ ಚಿಂತಿಸೆ
ಇಂದಿರಾಪತಿ ಇವರ ಭಾವವ
ಕಂಡುಮನದಲಿ ಹರುಷಪಡುತಲಿ
ಬಂದು ಅಸುರರ ಸುರರ ಮನ್ನಿಸಿ
ನಿಂದ ಶ್ರೀ ಗೋವಿಂದ ಮುದದಲಿ1
ಸಾಲಾಗಿ ಕುಳಿತಿರಿ ಮೇಲಾದಮೃತವನ್ನು
ಲೀಲೆಯಿಂದಲಿ ಬಡಿಸುವೆನೆನ್ನಲು
ಕೇಳಿ ಅಸುರರು ಹರುಷತಾಳಿ ಸಂಭ್ರಮದಿಂದ
ಸಾಲಾಗಿ ಕುಳಿತು ಆ ವೇಳೆ ನೋಡುತಲಿರಲು
ಶ್ರೀ ರಮಣ ಕರದಲ್ಲಿ ಕಲಶವ
ಲೀಲೆಯಿಂದಲಿ ಪಿಡಿದು ನಿಲ್ಲಲು
ತಾಳಿ ಹರುಷವ ದಾನವರು ಸÀÄ-
ಮ್ಮಾನದಿಂದಲಿ ನೋಡÀÄತಿಹರು2
ಗಂಗೆಯ ಪಡೆದ ಪಾದಗಳ ಶೃಂಗಾರ
ಅಂದಿಗೆ ಕಿರುಗೆಝೆ ಸರಪಣಿಯು
ಚಂದುಳ್ಳ ಬೆರಳುಗಳಿಗೆ ಪಿಲ್ಲಿ ಕಿರುಪಿಲ್ಲಿ ಕಾ-
ಲುಂಗರಗಳನಿಟ್ಟು ರಂಭೆಯಂಥೊಳೆಯಲು
ಬಂದಿ ಬಾಪುರಿ ಥಳಥಳಿಸುತಲಿ
ಚಂದದ ನಾಗ ಮುರಿಗಿ ತಾಯಿತ
ಸುಂದರ ಹಸ್ತ ಕಡಗ ಹಾಸರ
ಇಂದಿರಾಕ್ಷಿ ಕೈ ಬಳೆಗಳ್ಹೊಳೆಯುತ ೩
ಹಲವು ಸೂರ್ಯರ ಕಾಂತಿ ಹೊಳೆವೊ ಪೀತಾಂಬರ
ಸರಿಗೆ ಅಂಚಿನ ಕುಪ್ಪುಸವನೇ ತೊಟ್ಟು
ನಡುವಿಗೆ ನವರತ್ನ ಬಿಗಿದ ಪಟ್ಟೆಯನಿಟ್ಟು
ಸಡಗರದಲಿ ಆಣೆಮುತ್ತಿನ ಸರಗಳು
ಸರಗಿ ಏಕಾವಳಿಯು ವಜ್ರದ
ಪದಕಗಳು ಥಳಕೆಂಬ ಸರಗಳು
ಕೊರಳ ಗೆಜ್ಜೆಟ್ಟಿಕೆಯು ಕಂಠಿಯು
ಮುರಳಿಸರ ಕಠ್ಠಾಣಿವಲಿಯುತ ೪
ಹೊಳೆವೊ ಗಲ್ಲಕೆ ಥಳಥಳಿಪ ಅರಿಶಿನ ಹಚ್ಚಿ
ಹೊಳೆವೊ ಮೀನ್ ಬಾವುಲಿ ಕರ್ಣದಲಿ
ಗಿಳಿಗೆಜ್ಜೆ ಚಳತುಂಬು ಬುಗುಡಿ ಬಾವುಲಿ ಚಂದ್ರ
ಮುರುವು ಸರಪಳಿಗಳು ಥಳಥಳ ಹೊಳೆಯಲು
ಆಣಿಮುತ್ತಿನ ಮುಖುರ ಬೇಸರಿ
ಜಾಣೆ ನಾಶಿಕದಲ್ಲಿ ಹೊಳೆವ ಬು-
ಲಾಕುನಿಟ್ಟಿ ಬೆಳಕು ಗಲ್ಲದ
ಮೇಲೆ ಥಳಥಳ ಹೊಳೆವ ಕಾಂಚಿಯು ೫
ಸಣ್ಣ ಬೈತಲೆ ಬಟ್ಟು ಚಂದ್ರ ಸೂರ್ಯರ ನಿಟ್ಟು
ಹಿಂದೆ ಜಡೆಬಿಲ್ಲೆ ಗೊಂಡ್ಯಗಳನಿಟ್ಟು
ಚಂದ್ರ ಸೂರ್ಯರ ಪೋಲ್ವ ಚೌರಿ ರಾಗಟಿ ಜಡೆ
ಬಂಗಾರ ಹೊಳೆಯುತ್ತ ಬಡನಡು ಬಳಕುತ್ತ
ಕಂಗಳ ಕಡೆನೋಟದಿಂದಲಿ
ಭಂಗಪಡಿಸುತ ಅಸುರ ಕೋಟಿಯ
ಮಂದಗಮನದಿ ಅಡಿಯನಿಡುತಲಿ
ಬಂದಳಮೃತದ ಕಲಶ ಪಿಡಿಯುತ ೬
ಕಂಗಳು ಮುಚ್ಚಿ ಕುಳಿತಿರಲು ದಾನವ ಪಂಕ್ತಿ
ಮುಂದೆ ಕಾಲ್ಗೆಜ್ಜೆ ಧ್ವನಿಯ ಮಾಡುತ
ಅಂದಿಗೆ ಸರಪಣಿನಾದ ತುಂಬಲು ಭರದಿ
ಸುಂದರಿ ಬಂದಿಹಳೆಂದು ದಾನವರೆಲ್ಲ
ಮಂದಹಾಸದಿ ಮೈಮರೆತು ಮ
ತ್ತೊಂದು ತೋರದೆ ಕಳವಳಿಸುತಲಿರೆ
ಇಂದಿರೇಶನು ದೇವೆತೆಗಳಿಗೆ
ಪೊಂದಿಸಿದ ಅಮೃತವನು ಹರುಷದಿ ೭
ಕಲಕಲಕೂಗುತ ಕಲಹಕೆನ್ನುತ ಬರೆ
ಬಲವು ಸಾಲದೆ ಹಿಂದಿರುಗಲವರು
ಸುರರು ಪುಷ್ಪದ ಮಳೆಕರೆದರು ದೇವನ
ವರ ಋಷಿಗಳು ನೆರೆದು ಸ್ತುತಿಸಿ ಕೊಂಡಾಡಲು
ಪರಮ ಪುರುಷನೆ ಪುಣ್ಯಚರಿತನೆ
ಗರುಡ ಗಮನನೆ ಉರಗಶಯನನೆ
ಸರಸಿಜಾಕ್ಷನೆ ನಮಿಪೆವೆನ್ನುತ
ಸನಕಾದಿಗಳು ಸಂಸ್ತುತಿಸೆ ದೇವನ ೮
ಪರಶಿವನಿದ ನೋಡಿ ಪರಿಪರಿ ಪ್ರಾರ್ಥಿಸಿ
ತರುಣಿಯ ರೂಪವ ನೋಡಲನುವಾಗಲು
ಸರಸಿಜಾಕ್ಷನ ಸ್ತ್ರೀರೂಪ ನೋಡುತಲಿ ಮೈ
ಮರೆದು ಕೈಮುಗಿದು ಕೊಂಡಾಡಿ ಸುತ್ತಿಸಿದನು
ಮರಳಿ ಭಸ್ಮಾಸುರನ ಭಾಧೆಗೆ
ತರಹರಿಸಿ ಮುಂದೋರದಿರುವ
ಸಮಯದಲಿ ಸ್ತ್ರೀರೂಪ ತಾಳುವ
ತ್ವರದಿ ರಕ್ಷಿಸಿ ಪೊರೆದ ದೇವನು ೯
ಕಮಲಸಂಭವನಯ್ಯ ಕಮಲ ಜಾತೆಯ ಪ್ರಿಯ
ಕಮಲಾಕ್ಷ ಕಂಸಾರಿ ಕರುಣಾನಿಧೆ
ಶರಣು ಶರಣೆನ್ನುತ ನಭವ ತುಂಬಲು ಸ್ವರ
ಸುರಗಂಧರ್ವರು ಪಾಡಿಪೊಗಳುತಿಹರೊ ದೇವ
ಕನಕಗರ್ಭನ ಪಿತನೆ ರಕ್ಷಿಸು
ಕಮಲನಾಭ ವಿಠ್ಠಲನೆ ನಮಿಸುವೆ
ಸವಿನಯದಿ ನಿನ್ನ ಸ್ತುತಿಪ ಭಾಗ್ಯವಕರುಣಿಸೆನಗೆ ಶ್ರೀ ಕರುಣಾನಿಧಿಯೆ ೧೦

ಪೂರ್ವದಲ್ಲಿ ಇಂದ್ರದ್ಯುಮ್ನನೆಂಬ ವಿಷ್ಣು

ಎಂಥಾ ಚಲುವ ಶ್ರೀ ಹರಿ ಭಕ್ತರೋದ್ಧಾರಿ
ಎಂಥಾ ಚಲುವ ಶ್ರೀ ಹರಿ ಪ
ಎಂಥಾ ಚಲುವ ಲಕ್ಷ್ಮೀಕಾಂತ ಶ್ರೀಭೂಸಹಿತ
ಚಿಂತಿತಾರ್ಥವ ನೀವ ಕಂತುಪಿತನು ಹರಿ ಅ.ಪ.
ಚರಣದಂದುಗೆ ಗೆಜ್ಜೆಯು ಘಲುಘಲುರೆಂದು
ಮೆರೆವ ಪೈಜನರುಳಿಯು ಜರದ ಪೀತಾಂಬರವು
ನಡುವಿನ ಚಲ್ಲಣವು ಸಡಗರದಿಂದ ನಿಂತ
ಮದನಗೋಪಾಲನು ಹೃದಯದಿ ಹಾರವು
ಕೌಸ್ತುಭ ಹೊಳೆಯಲು ವಿಧವಿಧ
ಪದಕಗಳಿಂದಲಿ ಶೋಭಿಪ
ಅದ್ಭುತ ಮಹಿಮನು ವಿಧಿಭವವಂದ್ಯನು
ಸದಮಲಕಾಯನು ಸಚ್ಚಿದಾನಂದನು ೧
ಕರದಿ ಕಂಕಣ ಭೂಷಣ ಕರುಣದಿ ಸುರರ
ಪೊರೆವ ವೈಭವ ಕಾರಣ
ಕರವ ತೋರುತ ತನ್ನ ಚರಣ ಸೇವೆಯ ಮಾಳ್ಪ
ಪರಮ ಭಕ್ತರನೆಲ್ಲ ತ್ವರದಿ ಪಾಲಿಪೆನೆಂದು
ಸುರವರ ವಂದ್ಯನು ಪರಿಪರಿವರಗಳ
ಕರದು ನೀಡುವ ಸಿರಿ ಕರಿರಾಜವರದನು
ಸರಸಿಜನಾಭ ಸನ್ಮಂಗಳ ಮಹಿಮನು
ಉರಗಗಿರಿಯ ಶ್ರೀ ವರ ಶ್ರೀನಿವಾಸನು ೨
ಪಟ್ಟೆನಾಮವು ಘಣೆಯೊಳು
ಕಸ್ತೂರಿ ತಿಲಕ ಒಪ್ಪುತಿರೆ ವ್ಯೆಭವದೊಳು
ಸರ್ಪಶಯನ ಸರ್ವೋತ್ತಮ ಸಿರದೊಳು
ರತ್ನಕಿರೀಟನಿಟ್ಟು ಅತ್ಯಂತ ಶೋಭಿಸಲು
ಸುತ್ತಲ ಚಾಮರವೆತ್ತಿ ಬೀಸುತಿರೆ
ನರ್ತನ ಗಾಯನ ವಿಸ್ತರಿಸಲು ಪುರು-
ಷೋತ್ತಮ ತಾನಿರ್ಲಿಪ್ತನಾಗಿ ಸರ್ವ
ಕರ್ತೃಕಮಲ ನಾಭ ವಿಠ್ಠಲ ಸರ್ವೋತ್ತಮ ೩

ಬಡತನದಿ ಒಡನೆ ನೀಡಿದೆಯೊ
೧೫೯
ಎತ್ತಿದರಾರತಿ ಮುತ್ತೈದೆಯರು ಬೇಗ
ಅರ್ಥಿಯಿಂದಲಿ ಪಾಡಿ ಅಚ್ಚುತನರಸಿಗೆ ಪ
ಇಂದಿರಾದೇವಿ ಸುಗಂಧ ಸುಂದರಿ ನಮ್ಮ
ಮಂದಿರದೊಳು ನಲಿದಾಡುತಲಿಹ ತಾಯೆ
ಚಂದಿರವದನೆ ಸುಂದರಿ ಶಾಂತಿ ಜಯಮಾಯೆ
ಇಂದಿರೇಶನ ಪಟ್ಟದರಸಿ ವರ ಲಕ್ಷುಮಿಗೆ ೧
ಕರುಣದಿ ವರಗಳ ಕರೆದು ಕೊಡುವಳೆಂಬ
ಬಿರುದು ನಿನ್ನದು ತಾಯೆ ಕೊಡುವರ ಅಭಯವ
ಗರುಡಗಮನನ ವಕ್ಷಸ್ಥಳದಲಿ ವಾಸಿಸು-
ತಿರುವ ಸೌಭಾಗ್ಯದ ಖಣಿಯೆ ರಕ್ಷಿಸು ಎಂದು೨
ಪದ್ಮಮುಖಿಯೆ ಪದ್ಮಪಾಣಿಯೆ ಪದ್ಮಾಕ್ಷಿ
ಪದ್ಮಲೋಚನೆ ಪದ್ಮಸಂಭವೆ ಪೊಳೆವ ಹೃ-
ತ್ಪದ್ಮದಿ ಕಮಲನಾಭ ವಿಠ್ಠಲನ ತೋರಿಪದ್ಮನೇತ್ರೆಯೆ ಶ್ರೀ ಪದ್ಮಾಲಯೆ ಪೊರೆ ಎಂದು೩

ವಿಷ್ಣುವಿನ ಕರ್ಣಮಲದಿಂದ ಜನಿಸಿದ ಒಬ

ಎರೆದು ಪೀತಾಂಬರವನುಡಿಸಿದಳಾಗ
ವರ ಗೋಪಿಯು ಬೇಗ ಪ
ಮುರುಳಿಯನೂದುತ ಪರಿಪರಿ ಗೆಳೆಯರು
ಪರಮಾತ್ಮನೆ ನಿನ್ನರಸುತಲಿಹರೆಂದು ಅ.ಪ.
ಗುರುಳು ಕೂದಲು ಮುಖದಲ್ಲಿ ಹೊಸ ಬೆವರು
ಥಳಥಳಿಸುತಲಿಹುದು
ಎಳೆಯ ಶ್ರೀ ತುಳಸಿಯ ವನಮಾಲೆಗಳು
ಗಳದಲಿ ಶೋಭಿಪುದು
ಅರಳು ಮಲ್ಲಿಗೆ ಪುಷ್ಪದ ಹಾರಗಳು
ಮುತ್ತಿನ ಪದಕಗಳು
ಕೊರಳೊಳು ಮುತ್ತಿನ ಸರಗಳಿಂದೊಪ್ಪುತ
ಮುರುಳಿಯ ನೂದುತ ಸರಸರ ಬಾರೆಂದು ೧
ಗುರುಳು ಕೂದಲೊಳೊಪ್ಪುವ ಅರಳೆಲೆಯು
ಸೊಗಸಿನ ನವಿಲ್ಗರಿಯು
ಬಿಗಿದು ಸುತ್ತಿದ ಸಿರದಲಿ ಕೇಶಗಳು
ಅತಿ ಶೋಭಿಸುತಿಹವು
ಚದುರಿದ ಕೇಶದಿ ಕೆಂದೂಳಿಗಳು
ಮಧುವೈರಿಯ ಕೇಳು
ವಿಧವಿಧ ರಾಗದಿ ಪಾಡುತ ನಿನ್ನನು
ಸದನದಿ ಪೂಜಿಸಿ ನೋಡುವೆ ಬಾರೆಂದು ೨
ನೊಸಲಲ್ಲಿ ಕುಡಿನಾಮವನಿಟ್ಟಿಹಳು
ನೋಡುತ ಹಿಗ್ಗುವಳು
ಎಸಳು ಕಣ್ಣಿಗೆ ಕಪ್ಪನೆ ತೀಡುವಳು
ಬಣ್ಣಿಸಿ ಕರೆಯುವಳು
ಎಸೆವೊ ಕರ್ಣಕೆ ನೀಲದ ಬಾವುಲಿಯೂ
ರತ್ನದ ಚೌಕಳಿಯು
ಬಿಸುಜನಾಭ ನಿನ್ನ ಶಶಿಮುಖಿಯರುಗಳು
ರಸಕಸಿ ಮಾಳ್ಪರು ಹಸನಾಗಿ ಕೂಡೆಂದು ೩
ಅರಳುಕೆಂದಾವರೆ ಪೋಲುವ ಚರಣ
ಸ್ಮರಿಸುವರಘಹರಣ
ಸುರರು ಕಿನ್ನರರೋಲೈಸುವ ಚರಣ
ವರ ಸುಗುಣಾಭರಣ
ಘಲುಘಲುಘಲುರೆಂದೊಪ್ಪುವ ಚರಣ
ಸಜ್ಜನರಾಭರಣ
ಅಡಿಯಿಡುತಲಿ ಬಾ ಮೃಡಸಖ ನಿನ್ನಯ
ಅಡಿಗೆರಗುವರೈ ತಡೆಯದೆ ಬಾರೆಂದು ೪
ವರಹಸ್ತದಿ ಬೆಣ್ಣೆಯ ಮುದ್ದೆಯ ಕೊಡುವೆ
ಬಾರೆನ್ನಯ ದೊರೆಯೆ
ಜರದೊಲ್ಲಿಯ ಮುರಳಿಸಹಿತ ನಡುವಿಗೆ ಕಟ್ಟುವೆನು
ಬಾ ಭಕುತರ ಪೊರೆಯೆ
ಉಗುರಿಂದ ಗಿರಿಯನು ಎತ್ತಿದ ಧಣಿಯೆ
ಸುರಚಿಂತಾಮಣಿಯೆ
ಹಗಲು ಇರಳು ನಿನ್ನಗಲಿರಲಾರೆ ಶ್ರೀ-
ಕಮಲನಾಭವಿಠ್ಠಲ ಬೇಗಬಾರೆಂದು ೫

ಪಾಂಡವರ ಮನೆಯ ಬಿಟ್ಟಿ ಬಂಡಿಬೋವ

ಏನು ಚೋದ್ಯ ಶ್ರೀನಿಧೆ ಹರಿ
ಮಾನಿನಿ ಶ್ರೀದೇವಿ ಭೂದೇವಿರಮಣ ಪ
ಸೃಷ್ಟಿಕರ್ತನೆಂದು ಪೇಳ್ವರು ಪಾಂಡವರ ಮನೆಯ
ಬಿಟ್ಟಿ ಬಂಡಿಬೋವನೆಂಬೋರು ಪಾಂಚಾಲಿಗೆ ಒದಗಿದ
ಕಷ್ಟಕಳೆದ ಪೊರೆದನೆಂಬೊರೊ
ಕೆಟ್ಟದಾನವರ ಅಟ್ಟುಳಿಯ ಕಳೆದು
ದುಷ್ಟಕಂಸನವಧೆಯ ಸ್ಪಷ್ಟ ಪೇಳುತಿಹರೊ ೧
ಗಜನ ಸಲಹಿ ಪೊರೆದನೆಂಬೊರೊ ನೆಗಳೆಯನು ಸೀಳಿ
ತ್ರಿಜಗದೊಡೆಯ ಶ್ರೀಶನೆಂಬೊರೊ ಪ್ರಹ್ಲಾದ ಧೃವಗೆ
ನಿಜಸೌಭಾಗ್ಯ ಇತ್ತೆ ಎಂಬೊರೊ
ವಿಜಯ ಸಾರಥಿಯ ವಿಶ್ವರೂಪ ತೋರಿ
ಸುಜನರನ್ನು ಪೊರೆದ ನಿಜವ ಪೇಳುತಿಹರು ೨
ವತ್ಸಾಸುರನ ಮಡುಹಿದೆಂಬೊರೊ ಅಡವಿಯಲಿ ಕಾಡ-
ಕಿಚ್ಚನುಂಗಿ ಬೆಳೆದಿ ಎಂಬೊರೊ ತಾಯಿಗೆ ಬಾಯೋಳ
ಹೆಚ್ಚಿನ್ವಿಷಯ ತೋರ್ದಿ ಎಂಬೊರೊ
ಕಚ್ಚ ಬಂದ ಘಣಿಯ ಮೆಟ್ಟಿ ತುಳಿದು ಜಲವ
ಸ್ವಚ್ಛಗೈದನೆಂದಾಶ್ಚರ್ಯ ಪೇಳುತಿಹರೊ ೩
ಕರಡಿ ಮಗಳು ಮಡದಿಯೆಂಬೊರೊ ಪುಷ್ಪವನು ತರಲು
ತೆರಳಿ ಯುದ್ಧ ಮಾಡ್ದನೆಂಬೊರೊ ದೇವೇಂದ್ರನ ಗೆಲಲು
ತರುಣಿ ಸಮರಗೈದಳೆಂಬೊರೊ
ಮುರಳಿನಾದದಿಂದ ತರುಣಿಯರ ಮನವ
ಮರುಳುಗೈದನೆಂದು ಪರಿಪರಿ ಪೇಳುವರೊ ೪
ಕೆಟ್ಟದ್ವಿಜನ ಪೊರೆದಿ ಎಂಬೊರೋ ವನವನವ ಚರಿಸಿ
ಸುಟ್ಟ ದಾಸಗೊಲಿದೆ ಎಂಬೊರೋ ಒಪ್ಪಿಡಿಯ ಗ್ರಾಸವ
ಕೊಟ್ಟದ್ವಿಜನ ಪೊರೆದಿಯೆಂಬೊರೊ
ಅಟ್ಟಹಾಸದಿ ತಂದ ರುಕ್ಮಿಣಿಯ ತನ್ನ
ಪಟ್ಟದರಸಿಯೆಂದು ಸ್ಪಷ್ಟ ಪೇಳುತಿಹರೊ ೫
ಶಿಲೆಯ ಸತಿಯಗೈದನೆಂಬರೊ ಅಡವಿಗಳ ಚರಿಸಿ
ಬಲುಕಪಿಗಳ ಕೂಡ್ದನೆಂಬೊರೊ ಭಯ ಭಕ್ತಿಗೆ ಮೆಚ್ಚಿ
ಫಲದ ಎಂಜಲ ಸವಿದನೆಂಬೊರೊ ಮೆಚ್ಚಿ
ಸುಲಭದಿಂದ ದೈತ್ಯಕುಲವನೆಲ್ಲ ಸವರಿ
ಛಲದ ದಶಶಿರನ ವಧೆಯ ಪೇಳುತಿಹರೊ ೬
ಪುಟ್ಟಬ್ರಹ್ಮಚಾರಿ ಎಂಬೋರೊ ಬಲಿರಾಜನ ಬೇಡಿ
ಕೊಟ್ಟದಾನ ಕೊಂಡನೆಂಬೋರೊ ಈರಡಿಯನಳೆದು
ಮೆಟ್ಟಿ ಸಿರವ ತುಳಿದನೆಂಬೋರೊ
ಎಷ್ಟು ಪೇಳಲಿ ನಿನ್ನ ಶ್ರೇಷ್ಠಗುಣಗಳನ್ನು
ದಿಟ್ಟ ಕಮಲನಾಭ ವಿಠ್ಠಲ ಸರ್ವೇಶ ೭

ಯಾರಿಗೆ ಭಗವತ್
ಲೋಕನೀತಿ
೧೦೬
ಏನು ಮಾಡಿದರೇನು ಹಾನಿಯಾಗದು ಪಾಪ
ಶ್ರೀನಿಕೇತನನ ದಿವ್ಯನಾಮ ನೆನೆಮನವೆ ಪ
ಕ್ಷಣ ಪದಕಮಲಗಳ ಸ್ಮರಿಸಿ ಮನದೊಳಗೆ ಪ್ರತಿ
ಕ್ಷಣಕ್ಷಣದಿ ಹರಿ ಮಹಿಮೆ ಭಜಿಸಿ ಭಕ್ತಿಯಲಿ
ತೃಣ ಘನದೊಳಿಹನು ಹರಿ ಎನುತ ಚಿಂತಿಸಿ ಮನದಿ
ಪ್ರಣವ ಪ್ರತಿಪಾದ್ಯನಂಘ್ರಿಯ ಭಜಿಸದನಕ ೧
ಕಪಟನಾಟಕ ಸೂತ್ರಧಾರಿ ಶ್ರೀ ಹರಿಯ ಗುಣ
ಅಪರಿಮಿತ ಮಹಿಮೆಗಳ ಭಜಿಸಿ ಹಿಗ್ಗುತಲಿ
ಚಪಲ ಬುದ್ಧಿಗಳಿಂದ ತಪಿಸಿ ಕಂಗೆಡದೆ ಮನ
ಅಪರೂಪ ಹರಿನಾಮ ಜಪ ಮಾಡದನಕ ೨
ದಾನಧರ್ಮಗಳಿಂದ ಧನ್ಯನಾದೆನು ಎನಲು
ಹಾನಿಯಾಗೋದು ಆಯು ಪ್ರತಿ ನಿಮಿಷದಿ
ಸ್ನಾನ ಜಪತಪದೊಳಗೆ ಯಾರೆನಗೆ ಸರಿ ಎನದ
ಮೌನದಿಂದ್ಹರಿ ನಾಮ ಧ್ಯಾನಿಸುವತನಕ ೩
ಕ್ಲೇಶ ಆನಂದಗಳು ಈಶನಾಜ್ಞೆ ಇದೆಂದು
ವಾಸುದೇವನೆ ಜಗತ್ಪ್ರೇರಕನು ಎಂದು
ಶ್ವಾಸ ಬಿಡುವ ಶಕ್ತಿ ಲೇಸು ತನಗಿಲ್ಲ ಸ-
ರ್ವೇಶ ನಿನ್ನಧೀನವೆಂದರಿವ ತನಕ೪
ತೀರ್ಥಯಾತ್ರೆಗಳಿಂದ ಗಾತ್ರ ಶೋಷಣೆಯಾಕೆ
ಪಾರ್ಥಸಖನಂಘ್ರಿಗಳ ಕೀರ್ತಿಸುತ ಮನದಿ
ರಾತ್ರಿ ಹಗಲು ಕಮಲನಾಭ ವಿಠ್ಠಲನ ಶ್ರೀಮೂರ್ತಿಯನೆ ನೆನೆನೆನೆದು ಸುಖಿಯಾಗೊ ಮನವೆ೫

೧೫೭
ಏನು ಮಾಯವೊ ಹರಿಯೆ ಶ್ರೀನಿವಾಸನೆ ನಿನ್ನ
ಧ್ಯಾನಿಸುವವರನು ಪೊರೆವೆ ಸಾನುರಾಗದಲಿ ಪ
ಜ್ಞಾನಿಗಳು ಹಗಲಿರುಳು ಮೌನದಿಂದಲಿ ಭಜಿಸಿ
ದಾನವಾಂತಕ ನಿನ್ನ ಧ್ಯಾನ ಮಾಡುವರು ಅ.ಪ
ಬಡತನದಿ ಬಹು ವ್ಯಥೆಯ ಪಡುತ ಸತಿಸುತರಿರಲು
ನುಡಿಯೆ ಭಯ ಭಕ್ತಿಯಲಿ ಒಡೆಯರಿಲ್ಲೆಮಗೆ
ಮೃಡಸಖನು ಇಹನೆನಲು ಹಿಡಿಯವಲಿಯ ಕೊಡಲು
ಕೆಡದ ಸೌಭಾಗ್ಯವನು ಒಡನೆ ನೀಡಿದೆಯೊ ೧
ಅಂದು ದುಶ್ಖಾಸನ ನೃಪನಂದನೆಯ ಬಾಧಿಸುತ
ನಿಂದು ಸೀರೆಯ ಸೆಳೆಯೆನೊಂದು ದುಃಖಿಸುತ
ಇಂದಿರಾಪತಿ ಕೃಷ್ಣ ಇಂದೆನಗೆ ನೀನೆ ಗತಿ
ಎಂದೊಡಕ್ಷಯವಿತ್ತು ಅಂದು ಸಲಹಿದೆಯೊ ೨
ಮಡುವಿನಲಿ ಗಜರಾಜ ಪಿಡಿದ ಮಕರಿಗೆ ಸಿಲುಕಿ
ಮಡದಿ ಮಕ್ಕಳನಗಲಿ ಕಡೆಗೆ ಸೊಂಡಿಲಲಿ
ಪಿಡಿದ ಕುಸುಮವನು ಜಗದೊಡೆಯಗರ್ಪಿತವೆನಲು
ದಡದಡನೆ ಬಂದೆಯೊ ಮಡದಿಗ್ಹೇಳದಲೆ ೩
ಅಂದು ದೂರ್ವಾಸಮುನಿ ಬಂದು ಶಿಷ್ಯರ ಸಹಿತ
ಇಂದೆಮಗೆ ಹಸಿವೆನಲು ನೊಂದು ಶ್ರೀಹರಿಯೆ
ತಂದೆ ನೀ ಸಲಹೆನಲು ಬಂದೆ ಬಹಳ್ಹಸಿವೆಯಲಿ
ಒಂದು ಪತ್ರದ ಶಾಖ ಉಂಡು ಸಲಹಿದೆಯೊ ೪
ಹಿಂದಜಾಮಿಳ ತನ್ನ ಬಂಧುಬಳಗವ ತ್ಯಜಿಸಿ
ಅಂದು ಇಹಸುಖದಿ ಆನಂದ ಪಡುತಿರಲು
ಬಂದರಾಗ ಯಮಭಟರು ನಿಂದು ಬಾಧಿಸುತಿರಲು
ಕಂದನಾರಗನೆನಲು ಅಂದು ಸಲಹಿದೆಯೊ ೫
ಚಿಕ್ಕವನು ಪ್ರಹ್ಲಾದ ಮಕ್ಕಳಾಟದ ಧ್ರುವನು
ರಕ್ಕಸಾಂತಕನ ಮೊರೆ ಇಕ್ಕಿ ಪ್ರಾರ್ಥಿಸಲು
ತಕ್ಕವರಗಳನಿತ್ತು ತಕ್ಕೈಸಿ ಅಣುಗನನು
ಮಿಕ್ಕಭಕುತರ ಪೊರೆದೆ ಲಕ್ಕುಮಿಯ ರಮಣ ೬
ಈ ಪರಿಯಲಿ ಬಹುಭಕುತರಾಪತ್ತುಗಳ ಹರಿಸಿ
ಶ್ರೀಪತಿಯ ರಕ್ಷಿಸಿದಿ ಆಪನ್ನಜನರ
ಗೋಪತಿ ಕೃಷ್ಣ ಜಗದ್ವ್ಯಾಪಕನೆ ನೀ ಸಲಹಿ
ತಾಪಸರ ಒಡೆಯ ಹೃದ್ವ್ಯಾಕುಲವ ಕಳೆವೆ ೭
ಕಾಳಿ ಮಡುವನೆ ಧುಮುಕಿ ಕಾಳಿಂಗನ್ಹೆಡೆ ತುಳಿದೆ
ಕಾಳದೇವಿಯರಮಣ ಕಾಲಿಗೆರುಗುವೆನು
ಕಾಳಯುಕ್ತಿನಾಮ ಸಂವತ್ಸರದಿ ಸುಜನರಿಗೆ
ಭಾಳ ಸುಖಹರುಷಗಳ ಲೀಲೆ ತೋರಿಸುವ ೮
ಭ್ರಮಿಸಿ ಇಹ ಸುಖದಿ ಮನ ಶ್ರಮ ಪಡುತಲಿರೆ ದೇವ
ರಮೆಯ ರಮಣನೆ ಪೊರೆಯೊ ಮಮತೆಯನು ಬಿಡದೆ
ಕಮಲಸಂಭವಜನಕ ಕಮಲನಾಭ ವಿಠ್ಠಲ
ಸುಮನಸರ ಒಡೆಯ ಹೃತ್ಕಮಲದಲಿ ಪೊಳೆವ ೯

ಶ್ರೀಗೋಪೀ ಗೀತೆ
೧೬೬
ಒಂದು ದಿನದಲಿ ಇಂದಿರೇಶನು
ಚಂದದಿಂದಲಿ ವನಕೆ ಬಂದನು
ಸುಂದರಾಂಗನು ಗೋಪ ವೃಂದದಿ
ನಿಂದು ಕೊಳಲನು ಸ್ವರವಗೈದನು ೧
ಕೊಳಲ ಧ್ವನಿಯನು ಕೇಳುತಾಕ್ಷಣ
ಖಗಮೃಗಂಗಳು ಮಯ್ಯ ಮರತವು
ತರುಣಿ ಮಣಿಯರು ಮನೆಯ ಕೆಲಸಕೆ
ಮರತು ಮಯ್ಯನು ತೆರಳಿ ಬಂದರು ೨
ಕೊಳಲ ಧ್ವನಿಯನು ಕೇಳಿ ಗೋಪೇರು
ನಳಿನನಾಭನ ಬಳಿಗೆ ಬಂದರು
ನಳಿನಮುಖಿಯರ ನೋಡಿ ಕೃಷ್ಣನು
ಮುಗುಳುನಗೆಯಲಿ ಮಾತನಾಡಿದನು ೩
ನಾರಿಮಣಿಯರೆ ರಾತ್ರಿ ವೇಳೆಯು
ಈಗ ಇಲ್ಲಿಗೆ ಬಂದಿರೇತಕೆ
ಮಾರನಯ್ಯನ ಮಾತುಕೇಳುತ
ಮಡದಿ ಮಣಿಯರು ನುಡಿದರಾಗಲೆ೪
ಬಾಲಕೃಷ್ಣನೆ ನಿನ್ನ ಕೊಳಲಿನ
ನಾದ ಕೇಳುತ ಓಡಿ ಬಂದೆವೊ
ಈಗಲೆಮ್ಮಯ ಮನವು ಹರುಷಿಸೆ
ಬೇಗ ನಿನ್ನನು ಬೇಡಿಕೊಂಬೆವೊ ೫
ಇಂತು ಕೃಷ್ಣನು ಸರಸವಾಡುತ
ನಿಂತನವರಿಗೆ ಹರುಷ ತೋರುತ
ಚಿಂತೆಯೆಲ್ಲವ ಬಿಟ್ಟು ಗೋಪೇರು
ಅಂತರಾತ್ಮನ ಭಜಿಸುತಿದ್ದರು ೬
ಏನು ಪುಣ್ಯವೊ ನಮ್ಮದೆನುತಲಿ
ದಾನವಾರಿಯ ಸ್ಮರಿಸುತಿದ್ದರು
ನಾರೇರೆಲ್ಲರ ನೋಡಿ ಕೃಷ್ಣನು
ಬೇಗದಿಂದಲಿ ಅಂತರ್ಧಾನನಾದನು ೭
ಸ್ಮರನ ಪಿತನನು ಸ್ಮರಿಸಿಪಾಡುವ
ತರುಣಿಯರಿಗೆ ಮೈ ಸ್ಮರಣೆ ಮರೆತಿರೆ
ಭರದಿ ಕಂಗಳ ತೆರೆದು ನೋಡಲು
ಮುರಳೀಧರನ ಕಾಣದಲೆ ಚಿಂತಿಸಿ ೮
ಜಾಜಿ ಸಂಪಿಗೆ ಸೂಜಿ ಮಲ್ಲಿಗೆ
ರಾಜೀವಾಕ್ಷನ ಕಾಣಲಿಲ್ಲವೆ
ಬಿಳಿಯ ಮಲ್ಲಿಗೆ ಎಳೆಯ ತುಳಸಿಯೆ
ನಳಿನನಾಭನ ಸುಳಿವು ಕಾಣಿರಾ ೯
ಸರಸದಿಂದಲಿ ಹರಿವ ಯಮುನೆಯೆ
ಸರಸಿಜಾಕ್ಷನ ಪಾದ ಕಾಣೆಯಾ
ಚಿಗರಿ ಮರಿಗಳೆ ನಿಮ್ಮ ಕಂಗಳು
ನಳಿನನಾಭನ ಸುಳವು ಕಾಣವೆ ೧೦
ಯಾರ ಕೇಳಲು ಹರಿಯ ಕಾಣರು
ನಾರಿಮಣಿಯರೆ ನಾವೆ ಕರೆಯುವ
ಮುದ್ದು ಕೃಷ್ಣನೆ ಪದ್ಮನಾಭನೆ
ಶ್ರದ್ಧೆಯಿಂದಲಿ ನಿಮ್ಮ ಭಜಿಪೆವೊ ೧೧
ಜಯತು ಜಯತು ಶ್ರೀ ಲಕ್ಷ್ಮೀ ರಮಣನೆ
ಜಯತು ಜಯತು ಶ್ರೀ ಗರುಡಗಮನನೆ
ಜಯತು ಜಯತು ಶ್ರೀ ಉರಗಶಯನನೆ
ಜಯತು ಜಯತು ಶ್ರೀ ಪರಮ ಪುರುಷನೆ ೧೨
ಜಯತು ಜಾಹ್ನವಿಜನಕ ಶ್ರೀಶನೆ
ಜಯತು ಭಕ್ತರ ಭಯವಿನಾಶನೆ
ಜಯತು ಪಾವನ ಪುಣ್ಯ ಚರಿತನೆ
ಜಯತು ಜಯತು ಲಾವಣ್ಯರೂಪನೆ ೧೩
ಎಳೆಯ ಚಿಗುರಿನಂತಿರುವ ಪಾದವು
ರುಳಿಯ ಗೆಜ್ಜೆಯು ಕಾಲಪೆಂಡೆಯು
ಎಳೆಯ ಪಾದದಿ ಹೊಳೆವ ಪೈಜನಿ
ಘಲಿರು ಘಲಿರು ಎಂದೆನುತ ಮೆರೆವುದು ೧೪
ಪುಟ್ಟ ನಡುವಿಗೆ ಪಟ್ಟೆ ಮಡಿಗಳು
ಇಟ್ಟ ಚಲ್ಲಣ ಪುಟ್ಟ ಕೃಷ್ಣಗೆ
ಉಡುಗೆಜ್ಜೆಯು ಗಂಟೆ ಸರಪಳಿ
ಒಪ್ಪಿ ಮೆರೆಯುವ ಕಾಂಚಿಧಾಮವು ೧೫
ಚತುರ ಹಸ್ತದಿ ಶಂಖುಚಕ್ರವು
ಗದೆಯು ಪದುಮವು ಹೊಳೆಯುತಿರುವುದು
ಕಡಗ ಕಂಕಣ ತೋಳ ಬಾಪುರಿ
ವಜ್ರದೊಂಕಿಯು ಮೆರೆಯುತಿರುವುದು ೧೬
ಕೊರಳ ಕೌಸ್ತುಭ ವೈಜಯಂತಿಯು
ಸುರಗಿ ಸಂಪಿಗೆ ಸರಗಳೊಲಿಯುತ
ಎಳೆಯ ತುಳಸಿಯ ಸರಗಳೊಪ್ಪುತ
ಜರದವಲ್ಲಿಯು ಜಾರಿ ಬೀಳಲು ೧೭
ವÀಕ್ಷ ಸ್ಥಳದಿ ಶ್ರೀಲಕ್ಷ್ಮಿ ಒಪ್ಪಿರೆ
ರತ್ನ ಪದಕಗಳೆಲ್ಲ ಶೋಭಿಸೆ
ಮುತ್ತಿನರಳೆಲೆÉ ಮಕರ ಕುಂಡಲ
ರತ್ನದ್ಹಾರಗಳಿಂದ ಒಪ್ಪಿರೆ ೧೮
ಗುರುಳು ಕೂದಲು ಹೊಳೆವೊ ಫಣೆಯಲಿ
ತಿಲುಕ ಕಸ್ತೂರಿ ಶೋಭಿಸುತ್ತಿರೆ
ಎಳೆಯ ಚಂದ್ರನ ಪೋಲ್ವ ಮುಖದಲಿ
ಮುಗುಳು ನಗೆಯು ಬಾಯ್ದಂತ ಪಂಕ್ತಿಯು ೧೯
ಪದ್ಮನೇತ್ರಗಳಿಂದ ಒಪ್ಪುತ
ಪದ್ಮ ಕರದಲಿ ಪಿಡಿದು ತಿರುವುತ
ಪದ್ಮಲೋಚನೆಯನ್ನು ನೋಡುತ
ಪದ್ಮನಾಭನು ಕೊಳಲನೂದುತ ೨೦
ರತ್ನ ಮುತ್ತಿನ ಕಿರೀಟ ಶಿರದಲಿ
ಮತ್ತೆ ನವಿಲಿನ ಗರಿಗಳೊಪ್ಪಿರೆ
ಹಸ್ತಿ ವರದನು ಎತ್ತಿ ಸ್ವರವನು
ಮತ್ತೆ ಕೊಳಲನು ಊದೊ ದೇವನೆ ೨೧
ಸುಂದರಾಂಗನೆ ಮಂದಹಾಸನೆ
ಮಂದರೋದ್ಧರ ಬಾರೋ ಬೇಗನೆ
ಇಂದಿರೇಶನೆ ಇಭರಾಜವರದನೆ
ರಂಗನಾಥನೆ ಬಾರೊ ಬೇಗನೆ೨೨
ಮಾರನಯ್ಯನೆ ಮದನ ಮೋಹನ
ಪಾರಮಹಿಮನೆ ಬಾರೊ ಬೇಗನೆ
ಶ್ರೀರಮಾಪತೆ ಶ್ರೀ ನಿಕೇತನ
ವಾರಿಜಾಕ್ಷನೆ ಬಾರೊ ಬೇಗನೆ ೨೩
ಹೀಗೆ ಗೋಪೇರು ಮೊರೆಯನಿಡುತಿರೆ
ಮಂಗಳಾಂಗನು ಬಂದನೆದುರಿಗೆ
ಧ್ವಜ ವಜ್ರಾಂಕುಶ ಪದ್ಮ ಪಾದವು
ಅಡಿಯನಿಡುತಿರೆ ಧರಣಿ ನಲಿವಳು ೨೪
ಹರಿಯ ನೋಡುತ ಪರಮ ಹರುಷದಿ
ತರುಣಿಮಣಿಯರು ಹರುಷ ಪಡುತಲಿ
ಪರಮ ಮಂಗಳ ಚರಿತ ದೇವಗೆ
ಸ್ವರವನೆತ್ತಿ ಮಂಗಳವ ನುಡಿದರು ೨೫
ಮಂಗಳಂ ಶುಭ ಕಂಬು ಕಂಠಗೆ
ಮಂಗಳಂ ಮಹಾ ಮಾರನಯ್ಯಗೆ
ಮಂಗಳಂ ಮಹಾ ಮುದ್ದುಕೃಷ್ಣಗೆ
ಮಂಗಳಂ ಜಯ ಮಂಗಳಾಂಗಗೆ ೨೬
ಕಮಲ ಮುಖಿಯರು ನಮಿಸಿ ಕೃಷ್ಣಗೆ
ಸರಸವಾಡುತ ಹರುಷ ಪಡುತಲಿ
ಕಮಲನಾಭ ವಿಠ್ಠಲನ ಕೂಡುತ
ಮನದಿ ಸುಖವನು ಪಡುತಲಿದ್ದರು ೨೭

ದಶಾವತಾರಗಳು ವೇದತಂದು
೧೦
ಔತುಕೊಂಡಿ ಯಾಕೊ ನರಹರಿ
ಪ್ರಾರ್ಥನೆಯನ್ನು ಕೇಳೊ ಸ್ವಾಮಿ ಪ
ವೇದ ತಂದು ಭಾರ ಪೊತ್ತು
ಕೋರೆ ತೋರಿ ಕರುಳ ಬಗೆದು
ಬೇಡಿ ಭೂಮಿ ದೂಡಿನೃಪರ
ಸಾಗರವ ಬಂಧಿಸಿದ ಭಯವೋ ೧
ಕದ್ದು ಬೆಣ್ಣೆ ಕಳ್ಳನೆನಿಸಿ
ವದ್ದು ತ್ರಿಪುರಾಸುರರ ಸದೆದು
ಹದ್ದನೇರುವುದನೆ ಬಿಟ್ಟು
ಹಯವನೇರಿದ ಭಯವೋ ಸ್ವಾಮಿ2
ತರಳಗೊಲಿದು ಬರಲು ನಿನ್ನ
ಇರಿಸಿ ಸ್ನಾನಕೆನುತ ಪೋಗಿ
ತ್ವರದಿ ಬಂದು ನೋಡಲು ಅ
ದ್ಭುತದಿ ಬೆಳೆದ ಭಯವೋ ದೇವ3
ನಿಲುಕದಿರಲು ನಿನ್ನ ವದನ
ಯುವಕ ನೋಡಿ ಮೊರೆಯನಿಡಲು
ತವಕಿಸುವಿ ಬಾಲಕನೆ ನಿನ್ನ
ಸಮಕೆ ಎನ್ನ ಮಾಡಿಕೊ ಎಂದು ೪
ಸಿರದಿ ಕರವನಿಡುತ ತನ್ನ
ಸಮಕೆ ಬರುವ ತೆರದಿ ನಿನ್ನ
ಸಿರವ ಪಿಡಿದು ಬಿತ್ತಿ ಸ್ತುತಿಸೆ
ಕುಳಿತೆ ಕೂಡಲಿಯ ತೀರದಲಿ ೫
ಭಕ್ತರೆಲ್ಲ ನೆರೆದು ನಿನ್ನ
ಭಕ್ತಿಪಾಶದಿಂದ ಬಿಗಿದು
ಇಚ್ಛೆ ಬಂದ ತೆರದಿ ಕುಣಿಸೆ
ಮೆಚ್ಚಿ ಅವರ ಪೊರೆವೆ ದೇವ ೬
ಬಂದ ಜನರು ಛಂದದಿಂದ
ತುಂಗಭದ್ರೆ ಸಂಗಮದಲಿ
ಮಿಂದು ನಿನ್ನ ವಂದಿಸುವರೊತಂದೆ ಕಮಲನಾಭವಿಠ್ಠಲ7

೧೧೬
ಕದವ ತೆಗೆಯೆ ಸುಂದರಿವಯ್ಯಾರಿ ಮುತ್ತಿನ ಪ
ಕಡಲ ಶಯನನೆ ಮಡದಿ ಹರುಷದಿ
ಸಡಗರದಿ ಮುಂದಡಿ ಇಡುತ ನಿನ್ನ
ಒಡೆಯ ಬಂದಿಹನೆಂದು ಹರುಷದಿ
ಬೆಡಗು ಮಾಡದೆ ಬಿಡಿಯ ಮುತ್ತಿನ ೧
ಯಾರು ನಿನ್ನಯ ಪೆಸರ ಏನೆಂದು ತಿಳಿಯದೆ
ಹೇಗೆ ತೆಗೆಯಲಿ ಕದವಾ
ಘೋರ ರಾತ್ರಿಯ ವೇಳೆಯಲಿ ಬಂ-
ದೀಗ ಬಾಗಿಲ ಬಡಿಯ ನಿಂದಿರೆ
ನಾರಿಯರು ಏನೆಂದು ಕೇಳ್ಪರು
ದ್ವಾರ ಬಿಡುಬಿಡುತಲಿ ಸಾಗು ಮುಂದಕೆ೨
ತೆಗೆಯಲೊಲ್ಲೆನು ಕದವ ಸಮರಾತ್ರಿ ವೇಳದಿ
ರುಕ್ಮನ ಅನುಜೆ ಕೇಳೆ ಪೃಥ್ವಿಯೊಳು ಎನ್ನನು
ಚಕ್ರಿ ಎನ್ನುತ ಪೇಳ್ವರೆ
ಅರ್ಥಿವಚನಗಳನ್ನು ಕೇಳುತ
ಸತ್ವರದಿ ನೀ ಬಂದು ಮುಂದಕೆ
ಮುತ್ತಿನ ಕದತೆಗೆದು ಬೇಗನೆ
ರತ್ನ ಪೀಠದಿ ಕುಳ್ಳಿರಿಸೆ ಹೊಸ
ಮುತ್ತಿನರಗಿಣಿ ಸತ್ಯವಾಣಿಯೆ೩
ಕೇಳಿ ಹರ್ಷಿತನಾದೆನು ನಿನ್ನಯ ಮಾತ
ಕೇಳಿ ನಗುವರು ಜನರು
ಹೇಳಿ ಕೇಳುವರಿಲ್ಲ ನಿನ್ನ ಮನಸಾರ
ಮಾತುಗಳಾಡಲೇತಕೆ ಕು-
ಲಾಲ ಭವನವಿದಲ್ಲ ಸುಮ್ಮನೆ
ಹೇಳ ಕೇಳದೆ ಹೊರಡು ಮುಂದಕೆ ೪
ಹೀಗೆ ನುಡಿಯುವದೇತಕೆ ಈಗೆನ್ನ ಮಾತಿಗೆ
ಬೇಗದಿ ತೆಗೆ ಕದವ
ನಾಗವೇಣಿಯೆ ನಗುತ ಪೇಳುವೆ
ಬೇಗದಲಿ ಇನ್ನೊಂದು ನಾಮವ
ಈಗ ಧರಣಿಧರನು ಬಂದಿಹೆ
ಸಾಗರನ ಸುತೆ ಸರ್ಪವೇಣಿಯೆ ೫
ಧರಣೀಧರ ನೀನಾದರೆ ಈ ಧರೆಯನೆಲ್ಲವ
ಸಿರದ ಮೇಲಿರಿಸುವೆಯ
ಸರ್ವ ಜನರಿಗೆ ಭಯವ ಪಡಿಸುವ
ಉರಗರಾಜ ನೀನೆಂದು ತಿಳಿದೆನು
ಇರುತ ಸರ್ಪಗಳೊಳಗೆ ನೀ ಬಲು
ಹರುಷದಿಂದಲಿ ಸಾಗುಮುಂದಕೆ೬
ಹರಿಣಾಕ್ಷಿ ಕೇಳೆ ನೀನು ಎನ್ನನು ಜನರು
ಹರಿಯೆಂದು ಕರಿಯುವರು
ಕರೆ ಕರೆಯ ಮಾಡದಲೆ ಬೇಗನೆ
ವರ ಕನಕ ಕದ ತೆಗೆದು ಸುಮ್ಮನೆ
ಇರಿಸು ಸುಖ ಸಾಮ್ರಾಜ್ಯ ಪೀಠವ
ಹರುಷದಿಂ ಕುಳಿತೆಲ್ಲ ಪೇಳುವೆ ೭
ಕೋತಿ ನೀನಹುದಾದರೆ ಮಾತುಗಳ್ಯಾಕೆ
ಜಾತಿ ಕಪಿಗಳ ಕೂಡುತ
ಪ್ರೀತಿಯಿಂದಲಿ ಮನಕೆ ಬಂದೆಡೆ
ನೀತೆರಳುತಲಿ ಪೋಗು ಮುಂದಕೆ
ಕೋತಿಗಳ ಗುಂಪಿದಲ್ಲ ತಿಳಿಮಹ-
ರೂಪವತಿಯರಿರುವ ಸ್ಥಳವಿದು ೮
ಪ್ರೀತಿಸತಿಯೆ ನೀ ಕೇಳೆ ನಿನ್ನೊಳು ಬಹು
ಪ್ರೀತಿಯಿಂದಲಿ ಬಂದೆನು
ಶ್ರೀಶನ ನುಡಿಕೇಳಿ ರುಕ್ಮಿಣಿ
ಆತುರದಿ ಬಾಗಿಲನೆ ತೆಗೆಯುತ
ನಾಥ ಕಮಲನಾಭ ವಿಠ್ಠಲನಿಗೆ
ತಾನಮಿಸಿ ವಂದಿಸುತ ಭಕುತಿಯಲಿ
ಬಾಗಿಲು ತೆಗೆದಳಾಗ ಭಕುತಿಯಲಿ ಶ್ರೀಶಗೆ
ಬಾಗಿಲು ತೆಗೆದಳಾಗ೯

ಜಗನ್ನಾಥ ದಾಸರು ತಮ್ಮ ಗುರುಗಳಾದ
೭೭
ಕರುಣದಿಂದ ಕಾಯೊ ಎನ್ನನು
ಉರಗಾದ್ರಿವಾಸ ವಿಠ್ಠಲ ದೇವ ಪ
ತಂದೆ ವೆಂಕಟೇಶ ವಿಠ್ಠಲ
ಬಂದು ಎನ್ನ ಹೃದಯದಲ್ಲಿ
ನಿಂದು ನಾಮ ನುಡಿಸಿ ಪೇಳ್ವ
ಚಂದ ಮನಕೆ ತಂದು ಕೊಡುತ ೧
ವಾಸುದೇವ ನಿನ್ನ ಮಹಿಮೆ
ತೋಷದಿಂದ ಭಜಿಸುವುದಕೆ
ದೋಷಗುಣಗಳನ್ನೆ ಕಳೆದು-
ಲ್ಲಾಸ ಮನಕೆ ಒದಗುವಂತೆ ೨
ಮಂದಮತಿಗಳಾದ ಜನಕೆ
ಮುಂದೆ ಗತಿಯ ಪಥವ ತೋರಿ
ಬಂಧನಂಗಳನ್ನೆ ತರಿದು
ತಂದೆ ಕಾಯೊ ಇಂದಿರೇಶ ೩
ಬೊಕ್ಕಸದ ದ್ರವ್ಯ ಜನರು
ವೆಚ್ಚಮಾಡುತಿರುಹ ತೆರದಿ
ಮೆಚ್ಚಿ ಬಂದ ಜನರ ಮನದ
ಇಚ್ಛೆ ಪೂರ್ತಿಗೊಳಿಸಿ ಪೊರೆದೆ ೪
ಅಂತರಂಗದೊಳಗೆ ನಿನ್ನ
ಚಿಂತೆ ಮರೆಯದಂತೆ ಕೊಟ್ಟು
ಅಂತರಾತ್ಮ ಕಮಲನಾಭ
ವಿಠ್ಠಲ ಸಂತೈಸಿ ಕಾಯೊ೫

ಟ ಅಸ್ವತಂತ್ರ ಜೀವಾಂತರ್ಗತ ಶ್ರಿ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ಉರಗಾದ್ರಿವಾಸ ವಿಠ್ಠಲಾಭಿನ್ನ ಶ್ರಿ ಗುರುವಾಸುದೇವ ವಿಠ್ಠಲಾ ಭಿನ್ನ ಶ್ರೀ ತಂದೆ ವೆಂಕಟೇಶ ವಿಠ್ಠಲಾತ್ಮಕ ಶ್ರೀ ಕಮಲನಾಭ ವಿಠ್ಠಲಾಯ:ನಮ:
ಟ ಶ್ರೀ ಕಮಲನಾಭ ವಿಠ್ಠಲ ದಾಸರಾದ ಜೀವೂಬಾಯಿ ಅವರು ರಚಿಸಿದ ಮೊತ್ತ ಮೊದಲ ಹಾಡು.

ಜಗನ್ನಾಥದಾಸರು ಶ್ರೀ ರಾಘವೇಂದ್ರ
ಹನುಮ-ಭೀಮ-ಮಧ್ವ
೬೦
ಕರುಣಿಸೈ ಹರಿ ಚರಣಸೇವೆ ನಿರುತ ಪ
ಪರಿಪರಿಯ ಕ್ಲೇಶಗಳ ಪರಿಹರಿಸುತ ಪೊರೆವ
ದುರಿತದೂರ ಹರಿಯ ಚರಣ ಸೇವಕನೆ ಅ.ಪ
ಕಂಜಾಕ್ಷನ ದಯದಿ ಅಂಜದೆ ನೀರಧಿಯ
ಹಿಂಜರಿಯದೆ ದಾಂಟಿ ಸಂಜೆ ಕಳೆಯೆ ಲಂಕೆ
ರಂಜಿಸುವದು ಕಂಡು ಕಂಜಾಕ್ಷಿಗುಂಗುರ ಪ್ರ-
ಭಂಜನ ನೀಡಿದೆಯೊ ಅಂಜನೆಯತನಯ ೧
ದುರಳ ದೈತ್ಯನಾದ ಜರೆಯ ಸುತನ ಸೀಳಿ
ಹರಿಗರ್ಪಿಸಿ ಸರ್ವವನು ಧರಣಿ ಭಾರನಿಳುಹಿ
ಹರಿಯ ಮನವನರಿತು ಪರಿಪರಿಲಿ ಸೇವಿಸುತ
ಪರಮ ಭಕ್ತನಾದೆ ಪರಿಸರನೆ ಸಲಹೊ2
ಮುದ್ದು ಕೃಷ್ಣನ ಸೇವೆ ಶುದ್ಧಮನದಿ ಮಾಡಿ
ಸದ್ವೈಷ್ಣವರ ಕುಲದ ಪದ್ಧತಿಯನರುಹಿ
ಪದ್ಮನಾಭ ಕಮಲನಾಭ ವಿಠ್ಠಲನೊಲಿಸಿ
ಸದ್ಗ್ರಂಥಗಳ ರಚಿಸಿ ಉದ್ಧರಿಸಿದೆ ಜಗವ ೩

೮೭
ಕರೆ ಕರೆ ಭವದೊಳು ಮುಳುಗಿರುವೆ
ದುರಿತದೂರನೆ ದು:ಖ ತರ ತರ ವ್ಯಥೆಯಲಿ ಪ
ಅಗಣಿತ ಮಹಿಮನೆ ಸುಗುಣಗಳನುದಿನ
ಬಗೆ ಬಗೆ ಸ್ಮರಿಸುವ ಬಗೆ ಮರೆದು
ಹಗಲಿರುಳೆನ್ನದೆ ನಿಗಮವೇದ್ಯನ ನಾಮ
ಬಗೆ ಬಗೆ ಪೊಗಳಿ ಕೊಂಡಾಡಿ ಸ್ತುತಿಸದಲೆ ೧
ಜನುಮ ಜನುಮದಲಿ ಜನಿಸಿ ಬರುವ ದು:ಖ
ಕೊನೆಗಾಣದಾಗಿದೆ ಕರುಣಾನಿಧೆ
ಅನಿಮಿಷರೊಡೆಯ ಶ್ರೀ ಘನ ಮಹಿಮನ ನಾಮ
ಮನದಣಿ ಪೊಗಳಿ ಕೊಂಡಾಡಿ ಸ್ತುತಿಸದಲೆ೨
ನಾನು ನನ್ನದು ಎಂಬ ಹೀನವೃತ್ತಿಗಳಿಂದ
ಹಾನಿಯಾಯಿತು ಆಯು ಶ್ರೀನಿಧಿಯೆ
ಜ್ಞಾನಿಗಳೊಡನಾಡಿ ಮೌನದಿಂದಿರದಲೆ
ಶ್ವಾನಸೂಕರನಂತೆ ತಿರುಗಿ ಬಾಯ್ಬಿಡುತಲಿ ೩
ರಂಗನ ಮೂರ್ತಿಯ ಕಂಗಳಿಂದಲಿ ನೋಡಿ
ಭಂಗಗಳಳಿಯುವ ಹರಿದಾಸರ
ಸಂಗದೊಳಿರಿಸು ಉತ್ತುಂಗ ಮಹಿಮಪಾಂಡು-
ರಂಗನೆ ಈ ಭವ ಭಂಗ ಬಿಡಿಸೆನ್ನದೆ೪
ಇಂದಿರೇಶನ ಪಾದ ಪೊಂದಿ ಭವದಘ
ವೃಂದವ ಕಳೆಯುವನೆಂದೆನ್ನುತ
ಬಂಧಕ ಮೋಚಕನೆಂದರಿಯದೆ ಭವ
ಬಂಧನದೊಳು ಸಿಕ್ಕಿ ಬಳಲಿ ಬಾಯ್ಬಿಡುತಲಿ೫
ಯಾತಕೀ ಪರಿ ಮೋಹ ಮಾತುಳಾಂತಕ ಕೃಷ್ಣ
ಮಾತು ಮಾತಿಗೆ ಹರಿ ಹರಿ ಎನ್ನದೆ
ಸೋತು ಬಂದೆನೊ ದೇವ ಮಾತರಿಶ್ವನಪ್ರಿಯ
ಕೋತಿ ಬುದ್ಧಿಯ ಬಿಡಿಸೆಂದು ತುತಿಸದಲೆ ೬
ಕಮಲ ಪತ್ರಾಕ್ಷ ಶ್ರೀ ಕಮಲಜಾತೆಯ ಪ್ರಿಯ
ಕಮಲನಾಭ ವಿಠ್ಠಲ ವಿಠ್ಠಲ ಹರೇ
ಸುಮನಸರೊಡೆಯ ಶ್ರೀ ಭ್ರಮರಕುಂತಳೆ ಪ್ರಿಯಶ್ರಮ ಪರಿಹರಿಸೆಂದು ನಮಿಸಿ ಸ್ತುತಿಸುವೆನು ೭

ನದೀಸ್ತೋತ್ರವು
೭೨
ಕೃಷ್ಣ ಗೋದಾವರೀ ನಂದಿನೀ ನಳಿನೀ ಹೇಮಾವತಿ
ಹರಿದ್ವತೀ ಕಾವೇರೀ ಕಪಿಲಾ ಸಿಂಧು ಸರಯು
ನೇತ್ರಾವತಿ ಕುಮದ್ವತೀ ಭಾಗೀರಥೀ ಭೋಗವತಿ
ಜಾಹ್ನವೀ ಜಯಮಂಗಲಿ ತ್ರಿಜಗತ್ವಾವನೀ ವಿಷ್ಣು
ಪಾದೋದ್ಭವೆ ದೇವಿ ಕೃಷ್ಣವೇಣಿ ಅಘನಾಶಿನೀ
ಗಂಗಾ ಯಮುನಾ ತ್ರಿವೇಣೀ ದಕ್ಷಿಣ ಪಿನಾಕಿನೀ
ನರ್ಮದಾ ಸಾವಿತ್ರೀ ಗಾಯತ್ರೀ ಸರಸ್ವತೀ ಸೀತಾ
ಮಾಲತೀ ಚಮಲಾಪಹ ವಾರಾಹೀ ವೈಷ್ಣವೀ ಸುಜ್ಯೋತಿ
ಶಿವಗಂಗಾ ಪಂಚಗಂಗೀ ತ್ರಿಪದಗಾಮಿನೀ ಬ್ರಹ್ಮಪುತ್ರಾ
ತುಂಗಭದ್ರಾ ಭೀಮರಥೀ ಗೋಮತೀ ಶರಾವತೀ
ಸ್ವಾಮಿ ಪುಷ್ಕರಿಣೀ ವರಹ ಪುಷ್ಕರಿಣಿ ಪಾಂಡುತೀರ್ಥ
ಪಾಪನಾಶಿನೀ ಆಕಾಶಗಂಗಾಧವಳ ಗಂಗಾ ಶಾಲ್ಮಲೀ
ಲೋಕಪಾವನೀ ಕುಮಾರ ತೀರ್ಥ ವಿಷ್ಣುತೀರ್ಥ
ನಾರಾಯಣತೀರ್ಥ ಕೌಮೋದಕೀ ಕಪಿಲತೀರ್ಥ
ಅಲಕನಂದ ವರದಾ ಪಶ್ಚಿಮವಾಹಿನೀ ಸಿಂಧು
ನದಿ ಶೋಣನದಿ ಚಂದ್ರಭಾಗ ಅರ್ಕಾವತೀ ಸುವರ್ಣ-
ಮುಖರೀ ಗೋಗರ್ಭ ಶಿಂಶಾಕಾಗಿನೀ ಮಂದಾಕಿನೀ
ಪ್ರಾತ:ಕಾಲೇ ಪಠೀನ್ನಿತ್ಯಂ ದು:ಖದಾರಿದ್ರನಾಶನಂ
ಸ್ಮರಾಮಿ ನಿತ್ಯಂ ಭವದುಃಖ ದೂರಾ
ಶ್ರಿ ಕಮಲನಾಭ ವಿಠ್ಠಲೋ ವಿಜಯತೇ ಶುಭಂ

ಕಂಚಿ ವರದರಾಜ
೧೬೨
ಕೃಷ್ಣಾ ಎನ್ನ ಕಷ್ಟ ಹರಿಸೊ ಜಿಷ್ಣು ಸಾರಥಿಯೆ ಪ
ವಿಠ್ಠಲ ನಿನ್ನ ಪಾದ ಮುಟ್ಟಿ ಭಜಿಸುವರ
ಇಷ್ಟಾರ್ಥಗಳನೀವೆ ಸೃಷ್ಟಿಗೊಡೆಯ ದೇವ ಅ.ಪ
ಶಿಲೆಯಾದಹಲ್ಯೆಯ ದುರಿತವ ತರಿದೆ
ಸಲಿಲ ಮಡುವಿಲಿ ಮಕರದಿ ಕರಿಯ ರಕ್ಷಿಸಿದೆ
ಸುಲಭದಿಂದಜಮಿಳನ ದುರಿತವ ತರಿದೆ
ಕಲಿ ಸುಯೋಧನನ ಓಲಗದಿ ಗರ್ವ ಮುರಿದೆ ೧
ವಿಶ್ವರೂಪನು ನೀನೆ ವಿಶ್ವವ್ಯಾಪಕನೆ
ವಿಶ್ವೋದರನೆ ಕೃಷ್ಣಾ ವಿಶ್ವನಾಟಕನೆ
ವಿಶ್ವಬಾಯೊಳು ತೋರ್ದ ವಿಶ್ವೋದ್ಧಾರಕನೆ
ವಿಶ್ವಮಯನೆ ಸರ್ವ ವಿಶ್ವನು ನೀನೆ೨
ಅಗಣಿತ ಮಹಿಮ ಆಶ್ಚರ್ಯನು ನೀನೆ
ಬಗೆ ಬಗೆ ನಾಮಗಳಿಂದ ಪೂಜಿತನೆ
ಖಗವರವಾಹನ ಕಂಸ ಮರ್ದನನೆ
ನಿಗಮಗೋಚರ ನಿತ್ಯತೃಪ್ತನು ನೀನೆ ೩
ಕನಕಗರ್ಭನ ಪಿತ ಕರುಣದಿ ಸಲಹೊ
ಇನಕುಲ ತಿಲಕ ಸುಂದರ ಮೇಘಶಾಮ
ದಿನಕರ ತೇಜ ಶ್ರೀ ಸನಕಾದಿ ಮುನಿನುತ
ಹನುಮನಂತರ್ಯಾಮಿ ಮಮತೇಲಿ ಸಲಹೊ ೪
ಕಮಲ ಸಂಭವನಯ್ಯ ಕಮಲಜಾತೆಯ ಪ್ರಿಯ
ಕಮಲ ಪುಷ್ಪ ಮಾಲಾಲಂಕೃತ ಹರಿಯೆ
ಕಮಲಭವೇಂದ್ರಾದಿ ಸುಮನಸರೊಡೆಯ ಶ್ರೀ-ಕಮಲನಾಭ ವಿಠ್ಠಲ ಕರುಣದಿ ಸಲಹೊ ೫

೧೧
ಕೇಶವ ಬಾ ನಾರಾಯಣ ಬಾ ಬಾ
ಮಾಧವ ಬಾ ಮಧುಸೂದನ ಬಾ ಪ
ಗೋವಿಂದ ಬಾ ಬಾ ಗೋಪಾಲ ಬಾ ಬಾ
ಗೋವರ್ಧನ ಗಿರಿಧಾರಿಯೆ ಬಾ ಅ.ಪ
ರಂಗನೆ ಅಂದಿಗೆ ಗೆಜ್ಜೆಯ ಕಟ್ಟಿ
ಚುಂಗುಬಿಟ್ಟು ರುಮಾಲನೆ ಸುತ್ತಿ
ಶೃಂಗಾರದ ಹಾರ ಪದಕಗಳ್ಹಾಕಿ
ಅಂಗಳದೊಳಗಾಡಲು ಕಳುಹುವೆನು ೧
ಚಂಡು ಬುಗುರಿ ಗೋಲಿ ಗಜ್ಜುಗ ಹರಿಯೆ
ಗುಂಡು ಬಿಂದಲಿನಿಟ್ಟಿ ಕರದಲಿ ಕೊಡುವೆ
ಹಿಂಡು ಗೋಪಾಲರ ಕೂಡಿಸುವೆ
ಪುಂಡರಿಕಾಕ್ಷನೆ ಪಾಲಿಸು ದೊರೆಯೆ ೨
ಹಸುಳೆ ನಿನಗೆ ಹೊಸ ಬೆಣ್ಣೆಯ ನೀವೆ
ಬಿಸಿ ಬಿಸಿ ಕಡುಬು ಕಜ್ಜಾಯವ ಕೊಡುವೆ
ಶಶಿಮುಖಿಯರ ಕೂಡಾಡದಿರೆನುವೆ
ಮೊಸರು ಬೆಣ್ಣೆ ಪಾಲ್ಸಕ್ಕರೆ ಕೊಡುವೆ ೩
ಜರದವಲ್ಲಿ ಅಲಂಕರಿಸುತ ನಲಿವೆ
ಪರಿಪರಿ ಗೆಳೆಯರ ಕೂಡಿಸಿ ಕೊಡುವೆ
ಮುರಳಿ ನುಡಿಸೆನ್ನುತ ಕರ ಮುಗಿವೆ
ಪರಮಾತ್ಮನೆ ಜಗನ್ಮೋಹನ ಹರಿಯೆ ೪
ಕಮಲ ಭವೇಂದ್ರಾದ್ಯಮರರು ಪೊಗಳೆ
ಕಮಲ ಪುಷ್ಪ ಮಲ್ಲಿಗೆ ಮಳೆ ಕರೆಯೆ
ಕಮಲನಾಭ ವಿಠ್ಠಲ ಶ್ರೀಹರಿಯೆಶ್ರಮ ಪರಿಹರಿಸೆನ್ನುತ ಪ್ರಾರ್ಥಿಸುವೆ ೫

ಭಗವಂತನಲ್ಲಿ ಭಕ್ತಿಯು
೧೨
ಕ್ಷಮಾ ಸಮುದ್ರ ನಿನ್ನ ಸಮಾನರಿಲ್ಲ
ರಮಾ ಬ್ರಹ್ಮಾದಿಗಳು ಪೊಗಳೆ ಪ
ಉಮೆಯರಸ ನಿನ್ನ ಚರಣಮಹಿಮೆ ತನ್ನ
ತರುಣಿಯೊಡನೆ ಹಗಲಿರುಳು ಪೇಳುವ ದಿವ್ಯ ಅ.ಪ
ಅರಿಯದೆ ಅಜಮಿಳ ತರಳ ನಾರಗನೆಂದು
ಮರಣ ಕಾಲದಿ ಒದರೆ
ಸರಸೀಜಾಕ್ಷನು ತನ್ನ ಪರಿವಾರದವರೆಂದು
ಸಿರಿದೇವಿಯೊಳು ಪೇಳಿ ತ್ವರಿತದಿ ರಕ್ಷಿಸಿದ ೧
ನಕ್ರನ ಬಾಧೆಗೆ ಸಿಕ್ಕಿದ ಗಜರಾಜ
ಚಕ್ರಪಾಣಿಯ ಭಜಿಸೆ
ಆ ಕ್ಷಣದಿ ತನ್ನ ಚಕ್ರಕಾಙ್ಞೆಯ ಮಾಡಿ
ಲಕ್ಷ್ಮೀದೇವಿಘೇಳದೆ ಪಕ್ಷಿ ಹೆಗಲೇರಿ ಬಂದ ೨
ಹಿರಣ್ಯಕಶ್ಯಪು ತನ್ನ ತರಳ ಪ್ರಹ್ಲಾದನಿಗೆ
ಪರಿಪರಿ ಬಾಧೆ ಪಡಿಸೆ
ಹರಿಯ ತೋರೆಂದು ಆರ್ಭಟಿಸಿ ನುಡಿಯೆ ದೈತ್ಯ
ನರಮೃಗ ರೂಪನಾಗಿ ಭರದಿ ಕಂಬದಿ ಬಂದ ೩
ಪತಿಗಳೈವರು ಲಕ್ಷ್ಮೀಪತಿಯ ಧ್ಯಾನದೊಳಿರೆ
ಮತಿಹೀನನೆಳೆತರಲು
ಗತಿನೀನಲ್ಲದೆ ಮತ್ತೆ ಹಿತರೊಬ್ಬರಿಲ್ಲವೆನೆ
ಅತಿಬೇಗದಿಂದ ಧರ್ಮಸತಿಗೆ ಅಕ್ಷಯವಿತ್ತ ೪
ಇದರಂತೆ ತರಳಧ್ರವ ಒದಗಿದ ತಾಪದಿಂದ
ಪದುಮನಾಭನ ಭಜಿಸೆ
ಮುದದಿಂದಾತಗೆ ಧ್ರುವಪದವಿಯನಿತ್ತು ಕಾಯ್ದೆ
ಪದುಮನಾಭನೆ ನಿನಗೆದುರುಂಟೆ ತ್ರಿಜಗದಿ ೫
ಘಣಿಶಾಯಿ ನಿನ್ನ ಗುಣ ಮಹಿಮೆಯ ಪೊಗಳಲು
ಅಹಿಭೂಷಣನಿಗಳವೆ
ಕ್ಷಣ ಬಿಡದಲೆ ನಿನ್ನ ಚರಣಸೇವೆಯ ಮಾಳ್ಪ
ಸಿರಿದೇವಿ ಅರಿಯೆನೆಂದೆನಲು ನಿನ್ನಯ ಗುಣ6
ಕರುಣಾಸಾಗರ ದೇವ ವಿಮಲ
ಸ್ವರೂಪನೆ ಕಮಲನಾಭ ವಿಠ್ಠಲ
ಶರಣಜನರ ಬಹುತ್ವರದಿಂದ ಬಂದು ಕಾಯ್ದ
ಪರಮ ದಯಾಳೊ ನಿನ್ನ ಚರಣಕ್ಕೆ ನಮೋ ಎಂಬೆ ೭

ಇದು ಸತ್ಯವರ ತೀರ್ಥರ ಸ್ತೋತ್ರವಾಗಿದೆ.
ಪಾರ್ವತಿದೇವಿ
೭೦
ಗಿರಿಜೆ ನೀ ಒಲಿಯುವರೇ ಪರಶಿವನು ತಕ್ಕ
ವರನೆಂದು ಮೆರೆಯುವರೆ ಪ
ಪರಮ ವೈಷ್ಣವ ಭಕ್ತಾಗ್ರಣಿಯಾದ ಶಿವನಿಗೆ
ಇರುತಿಹ ಕೊರತೆಗಳರಿಯದೆ ಗರುವದಲಿ ಅ.ಪ
ಮನ್ಮಥನ ವೈರಿಗೆ ವಾಸಕೆ ಯೋಗ್ಯ
ಮನೆಯಿಲ್ಲದಿರುವಾತಗೆ
ಮನೆಯು ಮಶಾಣವೆನ್ನುತ ಪೇಳುತಿಹರಿನ್ನು
ಸುಮನಸರೊಡಯನೆ ಸಖನಂತೆ ಇದು ಕೇಳು
ಮನಸಿನ ಅಭಿಮಾನಿ ಶಿವನು
ಘನತರದ ವಿಷಪಾನಗೈದನು
ಮನದಿ ಶ್ರೀ ರಘುವರನ ಸ್ಮರಿಸುತ
ವೃಷಭ ವಾಹನವೇರಿ ಚರಿಪಗೆ ೧
ರುಂಡಮಾಲೆಯ ಧರಿಸಿದ ಕೊರಳೊಳಗೆ ಸರ್ಪ
ದಂಡೆ ಅಲಂಕರಿಸಿರುವ
ಮಂಡೆಯೊಳಗೆ ಚಲುವ ಗಂಗೆಯ ಧರಿಸಿಹ
ಚಂದ್ರಶೇಖರ ಶಿವನೆಂದು ಕರೆಸಿಕೊಂಬ
ಕೆಂಡಗಣ್ಣಿನ ಕ್ರೂರರೂಪನ
ಕಂಡು ಹರುಷದಿ ಹಿಗ್ಗಿ ನಲಿಯುವಿ
ಮಂಡೆಯಲಿ ಕೆಂಜಡೆಯ ಸುತ್ತಿಹ
ಹಿಂಡು ವಿಷ ಸರ್ಪಗಳಲಂಕೃತನಿಗೆ ೨
ಕರಿಚರ್ಮಾಂಬರನುಡುವ ಕೈಯಲ್ಲಿ ಕಪಾಲ
ತಿರಿದುಂಡು ಹರುಷಿಸುವ
ಪರಿ ಪರಿ ದೈತ್ಯ ಪಿಶಾಚಯಕ್ಷರ ಕೂಡಿ
ಚರಿಸುತ್ತ ಕುಣಿಯುತ್ತ ಗೊರವನಂತಿರುತಿಹ
ಪರಮ ವೈರಾಗ್ಯವನು ಧರಿಸಿ
ಫಣೆಯ ಗಣ್ಣನು ಬಳಿದು ಭಸುಮವ
ಚರಿಸುವನು ರುಷಿವರರ ತೆರದಲಿ
ಎಣಿಸಿ ಮಣಿಗಳ ಒಲಿಸಿ ಹರಿಯನು ೩
ರಾಮಮಂತ್ರವ ಜಪಿಸಿ ರಮಣಿಗೆ ದಿವ್ಯ
ರಾಮಚರಿತೆಯ ಬೋಧಿಸಿ
ಕಾಮಹರನು ಕೈಲಾಸಪತಿಯು ಮತ್ತೆ
ಕಾಮದೇವನು ಎಂಬ ನಾಮಸ್ಮರಿಸುವ
ಆ ಮಹಾಗಣಪತಿಯು ಪುತ್ರನು
ವೀರಭಕ್ತನು ಸುತನು ಶಿವನಿಗೆ
ಪ್ರೇಮದಲಿ ಷಣ್ಮುಖನು ಸುತನೆಂ-
ದೀ ಮಹಾಮಹಿಮೆಗಳು ತಿಳಿಯದೆ೪
ಸುಂದರಾಂಗಿ ನಿನ್ನಯ ಚಲುವಿಕೆಗೆ ತಕ್ಕ
ಚಂದದ ವರನೇ ಕೇಳು
ಮಂದರೋದ್ಧರ ಶ್ರೀ ಮುಕುಂದನ ಭಜಿಸಲು
ಚಂದದ ವರಗಳ ಕುಂದದೆ ಕರುಣಿಪ
ಕಂದುಗೊರಳನು ಶಿವನು ಕಮಲ
ನಾಭ ವಿಠ್ಠಲನ ಭಜಿಪ ಸಂತತ
ಮಂದಗಮನೆಯ ಇಂದುಧರನಿಗೆ
ಚಂದದಲಿ ವನಮಾಲೆ ಹಾಕುತ ೫

ಕಾಮ, ಕ್ರೋಧ, ಲೋಭ
೭೮
ಗುರುಗಳ ನೆರೆ ನಂಬಿರೊ ಪರಿಪಾಲಿಪ
ಗುರುಗಳ ನೆರೆ ನಂಬಿರೊ ಪ
ಪರಿ ಪರಿ ಅಘದೊಳು ತೊಳಲುವ ಮನು
ಜರ ಬವಣೆಗಳರಿತು ಸಜ್ಜನರ ಪಾಲಿಸುವಂಥ ಅ.ಪ
ಚಿಂತೆಯೆಲ್ಲವು ನೀಗಿಸಿ ಮನಸಿಗೆ ಬಹು
ಸಂತೋಷವನು ಸೂಚಿಸಿ
ಕಂತುಪಿತನ ಪಾದ ಚಿಂತನೆ ಮಾಡುವ
ಅಂತರಂಗದ ಭಕ್ತರೊಡನೆ ಮೆರೆವ ದಿವ್ಯ೧
ಬೆಟ್ಟದೊಡೆಯನ ಪೂಜಿಸಿ ಭಕುತರ ಮನ
ದಿಷ್ಟಗಳನು ಸಲ್ಲಿಸಿ
ಸೃಷ್ಟಿಕರ್ತನ ಗುಣ ಸ್ವಚ್ಛ ತಿಳಿದು ಸರ್ವ
ಕಷ್ಟಗಳ್ಹರಿಸಿ ಸಂತುಷ್ಟಿಪಡಿಸುವಂಥ ೨
ಸರಿಯುಂಟೆ ಧರೆಯೊಳಗೆ ಗುರುಗಳ ಪೋಲ್ವ
ನರರುಂಟೆ ಭುವಿಯೊಳಗೆ
ಸಿರಿ ಉರಗಾದ್ರಿವಸ ವಿಠ್ಠಲದಾಸರ ಕೂಡಿ
ವರಗಳ ಕೊಡುವಂಥ ಪರಮ ಸಾತ್ವಿಕರಾದ ೩
ಪರಮ ಮಂಗಳ ಮೂರ್ತಿಯ ರೂಪವ ಹಗ
ಲಿರುಳು ಧ್ಯಾನವ ಮಾಳ್ಪರ
ಪರಮ ಗುರುಗಳ ಪರಮ ಪ್ರೀತಿಯ ಪಡೆದಂಥ
ಉರಗಾದ್ರಿವಾಸ ವಿಠ್ಠಲದಾಸರೆಂಬಂಥ೪
ಕರುಣದಿ ಸಲಹುವರು ಭಕ್ತರನೆಲ್ಲ
ಕರೆದು ಬೋಧನೆ ಮಾಳ್ಪರು
ವರ ಕಮಲನಾಭ ವಿಠ್ಠಲನ ಭಜಿಸುತ್ತ
ಸಿರಿ ಶ್ರೀನಿವಾಸನ ನಿರುತ ಪೂಜಿಸುವಂಥ ೫

ಇದು ವ್ಯಾಸತತ್ವಜ್ಞರ ಸ್ತೋತ್ರವಾಗಿದೆ
ರಾಘವೇಂದ್ರಯತಿ
೭೩
ಗುರುರಾಯರ ಮಹಿಮೆ ಕೇಳಿರಿ ನಮ್ಮ
ಗುರುರಾಯರ ಮಹಿಮೆ ಪ
ಪರಮ ಭಕುತಿಯಿಂದ ಸ್ಮರಿಸುವ ಸುಜನರ
ದುರಿತಗಳ್ಹರಿಸಿ ಸದ್ಗತಿ ಪಥವ ತೋರುವ ಅ.ಪ
ಇಂದಿರೇಶನ ಮಹಿಮೆ ಪೊಗಳುವ ಭಕ್ತ
ಸಂದಣಿ ಪೊರೆಯುವರ
ಹಿಂದಿನ ಅಘಗಳನೊಂದೂ ನೋಡದೆ ಶ್ರೀ-
ಮುಕುಂದನ ಭಜಕರ ಸಂಗಡ ನೀಡುವ ದಿವ್ಯ ೧
ದೇಶ ದೇಶದೊಳಿವರ ಮಹಿಮೆಗಳ ಉ-
ಲ್ಲಾಸದಿ ಪೊಗಳುವರ
ದಾಸರೆಂತೆಂದು ಸಂತೋಷದಿ ಸೇವಿಪ
ಮೀಸಲ ಮನದವರ ಪೋಷಿಸುತಿರುವಂಥ ೨
ಹಲವು ಸಾಧನವೇತಕೆ ತನುಮನವ ಶ್ರೀ-
ಹರಿಗೆ ಸಮರ್ಪಿಸಿರಲು
ಕುಲಕೋಟಿ ಪಾವನ ಮಾಳ್ಪ ಶ್ರೀ ಗುರುಗಳ
ಚರಣ ಸೇವಕರೆಂದು ಸಿರಬಾಗಿ ನುತಿಸಿರೊ ೩
ನಿದ್ರೆ ಮಾಡುವ ಬಾಲೆಯ ಕರಗಳಿಗೆ ಶ್ರೀ-
ಮುದ್ರಾಧಾರಣ ಮಾಡಿಹ
ಸಜ್ಜನರಿಗಿವರ ಭಯ ವಜ್ರಕವಚವು ಸತ್ಯ
ಹೃದ್ರ‍ಗಹದಲಿ ರಾಮಭದ್ರ ಮೂರುತಿ ಕಾಂಬ ೪
ಕನಸುಮನಸಿನಲಿವರು ದರ್ಶನವಿತ್ತು
ಸವಿನಯ ತೋರುವರ
ಕನಲಿಕೆ ಕಳೆದು ಶ್ರೀ ಕಮಲನಾಭ ವಿಠ್ಠಲನೊಲುಮೆಯ ಪಡೆದ ಮಂತ್ರಾಲಯ ನಿಲಯ೫

ಜಗನ್ನಾಥದಾಸರು ರಚಿಸಿರುವ
೭೯
ಚಿಂತೆಯಾತಕೆ ಮನವೆ ಗುರುಗಳ ಪಾದ
ಚಿಂತನೆಯನು ಮಾಡದೆ ಪ
ಸಂತತ ಬಿಡದಲೆ ಚಿಂತನೆ ಮಾಳ್ಪರ
ಅಂತರಂಗವ ತಿಳಿವರು ಗುರುವರರು ಅ.ಪ
ಉದಯ ಕಾಲದಲಿವರ ಧ್ಯಾನವ ಮಾಡೆ
ಮದಗರ್ವ ಪರಿಹರವು
ಮುದದಿಂದ ಮೂರು ವೇಳೆಗಳಲ್ಲಿ ಸ್ಮರಿಸಲು
ಹೃದಯ ತಾಪವ ಕಳೆವರು ಗುರುವರರು೧
ದೇಶದೇಶವ ತಿರುಗಿ ತನುಮನಗಳ
ಬೇಸರಗೊಳಿಸಲೇಕೆ
ಪೋಷಿಪ ಗುರುಗಳಪಾದ ನಂಬಿದ ಮೇಲೆ
ವಾಸುದೇವನೆ ನಲಿವ ಮುಂದೊಲಿವ ೨
ವೇದವಾದಿಗಳೆಲ್ಲರೂ ವಾದವ ಮಾಡಿ
ಮಾಧವನನು ಕಾಣಿರೊ
ಮೋದತೀರ್ಥರ ಮತಬೋಧನೆ ಮಾಡುವ
ಸಾಧು ಗುರುಗಳನೆ ಕೂಡು ಸಂಶಯಬಿಡು೩
ಚಿತ್ತದಿ ಸ್ಮರಿಸುವರು ಹರಿ ಮಹಿಮೆಯ
ಭಕ್ತಿಲಿ ನಲಿಯುವರು
ಚಿತ್ರಗಾಯನ ನೃತ್ಯಗಾನಗಳಿಂ ಪುರು-
ಷೋತ್ತಮನನೊಲಿಸುವರು ಹರುಷಿತರು೪
ಕತ್ತಲೆ ಮನೆಗಳಲ್ಲಿ ಅಡಗಿಹ ವಸ್ತು
ಲಕ್ಷಪರಿಮಿತಿ ಇದ್ದರು
ಹಸ್ತದಿ ಜ್ಯೋತಿಯನೆತ್ತಿ ತೋರುವ ಪರಿ
ಭಕ್ತರ ಸಲಹುವರು ಗುರುವರರು ೫
ಸರಸೀಜಾಕ್ಷನ ನಾಮವು ಹಗಲಿರುಳು
ಬಿಡದೆ ಧ್ಯಾನಿಸುತಿರ್ಪರು
ಸಿರಿನಾರಾಯಣನನ್ನು ಸ್ಮರಿಸುತ್ತ ಮನದೊಳು
ಪರಮಸಂಭ್ರಮ ಪಡುವರು ಗುರುವರರು ೬
ಕರುಣದಿ ಸಲಹುವರು ಶಿಷ್ಯರ ಮನ
ವರಿತು ವರಗಳನೀವರು
ವರ ಕಮಲನಾಭವಿಠ್ಠಲನ ಧ್ಯಾನಿಪಉರಗಾದ್ರಿವಾಸ ವಿಠ್ಠಲದಾಸರನೆ ನಂಬು೭

ಹನುಮಂತ ದೇವರನ್ನು ಕುರಿತು
೧೩
ಚಿತ್ರ ವಿಚಿತ್ರವು ಹರಿ ವ್ಯಾಪಾರ
ಚಿತ್ತದಿ ಚಿಂತಿಪರಿಗೆ ಪ
ಸತ್ಯಭಾಮೆಯ ರಮಣನ ಕ್ರಿಯೆಗಳು
ಉತ್ತಮ ಋಷಿವರರರಿಯರೆನಲು ಬಹು ಅ.ಪ
ಮಿತ್ರೆ ರುಕ್ಮಿಣಿ ಕೂಡುತ ಹರಿ ಇರಲು ಪಾರಿಜಾತದ ಹೂ
ಮತ್ತೆ ಮಾಧವಗೀಯಲು ನಾರದರು ಕೌತುಕವನೆ ಕೇಳುತ
ಸತ್ಯಭಾಮೆಯು ಕೋಪವ ತಾಳುತಲಿ ಶಚಿಪತಿಯೊಳು ಕಲಹ
ಉತ್ತಮ ಶ್ರೀಹರಿ ಸಮರದಿ ಸೋಲಲು
ಮತ್ತೆ ಇಂದ್ರ ಜಯಭೇರಿಯ ಹೊಡಿಸಲು
ಸತ್ಯಭಾಮೆ ಸಮರದಿ ಗೆಲ್ಲುತ ಪುಷ್ಪ
ವೃಕ್ಷಸಹಿತ ದ್ವಾರಕಿಗೈತರೆ ಬಹು ೧
ದುರುಳ ದೈತ್ಯರು ಕೂಡುತ ಗುಂಪಾಗಿ ಶ್ರೀಹರಿಯನು ಪಿಡಿಯಲು
ಭರದಿಂದೋಡುತ ಬರುತಿರಲದ ನೋಡಿ ಶ್ರೀಹರಿ ತಾ ತಿಳಿದು
ತ್ವರದಿಂದೋಡುತ ಬರುತಲಿ ಗುಹೆ ಸೇರಿ ಮುಚುಕುಂದರಾಯನಿಗೆ
ಜರದವಲ್ಲಿ ಹೊದಿಸುತ ಮಾಯವಾಗಲು
ಖಳರು ಬಂದೊದ್ದರು ಮಚುಕುಂದಗೆ
ತೆರೆದು ಕಣ್ಣ ನೋಡಲು ಖಳರೆಲ್ಲರು
ಉರಿದು ಭಸ್ಮವಾದರು ಕೇಳಿರಿ ಬಹು ೨
ಮತ್ತೊಮ್ಮೆ ಖಳರೆಲ್ಲರು ಸೇರುತಲಿ ಸತ್ಯೇಶನ ಪಿಡಿಯಲು
ಸುತ್ತಮುತ್ತ ಚೀರುತ ಬರುತಿರಲು ಹರಿಬೆದರಿದ ಪರಿ
ಮತ್ತೋಡೂತ ಹಿಂದಕೆ ನೋಡುತ ಓಡುತಲಿ ಪರ್ವತವನೆ ಏರಲು
ಸುತ್ತಲು ನಿಂತರು ಖಳರೆಲ್ಲರು ಹರಿ
ಒತ್ತಿ ತುಳಿಯೆ ಪರ್ವತ ಕುಸಿಯಲು ಜಲ
ಎತ್ತಿ ಮುಖಕೆರಚಲು ಖಳರೋಡಲು
ಮೆತ್ತನಿಳಿದುದ್ವಾರಕಿ ಸೇರಿದ ಬಹು ೩
ಚಕ್ರವ್ಯೂಹದಿ ಸಿಕ್ಕಿದ ಅಭಿಮನ್ಯು ಷಡುರಥದೊಳು ಕಾದಿ
ದಿಕ್ಕು ದಿಕ್ಕಿಲಿ ಬಾಣದ ಮಳೆಸುರಿಸಿ ರಥಿಕ ಮಹರಥರÉÆಳು
ಉಕ್ಕಿ ಬರುತಿಹ ರೋಷದಿ ಹೊಯ್ದಾಡಿ ದುರುಳರ ವಶವಾಗಲು
ಅಕ್ಕರದಲಿ ದೇವಕಿತನಯ ತನ್ನ
ಮಿತ್ರನ ಸುತನ ವಿಯೋಗ ದು:ಖದ
ತಕ್ಕ ಉಪಾಯದಿ ಪರಿಹರಿಸಲು ಸಾ-
ಮರ್ಥ್ಯನಾಗಿರಲು ನರನಂತೆ ನಟಿಸಿದ ೪
ಹತ್ತು ಹನ್ನೊಂದನೆ ಸಲ ಸಮರದಲಿ ಸರ್ವೇಶನ ಜಯಿಸಲು
ದೈತ್ಯದಾನವ ಜರೆ ಸುತ ಬರುತಿರಲು ಶ್ರೀ ಹರಿ ತಾ ತಿಳಿದು
ಉತ್ತಮ ದ್ವಾರಕಾಪುರ ರಚಿಸುತಲಿ ಜಲಮಧ್ಯದೊಳಿರಲು
ಪಟ್ಟದರಿಸಿ ಅಷ್ಟ ಸತಿಯರು ಸೌಳ
ಸಾಸಿರ ಸತಿಯರ ಕೂಡುವ ಹರುಷದಿ
ಕರ್ತೃಕಮಲನಾಭ ವಿಠ್ಠಲ ಭಕುತರ
ಇಚ್ಛಿಸಲಿಸಲೀಪರಿ ನಟಿಸಿದ ಬಹು5

೧೧೭
ಜನಕರಾಜನ ಸುತೆ ಜಾನಕಿ ಜೋ ಜೋ
ಇನಕುಲತಿಲಕನರ್ಧಾಂಗಿಯೆ ಜೋ ಜೋ ಪ
ಕುಂದಣ ಕೆತ್ತಿದ ಚಂದದ ತೊಟ್ಟಿಲ
ಮಂದಗಮನೆಯರು ತಂದಿರಿಸಿದರು
ಸುಂದರಾಂಗಿ ವೈದೇಹಿಯನೆತ್ತುವ ಆ-
ನಂದದಿ ಜೋಗುಳ ಪಾಡ್ವರು ಜೋ ಜೋ ೧
ರತ್ನ ಮುತ್ತುಗಳ ಕಿರೀಟವು ಹೊಳೆಯಲು
ಮುತ್ತಿನ ತೊಡುಗೆಯಲಿ ರಂಜಿಸುವ ಸುಂದರಿಯ
ಉತ್ತಮ ಸತಿಯರು ತೊಟ್ಟಿಲ ಪಿಡಿಯುತ
ಅರ್ಥಿಯ ಜೋಗುಳ ಪಾಡ್ವರು ಜೋ ಜೋ೨
ಕೌಸಲ್ಯದೇವಿಯ ಕಂದನ ರಮಣಿಯೆ
ಕೌಶಿಕಯಜ್ಞದ ಪಾಲನಅರಸಿಯೆ
ಹಂಸವಾಹನನ ಪಿತನ ಸತಿಯೆ ಖಳ
ಧ್ವಂಸ ಮಾಡಿದ ರಘುರಾಮನರಸಿಯೆ ೩
ಅಂಬುಜನಯನೆ ಪೀತಾಂಬರ ಶೋಭಿತ
ಕಂಬುಕಂಠಿ ಕೋಕಿಲವಾಣಿ ಜೋ ಜೋ
ತುಂಬುಗುರುಳ ಮುಖ ಕಮಲೆಯೆ ಜೋ ಜೋ
ನಂಬಿದವರ ಕಾಯ್ವ ಕರುಣಿಯೆ ಜೋ ಜೋ೪
ಕಮಲನಯನೆ ಕಮಲಾಲಯೆ ಜೋ ಜೋ
ಕಮಲಗಂಧಿಯೆ ಕಮಲೋದ್ಭವೆ ಜೋ ಜೋ
ಕಮಲನಾಭ ವಿಠ್ಠಲನ ಸತಿ ಜೋ ಜೋ
ಕಮಲೆ ಹೃತ್ಕಮಲದಿ ವಾಸಿಸು ಜೋ ಜೋ೫

ಕೃಷ್ಣನು ಎಂದಿಗೂ ತಪ್ಪು
೧೧೯
ಜಯ ಜಯ ಮಂಗಳಾ ನಿತ್ಯ ಶುಭಮಂಗಳಂ ಪ
ಜಗದೇಕ ವೀರನಿಗೆ ಜಗದುದರ ದೇವನಿಗೆ
ಜಗವ ಬಾಯೊಳು ತೋರ್ದ ಮಹಮಹಿಮಗೆ
ಜಗವ ಸೃಜಿಸಿದ ಹರಿಗೆ ಜಗವಪಾಲಿಪದೊರೆಗೆ
ಜಗವ ಸಂಹರಿಸುವಗೆ ಜಯ ಮಂಗಳಂ ಅ.ಪ
ವರಮುನಿಯ ತಾಡನದಿ ಹೊರಡೆ ಲಕ್ಷ್ಮಿಯು ಆಗ
ಗಿರಿಗಿಳಿದು ಬಂದು ಹುತ್ತದೊಳಗಿರಲು
ಪರಮೇಷ್ಠಿ ಅರಸಿಪಾಲ್ಗರಿಯೆ ಗೋಪಾಲಕನ
ವರಕುಠಾರದ ಪೆಟ್ಟಿಗಂಜಿ ನಟಿಸಿದವಗೆ ೧
ಗಿರಿಗಿರಿಯ ಸಂಚರಿಸಿ ಅಡವಿಮೃಗ ಬೆನ್ನಟ್ಟಿ
ಪರಮಪದ್ಮಾವತಿಯ ಮನದಿ ಕಂಡು
ದುರುಳ ಮಾತುಗಳಾಡಿ ಶಿಲೆಯತಾಡಿತನಾಗಿ
ಕೊರವಂಜಿ ರೂಪದಿಂ ಕಣಿಯ ಹೇಳಿದಗೆ ೨
ಆಕಾಶರಾಜನಿಗೆ ಅಳಿಯನೆನಸಿಕೊಂಡು
ಆಕೆ ಪದ್ಮಾವತಿಯ ಕೂಡಿದವ
ಬೇಕಾದ ವರಗಳನು ಕೊಡುತ ಭಕ್ತರ ಪೊರೆವಶ್ರೀಕಾಂತ ಕಮಲನಾಭವಿಠ್ಠಲಗೆ ೩

ಕುವಲಯಾಪೀಡ ಎಂಬುದು
೧೧೮
ಜಯ ಜಯ ಶ್ರೀ ಹರಿ ಶೌರಿ
ಜಯ ಜಯ ಮಂದರಧಾರಿ
ಜಯ ಜಯ ಶ್ರೀ ಮುರವೈರಿ
ಜಯ ಜಯ ಕಂಸಾರಿ ಪ
ಮುತ್ತಿನ ಮಂಟಪದಿ
ರತ್ನಪೀಠವನಿರಿಸಿ
ಅರ್ಥಿಲಿ ಬಾ ಹಸೆಗೆನ್ನುತ ಕರೆವರು
ಮುತ್ತೆೈದೆಯರುಗಳು ೧
ಇಂದಿರೆ ರಮಣ ಬಾ
ಕಂದರ್ಪ ಜನಕ ಬಾ
ಸುಂದರಾಂಗನೆ ಬಾ ಹಸೆಗೆನ್ನುತ
ಚಂದದಿ ಕರೆದರು ೨
ಕಂಬು ಕಂದರೆಯೆ ಬಾ
ಅಂಬುಜ ಮುಖಿಯೆ ಬಾ
ಸಂಭ್ರಮದಲಿ ಬಾ ಹಸೆಗೆನ್ನುತ ಕರೆದರು
ಅಂಬುಜ ಮುಖಿಯರು ೩
ನಾರಿ ರುಕ್ಮಿಣಿ ದೇವಿ
ನಾರದ ವಂದ್ಯನಿಗೆ
ಚಾರು ಪರಿಮಳ ಅರಿಶಿನ ಕುಂಕುಮ
ಹಾರವನರ್ಪಿಸುತ ೪
ಪರಿ ಪರಿ ಕುಸುಮಗಳ
ಪದಕ ಪುಷ್ಪದ ಮಾಲೆ
ಪರಮಾತ್ಮನ ಕೊರಳಿಗೆ ಹಾಕುತ
ಅಲಂಕರಿಸಿದಳಾಗ೫
ಜಯ ಜಯ ಶ್ರೀ ಕೇಶವನೆ
ಜಯ ಜಯ ನಾರಾಯಣನೆ
ಜಯ ಜಯ ಶ್ರೀ ಮಾಧವನೆ
ಜಯ ಜಯ ಗೋವಿಂದ ೬
ಜಯ ಜಯ ಶ್ರೀ ವಿಷ್ಣುಹರೆ
ಜಯ ಜಯ ಶ್ರೀ ಮಧುಸೂದನನೆ
ಜಯ ಜಯ ಶ್ರೀ ತ್ರಿವಿಕ್ರಮನೆ
ಜಯ ಜಯ ವಾಮನನೇ ೭
ಜಯ ಜಯ ಶ್ರೀ ಶ್ರೀಧರನೇ
ಜಯ ಜಯ ಶ್ರೀ ಹೃಷಿಕೇಶ
ಜಯ ಜಯ ಶ್ರೀ ಪದ್ಮನಾಭ
ಜಯ ದಾಮೋದರನೆ ೮
ಜಯ ಜಯ ಸಂಕರ್ಷಣನೆ
ಜಯ ಜಯ ಶ್ರೀ ವಾಸುದೇವ
ಜಯ ಜಯ ಶ್ರೀ ಪ್ರದ್ಯುಮ್ನ
ಜಯ ಜಯ ಅನಿರುದ್ಧ ೯
ಜಯ ಜಯ ಶ್ರೀ ಪುರುಷೋತ್ತಮನೆ
ಜಯ ಜಯ ಶ್ರೀ ಅಧೋಕ್ಷಜನೆ
ಜಯ ಜಯ ಶ್ರೀ ನಾರಸಿಂಹ
ಜಯ ಜಯ ಅಚ್ಚುತನೆ ೧೦
ಜಯ ಜಯ ಶ್ರೀ ಜನಾರ್ದನನೆ
ಜಯ ಜಯ ಶ್ರೀ ಉಪೇಂದ್ರಹರೇ
ಜಯ ಜಯ ಶ್ರೀ ಹರಿ ಶ್ರೀಶಾ
ಜಯ ಜಯ ಶ್ರೀ ಕೃಷ್ಣಾ೧೧
ಇಂತು ದೇವನ ಸ್ತುತಿಸಿ
ಸಂತಸದಿ ವೀಳ್ಯವನು
ಕಂತು ಪಿತನಿಗೆ ಅರ್ಪಿಸಿ ಮುದದಿ
ವಂದಿಸಿ ಭಕ್ತಿಯಲಿ೧೨
ಕಮಲಾಕ್ಷಿಯರು ಕೂಡಿ
ಕನಕದಾರತಿ ಪಿಡಿದು
ಕಮಲನಾಭ ವಿಠ್ಠಲ ಲಕ್ಷ್ಮೀಯರಿಗೆಬೆಳಗಿದರಾಗ ೧೩

ಜಗನ್ನಾಥದಾಸರು ಶ್ರೀ ರಾಘವೇಂದ್ರ
೬೧
ಜಯ ಭಾರತೀಶ ಜಯ ಜಯ ಭಾರತೀಶ ಜಯ
ಜಯ ಭಾರತೀಶ ಜಯತು
ಜಯ ರಾಘವಾಂಘ್ರಿಪಾದ ಕಮಲ ಭೃಂಗನೆ ನಮಿಪೆ
ಜಯ ಭಾರತೀಶ ಜಯತು ಪ
ಜಯ ಭಾರತೀಶ ಜಯ
ಜಯ ಭೀಮ ಹನುಮನೆ
ಭಯವ ಪರಿಹರಿಸಿ ಪೊರೆಯೈ
ಜಯ ಮಧ್ವಮುನಿರಾಯ
ಗುರು ಮಧ್ವಮುನಿರಾಯ
ಗುರುವೆ ಪಾಲಿಸು ಜಯ ಜಯ ಅ.ಪ
ತ್ರೇತೆಯಲಿ ರಘುಪತಿಯ ಸೇವೆ ಮಾಡುವೆನೆಂದು
ಸೀತೆಗುಂಗುರವನಿತ್ತು
ಮಾತೆಯಾಜ್ಞೆಯ ಕೊಂಡು
ಘಾತಿಸಿದೆ ರಕ್ಕಸರ
ದೂತ ರಾವಣನ ಕಂಡು
ಭೀತಿಯಿಲ್ಲದೆ ಜನಕ-
ಜಾತೆಯಳ ಕಳುಹೆನಲು
ಆತ ಕೋಪದಿಂದಲಿ ತನ್ನ
ದೂತರಿಂದಲಿ ವಾಲ-
ವಗ್ನಿಯಲಿ ದಹಿಸಿರೆನೆ
ಆ ಪುರವ ದಹಿಸಿ ಮೆರೆದೆ ೧
ದ್ವಾಪರದಿ ಶ್ರೀಕೃಷ್ಣನಂಘ್ರಿ ಸೇವಕನಾಗಿ
ಪಾಪಿ ಜರೆಸುತನ ಸೀಳಿ
ದ್ರೌಪದಿಯ ನುಡಿ ಕೇಳಿ
ಪಾಪಿ ಕೀಚಕನನ್ನು
ಕೋಪದಿಂ ಕೊಂದ ಮಹಿಮಾ
ಪಾಪಿ ದುರ್ಯೋಧನಾದಿಗಳ ಸಂಗಡ ಕಾದಿ
ಸೋತು ಓಡಲು ದುರುಳನು
ನೀತಿ ಬಿಡದಲೆ ಗದೆಯ
ಏಟಿನಿಂದವನ ತೊಡೆ
ಘಾತಿಸುತಲವನನಳಿದೆ ೨
ಮಧ್ವಮತದವರನುದ್ಧರಿಸ ಬೇಕೆಂದೆನುತ
ಮಧ್ಯಗೇಹರಲಿ ಜನಿಸಿ
ಶುದ್ಧ ಶಾಸ್ತ್ರಗಳನುದ್ಧರಿಸುತ ಜಗದೊಳಗೆ ಪ್ರ-
ಸಿದ್ಧನೆಂದೆನಿಸಿ ಮೆರೆದೆ
ಮುದ್ದು ಕೃಷ್ಣನ ಪೂಜೆ
ಶ್ರದ್ಧೆ ಬಿಡದಲೆ ಮಾಡಿ
ಉದ್ಧರಿಸಿ ಸಜ್ಜನರನು
ಮುದ್ದು ಕಮಲನಾಭ-
ವಿಠ್ಠಲಗರ್ಪಿತವೆಂದೆ
ಮಧ್ವಮುನಿರಾಯ ಜಯತು ೩

ಜಗದುದರದೇವ
೧೨೧
ಜಯ ಮಂಗಳ ಶುಭ
ಶುಭ ಮಂಗಳ ಪ
ಜಯ ಮಂಗಳ ಜಗದುದರ ಶ್ರೀದೇವಗೆ
ಶುಭ ಮಂಗಳ ಸುಂದರ ವರಲಕ್ಷ್ಮಿಗೆ ೧
ಜಯ ಮಂಗಳ ಭಕ್ತರ ಪರಿಪಾಲಗೆ
ಶುಭ ಮಂಗಳ ಭಾರ್ಗವಿ ಮಹಲಕ್ಷ್ಮಿಗೆ ೨
ಜಯ ಶುಭ ಕಮಲನಾಭ ವಿಠ್ಠಲನಿಗೆಜಯ ಶುಭ ಕಮಲಾಸನ ಪಿತನರಸಿಗೆ ೩

ಶ್ರೀಹರಿಯ ಮೋಹಿನಿ
೧೨೨
ಜಯ ಲಕ್ಷ್ಮಿ ಬಾ ಹಸೆಗೆ
ಜಯ ಜಯ ಜಗನ್ಮಾತೆ ತ್ರೈಲೋಕವಿಖ್ಯಾತೆ ಪ
ಮುತ್ತಿನ ಮಂಟಪದಿ ರತ್ನಪೀಠವಿರಿಸಿ
ಮುತ್ತೈದೆಯರು ನಿನ್ನ ಅರ್ಥಿಯಲಿ ಕರೆವರು ಅ.ಪ
ಗೆಜ್ಜೆ ಸರಪಣಿ ಕಾಲಗೆಜ್ಜೆ ನಾದದಿಂದ
ಹೆಜ್ಜೆನಿಡುತ ಬಾ ಬಾ ಸಜ್ಜನರಕ್ಷಕಳೆ೧
ಅಚ್ಚ ಜರಿ ಪೀತಾಂಬರ ಹೆಚ್ಚಿನಾಭರಣಗಳು
ಮಿತ್ರೇರಲಂಕರಿಸುವರು ಅಚ್ಚುತನೊಡಗೊಡಿ ೨
ಮುತ್ತಿನ್ಹಾರ ಪದಕ ಜತ್ತಿಲೊಲಿಯುತಿಹುದು
ಹಸ್ತ ಕಡಗ ದೋರ್ಯ ಸಿಸ್ತಿನ ಸುಂದರಿಯೆ ೩
ಕರ್ತೃ ಕಮಲನಾಭ ವಿಠ್ಠಲನರಸಿಯೆ
ಹಸ್ತಿಗಮನೆ ಬಾ ಬಾ ಉತ್ತಮ ಪೀಠಕೆ ೪

ಕೀರ್ತನೆಯಂತೆ ಈ ಕೀರ್ತನೆಯಲ್ಲೂ
೧೨೫
ಜೋ ಜೋ ಶ್ರೀಹರಿ ಮಲಗೊ ಜೋಗುಳ ಪಾಡಿ
ಪಾಡಿ ತೂಗುವೆ ಮುದದಿಪ
ಯೋಗಿಗಳರಸನೆ ಸಾಗರಶಯನನೆ
ಭಾಗವತರಪ್ರಿಯ ಬಾಗಿ ಸ್ತುತಿಪರೊ ನಿನ್ನ ಅ.ಪ
ಹರ ಬ್ರಹ್ಮಾದಿಗಳು ಕೂಡಿ ನಿನ್ನನು
ಪರಿಪರಿ ವಿಧದಲಿ ಕೊಂಡಾಡಿ
ಸುರರು ಗಂಧರ್ವರು ವರಋಷಿಗಳು ಕೂಡಿ
ಪರಮ ಸಂಭ್ರಮದಿಂದ ಹರಿ ನಿನ್ನ ಸ್ತುತಿಪರು ೧
ಗೋಕುಲದ ನಾರಿಯರು ಗೋವಿಂದ ನಿನಗೆ
ಬೇಕಾದ ಪಾಲ್ಮೊಸರು
ಜೋಕೆಯಿಂದಲಿ ಹೊಸ ಬೆಣ್ಣೆ ತಂದಿಹೆವೆಂದು ಅ-
ನೇಕ ಬಗೆಯಲಿ ಸ್ತುತಿ ಮಾಡಿ ಬೇಡುತಲಿರುವರು ೨
ದಿಟ್ಟ ಗೋಪಾಲ ಕಯ್ಯೊಳಗೊಂದು
ಪುಟ್ಟ ಬಚ್ಚೆಯ ಪಿಡಿದು
ಅಚ್ಚುತ ನಿನಗೀವೆವೆಂದು ಬಾಗಿಲೋಳ್ ನಿಂದು
ಪುಟ್ಟ ಮಕ್ಕಳು ಬಾಯಿಬಿಟ್ಟು ಪ್ರಾರ್ಥಿಸುವರು ೩
ಇನಕೋಟಿ ಪ್ರಭೆ ನಾಚಿಪ ಮುಖ ಕಮಲದ
ದನುಜದಲ್ಲಣ ನಿನ್ನನು
ಸನಕಾದಿಗಳು ಸ್ತುತಿಮಾಡಿ ಮೈ ಮರೆತರೊ
ವನಿತೆಯರೋಕುಳಿಗಳನಾಡಿ ನರ್ತಿಸುವರೊ ೪
ನಿದ್ರೆ ಮಾಡಿದರೆ ನೀನು ಈ ಜಗವೆಲ್ಲ
ಉದ್ಧಾರವಾಗುವುದೇನು
ನಿದ್ರೆ ಸಾಕೇಳೆಂದು ದುರ್ಗಾದೇವಿಯರು ಸ್ತುತಿಸೆ
ಮುದ್ದು ಕೃಷ್ಣನೆ ಭಕ್ತರುದ್ಧಾರಕರ್ತನೆ೫
ಹಯ ಮುಖ ಹರಿ ಮತ್ಸ್ಯನೆ ಕೂರ್ಮನೆ ವರಹ
ಹಯಗ್ರೀವ ನರಸಿಂಹನೆ
ಜಯವಟು ಭೃಗು ರಾಮಕೃಷ್ಣ ಬುದ್ಧನÉ ಕಲ್ಕಿ
ಜಯ ನಾನಾ ರೂಪನ ಜಯವೆಂದು ಪೊಗಳ್ವರೊ೬
ನವನೀತ ಚೋರನೆಂದು ನಾರಿಯರೆಲ್ಲ
ನವವಿಧ ನುಡಿ ನುಡಿವರೊ
ಭುವನ ಮೋಹನಸ್ವಾಮಿ ಸುಮನಸ ವಂದ್ಯನೆಕವಿ ಜನರಪ್ರಿಯ ಶ್ರೀ ಕಮಲನಾಭ ವಿಠ್ಠಲ ೭

೧೨೩
ಜೋಜೋ ಜೋಜೋ ಜೋ ವೆಂಕಟೇಶ
ಜೋಜೋ ಜೋಜೋ ಜೋ ಶ್ರೀನಿವಾಸ
ಜೋಜೋ ಜೋಜೋ ಭಕ್ತರಘನಾಶ
ಜೋಜೋ ಜೋಜೋ ಜೋ ಸ್ವಪ್ರಕಾಶ ಜೋಜೋ ಪ
ನಂಬಿದೆ ತಂದೆ ಮುದ್ದು ಮೋಹನ್ನ ವಿಠ್ಠಲ
ಸುಂದರ ಶ್ರೀ ಉರಗಾದ್ರಿವಾಸ ವಿಠ್ಠಲ
ವಂದಿಪೆ ಸಿರಿ ಉರಗಾದ್ರಿವಾಸ ವಿಠ್ಠಲ
ಇಂದಿರಾಪತಿ ತಂದೆ ವೆಂಕಟೇಶ ವಿಠ್ಠಲ ೧
ಆನಂದಮಯ ಅಂತರಾತ್ಮವಿಠಲ
ನವನೀತ ಧರ ತಾಂಡವ ಕೃಷ್ಣ ವಿಠ್ಠಲ
ಜಯವೆಂದು ಪಾಡುವೆ ಜಯಾಪತಿ ವಿಠ್ಠಲ
ಸರಿಯುಂಟೆ ನಿನಗಿನ್ನು ಶಾಂತೀಶ ವಿಠ್ಠಲ೨
ಗಂಗಾಜನಕ ಶ್ರೀ ಗಜವರದ ವಿಠ್ಠಲ
ಸಂಗರಹಿತ ಶೇಷಶಯನ ವಿಠ್ಠಲ
ಹಯವನೇರುತ ಪೊರೆದೆ ಶ್ರೀಹರಿ ವಿಠ್ಠಲ
ದಾನವೈರಿಯೆ ಧ್ರುವವರದ ವಿಠ್ಠಲ ೩
ಗರುಡಗಮನ ಗುರುವಾಸುದೇವ ವಿಠ್ಠಲ
ವರವ ಪಾಲಿಸು ವರದ ಲಕ್ಷ್ಮೀಶ ವಿಠ್ಠಲ
ಪದ್ಮನಾಭನೆ ಕಾಯೊ ಪ್ರದ್ಯುಮ್ನ ವಿಠ್ಠಲ
ವರಲಕ್ಷ್ಮೀರಮಣ ವರದ ವೆಂಕಟೇಶ ವಿಠ್ಠಲ೪
ಸಜ್ಜನಪಾಲ ಶ್ರೀ ಸುಜ್ಞಾನ ವಿಠ್ಠಲ
ಶಾಮಲಾಂಗನೆ ಕೃಷ್ಣ ಶ್ರೀನಾಥ ವಿಠ್ಠಲ
ಭಾರ ಕರ್ತೃ ಭಾರತೀಶ ಪ್ರಿಯ ವಿಠ್ಠಲ
ಪರಿಸರನೊಡೆಯ ಶ್ರೀವರಹ ವಿಠ್ಠಲ ೫
ಜ್ಞಾನದಾಯಕ ಆನಂದಮಯ ವಿಠ್ಠಲ
ಸಜ್ಜನ ಪರಿಪಾಲ ಶ್ರೀ ಪ್ರಾಜ್ಞ ವಿಠ್ಠಲ
ಜಗವ ಮೋಹಿಪ ದೇವ ಜಗದ್ಭರಿತ ವಿಠ್ಠಲ
ವಿಶ್ವ ವ್ಯಾಪಕ ವಿಜ್ಞಾನಮಯ ವಿಠ್ಠಲ೬
ವಿಷ್ಣುಮೂರುತಿ ಕೃಷ್ಣದ್ವೈಪಾಯನ ವಿಠ್ಠಲ
ಅಕ್ಷರೇಡ್ಯನೆ ಕಾಯೋ ಲಕ್ಷ್ಮೀಶ ವಿಠ್ಠಲ
ಕಂಟಕ ಹರಿಸು ಶ್ರೀವೆಂಕಟೇಶ ವಿಠ್ಠಲ
ಸಾರಿದೆ ಸಲಹೆನ್ನ ಶ್ರೀರಮಣ ವಿಠ್ಠಲ೭
ದುರುಳರ ಮಡುಹಿದ ವರದ ವಿಠ್ಠಲ
ಅಂಬುಧಿ ಶಯನಪನ್ನಂಗ ಶಯನ ವಿಠ್ಠಲ
ದಾರಿ ತೋರಿಸೊ ದಾಮೋದರ ವಿಠ್ಠಲ
ಕರುಣಿಸಿ ಪೊರೆ ಎನ್ನ ಕಮಲನಾಭ ವಿಠ್ಠಲ೮
ಕಂಜದಳಾಕ್ಷ ಕಮಲನಾಥ ವಿಠ್ಠಲ
ಮುರಮರ್ದನನೆ ಕಾಯೋ ಮುರಳೀಧರ ವಿಠ್ಠಲ
ದಯದಿಂದ ಪಾಲಿಸು ದಯಾನಿಧೆ ವಿಠ್ಠಲ
ಅಚ್ಚುತ ಹರಿ ಕೃಷ್ಣಕ್ಷೇತ್ರಜ್ಞವಿಠ್ಠಲ೯
ಜ್ಞಾನಿಗಳರಸನೆ ಆನಂದ ವಿಠ್ಠಲ
ಮೂಜಗದೊಡೆಯ ಭಾರ್ಗವೀಶ ವಿಠ್ಠಲ
ಸರ್ವಕರ್ತೃ ಪುರುಷೋತ್ತಮ ವಿಠ್ಠಲ
ಮಧುವೈರಿ ಪೊರೆಮಧುರನಾಥ ವಿಠ್ಠಲ೧೦
ರಾಕ್ಷಸವೈರಿ ರಮಾಧವ ವಿಠ್ಠಲ
ಕರುಣಿಗಳರಸನೆ ಕಾರುಣ್ಯ ವಿಠ್ಠಲ
ಎದುರ್ಯಾರೋ ನಿನಗಿನ್ನು ಯದುಪತಿ ವಿಠ್ಠಲ
ಉದ್ಧರಿಸೆನ್ನ ಉದ್ಧವವರದ ವಿಠ್ಠಲ೧೧
ನಾಗಶಯನ ಕೃಷ್ಣಯೋಗೀಶ ವಿಠ್ಠಲ
ಕುಂಭಿಣಿಪತಿ ಶ್ರೀಶ ಸಿಂಧುಶಯನ ವಿಠ್ಠಲ
ಸುಜ್ಞಾನವೀವ ಪ್ರಾಜ್ಞಾನಿಧಿ ವಿಠ್ಠಲ
ಸಂಕಟಹರಿಸು ಸಂಕರ್ಷಣ ವಿಠ್ಠಲ೧೨
ಗೋಪಿಕಾಲೋಲ ಗೋಪೀನಾಥ ವಿಠ್ಠಲ
ವೇದ ಪ್ರತಿ ಪಾದ್ಯ ವೈಕುಂಠಪತಿ ವಿಠ್ಠಲ
ಮಾತರಿಶೃಪ್ರಿಯ ಶ್ರೀಕಾಂತ ವಿಠ್ಠಲ
ಧನ್ಯನಾದೆನೋ ದೇವ ಧನ್ವಂತ್ರಿ ವಿಠ್ಠಲ೧೩
ಶ್ರೀಧರ ಪೊರೆ ವೇದವತೀಶ ವಿಠ್ಠಲ
ಸಾಧುಗಳರಸನೆ ಭಕ್ತವತ್ಸಲ
ಮೇದಿನಿಯೊಳು ನಿನ್ನ ಪೋಲುವರಿಲ್ಲ
ಆದರದಿಂ ಕೇಳೊ ನೀ ಎನ್ನ ಸೊಲ್ಲ೧೪
ರನ್ನ ಮಂಟಪದೊಳು ಚಿನ್ನದ ತೊಟ್ಟಿಲು
ಕನ್ನೇರುತೂಗಿ ಪಾಡುವರೊ ಗೋವಿಂದ
ಕರುಣಸಾಗರ ಕೃಷ್ಣ ಮಲಗಿ ನಿದ್ರೆಯ ಮಾಡೊ
ಕಮಲನಾಭ ವಿಠ್ಠಲ ಪರಮದಯಾಳು ೧೫

೧೨೪
ಜೋಜೋ ಜೋಜೋ ಲಾಲಿ ಗೋವಿಂದ
ಜೋಜೋ ಜೋಜೋ ಲಾಲಿ ಮುಕುಂದ
ಜೋಜೋ ಜೋಜೋ ಲಾಲಿ ಆನಂದ
ಜೋಜೋ ಜೋಜೋ ಲಾಲಿ ಗೋಪಿಯ ಕಂದ ಪ
ಚಿನ್ನದ ತೊಟ್ಳಿಗೆ ರನ್ನದ ಮಲುಕು
ಕನ್ನಡಿ ಹೊಳೆವೊ ಮೇಲ್ಕಟ್ಟಿನ ಬೆಳಕು
ಸ್ವರ್ಣ ಮಂಟಪದಿ ರಾಜಿಪದಿವ್ಯ ಹೊಳಪು
ಕರ್ನೇರಲಂಕರಿಸಿ ನಲಿಯುವ ಕುಲುಕು ಜೋ ಜೋ೧
ಅರಿಶಿನ ಕುಂಕುಮ ಗಂಧ ಪುಷ್ಪಗಳು
ಸರಸೀಜಾಕ್ಷಗೆ ಮುತ್ತಿನ್ಹಾರ ಪದಕಗಳು
ಸುರರೊಡೆಯಗೆ ಪಟ್ಟೆ ಪೀತಾಂಬರಗಳು
ಹರುಷದಿಂದಿರಿಸಿ ನಲಿವ ಸ್ತ್ರೀಯರುಗಳು ಜೋ ಜೋ೨
ಮುತ್ತೈದೆಯರೆಲ್ಲ ಬಂದು ನೆರೆದರು
ಉತ್ತಮ ಸ್ವರ್ಗ ಕಲಶವ ಪೂಜಿಸುವರು
ಚಿತ್ತಜನಯ್ಯನ ಎತ್ತಿಕೊಂಡಿಹರು
ಮತ್ತೆ ತೊಟ್ಟಿಲೊಳಿಟ್ಟು ಜೋಗುಳವ ಹಾಡಿದರು ಜೋ ಜೋ೩
ಕೇಶವನನ್ನು ತನ್ನಿ ನಾರಾಯಣನ್ನ
ಆಸೆಲಿ ಮಾಧವ ಗೋವಿಂದನನ್ನ
ಸಾಸಿರ ನಾಮದ ವಿಷ್ಣು ಮಧುಸೂದನನ್ನ
ಸೋಸಿಲಿ ತ್ರಿವಿಕ್ರಮ ವಾಮನನ್ನ ಜೋ ಜೋ ೪
ಶ್ರದ್ಧೆಯಲಿ ಶ್ರೀಧರ ಹೃಷಿಕೇಶನನ್ನ
ಪದ್ಮನಾಭನ ಕೊಳ್ಳಿ ದಾಮೋದರನ್ನ
ಶುದ್ಧ ಮನದಿ ಸಂಕರ್ಷಣ ವಾಸುದೇವನನ್ನ
ಪ್ರದ್ಯುಮ್ನನನು ತನ್ನಿ ಅನಿರುದ್ಧನನ್ನ ಜೋ ಜೋ ೫
ಪುರುಷೋತ್ತಮನ ಕೊಳ್ಳಿ ಅದೋಕ್ಷಜನನ್ನ
ನಾರಸಿಂಹನ ತನ್ನಿ ಅಚ್ಚುತನನ್ನ
ಸರಸದಿ ಜನಾರ್ದನ ಉಪೇಂದ್ರನನ್ನ
ಹರುಷದಿಂದಲಿ ಕೊಳ್ಳಿ ಹರಿ ಶ್ರೀಕೃಷ್ಣನನ್ನ ಜೋ ಜೋ ೬
ಹೀಗೆಂದು ತೂಗುತ ಜೋಗುಳ ಹಾಡಿ
ನಾಗವೇಣಿಯರು ಸಂಭ್ರಮದಿಂದ ಕೂಡಿ
ಆಗ ಕಮಲನಾಭ ವಿಠ್ಠಲನ್ನ ನೋಡೀ
ಬೇಗ ರಕ್ಷೆಗಳನಿತ್ತರು ತ್ವರೆ ಮಾಡಿ ಜೋ ಜೋ ೭

ಶ್ರೀಗೋಪೀಗೀತಾ
೧೬೭
ತಿರುಪತಿ ಯಾತ್ರೆಯ ಮಾಡಿ ತಿರುಪತಿ ಪ
ತಿರುಪತಿಯಾತ್ರೆಯ ಮಾಡಿ ಮನದ
ದುರಿತಪಾಪಗಳನೀಡಾಡಿ ಆಹ
ಸ್ಮರಕೋಟಿ ತೇಜನ ದರುಶನಲಾಭವು
ದೊರಕಿದ ಸುಜನರ ಚರಿತೆಯ ಕೇಳುತ್ತ ಅ.ಪ
ಬೆಟ್ಟದ ದರುಶನದಿಂದ ಪಾಪ
ಸುಟ್ಟು ಹೋಗುವದಿದು ಚಂದ ಮೆಟ್ಟು
ಮೆಟ್ಟಿಲನೇರುವ ವೃಂದ ಜನ
ಸೃಷ್ಟಿಗೊಡೆಯ ಗೋವಿಂದ ಆಹಾ
ದಿಟ್ಟಮನದಿ ಪರಮೇಷ್ಠಿಪಿತನ ಪಾಡಿ
ಗಟ್ಯಾಗಿ ಗೋವಿಂದ ಗೋವಿಂದನೆನುವರು೧
ಗಾಳಿಗೋಪುರವನ್ನೆ ದಾಟಿ ಭಕ್ತ-
ರಾ ಮಂಟಪಕೆ ಉಂಟೆ ಸಾಟಿ ತಾಳ
ಮೇಳದವರ ಗಲಾಟೀಯಿಂದ
ಶೋಭಿಪ ಪವನನಕೋಟಿ ಕೇಳಿ
ನೋಡುತ್ತ ಭಕುತಿಸೂರ್ಯಾಡುತ್ತ ಮಹಿಮೆ ಕೊಂ-
ಡಾಡುತ್ತ ಪಾಡುತ್ತ ಕುಣಿವ ಸಜ್ಜನರೆಲ್ಲ ೨
ಸ್ವಾಮಿ ಪುಷ್ಕರಣಿಯ ಸ್ನಾನ ಮಾಡಿ
ಆ ಮಹವರಹದೇವರನ್ನ ಕಾಮ-
ಧೇನೆಂಬ ಶ್ರೀ ಗುರುಗಳನ್ನ ನೋಡಿ
ಆ ಮಹಾ ಅಶ್ವತ್ಥರಾಜನ್ನ ಸ್ತುತಿಸಿ
ನೇಮದಿ ದಿಗ್ಗಾವಿ ಆಚಾರ್ಯರಿಗೆ ನಮಿಸಿ
ಶ್ರೀಧರನಾಲಯ ದ್ವಾರಕ್ಕೆ ಪೋಗಲು ೩
ಮೂರು ದ್ವಾರಗಳನ್ನೆ ದಾಟಿ ಮು-
ರಾರಿಯ ಗುಡಿಸುತ್ತ ಕೋಟೆಯಲ್ಲಿ
ಸಾರುವ ಭಕುತರ ಭೇಟಿಯಿಂದ ಅ-
ಪಾರ ಜನುಮದ ಪಾಪಮೂಟೆ ಪೋಗಿ
ಬೇಗದಿ ವಿಮಾನ ಶ್ರೀನಿವಾಸನ ನೋಡಿ
ಸಾಗರಶಯನನ ದರುಶನ ಕೊಡುಕೊಡು ಎಂದು ೪
ಕೊಪ್ಪರಿಗೆಯು ಮನೆಯಂತೆ ಹಣ
ತಪ್ಪದೆ ಸುರಿಯುವರಂತೆ ನ-
ಮ್ಮಪ್ಪ ವೆಂಕಟಸ್ವಾಮಿಯಂತೆ
ತಪ್ಪನಾಡುವರ ಶಿಕ್ಷಿಪನಂತೆ ಆಹಾ
ಕ್ಷಿಪ್ರದಿ ಶ್ರೀಧರನಪ್ಪಣೆಯಂದದಿ
ಅಪ್ರಮೇಯನ ಸೇವೆಗೊಪ್ಪುವ ಸುಜನರು ೫
ಹೇಮದ್ವಾರದಿ ನಿಂತ ಜನರು ನಮ್ಮ
ಸ್ವಾಮಿ ಶೃಂಗಾರ ನೋಡುವರು ಶ್ರೀನಿ-
ವಾಸನೆ ಸಲಹು ಎಂಬುವರು ಪಾಹಿ
ಪಾಹಿ ಶ್ರೀಪತಿ ಎನ್ನುತಿಹರು ಶ್ರೀಶ
ಗೋವಿಂದ ಗೋವಿಂದ ಗೋವಿಂದ ಮಾಧವ
ಮಾತುಳಾಂತಕ ದೇವ ಮಾತು ಲಾಲಿಸು ಎಂದು೬
ಚರಣದಂದಿಗೆ ಗೆಜ್ಜೆವಲಿಯೆ ಪೊನ್ನ
ಸರಪಳಿ ಪಾಡಗ ನಲಿಯೆ ಒಳ್ಳೆ
ಜರದ ಪೀತಾಂಬರ ಹೊಳೆಯೆ ಪಟ್ಟೆ
ವರವಲ್ಲಿ ಹೊಳೆಯುತ್ತ ಮೆರೆಯೆ ಆಹ
ಸರಗಳು ವಲಿಯುತ್ತ ಪದಕಂಗಳ್ಹೊಳೆಯುತ್ತ
ಉರದಲ್ಲಿ ಶ್ರೀದೇವಿ ಇರುವ ವೈಭವ ನೋಡಿ೭
ವರಶಂಖು ಚಕ್ರ ಹಸ್ತದಲಿ ದಿವ್ಯ
ಸಿರದಿ ಕಿರೀಟ ಮೆರೆಯುತಲಿ ಪಟ್ಟೆ
ತಿಲುಕ ಕಸ್ತೂರಿ ಹೊಳೆಯುತಲಿ ಥಳ
ಥಳ ಹೊಳೆವ ಮುಖಕಾಂತಿಯಲಿ ಅಹ
ಕಡೆಗಣ್ಣ ನೋಟದಿ ಜಗವಮೋಹನ ಮಾಳ್ಪ
ಅಗಣಿತ ಮಹಿಮನ ಸುಗುಣವ ಪಾಡುತ್ತ ೮
ಕರುಣಿಗಳರಸನೆ ದೇವ ತನ್ನ
ಶರಣು ಹೊಕ್ಕವರನ್ನೆ ಕಾವ ತನ್ನ
ಭಜಕರಿಗಭಯವ ನೀವ ಇನ್ನು
ಸರಿಯುಂಟೆ ಶ್ರೀರಮಾದೇವ ಅಹ
ಪರಿಸರನೊಡೆಯನ ನಿರುತದಿ ಧ್ಯಾನಿಸಿ
ದುರಿತಗಳಳಿದು ಸದ್ಗತಿಯ ಪಡೆವರೆಲ್ಲ ೯
ಕಾಲಹರಣ ಮಾಡದಂತೆ ತ್ರಿ-
ಧಾಮನ ಸ್ಮರಿಸುವ ಚಿಂತೆಯಲ್ಲಿ
ಆಲಸ್ಯ ತೊರೆದಿಹರಂತೆ ಶ್ರೀನಿ-
ವಾಸನೆ ಇದಕ್ಹೊಣೆಯಂತೆ ಅಹ
ಕಾಲಕಾಲಕೆ ತಕ್ಕ ಲೀಲೆಯ ತೋರುವ
ಶ್ರೀಲಲಾಮನ ಪಾದ ಧ್ಯಾನಿಪ ಸುಜನರು ೧೦
ಹತ್ತವತಾರದ ಹರಿಯು ತನ್ನ
ಭಕ್ತರು ಸ್ತುತಿಸುವ ಧ್ವನಿಯ ಕೇಳಿ
ಚಿತ್ತದಿ ನಲಿಯುವ ಪರಿಯು ಸುರರು
ವಿಸ್ತರಿಸುವ ದಿನಚರಿಯು ಅಹ
ಕಸ್ತೂರಿ ತಿಲುಕದ ಕಮಲನಾಭ ವಿಠ್ಠಲ
ಭಕ್ತರ ಸ್ತುತಿಸಲು ಮತ್ತವರಿಗೊಲಿಯುವ ೧೧

ಮಧ್ವಾಚಾರ್ಯರನ್ನು ಗುರುರಾಯ
೧೪
ತೊಟ್ಟಿಲ ತೂಗುವೆ ಕೃಷ್ಣನ ತೊಟ್ಟಿಲ ತೂಗುವೆ
ಪುಟ್ಟಬಾಲಕರೊಳು ಪರಮ ಶ್ರೇಷ್ಠನಾದನಾ ಪ
ಮೀನನಾಗಿ ಭಾರಪೊತ್ತು ಬೇರು ಮೆಲ್ಲಿದನ
ಕ್ನೂರರೂಪ ತೋರಿ ಭೂಮಿದಾನ ಬೇಡ್ದನ1
ಭೂಮಿಪರ ಸಂಹರಿಸಿದ ಶ್ರೀರಾಮಚಂದ್ರನ
ಮಾವ ಕಂಸನ ತರಿದ ಬಲರಾಮನನುಜನ2
ಬುದ್ಧರೂಪದಿಂದ ತ್ರಿಪುರರನೊದ್ದ ಧೀರನ
ಮುದ್ದು ತೇಜಿನೇರಿ ಮೆರೆದ ಪದ್ಮನಾಭನ ೩
ಉಲಿವು ಮಾಡಬೇಡಿರಮ್ಮ ಚಲುವ ಮಲಗುವ
ನಳಿನನಾಭನನ್ನು ಸ್ಮರಿಸಿ ನಲಿದು ಪಾಡುವ4
ಕಮಲ ಮುಖಿಯರೆಲ್ಲ ಬನ್ನಿ ಕುಣಿದು ಪಾಡುವಕಮಲನಾಭ ವಿಠ್ಠಲನಂಘ್ರಿ ಸ್ಮರಣೆ ಮಾಡುವ ೫

ಸಕಲ ಕರ್ಮಗಳ ರಹಸ್ಯವನ್ನರಿತವನು
೧೦೭
ತೊಳೆಯಲಿ ಬೇಕಿದನು ಮನುಜ ಪ
ಭವಕೂಪದಿ ಬಿದ್ದು ತೊಳಲಿ ಬಳಲಿ ಬಳಲಿ
ಮಲಿನವಾಗಿಹ ಮನ ಹರಿಧ್ಯಾನ ಜಲದಲಿ ಅ.ಪ
ಕಾಮಕ್ರೋಧದಿಂದ ಜನಿಸಿದ
ಲೋಭಮೋಹ ಲೋಭದಿಂದ
ಮದಮತ್ಸರ ಷಡ್ವಿಧ ತಾಪಗಳಿಂದ
ಹದಗೆಟ್ಟಿರೆ ಮನ ಮುದದಿ ಹರಿಧ್ಯಾನದಿ ೧
ದುರ್ಜನ ಸಂಗದೊಳು ಸೇರುತ ಮನ
ವರ್ಜಿಸಿ ಹರಿ ಚರಿತ
ಅರ್ಜುನ ಸಖ ಸರ್ವೇಶನ ನಾಮವು
ಲಜ್ಜೆಯಿಲ್ಲದೆ ಸ್ಮರಿಸುತ ನಲಿಯಲು ಮನ ೨
ಜನನ ಮರಣ ಕ್ಲೇಶದಿ ದು:ಖದಿ ಮನ
ಮರಳಿ ಮರಳಿ ಪಾಪದಿ ಎಣಿಕೆ ಇಲ್ಲದ
ದೋಷದೊಳಗೆ ಮುಸುಕಿದ ಮನ
ನಳಿನನಾಭನ ಪಾದಸ್ಮರಣೆ ಮಾಡಲು ನಿತ್ಯ ೩
ಇಂದಿರೇಶನ ಧ್ಯಾನವ ಮಾಡಲು ಮನ
ಪೊಂದಿದ ಮಲಿನವನು ಛಂದದಿ ಹರಿದಾಸರ
ವೃಂದವ ಕೂಡಿ ಮಂದೋರದ್ಧರ ಗೋ_
ವಿಂದನೆನ್ನಲು ಮನ ೪
ನಿಚ್ಚ ಭಕುತಿಯಿಂದ ಶ್ರೀ ಹರಿಪಾದ
ಅರ್ಜಿಸಿಮುದದಿಂದ
ರುಕ್ಮಿಣಿಯರಸನ ಸತ್ಯಸಂಕಲ್ಪನ
ಮೆಚ್ಚಿಸಿ ಮುಕುತಿಯ ನೈದಲು ಈಮನ ೫
ಮಧ್ವಮತದಿ ಜನಿಸಿ ನಿರಂತರ
ಮಧ್ವರಾಯರ ಭಜಿಸಿ
ಸದ್ವೈಷ್ಣವರ ಸಂಗದೊಳಾಡುತ
ಲಜ್ಜೆತೊರೆದು ಕಾಲಗೆಜ್ಜೆ ಕಟ್ಟಲುಮನ೬
ಕಂಬು ಚಕ್ರಧಾರಿ ಶ್ರೀ ಶೌರಿ
ನಂಬುವರಾಧಾರಿ
ಶಂಬರಾರಿಪಿತ ನಂಬಿದೆ ನಿನ ಪಾದ
ಶಂಭುವಂದಿತ ಪಾಲಿಸಿಂದು ಸ್ಮರಿಸಲು ಮನ ೭
ತೊಳೆದು ತೊಳೆದು ವಿಷಯ ವಾಸನೆಯನ್ನು
ಹಲವು ವಿಧದಿ ತೊಳೆದು
ಕಲುಷದೂರನ ನಾಮ ಸ್ಮರಣೆಯ ಮಾಡಲು
ಮರುತ ಮತದ ಸಂಗ ದೊರೆವುದು ತವಕದಿ೮
ಕಳವಳಿಸದೆ ಮನವು ನಿಶ್ಚಲದಲಿ
ಥಳ ಥಳ ಥಳ ಹೊಳೆಯೆ
ಕಮಲನಾಭ ವಿಠ್ಠಲವಲಿದು ಪಾಲಿಸುವನುಹಲವು ಬಗೆಯಲಿ ಹಂಬಲಿಸದೆ ಮನ ೯

ವಾಯುದೇವರ ಪತ್ನಿಯಾದ
೧೫
ತ್ರಿಜಗದ್ವಾ ಪಕ ಹರಿ ಎನುವರು ಸುಜನರು
ನಿಜದಲಿ ಪೇಳಿವದಾರಕ್ಕಾ
ಅಜಭವಾದಿಗಳಿಗರಸನಾದ
ಹದಿನಾಲ್ಕು ಲೋಕಕೆ ದೊರೆ ತಂಗಿ ೧
ನೀರೊಳು ಮುಳುಗುತ ಮೀನರೂಪದಿ
ಸಾರುವ ಮಯ್ಯವದಾರಕ್ಕ
ನೀರೊಳು ಮುಳುಗಿ ವೇದವ ತಂದು ಸುತಗಿತ್ತ
ಧೀರ ಮತ್ಸ್ಯಮೂರುತಿ ತಂಗಿ ೨
ಭಾರ ಬೆನ್ನಿಲಿ ಪೊತ್ತು ಮೋರೆ ಕೆಳಗೆ ಮಾಡಿ
ನೀರೊಳು ವಾಸಿಪದಾರಕ್ಕ
ವಾರಿಧಿ ಮಥಿಸಿದಮೃತ ಸುರರಿಗೆ ಇತ್ತ
ಧೀರ ಕೂರ್ಮ ಮೂರುತಿ ತಂಗಿ ೩
ಕೋರೆದಾಡಿಯಲಿ ಧಾರುಣಿ ನೆಗಹಿದ
ಫೋರನೆನುವರಿವದಾರಕ್ಕ
ಕ್ರೂರ ಹಿರಣ್ಯಾಕ್ಷನ ಕೊಂದು ಭೂಮಿಯ ತಂದ
ಶೂರ ವರಹ ಮೂರುತಿ ತಂಗಿ ೪
ಕ್ರೂರ ರೂಪ ತಾಳುತ ಕರುಳ್ವನ
ಮಾಲೆ ಹಾಕಿದವದಾರಕ್ಕ
ಪೋರನ ಸಲಹಲು ಕಂಬದಿಂದುಸಿದ
ನಾರಸಿಂಹ ಮೂರುತಿ ತಂಗಿ ೫
ಮೂರಡಿ ಭೂಮಿಯ ದಾನವ ಬೇಡಿದ
ಹಾರ್ವನೆನುವನಿವದಾರಕ್ಕ
ಧೀರ ಬಲಿಯ ಭಕ್ತಿಗೆ ಮೆಚ್ಚಿ ಬಾಗಿಲು ಕಾಯ್ದ
ವಾಮನ ಮೂರುತಿ ಇವ ತಂಗಿ ೬
ಮೂರು ಏಳು ಬಾರಿ ಧಾರುಣಿ ಚರಿಸಿದ
ಶೂರನೆನುವರಿವದಾರಕ್ಕ
ವೀರ ಕ್ಷತ್ರಿಯರ ಮದವನಡಗಿಸಿದ ಪರಶು-
ರಾಮ ಮೂರುತಿ ತಂಗಿ ೭
ಕೋತಿಗಳೊಡನಾಡಿ ಸೇತುವೆ ಕಟ್ಟಿದ ಪ್ರ-
ಖ್ಯಾತನೆನುವರಿವದಾರಕ್ಕ
ಮಾತರಿಶ್ವನಿಗೆ ಒಲಿದಂಥ ದಶರಥ
ರಾಮ ಚಂದ್ರ ಮೂರುತಿ ತಂಗಿ ೮
ಗೋಕುಲದೊಳು ಪಾಲ್ಬೆಣ್ಣೆ ಮೊಸರು ನವನೀತ
ಚೋರನಿವದಾರಕ್ಕ
ಲೋಕಗಳೆಲ್ಲಾ ತಾಯಿಗೆ ಬಾಯೊಳುತೋರ್ದ
ಗೋಪಾಲಕೃಷ್ಣ ಮೂರುತಿ ತಂಗಿ ೯
ತ್ರಿಪುರರ ಸತಿಯರ ವ್ರತಗಳನಳಿದನು
ಗುಪಿತನೆನುವರಿವದಾರಕ್ಕ
ಕಪಟ ನಾಟಕ ಸೂತ್ರಧಾರಿ ಶ್ರೀ-
ಹರಿ ಬೌದ್ಧ ಮೂರುತಿ ತಂಗಿ ೧೦
ಅಶ್ವುವನೇರುತ ಹಸ್ತದಿ ಖಡ್ಗ ಪುರು-
ಷೋತ್ತಮನೆನುವರಿವದಾರಕ್ಕ
ಸ್ವಸ್ತದಿ ಕಲಿಯೊಳು ಸುಜನರ ಪಾಲಿಪ
ಕರ್ತೃ ಕಲ್ಕಿ ಮೂರುತಿ ತಂಗಿ ೧೧
ಶಂಖು ಚಕ್ರ ಗದೆ ಪದುಮವು ಸಿರದಿ ಕಿ-
ರೀಟಧಾರಿ ಇವದಾರಕ್ಕ
ಪಂಕಜಾಕ್ಷಿ ಪದ್ಮಾವತಿ ಪತಿ ಶ್ರೀ-
ವೆಂಕಟೇಶ ಮೂರುತಿ ತಂಗಿ ೧೨
ಮಮತೆಲಿ ಸುಜನರ ಶ್ರಮ ಪರಿಹರಿಸುವ
ಕಮಲಾಪತಿ ಇವದಾರಕ್ಕ
ಕಮಲಪತ್ರಾಕ್ಷ ಶ್ರೀ ಕಮಲನಾಭ ವಿ-
ಠ್ಠಲ ಮೂರುತಿ ಕೇಳಿವ ತಂಗಿ ೧೩

ಜಗನ್ನಾಥದಾಸರ ಆತ್ಮಶೋಧನಾತ್ಮಕ
೮೦
ತ್ವರದಿ ಭಜಿಪೆ ನಮ್ಮ ಗುರುಪಾದಾಂಬುಜ
ಕೆರಗುತಲನುದಿನ ಭಕುತಿಯಲಿ ಪ
ನೆರೆನಂಬಿದವರ ಬಿಡದೆ ಪೊರೆವರೆಂಬ
ಉರುತರ ಕೀರ್ತಿಯ ಸ್ಮರಿಸುತಲಿ ಅ.ಪ
ನೊಂದು ಮನದಿ ಭವ ಬಂಧನದಿ ಬಳಲುವ
ಮಂದಿಗಳನು ಉದ್ಧರಿಸುವರ
ಮಂದಮತಿಗಳಾದರು ನಿಂದಿಸದಲೆ
ಮುಂದಕೆ ಕರೆದಾದರಿಸುವರ
ಬಂಧು ಬಳಗ ಸರ್ವಬಾಂಧವರಿವರೆಂದು
ಒಂದೆ ಮನದಿ ಸ್ಮರಿಸುವ ಜನರ
ಕುಂದುಗಳೆಣಿಸದೆ ಕಂದನ ತೆರದೊಳು
ಮುಂದಕೆ ಕರೆದಾದರಿಸುವರ ೧
ಗುಪ್ತದಿಂದ ಶ್ರೀಹರಿನಾಮಾಮೃತ
ತೃಪ್ತಿಲಿ ಪಾನವ ಮಾಡಿಹರ
ನೃತ್ಯಗಾಯನ ಕಲಾನರ್ತನದಿಂ ಪುರು-
ಷೋತ್ತಮನನು ಮೆಚ್ಚಿಸುತಿಹರ
ಸರ್ಪಶಯನ ಸರ್ವೋತ್ತಮನನು
ಸರ್ವತ್ರದಲಿ ಧ್ಯಾನಿಸುತಿಹರ
ಮತ್ತರಾದ ಮನುಜರ ಮನವರಿತು ಉ-
ನ್ಮತ್ತತೆಯನು ಪರಿಹರಿಸುವರ೨
ಕಮಲನಾಭ ವಿಠ್ಠಲನು ಪೂಜಿಸಿ
ವಿಮಲಸುಕೀರ್ತಿಯ ಪಡೆದವರ
ಶ್ರಮಜೀವಿಗಳಿಗೆ ದಣಿಸದೆ ಮುಂ-
ದಣಘನ ಸನ್ಮಾರ್ಗವ ಬೋಧಿಪರ
ನವನವ ಲೀಲೆಗಳಿಂದೊಪ್ಪುವ
ಹರಿ ಗುಣಗಳನ್ನು ಕೊಂಡಾಡುವರ
ನಮಿಸಿಬೇಡುವೆ ಉರುಗಾದ್ರಿವಾಸ ವಿ-ಠ್ಠಲದಾಸರು ಎಂದೆನಿಸುವರ ೩

ಭಗವಂತನ ಅಧಿಷ್ಠಾನ ಎಂದರೆ
೮೮
ದಯದಿ ವರಗಳ ನೀಡು ಮಮಸ್ವಾಮಿ ಸರ್ವಂತರ್ಯಾಮಿ
ನಯದಿ ಬೇಡುವೆ ಭಕುತಜನ ಪ್ರೇಮಿ ಮಮ ಸರ್ವಸ್ವಾಮಿ ಪ
ಸವಿನಯದಿ ಪ್ರಾರ್ಥಿಸುತ ಬೇಡುವೆ
ಸುಮನರಸರ ಪ್ರಿಯ ಚಿತ್ಸುಖಪ್ರದ
ಅಮಿತ ವಿಕ್ರಮ ಅಪ್ರಮೇಯನೆ
ರಮೆಯರಮಣನೆ ರಕ್ಷಿಸೆನ್ನನು ಅ.ಪ
ತೀರ್ಥ ಕ್ಷೇತ್ರಗಳನು ಚರಿಸುತಲೆ ಶ್ರೀ ಹರಿಯಗುಣ ಸ-
ತ್ಪಾತ್ರರಿಂದನವರತ ತಿಳಿಯುತಲೆ
ಶ್ರೋತ್ರಿಯನ ಸಂಗದೊಳು ನಲಿಯುತ್ತಾ
ಮನನಲಿದು ನಿನ್ನಯ
ಕೀರ್ತನೆಗಳನುದಿÀನದಿ ಕೀರ್ತಿಸುತ
ಪಾರ್ಥಸಾರಥೆ ನಿನ್ನ ಪೊಗಳುತ
ರಾತ್ರಿ ಹಗಲೆಡಬಿಡದೆ ಸ್ತುತಿಪರ
ಗಾತ್ರಮರೆಯುತಲವರ ಸೇವಿಪ
ಸಾರ್ಥಕದ ಸೇವೆಯನೆ ನೀಡೈ ೧
ಗೋಕುಲಾಪತಿ ಹರಿಯೆ ಗೋವಿಂದ ನೀ ಕಡಿಯೋ ಬಂಧ
ನೂಕಿ ಉದ್ಧರಿಸೆನ್ನ ಭವದಿಂದ
ಕಾಕುಮತಿಗಳ ಬಿಡಿಸು ದಯದಿಂದ ನೀ ಪೊರೆಯದಿರಲು
ಯಾತಕೀ ನರದೇಹ ಮುಕುಂದ
ಮಾತುಮಾತಿಗೆ ನಿನ್ನ ಸ್ಮರಿಸದ
ಮಾತುಗಳ ಫಲವೇನು ಕೇಶವ
ಮಾತುಳಾಂತಕ ಮದನ ಜನಕ
ಮಾಧವ ಮುರಮರ್ದನ ಹರೇ ೨
ಕರುಣಿಗಳೊಳು ದೇವನಿನಗೆಣೆಯೆ ದಯ ಮಾಡು ಹರಿಯೆ
ಕರಿಯ ಪೊರೆದವನಲ್ಲೆ ನರಹರಿಯೆ
ಕರೆಕರೆಯ ಸಂಸಾರ ಇದು ಖರೆಯ ಇದರೊಳಗೆ ಬಳಲಿದೆ
ಕರೆದು ರಕ್ಷಿಪುದೆಂದು ಮೊರೆ ಇಡುವೆ
ಕಮಲ ಮುಖಿ ಶ್ರೀ ಭೂಮಿ ಸಹಿತದಿ
ಕಮಲನಾಭ ವಿಠ್ಠಲನೆ ಭಕುತರ
ಮಮತೆಯಲಿ ಕೈ ಪಿಡಿದು ಪೊರೆಯುವ
ಮನ್ಮಥನ ಪಿತ ಮನ್ನಿಸುತ ಪೊರೆ ೩

ಕೃಷ್ಣೆಯ ತೀರದ
ಮಹಾಲಕ್ಷ್ಮಿ
೫೦
ದಯಮಾಡಮ್ಮ ದಯಮಾಡಮ್ಮ
ಹಯವದನನ ಪ್ರಿಯೆ ಪ
ವಿನಯದಿಂದ ಬೇಡುವೆನೆ ಕಮಲನೇತ್ರೆಯೆ ಅ.ಪ
ಶಂಬರಾರಿ ಪಿತನ ರಾಣಿ ನಂಬಿಸ್ತುತಿಸುವೆ
ಅಂಬುಜನಾಭನ ಧ್ಯಾನ ಸಂಭ್ರಮ ಎನಗೀಯೆ ೧
ಗೆಜ್ಜೆಪಾದ ಧ್ವನಿಗಳಿಂದ ಮೂರ್ಜಗ ಮೋಹಿಸುತ್ತ
ಸಜ್ಜನರ ಸೇವೆಗೊಳ್ಳುತ ಜನಾರ್ದನನ ಪ್ರೀತೆ ೨
ತ್ರಿಗುಣಾಭಿಮಾನಿಯೆ ನಿನ್ನ ಪೊಗಳುವ ಭಕ್ತರ
ಬಗೆ ಬಗೆ ತಾಪತ್ರಯಗಳ ಕಳೆದುಮಿಗೆ ಸೌಖ್ಯವ ನೀಯೆ ೩
ಪದ್ಮಾಕ್ಷಿಯೆ ಪದ್ಮಸದನೆ ಪದ್ಮಪಾಣಿಯೆ
ಪದ್ಮನಾಭನಗೂಡುತಲಿ ಹೃತ್ಪದ್ಮದಲಿ ಪೊಳೆಯೆ ೪
ಕನಕಾಭರಣಗಳಿಂದಲಿ ಪೊಳೆಯುವ ಕಮಲನೇತ್ರೆಯೆ
ಕಮಲನಾಭವಿಠ್ಠಲನ ಕೂಡಿಕರುಣದಿ ಬಾರೆತಾಯೆ5

೧೦೮
ದಾಸರ ದೂಷಿಪರೊ ಕುಜನರು ಹರಿ-
ದಾಸರ ನಿಂದಿಪರೊ ಪ

ಏಸೇಸು ಜನುಮದ ದೋಷರಾಶಿಗಳೆಲ್ಲ
ನಾಶವಗೈವ ಶ್ರೀಕೇಶವನಣುಗರ ಅ.ಪ
ಮಂದಮತಿಗಳೆಲ್ಲರೂ ಸಜ್ಜನರ
ನಿಂದನೆಯೊಳಗಿಹರೊ
ಮುಂದಿನ ಬವಣೆಗಳೊಂದೆಣಿಸದಲೆ ಮು-
ಕುಂದನ ಭಕುತರ ಸಂದಣಿ ಸೇವಿಪ ೧
ಇಂದಿರೇಶನ ಗುಣವ ಪಾಡುತಲಿ ಆ-
ನಂದದೊಳೋಲ್ಯಾಡುವ
ನಂದಕಂದನ ಲೀಲೆಯಿಂದ ಹಗಲಿರುಳು ಮು-
ಕುಂದನ ಕುಣಿಸುವರೊ ದಣಿಯುವರೊ ೨
ಆರು ಮಂದಿಗಳ ಗೆದ್ದು ಹೃದಯದಲ್ಲಿ ಶ್ರೀ-
ಮಾಧವನನು ಕಾಂಬರ
ಶ್ರೀಧರನಂಘ್ರಿಗಳಾದರದಿಂ ಭಜಿಸಲು
ಸಾಧು ಗುರುಗಳು ಇವರು ಸುಂದರರು ೩
ಸುರಮುನಿವರ ಪ್ರಿಯನ ಭಕ್ತರಿಗೆಲ್ಲ
ವರಗಳ ಕೊಡುತಿಹನ
ಪರಮಪಾವನ ಮೂರುತಿಯನೆ ಕೊಂಡಾಡುತ
ದುರಿತಗಳಳಿಯುವರ ಪಾವನರ ೪
ಕರೆದು ಭಕ್ತರ ಸಲಹುವ ಕರುಣದೊಳು ಮೂ-
ರ್ಜಗದೂಡೆಯನ ಪಾಡುವ
ಪರಮ ಗುರುಗಳ ಮುಖ್ಯ ಕಾರಣವು ಪಡೆದವರು ಶ್ರೀ-ಕಮಲನಾಭ ವಿಠ್ಠಲನೆನ್ನುವರು೫

ವಿಜಯದಾಸರನ್ನು ಕುರಿತ ಸ್ತೋತ್ರವಿದು
ಗುರುಸ್ತುತಿ
೭೬
ದಾಸರ ಭಜಿಸುತ ಕ್ಲೇಶವ ಕಳೆಯಿರೊ
ವಾಸುದೇವನ ಭಕ್ತರಾದ ಶ್ರೀಪುರಂದರ ಪ
ಮೀಸಲ ಮನದಲಿ ಕೇಶವನಡಿಗಳ
ಆಸೆಲಿ ಪೂಜಿಪ ದಾಸರೊಳಗೆ ಶ್ರೇಷ್ಠ ಅ.ಪ
ಪುರಂದರ ಗಡದೊಳು ಹಿರಿಯನೆಂದೆನಿಸಿದ
ವರದಪ್ಪನಿಗೆ ವರಕುವರ ನೆಂದೆನಿಸಿದೀ
ಧರೆಯೊಳು ತನಗ್ಯಾರು ಸರಿಯಿಲ್ಲದಂತೆ ಮೆರೆಯೆ
ಸಿರಿಯರಸನು ಶೀಘ್ರದಲಿ ತಾನರಿಯುತ ೧
ಬಂದನು ಮಗನಿಗೆ ಮುಂಜಿಯೆಂದೆನುತಲಿ
ಚಂದದಿಂದಲಿ ಬೇಡಲು ಧಣಿಯ
ಬಂದೆಯಾತಕೆ ನಮ್ಮ ಚಂದದ ಬೀದಿಲಿ
ಹಿಂದಕೆ ತೆರಳೆನೆ ಬಂದನು ಬಾರಿ ಬಾರಿ ೨
ಹರಿಯೆಂದು ತಿಳಿಯದೆ ಜರಿಯುತ ನುಡಿಯಲು
ಮರಳಿ ಮರಳಿ ಯಾಚಿಸೆ ಬಿಡದೆ
ತೆರಳನು ಈ ವೃದ್ಧ ತೆರಳಿಪೆನೆನುತಲಿ
ಸರಸರ ತೆಗೆಯುತ ಸುರಿದನು ನಾಣ್ಯವ ೩
ನೋಡುತ ಶ್ರೀಹರಿ ಗಾಡದಿ ಕೈನೀಡೆ
ನೀಡಿದ ಸವೆದ ರೊಕ್ಕವ ನೋಡೀ
ಗಾಡನೆ ಬಂದು ನಾಯಕನ ಸತಿಯಳನು
ಬೇಡಿದ ಪುಣ್ಯವು ಬಾಹೋದೆನುತಲಿ ೪
ಏನು ನೀಡಲಿ ಎನಗೇನಿಹುದೆನ್ನಲು
ಮಾನಿನಿ ಮೂಗುತಿ ನೀಡೆಂದೆನಲು
ಶ್ರೀನಿಧಿಗರ್ಪಣೆ ಮಾನಿನಿ ಮಾಡಲು
ಜ್ಞಾನಿಗಳರಸನು ಗಾಡ ಹಿಂತಿರುಗುತ ೫
ಗಾಡನೆ ಮೂಗುತಿ ನೀಡುತ ದ್ರವ್ಯವ
ಬೇಡಲು ಬೇಗದಿ ನೀಡುತ ನುಡಿದನು
ನೋಡುತ ವಡವೆಯ ನೀಡಿದ ಭರಣಿಲಿ
ಓಡುತ ಬಂದು ನೋಡಿದ ಸತಿ ಮುಖವಾ ೬
ಮೂಗುತಿ ಎಲ್ಲೆನೆ ಬೇಗದಿ ನಡುಗುತ
ನಾಗವೇಣಿಯು ಪ್ರಾರ್ಥಿಸಿ ಹರಿಯ
ಆಗ ಕುಡಿವೆ ವಿಷವೆನ್ನುತ ಕರದಲಿ
ನಾಗವಿಷದ ಬಟ್ಲಲಿ ಇರಲು ೭
ತೋರಿದಳಾಗಲೆ ತನ್ನಯ ರಮಣಗೆ
ತೋರದಿರಲು ಮುಂದಿನ ಕಾರ್ಯ
ಭಾರಿ ಆಲೋಚನೆಯ ಮಾಡುತ ಮನದಲಿ
ಸಾರಿದ ತನ್ನ ವ್ಯಾಪಾರದ ಸ್ಥಳಕೆ ೮
ತೆರೆದು ನೋಡಲು ಆ ವಡವೆಯ ಕಾಣದೆ
ಮಿಗೆ ಚಿಂತೆಯು ತಾಳುತ ಮನದಿ
ನಗಧರನ ಬಹು ಬಗೆಯಲಿ ಪೊಗಳುತೆ
ತೆಗೆದ ಅಸ್ಥಿರ ರಾಜ್ಯದಿ ಮನವ ೯
ಕಳವಳ ಪಡುತಲಿ ಆ ಲಲನೆಯ ಸಹಿತದಿ
ತನುಮನ ಧನ ಹರಿಗರ್ಪಿಸುತಾ
ಕ್ಷಣ ಬಿಡದಲೆ ಹರಿ ಚರಣವ ಸ್ಮರಿಸುತ
ಕಮಲನಾಭ ವಿಠ್ಠಲನೆನ್ನುವ ಹರಿ ೧೦

ಭಗವದಪರೋಕ್ಷವನ್ನು ಸಾಧಿಸಲು
೮೯
ದಾಸರ ಮೊರೆ ಲಾಲಿಸೋ ವೆಂಕಟಾಚಲ
ವಾಸ ಬಿನ್ನಪ ಲಾಲಿಸೊ ಪ
ಲೇಸು ಭಕುತಿಯು ಮಾಡದಲೆ ಬಲು
ಘಾಸಿಯಾಗುತ ಮನದಿ ನೊಂದು
ದಾಸನಾಗದೆ ಕ್ಲೇಶಪಟ್ಟೆನೊ
ಈಸುದಿನಗಳ ಕಳೆದೆನೊ ವೃಥಾ೧
ಎಳೆಯ ತಳಿರು ಪೋಲುವ ನಿನ್ನಯ ಪಾದ-
ಕ್ಕೆರಗದೆನ್ನಯ ಸಿರವು
ದಣಿಯನೋಡದೆ ನಿನ್ನನು ಮಹಾಪಾಪ
ಗಳನೆ ಮಾಡುತ ನೊಂದೆನು ೨
ಅನಿಮಿಷೇಶನೆ ನಿನ್ನ ಮಹಿಮೆಯ
ಕ್ಷಣಬಿಡದೆ ಧ್ಯಾನವನೆ ಮಾಡುವ
ಅನಲಸಖತನಯನಿಗೆ ನಮಿಸುವೆ
ಕ್ಷಣ ಬಿಡದೆ ಎನ್ನ ಪೊರೆವ ಕರುಣಿ೩
ಕಟಿಯ ಕಾಂಜಿಯ ದಾಮವು ನವರತ್ನದ
ಸ್ಫ್ಪಟಿಕ ಮುತ್ತಿನ ಹಾರವು
ಲಕುಮಿ ಧರಿಸಿದ ವಕ್ಷ ಕೌಸ್ತುಭಹಾರ
ಸ್ಫುಟದಿ ಶೋಭಿಪ ಉರವು ೪
ವಟುವಿನಂದದಿ ಪ್ರಕಟನಾಗುತ
ಕುಟಿಲ ದಿತಿಜರಿಗಖಿಳ ವಿಧ ಸಂ-
ಕಟಗಳನೆ ಸಂಘಟನೆ ಮಾಡುವ
ನಟನ ತೆರ ವಟಪತ್ರಶಾಯಿ ೫

ನೊಸಲ ಕಸ್ತೂರಿ ತಿಲಕ ರಂಜಿಸುವ ಚಂ-
ಪಕವ ಪೋಲುವ ನಾಸಿಕ
ಎಸೆದು ಶೋಭಿಪ ಮೌಕ್ತಿಕ ಪೋಲುವ ದಂತ
ನಸುನಗುತಿಹ ಹಸನ್ಮುಖ೬
ಶಶಿಯ ಧರಿಸಿದ ಅಸಮ ಭಕುತನು
ನಿಶಿಹಗಲು ತನ್ನ ಸತಿಗೆ ಬೆಸಸಿದ
ಅತಿಶಯದ ಮಹಿಮೆಯನೆ ಕೇಳುವ
ಮತಿಯ ಕೊಡು ಮನ್ಮಥನ ಪಿತನೆ ೭
ಚಿತ್ತದೊಳಗೆ ನಿನ್ನಯ ಪಾದಾಂಬುಜ
ಭಕ್ತಿಯಿಂದಲಿ ಕಾಂಬುವ
ಭಕ್ತಜನರ ವೃಂದವ ಕರುಣದಿ ಕಾಯ್ವ
ವಿಷ್ಣು ಮೂರುತಿ ಕೇಶವ ೮
ಎತ್ತನೋಡಿದರಿಲ್ಲ ನಿನ್ನ ಸಮ
ಉತ್ತಮರ ಕಾಣುವುದೆ ಮಿಥ್ಯವೊ
ಸತ್ಯವಿದು ಪುರುಷೋತ್ತಮನೆ ಎನ್ನ
ಚಿತ್ತದಲಿ ನಲಿನಲಿದು ಶ್ರೀಶ ೯
ಕಮಲಸಂಭವ ಪಿತನೆ ಪ್ರಾರ್ಥಿಸುವೆ ಶ್ರೀ-
ರಮೆಧರೆಯರಿಂ ಸೇವ್ಯನೆ
ಕ್ಷಣಬಿಡದಲೆ ನಿನ್ನನೆ ಚಿಂತನೆ ಮಾಳ್ಪ
ಸುಜನರಿಗೊಲಿಯುವನೆ ೧೦
ಶ್ರವಣ ಮನನಕೆ ಒಲಿವ ದೇವನೆ
ದಿನದಿನದಿ ನಿನ್ನ ಮಹಿಮೆ ತೋರು ಶ್ರೀ-
ಕಮಲನಾಭ ವಿಠ್ಠಲನೆ ಕರುಣದಿ
ಶ್ರಮವ ಹರಿಸುಸುಧಾಮ ಸಖನೆ೧೧

೯೦
ಧನ್ವಂತ್ರಿ ನಿನ್ನ ಸ್ಮರಿಸಿ ಧನ್ಯರಾಗಿಹರ ಪಾದ
ಧ್ಯಾನದೊಳಿರೆಸೆನ್ನ ಧನ್ಯನೆಂದೆನಿಸೊ ಪ
ನಿನ್ನ ದಾಸರ ಕೀರ್ತಿ ನಿನ್ನ ದಾಸರ ವಾರ್ತೆ
ನಿನ್ನ ನಾಮಾಮೃತವು ಎನ್ನ ಕಿವಿ ತುಂಬಿರಲಿ ಅ.ಪ
ನಿನ್ನ ಪಾದದ ಸ್ಮರಣೆಯನ್ನು ಮಾಳ್ಪರ ಸಂಗ
ಇನ್ನು ಪಾಲಿಸು ದೇವನೆ
ಘನ್ನ ಮಹಿಮನೆ ಪರಮ ಪುಣ್ಯಶೀಲರ ಸೇವೆ
ಇನ್ನು ಕರುಣಿಸೊ ಕೇಶವಾ
ಸನ್ನುತಾಂಗನೆ ಭವಭಯವನ್ನು ಬಿಡಿಸೆಂದು ನಾ
ನಿನ್ನ ಮೊರೆಯಿಡುವೆ ಹರಿಯೇ
ಚನ್ನ ಶ್ರೀಗೋಪಾಲ ಗೋವಿಂದ ಕೇಶವ
ನಿನ್ನ ನಾಮನಿರಂತರವು ಪಾ-
ವನ್ನ ಮಾಡಲಿ ಎನ್ನ ಜಿಹ್ವೆಯಾ ೧
ಆದರದಿ ನಿನ್ನ ಸ್ಮರಿಪ ಸಾಧುಜನರ ಸಂಗ
ಭೇದವಿಲ್ಲದೆ ಕರುಣಿಸೊ
ಆದಿ ಮೂರುತಿ ನಿನ್ನ ಆದರದಿ ಸ್ಮರಿಪ ಪರ-
ಮಾದರವ ನಿತ್ತು ಸಲಹೊ
ಸಾಧು ಜನರೊಡಗೂಡಿ ಮೋದ ಪಡುವ ಭಾಗ್ಯ
ಮಾಧವನೆ ದಯಪಾಲಿಸೋ
ಶ್ರೀದ ಶ್ರೀಭೂರಮಣ ಮಾಧವ ಜನಾರ್ದನ
ಕ್ರೋಧಿ ಸಂವತ್ಸರವು ಭಕುತರ
ಕ್ರೋಧಗಳ ಕಳೆಯುತ್ತ ಸಲಹಲಿ೨
ಶರಣೆಂದು ಬೇಡುವೆ ಪರಿಪರಿ ಅಘಗಳ
ಪರಿಹರಿಸೆಂದು ನಾ ಸ್ಮರಿಸಿಬೇಡುವೆನು
ಸರಸಿ ಜೋದ್ಭವಪಿತನೆ ಸರಸಿಜಾಕ್ಷಿಯ ಕೂಡಿ
ಹರುಷದಿ ನೆಲಸೆನ್ನ ಹೃದಯದಲಿ ದೇವ
ಸರಸಿಜನೇತ್ರನೆ ಬಿಡದೆ ನಿನ್ನನು ಸ್ಮರಿಪ
ಕಡುಭಾಗವತರ ಸಂಗವನೆ ನೀಡೈ
ಮೃಡನ ಸಖನೆ ನಿನ್ನಂಘ್ರಿ ಸ್ಮರಿಸುವ ಭಾಗ್ಯ
ತಡೆಯದಲೆ ಪಾಲಿಸುತ ಪೊರೆ ಶ್ರೀ
ಕಮಲನಾಭ ವಿಠ್ಠಲನೆ ದಯದಲಿ ೩

ಶ್ರೀ ಹರಿಗೆ ಮಂಚವಾಗಿ
೧೬
ನವರತ್ನ ಖಚಿತ ಮಾಣಿಕ್ಯದ ಮಂಟಪದಿ
ನವವಿಧದ ಹಂಸತೂಲಿಕ ತಲ್ಪದಲಿ
ಭುವನ ಮೋಹನ ಶ್ರೀ ಹರಿ ಪವಡಿಸಿರಲು
ಕವಿಗಳು ಪೊಗಳಿ ಪಾಡುವರು ಶ್ರೀಹರಿಯೆ
ಏಳಯ್ಯ ಬೆಳಗಾಯಿತು ೧
ನಾಗಶಯನನೆ ಏಳು ನಾಗಾರಿವಾಹನನೆ
ನಾಗಸಂಪಿಗೆ ಪಾರಿಜಾತವರಳುತಿದೆ
ಬೇಗದಲಿ ಭಾಗೀರಥಿ ಉದಕವನೆ ತಂದು
ನಾಗಕನ್ನಿಕೆಯರು ಕಾದು ನಿಂತಿಹರು
ಏಳಯ್ಯ ಬೆಳಗಾಯಿತು2
ಅತ್ರಿ ವಸಿಷ್ಠ ಭಾರದ್ವಾಜ ಗೌತಮರು
ಸುತ್ತೆಲ್ಲ ಋಷಿಗಳು ಸ್ತೋತ್ರವನೆ ಮಾಡುತ್ತ
ಮಿತ್ರೆರುಕ್ಮಿಣಿ ಭಾಮೆರಿಂದ ಸೇವಿಪ ಹರಿಗೆ
ಮುತ್ತಿನಾರತಿ ಪಿಡಿದು ನಿಂದಿಹರು ಹರಿಯೆ
ಏಳಯ್ಯ ಬೆಳಗಾಯಿತು ೩
ಲಕ್ಷ್ಮಿರಮಣನೆ ಏಳು ಪಕ್ಷಿವಾಹನ ಏಳು
ಕುಕ್ಷಿಯೊಳು ಜಗವನಿಂಬಿಟ್ಟವನೆ ಏಳು
ರಕ್ಷ ಶಿಕ್ಷಕ ಜಗದ್ರಕ್ಷಕನೆ ನೀ ಏಳು
ಈಕ್ಷಿಸಿ ಭಜಕರನುದ್ದರಿಸಲೇಳು
ಏಳಯ್ಯ ಬೆಳಗಾಯಿತು ೪
ಕಮಲ ಮಲ್ಲಿಗೆ ಜಾಜಿ ಕುಸುಮ ಮಾಲೆಗಳನ್ನು
ಕಮಲಾಕ್ಷಿಗರ್ಪಿಸುತ ಹರುಷದಿಂದ
ಕಮಲನಾಭ ವಿಠ್ಠಲ ಸಲಹು ಸಲಹೆಂದೆನುತ
ಕಮಲಭವೇಂದ್ರಾದಿಗಳು ಸ್ತುತಿಸುವರು ಹರಿಯೆ
ಏಳಯ್ಯ ಬೆಳಗಾಯಿತು ೫
ಏಳು ಧೃವವರರೂಪ ಏಳು ನರಹರಿರೂಪ
ಏಳು ನಗಧರ ರೂಪ ಏಳಯ್ಯ ಹರಿಯೆಏಳಯ್ಯ ಬೆಳಗಾಯಿತು

ಈ ಕೀರ್ತನೆಯೂ ಶೇಷದೇವರನ್ನು
೧೭
ನಾನೆಲ್ಲ್ಲು ಪೋಗಲಿಲ್ಲ ನಾರಿಯರೆನ್ನ
ದೂರುವರಿದ ನೋಡಮ್ಮ ಪ
ವಾರಿಗೆಯ ಗೆಳತಿಯರು ಸೇರುತ
ಕೂಡಿ ಮಾತುಗಳಾಡಿ ನಗುವರು
ಚಾಡಿ ಮಾತುಗಳ್ಹೇಳ ಬರುವರು
ಕೇಳಿ ಮನದಲಿ ಕೋಪಿಸದಿರು ಅ.ಪ
ಬ್ರಹ್ಮನ ಪಿತನೆಂಬೊರೊ ಎನ್ನನು ಪುಟ್ಟ
ಸಣ್ಣ ಕೂಸೆಂದರಿಯರೆ
ಬ್ರಹ್ಮಾಂಡೋದರನೆಂಬೋರೇ ಕೇಳಮ್ಮಯ್ಯ
ಸಣ್ಣುದುರನೆಂದರಿಯರೆ
ಬೆಣ್ಣೆ ಕಳ್ಳನು ಸಣ್ಣವನು ಎಂದು
ಕಣ್ಣು ಸನ್ನೆಗೆ ಚಂದ ನಗುವರು
ಚಿನ್ನನೆಂದು ಮುದ್ದಿಸುವರೆನ್ನುತ
ಕನ್ಯೆಯರು ಅಪಹಾಸ್ಯ ಮಾಳ್ಪರು ೧
ನೀರ ಪೊಕ್ಕವನೆಂಬೋರೆ ವೇದ ತಂದಿತ್ತ
ನಾರುವ ಮಯ್ಯವನೆಂಬೋರೇ
ಭಾರ ಪೊತ್ತವನೆಂಬೋರೇ ಮೋರೆ ತಗ್ಗಿಸಿದ
ಘೋರರೂಪನು ಎಂಬೋರೇ
ಕೋರೆ ದಾಡಿಯ ನೆಗಹಿ ಧರಣಿಯ
ಶೂರ ಹಿರಣ್ಯಾಕ್ಷಕನ ಸೀಳಿದ
ಕ್ರೂರ ರೂಪವ ಧರಿಸಿ ಕರುಳಿನ
ಮಾಲೆ ಹಾಕಿದ ಧೀರನೆಂಬೋರು ೨
ಮೂರು ಪಾದದ ಭೂಮಿಯ ಬೇಡಲು ಬ್ರಹ್ಮ-
ಚಾರಿಯಾದನು ಎಂಬೋರೇ
ಮೂರು ಏಳೆನಿಸಿಕೊಂಡು ಧರಣಿಯ ಸುತ್ತಿದ
ಧೀರ ರಾಮನು ಎಂಬೋರೇ
ನಾರು ವಸ್ತ್ರವ ಧರಿಸಿ ವನ ವನ ಸೇರಿ
ವಾನರರೊಡನೆ ಚರಿಸಿದ
ನಾರಿಯರ ವಸ್ತ್ರಗಳ ಕದ್ದ ನವ-
ನೀತ ಚೋರನೆಂದೆನಿಸುತ ನಗುವರು ೩
ಬತ್ತಲಿರುವನೆಂಬೋರೇ ತ್ರಿಪುರಗೆದ್ದ
ಉತ್ತಮ ಹರಿ ಎಂಬೋರೇ
ಉತ್ತುಮಾಶ್ವವನೇರುತ ಧರೆಯಲಿ ಮೆರೆದ
ಮತ್ತೆ ರಾವುತನೆಂಬೋರೇ
ಹತ್ತು ವಿಧದಲಿ ಅವತರಿಸಿ ನಿಜ
ಭಕ್ತರನು ರಕ್ಷಿಸಿದೆನೆಂಬೋರು
ಮುಕ್ತಿದಾಯಕ ಹರಿಗೆ ಸಮರು
ಅಧಿಕರ್ಯಾರಿಲ್ಲೆನುತ ನಗುವರು ೪
ಮುದ್ದು ಮಾತಗಳ ಕೇಳಿ ಸಂಭ್ರಮದಿಂದ
ಎದ್ದು ಮಗನನಪ್ಪುತ
ಶ್ರದ್ಧೆಯಿಂದಲಿ ನೋಡುವ ತೊಡೆಯಲಿಟ್ಟು
ಮುದ್ದಿಸಿ ನಸುನಗುತಾ
ಪದ್ಮನಾಭ ಶ್ರೀ ಕಮಲನಾಭನ ವಿ-
ಠ್ಠಲನ ಮುಡಿನೇವರಿಸಿ ಹರುಷದಿ
ತಿದ್ದುತಲಿ ಮುಂಗುರಳು ನಗುಮುಖ
ಮುದ್ದಿಸುತ ಮುದದಿಂದ ನಲಿವಳು ೫
ಲಾಲಿಸಿದಳು ಮಗನ ಗೋಪೀದೇವಿಲಾಲಿಸಿದಳು ಮಗನ

ನೀರಿನ ಅಗತ್ಯ ಎಷ್ಟಿದೆ, ಅದರ ಮಹತ್ತ್ವ
೧೬೮
ನೀರಿನಿಂದಲೆ ಸರ್ವಫಲ ಬಾಹೋದು
ನೀರಜಾಕ್ಷನ ಸೇವೆ ಮಾಳ್ಪ ಸುಜನರಿಗೆ ಪ
ನೀರಿಲ್ಲದಲೆ ಯಾವ ಸಾಧನವು ನಡೆಯದು
ನೀರಿಲ್ಲದಲ ಯಾಗ ತಪಸ್ಸು ನಿಲ್ಲುವದು
ನೀರಿಲ್ಲದಲೆ ಸ್ನಾನ ಆಚಾರಹೀನವು
ನೀರಿಲ್ಲದಲೆ ದೇವತಾರ್ಚನೆಯು ಇಲ್ಲವು ೧
ನೀರೆಂದರೆ ಬರಿಯ ಜಡವಾದ ನೀರಲ್ಲ
ನೀರಜಾಕ್ಷನು ಜಲದಿ ವಾಸವಾಗಿಹನು
ವಾರಿಜಾಸನ ಮುಖ್ಯ ಸುರರೆಲ್ಲ ಹರುಷದಲಿ
ನೀರಮಧ್ಯದೊಳಿರುವ ಹರಿಯಧ್ಯಾನಿಪರೆಲ್ಲ೨
ಉದಯಕಾಲದಿ ಮುಖವ ತೊಳೆಯೆ ಜಲವಿರಬೇಕು
ಮಧುಸೂದನನ ಮನೆಯ ಸಾರಿಸಲು ಜಲಬೇಕು
ಹೃದಯ ಶುದ್ಧದಿ ಸ್ನಾನ ಮಾಡೆ ಜಲವಿರಬೇಕು
ಮುದದಿ ಮಡಿಯುಡುವುದಕೆ ಉದಕವಿರಬೇಕು೩
ಮೃತ್ತಿಕಾಶೌಚಕ್ಕೆ ಅಗತ್ಯಜಲವಿರಬೇಕು
ನಿತ್ಯ ಗೋಸೇವೆಗೆ ಉದಕಬೇಕು
ಮತ್ತೆ ಶ್ರೀ ತುಳಸಿಗೆರೆಯಲು ಉದಕವಿರಬೇಕು
ಮತ್ತೆ ಹರಿಪೂಜೆಗಗ್ರೋದಕವು ಬೇಕು೪
ಸಚ್ಚಿದಾನಂದನ ಅಭಿಷೇಕಕ್ಕೆ ಜಲಬೇಕು
ಮತ್ತೆ ಪಾಕವು ಮಾಡೆ ಜಲವುಬೇಕು
ನಿತ್ಯ ತೃಪ್ತನ ನೈವೇದ್ಯಕ್ಕೆ ಜಲವು ಬೇಕು
ಅರ್ತಿಯಿಂದ ಅತಿಥಿ ಪೂಜೆಗೆ ಉದಕಬೇಕು ೫
ಉತ್ತಮರು ಮನೆಗೆ ಬಂದರೆ ಪಾದ ತೊಳಿಬೇಕು
ಮತ್ತೆ ಅವರಿಗೆ ಸ್ನಾನಕಣಿ ಮಾಡಬೇಕು
ಸುತ್ತ ಬೆಳೆÀಗಳಿಗೆಲ್ಲ ಮತ್ತೆ ನೀರಿರಬೇಕು
ಸತ್ಯ ಮೂರುತಿ ಪಾದದಂಗುಷ್ಟದಲಿ ಜನಿಸಿದ೬
ಹಸುಮಕ್ಕಳಿಗೆ ನಿತ್ಯ ಎರೆಯೆ ನೀರಿರಬೇಕು
ಕುಸುಮ ಪುಷ್ಪದ ಗಿಡಕೆ ನೀರುಬೇಕು
ವಸುದೇವಸುತನ ತೆಪ್ಪೋತ್ಸವಕೆ ಜಲಬೇಕು
ಎಸೆವ ಕದಲಾರತಿಗೆ ಉದಕಬೇಕು ೭
ನೀರಿನೊಳು ಹಾವಿನ ಮೇಲೆ ಮಲಗಿದ ಹರಿಯ
ನಾಭಿನಾಳದ ತುದಿಯಲಿರುವ ಕಮಲದಲಿ
ನೀರಜಾಸನನ ಪಡೆದಿರುವ ಮಹಿಮೆಯ ಕೇಳಿ
ನೀರಿನಲಿ ಹರಿಯ ಅವತಾರ ರೂಪಗಳುಂಟು೮
ನೀರಿನೊಳು ವಾರುಣಿಯಪತಿಯ ಶಯ್ಯದೊಳಿಹನು
ನೀರಿನೊಳು ಮುಳುಗಿ ವೇದವ ತಂದನು
ನೀರಿನೊಳು ಮುಳುಗಿ ಭಾರವ ಪೊತ್ತು ನಿಂತನು
ನೀರಜಾಕ್ಷನು ನಾರಬೇರ ಮೆದ್ದಿಹನು ೯
ನೀರಜೋದ್ಭವಪಿತನು ಕ್ರೂರರೂಪವ ತಾಳ್ದ
ನೀರೆ ಅದಿತಿಯ ಪುತ್ರನಾಗಿ ನಿಂತ
ನೀರಜಾಕ್ಷನು ಪರಶುವಿಡಿದು ಸಂಚರಿಸಿದನು
ನೀರೆಗೋಸುಗ ಸಾಗರಕ ಸೇತುವೆಯ ಕಟ್ಟಿದನು೧೦
ನೀರಿನೊಳು ಗಜದ ಶಾಪವ ಕಳೆದು ಪೊರೆದನು
ನೀರೆ ದ್ರೌಪದಿಯ ಅಭಿಮಾನವನು ಕಾಯ್ದ
ನೀರ ಮಧ್ಯದಿ ದ್ವಾರಕಾಪುರವ ರಚಿಸಿದನು
ನೀರಜಾಕ್ಷಿಯರ ಕೂಡಿ ನೀರೊಳಗೆ ಆಡಿದನು ೧೧
ಕಮಲಾಕ್ಷಿ ಪುಟ್ಟಿರುವ ಕಮಲ ಜಲದಲ್ಲಿಹುದು
ಕಮಲನಾಭ ವಿಠ್ಠಲ ಜಲದೊಳೋಲ್ಯಾಡುವ
ಶ್ರಮವ ಪರಿಹರಿಪ ಚಂದ್ರನು ಜಲದಿ ಪುಟ್ಟಿಹನು
ಕಾಮಧೇನು ಐರಾವತವು ಪುಟ್ಟಿದ ಜಲವಯ್ಯ ೧೨

೧೮
ನೂತನಕೆ ನೂತನ ಬಲು ನೂತನ
ಶೇಷಗಿರಿವಾಸ ನಿನ್ನ ಮಹಿಮೆ ನೂತನವು ಪ
ಮಾಡದನೆ ಮಾಡಿಸುವಿ ನೋಡದನೆ ನೋಡಿಸುವಿ
ಬೇಡದಿದ್ದುದನೆಲ್ಲ ಕಾಡಿ ಬೇಡಿಸುವಿ
ನಾಡೊಳಗೆ ನಿನ್ನ ಪೋಲುವರುಂಟೆ ಸರ್ವೇಶ
ಮೂಡಲಗಿರಿವಾಸ ನಿನ್ನ ಮಹಿಮೆ ನೂತನವು ೧
ಅಣುಮೇರು ಮಾಡಿಸುವಿ ಘನತೃಣವ ಮಾಡಿಸುವಿ
ಘನ ಕೃಪಾಂಬುಧಿ ನಿನ್ನ ಮಹಿಮೆ ನೂತನವೊ
ಅಣಕವಾಡುವರಲ್ಲಿ ಕುಣಿಸಿ ಮರೆಸುತಲಿರುವಿ
ಫಣಿಶಾಯಿ ನಿನ್ನ ಮಹಿಮೆ ಪ್ರತಿಕ್ಷಣಕೆ ನೂತನವು2
ಕಮಲಸಂಭವ ಪಿತನೆ ಕಮಲಜಾತೆಯ ರಮಣ
ವಿಮಲ ಮುನಿಗಳ ಹೃದಯ ಕಮಲ ಶೋಭಿತನೆ
ಕಮಲದಳನೇತ್ರನೆ ಕಮಲನಾಭ ವಿಠ್ಠಲ
ಕಮನೀಯ ರೂಪ ನಿನ್ನ ಮಹಿಮೆ ನೂತನವೊ3

ಭಗವದಪರೋಕ್ಷವನ್ನು ಸಾಧಿಸಲು
೯೧
ನೊಂದು ಬಳಲಿದೆ ದೇವ ಇಂದಿರೇಶ ಸರ್ವೇಶ ಶ್ರೀಶ
ತಂದೆ ರಕ್ಷಿಸಿ ಸಲಹೊ ಶ್ರೀನಿವಾಸ ಪ
ಕಂದರ್ಪಜನಕ ಕಾರುಣ್ಯವಾರಿಧಿ ದೇವ
ಮಂದರೋದ್ಧಾರಿ ಕಂಸಾರಿ ಶ್ರೀಹರಿ ಶೌರಿ ಅ.ಪ
ಸ್ನಾನಜಪತಪವ ನೇಮಗಳ ಬಿಟ್ಟೆ
ಮೌನವನು ಬಿಟ್ಟೆ ದಾನಧರ್ಮವ ಕೊಡದೆ ಕೈಬಿಟ್ಟೆ
ಶ್ರೀನಿವಾಸನ ಪೂಜೆನೇಮ ನಿಷ್ಠೆ ಮಾಡದಲೆ ಬಿಟ್ಟೆ
ಶ್ವಾನ ಸೂಕರನಂತೆ ಹೊರೆದೆ ಹೊಟ್ಟೆ
ಏನ ಪೇಳಲಿ ಪರರ ದ್ರವ್ಯಪಹರಿಸುತಿಹ
ಹೀನ ಜನರ ಸಂಗಮಾಡಿ ಬಳಲಿ ಬರಿದೆ ೧
ಹಿಂದಿನ ಪಾಪ ದುಷ್ಕರ್ಮ ಫಲವೋ ಇದು ನಿನ್ನ ಒಲವೊ
ಸುಂದರಾಂಗನೆ ರಕ್ಷಿಸೆನ್ನ ಸಲಹೊ
ಬಂಧನದ ಬಹಳ ಭವ ಕರೆ ಕರೆಯೋ ಭವಬಂಧ ಸೆರೆಯೊ
ಇಂದಿರಾರಮಣ ಬಿಡಿಸೆನ್ನ ಪೊರೆಯೊ
ಹಿಂದೆ ಮುಂದೆನಗೆ ಗತಿ ನೀನೆಂದು ನಂಬಿದೆ ದೇವ
ಮಂದರೋದ್ಧಾರಿ ಮುಚುಕುಂದ ವರದನೆ ಸ್ವಾಮಿ ೨
ಶ್ರಮವ ಪರಿಹರಿಸಿ ಉದ್ಧರಿಸೊ ಜೀಯಾ
ಬಿಡುತಿಹೆನು ಬಾಯ
ಸುಮನಸರವೊಡೆಯ ಬಿಡು ನಿನ್ನ ಮಾಯ
ಕಮಲಸಂಭವ ಜನಕ ಬಿಡದೆ ಕಯ್ಯ ಪೊರೆಯುವದು ಶ್ರೇಯ
ಕಮಲಾಕ್ಷ ನಮಿಸಿ ಮುಗಿಯುವೆನು ಕಯ್ಯ
ಕಮಲ ಪತ್ರಾಕ್ಷ ಸುಜನರ ಕಲ್ಪತರುವೆ ಹೃ-
ತ್ಕಮಲದಿ ಪೊಳೆವ ಶ್ರೀ ಕಮಲನಾಭ ವಿಠ್ಠಲ ೩

ರಕ್ಷೆಗಳನಿತ್ತರು :ಸಣ್ಣ ಮಕ್ಕಳಿಗೆ ದೃಷ್ಟಿಯಾಗಬಾರದೆಂದು
೧೨೬
ಪತಿಮಂದಿರದಲಿ ನೀ ಸುಖವಾಗಿ ಬಾಳು ನಿನ್ನ
ಪತಿಗಹಿತಕರ ಸಂಗ ತ್ಯಜಿಸಮ್ಮ ಮಗಳೆ ಪ
ಉದಯ ಪೂರ್ವಕೆ ಎದ್ದು ಹರಿಯ ಸ್ಮರಣೆಯ ಮಾಡು
ಮುದದಿ ಗುರುಹಿರಿಯರಿಗೆ ವಂದನೆಯ ಮಾಡು
ಮದನನಯ್ಯನ ಭಜಕರನು ಕಂಡು ನಲಿದಾಡು
ಪದುಮನಾಭಗೆ ಪಟ್ಟದರಸಿಯಾಗಮ್ಮ೧
ರತ್ನಾಕರನು ತಂದೆ ಎನುತ ಗರ್ವಿಸಬೇಡ
ಮತ್ತೆನಗೆ ಸರಿಯಾರು ಎಂದೆನಲು ಬೇಡ
ಚಿತ್ತಜನಯ್ಯನ ಮನವರಿತು ನಡೆಯಮ್ಮ
ಹೊತ್ತು ಹೊತ್ತಿಗೆ ಪತಿಯ ಸೇವೆ ನಿರತಳಾಗಿ೨
ಬಿಟ್ಟಕಂಗಳು ಮುಚ್ಚದವನು ಎಂದೆನಬೇಡ
ಬೆಟ್ಟ ಬೆನ್ನಿಲಿ ಪೊತ್ತನೆನಲು ಬೇಡ
ಗಟ್ಟಿ ನೆಲವನು ಕೆದರಿ ಅಲಸಿದನೆನಬೇಡ
ಹೊಟ್ಟೆಯ ಕರುಳನು ಬಗೆದವ ನೆನೆಬೇಡ ೩
ಕಡುಲೋಭಿದಾನ ಬೇಡಿದನು ಎಂದೆನಬೇಡ
ಪೊಡವಿಪಾಲಕರ ಕೆಡಹಿದನು ಎನಬೇಡ
ಮಡದಿಯ ತಂದ ಕಪಿವಡೆಯನು ಎನಬೇಡ
ತುಡುಗತನದಿ ಪಾಲ್ಬೆಣ್ಣೆ ಚೋರನೆಂದೆನಬೇಡ ೪
ಉಡಿಗೆ ಉಡದ ಮಾನಗೇಡಿ ಇವನೆನಬೇಡ
ತುಡಗತನದಿ ರಾಹುತನಾದನೆನಬೇಡ
ಕಡಲಶಯನ ಕಮಲನಾಭ ವಿಠ್ಠಲನ ಗುಣ
ಒಡೆದು ಪೇಳದೆ ಗುಟ್ಟಾಗಡಗಿಸಿ ನಡೆಯಮ್ಮ ೫

ಹಯಮುಖ, ಹಯಗ್ರೀ
೧೨೭
ಪತಿಯ ಮಂದಿರದಲಿ ಸುಖವಾಗಿ ಬಾಳಮ್ಮ
ಮತಿವಂತೆ ಎನಿಸಿ ಸನ್ಮತಿ ಪಡೆದು ಪ
ಚತುರಳೆ ನಿನ್ನ ಸಖಿಯರೆಲ್ಲರು
ಅತಿಶಯದಿ ನಿನ್ನ ಪತಿಯ ಗುಣಗಾನ
ಕಥನ ಮಾಡುತ ನಿನ್ನೆದುರಿನಲಿ
ಸ್ತುತಿಸಿ ಹಿಗ್ಗಿ ಪೊಗಳುವರೆ ಪಾರ್ವತಿ ಅ.ಪ
ವಸತಿ ಇಲ್ಲದೆ ಸ್ಮಶಾನದಲಿ ವಾಸಿಪನೆಂದು
ಅಪಹಾಸ್ಯ ಮಾಡುವರೆ
ವಸನ ಪೀತಾಂಬರವನುಡುವುದನರಿಯದೆ
ಹಸಿಯ ಚರ್ಮವನುಡುತಿಹನೆಂಬರೆ
ಅಸನಕಿಲ್ಲದೆಗರಳ ವಿಷವನುಂಬುವನೆಂದು
ಗುಸುಗುಸು ನುಡಿಯುವರೆ
ಅಸಮನೇತ್ರನು ಭಸುಮ ಲೇಪಿಸಿ
ವೃಷಭರಾಜನ ಏರಿ ಬರುವನು
ಶಶಿಮುಖಿಯೆ ನೀನರಿಯದಲೆ ಈ
ಪಶುಪತಿಗೆ ಸತಿಯಾದೆ ಎಂಬರು ೧
ಸರಿಸವತಿಯ ತನ್ನ ಸಿರಮೇಲಿರಿಸಿದಿ
ಗಿರಿಜೆ ತರವಲ್ಲ ಕೇಳೆ
ಪರಿಪರಿ ರತ್ನಾಭರಣಂಗಳರಿಯದೆ
ಉರಗಗಳ ಭೂಷಿತನಾದ ನಮ್ಮ
ಗÀರಳ ಕಂಠನಿಗೆ ನೀನರಿಯದೆ ಸತಿಯಾದೆ ಎಂದು
ತರಳರೆಲ್ಲರು ಹಾಸ್ಯ ಮಾಡುವರೆ
ಸರಸವಾಡುತ ನೋಡು ಕಂಠದಿ
ಸಿರದ ಮಾಲೆಯ ಧರಿಸಿಕೊಂಡಿಹ
ಪರಮ ಆಶ್ಚರ್ಯದಲಿ ನಾವೆಲ್ಲ
ಅರುಹಲೀಗ ಬಂದಿಹೆವು ಎನುವರು ೨
ಅಂದು ಮೋಹಿನಿ ರೂಪವ ಕಂಡು
ಪರಶಿವನು ಇನ್ನೊಮ್ಮೆ ನೋಡಲು ಬೇಡೆ
ಪರಮಾತ್ಮನಾ ಸುಂದರಾಕೃತಿಯ
ನೋಡುತ ಪಿಡಿಯಲು ಪೋಗಿ
ನಂದ ಕಂದನ ರೂಪ ನೋಡಿದನು
ಹಿಂದೆ ಮೂಕಾಸುರನೆಂಬ ದೈತ್ಯನ ಕೊಲಿಸಿದ
ಇಂದಿರೇಶನಿಗೆ ಸೇವಕನಾದ ಶಿವನು
ಮಂದಗಮನೆ ಉಮೆ ಇಂದು ಶಿವನನು
ನಿಂದಿಸಿದೆವೆಂದೆನಲು ಬೇಡ ಶ್ರೀ-
ತಂದೆ ಕಮಲನಾಭ ವಿಠ್ಠಲನ
ಚಂದದಲಿ ಭಜಿಸುವನು ಎನುವರು೩

ಭಗವದಪರೋಕ್ಷವನ್ನು ಸಾಧಿಸಲು
೯೨
ಪದ್ಮನಾಭ ಮುದ್ದು ಪದ್ಮನಾಭ
ಉದ್ಧರಿಸು ನಮ್ಮ ಸಿರಿ ಪದ್ಮನಾಭ ಪ
ನಾನಾಯೋನಿಗಳಲ್ಲಿ ಜನಿಸಿ ಪದ್ಮನಾಭ
ನಾನಾಕ್ಲೇಶಗಳಿಂದ ಬಳಲಿ ಪದ್ಮನಾಭ
ನಾ ನಿನ್ನನು ಸ್ಮರಿಸದ್ಹೋದೆ ಪದ್ಮನಾಭ
ನಾನೆಂಬ ದುರ್ಮತಿಯ ಬಿಡಿಸೊ ಪದ್ಮನಾಭ ೧
ತಂದೆತಾಯಿಬಂಧು ನೀನೆ ಪದ್ಮನಾಭ ನಿನ್ನ
ನಂಬಿದ ಭಕ್ತರೊಳಿರಿಸಿ ಪದ್ಮನಾಭ
ಅಂಬುಜಾಕ್ಷ ಸಲಹಬೇಕೊ ಪದ್ಮನಾಭ ಪೀ-
ತಾಂಬರಧಾರಿಯೆ ಸಲಹೊ ಪದ್ಮನಾಭ ೨
ಪಾಪಿಯೆಂದು ನೂಕದಿರು ಪದ್ಮನಾಭ ಅ-
ನೇಕಪಾಪಗಳಿಗೆ ಪಾವಕ ಪದ್ಮನಾಭ
ಶ್ರೀಕಾಂತನೀ ಸಲಹಬೇಕೊ ಪದ್ಮನಾಭ
ಏಕಾಂತ ಭಕ್ತರ ಪೊರೆದೆ ಪದ್ಮನಾಭ ೩
ಹಿಂದೆ ನಿನ್ನ ಭಕ್ತರೆಲ್ಲ ಪದ್ಮನಾಭ ಗೋ-
ವಿಂದ ರಕ್ಷಿಸೆಂದು ಸ್ಮರಿಸೆ ಪದ್ಮನಾಭ
ಬಂದು ಅವರ ಸಲಹಿದೆಯೊ ಪದ್ಮನಾಭ ಮು-
ಕುಂದ ನಿನ್ನ ಮೊರೆಯ ಹೊಕ್ಕೆ ಪದ್ಮನಾಭ ೪
ಮಡುವಿನಲ್ಲಿ ಗಜವ ಕಾಯ್ದೆ ಪದ್ಮನಾಭ
ದೃಢ ಪ್ರಹ್ಲಾದಗೆ ಅಭಯವಿತ್ತೆ ಪದ್ಮನಾಭ
ಮಡದಿ ನುಡಿಯ ಕೇಳಿ ತ್ವರದಿ ಪದ್ಮನಾಭ
ಅಡವಿಯಲ್ಲಿ ಅಭಿಮಾನವ ಕಾಯ್ದೆ ಪದ್ಮನಾಭ೫
ವಂದಿಪೆ ಮುಚುಕುಂದ ವರದ ಪದ್ಮನಾಭ
ವಂದಿಪೆ ಗಜರಾಜ ವರದ ಪದ್ಮನಾಭ
ವಂದಿಪೆ ಉರಗಾದ್ರಿವಾಸ ಪದ್ಮನಾಭ
ಇಂದಿರೇಶ ಸ್ತುತಿಪದೇವ ಪದ್ಮನಾಭ ೬
ಕರುಣಿಗಳರಸನೆ ಕಾಯೋ ಪದ್ಮನಾಭ ಶ್ರಮ
ಪರಿಹರಿಸು ನಮಿಪೆ ದೇವ ಪದ್ಮನಾಭ
ಕಮಲ ಸಂಭವನನ್ನು ಪಡೆದ ಪದ್ಮನಾಭಕಮಲನಾಭ ವಿಠ್ಠಲ ಕಾಯೋ ಪದ್ಮನಾಭ೭

ರತ್ನಾಕರನು ತಂದೆ : ರತ್ನಾಕರ
೧೨೮
ಪರಮಾನಂದದಿ ಸರಸಿಜಾಕ್ಷಿಯರೆಲ್ಲ
ಪರಮ ಪುರುಷನಿಗಾರತಿ ಎತ್ತುತ ಪ
ಕರಿವರ ವರದನ ಸ್ಮರಿಸುತ ಸಂತತ
ನವರತ್ನದಾರತಿ ಬೆಳಗಿದರುಅ.ಪ
ಗೋಪಿಕಾಲೋಲನಿಗೆ ಗೋಪಾಲಕೃಷ್ಣಗೆ
ಗೋವರ್ಧನೋದ್ಧಾರ ಗೋವಿಂದಗೆ
ಗೋಪಸ್ತ್ರೀಯರ ಕೂಡ್ಯಾಡಿದ ಹರಿಗೆ
ಗೋಪಿಬಾಲನಿಗೆ ಎತ್ತಿದರಾರತಿ೧
ನಂದಕುಮಾರಗೆ ನವನೀತ ಚೋರಗೆ
ಬೃಂದಾವನದಿ ವಿರಾಜಿಪಗೆ
ಚಂದಿರವದನಗೆ ಇಂದಿರೆ ಸಹಿತಗೆ
ಕುಂದಣದಾರತಿ ಬೆಳಗಿದರು೨
ಕಮಲದಳಾಕ್ಷಗೆ ಕಮಲಮುಖಿಯರೆಲ್ಲ
ಕಮಲ ಮುತ್ತಿನ ಆರತಿ ಪಿಡಿದು
ಕಮಲನಾಭ ವಿಠ್ಠಲನ ಪಾಡಿ ಹರುಷದಿ
ಕಮಲಾಕ್ಷಿಯರು ಶೋಭನ ಪಾಡುತ್ತ ೩

ಗರುಡ, ಶೇಷ, ರುದ್ರರು
೧೯
ಪವಡಿಸು ಪರಮಾತ್ಮಾ ಶ್ರೀ ಶ್ರೀಶಾ
ಪವಡಿಸು ಪರಮಾತ್ಮಾ ಪ
ಪರಮ ಭಕ್ತರನು ಪೊರೆಯುವ ದೇವನೆ ಅ.ಪ
ರನ್ನಮಂಟಪದೊಳು ಕನ್ನಡಿಯಂದದಿ
ಸ್ವರ್ಣವರ್ಣದಲಿಹ ಪನ್ನಂಗ ಕಾದಿಹ ೧
ಸುತ್ತಲು ತುಂಬುರರು ನಾರದರು ಸ್ತೋತ್ರವ ಮಾಡಿ
ಅತ್ಯಂತ ಹರುಷದಿ ಚಿತ್ತೈಸೆಂದೆನುವರು2
ಥಳಥಳಿಸುವ ದಿವ್ಯತಾರೆಗಳಂದದಿ
ಲಲನೆ ಶ್ರೀ ಭೂದೇವಿಯರು ಸೇವಿಪರು ನಿನ್ನ3
ವೇದವ ಕದ್ದನ ಭೇದಿಸಿ ಅಜನಿಗೆ
ವೇದವ ತಂದಿತ್ತು ಆದರಿಸಿದ ದೇವ ೪
ಮುಳುಗಿದ ಗಿರಿಯನು ಧರಿಸಿ ಬೆನ್ನಲಿ ಬೇಗ
ಸುರರಿಗೆ ಅಮೃತವ ಕುಡಿಸಿದ ಮಾಧವ ೫
ಸುರಮುನಿಗಳಿಗೆಲ್ಲಾ ಅಭಯವ ನೀಡುತ
ವರಹ ರೂಪ ತಾಳಿ ಬಳಲಿ ದಣಿದು ಬಂದಿ ೬
ಕಂದನಿಗಾಗಿ ದೊಡ್ಡ ಕಂಬದಿಂದುದಿಸಿ ಖಳನ
ಕೊಂದು ಕರುಳ ವನಮಾಲೆ ಧರಿಸಿ ದಣಿದಿ7
ಮೂರಡಿ ಭೂಮಿಯ ಬೇಡಿ ಬಲೀಂದ್ರನ
ದೂಡಿ ಪಾತಾಳಕೆ ಬಹಳ ಬಳಲಿ ಬಂದಿ ೮
ಭೂಮಿ ಪಾಲಕರನ್ನು ಸೋಲಿಸಿ ಬಾರಿ ಬಾರಿ
ವಾರಿಜಾಕ್ಷ ಶ್ರೀರಾಮರಿಗೊಲಿದೆಯೊ ೯
ಸೇತುವೆಯನ್ನು ಕಟ್ಟಿ ದೂರ್ತರಾವಣನ ಕುಲವ
ಘಾತಿಸಿ ಕೊಂದ ರಘುನಾಥನೆ ಬಳಲಿದೆ ೧೦
ವಸುದೇವ ಕಂದನೆ ಶಿಶುರೂಪಿನಿಂದಲಿ
ಅಸುರೆ ಪೂತಣಿ ಅಸುಹೀರಿ ಬಳಲಿ ಬಂದಿ ೧೧
ತಿದ್ದಿ ತ್ರಿಪುರಾಸುರರ ಮರ್ದಿಸಿ ಸುಜನರಿಗೆ
ಮುದ್ದು ತೋರಿದ ಸುಪ್ರಸಿದ್ಧ ಮೂರುತಿ ಬೇಗ ೧೨
ಕರದಿ ಖಡ್ಗವ ಧರಿಸಿ ಸಿರದಿ ಕಿರೀಟ ಹೊಳೆಯೆ
ಇಳೆಯ ಮನುಜರಿಗೆಲ್ಲ ಸುಲಭನಂದದಿ ತೋರ್ಪಿ ೧೩
ಮಂಗಳಚರಿತ ವಿಹಂಗವಾಹನ ಸುರ
ಗಂಗೆಯಪಿತ ಸಾಧುಸಂಗವಂದಿತ ದೇವ ೧೪
ಗರುಡಗಮನ ಕೃಷ್ಣ ಉರಗನ್ಹಾಸಿಗೆಯೊಳು
ಸಿರಿದೇವಿ ಸಹವರ ಕಮಲನಾಭ ವಿಠ್ಠಲ ೧೫

ಅಸುರೆ ಪೂತನಿಯ ಸಂಹರಿಸಿ :ನೋಡಿ
ಯುಗಾದಿಯಂದು ರಚಿತವಾದ
ಹಾಡುಗಳು
೧೪೩
ಪವನಾಂತರ್ಗತ ಹರಿಯ ಸ್ಮರಣೆಯಮಾಡಿ ಪ
ವಿವಿಧ ಭಕುತರು ಕೂಡಿ ಹರುಷದಿ
ಪ್ಲವನಾಮ ಸಂವತ್ಸರದಲಿ
ಸವಿನಯದಿ ಭಜನೆಗಳ ಮಾಳ್ಪರು
ಹರಿಯ ಗುಣ ಕಾರ್ಯಗಳ ಸ್ಮರಣೆಯ ಅ.ಪ
ಪಕ್ಷಿವಾಹನ ಹರಿಯು ಶ್ರೀ ಲಕುಮಿದೇವಿಯ
ಲೆಕ್ಕಿಸದಿಹನಂತೆ ಹೀಗಿರಲು ಬ್ರಹ್ಮನ
ಪೊಕ್ಕುಳಲಿ ಪಡೆದನಂತೆ
ಸೊಕ್ಕಿದ ಅಸುರರನು ಬಡಿಯಲು
ಮಿಕ್ಕ ಸುರರನು ಪೊರೆಯಲೋಸುಗ
ರಕ್ಕಸಾಂತಕ ಹರುಷದಿಂದಲಿ
ಚೊಕ್ಕ ಸ್ತ್ರೀ ರೂಪಾದನಂತೆ ೧
ಇಂದುಶೇಖರ ಕೇಳಿದ ಸ್ತ್ರೀರೂಪ ನೋಡಲು
ಬಂದು ಬೇಡಿದನಂತೆ ಅದು ಕೇಳಿ ಶ್ರೀಶನು
ಸುಂದರ ಸ್ತ್ರೀಯಾದನಂತೆ
ನಿಂದು ನೋಡುತ ಚಂದ್ರಶೇಖರ
ಮಂದಹಾಸದಿ ಪಿಡಿಪೋದನಂತೆ
ಮಂದಗಮನೆಯು ಸಿಗದೆ ದೂರದಿ
ನಿಂದು ಕಣ್ಮರೆಯಾದಳಂತೆ೨
ಭಸ್ಮಾಸುರಗೆ ವರವಾ ಬೇಡಿದ್ದು ಕೊಟ್ಟು
ವಿಸ್ಮಯವಾದನಂತೇ ಪಶುಪತಿಯ ಸಿರದಲಿ
ಹಸ್ತ ನೀಡಿದನಂತೇ
ಮತ್ತೆ ರಕ್ಷಕರಿಲ್ಲವೆಂದು
ತತ್ತರಿಸಿ ಭಯಪಟ್ಟನಂತೆ
ತಕ್ಷಣದಿ ಶ್ರೀ ಕಮಲನಾಭ
ವಿಠ್ಠಲ ರಕ್ಷಿಸಿ ಪೊರೆದನಂತೆ ೩

ಭಗವದಪರೋಕ್ಷವನ್ನು
೯೩
ಪಾಲಿಸು ಪರಮಾತ್ಮನೆ ಪಾವನ ಗುಣ-
ಶೀಲ ಸದ್ಗುಣಧಾಮನೆ ಪ
ಶ್ರೀಲಕುಮಿಯ ಪ್ರಿಯ ಶ್ರೀಶಸರ್ವೋತ್ತಮ
ವಾಸವವಂದಿತ ವಾಸುದೇವನೆ ಹರಿ ಅ.ಪ
ಕೇಶವ ನಾರಾಯಣ ಮಾಧವ
ಗೋವಿಂದ ವಿಷ್ಣುವೆ ನಮಿಪೆ
ಮಧುಸೂದನ ತ್ರಿವಿಕ್ರಮ ವಾಮನ
ಶ್ರೀಧರ ಹೃಷಿಕೇಶ ಪದ್ಮನಾಭನೆ ಪೊರೆ
ದಾರಿ ಕಾಣೆ ದಾಮೋದರ ಸಂ_
ಕರ್ಷಣ ವಾಸುದೇವ ಪ್ರದ್ಯುಮ್ನನನಿ-
ರುದ್ಧ ಪುರುಷೋತ್ತಮ ಅಧೋಕ್ಷಜ
ನಾರಾಸಿಂಹ ಅಚ್ಚುತ ಜನಾರ್ದನ ಉ-
ಪೇಂದ್ರ ಹರಿ ಶ್ರೀ ಕೃಷ್ಣ ಶೌರಿ೧
ವಾರಿ ವಿಹಾರದಲಿ ಬೆನ್ನಿಲಿ ಗಿರಿ
ಭಾರವನ್ನೆ ತಾಳಿ
ಕೋರೆ ತೋರುತ ಕರುಳ್ಹಾರವ ಮಾಡಿದ
ಮೂರಡಿ ಭೂಮಿಯ ಬೇಡಿ ಭೂಪಾಲನ
ಕಾಡಿ ಕೆಡಹುತ ಕೂಡಿ ಕಪಿಗಳ
ಬೇಡಿ ಪಾಲ್ಮೊಸರ್ಬೆಣ್ಣೆ ಬುದ್ಧನೀ-
ನಾಗಿ ಖಡ್ಗವಧರಿಸಿ ಕುದುರೆಯ-
ನೇರಿ ಮೆರೆಯುವ ಶ್ರೀ ರಮಾಪತೆ ೨
ಶಾಂತೀಶ ಅನಿರುದ್ಧನೆ ಶರಣೆಂಬೆ ನಿನ್ನ
ಕೃತಿಪತಿ ಪ್ರದ್ಯುಮ್ನನೆ ಜಗದೀಶ ಜಯಾಪತಿ
ಜಯ ಸಂಕರ್ಷಣ ದೇವ
ನಮಿಪೆ ಮಾಯಾಪತಿ ವಾಸುದೇವನೆ ನಿನ್ನ
ಚರಣ ಪಂಕಜ ತೋರು ಲಕ್ಷ್ಮೀ-
ರಮಣ ನಾರಾಯಣ ನಮೋ
ಗರಡು ಗಮನನೆ ಕಮಲನಾಭ ವಿ-ಠ್ಠಲನೆ ಶ್ರೀಹರಿ ಪರಮ ಕರುಣಿಯೆ ೩

೫೧
ಪಾಲಿಸು ಪಾಲಿಸು ಪಾಲಯಮಾಂ ಸತತ
ಇಂದಿರಾದೇವಿ ಪ
ಪಾಲಿಸು ಪನ್ನಗವೇಣಿ ಪಾಲಿಸು ಪಂಕಜ ಪಾಣಿ
ಪಾಲಿಸು ಗುಣಗಣ ಶ್ರೇಣಿ ಪಾಹಿನಿತ್ಯ ಕಲ್ಯಾಣಿ ಅ.ಪ
ಬಾಲಕನು ತಾನಾಗಿ ಗೋಪಿಗೆ
ಬಾಲಲೀಲೆಗಳನ್ನು ತೋರಿದ
ಶ್ರೀಲಲಾಮನನ್ನು ಮೆಚ್ಚಿ
ಮಾಲೆಹಾಕಿದಂಥ ಲಕ್ಷ್ಮಿ ೧
ಅಂಬುಧಿಯೊಳ್ ಶಯನಿಸಿದ
ಕಂಬುಕಂಧರ ಹರಿಯ
ಬೆಂಬಿಡದೆ ಸೇವಿಪ ಭಕ್ತ ಕು-
ಟುಂಬಿ ನಿನ್ನ ನಂಬಿದವರ ೨
ನಿನ್ನನೆ ನಾನಂಬಿರುವೆ-
ನನ್ಯರ ನಾಶ್ರಯಿಸದಲೆ
ಸನ್ನುತಾಂಗಿ ಎನ್ನ ಮನದ-
ಲಿನ್ನು ಹರಿಯ ಪಾದ ತೋರು ೩
ಸರಸೀಜಾಸನ ಮಾತೆ
ಸ್ಮರಿಸುವೆ ನಿನ್ನಯ ಪಾದ
ಸ್ಮರಣೆ ಮರೆಯದಂತೆ ಕೊಟ್ಟು
ಹರಿಯ ತೋರು ಹರುಷದಿಂದ4
ಕಮಲೇ ಹೃತ್ಕಮಲದಿ ಶ್ರೀ
ಕಮಲನಾಭ ವಿಠ್ಠಲ
ಮಿನುಗುವಂಥ ಸೊಬಗು ತೋರು
ವಿನಯದಿಂದ ನಮಿಪೆ ನಿನ್ನ ೫

ಭಗವದಪರೋಕ್ಷವನ್ನು
೯೪
ಪಾಲಿಸು ಶ್ರೀಶನೆ ಪರಮ ಪವಿತ್ರನೆ
ಪಾವನ್ನ ಚರಿತನೆ ಪಾಲಿಸೆನ್ನ ಪ
ಕಾಲಕಾಲಕೆ ನಿನ್ನ ಮಹಿಮೆಯ
ತೋರಿಸಲಹುದು ಸರ್ವವ್ಯಾಪಕ
ಮಾಯಾದೇವಿಯರಮಣ ಶ್ರೀಪತೆ
ಕಾಯೊ ಶ್ರೀಹರಿವಾಸುದೇವನೆಅ.ಪ
ವಾಸುದೇವನೆ ನಿನ್ನ ಸೋಸಿಲಿ ಭಜಿಪರ
ಕ್ಲೇಶಗಳ್ಹರಿಸಿ ಸಂತೋಷವಿತ್ತು
ದೋಷದೂರನ ನಾಮ
ಆಸೆಯಿಂದ ಭಜಿಪರಸಂಗವನೂ
ನೀಡೆನುತ ಬಿನ್ನೈಸುವೆನೂ
ಎನ್ನೊಡೆಯ ನೀನೆಂದೆನುತ
ಅಡಿಗಳಿಗೆರಗುವೆನೂ
ಧೃಡಭಕುತಿ ನಿನ್ನೊಳಗಿರಿಸಿ
ರಕ್ಷಿಪುದೆಂದು ಬೇಡುವೆನೂ
ನುಡಿನುಡಿಗೆ ನಿನ್ನಯ ನುಡಿಗಳನು
ನುಡಿವಂಥ ಭಕ್ತರ
ಅಡಿಗಳಾಶ್ರಯ ಕೊಟ್ಟು ಕಾಯ್ವುದು
ಬಡವನೆನ್ನಲಿ ಬೇಡ ಎನ್ನನು
ಬಡವರಾಧಾರಿ ಶ್ರೀಹರಿ ೧
ಶಂಖು ಚಕ್ರವು ಪದ್ಮಗದೆಯು ಹೊಳೆಹೊಳೆಯುತ್ತ
ಬಿಂಕದಿಂದಲಿ ನಿಂತು ನೋಡುತಲಿ
ಮಂಕುಮತಿಗಳನ್ನು ಶಂಕೆಯೊಳಗೆ ತಳ್ಳಿನೋಡುತ್ತ
ನಿನ್ನಯ ಸದ್ಭಕ್ತರ ಶಂಕೆಗಳೆಲ್ಲವನು
ಕ್ಷಿಪ್ರದಿ ಕಳೆಯುತ್ತ ಶ್ರೀಹರಿ ನಿನ್ನ ಪಾದ
ಪಂಕಜಗಳೆ ಚಿಂತಿಸುವರಿಗೆ ಹರುಷ ನೀಡುತ್ತ
ಮಧು ವೈರಿ ನಿನ್ನಯ ವಿಧವಿಧದ ಲೀಲೆಗಳ ತೋರುತ್ತ
ಉದಯ ಭಾಸ್ಕರನಂತೆ ಪೊಳೆಯುತ್ತ
ಮುದದಿ ಸಿರದಿ ಕಿರೀಟ ಹೊಳೆಯುತ್ತ
ಸದಮಲಾತ್ಮಕ ಸತ್ಯಮೂರುತಿ೨
ಶುಭವಸ್ತ್ರವನುಟ್ಟು ಸದ್ದಿಲ್ಲದಲೆ ಬಂದು
ಹೃದ್ಗೋಚರನಾಗು ಪದ್ಮಾನಾಭ
ಉದ್ಧರಿಸೆನ್ನನು ಉದ್ಧವಸಖನೆಂದು ನಂಬಿರುವೆ
ಮನ್ಮನದ ಭಯಗಳವದ್ದು ಬಿಸುಡುತ ಸಲಹೊ
ನರಹರಿಯೆ ಮಮಸ್ವಾಮಿ ನಿನ್ನಯ ಪದ್ಮ-
ಪಾದಕೆ ನಮಿಪೆ ಶ್ರೀಹರಿಯೆ
ಮೋಹಕ ಬಂಧವ ಬಿಡಿಸಿರಕ್ಷಿಸುತೆನ್ನ ಸಲಹು
ಮಾಯಾಪತಿಯೆ ಬಹು ವಿಧದಿ ಪ್ರಾರ್ಥಿಪೆ
ತೋಯಜಾಕ್ಷನೆ ತೋರು ನಿನ್ನಯ
ಚಾರು ಚರಣಕೆ ಬಾಗಿ ನಮಿಸುವೆ
ಕಾಯ್ವುದೆನ್ನನು ಕಮಲನಾಭವಿಠ್ಠಲನೆ
ಶ್ರೀಹರಿ ವಾಸುದೇವನೆ ೩

ಜಗನ್ನಾಥದಾಸರು ಶ್ರೀ ರಾಘವೇಂದ್ರ
೬೨
ಪ್ರಾಣದೇವನೆ ನಿನ್ನ ಧ್ಯಾನಿಸದೆ ಮನದಿ ಬಲು
ಹೀನನಾದೆನೊ ಲೋಕದಿ ಪ
ದಾನವಾರಿಯ ಪಾದ ಧ್ಯಾನಮಾಡುವ ಮುಖ್ಯ-
ಪ್ರಾಣನೀನೆಂದು ಮನಸಾರ ಪೂಜಿಸದೆ ಶ್ರೀ ಅ.ಪ
ಶರಧಿ ಬಂಧಿಸಿ ದಶಶಿರನಳಿದ ಪಾದ
ಸ್ಮರಣೆ ಮಾಡುತಲಿ ನಿತ್ಯ
ಧರಣಿಸುತೆಯಳ ತಂದು ಪರಮ ಸಂಭ್ರಮದಿಂದ
ಮೆರೆವದೇವನ ಸ್ಮರಿಸುತ
ನರರೂಪದಿಂದ ದಶರಥನ ಪುರದಲಿ ನಿಂತ
ಪರಮಾತ್ಮನಿಗೆ ನಮಿಸುತ
ಸುರರು ಸ್ತುತಿಸಲು ಪರಮಹರುಷದಿಂದಾಲಿಸುತ
ಹರಿಯ ಮೆಚ್ಚಿಪ ನಮ್ಮ ಗುರುಪವಮಾನ ಶ್ರೀ ೧
ಅಂದು ಆ ಬಕನ ಭಯದಿಂದ ಸಜ್ಜನರೆಲ್ಲ
ಕುಂದಿರಲು ಭಯವ ಹರಿಸಿ
ಅಂಧಕನ ಸುತನ ಬಂಧಿಸುತ ರಣದೊಳಗೆ ಯದು-
ನಂದನಗೆ ಪ್ರೀತಿ ಪಡಿಸಿ
ಕೊಂದು ಬಿಸುಡಲು ಜರಾಸಂಧನನು ವಸುದೇವ
ಕಂದ ನೋಡುತಲಿ ಸುಖಿಸಿ
ಇಂದಿರಾರಮಣ ಮುಕುಂದನನು ಪೂಜಿಸುವ
ಸುಂದರ ಭೀಮ ನಿಸ್ಸೀಮನಹುದೆಂದು ಶ್ರೀ೨
ಪತಿತ ಸಂಕರದಿಂದ ಮತವೆಲ್ಲ ಕೆಡಲು ಶ್ರೀ-
ಪತಿಯ ಧ್ಯಾನವು ಮಾಡುತ
ಯತಿ ಶಿರೋಮಣಿಯಾಗಿ ಶ್ರುತಿ ಸ್ರ‍ಮತಿಗಳಣಿ ಮಾಡಿ
ಹಿತವ ಜನರಿಗೆ ತೋರುತ
ಎಸೆವ ಘನಗಿರಿಯಲ್ಲಿ ಅಸದಳ ಹನುಮರೆಂ-
ದೆಸೆದು ಮಿಗೆ ಶೋಭಿಸುತಲಿ
ವಾರಿ ದಡದಲಿ ಕಮಲನಾಭ ವಿಠ್ಠಲನ ಸ್ಮರಿಸಿ
ಧೀರ ಹನುಮಂತನಪಾರ ಮಹಿಮನೆಂದು
ವನಗಿರಿಯ ಗುಹೆಗಳಲಿ ಹನುಮಂತನೆಂದೆನುತ
ಎಣಿಸಲಳವಲ್ಲವೋ ಘನಪರಾಕ್ರಮಿ ಮುಖ್ಯ ೩

ನಿಂದಾಸ್ತುತಿಯನ್ನು ಹೋಲುವಂತಹ
೧೨೯
ಬಂದರು ನಾರದರ್ಹರುಷದಲಿ
ನಿಂದು ಯಜ್ಞ ನೋಡುತ ಮುದದಿ
ಇಂದು ಯಾರಿಗರ್ಪಣೆ ಮಾಡುವಿರೆನೆ
ಬಂದಿತು ಸಂಶಯ ಋಷಿಗಳಿಗೆ
ಮಂಗಳಂ ಜಯ ಮಂಗಳಂ ಪ
ತ್ವರದಿಭೃಗು ಮುನಿಗಳು ಹೊರಡುತಲಿ
ಹರಬ್ರಹ್ಮರು ಸರಿಯಲ್ಲೆನುತ
ಹರಿವೈಕುಂಠದಿ ಮಲಗಿರೆ ನೋಡುತ
ಭರದಿಂದೊದೆಯೆ ವಕ್ಷಸ್ಥಳಕೆ
ಮಂಗಳಂ ಜಯ ಮಂಗಳಂ ೧
ನೊಂದಿತು ಪಾದವೆಂದುಪಚರಿಸೆ
ಇಂದಿರಾದೇವಿ ಕೋಪಿಸಿ ತೆರಳೆ
ಬಂದು ಋಷಿಗಳಿಗರುಹಿದರು ಶ್ರೀಗೋ-
ವಿಂದಗೆ ಸಮರಿಲ್ಲೆಂದೆನುತಾ
ಮಂಗಳಂ ಜಯ ಮಂಗಳಂ ೨
ಮಡದಿ ಇಲ್ಲದೆ ಬೇಸರ ಪಡುತಾ
ಪೊಡವಿಗಿಳಿದು ಹುತ್ತದೊಳಗಿರಲು
ಕೊಡಲಿಯ ಗಾಯಕೌಷಧ ಹುಡುಕುತ ಹರಿ
ಅಡವಿಗಳಲಿ ಸಂಚರಿಸಿದಗೆ
ಮಂಗಳಂ ಜಯ ಮಂಗಳಂ೩
ಭೂಮಿಗೊಡೆಯ ವರಹನನು ನೋಡಿ
ಕಾಮಿನಿ ಬಕುಳೆ ಸೇವೆಗೆ ಮಾಡಿ
ಕಾಮಜನಕ ಬೇಟೆಗೆ ಹೊರಟನು ಬಹು
ಪ್ರೇಮದಿಂದಲಂಕರಿಸಿದ ಹರಿಗೆ
ಮಂಗಳಂ ಜಯ ಮಂಗಳಂ೪
ವನವನ ಚರಿಸಿ ಸ್ತ್ರೀಯರ ನೋಡಿ
ವನಜಾಕ್ಷೇರು ನಡುಗುತ ಭಯದಿ
ಘನಮಹಿಮಗೆ ಕಲ್ಲು ಕಲ್ಲೆಸೆಯೆ ಹಯ
ವನದಿ ಮೃತಿಸೆ ಗಿರಿ ಏರಿದಗೆ
ಮಂಗಳಂ ಜಯ ಮಂಗಳಂ ೫
ಕಾಮಿನಿ ಬಕುಳೆಗೆಲ್ಲವ ಪೇಳಿ
ಕೋಮಲೆ ಕೊರವಿ ರೂಪವ ತಾಳಿ
ವ್ಯೋಮರಾಜನ ಪುರದಲಿ ಧರಣಿಗೆ
ಸಾಮುದ್ರಿಕೆ ಪೇಳಿದ ಹರಿಗೆ
ಮಂಗಳಂ ಜಯ ಮಂಗಳಂ ೬
ವಶಿಷ್ಟ ಕಶ್ಯಪರು ಶುಕರುಗಳು
ವಿಶಿಷ್ಟ ಬಂಧುಗಳ ಕರೆಸುತಲಿ
ಪಟ್ಟದರಸಿ ಲಕುಮಿಯು ಬರೆಹರುಷದಲಿ
ಕಟ್ಟಿ ಮಾಂಗಲ್ಯ ಹರಿ ಪದ್ಮಿನಿಗೆ
ಮಂಗಳಂ ಜಯ ಮಂಗಳಂ ೭
ಜಯ ಜಯ ವೆಂಕಟ ಪದ್ಮಿನಿಗೆ
ಜಯ ಜಯ ಪದ್ಮಾವತಿಪ್ರಿಯಗೆ
ಜಯ ಜಯ ಕಮಲನಾಭ ವಿಠ್ಠಲಗೆ
ಜಯ ಜಯ ಶ್ರೀ ಶ್ರೀನಿವಾಸನಿಗೆಮಂಗಳಂ ಜಯ ಮಂಗಳಂ ೮

೧೬೩
ಬಂದಾ ಗೋವಿಂದನು ಗೋಕುಲದಿಂದ
ಆನಂದ ಮುಕುಂದನು ಪ
ಅಂದಿಗೆ ಕಿರುಗೆಜ್ಜೆಯು ಘಲುಘಲುರೆನೆ
ಮಂದಹಾಸನಗೆಯಿಂದಲಿ ಶ್ರೀಹರಿ ಅ.ಪ
ಕರದಿ ಕಂಕಣ ವಂಕಿಯು ಹೊಳೆಯುತಲಿ
ಸಿರದಿ ಕಿರೀಟ ಮುಂ-
ಗುರುಳು ಮುಖ ಬೆವರಿನ ಹೊಸ ಕಾಂತಿಯಲಿ
ಬೆರಳುಗಳಲಿ ಉಂಗುರ
ಥಳಥಳಥಳ ಹೊಳೆಯುವ ಸೊಬಗಿನಲಿ
ಕೊರಳೊಳು ಸರಿಗಿಯ ಸರ
ಪರಿ ಪರಿ ಸರ ಪದಕಗಳ್ಹೊಳೆಯುತಲಿ
ಜರಿ ಪೀತಾಂಬರದ ನಡುವಿಲಿ
ಕಿರು ಗೆಜ್ಜೆಗಳ್ಹೊಳೆಯುತಲಿ
ತರುತುರು ತರುಣೇರು ಮರುಳಾಗುವ ತೆರ
ಪರಿಪರಿ ರಾಗದಿ ಮುರಳಿಯ ನುಡಿಸಲು
ಸುರರು ಪುಷ್ಪ ವೃಷ್ಟಿಯ ಸುರಿಸುತಲಿರೆ
ತುರುಕರು ಮಧ್ಯದಿ ಪೊಳೆವೊ ಚಂದ್ರಮನಂತೆ೧
ತುಂಬುರು ನಾರದರೆಲ್ಲರು ಕೂಡಿ
ಅಂಬರದಲಿ ನೆರೆದರು
ಗಂಧರ್ವಪ್ಸರ ಸ್ತ್ರೀಯರು ಕುಣಿದಾಡಿ
ಪರಮಾತ್ಮನ ಸ್ತುತಿಸುತ
ರಂಭೆ ಊರ್ವಶಿ ಮೇನಕೆಯರು ಕೂಡಿ
ಆನಂದದಿ ನರ್ತಿಸೆ
ಇಂದಿರೆ ರಮಣನ ಗುಣಗಳ ಪಾಡಿ
ಅಂಬರದಲಿ ದೇವ ದುಂದುಭಿಗಳು ಮೊಳಗಲು
ಕಂದರ್ಪನ ಪಿತ ಕರುಣದಿ ಭಕುತರ
ಚಂದದಿ ದುರ್ಮತಿ ನಾಮ ವತ್ಸರದಲಿ
ಕುಂದಿಲ್ಲದೆ ಸಲಹುವೆನೆನುತಲಿ ತ್ವರ ೨
ಸೃಷ್ಟಿಗೀಶನ ಗುಣಗಳ ಪಾಡುತಲಿ ವ-
ಶಿಷ್ಠರು ವಿಶ್ವಾಮಿತ್ರ
ಕಶ್ಯಪ ಭಾರದ್ವಾಜ ಮುನಿಗಳು
ದೇವೇಶನ ಸ್ತುತಿಸುತ
ಅತ್ರಿ ಜಮದಗ್ನಿ ಜಾಬಾಲಿಗಳು
ಶ್ರೀಕೃಷ್ಣನೆ ಪರನೆಂದು-
ತ್ತಮ ಋಷಿಗಳು ಪೊಗಳುತಲಿರಲು
ಸೃಷ್ಟಿಗೊಡೆಯ ಪರಮೇಷ್ಠಿ ಪಿತನ ತ-
ನ್ನಿಷ್ಟ ಭಕುತರನು ಸಲಹಲು ಕಂಕಣ
ಕಟ್ಟಿಹ ಕಮಲನಾಭವಿಠ್ಠಲ ತ್ವರ
ಶಿಷ್ಟರ ಸಲಹಲು ಸರಸರ ಓಡುತ ೩

೨೯
ಬಾ ಹರಿ ಬಾ ಹರಿ ಬಾ ಹರಿ ಬೇಗ
ಶ್ರೀಹರಿ ಶೌರಿ ಮುರಾರಿಯೆ ಬೇಗ ಪ
ಅಂದಿಗೆ ಕಿರುಗೆಜ್ಜೆಗಳೊಲಿಯುತಲಿ
ಚಂದದಿಂದಲಿ ನಲಿದಾಡುತ ಬಾರೈ ೧
ಗುರುಳು ಕೂದಲು ಮುಖಹೊಳೆವೊ ಮುರಾರಿ
ಪÀಣೆಯೊಳು ತಿಲುಕದ ಹೊಳೆವ ಶೃಂಗಾರಿ೨
ಥಳಥಳಿಸುವ ಪೀತಾಂಬರ ಧಾರಿ
ಎಳೆತುಳಸಿಯ ವನಮಾಲೆಯ ಶೌರೀ ೩
ಕಂಕಣ ಕರ ಭೂಷಣಗಳು ಹೊಳೆಯೆ
ಟೊಂಕದಿ ಕರಗಳನಿಡುತಲಿ ಬಾರೈ ೪
ಕಾಮನಪಿತ ಕೊಳಲೂದುವ ಸೊಬಗು
ಕಮಲನಾಭ ವಿಠ್ಠಲ ಬಲು ಬೆಡಗು೫

ಈ ಎರಡೂ ಕೃತಿಗಳು ಕೃಷ್ಣವೇಣಿ
೩೦
ಬಾ ಹರಿ ಭಕುತರ ಭಯ ಪರಿಹರಿಸುತ
ಸರಸಿಜ ಸದನೆಯರೊಡಗೂಡಿ ನಲಿಯುತ ಪ
ನೀರೊಳು ಮುಳುಗಿ ಮೀನನೆಂದೆನಿಸಿ
ಭಾರವ ಪೊತ್ತಿಹ ಕೂರ್ಮನೆ ಜವದಿ ೧
ಕೋರೆಗಳಿಂದ ಧಾರುಣಿತಂದ
ಕ್ರೂರನುದರ ಕರುಳ್ಹಾರವೆ ಚಂದ ೨
ಮೂರಡಿ ಭೂಮಿಯ ಬೇಡುತ ಬಂದೆ
ನಾಡೊಳು ಕೊಡಲಿಯ ಪಿಡಿಯುತ ನಿಂದೆ೩
ಸೇತುವೆ ಕಟ್ಟುತ ಸೀತೆಯ ತಂದೆ
ಪಾತಕಿ ಕಂಸನ ನಾಶವ ಗೈದೆ೪
ಬುದ್ಧನೆಂದೆನಿಸಿದೆ ಶುದ್ಧಮೂರುತಿಯ
ಮುದ್ದು ತೇಜಿಯ ನೇರುತ ಮೆರೆದವನೆ ೫
ಬಾ ಮುರವೈರಿ ಬಾ ಬಾರೊ ಶೌರಿ
ಭಾಸುರ ವಂದ್ಯ ಬಾ ಮುದದಿಂದ೬
ಬಿಡದೆ ನಿನ್ನಯ ಪಾದ ದೃಢದಿ ಭಜಿಪೆನೈ
ಕಡಲ ಶಯನ ಕಮಲನಾಭ ವಿಠ್ಠಲನೆ ೭

೧೩೦
ಬಾಗಿಲು ತೆಗೆಯಲೆ ಭಾಮತಿ ರನ್ನಳೆ
ಈಗ ನಾ ಬಂದೆನು ಇಂದುಮುಖಿ ಪ
ನಾಗವೇಣಿಯೆ ನಿನ್ನೀಗಲೆ ನೋಡಲು
ಬೇಗನೆ ಬಂದೆನು ತೆಗಿ ಕದವಾ ಅ.ಪ
ಯಾರದು ಈ ಸಮರಾತ್ರಿಯ ವೇಳದಿ
ಬಾಗಿಲು ತೆಗೆ ಎಂದೆನುತಿಹರು
ತೋರದು ಎನಗೊಂದಾಲೋಚನೆ ನಿಮ್ಮ
ನಾಮವು ಪೇಳಲು ತೆಗೆಯುವೆನು ೧
ನೀಲವೇಣಿಯೆ ಕೇಳೆನ್ನ ಮಾತನು
ಬಹಳ ಚಿಂತೆಯಾತಕೆ ಮನದಿ
ನೀಲಕಂಠನೆಂದೆನ್ನನು ಕರೆವರು
ಕೇಳು ಮನಸು ಚಂಚಲ ಬಿಟ್ಟು ೨
ನೀಲಕಂಠನೆಂದರೆ ನೆನಪಾಯಿತು
ನವಿಲಿನ ಮರಿ ಬಂದಿಹುದೆಂದು
ನಾರಿಯರೆಲ್ಲರು ಹಾಸ್ಯವ ಮಾಳ್ಪರು
ಸಾರುತ ವನಗಳ ಚರಿಸೆಂದು ೩
ಬೆದರದೆ ತೆರೆ ಕದ ಸುದತಿಮಣಿಯೆ ನಾ
ಬದಲೊಂದು ನಾಮವ ಪೇಳುವೆನು
ಬುಧ ಜನರೆಲ್ಲರು ಭಕುತಿಲಿ ಸ್ಥಾಣು-
ವೆನ್ನುತ ನಾಮವ ಕೊಂಡಾಡುವರು೪
ಬೂಟಾಟಿಕೆ ಮಾತುಗಳನ್ನ ಏತಕೆ
ಸಾಟಿಯಾರು ಜಗದೊಳಗಿನ್ನು
ಮೋಟುಮರಕೆ ಸ್ಥಾಣುವೆನ್ನುತ ಕರೆವರು
ಈ ಪೃಥ್ವಿಯ ಮೇಲಿನ ಜನರು ೫
ಬಿಸುಜಮುಖಿಯೆ ಇನ್ನೊಂದು ಪೆಸರು ಕೇಳೆ
ಪಶುಪತಿಯೆಂದು ಕರೆವರೆನ್ನ
ವಸುಧೆಯ ಮೇಲಿನ ಪೆಸರುಗಳಿಗೆ ನೀ
ಪ್ರತಿಯಾಗರ್ಥವ ಕಲ್ಪಿಸುವಿ ೬
ವೃಷಭರಾಜ ನೀನಾದರೆ ಮುಂದಕೆ
ಪಶುಗಳ ಮಂದೆಗೆ ತೆರಳುವದು
ಕುಸುಮಗಂಧಿಯರ ಸದನದಿ ಕಾರ್ಯವು
ವೃಷಭರಾಜಗಿಲ್ಲವು ಕೇಳೌ ೭
ಶೀಲವಾಣಿಯೆ ಸುಶೀಲೆಯೆ ಎನ್ನಯ
ವಾಣಿ ಕೇಳಿ ಕದವನು ತೆಗಿಯೆ
ಪೇಳುವೆ ಮತ್ತೊಂದು ನಾಮವ ಎನ್ನನು
ಶೂಲಿ ಎಂದು ಕರೆವರು ಜನರು ೮
ಶೂಲಿಯಾದರೆ ನಿನ್ನ ಬಾಧೆಯ ಕಳೆಯಲು
ಯಾರಿಗೆ ಸಾಧ್ಯವು ಜಗದೊಳಗೆ
ನಾರಿಯರಿಗೆ ಹೇಳದೆ ಮುಂದಕೆ ನಡೆ
ಶೂರರಾದ ವೈದ್ಯರ ಬಳಿಗೆ ೯
ಕರಿಯ ಮುಖನ ಮಾತೆಯೆ ತಡಮಾಡದೆ
ಕನಕಮಯದ ಕದ ತೆರೆ ಬೇಗ
ಕಮಲನಾಭ ವಿಠ್ಠಲನನು ಪಾಡುತ
ಶಿವನ ನಮಿಸಿ ತೆಗೆದಳು ಕದವ ೧೦

ಜಗನ್ನಾಥದಾಸರು ಶ್ರೀ ರಾಘವೇಂದ್ರ
೫೨
ಬಾರಮ್ಮ ಮನೆಗೆ ಸೌಭಾಗ್ಯದ ಮಹಲಕ್ಷ್ಮಿಪ
ಬಾರಮ್ಮ ಮನೆಗೆ ಭಕ್ತರು ನಿನ್ನ ಸ್ತುತಿಪರು
ಮಾರನಯ್ಯನ ಕೂಡಿ ಮನ ಹರುಷದಿ ಬೇಗ ಅ.ಪ
ಶಂಖು ಚಕ್ರ ಗದ ಪದ್ಮವು ಧರಿಸಿದ
ಪಂಕಜಾಕ್ಷನ ಸಿರಿ ಪಟ್ಟದರಸಿದೇವಿ
ಕುಂಕುಮಾಂಕಿತೆ ಸರ್ವಾಲಂಕಾರ ಶೋಭಿತೆ
ಬಿಂಕ ಮಾಡದಲೆ ಬಾ ವೆಂಕಟನರಸಿಯೆ1
ಶುಕ್ರವಾರದಿ ನಿನ್ನ ಭಕ್ತಿಲಿ ಸ್ತುತಿಪರ
ಇಷ್ಟ್ಯಾರ್ಥಗಳ ಕೊಟ್ಟುದ್ಧರಿಪ ಭಾರ್ಗವಿ ತಾಯೆ
ಭಕ್ತವತ್ಸಲನೊಡಗೂಡುತ ಬಾರಮ್ಮ
ಮಿತ್ರೇರು ಕರೆವರು ಕೃಷ್ಣವೇಣಿಯೆ ನಿನ್ನ ೨
ಕನ್ನಡಿ ಕದುಪಿನ ಕಡು ಮುದ್ದು ಮಹಾಲಕ್ಷ್ಮಿ
ರನ್ನ ಪವಳ ಹಾರಾಲಂಕೃತ ಶೋಭಿತೆ
ಸ್ವರ್ಣಮಂಟಪದಿ ಕುಳ್ಳಿರು ಬಾರೆಂದೆನುತಲಿ
ಕರ್ನೇರು ಕರೆವರು ಕಮಲಾಕ್ಷನೊಡಗೂಡಿ3
ನಿಗಮವೇದ್ಯಳೆ ನಿನ್ನ ಅಗಣಿತ ಗುಣಗಳ
ಪೊಗಳುವ ಸುಜನರ ಅಘ ಪರಿಹರಿಸುತ್ತ
ಬಗೆ ಬಗೆ ನಾಮಗಳಿಂದ ಪೂಜೆಯಗೊಂಬ
ಖಗವಾಹನನ ರಾಣಿ ಲಗುಬಗೆಯಿಂದಲಿ4
ತಡಮಾಡದಲೆ ಬಾ ಬಾ ಮುಡಿದ ಹೂವು ಉದರುತ್ತ
ಬಡನಡು ಬಳುಕುತ್ತ ಕೊಡುತ ವರಗಳನ್ನು
ಬಿಡಿಮಲ್ಲಿಗೆಯ ತಂದು ನಡೆಮುಡಿ ಹಾಸುವರು
ಕಡಲೊಡೆಯನ ರಾಣಿ ಸಡಗರದಿಂದೊಮ್ಮೆ ೫
ಕ್ಷೀರವಾರಿಧಿಯ ಕುಮಾರಿಯೆ ಬಾರೆಂದು
ಸಾರಸಮುಖಿಯರು ಸರಸದಿ ಕರೆವರು
ಮೂರ್ಲೋಕ ವಿಖ್ಯಾತೆ ಮಾರಮಣನ ಪ್ರೀತೆ
ಚಾರುಮಂಗಳೆ ಸತ್ಯ ಶ್ರೀ ಭೂದುರ್ಗಾಂಬ್ರಣೆ ೬
ಕಮಲಾಕ್ಷಿ ಕೇಳಮ್ಮ ಶ್ರಮ ಪರಿಹರಿಸೆಂದು
ನಮಿಸಿ ಬೇಡುವೆ ನಿನ್ನ ಭ್ರಮರ ಕುಂತಳೆ ತಾಯೆ
ಕಮಲನಾಭ ವಿಠ್ಠಲನ ಕೂಡಿ ಹರುಷದಿ
ಸುಮನಸರೊಡೆಯನ ಸತಿ ಸಾರ್ವಭೌಮಳೆ ೭

೧೫೨
ಬಾರಯ್ಯ ಬಾರಯ್ಯ ಭಕ್ತವತ್ಸಲ ಹರಿ ಶ್ರೀಕೃಷ್ಣ ಪ
ಭಕ್ತರು ಬಂದು ದ್ವಾರದಿ ನಿಂದು
ಭಕ್ತಿಲಿ ಹಾಡುತ ಪಾಡುತಲಿರುವರು
ಮುಕ್ತಿದಾತ ನೀನಲ್ಲದೆ ಸರ್ವ-
ಶಕ್ತರಿನ್ಯಾರಿಹರೈ ಎನ್ನುತ ಪೊಗಳ್ವರು ೧
ತಾಳಮೇಳದವರೆಲ್ಲರು ನಿನ್ನಯ
ಊಳಿಗ ಮಾಡಬೇಕೆನುತಲಿ ಬಂದು
ವೇಳೆ ವೇಳೆಗೆ ತಮ್ಮ ಸೇವೆಯ ಸಲಿಸುತ
ಭಾಳ ಸಂಭ್ರಮದಿಂದ ಹಾರೈಪರೊ ಹರಿ ೨
ತುಂಬುರು ನಾರದರ್ವೀಣೆಯ ನುಡಿಸಲು
ರಂಭಾದ್ಯಪ್ಸರ ಸ್ತ್ರೀಯರು ನರ್ತಿಸೆ
ಅಂಬುಜನಾಭನೆ ನಂಬಿಹ ವಿಶ್ವ ಕು-
ಟುಂಬಿಯೆ ಬಾ ಬಾರೆನ್ನುತ ಸ್ತುತಿಪರು೩
ಅಂಬರದಲಿ ದೇವತೆಗಳೆಲ್ಲರು ನೆರೆದು
ತುಂಬಿ ಪುಷ್ಪವೃಷ್ಟಿಗಳನೆ ಮಾಡುತ
ಇಂಬಿಲ್ಲದೆ ಪಾರಿಜಾತ ಕುಸುಮ ಮಳೆ
ಗಂಭೀರದಿ ಸುರಿಸುತ ಪ್ರಾರ್ಥಿಸುವರು ೪
ಅತ್ರಿ ವಸಿಷ್ಠ ಗೌತಮ ಮೊದಲಾಗಿ
ರಾತ್ರಿಹಗಲು ಎಡೆಬಿಡದಲೆ ಸ್ತುತಿಸುತ
ವೃತ್ರಾರಿಯ ಸುತನಿಗೆ ಸಾರಥಿಯೆ ವಿ-
ಚಿತ್ರ ವ್ಯಾಪಾರಿ ಶ್ರೀಹರಿ ಎಂದು ಪೊಗಳ್ವರು ೫
ಅಣುಮಹದ್ರೂಪನೆ ಘನಮಹಿಮನೆ ನಿನ್ನ
ಮಣಿದು ಬೇಡಿ ಕೈಮುಗಿಯುತ ಸ್ತುತಿಪರು
ಪ್ರಣವ ಪ್ರತಿಪಾದ್ಯನೆ ನಿನ್ನ ಗುಣಗಳ
ಎಣಿಸಲಸಾಧ್ಯವೆನುತ ಕೊಂಡಾಡ್ವರು ೬
ನವನವ ರೂಪದಿ ನಲಿಯುವ ದೇವನೆ
ನವವಿಧ ಭಕುತರು ನಮಿಸುತ ಕರೆವರು
ಭುವನ ಮೋಹನ ಸುಂದರಮೂರ್ತಿಯೆ ಎಂದು
ಕವಿಗಳು ಪೊಗಳುತ ಕುಣಿಯುತಲಿರುವರು ೭
ಎಡಬಲದಲಿ ಶ್ರೀ ಭೂದೇವಿಯರಿರೆ
ಬಿಡದೆ ಛತ್ರಚಾಮರಗಳಿಂದೊಪ್ಪುತ
ತಡಮಾಡದೆ ಬಾ ಮಡದಿಯರ ಸಹಿತದಿ
ದಡ ದಡ ಬಾರೆಂದು ಬಡ ಬಡ ಕರೆವರು ೮
ವಿಶ್ವರೂಪಕ ವಿಶ್ವನಾಮಕ
ವಿಶ್ವತೋಮುಖ ವಿಶ್ವನಾಟಕ
ವಿಶ್ವವ್ಯಾಪಕ ವಿಶ್ವಾಧಾರಕ
ವಿಶ್ವ ಕುಟುಂಬಿಯೆ ವಿಶ್ವಾಸದಿ ಬಾ ೯
ವಿರೋಧಿಕೃತು ಸಂವತ್ಸರ ಬರುತಿರೆ
ಪರೋಪಕಾರವ ಮಾಡುತ ಸುಜನರು
ವಿರೋಧಿಗಳ ದೂರಿಡುತಲಿ ಶ್ರೀ ಹರಿ
ಸರೋಜದಳ ನೇತ್ರನÀ ಸ್ತುತಿಸುವರು ೧೦
ಕಮಲಾಕ್ಷಿಯ ಒಡಗೂಡುತ ಬಾ ಬಾ
ಕಮಲಾಸನ ಜನಕನೆ ಹರಿ ಬಾ ಬಾ
ಕಮಲನಾಭ ವಿಠ್ಠಲ ಬೇಗ ಬಾರೆಂದು
ಸುಮನಸ ವಂದ್ಯನ ಸ್ಮರಿಸುತ ಕರೆವರು೧೧

ಅದ್ರಿಧರ=ಕೃಷ್ಣ ಕೃಷ್ಣನ ಪ್ರಿಯ=ಶಿವ,
೨೦
ಬಾರಯ್ಯ ಶ್ರೀ ಶ್ರೀನಿವಾಸ ಭಕ್ತವತ್ಸಲ ಸ್ವಾಮಿ
ಬಾಗಿ ನಮಿಸುವೆನು ಭಾಗವತರ ಪ್ರಿಯ ಪ
ಬಾರೋ ಭಕುತರ ಭವವಿಮೋಚನ
ಬಾರೊ ದ್ರೌಪದಿ ಮಾನ ಸಂರಕ್ಷಣ
ಬಾರೊ ಧ್ರುವ ಪ್ರಹ್ಲಾದ ಪಾಲಕ
ಬಾರೋ ಗಜರಾಜೇಂದ್ರ ವರದ ಅ.ಪ
ಕಾಲಲಂದುಗೆ ಗೆಜ್ಜೆ ಘಲುಘಲುರೆನುತಲಿ
ಕಾಲಪಾಡಗರುಳಿ ಕಾಲಪೈಜನಿಸರ
ಕಾಲಲ್ಲಿ ಅಸುರರ ಧೂಳಿ ಮಾಡಿದ ದಿವ್ಯ
ಕಾಲಿಗೆರಗುವೆನು ಕಾಯೊ ಶ್ರೀ ಹರಿ ಶೌರೆ
ಕಾಲಿನಲಿ ಶಿಲೆ ನಾರಿಯಾದಳು
ಕಾಳಿಮದ ನಿರ್ಮೂಲವಾಯಿತು
ಕಾಲಿನಲಿ ಗಂಗೆಯು ಜನಿಸಿದಳು
ಕಾಲು ಪಾರ್ಥನೆ ರಥದಿ ಮೆರೆಸಿದೆ ೧
ಎಡಬಲದಿ ನಿನ್ನ ಮಡದೇರಿಂದೊಪ್ಪುತ
ತಡಮಾಡದಲೆ ಬಾರೊ ಮೃಡಸಖನೆ
ಉಡುಪ ಮುಖನೆ ನಿನ್ನ ಅಡಿಗೆರಗುವರಯ್ಯ
ತಡಮಾಡದಲೆ ತಾಳಮೇಳ ವಾದ್ಯಗಳಿಂದ
ಬಿಡದೆ ಶ್ವೇತ ಛತ್ರಚಾಮರ
ಎಡಬಲದಿ ನಿನ್ನ ಸ್ತುತಿಪ ಭಕ್ತರ
ಕಡುಸ್ವರದ ವಾದ್ಯ ವೇದ ಘೋಷಣೆ
ಬಿಡದೆ ಮಾಳ್ಪರೊ ಕಡಲೊಡೆಯನೆ ೨
ಕಮಲಸಂಭವನಯ್ಯ ಕಮಲಜಾತೆಯ ಪ್ರಿಯ
ಕಮಲ ಪೊಕ್ಕಳಲಿ ಪಡೆದಾತನೆ
ಕಮಲದಳಾಕ್ಷನೆ ಕಮನೀಯ ರೂಪನೇ
ಕಮಲಾಕ್ಷಿಯೊಡಗೂಡಿ ಕರುಣದಿ ಬಾರಯ್ಯ
ಕಮಲಮಲ್ಲಿಗೆ ಮಳೆಯ ಕರೆವರು
ಕಮಲಗಂಧಿಯರೆಲ್ಲ ಹರುಷದಿ
ಕಮಲನಾಭವಿಠ್ಠಲನೆ ಪೊಳೆವ ಹೃ-ತ್ಕಮಲದೊಳು ಮಿಗೆ ಶೋಭಿಸುವ ಹರಿ3

ಇದು ವ್ಯಾಸತತ್ವಜ್ಞರ ಸ್ತೋತ್ರವಾಗಿದೆ
೭೧
ಬಾರೆ ಪಾರ್ವತಿ ಸಾರೆ ಸುಖವ
ತೋರೆ ನಿನ ದಯವ ಪ
ಬಾರಿ ಬಾರಿಗು ಪ್ರಾರ್ಥಿಸುವೆನೆ
ಸಾರಸಾಕ್ಷಿಯೆ ಸರ್ಪವೇಣಿಯೆ ಅ.ಪ
ದಕ್ಷಕುವರಿಯೆ ಈಕ್ಷಿಸೆನ್ನನು-
ಪೇಕ್ಷೆ ಮಾಡದಲೆ
ಅಕ್ಷಿತ್ರಯನ ಸತಿಯೆ ಭಕ್ತರ
ಕಷ್ಟ ಬಡಿಸುತಲಿ
ಸೂಕ್ಷ್ಮ ಮತಿಯನಿತ್ತು ಕೃಷ್ಣನ
ಸ್ತೋತ್ರಗಾನದಲಿ ಅ-
ಪೇಕ್ಷೆಯೊದಗುವ ಮನವ ಪಾಲಿಸು
ರಕ್ಷಿಸೀಗಲೆ ಭಕ್ತವತ್ಸಲೆ ೧
ಮಂದಗಮನೆ ಮತ್ತೊಂದು ಪೇಳುವೆ
ನಂದಿವಾಹನನಾ
ಮುಂದೆ ಸ್ತುತಿಪ ಭಕ್ತವೃಂದ ವಿ-
ದೆಂದು ಪೇಳಿದೆ ನಾ
ಸುಂದರ ಶ್ರೀ ಹರಿಯ ಸೇವೆಗೆ
ಪೊಂದಿಸೆನ್ನ ಮನ
ಚಂದದಿಂದ ಪ್ರಾರ್ಥಿಸುವೆನೆ
ಸುಂದರಾಂಗಿಯೆ ನಿನ್ನನನುದಿನ ೨
ಕಮಲನೇತ್ರೆಯೆ ವಿಮಲ ಸದ್ಗುಣಗುಣಿಯೆ ಪಾರ್ವತಿ
ಕಮಲಸಂಭವ ಭವಸುರಾರ್ಚಿತನ
ಸ್ಮರಿಸುವ ಮತಿ ಹೃ-
ತ್ಕಮಲದೊಳಗೆ ನಿಲಿಸುವಂತೆ
ಮಾಡು ಸದ್ಗತಿ
ಕಮಲನಾಭ ವಿಠ್ಠಲ ಕೊಡುವ
ನೆನುತ ಕೀರುತಿ ೩

೫೩
ಬಾರೆ ಶ್ರೀ ಮಹಾಲಕ್ಷ್ಮಿದೇವಿಯೆ ಬೇಡುತಿರ್ಪೆವು ಪ
ಸಾರಸಾಕ್ಷಿಯೆ ಸರ್ಪವೇಣಿಯೆ
ನಾರಿಯೆ ವೈಯ್ಯಾರಿಯೆ ಶ್ರೀಹರಿ ಸಹಿತದಿ ಅ.ಪ
ಯಜ್ಞನಾಮಕ ಹರಿಯ ರಾಣಿ
ಯಜ್ಞ ಇಂದಿರಾ ಹಿರಣ್ಯ ಹರಿಣಿ
ಸುಜ್ಞರಾದ ಜನರ ಪೊರೆವೆ
ಸತ್ಯಾಶ್ರಿ ನಿತ್ಯಾಶ್ರೀ ಸುಗಂಧಿ ಸುಂದರಿ1
ಪ್ರಾಜ್ಞಸುಖಾ ಸುಗಂಧಿ ಸುಂದರಿ
ವಿದ್ಯಾ ಶ್ರೀ ಸುಶೀಲದೇವಿ
ಸುಜ್ಞರಾದ ಜನರೊಳಿರಿಸು
ತಕ್ಷಣ ಈಕ್ಷಿಸು ಸುಲಕ್ಷಣ ದೇವಿಯೆ ೨
ಶಾಂತಿ ಮಾಯೆ ಕೃತಿಯೆ ಇಂದಿರೆ
ಶಾಂತಚಿತ್ತದಿ ಧ್ಯಾನಿಸುವರಾ ನಿ-
ರಂತರದಿ ಪೊರೆವೆ ಜಯ
ಮಂಗಳೆ ಉತ್ತುಂಗಳೆ ಶೃಂಗಾರ ರೂಪಳೆ ೩
ನಗುತ ನಗುತ ಬಾರೆ ಬೇಗ
ನಗಧರನ ಸನ್ನಿಧಿಗೆ ಈಗ
ಖಗವಾಹನನ ಮಡದಿ ನಿನ್ನ
ಅಡಿಗಳ ಪೂಜಿಪೆ ಸಡಗರದಿಂದಲಿ4
ಪರಿಮಳೋದಕದಿಂದ ನಿನ್ನ
ಚರಣಗಳನು ತೊಳೆದು ದಿವ್ಯ
ವರಮಣಿಯ ಪೀಠದಲಿ ಕೂಡಿಸಿ
ಪರಿಪರಿ ಪುಷ್ಪದಿ ಪೂಜಿಸಿ ನಲಿಯುವೆ ೫
ಹರಿಯರಾಣಿ ನಿನಗೆ ದಿವ್ಯ
ಹರಿದ್ರಾಕುಂಕುಮಾಕ್ಷತೆಗಳಿಂದ
ವರ ಕಲ್ಹಾರ ಪೂವ್ಗಳಿಂದಲಿ
ಸುರಗಿ ಶಾವಂತಿಗಿ ತುರುಬಿಗೆ ಮುಡಿಸುವೆ ೬
ಎಣ್ಣೂರಿಗೆ ಹೋಳಿಗೆಯು ಕಡಬು
ಸಣ್ಣನಕ್ಕಿ ಶಾಲ್ಯನ್ನಗಳು
ಇನ್ನು ಬಗೆ ಬಗೆಯ ಭಕ್ಷಂಗಳನೂ
ಸ್ವರ್ಣ ಪಾತ್ರೆಗಳಲ್ಲಿ ಇರಿಸುತ ನಲಿವರು ೭
ಕ್ಷೀರ ಘೃತದಧ್ಯಾನ್ನ ಮಂಡಿಗೆ
ಶಾವಿಗೆ ಪರಮಾನ್ನಗಳನು
ಶ್ರೀರಮೇಶನಿಗರ್ಪಿಸೆನುತ
ಬೇಡುವೆ ಪಾಡುವೆ ಕೊಂಡಾಡುತ ನಲಿಯುವೆ ೮
ಮುದ್ದು ಮಹಾಲಕ್ಷ್ಮಿ ನಿನಗೆ
ಇಡಲಿ ದೋಸೆಗಳ ಸಹಿತ
ಪದ್ಮನಾಭನಿಗರ್ಪಿಸೆನುತ
ಶ್ರದ್ಧೆಯಿಂ ನಮಿಸುತ್ತಾ ಬೇಡುತಲಿರುವರು ೯
ಗಂಗಾಜನಕ ನರಸಿ ನಿನಗೆ
ಮಂಗಳಾರುತಿಗಳ ಮಾಡಿ
ಹಿಂಗಿಸುವೆ ಪಾಪಗಳೆನುತಾ
ವಂದಿಸಿ ಸಾಷ್ಟಾಂಗದಿಂ ಚಂದದಿ ಪ್ರಾರ್ಥಿಪೆ ೧೦
ಕರ್ಪೂರದ ಅಡಿಕೆ ವೀಳ್ಯ
ಅರ್ಪಿಸುತಲಿ ನಿನ್ನ ಪೂಜಿಸಿ
ಮುಪ್ಪುರಾಂತಕ ಕಮಲನಾಭವಿಠ್ಠಲ ವಿಠ್ಠಲ ವಿಠ್ಠಲನರಸಿಯೆ11

ಕೃಷ್ಣಾನದಿಯ ದಂಡೆಯ ಮೇಲಿರುವ
೨೧
ಬಾರೈ ರಂಗ ಬಾರೈ ಕೃಷ್ಣ ಬಾರೈ ದೇವ ಕೃಷ್ಣ
ತೋರೈ ನಿನ್ನಯ ಚಾರುಚರಣವ ತೋಯಜಾಕ್ಷ ಪ
ಘಲು ಘಲುರೆನ್ನುತ ರುಳಿಗೆಜ್ಜೆಯನಿಟ್ಟು ಬಾರೈ ದೇವ ಕೃಷ್ಣ
ಕುಣಿಕುಣಿಯುತ ಬಾ ಕುಂತಿಸುತರಪ್ರಿಯ ಬಾರೈ ದೇವ ಕೃಷ್ಣ
ಥಳಥಳಿಸುವ ಪೀತಾಂಬರ ಹೊಳೆಯುತ ಬಾರೈ ದೇವ ಕೃಷ್ಣ
ನಡುವಿಲಿ ಹೊಳೆಯುತ ಪಟ್ಟೆವಲ್ಲಿಯು ಬಾರೈ ದೇವ ಕೃಷ್ಣ ೧
ಕಂಕಣ ಕರಭೂಷಣಗಳು ಹೊಳೆಯುತ ಬಾರೈ ದೇವ ಕೃಷ್ಣ
ಪಂಕಜನಾಭ ಪಾರ್ಥಸಖನೆ ಕೃಷ್ಣ ಬಾರೈ ದೇವ ಕೃಷ್ಣ
ಶಂಖ ಚಕ್ರಗಳ ಧರಿಸುತ ಮುದದಲಿ ಬಾರೈ ದೇವ ಕೃಷ್ಣ
ಶಂಕಿಸದೆಲೆ ಬಾ ಬಿಂಕವ ತೊರೆದು ಬಾರೈ ದೇವ ಕೃಷ್ಣ ೨
ಮುಂಗುರುಳಲಿ ಮುತ್ತಿನರಳೆಲೆ ಹೊಳೆಯುತ ಬಾರೈ ದೇವ ಕೃಷ್ಣ
ಶೃಂಗಾರದ ಕಿರೀಟವು ಹೊಳೆಯುತ ಬಾರೈ ದೇವ ಕೃಷ್ಣ
ಸುಂದರ ಕಸ್ತೂರಿ ತಿಲಕವು ಹೊಳೆಯುತ ಬಾರೈ ದೇವ ಕೃಷ್ಣ
ಕಂಧರದಲಿ ಶೋಭಿಪ ಪದಕಗಳಿಂದ ಬಾರೈ ದೇವ ಕೃಷ್ಣ ೩
ಪೊಂಗೊಳಲೂದುತ ಹೆಂಗಳರೊಡನೆ ಬಾರೈ ದೇವ ಕೃಷ್ಣ
ಮಂಗಳ ಮಹಿಮ ವಿಹಂಗವಾಹನ ಕೃಷ್ಣ ಬಾರೈ ದೇವ ಕೃಷ್ಣ
ಅಂಗಳದೊಳಗಾಡುತ ನಲಿಯುತ ಬಲು ಚಂದದಿ ಬಾರೈ ದೇವ ಕೃಷ್ಣ
ಇಂದಿರೆಯರಸನೆ ವಂದಿಸಿ ಬೇಡುವೆ ಬಾರೈ ದೇವ ಕೃಷ್ಣ ೪
ಕಿಲಿಕಿಲಿನಗುತಲಿ ಕುಣಿಕುಣಿಯುತ ಬೇಗ ಬಾರೈ ದೇವ ಕೃಷ್ಣ
ಕನಕಾಭರಣಗಳಿಂದೊಪ್ಪುತ ಬೇಗ ಬಾರೈದೇವ ಕೃಷ್ಣ
ನಲಿನಲಿಯುತ ಬಾ ಮಣಿಯುತ ಬೇಡುವೆ ಬಾರೈ ದೇವ ಕೃಷ್ಣ
ದಣಿಸದೆ ಕಮಲನಾಭವಿಠ್ಠಲ ಬೇಗ ಬಾರೈ ದೇವ ಕೃಷ್ಣ ೫

ಮೃತ್ಯುಂಜಯ ಎಂದೇ
೨೨
ಬಾರೋ ಗೋಪಾಲ ಬಾಲ ಸುಶೀಲ
ದೇವಕಿ ಬಾಲ ಕಂಸಾರಿ ಶ್ರೀಲೋಲ ಪ
ಗುರುಳು ಕೂದಲು ಹೊಸ ಅರಳೆಲೆ ಹೊಳಪು
ಕೊರಳ ಕೌಸ್ತುಭಹಾರ ಸರಗಳ ಝಳಪು ೧
ಮುದ್ದು ಬಾಲನೆ ಹೊಸ ಬೆಣ್ಣೆಮುದ್ದೆಯ ನೀವೆ
ಸದ್ದು ಮಾಡದೆ ಬಾರೊ ಉದ್ಧವಸಖನೆ ೨
ಕಂಠದೊಳಸಲಿ ವೈಕುಂಠ ಶ್ರೀಪತಿಗೆ
ಸೊಂಟಗೆಜ್ಜೆಯು ಕಿರುಗಂಟಿಗಳೊಲಿಯೆ ೩
ಭಕ್ತಿಯಿಂದಲಿ ಕರವೆತ್ತಿ ಪ್ರಾರ್ಥಿಸುವೆನು
ಅಪ್ರಮೇಯನೆ ಪುರುಷೋತ್ತಮ ನಮಿಪೆ ೪
ಕರುಣದಿಂದಲಿ ಬಾರೊ ಕಮಲ ಸಂಭವನಯ್ಯಕಮಲನಾಭ ವಿಠ್ಠಲ ನಮಿಸುವೆ ಸತತ ೫

೨೩
ಬಾರೋ ದೇವ ದೇವನೇ ಭಾವಜಾರಿಪ್ರಿಯನೆ
ಬಾರೊ ಮನೆಗೆ ಶ್ರೀನಿವಾಸನೆ ಪ
ಬಾರೊ ಭಾಮೆ ರುಕ್ಮಿಣೀಶ
ಬಾರೋ ಯೋಗಿ ಹೃದಯವಾಸ
ಬಾರೊ ಭಕ್ತಜನರ ಪೋಷನೇ ೧
ನಂದ ಗೋಪ ತನಯಗೋಪ-
ವೃಂದದೊಳಗೆ ಕುಣಿದು ಮೆರೆದು
ಮಂದರೋದ್ಧರ ಮದನ ಜನಕನೇ2
ಅಂದಿಗೆ ಕಾಲ್ಗೆಜ್ಜೆ ನಾದ-
ದಿಂದ ಕುಣಿದು ನೆರೆದು ನಲಿದು
ಸುಂದರಾಂಗ ಶುಭಕರಾಂಗನೇ ೩
ಸರಿಗೆ ನಾಗಮುರಿಗೆ ಮುತ್ತಿನ
ಸರಗಳ್ಹೊಳಯೆ ಉರದಿ ಲಕ್ಷ್ಮಿ
ಜರಿಪೀತಾಂಬರ ಧಾರಿ ಶೌರಿಯೇ4
ಕೋಟಿ ಸೂರ್ಯಕಾಂತಿ ಮುಖಲ-
ಲಾಟ ಕಸ್ತೂರಿ ತಿಲಕ ಶಿರದಿ ಕಿ-
ರೀಟ ಧರಿಸಿ ಮೆರೆವ ದೇವನೇ ೫
ಮುರಳಿ ನುಡಿಸಿ ತರುಣಿಯರನು
ಮರುಳು ಮಾಡಿ ತುರುಕರುಗಳಪೊರೆದ ಕಮಲ ನಾಭ ವಿಠ್ಠಲನೆ6

೨೪
ಬಾರೋ ನಮ್ಮ ಮನೆಗೆ ಬೇಗನೆ ಗೋಪಾಲಕೃಷ್ಣ
ಬಾರೋ ಶ್ಯಾಮ ಸುಂದರಾಂಗನೆ ಪ
ಬಾರೊ ಭಾಮೆ ರುಕ್ಮಿಣೀಶ ಬಾರೊ ಯೋಗಿ ಹೃದಯವಾಸ
ಬಾರೊ ದ್ವಾರಕಾಪುರೀಶ ಬಾರೊ ಭಕ್ತಜನರ ಪೋಷ ಅ.ಪ
ಅಂದಿಗೆ ಕಾಲ್ಗೆಜ್ಜೆ ಸರಪಣಿ ಪಾಡಗರುಳಿಯು
ಕೆಂದಾವರೆಯು ಪೋಲ್ವಪಾದದಿ
ನಂದಗೋಪ ತನಯ ಗೋಪ
ವೃಂದದೊಳಗೆ ಕುಣಿದು ನಲಿದು
ಇಂದಿರೇಶ ಶ್ರೀಶನೆ ಬಂದೊಂದು
ಹೆಜ್ಜೆನಿಡುತ ಮುದದಿ ೧
ಉಟ್ಟದಟ್ಟಿಯು ಪಟ್ಟೆಚಲ್ಲಣ ಹವಳಕಟ್ಟು
ಗಟ್ಟಿ ಸರಪಣಿ ಕಿರುಗಂಟೆಯು
ಕಟ್ಟಿದ ಉಡುದಾರಗೆಜ್ಜೆ
ಶ್ರೇಷ್ಠತನದಿ ಮೆರೆಯುತಿರಲು
ಪುಟ್ಟಬಾಲರೊಡನೆ ಪುಟ್ಟ
ಪುಟ್ಟ ಹೆಜ್ಜೆನಿಡುತ ನಲಿದು2
ದುಂಡು ಕರಕೆ ಗುಂಡು ಬಿಂದಲಿ ಮುಂಗೈಮುರಿಗೆ
ಉಂಗುರಗಳು ಶೋಭಿಸುತಲಿ
ಬಂದಿ ಬಾಪುರಿಗಳು ತೋಳ
ಬಂದಿ ನಾಗಮುರಿಗಿ ಕರದಿ
ಚಂದ್ರನನ್ನು ಪಿಡಿದು ನಲಿದ
ಸುಂದರಾಂಗ ಚೆಲುವ ಕೃಷ್ಣ ೩
ಪದಕ ಮುತ್ತಿನ ಸರಗಳ್ಹೊಳೆಯುತ ವೈಜಯಂತಿ ಮಾಲೆ
ಸರಿಗೆ ಏಕಾವಳಿಗಳೊಲಿಯುತ
ಪದುಮನಾಭ ನಿನಗೆ ದಿವ್ಯ
ಮುದದಿ ಕೌಸ್ತುಭ ಮಾಲೆ ಹೊಳೆಯೆ
ಯದುಕುಲೇಶ ಉಡುಪಿವಾಸ
ಉದದಿ ಶ್ರೀಶ ಉದ್ಧವ ಸಖನೆ4
ಸೋಮಸೂರ್ಯರ ಕಾಂತಿ ಸೋಲಿಪ ಮುಂಗುರುಳು ಮುಖವು
ಕಾಮಜನಕ ಕಮಲಲೋಚನ
ಹೇಮಮಣಿ ಕಿರೀಟಕುಂಡಲ
ಪ್ರೇಮತೋರ್ವ ಫಣಿಯ ತಿಲಕ
ಶ್ರೀ ಮಹೀಶ ಶ್ರೀಶನೆ ಶ್ರೀ-
ಕಮಲನಾಭ ವಿಠ್ಠಲ ಒಲಿವ ೫

೨೫
ಬಾರೋ ಮನ ಮೋಹನ
ಭಾಮೆ ರುಕ್ಮಿಣಿ ಸತ್ಯಭಾಮೆಯರಸ ಬೇಗ ಪ
ಯಮುನಾ ತೀರದಿ ಮುರಳಿಯ ನುಡಿಸಲು
ಪ್ರಮದೇರು ಗೋವ್ಗಳು ಮರುಳಾಗಿರಲು
ಮಮತೇಲಿ ಸಲಹಿದ ಚಲುವ ಕೃಷ್ಣನೆ ಬೇಗ ೧
ಗೋಪಿಯ ಕಂದ ಶ್ರೀ ಗೋಪಾಲನೆ
ಗೋವರ್ಧನೋದ್ಧಾರಿ ಶ್ರೀ ಕೃಷ್ಣನೆ
ಗೋಪಿಕಾಲೋಲ ಶ್ರೀ ಗೋಪಾಲ ಕೃಷ್ಣ ಬೇಗ ೨
ಕಮಲ ಸಂಭವನಯ್ಯ ಕಮಲಾಪತೆ
ಕಮಲಜಾತೆಯ ಪ್ರಿಯ ಪೊರೆ ಶ್ರೀಪತೆ
ಕಮಲ ಪತ್ರಾಕ್ಷ ಶ್ರೀ ಕಮಲನಾಭ ವಿಠ್ಠಲ ೩

ಜಗನ್ನಾಥ ದಾಸರು ರಚಿಸಿರುವ
೨೬
ಬಾರೋ ಶ್ರೀಹರಿ ಬಾಲಕ ಶೌರಿ ಬಾರೋ ಶ್ರೀಹರಿ ಪ
ಬಾರೋ ಬಾರೋ ಕರುಣಾನಿಧಿ ನಿನ್ನನು
ಬಾರಿ ಬಾರಿಗೆ ಸಿರಬಾಗಿ ನಮಿಸುವೆನು ಅ.ಪ
ಮಾರನಯ್ಯನೆ ಮಂಗಳರೂಪ ತೋರೊ ಬೇಗನೆ
ಸಾರಸಾಕ್ಷ ಸನ್ಮಂಗಳ ಮಹಿಮನೆ
ತೋರೋ ನಿನ್ನ ಮಹಾ ಮೀನರೂಪವನು ೧
ಸುಂದರಾನನ ಚಂದಿರವದನ ಮಂದಹಾಸನೆ
ಇಂದ್ರಾದಿಗಳಿಗೆ ಬಂದ ದುರಿತ ಕಳೆವಂದದಿ
ಬೆನ್ನಿಲಿ ಮಂದರವೆತ್ತಿದ೨
ಆದಿದೈತ್ಯನು ಭೂದೇವಿಯಪಹಾರ ಗೈದನು
ಆ ದಿತಿಜರ ಸಂಹಾರ ಮಾಡಲು ನೆಲ
ಬೇರುಗಳನೆ ತಿಂದ ಧೀರ ವರಾಹ ಬೇಗ ೩
ಕಂದನಾಡಿದ ಆ ನುಡಿ ಕೇಳಿಯಾನಂದ ತಾಳಿದ
ಮಂದರೋದ್ಧರ ಮುಚುಕುಂದ ವರದ ಸುರ-
ಗಂಗೆಯ ಪಿತ ನರಸಿಂಗರೂಪದಿ ೪
ಬಾಲರೂಪದಿ ಬೇಡಿದ ದಾನ ಭೂಮಿ ಮಾತ್ರದಿ
ಬೇಡಿದುದನೆ ಕೊಟ್ಟಾಮಹೀಪಾಲನ
ದೂಡಿ ಪಾತಾಳಕ್ಕೆ ಬಾಗಿಲ ಕಾಯ್ದೆ ೫
ಶೂರ ರಾಜರ ಸಂಹಾರ ಮಾಡಿ ತೋರಿ ಶೌರ್ಯವ
ಸಾಗರಶಯನಗೆ ತೋರಿ ಪರಾಕ್ರಮ
ಶೂಲಿಯ ಧನುವಿತ್ತೆ ರೇಣುಕಾತ್ಮಜ ೬
ವಾನರಾಧಿಪ ಹಗಲಿರುಳು ಭಕ್ತಿಮಾಡಿ ಧ್ಯಾನಿಪ
ಶ್ರೀ ಮಾನಿನಿಯಳ ಕೈಪಿಡಿಯುತ
ಅಯೋಧ್ಯದಿ ಮೆರೆದ ಶ್ರೀರಾಮ ಚಂದಿರನೆ ೭
ಪಾಂಡುನಂದನ ಮಾಡಿದ ನಿನ್ನ ಬಂಡಿ ಬೋವನ
ಸಂದೇಹಿಸದಲೆ ಅಂದು ಅವರ ಮನೆ
ಎಂಜಲ ಬಳಿದ ಮುಕುಂದನೆ ಬೇಗದಿ ೮
ಮಂಗಳಾತ್ಮಕ ತ್ರಿಪುರರ ಮದ ಭಂಗನಾಶಕ
ಮಂಗಳಮಹಿಮ ವಿಹಂಗವಾಹನ ಸುರ
ಸಂಗೀತಲೋಲ ಕೃಪಾಂಗ ದಯಾನಿಧೆ ೯
ತೇಜಿಯನೇರುತ ಸುಜನರು ಮಾಳ್ಪಪೂಜೆಗೊಳ್ಳುತ
ರಾಜೀವಾಕ್ಷ ರಕ್ಕಸ ಸಂಹಾರಕ ಅ-
ಪಾರ ಮಹಿಮ ರಥವೇರುತ ತವಕದಿ ೧೦
ಕಂಜಲೋಚನ ಕಮಲಾಯತಾಕ್ಷ ಮಂಜುಭೂಷಣ
ಕಂಜದಳಾಂಬಕ ಕಮಲನಾಭ ವಿಠ್ಠಲಝಗಝಗಿಸುವ ಮದ್ರ‍ಹದಯ ಮಂಟಪಕೇ ೧೧

ಶ್ರೀ ಹರಿಯ ವೈಕುಂಠದ
೨೭
ಬಾರೋ ಶ್ರೀಹರಿ ಶೌರಿ ಬಾರೋ ಭಕ್ತರ ದೊರೆ
ಬಾರೋ ಬಾಬಾ ಮನೆಗೆ ಪ
ಚಾರುತರ ನವರತುನದ ಶೃಂ-
ಗಾರ ರಥದೊಳು ಕುಳಿತು ಬೇಗನೇ
ಭೇರಿ ವಾದ್ಯಗಳೆಲ್ಲ ಮೊಳಗಲು
ನಾರಿ ರುಕ್ಮಿಣಿ ಭಾಮೆ ಸಹಿತಅ.ಪ
ಸುರರು ಅಸರರು ಕೂಡಿ ಶರಧಿಯ ಮಥಿಸಲು
ಭರದಿ ಪುಟ್ಟಲು ಸುಧೆಯು
ಪರಮ ಹರುಷದಿಂದ ದೊರಕಿತಮೃತವೆಂದು
ಅಸುರರೆಲ್ಲರು ಬರಲು
ಬೆರಗಾಗಿ ಸುರರೆಲ್ಲ ಉಪಾಯವನರಿಯದೆ
ಗಗನ ನೋಡುತಿರಲು
ತ್ವರದಿ ಶ್ರೀಹರಿ ಅವರ ನೋಡುತ
ಪರಿಪರಿಯ ಆಭರಣ ಪೀತಾಂ-
ಬರಗಳಿಂದಲಂಕರಿಸಿ ಸುಂದರ
ತರುಣಿ ರೂಪವ ಭರದಿತಾಳಿದೆ ೧
ಹರಿಯ ಸ್ತ್ರೀರೂಪವ ಪರಶಿವ ಸ್ಮರಿಸುತ
ಮರಳಿ ನೋಡಲಪೇಕ್ಷಿಸೆ
ಪರಿ ಪರಿ ಪ್ರಾರ್ಥಿಸೆ ಪರಮಾತ್ಮ ನುಡಿದನು
ಇದುತರವಲ್ಲೆನುತ
ಉರಗ ಭೂಷಣನ ಪ್ರಾರ್ಥನೆ ಸಲಿಸುವೆನೆಂದು
ತರುಣಿಯಾದನು ಹರಿಯು
ಪರಮಸೂಕ್ಷ್ಮದ ವಸನ ವಡ್ಡ್ಯಾ-
ಣಗಳಲಂಕರಿಸುತ್ತ ವನದೊಳು
ಚರಿಸುತಿರೆ ಹರ ಬೆರಗಾಗಿ ಹಿಂದೋ-
ಡುತಲಿ ಬರೆ ಮರೆಯಾದ ದೇವನೆ ೨
ಹಿಂದೆ ದೈತ್ಯನು ಬಹುಚಂದದಿ ತಪಗೈದು
ಕಂದುಗೊರಳನ ಮೆಚ್ಚಿಸೇ
ಬಂದನಾಗಲೇ ಶಂಭು ಇಂದುವರ ಬೇಡೆನಲು
ವಂದಿಸಿ ಬೇಡಿದ ವರವ ತಾನು
ಅಂದು ವರಗಳ ಕೊಟ್ಟು ಹಿಂದಿರುಗಲು ಶಿವನು
ಹಿಂದೆ ಬೆನ್ನಟ್ಟಿದ ರಕ್ಕಸನೂ
ಹಿಂದುರಗದಲೆ ಓಡುತಲೆ ಶ್ರೀ
ತಂದೆ ಕಮಲನಾಭ ವಿಠ್ಠಲ
ನೆಂದು ಮೊರೆಯಿಡೆ ಕೇಳಿ ತ್ವರದಲಿಬಂದು ರಕ್ಷಿಸಿ ಕಾಯ್ದ ಶ್ರೀಹರಿ ೩

೨೮
ಬಾಲಕೃಷ್ಣ ಬಾ ಬಾ ಹರಿ ಬಾಲಗೋಪಾಲ
ಸುಶೀಲ ಶ್ರೀಲೋಲ ಪ
ಗೋಕುಲದಿ ಪುಟ್ಟಿ ಆಕಳನೆ ಕಾಯ್ದ
ಗೋವರ್ಧನವನೆತ್ತಿ ಗೋಪವೃಂದ ಕಾಯ್ದ ೧
ಬಾಲತನವ ನೋಡಿ ಪಾಲುಬೆಣ್ಣೆ ಸೂರೆ
ಬಾಲಗೋಪರೊಡನೆ ಚೋರನೆನಿಸಿ ಮೆರೆದ ೨
ಮುರಳಿನಾದಗೈದು ಪರಿಪರಿಯ ಜನರ
ಮರುಳುಗೈಸಿ ಮೆರೆದ ಸುರಮುನಿ ವಂದ್ಯ ೩
ಮಡದಿಯರು ಜಲದಿ ಮುದದಿಂದಾಡುತಿರಲು
ಮದನನಯ್ಯ ವಸ್ತ್ರಗಳನೆ ಕದ್ದ ಚೋರ ೪
ಕಾಳಿ ಮಡುವ ಧುಮುಕಿ ಕಾಳಸರ್ಪನ ತುಳಿದಕಾಮಜನಕ ಹರಿ ಶ್ರೀ ಕಮಲನಾಭ ವಿಠ್ಠಲ೫

ಗಂಗಾಜನಕ : ನೋಡಿ
೧೪೭
ಬಿಡದೆ ಯಾಚಿಸಿ ಬೇಡುವೆನು ಶೌರಿ ನಿನ್ನಂಘ್ರಿ ಭಜಕರ
ಅಡಿಗಳನು ಧ್ಯಾನಿಸುವ ಮತಿ ಕೋರಿ ಪ
ಮೃಡ ಪುರಂದರರೊಡೆಯ ಶ್ರೀಹರಿ
ಕಡಲಶಯನನ ಬಿಡದೆ ಭಜಿಪರ
ಸಡಗರದಿ ಸನ್ಮಾರ್ಗ ತೋರುವ
ಬಡವರ ಆಧಾರಿ ನರಹರಿ ಅ.ಪ
ನಿನ್ನ ದಾಸರ ಸಂಗದೊಳಿರಿಸೆನ್ನ ಬೇಡುವೆನು ನಿನ್ನ
ನಿನ್ನ ನಾಮಸ್ಮರಣೆ ಅನುದಿನ
ನಿನ್ನ ಚರಣವ ಭಜಿಪ ಭಕ್ತರನು ಕೊಂಡಾಡುವಂಥ ಅ-
ಚ್ಛಿನ್ನ ಭಕ್ತರ ಕೂಟದಲಿರಿಸೆನ್ನ
ಸನ್ನುತಾಂಗನೆ ಸರ್ವವ್ಯಾಪಕ
ನಿನ್ನ ಮೊರೆ ಹೊಕ್ಕಿರುವೆ ಪಾಲಿಸು
ಪನ್ನಗಾದ್ರಿವಾಸ ವೆಂಕಟ ಆ-
ಪನ್ನ ಜನರನು ಪೊರೆವ ಕರುಣಿಯೆ ೧
ಮಡುವಿನೊಳು ಗಜ ಮೊರೆಯನಿಡುತಿರಲು
ನೀ ಕೇಳಿ ತ್ವರದೊಳು
ಬಿಡದೆ ರಕ್ಷಿಸಿ ಪೊರೆದ ಕರುಣಾಳು
ಬಡವ ವಿಪ್ರಗೆ ಒಲಿದೆ ಕ್ಷಿಪ್ರದೊಳು ಸೌಭಾಗ್ಯವಿತ್ತೆ
ಹುಡುಗ ತಪವಿರೆ ಅಂದು ಅಡವಿಯೊಳು
ತಡೆಯದಲೆ ನೀನೊಲಿದೆ ಭಕುತಿಗೆ
ಒಡೆಯರೈವರ ಮಡದಿ ಮೊರೆ ಕೇಳಿ
ಬಿಡದೆ ಅಕ್ಷಯವೆಂದು ಸಲಹಿದೆ
ದೃಢ ಭಕುತರನು ಬಿಡದೆ ಪೊರೆಯುವೆ ೨
ರಂಗನಾಥ ನಿನ್ನಂಘ್ರಿ ಕಮಲಗಳ ಭಜಿಸುವವರ ಭವ
ಹಿಂಗಿಸುತ ಪೊರೆದಂಥ ಚರಿತೆಗಳ
ಸಂಗರಹಿತನೆ ಬಿಡಿಸು ಬಂಧಗಳ ಸಲಹೆಂದು ಪ್ರಾರ್ಥಿಪೆ
ಅಂಗಜನಪಿತ ತರಿದೆನ್ನಪರಾಧ
ಮಂಗಳಾಂಗ ಪ್ಲವಂಗ ವತ್ಸರ
ಗಂಗಾಜನಕ ನಿನ್ನಂಘ್ರಿ ಭಜಕರ
ಹಿಂಗದಲೆ ಪಾಲಿಸುತ ಪೊರೆ ಕೃಪಾ-ಪಾಂಗ ಕಮಲನಾಭ ವಿಠ್ಠಲನೆ ೩

ಸಕಲ ಕರ್ಮಗಳ ರಹಸ್ಯವನ್ನರಿತವನು
೧೦೯
ಬೆಳಗಾಗಲು ಅರಘಳಿಗೆಯು ಇರುತಿರೆ
ಸ್ಮರಿಸುವೆ ವಿಶ್ವಮೂರುತಿಯನ್ನು
ಬೆಳಗಾಗಲು ಹರಿಧ್ಯಾನವ ಮಾಡುತ
ಬಹಿರ ಭೂಮಿಗ್ಹೋಗುತ ಮುನ್ನು ೧
ಕಲಿ ಮೊದಲಾಗಿಹ ದೈತ್ಯರನೆಲ್ಲಾ ವಿ-
ಸರ್ಜನೆ ಮಾಡುತ ಮತ್ತಿನ್ನೂ
ದಂತ ಧಾವನೆಯ ಮಾಡುತ ಶ್ರೀ ಮಾ-
ಧವನನು ಸ್ಮರಿಸುವೆ ನಾನಿನ್ನೂ ೨
ಮುಖವನು ತೊಳೆಯುತ ಮುರಹರಿ ಧ್ಯಾನದಿ
ಶ್ರೀತುಳಸಿಯ ನಮಿಸುತಲಿನ್ನೂ
ಮೀಸಲ ನೀರನು ಎರೆಯುತ ಬೇಗದಿ
ಮೃತ್ತಿಕಿ ಫಣಿಗಿಡುತಲಿ ಇನ್ನು ೩
ಮೂರು ಪ್ರದಕ್ಷಿಣಿ ಮಾಡುತ ಬೇಗದಿ
ಮುದದಿ ನಮಸ್ಕರಿಸುತಲಿನ್ನೂ
ದೇವರ ಮನೆಕಡೆ ಪೋಗುತ ನಿಂದಿಹ
ಜಯವಿಜಯರಿಗೊಂದಿಸಿ ಮುನ್ನು ೪
ದೇವರ ದರ್ಶನಕಾಜ್ಞೆಯ ಕೇಳುತ
ದೇವರ ಗೃಹದೊಳು ಪೋಗುತಲಿ
ಮಾಯಾ ಪತಿಯನು ಮನದೊಳು ಧ್ಯಾನಿಸಿ
ವಂದನೆ ಮಾಡುತ ಬೇಗದಲಿ ೫
ದೇವರ ಮನೆಯನು ಸಾರಿಸಿ ಶಂಖುಚಕ್ರವುಗದೆ
ಪದುಮನ್ಹಾಕುತಲಿ
ಗಜವರದನ ಕೊಂಡಾಡುತ ಮುದದಿ
ಗಜೇಂದ್ರ ಮೋಕ್ಷನ ಸ್ಮರಿಸುತಲಿ ೬
ಗೋವೃಂದದ ಕಡೆ ಪೋಗುತ ಶ್ರೀ-
ಗೋವಿಂದನ ಸ್ಮರಿಸುತ ನಿತ್ಯದಲಿ
ಗೋಪೀ ಬಾಲನ ಗೋಕುಲವಾಸನ
ಗೋವ್ಗಳ ಮಧ್ಯದಿ ಸ್ಮರಿಸುತಲಿ ೭
ಬಾಲಕೃಷ್ಣನ ಲೀಲೆಯ ಪೊಗಳುತ
ಬಾಲಲೀಲೆಗಳ ಕೇಳುತಲಿ
ಪುರಾಣವ ಪೇಳುವ ದ್ವಿಜರಿಗೆ
ವೃದ್ಧರಿಗೆರಗುತ ಪ್ರತಿನಿತ್ಯದಲಿ ೮
ಮುರಳಿಯನೂದುತ ಮೆರೆಯುವ ಕೃಷ್ಣನ
ಸ್ಮರಣೆಯ ಅನುದಿನ ಮಾಡುತಲಿ
ಸರಸಿಜನಾಭನ ಸ್ಮರಿಸುತ ಮನದಲಿ
ಸ್ನಾನಕೆ ತೆರಳುತ ಶೀಘ್ರದಲಿ ೯
ನದಿಯ ಸ್ನಾನಕೆ ಪೋಗುವ ಸಮಯದಿ
ನಾರದವಂದ್ಯನ ಸ್ಮರಿಸುತಲಿ
ಭಾಗೀರಥಿಯಲಿ ಸ್ನಾನವು ಮಾಡುತ
ಬಾಗುತ ಸಿರವನು ಬೇಗದಲಿ೧೦
ಫಣಿರಾಜನ ಶಯನದಿ ಮಲಗಿಹ ಶ್ರೀ-
ಪರಮಾತ್ಮನ ನೋಡುತ ಬೇಗ
ಪಾದಗಳ ಸೇವಿಪ ಶ್ರೀ ಭೂದೇವಿಯ-
ರೇನುಧನ್ಯರೆಂದೆನುತಾಗ೧೧
ಪೊಕ್ಕಳ ಮಧ್ಯದಿ ಪೊರಟಿಹ ನಾಳದ
ತುದಿಯಲಿ ರಂಜಿಪ ಕಮಲದಲಿ
ಉದ್ಭವಿಸಿದ ನಾಲ್ಮೊಗನನು ನೋಡುತ
ಬಗೆ ಬಗೆ ಪ್ರಾರ್ಥಿಸುತಲಿ ಇನ್ನು ೧೨
ನೆರೆದಿಹ ಸುರ ಪರಿವಾರವೆಲ್ಲ ಶ್ರೀ-
ಹರಿಯನು ವಾಲೈಸುತಲಿನ್ನೂ
ಪರಮವೈಭವದಿ ಮೆರೆಯುವ ದೇವನ
ಸ್ಮರಿಸುವೆ ಜಲಮಧ್ಯದೊಳಿನ್ನು ೧೩
ದೇವರ ರಥವನು ತೊಳೆಯುವೆನೆಂಬ-
ನುಸಂಧಾನದಿ ಸ್ನಾನವು ಮಾಡಿ
ದೇವರ ರಥ ಶೃಂಗರಿಸುವೆನೆನ್ನುತ
ಶ್ರೀಮುದ್ರೆಗಳ್ಹಚ್ಚುತ ಪಾಡಿ ೧೪
ನಿತ್ಯ ಕರ್ಮಮುಗಿಸುವ ಬೇಗದಿ ಶ್ರೀ-
ಹರಿಪೂಜೆಗೆ ಅಣಿಮಾಡುತಲಿ
ಪುಷ್ಪಗಳನು ಗಂಧಾಕ್ಷತೆ ಶ್ರೀ ತುಳಸಿಯ
ತಂದಿಡುವೆನು ಮೋದದಲಿ ೧೫
ಪಂಚಭಕ್ಷ ಪಾಯಸಗಳ ಮಾಡುತ
ಪಂಚಾತ್ಮಕ ನ ಸ್ಮರಿಸುತಲಿ
ಮಿಂಚಿನಂತೆ ಹೊಳೆಯುವ ತಬಕಿಲಿ
ತಾಂಬೂಲವ ನಿರಿಸುತ ಬೇಗದಲಿ ೧೬
ಬ್ರಹ್ಮನು ಈ ವಿಧ ಪೂಜೆಯ ಪ್ರತಿದಿನ
ಬ್ರಹ್ಮನ ಪಿತಗರ್ಪಿಸುತಲಿರಲು
ಸುಮ್ಮಾನದಿ ಮಹಲಕುಮಿಯು ಇದ-
ನೊಯ್ಯತ ಸುರಮುನಿ ವಂದ್ಯನಿಗೆ ತಾನರ್ಪಿಸಲು೧೭
ಪರಮಾತ್ಮನು ಈ ವಿಧ ಸೇವೆಯ ಕೈ-
ಗೊಳುತಲಿ ಸಂತಸ ಪಡಲಿನ್ನು
ಅರಿತವರೆಲ್ಲರು ನಿರುತದಿ ಹರಿ ಧ್ಯಾ-
ನವ ಮಾಡುತಲಿರೆ ತಾವಿನ್ನು ೧೮
ದೇವಪೂಜೆ ವೈಶ್ವದೇವವು ನಿತ್ಯದಿ
ಗೋಬ್ರಾಹ್ಮಣನರ್ಚಿಸಿ ಇನ್ನು
ಸಾಯಂ ಸಮಯದಿ ಸಾಧುಗಳೊಡನೆ
ದೇವರ ಕಥೆ ಕೇಳುತಲಿನ್ನೂ ೧೯
ಝಾಮಝಾಮದಿ ಜಯಶಬ್ದಗಳಿಂ
ಜಯಾಪತಿಯನು ಪೊಗಳುತಲಿ
ಆರತಿ ಜೋಗುಳ ಹಾಡುತ ಮುದದಲಿ
ಮಧ್ವೇಶಾರ್ಪಣ ಪೇಳುತಲಿ ೨೦
ಮಲುಗುವಾಗ ಮುಕುಂದನ ಸ್ಮರಿಸುತ
ಲಯ ಚಿಂತನೆಯನು ಮಾಡುತಲಿ
ಕರಮುಗಿಯುತ ಕಾಯೇನ ವಾಚಾ ಎಂ-
ದ್ಹೇಳುತ ಪ್ರಾಜ್ಞನ ಸ್ಮರಿಸುತಲಿ ೨೧
ಝಾಮಝಾಮದಿ ಶ್ರೀ ಹರಿ ಮಾಧವ
ಕೇಶವ ನಾರಾಯಣ ಎನುತ
ಆಗಲು ಬೆಳಗಿನ ಝಾವದಿ ಸೃಷ್ಟಿಯ
ಚಿಂತನೆ ಮಾಡಿ ಎಂದೆನುತ೨೨
ಮಳಲಗೌರಿ ನೋಂತಿಹ ಸತಿಯರಿಗೆ
ಮುರಳೀಧರ ಒಲಿದಿಹನೆನ್ನುತ
ಉದಯವಾಗಲು ವಿಶ್ವನ ಸ್ಮರಿಸುತ
ವಿಧಿ ನೇಮಗಳನುಸರಿಸುತ್ತ ೨೩
ನಿತ್ಯದಿ ಈ ತೆರವಾಚರಿಸುವ ನರ
ಮುಕ್ತನು ಧರೆಯೊಳಗೆಂದೆನುತ
ಅತ್ಯುತ್ಸಾಹದಿ ಬರೆದೋದುತಲಿ-
ದರರ್ಥವ ತಿಳಿದಾಚರಿಸುತ್ತ೨೪
ಈ ವಿಧ ಚಿಂತನೆ ಮಾಡುವ ಮನುಜಗೆ
ದಾರಿದ್ರ್ಯವು ದೂರಾಗುವದು
ಮಾರಮಣನು ತನ್ನವರೊಡಗೂಡುತ
ವಾಸವಾಗುವನೆಂಬುವ ಬಿರುದು೨೫
ಕರೆಕರೆಗೊಳ್ಳದೆ ಕೇಳಿರಿ ನಿತ್ಯವು
ಕನಕಗಿರಿವಾಸನ ಮಹಿಮೆ
ಕನಲಿಕೆ ಕಳೆವುದು ಕಮಲನಾಭ-
ವಿಠ್ಠಲನು ಕೊಂಡಾಡುತ ಮಹಿಮೆ ೨೬

ಈ ಎರಡೂ ಕೃತಿಗಳು ಕೃಷ್ಣವೇಣಿ
೩೧
ಬೆಳಗಾಯಿತು ಏಳಿ
ನಳಿನನಾಭನ ಪಾದ ನಳಿನ ಸೇವಕರು ಪ
ಉದಯ ಕಾಲದೊಳೆದ್ದು ಹೃದಯ ನಿರ್ಮಲರಾಗಿ
ಮಧುಸೂದನನ ಪಾಡಿ ಸ್ತುತಿಸುತಲಿ
ಮುದದಿಂದ ಮಾಧವನ ವಿಧವಿಧದಿ ಪೂಜಿಸಿ
ಪದುಮನಾಭನ ಪಾಡಿ ಪೊಗಳುವ ಜನರು ೧
ರಂಗನ ಮಹಾದ್ವಾರದ ಮುಂದೆ ಕಾಣುವ
ಶೃಂಗಾರದ ಗಜ ಸಾಲುಗಳ ನೋಡುತ
ಬಂಗಾರ ಕೋಡುಳ್ಳ ಗೋವ್ಗಳಿಗೆರಗುತ್ತ
ಅಂಗಜ ಜನಕನ ಪಾಡಿ ಪೊಗಳುವರು೨
ರಂಭೆ ಊರ್ವಶಿ ಮೇನಕೆಯರೆಲ್ಲರು ಕೂಡಿ
ಸಂಭ್ರಮದಲಿ ನಾಟ್ಯವಾಡುತಿರೆ
ಗಂಗೆ ಗೋದಾವರಿ ಕೃಷ್ಣ ತುಂಗಭದ್ರೆ ಯಮುನೆಯರು
ಇಂಬಿಲ್ಲದೆ ಪಾಡುತಿಹರೊ ಶ್ರೀ ಹರಿಯ ೩
ಅತ್ರಿ ವಸಿಷ್ಠ ಗೌತಮ ಭಾರದ್ವಾಜರು
ಅರ್ಥಿಯಲ್ಲಿ ಜಮದಗ್ನಿ ಋಷಿಗಳೆಲ್ಲ
ಸ್ತೋತ್ರಮಾಡುತ ಪುರುಷೋತ್ತಮನನು ಪಾಡಿ
ವಿಶ್ವಾಮಿತ್ರರು ಬಹು ಭಕ್ತಿಯಲಿ ೪
ಸುತ್ತ ಸನಕಾದಿ ನಾರದರೆಲ್ಲ ಪಾಡಲು
ನೃತ್ಯಗಾಯನದಿಂದ ಶ್ರೀ ಕೃಷ್ಣನ
ಅರ್ತಿಯಿಂದ ಅಜಭವ ಸುರರೆಲ್ಲ ಸ್ತುತಿಸಲು
ಸ್ತೋತ್ರಮಾಡಲು ದುರ್ಗದೇವಿಯರು೫
ಗಜರಾಜ ಗೋಮಾತೆ ಮೊದಲಾದವರು ಬಂದು
ಮಧುಸೂದನನ ನೋಡೆ ನಿಂತಿಹರು
ಮದಗಜಗÀಮನೇರು ಮುದದಿ ಕಲಶ
ಕನ್ನಡಿಗಳ ಪಿಡಿದು ನಿಂತಿಹರು ಬೇಗದಲಿ ೬

ಮುತ್ತಿನ ಕದಗಳು ತೆಗೆವ ವ್ಯಾಳ್ಯದಲಿ
ನೌಬತ್ತು ನಗಾರಿ ವಾದ್ಯಗಳಾಗಲು
ಸಪರ್Àನ್ಹಾಸಿಕೆಯಲ್ಲಿ ಮಲಗಿರುವ ದೇವನ
ಅರ್ಥಿವೈಭವ ನೋಡೊ ವೇಳೆ ಮೀರುವದು೭
ಗಂಗಾಜನಕನ ಚರಣಂಗಳು ನೋಡುವ
ಬಂಗಾರ ಕಿರುಗಂಟೆಗಳ ನಡುವನು ನೋಡುವ
ರಂಗು ಕೇಸರಿಯ ಪೀತಾಂಬರ ನೋಡುವ
ಶೃಂಗಾರ ವೈಜಯಂತಿಯ ನೋಡುವ ೮
ವಕ್ಷ ಸ್ಥಳದಲ್ಲಿ ಶ್ರೀ ಲಕ್ಷ್ಮಿಯ ನೋಡುವ
ಹಸ್ತದ ಆಭರಣಂಗಳ ನೋಡುವ
ಮುತ್ತಿನ ಭುಜ ಕೀರ್ತಿ ರತ್ನದ್ಹಾರಗಳಿಂದ
ಒಪ್ಪುವ ಉರದಿ ಶ್ರೀವತ್ಸನ ಸ್ತುತಿಸೆ ೯
ಕೋಟಿ ಸೂರ್ಯರ ಕಾಂತಿ ಸೋಲಿಪ ನಗುಮುಖ
ಲಲಾಟದಿ ಕಸ್ತುರಿ ತಿಲಕ ಒಪ್ಪಿರಲು
ಮಾಟದ ಕರ್ಣಕುಂಡಲಗಳು ಹೊಳೆಯುತ್ತ
ನೋಟದಿ ಜಗವ ಮೋಹಿಪ ದೇವನನು ನೋಡೆ೧೦
ಅಂದದ ಮುಗುಳು ನಗೆಯು ದಂತ ಪಂಙ್ತಯು
ಸುಂದರ ಪಾದ ಕದಪುಗಳಂದವು
ಇಂದ್ರ ನೀಲದಮಣಿ ಖಚಿತ ಕಿರೀಟದ
ಮಂದಹಾಸದ ನಗೆಮುಖ ನೋಡುವ ೧೧
ಕಡೆಗಣ್ಣ ನೋಟದಿ ಜಗವ ಸೃಷ್ಟಿಪದೇವ
ಖಗವಾಹನನು ಸಂರಕ್ಷಿಪ ಲೋಕವ
ಅಗಣಿತ ಮಹಿಮ ಅತಿಶಯದಿ ಲಯವ ಮಾಳ್ಪ
ಸುಗುಣ ಸುಂದರನ ಗುಣ ಪೊಗಳುವ ಜನರು೧೨
ಸಕಲ ಸದ್ಗುಣ ಭರಿತ ನಿಖಿಳ ವ್ಯಾಪಕ ಕೃಷ್ಣ
ಶುಕಮುನಿ ವಂದಿತ ದಿವ್ಯ ಚರಣನ
ರುಕುಮಿಣಿ ಅರಸನ ಭಕುತರ ಪೋಷನ
ಸಖ್ಯದಿಂದ ಪ್ರಿಯನ ನೋಡುವ ಸುಜನರು೧೩
ಅನಿರುದ್ಧ ದೇವ ಶ್ರೀ ಪ್ರದ್ಯುಮ್ನ ಮೂರ್ತಿಯ
ಸಂಕರುಷಣ ವಾಸುದೇವೇಶನ
ನಾರದ ವಂದ್ಯ ನವನೀತ ಚೋರನ
ನಾರಾಯಣನ ನಾಮ ಸ್ಮರಿಸುವ ಸುಜನರು ೧೪
ಕವಿಜನ ಪ್ರಿಯನ ಕಮನೀಯ ರೂಪನ
ಕಮಲನಾಭವಿಠ್ಠಲನ ಪಾಡುವ
ಕಮಲಸಖನ ಸೋಲಿಸುವ ಮುಖಕಾಂತಿಯಕಮಲಾಕ್ಷಿಯರಸನ ಪೊಗಳುವ ಸುಜನರು೧೫

೩೨
ಬ್ಯಾಡೋ ಒಬ್ಬರ ಮನೆಗೆ ನೀ ಪೋಗ
ಬ್ಯಾಡೋ ಒಬ್ಬರ ಮನೆಗೆ ಪ
ಗಾಡಿಕಾರನೆ ಕೃಷ್ಣ ಚಾಡಿ ಮಾತನು ಕೇಳಿ
ಗಾಡನೆ ಕಿವಿಮುಚ್ಚಿ ಓಡಿಸಿದೆ ಗೋಪಿಯರ ಅ.ಪ
ಕಟ್ಟಿದ್ದ ತುರುಕರುಗಳ ಬಿಚ್ಚಿ ಪೋಗುವದಿದು
ನಿಶ್ಚಯವೆಂದು ಪೇಳ್ವರೊ
ಸ್ವಚ್ಛ ಕರುಗಳ ಕಣ್ಣುಮುಚ್ಚಿ ಪಾಲೆಲ್ಲ ಕುಡಿದ
ಅಚ್ಯುತನಿಗೆ ಬುದ್ಧಿ ಮತ್ತೆ ನೀ ಪೇಳೆಂಬರು ೧
ಮಕ್ಕಳೆಲ್ಲರು ಕಯ್ಯೊಳು ಬಟ್ಲಲಿ ಅವ-
ಲಕ್ಕಿಯ ತಿನ್ನುತಿರಲು
ಘಕ್ಕನೆ ಬಡಿಯೆ ದಿಕ್ಕು ದಿಕ್ಕಿಗೆ ಚಲ್ಲೆ
ಬಿಕ್ಕಿ ಬಿಕ್ಕಿ ಅಳುತಾರೆ ಗೋಪಕ್ಕ ನೀನೋಡೆಂಬರು ೨
ವಾಸುದೇವಗೆ ಹರಕೆಯ ಮಾಡಿ ನವ-
ನೀತ ಮೀಸಲು ಮಾಡಿರೆ
ಮೀಸಲಳಿದು ಕೋತಿ ಮಾರ್ಜಾಲಗಳಿಗುಣಿಸಿ
ನೀತಿ ಪೇಳುವ ಶ್ರೀನಾಥ ನೋಡೆಂಬರು ೩
ಗೊಲ್ಲ ಬಾಲಕಿಯರೆಲ್ಲ ಪಾಲ್ಮೊಸರು ಮಾರೆ
ಮೆಲ್ಲನೆ ಪೋಗುತಿರಲು
ಗುಲ್ಲು ಮಾಡದೆ ಕವಣೆ ಕಲ್ಲಿಂದ ಕುಂಭ ಒಡೆಯೆ
ಚಲ್ಲಿ ಪಾಲ್ಮೊಸರು ಸೂರೆ ನಲ್ಲೆ ನೀ ನೋಡೆಂಬರು೪
ಮತ್ತೆ ಕೇಳಮ್ಮ ಯಶೋದೆ ನಾವೆಲ್ಲ ಆಣಿ
ಮುತ್ತು ಪೋಣಿಸುತಿರಲು
ಸುತ್ತ ಮುತ್ತಲು ನೋಡಿ ಮುತ್ತು ಸೂರೆ ಮಾಡಿದ
ಕರ್ತೃ ಶ್ರೀ ಕಮಲನಾಭ ವಿಠ್ಠಲನ ನೋಡೆಂಬರು೫

ಲಿಂಗಸುಗೂರಿನಲ್ಲಿ ವರದೇಂದ್ರ
ಭಾರತೀದೇವಿ
೬೮
ಭಾರತಾದೇವಿಯರ ಪಾದ
ಚಾರು ಚರಣಕೆರಗುವೆ ಪ
ವಾರಿಜಾಕ್ಷಿ ನಿನ್ನ ಮಹಿಮೆ
ಬಾರಿ ಬಾರಿ ಪೊಗಳುವೆ ಅ.ಪ
ಸುಂದರಾಂಗಿ ಶುಭಕರಾಂಗಿ
ಬಂದು ಎನ್ನ ಪಾಲಿಸು
ಇಂದಿರೇಶನನ್ನು ಸದಾ ಆ-
ನಂದದಿಂದ ಭಜಿಸಲು ೧
ಬಾರಿ ಬಾರಿ ನಿನ್ನ ಸ್ತುತಿಪೆ
ಮಾರುತನರ್ಧಾಂಗಿಯೆ
ಸಾರಿ ಸಾರಿ ಶ್ರೀರಮಣನ
ಸಾರ ಕೃಪೆಯ ಕರುಣಿಸು೨
ಕರುಣಿಸಮ್ಮ ನಿನ್ನ ಪತಿಯ
ಸ್ಮರಣೆ ನಿರುತ ಮರೆಯದೆ
ಕರುಣಾಕರನೆ ಕಮಲನಾಭ
ವಿಠಲನಂಘ್ರಿ ಧ್ಯಾನವೀಯೆ ೩

೧೪೯
ಮಂಗಳ ಮಾಧವಗೆ ಮಾರಮಣಗೆ
ಮಂಗಳ ಶ್ರೀಧರಗೆ ಪ
ರಂಗ ರಿಪುಮದ ಭಂಗ ಭವಗಜ
ಸಿಂಗ ಕರುಣಾಪಾಂಗ ಶ್ರೀಶಗೆ
ಗಂಗಾಜನಕಗೆ ತುಂಗ ಮಹಿಮಗೆ
ಭಂಗರಹಿತಗೆ ಅನಂಗಪಿತನಿಗೆ ೧
ಭುವನ ಮೋಹನ ಸುಮನಸರ ಪ್ರಿಯ
ಕವಿಜನರ ಹೃದ್ರ‍ಗಹ ನಿವಾಸಗೆ
ನವನವ ಲೀಲೆಗಳ ತೋರ್ದಗೆ
ನವರತುನದಾರತಿಯ ಬೆಳಗಿರೆ ೨
ಗರುಡಗಮನಗೆ ಉರಗಶಯನಗೆ
ಪರಮಪುರುಷಗೆ ಪುಣ್ಯಚರಿತಗೆ
ಉರಗಗಿರಿವಾಸನಿಗೆ ದೇವಗೆ
ಸುರರೊಡೆಯ ಶ್ರೀ ಶ್ರೀನಿವಾಸಗೆ೩
ಸೌಮ್ಯನಾಮ ಸಂವತ್ಸರದಂದು
ನೇಮದಿಂದ ಭಜಿಪ ಭಕುತರ
ಕಾಮ್ಯಕರ್ಮವ ತರಿದು ಪೊರೆಯುವ
ಕಮಲನಾಭ ವಿಠ್ಠಲನ ಪ್ರತಿದಿನ೪

ಶ್ರೀನಿವಾಸ ಕಲ್ಯಾಣದ ಕತೆ
೧೩೧
ಮಂಗಳಂ ಜಯ ಮಂಗಳಂ ರಾಮ ಮುನಿಜನ ಸ್ತೋಮ
ಮಂಗಳಂ ಲೋಕಾಭಿರಘುರಾಮ ಸದ್ಗುಣ ಸ್ತೋಮ ಪ
ದಶರಥನ ವರಪುತ್ರ ನೀನಾಗಿ ಕೌಶಿಕನ ಯಜ್ಞದಿ
ಅಸಮಸಾಹಸ ದೈತ್ಯರನು ಗೆಲಿದಿ
ವಸುಧೆಯೊಳು ಗೌತಮನ ಸತಿಯಳನು ಉದ್ಧರಿಸಿ ತಾಟಕಿ
ಹೊಸಪರಿಯ ದೈತ್ಯರನು ಸಂಹರಿಸಿ
ಎಸೆವ ಮಿಥಿಲಾ ಪುರದಿ ಜಾನಕಿ
ಬಿಸಜನೇತ್ರೆಯ ಕೈಪಿಡಿದು ರನ್ನ
ಹೊಸ ಪರಿಯ ರಥದೊಳಗೆ ಪೊರಟು
ಸತಿಸಹಿತ ಅಯೋಧ್ಯೆಯಲಿ ಮೆರೆದಗೆ೧
ದಶರಥನು ಪುತ್ರಗೆ ಪಟ್ಟವನು ಕಟ್ಟುವೆನು ಎನಲು
ದಶದಿಕ್ಕಿಗೆ ಪತ್ರವನು ಕಳುಹಿಸಲು
ಎಸೆವ ಮಂಗಳ ವಾದ್ಯ ಕೇಳುತಲೆ ಕೈಕೇಯಿ ಬರಲು
ಅಸದಳದವರ ಬೇಡಿ ಕಾಡಿಸಲು
ವಸುಧೆಗೀಶನ ವನಕೆ ಕಳುಹಲು
ಕುಶಲವಿಲ್ಲದೆ ಮರುಗೆ ದಶರಥ
ಮಿಸುಣಿಮಣಿ ಸಿಂಹಾಸನ ತ್ಯಜಿ-
ಸುತಲಿ ಪಿತೃ ವಾಕ್ಯವ ನಡೆಸಿದಗೆ ೨
ಮಡದಿ ಸೀತಾ ಲಕ್ಷ್ಮಣರ ಕೂಡಿ
ಬಿಡದೆ ದೈತ್ಯರನೆಲ್ಲ ಕಡಿದಾಡಿ
ಒಡತಿ ಸೀತೆಗೆ ಉಂಗುರವ ನೀಡಿ ಹನುಮಂತ ಬರಲು
ಕಡುಜವದಿ ಸಾಗರದಿ ಸೇತುವೆಯ ಮಾಡಿ
ತಡೆಯದಲೆ ರಾವಣನ ಮೂಲವ
ಕಡಿದು ಕಮಲನಾಭ ವಿಠ್ಠಲನು
ಮಡದಿಸಹಿತಾಯೋಧ್ಯೆ ಪುರದಲಿ
ಸಡಗರದಿ ಸಾಮ್ರಾಜ್ಯವಾಳ್ದಗೆ೩

ಬಾಗಿಲು ತೆರೆಯುವ ಹಾಡು.
೧೩೨
ಮಂಗಳಂ ಜಯ ಮಂಗಳಂ ರಾಮ ಸಜ್ಜನರ ಪ್ರೇಮ
ಮಂಗಳಂ ಲೋಕಾಭಿರಘುರಾಮ ಪಟ್ಟಾಭಿರಾಮ ಪ
ಮಂಗಳಂ ಶ್ರೀ ದಶರಥಾತ್ಮಜಗೆ
ಮಂಗಳಂ ಅಯೋಧ್ಯವಾಸಿಗೆ
ಮಂಗಳಂ ಜನಕಜಾಮಾತೆಗೆ
ಮಂಗಳಂ ಶ್ರೀ ರಾಮಚಂದ್ರಗೆ ಅ.ಪ
ದೇವದೇವೋತ್ತಮ ವೈಕುಂಠದೊಳಗೆ ಶ್ರೀ ಭೂಮೇರಿಂದ
ಸೇವೆಗಳ ಕೈಗೊಳ್ಳುತ ಮಲಗಿರಲು
ದೇವಋಷಿ ಬ್ರಹ್ಮೇಂದ್ರಾದಿಗಳು ಸಹಿತ ಶ್ರೀಧರನ ಸ್ತುತಿಸುತ
ರಾವಣಾಸುರನುಪಟಳ ವರ್ಣಿಸಲು
ಶ್ರೀ ವರನು ಸಂತೈಸಿ ಅವರನು
ಭೂಮಿಪತಿ ದಶರಥನ ಪ್ರೇಮ
ಕುಮಾರನಾಗುದಿಸುತಲಯೋಧ್ಯದಿ
ಪ್ರೇಮ ತೋರುತ ಮೆರೆದವಗೆ ಜಯ೧
ದಶರಥನ ಸುತರಾಗಿ ಬೆಳೆಯುತಲಿ ಕೌಶಿಕನ ಯಜ್ಞವ
ಕುಶಲದಲಿ ರಕ್ಷಿಸುತ ಹರುಷದಲಿ
ಎಸೆವ ಧನುವನು ಮುರಿದು ನಿಮಿಷದಲಿ
ಶಶಿಮುಖಿಯ ಕೂಡುತ
ಕುಶಲದಲಿ ವನವಾಸ ಚರಿಸುತಲಿ
ದಶಶಿರನು ಜಾನಕಿಯ ಕದಿಯಲು
ಶಶಿಮುಖಿಯನರಸುತಲಿ ವನವನ
ವಸುಧಿಪತಿ ಕಪಿಗಳ ಕಳುಹಿ ಸತಿ
ಕುಶಲ ತಿಳಿಯುತ ನಲಿದವಗೆ ಜಯ ೨
ಬಂದ ಕಪಿ ಕಟಕವನೆ ನೋಡುತ್ತ ಸಾಗರಕೆ ಸೇತುವೆ
ಒಂದೇ ನಿಮಿಷದಿ ರಚಿಸಿ ಶೀಘ್ರದಲಿ
ಮಂದಮತಿ ರಾಕ್ಷಸರ ವಧಿಸುತಲಿ ಅಂದಣವ ಕಳುಹಿ
ಮಂದಗಮನೆಯ ಕರೆಸಿ ಬೇಗದಲಿ
ಬಂದ ರಾಮನು ಎಂದು ಮಾರುತಿ
ಮುಂದೆ ಭರತಗೆ ಕುಶಲ ತಿಳಿಸಲು
ತಂದೆ ಕಮಲನಾಥ ವಿಠಲ
ಮುಂದೆ ಪ್ರಜೆಗಳ ಪೊರೆದವಗೆ ಜಯ ೩

ರಾಮಾಯಣದ ಕಥೆ ಸಂಕ್ಷಿಪ್ತವಾಗಿ
೧೩೩
ಮಂಗಳಂ ಜಯ ಸುಂದರ ಮೂರುತಿಗೆ
ಮಾ ಮನೋಹರನಿಗೆ ಪ
ಮಂಗಳ ಮಧುಸೂದನನಿಗೆ
ಮಂಗಳ ಮುರಮರ್ದನನಿಗೆ
ಮಂಗಳಾಂಗ ಶ್ರೀ ಮದನಂತ-
ರಂಗನಿಗೆ ಶುಭಾಂಗ ಹರಿಗೆ ೧
ರಂತಿದೇವನನ್ನು ಪೊರೆದ
ಚಿಂತಿತಾರ್ಥ ಪ್ರದಾತನಿಗೆ
ಸಂತತವು ಭಕುತರನು
ಸಂತೋಷದಿ ಪೊರೆವ ಹರಿಗೆ೨
ಪಾಂಡವರನು ಪೊರೆದಗೆ
ಪುಂಡರೀಕಗೆ ಒಲಿದಗೆ
ತಂಡತಂಡದ ಭಕ್ತರನ್ನು
ಕಂಡುಪೊರೆವ ಮಹಮಹಿಮಗೆ೩
ನಾರಿ ರುಕ್ಮಿಣಿ ಭಾಮೆ ಸಹಿತದಿ
ದ್ವಾರಕಾಪುರ ವಾಸನಿಗೆ
ಸೌಳಸಾಸಿರ ಸತಿಯರಾಳ್ದ
ಸಾರಸಾಕ್ಷ ಹರಿಗೆ ಬೇಗ೪
ಕಡಲೊಡೆಯಗೆ ಮೃಡಸಖನಿಗೆ
ಕಡುಹರುಷದಿ ಕಾಮಿನಿಯರು
ಸಡಗರದಲಿ ಕಮಲನಾಭ
ವಿಠ್ಠಲನಂಘ್ರಿ ಭಜಿಸಿನಲಿದು೫

ರಾಮಾಯಣದ ಕಥೆ
೧೩೪
ಮಂಗಳಂ ನರಹರಿಗೆ ಜಯ ಜಯ
ಮಂಗಳ ಮುರಹರಗೆ ಪ
ಮಂಗಳ ಮದನಗೋಪಾಲ ಶ್ರೀಕೃಷ್ಣಗೆ
ಮಂಗಳ ಮಾಧವಗೆ ಅ.ಪ
ವಸುದೇವ ಸುತನಾಗಿ ಗೋಕುಲದೊಳು
ಮೊಸರು ಬೆಣ್ಣೆಯ ಕದ್ದು
ಶಶಿಮುಖಿಯರ ಕೂಡಿ ನಿಶಿರಾತ್ರಿಯಲಿ
ರಾಸ ಕ್ರೀಡೆಯಾಡಿದ ಹರಿಗೆ ೧
ನಳಿನಮುಖಿಯರೆಲ್ಲ ನೀರೊಳಗಾಡಿ
ಬಳಲಿ ಮೇಲಕೆ ಬರಲು
ಲಲನೆಯರ ಕಂಡು ಪರಿಹಾಸ್ಯ ಮಾಡಿದ
ಚೆಲುವ ಗೋಪಾಲಕೃಷ್ಣಗೆ೨
ಬೆಟ್ಟವ ಬೆರಳಿನಲಿ ಎತ್ತಿದ
ಭಕ್ತವತ್ಸಲ ಹರಿಗೆ
ಮಿತ್ರೆಯರಿಗೆ ಮೊಸರು ಬುತ್ತಿಯ
ಭುಕ್ತಿಯನೆವದಲಿ ಮುಕ್ತಿ ತೋರಿದ ದೊರೆಗೆ ೩
ಪುಟ್ಟಬಾಲಕನಾಗಿ ಗೋವ್ಗಳನೆಲ್ಲ
ಅಟ್ಟಿಯ ಮನೆಗೆ ಪೋಗಿ
ದುಷ್ಟ ಕಾಳಿಂಗನ ಮೆಟ್ಟಿ ತುಳಿದ ಹರಿಗೆ
ರತ್ನದಾರತಿ ಎತ್ತಿರೆ ೪
ಕೊಂದು ಕಂಸನ ಬೇಗ ಮಧುರೆಲಿ ನಿಂತ
ಮಹಾನುಭಾವಗೆ
ತಂದೆ ಶ್ರೀ ಕಮಲನಾಭವಿಠ್ಠಲಗೆ
ಕುಂದಣದಾರತಿಯ ೫

ಜೀವೂಬಾಯಿ ಅವರು ಪ್ರತಿ ಯುಗಾದಿ ಹಬ್ಬದಂದು
೧೪೫
ಮಂಗಳವೆನ್ನಿರೆ ಮದನಗೋಪಾಲನಿಗೆ
ಮಂಗಳವೆನ್ನಿರೆ ಮಾಧವಗೆ ಪ
ಮಂಗಳವೆನ್ನಿರೆ ಮಾಮನೋಹರನಿಗೆ
ಮಂಗಳವೆನ್ನಿರೆ ಮುರಹರಗೆ ಅ.ಪ
ಭುವನಮೋಹನ ಶಾಮಲಸುಂದರಾಂಗಗೆ
ಅಮಿತಪರಾಕ್ರಮ ಅಚ್ಚುತಗೆ
ನವನವಲೀಲೆಯ ತೋರಿದ ದೇವಗೆ
ಸುವಿನಯದಿಂದ ಶ್ರೀ ಶ್ರೀಧರಗೆ೧
ಶಂಖು ಚಕ್ರಪೀತಾಂಬರಧಾರಿಗೆ
ಬಿಂಕದಿಂದ ಮುರಳಿಯನೂದಿದಗೆ
ಶಂಕರಾದಿ ಸುರಸೇವಿತಗೆ ನಿಷ್ಕ-
ಳಂಕದಿ ಭಜಿಪರ ಪೊರೆದವಗೆ೨
ಪರಿಪರಿ ವಿಧದಲಿ ಹರಿ ಸ್ಮರಣೆಯ ಮಾಡೆ
ಪರಾಭವನಾಮ ಸಂವತ್ಸರದಿ
ದುರಿತಗಳೆಲ್ಲವ ಪರಿಹರಿಸುತ ಕಾಯ್ವ
ಸಿರಿವರ ಕಮಲನಾಭ ವಿಠ್ಠಲನಿಗೆ೩

೧೩೫
ಮಂಗಳವೆನ್ನಿರೆ ಮಹಲಕ್ಷ್ಮಿ ದೇವಿಗೆ
ಅಂಗನೆ ಮಣಿಯರು ಸಂಭ್ರಮದಲಿ ಶುಭ ಪ
ಅರಿಶಿನ ಕುಂಕುಮ ಅರಳು ಮಲ್ಲಿಗೆ ಗಂಧ
ಸುರಪಾರಿಜಾತ ಪುಷ್ಪವರ್ಪಿಸಿ
ನರಸಿಂಹನರಸಿಗೆ ಪರಿಪರಿ ಫಲಗಳ
ಹರದೇರುಡಿಯ ತುಂಬುತಲಿ ಶ್ರೀ ಲಕ್ಷ್ಮಿಗೆ ೧
ಸರಿಗೆ ಸರವು ಜರದ ನೆರಿಗೆ ಮೇಲೊಲಿಯಲು
ಅರಳು ಮಲ್ಲಿಗೆ ಜಾಜಿ ಸರವ ಮುಡಿದು
ಹರುಷದಿಂದಲಿ ನಾಗಮುರಿಗಿ ಕಂಕಣಕೈಲಿ
ಪರಿಪರಿ ವರಗಳ ಕೊಡುವಳಿಗೆ ಜಯ ೨
ಕಡಗ ಕಾಲಂದುಗೆ ಘಲುರೆಂಬನಾದದಿ
ಬೆಡಗಿನಿಂದಲಿ ಬರುವ ಭಾಗ್ಯದಾಯಿನಿಗೆ
ಕಡಲಶಯನ ಕಮಲನಾಭವಿಠ್ಠಲನ ರಾಣಿ
ಬೆಡಗಿನ ನಡಿಗೆಯ ನಡೆವ ದೇವಿಗೆ ಶುಭ ೩

ಮುರಹರ
೧೩೬
ಮಂಗಳಾಂಗ ಶ್ರೀಕೃಷ್ಣಗೆ ಸುದತಿಯರು
ಮಂಗಳಾರತಿ ಎತ್ತಿರೆ ಪ
ರಂಗಯದುಕುಲೋತ್ತುಂಗ ಭವ ಭಯ
ಭಂಗ ಶುಭಗುಣಸಾಂದ್ರನಿಗೆ ಜಯ ಅ.ಪ
ಮೀನ ಕೂರ್ಮ ಕ್ರೋಡ ನೃಹರಿಗೆ
ದಾನವ ಬೇಡಿದಗೆ
ಮಾನದಿ ಭೃಗು ಶ್ರೀರಾಮ ಶ್ರೀಕೃಷ್ಣಗೆ
ಸಾನುರಾಗದಿ ಬುದ್ಧ ಕಲ್ಕ್ಯನಿಗೆ ಜಯ ೧
ಅಕ್ಷರೇಢ್ಯ ಅನಿರುದ್ಧ ಮೂರುತಿಗೆ
ಪಕ್ಷಿವಾಹನ ಹರಿಗೆ
ಕುಕ್ಷಿಯೊಳೀರೇಳು ಜಗವನಿಂಬಿಟ್ಟಗೆ
ಲಕ್ಷ್ಮೀನಾರಾಯಣ ಶ್ರೀ ಶ್ರೀಶನಿಗೆ ಜಯ ೨
ಗೋಕುಲದೊಳು ಗೋಪಾಲಕರೊಡಗೂಡಿ
ಗೋವ್ಗಳ ಕಾಯ್ದವಗೆ
ಗೋವರ್ಧನಗಿರಿ ಎತ್ತಿದ ಧೀರಗೆ
ಗೋಪಿದೇವಿಗೆ ಬಾಲಲೀಲೆಯ ತೋರ್ದಗೆ ೩
ವೃಂದಾವನದಿ ಮೃತ್ತಿಕೆ ಮೆಲ್ಲುವೆನೆಂದು
ವೃಂದಾರಕರು ನುಡಿಯೆ
ನಂದ ಯಶೋದೆಯರು ಬಂದು ತೋರೆನಲು
ಛಂದದಿಂದ ವಿಶ್ವರೂಪವ ತೋರ್ದಗೆ ೪
ಕಾಳಾಹಿವೇಣಿಯರೊಡಗೂಡಿ ನಲಿವಗೆ
ಕಾಳಿಂದಿ ರಮಣನಿಗೆ
ಕಾಲಕರ್ಮಕೆ ಈಶನಾದ ಸ್ವಾಮಿಗೆ
ಕಾಳಿಮರ್ದನ ಕಮಲನಾಭವಿಠ್ಠಲನಿಗೆ ೫

ಪನ್ನಗಾದ್ರಿ : ನೋಡಿ
೧೪೬
ಮಂಗಳಾರತಿ ಮಾಡಿರೆ ಮಾರಮಣಗೆ ಪ
ಮಂಗಳಾರತಿ ಮಾಡಿ ಗಂಗಾಜನಕನಿಗೆ
ಶೃಂಗಾರ ಶೀಲಗೆ ಅಂಗನೆ ಮಣಿಯರುಅ.ಪ
ನೀರೊಳಗಾಡಿದವಗೆ ಬೆನ್ನಿಲಿ ಗಿರಿ
ಭಾರ ಪೊತ್ತಿಹ ದೇವಗೆ ಮಣ್ಣಿನಲಿದ್ದ
ಬೇರುಗಳನೆ ಮೆದ್ದಗೆ ಶ್ರೀಹರಿಗೆ
ಮೂರೆರಡರಿಯದ ಪೋರನ ಮಾತಿಗೆ
ಕ್ರೂರ ದೈತ್ಯನ ಕರುಳ್ಹಾರ ಮಾಡಿದಗೆ ೧
ಬಡವ ಬ್ರಾಹ್ಮಣನಾಗುತ ದಾನವ ಬೇಡಿ
ಕೊಡಲಿ ಪಿಡಿದ ಭಾರ್ಗವಗೆ ಕೋಡಗಗಳ ಕೂಡಿ
ಕಡಲ ಬಂಧಿಸಿ ಮಡದಿಯ ತಂದವಗೆ
ಕಡಹಲ್ದ ಮರನೇರಿ ಮಡದೇರಿಗೊಲಿದಗೆ
ಬಿಡದೆ ತೇಜಿಯನೇರಿ ಸಡಗರ ತೋರ್ದಗೆ ೨
ಪರಮಪುರುಷದೇವನ ಪರಿಪರಿಯಿಂದ
ಸ್ಮರಣೆ ಮಾಡುತ ಪಾಡುತ ಸಿರಿಯರಸಗೆ
ಸರಸೀಜಾಕ್ಷಿಯರೆಲ್ಲರೂ ಸರಸದಿ ಬಂದು
ಪರಾಭವ ನಾಮ ವತ್ಸರದಲಿ ಸುಜನರು
ಸಿರಿವರ ಕಮಲನಾಭ ವಿಠ್ಠಲನಿಗೆ ೩

೯೫
ಮನ್ನಿಸೈ ಹರಿ ಪನ್ನಗೇಂದ್ರಶಯನ ಪ
ಘನ್ನವಾದ ಪಾಪವನ್ನು ಮಾಡಿ ಜಗದಿ
ನಿನ್ನ ನಾಮ ಮರದೆ ಸನ್ನುತಾಂಗ ಸಲಹೊಅ.ಪ
ಜ್ಞಾನ ಶೂನ್ಯವಾಗಿ ನಾನಾ ವಿಷಯಗಳಲಿ
ನಾನು ನನ್ನದೆಂಬ ಹೀನ ಮಮತೆಯಿಂದ
ದಾನವಾರಿ ನಿನ್ನ ಧ್ಯಾನಿಸದಲೆ ಕಾಲ
ಸಾನುರಾಗದಿಂದ ಶ್ವಾನನಂತೆ ಕಳೆದೆ ೧
ರೋಗಹರನೆ ಭವದ ರೋಗವೈದ್ಯನೆಂದು
ಬಾಗಿ ನಿನ್ನನುತಿಪೆ ನಾಗಾರಿವಾಹನ
ಯೋಗಿವಂದ್ಯನೆ ಚನ್ನಾಗಿ ನಿನ್ನ ಸ್ತುತಿಪ
ಭಾಗವತರ ಸಂಗ ದೇವ ಪಾಲಿಸಯ್ಯ ೨
ರಕ್ಷಿಸೆಮ್ಮ ಬಿಡದೆ ಲಕ್ಷ್ಮಿರಮಣದೇವ
ಕುಕ್ಷಿಯೊಳಗೆ ಜಗವ ರಕ್ಷಿಸುತ್ತ ಪೊರೆವ
ಸೂಕ್ಷ್ಮ ಸ್ಥೂಲದೊಳು ಪ್ರತ್ಯಕ್ಷನಾದ ಹರಿ ಉ-
ಪೇಕ್ಷಿಸದಲೆ ಕಾಯೋ ಪಕ್ಷಿವಾಹನ ದೇವ ೩
ಕಡಲೊಡೆಯನೆ ದೇವ ಮೃಡನ ಸಖವೆ ಕಾಯೊ
ಅಡಿಗಡಿಗೆ ಸ್ತುತಿಸಿ ಬಿಡದೆ ಮುಗಿವೆ ಕಯ್ಯ
ಎಡಬಲದಲಿ ಶ್ರೀ ಭೂಮಡದೇರಿಂದ ಮೆರೆವ
ಉಡುಪ ಮುಖನೆ ಕಾಯೋ ಕಡಲೊಡೆಯನೆ ರಂಗ ೪
ಕಮಲಪತ್ರದಳಾಕ್ಷ ಕಮಲಜೋದ್ಭವೆ ಪ್ರಿಯ
ಕಮಲಸಂಭವ ಜನಕ ಕಮನೀಯ ಸ್ವರೂಪ
ಕಮಲನೇತ್ರೆರ ರಸಕಮಲಪುಷ್ಪಮಾಲಾ ಹೃ-
ತ್ಕಮಲದೋಳು ಶೋಭಿಪ ಕಮಲನಾಭ ವಿಠ್ಠಲ ೫

ಸಕಲ ಕರ್ಮಗಳ ರಹಸ್ಯವನ್ನರಿತವನು
೧೧೦
ಮನ್ಮಥನಯ್ಯನ ಮನದಲಿ ಸ್ಮರಿಸಿರೊ
ಮನ್ಮಥ ನಾಮ ಸಂವತ್ಸರದಿ ಪ
ಸುಮ್ಮನೆ ಕಾಲವ ಕಳೆಯುವದೇತಕೆ
ಬ್ರಹ್ಮನಪಿತ ನಂಘ್ರಿಗಳ ಭಜಿಸುತ ಅ.ಪ
ಬಂಧು ಬಳಗ ಮಂದಿಮಕ್ಕಳೆಲ್ಲರು ಕೂಡಿ
ಒಂದೆ ಸ್ಥಳದಿ ಭಜನೆಯಮಾಡಿ
ಇಂದಿರಾರಮಣನ ಚಂದದಿ ಪೊಗಳಲು
ಬಂದ ದುರಿತಗಳ ಪೊಂದಿಸನೆಂದೆಂದು ೧
ಮಾಕಮಲಾಸನ ಲೋಕದ ಜನರಿಗೆ
ತಾಕಾಣಿಸಿ ಕೊಳ್ಳದೆ ಇಹನು
ಶ್ರೀಕರ ಸಲಹೆಂದು ಏಕ ಭಕುತಿಯಲಿ
ಲೋಕವಂದ್ಯನ ಸ್ತುತಿಗೆ ನೂಕುವ ಅಘಗಳ ೨
ಅತಿಶಯದಿಂದಲಿ ಸತಿಸುತರೆಲ್ಲರು
ಪತಿತಪಾವನನ ಕೊಂಡಾಡುತಲಿ
ಗತಿ ನೀನಲ್ಲದೆ ಮತ್ತೆ ಹಿತರ್ಯಾರಿಲ್ಲವೆನೆ
ಸತತ ಸುಕ್ಷೇಮವಿತ್ತು ಪಾಲಿಸುವಂಥ ೩
ಶ್ರಮವ ಪರಿಹರಿಸೆಂದು ನಮಿಸಿಬೇಡುವ ಭಕ್ತ
ಜನರನು ಸಂತೈಸುತಲಿಹನು
ಹನುಮ ಭೀಮ ಮಧ್ವಮುನಿಗಳ ಸೇವಿಪ
ಮನುಜರ ಮನೋರಥಗಳನೆ ಪೂರೈಸುವೊ ೪
ವತ್ಸರ ಆದಿಯಲಿ ಅಕ್ಷರೇಡ್ಯನ ಪಾದ
ಕ್ಷಿಪ್ರದಿಂದಲಿ ಸೇವಿಪ ನರನ
ಭಕ್ತವತ್ಸಲ ತನ್ನ ಭಕ್ತರ ಸಂಗದೊಳಿಟ್ಟು
ಸಂತೈಸುವ ಸತ್ಯಸಂಕಲ್ಪ ಶ್ರೀ೫
ತಾಳ ತಂಬೂರಿ ಸುಸ್ವರಗಳಿಂದಲಿ ಬಹು
ನೇಮದಿಂದಲಿ ಸರುವರು ಕೂಡಿ
ಗಾನಲೋಲನ ಭಜನೆಯ ಮಾಡುತ ಸತ್ಯ
ಸ್ವಾಮಿಯ ಗುಣಗಳ ಪೊಗಳುವ ಸುಜನರು ೬
ಸಡಗರದಿಂದಲಿ ಕಡಲೊಡೆಯನ ಗುಣ
ಪೊಗಳುತ ಹಿಗ್ಗುತ ಅಡಿಗಡಿಗೆ
ಕಡಲ ಶಯನ ಕಮಲನಾಭ ವಿಠ್ಠಲನೆಂದು
ಬಿಡದೆ ಭಜಿಸುವರ ತೊಡರು ಬಿಡಿಸುವ ಶ್ರೀ ೭

ಕಾವೇರಿ ನದಿಯ ಸ್ತೋತ್ರವಾಗಿರುವ
೩೩
ಮರೆತು ಹೋದೆನೊ ದೇವ ರಂಗಯ್ಯ ರಂಗ
ಸಿರಿದೇವಿ ರಮಣನೆ ಪರನೆಂದು ತಿಳಿಯದೆ ಪ
ನೀರೊಳು ಮುಳುಗುತ್ತ ಮೀನಮತ್ಸ್ಯನು ಎಂದು
ವೇದವ ತಂದಿತ್ತೆ ದೇವೇಶನೆ
ವಾರಿಧಿಶಯನನೆ ವಾರಿಜಾಕ್ಷನು ಎಂದು
ಸಾರಸಾಕ್ಷನ ಗುಣ ಸ್ಮರಿಸದೇ ಮನದಲಿ ೧
ಬೆಟ್ಟ ಬೆನ್ನಿಲಿ ಪೊತ್ತು ಪೊಕ್ಕು ನೀರೊಳು ಬೇಗ
ಭಕ್ತರನುದ್ಧರಿಸಿದ ದೇವನ
ಪೃಥ್ವಿಯ ಕೋರೆಯಿಂದೆತ್ತಿ ಅಸುರನ ಕೊಂದ
ಸಿಸ್ತು ತೋರಿದ ಪರವಸ್ತುವ ಸ್ಮರಿಸದೆ ೨
ಘುಡು ಘುಡಿಸುತ ಬಂದು ಒಡಲ ಸೀಳಲು ಖಳನ
ಅಡವಿ ಮೃಗವು ಎಂದು ಬೆರಗಾದೆನೊ
ಹುಡುಗನಂದದಿ ಪೋಗಿ ಪೊಡವಿಪಾಲಕನ ಬೇಡಿ
ಕೊಡಲಿಯ ಪಿಡಿಯುತ್ತ ತಾಯತರಿದನ ಸ್ಮರಿಸದೆ ೩
ನಾರಿಯನರಸುತ ವನವ ಚರಿಸಿದಿ
ನಾರಿಚೋರನ ಕೊಂದೆ ವಾನರ ಸಹಿತ
ನವನೀತ ಚೋರನೆ ಮನೆಮನೆಗಳ ಪೊಕ್ಕು
ಗಾರು ಮಾಡಿದ ಕೃಷ್ಣ ಹರಿಯೆಂದು ಸ್ಮರಿಸದೆ ೪
ಬೆತ್ತಲೆ ನಿಂತರು ಉತ್ತಮ ನೆನಿಸಿದಿ
ಸತ್ಯಮೂರುತಿ ಪುರುಷೋತ್ತಮನೆ
ಕತ್ತಿ ಕಯ್ಯಲಿ ಪಿಡಿದು ಮತ್ತೆರಾವುತನಾಗಿ
ಸುತ್ತಿ ಸುತ್ತಿದ ಸರ್ವೋತ್ತಮನರಿಯದೆ ೫
ಭಕ್ತವತ್ಸಲಸ್ವಾಮಿ ಭಯನಿವಾರಣನೆಂದು
ಭೃತ್ಯರು ನೃತ್ಯದಿ ಕುಣಿಯುವರೊ
ಸತ್ಯ ಸಂಕಲ್ಪನೆ ಸತ್ಯಭಾಮೆಯ ಪ್ರಿಯ
ಭಕ್ತರೊಡೆಯ ಪರವಸ್ತುವ ಸ್ಮರಿಸದೆ೬
ಕರುಣವಾರಿಧಿಯೆಂದು ಸ್ಮರಿಸುವ ಭಕುತರ
ಪರಿ ಪರಿ ಅಘಗಳು ಪರಿಹಾರವೊ
ಶರಧಿಸುತೆಯ ಪತಿ ಕಮಲನಾಭ ವಿಠ್ಠಲ
ಸ್ಮರಿಸದೆ ಅಪರಾಧ ಸಲಹೆಂದು ಸ್ಮರಿಸದೆ ೭

ಗಾವುದೈವತ್ತು ಸಾವಿರದಲಿಹ ಪರ್ವತವ
೬೩
ಮರೆಯದೆ ಸಲಹೊ ಮಾರುತೀಶ ಎನ್ನ
ಶರಣೆಂಬೆನು ನಿನ್ನ ಪ
ಶರಣಾಗತರನು ಬಿಡದೆ ಪೊರೆವ ಫನ್ನ-
ಗಿರಿ ಅಂಜನೆತನಯಅ.ಪ
ವನನದಿಗಿರಿಗುಹೆಗಳಲಿ ನಿನ್ನ ರೂಪ
ತೋರುವುದೈ ಭೂಪ
ಶರಧಿ ಲಂಘಿಸಿ ರಾವಣನಿಗೆ ತಾಪ
ಪುಟ್ಟಿಸಿದೆಯೊ ರಘುಪ-
ನಡಿಗಳ ಬಿಡದೆ ಸೇವಿಸುವರ ಪಾಪ
ಮಾಡುವಿ ನಿರ್ಲೇಪ
ಸಡಗರದಲಿ ನಿನ್ನೊಡೆಯನ ತೋರಪ್ಪ
ಘನಗಿರಿ ಹನುಮಪ್ಪ ೧
ಊರಿನಲಿ ಊರ್ಹೊರಗು ನಿನ್ನ ಮೂರ್ತಿ
ಎಷ್ಟ್ಹೇಳಲಿ ಕೀರ್ತಿ
ಪಾಡುತ ಪೊಗಳ್ವರು ನಿನ್ನಯ ಸತ್ಕೀರ್ತಿ
ವರ್ಣಿಸುವುದೆ ಅರ್ಥಿ
ಪಾಮರನೊಮ್ಮೆ ಪಾಡಲು ನಿನ್ನ ವಾರ್ತೆ
ಪರಿಹಾರವೋ ಭೀತಿ
ನಾಡೊಳು ನಿನ್ನ ಭಜಿಸುವವರ ಸಂಗ
ನೀಡು ಕೃಪಾಪಾಂಗ೨
ಕಡಲ ಶಯನನ ಅಡಿಗಳ ಸೇವಿಸುತ
ಕಡುಹರುಷವ ಪಡುತ
ಬಿಡದೆ ನಿನ್ನಯ ಸೇವಕರಿವರೆನುತ
ಶ್ರೀಶಗೆ ಪೇಳುತ್ತ
ಕೊಡಿಸುವಿ ಮುಕ್ತಿಯ ಧೃಡಭಕ್ತರಿಗೆ ಸತತ
ರಾಮರ ಸ್ಮರಿಸುತ್ತ
ಕಮಲನಾಭ ವಿಠ್ಠಲನನು ಸೇವಿಸುತಭಕ್ತರ ಸಲಹುತ್ತ೩

೭೪
ಮಹಿಮೆ ನೋಡಿರೈ ರಾಯರ
ಮಹಿಮೆ ಪಾಡಿರೈ ಪ
ಜಲಜನಾಭನೊಲುಮೆ ಪಡೆದು
ಇಳೆಯೊಳು ಪ್ರಖ್ಯಾತರಾದ ಅ.ಪ
ರಾಘವೇಂದ್ರ ಯತಿಗಳೆಂದು
ಬಾಗಿ ನಮಿಸುವವರ ಮನದ
ರಾಗ ದ್ವೇಷಾದಿಗಳ ಕಳೆದು
ನೀಗಿಸುವರೊ ಭವದ ಬಂಧ ೧
ತಾಳ ತಂಬೂರಿಪಿಡಿದು
ಭೋಗಶಯನನನ್ನು ಭಜಿಸಿ
ಕೂಗಿ ಪಾಡುತಿರಲು ನಲಿದು
ಬೇಗ ಪಾಲಿಸುತಲಿ ನಲಿವ೨
ದೇಶದೇಶದವರು ಬಹಳ
ಕ್ಲೇಶಪಡುತ ಬರಲು ಅವರ
ಕ್ಲೇಶಗಳನು ಕಳೆದು ಪರಮ ಉ-
ಲ್ಲಾಸ ನೀಡಿ ಪೊರೆಯುವಂಥ ೩
ಸೀತಾಪತಿಯ ಪೂಜಿಸುತಲಿ
ಖ್ಯಾತರಾದ ಯತಿಗಳನ್ನು
ಪ್ರೀತಿಯಿಂದ ಸೇವಿಸುವರ
ಪಾತಕಗಳ ಕಳೆದು ಪೊರೆವ ೪
ಗಳದಿ ಹೊಳೆವ ತುಳಸಿ ಮಾಲೆ
ಹೊಳೆವ ನಗೆಯ ಮುಖದ ಭಾವ
ಕಮಲನಾಭ ವಿಠ್ಠಲನೊಲಿಸಿ
ಹಲವು ವಿಧದಿ ಪೂಜಿಸುವರು ೫

೩೪
ಮಾಧವ ಮಧುಸೂದನ ಕೇಶವ ಹರೆ
ಯಾದವ ಕೃಷ್ಣ ಶ್ರೀಹರಿ ಶೌರೆಪ
ವೇದವೇದ್ಯ ಸನ್ಮುನಿಗುಣ ಸೇವಿತ
ಸಾಧುವಂದಿತ ಚರಣಕೆ ನಮಿಪ ಅ.ಪ
ಮಂದರಧರ ಗೋವಿಂದ ಮುಕುಂದನೆ
ಇಂದಿರೆಯರಸ ಹೃನ್ಮಂದಿರದಿ
ಮಂದಗಮನೆ ಮಹಾಲಕ್ಷ್ಮಿಯೊಡನೆ ಆ-
ನಂದದಿ ನಲಿನಲಿದಾಡು ಹರಿ ೧
ಸರಸಿಜನಾಭನೆ ಮುರಳಿಧರನೆ ಹರಿ
ಪರಮಪುರುಷ ಪಾವನರೂಪ
ಸುರಗಂಧರ್ವರು ಸ್ತುತಿಸುತ ಪಾಡ್ವರು
ವಿನುತ ಸುತ ವಾಹನ ಹರಿಯೇ ೨
ಆದಿಪುರುಷ ಪುರುಷೋತ್ತಮ ಹರಿ ಈ
ಕ್ರೋಧಿ ವತ್ಸರ ಶುಭದಿನಗಳಲಿ
ಆದರದಲಿ ಗುರುಹಿರಿಯರ ಸೇವಿಸಿ
ಶ್ರೀಧರನನ್ನು ಭಕ್ತಿಲಿ ಭಜಿಸಿ ೩
ಗೋಕುಲಪತಿ ಗೋವಿಂದ ಮುಕುಂದನೆ
ಮಾತುಳಾಂತಕ ಮಧುಸೂದನನೆ
ಗೋಪತಿ ಕೃಷ್ಣನೆ ಸಲಹುವ ಸುಜನರ
ಮೂಕಾಂಬಿಕೆ ನಾಮವ ಧರಿಸಿ ೪
ಕಡುಹರುಷದಿ ನಿನ್ನಡಿಗಳಿಗೆರಗುವೆ
ಬಿಡದೆ ರಕ್ಷಿಸೆಂದೆನ್ನುತಲಿ
ಕರುಣದಿ ಕಾಪಾಡುತ ಸಲಹುವದು
ಕಮಲನಾಭ ವಿಠ್ಠಲ ದೇವ ೫

೧೫೧
ಮಾಧವ ಮಧುಸೂದನ ಹರಿ ಜೋ ಜೋ
ಯಾದವ ರಾಯ ಶ್ರೀರಂಗನೆ ಜೋ ಜೋ ಪ
ವಸುದೇವ ದೇವಕಿ ಸುತನಾಗುದಿಸಿ
ವಸುಧಯ ಭಾರವನಿಳುಹಿದೆ ಜೋ ಜೋ೧
ಶುಕಶೌನಕ ನಾರದಮುನಿ ವಂದ್ಯ
ಅಕಳಂಕ ಚರಿತ ಅಚ್ಚುತಾನಂತ ಜೋ ಜೋ ೨
ಶಿಶುರೂಪನೆತ್ತುತ ಮುದ್ದಿಸುತಿಹ
ಅಸುರೆ ಪೂತಣಿ ಅಸುಹೀರಿದೆ ಜೋ ಜೋ ೩
ಬಂಡಿಯ ರೂಪದಿ ಬಂದಸುರನ ಸಿರ
ಚಂಡಾಡುತ ನಲಿದಾಡಿದೆ ಜೋ ಜೋ ೪
ಪೊಂಗೊಳಲೂದುತ ಗಂಗೆಯೊಳಿಹ ಕಾ-
ಳಿಂಗನ ಪೆಡೆ ತುಳಿದಾಡಿದೆ ಜೋ ಜೋ ೫
ಗೋಪಾಲಕರೊಡನಾಡುತ ನಲಿಯುತ
ಪಾಪಿ ಖಳನ ತರಿದಾಡಿದೆ ಜೋ ಜೋ ೬
ಸಾಧಾರಣ ವತ್ಸರದಲಿ ಸಲಹುವ
ಶ್ರೀದ ಕಮಲನಾಭ ವಿಠ್ಠಲ ಸುಜನರ ೭

೧೩೭
ಮುತ್ತಿನ ಆರತಿಯ ತಂದೆತ್ತೀರೆ ಲಕ್ಷ್ಮಿಗೆ
ಮುತ್ತೈದೆಯರು ಜಯ ಪ
ರತ್ನಮಂಟಪದೊಳು ವರ ಮಹ-
ಲಕ್ಷ್ಮಿಯ ಕುಳ್ಳಿರಿಸಿ
ಮುತ್ತಿನ್ಹಾರಗಳ್ಹಾಕಿ
ಮುತ್ತೈದೆಯರು ಜಯ ೧
ಮಿತ್ರೆ ಮಹಲಕ್ಷುಮಿಯ ಬಹು
ಸಿಸ್ತಿಲಿ ಶೃಂಗರಿಸಿ
ಉತ್ತಮಾಂಗನೆಗೀಗ
ಮುತ್ತೈದೆಯರು ಜಯ೨
ಕರ್ತೃ ಶ್ರೀಹರಿ ಎನ್ನುತ ಕಮಲನಾಭ
ವಿಠ್ಠಲನರಸಿಗೀಗ
ಎತ್ತಿ ಚಾಮರ ಬೀಸಿ
ಮುತ್ತೈದೆಯರು ಜಯ೩

ದಶಾವತಾರಗಳು
೧೩೮
ಮುತ್ತೈದೆ ಜಯ ಜಯ
ಮುತ್ತೈದೆ ಜಯ ಜಯ
ಮುತ್ತೈದೆಯರು ಪಾಡುತ ಜಯ ಜಯ
ಮುತ್ತಿನಾರತಿ ಎತ್ತುತಾ ಪ
ಪೃಥ್ವಿಗೊಡೆಯ ಪುರುಷೋತ್ತಮ ಹರಿಗೀಗ
ಮುತ್ತಿನಾರತಿ ಎತ್ತುತಾ ಜಯ ಜಯ
ಮುತ್ತೈದೆಯರು ಪಾಡುತಾ ೧
ಮಿತ್ರೆ ರುಕ್ಮಿಣಿ ಸತ್ಯಭಾಮೆಯರರಸಗೆ
ರತ್ನದಾರತಿ ಎತ್ತುತಾ ಜಯ ಜಯ
ಮುತ್ತೈದೆಯರು ಪಾಡುತಾ ೨
ಮಮತೆಯಿಂದಲಿ ಕಮಲನಾಭ ವಿಠ್ಠಲನಿಗೆ
ಕನಕದಾರತಿ ಎತ್ತುತಾ ಜಯ ಜಯ
ಮುತ್ತೈದೆಯರು ಪಾಡುತಾ೩

ಭಾರತದ ಅತ್ಯಂತ ಪ್ರಸಿದ್ಧವಾದ
೩೫
ಮುರುಳಿಯ ನೂದಿದನಾಗ ಹರಿ
ವಿಧವಿಧರಾಗದೊಳೀಗ ಪ
ತುರುಗಳ ಕಾಯುತ ತರಳರ ಒಡಗೂಡಿ
ಸುರಮುನಿವಂದಿತ ಸರಸಿಜನಾಭನು ಅ.ಪ
ಚಂದದ ಪಾಡಗರುಳಿಯು ಕಾ-
ಲಂದುಗೆ ಕಿರುಗೆಜ್ಜೆ ಧ್ವನಿಯು
ಹಿಂಡುಗೋವ್ಗಳ ವೃಂದದಿ ನಲಿಯುತ
ಮಂದರೋದ್ಧರ ಗೋವಿಂದ ಮುಕುಂದನು೧
ಉಟ್ಟ ಪೀತಾಂಬರ ಹೊಳೆಯೆ ನಡು
ಕಟ್ಟಿದ ಚಲ್ಲಣ ಹೊಳೆಯೆ
ಸೃಷ್ಟಿಗೊಡೆಯ ಪರಮೇಷ್ಟಿ ಪಿತನು ತನ್ನ
ಪುಟ್ಟ ಕರದಲಿ ಉತ್ತಮನಾದದ ೨
ವಿಧವಿಧಹಾರಗಳಿಂದ ರನ್ನ
ಪದಕದ ಮುತ್ತುಗಳಿಂದ
ಹೃದಯದಿ ಶ್ರೀ ಭೂ ಸಹಿತದಿ ಮೆರೆಯಲು
ಪದುಮನಾಭ ಶ್ರೀ ಚಲ್ವ ಮದನಗೋಪಾಲನು ೩
ಕೋಟಿಸೂರ್ಯರಂದದಲಿ ಬಹು
ಮಾಟದ ಮುಖಕಾಂತಿಯಲಿ
ನೋಟದಿ ಜಗವನೆ ಮೋಹವಗೊಳಿಪ
ಕಿರೀಟಿಯ ಪೊರೆದ ವೈರಾಟನು ಹರುಷದಿ ೪
ಕರ್ಣದಿ ಬಾವುಲಿ ಹೊಳಪು ನವ-
ರನ್ನ ಕಿರೀಟದ ಬೆಳಕು
ಕನ್ನಡಿಯಂದದಿ ಕದುಪಿನ ಝಳಪು ಮೋ-
ಹನ್ನ ಮಾಲೆನಿಟ್ಟ ಸೊಗಸಿನ ವಲಪು ೫
ಮುಖದಲಿ ಮುಂಗುರುಳೊಲಿಯೆ ಪ್ರಿಯ
ಸಖಿಯರು ಹರುಷದಿ ನಲಿಯೆ
ಅಕಳಂಕ ಮಹಿಮನು ಗುಪಿತದಿ ಗೆಳೆಯರ
ಸುಖವ ಪಡಿಸುತಲಿ ಸಖ್ಯದಿಂದ ಪ್ರಿಯನು ೬
ತುಂಬಿದ ತುರು ವೃಂದದಲಿ ಗೋ-
ವಿಂದನು ಕುಣಿಕುಣಿಯುತಲಿ
ಅಂಬರದಲಿ ದೇವದುಂದುಭಿ ಮೊಳಗಲು
ಕಂಬು ಕಂಧರ ಹರಿ ಸಂಭ್ರಮ ಸೂಸುತ ೭
ವಾಸವ ವಂದಿತ ಹರಿಯೆ ಸರ್ವೇಶ
ಕೃಪಾಕರ ದೊರೆಯೆ
ವಾಸುದೇವ ಸರ್ವೇಶನೆ ಭಕುತರ
ಸಾಸಿರನಾಮದಿ ತೋಷಪಡಿಸುತಲಿ ೮
ಪಾಹಿ ಪಾಹಿ ಶ್ರೀಶ ನಮೋ
ಪಾಹಿ ಪಾಹಿ ಬ್ರಹ್ಮೇಶ
ಪಾಹಿ ಪಾಹಿ ಪರಿಪಾಲಿಸು ನಮ್ಮನುಪಾಹಿ ಕಮಲನಾಭವಿಠ್ಠಲ ದಯಾನಿಧೆ ೯

೩೬
ಮೆಚ್ಚಿದೆ ಯಾಕಮ್ಮ ಲಕ್ಕುಮಿದೇವಿ
ಸಚ್ಚಿದಾನಂದಾತ್ಮ ಹರಿಯೆಂದರಿಯದಲೆ ಪ
ರಕ್ಕಸಾಂತಕ ಹರಿಗೆ ಸೊಗಸಿನ
ತಕ್ಕ ವಾಹನವಿಲ್ಲದಿದ್ದೊಡೆ
ಹಕ್ಕಿಯ ಹೆಗಲೇರಿ ತಿರುಗುವ
ಚಿಕ್ಕ ಬುದ್ಧಿಯ ಚಲುವ ಕೃಷ್ಣಗೆಅ.ಪ
ನೀರೊಳು ಮುಳುಗಿ ಭಾರವಪೊತ್ತು ಧರಣಿಯ
ಕೋರೆದಾಡೆಲಿ ತಂದ ಕ್ರೂರ ರೂಪನಿಗೆ
ಮೂರಡಿ ಭೂಮಿಯ ಬೇಡಿ ಕ್ಷಿತಿಪರ ಕೊಂದು
ನಾರು ವಸ್ತ್ರಗಳುಟ್ಟು ಸೀರೆ ಕದ್ದವಗೆ
ಶೂರತನದಲಿ ತ್ರಿಪುರರಗೆದ್ದು ವಿ-
ಹಾರ ಮಾಡ್ಡ ಏರ್ದ ಕುದುರೆಯ
ಮಾರಪಿತ ಮಧುಸೂಧನನ ವ್ಯಾ-
ಪಾರ ತಿಳಿಯದೆ ವಾರಿಜಾಕ್ಷಿ ೧
ಹಾಸಿಕಿಲ್ಲದೆ ಹಾವಿನ ಮೇಲೆ ಮಲಗುವ
ಹೇಸಿಕಿಲ್ಲದೆ ಎಂಜಲ್ಹಣ್ಣನೆ ಮೆಲುವ
ದೋಷಕಂಜದೆ ಮಾವನ ಕೊಂದು ಮಧುರೆಲಿ
ದಾಸಿ ಕುಬ್ಜೆಯ ಡೊಂಕು ತಿದ್ದಿ ಪರಿಮಳ ಪೂಸಿ
ಸೋಸಿನಿಂದಲಿ ಕರಡಿ ಮಗಳನು
ಯೋಚಿಸದೆ ಕೈಪಿಡಿದು ಸೌಳ-
ಸಾಸಿರದ ಸತಿಯರನು ಕೂಡಿದ
ವಾಸುದೇವನ ಮೋಸವರಿಯದೆ ೨
ಮೋಸದಿಂದಲಿ ಬಂದು ಶಿಶುವನೆತ್ತಿದ ದೈತ್ಯ
ದಾಸಿಯ ಕೊಂದ ಉದಾಸೀನದಿಂದ
ಗ್ರಾಸಕಿಲ್ಲದೆ ಗೋಪೇರ ಮನೆಗಳ ಪೊಕ್ಕು
ಮೀಸಲು ಬೆಣ್ಣೆ ಪಾಲ್ಮೊಸರನೆ ಸವಿದು
ರಾಸಕ್ರೀಡೆಯ ವನಿತೆಯರ ಮನ
ದಾಸೆ ಪೂರೈಸಿ ರಾತ್ರಿ ವೇಳದಿ
ವಾಸುದೇವನು ಓರ್ವ ಸತಿಯೊಳು
ಕ್ಲೇಶಪಡಿಸದೆ ಮೋಸವರಿಯದೆ ೩
ಅಂಡಜವಾಹನ ಅಖಿಳ ಮಹಿಮನೆನೆ
ಪಾಂಡವರ ಮನೆಯ ಊಳಿಗ ಮಾಡಬಹುದೆ
ಚಂಡನಾಡುವ ನೆವದಿಂದ ಕಾಳಿಂಗನ
ಮಂಡೆಯ ತುಳಿದು ನಾಟ್ಯವನಾಡಬಹುದೆ
ಗಂಡುಗಲಿ ಅರ್ಜುನನು ರಥಕೆ
ಬಂಡಿಬೋವನ ಮಾಡಬಹುದೆ
ಪುಂಡಲೀಕನು ಇಟ್ಟೆಗೆಯ ಮೇ-
ಲ್ಪಾಂಡುರಂಗ ನಿಲಿಸಬಹುದೆ೪
ಕಮಲಾಕ್ಷ ಯಾಗಶಾಲೆಗೆ ಗೋಪರನು ಕಳುಹಿ
ರಮೆಯರಸಗೆ ಬಹಳ್ಹಸಿವೆನುತಿರಲು
ಕಮಲಾಕ್ಷನ ನುಡಿ ಗಮನಿಸದೆ ರುಷಿವರರಿಗೆ
ಕಮಲ ಮುಖಿಯರೆಲ್ಲ ಪರಮ ಸಂಭ್ರಮದಿಂದ
ಕಮಲನೇತ್ರಗೆ ವಿವಿಧ ಭಕ್ಷಗ-
ಳಮಿತ ಘೃತ ಪರಮಾನ್ನಗಳನು
ಕಮಲನಾಭ ವಿಠ್ಠಲಗೆ ಅರ್ಪಿಸಿ
ಶ್ರಮವ ಕಳೆದೈದಿದರು ಮುಕ್ತಿಯ ೫
ಯಾಕೆ ಮೆಚ್ಚಿದೆಯಮ್ಮ ಲೋಕ ಸುಂದರಿಯೆಶ್ರೀ ಕಮಲಜಪಿತ ಲೋಕ ಮೋಹಕನ

ಶ್ರೀ ಮದುತ್ತಾರಾದಿ ಮಠದ
೬೪
ಯಂತ್ರೋದ್ಧಾರಕ ರಾಯರ ಸ್ಮರಣೆಯ ಮಾಡಿ
ಅಂತರಾತ್ಮನ ದಾಸರ ಪ
ಸಂತತ ಮನದಿ ನಿಶ್ಚಿಂತೆಯೊಳ್ ಸ್ಮರಿಸಲು
ಸಂತಾಪಗಳ ಕಳೆದು ಚಿಂತಿತಾರ್ಥವನೀವ ಅ.ಪ
ಶರಧಿಯ ನೆರೆದಾಟಿದ ಕಾಲುವೆಯಂತೆ
ನಲಿದು ಲಂಕೆಯ ಸಾರಿದ
ಬಲಶಾಲಿ ಲಂಕಿಣಿಯು ಪುರವ ಕಾಯುವ ಶ್ರಮ
ಹರಿಸಿ ಸೂಕ್ಷ್ಮದ ರೂಪ ಧರಿಸಿ ಪುರವ ಪೊಕ್ಕು
ಪರಿಪರಿ ಕೋಟೆಗಳಿರವನೆ ಕಾಣುತ
ಕರಿ ಹಯ ರಥ ಶಾಲೆಗಳ ಪರಿಕಿಸುತ
ಖಳನರಮನೆ ಪೊಕ್ಕರು ಫಲವಿಲ್ಲದೆ
ಕಡೆಗೆ ಅಶೋಕ ವನದೊಳು ಚರಿಸಿದ ೧
ವನದ ಮಧ್ಯದೊಳಿರಲು ರಕ್ಕಸ ಬಹು
ಘನತೆಯಿಂದಲಿ ಬರಲು
ಬಣಗು ದೈತ್ಯನ ತೃಣಕೆಣೆಮಾಡಿ ನುಡಿಯಲು
ಪವನ ತನಯ ನೋಡಿ ಮನದಿ ಸ್ತೋತ್ರವ ಮಾಡಿ
ಮನದೊಳು ಶ್ರೀ ರಘುವರನನು ಧ್ಯಾನಿಸಿ
ಘನ ಮುದ್ರಿಕೆ ಮುಂದಿಡಲಾ ಜಾನಕಿ
ನಯನಂಗಳ ಕಂಬನಿಗರೆಯುತ
ಮುಂದಿಹ ಹನುಮನೊಳಿಂತೆನೆ ಲಾಲಿಸಿದ ೨
ಯಾವ ರಾಯರ ದೂತನೋ ಪೇಳಯ್ಯ ಬಲು
ಸಾವಧಾನದಿ ಮಾತನು
ಶ್ರೀರಾಮಚಂದ್ರ ನಿನ್ನ ಸೇರಿ ಮಿತ್ರತ್ವಮಾಡೆ
ಕಾರಣವೇನುಂಟು ಸಾವಧಾನದಿ ಪೇಳು
ಯಾರನುಮತಿಯಿಂದೀ ಪುರ ಪೊಕ್ಕೆಯೊ
ಯಾರಿಗಾಗಿ ಈ ವಾನರ ರೂಪವು
ಪೋರನಂತೆ ಕಾಣುವಿ ನಿನ್ನ ವಚನವು
ಬಾರದು ಮನಕೆಂದೆನಲು ಮಾತಾಡಿದ ೩
ಜನಕ ಜಾತೆಯೆ ಲಾಲಿಸು ದೈತ್ಯರ ಸದೆ
ಬಡಿಯುವನೆಂದು ಭಾವಿಸು
ಇನಕುಲ ತಿಲಕನ ಚರಣಸೇವೆಯು ಮಾಡೆ
ಜಲಜಾಕ್ಷನಾಜ್ಞದಿಂದ ಭುವಿಯೊಳು ವಾನರ-
ಕುಲದೊಳಗವತರಿಸುವ ಶತ ಸಂಖ್ಯೆಯೊಳಿರುತಿರೆ
ಗಿರಿವನಚರಿಸುವ ಸಮಯದಿ
ಜಲಜಾಕ್ಷಿಯನರಸುತ ರಾಘವಬರೆ
ಚರಣಾಂಬುಜಗಳಿಗೆರಗಿದೆವೆಂದೆನಲು ೪
ಜಲಜಾಕ್ಷಿ ನಿಮ್ಮ ಕಾಣದೆ ಮನದೊಳಗೊಂದು
ಘನವಾದ ಚಿಂತೆ ತಾಳಿದೆ
ಜನಕ ಜಾತೆಯ ಪಾದಾಂಬುಜವ ಕಾಣದೆ ಮರಳಿ
ಪುರವ ಸಾರುವದೆಂತು ರವಿಸುತನಾಜ್ಞೆ ಮೀರ-
ಲರಿಯದೆ ಈ ಉಪವನದೊಳಗರಸುವ
ಸಮಯದಿ ಶ್ರೀವರನಿಯಮಿಸಿ ಪೇಳಿದ
ಪರಿಯನು ತಿಳಿಯುತ ಪರಮಾನಂದದಿ
ರಘುವರನ್ವಾರ್ತೆಯ ಲಗುಬಗೆ ಪೇಳಿದ ೫
ಕುರುಹು ಕೊಡಮ್ಮ ಜಾನಕಿ ಮನಸಿನ ಚಿಂತೆ
ಬಿಡುಬೇಗ ಭದ್ರದಾಯಕಿ
ಕ್ಷಣದೊಳ್ ಶ್ರೀರಾಮನೊಳು ಇನಿತೆಲ್ಲವನು ಪೇಳಿ
ಕ್ಷಣದಿ ರಕ್ಕಸರನೆಲ್ಲ ನೆಲಸಮ ಮಾಳ್ಪೆನೆಂಬೀ
ಅಣುಗನಿಗಪ್ಪಣೆಯನು ಪಾಲಿಸೆನಲು
ಅನುಮತಿನೀಡಿದ ಅವನಿಜೆಗೊಂದಿಸಿ
ಕ್ಷಣದೊಳು ವನಭಂಗವ ಮಾಡಿದ ನುಡಿ ಕೇ-
ಳಿದ ರಾವಣನ ಪುರವ ಅನಲನಿಗಾಹುತಿ ಇತ್ತ ೬
ಜಯ ಜಯ ಜಯ ಹನುಮಂತ ಜಯ ಜಯ ಬಲವಂತ
ಜಯ ಶ್ರೀರಾಮರ ಪ್ರಿಯದೂತ
ಜಯ ಜಯ ಜಯವೆಂದು ಸನಕಾದಿಗಳು ಪೊಗಳೆ
ಅನಲ ಸಖನ ಸೂನುವನು ಸ್ತೋತ್ರದಿಂದ ಪಾಡೆ
ಕಮಲಜಾದಿ ಸುರಗಣ ತಲೆದೂಗೆ ಶ್ರೀ
ಕಮಲನಾಭ ವಿಠ್ಠಲನನು ಪಾಡುತ
ಅಮಿತ ಪರಾಕ್ರಮವಂತನ ಪೊಗಳುತ
ನಮಿಸಿ ಶ್ರೀರಾಮರ ಗುಣಗಳ ಪೊಗಳುವ ೭

೧೫೮
ಯದುಕುವರನು ಹರಿ ಮದನ ಮೋಹನ ಕೃಷ್ಣ
ಉದಧಿ ಶಯನ ಹರಿ ಮಾಧವನ ಪ

ಮದಗಜಗಮನೆ ಶ್ರೀ ಪದುಮಲೋಚನೆ ಪ್ರಿಯ
ಅದ್ಭುತ ಮಹಿಮ ಶ್ರೀ ಅಚ್ಚುತನ ಅ.ಪ
ಇಂದಿರೆ ರಮಣ ಗೋವಿಂದನ ಮಹಿಮೆಯ
ಒಂದೆ ಮನದಿ ಸ್ತುತಿಸುವ ಜನರ
ಕುಂದೆಣಿಸದೆ ಮುಚುಕುಂದ ವರದ
ಹೃನ್ಮಂದಿರದಲಿ ನಲಿದಾಡುವನು ೧
ಗೋಕುಲಪತಿ ಜಗದ್ವ್ಯಾಪಕ ಹರಿ ಎಂದ-
ನೇಕ ವಿಧದಿ ಸ್ತುತಿಸುವ ಜನರ
ಶೋಕಗಳಳಿದು ಏಕಾಂತ ಭಕ್ತರೊಳಿಟ್ಟು
ತೋಕನಂದದಿ ಪರಿಪಾಲಿಸುವ ೨
ಪದ್ಮನಾಭನ ಪಾದಪದ್ಮವ ಸ್ಮರಿಸುತ
ಶುದ್ಧಮನದಿ ಪಾಡಿ ಪೊಗಳುವರಾ
ಸಿದ್ಧಾರ್ಥನಾಮ ವತ್ಸರದಲಿ ಸುಜನರ
ಹೃದ್ರೋಗವಳಿಯುತ ಸಲಹುವನೂ ೩
ಚಿಂತೆ ಎಲ್ಲವ ಬಿಟ್ಟೀ ವತ್ಸರದಲಿ ಲಕ್ಷ್ಮೀ-
ಕಾಂತನನೇಕ ವಿಧದಿ ಸ್ಮರಿಸೆ
ದಂತಿವರದ ಅನಂತ ಮಹಿಮ ತನ್ನ
ಕಾಂತೆ ಸಹಿತ ಒಲಯುವನವರ್ಗೆ ೪
ಕಮಲಸಂಭವಪಿತ ನಮಿಸಿ ಸ್ತುತಿಸುವೆನು
ಕಮಲ ಪತ್ರಾಕ್ಷಹರಿ ಕರುಣಾನಿಧೆ
ಕಮಲನಾಭ ವಿಠ್ಠಲ ವಿಠ್ಠಲ ರಕ್ಷಿಸೆನೆ ಹೃ-
ತ್ಕಮಲದಿ ಪೊಳೆಯುವ ಸುಜನರಿಗೆ ೫

೯೬
ಯಾಕೆ ಕರುಣ ಬಾರದ್ಹರಿಯೆ
ಲೋಕನಾಯಕ ನಿನಗೆ ಸರಿಯೆ ಪ
ವ್ಯಾಕುಲದಲಿ ಮುಳುಗಿ ಬಹಳ
ಶೋಕಪಡುವ ಜನರ ಕಂಡು ಅ.ಪ
ತಂದೆ ತಾಯಿ ಬಂಧು ಬಳಗ
ಇಂದು ಮುಂದು ಗತಿ ನೀನೆಂದು
ಪೊಂದಿ ನಿನ್ನ ಭಜಿಸದಿರುವ
ಮಂದ ಮತಿಗಳನ್ನೆ ಕಂಡು ೧
ಕಾಮ ಕ್ರೋಧ ಲೋಭ ಮೋಹ
ಮದ ಮತ್ಸರದಿ ಮುಳುಗಿ ಮುಳುಗಿ
ಕಾಮಜನಕ ನಿನ್ನ ಮರೆತ
ತಾಮಸ ಜನರುಗಳ ಕಂಡು ೨
ಜ್ಞಾನಿಗಳನೆ ಕಂಡು ಪರಮ
ಸಾನುರಾಗದಿಂದ ಪೊರೆವೆ
ಜ್ಞಾನ ಶೂನ್ಯರಾದ ಪರಮ ಅ-
ಜ್ಞಾನಿ ಜನರುಗಳನೆ ಕಂಡು ೩
ಪರಮಪುರಷ ನಿನ್ನ ಮಹಿಮೆ
ನಿರುತ ಧ್ಯಾನಿಸುವವರ ಸಂಗ
ಕರುಣದಿಂದ ಪಾಲಿಸಯ್ಯ
ಪರಮ ಕರುಣಾನಿಧಿಯೆ ದೇವ ೪
ನೊಂದೆ ಭವದ ಬಂಧನದೊಳು
ತಂದೆ ಕಮಲನಾಭ ವಿಠ್ಠಲ
ಬಂಧನಗಳ ಬಿಡಿಸಿ ಸಲಹೊ
ಮುಂದೆ ಶ್ರಮವ ಹರಿಸೊ ಬೇಗ ೫

೯೭
ಯಾಕೆ ನಿರ್ದಯನಾದೆ ಲೋಕೇಶ ಪ್ರಭುವೆ
ಸಾಕಲಾರದೆ ಎನ್ನ ನೂಕಿ ಭವದೊಳಗೆ ಪ
ನಿನ್ನ ನಾಮಸ್ಮರಣೆ ಮಾಡದಲೆ ಹಗಲಿರುಳು
ಅನ್ಯ ವಿಷಯಗಳಿಂದ ನೊಂದು ಬಳಲಿದೆನೊ
ನಿನ್ನ ಧ್ಯಾನವ ಮಾಳ್ಪಚ್ಛಿನ್ನ ಭಕ್ತರೊಳಿರಿಸಿ
ಚನ್ನಾಗಿ ಸಲಹೊ ಪ್ರಸನ್ನ ಮಾಧವನೆ ೧
ಘನ್ನ ಮಹಿಮನೆ ಆಪನ್ನ ಜನರನು ಪೊರೆದೆ
ಸನ್ನುತಾಂಗನೆ ದೇವ ಸರ್ವವ್ಯಾಪಕನೆ
ಪನ್ನ ಗಾರಿವಾಹನ ಪ್ರಸನ್ನ ಶ್ರೀಹರಿ ಶೌರಿ
ಎನ್ನ ಕಡೆಹಾಯಿಸಯ್ಯ ಜೀಯ ೨
ಅಕ್ಷಯ ಫಲಪ್ರದ ಪಕ್ಷಿವಾಹನ ಕೃಷ್ಣ
ಕುಕ್ಷಿಯೊಳು ಜಗವನಿಂಬಿಟ್ಟ ಶ್ರೀ ಹರಿಯೆ
ರಕ್ಷ ಶಿಕ್ಷಕ ಜಗದ್ರಕ್ಷ ಪಾಂಡವ ಪಕ್ಷ
ಈಕ್ಷಿಸಿ ಎನ್ನನುದ್ಧರಿಸಿ ಸಲಹದಲೆ ೩
ಪರಿಪರಿಯ ಕಷ್ಟಗಳ ಪರಿಹರಿಸಿ ಭವದೊಳಗೆ
ದುರಿತದೂರನೆ ಕಾಯೊ ಶರಣ ಜನರ
ಪರಿಸರನೊಡೆಯ ನಳನಾಮ ಸಂವತ್ಸರದಿ
ಕರೆಕರೆಯ ಕಷ್ಟಗಳ ಬಿಡಿಸಿ ಸಲಹದಲೆ ೪
ಕನಕಗರ್ಭನ ಪಿತನೆ ಕಮಲನಾಭ ವಿಠ್ಠಲ
ಮಿನಗುತಿಹ ದಿವ್ಯ ಸೌಂದರ್ಯ ಮೂರುತಿಯೆ
ಸನಕಾದಿ ಮುನಿವಂದ್ಯ ಕ್ಷಣ ಬಿಡದೆ ಸ್ಮರಿಸುವರ
ಇನಕುಲೇಂದ್ರನೆ ದೇವ ಬಿಡದೆ ಸಲಹದಲೆ ೫

ಶ್ರೀಕೃಷ್ಣನು ಸತ್ಯಭಾಮೆಗಾಗಿ
೧೧೧
ಯಾಕೆ ಮನದಲಿ ಶೋಕಿಸುತ್ತಿರುವೆ ಜಗ
ದೇಕನಾಥನು ಸಾಕುತಿರುವನು ನೀ ತಿಳಿಯದಿರುವೆ ಪ
ಲೋಕನಾಥನ ವಿವೇಕದಿ ಸ್ತುತಿಸದೆ
ವ್ಯಾಕುಲದಿಂ ಮನ ಕಳವಳಗೊಳುತಲಿ ಅ.ಪ
ಸೃಷ್ಟಿಕರ್ತನು ರಕ್ಷಿಸುತ್ತಿರುವ
ದುರಿತಂಗಳ ರಾಸಿಯ
ಬೆಟ್ಟಗಳ ತರಿದೊಟ್ಟು ತಿರುವ
ಅದು ತಿಳಿಯದು ನೀ ಬಲು
ಕಷ್ಟಗಳ ಪಡುತಿರ್ಪ ವಿಷಯಗಳ
ನೋಡುತ ನಗುತಿರುವ
ಇಷ್ಟು ಈತನ ಪ್ರಭಾವವು ತಿಳಿಯದೆ
ಲಕ್ಷ್ಮಿರಮಣ ರಕ್ಷಿಸೆನ್ನುತ ಸ್ಮರಿಸದೆ ೧
ನಾನು ನನ್ನದು ಎಂಬ ಅಭಿಮಾನ
ಅದು ಪೋಗುವ ತನಕ
ಜ್ಞಾನ ಮಾರ್ಗಕೆ ಇಲ್ಲ ಸಾಧನ-
ವೆಂದರಿಯುತ ಮನದಲಿ
ಧ್ಯಾನಿಸುತ್ತಿರು ಶ್ರೀನಿಧಿ ಗುಣಗಳನು
ಹೀಗಿರುವುದೆ ಪ್ರಧಾನ
ಧ್ಯಾನ ಗಾನ ಮೌನಾದಿ ವ್ರತಗಳನು
ಶ್ರೀನಿಧಿಗರ್ಪಿಸಿ ಮನ ಹರುಷಿಸದಲೆ೨
ತಂದೆ ಶ್ರೀ ವೆಂಕಟೇಶ ವಿಠ್ಠಲನು
ಹರಿಭಕುತರ ಮೊರೆಯನು
ಛಂದದಿಂದಲಿ ಕೇಳಿ ಪೋಷಿಪನು
ಮುಕುಂದನಲಿ ಭಕುತಿ
ಎಂದೆಂದಿಗೂ ತಪ್ಪದೆ ಉದ್ಧರಿಸುವನು
ನಿಜವೆಂದರಿ ಇದನು
ಮುಂದೆ ಕಮಲನಾಭ ವಿಠ್ಠಲ ಭಕುತರ
ಸಂದಣಿ ಪೊರೆದು ಸಂತೈಸುತಲಿರೆ ವೃಥ ೩

ಇದು ಸತ್ಯವರ ತೀರ್ಥರ
ರುದ್ರದೇವರು
೬೯
ಯಾರಿಗಾಗಿ ಈ ಪರಿ ವೈರಾಗ್ಯವು
ವೀರ ವೈಷ್ಣವ ಭಕ್ತಾಗ್ರಣಿಯೆ ಪ
ಮಾರಹರನೆ ಮನ್ಮಥನ ವೈರಿಯೆ ಮನ-
ಸಾರ ಶ್ರೀರಾಮ ನಾಮವ ಜಪಿಸುವದಿದು ಅ,ಪ
ಮುತ್ತು ಮಾಣಿಕ್ಯದ ಕಿರೀಟವು ಧರಿಸದೆ
ನೆತ್ತಿಲಿ ಕೆಂಜೆಡೆ ಸುತ್ತಿಹುದು
ಹಸ್ತದಿ ಶಂಖು ಚಕ್ರಗದೆ ಪದುಮವು ಬಿಟ್ಟು
ಉತ್ತಮ ಡಮರು ತ್ರಿಶೂಲ ಪಿಡಿವುದಿದು ೧
ನೊಸಲಲಿ ಕಸ್ತೂರಿ ತಿಲಕವನಿಡದಲೆ
ಭಸುಮವ ಲೇಪಿಸುವುದು ತರವೆ
ಕುಸುಮಲೋಚನೆ ಪ್ರಿಯ ಸಖನಾಗಿರುತಿರೆ
ಎಸೆವ ಕಪಾಲ ಪಿಡಿದು ಬೇಡುವದಿದು ೨
ದುಂಡು ಮುತ್ತಿನ ಹಾರ ಪದಕಗಳಿರುತಿರೆ
ರುಂಡಮಾಲೆಯ ಕೊರಳೊಳು ತರವೆ
ತಂಡ ತಂಡ ಪರಮಾನ್ನ ಭಕ್ಷಗಳಿರೆ
ಉಂಡು ತೇಗದೇ ವಿಷಪಾನ ಮಾಡುವದಿದು೩
ಭರ್ಜರಿ ಪೀತಾಂಬರ ಉಡುವುದು ಬಿಟ್ಟು
ಕರಿಯ ಚರ್ಮನುಡುವುದು ತರವೆ
ಪರಿ ಪರಿ ರತ್ನಾಭರಣಗಳಿರುತಿರೆ
ಉರಗಗಳಿಂದಲಂಕೃತನಾಗಿರುವದು ೪
ಭೃತ್ಯರು ಸೇವೆಗೆ ಬೇಕಾದವರಿರೆ
ಮತ್ತೆ ಪಿಶಾಚ ಗಣಗಳೇತಕೆ
ಹಸ್ತಿ ತುರಗ ಪಲ್ಲಕ್ಕಿ ಪುಷ್ಪಕವಿರೆ
ಎತ್ತನೇರಿ ಚರಿಸುವುದುಚಿತವೆ ಶಂಭೊ ೫
ಸಿರದಲಿ ಗಂಗೆಯು ಸ್ಥಿರವಾಗಿರುತಿರೆ
ಪರ್ವತರಾಜಕುವರಿಯೇತಕೆ
ಅರಮನೆ ವಾಸಕೆ ಯೋಗ್ಯವಾಗಿರುತಿರೆ
ಗಿರಿ ಕೈಲಾಸ ಪರ್ವತದಿ ವಾಸಿಸುವದು ೬
ಭಕ್ತರು ಭಕುತಿಲಿ ಪಾಡಿ ಕೊಂಡಾಡಲು
ನೃತ್ಯವ ಮಾಡುತ ಹರುಷದಲಿ
ಕರ್ತೃ ಶ್ರೀ ಕಮಲನಾಭ ವಿಠ್ಠಲನೆಂದು
ಪತ್ನಿಗೆ ಉಪದೇಶ ಮಾಡುವದಿದು ೭

ಇದು ವರದಾ ನದಿಯ ಸ್ತೋತ್ರ
೩೭
ರಂಗಧಾಮ ಭುಜಂಗ ಶಯನ
ಮಂಗಳಾತ್ಮಕನೆ ಶ್ರೀಶನೆ ಪ
ಗಂಗಾಜನಕ ಉತ್ತುಂಗ ಮಹಿಮನೆ
ಸಂಗರಹಿತನೆ ಭಂಗಹರಿಪನೆ ಅ.ಪ
ಶ್ರೀಶ ನಿನ್ನನು ಪ್ರಾರ್ಥಿಪರಘ ಶೋಧಿಸೆನುತ
ಶ್ರೀ ಸಮೇತರಾಗಿ ಭಕ್ತರ ಪೋಷಿಸೆನ್ನುತ
ವಾಸುದೇವ ಅನಂತಮಹಿಮ ಶ್ರೀಶನೆನ್ನುತ
ದಾಸರೆಲ್ಲರು ಘೋಷಿಸುವರು ಶೇಷಶಯನ ರಕ್ಷಿಸೆನುತ ೧
ಸಾಧುಜನ ಹೃದಯವಾಸನೆನ್ನುತ ಪೇಳ್ವರೊ
ಸಾಧನ ಜೀವರಿಗೆ ಪರಮಪ್ರಿಯನೆಂಬರೊ
ಮೋದತೀರ್ಥ ಸುಧಾರಸ ಸೇವಿಸಿರೆಂಬರೋ
ಆದಿ ಪುರುಷ ಅನಾದಿ ಅನಂತ ಮಹಿಮನೆಂಬರೊ೨
ಅಕ್ಷಯಗುಣ ಪೂರ್ಣಸರ್ವರ ರಕ್ಷಿಸೆನ್ನುತಲಿ
ಲಕ್ಷ್ಮಿಪತಿಯೆ ಪ್ರಾರ್ಥಿಸುವೆನು ಈಕ್ಷಿಸೆನುತಲಿ
ಪಕ್ಷಿವಾಹನವೇರಿ ಮೆರೆವ ಅದೋಕ್ಷಜನೆನುತಲಿ
ರಕ್ಷ ಶಿಕ್ಷಕನೆಂದು ಪೇಳ್ವರೋ ನಿತ್ಯ ನಿತ್ಯದಲಿ ೩
ಶೋಭನ ಗುಣನೆಂದು ನಿನ್ನಸುರರು ಪಾಡಲು
ಶೋಭಿಪ ನಿನ್ನ ರೂಪ ಹೃದಯದಲಿ ಕಾಣಲು
ಶೋಭಕೃತು ಸಂವತ್ಸರದಲಿ ನಿನ್ನ ಪಾಡಲು
ಶೋಭನಂಗಳನ್ನೆ ಕೊಡುವ ಸ್ವಾಮಿ ಎನ್ನಲು ೪
ಕಡಲಶಯನ ಮೃಡನ ಸಖನೆ ಬಿಡದೆ ರಕ್ಷಿಸು
ತಡೆಯದೆ ನಿನ್ನ ಚರಣ ಸ್ಮರಣೆ ಬಿಡದೆ ಕರುಣಿಸು
ಬಿಡದಲೇ ಬಹಮನದ ತಾಪವೆಲ್ಲ ನೀಗಿಸು
ಕಡಲೊಡೆಯನೆ ಕಮಲನಾಭ ವಿಠ್ಠಲ ಪಾಲಿಸು ೫

೧೫೬
ರಂಗನೆ ಬಾ ಮನಮಂದಿರಕೆ
ಶೃಂಗಾರದ ಶ್ರೀ ಹರಿ ಶೌರೇ ಪ
ನಗುತ ನಗುತ ಬಾ ಖಗವಾಹನ ಹರಿ
ಬಗೆ ಬಗೆ ಕ್ರೀಡೆಗಳ ತೋರುತಲಿ
ಝಗ ಝಗಿಸುವ ಪೀತಾಂಬರಧಾರಿಯೆ
ಅಗಣಿತ ಗುಣನಿಧಿ ಬಾ ಹರಿಯೆ ೧
ಪಕ್ಷಿವಾಹನ ಪುರುಷೋತ್ತಮ ಶ್ರೀಹರಿ
ರಕ್ಷಿಸಿ ಕಾಪಾಡುವ ಜಗವ
ಕುಕ್ಷಿಯೊಳಡಗಿಸಿ ಸಲಹುವ ಸುಜನರ
ರಕ್ಷಿಸಿ ಪೊರೆಯಲು ಬಾ ಹರಿಯೆ ೨
ಪೊಂಗೊಳಲೂದುತ ಮಂಗಳ ಚರಿತ ಹೃ-
ದಂಗಳದೊಳು ನಲಿದಾಡುತಲಿ
ಅಂಗಜಜನಕ ಗೋಪಾಂಗನೆ ಲೋಲ ಶ್ರೀ-
ಮಂಗಳ ಮೂರುತಿ ಬಾ ಹರಿಯೆ ೩
ಗಂಗಾಜನಕಗೆ ಭೃಂಗಕುಂತಳೆಯರು
ರಂಗು ಮಾಣಿಕದಾರತಿ ಬೆಳಗೆ
ಪೈಂಗಳನಾಮ ಸಂವತ್ಸರದಲಿ ಭವ
ಭಂಗವ ಮಾಡಲು ಬಾ ಹರಿಯೆ ೪
ಸುಮನಸರೊಡೆಯಗೆ ಭ್ರಮರ ಕುಂತಳೆಯರು
ಘಮಘಮಿಸುವ ಸುಮಮಾಲೆಗಳ
ಕಮಲನಾಭ ವಿಠ್ಠಲಗರ್ಪಿಸುವರು
ಶ್ರಮ ಪರಿಹರಿಸಲು ಬಾ ಹರಿಯೆ ೫

೯೮
ರಕ್ಷಿಸಿ ಪೊರೆಯೊ ದೇವನೆ ಪಕ್ಷಿವಾಹನನೆ
ಸೂಕ್ಷ್ಮ ಸ್ಥೂಲದಿ ವ್ಯಾಪ್ತನೆ ಪ
ಲಕ್ಷ್ಮಿರಮಣ ಪುರುಷೋತ್ತಮ ಪುರುಷನೆ
ಕುಕ್ಷಿಯೊಳಗೆ ಜಗ ರಕ್ಷಿಸಿ ಪೊರೆವನೆ
ಅಕ್ಷರೇಢ್ಯ ಕಮಲೇಕ್ಷಣ ಮಾಧವ
ರಕ್ಷ ಶಿಕ್ಷಕ ಜಗದ್ರಕ್ಷಕ ಹರಿಯೆ ಅ.ಪ
ವಿಶ್ವರೂಪನೆ ಶ್ರೀಹರಿ ವಿಶ್ವವ್ಯಾಪಕನೆ
ವಿಶ್ವತೋ ಮುಖನೆ ಶ್ರೀಶನೆ
ವಿಶ್ವನಾಟಕನೆ ದೇವನೆ
ವಿಶ್ವೋದ್ಧಾರಕನೆ ವಿಶ್ವಮಯನೆ ಶ್ರೀ ವಿಶ್ವನೆ
ವಿಶ್ವರೂಪ ತಾಯಿಗೆ ಬಾಯೊಳು ತೋದರ್
ವಿಶ್ವರೂಪ ಮೈದುನನಿಗೆ ತೋರಿದ
ವಿಶ್ವರೂಪ ಸಭೆಯೊಳು ಭಕ್ತರಿಗೆ ತೋರ್ದ
ವಿಶ್ವವ್ಯಾಪಕ ವಿಶ್ವ ಮೂರುತಿಯೆ ೧
ಹಿಂದಿನ ಕರ್ಮಫಲದಲಿ ಬಂದು ಈ ಭವದಿ
ಕಂದಿ ಕುಂದಿದೆನೋ ವ್ಯಥೆಯಲಿ
ಬಂಧ ಮೋಚಕನೆನುತಲಿ ಬಂದೆರಗುತಲಿ
ತಂದೆ ನೀ ಪೊರೆಯಬೇಕೆನುತಲಿ
ಮಂದರೋದ್ಧರ ಗೋವಿಂದ ನಿನ್ನಯ ಪಾದ
ದ್ವಂದ್ವಕೆ ನಮಿಸುವೆ ಬಂಧನ ಬಿಡಿಸೆಂದು
ಇಂದು ಮುಂದು ಎಂದೆಂದಿಗೂ ನೀ ಗತಿ
ಎಂದು ನಂಬಿದೆನೋ ಇಂದಿರೆ ರಮಣ ೨
ಶ್ರಮವ ಪರಿಹರಿಸೊ ಶ್ರೀಶನೇ ಶ್ರೀನಿಕೇತನನೆ
ಕಮಲ ಸಂಭವನ ತಾತನೆ
ಕಮಲ ಜಾತೆಯ ಪ್ರೀಯನೆ ಕಮಲ ಲೋಚನನೆ
ಕಮಲ ಪೊಕ್ಕಳಲಿ ಪಡೆದನೆ
ಕಮಲ ಭವೇಂದ್ರಾದ್ಯಮರರು ಪೊಗಳಲು
ಕಮಲನಾಭ ವಿಠ್ಠಲ ವಿಠ್ಠಲನೆಂದು
ಕಮಲಪುಷ್ಪ ಮಾಲಾಲಂಕೃತ ಶೋಭಿತ
ಕಮಲದಳಾಕ್ಷನೆ ಕಮನೀಯರೂಪ ೩

ಜಗನ್ನಾಥದಾಸರು ಶ್ರೀ ರಾಘವೇಂದ್ರ
೫೪
ರಕ್ಷಿಸೆವರ ಮಹಲಕ್ಷ್ಮೀ
ಅಕ್ಷಯಗುಣಪೂರ್ಣೆ ಪ
ಪಕ್ಷಿವಾಹನನ ವಕ್ಷಸ್ಥಳದಿ
ರಕ್ಷಿತಳಾದೆ ಸುಲಕ್ಷಣದೇವಿ ಅ.ಪ
ನಿಗಮವೇದ್ಯನ ಗುಣಗಳ ಪೊಗಳುತಲಿ
ಮಿಗೆ ಸಂತೋಷದಲಿ
ಅಗಣಿತಾಶ್ಚರ್ಯನ ಕೊಂಡಾಡುತಲಿ
ಬಗೆ ಬಗೆ ರೂಪದಲಿ
ಖಗವರ ವಾಹನ ನಗಧರನಿಗೆ ಪ-
ನ್ನಗ ವೇಣಿಯು ಬಗೆ ಬಗೆಯಿಂದರ್ಚಿಸಿ
ಹಗಲಿರುಳೆಡೆ ಬಿಡದಲೆ ಹರಿಯನು ಬಹು
ಬಗೆಯಲಿ ಸೇವಿಪಭಾಗ್ಯದ ನಿಧಿಯೆ1
ಇಂದಿರೆ ಶ್ರೀ ಭೂದುರ್ಗಾಂಬ್ರಣಿಯೇ ಸು-
ಗಂಧ ಸುಂದರಿಯೆ
ಇಂದು ಶೇಖರ ಮೋಹಿಪ ಮೋಹಿನಿಯ
ಸುಂದರವನೆ ಕಂಡು
ಚಂದಿರಮುಖ ಮುದದಿಂದಲಿ ಶ್ರೀಗೋ-
ವಿಂದನು ತಾಳಿದ ಮೋಹಿನಿ ರೂಪವ
ನೆಂದು ಮನದಿ ಆನಂದ ಪಡಲು ಸುರ
ವೃಂದವ ಸ್ತುತಿಸೆ ಮುಕುಂದನ ರಮಣಿಯೆ ೨
ಕಮಲಾನನೆ ಕಮಲಾಲಯೆ ಕಮಲಾಕ್ಷಿ
ಕಮಲೋದ್ಭವೆ ಕಮಲೆ
ಕಮಲಾಸನ ಪಿತನ ಸತಿಯೆ ಭಾರ್ಗವಿಯೆ
ಕಮಲಾಂಬಿಕೆ ಪಿಡಿದಿಹ
ಕಮಲಪುಷ್ಪಮಾಲೆಯು ಹರುಷದಿ ಶ್ರೀ-
ಕಮಲನಾಭ ವಿಠ್ಠಲಗರ್ಪಿಸುತಲಿ
ಕಮಲ ಪತ್ರದಳಾಕ್ಷಗೆ ನಮಿಸಿ ಸ್ವ-
ರಮಣನ ಕರುಣಕೆ ಪಾತ್ರಳೆ ಸುಂದರಿ ೩

ಯಾರಿಗೆ ಭಗವತ್ ಸಾಕ್ಷಾತ್ಕಾರವನ್ನು
೧೦೦
ರಕ್ಷಿಸೋ ಶ್ರೀಶ ಶ್ರೀ ಶ್ರೀನಿವಾಸ
ಅಕ್ಷಯ ಗುಣಪೂರ್ಣ ಪಕ್ಷಿವಾಹನ ದೇವ
ಅಕ್ಷರೇಶಾತ್ಮಕ ಮೋಕ್ಷ ದಾತನೆ ಹರಿ ಪ
ರಕ್ಷಿಸೀಕ್ಷಣ ಲಕ್ಷ್ಮೀರಮಣ
ಈಕ್ಷಿಸೀಗಲೆ ರಕ್ಷಿಸೆಮ್ಮನು
ಕುಕ್ಷಿಯೊಳು ಜಗ ರಕ್ಷಿಸುವ ಹರಿ
ಸೂಕ್ಷ್ಮ ಸ್ಥೂಲದೊಳಿರುವ ದೇವ ಅ.ಪ
ಇಂದಿರೆರಮಣ ಗಜೇಂದ್ರವರದ ಹರಿ
ಮಂದಹಾಸದಿ ಭಕ್ತವೃಂದವ ಪಾಲಿಪ
ನಂದಕಂದನೆ ಬಂದು ರಕ್ಷಿಸು
ಇಂದಿರಾ ಭೂದೇವಿ ರಮಣನೆ
ಸುಂದರಾಂಗನೆ ಸುಮನ ಸರ ಹೃ-
ನ್ಮಂದಿರದಿ ಶೋಭಿಸುವ ದೇವ ೧
ನಂದನಕಂದ ಮುಕುಂದ ಹರೇ ಕೃಷ್ಣ
ಕಂದರ್ಪ ಜನಕನೆ ಕರುಣಾನಿಧೆ ಹರಿ
ಮಂದರೋದ್ಧರ ಮದನ ಜನಕ
ಸುಂದರಾಂಗ ಶ್ರೀಸುಮನಸರ ಪ್ರಿಯ
ಬಂಧಮೋಚಕ ಭವವಿದೂರನೆ
ಸಿಂಧುಶಯನ ಸರ್ವೇಶ ಶ್ರೀಹರಿ ೨
ಕನಕ ಗರ್ಭನ ಪಿತ ಕರುಣಿಸೊ ನಿನ್ನಧ್ಯಾನ
ಕನಸುಮನಸಲಿ ನಿನ್ನ ಸ್ಮರಣೆ ಎನಗಿತ್ತು
ಕನಲಿಕೆಯ ಕಳೆದೆಮ್ಮ ಕ್ಷಣ ಬೆಂ-
ಬಿಡದೆ ಕಾಪಾಡೆನ್ನುತ ಪ್ರಾರ್ಥಿಪೆ
ಕಮಲನಾಭವಿಠ್ಠಲನೆ ಕರುಣದಿಕಮಲ ಮುಖಿಯೊಡಗೂಡಿ ಹರುಷದಿ ೩

೯೯
ರಕ್ಷೆಸೆನ್ನ ಶ್ರೀಶನೆ ಲಕ್ಷ್ಮಿರಮಣದೇವ ಜಗದ್ರಕ್ಷ
ಕಮಲಾಕ್ಷ ಶ್ರೀಹರಿ ಪ
ನೊಂದೆನೊ ಭವಬಂಧದೊಳಗೆ ಸಿಂಧುಶಯನ
ಪೊರೆಯೊ ಜಗದ್ವಂದ್ಯ ಪಾದಕೆರಗಿ ನಮಿಸುವೆ ೧
ಸುಂದರಾಂಗ ಹರಿಯೆ ಭಕ್ತವೃಂದ ಪೊರೆದು
ಕಾಯ್ವ ದೇವ ಸಿಂಧುಶಯನ ಶ್ರೀ ಮುಕುಂದನೆ ೨
ಪಾಲಿಸೆನ್ನ ಪವನನಯ್ಯ ಪಾದಕೆರಗಿ ಮುಗಿವೆಕಯ್ಯ
ಲೋಲಲೋಚನೆಯರ ಪ್ರಿಯನೆ ೩
ರಂಗನೆ ಉತ್ತುಂಗ ಮಹಿಮ ಮಂಗಳರೂಪ
ಪಾಂಡುರಂಗ ಕೃಪಾಪಾಂಗ ಶ್ರೀಹರಿ೪
ಪಾಹಿ ಪಾಹಿ ಪಂಕಜಾಕ್ಷಿ ಪಾಹಿ ಲಕ್ಷ್ಮೀರಮಣ ಶ್ರೀಶ
ಪಾಹಿ ಕಮಲನಾಭ ವಿಠ್ಠಲನೆ ೫

ಜಗನ್ನಾಥದಾಸರು ತಮ್ಮ ತಂದೆಯವರಾದ
೭೫
ರಾಘವೇಂದ್ರ ರಾಯರಡಿಗೆ ಬಾಗಿ ನಮಿಸಿರೊ
ನೀಗಿ ಭವದ ಬಂಧದಿಂದ ಮುಕ್ತರಾಗಿರೊ ಪ
ಶಂಕೆಯಿಲ್ಲದೆ ವರಗಳ ಕೊಟ್ಟು ಚಿಂತೆ ಹರಿಸುವರ
ಕಂತುಪಿತನ ಭಕ್ತರಿಗೆ ನಿರಂತರ ಸಂತಸ ನೀಡುವರ
ಪಂಕಜನಾಭನ ಕಿಂಕರರ ಭಯ
ಚಿಂತೆಯ ನೀಗುವರ
ಶಂಖು ಕರ್ನರಿವರೆನ್ನುತ ಅಭಯದ ಕಂಕಣ ಕಟ್ಟಿಹರ ೧
ಹಾಟಕಶ್ಯಪುತ್ರನು ವಿನಯದಿ ಪ್ರಾರ್ಥಿಸಿ ಪೂಜಿಸಿದ
ಮಾಟಮುಖದ ದೇವನ ಪಾದಾಂಬುಜ ಧ್ಯಾನಿಸಿ ಸೇವಿಸಿದ
ಕೋಟಲೆ ಭವದೊಳು ತಾಪವ ಪಡುವರ ಆಪದ ಪರಿಹರಿಸಿ ಭ-
ವಾಟವಿದಾಟಿಸಿ ಪೊರೆದ ಪ್ರಹ್ಲಾದರ ಉಲ್ಲಾಸದಿ ಭಜಿಸಿರಿ೨

ವ್ಯಾಸರಾಯರೆಂದು ಜಗದಿ ಪ್ರಖ್ಯಾತಿ ಪಡೆದವರ
ದೇಶ ದೇಶದ ಭಕುತರ ಉಲ್ಲಾಸ ಕೊಡುವರ
ಶ್ರೀ ಸುಧೀಂದ್ರಾರ್ಯರ ಪುತ್ರರೆನಿಸಿಕೊಂಬರ
ಕ್ಲೇಶಗಳನೆ ಕಳೆವರೆಂಬ ಕೀರ್ತಿಪಡೆದರ೩
ಕಂಗೊಳಿಪ ಕೋರೆಯಿಂದ
ಬಂದ ಭದ್ರೆಯ ತೀರದಿ
ಚಂದದಿಂದ ಮೆರೆವ ರಾಘ-
ವೇಂದ್ರ ರಾಯರ
ಕೊಂಡಾಡಿ ಪಾಡಿರೊ ಮನಕೆ
ಸಂಭ್ರಮ ನೀಡುವರು
ಪೊಂದಿದ ಪಾಪಗಳೆಲ್ಲವ ನೀಗಿಸಿ
ಚಂದದಿ ಸಲಹುವರು ೪
ಕರುಣದಿಂದ ಭಕ್ತರನೆಲ್ಲ
ಸಲಹುತಿರ್ಪರ
ಕಮಲನಾಭ ವಿಠ್ಠಲನಂಘ್ರಿ
ಭಜನೆ ಮಾಳ್ಪರ
ಕನಕಮಯದ ಮಂಟಪದಲಿ
ಮರೆಯುತಿರ್ಪರ
ಕರೆದು ಪ್ರಾರ್ಥಿಸುವವರ ಮನಕೆಹರುಷ ತೋರ್ಪರ ೫

ಟೀಕಾಚಾರ್ಯರೆಂದೇ ಖ್ಯಾತರಾದ
೩೮
ರಾಜೀವದಳನೇತ್ರ ರಾಮಚಂದ್ರನೆ ಶುಭ-
ನಾಮಧೇಯನೆ ನಿನಗಾನಮಿಸುವೆನು ಪ
ರಾಮರಾಕ್ಷಸಕುಲ ಭಯಂಕರ
ರಾಮದಶರಥ ಪುತ್ರನೆ ವರ
ಸಾಮಗಾನ ವಿಲೋಲ ಶ್ರೀವರ
ರಾಮ ಭರತ ಶತ್ರುಘ್ನ ಪಾಲಕ ಅ.ಪ
ಸುರರೆಲ್ಲ ನೆರೆದು ಋಷಿವರರೆಲ್ಲ ಒಂದಾಗಿ
ವರ ಕ್ಷೀರಾಂಬುಧಿಯ ಸಾರುತ ವೇಗದಿ
ಪರಮಾತ್ಮ ನಿನ ಕಂಡು ಪರಿಪರಿ ಸ್ಮರಿಸುತ
ನೆರೆದರು ದೇವ ಗಂಧರ್ವ ನಾರದರೆಲ್ಲ
ಗರುಡ ಗಮನನೆ ಉರಗಶಯನನೆ
ಪರಮ ಪುರುಷನೆ ಪುಣ್ಯಚರಿತನೆ
ತ್ವರದಿ ಎಮ್ಮಯ ಮೊರೆಯ ಕೇಳೆಂದು
ಭರದಿ ಪ್ರಾರ್ಥನೆ ಮಾಡುತಿಹರು ೧
ಖೂಳ ದೈತ್ಯರು ನಮ್ಮ ಬಾಳಗೊಡರೊ ದೇವ
ಭಾಳ ವ್ಯಾಕುಲರಾಗಿ ದು:ಖಿಪೆವು
ಕೇಳಿ ತಡಮಾಡದೆ ಪಾಲಿಸಿ ಸಲಹಯ್ಯ
ಶ್ರೀಲೋಲ ಶ್ರೀವರ ಶ್ರೀವತ್ಸಲಾಂಛನ
ಶ್ರೀಶ ಶ್ರೀ ಭೂದೇವಿ ರಮಣನೆ
ಮಾತುಳಾಂತಕ ಮದನಜನಕನೆ
ವಾಸುದೇವನೆ ಭಜಿಪ ಭಕ್ತರ
ಸೋಸಿನಲಿ ರಕ್ಷಿಸುತ ಪೊರೆಯುವೆ ೨
ಭಕ್ತವತ್ಸಲ ಸ್ವಾಮಿ ಭಕ್ತರ ಸುರಧೇನು
ಯುಕ್ತ ಮಾತುಗಳಾಡಿ ಸಂತಯಿಸಿ
ಸತ್ಯ ಸಂಕಲ್ಪನು ಮತ್ತವರನು ಕಳುಹಿ
ಸತ್ಯಸಂಧನ ದಶರಥನುದರದಿ ಪುಟ್ಟಿ
ಮತ್ತೆ ವಿಶ್ವಾಮಿತ್ರ ಬರಲು
ಅರ್ಥಿಯಲಿ ಯಾಗವನೆ ನಡೆಸಲು
ಸುತ್ತಿ ಬರುವ ಸುರರನೆ ಸದೆದು
ಮತ್ತೆ ಯಾಗ ನಿರ್ವಿಘ್ನ ಮಾಡಿದ ೩
ಸೀತಾಸ್ವಯಂವರಕ್ಕಾಗಿ ಬರುತಿರಲಾಗವರು
ಗೌತಮ ಸತಿಯ ಶಾಪಹರಿಸಿ
ಪಾತಕಿ ತಾಟಕಿಯನು ಕೊಂದು ಹರುಷದಿ ನಿ-
ರ್ಭೀತನಾಗಿ ಮಿಥಿಲಾಪುರಕೆ ಸೇರಲು ಬಂದು
ಆತ ಲಕ್ಷ್ಮಣನೊಡನೆ ಶಿವಧನು
ನೀತಿಯಿಂದೆತ್ತುತಲಿ ಸೀತೆಯು
ಪ್ರೀತಿಯಲಿ ವನಮಾಲೆ ಹಾಕಲು
ಆಕೆಯ ಕೈಪಿಡಿದ ರಾಮನೆ ೪
ರಾಮಲಕ್ಷ್ಮಣ ಭರತ ಶತ್ರುಘ್ನರಿಗೆ ಲಗ್ನ
ನೇಮದಿಂದಲಿ ಮಾಡಿ ಕಳುಹಲಾಗ
ಸಾಮಜವರ ಅಯೋಧ್ಯಾಪುರದಿ ಭಕ್ತ-
ಸ್ತೋಮವನೆರಹಿ ರಾಜ್ಯಾಭಿಷೇಕವ ನಡಸೆ
ಆ ಮಹಾಮುನಿ ಸ್ತೋಮ ಸುರಗಣ
ರಾಮನಿಗೆ ಪಟ್ಟವೆನುತ ಹರುಷಿಸೆ
ಆ ಮಹಾಕೈಕೆ ವರವ ಬೇಡುತ
ರಾಮನಿಗೆ ವನವಾಸವೆನಲು ೫
ವನವನ ಚರಿಸುತ ಘನರಕ್ಕಸರ ಕೊಂದು
ವನಜಾಕ್ಷಿ ಮಾಯಾಮೃಗವೆ ಬೇಡಲು
ವನಮೃಗ ಬೆನ್ನಟ್ಟಿ ತರುವೆನೆನುತ ಪೋಗಿ
ಬಣಗು ರಾವಣ ಸೀತಾಹರಣವ ಮಾಡಲು
ಕುರುಹು ಕಾಣದೆ ಸೀತೆಯ ವನವನದಿ
ಚರಿಸುವ ಸಮಯದಲಿ ಕಪಿ
ವರರ ಸೈನ್ಯವ ಕಳುಹಿ ಮುದ್ರಿಕೆ
ಇತ್ತು ಜನಕ ಜಾತೆಯ ನೋಡಿ ಬರಲು ೬
ಕಡಲ ಕಟ್ಟುತ ಸೈನ್ಯ ನಡಿಸಿ ಯುದ್ಧವ ಮಾಡೆ
ಬಿಡದೆ ರಾವಣ ಸಹಿತೆಲ್ಲರನು ಕೊಂದು
ಕಡು ಭಕ್ತನಿಗೆ ಲಂಕಾಪುರದಲಿ ಪಟ್ಟವ ಕಟ್ಟಿ
ಮಡದಿ ಸಹಿತ ಪುಷ್ಪಕವನೇರಿ ಬರುತಿರೆ
ಸಡಗರದಿ ಹನುಮಂತ ಭರತಗೆ
ಒಡೆಯ ಬರುತಿಹನೆಂದು ಪೇಳಲು
ಕಡುಹರುಷದಿ ಅಯೋಧ್ಯೆಯನಾಳಿದ
ಕಡಲೊಡೆಯ ಕಮಲನಾಭ ವಿಠ್ಠಲನೆ ೭
ಬಂದ ಶ್ರೀರಾಮಚಂದ್ರ ಭಾಗವತರ ಕೂಡಿ
ಇಂದಿರೆ ಜಾನಕಿ ಸೌಮಿತ್ರಿ ಸಹಿತದಿ

ಈ ಕೀರ್ತನೆಯೂ ಜಯತೀರ್ಥರನ್ನೇ ಕುರಿತ
೩೯
ರಾಧೆ ಗೋಪಾಲ ಕೃಷ್ಣ ರಾಧೆಗೋಪಾಲ
ರಾಧೆ ಗೋಪಾಲ ಕೃಷ್ಣ ರಾಧೆಗೋಪಾಲ ಪ
ನಂದನಕಂದ ಮುಕುಂದಮುರಾರೆ
ಇಂದಿವರಾಕ್ಷ ಗೋವರ್ದನಧಾರೆ
ವೃಂದಾವನ ಸಂಚಾರ ವಿಹಾರೇ
ಸಿಂಧುಶಯನ ಕ್ಷೀರಾಬ್ಧಿವಿಹಾರ ೧
ಶಂಖು ಚಕ್ರಧರ ವೇಣುವಿನೋದ
ಶಂಕರಾದಿ ವಂದಿತ ದಿವ್ಯಪಾದ
ಬಿಂಕದಿಂದ ಕೊಳಲೂದುವನಾದ
ಪಂಕಜಾದಿಗಳು ನಲಿವ ಸುಸ್ವಾದ ೨
ಮಂದರಧರ ಗೋವರ್ಧನ ಧಾರಿ
ಮಂದೆ ಗೋವತ್ಸವ ಕಾಯ್ವ ಶೌರಿ
ಇಂದಿರೆಯರಸ ಶ್ರೀಹರಿಯೆ ಮುರಾರಿ
ನಂದಯಶೋದೆಯ ಮೋಹದ ಶೌರಿ೩
ವೃಂದಾವನದೊಳು ನಿಂದ ಗೋವಿಂದ
ಮಂದಹಾಸ ಮುಖನಗೆ ಮೊಗದಿಂದ
ಸುಂದರ ಗೋಪಿಯರೊಡಗೂಡಿ ಬಂದ
ಮಂದರಧರ ಆನಂದ ಮುಕುಂದ ೪
ಕಾಮನಪಿತ ಶ್ರೀ ಕಂಜಜನಾಭ
ಕಾಮಿತ ಫಲಗಳ ಕರುಣಿಪ ಶ್ರೀಧ
ಕಮಲನಾಭ ವಿಠಲ ನಿಮ್ಮ ಪಾದ
ಕರುಣದಿ ನೆನೆವರ ಸಲಹುವಮೋದ ೫

ವಾದಿರಾಜರು ಹದಿನೈದು
೪೦
ರಾಮ ಶ್ರೀರಾಮ ಸೀತಾರಾಮ ಶ್ರೀರಾಮ
ರಾಮನೆ ರವಿಕುಲ ಸೋಮ ಶ್ರೀರಾಮ ಪ
ರಾಮ ರಾಮ ರಘುರಾಮನೆ ದಶರಥ
ರಾಮನೆ ಗುಣಗಣಧಾಮನೆ ಶ್ರೀರಘು ಅ.ಪ
ಕೌಸಲ್ಯಾದೇವಿಯ ಕಂದನೆ ರಾಮ
ಕೌಶಿಕಯಜ್ಞವ ಕಾಯ್ದ ಶ್ರೀರಾಮ
ಹಿಂಸಿಸಿದ ತಾಟಕಿಯನು ಕೊಂದರಾಮ
ಧ್ವಂಸಮಾಡಿದೆ ಶಿವಧನು ಮುರಿದುರಾಮ
ಸಂಶಯವಿಲ್ಲದೆ ಸೀತೆ ಕರವ ಪಿಡಿದು
ತನ್ನಂಶದ ಪರಶುರಾಮನಿಗೊಲಿದನೆ ಶ್ರೀ ೧
ದಶರಥರಾಮ ನೀನರಸನಾಗೆನಲು
ಅಸುರಾವೇಶದಿ ಕೈಕೆ ವರವ ಯಾಚಿಸಲು
ಎಸೆವ ಸಿಂಹಾಸನ ತೊರೆದು ಪೊರಮಾಡಲು
ಶಶಿಮುಖಿ ಸೀತಾಲಕ್ಷ್ಮಣರ ಕೂಡಿ ಬರಲು
ಭರತಗೆ ಪಾದುಕೆ ಕೊಡುತಲಿ ಕಳುಹಿಸಿ
ಗುಹನ ಮನ್ನಿಸಿ ವನರಾಜ್ಯದೊಳ್ ಮೆರೆದೆ ೨
ವನದೊಳು ಮಾಯಾ ಮೃಗವ ಕಂಡು ಸತಿಯು
ಮನದಿ ಚಿಂತಿಸಿರಾಮ ತೆರಳೆ ರಕ್ಕಸನು
ವನಜಾಕ್ಷಿ ಸೀತೆಯ ಕಳವಿನಿಂ ತರಲು
ವನವನಚರಿಸಿ ಪುಡುಕೆ ಕಂಡು ಕಪಿವರನು
ಶರಧಿ ಲಂಘಿಸಿ ಸೀತೆಯನು ಕಂಡು ಹನುಮನು
ಕುರುಹು ಪಡೆದು ಲಂಕೆ ದಹಿಸುತ ಬರಲು ೩
ಸೇತುಬಂಧನ ಮಾಡಿ ಕಪಿಗಳ ಕೂಡಿ
ನೀತಿ ಪೇಳಿದ ವಿಭೀಷಣಗಭಯ ನೀಡಿ
ಭೂತ ರಾವಣನ ದಶಶಿರವ ಚಂಡಾಡಿ
ಸೀತಾಸಹಿತ ರಾಮ ಪುಷ್ಪಕವನೇರಿ
ಆತುರದಿಂದಿಹ ಭರತನಿಗ್ವಾರ್ತೆಯ
ಪ್ರೀತಿಲಿ ಕಳುಹಿದ ಶ್ರಿ ರಘುರಾಮ ೪
ಬಂದ ಶ್ರೀರಾಮಚಂದ್ರ ಬಹುಪ್ರೀತಿಯಿಂದ
ಛಂದದಿಂ ಭರತನ ಮನ್ನಿಸಿ ಮುದದಿಂದ
ಕುಂದಣಮಯದ ಸಿಂಹಾಸನ ಚಂದ-
ದಿಂದಲೇರುತ ರಾಮ ನಸುನಗೆಯಿಂದ
ಇಂದಿರಾಸೀತಾ ಸಹಿತ ಅಯೋಧ್ಯದಿ
ಬಂದು ಪೊರೆವ ಕಮಲನಾಭ ವಿಠ್ಠಲನು ೫

೧೦೧
ರಾಮಚಂದ್ರನೆ ನಿನ್ನ ನಾಮಮೃತವು ಎನ್ನ
ನಾಲಿಗೆಯೊಳು ನಿಲಿಸು ಪ
ದಾನವಾಂತಕ ನಿನ್ನ ಧ್ಯಾನ ಬಿಡದೆ ಇತ್ತು
ದೀನ ರಕ್ಷಕ ಹರಿ ಜಾನಕಿ ರಮಣನೆ ಅ.ಪ
ಕ್ಷೀರವಾರಿಧಿ ಶಯನ ಶ್ರೀ ಹರಿಯನು
ಸ್ಮರಿಸುತ ಧ್ಯಾನವ ಮಾಡಿ ಭಕುತಿಲಿ
ನಾರದ ಹರ ಬ್ರಹ್ಮಾದಿ ಋಷಿ ಗಂಧರ್ವರು
ಸುರರೆಲ್ಲರು ಕೂಡಿ
ಮಾರಮಣನ ಕೊಂಡಾಡುತ ಸ್ತೋತ್ರವ ಮಾಡಿ
ಪಾರುಮಾಡು ಜಗದೀಶನೆ ಎನುತಲಿ ತವಕದಿ
ಶ್ರೀ ಭೂರಮಣನು ದೀನರ ನುಡಿಗಳ
ಕೇಳುತ ಆಲೋಚಿಸುತಲಿ ಬೇಗದಿ
ಭೂನಾಥನ ಮನೆಯೊಳಗವತರಿಸುವೆ
ಎನ್ನುತವರಿಗೆಲ್ಲಾಭಯವ ನೀಡಿದ ೧
ದಶರಥನುದರದಿ ಜನಿಸಲು ನಾಲ್ವರು ಅಂದು ಯಾಗಕೆ
ಕೌಶಿಕನಲ್ಲಿ ವಿದ್ಯೆಗಳನ್ನು ಕಲಿಯುತ ಬಂದು
ಶಶಿಮುಖ ಜಾನಕಿ ಕರಪಿಡಿದನು ತಾನಂದು ಅಯೋದ್ಯದಿ
ಎಸೆವ ಸಿಂಹಾಸನವೇರುವ ಸಮಯದಿ ಬಂದು
ರಸಕಸಿ ಮಾಡಲು ಕೈಕೇಯಿಯು ತಾ
ಶಶಿಮುಖ ಸೀತೆಯ ಒಡಗೂಡುತಲಿ
ಬಿಸಿಲು ಗಾಳಿಮಳೆಯೊಳು ವನಚರಿಸುತ
ಸತಿಯು ಬೇಡೆ ಮಾಯಮೃಗವ ಬೆನ್ನಟ್ಟಿದ ೨
ಶಶಿಮುಖ ಸೀತೆಯ ದಶಶಿರನೊಯ್ಯಲು ಕೇಳಿ
ದಶರಥಸುತ ಅರಸುತ ಬಲು ಶೋಕವ ತಾಳಿ ಚಿಂತಿಸಿ
ಎಸೆವ ಗಿರಿ ಗುಹೆಗಳ ಹುಡುಕಲು ಮಾರುತಿ ನೋಡಿ ಮುದ್ರಿಕೆ
ವಸುಧೆ ತನಯಳಿಗರ್ಪಿಸೆ ಆಕೆಯು ಮುದ ತಾಳಿ
ವೀರ ಮಾರುತಿ ಚೂಡಾಮಣಿ ಕೊಡಲು
ಶ್ರೀ ರಘುವೀರನು ಸೇತುವೆ ಕಟ್ಟುತ
ಕ್ರೂರ ಖಳರನು ಸಂಹರಿಸಿದ ಕಮಲ
-ನಾಭ ವಿಠ್ಠಲ ಅಯೋದ್ಯದಿ ಮೆರೆಯುವ ೩

೫೬
ಲಕ್ಷ್ಮೀ ಬಾರಮ್ಮ ಮುತ್ತೈದೆ ಬಾರಮ್ಮ ಪ
ಲಕ್ಷ್ಮೀರಮಣನ ವಕ್ಷಸ್ಥಳದಲಿ
ರಕ್ಷಿತಳಾದೆ ಸುಲಕ್ಷಣ ದೇವಿ ೧
ಗೆಜ್ಜೆಯ ಕಾಲಿನ ನಾದಗಳಿಂದಲಿ
ಸಜ್ಜನರಿಗೆ ನೀ ಅಭಯವ ಕೊಡುತಲಿ ೨

ಕಮಲನಾಭ ವಿಠ್ಠಲನೊಡಗೂಡುತ
ಭ್ರಮರ ಕುಂತಳೆ ಸೌಭಾಗ್ಯದ ನಿಧಿಯೆ ೩

೫೫
ಲಕ್ಷ್ಮೀದೇವಿ ಕಮಲಾಕ್ಷಿ ತಾಯೆ
ಸೂಕ್ಷ್ಮಮತಿಯನಿತ್ತು ಪೊರೆದು ರಕ್ಷಿಪದೇವಿ ಪ
ಹರಿಯರಾಣಿ ಭುಜಗವೇಣಿ
ಪರಿಪರಿಯ ಕ್ಲೇಶಗಳಳಿವ
ದುರಿತದೂರನ ಕರಪಿಡಿಯುತ ಬಾ
ಪರಿ ಪರಿ ವೈಭವದಿ ೧
ವಂದಿಸುವೆ ನಿನ್ನ ಪದಕೆ
ಅಂಬುಜಾಕ್ಷಿ ಕರುಣವ ಮಾಡಿ
ಕಂಬು ಕಂಧರನೊಡಗೂಡುತ ಬಾ
ಸಂಭ್ರಮ ಸೂಸುತಲಿ ೨
ಗೆಜ್ಜೆ ಪೈಜನಿ ಪಾಡಗರುಳಿಯು
ಸಜ್ಜಾಗಿಹ ಕಾಲುಂಗುರ ಧ್ವನಿಯ
ಮೂರ್ಜಗದೊಡೆಯನ ಕರಪಿಡಿಯುತ ಬಾ
ಸಜ್ಜನ ರಕ್ಷಕಳೆ ೩
ನಡುವಿಗೆ ನವರತ್ನದ ಪಟ್ಟಿ
ಬಿಡಿಮುತ್ತುಗಳುದುರುವ ಪೀತಾಂಬರ
ಬಡನಡÀು ಬಳುಕುತ ಅಡಿ ಇಡು ಬಾ ನಿ-
ನ್ನೊಡೆಯನ ಕೂಡುತಲಿ ೪
ಕರದಲಿ ಕಂಕಣ ಹಾಸರ ಬಳೆಗಳು
ಬೆರಳಲಿ ಉಂಗುರ ಥಳಥಳಿಸುತಲಿ
ಗರುಡಗಮನ ನೊಡಗೂಡುತ ಬಾ ಬಾ
ಗರುವವು ಮಾಡದಲೆ ೫
ವಂಕಿನಾಗಮುರುಗಿ ಕರದಲಿ
ಬಿಂಕದಿ ಪಿಡಿದಿಹ ತಾವರೆ ಕುಸುಮವು
ಪಂಕಜಾಕ್ಷನೊಡಗೂಡುತ ಮನ
ಶಂಕೆಯು ಮಾಡದಲೆ ೬
ಕಠ್ಠಾಣಿಸರ ಪದಕಗಳ್ಹೊಳೆಯುತ
ಕಟ್ಟಿದ ಉಂಗುರಡ್ಡಿಕಿ ಶೋಭಿಸುತ
ಚಿತ್ತಜನಯ್ಯನನೊಡಗೂಡುತ ಬಾ
ಮತ್ತೆ ಹರುಷದಲಿ ೭
ಥಳಥಳಿಸುವ ಗಲ್ಲಕೆ ಅರಿಶಿನವು
ನಲಿಯುವ ಮೂಗುತಿ ಮುಖುರ ಬುಲಾಕು
ಹೊಳೆವ ಮೀನು ಬಾವಲಿ ಚಳತುಂಬುಗಳ್ಹೊಳೆಯುತ
ಘಳಿಲನೆ ಬಾರಮ್ಮ ೮
ಕುರುಡಿ ಬಾವಲಿ ಬುಗುಡಿ ಚಂದ್ರ
ಮುರುವಿನ ಕಾಂತಿ ಮುಗುಳ್ನಗೆ ಮುಖವು
ಉರುಗಾದ್ರೀಶನ ಕರಪಿಡಿಯುತ ಬಾ
ಕರೆ ಕರೆ ಮಾಡದಲೆ ೯
ಘಣೆಯಲಿ ಕುಂಕುಮ ಬೈತಲೆ ಬಟ್ಟು
ಥಳಥಳಿಸುವ ಕಣ್ಣಿಗೆ ಕಪ್ಪಿಟ್ಟು
ಎಳೆಬಾಳೆಯ ಸುಳಿಯಂದದಿ ಬಳುಕುತ
ಘಳಿಲನೆ ಬಾರಮ್ಮ ೧೦
ಕೆಂಪಿನ ರಾಗುಟಿ ಜಡೆ ಬಂಗಾರವು
ಸಂಪಿಗೆ ಮಲ್ಲಿಗೆ ಸರಗಳ ಮುಡಿದು
ಸೊಂಪಿಲಿ ಶ್ರೀ ಹರಿಯೊಡನಾಡುತ ನಲಿಯುವ
ಸಂತಸ ತೋರಮ್ಮ ೧೧
ಇಂದಿರೆ ಶ್ರೀರಮೆ ಭಾರ್ಗವಿಯೆ
ನಂದತ್ರಯಾ ಸದಾಸುಶೀಲೆ
ಸುಗಂಧಿ ಸುಂದರಿ ಮಂದಗ ಮನೆಯೆ
ಚಂದದಿ ಬಾರಮ್ಮ ೧೨
ಸುತ್ತೆಲ್ಲ ಸುರಸ್ತ್ರೀಯರು ಮುತ್ತಿನ
ಛತ್ರ ಚಾಮರದರ್ಪಣ ಪಿಡಿದು
ನೃತ್ಯಗಾಯನ ಮಾಡುತ ಕರೆವರು
ಸತ್ವರ ಬಾರೆನುತ ೧೩
ಶ್ರಮ ಪರಿಹರಿಸೆನುತಲಿ ಬೇಡುವೆನು
ಮಮತೆಲಿ ಕರಗಳ ಮುಗಿಯುತ ಬೇಡಲು
ಕಮಲನಾಭ ವಿಠ್ಠಲನೊಡನೆ ಶ್ರೀ-
ಕಮಲೆಯು ಬರುತಿಹಳು ೧೪

ಯಾರಿಗೆ ಭಗವತ್ ಸಾಕ್ಷಾತ್ಕಾರವನ್ನು
೧೦೨
ಲಕ್ಷ್ಮೀರಮಣನೆ ರಕ್ಷಿಸೆನ್ನನು
ಪಕ್ಷಿವಾಹನ ಅಕ್ಷರ ಪುರುಷ ಅಧೋಕ್ಷಜ ಹರಿ ಪ
ಇಂದಿರೇಶ ನೊಂದೆ ಭವದಿ ಮಂದ ಬಿಡಿಸಿ ಸಲಹೋ ದೇವ
ಇಂದು ಮುಂದು ಎನಗೆ ನೀ ಗತಿ ಎಂದು ನಂಬಿದೆ
ಮಂದರಧರ ಗೋವಿಂದ ಮುಕುಂದ೧
ಪರಮ ಪುರುಷ ಪುಣ್ಯಚರಿತ
ಗರುಡಗಮನ ವಾಸುದೇವ
ನಿರುತ ನಿನ್ನ ಭಜಿಪ ಭಕ್ತರ ಸ್ಮರಣೆ ಪಾಲಿಸೊ
ಪರಮಪುರುಷ ಹರಿ ಶರಧಿಶಯನ೨
ದೇಶದೇಶ ತಿರುಗಿ ಬಹಳ ಬೇಸರದಲೆ ಬಳಲಿದವರ
ಕ್ಲೇಶಗಳನೆ ಕಳೆದು ಪರಮೋಲ್ಲಾಸ ನೀಡಿದ
ಸಾಸಿರನಾಮದ ಒಡೆಯನೆ ವೆಂಕಟ ೩
ಕ್ಷೀರವಾರಿಧಿ ಶಯನದೇವ ಮಾರಪಿತ ಮಹಾನುಭಾವ
ಘೋರತರ ಸಂಸಾರ ಶರಧಿ ಪಾರುಗಾಣಿಸೋ
ಪರಿಸರ ನೊಡೆಯನÉ ಉರಗಶಯನ ೪
ಶಂಖು ಚಕ್ರಧಾರಿ ಶ್ರೀಹರಿ ಪಂಕಜಾಕ್ಷರೊಳು ವಿಹಾರಿ
ಬಿಂಕಮಾಡದೆ ಪೊರೆಯೊ ಶೌರಿ ಶಂಕರಾನುತ
ಪಂಕಜಲೋಚನ ವೆಂಕಟರಮಣ ೫
ಕಪಟ ಸೂತ್ರಧಾರಿ ಚಪಲ ಬುದ್ಧಿಯ ಬಿಡಿಸೊ ಶೌರೀ
ಅಪರಿಮಿತ ಮಹಿಮೆಗಳ ತೋರಿ ನಟಿಸಿ ಮೆರೆವ
ಸಟೆಯಲ್ಲವೊ ನಾರದ ಮುನಿ ಸೇವಿತ ೬
ಕಮಲಾಪತೆ ಪ್ರಿಯ ಜೀಯ ಕಮಲಸಂಭವ ಜನಕದೇವ
ಕಮಲನಾಭ ವಿಠ್ಠಲ ಕಾಯೋ ಶ್ರಮವ ಹರಿಸೊಸುಮನಸರೊಡೆಯನೆ ಸುರಮುನಿ ಸೇವಿತ ೭

ಶ್ರೀ ಮದುತ್ತಾರಾದಿ ಮಠದ
೬೫
ಲಾಲಿ ಲಾಲಿ ಹನುಮ ಲಾಲಿ ಬಲಭೀಮ
ಲಾಲಿ ಲಾಲಿ ಮಧ್ವರಾಯ ಗುರುವರ್ಯ ಪ
ತ್ರೇತೆಯಲಿ ರಘುಪತಿಯ ಸೇವೆ ಸಲಿಸಿದವನೆ
ಸೀತೆಯನು ಕಂಡು ರಕ್ಕಸರ ಗೆಲಿದವನೆ
ದೂತರಾವಣಗೆ ನೀತಿಗಳ ಕಲಿಸಿದವನೆ
ಭೀತಿಯಿಲ್ಲದೆ ಲಂಕಾಪುರವ ದಹಿಸಿದವನೆ ೧
ದ್ವಾಪರದಿ ಶ್ರೀ ಕೃಷ್ಣನನು ಪೂಜಿಸಿದವನೆ
ಪಾಪಿ ದುರ್ಯೋಧನಾದಿಗಳ ಗೆಲಿದವನೆ
ಕೋಪದಲಿ ಜರಾಸಂಧನನು ಸೀಳಿದವನೆ
ಶ್ರೀಪತಿಯ ಸೇವೆಯಲಿ ನಿಸ್ಸೀಮನೆನಿಸಿದವನೆ೨
ಮಧ್ವಮತದವರನುದ್ಧರಿಸಿ ಮೆರೆದವನೆ
ಶ್ರದ್ಧೆಯಿಂದಲಿ ಹರಿಯ ಭಜಿಪ ಗುರುವರನೆ
ಮುದ್ದು ಕಮಲನಾಭ ವಿಠ್ಠಲನೊಲಿಸಿದವನೆ
ಶುದ್ಧ ಮೂರುತಿ ಉಡುಪಿ ಕೃಷ್ಣನರ್ಚಿಸಿದವನೆ೩

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ
೬೬
ಲಾಲಿ ಲಾಲಿ ಹನುಮ ಲಾಲಿ ಬಲಭೀಮ
ಲಾಲಿ ಲಾಲಿ ಲಾಲಿ ಗುರು ಮಧ್ವನಾಮ ಪ
ತ್ರೇತೆಯಲಿ ಸಾಗರವ ದಾಟಿ ನಿಮಿಷದಲಿ
ಸೀತೆಗುಂಗರ ಕೊಟ್ಟು ಕುಶಲ ತಿಳಿಸುತಲಿ
ದೂತರಾವಣಗೆ ಶೌರ್ಯಗಳ ತೋರುತಲಿ
ಸೀತೆಯ ಕ್ಷೇಮ ರಘುನಾಥಗರುಹುತಲಿ ೧
ದ್ವಾಪರದಿ ಕೃಷ್ಣನಿಗೆ ಪರಮಾಪ್ತನಾಗಿ
ದ್ರೌಪದಿಯ ವಚನವನು ಸಲಿಸಬೇಕಾಗಿ
ಕೋಪದಲಿ ಖಳನ ಸೀಳುತ ತೃಪ್ತನಾಗಿ
ಈ ಪರಿಯಲಿ ಹರಿಗೆ ಅರ್ಪಿಸುತ ಚನ್ನಾಗಿ೨
ಮಧ್ವಮತವನುದ್ಧರಿಸಬೇಕೆನುತ
ಶ್ರದ್ಧೆಯಲಿ ಕೃಷ್ಣನ್ನ ಸೇವಿಸುತ ಸತತ
ಮುದ್ದು ಕಮಲನಾಭ ವಿಠ್ಠಲನ ಸ್ಮರಿಸುತ್ತಸದ್ಗ್ರಂಥ ರಚಿಸಿ ಬದರಿಯಲಿ ವಾಸಿಸುತ ೩

ಆತ್ಮ ಶೋಧನಾತ್ಮಕ ದೃಷ್ಟಿಯುಳ್ಳ
೮೧
ವಂದಿಪೆ ತವ ಪಾದಕೆ ಭವದ
ಬಂಧನ ಕಳೆವುದಕೆಪ
ಹಿಂದೆ ಮುಂದೆ ಎಂದೆಂದಿಗು ಎನ್ನಯ
ಕುಂದುಗಳೆಣಿಸದೆ ಕರುಣಿಪುದೆನ್ನುತ ಅ.ಪ
ಅಪರಾಧಿಯು ಎಂದು ತಿಳಿದರು
ಗುಪಿತದಿ ಸಲಹುವದು
ಅಪಮೃತ್ಯುವು ಪರಿಹಾರಕೆ ನಿಮ್ಮಯ
ಉಪದೇಶದ ಮಂತ್ರವೆ ಪರಮೌಷಧಿ ೧
ಕಾಯಕ್ಲೇಶದಿಂದ ಮನಸಿನ
ಹೇಯ ವ್ಯಥೆಗಳಿಂದ
ಕಾಯಜ ಪಿತನಂಘ್ರಿಯ ಸೇವಿಸದಲೆ
ಆಯಾಸದಿ ಮನ ಕಳವಳಗೊಳುತಿದೆ ೨
ದೇಹದಿ ಬಾಂಧವರು ಅವರು
ಆರು ಮಂದಿ ಇಹರು
ಮಾಯಾ ಪಾಶಾದಿ ಬಂಧಕ ಪಡಿಸುತ
ಹಾಯಲೀಸರೊ ಹರಿ ಅಂಘ್ರಿಗಳಲಿ ೩
ಆರಿಗುಸುರಲೇನು ಮಾಡಿದ
ಕಾಂಇÀರ್ಇವು ಮುಂದಿನ್ನೂ
ಆನಂದಮಯ ವಿಠ್ಠಲದಾಸರ ಕೂಡಿ
ಆದರುಸುವುದಿನ್ನೂ ಮುನ್ನೂ೪
ಕಮಲನಾಭ ವಿಠ್ಠಲನೊಲುಮೆಯು
ಸುಲಭದಿ ಪಡೆವುದಕೆ
ನಮಿಸಿ ತಂದೆ ವೆಂಕಟೇಶ ವಿಠ್ಠಲ ದಾ-ಸರಿಗೆ ನಮಿಸಿ ಬೇಡಿ ಅನುದಿನ ಪ್ರಾರ್ಥಿಸುತ೫

ವಾನರನಿಕರದೊಳು ಶ್ರೇಷ್ಠನ ಪ್ರಭು

ಗಣೇಶ ಪ್ರಾರ್ಥನೆ
ವಂದಿಪೆ ನಾ ನಿನ್ನನು ಸೊಂಡಿಲ ಗಣಪ ಧ
ಬಂದೆನ್ನ ಸಲಹೊ ನೀನು ಪ
ಪುಂಡರೀಕಾಕ್ಷನುದ್ದಂಡ ಪರಾಕ್ರಮ
ಕೊಂಡಾಡಿಸುವಿ ವಕ್ರತುಂಡನೆಂಬರೊ ನಿನ್ನ ಅಪ
ಪಾಶಾಂಕುಶಧರನೇ ಮೋದಕ ಹಸ್ತ
ಭಾಷಿಗ ನೀನಹುದೋ
ಆಶಾಪಾಶಗಳಿಂದ ಘಾಸಿಗೊಂಡಿಹ ಮನ
ಬೇಸರ ಕಳೆದೆಮ್ಮ ಪೋಷಿಪನನು ತೋರೊ ೧
ಗೌರಿಯ ವರಪುತ್ರನೆ ಪ್ರಾರ್ಥಿಸುವೆ ಶ್ರೀ-
ಶೌರಿಯ ಪಾದ ಸ್ಮರಣೆ
ಗೌರವದಿಂ ಮಾಳ್ಪ ಶೌರ್ಯ ಎನಗೆ ಕೊಟ್ಟು
ಮಾರ ಪಿತನ ಪಾದ ತೋರಿಸು ತವಕದಿ ೨
ಅಂತರಂಗದ ಶತ್ರುಗಳಿಂದಲಿ ಮನ
ಚಿಂತೆಗೆ ಗುರಿಗೈಸಿತೊ
ಎಂತು ಈ ಭವ ದಾಂಟುವಂಥ ಪಥವ ಕಾಣೆ
ಕಂತÀÄಪಿತನ ಪಾದ ಚಿಂತನೆ ಕೊಡಿಸಯ್ಯ ೩
ವಾನರ ನಿಕರದೊಳು ಶ್ರೇಷ್ಠನ ಪ್ರಭು
ವಾರಿಧಿಯನು ಬಂಧಿಸೆ
ಆದಿಮೂರುತಿ ನಿನ್ನ ಆರಾಧಿಸಿದನೆಂಬ
ಸೋಜಿಗ ಸುದ್ದಿಯು ಮೂರ್ಜಗದೊಳಗುಂಟು4
ಕಮಲ ನಾಭವಿಠ್ಠಲ ಭಕ್ತರ ಹೃದಯ
ಕಮಲದೊಳಗೆ ಶೋಭಿಪ
ಮಿನುಗುವ ಮಧ್ವಮಂಟಪದೊಳು ರಾಜಿಪಸನಕಾದಿವಂದ್ಯನ ಕ್ಷಣ ಬಿಡದಲೆ ತೋರು ೫

ಮುಚುಕುಂದವರದ
೧೬೦
ವಧುವಾದೆ ಯಾರಿಗೆ ಮದನ ಗೋಪಾಲಗೊ
ಸುದತಿ ಯಶೋದೆ ನಂದ ಕಂದನಿಗೊ ಪ
ಶ್ರೀಶ ಶ್ರೀ ಕೇಶವ ನಾರಾಯಣನಿಗೊ
ಸೋಸಿಲಿ ಮಾಧವ ಗೋವಿಂದ ಹರಿಗೊ
ಸಾಸಿರ ನಾಮದ ವಿಷ್ಣು ಮಧುಸೂದನಗೊ
ಭೂಸುರ ಪಾಲ ತ್ರಿವಿಕ್ರಮ ವಾಮ£ಗೊ ೧
ಮುದ್ದು ಮೂರುತಿ ಶ್ರೀಧರ ಹೃಷಿಕೇಶಗೊ
ಪದ್ಮನಾಭ ದಾಮೋದರಗೊ
ಶುದ್ಧಮನದಿ ಸಂಕರ್ಷಣ ವಾಸುದೇವಗೊ
ಪ್ರದ್ಯುಮ್ನ ಅನಿರುದ್ಧ ಮೂರುತಿಗೊ ೨
ಪರಮ ಪುರುಷ ಪುರುಷೋತ್ತಮ ಅಧೋಕ್ಷಜಗೊ
ಹರುಷದಿ ನಾರಸಿಂಹ ಅಚ್ಚುತಗೊ
ಸರಸಿಜನಯನ ಜನಾರ್ದನುಪೇಂದ್ರಗೊ
ದುರಿತಕಳೆವ ಸಿರಿ ಹರಿ ಕೃಷ್ಣಗೊ ೩
ಶಂಖು ಚಕ್ರ ಗದಾ ಪದ್ಮವು ಧರಿಸಿದ
ವೆಂಕಟರಮಣಗೊ ಶ್ರೀಹರಿಗೊ
ಪಂಕಜನಯನ ಶ್ರೀರಂಗನಾಥನಿಗೊ
ಬಿಂಕದಿ ಪಾಂಡುರಂಗ ವಿಠ್ಠಲಗೊ ೪
ಘನಮಹಿಮ ಮನು ಕಂಚಿ ವರದರಾಜನಿಗೊ
ಇನಕುಲ ತಿಲಕ ಶ್ರೀರಾಮಚಂದ್ರನಿಗೊ
ವನಿತೆಯರೊಡಗೂಡಿ ಮೆರೆವ ಕೃಷ್ಣನಿಗೊ
ವನಜಾಕ್ಷ ಪಶ್ಚಿಮ ರಂಗಧಾಮನಿಗೊ ೫
ಬಗೆ ಬಗೆ ನಾಮಗಳಿಂದ ಪೂಜೆಯಗೊಂಬ
ಅಗಣಿತ ಮಹಿಮಗೊ ಆಶ್ಚರ್ಯಗೊ
ಖಗವಾಹನ ಕರಿರಾಜ ವರದಗೊ
ನಿಗಮವೇದ್ಯ ನಿತ್ಯ ತೃಪ್ತನಿಗೊ ೬
ಶ್ರದ್ಧೆಯಿಂದಲಿ ತನ್ನ ಭಜಿಪ ಭಕ್ತರ ಕಾಯ್ವ
ರೌದ್ರಿನಾಮ ಸಂವತ್ಸರದಿ
ಮುದ್ದು ಮೂರುತಿ ಕಮಲನಾಭ ವಿಠ್ಠಲನಿಗೆ
ಪದ್ಮಾಕ್ಷಿ ವನಮಾಲೆ ಹಾಕಿದೆಯಾ ೭

ವಾದಿರಾಜಾಶ್ರಮದಲ್ಲಿ ಪುರಂದರದಾಸರ
೧೬೯
ವಾದಿರಾಜಾಶ್ರಮ ನೋಡಲು ಸಂಭ್ರಮ
ಪಾಡಿ ಪೊಗಳುವರಿಗಾಹುದು ಪ್ರೇಮ ಪ
ಕಾಡೊಳಗೆ ಸಂಚರಿಪ ಋಷಿಗಳು
ಪಾಡಿಪೊಗಳುತ ಪರಮ ಪುರುಷನ
ಬೇಡಿದಿಷ್ಟಾರ್ಥಗಳ ಪಡೆಯುತ
ಕೂಡಿ ಸುಖಿಸುವ ಶಿಷ್ಟರಂದದಿ ಅ.ಪ
ಪರಮಸಾತ್ವಿಕರೆಲ್ಲ ಪುರಂದರದಾಸರ
ಪರಮ ಪುಣ್ಯದ ದಿನ ಬರಲು ಸಂಭ್ರಮದಿ
ಪರಿಪರಿವಿಧದಿಂದ ಹರಿದಾಸರೆಲ್ಲರು ತ್ವರದಿಂದ
ಗುರುಗಳಾಜ್ಞೆಯ ಮೀರದೆ ಭರದಿಂದ
ನೆರೆದರತಿ ಶೀಘ್ರದಿಂದಲಿ ಮುದದಿಂದ
ಗುರುಗಳಡಿಗೊಂದಿಸುತ ಕ್ರಮದಿಂದ
ಸರಸವಾಕ್ಯಗಳಿಂದ ಶಿಷ್ಯರಿಂದ
ಹರಿಸಿ ಆಶೀರ್ವಾದದಿಂದಲಿ
ಸುರಿಸಿ ಅಮೃತವಾಣಿ ನುಡಿಯುತ
ಹರುಷಪಡುತಿಹ ಗುರುಗಳಿಹ ಸ್ಥಳ ೧
ಪವಮಾನಮತದವರೆಲ್ಲರೊಂದಾಗುತ
ನಮಿಸಿ ಶ್ರೀಪತಿಗೆ ವಂದನೆ ಮಾಡುತ
ವಿನಯದಿಂದಲಿ ತಮ್ಮನಿಯಮಿತ ಕಾರ್ಯವ
ನÀಡೆಸುತ್ತ ತಂಬೂರಿಗಳ ಸುಸ್ವರದಿ ಮೀಟುತ
ನಿಂದು ಹರುಷಿಸುತ ತಾಳಗಳ ಬಾರಿಸುತ
ಶಿಷ್ಯರು ಕುಣಿಯುತ್ತ ಬಲುನಾದ ಕೊಡುತಿಹ
ಕಾಲಗೆಜ್ಜೆಗಳೆಲ್ಲ ಘಲುರೆನುತ ದಾಸರಿಗೆ
ಉಚಿತದ ಜೋಳಿಗೆಗಳನೆ ಪಿಡಿದು ನಡಿಯುತ್ತ
ಶ್ರೀರಾಮರ ದೂತನ ಬಾರಿಬಾರಿಗೆ ನಮಿಸಿ
ನಮಿಸಿ ಪೊಗಳುತ್ತ ಹರಿನಾಮ ಸ್ಮರಣೆಯಲಿ
ಮಾರುತೀಶನ ಭಕುತರೆಲ್ಲರು ದ್ವಾರಬಿಡುತಲಿ
ಪೊರಟು ಭಜಿಸುತ ಬೀದಿಯಲಿ ಕುಣಿಯುತ್ತ
ಹರಿಗುಣ ಪಾಡಿ ಪೊಗಳುವ ಪರಮ ವೈಭವ ೨
ಆ ಮಾರುತನ ದಯದಿಯಾಯಿವಾರವು ಮಾಡಿ
ಶ್ರೀನಿಕೇತನ ಪಾಡಿ ಪೊಗಳುತಲಿ
ಜ್ಞಾನಿ ಪುರಂದರದಾಸರ ಚರಿತೆಯ ಪೇಳುವರು
ಸಂಭ್ರಮದಿಂದಲಿ ನಲಿದಾಡುವರು
ಹರಿದಾಸರ ಅದ್ಭುತಕಾರ್ಯಗಳ ಸುಸ್ವರದಿ
ಪಾಡುವರು ಹರಿದಾಸ ಶ್ರೇಷ್ಠರ ಮಹಿಮೆಗಳ
ಇನ್ನುಳಿದ ಶಿಷ್ಯರು ಪೇಳುವರು
ವರ ಪಾರ್ಥಿವ ವತ್ಸರದಿ ಗುರುಗಳ
ಕರುಣ ಪಡೆದವರು ನೆರೆದು ರಾತ್ರಿಕಾಲದಲಿ
ಶ್ರೀ ಹರಿಯ ಭಜನೆ ಮಾಡುತಿರಲು
ಹರುಷ ಪಡುತಲಿ ನಲಿದು ಕಮಲನಾಭ-
ವಿಠ್ಠಲನೆ ಸಲಹು ಎನ್ನುವ೩

೫೭
ಶರಣು ಹೊಕ್ಕೆನು ಕಾಯೆ ಕರಿವರದನ ಪ್ರಿಯೆಸರಸಿಜಾಲಯೆ ನಿಲಯೆ ಪ
ಸರಸಿಜನಾಭನ ವರಿಸಿ ಶ್ರೀಹರಿ ವಕ್ಷ-
ಸ್ಥಳದಲ್ಲಿ ನೆಲಸಿ ಸಜ್ಜನರ ರಕ್ಷಕಳೆಂದು ಅ.ಪ
ಕ್ಷೀರಸಾಗರ ಜಾತೆ ಮಾರನಯ್ಯನ ಪ್ರೀತೆ
ಸಾರಸದಳನೇತ್ರೆ
ಮಾರಮಣನ ಮನಸಾರ ಸೇವಿಪ ಮುದ್ದು
ಕೀರವಾಣಿಯ ಭಕ್ತಸ್ತೋಮ ರಕ್ಷಕಳೆಂದು ೧
ಅಂಬುಧಿಶಯನ ಪೀತಾಂಬರಧಾರಿಯ
ಶಂಖು ಚಕ್ರಾಂಕಿತ ಹರಿ ಶೌರಿಯ
ಶಂಭರಾರಿಯ ಪಿತನ ನಂಬಿಸೇವಿಪ ಜಗ-
ದಂಬ ನಿನ್ನಯ ಪಾದಾಂಬುಜಕ್ಕೆರಗುತ2
ಪದ್ಮನಾಭನ ರಾಣಿ ಪದ್ಮ ಸಂಭವೆ ದೇವಿ
ಪದ್ಮಾಕ್ಷಿ ಪದ್ಮ ಪಾಣಿಯೆ ಸುಂದರಿ
ಪದ್ಮಾಸನನ ಮಾತೆ ಪದ್ಮಮುಖಿಯೆ ಹೃ-
ತ್ಪದ್ಮದಿ ಹರಿಪಾದ ಪದ್ಮವ ತೋರೆಂದು ೩
ಸಾರಸಾಕ್ಷಿಯೆ ಹರಿಯ ಆರಾಧಿಸುವ ಜನರ-
ಪಾರ ದು:ಖವ ನೀಗಿ ಪೊರೆವೆಯೆಂದು
ಬಾರಿಬಾರಿಗು ನಿನ್ನ ಚಾರು ದರ್ಶನವಿತ್ತು
ಕೋರಿದ ವರಗಳ ಬೀರಿ ಭಕ್ತರ ಕಾಯೆ ೪
ಕರುಣದಿ ಭಕುತರ ಕರೆದು ಕಾಪಾಡುವ
ಬಿರುದು ನಿನ್ನದು ತಾಯೆ ತ್ವರಿತದಿ ಕಾಯೆ
ಕರುಣಿಸೆ ಕಮಲನಾಭ ವಿಠ್ಠಲನ ರಾಣಿ
ಮರೆಯದೆ ಹರಿಯ ಧ್ಯಾನವ ಕೊಟ್ಟು ಸಲಹೆಂದು ೫

೪೧
ಶುಭವು ಶ್ರೀಹರಿಯ ನಾಮವು ಸುಜನರಿಗೆಲ್ಲ
ಶುಭವು ಶ್ರೀಹರಿಯ ನಾಮವುಪ

ಶುಭವು ಶ್ರೀಹರಿಯ ನಾಮ
ವಿಭವದಿಂ ಪೊಗಳಲು
ಶುಭಕೃತು ನಾಮ ಸಂವತ್ಸರದಲಿ
ಶುಭ ಶುಭವೆನ್ನುತ ಪಾಡುವರನು ಸಲಹುವ ಅ.ಪ

ಸಿಂಧುಶಯನ ಹರಿಯ ಇಂದಿರೆ ಸಹಿತ
ಚಂದದಿ ಭಜಿಸುವರ
ಮಂದರಧರ ಅರವಿಂದನಯನ ಶ್ರೀಮು-
ಕುಂದ ಭಕ್ತರ ಭವಬಂಧನ ಬಿಡಿಸುವ
ಪೊಂದಿ ಭಜಿಸುವರಾನಂದದಿ ಸಲಹುವ
ಸುಂದರ ವದನ ಶುಭಾಂಗನು ಮುದದಲಿ
ಇಂದ್ರಾದಿಗಳು ಆನಂದದಿ ಪೊಗಳೆ ಗೋ-
ವಿಂದ ಆನಂದ ಹೃನ್ಮಂದಿರ ವಾಸನು1
ಶುಭವು ಭಕ್ತರಕಾರ್ಯಕೆ ಶ್ರೀಹರಿಯನಾಮ
ಶುಭವು ಮುಕ್ತಿಸಾಧನಕೆ
ಶುಭವು ಬಂಧುಗಳಿಂದ ಸದನದಿ ವೆÀÄರೆಯಲು
ಶುಭವು ಭಕ್ತರ ವೃಂದ ಕೂಡಿ ನಲಿದಾಡಲು
ಶುಭಗುಣ ಶೀಲನ ಶುಭಗುಣಗಳು ಸ-
ನ್ಮುದದಲಿ ಪಾಡಲು ಶುಭಕೊಡುವನು
ಶುಭಶುಭಶುಭವೆನ್ನುತ ನಲಿದಾಡೆ ಅ-
ಶುಭಗಳನೋಡಿಸಿ ಶುಭವೀವನು ಹರಿ ೨
ಶುಭವು ಶೋಭನ ಶ್ರೀಶಗೆ ಶ್ರೀ ಸಹಿತದಿ
ವೆÀÄರೆವ ಮಹಾನುಭಾವಗೇ
ಶುಭವೆಂದು ಪಾಡಲು ಅಗಣಿತ ಮಹಿಮನ
ಬಗೆಬಗೆಯಿಂದವರಘ ಪರಿಹರಿಸುವ
ಖಗವಾಹನ ಶ್ರೀ ಕಮಲನಾಭ ವಿಠ್ಠಲ
ನನು ಪಾಡುವ ಸುಜನರ ಸಲಹುವ
ಹಗಲಿರುಳೆನ್ನದೆ ಭಜಿಸುತ ಪಾಡಿರೊಕಡಲೊಡೆಯನ ಪಾದ ಧೃಡ ಭಕುತಿಯಲಿ ೩

೧೩೯
ಶೇಷಶಯನ ಶ್ರೀಕೃಷ್ಣನಿಗಾರತಿ
ಆ ಸತಿ ಲಕುಮಿಯು ಮಾಡಿದಳು ಪ
ಸಾಸಿರನಾಮನ ಭೂಸುರಪಾಲನ
ಸೋಸಿನಿಂದ ಸ್ಮರಿಸುತ ಮನದಿ ಅ.ಪ
ಅಂಬುಧಿಯುದುಕದಿ ಆಲದ ಎಲೆ ಮೇಲೆ
ಅಂಗುಟವನು ಬಾಯೊಳಗಿಟ್ಟು
ತುಂಬಿಗುರುಳ ಮುಖಕಮಲದ ಚಲುವಗೆ
ಸಂಭ್ರಮದಲಿ ಮುತ್ತಿನಾರತಿಯ ೧
ಮಂದರಧರ ಗೋವಿಂದಗೆಮ್ಮಯ
ಕುಂದುಗಳೆಣಿಸದೆ ಸಲಹೆನ್ನುತಾ
ವಂದಿಸಿ ಪ್ರಾರ್ಥನೆ ಮಾಡುತ ಬೇಗದಿ
ಇಂದಿರೇಶ ಸಲಹೆಂದೆನುತ ೨
ಗೋವರ್ಧನವನು ಎತ್ತಿ ಸುಜನರನು
ಗೋಗೋಪಾಲರ ಪೊರೆದವಗೆ
ಗೋಪತಿ ಕಮಲನಾಭ ವಿಠ್ಠಲನಿಗೆ
ಗೋಪಿಯರೊಡನಾಡುವ ಹರಿಗೆ ೩

ನವವಿಧ ಭಕ್ತಿಯನ್ನು ಹೇಳುವ ಹಾಡು
ನವವಿಧ ಭಕುತಿ
೧೭೦
ಶ್ರವಣದಿಂದಲಿ ಪಾಪಹರಣವಾಗುವುದೆಂದು
ಕವಿಗಳೆಲ್ಲರು ಕೂಗಿ ಒದರುತಿಹರು
ಕಿವಿಗಳಿಗಾನಂದದಾಭರಣದಂತಿಹುದು ಶ್ರೀ-
ಹರಿಯ ದಿವ್ಯನಾಮಾಮೃತದರಸವು
ಮಾಧವನ ಮೂರ್ತಿಯನು ನೋಡದಿಹ ಕಂಗಳು
ನವಿಲು ಕಣ್ಣುಗಳೆಂದು ಪೇಳುತಿಹರು
ಕಮಲನಾಭ ವಿಠ್ಠಲನ ಮಹಿಮೆ ಪೊಗಳೆ
ಫಣಿರಾಜನಿಗೆ ವಶವಲ್ಲ ದೇವಾ ೧
ಕೀರ್ತನವು ಮಾಡಲು ಪಾತಕವು ಪರಿಹರವು
ಮಾತುಳಾಂತಕನ ಮಹಿಮೆ ಘನವು
ಶ್ರೀಶನನು ಮನದಣಿಯ ಸ್ತೋತ್ರವನು ಮಾಡಲು
ನಾಶಗೈವನು ದುರಿತರಾಶಿಗಳನು
ಮಾಡಿದಪರಾಧಗಳ ಮಾಧವನು ಮನ್ನಿಸುವ
ಶ್ರೀಧರನ ಸ್ತುತಿಸಿ ಕೊಂಡಾಡುತಿಹರ
ಕರುಣಾಕರ ಕಮಲನಾಭವಿಠ್ಠಲ
ದುರಿತದೂರನು ಕಾಯ್ವ ಶರಣಜನರ ೨
ಸ್ಮರಣೆಯನು ಮಾಡುತಿಹ ಮನುಜರಿಗೆ ಇಹಪರದಿ
ಪರಮ ಮಂಗಳನೀವ ಪರಮಾತ್ಮನು
ದುರಿತ ದೂರನ ಪಾದಸ್ಮರಣೆ ಮಾಡುವರಿಗೆ
ಪರಿಪರಿಯ ಸೌಖ್ಯಗಳ ಕೊಡುವ ದೇವ
ಮಧುವೈರಿಯನು ಸ್ಮರಿಸೆ ಮುದದಿ ಸಂಪದವೀವ
ದಧಿ ವಾಮನ ಮೂರ್ತಿ ಶ್ರೀಮಾಧವ
ಕನಕಗರ್ಭನ ಪಿತನು ಕರುಣಾನಿಧಿಯು
ಕಮಲನಾಭ ವಿಠ್ಠಲ ಕಾಯ್ವ ಸುಜನರ ೩
ಶಿಲೆಯಾದ ಅಹಲ್ಯೆಯ ಪರಿಪಾಲಿಸಿದ ಪಾದ
ಧರಣಿ ಈರಡಿಗೈದ ದಿವ್ಯಪಾದ
ಶರಧಿಯೊಳು ಧುಮುಕಿ ಫಣಿ ಹೆಡೆಯ ತುಳಿದ ಪಾದ
ವರ ಋಷಿಗಳೆಲ್ಲ ವಂದಿಸುವ ಪಾದ
ಇಂದಿರಾದೇವಿ ಬಹುಚಂದದಿಂದೊತ್ತುತ
ಕಂದರ್ಪನಯ್ಯನಿಗೆ ಪಾದಸೇವ
ಚಂದದಿಂದಲಿ ಮಾಡಿ ಮಾಧವನಿಗೆ
ನಂದಗೋಪಿಯ ಕಂದ ಸಲಹುಎನಲು
ಸುಂದರ ಶ್ರೀ ಕಮಲನಾಭ ವಿಠ್ಠಲನು ಒಲಿವ ೪
ಅರ್ಚಿಸುತ ಮೆಚ್ಚಿಸುತ ಸಚ್ಚಿದಾನಂದನನು
ಸ್ವಚ್ಛ ಭಕುತಿಲಿ ಸ್ತೋತ್ರ ಮಾಡುತಿಹರ
ಅಷ್ಟ ಐಶ್ವರ್ಯಪ್ರದನು ನಿತ್ಯಮುಕ್ತಳ ಕೂಡಿ
ಭಕ್ತರ ಹೃದಯದಲಿ ಪೊಳೆವ ದೇವ
ಸತ್ಯ ಸಂಕಲ್ಪನಿಗೆ ಕಸ್ತೂರಿ ತಿಲಕವು
ಮತ್ತೆ ಪಾವಡಿ ಥಳಥಳನೆ ಹೊಳೆಯೆ
ಸುತ್ತ ಬ್ರಹ್ಮಾದಿಗಳ ಸ್ತುತಿಗೆ ದೇವ
ಚಿತ್ತವಿಟ್ಟು ಕೇಳ್ವ ಮಾಧವನು ಮುದದಿ
ಕರ್ತೃ ಕಮಲನಾಭ ವಿಠ್ಠಲನು ಕಾಯ್ವ ೫

ವಂದನೆಯನು ಮಾಡೆ ಮುಕುಂದನು ಒಲಿವನು ಮುದದಿ
ಕಂದರ್ಪನಯ್ಯ ಕಮಲಾಕ್ಷ ಹರಿಯೂ
ಸುಂದರಾಂಗ ಶ್ರೀಹರಿಗೆ ಗಂಧ ಪೂಸಿದಳಾಗ
ಇಂದೀವರಾಕ್ಷಿ ನಸುನಗುತ ಬೇಗ
ಇಂದ್ರಾದಿ ಸುರರೆಲ್ಲ ಕೊಂಡಾಡೆ ಮಾಧವನ
ವಂದಿಸುತ ಸಿರಬಾಗಿ ಚಂದದಿಂದ
ಮಂದಾರ ಪಾರಿಜಾತಗಳ ತಂದು
ತಂದೆ ಕಮಲನಾಭ ವಿಠ್ಠಲನ ಮುಡಿಗೆ
ಸಂಭ್ರಮದಿ ಮಳೆಗರೆಯೆ ಚಂದದಿಂದ ೬
ದಾಸ್ಯವನು ಕೈಕೊಂಬ ದಾಸ್ಯಜನರನು ಪೊರೆವ
ಮೀಸಲಾಗಿಹನು ಹರಿದಾಸ ಜನಕೆ
ಪೋಷಿಸೆಂದೆನುವವರ ದೋಷಗಳನೀಡಾಡಿ
ದೋಷರಹಿತನು ಪೊರೆವ ಸರ್ವಜನರ
ಪೂಸಿ ಪರಿಮಳ ದ್ರವ್ಯ ಶ್ರೀಸಹಿತ ಮೆರೆವ
ವಾಸುಕೀಶಯನ ಸಜ್ಜನರ ಪೊರೆವ
ಮುರಳೀಧರ ಮಾಧವನು ಕರುಣದಿಂದ
ಶರಣ ಜನರನು ಪೊರೆವ ಮರೆಯದೀಗ
ಕಮಲನಾಭವಿಠ್ಠಲನು ಕಾಯ್ವದೇವ ೭
ಸಖ್ಯ ಸ್ನೇಹಗಳಿಂದ ಮುತ್ತಿನ್ಹಾರಗಳನು
ಕೃಷ್ಣನ ಕೊರಳಿಗ್ಹಾಕುತಲಿಬೇಗ
ಅರ್ಥಿಯಿಂದಲಿ ರತ್ನ ಮುತ್ತಿನ ಚಂಡುಗಳ
ವಿಚಿತ್ರದಿಂದಾಡುತಿರೆ ನೋಡಿ ಸುರರು
ಮುತ್ತಿನಕ್ಷತೆಗಳನು ಮಾಧವನ ಸಿರಿಮುಡಿಗೆ
ಅರ್ಥಿಯಿಂದ ಸುರಿಸುತಿರೆ ಹರುಷದಿಂದ
ಅಪ್ರಮೇಯನು ಶ್ರೀಶ ಶ್ರೀನಿವಾಸ
ಸರ್ಪಶಯನನು ಕಮಲನಾಭ ವಿಠ್ಠಲ
ನಿತ್ಯ ತೃಪ್ತನು ಪೊಳೆವ ಭಕ್ತರ ಹೃದಯದಲಿ ೮
ಆತ್ಮನಿವೇದನವ ನಿತ್ಯ ತೃಪ್ತಗೆ ಮಾಡಿ
ಅರ್ಥಿಯಲಿ ಅಪ್ರಮೇಯನನು ಸ್ತುತಿಸಿ
ಮುತ್ತು ಮಾಣಿಕ್ಯ ಬಿಗಿದ ತಟ್ಟೆಯಲಿ ತಾಂಬೂಲ
ಅಚ್ಚುತಾನಂತನಿಗೆ ಅರ್ಪಿಸುತಲಿ
ಭಕ್ತಿಯಲಿ ವಂದನೆಯ ಭಕ್ತವತ್ಸಲನಿಗೆ
ನಿತ್ಯ ಮುಕ್ತಳು ಮಾಡಿ ಹರುಷದಿಂದ
ಸತ್ಯ ಸಂಕಲ್ಪ ಶ್ರೀ ಮಾಧವನಿಗೆ
ಮುತ್ತಿನಾರತಿ ಬೆಳಗಿ ಅರ್ಥಿಯಿಂದ
ಕರ್ತೃ ಶ್ರೀ ಕಮಲನಾಭ ವಿಠ್ಠಲನ ಕೊಂಡಾಡಿ ೯

೫೮
ಶ್ರೀ ಮಹಾಲಕ್ಷ್ಮಿ ದೇವಿಯೆ ಪಾಲಿಸೆ ಎನ್ನ
ಶಾಮನಯ್ಯನ ರಾಣಿಯೆ ಪ
ಜಾಣೆ ನಿನಗೆ ಸರಿಗಾಣೆನೆ ಗುಣಮಣಿ
ಮಾಲೆ ಸುಗುಣೆ ಅಹಿವೇಣಿಯೆ ಜನನಿ ಅ.ಪ
ನಿಗಮವೇದ್ಯಳೆ ನಿನ್ನನು ಪೊಗಳುವೆ ನಾನು
ತ್ರಿಗುಣಾಭಿಮಾನಿ ಸ್ತುತಿಪೆನು
ಬಗೆಬಗೆ ಭಜಿಪೆ ನಿನ್ನನು ಬಂದೆನ್ನ ಮನದಿ
ನಗಧರನ ತೋರೆಂಬೆನು
ಹಗಲು ಇರಳು ನಿನ್ನ ಬಗೆ ಬಗೆ ಸ್ತುತಿಪರಪಾದ-
ಗಳ ಸೇವಿಪ ಪರಮಾನಂದದ
ಮಿಗೆ ಸೌಭಾಗ್ಯವ ಕರುಣಿಸು ಬೇಗದಿ
ಸುದತಿ ಮಣಿಯೆ ಹರಿ ಪಾದಯುಗ ತೋರೌ ೧
ಭಕ್ತವತ್ಸಲನ ರಾಣಿಯೆ ಭಜಿಸುವೆ ನಿನ್ನ
ಮತ್ತೆ ಮಾಧವನ ಪಾದವ
ಭಕ್ತಿಂದ ಭಜಿಪ ಧ್ಯಾನವ ಕೊಟ್ಟು ಕಾಪಾಡೆ
ಸತ್ಯ ಮೂರುತಿಯ ದೇವಿಯೆ
ಉತ್ತಮ ಭಕ್ತರಿಗಿತ್ತ ವರಗಳನು
ಮತ್ತೆ ಕೇಳಿಮನ ತೃಪ್ತಿಯ ತಾಳುತ
ಚಿತ್ತಜ ಪಿತನೊಳು ಭಕ್ತಿಮಾಡುವ ಬಗೆ
ಇತ್ತು ಪಾಲಿಸು ಸರ್ವೋತ್ತಮನರಸಿಯೆ ೨
ಪದ್ಮಸಂಭವೆ ಪಾಲಿಸು ಪದ್ಮಾಕ್ಷಿ ನಿನ್ನ
ಪದ್ಮನಾಭನ ತೋರಿಸು
ಪದ್ಮನೇತ್ರೆಯೇಲಾಲಿಸು ಪಾಪವಹರಿಸು
ಶುದ್ಧಮನವ ಮಾಡಿಸು
ಪದ್ಮ ಸರೋವರ ಮಧ್ಯದಿ ಜನಿಸಿದ
ಪದ್ಮದೊಳುದಿಸಿದ ಪದ್ಮಾವತಿಯೆ ಹೃ-
ತ್ಪದ್ಮದಿ ಕಮಲನಾಭ ವಿಠ್ಠಲನ ಪಾದ ತೋರಿ
ಉದ್ಧರಿಸೆನ್ನ ಪ್ರಸಿದ್ಧಳೆ ಜನನಿ3

ವಾದಿರಾಜರು ಹದಿನೈದು
೪೨
ಶ್ರೀನಿವಾಸನೆ ಏಳು ಶ್ರೀನಿಕೇತನ ಏಳು
ಗಾನಲೋಲನೆ ಏಳು ಸಾನುರಾಗದಲಿ
ಏಳಯ್ಯ ಬೆಳಗಾಯಿತು ಪ
ನಂಬಿದೆ ತಂದೆ ಮುದ್ದುಮೋಹನ ವಿಠ್ಠಲ ಏಳು
ಸುಂದರ ಶ್ರೀ ಉರುಗಾದ್ರಿವಾಸ ವಿಠ್ಠಲ ಏಳು
ಇಂದು ಸಿರಿ ಉರುಗಾದ್ರಿವಾಸ ವಿಠ್ಠಲ ಏಳು
ಇಂದಿರಾ ಪತಿ ತಂದೆ ವೆಂಕಟೇಶ ವಿಠ್ಠಲನೆ ೧
ಆನಂದಮಯ ಅಂತರಾತ್ಮ ವಿಠ್ಠಲ ಏಳು
ನವನೀತ ಧರ ತಾಂಡವ ಕೃಷ್ಣ ವಿಠ್ಠಲ ಏಳು
ಜಗವ ಮೋಹಿಪ ಜಯಾಪತಿ ವಿಠ್ಠಲ ಏಳು
ಸಮರ್ಯಾರೋ ನಿನಗಿನ್ನು ಶಾಂತೀಶ ವಿಠ್ಠಲ ಏಳಯ್ಯ ೨
ಗಂಗೆಯ ಪಡೆದ ಗಜವರದ ವಿಠ್ಠಲ ಏಳು
ಮಂಗಳ ಮಹಿಮ ಶೇಷಶಯನ ವಿಠ್ಠಲ ಏಳು
ಗರುಡನೇರುತ ಪೊರೆದ ಹರಿ ವಿಠ್ಠಲ ನೀ ಏಳು
ನಿರುತಪೊರೆ ಎಮ್ಮ ಧೃವವರದ ವಿಠ್ಠಲ ಏಳಯ್ಯ ೩
ಪರಿಪಾಲಿಪ ಗುರುವಾಸುದೇವ ವಿಠ್ಠಲ ಏಳು
ವರಪಾಲಿಪ ವರದ ಲಕ್ಷ್ಮೀಶ ವಿಠ್ಠಲ ಏಳು
ಪದ್ಮನಾಭ ಪ್ರದ್ಯುಮ್ನ ವಿಠ್ಠಲ ಏಳು
ಮುದ್ದುಮಖದ ವರದ ವೆಂಕಟೇಶ ವಿಠ್ಠಲನೇ ೪
ಸಜ್ಜನರ ಪ್ರಿಯ ಶ್ರೀ ಸುಙ್ಞಾನ ವಿಠ್ಠಲ ಏಳು
ಶಾಮಸುಂದರ ಕೃಷ್ಣ ಶ್ರೀನಾಥ ವಿಠ್ಠಲ ಏಳು
ಭಯಹಾರಿ ಭಾರತೀಶ ವಿಠ್ಠಲ ನೀ ಏಳು
ಪರಿಸರನೊಡೆಯ ಶ್ರೀ ವರಹ ವಿಠ್ಠಲನೆ5
ಜ್ಞಾನನಿಧಿ ಆನಂದಮಯ ವಿಠ್ಠಲ ನೀ ಏಳು
ಸಜ್ಜನ ಪ್ರಿಯ ಶ್ರೀಪ್ರಾಜ್ಞ ವಿಠ್ಠಲ ಏಳು
ಜಗನ್ಮೋಹನ ಜಗದ್ಭರಿತ ವಿಠ್ಠಲ ಏಳು
ವಿಶ್ವಮೂರುತಿ ವಿಜ್ಞಾನಮಯ ವಿಠ್ಠಲನೇ ೬
ವಿಷ್ಣುಮೂರುತಿ ಕ್ರಷ್ಣದ್ವೈಪಾಯನ ವಿಠ್ಠಲ ಏಳು
ಅಕ್ಷರೇಢ್ಯನೆ ಲಕ್ಷ್ಮೀಶ ವಿಠ್ಠಲ ಏಳು
ಕಂಟಕಹಾರಿ ಶ್ರೀವೆಂಕಟೇಶ ವಿಠ್ಠಲ ಏಳು
ಸರಸೀಜಾಕ್ಷನೆ ಸಲಹೋ ಶ್ರೀರಮಣ ವಿಠ್ಠಲನೆ ೭
ದುರುಳರ ಮಡುಹಿದ ವರದ ವಿಠ್ಠಲ ಏಳು
ಕಂಜಾಕ್ಷ ಪನ್ನಗಶಯನ ವಿಠ್ಠಲ ಏಳು
ದಾರಿತೋರುವ ದಾಮೋದರ ವಿಠ್ಠಲ ನೀ ಏಳು
ಸರಸಿಜನಾಭನೆ ಪೊರೆ ಎನ್ನ ವಿಠ್ಠಲ ೮
ಕಂಜಾಕ್ಷ ಕಮಲನಾಥ ವಿಠ್ಠಲ ಏಳು
ಮುರಮರ್ದನನೆ ಏಳು ಮುರಳೀಧರ ವಿಠ್ಠಲ
ದಯದಿ ಪಾಲಿಪ ದಯಾನಿಧೆ ವಿಠ್ಠಲ ನೀ ಏಳು
ಅಚ್ಚುತ ಹರಿ ಕೃಷ್ಣ ಕ್ರೇತಜ್ಞ ವಿಠ್ಠಲ ೯
ಜ್ಞಾನಿಗಳರಸ ಆನಂದ ವಿಠ್ಠಲ ಏಳು
ಭಾಗವತಪ್ರಿಯ ಭಾರ್ಗವೀಶ ವಿಠ್ಠಲ ಏಳು
ಕರ್ತೃ ಶ್ರೀ ಪುರುಷೋತ್ತಮ ವಿಠ್ಠಲ ನೀ ಏಳು
ಮುರವೈರಿ ಮಧುರಾನಾಥ ವಿಠ್ಠಲನೆ ೧೦
ರಮೆಯರಸನೆ ರಮಾಧವ ವಿಠ್ಠಲ ನೀ ಏಳು
ಕರುಣಾಳು ಹರಿ ಕಾರುಣ್ಯ ವಿಠ್ಠಲ ಏಳು
ಎದುರಿಲ್ಲ ನಿನಗೆ ಯದುಪತಿ ನೀ ಏಳು
ಉದ್ಧರಿಸೆನ್ನ ಉದ್ಧವ ವರದ ವಿಠ್ಠಲನೆ11
ಗೋಪಿಕಾಲೋಲ ಗೋಪೀನಾಥ ವಿಠ್ಠಲ ಏಳು
ವೆಂಕಟೇಶ ವೈಕುಂಠಪತಿ ವಿಠ್ಠಲ ಏಳು
ಶ್ರೀನಿಕೇತನ ಶ್ರೀಕಾಂತ ವಿಠ್ಠಲ ಏಳು
ಧನ್ಯನಾದೆನೋ ದೇವ ಧನ್ವಂತ್ರಿವಿಠ್ಠಲ ೧೨
ಶ್ರೀಧರ ಪೊರೆ ವೇದವತೀಶ ವಿಠ್ಠಲ ಏಳು
ಸಾಧುಗಳರಸನೆ ಭಕ್ತವತ್ಸಲ ಏಳು
ಮೇಧಿನಿಯೊಳು ನಿನ್ನ ಪೋಲುವರ್ಯಾರಿಲ್ಲ
ಸಾದರದಿಂ ಕೇಳೋ ನೀ ಎನ್ನಸೊಲ್ಲ13
ರನ್ನ ಮಂಟಪದೊಳಗೆ ಚಿನ್ನದ ತೊಟ್ಟಿಲೊಳು
ಕನ್ನೆಯರು ತೂಗಿ ಪಾಡಿದರೊ ಗೋವಿಂದ
ಕರುಣಾಸಾಗರ ಕೃಷ್ಣ ಕಡು ನಿದ್ರೆ ಸಾಕೆಂದು
ಕಮಲಾಕ್ಷಿ ಸ್ತುತಿಸುವಳು ಕಮಲನಾಭವಿಠ್ಠಲ
ಏಳಯ್ಯ ಬೆಳಗಾಯಿತು14

ಲಂಕೆಯ, ಸಖಗೆ ನಿಶ್ಯಂಕೆಯಲಿ
೪೩
ಶ್ರೀಪುರುಷೋತ್ತಮ ಪಾಹಿ ಜಯಜಯಮು-
ರಾರೆ ನರಹರೆ ಸುರದೊರೆ ಪ
ಸಾರಸನಯನ ಶ್ರೀ ಮುಕುಂದ ಹರೆ ಶ್ರಿತಜನರಕ್ಷಕ
ಭಾನುಕೋಟಿ ಕಾಂತಿಸುಂದರ ಪ್ರಭÉÆÃ ನಮಿತ ಚರಣ
ಕಾಮಜನಕ ಕಮಲವದನ
ಶ್ರೀಮುಕುಂದ ಗರುಡಗಮನ
ಉರಗಶಯನ ನಮಿಪೆನಿನ್ನ
ಸುರರೊಡೆಯನೆ ತ್ವರದಿ ಬಾ ೧
ಚಂದದಿ ನಮಿಪೆ ಸುಂದರಾನನ ಮುನಿಹೃದಯಸದನ
ಇಂದಿರಾ ರಮಣ ಮುರಮರ್ಧನ ಚಂದ್ರವದನ
ಮಂದರಗಿರಿ ಎತ್ತಿದ ಬಲು
ಚಂದದಿಂದ ಸುರರ ಪೊರೆದ
ವಂದಿಪೆ ಗೋವಿಂದ ನಿನ್ನ
ಚಂದ ಪಾದಕ್ಕೆರಗಿ ನಮಿಪೆ ೨
ಕಾಮಿನಿ ರೂಪವ ಪ್ರೇಮದಿಂದಲಿ ನೀ ತಾಳುತಲಿ
ಕಾಮಜನಕನೆಂದರಿಯದೆ ಭ್ರಾಮಕರಾಗಿರಲು
ಕಾಳಿಫಣಿಯ ತುಳಿದು ಹರಿಯು
ಅಸುರರಟ್ಟಿ ಸದೆದು ನೂಕಿ
ಕಂಸ ಮರ್ಧನ ಕಮಲನಾಭ
ವಿಠ್ಠಲ ವಸುಧೆಯೊಳಗೆ ಮೆರೆದ ೩

೧೪೮
ಶ್ರೀಶ ಕೇಶವ ಮಾಧವ
ವಾಸುದೇವನ ದೇವ ವಾಸವ ವಂದಿತ ಪ

ಸಾಸಿರನಾಮನೆ ಭೂಸುರಪಾಲನೆ
ದೋಷವಿದೂರನೆ ಶೇಷಶಯನಹರಿ ೧
ಇಂದಿರಾರಮಣನೆ ನಂದಗೋಪಿಯ ಕಂದ
ಮಂದರಧರ ಗೋವಿಂದ ಗೋ ಗೋಪಪಾಲ೨
ಭುವನ ಮೋಹನರೂಪ ನವನವ ಚರಿತನೆ
ನವನೀತಧರ ಕೃಷ್ಣ ಭುವನ ವಿಲಕ್ಷಣನೆ ೩
ರಂಗನಾಯಕನೆ ಪ್ಲವಂಗ ವತ್ಸರದೊಳು
ಭಂಗಗಳಳಿಯುವ ಶೃಂಗಾರ ಮೂರುತಿ೪
ಶ್ರಮ ಪರಿಹರಿಸುತ ಮಮತೆಯಿಂದಲಿ ಕಾಯ್ವಸುಮನಸವಂದ್ಯ ಶ್ರೀ ಕಮಲನಾಭ ವಿಠ್ಠಲ ೫

ವಾದಿರಾಜರು ಹದಿನೈದು
೪೪
ಶ್ರೀಶ ಶ್ರೀಹಯವದನ ಮೂರ್ತಿಗೊಂದಿಸುವೆ
ಸಾಸಿರ ನಾಮದ ಒಡೆಯನೀನೆಂದು ಪ
ನಿನ್ನ ನೋಡುವ ಇಚ್ಛೆಯಿಂದ ನಿನ್ನದಾಸರು
ಇನ್ನು ಗಾವುದ ದೂರದಿಂದ ಬರುತಿಹರು
ನಿನ್ನ ಭಕ್ತರ ಕೂಡಿ ನಿನ್ನ ಸೇವೆಯ ಮಾಡಿ
ನಿನ್ನ ದರುಶನದಿಂದ ಧನ್ಯರಾಗುವರು ೧
ಹರಿದಾಸರೆಲ್ಲರೂ ಪರಮಸಂಭ್ರಮದಿಂದ
ಹರಿದಿನದ ಜಾಗರ ಹರಿ ಸ್ಮರಣೆಯಿಂದ
ಪರಮ ವೈಭವದಿ ತನ್ನ ಸ್ಮರಿಸುತಿಹ ಸುಜನರನು
ಕರುಣದಿಂದಲಿ ಕಾವ ಸಿರಿರಮಣನೆಂತೆಂದು ೨
ಆಪತ್ತು ತಾಪತ್ರಯಂಗಳೆಲ್ಲವು ನೀಗಿ
ಶ್ರೀಪತಿಯೆ ರಕ್ಷಿಸು ರಕ್ಷಿಸೆಂದೆನುತ
ಗೋಪತೀ ಕೃಷ್ಣನ್ನಪಾಡಿ ಪೊಗಳುವರನ್ನು
ಕಾಪಾಡುವನು ಸಕಲಪಾಪಗಳ ಹರಿಸಿ ೩
ಸೋದೆಯಲಿ ನೆಲೆಸಿರುವ ವಾದಿರಾಜರಿಗೊಲಿದು
ಆದರದಿ ಅವರಿತ್ತ ಸೇವೆ ಕೈಗೊಂಡು
ಶೋಭ ಕೃತುನಾಮ ಸಂವತ್ಸರದಿ ಸುಜನರಿಗೆ
ಶೋಭನಂಗಳನಿತ್ತು ನೀದಯದಿ ಪೊರೆವೆ4
ಕಡು ಹರುಷದಿಂದಿತ್ತ ಕಡಲೆ ಹೂರಣ ಸವಿದು
ದೃಢ ಭಕ್ತರನು ಪೊರೆದೆ ಕಡುಹರುಷದಿ
ಮೃಡನ ಸಖ ನಿನ್ನಂಘ್ರಿ ಬಿಡದೆ ಧ್ಯಾನಿಪ ಭಾಗ್ಯ
ತಡೆಯದಲೆ ಪಾಲಿಸೈ ಕಮಲನಾಭ ವಿಠ್ಠಲ5

೪೫
ಸಚ್ಚಿದಾನಂದಾತ್ಮ ಶ್ರೀಪುರುಷೋತ್ತಮ ಶ್ರೀ ಮಾಧವ ಶೌರೇ
ಸತ್ಯ ಸಂಕಲ್ಪ ಸರ್ವೇಶಾ ಸತ್ಯ ಭಾಮೆ ರುಕ್ಮಿಣೇಶ ಪ
ಸಾರಸಾಕ್ಷನೆ ಪರಿವಾರ ರಕ್ಷನೆ ಕಮ-
ಲಾಯತಾಕ್ಷ ನಿರುಪಮ ಚರಿತಾ ಶುಭಗುಣ
ಭರಿತಾ ಸುರಮುನಿ ನಮಿತಶ್ರೀಅ.ಪ
ಕರುಣಾಕರಸುಂದರ ಶ್ರೀರಂಗಾ ಶರಣಾಗತ
ವತ್ಸಲ ಭವಭಂಗ
ನಿರುತದಲೀ ಸ್ಮರಿಸುವರ ಕರುಣದಲೀ
ತ್ವರಿತದಿ ಸಲಹುವ ೧
ಬಾ ಯದುವರ ಬಾ ರಘುವರ ಬಾ
ನಗಧರ ಬಾ ಬಾ ಬಾ
ಬಾ ಭವಹರ ಬಾ ಮುರಹರ ಬಾ
ಸಿರಿವರ ಬಾ ಶ್ರೀಶಾ ೨
ಶ್ರೀಶನೆ ಬಾ ಬಾ ಬಾ ಕೇಶವ ಬಾ ಬಾ ಬಾ
ಭೂಸುರ ಪಾಲ
ಬಾ ಮುರಳಿಧರಾ ಸುರನತ ಶ್ರೀಕಮಲನಾಭ ವಿಠ್ಠಲ ನರಹರಿ3

೧೪೦
ಸತಿ ಸಹಿತ ಕಶ್ಯಪರು ರತುನದಾರತಿ ಪಿಡಿದು
ರತಿಪತಿಪಿತನಿಗೆ ಅತಿಹರುಷದಿ
ಅತಿಶಯದ ಮಹಿಮೆಗಳ ಪೊಗಳುತಲಿ ಶ್ರೀಹರಿಗೆ
ಕುಶಲದಾರತಿ ಎತ್ತಿಬೆಳಗಿದರು
ಜಯಮಂಗಳಂ ನಿತ್ಯ ಶುಭ ಮಂಗಳಂ ೧
ಅನಸೂಯ ಸಹಿತ ಅತ್ರಿಯರು ಬೇಗನೆ ಬಂದು
ನಳಿನಾಕ್ಷನ ಚರಣಕ್ಕೆರಗಿ ನಿಂದು
ವಿಧವಿಧದ ಆಟಗಳ ಆಡಿದ ಶ್ರೀಹರಿಗೆ
ಪದುಮದಾರತಿ ಎತ್ತಿ ಬೆಳಗಿದರು
ಜಯಮಂಗಳಂ ನಿತ್ಯ ಶುಭಮಂಗಳಂ ೨
ಶೀಲವತಿಯಾದ ಸುಶೀಲೆ ಸಹಿತ
ಭಾರದ್ವಾಜ ಋಷಿಗಳು ತಮ್ಮ ಆಶ್ರಮದಲಿ
ಶ್ರೀಲಕುಮಿವಲ್ಲಭಗೆ ಶೀಘ್ರದಿಂದಲಿ ತಾವು
ಗೋಮೇಧಿಕದಾರುತಿ ಬೆಳಗಿದರು
ಜಯಮಂಗಳಂ ನಿತ್ಯ ಶುಭಮಂಗಳಂ ೩
ಕುಮುದ್ವತಿ ಸಹಿತ ವಿಶ್ವಾಮಿತ್ರ ಋಷಿಗಳು
ಕನಕ ಮಂಟಪದಿ ಮೆರೆಯುವ ದೇವಗೆ
ಸನಕಾದಿವಂದ್ಯನಿಗೆ ವನಜಾಕ್ಷಿಯರಸನಿಗೆ
ಕನಕದಾರತಿ ಎತ್ತಿ ಬೆಳಗಿದರು
ಜಯಮಂಗಳಂ ನಿತ್ಯ ಶುಭಮಂಗಳಂ ೪
ಪ್ರಹ್ಲಾದವರದನಿಗೆ ಅಹಲ್ಯೆಯ ಸಹಿತದಿ
ಫುಲ್ಲಲೋಚನಪ್ರಿಯಗೆ ಋಷಿಗೌತಮ
ಮಲ್ಲಿಗೆಹಾರಗಳು ಧರಿಸಿ ಶೋಭಿಪ ಹರಿಗೆ
ಚಲ್ವನವರತ್ನದಾರತಿ ಎತ್ತುತಾ
ಜಯಮಂಗಳಂ ನಿತ್ಯ ಶುಭಮಂಗಳಂ ೫
ರೇಣುಕಾ ಸಹಿತ ಜಗದಗ್ನಿ ಋಷಿಗಳು ತಮ್ಮ
ಧ್ಯಾನಗೋಚರನಾದ ಪರಮಾತ್ಮನ
ಮಾನಿನಿಮಣಿ ಲಕುಮಿಯೊಡನೆ ಶ್ರೀಕೃಷ್ಣನಿಗೆ
ನೀಲಮಾಣಿಕ್ಯದ ಆರತಿ ಎತ್ತುತ
ಜಯಮಂಗಳಂ ನಿತ್ಯ ಶುಭಮಂಗಳಂ ೬
ಪರಮಮಂಗಳೆಯಾದ ಅರುಂಧತೀ ಸತಿ ಸಹಿತ
ವಶಿಷ್ಠ ಋಷಿಗಳು ಇಷ್ಟಮೂರುತಿಯಾದ
ವರಕಮಲನಾಭ ವಿಠ್ಠಲನ ಸ್ಮರಿಸುತ ನಿತ್ಯ
ನವರತ್ನದಾರತಿ ಬೆಳಗಿದರು
ಜಯಮಂಗಳಂ ನಿತ್ಯ ಶುಭಮಂಗಳಂ ೭
ಮಂಗಳಂ ಸಪ್ತಋಷಿಗಳು ಪರ್ಣಶಾಲೆಯೊಳು
ಗಾಂಗೇಯನುತನ ಪೂಜಿಸಿ ಹರುಷದಿ
ಸಂಗೀತಲೋಲನಿಗೆ ಶೃಂಗಾರ ಪುರುಷನಿಗೆ
ರಂಗಿನಾರತಿಯೆತ್ತಿ ಬೆಳಗಿದರು
ಜಯಮಂಗಳಂ ನಿತ್ಯ ಶುಭಮಂಗಳಂ ೮

ಜಗನ್ನಾಥದಾಸರು ಶ್ರೀ ರಾಘವೇಂದ್ರ
೫೯
ಸದಾ ಪೂಜಿಪೆ ನಿನ್ನ ಸೌಭಾಗ್ಯಳೆ ಪ
ಇಂದಿರಾದೇವಿಯೆ ಮಂದರೋದ್ಧರನ ರಾಣಿ
ಇಂದೀವರಾಕ್ಷಿ ಆನಂದದಲಿ ೧
ಪದ್ಮಾಕ್ಷಿ ಎನ್ನ ಹೃತ್ಪದ್ಮದಿ ಹರಿಪಾದ
ಪದ್ಮವ ತೋರಿ ಉದ್ಧರಿಸುವಳೆ ೨
ಅಂಬುಜ ಪಾಣಿಯೆ ಅಂಜುಜಾಕ್ಷನ ರಾಣಿ
ಅಂಬುಧಿಶಯನನ ಪೊಂದಿರ್ಪಳೆ3
ಆದಿಕಾರಿಣಿ ಪತ್ರಾದಿ ರೂಪದಿ ಹರಿಯ
ಆರಾಧಿಸುವಿ ಸರ್ವರಾಧಾರಿಯೆ ೪
ಹೆದರದೆ ಭೃಗುಮುನಿ ಒದೆಯೆ ಪಾದದಿಂದ
ಕದನವ ಮಾಡಿದ ಕಲ್ಯಾಣಿಯೆ ೫
ಭಕ್ತಜನರು ನಿನ್ನ ಭಕ್ತಿಯಿಂ ಪೂಜಿಸಲು
ಮುಕ್ತಿ ಮಾರ್ಗವ ತೋರಿ ಸಲಹುವಳೆ6
ಸರಸಿಜಾಸನ ಮಾತೆ ಸ್ಮರಿಸುವೆ ನಿಮ್ಮ ಪಾದ
ಸ್ಮರಣೆ ಮರೆಯದಂತೆ ಕರುಣಿಪುದು ೭
ಪಂಕಜನಾಭನ ಕಿಂಕರರನ್ನು ಕಾಯ್ವ
ಬಿಂಕ ನಿನ್ನದು ಸರ್ವ ಅಲಂಕಾರಿಣಿ ೮
ಕಮಲನಯನನೆ ಶ್ರೀ ಕಮಲನಾಭ ವಿಠ್ಠಲನ
ಕ್ಷಣ ಬಿಡದಲೆ ತೋರು ನಮಿಸುವೆನು ೯

ಶೇಷಶಯನ
೧೪೧
ಸರಸಿಜನಾಭ ಶ್ರೀಹರಿಪಾದಕಾರತಿಯ ಬೆಳಗಿರೆ ಪ
ವಸುದೇವ ಸುತನೆಂದೆನಿಸಿ
ಅಸುರೆ ಪೂತನಿಯ ಸಂಹರಿಸಿ ಆನಂದ ಸುರಿಸಿ
ಕಾಳಿಮಡುವ ಧುಮುಕಿ ಫಣಿಯ
ಮೇಲೆ ನಾಟ್ಯವನಾಡಿದವಗೆ
ಸನಕಾದಿ ನಾರದ ಮುನಿವಂದ್ಯಗೆ
ಸುರ ರಮಣಿಯರು ಹರುಷದಿ ೧
ಮಧುರೇಲಿ ಜನಿಸಿದವಗೆ
ಮಾವಕಂಸನ ತರಿದವಗೆ ಮಧುವೈರಿಹರಿಗೆ
ಮುರಳಿನಾದಗೈದು ಸ್ತ್ರೀಯರ
ಮರುಳುಗೊಳಿಸಿ ಆಡಿದವಗೆ
ಮುರವೈರಿ ಹರಿ ಮುಚುಕುಂದ
ವರದನ ಪಾಡುತಲಿ ಮುದದಲಿ೨
ಗೋಪಾಲರೊಡಗೂಡುತಲಿ
ಗೋವರ್ಧನವೆತ್ತಿದವಗೆ ಗೋವಿಂದ ಹರಿಗೆ
ಗೋಪಿಯರ ಮನೆಯ ಪೊಕ್ಕು
ಬೇಕೆನ್ನುತ ಪಾಲ್ಬೆಣ್ಣೆ ಸವಿದ
ಶ್ರೀಕಾಂತ ಕಮಲನಾಭ ವಿಠ್ಠಲನಿಗೆಸುದತಿಯರು ತ್ವರಿತದಿ ೩

ಯಾರಿಗೆ ಭಗವತ್ ಸಾಕ್ಷಾತ್ಕಾರವನ್ನು
೧೦೩
ಸಲಹೊ ಶ್ರೀಹರಿಯೆ ಎನ್ನ ಮೊರೆಯ ಚಿತ್ತೈಸಿ
ಉರಗಾದ್ರಿವಾಸ ಶ್ರೀಹರಿ ಕೇಶಿಧ್ವಂಸಿ ಪ
ಸಾರ ಶೃಂಗಾರ ಯದುವೀರ ಸಲಹೆನ್ನ
ಮಾರನ ಜನಕ ಮಧುವೈರಿ ಮೋಹನ್ನ ೧
ಅಪ್ಪ ತಿಮ್ಮಪ್ಪ ಎನ್ನ ತಪ್ಪನೆಣಿಸದಲೆ
ಸರ್ಪಶಯನ ಸರ್ವ ಶ್ರೇಷ್ಠ ಸಲಹೆನ್ನ ೨
ರಂಗಉತ್ತುಂಗ ಅಂತರಂಗದಿ ಒಲಿದು
ಮಂಗಳಕರ ಪಾಂಡುರಂಗ ಸಲಹೆನ್ನ ೩
ಬಾರಿಬಾರಿಗೆ ನಿನ್ನ ಹಾರೈಸುತಿರುವೆ
ಸಾರಸಾಕ್ಷನೆ ಸಾರ್ವಭೌಮ ಸಲಹೆನ್ನ ೪
ಕಮಲ ಸಂಭವನಯ್ಯ ವಿಮಲಸ್ವರೂಪ
ಕಮಲನಾಭ ವಿಠ್ಠಲ ಪೊರೆ ಎನ್ನದಾತ೫

೧೦೪
ಸಾರಿದೆನೊ ನಿನ್ನ ಶ್ರೀನಿವಾಸ
ಪಾರುಗಾಣಿಸೊ ಎನ್ನ ಉದ್ಧರಿಸೊ ಶ್ರೀಶ ಪ
ವಾರಿಜಾಕ್ಷನೆ ನಿನ್ನ ಚಾರುಚರಣದ ಸ್ಮರಣೆ
ಬಾರಿ ಬಾರಿಗೆ ಮಾಳ್ಪ ಭಾಗ್ಯವೀಯೊ
ಸಾರಸಾಕ್ಷನೆ ಸಂಸಾರ ದು:ಖದಿ ಎನ್ನ
ಸೇರದಂದದಿ ಮಾಡೋ ಸರ್ವವಂದಿತ ಕೃಷ್ಣ ೧
ಅಂಬುಜಾಕ್ಷನೆ ನಿನ್ನ ನಂಬಿದೆನೊ ಈ ಭವದ
ಬಂಧ ತಪ್ಪಿಸಿ ಕಾಯೊ ಇಂದಿರೇಶ
ಹಿಂದು ಮುಂದ್ಯಾರಿಲ್ಲವೆಂದು ನಂಬಿದೆ ನಿನ್ನ
ಛಂದದಿಂದ ಸಲಹೊ ಮಹೇಂದ್ರತೀರ ನಿವಾಸ ೨
ಸುಂದರಾಂಗನೆ ದೇವ ವಂದಿಸುವೆ ತವಪಾದ
ಧ್ವಂದ್ವ ಭಜಕರ ಸಂಗ ಬಂದುನೀಡೈ
ಇಂದಿರಾರಮಣನೆ ನಂದಗೋಪನ ಕುವರ
ಬಂದು ಭಕುತರ ಪೊರೆವ ಆನಂದ ಮೂರುತಿ ಕೃಷ್ಣ೩
ಶರಣಜನರನು ಪೊರೆಯೆ ತ್ವರಿತದಲಿ ಬಂದು ಈ
ಗಿರಿಯ ಮಧ್ಯದಿನಿಂದೆ ಮಧುಸೂದನ
ಶರಣುಶರಣೆಂದು ನಿನ್ನಡಿಗೆರಗುವ ಜನರ
ದುರಿತವೆಲ್ಲವ ಕಳೆದು ಪೊರೆವ ದಯಾನಿಧಿ ಕೃಷ್ಣ೪
ಕನಕಗರ್ಭನ ಪಿತನೆ ಕಡುಲೋಭವನೆ ಬಿಟ್ಟು
ದೃಢವಾದ ಅಭಯವನು ದಯಪಾಲಿಸೊ
ಪೊಡವಿಗೊಡೆಯನೆ ದೇವ ಕಮಲನಾಭವಿಠ್ಠಲ
ಬಿಡದೆ ನಿನ್ನನು ಭಜಿಪ ಧೃಢ ಮನವ ನೀಡೈ೫

ಸಪ್ತರ್ಷಿಗಳಾದ ಕಶ್ಯಪ
೧೪೨
ಸುಂದರ ಮೂರುತಿ ಹರಿಯೆ ಬಾ-
ರೆಂದು ಕಶ್ಯಪ ಋಷಿ ಅದಿತಿಯರು
ಮಂದಹಾಸದಿ ನಮ್ಮ ಮಂದಿರಕೀಗ ಗೋ-
ವಿಂದ ಬಾ ಶ್ರೀಮುಕುಂದ ಬಾ ಯಾದವ
ವೃಂದ ಬಾ ಬಲುಮುದದಿಂದ ಬಾ ಬಾ-
ರೆಂದು ಕರದಾರು ಶೋಭಾನೆ ೧
ಅಚ್ಚುತಾನಂತ ಶ್ರೀಹರಿ ನೀನು
ಸಚ್ಚಿದಾನಂತಾತ್ಮನೆ ನೀನು
ಮಿತ್ರೆ ಲಕುಮಿ ಒಡಗೂಡುತ ಬಾರೆಂದು
ಅತ್ರಿಯರು ಸ್ತುತಿಪರು ಮಿತ್ರೆಯರು ಪಾಡ್ವರು
ಕೀರ್ತಿಪರು ಅನಸೂಯಾತ್ರಿಯರು
ಬಾರೆಂದು ಕರೆದಾರು ಶೋಭಾನೆ ೨
ಭಾಗವತರ ಪ್ರಿಯ ಬಾರೆಂದು
ಭಾರದ್ವಾಜರು ಭಕ್ತಿಯಲಿ
ಬಾರಿಬಾರಿಗೆ ಸ್ತುತಿಗೈವರು ಸತಿ ಸುಶೀಲೆ-
ಯರು ಸುಂದರ ನಾರಿಯರು
ಕರೆವರು ಕಂಸಾರಿ
ಬಾರೆಂದು ಕರದಾರು ಶೋಭಾನೆ ೩
ಹಸ್ತಿವರದ ಹರಿ ಬಾರೆಂದು
ವಿಶ್ವಾಮಿತ್ರರು ಹರುಷದಲಿ
ಪತ್ನಿ ಕುಮುದ್ವತಿ ಸತಿ ಸಹಿತದಿ ಕರೆವರು
ಭಕ್ತಿಯಲಿ ಪರಮಾಸಕ್ತಿಯಲಿ
ಹರಿಯನು ಸ್ತೋತ್ರದಲಿ
ಭೂ ರಮಾ ಪಾರ್ಥಸಾರಥಿಯ ಕರದಾರು ಶೋಭಾನೆ ೪
ಕೌಶಿಕ ಯಜ್ಞಪಾಲನೆ ಬಾ
ಕಂಸನ ಸಭೆಯಲಿ ಸೆಳೆದನೆ ಬಾ
ಹಂಸವಾಹನಪಿತ ಬಾರೆಂದು ಕರೆವರು
ಗೌತಮರು ಪತ್ನಿ ಅಹಲ್ಯೆಯರು
ಪಾಡುತ ಪ್ರಾರ್ಥಿಪರು ಮುರಹರಿ ಗೋಪಾಲ
ಬಾರೆಂದು ಕರದಾರು ಶೋಭಾನೆ ೫
ಜಗದುದರನೆ ಶ್ರೀ ಹರಿಯೆ ಬಾ
ನಿಗಮತಂದು ಸುತಗಿತ್ತನೆ ಬಾ
ಝಗಿಝಗಿಸುವ ಆಭರಣಗಳ್ಹೊಳೆಯುತ
ಬಾರೆಂದು ಜಯ ಜಯವೆನ್ನುವರು
ಋಷಿ ಜಗದಗ್ನಿಯರು ರೇಣುಕ ಸಹಿತ
ಶ್ರೀಶನ ಕರದಾರು ಶೋಭಾನೆ ೬
ಮಂಗಳ ಮದನ ಗೋಪಾಲನಿಗೆ
ಮಂಗಳ ಯದುಕುಲ ತಿಲಕನಿಗೆ
ಮಂಗಳ ಕಮಲಾನಾಭ ವಿಠ್ಠಲನಿಗೆ
ಮಂಗಳವು ವಶಿಷ್ಠರು ಪಾಡುವರು ಸತಿ ಅ-
ರುಂಧತಿಯರು ಜಯ ಜಯ
ಮಂಗಳವೆಂದು ಕರದಾರು ಶೋಭಾನೆ೭
ಶೋಭನವೆನ್ನಿರೆ ಶ್ರೀಹರಿಗೆ
ಶೋಭನವೆನ್ನಿರೆ ಮಾಧವಗೆ
ಶೋಭನವೆನ್ನಿರಿ ಸೊಬಗುಳ್ಳ ದೇವಗೆ ಶೋಭಾನೆ
ಸಿರಿಯರಸಗೆ ದಿವ್ಯ ಶೋಭಾನೆ
ಪರಮಪುರುಷನಿಗೆ ಶೋಭಾನೆ
ಶೋಭನ ಗರುಡಗಮನಗಶೋಭನವೆನ್ನಿರೆ ಶೋಭಾನೆ ೮

ಶಿಲೆಯಾದ ತರಿದೆ
ಸೀಸಪದ್ಯ
೧೬೪
ಸುಂದರಾಂಗನ ಪಾದಕೊಂದಿಸುತ ಭಕ್ತಿಯಲಿ
ಮಂದರೋದ್ಧಾರ ಮುಚುಕುಂದ ವರದ
ನೆಂದು ಸ್ತುತಿಸುವ ಭಕ್ತವೃಂದವನು ರಕ್ಷಿಸುವ
ಕುಂದನೆಣಿಸದಲೆ ನಾರಸಿಂಹ ಹರಿಯು ೧
ಇಂದಿರಾರಮಣಗೆ ಜಯ ಗೋವಿಂದ ಗೋಪಕುಮಾರ-
ನೆಂದವರ ಬಂಧನವ ಬಿಡಿಸಿ ಕಾಯ್ವ
ಕಂದರ್ಪಜನಕ ಕಮಲಾಕ್ಷ ಹರಿ ಗತಿ ಎನುತ
ಬಂದವನ ಕೈ ಬಿಡನು ಇಂದಿರೇಶ ೨
ದುಂದುಭಿ ವತ್ಸರದಿ ಸುಜನರೆಲ್ಲ
ತಂದೆ ಕಮಲನಾಭ ವಿಠ್ಠಲನೆನುತ
ಒಂದೆ ಮನದಲಿ ಭಜಿಸಿ ಸ್ತುತಿಪ ಜನರ
ಚಂದದಲಿ ಕಾಯ್ವ ನಾರಸಿಂಹ ಹರಿಯು೩

ಭಗವಂತನಿಗೆ ಇರುವ ಹೆಸರುಗಳು
೮೨
ಸ್ಮರಿಸಿ ಬದುಕಿರೊ ಗುರುವರರಾ ನರ-
ಹರಿಸ್ಮರಣೆ ಮರೆಯದಲೆ ಕೀರ್ತಿಸಿ ನಲಿದವರ ಪ
ದಾಸದೀಕ್ಷೆಯ ವಹಿಸಿದವರ ಹರಿ
ದಾಸರ ಕೂಡಿ ನರ್ತಿಸಿ ನಲಿದವರ
ಶ್ರೀಶನ ಮಹಿಮೆ ಬಲ್ಲವರ
ಭವ ಪಾಶಗಳಳಿವ ಸನ್ಮಾರ್ಗಬೋಧಕರ ೧
ಬಡತನದಲಿ ಬಳಲಿದವರ ಭಾಗ್ಯ
ಬಿಡದೆ ಬಂದೊದಗೆ ಹಿಗ್ಗದೆ ತಗ್ಗಿದವರ
ಮೃಡಸಖನೊಲುಮೆ ಪಡೆದವರ
ಬಹು ಸಡಗರದಲಿ ಹರಿ ಭಜನೆ ಮಾಡ್ದವರ ೨
ಪಂಕಜಾಕ್ಷನ ಪೊಗಳಿದವರ ತಂದೆ
ವೆಂಕಟೇಶ ವಿಠ್ಠಲ ದಾಸರಿವರ
ಬಿಂಕದಿ ಹರಿಯ ಮರೆತವರ ಗರ್ವ
ಬಿಂಕಗಳಳಿಯ ಸನ್ಮಾರ್ಗಕೆಳದವರ೩
ತಾಳ ತಂಬೂರಿ ಪಿಡಿದವರ ಗೆಜ್ಜೆ
ತಾಳ ಮೇಳದಿ ನರ್ತಿಸಿ ನಲಿದವರ
ವ್ಯಾಳ ಶಯನನ ಭಕ್ತರಿವರ ಸಂಜೆ
ವೇಳೆ ಹರಿಭಜನೆ ಮಾಡಿ ನಲಿದವರ ೪
ಮಡದಿ ಮಕ್ಕಳು ಬಂಧು ಜನರ ಕೂಡಿ
ಕಡು ಸಂಭ್ರಮದಿ ಹರಿಭಜನೆ ಮಾಡ್ದವರ
ಕಡಲ ಶಯನನ ಭಕ್ತರಿವರು ಭಾಗ್ಯ
ಬಡತನ ಸಮವೆಂದು ತಿಳಿಯ ಹೇಳ್ದವರ ೫
ಹರಿಗುಣ ಕೀರ್ತಿಸಿದವರ ನರ
ಹರಿಯ ಮಹಿಮೆಗಳ ಶಿಷ್ಯರಿಗೊರೆದವರ
ಹರಿಯೆ ಸರ್ವೋತ್ತಮನೆಂದವರ ನಮ್ಮ
ಉರುಗಾದ್ರಿವಾಸ ವಿಠ್ಠಲನ ನಂಬಿದವರ೬
ಮಮತೆಯ ಬಿಡಬೇಕೆಂದವರ ದೇಹ
ಮಮತೆಯ ಬಿಡುತ ಹರಿಪುರ ಸೇರಿದವರ
ಕಮಲಾಕ್ಷನ ಭಕ್ತರಿವರ ನಮ್ಮಕಮಲನಾಭನ ವಿಠ್ಠಲನ ನಂಬಿದವರ ೭

ಭಗವಂತನಿಗೆ ಇರುವ ಹೆಸರುಗಳು
೮೩
ಸ್ಮರಿಸಿ ಬೇಡುವೆ ಗುರುವರರ ಪಾದ-
ಸರಸಿಜ ಸ್ಮರಿಪರಘುಪರಿಹರಿಸುವರ ಪ
ಇಂದಿರೇಶನ ಮಹಿಮೆ ಬಲ್ಲ ಭಕ್ತ
ಸಂದಣಿಯೊಳು ಇವರಿಗೆ ಸಮರಿಲ್ಲ
ತಂದೆ ವೆಂಕಟೇಶ ವಿಠ್ಠಲನೆಂದು
ಸಂಭ್ರಮ ಪಡುವ ಶಿಷ್ಯರಿಗೆಣೆಯಿಲ್ಲ ೧
ಸಿರಿವೆಂಕಟೇಶನ್ನ ಸ್ಮರಿಸಿ ಬಹು
ಪರಿಯಿಂದ ಪಾಡಿ ಕೊಂಡಾಡಿ ಸ್ತುತಿಸಿ
ಗಿರಿಯ ವೆಂಕಟನನ್ನು ಭಜಿಸಿ ನಮ್ಮ
ಉರಗಾದ್ರಿವಾಸ ವಿಠ್ಠಲದಾಸರೆನಿಸಿ ೨
ಸದ್ವೈಷ್ಣವರ ಸುರಧೇನು ಸರ್ವ
ರುದ್ಧಾರವಾಗಲು ಜನಿಸಿದರಿನ್ನು
ಬುದ್ಧಿ ಶಿಷ್ಯರಿಗೊರೆದರಿನ್ನು ತಂದೆ
ಮುದ್ದು ಮೋಹನ್ನ ವಿಠ್ಠಲದಾಸರನ್ನು ೩
ಸುಂದರ ಮೂರ್ತಿಯ ತಂದು ದುರ್ಗ
ಮಂದಿರದಲಿ ಸ್ಥಾಪಿಸಿದರೊ ಅಂದು
ಛಂದದಿ ಸೇವಿಸಿರೆಂದು ಶಿಷ್ಯ
ಮಂಡಲಿಗಳಿಗೆ ಬೋಧಿಸಿದರೆಂತೆಂದು ೪
ಕಳವಳ ಪಡುತಿಹೆನಲ್ಲ ಕಾಲ
ಕಳೆದು ಹೋಗುತಲಿದೆ ಅರಿವು ಬರಲಿಲ್ಲ
ಪರಮ ಭಕ್ತರ ಪರಿಯನೆಲ್ಲ ತಿಳಿವಕಮಲನಾಭ ವಿಠ್ಠಲನಲ್ಲದಿಲ್ಲ ೫

೧೪೪
ಸ್ಮರಿಸಿ ಬೇಡುವೆ ಹರಿಯ ಮುರಾರಿಯ
ಸ್ಮರ ಕೋಟಿತೇಜನ ಸುರಮುನಿವಂದ್ಯನ ಪ
ಮನ್ಮಥಕೋಟಿ ಲಾವಣ್ಯರೂಪದಿ ಮೆರೆವ
ಮನ್ಮಥಯ್ಯನ ಪೊಗಳುತ್ತಲಿ
ಚಿನ್ಮಯರೂಪನ ಚಿದ್ರೂಪನಾದನ
ಹೃನ್ಮನದಲಿ ಪಾಡಿಪೊಗಳಿ ಕೊಂಡಾಡುತ ಅ.ಪ
ಮನ್ಮನÀದೊಳು ಸ್ಮರಿಸಿ ಸ್ಮರಿಪ ಭಾಗ್ಯವು
ಮುನ್ನ ಕರುಣಿಸಿ ಸಲಹು ಬಲು ಸಂ-
ಪನ್ನ ನಿನಗೆದುರಿಲ್ಲ ಧರೆಯೊಳು
ಪನ್ನಗಾದ್ರಿ ನಿವಾಸ ಶ್ರೀಶನ೧
ವಿಶ್ವವ್ಯಾಪಕ ನೀನೆ ವಿಶ್ವಮೂರುತಿ ನೀನೆ
ವಿಶ್ವಕರ್ತನು ನೀನೆ ವಿಶ್ವ ನೀನೆ ಶ್ರೀ-
ವಿಶ್ವವಸುನಾಮ ಸಂವತ್ಸರದೊಳು ಮೆರೆವ
ವಿಶ್ವಮೂರುತಿ ಶ್ರೀ ಸರ್ವೇಶ್ವರ ನೀನೆಂದು೨
ವಿಶ್ವಮಯ ವಿಶ್ವೇಶ ಶ್ರೀಹರಿ
ವಿಶ್ವನಾಮಕ ವಿಮಲ ಸುಖಮಯ
ವಿಶ್ವವನು ಉದರದೊಳು ಧರಿಸಿದ
ವಿಶ್ವವನು ವದನದಲಿ ತೋರ್ದನ ೩
ಕಮಲದಳಾಕ್ಷನ ಕಮನೀಯ ರೂಪನ
ಕಮಲ ಸಂಭವನ ಪೆತ್ತಿಹ ಧೀರನ
ಕಮಲಮುಖಿಯ ಕರಕಮಲದಿ ಪೂಜ್ಯನ
ಕಮಲೆಯೊಡಗೂಡುತ ನಲಿವನ ೪
ಕಮಲ ಕರದೊಳು ಪಿಡಿದ ಕಮಲೆಯ
ಕಮಲನಾಭನ ಪಿತನೆ ಮುದದೊಳು
ಕಮಲೆಯನು ಕೈಪಿಡಿದು ಮೆರೆಯುವ
ಕಮಲನಾಭವಿಠ್ಠಲನ ಪ್ರತಿದಿನ೫

ಭಗವಂತನ ಅಧಿಷ್ಠಾನ
೮೪
ಸ್ಮರಿಸುವರ ಪಾಲಿಪ
ಬಿರುದು ಭಕುತರ ಪೊರೆವ ಕರುಣಿಯೆಪ
ಪರಿಪರಿವಿಧದಲಿ ಪರಿತಪಿಸುವರನು
ಕರವಿಡಿದುದ್ಧರಿಸುತ ಸಂತೈಸುವ
ಉರಗಾದ್ರಿವಾಸ ವಿಠ್ಠಲ ಸಂತೈಸು
ಚರಣಕಮಲಗಳಿಗೆರಗಿ ಭಿನ್ನೈಸುವೆ೧
ಮಂದಮತಿಯು ನಾನೆಂದು ವಂದಿಪರ
ಬಂಧನ ಕಳೆಯುತ ಮುಂದೆ ಗತಿಯು ತೋರಿ
ತಂದೆ ವೆಂಕಟೇಶ ವಿಠ್ಠಲ ಭಕುತರ
ಸಂದಣಿ ಪೊರೆಯುವರೆಂಬ ಬಿರುದು ದೇವ ೨
ಆಶಾಪಾಶಗಳಿಗೊಳಗಾಗಿಹ ಮನ-
ದಾಸೆ ಪೂರೈಸುತ ನೀ ಸಲಹೈ ಗುರು
ವಾಸುದೇವ ವಿಠ್ಠಲ ಹರಿ ಭಕುತರ
ದಾಸ್ಯವ ಕೊಟ್ಟು ಉಲ್ಲಾಸ ಒದಗಿಸುತ ೩
ಮೊದಲೆ ನಿನ್ನಯಪಾದ ಹೃದಯದಿ ಭಜಿಸದೆ
ಒದಗಿದ ಪಾಪದಿ ಹೆದರುತಲಿದೆ ಮನ
ಪದುಮಜಾಂಡ ಸೃಜಿಸಿದ ಪರಮಾತ್ಮನಿ-
ಗದ್ಭುತವೇ ಪಾಮರರನು ಪೊರೆವುದು ೪
ಮಣಿದು ಬಿನ್ನೈಸುವೆ ಪವನಮತವ ತೋರಿ
ಬಿನಗು ಬುದ್ಧಿಗಳ ಗಮನಕೆ ತಾರದೆ
ಕಮಲನಾಭ ವಿಠ್ಠಲ ತವ ಕರುಣದಿ
ಮನದ ಕ್ಲೇಶಗಳ ಕಳೆದು ಉದ್ಧರಿಸುತ ೫

ಯಾರಿಗೆ ಭಗವತ್ ಸಾಕ್ಷಾತ್ಕಾರವನ್ನು
೧೦೫
ಸ್ವೀಕರಿಸೈ ಕರುಣಾಕರ ಶ್ರೀವರ
ಲೋಕವಂದಿತ ಪ್ರಭುವೆ ಪ
ಮಾಕಮಲಾಸನ ನಾಕಪಾಲವಂದ್ಯ
ಮಾತುಳಾಂತಕ ಮಧುಸೂದನ ಶ್ರೀಹರಿ ಅ.ಪ
ಮಾವು ಮಾದಳ ದ್ರಾಕ್ಷ ಬಾಳೆ ಕಿತ್ತಳೆ
ಮೊದಲಾದ ಫಲಗಳೆಲ್ಲ
ಮಾಧವ ನೀನಿದನಾರೋಗಣೆ ಮಾಡು
ಶ್ರೀ ರಮಣಿಯ ಪ್ರಿಯ ಶ್ರೀನಿವಾಸನೆ ಬೇಗ ೧
ನಾನಾ ವಿಧದ ಫಲ ಹಾಲು ಸಕ್ಕರೆ ಬೆಣ್ಣೆ
ನಾರಾಯಣ ನಿನಗೆ
ಬಾಲೆ ಲಕುಮಿ ಪರಮಾದರದಿಂದಲಿ
ಸೇವೆಗೆ ಪರಮಾನ್ನವನರ್ಪಿಸುವಳು೨
ತನುವೆಂಬೊ ತಟ್ಟೆಯೊಳಿರಿಸಿ ಫಲವ ನಿ-
ರ್ಮಲಮನವೆಂಬ ವಸ್ತ್ರವನ್ಹೊದಿಸಿ
ಸನ್ಮತವೆಂಬ ಸಾರಣೆಮಾಡಿ ನಮ್ಮ
ಗುರುಕರುಣದ ರಂಗವಲಿಯನ್ಹಾಕುವೆ ೩
ನವವಿಧ ಭಕುತಿಯ ನಳನಳಿಸುವ ವೀಳ್ಯ
ಚಲುವ ಶ್ರೀ ಹರಿ ನಿನಗೆ
ಸವಿನಯ ನುಡಿಗಳ ಮಂತ್ರ ಪುಷ್ಪಗಳು
ಸನಕಾದಿವಂದ್ಯ ಸರ್ವೇಶ ಶ್ರೀ ಕೃಷ್ಣ ೪
ಕ್ಷೀರ ಸಾಗರವಾಸಿ ಶ್ರೀ ಭೂರಮಣನೆ
ಮಾರಜನಕ ಹರಿಯೆ
ಕಾರುಣ್ಯಸಾಗರ ಕಮಲನಾಭ ವಿಠ್ಠಲ
ಪಾರುಗಾಣಿಸೊ ಭವಸಾಗರದಿಂದಲಿ೫

ಲಿಂಗಸುಗೂರಿನಲ್ಲಿ
೬೭
ಹನುಮ ಭೀಮ ಮಧ್ವಮುನಿಯೆ ರಕ್ಷಿಸೆನ್ನ
ಅನುದಿನವು ಶ್ರೀ ಹರಿಯ ಸ್ಮರಣೆ ಮರೆಯದಂತೆ ಪ
ತಂದೆ ತಾಯಿ ನೀನೆಂದು ನಂಬಿದೆನೊ
ಬಂಧ ಬಿಡಿಸಿ ಕಾಯೋ ತಂದೆ ಹನುಮವೀರ ೧
ದುರುಳ ದೈತ್ಯನಾದ ಜರೆಯ ಸುತನ ಸೀಳಿ
ಕರುಣಿ ಕೃಷ್ಣನಂಘ್ರಿ ನಿರುತ ಭಜಿಪ ವೀರ ೨
ಸದ್ವೈಷ್ಣವರನೆಲ್ಲ ಉದ್ಧರಿಸಿ ಜಗದಿಮುದ್ದು ಕಮಲನಾಭ ವಿಠ್ಠಲನಂಘ್ರಿ ಭಜಿಪ೩

ಇದು ಕೃಷ್ಣದ್ವೈಪಾಯನರ ಸ್ತೋತ್ರವಾಗಿದೆ
೪೬
ಹರಿ ಮಂದಿರ ಹರಿ ಮಂದಿರ ಈ ಸ್ಥಳವು
ಹರುಷದಿ ಚಿಂತಿಪರಿಗೆ ಪ
ಹರಿ ಹರ ಬ್ರಹ್ಮಾದಿಗಳು ಪೊಗಳುತಿರೆ
ಸುರಮುನಿ ನಾರದ ಋಷಿಗಳು ಸ್ತುತಿಸಲು
ಸುರರು ಪುಷ್ಪ ವೃಷ್ಟಿಯ ಕರೆಯಲು ಅ-
ಪಸ್Àರ ಸ್ತ್ರೀಯರು ನರ್ತನ ಮಾಡುವ ಸ್ಥಳ ಅ.ಪ
ಸಿರಿ ನಾರಾಯಣ ಶೇಷಶಯನದಲಿ
ಶಯನಿಸಿ ನಿದ್ರಿಸುತಿರೆ
ಸಿರಿ ಭೂದುರ್ಗಾಂಬ್ರಣಿಯರು ಸೇವಿಸಲು
ನಾಭಿ ಕಮಲದಲಿ
ಸರಸಿಜೋದ್ಭವ ಸ್ತುತಿಸುತ ಧ್ಯಾನಿಸಲು
ಕರಜೋಡಿಸಿ ಸುಜನರು ನಮೋ ನಮೋ ಎನೆ
ಭರದಿ ಜಾಗಟೆ ಭೇರಿ ತಾಳ ತುತ್ತೂರಿಯು
ಕರದಿ ಶಂಖು ಗಂಟೆ ನಾದ ಮೊಳಗೆ ಹರಿ
ಭಜನೆ ಮಾಡುತ ತದ್ಧಿಮಿಕೆನ್ನುವ ಸ್ಥಳ ೧
ಹರಿ ವೈಕುಂಠದಿ ಸಿರಿಯೊಡಗೂಡಿರಲು
ಭೃಗುಮುನಿ ತಾಡನದಿ
ಸಿರಿದೇವಿ ಕೋಪಿಸಿ ಹರಿಯನು ಬಿಡಲು
ಸಿರಿ ಇಲ್ಲದೆ ಒಬ್ಬನೆ ಇರಲಾಗದೆ ವೆಂಕಟಗಿರಿಗಿಳಿತರಲು
ಸರಸಿಜಾಕ್ಷ ಕರಿಬೇಟೆಯ ನಾಡುತ
ಬರುತ ಪದ್ಮಾವತಿಯನು ಮೋಹಿಸಿ
ಕೊರವಿ ರೂಪ ತಾಳುತ ಕಣಿ ಹೇಳಲು
ಭರದಿ ಕಲ್ಯಾಣವು ನಡಸಿದ ಸ್ಥಳವಿದು ೨
ಸುರರು ಅಸುರರು ಶರಧಿಯ ಮಥಿಸಿರಲು
ಅಮೃತವನೆ ಕಂಡು
ಹಿರಿ ಹಿರಿ ಹಿಗ್ಗುತ ನುಗ್ಗೆ ದಾನವರು
ಶ್ರೀ ಹರಿ ತಿಳಿದು ತ್ವರದಿಂದ ಮೋಹಿನಿರೂಪ ತಾಳಿ
ಬಿರಿಬಿರಿ ನೋಡುತಲಿರೆ ದಾನವರು
ಸುರರಿಗೆ ಅಮೃತವನುಣಿಸುತ ಮೋಹಿನಿ
ಪರವಶದಲಿ ಮೈ ಮರತಿರೆ ಅಸುರರು
ಸುರರಿಗೆ ಅಭಯವ ನೀಡಿದ ಸ್ಥಳವಿದು ೩
ವಿಶ್ವಾಸದಿ ತಪಗೈದ ಸುರನ ನೋಡಿ
ಮಹದೇವರು ಒಲಿದು
ಭಸ್ಮಾಸುರ ಬೇಡಿದ ವರಗಳ ಕೊಡಲು
ನಿಜ ನೋಡುವೆನೆಂದು ಭಸ್ಮಾಸುರ ಬೆನ್ನಟ್ಟುತ ಬರುತಿರಲು
ವಿಶ್ವ ವ್ಯಾಪಕ ಹರಿ ತಾ ತಿಳಿದು
ತಕ್ಷಣ ಸ್ತ್ರೀ ರೂಪವ ಧರಿಸುತ ಬರೆ
ಭಸ್ಮಾಸುರ ತನ್ಹಸ್ತದಿ ಮೃತಿಸಲು
ಭಕ್ತರನುದ್ಧರಿಸಿದ ಈ ಸ್ಥಳವು ೪
ಲೋಕ ಲೋಕದ ಜನರೆಲ್ಲರು ಕೂಡಿ
ಪ್ರಜಾ ಕಂಟಕನಾದ
ಮೂಕಾಸುರನನು ಗೆಲ್ಲಲು ಸಾಗದಲೆ
ಶ್ರೀಕಾಂತನ ಪ್ರಾರ್ಥಿಸೆ
ಮೂಕಾಂಬಿಕೆ ನಾಮದಿಂದಲಿ ಪ್ರಜ್ವಲಿಸಿ
ಮೂಕಾಸುರನನು ವಧಿಸಿದ ಶ್ರೀ ಕೋಲಾ-
ಪುರದಲಿ ವಾಸಿಸುತಲಿ ಸಂತತ
ಶ್ರೀಕರ ಕಮಲನಾಭ ವಿಠ್ಠಲ
ಏಕಾಂತದಿ ಭಕ್ತರ ಸಲಹಿದ ಸ್ಥಳವಿದು5

೧೧೨
ಹರಿನಾರಾಯಣ ಎನ್ನಿರೊ ಸಜ್ಜನರು ಶ್ರೀ-
ಹರಿಕೃಷ್ಣ ಶರಣೆನ್ನಿರೊ ಪ
ಪರಿಪರಿ ದುರಿತಗಳಳಿದು ಪೋಗುವದೆಂದು
ನಿರುತವು ವೇದಪುರಾಣ ಪೇಳುವದು ಶ್ರೀ ಅ.ಪ
ಹರಿ ಎಂದ ಮಾತ್ರದಲಿ ಹತ್ತಿದ ಪಾಪ
ಪರಿಹಾರಾಗುವುದು ಕೇಳಿ
ಹರಿದಾಸರೊಡನೆ ಕೂಡಿ ಸತ್ಸಂಗದಿ
ಹರಿ ಕೀರ್ತನೆಯನು ಪಾಡಿ
ಹರಿಯ ಮಹಿಮೆಯ ಸ್ಮರಿಸುತಲಿ ಹಗ
ಲಿರುಳು ಚಿಂತನೆ ಮಾಳ್ಪ ಸುಜನರ
ಪರಮ ಕರುಣಾ ಸಾಗರನು ತನ್ನ-
ವರೊಳಿರಿಸುತ ಪೊರೆವ ಸಂತತ ೧
ಕರಿರಾಜ ಕಷ್ಟದಲಿ ಮೊರೆ ಇಡೆ ಕೇಳಿ
ತ್ವರದಿ ಓಡಿ ಬರಲಿಲ್ಲವೆ
ಹರಿ ನೀ ರಕ್ಷಕನೆನ್ನಲು ಪಾಂಚಾಲಿಗ-
ಕ್ಷಯ ವಸ್ತ್ರವೆನಲಿಲ್ಲವೆ
ತರುಳರೀರ್ವರ ಪೊರೆದು ರಕ್ಷಿಸಿ
ಕರೆಯೆ ನಾರಗನೆಂದ ದ್ವಿಜನಿಗೆ
ನರಕ ಬಾಧೆಯ ಬಿಡಿಸಿ ಸಲಹಿದ
ಹರಿಗೆ ಸಮರು ಅಧಿಕರಿಲ್ಲ ಶ್ರೀ ೨
ಬಡಬ್ರಾಹ್ಮಣನ ಸತಿಯು ನಯಭಯದಿಂದ
ಒಡೆಯರ್ಯಾರಿಲ್ಲೆನಲೂ
ಪೊಡವೀಶ ಶ್ರೀಪತಿಯು ಪರಮಾಪ್ತನೆನಲು
ಹಿಡಿಯಗ್ರಾಸವ ಕೊಡಲು
ನಡೆದು ದ್ವಾರಕ ದೊಡೆಯನಿಗೆ ಒ-
ಪ್ಪಿಡಿಯ ಗ್ರಾಸವ ಕೊಡಲು ಭುಂಜಿಸಿ
ಕೆಡದ ಸೌಭಾಗ್ಯವನೆ ನೀಡಿದ
ಬಿಡದೆ ಕಮಲಾನಾಭ ವಿಠ್ಠಲನ ೩

೧೫೫
ಹರಿಸಿರಿ ರಮಣಿಯೆ ಕರಗಳ ಮುಗಿಯುವೆ
ವರಮತಿ ನೀಡೆನಗೆ ಪ
ಸರಸಿಜಾಕ್ಷನ ವಕ್ಷಸ್ಥಳದಿ ನಿವಾಸಿಯೆ
ನಿರುತದಿ ಹರಿಪಾದ ಸ್ಮರಣೆ ಎನಗೆ ಕೊಡು ಅ.ಪ
ಮಂದರೋದ್ಧರ ಗೋವಿಂದ ಗುಣಗಳಾ-
ನಂದದಿ ಸ್ತುತಿಸಿ ಹಿಗ್ಗುವ ಜನನಿ
ಇಂದಿರೆ ರಮೆ ಭಾರ್ಗವಿಯೆ ನಿನ್ನಯ ಪಾದ
ದ್ವಂದ್ವಕೆ ನಮಿಪೆ ಸುಗಂಧಿ ಸುಂದರಿಯೆ ೧
ಪರಮಪುರುಷ ಪುರುಷೋತ್ತಮನರಸಿಯೆ
ಪರಮ ಮಂಗಳೆ ಪಾವನಿ ಜನನಿ
ಸುರರು ಕಿನ್ನರರು ಕಿಂಪುರುಷರು ಸ್ತುತಿಪರು
ವರ ಮಹಾಲಕ್ಷ್ಮಿ ಸುಂದರಿ ಜಯ ಜಯ ಎಂದು ೨
ಗಂಗಾಜನಕ ಪಾಂಡುರಂಗ ನಿಜ ಸತಿ
ಭೃಂಗಕುಂತಳೆ ಭಾಗ್ಯದ ಖಣಿಯೆ
ಅಂಗಜಜನಕ ವಿಹಂಗವಾಹನನ ಪಾ-
ದಂಗಳ ಸ್ಮರಣೆಲಿ ನಲಿವ ಮನವ ಕೊಡು ೩
ಪಕ್ಷಿವಾಹನ ಕಮಲಾಕ್ಷನ ಮಹಿಮೆಯ
ವೀಕ್ಷಿಸಿ ಮನದಿ ಹಿಗ್ಗುವ ಜನನಿ
ರಾಕ್ಷಸನಾಮ ವತ್ಸರದಲಿ ಭಕುತರ
ಮೋಕ್ಷದಾತನು ಸಲಹುವ ಸುಜನರನು೪
ಕಮಲಸಂಭವ ಕಮಲಾಲಯೆ ಹರಿಪಾದ
ಕಮಲಭೃಂಗಳೆ ಹಿರಣ್ಯಹರಿಣಿ
ಕಮಲನಾಭ ವಿಠ್ಠಲನೊಡಗೂಡಿ ಹೃ-
ತ್ಕಮಲದಿ ಶೋಭಿಸು ಎನುತ ಸ್ತುತಿಸುವೆನು ೫

ಇದು ಕೃಷ್ಣದ್ವೈಪಾಯನರ ಸ್ತೋತ್ರ
೪೭
ಹಸಿವು ಬಹಳಾಗುತ್ತಿದೆ ಕೇಳಮ್ಮಯ್ಯ
ಹಸನಾಗಿ ಉಣಬಡಿಸೇ ಪ
ಬಿಸಿ ಬಿಸಿ ಕಡುಬು ಕಜ್ಜಾಯ ದೋಸೆಯು ಹುಗ್ಗಿ
ಹಸನಾಗಿ ಬಡಿಸಮ್ಮ ಬಿಸಿ ಬಿಸಿ ಪರಮಾನ್ನ ಅ.ಪ
ನೀರೊಳು ಮುಳುಗಿ ಬಂದೆ ಭಾರವ ಪೊತ್ತು
ಕೋರೆಲಿ ಧರಣಿ ತಂದೆ
ಪೋರನೊಡನೆ ವೈರಿಯಾದ ದೈತ್ಯನ ಕರು-
ಳ್ಹಾರವ ಮಾಡುತ್ತ ಭಾಳ ಬಳಲಿ ಬಂದೆ ೧
ಪೊಡವಿ ದಾನವ ಬೇಡಿದೆ ರಾಜರ ಗೆದ್ದು
ಕೊಡಲಿ ಕಯ್ಯಲಿ ಪಿಡಿದೆ
ಮಡದಿಯನರಸುತ ಅಡವಿಗಳ ಚರಿಸಿದೆ
ಬಿಡದೆ ದೈತ್ಯರ ಸದೆ ಬಡಿದು ದಣಿದು ಬಂದೆ ೨
ವಿಷವನುಣಿಸಿದ ದೈತ್ಯಳ ಅಸುವನೆ ಹೀರಿ
ಅಸುರ ಶಕಟನ ಸೀಳಿದೆ
ವಸುದೇವ ಸುತನು ಈ ಅಸುರ ಮರ್ದನನಾಗಿ
ಬಸುರೊಳು ಬ್ರಹ್ಮಾಂಡ ಧರಿಸಿದ ಕಾರಣ ೩
ಕಿಚ್ಚನುಂಗಿದ ಕಾರಣ ಹೊಟ್ಟೆಯ ಹಸಿವು
ಹೆಚ್ಚುತಲಿದೆ ನೋಡಮ್ಮಾ
ಕಚ್ಚ ಬರುತಿಹ ಕಾಳಿ ಸರ್ಪನ ಹೆಡೆ ಮೇಲೆ
ನರ್ತನ ಮಾಡುತ ಭಾಳ ಬಳಲಿ ಬಂದೆ ೪
ಬತ್ತಲೆ ತಿರುಗಿ ಬಂದೆ ತೇಜಿಯನೇರಿ
ಸುತ್ತಿದೆ ಧರಣಿಯನು
ಕರ್ತೃ ಶ್ರೀ ಹರಿ ಕಮಲನಾಭ ವಿಠ್ಠಲನಿಗೆ
ತೃಪ್ತಿಯ ಪಡಿಸಮ್ಮ ಮುಕ್ತಿಪಥವನೀವೇ5

೧೫೩
ಹೆಜ್ಜೆ ತೋರೆ ಕಾಲಗೆಜ್ಜೆ ತೋರೆ
ಅರ್ಜುನ ಸಾರಥಿ ಪಟ್ಟದ ರಾಣಿ ಹೆಜ್ಜೆ ತೋರೆ ಪ
ಕಾಲಲಂದಿಗೆ ನೂಪುರವಿಟ್ಟ ಹೆಜ್ಜೆ ತೋರೆ
ಕಾಳಿಮರ್ದನ ಕೃಷ್ಣನರಸಿಯೆ ಹೆಜ್ಜೆ ತೋರೆ
ಕಾಲಸರವು ಪಾಡಗನಿಟ್ಟ ಹೆಜ್ಜೆ ತೋರೆ
ಕಾಳಿಂದಿ ರಮಣನ ಸತಿಯೆ ಹೆಜ್ಜೆ ತೋರೆ ೧
ಬಡವರ ಮನೆಗೆ ನಡದು ಬರುವ ಹೆಜ್ಜೆ ತೋರೆ
ಬಡನಡು ಬಳುಕುತ ನಡೆಯುವ ಪುಟ್ಟ ಹೆಜ್ಜೆ ತೋರೆ
ಸಡಗರದಲಿ ಹರಿಯೊಡನೆ ಬರುವ ಹೆಜ್ಜೆ ತೋರೆ
ಪೊಡವಿಗೊಡೆಯ ಶ್ರೀ ಕೃಷ್ಣನರಸಿಯೆ ಹೆಜ್ಜೆ ತೋರೆ೨
ಮೆಲ್ಲನೆ ಮೆಲ್ಲನೆ ನಡದು ಬರುವ ಹೆಜ್ಜೆ ತೋರೆ
ಲುಲ್ಲುರುಳಿ ಪೈಜನಗಳು ಹೊಳೆವ ಹೆಜ್ಜೆ ತೋರೆ
ಉಲ್ಲಾಸದಿ ಸುರರೆಲ್ಲರು ಸ್ತುತಿಪ ಹೆಜ್ಜೆ ತೋರೆ
ಫುಲ್ಲಾಕ್ಷನ ಒಡಗೂಡುತ ಬರುವ ಹೆಜ್ಜೆ ತೋರೆ೩
ಪದ್ಮ ರೇಖೆಗಳಿಂದ ಶೋಭಿಪ ಹೆಜ್ಜೆ ತೋರೆ
ಪದ್ಮನಾಭನ ಕೂಡಿ ಬರುವ ಹೆಜ್ಜೆ ತೋರೆ
ಪದ್ಮದೊಳು ಪುಟ್ಟಿರುವ ಪುಟ್ಟ ಹೆಜ್ಜೆ ತೋರೆ
ಪದ್ಮಮುಖಿಯೆ ಶ್ರದ್ಧೆಲಿ ಭಜಿಪರು ಹೆಜ್ಜೆ ತೋರೆ೪
ವಿರೋಧಿಕೃತ ಸಂವತ್ಸರ ಬರುತಿರೆ ಹೆಜ್ಜೆ ತೋರೆ
ವಿರೋಧಿಗಳ ದೂರೋಡಿಪ ದಿವ್ಯ ಹೆಜ್ಜೆ ತೋರೆ
ಸರೋಜದಳದೊಳು ಶೋಭಿಪ ದಿವ್ಯ ಹೆಜ್ಜೆ ತೋರೆ
ಸುರರೆಲ್ಲರು ಕೊಂಡಾಡುತ ಸ್ತುತಿಪ ಹೆಜ್ಜೆ ತೋರೆ೫
ನಿಗಮವೇದ್ಯಳೆ ನಿನ್ನ ಪೊಗಳುವೆ ಹೆಜ್ಜೆ ತೋರೆ
ಅಗಣಿತ ಮಹಿಮನ ಗುಣಗಳ ಪೊಗಳುವೆ ಹೆಜ್ಜೆ ತೋರೆ
ಬಗೆ ಬಗೆ ಭಕುತರು ಪೂಜಿಪ ನಿನ್ನ ಹೆಜ್ಜೆ ತೋರೆ
ಖಗವಾಹನನೊಡಗೂಡುತ ಬರುವ ಹೆಜ್ಜೆ ತೋರೆ೬
ಕಮಲ ಮುಖಿಯೆ ಕರುಣವ ಮಾಡಿ ಹೆಜ್ಜೆ ತೋರೆ
ಕಮಲನಾಭ ವಿಠ್ಠಲನ್ನ ರಾಣಿ ಹೆಜ್ಜೆ ತೋರೆ
ಕಮಲಾಕ್ಷಿಯರಿಂದ ಪೂಜೆಗೊಳ್ಳುವ ಹೆಜ್ಜೆ ತೋರೆ
ಸುಮನಸವಂದ್ಯನ ಸತಿಯೆ ನಮಿಪೆ ಹೆಜ್ಜೆ ತೋರೆ೭

೪೯
ಹೆಜ್ಜೆಗಳಿವೆ ನೋಡಿರಿ ರಂಗಯ್ಯನ
ಹೆಜ್ಜೆಗಳಿವೆ ನೋಡಿರಿ ಪ
ಹೆಜ್ಜೆಗಳಿವೆ ನೋಡಿರಿ ಮೂರ್ಜಗದೊಡೆಯನ
ಅಬ್ಜಭವಾದ್ಯರ ಹೃದ್ಗ್ರಹವಾಸನ ಅ.ಪ
ಮಧುರಾಪುರದಿ ಜನಿಸಿದನ ಬೇಗ
ಮಾವ ಕಂಸನ ಛೇದಿಸಿದನ
ಚದುರೇರಿಗೊಲಿದ ಶ್ರೀಶನ ದಿವ್ಯ
ಮದನ ಮೋಹನ ಕೃಷ್ಣ
ವಿಧಿ ಭವಾರಾಧ್ಯನ ೧
ಗೋಕುಲವಾಸನೆಂದೆನಿಪ ದಿವ್ಯ
ನಾಕೇಶ ವಂದ್ಯ ಸರ್ವೇಶನ
ಭೀಕರ ದೈತ್ಯರ ಸದೆದನ ಸವ್ಯ-
ಸಾಚಿಯ ರಥದೊಳು ಏಕಾಂತ ನುಡಿದನ ೨
ವೇದ ಚೋರನ ಭೇದಿಸಿದನ ಗಿರಿ
ಭಾರ ಬೆನ್ನಿಲಿ ಪೊತ್ತು ನಿಂತನ
ಆದಿ ದೈತ್ಯನ ಸೀಳಿ ಭೂಮಿಯ ತಂದು
ಕ್ರೂರ ದೈತ್ಯನ ಕರುಳ್ಹಾರ ಮಾಡಿದ ಹರಿಯ ೩
ಬಲಿಯ ದಾನವ ಬೇಡಿದನ ಬಲು
ಛಲದಿ ಕ್ಷತ್ರಿಯರ ಸೋಲಿಸಿದನ
ಲಲನೆಯ ತಂದ ಶ್ರೀವರನ
ಗೊಲ್ಲರ ಕುಲದಲ್ಲಿ ಬೆಳೆದ ಶ್ರೀ
ಚಲುವ ಗೋಪಾಲನ4
ದುಷ್ಟಕಾಳಿಂಗನ ಮದವನಳಿದು
ಮೆಟ್ಟಿನಾಟ್ಯದಿ ಸಿರದಿ ತುಳಿದನ
ಪುಟ್ಟಪಾದದ ದಿವ್ಯ ಚಲುವನ ಗೋವ್ಗ-
ಳಟ್ಟಿ ಹೋಗುವ ನಮ್ಮ ಪುಟ್ಟ ಗೋಪಾಲನ ೫
ಶಂಖು ಚಕ್ರವು ಗದ ಪದ್ಮವು ಹೊಳೆವ
ಕಿಂಕಿಣಿ ಪೈಜನಿನಾದವು
ಬಿಂಕದಿ ಊದುವ ಕೊಳಲಗಾನವು ನಿ-
ಶ್ಶಂಕೆಯಿಂದಲಿ ಭಕ್ತವೃಂದವ ಪೊರೆದನ ೬
ಥಳಥಳಿಸುವ ದಿವ್ಯ ತಿಲಕವು ಹೊಳೆಯೆ
ಬರಿಮೈಯ್ಯ ತೋರುತ ನಿಂತನ
ಕುದುರೆಯನೇರುತ್ತ ಬರುವನ
ಸಿರಿ ಕಮಲನಾಭ ವಿಠ್ಠಲ ಭಕ್ತಪೋಷನ ೭

ಇದು ಶ್ರೀ ವಸುಧೀಂದ್ರರ
೪೮
ಹ್ಯಾಂಗೆ ಶೋಭಿಸುವ ನೋಡೆ ಯಾದವ ಕೃಷ್ಣ
ಹ್ಯಾಂಗೆ ಶೋಭಿಸುವ ನೋಡೆ ಪ
ಮಂಗಳ ಮಹಿಮ ಶ್ರೀರಂಗ ತನ್ನವರಿಗೆ ಅ.ಪ
ಘಲುಘಲು ಘಲುರೆನ್ನುತ ಕಾಲ್ಗಡಗ ನೂ-
ಪುರಗೆಜ್ಜೆ ಸರಪಣಿಯು
ಸರಿಗೆಳೆಯರ ಕೂಡಿ ಮುರಳಿಯ ಧರಿಸುತ
ಹರುಷದಿಂದಲಿ ಸಪ್ತಸ್ವರಗಳ ನುಡಿಸುತ್ತ ೧
ಉಟ್ಟ ಪೀತಾಂಬರವು ನಡುವಿಗೆ ಜರದ
ಪಟ್ಟೆಯ ಚಲ್ಲಣವು
ಗಟ್ಟಿ ಕಂಕಣ ಕೈಗಳಿಟ್ಟು ಕಟಿಯ ಮೇಲೆ
ಭಕ್ತವತ್ಸಲ ಸ್ವಾಮಿ ಸೃಷ್ಟಿಪಾಲಕ ಕೃಷ್ಣ ೨
ಎಳೆ ತುಳಸಿಯ ಮಾಲೆಯು ಕಂಠದಿ ಮೆರೆವ
ಪದಕ ಕೌಸ್ತುಭ ಮಣಿಯು
ನಳಿನ ಲೋಚನೆಯ ಉರದಲ್ಲಿ ಧರಿಸಿಕೊಂಡು
ಚಲುವ ಚನ್ನಿಗನಾಗಿ ಹೊಳೆಯುವ ದೇವನು ೩
ಕೋಟಿ ಸೂರ್ಯರ ಸೋಲಿಪ ಮುಖಕಾಂತಿಯ
ಸಾಟಿಯಾರುಂಟವಗೆ
ನೀಟಾಗಿ ಕರ್ನಕುಂಡಲ ಕಿರೀಟವು ಹೊಳೆಯೆ
ಲಲಾಟದಿ ಕಸ್ತೂರಿ ತಿಲುಕವು ಹೊಳೆಯುತ್ತ ೪
ಕಂಗಳ ಕುಡಿನೋಟದಿ ಸಜ್ಜನರ ಪಾ-
ಪಂಗಳ ಪರಿಹರಿಸಿ
ಮಂಗಳ ಮಹಿಮ ಶ್ರೀರಂಗ ಮೂರುತಿ ಸಾಧು
ಸಂಗ ವಂದಿತ ಸಿರಿ ಕಮಲನಾಭ ವಿಠ್ಠಲ ೫

ಜಯ ಲಕ್ಷ್ಮಿ ಬಾ ಹಸೆಗೆ
೧೨೨
ಜಯ ಲಕ್ಷ್ಮಿ ಬಾ ಹಸೆಗೆ
ಜಯ ಜಯ ಜಗನ್ಮಾತೆ ತ್ರೈಲೋಕವಿಖ್ಯಾತೆ ಪ
ಮುತ್ತಿನ ಮಂಟಪದಿ ರತ್ನಪೀಠವಿರಿಸಿ
ಮುತ್ತೈದೆಯರು ನಿನ್ನ ಅರ್ಥಿಯಲಿ ಕರೆವರು ಅ.ಪ
ಗೆಜ್ಜೆ ಸರಪಣಿ ಕಾಲಗೆಜ್ಜೆ ನಾದದಿಂದ
ಹೆಜ್ಜೆನಿಡುತ ಬಾ ಬಾ ಸಜ್ಜನರಕ್ಷಕಳೆ೧
ಅಚ್ಚ ಜರಿ ಪೀತಾಂಬರ ಹೆಚ್ಚಿನಾಭರಣಗಳು
ಮಿತ್ರೇರಲಂಕರಿಸುವರು ಅಚ್ಚುತನೊಡಗೊಡಿ ೨
ಮುತ್ತಿನ್ಹಾರ ಪದಕ ಜತ್ತಿಲೊಲಿಯುತಿಹುದು
ಹಸ್ತ ಕಡಗ ದೋರ್ಯ ಸಿಸ್ತಿನ ಸುಂದರಿಯೆ ೩
ಕರ್ತೃ ಕಮಲನಾಭ ವಿಠ್ಠಲನರಸಿಯೆ
ಹಸ್ತಿಗಮನೆ ಬಾ ಬಾ ಉತ್ತಮ ಪೀಠಕೆ ೪

ಹಾಡಿನ ಹೆಸರು :ಜಯ ಲಕ್ಷ್ಮಿ ಬಾ ಹಸೆಗೆ
ಹಾಡಿದವರ ಹೆಸರು :ಕುಸುಮಾ ಕೆ. ಎಂ., ಆರತಿ ರಾಣಿ, ಪದ್ಮಾ
ಸಂಗೀತ ನಿರ್ದೇಶಕರು :ನಾರಾಯಣ ಹೆಚ್. ಕೆ.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ದಯಮಾಡಮ್ಮ ದಯಮಾಡಮ್ಮ
ಮಹಾಲಕ್ಷ್ಮಿ
೫೦
ದಯಮಾಡಮ್ಮ ದಯಮಾಡಮ್ಮ
ಹಯವದನನ ಪ್ರಿಯೆ ಪ
ವಿನಯದಿಂದ ಬೇಡುವೆನೆ ಕಮಲನೇತ್ರೆಯೆ ಅ.ಪ
ಶಂಬರಾರಿ ಪಿತನ ರಾಣಿ ನಂಬಿಸ್ತುತಿಸುವೆ
ಅಂಬುಜನಾಭನ ಧ್ಯಾನ ಸಂಭ್ರಮ ಎನಗೀಯೆ ೧

ಗೆಜ್ಜೆಪಾದ ಧ್ವನಿಗಳಿಂದ ಮೂರ್ಜಗ ಮೋಹಿಸುತ್ತ
ಸಜ್ಜನರ ಸೇವೆಗೊಳ್ಳುತ ಜನಾರ್ದನನ ಪ್ರೀತೆ ೨
ತ್ರಿಗುಣಾಭಿಮಾನಿಯೆ ನಿನ್ನ ಪೊಗಳುವ ಭಕ್ತರ
ಬಗೆ ಬಗೆ ತಾಪತ್ರಯಗಳ ಕಳೆದುಮಿಗೆ ಸೌಖ್ಯವ ನೀಯೆ ೩
ಪದ್ಮಾಕ್ಷಿಯೆ ಪದ್ಮಸದನೆ ಪದ್ಮಪಾಣಿಯೆ
ಪದ್ಮನಾಭನಗೂಡುತಲಿ ಹೃತ್ಪದ್ಮದಲಿ ಪೊಳೆಯೆ ೪
ಕನಕಾಭರಣಗಳಿಂದಲಿ ಪೊಳೆಯುವ ಕಮಲನೇತ್ರೆಯೆ
ಕಮಲನಾಭವಿಠ್ಠಲನ ಕೂಡಿಕರುಣದಿ ಬಾರೆತಾಯೆ5

ಹಾಡಿನ ಹೆಸರು :ದಯಮಾಡಮ್ಮ ದಯಮಾಡಮ್ಮ
ಹಾಡಿದವರ ಹೆಸರು :ರಮೇಶ್‍ಚಂದ್ರ
ರಾಗ :ಚಂದ್ರಕೌಂಸ್
ಸಂಗೀತ ನಿರ್ದೇಶಕರು :ಶ್ರೀನಿವಾಸ್ ಟಿ.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಬಾಲಕೃಷ್ಣ ಬಾ ಬಾ ಹರಿ ಬಾಲಗೋಪಾಲ
೨೮
ಬಾಲಕೃಷ್ಣ ಬಾ ಬಾ ಹರಿ ಬಾಲಗೋಪಾಲ
ಸುಶೀಲ ಶ್ರೀಲೋಲ ಪ
ಗೋಕುಲದಿ ಪುಟ್ಟಿ ಆಕಳನೆ ಕಾಯ್ದ
ಗೋವರ್ಧನವನೆತ್ತಿ ಗೋಪವೃಂದ ಕಾಯ್ದ ೧
ಬಾಲತನವ ನೋಡಿ ಪಾಲುಬೆಣ್ಣೆ ಸೂರೆ
ಬಾಲಗೋಪರೊಡನೆ ಚೋರನೆನಿಸಿ ಮೆರೆದ ೨
ಮುರಳಿನಾದಗೈದು ಪರಿಪರಿಯ ಜನರ
ಮರುಳುಗೈಸಿ ಮೆರೆದ ಸುರಮುನಿ ವಂದ್ಯ ೩
ಮಡದಿಯರು ಜಲದಿ ಮುದದಿಂದಾಡುತಿರಲು
ಮದನನಯ್ಯ ವಸ್ತ್ರಗಳನೆ ಕದ್ದ ಚೋರ ೪
ಕಾಳಿ ಮಡುವ ಧುಮುಕಿ ಕಾಳಸರ್ಪನ ತುಳಿದ
ಕಾಮಜನಕ ಹರಿ ಶ್ರೀ ಕಮಲನಾಭ ವಿಠ್ಠಲ೫

ಹಾಡಿನ ಹೆಸರು :ಬಾಲಕೃಷ್ಣ ಬಾ ಬಾ ಹರಿ ಬಾಲಗೋಪಾಲ
ಹಾಡಿದವರ ಹೆಸರು :ಸುಮನಾ ವೇದಾಂತ್, ಮುಕ್ತಾ ಮುರಳಿ, ನಾಗಲಕ್ಷ್ಮಿ, ಅನ್ನಪೂರ್ಣ ಕೆ. ಮೂರ್ತಿ
ರಾಗ :ಕೀರವಾಣಿ
ತಾಳ :ಆದಿ ತಾಳ
ಶೈಲಿ :
ಸಂಗೀತ ನಿರ್ದೇಶಕರು :ಸುಕನ್ಯಾ ಪ್ರಭಾಕರ್
ಸ್ಟುಡಿಯೋ :ಶಂಕರಿ ಡಿಜಿಟಲ್ ಸ್ಟುಡಿಯೊ, ಮೈಸೂರು

ನಿರ್ಗಮನ

ಲಾಲಿ ಲಾಲಿ ಹನುಮ ಲಾಲಿ
೬೫
ಲಾಲಿ ಲಾಲಿ ಹನುಮ ಲಾಲಿ ಬಲಭೀಮ
ಲಾಲಿ ಲಾಲಿ ಮಧ್ವರಾಯ ಗುರುವರ್ಯ ಪ
ತ್ರೇತೆಯಲಿ ರಘುಪತಿಯ ಸೇವೆ ಸಲಿಸಿದವನೆ
ಸೀತೆಯನು ಕಂಡು ರಕ್ಕಸರ ಗೆಲಿದವನೆ
ದೂತರಾವಣಗೆ ನೀತಿಗಳ ಕಲಿಸಿದವನೆ
ಭೀತಿಯಿಲ್ಲದೆ ಲಂಕಾಪುರವ ದಹಿಸಿದವನೆ ೧
ದ್ವಾಪರದಿ ಶ್ರೀ ಕೃಷ್ಣನನು ಪೂಜಿಸಿದವನೆ
ಪಾಪಿ ದುರ್ಯೋಧನಾದಿಗಳ ಗೆಲಿದವನೆ
ಕೋಪದಲಿ ಜರಾಸಂಧನನು ಸೀಳಿದವನೆ
ಶ್ರೀಪತಿಯ ಸೇವೆಯಲಿ ನಿಸ್ಸೀಮನೆನಿಸಿದವನೆ೨
ಮಧ್ವಮತದವರನುದ್ಧರಿಸಿ ಮೆರೆದವನೆ
ಶ್ರದ್ಧೆಯಿಂದಲಿ ಹರಿಯ ಭಜಿಪ ಗುರುವರನೆ
ಮುದ್ದು ಕಮಲನಾಭ ವಿಠ್ಠಲನೊಲಿಸಿದವನೆ
ಶುದ್ಧ ಮೂರುತಿ ಉಡುಪಿ ಕೃಷ್ಣನರ್ಚಿಸಿದವನೆ೩

ಹಾಡಿನ ಹೆಸರು :ಲಾಲಿ ಲಾಲಿ ಹನುಮ ಲಾಲಿ
ಹಾಡಿದವರ ಹೆಸರು :ರಮೇಶ್ ಚಂದ್ರ
ಸಂಗೀತ ನಿರ್ದೇಶಕರು :ಹೇಮಂತ್ ಬಿ. ಆರ್.
ಸ್ಟುಡಿಯೋ :ಗಣೇಶ್ ಕುಟೀರ, ಬೆಂಗಳೂರು

ನಿರ್ಗಮನ

ವಂದಿಪೆ ನಾ ನಿನ್ನನು ಸೊಂಡಿಲ

ಗಣೇಶ ಪ್ರಾರ್ಥನೆ
ವಂದಿಪೆ ನಾ ನಿನ್ನನು ಸೊಂಡಿಲ ಗಣಪ ಧ
ಬಂದೆನ್ನ ಸಲಹೊ ನೀನು ಪ
ಪುಂಡರೀಕಾಕ್ಷನುದ್ದಂಡ ಪರಾಕ್ರಮ
ಕೊಂಡಾಡಿಸುವಿ ವಕ್ರತುಂಡನೆಂಬರೊ ನಿನ್ನ ಅಪ
ಪಾಶಾಂಕುಶಧರನೇ ಮೋದಕ ಹಸ್ತ
ಭಾಷಿಗ ನೀನಹುದೋ
ಆಶಾಪಾಶಗಳಿಂದ ಘಾಸಿಗೊಂಡಿಹ ಮನ
ಬೇಸರ ಕಳೆದೆಮ್ಮ ಪೋಷಿಪನನು ತೋರೊ ೧
ಗೌರಿಯ ವರಪುತ್ರನೆ ಪ್ರಾರ್ಥಿಸುವೆ ಶ್ರೀ-
ಶೌರಿಯ ಪಾದ ಸ್ಮರಣೆ
ಗೌರವದಿಂ ಮಾಳ್ಪ ಶೌರ್ಯ ಎನಗೆ ಕೊಟ್ಟು
ಮಾರ ಪಿತನ ಪಾದ ತೋರಿಸು ತವಕದಿ ೨
ಅಂತರಂಗದ ಶತ್ರುಗಳಿಂದಲಿ ಮನ
ಚಿಂತೆಗೆ ಗುರಿಗೈಸಿತೊ
ಎಂತು ಈ ಭವ ದಾಂಟುವಂಥ ಪಥವ ಕಾಣೆ
ಕಂತÀÄಪಿತನ ಪಾದ ಚಿಂತನೆ ಕೊಡಿಸಯ್ಯ ೩
ವಾನರ ನಿಕರದೊಳು ಶ್ರೇಷ್ಠನ ಪ್ರಭು
ವಾರಿಧಿಯನು ಬಂಧಿಸೆ
ಆದಿಮೂರುತಿ ನಿನ್ನ ಆರಾಧಿಸಿದನೆಂಬ
ಸೋಜಿಗ ಸುದ್ದಿಯು ಮೂರ್ಜಗದೊಳಗುಂಟು4
ಕಮಲ ನಾಭವಿಠ್ಠಲ ಭಕ್ತರ ಹೃದಯ
ಕಮಲದೊಳಗೆ ಶೋಭಿಪ
ಮಿನುಗುವ ಮಧ್ವಮಂಟಪದೊಳು ರಾಜಿಪ
ಸನಕಾದಿವಂದ್ಯನ ಕ್ಷಣ ಬಿಡದಲೆ ತೋರು ೫

ಹಾಡಿನ ಹೆಸರು :ವಂದಿಪೆ ನಾ ನಿನ್ನನು ಸೊಂಡಿಲ
ಹಾಡಿದವರ ಹೆಸರು :ಫಯಾಜ್
ಸಂಗೀತ ನಿರ್ದೇಶಕರು :ಪ್ರವೀಣ್ ಗೋಡ್ಖಿಂಡಿ
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ