Categories
ರಚನೆಗಳು

ಪರಿಶಿಷ್ಟಂ

೪೬೭
ಸರಳಕವಿ ರಾಮಾರ್ಯ ಹರುಷದಿ
ವಿರಚಿಸಿದ ವರವೆಂಕಟೇಶನ
ಪರಮಲೀಲೆಯ ಚರಿತೆಯುನ್ನತ ಕೀರ್ತಿಯಾಂತಿಹುದು
ನರರ ಭಕ್ತಿಯ ಪೆರ್ಚಿಸಲ್ಕಿದು
ಕರದ ದಿವ್ಯಜ್ಯೋತಿಯಪ್ಪುದು
ಬರೆದಕವಿಯಾಸೂರಿವಂಶದ ಶರಧಿಚಂದಿರನು ೧
ಭರತಭಕ್ತಿ ಯೆನಿಪ್ಪ ಚರಿತೆಯ
ಬರೆದು ತಾನೇ ಭರತನಾಗಿಹ
ಪರಿಯ ತೋರುವ ಭಕ್ತಿಬೋಧಕ ಭಾವಭಂಗಿಯಲಿ
ಸರಸ ಸರಳತೆ ಲಲಿತಪದಗಳ
ಶರಧಿಯಪ್ಪುದು ಕಾವ್ಯಮಿದನಾ
ದರದಿ ಮುದ್ರಣಗೊಳಿಸಿ ಹಂಚಿದ ಕವಿಯು ಧನ್ಯನಲೇ ೨
ಕವಿ ವಿಶಿಷ್ಠಾದ್ವೈತತತ್ವೋ
ದ್ಭವನು ಹರಿಹರ ಭೇದರಹಿತನು
ನವರಸಾಲಂಕೃತಯುತ ಗೋಕರ್ಣ ಮಹಿಮೆಯನು
ಶಿವನ ಸನ್ನುತಿಗೈದು ರಚಿಸುತೆ
ಭುವಿಯ ರಕ್ಷಣೆಗೈವ ಶಿವಕೇ
ಶವರ ನಾಮವನೇಕ ವೊಬ್ಬನೆ ದೈವತಾನೆಂಬ ೩
ಭಕ್ತಿಕಾವ್ಯಂಗಳನು ರಚಿಸಿಹ
ಭಕ್ತನೀತನ ವಹ್ನಿಪುರಕಾ
ಸಕ್ತಿಯಾಂತೈತರ್ಪುದೆಂದೆವು ವೇಂಕಟೇಶ್ವರನ
ಭಕ್ತಿಬೋಧಕ ಕೃತಿಗೆ ಮಂಗಳ
ದುಕ್ತಿಯುತ್ಸವಕಾಗಿ ನಾವತಿ
ಭಕ್ತಿ ಸುಸ್ವಾಗತವನೀವೆವು ಕೈಗಳಂ ಮುಗಿದು ೪
ಕೃತಿಯ ರಚನೆಗೆ ಮೋಹಗೊಂಡೆವು
ಕೃತಿಯನೋದಿಸಿ ಕೇಳಿ ನಲಿದೆವು
ಕೃತಿಯ ಬರೆದಾ ಕವಿಯ ಭಕ್ತಿಗೆ ಮನವ ತೆತ್ತಿಹೆವು
ಕೃತಿಯ ಕರ್ತಗೆ ಮಣಿದು ಮಹದುಪ
ಕೃತಿಯ ಗೈದಿಹಿರೆಂಬುದಲ್ಲದೆ
ಕೃತಿಯ ಬರೆದವಗಾವಭಾಗ್ಯವನಿತ್ತು ತಣಿಸುವೆವು೫
ಸರಳ ಕವಿಯೆಂದೆನಿಸಿ ರಂಜಿಪ
ಪರಮಭಕ್ತನಿಗಿಂದು ವಂದಿಸಿ
ನೆರೆದ ಪಂಡಿತ ಪೌರಸಭಿಕರ ನೇಮಗಳಪೊತ್ತು
ಹರಿಯ ಪಾದಂಗಳಿಗೆ ವಂದಿಸಿ
ವರಕವಿಗೆ ‘ಕವಿರತ್ನ’ ನೆನ್ನುವ
ಬಿರುದನೀವೆವು ಸರಳಕವಿವರನಿದನು ಕೈಗೊಳಲಿ ೬
ಗಮಕಕೋಕಿಲನೆನಿಪ ಕೌಶಿಕ
ನಮಲಕೃತಿವಾಚನವಗೈಯಲು
ಅಮಿತಸಂತಸದಿಂದ ವಿವರಿಸುತಂತರಾರ್ಥಗಳ
ಕ್ರಮದಿ ಪೇಳಲು ಸೂರ್ಯನಾರಣ
ನಮಿತ ಹರ್ಷಾಂಬುಧಿಯೊಳಿಳಿಯುತೆ
ರಮೆಯ ರಮಣನ ಪಾದಕೆರಗಿದ ಸರಳಕವಿರತ್ನ೭
ಆ ಮಹಾಮುನಿ ಸೂತನಂದದಿ
ರಾಮಚರಿತಾಮೃತವ ರಚಿಸುತೆ
ಕಾಮಿತಾರ್ಥವನೀವ ವೇಂಕಟಪತಿಯ ಚರಿತೆಯನು
ಆ ಮಹೇಶ್ವರನಾತ್ಮಲಿಂಗವು
ಭೂಮಿಗಿಳಿದಾಕಥೆಯ ಕಾವ್ಯವ
ನೀ ಮಹಾಮತಿ ರಚಿಸಿ ಮುಕ್ತಿಯ ಮಾರ್ಗವಿಡಿದಿಹನು೮
ಸರಳಕವಿರತ್ನನಾಸೂರಿ ರಾಮಾರ್ಯತಾಂ
ವಿರಚಿಸಲಿ ಸದ್ಭಕ್ತಿ ಕಾವ್ಯಗಳನೋರಂತೆ
ಸಿರಿಕಾಂತನೀತಂಗೆ ದೀರ್ಘಾಯುರಾರೋಗ್ಯಗಳ ಕುಡಲಿ ಕಡುಕೈಪೆಯೊಳು
ನೆರೆ ಗಮಕ ಕಲೆಯ ಸತ್ಕೀರ್ತಿ ವಿಸ್ತರಗೊಳಲಿ
ಸಿರಿಗನ್ನಡಂ ಚಿರಂ ಬಾಳ್ಗೆ ಸುಕ್ಷೇಮದಿಂ
ವರವಹ್ನಿಪುರದರಸನೆಲ್ಲರಂ ರಕ್ಷಿಸಲಿ ಭದ್ರಂ ಶುಭಂ ಮಂಗಳಂ೯

೪೬೮
*ಸುದಿನ ದುರ್ದಿನಮೆಂಬುದವರವರ ಸಂಪ್ರಾಪ್ತಿ
ಸುದಿನಮದು ಜನಿಸಿದೊಡೆ ದುರ್ದಿನಮದಳಿಯಲ್ಕೆ
ವಿಧಿಲೀಲೆ ಜನನಮರಣಂಗಳೈ ರಕ್ತಾಕ್ಷಿ ಮಧುಮಾಸ ಸಿತಪಕ್ಷದ
ಸದಮಲಾನ್ವಿತಮಪ್ಪ ತಾರಗೆಪುನರ್ವಸೂ
ವಿಧುವಾರ ಪೂರ್ವಾಹ್ನಮಾಸೂರಿ ನಾಮಮೆದಿ
ರೆದ ರಾಮಸ್ವಾಮಿಯೈಂಗಾರ್ಯನೇರಿದಂ
ಮಾಂಗಿರಿಯ ರಂಗಪದಮಂ ೧
ಬಂಧುಜನÀಮಿತ್ರರ್ಗೆ ದುರ್ದಾಂತ ದುರ್ದಿನಂ
ಸಂದಮಾಂಗಿರಿರಂಗಪದನಳಿನಮಂ ಸೇರ್ದ
ಸಿಂಧುಪುತ್ರಂ ಬಳಗದಾಸೂರಿಯಾತ್ಮಮದು ಚಿರಶಾಂತಿಯಂಪಡೆಯಲೈ
ಚೆಂದವಹ ಕಮಲಮದು ಕಮನೀಯ ಕಾಂತಿಯಿಂ
ದಂದವಡೆದಿರ್ಪುದೇ ನಿಡುಗಾಲಮದು ಬಳಿಕ
ಕುಂದದಿರದೇಂ ನಿಜದೆಯಾದರ್ಶಜೀವನಂ ಶ್ರೀರಕ್ಷೆಯಲ್ತೆ ನಮಗೆ ೨
ವರಮಹಾಲೆಕ್ಕಿಗರ ಶಾಖೆಯೊಳ್ ಪರಿಣತಿಯ
ಕರಣಿಕಂ ತಾನಾಗಿ ವಿಶ್ರಾಮ ಜೀವನದೆ
ಸರಸಕಾವ್ಯಾದಿ ಪದರಚನೆಯಿಂ ಗಮಕಿಗಳ ತಣಿಸಿಯಾನಂದಮುಣಿಸಿ
ಸಿರಿಲೋಲ ಸುವಿಲಾಸ ಗೋಕರ್ಣಮಹಿಮೆಯಂ
ಭರತಮಾರುತಿಭಕ್ತಿಯಾಳ್ವಾರುವೈಭವಂ
ಸರಿಸದಲಿ ಕಾವ್ಯಪಂಚಕ ರಚಿಸಿ ಪಂಚತ್ವವೈದಿದರ್ ಧನ್ಯರಲ್ತೆ ೩
ಕಿವಿಚುರುಕು ನಿಡುಮೂಗು ದೃಷ್ಟಿಪಾಟವಹೊಳಪು
ಸವಿನೆನಪಿನಂಗಳಂ ಬೇವುಬೆಲ್ಲದಪದರು
ರವಿಯೆಡೆಗೆ ನಿಟ್ಟಯಿಸಿ ಧೀರ್ಘಾಯುವೆಂದೆನಿಸಿ, ಶರದಶಕಗಳ ಕಳೆದನು
ಇವಗೆ ಮಣಿವುದೆ ಬೆಲ್ಲ ಹರಿಚಿಂತನೆಯಬಲ್ಲ
ದಿವರಾತ್ರಿ ಸಂತೃಪ್ತಿ ಮಾಳ್ಪಕಾರ್ಯಂಗಳಲಿ
ತವಕದಿಂ ಸುತ್ತುವರೆದಿರ್ಪರೈ ಹಿರಿತನದ ನಮ್ರತೆಗೆ ಬೆರಗಾಗುತ ೪
ಸುತರತ್ನರೀರ್ವರಂ ಸುತೆಯರಂ ಸೊಸೆಯರಂ
ಹಿತಮಪ್ಪಮೊಮ್ಮಂದಿರಂ ನೆಂಟರಿಷ್ಟರಂ
ಮಿತವಚನದಿಂ ನಲಿಸಿ ಮನದಳಲಿಗೆಡೆಮಾಡಿ ವೈಕುಂಠಮಂ ಸೇರಿದೈ
ಶತಪತ್ರಲೋಚನದ ಪರಿಚರ್ಯೆಯಂ ಗೈದು
ಶತವರುಷಮಂ ತುಂಬುಜೀವನವ ತಾಳ್ದೆ ಸ
ತ್ಪಥವಿಡಿದು ನಿನಗಾತ್ಮಶಾಂತಿಯುಂಟಾಗಲೈ ತವಕುಲಂ ವರ್ಧಿಸಿರಲೈ೫