Categories
ರಚನೆಗಳು

ಭಟಕಳ ಅಪ್ಪಯ್ಯ

ಮಂಗೇಶದೇವಾಲಯ
ದೇವ ಗುರುಸ್ತುತಿ
೪೨೮
ಅಂಗವೇ ಶ್ರೀ ಮಹಾಂಗಿರೀಶ ಲಿಂಗವಾದುದು
ಸಂಗ ಸುಖದ ದುರಿತವೆಲ್ಲ ಹಿಂಗಿ ಪೋದುದು ಪ
ನಿರ್ಮಲಾತ್ಮ ಗುರುಕಟಾಕ್ಷ ಮರ್ಮಸಿಕ್ಕಿತು
ಕರ್ಮ ಹರಿದು ಜ್ಞಾನಜ್ಯೋತಿ ಬೆಳಕು ಮಿಕ್ಕಿತು
ಧರ್ಮ ತತ್ವದಮೃತವೆಂಬ ಶರಧಿಯುಕ್ಕಿತು
ಪ್ರೇಮದಿಂದ ಪ್ರಕಟವಾದ ಬ್ರಹ್ಮ ದಕ್ಕಿತು ೧
ಮಾಯೆಯಿಂದ ಮಮತೆಯೆಲ್ಲ ಸತ್ಯವಾದುದು
ನ್ಯಾಯಪಥವ ತಿಳಿಯೆ ಸರ್ವ ಮಿಥ್ಯವಾದುದು
ಸಾಯುತೊಡನೆ ಹುಟ್ಟುವುದರ ಭೀತಿಪೋಪುದು
ಕಾಯದೊಳಗೆ ದಿವ್ಯಜ್ಯೋತಿ ಪಥ್ಯವಾದುದು ೨
ಪರಶಿವಾತ್ಮಲಿಂಗವೆನ್ನ ಮನಕೆ ಸಾರಿತು
ಬೆರೆದು ಸ್ವಯಂಜ್ಯೋತಿ ತುಂಬಿ ತುಳುಕಿ ಬೀರಿತು
ಪರಮಾನಂದರಸದ ಲಹರಿ ಉಕ್ಕಿ ಹರಿಯಿತು ೩

 

೪೨೯
ಅಂತರಂಗದ ಸುಖ ಹೇಳುವುದಲ್ಲಾ
ಸಂತೋಷವೆಂಬುದು ಶಿವನೊಬ್ಬ ಬಲ್ಲ ಪ
ಗುರುಕೊಟ್ಟ ಮಂತ್ರದ
ಪರರ್ಯಾರು ಅರಿಯದಂದದಲಿ ಈ ಪ್ರಾಣ
ಪರಮನೊಳಾಡುವುದು ಆತನ ದಿವ್ಯ
ಚರಣನೋಡುವುದು ಆಂತರ್ಯದ ಸ್ವಾನುಭವ
ಅರಿಯದ ಜನರಿಗೆ ೧
ಧ್ಯಾನಿಸಿ ನೋಡಲು ದೃಢವಿಡಿದಾಡಲು
ಜ್ಞಾನ ದೀಪದ ಜ್ಯೋತಿ ಗಗನ ವೇರಿದ ಪ್ರತಿ
ಭಾನುವುದಿಸಿದಂದದಿ ಪ್ರಕಾಶಮಾನ ಸದಾನಂದದಿ
ಅಂತರ್ಯದ ಸ್ವಾನುಭವ ಅರಿಯದ ಜನರಿಗೆ ೨
ಪರಶಿವಾತ್ಮಕ ಮೂರ್ತಿ ಪರಮನಾಗಿಹ ಅರ್ಥಿ
ಎರಕವಾಗಿಹ ಲಕ್ಷಾ ಎಣಿಕೆ ಇಲ್ಲದ ಮೋಕ್ಷಾ
ಶರಧಿಯೊಳಾಡುವುದು ಶಕ್ತಿಯ ಮರ್ಮ
ವರಕೃಪಮಾಡುವುದು ವಿಮಲಾನಂದ
ಗುರುಕಟಾಕ್ಷದ ಬಗೆ ಅರಿಯದ ಜನರಿಗೆ ೩

 

೪೩೦
ಅಂತರಾತ್ಮನ ದ್ಯಾನವನ್ನು ಅಂತರಂಗದಿ ಮಾಡೋ ನೀನು
ಸಂತತ ನಿರ್ಮಲನಾಗಿ ನಲಿದಾಡು ಮನವೆ ಪ
ನರದೇಹಕ್ಕೆ ಬಂದು ನೀನು
ಇರುವಂಥಾ ಸಾರ್ಥಕವೇನು
ಗುರುಕರುಣಕವಚವ ತೊಟ್ಟು
ಕರ್ಮವ ಸುಟ್ಟು
ಮರೆತು ಮಾಯಾ ಮೋಹವೆಲ್ಲವ
ತರಿದು ಷಢ್ವೈರಿಗಳ ಶಿರವನು
ಸರಸ ಹೃದಯದಿ ಮೆರೆವ ಜ್ಯೊತಿಯ ಬೆಳ
ಗಿರುವ ಕೋಟಿಪ್ರಕಾಶದಂತಿಹ ೧
ಬಿಡದೆ ಶ್ರೀ ಗುರುವಿನ ಪಾದಾ
ಪಿಡಿದು ನಿತ್ಯಾನಂದ ಬೋಧಾ
ಕಡಲ ತೆರೆಯೊಳು ಮಿಂದು ಕಾಮನ ಕೊಂದು
ಅಡಿಗಡಿಗೆ ತತ್ವಾಮೃತರಸ
ಕುಡಿದು ಸರ್ವಾಂಗದಲಿ ಬೇಧಿಸಿ
ನಡುವಿರಳು ಶೀತ ಕಿರಣಕೋಟಿಯ
ಪಡೆಯಕಟ್ಟಿದ ತರಣಿಯಂತಿಹ ೨
ಮಂದಮತಿಯ ಕಳೆದು ಚಿದಾ
ನಂದನ ಶ್ರೀ ದಿವ್ಯಪಾದ ಹೊಂದಿ ಬ್ರಹ್ಮಾ
ನಂದರಸವಾ ಬಿಡದೆ ಸೇವಿಸುವ ಶಿವಾ
ನಂದವನು ಕೈಕೊಂಡು ವಿಮಲಾ
ನಂದ ದತ್ತಾತ್ರೇಯನೊಳಾಡುವಾ
ಎಂದಿಗೂ ಆಳವಿಲ್ಲದಾತ್ಮನ
ಚಂದವನು ನೋಡುತ್ತನಿನ್ನೊಳು ೩

 

ಮೂಕಾಂಬಿಕೆಯ ಮೇಲೆ ರಚಿಸಿದ ಪದ್ಯ
೪೩೧
ಅಂಬಾ ತ್ರಿಪುರ ಸುಂದರೀ ಅದ್ವೈತಕಾರೀ
ಸಾಂಬೆ ಪರಬ್ರಹ್ಮಣಿ ಪ
ಶುಂಭಾಸುರ ಮರ್ದಿನೀ ಸಹಜಾನಂದೆಕ್ಯವಾಣಿ
ತುಂಬುರಗಾನ ಪ್ರಿಯೆ ಮಹಾಮಾಯೆ
ಸುಖದಾಯೆ ಸರಸಿಜದಳಾಯೆ ಅ.ಪ.
ತ್ರಿದಶ ವಂದಿತೆ ತ್ರಿಮೂರ್ತಿ ತ್ರೈಲೋಕ್ಯಗಾತ್ರಿ
ತ್ರಿಗುಣರಹಿತೆ ಪಾರ್ವತಿ ತ್ರಿಪುರ ಪ್ರಹಾರೆ
ದೇವೀ ತ್ರಿಶೂಲಧರ ಸಂಜೀವಿ
ತ್ರಿಗುಣ ಸೋಮ ಸೂರ್ಯಗ್ನಿ ನೇತ್ರೆ
ಶುಭಗಾತ್ರೆ ಸುಚರಿತ್ರೆ ಸನ್ಮುನಿಸ್ತೋತ್ರೆ ೧
ಪರಶಿವೇ ಪರಶಾಂಭವಿ
ಪರತರದೇವಿ ಪರಮಪಾವನ ಪ್ರಭಾವಿ
ಪರಮಾತ್ಮ ಸ್ವರೂಪಿಣಿ ಪರಮಾನಂದೆಕ್ಯವಾಣಿ
ಪರಿಪೂರ್ಣಭರಿತೆ ಶರ್ವಾಣಿ
ಶಿವರಾಣಿ ಫಣಿವೇಣಿ ನಿತ್ಯಕಲ್ಯಾಣಿ ೨
ವರಕೊಡಶಾದ್ರಿ ನಿವಾಸೆ ವರಸುಪ್ರಕಾಶೆ
ವರ ಸಿಂಹಾ ರೂಢೆ ಮಹೇಶೇ
ವರದೇ ಶ್ರೀ ಮೂಕಾಂಬಿಕೇ
ವಿನುತಾನಂದೈಕ್ಯರೂಪಿ ಗುರುವಿಮಲಾನಂದ ಸ್ವರೂಪಿ
ಸುಪ್ರತಾಪಿ ಸ್ತುತಿ ದೀಪಿ ಮಂತ್ರಕಲಾಪಿ ೩

 

೪೩೨
ಅಂಬಾ ಮೂಕಾಂಬಾ ಪಾಹಿ ಭಕ್ತಾವಲಂಬಾ
ಅಂಬಾ ಮೂಕಾಂಬಾ ಪಾಹಿ ಪ
ಶುಂಭ ದನುಜ ಸಂಹಾರಿಣಿ ತಾರಿಣೇ
ಶಾಂಭವಿ ಶೂಲಿನಿ ವರಗೌರೀ
ಅಂಬುಜಾಕ್ಷಿ ಅಸುರಾಸುರ ವಂದಿತೆ
ಸಾಂಬಶಿವೇ ಸಚರಾಚರ ಸಾಕ್ಷಿಣೆ ೧
ಕಾಮ ಜನನಿ ಕರುಣಾ ಜಲಧೇ
ಶ್ರೀ ಮಹಾವೈಷ್ಣವಿ ಶುಭ ಫಲದೇ
ಕಾಮೇಶ್ವರಿ ಕಮಲಾಸನ ಸನ್ನುತೇ
ಭೀಮ ಪರಾಕ್ರಮಿ ಭವಭಯ ಭಂಜಿನಿ ೨
ವರ ಕುಟಿಜಾಚಲಪುರ ನಿಲಯೇ
ಸುರಮುನಿ ಸೇವಿತೆ ಸಹೃದಯೇ
ಶರಣಾಗತ ಪರಿಪಾಲಿತೆ ಸುಲಲಿತೆ
ಗುರುವಿಮಲಾನಂದಭರಿತೆ ಮೂಕಾಂಬಿಕೆ ಶ್ರೀ ಶ್ರೀ ಶ್ರೀ ೩

 

೪೩೩
ಆನಂದಮಯನಾದೆ ನಾನು ದಿವ್ಯ
ಜ್ಞಾನಾಮೃತವನುಂಡು ಪೇಳಲಿನ್ನೇನು ಪ
ಶರೀರ ಭ್ರಾಂತಿಗಳನೆಲ್ಲ ಕಳೆದು ಕರ್ಮ
ದುರಿತ ಸಂಸಾರ ಆಶಾಪಾಶವಳಿದು
ನರನೊಳಗೆ ನರನಾಗಿ ಸುಳಿದು ಸರ್ವ
ಪರಿಪೂರ್ಣ ಭರಿತ ತಾನೆಂಬುದು ತಿಳಿದು ೧
ಗುರುಕಟಾಕ್ಷದ ನೆಲೆ ನೋಡಿ ತಿರುಗಿ
ಬರುವ ಹೋಗುವ ಭ್ರಮೆಗಳನೀಡಾಡಿ
ಶರಣರ ಸ್ತೋಮದಿ ಕೂಡಿ ಭವ
ಶರಧಿಯ ದಾಟಿ ಹಂಸಾತ್ಮಕನೊಳಾಡಿ ಆನಂದ ೨
ಗುರುಚರಣಗಳ ಧ್ಯಾನಿಸುತಾ ಒಡನೆ
ಎರಕವಾದಂತೆ ಬೇರೂರಿತು ಚಿತ್ತಾ
ವರವಿಮಲಾನಂದ ಗುರುದತ್ತಾತ್ತೇಯನ
ಕರುಣಾಸಮುದ್ರದೊಳ್ಬೆರೆದು ನಲಿವುತ್ತಾ ಆನಂದ ೩

 

೪೩೪
ಆನಂದಾ ಅದ್ವೈತಾ ಬಲ್ಲವರಿಗೆ ನಿತ್ಯಾನಂದ ಪ
ಆನಂದಾ ಅತಿ ಸಾಧುಗಳಲಿ ಸಹ
ಜಾನಂದಾ ಸುಖಸಮಾಧಿಯಲಿ ಬೋ
ಧಾನಂದಾ ಭಕ್ತ ವೃಂದದಲಿ
ಆನಂದ ಸುಖಮಯ ಸರ್ವಭರಿತ ಸಚ್ಚಿ
ದಾನಂದಾಮೃತ ರಸಪಾನದೊಳಿರುವ-
ದೊಂದಾನಂದಾ ಅದ್ವೈತ ೧
ಒಳಹೊರಗೊಂದಾಗಿರುವಾ ಹೊಳ
ಹೊಳದ ಹಂಬಲಿಸದೆ ಮೆರೆವಾ ಥಳ
ಥಳಿಸುವ ತನಿರಸಸುರಿವಾ
ಕಳೆಯಮಧ್ಯದಿ ನಲಿನಲಿದು ಬ್ರಹ್ಮಾನಂದ
ತಿಳಿದು ಬೋಧಜ್ಞರ ಬಳಿಯಲಿರುವುದೊಂದಾನಂದಾ ಅದ್ವೈತ ೨
ಪರಮ ಪುರುಷರ ಸ್ತೋಮದಲಿ ಪರಾ
ತ್ಪರ ತತ್ವ ವರವಿಚಾರದಲಿ ಹರಿ
ಹರರಿಗೊಂದಿಸುವ ಹಾದಿಯಲಿ
ಚರಿಸುತ್ತ ಚತುರ್ಥಮಂಟಪದ ಮದ್ಯದಲಿ
ಇರುವಂಥಾ ಸದ್ಗುರು ಪರಶಿವಭರಿತ ವಿಮಲಾನಂದಾ ಅದೈತ ೩

 

೪೩೫
ಈಗಿದ್ದ ಇರವೇ ಮನುಜರಿಗೆ ಈಗಿದ್ದ ಇರವೇ ? ಪ
ಮಾಯಾಪ್ರಪಂಚದ ಬಲೆಯ ಪಾಶಕ್ಕೆ ಸಿಕ್ಕಿ
ಕಾಯದೊಳಿಹ ಪರಮಾತ್ಮನನರಿಯದೆ ಅ.ಪ.
ನರರ ಯೋನಿಗೆ ಬಂದು ನಡತೆ ಸಜ್ಜನರೆಂದು
ಬರಿಯ ಬನ್ನಣೆಯೊಳು ಬೆರೆತಿಹರಲ್ಲದೆ
ಶರೀರ ಸುಖವನ್ನೆಲ್ಲ ಮರೆತು ತನ್ನಾತ್ಮನೊಳಿರುವ
ಸುಖವು ತಾನು ಬಯಸಬೇಕಲ್ಲದೆ ಈಗಿದ್ದ ೧
ಮಂದಮತಿಗಳಾಗಿ ಮಮತೆಮಾರ್ಗಕೆ ತಾಗಿ
ಅಂದಣದೈಶ್ವರ್ಯ ಬಯಸುವವರಲ್ಲದೆ
ಹೊಂದಿಸಿ ಸಚ್ಚಿದಾನಂದ ಬ್ರಹ್ಮದಿಮನ
ಬಂದಾಗಿ ನಲಿಸಿ ವಿರಕ್ತಿಯ ಬಂದಿಯೊಳ್ಬಲಿಸಿ
ನಿಂದು ನಿಜದ ನಿರುಪಮನೆ ನಿತ್ಯಾತ್ಮನೆ
ಎಂದು ಕುಂದದೆ ಸಹಜಾನಂದನಾಗದ ಮೇಲೆ ಈಗಿದ್ದ ೨
ಪರಮಪುರುಷರಾದ ಪ್ರಹುಢ ಸಂತರ ಪಾದ
ಸ್ಮರಣೆಯ ನಿರುತ ಮಾಡಿರಬೇಕಲ್ಲದೆ
ಪರತತ್ವಮಯನಾದ ಗುರುಮಹಾರಾಯನ
ಕರುಣವ ಪಡೆದು ಕಣ್ಣಿನೊಳು ಶ್ರೀ
ಚರಣವ ಪಿಡಿದು ಬರಿಯಮಾತಲ್ಲವೆಂದರಿತು ಪೂರ್ಣ ಬ್ರಹ್ಮ
ಗುರುವಿಮಲಾನಂದ ಭರಿತನಾಗದ ಮೇಲೆ ಈಗಿದ್ದ ೩

 

ಶ್ರೀಗುರುವು ಮೊದಲ ಬಾರಿಗೆ
೪೩೬
ಎಂದಿಗೆ ದೊರಕುವನು ಶ್ರೀಗುರುವನ
ಗೆಂದಗೆ ದೊರಕುವನು ಪ
ಮಂದಮತಿಯ ಕಡೆಗ್ಹೊಂದಿಸಿ ಸಚ್ಚಿದಾ
ನಂದ ಬ್ರಹ್ಮನ ಕೃಪೆಯಿಂದ ಪಾಲಿಸಿದಾತಾ ಅ.ಪ.
ಕರುಣದಿ ಕರದು ತನ್ನಾ ತೊಡೆಯ ಮೇಲ್ಕು
ಳ್ಳಿರಿಸಿ ಶರಧಿಯೊಳೀಡಾಡಿ ಈಶ್ವರನ
ತೋರಿದ ಗುರು ಎಂದಿಗೆ ೧
ತನ್ನ ತಾ ತಿಳಿವವೊಲು ತತ್ವನಸಾರ
ವನ್ನು ಸಾಧುಗಳಿಂದಲಿ ಚೆನ್ನಾಗಿ ಅರಿತುಕೊಳ್ಳೆಂದು
ಅಮೃತಪಾನವನ್ನು ಮಾಡಿಸಿದ
ಪ್ರಸನ್ನವದನ ಗುರು ಎಂದಿಗೆ ೨
ಹುಟ್ಟಿಸಾಯದಂದದಿ ವಾಕ್ಯದ ಮದ್ದು
ಕೊಟ್ಟು ಜೀವನ್ಮುಕ್ತಿಯ ಪಟ್ಟವ
ಗಟ್ಟಿ ಫಣಿಗೆ ಮಂಗಲಾಕ್ಷತೆ
ಇಟ್ಟ ವಿಮಲಾನಂದ ಬಟ್ಟೆದೋರಿದ ಗುರು ೩

 

ಶಿವಮೊಗ್ಗ ಜಿಲ್ಲೆಯ
೪೩೭
ಎನ್ನ ಮೋಹನ ತುಪಾಕಿಯನು ಪಿಡಿದು ಹಸ್ತದಲಿ
ಚೆನ್ನಾಗಿ ಶೃಂಗರಿಸುವೆ ಪ
ಭಿನ್ನಭಾವನೆಯ ಕಳಿದುಳಿದು ಕೋವಿಗೆ ಮತ್ತೆ
ಇನ್ನು ಜೋಡಿಲ್ಲವೆಂದು ಇಂದು ಅ.ಪ.
ಪ್ರೇಮರಸವೆಂಬ ಜಲದಲಿ ತೊಳೆದು ಶುಚಿಮಾಡಿ
ನೇಮವೆಂದೆಂಬ ನಿರ್ಮಲವಾಗಿಹ
ಆಮಹಾಕನಕ ರಜತದ ಭೂಷಣವ ತೊಡಿಸಿ
ಕಾಮವನು ಸುಟ್ಟು ಮಸಿಮಾಡಿ ತುಂಬುವೆನದಕೆ ಎನ್ನೆ ೧
ಹಮ್ಮಮತೆಯೆಂಬ ಗುಂಡನು ಅದರಮೇಲಿರಿಸಿ
ಒಮ್ಮನಸು ಎಂಬ ಗಜದಿಂದ ಜಡಿದು
ಒಮ್ಮೆ ಗುರುವಾಕ್ಯರಂಜಿಕೆಯ ಕಿವಿಯೊಳಗರದು
ಬಿಮ್ಮನೇ ಬಿಗಿದು ಈಕ್ಷಿಸಿ ನೋಡುವೆ ಎನ್ನ ೨
ಮೆರೆವ ಸುಜ್ಞಾನ ಜ್ಯೋತಿಯ ಬತ್ತಿಯನು ಕೊಳಿಸಿ
ಭರದಿ ಬರುತಿಹ ಅಷ್ಟಮದ ಕರಿಗಳಾ
ತರಿದಾರು ವೈರಿವರ್ಗಕೆ ಕೆಡಹಿ ಗುರಿಯಿಂದ
ಗುರುವಿಮಲಾನಂದ ರಸಭರಿತನಾಗಿರುವಂಥ ೩

 

ಪುಣ್ಯ ಸ್ತ್ರೀ ಪಂಚತ್ವವನ್ನೈದಾಗ
೪೩೮
ಕಾಶಿಯಿಂದ ಬಂದ ಬಾಗೀರಥಿಯು ತನ್ನ
ವಾಸಕ್ಕೆ ತೆರಳಿದಳು ಲೀಸಾಗಿ ತನ್ಹ ಮನದ ಸಂಕಲ್ಪವು
ವಾಸಿಯಾಗಲು ತನ್ಹಾಶೆ ಪೊರೈಸಿಸಿ ಪ
ಮದದಾನೆ ತನ್ನ ಕಾಲುಗಳ ಸಂಕೋಲೆಯ
ನೊದೆದು ಕಳೆವ ತೆರದಿ
ಪದುಳದಿ ಶ್ರೀಗುರು ಮುದದಿ ಬಿಡಿಸಿ ತನ್ನ
ಸದಮಲಾನಂದವ ಸತತ ಪಡೆವೆನೆಂದು ೧
ಮುತ್ತೈದೆತನದಿ ತೆರಳಿಹೋಗಬೇಕೆಂಬ
ಚಿತ್ತದಿವಿಸ್ಮರಣೆಗೈದು
ಪ್ರತ್ಯುಗಾತುಮ ಆತ್ಮಾರಾಮನ ಸಂಗಡ
ಚಿತ್ತೈಸಿದಳು ತನ್ನ ಉತ್ತಮ ಕಾಶಿಗೆ ೨
ಪತಿಯ ವಚನದ ಸಂಗತಿಗಳ ಕೇಳುತ
ಅತಿ ಹಿತ ತನಗಾಗಲು
ಮತಿಗೆ ಮಂಗಲವಾದ ಮುಕುತಿಯ ಸಾಧಿಸಿ
ನುತ ವಿಮಲಾನಂದ ಸತತ ಪಡುವೆನೆಂದು ೩

 

ನಗರದ ಅರಮನೆ ಬಾಗಿಲಿನ
೪೩೯
ಗುಡಿಗುಡಿಯನು ಸೇದಿ ನೋಡೋ ನಿನ್ನ
ಒಡಲೋಳಗಿರುವ ರೋಗಗಳನೀಗಾಡೋ ಪ
ಬುರುಡೆ ಎಂಬುದು ಈ ಶರೀರಪಡೆ
ದಿರುವ ಸುಕೃತವೆ ಕೊಳವೆಯಾಕಾರಾ
ಹರಿನಾರಾಯಣನೆಂಬ ನೀರಾ ಇದ
ನರಿತು ನೀ ಸೇದಿಕೊ ಬಲು ಮೋಜುಗಾರಾ ಗುಡುಗುಡಿ ೧
ಮನವೆಂಬ ಸಂಚಿಯ ಬಚ್ಚಿ ದಿನ
ದಿನದಿ ಪತಾಕವೆಂಬ ಭಂಗಿಯ ಕೊಚ್ಚಿ
ತನುವಿನ ಚಿಲುಮೆಯೊಳ್ಬೆಚ್ಚಿ ಗುರು
ಧ್ಯಾನದ ಕೆಂಡದುರಿಯ ತಂದ್ಹಚ್ಚಿ ಗುಡುಗುಡಿ ೨
ಸದ್ಯದಿ ಅಮಲೇರುವುದು ದಾರ್ರಿದ್ರ್ಯ
ದುಃಖವ ಸುಟ್ಟು ಹೊಗೆ ಏಳುವುದು
ತೋರುವುದು ಗುರು ಬುದ್ಧಿಗೆ ಮಾರ್ಗ
ಸಿದ್ಧ ವಿಮಲಾನಂದ ಪದಕೆ ಕೊಡುವುದು ಗುಡುಗುಡಿ ೩

 

೪೪೦
ಗುರು ಕೃಪೆ ಯಾಗದ ನರಜನ್ಮ ವ್ಯರ್ಥಾ
ಅರಿತು ನೀ ಸಾಧಿಸು ಘನಪರಮಾರ್ಥಾ ಪ
ಭೇದವರ್ಜಿತನಾಗಿ ಸ್ವಾದ ಸೇವಿಸಬೇಕು
ಸಾದು ಸಜ್ಜನ ಪಾದ ತೀರ್ಥಾ ೧
ಭಕ್ತಿಭಾವಾರ್ಥ ವಿರಕ್ತಿಯಿಂದಾಗಬೇಕು
ಮುಕ್ತಿಮಾನಿನಿಗೆ ತಾಂ ಕರ್ತಾ ೨
ವರಸಚ್ಚಿದಾನಂದ ಬ್ರಹ್ಮದಿಂದೆಸೆವ
ಗುರುವಿಮಲಾನಂದ ಸಮರ್ಥಾ ೩

 

೪೪೧
ಗುರುಕೊಟ್ಟ ಭಾಗ್ಯ ವೈರಾಗ್ಯ ಇದ
ನರಿತು ಅರ್ಚಿಸಲು ಲಿಂಗೈಕ್ಯಕೆ ಯೋಗ್ಯ ಪ
ಘನವಾದ ವೈರಿ ಸಂಸಾರ ಮಾಯಾ
ವನಿತೆ ಇಕ್ಕಿದ ಮದ್ದು ದುಃಖದಾಕಾರಾ
ಮನವೆ ಶುದ್ಧಾತ್ಮವಿಚಾರಾ ನೀನು
ನೆನೆದು ಮರೆಯದಿರು ಗುರು ಉಪಕಾರಾ ೧
ನಗಿಸಿ ಅಳಿಸುವುದು ಕುಂದು ಭಕ್ತ
ರಘವ ನಿವಾರಿಸಿ ಸಲಹಬೇಕೆಂದು
ಮೃಗಧರ ರೂಪಿಲಿ ಬಂದು ಸ್ವಾಮಿ
ಸೊಗಸಾಗಿ ಶ್ರೀ ಗುರುಚಿತ್ತಕೆ ತಂದು ೨
ಜೋಡಿಲ್ಲದೈಶ್ವರ್ಯದಿಂದಾ ಹೋ
ಗಾಡಿಸೋ ಘೋರಸಂಸಾರದ ಬಂಧಾ
ನೋಡೋ ನಿತ್ಯಾತ್ಮನ ಚಂದಾ ನಲಿ
ದಾಡೋ ಎನ್ನನು ಗುರು ವಿಮಲಾನಂದಾ ೩

 

೪೪೩
ಗುರುವೆ ಸಂಸಾರವಿದು ಸ್ಥಿರವೇ ಬರಿದೆ ನಾ
ಮೆರೆವೆ ಧರವೇ ವಿಷಯಂಗಳಲಿ ವಿಶ್ವಾಸಾ ವಿರಕ್ತಿಗೆ ಮೋಸಾ
ಎಲ್ಲ ಉಪಾಧಿಯೊಳು ಸುಖವಿಲ್ಲ ಅನುಭವಿ ತಾಂ ಬಲ್ಲ
ವಲ್ಲೆನೆಂದರೆ ಎನಗದು ಬಿಡದಲ್ಲ
ಈ ನುಡಿ ಪುಸಿಯಲ್ಲ ಗುರುವೆ
ಆಗ ಈಗೆಂಬ ಶರೀರದ ಭೋಗ ತೀರಿಸಿಕೊಂಡು
ಹೋಗಬೇಕೆಂಬ ಚಿಂತೆ ಎನಗೆ ಮುಕ್ತಿಯಮನೆಗೆ ಗುರುವೆ ೧
ಆಶಾಪಾಶದಲಿ ಶರೀರದ ಘಾಸಿಯಾಗದಂತೆ ಪ್ರ
ಕಾಶ ಹಣವೇ ರೂಪಾಗಿ ಎನ್ನ ನೋಡೋ
ನಿನ್ನಂತೆ ಮಾಡೊ ಗುರುವೆ ೨
ಹಣವೆ ಮುಂದಿಲ್ಲ ಕೊಟ್ಟ ಋಣವೇ ತೀರಿಸಲಿಕ್ಕೆ
ಗುಣವೇ ನೀ ಕೊಟ್ಟದ್ದುಂಟು ಎನಗೆ ನಿರುತ
ನಾ ಬೆಳಗೆ ಗುರುವೆ ೩
ನಿನಗೆ ಎಣೆಯಾದ ವಸ್ತು ಎನಗೆ ಸಿಕ್ಕುವುದುಂಟೇ
ಬಾರಯ್ಯ ಬಲು ಕೃಪೆಯಿಂದ ಗುರು ವಿಮಲಾನಂದಾ ಗುರುವೆ ೪

 

ಸ್ಥಾವರ ಜಂಗಮ
೪೪೨
ಗುರುವೆನ್ನ ತಾಯಿ ಸದ್ಗುರುವೆನ್ನ ತಂದೆ
ಗುರುಕೃಪೆ ಪಡೆದು ನಾ ಹೆಸರಿಗೆ ಬಂದೆ ಪ
ಗುರುವೆನ್ನ ಪ್ರಾಣಲಿಂಗಾ
ಗುರುವೆನ್ನ ಇಷ್ಟಲಿಂಗಾ
ಗುರುಪ್ರಕಾಶವು ಬೆಳಗುತಿರೆ ಸರ್ವಾಂಗಾ
ಗುರುಸ್ಮರಣೆ ಸುಖರಂಗಾ
ಗುರುಕರುಣಾ ಕೃಪಾಂಗಾ
ಗುರುವಿಂದಧಿಕ ಕಾಣೆ ಶಿವನಾಣೆ ಗುರುವೆನ್ನ ೧
ಗುರುವೆ ಈ ಪೃಥವಿಯು
ಗುರುವೆ ಆಕಾಶವು
ಗುರುವೆ ಸ್ಥಾವರ ಜಂಗಮವೆಲ್ಲವು
ಗುರುರೂಪವೆಂದು ಶ್ರೀ ಗುರು ಕರುಣದಂದರಿತು
ಗುರು ಸರ್ವರಿಗೆ ಸರಿಯಲ್ಲಾ ಶಿವಬಲ್ಲ ೨
ಗುರುವೆ ದೇವಾಂಗಾ ಶ್ರೀ
ಗುರುವೆ ಬಸವಲಿಂಗಾ
ಗುರು ಬ್ರಹ್ಮವಿಷ್ಣುರುದ್ರ ಸ್ವರೂಪ
ಗುರು ಧರಣಿಪಾಲಾ
ಗುರು ವಿಮಲಾನಂದ ಲೋಲಾ
ಗುರು ಸಿದ್ಧೇಶ್ವರಸ್ವಾಮಿ ಭಕ್ತ ಪ್ರೇಮಿ ೩

 

ಗೋಕರ್ಣದ ಮಹಾಂಕಾಳಿಯ
ಮಂಗಳ ಪದ್ಯಗಳು
೪೭೫
ಜಯ ಜಯ ಶ್ರೀ ಮಹಾಕಾಳಿ ಗೋಕರ್ಣೆ
ಮಹಾಬಲ ಪೂಣ್ಯವಧು
ಭಯವಿರಹಿತ ಭವನಾಶಿನಿ ಸುಲಲಿತೆ
ಭಕ್ತ ಜಿಹ್ವಾಗ್ರ ಮಧು ಪ
ಪರಮೇಶ್ವರಿ ಪರಿಪೂರ್ಣಾಂಬಿಕ ನಿಜ
ಪರಮಾನಂದ ಪರೇ
ಪರತರವಸ್ತು ಪರಾತ್ಪರ ಶಾಂಭವಿ
ಸುರಮುನಿ ಅಭಯಕರೇ ಜಯಜಯ ೧
ವೀಣಾ ಪುಸ್ತಕಧಾರಿಣೆ ಅಗಣಿತ
ಪಾನಪಾತ್ರಪ್ರಿಯೇ
ವಾಣಿನಿತ್ಯಕಲ್ಯಾಣಿ ವಂದಿತಗುಣ
ಶ್ರೇಣಿ ಮುನೀ ಸಾಹ್ಯೇ ಜಯಜಯ ೨
ಹರಿಮೋಹಿನಿ ಹರಿವಾಹಿನಿ ಗಿರಿಸುತೆ
ಹರಿಣಾಂಕಿಣಿ ಭವ್ಯಮುಖೆ
ಹರಿಹರ ಅಜತ್ರಯ ಶಕ್ತಿ ಸ್ವರೂಪಿಣಿ
ಹರಿಸಖ ಪ್ರಾಣಸಖೇ ಜಯಜಯ ೩
ಸರ್ವಗುಣನಿಲಯೇ ಸರ್ವಾತ್ಮಕಿ
ಸರ್ವಯಂತ್ರರೂಪೇ
ಶರ್ವಾಣೆ ಸರ್ವೇಶ್ವರಿ ಸದಾಶಿವೇ
ಸರ್ವ ಮಂತ್ರರೂಪೇ ಜಯಜಯ ೪
ಮೂಲಾಧಾರೇ ಮುಕುಂದಾರ್ಚಿತ ಪದ
ಬಾಲಾ ತ್ರಿಪುರಹರೇ
ಮಾಲಿನಿ ಮಂತ್ರಾತ್ಮಕಿ ಮಹಾದೇವಿ ತ್ರಿ
ಶೂಲಿನಿ ಶಶಿಶಿಖರೇ ಜಯಜಯ ೫
ನಿತ್ಯಾರ್ಚನಿ ಸುಖಭೋಗಿನಿ ಸುಲಲಿತೇ
ನಿತ್ಯಾನಂದಮಯೇ
ನಿತ್ಯಾನಿತ್ಯ ಸ್ವರೂಪಿಣಿ ನಿರ್ಗುಣೆ
ಸತ್ಯ ಸಾಧು ಹೃದಯೇ ಜಯಜಯ ೬
ಶಂಭಾಸುರಮಹಿಷಾ ಸುರಮೇಕ್ಷಕ
ದಂ¨ ಮುಕುಟಧರೇ
ಅಂಬಾ ಶ್ರಿ ಮಹಾಕಾಳಿ
ವಿಮಲಾನಂದ ಸುಖ ಶರೀರೇ ಜಯ ಜಯ ೭
ಇತಿ ಶ್ರೀ ಮಹಾಕಾಳ್ಯಷ್ಟಕ ಸ್ತೋತ್ರಂ
ತ್ರಿಕಾಲಪಠತೆ ನಿತ್ಯಂ ನಿತ್ಯಂ
ನತಿಸುತಧನ ಪೌತ್ರಾದಿ ಕೃತಾರ್ಥಂ
ಭವತಿ ಸತ್ಯಂ ಸತ್ಯಂ ಜಯಜಯ ೮

 

ಮಂಗೇಶ ದೇವರ ಮೇಲೆ ರಚಿಸಿದ
೪೭೬
ಜಯದೇವ ಜಯದೇವ ಜಯಮಹಾಂಗಿರೀಶಾ
ಸ್ವಯಂಜ್ಯೋತಿ ಬೆಳಗುವೆ ಸಚ್ಚಿತ್ಸುಖತೋಷಾ ಪ
ಸರ್ವರಲಿ ನೋಡಿದರೂ ನೀನಲ್ಲದೆ ಇಲ್ಲಾ
ಉರ್ವಿಯಾಕಾಶ ದಶದಿಕ್ಕುಗಳೆಲ್ಲಾ
ಸರ್ವೇಶ್ವರವೆಂಬದು ಸರ್ವಾಂಗದೆಲ್ಲಾ
ಪಾರ್ವತೀಶ್ವರನೆಂಬುದು ಬಲ್ಲವನೆ ಬಲ್ಲಾ ಜಯದೇವ ೧
ಸಕಲ ಸುಖದುಃಖವೆಂಬುದು ನಿನ್ನ ಲೀಲೆ
ಅಖಿಲ ಅಂಡಗಳೆಂಬ ಭೋಜನಶಾಲೆ
ಭಕುತಿ ಭಾಗ್ಯೆಂಬ ಜ್ಞಾನದ ದೀಪಜ್ವಾಲೆ
ಪ್ರಕಟಿಸುವಂತೆ ಎತ್ತುವೆ ನಿನ್ನ ಮೇಲೆ ಜಯದೇವ ೨
ಪರಿಶುದ್ಧಾತ್ಮಕದೇವಾ ನಿರುತ ನಿರ್ದೋಶಾ
ಸಕಲಜನರ ಹೃದಯಕಮಲ ನಿವಾಸಾ
ದುರಿತದಾರಿದ್ರ್ಯ ಭವದುಃಖವಿನಾಶಾ
ಗುರು ವಿಮಲಾನಂದ ಶ್ರೀ ಮಹಾಂಗಿರೀಶಾ ೩

 

೪೪೪
ದೀಪ ಬೆಳಗುವಾಗಾ ಉಣ್ಣುವರುಣ್ಣಿರೋ ಬೇಗ ಬೇಗಾ
ದೀಪ ಲೋಪವಾದಮೇಲೆ ಬರಿದಪ್ಪುದು ಭೋಜನಶಾಲೆ ಪ
ಚಿತ್ತಶುದ್ಧಿಎಂಬ ಎಳೆಬಾಳೆಎಲೆ ಎಡೆಮಾಡಿ
ನಿತ್ಯನಿರ್ಮಲವೆಂಬ ರಾಜಾನ್ಹವ ನೀಡಿ
ಸತ್ಯಸಾಧುಸಂಗವೆಂಬ ಘೃತಸಾರಾನ್ಹವ ನೀಡಿ
ಪ್ರತ್ಯುಗಾತಮ ಆತ್ಮನ ನಿರಂತರ ತೃಪ್ತಿಬಡಿಸಿ ನೋಡಿ ದೀಪ ೧
ಗುರುಕೃಪೆಯೆಂದೆಂಬ ಪರಡಿಯ ಪಾಯಸದಾಹಾರಾ
ನಿರುತಾನ್ಹ ಉದಾನಮಾಡಲು ಷಡುರಸದುಪಚಾರಾ
ಹರಿಹರ ಭೇದಗಳಡಗಿದನು ಭವಾಮೃತ ಸಾರಾ
ಪರಉಪಕಾರಕೆ ಶರೀರವ ತೆರುವುದು
ಪೊಸದುಪ್ಪದಭಾರಾ ದೀಪ ೨
ಕೆಂದ ಆಕಳ ಕರೆದು ಕಾಸಿದ ಕ್ಷೀರವ ಕೈಕೊಂಡು
ತಂದೆ ತಾಯ್ಗಳ ಭಕುತಿ ಮಾಡಿದ ಮಸುರೋಗರ ಉಂಡು
ವಂದಿಸಿ ಶ್ರೀ ಗುರು ವಿಮಲಾನಂದನ ಸೈಂದವನೊಳಗೊಂಡು
ಹೊಂದಿದ ಮಾಯಾಕ್ಷುಧೆಯನು ಹಿಂದಿಸಿ
ತೇಗುತ ಮೆರದುಂಡು ೩

 

ಕುಲದೇವತೆ ಮಹಾಲಕ್ಷ್ಮೀಯ
೪೪೫
ದೇಹಿ ತವ ಭಕ್ತಿ ದೇವಾದಿಶಕ್ತಿ ಮೋಹನಮಯ ಮೂರ್ತಿ ಧೃತ
ಹೇಮವರ್ಣ ಸರ್ವಾಂಗ ಶೋಭಿತೆ ಕಾಮಿತಾರ್ಥ ಉದಾರಿಣಿ
ಕಾಮಜನನಿ ಕಿರೀಟ ಕುಂಡಲ ಪಾಣಿ ಪಾತ್ರ ಸುಧಾರಿಣಿ
ಸೋಮ ಸೂರ್ಯ ಪ್ರಕಾಶೆ
ಸುರಮುನಿಸ್ತೋಮ ಹೃದಯ ಸಂಚಾರಿಣಿ
ತಾಮಸ ಕೃತ್ಯ ದೈತ್ಯವನ ಸಂಹಾರೆ ಕಾಲ ಕಠಾರಿ ಪರಶಿವೆ ೧
ಅಂಬುಜಾನನೆ ಸಕಲ ಕುಟುಂಬ ರಕ್ಷಕ ಮೋಹಿನಿ
ಶಂಭುದಾನವ ಶಿಕ್ಷಿತೆ ಶಿವ ಪ್ರತಿಬಿಂಬೆ ಸಿಂಹ ಸುವಾಹಿನಿ
ಕಂಬುಕಂಧರ ರತ್ನ ಭೂಷಿತೆ ತುಂಬರ ಪ್ರಿಯಗಾಯಿನಿ
ಅಂಬಿಕಾ ಶ್ರೀಯ ಅಮೃತಪೂರಿತ ಕುಂಭ ಕುಚಯುಗೆ
ಕುಮುದ ಲೋಚನೆ ೨
ವರದ ಅಭಯ ಕರಾಂಬುಜೇಷಣೆ ವೀಣಾ ಪುಸ್ತಕ ಶೋಭಿತೇ
ಪರಮ ಪಾವನ ಚರಿತೆ ಪರಮೇಶ್ವರಿ ಪ್ರತಾಪ ವಿರಾಜಿತೆ
ಭರಿತ ಬಂಧ ಕಟಾದಿವಾಸಿನಿ ಭಕ್ತ ಸಜ್ಜನ ಪೂಜಿತೆ
ಗುರು ವಿಮಲಾನಂದ ದೇವಿ ಶ್ರೀ ಮಹಾಲಕ್ಷ್ಮೀ ಸಂತತ ೩

 

ಕೊಲ್ಲೂರು ಮೂಕಾಂಬಿಕೆಯ
೪೪೬
ನಾನಿನ್ನ ಪಾದದ ಬಳಿಗೆ ಬಂದೆನು ಹೂವಾ
ಕೊಡಿಸೆ ಭಕ್ತರ ಒಡಂಬಡಿಸೆ
ಮನದ ಅಜ್ಞಾನವ ಬಿಡಿಸೆ ಮನಕೆ ಸಂತೋಷವ ಕೊಡಿಸೆ
ಬಸುರೊಳಗಿದ್ದಾಗ ಕಾಯ್ದವರ್ಯಾರು
ಮೊಲೆಯುಣ್ಣಿಸಿ ತೊಟ್ಟಿಲೊಳ್
ಶಿಶುವಾಗಿದ್ಧಾಗ ಸಲಹಿದವರ್ಯಾರು
ಮಾಯೆ ನೀನೊಬ್ಬಳೆ ತಾಯೆ
ಭಕ್ತರ ಸಂತತ ಕಾಯೆ ಶಾಂತೇಶ್ವರಿ ಮಾಹಾಮಾಯೆ ನಾನಿನ್ನ ೧
ಬರವೋದ ಕಲಿಸಿದ್ಯಾಕ ನೀನು ಸಂಗೀತ
ಸಪ್ತಸ್ವರ ಭೇದವ ತಿಳಿಸಿದ್ಯಾಕೆ ನೀನು
ನಿನ್ನಿಂದ ಬಲ್ಲವರಿಲ್ಲ ಮತ್ತೊಬ್ಬರು ತಿಳುಹುವರಿಲ್ಲ ನಾ
ಪೇಳುವ ನುಡಿ ಪುಸಿಯಲ್ಲ ನಾನಿನ್ನ ೨
ವರಕೊಲ್ಲಾಪುರದ ಶ್ರೀ ದುರ್ಗಾಂಬಾ ನಾನಿನ್ನ ಪಾದದ
ಸ್ಮರಣೆ ಬಿಡೆನು ಶ್ರೀ ಮೂಕಾಂಬಾ ಅಡಿಗಡಿಗೆ ನಾ
ಶರಣೆಂಬೆ ಸಲಹುವ ಪುತ್ಥಳಿಗೊಂಬೆ ಶಾಂತೇಶ್ವರಿ
ಶ್ರೀ ಮೂಕಾಂಬೆ ನಾನಿನ್ನ ೩

 

ಸಾಗರದ ಅಮಲದಾರರ
೪೪೭
ನಿಜದ ನೆನಪು ನಿನಗಿರಲಿ ಮತ್ತೆ
ಅಜನ ಲಿಖಿತದಿ ಬಂದುದೆಲ್ಲಾ ಬರಲಿ ಪ
ಹುಟ್ಟಿಬಹಾಗ ತಂದಿಲ್ಲಾ ಶಿವ
ಕೊಟ್ಟ ಸರ್ವಸ್ವ ಸಂಗಡ ಬಹಾದಲಾ
ಬಟ್ಟೆ ಬೈಲಾಗುವುದೆಲ್ಲಾ ಮನ
ಮುಟ್ಟಿ ಭಜಿಸೊ ಗುರುನಾಥನ ಸೊಲ್ಲಾ ನಿಜದ ೧
ಸುಖದ ಸುದ್ದಿಯ ನಂಬಬೇಡಾ ಬಹು
ದುಃಖ ತಂದೊಡ್ಡುವುದಕೆ ತಡಮಾಡಾ ಸುಖ
ದುಃಖ ತನದೆಂದು ನೋಡಾ ನಿತ್ಯ
ಮುಕುತಿ ಮಾರ್ಗದಲಿ ಚಿತ್ತವ ನೀಡೋ ಗಾಡಾ ನಿಜದ ೨
ನಿನ್ನೊಳು ಶೋಧಿಸಿನೋಡು ಪ್ರ
ಸನ್ನವಾಗಿಹ ಪ್ರಕಾಶದಲಿ ಲೋಲಾಡು
ಭಿನ್ನಭಾವನೆಯನೀಡಾಡು ವ್ಯು
ತ್ಪನ್ನ ಶ್ರೀ ಗುರುವಿಮಲಾನಂದನ ಪಾಡು ನಿಜದ ೩

 

೪೪೯
ನಿಜವೆಂದು ತಿಳಿದು ಪೂಜಿಸೋ ಗುರುಚರಣ
ತ್ಯಜಿಸೋ ನೀ ಮಾಯಾ ಪ್ರಪಂಚದ ಸ್ಮರಣಾ ಪ

ರಮಣೀಯರ್ಮೋಹವೆಂಬುದು ದೊಡ್ಡಶರಧಿ
ಭ್ರಮಿಸಿ ನೀ ಮುಳುಗುತ್ತೇಳುವೆ ವ್ಯರ್ಥಭರದಿ ನಿಜ
ಸತ್ತು ಹುಟ್ಟುವ ದೇಹ ಸಾಧ್ಯವ ಮಾಡಾ ಅ
ನಿತ್ಯ ಪ್ರಪಂಚ ದೊಳ್ಕೆಡಬೇಡ ಮೂಢಾನಿಜ
ನೀರ ಮೇಲಣ ಗುಳ್ಳೆಯಂತೆ ಶರೀರಾ
ಬಾರಿಬಾರಿಗೆ ಸತ್ತು ಜನಿಪ ವಿಚಾರ ನಿಜ
ಎಂದಿಗೂ ಮರಣತಪ್ಪದು ಕೇಳುಮರುಳೆ
ಚಂದ್ರಶೇಖರನಾ ಧ್ಯಾನಿಸು ಹಗಲಿರುಳೆ ನಿಜ
ಗುರುವಿಮಲಾನಂದ ಸ್ಮರಣೆಯ ಮಾಡೋ
ಜನನ ಮರಣದ ಭಯವ ನೀಗಾಡೋ ನಿಜ

 

ಸಕಲ ವೇದಾಂತದ
೪೪೮
ನಿನ್ನೊಳಗೆ ನೀ ತಿಳಿದುನೋಡು ನಿರ್ಮಲನಾಗಿ ಪ
ನಿನ್ನೊಳಗೆ ನೀ ತಿಳಿದುನೋಡು
ಚೆನ್ನಾಗಿ ಗುರುಭಕ್ತಿಯ ಮಾಡು
ಭಿನ್ನಪದಾರ್ಥಗಳನ್ನು ಬಯಸದೆ
ಅನನ್ಯಭಾವದಿ ನಿಜವನ್ನು ನಿತ್ಯಾತ್ಮನ
ನರದೇಹದಿಂದಧಿಕವಿಲ್ಲಾ
ಸ್ಥಿರವಾಗಿ ನಿಂದಿರುವುದಲ್ಲಾ
ಬರಿದೆ ಕೆಡಿಸುವುದು ಸಲ್ಲಾ
ಗುರುತಿಗೆ ಬೆರೆಸಲು ಬಲ್ಲಾ
ಗುರುನಾಥನಿಂದುಪದೇಶವಾ ಕೈಕೊಂಡು ಇ
ತರ ಪರಿಕರಂಗಳ ಆಶಾಪಾಶವಾ ವರ್ಜಿಸಿ ನಿನ್ನ
ದುರಿತ ದುಃಖ ವಿನಾಶವಾಮಾಡಲು ಭವ
ಶರಧಿಯ ದಾಟುವಾ ಆಯಾಸವಾ ನಿಲ್ಲುವದಿನ್ನು
ಕುರಿತುಮನದಲಿ ತಿಳಿದುನೋಡು ಕಾಂಡುವ
ಆರು ಅರಿಗಳ ವಿಚ್ಛೇಧನ ಮಾಡು ಅವಿದ್ಯೆಯನ್ನು
ಶರಗು ಹಿಡಿದು ಹೊರಗೆ ದೂಡು ಹಮ್ಮಿನಹಲ್ಲು
ಮುರಿದು ನಿನ್ನೊಳಗೆ ಕೂಡು
ಹರಿಚರಣದೊಳಾಡು ಗುರುಮಂತ್ರವನುಚ್ಚರಿಸಿ ಕರ್ಪೂರವನು

 

ಉರಿವ ಜ್ಯೋತಿಯಲಿ ಬೆರೆವಂತೆ
ಜಗದೊಳಿರುವುದೆಲ್ಲ ನಶ್ವರಸಂತೆ ನೋಡೆ
ಮರೆವದೆಲ್ಲ ನಿಮ್ಮಯ ಪಿಂತೆ ಇಲ್ಲಿ
ಬರುವದೆಲ್ಲ ಬಯಲಿನ ಭ್ರಾಂತಿ
ಅರಿತಮಹಾತ್ಮರ ಚರಣನರಸಿಜಕೆ
ಎರಗಿ ತತ್ವಾನಂದ ಭರಿತನೆಂದೆನಿಸುವ ನಿನ್ನೊಳಗೆ ೧
ವಾದಿಸಿ ಶುದ್ಧತತ್ವದ ಹಾದಿಯ ಬಲ್ಲವರಾದ
ಸಾದು ಸತ್ಪುರುಷರಪಾದ ಕೊಡಿ ಶ್ರೀ ಗುರುಪ್ರಸಾದ
ಸಾಧಿಸಿ ಸವಿಯನು ಬೇಡಿಕೊ
ಬ್ರಹ್ಮಾನಂದದ ಬೋಧೆಯಿಂದ ನೀ ಲೋಲಾಡಿಕೊ
ನಿತ್ಯನಿರ್ಮಲವಾದ ವಸ್ತು ನೀ ದೃಢಮಾಡಿಕೊ
ಅಂತರಾತ್ಮನ ಶೋಧಿಸಿ ಸಜ್ಜಾಗಿ ನೋಡಿಕೊ
ಅಷ್ಟರಮೇಲೆ ಹಾ ಧನ್ಯಧನ್ಯನೆನಿಸಿ ಮೆರೆವ ವರ್ಣಾಶ್ರಮದ
ಭೇದವಳಿದು ಮಾಯೆಯ ಜರಿವೆ
ನಿತ್ಯಾನಂದವಿನೋದಕೆ ಮಹಾತ್ಮರನು ಕರಿವೆ
ನೋಡಲು ದ್ವೈತವಾದ ಮಿಥ್ಯವೆಂಬುದನರಿವೆ
ಭೂಮಂಡಲದ ವೇದಸುಶಾಸ್ತ್ರಪುರಾಣಾಗಮಗಳಾದಿ
ಮಧ್ಯಾಂತ ಶ್ರೀ ಗುರುದೇವಾ
ಬಹುಆದರವಿಡಿದು ಶಿಷ್ಯರಕಾವಾ
ಸಂಪಾದಿಸಿಕೊಡುವಾ ಮುಕ್ತಿಯಠಾವಾ
ನಿತ್ಯಾರಾಧಕರಿಗೆ ಸದ್ಗತಿಗಳನೀವಾ
ಶ್ರೀಧರವರಗಂಗಾಧರ ಕಮಲಜರಾದ
ತ್ರಿಮೂರ್ತಿಗಳಾದರೆಂತೆಂಬುದ ನಿನ್ನೊಳಗೆ ೨
ಚಿತ್ತಶುದ್ಧಿಯನ್ನೆ ಮಾಡಿ ಸತ್ಯಸದಾಚಾರ ಗೂಡಿ
ನಿತ್ಯನಿರ್ಮಲದೊಳಗಾಡಿ ಪ್ರತ್ಯುಗಾತುಮನ ನೋಡಿ
ಇತ್ತಣದ ಹಂಬಲವ ಬಿಡಬೇಕು ತನುಮನಧನ
ಜೊತ್ತಾಗಿ ಶ್ರೀ ಗುರುವಿಗೆ ಕೊಡಬೇಕು ಕರುಣದವಜ್ರ
ಕೆತ್ತಿದ ಕವಚವನು ತೊಡಬೇಕು
ಭಕ್ತಿವೈರಾಗ್ಯದುತ್ತರಕೆ ತಾನೊಡಂಬಡಬೇಕು ಇಂತಾಗಿ
ಬಿಡಬೇಕು ಇಂತಾಗಿ ಬಿಡದೆ
ಮತ್ತಿ ತಾತ್ವರ್ಥವ ತಿಳಿದು ಕಾಣುಕಾಣದರೊಳು
ಪ್ರತ್ಯಕ್ಷ ಹೊಳದಾಡುವ ಚಿದ್ಭಾನು ಪ್ರಕಾಶವನ್ನು
ಅತ್ಯಧಿಕತೆಯಿಂದಲೀವನು ಜ್ಞಾನಿಗಳೊಳು
ವಿಸ್ತಾರ ವಸ್ತು ವಿಚಾರವನು ಮಾಡಿ ನೋಡಿದರೆ
ಕತ್ತಲೆ ಬೆಳಕೆರಡಿಲ್ಲದು ಸ್ವಯದಲಿ
ಎತ್ತನೋಡಿದರು ಪ್ರಜ್ವಲಿಸುವುದು ತಾಂ
ಉತ್ತಮಾನಂದದಿ ಸಲಿಸುವುದು ಗುರು
ಭಕ್ತರ ನಿಜದಲಿ ನಿಲಿಸುವದು
ಸುತ್ತು ಮುತ್ತು ಸುಳಿದು ತಾನೆ ಬಯಸುವದು
ನೆತ್ತಿಯೊಳಗೆ ಹೊಳೆಯುತ್ತಿಹ ಜ್ಯೋತಿಯು
ಎತ್ತಿತೋರಿತು ವಿಮಲಾನಂದ ಬ್ರಹ್ಮನ ನಿನ್ನೊಳಗೆ ೩

 

ಅಪ್ಪಯ್ಯನವರ ಪರಿಚಾರಕನಾದ
೪೫೦
ನೆರೆನಂಬಿದೆನು ನಾನಿನ್ನ ಪಾದಾಂಬುಜವನು
ಕರುಣದಿ ಸಲಹೋ ಎನ್ನಾ ಪ
ಹರನದೊಡೆಯ ಗೌರಿ ವರನಾಗಿ ಮೆರೆದಿಹ
ಸ್ಮರಹರ ಕರ್ಪೂರ ಧವಳಾಂಗಾ
ರಿಪುಭಂಗಾ ದೇವತುಂಗಾ ಮೃಢೇಶ್ವರಲಿಂಗಾ
ದೇವರದೇವ ನೀನೆಂದು ರಾವಣ ಬಂದು
ದೇವಾ ನೀ ಸಲಹೋ ಇಂದು
ಭಾವಕಿ ಬೇಡಿಕೊಂಡರೆ ಭಾವಜೆಯವಗೆ ನೀ
ಭಾವಿಸಿ ವರವಿತ್ತ ಹರನೇ ಶಂಕರನೇ ಮೃಗಧರನೇ
ಪಾರ್ವತೀಶ್ವರನೇ ನೆರೆ
ಹರಿಧರಹರನೀನೆಂದು ಹರಿಯುತಾ ಬಂದು
ಹರನೆ ರಕ್ಷಿಸೋ ನೀ ಎಂದು ಕರದು
ಹರಿಮಿತ್ರನ ಕರುಣದಿ ವರವಿತ್ತ ಕರಿಗೊರಳನೆ
ನಾಗಭೂಷಾ ಅಘನಾಶಾ ಮುನಿತೋಷಾ
ಅಮಿತಸರ್ವೇಶಾ ನೆರೆ
ಪಡುಗಡಲೊಡೆಯನೆಂದು ಪಾಡುತಬಂದು
ಪೊಡವಿಯೊಳ್ ಸ್ತುತಿಪನೆಂದೂ
ಒಡೆಯ ಲಕ್ಷ್ಮಣನಿಗೆ ಒಡನೆ ಅಭಯವಿತ್ತ
ದೃಢ ಮೃಢೇಶ್ವರಲಿಂಗಾ ಮೋಹನಾಂಗಾ
ರಿಪುಭಂಗಾ ಹರನೆ ಭಸಿತಾಂಗಾ

 

ಪರಊರಿನ ಸ್ತ್ರೀಯರು
೪೫೧
ನೋಡಯ್ಯಾ ನಿತ್ಯಾತ್ಮನನ್ನು
ನಿಜವಾಗಿ ನಿನ್ನೊಳಗೆ ನೀನು
ನೋಡಯ್ಯಾ ನಲಿನಲಿದಾಡಯ್ಯಾ
ಎರಡುದಿನಸಂಸಾರಾ
ಎರವಾಗಿ ತಂದ ಶರೀರಾ ಸ್ಥಿರವಲ್ಲ ಸ್ವಾಮಿ
ಗುರುಬಲ್ಲಾ ನೋಡಯ್ಯಾ ೧
ಶರೀರ ಅರ್ಥಪ್ರಾಣ ಮೂರು
ಗುರುಮೂರ್ತಿಗರ್ಪಿಸಿ ತೋರು
ದೃಢಭಾವಾ ಆತ್ಮಸುಖವೀವಾ ನೋಡಯ್ಯಾ ೨
ನರದೇಹಕ್ಕೆ ಬಂದು ನೀನು
ಇರುವಂಥಾ ಸಾರ್ಥಕವೇನು
ದೃಢ ಭಕ್ತಿಮಾಡಿ ಪಡೆ ಮುಕ್ತಿ ನೋಡಯ್ಯಾ ೩
ದೊರಕುವುದು ಪರಿಕರ ಸರ್ವಾ
ಗುರುಮೂರ್ತಿ ಸಿಕ್ಕುವುದಪೂರ್ವಾ
ಬಿಡಬೇಡಾ ವ್ಯರ್ಥ ಕೆಡಬೇಡಾ ನೋಡಯ್ಯಾ ೪
ಭಕ್ತಿಯಲಿ ಕೈವಿಡಿದು ಹೋಗು
ಭಜಿಸಿ ಜೀವನ್ಮುಕ್ತನಾಗು
ಸಾರಿದೆ ಮರ್ಮವ ತೋರಿದೆ ನೋಡಯ್ಯ ೫
ಯುಕ್ತಿಯಲಿ ಸಾಧಿಸಲು ಬೇಕು
ಇಷ್ಟೊಂದು ಸಿಕ್ಕಿದರೆ ಸಾಕು
ಚಂದದಿ ಗುರುವಿಮಲಾನಂದದಿ ನೋಡಯ್ಯಾ ೬

 

೪೫೨
ಪರಶಿವಾತ್ಮ ಲಿಂಗವೆನ್ನ ಕರತಳಾಮಳಕವಾಗಿ
ಶರೀರದೊಳಗೆ ಬೆಳಗುವುದು ಶ್ರೀ ಗುರು ವಚನದಿ ಕಂಡೆನು ಪ
ಏನು ಬೇಕು ಎನಗೆ ಇನ್ನು
ಮಾನವತ್ವ ಅಳಿದು ಸರ್ವ
ತಾನೆ ಅಂಗದಿರವೆಯಾಗಿ ಸ್ವಾನುಭವದ ಸುಖದೊಳು
ಧ್ಯಾನಿಸುತ್ತ ಒಳಹೊರಗಿಹ
ಭಾನುಕೋಟಿ ತೇಜವನ್ನು
ಮೌನಮುದ್ರೆಯಿಂದ ಗುರು ನಿಧಾನವಾಗಿ
ತೋರಿದಾ ಪರಶಿವಾತ್ಮ ೧
ವಿಂಗಡಿಸಿದ ಷಟ್‍ಸ್ಥಳಗಳ
ಸಂಗವಿಡಿದು ಚರಿಸುತ್ತಿರಲು
ಲಿಂಗವೇ ಸರ್ವಾಂಗವಾಗಿ ಇಂಗಿತವ ತಿಳಿದವನು
ಮಂಗಲಾತ್ಮನಾದ ಶ್ರೀಗುರು
ಪುಂಗನು ಎನಗೊಲಿದು ದಿವ್ಯ
ಕಂಗೊಳಿತ್ತುಧರಣಿ ಗಗನ ಡಂಗದ ಘನಲಿಂಗವಾ ಪರಶಿವಾತ್ಮ ೨
ಒಂದರಂಕೆಯನ್ನು ಬರೆದು
ಹೊಂದಿದಷ್ಟು ಲೆಖ್ಖ ಬೆಳೆವ
ಅಂದದಂತೆ ಉಳಿದು ಅಳಿದು ನಿಂದ ನಿಜದ ನಿಲುವಿಗೆ
ಬಂಧು ವಿಮಲಾನಂದ ಶ್ರೀಗುರು
ಬಂದು ಎನ್ನ ಹೃದಯದಿ ಪರಶಿವಾತ್ಮ ೩

 

೪೫೩
ಪಾಪಿಯೆಂದೆನಲು ನಾ ತಗ್ಗೆ ಪುಣ್ಯ
ರೂಪಿಯೆಂದೆನಲು ನಾ ಹಿಗ್ಗೆ
ವ್ಯಾಪಿಸಿ ನೀ ಎನ್ನ ಕುಣಿಸಿದ ಮೇಲೆ ನಿ
ರ್ಲೇಪಿಯೆಂದರಿಯದೆ ಈ ಪರಿ ಜನರೆನ್ನ ಪ
ನುಡಿಸಿದಂತೆ ನಾ ನುಡಿವೆ ನೀ
ನಡೆಸಿದಂತೆ ನಾ ನಡೆವೆ
ಉಡಿಸಿದಂತೆ ನಾನುಡುವೆ ನೀ
ತೊಡಿಸಿದಂತೆ ನಾ ತೊಡುವೆ ಎ
ನ್ನೊಡೆಯ ಸೂತ್ರಧಾರ ನೀನೆಂದರಿಯದೆ
ಪೊಡವಿ ಜನರು ಬಾಯಿ ಬಡಿಕ ತನದೊಳೆನ್ನ ೧
ಬಿಂಬಕ್ಕೆ ಸ್ವತಂತ್ರವೇನು ತುತ್ತು
ಗೊಂಬಾತ ಉಂಬಾತ ನೀನು
ಗೊಂಬೆಯಂತಿರಲದಕೇನು ಬರಿಯ
ಸಂಭ್ರಮ ಶಬ್ದಕೆ ನಾನು
ಕಾಂಬ ಸೂತ್ರಧಾರಿ ನೀನೆಂದರಿಯದೆ
ಹಂಬಲಿಪರು ಬರಿ ಕುಂಭಿನಿ ಜನರೆನ್ನ ೨
ಭಾಗ್ಯವುಂಟೆಂದು ನಾ ಮೆರೆಯೆ ವೈ
ರಾಗ್ಯವುಂಟೆಂದು ನಾ ಜರಿಯೆ
ಯೋಗಿಗಳಿಗೆ ನಾ ಸರಿಯೇ ಯಾ
ವಾಗಲು ನಡಿಸಿದ ಪರಿಯೆ
ಈಗ ಕಾಯದ ಬರಿಯ ಡಂಬವ ಕಂಡು
ಭಾಗ್ಯವಂತನೆಂದು ಜನರು ಕೊಂಡಾಡಲು ೩
ಬರಿಯ ಸುಖವ ನಾ ತೊಟ್ಟೆ ಸರ್ವ
ಸಿರಿಯ ಹೆಡತಲೆಯೊಳಿಟ್ಟೆ
ಅರಿತರಿತು ಮಾಯದ ಲೊಟ್ಟೆ ಕಂಡು
ಬೆರಗಾಗಿ ನಂಬಿ ನಾ ಕೆಟ್ಟೆ
ಗುರು ವಿಮಲಾನಂದವರ ಮಾಂಗೀರೀಶನು
ಇರಿಸಿದ್ಹಾಗೆ ನಾನಿರಬೇಕಲ್ಲದೆ ೪

 

ಕುಲದೇವರಾದ ಶ್ರೀಪಾಲ
೪೫೪
ಪ್ರಾಣಲಿಂಗ ಲಕ್ಷ್ಮಣನ ಮಂಗೀಶಾ ಪುಣ್ಯ
ಸ್ಥಾಣು ಸರ್ವಾತ್ಮಕ ನೀನೆ ಮಂಗೀಶಾ
ಮಾಣದೆನ್ನ ಕೈಪಿಡಿದು ಮಂಗೀಶಾ ಇನ್ಯಾ
ರ್ಕಾಣೆ ನಿನಗೆ ಸಮನಾಗಿ ಮಂಗೀಶಾ ಪ
ಆದಿಗನಾಗಿ ಸಿದ್ಧ ಮಂಗೀಶಾ ನಿನ್ನ
ಶೋಧಿಸಿ ಕಂಡವರುಂಟೆ ಮಂಗೀಶಾ
ವೇದ ಉಪನಿಷದ ನೀನೇ ಮಂಗೀಶಾ ನಿನ್ನ
ಪಾದವ ನೆರೆನಂಬಿರುವೆ ಮಂಗೀಶಾ ೧
ರಾಮನ ವಂಶವನೊಲಿದು ಮಂಗೀಶಾ ಬಹು
ಪ್ರೇಮದಿಂದ ಸಲಹಿದಯ್ಯಾ ಮಂಗೀಶಾ
ನಾಮಕ್ಕೆ ಲಕ್ಷ್ಮಣ ಎನ್ನ ಮಂಗೀಶಾ ನೀನೇ
ಸ್ವಾಮಿಯೆಂದು ನಂಬಿದೆನು ಮಂಗೀಶಾ ೨
ನಿನ್ನ ಬಲದಿಂದ ಸರ್ವ ಮಂಗೀಶಾ ಸುಖ
ವನ್ನು ಪಡೆದೆನು ನಾನು ಮಂಗೀಶಾ
ಇನ್ನು ನಿನ್ನೊಳು ಕೂಡಿಸಿಕೊ ಮಂಗೀಶಾ ಮುಂದೆ
ಬೆನ್ನನು ರಕ್ಷಿಸಿ ಕಾಯೋ ಮಂಗೀಶ ೩
ಯಾರಿಗುಸುರಲಿ ನಾನು ಮಂಗೀಶಾ ಸರ್ವ
ಭಾರಕರ್ತೃ ನೀ ಸಲಹೋ ಮಂಗೀಶಾ
ದಾರಿಯ ತೋರಿಸೋ ಎನಗೆ ಮಂಗೀಶಾ ನಿನ್ನ
ಸೇರಿ ಬದುಕುವೆ ನಾನು ಮಂಗೀಶಾ ೪
ಏನೇನರಿಯೆನೆಲೊ ನಾನು ಮಂಗೀಶಾ ನಿನ್ನ
ಧ್ಯಾನಿಸಲೊಂದೆ ಬಲ್ಲೆ ಮಂಗೀಶಾ
ಹಾನಿ ವೃದ್ಧಿನಿನ್ನದು ಶ್ರೀ ಮಂಗೀಶಾ ಎನ್ನ
ಮಾನಾಭಿಮಾನದ ಕರ್ತೃ ಮಂಗೀಶಾ ೫
ಅರಿಕೆ ಇಲ್ಲದುಂಟೆ ನಿನಗೆ ಮಂಗೀಶಾ ದುಷ್ಟ
ಅರಿಗಳ ಮಾಯಾಜಾಲವು ಮಂಗೀಶಾ
ಸ್ಮರನ ದಹಿಸಿದಂತೆ ನೀನು ಮಂಗೀಶಾ ಅವರ
ನುರುಹಿ ತೋರೋ ಎನ್ನೊಡೆಯ ಮಂಗೀಶಾ ೬
ಬರದು ಬಿನ್ನವಿಸಿದೆ ನಾನು ಮಂಗೀಶಾ ಚಿತ್ತ
ವಿರಲಿ ಅಣುಗನ ಮೇಲೆ ಮಂಗೀಶಾ
ಸ್ಥಿರದಿ ಕುಶಸ್ಥಲವಾಸಿ ಮಂಗೀಶಾ ಶ್ರೀ
ಗುರು ವಿಮಲಾನಂದ ಚೆಲುವ ಮಂಗೀಶಾ ೭

 

೪೫೫
ಬತ್ತಿಗೆ ಹತ್ತದ ಜ್ಯೋತಿಯು ನಡು
ನೆತ್ತಿಯೊಳಿಂ ಬಿಟ್ಟು ಜತನ ಮಾಡಣ್ಣಾ ಪ
ತೈಲ್ಯವು ಸರಿಯಾಗದು ನೋಡು ಅಶುದ್ಧ
ಮೈಲಿಗೆಯಿದ್ದರೆ ಕಳದೀತು
ಕೈಲಾಸಪತಿಯ ಧ್ಯಾನವ ಮಾಡು ಬಟ್ಟ
ಬೈಲಲ್ಲಿ ಬೆಳಗಾಗುತಿದೆ ಮುಂದೆ ನೋಡು ೧
ಕತ್ತಲೆ ಬೆಳಕಲ್ಲಿ ಉಳಿಯದು ಮಾಯಾ
ಮೃತ್ಯುಪಾಶಗಳಲ್ಲಿ ಸುಳಿಯದು
ನಿತ್ಯ ನಿರ್ಮಲವೆಂಬ ಗೆಲವದು ಪರ
ವಸ್ತುವಿನೊಳಗೆ ಕೂಡಿರುವುದು ಅಣ್ಣಾ ೨
ನಿಂದಿಹ ನಿಜಕೆ ತಾ ನಿಲುವದು ಪರ
ದ್ವಂದ್ವಾಕಾರಗಳೆಲ್ಲ ಗೆಲುವದು
ಕುಂದು ದುಷ್ಕರ್ಮವ ಕೊಲುವದು ವಿಮಲಾ
ನಂದನ ಚರಣಕೆ ಸಲುವದು ಅಣ್ಣಾ ೩

 

೪೫೬
ಬಲ್ಲೆನೆಂದರೆ ನಾನೇನೇನರಿಯೆ
ಅರಿಯೆನಂದರೆ ಸ್ವಲ್ಪ ತಿಳಿದಷ್ಟು ಬಲ್ಲೆ ಪ
ಗುರುಚರಣದ ಸ್ಮರಣೆಯ ಮಾಡಿ ಬಲ್ಲೆ
ಪರ ಕಡಿಸಿ ಹೊಟ್ಟೆ ಹೊರವುದನರಿಯೆ
ಶರಣ ಜನರ ಕಂಡು ಎರಗಲು ಬಲ್ಲೆ
ಕೊರಳ ಕೊಯ್ವರ ಕಪಟವು ನಾನರಿಯೆ ೧
ಸಾಧು ಸಮಾಗಮ ಸುಖವೆಂದು ಬಲ್ಲೆ
ವಾದಿಸುವರ ಕೂಡ ಕಾದಾಡಲರಿಯೆ
ಬೋಧಾಮೃತರಸಸ್ವಾದವು ಬಲ್ಲೆ
ವೇದ ಶಾಸ್ತ್ರಂಗಳ ಓದಿ ನಾನರಿಯೆ ೨
ಶರೀರ ಸುಖವು ನಶ್ವರವೆಂದು ಬಲ್ಲೆ
ಪರಮಾತ್ಮ ತೊಲಗುವ ಪರಿಯ ನಾನರಿಯೆ
ಹರಿಹರರಿಗೆ ಭೇದವಿಲ್ಲೆಂದು ಬಲ್ಲೆ
ಗುರು ವಿಮಲಾನಂದಗೆ ಹಿಂಗಲರಿಯೆ ೩

 

೪೫೭
ಬಾರಕ್ಕಾ ನಾವಿಬ್ಬರಾಡುವಾ ಯೋಗ
ಸಾಧನವೆಂಬುದು ಮಾಡುವಾ
ತಾಮಸ ತನುಗುಣಗಳ ಬಿಟ್ಟು ಸುಜ್ಞಾನ
ಕ್ಷೀರ ಸಾಗರದೊಲಗಾಡುವಾ ಪ
ಕಳೆಗೂಡಿ ಒಳನೋಟ ನೋಡುವಾ ಅಲ್ಲಿ
ಒಳಸಭೆ ಪ್ರಭೆಯೊಳಗಾಡುವಾ
ಥಳಥಳಿಸುವ ಮೆರೆವ ಚಿದಾತ್ಮನ
ಬೆಳಕಿನೊಳ್ ಬೆಳಕಾಗಿ ಪರವಶವಾಗುವಾ ೧
ಅಂಬಾ ಚಂದನ ಗಂಧಿಯೇ ಶಾರ
ದಾಂಬಾ ಸುಪ್ರದವೇಣಿಯೇ
ಶಂಭು ಸದ್ಗುರು ಎನ್ನೊಳು ಕಡೆನೋಡೆ
ಕಂಬುಕಂಠಿನಿ ಚಲ್ವ ಕಮಲದಳಾಕ್ಷಿ ೨
ಎಂಟೆರಡು ಕದಗಳ ಕಟ್ಟುವಾ ಅಲ್ಲಿ
ಬಂಟರ ತಡೆಗಳ ಅಟ್ಟುವಾ
ಮಂಟಪವೆಂಬುದು ಮಹಾಲಿಂಗನದೆಡೆ
ಅಂತರಂಗದ ಕಾಂತೆಗಾಡುವಾ ೩
ಏರುವ ಮಂದರ ಗಿರಿಯಂತೆ ಅಲ್ಲಿ
ಭೋರೈಸುವ ಘಂಟಾ ಧ್ವನಿಯಂತೆ
ಸಾರ ಅಮೃತವುಂಡು ಕ್ಷೀರಸಾಗರಮಿಂದು
ತೋರುವ ಗುರು ವಿಮಲಾನಂದಾ ೪

 

ಇಡಗುಂಜಿ ಗಣಪತಿಯ
ಗಣೇಶ ಸ್ತುತಿ
೪೨೭
ಮಂಗಲಂ ಜಯ ಮಂಗಲಂ ಪ
ಗಜಮುಖದೆಸೆವೆ ಲಂಬೋದರಗೆ
ತ್ರಿಜಗವಂದಿತ ಮೋದಕ ಕರಗೆ
ರಜತಾದ್ರಿವಾಸನ ರಮಣಿಯಸುತನಿಗೆ
ಭಜಕರ ಪಾಲಿಪ ವಿಜಯನಿಗೆ ೧
ಮೂಷಿಕ ತೇಜಿಯನೇರಿದಗೆ
ದೇಶದಿ ಕೀರ್ತಿಯ ಬೀರಿದಗೆ
ಶೇಷಾಭರಣವೆತ್ತ ಶೂರ್ಪಕರ್ಣನಿಗೆ
ವಾಸೆಯಿಂದ ಭಕ್ತರ ಪೋಷಿಪಗೆ ಮಂಗಲಂ ೨
ಕಡುಕರುಣದಿ ಜಗವನು ಕಾಯ್ವಾ ಯೆ
ನ್ಹೊಡೆಯ ಶ್ರೀ ವಿಘ್ನೇಶ್ವರ ದೇವಾ
ಇಡಗುಂಜಿಯೊಳಗಿದು ದೃಢದಿ ಲಕ್ಷ್ಮಣನಿಗೆ
ಗಡಣವಿದ್ಯವನಿತ್ತು ನುಡಿಸುವಗೆ ಮಂಗಲಂ ೩

 

೪೫೮
ಮಂಗೀಶಾ ಮಂಗೀಶಾ
ಮಮ ಪ್ರಾಣಲಿಂಗೇಶಾ ಶಿವಹರ ಪ
ಕುಟುಂಬ ರಕ್ಷಕ ನೀನು ಎನಗೆ
ಸಟೆಂಬ ಸ್ವತಂತ್ರವೇನು ಶಿವಹರ ೧
ರಾಮನ ಹೃದಯದಿ ನಲಿದೆ ನೀ ಬಲು
ಪ್ರೇಮದಿ ಲಕ್ಷ್ಮಣಗೊಲಿದೆ ಶಿವಹರ ೨
ಬೆಳೆಸಿದೆ ಈ ಸಂಸ್ಥಾನಾ ಇಂದಿಗೆ
ಉಳಿಸಿದೆ ಎನ್ನಭಿಮಾನಾ ಶಿವಹರ ೩
ಎನಗಿನ್ಯಾವುದು ಬೇಕು ನಿನ್ನಯ
ನೆನಹಿನೊಳಿರುವದೆ ಸಾಕು ಶಿವಹರ ೪
ಕುಶಸ್ಥಲದೆಡೆಯಲಿ ನಿಂದಾ ಶ್ರೀಗುರು
ಪಶುಪತಿ ವಿಮಲಾನಂದಾ ಶಿವಹರ ೫

 

೪೫೯
ಮರ್ಮವ ತಿಳಿದವಗೆ ಈ ಕಾಯದ
ಕರ್ಮದ ಗೊಡವೆಯುಂಟೇ
ನಿರ್ಮಲಾತ್ಮಕಗೆ ಸಮರ್ಪಣೆಯೆಂಬ ಸ್ವ
ಧರ್ಮ ಮೂಲ ಮಂತ್ರ ಸೋಹಂವೆಂದೆಂಬ ಪ
ಜ್ಯೋತಿ ಹಸ್ತದೊಳಿರಲು ಕತ್ತಲೆಗೆ ಬ
ದ್ಯೋತವ ಬಯಸುವರೇ
ಪಾತಕ ಪುಣ್ಯ ಶುಭಾಶುಭವೆಂಬ ವಿ
ಘಾತಿಯಾಗುವ ಅವಧೂತ ಮಂತ್ರವೆಂಬ ೧
ಶರೀರಾತ್ಮಗ್ರಹವು ಪೂಜೆಗೆ ಸಹಜ
ಪರಿಪರಿ ವಿಷಯ ಭೋಗಾ
ನಿದ್ರೆ ಸಮಾಧಿ ಸಂಚಾರ ಪ್ರದಕ್ಷಣೆ
ನಿರುತ ಆಡುವ ವಾಣಿ ಸ್ತೋತ್ರಗಳೆಂದೆಂಬ ೨
ಬರಿದೆ ಕಾಯದ ಸುಖವು ಕರ್ಮಾ
ಕರ್ಮ ಪರಿಪೂರ್ಣಾತ್ಮಕಗರ್ಪಿಸಿ
ಗುರು ವಿಮಲಾನಂದಭರಿತನಾಗಿಹ ಮಂತ್ರೋ
ಚ್ಚರಣೆಯೊಳಿರುವುದು ದೊರಕೊಂಡನೆಂದೆಂಬ ೩

 

೪೬೦
ಮಾರಹರ ರಣಶೂರ ಶರಧಿ ಗಂ
ಭೀರ ದಯಾಸಾರ
ವಾರಿಜಾಕ್ಷ ಮುರಹರ ಸಖನಾಗಿಹ
ಚಾರುಮಹಿಮ ನಿಟಿಲಾಂಬಕ ಪರಶಿವ ಪ
ಸಿಂಧು ಮಥನದೊಳಗೆ ಕೈಲಾಸ
ದಿಂದ ಬಂದನಿಳೆಗೆ
ನಂದಿವಾಹನ ಗರಳವನೆಲ್ಲ ಭುಂಜಿಸಿ
ಕುಂದುಗೊರಳನಾಗಿಹ ತ್ರಿಪುರಾಂತಕ ಮಾರ ೧
ವ್ಯೋಮಕೇಶ ದೇವಾ ಸುಜನರ
ಸ್ತೋಮವನು ಕಾವಾ
ಕಾಮಿತಾರ್ಥ ವರಗಳನಿತ್ತು ಸಲಹುವ
ಸೋಮಶೇಖರ ಕರ್ಪೂರಧಲಾಂಗಾ ೨
ಸುರನರೋರಗ ಪಾಲಾ ಸಜ್ಜನ
ಪೊರೆವ ಪುಣ್ಯಶೀಲಾ
ಗುರುವಿಮಲಾನಂದ ಭರಿತ ಕುಶಸ್ಥಳ
ಪುರನಿವಾಸ ಶ್ರೀ ಮಹಾಂಗಿರೀಶ ಮಹಾರುದ್ರ ೩

 

ಈ ಹಾಡು ಬಹಳ ನ್ಯೂನತೆಯಿಂದ
೪೬೧
ಮುದುಕನಾಗಿ ಬದುಕಿ ಫಲವೇನು ತನ್ನಯ ಪ್ರಾಣ
ಪದಕವಾ ಕಂಡರಿಯದನಕಾ ಪ
ಬದುಕಿ ಸಂಸಾರ ಸೆಲೆಯೊಳು
ಅದಕಿದಕೆಂದು ಓಡ್ಯಾಡಿ
ಮದಕೆ ಮಾಯೆಯೊಳು ಸಿಕ್ಕಿ
ಬದರಿಕೊಳ್ಳುತ್ತಿರುವಾ ಮನುಜಾ ಅ.ಪ.
ಸತ್ತು ಹುಟ್ಟು ಹುಟ್ಟು ಸಾವಿಗೆ ಅದಕೆ ತಕ್ಕ
ಉತ್ತಮ ಶ್ರೀ ಗುರುಮಂತ್ರವನ್ನು
ಚಿತ್ತದಿ ಧ್ಯಾನಿಸದೆ ಮುದಿ
ಕತ್ತೆಯಂತೆ ಧರೆಯೊಳಗೆ ವ್ಯರ್ಥವಾಗಿ ಜನಿಸಿ ಮದೋ
ನ್ಮತ್ತನಾಗಿ ಇರುವ ಮನುಜಾ ೧
ಗುರೂಪದೇಶವನ್ನು ಪಡೆಯದೆ ಸಂಸಾರವೆಂಬ
ಶರಧಿಯೊಳು ಈಸಾಡಿ ಬಳಲುತ್ತ
ಹರಿಯಧಿಕ ಹರನಧಿಕನೆಂದು ವಾದಿಸುತ್ತ
ಪರರ ಬರಿದೆ ನಿಂದಿಸಿ ಹೊಟ್ಟೆಯ
ಹೊರಕೊಳ್ಳುತ್ತಿರುವ ಮಂದ ಮನುಜಾ ೨
ಪರಿಪೂರ್ಣಾತ್ಮಕನನ್ನು ನೋಡದೆ
ಪರಾತ್ಮರ ಗುರು ವಿಮಲಾನಂದನೊಳಾಡದೆ
ಮರಗಳಲ್ಲಿ ಹಾರುವವಾ ನರನಂತೆ ಮನದೊಳು ಸಿಕ್ಕಿ
ನರಳುತ್ತ ಪ್ರಾಯವು ಹೋದ
ನರಿಯಂತೆ ಕೂಗುವ ಮನುಜಾ ೩

 

ಗಿರಿಜಾಕಲ್ಯಾಣದ ಕಥೆಯಲ್ಲಿ
೪೬೨
ಯಾಕೆ ನೀ ಬರಿದೆ ಮೆಚ್ಚಿದೆ ಭವಹರಗೆ
ಲೋಕೇಶನೆನಿಪ ಶ್ರೀಗುರು ಸಿದ್ಧೇಶ್ವರಗೆ ಪನೀ ಕಮಲಮುಖಿ ಆಋವೈರಿಯ
ನೇಕ ಮೈಯ್ಯಾಳು ಸುತ್ತಿಕೊಂಡು ವಿ
ವೇಕವಿಲ್ಲದೆ ವಿಷವನುಂಡ ಪಿನಾಕಧರನಿಗೆ ಸೋಲುವರೆ ನೀ
ಜಗವ ಮೋಹಿಪ ಮಾನಿನೀ ಮಣಿಯೇ ಅ.ಪ.
ಶಿರದೊಳು ಶಶಿಯ ಕೆಂಜೆಡೆ ಇಹ ಜೋಗಿ
ಸ್ಮರನ ದಹಿಸಿ ಭಸ್ಮ ಹಣೆಗಿಟ್ಟ ಯೋಗಿ
ಇರುವರೆ ಸ್ಥಳವಿಲ್ಲದಂತೆ ತಾ ಪೋಗಿ
ಮೆರೆವ ಸ್ಮಶಾನ ಮಂದಿರಕನುವಾಗಿ
ಮರುಲು ಭೂತ ಪಿಶಾಚ ಯಕ್ಷರ
ನೆರವಿಯಲಿ ಕುಣಿಕುಣಿದು ಬ್ರಹ್ಮನ
ಶಿರವಿಡಿದು ತಿರಿದುಂಬ ಗೊರವಗೆ
ಬರಿದೆ ತಿಳಿಯದೆ ಜಗವ ಮೋಹಿಪ ಮಾನಿನೀ ಮಣಿಯೇ ೧
ಮಂಡೆಯೋಳ್ ಜಾನ್ಹವಿ ಶಶಿಯನ್ನೆ ಸೂಡಿ
ರುಂಡಮಾಲೆಯ ಕೊರಳೊಳಗಿಟ್ಟಪಚಾಡಿ
ಕುಂಡಲಿಗಳಾ ಧರಿಸಿರುವನ ನೋಡಿ
ಖಂಡ ಪರಶುವೆಂದು ಅವನ ಕೊಂಡಾಡಿ
ಧಿಂಡೆಯಾಗಿಹ ಪ್ರಾಯದವಳು ನೀ
ಕೆಂಡಗಣ್ಣಿನ ಕ್ರೂರರೂಪಿನ ಗಂಡನೆಂದು
ನೀನವನನೊಲಿದೆ ಪ್ರ
ಚಂಡೆ ಪಾರ್ವತಿ ಜಗವ ಮೋಹಿಪ ಮಾನಿನೀ ಮಣಿಯೇ ೨
ಕರದಿ ತ್ರಿಶೂಲ ಧಮರುಗಳ ಧರಿಸಿರುವಾ
ಕಂಚರ್ಮಾಂಬಕ ಪುಲಿದೊಗಲುಟ್ಟು ಮೆರೆವಾ
ಹಿರಿಯತನಕೆ ವೃಷಭವನೇರಿ ಬರುವಾ
ಶಿರಿಯ ಹೊಗಾಡಿ ಫಕೀರನಂತಿರುವಾ
ವಿರಚಿಸಿದ ಲೀಲಾವಿನೋದದ
ಪರತರ ಶ್ರೀ ಪ್ರಣವರೂಪನ
ಗುರುವಿಮಲಾನಂದ ತೊಟ್ಟಿದ ಗುರು ಸಿದ್ಧೇ
ಶ್ವರನೆಂದು ತಿಳಿಯದೆ ಜಗವ ಮೋಹಿಪ ಮಾನಿನೀಮಣಿಯೇ ೩

 

ಯಾಚಕರ ಕಷ್ಟಗಳನ್ನು ನೋಡಿ
೪೬೩
ಯಾಚಕ ಜನ್ಮಾ ಯಾಕೆ ಬರೆದನೊ ಬ್ರಹ್ಮಾ
ನಾಚಿಕೆಯಾಗಿ ನಷ್ಟಾಗುವಂತೆ ಸ್ವಧರ್ಮಾ ಪ
ಒಡಲಾಶೆಗಾಗಿ ಹೊಲೆಯನ ಹೊಗಳಬೇಕು
ಕಡುಲೋಭಿಯಾದ ಅರಸನೋಲಗವೆ ಸಾಕು
ಬಡತನವೆಂದು ಪರರ ಸೇರುವದೆ ಸಾಕು
ಎಂದರೆನ್ನಯ ಒಡಲು ತುಂಬದು ಪರಾಕು ೧
ತ್ಯಾಗದಿ ಕರ್ಣಾ ಭೋಗದಿ ದೇವೇಂಧ್ರನೆಂದು ಕೊಂಡಾಡಲು
ಪೋಗಿ ಬಾ ನಾಳೆ ಎಂದು
ಎನುತ ಪೇಳಲಾಗಿ ಬೈದಾಡುತ ಬಂದು
ಬಳಲುತಿರಲಾಗ ಚಿತ್ತಕ್ಕೆ ತಂದು ೨
ಪೂರ್ವಜನ್ಮದ ಫಲದಿಂದೀ ಹುಟ್ಟುಸೇರಿದೆ
ಪರ್ವತವನ್ನು ಕಂಡು ಕೈತಿಕ್ಕಿ ಕೋರಿದೆ
ಬರಿದೆ ಇಂಥಾ ಗರ್ವದಿಂದುಕ್ಕಿ ಏರಿದೆ
ಗುರುವಿಮಲಾನಂದ ಸರ್ವೋತ್ತಮನ ನೆನೆಯ ಬಾರದೇ ೩

 

೪೬೪
ಯಾರಿಗುಸುರಲಿ ಸಾರತತ್ವ ವಿ
ಚಾರ ಭವದೂರಾ ಪ
ಧೀರ ಗುರುವಿನ ಚಾರು ಚರಣವ
ಸೇರಿ ಮುಕ್ತಿಯ ಸೊರೆವಿಡಿವುದಿನ್ಯಾರಿಗುಸುರಲಿ ಅ.ಪ.
ಶ್ರೀ ಗುರುನಾಥನ ಕಟಾಕ್ಷದಿ
ತ್ಯಾಗಿಸಿ ಸಂಸಾರದ ಗೊಡವೆಯ
ಯೋಗಿಯಂದದೊಳಿದ್ದು
ಆಗಮ ನಿಗಮಾರ್ಥಕೆ ಸಿಲುಕದ
ಯೋಗ ಘನವನೊಳಗೊಂಡಿಹ ಅಂಗದ
ಯೋಗಾನಂದದುಯ್ಯಾಲೆಯ ತೂಗಿ
ನೆಲೆಗೆ ನಿಂದಿಹ ನಿಜಸುಖವಿನ್ಯಾರಿಗುಸುರಲಿ ೧
ಉದರದ ನಾಭಿಯ ನೀಳದ ತುದಿ
ಹೃದಯ ವಾರಿಜದೊಳಗಿಪ್ಪ ಶಿವ
ಸದನ ಲಿಂಗವ ಕಂಡು
ಅದು ಇದು ಬೇರ್ಪಡಿಸದೆ ಹೃದಯದಿ
ಚದುರ ಸಾಧು ಸತ್ಪುರುಷರ ಮತದಲಿ
ಮುದದಿ ಮುಕ್ತಿ ಮಾನಿನಿಗೆ ಮಂಗಲ
ಮದುವೆಯಾದ ಮನಸಿನ ಮಹಾ ಗೆಲವಿನ್ಯಾರಿಗುಸುರಲಿ ೨
ನೆತ್ತಿಯೊಳ್ ಹೊಳೆ ಹೊಳೆವ ಚಿದಾ
ದಿತ್ಯನ ಪ್ರಕಾಶವ ಕಂಡು
ಚಿತ್ತದಿ ನಲಿದಾಡಿ
ಉತ್ತಮಾನಂದಾತ್ಮರಸ ಸವಿ
ಯುತ್ತ ಚಪ್ಪರಿದು ಶರಣರ
ಮೊತ್ತದೊಡನೆ ಕುಣಿಕುಣಿದು ಬ್ರಹ್ಮನ
ಗೊತ್ತು ತಿಳಿದ ಗುರುತಿನ ವಿಸ್ತರವಿನ್ಯಾರಿಗುಸುರಲಿ ೩
ಕುಂದುವ ಕಾಯದ ಸುಖಿಕೆಳೆಸದೆ
ಹೊಂದಿದ ಸರ್ವಾಂಗದ ಶೋಧಿಸಿ
ಒಂದೇ ದೇವನೊಳಾಡಿ
ವಂದಿಸಿ ಗುರುಹಿರಿಯರ ಚರಣಕೆ
ಹೊಂದಿ ಹೊಂದಿ ಓಲಾಡುವ ಅರಿಗಳ
ಬಂದಿಯೊಳಗೆ ಸಿಲುಕದೆ ಬ್ರಹ್ಮಾ
ನಂದರಸಾಮೃತ ಸವಿದಿಹ ಸುಖವಿನ್ಯಾರಿಗುಸುರಲಿ ೪
ಹಲವು ಯೋನಿಯೊಳಗೆ ಹೊರಳ
ಕುಲ ಛಲ ಶೀಲವ ಮೂರಡಗಿಸಿ
ಸುಲಭ ವಂಶದೊಳುಂಡು
ಮಲಿನ ಮಾಯಾಮೋಹಕೆ ಸಿಲುಕದೆ
ಬಲೆಯ ಛೇದಿಸಿ ಮುಕ್ತಾಂಜ್ಯದ ಬಗೆ ಇನ್ಯಾರಿಗುಸುರಲಿ ೫

 

ಧರ್ಮಸ್ಥಳದ ಹೆಗ್ಗಡೆಗೆ
೪೬೫
ರಕ್ಷಿಸೋ ವರದಯ್ಯನ ಕಣ್ಣಿಗೆ
ಸುಕ್ಷೇಮದಿ ದೃಷ್ಟಿಯಪ್ಪಂತೆ
ದಕ್ಷಿಣ ಕಾಶಿಯೆಂದೆನಿಪ ಕುಡುಮಪುರಾ
ಧ್ಯಕ್ಷನಾದ ಶ್ರೀ ಮಂಜುನಾಥ ದೇವಾ ಪ
ನಿನ್ನಡಿಸೇವೆಯ ಮಾಳ್ಪರಿಗೀಪರಿ
ಬನ್ನ ಬಡಿಸುವುದುಚಿತವೇ
ತನ್ನ ಮಕ್ಕಳು ತಪ್ಪಿ ನಡೆದರೆ ತಾಯ್ತಂದೆ
ಮುನ್ನ ಮರುತು ಸಲಹುವ ಪರಿಯಲಿ ಮುಂದೆ ೧
ಬುದ್ಧಿಯಾಗಿರಲೆಂದು ಮಾಡಿದರೇನು
ಉದ್ಧರಿಸುವದನು ಮಾನವೆ
ಸದ್ಯದಿ ದೃಷ್ಟಿಯಪ್ಪಂತೆ ನಿನ್ನೊಳ
ಗಿದ್ದ ಮಹಾತ್ಮರೊಂದಾಗಿ ಮೋಹದಿ ಬೇಗ ೨
ಮೋಡದ ರವಿ ಮೂಡುವಂದದಿ ದಯ
ಮಾಡುವ ಭಾರವು ನಿನ್ನದು
ರೂಢಿಯೊಳಧಿಕ ಶ್ರೀವರ ಮಂಜುನಾಥೇಶ
ಗಾಢದಿಂದಲಿ ವರದಯ್ಯ ಹೆಗಡೆಗೆ ೩

 

ಕನ್ನಡ ಮರಾಠಿ ಹಿಂದೂಸ್ತಾನಿ
೪೬೬
ಶರಣು ಹೊಕ್ಕೆನು ಶಿವನ
ತೋರಯ್ಯಾ ಸದ್ಗುರುರಾಯಾ ಪ
ಅಂಗದ ಮೇಲೆಯು ಲಿಂಗದಂತಿಹುದೆಂದು
ಮಂಗಲಾತ್ಮನ ತಿಳಿಯುವದೀನ್ಯಾಯಾ ಸದ್ಗುರುರಾಯಾ ೧
ದುನಿಯಾಕೇ ಬೀಚಮೊತುಮ್ ಬಡೇ ಸಾಬ
ಮನಮೊರೆ ಸಾಬ ತುಮ್‍ಆಯಾ ಸದ್ಗುರುರಾಯಾ ೨
ಜಮ ನಮೋ ಸ್ಥಲಮೋ ಎಕದಿಸತಹೈ
ರಮತಠಡೇ ಮೋರಾ ಪೀಯಾ ಸದ್ಗುರುರಾಯಾ ೩
ಪರಮಾತ್ಮಾ ಪಿವಳಾ ಕೀಂ ಧವಳಾ ಮೀ ನೇಣೇ
ಗುರುನಾಥಾ ಪಡೇನ ತುಝ್ಯಾ ಪಾಯಾಂ ಸದ್ಗುರುರಾಯಾ ೪
ವರ ಸಚ್ಚಿದಾನಂದ ಬ್ರಹ್ಮದಿಂದೆಸೆವ
ಗುರುವಿಮಲಾನಂದಾ ಪ್ರಿಯಾ ಸದ್ಗುರುರಾಯಾ ೫

 

೪೬೭
ಶ್ರೀ ಗುರುಮಹಾರಾಯಾ ದಮ್ಮಯ್ಯ ನಿನ್ನ ಪಾದಕೆ ಬಿದ್ದೆನು
ನಿರ್ಮಲ ನಿತ್ಯಾನಂದದೊಳಿಹಪರ ಬ್ರಹ್ಮವ
ತೋರಿಸೋ ಶ್ರೀ ಗುರುನಾಥಾ ಪ
ತೋರುವ ತೋರಿಕೆಗಳೆಲ್ಲವ ಹಿಂಗಿಸೋ ಷಡ್ವೈರಿಗಳಾಗಿಹ
ಚೋರರ ಬಾಧೆಯ ಬಲವನು ಭಂಗಿಸೋ ತತ್ವಾಮೃತ
ಸಾರ ನಿತ್ಯಸುಖದೊಳನ್ನ ನಿಲ್ಲಿಸೋ ೧
ನೋಡದಿರುವ ನೋಟವ ನೋಡಿಸೋ
ಅಮೃತಾನ್ನವ ಮುಂದಿಡೋ
ಜೋಡಾಗದ ಊಟವನ್ನುಣ್ಣಿಸೋ ನವನೂತನವಾಗಿಹ
ಆಡದಿರುವ ಆಟವಾಡಿಸೋ ನಿನ್ನರ್ಚನೆ ಪೂಜೆಯ
ಮಾಡುವಾನಂದವುದಯ ಮಾಡಿಸೋ ೨
ಚರಣತೀರ್ಥ ಪ್ರಸಾದವನು ಕೃಪೆಮಾಡೋ ಸಜ್ಜನರಾ
ಸ್ಮರಣೆಯ ಕರ್ಣಾಭರಣವ ನೀಡೋ ನಾನಾಮೃತದ
ಚರಣ ರಜಪ್ರಕಾಶದೊಳಿಡೋ ವಿಮಲಾನಂದ
ಕರುಣಾಕಟಾಕ್ಷದ ವಿಧಿ ನೋಡೋ ೩

 

೪೬೯
ಶ್ರೀ ಗುರುವಿನ ಮನೆಯ ಮುಂದಣ ಬಾಗಿಲ ಕಾಯ್ದಿರುವೆ ಪ
ತ್ಯಾಗಿಸಿ ಸಂಸಾರಾ ಶ್ರೀ ಗುರುವಿನ ಯೋಗಾಸನವಹೆನು ಅ.ಪ.
ಗುರುವಿನ ಮನೆಯ ಮಜ್ಜನಮದಕವ
ಕೊಪ್ಪರಿಗೆಯಾಗಿಹೆ ನಾನು
ಗುರುವಿನ ಚರಣವ ತೊಳೆದ ತೀರ್ಥದ
ಜಲಹರಿಯಾಗಿಹೆ ನಾನು
ಗುರುವಿನ ಚರಣಾಲಂಕರಿಸುವ ಕೇತಕಿ ಗರಿಯಾಗಿದೆ ನಾನು
ಗುರು ಮಂತ್ರವನುಚ್ಚರಿಸಿ ಜಪಿಸುವ ಸರವಾಗಿಹೆ ನಾನು ೧
ಗುರುವಿನ ಕೊರಳೊಳಗಿಹ ರುದ್ರಾಕ್ಷದ ಸರವಾಗಿಹೆ ನಾನು
ಗುರುವರ ಫಣೆಯೊಳಗಿಡುವ ವಿಭೂತಿಯ
ಭರಣಿಯಾಗಿಹೆ ನಾನು
ಗುರುಬೋಧಾಮೃತ ಭರಿತವಾಗಿಹ ಘಟ ಪರಿಯಾಗಿಹೆ ನಾನು
ಗುರುವಿನ ಭುಂಜಿಸಿ ಮಿಕ್ಕ ಪ್ರಸಾದಕೆ ಗುರಿಯಾಗಿದೆ ನಾನು ೨
ಸುಗುಣ ಶ್ರೀಗುರು ಪದಯುಗಗಳಿಗೆ
ನಡೆವ ಹಾವಿಗೆಯಾಗಿಹೆ ನಾನು
ಮಿಗೆ ನಿರ್ಮಲದೊಳು ಪವಡಿಸುತ್ತಿಹ ಹಾಸಿಗೆಯಾಗಿಹೆ ನಾನು
ಬೊಗಳಲು ಸಾಕಿದ ನಾಯಿಯಂದದಿ
ಹೊರಜರುಲಿಯ ಸಾರಿಹೆ ನಾನು
ಜಗದೀಶ್ವರ ವಿಮಲಾನಂದ ಗುರುವಿಗೆ ಮಗನಾಗಿಹೆ ನಾನು ೩

 

೪೬೮
ಶ್ರೀಗುರುವಿಟ್ಟಂತಿರಿರೋ ವ್ಯರ್ಥಸ್ಯ ಭ್ರಮೆಗೊಳ್ಳಬೇಡೀ ಪ
ಕೊಟ್ಟರೂಟವ ಮಾಡಿ ಕೊಡದಿದ್ದರವನ ಪಾಡಿ
ಸಿಟ್ಟಾಗಿ ಶಿವನ ಬೈಬೇಡೀ ೧
ಸಂತೆಯ ಕೂಟವಿದು ಸಟೆಯ ಸಂಸಾರವಿದು
ಅಂತರಾತ್ಮನ ಧ್ಯಾನಿಸುವನೇ ಸಾಧು ೨
ಯಾರಿಗೆ ಯಾರಿಲ್ಲಾ ನರದೇಹ ಸ್ಥಿರವಲ್ಲಾ
ವಸ್ತು ಮೀರಿದ ಬಳಿಕ ಇರಲಿಲ್ಲಾ ೩
ಒಂದೇ ಜನ್ಮದ ನಂಟು ಸುಖದುಃಖಕ್ಕೋಂದೇ ಗಂಟು
ಸಂದೇಹವಿಲ್ಲ ಕೊಟ್ಟ ಋಣ ಉಂಟು ೪
ವರಮಂಗೀಶಾತ್ಮಾರಾಮಾ ಇರಿಸಿದಂತಿರುವ ನೇಮಾ
ಗುರು ವಿಮಲಾನಂದ ಸುಖಧಾಮಾ ೫

 

೪೭೧
ಸಾರಿ ಹೇಳಿದೆ ಮೂರು ಬಾರಿ ಮನ
ಬಾರದಿದ್ದವರು ದೂರಿದರೆನ್ನ ದೂರಿ ಪ
ನರದೇಹವಿದು ನಂಬಬೇಡಿ ಭವ
ಶರಧಿಯ ದಾಟಲುಪಾಯವ ಮಾಡಿ
ಎರವಿನ ತನುವನು ನೋಡಿ ಶ್ರೀ
ಗುರುವಿನ ಚರಣಕ್ಕೆ ಶೆರಗೊಡ್ಡಿ ಬೇಡಿ ೧
ಗುರುವಿನಿಂದಧಿಕ ದೈವವಿಲ್ಲಾ ಇದ
ನರಿಯದೆ ಕೆಡುವರು ಪ್ರಾಣಿಗಳೆಲ್ಲಾ
ಅರಿತ ಸುಜ್ಞಾನಿಯೆ ಬಲ್ಲಾ ಉಪ
ಕರಿಸಿ ಪೇಳುವೆನು ಕೇಳಿರೋ ಎನ್ನ ಸೊಲ್ಲಾ ೨
ಸರಸಿಜೋದ್ಭವನ ಕೈಮಾಟಾ ಚೆಲ್ವ
ಗಿರಿಜಾರಮಣನ ಸೂತ್ರದ ಗೊಂಬೆಯಾಟಾ
ಬರಿದೆ ವಿಷ್ಣು ಮಾಯಾಕಾಟಾ ಶ್ರೀ
ಗುರುವಿಮಲಾನಂದ ಹೇಳಿದ ಪಾಠಾ ೩

 

೪೭೦
ಸಾವಾತ ನಾನಲ್ಲಾ ಸಾವು ಮೊದಲೆನಗಿಲ್ಲಾ
ಜೀವಗುಣವಳಿದಾತ್ಮ ಯೋಗಿ ತಾ ಬಲ್ಲಾ ಪ
ಧರೆಯೆನಿಸಿ ದೊರೆಯಾಜ್ಞಯೊಳಾಳುತಿಹೆ ನಾನು
ವರಮಂತ್ರಿಯಾಗಿ ವರ್ತಿಸುವವನೆ ನಾನು
ಕರಣಿಕರ ತೆರದಿ ಲೆಕ್ಕವ ನೋಡುತಿಹೆ ನಾನು
ಪರಿವಾರವಾಗಿ ಓಲೈಸುವವನೆ ನಾನು ೧
ಕರಿತುರಗ ರೂಪಿನಲಿ ಎನಗೆ ವಾಹನ ನಾನು
ಹೊರುವಾತ ನಾನು ಹೊತ್ತಂತಿರುವೆ ನಾನು
ಹರಿನಾಮ ಹರನಾನು ನರನಾನು ಸರ್ವವೀ
ಪರಿಯೊಳಗೆ ಮೆರೆದು ವಿಸ್ತರಿಪೆ ನಾನು ೨
ಅಣುರೇಣು ತೃಣಕಾಷ್ಠ ಭರಿತನಾಗಿಹೆ ನಾನು
ಗಣನೆಯಿಲ್ಲದ ಗುಣವ ತೋರ್ಪೆ ನಾನು
ಉಣಲಿಕ್ಕುವವ ನಾನು ಉಂಡು ತೃಪ್ತಿಪೆ ನಾನು
ರಣನಾನು ರಣವ ಗೆಲುವಾತ ನಾನು ೩
ಭೂಮಿಯಾಗಿಹೆ ನಾನು ಬೆಳೆವ ಬೆಳೆಯೇ ನಾನು
ಸೋಮ ಸೂರ್ಯಾಗ್ನಿ ವಾಯುಗಳೆ ನಾನು
ನಾಮರೂಪಾತೀತ ವಸ್ತುವಾಗಿಹೆ ನಾನು
ಕಾಮಿನಿಯರಾಗಿ ಕಾಮಿಸುವವನೆ ನಾನು ೪
ಒಲಿವಾತನೇ ನಾನು ಒಲಿದರಗಲೆ ನಾನು
ಕೊಲಿಸಿಕೊಂಬುವೆ ನಾನು ಕೊಲುವಾತ ನಾನು
ಸುಲಭದಿಂದಲಿ ಜ್ಞಾನ ಫಲವಿಕ್ಕುವವ ನಾನು
ಚೆಲುವ ವಿಮಲಾನಂದ ಗುರುರಾಯ ನಾನು ೫

 

೪೭೨
ಹುಡುಕಿ ನೋಡೆಲೋ ನಿನ್ಯಾರೆಂದು ಧೃಢಚಿತ್ತಕ ತಂದು ಪ
ಎಲು ಚರ್ಮ ಮಾಂಸ ತುಂಬಿದ ಗೂಡು
ಮಲಮೂತ್ರದ ಬೀಡು
ಹೊಲೆಯ ಸಂಸಾರದೊಳೀಡು ಗುರುಚರಣಕೆ ಕೂಡು ೧
ಏಸು ದುರ್ಗಂಧದೊಳು ನೀ ಬೆಳಿದೆ ಸೂತಕದಿಂದಿಳಿದೆ
ಆಶಾಪಾಶದಲಿ ದಿನವನು ಕಳೆದೆ ಮಾಯೆಯೊಳು ಸಳಿದೆ ೨
ಅಂತರಾತ್ಮನ ನೆಲೆಯ ಹುಡುಕು ಇದಕ್ಯಾತಕೆ ತುಡುಕು
ಶಾಂತ ಶ್ರೀ ವಿಮಲಾನಂದನ ಹುಡುಕು ಅಜ್ಞಾನವ ಬಿಡುಕು ೩

 

ನಗರದ ಬಸವನೃಪಗೆ ಶ್ರೀ ಕೊಲ್ಲೂರು
೪೭೩
ಹೂವಾ ಕೊಟ್ಟಳು ಮಹಾದೇವಿ ಮೂಕಾಂಬಾ
ಭೂಪವರ ಬಸವ ನೃಪನ ಭಾವಭಕ್ತಿಗೆ ಒಲಿದು ಪ
ತನ್ನ ಮಗನೆಂಬ ತಾತ್ಪರ್ಯದಲಿ ಕೈವಿಡಿದು
ಮನ್ನಿಸುವೆನೆನುತ ಮೋಹದಲಿ ಕರೆದು
ಅನ್ಯ ವೈರಿಗಳ ಜಯಿಸೆಂದು ಅಭಯವನಿತ್ತು
ಚೆನ್ನಾಗಿ ಸಾಮ್ರಜ್ಯ ಪದವಿಯನನುಭವಿಸೆನುತಾ ೧
ದೃಢಭಕ್ತಿವಿಡಿದು ತನ್ನಡಿಗಳನು ಪೂಜಿಸಲು
ಒಡನೊಡನೆ ಬಂದು ಭೂಮಿಪನ ನೋಡಿ
ಪಡುಗಡಲ ಒಡೆಯ ಬಾರೆಂದು ನಂಬಿಗೆಯನ್ನು
ಕೊಡುವ ತೆರದಲಿ ವಿಶ್ವದೊಡತಿ ತನ್ನಯ ಬಲದ ೨
ಇಂದು ರವಿಗಳು ಇರುವ ಪರಿಯಂತ ನೃಪನೇನಿಸಿ
ಚಂದದಿಂದಲಿ ವಿಮಲಾನಂದವಾಗಿ
ಎಂದೆಂದು ಸ್ಥಿರದಿ ಬಾಳೆಂದು ಬಸವೇಂದ್ರನಿಗೆ
ಇಂದೀವರಾಕ್ಷಿ ಕೊಲ್ಲೂರ ಮೂಕಾಂಬಾ ೩

 

೪೭೪
ಹೆಚ್ಚುಕಡಿಮೆಯೆಂದು ಹೆಣಗಾಡಬೇಡಿ
ಸಚ್ಚಿದಾನಂದ ಬ್ರಹ್ಮನ ಗುಟ್ಟು ನೋಡಿ ಪ
ಪರಮಾತ್ಮ ಕಾಯದೊಳಿರುತಿರ್ಪತನಕಾ
ಪರಿಪರಿ ಹೆಸರಿಂದ ಕರಿವರು ಅನಕಾ
ಶರೀರ ಭೋಗವ ತೀರಿಸಿಕೊಂಡು ಹೋಹಾಗೆ
ಲ್ಲರಿಗೊಂದೆ ಪೆಸರಿಂದ ಕರೆಯುವರಾಗಾ ೧
ಅರಸು ಮಂತ್ರಿ ಕರಣೀಕ ತಳವಾರಾ
ಮೆರೆವ ಪಾಠಕ ಕವಿ ಶಾಸ್ತ್ರಿ ಉದಾರಾ
ಪರಿಯ ನಾಮಗಳಿಂದ ಉಪಾಧಿಯೋಗಾ
ಪರಮಾತ್ಮ ತೊಲಗಲು ಹೆಣವೆಂಬರಾಗಾ ೨
ಪರಮಾತ್ಮನಾಟದ ಲೀಲೆ ಇದೆಲ್ಲಾ
ಗುರುಪುತ್ರನಾದ ಮಹಾತ್ಮನೆ ಬಲ್ಲಾ
ಗುರು ವಿಮಲಾನಂದ ಶರಧಿಯೊಳಾಡಿ
ಹಿರಿದು ಕಿರಿದು ಯಾವಲ್ಯುಂಟೆಂದು ನೋಡಿ ೩

 

ದೀಪ ಬೆಳಗುವಾಗಾ
೪೪೪
ದೀಪ ಬೆಳಗುವಾಗಾ ಉಣ್ಣುವರುಣ್ಣಿರೋ ಬೇಗ ಬೇಗಾ
ದೀಪ ಲೋಪವಾದಮೇಲೆ ಬರಿದಪ್ಪುದು ಭೋಜನಶಾಲೆ ಪ
ಚಿತ್ತಶುದ್ಧಿಎಂಬ ಎಳೆಬಾಳೆಎಲೆ ಎಡೆಮಾಡಿ
ನಿತ್ಯನಿರ್ಮಲವೆಂಬ ರಾಜಾನ್ಹವ ನೀಡಿ
ಸತ್ಯಸಾಧುಸಂಗವೆಂಬ ಘೃತಸಾರಾನ್ಹವ ನೀಡಿ
ಪ್ರತ್ಯುಗಾತಮ ಆತ್ಮನ ನಿರಂತರ ತೃಪ್ತಿಬಡಿಸಿ ನೋಡಿ ದೀಪ ೧
ಗುರುಕೃಪೆಯೆಂದೆಂಬ ಪರಡಿಯ ಪಾಯಸದಾಹಾರಾ
ನಿರುತಾನ್ಹ ಉದಾನಮಾಡಲು ಷಡುರಸದುಪಚಾರಾ
ಹರಿಹರ ಭೇದಗಳಡಗಿದನು ಭವಾಮೃತ ಸಾರಾ
ಪರಉಪಕಾರಕೆ ಶರೀರವ ತೆರುವುದು
ಪೊಸದುಪ್ಪದಭಾರಾ ದೀಪ ೨
ಕೆಂದ ಆಕಳ ಕರೆದು ಕಾಸಿದ ಕ್ಷೀರವ ಕೈಕೊಂಡು
ತಂದೆ ತಾಯ್ಗಳ ಭಕುತಿ ಮಾಡಿದ ಮಸುರೋಗರ ಉಂಡು
ವಂದಿಸಿ ಶ್ರೀ ಗುರು ವಿಮಲಾನಂದನ ಸೈಂದವನೊಳಗೊಂಡು
ಹೊಂದಿದ ಮಾಯಾಕ್ಷುಧೆಯನು ಹಿಂದಿಸಿ
ತೇಗುತ ಮೆರದುಂಡು ೩

 

ಹಾಡಿನ ಹೆಸರು :ದೀಪ ಬೆಳಗುವಾಗಾ
ಹಾಡಿದವರ ಹೆಸರು :ರಾಘವೇಂದ್ರ ಎಂ., ಶಿವಕುಮಾರ್ ಎಸ್.
ರಾಗ :ಕಾಪಿ
ತಾಳ :ಆದಿ ತಾಳ
ಶೈಲಿ :ಕರ್ನಾಟಕ
ಸಂಗೀತ ನಿರ್ದೇಶಕರು :ರಾಘವೇಂದ್ರ ಎಂ.
ಸ್ಟುಡಿಯೋ : ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *