Categories
ರಚನೆಗಳು

ರಂಗೇಶವಿಠಲದಾಸರು

೧೦೪
ಅನ್ಯ ದೇವರ ನಾನರಿಯೆ ಸಿರಿಹರಿಯೆ ಪ
ಎನ್ನ ಬಿನ್ನಪ ಕೇಳಯ್ಯ ದೊರೆಯೆ ಅ.ಪ
ಹರಬೊಮ್ಮಾದಿಗಳಿಂದ ವರಪಡೆದ ರಾವಣ
ಸರುವ ಲೋಕಂಗಳನೆಲ್ಲ ಗೆಲಿದು ಬಂದು
ಸಿರಿರಮಣನೆ ನಿನ್ನೊಳು ದ್ವೇಷವನೆ ಮಾಡಿ
ತರು ಮೃಗಗಳಿಂದಪರಾಜಿತನಾದನಯ್ಯಾ ೧
ದೃಷ್ಟಾಂತಗಳನ್ನೆಷ್ಟು ತೋರಲಿ ನಾನು
ದುಷ್ಟ ಜನರೆಲ್ಲ ಪಟ್ಟ ಬವಣೆಗಳಿಗೆ
ಶ್ರಿಷ್ಟಿಗೊಡೆಯನೆ ನಾ ಮನಮುಟ್ಟಿ ನುತಿಸುವೆ
ಶಿಷ್ಟ ಜನರ ಸಂಗದೊಳಿಟ್ಟೆನ್ನ ಸಲಹಯ್ಯಾ ೨
ಮೂರು ಕರಣಗಳಿಂದ ನಾ ನಿನ್ನ ನಂಬಿಹೆನು
ಮಾರುತೀಶನೆ ನಿನ್ನ ಚರಣವ ತೋರಿ
ಗಾರು ಮಾಡದೆ ನೀ ಸಲಹಬೇಕೆಂಬೆನು
ಕಾರುಣ್ಯದಿಂದಲಿ ಶ್ರೀ ರಂಗೇಶವಿಠಲ ೩

 

೧೦೫
ಆರತಿ ಮಾಡಿರೆ ನೀರೆಯರೆಲ್ಲರು
ಮಾರಮಣನಾದ ಶ್ರೀರಂಗರಾಜನಿಗೆ ಪ
ನೀರೊಳು ಮುಳುಗುತ ಭಾರ ಬೆನ್ನಲಿ ಪೊತ್ತು
ಕೋರೆಯೆ ತೋರಿದ ನಾರಸಿಂಹನಿಗೆ ೧
ಪೋರ ರೂಪನಾದ ಧೀರ ಪರಶುಧರಗೆ
ಶ್ರೀ ರಘುರಾಮನೆಂಬ ಚೋರ ಶಿಖಾಮಣಿಗೆ ೨
ಚಾರು ಬೌದ್ಧನಿಗೆ ವೀರ ರಾಹುತಗೆ
ನೀರಜನಾಭನಾದ ಶ್ರೀ ರಂಗೇಶವಿಠಲಗೆ ೩

 

೧೯೩
ಈ ಸಂಸಾರ ಸುಖವು ಬೇಸರಾಯ್ತೆನಗೆ
ವಾಸವಾನಜ ಲಾಲಿಸೊ ಪ
ಏಸು ಜನುಮದ ಪಾಪವೊ
ಈ ಸಂಸಾರ ಬಂಧನವೊ ಅ.ಪ
ತಂದೆ ತಾಯಿ ಎಂಬುದದು ಒಂದು ಚಿಂತೆ
ಬಂಧು ಬಳಗವು ಎಂಬುದದು ಬೇರೆ ಚಿಂತೆ
ಸಂದಣೀಯ ಸತಿ ಸುತರೆಂಬದದು ದೊಡ್ಡ ಚಿಂತೆ
ಕಂದನಿಲ್ಲದಿರಲದು ಘೋರ ಚಿಂತೆ ೧
ಹಿಂದೆ ಮಾಡಿದ ಪಾಪಕೀಸು ಭವಣೆಯು ಸಾಕು
ಮುಂದೆ ಬೇಡವೊ ಸ್ವಾಮಿ ಈ ತೆರದ ತಾಪ
ಇಂದು ಮಾಡಿದ ಪಾಪ ಒಂದುಳುಹದಂತೆ
ತಂದೆ ಕರುಣದಿ ಸುಟ್ಟು ಸಲಹೆನ್ನ ದೊರೆಯೆ ೨
ಇಂದಿರಾಧವ ನಿನ್ನ ಪಾದ ಸರೋಜದಲಿ
ಮಂದಮತಿಯ ಮನ ಚಲಿಸದೆ ನಿಲುವಂತೆ
ಒಂದು ಬೇಡುವೆನೊ ದೇವ ಬೇರೊಂದ ನಾನೊಲ್ಲೆ
ಮಂದರೋದ್ಧಾರ ಶ್ರೀ ರಂಗೇಶವಿಠಲ ೩

 

೧೧೨
ಉಗಾಭೋಗ
ಕಮಲಮಾರ್ಗಣಪಿತ ನಿನ್ನ
ಸಮವಾದ ದೈವಗಳ ನಾ ಕಾಣೆ
ಕಮಲಜಾಂಡದೊಳಗೆ ಜಗಕೆ ಗುರುವೆನಿಪ
ಕಮಲಭವನ ನೀ ಪೆತ್ತೆ ಜಗನ್ಮಾತೆಯಾ
ಕಮಲಾಲಯೆಗೆ ನೀ ಪತಿಯಾದೆ
ಕಮಲಸಖ ಕೋಟಿತೇಜ ನಿನ್ನ ಪಾದ
ಕಮಲವನೆನ್ನ ಹೃತ್ಕಮಲದೊಳು ತೋರಿ ಸಲಹೊ
ಕಮಲಾಕ್ಷ ಶ್ರೀ ರಂಗೇಶವಿಠಲ

 

೧೦೮
ಉಗಾಭೋಗ
ಏನೇನು ಪಾಟು ಬಿದ್ದರು ಮುನ್ನ
ನಾನು ಮಾಡಿದ ಕರ್ಮ ಬೆಂಬಿಡದಿರೆ
ಶ್ರೀನಿವಾಸನೆ ನಿನ್ನಲನುಗಾಲ
ಧ್ಯಾನಿಸಲೇಕೊ ಸ್ವಾಮಿ
ನೀನೊಲಿದ ಮೇಲೆ ಪೂರ್ವಾಜಿತ ಕರ್ಮ
ವೇನು ಮಾಡಬಲ್ಲದು
ಹೀನ ಮಾನವರಿದನರಿಯದೆ
ನಾನಾ ಪ್ರಕಾರದಿ ತೊಳಲುವರು
ಶ್ವಾನನಂದದಿ ಭವದೊಳಗೆ ನಿನ್ನ ಮರೆದು
ಏನು ಕಷ್ಟ ಬಂದರೂ ಬರಲಿ
ನಾ ನಿನ್ನ ಮರೆಯೆನೊ ದೇವರದೇವ
ಸಾನುರಾಗದಿ ಸಲಹೆನ್ನ
ಶ್ರೀನಿಧಿ ರಂಗೇಶವಿಠಲ

 

೧೧೭
ಉಗಾಭೋಗ
ಚಿಕ್ಕ ಮಗುವಾದ ಪ್ರಹ್ಲಾದ ದೇವನನು
ರಕ್ಕಸನು ಪಿಡಿದತಿ ಹಿಂಸೆಪಡಿಸುವದ ನೋಡಿ
ಉಕ್ಕಿಬರುತಿಹ ಕೋಪದಿಂ ಕಿಡಿಕಿಡಿಯಾಗಿ
ಉಕ್ಕಿನ ಕಂಬದಿಂ ಉರಿಯ ಕಾರುತ ಬಂದು
ಪಕ್ಕಿದೇರನು ಹಿರಣ್ಯಕಶಿಪನ ಪಿಡಿದು ತಾ
ಕುಕ್ಕಿ ಉಗುರಿಂದ ಉರ ಬಗೆದು ಕರುಳ ಮಾಲೆಯ
ಗಕ್ಕನೆ ಗಳಕಿಕ್ಕಿಕೊಂಡು ಆರ್ಭಟಿಸಿದಂದು
ಲಕ್ಕುಮಿಯಾದಿಯಾಗಿ ಮುಕ್ಕೋಟಿ ದೇವತೆಗಳು ಬೆದರಿ
ದಿಕ್ಕೆಟ್ಟು ಗಡ ಗಡ ನಡುಗುತಿರಲಾಗ
ಅಕ್ಕರದ ಭಕುತ ಪ್ರಹ್ಲಾದ ಬರೆ ಬಿಗಿಯಪ್ಪಿ
ತಕ್ಕೈಸಿ ಮುಂಡಾಡಿ ಪ್ರಸನ್ನನಾದನು ತನ್ನ
ಭಕ್ತರೊಳಿನ್ನೆಷ್ಟು ಪ್ರೀತಿಯೋ ರಂಗೇಶವಿಠಲಗೆ

 

೧೮೭
ಉಮಾ ಹಿಮಗಿರಿ ಸಮಸ್ತ
ಸಮಾನ ಸುಗುಣವಂದ್ಯೆ ಪ
ಕಮಲಾಕ್ಷನ ಭಗಿನಿಯೆನ್ನಮಲನ ಮಾಡಿ
ವಿಮ¯ ಮನಸು ಶಮದಮಗಳ ನೀಡಮ್ಮ ಅ.ಪ.
ತ್ರಿಪುರ ಸುಂದರಿ ನಿನ್ನ ಅಪಾರ ರೂಪಕೆ
ತ್ರಿಪುರಾರಿ ಮರುಳಾದನಮ್ಮ
ಶಫರಾಕ್ಷಿ ಕೇಳೆನ್ನ ಬಿನ್ನಪವನು ಮನ
ಚಪಲಾಕೆರಗದಂತೆ ಕೃಪೆ ಮಾಡಬೇಕಮ್ಮ ೧
ಜಪವ ನಾನರಿಯೆನು ತಪವ ನಾನರಿಯೆನು ಎ
ನ್ನಪರ ಬುದ್ಧಿಯ ಬಿಡಿಸಮ್ಮ
ಕೃಪಣ ವತ್ಸಲೆ ಎನ್ನ ಕುಪಥಾವ ತಪ್ಪಿಸಿ
ಅಪವರ್ಗ ಸೇರುವ ಸುಪಥವ ತೋರಮ್ಮ ೨
ಅಪ್ಪ ರಂಗೇಶವಿಠಲ ಒಪ್ಪುವ ರೀತಿಲಿ
ತಪ್ಪದೆ ಮತಿ ಪ್ರೇರಿಸಮ್ಮ
ತಪ್ಪು ಒಪ್ಪುಗಳೆಲ್ಲ ಸರ್ಪಶಯನಗೆಅರ್ಪಿಸಿ ಎನ್ನ ನಿರ್ಲಿಪ್ತನ ಮಾಡಿಸಮ್ಮ ೩

 

೧೦೬
ಎಂಥ ಶೂರನೊ ರಾಮ ಎಂಥ ಧೀರನೊ ಪ
ಕಂತುಹರನ ಧನುವನೆತ್ತ
ಪಂಥದಿಂದ ಮುರಿದು ಬಿಸುಟ ಅ.ಪ.
ಹಲವು ಶೂರರಾಜರದನು
ಚಲಿಸಲಾಗದ ಧನುವ
ಸುಲಭದಿಂದಲೆತ್ತಿ ಮುರಿದು
ಲಲನೆ ಸೀತೆಯೊಲಿಸಿದವನು ೧
ಸಕಲ ಕ್ಷತ್ರಿಯರನು ಗೆಲಿದು
ಪ್ರಕಟನಾದ ಪರಶುರಾಮ
ಶಕುತಿಯನ್ನು ತಾನು ಪರಮ
ಯುಕುತಿಯಿಂದ ಗೆಲಿದು ಬಂದ ೨
ಸಾಲು ಶಿರನ ಕೀಟವೆಂದು
ಬಾಲದಲ್ಲಿ ತಂದ ವೀರ
ವಾಲಿಯನೇಕ ಬಾಣದಲಿ
ಲೀಲೆಯಿಂದಲಿರಿದ ಜಾಣ ೩
ಹತ್ತನಾಲ್ಕು ಲೋಕಗಳನು
ಸುತ್ತಿಗೆಲಿದು ಖ್ಯಾತನಾದ
ಹತ್ತು ತಲೆಯ ದುಷ್ಟನನ್ನು
ಕತ್ತು ಕಡಿದು ಕೆಡಹಿದವನು ೪
ರಾಸಿ ದೈತ್ಯರನ್ನು ಕೊಂಡು
ದೇಶವನ್ನು ಉದ್ಧರಿಸಿದ
ವಾಸವಾದಿ ಸುರನುತ ರಂ-
ಗೇಶವಿಠಲರೇಯನವನು ೫

 

೧೯೪
ಎಂದಿಗೆ ಕಾಂಬುವೆ ನಿನ್ನ ಚರಣವ
ಸಿಂಧು ಸುತೆಯ ಪತಿ ಘನ್ನ ಪ
ಪರಧನ ಪರಸತಿಯರನು ನಾ ಬಯಸುತ
ಸಿರಿಯರಸ ನಿನ್ನ ಮರೆದು ಪರಮ ನೀಚನೆಂದೆನಿಸಿರುವೆ ೧
ಅರಿತು ಅರಿಯದಂತೆ ದುರಿತಗಳನು ಮಾಡಿ
ಗುರು ಹಿರಿಯರನು ನಿಂದಿಸಿ ಗರುವದಿಂದಲಿ ಚರಿಸುತಿರುವೆ ೨
ಸರುವಂತರ್ಯಾಮಿ ಕರುಣಾಕರನಾದ
ಸಿರಿ ರಂಗೇಶವಿಠಲ ನಿನ್ನ ಅರೆಕ್ಷಣ ಸ್ಮರಿಸದಿರುತಿರುವೆ ೩

 

೧೯೫
ಎನಗೆಲ್ಲಿಯ ಕೊರತೆ ನಿನ ನಂಬಿದ ಮೇಲೆ
ಮನಸಿಜನೈಯ್ಯಾ ಶ್ರೀ ರಂಗೇಶವಿಠಲ ಪ
ಕೊಡುವ ಕರ್ತನು ನೀನು ಎಡಬಿಡದಿರುವಾಗ
ಬಡತನವೆನಗ್ಯಾಕೆ ರಂಗೇಶವಿಠಲ ೧
ಸತಿಯು ಸುತರು ಎನಗೆ ಹಿತವ ಬಯಸಲಿಲ್ಲ
ಗತಿಯು ಎನಗೆ ನೀನೆ ರಂಗೇಶವಿಠಲ ೨
ಮಂದಮತಿಯು ನಾನು ಸಿಂಧುಶಯನ ನಿನ್ನ
ಕಂದನೆಂದು ತಿಳಿಯೊ ರಂಗೇಶವಿಠಲ ೩

 

೧೯೬
ಎಲ್ಲರೂ ದಾಸರಹರೇ ಪ
ಪುಲ್ಲನಾಭನ ದಯವಿಲ್ಲದೆ ಅ.ಪ.
ಜ್ಞಾನವಿಲ್ಲ ಭಕುತಿಯಿಲ್ಲ
ಧ್ಯಾನ ವೈರಾಗ್ಯ ಮೊದಲೆ ಇಲ್ಲ
ಹೀನ ಕರ್ಮಗಳನು ಮಾಡಿ
ಶ್ರೀನಿವಾಸನ ಮರೆತವರು ೧
ಪರವಧುವಿನ ರೂಪ ಮನದಿ
ಸ್ಮರಣೆ ಮಾಡುತ ಬಾಯಿಯೊಳು
ಹರಿಯ ಧ್ಯಾನ ಮಾಡುತಿರುವ
ಪರಮ ನೀಚರಾದ ಜನರು ೨
ಪಟ್ಟೆನಾಮ ಹಚ್ಚಿ ಕಾವಿ
ಬಟ್ಟೆಯನ್ನು ಹೊದ್ದುಕೊಂಡು
ಅಟ್ಟಹಾಸ ತೋರಿಕೊಳುತ
ಗುಟ್ಟು ತಿಳಿಯದಿರುವ ಜನರು ೩
ದೊಡ್ಡ ತಂಬೂರಿಯ ಪಿಡಿದು
ಅಡ್ಡ ಉದ್ದ ರಾಗ ಪಾಡಿ
ದುಡ್ಡುಕಾಸಿಗಾಗಿ ಭ್ರಮಿಸಿ
ಹೆಡ್ಡರಾಗಿ ತಿರುಗುವವರು ೪
ನೋವು ಬಾರದಂತೆ ಸದಾ
ಓವಿಕೊಂಡು ಬರುತಲಿರುವ
ದೇವ ರಂಗೇಶವಿಠಲನ
ಸೇವೆಯನ್ನು ಮಾಡದಿರುವ ೫

 

೧೯೭
ಏನಬೇಡಲೊ ಕೃಷ್ಣ ನಾಚಿಕಿಲ್ಲದೆ ಪ
ಜ್ಞಾನಶೂನ್ಯನಾಗಿ ಬಹಳ ಹೀನ ಕಾರ್ಯ ಮಾಡಿ ನಾನು ಅ.ಪ.
ಪರರ ವನಿತೆ ಧನಗಳಿಂಗೆ
ಅರಿತು ಅರಿತು ಆಶೆಪಡುತ
ದುರಿತಕೋಟಿಗಳನು ಮಾಡಿ
ಪರಮ ನೀಚನೆನಿಸಿದವನು ೧
ವನಗಳನು ಕಡಿಸಿ ಹಿರಿದು
ಮನೆಗಳನ್ನು ರಚಿಸಿಕೊಂಡು
ವನಿತೆ ಮಾತು ಕೇಳಿ ಜನನಿ
ಜನಕರನ್ನು ತೊರೆದ ಪಾಪಿ ೨
ಸತ್ಯ ಮತವನು ತುಚ್ಛಗೈದು
ನಿತ್ಯಕರ್ಮಗಳನು ಬಿಟ್ಟು
ಮತ್ತನಾಗಿ ತಿಂದು ಮಲಗಿ
ಕತ್ತೆಯಂತೆ ಹೊರಳುವವನು ೩
ಆರ್ತರಾದ ಜನರ ಸಲಹಿ
ಕೀರ್ತಿಯನ್ನು ಹೊಂದಿ ದೇಹ
ಸಾರ್ಥಕವನು ಮಾಡಿಕೊಳದೆ
ಧೂರ್ತನೆನಿಸಿಕೊಳುವ ನರನು ೪
ವಾಸುದೇವ ಸಕಲ ದೋಷ
ರಾಸಿಗಳನು ದಹಿಸುವ ರಂ-
ಗೇಶವಿಠಲರೇಯ ನಿನ್ನ
ದಾಸನೆಂದು ಪೇಳದವನು ೫

 

೨೦೯
ಏನಿದ್ದರೇನಯ್ಯಾ ಜ್ಞಾನವಿಲ್ಲದ ಮೇಲೆ ಪ
ದೀನರಕ್ಷಕ ನಿನ್ನ ಧ್ಯಾನ ಮಾಡದವನೆ ಅ.ಪ.
ಸತಿಸುತ ಬಾಂಧವರು ಬಹಳಿದ್ದರೇನು
ಗತಿ ಕಾಣಿಸುವರೇನೋ ದೇವರ ದೇವ
ಪತಿತಪಾವನ ನಿನ್ನ ಅತಿಭಕುತಿಯಿಂದ
ಸ್ತುತಿಸಿ ಹಿಗ್ಗದಂಥ ಪಾಮರ ಮನಿಜನೆ ೧
ಕ್ಷೇತ್ರಮಾನ್ಯಗಳೇಸಿದ್ದರೇನು
ಪಾತ್ರೆ ಪದಾರ್ಥಗಳ್ ಗೃಹದಿ ತುಂಬಿದ್ದರೇನು
ಪಾತ್ರಂಗಳ ನೋಡಿ ದಾನಧರ್ಮಂಗಳ ಮಾಡಿ ಮಹ
ಯಾತ್ರೆಗಳ ಚರಿಸದೆ ಗಾತ್ರವ ಪೋಷಿಪಗೆ ೨
ರಾಶಿ ವಿದ್ಯವಿರಲು ಅದರಿಂದ ಫಲವೇನು
ಕೋಶವು ಕೊರೆಯಿಲ್ಲದೆ ಇರುತಿರ್ದರೇನೊ
ಈಶ ವಿನುತ ಶ್ರೀ ರಂಗೇಶವಿಠಲನೊಳು
ಲೇಶ ಭಕುತಿಯಿಲ್ಲದ ಹೇಸೀಕೆ ಮನದವನೆ ೩

 

೧೦೭
ಏನು ಕರ್ಮವ ಮಾಡಿ ನಾ ನಿನ್ನ ಒಲಿಸಲಿ ಶ್ರೀನಿವಾಸ
ಧ್ಯಾನಕೆ ನಿಲುಕದ ಜ್ಞಾನಿಗಳರಸ ನೀನು ಶ್ರೀನಿವಾಸ ಪ
ಗಂಗೆಯ ತಂದು ಮಂಗಳಸ್ನಾನ ಮಾಡಿಸೆ ಶ್ರೀನಿವಾಸ
ಗಂಗೆಯು ನಿನ್ನಂಗುಷ್ಟದಲ್ಲಿಹಳಲ್ಲೊ ಶ್ರೀನಿವಾಸ ೧
ಮನಮೆಚ್ಚುವಂತೆ ನಿನ್ನ ಸುಮಗಳಿಂದರ್ಚಿಪೆನೆ ಶ್ರೀನಿವಾಸ
ವನಜ ಪುಷÀ್ಪವು ನಿನ್ನ ನಾಭಿಯೊಳಿಹುದಲ್ಲೋ ಶ್ರೀನಿವಾಸ ೨
ಅಂಗಿವಸ್ತ್ರಗಳಿಂದ ಶೃಂಗರಿಸುವೆನೆಂದರೆ ಶ್ರೀನಿವಾಸ
ಅಂಗನೆ ಲಕುಮಿ ಸಕಲಾಭರಣಂಗಳಾಗಿರುವಳಲ್ಲೊ ಶ್ರೀನಿವಾಸ ೩
ಅನ್ನ ಪಾನಗಳಿತ್ತು ಧನ್ಯನಾಗುವೆನೆ ಶ್ರೀನಿವಾಸ
ಅನ್ನಪೂರ್ಣಿ ಷಡುರಸದನ್ನವ ಮಾಳ್ಪಳಲ್ಲೊ ಶ್ರೀನಿವಾಸ ೪
ಕಡುಭಕ್ತಿಯಿಂದ ನಿನ್ನಡಿ ಸೇವೆ ಮಾಳ್ಪೆನೆ ಶ್ರೀನಿವಾಸ
ಎಡಬಿಡÀದೆ ಹನುಮ ನಿನ್ನಡಿಯ ಪಿಡಿದಿಹನಲ್ಲೊ ಶ್ರೀನಿವಾಸ ೫
ಜಗದುದರ ನಿನ್ನ ಬಗೆ ಬಗೆ ನಾಮಗಳ ಸ್ತುತಿಸೆ ಶ್ರೀನಿವಾಸ
ಅಗಣಿತವಾಗಿಹುದು ಮುಗಿಯದಂತಿಹುದಲ್ಲೊ ಶ್ರೀನಿವಾಸ ೬
ಶ್ರಿಷ್ಟಿಕರ್ತ ಶ್ರೀ ರಂಗೇಶವಿಠಲನೆ ಎಂಬೆ ಶ್ರೀನಿವಾಸ
ಇಷ್ಟೆಂದ ಮಾತ್ರಕೆ ಒಲಿದಿಷ್ಟವ ಸಲಿಸೈಯ್ಯಾ ಶ್ರೀನಿವಾಸ ೭

 

೧೫೫
ಏಳಮ್ಮ ತಾಯೆ ಮುದದಿಂದೆಮ್ಮನು ಕಾಯೆ
ಕೋಳಿ ಕೂಗುತಲಿದೆ ಕೇಳಮ್ಮಯ್ಯಾ ಪ
ಕಾಲನಾಮಕ ಸೂರ್ಯದೇವನ ರಥದ ಕೆಂ-
ಧೂಳಿಯೇಳುವಂತೆ ಅರುಣೋದಯವಾಯ್ತು ಅ.ಪ.
ಮರುತಸುತನೆದ್ದು ಪರಾಕ್ಹೇಳುತಿಹನು
ಗರುಡನು ಹೊರಬಾಗಿಲೊಳು ಕಾದಿರುವನು
ಪರಿವಾರದವರೆಲ್ಲ ಕರಕಟ್ಟಿ ನಿಂದಿಹರು
ಹಿರಿಯ ಸೊಸೆ ವಾಣಿ ವಾರಿ ಕಲಶ ಪೊತ್ತಿಹಳು ೧
ಸಾರಭಕ್ತರು ಎಲ್ಲ ಸಾಲಾಗಿ ನಿಂದಿಹರು
ಭೂರಿ ಕುತೂಹಲದಿ ನಿನ್ನ ದರುಶನಕಾಗಿ
ವಾರಿಜಭವ ಮುಖ್ಯ ಸರುವ ದೇವತೆಗಳು
ಸಾರಿ ಬರುತಿರುವರು ನೀನೇಳಮ್ಮಯ್ಯಾ ೨
ನೀ ಪೋಗಿ ಆತನ ಕರಪಿಡಿದೆಬ್ಬಿಸಾದೊಡೆ
ಶ್ರೀಪತಿಯು ಶೇಷತಲ್ಪದಿಂದೇಳನು
ಅಪಾರಮಹಿಮ ಶ್ರೀ ರಂಗೇಶವಿಠಲನ
ವ್ಯಾಪಾರಂಗಳನರಿತವರಿನ್ನ್ಯಾರಮ್ಮ ೩

 

೧೭೧
ಏಳಯ್ಯ ಭಾರತಿ ಮೋಹನ
ಲೋಲನೇಳುವದಕಿನ್ನ ಮುನ್ನ ಪ
ತಾಳಮೇಳದವರೆಲ್ಲಿ ಬಂದು ದ್ವಾರ
ದೊಳು ಸೇರಿ ಪಾಡುತಿಹರೊ ನಿಂದು ೧
ಜಲಜಭವ ಭವಾದಿ ಸುರರು ಸಭೆ
ಯಲಿ ಬಂದಾಗಲೆ ಓಲೈಸುತಲಿಹರು ೨
ತಡಮಾಡಬೇಡಯ್ಯ ನೀನು ನಿನ್ನ
ಒಡೆಯನೆದ್ದು ನಿನ್ನನು ಕೂಗ್ಯಾನೊ ೩
ಕಪಿಯಾಗಿ ನೀ ಪುಟ್ಟಬೇಕಂತೆ ತಾನು
ವಿಪಿನವಾಸಕಾಗಿ ತೆರಳುವನಂತೆ ೪
ಶರಧಿಯ ನೀ ದಾಟಬೇಕಂತೆ ಅಲ್ಲಿ
ಸಿರಿಗೆ ಮುದ್ರೆಯ ನೀನೀಯಬೇಕಂತೆ ೫
ದುರುಳನ ಪುರವ ನೀನುರುಹಬೇಕಂತೆ ಅವನ
ಪರಿವಾರವೆಲ್ಲವ ನೀ ತರಿಯಬೇಕಂತೆ ೬
ಕುಂತೀಲಿ ನೀ ಪುಟ್ಟಬೇಕಂತೆ ತಾನು
ಕಂತುವಿಗೆ ಪಿತನಾಗುವನಂತೆ ೭
ಮಗಧ ಮುಖ್ಯರ ನೀ ಸೀಳಬೇಕಂತೆ ದೇವ
ಜಗಕೆ ಮಂಗಳವ ನೀ ಮಾಡಬೇಕಂತೆ ೮
ದುರುಳ ದುಶ್ಶಾಸನನ ಇರಿಯಬೇಕಂತೆ ಅವನ
ಕರುಳ ನಿನ್ನರಸಿಗೆ ಮುಡಿಸಬೇಕಂತೆ ೯
ಮುದ್ದು ಭಾರತಿಯ ನೀ ಬಿಡಬೇಕಂತೆ ನೀನು
ಹೊದ್ದು ಕಾವಿಬಟ್ಟೆ ಯತಿಯಾಗಬೇಕಂತೆ ೧೦
ಅದ್ವೈತ ಮತವನು ನೀ ಖಂಡ್ರಿಸಬೇಕಂತೆ ಗುರು
ಮಧ್ವಮುನಿಯೆಂದು ನೀ ಮೆರೆಯಬೇಕಂತೆ ೧೧
ಬದರಿಕಾಶ್ರಮಕೆ ಪೋಗಬೇಕಂತೆ ಅಲ್ಲಿ
ಬಾದರಾಯಣನಾಗಿ ತಾನಿರ್ಪನಂತೆ ೧೨
ಹಿಂಗದೆ ಶ್ರೀಶನ ನೀ ನುತಿಸಬೇಕಂತೆ ಸಿರಿ
ರಂಗೇಶವಿಠಲ ನಿನಗೊಲಿದಿಹನಂತೆ ೧೩

 

೧೦೯
ಏಳು ರಂಗಯ್ಯ ನೀನೇಳು ಕೃಷ್ಣಯ್ಯ
ಏಳಯ್ಯ ದೊರೆ ಬೆಳಗಾಯಿತೇಳೆಂದು
ಪಾಲ್ಗಡಲೊಡೆಯ ಹರಿಯನೆಬ್ಬಿಸಿದಳಂದು
ಬಾಲೆ ಯಶೋದೆಯು ಬಹು ಸಂಭ್ರಮದಿಂದ ಪ
ಶಕ್ರನುಪಟಳವ ನೀ ಪರಿಹರಿಸಬೇಕು
ವಿಕ್ರಮದಿ ಗೋವರ್ಧನ ಎತ್ತಬೇಕು
ಅಕ್ರೂರ ಬಂದು ಕಾದಿಹನು ರಥ ಸಹಿತ
ಚಕ್ರಧರ ನಿನ್ನ ಮಧುರೆಗೆ ಕರೆದೊಯ್ಯೆ ೧
ಮಾವ ಕಂಸನು ನಿನ್ನ ಬಾ ಎಂದನಂತೆ
ಸಾವು ಅವನಿಗೆ ಸಮೀಪದಲಿದೆಯಂತೆ
ದೇವಕಿ ವಸುದೇವ ಸೆರೆಯಲಿರುವರಂತೆ
ಕಾವುದಕೆ ನೀ ಪೋಗಲೇಬೇಕಂತೆ ೨
ಬಿಲ್ಲ್ಹಬ್ಬದಲಿ ಜಯಶೀಲನಾಗಬೇಕು
ಖುಲ್ಲ ರಕ್ಕಸ ದಲ್ಲಣನೆನಿಸಬೇಕು
ಮಲ್ಲಮರ್ದನ ಮಾರುತಿಯ ಕರೆಯಬೇಕು
ಬಲ್ಲಿದ ಮಗಧನ ಕೊಲ್ಲಿಸಲುಬೇಕು ೩
ದೇವಿ ದ್ರೌಪದಿಗೆ ಸುಚೇಲವೀಯಬೇಕು
ಭಾವಮೈದುಗೆ ಬೋವನಾಗಬೇಕು
ಪಾವಿನ ಶರದಿಂದವನ ಪೊರೆಯಬೇಕು
ಯಾವತ್ತು ಭೂ ಭಾರವನಿಳುಹಬೇಕು ೪
ಮಧ್ವರಾಯರ ಹೃತ್ಪದ್ಮದಿ ನಿಲಬೇಕು
ಇದ್ದು ಉಡುಪಿಯೊಳು ಪೂಜೆಗೊಳಲುಬೇಕು
ಶುದ್ಧ ವೈಷ್ಣವರಿಷ್ಟಗಳ ಸಲಿಸಬೇಕು
ಮುದ್ದು ರಂಗೇಶವಿಠಲನೆನಿಸಬೇಕು ೫

 

೧೧೦
ಕಂಡು ಹೇಳಿಕೊಂಡೆನೆನ್ನ ಕಷ್ಟವ | ರಂಗನನು ಪ
ಕಂಡ ಹೇಳಿಕೊಂಡೆನೆನ್ನ ಕಷ್ಟವ ಅ.ಪ.
ಬಡವರಾದ ಭೃತ್ಯ ಜನರು
ಕುಡಿದ ನೀರು ಕದಲದಂತೆ
ಒಡಲ ಸಲಹಿಕೊಂಡು ಬರುವ
ಕಡಲಶಯನನಾದ ಹರಿಯ ೧
ಜಗವ ಪೊರೆವ ದೇವ ಕುಂತಿ
ಮಗನ ರಥಕೆ ಸೂತನಾಗಿ
ಮಗುಳೆ ಭುಜಗ ಶರವು ಅವನ
ತಗಲದಂತೆ ಮಾಡಿದವನ ೨
ಭಕುತ ಜನರು ಮಾಡಿದಂಥ
ಸಕಲ ದುರಿತಗಳನು ಕಳೆದು
ಮುಕುತಿ ಮಾರ್ಗ ತೋರುತಿರುವ
ಶಕುತ ರಂಗೇಶವಿಠಲನ ೩

 

೧೧೧
ಕಂಡೆನೆನ್ನ ದೊರೆಯ ಲಕುಮಿಯ | ಗಂಡನೆನಿಪ ಹರಿಯ ಪ
ಕುಂಡಲಿಶಯನನಿರುವ ಪರಿಯ | ಪದ
ಪುಂಡಲೀಕ ಸೇವಿಪ ಪರಿಯ ಅ.ಪ.
ಸಿರಿರಂಗ ಪುರಿಗೆ ಬಂದು | ವಿರಜಯೆನಿಪ
ವರ ಕಾವೇರಿಯೊಳು ಮಿಂದು
ನಿರುಪಮ ರಂಗಮಂದಿರದಿ ನಿಂದು | ನಮ್ಮ
ಸಿರಿ ರಂಗರಾಜನ ಕಂಡೆನಿಂದು ೧
ಇಂದೆನ್ನ ಭಾಗ್ಯಕೆಣೆಯಿಲ್ಲ ಈ
ಮಂದಸ್ಮಿತನ ಕಂಡೆನಲ್ಲ
ಹಿಂದಿನ ಪುಣ್ಯ ಫಲಿಸಿತಲ್ಲ ಇನ್ನು
ಮುಂದಕೆ ಬಹು ಸಾಧನವಾಯಿತಲ್ಲ ೨
ವಾಸುಕಿಶಯನನಾಗಿರುವ | ಬಲು
ಸೋಸಿನಿಂದ ಗರುಡನೇರಿ ಮೆರೆವ
ದೋಷರಾಶಿಗಳ ತರಿವ | ತನ್ನ
ದಾಸರ ಪ್ರೀತಿಯಲಿ ಪೊರೆವ ೩
ಇಂದಿರೆ ರಮಣನಂದನ ಕಂದ | ತಾನು
ಇಂದೆನಗೆ ಒಲಿದು ದಯದಿಂದ
ಸಂದರುಶನವಿತ್ತು ಆನಂದಾಮಿಗೆ
ಪೊಂದಿಸಿ ದಾಟಿಸಿದ ಭವದಿಂದ೪
ಸಂದು ಹೋದವಘಗಳೆಲ್ಲವೆಂದ | ಇನ್ನು
ಮುಂದೆನಗೆ ಭಯವಿಲ್ಲವೆಂದ
ಸುಂದರ ರಂಗೇಶವಿಠಲ ಬಂದ | ಮನ
ಮಂದಿರದಿ ನೆಲೆಯಾಗಿ ನಿಂದ ೫

 

೧೮೩
ಕರುಣದಿ ಪೊರೆಯೆ ಭಾರತಿ
ಗುರು ಮುಖ್ಯಪ್ರಾಣನ ಸತಿ ಪ
ಪರಮ ಮಂಗಾಳೆ ನಿನ್ನ
ಚರಣ ಕಮಲಾವ
ಮರೆಯ ಹೊಕ್ಕೆನು ಕಣ್ಣ
ತೆರೆದು ನೋಡೌ ತಾಯೆ ೧
ಸರುವದ ದುರಿತದಿ
ಚರಿಸಿದವನೆಂದು
ತರಳನಾದೆನ್ನನು
ಜರಿದು ನೂಕುವರೆ ೨
ದುರಿತದೂರ ಗುಣಪೂರ್ಣ
ಸಿರಿ ರಂಗೇಶವಿಠಲನೆ
ಸರಿಯೆಂಬ ಮತಿಯನ್ನು
ಸ್ಥಿರವಾಗಿ ಕೊಟ್ಟೆನ್ನ ೩

 

೧೭೨
ಕರುಣದಿ ಪೊರೆಯೆನ್ನ ಪ್ರಭುವೇ ಮೂಲ ಗುರುವೆ ಪ
ಪರಮ ದಯಾನ್ವಿತ ಸುರಕಲ್ಪತರುವೆ ಅ.ಪ.
ಅಂಗಜಪಿತನಾಜ್ಞೆ ಹಿಂಗಾದೆ ನೀಯಾಂತು
ಅಂಗನೆ ಸೀತೆಯ ಅರಸುತ್ತ ಪೋದೆಯೊ
ತುಂಗವಿಕ್ರಮ ನೀನು ಮಂಗಳಾಂಗಿಯ ಕಂಡು
ಶೃಂಗಾರವನವನ್ನೆ ಭಂಗಮಾಡಿದೆಯೊ ೧
ಕರಿಪುರದರಸನ ವರಪುತ್ರ ನೀನಾಗಿ
ಕರಿರಾಜವರದಗೆ ಭಾವನಾಗಿ
ಕುರುರಾಯ ಮುಖ್ಯ ದುರುಳರ ನೀ ಕೊಂದು
ಧರಣಿ ಭಾರವೆಲ್ಲ ಹರಿಸಿದೆ ನೀನು ೨
ಯತಿಯ ರೂಪವ ತಾಳಿ ಕ್ಷಿತಿಯೊಳು ಚರಿಸುತ
ದಿತಿಜರ ಬಾಯ್ಗಳ ಬಡಿಯುತಲಿ
ಪತಿತ ಪಾವನ ಶ್ರೀ ರಂಗೇಶವಿಠಲನೆ
ಪ್ರತಿಯಿಲ್ಲವೆಂತೆಂಬ ಮತಿಯಿತ್ತದೇವ ೩

 

೧೧೩
ಕರುಣಿಸು ಕರುಣಿಸು ಪರಮ ಪುರುಷ ರಂಗ ಪ
ಕರಿಯ ಮೊರೆ ಕೇಳಿ ಹರಿತಂದಂತೆನ್ನಾ ಅ.ಪ
ನೀರೊಳು ಮುಳುಗುತ ಗಿರಿಯ ಬೆನ್ನಲಿ ಪೊತ್ತ
ಕೋರೆಯ ತೋರುತ ನರಹರಿಯಾದರು ಬಿಡೆನೊ ೧
ನೀನೆ ತರಿದುಂಡರು ನಾ ನಿನ್ನ ಬಿಡುವೆನೆ
ಮೌನಿ ಕುವರನಾಗಿ ಜನಿಸಿದರು ಬಿಡೆನೊ ೨
ಪುರವ ಕಳೆದು ವನಕೆ ತೆರಳಿದರು ಬಿಡೆನೊ
ಉರಗನ ಮಡುವಿನೊಳು ಸರಿದರು ನಾ ಬಿಡೆನೊ ೩
ದಿಗಂಬರ ನೀನಾಗಿ ಹಗರಣವ ಮಾಡಲು
ಮಗುಳೆ ತೇಜಿಯನೇರಿ ಪೋಗಲು ನಾ ಬಿಡೆನೊ ೪
ಗರುಡನ ಹೆಗಲೇರಿ ತಿರುಗಿದರು ಬಿಡೆನೊ
ಸಿರಿ ರಂಗೇಶವಿಠಲನೀ ಕರೆಕರೆಗೊಳಿಸದೆ ೫

 

೧೬೬
ಕರುಣಿಸೆ ಕೋಮಲ ಗಾತ್ರೆ ಕಂಜಜಮಾತೆ ಪ
ಹರ ಸುರೇಶ್ವರ ಪ್ರಮುಖ ಸಮಸ್ತ ಸುರರು
ನಲಿಯುತ ಶಿರವ ಬಾಗಿ
ಕರವ ಮುಗಿಯಲು ಪರಮ ಹರುಷದಿ ವರವ ಕೊಡುತಿಹ
ಹರಿಯ ಮಡದಿಯೆ ಅ.ಪ.
ಕ್ಷೀರವಾರಿಧಿ ತನಯೆ ನಿನ್ನಯ ದೇಹ
ಬೀರುತಿದೆ ವಿದ್ಯುಛ್ಛವಿಯೆ ಶ್ರೀ ಹರಿಜಾಯೆ
ವರ ಸುದರ್ಶನ ಶಂಖಹಸ್ತದಿ
ಮೆರೆಯುತಿರೆ ಭಕುತರನು ಸಲಹಲು
ಕರವೀರಪುರ ನಿಲಯದಿ ನೆಲಸಿ
ವರದಭಯ ಹಸ್ತವ ತೋರುತಿರ್ಪೆ ೧
ಮನಸಿಜಕೋಟಿ ಸುರೂಪಿಣಿ ಮೃದುಮಧುರ ವಾಣಿ
ಧನಕನಕಾದಿಗಳಭಿಮಾನಿ ಕೈವಲ್ಯದಾಯಿನಿ
ವನಜಸಂಭವೆ ನಿನ್ನ ಒಂದರೆ-
ಕ್ಷಣವು ಬಿಡದಲೆ ತನ್ನ ಉರದೊಳು
ದನುಜಮರ್ಧನ ಧರಿಸಿಕೊಂಡು
ತನುವು ಮನವನು ನಿನಗೆ ತೆತ್ತಿಹ ೨
ರಂಗೇಶವಿಠಲನ ರಾಣಿ ಪಂಕಜಪಾಣಿ
ಡಿಂಗರೀಕರ ಪೊರೆವ ಕರುಣಿ ಕಾಳಾಹಿವೇಣಿ
ಮಂಗಳಾಂಗಿಯೆ ಖೂಳ ಕುಜನರ
ಸಂಗಬಿಡಿಸುತ ತವ ಪದ ಸರೋ
ಜಂಗಳಲಿ ನಾ ನಲಿದು ವಿಹರಿಪಭೃಂಗನಾಗುವ ಪರಿಯ ತೋರೆ ೩

 

೧೭೩
ಕರುಣೆ ತೋರೋ ಕಣ್ಣ ತೆರೆದು
ಗುರುವು ನೀನೆ ಗತಿಯು ನೀನೆ ಪ
ತ್ವರದಿ ಜಪವ ಪೂರ್ಣ ಮಾಡಿ
ವರದ ಕರವ ಶಿರದಲಿಡುತ ಅ.ಪ.
ಸಿರಿಯ ವರನ ಪರಮ ಭಕುತ
ಸಿರಿದಮಣಿಗಳಲ್ಲಿ ನೀನು
ಹಿರಿಯ ಅಹುದೊ ಜಗದ ಗುರುವೆ
ಪರಮ ಕರುಣಾಕರನೆ ದೇವ ೧
ಹರಿಯ ಆಜ್ಞದಂತೆ ನೀನು
ಸರುವ ಪ್ರಾಣಿಗಳಲಿ ನಿಂದು
ಹಿರಿದು ಜಪವನಾಚರಿಸಿ ಅವರು
ಅರಿಯದಂತೆ ನಿರುತ ಪೊರೆವೆ ೨
ಶರಧಿ ಮಥನದಿಂದ ಬಂದ
ಗರಳನಂದು ಭುವನಗಳನು
ಉರುಹುತಿರಲು ಹರಿಯ ಮನವ
ಅರಿತು ನೀನು ಭರದಿ ಕುಡಿದೆ ೩
ಪೊಗಳಲವೆ ನಿನ್ನ ಮಹಿಮೆ
ಸುಗುಣಮಣಿ ಭಾರತಿಯ ಪತಿಯೆ
ಅಗಜೆಯರಸನನ್ನು ಪೆತ್ತ
ನಗಧರನ ಪ್ರೀತಿ ಪಾತ್ರ ೪
ಅಜನಪದಕೆ ಅರುಹನಾದೆ
ದ್ವಿಜ ಫಣೀಶಾದಿಗಳ ಗುರುವೆ
ಭಜನೆಗೈವೆನೆಂತು ನಿನ್ನ
ತ್ರಿಜಗವಂದ್ಯ ತ್ರಿಜಗಪೂಜ್ಯ ೫
ತ್ರೇತೆಯಲಿ ಅಂಜನಿಯಳ
ಪೂತ ಗರ್ಭದಿಂದ ಬಂದು
ಪೋತನಾದ ರವಿಜನನ್ನು
ಪ್ರೀತಿಯಿಂದ ಸಲಹಿದೆಯ್ಯ ೬
ಅಂದು ಕಪಿಯ ವೃಂದವೆಲ್ಲ
ಬಂದು ಶರಿಧಿ ತಟದಿ ನಿಂದು
ಮುಂದೆ ದಾರಿ ಕಾಣದಿರಲು
ಸಿಂಧುವನ್ನು ದಾಟಿ ಬಂದೆ ೭
ಮಂಗಳಾಂಗಿ ಸೀತೆಯನ್ನು
ಕಂಗಳಿಂದ ನೋಡಿ ಹಿಗ್ಗಿ
ಅಂಗನೆಯ ಪಾದಕೆರಗಿ
ಉಂಗುರವನಿತ್ತ ಧೀರ ೮
ಫಲವ ಸವಿವ ನೆವದಿ ನೀನು
ನಲಿದು ವನವ ಮುರಿದು ತುಳಿದೆ
ಕಲಹಕಿಳಿದು ಬಂದ ಅಕ್ಷನ
ಬಲಿಯಹಾಕಿ ಕುಣಿಯುತಿರ್ದೆ೯
ಕುಲಿಶಧರನ ಗೆಲಿದ ವೀರ
ಜಲಜಭವನ ಶರವ ಬಿಡಲು
ಛಲದಿ ನೀನು ಅದನು ತಡೆದು
ಮಲೆತು ನಿಂತ ಮಹಿಮಯುತನೆ ೧೦
ವನಜಭವ ನಾಮನ ಕೇಳಿ
ಕನಲಿ ಬಂದಾ ಶರಕೆ ಸಿಲುಕಿ
ದನುಜ ಸಭೆಗೆ ಬಿಜಯಮಾಡಿ
ಅನುವ ತಿಳಿದು ಬಂದ ದೇವ ೧೧
ರಕ್ಕಸನ ಲೆಕ್ಕಿಸದೆ
ಧಿಕ್ಕರಿಸಿ ಮಾತನಾಡಿ
ಪಕ್ಕಿರಥನ ಬಲುಮೆಯನ್ನು
ಹೆಕ್ಕಳಿಸಿ ನೀ ಪೊಗಳಿ ನಿಂದೆ ೧೨
ಉಕ್ಕಿ ಬಂದ ರೋಷದಿಂದ
ರಕ್ಕಸನು ಚರರ ಕರೆದು
ಇಕ್ಕಿರಿವನ ಬಾಲಕುರಿಯ
ತಕ್ಕ ಶಿಕ್ಷೆ ಮಾಡಿರೆನಲು ೧೩
ಸುಟ್ಟಬಾಲ ನೆಗಹಿಕೊಂಡು
ದಿಟ್ಟ ನೀನು ಪುರವನೆಲ್ಲ
ಸುಟ್ಟುಖಳರ ಬಿಡದೆ ಸದೆದು
ಅಟ್ಟಹಾಸದಿಂದ ಮೆರೆದೆ ೧೪
ಮತ್ತೆ ಶರಧಿ ಹಾರಿ ಬಂದು
ಸತ್ಯಸಂಧ ರಾಮಗೆರಗಿ
ಇತ್ತು ಚೂಡಾಮಣಿಯನವನಾ
ಚಿತ್ತ ಹರುಷಗೈದ ಧೀರ ೧೫
ಹರಿಯು ತನ್ನ ಬೆರಳಿನಲ್ಲಿ
ಗಿರಿಯನೆತ್ತಿ ನಿಂತನೆಂದು
ಸರುವ ಗಿರಿಗಳನ್ನು ನೆಗಹಿ
ಶರಧಿಗೊಡ್ಡಿ ಸೇತುಗೈದೆ ೧೬
ಸುರರಿಗಮೃತವಿತ್ತನೆಂದು
ಅರಸಿ ಸಂಜಿವನವ ನೀನು
ಭರದಿ ತಂದು ಒರಗಿ ಬಿದ್ದ
ಹರಿಯ ವೃಂದಕೆರೆದು ಮೆರೆದೆ ೧೭
ಮಂದರಾದ್ರಿಯನ್ನು ಒಡೆಯ
ಅಂದು ಬೆನ್ನಲಿ ಪೊತ್ತು ನಿಂದು
ಸಿಂಧುವನ್ನು ಗೆಲಿದನೆಂದು
ಬಂದೆ ಹಾರಿ ಲಂಕಪುರಿಗೆ ೧೮
ಧರಣಿಧವಗೆ ನೆರಳಿನಂತೆ
ಸರುವ ಕಾಲ ಚರಿಸಿ ನೀನು
ಅರಸಿನಂತೆ ಬಂಟನೆಂಬ
ಕರೆಯವಾರ್ತೆ ಖರೆಯಗೈದೆ ೧೯
ಕಾಲನೇಮಿ ಯತಿಯ ರೂಪ
ಜಾಲದಿಂದ ವೇಳೆ ಕಳೆಯೆ
ಶೀಲವಂತ ಅವನ ಸೀಳಿ
ಬಾಲದಿಂದ ನಗವ ತಂದೆ ೨೦
ವ್ಯಾಸಮುನಿಯ ಯಂತ್ರದಲ್ಲಿ
ವಾಸವೆಂದು ತೂರಿಕೊಳುತ
ದಾಸ ಜನರ ಆಸೆಗಳನು
ಬೇಸರಾದೆ ನೀ ಸಲಿಸುವೆ ೨೧
ನೀನು ಒಲಿಯೆ ರಾಮನೊಲಿವ
ನೀನು ಮುನಿಯೆ ರಾಮ ಮುನಿವ
ನಾನು ನಿನಗೆ ಅನ್ಯನಲ್ಲ
ಸೂನುವಲ್ಲೇ ತಿಳಿದು ನೋಡೊ ೨೨
ನಿನ್ನ ನಂಬಿ ಸರಮೆಯರಸ
ಪನ್ನಗಾರಿರಥನ ಒಲುಮೆ-
ಯನ್ನು ಪಡೆದು ಹರುಷವಾಂತು
ಧನ್ಯನಾದ ಧರೆಯೆ ಮೇಲೆ ೨೩
ನಿನ್ನ ಜರೆದ ಅವನ ಅಣ್ಣ
ತನ್ನ ಬಂಧು ದೇಶ ಕೋಶ-
ವನ್ನು ನೀಗಿಕೊಂಡು ಕೊನೆಗೆ
ಮಣ್ಣುಗೂಡಿ ಪೋದನಯ್ಯ ೨೪
ದಂತಿಪುರದ ದೊರೆಯೆ ಮಡದಿ
ಕುಂತಿದೇವಿ ಕುವರನಾಗಿ
ಕಂತುಪಿತನ ಮತವ ತಿಳಿದು
ನಿಂತು ಖಳರ ಸದೆದ ಶೂರ ೨೫
ಏಕಚಕ್ರ ನಗರದಲ್ಲಿ
ಶೋಕ ಪಡುತಲಿರ್ದ ಜನರ
ವಾಕು ಕೇಳಿ ಕಾಕು ಬಕನ
ಏಕಮುಷ್ಠಿಯಿಂದ ಕೊಂದೆ ೨೬
ಕೀಚಕಾರಿ ನಿನ್ನ ಮಹಿಮೆ
ಯೋಚನೆಗೆ ನಿಲುಕದಯ್ಯ
ಯಾಚಿಸೂತಿ ದೀನನಾಗಿ
ಮಾಚದಂತೆ ಸಲಹೊ ಸ್ವಾಮಿ ೨೭
ಜರೆಯ ಸುತನ ಗರುವ ಮುರಿದು
ಭರದಿ ಅವನ ತನುವ ಸೀಳಿ
ಧರಣಿಧವರ ಸೆರೆಯ ಬಿಡಿಸಿ
ಪರಮ ಹರುಷಗರೆದ ಧೀರ ೨೮
ದುರುಳ ದುಶ್ಶಾಸನನ ಅಂದು
ಧುರದಿ ಕೆಡಹಿ ಉರವ ಬಗೆದು
ತಿರೆಯ ಹೊರೆಯ ಹರಿಸಿದಂಥ
ಸರುವ ಪುಣ್ಯ ಹರಿಗೆ ಇತ್ತೆ ೨೯
ಮಲ್ಲಯುದ್ಧದಲ್ಲಿ ನೀನು
ಖುಲ್ಲ ದುರ್ಯೋಧನನ ತೊಡೆಗ
ಳೆಲ್ಲ ಮುರಿಯೆ ಸುರರು ನೋಡಿ
ಫುಲ್ಲ ಮಳೆಯಗರೆದರಾಗ ೩೦
ಸೃಷ್ಟಿಕರ್ತ ಕೃಷ್ಣ ನಿನ್ನ
ಇಷ್ಟದೈವವೆಂದು ಅವನ
ನಿಷ್ಠೆಯಿಂದ ಭಜಿಸಿ ಇಳೆಯ
ಶಿಷ್ಟ ಜನರ ಕಷ್ಟ ಕಳೆದೆ ೩೧
ಖಲರು ನಿನ್ನ ಬಲುಮೆ ನೋಡಿ
ಗೆಲುವು ತಮಗೆ ಆಗದೆಂದು
ಕಲಿಯುಗದಿ ವಿಪ್ರರಾಗಿ
ಇಳೆಯ ಧವನ ಹಳಿಯುತಿರಲು ೩೨
ಜಡಜನೇತ್ರ ನಿನ್ನ ಕರೆದು
ಅಡಗಿಸಿವರವಾದವೆನಲು
ನಡುವೆ ಮನೆಯು ಎಂಬ ದ್ವಿಜನ
ಮಡದಿ ಗರ್ಭದಿಂದ ಬಂದೆ ೩೩
ಯತಿಯು ನೀನೆಂದೆನಿಸಿಕೊಂಡು
ಚ್ಯುತಿ ರಹಿತ ಪ್ರೇಕ್ಷರಿಂದ
ಶ್ರುತಿಪುರಾಣ ವೇದಮಂತ್ರ
ತತಿಗಳನು ಪಠಣಗೈದೆ ೩೪
ಹರಿಯೆ ಹರನು ಹರನೆ ಹರಿಯೆಂ-
ದರುಹುತಿರ್ದಾ ದುರುಳ ಖಳರ
ಕರೆದು ಕರೆದು ಜರೆದು ಭರದಿ
ಹರಿಯೆ ಶರಣೆಂದರುಹಿ ಮೆರೆದೆ ೩೫
ಮಾಯ ಮತವ ಧಿಕ್ಕರಿಸಿ
ನ್ಯಾಯ ಶಾಸ್ತ್ರವನ್ನು ರಚಿಸಿ
ಕಾಯಭವನ ಪಿತನ ಹಳಿದ
ನಾಯಿಗಳನು ಬಡಿದು ನಿಂದೆ ೩೬
ಕೃತಕಭಾಷ್ಯ ರಚಿಸಿದಂಥ
ದಿತಿಜರನ್ನಾನತರ ಮಾಡಿ
ಗತಿಯ ತೋರಿ ಜನಕೆ ಸತ್ಯಾ-
ವತಿಯ ಸುತನ ಒಲುಮೆ ಪಡೆದೆ ೩೭
ಮಧ್ವಮತವ ಉದ್ಧರಿಸಿ
ಶುದ್ಧವಾದ ಬುದ್ಧಿಗಲಿಸಿ
ಹದ್ದುವಾಹನ ಮುದ್ದುಕೃಷ್ಣನ
ಶ್ರದ್ಧೆಯಿಂದ ಬದ್ಧಗೈದೆ ೩೮
ಅಷ್ಟಮಠವ ರಚನೆ ಮಾಡಿ
ಶಿಷ್ಟಜನರ ಬಾಧೆ ಕಳದೆ
ತುಷ್ಟರಾದ ದ್ವಿಜರು ನಿನ್ನ
ಎಷ್ಟು ಪೊಗಳಿ ತೀರದಯ್ಯ ೩೯
ದಾನಧರ್ಮವ ಮಾಡಲಿಲ್ಲ
ಜ್ಞಾನಮಾರ್ಗ ಹಿಡಿಯಲಿಲ್ಲ
ದೀನತನದ ಭವಣೆಯಿಂದ
ನಾನು ಮರುಗಿ ಬಂದೆನೀಗ ೪೦
ವಚನ ಮಾರ್ಗದಲ್ಲಿ ನಿನ್ನ
ಪ್ರಚನೆ ಮಾಳ್ಪೆ ಕೇಳೊ ದೇವ
ರಚಿಸಲಾರೆ ನಿಯಮಗಳನು
ಉಚಿತ ತೋರಿದಂತೆ ಮಾಡೊ ೪೧
ನಾರಸಿಂಹ ರಾಮಕೃಷ್ಣ
ನಾರಿ ಸತ್ಯವತಿಯ ಮಗನ
ಮೂರುತಿಗಳ ಹೃದಯದಲ್ಲಿ
ಸೇರಿ ಭಜಿಪ ಭಾವಿ ಬ್ರಹ್ಮ ೪೨
ವಾಯು ಹನುಮ ಭೀಮ ಮಧ್ವ
ರಾಯ ನಿನ್ನ ನಂಬಿ ಬಂದೆ
ಮಾಯ ಪಾಶದಿಂದ ಬಿಡಿಸಿ
ಕಾಯಬೇಕೊ ಕೃಪಣ ಬಂಧು ೪೩
ಜನುಮ ಜನುಮದಲ್ಲಿ ನೀನೆ
ಎನಗಿ ಜನನಿ ಜನಕನಾಗಿ
ಕನಸು ಮನಸುನಲ್ಲಿ ನಿನ್ನ
ನೆನೆಸುವಂತೆ ಮತಿಯ ನೀಡೊ ೪೪
ತುಂಗಭದ್ರ ತೀರ ವಾಸ
ಭಂಗಬಾಳನು ಹೊರೆಯಲಾರೆ
ಮಂಗಳಾಂಗ ಕಳುಹೊ ಎನ್ನ
ರಂಗಈಶವಿಠಲ ಪುರಿಗೆ ೪೫

 

೧೮೫
ಕಾಮಪಿತ ಪದಸರಸಿರುಹ ಭೃಂಗ
ಆ ಮನಸಿಜನ ಮದಗರುವ ಭಂಗ ಪ
ದಾಕ್ಷಾಯಿಣೀಪತೇ ಬಾಗಿ ವಿಜ್ಞಾಪಿಸುವೆ
ದಾಕ್ಷಿಣ್ಯ ಲವಲೇಶವಿಲ್ಲವೊ ನನಗೆ
ಸಾಕ್ಷಿಯೇಸು ಕೊಡಲಿದಕೆ ಬ್ರಹ್ಮನ ಶಿರ ತರಿದೆ
ಸಾಕ್ಷಾತು ಪಿತನೆಂಬುದ ನೀ ಲಕ್ಷ್ಯವಿಡದೆ ೧
ಪಕ್ಷಿವಾಹನನ ಸುತ ಸ್ಮರ ನಿನ್ನ ಕಿರಿತಂದೆ
ಅಕ್ಷಿತೆರದೀಕ್ಷಿಸವನ ಬಿಡದೆ ದಹಿಸಿನಿಂದೆ
ದಕ್ಷ ನಿನಗೇನಾಗಬೇಕು ತಿಳಿದು ನೋಡೊ
ತಕ್ಷಣದಲವನನೆತ್ತಿ ಹರಿಗಡಿದೆ ನೀನು ೨
ಪಾಪಯೇಸು ಮಾಡಿದರೆಯು ಭಯವೇನು ನಿನಗೆ
ಶ್ರೀಪತಿ ರಂಗೇಶವಿಠಲಗೆ ಸರ್ವವರ್ಪಿಸಿ
ತಾಪತ್ರಯ ದೂರ ವಿರಾಗಿಯಾಗಿ ಮನಸ್ಸು ನಿ-
ರ್ಲೇಪವಾಗಿರುವಿ ಆ ಪರಿ ಮನಸ ಕೊಡು ಗುರುವೆ ೩

 

೧೯೮
ಕಾಯೊ ಕರುಣದಿಂದೆನ್ನನು ತೋಯಜಾಕ್ಷನೆ ನೀನು ಪ
ಕಾಯೊ ಕರುಣದಿ ತೋಯಜಾಕ್ಷನೆ ನೀನು
ಹೇಯ ಜನಮವೆತ್ತಿ ಮಾಯಕೆ ಸಿಲುಕಿದೆ ಅ.ಪ.
ಹಿಂದೆ ತಪ್ಪಿದೆನ್ಯಯ್ಯ ಮುಂದೆ ಬುದ್ಧಿಯು ಬಂತು
ಸಿಂಧುಶಯನ ನೀನು ಬಂದು ಮೈದೋರಿ ೧
ಸತಿಸುತರೆನಗೆ ಅತಿ ಹಿತರೆಂತೆಂದು
ಮತಿಭ್ರಾಂತನಾಗಿದ್ದೆ ಪತಿತ ಪಾವನನೆ ೨
ಕೊಟ್ಟು ಆದರಿಸಲು ಇಷ್ಟ ಮಿತ್ರರು ಇದ್ದು
ಕೆಟ್ಟುಪೋದಮೇಲೆ ಕೈಬಿಟ್ಟರು ನೀ ಬಿಡಬೇಡ ೩
ತಂದೆತಾಯಿಯು ನೀನೆ ಬಂಧು ಬಳಗವು ನೀನೆ
ಇಂದಿರೆರಮಣನೆ ಬಂಧವ ಬಿಡಿಸೀಗ ೪
ಕರುಣಾಸಾಗರ ನಿನ್ನ ಮರೆಹೊಕ್ಕೆ ನಾನೀಗ
ಶರಣರ ಪೊರೆಯುವ ರಂಗೇಶವಿಠಲನೆ ೫

 

೧೧೪
ಕಾವೇರಿ ತೀರದಲಿ ನಿಂದಿರುವ ರಂಗಯ್ಯ
ಕಾವುದೆಮ್ಮನು ನೀನು ದೇವರಂಗಯ್ಯ ಪ
ಭಾವಮೈದುನಗೆ ಬೋವನಾದ ರಂಗಯ್ಯ
ನೋವುಬಾರದಂತವನ ಕಾಯ್ದೆ ರಂಗಯ್ಯಾ ೧
ಮಾಯವಾದಿಗಳ ಸಂಗ ಬಿಡಿಸೋ ರಂಗಯ್ಯ
ತೋಯಜಾಕ್ಷನೆ ಬೇಡುವೆ ಸ್ವಾಮಿ ರಂಗಯ್ಯ ೨
ಏಸು ಕಷ್ಟವ ಇತ್ತರೂ ಸಹಿಸುವೆ ರಂಗಯ್ಯ
ದಾಸತ್ವ ಮಾತ್ರ ದಯಮಾಡೊ ರಂಗಯ್ಯ ೩
ಸತ್ತು ಹುಟ್ಟುವಿಕೆ ಬಿಡಿಸಿ ಸಲಹೊ ರಂಗಯ್ಯ
ಮತ್ತೇನು ಬೇಡೆನು ಮಮ ಬಂಧು ರಂಗಯ್ಯ ೪
ರಂಗೇಶವಿಠಲ ನೀನಲ್ಲವೆ ರಂಗಯ್ಯ
ಭಂಗಪಡಲಾರೆ ಭವಹಿಂಗಿಸು ರಂಗಯ್ಯ ೫

 

೧೭೪
ಕೋರಿ ಬಂದೆನೊ ನಾನು
ಭಾರತಿ ಪತಿ ನಿನ್ನ ಪ
ಘೋರ ಸಂಸಾರದಿಂದ
ಪಾರು ಮಾಡುವಿಯೆಂದು ಅ.ಪ.
ಸರ್ವ ಪ್ರಾಣಿಗಳಲ್ಲಿ
ಸರ್ವವಸ್ತುಗಳಲ್ಲಿ
ಸರ್ವೇಶ ಹರಿಯ ಕೂಡಿ
ಸರ್ವದಾ ಇರುವೆಯೆಂದು ೧
ಅಂಜಾನೆ ಗರ್ಭದಿ
ಸಂಜಾನಿತ ನೀನಾಗಿ
ಕಂಜನಾಭನ ಮನ-
ರಂಜಾನೆ ಮಾಡಿದೆಯೆಂದು ೨
ದಾನವಾಂತಕನಿಂದ ಸ-
ನ್ಮಾನಿತನಾದಂಥ
ದೀನರಕ್ಷಕ ಭೀಮ-
ಸೇನ ವಿಕ್ರಮನೆಂದು ೩
ಹೀನಬುದ್ಧಿಯ ಬಿಡಿಸಿ
ದೀನ ಸುಜನರಿಗೆ
ಜ್ಞಾನ ಮಾರ್ಗವ ತೋರಿ-
ದಾನಂದತೀರ್ಥನೆಂದು ೪
ಶ್ರೀ ರಂಗೇಶವಿಠಲಗೆ ಸಮ
ರ್ಯಾರಿಲ್ಲವೆಂತೆಂದು
ಈರೇಳು ಜಗದೊಳು
ಸಾರುತಿರುವೆಯೆಂದು ೫

 

೧೧೫
ಕೋಲು ಕೋಲೆನ್ನ ಕೋಲೆ ರನ್ನದಾ
ಕೋಲು ಕೋಲೆನ್ನ ಕೋಲೆ ಪ
ಅಂಜಾನೆ ಗಿರಿಯಲ್ಲಿ | ಸಂಜೀವರಾಯ ಸಹ
ಕಂಜನಾಭನಿರುವ | ಅಂಜಿಕ್ಯಾತಕಮ್ಮ ೧
ಮೂಡಲು ಗಿರಿವಾಸ | ನಾಡಿಗೊಡೆಯನೆಂದು
ಪಾಡುವವರ ದೋಷ | ಓಡಿಸುವನಮ್ಮ ೨
ವೆಂಕಟರಮಣನು | ಕಿಂಕರ ಜನಗಳ
ಸಂಕಟಗಳ ಕಳೆವ | ಶಂಕೆ ಇಲ್ಲವಮ್ಮ ೩
ಈಶ ಶ್ರೀನಿವಾಸ | ದಾಸ ಜನರ ಪೋಷ
ರಾಶಿ ದೋಷ ಸುಟ್ಟು | ಲೇಸುಗೈವನಮ್ಮ ೪
ಮತ್ಸ್ಯ ಮೂರುತಿ ತ | ನ್ನಿಚ್ಛೆಯಿಂದಲಿ ಬಲು
ತುಚ್ಛ ದೈತ್ಯನನು | ಕೊಚ್ಚಿ ಬಿಸುಟನಮ್ಮ ೫
ಕಮಠ ರೂಪನಾಗಿ | ಅಮಿತ ಭಾರ ಪೊತ್ತು
ಸುಮನಸರಿಗಮೃತ | ಮಮತೆಲಿತ್ತನಮ್ಮ ೬
ಕ್ರೋಡಾಕಾರನಾಗಿ | ರೂಢಿಚೋರನಾದ
ಹೇಡಿ ರಕ್ಕಸನ | ತೀಡಿ ಕೊಂದನಮ್ಮ ೭
ಘೋರ ರೂಪ ಕೊಂಡು | ಕ್ರೂರ ರಕ್ಕಸನ
ದೋರೆ ಕರುಳಕಿತ್ತು | ಪೋರನ ಪೊರೆದನಮ್ಮ ೮
ಪುಟ್ಟ ಪೋರನಾಗಿ | ಬೆಟ್ಟದಂತೆ ಬೆಳೆದು
ದಿಟ್ಟ ಬಲಿಯ ಶಿರವ | ಮೆಟ್ಟಿ ತುಳಿದನಮ್ಮ ೯
ತಾತನ ನುಡಿ ಕೇಳಿ | ಕಾತರನಾಗದೆ
ಮಾತೆಯ ಶಿರವನ್ನು | ತಾ ತರಿದಿಟ್ಟನಮ್ಮ ೧೦
ಸೀತೆಯ ಬಿಡಿಸಲು | ಸೇತುವೆಯನು ಕಟ್ಟಿ
ಭೂತನನ್ನು ಕೊಂದು | ಖ್ಯಾತಿಗೊಂಡನಮ್ಮ ೧೧
ದ್ವಾರಕಪತಿ ತಾನು | ನಾರಿ ಪಾಂಚಾಲೆಯು
ಕೋರಿದ ಕ್ಷಣದಲ್ಲಿ | ಸೀರೆಯ ನೇದನಮ್ಮ ೧೨
ಚಿತ್ತಜನಯ್ಯನು | ಅತ್ತಿತ್ತ ಅಲೆಯುತ
ಬೆತ್ತಲೆ ನಾರಿಯರ | ಮುತ್ತುಗೊಂಡನಮ್ಮ ೧೩
ಜಲಜನಾಭನು ತಾ | ಕಲಿಗಾಲ ಕಡೆಯಲ್ಲಿ
ಹಲವು ಪಾಪಿಗಳನು | ಫಲದಿ ಕೊಂದನಮ್ಮ ೧೪
ಮುಟ್ಟಿ ಭಜಿಸುವರಿಗೆ | ಇಷ್ಟವಾದ ವರವಕೊಟ್ಟನು ರಂಗೇಶ | ವಿಠಲ ಕೇಳಮ್ಮ ೧೫

 

೧೧೬
ಗರುಡನೇರಿ ಬಂದ ಸಿರಿರಮಣನು ತಾನು ಪ
ಗರುಡನೇರಿ ಬಂದ ಸಿರಿರಮಣನು ತನ್ನ
ಶರಣ ಕರುಣದಿ ಪೊರೆಯಲೋಸುಗ ಭರದಿ ಅ.ಪ.
ಕರಿರಾಜನು ಅಂದು ಕ್ರೂರ ನಕ್ರಗೆ ಸಿಲ್ಕಿ
ತೆರವಿಲ್ಲದೆ ಕೂಗುತ ಚೀರುತಿರಲು
ಸುರರು ಮೊದಲಾಗಿ ಸತಿಸುತ ಬಾಂಧವರು
ಅರಿತು ಅರಿಯದಂತೆ ತ್ರಾನದಿಂದ್ದಾಗ ೧
ಉತ್ತಾನಪಾದನು ಚಿತ್ತದಿ ಮರುಗದೆ
ಮತ್ತೆ ಬÁಲನ ಕರೆದು ಮನ್ನಿಸದೆ
ಅತ್ತ ಸಾರೆಂದು ಸುರುಚಿ ನೂಕಿದ ಮೇಲೆ
ಚಿತ್ತಜನಯ್ಯನ ಸ್ಮರಿಸಿದ ಮಾತ್ರದಿ ೨
ನೀಚ ರುಕ್ಮನು ತನ್ನನುಜಾತೆಯನಂದು
ಮಾಚಿಸಿ ಶಿಶುಪಾಲಗೀವೆನೆಂದು
ಯೋಚಿಸಿ ಮನದೊಳು ಹರಿಯ ದೂರುತಲಿರೆ
ತಾ ಚಿಂತೆ ತಾಳಿದ ರುಕ್ಮಿಣಿಯ ಕೈಪಿಡಿಯಲು ೩
ಅಕ್ಷಯ ಪಾತ್ರೆಯ ತೊಳೆದು ಪಾಂಚಾಲೆ
ಪಕ್ಷಿದೇರನ ಧ್ಯಾನದೊಳು ಕುಳಿತಿರಲು
ಭಿಕ್ಷೆ ಬೇಡುತ ಬಂದು ದೂರ್ವಾಸ ಮುನಿಪನು
ಶಿಕ್ಷಿಸೆನೆಂದಾಗ ಸತಿಗೆ ಮುಂದೋರದಂದು ೪
ಗರುವ ಪಾರ್ಥನು ಅಂದು ಗಂಗಾ ಶಾಪದಲಿ ಅಸುವ
ತೊರೆದು ರಣದೊಳು ಬಿದ್ದಿರಲು
ಅರಿತು ಮನದೊಳು ಅನಿಲಜನೊಡಗೂಡಿ
ವರ ಮಣಿಪುರಕಾಗ ಸಿರಿ ರಂಗೇಶವಿಠಲನು ೫

 

೧೭೫
ಗುರು ಮುಖ್ಯಪ್ರಾಣ ಕರವೆತ್ತಿ ನಿಂದ ಪ
ಹರಿಯೆ ಪರನೆನ್ನದವನ ಹಲ್ಮುರಿವೆನೆಂದು ಅ.ಪ.
ಸಿರಿ ರಾಮನಾಜ್ಞೆಯನು ಸಿರದೊಳಾನುತ ಬಂದು
ವರಕಪಿಗಳೊಡಗೂಡಿ ಸಿರಿದೇವಿಯನರಸುತ
ಶರಧಿತಟಕೆ ಬಂದು ಸಿರಿಪೋದ ಪಥವರಿಯದೆ
ಪರಿತೋರದಿರ್ದ ಹರಿವರರಿಗಭಯವಿತ್ತು ೧
ಇರುಳು ಇಂದ್ರಜಿತುವಿನ ಶರಹತಿಯಲಳಿದಂಥ
ಸರುವ ಕಪಿ ಭಟರನ್ನು ಸಿರಿ ರಾಮ ನೋಡುತ
ಮರುಗುತಿರಲಂದು ವರ ಜಾಂಬವನ ಸುಮತಿಯಲಿ
ತ್ವರಿತದಿ ಸಂಜೀವನ ಗಿರಿಯ ತಹೆನೆನ್ನುತ ೨
ಭರದಿ ದಶಶಿರನು ತಾನರಿಯದೆ ಹನುಮನ ಬಲ
ಭರವಸದಲಿ ಮಾಡಿ ಮೂರು ಗುದ್ದಿನ ಪಂಥ
ಕರಹತಿಗೆ ಕಂಗೆಟ್ಟು ಧುರವ ಬಿಟ್ಟೋಡುತಿರೆ
ಅರಸಿ ಅಸುರನ ಪಿಡಿದ ಹರಿಸು ಋಣವನೆಂದು ೩
ದುರುಳ ಕೀಚಕನಂದು ಕರಿಗಮನೆಯನು ಕಂಡು
ಸ್ಮರಶರಹತಿಯಿಂದ ಉರುತರದಲಿ ನೊಂದು
ಹರಿಣಾಕ್ಷಿಯನು ಬರಿಸಿ ಸೆರಗ್ಹಿಡಿದೆಳೆದುದನು
ತರಳೆ ಮುಖದಿ ಕೇಳವನ ಸಿರ ಮುರಿವೆನೆಂದು ೪
ಕುರುಪತಿಯ ಸಭೆಯಲಿ ದುರುಪದಿ ಗೈದ ಶಪಥ
ಮರೆಯದೆ ದುಶ್ಶಾಸನನ ಧುರದಿ ಕೆಡಹಿ ಕೊಂದು
ಉರ ಬಗೆದು ಕರುಳ ನಿಜತರುಣಿಗೆ ಮುಡಿಸುವಾಗ
ಬರಲಿ ಬಿಡಿಸುವರೆಂದು ಉರು ಗದೆಯನು ಪಿಡಿದು ೫
ಹರಿಹರರು ಸರಿಯೆಂದು ಹರಟುತಿರ್ದವರನು
ಗುರುತರ ವಾಕುಗಳೆಂಬ ಬಿರುಬಾಣದಿಂದ
ಗರ ಹೊಡೆದವರ ಮಾಡಿ ಪರತತ್ವವನು ಪೇಳಿ
ಭರದಿ ನಡೆದೆ ‘ಪರಮೋನಹತಿ ಸದೃಶ’ ವೆಂದು ೬
ಸರುವರಂತರ್ಯಾಖ್ಯ ಹರಿಯಾಜ್ಞಾನುಸಾರ
ಸರುವ ಜೀವರಿಗೆ ತಾನು ಗುರುವೆನಿಸಿಕೊಂಡು
ತರತಮವನರಿಯುತ ಸಿರಿ ರಂಗೇಶವಿಠಲನ
ಸ್ಮರಿಸುತಿರುವಗಾವ ದುರಿತ ಭಯವಿಲ್ಲೆಂದು ೭

 

೧೧೮
ಚಿತ್ತೈಸಬೇಕೆನ್ನ ಮಾತು ಕೇಳಯ್ಯ
ಮತ್ತೆ ಹುಟ್ಟದಂತೆ ಮಾಡೊ ರಂಗಯ್ಯ ಪ
ನಾನಾ ಯೋನಿಯಲೆನ್ನ ನೀನಿಡದಿರಯ್ಯ
ಶ್ರೀನಿವಾಸ ಬೇಡಿಕೊಂಬೆ ಶ್ರೀ ರಂಗಯ್ಯ ೧
ದೀನ ರಕ್ಷಕನೆಂದು ದೈನ್ಯದಿಂ ಬೇಡುವೆ
ಜ್ಞಾನವಂತನ ಮಾಡಿ ಸಲಹೊ ರಂಗಯ್ಯ ೨
ದಾನವಾಂತಕ ನಿನ್ನ ಭಕುತರಪರಾಧ
ನೀನೆಣಿಸದೆ ನಿರುತ ಸಲಹೊ ರಂಗಯ್ಯ ೩
ನಾ ನಿನ್ನ ಮರೆತರೂ ನೀ ನನ್ನ ಮರೆಯೆ
ಏನೆಂಬೆ ನಿನ್ನ ಕರುಣಕೆ ಶ್ರೀ ರಂಗಯ್ಯ ೪
ಭಾನು ಕೋಟಿ ಪ್ರಕಾಶ ಶ್ರೀ ರಂಗಯ್ಯವಿಠಲ
ಮಾನದಿಂದಲಿ ಪೊರೆಯೊ ಶ್ರೀನಿಧಿ ರಂಗಯ್ಯ ೫

 

೧೨೦
ಜೋ ಜೋ ಜೋ ರಂಗ ಜೋ ಮುದ್ದು ರಂಗ
ಜೋ ಜೋ ಮಂಗಳ ಮೂರುತಿ ರಂಗ ಜೋ ಜೋ ಪ
ದೇವ ಪಾರಿಜಾತ ಪುಷ್ಪವ ತಂದ
ದೇವಕಿ ದೇವಿಯ ಮೋಹಕ ಕಂದ ೧
ಮಾವ ಕಂಸನ ಶಿರವನು ತಂದ
ಹಾವಿನ ಹಡೆ ಮೇಲಿ ಕುಣಿಯುತ್ತ ನಿಂದ ೨
ಕಾವೇರಿ ತೀರದಿ ನೆಲೆಯಾಗಿ ನಿಂದ
ದೇವ ರಂಗೇಶವಿಠಲ ಅತಿ ಮೋಹದಿಂದ ೩

 

೧೨೧
ಜೋ ಜೋ ರಂಗಯ್ಯ ಜೋ ಜೋ ಕೃಷ್ಣಯ್ಯ
ಜೋ ಜೋ ಅಹಿತಲ್ಪ ಶಯ್ಯ ಸ್ವಸ್ಥ
ಮಲಗಯ್ಯ ಜೋ ಜೋ ಪ
ಕಣ್ಣೇಕೆ ನೀನು ಮುಚ್ಚಲೊಲ್ಲೆಯೊ ರಂಗ
ಬೆನ್ನು ಭಾರವಾಗಿರುವುದೇನೋ ದೇವ
ಮಣ್ಣಿನೊಳು ನೀನಾಡಿ ಮೈ ನೋಯುವುದೇನೊ
ಹೊನ್ನು ಕಶಿಪುವಿನ ಕರುಳ ಕಂಡಂಜಿದೆಯೇನೊ ೧
ಚಿಣ್ಣ ನೀ ಧರೆಯನಳೆಯಲೇತಕೆ ಪೋದೆ
ಗಣ್ಡುಗೊಡಲಿ ಪಿಡಿದು ಕೈಯಿ ಉಳುಕಿಹುದೇನೊ
ಅನ್ನವ ಬಿಟ್ಟು ನೀ ಪರ್ನವೇತಕೆ ತಿಂದೆ
ಬೆಣ್ಣೆಯ ಮೆದ್ದು ನಿನ ಹೊಟ್ಟೆ ನೊಯ್ಯುವದೇನೊ ೨
ಬತ್ತಲೆ ತಿರುಗಿ ಮೈ ಬಿಸಿಯಾಗಿರುವದೇನೊ
ಕತ್ತಿಯ ಪಿಡಿದು ತೇಜಿಯ ಹತ್ತಬೇಕೇನೊ
ಹೊತ್ತಾಯ್ತು ಕಂದಯ್ಯ ಮಲಗೆಂದು ಯಶೋದೆ
ಮುತ್ತಿಟ್ಟು ತೂಗಿದಳು ರಂಗೇಶವಿಠಲನ ೩

 

೧೯೯
ತಂದೆ ನೀನೆಂದು ನಾ ಬಂದೆ ರಕ್ಷಿಸೆಂದೆ ಪ
ಮುಂದೆನ್ನ ಸಲಹುವ ಭಾರವು ನಿಂದೆ ಅ.ಪ.
ಮಾತು ಮಾತಿಗೆ ನಾ ನಿನ್ನ ನೆನೆವೆ ಸ್ಮರಿಸುತಿರುವೆ
ಜ್ಞಾತಿ ಬಾಂಧವರ ಮತ್ಸರ ಮರೆವೆ
ಮಾತಾಪಿತರುಗಳ ಸೇವೆಗೈವೆ
ಈ ತನು ನಿನ್ನ ಚರಣಕರ್ಪಿಸಿರುವೆ ೧
ಸಾಧನವೇನೆಂಬುದ ನಾನರಿಯೆ ಕೇಳೊ ದೊರೆಯೆ
ಮಾಧವ ನಿನ ನಾಮವೆಂದಿಗೂ ಮರೆಯೆ
ವೇದಬಾಹಿರರೊಡನಾಡಿ ಮೆರೆಯೆ
ಕಾದುಕೋಯೆನ್ನನೆಂಬೆನು ಶ್ರೀಹರಿಯೆ ೨
ನಾ ನಿನ್ನ ಕಾಡಿ ಬೇಡುವುದಿಲ್ಲ ದೂರುವನಲ್ಲ
ಜ್ಞಾನ ಮಾತುರವಿತ್ತು ಕಾಯಬೇಕಲ್ಲ
ನೀ ನನ್ನ ಸಲಹೊ ಲಕ್ಷ್ಮೀ ನಲ್ಲ
ಶ್ರೀನಿವಾಸ ರಂಗೇಶವಿಠಲ ೩

 

೨೦೦
ತಾರೊ ನಿನ್ನಯ ಕರವಾರಿಜವನು ಕೃಷ್ಣ
ಸಾರಿ ಬೇಡಿಕೊಂಬೆ ಮುರಾರಿ ದಯಮಾಡಿ ಪ
ಮಾರಮಣನೆ ಸಂಸಾರ ಶರಧಿಯೊಳೀಸ
ಲಾರದೆ ಬಳಲುತ ಚೀರೂತಲಿರುವೆ ಅ.ಪ
ದಾರಾ ಪುತ್ರರೆನಗೆ ದಾರಿ ತೋರುವರೆಂದು
ಹಾರೈಸುತಲಿದ್ದೆ ಮಾರ ಜನಕನೆ ಕೇಳೊ
ಮೋರೆ ತೋರದೆ ಅವರು ಜಾರಿಕೊಂಡರಯ್ಯ
ಭೂರಿ ಬಳಗದವರ್ಯಾರು ಬಾರರೊ ದೇವ ೧
ಧಾರುಣಿ ಧನ ಧಾನ್ಯ ಹೇರಳವಾಗಿದೆ ಜೀವ
ಹಾರಿ ಹೋಗುವಾಗ ಯಾರಿಲ್ಲವಯ್ಯ
ಕೋರಿ ಭಜಿಪೆ ನಿನ್ನ ಬಾರಿ ಬಾರಿಗೆ ನಾನು
ಕ್ಷೀರ ವಾರಿಧಿವಾಸ ವೀರ ಮಾರುತೀಶ ೨
ಘೋರಾಂಧಕಾರದಿ ಮೇರೆಯು ಕಾಣದೆ ಮಿತಿ
ಮೀರಿದ ಭಯದಿಂದ ಗಾರು ಪಡುತಿಹೆನೊ
ಕಾರುಣ್ಯನಿಧಿಯೆ ನೀ ಪಾರು ಮಾಡದಿರೆ ಮತ್ತ್ಯಾರು ಕೇಳುವರೆನ್ನ ಶ್ರೀ ರಂಗೇಶವಿಠಲ ೩

 

೧೯೧
ತೆರಳಿ ಪೋದರಿಂದು ಪರಮ ಪದವನರಸುತ ಪ
ಶಿರೀಷ ಪುರದ ಸಿರಿ ಶೇಷದಾಸಾರ್ಯರು ಅ.ಪ.
ಸಿರಿಯುಕ್ತ ರಕಾಕ್ಷಿ ವರುಷ ಭಾದ್ರಪದಸಿತ
ವರಪೌರ್ಣಿಮಾ ಸಹಿತವಾದ ಕವಿವಾರದಿ
ಸರು ನಿಶಿಯೊಳು ಶತತಾರ ನಕ್ಷತ್ರ ಬರುತಿರೆ
ನರಹರಿಯ ಚರಣಕಾಂಬ ಕಡು ತವಕದಿಂದ ೧
ತಂದೆ ಮುದ್ದುಮೋಹನ ದಾಸವರ್ಯರಿಂದ
ಕುಂದುರಹಿತನಾದ ಪ್ರಾಣನಾಥವಿಠಲ-
ನೆಂದು ಅಂಕಿತೋಪದೇಶವನು ಕೈಕೊಂಡು
ಬಂಧುರವಾದನೇಕ ಪದಗಳನು ರಚಿಸಿ ೨
ದಾಸವೃತ್ತಿಯ ಕಂಡು ದೇಶ ದೇಶವ ಸುತ್ತಿ
ಕಾಸು ವೀಸದಾಸೆಗಾಗಿ ಕರವ ನೀಡದೆ
ಲೇಸು ಮಾಡುತಲಿ ಸಚ್ಛಿಷ್ಯರಿಗೆ ತತ್ತ್ವೋಪ-
ದೇಶವನು ಪರಮ ಸಂತೋಷದಿಂದಗೈದು ೩
ಆಶಪಾಶವ ತೊರೆದು ಮೀಸಲು ಮನರಾಗಿ
ವಾಸುದೇವನ ನಾಮ ಸೋಸಿನಿಂದ ಭಜಿಸಿ
ಸಾಸುವೆಯಷ್ಟಾದರಾಯಾಸವನುಪಡದೆ
ಈ ಶರೀರ ವಿಶ್ವೇಶನಾಧೀನವೆಂದು ೪
ಅಂಗೋಪಾಂಗವ ಮರೆದು ನಿಸ್ಸಂಗಯುತರಾಗಿ
ಕಂಗಳನು ಮುಚ್ಚುತ ಭಂಗವಿಲ್ಲದ ಸುಖವ
ಹಿಂಗದೆ ಕೊಡುವಂಥ ಮಂಗಳನ ಶ್ರೀ
ರಂಗೇಶವಿಠಲನಂತರಂಗದಿ ನೋಡುತ ೫

 

೧೮೪
ತೋರೆ ನಿನ್ನ ಪದಸರಸಿಜವನು ತಾಯೆ
ಮಾರುತನ ನಿಜ ಜಾಯೆ ಪ
ಬಾರಿ ಬಾರಿಗೆ ನಿನ್ನ ಚರಣವ ಸ್ಮರಿಸುವೆ
ಚಾರುಮತಿಯನೀಯೆ ಅ.ಪ.
ಮೂರನೆ ಯುಗದಲಿ ಧೀರ ದ್ರುಪದನಧ್ವರದೊಳುದಿಸಿ
ಶೂರ ಪಾಂಡವರೈವರ ವೀರಪತ್ನಿಯು ನೀನೆನಿಸಿ
ಕೌರವನ ಸಭೆಯಲಿ ಸೀರೆಯನು ಸೆಳೆಯಲು ನೀ
ಮಾರಪಿತನ ಭಜಿಸಿ ಭೂರಿವಸನ ಪೊಂದಿದೆ ಧೀರೆ ೧
ಮೂರು ಲೋಕವರಿಯೆ ಮೀರಿದ ಕೋಪದಿ ಶಪಿಸಿದೆಯಂದು
ವೀರ ಮಾರುತಿಯ ಗದೆ ಕುರುಪನ ಊರು ಮುರಿಯಲೆಂದು
ಧಾರುಣಿ ನಡುಗಿತು ತಾರೆಗಳುದುರಿತು ವಾರಿಧಿ ಮಿತಿ
ಮೀರುತಿರೆ ನೀ ಸಾರಿದೆ ಪತಿಗಳ ಗಂಭೀರೆ ೨
ಆ ರಣಾಗ್ರದಿ ಕ್ರೂರ ದುಶ್ಶಾಸನ ಸಾರಿ ಬರುವುದ ನೋಡಿ
ದಾರಿ ಹಿಡಿದಪ್ಪಳಿಸವನ ದೋರೆ ಕರುಳ ಹಿರಿದೀಡ್ಯಾಡಿ
ಮೋರೆಯಿರಿದು ಪಲ್ಮುರಿದು ಹಂಗಿಸಿದಂಥ-
ಪಾರ ಪುಣ್ಯ ರಂಗೇಶವಿಠಲಗರ್ಪಿಸಿದನ ಸತಿ ೩

 

೧೦೨
ದಂತಿವದನ ವಿಘ್ನದಂತಿನಿಚಯಕೆ ಹರಿ
ದಂತಿವರದನ ಪ್ರಪೌತ್ರ ವಿನಂತಿಯ ಕೇಳೊ ಪ
ಕಂತುವೈರಿಯ ಪುತ್ರ ಪರಮ ಪವಿತ್ರ
ಸಂತತ ಪೊರೆ ಸುಚರಿತ್ರ ರಹಿತ ಕಳತ್ರ ೧
ಸಾದರಲಿ ನಿನ್ನಾರಾಧಿಸುವೆ ಮುನ್ನ
ನೀ ದಯದಿ ವಿಘ್ನ ನಿವಾರಿಸೊ ಮೋದಕ ಪ್ರಿಯಾ ೨
ರಂಗೇಶವಿಠಲನ ರಾಗದಿಂ ಪಾಡುತ
ಮಂಗಳ ಮೂರುತಿಯೆ ಉತ್ತಂಗ ಪ್ರಭಾವ ೩

 

೨೦೧
ದುಷ್ಟ ಮನುಜ ಕೇಳೊ ನೀ ಬಲು
ಭ್ರಷ್ಟನಾದೆಯಲ್ಲೋ ಪ
ಎಷ್ಟು ಪೇಳಿದರೇನು ನಿನಗೆಳ್ಳಿ-
ನಷ್ಟಾದರು ಮತಿ ಬರಲಿಲ್ಲ ಅ.ಪ
ಶುದ್ಧ ವೈಷ್ಣವನೆಂಬೀ ನೀನು ನಿ-
ಷಿದ್ಧ ಕೂಳನು ತಿಂಬೀ
ಬುದ್ಧಿಪೂರ್ವಕವಾಗಿ ನಮ್ಮ ಅನಿ
ರುದ್ಧನ ನಾಮದ ನೆನೆಯದಲಿರುವಿ ೧
ಬಾಯೊಳು ಬಹುನೀತಿ | ಬೊಗಳುವೆ
ಹೇಯ ಕರ್ಮದಿ ಪ್ರೀತಿ
ಮಾಯವಾದಿಯನುತವನು ಪೊಗಳುವೆ
ಕಾಯಕ್ಲೇಶ ನಿನಗಾಗದಿರದು ೨
ಭಂಗ ಹೋಗದೆ ಬಾಳೊ | ಮುಂದಕೆ
ಭಂಗಿಕೋರನೆ ಕೇಳೊ
ರಂಗೇಶವಿಠಲನ ಮೊರೆಹೊಗು ನಿನ ದುರಿ-
ತಂಗಳು ಪೋಪವು ಮಂಗನಾಗಬೇಡ ೩

 

೨೧೬
ಧನ್ಯನಲ್ಲವೇ ಅವನು ಧನ್ಯನಲ್ಲವೆ ಪ
ಪನ್ನಗಾರಿ ಧ್ವಜನ ಮಹಿಮೆಯನ್ನು ಪೊಗಳುತಿರುವ ನರನು ಅ.ಪ.
ಅರುಣ ಉದಯದಲ್ಲಿ ಎದ್ದು
ದುರಿತದೂರವನ್ನು ಸ್ಮರಿಸಿ
ಹರುಷದಿಂದ ಶೌಚ ಕರ್ಮ
ಅರಿತು ನಿರುತ ಚರಿಸುವರನು ೧
ಸತ್ಯಮತದ ಪದ್ಧತಿಯನು
ಚಿತ್ತವಿಟ್ಟು ಆಚರಿಸುತ
ಭೃತ್ಯನೆಂದು ಪೇಳಿಕೊಳುವ
ನಿತ್ಯ ತೃಪ್ತನಾದವರನು ೨
ಸಿರಿಯುತ ರಂಗೇಶವಿಠಲ
ಸರುವ ದೇವರೊಡೆಯನೆಂದು
ಸ್ಥಿರದಿ ನಂಬಿ ಅವನ ಪಾದ
ಮರೆಯ ಹೊಕ್ಕ ಜಾಣ ನರನು ೩

 

೧೨೨
ಧರಾ ರಮಣ ಸ್ವಾಮಿ ಪುಷ್ಕರಿಣೀ ತೀರದೊಳಿರುತಿಹನೆ ಪ
ವರಾಹರೂಪದಿ ಹಿರಣ್ಯಾಕ್ಷನ ಸಂಹರಿಸಿದವ ನೀನೆ ಭೂಧರನೇ ಅ.ಪ.
ನೀನಲ್ಲದೆ ಭಕುತರ ಮಾನದಿಂ ಪೊರೆವರಿನ್ಯಾರು ಪೇಳೊ
ಭಾನುಕೋಟಿ ಪ್ರಕಾಶನೆ ನೀನೆನ್ನ
ಮೊರೆಯ ಕೇಳೊ | ದಯಾಳೊ ೧
ಅಂದಿನಿಂಗೆಂದೆಂದಿಗು ನಿನ ಪಾದ ನಂಬಿದೆನೊ ಸ್ವಾಮಿ
ಮಂದಮತಿಯನು ದಯದಿಂದ ಸಲಹೊ ಸೇವಿತ
ಶ್ರೀಭೂಮಿ ನಿಷ್ಕಾಮಿ ೨
ಏಸು ಜನುಮದ ಪಾಪರಾಸಿಗಳಳಿದು ಹೋದವೆಲ್ಲ
ಶ್ರೀಶ ನಿನ್ನ ಸಂದರ್ಶನದಿಂದ ರಂಗೇಶವಿಠಲ ಭೊಲೋಲ ೩

 

೧೨೩
ಧ್ಯಾನ ಮಾಡಿರೊ ರಂಗಯ್ಯನ ಪ
ಗಾನ ವಿಲೋಲನ ದೀನಾರ ಪೊರೆವೊನ ಅ.ಪ.
ಮೀನ ರೂಪವ ತಾಳಿ ದಾನವಾಖ್ಯನ ಸೀಳಿ
ಮಾನವ ಪೊಂದಿದ ಜಾಣ ರಂಗೈಯ್ಯನ ೧
ವರ ಕೂರ್ಮ ತಾನಾಗಿ ಗಿರಿಯ ಬೆನ್ನಲಿ ಪೊತ್ತು
ಸುರರನ್ನೆ ಪೊರೆದ ಗಂಭೀರ ರಂಗೈಯ್ಯನ ೨
ವರಾಹ ರೂಪದಿ ಕೋರೆಯ ಕೊನೆಯಲಿ
ಧರಣಿಯನೆತ್ತಿದ ಶೂರ ರಂಗೈಯ್ಯನ ೩
ನರಹರಿ ರೂಪದಿ ಘೋರ ದೈತ್ಯನ ಸೀಳಿ
ತರಳನ ಸಲಹಿದ ಕರುಣಿ ರಂಗೈಯ್ಯನ ೪
ಪುಟ್ಟ ಹಾರುವನಾಗಿ | ದಿಟ್ಟ ಬಲಿಗೆ ಒಲಿದು
ಕೊಟ್ಟ ವರಗಳ ದಿಟ್ಟ ರಂಗೈಯ್ಯನ ೫
ಪರಶು ಪಿಡಿದು ಭೂವರರ ಗೆಲಿದು ಭೂ
ಸುರರನ್ನೆ ಸಲಹಿದ ಧೀರ ರಂಗೈಯ್ಯನ ೬
ಮಾನವ ರೂಪದಿ ದಾನವಾಂತಕನಾಗಿ
ದೀನರ ಪೊರೆದ ಸುಜ್ಞಾನಿ ರಂಗೈಯ್ಯನ ೭

ಕಂಸನ ವಂಶ ನಿರ್ವಂಶಾಕೋಸುಗ ಯದು
ವಂಶದೊಳು ತಾನು ಜನಸಿದನು
ಹಿಂಸೆ ಮಾಡುತಲಿರ್ದ ಹಂಸ ಡಿಬಿಕರನ್ನು
ಧ್ವಂಸ ಮಾಡಿದ ಮುರಧ್ವಂಸಿ ಕೃಷ್ಣಗೆ ೮
ಸತಿಯರ ವ್ರತದಿಂದ ಪತಿತರಳಿಯದಿರೆ
ಗತಿ ತೋರದೆ ಭವಕಾತರಿಸೆ
ಅತಿ ನಗ್ನದಿ ಬಂದು ವ್ರತಭಂಗ ಮಾಡಿದ
ಸಿರಿ ಕಂಠನುತನಾದ ಸಿತವಾಹನ ಸಖನ ೯
ವೇದ ಬಾಹಿತರನ್ನು ಭೂದೇವಿ ಧರಿಸದೆ
ಮಾಧವ ಪೊರೆಯೆಂದು ಮೊರೆಯಿಡಲು
ಚದುರತನದಿ ಸತಿಯ ಕುದುರೆಯ ಮಾಡಿತಾ
ಹದನಾದಸಿಯ ಕೊಂಡ ಕದನದಿ ಕೊಂದವನ ೧೦
ಮಂಗಳ ಮಹಿಮನ ಶೃಂಗಾರ ಪ್ರಿಯನ
ಅಂಗಜಾರಿಯ ಧನುರ್ಭಂಗನ
ಅಂಗಳದೊಳು ಮೂರ್ಲೋಕಂಗಳ ತೋರಿದ
ತುಂಗ ವಿಕ್ರಮನಾದ ರಂಗೇಶವಿಠಲನ ೧೧

 

೧೨೪
ನರಹರಿ ದೀನದಯಾಳೊ ನರಹರಿ ಪ
ನರಹರಿ ಕಾಯೊ ನೀಯೆನ್ನ | ಮಹಾ
ದುರಿತಂಗಳ ಮರಿಯೊ ಮುನ್ನ | ಆಹ
ಪರಮ ಭಕುತಿಲಿ ನಿನ್ನ ಚರಣಾರಾಧನೆ ಮಾಳ್ಪೆ
ವರಭಯ ಹಸ್ತವೆನ್ನ ಸಿರದಲಿಡುತಲಿ ಅ.ಪ.
ಹಿಂದೆ ಪ್ರಹ್ಲಾದದೇವನಂದು | ಪಿತನ
ಬಂಧನದೊಳು ಸಿಲ್ಕಿ ಬಹುನೊಂದು | ತಾನು
ಸಂಧ್ಯಾಕಾಲದೊಳಾಗ ನಿಂದು ನಿನ್ನ
ಒಂದೇ ಮನದಿ ಸ್ತುತಿಸೆ ದಯಸಿಂಧು | ಆಹ
ಮಂದಮತಿಯ ಹಿರಣ್ಯಕನುದರವ ಬಗೆದು
ಛಂದದಿ ಕರುಳ ಮಾಲೆಯ ಧರಿಸಿದ ಧೀರ ೧
ಕಂದು ಕೊರಳನಂತರ್ಗತದೇವ | ಸಕಲ
ವೃಂದಾರಕ ವೃಂದವ ಕಾವ | ಭಕುತ
ಸಂದಣಿಗೆ ಬೇಡಿದನೀವ | ಭವ
ಬಂಧನವೆಂಬ ವಿಪಿನಕೆ ದಾವ | ಆಹ
ಎಂದಿಗೆ ನಿನ್ನಯ ಸಂದರುಶನವೀವೆ
ಮಂದಮತಿಯಾದೆನ್ನ ಮುಂದಕೆ ಕರೆಯೊ ೨
ನೊಂದೆ ಸಂಸಾರದೊಳು ಮಾಲೋಲ | ಕರುಣ
ದಿಂದ ನೋಡೆನ್ನ ದೀನಜನಪಾಲ | ದಿವ್ಯ
ಸುಂದರ ಮೂರುತಿಯೆ ಗೋಪಾಲ | ಪವನ
ವಂದಿತ ಶ್ರೀ ರಂಗೇಶವಿಠಲ | ಆಹ
ಬಂದೆನ್ನ ಹೃದಯಮಂದಿರದಿ ನೆಲೆಯಾಗಿ ನೀ
ನಿಂದು ಸಲಹೋ ಎನ್ನ ಕುಂದುಗಳೆಣಿಸದೆ ೩

 

೧೨೫
ನಾರಾಯಣ ತನ್ನ ನಂಬಿದ ಭಕುತರ ಕಾರುಣ್ಯದಿ ಕಾವ ಪ
ಮಾರುತಿ ಸಹಿತನಾಗಿ ತಾನೀ ಶರೀರದೊಳಿಹ ದೇವ ಅ.ಪ
ಅನಿರುದ್ಧನು ತಾ ಸಕಲ ಚರಾಚರ ಸೃಷ್ಟಿಯ ಗೈವ
ವನಧಿಶಯನ ಪ್ರದ್ಯಮ್ನನು ಬ್ರಹ್ಮಾಂಡವ ಪಾಲಿಸುವ
ತ್ರಿನಯನನಂತರ್ಗತ ಸಂಕರ್ಷಣ ತಾನು ಲಯವನು ಗೈವ
ಅನಿಲಾಂತರ್ಗತ ವಾಸುದೇವ ಸುಜೀವರಿಗೆ ಮೋಕ್ಷವನೀವ ೧
ನರಸಿಂಹ ರೂಪದಿ ಹರಿಯು ಭಕುತ ಪ್ರಹ್ಲಾದನ ಕಾಯ್ದ
ಸಿರಿ ರಾಮನು ತಾನಾಗಿ ಬಂದು ದಶಶಿರನ ಭಂಜಿಸಿದ
ದುರುಳ ಕಂಸನ ನಿಗ್ರಹಿಸಲು ಯದು ವಂಶದೊಳುದಿಸಿ ಬಂದ
ಪರಾಶರಾತ್ಮಜನಾಗಿ ವರವೇದ ವಿಭಾಗವ ಗೈದ ೨
ಮತ್ಸ್ಯಕಚ್ಛಪ ವರಾಹ ನರಹರಿರೂಪವ ತಾ ಕೊಂಡ
ಇಚ್ಛೆಯಿಂದಲಿ ವಟುವಾಗಿ ಕೊಡಲಿಯ ಪಿಡಿದ ಪ್ರಚಂಡ
ತುಚ್ಛ ದೈತ್ಯರ ಸದೆದು ಸಿರಿ ಕೃಷ್ಣ ದಿಗಂಬರನಾಗಿ ಕಂಡ
ಸ್ವಚ್ಛ ಅಶ್ವವೇರಿದ ರಂಗೇಶವಿಠಲ ಬಿನಗು ದೈವರ ಗಂಡ ೩

 

೧೯೨
ನೀನಲ್ಲದಿನ್ನಾರು ಸಲಹುವರೊ ಎನ್ನ ಪ
ನಾನು ನನ್ನದು ಎಂಬ ದುರಭಿಮಾನಿಯನ್ನಅ.ಪ.
ಶ್ರೀಮದಾಚಾರ್ಯರ ಪುಸ್ತಕ ಭಂಡಾರವನು
ಪ್ರೇಮದಿಂ ಧರಿಸುತ ವೃಷಭನಾಗಿರ್ದು ಚರಿಸಿ
ಕಾಮಪಿತನೊಲಿಮೆಯಿಂ ಮರಳಿ ಜನಿಸಿ ಗುರುಗಳ
ಆ ಮಹಾಭಾಷ್ಯವರುಹಿದ ಜಯತೀರ್ಥ ಗುರುವೆ ೧
ಬಾಲತನದಲಿ ಸಕಲ ಲೀಲೆಗಳ ತೊರೆದು
ಕಾಲುಂಗುಟಾಗ್ರದಿ ನಿಂದು ತಪವಗೈದು
ಶ್ರೀಲೋಲನ ಮೆಚ್ಚಿದಂಥ ಧೀರ ದೈವ ಭೂ-
ಪಾಲನಂಶದ ಶ್ರೀಪಾದರಾಜ ಗುರುವೆ ೨
ಪಿತನ ಮತ ಧಿಕ್ಕರಿಸಿ ಶ್ರೀಪತಿಯೆ ಪರನೆಂಬ
ಮತಿಪÉೂಂದಿ ಶಿಶುತನದಲಿ ನರಹರಿಯ ಒಲಿಸಿ
ಅತಿಹಿತನಾದ ಪ್ರಹ್ಲಾದದೇವನಂಶದಿಂ
ಕ್ಷಿತಿಯೊಳುದ್ಭವಿಸಿದ ವ್ಯಾಸರಾಜ ಗುರುವೆ ೩
ಈ ಧರೆಯೊಳೆಸೆಯುತಿಹ ಉಡುಪಿಯೊಳು ನೆಲಸಿರ್ಪ
ಯಾದವ ತೀರ್ಥಾಯ ಪದ ಸರಸಿರುಹ ಭೃಂಗ
ಮೋದ ತೀರ್ಥಾರ್ಯರ ಪದಕರುಹನಾದಂಥ
ಸೋದೆಯೊಳ್ರಾಜಿಸುವ ವಾದಿರಾಜ ಗುರುವೇ ೪
ಕಂತುಜನಕನಿಗತ್ಯಂತ ಪ್ರಿಯನಾದ ಮತಿ
ವಂತನಾ ವ್ಯಾಸಮುನಿಯೆ ನೀನಾಗಿ ಬಂದು
ಸಂತಸದಲಿ ಸಾಧು ಜನರಿಷ್ಟ ಪೂರೈಸುತ
ಮಂತ್ರಾಲಯದಿ ಮೆರೆವ ರಾಘವೇಂದ್ರ ಗುರುವೆ ೫
ಜಲಜಭವನೂರುಭವನಂಶದಲಿ ಜನಿಸಿ
ಕಲಿಯುಗದಿ ಹರಿನಾಮವೆ ಗತಿಯೆಂದು ಸಾರಿ
ಹಲವು ಪದ ಸುಳಾದಿಗಳ ರಚಿಸಿ ಸಜ್ಜನರ
ಕಲುಷಗಳ ಕಳೆದ ಪುರಂದರದಾಸರಾಯ ೬
ಸಕಲ ಋಷಿಗಳ ಸಂಶಯವ ಪರಿಹರಿಸಿ ವೇದ
ಉಕುತಿಗಳಿಂದ ಹರಿಯೆ ಪರನೆಂದು ಸ್ಥಾಪಿಸಿ
ಭಕುತಿ ವೈರಾಗ್ಯನಿಧಿ ಭೃಗುಮುನಿಯೆಂದೆನಿಸಿದ
ಮುಕುತಿಪಥ ತೋರಿಸಿದ ವಿಜಯದಾಸರಾಯ ೭
ವಾಸಿಷ್ಠ ಕೃಷ್ಣ ಸೂತ್ರ ಪುರಾಣಗಳ ರಚಿಸೆ
ದಾಸತ್ವವಹಿಸಿ ಸಕಲ ಗ್ರಂಥಗಳ ಬರೆದು
ಶ್ರಿಶಗರ್ಪಿಸುತ ಲೇಸು ಜಗಕೆಗೈದಂಥ ಗ
ಣೇಶಾವತಾರಿ ಗೋಪಾಲದಾಸರಾಯ ೮
ಸಿರಿ ರಂಗೇಶವಿಠಲನ ಕಾಂಬ ತೃಷೆಯಲಿ ಹರಿಗೆ
ಹರಿಕಥಾಮೃತಸಾರ ಪಾನಗೈಯಲಿತ್ತ
ನರಹರಿಯ ಕೃಪಾಪಾತ್ರ ಸಹ್ಲಾದನಂಶದ
ಗುರುವರ ಶ್ರೀ ಜಗನ್ನಾಥದಾಸರಾಯ ೯

 

೨೧೮
ನೀನು ನಾನು ಸಮನೆಂತಹೆವು ಕಾಣೆನ್ಯಯ್ಯಾ ಪ
ಮಾನವ ರಕ್ಕಸ ಜನರ ಕುತರ್ಕವದೇನೊ ಅ.ಪ.
ಹದಿನಾಲ್ಕು ಲೋಕಗಳನು ಪೊರೆವ ದಾತನು ನೀನು
ಉದರಕಾಗಿ ಅಂಡಲೆವ ತಿಂಡಿಪೋತನು ನಾನು
ಮಧುರ ರಕ್ಕಸನ ಸೀಳ್ದ ಘನ ಪರಾಕ್ರಮಿ ನೀನು
ಸುದತಿ ಗದರಿಸಲು ಗದಗದ ನಡುಗುವೆ ನಾನು ೧
ವ್ಯಾಳಶಯನನಾಗಿ ಸುಖದಿ ನಿದ್ರಿಸುವೆ ನೀನು
ಚೇಳು ಕುಟುಕಲು ಬಾಯ್ಬಡುಕೊಂಬುವೆನು ನಾನು
ಮಾಲೋಲನಾಗಿಹ ನಿತ್ಯ ತೃಪ್ತನು ನೀನು
ಕೂಳಿಲ್ಲದಿರೆ ಮೇಲಕೇಳಲಾರೆನೊ ನಾನು ೨
ಸರ್ವಜ್ಞನಾದ ರಂಗೇಶವಿಠಲ ನೀನು
ಗರ್ವಿಷ್ಟನಾದ ಮಹಾಜ್ಞಾನಿಯು ನಾನು
ಶರ್ವಾದಿಗಳಿಂದ ಸ್ತುತ್ಯನಾದವ ನೀನು
ಉರ್ವಿಯೊಳು ಸರ್ವರಿಂದ ನಿಂದಿತನು ನಾನು ೩

 

೨೧೯
ನೀನೆ ನಾನೆಂಬುವ ಮಾನವಾಧಮನನ್ನು
ಏನು ಮಾಡಲು ಬೇಕು ನಾನರಿಯೆನೊ ರಂಗ ಪ
ದಾನವಾರಿಯೆ ಎನ್ನನೇನೆಂದರೂ ಅನಲಿ
ನಾ ನಿನ್ನ ನಿಂದಿಸುವರಾನನವ ನೋಡೆನೋಅ.ಪ.
ಆನೆಕಾಲಿಗೆ ಕಟ್ಟಿ ಬೀದಿಯೊಳೆಳೆಸಲೆ
ಕಾನನಕೆ ಕೊಂಡೊಯ್ದು ಕೈಕಾಲು ಕಡಿಸಲೆ
ಮೀನು ಮೊಸಳೆಗಳಿರುವ ಮಡುವೀಲಿ ನೂಕಿಸಲೆ
ನೇಣುಗಳಿಂದಲಿ ಬಿಗಿದು ಶೂಲಕೇರಿಸಲೆ ೧
ಜೀವದೊರಸೆ ಅವನ ಹೂಳಿಸಿರೆಂದ್ಹೇಳಲೆ
ಹಾವುಗಳ ಹಿಂಡಿನೊಳು ನೂಕಿರೆಂದ್ಹೇಳಲೆ
ನೋವು ಬಹಳಾಗಲು ಸೂಜಿಗಳಿಂದಿರಿಸಲೆ
ಪಾವಕನೊಳು ಕಾಲ್ಕಟ್ಟಿ ಎತ್ತಿ ಹಾಕಿಸಲೇ ೨
ಗಿರಿಯ ತುದಿಯಲಿ ನಿಲಿಸಿ ಜರಿಯೊಳಗೆ ನೂಕಿಸಲೆ
ಭರದಿ ಕಣ್ಕಟ್ಟಿ ಕಾದತೈಲದೊಳಿಡಿಸಲೆ
ಸಿರಿಹರಿಯೆ ಪೇಳೆಂದು ರಂಗೇಶವಿಠಲನೊಳು
ತರಣಿನಂದನ ತಾನು ಬಿನ್ನೈಸಿದನಂದು ೩

 

೧೮೦
ನೆಲೆಸೆನ್ನ ವದನದಿ ವಾಣಿ ಬ್ರಹ್ಮಾಣಿ
ನೆಲೆಸೆನ್ನ ವದನದಿ ವಾಣಿ ಪ
ಜಲಜನಾಭನ ಗುಣಗಣ ನಲಿಯುತ ಪಾಡಲು
ಸುಲಲಿತವಾದಂಥ ಪದಗಳನು ನುಡಿಸುತ್ತ ಅ.ಪ.
ಸದಾಶಿವಾದಿ ಸಕಲ ಸುರಗಣ ಸೇವಿತ
ಸದಮಲ ದಿವ್ಯ ಪಾದ ಪಂಕಜವನ್ನು ೧
ಇಂದುವದನೆ ನಿನ್ನ ಮಂದಸ್ಮಿತವೆಂಬುವ
ಚಂದ್ರಕಾಂತಿಯ ಮನ್ಮನದೊಳು ಬೀರುತ ೨
ಕರದಲಿ ವೀಣೆಯ ನುಡಿಸುತ ವದನದಿ
ಹರುಷದಿ ರಂಗೇಶವಿಠಲನ ಪಾಡುತ ೩

 

೧೨೭
ನೋಡಯ್ಯಾ ಹರಿಯೆ ಪ
ಪಂಡರಪುರ ನಿಲಯನೆ ಕುಂಡಲಿಶಯನನೆ ಅ.ಪ.
ಪುಂಡರೀಕಗೊಲಿದವನೆ | ಅಂದು
ಶುಂಡಾಲವ ಪೊರೆದವನೆ
ಅಂಡಜ ವರ ವಾಹನನೆ | ಎನ್ನ
ಮಂಡೆಯ ಮೇಲ್ಕರವಿಡುತಲಿ ೧
ವಿಜಯಗೆ ಸಾರಥಿಯಾದಿ | ಅವನ
ಭುಜಗ ಶರದಿಂದ ಪೊರೆದಿ
ನಿಜ ಭಕುತಗೆ ನೀ ಒಲಿದ | ದೇವ
ಕುಜನಮರ್ದನ ಹರಿ ಮುದದಿ ೨
ಪಟುತರ ದೇಹ ಪ್ರಕಾಶ | ದಿಂದ
ವಟುವಂತೆ ಮೆರೆವ ಶ್ರೀಶ
ಕುಟಿಲ ರಹಿತ ರಂಗೇಶ | ವಿಠಲ
ಹಟಮಾಡದೆ ಕಣ್ತೆರದು ೩

 

೧೨೯
ಪದುಮನಾಭನೆ ಪಾಲಿಸಯ್ಯ ತುದಿ ಮೊದಲಿಲ್ಲದಂಥ ದೇವನೆ
ಹರಿನಾಲ್ಕು ಲೋಕಗಳೆಲ್ಲವನು ಉದರದೊಳಿಂಬಿಟ್ಟಿಹ ಭೂಪನೆ ಪ
ಆದಿಯಲಿ ಮಧುಕೈಟಬರನು ಸಂಹರಿಸಿದಂಥ ಶೂರನೆ
ವೇದವನು ಕದ್ದೊಯ್ದ ದಾನವನೊಳು ಕಾದಿಗೆದ್ದ ಧೀರನೆ ೧
ಹದಿನಾರು ಸಾವಿರ ಗೋಪಿಯನಾಳಿದಾಮಿತ ಬಲವಂತನೆ
ಕದನಕೊದಗಿದಸುರರನ್ನು ಸದೆ ಬಡಿದ ಪ್ರಖ್ಯಾತನೆ ೨
ಸಾಧು ಸಜ್ಜನರ ಸಂತಾಪ ಕಳೆದಾಮೋದ ತೀರ್ಥಾರಾಧ್ಯನೆ
ಆದಿದೈವಿಕಾದಿ ಈತಿ ಬಾಧೆ ಕಳೆಯೊ ರಂಗೇಶವಿಠಲನೆ ೩

 

೧೩೦
ಉಗಾಭೋಗ
ಪಾಪ ಪುಣ್ಯ ಫಲಲೇಶವಿಲ್ಲದವ ಮತ್ಸ್ಯಾದ್ಯನಂತವತಾರ
ಮಾಡಿದೆ ಯಾಕೆ
ನಿತ್ಯ ತೃಪ್ತನಾದವ ಶಬರಿಯು ಕೊಟ್ಟೆಂಜಲು
ಫಲಗಳ ಮೆದ್ದೆಯಾಕೆ
ಪಾಲಸಾಗರದಿ ಪವಡಿಸಿರ್ಪವ ವಿದುರ ಕೊಟ್ಟ
ಒಕ್ಕುಡಿತೆ ಪಾಲ ಕುಡಿದೆಯಾಕೆ
ಅನ್ನ ಅನ್ನದ ಅನ್ನಾದನೆನಿಸಿದವ ಕುಚೇಲ ಕೊಟ್ಟ ಒಪ್ಪಿಡಿ
ಅವಲ ಮೆದ್ದೆಯಾಕೆ
ಶ್ರೀ ಭೂದೇವಿಯರ ಸ್ತುತಿಗೆ ಮೊಗವೆತ್ತಿ ನೋಡಿದವ
ಕುರೂಪಿ ಕುಬುಜೆಗೆ ಮನಸೋತೆಯಾಕೆ
ಅಖಿಲಾಂಡಕೋಟಿ ಬ್ರಹ್ಮಾಂಡನಾಯಕನಾದವ
ಪಾಂಡವರೋಲೆಕಾರನಾದೆಯಾಕೆ
ನಿನಗಾಗಿ ನೀನು ಬವಣೆಪಡಲಿಲ್ಲವೊ ದೇವ
ನಿನ್ನ ಭಕುತರ ಪೊರೆಯಲೋಸುಗವೆಂಬುದ ನಾ ಬಲ್ಲೆ
ನಿನ್ನ ದಯಕೆಣೆಯುಂಟೆ ಎನ್ನಪ್ಪ ರಂಗೇಶವಿಠಲ

 

೨೦೨
ಪೊರೆಯೊ ಶ್ರೀಶನೆ ಸರುವ ಲೋಕ ಪೊರೆವನೆ ಪ
ಅರಿತು ಅರಿಯದಂತೆ ನಾನು ಗರುವದಿಂದ ಮೆರೆದನಯ್ಯ ಅ.ಪ
ಅರುಣ ಉದಯದಲ್ಲಿ ಎದ್ದು
ಹರಿಯೆ ನಿನ್ನ ಸ್ಮರಣೆ ಬಿಟ್ಟು
ಗೊರಿಕೆ ಹೊಡಿದು ನಿದೆರಮಾಡಿ
ದುರಿತದಲ್ಲಿ ಪೊರಳುವವನ ೧
ಕುತುಬ ಕಾಲದಲ್ಲಿ ಬಂದ
ಅತಿಥಿಗಳನು ಜರೆದು ನೂಕಿ
ಮಿತಿಯ ಮೀರಿ ಸವಿಯುತ ಪರ-
ಗತಿಯ ದಾರಿ ಕಾಣದವನ ೨
ದಾನಧರ್ಮ ಕೇಳಬಂದ
ಮಾನವಂತ ಜನರ ಬಹಳ
ಹೀನ ಮಾತಿನಿಂದ ಬೈದ
ಜ್ಞಾನರಹಿತನಾದ ನರನ ೩
ರೊಕ್ಕವಿರುವದೆಂದು ಬಹಳ
ಸೊಕ್ಕಿನಿಂದ ಬಡವರನ್ನು
ಲೆಕ್ಕಿಸದೆ ಮಾತನಾಡಿ
ಧಿಕ್ಕರಿಸಿದ ಅಧಮ ನರನ ೪
ಪಟ್ಟದರಸಿಯಿರಲು ಅವಳ
ಬಿಟ್ಟು ಪರರ ಸತಿಯ ಬಯಸಿ
ಅಟ್ಟಹಾಸದಿಂದ ನಗುತ
ಕೆಟ್ಟು ಹೋದ ಭ್ರಷ್ಟ ನರನ ೫
ಎಷ್ಟು ಮಾಡಲೇನು ಎಳ್ಳಿ
ನಷ್ಟು ಸುಖವ ಕಾಣಲಿಲ್ಲ
ಇಷ್ಟ ಮಿತ್ರ ನೀನೆಯೆಂದು
ಗಟ್ಟಿಯಾಗಿ ತಿಳಿದುಕೊಂಡೆ ೬
ಶ್ರಿಷ್ಟಿಗೊಡೆಯನು ರಂಗೇಶ-
ವಿಠಲನೆಂಬ ಮತಿಯ ಎನಗೆ
ಎಷ್ಟು ಮಾತ್ರ ಕೊಟ್ಟು ಸಲಹೊ
ಕೆಟ್ಟ ಮೇಲೆ ಬುದ್ಧಿ ಬಂತು ೭

 

೨೧೧
ಫಲವೇನೊ ಫಲವೇನೊ ಫಲವೇನೊ ಮನುಜ ಪ
ಫಲವೇನೊ ಬಾಳಿ ಹರಿದಾಸನಾಗದ ಮೇಲೆ ಅ.ಪ.
ಆಧಿಕಾರವನು ಮಾಡಿ ಮಧುವೈರಿಯನು ಮರೆತು
ಎದುರಿಲ್ಲ ಎನಗೆಂದು ಬಲು ಮದದಿಂದ ಮೆರೆದೆ ೧
ಬಡವಾರ ಬಡಿಯುತ ಕಡುದುಷ್ಟನಿವನೆನಿಸಿ
ಹೆಡಿಗೇಲಿ ಹೊನ್ನ ತಂದು ನಿನ ಮಡದೀಗೆ ಕೊಡಲು ೨
ಮಡದಿ ಮಕ್ಕಳು ನಿನ ಹಡೆದ ತಾಯ್ತಂದೆ
ಕಡು ಸುಖಪಟ್ಟಾರು ನಿನ ಒಡಗೂಡಿ ಬರುವಾರೆ ೩
ಅನುದಿನದÀಲಿ ನೀನು ತನುವ ಪೋಷಿಸುತ
ಅನುರಾಗದಿಂದಾಲಿ ನಿನ್ನ ಮನಸಿನಂತಿದ್ದು ೪
ನರಜನ್ಮವನು ಕೊಟ್ಟ ರಂಗೇಶವಿಠಲನ
ಹರುಷದಿಂ ಪಾಡುವ ಹರಿದಾಸನಾಗದ ಮೇಲೆ ೫

 

೧೩೧
ಬಂಡು ಮಾಡುವರಲ್ಲೊ ರಂಗೈಯ್ಯ ಪ
ಮಡುವ ಪೊಕ್ಕೆನುಯೆಂದು ಮಡದೇರೆಲ್ಲರು ಕೂಡಿ
ಬಿಡುಗಂಣನಿವನೆಂಬರೋ ರಂಗೈಯ್ಯಾ ೧
ಗುಡ್ಡ ಹೊತ್ತನು ಎಂದು ಸಡ್ಡೆನು ಮಾಡದೆ ನಿನ್ನ
ದೊಡ್ಡ ದೆವ್ವಯೆಂಬರೊ ರಂಗೈಯ್ಯಾ ೨
ಧರಣಿ ಎತ್ತಿದೆ ಎಂದು ಪರಿಹಾಸ ಮಾಡುತ
ಕೋರೆದಾಡಿಯನೆಂಬರೊ ರಂಗೈಯ್ಯಾ ೩
ತರಳನ ಸಲಹಲು ಸಿರಿಗೆ ಪೇಳದೆ ಬಂದ
ಉರಿಮೋರೆಯವನೆಂಬರೊ ರಂಗೈಯ್ಯಾ ೪
ಕೃಪೆಯ ಮಾಡದೆ ಬಲಿಯ ತಪಭಂಗ ಮಾಡಿದ
ಕಪಟ ತಿರುಕನೆಂಬರೊ ರಂಗೈಯ್ಯಾ ೫
ಪಿತನ ಮಾತನು ಕೇಳಿ ಮಾತೃಹತ್ಯವಗೈದ
ಪತಿತ ಹಾರುವನೆಂಬರೊ ರಂಗೈಯ್ಯಾ ೬
ಸತಿಯ ರಕ್ಕಸನೊಯ್ಯೆ ಅತಿಶೋಕ ಪೊಂದಿದ
ಹತಭಾಗ್ಯನಿವನೆಂಬರೊ ರಂಗೈಯ್ಯಾ ೭
ನೆರೆಹೊರೆ ಹೆಂಗಳ ಸುರತದಿ ಕೂಡಿದ
ಜಾರ ಚೋರನು ಎಂಬರೊ ರಂಗೈಯ್ಯಾ ೮
ಬಟ್ಟೆಯಿಲ್ಲದೆ ಪೋಗಿ ನೆಟ್ಟನೆ ನಿಂತಿರ್ದ
ಕೆಟ್ಟಾ ಭಂಡನಿವನೆಂಬರೊ ರಂಗೈಯ್ಯಾ ೯
ಅಷ್ಟಾ ಭಾಗ್ಯವ ನೀಗಿ ಕಷ್ಟಕ್ಕೆ ಗುರಿಯಾದ
ದುಷ್ಟ ರಾಹುತನೆಂಬರೊ ರಂಗೈಯ್ಯಾ ೧೦
ಕಂದಾ ನೀ ನಿರ್ದೋಷ ರಂಗೇಶವಿಠಲ
ನೆಂದು ತಿಳಿದು ದೂರುವರೊ ರಂಗೈಯ್ಯಾ ೧೧

 

೧೩೨
ಬಂದನು ರಘುವೀರ ರಣಧೀರ ಪ
ತಡೆ ಭರತನೆ ಮುಂದಡಿಯಿಡಬೇಡ
ದುಡುಕಿ ಬೀಳದಿರು ಬಡಜನ ಮುಖಕೆ ೧
ಸೀತಾನಾಥನ ದೂತನಾದೆನ್ನ
ಮಾತನು ಕೇಳು ಆತುರಪಡದೆ ೨
ಭ್ರಾತನ ನೋಡಲು ಕಾತರನಾಗಿ
ವಾತವೇಗದೊಳು ಆತನು ಬರುತಿಹ ೩
ಅದೊ ನೋಡದೊ ನೋಡದರ ದೆಶೆಯಲಿ
ವಿದುಶತಕಿಲ್ಲದಗದಿರದದ್ಯುತಿಯ ೪
ಅದೊ ಪುಷ್ಪಕವು ಅದರ ಪ್ರಭೆ ನೋಡು
ಅದರಿರವ ನೋಡು ಒದಗಿ ಬರುತಿದೆ ೫
ಆ ಮಹಕಾಂಚನ ಧಾಮ ಮಧ್ಯೆ ನಿ
ಸ್ಸೀಮ ನಿಮ್ಮಣ್ಣ ರಾಮನ ನೋಡು ೬
ವಾಮದಿ ಸೀತಾಭಾಮೆ ಕುಳ್ಳಿಹಳು
ಪ್ರೇಮದಿ ಲಕ್ಷ್ಮಣ ಚಾಮರ ಬೀಸುವ ೭
ಬಲದಿ ಸುಗ್ರೀವ ನೆಲೆಸಿಹ ನೋಡು
ಕೆಲದಿ ವಿಭೀಷಣ ನಲಿಯುತ ನಿಂತಿಹ ೮
ಅಂಗದ ತನ್ನಯ ಜಂಘೆಲಿ ದೇವನ
ಮಂಗಳ ಚರಣವ ಹಿಂಗದೆ ಸೇವಿಪ ೯
ವೃದ್ಧ ಜಾಂಬವ ಗದ್ದುಗೆ ಮುಂದಿಹ
ಯುದ್ಧ ಪ್ರವೀಣರು ಸಿದ್ಧರಾಗಿಹರು ೧೦
ಉಳಿದ ಕಪಿ ದನುಜ ದಳಗಳು ಹಿಂದೆ
ಕಲಕಲ ಮಾಡುತ ಉಲಿಯುತಲಿಹವು ೧೧
ಅರರೆ ವಿಮಾನವು ತಿರುಗಿತು ನೋಡು
ಧರಣಿಗೆರಗುತಿದೆ ಭರದೊಳು ನೋಡು ೧೨
ಭಳಿರೇ ರಾಮನು ಇಳಿದನು ನೋಡು
ಕಳವಳವೆಲ್ಲವ ಕಳೆಯುತ ನೋಡು ೧೩
ಬಂದನು ಅದಕೊ ಬಂದೇ ಬಂದನು
ಇಂದುಮುಖಿಯ ತಾ ಹಿಂದಿಟ್ಟುಕೊಂಡು ೧೪
ಮುಂದೆ ಬರುವ ಕಪಿಯನು ಉಳಿದು
ಸುಂದರ ಮುಖವು ಕುಂದಿದೆ ನೋಡು ೧೫
ನಡೆದು ಬರುತಿಹ ಮಡದಿಯೊಡಗೂಡಿ
ತಡಮಾಡದಿರು ಪೊಡಮಡು ಪೋಗು ೧೬
ಇಂತು ನುಡಿದು ಧೀಮಂತನಾದ ಹನು-
ಮಂತ ಚಿಗಿದು ಖಗನಂತೆ ಬಂದಿಳಿದ ೧೭
ವಾತಸುತನ ಸವಿಮಾತಲಿ ಭರತನು
ಪ್ರೀತಿಲಿ ತಿರುಗಿದನಾತುರದಿಂದ ೧೮
ನೋಡುತ ರಾಮನ ಓಡುತ ಬಂದೀ
ಡಾಡಿದ ತನುವ ಬಾಡಿದ ಮುಖದಿ ೧೯
ಅನುಜನ ನೋಡಿ ದನುಜಾರಿಯಾಗ
ಮನ ಮರುಗಿದ ಬಲು ಕನಿಕರದಿಂದ ೨೦
ರಂಗೇಶವಿಠಲ ಕಂಗಳ ಜಲದೊಳು
ಮಂಗಳಯುತನಾಲಿಂಗನಗೈದ ೨೧

 

೨೧೦
ಬಡಿವಾರವಿದ್ಯಾಕೊ ದಡಿಗ ಮಾನವನೆ ಪ
ಜಡಜಮಿತ್ರನ ಸೂನು ಹೆಡತಲೆಯಲಿ ನಗುವ ಅ.ಪ.
ಬಾಲನು ನಾನು ಭಾಗ್ಯಶಾಲಿಯೆನುತ ನಿತ್ಯ
ಲೀಲ ವಿನೋದವೆಂಬ ಜಾಲದೊಳು ಸಿಲುಕಿ
ಕಾಲವ ಕಳೆದು ಮಾಲೋಲನ ಮರೆತಂಥ
ಖೂಳ ಮಾನವ ಪಶುಪಾಲನಾದವ ನಿನಗೆ ೧
ತಾಸು ತಾಸಿಗೆ ನೀನು ಲೇಸಾಗಿ ಭುಂಜಿಪೆ
ಬೇಸರಿಲ್ಲವೊ ನಿನಗೆ ರಾಸಿ ಭೋಗಗಳಲಿ
ಕಾಸುವೀಸವ ಕೊಡೆ ಹರಿದಾಸರಾದವರಿಗೆ
ದೋಷಕಾರಿಯೆನಿಸಿದ ಹೇಸಿಕೆ ಮನದವನೆ ೨
ಕಡುಪ್ರಿಯರೆಂದೆನಿಸುವ ಮಡದಿ ಮಕ್ಕಳು ಎಂಬ
ಬೆಡಗು ತೋರುವ ಮೋಹ ಮಡುವಿನೋಳ್ಬಿದ್ದು
ಒಡೆಯ ಶ್ರೀ ರಂಗೇಶವಿಠಲರೇಯನ ಪಾದ
ಜಡಜವ ನಂಬದೆ ನೀ ಕೆಡಬೇಡ ಮನುಜ ೩

 

೧೩೩
ಬಾ ಬಾ ಬಾರೈಯ್ಯಾ ಶ್ರೀ ಗಿರಿದೊರೆಯೆ
ತ್ವರಿತದಿ ಸಿರಿ ಹರಿಯೆ ಚಿ ಪ
ನೀ ಬರುವೆಂದಬುಜಾಭವಾದೀ ಸುರರು
ಕಾದೂಕೊಂಡಿಹರು
ಶ್ರೀ ಭೂಮಿ ಸಹಿತದಿ ಶ್ರೀ ಗಿರಿಯಿಳಿದು
ಈ ಭವನವನು ನೀ ಪಾವನ ಮಾಡಲು ಅ.ಪ
ಮೃಡನೊಡನೆ ಪರ್ವತದಿ ವಾಸವು ಯಾಕೊ
ಕರೆದರೆ ಬರೆ ಯಾಕೊ
ಬಡವರೊಳೀಪರಿಯ ಪಂಥವು ಸಾಕೊ ಸುಲಭನಾಗಿರಬೇಕೊ
ಕೊಡುವ ದೊರೆಯೆಂದು ದೃಢದಿ ತಿಳಿದು ನಿ
ನ್ನಡಿ ಬಿಡದೆ ಬಲು ಕಾಡದೆ ಬಿಡುವರೆ ೧
ಜಡಜಭವಾದ್ಯರ ಮನೆ ದೈವಾವೆ ಭವ ಶರಧಿಗೆ ನಾವೆ
ಬಡವರಾದರೀಯೂ ನೀನಲ್ಲವೆ ಕೊಡೆನಗೆ ನಿನಸೇವೆ
ಒಡೆಯ ನೀನಲ್ಲದೆ ಬಡದೇವತೆಗಳು
ಕೊಡಬಲ್ಲವೆ ಪೇಳು ತಡಮಾಡದೆ ನೀ ೨
ಹದಿನಾಲ್ಕು ಲೋಕದೊರೆಯು ನೀನು ಎನುತ ತಿಳಿದು ನಾನು
ಪದುಳದಿ ನಿನ್ನ ಸೇವಿಸ ಬಂದೆನು ಕೇಳಯ್ಯಾ ಇನ್ನು
ಪದುಮನಾಭನೆ ನೀ ಸದಯದಿ ನೋಡಿ
ಇದನೆ ಕರುಣಿಸು ನಿನ್ನ ಪದಸೇವೆಯನು ೩
ಸಿರಿ ಧರೆ ನಾರಿಯರ ನಾ ಕೇಳಲಿಲ್ಲಾ ಕೊಟ್ಟರು ಬೇಕಿಲ್ಲ
ದೊರೆತನ ಬಯಸಿ ನಾ ಬೇಡ ಬಂದಿಲ್ಲ ಕೇಳೆನ್ನೆಯ ಸೊಲ್ಲ
ಪರಿ ಪರಿ ಬೇಡುವೆ ನಿನ್ನ ಪದಸೇವಕರ
ಪರಿಚಾರಕರನೆನಿಸೊ ಪರಮ ದಯಾಳೊ ೪
ಕೋರಿದನು ಕೊಡುವಿಯೆಂಬರು ಜನರೆಲ್ಲಾ
ಮಾತಿದು ಪುಸಿಯಲ್ಲ
ನೀರಜ ಭವಾಂಡದಿ ನಿನಗೆದುರ್ಯಾರಿಲ್ಲ ರಂಗೇಶವಿಠಲ
ದೂರ ನೋಡುತಲಿ ಘೋರಪಾತಕರೊಳು
ಸೇರಿಸದೆನ್ನನು ಪಾರುಮಾಡಲು ಬೇಗ ೫

 

೧೬೭
ಬಾರಮ್ಮ ಲೋಕಮಾತೆ ಆನಂದಪ್ರದಾತೆ ಪ
ಸಿಂಧುರಾಜತನಯೆ ಅರವಿಂದ ಮಂದಿರೆ
ಸಿಂಧುಶಯನನ ಪ್ರಿಯೆ ಮುದದಿಂದೆಮ್ಮನು ಕಾಯೆ ೧
ಕಮಲಸಂಭವನ ಮಾತೆ ಕಮಲಾಕ್ಷಗೆ ಪ್ರೀತೆ
ಕಮಲಶರನ ಪೆತ್ತ ಕಮಲಾರಿ ಕೋಟಿಕಾಂತೆ ೨
ರಂಗೇಶವಿಠಲನ ಉರದಲಿ ಮೆರೆಯುವ
ಮಂಗಳದೇವತೆ ಸ್ಮಿತ ತಿಂಗಳ ಬೀರುತ್ತ ೩

 

೧೩೪
ಬಾರೊ ನೀ ಭಕುತರ ಸುರಧೇನು ಪ
ಕರಗಳ ಮುಗಿವೆನು ಅ.ಪ.
ಮೂರು ಲೋಕದ ದೊರೆ ನೀನಾಗಿರೆ
ನೀರಿನೊಳೀಪರಿಯಾಟವು ತರವೆ
ಕೂರುಮ ರೂಪದಾಕಿಟಿ ನರಮೃಗದಾ
ಕಾರನೆನುತ ಪರಿಹಾಸವ ಮಾಳ್ಪರು ೧
ಪೋರ ನಗುತ ಬಲಿಯನು ವಂಚಿಸಿ
ಮೀರಿದ ಕೋಪದಿ ಮಾತೆಯನಿರಿದು
ನಾರಿಯ ನೀಗುತ ಮಾವನ ಕೊಂದು
ಜಾರಿದ ವಸನದ ರಾಹುತನೆಂಬರು ೨
ವಾರಿಧಿಯೊಳು ನಿನಗಾಟವು ಸಲ್ಲದು
ಕೋರಿದ ಕೊಡುವೆನು ಬಾರೆನ ದೊರೆಯೆ
ವಾರಿಜಾಭನೆ ಕರೆ ಕರೆ ಮಾಡದೆ
ಶ್ರೀರಂಗೇಶವಿಠಲನೆ ಬೇಗದಿ ೩

 

೧೩೫
ಬೇಗನೆ ಬಾರೊ ದೇವ ಜಾಗೂ ಮಾಡದೆ ಪ
ಬೇಗನೆ ಬಾರೊ ನೀನು ನಾಗಶಯನ ಕೃಷ್ಣ
ಯೋಗಿ ಜನರು ಕಂಡು ಪೋಗಲೀಸರೆ ನಿನ್ನ ಅ.ಪ.
ಹತ್ತಾವತಾರವಾಯ್ತು ಮತ್ತಗಜವ ಪೊರೆದೆ
ಉತ್ತಮಪದ ಧ್ರುವಗಿತ್ತೆ ಮತ್ತೇನು ಕಾರ್ಯವೈಯ್ಯ ೧
ತರಳ ಪ್ರಹ್ಲಾದನ ಕರುಣಾದಿ ಸಲಹಿದೆ
ದುರುಳರ ಸದೆದ ಪರಿಯೆಲ್ಲವಾಯಿತು ೨
ಪರಿ ಪರಿ ರೂಪವ ಧರಿಸಿದ ಎನ್ನದೇವ
ಸಿರಿರಂಗೇಶವಿಠಲನೆ ಕರವೆತ್ತಿ ಮುಗಿಯುವೆ ೩

 

೨೦೩
ಬೇಡಿಗೊಂಬೆನೊ ದೇವ ಮಹಾನುಭಾವ ಪ
ಮೂಡಲುಗಿರಿವಾಸ ಶ್ರೀ ಶ್ರೀನಿವಾಸ ಅ.ಪ
ನಾನಾ ಯೋನಿಗಳಲಿ ನಾ ಬಂದು ನೊಂದೆನೋ
ನೀನೇ ಸಲಹಬೇಕೋ ಎನಗೆ ಜನುಮವು ಸಾಕೊ ೧
ತನುವೂ ಮನಗಳನ್ನೂ ನಿನಗರ್ಪಿಸಿದೆನೊ
ವನಜಾಕ್ಷ ಬಿಡಿಸು ಸಿಕ್ಕುಯೆನಗೆ ನೀನೇ ದಿಕ್ಕು ೨
ಮಾನಾಪಮಾನವು ನಿನ್ನದು ಎನಗೇನೊ
ದೀನ ಜನರ ಪಾಲ ರಂಗೇಶವಿಠಲ ೩

 

೧೩೬
ಬ್ರಹ್ಮಾದಿದೇವಗಣ ನಮಿತ ಪಾದಯುಗಳನೆ
ಬ್ರಹ್ಮಾಂಡ ಜೀವರೊಡೆಯನೆ ಸನ್ಮಂಗಳಂ
ನಿನಗೆ ರಂಗಧಾಮನೆ ಪ
ಸುಮನಸರೊಡೆಯನೆ ಕಮಲಾಪತಿಯೆ ಅ.ಪ.
ಗೋಪಾಲ ಬಾಲಕಿಯರ ಮನಕುಮುದ ಚಂದ್ರನೆ
ಭೂಪಾಲ ಹಲಧರನನುಜನೆ ಸನ್ಮಂಗಳಂ
ನಿನಗೆ ರಂಗಧಾಮನೆ
ಕಪಟ ರಕ್ಕಸರನು ಮಡುಹಿದನೆ ೧
ಕಾವೇರಿ ತೀರದಲ್ಲಿ ನಿಂದ ಪಾವನರೂಪನೆ
ಹಾವಿನಹಡೆಯೊಳ್ಕುಣಿದವನೆ ಸನ್ಮಂಗಳಂ
ನಿನಗೆ ರಂಗಧಾಮನೆ
ನಮ ತೋಹನಾಂಗೀಯ ರಾಮನಾಪಹಾರಿಯೆ ೨
ಮಾನಿನಿ ದ್ರೌಪದಿಯ ಮಾನವನ್ನು ಕಾಯ್ದನೆ
ಜ್ಞಾನಿಗಳ ಹೃತ್ಕಮಲವಾಸನೆ ಸನ್ಮಂಗಳಂ
ನಿನಗೆ ರಂಗಧಾಮನೆ
ದಿನಕರ ಕೋಟಿತೇಜನೆ ರಂಗೇಶವಿಠಲನೆ ೩

 

೧೭೬
ಭಾರತೀಶನೆ ಕಾಯೋ ನಿನ್ನ ಸಿರಿ ಚರಣದಲ-
ಪಾರ ಭಕುತಿಯನೀಯೋ ತವ ಸೇವಕನೆನಿಸಿ
ಕೀರುತಿಯನು ಪಡೆಯೋ ಭವಕ್ಲೇಶ ಕಳೆಯೊ ಪ
ಸೂರಿ ಸುಬ್ಬಣಾಚಾರ್ಯಕರಸ-
ರೋರು ಹಗಲಲಿ ಪೂಜೆಗೊಳುತಲಿ
ಚಾರುತರ ಶ್ರೀ ಜಯಮಂಗಳಿಯ
ತೀರದೊಳಿರುವ ವೀರ ಮಾರುತಿ ಅ.ಪ.
ಪ್ರತಿ ವರುಷ ಮಾಘಸಿತ | ನವಮಿ ದಿನದೊಳು ನೀ-
ನತಿವಿಭವದೊಳು ನಗುತ | ಭಕುತರಿಷ್ಟವ ಸಲಿಸೆ
ರಥದೊಳಗೆ ಕುಳ್ಳಿರುತ | ವಿಧ ವಿಧ ವಾದ್ಯಗಳ
ತತಿಯನಾಲೈಸುತ | ಅತಿ ಮೋದಬಡುತ
ನತ ಜನರ ಬಹು ವಿವಿಧ ಪರಿ ಸಂ-
ಸ್ತುತಿಸೆ ಹಿಗ್ಗುತಲವರ ಸ್ವಮನೋ-
ರಥಗಳ ನೀ ಸಲಿಸುವೆನೆನುತಲಿ
ಅತುಳ ವಿಕ್ರಮದಭಯ ಹಸ್ತದಿ
ಕೃತಿರಮಣ ಸಿರಿವರ ಹರಿಯನನು
ಮತವ ಪಡೆಯುತ ರಥವ ನಡೆಸಿ
ಚತುರ ದಿಕ್ಕಲಿ ಬಿಜಯ ಮಾಡುತ
ಸತತ ಹರುಷವಗರೆವ ದೇವ ೧
ರಕ್ಕಸಕುಲ ತಮ ಭಾನು | ತಾಮಸರ ಧ್ಯಾನಕೆ
ಸಿಕ್ಕುವನಲ್ಲ ನೀನು | ಸುಜನರ ಹೃದಯದೊಳು
ಅರ್ಕನೊಲು ಪೊಳೆವನು | ಹರಿಸಿರಿಗಾಳುಳಿದು
ಬಕ್ಕ ದಿವಿಜರಿಗಿನ್ನು | ಗುರುಬಲ್ಲೆ ನಾನು
ಚಿಕ್ಕ ರೂಪವಗೊಂಡು ಲಂಕೆಯ
ಪೊಕ್ಕು ರಾಮನ ಸತಿಯ ಕಂಡು
ತುಕ್ಕಿ ವನವನು ಸೂರೆ ಮಾಡಿ
ಉಕ್ಕಿನ ಧ್ವಜಸ್ತಂಭದಿಂದ
ಸೊಕ್ಕಿ ಬಂದ ದನುಜವ್ರಾತವ
ಕುಕ್ಕಿ ಕೆಡಹಿ ಪುರವನುರಹಿ
ಅಕ್ಕರದ ಮಣಿಸಹಿತ ಬಂದು
ಪಕ್ಕಿದೇರನಿಗೆರಗಿ ನಿಂದೆ ೨
ತುತಿಸ ಬಲ್ಲೆನೆ ನಾನು | ನಿನ್ನಯ ಸುಗುಣಗಳ
ತತಿಗಳೆಲ್ಲವನು | ತ್ರಿಪುರ ಸುಂದರಿ ಪಾ-
ರ್ವತಿ ಪತಿಯ ಪಡೆದವನು | ರಂಗೇಶವಿಠಲಗೆ
ಅತಿಪ್ರೀತಿಸುತ ನೀನು | ನಿಷ್ಕಾಮಯುತನು
ಪತಿತರನುದ್ಧರಿಸಲು ನೀ ಸಿರಿ
ಪತಿಯ ಮತದೊಳು ಹನುಮ ಭೀಮ
ಯತಿಯ ರೂಪವ ತಾಳಿ ಹರುಷದಿ
ಕ್ಷಿತಿಯ ಭಾರವ ಹರಸಿ ಸಲಹಿದೆ
ಅತುಳ ಮಹಿಮ ನಿನ್ನಪರಿಮಿತ ಶ
ಕುತಿಗೆ ನಮೊ ನಮೊ ವಾಯುತನಯನೆ
ಸತತ ಮುದದೊಳು ನಿನ್ನ ಸ್ಮರಿಸುವ
ಮತಿಯ ಪಾಲಿಸು ಪತಿತ ಪಾವನ ೩

 

೧೬೮
ಮಂಗಳಂ ಮಹಿಜಾತಗೆ ಇಂಗಡಲ ಮಂದಿರಗೆ ಪ
ಬಂಗಾರದೊಡಲ ಮುಖ್ಯ ಪದಂಗಳನೆಲ್ಲ
ಕಂಗಳ ಭ್ರೂಭಂಗಾದಿ ಕರುಣಿಪ ದೇವಿಗೆ ೧
ರಂಗು ಮಾಣಿಕದಾಭರಣಂಗಳನಿಟ್ಟು
ಡಿಂಗರೀಕರಂತರಂಗದಿ ನಲಿಯುವ ದೇವಿಗೆ ೨
ರಂಗೇಶವಿಠಲನರ್ಧಾಂಗಿಯೆನಿಸಿಕೊಂಡು
ಹಿಂಗದೆ ಭಜಿಪರ್ಗೆ ಶುಭಗಳ ನೀಡುವ ದೇವಿಗೆ ೩

 

೧೭೭
ಮಂಗಳಂ ಶುಭಮಂಗಳಂ ಪ
ಅಂಜನೆ ಗರ್ಭದಿಂ ಬಂದವಗೆ
ಕಂಜಾಕ್ಷಿ ವಾರ್ತೆಯ ತಂದವಗೆ
ಸಂಜೀವನ ತಂದು ರಾಮನ
ರಂಜನೆಗೈದ ಮುಖ್ಯಪ್ರಾಣಗೆ ೧
ಕುಂತಿಯ ಕಂದನೆಂದೆನಿಸಿದವಗೆ
ದಂತಿ ಸಾಸಿರ ಬಲವಂತನೆಗೆ
ಕಂತು ಪಿತನ ಮಂತ್ರಿಯೆನಿಸಿ ಕುರುಕುಲ
ಅಂತಕನಾದ ಭೀಮಸೇನಗೆ ೨
ನಡುಮನೆ ವೇದವತಿ ವರಸುತಗೆ
ಉಡುದಾರ ಉಪವೀತ ತೊರೆದವಗೆ
ಉಡುಪೀಲಿ ಸಿರಿ ರಂಗೇಶವಿಠಲನ
ಬಿಡದೆ ಪೂಜಿಪ ಮಧ್ವರಾಯಗೆ ೩

 

೧೩೭
ಮಂಗಳಂ ಶ್ರೀ ರಂಗನಿಗೆ ಗಂಗೆಯ ಜನಕಗೆ ಪ
ಶರಧಿ ಪೊಕ್ಕವನಿಗೆ ಗಿರಿಯ ಪೊತ್ತವನಿಗೆ
ಧರೆಯ ನೆಗಹಿದವಗೆ ನರಹರಿ ರೂಪಗೆ ೧
ಬಲಿಯನು ತುಳಿದಗೆ ಕಲಿಭೃಗು ತನುಜಗೆ
ಶಿಲೆಯ ಪೆಣ್ಮಾಡಿದವಗೇ ಹಲಧರನನುಜಗೆ ೨
ಚಾರು ಬೌದ್ಧನಿಗೆ ವೀರರಾಹುತನಿಗೆ
ಕಾರುಣ್ಯ ಸಾಗರಗೆ ಶ್ರೀ ರಂಗೇಶವಿಠಲಗೆ ೩

 

೧೩೮
ಮಧುವೈರಿ ಬಂದನದಕೋ ದಧಿ ಕಡೆವ ವೇಳೆಗೆ ಪ
ಮಧುವೈರಿ ಬಂದನದಕೋ ಸಂಗಡಿಗರೊಂದಿಗೆ
ವಿಧವಿಧ ರಾಗದಿ ಕೊಳಲನೂದುತ ತಾನು ಅ.ಪ.
ಅರಳೆಲೆ ಮಾಗಾಯಿ ಕಿರುಗೆಜ್ಜೆ ಪಾಗಡ
ಪರಿ ಪರಿಯಾಭರಣಗಳಿಟ್ಟು ಕಿರುನಗೆ ಮುಖದ ೧
ವಾರಿಜನೇತ್ರನು ಓರೆನೋಟದಿ ಸಕಲ
ನಾರೀಮಣಿಗಳ ಮನಸೂರೆಗೊಳ್ಳುತಲಿ ೨
ಬಾಲನಂದದಿ ತಾನು ಲೀಲೆಯ ತೋರುತ
ಮಾಲೋಲನು ಆಗ ಬೆಂಣೆ ಕೊಡೆನ್ನುತಲಿ ೩
ಏನು ಪುಣ್ಯ ಯಶೋದೆ ತಾನು ಮಾಡಿರ್ದಳೊ
ಶ್ರೀನಿಧಿ ಕೃಷ್ಣನು ಸಾನುರಾಗದಲಪ್ಪಿದ ೪
ಮುಟ್ಟಿ ಭಜಿಸುವರಘ ಸುಟ್ಟು ಸಲಹು
ದಿಟ್ಟ ಶ್ರೀ ರಂಗೇಶವಿಠಲ ನಲಿಯುತ ೫

 

೨೧೨
ಮರೆಯದಿರು ಮರೆಯದಿರು ಹರಿಯನು ಪಾಪಿ ಪ
ಮರೆಯದಿರೆ ನೀ ಮೈಕುಂಠಕೆ ಪೋಪಿ ಅ.ಪ.
ಮೂರು ದಿನ ಬಾಳ್ವ ಸಂಸಾರವ ನೋಡಿ
ಬಾರಿ ಹರುಷಿಸದಿರು ನೀನೆಲೊ ಖೋಡಿ ೧
ಮತಿವಂತನಾದರೆ ಹರಿಪುರಕೆ ಪೋದಿ
ಸತಿಸುತರ ನಂಬೆ ನಿನ ಬಾಯಲಿ ಬೂದಿ ೨
ಸಿರಿಯ ನಂಬಿದ ದುರ್ಯೋಧನ ಬಿದ್ದ
ಹರಿಯ ನಂಬಿದ ಭೀಮಸೇನನು ಗೆದ್ದ ೩
ಆನೆ ಕುದುರೆ ರಥ ಭಂಡಾರವು ನಿಂದೆ
ಪ್ರಾಣ ಹೋಗುವಾಗವು ಬಾರವು ಹಿಂದೆ ೪
ರಂಗೇಶವಿಠಲನ ನಂಬಿದವ ಜಾಣ
ಅಂಗನೆಯರ ನಂಬಿದ ಮನುಜನೆ ಕೋಣ ೫

 

೧೩೯
ಮರೆವೆನೆ ನಾ ನಿನ್ನ ಕರಿಗಿರಿ ದೊರೆ ಕರುಣಾಪೂರ್ಣನ್ನ ಪ
ನರಹರಿ ರೂಪದವನ ನಖದೀ ಹಿರಣ್ಯನ ಸೀಳಿದವನ
ವರಪ್ರಹ್ಲಾದ ವರದನ ಅಂಕದಿ ಸಿರಿಯ ಧರಿಸಿಕೊಂಡಿಹನ ೧
ದಾನವಕುಲ ಸಂಹರನ ತನ್ನ ಧ್ಯಾನಿಸಿದರೆ ಒದಗುವನ
ಆನೆಗೊಲಿದು ಬಂದವನ ಭಕ್ತಾಧೀನನಾಗಿ ಇರುತಿಹನ ೨
ಶುದ್ಧ ಸತ್ವ ಶರೀರನ ಅಷ್ಟ ಸಿದ್ಧಿಪ್ರದನೆಂಬುವನ
ಮದ್ಗುರು ಅಂತರ್ಗತನ ಸ್ತಂಭದಿ ಉದ್ಭವಿಸಿ ಬಂದವನ ೩
ಊರ್ವಿಪೆಸರುಗೊಂಡಿಹನ ಸಕಲ ಗೀರ್ವಾಣ ತತಿ ವಂದಿತನ
ದೂರ್ವಾಸ ಕರಾರ್ಚಿತನ ಮುಕುತಿಯ ತೋರ್ವ
ಶುಭತಮ ಚರಿತನ ೪
ಮಂಗಳ ಮಹಿಮಯುತನ ಜಯ
ಮಂಗಳಿ ತೀರದೊಳಿಹನು
ಇಂಗಡಲಸುತೆಯಾಣ್ಮನ ಮುದ್ದು ರಂಗೇಶವಿಠಲರೇಯನ ೫

 

೧೬೯
ಮಲಗು ಮಲಗಮ್ಮ ತಾಯೆ ಶ್ರೀಹರಿಯ ಜಾಯೆ
ಮಲಗು ದುಗ್ಧಾಬ್ಧಿನಿಲಯೆ ಸಾಗರನ ತನಯೆ ಜೋ ಜೋ ಪ
ಇಂದಿರೆಯೆ ಹರಿ ನಿನ್ನ ಅಂದವನು ನೋಡಿ
ಮಂದರಧರ ತನ ವಕ್ಷದಿ ಮಂದಿರವ ಮಾಡಿ
ಚಂದದಿ ಮುದ್ದಿಪನು ಗೋವಿಂದ ನಲಿದಾಡಿ
ಮಂದಸ್ಮಿತನಾಗಿ ತಾ ನಿಂದಿರುವ ನಿನ ಕೂಡಿ ೧
ಮೂರುಕಣ್ಣ ಮೋಹಿಸಿದನೇನೆಂಬೆನಾಗ
ಮಾರಮಣನು ಸ್ತ್ರೀ ವೇಷಧರಿಸಿದಾಗ
ಆ ರಮೇಶ ಮರುಳಾದನಮ್ಮ ನಿನಗೀಗ
ನೀರೆ ನೀ ಮಲಗು ನಿಶ್ಚಿಂತಳಾಗಿ ಬೇಗ ೨
ಪನ್ನಗಾರಿಧ್ವಜಗೆ ಛತ್ರ ಚಾಮರವಾದಿ
ಉನ್ನಂಥ ವಸ್ತ್ರ ಆಭರಣಗಳು ನೀನಾದಿ
ಅನ್ನಪಾನಾದಿಗಳಿತ್ತು ತೃಪ್ತಿಪಡಿಪಳಾದಿ
ನಿನ್ನಂತೆ ಸೇವಿಪರ್ಯಾರು ಮೂರು ಭುವನದಿ ೩
ಏನು ಸುಕೃತಗೈದಿದ್ದೆ ನಾ ಕಾಣೆನಮ್ಮಾ
ಜಾಣೆ ನಿನಗೆಣೆಯ ಕಾಣೆ ಜನನಿ ಕೇಳಮ್ಮಾ
ತಾನೆ ತನ್ನಲ್ಲಿ ರಮಿಪನಲ್ಲವೇನಮ್ಮಾ
ದಾನವಾಂತಕನು ನಿನ್ನ ಕೈಪಿಡಿದನಮ್ಮಾ ೪
ಮಂಗಳಾಂಗಿಯೆ ನಿನಗೆ ಸರಿಸಮರ್ಯಾರಿಲ್ಲ
ಭೃಂಗಕುಂತಳೆ ಕೈ ಜೋಡಿಪರು ಸುರರೆಲ್ಲ
ಬಂಗಾರದ ಮಂಚವಣಿಯಾಗಿಹುದಲ್ಲ
ರಂಗೇಶವಿಠಲ ತಾ ಪವಡಿಸಿರ್ಪನಲ್ಲ ೫

 

೧೭೯
ಮಲಗು ಮಲಗಯ್ಯ ಹನುಮ ಕಲಿಭಂಜನ ಭೀಮ
ಮಲಗು ಮುನಿ ಜಲಧಿ ಸೋಮ
ಅಲವಬೋಧನಾಮಾ ಜೋ ಜೋ ಪ
ತ್ರೇತೆಯಲಿ ರಾಮದೂತನಾಗಿ ನೀ ಬಂದು
ಭೀತಿಯಿಲ್ಲದೆ ಲಂಕೆಯ ದಹಿಸಿದೆಯೊ ಅಂದು
ಸೀತೆಯಿತ್ತಂಥ ಚೂಡಾಮಣಿಯನು ತಂದು
ಪ್ರೀತಿಪಡಿಸಿದೆ ರಾಮನ ನೀ ದಯಾಸಿಂಧು ೧
ದ್ವಾಪರಾಂತದಲಿ ಭೀಮನಾಗಿ ನೀ ಬಂದೆ
ಪಾಪಿ ಕೀಚಕ ದುಶ್ಶಾಸನಾದ್ಯರ ಕೊಂದೆ
ಶ್ರೀಪತಿ ಸಿರಿ ಕೃಷ್ಣನ ಪಾದಕೆರಗಿ ನಿಂದೆ
ಭಾಪು ಭಾಪುರೆಂದೆನಿಸಿಕೊಂಡೆ ಅವನಿಂದೆ ೨
ನಾನೆ ದೇವರೆಂಬ ಮತವನು ಹೆಮ್ಮೆಯಿಂದ
ದಾನವರೀ ಕಲಿಯುಗದಲಿ ಪೊಗಳೆ ಮುದದಿಂದ
ನೀನವತರಿಸಿ ಮಧ್ವಮುನಿ ಪೆಸರಿನಿಂದ
ಹೀನ ಮತವ ಮುರಿದೆಯೊ ವಾಗ್ಭಾಣಗಳಿಂದ ೩
ಏಕಾದ್ಯಶ ಕರ್ಮಗಳ ಶ್ರೀ ಹರಿಗರ್ಪಿಸಿ
ಆತನನು ನೀ ಬಹು ಸಂತೋಷವನುಪಡಿಸಿ
ಜಾತರಹಿತನಾಗೆನುತ ಆಶಿಷವ ವಹಿಸಿ
ವಾತಸುತ ಕುಳಿತಿಹೆ ಯಂತ್ರೋದ್ಧಾರನೆನಿಸಿ ೪
ಕಂಗಳನು ಮುಚ್ಚಿ ಜಪಮಾಲೆಯನು ತಿರುಗಿಸುತ
ರಂಗೇಶವಿಠಲನ ತಾನದೊಳು ಸ್ಮರಿಸುತ
ಹಿಂಗೇಕೆ ಕುಳಿತಿಹೆ ಮಲಗೇಳಯ್ಯ ದಾತ
ತುಂಗ ವಿಕ್ರಮ ನೀನು ತ್ರಿಭುವನದಿ ಪ್ರಖ್ಯಾತ ೫

 

೧೪೦
ಮಾತುಮಾತಿಗೆ ಮರೆಯಬೇಡ ಸೀತಾರಾಮನ ಪ
ಮಾತರಿಶ್ವನಾಥನು ಪ್ರೀತನಾಗುವ ಅ.ಪ.
ಹನುಮ ತಾನು ಭಕ್ತಿಯಿಂದ ನೆನೆದು ಸುಖಿಸುತ
ವನಜ ಸಂಭವ ಪದವಿ ಪೊಂದಿದ ಘನತರನ ಮಾತ ೧
ಅಬಲೆಯನ್ನು ಕುಲಕೆ ತಂದ ಪ್ರಬಲನ ಮಾತ
ಶಬರಿಯೆಂಬ ಭಕ್ತಳಿಗೆ ಅಭಯವಿತ್ತನ ಮಾತ ೨
ಅಂಗಜವೈರಿ ಶ್ರೀ ಶಿವನು ಹಿಂಗದೆ ಭಜಿಪ
ರಂಗೇಶವಿಠಲನೆಂಬುವ ಮಂಗಳನ ಮಾತ ೩

 

೧೭೮
ಮಾರಪಿತನ ತೋರಿದಲ್ಲದೆ ನಾ ಬಿಡೆ ನಿನ್ನ ಪಾದವ ಪ
ಧೀರ ಹನುಮ ಘೋರ ರೂಪವ
ತೋರಿ ಪಾರಲು ದೂರ ನಾ ಸಾರೆನು ಅ.ಪ.
ನೀರ ಸೇರುತ ಭಾರ ಧರಿಸಿ
ಕೋರೆ ತೋರುತ ಘೋರ ರೂಪದಿ
ಪೋರನೆನ್ನಿಸಿ ನಾರಿ ಹತ್ಯದಿ
ಚಾರುವನವ ಸೇರಿದವನ ೧
ಜಾರನೆನ್ನಿಸಿ ನಾರಿ ಮಾನವ
ಸೂರೆಗೊಳ್ಳುತ ಪಾರಿಪೋಗುವ
ಶೂರ ತೇಜಿಯನೇರಿ ಮೆರೆದ
ವಾರಿಜಾಕ್ಷನ ಧೀರ ಕಲ್ಕಿಯ ೨
ದಾರಿ ತೋರದೆ ಸಾರಿ ನಿನ್ನನು
ಕೋರಿ ಭಜಿಪೆನು ಬಾರಿ ಬಾರಿಗೆ
ಭಾರತೀಶನೆ ತೋರು ಕರುಣದಿ
ಸಾರಸಾಕ್ಷ ರಂಗೇಶವಿಠಲನ ೩

 

೧೪೧
ಮಾಸ ನಿಯಾಮಕ ದೇವತೆಗಳ ವರ್ಣಿಸುವೆನು ಪ
ಶ್ರೀಶನಾಜ್ಞೆಯಲಿ ಸಕಲ ಸುಜನರಿದ ಕೇಳಿ ಅ.ಪ.
ಸಹವೆಂಬ ಮಾರ್ಗ ಶಿರದಿ ಪುತ್ರ ನಾಮಕ ಸವಿತೃ
ಮಹಾ ವಿಶಾಲಾಕ್ಷಿರಮಣ ಕೇಶವ ನಿಯಾಮಕನು
ಸಹಸ್ಯವೆನಿಪ ಪುಷ್ಯದೊಳು ವಿಷ್ಣುವೆನಿಪನು
ಮಹಲಕುಮಿರಮಣ ನಾರಾಯಣನಿದಕೆ ಕರ್ತೃ ೧
ತಪವೆನಿಪ ಮಾಘದೊಳು ಅರುಣನಾಮಕ ಸವಿತೃ
ಚಪಲಾಕ್ಷಿ ರುಕ್ಮಿಣೀರಮಣ ಮಾಧವನು ದೊರೆಯು
ತಪಸ್ಯವೆನಿಪ ಫಾಲ್ಗುಣದಿ ಸೂರ್ಯನೆನಿಪನು
ಸುಪವಿತ್ರೆ ಧಾತ್ರೀಪತಿ ಗೋವಿಂದನಧಿದೇವತೆ ೨
ಮಧುಮಾಸವಾದ ಚೈತ್ರದೊಳು ವೇದಾಂಗನು
ಪದುಮಾಕ್ಷ ಮಾ ರಮಾರಮಣ ವಿಷ್ಣು ನಿಯಾಮಕನು
ಮಾಧವನೆನಿಪ ವೈಶಾಖದಿ ಭಾನುವೆಂದೆನಿಸುವನು
ಮಧುಸೂದನ ನಾಮಕ ಮೋಹಿನೀ ಪತಿಯು ೩
ಶುಕ್ರವೆನಿಪ ಜ್ಯೇಷ್ಠದೊಳು ಇಂದ್ರನೆನಿಪ ಸವಿತೃ ತ್ರಿ
ವಿಕ್ರಮನಿದಕಧಿಪತಿಯು ಪದುಮಾಕ್ಷಿರಮಣ
ಅಕ್ಕರದಿ ಶುಚಿಯೆನಿಪಾಷಾಡದಿ ರವಿಯೆನಿಪನು
ಚಕ್ರಧರ ವಾಮನನಿದರಧಿಪತಿ ಕಮಲಾರಮಣ ೪
ನಭವಾದ ಶ್ರಾವಣದಿ ಗಭಸ್ತಿಯೆನಿಸುವನು
ತ್ರಿಭುವನದಧಿಪತಿ ಶ್ರೀಧರನು ಕಾಂತಿಮತಿರಮಣ
ನಭಸ್ಯವೆನಿಪ ಭಾದ್ರಪದದಿ ಯಮನೆನಿಸುವನು
ಇಭವರದ ಹೃಷಿಕೇಶ ಅಪರಾಜಿತಾ ರಮಣ ೫
ಒದಗಿಹ ಇಷವೆನಿಪಾಶ್ವೀಜದೊಳು ಸ್ವರ್ಣರೇತಾ
ಇದಕಭಿಮಾನಿ ಪದಮಾವತಿಪತಿ ಪದುಮನಾಭ
ಉದಯಿಸುತಿಹ ಊರ್ಜಿಯೆನಿಪ ಕಾರ್ತಿಕದಿ ದಿವಾಕರ
ರಾಧಾರಮಣ ದಾಮೋದರನಿದರಭಿಮಾನಿ ೬
ಆಯಾಯ ಮಾಸದಲಿ ಮಾಳ್ಪ ಸಕಲ ಕರ್ಮಗಳನು
ಆಯಾಯಭಿಮಾನಿ ದೇವರುಗಳಿಗರ್ಪಿಸಿ
ಮಾಯಾರಮಣ ಶ್ರೀ ರಂಗೇಶವಿಠಲನ ನೆನೆಯುತ
ಆಯಾಸವಿಲ್ಲದೆ ಪರಮಪದವನು ಪಡೆಯಿರೊ ೭

 

೧೮೮
ಮೋಸ ಪೋದೆಯಲ್ಲೇ ಭಾಸುರಾಂಗಿ ನೀನು ಪ
ಕಾಶಿ ನಿವಾಸಿ ವಿಶ್ವೇಶ್ವರನಹುದೆಂದು ಅ.ಪ.
ವಿಶ್ವೇಶ್ವರನವನಲ್ಲ ತಿಳಿದು ನೋಡು ನೀನು
ವಿಶ್ವಪತಿಯಾ ವಿಷ್ಣುವಿನಡಿಯಾಳು ಅವನು
ಸುಸ್ವಭಾವದ ಸರಳ ಹೃದಯಾನ್ವಿತಳು ನೀನು
ದುಸ್ವಭಾವದ ಬಲು ಕಪಟ ಕಿರಾತನವನು ೧
ತ್ರಿಪುರ ಸುಂದರಿಯೆಂಬ ಬಿರುದು ಪೊತ್ತಿಹೆ ನೀನು
ಕಪಟ ವೇಷದೊಳು ಬಂದ ವಿಷಕಂಠನವನು
ಚಪಲಾಕ್ಷಿಯೆ ನಿಜಸ್ಥಿತಿ ಅರಿಯಲಿಲ್ಲ ನೀನು
ಗುಪಿತದಲಿ ನಿನ ಕಂಡು ಮರುಳು ಮಾಡ್ದನವನು ೨
ರಾಜರಾಜೇಶ್ವರಿಯಾಗಿ ರಾಜಿಸುವೆ ನೀನು
ಭೋಜನಕಾಗಿ ಭಿಕ್ಷ ಬೇಡುವನಲ್ಲೆ ಅವನು
ಮೂಜಗವು ಮೋಹಿಸುವ ಕೋಮಲಾಂಗಿಯು ನೀನು
ಈ ಜಗವರಿಯೆ ಸರ್ವದ ಭಸ್ಮಾಂಗನವನು ೩
ಕನಕ ಮಣಿಮಯದಂತಃಪುರವಾಸಿಯು ನೀನು
ಶುನಕ ಗೋಮಾಯ್ಗಳೆಡೆ ಮಸಣವಾಸಿಯವನು
ಘನ ವಿಶಾಲಾಕ್ಷಿಯೆ ಮಂದಹಾಸಮುಖಿ ನೀನು
ಮಿನುಗುವ ಬೆಸಗಣ್ಣಿನುರಿಮೊಗದೊಳಿಹನವನು ೪
ಚಾರು ಪೀತಾಂಬರ ಧರಿಸಿ ಶೋಭಿಸುವೆ ನೀನು
ಕೋರಿ ಗಜಚರ್ಮಧರಿಸುವ ಭಿಕಾರಿಯವನು
ಭೂರಿ ಸುಖಭೋಗಂಗಳನನುಭವಿಸುವೆ ನೀನು
ನಾರಸಿಂಹ ಮಂತ್ರ ಜಪಿಪ ವಿರಾಗಿಯವನು ೫
ಕರುಣಾ ಕಟಾಕ್ಷದಿಂ ಜಗವ ಪೊರೆದಪೆ ನೀನು
ಕರುಣವಿಲ್ಲದೆ ಮೂಜಗವನುರುಹುವನವನು
ಪರಮ ಭಕತರಿಗೆ ಮುಕುತಿಪಥ ತೋರುವೆ ನೀನು
ನರನಾದ ಭಕ್ತನೊಳು ಹೋರಾಡಿದವನು ೬
ಮಂಗಳಪ್ರದೆಯೆಂದು ಖ್ಯಾತಿಗೊಂಡಿರುವೆ ನೀನು
ಜಂಗಮ ಜೋಗಿಗಳಿಗೆ ನೆಲೆಯಾಗಿಹನವನೂ
ಗಂಗಾಜನಕನ ಪ್ರಿಯತಮ ಸೋದರಿಯು ನೀನು
ರಂಗೇಶವಿಠಲನ ಚರಣ ಸೇವಕನವನು ೭

 

೧೪೨
ಯಾಕೆನ್ನೊಳಿಂತು ನಿರ್ದಯವೆಲೊ ದೇವ
ನೀ ಕರುಣದಿ ನೋಡದಿರಲು ಮತ್ತಾವ ಕಾವ ಪ
ಗಜರಾಜನ ನೀ ಸಲಹಲಿಲ್ಲೇ ಅಂದು
ನಿಜಭಕ್ತ ಪ್ರಹ್ಲಾದನ ಪೊರೆಯಲಿಲ್ಲೇ
ವಿಜಯನಿಗೊಲಿದ ಪರಿ ಎಲ್ಲ ಬಲ್ಲೆ ನಿನ್ನ
ಭಜನೆಯೊಳಿಹ ಎನ್ನನೇಕೆ ನೋಡಲೊಲ್ಲೆ ೧
ದ್ರೌಪದಿ ಕರೆಯಲಕ್ಷಯ ವಸ್ತ್ರವ ಕೊಟ್ಟೆ ನೀನು
ಶಾಪದ ಶಿಲೆಯ ಕುಲಕೆ ತರಲಡಿಯಿಟ್ಟೆ
ಪಾಪಿ ಅಜಮಿಳನ ಅಘಗಳ ಸುಟ್ಟೆ ಸ್ವಾಮಿ
ಶ್ರೀಪದಗ್ರಸ್ತನಾದೆನ್ನ ನೀ ಕೈಬಿಟ್ಟೆ ೨
ಬಿಡಬೇಡೆನ್ನ ಕೈಯ ಶ್ರೀನಿವಾಸ ಬಹು
ಬಡವ ನಾನಹುದು ಮಧ್ವಗೃಹವಾಸ
ಕಡುಪಾಪಿ ನಾನಲ್ಲವೊ ರಂಗೇಶವಿಠಲ
ದೃಢವಾಗಿ ನಂಬಿಹೆನೊ ನಿನ್ನ ಸರ್ವೇಶ ೩

 

೧೪೩
ರಂಗಬಾರನ್ಯಾತಕೆ ಸಖಿಯೆ ಮುದ್ದು ಪ
ಶರಧಿಯ ಪೊಕ್ಕನೇನೆ ಸುರರೆಲ್ಲರು ಕೂಡಿ
ಗಿರಿಯ ಬೆನ್ನಾಲಿ ಅವರು ಪೊರಿಸಿದರೇನೆ ೧
ಧರೆಯನೆತ್ತಲು ಪೋಗಿ ನರಹರಿಯಾದನೇನೇ
ಗರುವರಹಿತ ಬ್ರಹ್ಮಚಾರಿಯಾದನೇನು ೨
ಪರಶುಪಿಡಿದು ಕ್ಷತ್ರಿಯರ ಸವರುವೆನೆಂದು
ಗಿರಿವನಗಳಲಿ ತಾನು ಚರಿಸುತಲಿಹನೇನೇ ೩
ಸ್ಮರನ ಪಿತನು ತಾನು ನಾರಿ ಪಾಂಚಾಲೆಯ
ಮೊರೆಯ ಕೇಳುತ ಭರದಿ ಸಾರಿದನೇನೆ ೪
ನಾರೇರ ಮಾನವ ತಾ ಸೂರೆಗೊಳ್ಳಲು ತೇಜಿ
ಏರಿ ಪೋದನೇನೆ ಶ್ರೀ ರಂಗೇಶವಿಠಲ ೫

 

೧೪೪
ರಥವನೇರಿ ಬರುವ ರಂಗನಾಥನ ನೋಡಿ ಪ
ಅತಿಶಯವಾದಂಥ ಪರಗತಿಯನು ಪಡೆಯಿರೊ ಅ.ಪ.
ಹಸ್ತಿಗಳು ಚಾಮರ ಹಾಕುತಲಿರೆ
ಸ್ವಸ್ತಿವಾಚನಗಳನು ದ್ವಿಜರು ಪೇಳುತಲಿರೆ
ಸ್ವಸ್ತಿಲಿ ವಿವಿಧ ವಾದ್ಯತತಿ ಸೂಳೈಸುತಲಿರೆ
ಮಸ್ತಕಾಂಜಲಿಪುಟದಿ ಹರಿದಾಸರು ಪೊಗಳುತಿರೆ ೧
ಸಾಲು ಪಂಜಿನ ದೀವಟಿಗೆಗಳು ಮೆರೆಯೆ
ನಾಲ್ಕು ದಿಕ್ಕಲಿ ಜನರು ನಿಂತು ನೋಡುತ ನಲಿಯೆ
ಲೀಲೆಯ ತೋರುತ ಶ್ರೀ ಭೂದೇವಿಯರಿಂದ
ಲೋಲುಪ ತಾನಾಗಿ ಬಹು ಸಂಭ್ರಮದಿಂದ ೨
ನಭದೊಳು ಸಕಲ ದಿವಿಜರೊಡಗೂಡಿ ತಾ
ನಭುಜಭವನು ನಿಂತು ನೋಡಿ ಹಿಗ್ಗುತಿರೆ
ಇಭರಾಜವರದ ಶ್ರೀ ರಂಗೇಶವಿಠಲನು
ತ್ರಿಭುವನ ಪಾವನ ಮಾಡಿ ಸೊಬಗು ತೋರುತ ೩

 

೧೪೫
ರಾಮನ ನೋಡಿದೆ ರಘುಕುಲ ತಿಲಕನ
ಕೋಮಲ ಕಾಯ ಕೌಸಲ್ಯ ತನಯನ ಪ
ತಾಮಸ ದೈತ್ಯರ ಲೀಲೆಯಲಿ ಕೊಂದು
ಭೂಮಿ ಭಾರವನಿಳುಹಿದ ನಿಸ್ಸೀಮನ ಅ.ಪ.
ತಾಟಕಾದಿಗಳ ಘೋರಾಟವಿಯಲಿ
ಪಾಟುಪಡಿಸಿದ ಹಾಟಕಾಂಬರನ
ತೋಟಿಗೊದಗಿದ ಮಾರೀಚಾದಿಗಳ
ಆಟನಾಡಿಸಿದ ನೀಟುಗಾರ ೧
ಹಲವು ಕಾಲದಿ ಶಿಲೆಯಾಗಿರ್ದ
ಲಲನೆ ಅಹಲ್ಯೆಯ ಶಾಪವ ಹರಿಸಿ
ಕಲುಷವ ಕಳೆಯುತ ಕುಲಸತಿ ಮಾಡಿದ
ಚಲುವ ಮೂರುತಿ ನಳಿನ ನಯನನ ೨
ಹರನ ಧನುವನು ಸ್ಮರನ ಧನುವಿನಂತೆ
ತ್ವರದಿ ಮುರಿದು ನಿಂದ ಸುಕುಮಾರನ
ಧರಣಿಪ ಜನಕನ ಭಕ್ತಿಗೆ ಒಲಿದು
ಧರಣಿಜೆಯ ವರಿಸಿ ಹರುಷವಿತ್ತನ ೩
ತಾತನ ಭಾಷೆಯ ಪ್ರೀತಿಯಿಂ ಸಲಿಸೆ
ಸೀತೆ ಸಹಿತ ಭ್ರಾತ ಲಕ್ಷ್ಮಣವೆರಸಿ
ಆತುರದಿಂದಲಿ ಅರಣ್ಯವನೈದಿ
ಕೌತುಕ ತೋರುತ ಚರಿಸಿದವನ೪
ಖರದೂಷಣ ತ್ರಿಶಿರಾದಿ ರಕ್ಕಸರ
ಅರೆಕ್ಷಣದಲಿ ತರಿದು ಬಿಸುಟವನ
ಹಿರಣ್ಯಮೃಗವ ಬೆನ್ನಟ್ಟಿ ಕೆಡಹುತ
ವರ ಜಟಾಯು ಶಬರಿಗೆ ಒಲಿದವನ ೫
ವಾತಸುತನ ಕಂಡಾತನ ಪದುಳಿಸಿ
ಆ ತರಣಿ ಸುತಗೆ ಅಭಯವನಿತ್ತ
ಜಾತವೇದನೆದುರಲಿ ಸಖ್ಯವ ಮಾಡಿ
ಘಾತಕ ವಾಲಿಯ ನಿಗ್ರಹಿಸಿದನ ೬
ಕೋತಿ ಕರಡಿಗಳ ಹಿಂಡನು ಕೂಡಿಸಿ
ಸೇತುವೆಗಟ್ಟಿಸಿ ಜಲಧಿಯ ದಾಟಿ
ಪಾತಕಿ ರಾವಣನ ಶಿರಗಳ ಕಡಿದು
ಸೀತೆಯ ಸೆರೆಯನು ಬಿಡಿಸಿದಾತನ ೭
ಮೊರೆಯನು ಪೊಕ್ಕಾ ವರ ಭೀಷಣನ
ಕರುಣದಿ ಕರೆದು ಕರವನು ಪಿಡಿದು
ಧರೆಯಿದು ಸ್ಥಿರವಾಗಿರುವ ಪರಿಯಂತ
ದೊರೆತನ ಮಾಡೆಂದ್ಹರಸಿದಾತನ ೮
ಅಕ್ಕರೆಯಿಂದಲಿ ಅರ್ಚಿಸುವರಿಗೆ
ತಕ್ಕಂತೆ ವರಂಗಳ ನೀಡುತಲಿ
ಮಿಕ್ಕು ರಾಜಿಸುತಿಹ ಪಂಪಾಪುರದ
ಚಕ್ರತೀರ್ಥದಿ ನೆಲೆಸಿಹನ ೯
ಕಂತುವೈರಿ ವಿರುಪಾಕ್ಷಗೆ ತಾರಕ
ಮಂತ್ರ ನಾಮಕನಾಗಿರುತಿರ್ಪನ
ಯಂತ್ರೋದ್ಧಾರನಾಗಿರುವ ಹನುಮನ
ಮಂತ್ರಿಯ ಮಾಡಿಕೊಂಡು ರಾಜಿಪನ ೧೦
ದುಷ್ಟ ರಕ್ಕಸ ದಮನವ ಮಾಡಿ
ಶಿಷ್ಟ ಜನರುಗಳಿಷ್ಟವ ಸಲಿಸುತ
ಶ್ರಿಷ್ಟಿಗೊಡೆಯನೆನಿಸಿ ಮೆರೆಯುತಲಿರುವ
ದಿಟ್ಟ ಶ್ರೀ ರಂಗೇಶವಿಠಲನ ೧೧

 

೧೯೦
ವರಗುರು ತಂದೆ ಮುದ್ದು ಮೋಹನದಾಸರೆಗಿತ್ತರು ಲೇಸ
ಪರಮ ಸಂಭ್ರಮದೊಳಿವರ ಸಹವಾಸ ಕರುಣಿಸಿದನು ಶ್ರೀಶ ಪ
ರಾಗ ದ್ವೇಷಾದಿಗಳಿವರೊಳಗಿಲ್ಲ ಪಾಮರರಿವರಲ್ಲ
ಶ್ರೀ ಗುರುಗಳೆನಗಿವರೆಂದು ಸ್ತುತಿಪನಲ್ಲ ಲಾಲಿಪುದೆನಸೊಲ್ಲ ೧
ಬಲ್ಲವರೆ ಬಲ್ಲರಿವರ ಶುಭ ಚರಿತೆಯನು ಜ್ಞಾನಿಗಳೆಂಬುದನು
ಖುಲ್ಲ ಜನ ನಿಂದಿಸಿದರಾಗುವದೇನೊ ಅರಿಯೆನಯ್ಯ ನಾನು ೨
ಅಜಪಿತನ ಪಾದ ಸರಸಿರುಹಕೆ ಭ್ರಮರರೆನಿಸುವ ಗುಣಯುತರ
ಕುಜನಗಳೇನು ಬಲ್ಲರಯ್ಯ ಇವರ ಮಹಿಮಂಗಳ ವಿವರ ೩
ಕರಿಗಿರಿಯೆಂಬ ವರಕ್ಷೇತ್ರದಲ್ಲಿ ವರುಷಂಪ್ರತಿಯಲ್ಲಿ
ಹರಿದಾಸೋತ್ತಮ ಧರಣಿಸುರರನಲ್ಲಿ ಬಲು ಸೇವಿಪರಲ್ಲಿ ೪
ಇಷ್ಟದೈವ ಅಪವರ್ಗಪ್ರದನೆಂಬ ಶ್ರೀ ನರಹರಿಯೆಂಬ
ದಿಟ್ಟ ಶ್ರೀ ರಂಗೇಶವಿಠಲನ ಬಿಂಬಾಕೃತಿಯ ಸದಾ ಕಾಂಬ ೫

 

೧೮೧
ವಾಣೀ ನೀ ಬಾರೆ ಪನ್ನಗವೇಣೀ ಓ ಪುಸ್ತಕ ಪಾಣಿ ಪ
ಆಣಿಮುತ್ತಿನ ಹಾರ ಕಟ್ಟಾಣಿಯ ಕೊರಳಿನ
ತ್ರಾಣಿ ಪಲ್ಲವÀಪಾಣಿ ಹಿರಣ್ಯಗರ್ಭನ ರಾಣಿ ಅ.ಪ.
ಕರವ ಮುಗಿದು ನಾ ನಮಿಪೆನೆ ಮಯೂರಯಾನೆ
ಕರುಣಾದಿ ನೋಡೆ ಮದಗಜಗಮನೆ
ಚರಣ ಸೇವಕರ ಬಹುದುರಿತಗಳೋಡಿಸಿ
ಸಿರಿರಮಣನೊಲಿಸುವ ಪರಿಯ ತೋರುತಲಿ ಬೇಗ ೧
ಪ್ರದ್ಯುಮ್ನ ಜಠರಾ ಸಂಭೂತೆ ಪೂರ್ವಾಭಾರತೆ
ಸದ್ವಿದ್ಯಾಭಿಮಾನಿ ದೇವತೆ
ಮಧ್ವವನದಲಿ ನೀನೆ ಬದ್ಧವಾಗಿ ನೆಲೆಸುತ
ಶುದ್ಧ ಮನದಲಿ ಅನಿರುದ್ಧನ ನಾಮ ನುಡಿಸುತ ೨
ಸರಸೀಜನವದನೆ ಮಂದಸ್ಮಿತ ಬೀರೆ ಸಿತವಸನಧಾರೆ
ಸಿರಿ ರಂಗೇಶಾವಿಠಲನ ತೋರೆ
ಅರೆಬಿರಿದೆಸೆಯುವ ತಾವರೆಸುಮವನು ಪೋಲ್ವ
ಸಿರಿಚರಣಂಗಳಿಗೆ ನಾ ನಿರುತದಿ ಎರಗುವೆ ೩

 

೧೮೨
ವಾರಿಜನ ಹೃದಯೇಶ್ವರಿ ಸರ್ವವಿದ್ಯಕಾಧಾರಿ ಪ
ವಾಣಿವಿರಂಚಿ ರಾಣಿ ಪಂಕಜ
ಪಾಣಿ ಕಾಳಾಹಿವೇಣಿ ನಿನ್ನಯ
ವೀಣೆಯಿಂದಲಿ ವೇಣುಗಾನವ
ಮಾಣದೆ ಪಾಡುತ ಕುಣಿಕುಣಿಯುತ ಬಾರೆ ೧
ಮಂದಯಾನೆ ಪೂರ್ಣೆಂದುವದನೆ
ಕುಂದುರಹಿತೆ ಬಂದು ರಕ್ಷಿಸೆ
ಮಂದಮತಿಯನಿಂದು ಬೇಗನೆ
ಕಂದ ನಾನೆಂದ ನೀ ಛಂದದಿ ಅರಿಯುತ ೨
ಸಾರಸಾಕ್ಷಿ ಮಯೂರವಾಹನೆ
ಶಾರದಾಂಬೆ ಕಲಕೀರವಾಣಿಯೆ
ಸಾರಿ ಬೇಡುವೆ ತೋರು ಕರುಣದಿ
ಧೀರನಾ ಗಂಭೀರನಾ ರಂಗೇಶವಿಠಲನ ೩

 

೧೪೭
ವೆಂಕಟೇಶ ತೋರೊ ಪಾದ ಪಂಕಜವನು ಪ
ಮಂಕುಮತಿಯ ಬಿಡಿಸಿ ನಿನ್ನ ಕಿಂಕರನೆಂದೆನಿಸೊ ಅ.ಪ.
ಕಲಿಯುಗದೊಳು ನೀನು ಸಕಲ ಸುಜನರ
ಕಲುಷ ಕಳೆಯುವೆನೆಂದು ಬಹುಮೋದದಿಂದ
ಎಲರುಣಿ ಪರುವತದೊಳಗೆ ವಾಸನಾಗಿ
ಒಲಿದು ಪದುಮಾವತಿಯ ಕರ ಪಿಡಿದಂಥ ೧
ತೆತ್ತೀಸಕೋಟಿ ದೇವತೆಗಳು ತನ್ನ
ಸುತ್ತಲು ನಿಂತು ಪರಿಚರಿಯವನು ಮಾಡೆ
ಎತ್ತ ನೋಡಲು ಸಿರಿಯು ಓ ಎನುತಿರೆ
ಚಿತ್ತಜನೈಯ್ಯನು ನಗುತ ನಿಂದಿರುವಂಥ ೨
ಭುವನತ್ರಯಂಗಳನೆಲ್ಲ ಲೀಲೆಯಿಂ ಕಾವ
ಪವನವಂದಿತನೆ ಮಹಾನುಭಾವ
ನವ ಮೋಹನಾಂಗ ಶ್ರೀ ರಂಗೇಶವಿಠಲ
ಜವನ ಬಾಧೆಯ ಬಿಡಿಸಯ್ಯಾ ಶ್ರೀಲೋಲ ೩

 

೨೦೪
ವೇದ ಓದಿದರೇನು ನಮ್ಮ
ಬಾದರಾಯಣನ ಪಾದವ ನಂಬದೆ ಪ
ಹೃದಯದಿ ಕಲುಮಷ ತುಂಬಿ ತುಳುಕುತಿರೆ
ವದನದಿ ಮಂತ್ರವ ಪಠಿಸಿ ಫಲವೇನು
ಉದರ ಪೋಷಣೆಗಾಗಿಯೆ ಮಾಡುವ
ವಿಧ ವಿಧ ಕರ್ಮ ನೋಡಿ ನಗುವರು ೧
ಕಂಣನು ಮುಚ್ಚಿ ಮೌನದಿ ಕುಳಿತು ಪರ
ಹೆಂಣಿನ ರೂಪವ ಮನದೊಳು ನೆನೆದು
ಚಿಂಣತನದಿ ಅವಳ ಬೆರೆಯಲು ಯೋಚಿಸಿ
ಹೊನ್ನು ಕೂಡಿಸುವ ಪರಿಯದಲ್ಲದೆ ೨
ಗುಟ್ಟಲಿ ಪೂಜಿಪ ಗುರುತನು ಅರಿಯದೆ
ಪಟ್ಟೆ ನಾಮವ ಹಚ್ಚಿ ಮಡಿಗಳನು
ಉಟ್ಟು ಬಹಿರಾಡಂಬರ ತೋರುತ
ದಿಟ್ಟ ರಂಗೇಶವಿಠಲನ ಮರೆದು ೩

 

೧೦೩
ಶರಣು ಗಜಾನನನೆ ಶರಣು ಲಂಬೋದರನೆ
ಶರಣು ಪಾರ್ವತಿ ಪುತ್ರ ಶುಭಗಾತ್ರ ಪ
ಆದಿಯಲಿ ನಿನ್ನ ಪಾದಭಜನೆಯ ಮಾಡೆ
ಸಾದರದಿ ಸಲಹುವೆ ಮೋದವಿತ್ತು
ಮೇದಿನಿಯಲಿ ನಿನ್ನಾರಾಧನೆಯ ಮಾಡದವ ನ-
ರಾಧಮನೆನಿಸುವನಿದು ಪುಸಿಯಲ್ಲ ೧
ಆಖುವಾಹನನೆ ನೀ ಕಳೆ ವಿಘ್ನಗಳ
ಸಾಕು ಲಾಲಿಸೆನ್ನ ಏಕದಂತ
ರಾಕೇಂದುವದನಾನೇಕ ಮಣಿ ಭೂಷಣ
ಕಾಕುಜನ ಕುಠಾರ ಲೋಕೈಕ ವೀರ ೨
ಸಿತಿಕಂಠ ವರಪುತ್ರ ಪ್ರತಿ ವಾಸರವು ನಾ
ನುತಿಸಿ ಬೇಡುವೆ ನಿನ್ನ ಸತಿರಹಿತನೇ
ಪತಿತಪಾವನ ಸಿರಿ ರಂಗೇಶವಿಠಲನ
ಅತಿಪ್ರೀತಿಯಿಂದ ಭಜಿಪ ಮತಿಯ ನೀಡೋ ೩

 

೨೦೫
ಶಾಮಸುಂದರ ಮಾಮನೋಹರ ತಾಮರಸಾಕ್ಷ ಪ
ಪ್ರೇಮದಿ ಕೊಡು ಕಾಮಿತಾರ್ಥವ ಭೂಮಿವಲ್ಲಭ ಅ.ಪ
ಮಾನವಿಲ್ಲದೆ ಹೀನ ನೃಪರನು ನಾನಾ ಪರಿಯಲಿ
ಶ್ವಾನನಂದದಿ ನಾನು ಸೇವಿಸಿ ದೀನನಾದೆನೊ ೧
ದಾನ ಧರ್ಮಗಳೇನು ಮಾಡದೆ ಮಾನನೀಯರ
ಸಾನುರಾಗದಿ ನಾನು ಕೂಡಿದೆ ಜ್ಞಾನವಿಲ್ಲಾದೆ ೨
ದಾಶರಥಿ ನೀ ಬೇಸರೀಸುತ ಘಾಸಿಗೈಯ್ಯಲೂ
ಘೋಷಿಪರ್ಯಾರೊ ವಾಸವನುತ ರಂಗೇಶವಿಠಲನೆ ೩

 

ಶೇಷಾಚಲನಿಲಯನಾಗಿರುತ ಭಕುತರ
ಪೋಷಿಸುತಿಹನ್ಯಾರೆ ಪೇಳಮ್ಮಯ್ಯ ಪ
ದೋಷರಾಸಿಗಳನು ನಾಶ ಮಾಡುತಲಿ
ಶೇಷಸುರಸೇವ್ಯ ಶ್ರೀನಿವಾಸ ಕಾಣಮ್ಮ ಅ.ಪ.
ಕಲಿಯುಗದೊಳು ಪ್ರಜ್ವಲಿಸುತಿರುವೀ ಗಿರಿ-
ಗಿಳಿದು ಬಂದನ್ಯಾಕೆ ಪೇಳಮ್ಮಯ್ಯ
ನಲಿಯುತ ಸ್ತುತಿಪ ಜನರ ಕಲುಷವ ಕಳೆಯಲು
ಒಲಿದು ಬಂದ ದಯದಿಂದಲಿ ಕೇಳಮ್ಮ ೧
ಸ್ವಾಮಿ ಪುಷ್ಕರಿಣಿ ತೀರದಿ ನಗುತ ನಿಂದಿಹ
ಕೋಮಲಾಂಗನವನ್ಯಾರೇ ಪೇಳಮ್ಮಯ್ಯ
ಕಾಮಿನಿ ಪದುಮಾವತಿ ತಾ ಮೋಹಿಸುತಲಿ
ಪ್ರೇಮದಿ ವರಿಸಿದ ಭೂಮಿಪ ಕಾಣಮ್ಮ ೨
ಬಂಗಾರ ನವರತ್ನ ಮಂಡಿತನಾಗಿ ವಿ
ಹಂಗವೇರ್ದನ್ಯಾರೇ ಪೇಳಮ್ಮಯ್ಯಾ
ಗಂಗಾಜನಕ ಪಾಂಡುರಂಗನೆನಿಪ ಆ
ರಂಗೇಶವಿಠಲನೆ ಇವ ಕಾಣಮ್ಮ ೩

 

೧೮೯
ಶೈಲರಾಜಸುತೆಯೆ ಗೌರಿ ಕಲಹಂಸಗಾಮಿನಿ ಪ
ನಿರುತವು ನಿನ್ನ ನಾ ಪರಿಪರಿಯಿಂ ನುಡಿಸುವೆನೆ
ಸಿರಿಯವರನ ಚರಿತೆ ಅರಿತು ಪಾಡು ೧
ನೀಲಕುಂತಳೆ ಪೊರೆಯೆ ಶಶಿಮೌಳಿ ಮೋಹದರಸಿಯೆ
ಶೂಲಪಾಣಿಯೆ ಕಲುಷ ಕಳೆದು ಒಲಿದು ಪಾಲಿಸೆ ೨
ಕಂತುಪಿತ ನಮ್ಮ ಶ್ರೀ ರಂಗೇಶವಿಠಲನ ಪದ
ಸಂತತ ನುತಿಪ ಮತಿಯನಿತ್ತು ಭ್ರಾಂತಿಯಾ ನೀಗೆ ೩

 

೧೪೬
ಶ್ರೀ ಕರಾರ್ಚಿತ ಪರಮಪುರುಷ ಶೋಕವರ್ಜಿತ ಪ
ನೀ ಕರುಣಿಸದೆ ನಿರಾಕರಿಸಲಿನ್ನು
ಸಾಕುವರ್ಯಾರೊ ಮಾಕಳತ್ರಹರಿ ಅ.ಪ.
ರಜತಪೀಠ ಪುರದೊರೆಯೆ ನಿನ್ನ ಭಜನೆಗೈವರ
ಸುಜನರಿಗೆ ಸಕಲ ವಿಜಯವಹದೆಂದು ತ್ರಿಜಗವು
ಬಲ್ಲುದು ಗಜರಾಜವರದ ೧
ಮೋದಮುನಿಮನಾನಂದ ನೀ ಯಶೋದೆ ನಂದನ
ಆದಿಮೂರುತಿಯನಾದಿಯಾದೆನ್ನ ವೇಧೆಕಳೆಯೊ
ನಿನ್ನ ಪಾದವ ನಂಬಿದೆ ೨
ಕಂಗಳಿಂದ ನಾ ನಿನ ನೋಡಿ ವಿಹಂಗವಾಹನ
ಹಿಂಗಿವೆನ್ನ ಅಘಂಗಳು ಕೇಳೆಲೊ ಮಂಗಳಾಂಗ
ಶ್ರೀ ರಂಗೇಶವಿಠಲ ೩

 

೧೪೮
ಶ್ರೀನಿವಾಸ ನೀನೆಮ್ಮ ಪೊರೆಯೊ ನಿರುತ |
ಪದುಮಾವತಿ ಕಾಂತ ಪ
ಸಾನುರಾಗದೊಳು ಲಾಲಿಸೆನ್ನ ಮಾತ |
ಬ್ರಹ್ಮಾದ್ಯರ ತಾತ ಅ.ಪ.
ನಿನ್ನ ದರ್ಶನವು ಸಂಸಾರ ಸಮೇತ | ಬೇಡನೆ ಜನವ್ರಾತ
ಮನ್ನಿಸಲಿಲ್ಲವೊ ನಾನವರ ಮಾತ | ಪಾವನ ಶುಭಚರಿತ
ನಿನ್ನನು ಸತಿಸುತೆವೆರೆಸಿ ನೋಳ್ಪೆನೆನುತ |
ನಾ ಮಾಡಿದೆ ಶಪಥ
ಘನ್ನಮಹಿಮನೆ ನೀ ಮಾಡದಿರು ಘಾತ |
ಸದ್ಗುಣ ಗಣಭರಿತ ೧
ಹದಿನಾಲ್ಕು ಲೋಕವ ನೀನು ಪೊರೆವಾತ |
ದ್ವಿಜರಾಜ ವರೂಥ
ಇದು ಏನಧಿಕವೊ ನಿನ್ನಸಮದಾತ | ರಿಲ್ಲವೊ ಶುಭಗಾಥ
ವಿಧಿವಿಹಿತ ಕರ್ಮಗಳನರಿಯೆನೊ ನಾಥ |
ಭವ ಶರಧಿಗೆ ಪೋತ
ಮುದದೊಳು ನಾ ಮಾಡುವ ಸ್ತೋತ್ರಕೆ ಪ್ರೀತ |
ನಾಗಯ್ಯಾತ್ವರಿತ ೨
ಸಿರಿಯುತ ಕ್ರೋಧನ ವತ್ಸರ ಚೈತ್ರ ಪಿತ |
ಪ್ರತಿಪದ ಬುಧಸಹಿತ
ಮೆರೆವ ಉದಯದಿ ನಾನ್ಮಿಂದು ಮಡಿಯುಡುತ |
ಊಧ್ರ್ವಪುಂಡ್ರವಿಡುತ
ಗುರು ಮಧ್ವಾಂತರ್ಗತ ನಿನ ಸ್ಮರಿಸುತ |
ಏರಿದೆ ಪರುವತ
ಉರದಿ ಮೆರೆವ ಸಿರಿ ಸಹಿತ ಜಗನ್ನಾಥ |
ನಿನ ಕಂಡೆವೊ ತಾತ ೩
ಹಲವು ಜನುಮಗಳಲಿ ಮಾಡಿದ ಸುಕೃತ | ಈ ದಿನ ಒದಗುತ
ಫಲವಾದುದಕೆ ನಾವೆಲ್ಲ ಬಹುಪ್ರೀತ | ರಾದೆವು ಶ್ರೀಕಾಂತ
ಕಲುಷ ನಾಶನಿಯೊಳು ಕಲಿಮಲ ಕಳೆಯುತ |
ಉತ್ಸವ ನೋಡುತ
ಒಲಿದು ನಿನ್ನ ತೀರ್ಥಪ್ರಸಾದವ ಕೊಳುತ | ನಾವಿದ್ದೆವೊ ಸತತ ೪
ತುಂಗ ವಿಕ್ರಮನೆ ರಣದೊಳು ನಿರ್ಭೀತ | ಬಲರಿಪು ಸಹಜಾತ
ಮಂಗಳಾಂಗ ಶ್ರೀ ಗಾಂಗೇಯಗೆ ಸೋತ |
ಗಾಂಡೀವಿಯ ಸೂತ
ಗಂಗಾಜನಕನೆ ತ್ರಿಗುಣಾತೀತ | ಭುವನದಿ ವಿಖ್ಯಾತ
ರಂಗೇಶವಿಠಲನೆ ನಾ ನಿನ್ನ ದೂತ | ಯದುಕುಲ ಸಂಭೂತ ೫

 

೧೪೯
ಶ್ರೀರಂಗೇಶವಿಠಲ | ಪೊರೆಯೆನ್ನ ಹೃದಯಾ-
ಧಾರನೆ ಮಾಲೋಲ | ಸ್ಮರಕೋಟಿ ಸುಂದರಾ-
ಕಾರ ನತಜನಪಾಲ | ಅರಿಮಸ್ತಕ ಶೂಲ ಪ
ಆರು ಅರಿಗಳ ಗೆಲಿಸಿಯೆನ್ನಿಂ-
ದಾರು ಎರಡನು ಮುರಿಸಿ ನಿನ್ನೊಳು
ಆರು ಮೂರನೆಯಿತ್ತು ಸರ್ವದ
ಪಾರುಗೈಯ್ಯಬೇಕೆಂಬೆ ದೇವ ಅ.ಪ.
ಆನೆಗೊಂದಿ ನಿವಾಸ | ಭಕುತರ ನಿರಂತರ
ಮಾನದಿಂ ಪೊರೆವ ಶ್ರೀಶ | ಎಂದೆಂದಿಗು
ನಾನಿನ್ನ ದಾಸರ ದಾಸ | ನೆಂದು ಕರುಣಿಸು
ನೀನೆನಗೆ ಲೇಸ | ಭಾನುಕೋಟಿ ಪ್ರಕಾಶ
ಮಾನ ಅವಮಾನಗಳು ನಿನ್ನಾ-
ಧೀನವೆಂದೇ ನಂಬಿಕೊಂಡಿಹ
ದೀನನೆನ್ನನು ದೂರ ನೋಡದೆ
ಸಾನುರಾಗದಿ ಪೊರೆವುದೈಯ್ಯಾ
ಈ ನಳಿನಭವ ಅಂಡದೊಳಗೆ
ದಾನಿ ನೀನಲ್ಲದನ್ಯರುಂಟೆ
ಏನ ಬೇಡೆನು ನಿನ್ನ ಬಳಿಯಲಿ
ಜ್ಞಾನ ಭಕುತಿ ವೈರಾಗ್ಯವಲ್ಲದೆ ೧
ಮೀನ ಕಚ್ಛಪರೂಪ | ಧರಿಸಿದ ವರಾಹ ಜನ
ತ್ರಾಣ ನರಹರಿ ತಾಪ | ತ್ರಯ ದೂರ ವಾಮನ
ಮಾನವೇಂದ್ರರ ಪ್ರತಾಪ | ವಡಗಿಸಿದೆ ಪ್ರಬಲ
ದಾನವೇಂದ್ರನ ಶಾಪ | ನೀನೆ ಕಳೆದೆಯೊ ಶ್ರೀಪಾ
ವಾನರ ಬಲ ನೆರಹಿಕೊಂಡು
ನೀನು ರಾವಣನನ್ನು ಕೊಂದು
ಮಾನಿನಿಯ ಪೊರೆದು ಶರಣಗೆ ನಿ
ದಾನ ಮಾಡದೆ ಪಟ್ಟಗಟ್ಟಿದೆ
ದಾನವಾಂತಕನೆಂಬ ನಾಮವ-
ನ್ಯೂನವಿಲ್ಲದೆ ಪರಸತಿಯರಭಿ
ಮಾನ ಕಳುಪಿದ ಜಾಣ ಕಲ್ಕಿಯೆ ೨
ಸೂರಿಜನ ಪರಿಪಾಲ ಸದ್ಗುಣಗಣನಿಲಯ
ಘೋರರಕ್ಕಸಕಾಲ | ವರಶೇಷತಲ್ಪವ
ನೇರಿ ನಿರುಪಮ ಬಾಲ | ನಂದದಿ ನಿರುತ ನೀ
ತೋರುತಿರುವೆಯೊ ಲೀಲ | ಶ್ರೀ ರಂಗೇಶವಿಠಲ
ಮಾರ ಜನಕನೆ ಮಂಗಳಾಂಗನೆ
ಕ್ರೂರ ಕುಲವನದಾವ ಅನಲನೆ
ಭೂರಿ ಕರುಣವ ಬೀರಿ ಎನ್ನಸು
ಪಾರುಮಾಡುವ ಭಾರ ನಿನ್ನದು
ವಾರಿಜಾಕ್ಷನೆ ಎನ್ನ ಹೃದಯದಿ
ತೋರು ನಿನ್ನಯ ಚಾರು ಬಿಂಬವ
ಸಾರಿ ಬೇಡುವೆ ಬಾರಿ ಬಾರಿಗೆ
ಘೋರ ದುಷ್ರ‍ಕತ ಶರಧಿ ಬಡಬನೆ೩

 

೨೧೩
ಸಂಸಾರ ಶರಧಿಯೊಳಗೆ ಮುಳುಗಿ ಆಡಬೇಡವೊ
ಅಲ್ಲೇನು ಇಲ್ಲವೋ ಪ
ಸಿರಿಯು ಇರುವದೆಂದು ನೀನು ಗರುವದಿಂದ ಹರಿಯ ಮರೆತು
ಉರುಳಿ ಪೋಪ ತನುವ ಪೋಷಿಸುತಲಿ ಬಹುತೋಷಿಸೂತಲಿ ೧
ಸತಿಯು ಸುತರು ಬಂಧುಗಳತಿ ಹಿತರು ಎಂದು
ಮತಿಯ ತೊರೆದು
ಪತಿತನಾಗಿ ಬಾಳ ಬೇಡೆಲೊ ಗತಿತೋರರವರೆಲೊ ೨
ಧರಣಿಗೊಡೆಯನಾದ ನಿನ್ನ ಭರದಿ ಯಮನ ಚರರು ಕರೆಯೆ
ಬರೆನು ಎನಲು ಅವರು ಬಿಡುವರೇನೆಲೊ
ನೀ ತಿಳಿದು ನೋಡಲೆ ೩
ಹೊನ್ನು ಹೆಂಣು ಮಂಣಿಗಾಗಿ ಬನ್ನ ಬಿಟ್ಟು ಲಜ್ಜೆ ಬಿಟ್ಟು
ಅಂಣ ತಮ್ಮನೆಂಬಭಿಮಾನ ತೊರೆದೆಲೋ
ಬಲು ನೀಚನಾದೆಲೊ ೪
ಮಂದಮತಿಯೆ ಕೇಳು ನೀನು ಮುಂದೆ ಹಿರಿದು ಬಳಲಬೇಡ
ಪೊಂದಿ ಭಜಿಸೊ ರಂಗೇಶವಿಠಲನ ಸುಖವೀವ ದೊರೆಯನ ೫

 

೨೨೪
ಸಕಲ ಕರ್ಮಗಳ ಮಾಡಿ ಮಾಡಿಸುವೆ ನೀನು ಪ
ವಿಕಳಮತಿಗಳಿದನರಿಯರೇನೆಂಬೆ ನಾನು ಅ.ಪ.
‘ತೇನವಿನಾ ತೃಣಮಪಿ ನ ಚಲತಿ’ ಎಂಬುದನು
ಆನುಪೂರ್ವಕದಿಂದ ತಿಳಿದು ತಿಳಿಯದಂತೆ
ತಾನು ಪುಣ್ಯಕರ್ಮಗಳನು ಮಾಳ್ಪವನೆಂದು
ನೀನು ಪಾಪಕೆಳಸುವೆನೆಂಬರಧಮ ಜನರು ೧
ವಿಧಿವಿಹಿತ ಕರ್ಮಗಳನು ಮಾಡಿಸುವಾತ ಹರಿಯು
ಆಧುನಿಕ ಕರ್ಮಗಳಿಗೆ ಕರ್ತೃ ತಾನೆ ಎಂದು
ಅಧಮ ಕಾರ್ಯಗಳ ಮಧುವೈರಿಗಾರೋಪಿಸದೆ
ನಿಧನರಾಗಿಹ ಜನರು ಮಧ್ಯಮರೆನಿಸುವರು ೨
ಪಾಪ ಪುಣ್ಯ ಕರ್ಮಗಳೇನು ಮಾಡುವುದಕೆ
ಶ್ರೀಪತಿ ರಂಗೇಶವಿಠಲ ಪ್ರೇರಕನಲ್ಲದೆ
ವ್ಯಾಪಾರ ತನಗಿನಿತಾದರಿಲ್ಲವೆಂದರಿತು
ಲೇಪರಹಿತರಾಗಿಹರೆ ಉತ್ತಮರಯ್ಯಾ ೩

 

೧೮೬
ಸಕಲ ಭೂತಗಣಕಧಿನಾಥ ನೀನೆ
ಮುಕುತಿ ಪಥ ತೋರುವ ಮಹ ಮಹಿಮ ನೀನೆ ಪ
ಸುರರು ಕೊಂಡಾಡೆ ಗರಳ ಕುಡಿದವ ನೀನೆ
ಸರಸಿಜಾಕ್ಷನ ಪರಮ ಸಖನು ನೀನೆ
ವರ ಭಗೀರಥನುತಿಸೆ ಸುರನದಿಯನು ನಿಜ
ಸಿರಿಮುಡಿಯೊಳ್ಧರಿಸಿದಾತನು ನೀನೆ ೧
ಸಿರಿರಾಮ ಮಂತ್ರವನು ಗಿರಿಜೆಗುಸುರಿದವ ನೀನೆ
ವರ ಪಾಶುಪತ ಶರವ ನರನಿಗಿತ್ತವನು ನೀನೇ
ವರ ಮಾರ್ಕಂಡಗೆ ವರವನಿತ್ತವ ನೀನೆ
ಕರಿಚರ್ಮ ಧರಿಸಿರುವ ಪರಮ ವೈರಾಗಿಯೂ ನೀನೆ ೨
ಕೋರಿದನು ಕೊಡಲುಳ್ಳ ಕರುಣಪೂರ್ಣನು ನೀನೆ
ಶ್ರೀ ರಜತಗಿರಿಯಲಿ ಮೆರೆಯುವಾತನು ನೀನೆ
ನೀರಜಾಕ್ಷ ಶ್ರೀ ರಂಗೇಶವಿಠಲ ಪರನೆಂದು
ಸಾರುತಲಿ ಪೊಗಳುವ ಪರಮ ಭಾಗವತನು ನೀನೆ ೩

 

೧೫೧
ಸಮಯಕ್ಕೊದಗುವ ನೆಂಟ ನಿನ್ನ ಭಕುತರ ಬಂಟ ಪ
ಕನಕಕಶಿಪು ತನಯ ತನ್ನ
ಜನಕನ ಹಿಂಸೆ ತಡೆಯದೆಲೆ
ದನುಜಹರನೆ ರಕ್ಷಿಸೆನಲು
ಕ್ಷಣದಿ ಬಂದು ಸಲಹಿದೈಯ್ಯಾ ೧
ನಾರಿ ದ್ರುಪದನಂದನೆಯಳ
ಸೀರೆ ಖಳನು ಸೆಳೆಯುತಿರಲು
ವಾರಿಜಾಕ್ಷ ನಿನ್ನ ಸ್ಮರಿಸೆ
ಯಾರು ಅರಿಯದಂತೆ ಬಂದೆ ೨
ದಾಸಜನರ ಸಕಲ ಪಾಪ-
ರಾಸಿಗಳನು ದಹಿಸೆ ಪೊರೆವೆ
ಶ್ರೀಶ ನಿನ್ನ ಭಜಿಸಿದರೆ ರಂ-
ಗೇಶವಿಠಲರೇಯ ನೀನು ೩

 

೧೭೦
ಸರಸಿಜಾಲಯೆ ಪೊರೆಯೆ ಬೇಗನೇ ಹೇ ಮಾತೆ ಪ
ಸಾರಸಭವನ ವೀರ ಮಾತೆಯೆ
ನೀರಜಾಕ್ಷಿಯೆ ಹೇ ಮಾತೆ
ಸಾರಸಾಕ್ಷ ಪರಮಪ್ರಿಯಳೆ
ಸಾರಿಬಾರೆನ್ನ ಹೇ ಮಾತೆ ೧
ತುರುವು ತನ್ನ ಕರುವ ಧ್ವನಿಯಂ
ಅರಿತು ಬಾರದೆ ಹೇ ಮಾತೆ ಈ
ತೆರದಿ ಎನ್ನ ಮೊರೆಯ ಕೇಳಿ
ಕರವ ಹಿಡಿಯೆ ಹೇ ಮಾತೆ ೨
ಪರಿಯು ಯಾರೆ ಸಿರಿಯು ನಿನಗೆ
ಪರಮಪಾವನೆ ಹೇ ಮಾತೆ
ಕರುಣದಿಂದ ಪೊರೆದು ತೋರೆ
ಸಿರಿರಂಗೇಶವಿಠಲನ ಹೇ ಮಾತೆ ೩

 

೧೫೨
ಸರಿ ಯಾರೊ ನಿನಗೆ ಪರಮ ಕರುಣಾನಿಧೆ ಪ
ಸರಿ ಯಾರೊ ನಿನಗೆ ಗರುಡವಾಹನ ನಿನ್ನ
ಸ್ಮರಿಸುತಿರುವರನು ಕರುಣದಿ ಪೊರೆಯುವೆ ಅ.ಪ.
ಕರಿರಾಜ ಕೂಗಲು ಭರದಿಂದ ಪೋದೆಯೊ
ಸರಸಿಜ ಭವನುತ ಸುರಗಣ ಸೇವಿತ ೧
ಕಂದನ ಮಾತನು ಛಂದದಿಂ ಕೇಳುತ
ಬಂದು ಸಂತೈಸಿದ ಇಂದಿರ ರಮಣನೆ ೨
ದುಷ್ಟರ ಸದೆಯುತ ಶಿಷ್ಟರ ರಕ್ಷಿಸುವ
ದಿಟ್ಟ ರಂಗೇಶವಿಠಲರಾಯನೆ ೩

 

೧೫೩
ಸರುವದ ಪಠಿಸಿರೊ ಚತುರವಿಂಶತಿನಾಮ
ಸಿರಿವಿರಿಂಚಾದಿಗಳಿಗೇ ಪ್ರಿಯಕರ ನಾಮ ಪ
ಕೇಶವ ನಾರಾಯಣ ಮಾಧವ ಗೋವಿಂದನ
ಶ್ರೀಶ ವಿಷ್ಣು ಮಧುಸೂಧನ ತ್ರಿವಿಕ್ರಮನ ೧
ವಾಮನ ಶ್ರೀಧರ ಹೃಷಿಕೇಶ ಪದುಮನಾಭ
ದಾಮೋದರ ಸಂಕರುಷಣ ವಾಸುದೇವನ ೨
ಪ್ರದ್ಯುಮ್ನ ಅನಿರುದ್ಧ ಪುರುಷೋತ್ತಮ ದೇವನ
ಅಧೋಕ್ಷಜ ನಾರಸಿಂಹ ಅಚ್ಯುತರಾಯನ ೩
ಜನಾರ್ಧನ ಉಪೇಂದ್ರ ಹರಿ ಶ್ರೀ ಕೃಷ್ಣಸ್ವಾಮಿಯ
ಜನನ ಮರಣ ರಹಿತನಾದ ಶ್ರೀನಿವಾಸನ ೪
ಈ ಮಹಾನಾಮಂಗಳ ಪ್ರೇಮದಿಂ ಪಾಡಲು
ಕಾಮಿತಾರ್ಥವೀವ ಶ್ರೀ ರಂಗೇಶವಿಠಲ ೫

 

೨೦೬
ಸಲಹಯ್ಯಾ ಲಕ್ಷೀರಮಣ ಸರುವದ ನಮ್ಮನು ನೀ ಪ
ಊರೊಳಗಿರಲಿ ಊರು ಬಿಟ್ಟಿರಲಿ
ದಾರಿಯ ಬಿಟ್ಟು ನಾ ಸಂಚರಿಸುತಿರಲಿ
ಮಾರಮಣ ಮುರಾರಿ ನಿನ್ನಯ ಪಾದ
ವಾರಿಜನ ನಂಬಿ ಸೇರಿದ ಭಕುತರ ೧
ಸಿರಿಯೆನಗಿರಲಿ ಎಡರೆನಗಿರಲಿ
ಮರುಳುತನವೆನಗೇ ಆವರಿಸಿರಲಿ
ನರಹರಿ ನಿನ್ನಯ ಚರಣದ ಮಹಿಮೆಯ
ಪರಿಪರಿಯಿಂದ ಪೊಗಳುವ ಮತಿಯಿತ್ತು ೨
ದೊರೆತನ ಬರಲಿ ತಿರುಕನು ಆಗಲಿ
ಬಂದೆ ಡಂಭದೊಳು ತಿರುಗುತಲಿರಲಿ
ಕರಿವರದ ಶ್ರೀ ರಂಗೇಶವಿಠಲ ನಿನಮರೆಯದೆ ಹರುಷದಿ ನೆನೆವಂತೆ ಮಾಡಿ ೩

 

೧೫೪
ಸಾಧನವು ಮತ್ತೇನಾಗಬೇಕು ನಿನಗೇ ಪ
ಮಾಧವನ ನಾಮವು ಮನದೊಳಿದ್ದರೆ ಸಾಲದೇ ಅ.ಪ.
ಗೋಕೋಟಿ ದಾನವು ಗೋವಿಂದನ ಸ್ಮರಣೆಯ
ತಾಕಲಾರದಿದಕೆ ಸಂದೇಹವೇ ಇಲ್ಲ
ಸಾಕಲ್ಯದಿ ಮಾಳ್ಪ ಸಕಲ ದೇವತಾರ್ಚನೆಯು
ಮಾಕಳತ್ರನ ಪಾದ ಭಜನೆಗೆಣೆಯು ಅಲ್ಲ ೧
ಸ್ನಾನ ಸಂಧ್ಯಾವಂದನ ಜಪತಪಾದಿಗಳು
ದಾನವೇ ಮೊದಲಾದ ನೇಮ ನಿಷ್ಟೆಗಳು
ಆನುಪೂರ್ವಕ ಮಾಳ್ಪ ಸಕಲ ಕರ್ಮಗಳೆಲ್ಲ
ಶ್ರೀನಿವಾಸನ ನಾಮಸ್ಮರಣೆಗೆ ಎಣೆಯು ಅಲ್ಲ ೨
ರಾಸಿ ವಿದ್ಯ ವೇದಾಧ್ಯಯನ ಪಾಠಗಳು
ಬೇಸರಿಲ್ಲದೆ ಪಠಿಪ ಮಂತ್ರ ತಂತ್ರಗಳೆಲ್ಲ
ಈ ಸಮಸ್ತ ಭುವನಗಳೊಡೆಯನಾದ ಶ್ರೀ ರಂ
ಗೇಶವಿಠಲನ ನಾಮದಲ್ಲಡಗಿರುವುದಲ್ಲ ೩

 

೨೧೪
ಸುಖವನು ಸರ್ವದ ಬಯಸಲದೇನೆಂದು ನೀ ತಿಳಿದಿಹೆಯಣ್ಣಾ ಪ
ಸುಖ ಬೇಕಾದರದರ ಗೂಢದ ನೆಲೆಯ ನೀ ಕಂಡ್ಹಿಡಿಯಣ್ಣಾ ಅ.ಪ.
ಸಕ್ಕರೆ ತುಪ್ಪ ಹಾಲ್ಮೊಸರಿನೂಟವು ಸುಖವಹುದೇನಣ್ಣ
ಬೊಕ್ಕಸ ಬರಿದಾಗದಲೆ ಸದಾ ರೊಕ್ಕ ತುಂಬಿಹುದೇನಣ್ಣ
ಅಕ್ಕಪಕ್ಕದ ರೂಪವತಿಯರ ಕಣ್ಣೋಟದೊಳೇನಿದೆಯಣ್ಣ
ಚಿಕ್ಕತನದ ಚಲ್ಲಾಟಗಳೋ ನಿರತನಾಗಿಹುದೇನಣ್ಣ ೧
ಚರ ಸ್ಥಿರ ಸ್ವತ್ತುಗಳ ನೀ ಗಳಿಸಿ ಧನಿಕನೆನಿಸುವುದೇನಣ್ಣ
ದೊರೆತನ ಬಯಸಿ ನೀ ದರ್ಪವ ತೋರುತ ಬಾಳುವುದೇನಣ್ಣ
ಪರಿಪರಿ ಬಣ್ಣದ ಪಾವುಡ ಧರಿಸಿ ನೀ ಮೆರೆಯುವುದೇನಣ್ಣ
ಕರಿ ತುರಗ ರಥ ಪಲ್ಲಕ್ಕಿಯಲಿ ಕುಳಿತು ಚರಿಸುವುದೇನಣ್ಣ ೨
ಈ ಪರಿ ಸುಖಗಳೆಲ್ಲವು ತಪ್ಪಲು ನೀನಳುವಿಯೇತಕ್ಕಣ್ಣ
ತಾಪತ್ರಯಂಗಳಂಕುರಿಸಲಿಕವೆಲ್ಲವು ಬೀಜಗಳೆ ಅಣ್ಣ
ಪಾಪ ರಾಸಿ ಬೆಳೆಯಲಿವೆ ಮೂಲ ಕಾರಣವೆಂದರಿಯಣ್ಣ
ಆಪತ್ತುಗಳು ಬಿಡದೆ ಬಂದಡರಿ ಬಹುತಾಪಗೊಳಿಪವಣ್ಣ ೩
ಈ ಸುಖಗಳೆಲ್ಲವು ಬಹುಕಾಲವಿರವು ಶಾಶ್ವತವಲ್ಲಣ್ಣ
ಆಸೆಯ ತೋರಿಸಿ ನಿನ್ನನು ಬಹುಮೋಸಗೊಳಿಪವು ಕೇಳಣ್ಣ
ಹೇಸಿಕೆಗಿಂತವು ಕಡೆಯಾಗಿಹವೆಂದು ದೃಢದಿ ನಂಬಿರಣ್ಣ
ಸಾಸಿರ ನಾಮದ ರಮೇಶನ ಸ್ಮರಿಸಲು ಬೇಸರ ಬೇಡಣ್ಣ ೪
ಕಟ್ಟಿಕೊಂಡ್ಹೋದ ಬುತ್ತಿಯು ತಾನೆಷ್ಟು ದಿನವಿದ್ದೀತಣ್ಣ
ಎಷ್ಟು ಹೇಳಿದರೇನಿ ಫಲವು ನಿನ್ನಲಿ ನೀನೆ ತಿಳಿಯಣ್ಣ
ಗುಟ್ಟಿನಲಿ ಮನಮುಟ್ಟಿ ಯೋಚಿಸಲದುವೆ ಬಯಲಾಗುವುದಣ್ಣ
ದಿಟ್ಟ ರಂಗೇಶವಿಠಲನ ನಾಮವೊಂದೇ ನಿಜ ಸುಖವಣ್ಣ ೫

 

೨೨೫
ಸ್ವಾಮಿಯು ನೀನಲ್ಲವೊ ಪಾಮರನೆ ಪ
ಸ್ವಾಮಿಯು ನೀನಾಗೆ ಭೃತ್ಯಾನು ನಿನಗ್ಯಾರು
ಈ ಮಾತಿಗೇನೆಂಬೆಯೊ ಸೋಮಾರಿ ಮನುಜನೆ ಅ.ಪ.
ನಿತ್ಯತೃಪ್ತನು ದೇವದೇವೋತ್ತಮನವನು
ಸತ್ಯ ಸಂಕಲ್ಪನು ಸಕಲ ಜಗವರಿಯೆ
ಹೊತ್ತು ಹೊತ್ತಿಗೆ ಗ್ರಾಸಕಿಲ್ಲದವ ಗೃಹಪಾಲ
ಸತ್ಯದನುಭವವಿಲ್ಲವೊ ನಿನಗೆ ೧
ಸ್ವಾಮಿ ಭೃತ್ಯರಿಗೆ ಬೇಧವಿಲ್ಲೆಂಬುವ ನಿನ್ನ
ಕಾಮಿನಿಯ ಮೋಹಿಸಿ ಭೃತ್ಯ ತಾ ಬರಲು
ಕಾಮಾರಿಯಂತೆ ಕೋಪವ ತಾಳುವೆ ನಮ್ಮ
ಸ್ವಾಮಿಗೆ ತಾಮಸ ಗುಣವೆಲ್ಲಿಹುದೊ ೨
ಕಾಸು ಕೊಟ್ಟರೆ ನೀನು ಹೇಸಿಕ್ಯಾದರು ಬಳಿವೆ
ದಾಸ ನೀನಲ್ಲದೆ ಈಶನೆಂತಾದೆಯೊ
ವಾಸುದೇವ ನೀನೆಂದು ಘಾಸಿಯಾಗಲು ಬೇಡ ರಂ-
ಗೇಶವಿಠಲನ ದಾಸರ ದಾಸ ನೀನಾಗೊ ೩

 

೨೧೭
ಹಟವ ಮಾಡದಿರು ಕೇಳೆಲೊ ಮೂಢ ಪ
ಕುಟಿಲವ ಬಿಡು ನೀ ಗಾಢ ಅ.ಪ.
ಹರಿ ಸರ್ವೋತ್ತಮ ವಾಯು ಜೀವೋತ್ತಮ
ಹರ ವೈಷ್ಣವೋತ್ತಮನೆನ್ನೊ ೧
ಮಧ್ವ ಸಿದ್ಧಾಂತದ ಪದ್ಧತಿ ಬಿಡದಲೆ
ಶುದ್ಧ ವೈಷ್ಣವರೊಳಾಡೊ ೨
ಹರಿ ಶರಣರ ಚರಣ ಕಮಲಂಗಳಿಗೆ
ಗರುವಪಡದೆ ನೀ ಬೀಳೊ ೩
ಸಂತತದಲಿ ಶ್ರೀಕಾಂತನ ಗುಣಗಳ
ಚಿಂತನೆ ಮಾಡುತ ಬಾಳೊ ೪
ಮಂಗಳಾಂಗ ತ್ರಿಜಗಂಗಳ ಪೊರೆವವ
ರಂಗೇಶವಿಠಲನೆನ್ನೊ ೫
ನೆಲವಿತ್ತ ದಯವಂತ ಶ್ರೀಕಾಂತ ೩

 

೨೦೭
ಹರಿ ನಿನ್ನ ದಾಸರ ಸೇವೆಯ ಕರುಣಿಸೆನಗೆ
ಸುರಪತಿಯ ನಾನೊಲ್ಲೆನೈ ಪ
ಸ್ಮರನ ಹಾವಳಿ ಬಿಡಿಸಿ ಗುರುಭಕ್ತಿಯನು ಕೊಟ್ಟು
ನಿರುತವು ನಿನ್ನ ನಾ ಸ್ಮರಿಸುವಂದದಿ ಮಾಡು ಅ.ಪ
ಎಷ್ಟು ಸ್ಥಿರ ಮಾಡಿದಾಗ್ಯು ಎನ್ನ ಮನ
ಬಟ್ಟ ಕುಚೆಯರ ಬಲೆಗೆ ಸಿಲುಕುತಲಿ
ಬಿಟ್ಟು ನಿನ್ನಯ ಧ್ಯಾನ ಕೆಟ್ಟುಪೋಗುತಲಿದೆ
ದಿಟ್ಟ ನಿನ್ನ ಮಗನ ಬಲುಹಿನ್ನೆಷ್ಟೆಂದು ಪೇಳಲೊ ೧
ಕುಸುಮಗಂಧಿಯರ ಓರೆನೋಟವೆಂಬ
ಮಸೆದ ಕಣೆಯ ತಾನು ಪೂಡುತಲಿ
ಎಸೆ ಮೋಹತಿಗೆ ನಾ ಸೈರಿಸಲಾರೆನೋ
ಬಿಸಜನಾಭನೆ ನಿನ್ನ ಸುತಗೆ ಪೇಳೋ ಬುದ್ಧಿ ೨
ಅಂಗನೆಯರ ಸವಿ ನುಡಿಗಳಿಗೆ ನಾ ಮರುಗಿ
ಭೃಂಗದಂತವರ ಬಲೆಗೆ ಬೀಳದಂತೆ
ಸಂಗ ಸುಜನರಲ್ಲಿ ಇತ್ತು ಕಾಯೊ ದೇವ
ಅಂಗಜಪಿತ ಶ್ರೀ ರಂಗೇಶವಿಠಲನೇ ೩

 

೨೦೮
ಹರಿಯೇ ಪೊರೆಯದಿಹುದು ಸರಿಯೆ | ಎನ್ನ
ಮರೆತೆ ಯಾತಕೊ ನಾನರಿಯೆ ಪ
ಶುನಿ ಸೂಕರ ಯೋನಿಯಲಿ ಬಂದು | ನಾನು
ಮನುಜನಾಗಿ ನಿಂದಿಹೆನಿಂದು
ನಿನ ಬೇಡಿಕೊಂಬೆ ದಯಸಿಂಧು | ಎನ್ನ
ಪುನಹ ಪುಟ್ಟಿಸಬೇಡವೆಂದು ೧
ಮನಸು ವಚನ ಕಾಯಗಳಿಂದ | ನಿನ್ನ
ಅನುಚರನಾಗಿಹೆ ಮುದದಿಂದ
ದನುಜಾರಿ ಬಿಡಿಸೆನ್ನ ಬಂಧ | ಭವ-
ಜನಿತವಾಗಿಹ ಜಾಲದಿಂದ ೨
ಹಲವು ಮಾತೇಕೊ ಮಾಲೋಲ | ಮೌನಿ
ಅಲವ ಬೋಧಾರ್ಚಿತ ಗೋಪಾಲ
ಕಲಿ ಕಲುಷ ರಾಸಿಗಳನೆಲ್ಲ ಕಳೆದು
ಸಲಹೈಯ್ಯಾ ರಂಗೇಶವಿಠಲ ೩

 

೨೧೫
ಉಗಾಭೋಗ
ಅಚ್ಯುತಾನಂತನ ಅಚ್ಛಿನ್ನ ಭಕ್ತರ ಸಚ್ಚರಿತ್ರೆಗಳನು
ಮುಚ್ಚುಮರೆ ಮಾಡದೆ ಬಿಚ್ಚಿ ಪೇಳುವೆ ನಾನು
ಇಚ್ಛೆಯುಳ್ಳ ಸುಜನರು ತುಚ್ಛವಾಗೆಣಿಸದೆ ನಿಚ್ಚಾಳ
ಮನದಿಂದ ಕೇಳಿ
ಸ್ವಚ್ಛವಾದ ಭಕುತಿಯಿಂದ ಸಚ್ಚಿದಾನಂದಗೆ ಕಣ್ಣೆಂಬ ದೀಪವ
ಹಚ್ಚಿ ಮನವೆಂಬ ಕುಸುಮದಿ ಅರ್ಚಿಸಿ ಅವನಂಘ್ರಿಕಮಲ-
ಕೆಚ್ಚರಿಸೆ ಪರಾಕು ಹೇಳಿ ಹೆಚ್ಚು ಕುಂದುಗಳನು ಮನ
ಮೆಚ್ಚಿ ಮಾಳ್ಪ ಕರ್ಮವೆಲ್ಲವ ಕಚ್ಛಪರೂಪಗರ್ಪಿಸುವರು
ಕುತ್ಸಿತ ಜನಾಪವಾದಕೆ ಬೆಚ್ಚಿ ಬೆದರದೆ ಕಿಚ್ಚಿಗೂ ಅಂಜದಂಥ
ಕೆಚ್ಚೆದೆಯುಳ್ಳವರಾಗಿ ಯದೃಚ್ಛಾಲಾವಧಿ
ತೃಪ್ತಿ ಹೊಂದಿ ನಿಶ್ಚಿಂತೆಯಲಿರ್ಪರು
ಅಚ್ಯುತನಾದ ರಂಗೇಶವಿಠಲನ ಸರುವದ
ನೆಚ್ಚಿಕೊಂಡಿರುವರಯ್ಯಾ

 

೨೧೭
ಉಗಾಭೋಗ
ನಾನು ನಾನು ಎಂದು ನೀನೇಕೆ ಬಡಕೊಂಬಿ
ನಾನು ನಾನು ಎಂಬುವನೆ ನಾನಾ ಯೋನಿಯೊಳು ಬರುವ
ನೀನು ನೀನು ಎಂಬುವಗೆ ನ್ಯೂನವೇನೂ ಇಲ್ಲ
ನಾ ಸತ್ತರೆ ನರಕವೇ ಇಲ್ಲ ನಿನ್ನಲಿ
ನೀನೆ ನೋಡಿಕೋ ಎಂದ ಶ್ರೀನಿಧಿ ರಂಗೇಶವಿಠಲ

 

೧೨೬
ಉಗಾಭೋಗ
ನಿನ್ನಭಯವೇನೆನಗೆ ನೀ ನೀರಿನೊಳಿರುವೆ
ನಿನ್ನಭಯವೇನೆನಗೆ ನೀ ಭಾರ ಪೊತ್ತಿರುವೆ
ನಿನ್ನಭಯವೇನೆನಗೆ ನೀ ಬೇರ ಮೆಲ್ಲುತಲಿರುವೆ
ನಿನ್ನಭಯವೇನೆನಗೆ ನೀನರಣ್ಯದೊಳಿರುವೆ
ನಿನ್ನಭÀಯವೇನೆನಗೆ ನೀ ಪೋರನಾಗಿರುವೆ
ನಿನ್ನಭಯವೇನೆನಗೆ ನೀ ಪಾರ್ವನಾಗಿರುವೆ
ನಿನ್ನಭಯವೇನೆನಗೆ ನೀ ವನದಿ ಚರಿಸುತಲಿರುವೆ
ನಿನ್ನಭಯವೇನೆನಗೆ ನೀ ಜಾರನಾಗಿರುವೆ
ನಿನ್ನಭಯವೇನೆನಗೆ ನೀ ದಿಗಂಬರನಾಗಿರುವೆ
ನಿನ್ನಭಯವೇನೆನಗೆ ನೀ ಕಾಸ್ತಾರನಾಗಿರುವೆ
ನಿನ್ನ ಭಕುತರ ನುಡಿಗೆದುರಿಲ್ಲ
ನಿನ್ನವರಿದ್ದಲ್ಲಿಯೆ ನೀನಿರುವಿ
ನಿನ್ನವರ ಮತವೇ ನಿನ್ನ ಮತವು
ನಿನ್ನವರಾಡಿದ್ದೇ ಆಟ ಹೂಡಿದ್ದೇ ಲಗ್ಗೆ
ನಿನ್ನವರಿಗಾನಂಜುವೆನಯ್ಯ
ಚೆನ್ನ ಶ್ರೀ ರಂಗೇಶವಿಠಲ

 

೧೨೮
ಉಗಾಭೋಗ
ಪಂಕಜನಾಭನಂಕಿತನಾದವಗೆ
ಪಂಕ ಲವಲೇಶವಿಲ್ಲ ಶಂಕೆ ಬೇಡಿದಕೆ
ಮಂಕುಮತಿಯವರು ಪಂಕಜ ಸಂಭವ
ಶಂಕರರ ನಂಬಿ ಸಂಕಟಪಟ್ಟುದನರಿಯ
ಬಿಂಕದ ಬಿರದಿನಕಳಂಕ ರಂಗೇಶವಿಠಲ ನಿರಾ
ತಂಕದಿ ಪೊರೆವ ತನ್ನವರ ಏಣಾಂಕ ಸನ್ನಿಭವಕ್ತ್ರ

 

೨೨೦
ಉಗಾಭೋಗ
ಪಾಪ ಮಾಡಿದರೇನು ಮಾಡದಿದ್ದರೇನು
ಪಾಪಿ ಜನರ ಸಂಗವ ಮಾಡಿದರೇನು ಮಾಡದಿದ್ದರೇನು
ವಾಪಿ ಕೂಪದಿ ಮಿಂದು ಮಡಿಯುಟ್ಟರೇನು
ಮಡಿಯುಡದಿದ್ದರೇನು
ಧೂಪ ದೀಪಗಳಿಂದ ಹರಿಪೂಜೆ ಮಾಡಲೇನು
ಮಾಡದಿದ್ದರೇನು
ಶ್ರೀಪತಿ ರಂಗೇಶವಿಠಲ ಸರುವ
ವ್ಯಾಪಾರ ಮಾಡುತಿಹನೆಂದು ತಿಳಿಸು ನಿ-
ರ್ಲೇಪನಾಗಿದ್ದು ಅವನ ಶ್ರೀಪಾದ ಪದ್ಮವನು ನೀ-
ಜೋಪಾನವಾಗಿಟ್ಟುಕೊಂಡಿದ್ದರೆ ಸಾಕು

 

೨೨೧
ಉಗಾಭೋಗ
ಮಧ್ವರಾಯರ ಸಿದ್ಧಾಂತ ಪದ್ಧತಿಯನು ಬಿಟ್ಟು
ಅದ್ವೈತಮಾರ್ಗವನು ಪಿಡಿದು ಸದ್ಗತಿಯ
ಬಯಸಿದವರೆ ಹಾಳೂರು
ಹದ್ದು ಹಾಲೋಗರ ಬಯಸಿದಂತಹುದು
ಸದ್ಗುರುವಿನ ಬುದ್ಧಿವಾದವ ಕೇಳಿ ತನು ಮನವ
ತಿದ್ದಿಕೊಳುತ ಸದ್ವಿದ್ಯವ ಕಲಿತು
ಹೃದ್ಗುಹದೊಳಾ ಹದ್ದುವಾಹನ ಅನಿ
ರುದ್ಧ ನಾಮಕ ಸಿರಿಮುದ್ದು ರಂಗೇಶವಿಠಲನ
ಬದ್ಧವಾಗಿ ನಿಲಿಸಿ ಶುದ್ಧಮನದಿ ಪೂಜಿಸಿ ಇಷ್ಟ
ಸಿದ್ಧಿಯ ಪೊಂದಿ ಊಧ್ರ್ವಲೋಕಂಗಳಲಿ ಚರಿಸೋ

 

೨೨೨
ಉಗಾಭೋಗ
ಮುನ್ನ ಮುರಾರಿಯ ನಿಂದಿಸಿ
ಬನ್ನಪಟ್ಟ ಅನೇಕಾನೇಕ
ಘನ್ನ ರಕ್ಕಸರನು ನೋಡಿ
ಇನ್ನು ನಿನಗೆ ಮತಿ ಬಾರದೆ
ಅನ್ಯ ಶಾಸ್ತ್ರಗಳೋದಿ
ಭಿನ್ನ ಜ್ಞಾನವ ಪೊಂದಿ
ನಿನ್ನನು ನೀನೇ ಮರೆದು
ಭಿನ್ನವಾಗಬೇಡ
ಪನ್ನಗಾರಿ ಧ್ವಜ ನಮ್ಮ
ಚೆನ್ನ ರಂಗೇಶವಿಠಲನ
ಘನ್ನ ಪಾದಂಗಳ ನಂಬಿ
ಉನ್ನತ ಲೋಕಗಳ ಪಡೆಯೊ

 

೨೨೩
ಉಗಾಭೋಗ
ರಂಗನಾ ಒಲುಮೆಯಿರಲು ಮಂಗನೇ ಅನಂಗನಕ್ಕು
ಮಂಗನಲಿ ಧನವಿರಲು ಭಂಗವಿಲ್ಲದ ಸುಖವಕ್ಕು
ಅಂಗನೆ ಒಲಿದಿರಲು ಭಂಗವಿಲ್ಲದ ಸುಖವಕ್ಕು
ಭಂಗವಿಲ್ಲದ ಸುಖಕೆ ರಂಗೇಶವಿಠಲನೆ ಕಾರಣಮಕ್ಕು

 

೧೫೦
ಉಗಾಭೋಗ
ಶ್ರೀ ಸದನ ನಿನ್ನ ಸುಗುಣಗಳ ಪೊಗಳುವಡೆ ಕಡೆಯುಂಟೆ
ಸಾಸಿರ ಮುಖದಾದಿಶೇಷಗಳವಡದು ವೇದ
ರಾಸಿಗಳೆಲ್ಲ ಮುಂಬರಿಯಲಾಗದೆ ಮೌನವಾಂತಿಹವು
ಲೇಶ ಭಕುತಿಯಿಲ್ಲದ ಪಾಮರನಾದ ನಾನು ಮ
ತ್ತೇಸು ಬಗೆಯಿಂದ ಸ್ತುತಿಸಲಾಪೆನೊ ದೇವ ಸ
ರ್ವೇಶನೇ ನೀನೆಂಬ ನುಡಿಮಾತ್ರ ಘೋಷಿಸುತಲಿರುವೆ
ಈಸು ಮಾತ್ರಕೆ ನೀ ಪ್ರಸನ್ನನಾಗಿ ರಕ್ಷಿಸೋ ರಂ-
ಗೇಶವಿಠಲರೇಯ ನಾ ನಿನ್ನ ದಾಸರ ದಾಸನೆಂದು

 

ಜೋ ಜೋ ರಂಗಯ್ಯ
೧೨೧
ಜೋ ಜೋ ರಂಗಯ್ಯ ಜೋ ಜೋ ಕೃಷ್ಣಯ್ಯ
ಜೋ ಜೋ ಅಹಿತಲ್ಪ ಶಯ್ಯ ಸ್ವಸ್ಥ
ಮಲಗಯ್ಯ ಜೋ ಜೋ ಪ
ಕಣ್ಣೇಕೆ ನೀನು ಮುಚ್ಚಲೊಲ್ಲೆಯೊ ರಂಗ
ಬೆನ್ನು ಭಾರವಾಗಿರುವುದೇನೋ ದೇವ
ಮಣ್ಣಿನೊಳು ನೀನಾಡಿ ಮೈ ನೋಯುವುದೇನೊ
ಹೊನ್ನು ಕಶಿಪುವಿನ ಕರುಳ ಕಂಡಂಜಿದೆಯೇನೊ ೧
ಚಿಣ್ಣ ನೀ ಧರೆಯನಳೆಯಲೇತಕೆ ಪೋದೆ
ಗಣ್ಡುಗೊಡಲಿ ಪಿಡಿದು ಕೈಯಿ ಉಳುಕಿಹುದೇನೊ
ಅನ್ನವ ಬಿಟ್ಟು ನೀ ಪರ್ನವೇತಕೆ ತಿಂದೆ
ಬೆಣ್ಣೆಯ ಮೆದ್ದು ನಿನ ಹೊಟ್ಟೆ ನೊಯ್ಯುವದೇನೊ ೨
ಬತ್ತಲೆ ತಿರುಗಿ ಮೈ ಬಿಸಿಯಾಗಿರುವದೇನೊ
ಕತ್ತಿಯ ಪಿಡಿದು ತೇಜಿಯ ಹತ್ತಬೇಕೇನೊ
ಹೊತ್ತಾಯ್ತು ಕಂದಯ್ಯ ಮಲಗೆಂದು ಯಶೋದೆ
ಮುತ್ತಿಟ್ಟು ತೂಗಿದಳು ರಂಗೇಶವಿಠಲನ ೩

 

ಹಾಡಿನ ಹೆಸರು :ಜೋ ಜೋ ರಂಗಯ್ಯ
ಹಾಡಿದವರ ಹೆಸರು :ಆರತಿ ರಾಣಿ, ಪದ್ಮಾ
ಸಂಗೀತ ನಿರ್ದೇಶಕರು :ನಾರಾಯಣ ಹೆಚ್. ಕೆ.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ವೆಂಕಟೇಶ ತೋರೊ ಪಾದ
೧೪೭
ವೆಂಕಟೇಶ ತೋರೊ ಪಾದ ಪಂಕಜವನು ಪ
ಮಂಕುಮತಿಯ ಬಿಡಿಸಿ ನಿನ್ನ ಕಿಂಕರನೆಂದೆನಿಸೊ ಅ.ಪ.
ಕಲಿಯುಗದೊಳು ನೀನು ಸಕಲ ಸುಜನರ
ಕಲುಷ ಕಳೆಯುವೆನೆಂದು ಬಹುಮೋದದಿಂದ
ಎಲರುಣಿ ಪರುವತದೊಳಗೆ ವಾಸನಾಗಿ
ಒಲಿದು ಪದುಮಾವತಿಯ ಕರ ಪಿಡಿದಂಥ ೧
ತೆತ್ತೀಸಕೋಟಿ ದೇವತೆಗಳು ತನ್ನ
ಸುತ್ತಲು ನಿಂತು ಪರಿಚರಿಯವನು ಮಾಡೆ
ಎತ್ತ ನೋಡಲು ಸಿರಿಯು ಓ ಎನುತಿರೆ
ಚಿತ್ತಜನೈಯ್ಯನು ನಗುತ ನಿಂದಿರುವಂಥ ೨
ಭುವನತ್ರಯಂಗಳನೆಲ್ಲ ಲೀಲೆಯಿಂ ಕಾವ
ಪವನವಂದಿತನೆ ಮಹಾನುಭಾವ
ನವ ಮೋಹನಾಂಗ ಶ್ರೀ ರಂಗೇಶವಿಠಲಜವನ ಬಾಧೆಯ ಬಿಡಿಸಯ್ಯಾ ಶ್ರೀಲೋಲ ೩

 

ಹಾಡಿನ ಹೆಸರು :ವೆಂಕಟೇಶ ತೋರೊ ಪಾದ
ಹಾಡಿದವರ ಹೆಸರು : ಚಂದನ ಬಾಲಾ
ಸಂಗೀತ ನಿರ್ದೇಶಕರು :ಶಂಕರ್ ಎಸ್.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಹರಿಯೇ ಪೊರೆಯದಿಹುದು
೨೦೮
ಹರಿಯೇ ಪೊರೆಯದಿಹುದು ಸರಿಯೆ | ಎನ್ನ
ಮರೆತೆ ಯಾತಕೊ ನಾನರಿಯೆ ಪ
ಶುನಿ ಸೂಕರ ಯೋನಿಯಲಿ ಬಂದು | ನಾನು
ಮನುಜನಾಗಿ ನಿಂದಿಹೆನಿಂದು
ನಿನ ಬೇಡಿಕೊಂಬೆ ದಯಸಿಂಧು | ಎನ್ನ
ಪುನಹ ಪುಟ್ಟಿಸಬೇಡವೆಂದು ೧
ಮನಸು ವಚನ ಕಾಯಗಳಿಂದ | ನಿನ್ನ
ಅನುಚರನಾಗಿಹೆ ಮುದದಿಂದ
ದನುಜಾರಿ ಬಿಡಿಸೆನ್ನ ಬಂಧ | ಭವ-
ಜನಿತವಾಗಿಹ ಜಾಲದಿಂದ ೨
ಹಲವು ಮಾತೇಕೊ ಮಾಲೋಲ | ಮೌನಿ
ಅಲವ ಬೋಧಾರ್ಚಿತ ಗೋಪಾಲ
ಕಲಿ ಕಲುಷ ರಾಸಿಗಳನೆಲ್ಲ ಕಳೆದು
ಸಲಹೈಯ್ಯಾ ರಂಗೇಶವಿಠಲ ೩

 

ಹಾಡಿನ ಹೆಸರು :ಹರಿಯೇ ಪೊರೆಯದಿಹುದು
ಹಾಡಿದವರ ಹೆಸರು :ಸಂಗೀತಾ ಕಟ್ಟಿ
ಸಂಗೀತ ನಿರ್ದೇಶಕರು : ಶ್ಯಾಮಲಾ ಜಿ. ಭಾವೆ
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ