Categories
ರಚನೆಗಳು

ವಿಶ್ವೇಂದ್ರತೀರ್ಥ

ಅ. ಶ್ರೀಹರಿ-ಲಕ್ಷ್ಮಿಯರು

ಉದ್ಧವಾ ಬೇಗ ಬಾ |ಬಾ|
ಶ್ರದ್ಧೆಯಿಂದಿರ್ಪರೆ| ಗೋಪಿಯರೆನ್ನೊಳು ಪ
ಕಾಳಿಯ ಫಣದಲ್ಲಿ ಮೋದದಿಂ ಕುಣಿಯಲು
ಸಾಲು ಸಾಲಾಗಿಯೇ ತವಕದಿಂ ನಿಂತರು ೧
ಬೆಣ್ಣೆಯ ಕದ್ದರೂ ಸಣ್ಣ ಮಾತಾಡರು
ಕಣ್ಣು ಕೆಂಪಾಗಿ ತಾವೆಂದಿಗೂ ನುಡಿಯರು ೨
ಸುಂದರಾಂಗಿಯಾ ಸೀರೆಯ ಸೆಳೆದರೂ
ನಂದನೊಳೆನ್ನಯ ಸುದ್ದಿಯ ಪೇಳರು ೩
ತರುವ ನಾನೇರ್ದರೂ ಸೀರೆಯ ಕದ್ದರೂ
ಕರಗಳ ಜೋಡಿಸಿ ಬೇಡುತ್ತ ನಿಂತರು ೪
ಪತಿಗಳ ಶಿಕ್ಷೆಯನ್ನೀಕ್ಷಿಸದೆ ಎನ್ನೊಳು
ರತಿಸುಖಾಂಬುಧಿಯಲ್ಲಿ ತೇಲಿಕೊಂಡಿರ್ದರು ೫
ಭಜಿಸಿ ರಾಜೇಶನ ಹಯಮುಖ ದೇವನ
ತ್ಯಜಿಸಿ ಶೋಕಂಗಳ ಸುಖಿಗಳಾಗಿರ್ಪರೆ ೬

 

ಇದೊಂದು ಸೊಗಸಾದ ಉದಯರಾಗ

ಏಳಯ್ಯ ಮಹಾರಾಜ ಬೆಳಗಾಯಿತೇಳಯ್ಯ ರಂಗ ಬಾ ಪ
ಬಾಗಿಲಲಿ ಕೂಗುವರು ಸನಕಾದಿ ಮುನಿವರರು
ನಾಗಭೂಷಣನು ಕೈಮುಗಿದು ನಿಂತ |
ಜಾಗರವ ಮಾಡಿರ್ಪ ಸುರರೆಲ್ಲ ಬಂದಾಯ್ತು
ಯೋಗಿಗಳು ಪೊಗಳುವರು ನಿನ್ನಂಘ್ರಿಯ ೧
ಲಂಕೆಯನು ಬಿಟ್ಟು ವಿಭೀಷಣನು ನಿಂತಿರ್ದ
ಗಂಗೆಯನು ಬಿಟ್ಟೇಳು ಜಗದೀಶನೆ |
ತಂಗಿಯನು ಬೇಡುವರೆ ಭಾವ ಪಾರ್ಥನು ಬಂದ
ಮಂಗಳದ ನುಡಿ ನಿನಗೆ ಕೇಳಲಿಲ್ಲವೊ ಹರಿಯೆ ೨
ಪುಟ್ಟಾದ ಮುನಿ ಬಂದನಿಷ್ಟ ಭೀಮನು ಬಂದ
ಥಟ್ಟನೆ ಏಳು ಯಾದವರಿಗರಸ |
ಸೃಷ್ಟಿಗೊಡೆಯನೆ ಕೇಳು ಭೂಸುರನು ರುಕ್ಮಿಣಿಯ
ಪುಟ್ಟ ವಾಲೆಯ ತಂದ ನೀ ನೋಡು ನೋಡು ೩
ಕೋಪಿಗಳರಸಾದಿ ದುರ್ವಾಸ ಮುನಿ ಬಂದ |
ಇಂಪಾಗಿ ಪಾಡುತಿಹ ಸುರಮುನಿಯು ಬಂದ |
ಕೋಪದೊಳೊದೆದ ಮುನಿ ಬಂದ ಬೇಗೇಳು
ಪುಷ್ಪಶರ ಮಗ ಬಂದ ಬೇಗೇಳು ರಂಗ ೪
ಸಿರಿದೇವಿ ನಿನ್ನಂಘ್ರಿಗಳನೊತ್ತ ಬಿಡಳೇನೊ |
ಮಾರುತಿಯ ಜಪವಿನ್ನು ಮುಗಿಯಲಿಲ್ಲೊ |
ಕರುಣದಿಂದಲಿ ಕಾಯೋ ರಾಜೇಶ ಹಯಮುಖನೆ
ನರರೆಲ್ಲ ನಗುವಂತೆ ಮಾಡದಿರೊ ರಂಗ ೫

 

೨೩
ಕಾಯೋ ಪ್ರಾಣೇಶ ಕೀಶಕುಲೇಶ
ವಾಯುಸುತನೆಂದು ಮೆರೆವ ಜೀವೇಶ ಪ
ಅಂಜನಾದೇವಿಯೊಳ್ ಜನಿಸಿಕೊಂಡಿರುವಿ
ಅಂಜದೆ ಲಂಕೆಗೆ ಬೆಂಕಿ ಹಚ್ಚಿರುವಿ
ಸಂಜೀವನವ ತಂದು ಕಪಿಗಳನುಳಿಸಿದಿ
ಕಂಜಾಕ್ಷಿ ಸೀತೆಗುಂಗುರವ ತಂದಿತ್ತೆ ೧
ಕುಂತಿದೇವಿಯ ಗರ್ಭದೊಳಗುದ್ಭವಿಸಿದಿ
ಪಾರ್ಥರೊಳ್ನೀನಗ್ರಗಣ್ಯನೆಂದೆನಿಸಿ
ಪಂಥದಿ ಮಗದಾಧಿಪತಿಯ ಸಂಹರಿಸಿ
ಕಾಂತೆಯ ತಲೆಯ ಕೂದಲನೆ ಕಟ್ಟಿಸಿದಿ೨
ಪಾಜಕ ಕ್ಷೇತ್ರದೊಳ್ ನೀನವತರಿಸಿ
ರಾಜತಾಸನದಿ ಶ್ರೀಕೃಷ್ಣನನಿರಿಸಿ
ರಾಜೇಶ ಹಯಮುಖ ಕಿಂಕರನೆನಿಸೀ
ಮೂಜಗದಲಿ ಶ್ರೇಷ್ಠಗುರು ನೀನೆಂದೆನಿಸಿ ೩

 

ಇದು ಹಯಗ್ರೀವ ದೇವರ ಸ್ತುತಿ

ಕುದುರೆ ಕಂಡೀರ್ಯಾ ಬಿಳಿ ಕುದುರೆ ಕಂಡೀರ್ಯಾ
ಚೆಲುವ ಕುದುರೆ ಕಂಡೀರ್ಯಾ
ಮಧ್ವರಾಯರಿಗೊಲಿದ ಕುದುರೆ
ವಾದಿರಾಜರ ಪೊರೆದ ಕುದುರೆ
ಇಂದಿರಾ ದೇವಿಯನಪ್ಪಿದ ಕುದುರೆ
ಬಂದರೆ ನರರು ಬೆದರದಂಥ ಕುದುರೆ ೧
ಮಂದರಗಿರಿಯನ್ನೆತ್ತಿದ ಕುದುರೆ
ಚಂದಿರನಂತೆ ಪೊಳೆಯುವ ಕುದುರೆ
ಸೋದೆಯ ಪುರದೊಳಿರುವ ಕುದುರೆ
ಮೋದದಿಂದ ಮೆರೆಯುವ ಕುದುರೆ ೨
ಸುರರಿಗಮೃತವನ್ನಿತ್ತ ಕುದುರೆ
ನರನ ರಥವನು ಏರಿದ ಕುದುರೆ
ಸ್ಮರನ ತಾತನೆನಿಪ ಕುದುರೆ
ಸುರತರುವನೆ ಭೂಮಿಗೆ ತಂದ ಕುದುರೆ ೩
ಕಡಲೆ ಹೂರಣ ಮೆಲುವ ಕುದುರೆ
ಪಂಡರಪುರದಿ ಮೇದ ಕುದುರೆ
ಪುಂಡರೀಕನಿಗೆ ಒಲಿದಿಹ ಕುದುರೆ
ಪಾಂಡವರನೆ ಪೊರೆದ ಕುದುರೆ ೪
ರಾಜನಾಥನೆನಿಪ ಕುದುರೆ
ವಾಜಿವದನ ತಾನೆನಿಪ ಕುದುರೆ
ಕಂಜಸುತಗೆ ಶ್ರುತಿಯನ್ನಿತ್ತ ಕುದುರೆ
ಕಂಜನಾಭನೆನಿಪ ಕುದುರೆ ೫

 

ಈ ಹಾಡಿನ ಪಲ್ಲವಿಗೆ
೨೭
ಕೈಲಾಸನಾಥ ಮಹೇಶ ಈಶ
ಶೈಲೇಶ ತನಯೇಶ ಬಾಲಾರ್ಕ ಸಮಭಾಸ ಪ
ಶೂಲಾಕ್ಷ ಡಮರುಗಳಿಂದ ಶೋಭಿಪ ಹಸ್ತ
ತಾಲಾಂಕನನುಜನೊಳ್ಸಮರಗೈದೀರ್ಪ
ಫಾಲಾಕ್ಷದಿಂದಲಿ ಕಾಮನ ದಹಿಸಿರ್ಪ
ಶೂಲಿಯ ಮಹಿಮೆಯನೇನು ಬಣ್ಣಿಸಲಿ ೧
ವೈಷ್ಣವಾಗ್ರಣಿಯೆಂದು ಪೆಸರುಗೊಂಡಿರುವ
ವಿಷ್ಣುಭಕ್ತರೊಳಗತಿ ಪ್ರೇಮವಿರುವ
ಕೃಷ್ಣ ದ್ವೈಪಾಯನರ ಸುತರಾಗಿ ಶೋಭಿಪ
ಸನಕಾದಿಗಳ ಶಿಷ್ಯ ದುರ್ವಾಸರೆನಿಪ ೨
ನಂಜುಂಡನೆನಿಸಿರ್ಪ ಪ್ರಖ್ಯಾತ ಮಹಾದೇವ
ಕಂಜಜಾತನ ಸುತನೆನಿಸಿರ್ದ ದೇವ
ರಾಜೇಶ ಹಯಮುಖ ಭಕ್ತಪುಂಗವ ನೀನು
ಅಂಜಲಿ ಬಂಧದಿಂ ನಮಿಪೆ ನಿನ್ನಡಿಗೆ ೩

 

೩೦
ಗಂಗೆ ಮಂಗಲ ತರಂಗೆ ಪಾಹಿ
ಪಾಪಭಂಗೆ ಹರಿಪಾದಸಂಗೆ ಪ
ಗಂಗೆ ಹರಿಪಾದದಿಂದ ಉದ್ಭವಿಸಿದೆ
ಪರಮೇಷ್ಠಿಯ ಪಾತ್ರೆಯೊಳಗೆ ನಿಂತೆ
ಹರಶಿರದೊಳು ನಿತ್ಯ ನೆಲಸಿದೆ
ಮತ್ತೆ ಸ್ಮರಿಪರ ಚಿತ್ತದೊಳ್ ವಾಸಿಸಿದೆ ೧
ಸಗರಪುತ್ರರ ಪವಿತ್ರಿಸಿದೆ
ಗಗನದೊಳ್ ಹರಿಯುವ ನದಿಯಾದೆ
ನಗವರ ಕೈಲಾಸಕ್ಕಿಳಿದೆ
ಜಗವರಿಯೆ ಜಹ್ನುತನಯೆಯಾದೆ ೨
ರಾಜೇಶ ಹಯಮುಖ ತನಯೆ
ರಾಜಧರ್ಮನು ನಿನ್ನ ತಟದಲ್ಲಿ
ಮೂಜಗವು ತಾ ಪೊಗಳುವಂದದಿ
ವಾಜಿಮೇಧನ ಗೈದನಾದರದಿ ೩

 

೨೬
ಗರುಡದೇವನೇ ಪೊರೆಯೊ ಎನ್ನನು
ಹರಿಯ ವಾಹನನಾಗಿ ಮೆರೆಯುವ
ಗರುಡದೇವನೇ ಪ
ಮಾತೆಯ ಮಾನವನುಳಿಸಲೋಸುಗ |
ಸುಧೆಯ ಕಲಶವ ಪೊತ್ತು ತಂದೆಯೋ ೧
ಹರಿಯು ನಿನ್ನೊಳು ಪೇಮದಿಂದಲೀ
ಧರಣಿಯೊಳವತರಿಸಲೊಲ್ಲನು ೨
ರಾಕ್ಷಸಾರಿ ರಾಜೇಶ ಹಯಮುಖ
ಪಕ್ಷಿರಾಜನೊಳಿಪ್ಪ ಭಾಗ್ಯವು ೩

 

(ಆ) ವಿವಿಧ ದೇವತಾ ಸ್ತುತಿ
೨೧
ಬ್ರಹ್ಮನ ಸ್ತುತಿ
ಚತುರವದನಗೊಂದಿಸುವೆನು
ಮದನನಯ್ಯನ ಜ್ಯೇಷ್ಠಕುವರ
ಚತುರವದನಗೊಂದಿಸುವೆನು ಪ
ಜಗವ ಸೃಷ್ಟಿಪ ಗುರುವರನ ಮೂ-
ಜಗದೊಡೆಯನ ನಿತ್ಯ ನೋಡುತಿಹನ
ನಗವೈರಿಮುಖಸುರಪ್ರಿಯನ
ನಿಗಮೋಕ್ತ ಯಾಗ ಮಾಡುವನ ೧
ಸುರರು ಅಸುರರೆಂಬ ಭೇದ
ವಿರದೆ ಸರ್ವರಿಗಿಷ್ಟವೀವನೆ
ಪುರಹರಾದ್ಯಖಿಲಾಮರರು ನಿನ್ನ
ಸ್ಮರಿಸುತಾಜ್ಞೆಯ ಧರಿಸುವರು ೨
ಯಜ್ಞಕುಂಡದೊಳುದ್ಭವಿಸಿದ ಸ-
ರ್ವಜ್ಞ ರಾಜೇಶ ಹಯಮುಖ
ಸುಜ್ಞಾನ ವೇದಾರ್ಥಗಳನು ಬೋಧಿಸಿಷ್ಟ ಸಾ-
ಯುಜ್ಯವ ನಿನಗೆ ಕೊಟ್ಟಿಹನು ೩

 

೩೬
ಜನ್ಮ ಸಫಲ ಕಾಣಿರೋ
ನಮ್ಮ ಗುರು ವಾದಿರಾಜರಾಯರ ಕಂಡು
ಜನ್ಮ ಸಫಲ ಕಾಣಿರೋ ಪ
ಯುಕ್ತಿ ಮಲ್ಲಿಕೆಯೆಂಬ ಗ್ರಂಥ ಮಾಡಿಹರು
ಮತ್ತೆ ಮುತ್ತಿನ ಸಿಂಹಾಸನವನೇರಿಹರು
ಮತ್ತೆ ದುರ್ವಾದೀಭಗಳಿಗೆ ಮೃಗೇಂದ್ರರು
ಸೂತ್ರನಾಮದಿ ಮುಂದೆ ಮೆರೆವರು ೧
ವ್ಯಾಸಕೂಟಗಳಲ್ಲಿ ಶ್ರೇಷ್ಠರಾಗಿಹರು
ದಾಸಕೂಟಗಳಲ್ಲಿ ರತ್ನದಂತಿಹರು
ಭಾಸುರಕಾಯದಿ ನೂರ ಇಪ್ಪತ್ತು
ವರ್ಷಗಳೊಳಗಿದ್ದು ಮೆರೆದವರು ೨
ಮೂಜಗದೊಳಗಿಂಥ ಗುರುಗಳೆಲ್ಲಿಹರು
ಕಂಜಸುತನ ಪದವೇರುವವರು
ರಾಜೇಶ ಹಯಮುಖ ಕಿಂಕರಾಗ್ರಣಿಗಳು
ರಾಜಿಪ ಶ್ರೀಸೋದಾಪುರದೊಳಗಿಹರು ೩

 

೩೪
ಜಯ ಜಯ ಜಯ ಮುನಿವರ್ಯ
ಜಯ ಮಧ್ವಶಾಸ್ತ್ರ ವ್ಯಾಖ್ಯಾನಾತಿಗೇಯ ಪ
ಮಂಗಲವೇಡೆಯೊಳುದುಭವಿಸುತ ಜಗ-
ನ್ಮಂಗಲಕರವಾದ ಟೀಕೆಯ ರಚಿಸಿ
ಮಂಗಲಮೂರುತಿ ರಾಮನ ಭಜಿಸುತಾ-
ನಂಗನ ಜಯಿಸಿದ ಮುನಿಕುಲ ತಿಲಕ ೧
ವಿದ್ಯಾರಣ್ಯನೆಂಬ ಖಾಂಡವ ವನವನೆ
ಯಾದವೇಶನ ಸಖನಂತೆ ನೀ ದಹಿಸಿ
ಮಧ್ವಶಾಸ್ತ್ರವೆಂಬ ರತ್ನವ ಜನರಿಗೆ
ಸುಧೆಯಂತೆ ಕುಡಿಸಿದ ಯತಿವಂಶ ರತ್ನ ೨
ಮಾಧ್ವಗ್ರಂಥವ ನೀನು ಬಂಧುವೆಂದೆಣಿಸುತ
ರಾಜೇಶ ಹಯಮುಖ ಶ್ರೀರಾಮಚಂದ್ರ
ಪಾಂದಾಂಬರುಹವನ್ನೆ ಬಿಡದೆ ಸೇವಿಸುತಲಿ
ವಾದೀಭಗಳಿಗೆ ಮೃಗೇಂದ್ರನಾಗಿರುವಿ ೩

 

ವೆಂಕಟೇಶನ ಪ್ರಾಚೀನ ದೇವಸ್ಥಾನವಿದೆ

ತಿರುಪತಿ ವೆಂಕಟರಮಣ ನೀನು
ಧರಣಿಯೊಳ್ಸರ್ವರಿಗಧಿಕ
ತಿರುಪತಿ ವೇಂಕಟರಮಣ ಪ
ಸ್ವಾಮಿ ಪುಷ್ಕರಿಣಿಯ ತಟದಿ
ವಾಸ ಮಾಡಿಕೊಂಡಿರುವೆಯೊ ನೀನು |
ಭೂಮಿಯೊಳಗೆಲ್ಲ ಸಾಧು ಸಜ್ಜನರು
ನೇಮದಿಂದಲಿ ನಿನ್ನ ಸೇವಿಪರು ೧
ಮಂಜುಗುಣಿಯ ಪುರದೊಳಗೆ ಬಂದು
ನಿಂದಿರುವಿ ವೆಂಕಟೇಶ
ಕಂಜಾಕ್ಷ ವರ ಚಕ್ರ ಶಂಖ ಮತ್ತೆ
ಶರಚಾಪಗಳನ್ನೆತ್ತಿ ಮೆರೆದೀ ೨
ಜಗಕೆಲ್ಲ ಶೇಷಾದ್ರಿಯಂಥ
ಕ್ಷೇತ್ರವಿಲ್ಲೆಂದು ತೋರಿಸುತಿರುವಿ |
ಖಗವರನನ್ನೇರಿ ತಿರುಗಿ ಬಂದು
ತಿರುಪತಿ ಕ್ಷೇತ್ರದೊಳಿರುವಿ ೩
ವಾದಿರಾಜರು ನಿನ್ನ ಬಳಿಗೆ
ಪಾದ ಮುಟ್ಟದೆ ಜಾನುಗಳಿಂದ |
ಬಂದು ಸಾಲಿಗ್ರಾಮದ ಮಾಲೆಯನ್ನು
ಪಾದಕರ್ಪಿಸಿ ಸ್ತುತಿಸಿದರು ನಿನ್ನ ೪
ಆಕಾಶರಾಜನ ಮಗಳು
ಬಂದು ರಾಜೇಶ ಹಯಮುಖ ನಿನಗೆ |
ಮಾಲೆ ಹಾಕುತ ಮುಂದೆ ನಿಂದಳು
ಶಂಕೆಯಿಲ್ಲದೆ ನಮಿಸಿದಳು ಮುದದಿ ೫

 


ದಾಸಗೆ ಭಯವೆಲ್ಲಿ
ವಾಸವನನುಜನ
ದಾಸಗೆ ಭಯವೆಲ್ಲಿ ಪ
ದಾಸನಾಗದವಗೆ ಭಯವೆಂದಿಗು ತಪ್ಪದು
ದಾಸನಾಗಿಹಗೆ ಭಯವೆಂದಿಗು ಬಾರದು ೧
ತರಳ ಪ್ರಹ್ಲಾದಗೆ ಭಯವೆಂದಿಗು ಸೋಂಕಲಿಲ್ಲ
ತರಳನ ಪಿತಗೆ ಭಯವೆಂದಿಗು ತಪ್ಪಲಿಲ್ಲ ೨
ಲಂಕೆಯೊಳಿದ್ದರೂ ದಶಕಂಠನಿಗತಿ ಭಯ
ಲಂಕೆಯ ಬಿಟ್ಟ ವಿಭೀಷಣನಿಗಭಯ ೩
ಹರನ ಪೀಡಿಸಿದಾ ಭಸ್ಮಾಸುರಗೆ ಭಯ
ಹರಿಯ ಸ್ತುತಿಸಿದ ಮಹಾದೇವನಿಗಭಯ ೪
ರಾಜಾಧಿರಾಜನಿಗೂ ಭಯವೆಂದೂ ತಪ್ಪದು
ರಾಜೇಶ ಹಯಮುಖನೊಲಿದವನಿಗಭಯ ೫

 


ದೇವಾಧಿದೇವ ಶ್ರೀ ತ್ರಿವಿಕ್ರಮರಾಯ
ದ್ಯಾವಾ ಮ್ಯಾಲ್ನಿನ್ನ ಕಾಯ ||
ಪಾದನಖಾಗ್ರದಿ ಬ್ರಹ್ಮಾಂಡವನ್ನು
ಭೇದಿಸಿ ಗಂಗೆಯ ಜನಿಸಿರ್ದ ಕಾಯ ಪ
ಅಣುರೂಪದಿಂದಿದ್ದು ಕ್ಷಣದೊಳಗದ್ಭುತ
ರೂಪವ ಧರಿಸಿ ಬಲಿಯ ಬಂಧಿಸಿದೆ |
ರಣ ಶಬ್ದವಿಲ್ಲದೆ ಸರ್ವ ಸಾಮ್ರಾಜ್ಯವ
ನಗ್ರಜಗಿತ್ತಿಹ ಕಾರ್ಯವಾಶ್ಚರ್ಯ ೧
ವಾದಿರಾಜರಿಗೆ ನೀ ಒಲಿದು ಶ್ರೀ ಸೋದೆಯೊಳ್
ನಿಂತಿದ್ದ ತೆರವತಿ ಚೋದ್ಯವಾಗಿಹುದು |
ಕದನವಾಗಿಲ್ಲ ಭೂಭುಜರಲ್ಲಿ ಒಲಿದುದು
ಹರಿಭಕ್ತರ್ಗತಿ ತೋರ್ಪ ಕಾರ್ಯ ೨
ಕಂಜಾಕ್ಷ ಶ್ರೀಕೃಷ್ಣಗೋಲೆಯರ್ಪಿಸಿದ
ರಾಜೇಶ ಹಯಮುಖ ದಾಸರೆಂದೆನಿಪ |
ರಾಜ್ಯದೊಳಗತಿ ಮಾನ್ಯ ವಾದಿರಾಜರ ಭಾಗ್ಯ
ದೇವಾಧಿದೇವ ಶ್ರೀ ತ್ರಿವಿಕ್ರಮರಾಯ ೩

 

ಲಕ್ಷ್ಮೀಸ್ತುತಿ
೨೦
ದೇವಿ ಇಂದಿರೆ ನಿನ್ನೊಳ್ ದೇವ ಶ್ರೀಹರಿಗಿಪ್ಪ
ಪ್ರೇಮವ ಬಣ್ಣಿಸಲಸದಳ ಕಂಡ್ಯ ಪ
ಜಕ್ಕ ಜವ್ವನ ಪೋಗಬಾರದೆಂದೆನುತಲಿ
ಮಕ್ಕಳ ನಿನ್ನೊಳು ಜನಿಸನು ಕಂಡ್ಯ
ಪೊಕ್ಕಳೊಳಗೆ ತಾನೆ ಮಕ್ಕಳ ಪುಟ್ಟಿಸಿದ
ಅಕ್ಕರೆಯನು ಶ್ರೀದೇವಿ ನೀ ಕಂಡ್ಯ ೧
ಉರದೊಳು ತೊಡೆಯೊಳು ಕೊಳಲೊಳಾಭರಣದೊಳು
ಕರಗಳಿಂದಲಿ ಪಾಶ್ರ್ವದೊಳಗಾಲಿಂಗಿಸಿದಾ
ನೀರೊಳಕ್ರೂರಗೆ ಒಲಿಯುವಾಗಲು, ಮಹಾ
ನೀರೊಳು ಪ್ರಳಯದಿ ನಿನ್ನನು ಬಿಡನು ೨
ರಾಜಾಧೀರಾಜರು ಬಹುದಾರರೆಂಬರು
ರಾಜೀವಾಕ್ಷನಿಗೆ ನೀನೊಬ್ಬಳೆ ಕಂಡ್ಯ
ರಾಜೇಶಹಯಮುಖನಂಥ ಪ್ರೇಮಿಗಳುಂಟೆ
ರಾಜೇಶ ಶ್ರೀರಾಮನರಸಿಯೊಬ್ಬಳೆ ಕಂಡ್ಯ ೩

 

೨೮
ದೇವಿ ನೀ ಗಿರಿಜಾತೆಯು
ನಿನ್ನಯ ಕಾಂತ ರಜತಾಖ್ಯಗಿರಿನಾಥನು
ನೀನು ಭವಾನಿಯು ನಿನ್ನ ಕಾಂತನು ಭವದೇವನಾಗಿರುವ ಪ
ನಿನ್ನ ಯೌವನಭಂಗದ ಭೀತಿಯ ಕಂಡು
ವಿಘ್ನೇಶನನು ಪುಟ್ಟಿಸಿ
ಪ್ರಣಾತ್ಮಗಳನೊಬ್ಬ ತನುಜಗೆ ಕಲ್ಪಿಸಿ
ಕೃತಕೃತ್ಯನಾದ ನಿನ್ನರಸ ಕಾಣಮ್ಮ ೧
ನಿನ್ನ ಕಾಂತನು ಪಾರ್ಥನಿಗೆ ಬಾಣವನೀಯಲು
ನೀನು ಅಂಜಲಿಕಾಸ್ತ್ರವನು ಪ್ರೇಮದಿ
ನಿನ್ನ ಕಾಂಚನ ಚಿತ್ತವರಿತು ಕೊಡಲು ನಿನ್ನೊಳ್
ಪಾರ್ಥಸೂತನ ದಯವೆಷ್ಟೆಂಬೆ ೨
ರಾಜೇಶ ಹಯಮುಖನ ದಯದಿಂದ ನಿನ್ನ ಪತಿ
ವಿಷವ ಜೀರ್ಣಿಸಿಕೊಂಡನು
ರಜತಾದ್ರಿಯೊಳಗಿರುವ ಶಿತಿಕಂಠ ಶಂಕರನ
ಮಹಿಮೆಯದ್ಭುತವಲ್ಲವೇ ಪೇಳು ಗಿರಿಜೆ ೩

 

೨೯
ಧೀರ ಕುಮಾರ ಮಾರಾವತಾರ
ಪಾಹಿ ತ್ರ್ಯಂಬಕನ ಕುಮಾರ ಪ
ತಾರಕಾಸುರ ಸಂಹಾರ ದೇವ
ನಿನ್ನಲಿ ದೇವಸೈನ್ಯದ ಭಾರ
ಗಿರಿಜಾದೇವಿಯ ಮೋಹದ ಕುವರ
ಪೊರೆಯೊ ಎನ್ನನು ಕರುಣಾಸಾಗರ ೧
ಅಮರಸೇನೆಗೆ ನೀನಗ್ರೇಸರ
ಭೂಸುರ ಹತ್ಯಾ ಪಾಪಸಂಹಾರ
ಸಮರದೊಳಗೆ ನೀನು ಶೂರ
ನಮಿಸುವರಿಗಿಷ್ಟ ಫಲವೀವ ವೀರ ೨
ವಿಪ್ರಜನರಿಗತಿಪ್ರಿಯ
ವಲ್ಲೀಸೇನೆಗೆ ಪ್ರಾಣಪ್ರಿಯ
ವ್ಯಾಪ್ತ ರಾಜೇಶ ಹಯಮುಖನ
ಚಕ್ರಾಭಿಮಾನಿ ಮೂರುತಿಯಾಗುತಿರುವಿ ೩

 

ವಿಷ್ಣುವಿನ ದಶಾವತಾರಗಳು

ನಾನಾ ವೇಷಗಳಿನ್ನು ನಿನಗ್ಯಾಕೊ ಹರಿಯೆ
ನಿನ್ನ ಭಕ್ತರು ನಿನ್ನ ತಿಳಿಯದೆ ಬಿಡರು ಪ
ಮೀನಾಗಿ ಜಲದೊಳು ತಿರುಗುವದ್ಯಾಕೊ
ಚಾರಣನೆಂದೆನಿಸಿ ಭಾರವ ಪೊತ್ತುದ್ಯಾಕೊ ೧
ಹಂದ್ಯಾಗಿ ದಿತಿಜನ ಬಡಿದೆ ನೀನ್ಯಾತಕೋ
ಕಂದನ ಪೊರೆಯೆ ಕಂಬದಿ ತೋರಿದ್ಯಾಕೊ ೨
ವಟುವಾಗಿ ಭೂಮಿಯ ಬೇಡಿದೆ ಏತಕೊ
ಹಟವು ರಾಯರ ಮೇಲೆ ನಿನಗ್ಯಾಕೆ ಬೇಕೋ ೩
ಮಲತಾಯಿ ನುಡಿಗಾಗಿ ವನವಾಸ ನಿನಗ್ಯಾಕೊ
ಬಲದಿ ತಂದೆಯ ಬಂಧ ಬಿಡಿಸಿದ್ದು ಸಾಕೊ ೪
ರಾಜೇಶ ಹಯಮುಖ ಬತ್ತಲೆ ನಿಂತೆ ಏಕೊ
ತೇಜಿಯನೇರ್ದು ತೋರುವ ಶೌರ್ಯ ಸಾಕೊ ೫

 

ಇಲ್ಲಿಯೂ ವ್ಯಾಜನಿಂದಾ ಸ್ತುತಿಯೇ

ನಾನೇನ ಮಾಡಿದೆ ತಪ್ಪುಗಳನ್ನ
ನಾನೇನ ಮಾಡಿದೆ ದೇವರದೇವ ಪ
ನಿನ್ನ ದಾಸರ ತಪ್ಪನೆಣಿಸದೆ ಪೊರೆಯುವೆ
ನಾನೊಬ್ಬ ದಾಸನೆಂದರಿದು ನೀ ಪೊರೆಯೊ ೧
ಭೃಗುವಂತೆ ನಿನ್ನಯ ಎದೆಗೆ ತುಳಿಯಲಿಲ್ಲ
ನಗವೈರಿಯಂತೆ ಯುದ್ಧವ ಮಾಡಲಿಲ್ಲ ೨
ಅಂಗಾಧಿಪತಿಯಂತೆ ಕೊಂದೆನೆಂದರಿತಿಲ್ಲ
ಗಂಗೆಯ ಸುತನಂತೆ ಫಣಿಗೆ ಹೊಡೆಯಲಿಲ್ಲ ೩
ನಿನ್ನಣ್ಣನಂತೆ ನೀ ವಂಚಿಸಿದೆಯೆಂದು
ನಿನ್ನ ಬಿಟ್ಟನ್ಯ ದೇಶಕೆ ಪೋಗಲಿಲ್ಲಾ ೪
ಭಾವ ಫಲ್ಗುಣ ವಿಪ್ರಶಿಶುವ ಪಾಲಿಪೆನೆಂಬ
ಭಾವದಿ ನುಡಿದಂತೆ ನಿನಗೇನು ಪೇಳಿಲ್ಲ ೫
ನಿನ್ನಾ ಕುವರರು ಸುಭದ್ರೆಯ ಮದುವೆಯ
ಚೆನ್ನಾಗಿ ತಡೆದಂತೆ ತಡೆಯಲಿಲ್ಲವೊ ನಾನು೬
ವಸುದೇವ ದೇವಕಿ ಮುಖ್ಯರಂತೆ ನಿನ್ನ ಮಾ-
ನುಷನೆಂದು ನಾನೇನು ತಿಳಿದುಕೊಂಡಿಲ್ಲ ೭
ಮಲಗಿದ್ದ ಸಮಯದ ಕಂಡು ಬಲಿಯು ಬಂದು
ಮೌಲಿಯ ಕದ್ದಂತೆ ಕದ್ದುಕೊಂಡಿಲ್ಲ೮
ರಾಜೇಶಹಯಮುಖ ಭಜಕರೊಳಗೆ ಮತ್ತೆ
ಋಜುಗಳಲ್ಲದೆ ನಿತ್ಯ ಭಕ್ತರಾರಿಹರು ೯

 

ಪಾತಾಳದೊಳಗಿಂದ ಬಂದ ವರ ಚಿಂತಾಮಣಿ
೧೦
ಪಾತಾಳದೊಳಗಿಂದ ಬಂದ ವರ
ಚಿಂತಾಮಣಿ ನಾರಸಿಂಹ ಪ
ಪಾಹಿ ಕರುಣಾಸಾಗರ ಶ್ರೀಹರಿಯೆ ಅ.ಪ
ಯೋಗಿ ನೀ ಗಣಗಳ ಕೊಂದು
ನಾಗಭೂಷಣನಿಗೊಲಿದಂಥ
ರಾಗದಿ ದೋಷವಿದೂರರ
ರಾಗದಿಂದಲಿ ಪಾಲಿಸುತಿರುವೆ ದೊರೆಯೆ ೧
ಕೋಲಾವತಾರದ ಹರಿಯ ದಿವ್ಯ
ಲೋಲ ನೇತ್ರದಿ ಬಂದ ನದಿಯ
ವೇಲೆಯೊಳಗಿದ್ದು ಶೋಭಿಸುವ ವನ-
ಮಾಲಾದಿ ಭೂಷಿತನಿರುವಿ ೨
ಬಾಲಗೊಲಿದೆ ಕಂಬದಲ್ಲಿ ಮತ್ತೆ
ಶೂಲಿಗೊಲಿದೆ ಪಾತಾಳದಲ್ಲಿ
ಚೆಲ್ವ ರಾಜೇಶಮುಖ ಹರಿಯೇ ನಿನ್ನ
ಬಲ್ಲಿದ ಜನರಿಗೆ ಸುಲಭ ೩

 

೧೧
ಪಾಲಿಸೊ ಪಂಕಜನೇತ್ರ ರಘು
ಕುಲಾಂಬುಧಿ ಚಂದ್ರ ಶ್ರೀ ರಾಮಚಂದ್ರ ಪ
ಒಂದೇ ಭಾಷಣ ನಿನಗೊಂದೇ ಮಾರ್ಗ ಸಾಕು
ಒಂದೇ ಸ್ಥಾನದೊಳಾಶ್ರಿತರನೇ ನಿಲ್ಲಿಸುವಿ
ಒಂದೇ ಬಾರಿಯೆ ಕೊಟ್ಟುದ್ಧರಿಸುವೆ ಭೃತ್ಯರ
ಒಂದೇ ಪತ್ನಿಯು ನಿನಗೆಂಬುದು ಬಿರುದು ೧
ನಿನ್ನ ತಮ್ಮನು ನಿನ್ನ ರಾಣಿಯ ಭೃತ್ಯನು
ನಿನ್ನಂಥ ಭಾಗ್ಯ ಮತ್ತೆಲ್ಲಿ ತೋರುವುದು
ಘನ್ನ ಮಹಿಮ ನೀನು ಮಲತಾಯಿ ನುಡಿಯಲು
ತನ್ನ ರಾಜ್ಯಗಳನ್ನು ತಮ್ಮನಿಗೊಪ್ಪಿಸಿದೆ ೨
ಭರತನು ನಿನ್ನಡಿಗಾಗಿ ಬೇಡಿದರೂ ನೀ
ಹರುಷದಿಂದಲಿ ಕಾಲಾಂತರವ ಪೇಳಿರುವಿ
ಮರಳಿ ರಾಜ್ಯದಿ ಬಂದು ರಾಜೇಶ ಹಯಮುಖ
ಕರುಣಿಸಿ ಪಟ್ಟಾಭಿಷಿಕ್ತನಾಗಿರುವಿ ೩

 

ಈ ಗಣೇಶಸ್ತುತಿಯಲ್ಲಿ ‘ಪರಮಾತ್ಮನಿಗೆ
ಗಣೇಶಸ್ತವನ

ಬಾರೊ ಮಹೇಶತನಯ ಗಣೇಶ
ವರ ವಿಷ್ಣುಪದಕಭಿಮಾನಿ ವಿಘ್ನೇಶ ಪ
ನಿನ್ನ ಪೂಜಿಸಿ ಧರ್ಮರಾಜನು ಗೆದ್ದ
ನಿನ್ನ ಪೂಜಿಸದೆ ದುರ್ಯೋಧನ ಬಿದ್ದ
ನಿನ್ನ ಪೂಜಿಸಿ ರಾಮ ಸತಿಯನೆ ಪಡೆದ
ನಿನ್ನನರ್ಚಿಸದ ದಶಕಂಠನು ಕೆಟ್ಟ ೧
ಸುರಮುಖ್ಯರೆಲ್ಲರು ನಿನ್ನ ಪೂಜಿಪರು
ಪರಮಾತ್ಮನಿಗೆ ನೀನು ಮರಿಮಗನಿರುವಿ
ಸುರಮುನಿ ದಿತಿಜಾದಿಗಳಿಗತಿಪ್ರಿಯನೆ
ಸರುವರಿಂದಲು ಮೊದಲು ಪೂಜೆಗೊಂಬನೆ ೨
ರಾಜೀವಾಕ್ಷಗೆ ಸತ್ಯಾದೇವಿಯೊಳ್ಜನಿಸಿ
ಮೂಜಗದಲಿ ನೀನು ಪೂಜ್ಯನೆಂದೆನಿಸಿ
ರಾಜೇಶ ಹಯಮುಖ ಚರಣಾಬ್ಜಭೃಂಗ
ಕಂಜಜತನಯನ ಹೆಮ್ಮಗ ಕಂಡ್ಯಾ ೩

 

೧೨
ಬಾರೊ ಸುದಾಮ ಬಾರೆನ್ನ ಮಿತ್ರ
ದಾರಿ ನಮ್ಮಲ್ಲಿಗೆ ತೋರಲಿಲ್ಲೇನೊ ಪ
ನಿನ್ನಯ ಪತ್ತೆಯು ಸಿಕ್ಕಲಿಲ್ಲೆನಗೆ
ಎನ್ನಯ ಪತ್ತೆಯು ನಿನಗತಿ ಸುಲಭ
ಎನ್ನತ್ತಿಗೆ ಕ್ಷೇಮದಿಂದಿರುವಳೆ ಪೇಳೊ
ನಿನ್ನತ್ತಿಗೆ ಕ್ಷೇಮದಿರುವಳು ಕೇಳು ೧
ಸತಿಸುತರನು ಕಾಣದುಂಟೇನೊ ಚಿಂತೆ
ಸತಿಸುತರನ್ನಿಲ್ಲಿ ಕರೆಸುವೆ ಕಾಣೊ
ನೀ ತಂದ ಒಡವೆಗಳೇನೇನು ತೋರೊ
ಪೃಥುಕದ ಗಂಟನೆ ಬಿಚ್ಚೊ ನೀ ಬೇಗ ೨
ಪೃಥುಕೈಕ ಮುಷ್ಟಿಯ ತಿಂದಾಗುತಿರಲು
ಕ್ಷಿತಿಪತಿ ಕರವನೆ ಪಿಡಿದಳು ಭೈಷ್ಮೀ
ಪೃಥುಕದ ಮುಷ್ಟಿಗೆ ಮೋಕ್ಷವ ಕೊಡುವಿ
ಮತ್ತಿನ್ನು ತಂದರೆ ಕೊಡುವುದೇನರಸ ೩
ತಟ್ಟಿ ಮುದ್ದಾಡಿ ಸುದಾಮನ ಬಿಡನು
ಕಷ್ಟವನರುಹಲು ತಿಳಿಯದು ಹರಿಗೆ
ಪುಟ್ಟಾದ ಮಕ್ಕಳ ಬಿಟ್ಟು ಬಂದಿರುವಿ
ಕಷ್ಟವು ನಿನಗೇನೊ ಮಿತ್ರ ನಾನಿರಲು ೪
ರಾಜೇಶ ಹಯಮುಖ ಚರಣಾಬ್ಜಗಳನು
ಭಜಿಸುತ್ತ ನೀ ಪೋಗು ಮರೆಯದೆ ಮಿತ್ರನ
ತ್ಯಜಿಸುತ್ತಲಿರುವೆ ನೀ ವಿಷಯದ ಸುಖವ
ಮೂಜಗದೊಳಗಿಂಥ ಮಿತ್ರನೆಲ್ಲಿಹನು ೫

 

ವಾಗೀಶತೀರ್ಥರು ಶ್ರೀ ವಾದಿರಾಜರ
೩೫
ಭಳಿರೆ ವಾಗೀಶ ತೀರ್ಥಾಖ್ಯ ಮುನಿವರ್ಯ
ಇಳೆಯೊಳು ನಿನಗೆಣೆ ಕಾಣೆ ನಾ ಯತಿವರ್ಯ ಪ
ಜಗದೊಳು ದುರ್ವಾದಿ ಮತವ ಖಂಡಿಸಿದ
ಜಗದೀಶ ಹರಿಯೆ ಸರ್ವೋತ್ತಮನೆಂದು
ನಿಗಮಾರ್ಥವನು ಜಗದಿ ಸಾರಿದಾ ಕುಜನೇಭ
ಮೃಗರಾಜ ವಾದಿರಾಜರಿಗೆ ಗುರುವೆನಿಸಿದೆ ೧
ಭಾವೀ ಸಮೀರ ಶ್ರೀವಾದಿರಾಜರ ಜನ್ಮೋ-
ತ್ಸವ ಕಾಲವರಿತಾಗ ಸುಮಪುರಕೆ ನೀನು
ತವಕದಿಂದಲಿ ಪೋಗಿ ಬಾಲಕನ ರಕ್ಷಿಸಿ
ಅವನನೆ ಯತಿರಾಜ ಪಟ್ಟದೊಳಿರಿಸಿದಿರಿ ೨
ಗುರು ಮಧ್ವರಂತೆ ನೀ ಸರ್ವಶಾಸ್ತ್ರವ ಮಾಡಿ
ಧರಣಿಯೊಳು ರಾಜೇಶ ಹಯಮುಖನ ಚರಣ
ಸ್ಮರಿಸಿ ನೂರಿಪ್ಪತ್ತು ವತ್ಸರದ ಕಾಲದಲಿ
ಇರುವಿರೆನುತಲಿ ಅವರ ಹರಸಿದಿರಿ ದೊರೆಯೆ ೩

 

೨೪
ಭಾರತಿ ಮರುತನ ರಾಣಿ ಶುಭ
ವಾಣಿಯಾಗಿರುವಿ ಕಲ್ಯಾಣಿ
ನಾರಸಿಂಹನ ಸೊಸೆಯಾದಿ ಸರ್ವ
ನಾರಿಯರಿಗೂ ನೀ ಮೇಲಾದಿ ಪ
ಭೀಮನು ಶೂದ್ರನೆಂದಿರಲು ನೀನು
ಶೂದ್ರೆಯೆಂದೆನಿಸುತಲಿರುವಿ
ಕಾಮಿ ಕೀಚಕನಿಗೆ ಮೃತ್ಯುವಾಗಿ ನಿನ್ನ
ಪ್ರೇಮವನೇನು ಬಣ್ಣಿಸಲಿ ೧
ಜುಟ್ಟನು ಕೈಯೊಳು ಸೆಳೆದ
ದುಷ್ಟ ದೈತ್ಯನ ಪಂಥದಿ ಮಥಿಸಿ
ಪಟ್ಟದರಸನು ತೋರಿದುದದ್ಭುತವು
ಸಿಟ್ಟು ನಿನಗಾಗಿ ತೋರ್ದುದಾಶ್ಚರ್ಯ ೨
ರಾಜಧರ್ಮನು ಸುಮ್ಮನಿರಲು
ರಾಜನಾಥ ಶ್ರೀಹಯಮುಖ ದಾಸ
ರಾಜ ಭೀಮನು ತೋರ್ದ ಶಾಂತತೆಯ
ರಾಜೀವಾಕ್ಷ ನಿನ್ನೊಳು ತೋರಿದ ಕರುಣ ೩

 

ಭಾವಿ ಸಮೀರ ಶ್ರೀವಾದಿರಾಜರು
೩೭
ಭಾವಿಸಮೀರ ಗುರು ಶ್ರೀ ವಾದಿರಾಜ
ನಿಮ್ಮ ಸೇವಿಪ ಜನರಿಗಭೀಷ್ಟವನೀವ ಪ
ಹನುಮ ಭೀಮ ಮಧ್ವರೊಡಗೂಡಿ ವೃಂದಾವನ-
ದೊಳು ಮೆರಸುವ ಮುಂದಿನ ಸೊಬಗ
ಪಂಥದಿ ವೀರಶೈವರ ಗುರುವನೆ ಗೆದ್ದು
ಹತ್ತಿದೆ ಮುತ್ತಿನ ದಿವ್ಯ ಪೀಠವನು ೧
ಕುಂಡಿನೇಶನ ತನುಜಾತೆಯ ಪತ್ರವ
ಪುಂಡರೀಕಾಕ್ಷನಿಗರ್ಪಿಸಿದ್ಯಲ್ಲೋ
ಮದುವೆಯ ಸಮಯದಿ ಶಪಥದಿಂದಲಿ ಬಂದು
ವಧುವಿನ ಭಾಗ್ಯವನುಳಿಸಿದೆಯಲ್ಲೋ ೨
ಅರಿತುಂಡು ವಿಷವ ನೀನರಗಿಸಿಕೊಂಡ್ಯಲ್ಲೊ
ನರಪತಿತನಯನ ಬದುಕಿಸಿದ್ಯಲ್ಲೋ
ಭಜಿಸುತ ರಾಜೇಶ ಹಯಮುಖನಂಘ್ರಿಯ
ತ್ರಿಜಗದೊಳಧಿಕ ಸೋದಾಪುರದೊಳು ನಿಂದ್ಯೋ ೩

 

೧೩
ಭೀಮಾನದೀ ತೀರಾವಾಸ
ಪಾಹಿ ಪಾಹಿ ಪಾಂಡುರಂಗ ಪ
ಜಾರಚೋರನೆಂಬರೆಂದು
ಗೋಕುಲವ ಬಿಟ್ಟು ಬಂದೆ
ಜಾರಚೋರನೆಂದು ನಿನ್ನ
ಪುಂಡರೀಕ ಮುನಿಕರೆದ ||ಪಾಂಡುರಂಗ|| ೧
ಅನ್ಯ ಭೋಗಗಳನು ಬಿಟ್ಟು
ನಿನ್ನ ಪಾದವ ಧ್ಯಾನಿಸುವರ
ಮನದಿಷ್ಟವನೀವನೆಂದು
ತೋರಿಸುವೇ ಚಿಹ್ನೆಯಿಂದ ||ಪಾಂಡುರಂಗ|| ೨
ರಾಜೇಶ ಶ್ರೀಹಯಮುಖ
ಜ್ಞಾನಶೂನ್ಯಾರ್ತರ್ಗೆ ಸಾಯುಜ್ಯವಿತ್ತು ಪೊರೆವ ವಿಠಲ-
ನೆಂದು ಭೂಮಿಯೊಳು ಮೆರೆವ ||ಪಾಂಡುರಂಗ|| ೩

 

ಶ್ರೀವಾದಿರಾಜರ ನೆಚ್ಚಿನ ಬಂಟ
೪೩
ಭೂತನಾಥ ಪಾಲಿಸೆನ್ನ ನಾರಾಯಣ
ಭೂತನಾಥನೆ ಪಾಲಿಸೆನ್ನ ಪ
ಕರ್ಣವಿಕರ್ಣಾದಿಗಣಗಳಿಂದಲಿ ಕೂಡಿ
ಸ್ವರ್ಣದಿ ಭಾಸುರಾಂಗ ಶ್ರೀರಾಜರ
ಸ್ವರ್ಣದ ಪಾಲಕಿಯನ್ನು ಮುಂಭಾಗದಿ
ಭಕುತಿಯಿಂದಲಿ ಪೊತ್ತ ಶ್ರೀ ಭೂತರಾಜ ೧
ಬದರಿಕಾಶ್ರಮದಿಂದ ನದಿಯ ತಾತನ ದಿವ್ಯ
ಸದನವ ಶ್ರೀಸೋದಾಕ್ಷೇತ್ರಕ್ಕೆ ತರಲು
ಬೆದರದೆ ವಿಘ್ನವ ತಂದ ದೈತ್ಯನ ರಥ
ಚಕ್ರದಿಂದಲಿ ಕೊಂದು ರಥವ ಬೇಗದಿ ತಂದೆ ೨
ಧನಪನ ಕೋಶದೊಳಿಪ್ಪ ಮೌಳಿಯ ವೇಗ –
ದಿಂದಲಿ ನೀ ತಂದು ವಾದಿರಾಜರಿಗಿತ್ತೆ
ಅನುಮಾನವಿಲ್ಲದೆ ತಂದು ಶ್ರೀರಾಜೇಶ
ಹಯಮುಖನನ ಚರಾಗ್ರಣಿಯಾಗಿ ಮೆರೆದೆ ೩

 

೪೪
ಭೂತರಾಜ ಕರುಣಿಸೊ ಭೂತರಾಜ
ಮುಂದೆ ಬೆಳ್ಳಿಯ ಗಿರಿನಾಥನೆಂದೆನಿಸುವ ಭೂತರಾಜ ಪ
ವಾದದಿಂದಲಿ ಸೋತು
ವಾದಿರಾಜರ ಸೇರ್ದೆ
ಭೂತಾದಿಗಳ ಬೇಗದಿಂದಲೋಡಿಸುವಿ ೧
ವಾದಿರಾಜರ ಬಲಭಾಗದಿ ನಿಂತಿರ್ದೆ
ಬಂದ ಜನರಿಗಿಷ್ಟ
ಕೊಟ್ಟು ಪೋಷಿಸುವಿ ೨
ರಾಜೇಶ ಹಯಮುಖ-
ನೊಲಸಿ ಕೊಂಡಿಹ ಋಜು
ಗಣನಾಥ ಶ್ರೀವಾದಿರಾಜ ಕಿಂಕರವರ್ಯ ೩

 

ರಿಂದ ಸೋದೆ
೧೪
ಭೂವರಾಹ ಪಾಲಿಸೆನ್ನ ಶ್ಯಾಮಲಾಂಗ ಕಾಮ ತಾತ
ಪಾವಮಾನ ಕರಗಳಿಂದ ಸೇವ್ಯಮಾನ ಚಾರು ಚರಣ ಪ
ಧರೆಯನ್ನೆತ್ತಿ ತೊಡೆಯೊಳಿಟ್ಟು
ಕರಗಳಿಂದಲಪ್ಪಿಕೊಂಬ
ಕರುಣದಿಂದ ಸುರರಿಗಭಯ
ವಿತ್ತ ದಿವ್ಯ ಕೋಲಮೂರ್ತಿ ೧
ಎರಡನೆಯ ಹಿರಣ್ಯಾಕ್ಷ
ದೈತ್ಯನನ್ನು ಮಥಿಸಿದಂಥ
ಧರಣಿಯಲ್ಲಿ ನರಕವನ್ನು
ಜನಿಸಿದಂಥ ಮಂಗಲಾಂಗ ೨
ದೇಶದೊಳ್ ಶ್ರೀಮುಷ್ಣವೆನಿಪ
ಕ್ಷೇತ್ರದೊಳಗೆ ನೆಲಸಿದಂಥ
ಶೇಷ ಶಿರದೊಳ್ ಚರಣವಿತ್ತ
ರಾಜನಾಥ ಹಯಮುಖಾತ್ಮ ೩

 

೧೫
ಯಾತರ ಭಯವಿದೆ ಹರಿಯ ಕಿಂಕರಗೆ
ಪಾರ್ಥಸೂತನ ದಯವಿದ್ದರೆ ಸಾಲದೇ ಪ
ನಿತ್ಯಕರ್ಮವ ಮಾಡಿ ಹರಿಯ ಪೂಜಿಪಗೆ
ಮತ್ತೆ ಇಂದ್ರಿಯಗಳ ಜಯಿಸಿಕೊಂಬವಗೆ
ಹರಿದಿನ ವ್ರತವನ್ನು ಬಿಡದೆ ಮಾಡುವಗೆ
ಸರ್ವ ಜೀವೋತ್ತಮ ಪ್ರಾಣನೆಂಬವಗೆ
ಜಗದೊಳು ಶ್ರೀ ಮಧ್ವರಾಯರ ಮತವೇ
ನಿಗಮಾರ್ಥವೆಂದು ಡಂಗುರವ ಸಾರುವಗೆ
ತೇಜಿಯನೇರ್ದು ದುರ್ಜನರ ಸಂಹರಿಸುವ
ರಾಜೇಶ ಹಯಮುಖನ ಒಲಿಸಿಕೊಂಬವಗೆ ೧

 

೩೧
ರಜತಪೀಠವೆ ಭೂ ವೈಕುಂಠ
ಇಲ್ಲಿ ಮಧ್ವ ಪುಷ್ಕರಿಣಿಯೆ ವಿರಜೆ
ಅಲ್ಲಿ ರಾಜಿಪರಷ್ಟಮಹಿಷಿಯರು
ಇಲ್ಲಿ ರಾಜಿಪರಷ್ಟಯತಿಗಳು ಪ
ಅಲ್ಲಿ ಎಲ್ಲರೊಳಿರುವದು ಭಕ್ತಿ
ಇಲ್ಲಿ ಎಲ್ಲಿ ನೋಡಲು ವಿರಕ್ತಿ
ಅಲ್ಲಿಪ್ಪ ಜನರಿಗೆ ಮುಕ್ತಿ
ಇಲ್ಲಿ ಎಲ್ಲಿ ನೋಡಿದರಲ್ಲಿ ಭುಕ್ತಿ ೧
ಅಲ್ಲಿ ಮತ್ತಿಲ್ಲ ಜನರಿಗೆ ಪುಣ್ಯ
ಇಲ್ಲಿ ಲಭಿಸುವುದೆಲ್ಲವೂ ಪುಣ್ಯ
ಅಲ್ಲಿ ಹೋದವರಿಗಿಲ್ಲಾಗಮನವು
ಇಲ್ಲಿ ಬಂದವರಿಗಿಲ್ಲ ಮರು ಜನನ ೨
ಪೂಜೆಯ ವೈಕುಂಠದೊಳಗೆ
ಸರ್ವಜನರು ಮಾಡಬೇಕೆಂದಿಹರು
ರಾಜೇಶ ಹಯಮುಖಕೃಷ್ಣ
ಮಧ್ವಾಚಾರ್ಯರೊಬ್ಬರ ಪೂಜೆಗೊಂಬ ೩

 

೪೨
ವರ ಮಂತ್ರಾಲಯದೊಳು ಘನವಾಗಿ ನೆಲಸಿರ್ಪ
ಪರಮ ಸದ್ಗುರುವರ್ಯ ಶ್ರೀ ರಾಘವೇಂದ್ರ ಪ
ಭುವನಾದ್ರಿಯೊಳಗುದುಭವಿಸುತ್ತ ರವಿಯಂತೆ
ತವಕದಿಂ ದಿನದಿನವು ತೇಜವನು ಬೆಳಗುವೆ ೧
ನರನಂತೆ ಮೆರೆಯುವ ಜಯಮುನಿಕೃತಶಾಸ್ತ್ರ
ಪರಿಮಳವನು ನೀನು ಪಸರಿಸಿದೆಯಲ್ಲವೆ ೨
ಮಧ್ವಮತವೆಂಬ ದುಗ್ಧಸಾಗರದೊಳು |
ಉದ್ಭವಿಸಿದ ಪೂರ್ಣ ಹಿಮಕರ ತೇಜ ೩
ಅಸುರನಂದನನಾಗಿ ನರಹರಿಯನೆ ಕಂಡ
ಮಸ್ಕರಿವರ ಸಿರಿ ಗುರುರಾಘವೇಂದ್ರ ೪
ರಾಜೇಶ ಹಯಮುಖ ಭಜಕರೊಳಗೆ ನೀನು
ರಾಜಿಪ ಸುರತರುವಂತಿರ್ಪೆ ಗುರುವೆ ೫

 

ಶ್ರೀ ವೇದವ್ಯಾಸರು ಕೀಟದ ಮೂಲಕ
೧೬
ವರದರಾಜ ಪಾಲಿಸೆನ್ನ ಧರಣಿಯೊ-
ಳ್ನಿನ್ನಂಥ ರಸಿಕಾಗ್ರೇಸರರುಂಟೆ
ವರದರಾಜ ಪಾಲಿಸೆನ್ನ ಪ
ಕಾಂತೆಯ ಕಾಂತಿಯೊಳಿರುವೆ ನಿನ್ನಯ ಭಾವವರಿಯದ
ರಸಿಕರಾರಿಹರು
ಪರಮ ಪುರುಷ ನಿನ್ನ ಚರಣ ಸೇರಿದ ಭಕ್ತ ಜನರೆಲ್ಲ ರಸಿಕರಾಗಿಹರು ೧
ಅಜನ ಪೂಜೆಯ ಕೈಕೊಂಡಿರುವಿ
ದ್ವಿಜವರರಿಗಿಷ್ಟವ ಪಾಲಿಸಿರುವಿ
ಅಜನ ನೀನೆಂದು ತೋರಿಸುವಿ
ಯಜ್ಞಭೋಜನವನ್ನು ಮಾಡುತಿರುವಿ ೨
ಚೇತನಾಚೇತನಗಳಿಗೆ ಶ್ರೇಷ್ಠನರಸೂತ ರಾಜೇಶ ಹಯಮುಖ ನಿನ್ನ
ವಾತವಿಧಿ ಹರ ಮುಖ್ಯರು ಭಜಿಸುತಲಿ ನಿತ್ಯ
ಮುಕ್ತರಾದರು ಎಂದೊರೆಯುವುದು ಶ್ರುತಿಯು ೩

 

೨೨
ವಾಣಿ
ವೀಣಾಪಾಣಿ
ಬ್ರಹ್ಮನರಾಣಿ
ಪಾಹಿ
ಕಿಂಕರ ಪಾಪಕೃಪಾಣೀ ಪ
ಖ್ಯಾತೇ ವೇದಮಾತೇ
ನಾಗಭೂಷಣ ಮಾತೇ
ಮಾಲಾಪುಸ್ತಕ ಶೋಭಿತಹಸ್ತೇ ೧
ಭವ್ಯೇ ಭವ್ಯಕೃತ್ಯೇ ಭವ
ಮುಖ್ಯರಿಗಭಯವನಿತ್ತೇ
ಮತ್ತೆ ಗಿರಿಜಾದಿಗಳಿಗೆ ನೀನತ್ತೆ ೨
ಶುಕ್ಲೇ ಪರಶುಕ್ಲೇ
ಶುಕ್ಲಹಂಸದಿ ಮೆರೆದಿರ್ಪೆ
ಶುಕ್ಲ ರಾಜೇಶ ಹಯಮುಖ ಭಕ್ತೇ ೩

 

೩೯
ವಾದಿರಾಜರ ಪದವ ಸ್ಮರಿಸುವೆ ಅ-
ಗಾಧ ಮಹಿಮರ ಸದಯ ಹೃದಯರ ಪ
ಮೋದತೀರ್ಥರಾಗಮದ ಸಾರವ
ಸಾಧು ಜನರಿಗೆ ಬೋಧಿಸಿರ್ಪರ
ವಾದದಿಂದಲಿ ವೀರಶೈವರ
ಗೆದ್ದು ಮುತ್ತಿನ ಪೀಠವೇರ್ದರ ೧
ಪಾದದಿಂದಲಿ ಸಕಲ ತೀರ್ಥವ
ಮೋದದಿಂದ ಚರಿಸಿ ತೀರ್ಥ ಪ್ರ-
ಬಂಧ ಗ್ರಂಥವ ರಚಿಸಿ ಮಾನ್ಯರಾ
ಗಿರ್ದ ಗುರುಗಳನೆಂತು ಬಣ್ಣಿಪೆ ೨
ರಾಜಸಭೆಯೊಳು ರಾಜಭೀಷ್ಮಕ
ತನುಜೆಯರಸನ ಸ್ತುತಿಪ ಕಾವ್ಯವ
ಈ ಜಗತ್ತಿನೊಳ್ ಶ್ರೇಷ್ಠ ಕಾವ್ಯವೆಂ
ದಿದನೆ ಗಜದೊಳು ಮೆರೆಸಿದರಸನು ೩
ಒಂದುನೂರ ಇಪ್ಪತ್ತು ವರ್ಷದೊಳ್
ಸಿಂಧುಶಯನನ ಸೇವಿಸುತ್ತಲಿ
ಇಂದ್ರದತ್ತ ವಿಮಾನದಿಂದಲಿ
ಸತ್ಯಲೋಕವನೈದಿದ ಗುರುವರ ೪
ಯುಕ್ತಿಮಲ್ಲಿಕಾ ಗ್ರಂಥದಿಂದ
ರಾಜೇಶ ಹಯಮುಖಾನಂತ ಗುಣಗಳ
ಪೊಗಳುತಿರ್ಪರ ರಾಗಶೂನ್ಯರ
ಋಜು ಗಣೇಶರ ಜ್ಞಾನಪೂರ್ಣರ ೫

 

ವಿಶ್ವಾಧೀಶರು ಸೋದೆಯ ಮಠದ
೪೫
ವಿಶ್ವಾಧೀಶರ ನಮಿಪೆ
ಗುರುವರ್ಯ ವಿಶ್ವಪ್ರಿಯ ಶಿಷ್ಯರ ಪ
ಆಂಗ್ಲದೇಶದ ರಾಣಿಯು ನಿಮ್ಮಯ
ಶಾಸ್ತ್ರ ಸಂಪದ ಮಹಿಮೆಯನು
ಆಂಗ್ಲೇಯ ಜನರಿಂದ ತಿಳಿದು ತಾ ಬಹುಮಾನ-
ವಾಂಗ್ಲೇಯ ಭಾಷೆಯೊಳಿತ್ತಳಾದರದಿ ೧
ನ್ಯಾಯಸುಧೆಯ ಪಾಠವ ಯತಿವರ್ಯ
ವಿಬುಧಪ್ರಿಯರೆ ಮುಖ್ಯರು
ಆಯಾಸವಿಲ್ಲದೆ ಪಠಿಸುತ್ತ ನಿಮ್ಮೊಳು
ಪಂಡಿತಾಗ್ರಣಿಯಾದರು ೨
ಅರುವತ್ತನೆಯ ವರ್ಷದಿ ಪ್ಲವಾಬ್ದದಿ
ರಾಜೇಶ ಹಯಮುಖನ ಚರಣವ ಸ್ಮರಿಸುತ್ತ
ಸ್ಮರತಾತನನೈದಿದ ಕರುಣಾಸಮುದ್ರರ
ಚರಣಕ್ಕೆ ನಮಿಸುವೆ ೩

 

ಅದೇ ಬಾಲಕನ ಪಿತ ಬಂದು ಪಾತ್ರವ
೧೭
ವಿಷ್ಣು ಮೂರ್ತಿಯೆ ಪಾಹಿ ಭುಕ್ತಿಪುರೇಶ
ಜಿಷ್ಣು ನಂದನಸೂತ ವೃಷ್ಟಿಕುಲೇಶ ಪ
ಮೃಷ್ಟಾನ್ನ ಭೋಜನವಿತ್ತ ಸಜ್ಜನರಿಗೆ
ಕಷ್ಟವ ಪರಿಹರಿಸೀಷ್ಟವ ಕೊಡುವಿ |
ಶ್ರೇಷ್ಠ ನಾನೆಂಬುವ ಹೆಮ್ಮೆಯುಳ್ಳವರಿಗೆ
ಇಷ್ಟವ ಕೊಡದೇನೆ ದೂರ ಕೂಡಿಸುವಿ ೧
ಆರ್ತನಾಗುತ ನಿನ್ನ ಪಾದವ ಸೇರಿದ
ಭಕ್ತರಭೀಷ್ಟವ ಪೂರ್ತಿಗೊಳಿಸುವಿ |
ಶಕ್ತ ಅಶಕ್ತನು ಎಂಬ ಭೇದಗಳಿಲ್ಲ
ಭಕ್ತನೆಂದರೆ ಸಾಕು ಪಾಲಿಸುತಿರುವಿ ೨
ಬಾಲಕನಾದರು ಕೊಟ್ಟ ನೈವೇದ್ಯವ
ಆಲಸ್ಯವಿಲ್ಲದೆ ಸ್ವೀಕರಿಸಿರುವಿ
ಬಾಲಕ ಪಿತ ಬಂದು ಪಾತ್ರವ ಕೇಳಲು
ಜಲದೊಳಗುಂಟೆಂದು ಸ್ವಪ್ನದಿ ನುಡಿದಿ ೩
ಬೇಸಿದ ಮಾವಿನ ಫಲದೊಳು ಪ್ರೇಮವೊ
ಬಾಲನ ನುಡಿಯೊಳಗಾಯ್ತೇನೊ ಪ್ರೇಮ |
ದಾಸರೊಳ್ನಿನಗಿಪ್ಪ ಪ್ರೇಮವ ಜಗಕೆಲ್ಲ
ಬಾಲನಿಂದಲಿ ತೋರ್ದೆ ವಿಷ್ಣುಮೂರುತಿಯೆ ೪
ರಾಜೇಶ ಹಯಮುಖಕಿಂಕರಾಗ್ರಣಿ ವಾದಿ-
ರಾಜರಾಯರಿಗಿಷ್ಟವಿತ್ತು ಪಾಲಿಸಿದಿ |
ಇಷ್ಟದ ಶಿಶುಗಳು ಬೇಡದಿದ್ದರು ಮಾತೆ
ಇಷ್ಟವಿತ್ತಂತೆ ನೀ ಪೊರೆಯುವೆ ದೊರೆಯೆ ೫

 

ಇಲ್ಲಿ ವರ್ಣಿತರಾದ ವಿಷ್ಣುತೀರ್ಥರು
ಇ. ಗುರುನಮನ
೩೩
ವಿಷ್ಣುತೀರ್ಥರೆ ಪಾಲಿಸೀ ನಿರಂತರ
ಪೂರ್ಣಪ್ರಜ್ಞರ ಸೋದರ
ಮಧ್ಯಗೇಹರ ಸುತನೆನಿಸಿರ್ದ ಗುರುವರ ಪ
ಮಧ್ವಶಾಸ್ತ್ರವು ಜೀರ್ಣವಾಗುವ ಸಮಯದಿ
ಬದ್ಧಾದರದಿ ಬಂದುದ್ಧರಿಸುವ ಗುರುವರ ೧
ಅಣ್ಣನೊಳ್ನಿಮಗಿಪ್ಪ ಶ್ರದ್ಧೆಯ ಕಂಡರೆ
ಜಾನಕೀಪತಿಯೊಳು ಲಕ್ಷುಮಣನಂತೆ ೨
ವಾಲ್ಮೀಕಿಗಳ ಶಿಷ್ಯಕುಶಲವರಂತೆಯೇ
ಚೆಲ್ವ ವ್ಯಾಸರು ಅನಿರುದ್ಧರು ನಿಮಗೆ ೩
ಪಾಜಕ ಕ್ಷೇತ್ರದೊಳ್ಸನ್ಯಾಸಾಶ್ರಮಿಯಾಗಿ
ರಾಜೇಶ ಹಯಮುಖ ಕೃಷ್ಣನರ್ಚಿಸಿದ ೪

 

೪೧
ವೃಂದಾವನಾಚಾರ್ಯರ ಭಾವಿಸಮೀರರ
ವೃಂದಾವನದಿ ಶಾಸ್ತ್ರದ ವೃಂದವನೆ ಪಠಿಸುತ
ಚಂದದಿ ಲೋಕದೊಳಗತ್ಯಂತ ಪೂಜ್ಯರ
ನಮಿಸುವೆನು ವಿಶ್ವಪ್ರಿಯರ ಪ
ವಿಷ್ಣುತೀರ್ಥರ ಪೀಠದಿ ವಾಸಿಸಿ ವಾಸಿಷ್ಠ
ಕೃಷ್ಣನ ದಯದಿ ದ್ವಾದಶಾಬ್ದಗಳಲ್ಯುಪೋಷಣ
ಕೃಷ್ಣನೊಳಗರ್ಪಿಸಲು ಪ್ರೇಮದಿ ಕೃಷ್ಣ
ಭೂಪನು ರತ್ನ ಮಂಟಪವನ್ನೆ ನಿಮಗರ್ಪಿಸಿದನು ೧
ಕೇರಳ ನೃಪವರ್ಯನು ನಿಮ್ಮಯ ಶಿಷ್ಯವರ್ಯ-
ನಾಗಿರುತಿಹನು ಸಾರಮಧ್ವಾಗಮವ
ನಿಮ್ಮೊಳಗೋದಿ ಪಂಡಿತವರ್ಯ-
ನೆನಿಸುತ ವೀರ ವಿಷ್ಣುಭಕ್ತನಾದನು ೨
ರಾಜೇಶ ಹಯಮುಖನ ಕಿಂಕರರೊಳು
ನಿಮಗೆಣೆ ನಾ ಕಾಣೆನು
ರಾಜರಾಜರು ಪೊಂದದಿರುತಿಹ ನಾಕಿನಾಥನ
ಪದವನೇರುವ ಗುರುವರ್ಯರನೆ ನಮಿಪೆ ೩

 

೪೦
ವೇದವೇದ್ಯರ ವಂದಿಸುವೆನು
ವಾದಿರಾಜರ ಪ್ರಿಯ ಶಿಷ್ಯರ
ವೇದವೇದ್ಯರ ವಂದಿಸುವೆನು ಪ
ವಾದಿರಾಜರ ಪಾಶ್ರ್ವದಲ್ಲಿಹ
ವಾದಿಗಳ ದುರ್ವಾದ ಕೆಡಿಸಿದ
ಮಧ್ವಶಾಸ್ತ್ರವನುದ್ಧರಿಸಿದ
ವೇದನಿಧಿಗಳ ತಾತರಾಗಿಹ ೧
ರೂಪ್ಯಪೀಠದಿ ಕೃಷ್ಣಮಂದಿರ
ರೂಪಳಿದುದನುದ್ಧಾರ ಮಾಡಿದ
ಪಾಪರಹಿತರ ಕೋಪಶೂನ್ಯ ಸೋ-
ದಾಪುರದೊಳಗೆ ಇರ್ಪ ಯತಿಗಳ ೨
ಯಾದವೇಶ ರಾಜೇಶ ಹಯಮುಖ
ಪಾದಕಮಲವ ಬಿಡದೆ ಸ್ಮರಿಸುವ
ಸಾಧುಜನರಿಗಾಧಾರರಾಗಿಹ
ವಾದಿರಾಜರ ಪದದೊಳಿರ್ಪರ ೩

 

೧೮
ವೇದವ್ಯಾಸ ಮೂರುತೀ ಬದರಿಯೊಳಗಿರುತಿ
ಮೇದಿನಿಯೊಳ್ ನಿನ್ನ ಕೀರುತಿ ಪಸರಿಸುತಿರುತಿ ಪ
ಮಧ್ವಮುನಿಗಾನಂದದಿ ವೇದ ಶಾಸ್ತ್ರಾಂಬುಧಿಯೊಳು
ಇಂದಿಗಾಯ್ತೊಂಭತ್ತು ಶತವು ಚಂದದಿಂ ವತ್ಸರಗಳು ೧
ಕೀಟದಿಂದ ರಾಜ್ಯಭಾರ-
ವಾಟದಂತೆ ನಡೆಸಿದಿ |
ಪುಟ್ಟತನದಿ ಮಾತೆಗೊಲಿದು
ಶ್ರೇಷ್ಠ ನೀನೆಂದೆನಿಸಿದಿ ೨
ರಾಜ ಧರ್ಮತನಯನಿಂದ
ರಾಜಸೂಯ ನಡೆಸಿದಿ |
ರಾಜನಾಥ ಹಯಮುಖ ನೀ
ಮೂಜಗದಿ ಮೆರೆಯುತಿ ೩

 

ಶೇಷಶಾಯಿಯಾದ ವಿಷ್ಣುವು ಲಕ್ಷ್ಮಿಯೊಂದಿಗೆ
೨೫
ಶೇಷಮೂರುತಿ ಪೋಷಿಸೆನ್ನ
ಹಾಸಿಗೆಯಾಗಿ ನೀ ಹರಿಯ ಪೊತ್ತಿರುವಿ ಪ
ಶ್ವೇತದ್ವೀಪದ ಮಧ್ಯದಲ್ಲಿ
ದೇವನರಸಿಯ ಕೂಡುತ್ತಲಿರಲು
ಭಕ್ತಿಯಿಂದಲಿ ಕಂಗಳಿಂದ
ಬಿಡದೆ ನೋಡುತಲಿಪ್ಪ ಸಮಯ೧
ಮಗಳ ಲಜ್ಜೆಯ ಕಂಡು ಪಿತನು
ಹಾಲಿನ ತೆರೆಯಿಂದ ಕಣ್ಣನೆ ಮುಚ್ಚಿಸಿಹನು
ಮಗಳ ಮೇಲಿನ ಪ್ರೀತಿ ಪಿತಗೆ
ಯೆಣಿಸಲಾಗದು ಲೋಕದೊಳಗೆ ೨
ರಾಜೇಶ ಹಯಮುಖ ಹರಿಗೆ
ಮಂಚವೆಂದರೆ ನೀನೆ ಖರೆಯು
ರಾಜರಾಜರಿಗಿಂಥ ಮಂಚ
ದೊರಕದೆಂದೆಂದಿಗೂ ದೇವ ೩

 

೩೨
ಸೋದಾಕ್ಷೇತ್ರವೆ ದಿವ್ಯ ಕ್ಷೇತ್ರ
ಬಂದ ಜನರಿಗಿಷ್ಟವನೀವ ಕ್ಷೇತ್ರ
ವಾದಿರಾಜರು ವಾದದಿಂದ ವಾದಿಸಿ
ವೀರಶೈವರ ಗೆದ್ದ ಕ್ಷೇತ್ರ ಪ
ಒಂದು ಭಾಗದಿ ರೂಪ್ಯಪೀಠ ಮ-
ತ್ತೊಂದು ಭಾಗದಿ ಸೋದಾಕ್ಷೇತ್ರ
ಕುಂದು ಎಳ್ಳಷ್ಟಿಲ್ಲದೆ ತೋರ್ಪು
ದೆಂದು ಹರಿಭಕ್ತರಾದರಿಸುವರು ೧
ಒಂದೇ ಸ್ಥಾನದಿ ಶ್ವೇತದ್ವೀಪ ಮತ್ತೆ
ವೈಕುಂಠನಂತಾಸನಗಳು
ಒಂದಾಗಿ ಶೋಭಿಸುತಿರುವ
ಚೆಂದವೇನೆಂದು ಪೇಳಲಿ ಮನವೆ ೨
ರಾಜೇಶ ಹಯಮುಖ ಚರಣ
ಕಂಜ ಮಧುಪನಂತಿರುವ ಶ್ರೀಭಾವಿ-
ಕಂಜಜಾತನ ಪದಕರುಹ
ವಾದಿರಾಜರಾಯರ ದಿವ್ಯ ಕ್ಷೇತ್ರ ೩

 

ಕಥೆ ಭಾಗವತ ಪುರಾಣದಲ್ಲಿ ಬರುತ್ತದೆ
೧೯
ಹರಿ ಬಂದ ನರಹರಿ ಬಂದ
ಕರಿಯ ಮೋಚಿಸಿದ ಸಿರಿವರ ಬಂದ ಪ
ದೇವ ಬಂದ ಪಾಂಡವರ ಭಾವ ಬಂದ
ಗೋವುಗಳ ಕಾವ ಕೃಪಾಸಿಂಧು ಬಂದ ೧
ಖ್ಯಾತ ಬಂದ ಪಾರ್ಥಸೂತ ಬಂದ
ವಾತಸುತ ಭೀಮಸೇನಪ್ರಿಯ ಬಂದ ೨
ಮುನಿ ಬಂದ ಜಾಮದಗ್ನ್ಯ ಬಂದ
ಭಾನುಕೋಟಿಸುಪ್ರಕಾಶ ವ್ಯಾಸ ಬಂದ ೩
ರಾಜ ಬಂದ ದಶರಥಸುತ ಬಂದ |
ತೇಜಿಯೇರಿ ಮೆರೆದ ಕಲ್ಕಿದೇವ ಬಂದ ೪
ಶ್ರೀಶ ಬಂದ ಮಹಿದಾಸ ಬಂದ
ಭಾಸುರಾಂಗ ದೇವ ಶ್ರೀನಿವಾಸ ಬಂದ ೫
ನೀಲ ಬಂದ ಬಾಲಕೃಷ್ಣ ಬಂದ
ಬಾಲಧ್ರುವರಾಯಗೊಲಿದ ರಂಗ ಬಂದ ೬
ಕೋಲ ಬಂದ ಬಲಭದ್ರನ ತಮ್ಮ ಬಂದ
ರಾಜೇಶ ಶ್ರೀಹಯಮುಖ ದೇವ ಬಂದ ೭

 

ನಾನೇನ ಮಾಡಿದೆ

ನಾನೇನ ಮಾಡಿದೆ ತಪ್ಪುಗಳನ್ನ
ನಾನೇನ ಮಾಡಿದೆ ದೇವರದೇವ ಪ
ನಿನ್ನ ದಾಸರ ತಪ್ಪನೆಣಿಸದೆ ಪೊರೆಯುವೆ
ನಾನೊಬ್ಬ ದಾಸನೆಂದರಿದು ನೀ ಪೊರೆಯೊ ೧
ಭೃಗುವಂತೆ ನಿನ್ನಯ ಎದೆಗೆ ತುಳಿಯಲಿಲ್ಲ
ನಗವೈರಿಯಂತೆ ಯುದ್ಧವ ಮಾಡಲಿಲ್ಲ ೨
ಅಂಗಾಧಿಪತಿಯಂತೆ ಕೊಂದೆನೆಂದರಿತಿಲ್ಲ
ಗಂಗೆಯ ಸುತನಂತೆ ಫಣಿಗೆ ಹೊಡೆಯಲಿಲ್ಲ ೩
ನಿನ್ನಣ್ಣನಂತೆ ನೀ ವಂಚಿಸಿದೆಯೆಂದು
ನಿನ್ನ ಬಿಟ್ಟನ್ಯ ದೇಶಕೆ ಪೋಗಲಿಲ್ಲಾ ೪
ಭಾವ ಫಲ್ಗುಣ ವಿಪ್ರಶಿಶುವ ಪಾಲಿಪೆನೆಂಬ
ಭಾವದಿ ನುಡಿದಂತೆ ನಿನಗೇನು ಪೇಳಿಲ್ಲ ೫
ನಿನ್ನಾ ಕುವರರು ಸುಭದ್ರೆಯ ಮದುವೆಯ
ಚೆನ್ನಾಗಿ ತಡೆದಂತೆ ತಡೆಯಲಿಲ್ಲವೊ ನಾನು೬
ವಸುದೇವ ದೇವಕಿ ಮುಖ್ಯರಂತೆ ನಿನ್ನ ಮಾ-
ನುಷನೆಂದು ನಾನೇನು ತಿಳಿದುಕೊಂಡಿಲ್ಲ ೭
ಮಲಗಿದ್ದ ಸಮಯದ ಕಂಡು ಬಲಿಯು ಬಂದು
ಮೌಲಿಯ ಕದ್ದಂತೆ ಕದ್ದುಕೊಂಡಿಲ್ಲ೮
ರಾಜೇಶಹಯಮುಖ ಭಜಕರೊಳಗೆ ಮತ್ತೆ
ಋಜುಗಳಲ್ಲದೆ ನಿತ್ಯ ಭಕ್ತರಾರಿಹರು ೯

 

ಹಾಡಿನ ಹೆಸರು :ನಾನೇನ ಮಾಡಿದೆ
ಹಾಡಿದವರ ಹೆಸರು :ಮುರಳಿ
ರಾಗ :ಆರಭಿ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ಗಿರಿಧರ ದಿವಾನ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ