Categories
ರಚನೆಗಳು

ಸದಾನಂದರು

೧೨೫
ಅನ್ನಪೂರ್ಣೇಶ್ವರಿ ನಿನ್ನ ಪಾದಕೆ ಶರಣು |
ಮನ್ನಿಸಿ ಕರುಣದಿ ಎನ್ನನುದ್ಧರಿಸವ್ವ ಪ
ಮಾತೆ ನೀನೆನ್ನನು | ಪ್ರೀತಿಯೊಳ್ ಸಲಹವ್ವ ||
ದಾತೆಯೆ ಭವಭಯ (ದ) | ಭೀತಿಯೊಳೆನ್ನ ಪೊರೆ ೧
ಸರಸಿಜಾಂಬಕಿ ಯೆನ್ನ | (ಸ) ರಸೆ (ಸುಗುಣೆ) ರನ್ನೆ |
ಕರುಣದಿ ಪೊರೆವ ಭಾರ | ಗಿರಿಜೆ ನಿನಗಪಿ೯ಸಿದೆ೨
ಭಾವಭಕ್ತಿಯೊಳ್ನಿನ್ನ | ಸೇವೆಯೊಳಿರುವರನ್ನೆ ||
ದೇವ ವಿಶ್ವೇಶ್ವರ ಪ್ರಿಯೆ | ದೇವಿ ಸಂತಸದಿ ಕಾಯೆ ೩
ಸಾಧುಸಂತರ ಸೇವೆ | ಎಂದೆಂದಿಗಾದರು ||
ಕುಂದದೆ ಸಾಗುವರೆ | ಕಂದನಿಷ್ಟವ ಸಲಿಸೆ ೪
ವಾಸುದೇವನ ಭಗಿನಿ | ಲೇಸಿನೊಳಗ್ರಜನ ||
ದಾಸನಾದೆನ್ನ (ವ) ರೊಳ್ | ಸಾಸಿ (ರ) ಸೇವೆಗೈಸೆ ೫
ಭಗವತ್ಸೇವೆಯೊಳೆನ್ನ | ಸುಗುಣದ ಪರಂಪರೆ ||
ಸೊಗಸಿನೊಳ್ ಹೊಂದಿರುವ | ಅಗಣಿತ ವರವೀಯೆ ೬
ತಾಯೆನ್ನಿಷ್ಟವನು ಪ್ರೀಯದಿಂ ಸಲಿಸುವ ||
ರಾಯ ಶ್ರೀಕೃಷ್ಣಾನುಜೆ | ಕಾಯೆ ಸದಾನಂದದೊಳು೭

 

೧೩೨
ಇನ್ನಾದರೂ ದಯಬಾರದೆ ನಿನಗೆ ಸಂ-|
ಪನ್ನ ಮೂರುತಿ ಶ್ರೀಹರಿ ಪ
ಮುನ್ನ ಮಾಡಿದ ಸುಕೃತದಿಂದಲಿ |
ನಿನ್ನ ನಾಮಸ್ಮರಣೆ ದೊರಕಿತು ||
ಚೆನ್ನಕೇಶವರಾಯ ಪಾಲಿಸು |
ನಿನ್ನ ನಂಬಿದನಾಥನನುದಿನ ಅ.ಪ
ಘೋರ ಸಂಸಾರದಿ ಪಾರಗಾಣದೆ ಬಿದ್ದೆ |
ಧಾರಿಣಿಯಲಿ ಬಳಲಿದೆ ||
ನೀರಜಾಕ್ಷನೆ ನಿಗಮವೇದ್ಯನೆ |
ಪಾರ ರಹಿತನೆ ನಿರ್ಗುಣಾತ್ಮಕ |
ವೀರ ನರಹರಿ ರೂಪ ತಾಳ್ದು ಕು |
ಮಾರನನು ರಕ್ಷಿಸಿದ ದೇವನೆ ೧
ಕಂದ ಧ್ರುವನು ಬಂದು ನಿಂದು ಮಧುವನದಲ್ಲಿ |
ಚಂದದಿಂ ತಪಗೈಯಲು ||
ಬಂದು ಧ್ರುವಪದವಿಯನು ಕರುಣಿಸು |
ತಂದು ಕಂದನ ಕಾಯ್ದ ದೇವಮು-|
ಕುಂದ ಲಕ್ಷ್ಮೀವರನೆ ಪೊರೆಯೈ |
ನಂದನಂದನ ದೇವ ಪಾಲಿಸು ೨
ಅಂಬರೀಷನ ಕಾಯ್ದೆ | ಕುಂಭಿನೀ ಪತಿಯಾದೆ |
ನಂಬಿದ ದ್ರೌಪದಿಗಭಯವಿತ್ತೆ ||
ಶಂಭುಮಿತ್ರನೆ ಪಾಲಿಸೀಕ್ಷಣ |
ನಂಬಿದಜಮಿಳನಿಂಗೆ ಮೋಕ್ಷವ |
ಸಂಭ್ರಮದಿ ಕೊಡುವಂತೆ ಭಕ್ತಕ-|
ದಂಬಪಾಲಕ ಶ್ರೀನಿವಾಸನೆ ೩

 

೧೩೩
ಇವನೆಂತ ಮಾಯಗಾರ | ಗೋಪಮ್ಮ ಕೇಳೆ |
ಭುವನದೊಳಿವನೆ ಶೂರ ಪ
ಕವಿಗಳಿಗಾದರು | ವಿವರಿಸಲಸದಳ |
ಭವಬಂಧಗಳ ನಿನ್ನ | ಕುವರನೆ ಬಿಡಿಸುವ ಅ.ಪ
ಮಕ್ಕಳ ಕೂಡಿಕೊಂಡು | ನಮ್ಮನೆಗಿವ-|
ನೊಕ್ಕಲಿಕ್ಕುವನು ಬಂದು ||
ಹೊಕ್ಕು ಕರೆಯದ ಮುನ್ನ | ಚಿಕ್ಕ ಕರುಗಳ ಬಿಟ್ಟು |
ಪಕ್ಕನೆ ಓಡುವ | ಸಿಕ್ಕನು ಯೆಮಗಿವ ೧
ಸುರಿಯುವ ಪಾಲ್ಮೊಸರ | ಬೆಣ್ಣೆಯ ಮುದ್ದೆ |
ಕರದೊಳಗೀಡಾಡುವ ||
ಜರೆದಡಳುತ ನಕ್ಕು | ಮರೆಸುವ ನಮ್ಮನು |
ಒರಗಿದ ಮಕ್ಕಳ | ಕರೆದು ಡಬ್ಬಿಸುವನು ೨
ಉಂಡುದಕಾರಳುವರು | (ದನ ಕರು) ಗಳ |
ಹಿಂಡಿದ ಪಾಲ್ಮೊಸರು ||
ಕಂಡು ಇದೇನೆನೆ | ಭಾಂಡವ ಬಿಸುಡುತ್ತ |
ಚೆಂಡಾಟದೊಳು ನೆಲ-| ನುಂಡುಂಡು ಕೆಸರಾಯ್ತು ೩
ನಿಲುಹುಗಳಲ್ಲಿಟ್ಟರು | ಕೈಗಳನೆತ್ತಿ |
ನಿಲುಕದಿದ್ದರೆ ಭಾಂಡವು ||
ಕಲುಗುಂಡಿ(ನಲಿ) ಕುಟ್ಟ | ಬಲು ಉದ್ದದವರ ಮೇಲ್ |
ನಿಲುತ ಪಾತ್ರವ ಕೊಂಡು | ಮೆಲುವ ನಾಟಕಧಾರಿ ೪
(ಬಲು) ಗತ್ತಲೆಯೊಳಿರಿಸೆ | ರತ್ನಾಭರಣ |
ಬೆಳಗನ್ನು ಮೇಳವಿಸೆ ||
ಕೆಳೆಯರ ಕರೆದಾಗ | ತಳವನ್ನು ತೋರಿಸಿ |
ಕಳೆದು ತರಿಸುವ ನಾವಿ | ನ್ನುಳಿ (ವು)ಪಾಯವ ಕಾಣೆ ೫
ದೊರೆಯದಿದ್ದರೆ ಬೈವನು | ಮನೆಗೆ ಕಿಚ್ಚ-|
ನ್ನಿರಿಸುವೆನೆನ್ನುವನು ||
ಕೆರಳಿ ಹೊಸ್ತಿಲ ಮೇಲೆ | ಸುರಿಯುವ (ಹೊಲಸನು) |
ವೊರಳೊಳು ವಿಷ್ಠಿಸಿ | ಮರೆಯೊಳಡಗುವ೬
ಛಲವುಳ್ಳಡೆಮ್ಮ ಮೇಲೆ | ಗೋಧನವನ್ನು |
ನಿಲದೀಗ ತರಿಸಲ್ಲ(ದೆ) ||
ಸುಲಿಗೆÉಗಾರಗೆ ತಕ್ಕ | ಬಲುಮೆಯೊಳ್ ಬುದ್ಧ್ದಿಯ-|
ನೊಲಿದು ಪೇಳುತಲೆಮ್ಮ | ಕುಲವನುದ್ಧರಿಸವ್ವ ೭
ಎಂದು ನಾನಾ ತೆರದಿ | ನಾರಿಯರು ಗೋ-|
ವಿಂದನನತಿ ಮುದದಿ ||
ಸುಂದರ ಮೂರ್ತಿಯಾ | ನಂದದಿಂದಲೆ ನೋಡಿ |
ಇಂದುವದನೆ ಗೋಪಿ | ಗೆಂದರೀ ಪರಿ ಚಾಡಿ೮
ಮಕ್ಕಳಾಟವ ತಾಯಿಗೆ | ಪೇಳುವದಿದು |
ತಕ್ಕ ಪದ್ಧತಿ ಧಾತ್ರಿಗೆ ||
ಚಿಕ್ಕವನಿಗೆ ಬುದ್ಧಿ | ಪಕ್ಕನೆ ಪೇಳುವೆ |
ಬೆಕ್ಕಸಗೊಳದಿರಿ ಅಕ್ಕು ಸದಾನಂದ ೯

 

೧೩೪
ಎಂಥ ಪಾಪಿ ನಾನು ಹರಿ ಹರಿ | ಗೋಪಾಲಕೃಷ್ಣ |
ಎಂಥ ಪಾಪಿ ನಾನು ಹರಿ ಹರಿ ಪ
ಎಂಥ ಪಾಪಿ ನಾನು ಪೂರ್ವಭ | ವಾಂತರದೊಳಾರ್ಜಿಸಿದ ಕರ್ಮ |
ತಿಂತಿಣಿಗಳ ಬಾಧೆಗಳನು | ಅಂತ್ಯಗಾಣದಾದೆನಯ್ಯ ಅ.ಪ
ಪರರಿಗುಪಕಾರಗಳ ಮಾಡದೆ | ನಾನನುದಿನದೊಳು |
ಪರಹಿತಾರ್ಥ ಮನದೊಳೆಣಿಸದೆ ||
ದುರಿತಬಾಧೆಯೊಳಗೆ ಬಿದ್ದು | ಪರಿಪರಿಯಾಸೆಯೊಳ್ ಬಳಲ್ದು |
ನರಕದುಃಖದೊಳು ಗೋಳಿಡಲು | ಬರುವರಾರು ಕಾಣದಿರಲು ೧
ಪರರ ಆಪತ್ತುಗಳಿಗೊದಗದೆ | ಪರ ಪೀಡನಾಗಿ |
ಇರುತ ಮಾಯಾಬಲೆಯೊಳಗೆ ಬಿದ್ದೆ ||
ದುರಿತ ಕೋಟಿ ಋಣ ರೂಪಗಳು | ನಿರುತ ಬಾಧಿಸುತ್ತಲಿರಲು |
ಕರೆದರಾರು ಬಾರದಿನಿತು | ಪರಿಯ ಭವಕಿಲ್ಬಿಷವನುಣುವ ೨
ದಾನ ಧರ್ಮಗಳನು ಮಾಡದೆ | ದರಿದ್ರನಾಗಿ |
ಶ್ವಾನನಂತೆ ನಾನು ತೊಳಲಿದೆ ||
ಏನು ಸಾಹಸಗಳನು ಮಾಡೆ | ಪಾನ ಭೋಜನಗಳಿಗಿಲ್ಲ |
ತಾನು ತನ್ನದೆಂದಧರ್ಮ ನಾ | ಏನನೆಂದರು ಕೇಳರಯ್ಯ ೩
ಹೆಣ್ಣು ಹೊನ್ನು ಮಣ್ಣಿನಾಸೆಯ | ಜಾಲದೊಳು ಸಿಕ್ಕಿ |
ಕಣ್ಣು ಕಾಣದಾದೆನಲ್ಲಯ್ಯ ||
ಹಣ್ಣಿ ಕಾಮಕ್ರೋಧಲೋಭ | ವೆಣ್ಣೆ ಮಹಾಮದಮತ್ಸರದಿ |
ಅನ್ಯರೆಂದು ಪರರ ನಿಂದಿಸಿ | ಪುಣ್ಯಹೀನನಾದೆನಯ್ಯ ೪
ಸರ್ವನಾಮ ಸರ್ವಕಾರಣ | ಸರ್ವಾತ್ಮನಾಗಿ |
ಸರ್ವಶಬ್ದ ಸ್ಪರ್ಶರಸ ಗುಣ ||
ಸರ್ವರೂಪ ಸರ್ವಗಂಧ | ಸರ್ವ ಜಗದ್ವಂದ್ಯ ನಿನ್ನ |
ಸರ್ವವಿಧದಿ ಭಜಿಸಿ ನಿಜ | ಸರ್ವೇಶ ಶ್ರೀನಿವಾಸನೆನದೆ ೫

 

ಉ. ಲೋಕನೀತಿ
೧೬೬
ಎಂದಿಗಂತ್ಯಗಳಹುದೊ ದಂದುಗದ ಭವಕೆ |
ಸಿಂಧುಶಯನನೆ ಗೋವಿಂದ ನಿಜಕೆ
ಮುಂದೆ ಕಾಣುವುದಿಲ್ಲ, ಹಿಂದೆ ಕಲಿಮಲವೆಲ್ಲ |
ಅಂದಿನಿಂದೀವರೆಗು ಸುಖವೆ ಯಿಲ್ಲ ||
ಬಂದ ಬಂದಘಪಾತಕಂಗಳಿಗೆ ಕಡೆಯಿಲ್ಲ |
ತಿಂದು ಮುಗಿಯುವುದಿಲ್ಲ ಋಣ ಬಾಧೆಯೆಲ್ಲ ೧
ನಡೆಯಲಾರೆನು ಮುಂದೆ, ಎಡವಿ ಬೀಳೆನು ಹಿಂದೆ |
ದೃಢಚಿತ್ತನಾಗುತೀವರೆಗು ಬಂದೆ ||
ಕಡುತರದ ಭವಭಯವು ಅಡಿಗಡಿಗೆ ಹೆಚ್ಚುವುದು |
ಎಡೆಬಿಡದ ಚಿಂತೆಗಳು ಕಡೆಗಾಣದಿಹುದು ೨
ಎನ್ನದೆಂಬುವುದೆಲ್ಲ ಗನ್ನಗಾತಕವಾಯ್ತು |
ಬನ್ನ ಬಡಿಸುವ ಮಾಯೆ ಬೆನ್ನ ಬಿಡದು ||
ಕುನ್ನಿಯಂದದಿ ಜನ್ಮವೆನ್ನಹುದು ಬರಿದಾಯ್ತು |
ಅನ್ನಕಂಟಕ ಭೂಮಿ ಭಾರವಾಯ್ತು ೩
ತಂದೆ ತಾಯಿಗಳೆಂದು, ಬಂಧುಬಾಂಧವರೆಂದು |
ಹೊಂದಿರುವ ಸೌಭಾಗ್ಯವಂದಿಗಿಂದು ||
ಕುಂದೆ ಹೆಚ್ಚುಗಳಾಯ್ತು ತಿಂದು ಮಲವಾದಂತೆ |
ಬಂದಿಕಾರನವೋಲ್ ನಾನೆಂಬ ಚಿಂತೆ ೪
ಏನು ಮಾಡಿದಡೇನು ನ್ಯೂನ ಪೋಗಲೆ ಇಲ್ಲ |
ದೀನವೃತ್ತಿಯೊಳು ದಿನ ಕಳೆದುದೆಲ್ಲ ||
ಶ್ರೀನಿವಾಸನೆ ನಿಜದಿ ನಾನೆಂಬ ಲೀಲೆಯೆಂ-|
ದೇನನುಸುರುವುದಿನ್ನು ತಾನಾದುದನ್ನು ೫

 

೧೬೭
ಎಚ್ಚೆತ್ತು ನಡೆಯಿರಿ ದಿನದಿ | ನಮ್ಮ |
ಅಚ್ಯುತನ ಧ್ಯಾನದೊಳಿರಿ ಅನುದಿನದಿ ಪ
ಎಚ್ಚೆತ್ತು ನಡೆಯಿರಿ ಮುಚ್ಚು ಮರೆಯದೆ ನಿಮ |
ಗುಚ್ಚರಿಸುವೆ ಕಲಿಯ ತುಚ್ಛ ದುರ್ಗುಣಗಳ ಅ.ಪ
ಧರ್ಮಮಾರ್ಗಕೆ ವಿಘ್ನವಹುದು | ದು- |
ಷ್ಕರ್ಮ ಮಾರ್ಗಕೆ ನಿರ್ವಿಘ್ನವಾಗಿಹುದು ||
ಮರ್ಮವನರಿವರೆ ಬಿಡದು | ನಿತ್ಯ |
ಕರ್ಮಕೆ ಕ್ಷುಧೆಯು ತಾ ಬಾಧಿಸುತಿಹುದು ೧
ಕುಲದಾಚಾರದೊಳು ಮನಸಿಲ್ಲ | ಅನ್ಯ |
ಕುಲದಾಚರಣೆಗೆ ಮನಸಿಡುವರೀಗೆಲ್ಲ ||
ಜಲುಮಸಾರ್ಥಕದರಿಕೆ ಇಲ್ಲ | ಮನ |
ವೊಲಿದಂತೆ ನಡೆದು ನಿಜ ಸುಖದಾಸೆಯಿಲ್ಲ ೨
ಗುರುಕೃಪೆ ಪಡೆಯುವರಿಲ್ಲ | ಗುರು |
ಹಿರಿಯರೊಳ್ ಭಯಭಕ್ತಿ ಕಾಲದೊಳಿಲ್ಲ ||
ಬರೆವ ಶಾಸ್ತ್ರದ ಗೋಷ್ಠಿಯಿಲ್ಲ | ಸಾರ |
ವರಿತ ಮಹಾತ್ಮರ ಸಂಸರ್ಗವಿಲ್ಲ ೩
ಭೂತಂಗಳನು ಪೂಜಿಸುವುದು | ನವ |
ನೂತನದಡುಗೆ ಪ್ರೇತಗಳಿಗುಣಿಸುವುದು ||
ಆತುರ ಪರರನ್ನದೊಳಿಹುದು | ಸತ್ಯ |
ನೀತಿ ಪೇಳ್ವರಿಗೆ ಘಾತಕವೆಣಿಸುವುದು ೪
ಪಿತೃ ಮಾತೃ ಭಕ್ತಿಗಳಿಲ್ಲ | ತನ್ನ |
ಮತಿಗೆಟ್ಟು ಅನ್ಯರ ದೂಷಿಪರಲ್ಲ ||
ಅತಿಥಿ ಪೂಜೆಗಳೆಂಬುದಿಲ್ಲ | ಪರ |
ಗತಿಯ ಸಾಧನೆಗಳೀ ಕಾಲದೊಳಿಲ್ಲ ೫
ಹರಿಹರರೆನ್ನುವ ಭೇದ | ಸಾರ |
ವರಿಯದೆ ಮಾಳ್ವರು ತಮ್ಮೊಳು ವಾದ ||
ಗುರುವಿದ್ದರೆಲ್ಲ ನಿರ್ವಾದ | ಇದ |
ನರಿಯದವನೆ ಪಿತೃಗಳಿಗೆ ವಿರೋಧ ೬
ಗುರು ಬ್ರಹ್ಮ ವಿಷ್ಣು ಮಹೇಶ | ಜೀವ |
ರೆರಕವಾದವನೆ ಗುರು ಸರ್ವೇಶ ||
ಗುರುವಲ್ಲದೆ ಪೋಗದು ದೋಷ | ಜಗ |
ದ್ಗುರುವನ್ನು ಸೇರಿದಡವನೆ ನಿರ್ದೋಷ ೭
ಶಾಸ್ತ್ರ ಪುರಾಣವೆ ಸ್ವಾರ್ಥ | ಅದ |
ರರ್ಥವರಿಯದಿಹ ನರನೆ ನಿರರ್ಥ ||
ತತ್ತ್ವವನರಿತು ಯಥಾರ್ಥ | ನಿಜ |
ಕೃತ್ಯದಿ ನಡೆಯಲವಗಹುದು ಇಷ್ಟಾರ್ಥ ೮
ಭಗವಂತನೆಂಬರ್ಥವನ್ನು | ಪೇಳ್ವ |
ನಿಗಮ ಬೋಧೆಯ ಕೇಳಿ ತಿಳಿದು ನಡೆದವನು ||
ಜಗಕೆಲ್ಲ ತಾನೆ ತಾನಹನು | ನಮ್ಮ |
ಶ್ರೀ ಗುರುದೇವ ಸದಾನಂದಮಯನು ೯

 

೧೩೫
ಏನು ನಿರ್ದಯನಾದೆ | ಭಕತ ವತ್ಸಲ ಕೃಷ್ಣ |
ಕೃಪೆಯಿಲ್ಲವೇನೊ ನಿನಗೆನ್ನ ಮ್ಯಾಲೇ ಪ
ದೀನ ವತ್ಸಲನಾಗಿ ಯೆನ್ನ ಪೊರೆಯುವ ಭಾರ |
ಇನ್ಯಾರಿಗಿಹುದಯ್ಯ | ಮನ್ನಿಸೆಲೊ ದೇವಾ ಅ.ಪ
ಒಂದೆ ಚಿತ್ತಿನೊಳು ನೀ | ನಂದೆ ನಾನಾಗಿ ಭವ |
ಬಂಧನಕೆ ಹೊಂದಿಸಿದುದೇನಿದಯ್ಯಾ |
ಮಂದ ಬುದ್ಧಿಯೊಳು ನಿಜದಂದವನೆ ಮರೆ ಮಾಡಿ |
ಕೊಂಡು ಹುಟ್ಟಿಸುವ ಭ್ರಮೆಯಿಂದೆರಿ ನಿವಾರಿಸದೆ ೧
ಭೇದವಾದಾಟದೊಳು ಹಾದಿ ತಪ್ಪಿಸುತ ಶಿಲ |
ಬಾಧೆಯೊಳು ಪೀಡಿಸುವದೇನಿದಯ್ಯಾ |
ಮಾಧವನೆ ನಿನ್ನ ನಿಜ ಬೋಧೆಯಿಂದೆನಗಾಗಿ |
ಆಧಾರವಾಗದೆ ನಿರಾಧಾರನಾಗುವರೆ ೨
ಸೃಷ್ಟಿ ಸ್ಥಿತಿ ಲಯವೆಂಬ ಕಟ್ಟಳೆಗಳಿಲ್ಲದಿಹ |
ಶ್ರೇಷ್ಠ ಪರ ವಸ್ತು ನೀನಾಗಿರುತ್ತಾ |
ಅಷ್ಟ ಪುರಪತಿಯೆನಿಸಿ ಗುಟ್ಟಿನೊಳಗಿರುತಿಹುದ |
ಬಿಟ್ಟು ಮೈ ದೋರೊ ದಯವಿಟ್ಟು ಸದಾನಂದ ೩

 

(ಎ) ಮಂಗಳ ಪದಗಳು
೧೮೬
ಏಳಯ್ಯ ಶ್ರೀ ಗುರು ಸಚ್ಚಿದಾನಂದನೆ |
ಏಳಯ್ಯ ಬೆಳಗಾಯ್ತು ಏಳು ಬೇಗ ಪ
ಏಳು ಪನ್ನಗಶಯನ ಏಳು ಗರುಡಗಮನ |
ಏಳೈ ಕರುಣಾಕರನೆ ಏಳು ಲಕ್ಷ್ಮೀವರನೆ ಅ.ಪ
ಭಾರತೀಶನು ಋಷಿವರರ ಸಮ್ಮೇಳದಿ |
ಪರಿಪರಿ ವೇದಸಾರದ ಘೋಷದಿ ||
ಹರಿಯೆ ನಿನ್ನಯ ದಿವ್ಯ ಚರಣಪೂಜೆಯ ಮಾಡಿ |
ಕರವ ಮುಗಿದು ಶಿರವೆರಗಿ ಸಂಸ್ತುತಿಸುವ ೧
ಚಂದ್ರಶೇಖರನು ನಂದನರೊಡಗೂಡಿ |
ಇಂದುವದನೆ ಗೌರಿಯೊಂದಿರುತ ||
ನಂದಿಯನೇರಿ ಆನಂದದಿ ಪ್ರಮಥರ |
ವೃಂದದೊಡನೆ ಬಂದು ನಿಂದು ಹಾರೈಸುವ ೨
ಜಾತವೇದ ಪಿತೃಪತಿ ಯಾತುಧಾನ ಪ್ರ-|
ಚೇತಸ ಮಾತರಿಶ್ವ ಧನಾಧಿಪರ ||
ವ್ರಾತದೊಳಮರೇಶ ಹಸ್ತಿವಾಹನನಾಗಿ |
ಪತ್ನಿಯನೊಡಗೊಂಡು ಸ್ತೋತ್ರಮಾಡುವನಯ್ಯ ೩
ಮನು ಯಕ್ಷ ಗಂಧರ್ವ ಮುನಿಸಿದ್ಧ ಸಾಧ್ಯರು |
ಪನ್ನಗ ಗರುಡ ಕಿನ್ನರ ತುಂಬುರರು ||
ಸನಕ ಕಿಂಪುರುಷ ಸನಂದ ವಿದ್ಯಾಧರರು |
ನೆನೆವರ್ ನಾರದರ್ಗೂಡಿ ಚಿನ್ಮಯಾತ್ಮಕ ರಂಗ ೪
ಯಾಗನಿಷ್ಠರು ನಿಗಮಾಗಮಜ್ಞರು ಭವ |
ರೋಗವರ್ಜಿತ ಸರ್ವತ್ಯಾಗಿಗಳು ||
ಭಾಗವತರು ನಿಜಭೋಗ ಸದಾನಂದ |
ಯೋಗಿಗಳ್ ನಿಜಸುಖಸಾಗರರೊಡಗೂಡಿ ೫

 

೧೩೬
ಓಂ ನಮೋ ನಾರಾಯಣಾ |
ಜಯ ಜಯ ನಮೋನಮೊ |
ಓಂ ನಮೋ ನಾರಾಯಣ ಪ
ಓಂ ನಮೊ ಜಯ ಜಯತು ಶ್ರೀವರ |
ಓಂ ನಮೋ ಸಜ್ಜನ ದುರಿತ ಹರ |
ಓಂ ನಮೋ ರಘುಪತಿ ಮುರಾಂತಕ |
ಓಂ ನಮೋ ಜಗದೀಶ ಪಾಲಿಸೊಅ.ಪ
ಶರಣು ಶರಣೆನುತಲಾನೂ | ಶರಣರಧಾತನೇ |
ಸ್ಮರಿಸುವೆ ತವ ಲೀಲೆಯನೂ |
ಪರಮ ಪುರುಷನೆ ನಿನ್ನ |
ಶರಣನಲ್ಲವೆಯೆನ್ನೊಳು |
ಕರುಣಾ ವಾರುಧಿ ನಿಂದು |
ಪೊರೆಯೊ ಅನಾಥ ಬಂಧು ೧
ಆದಿ ದೇವನೆ ನಾ ನಿನ್ನ | ಆತುರದ ವಿ-|
ನೋದದಿ ಜನಿಸಲೆನ್ನಾ |
ಬಾಧಿಸುವ ಮಾಯಾಗುಣಂಗಳು |
ಹಾದಿ ತಪ್ಪಿಸಿ ಭವ ಶರಧಿಯೊಳು |
ಮಾಧವನ ಮೈ ದೋರದಿರೆ ಯೆನ |
ಆಧರಿಸಿ ಸಲಹುವರ ಕಾಣೆನು ೨
ಮಂದರಧರ ಮುಕುಂದಾ | ಗೋಪಿಯ ಕಂದಾ |
ವಂದಿಸುವೆನು ಗೋವಿಂದಾ |
ಸಂದೇಹ ಮಾಡದೆ |
ಕಂದನ ಮೇಲ್ ಕೃಪೆ |
ಯಿಂದು ಮೈ ದೋರೆನ್ನಾ |
ತಂದೆ ಸದಾನಂದ ೩

 

೧೬೮
ಕಣ್ಣ ತೆರೆದು ನೋಡಬಾರದೇ | ದೇಹ |
ಮಣ್ಣುಪಾಲಾದ ಮೇಲ್ ನಿನ್ನಿಚ್ಛೆಯಿಹುದೇ ಪ
ಪಡದವರ್ಯಾರೆಂದು ನೋಡು | ನಿನ್ನ |
ಬುಡವ ಶೋಧಿಸಿ ತತ್ವ ಸಾಧನೆ ಮಾಡೋ |
ಜಡಬುದ್ಧಿಗಳನೆಲ್ಲ ದೂಡೊ | ಮುಂದೆ
ದೃಢಚಿತ್ತದೊಳು ಮಾಯಾ ಬಲೆಯ ಹೋಗಾಡೊ ೧
ರುಣ ರೂಪವೆಲ್ಲ ಸಂಸಾರ | ತನ್ನ |
ರುಣ ತೀರಿದರೆ ಇದರೊಳಗಿಲ್ಲ ಸಾರಾ |
ಪ್ರಣವ ರೂಪನೆ ತಂತ್ರಧಾರಾಯೆಂಬ
ನೆಲೆಯನರಿತು ಸೇರೋ ಮಾಧವನೂರಾ ೨
ಜಡಜಾಕ್ಷನಂಘ್ರಿಗೆ ಮಣಿದೂ | ಗೂಢ |
ನೋಡದಾತ್ಮ ಫಲವ ಸಮರ್ಪಣೆ ಗೈದೂ |
ಕಡೆಯದಿಷ್ಟಾರ್ಥವ ಪಡದೂ | ಜಗ
ದೊಡೆಯ ಶ್ರೀ ಗುರು ಸದಾನಂದದಿಂದಿಹುದೂ ೩

 

೧೩೭
ಕಪಟ ನಾಟಕ ಸೂತ್ರಧಾರಿ ಸದಾನಂದ |
ಕೃಪೆಯಾಗೆನ್ನೊಳು ಜಗತ್ಪತಿ ಶ್ರೀ ಗೋವಿಂದ ಪ
ಮಾತೆ ಪಿತನು ಸತಿ ಜಾತ ಬಾಂಧವರೆಂಬ |
ರೀತಿಯಿಂದಖಿಳ ಯೋನಿಗಳ ಮಾಯಾ |
ಆತುರ ಸಂಸಾರ ಶರಧಿಯಿಂದೆತ್ತುವ |
ಧಾತ ನಿರ್ಭೀತ ಅನಾಥ ಸಂಜೀವಾ ೧
ಸತ್ಯವೆಂದೆನುತಲಾ ನಿತ್ಯ ಭೋಗಂಗಳಾ |
ಕೃತ್ಯದಿ ಸುಖ ದುಖ್ಖಾಟವಿಯೊಳಗೇ |
ಸತ್ತು ಹುಟ್ಟುತ ಮತ್ತೆ ಹತ್ತಿ ನಾಕದಿಂದತ್ತಾ |
ಸುತ್ತಿರುವ ಕಾರಣ ಕರ್ತು ಮೈದೋರೋ ೨
ಓಂಕಾರದಾದಿ ಮಧ್ಯಾಂಶ ತ್ರೈಗುಣದಿ ನೀ |
ಲಂಕರಿಸಲು ತಾಮಸರಜಾದಾ |
ಶಂಕೆಗಳಡಗೆ ನಿಶ್ಯಂಕೆ ಚಿದಾನಂದ |
ವೆಂಕಟರಾಯನೆ ದಯಮಾಡಯ್ಯಾ ೩
ಆದಿ ಮಧ್ಯಾಂಶದೋಳ್ನೀನೆ ಯೆನಗೆ ದಾತ |
ಭೇಧವ ವೇಧಿಸಿ ಆಧರಿಸೋ |
ಶ್ರೀಧರ ಸಾಕ್ಷಾತ್ವಿನೋದ ಸಾರೂಪ್ಯದ |
ಪಾದ ಸಾಮೀಪ್ಯ ಸಾಲೋಕ್ಯವಿತ್ತೂ ೪
ಕರುಣವಾರುಧಿ ತವ ಚರಣದ್ವಯಂಗಳ |
ನಿರತ ಸೇವಕನೊಳು ಕರುಣವ ಮಾಡೋ |
ಶಿರಿಯರಸನೆ ಗುರುರಾಯ ವೈಕುಂಠದೊ |
ಳ್ತರಳನ ಸಲಹಯ್ಯ ದೊರೆ ಶ್ರೀನಿವಾಸಾ ೫

 

೧೩೮
ಕಿಂಕರನು ನಾನೊಂದು ಬಿನ್ನಪವ ಪ
ಪಂಕಜಾಕ್ಷನೆ ನಿನ್ನೊಡನೆ ನಾ |
ಮಂಕುಗಳ ನುಡಿಯೊರೆಯೆನೆಂದಿಗು |
ಸೋಂಕಿಕೊಂಡಿಹದೊಂದವಸ್ಥೆಯ |
ಶಂಕೆಯನು ಪರಿಹರಿಸೊ ಕರುಣದಿ ಅ.ಪ
ಕರ ಮುಗಿದು ಬೇಡುವೆನು ಭಾಗ್ಯನಿಧೀ | ತಾಪತ್ರಯವ ತರ -|
ಹರಿಸಲಾರದೆ ಕರಗುವೆನು ದಿನದಿ ||
ಗರುಡವಾಹನನೆನ್ನ ದೃಢವನು |
ಪರಿಕಿಸಲು ನಾನೇಸರವನೀ |
ಶರಣರಕ್ಷಕನೆಂಬ ಬಿರುದನು |
ನೆರೆದು ಪಾಲಿಪುದೆನ್ನ ಮುದದಲಿ ೧
ದೃಢದೊಳಗೆ ಭಜಿಸುವೆನು ತವಚರಣ | ಸೌಭಾಗ್ಯಸುಖದಿಂ |
ಪೊಡವಿಯೊಳಗಿರಿಸೆನ್ನ ಭಯಹರಣ ||
ಎಡೆಬಿಡದೆ ಅನುದಿನದಿ ವಾಸದ |
ಕಡಲೊಳಗೆ ಬಿದ್ದಿರುವ ಎನ್ನನು |
ಪಿಡಿದೆಳೆದು ಇಷ್ಟಾರ್ಥ ಸಂಪದ |
ಸಡಗರದಿ ಕೊಡು ಜಡಜಲೋಚನ ೨
ಗುಡುಗುಡೆನುತಿದೆ ಮಿಂಚು ಗುಡುಗುಗಳು | ಈ ದಿನದೊಳೆಲ್ಲ |
ಎಡೆಬಿಡದೆ ತುಂಬಿಹವು ಮೋಡಗಳು ||
ತಡೆಯದೀ ಕ್ಷಣ ಮಳೆಯ ಸುರಿದರೆ |
ಬಡವನೊಡವೆಗಳೆಲ್ಲ ಕೆಡುವುದು |
ಅಡಸಿದಾಪತ್ತಿನೊಳು ಕಾಯುವ |
ಒಡೆಯ ನೀನೆ ಗತಿ ಸದಾನಂದ ೩

 

೧೩೯
ಕ್ಷಮಿಸೊ ಯೆನ್ನಪರಾಧಗಳನು | ಗೋಪಾಲಕೃಷ್ಣ |
ಕ್ಷಮಿಸೊ ಯೆನ್ನಪರಾಧಗಳನು ಪ
ಕುಮತಿ ನಾನು ನಿನ್ನ ಮಾಯಾ
ಭ್ರಮಿತನ ಕರುಣದೊಳೀಕ್ಷಿಸೊ ಅ.ಪ
ಸೃಷ್ಟಿಸಿದಾತನು ಪಾಲಿಸುವಾತನು |
(ಇಷ್ಟನು) ನೀನೆ ಗೋವಿಂದರಾಯ ||
ಅಷ್ಟಿಷ್ಟಲ್ಲದ ಕಷ್ಟದ ಭವದೊಳ-|
ಗಿಷ್ಟಾದರು ದಯೆಯಿಟ್ಟು ಪೊರೆಯೊ ಹರಿ ೧
ತಂದೆಯು ತಾಯಿಯು ಬಂಧುವು ನೀನೆ |
ಮಂದರಧರ ಸರ್ವೇಶ್ವರನೆ ||
ಕಂದನು ಬೇಡುವೆನಿಂದು ತವಾಂಘ್ರಿಯ |
ನಂದದ ಸ್ಮರಣೆಯ ಕುಂದದೆ ಪಾಲಿಸೊ ೨
ಸತಿಸುತರಿಹಪರವೆನಗೆ ನೀನೆ ಸ-|
ದ್ಗತಿಮತಿ ನೀನೆ ಸರ್ವೇಶಯೀಶ ||
ಶ್ರುತಿ ನುತ ಎನ್ನಯ ಜತೆಯನ್ನಗಲದೆ |
ಸತತ ಮೈದೋರೊ ಸದಾನಂದ ಗುರುವರ ೩

 

(ಊ) ಗುರುನಮನ
೧೭೮
ಗುರುಕರುಣಾಮೃತ ಶರಧಿಯ ತೆರೆಯೊಳು |
ಮುಳುಗಿ ಮೀಯೊ ಮನುಜ ಪ
ಪರಿಪರಿ ಹಿಂದಣ ದುರಿತ ಬಂಧಗಳ |
ಹರಿಸಿ ಸುಸ್ಥಿರ ಪದ (ಕರುಣಿಸುವಂಥ) ಅ.ಪ
ತೀರ್ಥಯಾತ್ರೆಗಳ ಸುತ್ತಿ ಸುಳಿದಿರಲು |
ಸ್ವಾರ್ಥವಾಗದಣ್ಣ ||
ಚಿತ್ತದಿ ನಿರ್ಮಲ ಭಕ್ತಿಯೊಳ್ನಿಜ ಸುಖ |
ಮುಕ್ತಿಸಂಪದಗಳ ಅರ್ತಿಯೊಳ್ ಪಡೆಯಲು ೧
ಯಜ್ಞಶತಂಗಳ ಊರ್ಜಿಸಿ ಮಾಡಲು |
ಮೂರ್ಜಗಪತಿ ದಯವಿಡನಣ್ಣ ||
ಸಜ್ಜನರಂದದಿ ಪ್ರಾಜ್ಞರ ಸಂಗದಿ |
ಅರ್ಜುನ ಸಖನ ಪದಾಬ್ಜವ ಸೇರಲು ೨
ಲಕ್ಷ ಸಂಖ್ಯೆ ಗೋದಾನವ ಮಾಡಲು |
ಪಕ್ಷಿವಾಹನ ದಯವಿಡನಣ್ಣ ||
ಅಕ್ಷಯ ಸುಖವ ತನ್ನಿಚ್ಛೆಯೊಳ್ ಪಡೆದು ಮು-|
ಮುಕ್ಷುವಾಗಿ ನಿಜ ಮೋಕ್ಷವ ಪಡೆಯಲು ೩
ಇನ್ನೂರ್ ಮುನ್ನೂರ್ ಕನ್ಯಾದಾನದಿ |
ಚೆನ್ನ ಶ್ರೀಕೃಷ್ಣನೊಲಿಯನಣ್ಣ ||
ತನ್ನೊಳವರಿಯುತ ಪನ್ನಗಶಯನನ |
ಸನ್ನಿಧಿ ಭಾಗ್ಯವನುಣ್ಣುತಿರುವರೆ ೪
ವೇದಶಾಸ್ತ್ರ ಪುರಾಣವನೋದಲು |
ಮಾಧವ ಮೆಚ್ಚುವನಲ್ಲಣ್ಣ ||
ಆದಿಮಧ್ಯಾಂತವಿಲ್ಲದ ಪದವಿಯೊಳ್ ಸ-|
ದಾನಂದನಾಗಿ ವಿನೋದದೊಳಿರುವರೆ ೫

 

೧೭೯
ಗುರುವರನೆ ಲಾಲಿಸೊ |
ಸ್ಥಿರ ಸುಖದೊಳ್ ಪಾಲಿಸೊ ಪ
ಗುರುವರ ತವಚರಣಕೆ ಶಿರವೆರಗುತ |
ಕರವ ಮುಗಿವೆ ನಿನ್ನಂತಿರಿಸೆನ್ನ ನಿಜದೊಳ್ ಅ.ಪ
ಸೃಷ್ಟಿಸಿದವನೆ ಯೆನ್ನಿಷ್ಟಾರ್ಥವೀವನೆ |
ಶ್ರೇಷ್ಠನೆನ್ನಿಸುವನೆ ||
ಸೃಷ್ಟಿ ಸ್ಥಿತಿಲಯವೆಂಬ ಕಟ್ಟಳೆಗಧೀಶನಾಗಿ |
ಅಷ್ಟಮೂರ್ತಿಯೆನಿಸಿ ಜಗವ | ಗುಟ್ಟನಿಂದಲೆ ಪೊರೆವ ೧
ನಿನ್ನನಾ ಸೇರಿದೆಯಿನ್ನಾವ ಭಯವಿದೆ |
ಮನ್ನಿಸೆನ್ನಗಲದೆ ||
ಎನ್ನನುದ್ಧರಿಸುವ ಭಾರ ನಿನ್ನದಾದ ಮೇಲೆ ನಾನು |
ಧನ್ಯನಾಗಿ ಭಿನ್ನವಡಗಿ ಮಾನ್ಯನೆನಿಸಿ ಕಾಯ್ದ ೨
ಸವಿಸವಿದು ಸೊಗಸಿದೆ, ತವ ಬೋಧಾಮೃತವದೆ |
ಭವಭಯವು ಹರಿದಿದೆ ||
ಪಾವನನಾದೆನು ಮುಕ್ತಿ ಶ್ರೀವಧು ಸತ್ಕರುಣದಿಂದ |
ದೇವರ ದೇವನೆ ಶಿವ ಸದಾನಂದನಾಗಿರುವ ೩

 

೧೧೮
ಜಯದೇವ ಜಯದೇವ ಜಯ ಲಂಬೋದರ |
ಜಯ ಶಂಭು ಸತಿಗತಿ ಪ್ರಿಯ ಸುಕುಮಾರ ಪ
ಜಯತು ಜಯತೆಂಬೆ ನಿನ್ನಯ ಪದವನಾಶ್ರಯಿಸಿ |
ಜಯತು ಪಾಲಿಸೋಯೆನ್ನ ಮನದಿಷ್ಟ ಸಲಿಸಿ ಅ.ಪ.
ಸುರರ ಪೂಜೆಯಗೊಂಡು ಸಂತುಷ್ಟಿಗೊಳದೆ |
ನರರ ಭಕ್ತಿಗೆ ಮೆಚ್ಚಿ ಧರೆಗೆ ನೀನಿಳಿದೆ ||
ಪರಿಪರಿ ಭಕ್ಷ್ಯ ಪಾಯಸ ಕಜ್ಜಾಯಗಳ|
ವರಶುಭ ದಿನ ಚೌತಿಗುಂಬೆ ಲೇಸುಗಳ ೧
ತ್ರಿಭುವನದೊಳು ಸರ್ವರಿಂದ ಸೇವೆಯನು |
ವಿಭವದಿ ಕೈಗೊಳ್ಳುತ್ತೊರೆದ ಶುಭವನು ||
ಅಭಯವನಿತ್ತು ರಕ್ಷಿಸುವೆ ಭಕ್ತರನು |
ಇಭಮುಖ ಗಣಪ ಪಾಲಿಸೊ ಭಾಗ್ಯಗಳನು ೨
ಅನುದಿನ ತವ ಪಾದ ನೆನೆವೆ ಮನ್ಮನದಿ |
ಘನ ದುರಿತವ ದೂರಪಡಿಸು ನೀ ಮುದದಿ ||
ಚಿನುಮಯ ಮೂರ್ತಿಯ ಪದವ ಧ್ಯಾನಿಸುವ |
ಮನಕೆ ಸುಜ್ಞಾನ ಮತಿಯ ಪಾಲಿಸಯ್ಯ ೩
ದಾಸರಿಗೊಡೆಯ ಗಣೇಶ್ವರ ನಿನ್ನ |
ಲೇಸಿನೊಳ್ ಭಜಿಸಿ ಕೇಳುವೆ ಗುಣರನ್ನ |
ದಾಸನೆಂದೆನಿಸಿ ಲೋಕದಿ ರಂಜಿಸೆನ್ನ |
ದೋಷವ ತ್ಯಜಿಸನುದಿನ ಸಲಹೆನ್ನ ೪
ಸಕಲ ಸುಜ್ಞಾನ ಕವಿತೆಗಳ ಮುದದಿ |
ಸಖನಾಗುತೆನ್ನ ನೀ ಪೊರೆಯಯ್ಯ ದಯದಿ ||
ಭಕುತ ವತ್ಸಲ ಶ್ರೀನಿವಾಸನ ಪ್ರಿಯ ನೀ |
ಸುಕುಮಾರ ಕುಡುಮದೊಡೆಯ ಗಜವದನ ೫

 

೧೮೭
ಜೋಜೋ ಯದುಕುಲಾಂಬುಧಿ ಪೂರ್ಣಚಂದ್ರ ||
ಜೋಜೋ ಪದುಮದಳಾಕ್ಷ ಉಪೇಂದ್ರ ಪ
ಜೋಜೋ ವೇದವಂದಿತ ನಿತ್ಯಾನಂದ |
ಜೋಜೋ ಆದಿಮೂರುತಿ ಶ್ರೀಗೋವಿಂದ ಅ.ಪ
ಮಧುಮುಖರಾದ ದುಷ್ಟರನೆಲ್ಲ ಕೊಂದು |
ತ್ರಿದಶ ಗೋದ್ವಿಜರನ್ನು ಸಲಹಬೇಕೆಂದು ||
ಅದಿತಿ ಕಶ್ಯಪರಿಚ್ಚೆ ಪೂರೈಸಲೆಂದು |
ಉದಿಸಿದೆ ವಸುದೇವನರಸಿಯೊಳಂದು ೧
ದೇವಕಿಯುದರದೊಳ್ ನವಮಾಸ ಕಳೆದೆ |
ಶ್ರಾವಣ ಬಹುಳಾಷ್ಟಮಿಯೊಳ್ ದಯೆದೋರ್ದೆ ||
ಕಾವೆ ತ್ರೈಜಗವೆನ್ನುತಲಿ ಮೈದೋರ್ದೆ |
ದೇವ ರೋಹಿಣಿ ನಕ್ಷತ್ರದೊಳು ಧರೆಗಿಳಿದೆ ೨
ಮಕುಟಮಣಿ ಕೇಯೂರ ಕೌಸ್ತುಭ ಭರದಿ |
ಪ್ರಕಟಿಸಿ ತೋರುವ ಹಾರ ಕುಂಡಲದಿ ||
ಭಕುತರಿಗಭಯದ ಕರದ ಕಂಕಣದಿ |
ಸಕಲ ಲೋಕೇಶ ಶೋಭಿಸುವೆ ಸಂಭ್ರಮದಿ೩
ಬೆರಳೊಳೂ ಮುದ್ರಿಕೆ ಮಿನುಗುವ ಚಂದ |
ಉರದಿ ಪೀತಾಂಬರ ಶೋಭಿಸುವಂದ ||
ಸರಪಣಿ ನೇವಳ ಡಾಬುಗಳಿಂದ |
ಪರಿಪರಿ ಶೋಭಿಸಿ ಮೆರೆವೆ ಆನಂದ ೪
ಕಾಲಲಂದುಗೆ ಪಾಡಗ ಗೆಜ್ಜೆ ರವದಿ |
ಮೇಲಾದ ನವರತ್ನ ಖಚಿತ ಭೂಷಣದಿ ||
ಸಾಲಿನೊಳ್ ಸರಗಳ ಪದಕ ಸಂಭ್ರಮದಿ |
ಲೀಲಾವಿನೋದವ ಮಾಳ್ಪೆ ಸಂತಸದಿ ೫
ಗಂಧ ಕಸ್ತುರಿ ಚಂದನಾದಿ ಲೇಪನದಿ |
ಮಂದರ ಪದ್ಮ ತುಲಸಿ ಮಾಲಾ ಭರದಿ ||
ವೃಂದಾರಕರು ಜಯ ಜಯವೆಂಬ ರವದಿ |
ಒಂದಾಗಿ ಸುಮವೃಷ್ಟಿ ಸುರಿವ ಸಂಭ್ರಮದಿ ೬
ಭೇರಿ ನಗಾರಿ ದುಂದುಭಿಯ ನಾದಗಳು |
ಓರಂತೆ ಧ್ವನಿಗೈಯುತಿಹವು ಶಂಖಗಳು ||
ನಾರದ ಮುನಿಪನ ವೀಣಾಗಾನಗಳು |
ನಾರಿ ಲಕ್ಷ್ಮಿಯು ರತ್ನದಾರತಿಯೆತ್ತುವಳು ೭
ಪರಿಪರಿ ಕಪಟನಾಟಕ ಸೂತ್ರಧಾರಿ |
ಮರೆಹೊಕ್ಕ ಶರಣರ ಭವಭಯಹಾರಿ ||
ನಿರತ ಸದಾನಂದ ಭಕ್ತ ಸಂಸಾರಿ |
ಗಿರಿಜೇಶಪ್ರಿಯನೆ ತ್ರೈಜಗದುದ್ಧಾರಿ೮
ತ್ರುವಿತ್ರುವಿ ಯಜ್ಞವಸ್ತುವೆ ಯಜ್ಞಕರ್ತ |
ತ್ರುವಿತ್ರುವಿ ಯಜ್ಞಭೋಕ್ರ‍ತವೆ ಯಜ್ಞ ಭುಕ್ತ |
ತ್ರುವಿತ್ರುವಿ ಸರ್ವಶಕ್ತನೆ ನಿತ್ಯತೃಪ್ತ |
ತ್ರುವಿತ್ರುವಿ ಶಂಖಚಕ್ರಗದಾಪದ್ಮ ಹಸ್ತ ೯
ತ್ರುವಿತ್ರುವಿ ಸರ್ವಾಂತರ್ಯಾಮಿ ನಮಾಮಿ |
ತ್ರುವಿತ್ರುವಿ ಶರಣ ಜನಾರ್ಚಿತಪ್ರೇಮಿ ||
ತ್ರುವಿತ್ರುವಿ ನಿಶ್ಚಿಂತ ಸದ್ಗುಣಧಾಮ |
ತ್ರುವಿತ್ರುವಿ ಪರತರ ಪಾವನರಾಮ ೧೦
ಇಂತೆಂದು ಬಗೆಬಗೆ ಲೀಲಾಟಗಳನು |
ಅಂತರಾತ್ಮನೆ ನಿನ್ನ ತೂಗಿ ಪಾಡುವೆನು |
ಸಂತತ ಪಾಡುತ್ತ ತೂಗುವರನ್ನು (ನೀ) |
ನಂತರ್ಯದೊಳಗಿಟ್ಟು ಪೊರೆವೆನಿನ್ನೇನು ೧೧
ಮರೆವೆಯೊಳ್ ಬ್ರಹ್ಮಾಂಡಮಯನಾಗುತಿರುವೆ |
ಅರಿವಿನೊಳ್ ಪರಂಜ್ಯೋತಿಯಾಗಿ ನೀನಿರುವೆ |
ನಿರತ ಸದಾನಂದ ನೀನೆ ಆಗಿರುವೆ |
ಗುರು ದಾಮೋದರ ಶ್ರೀನಿವಾಸ ಆಗಿರುವೆ ೧೨

 

೧೮೦
ಜ್ಞಾನ ಸಂಜೀವಾ ದಯ ಮಾಡೋ ಬೇಗಾ |
ಮಾನಸಾದಾತೂರ ಕಳವಳಗೊಳದಂತೇ ಪ
ಮೂಢ ಮಾನವ ನಾನು | ರೂಢಿಗೊಡೆಯ ನೀನೇ |
ಕಾಡುವ ದುರಿತಾಗಳೋಡಿಸಿ ಸಲಹಲು ೧
ದುಷ್ಟ ಜನರು ಧರೆಯೊಳು | ಶಷ್ಟಾ (?) ಮಂದಿಗಳಿವರು |
ನಿಷ್ಠೂರದಿಂದೆನಗೆ | ಕಷ್ಟಗೊಳಿಸದಂತೇ ೨
ಸತ್ಯವ ನಡಸಲಕೃತ್ಯಾರು ಬಿಡರು |
ನಿತ್ಯಾ ಚಿತ್ತಕೆ ದುಃಖವೊತ್ತಿ ದೂಡುವರು ೩
ಜೇಷ್ಠಾತ್ರಿ ಸುಖದಿಂ | ದಷ್ಟಾಮದಗಳು ಪುಟ್ಟಿ |
ಧ್ರಷ್ಟರಿಂದ್ಹದಿನೆಂಟು | ಕೆಟ್ಟಾ ದೋಷವ ತ್ಯಜಿಸಲ್ ೪
ಎಂದು ಹೃದ್ಮಂದೀರದಿಂದಾ ನಿತ್ಯಾನಂದಾ |
ಎಂದೂ ರಕ್ಷಿಸೋ ಯೆನ್ನ | ತಂದೆ ಸದಾನಂದ ೫

 

೧೬೯
ತನ್ನ ಅವಗುಣಗಳನು ಅರಿತುಕೊಳ್ಳದೆ ವ್ಯರ್ಥ |
ಅನ್ಯರವಗುಣವ ಪೇಳುವನು ಬಲ್ಲವನೊ ಪ
ಹೊನ್ನು ಮಣ್ಣು ಹೆಣ್ಣಿನಾಸೆ ಸರ್ವರಿಗಿರಲು |
ಭಿನ್ನವಿಲ್ಲದ ನರನೇನ ಪೇಳುವನು ಅ.ಪ
ತನ್ನ ಪೋಷಣೆಗಾಗಿ ಹೀನರನಾಶ್ರಯಿಸಿ |
ಹೀನ ವೃತ್ತಿಯೊಳುದರ ತುಂಬಿಸುತಲಿ ||
ತಾನೆ ಶ್ರೇಷ್ಠನು ಯೆಂದು ಅನ್ಯರನು ಹೀನೈಸೆ |
ಅನ್ಯರಿಂದಲು ಹೀನ ತಾನಾಗದಿಹನೆ ೧
ಪರರಿಗಪಮಾನ ಗೈದರೆ ಪರವ ಹತಗೈವ |
ದುರಿತವನು ತಾನೆ ಸಂಗ್ರಹಿಸಿಕೊಂಡ ||
ನಿರತ ತಾನೆ ಪೂಜ್ಯನೆಂದು ತನ್ನನೆ ಕೊಂದ |
ದುರಿತವನು ತಾನೆ ಹೊರುವವನೆಂಥ ಮರುಳ ೨
ಅರಿಯದ ಜ್ಞಾನಿಗಳ ಪಾಪವೆಷ್ಟಿರಬಹುದು |
ಬರಿದೆ ಮತ್ಸರದೊಳವರನು ನಿಂದಿಸಿ ||
ಪರರು ಗೈದಿಹ ದುರಿತರಾಶಿಗಳ ಹೊರುವಾತ |
ಧರೆಯೊಳವನಿಂದಧಿಕ ಪಾಪಿ ಯಾರಿಹರು ೩
ಪರರ್ಗೆ ಹಿತವನು ಮಾಡಿ ಪರರ ಸನ್ಮಾನಿಸುತ |
ಪರರಿಂಗೆ ಸುಕ್ಷೇಮವನು ಬಯಸುತ ||
ಇರುವನಾವನೊ ಅವಗೆ ಪರರ ಪುಣ್ಯದ ಫಲವು |
ದೊರಕುವದು ಎಂದರಿತು ನಡೆವನೆ ಪುಣ್ಯಾತ್ಮ೪
ಪರಪೀಡೆ ದುಷ್ಕರ್ಮ, ಪರಹಿತವೆ ಸತ್ಕರ್ಮ |
ಪರರ ಪೀಡಿಸುವ ದುರುಳರನೆ ಕೊಂದು ||
ಧರೆಯ ಭಾರವನಿಳುಹಿ, ಶರಣರನು ಬೆಂಬಿಡದೆ |
ಪೊರೆಯುವ ಸದಾನಂದ ಸುಖದಿ ಪರಮಾತ್ಮ ೫

 

೧೬೧
ತಾಯೆ ಲಕ್ಷ್ಮಿ ಕಾಯೆ ಯೆನ್ನನು | ಸೌಭಾಗ್ಯ ಜನನಿ |
ತಾಯೆ ಲಕ್ಷ್ಮಿ ಕಾಯೆ ಯೆನ್ನನು ಪ
ತಾಯೆ ಯೆನ್ನ ಕಾಯೆ ಭವದಿ | ನೋಯದಂತೆ ಮಾಯೆ ರುಣದಿ |
ಆಯದಿಂದಲೆನ್ನ ಪಿಡಿದು | ತೋಯಜಾಕ್ಷಿ ನೀನೆ ಸುಖದಿ ಅ.ಪ|
ನೀನೆ ದಾತೆ ಸರ್ವಲೋಕಕೆ | ಮಹಾಲಕ್ಷ್ಮಿ ದೇವಿ |
ನೀನೆ ಸೋತೆಯಾದಿ ಪುರುಷಗೆ ||
ನೀನೆ ಖ್ಯಾತೆ ನೀ ನಿರ್ಭೀತೆ | ನೀನೆಯೆನ್ನ ಪಡೆದ ಮಾತೆ |
ನೀನೆ ನಿಜ ಸುಖಪ್ರದಾತೆ | ನೀನೆ ಆದಿವಿಷ್ಣು ಪ್ರೀತೆ ೧
ಸೋತೆನವ್ವ ಭವದ ತಾಪದಿ | ಜಗನ್ಮಾತೆ ನೀ ನಿ-|
ರ್ಭೀತಿಯಿಂದುದ್ಧರಿಸೆ ಸೌಖ್ಯದಿ ||
ದಾತೆ ನೀನೆ ಹೊರತುಯೆನ್ನ | ಪ್ರೀತಿಯಿಂದ ಕಾಯ್ವರಾರು |
ಜಾತನೆಂದ ಮಾತ ಜಗ | ನ್ನಾಥವನಿತೆ ಲಾಲಿಸವ್ವ ೨
ವಂದಿಸುವೆ ನಿನ್ನ ಪಾದಕೆ | ಇಂದೀವರಾಕ್ಷಿ |
ಸಿಂಧುಶಯನನಂಘ್ರಿ ಧ್ಯಾನಕೆ ||
ಬಂದು ಎನ್ನ ಗೃಹದಿ ನೀನೆ | ನಿಂದಿಷ್ಟಾರ್ಥವಿತ್ತು ಸದಾ-|
ನಂದದಿಂದ ಪಾಲಿಸೆನ್ನ | ನಿಂದು ಶ್ರೀನಿವಾಸ ಪ್ರೀತೆ ೩

 

೧೨೭
ದೇವಿ ಸಲಹೆಮ್ಮನು ಭವ ಭಯದಿ ಬಂದೆವು
ದೇವಿ ಸಲಹೆಮ್ಮನು ಪ
ಕಾವ ಕರ್ತಳು ನೀನೆ ನಿರ್ಮಿಸಿ |
ತೋರ್ವ ಶಕ್ತಳು ನೀನೆ ಭುವನವ |
ನಾಳ್ವ ತ್ರಿಜಗಜ್ಜನನಿ ತವಪದ |
ಸೇವೆ ನಿಜಸುಖವೀ ಮಹೇಶ್ವರಿ ಅ.ಪ
ನೊಂದೆವು ದಾರಿದ್ರ್ಯದ | ಬಲು ಬಾಧೆಯಿಂದಲಿ |
ಬೆಂದೆವು ಹಲವಂಗದ ||
ದಂದುಗಕ್ಕೊಳಗಾಗಿ ಜೀವಿಪ |
ವಂದವೆಂತೆಂಬುದನು ಕಾಣದೆ |
ಅಂಧಕರವೋಲಾಗಿ ತವ ಪದ |
ದ್ವಂದ್ವಕಾನತರಾಗುತಿರುವೆವು ೧
ಸರಸ್ವತಿ ಮಹಾಲಕ್ಷ್ಮಿಯು | ಗೌರಿ ಮಹೇಶ್ವರಿ |
ಪರಮೇಷ್ಠಿಯವತಾರಿಯು ||
ಹರಿಹರಾದಿ ಸುರೇಂದ್ರ ಮುಖ್ಯಾ |
ಮರರು(ಗಳು) ಗಂಧರ್ವ ವಿದ್ಯಾ |
ಧರರುರಗ ಗರುಡಾದಿ ತುಂಬುರ
ನಾರದಾದ್ಯವತಾರ ರೂಪಿಣಿ ೨
ಶರಣಾಗತರ ನೋಡೆ | ಕರುಣಾ ಕಟಾಕ್ಷದಿ |
ತರಳರಿಷ್ಟಗಳ ನೀಡೆ ||
ದುರಿತಗಳನೀಡಾಡಿ ಸಂಪದ |
ಭರಿತದಿಂ ಕಾಪಾಡುತೆಮ್ಮನು |
ನಿರುತ ಭಕ್ತರ ಸಾಲೊಳಿರಿಸುತ |
ಸ್ಥಿರ ಸದಾನಂದದೊಳು ಪಾಲಿಸೆ ೩

 

೧೨೬
ದೇವೀ ಸಲಹೆನ್ನನೂ | ತವ ಬಾಲಕನನೂ |
ದೇವೀ ಸಲಹೆನ್ನನೂ ಪ
ದೇವಿ ನೀನೆನ್ನಾವ ಕಾಲಕು |
ಕಾವ ನಿಜ ಸುಖವೀವ ಶಕ್ತಿಯೆ |
ಶ್ರೀವರನ ಪ್ರೀಯ ಭಗಿನಿ ದೇವರ |
ದೇವ ವಿಶ್ವೇಶ್ವರನ ಸುಪ್ರೀಯೆ ಅ.ಪ
ಖಂಡಿಸಿದೆ ಮಹಿಷಾಸುರನ ಶಿರವಾ | ಶುಂಭ ನಿಶುಂಭರ |
ದಿಂಡುಗೆಡಹಿದೆ ದುಷ್ಟ ಸಂಕುಲವಾ | ಚಂಡ ಮುಂಡ |
ಧೂಮ್ರಾಕ್ಷ ದೈತ್ಯರ ತಂಡಗಳ ರುಂಡವನು ಧರೆಯೊಳು |
ಚಂಡನಾಡುತ ರಕ್ತಬೀಜರ | ಹಿಂಡಿ ರಕ್ತನುಂಡ ಶಂಕರೀ ೧
ದುರಿತ ಹರೆ ಆರ್ಯಾ ಕಾತ್ರ್ಯಾಯನಿಯೇ |
ಗೌರಿ ಹೈಮಾವತಿ |
ಕರುಣಸಾಗರೆ ಕಾಳಿಕಾ ಮಾರೀ |
ಪರಮ ಶಿವೆ ಈಶ್ವರಿ ಭವಾನಿ |
ಸುರಮುನೀ ಸುತೆ ಸರ್ವಮಂಗಲೆ |
ಶರಣೈ ತ್ರಿಯಂಬಕಿ |
ಸರ್ವಾರ್ಥ ಸಾಧಕೆ |
ಶರಣು ಶರ್ವಾಣಿಯೆ ರುದ್ರಾಣಿಯೆ ೨
ಸರ್ವ ಭವ ಭಯಹಾರಿ ಓಂಕಾರೀ |
ಮುರಾರಿಯೊಲ್ಲಭೆ |
ಸರ್ವ ಸದ್ಗುಣ ಭಕ್ತ ಸಂಸಾರೀ |
ಸೃಷ್ಟಿ ಸ್ಥಿತಿ ಲಯಂಗಳ |
ಸರ್ವ ಕಾರಣ ಭೂತೆ ಮುನಿ ಸುತೆ |
ಸರ್ವ ಸಂಪದಭೀಷ್ಟದಾಯಕಿ |
ಸರ್ವ ಸೌಖ್ಯ ಸುಖ ಪ್ರದಾಯಕಿ ೩
ಮಾತೆ ತ್ರಿಜಗಖ್ಯಾತೆ ಶಿವಪ್ರೀತೇ |
ಜಗದ್ಭರಿತೆ ಸದ್ಗುಣ |
ದಾತೆ ಯೋಗಿಮನೋನು ಶುಭ ಚರಿತೇ |
ನೀತಿ ಶಾಸ್ತ್ರ ಪುರಾಣ |
ತತ್ವಾತೀತೆ ನಿರುಪಮ ಶಕ್ತಿ ದೇವತೆ |
ಸೋತೆ ನೀ | ದಾರಿದ್ರ ದುಃಖ
ವ್ರಾತವನು ಪರಿಹರಿಸಿ ರಕ್ಷಿಸೆ೪
ತಂದೆ ತಾಯೆನ್ನ ಬಂಧು ಬಳಗಗಳೂ |
ನಾರಾಯಣಿಯನೀ- |
ನಂದಿಗಿಂದಿಗು ಯೆಂದಿಗಾದರೆಯೂ |
ಹೊಂದಿರುವ ತಾಪತ್ರಯವನಾ |
ನಂದದಿಂದಲಿ ಪಾರಗಾಣಿಸಿ |
ಕುಂದು ಕೊರತೆಗಳನು ನಿವಾರಿಸು |
ತಿಂದೆನ್ನನು ಸದಾನಂದನೆನಿಸುತ ೫

 

ಈ. ಹನುಮಂತ ದೇವರು
೧೬೩
ಧನ್ಯನಾದೆನು ಮುಖ್ಯ ಪ್ರಾಣಾ | ನೀ ಪ್ರ-
ಸನ್ನನಾದೆಯೆನಗೆ ಇನ್ನೇನನುಮಾನಾ ಪ
ಮಾನ್ಯನಾದೆನು ಜಗತ್ರಾಣಾ | ನಾ |
ನಿನ್ನವನೆನಿಸಿದೆ ಗುರುವೆ ಮತ್ಪ್ರಾಣಾ ಅ.ಪ
ಭವ ಭಯಂಗಳು ಹರವಾಯ್ತು | ಮನ |
ದೊಳು ತವಕಿಸುವ ಚಂಚಲವೆಲ್ಲ ಹೋಯ್ತು |
ಶಿವನನುಗ್ರಹವೆನಗಾಯ್ತು |
ತ್ರೈಭುವನಕಾಧಾರ ಸದ್ಗುರು ಕೃಪೆಯಾಯ್ತು ೧
ವಾಸುದೇವನು ಯೆನಗೊಲಿದಾ | ಯೆನ್ನೋಳ್ |
ಲೇಸಾದ ಕುಲ ಕಲ್ಪತರು ಫಲ ತಾನಾದೆ |
ದೋಷರಾಶಿಗಳನ್ನು ಜರದಾ | ಯೆನ್ನ |
ಸಾಸೀರ ಪಿತೃಗಳಾ ತಾನುದ್ಧರಿಸಿದಾ ೨
ಹಿಂದೆನಗಿತ್ತಾಜ್ಞೆಗಾಗೀ | ಕರುಣ |
ಸಿಂಧು ಶ್ರೀಕೃಷ್ಣನೆನ್ನಿಜದೊಳ್ ಲೇಸಾಗಿ |
ನಿಂದು ಸದಾನಂದನಾಗೀ |
ಎನ್ನ ಬಂಧು ಬೆಳಗುವ ಸಚ್ಚಿದಾನಂದನಾಗೀ ೩

 

೧೮೧
ನಮಿಪೆನು ಗುರುರಾಯನೆ | (ನಾ ನಿನ್ನನು)|
ನಮಿಪೆನು ಗುರುರಾಯನೆ ಪ
ನಮಿಪೆ ಸದಾನಂದ ಗುರುವೆ ತವ ಚರಣಕೆ |
ಕುಮತಿಯಾಗಿರ್ದೆನ್ನ ಮಮತೆಯೊಳ್ ಪೊರೆಯೆಂದು ಅ.ಪ
ಮಂದ ಬುದ್ಧಿಗಳಿಂದ ನೊಂದೆ ಭವಭಯದಿಂದ |
ಹೊಂದಿದೆ ತವ ಪಾದ ಕಂದನ ಸಲಹೆಂದು ೧
ಎನ್ನಾದಿ ಮಧ್ಯಾಂತವನ್ನರಿಯದ ಭ್ರಾಂತ |
ಇನ್ನು ನೀ ವೇದಾಂತವನ್ನು ಬೋಧಿಸೆಂದೆನುತ ೨
ಮುನ್ನ ನಾನಾರೆಂಬುದಿನ್ನು ಮುಂದೇನೆಂಬು-|
ದೆನ್ನಯ ನಿಜದರಿವ ಚೆನ್ನಾಗಿ (ಪೇಳೆಂದು) ೩
ಯೋಗ ಭೋಗದ ಸಕಲಾಗಮಂಗಳ ಸುಖ
ಸಾಗರದೊಳಗೈಕ್ಯವಾಗುವಂತೆಸಗಯ್ಯ ೪
ಗುರುವೆ ವಾಣೀಶ ಮದ್ಗುರುವೇ ಲಕ್ಷ್ಮೀಶ |
ಗುರು ಪಾರ್ವತೀಶ ಸದ್ಗುರುವೆ ತ್ರೈಜಗದೀಶ ೫
ತಂದೆ ತಾಯಿಯು ನೀನೆ ಬಂಧು ಬಳಗವು ನೀನೆ |
ಇಂದೆನ್ನ ಹೃದಯದೊಳ್ ನಿಂದು ಮೈದೋರೆಂದು ೬
ಆದಿಶಕ್ತಿಯೆ ನಿಜವಾದ ಸದಾಶಿವ |
ನಾದ ಸ್ವರೂಪನೆಯಾದ ಸದಾನಂದ ೭

 

೧೭೦
ನರ ಜಲ್ಮವನ್ನು ಸಾರ್ಥಕ ಮಾಡಿಕೊಳ್ಳೀ |
ಬರಿದೆ ಆಯುಷ್ಯ ಸಲುವದು ನೋಡಿಕೊಳ್ಳೀ ಪ
ಸ್ಥಿರವಲ್ಲ ಈ ದೇಹ ನೀರ ಮೇಲಣ ಗುಳ್ಳೆ |
ಮರಣವಿರ್ಪುದು ಒಂದು ದಿನವಾದರೂ |
ಅರಿತು ಅರಿಯದೆ ಗೈದ ದುರಿತ ಹರಚಿತವಾದ |
ಹರಿ ಸ್ಮರಣೆಯನ್ನು ಮರೆಯದೆ ಜಪಿಸಿ ಕೊಳ್ಳೀ ಅ.ಪ
ಅಸ್ಥಿರದ ಸಂಸಾರ ವಿಷಯಾದಿ ಭೋಗ ಸುಖ |
ಮೃತ್ಯು ಬಂದೆಳವಾಗ ವ್ಯರ್ಥವಹುದೂ |
ಚಿತ್ತ ಶುದ್ಧದೊಳು ಪರಮಾತ್ಮನನು ಭಜಿಸಿರ್ದ |
ಭಕ್ತರನು ಕರುಣದಿಂದೆತ್ತಿ ಸಲಹುವನೂ ೧
ಹಿಂದೆ ಪೋದವರೊಡನೆ ಹೊಂದಿ ಪೋದವರುಂಟೆ |
ಬಂಧು ಬಾಂಧವರ್ಯಾರಿಗ್ಯಾರಿಗಯ್ಯಾ |
ಹೊಂದಿರ್ದ ಭವ ಪಾಶ ಬಂದ ಬಿಡಿಸುತ ಕಾಯ್ವ |
ಬಂಧು ಶ್ರೀ ಪರಮಾತ್ಮನನ್ನು ನೆನನೆನದೂ ೨
ಭಕ್ತ ಸಂಸಾರಿಯೆಂದೆನಿಸುವ ಬಿರುದನೂ ಧರಿಸಿ |
ಮಾತೆಯಾಗುವ ಜಗವ ಕಾಯ್ವ ಧಾತಾ |
ಸೋತು ತನ್ನವರ ನಿಜ ಸುಖ ಸದಾನಂದದೊಳು |
ಪ್ರೀತಿಯೊಳು ಕಾಯ್ವ ಜಗದ್ಗುರು ಕೃಪೆಯ ಪಡೆದೂ ೩

 

೧೬೨
ನಲಿ ನಲಿದು ಮಹಾಲಕ್ಷುಮಿ ಬಾರಮ್ಮ ಬಾ |
ನಲಿ ನಲಿದು ಒಲಿದು ಮೊಗವ ತೋರೆ ಬಾ ಪ
ನಲಿದು ನಲಿದು ಯೆಮಗೊಲಿದು ಮೊಗವ ತೋರೆ |
ಜಲಜಾಕ್ಷ ನಾರಾಯಣ ಪ್ರೀಯೆ ೧
ಲೋಕಾಧಿಕಾರಿಣಿ | ಶೋಕನಿವಾರಿಣಿ |
ಸಾಕವ್ವ ನೀ ಬಂದು ಬೇಗನೇ ೨
ಮಾತೆ ಸಜ್ಜನ ಜನ | ಧಾತೆ ಸದಾನಂದ |
ಪ್ರೀತೆ ನೀನೆಮಗೊಲಿದು ಬಾ | ಬೇಗನೆ ೩

 

೧೬೪
ನಲಿದು ಬಾರೋ ಹನುಮಂತ | ಎನ-|
ಗೊಲಿದು ನಿರತ ನೆಲಸಿರು ಗುಣವಂತ ಪ
ನಲಿನಲಿದು ಎನಗೊಲಿದು ಶ್ರೀರಾಮನ |
ಚೆಲುವ ಮೂರ್ತಿಯ ತೋರೋ ಶ್ರೀಕೃಷ್ಣನ ಅ.ಪ
ಗತಿಯೆನಗಿಲ್ಲ ನೀ ಹೊರತು | ಲಕ್ಷ್ಮೀ-|
ಪತಿಯ ದಾಸತ್ವವ ಪಾಲಿಸೀಹೊತ್ತು ||
ಧೃತಿಯೊಳ್ ಮಹೀಶನ ಕುರಿತು | ಸ -|
ನ್ಮತಿ ನಿಜ ಬೋಧವನ್ನುಣಿಸೀಹೊತ್ತು ೧
ಗುರುರಾಯನೆ ಜಗಕೆಲ್ಲ | ಸ್ಥಿರ |
ಚರ ಕಧಾರ ನೀ ಹೊರತನ್ಯರಿಲ್ಲ ||
ಸ್ಮರಿಪೆ ನಿರತ ತವ ಸೊಲ್ಲ | ಶ್ರೀ -|
ಹರಿಪಾದವೆನಗೆ ಗೋಚರಿಸಬೇಕಲ್ಲ ೨
ಅಜಸುರ ನರಮುನಿವಂದ್ಯ | ತವ |
ಭಜಕನಾಗಿ ಬೇಡುವೆನು ನಾನೊಂದ ||
ತ್ರಿಜಗವೆಲ್ಲ ಸದಾನಂದ | ನಾ |
ನಿಜ ಸುಖದೊಳಗಿಹೆ ಸಚ್ಚಿದಾನಂದ ೩

 

೧೪೧
ನಾ ಮಾಡಿದ ತಪ್ಪ ಕ್ಷಮಿಸೊ ರಂಗಯ್ಯ |
ಸ್ವಾಮಿ ರಕ್ಷಿಸೊ ಬಂದು ನೀನೆ ಎನ್ನಯ್ಯ ಪ
ಪ್ರೇಮದೋರದೆ ನಿನಗಿನ್ನು ಶ್ರೀಹರಿಯೆ |
ಸೋಮಶೇಖರ ಪ್ರಿಯ ಸಲಹೆನ್ನ ದೊರೆಯೆ ಅ.ಪ
ಜಲ್ಮ ಜಲ್ಮದ ದೋಷವೆಲ್ಲ ಬಂಧಿಸುತೆನ್ನ |
ನಿಲ್ಲಗೊಡದ ಪರಿ ಸೊಲ್ಲಿಸಲರಿಯೆನು ||
ಪುಲ್ಲಲೋಚನ ಪಾದಪಲ್ಲವದೊಳು ಬಿದ್ದು |
ತಲ್ಲಣಿಸುವೆÀ ನಿನಗಿನ್ನು ಕರುಣವಿಲ್ಲ ೧
ನೀನೆನ್ನ ಸೃಷ್ಟಿಸಿದಂದಿನಿಂದೀ ವರೆಗೆ |
ನಾನೇನ ಗೈದೆನೊ ವರ್ಣಿಸಲರಿಯೆ ||
ಸಾನುರಾಗದಿ ಕೈಯ ಮುಗಿದು ಬೇಡುವೆನು |
ದೀನರಕ್ಷಕ ತ್ರಾಹಿ ತ್ರಾಹಿ ಮಣಿವೆನು ೨
ದಮ್ಮಯ್ಯ ಬಳಲಿಸದಿರು ಎನ್ನ ತಂದೆ |
ಹಮ್ಮೆನ್ನೊಳಿಲ್ಲವೆಂಬುದ ನೀನೆ ಕಂಡೆ ||
ಕರ್ಮ ವಂಚಿಸುತಲಿ ಸಲಹಬೇಕೆಂದೆ |
ನಿರ್ಮಲಗೊಳಿಸೆನ್ನ ಮನವ ನೀನಿಂದೆ ೩
ಧ್ರುವ ಪ್ರಹ್ಲಾದಾಂಬರೀಷ ರುಕ್ಮಾಂಗ |
ತವ ಪಾದಭಜಕನಕ್ರೂರ ಸುದಾಮ |
ಭುವನ ವಿಖ್ಯಾತ ಸತ್ಯಾತ್ಮ ಹರಿಶ್ಚಂದ್ರ |
ಇವರಿಗಿಷ್ಟಾರ್ಥವನಿತ್ತು ಪಾಲಿಸಿದಾತ೪
ಸೋತೆ ನೀ ಭವ ಬಂಧದೊಳಗೆ ನಾ ಸಿಲುಕಿ |
ದಾತ ನೀನೈತಂದೆನ್ನನು ತಕ್ಕೈಸಿ ||
ಪ್ರೀತಿಯೊಳೆನ್ನ ಮನದಿ ನಿಂದು ಸುಖದಿ | ನಿ |
ರ್ಭೀತ ಶ್ರೀನಿವಾಸ ಪಾಲಿಸೊ ಮುಕುತಿ ೫

 

೧೮೨
ನಾನಾರೆಂಬುದ ನಿಜವೆನಗೀಗ ಪೇಳೈ |
ನೀನೆ ಸದ್ಗುರುರಾಯನೆ ಪ
ಮಾನವನು ನಾನಾಗಿ ಜನಿಸಿದ -|
ರೇನು ಫಲವೆನಗಿಲ್ಲದಾಯಿತು |
ನಾನು ನಿನ್ನವನಾಗಲೆನ್ನನು |
ಹೀನನಿವನೆನಲೇನು ಕಾರಣ ಅ.ಪ
ನೀನೆ ಸೃಷ್ಟಿಸಿದವನು |
ನೀನೆ ಪಾಲಿಸುವವನು |
ನಿನ್ನಿಂದಾದವ ನಾನಾರೊ ||
ನೀನೆ ನಿಜ ಸುಖ ವಸ್ತುವಾಗಿಹೆ |
ನಾನು ನಿನ್ನನು ಪೂಜಿಸುತ್ತಿರೆ ||
ನೀನೆ ಪುರುಷೋತ್ತಮನು ನಿನ್ನಾ – |
ಧೀನದೊಳು ನಾನಿರುವ ದಾಸನು ೧
ನೀನೆ ದೇವರ ದೇವ |
ನಾ ನಿನ್ನೊಳಾದವ |
ನಾನಾರು ನೀ ಪೇಳಯ್ಯ ||
ನೀನೆ ಹೀನನೊ ನಾನೆ ಹೀನನೊ |
ಎನ್ನೊಳಗೆ ಪರಿಪೂರ್ಣನಾವನೊ |
ನೀನೆ ಪಾವನ ವಸ್ತುವಾಗಿಹೆ |
ಎನ್ನೊಳಗೆ ನೀನೈಕ್ಯವಾಗಿಹೆ ೨
ದೀನವತ್ಸಲನೆನ್ನ |
ಮಾನಾಪಮಾನಗಳ್ |
ನಿನಗಲ್ಲದಾರಿಗಯ್ಯ |
ನಿನ್ನ ಭಕ್ತರ ಹಾನಿವೃದ್ಧಿಗ -|
ಳನ್ಯರೊಬ್ಬರಿಗಿಹುದೆ ಪೇಳೈ |
ಅನ್ಯನೋ ನಾ ನಿನ್ನವನೊಯೇ – |
ನೆನ್ನು ನೀ ನಿಜವನು ಸದಾನಂದ ೩

 

೧೭೧
ನಾರಾಯಣ ನಾರಾಯಣನೆನ್ನದೆ |
ನೀರೊಳು ಮುಳುಗಿದಡೇನು ಫಲ ಪ
ಸಾರವರಿತು ಭಕ್ತಿಯನಿಡದಾ ಶ್ರುತಿ |
(ಸಾರವ)ನೋದಿದಡೇನು ಫಲ ಅ.ಪ
ಬ್ರಾಹ್ಮಣನೆನ್ನುತ ಬ್ರಹ್ಮವನರಿಯದೆ |
ಕರ್ಮವ ಮಾಡಿದಡೇನು ಫಲ ||
ನಿರ್ಮಲ ಚಿತ್ತದಿ ಮರ್ಮವನರಿಯದೆ |
ಧರ್ಮದಾನದಿಂದೇನು ಫಲ ೧
ಪರರನು ಪೀಡಿಸಿ ಪರರನು (ವಂಚಿಸಿ) |
ದೊರೆ ತಾನೆಂದರದೇನು ಫಲ ||
ಗುರುಹಿರಿಯರ ಪೂಜಿಸದೆ ಡಂಬಕೆ |
ಹರಿ ಹರಿಯೆಂದರದೇನು ಫಲ ೨
ಪತಿಯನು ವಂಚಿಸಿ ಪರರನು ಕೂಡುತ |
ಪತಿವ್ರತೆಯೆಂದರದೇನು ಫಲ ||
ಧೃತಿಯ ನಿರುತ ಪ್ರಪಂಚದೊಳಿರಿಸುತ |
ಸ್ತುತಿ ಪೂಜೆಗಳಿಂದೇನು ಫಲ ೩
ಸತತ ದುಷ್ರ‍ಕತ್ಯದ ನಡತೆಯೊಳಿದ್ದವ |
ತೀರ್ಥಯಾತ್ರೆ ಮಾಡಲೇನು ಫಲ ||
ಸತಿಯ ಬಿಟ್ಟು ಪರಸತಿಗಪೇಕ್ಷಿಸಿ |
ವ್ರತಗಳ ಮಾಡಲದೇನು ಫಲ ೪
ಮನುಜನಾಗಿ ಸುಜ್ಞಾನವನರಿಯದೆ |
ತನುವನು ಪೊರೆದರದೇನು ಫಲ ||
ಶ್ರೀನಿವಾಸನ ಪಾದವ ಸ್ಮರಿಸದೆ
ದಿನವನು ಕಳೆದರದೇನು ಫಲ ೫

 

೧೪೩
ನಾರಾಯಣ ಹರಿ | ನಾರಾಯಣ ಲಕ್ಷ್ಮೀ |
ನಾರಾಯಣ ಹರಿ ಗೋವಿಂದ ಪ
ಕ್ಷೀರ ಶರಧಿಯೊಳು | ಉರಗಶಯನದೊಳು |
ಸಿರಿಯು ಸಹಿತ ಮೆರೆದಿರುವ ಜಗದ್ಗುರು ಅ.ಪ
ಮತ್ಸ್ಯಾವತಾರದೊಳ್ ಜಲಧಿಯೊಳಾಡಿದೆ |
ಧೂರ್ತ ತಮಾಸುರನನು ತರಿದೆ ||
ಸತ್ಯವ್ರತನನು ಸ್ವಸ್ಥದೊಳಿರಿಸಿದೆ |
ಇತ್ತು ವೇದವ ಶತಧೃತಿಯನೆ ಸಲಹಿದೆ ೧
ಸುರರನ್ನಸುರರ ನೆರಹಿದೆ ದುಗ್ಧ |
ಶರಧಿಯ ಮಥನವ ಮಾಡಿಸಿದೆ ||
ಗಿರಿಯನು ಕೂರ್ಮಾಕೃತಿಯೊಳು ಧರಿಸಿದೆ |
ಸುರಿ ಸುರಿದಮೃತವ ದಿವಿಜರಿಗುಣಿಸಿದೆ ೨
ಲೋಕೇಶನ ನಾಸಿಕದೊಳಗುದಿಸುತ |
ಸೂಕರನೆನಿಸಿ ವಿತಳಕಿಳಿದೆ |
ಪೋಕ ಹಿರಣ್ಯನ ಶಿರವ ಕತ್ತರಿಸಿದೆ |
ಜೋಕೆಯಿಂದ ತ್ರೈಜಗವನು ಸಲಹಿದೆ ೩
ಕಂಭದಿ ರೌದ್ರಾಕಾರದೊಳುದಿಸಿದೆ |
ಸಂಭ್ರಮದೊಳು ದುರುಳನ ತರಿದೆ ||
ನಂಬಿದ ಪ್ರಹ್ಲಾದನ ನೀ ಸಲಹಿದೆ |
ಕುಂಭಿನಿಯೊಳು ನರಹರಿಯೆಂದೆನಿಸಿದೆ ೪
ಲಲನೆಯಸಿತಿ ಗರ್ಭದಿ ಸಂಜನಿಸಿದೆ |
ಛಲದೊಳು ಭೂದಾನವ ಕೇಳ್ದೆ ||
ಬಲಿಯನು ವಿತಳದಿ ಸುಸ್ಥಿರಗೊಳಿಸಿದೆ |
ಒಲಿದು ತ್ರಿವಿಕ್ರಮ ವಾಮನನೆನಿಸಿದೆ೫
ಜಮದಗ್ನಿಯ ಸತಿಯುದರದೊಳುದಿಸಿದೆ |
ಕುಮತಿ ಕ್ಷತ್ರಿಯರನು ಹತಗೈದೆ ||
ನಮಿಸುತ ಮಾತೆಯ ಶಿರವನ್ನಿಳುಹಿದೆ |
ಅಮಿತ ಪರಾಕ್ರಮಿ ಭಾರ್ಗವನೆನಿಸಿದೆ ೬
ದಶರಥನರಸಿ ಕೌಸಲ್ಯೆಯೊಳುದಿಸಿದೆ |
ಕುಶಿಕಾಧ್ವರ ಪಾಲನಗೈದೆ ||
ವಿಷಮ ರಾವಣನ ಶಿರವ ಕತ್ತರಿಸಿದೆ |
ಶಶಿಮುಖಿ ಸೀತಾರಾಮನೆಂದೆನಿಸಿದೆ ೭
ವಸುದೇವನ ಸತಿದೇವಕಿಗುದಿಸಿದೆ |
ಕಂಸ(ದೈತ್ಯ)ನನು ಹತಗೈದೆ ||
ಸಸಿ(ನದಿಂ) ಭೂಮಿಯ ಭಾರವನಿಳುಹಿದೆ |
ಅಸುರಾಂತಕ ಶ್ರೀಕೃಷ್ಣನೆಂದೆನಿಸಿದೆ ೮
ತ್ರಿಪುರರ ಸತಿಯರ ವ್ರತವನು ಕೆಡಿಸಿದೆ |
ಗುಪಿತದೊಳಮೃತವ ಸೇವಿಸಿದೆ ||
ಕೃಪೆಯೊಳು ದಿವಿಜರ ನೆರವಿಯ ಸಲಹಿದೆ |
ಅಪರಿಮಿತ ಮಹಿಮ ಬುದ್ಧನೆಂದೆನಿಸಿದೆ ೯
ಭೂಸುರ ವಿಷ್ಣು ಕೀರ್ತಿಯ ಸತಿಗುದಿಸಿದೆ |
ದಾಸ ಜನರ ಬಿನ್ನಪ ಕೇಳ್ದೆ ||
ಘಾಸಿ(ಪ) ಮ್ಲೇಂಛರ ಕುಲವ ಮರ್ದಿಸಿದೆ |
ಸಾಸಿರ ನಾಮನೆ ಕ(ಲ್ಕಿ)ಯೆಂದೆನಿಸಿದೆ ೧೦
ಹತ್ತವತಾರದಿ ದೈತ್ಯರ ಮಡುಹಿದೆ |
ಪೃಥ್ವಿಯ ಭಾರವನಿಳುಹಿಸಿದೆ ||
ಭೃತ್ಯರ ಕುಲವ ಪವಿತ್ರವಗೈದೆ |
ಹೃತ್ಕಮಲೇಶ ಸದಾನಂದನೆನಿಸಿದೆ ೧೧

 

೧೭೨
ನಾರಾಯಣನೆಂಬ ನಾಮವನನುದಿನ |
ನೀ ಮನದೊಳು ಜಪಿಸೆಲೊ ಮನುಜ ಪ
ಘೋರ ಭವಾಂಬುಧಿ ಪಾರಾಗುತ ಸುಖ |
ಸಾರದ ಪದವಿಯ ಸೇರಿರುತಿರುವರೆ ಅ.ಪ
ಪಂಚೀಕರಣದ ಮಿಂಚುವ ಪ್ರಭೆಗಳ |
ವಂಚನೆ ವಿಷದಿ ಮನಸಿಲುಕಿ ||
ಸಂಚಿತ ಕೃತ್ಯದಿ ವಿರಿಂಚಿಯಾಜ್ಞೆಗೆ
ಸಂಚರಿಸದೆ ನಿಶ್ಚಿಂತೆಯೊಳಿರುವರೆ ೧
ಸತಿಸುತ ಧನಗೃಹ ಪಶುಬಾಂಧವರೆನ-|
ಗತಿಹಿತರೆಂದೆಣಿಸದೆ ಮನದಿ ||
ಮತಿಹೀನರ ಸಂಗದೊಳಿರಲನುದಿನ |
ಪೃಥಿವಿಯ ಭೋಗವಸ್ಥಿರವೆನುತ ೨
ಬಲ್ಲವರೊಳು ತಾನೆಲ್ಲ ಕಾಲದೊಳು |
ಉಲ್ಲಾಸದೊಳಿರುತೆಲ್ಲ ನಿಜ ||
ಸೊಲ್ಲಿನ ಸಾರವ ಚೆಲ್ಲದೆ ಮನದೊಳು |
ನಿಲ್ಲಿಸಿ ಭಾವಿಸಲಲ್ಲಿರುತಿಹನು ೩
ಇಂದುಣ್ಣುವ ಸುಖ ದುಃಖಂಗಳು ತಾ |
ಹಿಂದೆಸಗಿದ ಕೃತಬಂಧಗಳು ||
ಎಂದು ನಿಧಾನಿಸುತಿಂದು ಸದ್ಧರ್ಮದ |
ಹೊಂದುತೆಲ್ಲ ಗೋವಿಂದನಿಚ್ಛೆಯೊಳು ೪
ಹೊರಗು ಒಳಗು ಸರ್ವಾತ್ಮನ ಲೀಲೆಯ |
ಪರಿಕಿಸುತಾನಂದಾಬ್ಧಿಯೊಳು ||
ಸರಸವಾಡಿ ಗುರು ಶ್ರೀನಿವಾಸನ ಪದ |
ನಿರತಾನಂದದೊಳಿರು ನೀ ನಿಜದೊಳು ೫

 

೧೪೨
ನಾರಾಯಣಯೆಂಬ ನಾಮಾಮೃತವ ಸವಿಯೊ |
ಘೋರ ಭವಶರಧಿಯೊಳಗಿರುವ ಮನವೆ ಪ
ದುರಿತವರ್ಜಿತನಾಗಿ ಕರಕರಿಯ ಹೋಗಾಡಿ |
ನಿರತ ಸುಖ ಸಾಮ್ರಾಜ್ಯ ಗುರುವೆ ನೀನಾಗಿ ಅ.ಪ
ನಿನ್ನೊಳವ ನೀನರಿಯೆ, ಅನ್ಯವೆಂಬುವದಿಲ್ಲ |
ಚಿನ್ಮಯ ಚಿದಾನಂದ ನೀನಿದೆಲ್ಲ ||
ಬನ್ನಬಡುವವನಲ್ಲ, ಗನ್ನಗಾತಕನಲ್ಲ |
ಜನ್ಮ ಜರೆ ಮರಣದ ಭಿನ್ನ ನಲ್ಲ ೧
ಚಿತ್ತ ಚಂಚಲನಲ್ಲ ಅಸ್ಥಿರದ ಪದವಲ್ಲ |
ಸುತ್ತಿ ಸುತ್ತಿ ತೊಳಲಿ ಬಳಲುವನಲ್ಲ |
ಅತ್ತಲಿತ್ತಲು ಎತ್ತಲುತ್ತಮೋತ್ತಮನೆಲ್ಲ |
ಕರ್ತೃ ಪರಮಾತ್ಮ ಪರಂಜ್ಯೋತಿ ನೀನೆಲ್ಲ ೨
ಆದಿ ಮಧ್ಯಾಂತಗಳ ವಾದಾಟದವನಲ್ಲ |
ಭೇದ ಕಲ್ಮಷವಖಿಲಬಾಧನಲ್ಲ ||
ವೇದವೇದಾತ್ಮ ಶುದ್ಧಾತ್ಮ ನಿಜದಾತ್ಮ ಜಗ |
ದಾಧಾರ ಮೂರ್ತಿ ಸದಾನಂದ ಕೀರ್ತಿ ೩

 

೧೭೩
ನಿಜವರಿತಿರುವುದೆ ಭಾಗ್ಯಾ | ಹರಿ |
ಭಜನೆಯೊಳಿರುವದೆ ಜನ್ಮಕೆ ಯೋಗ್ಯ ಪ
ಕುಜನರ ಸಂಗವ ತ್ಯಜಿಸಲು ಬೇಕು |
ಸುಜನರ ಸಂಗದೊಳಿರಬೇಕು |
ತ್ರಿಜಗಕ್ಕೊಡೆಯನುಯೆಂದೀ ಗುರು ಪದ |
ಭಜನೆಯಿಂದ ಪೂಜಿಸುತಾನಂದದಿ ೧
ಶಾಸ್ತ್ರ ಪುರಾಣವನೋದಿರಬೇಕು |
ತತ್ವಾರ್ಥವ ತಿಳಿದಿರಬೇಕು |
ಚಿತ್ತದಿ ನಿರ್ಮಲ ಭಕ್ತಿಯೊಳನುದಿನ |
ಸ್ತೋತ್ರಗೈದು ಹರಿ ಕೀರ್ತನೆಯಿಂದಲಿ ೨
ಸಾಧು ಸೇವೆಯೊಳಗಿರಬೇಕೂ |
ಕಾಮ ಕ್ರೋಧ ಲೋಭಗಳ ಬಿಡಬೇಕೂ |
ಭೇದವಾದ ಮೋಹ ಮದ ಮತ್ಸರಗಳ |
ಹಾದಿ ಬಿಟ್ಟು ಗುರು ಬೋಧೆಯ ಮನನದಿ ೩
ಅತಿಥಿಗಳನು ಪೂಜಿಸುತಿರ ಬೇಕೂ |
ಸಂತರೊಡನೆ ಬೆರೆತಿರಬೇಕೂ |
ಮಾತೆ ಪಿತನು ಸತಿ ಸುತರು ಹಿತರು ಗುರು |
ನಾಥನೆ ಪತಿತ ಪಾವನನೆಂದೆಣಿಸುತ ೪
ಭಗವಂತನ ಧ್ಯಾನದೊಳಿರಬೇಕು |
ಜಗದಾತ್ಮನ ಪೂಜಿಸಬೇಕು |
ಭಾಗವತಾಮೃತ ಸೇವಿಸುತನುದಿನ |
ಯೋಗಾಧೀಶ ಸದಾನಂದನಾಗಲು ೫

 

೧೪೪
ನಿನ್ನ ಕೃಪೆಯಿಲ್ಲದನ್ಯವು ಬೇಡ ಕೃಷ್ಣಾ |
ನಿನ್ನ ದಾಸರ ದಾಸನೆನಿಸೂ ಶ್ರೀಕೃಷ್ಣ || ಪ
ನಿನ್ನ ಕೃಪೆಯಿದ್ದರೀ ದೇಹಕ್ಕೆ ಸುಖವಿಹುದು |
ನಿನ್ನ ಕೃಪೆಯಿರೆ ಬುದ್ಧಿ ಶುದ್ಧವಹುದೂ |
ನಿನ್ನ ಕೃಪೆಯಿರೆ ಮನಕೆ ಶಾಂತಿ ಗುಣ ಸಿದ್ಧಿಪುದು |
ನಿನ್ನ ಕೃಪೆಯೊಳು ಜನ್ಮ ಸುಪವಿತ್ರವಹುದೂ ೧
ನಿನ್ನ ಕೃಪೆಯಿದ್ದರೇ ಹೆಂಡತಿಯ ಸುಖವಿಹುದು |
ನಿನ್ನ ಕೃಪೆ ಇರಲು ಮನೆ ವೈಕುಂಠವಹುದೂ |
ನಿನ್ನ ಕೃಪೆಯಿದ್ದರೇ ಸತ್ಪುತ್ರರೊದಗುವರು |
ನಿನ್ನ ಕೃಪೆಯಿರಲು ಸಂಸಾರ ಸುಖವಹುದೂ ೨
ನಿನ್ನ ಕೃಪೆಯಿರುವ ಸಂಪದಗಳಲಿ ಸುಖವಿಹುದು |
ನಿನ್ನ ಕೃಪೆಯಿರೆ ವಿಷಯ ಭೋಗ ಸುಖವಹುದೂ |
ನಿನ್ನ ಕೃಪೆಯಿರೆ ಸರ್ವ ಕಾರ್ಯಗಳು ಸಿದ್ಧಿಪುದು |
ನಿನ್ನ ಕೃಪೆಯಿರಲು ಸತ್ಕೀರ್ತಿ ದೊರಕುವುದೂ ೩
ನಿನ್ನ ಕೃಪೆಯೊಳಗಾಯುರಾರೋಗ್ಯ ಸಿದ್ಧಿಪುದು |
ನಿನ್ನ ಕೃಪೆಯುರಲು ಸೌಭಾಗ್ಯ ಸುಖವಹುದೂ |
ನಿನ್ನ ಕೃಪೆಯಿರಲು ಸದ್ಧರ್ಮಾರ್ಥ ಸಿದ್ಧಿಪುದು |
ನಿನ್ನ ಕೃಪೆಯೊಳು ಕಾಮ್ಯದಿಂ ಮೋಕ್ಷವಹುದೂ ೪
ನಿನ್ನ ಕೃಪೆಯಾದರೇ ಭವರೋಗ ಹರವಹುದು |
ನಿನ್ನ ಕೃಪೆಯೊಳು ಭವ ಭಯಗಳು ತೊಲಗುವದೂ |
ನಿನ್ನ ಕೃಪೆಯೊಳು ಭವದ ಬಂಧ ಬಿಡುಗಡೆಯಹುದು |
ನಿನ್ನ ಕೃಪೆಯೊಳು ಸದಾನಂದ ಸುಖವಹುದೂ ೫

 

೧೨೦
ನಿನ್ನ ನಂಬಿದೆ ಶಾರದೇ | ಭಕ್ತಿಗೆ ಮತಿ- |
ಯನ್ನು ಪಾಲಿಸ ಬಾರದೇ ಪ
ನಿನ್ನ ನಂಬಿದೆ ನಾನು | ಎನ್ನ ಜಿಹ್ವೆಯೊಳ್ ನೀನು |
ಖಿನ್ನತ್ವಗೊಳ್ಳದೆ | ಸನ್ನುತೆ ನೆಲಸವ್ವ ಅ.ಪ
ಜಡಮತಿಯನು ತ್ಯಜಿಸಿ | ನೀ ದಯದಿಂದ |
ದೃಢಮತಿಯನು ಪಾಲಿಸಿ ||
ಕಡಲ ಶಯನ ಸೊಸೆ | ಪೊಡವಿಗಧಿಕವಾದ |
ಮೃಡನ ಸ್ಮರಿಪ ಜ್ಞಾನ | ತಡೆಯದೆ ಕರುಣಿಸು ೧
ತ್ವತ್ಸಂಗವನು ಪಾಲಿಸಿ | ನೀ ದಯದಿಂದ |
ದುಸ್ಸಂಗವನು ಛೇದಿಸಿ ||
ಸತ್ಸಂಗವೆನಗಿತ್ತು | ಮತ್ಸಂಗ ನೀನಾಂತು |
ತ್ವತ್ಸುಗುಣ ನುಡಿಗಳ | ಹೃತ್ಸರೋಜದೊಳಿರಿಸೆ ೨
ಸನುಮತ ಪಥಗಾಣಿಸಿ | ಕಏತೆಗಳ |
ಮನದಲ್ಲಿ ಸ್ಥಿರಗೊಳಿಸಿ ||
ಜನನ ಮರಣವೆಂಬ | (ವನ) ದೊಳಗೆನ್ನನು |
ವಿನಯದಿ (ಂದಲಿ) ಪಾರ | ಗಾಣಿಸೆ ಶಾರದೆ ೩
ದಾಸನೆಂದೆನಿಸೆಯೆನ್ನ | ಕೀತಿ೯ಗಹಿತ |
ದೋಷವ ತ್ಯಜಿಸೆ ಮುನ್ನ ||
ಕ್ಲೇಶಗೈವರ ಮನ | ಲೇಸಿನೊಳ್ ವಂಚಿಸಿ |
ದಾಸರ ದಾಸನ | ವಾಸವ ಕರುಣಿಸೆ ೪
ಚಿನುಮಯಾತ್ಮಕನಿರುವ | ವೈಕುಂಠದ |
ಘನತರ (ಸತ್) ಪದವಿಯ ||
ಅನುದಿನ ತವ ಪತಿ | ಪಿತ ಶ್ರೀನಿವಾಸನ |
(ಅನುಯಾಯಿ) ಸೇವೆಗ | ಳೆನಗಿತ್ತು ಪಾಲಿಸೆ ೫

 

೧೪೫
ನಿನ್ನವ ನಾನಲ್ಲವೋ | ಶ್ರೀಕೃಷ್ಣರಾಯ |
ಎನ್ನ ಕೈ ಬಿಡಬೇಡವೋ ಪ
ಮುನ್ನಿನಾರಭ್ಯ ಮನ್ನಿಸಿ ಪೊರೆಯುವ- |
ರಿನ್ನಾರ ಕಾಣೆನು ಪನ್ನಗಶಯನನೆ ಅ.ಪ
ನೊಂದೆನು ಬಹು ಜನ್ಮದಿ | ಶ್ರೀರಂಗನೆ |
ಬಂದೆನು ನರಜನ್ಮದಿ ||
ಹೊಂದಿದ ಭವಬಾಧೆಗೆಂದಿಗು ಕಡೆಯಿಲ್ಲ |
ತಂದೆ ಅನಾಥರ ಬಂಧು ಕಾಪಾಡಯ್ಯ ೧
ಧ್ರುವರಾಯನ ಪಿತನು | ಮನ್ನಿಸದಿರೆ |
ತವ ಪಾದವನೆ ಸೇರ್ದನು ||
ಭವಬಂಧವನೆ ಕಿತ್ತು ತವ ಸಾನ್ನಿಧ್ಯವನಿತ್ತು |
ಭುವನವಿಖ್ಯಾತನೆಂದೆನಿಸಿ ಕಾಯ್ದವ ನೀನೆ ೨
ತರಳನ ಕೊಲುವೆನೆಂದು | ಬಾಧಿಸುತಿರೆ |
ನರಹರಿಯಾಗಿ ಬಂದು ||
ದುರುಳನ ಛೇದಿಸಿ ಶರಣ ಪ್ರಹ್ಲಾದನ |
ಸ್ಥಿರ ಸುಖದೊಳು ಕಾಯ್ದೆ ಕರುಣಿಗಳರಸನೆ ೩
ಅಂಬರೀಷನ ವ್ರತವ | ಕೆಡಿಸಲೆಂದು |
ಡೊಂಬಿಯ ಮಾಡಿರುವ ||
ಡಾಂಭಿಕ ಮುನಿಯನ್ನು ಬೆಂಬಟ್ಟಿ ಚಕ್ರದಿ |
ಇಂಬಿಟ್ಟು ಭಕುತನ ಸಂಭ್ರಮದೊಳು ಕಾಯ್ದೆ ೪
ಕರಿರಾಜನಿಗೊಲಿದು | ನೆಗಳ ಬಾಯ |
ತ್ವರಿತದಿಂದಲಿ ಸೀಳ್ದು ||
ಭರದಿಂದ ಗರುಡನಲೇರಿಸಿ ಕರೆತಂದು |
ಶರಣನ ಸಲಹಿದ ಪರಮ ಪುರುಷ ನೀನೆ ೫
ಏಕಾದಶಿಯ ವ್ರತವ | ಮಾಡಿದ ಪುಣ್ಯ- |
ಶ್ಲೋಕನು ರುಕ್ಮಾಂಗದ ||
ಬೇಕಾದ ಬವಣೆಗ | (ಳೇಕಾಕಿ) ಪಡೆಯಲು
ಜೋಕೆಯೊಳ್ ನಿಜದಿ | ಸಾಕಿದೆ ಕರುಣಾಳು ೬
ದ್ರುಪದರಾಯನ ಮಗಳ | ಸಭೆಯೊಳಗಂದು |
ಅಪಮಾನಗೈದ ಖೂಳ ||
ಕಪಟನಾಟಕ ನಿನ್ನ ಗುಪಿತದಿ ನೆನೆಯಲು
ಕೃಪೆಯೊಳವಳಿಗೊಲಿಖಿಲವಸ್ತ್ರವನಿತ್ತೆ ೭
ಹೊತ್ತು ತಪ್ಪಿಸುತ ಬಂದ | ಋಷಿಗಳಿಗೊಂದು |
ತುತ್ತನ್ನವಿರದ (ಕಾಲ)
ಸ್ತೋತ್ರಕೊಲಿದು ಬಂದು ಯತಿಗಳ ಸಂತೈಸಿ |
ಮತ್ತೆ ಪಾಂಡವರನ್ನು ಸತ್ಯಾತ್ಮರೆನಿಸಿದೆ ೮
ಭೂಸುರರಡಿಗೆ ಬೀಳೆ | ಕುಲಹೀನನ |
ವಾಸದಿ ಬಾಯಬಿಟ್ಟೆ ||
ಲೇಸಿನೊಳ್ ಕುಡುತೆ ಪಾಲ್(ಸೂಸಿ) ತೃಪ್ತಿಯ ಪಟ್ಟೆ |
ದಾಸ ವಿದುರನಿಗೆ ಲೇಸ ಮುಕ್ತಿಯ ಕೊಟ್ಟೆ ೯
ಗಂಧವ ಸೆಳೆದುಕೊಂಡೆ | ಶ್ರೀ ವಕ್ರೆಯ |
ಅಂದವ ಸರಿಮಾಡಿದೆ ||
ಮಂದಾರ ಮಾಲೆಯ ತಂದ ಸುದಾಮನ |
ವಂದ್ಯನೆಂದೆನಿಸಿದೆ ಇಂದಿರಾ ವರದನೆ ೧೦
ಬಡತನದೊಳಗೆ ಸೋತ | ಕುಚೇಲನು |
ಪಿಡಿಯವಲಕ್ಕಿ ತಂದ ||
ಕಡು ಕೃಪೆಯೊಳು ಉಣಬಡಿಸಿ ನೀನಾತನ |
ದೃಢಭಕ್ತಿಗೊಲಿದಿತ್ತೆ ತಡೆಯದಿಷ್ಟಾರ್ಥವ ೧೧
ನಾನೇನು ಮಾಡಿದೆನು | ಅಪರಾಧವ |
ನೀನೇನು ತೋರದೇನು ||
ದೀನವತ್ಸಲನೆಂಬ ಮಾನ ನಿನಗಿಹುದಾಗಿ |
ಏನು ಗತಿಯೆನಗಿನ್ನು ನೀನೊಲಿಯದಿಲ್ಲಿನ್ನು ೧೨
ಬಾಲ ನಾ ನಿನಗಲ್ಲವೊ | ನಿನಗೆ ಯೆನ್ನ |
ಮೇಲೆ ಕರುಣವಿಲ್ಲವೊ ||
ಕಾಲಿಗೆರಗಿ (ಶಿರವೊಲಿದು) ಬೇಡುವೆನಯ್ಯ |
ಲೀಲೆಯಿಂದನುದಿನ ಸಲಹೊ ಸದಾನಂದ ೧೩

 

೧೪೭
ನೀನೆ ಸಕಲ ಲೋಕನಾಥನು | ಶ್ರೀಪತಿ ಗಿರೀಶ |
ನೀನೆ ಸರ್ವ ಸೂತ್ರಧಾರನು ಪ
ನೀನೆ ಸಕಲ ಲೋಕಕೊಡೆಯ |
ನೀನೆ ಸಕಲ ಪ್ರಾಣಗೆರೆಯ |
ನೀನೆ ಶಿಕ್ಷಾರಕ್ಷಾ ಕರ್ತು ನೀನೆ ಆದಿಶಕ್ತಿ ವಸ್ತು ಅ.ಪ
ಮೂರು ಪುರವ ನೀನೆ ನಿರ್ಮಿಸಿ | ಸಾಹಸ್ರರೂಪ |
ಮೂರು ಗುಣಗಳಲ್ಲಿ ನಿಲ್ಲಿಸಿ||
ಮೂರುಕಾಲ ಮೂರು ಮೂಲ | ಮೂರಕ್ಕೆರಡು ಕೂಡಿ ಸಾರ |
ಮೂರು ಆರು ದೋಷದೂರ | ಮೂರು ಸುಖಕ್ಕೈಕ್ಯನೆನಿಸೊ ೧
ತರಳ ಧ್ರುವನ ಮನವ ಪರಿಕಿಸಿ | ಮೇಲ್ ಲೋಕವಿತ್ತೆ |
ಕರುಣದಿಂದಲವನ ರಕ್ಷಿಸಿ ||
ದುರುಳ ದೈತ್ಯನನ್ನು ಕೊಂದು | ಹರುಷದಿಂ ಪ್ರಹ್ಲಾದನಿಗೆ |
ನಿರತ ಭಕ್ತಿ ಪಾಲಿಸಿದ | ದುರಿತಹರನೆ ಶರಣು ಶರಣು ೨
ಚಲವ ಪಿಡಿದು ಸತ್ಯ ಪೊರೆದನು | ಹರಿಶ್ಚಂದ್ರರಾಜ |
ಲಲನೆ ಪುತ್ರರನ್ನೆ ತೊರೆದನು ||
ಹರಿಯೆ ನೀನೆ ಗತಿಯೆಂದೆನಲು | ಒಲಿದೆ ಮೂರು ರೂಪವಾಗಿ |
ಕರೆದು ಪತ್ನೀಸುತರನಿತ್ತು | ನಿಲದೆ ಮೋಕ್ಷದೊಳಗೆ ಪೊರೆದೆ ೩
ಭಾಗವತರು ಪಾಂಡುತನುಜರು | ಜೂಜಾಟವಾಡಿ |
ಭೋಗ ಭಾಗ್ಯಗಳನು ತೊರೆದರು ||
ರಾಗರಹಿತರಾಗಿ ಭಕ್ತಿ | ಯೋಗದಿಂದ ನಿನ್ನ ಭಜಿಸಿ |
ಭೋಗದೀಶರಾಗಿ ಸುಖದ | ಸಾಗರದೊಳು ಮೆರೆದರಯ್ಯ ೪
ಇಂದು ಯೆನ್ನ ಕೈಯ ಬಿಡದಿರು | ಗೋವಿಂದರಾಯ |
ನೊಂದೆನಯ್ಯ ಭವದ ಭಯದೊಳು ||
ವಂದಿಸುವೆ ಅನಾಥನಾಗಿ | ಚಂದದಿಂದಲೆನ್ನ ಕೂಡಿ |
ತಂದೆ ಶ್ರೀನಿವಾಸ ನಿನ್ನ | ಮಂದಿರದೊಳೆನ್ನ ಸಲಹೊ ೫

 

೧೪೬
ನೀನೆನಿಸಿದಂತಹುದು | ನಾ ನೆನದುದಾಗದಿರ-|
ಲೇನು ಕಾರಣ ಯೆನ್ನ ಪ್ರಾಣನಾಥ ಪ
ನಾ ನಿನ್ನೊಳಾದವನು | ನೀನೆನ್ನೊಳಿದ್ದವನು |
ನೀನೆ ವಂಚಿಸಿದರೆನ | ಗೇನು ಗತಿ ಹರಿಯೇ ಅ.ಪ
ನಿನ್ನನೇ ನೆನವುತ್ತ | ನಿನ್ನನೇ ಪೊಗಳುತ್ತ |
ನಿನ್ನ ಸೇವೆಯೊಳಿರುವ ದಾಸ ನಾನೂ |
ಯೆನ್ನ ಮನದೊಳು ಚರಿಪ | ಪ್ರೇರಕನು ನೀನಾಗಿ |
ನಾ ನೆನದುದಕೆ ವಿಘ್ನ | ನೀನೆಸಗಬಹುದೇ ೧
ನಿನ್ನಿಂದ ನಾನಾಗಿ | ಯೆನಗೆ ಗತಿ ನೀನಾಗಿ |
ಯೆನ್ನ ತಾಯ್‍ತಂದೆ ಗುರುದೇವ ನೀನಾಗಿ |
ಯೆನ್ನ ಸತಿ ಸುತರು ಸಂಪದವೆಲ್ಲ ನೀನಾಗಿ |
ನೀನಚಿಂತ್ಯನು ಯೆನಗ | ದೇನು ಚಿಂತೆಗಳೂ ೨
ಇನ್ನು ಸಾಕಯ್ಯ | ನಿನ್ನಯ ಕಪಟ ನಾಟಕದೊ- |
ಳೆನ್ನ ಬಳಲಿಸಲು ನಿನಗನ್ಯನೇನೋ ||
ದೀನ ವತ್ಸಲನು ನೀನಾದರೆ ನನಗೊಲಿದೀಗ |
ನಿನ್ನಂತೆ ಯೆನ್ನನು ಸದಾನಂದನೆನಿಸೋ ೩

 

ಶಿವ – ಪಾವ೯ತಿಯರು
೧೨೧
ಪರಮೇಶ್ವರಾ ಮಹದೇವಾ | ಗಿರಿಜಾವರ ಶಿವ ಶಂಭೋ |
ಪರಮೇಶ್ವರ ಮಹದೇವಾ ಪ
ಹರಶವ೯ ಕಾಲಕಾಲ | ವಿರೂಪಾಕ್ಷ ರುಂಡಮಾಲಾ |
ಶರಣು ಜನರಪಾಲಾ | ಗಿರಿ ಶೋಭಾವಾ ನೀ ಲೋಲಾ ೧
ಭೂತೇಶ ವ್ಯೊಮಕೇಶಾ | ಶಿತಿಕಂಠ ಕೃತ್ತಿವಾಸಾ |
ಸ್ತುತಿಪೇ ಉಮಾ ಮಹೇಶಾ | ಕ್ರತು ಧ್ವಂಸಿ ದುಷ್ಟ ನಾಶಾ ೨
ಈಶಾನ್ಯ ಭಗ೯ರುದ್ರಾ | ಪಶುಪತೇ ವೀರಭದ್ರಾ |
ಕೃಶಾನು ರೇತಸ್ ರೌದ್ರಾ | ಶಶಿಧರಾ ಯೋಗನಿದ್ರಾ ೩
ಪಿನಾಕಿ ಮೃತ್ಯುಂಜಯನೇ | ನಾ ನಿನ್ನ ಮರತಿಹನೇ|
ದೀನರ ಪಾಲಿಸುವನೇ | ನೀನೆನ್ನ ಕಾಯೋ ಭವನೇ ೪
ಗಜಮುಖ ತಾತ ಬಾರೋ | ಭಜಿಸುವೆನೀ ಮೈದೋರೋ |
ನಿಜದಾ ಸದಾನಂದ ಬಾರೋ | ರಜತಾದ್ರಿವಾಸ ತೋರೊ ೫

 

೧೭೪
ಪಾಪದ ಭಯ ಯಾರಿಗಿಹುದು ಈ ಕಾಲ |
ಶಾಪದಿಂದಡಗಿತೈ ಧರ್ಮ ಪರಿವಾರ ಪ
ಲೇಪವಿದು ಕೃತ ತ್ರೇತ ದ್ವಾಪರವ ದಾಟುತ್ತ | ಪ್ರ |
ತಾಪದಾ ಕಲಿಯುಗದಿ ವ್ಯಾಪಿಸಿತು ಧರೆಯ ||
ರೂಪದೋರದೆ ನರಕ ಕೂಪದೊಳು ಕೆಡಹುತ್ತ |
ತಾಪಪಡಿಸುವ ಪರಿಯ ಶ್ರೀಪತಿಯೆ ಬಲ್ಲ ಅ.ಪ
ಕಷ್ಟ ದುಃಖಕೆ ಮೂಲ ಪಾಪವೇ ಕಾರಣವು |
ಇಷ್ಟ ಸುಖ ಪಡೆಯುವರ ಪುಣ್ಯ ಫಲವು ||
ಇಷ್ಟ ಪಡೆಯುವ ಪುಣ್ಯ, ಕಷ್ಟ ಪಡೆಯುವ ಪಾಪ |
ಇಷ್ಟಿದರನರಿಯದವ ನರನೊ ಪಾಮರನೊ ೧
ಸ್ಥಿರಚರ ಪ್ರಾಣಿಯೊಳು ಪರಿಕಿಸಲು ಮೇಲಾದ |
ನರಜನ್ಮದೊಳು ಬಂದು ಸುಖದುಃಖದ ||
ಕಾರಣವ ಬಲ್ಲ ಗುರುಹಿರಿಯರಿಂದರಿತು ಸುವಿ |
ಚಾರದಿಂ ನಡೆಯುವವನವ ನರೋತ್ತಮನು ೨
ಪುಣ್ಯಾತ್ಮನಾದವನು ಇಹಸುಖಂಗಳ ಪಡೆವ |
ಪುಣ್ಯಾತ್ಮನಾದವನು ಸ್ವರ್ಗಸುಖ ಪಡೆವ ||
ಪುಣ್ಯಾತ್ಮನಾಗಿ ಶ್ರೀಹರಿ ಭಕ್ತನಾಗಿರುವ |
ಪುಣ್ಯಫಲದೊಳು ಸದಾನಂದ ಸುಖ ಪಡೆವ ೩

 

೧೨೩
ಪಾಲಿಸೆನ್ನ ಪಾವ೯ತೀಶನೆ | ಮಹಾನುಭಾವ |
ನೀಲಕಂಠ ರುಂಡಮಾಲನೆ ಪ
ಪಾಲಿಸೆನ್ನ ಭವದೊಳಿಂದು |
ಬಾಲಚಂದ್ರಧರನೆ ಬಂದು |
ಕಾಲಕಾಲ ದುರಿತಜಾಲ |
ಮೂಲನಾಶಗೈದುವೊಲಿದು ಅ.ಪ.
ಅಂತರಾತ್ಮನಖಿಲ ಪೋಷಣ | ಕಪಾಲಧರ ದು-|
ರಂತ ಮಹಿಮ ತ್ರಿಗುಣ ಕಾರಣ ||
ಸಂತಸುಜನ ಚಿಂತಿತಾಥ೯ |
ಕಂತುಹರ ಭವಾಬ್ಧಿ ಪೋತ |
ಅಂತಕಾಂತನಖಿಲ ಭುವನ |
ಕ್ರಾಂತಾನಂತ ಮಹಿಮ ದೇವ ೧
ಭುಜಗಾಭರಣ ಅಜಸುರಾಚಿ೯ತ | ತ್ರಿಶೂಲಧಾರ|
ಸುಜನ ಬಂಧು ಮುಕ್ತಿದಾಯಕ ||
ತ್ರಿಜಗದೀಶ ತ್ರಿಪುರನಾಶ |
ರಜತಶೈಲವಾಸ ಭಕ್ತ |
ನಿಜಮನೋರಥಾಬ್ಧಿ ಚಂದ್ರ |
ಭಜಿಸುವೆ ಚರಣಾರವಿಂದ ೨
ಆದಿಮಧ್ಯಾಂತರಾತ್ಮನೆ | ಜಗನ್ನಿವಾಸ |
ವೇದವೇದ್ಯ ಸುಜನಸೇವ್ಯನೆ ||
ಆದಿಮಾಯೆಯಾದಿಮೂಲ |
ಆದಿಪುರುಷ ಶ್ರೀನಿವಾಸ |
ಸಾದರದೊಳೆನ್ನ ಕಾಯ್ದು |
ಮೋದದಿಂದ ಸಲಹೊ ದೇವ ೩

 

೧೪೮
ಪಾಲಿಸೈ ಶ್ರೀ ಲೋಲನೆ ಎನ್ನ | ಗೋಪಾಲಕೃಷ್ಣನೆ |
ಪಾಲಿಸೈ ಶ್ರೀ ಲೋಲನೆ ಎನ್ನ ಪ
ಕಾಲ ಕಾಲ ಸುಶೀಲ ದೇವಕಿ |
ಬಾಲ ಕೌಸ್ತುಭಲೋಲ ಭಕ್ತರ |
ಪಾಲ, ತುಳಸೀ ಮಾಲ, ಮುನಿಸ ದ-
ಯಾಲ, ಶೋಭಿತ ರತ್ನಜಾಲ, ಭೂಷಿತ ಲೀಲ ಅ.ಪ
ನಂದಗೋಪಿಯ ಕಂದ ಸಚ್ಚಿದಾ- |
ನಂದ ಶ್ರೀ ಗೋವಿಂದ ತ್ರಿಜಗ |
ದ್ವಂದ್ಯ ತವ ಪದ (ಸ್ಕಂದ) ಶರಣರ |
ಬಂಧು, ಪೊರೆಯೊ ದಯಾಸಿಂಧು ನುತಿಪೆನಿಂದು ೧
ಕ್ಷೀರ ದಧಿಘೃತ ಚೋರ ಗೋಪೀ |
ಜಾರ, ಕುಜನ ಕುಠಾರ, ಖಳ ಸಂ- |
ಹಾರ, ಭಕ್ತವಿಚಾರ, ಲೋಕ ವಿ- |
ಹಾರ, ಭವದೂರ, ಸುಖಸಾರ, ಯದುವೀರನೆ ೨
ಶ್ರೀಶ ತ್ರೈಜಗದೀಶ ಕವಿಜನ |
ತೋಷ, ಭವ ಭಯ ಪಾಶ ಕಿಲ್ಬಿಷ |
ನಾಶ, ಸಜ್ಜನ ಪೋಷ, ನಿಜ ಸ-|
ರ್ವೇಶ, ದೇವೇಶ ಸದಾನಂದ ಶ್ರೀನಿವಾಸ ೩

 

೧೨೨
ಪಾಲಿಸೋ | ಪಾವ೯ತಿಯ ಪ್ರಾಣೇಶ |
ಪಾಲಿಸೋ ಪ
ಪಾಲಿಸೆಮ್ಮನು ಪಶುಪತಿಯೆ | ನಿಜ |
ಬಾಲಾಕ೯ ಕೋಟಿದೀಧಿತಿಯೆ | (ನಮ್ಮ) |
ಏಳಿಗೆಗೊಳಿಪ ಸದ್ಗತಿಯೆ ಎಂಬು ||
ದಾಲಸ್ಯಗೊಳದೆ ಝೇಂಕೃತಿಯೆ ಶಂಭೋ ||
ಮೂಲ ಮೂರುತಿ ಸರ್ವಕಾಲಕಾಲನೆ ತ್ರೀ ||
ಶೂಲವ ಪಿಡಿದೆನ್ನ ಆಲಸ್ಯ ತ್ಯಜಿಸಿನ್ನು ೧
ಪ್ರಮಥ ಪ್ರಜಾಪ್ರಭೂದಾರ | ಧರ್ಮ |
ದ್ರುಮ ಸುಮನಸರಿಗಾಧಾರ |ಜಗ |
ತ್ಕ್ರಮಜಳಿಂತೆನುವ ವಿಚಾರ | ಸ್ವಾಮಿ |
ನಮಿಸಿ ಕೇಳುವೆ ಸವ೯ಸಾರ | ಆಹಾ ||
ಕಮಲನಾಭನ ಮಿತ್ರ | ದ್ಯುಮಣಿಶೋಭನ ಗಾತ್ರ |
ದ್ಯುಮಣಿಸನ್ನುತ ನಮೋ | ನಮೋಯೆಂಬೆ ಜಯ ಶಂಭೋ ೨
ಶರಣವತ್ಸಲ ಮೃತ್ಯುಂಜಯನೆ | ನಿನ್ನ |
ಮರೆಯ ಹೊಕ್ಕೆನು ಕಾಲಾಂತಕನೆ | ಎನ್ನ |
ಕರುಣದಿ ಸಲಹೊ ಶಂಕರನೆ | ಶಿರ-
ವೆರಗಿ ಬೇಡುವೆ ದಯಾಪರನೆ | ದೇವ ||
ಕರುಣಾಸಾಗರ ನಿನ್ನ | ತರಳನಾಗಿದೆ೯ನ್ನ |
ಪೊರೆಯೊ ಸದಾನಂದ | ಪರ ಗುರುರಾಯನೆ ೩

 

೧೨೫
ಪುಣ್ಯ ಮಾಡುವರೆ ಚೈತನ್ಯವಿಲ್ಲೆನ್ನುವೆಯ |
ಕಣ್ಣ ಮುಂದಿರುವ ವಿಷಯಾದಿ ಸುಖಕೆ ಪ
ಚರವಾದ ವಿಷಯಾದಿ ಸ್ವಪ್ನಸುಖದಾಸೆಯೊಳು |
ಪರಿಪರಿಯ ಸಾಧನೆಯೊಳರ್ಥ ಗಳಿಸಿ ||
ದೊರೆತನದೊಳಿಹೆ ಯಮನ ಚರರು ಸೆಳೆದೊಯ್ವಾಗ |
ಮೊರೆವೆ ನರಕುರಿಯೆ ಅದನರಿತಿಹೆಯ ಮನವೆ ೧
ಬಣ್ಣಗುಂದಿದರು ದಿವರಾತ್ರಿ ಸಾಧಿಸುವೆ |
ಎಣ್ಣುತೆಣ್ಣುತಲಿ ನಿನ್ನಾಯುಷ್ಯ ಕಳೆವೆ ||
ಇನ್ನೀಗಲಾದಂತೆ ಪುಣ್ಯ ಸಂಗ್ರಹಿಸಿದರೆ |
ಸನ್ನುತದ ನಿಜಸುಖದೊಳಿರಬಹುದು ಮನವೆ ೨
ಚರಸುಖದ ಸಂಗ್ರಹಕೆ ಇರುವ ಆಯುಷ್ಯದ |
ಪರಿಸಮಾಪ್ತಿಯ ತನಕ ಸಾಧಿಸುತಿಹೆ ||
ಸ್ಥಿರಸುಖಕೆ ಆದಷ್ಟು ಪುಣ್ಯ ಸಂಗ್ರಹಿಸದಿರೆ |
ನರಕದೊಳ್ ಬಾಯ್‍ಕಳೆದರೊದಗುವುದೆ ಸುಖವು ೩
ನರಜನ್ಮದೊಳು ಬಂದು ಅರಿವನರಿಯದೆ ವ್ಯರ್ಥ |
ಚರ ಭೋಗ ಸುಖವ ಸುಸ್ಥಿರವೆನ್ನುತ |
ಇರುವ ಜನ್ಮವ ಕಳೆದು ಭವದ ಬಲೆಯೊಳು ಸಿಲುಕಿ |
ತಿರುತಿರುಗಿ ಬಳಲುತಿರೆ ಸುಖವಾಗಬಹುದೊ ೪
ಧರೆಗೆ ಭಾರದ ದುಷ್ಟರನು ಸಂಹರಿಸಿ |
ಶರಣರನ್ನುದ್ಧರಿಸಿ ಸದ್ಧರ್ಮವ ||
ಸ್ಥಿರಗೊಳಿಸಿ ಪರಮಾತ್ಮ ಮೆರೆವ ಕಲಿಯುಗದಿ ಸ-|
ದ್ಗುರುವಾಗುತಿಹನಲ್ಲೊ ಅರಿತುಕೊ ಮನವೆ೫
ಏನರಿಯದವನಂತೆ ಮೌನದಿಂದಿರಬಹುದು |
ತಾನೊರ್ವನೆಲ್ಲೊ ಸಂಚರಿಸುತಿರಬಹುದು ||
ಧ್ಯಾನಿಸುವ ಪುಣ್ಯಾತ್ಮರಿಗೆ ಗೋಚರಿಸಬಹುದು |
ತಾನಾಗಿ ಶರಣರೊಳು ಕರುಣವಿಡಬಹುದು೬
ಗುರುವರನ ಚರಣಕ್ಕೆ ಸಾಷ್ಟಾಂಗವೆರಗುತ್ತ |
ನಿರತ ಸೇವೆಯೊಳವನ ಮನಮೆಚ್ಚಿಸಿ ||
ಪರತತ್ತ್ವವರಿತು ಶ್ರೀಹರಿ ಸದಾನಂದ ಸುಖ |
ಶರಧಿಯೊಳಗೋಲಾಡುತಿರು ನಿರುತ ಮನವೆ ೭

 

೧೪೯
ಬರಿದೆ ದೂರುವಿರೇತಕೆ | ಕೃಷ್ಣಯ್ಯನ |
ಚರಿತೆಯ ಪೇಳಬೇಕೆ ಪ
ಅರಿತವರಾದರೆ | ಪರಮ ಪುರುಷನೊಳು |
ಕೊರತೆಗಳೆಣಿಸದೆ | ಸ್ಥಿರಸುಖದೊಳು ಬಾಳಿ ಅ.ಪ
ದಧಿಘೃತ ಚೋರನೆಂದು | ಶ್ರೀ ರಂಗನೊಳ್ |
ವಿಧಿಸುವಿರೇಕೆ ಕುಂದು ||
ದಧಿಘೃತ ಸೋಕಿದ | (ಓದನ)ವುಣಲೊಲ್ಲ |
ಚದುರ ಚೆನ್ನಿಗ ಮುದ್ದು | ಪದುಮದಳಾಕ್ಷನ ೧
ಹಾಲು ಬೆಣ್ಣೆಯ ಮೆದ್ದನು | ಯೆಂದೆನುವಿರಿ |
ಬಾಲನೊಳ್ ಕೊರತೆಯನು |
ಹಾಲು ಬೆಣ್ಣೆಯ ತಂದು | ಲೀಲೆಯೊಳಿಕ್ಕಲು |
ಕಾಲಿನೊಳೊದೆದೆಲ್ಲ | ಶ್ರೀಲೋಲನುಣಲೊಲ್ಲ ೨
ಕರುಗಳ ಬಿಡುವನೆಂದು | ಬರಿದೆ ದೂರ |
ಹೊರಿಸುವಿರೇತಕಿಂದು ||
ತರಳನೊಂದಿಲಿಯ | ಮರಿಯ ಕಂಡಂಜುವ |
ಹರಿಣಾಕ್ಷಿಯರಿರೇನು | ಮರುಳರಂತೊರೆವಿರೆ ೩
ಉಚ್ಚೆ ಬಂದರೆ ಪೋರನು | ನಮ್ಮನೆಯೊಳು |
ಕಚ್ಚೆ ಬಿಟ್ಟೋಡುವನು ||
ಹೆಚ್ಚು ಮಾತುಗಳೇನು | ಅಚ್ಯುತನೊಳು ನೀವು |
ಮೆಚ್ಚಿನ ಮಾತಿದು | ಸಚ್ಚರಿತವಿದೆಂದು ೪
ಮುಗುದೆಯರಿರ ನೀವ್ ಬಂದು | ಪೇಳಿದ ಮಾತು |
ಸೊಗಸಾಗಿ ಕೇಳ್ಹೆ ನಿಂದು ||
ಜಗದೊಡೆಯನು ನಿಮ್ಮೊ | ಳಗಡುತನವ ಮಾಡೆ |
ಬಿಗಿವೆ ಸದಾನಂದ | ವಾಗಲಿ ನಿಮಗೆಲ್ಲ ೫

 

೧೬೫
ಬಾರೆನ್ನ ಪ್ರಾಣ ಶ್ರೀ ಗುರು ಮುಖ್ಯಪ್ರಾಣ |
ತೋರೋ ಸದಾನಂದಮಯ ಜಗತ್ಪ್ರಾಣ ಪ
ಜಗಗಳಾಧಾರನೆ ನಿಗಮ ಬೋಧಿತನೆ |
ತ್ರಿಗುಣ ವ್ಯಾಪಾರ ಶ್ರೀ ರಘುಪತಿ ಪ್ರಿಯನೆ ೧
ಆತ್ಮನು ನೀನಂತರಾತ್ಮನು ನೀನೆ ||
ಮುಕ್ತಿದಾಯಕ ಪರಮಾತ್ಮನು ನೀನೆ ೨
ಪ್ರಾಣ ಅಪಾನ (ವ್ಯಾನನು) ನೀನೆ ||
(ಉದಾನ) ಸಮಾನ ಸದಾನಂದ ನೀನೆ ೩

 

೧೫೦
ಬಿಡಬೇಡ ಕೈಯ | ನಾರಾಯಣ |
ಬಿಡಬೇಡ ಕೈಯ ಪ
ಬಿಡಬೇಡ ಕೈಯ ಎನ್ನೊಡೆಯ ನಾರಾಯಣ |
ಕಡಲಶಯನ ನಿನ್ನಡಿಗೆರಗಿ ಬೇಡುವೆ ಅ.ಪ
ಅನಾಥ(ನು) ನಾನು | ದೇವರ ದೇವ |
ಎನಗೆ ಗತಿ ನೀನು ||
ಮಾನವ ಜನ್ಮದೊಳಾನುದಿಸಿರ್ದರು |
ಏನೊಂದನರಿಯದ ಮೂಢನಾಗಿರುವನ ೧
ವ್ರತ(ದ) ಭಂಗವಾಯ್ತು | ಜಪವಗೈವ |
ಮತಿಯು ಬರಡಾಯ್ತು ||
ಶ್ರುತಿಶಾಸ್ತ್ರ ನೋಡದೆ ಕೃತಕೃತ್ಯವರಿಯದೆ |
ಮತಿಹೀನನಾದೆನು ಪತಿತ ಪಾವನ ಕಾಯೊ ೨
ದುರಿತರಾಶಿಗಳು | ಎಷ್ಟಿಹುದೊ ನಾ – |
ನರಿಯೆ ಮರೆವೆನ್ನೊಳು ||
ಶರಣವತ್ಸಲನೆಂಬೀ ಬಿರುದುಳ್ಳ ದೇವನೆ |
ಮರೆಯಹೊಕ್ಕೆನು ಕಾಯೊ ಕರುಣಿಗಳರಸನೆ ೩
ಭಕುತ ಸಂಸಾರಿ | ಮೈದೋರೈಯ |
ಪ್ರಕಟದಿ ನೀ ಸಾರಿ ||
ಸಕಲಾತ್ಮಕನೆ ಜೀವ ಮುಕುತನೆನ್ನಿಸಿ ನಿಜ |
ಸುಖದ ಸಂಪದವಿಯೊಳು ಮಕರಕುಂಡಲ ಧಾರಿ ೪
ಶ್ರೀವಾಸುದೇವ | ನೀನೆನಗೀಯೊ |
ತವಕದಿ ಪದ ಸೇವಾ ||
ಭಾವಭಕ್ತಿಯ ಸುಖವೀವ ಬಾಂಧವನೆನ್ನ |
ಕಾವ ಕರ್ತನೆ ಕುಲದೇವ ಸದಾನಂದ ೫

 

೧೫೧
ಬಿಡಬೇಡಿ ಶ್ರೀ ಹರಿಯ | ನಾವೆಲ್ಲರು |
ಪಿಡಿದು ಕೃಷ್ಣನ ಚರಿತ್ರೆಯ ಪ
ತಡೆಯದೆ ನಂದನ | ಮಡದಿ ಗೋಪಮ್ಮನ |
ಯೆಡೆಗೊೈದೆಲ್ಲರು ಪೇಳುವ ಅ.ಪ
ಅಲ್ಲಿ ಓಡುವನಿದಕೋ | ಗೋಪಾಲ ತಾ-|
ನಿಲ್ಲಿರುವನೊ ನೋಡಿಕೋ ||
ಸೊಲ್ಲನಾಡದೆ ನಾವು | ಮೆಲ್ಲನೆ ಮೌನದಿ |
ಬಲ್ಲಿದವನ ನೋಡುವ ೧
ಗಡಬಡಗುಟ್ಟುತಿದೆ | ನಮ್ಮೊಳಗೇನೊ |
ವೊಡೆದಂತೆ ಶಬ್ದವದೆ ||
ಹುಡುಗ ರಂಗನು ಹಾಲ | ಕುಡಿದು ಭಾಂಡವ ಮೆಟ್ಟಿ |
ಪುಡಿಗೈವನೇನೊ ಕಾಣೆ ೨
ದುಶ್ವರಿತೆಯನುಳಿದು | ಸಾಧಿಸುತೀಗ |
ಸಚ್ಚರಿತನ ಪಿಡಿದು ||
ಬೆಚ್ಚದೆ ನಾವೆಲ್ಲ | ರಿಚ್ಚೆ ಬಂದಂದದಿ |
ನಿಶ್ಚಿಂತೆಯೊಳಗಾಡುವ ೩
ಕಿಟಕಿಯ ಬೆಳಕಿನೊಳು | ಕೋಣೆಯೊಳಿರೆ |
ಕಟಕಿಯೋರ್ವಳು ಪಿಡಿದು ||
ಹಟವೇನೊ ಯೆಮ್ಮೊಳು | ಕುಟಿಲಗಾರನೆ ನಿನ್ನ |
ನಟನೆ ನೀಡುವೆನೆಂದಳು ೪
ಬಾಲೆಯರೊಂದುಗೂಡಿ | ಗೋವಿಂದನ |
ಲೀಲೆಗಳನ್ನೆ ಪಾಡಿ ||
ಆಲಸ್ಯವಿರದೆ ಶ್ರೀ | ಲೋಲನನೊಯ್ದು ಸು-|
ಶೀಲೆ ಗೋಪಿಯೊಳೆಂದರು ೫
ಹುಡುಗನ ತಂದಿಹೆವು | ಗೋಪಮ್ಮ ಕೇಳೆ |
ಪಿಡಿದಿಕೊ ನಿಂದಿಹೆವು ||
ತಡೆಯದೆ ನೀ ಮಾಳ್ಪ | ಬೆಡಗೇನುಂಟದನೊಮ್ಮೆ |
ನಡೆಸೆಂದರಬಲೆಯರು ೬
ಇಂದುಮುಖಿಯರಿತೆಂದು | ಕಂಕುಳೊಳು ಮು-|
ಕುಂದನಿಲ್ಲದಿರಲಂದು ||
ಮುಂದೆ ತೊಟ್ಟಿಲೊಳು ಗೋ | ವಿಂದನ ನೋಡಿ ಸದಾ – |
ನಂದವಾಗಿರ್ದರು ೭

 

೧೫೨
ಬೇಡುವೆನು ನಾ ರೂಢಿಗೊಲ್ಲಭನೇ |
ವೈಕುಂಠ ಪದವಿಯ |
ನೀಡುತಲಿ ಕೃಪೆ ಮಾಡೊ ಸಿರಿವರನೆ ಪ
ಗಾಢಭವದೊಳು ಕೂಡಿತನುವೀ |
ಡಾಡಿ ದಣಿದೆಯಿನ್ನಾಡಲೇನದ |
ಬೇಡಯೆನಗೀ ಗೂಢ ದುಃಖದ |
ಹೇಡಿ ಜನ್ಮದೊಳಿಡದೆ ರಕ್ಷಿಸೊ ಅ.ಪ
ಸೃಷ್ಟಿಸಿದೆ ನೀ ನನ್ನ ಜೀವವನೂ | ಅಲ್ಲಿಂದ ತೊಳಲಿದೆ |
ಅಷ್ಟ ಚಾತುರ್ಲಕ್ಷ ಜನ್ಮವನೂ |
ಭ್ರಷ್ಟನಾದೆನೀ ಕಷ್ಟ ಭವದೊಳ- |
ಗೆಷ್ಟು ದಿನಯೆನಗಿಟ್ಟಿರುವೆ ನೀ |
ಶ್ರೇಷ್ಠ ಶ್ರೀ ಗುರು ನಿನ್ನ ಕಾಂಬೆನೆ |
ನ್ನಿಷ್ಟ ಪಾಲಿಸೋ ಲಕ್ಷ್ಮಿಯೊಲ್ಲಭ ೧
ನಾಗಶಯನ ಯೆನ್ನಾಗಮನವ ಬಲ್ಲೆ | ಸರ್ವಾತ್ಮ ಶಾಸ್ತ್ರ ನಿ-
ನ್ನಾಗಮಗಳೆಂತೆಂಬುದಾನೊಲ್ಲೇ |
ನೀಗಿತಿರನು ಶ್ರೀನಿವಾಸ ಕೃಪಾ |
ಸಾಗರದೊಳಾಲಾಡಿ ಸ್ಥಿರ ಪದವೀಗ |
ಪಾಲಿಸೆಂದೆನ್ನ ಮನದೊಳು |
ಬಿಗಿದು ಪಿಡಿದೆನು ನಿನ್ನ ಪಾದವ ೨
ಪಾರಗಾಣಿಸೊ ಭವ ಶರಧಿಯಿಂದಾ |
ತವ ಚರಣಕೆರಗೀ ಕರಮುಗಿದು ಬೇಡುವೆನು |
ಗೋವಿಂದಾ ಶರಣ ವತ್ಸಲ ನೀನೆಯೆನ್ನಯ |
ದುರಿತ ಬಂಧವ ಬಿಡಿಸಿ ನಿರ್ಭಯ |
ಪರಮಸುಖ ಸಂಪದದಿ ಪಾಲಿಸೊ |
ಕರುಣಾಸಾಗರ ಗುರು ಸದಾನಂದ೩

 

೧೫೩
ಭಗವಂತನೇ ನಿನ್ನ ಮಗನು ನಾ ಬೇಡುವೆನು |
ಧಗಧಗಿಪ ಬಿಸಿಲೊಳಗೆ ಜಗವು ಸುಡುತಿಹುದು ಪ
ನಿಗಮಗೋಚರ ನಿನ್ನ ಉಗುರೆಡೆಯೊಳುದಿಸಿರ್ದ |
ಮಗಳಾದ ಭಾಗೀರಥಿಯ ಕಳುಹಿ ಸಲಹೊ ಅ.ಪ
ಆಷಾಢ ಮಾಸದೊಳು ಬೇಸಿಗೆಯ ಬಿಸಿಲುಂಟೆ |
ಕೇಶವನೆ ನೀ ನೋಡು ದಾಸ ಜನರ ||
ರಾಶಿ ಬೆಳೆಗಳು ಸುಟ್ಟು ಘಾಸಿಯಾಯಿತು ಎಮ್ಮ |
ಪೋಷಣೆಗೆ ಗತಿಯೇನು ಶೇಷಶಯನ ೧
ನೀನೆ ಸೃಷ್ಟಿಸಿದವನು ನೀನೆ ಪಾಲಿಸುವವನು |
ನೀನೆ ಮುನಿದಡೆ ಕಾಯ್ವರಾರು ದೇವ ||
ಏನೆಂದು ತಿಳಿಯೆ ನಾ ನಿನ್ನ ಮಾಯಾ ನಟನೆ |
ದೀನ ವತ್ಸಲನೆಂದು ನನ್ನೊಂದರಿಕೆ ೨
ಎರಡು ಸೊಲ್ಲಲಿ ಇಂದುವಾರದೊಳಗರಿಕೆಯನು |
ಹರಿಯೆ ತವಚರಣಕರ್ಪಿಸಿದೆ ನಾನು ||
ಮೂರನೆಯ ಸೊಲ್ಲೊಳಗೆ ಕರುಣಾಮೃತದ ಮಳೆಯ |
ಧರಧರನೆ ಸುರಿಸಿದೆ ಸದಾನಂದಗೈದೆ ೩

 

೧೫೪
ಮಾನವನು ಕಾಪಾಡೊ ಶ್ರೀ ಹರಿಯೇ |
ಮಾನವನು ಕಾಪಾಡೊ ಪ
ಋಣ ಪಾಶದೊಳು ಅಪ -|
ಮಾನ ಗೈಯ್ಯದೆ ಕಾಯೊ ಸದ್ಗುರುವೇ |
ಶ್ರೀನಿವಾಸನೆ ನಾನು ನಿನ್ನಾ- |
ಧೀನನಾದ ಅನಾಥನೆನ್ನ ನಿ- |
ದಾನ ಮಾನಪಮಾನ ನಿನ್ನದು |
ನೀನೆನಗೆ ಗತಿ ದೀನ ವತ್ಸಲ ಅ.ಪ
ಅಂದಿನಿಂದೀವರೆಗು ಸುಖವಿಲ್ಲಾ | ನಾ ಬಂದ ಭವಣೆಗ |
ಳಂದವನು ವರ್ಣಿಸುವಡಳವಲ್ಲ |
ಹಿಂದಣೆಸಗಿದ ದುಷ್ರ‍ಕತದ ಫಲ |
ದಿಂದಲೇ ಭವ ಬಂಧದೊಳು ನಾ- |
ನೊಂದೆ ಕೈ ಪಿಡಿದಿಂದು ಆಪದ್ |
ಬಂಧು ಕರುಣಾ ಸಿಂಧು ರಕ್ಷಿಸೋ ೧
ಹುಲಿ ಕರಡಿ ಶಾರ್ದೂಲದಂತೆಲ್ಲಾ | ಮಾನವರು ಯೆನಗೇ |
ಹಲವು ವಿಧದೊಳು ಪೀಡಿಸುವರಲ್ಲಾ |
ಕೊಲುವೆನೆನ್ನುತ ಭಾಷೆ ಹಾಕುತ |
ಬಲು ತರದ ಕಷ್ಟಗಳ ಕೊಡುತಿಹ |
ಸುಲಿಗೆದಾರರ ಬಲೆಗೆ ಬಿದ್ದಿಹೆ |
ಜಲಜನಾಭನೆ ಸಲಹೊ ಬೇಗನೆ ೨
ಸೋತೆನೀ ಭವ ಯಾತನೆಗಳಿಂದಾ | ಅನಾಥನೆನ್ನನು |
ಪ್ರೀತಿಯೊಳಗಾದರಿಸೊ ಗೋವಿಂದಾ |
ಘಾತಕರ ಕೈಯೊಳಗೆ ಸಿಲುಕಿದ |
ರೀತಿಯೊಳು ನಿರ್ಭೀತಿಯಿಂದಲಿ |
ಮಾತೆಯಂದದಿ ಯೆನ್ನ ಸಲಹುವ |
ಧಾತನೇ ಜಗನ್ನಾಥ ಪಾಲಿಸೋ ೩
ಸಾಕು ಸಾಕಾಯ್ತಯ್ಯ ಸಂಸಾರ | ದಾರಿದ್ರ ದುಃಖದಿ |
ಮೂಕನಾದೆನು ಸೋಕಿ ಗ್ರಹಚಾರ |
ಶ್ರೀ ಕಮಲೆಯೊಲ್ಲಭನೆ ನಿನಗಾ- |
ನೇಕ ವಿಧದಪರಾಧಿಯಾದರು |
ನೀ ಕೃಪಾನಿಧಿ ಕ್ಷಮಿಸಿ ತಪ್ಪನು |
ಲೋಕನಾಥನೇ ಸಾಕು ಕರುಣದಿ೪
ಪುಟ್ಟಿದೀವರೆ ಪಟ್ಟ ಭವಣೆಗಳಾ | ಬಣ್ಣಿಸುವೆನೆಂದರೆ |
ಅಷ್ಟ ಕುಲ ನಾಗೇಶಗಳವಲ್ಲಾ |
ಸೃಷ್ಟಿಗೊಡೆಯನೆ ನೀನೆ ದಿವ್ಯಾ |
ದೃಷ್ಟಿಯಿಂದಲಿ ನೋಡುತೆನ್ನಯ |
ಕಷ್ಟ ಪರಿಹರಿಸೈ ಸದಾನಂದ |
ಭೀಷ್ಟವೀಯೈ ಕೃಷ್ಣರಾಯನೆ ೫

 

೧೫೫
ಯಾವ ದಾರಿಯೆನಗೇ ಮುರಾರಿಯಿ-
ನ್ನಾವ ಗತಿಯು ತನಗೇ | ದೇವರ ದೇವನೆ
ನೀ ವಂಚಿಸಿದರೆ | ಕಾವರೊಬ್ಬರನು ಕಾಣೆ ನಾ ದಿಟವಿದು ಪ
ದೇಶದೇಶ ತೊಳಲೀ | ನಾ ಬಲು ಘಾಸಿಯಾದೆ ಬಳಲೀ |
ಕೇಶವ ತವ ಕೃಪೆ ದಾಸನೊಳಾಗದೆ ಲೇಸೆನಗಿಲ್ಲ |
ವಾಸುಕಿಶಯನನೆ ೧
ಅಕ್ಷಿ ತೆರೆದು ನೋಡೋ ಮಾಯೆಯ |
ಶಿಕ್ಷೆ ಸಾಕು ಮಾಡೋ | ಕುಕ್ಷಿಗೊಡೆಯ ಕಮಲಾಕ್ಷನೆ ತವಪದ|
ಮೋಕ್ಷವಿತ್ತೆನ್ನನು | ರಕ್ಷಿಸದಿರ್ದಡೆ ೨
ಮಂದರಾದ್ರಿಧರನೇ | ತವಾಂಘ್ರಿಗೆ ವೊಂದಿಪೆ ಶ್ರೀವರನೇ |
ಬಂದು ಮಾನಸದಿ ನಿಂದು ಮೈ ದೋರುತ |
ಕಂದನ ಸಲಹೆನ್ನ | ತಂದೆ ಸದಾನಂದ ೩

 

೧೫೬
ರಾಮಕೃಷ್ಣ ನಮೋ ನಮೋ ಹರಿಯೆ | ಸುಪ್ರೇಮದಿಂ ತವ |
ನಾಮ ನಿಜ ಸುಖ ಪಾಲಿಸೈ ದೊರೆಯೆ ಪ
ಶ್ಯಾಮಸುಂದರ ಪುಣ್ಯ ಜನ ನಿಜ |
ಧಾಮ ಭುವನ ಸ್ತೋಮ ಮಂಗಲ-||
ನಾಮ ಭಕ್ತಾಭೀಷ್ಟ ಸುರಕುಲ-|
ಕಾಮಧೇನು ರಮಾವರನೆ ಹರಿ ಅ.ಪ
ಶ್ರೀವರನೆ ಶಾಶ್ವತನೆ ಭವಹರನೆ | ದೇವೇಶ ಮುನಿಜನ |
ಭಾವ ಮಂದಿರ ರಾವಣಾಂತಕನೆ ||
ಸೇವಕರ ಕುಲದೇವ ಸನ್ನುತ | ಕೇವಲಾನಂದಾತ್ಮ ಚಿನ್ಮಯ |
ಭೂವಧೂಹಿತ ಕಾವ ವಿಭು ರಾಜೀವ ಸುತೆ ಶ್ರೀಲೋಲ ರಾಘವ ೧
ಸಿಂಧುಶಯನನೆ ಮಂದರಧರನೆ | ಗೋವಿಂದ ತ್ರಿಭುವನ |
ವಂದ್ಯ ಸುಜನರ ಬಂಧುವಾದವನೆ ||
ನಂದಗೋಪಿಯ ಕಂದ ನಿತ್ಯಾ | ನಂದ ಪಾವನ ದ್ವಂದ್ವಚರಣವ |
ಪೊಂದಿ ಜಯ ಜಯವೆಂದು ನುತಿಸುವೆ | ಇಂದಿರೇಶ
ಮುಕುಂದ ರಕ್ಷಿಸು ೨
ಮತ್ಸ್ಯ ಕೂರ್ಮ ವರಾಹ ನರಸಿಂಹ | ವಾಮನ ತ್ರಿವಿಕ್ರಮ |
ಕ್ಷತ್ರಿಹರ ಭಾರ್ಗವ ಪರಬ್ರಹ್ಮ ||
ಭಕ್ತವತ್ಸಲ ರಾಮ ದೇವಕಿ | ಪುತ್ರ ಸನ್ನುತಿಪಾತ್ರ ಕವಿಜನ |
ಸ್ತೋತ್ರ ಬುದ್ಧಾವತಾರಿ ಕಲ್ಕಿಯೆ | ನಿತ್ಯ ಸದಾನಂದಾತ್ಮ ಶ್ರೀಗುರು ೩

 

೧೫೭
ಲಕ್ಷುಮಿ ನಾರಾಯಣ | ಭಕ್ತಪಾರಾಯಣ ||
ಲಕ್ಷುಮಿ ನಾರಾಯಣ ಪ
ಅಕ್ಷಯ ನಿಜ ಸುಖದಿಚ್ಚೆಯ ಪೂರೈಸುವ |
ಮೋಕ್ಷದಾಯಕ ಗುರು | ಸಚ್ಚಿದಾನಂದಾ ನಮೊ ೧
ಭವಭಯ ವರ್ಜಿತ | ಭವನಜನಾರ್ಜಿತ |
ಕವಿಜನ ಪೂಜಿತ | ಶಿವಸಖನ ಜಪಿತ ೨
ವಾಸುಕಿ ಶಯನನೆ | ಭೂಸುರ ಪ್ರೀಯನೆ |
ಲೇಸು ಸುಬೋಧಾಯನೆ | ದಾಸರ ದಾಸ ನಮೋ ೩
ಸತ್ವ ಚಿತ್ತಾನಂದ | ನಿತ್ಯ ಮೂರ್ಜಗ ದ್ವಂದ್ಯ |
ಮುಕ್ತಿದಾಯಕ ಪರ | ವಸ್ತು ಸದಾನಂದ ೪

 

೧೧೯
ವಾಣಿ ಬ್ರಹ್ಮನ ರಾಣಿ ಕಲ್ಯಾಣೀ|
ಫಣಿವೇಣಿ ಸದ್ಗುಣ |
ಶ್ರೇಣಿ ವೀಣಾ ಪುಸ್ತಕ ಪಾಣಿ ಪ
ಜಾಣೆ ಶ್ರೀ ಜಗತ್ರಾಣಿ ಶಾಸ್ತ್ರ ಪ್ರ-
ವೀಣೆ ವೇದ ಪ್ರಮಾಣಿ ನಿನಗೆಣೆ |
ಗಾಣೆ ಸಂತತಕೇಣವಿಡದೆನ್ನಾಣೆ |
ನೆಲಸಿರು ಮಾಣದೆನ್ನೊಳು ಅ.ಪ.
ತಾಯೆ ತ್ರಿಜಗ ಸಹಾಯೆ ಶುಭ ಕಾಯೇ |
ಓಂಕಾರರೂಪಿಣಿ |
ಮಾಯೆ ಮುನಿಜನಗೇಯೆ ಸುಖದಾಯೇ ||
ತೋಯಜಾಂಬಕಿ ಶ್ರೀಯರ ಸೊಸೆ |
ಆಯದಿಂದಲಿ ಶ್ರೇಯಸ್ಸುಖಪದ –
ವೀಯೆ ಸಂತತ ಕಾಯೆ ಶತಧೃತಿ ಪ್ರೀಯೆ |
ನೀನೆನಗೀಯೆ ವಾಕ್ಸುಧೆü ೧
ಅಕ್ಷರ ಸ್ವರೂಪೆ ನಿರ್ಲೇಪೇ |
ಮೌನಿಜನ ಮಾನಸ |
ಪಕ್ಷ ಸಕಲಾಧ್ಯಕ್ಷೆ ಶುಭಚರಿತೇ |
ಸೂಕ್ಷ್ಮ ಸ್ಥೂಲ ಸುಲಕ್ಷಣಾನ್ವಿತೆ |
ಯುಕ್ತೆ ಶಕ್ತೆ ಮುಮುಕ್ಷು ಜನ ನಿಜ |
ಭಕ್ತಿ ಭುಕ್ತಿವರ ಪ್ರದಾಯಕಿ |
ಮುಕ್ತಿ ಸುಖ ಸೌಖ್ಯ ಪ್ರದಾಯಕಿ ೨
ಸುಂದರಾಂಗಿ ಆನಂದ ಗುಣ ಭರಿತೇ |
ವಂದಿಸುವೆ ತವಪದ -|
ದ್ವಂದಕಾನತನಾಗಿ ಸಚ್ಚರಿತೇ |
ಯೆಂದು ಮದ್‍ಹ್ವನ್ ಮಂದಿರದಿ ನೀ |
ನಿಂದು ಆಪದ್ ಬಂಧು ಕರುಣಾ |
ಸಿಂಧುವನು ನಾನೆಂದು ಪೊಗಳ್ವಾ -|
ನಂದವರ ಸದಾನಂದ ಪಾಲಿಸೇ ೩

 

೧೨೮
ಶಂಕರಿ ಪಾರ್ವತಿ ಶಿವನರ್ಧಾಂಗಿಯೆ |
ಪಂಕಜ ಲೋಚನೆ ಕಿಂಕರನನು ಪೊರೆಯೆ ಪ
ಮಂಗಲಾಂಗಿಯೆ ಭವ ಭಂಗ ನಿವಾರಿಣಿ |
ಹಿಂಗದೆನ್ನನು ರಂಗನ ಭಗಿನಿ ೧
ಒಂದರಿಂದೆರಡಾಗಿ ಒಂದೆ ಶಕ್ತಿಯೊಳು (ನೀ) |
ನಂದ ಮೂರುತಿಯಾದಾನಂದ ಮಹಾಮಾಯೆ ೨
ದೇಶದೊಳ್ ದೋಷ ವಿನಾಶಗೊಳಿಸುವೆ |
ದಾಸರಿಷ್ಟಗಳೀವ ಈಶೆಯಾಗಿರುವೆ ೩
ಉಣಿಸುವೆ ಎಣಿಸುವೆ ತಣಿಸುವೆ ನೀನೆ |
ದಣಿದರ ಭವದೊಳುದ್ಧರಿಸುವೆ (ನೀನೆ) ೪
ವಾಸವಾರ್ಚಿತೆ ಜಗದೀಶ ಸುಪ್ರೀತೆ |
ದಾಸನ ಪೊರೆ ಶ್ರೀನಿವಾಸಾನುಜಾತೇ ೫

 

೧೨೯
ಶರಣಾಗತನಾದೆನು | ಭವಾನಿ |
ಶರಣಾಗತನಾದೆನು |
ಭೂರಿಜಗದುದ್ಧಾರೆ ಲೋಕವಿ-|
ಹಾರೆ ಸತ್ಯವಿಚಾರೆ ಮುನಿಮನ |
ಸಾರೆ ಸರ್ವಾಧಾರೆ ಲೋಕವಿ-|
ಚಾರೆ ನಿನ್ನಡಿದಾವರೆಗೆ ನಾ ಅ.ಪ
ಖಂಡಪರಶು ಸುಪ್ರೀತೆ | ನಾರಾಯಣಿ |
ಚಂಡಿಕೆ ಗಿರಿಜಾತೆ ||
ಚಂಡ ಮುಂಡ ಧೂಮ್ರಾಕ್ಷ ತ್ರಿಜಗ- |
ದ್ಭಂಡ ಶುಂಭನಿಶುಂಭ ಮಹಿಷನ |
ದಿಂಡುಗೆಡಹುತ ರುಂಡಗಳ ಚೆಂ-|
ಡಾಡಿ ರಕ್ತವನುಂಡ ಶಂಕರಿ೧
ಹೈಮವತಿ ಶರ್ವಾಣಿ | ಶರಣ್ಯೇ |
ಕೌಮಾರಿ ಗೌರಿ ರುದ್ರಾಣಿ ||
ಕಾಮಹರ ಸುಪ್ರೀ(ಯೆ) ತ್ರಿಜಗ-|
(ದ್ಧಾಮೆ) ಧರ್ಮ (ನಿ)ದಾ(ನೆ) (ನಿ)ರ್ಮಲ |
(ಕಾಮೆ) ಮನ್ಮನ ಧಾ(ಮೆ) ನೀನೆ |
(ವಾಮೆ) ಪೊರೆ ಬ್ರಹ್ಮಾಂಡ ನಾಯಕಿ ೨
ಆದಿಶಕ್ತಿಯೆ ಈಶ್ವರಿ | ಭುವನೇಶ್ವರಿ |
ವೇದಾತ್ಮೆ ಸರ್ವೇಶ್ವರಿ ||
ನಾದ ಬಿಂದು ಕಲಾದಿಮಯ(ಳೆ) ವಿ-|
ನೋದೆ ಪರಮಾಹ್ಲಾದೆ ನಿರುಪಮ |
ಬೋಧೆ ನಿಜನಿರ್ವಾದೆ ಆದಿಮ |
ಧ್ಯಾಂತರಹಿತೆ ಸದಾನಂದೋದ್ಧರೆ ೩

 

೧೩೦
ಶರಣು ಶಂಕರಿ | ಗೌರಿ ಶಿವೇ |
ಶರಣು ಶಂಕರಿ ಪ
ಮಾರವೈರಿಯ | ನಾರಿ ನಿನ್ನ ಚರ – |
ಣಾರವಿಂದಕೆ ನಮೋ ಅ.ಪ
ತರಳರಾಗಿ ನಾವು ನಿನ್ನ | ಮರೆಯೊಳಿಪ್ಪುದರಿಂದ
ಕರುಣಾಮೃತದೊಳ್ ಪರಿಪಾಲಿಸುತ |
ಪೊರೆಯೆ ನೀನೆ ಸ್ಥಿರಸುಖದೊಳು ೧
ಸೃಷ್ಟಿಕರ್ತೆಯಾಗಿ ಸಕಲ | ದುಷ್ಟಭವದೊಳ್ ಕಷ್ಟಪಡಿಸಿ |
ಭ್ರಷ್ಟರೆನಿಸಿ ಕೈಯಬಿಟ್ಟರೆ |
ಕೆಟ್ಟೆವಲ್ಲವೇ ಭವಾನಿ ೨
ಆದಿಶಕ್ತಿ ನಿನ್ನ ಮಾಯಾ | ಭೇದದೊಳಗೆ ಹಲವು ಭ್ರಮೆಯ |
ಹಾದಿಯೊಳಗೆ ತಪ್ಪಿಸದೆ |
ಕಾಯ್ದು (ನೀ) ಆದರಿಸವ್ವ ೩
ಮಂತ್ರರೂಪಿಣಿಯೆ ಸಕಲ | ತಂತ್ರಧರ್ಮ ಯಂತ್ರದ |
ಚಿಂತೆಯಿಲ್ಲದೆ ಶಿವನ |
ಕಾಂತೆ ಸಲಹೆಮ್ಮನು ೪
ಗಣಪಗುಹರ ಆಣೆ ನಿನಗೀ |
ಋಣದ ಬಾಧೆ ಬಿಡಿಸದಿರೆ |
ಅಣುವಿನಷ್ಟು ಗುಣವಿಲ್ಲೆನುತಲಿ |
ಮಣಿದು ಪ್ರಾರ್ಥಿಸುವೆನು ೫
ಪೂರ್ವ ಪುಣ್ಯ ಹೀನರಾಗಿ |
ಉರ್ವಿಯೊಳ್ ಸುಖವಿಲ್ಲದಾಗಿ |
ಶರ್ವವಲ್ಲಭೆಯೆಮ್ಮ ಬವಣಿ |
ನಿರ್ವಾರಿಸಲುಸುರಿದೆವು ೬
ತಾಯೆ ಜಗನ್ಮಾಯೆ ಯೆಮ್ಮ |
ಆಯದಿ ಸದಾನಂದದೊಳ್ |
ತಾಯೆ ಮಹಾದೇವ ಪ್ರಿಯ
ಜಾಯೆ ನಮೋ ಸರ್ವೇಶ್ವರಿ ೭

 

೧೨೪
ಶರಣು ಶ್ರೀ ನಂದನೇಶ್ವರ | ಪಾಲಿಸು ಜಗದೀಶ್ವರ |
ಶರಣು ಶ್ರೀ ನಂದನೇಶ್ವರ ಪ
ಶರಣು ಶ್ರೀ ಗುರುವರ ಗಂಗಾಧರ |
ಕರ ಕಪಾಲಧರ ಹರ ಮೃತ್ಯುಂಜಯ ಅ.ಪ.
ತಂದೆ ನಿನ್ನಯ ಪಾದವ | ಮರೆತಿಹುದರಿಂದ |
ನಿಂದ ಹಲವಂಗದಲಿ ಭವಭವದಿ ||
ನೊಂದು ಬಂದೆ ನಾನಿಂದೀ ಭವದೊಳು |
ಹೊಂದಿ ತವಾಂಘ್ರಿಯನಂದದಿ ಭಜಿಸುವೆ ೧
ಭೇದ ಬುದ್ಧಿಯ ಮಾನವರು | ವೇದ ಶಾಸ್ತ್ರದ|
ಹಾದಿಯರಿಯದ ಮತ್ಸರರು ||
ಸಾಧುಗಳೊಡನೆ ವಿರೋಧವನೆಣಿಸುವ |
ಬಾಧಕರಾದರು ಹೇ ದಯಾನಿಧಿಯೇ ೨
ತೊಡಕುಗಳನ್ನೆ ಬಿಡಿಸಿ | ಬಾಧೆಗಳ ವಾರಿಸಿ |
ಕಡು ದುಷ್ಟಾತ್ಮರ ಶಿಕ್ಷಿಸಿ |
ಎಡೆಬಿಡದೆನ್ನ ಮನೋರಥ ಸಲಿಸುತ |
ದೃಢತರ ಭಕುತಿಯ ಕೊಡು ಕೃಪೆಯಿಂದಲಿ ೩
ಭಕತಜನರನೀಕ್ಷಿಸೊ | ನಿನ್ನಯ ಪಾದ |
ಮುಕುತಿ ಸಂಪದ ಪಾಲಿಸೊ ||
ಶಕುತಿಯೊಳಗೆ ನೀ ಯುಕುತಿಯಿಂದ ನಿಜ |
ಸುಖದ ಪದವಿಯೊಳು ಪ್ರಕಟದಿ ಪೊರೆಯೈ೪
ಯೋಗಿಗಳರಸ ನೀನೆಂಬ | ಬಿರುದುಗಳ ತೋರಿಸು- |
ತೀಗೆನ್ನಪರಾಧವ ಕ್ಷಮಿಸೆಂಬ ||
ರಾಗದ ನುಡಿಯೊಳೆನ್ನಾಗಮನವೊಪ್ಪಿಸು- |
ತೀಗ ಸದಾನಂದ ಯೋಗಾಂತರ್ಗತ ೫

 

೧೮೩
ಶರಣು ಸದ್ಗುರುನಾಥ ಮಮ ದಾತ |
ಶರಣಾಗತರನು |
ಕರುಣೆಯಿಂದಲಿ ಪೊರೆಯೊ ಸುಪ್ರೀತ ಪ
ಪರಿಪರಿಯ ಭವದೊಳಗೆ ತಿರುಗುತ |
ನರ ಜನುಮದೊಳು ಬಂದು ತೊಳಲುತ |
ಮರೆಯ ಹೊಕ್ಕೆನು ತವ ಪದಾಶ್ರಿತ |
ತರಳನನು ಸ್ಥಿರಸುಖದಿ ಪಾಲಿಸು ಅ.ಪ
ಬ್ರಹ್ಮ ನಿರ್ಮಲರೂಪ ಗುರು ಬ್ರಹ್ಮ | ಸಚರಾಚರಾತ್ಮಕ |
ಧರ್ಮಪಾಲನ ಗುರು ಪರಬ್ರಹ್ಮ |
ಬ್ರಹ್ಮ ವಿಷ್ಣು ಮಹೇಶ್ವರಾತ್ಮಕ |
ಬ್ರಹ್ಮ ಬ್ರಹ್ಮೋಂಕಾರ ರೂಪಕ |
ಬ್ರಹ್ಮ ಬ್ರಹ್ಮಾನಂದ ದಾಯಕ |
ಬ್ರಹ್ಮ ಗುರು ಪರಬ್ರಹ್ಮಣೇ ನಮಃ೧
ಸತ್ಯ ಗುಣ ಪೂರಿತನೆ ನಿರುಪಮನೆ | ನಿರ್ಗುಣ ನಿರಂಜನ |
ನಿತ್ಯ ತೃಪ್ತ ನಿರಾಮಯಾತ್ಮಕನೆ ||
ಸತ್ಯಚರಿತನೆ ಸದ್ರ‍ಥದಯ ಸ |
ರ್ವೋತ್ತಮೋತ್ತಮ ದೇವದೇವನೆ |
ಅತ್ಯಧಿಕ ಭಯ ಭಕ್ತಿಯಿಂ ಪದ-|
ಕರ್ತಿಸುವೆನೀ ತನುಮನಂಗಳ ೨
ನೀನೆ ಮತಿ ಗತಿ ನೀನೆ ಸದ್ಗುರುವೆ | ಸರ್ವತ್ರ ಸಾಧನ |
ನೀನೆ ಎನ್ನಯ ಆದಿ ಕುಲವಿಭುವೆ ||
ನೀನೆ ತಂದೆಯು ನೀನೆ ತಾಯಿಯು |
ನೀನೆ ಕರುಣಾಸಿಂಧು ಬಂಧುವು |
ನೀನೆ ಪರಮಾನಂದದಾತನು |
ನೀನೆ ಎನ್ನಯ ಪ್ರಾಣನಾಥನು ೩
ಆದಿತತ್ತ್ವ ರಹಸ್ಯ ಮೂಲವನು | ನಾನರಿಯೆನೀ ಭವ |
ವಾರ್ಧಿಯನ್ನುತ್ತರಿಪ ರೀತಿಯನು ||
ಆದಿಮಧ್ಯಾಂತಗಳ ತಿಳಿಯೆನು |
ಹಾದಿಯೇನೆಂದೆನುತಲರಿಯೆನು |
ಆದಿಮೂರುತಿ ಕರುಣದಿಂದೆನ-|
ಗಾದರದಿ ನೀ ಬೋಧಿಸೈ ನಿಜ ೪
ಸರ್ವದಾ ನಂಬಿರುವೆ ತವ ಪದವ | ಗುರದೇವ ಜಯ ಜಯ |
ಸರ್ವದಾ ಕೊಡು ತವ ಪದದ ಸೇವಾ ||
ಸರ್ವದಾ ಸರ್ವಾತ್ಮ ಜಯ ಜಯ |
ಸರ್ವದಾ ನಿಜಸುಖದ ಜಯ ಜಯ |
ಸರ್ವದಾ ಸನ್ಮೋಕ್ಷ ಜಯ ಜಯ |
ಸರ್ವದಾ ಸದಾನಂದ ಜಯ ಜಯ ೫

 

೧೭೬
ಶಾಂತನಾಗದೆ ಭವದ ಬಂಧ ಬಿಡದಣ್ಣಾ |
ಶಾಂತನಾಗದೆ ಭವದ ಚಿಂತೆ ಬಿಡದಣ್ಣಾ ಪ
ಶಾಂತನಾಗದೆ ಭವದ ದುಖ್ಖಗಳು ಬೆಂಬಿಡದು |
ಶಾಂತನಾಗದೆ ಭವದ ಭಯವು ಬಿಡದೂ |
ಶಾಂತನಾಗದವಂಗೆ ಭವ ಭವರೋಗ ಬಿಟ್ಟಿರದು
ಶಾಂತನಾಗದೆ ಭವ ಭವಂಗಳೆಡೆ ಬಿಡದೂ ೧
ಶಾಂತನಾಗದವಂಗೆ ಅಜ್ಞಾನ ಬೆಂಬಿಡದು |
ಶಾಂತನಾಗದೆ ಪಾಪಗಳು ಪೋಗದೂ |
ಶಾಂತಿಯಿಲ್ಲದ ನರನ ಜನ್ಮವೆರ್ಥಾಗುವುದು |
ಶಾಂತಿಯಿರದವಗೆ ದುರ್ಗತಿಗಳೊದಗುವದೂ ೨
ಶಾಂತಿಯಿಲ್ಲದ ಮನವು ಚಂಚಲದೊಳಡಗಿಹುದು |
ಶಾಂತಿಯಿಲ್ಲದಿರೆ ಷಡ್ಟೈರುಗಳು ಬಿಡದೂ |
ಶಾಂತನಾದರೆ ಸದಾನಂದ ಸುಖವಹುದೂ ೩

 

೧೮೪
ಶಾರದಾವರ | ಶರಣು ಗುರುವರಾ |
ಶಾರದಾವರ ಪ
ನಾರಾಯಣ ನಾಮ | ಚರಣ ಭಕ್ತಿ ಪ್ರೇಮ |
ಸಾರಿ ಸಂನ್ನುತಿಪ್ಪಾ | ವರವ ನೀಯೆನ್ನಪ್ಪಾ ಅ.ಪ
ಸೃಷ್ಟಿಕಾರಣ ಪರ | ಮೇಷ್ಠಿದ್ರುಹಿಣಾ | ದುಷ್ಟಮಾರಣ |
ಸೃಷ್ಟ ವೇದ ವಿಧಾತ ಶ್ರೇಷ್ಠ | ಭೂಸುರ ಜೇಷ್ಠಾ |
ಕಷ್ಟ ಪರಿಸೊ | ಇಷ್ಟಾರ್ಥ ಪಾಲಿಸೊ ೧
ಹರಿಕಥಾಮೃತ | ಸಾರವೀಕೃತ | ವರಕವಿತ್ಪಥಾ |
ಸ್ಥಿರ ಮನೋರಥವ | ಪೂರಯಿಸೊ ದೇವ |
ಭಾರವೊಪ್ಪಿಸಿದೆನು | ಪಾರಗಾಣಿಸಿದನು ೨
ಮರೆಯ ಹೊಕ್ಕೆನೂ | ವರಕವಿತ್ವವನ್ನೂ | ಮೆರೆಯಿಸಿ
ನೀನೂ | ಹರಿದಾಸತ್ವವಿತ್ತೂ | ಪೊರೆಯಬೇಕು ಮತ್ತು |
ಇರಿಸೆನ್ನಾ ಸತ್ಕೀರ್ತಿ | ಸ್ಥಿರ ಸದಾನಂದಾರ್ತಿ ೩

 

ಅ. ಗಣಪತಿ – ಸರಸ್ವತಿಯರು
೧೧೭
ಶ್ರೀ ಗಣಪತಿ ಓಂ ನಮೋನಮೋ | ಜಯ
ಶ್ರೀ ಗಣಪತಿ ಓಂ ನಮೋನಮೋ ಪ
ಅಗಜಾವರಸುತ | ನಿಗಮಾಗಮನುತ |
ಯೋಗಿಗಳರಸನೆ | ಭಾಗವತರ ಪ್ರೀಯ ಅ.ಪ
ವಿಘ್ನಹರನೆ ಶುಭ | ಲಗ್ನಪ್ರದಾಯಕ |
ಭಗ್ನದುರಿತ ನಿಜ | ಮಗ್ನ ಪ್ರಭಾಕರ೧
ವಿದ್ಯಪ್ರದಾಯಕ | ಬುದ್ಧಿ ಪ್ರದಾಯಕ |
ಸಿದ್ಧಿಸಂಪದ ಆಯುರ್ ವೃದ್ಧಿ ಪ್ರದಾಯಕ ೨
ಶಕ್ತಿ ಪ್ರದಾಯಕ | ಸೌಖ್ಯಪ್ರದಾಯಕ |
ಭಕ್ತಿದಾಯಕ ನಿಜ | ಮುಕ್ತಿದಾಯಕ ನಮೋ ೩
ಋಣಬಂಧಂಗಳ | ಗುಣದಿಂ ಬಿಡಿಸುತ್ತ |
ತ್ರಿಣಯಕುಮಾರನೆ | ಪ್ರಣತನ ಪಾಲಿಸೋ ೪
ಭವ ಭಯ ಹರ | ತ್ರೈಭುವನಜನಾರ್ಚಿತ |
ಕವಿಸುತಲೋಲನೆ | ಶಿವಸದಾನಂದನೆ ೫

 

೧೮೫
ಶ್ರೀ ಗುರುವರನೆ ನಮೋ | ನಮ ಓಂ |
ಶ್ರೀ ಗುರುವರನೆ ನಮಃ ಪ
ಭಾಗವತರ ನಿಜಯೋಗ ಭಾಗ್ಯ ಸುಖ |
ಸಾಗರ ಮಹಿಮ ಸದಾನಂದ ಮೂರುತಿ ಅ.ಪ
ವಿಘ್ನನಿವಾರಣ ಕಾರಣ | ನಿಗ-
ಮಾಗಮ ಶಾಸ್ತ್ರ ವಿಚಾರಣ ||
ತ್ರಿಗುಣಾತ್ಮಕ ತ್ರಿಜಗತ್ಪರಿಪಾಲನ |
ಸಗುಣ ನಿರ್ಗುಣ ತ್ರೈಜಗದುದ್ಧರಣ೧
ತಂದೆ ತಾಯ್ ಗುರು ನೀನೆ ಬಾಂಧವ | ನಾ |
ನಂದಿಂದಿಗೆಂದೆಂದು ನಿನ್ನವ ||
ಇಂದು ಎನ್ನ ಹೃನ್ಮಂದಿರದೊಳು ನಿಂದು |
ನಂದದಿಂದ ದಯದೋರಿಂದೆನಗೆ ೨
ದಾಸರ ಸಂಗವ ಪಾಲಿಸೊ | ಹರಿ |
ದಾಸನು ನಾನೆಂದೆನ್ನಿಸೊ ||
ವಾಸಿಸಿ ಮನದೊಳು ಲೇಸು ಸಂಬೋಧೇಯ, |
ಬೇಸರಿಸದೆ ಶ್ರೀನಿವಾಸನೆ ಪಾಲಿಸೊ ೩

 

೧೫೮
ಶ್ರೀ ಲಕ್ಷ್ಮೀನಾರಾಯಣ | ಜಯ ಜಯ ನಮೋ ನಮೋ |
ಶ್ರೀ ಲಕ್ಷ್ಮೀನಾರಾಯಣ ಪ
ಶ್ರೀ ಲತಾಂಗಿಯ ಲೋಲ ತ್ರಿಜಗ-|
ತ್ಪಾಲ ಮುನಿಸದಯಾಲ ತುಲಸೀ |
ಮಾಲ ಸತ್ಯ ಸುಶೀಲ ಕಾಲ |
ಕಾಲ ಗಾನವಿಲೋಲ ಜಯ ಜಯ ಅ.ಪ
ಮತ್ಸ್ಯಾವತಾರ ತಾಳ್ದೆ | ಜಲಧಿಯೊಳಗಾಡುತ |
ಕುತ್ತಿ ತಮನನು ಗೆಲಿದೆ ||
ಇತ್ತ ವೇದವ ತಂದು ದ್ರುಹಿಣಗೆ |
ಸತ್ಯವ್ರತನನು ಎತ್ತಿ ಸಲಹಿದೆ |
ಕೃತ್ತಿವಾಸ ವಿರಿಂಚಿ ಮುಖ್ಯರ |
ಸ್ತೋತ್ರ ಪಡೆದ ಮಹಾತ್ಮ ಜಯ ಜಯ ೧
ಸುರರಸುರರ ನೆರಹಿ | ಮಂದರವ ಧರಿಸಿದೆ |
ಕ್ಷೀರ ಶರಧಿಯ ಮಥಿಸಿದೆ ||
ಗಿರಿಯು ನೀರೊಳ್ ಮುಳುಗಲಾಕ್ಷಣ |
ಧರಿಸಿ ಕೂರ್ಮಾಕೃತಿಯೊಳೆತ್ತಿದೆ |
ದುರುಳರಿಗೆ ಸುರೆ ಕುಡಿಸಿ, ದಿವಿಜರಿ |
ಗೆರೆದೆಯಮೃತವ ಪೊರೆದೆ ಕರುಣದಿ೨
ನಾಸಿಕೋದ್ಭವನಾದೆ | ಲೇಸಿನೊಳ್ ವಿತಳದ |
ಹಾಸಿನೊಳ್ ಪವಡಿಸಿದೆ ||
ಗಾಸಿಸುತ ಹೇಮಾಕ್ಷ ದೈತ್ಯನ |
ಭೂಸತಿಯ ಸುಸ್ಥಿರವಗೊಳಿಸಿದೆ |
ವಾಸವಾದ್ಯರ ಪೂಜೆಗೊಳ್ಳುವೆ |
ಶೇಷಗಿರಿಯ ವರಾಹರೂಪನೆ ೩
ಹರಿನಾರಾಯಣನೆಂದೆಂಬ | ಪ್ರಹ್ಲಾದನನು ಪಿತ |
ತರಿದು ಸಂಹರಿಪೆನೆಂಬ ||
ಭರದೊಳಿರಲೊಡೆದ್ವಜ್ರ ಕಂಭದಿ |
ದುರುಳ ಹಿರಣ್ಯನ ಕೆಡಹುತುದರದ |
ಕರುಳ ದಂಡೆಯ ಕೈಗೊಳುತ ನಿಜ |
ಶರಣನು ಪೊರೆದಾ ನೃಸಿಂಹನೆ ೪
ಅದಿತಿಯುದರದೊಳುದಿಸಿ | ವಾಮನನೆನಿಸಿ |
ಬುಧಜನರೊಡನೆ ಗಮಿಸಿ ||
ಚದುರತನದಿಂ ತ್ರಿಪದ ಭೂಮಿಯ |
ಮುದದಿ ದಾನವ ಬೇಡಿ ವಿತಳದಿ |
ಸದನಗೈದಾ ಬಲಿಯ ಬಾಗಿಲೊ |
ಳೊದಗಿರುವ ತ್ರಿವಿಕ್ರಮನೆ ಜಯ ಜಯ ೫
ಜಮದಗ್ನಿ ಸುತನೆಂದು | ತಂದೆಯ ನೆವದೊಳು |
ಕುಮತಿ ಕ್ಷತ್ರಿಯರ ಕೊಂದು ||
ನಮಿಸಿ ಪಿತನನು ಕಾಯ್ದು, ರಘುಜನ |
ಸಮರದೊಳು ಸಂಭವಿಸುತ ಶ್ರೀ |
ಮನುಮುನಿಗಳ ಯೋಗಸಿದ್ಧಿಯ |
ಸಮಗೊಳಿಸಿ ಪೊರೆದಮಲ ಭಾರ್ಗವ ೬
ದಶರಥ ಸುತನೆನಿಸಿ | ಕೌಸಲ್ಯೆಯ |
ಬಸಿರೊಳಗವತರಿಸಿ ||
ಕುಶಿಕಸುತನಧ್ವರವ ಪಾಲಿಸಿ |
ಶಶಿವದನೆ ಸೀತೆಯನು ವರಿಸುತ |
ನಿಶಿಚರೇಶಾದ್ಯರನು ಮಥಿಸಿದ |
ಕುಶಲವರ ಪಿತ ರಾಮಚಂದ್ರನೆ ೭
ಅವನಿಭಾರವನಿಳುಹುವ | ನೆವದೊಳು ವಸು |
ದೇವನರಸಿ ಸಂಭವ ||
ಅವಿತು ಬಾಲ್ಯದಿ ಮಾವ ಕಂಸನ |
ಬವರದೊಳು ಗೆಲಿದೊಲಿಸು ಭಕ್ತರ |
ನಿವಹವನು ನೆರೆ ಕಾಯ್ದ, ಭೀಷ್ಮಕ |
ಕುವರಿಯರಸ ಗೋಪಾಲಕೃಷ್ಣನೆ ೮
ಪತಿವ್ರತೆಯರ ವ್ರತವ | ಕೆಡಿಸುತ ಶತ |
ಧೃತಿಯ ಕೂಡುತೆ ಅಮೃತವ ||
ಅತಿ ಚಮತ್ರ‍ಕತಿಯಿಂದ ಕುಡಿದು ತ್ರಿ -|
ನೇತ್ರಗೆಣೆಯಾಗುತ್ತ ತ್ರಿಪುರರ |
ಹತವ ಗೈದಾ ಕ್ರತುಮುಖರ ಪೊರೆ |
ದತಿಕುಶಲ ಬುದ್ಧಾವತಾರನೆ ೯
ದುಷ್ಟ ಮ್ಲೇಂಛರು ಧರೆಯೊಳು | ಶಿಷ್ಟರನೆದೆ |
ಮೆಟ್ಟಿ ನಡೆಯುತಿರಲು ||
ಶ್ರೇಷ್ಠ ಭೂಸುರ ವಿಷ್ಣುಕೀರ್ತಿಯ |
ಪಟ್ಟದರಸಿಗೆ ಪುಟ್ಟುತಧಮರ |
ಕುಟ್ಟಿ ಭಕುತರಭೀಷ್ಟ ಸಲಿಸುತ – |
ಲಟ್ಟಹಾಸದಿ ಮೆರೆವ ಕಲ್ಕಿಯೆ ೧೦
ಪತಿತಪಾವನ ಮಾಧವ | ನಾ ನಿನ್ನಯ |
ಸುತನು ಅನಾಥ ದೇವ ||
ಸತತ ನೀ ಮೈದೋರುತೆನ್ನಯ |
ಧೃತಿಮತಿಗೆ ಕಲ್ಯಾಣವಾಂತಾ |
ಶ್ರಿತ ಸದಾನಂದ ವಾಸ ನೀನೇ |
ಗತಿ ಜಗದ್ಗುರು ಸಚ್ಚಿದಾನಂದ ೧೧

 

೧೫೯
ಶ್ರೀ ವರ ಜಯ ಜಯ ಜಯತು ನಮೋ ||
ಜಯತು ನಮೋ ಜಯ ಜಯತು ನಮೋ ಪ
ಭಾವಜನಯ್ಯನೆ ಕವಿಜನ ಪೂಜಿತ ||
ದೇವರ ದೇವನೆ ಕಾಯೊ ಕರುಣಾನಿಧಿ ಅ.ಪ
ಭಾಗೀರಥಿಪಿತ ನಾಗಶಯನ ಹರಿಯೇ ||
ನಿಗಮಾಗಮ ನುತ ಬಗೆ ಬಗೆಯಲಿ ನಿನ್ನ
ಪೊಗಳಲೆನ್ನಳವೆ ಅಗಣಿತ ಮಹಿಮನೆ ೧
ಗರುಡ ಗಮನ ಗಿರಿಜಾವರ ಪ್ರಿಯನೇ ||
ಪರಮ ಪುರುಷ ಪರಮಾತ್ಮ ನಿನ್ನಯ ಪಾದ |
ಸ್ಮರಣೆ ಮನ್ಮನ ಕಾಯ ಕರ್ಮದೊಳಿರಿಸೈ ೨
ವಾಸುದೇವ ತವ ದಾಸರ ಸಂಗದೊಳು ||
ಲೇಸಿನೊಳ್ ನಿಜ ಸುಖವಾಸದೊಳೆನ್ನ ಪೊರೆ |
ದಾಸರ ದಾಸನೆಂದೆನಿಸೊ ಸದಾನಂದ ೩

 

೧೭೭
ಸ್ನಾನ ಮಾಡಿ ಬೇಗ ಬಾರೆಲೋ | ಪಂಚಾತ್ಮ ಜಲದಿ
ಸ್ನಾನ ಮಾಡಿ ಬೇಗ ಬಾರೆಲೋ |
ಸ್ನಾನ ಮಾಡು ಹೀನ ಭವದ |
ನ್ಯೂನವಾದ ಮಲಿನ ತೊಳದು |
ಶ್ರೀನಿವಾಸನನ್ನು ಸೇರಿ | ನೀನು ಮುಕ್ತನಾಗಿರುವರೆ ಅ.ಪ
ಮಾತೃ ಸ್ಥಾನವನ್ನು ಕಾಣೆಲಾ | ಅಲ್ಲಿ |
ಮಾತಾ ಪಿತೃಗಳೆಲ್ಲರಿಹರು ನೋಡೆಲಾ |
ಮಾತೆೃ ಮಾತಾ ಪಿತೃಗಳುವಿ
ಧಾತ್ರ ವಶದಿ ಸಿಲುಕಿರುವರು |
ಸ್ವಾರ್ಥವಾಗಲೆಂದು ಜಗ -|
ತ್ಕರ್ತನನ್ನು ಪೂಜಿಸುವರೆ೧
ಪಿತೃ ಸ್ಥಾನಕಿತ್ತ ಬಾರೆಲೋ ಇಲ್ಲಿ ಪಿತನ |
ಪಿತೃಗಳೆಲ್ಲ ಬಳಲ್ವರೆಲ್ಲೆಯೋ |
ಸತತ ಶುದ್ಧ ಚಿತ್ತ ಲಕ್ಷ್ಮೀ |
ಪತಿಯ ಚರಣದೊಳಗೆ ನಿಲಿಸಿ |
ಅತಿಶಯದೊಳು ಪಾಡಿ ಪರ
ಗತಿಯ ಪಡೆದು ಸುಖದೊಳಿರಲು ೨
ಅಂತರಂಗದೊಳಗೆಯಿರುವವರಾ | ನಿಶ್ಚಿಂತೆಯಿಂದ |
ಕುಂತಿರುವ ಹಗೆಗಳಾರ್ವರಾ |
ಶಾಂತಿ ದಾಂತಿಯವರ ಸಹಾಯ -|
ವಾಂತು ದುರುಳರನ್ನು ಗೆಲಿದು |
ಅಂತರಾತ್ಮನನ್ನು ನೆನೆದು |
ಚಿಂತಿತಾರ್ಥ ಪಡೆಯಲೀಗ ೩
ಅದು ಇದೆಂಬ ಭ್ರಮೆಗಳ್ಯಾಕೆಲಾ | ಬಹಿರಂಗದಲ್ಲಿ |
ಪದುಮನಾಭನಾಟ ನೋಡೆಲಾ |
ವಿಧ ವಿಧದ ಮಹೇಂದ್ರ ಜಾಲ |
ವುದಿಸಿ ಬೆಳದೋಲೈಸಿ ತೋರ್ಪ |
ಸದಮಲಾನಂದಾತ್ಮಮಯನ |
ಹೃದಯದೊಳಗು ಹೊರಗು ನೋಡಿ ೪
ಗುರುವೆ ಬ್ರಹ್ಮನೆಂದು ನೋಡೆಲಾ | ಗುರು ವಿಷ್ಣುವನ್ನು |
ಗುರು ಮಹೇಶನೆಂದು ತಿಳಿಯೆಲಾ |
ಗುರು ಜಗನ್ಮಯನೆ ಭಕ್ತಿ |
ಗುರುವೆ ಭಕ್ತಿ ಮುಕ್ತಿ ಶಕ್ತಿ |
ಗುರುವೆ ಸದಾನಂದವಾಸ |
ಗುರುವೆ ನಿಜದ ಶ್ರೀನಿವಾಸ ೫

 

೧೬೦
ಹರಿ ನಾರಾಯಣ ಕೃಷ್ಣನೆನ್ನೀ | ಘೋರ |
ಭವ ಶರಧಿಯ ದಾಟಿ | ಸ್ಥಿರ ಭಾಗ್ಯವುಣ್ಣೀ ಪ
ಸಕಲ ಭಾಗ್ಯಗಳು ಹೊಂದುವದೂ | ಸಾರ |
ಸುಖದ ಸಂಪದಗಳು ತಾನೆ ಸೇರುವದೂ |
ಶಕುತಿ ಹೆಚ್ಚೆಚ್ಚು ಆಗುವದೂ | ನಾಲ್ಕು |
ಮುಖದೊಳಗಾನಂದವಾಗಿ ತೋರುವದೂ ೧
ದುರಿತ ರಾಶಿಗಳು ಸುಡುವದೂ | ಘೋರ |
ನರಕದ ವಿಷಗಳು ತಾನೆ ಓಡುವದೂ |
ಕರಕರೆಯೆಲ್ಲ ಜಾರುವದೂ |
ಗುರು ಪದ ಭಕ್ತಿ ತನ್ನೊಳು ತಾನೆ ಪುಟ್ಟುವದೂ ೨
ದುಃಖ ತನ್ನಂತೆ ಪೋಗುವದೂ |
ಮಿಕ್ಕ ಭವ ರೋಗ ಗುಣವಾಗಿ ಸುಖವು ಹೊಂದುವದೂ |
ಭಕುತಿಯೊಳ್ಮುಕುತಿಯಾಗುವದೂ |
ಲೋಕಾತ್ಮಕ ಶ್ರೀನಿವಾಸ ಸದಾನಂದವಹುದೂ ೩

 

ಧನ್ಯನಾದೆನು ಮುಖ್ಯ
ಈ. ಹನುಮಂತ ದೇವರು
೧೬೩
ಧನ್ಯನಾದೆನು ಮುಖ್ಯ ಪ್ರಾಣಾ | ನೀ ಪ್ರ-
ಸನ್ನನಾದೆಯೆನಗೆ ಇನ್ನೇನನುಮಾನಾ ಪ
ಮಾನ್ಯನಾದೆನು ಜಗತ್ರಾಣಾ | ನಾ |
ನಿನ್ನವನೆನಿಸಿದೆ ಗುರುವೆ ಮತ್ಪ್ರಾಣಾ ಅ.ಪ
ಭವ ಭಯಂಗಳು ಹರವಾಯ್ತು | ಮನ |
ದೊಳು ತವಕಿಸುವ ಚಂಚಲವೆಲ್ಲ ಹೋಯ್ತು |
ಶಿವನನುಗ್ರಹವೆನಗಾಯ್ತು |
ತ್ರೈಭುವನಕಾಧಾರ ಸದ್ಗುರು ಕೃಪೆಯಾಯ್ತು ೧
ವಾಸುದೇವನು ಯೆನಗೊಲಿದಾ | ಯೆನ್ನೋಳ್ |
ಲೇಸಾದ ಕುಲ ಕಲ್ಪತರು ಫಲ ತಾನಾದೆ |
ದೋಷರಾಶಿಗಳನ್ನು ಜರದಾ | ಯೆನ್ನ |
ಸಾಸೀರ ಪಿತೃಗಳಾ ತಾನುದ್ಧರಿಸಿದಾ ೨
ಹಿಂದೆನಗಿತ್ತಾಜ್ಞೆಗಾಗೀ | ಕರುಣ |
ಸಿಂಧು ಶ್ರೀಕೃಷ್ಣನೆನ್ನಿಜದೊಳ್ ಲೇಸಾಗಿ |
ನಿಂದು ಸದಾನಂದನಾಗೀ |
ಎನ್ನ ಬಂಧು ಬೆಳಗುವ ಸಚ್ಚಿದಾನಂದನಾಗೀ ೩

 

ಹಾಡಿನ ಹೆಸರು :ಧನ್ಯನಾದೆನು ಮುಖ್ಯ
ಹಾಡಿದವರ ಹೆಸರು : ಸಂಗೀತಾ ಕಟ್ಟಿ
ರಾಗ :ಕೌಂಸೀಕಾನಡ
ತಾಳ : ಭಜನ್ ಠೇಕಾ
ಸಂಗೀತ ನಿರ್ದೇಶಕರು :ವೆಂಕಟೇಶ ಗೋಡ್ಖಿಂಡಿ
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ನರಜನ್ಮವನ್ನು ಸಾರ್ಥಕ ಮಾಡಿಕೊಳ್ಳಿ
೧೭೦
ನರ ಜಲ್ಮವನ್ನು ಸಾರ್ಥಕ ಮಾಡಿಕೊಳ್ಳೀ |
ಬರಿದೆ ಆಯುಷ್ಯ ಸಲುವದು ನೋಡಿಕೊಳ್ಳೀ ಪ
ಸ್ಥಿರವಲ್ಲ ಈ ದೇಹ ನೀರ ಮೇಲಣ ಗುಳ್ಳೆ |
ಮರಣವಿರ್ಪುದು ಒಂದು ದಿನವಾದರೂ |
ಅರಿತು ಅರಿಯದೆ ಗೈದ ದುರಿತ ಹರಚಿತವಾದ |
ಹರಿ ಸ್ಮರಣೆಯನ್ನು ಮರೆಯದೆ ಜಪಿಸಿ ಕೊಳ್ಳೀ ಅ.ಪ
ಅಸ್ಥಿರದ ಸಂಸಾರ ವಿಷಯಾದಿ ಭೋಗ ಸುಖ |
ಮೃತ್ಯು ಬಂದೆಳವಾಗ ವ್ಯರ್ಥವಹುದೂ |
ಚಿತ್ತ ಶುದ್ಧದೊಳು ಪರಮಾತ್ಮನನು ಭಜಿಸಿರ್ದ |
ಭಕ್ತರನು ಕರುಣದಿಂದೆತ್ತಿ ಸಲಹುವನೂ ೧
ಹಿಂದೆ ಪೋದವರೊಡನೆ ಹೊಂದಿ ಪೋದವರುಂಟೆ |
ಬಂಧು ಬಾಂಧವರ್ಯಾರಿಗ್ಯಾರಿಗಯ್ಯಾ |
ಹೊಂದಿರ್ದ ಭವ ಪಾಶ ಬಂದ ಬಿಡಿಸುತ ಕಾಯ್ವ |
ಬಂಧು ಶ್ರೀ ಪರಮಾತ್ಮನನ್ನು ನೆನನೆನದೂ ೨
ಭಕ್ತ ಸಂಸಾರಿಯೆಂದೆನಿಸುವ ಬಿರುದನೂ ಧರಿಸಿ |
ಮಾತೆಯಾಗುವ ಜಗವ ಕಾಯ್ವ ಧಾತಾ |
ಸೋತು ತನ್ನವರ ನಿಜ ಸುಖ ಸದಾನಂದದೊಳು |
ಪ್ರೀತಿಯೊಳು ಕಾಯ್ವ ಜಗದ್ಗುರು ಕೃಪೆಯ ಪಡೆದೂ ೩

 

ಹಾಡಿನ ಹೆಸರು :ನರಜನ್ಮವನ್ನು ಸಾರ್ಥಕ ಮಾಡಿಕೊಳ್ಳಿ
ಹಾಡಿದವರ ಹೆಸರು :ಆತ್ಮಾ ವೆಂಕಟೇಶ್
ರಾಗ : ಮಾಲಕೌಂಸ್
ತಾಳ :ಕೆಹರವ
ಸಂಗೀತ ನಿರ್ದೇಶಕರು :ಸಂಗೀತಾ ಕಟ್ಟಿ
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ನಾ ಮಾಡಿದ ತಪ್ಪ ಕ್ಷಮಿಸೊ
೧೪೧
ನಾ ಮಾಡಿದ ತಪ್ಪ ಕ್ಷಮಿಸೊ ರಂಗಯ್ಯ |
ಸ್ವಾಮಿ ರಕ್ಷಿಸೊ ಬಂದು ನೀನೆ ಎನ್ನಯ್ಯ ಪ
ಪ್ರೇಮದೋರದೆ ನಿನಗಿನ್ನು ಶ್ರೀಹರಿಯೆ |
ಸೋಮಶೇಖರ ಪ್ರಿಯ ಸಲಹೆನ್ನ ದೊರೆಯೆ ಅ.ಪ
ಜಲ್ಮ ಜಲ್ಮದ ದೋಷವೆಲ್ಲ ಬಂಧಿಸುತೆನ್ನ |
ನಿಲ್ಲಗೊಡದ ಪರಿ ಸೊಲ್ಲಿಸಲರಿಯೆನು ||
ಪುಲ್ಲಲೋಚನ ಪಾದಪಲ್ಲವದೊಳು ಬಿದ್ದು |
ತಲ್ಲಣಿಸುವೆ ನಿನಗಿನ್ನು ಕರುಣವಿಲ್ಲ ೧
ನೀನೆನ್ನ ಸೃಷ್ಟಿಸಿದಂದಿನಿಂದೀ ವರೆಗೆ |
ನಾನೇನ ಗೈದೆನೊ ವರ್ಣಿಸಲರಿಯೆ ||
ಸಾನುರಾಗದಿ ಕೈಯ ಮುಗಿದು ಬೇಡುವೆನು |
ದೀನರಕ್ಷಕ ತ್ರಾಹಿ ತ್ರಾಹಿ ಮಣಿವೆನು ೨
ದಮ್ಮಯ್ಯ ಬಳಲಿಸದಿರು ಎನ್ನ ತಂದೆ |
ಹಮ್ಮೆನ್ನೊಳಿಲ್ಲವೆಂಬುದ ನೀನೆ ಕಂಡೆ ||
ಕರ್ಮ ವಂಚಿಸುತಲಿ ಸಲಹಬೇಕೆಂದೆ |
ನಿರ್ಮಲಗೊಳಿಸೆನ್ನ ಮನವ ನೀನಿಂದೆ ೩
ಧ್ರುವ ಪ್ರಹ್ಲಾದಾಂಬರೀಷ ರುಕ್ಮಾಂಗ |
ತವ ಪಾದಭಜಕನಕ್ರೂರ ಸುದಾಮ |
ಭುವನ ವಿಖ್ಯಾತ ಸತ್ಯಾತ್ಮ ಹರಿಶ್ಚಂದ್ರ |
ಇವರಿಗಿಷ್ಟಾರ್ಥವನಿತ್ತು ಪಾಲಿಸಿದಾತ೪
ಸೋತೆ ನೀ ಭವ ಬಂಧದೊಳಗೆ ನಾ ಸಿಲುಕಿ |
ದಾತ ನೀನೈತಂದೆನ್ನನು ತಕ್ಕೈಸಿ ||
ಪ್ರೀತಿಯೊಳೆನ್ನ ಮನದಿ ನಿಂದು ಸುಖದಿ | ನಿ |
ರ್ಭೀತ ಶ್ರೀನಿವಾಸ ಪಾಲಿಸೊ ಮುಕುತಿ ೫

 

ಹಾಡಿನ ಹೆಸರು :ನಾ ಮಾಡಿದ ತಪ್ಪ ಕ್ಷಮಿಸೊ
ಹಾಡಿದವರ ಹೆಸರು :ಸುರೇಖಾ ಕೆ. ಎಸ್.
ರಾಗ :ರೀತಿಗೌಳ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ಗಿರಿಧರ ದಿವಾನ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ನಾರಾಯಣ ನಾರಾಯಣನೆನ್ನದೆ
೧೭೧
ನಾರಾಯಣ ನಾರಾಯಣನೆನ್ನದೆ |
ನೀರೊಳು ಮುಳುಗಿದಡೇನು ಫಲ ಪ
ಸಾರವರಿತು ಭಕ್ತಿಯನಿಡದಾ ಶ್ರುತಿ |
(ಸಾರವ)ನೋದಿದಡೇನು ಫಲ ಅ.ಪ
ಬ್ರಾಹ್ಮಣನೆನ್ನುತ ಬ್ರಹ್ಮವನರಿಯದೆ |
ಕರ್ಮವ ಮಾಡಿದಡೇನು ಫಲ ||
ನಿರ್ಮಲ ಚಿತ್ತದಿ ಮರ್ಮವನರಿಯದೆ |
ಧರ್ಮದಾನದಿಂದೇನು ಫಲ ೧
ಪರರನು ಪೀಡಿಸಿ ಪರರನು (ವಂಚಿಸಿ) |
ದೊರೆ ತಾನೆಂದರದೇನು ಫಲ ||
ಗುರುಹಿರಿಯರ ಪೂಜಿಸದೆ ಡಂಬಕೆ |
ಹರಿ ಹರಿಯೆಂದರದೇನು ಫಲ ೨
ಪತಿಯನು ವಂಚಿಸಿ ಪರರನು ಕೂಡುತ |
ಪತಿವ್ರತೆಯೆಂದರದೇನು ಫಲ ||
ಧೃತಿಯ ನಿರುತ ಪ್ರಪಂಚದೊಳಿರಿಸುತ |
ಸ್ತುತಿ ಪೂಜೆಗಳಿಂದೇನು ಫಲ ೩
ಸತತ ದುಷ್ರ‍ಕತ್ಯದ ನಡತೆಯೊಳಿದ್ದವ |
ತೀರ್ಥಯಾತ್ರೆ ಮಾಡಲೇನು ಫಲ ||
ಸತಿಯ ಬಿಟ್ಟು ಪರಸತಿಗಪೇಕ್ಷಿಸಿ |
ವ್ರತಗಳ ಮಾಡಲದೇನು ಫಲ ೪
ಮನುಜನಾಗಿ ಸುಜ್ಞಾನವನರಿಯದೆ |
ತನುವನು ಪೊರೆದರದೇನು ಫಲ ||
ಶ್ರೀನಿವಾಸನ ಪಾದವ ಸ್ಮರಿಸದೆ
ದಿನವನು ಕಳೆದರದೇನು ಫಲ ೫

 

ಹಾಡಿನ ಹೆಸರು :ನಾರಾಯಣ ನಾರಾಯಣನೆನ್ನದೆ
ಹಾಡಿದವರ ಹೆಸರು :ಉದಯ್ ಅಂಕೋಲ
ರಾಗ :ಪೂರಿಯಾ ಧನಾಶ್ರೀ
ತಾಳ :ಭಜನ್ ಠೇಕಾ
ಸಂಗೀತ ನಿರ್ದೇಶಕರು :ವೆಂಕಟೇಶ ಗೋಡ್ಖಿಂಡಿ
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *