Categories
Europe

ಸ್ವಿಟ್ಜರ್‌ಲ್ಯಾಂಡ್

ಸ್ವಿಟ್ಜರ್‌ಲ್ಯಾಂಡ್

ಸ್ವಿಟ್ಜರ್‌ಲ್ಯಾಂಡ್ ಆಧುನಿಕ ವಿಶ್ವದಲ್ಲಿಯೇ ಅತ್ಯಧಿಕ ಬಂಡವಾಳಶಾಹಿ ಆರ್ಥಿಕತೆಯನ್ನು ಹೊಂದಿರುವ ರಾಷ್ಟ್ರ. ಸ್ವಿಸ್ ಗಡಿಯಾರಗಳು, ನೆಸ್ಲೆ ಆಹಾರ ಉತ್ಪನ್ನಗಳು, ಹಾಲಿನ ಚಾಕ್ಲೇಟ್ ತಯಾರಿಕೆ ಮತ್ತು ಸ್ವಿಸ್ ಬ್ಯಾಂಕಿ ನಿಂದ ಜಗತ್ಪ್ರಸಿದ್ಧವಾಗಿದೆ. ದೇಶ ದೀರ್ಘಕಾಲಮಾನದ ಅಲಿಪ್ತ ನೀತಿಯ ಇತಿಹಾಸವನ್ನು ಹೊಂದಿದೆ. ಕ್ರಿ.ಶ. ೧೮೧೫ ರಿಂದ ಇಲ್ಲಿಯವರೆಗೆ ಯಾವುದೇ ಅಂತಾರಾಷ್ಟ್ರೀಯ ಯುದ್ಧಗಳಲ್ಲಿ ಭಾಗವಹಿಸಿಲ್ಲ. ಸೇವಾ ಮನೋಭಾವನೆಯ ಅಂತಾರಾಷ್ಟ್ರೀಯ ರೆಡ್‌ಕ್ರಾಸ್ ಸಂಸ್ಥೆ (ಕ್ರಿ.ಶ. ೧೮೬೩), ಐರೋಪ್ಯ ಪ್ರಸರಣಾ ಒಕ್ಕೂಟಗಳ ಪ್ರಧಾನ ಕಛೇರಿ, ಲೀಗ್ ಆಫ್ ನೇಷನ್ಸ್ (ಕ್ರಿ.ಶ. ೧೯೨೦-೧೯೪೫ – ಇಂದು ಅಸ್ತಿತ್ವದಲ್ಲಿಲ್ಲ), ವಿಶ್ವ ಆರೋಗ್ಯ ಸಂಸ್ಥೆ, ಅಂತಾರಾಷ್ಟ್ರೀಯ ದೂರ ಸಂಪರ್ಕ ಒಕ್ಕೂಟ, ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ, ಅಂತಾರಾಷ್ಟ್ರೀಯ ಫುಟ್ಬಾಲ್ ಒಕ್ಕೂಟ, ಹೀಗೆ ಸುಮಾರು ೨೦೦ ಅಂತಾರಾಷ್ಟ್ರೀಯ ಸಂಸ್ಥೆಗಳು ಹಾಗೂ ಅದರ ಅಂಗಸ೦ಸ್ಥೆಗಳು ಸ್ವಿಟ್ಜರ್‌ಲ್ಯಾಂಡ್‌ನಲ್ಲಿವೆ.

ಸ್ವಿಟ್ಜರ್‌ಲ್ಯಾ೦ಡ್ ಕ್ಯಾಂಟನ್‌ಗಳೆ೦ದು ಕರೆಯಲಾಗುವ ೨೬ ರಾಜ್ಯಗಳನ್ನು ಹೊಂದಿರುವ ಸಂಯುಕ್ತ ಗಣರಾಜ್ಯವಾಗಿದೆ. ಬರ್ನ್ ರಾಜ್ಯಾಡಳಿತದ ಕೇಂದ್ರಸ್ಥಾನ ಹೊಂದಿದೆ. ಬರ್ನ್, ಜಿನೀವಾ, ಜ್ಯೂರಿಚ್, ಲಾಸನ್ನೆ, ಬಸೆಲ್ ಆರ್ಥಿಕ ಮತ್ತು ಜಾಗತಿಕ ಮಹಾನಗರಗಳು. ಈ ದೇಶದ ಕನಿಷ್ಟ ಜಿ.ಡಿ.ಪಿ ೬೭,೩೮೪ ಫ್ರಾಂಕ್. ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರ ಮತ್ತು ವಿಶ್ವದಲ್ಲೇ ಉತ್ತಮ ಜೀವನಮಟ್ಟವನ್ನು ಹೊಂದಿರುವ ಜ್ಯೂರಿಚ್ ಮತ್ತು ಜಿನೀವಾ ಈ ದೇಶದ ಕಾಣಿಕೆ. ಆಲ್ಫ್ಸ್ ಪರ್ವತ ಪ್ರದೇಶದಿಂದ ಆವೃತವಾದ ಭೂ ಪ್ರದೇಶ. ದೇಶದ ಉತ್ತರಕ್ಕೆ ಜರ್ಮನಿ, ಪಶ್ಚಿಮದಲ್ಲಿ ಫ್ರ‍್ರಾನ್ಸ್, ದಕ್ಷಿಣದಲ್ಲಿ ಇಟಲಿ ಮತ್ತು ಪೂರ್ವದಲ್ಲಿ ಲಿಯಶ್ಚಟೈನೈ, ಆಸ್ಟ್ರಿಯಾಗಳು ಗಡಿಗಳಾಗಿವೆ. ‘ಒನ್ ಫಾರ್ ಆಲ್; ಆಲ್ ಫಾರ್ ಒನ್’ ಧ್ಯೇಯವಾದರೆ, ‘ಸ್ವಿಸ್ ಪ್ಯಾಲಮ್’ ರಾಷ್ಟ್ರಗೀತೆಯಾಗಿದೆ. ಸಾಂಪ್ರದಾಯಿಕವಾಗಿ ಸ್ವಿಟ್ಜರ್‌ಲ್ಯಾಂಡ್ ಸ್ಥಾಪನೆಯು ಕ್ರಿ.ಶ. ೧೨೯೧ ಆಗಸ್ಟ್ ೧ರಲ್ಲಿ ಆಗಿದ್ದರಿಂದ ಈ ದಿನವೇ ಸ್ವಿಸ್ ರಾಷ್ಟ್ರೀಯ ದಿನ. ಜರ್ಮನ್, ಪ್ರೆಂಚ್, ಇಟಾಲಿಯನ್ ಮತ್ತು ರೋಮನ್ಸ್ ಹೀಗೆ ನಾಲ್ಕು ಆಡಳಿತ ಭಾಷೆಗಳನ್ನು ಹೊಂದಿದೆ. ಸ್ವಿಸ್ ಫ್ರಾಂಕ್ ದೇಶದ ನಾಣ್ಯ. ಅಧಿಕೃತವಾಗಿ ಯಾವುದೇ ಧರ್ಮ ಇಲ್ಲಿಲ್ಲ. ಆದರೂ ಕ್ಯಾಥೊಲಿಕ್ ಚರ್ಚು ಮತ್ತು ಸ್ವಿಸ್‌ನ ಸುಧಾರಿತ ಚರ್ಚುಗಳು ಇಲ್ಲಿವೆ. ಶೇ. ೪೧.೮% ಕ್ಯಾಥೊಲಿಕ್ ಶೇ. ೩೫.೩% ಪ್ರಾಟೆಸ್ಟೆಂಟ್‌ರಿದ್ದಾರೆ. ಉಲ್ರಿಚ್ ಜ್ವಿಂಗ್ಲಿ (೧೪೮೪-೧೫೩೧) ಮಾರ್ಟಿನ್ ಲೂಥರನ ಪ್ರಭಾವಕ್ಕೆ ಒಳಗಾಗಿ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಪ್ರಾಟೆಸ್ಟೆಂಟ್ ಪಂಥವನ್ನು ಜನಪ್ರಿಯಗೊಳಿಸಿದ.

ಆಲ್ಫ್ಸ್ ಪರ್ವತ ಶ್ರೇಣಿಯ ಉತ್ತರ ಮತ್ತು ದಕ್ಷಿಣ ಬದಿಗಳಲ್ಲಿರುವ ಸ್ವಿಟ್ಜರ್‌ಲ್ಯಾಂಡ್ ಕೇವಲ ೪೧,೨೮೫ ಚ.ಕಿ.ಮೀ. ವಿಸ್ತಾರವನ್ನು ಹೊಂದಿದೆ. ಸೀಮಿತ ವ್ಯಾಪ್ತಿಯಲ್ಲಿ ವೈವಿಧ್ಯಮಯ ಮಾದರಿಯ ವಿಶಾಲ ದೃಶ್ಯ ಮತ್ತು ಹವಾಗುಣವನ್ನು ಹೊಂದಿದೆ. ೨೦೧೫ರ ಪ್ರಕಾರ ೮೩,೨೭,೧೨೬ ಜನಸಂಖ್ಯೆಯನ್ನು ಹೊಂದಿದ್ದು, ೪೬೦ ೫೭, ಉತ್ತರ ಅಕ್ಷಾಂಶ ಮತ್ತು ೭೦ ೨೭ ಪೂರ್ವ ರೇಖಾಂಶಗಳ ನಡುವೆ ದೇಶ ತನ್ನ ವ್ಯಾಪ್ತಿಯನ್ನು ಹೊಂದಿದೆ. ದಕ್ಷಿಣದಲ್ಲಿ ಸ್ವಿಸ್ ಆಲ್ಫ್ಸ್, ಸ್ವಿಸ್ ಪ್ರಸ್ಥಭೂಮಿ ಅಥವಾ ಮಧ್ಯನಾಡು, ಉತ್ತರದಲ್ಲಿ ಜ್ಯೂರಾ ಪರ್ವತಗಳು ರಾಷ್ಟçದ ಶೇ. ೬೦%ರಷ್ಟು ಭೂ ಪ್ರದೇಶವನ್ನು ಆಲ್ಫ್ಸ್ ಪರ್ವತ ಪ್ರದೇಶವೇ ವಿಸ್ತೀರ್ಣವನ್ನು ಆವರಿಸಿದೆ. ಸ್ವಿಸ್ ಆಲ್ಪ್ನ ಎತ್ತರ ಶೃಂಗಗಳಲ್ಲಿ ಡುಪೊರ್‌ಸ್ವಿಟ್ಸ್ (೪೬೩೪ ಮೀಟರ್) ಅತಿ ಎತ್ತರವಾಗಿದೆ. ಹಿಮನದಿ ಮತ್ತು ಜಲಪಾತಗಳನ್ನು ಹೊಂದಿರುವ ಅಸಂಖ್ಯ ಕಣಿವೆಗಳೂ ಇವೆ. ರೈನ್, ರೋನ್, ಇನ್‌ಅರೆ ಮತ್ತು ಟಿಕಿನೊ ನದಿಗಳ ಮೂಲ ತೊರೆಗಳು ಅತಿದೊಡ್ಡ ಸ್ವಿಸ್ ಸರೋವರಗಳಾದ ಜನೀವಾ ಸರೋವರ (ಲಾಕ್ ಲೆಮನ್) ಜ್ಯೂರಿಚ್ ಸರೋವರ, ನ್ಯೂಚಾಟೆಲ್ ಸರೋವರ ಮತ್ತು ಕಾನ್‌ಸ್ಟಾನ್ಸ್ಗಳಿಗೆ ಸೇರುತ್ತವೆ.

ವಲಾಯಿಸ್‌ನಲ್ಲಿರುವ ಮ್ಯಾಟ್ಜರ್‌ಹಾರ್ನ್ (೪೪೭೮.ಮೀ), ಇಟಲಿಯ ಗಡಿಯಲ್ಲಿರುವ ಪೆನ್ನೈನ್ ಆಲ್ಫ್ಸ್ ಡುಪೋರ್‌ಸ್ವಿಟ್ಸ್ (೪೬೩೪.ಮೀ), ಡಾಮ್ (೪೫೪೫.ಮೀ), ವೇಯಿಸ್‌ಹಾರ್ನ್ (೪೫೦೬.ಮೀ) ಉಳಿದ ಕೆಲವು ಪ್ರಮುಖ ಪರ್ವತಗಳು. ಹಿಮನದಿಗಳಿರುವ ವಾಟರ್‌ಬ್ರುನೆನ್ ಕಣಿವೆಯ ಮೇಲಿರುವ ಬರ್ನ್ ಪ್ರಾಂತ್ಯದ ಆಲ್ಫ್ಸ್ ಭಾಗವು ೭೨ ಜಲಪಾತಗಳನ್ನು ಹೊಂದಿದ್ದು ಜುಂಗ್‌ಫ್ರಾ೦ವ್ (೪೧೫೮.ಮೀ) ಮತ್ತು ಐಗರ್ ಆಗ್ನೇಯದಲ್ಲಿ ಗ್ರಾವುಬುಂಡೆನ್ ಕ್ಯಾಂಟನ್‌ನ, ಸೆಂಟ್ ಮೊರಿಟ್ಜ್ ಪ್ರದೇಶದಲ್ಲಿರುವ ಎಂಗಾಡಿನ್ ಕಣಿವೆಗಳಿವೆ. ಸಮಶೀತೋಷ್ಣ ಹವಾಗುಣ ಹೊಂದಿದ್ದ ಪರ್ವತದ ತುದಿಗಳಲ್ಲಿನ ವಿಪರೀತ ಶೈತ್ಯದಿಂದ (ಶೀತ) ಹಿಡಿದು ದಕ್ಷಿಣದ ತುದಿ ಅಹ್ಲಾದಕರ ವಾತಾವರಣವನ್ನು ಹೊಂದಿದೆ. ಅರಣ್ಯಗಳೆಲ್ಲ ಹಿಮಾವೃತ ಮತ್ತು ಹುಲ್ಲುಗಾವಲುಗಳಿಂದ ತುಂಬಿದೆ.

ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಮಾನವ ಅಸ್ತಿತ್ವದ ಪ್ರಾಚೀನ ಕುರುಹುಗಳು ೧,೫೦,೦೦೦ ವರ್ಷಗಳ ಹಿಂದಿನವು. ಗ್ಯಾಕ್‌ಲಿಂಗೇನ್ ಎಂಬಲ್ಲಿ ಪತ್ತೆಯಾದ ಕೃಷಿ ನೆಲೆಯೇ ಅತಿ ಹಳೆಯ ಪರಿಚಿತ ನೆಲೆಯಾಗಿದ್ದು ಇದು ಸುಮಾರು ಕ್ರಿ.ಪೂ. ೫೩೦೦ ವರ್ಷಗಳಷ್ಟು ಹಳೆಯದಾಗಿದೆ. ಈ ಪ್ರದೇಶದ ಅತಿ ಹಳೆಯ ಸಂಸ್ಕೃತಿ ಎಂದರೆ ಹಾಲ್‌ಸ್ವಟ್ ಮತ್ತು ಲಾಟಿನೆ ಸಂಸ್ಕೃತಿಗಳು. ಲಾಟಿನೆ ಸಂಸ್ಕೃತಿಯು ಕಬ್ಬಿಣಯುಗದ ಉತ್ತರಭಾಗದಲ್ಲಿ ಸುಮಾರು ಕ್ರಿ.ಪೂ. ೪೫೦ರ ಕಾಲದಲ್ಲಿ ಗ್ರೀಕ್ ಮತ್ತು ಎಟ್ರುಸ್ಕ್ಯಾನ್  ನಾಗರಿಕತೆಗಳ ಪ್ರಭಾವದಲ್ಲಿ ಬೆಳೆದು ಏಳಿಗೆ ಹೊಂದಿತು. ಕ್ರಿ.ಶ. ೪ನೇ ಶತಮಾನದಿಂದ ಆಧುನಿಕ ಕಾಲದ ಸ್ವಿಟ್ಜರ್‌ಲ್ಯಾಂಡ್‌ನ ಪಶ್ಚಿಮ ಪ್ರದೇಶವು ಬರ್ಗಂಡಿಯನ್ ಅರಸರ ಸೀಮೆಗೆ ಒಳಪಟ್ಟಿತ್ತು. ಅಲೆಮಾನ್ನಿಗಳು ಸ್ವಿಸ್ ಪ್ರಸ್ಥಭೂಮಿಯಲ್ಲಿ ೫ನೇ ಶತಮಾನದಲ್ಲಿ ನೆಲೆಗೊಂಡರೆ ಆಲ್ಫ್ಸ್ ಕಣಿವೆಗಳಲ್ಲಿ ೮ನೇ ಶತಮಾನದಲ್ಲಿ ನೆಲೆಗೊಂಡು ಅಲೆಮಾನ್ನಿಯಾ ಪ್ರದೇಶವನ್ನು ರೂಪಿಸಿದರು. ಪ್ರಸ್ತುತ ಸ್ವಿಟ್ಜರ್‌ಲ್ಯಾಂಡ್‌ನ ಈಗಿನ ಪ್ರಾಂತ್ಯಗಳು ಮಧ್ಯ ಪ್ರಾನ್ಷಿಯಾ ಮತ್ತು ಪೂರ್ವ ಪ್ರಾನ್ಷಿಯಾಗಳಾಗಿ ವಿಭಜನೆಯಾದವು. ಕ್ರಿ.ಶ. ೧೦೦೦ರಲ್ಲಿ ಪವಿತ್ರ ರೋಮ್ ಸಾಮ್ರಾಜ್ಯ ಮರು ಏಕೀಕರಣಗೊಂಡಿತು. ಕ್ರಿ.ಶ. ೧೨೦೦ರ ಹೊತ್ತಿಗೆ ಸ್ವಿಸ್ ಪ್ರಸ್ಥಭೂಮಿಯು ಸೆವಾಯ್, ಝಹ್ರಿಂಗರ್, ಹಬ್ಸ್ಬರ್ಗ್ ಮತ್ತು ಕಿಬರ್ಗ್ ಆಡಳಿತಗಳ ಸ್ವಾಮ್ಯಕ್ಕೆ ಒಳಪಟ್ಟಿತು. ಕ್ರಿ.ಶ. ೧೨೬೪ರಲ್ಲಿ ಹಬ್ಸ್ಬರ್ಗ್ ಚಕ್ರವರ್ತಿ ರುಡಾಲ್ಫ್ನ ನೇತೃತ್ವದಲ್ಲಿ ಪೂರ್ವ ಸ್ವಿಸ್ ಪ್ರಸ್ಥಭೂಮಿಯವರೆಗೆ ತನ್ನ ಎಲ್ಲೆಯನ್ನು ವಿಸ್ತರಿಸಿಕೊಂಡಿತು. ಕ್ರಿ.ಶ. ೧೩೫೩ರ ಹೊತ್ತಿಗೆ ಮೂರು ಮೂಲ ಕ್ಯಾಂಟನ್‌ಗಳು ಎಂದರೆ ಗ್ಲಾರಸ್, ಝಗ್ ಮತ್ತು ಲ್ಯೂಸರ್ನ್ಗಳು ಜ್ಯೂರಿಚ್ ಮತ್ತು ಬರ್ನ್ ನಗರ ರಾಜ್ಯಗಳೊಂದಿಗೆ ಸೇರಿ ಎಂಟು ರಾಜ್ಯಗಳು ರೂಪುಗೊಂಡು ೧೫ನೇ ಶತಮಾನದ ಕೊನೆಯವರೆಗೂ ಅಸ್ತಿತ್ವದಲ್ಲಿದ್ದ ಹಳೆಯ ಒಕ್ಕೂಟವು ಅಸ್ತಿತ್ವಕ್ಕೆ ಬಂದಿತು.

ಹಬ್ಸ್ಬರ್ಗ್ಗಳ ಬಂರ್ಗ೦ಡಿಯ ದಿಟ್ಟ ಚಾರ್ಲ್ ಮೇಲಿನ ವಿಜಯದಿಂದ (ಕ್ರಿ.ಶ. ೧೪೭೦) ಸ್ವಿಸ್ ಕೂಲಿ ಸಿಪಾಯಿಗಳ ಯಶಸ್ಸಿನ ನಂತರ ಜ್ಯೂರ ಮತ್ತು ಆಲ್ಫ್ಸ್ ಪ್ರದೇಶಗಳ ಮೇಲಿನ ನಿಯಂತ್ರಣ ಸಾಧ್ಯವಾಯಿತು. ಸ್ಟಾಬಿಯನ್ ಯುದ್ಧದಲ್ಲಿ ಚಕ್ರವರ್ತಿ ಮ್ಯಾಕ್ಸಿಮಿಲಿಯನ್‌ನ ಸ್ಟಾಬಿಯನ್ ಒಕ್ಕೂಟದ ಮೇಲಿನ ಸ್ವಿಸ್‌ವಿಜಯವು ಪವಿತ್ರ ರೋಮ್ ಸಾಮ್ರಾಜ್ಯದೊಳಗೆ ವಸ್ತುತಃ ಸ್ವಾತಂತ್ರ್ಯ ಗಳಿಸಲು ಕಾರಣವಾಯಿತು. ಕ್ರಿ.ಶ. ೧೫೧೫ರಲ್ಲಿ ಸ್ವಿಸ್ ಚರಿತ್ರೆಯ ಧೀರ ಯುಗದ ಮುಕ್ತಾಯಕ್ಕೆ ನಾಂದಿಹಾಡಿತು.

ಕ್ರಿ.ಶ. ೧೬೪೮ರಲ್ಲಿ ವೆಸ್ಟ್ಪಾಲಿಯಾ ಒಪ್ಪಂದದ ಅಂಗವಾಗಿ ಐರೋಪ್ಯ ರಾಷ್ಟ್ರಗಳು ಪವಿತ್ರ ರೋಮ್ ಸಾಮ್ರಾಜ್ಯದಿಂದ ಸ್ವಿಸ್ ಸ್ವತಂತ್ರತೆಗೆ ಮತ್ತು ಅದರ ಅಲಿಪ್ತನೀತಿಗೆ ಮಾನ್ಯತೆ ನೀಡಿದವು. ಕ್ರಿ.ಶ. ೧೭೯೮ರಲ್ಲಿ ನೆಪೋಲಿಯನ್ ಬೊನಾಪಾರ್ಟೆಯ ನಾಯಕತ್ವದ ಪ್ರೆಂಚ್ ಕ್ರಾಂತಿಯ ಸೇನೆಯು ಸ್ವಿಸ್ ವಶಪಡಿಸಿಕೊಂಡು ಏಕೀಕೃತ ಸಂವಿಧಾನವನ್ನು ಹೇರಿತು. ಹೆಲ್ವೆನಿಕ್ ಗಣರಾಜ್ಯದ ಹೆಸರಿನಲ್ಲಿ ಪ್ರೆಂಚರ ಪರ ಹೋರಾಡಲು ಸ್ವಿಸ್ ಒಪ್ಪಲಿಲ್ಲ. ಕ್ರಿ.ಶ. ೧೮೦೩ರಲ್ಲಿ ನೆಪೋಲಿಯನ್ ಸ್ವಿಸ್ ಸ್ವಾಯತ್ತತೆಯನ್ನು ಕಾಪಾಡಿಕೊಂಡು ೧೯ ಕ್ಯಾಂಟನ್‌ಗಳ ಒಕ್ಕೂಟವೊಂದನ್ನು ಪರಿಚಯಿಸಿದ. ಕ್ರಿ.ಶ. ೧೮೧೫ರಲ್ಲಿ ನಡೆದ ವಿಯನ್ನಾದ ಆಡಳಿತ ಸ್ವಿಸ್ ಸ್ವತಂತ್ರತೆಯನ್ನು ಮರು ಸ್ಥಾಪನೆಗೊಳಿಸಿತು. ಸ್ವಿಟ್ಜರ್‌ಲ್ಯಾಂಡ್ ಸಂಸತ್ತು ಎರಡು ಸಭೆಗಳನ್ನು ಹೊಂದಿರುವ ಸ್ವಿಸ್ ಒಕ್ಕೂಟ ಸರ್ಕಾರ. ಸ್ವಿಸ್‌ವೈನ್ ವಲಾಯಿಸ್, ವಾಡ್, ಜಿನೀವಾ ಮತ್ತು ಟಿಕಿನೋಗಳಲ್ಲಿ ಉತ್ಪಾದಿಸಲಾಗುತ್ತದೆ. ಟೆನ್ನಿಸ್ ತಾರೆ, ವಿಶ್ವದ ನಂ-೧ ಆಟಗಾರ ರೋಜರ್ ಫೆಡರಲ್ ಸ್ವಿಟ್ಜರ್‌ಲ್ಯಾಂಡ್‌ನ ಪ್ರತಿಬೆ. ಸ್ಕೀಯಿಂಗ್ ಹಿಮದಲ್ಲಿ ಜಾರುವ ಸ್ಪರ್ಧೆಗೆ ಅಂತಾರಾಷ್ಟ್ರೀಯ ಖ್ಯಾತಿ ಹೊಂದಿದೆ. ಚಳಿಗಾಲದಲ್ಲಿ ಸ್ಕೀ ರೆಸಾರ್ಟ್ ಸಂಸ್ಕೃತಿ ಮತ್ತು ಬೇಸಿಗೆಯಲ್ಲಿ ಹೈಕಿಂಗ್ ಸಂಸ್ಕೃತಿಯನ್ನು ರೂಡಿಸಿಕೊಂಡಿದ್ದಾರೆ.