Categories
ವಚನಗಳು / Vachanagalu

ಅಕ್ಕಮ್ಮನ ವಚನಗಳು

ಅಂಗಲಿಂಗ ಸಹವಾಗಿ, ಆತ್ಮನರಿವು ಸಹವಾಗಿ,
ಇಷ್ಟಪದಾರ್ಥವ ಇಷ್ಟ ಲಿಂಗಸಹವಾಗಿ,
ರುಚಿಪದಾರ್ಥವ ಆತ್ಮಲಿಂಗಸಹವಾಗಿ,
ರಸ ಗಂಧ ರೂಪ ಶಬ್ದ ಸ್ಪರ್ಶ ಪಂಚೇಂದ್ರಿಯಗಳಲ್ಲಿ
ದೃಷ್ಟಪದಾರ್ಥವ ಇಷ್ಟಲಿಂಗಸಹವಾಗಿ,
ಸ್ಥೂಲ ಸೂಕ್ಷ್ಮ ಕಾರಣದಲ್ಲಿ ಒಳಗು ಹೊರಗು ಸಹವಾಗಿ,
ಅಳಿವು ಉಳಿವು ಸಹವಾಗಿ, ಕಾಬುದು ಕಾಣಿಸಿಕೊಂಬುದು ಸಹವಾಗಿ,
ರಸವ ಕೊಂಡವನಂತೆ, ಅಸಿಯ ಮೊನೆ ಹರಿದಲ್ಲಿ ರಸ ಬಂದು ನಿಂತಂತೆ,
ಎಲ್ಲಿ ಅರ್ಪಿತಕ್ಕೆ ಅಲ್ಲಿ ವಸ್ತು ಸಹವಾಗಿ
ಎಲ್ಲಾ ಎಡೆಯಲ್ಲಿ ಪರಿಪೂರ್ಣ ಸಹವಾಗಿ,
ಇಪ್ಪುದು ಸಹಭೋಜನಸ್ಥಲ.
ಹೀಗಲ್ಲದೆ ಓಗರ ಮೇಲೋಗರವ ಲಾಗುಲಾಗಿಗೆ ತೋರುತ್ತ
ಸಕಲಸಂಸಾರದ ಸಾಗರದಲ್ಲಿ ಮುಳುಗುತ್ತ,
ಮರವೆ ಅಜ್ಞಾನದಲ್ಲಿ ಮರಳಿ ತಿರುಗುತ್ತ
ನಾನಾವಿಕಾರತ್ರಯಗಳಿಂದ ಹುಟ್ಟುತ್ತ ಸಾವುತ್ತ,
ಮತ್ತೆ ಸಾವಧಾನ ಸಹಭೋಜನವೆಂದಡೆ ನಾಚಿತ್ತು ಎನ್ನ ಮನ.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಉಭಯವನಳಿದು ಏಕವಾದುದು ಸಹಭೋಜನಸ್ಥಲ./1
ಅಕ್ಕಿ ಬೇಳೆ ಬೆಲ್ಲ ಉಪ್ಪು ಮೆಣಸು ಅಡಕೆ ಫಲ ರಸ ದ್ರವ್ಯ ಮುಂತಾದ
ದ್ರವ್ಯಕ್ಕೆ ವ್ರತವೊ ? ಮುಟ್ಟುವ ತಟ್ಟುವ ಸೋಂಕುವ ಚಿತ್ತಕ್ಕೆ ವ್ರತವೊ ?
ಇವು ಬಾಹ್ಯದಲ್ಲಿ ಮಾಡುವ ಸೌಕರಿಯವಲ್ಲದೆ ವ್ರತಕ್ಕೆ ಸಲ್ಲ.
ವ್ರತವಾವುದೆಂದಡೆ
ತನ್ನಯ ಸ್ವಪ್ನದಲ್ಲಿ ತನಗಲ್ಲದುದ ಕಂಡಡೆ,
ತಾ ಮುಟ್ಟದುದ ಮುಟ್ಟಿದಡೆ, ತಾ ಕೊಳ್ಳದುದ ಕೊಂಡಡೆ,
ಆ ಸೂಕ್ಷ್ಮತನುವಿನಲ್ಲಿ ಆ ತನುವಂ ಬಿಟ್ಟು ನಿಂದುದು ವ್ರತ.
ಸ್ಥೂಲತನುವಿನಲ್ಲಿ ಸರ್ವರ ನಿಂದೆಗೊಡಲಾಗದೆ,
ಮಾಡಿಕೊಂಡ ನೇಮಕ್ಕೆ ಕೇಡುಬಂದಲ್ಲಿ
ಆ ಅಂಗಕ್ಕೆ ಓಸರಿಸದೆ ನಿಂದುದು ಆಚಾರ.
ಇಂತೀ ಅಂತರಂಗದಲ್ಲಿ ವ್ರತ, ಬಹಿರಂಗದಲ್ಲಿ ಆಚಾರ,
ಇಂತೀ ಉಭಯ ಸಿದ್ಭವಾಗಿ ನಡೆವುದೆ ವ್ರತ ಆಚಾರದ
ಇಂತಿವನರಿದು ಮರೆದಲ್ಲಿ, ತಾ ಮಾಡಿಕೊಂಡ ಕುತ್ತಕ್ಕೆ ಹಾಡಿ ಮದ್ದನರೆದಂತೆ,
ಜಗಕ್ಕೆ ಭಕ್ತನಾಗಿ ಆತ್ಮಂಗೆ ಅನುಸರಣೆಯಾದಲ್ಲಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದ ನೇಮ./2
ಅಜ ಎಮ್ಮೆ ಹಾಲಬಿಟ್ಟಲ್ಲಿ ಹೇರಂಡವ ಬೆಳೆಯಲಿಲ್ಲ
ಬೆಳೆದಡೆ ಮನೆಗೆ ತರಲಿಲ್ಲ ತರಲಿಲ್ಲದ ಮತ್ತೆ ಅಡಲಿಲ್ಲ
ಅದು ದೀಪದ ಬೆಳಗಿಂಗೆ ದೇವರಿಗೆ ನಿಹಿತವಲ್ಲ,
ಅದು ರಾಕ್ಷಸವಂಶಭೂತವಾದ ಕಾರಣ.
ಕಂಡುದ ಬಿಟ್ಟು ಕಾಣದುದನರಸಿಕೊಳಬೇಕು.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ವ್ರತಮುಕ್ತನ ನೇಮ./3
ಅಡಗು ಸುರೆ ಕಟಕ ಪಾರದ್ವಾರ ಪರಪಾಕ ಮುಂತಾದ
ಇಂತಿವ ಬೆರೆಸುವರ ನಾ ಬೆರಸೆನೆಂದು, ಅವರ ನಿರೀಕ್ಷಿಸೆನೆಂದು,
ಮತ್ತಿದ ಮರೆದು ಕೊಂಡು ಕೊಟ್ಟೆನೆಂದು ತ್ರಿವಿಧದಾಸೆಯ ಕುರಿತು
ಮತ್ತವರ ಸಂಗವ ಮಾಡಿದೆನಾದಡೆ,
ಲಿಂಗಕ್ಕೆ ಸಲ್ಲ, ಜಂಗಮಕ್ಕೆ ದೂರ, ಪ್ರಸಾದವಿಲ್ಲ.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವಾದಡೂ ವ್ರತಭ್ರಷ್ಟನೆಂದು ಬಿಡುವೆ./4
ಅನಲನ ತಾಹಲ್ಲಿ, ಅನಿಲನ ಗಂಧ ಒಡಗೂಡಿ ಸೋಂಕುವಲ್ಲಿ,
ಅಲ್ಲಿ ವ್ರತದಾಯತದ ಲಕ್ಷಣವನರಿಯಬೇಕುದ
ಮಿಕ್ಕಾದ ತಿಲ, ತೈಲ, ಫ್ಸೃತ, ಕ್ಷೀರ, ದಧಿ, ಮಧುರ,
ಇಕ್ಷುದಂಡ, ಕ್ರಮುಕ, ಪರ್ಣ, ಚೂರ್ಣ, ರಸ, ದ್ರವ್ಯ ಮುಂತಾದವಿಂತು
ಮಿಕ್ಕಾದ ಫಲ ಕುಸುಮ ವಿದಳ ಬಹುಧಾನ್ಯ ಮುಂತಾದ
ಸಕಲಸುಯಿಧಾನಂಗಳಲ್ಲಿ ಲಿಂಗವ್ಯವಧಾನದಲ್ಲಿ ತಂದು
ಸತ್ಕ್ರೀ ತಪ್ಪದೆ, ವ್ರತಕ್ಕೆ ಭಂಗವಿಲ್ಲದೆ, ನಾಣ್ಣುಡಿಗೆ ಇದಿರೆಡೆಯಾಗದೆ,
ವಿಶ್ವಲಕ್ಷಣ ಶಸ್ತ್ರ ಅಭ್ಯಾಸಿಯಂತೆ, ಆವೆಡೆಯಲ್ಲಿ ಇದಿರಿಂಗೆ ತೆರಪಿಲ್ಲದೆ,
ತಾ ಮುಟ್ಟುವಲ್ಲಿ ಒಳಗೆ ಕೊಂಡಂತೆ ಇರಬೇಕು.
ಇಷ್ಟನರಿತು ಆಚರಣೆಯಲ್ಲಿ ಆದರಿಸಿ ನುಡಿವುದೆ ಸದ್ಭಕ್ತನ ಸ್ಥಲ.
ಆತ ಸರ್ವಶೀಲಸಂಪನ್ನ ಸರ್ವಾಂಗಲಿಂಗ ಸನ್ನದ್ಧ ಆತ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ./5
ಅನ್ಯದೈವ ಭವಿನಾಸ್ತಿಯಾದಲ್ಲಿ,
ಪಾದತೀರ್ಥಪ್ರಸಾದವಿಲ್ಲದೆ ಬಾಯಿದೆರೆದಲ್ಲಿ,
ಲಿಂಗಕ್ಕೆ ಕೊಡದೆ ಕೊಂಡಲ್ಲಿ,
ಆ ವ್ರತಕ್ಕೆ ಆಚಾರವೆ ಪ್ರಾಣವಾಗಿರ್ಪ ರಾಮೇಶ್ವರಲಿಂಗ ದೂರಸ್ಥನಾಗಿಪ್ಪನು/6
ಅನ್ಯರು ಮಾಡಿದುದ ಮುಟ್ಟದೆ ತನ್ನ ತಾ ಮಾಡಿಕೊಂಡು ನಡೆವುದು
ಸೌಕರಿಯವಲ್ಲದೆ, ವ್ರತಕ್ಕೆ ಸಂಬಂಧವಲ್ಲ. ಅದೆಂತೆಂದಡೆ
ರಸ ಗಂಧ ರೂಪು ಶಬ್ದ ಸ್ಪರ್ಶವೆಂಬ ಪಂಚೇಂದ್ರಿಯವ ಶುದ್ಧತೆಯ ಮಾಡಿ
ಪಂಚಾಚಾರವೆಂಬುದನರಿತು,
ರಸವ ರುಚಿಸುವಲ್ಲಿ ಬಹುದಕ್ಕೆ ಮುನ್ನವೆ ಭೇದವನರಿತು,
ನಾಸಿಕ ವಾಸನೆಯ ಕೊಂಬಲ್ಲಿ ಸೋಂಕುವುದಕ್ಕೆ ಮುನ್ನವೆ
ಸುಗುಣ ದುರ್ಗುಣವನರಿತು,
ಕಾಂಬುದಕ್ಕೆ ಮುನ್ನವೆ ರೂಪ ನಿರೂಪೆಂಬುದನರಿತು,
ನುಡಿಯುವುದಕ್ಕೆ ಮುನ್ನವೆ ಮೃದು ಕಠಣವೆಂಬುದನರಿತು,
ಇಂತೀ ಭೇದಂಗಳಲ್ಲಿ ಅರ್ಪಿತದ ಲಕ್ಷಣವ ಕಂಡು,
ದೃಷ್ಟದಿಂದ ಕಟ್ಟುಮಾಡುವುದೆ ವ್ರತ ;
ಆ ಗುಣ ತಪ್ಪದೆ ನಡೆವುದೆ ಆಚಾರ.
ಇಂತೀ ವ್ರತಾಚಾರಂಗಳಲ್ಲಿ ಸರ್ವಶೀಲಸನ್ನದ್ಧನಾಗಿ,
ಸರ್ವಮುಖ ಲಿಂಗಾವಧಾನಿಯಾಗಿ ಇಪ್ಪ ಅಂಗವೆ, ಆಚಾರವೆ ಪ್ರಾಣವಾಗಿಪ್ಪ ರಾಮೇಶ್ವರಲಿಂಗವು ತಾನೆ./7
ಅನ್ಯಶಬ್ದಕ್ಕೆ ಜಿಹ್ವಾಬಂಧನ, ದುರ್ಗಂಧಕ್ಕೆ ನಾಸಿಕಬಂಧನ,
ನಿಂದೆಗೆ ಕರ್ಣಬಂಧನ, ದೃಕ್ಕಿಂಗೆ ಕಾಮ್ಯಬಂಧನ,
ಚಿತ್ತಕ್ಕೆ ಆಶಾಬಂಧನ, ಅಂಗಕ್ಕೆ ಅಹಂಕಾರ ಬಂಧನ.
ಇಂತೀ ಷಡ್ಭಾವಬಂಧಂಗಳ ಹರಿದಲ್ಲದೆ
ಅರುವತ್ತುನಾಲ್ಕು ಶೀಲಕ್ಕೆ ಸಂಬಂಧಿಯಲ್ಲ.
ಹೀಂಗಲ್ಲದೆ ಕಾಂಬವರ ಕಂಡು,
ಅಲ್ಲಿ ಒಂದ ತಂದು, ಇಲ್ಲಿ ಒಂದ ಕೊಟ್ಟಿಹೆನೆಂದು
ಕಳ್ಳನ ತಾಯಂತೆ ಅಲ್ಲಿ ಇಲ್ಲಿ ಹಾರೈಸುತ್ತ
ಇಂತೀ ಸಜ್ಜನಗಳ್ಳರ ಕಂಡು ಬಲ್ಲವರೊಪ್ಪುವರೆ ಕಳ್ಳರ ವ್ರತವ ?
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಅವರುವನೆಲ್ಲಿಯು ಒಲ್ಲನಾಗಿ./8
ಅರಸಿಗೆ ಆಚಾರ ಅನುಸರಣೆಯಾಯಿತ್ತೆಂದು,
ಸದಾಚಾರಿಗಳೆಲ್ಲಾ ಬನ್ನಿರಿಂದು,
ಕೂಲಿಗೆ ಹಾವ ಕಚ್ಚಿಸಿಕೊಂಡು ಸಾವತೆರೆದಂತೆ
ದ್ರವ್ಯದ ಮುಖದಿಂದ ಸರ್ವರ ಕೂಡಿ ತಪ್ಪನೊಪ್ಪಗೊಳ್ಳಿಯೆಂದು
ದಿಪ್ಪನೆ ಬೀಳುತ್ತ ತನ್ನ ವ್ರತದ ದರ್ಪಂಗೆಟ್ಟು
ಕೀಲಿಗೆ ದೇವಾಲಯವ ನೋಡುವವನಂತೆ,
ಕಂಬಳಕ್ಕೆ ಅಮಂಗಲವ ತಿಂಬವನಂತೆ, ಇವನ ದಂದುಗವ ನೋಡಾ ?
ಇವನ ಸಂಗವ ಮಾಡಿದವನು ಆಚಾರಕ್ಕೆ ಅಂದೆ ಹೊರಗು.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ನೀನೆ ಬಲ್ಲೆ./9
ಅರುವತ್ತುನಾಲ್ಕು ಶೀಲ, ಐವತ್ತಾರು ನೇಮ, ಮೂವತ್ತೆರಡು ಕೃತ್ಯ
ಇಂತಿವು ಕಟ್ಟಳೆಗೊಳಗಾದವು.
ಮಿಕ್ಕಾದ ಪ್ರಮಥರೆಲ್ಲರು ಸ್ವತಂತ್ರಶೀಲರು.
ಅಣುವಿಂಗಣು, ಘನಕ್ಕೆಘನ, ಮಹತ್ತಿಂಗೆ ಮಹತ್ತಪ್ಪ ಘನಶೀಲರುಂಟು.
ಆರಾರ ಅನುವಿನಲ್ಲಿ ಅನುವ ಅನುಕರಿಸಿ,
ಆರಾರ ಭಾವದಲ್ಲಿ ಬಂಧಿತನಾಗಿ ಸಿಕ್ಕಿದೆಯಲ್ಲಾ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ?/10
ಅಸಿ ಮಸಿ ಕೃಷಿ ವಾಣಿಜ್ಯ ಮುಂತಾದ ಕಾಯಕವ ಮಾಡಿ,
ಭಕ್ತರ ಪಡುಗ, ಪಾದತ್ರಾಣ, ಪಹರಿ, ಬಾಗಿಲು, ಬೊಕ್ಕಸ, ಬಿಯಗ
ಮುಂತಾದ ಕಾಯಕವಂ ಮಾಡಿಕೊಂಡು
ವ್ರತಕ್ಕೆ ಊಣೆಯವಿಲ್ಲದೆ ಮಾಡುವ ಕೃತ್ಯಕ್ಕೆ ಕಡೆಯಾಗದೆ
ಈ ಭಕ್ತನ ಅಂಗಳ ಅವಿಮುಕ್ತಿಕ್ಷೇತ್ರ, ಆತನ ಮನೆಯೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಾಶ್ರಯ./11
ಆಚಾರ ಅನುಸರಣೆಯಾದಲ್ಲಿ ಅಲ್ಲ ಅಹುದೆಂದು ಎಲ್ಲರ ಕೂಡುವಾಗ
ಗೆಲ್ಲ ಸೋಲದ ಕಾಳಗವೆ ?
ಶ್ರುತದಲ್ಲಿ ಕೇಳಿ, ದೃಷ್ಟದಲ್ಲಿ ಕಂಡು, ಅನುಮಾನದಲ್ಲಿ ಅರಿದು,
ಸಂದೇಹವ ಬಿಟ್ಟು ಕಂಡ ಮತ್ತೆ
ಆತನಂಗವ ಕಂಡಡೆ, ಸಂಗದಲ್ಲಿ ನುಡಿದಡೆ,
ಈ ಗುಣಕ್ಕೆ ಹಿಂಗದಿದ್ದನಾದಡೆ ಲಿಂಗಕ್ಕೆ ಸಲ್ಲ,
ಜಂಗಮಕ್ಕೆ ದೂರ, ಅದು ಕುಂಭೀನರಕ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದ ನೇಮ./12
ಆಚಾರ ತಪ್ಪಿದಲ್ಲಿ ಪ್ರಾಯಶ್ಚಿತ್ತ ಉಂಟೆಂಬ
ಅನಾಚಾರಿಗಳ ಮುಖವ ನೋಡಬಹುದೆ ?
ಆಚಾರವಟ್ಟದ ಹೊನ್ನೆ ? ಮೊತ್ತದ ಮಡಕೆಯೆ ? ಸಂತೆಯ ಬೆವಹಾರವೆ ?
ಜೂಜಿನ ಮಾತೆ ? ವೇಶ್ಯೆಯ ಸತ್ಯವೆ ? ಪೂಸರ ವಾಚವೆ ?
ಇಂತೀ ವ್ರತದ ನಿಹಿತವ ತಿಳಿದಲ್ಲಿ,
ಇಷ್ಟಬಾಹ್ಯನ ವ್ರತಭ್ರಷ್ಟನ ಸರ್ವಪ್ರಮಥರಲ್ಲಿ ಅಲ್ಲಾ ಎಂದವನ
ನಾನರಿತು ಕೂಡಿದೆನಾದಡೆ, ಅರಿಯದೆ ಕೂಡಿ ಮತ್ತರಿದಡೆ,
ಆ ತನುವ ಬಿಡದಿರ್ದಡೆ ಎನಗದೆ ಭಂಗ.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಪ್ಪಿದಡೆ ಹೊರಗೆಂದು ಮತ್ತೆ ಕೂಡಿಕೊಳ್ಳೆ./13
ಆಚಾರ ತಪ್ಪಿದಲ್ಲಿ, ಶ್ರೇಷ್ಠನು ನಾನೆಂದು
ಆಚಾರವನು ಅನುಸರಣೆಯಮಾಡಬಹುದೆ ?
ಆಚಾರಕ್ಕೂ ಪಕ್ಷಪಾತ ಉಂಟೆ ?
ಕಿತ್ತ ಕಣ್ಣಿ ಗಂಟನಿಕ್ಕಿದ ಮತ್ತೆ ಅಳತಕ್ಕುಂಟೆ ?
ಸತ್ಯ ತಪ್ಪಿ ನಡೆದ ಮತ್ತೆ ಭಕ್ತಿಯುಂಟೆ ?
ಕೆಟ್ಟು ನಡೆದ ಅಂಗನೆಯಲ್ಲಿ ದೃಷ್ಟವ ಕಂಡ ಮತ್ತೆ ದಿಷ್ಟ ದಿಬ್ಯ ಉಂಟೆ ?
ಅದು ಬಾಯ ಬಗದಳದಂತೆ, ಇನ್ನಾರಿಗೆ ಪೇಳುವೆ ? ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವಲ್ಲದ ನೇಮ./14
ಆಚೆಯ ನೀರ ಈಚೆಯಲ್ಲಿ ತೆಗೆವುದು ಚಿಲುಮೆಯಲ್ಲ ;
ಆಚೆಯಲ್ಲಿ ಕೇಳಿದ ಮಾತ ಈಚೆಯಲ್ಲಿ ನುಡಿದು
ಮತ್ತಾಚೆಯಲ್ಲಿ ಬೆರೆಸುವನ ಭಕ್ತನಲ್ಲ ;
ಆತನ ಇದಿರಿನಲ್ಲಿ ಆತನ ಸತಿಯ ಅವ್ವಾ ಎಂದು,
ಆತ ಸಂದಲ್ಲಿ ಸತಿ ಎಂಬ ಭಂಡರಿಗೇಕೆ ವ್ರತ ನೇಮ ನಿತ್ಯ ?
ಇಂತಿವರಲ್ಲಿ ಕಳೆದುಳಿಯಬೇಕು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವನರಿವುದಕ್ಕೆ./15
ಆರಾರ ಭಾವಕ್ಕೆ ಒಳಗಾದ ವಸ್ತು,
ಆರಾರ ಭ್ರಮೆಗೆ ಹೊರಗಾದ ವಸ್ತು,
ಆರಾರ ಆಚಾರಕ್ಕೆ ಒಳಗಾದ ವಸ್ತು,
ಆರಾರ ಅನಾಚಾರಕ್ಕೆ ಹೊರಗಾದ ವಸ್ತು,
ಆಚಾರ ಶ್ರದ್ಧೆ ಇದ್ದಲ್ಲಿ ನೀನೆಂಬೆ.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಾ,
ಆ ಗುಣ ಇಲ್ಲದಿರ್ದಡೆ ನೀನು ಎನ್ನವನಲ್ಲಾ ಎಂಬೆ./16
ಆರೈದು ನಡೆವಲ್ಲಿ ತನ್ನ ಕ್ರೀಯನರಿತು,
ನೀರು ನೆಲ ಬಹುಜನ ಗ್ರಾಮಂಗಳಲ್ಲಿ ತನಗಾದಿಯ ಶೀಲವರಿದು
ಅಂಗಂಗಳ ಸೋಂಕುವಲ್ಲಿ ಮನದೆರೆದು ಮಾತನಾಡುವಲ್ಲಿ
ತನು ಮನಗೂಡಿ ಬೆರೆಸುವಲ್ಲಿ,
ಶಿವಲಿಂಗಪೂಜೆ, ಶಿವಾಧಿಕ್ಯಸಂಬಂಧ, ಶಿವಪ್ರಸಾದಂಗಳಲ್ಲಿ
ಸರ್ವವ್ಯವಧಾನವ ತಿಳಿದು,
ತಾ ಹಿಡಿದ ಜ್ಞಾನದ ಸೀಮೆಗೆ ತಲೆವಿಡಿ ಕೊಳುವಿಡಿ ಬಾರದೆ
ವ್ರತವೆ ಘಟವಾಗಿ, ಸನ್ಮಾರ್ಗವೆ ಆತ್ಮನಾಗಿ,
ಇಂತೀ ವ್ರತಸಂಬಂಧ ಕಾಯಜೀವದಂತೆ ಏಕವಾಗಿಪ್ಪ ಮಹಾವ್ರತಿಗೆ
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ನಮೋ ನಮೋ ಎಂದು ಕೃತಾರ್ಥನಾದನು./17
ಆವಾವ ವ್ರತಕ್ಕೂ ಗುರು ಲಿಂಗ ಜಂಗಮನೆ ಮೂಲಮಂತ್ರ.
ಆವಾವುದ ತಾ ಕೊಂಬ ಕೊಡುವಲ್ಲಿ
ಲಿಂಗ ಜಂಗಮನ ಮುಂದಿಟ್ಟುಕೊಂಬುದೆ ಶುದ್ಧಕ್ರೀ.
ಹೀಗಲ್ಲದೆ,
ಲಿಂಗ ಜಂಗಮ ಹೊರತೆಯಾಗಿ ಮತ್ತೊಂದು ಕೊಂಡೆನಾಯಿತ್ತಾದಡೆ,
ಎನಗದಲ್ಲದ ದ್ರವ್ಯ, ಎನಗಿದೆ ಭಾಷೆ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಸಾಕ್ಷಿಯಾಗಿ./18
ಉಳ್ಳೆ ಹೇರಂಡ ಮಹಿಷಿ ಇವೆಲ್ಲವ ನಿಷೇಧವೆಂದು ಬಿಟ್ಟಲ್ಲಿ
ಕೊಲ್ಲದ ಕೊಲೆಯ ಕೊಲಲೇತಕ್ಕೆ ?
ವ್ರತಿಗಳಲ್ಲಿ ಗೆಲ್ಲ ಸೋಲಕ್ಕೆ ಹೋರಲೇತಕ್ಕೆ ?
ಪ್ರಮ ಥರೆಲ್ಲರು ಅಲ್ಲಿ ಇಲ್ಲಿಯವರೆಂದು ಪ್ರಮಾಣಿಸಬಹುದೆ ?
ಸರ್ಪನೆತ್ತಮುಟ್ಟಿದಲ್ಲಿಯೂ ಪ್ರಾಣಕ್ಕೆ ಹೆಚ್ಚು ಕುಂದಿಲ್ಲ.
ಶರಣರತ್ತ ಇತ್ತಣವರೆಂದಡೆ ಭಕ್ತಿಗೆ ಹಾನಿ, ಸತ್ಯಕ್ಕೆ ದೂರ ;
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಮುನ್ನವೆ ದೂರ./19
ಎಂಬತ್ತುನಾಲ್ಕು ಲಕ್ಷ ವ್ರತದೊಳಗಾದ ಶೀಲ
ಸಂಭವಿಸಿ ನಿಂದುದು ಅರುವತ್ತುನಾಲ್ಕು.
ಅರುವತ್ತುನಾಲ್ಕರಲ್ಲಿ ಸಂಭವಿಸಿ ನಿಂದುದು ಮೂವತ್ತಾರು.
ಮೂವತ್ತಾರರಲ್ಲಿ ಸಂಭವಿಸಿ ನಿಂದುದು ಇಪ್ಪತ್ತೈದು.
ಇಪ್ಪತ್ತೈದರೊಳಗಾಗಿ ಸಂಭವಿಸಿನಿಂದುದು ಮೂರೆಯಾಯಿತ್ತು.
ಮೂರು ವ್ರತಕ್ಕೆ ಮುಕುತವಾಗಿ, ತಬ್ಬಿಬ್ಬುಗೊಳ್ಳುತ್ತಿದ್ದೇನೆ.
ನಾ ಹಿಡಿದ ಒಂದು ನೇಮಕ್ಕೆ ಸಂದೇಹವಾಗಿ, ಒಂದನೂ ಕಾಣದಿದ್ದೇನೆ.
ಒಂದರ ಸಮಶೀಲಕ್ಕೆ ಸತಿಪುತ್ರರು ಎನ್ನಂಗದೊಳಗಿರರು.
ಎನ್ನಂಗದ ಜೀವಧನ ಹೊಂದಿ ಹೋದಾಗ ಎನ್ನಂಗದ ವ್ರತ ಅಲ್ಲಿಯೆ ಬಯಲು.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಶೀಲ ಕಡೆ ನಡು ಮೊದಲಿಲ್ಲ./20
ಎನ್ನ ಲಿಂಗದ ಸೀಮೆಯಲ್ಲಿದ್ದ ಗೋವತ್ಸ ಮೊದಲಾದ ಘಟಕ್ಕೆಲ್ಲಕ್ಕೂ
ಶಿವಲಿಂಗಪೂಜೆ, ಪಂಚಾಚಾರಶುದ್ಧ ನೇಮ.
ಭಾವ ತಪ್ಪದೆ ಪಾದೋದಕ ಪ್ರಸಾದವಿಲ್ಲದೆ
ತೃಣ ಉದಕವ ಮುಟ್ಟಿದಡೆ
ಎನ್ನ ಸೀಮೆಗೆ, ಎನ್ನ ವ್ರತಾಚಾರಕ್ಕೆ, ನಾ ಕೊಂಡ ಗಮನಕ್ಕೆ
ತನುವಿಗೆ ಬಂದಲ್ಲಿ ಭೀತಿ, ಆತ್ಮಕ್ಕೆ ಬಂದಲ್ಲಿ ಸಂದೇಹವ ಮಾಡಿದಡೆ,
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ದೂರ./21
ಎನ್ನ ವ್ರತದ ನೇಮ ಅಡಿ ಆಕಾಶದೊಳಗಾದ ವ್ರತಸ್ಥರು ಕೇಳಿರೆ.
ನಮ್ಮ ನಿಮ್ಮ ವ್ರತಕ್ಕೆ ಸಂಬಂಧವೇನು ?
ಲೆಕ್ಕವಿಲ್ಲದ ವ್ರತ, ಕಟ್ಟಳೆಯಿಲ್ಲದ ನೇಮ, ಇವನೆಷ್ಟು ಮಾಡಿದಡೆ ಏನು ?
ತನ್ನ ಮನೆಗೆ ಕಟ್ಟಳೆ ಇರಬೇಕು.
ಎನ್ನ ಲಿಂಗವಂತೆಗೆ ಸೂತಕಮಾಸ ತಡೆದಲ್ಲಿ,
ಗರ್ಭವೆಂಬುದು ತಲೆದೋರಿದಲ್ಲಿಯೆ ಆತ್ಮ ಚೇತನಿಸುವನ್ನಕ್ಕ
ಆಕೆಯ ಉದರದ ಮೇಲೆ ನಿಹಿತ ಲಿಂಗವಿರಬೇಕು.
ನವಮಾಸ ತುಂಬಿ ಆಕೆಯ ಗರ್ಭದಿಂದ ಉಭಯಜಾತತ್ವವಾಗಲಾಗಿ
ಚೇತನ ಬೇರಾದಲ್ಲಿ ಗುರುಕರಜಾತನಮಾಡಬೇಕು.
ಇಂತೀ ಇಷ್ಟರ ಕ್ರೀಯಲ್ಲಿ ಸಂತತ ವ್ರತ ಇರಬೇಕು.
ಕಂಥೆಯ ಬಿಡುವನ್ನಕ್ಕ ಶರಣರ ಕೈಯಲ್ಲಿ ಅಂತಿಂತೆಂಬ ಶಂಕೆಯ ಹೊರಲಿಲ್ಲ.
ಇಂತೀ ವ್ರತದಲ್ಲಿ ನಿಶ್ಶಂಕನಾಗಬಲ್ಲಡೆ
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಸಮಶೀಲವಂತನೆಂಬೆ./22
ಎನ್ನ ಸಮಗ್ರಾಹಕ ಶೀಲಸಂಪಾದಕರನಲ್ಲದೆ
ಎನ್ನ ಕಣ್ಣಿನಲ್ಲಿ ನೋಡೆ, ಜಿಹ್ವೆಯಲ್ಲಿ ನೆನೆಯೆ,
ಮಿಕ್ಕಾದ ತಟ್ಟುವ ಮುಟ್ಟುವ ತಾಗುವ ಸೋಂಕುವ
ನಾನಾ ಗುಣಂಗಳಲ್ಲಿ ಶೋಧಿಸಿಯಲ್ಲದೆ ಬೆರೆಯೆ.
ಕೊಂಬಲ್ಲಿ ಕೊಡುವಲ್ಲಿ
ಎನ್ನ ವ್ರತಾಚಾರವ ಅಂಗೀಕರಿಸಿದವರಲ್ಲಿಗಲ್ಲದೆ ಹೋಗೆ.
ಇದಕ್ಕೆ ದೃಷ್ಟವ ನೋಡಿಹೆನೆಂದಡೆ ತೋರುವೆ.
ಶ್ರುತದಲ್ಲಿ ಕೇಳಿಹೆನೆಂದಡೆ ಹೇಳುವೆ.
ಅನುಮಾನದಲ್ಲಿ ಅರಿದಿಹೆನೆಂದಡೆ
ಎನ್ನ ಆಚಾರದ ಆತ್ಮನ ಎನ್ನ ಕೈಯಲ್ಲಿ ಹಿಡಿದು
ನಿಮ್ಮ ಕೈಯಲ್ಲಿ ಕೊಡುವೆ.
ಈ ಭಾಷೆಗೆ ತಪ್ಪೆನೆಂದು ಕಟ್ಟಿದೆ ತೊಡರುವ.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಾ,
ಎನಗೆ ಸರಿ ಇಲ್ಲ ಎಂದು ಎಲೆದೊಟ್ಟು ನುಂಗಿದೆ./23
ಎರಿಯಕೆಳಗೆ ಬಿದ್ದ ನೀರು ಪೂರ್ವದ ತಟಾಕಕ್ಕೆ ಎರಬಲ್ಲುದೆ ?
ವ್ರತಾಚಾರವ ಮೀರಿ ಕೆಟ್ಟ ಅನಾಚಾರಿ ಸದ್ಭಕ್ತರ ಕೂಡಬಲ್ಲನೆ ?
ದೇವಾಲಯದಲ್ಲಿ ಸತ್ತಡೆ ಸಂಪ್ರೋಕ್ಷಣವಲ್ಲದೆ
ದೇವರು ಸತ್ತಲ್ಲಿ ಉಂಟೆ ಸಂಪ್ರೋಕ್ಷಣ ?
ಅಂಗದಲ್ಲಿ ಮರವೆಗೆ ಹಿಂಗುವ ಠಾವಲ್ಲದೆ,
ಮನವರಿದು ತಾಕು ಸೋಂಕಿಗೆ ಹೆದರದೆ ಕೂಡಿದ
ದುರ್ಗಣಕ್ಕುಂಟೆ ಪ್ರಾಯಶ್ಚಿತ್ತ ?
ಇಂತಿವ ಕಂಡಲ್ಲಿ ಗುರುವಾದಡೂ ಬಿಡಬೇಕು,
ಲಿಂಗವಾದಡೂ ಬಿಡಬೇಕು, ಜಂಗಮವಾದಡೂ ಬಿಡಬೇಕು ;
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವಾದಡೂ ಬಿಡಬೇಕು./24
ಎಲ್ಲವ ಮೀರಿ ಶೀಲವಂತನಾದಲ್ಲಿ ರೋಗವೆಲ್ಲಿಂದ ಬಂದಿತು ?
ಆ ಗುಣ ತನುವಿನಲ್ಲಿಯ ತೊಡಕು ; ರುಜೆ ಪ್ರಾಣವ ಕೊಳ್ಳಲರಿಯದು.
ಅಂಗದ ಡಾವರಕ್ಕೆ ಸೈರಿಸಲಾರದೆ,
ಮದ್ದ ತಾ ಲಿಂಗಕ್ಕೆ ತೋರಿ, ಜಂಗಮಕ್ಕೆ ಕೊಟ್ಟು, ಜಂಗಮಪ್ರಸಾದವೆಂದು
ಲಿಂಗ ಜಂಗಮವ ಹಿಂಗದೆ ಕೊಳ್ಳೆಂದು ಹೇಳುವ ಅನಂಗಿಗಳಿಗೆ
ಗುರು ಲಿಂಗ ಜಂಗಮ ಮೂರರಲ್ಲಿ ಒಂದೂ ಇಲ್ಲ ಎಂದೆ.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವಾದಡೂ ತಪ್ಪನೊಪ್ಪಗೊಳ್ಳೆ./25
ಎಲ್ಲಾ ವ್ರತಕ್ಕೂ ಜಂಗಮದ ಪ್ರಸಾದವೆ ಪ್ರಾಣ.
ಎಲ್ಲಾ ನೇಮಕ್ಕೂ ಜಂಗಮದರ್ಶನವೆ ನೇಮ.
ಎಲ್ಲಾ ಶೀಲಕ್ಕೂ ಜಂಗಮಮಾಟವೆ ಶೀಲ.
ಇಂತೀ ವ್ರತ ನೇಮ ಶೀಲಂಗಳೆಲ್ಲವೂ
ಜಂಗಮದ ಮುಂದಿಟ್ಟು ಶುದ್ಧತೆಯಹ ಕಾರಣ
ಆ ಜಂಗಮದಲ್ಲಿ ಅರ್ಥ ಪ್ರಾಣ ಅಭಿಮಾನಕ್ಕೆ
ಕಟ್ಟುಮಾಡಿದೆನಾದಡೆ ಎನಗದೆ ದ್ರೋಹ.
ಆ ಜಂಗಮದ ದರ್ಶನದಿಂದ ಸಕಲದ್ರವ್ಯ ಪವಿತ್ರ.
ಆ ಜಂಗಮದ ಪಾದತೀರ್ಥದಿಂದ ಘನಲಿಂಗಕ್ಕೆ ಜೀವಕಳೆ.
ಆ ಜಂಗಮದ ಪ್ರಸಾದದಿಂದ ಘನಲಿಂಗಕ್ಕೆ ತೃಪ್ತಿ.
ಇಷ್ಟನರಿತಲ್ಲಿ ಜಂಗಮಲಿಂಗಕ್ಕೆ ಸಂದೇಹ ಮಾಡಿದಡೆ
ಎನಗೆ ಕುಂಭೀಪಾತಕದಲ್ಲಿ ನಾಯಕನರಕ ತಪ್ಪದು.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ಸಹಿತಾಗಿ ಮುಳುಗುವೆನು./26
ಏಳುನೂರೆಪ್ಪತ್ತು ಅಮರಗಣಂಗಳಿಗೆಲ್ಲಕ್ಕೂ ತಮ್ಮ ತಮ್ಮ ಭಾವದಶೀಲ.
ಗಂಗೆವಾಳುಕ ಸಮಾರುದ್ರರೆಲ್ಲಕ್ಕೂ ತಮ್ಮ ತಮ್ಮ ಮನಕ್ಕೆ ಸಂದ ಸಂದ ನೇಮ.
ಮರ್ತ್ಯಕ್ಕೆ ಬಂದ ಪ್ರಮಥರೆಲ್ಲರೂ ತಾವು ಬಂದುದನರಿದು
ಮುಂದಿನ ಪಯಣಕ್ಕೆ ಎಂದೆಂಬುದ ಕಂಡು,
ಬಸವಣ್ಣನ ಮಣಿಹ ಎಂದಿಂಗೆ ಸಲೆ ಸಂದು ನಿಂದಿಹ ವೇಳೆಯನರಿವನ್ನಕ್ಕ
ತಾವು ಕೊಂಡ ವ್ರತದಲ್ಲಿ ಭಯ ಭಂಗವಿಲ್ಲದೆ ನಿಂದಿರಬೇಕು,
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದೊಳಗಹನ್ನಕ್ಕ./27
ಒಂದ ವಿಶೇಷವೆಂದು ಹಿಡಿದು,
ಮತ್ತೊಂದಧಮವ ಮುಟ್ಟದಿದ್ದುದೆ ಭರಿತಾರ್ಪಣ.
ಪರಸ್ತ್ರೀ ಪರಧನಂಗಳಲ್ಲಿ ದುರ್ವಿಕಾರ ದುಶ್ಚರಿತ್ರದಲ್ಲಿ
ಒಡಗೂಡದಿಪ್ಪುದೆ ಭರಿತಾರ್ಪಣ.
ಮರವೆಯಲ್ಲಿ ಬಂದ ದ್ರವ್ಯವ ತಾನರಿದು ಮುಟ್ಟಿದಲ್ಲಿಯೆ ಭರಿತಾರ್ಪಣ.
ತನ್ನ ವ್ರತ ನೇಮ ನಿತ್ಯಕೃತ್ಯಕ್ಕೆ ಅಪರಾಧ ಬಂದಲ್ಲಿ
ಸಕಲವ ನೇತಿಗಳೆದು, ಆ ವ್ರತ ನೇಮದ ಆಳಿ ತಪ್ಪದೆ
ಸಲೆ ಸಂದುದು ಭರಿತಾರ್ಪಣ.
ಹೀಗಲ್ಲದೆ ಓಗರ ಮೇಲೋಗರದ ಲಾಗಿಗೆ
ಭರಿತಾರ್ಪಣವುಂಟೆಂದು ನುಡಿವುದು ಸಹಜವೆ !
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ
ಭರಿತಾರ್ಪಣದ ಸಹಜದ ಭಾವ./28
ಒಡೆಯರ ಕಟ್ಟಳೆಯೆಂದು ಮಾಡಿಕೊಂಡು ಆಡುವ ತನಕ
ಅಂಗಳ ಬಾಗಿಲಲ್ಲಿ ಗುಡಿಗೂರಿ ಎನಬಹುದೆ !
ಒಡೆಯರಂತೆ, ಮನೆಗೊಡೆಯನಂತೆ ಗಡಿತಡಿಯಲ್ಲಿ ಕಾಯಲುಂಟೆ !
ಅದು ತುಡುಗುಣಿಕಾರರ ನೇಮ.
ಒಡೆಯರತ್ತ ನಾವಿತ್ತ.
ಗಡಿಗೆಯ ತುಪ್ಪ, ಹೆಡಿಗೆಯ ಮೃಷ್ಟಾನ್ನತುಡುಗುಣಿಯಂತೆ ತಿಂಬವಂಗೆ
ಮತ್ತೊಡೆಯರ ಕಟ್ಟಳೆಯೆ !
ಇಂತೀ ಕಡುಕರ ಕಂಡು ಅಂಜಿದೆಯಲ್ಲಾ
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಾ !/29
ಒಡೆಯರ ಸಮಯಾಚಾರವೆಂದ ಮತ್ತೆ
ಹಲ್ಲುಕಡ್ಡಿ, ದರ್ಪಣ, ನಖಚಣ, ಮೆಟ್ಟಡಿ ಮುಂತಾದ
ತಾ ಮುಟ್ಟುವ, ತಾ ತಟ್ಟುವ, ಸೋಂಕುವ,
ತನ್ನಯ ಸಂದೇಹ ಮುಂತಾದ
ದಿಟ ಮೊದಲು ಹುಸಿ ಕಡೆಯಾದ ದ್ರವ್ಯವೆಲ್ಲವನು ಕೊಟ್ಟು
ತಾ ಕೊಳ್ಳದಿದ್ದನಾಯಿತ್ತಾದಡೆ
ಬೈವುದಕ್ಕೆ ಬಾಯಿ ತೆರಪಿಲ್ಲ ; ಹೊಯ್ವದಕ್ಕೆ ಕೈಗೆ ಅಡಹಿಲ್ಲ.
ನೋಡುವ ಕಣ್ಣನೆ ಮುಚ್ಚುವೆ, ಈ ನೋವನಿನ್ನಾರಿಗೂ ಹೇಳೆ.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಾ, ನೀನೇ ಬಲ್ಲೆ./30
ಒಡೆಯರು ಭಕ್ತರಿಗೆ ಸಲುವ ಸಹಪಙ್ತಿಯಲ್ಲಿ ಗುರುವೆಂದು, ಅರಸೆಂದು,
ತನ್ನ ಪರಿಸ್ಪಂದದವರೆಂದು,
ರಸದ್ರವ್ಯವನೆಸಕದಿಂದ ನೀಡಿದೊಡೆ,
ಅದ ನಾನರಿದು ಕೈಕೊಂಡಡೆ ಕಿಸುಕುಳದ ಪಾಕುಳಕಿಚ್ಚೈಸಿದಂತೆ ;
ಅಲ್ಪ ಜಿಹ್ವಾಲಂಪಟಕ್ಕೆ ಸಿಕ್ಕಿದ ಮತ್ಸ್ಯ ಬಂಧನದಿ ಸತ್ತಂತೆ.
ಇದನರಿದು ಭಕ್ತನಾಗಲಿ, ಗುರುವಾಗಲಿ, ಜಂಗಮವಾಗಲಿ,
ಶಿವಗಣಪಙ್ತಿಯ ನಡುವೆ ತಾ ಕುಳ್ಳಿರ್ದು
ಮಿಗಿಲಾಗಿ ಷಡುರಸಾನ್ನವಾದಿಯಾದ ಸುಪದಾರ್ಥಂಗಳನಿಕ್ಕಿಸಿಕೊಂಡು
ತಿಂದನಾದಡೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ದೂರ./31
ಕಂಗಳ ಮುಂದೆ ಕಂಡಂತೆ ಕಾಣಬಹುದೆ
ಮನ ನೆನೆದಂತೆ ಆಡಬಹುದೆ
ಕಂಡಕಂಡವರಲ್ಲಿ ಸಂಗವ ಮಾಡಬಹುದೆ
ಅದು ಸ್ವಾನುಭಾವರಿಗೆ ಸಲ್ಲದ ಮತ.
ಶಿವಪೂಜಕರಲ್ಲಿ ಶಿವಧ್ಯಾನಮೂರ್ತಿಗಳಲ್ಲಿ, ಶಿವಕಥಾಪ್ರಸಂಗಿಗಳಲ್ಲಿ,
ಶಿವಾಧಿಕ್ಯವಲ್ಲದೆ ಪೆರತೊಂದನರಿಯದವರಲ್ಲಿ
ತನು ಕರಗಿ, ಮನ ಸಲೆಸಂದು, ತ್ರಿವಿಧಪ್ರಸಾದದಲ್ಲಿ ಮಹಾಪ್ರಸಾದಿಯಾಗಿ ನಿಂದು
ವ್ರತಾಂಗಕ್ಕೆ ಅಭಂಗ ಅವಿರಳನಾಗಿಪ್ಪ ಸದ್ಭಕ್ತನಂಗವೆ,
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಸುಖ./32
ಕಾಮಿಗೆ ವ್ರತವುಂಟೆ, ನಿಃಕಾಮಿಗಲ್ಲದೆ !
ಕ್ರೋಧಿಗೆ ವ್ರತವುಂಟೆ, ಸಮಾಧಾನಿಗಲ್ಲದೆ !
ಲೋಭಿಗೆ ವ್ರತವುಂಟೆ, ಉದಾರಿಗಲ್ಲದೆ !
ಇಂತೀ ಕ್ಷಮೆ ದಮೆ ಶಾಂತಿ ಸಮಾಧಾನಸಂಪದ ಮುಂತಾಗಿ
ಗುರುಲಿಂಗಜಂಗಮಕ್ಕೆ, ತನುಮನಧನದಲ್ಲಿ ನಿರತನಾಗಿ,
ತನ್ನ ತ್ರಾಣಕ್ಕೆ ಇದ್ದಂತೆ ಚಿತ್ತಶುದ್ಧಾತ್ಮನಾಗಿ ಇಪ್ಪ ಮಹಾಭಕ್ತನೆ
ಕೃತ್ಯವಿಲ್ಲದ ಶರಣ.
ಆತನ ಪಾದ ಎನ್ನ ಹೃದಯದಲ್ಲಿ ಅಚ್ಚೊತ್ತಿದಂತಿಪ್ಪುದು.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಅವರುವ ಎತ್ತುಕಟ್ಟುವ ಗೊತ್ತಾಗಿಪ್ಪನು. /33
ಕಾಮುಕಗೆ ದುರ್ಜನಗೆ ಕಪಟಿಗೆ ಹೇಮಚೋರಗೆ ಕಾರುಕ ಸಮ್ಮಗಾರಗೆ
ಆವ ಭಾವದ ವ್ರತವ ಮಾಡಲಿಕ್ಕೆ, ಅವ ಭಾವಿಸಿ ನಡೆಯಬಲ್ಲನೆ !
ಕಾಗೆಗೆ ರಸಾನ್ನ ಮುಂದಿರಲಿಕೆ, ಹರಿವ ಕೀಟಕಂಗೆ ಸರಿವುದಲ್ಲದೆ
ಮತ್ತೆ ಅದು ಸವಿಯಸಾರವ ಬಲ್ಲುದೆ
ಇಂತೀ ಇವು ತಮ್ಮ ಜಾತಿಯ ಲಕ್ಷಣವ ಕೊಂದಡೂ ಬಿಡವಾಗಿ,
ವ್ರತಾಚಾರವ ಸಂಬಂಧಿಸುವಲ್ಲಿ ಶರಣರೆಲ್ಲರ ಕೂಡಿ,
ಈ ಗುಣ ಅಹುದು ಅಲ್ಲ ಎಂದು ಹೇಳಿ,
ಜಾತಿವರ್ಗದ ಗುಣವ ನೀಕರಿಸಿ ಬಿಡಿಸಿ,
ಸುಜಾತಿಯ ಅರಸಿನ ಪಟ್ಟವಂ ಕಟ್ಟಿ
ಶರಣರೆಲ್ಲರು ನಿಹಿತಾಚಾರದಲ್ಲಿ ಸಹಭೋಜನವಂ ಮಾಡಿ
ಇಂತೀ ಗುಣನಿಹಿತವ್ರತ ಅಜಾತನ ಒಲುಮೆ,
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ನಿಹಿತದ ಶೀಲದ ನೇಮ./34
ಕಾಯಕಕೃತ್ಯ, ನೇಮಕೃತ್ಯ, ಆಚರಣೆಕೃತ್ಯ, ದಾಸೋಹಕೃತ್ಯ, ಭಾವಕೃತ್ಯ,
ಸೀಮೆಕೃತ್ಯ, ಯಾಚಕಕೃತ್ಯ, ಗಮನಕೃತ್ಯ, ಲಿಂಗಕೃತ್ಯ, ಜಂಗಮಕೃತ್ಯ,
ಪಾದೋದಕಕೃತ್ವ, ಪ್ರಸಾದಕೃತ್ಯ, ಕೊಡೆಕೊಳ್ಳೆನೆಂಬ ಉಭಯಕೃತ್ಯ,
ಮರೆದರಿಯೆ ಅರಿದು ಮರೆಯೆನೆಂಬ ಅರಿವುಕೃತ್ಯ
ತನ್ನ ಕೃತ್ಯಕ್ಕೆ ಆವುದು ನಿಷೇಧವೆಂದು ಬಿಟ್ಟಲ್ಲಿ,
ರಾಜ ಹೇಳಿದನೆಂದು, ಗುರುವಾಜ್ಞೆಯ ಮೀರಿದಿರೆಂದು,
ಶರಣರ ಸಮೂಹ ಹೇಳಿದರೆಂದು
ಮಿಕ್ಕಾದ ತನ್ನ ಪರಿಸ್ಪಂದಿಗಳರಿದರೆಂದು
ಇಂತೀ ಗುಣಕ್ಕೆ ಅನುಸರಣೆಯ ಮಾಡಿದೆನಾದಡೆ ಎನಗದೆ ಭಂಗ.
ಇದಕ್ಕೆ ನೀ ಒಪ್ಪಿದಡೆ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ
ನೀ ತಪ್ಪಿದೆಯಾದಡೆ ನಿನಗೆ ಎಕ್ಕಲನರಕ. /35
ಕೀಟಕ ವಿಹಂಗ ಮೊದಲಾದ ಆವ ಜೀವವು
ಮುಟ್ಟಿದ ಫಲಕುಸುಮ ದ್ರವ್ಯಂಗಳ ಮುಟ್ಟದೆ, ಸಂದೇಹವಿದ್ದಲ್ಲಿ ಒಪ್ಪದೆ,
ತಾ ಮಾಡಿಕೊಂಡ ಕೃತ್ಯಕ್ಕೆ ಆರನು ಆರೈಕೆಗೊಳ್ಳದೆ,
ತಾ ತಪ್ಪಿದಲ್ಲಿ, ತಪ್ಪನೊಳಗಿಟ್ಟುಕೊಳಬೇಕೆಂದು,
ಭಕ್ತರು ಜಂಗಮದ ಬಾಗಿಲಕಾಯದೆ ತಪ್ಪಿದಲ್ಲಿಯೆ ನಿಶ್ಚೈಸಿಕೊಂಡು
ಮರ್ತ್ಯದ ಕಟ್ಟಳೆ ತಾನೆ ಎಂಬುದು ಕಟ್ಟಾಚಾರಿಯ ನೇಮ.
ಇದು ನಿಷ್ಠೆವಂತರಿಗಿಕ್ಕಿದ ಗೊತ್ತು.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ನೇಮ. /36
ಕೂಪಚಿಲುಮೆ ಬಹುಜಲಂಗಳಲ್ಲಿ ಸ್ವೀಕರಿಸಿಕೊಂಬುದು ಅದೇತರ ಶೀಲ
ತನು ಕರಗದೆ, ಮನ ಮುಟ್ಟದೆ, ಆಗಿಗೆ ಮುಯ್ಯಾಂತು ಚೇಗಿಗೆ ಹಲುಬುತ್ತ,
ಸುಖದುಃಖವೆಂಬ ಉಭಯವರಿಗಾಣದೆ,
ಅಂದಂದಿಗೆ ಆಯು ಸಂದಿತ್ತೆಂದಿರಬೇಕು.
ಆ ಗುಣ ಶಿವಲಿಂಗ ಖಂಡಿತನೇಮ, ಈ ಸಂಗವೆ ಎನಗೆ ಸುಖ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಕೂಟ. /37
ಕೂಪಜಲವ ಬಳಸುವನ್ನಕ್ಕ, ಲವಣಬಳಕೆ ಸಾರೋಪಿತ ದ್ರವ್ಯವನ್ನರಿಯಬೇಕು.
ಸರ್ವಸಂಗ್ರಹಗಳಲ್ಲಿ ಸೌಕರ್ಯವ ತಿಳಿಯಬೇಕು.
ಪರ್ಣಫಲಂಗಳಲ್ಲಿ ಪುನರಪಿ ಪ್ರಕ್ಷಾಲನವಮಾಡಬೇಕು.
ಕೂಪೋದಕವ ತ್ರಿಪಾವಡೆಯಲ್ಲಿ ಸೋದಿಸಬೇಕು.
ಇಂತಿವು ಸಂತೋಷದ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಅರ್ಪಿತ. /38
ಕೆಯಿಗೆ ಬೆಚ್ಚು ಬೆದರ ಕಟ್ಟುವಲ್ಲಿ
ಆ ಲೆಪ್ಪಕ್ಕೆ ಇಷ್ಟಲಿಂಗ, ರುದ್ರಾಕ್ಷಿ, ಭಸಿತಪಟ್ಟವ ಕಟ್ಟಿ,
ಎನ್ನ ಕೆಯ್ಯ ತಪ್ಪಲಲ್ಲಿ ಕಾಷ್ಠವ ನೆಟ್ಟು ಕಟ್ಟಿದ ಮತ್ತೆ,
ವಿಹಂಗಕುಲ ಮೃಗಜಾತಿ ಮುಟ್ಟಲಿಲ್ಲ.
ಮೀರಿಬಂದು ಮುಟ್ಟಿಹೆನೆಂದಡೆ ಮುಟ್ಟುವುದಕ್ಕೆ ಮುನ್ನವೆ
ಅಟ್ಟಿ ಅದ್ದರಿಸಿ ಕುಟ್ಟಿ ಓಡಿಸುವವು.
ಅದು ತೃಣದ ಲೆಪ್ಪದ ಬಲಿಕೆಯೊ ! ತನ್ನ ಚಿತ್ತದ ಬಲಿಕೆಯೊ !
ಅದು ಎನ್ನ ನಿನ್ನ ದೃಷ್ಟದ ಭಾವ.
ಅದು ಎನ್ನ ಸ್ವತಂತ್ರವಲ್ಲ.
ಅದು ನಿಮ್ಮಯ ಭಾವ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಾ. /39
ಕೆರೆ ಪೂದೋಟ ಅರವಟ್ಟಿಗೆ ಬಾವಿ ವಿವಾಹ
ಮುಂತಾದ ಧರ್ಮಂಗಳ ಕಟ್ಟಿಹೆವೆಂದು
ನೇಮದಿಂದ ತಿರುಗುವ ಶೀಲ ಅದಾರಿಗೆ ಯೋಗ್ಯ !
ಸರಿಹುದುಗಿನ ಸೂಳೆ ಸೀರೆಯನುಟ್ಟಂತೆ
ಅದಾರಿಗೆ ಸುಖದುಃಖವೆಂಬುದ ನೀನೆ ಅರಿ.
ಸರಿ ಹುದುಗಿನ ಧರ್ಮವುಂಟೆ !
ಅರಿಕೆಯ ಒಡವೆಯ ಊರೆಲ್ಲಕ್ಕೆ ತಂದಿಕ್ಕಿ,
ನಾ ಮಾಡಿದೆನೆಂದಡೆ ಇದಾರು ಮೆಚ್ಚುವರು !
ಆ ಮಾಟವನಾರಯ್ಯಲಿಲ್ಲ, ಅದು ಸ್ವಕಾರ್ಯಕ್ಕೆ ಏರಿದ ಪಥ.
ಇಂತೀ ವ್ರತ ನೇಮ ಶೀಲವನರಿಯಬೇಕು
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಧರ್ಮಜ್ಞನಾಗಿ ವ್ರತವನಂಗೀಕರಿಸಬೇಕು. /40
ಕೊಡುವದು ಬೇಡ ಎಂದಲ್ಲಿ ಸರ್ವರ ಒಡಗೂಡಿ ಕಾಡುವುದು.
ನಿಂದಲ್ಲಿ ಮತ್ತಾರಾಗುಳಯದ ಬಾಗಿಲ ಕಾಯ್ದಲ್ಲಿ
ಹೆಚ್ಚು ಕುಂದೆಂಬ ಆತ್ಮನಭೀಷ್ಟಿಕೆಯ ಬಿಟ್ಟಲ್ಲಿ
ಗೆಲ್ಲ ಸೋಲಕ್ಕೆ ಕಲ್ಲೆದೆಯಾಗದಲ್ಲಿ ಇಂತಿವನೆಲ್ಲವನರಿತು ಮರೆದಲ್ಲಿ
ನಿಜ ಬಲ್ಲವನ ಭರಿತಾರ್ಪಣ.
ಹೀಗಲ್ಲದೆ ಎಲ್ಲರ ಕಂಡು ಅವರ ಸೊಲ್ಲಿಗೆ ಸೋತು ಅಲ್ಲಿಗಲ್ಲಿಗೆ ತಕ್ಕವನಹ
ಕಳ್ಳನ ಭರಿತಾರ್ಪಣ ದ್ರವ್ಯದಲ್ಲಿಯೆ ಉಳಿಯಿತ್ತು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿಗೆ ದೂರಸ್ಥನಾದ./41
ಖಂಡಿತ ವ್ರತ ಅಖಂಡಿತ ವ್ರತ,
ಸಂದ ವ್ರತ, ಸಲ್ಲದ ವ್ರತವೆಂದು ನೇಮವ ಮಾಡಿಕೊಂಡು
ಊರೂರ ತಪ್ಪದೆ ಸಾರಿ ದೂರಿಕೊಂಡು ತಿರುಗಲೇತಕ್ಕೆ !
ತಾ ಮಾಡಿಕೊಂಡ ವ್ರತ ನೇಮ ಊರೆಲ್ಲಕ್ಕೊ ತನಗೊ
ಎಂಬುದ ತಾನರಿಯದೆ ನಿಕ್ಷೇಪವ ಕಂಡೆನೆಂದು ಸಾರಿದರುಂಟೆ !
ಆ ಮನಜ್ಞಾನವ್ರತ ಕಳ್ಳನ ಚೇಳೂರಿದಂತೆ ಅಲ್ಲಿಯೆ ಅಡಗಬೇಕು.
ಹೀಗಲ್ಲದೆ ಕಲಕೇತರಂತೆ
ಊರಮಗನೆಂದು ಬಾಗಿಲಲ್ಲಿ ಇರಿದುಕೊಂಬನಂತೆ
ಅವ ಮಾಡಿಕೊಂಡ ವ್ರತ ಅದಾರಿಗೆ ಯೋಗ್ಯ !
ಅದು ಸಾಗದ ನೇಮ, ಶೀಲವಾಗದ ಅಕೃತ್ಯ.
ಇಂತೀ ವ್ರತದ ಭೇದವನರಿಯಬೇಕು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ. /42
ಖಂಡಿತಕಾಯಕದ ವ್ರತಾಂಗಿಯ ಮಾಟದ ಇರವೆಂತೆಂದಡೆ
ಕೃತ್ಯದ ನೇಮದ ಸುಯಿದಾನವ ಅಚ್ಚೊತ್ತಿದಂತೆ ತಂದು
ಒಡೆಯರ ಭಕ್ತರ ತನ್ನ ಮಡದಿ ಮಕ್ಕಳು ಸಹಿತಾಗಿ ಒಡಗೂಡಿ,
ಎಡೆಮಾಡಿ ಗಡಿಗೆ ಭಾಜನದಲ್ಲಿ ಮತ್ತೊಂದೆಡೆಗೆ, ಈಡಿಲ್ಲದಂತೆ,
ಬಿಡುಮುಡಿಯನರಿಯದೆ,
ಮತ್ತೆ ಇರುಳೆಡೆಗೆಂದಿರಿಸದೆ, ಹಗಲೆಡೆಯ ನೆನೆಯದೆ,
ಇಂದಿಗೆ ನಾಳಿಗೆ ಎಂಬ ಸಂದೇಹಮಂ ಬಿಟ್ಟು
ಮುಂದಣ ಕಾಯಕ ಅಂದಂದಿಗೆ ಉಂಟು ಎಂಬುದನರಿತು
ಬಂದುದ ಕೂಡಿಕೊಂಡು ಲಿಂಗಾರ್ಚನೆಯ ಮಾಡಿ
ಸದಾನಂದದಲ್ಲಿಪ್ಪ ಭಕ್ತನಂಗಳ ಮಂಗಳಮಯ ಕೈಲಾಸದ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಬೆಳಗು. /43
ಖಂಡಿತವ್ರತದ ನಿರಂಗನ ವ್ರತವೆಂತುಟೆಂದಡೆ
ತನ್ನ ಸತಿಗೆ ಗರ್ಭ ತಲೆದೋರಿದಲ್ಲಿಯೆ,
ಮುಖವ ಕಾಂಬುದಕ್ಕೆ ಮುನ್ನವೆ ಲಿಂಗಧಾರಣಮಂ ಮಾಡಿ,
ಮಾಡಿದ ಮತ್ತೆ ತನ್ನ ವ್ರತದ ಪಟ್ಟವಂ ಕಟ್ಟಿ,
ಶಕ್ತಿಯಾದಲ್ಲಿ ತನ್ನ ನೇಮದ ವ್ರತಿಗಳಿಗೆ ಕೊಟ್ಟಿಹೆನೆಂದು
ಸುತನಾದಲ್ಲಿ ತನ್ನ ನೇಮದ ವ್ರತಿಗಳಲ್ಲಿ ತಂದೆಹೆನೆಂದು,
ಗಣಸಾಕ್ಷಿಯಾಗಿ ವಿಭೂತಿಯ ಪಟ್ಟವಂ ಕಟ್ಟಿ ಇಪ್ಪುದು
ಖಂಡಿತನ ವ್ರತ, ಶೀಲ, ನೇಮ.
ಹಾಗಲ್ಲದೆ ದಿಂಡೆಯತನದಿಂದ ಹೋರಿ,
ಮಕ್ಕಳಿಗೆ ಸಂದೇಹದ ವ್ರತವ ಕಟ್ಟಬಹುದೆಯೆಂದು
ಬುದ್ಧಿಯಾದಂದಿಗೆ ವ್ರತವಾಗಲಿಯೆಂಬವರ ಅಂಗಳವ ಮೆಟ್ಟಬಹುದೆ
ಅದೆಂತೆಂದಡೆ
ವ್ರತದ ಅಂಗಳದಲ್ಲಿ ಬೆಳೆದ ಗರ್ಭವ
ಮತ್ತಂದಿಗಾಗಲಿಯೆಂಬ ಭಂಡರ ನೋಡಾ
ಅಂದಿಗಾಗಲಿಯೆಂಬವನ ವ್ರತ ಇಂದೆ ಬಿಟ್ಟಿತ್ತು.
ಅದೆಂತೆಂದಡೆ
ತನ್ನಂಗದಲ್ಲಿ ಆದ ಲಿಂಗದೇಹಿಯ
ಮುಂದಕ್ಕೆ ಭವಿಸಂಗಕ್ಕೆ ಈಡುಮಾಡುವ ವ್ರತಭಂಗಿತನ ಕಂಡು,
ಅವನೊಂದಾಗಿ ನುಡಿದಡೆ ಕುಂಭೀನರಕ.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ಅವನ ಹಂಗಿರಬೇಕಯ್ಯಾ./44
ಖ್ಯಾತಿಯ ಲಾಭಕ್ಕೆ ವ್ರತವ ಮಾಡಿಕೊಂಡವನ ನೇಮವ ನೋಡಾ !
ಊರಿಗೆ ಬಲುಗಯ್ಯ ಬಂದುಣ್ಣಬೇಕೆಂದು ದಾರಿದಾರಿಯ ಕಾಯ್ದು
ಮತ್ತಾರನು ಏನೆಂದರಿಯದೆ.
ಮತ್ತಾರು ಆರೈಕೆಗೊಂಡಡೆ ದೇವರೆಂದು, ಬಂದವರ ದಾರಿಗರೆಂದು ಕಾಣುತ್ತ
ಇಂತೀ ಗಾರಾದ ಮನಕ್ಕೆ ಇನ್ನಾರು ಹೇಳುವರಯ್ಯಾ !
ಮುಂದೆ ಬಸುರಾಗಿ ಹೆರುವಾಗ ಊರೆಲ್ಲರು ಅವಳಂಗವ ಕಂಡಂತೆ
ಜಗಭಂಡ ಶೀಲವಂತನಾಗಿ, ತನ್ನ ಕೊಂಡಾಡುವ
ಸತ್ತ ಮತ್ತೆ ಮೂರು ಹೆಂಡಗುಡಿ ಹೇಯಶೀಲ ಕಂಡವರಿಗೆ ನಗೆಯಾಯಿತ್ತು
ಇದರಂದಕಂಜಿ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಕಂಡೂ ಕಾಣದಂತಿದ್ದ./45
ಗುರುವಾಗಿಬಂದು ತನುವ ಕೊರೆದಡೂ ಕೇಳೆ,
ಲಿಂಗವಾಗಿಬಂದು ಮನದಲ್ಲಿ ಕುಳ್ಳಿರ್ದು ನಿಜಾಂಗವ ತೋರಿದಡೂ ಕೇಳೆ,
ಜಂಗಮವಾಗಿಬಂದು ಬಯಲಬೆಳಗಿನಲ್ಲಿ ಒಳಗಾಗೆಂದಡೂ ಒಲ್ಲೆ.
ಅದೆಂತೆಂದಡೆ ;
ಕುಟಿಲದಲ್ಲಿ ಬಂದು ವ್ರತವ ಕೆಡಿಸಿಹೆನೆಂದಡೆ,
ಕುಟಿಲದ ದೇವರುಂಟೆ
ವ್ರತ ಮೊದಲು ಘಟ ಕಡೆಯಾಗಿ ಘಟಿಸುವೆನಲ್ಲದೆ,
ಮೂರು ಕಿಸುಕುಳಕಾಗಿ ಘಟವ ಹೊರೆದಡೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ದೂರ. /46
ಗುರುವಾದಡೂ ಆಚಾರಭ್ರಷ್ಟನಾದಡೆ ಅನುಸರಿಸಲಾಗದು.
ಲಿಂಗವಾದಡೂ ಆಚಾರದೋಹಳವಾದಲ್ಲಿ ಪೂಜಿಸಲಾಗದು.
ಜಂಗಮವಾದಡೂ ಆಚಾರ ಅನುಸರಣೆಯಾದಲ್ಲಿ ಕೂಡಲಾಗದು.
ಆಚಾರವೆ ವಸ್ತು, ವ್ರತವೆ ಪ್ರಾಣ, ಕ್ರಿಯೆಯೆ ಜ್ಞಾನ, ಜ್ಞಾನವೆ ಆಚಾರ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ. /47
ಚಂದ್ರ ಸೂರ್ಯಾದಿಗಳು ಭವಿಯೆಂದಲ್ಲಿ ಅವೆರಡರ ಸಂಸಂಧಿಯ ಜಗದಲ್ಲಿ
ಇರಬಹುದೆ ಇದರಂದವ ಹೇಳಿರಯ್ಯಾ.
ತಾ ಕೊಂಡ ನೇಮದ ಸಂದೇಹವಲ್ಲದೆ, ಅವರಂದದ ಇರವ ವಿಚಾರಿಸಲಿಲ್ಲ.
ಅದೆಂತೆಂದದಡೆ
ತಾನಿಹುದಕ್ಕೆ ಮುನ್ನವೆ ಅವು ಪುಟ್ಟಿದವಾಗಿ,
ನೀರು ನೆಲ ಆರೈದು ಬೆಳೆವ ದ್ರವ್ಯಂಗಳೆಲ್ಲವು ಆಧಾರ ಆರೈಕೆ.
ಇಂತೀ ಗುಣವ ವಾರಿಧಿಯನೀಜುವನಂತೆ
ತನ್ನಿರವೆ ತನ್ನ ಸಂದೇಹಕ್ಕೆ ಒಡಲಾಗಿ ನಿಂದುದೆ ತನ್ನ ನೇಮ.
ತನ್ನ ಹಿಂಗಿದುದೆ ಜಗದೊಳಗು ಎಂಬುದನರಿದ ಮತ್ತೆ
ಸಂದೇಹದ ವ್ರತವ ಸಂದೇಹಕ್ಕಿಕ್ಕಲಿಲ್ಲ.
ತಾ ಕೊಂಡುದೆ ವ್ರತ, ಮನನಿಂದುದೆ ನೇಮ.
ಇದಕ್ಕೆ ಸಂದೇಹವೆಂದು ಒಂದನೂ ಕೇಳಲಿಲ್ಲ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ನೀನೆ ಬಲ್ಲೆ. /48
ಚತುಷ್ಪಾದಿ ಮುಂತಾದ, ನರ ವಿಹಂಗ ಕೀಟಕ ಮುಂತಾದ ಜೀವಂಗಳೆಲ್ಲವು
ತಮ್ಮ ತಮ್ಮ ಸ್ವಜಾತಿಯ ಕೂಡುವುದೆ ಶೀಲ.
ತಮ್ಮ ತಮ್ಮ ವ್ಯವಹಾರಂಗಳಲ್ಲಿ ಕೊಡುವ ಕೊಂಬುದೆ ಶೀಲ.
ಇಂತೀ ಜಾತಿವರ್ತಕದಲ್ಲಿ ನಡೆವ ಶೀಲವಂ ಬಿಟ್ಟು,
ಲಿಂಗವಂತ ಲಿಂಗಮುಂತಾಗಿ ನಡೆವ ಶೀಲವೆಂತುಟೆಂದಡೆ
ಅಸಿ, ಕೃಷಿ, ವಾಣಿಜ್ಯ, ವಾಚಕ ಮುಂತಾದ ಕಾಯಕಂಗಳ ವಿವರವನರಿತು
ಪಾಪ ಪುಣ್ಯ ಬಹುಕಾಯಕಮಂ ಕಂಡು, ತನ್ನ ವಂಶದ ಸ್ವಜಾತಿಯಂ ಬಿಟ್ಟು,
ಶಿವಭಕ್ತರೆ ಬಂಧುಗಳಾಗಿ ಶಿವಾಧಿಕ್ಯವೆ ದಿಕ್ಕಾಗಿ ಕೊಂಡು ಗಮನಕ್ಕೆ
ಕಾಯಲಿಂಗ ಮನವರಿಕೆಯಾಗಿ, ತ್ರಿಕರಣ ಶುದ್ಧಾತ್ಮನಾಗಿ,
ಅಂಗಕ್ಕೆ ಆಚಾರ, ಮನಕ್ಕೆ ಅರಿವು, ಅರಿವಿಂಗೆ ಜ್ಞಾನ
ನಿರ್ಧಾರವಾಗಿ ಕರಿಗೊಂಡುದೆ ವ್ರತ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಎಡೆದೆರಪಿಲ್ಲದ ನೇಮ./49
ಚಾಟಿ ಗುಂಡು ಬಂಧನ ಕಲಕೇತ ಯಾಚಕ ಪಗುಡಿ
ಪರಿಹಾಸಕಂಗಳಿಂದ ಬೇಡಿ ತಂದು
ಗುರುಲಿಂಗಜಂಗಮಕ್ಕೆ ಮಾಡಿಹೆನೆನಬಹುದೆ
ಮಾಡುವ ಠಾವಿನಲ್ಲಿ, ಮಾಡಿಸಿಕೊಂಬವರಾರೆಂದು ತಾನರಿದ ಮತ್ತೆ
ಅಲ್ಲಿ ಬೇಡಬಹುದೆ ? ಭಕ್ತಿಯ ಮಾಡಿಹೆನೆಂದು ಕಾಡಬಹುದೆ ತಾ ?
ತಾ ದಾಸೋಹಿಯಾದ ಮತ್ತೆ ಅಲ್ಲಿಗೆ ತಾ ದಾಸನಾಗಿ
ಸಲ್ಲೀಲೆಯಿಂ ಪ್ರಸಾದವ ಕೊಂಡು
ಅಲ್ಲಿ ಇಲ್ಲಿ ಎಲ್ಲಿಯೂ ತಾನಾಗಿ ಇರಬೇಕಲ್ಲದೆ,
ಅಲ್ಲಿ ಮಾಡಿಹೆನೆಂದು ಎಲ್ಲರ ಬೇಡುವ ಕಲ್ಲೆದೆಯವನನೊಲ್ಲ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದ ನೇಮ. /50
ಚಿನ್ನ ಒಡೆದಡೆ ಕರಗಿದಡೆ ರೂಪಪ್ಪುದಲ್ಲದೆ,
ಮುತ್ತು ಒಡೆದು ಕರಗಿದಡೆ ರೂಪಪ್ಪುದೆ !
ಮರ್ತ್ಯದ ಮನುಜ ತಪ್ಪಿದರೊಪ್ಪಬೇಕಲ್ಲದೆ,
ಸದ್ಭಕ್ತ ಸದೈವ ತಪ್ಪಿದಡೆ ಒಪ್ಪಬಹುದೆ !
ಆಚಾರಕ್ಕು ಅಪಮಾನಕ್ಕು ಅಂಗವೆ ಕಡೆಯಿಲ್ಲದೆ,
ಬೇರೊಂದಂಗವ ಮಾಡಿ ಗುರುಲಿಂಗಜಂಗಮದ ಮುಖದಿಂದ
ಶುದ್ಧವೆಂದು ತಂದು ಕೂಡಿಕೊಳಬಹುದೆ !
ಲಿಂಗಬಾಹ್ಯನ, ಆಚಾರಭ್ರಷ್ಟನ, ಜಂಗಮವ ಕೊಂದವನ
ಇವರುವ ಕಂಡು ನುಡಿದಡೆ ಕುಂಭೀಪಾತಕಕ್ಕೆ ಒಳಗು
ಇದಕ್ಕೆ ಸಂದೇಹವಿಲ್ಲ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಆಣತಿ. /51
ಜಗಮೆಚ್ಚಬೇಕೆಂಬ ಶೀಲವ ನಾನರಿಯೆ,
ಕೊಳುಕೊಡೆಯಾಗಬೇಕೆಂಬ ಶೀಲವ ನಾನರಿಯೆ,
ದ್ರವ್ಯದ ಕಳ್ಳತನಕ್ಕಂಜಿ ಶೀಲವಾದುದ ನಾನರಿಯೆ.
ಹೊರಗಣ ಬಾವಿ, ಮನೆಯ ಮಡಕೆ –
ತನುಘಾತಕಕ್ಕಾದ ಶೀಲವೆಂದು ನಾನರಿಯೆ.
ತಾ ಹೋದಲ್ಲಿ ಇದಿರ ಕೇಳುವಲ್ಲಿ
ಆಯತ ಸ್ವಾಯತ ಸನ್ನಹಿತನೆಂಬುದ ವಿಚಾರಿಸಿ,
ಅಹುದಲ್ಲವೆಂಬುದ ಮನಕ್ಕೆ ಕುರುಹಿಟ್ಟು,
ನೇಮಕ್ಕೆ ಬಂದುದ ವ್ರತಕ್ಕೆ ಸಂದುದ ಸಂದೇಹವುಳ್ಳನ್ನಕ್ಕ ವಿಚಾರಿಸಿ,
ಸಂದೇಹ ನಿಂದಲ್ಲಿ ತನ್ನ ಆಯತದ ಅನುವನರಿತು ಕೊಂಬುದು ಪ್ರಸಾದವು.
ಇಂತೀ ತನುವಿಚಾರ ಕ್ರೀವಿಚಾರ ;
ಇಂತೀ ಭಾವಶುದ್ಧಾತ್ಮವಾದಲ್ಲಿ ವ್ರತ ಸಂದಿತ್ತು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ಶೀಲವಂತನಾದ. /52
ಜಾಗ್ರದಲ್ಲಿ ಮಾಡುವ ಹಾಹೆಯ ಗುಣಂಗಳು ಸ್ವಪ್ನದಲ್ಲಿ ತೋರುವಂತೆ
ಬಂದ ಮಣಿಹವ ಕಂಡು ಮುಂದಕ್ಕೆ ಶುಭಸೂಚನೆಯನ್ನರಿಯಬೇಕು.
ಅರಿವನ್ನಕ್ಕ ವ್ರತ, ಮಾಟ ವಸ್ತು ವಸ್ತುವಿನಕೂಟ ನೆರಿಗೆಯಲ್ಲಿ ನೆರೆ ನಂಬಿ ಆಚಾರವೆ ಪ್ರಾಣವಾದ
ರಾಮೇಶ್ವರಲಿಂಗದಲ್ಲಿಗೆ. /53
ಜಾಗ್ರದಲ್ಲಿ ಹೋಹಡೆ,
ಎನ್ನ ವ್ರತಕ್ಕೆ ಅರ್ಹರಾಗಿದ್ದವರಲ್ಲಿಗಲ್ಲದೆ ಹೋಗೆನು.
ಸ್ವಪ್ನದಲ್ಲಿ ಕಾಂಬಲ್ಲಿ ಎನ್ನ ಸಮಶೀಲವಂತರನಲ್ಲದೆ ಕಾಣೆನು.
ಸುಷುಪ್ತಿಯಲ್ಲಿ ತೊಳಗಿ ಬೆಳಗಿ ಆಡುವಾಗ ಎನ್ನ ನೇಮದಲ್ಲಿಯೆ ಅಡಗುವೆ.
ಈ ಸೀಮೆಯಲ್ಲಿ ತಪ್ಪಿದೆನಾದಡೆ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ತಪ್ಪುಕನಹೆನು. /54
ತಂದೆಯ ಒಂದಾಗಿ ಬಂದ ಸಹೋದರ ಗಂಡೆಲ್ಲ ತಂದೆಯಾದ ಕಾರಣ,
ಆ ತಂದೆಯ ಒಡಹುಟ್ಟಿದ ಹೆಣ್ಣೆಲ್ಲ ತನಗೆ ತಾಯಲ್ಲವೆ !
ಆಕೆಯನತ್ತೆಯೆಂಬ ಜಗದ ತೆತ್ತುಮತ್ತರ ನಾವರಿಯೆವಯ್ಯಾ.
ಮತ್ತೆ, ತಾವು ಬಳಸುವುದಕ್ಕೆ ಗೊತ್ತಿಲ್ಲವೆಂದಾಕೆಯ ಮಗಳನು
ಸತಿಯನೆ ಮಾಡಿಕೊಳ್ಳಬಹುದೆ !
ಹೆತ್ತತಾಯ ಮಗಳ ಮಗಳು ಒಡಹುಟ್ಟಿದವಳಲ್ಲವೆ !
ಸೊಸೆ ಮಾವನೆಂದು ಸತಿಯಂ ಮಾಡಿಕೊಂಬರು ನೋಡಾ.
ಸೊಸೆಗೂ ಮಾವಂಗೂ ಸಂಸರ್ಗ ನಿಲ್ಲುವುದೆ !
ಸತ್ಯಕ್ಕೆ ಸಮವಲ್ಲ, ಭಕ್ತಿಗೆ ಇದಿರಿಲ್ಲವೆಂದರಿದು ಮತ್ತೆ
ಜಗದಲ್ಲಿ ಹೊತ್ತು ಹೋರಲೇಕೆ !
ಇದು ಆಚಾರಕ್ಕೆ ನಿಶ್ಚಯ,
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಕೊಳುಕೊಡೆಯೆಂಬ ಸೂತಕ ಸದಾಚಾರದಲ್ಲಿ ಅಡಗಿತ್ತು./55
ತನುವಿಂಗೆ ಕ್ರೀ, ಆತ್ಮಂಗೆ ವ್ರತ.
ಆ ವ್ರತಕ್ಕೆ ನಿಶ್ಚಯ ಕರಿಗೊಂಡು
ಬಾಹ್ಯದ ಕ್ರೀ, ಅರಿವಿನ ಆಚರಣೆ,
ಭಾಷೆ ಓಸರಿಸದೆ ನಿಂದಾತನೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ./56
ತನುವ್ರತ ಮನವ್ರತ ಮಹಾಜ್ಞಾನವ್ರತ –
ತ್ರಿಕರಣದಲ್ಲಿ ಶುದ್ಧವಾಗಿಯಲ್ಲದೆ ಕ್ರೀ ಶುದ್ಧವಿಲ್ಲ.
ಕ್ರೀ ಶುದ್ಧವಾಗಿಯಲ್ಲದೆ ತನು ಶುದ್ಧವಿಲ್ಲ.
ತನು ಶುದ್ಧವಾಗಿಯಲ್ಲದೆ ಮನ ಶುದ್ಧವಿಲ್ಲ.
ಮನ ಶುದ್ಧವಾಗಿಯಲ್ಲದೆ ಜ್ಞಾನ ಶುದ್ಧವಿಲ್ಲ.
ಜ್ಞಾನ ಶುದ್ಧವಾಗಿ ನಿಂದು ಮಾಡಿಕೊಂಡ ನೇಮ ತಪ್ಪದೆ,
ಶರಣರಿಗೆ ದೂರಿಲ್ಲದೆ, ಮನಕ್ಕೆ ಮರವೆ ಇಲ್ಲದೆ,
ಮಹಾಜ್ಞಾನವೆ ವ್ರತ ನೇಮ ಲಿಂಗವಾಗಿ,
ಶ್ರುತ ದೃಷ್ಟ ಅನುಮಾನಕ್ಕೆ ಅಗೋಚರವಾಗಿ ನಿಂದ ಶೀಲವಂತನಂಗವೆ ಆಚಾರವೆ ಪ್ರಾಣವಾದ
ರಾಮೇಶ್ವರಲಿಂಗದ ಅಂಗ./57
ತನುಶೀಲವಂತರುಂಟು, ಧನಶೀಲವಂತರುಂಟು,
ಧರೆಶೀಲವಂತರುಂಟು, ಕನಕ ವನಿತೆಶೀಲವಂತರುಂಟು.
ಕೆಯಿ ತೋಟ ಹಿಂದೆಸೆ ಮುಂದೆಸೆ ನಿಳಯಶೀಲವಂತರುಂಟು.
ಫಲ ಕುಸುಮ ವಿದಳ ಬಹುಧಾನ್ಯ ಮುಂತಾದ
ರಸದ್ರವ್ಯ ಪಶು ಪಾಷಾಣ ವಸ್ತ್ರ ಪರಿಮಳ
ಛತ್ರ ಚಾಮರ ಅಂದಳ ಕರಿ ತುರಗಂಗಳು
ಮುಂತಾದವೆಲ್ಲಕ್ಕೂ ಶೀಲವಂತರುಂಟು.
ಅನುಸರಣೆಯ ಕಂಡಲ್ಲಿ, ಆಚಾರ ತಪ್ಪಿದಲ್ಲಿ, ಲಿಂಗ ಬಾಹ್ಯವಾದಲ್ಲಿ,
ಆಗವೆ ಅಂಗವ ಬಿಟ್ಟು ಲಿಂಗದೊಡಗೂಡುವ ಶೀಲವಂತರಂಗವ ಕಾಣೆ.
ಎನ್ನ ಕ್ರೀ ಭಂಗವಹುದಕ್ಕೆ ಮುನ್ನವೆ ನಿರಂಗವ ಹೇಳಾ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ./58
ತನ್ನ ತಾ ಬಂದುದ ಸೋಂಕಿಲ್ಲದುದ ವಿಚಾರಿಸಿ,
ತನ್ನನುವಿಂಗೆ ಬಂದುದ ಕೈಕೊಂಬುದು,
ಬಾರದ ದ್ರವ್ಯಕ್ಕೆ ಭ್ರಮೆಯಿಲ್ಲದೆ ಚಿತ್ತದೋರದಿಪ್ಪುದು ಭರಿತಾರ್ಪಣ.
ಅರ್ಪಿತವ ಮುಟ್ಟಿ ಅನರ್ಪಿತವ ಜಾಗ್ರ ಸ್ವಪ್ನದಲ್ಲಿ
ಮುಟ್ಟದಿಪ್ಪುದು ಭರಿತಾರ್ಪಣ.
ಲಿಂಗಕ್ಕೆ ಸಲ್ಲದುದ ಇರಿಸದೆ, ಸಲುವಷ್ಟನೆ ಅರ್ಪಿತವ ಮಾಡಿ,
ಮುಂದಣ ಸಂದೇಹವ ಮರೆದು, ಹಿಂದಣ ಸೋಂಕನರಿದು,
ಉಭಯದ ಖಂಡಿತವ ಖಂಡಿಸಿ ನಿಂದುದು ಭರಿತಾರ್ಪಣ.
ಹೀಗಲ್ಲದೆ, ಭಾಷೆಗೂಳಿನ ಭಟರಂತೆ,
ಓಗರ ಮೇಲೋಗರದಾಸೆಗೆ ಲೇಸಿನ ದ್ರವ್ಯಕ್ಕೆ ಆಸೆ ಮಾಡಲಿಲ್ಲ.
ಬಂದುದ ಕೈಕೊಂಡು ಸಂದನಳಿದು ನಿಂದುದೆ ಭರಿತಾರ್ಪಣ.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಕ್ರೀ ಭಾವದ ಭೇದ./59
ತನ್ನ ಸ್ವಕಾರ್ಯದಿಂದ ಮಾಡುವ
ಭಕ್ತನ ವ್ರತವೆ ವ್ರತದ
ಆತನಾಚಾರವೆ ಸತ್ಯದ
ಆತನಾಶ್ರಯದ ಶೇಷವೆ ಸಂಜೀವನಪ್ರಸಾದ.
ಆತನ ರೂಪೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ನಷ್ಟರೂಪು./60
ತನ್ನಾಚಾರಕ್ಕೆ ಬಂದವರು ತನ್ನವರೆಂದು ಭಾವಿಸಬೇಕಲ್ಲದೆ,
ತನ್ನಾಚಾರಕ್ಕೆ ಹೊರಗಾದವರ ಅಣ್ಣತಮ್ಮನೆಂದು
ತಾಯಿತಂದೆ ಎಂದು, ಹೊನ್ನು ಮಣ್ಣು ಹೆಣ್ಣಿನವರೆಂದು
ಅಂಗೀಕರಿಸಿದಡೆ, ಅವರಂಗಣವ ಕೂಡಿದಡೆ,
ಅವರೊಂದಾಗಿ ನುಡಿದಡೆ, ಭಕ್ತರು ಸತ್ಯರಿಗೆ ಮುನ್ನವೆ ಹೊರಗು.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಅವರನೊಳಗಿಟ್ಟುಕೊಳ್ಳ/61
ತಮ್ಮ ಆಯತದ ಉಪ್ಪೆಂದು ಬಳಸುವನ್ನಕ್ಕ
ತಾವು ತಂದು ಮಾಡಿಕೊಂಬ ಮೃತ್ತಿಕೆಯ ಸಾರವೆ ಲೇಸು.
ಅದೆಂತೆಂದಡೆ
ಮಹಾ ಅಂಬುಧಿಗಳಲ್ಲಿ
ತಾಕುಸೋಂಕು, ತಟ್ಟುಮುಟ್ಟು ಬಹವಾದ ಕಾರಣ.
ಇಂತೀ ಇವ ತಾನರಿದ ಮತ್ತೆ ಆಯತವೆಂಬುದೇನು
ತನ್ನ ಕಾಯ ಮನ ಅರಿದು ಮಾಡಿಕೊಂಬುದೆ ವ್ರತ.
ಇಂತಿವನರಿಯದೆ ಬಳಸುವ ಬಳಕೆಗಳೆಲ್ಲವು ಸೌಕರಿಯವಲ್ಲದೆ
ವ್ರತಕ್ಕೆ ಸಲ್ಲದ ಆಚಾರವಲ್ಲ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಇದೆ ಆಣತಿ./62
ತಾ ಮಾಡುವ ಕೃಷಿಯ ಮಾಡುವನ್ನ ಬರ ಮಾಡಿ,
ಕೃಷಿ ತೀರಿದ ಮತ್ತೆ ಗುರುದರ್ಶನ ಲಿಂಗಪೂಜೆ ಜಂಗಮಸೇವೆ
ಶಿವಭಕ್ತರ ಸುಖಸಂಭಾಷಣೆ ಶರಣರ ಸಂಗ
ಈ ನೇಮವನರಿವುತಿಪ್ಪುದು ಸದ್ಭಕ್ತನ ಸದಾತ್ಮನ ಯುಕ್ತಿ.
ಆಚಾರವೆ ಪ್ರಾಣವಾಗಿಪ್ಪ ರಾಮೇಶ್ವರಲಿಂಗಕ್ಕೆ ಆತನೆ ಚೇತನಭಾವ./63
ತಾ ಮುಳುಗಿದ ಮತ್ತೆ ಸಮುದ್ರದ ಪ್ರಮಾಣ ತನಗೇನು ?
ತಾನೊಂದು ಶಸ್ತ್ರದಲ್ಲಿ ಸಲೆ ಸಂದ ಮತ್ತೆ
ತನ್ನಂಗವ ಹಲವು ಶಸ್ತ್ರ ಬಂದಿಸಿದಡೇನು ?
ತಾ ನಿಂದ ನಿರಿಗೆಯಲ್ಲಿ ಸಂದ ಮತ್ತೆ
ಸಂದಣಿಗಾರರ ಬಂಧದ ಮಾತೇತಕ್ಕೆ ?
ಇದು ವ್ರತಾಚಾರದ ನಿಂದ ನಿರಿಗೆ, ಸಲೆ ಸಂದ ನೇಮ.
ಕಟ್ಟಾಚಾರಿಯ ದೃಷ್ಟನಿಷ್ಠೆ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದೊಳಗೆ ಕಟ್ಟಿದ ತೊಡರು/64
ತಾ ವ್ರತಿಯಾಗಿ ಮಕ್ಕಳೆಂದು ಮಾಡದಿರ್ದಡೆ ಆ ವ್ರತಕ್ಕೆ ತಾನೆ ಹೊರಗು.
ತನ್ನಂಗ ಮನ ಭಾವ ಕರಣಂಗಳಲ್ಲಿ ಸಂಗದಲ್ಲಿ ಇದ್ದವರಿಗೆಲ್ಲಕ್ಕೂ
ತನ್ನಂಗದ ವ್ರತವ ಮಾಡಬೇಕು.
ಇದು ಸೀಮೆವಂತರಯುಕ್ತಿ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಾಚಾರದ ಸೊತ್ತು./65
ತಾ ವ್ರತಿಯಾಗಿದ್ದಲ್ಲಿ ತನ್ನ ಸೀಮೆ ಒಳಗಾಗಿ,
ಕಟಕ ಪಾರದ್ವಾರ ಹುಸಿ ಕೊಲೆ ಕಳವು ಅನ್ಯಾಹಾರ ಮುಂತಾದ
ನಿಂದಕ ದುರ್ಜನ ಭವಿಸಂಗ ಉಳ್ಳವರ
ತಂದೆತಾಯಿಯೆಂದು ಹೆಂಡಿರುಮಕ್ಕಳೆಂದು ಬಂಧುಬಳಗವೆಂದು
ಅವರನು ಅಂಗಳದಲ್ಲಿ ಕೂಡಿಕೊಂಡಡೆ, ಅವರ ತಂದು ಕೊಳನಿಕ್ಕಿದಡೆ,
ತಿಂಗಳು ಸತ್ತ ನಾಯಮಾಂಸವ ತಂದು ತಿಂದ ದೋಷ ತಪ್ಪದು.
ಇದಕ್ಕೆ ಹಿಂದೆ ನೆನೆಯಲಿಲ್ಲ, ಮುಂದೆ ನೋಡಲಿಲ್ಲ.
ಈ ತಪ್ಪು ಹೊತ್ತಲ್ಲಿಯೆ ಅಂದಿಗೆ ನೂರು ತುಂಬಿತ್ತೆಂದು ಅಂಗವ ಬಿಡಬೇಕು.
ಅಂಗವ ಬಿಡದ ಭಂಡರ ಕಂಡಡೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗನೊಪ್ಪ./66
ತುಷವ ಕಳೆದ ತಂಡುಲವನಡಬೇಕು.
ಸಿಪ್ಪೆಯ ಕಳೆದ ಹಣ್ಣ ಮೆಲಬೇಕು.
ಕ್ರೀಯನರಿತು ಆಚಾರವನರಿಯಬೇಕು.
ಆಚಾರವನರಿತು ವ್ರತಕ್ಕೆ ಓಸರಿಸದಿರಬೇಕು.
ಮನ ವಸ್ತುವಾಗಿ, ವಸ್ತು ತಾನಾಗಿ, ಉಭಯ ಭಿನ್ನಭಾವವಿಲ್ಲದೆ
ನಿಂದವಂಗೆ ಸಹಭೋಜನದಂಗ.
ಶೋಕ, ರೋಗ, ಜನನಮರಣಾದಿಗಳಲ್ಲಿ
ಆಕರಣೆಗೊಳಗಾಗುತ್ತ
ಆರು ಸಹಭೋಜನಕ್ಕೆ ಘಾತಕತನವಲ್ಲವೆ ?
ಇಂತೀ ಜಗದ ವರ್ತಕರು ಮೆಚ್ಚಬೇಕೆಂಬ ಕೃತ್ಯವ
ಸದ್ಭಕ್ತರು ನೀವೆ ಬಲ್ಲಿರಿ.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಾ ಈ ಭಾವವ ನೀನೆ ಬಲ್ಲೆ./67
ತೋಡಿದ ಬಾವಿ, ಬಳಸುವ ಭಾಜನಕ್ಕೆ ಮರೆಯಲ್ಲದೆ,
ಹರಿದಾಡುವ ಚಿತ್ತಕ್ಕೆ, ಸರ್ವವ ಕೂಡುವ ಪ್ರಕೃತಿಗೆ,
ಗೆಲ್ಲ ಸೋಲಕ್ಕೆ, ಅಲ್ಲ ಅಹುದೆಂಬುದಕ್ಕೆ ಎಲ್ಲಿಯೂ ಮರೆಯ ಕಾಣೆ.
ಬಹುಮಾತನಾಡುವ ಬಾಯಿ ಸರ್ವರ ಕೂಡಿ
ಬೆರೆದೆನೆಂಬಂಗಕ್ಕೆ ಮರೆಯ ಕಾಣೆ.
ಕಳ್ಳನ ಜಾಳಿಗೆಯಂತೆ ಒಳ್ಳೆಯ ಮುದ್ರೆಯನಿಕ್ಕಿದಡೆ
ಸುರಿದಲ್ಲಿಯೆ ಕಾಣಬಂದಿತ್ತು.
ಕಲ್ಲಿಯ ಬಳಸಿನ ನೂಲಿನಂತೆ ಚಲ್ಲಿ ಸಿಕ್ಕಿನಲ್ಲಿ ತುಯಿದಡೆ
ಆ ಕಳ್ಳರ ಬಲ್ಲವರಿಗೆ ಎಲ್ಲಿಯ ವ್ರತ !
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಅವರುವ ಬಲ್ಲನಾಗಿ ಒಲ್ಲನು./68
ದಾಸಿ ವೇಶಿ ಪರನಾರಿಸಹೋದರನಾಗಿರಬೇಕು.
ವ್ರತಹಸ್ತಂಗೆ, ಸದ್ಭಕ್ತಂಗೆ, ಸತ್ಪುರುಷಂಗೆ ವ್ರತಕ್ಕೆ ತಪ್ಪದೆ
ನೇಮಕ್ಕೆ ನಿತ್ಯವಾಗಿ ಭಾವಭ್ರಮೆಯಳಿದಿರಬೇಕು, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವನರಿವುದಕ್ಕೆ./69
ದುಷ್ಟರಿಗಂಜಿ ಕಟ್ಟಿಕೊಳ್ಳಬಹುದೆ ಕಡ್ಡಾಯದ ವ್ರತವ !
ಆ ವ್ರತದ ವಿಚಾರವೆಂತೆಂದಡೆ ;
ಅಲಗಿನತುಪ್ಪದಸವಿಗೆ ಲಲ್ಲೆಯಿಂದ ನೆಕ್ಕಿದಡೆ
ಅಲಗಿನಧಾರೆ ನಾಲಗೆಯ ತಾಗಿ, ಆ ಜೀವ ಹಲುಬುವ ತೆರದಂತೆ.
ಒಲವರವಿಲ್ಲದ ಭಕ್ತಿ, ಛಲವಿಲ್ಲದ ನಿಷ್ಠೆ,
ಎಲವದಮರನಕಾಯ್ದ ವಿಹಂಗನಂತೆ.
ಇಂತೀ ಸಲೆನೆಲೆಯನರಿಯದವನ ವ್ರತಾಚಾರ
ಕೊಲೆ ಹೊಲೆ ಸೂತಕಕ್ಕೊಡಲಾಯಿತ್ತು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಹೊರಗಾದ ನೇಮ./70
ದೃಷ್ಟದಲ್ಲಿ ಆಗಾಗ ಅರ್ಪಿಸಿಕೊಂಡಿಹೆನೆಂಬುದು ನಿನ್ನ ಚಿತ್ತದ ಕಲೆಯೊ !
ವಸ್ತುವಿಗೆ ನೀ ತೃಪ್ತಿಯ ಮಾಡಿಹೆನೆಂಬ ನಿಶ್ಚಯವೊ !
ಆ ವಸ್ತು ವಿಷದಬುಡದಂತೆ, ಅಮೃತದಗಟ್ಟಿಯಂತೆ.
ನಿನ್ನ ಸರ್ವಾಂಗದಲ್ಲಿ ಛೇದಿಸಿದ ಲಿಂಗಕ್ಕೆ
ಸಹಭೋಜನದ ಭಾವವ ನಿನ್ನ ನೀನೆ ತಿಳಿ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ./71
ದೇವರಿಗೆಂದು ಬಂದ ದ್ರವ್ಯ ಮತ್ತೆ ಸಂದೇಹವಾಯಿತ್ತೆಂದು
ಹಾಕೆಂದಾಗವೆ ಘನಲಿಂಗಕ್ಕೆ ದೂರ.
ಬೇಹುದಕ್ಕೆ ಮೊದಲೆ ಸಂದೇಹವನಳಿದು ತರಬೇಕಲ್ಲದೆ
ಉಂಡು ಊಟವ ಹಳಿಯಲುಂಟೆ !
ತಂದುಕೊಟ್ಟು ಕುಲವನರಸಲುಂಟೆ !
ಇಂತಿವರು ತಮ್ಮಂಗವ್ರತವನರಿಯದೆ
ಇದಿರವ್ರತದಂಗ ತಪ್ಪಿತೆಂದು ಕೊಂಡಾಡುವರ ಕಂಡು
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಅವರು ಕಂಡಹರೆಂದು ಅಂಜುತ್ತಿದ್ದನು./72
ಧನಶೀಲ ಮನಶೀಲ ತನುಶೀಲ ಸರ್ವಮಯ ದೃಕ್ಕಿಂಗೆ ಕಾಂಬುದೆಲ್ಲವು ಶೀಲ.
ಇಂತೀ ವ್ರತಸಂಪದವೆಲ್ಲವು ಅದಾರ ಕುರಿತು ಮಾಡುವ ನೇಮ
ಎಂಬುದ ತಾನರಿಯಬೇಕು.
ಗುರುವಿಂಗೆ ತನುವನರ್ಪಿಸಿ, ಲಿಂಗಕ್ಕೆ ಮನವನರ್ಪಿಸಿ,
ಜಂಗಮಕ್ಕೆ ಧನವನರ್ಪಿಸಿ, ತ್ರಿವಿಧಕ್ಕೆ ತ್ರಿವಿಧವ ಕೊಟ್ಟು,
ತನ್ನ ವ್ರತಕ್ಕೆ ಭಿನ್ನಭಾವವಿಲ್ಲದೆ ನಿಂದುದೆ ವ್ರತ.
ಹೀಗಲ್ಲದೆ, ಇದಿರ ಮಾತಿಂಗಂಜಿ
ಕೊಡುವ ಕೊಂಬುವರ ನಿಹಿತಕ್ಕಂಜಿ ನಡೆವನ ವ್ರತ
ಜಂಬುಕ ಶೀಲವಹಿಡಿದು ನಾಲಗೆಮುಟ್ಟದೆ ನುಂಗುವ ತೆರದಂತೆ
ಸರ್ವವ ತಾ ಮುಟ್ಟುವಲ್ಲಿ ಜಂಗಮಮುಟ್ಟದೆ ತಾ ಮುಟ್ಟಿದನಾದಡೆ
ಸಜ್ಜನಸ್ತ್ರೀ ಕೆಟ್ಟುನಡೆದಂತೆ.
ಬಾಯಿಯಿದ್ದು ಬಯ್ಯಲಾರೆ, ಕಯ್ಯಿದ್ದು ಪೊಯ್ಯಲಾರೆ,
ಕಾಂಬುದಕ್ಕೆ ಮೊದಲೆ ಕಣ್ಣ ಮುಚ್ಚುವೆನು.
ಈ ಗುಣ ತಪ್ಪದು ನಿಮ್ಮಾಣೆ.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಆಣತಿ./73
ಧೂಳುಪಾವಡ ಕಂಠಪಾವಡ ಸರ್ವಾಂಗಪಾವಡ
ಇಂತೀ ತ್ರಿವಿಧಶೀಲವ ನಡೆಸುವಲ್ಲಿ ಆ ಭೇದವನರಿತು,
ಕಡೆ ನಡು ಮೊದಲು ಮೂರು ವ್ರತ ಕೂಡುವಲ್ಲಿ
ವ್ರತದ ಬಿಡುಮುಡಿಯನರಿಯಬೇಕು.
ಮನ ವಚನ ಕಾಯ ಈ ಮೂರರ ತೆರನ ಅರಿಯಬೇಕು.
ಹೆಣ್ಣು ಹೊನ್ನು ಮಣ್ಣಿನಂಗವನರಿಯಬೇಕು.
ಅರ್ಪಿತ, ಅನರ್ಪಿತ, ತೃಪ್ತಿ ಈ ಮೂರರ ಚಿತ್ರವನರಿಯಬೇಕು.
ಮರ್ಕಟ ವಿಹಂಗ ಪಿಪೀಲಿಕ ಈ ಮೂರು ಮುಟ್ಟುವ ಭೇದವನರಿಯಬೇಕು.
ಇಂತೀ ಇವು ಆವ ಶೀಲವಾದಡೂ ಭಾವಶುದ್ಧವಾಗಿರಬೇಕು, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ./74
ಧೂಳುಪಾವಡವಾದಲ್ಲಿ ಆವ ನೀರನು ಹಾಯಬಹುದು.
ಕಂಠಪಾವಡದಲ್ಲಿ ಉರದಿಂದ ಮೀರಿ ಹಾಯಲಾಗದು.
ಸರ್ವಾಂಗಪಾವಡದಲ್ಲಿ ಹೊಳೆ ತಟಾಕ ಮಿಕ್ಕಾದ
ಬಹುಜಲಂಗಳ ಮೆಟ್ಟಲಾಗದು.
ಅದೆಂತೆಂದಡೆ
ಆ ಲಿಂಗವೆಲ್ಲವು ವ್ರತಾಚಾರಲಿಂಗವಾದಕಾರಣ.
ತಮ್ಮ ಲಿಂಗದ ಮಜ್ಜನದ ಅಗ್ಗಣಿಯಲ್ಲದೆ
ತಮ್ಮಂಗವ ಮುಟ್ಟಲಾಗದು.
ಇಂತೀ ಇವು ತಾವು ಕೊಂಡ ವ್ರತದಂಗದ ಭೇದವಲ್ಲದೆ
ನಾನೊಂದು ನುಡಿದುದಿಲ್ಲ.
ಇದಕ್ಕೆ ನಿಮ್ಮ ಭಾವವೆ ಸಾಕ್ಷಿ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ವ್ರತದಂಗದ ಭೇದ./75
ನಚ್ಚುಮಚ್ಚಿನ ವ್ರತ, ನಿಷ್ಠೆಹೀನನ ಪೂಜೆ, ಭಕ್ತಿ ಇಲ್ಲದವನ ಮಾಟಕೂಟ
ಇಂತಿವು ಸತ್ಯವಲ್ಲ.
ಆ ವ್ರತ ನೇಮ ನಿತ್ಯಂಗಳಲ್ಲಿ ಮನ ವಚನ ಕಾಯ ತ್ರಿಕರಣ ಶುದ್ಧವಾಗಿ,
ಬಾಹ್ಯಕ್ರೀಯಲ್ಲಿ ಅರಿವ ಆತ್ಮನಲ್ಲಿ,
ಮಿಕ್ಕಾದ ಪದಾರ್ಥಂಗಳಲ್ಲಿ ಸದ್ಭಾವ ತಾನಾಗಿ,
ಅರಿವಿಂಗೂ ಆಚಾರಕ್ಕೂ ಎಡೆದೆರಪಿಲ್ಲದೆ
ಕ್ರೀಯೆ ವಸ್ತುವಾಗಿ, ವಸ್ತುವೆ ಕ್ರೀಯಾಗಿ, ಬಣ್ಣ ಬಂಗಾರದಂತೆ ನಿಂದಂಗವೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಂಗ/76
ನಾನಾ ವ್ರತ ನೇಮ ಭೇದಂಗಳಲ್ಲಿ ಅರುವತ್ತುನಾಲ್ಕು ವ್ರತ, ಐವತ್ತಾರು ಶೀಲ,
ಮೂವತ್ತೆರಡು ನೇಮ, ನಿತ್ಯಕೃತ್ಯ ಲೆಕ್ಕಕ್ಕವಧಿಯಿಲ್ಲ, ಅಗೋಚರ.
ಆಚಾರವಾರಿಗೂ ಅಪ್ರಮಾಣ, ನೀತಿಯ ಮಾತಿಂಗೆ ಆಚಾರ,
ಶಿವಾಚಾರವೆ ಸರ್ವಮಯಲಿಂಗ, ಪಂಚಾಚಾರಶುದ್ಧಭರಿತ, ರಾಮೇಶ್ವರಲಿಂಗಕ್ಕೆ ಪ್ರಾಣವಾಗಿರಬೇಕು./77
ನಾನಾ ವ್ರತಂಗಳ ಪಿಡಿವುದೆಲ್ಲವು ಮನದ ಶಂಕೆ.
ಮನ ಹರಿದಾಡುವುದೆಲ್ಲವು ತನುವಿನ ಶಂಕೆ.
ಮನ ತನು ಕೂಡಿ ನಡೆವುದೆಲ್ಲವು ಪ್ರಕೃತಿಯ ಶಂಕೆ.
ಮನ ತನು ಪ್ರಕೃತಿ ಮೂರೊಂದಾದಲ್ಲಿ ಶೀಲವೆಂಬ ಪಾಶ
ಜೀವನ ಕೊರಳ ಸುತ್ತಿತ್ತು.
ಬಹಿರಂಗದ ವ್ರತ ಅಂತರಂಗದ ಅರಿವು ಉಭಯವು ಕಟ್ಟುವಡೆದಲ್ಲಿ ಆಚಾರವೆ ಪ್ರಾಣವಾದ
ರಾಮೇಶ್ವರಲಿಂಗವೆಂಬ ಗೊತ್ತಾಯಿತ್ತು./78
ನಾನಾ ವ್ರತದ ಭಾವಂಗಳುಂಟು.
ಲಕ್ಷಕ್ಕೆ ಇಕ್ಕಿಹೆನೆಂಬ ಕೃತ್ಯದವರುಂಟು.
ಬಂದಡೆ ಮುಯ್ಯಾಂತು ಬಾರದಿದ್ದಡೆ ಭಕ್ತರು ಜಂಗಮವ
ಆರನೂ ಕರೆಯೆನೆಂಬ ಕಟ್ಟಳೆಯವರುಂಟು.
ತಮ್ಮ ಕೃತ್ಯವಲ್ಲದೆ ಮತ್ತೆ ಬಂದಡೆ ಕತ್ತಹಿಡಿದು ನೂಕುವರುಂಟು.
ಗುರುಲಿಂಗಜಂಗಮದಲ್ಲಿ ತಪ್ಪಕಂಡಡೆ ಒಪ್ಪುವರುಂಟು.
ಮೀರಿ ತಪ್ಪಿದಡೆ ಅರೆಯಟ್ಟಿ ಅಪ್ಪಳಿಸುವರುಂಟು.
ಇಂತೀ ಶೀಲವೆಲ್ಲವು ನಾವು ಮಾಡಿಕೊಂಡ ಕೃತ್ಯದ ಭಾವಕೃತ್ಯ.
ತಪ್ಪಿದಲ್ಲಿ ದೃಷ್ಟವ ಕಂಡು ಶರಣರೆಲ್ಲರು ಕೂಡಿ ತಪ್ಪ ಹೊರಿಸಿದ ಮತ್ತೆ
ಆ ವ್ರತವನೊಪ್ಪಬಹುದೆ !
ಕೊಪ್ಪರಿಗೆಯಲ್ಲಿ ನೀರ ಹೊಯಿದು ಅಪೇಯವ ಅಪ್ಪುವಿನಲ್ಲಿ ಕದಡಿ
ಅಶುದ್ಧ ಒಪ್ಪವಿಲ್ಲವೆಂದು ಮತ್ತೆ ಕುಡಿಯಬಹುದೆ !
ತಪ್ಪದ ನೇಮವನೊಪ್ಪಿ ತಪ್ಪ ಕಂಡಲ್ಲಿ ಬಿಟ್ಟು
ಇಂತೀ ಉಭಯಕ್ಕೆ ತಪ್ಪದ ಗುರು ವ್ರತಾಚಾರಕ್ಕೆ ಕರ್ತನಾಗಿರಬೇಕು.
ಇಂತೀ ಕಷ್ಟವ ಕಂಡು ದ್ರವ್ಯದಾಸೆಗೆ ಒಪ್ಪಿದನಾದಡೆ
ಅವನೂಟ ಸತ್ತನಾಯಮಾಂಸ.
ನಾ ತಪ್ಪಿ ನುಡಿದೆನಾದಡೆ ಎನಗೆ ಎಕ್ಕಲನರಕ.
ನಾ ಕತ್ತಲೆಯೊಳಗಿದ್ದು ಅಂಜಿ ಇತ್ತ ಬಾ ಎಂಬವನಲ್ಲ.
ವ್ರತ ತಪ್ಪಿದವರಿಗೆ ನಾ ಕಟ್ಟಿದ ತೊಡರು.
ಎನ್ನ ಪಿಡಿದಡೆ ಕಾದುವೆ, ಕೇಳಿದಡೆ ಪೇಳುವೆ.
ಎನ್ನಾಶ್ರಯದ ಮಕ್ಷಿಕ ಮೂಷಕ ಮಾರ್ಜಾಲ ಗೋ ಮುಂತಾದ
ದೃಷ್ಟದಲ್ಲಿ ಕಾಂಬ ಚೇತನಕ್ಕೆಲ್ಲಕ್ಕೂ ಎನ್ನ ವ್ರತದ ಕಟ್ಟು.
ಇದಕ್ಕೆ ತಪ್ಪಿದೆನಾದಡೆ ನಿಮ್ಮಾಣೆ ನಿಮ್ಮ ಪ್ರಮಥರಾಣೆ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ಎಚ್ಚತ್ತು ಬದುಕು./79
ನಿತ್ಯ ಚಿಲುಮೆಯ ಕೃತ್ಯಂಗಳಾದಲ್ಲಿ
ತೃಣ ಕಾಷ್ಠ ವಿದಳ ಮೊದಲಾದ ಸಂಗ್ರಹಂಗಳಲ್ಲಿ
ಸಂದೇಹ ಮಾತ್ರವಿಲ್ಲದೆ
ಮನ ನಂಬುವನ್ನಬರ ಸೋದಿಸಬೇಕು. ಅದು ಆಚಾರವೆ ಪ್ರಾಣವಾಗಿರ್ಪ ರಾಮೇಶ್ವರಲಿಂಗಕ್ಕರ್ಪಿತ./80
ನಿತ್ಯ ಚಿಲುಮೆಯ ಕೃತ್ಯವೆಂದು ಮಾಡುವಲ್ಲಿ,
ಮಳಲಿನ ಮರೆಯ ನೀರ ಬಳಸದೆ,
ಸಲೆ ಪೃಥ್ವಿಯಲ್ಲಿ ನೆಲೆ ಚಿಲುಮೆಯಂ ಕಂಡು
ದಿನಕೃತ್ಯ ತಪ್ಪದೆ ನೇಮ ಸಲುವಂತೆ ಕಾಷ್ಠವಂ ತೊಳೆದು
ಜೀವಜಂತುಗಳ ನೋಡಿ, ಉಂಡೆ ಮರನಂ ಒಡೆಯದೆ,
ಜೀರ್ಣವಾದ ಕಾಷ್ಠಮಂ ಒಲೆಗಿಕ್ಕದೆ
ತುಳಿಯದ ಧಾನ್ಯವಂ ಶೋಧಿಸಿ,
ಲತೆ ಪರ್ಣ ಮೊದಲಾದ ಪಚ್ಚೆ ಪೈರು ಗೆಣಸು ವಿದಳ ಹುಡುಕಂ ಮುಟ್ಟದೆ,
ಲಿಂಗಾವಧಾನದಲ್ಲಿ ಸ್ವಯಂ ಪಾಕವಂ ಮಾಡಿ
ಸ್ವಾನುಭಾವದಿಂದ ಲಿಂಗಾರ್ಚನೆಯ ಮಾಡಿ
ಬೇಡದೆ ಕಾಡದೆ ಸ್ವ ಇಚ್ಫಾಪರನಾಗಿ ಆರೈದು ನಡೆವಲ್ಲಿ,
ನೀರು ನೆಲ ಬಹುಜನಗ್ರಾಮ ಗಣಸಮೂಹಸಂಪದಸಮಯಕ್ಕೆ ಸಿಕ್ಕದೆ
ತ್ರಿವಿಧಕ್ಕೊಳಗಲ್ಲದೆ,
ಇಂತೀ ನೇಮವೆ ತಾನಾಗಿ, ತಾನೆ ನೇಮವಾಗಿ,
ಉಭಯಕ್ಕೆ ತೆರಪಿಲ್ಲದೆ ನಿಂದುದು ಆಚಾರವೆ ಪ್ರಣವಾದ ರಾಮೇಶ್ವರಲಿಂಗವು ತಾನೆ./81
ನಿತ್ಯ ಚಿಲುಮೆಯ ನೇಮಕ್ಕೆ ಶಿವಭಕ್ತರ ಸೀಮೆಯಲ್ಲಿಯಲ್ಲದೆ ಇರಲಿಲ್ಲ.
ಶಿವಭಕ್ತರು ಮುಟ್ಟಿ ತಂದ ದ್ರವ್ಯವನಲ್ಲದೆ ಒಪ್ಪಲಿಲ್ಲ.
ಭೋಜನಕ್ಕೆ ತಮ್ಮಾಯತದ ಜಲ
ಲಿಂಗಮುದ್ರೆಯ ಸೀಮೆಯ ಮೃತ್ತಿಕೆ ಮರಕಲ್ಲು
ಮುಂತಾದ ಮತ್ತಾವಾವ ಗುಣಂಗಳೆಲ್ಲವು ಲಿಂಗಧಾರಣ ಸೀಮೆಯಾಗಿ,
ಮತ್ತೆ ಆವಾವ ಗುಣಂಗಳಿಂದ ಮನವೆಟ್ಟುವನ್ನಬರ ಚಿತ್ತಸುಯಿಧಾನಿಯಾಗಿ,
ತನ್ನಾಯತದ ಕೈಯ ಧಾನ್ಯವ ಕುಟ್ಟುವಲ್ಲಿ,
ಒರಳು ಒನಕೆಯ ಶಬ್ದವಂ ಭವಿಗಳು ಕೇಳದಂತೆ
ಸ್ವಯಂ ಪಾಕವ ಮಾಡುವಲ್ಲಿ, ಅಗ್ನಿಯಲ್ಲಿ ಕಾಷ್ಠದಲ್ಲಿ ಭೂಮಿಯಲ್ಲಿ ಸುಜಲದಲ್ಲಿ
ಇಂಬಿಡುವಲ್ಲಿ ತೆಗೆವಲ್ಲಿ ಲಿಂಗಸುಯಿಧಾನಿಯಾಗಿ,
ಮಜ್ಜನ ದಂತಾವಳಿಗಳಲ್ಲಿ ಶುಚಿರ್ಭೂತನಾಗಿ,
ಜಂಗಮಲಿಂಗದ ಮುಂದಿಟ್ಟು ಅವರು ಸ್ವೀಕರಿಸುವನ್ನಕ್ಕ ನೇತ್ರತುಂಬಿ ನೋಡಿ
ಅವರ ಕಾರುಣ್ಯವ ಪಡೆದು ಇಪ್ಪುದು ಸದ್ಭಕ್ತನ ವ್ರತ ; ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ನೇಮ./82
ನಿರ್ಧನಿಕರು ನಡೆನುಡಿಗಳಿಂದ ತಾಕುಸೋಂಕು ಬರಲಾಗಿ
ಒಳಹೊರಗು ಎಂಬ ಸಂದೇಹಕ್ಕೆ ಈಡನಿಕ್ಕಿ,
ಕಂಡಡೆ ನುಡಿಯದೆ ಬಂದಡೆ ಕರೆಯದೆ ಇಪ್ಪವರ ನೋಡಾ !
ಧನಪತಿಶ್ರುತ ದೃಷ್ಟದಲ್ಲಿ ಕೆಡೆನುಡಿದು ಅಂಗಳ ಬಾಗಿಲಲ್ಲಿ ತಳ್ಳಿದಡೆ
ಇಲ್ಲಿಯೆ ಲೇಸೆಂದು ಕುಳ್ಳಿರುವರ ಕಂಡು ನಾಚಿತ್ತಯ್ಯಾ ಎನ್ನ ಮನ.
ಆಚಾರಕ್ಕೆ ಅರಸುಂಟೆ !
ಇಂತೀ ಶೀಲವಂತರೆಲ್ಲರು ಮಹಾಲಕ್ಷ್ಮಿಯ ಮನೆಯ ಎತ್ತಾಗಿ ಉತ್ತು,
ತೊತ್ತಾಗಿ ಕೊಬ್ಬಿ, ಕತ್ತೆಯಾಗಿ ಹೊತ್ತು ಸಾವರೆಲ್ಲರು ಸದ್ಭಕ್ತರೆ !
ಆಚಾರಕ್ಕೆ ಅರಸಾದಡು ಆಕಾಶವ ನೋಡುವುದಕ್ಕೂ ನೂಕು ತಾಕೆ !
ಕಂಡ ಮತ್ತೆ ಒಳಗಿಟ್ಟುಕೊಳ್ಳಬಹುದೆ !
ಇದು ಕಾರಣದಲ್ಲಿ
ಭಕ್ತಿ ಎನಗೆ ಸ್ವಪ್ನವಾಯಿತ್ತು ಸತ್ಯವೆಂಬುದು ಬೆಚ್ಚಿ ಓಡುತ್ತಿದೆ.
ಎನಗಿನ್ನು ಮುಕ್ತಿಯಾವುದು !
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ಎನಗೊಂದು ಗೊತ್ತ ತೋರಾ./83
ನೆರಹಿ ಮಾಡುವ ಮಾಟ ಅಘಹರನ ಮುಟ್ಟದು.
ಬೇಡಿ ಮಾಡುವ ಮಾಟ ಪುಣ್ಯವೃದ್ಧಿಗೆ ಸಲ್ಲದು.
ಕೃತ್ಯಕ್ಕೆ ಒಡೆಯರ ಕಟ್ಟಳೆಯಿಲ್ಲದೆ ಒಲ್ಲೆನೆಂದಡೆ
ಮನಮುಟ್ಟದ ಕಟ್ಟಳೆಯ ಗುತ್ತಿಗೆಯ ಹೋದವರುಂಟೆ !
ನಿಶ್ಚಯವನರಿಯದ ಕೃತ್ಯವ ಮಾಡಿಕೊಂಡಂತೆ
ಮತ್ತೆ ಅದ ಬಿಟ್ಟು ಕೃತ್ಯವಿಲ್ಲದಿರೆ ಮತ್ತೊಂದುವ ಮುಟ್ಟಿದೆನಾದಡೆ
ಹೊಟ್ಟೆಯೊಳಗಣ ಸತ್ತಕತ್ತೆಯಮರಿಯ ನರಿಯು ತಿಂದು
ಮಿಕ್ಕುದ ನಾಯಿತಿಂದಡೆ, ಇದರಚ್ಚುಗಕ್ಕಂಜಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ಗೊತ್ತಿಗೆ ಮರೆಯಾದ./84
ನೇಮವ ಮಾಡಿಕೊಂಡು ತನ್ನಯ ಸಂಸಾರದ ಕಾಮ್ಯಾರ್ಥಕ್ಕಾಗಿ
ಐದು ಹತ್ತು ಹದಿನೈದೆಂದು ಮೀರಿ ಬಂದಡೆ ಕೃತ್ಯವಿಲ್ಲ ಎಂದು
ಅವರಿಗಿಕ್ಕಿಹೆವೆಂದು ಭಕ್ತರ ಮನೆಯಲ್ಲಿ ಹೊಕ್ಕು ಹೊಕ್ಕು
ಬೇಡುವುದು ಭಕ್ತನ ಯುಕ್ತಿಯೆ !
ಆರೊಡವೆಯ ಆರಿಗೆ ಬೇಡಿ ಮಾಡಿ
ತಾನು ದಾರಿಯಾದೆನೆಂಬ ಭೋಗಿಯ ನೋಡಾ !
ವೇಶಿಯ ಪುತ್ರ ಪೈತೃಕವ ಮಾಡಿದಲ್ಲಿ ಅದೇತರ ಊಟ ! ಅದೇತರ ಮಾಟ ! ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದ ನೇಮ./85
ಪಂಚಾಚಾರ ಶುದ್ಧವಾದ ಸದ್ಭಕ್ತಂಗೆ, ಪಾದತೀರ್ಥಪ್ರಸಾದದಲ್ಲಿ ನಿರತಂಗೆ,
ಆವ ವ್ರತ ನೇಮವ ನಡೆಸುವ ಸದೈವಂಗೆ ಆತನ ಸುಕಾಯಕದ ಇರವೆಂತೆಂದಡೆ !
ತಾ ದೃಷ್ಟದಲ್ಲಿ ಕಾಬ ಪ್ರಾಣಿಗಳ ಕೊಲ್ಲದೆ, ಕೊಲ್ಲುವುದಕ್ಕೆ ಒಡಂಬಡದೆ,
ತಾ ಮಾಡುವ ಕಾಯಕದಲ್ಲಿ ಅಧಮ ವಿಶೇಷವೆಂಬುದನರಿತು,
ನಡೆನುಡಿ ಸಿದ್ಧಾಂತವಾಗಿ ಲಿಂಗವ ಒಡಗೂಡಿಪ್ಪ ಕಾಯಕದಿರವೆಂತೆಂದಡೆ !
ನಿರತವಾಗಿ ಆ ಮುಖದಿಂದ ಬಂದ ದ್ರವ್ಯದ ಗುರುಲಿಂಗಜಂಗಮದ ಮುಂದಿಟ್ಟು
ಆ ಪ್ರಸಾದಮಂ ಕೊಂಡ ಸದ್ಭಕ್ತನ ಪ್ರಸಾದವ ಕೊಂಡ
ಗುರುವಿಂಗೆ ಇಹಸುಖ, ಲಿಂಗಕ್ಕೆ ಪರಸು, ಜಂಗಮಕ್ಕೆ ಪರಮಸುಖ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಆ ಪ್ರಸಾದವೆ ಪರಮಪದ/86
ಪಂಚಾಚಾರವ ಧರಿಸಿದ ಶರೀರಕ್ಕೆ
ಅಷ್ಟೋತ್ತರಶತವ್ಯಾದಿ ಬಂದಿತ್ತೆಂದು ಕಲ್ಪಿಸಬಹುದೆ ?
ಪಾದತೀರ್ಥ ಪ್ರಸಾದವೆಂದು ನೈಷ್ಠಿಕದಲ್ಲಿ ಕೊಂಬ ಜಿಹ್ವೆ,
ಔಷದಿ ಕಷಾಯ ಕೊಂಡಡೆ ಪಂಚಾಚಾರಕ್ಕೆ ದೂರ
ಪಾದೋದಕ ಪ್ರಸಾದವಿಲ್ಲ ಇಹಪರಕ್ಕೆ ಸಲ್ಲ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ಅವರನೊಲ್ಲ./87
ಪಂಚಾಚಾರಶುದ್ಧವಾಗಿ ಇರಬೇಕೆಂಬರಲ್ಲದೆ,
ಪಂಚಾಚಾರದ ವಿವರವನರಿಯರು ನೋಡಾ !
ತಮ್ಮ ಸ್ವಯಾಯತವೆಂಬುದನರಿಯದೆ ಉಂಡಲ್ಲಿ,
ತಮ್ಮ ಲಿಂಗಕ್ಕೆ ಅಲ್ಲದುದ ವಾಸಿಸಿದಲ್ಲಿ,
ತಮ್ಮ ವ್ರತಾಚಾರಕ್ಕೆ ಸಲ್ಲದುದ ನಿರೀಕ್ಷಿಸಿದಲ್ಲಿ,
ತಮ್ಮಾಯತಕ್ಕೊಳಗಲ್ಲದ ಕುಶಬ್ದವ ಕೇಳಿ ಒಪ್ಪಿದಲ್ಲಿ,
ತಮ್ಮ ಲಿಂಗಾಯತಕ್ಕೆ ಹೊರಗಾದುದ ಮುಟ್ಟಿ ಅಂಗೀಕರಿಸಿದಲ್ಲಿ,
ಇಂತೀ ಪಂಚಾಚಾರದಲ್ಲಿ ಶುದ್ಧತೆಯಾಗಿ
ಗುರುಲಿಂಗಜಂಗಮ ಪಾದತೀರ್ಥ ಪ್ರಸಾದ
ಇಂತೀ ವರ್ತನಪಂಚಾಚಾರಶುದ್ಧವಾಗಿ,
ಬಾಹ್ಯ ಅಂತರಂಗದಲ್ಲಿ ಉಭಯನಿರತವಾಗಿ, ನಿಂದುದು ವ್ರತವಲ್ಲದೆ,
ಉಂಬ ಉಡುವ ಕೊಂಬ ಕೊಡುವ ಸಂದಣಿಗಾರರ ಶೀಲ ಹಿಂದೆ ಉಳಿಯಿತ್ತು, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವ ಮುಟ್ಟದೆ./88
ಪರಪಾಕವ ಬಿಟ್ಟಿಹುದೊಂದೆ ವ್ರತ.
ಲವಣ ನಿಷೇಧವೆಂದು ಬಿಟ್ಟಿಹುದೊಂದೆ ವ್ರತ.
ಸಪ್ಪೆಯೆಂದು ಚಿತ್ತಬಿಟ್ಟಿಹುದೊಂದೆ ವ್ರತ.
ಇಂತೀ ತ್ರಿವಿಧವ್ರತಂಗಳಲ್ಲಿ ನಿರತವಾದವಂಗೆ
ಮತ್ತಾವ ವ್ರತಕ್ಕೂ ಅವಧಿಗೊಡಲಿಲ್ಲ.
ನುಡಿಗಡಣಕ್ಕೆ ತೆರಪಿಲ್ಲದ ತಾವು ತಾವು ಕೊಂಡ ವ್ರತಕ್ಕೆ ತಾವೆ ಮುಕ್ತರು.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ನೀನೇ ಬಲ್ಲೆ./89
ಪಾಕಲವಣವ ಬಿಟ್ಟಲ್ಲಿ ಪರವಧುವ ಅಪೇಕ್ಷಿಸಿ ಬೇಡಲಾಗದು.
ಅಪ್ಪುಲವಣವ ಬಿಟ್ಟು ಸಪ್ಪೆಯ ಕೊಂಬಲ್ಲಿ ಉಚ್ಚೆಯಬಚ್ಚಲ ಮುಟ್ಟಲಾಗದು.
ಉಚ್ಚೆಯ ಬಚ್ಚಲ ಬಿಟ್ಟಲ್ಲಿ ಮತ್ತೊಬ್ಬರ ಅಪ್ಪಾ ಅಣ್ಣಾ ಎಂದು
ಬಾಗಿಲತಪ್ಪಲ ಕಾಯಲಾಗದು.
ಇಂತೀ ವ್ರತ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ತಪ್ಪದ ನೇಮ./90
ಬಂದುದ ಸಾಕೆನ್ನದೆ, ಬಾರದುದ ತಾ ಎನ್ನದೆ,
ಗಡಿಗೆ ಬಟ್ಟಲು ನಮ್ಮೆಡೆಯಲ್ಲಿ ಒಡಗೂಡಿ ಸುರಿಯೆನ್ನದೆ,
ಮಂತ್ರ ಭಿನ್ನವಾಗಿ, ಮತ್ತಾರಿಗು ಸಂಚರಿಸದೆ,
ಕೆಲಬಲದಿಂದ ಅವರಿಗೆ ಅದು ನೇಮವೆಂದೆನಿಸದೆ
ಲಿಂಗಕ್ಕೆ ಬಂದು ಸಂದುದ ಆನಂದದಿಂದ ಸ್ವೀಕರಿಸಿ ನಿಂದುದೆ ಭರಿತಾರ್ಪಣ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ./91
ಬತ್ತಲೆ ಇದ್ದವರೆಲ್ಲ ಕತ್ತೆಯ ಮಕ್ಕಳು.
ತಲೆ ಬೋಳಾದವರೆಲ್ಲ ಮುಂಡೆಯ ಮಕ್ಕಳು.
ತಲೆ ಜಡೆಗಟ್ಟಿದವರೆಲ್ಲ ಹೊಲೆಯರ ಸಂತಾನ.
ಆವ ಪ್ರಕಾರವಾದಡೇನು ಅರಿವೆ ಮುಖ್ಯವಯ್ಯಾ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ./92
ಬಸವಣ್ಣ, ಚೆನ್ನಬಸವಣ್ಣ, ಪ್ರಭು, ವೀರಮಡಿವಳ, ನಿಜಗುಣಶಿವಯೋಗಿ,
ಸಿದ್ಭರಾಮ, ಮೋಳಿಗೆಯಯ್ಯ, ಆಯ್ದಕ್ಕಿಯ ಮಾರಯ್ಯ, ಏಕಾಂತರಾಮಯ್ಯ,
ಅಜಗಣ್ಣ, ಶಕ್ತಿ, ಮುಕ್ತಿ, ಮಹಾದೇವಿಯಕ್ಕ ಮುಂತಾದ
ಏಳುನೂರೆಪ್ಪತ್ತು ಅಮರಗಣಂಗಳು ಕೊಟ್ಟ ವ್ರತಪ್ರಸಾದ.
ಆ ಪ್ರಸಾದ ಎನಗೆ ಪ್ರಸನ್ನ, ನಿಮಗೆ ಮರ್ತ್ಯದ ಮಣಿಹ ಹಿಂಗುವನ್ನಕ್ಕ.
ಎನ್ನ ವ್ರತದಲ್ಲಿ, ಎನ್ನ ಆಚಾರದಲ್ಲಿ, ನಾ ಹಿಡಿದ ನೇಮದಲ್ಲಿ, ಭಾಷೆಯಲ್ಲಿ,
ನಾ ತಪ್ಪಿದಡೆ, ತಪ್ಪ ಹೊತ್ತಲ್ಲಿ ನಿಮ್ಮ ಕೇಳಿದಡೆ, ನಾ ಸತ್ತಿಹೆನೆಂದು ಕೂಡಿದಡೆ,
ಮತ್ತೆ ಶಸ್ತ್ರ ಸಮಾಧಿ ನೀರು ನೇಣು ವಿಷ ಔಷಧಿಯಿಂದ ಘಟವ ಬಿಟ್ಟಡೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ.
ಕ್ರೀ ಭಿನ್ನಚಿಹ್ನದೋರದಲ್ಲಿಯೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ನಿನ್ನಲ್ಲಿಯೆ ಲೀಯ./93
ಬಹುಜಲವಂ ಬಿಟ್ಟಲ್ಲಿ ಅದು ಶೀಲವಲ್ಲ.
ಪರಪಾಕ ಮುಂತಾದ ದ್ರವ್ಯವ ಬಿಟ್ಟಲ್ಲಿ ಶೀಲವಂತನಲ್ಲ.
ಅದೆಂತೆಂದಡೆ ;
ಅದು ಮನದ ಅರೋಚಕ, ಆ ಗುಣ ಜಗದ ಮಚ್ಚು,
ಸರ್ವರ ಭೀತಿ, ದ್ರವ್ಯದ ಒದಗು ; ಈ ಗುಣ ವ್ರತಕ್ಕೆ ಸಲ್ಲ.
ವ್ರತವಾವುದೆಂದಡೆ ;
ಪರಾಪೇಕ್ಷೆಯ ಮರೆದು, ಪರಸತಿಯ ತೊರೆದು,
ಗುರುಲಿಂಗಜಂಗಮದಲ್ಲಿ ತಾಗು ನಿರೋಧಮಂ ತಾಳದೆ,
ಹೆಣ್ಣು ಹೊನ್ನು ಮಣ್ಣಿಗಾಗಿ ತಪ್ಪಿ ನುಡಿಯದೆ,
ಒಡೆಯರು ಭಕ್ತರಲ್ಲಿ ತನ್ನ ಕುರಿತ ಗೆಲ್ಲ ಸೋಲಕ್ಕೆ ಹೋರದೆ,
ತನಗೊಂದು ಬೇಕೆಂದು ಅನ್ಯರ ಕೈಯಲ್ಲಿ ಹೇಳಿಸದೆ,
ಬಹು ಢಾಳಕತನವಂ ಬಿಟ್ಟು ಸರ್ವರ ಆತ್ಮ ಚೇತನವನರಿತು,
ತಾ ಮರೆದುದ ಅರಿದು ಎಚ್ಚತ್ತು ನೋಡಿ,
ಅಹುದಾದುದ ಹಿಡಿದು ಅಲ್ಲದುದ ಬಿಟ್ಟು, ಬಹುದುಃಖಮಂ ಮರೆದು
ಇಂತೀ ಸರ್ವಗುಣಸಂಪನ್ನನಾಗಿ ಆತ್ಮಂಗೆ ಅರಿವಿನ ಶೀಲವ ಮಾಡಿ,
ಕಾಯಕ್ಕೆ ಮರವೆ ಇಲ್ಲದ ಆಚಾರವನಂಗೀಕರಿಸಿ,
ಇಂತೀ ಕಾಯ, ಮನ, ಅರಿವಿನ ಆಚಾರದಲ್ಲಿ ನಿಂದಲ್ಲಿ ನಿಂದು,
ಏತಕ್ಕೂ ಮರವೆಯಿಲ್ಲದೆ ಸರ್ವ ಅವಧಾನಂಗಳಲ್ಲಿ
ಹೊರಗಣ ಮಾಟ ಒಳಗಣ ಕೂಟ ಉಭಯ ಶುದ್ಧವಾದಲ್ಲಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಜಿಡ್ಡು ಹರಿಯಿತ್ತು./94
ಬೆಳ್ಳೆ, ಭಂಗಿ, ನುಗ್ಗಿ, ಉಳ್ಳೆ ಮೊದಲಾದವನೆಲ್ಲವ ಬಿಡಬೇಕು.
ಬೆಳ್ಳೆಯಲ್ಲಿ ದೋಷ, ಭಂಗಿ ನುಗ್ಗಿಯಲ್ಲಿ ಲಹರಿ, ಉಳ್ಳೆಯಲ್ಲಿ ದುರ್ಗುಣ,
ವ್ರತ ಲಿಂಗಕ್ಕೆ ಸಲ್ಲವಾಗಿ ಈ ನಾಲ್ಕು ಬಂದ ಬಂದಲ್ಲಿ ದೋಷವುಂಟು.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ವ್ರತಕ್ಕೆ ಅಹುದಲ್ಲ ಅಂಬುದನರಿಯಬೇಕು./95
ಭಕ್ತಂಗೆ ಬಯಕೆ ಉಂಟೆ ? ನಿತ್ಯಂಗೆ ಸಾವುಂಟೆ ?
ಸದ್ಭಕ್ತಂಗೆ ಮಿಥ್ಯ ತಥ್ಯ ಉಂಟೆ ?
ಕರ್ತೃ ಭೃತ್ಯನಾದ ಠಾವಿನಲ್ಲಿ ಪ್ರತ್ಯುತ್ತರಂಗೆಯ್ದಡೆ
ಸತ್ಯಸದಾಚಾರಕ್ಕೆ ಹೊರಗು ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಾಣತಿ./96
ಭಕ್ತರ ಮನೆಗೆ ಸತ್ಯಶರಣರು ಬಂದಲ್ಲಿಯೆ
ಮದುವೆಯ ಉತ್ಸಾಹಕ್ಕಿಂದ ವೆಗ್ಗಳವೆಂದು ಕಂಡು,
ತನುಕರಗಿ, ಮನಬೆರಸಿ, ಕಂಗಳುತುಂಬಿ ಪುಳಕಿತವಾಗಿ
ವಂಚನೆ ಸಂಕಲ್ಪವೆಂಬ ಶಂಕೆದೋರದೆ,
ನಿಶ್ಶಂಕನಾಗಿ ಮಾಡುವ ಭಕ್ತನ ವಂಕದ ಬಾಗಿಲೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಮಸ್ತಕ./97
ಭಕ್ತರ ಮನೆಯಲ್ಲಿ ಭಕ್ತರು ಬಂದು ಕಳವು ಪಾರದ್ವಾರವ ಮಾಡಿದರೆಂದು
ಹೊರಹಾಯ್ಕಿ ಎಂದು ನುಡಿಯಬಹುದೆ ?
ಒಡೆಯರು ಭಕ್ತರ ನಿಂದೆಯ ಕೇಳೆನೆಂದು
ತನ್ನೊಡವೆ ಒಡೆಯರು ಭಕ್ತರ ದ್ರವ್ಯವೆಂದು ಭಾವಿಸಿದಲ್ಲಿ
ಮತ್ತೊಬ್ಬ ಅರಿಯದ ತುಡುಗುಣಿ ಮುಟ್ಟಿದಡೆ ಅವ ಕೆಡುವ.
ಆಚಾರಕ್ಕೆ ಹೊರಗು, ತಾನರಿಯದಂತಿರಬೇಕು ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ವ್ರತಸ್ಥನ ನೇಮ./98
ಭರಿತಾರ್ಪಣವೆಂದು ಸ್ಥಲವನಂಗೀಕರಿಸಿದಲ್ಲಿ
ಆ ಭರಿತ ಅಂಗಕ್ಕೊ, ಲಿಂಗಕ್ಕೊ, ಆತ್ಮಕ್ಕೊ, ಸರ್ವೆಂದ್ರಿಯ ವಿಕಾರಕ್ಕೊ ?
ಹಿಡಿವ, ಬಿಡುವ, ಕೊಡುವ, ಕೊಂಬ ಸಡಗರಿಸುವ ಎಡೆಗಳಲ್ಲಿಯೆ
ಘೃತ, ರಸಾನ್ನ, ಸಕಲಪದಾರ್ಥಗಳ ಯಥಾಥ್ಟವಾಗಿ ಗ್ರಾಸಿಸುವ ಭರಿತವೊ ?
ಆತ್ಮನ ಕ್ಷುಧೆಯ ಆಶಾಪಾಶವೊ ?
ಅಲ್ಲ, ಲಿಂಗಕ್ಕೆ ಸಂದುದನೆಲ್ಲವನು
ಒಂದೆ ಭಾವದಲ್ಲಿ ಕೊಳಬೇಕೆಂದು ಸಂದೇಹವೊ ?
ಇಂತೀ ಗುಣಂಗಳಲ್ಲಿ ಅಹುದಲ್ಲವೆಂಬುದ ತಿಳಿದು ನೋಡಿಕೊಳ್ಳಿ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ./99
ಭವಿ ನಿರೀಕ್ಷಣೆಯಾದ ದ್ರವ್ಯಂಗಳ ಮುಟ್ಟೆನೆಂಬಲ್ಲಿ
ಮುಟ್ಟಿದ ಭೇದವಾವುದು ಹೇಳಿರಣ್ಣಾ.
ಧಾನ್ಯ ವಿದಳಫಲ ಪಂಫಲಾದಿಗಳಲ್ಲಿ
ಆಯತಕ್ಕೆ ಮುನ್ನವೊ ಆಯತದೊಳಗಾದಲ್ಲಿಯೊ !
ಆ ನಿರೀಕ್ಷಣೆ ವ್ರತಕ್ಕೆ ದ್ರವ್ಯ ಮೊದಲಾದ ದ್ರವ್ಯಕ್ಕೆ
ವ್ರತ ಮೊದಲೊ, ಅಲ್ಲ, ತಾ ಮಾಡಿಕೊಂಡ ನೇಮವೆ ಮೊದಲೊ !
ಇದ ನಾನರಿಯೆದ ನೀವು ಹೇಳಿರಯ್ಯಾ.
ಭಾಷೆಗೆ ತಪ್ಪಿದ ಬಂಟ, ಲೇಸಿಗೆ ಒದಗದ ಸ್ತ್ರೀ, ವ್ರತದ ದೆಸೆಯನರಿಯದ ಆಚಾರರ,
ಕೂಸಿನವರವ್ವೆ ಹಣದಾಸೆಗೆ ಕರೆದು ತಾ ಘಾಸಿಯಾದಂತಾಯಿತ್ತು.
ವ್ರತಾಚಾರದ ಹೊಲಬು ನಿಹಿತವಾದುದಿಲ್ಲ.
ಏತದ ತುದಿಯಲ್ಲಿ ತೂತು ಮಡಕೆಯ ಕಟ್ಟಿದಲ್ಲಿ ಬಾವಿಯ ಘಾತಕ್ಕೆ ಸರಿ.
ತೂತಿನ ನೀರಿನ ನಿಹಿತವನರಿಯದವನಂತೆ ವ್ರತಾಚಾರ ಸಲ್ಲದು.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ನೇಮಘಾತಕರುಗಳಿಗಿದಸಾಧ್ಯ./100
ಭವಿಪಾಕವ ಮುಟ್ಟದೆ ಸಮಸ್ತ ಮತದಿಂದ
ಅಯೋಗ್ಯವಾದ ಪದಾರ್ಥವನುಳಿದು ಯೋಗ್ಯವಾದ ಪದಾರ್ಥವ ಕೊಂಡು,
ಪಾದೋದಕದಲ್ಲಿ ಪವಿತ್ರತೆಯಿಂದ ಸ್ವಪಾಕವ ಮಾಡಿ,
ಪರಶಿವಲಿಂಗವೆಂದರಿದು ಸುಖಿಸಿ ನಿಜೈಕ್ಯರಾದರು.
ಇದನರಿಯದ ಆಡಂಬರದ ವೇಷವ ಧರಿಸಿ
ಉದಕ ಹೊಯ್ದು ಸ್ವಯ ಚರ ಪರ ಷಟ್ಸ್ಥಲವ ಬೊಗಳುವ
ಕುನ್ನಿಗಳ ಕಂಡು ನಾಚಿತ್ತು ಕಾಣಾ, ಎನ್ನ ಮನವು ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ./101
ಭವಿಯಲಾದ ಪಾಕವ ತಂದು ಮನೆಯಲ್ಲಿರಿಸಿಕೊಂಡು ಭುಂಜಿಸುತ್ತ
ಅವರ ಮನೆಯ ಒಲ್ಲೆನೆಂಬುದು ವ್ರತಕ್ಕೆ ಹಾನಿ,
ಪಂಚಾಚಾರಕ್ಕೆ ದೂರ, ಪಂಚಾಚಾರಶುದ್ಭತೆಗೆ ಹೊರಗು.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಅವರ ಬಲ್ಲನಾಗಿ ಒಲ್ಲನು./102
ಭಾಜನಕ್ಕೆ ಸರ್ವಾಂಗ ಮುಸುಕಿಟ್ಟಲ್ಲಿ ಸರ್ವವ್ಯಾಪಾರ ನಿರಸನವಾಗಿರಬೇಕು ;
ಸರ್ವಸಂಗವನೊಲ್ಲದೆ ಇರಬೇಕು.
ಒಡೆಯರು ಭಕ್ತರಲ್ಲಿ ನಿಗರ್ವಿಯಾಗಿ
ಬಂದು ನಿಂದುದ ಜಂಗಮಲಿಂಗವ ಮುಂದಿರಿಸಿ,
ಅವರು ಕೈಕೊಂಡು ಮಿಕ್ಕ ಪ್ರಸಾದವ ಲಿಂಗಕ್ಕೆ ಅರ್ಪಿತವ ಮಾಡಿ,
ಗುರುಲಿಂಗಜಂಗಮದಲ್ಲಿ ಸಂದುಸಂಶಯವಿಲ್ಲದೆ ಆಚಾರವೆ ಪ್ರಾಣವಾಗಿ ನಿಂದುದು ರಾಮೇಶ್ವರಲಿಂಗದಂಗ./103
ಭಾಜನಕ್ಕೆ ಸರ್ವಾಂಗವ ಬಾಸಣಿಸುವಾಗ
ಅದು ಆ ಕುಂಭಕ್ಕೊ, ತನ್ನಂಗಕ್ಕೊ ಎಂಬುದನರಿತು,
ಸರ್ವಾಂಗ ಪಾವಡವ ಕಟ್ಟುವ ವಿವರ ; ಮನ, ಬುದ್ಧಿ, ಚಿತ್ತ, ಅಹಂಕಾರ
ಎಂಬ ಚತುರ್ಭಾವದ ಸೆರಗಿನಲ್ಲಿ ಗುಹ್ಯೇಂದ್ರಿಯವಂ ಕಳೆದು,
ಜಿಹ್ವೇಂದ್ರಿಯವೆಂಬ ಅಂಗ ಭಾಜನಕ್ಕೆ ಸರ್ವಾಂಗ ಪಾವಡವಂ ಕಟ್ಟಿ,
ಮಣ್ಣೆಂಬ ಆಸೆಯ ಬಿಟ್ಟು, ಹೊನ್ನೆಂಬ ಆಸೆಯ ಬಿಟ್ಟು,
ಹೆಣ್ಣೆಂಬ ಮೋಹದಲ್ಲಿ ಮಗ್ನವಾಗದೆ,
ಮಣ್ಣೆಂಬ ಆಸೆಯ ಗುರುವಿನಲ್ಲಿ,
ಹೊನ್ನೆಂಬ ಆಸೆಯ ಲಿಂಗದಲ್ಲಿ, ಹೆಣ್ಣೆಂಬ ಮೋಹವ ಜಂಗಮದಲ್ಲಿ,
ಕೊಡುವ ವ್ರತವನರಿಯದೆ ಆಚಾರ ಅಂಗದಲ್ಲಿ
ಇಂತೀ ವ್ರತನೇಮವಲ್ಲದ ಮಣ್ಣ ಮಡಕೆಯ ಗನ್ನದಲ್ಲಿ ಕಟ್ಟಿದಡೆ
ಪ್ರಸನ್ನನ ವ್ರತದಣ್ಣಗಳೆಲ್ಲರು ಇದ ಚೆನ್ನಾಗಿ ತಿಳಿದು ನೋಡಲಾಗಿ
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ವ್ರತ ನೇಮ ಹರಿತವಾಯಿತ್ತು./104
ಭಾಜನದ ಕಂಠಕ್ಕೆ ಪಾವಡವ ಬಾಸಣಿಸಲಾಗಿ ವ್ರತಕ್ಕೆ ಬೀಜ ಮೊದಲಾಯಿತ್ತು.
ಭವಿಸಂಗ ಭವಿಪಾಕ ಅನ್ಯದೈವ ಪೂಜಿಸುವವರ ದೂರಸ್ಥನಾಗಿರಬೇಕು, ಆಚಾರವೆ ಪ್ರಾಣವಾದ
ರಾಮೇಶ್ವರಲಿಂಗವನರಿಯಬೇಕಾದಡೆ./105
ಮಣ್ಣಮಡಕೆಯ ಮುಸುಕಿಟ್ಟು ಗನ್ನದಲ್ಲಿ ನೀರು ತುಂಬಿ,
ಇದಿರಿಗೆ ಬಿನ್ನಾಣವ ತೋರುತ ಇಂತೀ ಬಣ್ಣ ಬಚ್ಚಣೆಯ ಶೀಲವ ನಾನೊಪ್ಪೆ.
ಇದಿರು ಕಂಡಲ್ಲಿ ಹಾಕಿ, ಆರೂ ಕಾಣದಡೆ ತಾನೊಪ್ಪಿಕೊಂಡಿಪ್ಪ
ಭಂಡನ ಶೀಲ ಮೂರು ಕುಂಡೆಯೊಳಗಾಯಿತ್ತು.
ಇದರಂಗವ ಬಿಟ್ಟು, ಮನ ಲಿಂಗದಲ್ಲಿ ನಿಂದು, ಧನ ಜಂಗಮದಲ್ಲಿ ಸಂದು,
ಬಂಧನವಿಲ್ಲದೆ ನಿಂದ ನಿಜೈಕ್ಯನ ಅಂಗವೆ ಸರ್ವಾಂಗಶೀಲ.
ಆತ ಮಂಗಳಮಯಮೂರುತಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ./106
ಮನಮುಟ್ಟದ ವ್ರತ, ತನುಮುಟ್ಟದ ಸುಖ,
ಬೇರುಮುಟ್ಟದ ಸಾರ ಅದಾರಿಗೆ ಯೋಗ್ಯ
ಮನ ವಚನ ಕಾಯ ತ್ರಿಕರಣ ಏಕವಾಗಿ
ಅಂಗಕ್ಕೆ ಆಚಾರ, ಆಚಾರಕ್ಕೆ ಅರಿವು, ಅರಿವಿಂಗೆ ಕುರುಹು,
ಕುರುಹಿನಲ್ಲಿ ನೇಮಕ್ಕೊಡಲಾಗಿ, ಭಾವಕ್ಕೆ ರೂಪಾಗಿ,
ಬಾವಿಯ ನೀರ ಕುಂಭ ತಂದುಕೊಡುವಂತೆ,
ಮಹಾಜ್ಞಾನ ಸುಖಜಲವ ಜ್ಞಾತೃವೆಂಬ ಕಣ್ಣಿಗೆ
ಜ್ಞೇಯವೆಂಬ ಕುಂಭದಲ್ಲಿ ಭಾವವೆಂಬ ಜಲ ಬಂದಿತ್ತು.
ಆ ಸುಜಲದಿಂದ ಅಂಗವೆಂಬ ಲಿಂಗಕ್ಕೆ ಮಜ್ಜನಕ್ಕೆರೆದೆ
ಪ್ರಾಣಲಿಂಗಕ್ಕೆ ಓಗರವನಟ್ಟೆ,
ಮಹಾಘನವೆಂಬ ತೃಪ್ತಿಲಿಂಗ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ನೇಮ ಸಂದಿತ್ತು./107
ಮರ್ಕಟ, ಕುಕ್ಕುಟ, ಮಾರ್ಜಾಲ, ಶುನಕ, ಶೂಕರ, ವಿಹಂಗ
ಇಂತಿವು ಮೊದಲಾದ ಅನ್ಯಜೀವಪ್ರಾಣಮಂ ಸಲಹದೆ
ಸಲಹುವರ ಮನೆಯಲ್ಲಿ ತಾನೊಪ್ಪಿಕೊಳ್ಳದೆ,
ಪರಪಾಕ ರಸದ್ರವ್ಯವ ಮುಟ್ಟದೆ, ಬಾಹ್ಯಜಲವಂ ಬಿಟ್ಟು
ಪಾದತೀರ್ಥ ಪ್ರಸಾದವಿಲ್ಲದೆ ತಾ ನೇಮವನೊಲ್ಲದೆ,
ಬೇರೊಂದು ಭಿನ್ನದೈವವೆಂದು ಪ್ರಮಾಣಿಸದೆ,
ಪಾದತೀರ್ಥ ಪ್ರಸಾದವಿಲ್ಲದವರ ಮನೆಯಲ್ಲಿ ಒಲ್ಲದೆ,
ತನ್ನನುವಿಂಗೆ ಅನುವಾದುದನರಿದು ಸಂಬಂಧಿಸಿ ಇಪ್ಪುದು ನೇಮ ಕ್ರೀ.
ಇಂತೀ ಭಾವಶುದ್ಧವಾಗಿ ನಡೆವುದು, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಬಾಹ್ಯನೇಮ./108
ಮರ್ತ್ಯಕ್ಕೆ ಬಂದ ಭಕ್ತಕಾಯರು ತಮ್ಮ ತಮ್ಮ ಗೊತ್ತಿನಲ್ಲಿಯೆ ಮುಕ್ತರು.
ತಮ್ಮ ತಮ್ಮ ನಿಷ್ಠೆಯಲ್ಲಿಯೆ ತೃಪ್ತರು.
ಸ್ವ ಇಚ್ಫಾಮರಣ, ಸಂತೋಷಮರಣ, ಕಂಟಕಮರಣ,
ಖಂಡನೆಮರಣ, ದಿಂಡುಮರಣ, ಅರಿಲಯಮರಣ, ಶರೀರ ನಿರವಯಮರಣ,
ಅಂತರಿಕ್ಷ ಸುಮಾನಲಯ, ಸ್ವಾನುಭಾವಐಕ್ಯ, ಸದ್ಭಾವಕೂಟ,
ಪರತಂತ್ರಲಯ, ಸಮ್ಯಗ್ಜ್ಞಾನ ಸಂಬಂಧ, ದಿವ್ಯ ಜ್ಞಾನಕೂಟ
ಇಂತೀ ಸರ್ವಸಂಬಂಧ ಕಾಯಬಯಲಹರುಂಟು.
ನಾನೊಂದ ಭಾವಿಸಿ ಕಲ್ಪಿಸಿದವನಲ್ಲ.
ನಿಮ್ಮ ನಿಮ್ಮ ಭಾವವ ನೀವೆ ನೋಡಿಕೊಳ್ಳಿ.
ಎನಗೆ ಕಟ್ಟಾಚಾರದ ನೇಮ.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವಾಯಿತ್ತಾಡೂ ಎನ್ನ ಕ್ರೀ ತಪ್ಪಿದಲ್ಲಿ ಕಂಡಡೆ ಮಸ್ತಕವನೊಡೆಯ ಹೊಯಿವೆನು/109
ಮಹಾವ್ರತಸ್ಥರು ವ್ರತಿಗಳ ಮನೆಗೆ ಹೋದಲ್ಲಿ,
ಕಂಡುದ ಬೇಡದೆ, ಬಾಯಿಗೆ ಬಂದಂತೆ ನುಡಿಯದೆ,
ಕಾಮದೃಷ್ಟಿಯಲ್ಲಿ ಮತ್ತೇನುವ ನೋಡದೆ,
ಶಿವಲಿಂಗಪೂಜೆ ಶಿವಧ್ಯಾನಮೂರ್ತಿ ಶಿವಕಥಾ ಪ್ರಸಂಗ
ಶಿವಶರಣರ ಸಂಗ ತಮ್ಮ ಕ್ರಿಯಾನುಭಾವದ ವಿಚಾರ
ಹೀಂಗಲ್ಲದೆ ಸರಸ, ಸಮೇಳ, ಪಗುಡಿ, ಪರಿಹಾಸಕ,
ಚದುರಂಗ ನೆತ್ತ ಪಗಡಿ ಜೂಜು ಶಿವಭಕ್ತಂಗೆ ಉಂಟೆ ?
ಆತ್ಮನಲ್ಲಿದ್ದಡೆ ಎನ್ನ ಬೇಗೆ, ನುಡಿದಡೆ ಶರಣರ ಬೇಗೆ.
ಈ ಒಡಲೇಕೆ ಅಡಗದು
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ನಿನ್ನ ಕೊರಳೇಕೆ ಉಡುಗದು ?/110
ಮಾಡಿ ನೀಡುವ ಭಕ್ತನನರಸಿಕೊಂಡು ಹೋಗಿ
ಗಡ್ಡ ಮಂಡೆ ಬೋಳಿನ ಕುರುಹ ತೋರಿ,
ಬಲ್ಲವರಂತೆ ಅಧ್ಯಾತ್ಮವ ನುಡಿದು
ಉಪಾಧಿಯಿಂದ ಒಡಲ ಹೊರೆವಾತ ವಿರಕ್ತನೆ ಅಲ್ಲ.
ವಿರಕ್ತನ ಪರಿ ಎಂತೆಂದಡೆ ;
ಆಚಾರಸಹಿತವಾಗಿ ಭಕ್ತಿ ಭಿಕ್ಷವ ತೆಗೆದುಕೊಂಡು
ಉಪಾಧಿರಹಿತವಾಗಿಪ್ಪ ವಿರಕ್ತನ ತೋರಿ ಬದುಕಿಸಯ್ಯಾ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ./111
ಮೂಷಕ ಮಾರ್ಜಾಲ ಮಕ್ಷಿಕ ಇವು ಮೊದಲಾದ ಸಕಲ ಜೀವಪ್ರಾಣಿಗಳಿಗೆ
ಎಲ್ಲಕ್ಕು ತನುವಿಂಗಾಚಾರ ಮನಕ್ಕರಿವು ಅರಿವಿಂಗೆ ವ್ರತವ
ಬಿಡದಿದ್ದಡೇನಾಯಿತ್ತಾದಡೆ ಎನಗದೆ ಭಂಗ.
ಲಿಂಗಕ್ಕು ಲಿಂಗವೆಂಬುದ ಅಂಗದ ಮೇಲೆ ಅವಧರಿಸದಿದ್ದಡೆ
ನಾ ಕೊಂಡ ಪಂಚಾಚಾರಕ್ಕೆ ದೂರ.
ಈ ಕಟ್ಟಿದ ತೊಡರ ಬಿಡಿಸುವುದಕ್ಕೆ ಕಟ್ಟಾಚಾರಿಗಳಾರನು ಕಾಣೆ.
ಈ ಗುಣದ ದೃಷ್ಟ ಹಿಂದು ಮುಂದಿಲ್ಲ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಲೀಯವಲ್ಲದೆ./112
ಮೂಷಕ, ವಿಹಂಗ, ಕುಕ್ಕುಟ,ಮಾರ್ಜಾಲ, ಕುಕ್ಕುರ, ದೌಷ್ಟ್ರ
ಇವು ಮೊದಲಾದ ನೇಮಿಗಳೆಲ್ಲರು ಸಿಕ್ಕಿದರಲ್ಲಾ
ನೀವು ಹಿಡಿದ ವ್ರತಕ್ಕೆ ಭಂಗಿತರಾಗಿ,
ಭವಿಯ ಪರಾಪೇಕ್ಷದಿಂದ ದ್ರವ್ಯವ ತಂದು
ಗುರುಲಿಂಗಜಂಗಮಕ್ಕೆ ಮಾಡಿಹೆನೆಂದು ಮರೆಯಲ್ಲಿ ಒಡಲ ಹೊರೆವ
ಸುರೆಗುಡಿಹಿಗೆ ನೆರೆ ಭಕ್ತಿಯೇಕೆ
ವ್ರತಕ್ಕೆ ದೂರ, ಆಚಾರಕ್ಕೆ ಹೊರಗು ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ದೂರ./113
ಲಕ್ಷವಿಲ್ಲದ ವ್ರತ, ಕಟ್ಟಳೆಯಿಲ್ಲದ ನೇಮ,
ಕೃತ್ಯವಿಲ್ಲದ ನಿತ್ಯ ಎಷ್ಟಾದಡುಂಟು,
ಕಟ್ಟಳೆಗೊಳಗಾದವು ಅರುವತ್ತಾರು ಶೀಲ, ಅರುವತ್ತುನಾಲ್ಕು ನೇಮ,
ಅಯಿವತ್ತುಮೂರು ನೇಮ, ಮೂವತ್ತೆರಡು ನಿತ್ಯ.
ಇಂತಿವರ ಗೊತ್ತಿಗೊಳಗಾಗಿ ಕಟ್ಟಳೆಯಾಗಿ ನಡೆವಲ್ಲಿ
ಅರ್ಥ ಪ್ರಾಣ ಅಭಿಮಾನಂಗಳಲ್ಲಿ, ತಥ್ಯಮಿಥ್ಯ ರಾಗದ್ವೇಷಂಗಳಲ್ಲಿ,
ಭಕ್ತಿ ಜ್ಞಾನ ವೈರಾಗ್ಯಂಗಳಲ್ಲಿ, ಸ್ಥೂಲ ಸೂಕ್ಷ್ಮ ಕಾರಣ ತನುತ್ರಯಂಗಳಲ್ಲಿ,
ಜರ ನಿರ್ಜರ ಸಮನ ಸುಮನಂಗಳಲ್ಲಿ, ಸರ್ವೆಂದ್ರಿಯ ಭಾವಭ್ರಮೆಗಳಲ್ಲಿ,
ಐದು ತತ್ವದೊಳಗಾದ ಇಪ್ಪತ್ತಾರು ಕೂಟದಲ್ಲಿ,
ಆತ್ಮವಾಯು ಒಳಗಾದವನ ವಾಯುವ ಬೆರಸುವಲ್ಲಿ,
ಜಿಹ್ವೆದ್ವಾರದೊಳಗಾದ ಅಷ್ಟದ್ವಾರಂಗಳಲ್ಲಿ,
ಇಂತೀ ಘಟದೊಳಗಾದ ಸಂಕಲ್ಪವೆಲ್ಲಕ್ಕೂ
ಬಾಹ್ಯದಲ್ಲಿ ತೋರುವ ತೋರಿಕೆಗಳೆಲ್ಲಕ್ಕೂ ಹೊರಗೆ ಕ್ರೀ, ಆತ್ಮಂಗೆ ವ್ರತ.
ಅವರವರ ತದ್ಭಾವಕ್ಕೆ ವ್ರತಾಚಾರವ ಮಾಡದೆ
ಕಾಮಿಸಿ ಕಲ್ಪಿಸಿದೆನಾಯಿತ್ತಾದಡೆ, ಎನ್ನರಿವಿಂಗೆ ಅದೆ ಭಂಗ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ಸಹಿತಾಗಿಯೆ ಮಾಡುವೆನು/114
ಲವಣನಿರಶನದ ಆಯತದ ಭೇದವೆಂತೆಂದಡೆ ;
ಕಾರಲವಣ ನಿಷೇಧವೆಂದು ಬಿಟ್ಟು, ಮತ್ತೆ ಬಿಳಿಯ ಲವಣಬಳಸುವುದು.
ಬಿಳಿಯಲವಣ ನಿಷೇಧವೆಂದು ಬಿಟ್ಟು ಮತ್ತೆ ಸೈಂಧಲವಣ ಬಳಸುವುದು.
ಸೈಂಧಲವಣ ನಿಷೇಧವೆಂದು ಬಿಟ್ಟು, ಮತ್ತೆ ಮೃತ್ತಿಕೆಲವಣ ಬಳಸುವುದು.
ಮೃತ್ತಿಕೆಲವಣದಲ್ಲಿ ತಟ್ಟುಮುಟ್ಟು ಕಂಡ ಮತ್ತೆ
ಉಪ್ಪೆಂಬ ನಾಮವ ಬಿಟ್ಟಿಹುದೇ ಲೇಸು.
ಈ ಅನುವ ನಾನೆಂದುದಿಲ್ಲ, ನಿಮ್ಮ ಅನುವ ನೀವೇ ಬಲ್ಲಿರಿ.
ಅನುವಿಗೆ ತಕ್ಕ ವ್ರತ, ವ್ರತಕ್ಕೆ ತಕ್ಕ ಆಚಾರ, ಆಚಾರಕ್ಕೆ ತಕ್ಕ ಖಂಡಿತ.
ಆವಾವ ನೇಮದಲ್ಲಿಯೂ ಭಾವ ಶುದ್ಧವಾದವಂಗೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ./115
ಲವಣವ ಕೊಂಬುದೆಲ್ಲವು ಒಂದೆ ಶೀಲ. ಸರ್ವ ಸಪ್ಪೆ ಎಂಬುದು ಒಂದೆ ಶೀಲ.
ಇವೆಲ್ಲವ ವಿಚಾರಿಸಿ, ತಟ್ಟುಮುಟ್ಟಿಗೆ ಬಾರದೆ
ತೊಟ್ಟುಬಿಟ್ಟ ಹಣ್ಣಿನಂತೆ ನೆಟ್ಟನೆ ವ್ರತವ ಕೂಡುವುದು ಮೂರನೆಯ ಶೀಲ.
ಮೂರು ಕೂಡಿ ಒಂದಾಗಿ ನಿಂದುದು, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಶೀಲ./116
ಲಿಂಗಕ್ಕೂ ತಮಗೂ ಸಹಭಾಜನ ಸಹಭೋಜನವಾಹಲ್ಲಿ
ಇದಿರಿಟ್ಟ ಪದಾರ್ಥಂಗಳ ಲಿಂಗಕ್ಕೆ ತೋರಿ, ತಾ ಕೊಂಬಲ್ಲಿ ದೃಷ್ಟವಾಯಿತ್ತು.
ಸ್ವಪ್ನ ಸುಷುಪ್ತಿಗಳಲ್ಲಿ, ಮಿಕ್ಕಾದ ಏಕಾಂತ ಸತಿ ಕೂಟಂಗಳಲ್ಲಿ
ಅದಕ್ಕೆ ದೃಷ್ಟವಹ ಸಹಭೋಜನವಾವುದಯ್ಯಾ ?
ಯೋನಿ ಸ್ವಪ್ನ ಸುಷುಪ್ತಿ ಮುಂತಾದ ಭಾವದ ಸಹಭೋಜನ ಎಲ್ಲಿ ಇದ್ದಿತ್ತು ?
ಆ ಭಾಜನದ ಸಹಭೋಜನದ ಸಂಬಂಧ ಎಲ್ಲಿದ್ದಿತು ?
ಅದು ಕಲ್ಲಿನೊಳಗಣ ನೀರು, ನೀರೊಳಗಣ ಶಿಲೆ, ಇದಾರಿಗೂ ಅಸಾಧ್ಯ ನೋಡಾ.
ಅದು ಕಾಯದ ಹೊರಗಾದ ಸುಖ, ಸುಖದ ಹೊರಗಾದ ಅರ್ಪಿತ.
ಇಂತೀ ಗೊತ್ತಮುಟ್ಟಿ ಸಹಭೋಜನದಲ್ಲಿ ಅರ್ಪಿಸಬಲ್ಲವಂಗೆ
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಸಹಭಾಜನ ಭೋಜನವಾಗಿಪ್ಪನು./117
ಲಿಂಗಗೂಡಿ ಭರಿತಾರ್ಪಣವ ಅಂಗೀಕರಿಸುವಲ್ಲಿ,
ಭರಿತ ಲಿಂಗಕ್ಕೊ ತನಗೊ ಎಂಬುದನರಿದು,
ಲಿಂಗವೆಂತೆ, ತನ್ನಂಗವಂತೆ, ಬಂದಿತ್ತು ಬಾರದೆಂಬ ಆರೈಕೆಯನರಿತು,
ಸಂದಿತ್ತು ಸಲ್ಲದೆಂಬ ಸಂದೇಹವ ತಿಳಿದು,
ಸ್ವಯವಾಗಿ ನಿಂದುದು ನಿಜಭರಿತಾರ್ಪಣ.
ಹೀಗಲ್ಲದೆ ಸಕಲವಿಷಯದಲ್ಲಿ ಹರಿದಾಡುತ್ತ
ಆಮಿಷ ತಾಮಸ ರಾಗ ದ್ವೇಷದಲ್ಲಿ ಬೇವುತ್ತ
ಇಂತಿವನರಿಯದ ತಮಗೆ ಸಂದುದಲ್ಲದೆ ಮರೆದೊಂದು ಬಂದಡೆ,
ಆ ಲಿಂಗಪ್ರಸಾದವ ಇರಿಸಬಹುದೆ ?
ನೇಮ ತಪ್ಪಿ ಸೋಂಕಿದಲ್ಲಿ ಕೊಳ್ಳಬಹುದೆ ?
ಇಂತೀ ಅರ್ಪಿತದ ಸೋಂಕ, ಭರಿತಾರ್ಪಣದ ಪರಿಭಾವವ
ನಿಮ್ಮ ನೀವೆ ನಿಶ್ಚೈಸಿಕೊಳ್ಳಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ./118
ಲಿಂಗರೂಪ ನೋಡುವಲ್ಲಿ, ಗುರುಲಿಂಗಜಂಗಮವನರಿವಲ್ಲಿ,
ಕಂಡ ದೋಷ ಸರಿಸುವದು ವ್ರತಾಂಗಿಗಳಿಗುಂಟೆ ?
ಅರ್ಥ ಪ್ರಾಣ ಅಭಿಮಾನವನು ಗುರುಲಿಂಗಜಂಗಮಕ್ಕೆಂದಿತ್ತು.
ಮರ್ತ್ಯರು ಕೊಲುವಾಗ ಸತ್ತ ಸಾವ ನೋಡುತ್ತ
ಮತ್ತವರಿಗಿನ್ನೆತ್ತಣ ವ್ರತ ಆಚಾರ ಭ್ರಷ್ಟರಿಗೆಲ್ಲಕ್ಕೆ ?
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ನೇಮಕ್ಕೆ ತಪ್ಪಿದಡೆ ಹೊರಗೆಂಬೆ./119
ಲಿಂಗಸೀಮೆ ಸೀಮೋಲ್ಲಂಘನವಾದಲ್ಲಿ,
ಸೀಮೆಯ ಮೀರಿದಲ್ಲಿ ಪ್ರಾಣಯೋಗವಾಗಬೇಕು.
ಆ ಗುಣ ತೋರುವುದಕ್ಕೆ ಮುನ್ನವೆ ಸಾವಧಾನಿಯಾಗಿರಬೇಕು.
ಲೌಕಿಕ ಮೆಚ್ಚಬೇಕೆಂಬುದಕ್ಕೆ, ಭಕ್ತರೊಪ್ಪಬೇಕೆಂಬುದಕ್ಕೆ,
ಉಪಾಧಿಕೆಯ ಮಾಡುವಲ್ಲಿ ವ್ರತ ಉಳಿಯಿತ್ತು, ಆಚಾರ ಸಿಕ್ಕಿತ್ತು.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಆತನ ದೃಕ್ಕಿಂಗೆ ಹೊರಗಾದ./120
ವಿಪ್ರಂಗೆ ವೇದಮಂತ್ರವ ಬಿಟ್ಟು ವಿಜಾತಿಯಲ್ಲಿ ಬೆರಸಲಿಕ್ಕೆ
ಸುಜಾತಿಗೆ ಹೊರಗಪ್ಪರು ನೋಡಾ.
ಶ್ರೀ ವಿಭೂತಿ ಶ್ರೀ ರುದ್ರಾಕ್ಷಿ ಶಿವಲಿಂಗ ಮುಂತಾದ
ನಾನಾ ವ್ರತ ನೇಮ ನಿತ್ಯದ ಭಾವವ ಬಿಟ್ಟು ಬಂದವನ
ಗುರುವಾದಡು ಲಿಂಗವಾದಡು ಜಂಗಮವಾದಡು ನೋಡಿದಡೆ ನುಡಿಸಿದಡೆ
ಆ ಘಟವಿದ್ದೆಡೆಯಲ್ಲಿ ನಾನಿದ್ದೆನಾದಡೆ ಎನ್ನ ವ್ರತಕ್ಕದೆ ಭಂಗ.
ಅನುಸರಣೆಯಲ್ಲಿ ಬಂದವರ ಕಂಡು ಕೇಳಿ
ಅವರ ಅಂಗಳವ ಕೂಡಿಕೊಂಡವರ
ಇದ ನಾನರಿತು ಅಂಗೀಕರಿಸಿದೆನಾದಡೆ ಇಹಪರಕ್ಕೆ ಹೊರಗು.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವಾಯಿತ್ತಾದಡೂ ವ್ರತಬಾಹ್ಯವಾದಡೆ ಎತ್ತಿಹಾಕುವೆನು./121
ವಿಷವ ಅಂಗಕ್ಕೆ ಕೊಂಡು ವೇಧಿಸಿದಲ್ಲಿ,
ಆವ ಠಾವಿನಲ್ಲಿ ಗಾಯ ? ಅದಾವ ಠಾವಿನ ಕುರುಹು ?
ಲಿಂಗದಷ್ಟ ಅಂಗಕ್ಕಾದಲ್ಲಿ ಅದಾರಿಗೆ ಮೊರೆ ? ಅದಾರಿಗೆ ಕೈಲೆಡೆ ?
ಆಚಾರಗೂಡಿಯೆ ಆ ಘಟವಳಿಯಬೇಕು.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿಗೆ ಇದಿರೆಡೆಯಿಲ್ಲದೆ ಕೂಡಬೇಕು./122
ವೇಷ ಎಲ್ಲಿರದು ?
ಸೂಳೆಯಲ್ಲಿ, ಡೊಂಬನಲ್ಲಿ, ಭೈರೂಪನಲ್ಲಿರದೆ ?
ವೇಷವ ತೋರಿ ಒಡಲ ಹೊರೆವ
ದಾಸಿ ವೇಶಿಯ ಮಕ್ಕಳಿಗೆ ನಿಜಭಕ್ತಿ ಎಲ್ಲಿಯದೊ ?
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ?/123
ವ್ರತ ನೇಮ ಶೀಲಮಂ ಮಾಡಿಕೊಂಡು,
ಸಮಯಾಚಾರದಲ್ಲಿ ನಡೆದೆನೆಂಬ ಭಕ್ತನ ಕ್ರಮವೆಂತೆಂದಡೆ ;
ತಾನು ಭೋಗಿಸುವಂತಹ ಸಕಲದ್ರವ್ಯಂಗಳೆಲ್ಲವನು,
ಜಂಗಮಕ್ಕೆ ಕೊಟ್ಟು ತಾನು ಕೊಳಬೇಕು.
ಅವಾವೆಂದಡೆ
ಮಜ್ಜನ ಭೋಜನ ಅಂದಣ ಸತ್ತಿಗೆ ಚಾಮರ ಆನೆ ಕುದುರೆ
ಕನ್ನಡಿ ಪರಿಮಳ ಲೇಪನ ಗಂಧ ಅಕ್ಷತೆ ವಸ್ತ್ರ ರತ್ನಾಭರಣ
ತಾಂಬೂಲ ಮೆಟ್ಟಡಿ ಮಂಚ ಸುಪ್ಪತ್ತಿಗೆ ಒಡೆಯರಿಗೆ ಆಯಿತೆಂಬುದ ಕೇಳಿ,
ಆ ಒಡೆಯನ ವಾಕ್ಯಪ್ರಸಾದದಿಂದ, ಮಹಾಪ್ರಸಾದವೆಂದು
ಎಲ್ಲ ವ್ರತಂಗಳಿಗೆಯೂ ಜಂಗಮಪ್ರಸಾದವೆ ಪ್ರಾಣ;
ಎಲ್ಲ ನೇಮಕ್ಕೆಯೂ ಜಂಗಮದರ್ಶನವೆ ನೇಮ;
ಎಲ್ಲ ಶೀಲಕ್ಕೆಯೂ ಜಂಗಮದ ಮಾಟವೆ ಶೀಲ;
ಎಲ್ಲ ವ್ರತ ನೇಮ ಶೀಲಂಗಳೆಲ್ಲವು
ಜಂಗಮವ ಮುಂದಿಟ್ಟು ಶುದ್ಧತೆಯಹ ಕಾರಣ,
ಆ ಜಂಗಮದಲ್ಲಿ ಅರ್ಥ, ಪ್ರಾಣ, ಅಭಿಮಾನ ಮುಂತಾದ
ಈ ಮೂರಕ್ಕು ಕಟ್ಟು ಮಾಡಿದೆನಾದಡೆ ಎನಗೆ ದ್ರೋಹ.
ಆ ಜಂಗಮದ ದರ್ಶನದಿಂದವೆ ಸಕಲದ್ರವ್ಯಂಗಳು ಪವಿತ್ರವು ;
ಆ ಜಂಗಮಪ್ರಸಾದದಿಂದವೆ ಮಹಾಘನಲಿಂಗಕ್ಕೆ ತೃಪ್ತಿ.
ಇಷ್ಟನರಿದ ಬಳಿಕ ಜಂಗಮಲಿಂಗಕ್ಕೆ ಸಂದೇಹವ ಮಾಡಿದೆನಾದಡೆ
ಎನಗೆ ಕುಂಭೀಪಾತಕ ನಾಯಕನರಕ ತಪ್ಪದು.
ಈ ಜಂಗಮದ ಭಕ್ತಿ ಕಿಂಚಿತ್ತು ಕೊರತೆ ಇಲ್ಲದ ಹಾಗೆ ಜೀವವುಳ್ಳ ಪರಿಯಂತರ
ಇದೆ ಆಚಾರವಾಗಿ, ಇದೇ ಪ್ರಾಣವಾಗಿ ನಡೆದು, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವನೊಡಗೂಡುವೆನು./124
ವ್ರತನೇಮಿಯಾಗಿರ್ದಲ್ಲಿ, ಹಿರಿಯರು ಭಕ್ತರು ಮಿಕ್ಕಾದ ಮನುಜರಲ್ಲಿ
ಸರಸಮೇಳ, ಪರಿಹಾಸಕಂಗಳಲ್ಲಿಂದ ಕೆಲದಲ್ಲಿ ನಿಂದಿತ್ತು.
ವ್ರತ ಹೋಯಿತ್ತು, ಆಚಾರ ಕೆಟ್ಟಿತ್ತು.
ಆಚಾರವೆ ಪ್ರಾಣವಾಗಿಪ್ಪ ರಾಮೇಶ್ವರಲಿಂಗಕ್ಕೆ ದೂರವಾಯಿತ್ತು./125
ವ್ರತವ ಮಾಡಿಕೊಂಡಲ್ಲಿ ರತಿಗೆಡದೆ, ಕ್ಷೇತ್ರವಾಸಂಗಳ ಬೇಡದೆ,
ಪಡಿವರ ಧಾನ್ಯಂಗಳೆಂದು, ಗುಡಿಗಳ ಹೊಕ್ಕು,
ಸರಿಗರತಿಯರಲ್ಲಿ ಅಡುಮೆಯಾಗದೆ
ಭಕ್ತರಲ್ಲಿ ಬೇಡುವಾಗಳೆ ಕೆಟ್ಟಿತ್ತು ವ್ರತ. ಆಚಾರವೆ ಪ್ರಾಣವಾಗಿಪ್ಪ ರಾಮೇಶ್ವರಲಿಂಗಕ್ಕೆ ದೂರ./126
ವ್ರತವ ಹಿಡಿವಲ್ಲಿ, ವ್ರತವ ಉಪದೇಶ ಮಾಡುವಲ್ಲಿ,
ಹಿಡಿವಾತನ ಯುಕ್ತಿ ಎಂತೆಂದಡೆ
ಮನ, ವಚನ, ಕಾಯ, ತ್ರಿಕರಣಶುದ್ಧಾತ್ಮನಾಗಿ,
ಸತಿ, ಸುತ, ಬಂಧುವರ್ಗಂಗಳೆಲ್ಲವು ಏಕತ್ರವಾಗಿ,
ನಡೆವುದ ನಡೆಯದಿಹುದೆಂಬುದ ಸ್ಥಿರಕರಿಸಿ,
ಶ್ರುತ, ದೃಷ್ಟ, ಅನುಮಾನ, ಮೂರನೊಂದುಮಾಡಿ
ಮತ್ತೆ ಏನುವ ತೋರದ ವ್ರತವಸ್ತುವನಾದರಿಸಬೇಕು.
ವ್ರತ ದೀಕ್ಷೆಯ ಮಾಡುವಲ್ಲಿ ಗುರುವಿನ ಇರವೆಂತೆಂದಡೆ ;
ಅವನ ಆಗು ಚೇಗೆಯನರಿತು ಅರ್ತಿಕಾರರಿಗೆ ಇದಿರು ಮೆಚ್ಚುವಭೇದ.
ಹಿರಣ್ಯದ ಒದಗಿನ ಲಾಗು, ಕೊಲೆ ಹಗೆಯಪ್ಪನ
ರಾಗವಿರಾಗಗಳೆಂಬ ಭಾವವ ವಿಚಾರಿಸಿ,
ಈ ವ್ರತ ನೇಮ ನಿನಗೆ ಲಾಗಲ್ಲ ಎಂದು ಅರೆಬಿರಿದಿನ ನೇಮ.
ತೊಡಕಿನಂಬಿನ ಘಾಯ ತಪ್ಪಿದಡೆ
ಇಹಪರದಲ್ಲಿ ಉಭಯದೋಷದ
ಹೀಗೆಂದು ಉಪದೇಶವಂ ಕೊಟ್ಟು ಸಂತೈಸುವುದು ಗುರುಸ್ಥಲ.
ಆ ಗುಣಕ್ಕೆ ಮುಯ್ಯಾಂತು, ಪರಮಹರುಷಿತನಾಗಿ,
ಗಣಸಮೂಹಂ ಕೂಡಿ, ಪರಮ ವಿರಕ್ತರಂ ಕರೆದು,
ಮಹತ್ತು ನೆರಹಿ, ಗುರುಲಿಂಗಜಂಗಮಸಾಕ್ಷಿಯಾಗಿ ಮಾಡುವುದೆ ವ್ರತ.
ಹೀಗಲ್ಲದೆ, ಮನಕ್ಕೆ ಬಂದಂತೆ, ತನು ಹರಿದಾಡುವಂತೆ,
ಊರೂರ ದಾರಿಗರಲ್ಲಿ ವ್ರತವ ಮಾಡಿಕೊಳ್ಳಿಯೆಂದು ಸಾರಲಿಲ್ಲ.
ಇಂತೀ ಉಭಯವನರಿತು ವ್ರತಕ್ಕೆ ಅರ್ಹನಾಗಬೇಕು.
ಇಂತೀ ಸರ್ವಗುಣಸಂಪನ್ನ ಮಾಡಿಸಿಕೊಂಬವನೂ ತಾನೆ,
ಮಾಡುವಾತನೂ ತಾನೆ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ./127
ವ್ರತವನಾಶ್ರಯಿಸಿದ ಮತ್ತೆ ಹುಸಿ ನುಸುಳು ಕೊಲೆ ಕಳವು
ಪಾರದ್ವಾರವ ಮಾಡುವನ್ನಬರ
ವ್ರತಸ್ಥನಲ್ಲ, ನೇಮಕ್ಕೆ ಸಲ್ಲ, ಅವಂಗಾಚಾರವಿಲ್ಲ.
ಅವ ರಾಜನೆಂದು ದ್ರವ್ಯದಾಸೆಗಾಗಿ ಅವನ ಮನೆಯ ಹೊಕ್ಕು
ವಿಭೂತಿ ವೀಳೆಯ ಮೊದಲಾದ ಉಪಚಾರಕ್ಕೊಳಗಾದವ
ಸತ್ತಕುಕ್ಕುರನ ಕೀಟಕ ತಿಂದು ಅದು ಸತ್ತಡೆ ತಾ ತಿಂದಂತೆ
ಪಂಚಾಚಾರಶುದ್ಧಕ್ಕೆ ಹೊರಗು. ಆಚಾರವೆ ಪ್ರಾಣವಾಗಿಪ್ಪ ರಾಮೇಶ್ವರಲಿಂಗಕ್ಕೆ ಮುನ್ನವೆ ಹೊರಗು./128
ವ್ರತವೆಂಬ ಸೀಮೆಯ ವಿವರವೆಂತುಟೆಂದಡೆ
ಬೀಗಿ ಬೆಳೆದ ಹೊಲಕ್ಕೆ ಬೇಲಿಯ ಕಟ್ಟಿದಡೆ ಚೇಗೆಯುಂಟೆ
ಹಾವ ಪಶುವಿಂಗೆ ಮಾಣಿಸಿದಡೆ ದೋಷ ಉಂಟೆ
ಗಾವಿಲಂಗೆ ಭಾವದ ಬುದ್ಧಿಯ ಹೇಳಿದವಂಗೆ ನೋವುಂಟೆ
ಬೇವ ನೋವ ಕಾಯಕ್ಕೆ ಜೀವವೆಂಬ ಬೆಳಗೇ ವ್ರತ.
ಭಾವವೆಂಬ ಬೇಲಿಯ ಸಾಗಿಸಿಕೊಳ್ಳಿ.
ಲೂಟಿಗೆ ಮೊದಲೆ ಬಸವ ಚೆನ್ನಬಸವಣ್ಣ ಪ್ರಭುದೇವ ಮೊದಲಾಗಿ
ಶಂಕೆಗೆ ಮುನ್ನವೆ ಹೋದೆಹೆನೆಂಬ ಭಾವ ತೋರುತ್ತಿದೆ.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಏಲೇಶ್ವರದ ಗೊತ್ತು ಕೆಟ್ಟಿತ್ತು./129
ವ್ರತವೆಂಬುದೇನು ? ಮನವಿಕಾರಿಸುವುದಕ್ಕೆ ಕಟ್ಟಿದ ಗೊತ್ತು.
ಜಗದ ಕಾಮಿಯಂತೆ ಕಾಮಿಸದೆ,
ಜಗದ ಕ್ರೋಧಿಯಂತೆ ಕ್ರೋಧಿಸದೆ,
ಜಗದ ಲೋಭಿಯಂತೆ ಲೋಭಿಸದೆ,
ಮಾಯಾಮೋಹಂಗಳು ವರ್ಜಿತವಾಗಿ
ಮನಬಂದಂತೆ ಆಡದೆ, ತನುಬಂದಂತೆ ಕೂಡದೆ
ವ್ರತದಂಗಕ್ಕೆ ಸಂಗವಾಗಿ ನಿಂದ ಸದ್ಭಕ್ತನ ಅಂಗವೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಂಗ./130
ವ್ರತವೆಂಬುದೇನು ?ವಸ್ತುವ ಕಾಂಬುದಕ್ಕೆ ನಿಚ್ಚಣಿಕೆ.
ವ್ರತವೆಂಬುದೇನು ? ಇಂದ್ರಿಯಂಗಳ ಸಂದಮುರಿವ ಕುಲಕುಠಾರ.
ವ್ರತವೆಂಬುದೇನು ? ಸಕಲ ವ್ಯಾಪಕಕ್ಕೆ ದಾವಾನಳ.
ವ್ರತವೆಂಬುದೇನು ? ಸರ್ವದೋಷನಾಶನ.
ವ್ರತವೆಂಬುದೇನು ? ಚಿತ್ತಸುಯಿದಾನದಿಂದ
ವಸ್ತುವ ಕಾಂಬುದಕ್ಕೆ ಕಟ್ಟಿದ ಗುತ್ತಗೆ.
ವ್ರತವೆಂಬುದೇನು ? ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಅವರಿಗೆ ತತ್ತಲಮಗನಾಗಿಪ್ಪನು./131
ವ್ರತಾಚಾರವ ಅವಧರಿಸಿದ ಭಕ್ತಂಗೆ
ಕತ್ತಿ ಕೋಲು ಅಂಬು ಕಠಾರಿ ಈಟಿ ಕೊಡಲಿ
ಮತ್ತಾವ ಕುತ್ತುವ ಕೊರವ ಹಾಕುವ, ಗಾಣ ಮುಂತಾಗಿ
ದೃಷ್ಟದಲ್ಲಿ ಕೊಲುವ ಕೈದ ಮಾಡುತ್ತ,
ಮತ್ತೆ ಅವ ವ್ರತಿಯೆಂದಡೆ ಮೆಚ್ಚುವರೆ ಪರಮಶಿವೈಕ್ಯರು
ಇಂತಿವ ಶ್ರುತದಲ್ಲಿ ಕೇಳಲಿಲ್ಲ,
ದೃಷ್ಟದಲ್ಲಿ ಕಾಣಲಿಲ್ಲ, ಅನುಮಾನದಲ್ಲಿ ಅರಿಯಲಿಲ್ಲ.
ಸ್ವಪ್ನದಲ್ಲಿ ಕಂಡಡೆ ಎನ್ನ ವ್ರತಕ್ಕದೇ ಭಂಗ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವಾದಡೂ ಒಲ್ಲೆನು./132
ವ್ರತಾಚಾರವೆಂದು ಹೆಸರಿಟ್ಟುಕೊಂಡಿಪ್ಪರಯ್ಯಾ !
ವ್ರತವೆಂದೇನು ಆಚಾರವೆಂದೇನು !
ಅನ್ಯರು ಮಾಡಿದ ದ್ರವ್ಯವನೊಲ್ಲದಿಪ್ಪುದು ವ್ರತವೆ !
ಆರನು ಕರೆಯದಿಪ್ಪುದು ಆಚಾರವೆ !
ಪರಸ್ತ್ರೀ ಪರಧನಂಗಳಲ್ಲಿ ನಿಂದೆಗೆ ಒಡಲಾಗದಿದ್ದುದೆ ವ್ರತ.
ಸರ್ವಭೂತಹಿತನಾಗಿ ದಯವಿದ್ದುದೆ ಆಚಾರ.
ಇಂತೀ ಕ್ರೀಯನರಿತು, ಕ್ರೀಯ ಶುದ್ಧತೆಯಾಗಿ ನಿಂದುದೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ನೇಮ./133
ವ್ರತಾಚಾರವೆಂಬುದು ತನಗೊ, ತನ್ನ ಸತಿಗೊ, ಇದಿರ ಭೂತಹಿತಕೊ ?
ತಾನರಿಯದೆ ತನಗೆ ವ್ರತ ಉಂಟೆ ?
ವ್ರತಾಚಾರಿಗಳ ಗರ್ಭದಿಂದ ಬಂದ ಶಿಶುವ ಅನ್ಯರಿಗೆ ಕೊಡಬಹುದೆ ?
ವ್ರತಾಚಾರವಿಲ್ಲದವರಲ್ಲಿ ತಂದು ವ್ರತವ ಮಾಡಬಹುದೆ ?
ಇಂತೀ ತಮ್ಮ ಕ್ರೀವಂತರಲ್ಲಿಯೆ ತಂದು ಕ್ರೀವಂತರಲ್ಲಿಯೆ ಕೊಟ್ಟು
ಉಭಯ ಭಿನ್ನವಿಲ್ಲದೆ ಇಪ್ಪುದೆ ಸಜ್ಜನವ್ರತ, ಸದಾತ್ಮ ಯುಕ್ತಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಮುಕ್ತಿ./134
ವ್ರತಿಗಳ ಮನೆಗೆ ವ್ರತಿಗಳು ಬಂದಲ್ಲಿ
ಎನ್ನ ಮನೆಗೆ ಇವರು ಬಂದರೆಂದು ಭಿನ್ನಭಾವವಾದಾಗಲೆ
ವ್ರತಕ್ಕೆ ದೂರ, ಆಚಾರಕ್ಕೆ ಕೊರತೆ.
ತಮ್ಮ ಮನೆಗೆ ತಾವು ಬಂದರೆಂದು ಅನ್ಯಭಿನ್ನವಿಲ್ಲದೆ
ಅರ್ಥ ಪ್ರಾಣ ಅಭಿಮಾನವೆಂದು ಕಟ್ಟುಮಾಡಿದಡೆ
ಸಮಯಾಚಾರಕ್ಕೆ ದೂರ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಒಪ್ಪದ ನೇಮ./135
ಸಂದೇಹವ ಹರಿದವಂಗಲ್ಲದೆ ಸಹಭೋಜನ ಭಾಜನವಿಲ್ಲ.
ಸಂದಿತ್ತು ಸಲ್ಲದೆಂಬ ಸಂಕಲ್ಪವಳಿದವಂಗಲ್ಲದೆ ಭರಿತಾರ್ಪಣವಿಲ್ಲ.
ನೇಮ ತಪ್ಪಿದಲ್ಲಿ ಆಶೆಯು ಬಿಟ್ಟವಂಗಲ್ಲದೆ ಸರ್ವವ್ರತದ ದೆಸೆಯಿಲ್ಲ.
ಇಂತೀ ಆಶೆಯ ಪಾಶದಿಂದ ತಾ ಹಿಡಿದ ವ್ರತದ ಭಾಷೆಯ ತಪ್ಪಿ
ಮತ್ತೆ ಪ್ರಾಯಶ್ಚಿತ್ತವೆಂದಲ್ಲಿ
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವಾಯಿತ್ತಾದಡೂ ಇಹಪರಕೆ ಹೊರಗೆಂದು ಡಂಗುರವಿಕ್ಕುವ./136
ಸಂದೇಹವುಳ್ಳನ್ನಕ್ಕ ವ್ರತಾಂಗಿಯಲ್ಲ.
ಅಲಗಿನ ಮೊನೆಗಂಜುವನ್ನಕ್ಕ ಪಟುಭಟನಲ್ಲ.
ತ್ರಿವಿಧದ ಅಂಗವುಳ್ಳನ್ನಕ್ಕ ಲಿಂಗಾಂಗಿಯಲ್ಲ.
ಸೋಂಕು ಬಂದಲ್ಲಿ ಆ ಅಂಗವ ಬಿಡದಿದ್ದಡೆ ಶೀಲವಂತನಲ್ಲ.
ಈ ನೇಮಂಗಳಲ್ಲಿ ನಿರತನಾದವಂಗೆ
ಅಲ್ಲಿ ಇಲ್ಲಿಯೆಂಬ ಅಂಜಿಕೆ ಎಲ್ಲಿಯೂ ಇಲ್ಲದೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿಯೂ ಇಲ್ಲ./137
ಸದೈವ ಆವಾವ ಗೋತ್ರದಲ್ಲಿ ಬಂದಡೂ ಎಣ್ಣೆ ನೀರಿನಂತೆ,
ಮಣ್ಣು ಹೊನ್ನಿನಂತೆ,
ತನ್ನ ಅನು ಆಚಾರಕ್ಕೆ ಬಂದವರ ತನ್ನವರೆಂದು ಭಾವಿಸಬೇಕಲ್ಲದೆ,
ತನ್ನ ಆಚಾರಕ್ಕೆ ಹೊರಗಾದವರ
ಅಣ್ಣ ತಮ್ಮನೆಂದು ತಂದೆ ತಾಯಿಯೆಂದು,
ಮಿಕ್ಕಾದವರ ಹೊನ್ನು ಹೆಣ್ಣು ಮಣ್ಣಿನವರೆಂದು,
ದಿಕ್ಕುದೆಸೆಯೆಂದು ಅಂಗೀಕರಿಸಿದಡೆ, ಅವರಂಗಳವ ಕೂಡಿದಡೆ,
ಅವರೊಂದಾಗಿ ನುಡಿದಡೆ, ಭಕ್ತರು ಸತ್ಯರಿಗೆ ಮುನ್ನವೆ ಹೊರಗು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಅವರ ಒಳಗಿಟ್ಟುಕೊಳ್ಳ/138
ಸಪ್ಪೆಯ ವ್ರತವೆಂಬುದ ನಾವರಿಯೆವು, ನೀವು ಹೇಳಿರಯ್ಯಾ.
ಸರ್ವ ಫಲರಸ ಘೃತ ತೈಲ ಮಧುರ ವಿದಳಧಾನ್ಯ ಮುಂತಾದವಕ್ಕೆ
ಎಲ್ಲಕ್ಕೂ ತಮ್ಮ ತಮ್ಮಲ್ಲಿಯ ರುಚಿ ಸಪ್ಪೆಯ ನೇಮವನೊಂದನೂ ಕಾಣೆ.
ಇದ ನೀವೆ ಬಲ್ಲಿರಿ.
ಸಪ್ಪೆ ಯಾವುದೆಂದಡೆ ಸುಖದುಃಖಂಗಳೆಂಬುದನರಿಯದೆ,
ತನುವಾಡಿದಂತೆ ಆಡದೆ, ಮನ ಹರಿದಂತೆ ಹರಿಯದೆ,
ಬಯಕೆ ಅರತು ಭ್ರಾಮಕ ಹಿಂಗಿ ಸರ್ವವಿಕಾರ ವಿಸರ್ಜನವಾಗಿ,
ಹಿಂದಾದುದ ಮರೆದು ಮುಂದಕ್ಕೆ ಗತಿಯೆಂದು ಒಂದ ಕಾಣದೆ,
ಹಿಂದು ಮುಂದೆಂದು ಒಂದನರಿಯದಿದ್ದುದೆ ಸಪ್ಪೆ.
ಇದು ಅಂತರಂಗದ ವ್ರತ ಲವಣವ ಬಿಟ್ಟುದು ಬಹಿರಂಗ ಶೀಲ.
ಇಂತೀ ಉಭಯವ್ರತ ಏಕವಾದಲ್ಲಿ ಸರ್ವಸಪ್ಪೆ ಸಂದಿತ್ತು
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಪ್ಪೆಯ ವ್ರತ ಅರ್ಪಿತವಾಯಿತ್ತು./139
ಸಮಶೀಲ ನೇಮ ಒಂದಾದಲ್ಲಿ ಉಡುವ ತೊಡುವ ಕೊಡುವ ಕೊಂಬ
ಅಡಿಯೆಡೆ ಮುಂತಾಗಿ ಸಕ್ಕರೆಯ ಬುಡಶಾಖೆಯಂತೆ
ಮಧುರಕ್ಕೆ ಹೆಚ್ಚು ಕುಂದಿಲ್ಲದೆ ಇಪ್ಪ ನೇಮ ಕಟ್ಟಾಚಾರ ನಿಶ್ಚಯವಾದವಂಗೆ,
ಅಂಗ ಹಲವಲ್ಲದೆ ಕುಂದಣ ಒಂದೆ ಭೇದ.
ನೇಮ ಹಲವಲ್ಲದೆ ಜ್ಞಾನವೊಂದೆ ಭೇದ.
ಭೂಮಿ ಹಲವಲ್ಲದೆ ಅಪ್ಪುವೊಂದೆ ಭೇದ, ಬಂದ ಯೋನಿ ಒಂದೆ.
ತಾ ಮುಂದಿಕ್ಕುವ ಯೋನಿ ಒಂದಾದ ಕಾರಣ.
ಹಿಟ್ಟು ಹಲವಾದಡೆ ಅಪ್ಪದಕಲ್ಲು ಒಂದೆಯಾದಂತೆ.
ಇದು ತಪ್ಪದ ಆಚಾರ, ಇದಕ್ಕೆ ಮಿಥ್ಯತಥ್ಯವಿಲ್ಲ, ತಪ್ಪದು ನಿಮ್ಮಾಣೆ.
ಆಚಾರಕ್ಕರ್ಹನಾದ ರಾಮೇಶ್ವರಲಿಂಗವೆ ನೀನೆ ಬಲ್ಲೆ./140
ಸಮಶೀಲಸಂಪಾದಕರು ಬಂದಿದ್ದಲ್ಲಿ
ತಮ್ಮ ತಮ್ಮನೆಯಲ್ಲಿ ವಿಶೇಷ ದ್ರವ್ಯವ ಸಂಚವಿರಿಸಿ
ಇದ್ದುದನಿದ್ದಂತೆ ಎಡೆಮಾಡೆಂದಡೆ ಬದ್ಧಕತನವಲ್ಲದೆ ಆ ವ್ರತ ನಿರ್ಧರವೆ ?
ಆ ಹರಶರಣರು ಮನೆಯಲ್ಲಿ ಬಂದಿರೆ ಅವರ ಮಲಗಿಸಿ,
ತಾ ತನ್ನ ಸತಿಯ ನೆರೆದಡೆ, ಅವರ ನಿಲಿಸಿ ತಾ ಮತ್ತೊಂದಕ್ಕೆ ಹೋದಡೆ,
ಶರಣಸಂಕುಳಕ್ಕೆ ಹೊರಗು,
ಅವರಲ್ಲಿ ಮುಯ್ಯಾಂತು ಬೀಳ್ಕೊಂಡು ತನ್ನ ಸಂದೇಹ ಒಂದೂ ಇಲ್ಲದಂತೆ
ಉಭಯವ ತಿಳಿದು ಮಾಡುವ ಮಾಟಕ್ಕೆ ಹಿಡಿದ ವ್ರತಕ್ಕೆ
ಭಾವಶುದ್ಧವಾಗಿ ಇಪ್ಪುದು ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ವ್ರತಸಂಪಾದನೆ./141
ಸರಸಕ್ಕೆ ಸತ್ತವರುಂಟೆ ? ವಿನೋದಕ್ಕೆ ಪಾರದ್ವಾರ ಉಂಟೆ ?
ಅರ್ತಿಯೆಂದು ಕಣ್ಣ ಕುತ್ತಿದಡೆ ಆ ಕೆಟ್ಟ ಕೇಡು ಅದಾರಿಗೆ ಪೇಳಾ ?
ಸತ್ಯನಾಗಿದ್ದು ಭಕ್ತರು ಜಂಗಮದಲ್ಲಿ
ಚಚ್ಚಗೋಷ್ಠಿಯನಾಡುವ
ಮಿಟ್ಟಿಯ ಭಂಡರಿಗೆ ಸತ್ಯಸದಾಚಾರ ಮುಕ್ತಿಭಾವ ಒಂದೂ ಇಲ್ಲ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದ ನೇಮ./142
ಸರ್ವ ಇಂದ್ರಿಯಗಳ ಒಂದು ಮುಖವ ಮಾಡಿ
ಸರ್ವ ಮೋಹಂಗಳಲ್ಲಿ ನಿರ್ಮೊಹಿತನಾಗಿ,
ಅಂಗದಿಚ್ಫೆಯ ಮರೆದು ವ್ರತವೆಂಬ ಆಚಾರಲಿಂಗವ ಧರಿಸಬೇಕಲ್ಲದೆ
ತನುವಿಗೆ ಬಂದಂತೆ ಮುಟ್ಟಿ, ಮನಕ್ಕೆ ಬಂದಂತೆ ಹರಿದು,
ನಾನಿಲ್ಲಿ ಒಬ್ಬ ಶೀಲವಂತನಿದ್ದೇನೆ ಎಂದು
ಕಲಹಟ್ಟಿಯಂತೆ ಕೂಗುತ್ತ ಕೊರಚುತ್ತ ಅಲ್ಲಿ ಬೊಬ್ಬಿಡುತ್ತ
ಶೂಲವನೇರುವ ಕಳ್ಳನಂತೆ ಬಾಹ್ಯದಲ್ಲಿ ಬಾಯಾಲುವ,
ಮನದಲ್ಲಿ ಸತ್ತೆಹೆನೆಂಬ ಸಂದೇಹದವನಂತೆ ಸಾಯದೆ,
ಹೊರಗಣ ಕ್ರೀ ಶುದ್ಭವಾಗಿ, ಒಳಗಳ ಆತ್ಮ ಶುದ್ಧವಾಗಿ,
ಉಭಯ ಶುದ್ಧವಾಗಿಪ್ಪುದು ಪಂಚಾಚಾರ ನಿರುತ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಸರ್ವಾಂಗಭರಿತನು/143
ಸರ್ವಮಯ ಲಿಂಗಾಂಕಿತಸೀಮೆಯಾಗಬೇಕೆಂಬಲ್ಲಿ
ಆ ಘನವ ತಿಳಿದು ತನ್ನ ತಾನೆ ವಿಚಾರಿಸಿಕೊಂಬಲ್ಲಿ
ಸ್ಥೂಲತನುವಿನಲ್ಲಿ ಕಾಬ ಕಾಣಿಕೆ ದೃಷ್ಟವಾಗಿ ಲಿಂಗಾಂಕಿತ.
ಸೂಕ್ಷ್ಮತನುವಿನಲ್ಲಿ ಕಾಬ ಕಾಣಿಕೆ ಎಚ್ಚತ್ತಲ್ಲಿ ಬಯಲಾಯಿತ್ತು ಲಿಂಗಾಂಕಿತ.
ಕಾರಣದಲ್ಲಿ ಪ್ರಮಾಣಿಸುವುದಕ್ಕೆ ಲಿಂಗಾಂಕಿತಕ್ಕೆ ಒಡಲಾವುದು ?
ಇದ ನಾನರಿಯೆ, ನೀವೆ ಬಲ್ಲಿರಿ.
ಜಾಗ್ರ, ಸ್ವಪ್ನ, ಸುಷುಪ್ತಿಗಳಲ್ಲಿ ಕಾಬ ಲಿಂಗಾಂಕಿತದ ಭೇದ ನೇಮವಾವುದು ?
ಜಾಗ್ರದಲ್ಲಿ ತೋರುವ ನಿಜ ಸ್ವಪ್ನಕ್ಕೊಡಲಾಗಿ,
ಸ್ವಪ್ನದಲ್ಲಿ ತೋರುವ ನಿಜ ಸುಷುಪ್ತಿಗೊಡಲಾಗಿ,
ಉಭಯದಲ್ಲಿ ಕೂಡಿದ ಕೂಟ ತನ್ಮಯಲಿಂಗಾಂಕಿತವಾಯಿತ್ತು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಲೇಪವಾಗಿ./144
ಸರ್ವಶೀಲದ ವ್ರತದಾಯತವೆಂತುಟೆಂದಡೆ
ತನ್ನ ವ್ರತವಿಲ್ಲದ ಗುರುವ ಪೂಜಿಸಲಾಗದು.
ವ್ರತವಿಲ್ಲದ ಜಂಗಮದ ಪ್ರಸಾದವ ಕೊಳಲಾಗದು.
ವ್ರತವಿಲ್ಲದವರ ಅಂಗಳವ ಮೆಟ್ಟಲಾಗದು.
ಅದೆಂತೆಂದಡೆ
ಗುರುವಿಗೂ ಗುರು ಉಂಟಾಗಿ, ಲಿಂಗಕ್ಕೂ ಉಭಯಸಂಬಂಧ ಉಂಟಾಗಿ.
ಆ ಜಂಗಮಕೂ ಗುರುಲಿಂಗ ಉಭಯವುಂಟಾಗಿ ಜಂಗಮವಾದ ಕಾರಣ.
ಇಂತೀ ಗುರುಲಿಂಗಜಂಗಮಕ್ಕೂ ಪಂಚಾಚಾರ ಶುದ್ಧವಾಗಿರಬೇಕು.
ಪುರುಷನ ಆಚಾರದಲ್ಲಿ ಸತಿ ನಡೆಯಬೇಕಲ್ಲದೆ ಸತಿಗೆ ಸ್ವತಂತ್ರ ಉಂಟೆ ?
ಇಂತೀ ಉಭಯದ ವ್ರತವೊಡಗೂಡಿದಲ್ಲಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ವ್ರತವೆ ವಸ್ತು./145
ಸೀಮೋಲ್ಲಂಘನವೆಂಬುದ ನಾನರಿಯೆ, ನೀವೆ ಬಲ್ಲಿರಿ.
ಇದ್ದ ಮನೆಯ ಬಿಡಲಾರದೆ, ತೊಟ್ಟಿದ್ದ ತೊಡಿಗೆಯ ಅಳಿಯಲಾರದೆ,
ಇದ್ದ ಠಾವ ಬಿಟ್ಟು ಹೋಗೆನೆಂಬುದು ಛಲವೆ ?
ಅದು ತನ್ನ ಸೀಮೆಯೊ ಜಗದ ಸೀಮೆಯೊ ಎಂಬುದ ತಾನರಿಯಬೇಕು.
ತನ್ನ ಸೀಮೆಯಲ್ಲಿ ಬಂದಂಗವ ಜಗದ ಸೀಮೆಯಲ್ಲಿ ಅಳಿಯಬಹುದೆ
ತನ್ನಂಗಕ್ಕೆ ಕಂಟಕ ನೇಮ ತಪ್ಪಿ ಬಂದಲ್ಲಿ
ಅಂಗವ ಲಿಂಗದಲ್ಲಿ ಬೈಚಿಟ್ಟು ಕೂಡಿದ ಅಂಗ ಸೀಮೋಲ್ಲಂಘನ. ಇಂತೀ ನೇಮ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಂದಿತ್ತು/146
ಸೆರೆಗೆ ಸತಿ ಸಿಕ್ಕಿದಲ್ಲಿ ಅಪಮಾನವನರಸಲಿಲ್ಲ.
ಹುತ್ತವನೇರಿ ಹುಲ್ಲ ಕಚ್ಚಿದಲ್ಲಿ ಪಟುಭಟತನವನರಸಲಿಲ್ಲ.
ವ್ರತಾಚಾರಕ್ಕರ್ಹನಾಗಿ ಭವಿದ್ರವ್ಯವನೊಲ್ಲೆನೆಂದು
ಆ ಭವಿಯ ಸೀಮೆಯ ಭಕ್ತನ ಕೈಯಿಂದ ಕೊಂಡು
ಭಕ್ತ ಕೊಟ್ಟನೆಂದು ತಕ್ಕೊಂಬ ಮಿಟ್ಟೆಯ ಭಂಡನ ಶೀಲ ಸಿಕ್ಕಿತ್ತು.
ಹೊಸ್ತಲ ಪೂಜಿಸುವ ಪಾಣ್ಬೆಯಂತಾಯಿತ್ತು.
ಇನ್ನಾರಿಗೆ ಹೇಳುವೆ ಆಚಾರವೆ ಪ್ರಾಣವಾಗಿಪ್ಪ ರಾಮೇಶ್ವರಲಿಂಗವೆ ನೀನೆ ಬಲ್ಲೆ./147
ಸ್ಥಾವರಕ್ಕೆ ಲಿಂಗಮುದ್ರೆ, ಪಾಷಾಣಕ್ಕೆ ಲಿಂಗಮುದ್ರೆ,
ಗೋವಿಗೆ ಲಿಂಗಮುದ್ರೆ,
ಮತ್ತಾವಾವ ರೂಪಿನಲ್ಲಿ ಲಿಂಗಾಂಕಿತವ ಮಾಡಿದಡೂ ಪ್ರೇತಾಂಕಿತಭೇದ.
ಅದೆಂತೆಂದಡೆ ;
ತರು ಫಲವ ಹೊತ್ತಂತೆ ಸವಿಯನರಿಯವಾಗಿ.
ಮಾಡಿಕೊಂಡ ನೇಮಕ್ಕೆ ತಮ್ಮ ಭಾವದ ಶಂಕೆಯಲ್ಲದೆ
ಧರಿಸಿದ್ದವು ಇದಾವ ಲಿಂಗವೆಂದರಿಯವು.
ತಾನರಿದು ಆ ವ್ರತ ನೇಮ ಮಾಟವ ಮಾಡುವಲ್ಲಿ
ಶೀಲದ ತೊಡಿಗೆ, ನೇಮದ ಖಂಡಿತ, ಮಾಟದ ಕೂಟ
ಇಂತಿವನರಿದು ತನುವಿಂಗಾಚಾರ, ಮನಕ್ಕೆ ವ್ರತ, ಮಾಟಕ್ಕೆ ನೇಮ, ಕೂಟಕ್ಕೆ ನಿಶ್ಚಯ.
ಇಂತೀ ಮರ್ತ್ಯದ ಆಟವುಳ್ಳನ್ನಕ್ಕ ಸದಾತ್ಮನಿಹಿತವಿರಬೇಕು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವನರಿವುದಕ್ಕೆ./148
ಹರಿ ಬ್ರಹ್ಮ ದೇವರ್ಕಳು ಮುಂತಾಗಿ ಇದ್ದವರೆಲ್ಲರು
ತಮ್ಮ ತಮ್ಮ ಮಾರ್ಗದ ಕಲೆಯಲ್ಲಿಯೆ ಎಯ್ದಿ,
ಜಪ ತಪ ನೇಮ ನಿತ್ಯಂಗಳು ತಪ್ಪದೆ ಮಹಾದೇವನ ಓಲೈಸಿದರಾಗಿ,
ಇದು ಕಾರಣದಲ್ಲಿ ಕೊಂಡ ವ್ರತಕ್ಕೆ ಹಾನಿಯಿಲ್ಲದೆ, ನೇಮಕ್ಕೆ ಅನುಸರಣೆಯಿಲ್ಲದೆ,
ತಾ ನಡೆವಲ್ಲಿ, ಇದಿರ ತಾ ಕಾಬಲ್ಲಿ,
ಅಣುಮಾತ್ರ ತಪ್ಪದೆ, ಕ್ಷಣಮಾತ್ರ ಸೈರಿಸದೆ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಹಾದಿಯನರಿಯಬೇಕು./149
ಹಲವುತೆರದ ಕ್ರೀಯನಾಧರಿಸಿ ನಡೆವಲ್ಲಿ
ಅಂಗಕ್ಕೆ ಆಚಾರ, ಮನಕ್ಕೆ ಅರಿವು ಮುಂತಾಗಿ,
ಪೂರ್ವದ ಸ್ವಸ್ಥಾನ, ಉತ್ತರದ ನಿಶ್ಚಯವ ಕಂಡು, ಸತ್ಕ್ರೀಯಿಂದ ಆದರಿಸಿ,
ಪರಧನ ಪರಸತಿ ಪರಾಪೇಕ್ಷೆ ಅನ್ಯನಿಂದೆ
ದುರ್ಗುಣ ದುಶ್ಚರಿತ್ರ ದುರ್ವಿಕಾರ ದುರ್ಬೊಧೆ
ಇಂತೀ ಅನ್ಯವ ನೇತಿಗಳೆದು, ತನಗೆ ಅನ್ಯವಿಲ್ಲದುದ ಅಂಗೀಕರಿಸಿ,
ತಾ ಹಿಡಿದ ವ್ರತಕ್ಕೆ ತನ್ನ ಸತಿಸುತ, ತನ್ನ ಕ್ರೀ ಮುಂತಾದ
ಒಡೆಯರು ಭಕ್ತರು ಸಹವಾಗಿ ತಾ ತಪ್ಪದೆ,
ತಪ್ಪಿದವರ ಕಂಡು ಒಳಗಿಟ್ಟುಕೊಂಡು ಒಪ್ಪದೆ ಇಪ್ಪ
ಭಕ್ತನ ಸತ್ಯದ ಕಾಯವಳಿಯಿತ್ತು ಉಳಿಯಿತ್ತೆಂಬ ಸಂದೇಹವಿಲ್ಲ.
ಆತನಿಹಪರದಲ್ಲಿ ಸುಖಿ. ಆತನಾಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ./150
ಹಿಡಿಯೆನೆಂಬುದ ಹಿಡಿದಲ್ಲಿ ಅದು ಸುರಾಪಾನ.
ಒಡಗೂಡೆನೆಂದು ಮತ್ತೊಡಗೂಡಿದಡೆ ಅದು ಪರಪಾಕ.
ಮತ್ತಾವುದೊಂದು ಲಿಂಗಕ್ಕೆ ಸಲ್ಲದೆಂಬುದನರಿತು
ಮತ್ತೆಲ್ಲರ ಮಾತು ಕೇಳಿ ಮೆಲ್ಲನೆ ಆದಲ್ಲಿ ಆ ಗುಣ ಸಲ್ಲದು.
ಇವನೆಲ್ಲವನರಿತು ಮತ್ತೆ ಸಲ್ಲದುದ ಸಲ್ಲಿಸಿದೆನಾದಡೆ
ಎಲ್ಲಾ ಯೋನಿಗೆ ಕಡೆಯಪ್ಪ ಶ್ವಾನನಯೋನಿಯಲ್ಲಿ ಬಪ್ಪೆ.
ಈ ಗುಣ ತಪ್ಪದು, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ಸಾಕ್ಷಿಯಾಗಿ./151
ಹೆಣ್ಣು ಹೊನ್ನು ಮಣ್ಣಿಗಾಗಿ ವ್ರತವೆಂಬ ನೇಮವ ಮಾಡಿಕೊಳ್ಳಬಹುದೆ ?
ಕೂಲಿಗೆ ಬಳಿನೀರ ಕುಡಿದಡೆ ಅದಾರ ಮುಟ್ಟುವುದು ?
ವಾಸಿಗೆ ಮೂಗನರಿದುಕೊಂಡಡೆ ನಾಚಿಕೆ ಯಾರಿಗೆಂಬುದನರಿದ ಮತ್ತೆ
ಇಂತಿವ ಹೇಸಿ ಶೀಲವಂತನಾಗಬೇಕು.
ಇಂತೀ ಗುಣಕ್ಕೆ ನಾಚಿ ನೇಮವ ಮಾಡಿಕೊಳ್ಳಬೇಕು.
ಇಂತೀ ವ್ರತದ ಆಗುಚೇಗೆಯನರಿದ ಮತ್ತೆ
ಇದಿರ ಬಯಕೆಯ ಬಿಟ್ಟು ತನ್ನ ತಾನರಿಯಬೇಕು ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ./152
ಹೊಳೆಯ ಹರುಗೋಲಲ್ಲಿಯೆ ಮೆಟ್ಟಡಿಯ ಮೆಟ್ಟಿಹೆನೆಂದು
ಚರ್ಮಕ್ಕೆ ಕೊಟ್ಟು ತನ್ನ ಠಾವಿನಲ್ಲಿ ಕಚ್ಚಾಡಲೇತಕ್ಕೆ ?
ಆ ಗುಣ ವ್ರತನೇಮಿಗಳಿಗೆ ನಿಶ್ಚಯವೆ ?
ಕೊಟ್ಟಲ್ಲಿ ಬೇಯದೆ ತಂದಲ್ಲಿ ನೋಯದೆ
ಭಕ್ತರ ಒಡೆಯರ ಚಿತ್ತವಿದ್ದಂತೆ ಅಚ್ಚೊತ್ತಿದಂತಿರಬೇಕು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ನೇಮ ಸಂದಿತ್ತು./153
ಹೋತಿನ ಗಡ್ಡದಂತೆ ಗಡ್ಡದ ಹಿರಿಯರ ನೋಡಾ.
ಬಿಡಾರ ಬಿಡಾರವೆಂದು ಹಿರಿಯತನಕ್ಕೆ ಅಹಂಕರಿಸಿ.
ಆಚಾರವಂ ಬಿಟ್ಟು ಅನಾಚಾರವಂ ಸಂಗ್ರಹಿಸಿ,
ಭಕ್ತರೊಳು ಕ್ರೋಧ, ಭ್ರಷ್ಟರೊಳು ಮೇಳ
ಇವರು ನರಕಕ್ಕೆ ಯೋಗ್ಯರು, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ./154