Categories
ವಚನಗಳು / Vachanagalu

ಹೊಡೆಹುಲ್ಲ ಬಂಕಣ್ಣನ ವಚನಗಳು

1205
ಕಾಯ ಪ್ರಸಾದವಾದಲ್ಲಿ ಗುರುಪ್ರಸಾದವನೊಲ್ಲ.
ಭಾವ ಪ್ರಸಾದವಾದಲ್ಲಿ ಲಿಂಗಪ್ರಸಾದವನೊಲ್ಲ.
ಜ್ಞಾನ ಪ್ರಸಾದವಾದಲ್ಲಿ ಜಂಗಮಪ್ರಸಾದವನೊಲ್ಲ.
ಇಂತೀ ತ್ರಿವಿಧ ಪ್ರಸಾದವ ಬಲ್ಲವ, ಮಹಾಪ್ರಸಾದವ ಕೊಂಬ.
ಗುರುವಿಂಗೆ ತನುವಳಿದು, ಲಿಂಗಕ್ಕೆ ಮನವಳಿದು,
ಜಂಗನಕ್ಕೆ ತ್ರಿವಿಧಮಲವಳಿದು, ಅರಿವಿಂಗೆ ಕುರುಹಳಿದು,
ಸ್ವಯವೆ ತಾನಾದ, ಇಂದಿರೆಡೆಗೆ[ಟ್ಟ] ಐಕ್ಯಪ್ರಸಾದಿಗೆ
ಕುಂಭೇಶ್ವರಲಿಂಗದಲ್ಲಿ ಜಗನ್ನಾಥ ಸಾಕ್ಷಿಯಾಗಿ
ನಮೋ ನಮೋ ಎನುತಿದ್ದೆನು.
1206
ಕಾಷ್ಟವಗ್ನಿಯೊಳಗಿಡಲಿಕ್ಕಾಗಿ,
ಆ ಕಾಷ್ಟದೊಳಗಿದ್ದಗ್ನಿ ನಾನಿದ್ದೇನೆ, ನೀ ಬೇಡಾ ಎಂದಿತ್ತೆ ?
ತಾನಡಗಿ ಇದಿರಿಟ್ಟ ಅಗ್ನಿಗೆ ಒಡಲಾಯಿತ್ತು.
ಇಂತು ಇದ್ದ ಇದಿರಿಂಗೆ ಒಡಲೆಡೆಗೊಡದ ಅಗಮ್ಯಂಗೆ ಪಡಿಪುಚ್ಚವಿಲ್ಲ,
ಕುಂಭೇಶ್ವರಲಿಂಗದಲ್ಲಿದ್ದ ಜಗನ್ನಾಥನನರಿದವಂಗೆ.
1207
ಕೂಲಿ ಕೃಷಿ ಕಾಯಕಂಗಳಿಂದ ಮಾಡುವ
ಗುರುಲಿಂಗಜಂಗಮದ ಸೇವೆ, ಅದಾವ ತೆರನೆಂದರಿದು,
ಭಾವ ಶುದ್ಧವಾಗಿ ಮಾಡುವ ಸುಕಾಯಕವಂತನಿರವು
ಎಂತುಟೆಂದಡೆ : ಮಾಡಿಕೊಂಡ ಕೃತ್ಯದಲ್ಲಿ ಆರಿಗೂ ಒಡಲೆಡೆಗೂಡದೆ,
ಕೊಂಡುದು ಪ್ರಸಾದ, ನಿಂದುದು ಸಯಿದಾನವೆನ್ನದೆ,
ಉಭಯ ಪ್ರತಿಪಾಕದಲ್ಲಿ ಆದ ಸಯಿದಾನಕ್ಕೆ ಸಂಕಲ್ಪವಳಿದು,
ಉಭಯಭಾಂಡವೂ ಸರಿಯೆಂದ ಪ್ರಸಾದಿಗೆ ಪ್ರಸಾದವ ಎಡೆಮಾಡಬೇಕು.
ಅದು ನಿರ್ಮಾಲ್ಯವಲ್ಲ, ಅದು ಲಿಂಗಾಂಗ, ಕುಂಭದಲ್ಲಿ ನಿಂದಪ್ರಸಾದ.
ಇದರ ಸಂದೇಹವ ಹರಿದು ಕೊಂಬ ನಿರಂಗಪ್ರಸಾದಿಗೆ
ಕುಂಭೇಶ್ವರಲಿಂಗದಲ್ಲಿದ್ದ ಜಗನ್ನಾಥ ಸಾಕ್ಷಿಯಾಗಿ
ನಮೋ ನಮೋ ಎನುತಿದ್ದೆನು.
1208
ಕೈಯೊಡ್ಡಿ ಪ್ರಸಾದವ ಕೊಂಡಡೆ ಕರ್ಮಧಾರಿ.
ಶೇಷಪ್ರಸಾದವನಾಯ್ದು ಕೊಂಡಡೆ ವರ್ಮಹೀನ.
ಉಕ್ಕುಳಪ್ರಸಾದವ ಕೊಂಡಡೆ ಸತ್ಕ್ರೀಗೆ ಸಲ್ಲ.
ಇಂತಿವನರಿದು ಸಜ್ಜನಪ್ರಸಾದವ ನಿರ್ಧರದಿಂದ ಕೊಂಬ
ಮಹಾಪ್ರಸಾದಿಯ ಕಾರುಣ್ಯವೆನಗೆಂದಿಗೆ ಸಾಧ್ಯವಪ್ಪುದು ?
ಕುಂಭೇಶ್ವರಲಿಂಗದಲ್ಲಿ ಜಗನ್ನಾಥವವರಿದವಂಗಲ್ಲದೆ ಸಾಧ್ಯವಲ್ಲ.
1209
ಧರೆಯ ಮೇಲೆ ಬಿದ್ದ ಬೀಜ,
ಧರೆಯಲ್ಲಿಯೆ ಅಳಿದು, ಆಕಾಶದಲ್ಲಿ ಫಲವಾಯಿತ್ತು.
ಆ ಫಲವ ಬಯಲ ಕಣದಲ್ಲಿ ಒಕ್ಕಿ, ಮನದ ಹಗಹದಲ್ಲಿ ತುಂಬಿ,
ಬಾಯ ಹಗಹದಲ್ಲಿ ತೆಗೆದು, ಕಣ್ಣಿನ ಕೊಳಗದಲ್ಲಿ ಅಳೆವುತ್ತಿರಲಾಗಿ,
ಖಂಡುಗವೆಂಬುದಕ್ಕೆ ಮೊದಲೆ ಕೊರಳಡಗಿತ್ತು.
ಕುಂಭೇಶ್ವರಲಿಂಗದಲ್ಲಿದ್ದ ಜಗನ್ನಾಥನರಿಕೆಯಾಗಿ.
1210
ನೆಲ್ಲು ನೆಲದಲ್ಲಿಯೆ ಅಳಿದು, ಹುಲ್ಲಿನ ಒಡಲಲ್ಲಿಯೆ ಜನಿಸಿ,
ಆ ಹುಲ್ಲ ತನ್ನೊಳಗಿರಿಸಿದ ಭೇದವ ನೋಡಾ.
ತನ್ನೊಡಲಳಿದಲ್ಲಿ ನೆಲ್ಲೂ ಅಲ್ಲ, ಹುಲ್ಲೂ ಅಲ್ಲ !
ಆ ಹೊಡೆಯಲ್ಲಿ ಅಡಗಿತ್ತೆಂದರಿಯೆ,
ಕುಂಭೇಶ್ವರಲಿಂಗದಲ್ಲಿ ಜಗನ್ನಾಥನನರಿಯಲಾಗಿ,

1211
ಭಯಭಕ್ತಿಯಿಂದ ಸಂಗನಬಸವಣ್ಣನ ಶ್ರೀಪಾದವ ಕಂಡೆನು.
ಅನುಮಿಷ ದೃಷ್ಟಿಯಿಂದ ಚೆನ್ನಬಸವಣ್ಣನ ಶ್ರೀಪಾದವ ಕಂಡೆನು.
ಸುಜ್ಞಾನದ ಬೆಳಗಿನಿಂದ ಪ್ರಭುದೇವರ ಶ್ರೀಪಾದವ ಕಂಡೆನು.
ಇಂತೀ ಮೂವರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು,
ಕುಂಭೇಶ್ವರಲಿಂಗದಲ್ಲಿ ಜಗನ್ನಾಥ ಸಾಕ್ಷಿಯಾಗಿ.
1212
ಮಾತಿನ ಮಾತಿನ ಗೀತಾಂತದಲ್ಲಿ ಜಾಣನಾಗಿರಬಹುದು.
ಸ್ತೋತ್ರದ .. ..ಪರಿಣತೆಯಲ್ಲಿ ಜಾಣನಾಗಿರಬಹುದು.
ಅಂತರಂಗ ಬಹಿರಂಗವಂತನಾಗಿರಬಹುದು.
ಕಾಂತೆಯರ ರತಿಗುಣವರ್ಜಿತರಾಗಿರಬಹುದು.
ಕ್ಷೇತ್ರವಾಸಿಗಳಾಗಿರಬಹುದು, ತನುನಿಗ್ರಹ ಮಾಡಬಹುದು.
ವೈವಾಸದ ಕೊಂಬೆ ಕಿಂಚಿತ್ತಾಗಿ ಹೊದೆಯಬಹುದು.
ಹಿಡಿದು.. ..ಮುಚ್ಚಿ ಪೂರೈಸದಿರ್ದಡೆ,
ಎನ್ನೊಡೆಯ ಕುಂಭೇಶ್ವರನ ಶರಣರ ನಚ್ಚಿನ ಮಚ್ಚಿನ
ಇಚ್ಛಾವಾಸವೃತ್ತಿಯಾದ ಕುಂಭಾರ ಗಂಡನಲ್ಲಿ .. ..ಲದ್ಗುಗವು.
1213
ಲಿಂಗವಂತರು, ಲಿಂಗಾಚಾರಿಗಳಂಗಣಕ್ಕೆ.
ಲಿಂಗಾರ್ಪಿತ ಭಿಕ್ಷಕ್ಕೆ ಹೋದಲ್ಲಿ, ಲಿಂಗಾರ್ಪಿತವ ಮಾಡುವಲ್ಲಿ,
ಸಂದೇಹವಿಲ್ಲದೆ ಕಾಣದುದನೆಚ್ಚರಿಸದೆ,
ಕಂಡುದ ನುಡಿಯದೆ, ಕಂಡುದನು ಕಾಣದುದನು,
ಒಂದೆಸಮವೆಂದುತಿಳಿಯಬಲ್ಲಡೆ, ಕುಂಭೇಶ್ವರಲಿಂಗವೆಂಬೆನು.
1214
ಸ್ವಯಪ್ರಸಾದಿ ಗುರುಪ್ರಸಾದವನೊಲ್ಲ, ಲಿಂಗಪ್ರಸಾದವ ಕೊಂಬ.
ಜ್ಞಾನಪ್ರಸಾದಿ ಜಂಗಮಪ್ರಸಾದವ ಕೊಂಬ, ಲಿಂಗಪ್ರಸಾದವನೊಲ್ಲ.
ಮಹಾಪ್ರಸಾದಿ ಪ್ರಸನ್ನಪ್ರಸಾದವ ಕೊಂಬ, ಜಂಗಮಪ್ರಸಾದವನೊಲ್ಲ.
ಇಂತೀ ತ್ರಿವಿಧಪ್ರಸಾದದ ಭೇದವನರಿದು,
ಒಂದನೊಡಗೂಡಿ ಒಂದನರ್ಪಿಸಬೇಕು.
ಆ ಉಭಯಪ್ರಸನ್ನಪ್ರಸಾದವ
ಲಿಂಗಕ್ಕೆ ಕೊಟ್ಟು ಕೊಳಬಲ್ಲ ಮಹಾಪ್ರಸಾದಿಗೆ
ಕುಂಭೇಶ್ವರಲಿಂಗದಲ್ಲಿದ್ದ ಜಗನ್ನಾಥ[ಸಾಕ್ಷಿಯಾಗಿ]
ನಮೋ ನಮೋ ಎನುತಿದ್ದೆನು.

Categories
ಶರಣರು / Sharanaru

ಹೊಡೆಹುಲ್ಲ ಬಂಕಣ್ಣ

ಅಂಕಿತ: ಜಗನ್ನಾಥ ಸಾಕ್ಷಿಯಾಗಿ ಕುಂಭೇಶ್ವರ ಲಿಂಗ
ಕಾಯಕ: ಹುಲ್ಲು ಮಾರುವುದು

೧೨೧೩
ಲಿಂಗವಂತರು, ಲಿಂಗಾಚಾರಿಗಳಂಗಣಕ್ಕೆ.
ಲಿಂಗಾರ್ಪಿತ ಭಿಕ್ಷಕ್ಕೆ ಹೋದಲ್ಲಿ, ಲಿಂಗಾರ್ಪಿತವ ಮಾಡುವಲ್ಲಿ,
ಸಂದೇಹವಿಲ್ಲದೆ ಕಾಣದುದನೆಚ್ಚರಿಸದೆ,
ಕಂಡುದ ನುಡಿಯದೆ, ಕಂಡುದನು ಕಾಣದುದನು,
ಒಂದೆಸಮವೆಂದುತಿಳಿಯಬಲ್ಲಡೆ, ಕುಂಭೇಶ್ವರಲಿಂಗವೆಂಬೆನು.

ಹುಲ್ಲು ಮಾರುವ ಕಾಯಕ ಕೈಕೊಂಡಿದ್ದ ಬಂಕಣ್ಣನ ಕಾಲ-೧೧೬೦. ‘ಕುಂಭೇಶ್ವರಲಿಂಗದಲ್ಲಿ ಜಗನ್ನಾಥ ಸಾಕ್ಷಿಯಾಗಿ’ ಎಂಬುದು ಈತನ ಅಂಕಿತ. ೧೦ ವಚನಗಳು ದೊರೆತಿವೆ. ಪ್ರಸಾದದ ಮಹತಿ, ಶುದ್ಧಕಾಯಕ, ಶರಣರ ಸ್ತುತಿ ಅವುಗಳಲ್ಲಿದೆ. ಕೆಲವು ಬೆಡಗಿನ ರೂಪದಲ್ಲಿವೆ.

೧೨೧೧
ಭಯಭಕ್ತಿಯಿಂದ ಸಂಗನಬಸವಣ್ಣನ ಶ್ರೀಪಾದವ ಕಂಡೆನು.
ಅನುಮಿಷ ದೃಷ್ಟಿಯಿಂದ ಚೆನ್ನಬಸವಣ್ಣನ ಶ್ರೀಪಾದವ ಕಂಡೆನು.
ಸುಜ್ಞಾನದ ಬೆಳಗಿನಿಂದ ಪ್ರಭುದೇವರ ಶ್ರೀಪಾದವ ಕಂಡೆನು.
ಇಂತೀ ಮೂವರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು,
ಕುಂಭೇಶ್ವರಲಿಂಗದಲ್ಲಿ ಜಗನ್ನಾಥ ಸಾಕ್ಷಿಯಾಗಿ.

ಹೊಡೆ = ಅದೇ ಆಗ ಹುಟ್ಟಿದ ತೆನೆ

Categories
ವಚನಗಳು / Vachanagalu

ಹೇಮಗಲ್ಲ ಹಂಪನ ವಚನಗಳು

ಅಂಗಗುಣಸಂಸಾರಿಗೆ ಲಿಂಗಗುಣಸಂಸಾರವುಂಟೇನಯ್ಯಾ ?
ಲಿಂಗಗುಣಸಂಸಾರಿಗೆ ಅಂಗಗುಣಸಂಸಾರವುಂಟೇನಯ್ಯಾ ?
ಈ ಲಿಂಗ ಅಂಗವೆಂಬ ಉಭಯ ಮಧ್ಯೆ ಜ್ಞಾನಸಂಸಾರಿಯಾಗಿಪ್ಪ
ಶರಣ ಬಸವಣ್ಣ ಚೆನ್ನಬಸವಣ್ಣ ಪ್ರಭುರಾಯ
ಮೋಳಿಗೆಯ್ಯಗಳು ಮುಖ್ಯವಾದ ಏಳುನೂರಾ ಎಪ್ಪತ್ತು
ಅಮರಗಣಂಗಳ ಪಾದಕ್ಕೆ ನಮೋ ನಮೋ ಎಂಬೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./1
ಅಂಗದ ಮೇಲೆ ಲಿಂಗವಿಪ್ಪ ಶಿವಭಕ್ತನ ಕಂಡರೆ
ಸಂಗಯ್ಯನ ಸಮವೆಂಬೆನಯ್ಯಾ.
ಲಿಂಗವಿಲ್ಲದೆ ನಾಲ್ಕು ವೇದವನೋದುವ ವಿಪ್ರನಾದರೂ ಆಗಲಿ,
ಹೊಲೆಮಾದಿಗರೇಳು ಜಾತಿಗಿಂತ ಕಡೆಯೆಂಬೆನಯ್ಯಾ.
ತಾಯಿಲ್ಲದ ಮಕ್ಕಳಂತೆ, ಗಂಡನಿಲ್ಲದ ಮುಂಡೆಗೆ
ಮುತ್ತೈದೆತನವುಂಟೇನಯ್ಯಾ ?
ಲಿಂಗವಿಲ್ಲದ ಭವಿ ಏನನೋದಿ ಏನ ಹಾಡಿದರೂ ವ್ಯರ್ಥ.
ಸಾಕ್ಷಿ :“ಮಾತಾ ನಾಸ್ತಿ ಯಥಾ ಸುತಂ ಪತಿರ್ನಾಸ್ತಿ ಯಥಾ ನಾರೀ |
ಲಿಂಗಂ ನಾಸ್ತಿ ಯಥಾ ಪ್ರಾಣಂ ತಸ್ಯ ಜನ್ಮ ನಿರರ್ಥಕಂ ||”
ಇಂತೆಂಬುದನರಿಯದೆ ವಾಗದ್ವೈತದಿಂದ
ತನುಲಿಂಗ ಮನಲಿಂಗ ಪ್ರಾಣಲಿಂಗವೆಂಬ ಹೊಲೆಯರ
ಮುಖವನೆನಗೊಮ್ಮೆ ತೋರದಿರಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /2
ಅಂಗದೊಳಗಣ ಅಷ್ಟಮದಮೋಹಿನಿಗಳನಾರನೂ ಕಾಣೆ.
ಭಂಗಿಯ ಸೊಪ್ಪು ತಿಂದ ಬಳ್ಳು ಉಳ್ಳಿಟ್ಟು ಒದರುವಂದದಿ
ದೇಹ ಆತ್ಮದ ತಲೆಗೇರಿ,
ಬರಿದೆ ವೇದಶಾಸ್ತ್ರಪುರಾಣವೆಂದೋದಿ
ಬಲ್ಲವರೆನಿಸಿಕೊಂಬರು ಲಜ್ಜೆಭಂಡರು.
ನುಡಿಯಂತೆ ನಡೆಯಲರಿಯದ ಜಡದೇಹಿಗಳ ಮೆಚ್ಚುವನೆ
ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /3
ಅಂಗದೊಳಗಣ ಅಷ್ಟಮೂರ್ತಿ ಮದಂಗಳ
ಹಿಂಗಿ ನಿರ್ಮದನಾದಡವಂ ಸತ್ಯ ನಿತ್ಯ.
ಪದ : ಪೃಥ್ವಿ ಸಲಿಲಂ ಅಗ್ನಿ ಪವನ ಅಂಬರಮದ
ದೊತ್ತಿಲಿ ರವಿ ಶಶಿ ಆತ್ಮಮದವೆಂದೆಂಬ
ಕೃತ್ಯದಲಿ ನರಳಿ ಹಲವಂ ಬಯಸಿ ಹಂಬಲಿಸಿ
ಕತ್ತಲನ್ನೆಲ್ಲವ ಕಳೆದು ನಿರ್ಮದನಾಗಿಯೆ
ನಿತ್ಯ ಶ್ರುತ ದೃಷ್ಟ ಅನುಮಾನದಿಂದಲಿ ಶಿವನ
ಆತ್ಮದೊಳು ನೆಲೆಗೊಳಿಸಿ ಅಪಮೃತ್ಯು ಮಾರಿಗಳ
ಒತ್ತಿರಿಸಿ ಒಂ ನಮಃ ಪ್ರಣಮಪಂಚಾಕ್ಷರಿಯ
ಬಿತ್ತರಿಸುತಿಪ್ಪ ನಿಜ ತಾ ಸತ್ಯ ನಿತ್ಯನು. |1|
ಅಷ್ಟಾತ್ಮ ಅಷ್ಟತನುವಂತರಂಗದೊಳಿಪ್ಪ
ಅಷ್ಟಮೂರ್ತಿಮದಂಗಳಷ್ಟ ಅಂತರ್ಬಾಹ್ಯ
ಅಷ್ಟಮದ ಅಷ್ಟಾಂಗವಾವರಿಪ ಕರ್ಮಗಳನಿಟ್ಟೊರಸಿ
ಸುಟ್ಟು ಸೂರೆಮಾಡಬಲ್ಲರೆ ಶರಣ
ಇಷ್ಟನೆಲ್ಲವ ಅಂಗದೊಳಹೊರಗೆ ಬಲಿದು ಈ
ಕಷ್ಟಕಾಯಕ್ಕೆ ಗುರಿಯಾಗಿ ಕರ್ಮದ ಬೆಳೆಯ
ನಷ್ಟಮಾಡಲರಿಯದೆ ವೇದ ಶಾಸ್ತ್ರಾಗಮವ
ಎಷ್ಟುದಿನ ಓದಿದರೇನು ವ್ಯರ್ಥ ನಿಜವಿಲ್ಲದಿರಲು. |2|
ವೇದ ಶಾಸ್ತ್ರಾಗಮ ಪುರಾಣವನೋದಿ ತಾನು
ವೇದಿ ಸಂಕಲ್ಪ ಪೂರ್ವದ ಕರ್ಮ ಅನನ್ಯ
ಬಾಧೆಗೆ ಕಳೆಯಲರಿಯದೆ ಬರಿಯ ದುರ್ನಡೆಯ
ಹಾದಿಗೆಳಸಿಯೆ ನುಡಿದು ನಡೆಯಲರಿಯದೆ
ಬಾಧಕತನದೊಡಲ ಹೊರೆವ ಪಿಸುಣನಿಗೆ ಅ
ಸಾಧ್ಯ ಶಿವಮುಕ್ತಿಯೆಂಬುದು ಸ್ವಪನದಲಿಲ್ಲ
ಈ ದೇಹವಿಡಿದು ಗುರುಸಿದ್ಧಮಲ್ಲಿನಾಥನ
ಪಾದಕ್ರಾಂತದಿ ಶಿವಾನಂದಸುಖಿ ಸತ್ಯ ನಿತ್ಯ. |3|/4
ಅಂತರಂಗದ ಅಷ್ಟಮದ ಅವಾವೆಂದರೆ ಹೇಳುವೆ ಕೇಳಿರಣ್ಣಾ :
ಪೃಥ್ವಿಮದ ಸಲಿಲಮದ ಪಾವಕಮದ ಪವನಮದ
ಅಂಬರಮದ ರವಿಮದ ಶಶಿಮದ ಆತ್ಮಮದವೆಂಬ
ಅಷ್ಟಮೂರ್ತಿಯ ಮದಂಗಳು.
ಇವರ ಗುಣಧರ್ಮಕರ್ಮವೆಂತೆಂದಡೆ, ಅದಕ್ಕೆ ವಿವರ ;
ಪೃಥ್ವಿಮದವೆತ್ತಿದಲ್ಲಿ ತನುಗುಣಭರಿತನಾಗಿ,
ಆಭರಣ ಅನುಲೇಪನ ತಾಂಬೂಲವಂ ಬಯಸುತ್ತಿಹನು.
ಸಲಿಲಮದವೆತ್ತಿದಲ್ಲಿ ಸಂಸಾರಭರಿತನಾಗಿ,
ಎನಗೆ ಬೇಕು, ಮನೆಗೆ ಬೇಕು, ಮಕ್ಕಳಿಗೆ ಬೇಕು ಎನುತಿಹನು.
ಪಾವಕಮದವೆತ್ತಿದಲ್ಲಿ ಕಾಮರಸಭರಿತನಾಗಿ,
ಕರಸಬೇಕು ನುಡಿಸಬೇಕು ಆಲಿಂಗಿಸಬೇಕು ಎನುತಿಹನು.
ಪವನಮದವೆತ್ತಿದಲ್ಲಿ ಕೋಪಾಗ್ನಿಭರಿತನಾಗಿ,
ಕೊಂದೇನು ತಿಂದೇನು ಸಾಧಿಸೇನು ಭೇದಿಸೇನು [ಎನುತಿಹನು].
ಶಶಿಮದವೆತ್ತಿದಲ್ಲಿ ಚಿಂತಾಭರಿತನಾಗಿ,
ಆದೀತೊ ಆಗದೊ, ಇದ್ದೀತೊ ಇಲ್ಲವೊ ಎನುತಿಹನು.
ಆತ್ಮಮದವೆತ್ತಿದಲ್ಲಿ ಅಹಂಕಾರಭರಿತನಾಗಿ,
ಎನಗಿಂದು ಅಧಿಕರಿಲ್ಲ, ಎನಗಿಂದು ಇದಿರಿಲ್ಲವೆಂದು
ಅಹಂಭಾವದಿಂದ ಅಹಂಕರಿಸುತ್ತಿಹನು.
ಇಂತೀ ಅಷ್ಟಮೂರ್ತಿಮದಂಗಳ ಭ್ರಾಂತಿನ ಬಲೆಯೊಳಿಟ್ಟೆನ್ನನಗಲದಿರು
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /5
ಅಂತರಂಗದಲ್ಲಿ ಜ್ಞಾನಪರಿಪೂರ್ಣನಾಗಿ ಸರ್ವಾಂಗವೆಲ್ಲ
ಲಿಂಗಮಯವೆಂದು ಜ್ಞಾನದ ಕಣ್ಣಲಿ ಕಂಡು,
ಅರುಹು ಪರಮಾರ್ಥನೊಳು ಬೆರದು, ಅಚಲಿತಶರಣನಾದೆನೆಂದು,
ಬಹಿರಂಗದಲ್ಲಿ ಗುರುಕರುಣದ ಇಷ್ಟಲಿಂಗಧಾರಣವಿಲ್ಲದಿರಬಹುದೇ ?
ಇರಬಾರದು ; ಇದ್ದರೆ ಮಹಾನರಕ.
ಮೂರುಕಣ್ಣುಳ್ಳ ಶಿವನಾದರೂ ಆಗಲಿ,
ಅಂಗದ ಮೇಲೆ ಇಷ್ಟಲಿಂಗವಿಲ್ಲದೆ
ಸುಜ್ಞಾನಿಶರಣನಾದನೆಂದು ನುಡಿದುಕೊಂಡು ನಡೆದರೆ
ಅದ ನಮ್ಮ ಪುರಾತರು ಮೆಚ್ಚುವರೆ ? ಮೆಚ್ಚರು.
ಮೆಚ್ಚರಾಗಿ ನಾಯಕನರಕ ತಪ್ಪದು.
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./6
ಅಂದು ಆದಿಯಲ್ಲಿ ಶಿವ ಬೀಜವಾಗಿ ಬಂದ ಕಾರಣ
ಮರ್ತ್ಯಕೆ ಶಿವಭಕ್ತ [ರುದಯವಾಯಿ]ತು ನೋಡಯ್ಯ.
ಅಂದು ಆದಿಯಲ್ಲಿ ಶಿವಬೀಜವಲ್ಲದಿದ್ದರೆ ಇಂದೆಲ್ಲಿಯದಯ್ಯಾ ?
ಶಿವಭಕ್ತನೆಂಬ ಶ್ರೇಷ್ಠತ್ವನಾಮ ಧರೆಯ ಮನುಜರೆಲ್ಲರಿಗಹುದೇನಯ್ಯ ?
ಶಿವಭಕ್ತಿ ಹಿಡಿದವರೆಲ್ಲ ಬಂಟರೆ ? ಶಕ್ತಿಯ ಸಾಧಿಸಿದವರೆಲ್ಲ ಜಟ್ಟಿಗಳೇ ?
ಸ್ವರಗೈದ ಪಕ್ಷಿಗಳೆಲ್ಲ ಕೋಗಿಲೆಯಾಗಬಲ್ಲುವೆ ?
ಅಂಗಹೀನ ಮಾನವರೆಲ್ಲ ಲಿಂಗವ ಧರಿಸಿ ಲಿಂಗವಂತರೆಂದು
ನುಡಿದುಕೊಂಡು ನಡೆದರೆ ಶಿವಭಕ್ತಿ ಸಾಧ್ಯವಾಗಬಲ್ಲುದೆ,
ಜಗದ ಜಂಗುಳಿಯ ಮಾನವರಿಗೆ ?
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./7
ಅಂದು ಸಹಸ್ರಜನ್ಮಾಂತರದಲ್ಲಿ ತಪೋಧ್ಯಾನವ ಮಾಡಿ
ಪಡೆದಕಾರಣ ಮುಂದೆನಗೆ ಗುರುಪಾದ ದೊರೆಯಿತ್ತು.
ಆ ಗುರುಪಾದದರುಶನದಿಂದ ಹಿಂದೇಳು ಜನ್ಮಾಂತರದಲ್ಲಿ
ಭವಾಂತರ ಹಿಂಗಿ, ಇಂದೆನಗೆ ಶಿವಲಿಂಗವ[ನಿರಿಸೆ],
ಶಿವದೇಹಿ ಶಿವಭಕ್ತ ಶಿವಮಾಹೇಶ್ವರನೆಂಬ
ನಾಮ ನನಗಾಯಿತ್ತು ನೋಡಾ.
ಸಾಕ್ಷಿ :“ಜನ್ಮಾಂತರಸಹಸ್ರೇಷು ತಪೋ ಧ್ಯಾನಂ ಸಮಾಚರೇತ್ |
ನರಾಣಾಂ ಕ್ಷೀಣಪಾಪಾನಾಂ ಶಿವೇ ಭಕ್ತಿಃ ಪ್ರಜಾಯತೇ ||”
ಎಂದುದಾಗಿ,
ಹೀಗೆಂಬ ಸುಕೃತಫಲದಿಂದ ಭವಸಾಗರವ ದಾಂಟಿ
ಭಕ್ತ ಬಸವಣ್ಣ ಮಾಹೇಶ್ವರ ಪ್ರಭುರಾಯರು ಮುಖ್ಯವಾದ
ಪ್ರಮಥಗಣಂಗಳ ಲೆಂಕರ ಲೆಂಕನಾಗಿದ್ದೆನು ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./8
ಅಂಧಕ ಅಂಧಕರು ಕರವಿಡಿದರಣ್ಯದೊಳು
ಹೋಗುತೊಂದು ಕೊಳ್ಳವ ಬಿದ್ದು ಚಾಲಿವರಿವಂತೆ,
ಅಜ್ಞಾನಿ ಗುರುವಿಂಗೆ ಅಜ್ಞಾನಿ ಶಿಷ್ಯನಾದರೆ
ಅವರ ಪಾತಕಕೆ ಕಡೆಯೇನಯ್ಯಾ !
ಹೆಸರಿನ ಗುರುವಿಗೆ ಹೆಸರಿನ ಶಿಷ್ಯನಾಗಿ
ಗುರು-ಶಿಷ್ಯ ಸಂಬಂಧಕ್ಕೆ ಹೋರಾಡಿ
ಒಡಲಾಸೆಗೆ ಲಿಂಗವ ಮಾರಿಕೊಂಬ ಕಡುಪಾಪಿಗೆ
ಗುರುತ್ವವುಂಟೇನಯ್ಯಾ ? ಗುರುತ್ವವಿಲ್ಲ.
ಸಾಕ್ಷಿ :“ನಾಮಧಾರಕ ಶಿಷ್ಯಶ್ಚ ನಾಮಧಾರೀ ಗುರುಸ್ತಥಾ |
ಅಂಧಕೋಂಧಕರಾಬದ್ಧೋ ದ್ವಿವಿಧಂ ಪಾತಕಂ ಭವೇತ್ ||”
ಎಂದುದಾಗಿ,
ಬುದ್ಧಿಹೀನ ಶಿಷ್ಯಂಗೆ ಉಪದೇಶವ ಕೊಟ್ಟ ಗುರುವ
ಎದ್ದೆದ್ದಿ ತೆಗೆಯುವರು ರೌರವ ನರಕದಲ್ಲಿ ಎಂದಾತ
ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /9
ಅಕಟಾ, ರಾಟಾಳದ ಘಟದಂತೆ ಭವಾರಣ್ಯದೊಳು ತಿರುಗಿತಿರುಗಿ
ಸತ್ತು ಸತ್ತು ಹುಟ್ಟುವಂತಿದ್ದೆನಯ್ಯಾ.
ಅದು ಎಂತೆಂದರೆ : ಶ್ವೇದಜ ಉದ್ಬಿಜ ಜರಾಯುಜ ಅಂಡಜವೆಂಬ
ನಾಲ್ಕು ತೆರದ ಮುಖ್ಯ ಆನೆ ಕಡೆ ಇರುವೆ ಮೊದಲು
ಎಂಬತ್ತುನಾಲ್ಕು ಲಕ್ಷ ಜೀವರಾಶಿಯಲ್ಲಿ
ಒಂದೊಂದು ಯೋನಿಯಲ್ಲಿ ಸಾವಿರಬಾರಿ ತಿರುಗಿ,
ಆವಾವ ಜನ್ಮದಲ್ಲಿ ಆವಾವ ಆಹಾರವನುಂಡು,
ಆವಾವ ಭೂಮಿಯಲ್ಲಿ ಪುಟ್ಟಿ, ಆವಾವ ಕರ್ಮವ ಕಂಡು,
ಭಂಗ ಬಡುತ್ತಿದ್ದುದಯ್ಯಾ ಶರೀರ.
ಸಾಕ್ಷಿ :“ನಾನಾಯೋನಿಸಹಸ್ರಾಣಿ ಕೃತಂ ಚೈವ ತು ಮಾಯಯಾ |
ಅನೇಕಂ ವಿವಿಧಾಹಾರಂ ಪೀತಾಶ್ಚ ವಿವಿಧಾಃ ಸ್ತನಾಃ ||”
ಎಂದುದಾಗಿ,
ಇಂತಪ್ಪ ಸಂಸಾರಭ್ರಾಂತಿನ ಬಲೆಯ ತೊಲಗಿಸಿ
ನಿಃಸಂಸಾರಿಯಾಗಿಪ್ಪ ಶರಣರ ಪಾದಕ್ಕೆ ನಮೋ ನಮೋಯೆಂಬೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./10
ಅಗಜೇಶ ಅಜಹರಿಸುರರೊಂದ್ಯ,
ಜಗದಗಲಾತ್ಮ ಅಮೃತಕರ
ಅಘಗಿರಿಗೊಜ್ರ ಅನಲಾಕ್ಷ ಅನಾಮಯ
ಅಚಲ ಅಗಣಿತ ಅತಿಸತ್ಯ
ಅಭವ ಅಭಂಗ ಅತಿಪರಾಕ್ರಮ
ಆನಂದ ಅಪರಂಪಾರ ಆದಿಸ್ವಯಂಭೂ
ಆಧ್ಯಾತ್ಮಪರಂಜ್ಯೋತಿ ಅಕಳಂಕ ಅಮಲ ಅದೃಶ್ಯ
ಅಕಲ್ಪ ಅಭವ ಅರುಣೋದಯ ಅನುಪಮ ಅಘಟಿತ
ಅಚರಿತ್ರ ಐಶ್ವರ್ಯ ಅದ್ಭುತ
ಆದ್ಯ ಆರಾಧ್ಯ ಅಂಗಸಂಗ ಅಮರಗಣವಂದ್ಯ
ರಕ್ಷಿಪುದೆಮ್ಮ ಜಯಜಯ ಹರಹರ ಶಿವಶಿವ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./11
ಅಗ್ನಿ ಆಕಾಶವ ಬೆರಸಲು
ಶ್ರೋತ್ರೇಂದ್ರಿಯದುತ್ಪತ್ತಿಯಯ್ಯ.
ಅಗ್ನಿ ವಾಯುವ ಬೆರಸಲು
ತ್ವಗೀಂದ್ರಿಯದುತ್ಪತ್ತಿಯಯ್ಯ.
ಅಗ್ನಿ ಅಗ್ನಿಯ ಬೆರಸಲು
ನೇತ್ರೇಂದ್ರಿಯದುತ್ಪತ್ತಿಯಯ್ಯ.
ಅಗ್ನಿ ಅಪ್ಪುವ ಬೆರಸಲು
ಜಿಹ್ವೇಂದ್ರಿಯದುತ್ಪತ್ತಿಯಯ್ಯ.
ಅಗ್ನಿ ಪೃಥ್ವಿಯ ಬೆರಸಲು
ಘ್ರಾಣೇಂದ್ರಿಯದುತ್ಪತ್ತಿಯಯ್ಯ.
ಇಂತಿವು ಬುದ್ಧೀಂದ್ರಿಯಂಗಳುತ್ಪತ್ತಿ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./12
ಅಗ್ನಿಗೆ ಮೈಯೆಲ್ಲ ಮುಖ, ಬಲಕೆ ಮೈಯೆಲ್ಲ ಕಾಲು.
ಆತ್ಮದೇಹಿಂಗೆ ದಶವಾಯುಗಳ ಮುಖದಲ್ಲಿ ಹರಿವ
ಕರಣೇಂದ್ರಿಯಂಗಳೆಲ್ಲ ಮುಖ ಕಾಲಾಗಿ ಚರಿಸುತಿಪ್ಪವು.
ತನುವೆಂಬ ಕೊಟಾರದೊಳು ಚರಿಸಿದರೇನು ?
ಅವಕೆ ಬೆಸಸೆ ಎನ್ನ ಸ್ವತಂತ್ರವಲ್ಲ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./13
ಅಗ್ನಿಯೊಳಗಣ ಅಗ್ನಿ ನೇತ್ರೇಂದ್ರಿಯ.
ಅಗ್ನಿಯೊಳಗಣ ಆಕಾಶ ಶ್ರೋತ್ರೇಂದ್ರಿಯ.
ಅಗ್ನಿಯೊಳಗಣ ವಾಯು ತ್ವಗೀಂದ್ರಿಯ.
ಅಗ್ನಿಯೊಳಗಣ ಅಪ್ಪು ಜಿಹ್ವೇಂದ್ರಿಯ.
ಅಗ್ನಿಯೊಳಗಣ ಪೃಥ್ವಿ ಘ್ರಾಣೇಂದ್ರಿಯ.
ಇಂತಿವು ಅಗ್ನಿಯ ಪಂಚಕೃತಿಯೆಂದು ಹೇಳಲ್ಪಟ್ಟಿತ್ತಯ್ಯ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./14
ಅಜ್ಞಾನ ಕುಕರ್ಮದಿಂದ ಮುಸುಕಿದ ಕತ್ತಲೆಗೆ
ಸುಜ್ಞಾನಜ್ಯೋತಿ ಎರೆಯಲ್ಪಟ್ಟ ಪರಮಗುರುವೆಂದಿತ್ತು ರಹಸ್ಯ.
ಸಾಕ್ಷಿ : “ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನಶಲಾಕಯಾ |
ಚಕ್ಷುರುನ್ಮೀಲಿತಂ ಯೇನ ತಸ್ಮೆ ಶ್ರೀಗುರವೇ ನಮಃ ||”
ಎಂದೆಂಬ ಗುರು.
“ಆಕಾಶೋ ಲಿಂಗಮೂಲಂ ಚ ಪೃಥ್ವೀ ತಸ್ಯಾದಿ ಪೀಠಕಂ |
ಆಲಯಂ ಸರ್ವಭೂತಾನಾಂ ಲಯಂ ಚ ಲಿಂಗಮುಚ್ಯತೇ ||”
ಎಂದೆಂಬ ಲಿಂಗವು.
“ಜಕಾರಂ ಹಂಸವಾಹಸ್ಯ ಗಕಾರಂ ಗರುಢಧ್ವಜಂ |
ಮಕಾರಂ ರುದ್ರರೂಪಂ ಚ ತ್ರಿಮೂತ್ರ್ಯಾತ್ಮಕಜಂಗಮಃ ||”
ಎಂದೆಂಬ ಜಂಗಮವು.
“ಶ್ರಾದ್ಧಂ ಯಜ್ಞಂ ಜಪಂ ಹೋಮಂ ವೈಶ್ವದೇವಸುರಾರ್ಚನಂ |
ಧೃತತ್ರಿಪುಂಡ್ರಪೂತಾತ್ಮಾ ಮೃತ್ಯುಂ ಜಯತಿ ಮಾನವಃ ||”
ಎಂದೆಂಬ ವಿಭೂತಿ.
“ರುದ್ರಾಕ್ಷಿಧಾರಣಂ ಸರ್ವಂ ಜಟಾಮಂಡಲಧಾರಿಣಿ |
ಅಕ್ಷಮಾಲಾರ್ಪಿತಕರ ಕಮಂಡಲಕರಾನ್ವಿತಂ ||
ತ್ರಿಪುಂಡ್ರಾವಲಿಯುಕ್ತಾಂ |
ಆಷಾಡೇನ ವಿರಾಜಿತಂ
ಋಗ್ಯಜುಃಸಾಮ ರೂಪೇಣ |
ಸೇವ ತಸ್ಮೆ ಸ್ವರಃ ಇತಿ |
ತ್ರೈವ ಗಾಯಿತ್ರೇವ ವರಾನನೇ ||” (?)
ಎಂದೆಂಬ ವಿಭೂತಿ ರುದ್ರಾಕ್ಷಿ.
“ಜ್ಞಾನ ಪ್ರಾಣ ಬೀಜಂ ಚ ನಕಾರಂ ಚ ಆಚಾರಕಂ |
ಮಕಾರಂ ಚ ಗುರೋರ್ಬಿಜಂ ಶಿಕಾರಂ ಲಿಂಗಮರ್ತ್ಯಕಂ ||
ವಕಾರಂ ಚ ಬೀಜಂ ಚ ಯಕಾರಂ ಪ್ರಾಸಕಂ |
ಏವಂ ಬೀಜಾಕ್ಷರಂ ಜ್ಞಾತುಂ ದುರ್ಲಭಂ ಕಮಲಾನನೆ ||”
ಎಂದೆಂಬ ಷಡಕ್ಷರಿಮಂತ್ರವು.
“ಶೋಷಣಂ ಪಾಪಪಂಕಸ್ಯ ದೀಪನಂ ಜ್ಞಾನತೇಜಸಃ |
ಗುರುಪಾದೋದಕಂ ಪೀತ್ವಾ ಸಂಸಾರದ್ರುಮನಾಶನಂ ||”
ಎಂದೆಂಬ ಪಾದೋದಕವು.
“ಪ್ರಸಾದಂ ಗಿರಿಜಾದೇವಿ ಸಿದ್ಧಕಿನ್ನರಗುಹ್ಯಕಃ |
ವಿಷ್ಣು ಮುಖ್ಯಾದಿದೇವಾನಾಮಗ್ರಾಹ್ಯೋಯಮಗೋಚರಃ ||”
ಎಂದೆಂಬ ಪ್ರಸಾದವು.
ಇನಿತು ತೆರದ ಅಷ್ಟಾವರಣದ ಶ್ರುತ ದೃಷ್ಟವ ಕಂಡು
ಘನವೆಂದು ನಂಬಿದಾತನೆ ಸತ್ಯಸದಾಚಾರಿ ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./15
ಅತ್ತಿಯಹಣ್ಣಿಗಾಗಿ ಬಂದು ಸಿಕ್ಕಿದ ಪಿಕಳಿಯಂತೆ
ವ್ಯರ್ಥ ಕಾಯರಸವಿಷಯಕ್ಕಾಸೆಗೈದು ಸತ್ತು ಸತ್ತು ಹುಟ್ಟಿ
ಭವಕ್ಕೆ ಗುರಿಯಾಗಿ,
ಮಾಯಾಬಲೆಯ ಸಂಸಾರಬಂಧನದೊಳು ಬಂದು ಸಿಲ್ಕಿದೆನಯ್ಯಾ.
ಮಾಯೆಯ ಹರಿದು, ಸಂಸಾರಬಂಧನವ ಕೆಡಿಸಿ,
ಭವರೋಗಕ್ಕೆ ವೈದ್ಯನ ಮಾಡೋ ಶಿವ ವಿಶ್ವಕುಟುಂಬಿ ಮಹಾದೇವ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./16
ಅನಾದಿ ಆದಂದು
ಅನಾದಿಯ ಮರೆಯಲ್ಲಿಯಿದ್ದೆಯಯ್ಯಾ.
ತತ್ವಬ್ರಹ್ಮಾಂಡವಾದಂದು
ತತ್ವಬ್ರಹ್ಮಾಂಡದ ಮರೆಯಲ್ಲಿಯಿದ್ದೆಯಯ್ಯಾ.
ಪಿಂಡಾಂಡವಾದಂದು
ಪಿಂಡಾಂಡದ ಮರೆಯಲ್ಲಿಯಿದ್ದೆ ಅಯ್ಯಾ.
ಜ್ಞಾನವಾದಂದು
ಜ್ಞಾನದ ಮರೆಯಲ್ಲಿದ್ದೆ ಅಯ್ಯಾ.
ನಾನಾದಂದು
ನನ್ನ ಆತ್ಮದಲ್ಲಿ ನೀನೆ ಹೊಳೆವುತಿದ್ದೆ ಅಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./17
ಅನಾದಿಪರಶಿವನ ಶಿಷ್ಯ
ಆದಿಶಂಭುವೆಂಬ ಗಣೇಶ್ವರ.
ಆದಿಗಣೇಶ್ವರನ ಶಿಷ್ಯರು
ನಿರಂಜನನೆಂಬ ಗಣೇಶ್ವರ.
ನಿರಂಜನನೆಂಬ ಗಣೇಶ್ವರನ ಶಿಷ್ಯರು
ಆದಿ ಪಡುವಿಡಿ, ಅನಾದಿ ಪಡುವಿಡಿ,
ಶಿವಸಿದ್ಧಪಡುವಿಡಿಯಪ್ರಭುವೆಂಬ ಗಣೇಶ್ವರ.
ಪ್ರಭುವೆಂಬ ಗಣೇಶ್ವರನ ಶಿಷ್ಯರು
ಮಹಾಂತಮಲ್ಲಿಕಾರ್ಜುನನೆಂಬ ಗಣೇಶ್ವರ.
[ಮಹಾಂತ ಮಲ್ಲಿಕಾರ್ಜುನನ] ಶಿಷ್ಯರು
ಜಾಲಹಳ್ಳಿಯ ಶಾಂತದೇವರು.
ಜಾಲಹಳ್ಳಿಯ ಶಾಂತದೇವರ ಶಿಷ್ಯರು
ಸಿದ್ಧಮಲ್ಲಿನಾಥೇಶ್ವರ.
ಸಿದ್ಧಮಲ್ಲಿನಾಥೇಶ್ವರನ ಶಿಷ್ಯರು
ಪಡುವಿಡಿಯ ರಾಚೇಶ್ವರ.
ಪಡುವಿಡಿಯ ರಾಚೇಶ್ವರನ ಕರಕಮಲದಲ್ಲಿ ಉತ್ಪತ್ಯವಾದ
ಶಿಶುವು ಹೇಮಗಲ್ಲ ಹಂಪ ನಾನಯ್ಯ.
ಹೀಗೆ, ಅನಾದಿವಿಡಿದು ಬಂದ ಗುರು-ಶಿಷ್ಯ ಸಂಬಂಧ,
ಅನಾದಿವಿಡಿದು ಬಂದ ಲಿಂಗ-ಜಂಗಮ,
ಅನಾದಿವಿಡು ಬಂದ ಭಕ್ತಿ-ಜ್ಞಾನ-ವೈರಾಗ್ಯ.
ಇದು ಸತ್ಯ, ಇದು ಸತ್ಯ ಎನ್ನಾಳ್ದ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./18
ಅನಾದಿವಿಡಿದು ಆದಿ, ಆದಿವಿಡಿದು ಸಾವಯವ ;
[ಸಾವಯವವಿಡಿದು ನಿರ್ವಯ], ನಿರ್ವಯವಿಡಿದು ಪಂಚಬ್ರಹ್ಮತ್ವ ;
ಪಂಚಬ್ರಹ್ಮತ್ವವಿಡಿದು ತತ್ವಬ್ರಹ್ಮಾಂಡ,
ತತ್ವಬ್ರಹ್ಮಾಂಡವಿಡಿದು ಪಿಂಡಾಂಡ,
ಪಿಂಡಾಂಡವಿಡಿದು ಜ್ಞಾನ,
ಜ್ಞಾನವಿಡಿದು ನಿಂದ ನಿಲವು ನೀನೆ ಅಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./19
ಅನ್ನ ಉದಕದ ದೆಸೆಯಿಂದ ನಿದ್ರೆ, ನಿದ್ರೆಯಿಂದ ಕಾಮ,
ಕಾಮದಿಂದ ಅಜ್ಞಾನ, ಅಜ್ಞಾನದಿಂದ ಕರ್ಮ,
ಕರ್ಮದಿಂದ ಮಾಯಾತಮಂಧಕ್ಕೆ ಗುರಿ.
ಮಾಯಾತಮಂಧದಿಂದ ಮರಣಕ್ಕೆ ಗುರಿಮಾಡಿ
ಸತ್ತು ಸತ್ತು ಹುಟ್ಟಿಸಿ, ಎನ್ನ ಭವಾರಣ್ಯದೊಳಗೆ
ಕಣ್ಗಾಣದಂಧಕನಂತೆ ತಿರುವಿ ತಿರುವಿ ಕಾಡುತಿರ್ದೆಯಲ್ಲ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./20
ಅನ್ನದ ಗೊಡವಿಲ್ಲದಾತಂಗೆ ಆರಂಭದ ಗೊಡವಿಯುಂಟೇ ?
ಖೇಚರ ಪವನಸಾಧಕಂಗೆ
ಭೂಚರದಲಡಿಯಿಡುವ ಬಯಕೆಯುಂಟೇ ?
ವಜ್ರಾಂಗಿಯ ತೊಟ್ಟಿಪ್ಪಾತಂಗೆ ಬಾಣದ ಭಯವುಂಟೇನಯ್ಯಾ ?
ನಿರ್ಮಾಯಕಂಗೆ ಮಾಯದ ಹಂಗುಂಟೇ ?
ನಿವ್ರ್ಯಸನಿಗೆ ವ್ಯಸನದ ಹಂಗುಂಟೇ ?
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥನೊಳು
ಬೆರೆದಾತಂಗೆ ಅನ್ಯದೈವದ ಹಂಗುಂಟೇ ? /21
ಅನ್ಯದೇಹಿಯೆಂದು ಎನ್ನ ಕಳೆಯದಿರು,
ಕರ್ಮದೇಹಿಯೆಂದು ಕೈಯ ಬಿಡದಿರು,
ಮರ್ತ್ಯನೆಂದು ಮಾಯಕ್ಕೆ ಗುರಿಮಾಡದಿರು,
ಮದಡನೆಂದು ಮನವಿಕಾರಕ್ಕೆ ಗುರಿಮಾಡದಿರು,
ಅಜ್ಞಾನಿಯೆಂದು ಅಹಂಕಾರಕ್ಕೆ ಗುರಿಮಾಡದಿರು,
ಮದದೇಹಿಯೆಂದು ಮಾಯಾತಮಂಧಕ್ಕೆ ಗುರಿಮಾಡದಿರು,
ಜಲ ಅಗ್ನಿಯ ಗುಣವಿರಲೊ ಎನ್ನಯ್ಯ.
ಅದು ಎಂತೆಂದೊಡೆ : ಜಲ ಹರಿವೆಡೆಯಲ್ಲಿ ಹೊಲಗೇರಿ ಉತ್ತಮಗೇರಿ
ಅಮೇಧ್ಯದಗೇರಿಯೆಂದು ನೋಡಿ ಹರಿವುದೆ ?
ಹರಿಯದು ; ಅದಕ್ಕೆಲ್ಲ ಸಮ.
ಅಗ್ನಿ ಶ್ವಪಚರ ಮನೆ, ಗೃಹಸ್ಥರ ಮನೆ, ಬೇಡ ಮಾದಿಗ
ಹದಿನೆಂಟು ಜಾತಿ ಎಂದು ಅಡಿಯಿಡಲು ಮುನಿವುದೆ ? ಮುನಿಯದು.
ಎನ್ನ ಅನ್ಯದೇಹಿಯೆಂದು, ಕರ್ಮದೇಹಿಯೆಂದು,
ಮರ್ತ್ಯದೇಹಿಯೆಂದು, ಮದಡದೇಹಿಯೆಂದು,
ಅಜ್ಞಾನಿಯೆಂದು ಕಳೆದಡೆ ಹುರುಳಿಲ್ಲ.
ಅತ್ತಿಯಹಣ್ಣು ಬಿಚ್ಚಿದರೆ ಬಲು ಹುಳು.
ಎನ್ನ ಚಿತ್ತದೊಳವಗುಣವ ವಿಸ್ತರಿಸಿದರೇನು ? ಫಲವಿಲ್ಲ.
ನೋಡದೆ ಕಾಡದೆ ಮಾಯಾತಮವಕಳೆದು ಜ್ಞಾನಜ್ಯೋತಿಯ ತೀವು.
ಎನ್ನ ನಿಮ್ಮಯ ಶರಣರು
ಚೆನ್ನಬಸವಣ್ಣ ಅಕ್ಕನಾಗಮ್ಮ ನೀಲಲೋಚನೆ ನಿಂಬವ್ವೆ
ಮಹಾದೇವಿ ಮುಕ್ತಾಯಕ್ಕ ಅಜಗಣ್ಣ ಅಂಬಿಗರ ಚೌಡಯ್ಯ
ಕಲಿಕೇತಯ್ಯ ಬ್ರಹ್ಮಯ್ಯ ನಿರ್ಲಜ್ಜಶಾಂತಯ್ಯ
ನಿಜಗುಣದೇವರು ಸಿದ್ಧರಾಮಿತಂದೆ
ಮರುಳಶಂಕರದೇವರು ಕಿನ್ನರಿಬ್ರಹ್ಮಯ್ಯ
ವೀರಗಂಟೆಯ ಮಡಿವಾಳಯ್ಯ ಮೇದರ ಕೇತಯ್ಯಗಳು
ಅರವತ್ತುಮೂವರು ಪುರಾತನರು ತೇರಸರು
ಷೋಡಶರು ದಶಗಣರು ಮುಖ್ಯವಾದೈನೂರಾ ಎಪ್ಪತ್ತು
ಅಮರಗಣಂಗಳ
ಆಳಿನಾಳಿನಾ ಮನೆಯ ಕೀಳಾಳ ಮಾಡಿ
ಅವರ ಲೆಂಕನಾಗಿ, ಅವರುಟ್ಟ ಮೈಲಿಗೆ, ಉಗುಳ್ದ ತಾಂಬೂಲ
ಪಾದೋದಕ, ಅವರೊಕ್ಕ ಪ್ರಸಾದಕೆನ್ನ ಯೋಗ್ಯನಮಾಡೆ
ಏಳೇಳು ಜನ್ಮದಲ್ಲಿ ಬರುವೆ ಕಂಡಾ,
ಭವವಿರಹಿತ ತಂದೆ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./22
ಅನ್ಯವಿಷಯ ಪಂಚೇಂದ್ರಿಯವೆಂದೆಂಬ
ಕುನ್ನಿಗಳ ಬಲಿಯೊಳಗಿರಿಸಬೇಡವೊ ಗುರುವೆ.
ಪದ : ಹರಗುರು ನಿಂದೆಕಾರರ ಕಾವ್ಯಕಥೆಗಳ
ಒರೆದು ಕೇಳುವರೆನ್ನವೆರಡು ಕಿವಿಯು ತಾ
ಹಿಡಿದಾಕಾರಕೆ ಬಾಯದೆರದು ರಂಜಿಸುತಲಿಹೆ
ಪರಮಾತ್ಮನ ಶ್ರುತಿ ಮಂತ್ರಾಗಮಂಗಳ
ವಿರಚಿಸಲೊಲ್ಲದೆ ಕುರಿಯ ದನಿಗೆ ಹುಲಿ
ಶರೀರವನಳಿದಂತೆ ಕಣರ್ೆಂದ್ರಿಯ ದೇವ. |1|
ಅನ್ಯಗೋಷ್ಠಿಯ ಪರನಿಂದ್ಯಗಳ ನುಡಿವರೆ
ಎನ್ನಾ ನಾಲಗೆ ಹರಿವುದುರುಗನಂತೆ
`ಓನ್ನಮಃಶಿವಾಯ’ಯೆಂಬಮಂತ್ರವ ನೆನೆಯದಲ್ಲಿ
ತನ್ನ ತಾ ಹಿಂದಕ್ಕೆ ಸೇದುತಲಿದೆ ಕರ್ಮಿ
ಗಿನ್ನೆಂತೊ ಹೇಳಾ ಗುರುವೆ ಮಾಂಸದ ಸವಿಗೆ ವಿೂನು
ತನ್ನ ದೇಹವನಳಿದಂತೆ ಜಿಹ್ವೇಂದ್ರಿಯವು. |2|
ಪರಧನ ಪರಸ್ತ್ರೀಯರಾಟ ನೋಟಗಳನು
ನೆರೆ ನೋಡುವರೆನ್ನ ನಯನ ತಿಗುರಿಯಂತೆ
ತಿರುಗುತಲಿಗೆ ಸದಾ ಅನ್ಯಾಯವನಾಶ್ರಯಿಸಿ
ಹರಗುರುಲಿಂಗ ಪೂಜೆಗೆ ಅನುಮಿಷದೃಷ್ಟಿ
ಇರಿಸಿ ನೋಡದೆ ತಾ ಪತಂಗ ಹಾರಿಯೆ ಬಂದು
ಉರಿಯೊಳು ಮಡಿದಂತೆ ನಯನೇಂದ್ರಿಯ ದೇವಾ. |3|
ಜೂಜು ಪಗಡಿ ಲೆತ್ತನಾಡಿ ಪರನಾರಿಯರ
ವಾಜಿಯಿಂದಲಿ ಹಿಡಿದೆಳೆವರೆ ದ್ವಿಹಸ್ತ
ರಾಜಿಸುತಿದೆ ರಮ್ಯವಾಗಿ, ಹರಗುರುಲಿಂಗದ
ಪೂಜೆಯ ಮಾಡೇನೆಂದರೆ ಕೈ ಏಳದೆ ಕರ್ಮ
ಭಾಜನದೊಳು ಸಿಲ್ಕಿ ಸ್ಪಶರ್ೆಂದ್ರದಿ ಕರಿ
ತಾ ಜೀವಮೃತವಾದಂತೆ ತ್ವಗಿಂದ್ರಿಯ. |4|
ಪೂಸಿಪ ಗಂಧ ಚಂದನ ಪರಿಮಳಗಳ
ವಾಸಿಸುವಂತೆ ಲಿಂಗಾನುಭವದ ಜ್ಞಾನ
ವಾಸನೆಯರಿಯದೆ ಸಂಪಿಗೆಗಳಿ ಮಡಿದಂದದಿ
ನಾಸಿಕೇಂದ್ರಿಯ ಇವೈದರಿಂದಲಿ ಮಹಾ
ದೋಷಕೀಡಾದೆ ಪಡುವಿಡಿ ಸಿದ್ಧಮ
ಲ್ಲೇಶಾ ಎನ್ನನು ಕಾಯಿದು ರಕ್ಷಿಸು ಕರುಣಾಂಬುವೆ. |5|/23
ಅಪ್ಪು ಆಕಾಶವ ಬೆರಸಲು ಶಬ್ದ ಹುಟ್ಟಿತ್ತು.
ಅಪ್ಪು ಅಪ್ಪುವ ಬೆರಸಲು ರಸ ಹುಟ್ಟಿತ್ತು.
ಅಪ್ಪು ವಾಯುವ ಬೆರಸಲು ಸ್ಪರುಶನ ಹುಟ್ಟಿತ್ತು.
ಅಪ್ಪು ಅಗ್ನಿಯ ಬೆರಸಲು ರೂಪ ಹುಟ್ಟಿತ್ತು.
ಅಪ್ಪು ಪೃಥ್ವಿಯ ಬೆರಸಲು ಗಂಧ ಹುಟ್ಚಿತ್ತು.
ಇಂತಿವು ಪಂಚವಿಷಯಂಗಳುತ್ಪತ್ತಿಯೆಂದು ಹೇಳಲ್ಪಟ್ಟಿತ್ತಯ್ಯ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./24
ಅಪ್ಪುವಿನೊಳಗಣ ಅಪ್ಪು ರಸ.
ಅಪ್ಪುವಿನೊಳಗಣ ಆಕಾಶ ಶಬ್ದ.
ಅಪ್ಪುವಿನೊಳಗಣ ವಾಯು ಸ್ಪರುಶನ.
ಅಪ್ಪುವಿನೊಳಗಣ ಅಗ್ನಿ ರೂಪ.
ಅಪ್ಪುವಿನೊಳಗಣ ಪೃಥ್ವಿ ಗಂಧ.
ಇಂತಿವು ಅಪ್ಪುವಿನ ಪಂಚಕೃತಿಯೆಂದು ಹೇಳಲ್ಪಟ್ಟಿತ್ತಯ್ಯ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./25
ಅರಣ್ಯದೊಳಗೊಂದು ಮನೆಯ ಕಟ್ಟಿದರೆ
ಹುಲಿ ರಕ್ಷಿ ಕರಿ ಭಲ್ಲೂಕಂಗಳ ಹಾವಳಿಯ ನೋಡಾ.
ಹಾವಳಿಗಂಜಿ ಮನೆಯೊಡೆಯ ಅಳಲಿ ಬಳಲುತ್ತೈದಾನೆ.
ಇದೇನು ಚೋದ್ಯ ಹೇಳಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ ! /26
ಅರಿಗಳಾರುಮಂದಿ ಬರಸಿಡಿಲಂತೆ
ಎರಗಿ ಎರಗಿ ಕಾಡುತಿವೆ.
ಸಿಡಿಲಬ್ಬರ ಅರಗಳಿಗೆಯಾದರೆ,
ಅರಿಷಡುವರ್ಗದಬ್ಬರ ವೇಳೆವೇಳೆಗೆ,
ಬಗೆಯ ನೆನದು ಕಾಡುತಿವೆ.
ಅರಿಗಳನುರುವಿ ಪರಮಪದ[ದ]ಲಿಪ್ಪ ಶರಣರ
ದರುಶನ ಸ್ಪರುಶನದಿಂದಲೆನ್ನ ಬದುಕಿಸಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./27
ಅರಿಷಡುವರ್ಗವೆಂದೆಂಬ ಕರ್ಮಿಗಳ ಬಲಿಯೊಳಿಟ್ಟೆನ್ನನಗಲಿದೆ.
ಅಗಲಿದರೆ, ನಾ ಗೊರಲೆಯ ಹುತ್ತಕ್ಕೆ ಉರಗ ನಡೆಗೊಂಡಂತೆ,
ಅರಸಿಲ್ಲದ ರಾಜ್ಯಕ್ಕೆ ಚೋರರ ಹಾವಳಿಯಂತೆ,
ನೀ ಪಡೆದೆ ತನುವಿಂಗೆ ನೀನನ್ಯನಾಗಿ ಬರಿಯ
ದುರಿತಭ್ರಮೆಗೆನ್ನನಿಟ್ಟು ಬಿಡುಬೀಸಿ ಕಾಡುತ್ತಿದ್ದೆಯಲ್ಲ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./28
ಅರಿಷಡುವರ್ಗವೆಂಬ ಕರ್ಮಿಯ ಬಲಿಯೊಳಿಂಬು
ಗುರು ನೀ ಮಾಡಲಿಬೇಡ ಗುಪ್ತದಿಂದಲೆನ್ನ ಕೂಡೆ.
ಪದ :ಕಾಮ ಕ್ರೋಧ ಲೋಭ ಮೋಹ ಮದ ಮತ್ಸರದ ಡಂಬು
ಈ ಮಹಾಬಲೆಯೊಳಿಟ್ಟು ನೀ ಮುನ್ನಗಲಿದೆ ದಿಟ
ತಾಮಸಗುಣವನಳಿದು ಆ ಮಹಾಜ್ಞಾನದೊಳುಳಿದು
ಭೂಮಿಯೊಳಗಿಪ್ಪ ಗಣಸ್ತೋಮದ ಪದಕ್ಕೆ ನಮೋಯೆಂದು ಶರಣು. |1|
ಕರಿಯ ಸೊಂಡಿಲ ಮುರಿದು ವ್ಯಾಘ್ರನ ಶಿರವನರಿದು
ಉರಗನ ಹೆಡೆಯ ಮೆಟ್ಟಿ ಸಿಂಹನ ಉರಿಯೊಳಿಟ್ಟು
ಮರೆಯ ಕಣ್ಣ ಕಳದು ಭಲ್ಲೂಕನ ಕರದು
ಇರಬಲ್ಲಡಾತನೆ ಸತ್ಯ ಈ ಭುವನದೊಳಗೆ ನಿತ್ಯ. |2|
ಪರಮನ ಲಿಂಗಮುಖವಾಗಿ ಸತ್ಯಸಂಗ
ಶರಣ ನಿರ್ಮಲದೇಹಿ ಸರ್ವಗಣಕೆಲ್ಲ ಮೋಹಿ
ಗುರು ಪಡುವಿಡಿ ಸಿದ್ಧವರಮಲ್ಲಿನಾಥನೊಳಿರ್ದು
ಹೆರೆಹಿಂಗದಿಪ್ಪ ಜಾಣ ಮೂರುಲೋಕಪ್ರವೀಣ. |3|/29
ಅರ್ಥ ಪ್ರಾಣ ಅಭಿಮಾನವ ಗುರುಲಿಂಗಜಂಗಮಕ್ಕೆ ಸವೆದು,
ಸಂಸಾರಬಂಧನವ ಕಳೆದ ಸಂಸಾರಿಗಳಿಗೆ ಸದ್ಭಕ್ತರಿಗೆ
ಸಂಸಾರಿಗಳೆನಬಹುದೆ ? ಎನಲಾಗದು.
ಅದು ಎಂತೆಂದರೆ : ಚಂದ್ರಮನ ಕಿರಣದೊಳು ಬಿಸಿಯುಂಟೇನಯ್ಯಾ ?
ಪರಮಾತ್ಮನ ಬೆರೆದ ನಿಬ್ಬೆರಗಿ[ನ] ಶರಣರಿಗೆ ಸಂಸಾರ ಉಂಟೇನಯ್ಯಾ ?
ತನುಸಂಸಾರಂಭವ ಗುರುವಿಂಗಿತ್ತು,
ಮನಸಂಸಾರಂಭವ ಲಿಂಗಕ್ಕಿತ್ತು , ಧನಸಂಸಾರಂಭವ ಜಂಗಮಕ್ಕಿತ್ತು
ನಿಃಸಂಸಾರಿಯಾಗಿಪ್ಪ
ಶರಣ ಬಸವಣ್ಣ ಚೆನ್ನಬಸವಣ್ಣ ಪ್ರಭುರಾಯ ಮುಖ್ಯವಾದ
ಪ್ರಮಥಗಣಂಗಳ ಪಾದಕ್ಕೆ ನಮೋ ನಮೋ ಎಂಬೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./30
ಅಲೆಯ ಮನೆಯೊಳಗಣ ಕಿಚ್ಚು ಅಲೆದಾಡದ ಮುನ್ನ,
ಊರ ಮುಂದೆ ನಾಲ್ವರು ಸತ್ತು ಒಳಗೆ ಬೇವುದ ಕಂಡೆ.
ಊರು ಬೆಂದು, ಕಿಚ್ಚಿನ ಊನ್ಯವ ಕೇಳಬಂದ ರಕ್ಷಿ,
ಹುಲಿಯನೇರಿಕೊಂಡು ಕಳೆದುಳಿದುದಕ್ಕೆ ತಾನೊಡತಿಯಾಗಿ
ಊರುಂಬಳಿಯನುಂಬುದ ಕಂಡೆ.
ಅತ್ತುದೊಂದಲ್ಲದೆ ಹೆಣ ಬಂದು ಕಚ್ಚದಿದೇನು
ಚೋದ್ಯದ ದುಃಖ ಹೇಳಾ !
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./31
ಅಷ್ಟತನುಕೋಣೆಯ ಅಷ್ಟಾತ್ಮದ ನಡುವೆ ಕಟ್ಟಿಪ್ಪವೆಂಟಾನೆಯ
ಭೂಮಿಯಾಕಾಶಕ್ಕೆ ಬೆಳೆದಿಪ್ಪ ಒಂಟಿ ನುಂಗಿ,
ಉಗುಳಲಾರದಿಪ್ಪುದಿದೇನು ಚೋದ್ಯವೋ !
ಒಂಟೆಯ ತಲೆಯಲ್ಲಿ ಉರಿಲಿಂಗ ಹುಟ್ಟಿ,
ಎಂಟಾನೆಯ ಸುಟ್ಟು, ಕಂಟಕಂಗಳ ಗೆಲಿದಿಪ್ಪ
ಶರಣರ ಚರಣದರುಶನದಿಂದಲೆನ್ನ ಭವ
ಹಿಂಗುವಂತೆ[ಮಾಡು] ಭವವಿರಹಿತ ತಂದೆ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./32
ಅಷ್ಟಾವರಣದಲ್ಲಿ ನೈಷ್ಠೆವಾರಿಯಾಗದನ್ನಕ್ಕರ
ಭಕ್ತಿಸ್ಥಲವೆಂತು ಅಳವಡುವುದಯ್ಯಾ !
ಅಷ್ಟಾವರಣದಲ್ಲಿ ನೈಷ್ಠೆವಾರಿಯಾಗದನ್ನಕ್ಕರ
ಮಹೇಶ್ವರಸ್ಥಲವೆಂತು ಅಳವಡುವುದಯ್ಯಾ !
ಅಷ್ಟಾವರಣದಲ್ಲಿ ನೈಷ್ಠೆವಾರಿಯಾಗದನ್ನಕ್ಕರ
ಪ್ರಸಾದಿಸ್ಥಲವೆಂತು ಅಳವಡುವುದಯ್ಯಾ !
ಅಷ್ಟಾವರಣದಲ್ಲಿ ನೈಷ್ಠೆವಾರಿಯಾಗದನ್ನಕ್ಕರ
ಪ್ರಾಣಲಿಂಗಿಸ್ಥಲವೆಂತು ಅಳವಡುವುದಯ್ಯಾ
ಅಷ್ಟಾವರಣದಲ್ಲಿ ನೈಷ್ಠೆವಾರಿಯಾಗದನ್ನಕ್ಕರ
ಶರಣಸ್ಥಲವೆಂತು ಅಳವಡುವುದಯ್ಯಾ !
ಅಷ್ಟಾವರಣದಲ್ಲಿ ನೈಷ್ಠೆವಾರಿಯಾಗದನ್ನಕ್ಕರ
ಐಕ್ಯಸ್ಥಲವೆಂತು ಅಳವಡುವುದಯ್ಯಾ !
ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯಸ್ಥಲವೆಂಬ
ಷಡುಸ್ಥಲಕ್ಕೆ ಅಷ್ಟಾವರಣವೆ ಮುಖ್ಯ ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./33
ಅಹೋ ನಿಲ್ಲಿ ನಿಲ್ಲಿ ವ್ಯಸನಗಳಿರಾ !
ಬಲ್ಲೆ ಬಲ್ಲೆ ನಿಮ್ಮ ಗುಣಂಗಳ.
ಮಲ್ಲರ ಕಾಳಗದ ನಡುವಿನ ಶಿಶುವಿನಂತೆ,
ಎನ್ನ ತುಳಿದೇನೆಂಬಿರಿ.
ಬಿಲ್ಲು ಬಾಣದ ನಡುವಿನ ಹುಲಿಯಂತೆ
ಎನ್ನ ನಿಲಿಸೇನೆಂಬಿರಿ.
ಎಂದರೆ ನಿಮ್ಮ ಹವಣಿಕೆ ಬೇರೆ, ಎನ್ನ ಹವಣಿಕೆ ಬೇರೆ.
ಅದು ಹೇಗೆಂದಡೆ : ಎನ್ನ ಹವಣಿಕೆ ಶಿವಜ್ಞಾನಾಗ್ನಿಯಿಂದ ನಿಮ್ಮನುರುವಿ
ನಿವ್ರ್ಯಸನಿಯಾದೇನೆಂಬೆ ;
ನಿಮ್ಮ ಹವಣಿಕೆ ಎನ್ನ ಸುಟ್ಟು ಸೂರೆಮಾಡುವೆನೆಂಬಿರಿಯೆಂದರೆ
ನಿಮ್ಮದು ಅನ್ಯದ ಹಾದಿ, ಎನ್ನದು ಪುಣ್ಯದ ಹಾದಿ.
ಎನ್ನ ನಿಮ್ಮ ಹಾದಿಯ ನಡುಮಧ್ಯದಲ್ಲಿಪ್ಪ
ಮನೋಮೂರ್ತಿಮಹಾಲಿಂಗ ಮಾಡಿದಂತೆ ಆಗುವೆ,
ಆಡಿಸಿದಂತೆ ಆಡುವೆ, ನಡೆಸಿದಂತೆ ನಡೆವೆ,
ನುಡಿಸಿದಂತೆ ನುಡಿವೆ, ಕೆಡಸಿದಂತೆ ಕೆಡವೆನೈ ; ಇನ್ನಂಜೆ.
ಘವೈದ್ಯನಘೆ ನಂಬಿ ಸೇವಿಸಿದರೆ ವ್ಯಾಧಿ ಪರಿಹಾರವಾಗುವುದು ;
ಮಂತ್ರವ ನಂಬಿ ಜಪಿಸಿದರೆ ಭೂತ ಪ್ರೇತಗಳ ಭಯ ಪರಿಹಾರ.
ಹಡಗವ ನಂಬಿದವರು ಕಡಲವ ದಾಟುವರು.
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವಿನ
ನಂಬಿದವರು ಭವಸಾಗರವ ದಾಟುವರು./34
ಆಕಾರವಿಲ್ಲದಂದು
ನಿರಾಕಾರದ ಮರೆಯಲ್ಲಿ ಇದ್ದೆಯಯ್ಯಾ.
ನಿರಾಕಾರದ ಮರೆಯಿಲ್ಲದಂದು,
ಸ್ವಯಪರದ ಮರೆಯಲ್ಲಿದ್ದೆ ಅಯ್ಯಾ.
ಸ್ವಯಪರದ ಮರೆಯಿಲ್ಲದಂದು,
ನೀನೆ ನೀನಾಗಿ ಜ್ಞಾನಪರನಾಗಿಯಿದ್ದೆ ಅಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./35
ಆಕಾಶದೊಳಗಣ ಆಕಾಶ ಜ್ಞಾನ.
ಆಕಾಶದೊಳಗಣ ವಾಯು ಮನಸ್ಸು.
ಆಕಾಶದೊಳಗಣ ಅಗ್ನಿ ಅಹಂಕಾರ.
ಆಕಾಶದೊಳಗಣ ಅಪ್ಪು ಬುದ್ಧಿ.
ಆಕಾಶದೊಳಗಣ ಪೃಥ್ವಿ ಚಿತ್ತ.
ಇಂತಿವು ಆಕಾಶದ ಪಂಚಶ್ರುತಿಯೆಂದು ಹೇಳಲ್ಪಟ್ಟತ್ತಯ್ಯ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./36
ಆದಿ ಇದ್ದಂದು ನೀನೆ, ಆದಿ ಇಲ್ಲದಂದು ನೀನೆ ;
ಅನಾದಿ ಇದ್ದಂದು ನೀನೆ, ಅನಾದಿ ಇಲ್ಲದಂದು ನೀನೆ ;
ನಾದ ಬಿಂದು ಕಳೆ ಇದ್ದಂದು ನೀನೆ, ಅವು ಇಲ್ಲದಂದು ನೀನೆ ;
ಸಾವಯವ ನಿರವಯವವಿದ್ದಂದು ನೀನೆ, ಅವು ಇಲ್ಲದಂದು ನೀನೆ ;
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./37
ಆನೆಯ ನುಂಗಿದ ಹುಲಿ, ಹುಲಿಯ ನುಂಗಿದ ಸರ್ಪ,
ಸರ್ಪನ ನುಂಗಿದ ಸಿಂಹ, ಸಿಂಹನ ನುಂಗಿದ ಮರೆ,
ಮರೆಯ ನುಂಗಿದ ಭಲ್ಲೂಕ ಇಂತಿವರು ಹಕ್ಕಿಯ ಹೊಲನಲ್ಲಿ
ತಮ್ಮ ತಮ್ಮ ವೈರತ್ವದಿಂದಲಿರುವುದಿದೇನು ಚೋದ್ಯ ಹೇಳಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./38
ಆನೆಯ ಹೆಣಕ್ಕೆ ಕೋಡಗ ಶೋಕಂಗೈವುದ ಕಂಡೆ.
ಮಾಗಿಗಂಜಿದ ಕೋಗಿಲೆ ಮರುಜೇವಣಿಗೆಯ
ಬೆಟ್ಟದೊಳಡಗುವುದ ಕಂಡೆನು.
ಸಾಗರದ ಮೇಲೆ ಹಾರುವ ಹಂಸ ಭ್ರಮರನ ಗೆಣೆವಿಡಿಯಲಿ.
ಯತಿ ಸಿದ್ಧ ಸಾಧ್ಯರೆಲ್ಲ ಸಂಸಾರಭರಿತರಾದರೇನು ಚೋದ್ಯ ಹೇಳಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ ? /39
ಆರೆ ನೀನಾರೆ ಮಾಯದ ಬಲೆಯ
ತೋರೆನ್ನ ಸಿಗಿಸಿ ನೀನಗಲಿದರೆ.
ತ್ರಿವಿಧ ಗುಣವು ತ್ರಿವಿಧ ಮಲವು
ತ್ರಿವಿಧ ತನುವು ತ್ರಿವಿಧ ಮನವು
ತ್ರಿವಿಧ ಕರಣ ತ್ರಿವಿಧ ಅಗ್ನಿಗೆನ್ನನಿಕ್ಕಿ
ಭಾವಿಸಿ ಕಾಡುತಿದೆ ನಿನ್ನ ಮಾಯ. |1|
ಪಂಚವಿಂಶವು ಪಂಚಭೂತಗಳುಪವಿ
ಪಂಚಕರ್ಮೆಂದ್ರಿಯಂಗಳ ಬಲೆಯು
ಸಂಚನಿಕ್ಕಿ ಹರಿಹಂಚ ಮಾಡಿ ಮಾಯಾ ಪ್ರ
ಪಂಚನ ಕಾಡುತಿದೆ ಗುರುವೆ. |2|
ಹೊನ್ನಾಗಿ ಚರಿಸಿ ಹೆಣ್ಣಾಗಿ ಸುಳಿದು
ಮಣ್ಣಾಗಿ ನಿಂದು ಮಾಯಾರಕ್ಕಸಿಯು
ಕಣ್ಣಿಂದ ನೋಡಿ ಕಾಲ್ನೆಡಿಸಿ ಅಜಹರಿಸುರರ
ಬಣ್ಣಗುಂದಿಸಿ ಕಾಡುತಿದೆ ಗುರುವೆ. |3|
ಪಶುವಿನ ಮುಂದೆ ಗ್ರಾಸವ ಚೆಲ್ಲಲದು
ಹಸುರೆಂದು ಆಸೆಗೈವಂತೆ ಮಾಯಾ
ರಸ ವಿಷಯ ಅಲ್ಪಸುಖಕೆನ್ನ ಗುರಿಮಾಡಿ
ವಿಷಕಂಠ ನೀನಗಲಿದೆ ಗುರುವೆ. |4|
ಪರುಷಕೆ ಪಾಷಾಣವನೊತ್ತೆಯಿಡುವಂತೆ
ಶರೀರಮಾಯೆಗೆ ಎನ್ನ ಗುರಿ ಮಾಡಿ
ಹರ ನೀನಗಲದಿರು
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. |5|/40
ಆಶೆಯಾಮಿಷವೆಂಬ ಮಾಯಾಪಾಶಕೆನ್ನ ಗುರಿಮಾಡಿ ನೀ ಸಿಕ್ಕದೆ
ನಿರ್ಮಾಯನಾಗಿ ಮಾಯಕದ ಬಲೆಯೊಳಿಟ್ಟೆನ್ನ.
ಅದು ಎಂತೆಂದರೆ : ನೆನೆವ ಮನಕಾಸೆಯನೆ ತೋರಿದೆ,
ನೋಡುವ ಕಂಗಳಿಗಾಸೆಯನೆ ನೋಡಿಸಿದೆ,
ನುಡಿವ ಜಿಹ್ವೆಗೆ ಆಸೆಯನೆ ನುಡಿಸಿದೆ,
ಕೇಳುವ ಕರ್ಣಕೆ ಆಸೆಯನೆ ಕೇಳಿಸಿದೆ,
ವಾಸಿಸುವ ನಾಸಿಕಕೆ ಆಸೆಯನೆ ವಾಸಿಸಿದೆ,
ಮುಟ್ಟುವ ಹಸ್ತಕ್ಕೆ ಆಸೆಯನೆ ಮುಟ್ಟಿಸಿದೆ.
ಆಸೆಯನೆ ಕಳೆದು, ನಿರಾಸೆಯಾಗಿಪ್ಪ ಶರಣರ ಪಾದಕ್ಕೆ
ನಮೋ ನಮೋ ಎಂಬೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./41
ಆಸತ್ತೆ ಸಂಸಾರಸಂಗಕ್ಕೆ, ಬೇಸತ್ತೆ ಸಂಸಾರಸಂಗಕ್ಕೆ.
ಸಂಸಾರಸಂಗದಿಂದ ಓಸರಿಸಿ ಒಯ್ಯನೆ ಕಂದಿ ಕುಂದಿ,
ಭವಗಿರಿಯ ಸುತ್ತುತ್ತಿದ್ದೆನಯ್ಯಾ.
ಅಯ್ಯಾ, ಅಯ್ಯಾ ಎಂದು ಒಯ್ಯನೆ ಒದರಿದರೆ
`ಓ’ ಎನ್ನಲೊಲ್ಲೇಕೆಲೊ ಅಯ್ಯ ?
ನೀ ಪಡೆದ ಸಂಸಾರ ಸುಖ ದುಃಖ, ನೀನೆ ಬೇಗೆಯನಿಕ್ಕಿ,
ನೀನೊಲ್ಲೆನೆಂದರೆ ನಾ ಬಿಡೆ, ನಾ ಬಿಡೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./42
ಆಸೆ ಮಾಡದಿರು ಅಧಮ ಚಾಂಡಾಲಿ ನರರಿಂಗೆ.
ಆಸೆಗೈಯದಿರು
ಹೊನ್ನು ಹೆಣ್ಣು ಮಣ್ಣಿನ ಮದದಮಲು ತಲೆಗೇರಿದ ಪಿಸುಣಿ ಮಾನವರ.
ಆಸೆಗೈಯದಿರು ಪಾಪಿ ಮನವೆ.
ಆಸೆಗೈ ಆಸೆಗೈ ಇನ್ನೊಮ್ಮೆ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ
ಸಮುದ್ರವನಾಸೆಗೈದರೆ ಹವಳ ಮುತ್ತನುಗಿವುದು./43
ಆಸೆ ಮಾಡದಿರು ಪರರಿಗೆ ಕೇಳು ಮನವೆ
ದೋಷರಹಿತಲಿಂಗವಲ್ಲದನ್ಯರಿಗೆ ದಯವೆಂದು.
ಪದ : ಜಲವಿಲ್ಲದ ಕೆರೆಗೆ ತುರು ಬಂದು ಹಿಂದಿರುಗುವಂತೆ
ಫಲವಿಲ್ಲದ ಮರಕೆ ಗಿಣಿವಿಂಡು ಮುಸುಕಿದಂತೆ
ನಳಿನವಿಲ್ಲದ ಕೊಳಕೆರಗಿದಳಿಚರದಂತೆ
ಮಲಹರನ ಭಕ್ತಿಜ್ಞಾನವೈರಾಗ್ಯವಿಲ್ಲದವರಿಗೆ |1|
ಕಾಮಧೇನಲ್ಲದೆ ಸಾದಾಧರೆಯ ಗೋವುಗಳು [ಪಂ
ಚಾಮೃತವನೀಯಬಲ್ಲುದೆ ? ಕಲ್ಪವೃಕ್ಷವಲ್ಲದೆ ಬೇವು ಸ್ವಾ
ದು ಫಲವನೀವುದೇ? ***]ಪಡುವುದೆ
ಕಾಮಾರಿಲಿಂಗವಲ್ಲದನ್ಯರಿಗೆ ದಯವೆಂದು |2|
ಕರಸೆರೆಯಲ್ಲಿ ಹಣ್ಣಿರೆ ಮರನೇರಿ ಕೊಯ್ಯುವರುಂಟೇ ?
ಪರುಷ ಮನೆಯೊಳಿರೆ ಪರರ ಹಣವ ಬೇಡಲುಂಟೇ ?
ಪರಬ್ರಹ್ಮ ಮೂಲವೃಕ್ಷ ಶರೀರದೊಳಿರೆ ಲೋಕ
ನರರನಾಸೆಗೈವೆನೆಂಬ ಭ್ರಾಂತಿಯಾಕೆ ಮನುಜ ? |3|
ದಧಿಯ ಮಥನವ ಮಾಡೆ ಪಂಚಾಮೃತವ ಕುಡುವುದು
ಉದಕವ ಕಡೆಯಲೇನ ಕೊಡುವುದಾ ತೆರದಲ್ಲಿ
ಸುಧಾಕರ ರತ್ನಲಿಂಗ ನಿನ್ನಿದಿರಿನಲ್ಲಿರುತಿರೆ
ಅಧಮರಾದನ್ಯರಿಗೆ ಆಸೆಗೈಯಲಿಬೇಡ. |4|
ಸರ್ವರ ಮನಧರ್ಮವನರಿವ ಪರಮಾತ್ಮ ನಿನ್ನ
ಕರದೊಳಿರೆ ಅನ್ಯಸಂಗವ ಮಾಣಿಸಿ
ಗುರು ಪಡುವಿಡಿ ಸಿದ್ಧಮಲ್ಲಿನಾಥನೊಳು
ಬೆರೆದು ನಿಶ್ಚಿಂತನಾಗಿರು ಕಂಡ್ಯ ಮನವೆ. |5|/44
ಆಸೆಬದ್ಧವು ಬಿಡದು ಈ ಮನದ
ಸಾಸಿರಬಗೆಯ ಬೋಧೆಯ ಹೇಳ್ದಡೆಳ್ಳಿನಿತು.
ಪದ :ಮೋಷನ ದನಿಗೆ ಆಸೆಗೈದ ವ್ಯಾಘ್ರಬಂಧನ
ಸೂಸಲನಾಸೆಗೈದು ಮೂಷಕ ಮಡಿಯದೆ ?
ಆಸೆಮಾಡದಿರು ಪರಧನ ಪರಸ್ತ್ರೀಯರಿಗೆ
ರೋಷಧಿಪತಿಯ ಬಾಧೆಯಿದೆಯೆನೆ ನಾಚದೆ. |1|
ದಶದಿಕ್ಕು ಆನೆ ಸೇನೆ ಹೊನ್ನು ಭಂಡಾರ ಕೈ
ವಶವಾಗಿ ಇದು ಸಾಲದೆಂಬುದೀ ಆಸೆಯೆಂಬ
ಹಸುಗೂಸನೆತ್ತಲು ರೋಷವೆಂಬ ತಾಯಿ ಸುಳಿದು
ವಸುಧೆಯ ಜನರ ತಿಂದು ತೇಗಿ ಕಾಡುವ ಮನದ |2|
ಆಸೆಯನಳಿದು ನಿರಾಸೆಯಾಗಿಹರೆ ಶರಣ-
ರಾ ಶಿಶುವಾಗೆನ್ನನಿರಿಸು ಕಂಡೆಲೆ ಜಗದೀಶ
ಗುರು ಪಡುವಿಡಿ ಸಿದ್ಧಮಲ್ಲಿನಾಥ ನಿಮ್ಮ
ಭಾಷೆಯನಿತ್ತು ಮನವ ಸೆರೆಯ ಹಿಡಿಯಯ್ಯ ದೇವ. |3|/45
ಆಸೆಯಾಗಿ ನಿಂದು, ರೋಷವಾಗಿ ಕೊಂದು,
ಮೋಸವಾಗಿ ತಿಂದು, ವೇಷವಾಗಿ ಸುಳಿದು,
ಭಾಷೆಯಾಗಿ ನಿಂದು, ಪಾಶವಾಗಿ ಕಟ್ಟಿ,
ಶೇಷವಾಗಿ ಕರಗಿ, ವಿೂಸಲಕ್ಷಿಯಾಗಿ
ಜಗವ ಮರುಳುಮಾಡಿ ಕಾಡುತಿದ್ದುದು ನಿಮ್ಮ ಮಾಯದ ದಿಗಡ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./46
ಆಸೆಯೆಂಬುದು ಆರಾರನು ಕೆಡಿಸದಯ್ಯ ?
ಸೀಮೆ ಭೂಮಿಗಾಸೆಗೈದು ಮಡಿದ ರಾಜರ
ಹೇಳೆಂದರೊಂದು ಕೋಟ್ಯಾನುಕೋಟಿ.
ಹೊನ್ನು ಹೆಣ್ಣಿಂಗೆ ಆಸೆಗೈದು ಮಡಿದವರ
ಹೇಳೆಂದರೊಂದು ಕೋಟ್ಯಾನುಕೋಟಿ.
ಹೆಣ್ಣು ವಿಷಯಕ್ಕೆ ಆಸೆಗೈದು ಮಡಿದವರೊಂದು ಕೋಟ್ಯಾನುಕೋಟಿ.
ಹೊನ್ನು ಹೆಣ್ಣು ಮಣ್ಣಿಗೆ ಆಸೆಗೈದು ಮಡಿದವರ ಕಾಂಬೆನಲ್ಲದೆ,
ನಿನಗಾಡಿ ನಿರಾಸಕ್ತರಾಗಿ ಸತ್ತವರನಾರನೂ ಕಾಣೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./47
ಇ[ರಿ]ವಾಕಳದೆರಡು ಕೋಡು ಧರೆಯಾಕಾಶಕ್ಕೆ ಬೆಳೆದಿಪ್ಪುದ ಕಂಡೆನು
ಆಕಳಕೊಂಬಿನ ಭಯಕೆ ರಂಭೆಯರು
ಅಮೃತವ ತೊರೆಗಿಳಿಸಲಾರದೆ
ಕರೆವ ಮಗಿಯೊಳಡಗುವುದ ಕಂಡೆನು.
ಕೊಂಬ ಮುರಿದು, ಗೋವ ತುರಿಸಿ,
ರಂಭೆಯರು ಕರೆದ ಅಮೃತವ ದಣಿಯಲುಂಡು
ನಿಸ್ಸಂಸಾರಿಯಾಗಿಪ್ಪರ ತೋರಿ ಬದುಕಿಸು
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /48
ಇಂದ್ರನ ಮೈಯ ಯೋನಿಯ ಮಾಡಿತ್ತು ಮಾಯೆ.
ಬ್ರಹ್ಮನ ತಲೆಯ ಕಳೆಯಿತ್ತು ಮಾಯೆ.
ವಿಷ್ಣುವಿನ ಕಷ್ಟಬಡಿಸಿತ್ತು ಮಾಯೆ.
ಚಂದ್ರನ ಕ್ಷಯರೋಗಿಯ ಮಾಡಿತ್ತು ಮಾಯೆ.
ರವಿಯ ಕೊಷ್ಠನ ಮಾಡಿತ್ತು ಮಾಯೆ.
ಈ ಮಾಯೆಯೆಂಬ ವಿಧಿ ಆರಾರನೂ ಕೆಡಿಸಿತ್ತು ನೋಡ,
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./49
ಇನ್ನೇವೆ ಇನ್ನೇವೆನಯ್ಯಾ ?
ಸಂಸಾರಕೂಪದ ನೆಲೆಯಿಲ್ಲದ ಜಲದೊಳು ಎನ್ನ ಕೆಡವಿದೆ.
ನೆಲೆಗಾಣದೆ ಹಲವು ದೆಸೆಗೆ ಹಂಬಲಿಸಿ
ಮುಳುಮುಳುಗಿ ಏಳುತ್ತಿದ್ದೆನಯ್ಯಾ.
`ಸಂಸಾರಕೂಪಜಲಮುಚ್ಯತೇ’ ಎಂದುದಾಗಿ
ಈ ಸಂಸಾರವೆಂಬ ಬಾವಿಯ ಜಲದೊಳು ಮುಳುಗಿರುವಂಗೆ
ದುರಿತಸಂಹರವೆಂಬ ತೊಟ್ಟಿಲಿಂಗೆ,
ಕರುಣಾಕೃಪೆಯೆಂಬ ಸೇದೆಯ ಹಗ್ಗವ ಕಟ್ಟಿ ಇಳಿವಿಟ್ಟು
ಎನ್ನನೆಳೆತೆಗೆದು ಕಾಯೊ ಕಾಯೊ ನಿಮ್ಮ ಧರ್ಮ ನಿಮ್ಮ ಧರ್ಮ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./50
ಇಷ್ಟಲಿಂಗದ ವೀರಶೈವ, ಪ್ರಾಣಲಿಂಗದ ವೀರಶೈವ,
ಭಾವಲಿಂಗದ ವೀರಶೈವ.
ತ್ರಿವಿಧ ಲಿಂಗದಲ್ಲಿ ನೈಷ್ಠೆವರಿಯಾದ ಶರಣನ ನೀವು ನೋಡಣ್ಣ.
ಇಷ್ಟಲಿಂಗವ ಕಾಯಕರದಲ್ಲಿ ಹಿಡಿದ ಮೇಲೆ
ಅನ್ಯದೈವಕೆ ತಲೆವಾಗದ ವೀರಶೈವಬೇಕು ಭಕ್ತಂಗೆ,
ಮನದ ಕೈಯಲ್ಲಿ ಪ್ರಾಣಲಿಂಗವ ಹಿಡಿದ ಮೇಲೆ
ಮಾಯಾ [ಮೋಹನಿರಸನೆಯಾಗಿ]ರುವ
ವೀರಶೈವಬೇಕು ಭಕ್ತಂಗೆ.
ಭಾವದ ಕೈಯಲ್ಲಿ ಭಾವಲಿಂಗವ ಹಿಡಿದ ಮೇಲೆ
ಪರಧನ ಪರವಧು ಪರಾನ್ನವ
ಬಯಸದ ವೀರಶೈವಬೇಕು ಭಕ್ತಂಗೆ.
ಇಂತೀ ತ್ರಿವಿಧಲಿಂಗದ ವೀರಶೈವದೊಳಿಂಬುಗೊಂಡ
ತ್ರಿಕರಣಶುದ್ಧವಾದ ತ್ರಿವಿಧಸಂಪನ್ನ ಶರಣಂಗೆ
ನಮೋ ನಮೋಯೆಂದು ಬದುಕಿದೆನು ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
ಅಂಗಸೋಂಕಿನ ಲಿಂಗತಂದೆ/51
ಇಷ್ಟಲಿಂಗವ ಮರೆದು ಬರಿಯ ಕಲ್ಲಿಗೆರಗುವ
ಭ್ರಷ್ಟಂಗಿನ್ನೆಲ್ಲಿಯ ಶಿವಾಚಾರವಯ್ಯಾ !
ಖಡ್ಗವ ಬಿಟ್ಟು ಕೋಲುವಿಡಿದು ಕಾಳಗವ ಮಾಡಿದರೆ
ತಲೆ ಹೋಗುವುದನರಿಯಾ ಮನುಜ.
ಲಿಂಗವ ಬಿಟ್ಟು ಅನ್ಯಲಿಂಗವ ಪೂಜೆಮಾಡಿದರೆ
ನರಕವೆಂಬುದನರಿಯಾ ಪಾಪಿ.
ಸಾಕ್ಷಿ :“ಇಷ್ಟಲಿಂಗೇ ಪರೇತ್ ಚ ಭಾವಾದನ್ಯತ್ರ ಗಚ್ಛತಿ |
ಸ ಕಿಲ್ಬಿಷಮವಾಪ್ನೋತಿ ಪೂಜಯನ್ ನಿಃಫಲೋ ಭವೇತ್||”
ಎಂಬ ವಚನವನರಿಯದೆ ಮುಂದುಗಾಣದನ್ಯದೈವಕೆರಗುವ
ಅಂಧಕರಿಗೆಂದೆಂದು ಭವಹಿಂಗದೆಂದಾತ ನಮ್ಮ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./52
ಉರು ಬಡತನಕ್ಕೆ ವಾಳಿ (?) ಧನಿಕನಾಗುವುದ ಕಂಡೆ.
ಧನವ ಬೇಡುವ ಧನಿಕನ ನುಂಗುವುದ ಕಂಡೆನು.
ರಾಜ್ಯ[ವ]ನಾಳೇನೆಂಬ ಅರಸು
ತೇಜಿಯ ಕಡಿವಾಣದೊಳಡಗುವುದ ಕಂಡೆ.
ಉತ್ಸಾಹವ ಬೇಡುವ ಹೆಣ್ಣು
ಉಮ್ಮತ್ತದಕಾಯೊಳಡಗಿದ್ದುದ ಕಂಡೆನು.
ವಿಶ್ವಾಸದಿಂದ ಕುಡಿದ ಅಮೃತ ವಿಷವಾಗುವುದ ಕಂಡೆನು.
ಸೇವಕ ಒಡೆಯನ ಕಾಣದೆ
ಬಟ್ಟೆಬಟ್ಟೆಯಲರಸುವುದ ಕಂಡೆನು.
ಇದೇನು ಚೋದ್ಯ ಹೇಳಾ !
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./53
ಉಳಿ ಬಾಚಿಂಗೆ ಹರಿಯದ ಕೊರಡು,
ಕೊಡಲಿ ಕುಡುಗೋಲಿಂಗೆ ಹರಿವುದೆ ?
ಪುರಾತರ ವಚನಾಮೃತವೆಂಬ ಉಳಿಯಲ್ಲಿ ಕಡಿದು
ಬಾಚಿಯಲ್ಲಿ ಕೆತ್ತಿದರೆ ನಾಚದೆ ಮನ ?
ವೇದಾಗಮವೆಂಬ ಕೊಡಲಿ ಕುಡುಗೋಲಿಂಗೆ ಹರಿವುದೆ ? ಹರಿಯದು.
ಕೊರಡುಮನ ಜರಡುಮನ ಜಾಳುಮನ ಹಾಳುಮನ
ಕೋಳುಮನ ಕುಪಿತಮನ ಸರ್ವಚಾಂಡಾಲ ಮನದ
ಮೇಳದ ಬಲೆಯೊಳು ಬಿದ್ದು ಭಂಗಬಡುತ್ತಿದ್ದೆನೈ
ನಿರ್ಭಂಗ ನಿಲರ್ೆಪ ನಿಜಗುರು ನಿಶ್ಚಿಂತ ಸ್ವಯಂಭೂ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./54
ಎಂದಾದರೂ ಸಂಸಾರದಂದುಗ ಬಿಡುದು ನೋಡಯ್ಯಾ !
ಎಂದಾದರೂ ಸಂಸಾರಬಂಧನ ಬಿಡದು ನೋಡಯ್ಯಾ !
ಎಂದಾದರೂ ಸಂಸಾರವಿಷಯ ಹಿಂಗದು ನೋಡಯ್ಯಾ !
ಸಂಸಾರದಂದುಗ ಕಳೆದು ನಿರ್ದಂದುಗನಾಗಿಪ್ಪುದು ಎಂದೊ ಎಂದೊ ?
ನಿಮ್ಮ ನೆನವು ನೆಲೆಗೊಂಬುದು ಎಂದೊ ಎಂದೊ ?
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./55
ಎನ್ನ ಪಿಂಡದೊಳು ಹೊಳೆಯುತಿಹ ಜ್ಞಾನ,
ಸೋಮ ಸೂರ್ಯರ ಪ್ರಕಾಶವ ಮೀರಿತ್ತು,
ಜಗವ ಮೀರಿತ್ತು, ಜಗದಗಲವ ಮೀರಿತ್ತು,
ಸ್ವಯಪರವ ಮೀರಿತ್ತು.
ಕಾರಣ, ಎನ್ನ ಆತ್ಮ ಸ್ವಯಜ್ಯೋತಿಯಾಗಿದ್ದೆ ಅಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./56
ಎರಡು ಹೆಸರಿನ ಮರದ
ಬೊಡ್ಡೆಯಲಾಡುವಾಲಿಯ ಮನೆ
ಏಳು ಬಗೆಯ ನಿರ್ಮಿತ,
ಹತ್ತು ಬಗೆಯ ಹರವರಿ,
ಒಂಬತ್ತು ಬಗೆಯ ಹಾದಿ.
ಆ ಮನೆಯ ಪಂಚಾಳರು ರಚಿಸಿದರು ನೋಡಾ !
ಮನೆಯೊಳಗೆ ಮಧುರದ ಪಾಕವಾಗುತಿರೆ,
ಆ ಮಧುರದ ಸವಿಗೆಟ್ಟು, ಹೊತ್ತಿ,
ಹೊಗೆ ಮನೆಯ ಸುತ್ತಿದುದ ಕಂಡು,
ಕೆಟ್ಟಡಿಗೆಯನಟ್ಟು, ಶುದ್ಧ ಮಾಡುವೆನೆಂದು,
ಹಿಂದಣ ಮನೆಯ ಸುಟ್ಟು, ಮುಂದೊಂದು ಮನೆಯ ಕಟ್ಟಿ,
ಅಂದಚೆಂದವ ನೋಡಿ,
ಆಡಿಸುತ್ತಿದ್ದ ಭೇದವ ನೀನೆ ಬಲ್ಲೆ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./57
ಎಲ್ಲಿ ನೋಡಿದರೆನ್ನಯ ಮನವಿಪ್ಪುದು.
ಜಗದಗಲದಲ್ಲಿ ನೋಡಿದರೆನ್ನ ಮನವಿಪ್ಪುದು.
ಸಪ್ತಸಾಗರದಿಂದತ್ತತ್ತವೆನ್ನಯ ಮನವಿರುತ ಚರಿಸುತಿಪ್ಪುದು.
ಸಾಕ್ಷಿ ಗ್ರಂಥ : “ಮಕಾರಂ ಮರುತರೂಪಯೋ ನಕಾರಂ ನಾಹಂ ಕೋಹಂ | (?)
ಅಕ್ಷರದ್ವಯ ಮನೋ ನಾಮ ಸರ್ವದಾ ಸಮಾಶ್ರೀತಂ ||”
ಎಂದುದಾಗಿ, ಮನವೆಂಬ ವಾಯು ಹರಿದು ಗಳಿಗೆ ಗಳಿಗೆಗೆ
ಒಂದೊಂದು ನೆನೆನೆನೆದು ಹಂಬಲಿಸಿ ಹತವಾಗುತಿದೆ.
ಮನದ ಗಂಧೆಯ ತುರುಸಿದರೆ ಸುಖವಾಗುತಿದೆ.
ಸುಖದಿಂದ ದುಃಖ, ದುಃಖದಿಂದ ಪ್ರಳಯಕ್ಕಿಕ್ಕಿ ಕೊಲ್ಲುತಿದೆ ಮನ.
ಮನವೆಂಬ ಮಾಯದ ಬಲೆಯಲೆನ್ನ ಕೆಡವದೆ ಉಳುಹಿಕೊಳ್ಳಯ್ಯ
ನಿರ್ಮಳ ನಿರ್ಮಳಾತ್ಮಕ ಜಗದಾರಾಧ್ಯ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./58
ಏನ ಹೇಳುವೆನಯ್ಯಾ ? ಸಂಸಾರಬಂಧನದಲ್ಲಿ ಕಂದಿಕುಂದಿದೆನಯ್ಯಾ.
ಅದು ಎಂತೆಂದರೆ : ಭಾನುವಿನ ಕಿರಣದಲ್ಲಿ ಬಾಡಿದ ಕಮಲದಂತಾದೆ.
ಗಾಳಿಗುಲಿವ ತರಗೆಲೆಯಂತೆ, ಸಂಸಾರವೆಂಬ ಸುಂಟರಗಾಳಿ
ಆಕಾಶಕ್ಕೆ ನೆಗವಿ, ಭೂಕಾಂತೆಗೆನ್ನಬಿಟ್ಟು,
ಕಣ್ಣು ಬಾಯೊಳು ಹುಡಿಯಂ ಹೊಯಿದು,
ಮಣ್ಣಕಾಯವ ಮಣ್ಣಿಂಗೆ ಗುರಿಮಾಡಿ ಕಾಡುತಿಪ್ಪುದೀ
ಸಂಸಾರವೆಂಬ ಹೆಮ್ಮಾರಿಯ ಬಾಯಿಗೆನ್ನನಿಕ್ಕದೆ ಕಾಯೋ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /59
ಏನು ಸುಕೃತದ ಫಲವೊ, ಅದೇನು ಪುಣ್ಯವೋ,
ಅದೇನು ಭಾಗ್ಯವೋ, ಅದೇನು ತಪಘಸಿನಘೆ ಫಲವೋ,
ಅದೇನು ಕಾರಣವಾಗಿ ಗುರುಪಾದ ದೊರೆಯಿತ್ತು.
ಗುರುಪಾದ ದರುಶನದಿಂದ ಕಿಂಕುರ್ವಾಣ ಭಯಭಕ್ತಿಯಿಂದಿರುತಿರೆ,
ಗುರು ಕರುಣಿಸಿ ಇಷ್ಟಲಿಂಗವನೆನ್ನ ಕರಕೆ ಸೇರಿಸಿ,
ಪೂರ್ವಜನ್ಮವ ಕಳೆದು ಪುನರ್ಜಾತನ ಮಾಡಿದ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ
ಗುರುವ ಮರೆದವರಿಗೆ ಇದೇ ನರಕ./60
ಏನೆಂದು ಉಪಮಿಸುವೆನಯ್ಯಾ ಶ್ರೀಪಂಚಾಕ್ಷರಿಯ !
ಏನೆಂದು ಬಣ್ಣಿಸುವೆನಯ್ಯಾ ಶ್ರೀಪಂಚಾಕ್ಷರಿಯ !
ನೆನೆವಡೆನ್ನ ಮನ ಸಾಲದು, ನುಡಿವಡೆನ್ನ ಜಿಹ್ವೆ ಸಾಲದು,
ಕೇಳುವಡೆನ್ನ ಕರ್ಣ ಸಾಲದು.
ಮನಮುಟ್ಟಿ ನೆನೆದು ಶ್ರೀ ಪಂಚಾಕ್ಷರಿಯ,
ಜಿಹ್ವೆಮುಟ್ಟಿ ಸ್ತುತಿಸಿ ಶ್ರೀಪಂಚಾಕ್ಷರಿಯ,
ಕರ್ಣಮುಟ್ಟಿ ಕೇಳಿ ಶ್ರೀಪಂಚಾಕ್ಷರಿಯ
ನಾನು ಅಡಿಗಡಿಗೆ ನಿತ್ಯಮುಕ್ತನಾಗಿದ್ದೆನು ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./61
ಏಳು ಸಮುದ್ರ ಉಕ್ಕಿ ಜಂಬೂದ್ವೀಪವ ಮುಸುಕದ ಮುನ್ನ
ಧರೆಯ ಹೊತ್ತ ಸರ್ಪ[ನ] ಫಣಿ ಉಡುಗುವುದ ಕಂಡೆ.
ಕೂರ್ಮ ಗಜ ಶಿರವಲುಗುವುದ ಕಂಡೆ.
ನಾಗಲೋಕ ದೇವಲೋಕವನೊಂದು ಕಪ್ಪೆ ನುಂಗಿ
ಏರಿಯತಡಿಯಲೊದರುವುದ ಕಂಡೆ.
ಇದೇನು ಚೋದ್ಯ ಹೇಳಾ !
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./62
ಏಳುವ್ಯಸನಂಗಳೆಂಬ ಕಾಳುವಿಷಯಕ್ಕೆನ್ನ
ಮೇಳವಿಸಿ ಕಾಡುತಿದೆ.
ಅದು ಎಂತೆಂದೊಡೆ : ವಿಪಿನದೊಳು ಹೋಗುವ ಮನುಜರ ಕಣ್ಣಿಂಗೆ
ಕೋಮಳದ ಹೂವಿನಂತಿದ್ದು ,
ಮೋಹಿಸಿ ನೆಗವಿದವರ ಹೀರುವ ಪಾಪಿಕೂಸಿನಂತೆ,
ಎನ್ನ ಹೀರಿ ಹಿಪ್ಪೆಯಮಾಡಿ ಕಾಡುತಿವೆ.
ಇವ ನಿರಸನವ ಮಾಡುವ ಮೋಹಿಗಳನಾರನೂ ಕಾಣೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./63
ಐದುಮುಖದಂಗನೆಗೆ ತನು ಮೂರು,
ತದಂಗವೆರಡು, ಜೀವವೊಂದು, ಗುಣ ಇಪ್ಪತ್ತೈದು.
[ವಂಶದ]ವರು ಇಪ್ಪತ್ತೈದುಮಂದಿಯ ಕೈವಿಡಿದು
ಅಷ್ಟದಿಕ್ಕು ನವಖಂಡ ಜಂಬೂದ್ವೀಪವ
ಮೇಲುಹೊದಿಕೆಯ ಮಾಡಿ, ಹೊದ್ದುಕೊಂಡು,
ದೃಷ್ಟಜಗಕ್ಕೆ ಬಂದು
ಕಷ್ಟಬಡುತಿದ್ದ ಭೇದವ ನೀನೆ ಬಲ್ಲೆ, ಉಳಿದರಿಗಸಾಧ್ಯ,
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./64
ಒಂದೆಸೆಯಲ್ಲಿ ಹುಲಿ, ಒಂದೆಸೆಯಲ್ಲಿ ರಕ್ಷಿ,
ನಡುವೆ ಬಂದು ಸಿಲ್ಕಿದ ಪಶುವಿನಂತೆ ;
ಒಂದೆಸೆಯಲ್ಲಿ ಕರಿ, ಒಂದೆಸೆಯಲ್ಲಿ ಭಲ್ಲೂಕ,
ನಡುವೆ ಬಂದು ಸಿಲ್ಕಿದ ಎರಳೆಯಮರಿಯಂತೆ ;
ಒಂದೆಸೆಯಲ್ಲಿ ಕಾಕ, ಒಂದೆಸೆಯಲ್ಲಿ ಗಿಡುಗ,
ನಡುವೆ ಬಂದು ಸಿಲ್ಕಿದ ಗಿಳಿಯಂತೆ.
ಇಂತಿವು ಸ್ಥಿರವಿಲ್ಲದಂತೆ ಎನ್ನ ಬಾಳ್ವೆ.
ಅದು ಎಂತೆಂದೊಡೆ : ಕಾಲವ್ಯಾಘ್ರನೆಂಬ ಹುಲಿ ಮರಣಕ್ಕೆ ಗುರಿಮಾಡಿ
ನರಕಕ್ಕಿಕ್ಕಿ ಕೊಲ್ಲುತ್ತಿಪ್ಪುದಾಗಿ.
ಮಾಯೆಯೆಂಬ ರಕ್ಷಿ ಜನನಕ್ಕೆ ಗುರಿಮಾಡಿ
ಸುಖದುಃಖಕ್ಕಿಕ್ಕಿ ಕೊಲ್ಲುತ್ತಿಪ್ಪುದಾಗಿ.
ಅಷ್ಟಮದವೆಂಬ ಕರಿ ಮೆಟ್ಟಿ ಕೊಲ್ಲುತ್ತಿಪ್ಪುದಾಗಿ.
ಅರಿಷಡ್ವರ್ಗವೆಂಬ ಭಲ್ಲೂಕಂಗಳು ಹರಿದು
ಹೀರಿ ಹಿಪ್ಪೆಯ ಮಾಡುತ್ತಿಪ್ಪುವಾಗಿ.
ಮನವೆಂಬ ಕಾಗೆ ಕಂಡಕಡೆಗೆ ಹಾರಿ,
ಅಜ್ಞಾನವೆಂಬ ಗಿಡುಗ ಅಂತರಂಗದೊಳುಲಿದಾಡಿ
ಸುಜ್ಞಾನವ ಮರಸಿ ಕಾಡುತಿಪ್ಪುದು ನಿನ್ನ ಮಾಯೆ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./65
ಒಡಲಾಸೆಗೆ ಅನ್ಯರ ಸೇವೆಯ ಮಾಡುವ
ಕಡುಪಾಪಿಮನವೆ ಕೇಳು.
ದಧಿಯ ಮಥನವ ಮಾಡೆ ಪಂಚಾಮೃತವ ಕೊಡುವುದಲ್ಲದೆ,
ಉದಕವ ಕಡೆಯಲೇನ ಕೊಡದ ತೆರದಲ್ಲಿ
ಅನ್ಯರನಾಸೆಗೈದರೆ-
ಪರುಷ ಮನೆಯೊಳಿರೆ ಪರರ ಹಣವ ಬೇಡಿ
ಚಾಲಿವರಿವ ಮರುಳುಮಾನವನಂತೆ,
ವರ ಅಮೃತಬಾವಿ ಗೃಹದೊಳಿರೆ ಸವುಳು ನೀರಿಂಗೆ
ಚಾಲಿವರಿವ ಹೆಡ್ಡಮನುಜನಂತೆ,
ಸರ್ವರ ಮನ ಧರ್ಮ ಕರ್ಮವನರಿವ ಪರಮಾತ್ಮ
ನಿನ್ನ ಅಂಗೈಕರದೊಳಿರೆ ಪರರಾಸೆಗೈಯದಿರು, ಆಸೆಗೈಯದಿರು.
ಆಸೆಗೈ ಆಸೆಗೈ ನಮ್ಮ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವನಾಸೆಗೈದರೆ
ನಿನಗೆ ಮುಕ್ತಿಯುಂಟು ಕೇಳಲೆ ಮನುಜ./66
ಒಡವೆ ವಸ್ತು ಧನ ಧಾನ್ಯವ ಲೋಭದಿಂದ ಗಳಿಸಿ,
ಮಡದಿಮಕ್ಕಳಿಗೆಂದು ಮಡುಗಿಕೊಂಡು,
ದಾನಧರ್ಮವ ಪರ ಉಪಕಾರಕ್ಕೆ ನೀಡದೆ,
ಹೇಸಿಗುಣದಲ್ಲಿಪ್ಪ ಮಾನವರ ಆಯುಷ್ಯ ವ್ಯಯಿದು
ಕಾಲಮೃತ್ಯು ಬಂದು ಹೊಡೆದೊಯ್ಯು[ವಾಗ],
ಸುಖದಲ್ಲಿರುವಂದಿನ ಮಡದಿ-ಮಕ್ಕಳು ಒಡವೆ-ವಸ್ತು
ಧನಧಾನ್ಯ ಕಾಯುವವೆ ? ಕಾಯವು.
ಎರವಿನ ಸಿರಿ, ಎರವಿನ ಮನೆ, ಎರವಿನ ಮಡದೇರು,
ಎರವಿನ ಮಕ್ಕಳ ನೆಚ್ಚಿಕೊಂಡು
ಊರ ಸೀರಿಂಗೆ ಅಗಸ ಬಡದು ಸಾವಂತೆ,
ಪರಾರ್ಥನರಕದೊಡವೆಯ ನೆಚ್ಚಿ
ನನ್ನತನ್ನದೆಂದು ಲೋಭತ್ವದಿಂದ ಕೆಟ್ಟರು.
ಬರುತೇನು ತರಲಿಲ್ಲ , ಹೋಗುತೇನು ಒಯ್ಯಲಿಲ್ಲ ,
ಹುಟ್ಟುತ್ತಲೆ ಬತ್ತಲೆ, ಹೋಗುತಲೆ ಬತ್ತಲೆ.
ಈ ನಷ್ಟಸಂಸಾರವ ನಂಬಿ ಕೆಡದಿರಿ ಮನುಜರಿರ.
ನಂಬಿ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವ./67
ಒರಳೊನಕಿಯ ನಡುವಿನ ಸಿಹಿಧಾನ್ಯದಂತೆ,
ಖಣಿ ಗಾಣದ ನಡುವಿನ ತಿಲದಂತೆ,
ಅಗ್ನಿ ಕುಂಭದ ನಡುವಿನ ಜೀವಪಾಕದಂತೆ,
ತ್ರಿದೋಷದಿಂದಲೆನ್ನ ಕಾಡುತಿದೆ ಮಾಯೆ.
ಅದುಯೆಂತೆಂದಡೆ : ಜನನ ಮರಣವೆಂಬ ಯಂತ್ರದಲ್ಲಿ ತಿರುವಿ,
ಹೊನ್ನು ಹೆಣ್ಣು ಮಣ್ಣೆಂಬ ಒರಳೊನಕಿಯ ನಡುವೆ ಹಾಕಿ ಕುಟ್ಟಿ,
ತಾಪತ್ರಯವೆಂಬ ಅಗ್ನಿ ಕುಂಭದೊಳಿಟ್ಟೆನ್ನ ಸುಟ್ಟು
ಸೂರೆಮಾಡಿ ಕಾಡುತಿರ್ದುದೀ ಮಾಯೆ, ಕಳೆವರೆನ್ನಳವಲ್ಲ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./68
ಕಂಡೆನೆನ್ನ ಕರದೊಳು ಕರುಣವರಮೂರ್ತಿಲಿಂಗವ.
ಕಂಡೆನೆನ್ನ ಕರದೊಳು ಆತ್ಮಲಿಂಗವ.
ಕಂಡೆನೆನ್ನ ಕರದೊಳು ಚಿನ್ಮಯ ಚಿದ್ರೂಪ ಚಿತ್ಪ್ರಕಾಶಲಿಂಗವ.
ಕಂಡೆನೆನ್ನ ಕರದೊಳು ಮನಾತೀತಮಗೋಚರ ಲಿಂಗವ.
ಕಂಡೆನೆನ್ನ ಕರದೊಳು ನಿರ್ನಾಮ ನಿರ್ಗುಣ ನಿರಂಜನ ನಿರವಯಲಿಂಗವ.
ಕಂಡೆನೆನ್ನ ಕರದೊಳು ಮಹಾಲಿಂಗವ.
ಸಾಕ್ಷಿ : “ಮಹಾಲಿಂಗಮಿದಂ ದೇವಿ ಮನೋತೀತಮಗೋಚರಂ |
ನಿರ್ನಾಮ ನಿರ್ಗುಣಂ ನಿತ್ಯಂ ನಿರಂಜನ ನಿರಾಮಯಂ ||”
ಎಂದೆನಿಸುವ ಲಿಂಗವ ಕಂಡೆನಲ್ಲ ಎನ್ನ ಕರದೊಳು !
ಆ ಲಿಂಗವೆನ್ನ ಕರಸ್ಥಲಕ್ಕೆ ಇಷ್ಟಲಿಂಗವಾಗಿ,
ಮನಸ್ಥಲಕ್ಕೆ ಪ್ರಾಣಲಿಂಗವಾಗಿ, ಭಾವಸ್ಥಲಕ್ಕೆ ಭಾವಲಿಂಗವಾಗಿ ;
ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗವೆಂಬ ಮೂರುಲಿಂಗವೆ
ಆರುಲಿಂಗವಾಗಿ, ಆರುಲಿಂಗವೆ ಮೂವತ್ತಾರು ಲಿಂಗವಾಗಿ ,
ಮೂವತ್ತಾರು ಲಿಂಗವೆ ಇನ್ನೂರ ಹದಿನಾರು ಲಿಂಗವಾಗಿ,
ಸರ್ವಾಂಗವೆಲ್ಲ ಲಿಂಗಮಯವಾಗಿ, ಸರ್ವತೋಮುಖದ
ಲಿಂಗವೆ ಗೂಡಾಗಿಪ್ಪ ಶರಣ ಬಸವಣ್ಣ
ಚೆನ್ನಬಸವಣ್ಣ ಪ್ರಭುರಾಯ ಮುಖ್ಯವಾದ
ಅಸಂಖ್ಯಾತ ಮಹಾಗಣಂಗಳ ಲೆಂಕರ ಲೆಂಕನೆಂದೆನಿಸಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./69
ಕಂಡೆನೊಂದು ಸ್ವಪನವ ಕಾನನದ ಮಾಗಿಯೊಳು
ಚಂಡಕೋಟಿಪ್ರಭೆಯ ಮೀರುವ ಜ್ಯೋತಿಯನು
ಮುಂಡವ ಹೊಂದದೆ ತಲೆಯಂತರದೆ ನಲಿದಾಡಿ
ಮಂಡಲಕ್ಕೆ ಬೇರುವರಿದು ಮರುಳ್ಗಳ ಶಂಕೆಯ ಮೀರಿ
ಹಿಂಡುಸೂರ್ಯಗಳನೊಂದು ದ್ವಿಯಕ್ಷರದ ಪಕ್ಷಿಯು ನುಂಗಿ
ಕೊಂಡು ಉಗುಳಲಾರದಿರೆ ಬೆಳಗಾಗೆ ನಾನೆಚ್ಚತ್ತೆನು |1|
ಹಿಂದಣ ಮುಂದಣ ಮನೆಯ ಸಂದಿನಲ್ಲಿ ಉರಿವಜ್ಯೋತಿ
ಬಂದು ನಟ್ಟನಡುಸಮುದ್ರದೊಳು ಹೊಕ್ಕು
ನೊಂದಿ ನೊಂದದುರಿವುತಿರೆ, ಅಂಧಕಾರ ಕವಿದ ಲೋಕ,
ಮುಂದುಗೆಟ್ಟು ಕಣ್ಗಾಣದಿರಲು ಬೆಳಗಲೆಚ್ಚತ್ತೆನೊ |2|
ತಮ ಹೆಚ್ಚಿ ಜ್ಯೋತಿಯ ನುಂಗಿ, ಕಮಲ ಪರಿಮಳವ ನುಂಗಿ
ಭ್ರಮರ ಕಂಪನೊಲ್ಲದೆ ತಾ ಬಾವಿಯ ಬೀಳೆ
ದ್ಯುಮಣಿಯನು ಜಲ ನುಂಗಿ ಕಾಳಗವಿದ ಲೋಕವೆಲ್ಲ
ಭ್ರಮಿತರಾಗಿ ಗೊಂದಿಲಿಯ ಮರ[ನ]ನೆಂಬಲಾನೆಚ್ಚತ್ತೆನೊ |3|
ಕಂಬದೊಳಗಿಹ ಮಾಣಿಕವ ಕಳಬಂದು ನಾಲ್ವರು ಮಂದಿ
ಅಂಬರಗತ್ತಲೆಯ ಮಾರಿಯೊಳಿರುತಿರಲು
ನಂಬುಗಿಯಾ ಭೂತ ಹೆಚ್ಚಿ ನಾಡ ನುಂಗುತಲಿ ಬರುವ
ಸಂಭ್ರಮವ ಕಂಡು ಹೆದರಿ ನಾನೆಚ್ಚತ್ತೆನಯ್ಯಾ |4|
ಪ್ರಳಯದ ಮುಖದ ಪಕ್ಷಿ ಕಾಕವಿಂಡ ಕೂಡಿಕೊಂಡು
ಸಲೆ ಪರಮಗೂಡಿನೊಳಿಪ್ಪ ಪಕ್ಕಿಗೆ ಮುಕುರಿ ತಾವು
ಕೊಲ್ಲೆವೆನ್ನಲದು ಗುರುಸಿದ್ಧಮಲ್ಲನ ಪಾದಂಘ್ರಿಯೊಳು
ನೆಲಸಿ ಮಾಯವಾಗಲಾನು ಎಚ್ಚತ್ತೆ ಪಿಂಡಜ್ಞಾನದಿ | 5|/70
ಕಂದ : ಬಣ್ಣಿಪರಳವೆ ಶ್ರೀ ಪಂಚಾಕ್ಷರಿ
ಉನ್ನತ ಮಹಿಮೆಯ ತ್ರಿಜಗದೊಳಗಂ
ಎನ್ನಯ ಬಡಮತಿಯುಳ್ಳಷ್ಟಂ
ಇನ್ನಂ ಪೊಗಳ್ವೆ ಸಿದ್ಧಮಲ್ಲನ ಕೃಪೆಯಿಂ.
ರಗಳೆ :ಗುರು ಮಹಿಮೆಯನೋಪ ಪಂಚಾಕ್ಷರಿಯು
ನಾಗಭೂಷಣನರ್ತಿನಾಮ ಪಂಚಾಕ್ಷರಿಯು |1|
ನಡೆವುತಂ ನುಡಿವುತಂ ಶಿವನೆ ಪಂಚಾಕ್ಷರಿಯು
ಕುಡುತಲಿ ಕೊಂಬುತಲಿ ಹರನೆ ಪಂಚಾಕ್ಷರಿಯು
ಉಡುತಲಿ ಉಂಬುತಲಿ ಸದ್ಗುರುವೇ ಪಂಚಾಕ್ಷರಿಯು
ಬಿಡದೆ ಜಪಿಸಲು ಸದ್ಯೋನ್ಮುಕ್ತಿ ಪಂಚಾಕ್ಷರಿಯು. |2|
ಸಟೆ ಠಕ್ಕು ಠೌಳಿಯಲ್ಲಿ ಬಿಡದೆ ಪಂಚಾಕ್ಷರಿಯು
ದಿಟಪುಟದಲ್ಲಿ ಆವಾ ಪಂಚಾಕ್ಷರಿಯು
ಕುಟಿಲ ವಿಷಯಂಗಳೊಲಿದು ಪಂಚಾಕ್ಷರಿಯು
ನಟಿಸಿ ಜಪಿಸಲು ಮುಕ್ತಿ ಈವ ಪಂಚಾಕ್ಷರಿಯು. |3|
ಮಂತ್ರಯೇಳ್ಕೋಟಿಗೆ ತಾಯಿ ಪಂಚಾಕ್ಷರಿಯು
ಅಂತ್ಯಜಾಗ್ರಜ ವಿಪ್ರರೆಲ್ಲ ಪಂಚಾಕ್ಷರಿಯು
ಸಂತತಂ ಬಿಡದೆ ಜಪಿಸುವದು ಪಂಚಾಕ್ಷರಿಯು
ಎಂತು ಬಣ್ಣಿಪರಳವಲ್ಲ ಪಂಚಾಕ್ಷರಿಯು. |4|
ಆದಿ ಪಂಚಾಕ್ಷರಿಯು ಅನಾದಿ ಪಂಚಾಕ್ಷರಿಯು
ಭೇದ್ಯ ಪಂಚಾಕ್ಷರಿಯು [ಅಭೇದ್ಯ ಪಂಚಾಕ್ಷರಿಯು]
ಸಾಧಿಸುವಗೆ ಸತ್ಯ ನಿತ್ಯ ಪಂಚಾಕ್ಷರಿಯು
ಬೋಧೆ ಶೃತಿತತಿಗಳಿಗೆ ಮಿಗಿಲು ಪಂಚಾಕ್ಷರಿಯು. |5|
ಪಂಚಾನನದುತ್ಪತ್ಯದಭವ ಪಂಚಾಕ್ಷರಿಯು
ಪಂಚಮಯ ಬ್ರಹ್ಮಮಯಂ ಜಗತ್ ಪಂಚಾಕ್ಷರಿಯು
ಪಂಚವಿಂಶತಿತತ್ವಕಾದಿ ಪಂಚಾಕ್ಷರಿಯು
ಪಂಚಶತಕೋಟಿ ಭುವನೇಶ ಪಂಚಾಕ್ಷರಿಯು. |6|
ಹರಿಯಜರ ಗರ್ವವ ಮುರಿವ ಪಂಚಾಕ್ಷರಿಯು
ಉರಿಲಿಂಗವಾಗಿ ರಾಜಿಸುವ ಪಂಚಾಕ್ಷರಿಯು
ಸ್ಮರಣೆಗೆ ಸರಿಯಿಲ್ಲ ಪ್ರಣಮಪಂಚಾಕ್ಷರಿಯು
ಸ್ಮರಿಸುವಾತನೆ ನಿತ್ಯಮುಕ್ತ ಪಂಚಾಕ್ಷರಿಯು. |7|
ಪರಮ ಮುನಿಗಳ ಕರ್ಣಾಭರಣ ಪಂಚಾಕ್ಷರಿಯು
ಹರನ ಸಾಲೋಕ್ಯದ ಪದವನೀವ ಪಂಚಾಕ್ಷರಿಯು
ಉರಗತೊಡೆಶಿವನನೊಲಿಸುವರೆ ಪಂಚಾಕ್ಷರಿಯು
ಕರ್ಮಗಿರಿಗೊಜ್ರ ಸುಧರ್ಮ ಪಂಚಾಕ್ಷರಿಯು. |8|
ನಾನಾ ಜನ್ಮದಲ್ಲಿ ಹೊಲೆಯ ಕಳೆವ ಪಂಚಾಕ್ಷರಿಯು
ಮನಸ್ಮರಣೆಗೆ ಸರಿಯಿಲ್ಲ ಪಂಚಾಕ್ಷರಿಯು
ಜ್ಞಾನವೇದಿಕೆ ಮುಖ್ಯ ಪಂಚಾಕ್ಷರಿಯು
ಧ್ಯಾನಿಸುವ ನೆರೆವ ತಾನೆ ಪಂಚಾಕ್ಷರಿಯು. |9|
ಏನ ಬೇಡಿದಡೀವ ದಾನಿ ಪಂಚಾಕ್ಷರಿಯು
ಸ್ವಾನುಜ್ಞಾನದಲ್ಲು[ದಿ]ಸಿದಂಥ ಪಂಚಾಕ್ಷರಿಯು
ಭಾನು ಅಘತಿಮಿರಕ್ಕೆ ತಾನೆ ಪಂಚಾಕ್ಷರಿಯು
ಕ್ಷಿತಿಭುವನಗಳ ಬೇಡಲೀವ ಪಂಚಾಕ್ಷರಿಯು. |10|
ಕಾನನ ಭವತರು ವಹ್ನಿ ಪಂಚಾಕ್ಷರಿಯು
ಯತಿಗೆ ಯತಿತನವೀವ ಗತಿಯು ಪಂಚಾಕ್ಷರಿಯು
ಉನ್ನತ ಸಿದ್ಧತ್ವವನೀವ ಸಿದ್ಧಿ ಪಂಚಾಕ್ಷರಿಯು
ಭಾನು ಅಘತಿಮಿರಕ್ಕೆ ತಾನೆ ಪಂಚಾಕ್ಷರಿಯು
ಗತಿ ಮೋಕ್ಷಗಳ ಬೇಡೆ ಕುಡುವ ಪಂಚಾಕ್ಷರಿಯು. |11|
ಅವಲಂಬಿಗೆ ಅವಲಂಬ ಪಂಚಾಕ್ಷರಿಯು
ನಿರಾವಲಂಬಿಗೆ ನಿರಾವಲಂಬ ಪಂಚಾಕ್ಷರಿಯು
ಕಾವ ಸಂಹರ ಭಜಿಪರಿಗೆ ಪಂಚಾಕ್ಷರಿಯು
ಮಾವದ್ಯುಮಣಿಧರನನೊಲಿಪ ಪಂಚಾಕ್ಷರಿಯು. |12|
ಅರಿವರ್ಗಗಳ ಮುರಿವ ಶತೃ ಪಂಚಾಕ್ಷರಿಯು
ಕರಿಗಳೆಂಟನು ಹೊಡೆವ ಸಿಂಹ ಪಂಚಾಕ್ಷರಿಯು
ಹರಿವ ದಶವಾಯುಗಳನಳಿವ ಪಂಚಾಕ್ಷರಿಯು
ನೆರೆ ಸಪ್ತವ್ಯಸನಗಳಿಗೊಹ್ನಿ ಪಂಚಾಕ್ಷರಿಯು. |13|
ತ್ರಿಗುಣಗಳ ಕೆಡಿಪ ನಿರ್ಗುಣವು ಪಂಚಾಕ್ಷರಿಯು
ಅಘವೈದೇಂದ್ರಿಯಕೆ ಲಿಂಗೇಂದ್ರಿಯ ಪಂಚಾಕ್ಷರಿಯು
ಮಿಗೆ ಕರ್ಮೆಂದ್ರಿಗಳ ತೆರೆತೆಗೆವ ಪಂಚಾಕ್ಷರಿಯು
ಝಗಝಗಿಸಿ ಸರ್ವಾಂಗಪೂರ್ಣ ಪಂಚಾಕ್ಷರಿಯು. |14|
ಷಡೂರ್ಮಿಗಳ ಗಡವನಳಿವ ಪಂಚಾಕ್ಷರಿಯು
ಷಡುಕರ್ಮಗಳ ಮೆಟ್ಟಿನಿಲುವ ಪಂಚಾಕ್ಷರಿಯು
ಷಡುವೇಕದಂತಿಗೆ ನಾಥ ಪಂಚಾಕ್ಷರಿಯು
ಬಿಡದೆ ಜಪಿಸಿದಡವ ಮುಕ್ತ ಪಂಚಾಕ್ಷರಿಯು. |15|
ಸಂಸಾರಸಾಗರಕೆ ಹಡಗ ಪಂಚಾಕ್ಷರಿಯು
ವಂಶಗಳನಳಿವ ನಿರ್ವಂಶ ಪಂಚಾಕ್ಷರಿಯು
ಸಂಶಯವಿಲ್ಲದಲಿ ನಿಸ್ಸಂಶಯ ಪಂಚಾಕ್ಷರಿಯು
ವಿಂಶಾರ್ಥ ಬಿಡದೆ ಜಪಿಸುವದು ಪಂಚಾಕ್ಷರಿಯು. |16|
ಗುರುಕೃಪಕಧಿಕದಿ ಭವದಗ್ಧ ಪಂಚಾಕ್ಷರಿಯು
ಕರದ ಲಿಂಗಬೆಳಗು ಪ್ರಣಮಪಂಚಾಕ್ಷರಿಯು
ನೆರೆಶ್ರೋತ್ರಬೋಧೆ ನಿಬರ್ೊಧೆ ಪಂಚಾಕ್ಷರಿಯು
ನಿರುತ ಜಪಿಸುವನೆ ನಿರಾಪೇಕ್ಷ ಪಂಚಾಕ್ಷರಿಯು. |17|
ದೀಕ್ಷಾ ಪಂಚಾಕ್ಷರಿಯು ದೀಕ್ಷ ಪಂಚಾಕ್ಷರಿಯು
ಮೋಕ್ಷಾ ಪಂಚಾಕ್ಷರಿಯು ಮೋಕ್ಷ ಪಂಚಾಕ್ಷರಿಯು
ಶಿಕ್ಷಾ ಪಂಚಾಕ್ಷರಿಯು ಶಿಕ್ಷ ಪಂಚಾಕ್ಷರಿಯು
ಭಿಕ್ಷಾ ಪಂಚಾಕ್ಷರಿಯು ಭಿಕ್ಷ ಪಂಚಾಕ್ಷರಿಯು |18|
ಚಿದ್ಭಸ್ಮದೊಳುವಾಭರಣ ಪಂಚಾಕ್ಷರಿಯು
ಚಿದ್ಮಣಿಗಳ ಸ್ಥಾನ ಸ್ಥಾನ ಪಂಚಾಕ್ಷರಿಯು
ಚಿದಂಗ ಸರ್ವದೊಳು ಪೂರ್ಣ ಪಂಚಾಕ್ಷರಿಯು
ಚಿದಂಗ ಲಿಂಗಸಂಗಸಂಯೋಗ ಪಂಚಾಕ್ಷರಿಯು. |19|
ಪಾದಸಲಿಲಂ ಪ್ರಸಾದಾದಿ ಪಂಚಾಕ್ಷರಿಯು
ಆದಿಕ್ಷೇತ್ರಕ್ಕೆ ವೀರಶೈವ ಪಂಚಾಕ್ಷರಿಯು
ಸಾಧಿಸುವ ಸದ್ಭಕ್ತಿಯನೀವ ಪಂಚಾಕ್ಷರಿಯು
ಓದುವಾತನ ವೇದವಿತ್ತು ಪಂಚಾಕ್ಷರಿಯು. |20|
ಅಷ್ಟಾವರಣಕೆ ಮಹಾಶ್ರೇಷ್ಠ ಪಂಚಾಕ್ಷರಿಯು
ದುಷ್ಟನಿಗ್ರಹ ಶಿಷ್ಟಪಾಲ ಪಂಚಾಕ್ಷರಿಯು
ಮುಟ್ಟಿ ನೆನದರೆ ಮುಕ್ತಿಸಾರ ಪಂಚಾಕ್ಷರಿಯು
ಇಷ್ಟಪ್ರಾಣಭಾವದೀಶ ಪಂಚಾಕ್ಷರಿಯು. |21|
ಭಕ್ತಿಯುಕ್ತಿಯು ಮಹಾಬೆಳಗು ಪಂಚಾಕ್ಷರಿಯು
ನಿತ್ಯನೆನೆವರಿಗೆ ತವರ್ಮನೆಯು ಪಂಚಾಕ್ಷರಿಯು
ಸತ್ಯಸದ್ಗುಣಮಣಿಹಾರ ಪಂಚಾಕ್ಷರಿಯು
ವಿತ್ತ ಸ್ತ್ರೀ ನಿರಾಸೆ ಮಹೇಶ ಪಂಚಾಕ್ಷರಿಯು. |22|
ಪರಧನ ಪರಸ್ತ್ರೀಗೆಳಸ ಪಂಚಾಕ್ಷರಿಯು
ನಿರುತ ಮಹೇಶ್ವರಾಚಾರ ಪಂಚಾಕ್ಷರಿಯು
ಪರಮ ಪ್ರಸಾದಿಸ್ಥಲ ತಾನೆ ಪಂಚಾಕ್ಷರಿಯು |23|
ಈ ಪರಿಯ ತೋರೆ ಮಹಾಮೂರುತಿ ಪಂಚಾಕ್ಷರಿಯು
ತಾ ಪರಬ್ರಹ್ಮ ನಿನಾದ ಪಂಚಾಕ್ಷರಿಯು |24|
ತಟ್ಟಿ ಮುಟ್ಟುವ ರುಚಿ ಶಿವಾರ್ಪಣ ಪಂಚಾಕ್ಷರಿಯು
ಕೊಟ್ಟುಕೊಂಬುವ ಪ್ರಸಾದಾಂಗ ಪಂಚಾಕ್ಷರಿಯು
ನಷ್ಟ ಶರೀರಕೆ ನೈಷ್ಠೆವೀವ ಪಂಚಾಕ್ಷರಿಯು
ಭ್ರಷ್ಟ ಅದ್ವೈತಿಗತೀತ ಪಂಚಾಕ್ಷರಿಯು. |25|
ಸ್ಥೂಲತನುವಿಗೆ ಇಷ್ಟಲಿಂಗ ಪಂಚಾಕ್ಷರಿಯು
ಮೇಲೆ ಸೂಕ್ಷ್ಮಕೆ ಪ್ರಾಣಲಿಂಗ ಪಂಚಾಕ್ಷರಿಯು
ಲೀಲೆ ಕಾರಣ ಭಾವಲಿಂಗ ಪಂಚಾಕ್ಷರಿಯು
ಬಾಳ್ವ ತ್ರಿತನುವಿಗೆ ತ್ರಿಲಿಂಗ ಪಂಚಾಕ್ಷರಿಯು. |26|
ಪ್ರಾಣಲಿಂಗದ ಹೊಲಬು ತಾನೆ ಪಂಚಾಕ್ಷರಿಯು
ಕಾಣಿಸುವ ಇಷ್ಟರೊಳು ಭಾವ ಪಂಚಾಕ್ಷರಿಯು
ಮಾಣದೊಳಹೊರಗೆ ಬೆಳಗು ಪಂಚಾಕ್ಷರಿಯು
ಕ್ಷೊಣಿಯೊಳು ಮಿಗಿಲೆನಿಪ ಬಿರಿದು ಪಂಚಾಕ್ಷರಿಯು. |27|
ಆರು ಚಕ್ರಕೆ ಆಧಾರ ಪಂಚಾಕ್ಷರಿಯು
ಆರು ಅಧಿದೈವಗಳ ಮೀರ್ದ ಪಂಚಾಕ್ಷರಿಯು
ಆರು ವರ್ಣಗಳ ಬಗೆದೋರ್ವ ಪಂಚಾಕ್ಷರಿಯು
ಆರು ಚಾಳ್ವೀಸೈದಕ್ಷರಂಗ ಪಂಚಾಕ್ಷರಿಯು. |28|
ಆರು ಶಕ್ತಿಗಳ ಆರಂಗ ಪಂಚಾಕ್ಷರಿಯು
ಆರು ಭಕ್ತಿಗಳ ಚಿದ್ರೂಪ ಪಂಚಾಕ್ಷರಿಯು
ಆರು ಲಿಂಗದ ಮೂಲ ಬೇರು ಪಂಚಾಕ್ಷರಿಯು
ಆರು ತತ್ವವಿಚಾರ ಪಂಚಾಕ್ಷರಿಯು. |29|
ಯೋಗಷ್ಟ ಶಿವಮುಖವ ಮಾಡ್ವ ಪಂಚಾಕ್ಷರಿಯು
ನಾಗಕುಂಡಲ ಊಧ್ರ್ವವಕ್ತ್ರ ಪಂಚಾಕ್ಷರಿಯು
ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಪಂಚಾಕ್ಷರಿಯು
ಸಾಗಿಸಿ ಸುಜ್ಞಾನವೀವ ಪಂಚಾಕ್ಷರಿಯು. |30|
ಇಷ್ಟ ಪ್ರಾಣಲಿಂಗ ಹೊಲಿಗೆ ಪಂಚಾಕ್ಷರಿಯು
ಅಷ್ಟದಳಕಮಲದ ಪೀಠ ಪಂಚಾಕ್ಷರಿಯು
ದೃಷ್ಟಿ ಅನುಮಿಷಭಾವ ಪಂಚಾಕ್ಷರಿಯು
ಕೊಟ್ಟು ಸಲಹುವದಷ್ಟ ಪಂಚಾಕ್ಷರಿಯು. |31|
ತನು ಸೆಜ್ಜೆ ಪ್ರಾಣವೆ ಲಿಂಗ ಪಂಚಾಕ್ಷರಿಯು
ಮನ ಪೂಜಾರಿಯು ಭಾವ ಪುಷ್ಪ ಪಂಚಾಕ್ಷರಿಯು
ಇನಿತು ಕೂಡುವುದು ಶಿವಶರಣ ಪಂಚಾಕ್ಷರಿಯು
ಬಿನುಗಿಗಳವಡದ ಈ ಸತ್ಯ ಪಂಚಾಕ್ಷರಿಯು. |32|
ಶರಣಸ್ಥಲದಂಗ ವೈರಾಗ್ಯ ಪಂಚಾಕ್ಷರಿಯು
ಶರಣಸತಿ ಲಿಂಗಪತಿ ತಾನೆ ಪಂಚಾಕ್ಷರಿಯು
ಶರಣುವೊಕ್ಕರ ಕಾವ ಬಿರಿದು ಪಂಚಾಕ್ಷರಿಯು
ಶರಣಗಣರಿಗೆ ಮಾತೆಪಿತನು ಪಂಚಾಕ್ಷರಿಯು. |33|
ಶರಣಂಗೆ ಸುಜ್ಞಾನದಿರವು ಪಂಚಾಕ್ಷರಿಯು
ಶರಣಂಗೆ ಮುಕ್ತಿಯಾಗರವು ಪಂಚಾಕ್ಷರಿಯು
ಶರಣಂಗೆ ಭಕ್ತಿಯ ಸೋಪಾನ ಪಂಚಾಕ್ಷರಿಯು
ಶರಣಂಗೆ ಪರಮಜಲಕೂಪ ಪಂಚಾಕ್ಷರಿಯು. |34|
ಶರಣಂಗೆ ಶೈವದ ಗೃಹವು ಪಂಚಾಕ್ಷರಿಯು
ಶರಣರಿಗೆ ಸುರಧೇನು ಅಮೃತ ಪಂಚಾಕ್ಷರಿಯು
ಶರಣರಿಗೆ ಕಲ್ಪತರು ಫಲವು ಪಂಚಾಕ್ಷರಿಯು
ಶರಣರಿಗೆ ಚಿಂತಾಮಣಿ ತಾನೆ ಪಂಚಾಕ್ಷರಿಯು. |35|
ಶರಣಪದ ಬೇಡುವರಿಗೀವ ಪಂಚಾಕ್ಷರಿಯು
ಶರಣ ನಡೆನುಡಿ ಪೂರ್ಣಮಯವು ಪಂಚಾಕ್ಷರಿಯು
ಶರಣರಿಗೆ ಶಿವನಚ್ಚು ಮೆಚ್ಚು ಪಂಚಾಕ್ಷರಿಯು
ಶರಣದರ್ೂಷಣರೆದೆಗಿಚ್ಚು ಪಂಚಾಕ್ಷರಿಯು. |36|
ಶರಣು ಶಿವಾನಂದ ಜಲಗಡಲು ಪಂಚಾಕ್ಷರಿಯು
ಶರಣರ ಶರೀರ ಮೇಲೆ ಹೊದಿಕೆಯು ಪಂಚಾಕ್ಷರಿಯು
ಶರಣು ಕೃತ್ಯಕೆ ವೈದ್ಯ ಕಾಣಾ ಪಂಚಾಕ್ಷರಿಯು
ಶರಣು ಸುಜ್ಞಾನದರ್ಪಣವು ಪಂಚಾಕ್ಷರಿಯು. |37|
ಶರಣ ಚಿದ್ರೂಪದ ಬಯಕೆಯಳಿದ ಪಂಚಾಕ್ಷರಿಯು
ಶರಣಷ್ಟೈಶ್ವರ್ಯದೊಳಗಿಡದ ಪಂಚಾಕ್ಷರಿಯು
ಶರಣಪೂಜಿಸಿ ಫಲವ ಬೇಡು[ವ] ಪಂಚಾಕ್ಷರಿಯು
ಶರಣೊಜ್ರಪಂಜರದ ಬಿರಿದು ಪಂಚಾಕ್ಷರಿಯು. |38|
ಶರಣಾಸೆ ರೋಷವನಳಿವ ಪಂಚಾಕ್ಷರಿಯು
ಶರಣಾಸೆಯ ಮೋಹಲತೆ ಚಿವುಟುವ ಪಂಚಾಕ್ಷರಿಯು
ಶರಣಜ್ಞಾನದತರು ಕುಠಾರ ಪಂಚಾಕ್ಷರಿಯು
ಶರಣರುದಯಾಸ್ತಮಾನ ತಾನೆ ಪಂಚಾಕ್ಷರಿಯು. |39|
ಶರಣರ ನಡೆನುಡಿ ಒಂದು ಮಾಡಿ[ದ] ಪಂಚಾಕ್ಷರಿಯು
ಶರಣ ಸಂಸಾರಕಿಕ್ಕಿಡದ ಪಂಚಾಕ್ಷರಿಯು
ಶರಣಗುಣ ಚಿಹ್ನಕೊರೆ ಶಿಲೆಯು ಪಂಚಾಕ್ಷರಿಯು
ಶರಣರೊಡಗೂಡಿದಾನಂದ ಪಂಚಾಕ್ಷರಿಯು. |40|
ಶರಣರ ಕರ್ಣದಾಭರಣ ಪಂಚಾಕ್ಷರಿಯು
ಶರಣ ನುಡಿವ ಮಹಾವಸ್ತು ಪಂಚಾಕ್ಷರಿಯು
ಶರಣ ಕೇಳುವ ಕೀರ್ತಿವಾತರ್ೆ ಪಂಚಾಕ್ಷರಿಯು
ಶರಣಾಸರ ಬೇಸರಗಳ ಕಳೆವ ಪಂಚಾಕ್ಷರಿಯು. |41|
ಶರಣರ ಚರಿತ್ರೆಯ ಬರೆವ ಲಿಖಿತ ಪಂಚಾಕ್ಷರಿಯು
ಶರಣೀಶ ಲಾಂಛನಕಿಡದ ಪಂಚಾಕ್ಷರಿಯು
ಶರಣ ತನು ಬಾಳಳಿದ ಬೋಧೆ ಪಂಚಾಕ್ಷರಿಯು
ಶರಣನ ಮನ ಬೋಳಮಾಡಿರುವ ಪಂಚಾಕ್ಷರಿಯು. |42|
ಶರಣಂಗೆ ಪರತತ್ವಬೋಧವೆ ಪಂಚಾಕ್ಷರಿಯು
ಶರಣ ಪರವು ಶಾಂತಿ ಭಸ್ಮಧೂಳ ಪಂಚಾಕ್ಷರಿಯು
ಶರಣ ಪರಬ್ರಹ್ಮಮಣಿ ಪಂಚಾಕ್ಷರಿಯು
ಶರಣ ಪರಾತ್ಪರವು ಪಂಚಾಕ್ಷರಿಯು, |43|
ಶರಣಂಗೆ ದೃಢವೆಂಬ ದಂಡ ಪಂಚಾಕ್ಷರಿಯು
ಶರಣ ಕರ್ಮವ ಸುಟ್ಟಗ್ನಿ ಪಂಚಾಕ್ಷರಿಯು
ಶರಣ ತೃಪ್ತಿಗೆ ನಿತ್ಯಾಮೃತ ಪಂಚಾಕ್ಷರಿಯು
ಶರಣ ಹಿಡಿದ ವ್ರತವೈಕ್ಯ ಪಂಚಾಕ್ಷರಿಯು. |44|
ಶರಣ ಪೂಜಿಪ ಪೂಜೆ ಐಕ್ಯ ಪಂಚಾಕ್ಷರಿಯು
ಶರಣಂಗೆ ಐಕ್ಯಪದವೀವ ಪಂಚಾಕ್ಷರಿಯು
ಶರಣ ಮಾಡುವ ಕ್ರಿಯಾದ್ವೈತ ಪಂಚಾಕ್ಷರಿಯು
ಶರಣಂಗೆ ಇವು ನಾಸ್ತಿ ಪಂಚಾಕ್ಷರಿಯು. |45|
ನೇಮ ನಿತ್ಯಂಗಳು ಲಿಂಗೈಕ್ಯ ಪಂಚಾಕ್ಷರಿಯು
ಕಾಮ ಧರ್ಮ ಮೋಕ್ಷತ್ರಯಕ್ಕೆ ಪಂಚಾಕ್ಷರಿಯು
ಕಾಮಿಸುವ ಬಾಹ್ಯಕ್ಕಿಲ್ಲದೈಕ್ಯ ಪಂಚಾಕ್ಷರಿಯು
ನಾಮರೂಪಿಲ್ಲದ ನಿರ್ನಾಮ ಪಂಚಾಕ್ಷರಿಯು. |46|
ಮಾನಸ್ವಾಚಕ ತ್ರಿಕರಣೈಕ್ಯ ಪಂಚಾಕ್ಷರಿಯು
ಜ್ಞಾನ ಜ್ಞಾತೃಜ್ಞೇಯದೈಕ್ಯ ಪಂಚಾಕ್ಷರಿಯು
ಸ್ವಾನುಭಾವವು ಲಿಂಗದೊಳೈಕ್ಯ ಪಂಚಾಕ್ಷರಿಯು
ಮೋನಮುಗ್ಧಂ ತಾನಾದೈಕ್ಯ ಪಂಚಾಕ್ಷರಿಯು. |47|
ನಡೆವ ಕಾಲ್ಗೆಟ್ಟ ಲಿಂಗೈಕ್ಯ ಪಂಚಾಕ್ಷರಿಯು
ಷಡುರೂಪುಗೆಟ್ಟ ನೇತ್ರೈಕ್ಯ ಪಂಚಾಕ್ಷರಿಯು
ಜಡ ಘ್ರಾಣೇಂದ್ರಿಲ್ಲದ ಲಿಂಗೈಕ್ಯ ಪಂಚಾಕ್ಷರಿಯು
ಷಡುಯಿಂದ್ರಿಯಕೆ ಷಡುಲಿಂಗೈಕ್ಯ ಪಂಚಾಕ್ಷರಿಯು
ಷಡುಸ್ಥಲವ ಮೀರಿರ್ದ ಲಿಂಗೈಕ್ಯ ಪಂಚಾಕ್ಷರಿಯು. |48|
ಭಕ್ತಿ ಸ್ಥಲದಾಸೆಳಿದೈಕ್ಯ ಪಂಚಾಕ್ಷರಿಯು
ವ್ಯಕ್ತ ಮಹೇಶ್ವರ ಭಜನೈಕ್ಯ ಪಂಚಾಕ್ಷರಿಯು
ಮುಕ್ತಪ್ರಸಾದಿ ಸ್ಥಲದೈಕ್ಯ ಪಂಚಾಕ್ಷರಿಯು
ಸತ್ಯ ಪ್ರಾಣಲಿಂಗವೆನ್ನದೈಕ್ಯ ಪಂಚಾಕ್ಷರಿಯು. |49|
ಶರಣಸ್ಥಲದಾಸೆಳಿದೈಕ್ಯ ಪಂಚಾಕ್ಷರಿಯು
ನಿರವಯಲ ಬೆರದ ಮಹಾಐಕ್ಯ ಪಂಚಾಕ್ಷರಿಯು
ಉರಿವುಂಡ ಕರ್ಪುರದ ತೆರನು ಪಂಚಾಕ್ಷರಿಯು
ಸರ[ವು] ಸರವು ಬೆರದಂತೆ ಮಾಡ್ವ ಪಂಚಾಕ್ಷರಿಯು. |50|
ಪರಿಮಳ ವಾಯು ಸಂಗದಂತೆ ಪಂಚಾಕ್ಷರಿಯು
ನಿರವಯಲಪ್ಪಿದಂತೆ ಪಂಚಾಕ್ಷರಿಯು
ನೆರೆ ಮಾಡಿತೋರುವ ನಿತ್ಯ ಪಂಚಾಕ್ಷರಿಯು
ಪರಮ ಬೋಧೆಯನೇನ ಹೇಳ್ವೆ ಪಂಚಾಕ್ಷರಿಯು. |51|
ನಕಾರ ಮಕಾರ ಭಕ್ತ ಮಹೇಶ ಪಂಚಾಕ್ಷರಿಯು
ಶಿಕಾರವೆ ಪ್ರಸಾದಿಸ್ಥಲದಂಗ ಪಂಚಾಕ್ಷರಿಯು
ವಕಾರವೆ ಪ್ರಾಣಲಿಂಗಿ ತಾನೆ ಪಂಚಾಕ್ಷರಿಯು
ಯಕಾರಂ ಓಂಕಾರಂ ಶರಣೈಕ್ಯ ಪಂಚಾಕ್ಷರಿಯು. |52|
ಷಡಕ್ಷರ ಷಡುಸ್ಥಲದ ಬೀಜ ಪಂಚಾಕ್ಷರಿಯು
ಷಡುಭಕ್ತಿಗಳ ಮುಖವು ಪಂಚಾಕ್ಷರಿಯು
ಬಿಡದೆ ಸರ್ವತೋಮುಖವಾದ ಪಂಚಾಕ್ಷರಿಯು
ಷಡುದರುಶನಕೆ ಮುಖ್ಯವಾದ ಪಂಚಾಕ್ಷರಿಯು. |53|
ಪರಮ ಪಂಚಾಕ್ಷರಿಯು ಪ್ರಣಮ ಪಂಚಾಕ್ಷರಿಯು
ಅರಿವು ಪಂಚಾಕ್ಷರಿಯು ಚರವು ಪಂಚಾಕ್ಷರಿಯು
ಸಿರಿಯು ಪಂಚಾಕ್ಷರಿಯು ಕರುಣ ಪಂಚಾಕ್ಷರಿಯು
ಹರುಷ ಪಂಚಾಕ್ಷರಿಯು ನಿಧಿಯು ಪಂಚಾಕ್ಷರಿಯು. |54|
ನಿತ್ಯ ಪಂಚಾಕ್ಷರಿಯು ಮುಕ್ತ ಪಂಚಾಕ್ಷರಿಯು
ಸತ್ಯ ಪಂಚಾಕ್ಷರಿಯು ವ್ಯಕ್ತ ಪಂಚಾಕ್ಷರಿಯು
ಭಕ್ತ ಪಂಚಾಕ್ಷರಿಯು ಯುಕ್ತ ಪಂಚಾಕ್ಷರಿಯು
ಮೌಕ್ತಿಕ ಮಾಣಿಕಹಾರ ಪಂಚಾಕ್ಷರಿಯು. |55|
ಹರನೆ ಪಂಚಾಕ್ಷರಿಯು ಗುರುವೆ ಪಂಚಾಕ್ಷರಿಯು
ಇರವೆ ಪಂಚಾಕ್ಷರಿಯು ಪರವೆ ಪಂಚಾಕ್ಷರಿಯು
ಸರ್ವ ಪಂಚಾಕ್ಷರಿಯು ಹೊರೆವ ಪಂಚಾಕ್ಷರಿಯು
ಸ್ಥಿರವೇ ಪಂಚಾಕ್ಷರಿಯು ಅರಿವು ಪಂಚಾಕ್ಷರಿಯು. |56|
ಸ್ಥೂಲ ಪಂಚಾಕ್ಷರಿಯು ಸೂಕ್ಷ್ಮ ಪಂಚಾಕ್ಷರಿಯು
ಲೀಲೆ ಪಂಚಾಕ್ಷರಿಯು ಕಾರಣ ಪಂಚಾಕ್ಷರಿಯು
ಶೂಲಿ ಪಂಚಾಕ್ಷರಿಯು ಪೀಠ ಪಂಚಾಕ್ಷರಿಯು
ಲೋಲ ಪಂಚಾಕ್ಷರಿಯು ಚರ್ಯ ಪಂಚಾಕ್ಷರಿಯು. |57|
ಯಂತ್ರ ಪಂಚಾಕ್ಷರಿಯು ಮಂತ್ರ ಪಂಚಾಕ್ಷರಿಯು
ಸಂತು ಪಂಚಾಕ್ಷರಿಯು ನಿಸ್ಸಂತು ಪಂಚಾಕ್ಷರಿಯು
ಚಿಂತ ಪಂಚಾಕ್ಷರಿಯು ನಿಶ್ಚಿಂತ ಪಂಚಾಕ್ಷರಿಯು
ಇಂತು ಪಂಚಾಕ್ಷರಿಯು ಜಪಿಸಿ ಪಂಚಾಕ್ಷರಿಯು. |58|
ಕಂದ :ನಮಃ ಶಿವಾಯಯೆಂಬೀ
ಅಮಲ ತೆರದ ನಾಮವ ನೋಡಿ ಜಪಿಸಲಿರುತಂ
ಉಮೆಯರಸನನ್ನೊಲಿಸುವ
ಕ್ರಮವಿದೆಂದು ಪೊಗಳ್ವೆ ಸಿದ್ಧಮಲ್ಲನ ಕೃಪೆಯಿಂ. |1|
ಷಡುಸ್ಥಲ ಪಂಚಾಕ್ಷರಿಯನು
ಬಿಡದೆ ಜಪಿಸಲು ಮುಕ್ತಿಯೆಂದು ಪೊಗಳ್ದ
ಹೇಮಗಲ್ಲಂ ತನ್ನ ದೃಢಮೂರ್ತಿ
ಶಂಭು ಗುರುರಾಯ ಪಡುವಿಡಿ ಸಿದ್ಧಮಲ್ಲಿನಾಥ ಕೃಪೆಯಿಂ. |2|
ಷಡುಸ್ಥಲ ಪಂಚಾಕ್ಷರಿಯ ರಗಳೆ ಸಂಪೂರ್ಣಂ/71
ಕಣ್ಗಾಣದೆ ಲೋಕ ಮಾಯಾತಮಂಧವೆಂಬ
ಬಣ್ಣಛಾಯಕ್ಕೆ ಸಿಲ್ಕಿ ಭ್ರಮಿತಗೊಂಡಿತು.
ಪದ : ತನುಮದ ಹುತ್ತದೊಳು ಮನವಿಕಾರದ ಸರ್ಪ
ಜನರನೆಲ್ಲರ ಕಚ್ಚಿ ವಿಷವೇರಿಸಿ
ಅನುದಿನ ಉಳಿಯಗೊಡದಾ ಮಾಯಾತಮಂಧವೆಂಬ
ಅಣಲಿಂಗೆ ಗುರಿಯಾಗಿ ಬರಿದೆ ಕಲಿಗೆಡುತಲಿ. |1|
ಷಡೂರ್ಮೆ ಷಟ್ಕರ್ಮ ಷಡ್ಭಾವವೈಕರಣ
ಷಡ್ಭ್ರಮೆಗಳೆಂದೆಂಬುದ
ಷಡು ಅಂಗ ಕತ್ತಲೆಗೆ
ನಡೆದು ಮೈಮರೆದು ಬರಿದೆ. |2|
ಅಸಿಯ ಜವ್ವನೆಯರ ವಿಷಯರಸವೆಂದೆಂಬ
ಪ್ರಸರದೊಳು ಲೋಕವನು ಗುರಿಮಾಡಿಯೆ ;
ಅಸನ ವ್ಯಸನ ನಿದ್ರೆ ಆಲಸ್ಯ ಮಾಯಾತನು
ಬೆಸುಗೆಯೊಳು ಸಿಲ್ಕಿ ಬರಿದೆ. |3|
ಹಿರಿದು ಮಾಯಾತಮವೆಂಬ ಕತ್ತಲೆಯೊಳಗೆ ನಡೆದು
ಬರುತಲಿ ಅಜ್ಞಾನವೆಂದೆಂಬುವ
ಕೊರಡನೆಡವಿಯೆ ತಾಪತ್ರಯದಗ್ನಿಗಿರಿಯೊಳಗೆ
ಮರೆಗೊಂಡು ಮುಂದುಗಾಣದೆ ಮೂಲೋಕ |4|
ಸುರೆಗುಡಿದ ಮರ್ಕಟಗೆ ವಿರಚಿ ಭೂತಂ ಸೋಂಕಿ
ಹಿರಿದು ಚೇಷ್ಟೆಯ ತೆರದಿ ಮಾಯಾಮದದ
ಗುರುವಹಂಕಾರ ಮನ ಚೇಷ್ಟೆಯಂಗಳ ತೊರದು
ಗುರುಸಿದ್ಧ ಮಲ್ಲಿನಾಥನೊಳು ಬೆರೆಯಲರಿಯದೆ. |5|/72
ಕಣ್ಗೆಡಿಸಿತ್ತು ಮಾಯಾಕಾವಳ, ಕಾಲ್ಗೆಡಿಸಿತ್ತು ಮಾಯಾಕಾವಳ,
ತನುಗೆಡಿಸಿತ್ತು ಮಾಯಾಕಾವಳ.
ದಿನಕ್ಕೊಮ್ಮೆ ಕತ್ತಲೆಗವಿದರೆ,
ಎನಗೆ ಗಳಿಗೆ ಗಳಿಗೆಗೆ ಮಾಯಾತಮಂಧ ಕತ್ತಲೆ.
ಸಮುದ್ರಕ್ಕೆ ದಿನಕ್ಕೊಮ್ಮೆ ತೆರೆ ಬಂದರೆ,
ಎನ್ನ ಮನವಿಕಾರದ ತೆರೆ ವೇಳೆವೇಳೆಗೆ ಕವಿದವು.
ವರುಷವರುಷಕೊಂದು ಜೋಳದ ಬೆಳೆಯಾದರೆ
ಎನ್ನ ತನುವಿಕಾರದ ಚಿಂತೆ ಕರ್ಮದ ಬೆಳೆಯು
ಸದಾ ಬೆಳೆಯುತಿಪ್ಪುದು.
ಈ ಮಾಯಾತಮಂಧವೆಂಬ ವಿಧಿಗೆನ್ನ ಗುರಿಮಾಡಿ
ಬಿಟ್ಹೋಗದಿರು, ತೊಲಗದಿರು.
ಕಾಳಿ ಹೊಲೆಯನದಾದಡೇನು, ಬಿರಿದು ಒಡೆಯನದು.
ಕರ್ಮದ ಬಾಯಿ ಹೊಲೆಯಾದಡೇನು
ಸುಜ್ಞಾನದ ಮರ್ಮವನಿತ್ತು ಸಲಹಯ್ಯ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./73
ಕರಸ್ಥಲದ ಲಿಂಗ ಕೈಸೇರಿ ಇರು
ತಿರಲನ್ಯ ಭಯಗಳುಂಟೆ ಗುರುವೆ ?
ಪದ :ಕಂಠೀರ[ವ]ನಿಹ ವನದೊಳು ಕರಿಯಭಯ
ವುಂಟೇ ಇನ್ನಾ ತೆರದೊಳು
ಬಂಟಾಯುಧವಿರೆ ಕರದೊಳು ಸೂಜಿಯ ಮೊನೆಯ
ತುಂಟಕದ ಭಯಗಳುಂಟೆ ಗುರವೆ ? |1|
ಕರಿಯನೇರಿ ಪೋಗುತಿರಲು ಶುನಿ ಬಗುಳುತ
ಬರುತಿರುವ ಭಯಗಳುಂಟೆ ನೋಡಾ.
ಹರನೆನ್ನ ಕರದೊಳಿರಲು ಪಂಚೇಂದ್ರಿ
ದುರಿತ ಭಯದಂಜಿಕೆಯುಂಟೆ ಗುರುವೆ ? |2|
ದ್ಯುಮಣಿಗುರಿಯ ಭಯಗಳುಂಟೆ ? ಅಷ್ಟದಳ
ಕಮಲದೊಳು ಸುಳಿವ ಹಂಸ ತಾನೆ
ಭ್ರಮರನಂತೆ ಕರಕಮಲದ ಲಿಂಗವ ತಾ
ಭ್ರಮಿಸೆರಗೆ ಭಯಗಳುಂಟೆ ಗುರುವೆ ? |3|
ಉರಿಯುತಿರೆ ಜ್ಯೋತಿ ಗೃಹದಿ ತಮ ನಡೆದು
ಬರುವ ಭೀತಿಯುಂಟೆ ನೋಡಾ.
ಪರಂಜ್ಯೋತಿಲರ್ಿಂಗಯೆನ್ನ ಅಂಗಾಕಾರದೆ
ಇರೆ ಮಾಯದ ಭೀತಿಯುಂಟೆ ಗುರುವೆ ? |4|
ಉರಗ ಮುಟ್ಟಲು ಓರ್ವನ ತನು ವಿಷದಿ
ಭರಿತವಾದಂತೆ ಶರಣ
ಶರೀರವನು ಸೊಮ್ಮು ಸೋಂಕಿ
ಸರ್ವಾಂಗ ಕಾರಣಲಿಂಗವಾಗೆ ಭಯವೆ ಗುರುವೆ ? |5|
ಅಗಲದೆ ಸರ್ವಾಂಗದಿ ಭರಿತವಾದಂತೆ ಶರಣ ಶಿವಲಿಂಗ
ಝಗಝಗಿಸುತಿದೆ ಕೋಯೆಂದು ನುಡಿದು
ಪೊಗಳ್ದ ಹೇಮಗಲ್ಲ ಹಂಪ ಪಡುವಿಡಿಯ ಬಗೆಯ ಗುರು ರಾಚನಿರವು ತಾನೆ |6| /74
ಕರಿಗಳ ಹೊಯಿದಾಟದಾ ನಡುವಿನ ಮರ ಮುರಿ[ವಂತೆ]
ಆ ಜಗವಾಗಿದೆ ನೋಡಾ.
ಮಾವುತಿಗನ ಅಂಕುಶಕ್ಕಂಜದಾನೆಗಳು ಮನಬಂದಂತೆ ಹರಿವವು.
ಮರದ ಬೇರು ಭೂಮಿಯಾಕಾಶಕ್ಕೆ ಹಬ್ಬಿ,
ಕೊಂಬೆಕೊಂಬೆಯ ಮೇಲೆ ಕುಣಿವ ಅರಗಿಣಿ ಕೋಡಗ.
ಗಿಣಿ ಆನೆಯ ನುಂಗಿ, ಆನೆಯ ಮೇಲೆ ಮಾವುತನ ನುಂಗಿ,
ಭಾನುಕೆ ಹರಿದುದಿದೇನು ವಿಚಿತ್ರ ಹೇಳಾ !
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./75
ಕರಿಯ ಕಾಲೊಳಗೆ ಸಿಕ್ಕಿದ ಮರಿಯ ನಾಯಿಯಂತೆ,
ಅಷ್ಟಮದವೆಂಬ ಕರಿಯ ಕಾಲೊಳಗೆನ್ನ ಸಿಗಿಸಿ,
ಮೆಟ್ಟಿ ಮೆಟ್ಟಿ ತುಳಿಸುತ್ತಿದ್ದೆಯಲ್ಲ !
ಅರಸಿನ ಉಪ್ಪನುಂಡು ಆನೆ ಸೇನೆ ದಳ
ಅರಸಘನಘೆ ಕೈಸೆರೆ ಹಿಡಿವಂತೆ,
ಎನ್ನಾತ್ಮದಲ್ಲಿ ಹುಟ್ಟಿದ ಮದ, ಎನ್ನನೆ ತಿಂದು ತೇಗುತ್ತಿದ್ದವಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./76
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರದ ಸೀಮೆಗಳೆನಿಸಿ
ಯತಿ ಸಿದ್ಧ ಸಾಧ್ಯರೆಲ್ಲ ವ್ರತಭ್ರಷ್ಟರಾದರು.
ಅದು ಎಂತೆಂದೊಡೆ : ಕಾಮವೆಂಬ ಅಗ್ನಿ, ಕ್ರೋಧವೆಂಬ ಕಾಷ್ಠ, ಲೋಭವೆಂಬ ಗಾಳಿ
ಪುಟಮಾಡಿ, ಮೋಹವೆಂಬರಣ್ಯ, ಮದವೆಂಬ ಕುಳ್ಳು,
ಮತ್ಸರವೆಂಬ ಗಿರಿಗೆ ಬೆಂಕಿ ಹತ್ತಿ ,
ಸುಟ್ಟು ಸುಟ್ಟು ಬೆಂದರು ಹಲಬರು, ನೊಂದರು ಹಲಬರು.
ಕಾಮವ ಕಳದು ನಿಃಕಾಮಿಯಾಗಿ,
ಕ್ರೋಧವ ಕಳದು ನಿಃಕ್ರೋಧಿಯಾಗಿ,
ಲೋಭವ ಕಳದು ನಿಲರ್ೊಭಿಯಾಗಿ,
ಮೋಹವ ಕಳದು ನಿರ್ಮೊಹಿಯಾಗಿ,
ಮದವ ಕಳದು ನಿರ್ಮದವಾಗಿ,
ಮತ್ಸರವ ಕಳದು ನಿರ್ಮತ್ಸರರಾಗಿಪ್ಪ
ಚೆನ್ನಬಸವೇಶ್ವರದೇವರು ಪ್ರಭುರಾಯ ಮುಗ್ಧಸಂಗಯ್ಯ
ಘಟ್ಟಿವಾಳಯ್ಯ ಮರುಳಶಂಕರದೇವರು ಮುಖ್ಯವಾದ
ಏಳ್ನೂರಯೆಪ್ಪತ್ತು ಅಮರಗಣಂಗಳ ಪಾದಕ್ಕೆ
ನಮೋ ನಮೋ ಎಂಬೆನಯ್ಯ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./77
ಕಾಮಧೇನುವಲ್ಲದೆ ಸಾದಾ ಧರೆಯ ಗೋವುಗಳು
ಪಂಚಾಮೃತವನೀಯಬಲ್ಲವೆ ?
ಸರ್ವರ ತೃಪ್ತಿಂಗೆ ಕೇಳು ಆತ್ಮ.
ಕಲ್ಪವೃಕ್ಷ ಸ್ವಾದಫಲವೀವುದೆಂದು
ಬೇವಿನಮರಕೆ ಹಾರೈಸಿಹೋದರೆ ಬರೆಕಾಯಿ.
ಕಾಮಧೇನು ಕಲ್ಪವೃಕ್ಷಗಿಂದಲಿ ಮೀರಿದ
ಕಾಮಾರಿಲಿಂಗ ನಿನ್ನ ಆತ್ಮದೊಳಿರಲು
ಅದ ಮರದು ಅನ್ಯರಿಗೆ ಆಸೆಗೈಯದಿರು.
ಆಸೆಗೈ ಆಸೆಗೈ ನಮ್ಮ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವ./78
ಕಾಮನ ಸುಟ್ಟು ವಿಭೂತಿಯಿಲ್ಲದಂದಿನ,
ಕಾಲನ ಸುಟ್ಟು ವಿಭೂತಿಯಿಲ್ಲದಂದಿನ,
ತ್ರಿಪುರವ ಸುಟ್ಟು ವಿಭೂತಿಯಿಲ್ಲದಂದಿನ,
ಪಂಚಮುಖದಲ್ಲಿ ಜನಿಸಿದ ಪಂಚಗವ್ಯ
ಗೋಮಯದಿಂದಾದ ಚಿದ್ಭಸ್ಮವಿದು ಅಪರಂಪಾರವೆಂದು
ಜಪಿಸಿದ ಎನ್ನ ಪರಿಭವವ ದಾಟಿಸಿದ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./79
ಕಾಮವಿಲ್ಲದಾತ ಭಕ್ತ , ಕ್ರೋಧವಿಲ್ಲದಾತ ಮಹೇಶ್ವರ,
ಲೋಭವಿಲ್ಲದಾತ ಪ್ರಸಾದಿ, ಮೋಹವಿಲ್ಲದಾತ ಪ್ರಾಣಲಿಂಗಿ,
ಮದವಿಲ್ಲದಾತ ಶರಣ, ಮತ್ಸರವಿಲ್ಲದಾತ ಐಕ್ಯ.
ಅದು ಎಂತೆಂದೊಡೆ : ಕಾಮವಿಲ್ಲದ ಭಕ್ತ ಬಸವಣ್ಣ ,
ಕ್ರೋಧವಿಲ್ಲದ ಮಹೇಶ್ವರ ಪ್ರಭುರಾಯ,
ಲೋಭವಿಲ್ಲದ ಪ್ರಸಾದಿ ಚೆನ್ನಬಸವೇಶ್ವರದೇವರು,
ಮೋಹವಿಲ್ಲದ ಪ್ರಾಣಲಿಂಗಿ ಘಟ್ಟಿವಾಳಯ್ಯ,
ಮದವಿಲ್ಲದ ಶರಣ ಮೋಳಿಗೆಯ್ಯನವರು,
ಮತ್ಸರವಿಲ್ಲದ ಲಿಂಗೈಕ್ಯಳು ನೀಲಲೋಚನ ತಾಯಿ.
ಇಂತಿವರು ಮುಖ್ಯವಾದ ಏಳನೂರ ಎಪ್ಪತ್ತು ಅಮರಗಣಂಗಳ
ಪಾದಕ್ಕೆ ನಮೋ ನಮೋ ಎಂಬೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./80
ಕಾಮವು ಲಿಂಗಮುಖವಾಗಿ, ಕ್ರೋಧವು ಲಿಂಗಮುಖವಾಗಿ,
ಲೋಭವು ಲಿಂಗಮುಖವಾಗಿ, ಮೋಹವು ಲಿಂಗಮುಖವಾಗಿ,
ಮದವು ಲಿಂಗಮುಖವಾಗಿ, ಮತ್ಸರವು ಲಿಂಗಮುಖವಾಗಿ
ಇಪ್ಪಾತನೆ ನಿರ್ಮೊಹಿ.
ಅದು ಎಂತೆಂದೊಡೆ : ಪರಧನ ಪರಸ್ತ್ರೀಯ ಕಾಮಿಸುವಂತೆ
ಲಿಂಗವ ಕಾಮಿಸುವುದೆ ಕಾಮ.
ಪರರೊಳು ಕ್ರೋಧಿಸುವಂತೆ ಕರ್ಮವಿರಹಿತನಾದರೆ ಕ್ರೋಧ.
ಅರ್ಥ ಸ್ತ್ರೀಯರ ಮೇಲೆ ಲೋಭವಿಡುವಂತೆ
ಲಿಂಗದೊಡನೆ ಲೋಭವಿಟ್ಟು ಲಿಂಗವ ಕೂಡಬಲ್ಲರೆ ಲೋಭ.
ಅನ್ಯರ ಮೋಹಿಸುವಂತೆ ಲಿಂಗವ ಮೋಹಿಸಬಲ್ಲರೆ ಮೋಹ.
ಅನ್ನಮದ ಪ್ರಾಯಮದ ತಲೆಗೇರುವಂದದಿ
ಲಿಂಗಮದನಾಗಿರಬಲ್ಲರೆ ಮದ.
ಅನ್ಯರೊಡನೆ ಮತ್ಸರಿಸುವಂತೆ ಲಿಂಗದೊಡನೆ ಮತ್ಸರಿಸಿ
ಶರಣಕೃಪೆಯ ಪಡೆಯಬಲ್ಲರೆ ಮತ್ಸರ.
ಇಂತಪ್ಪ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರದಲ್ಲಿ
ಲಿಂಗಮುಖವಾಗಿಪ್ಪ ಶರಣರ ಪಾದಕ್ಕೆ ನಮೋ ನಮೋ ಎಂಬೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /81
ಕಾಮವುಳ್ಳವ ಭಕ್ತನಲ್ಲ , ಕ್ರೋಧವುಳ್ಳವ ಮಹೇಶ್ವರನಲ್ಲ ,
ಲೋಭವುಳ್ಳವ ಪ್ರಸಾದಿಯಲ್ಲ , ಮೋಹವುಳ್ಳವ ಪ್ರಾಣಲಿಂಗಿಯಲ್ಲ ,
ಮದವುಳ್ಳವ ಶರಣನಲ್ಲ , ಮತ್ಸರವುಳ್ಳವ ಐಕ್ಯನಲ್ಲ.
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವುಳ್ಳನಕ
ಎಂತು ಭಕ್ತನೆಂಬೆ ? ಎಂತು ಮಹೇಶ್ವರನೆಂಬೆ ?
ಎಂತು ಪ್ರಸಾದಿಯೆಂಬೆ ? ಎಂತು ಪ್ರಾಣಲಿಂಗಿಯೆಂಬೆ ?
ಎಂತು ಶರಣನೆಂಬೆ ? ಎಂತು ಐಕ್ಯನೆಂಬೆ ?
ಬರಿಯ ಮಾತಿನ ಬಣಗರು
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./82
ಕಾಮವೆಂಬ ಆನೆಯ ಕಾಲಿಂಗೆ ಹಾಕಿ ತುಳಿಸಿ,
ಕ್ರೋಧವೆಂಬ ಹುಲಿಯ ಬಳಿಯಿಕ್ಕಿ,
ಲೋಭವೆಂಬ ಸರ್ಪನ ಕಚ್ಚಿಸಿ,
ಮೋಹವೆಂಬ ಸಿಂಹ[ನ] ತೊಡರಿಸಿ,
ಮದವೆನಿಪ್ಪ ಮರೆಯಹಿಂಡ ಕವಿಸಿ,
ಮತ್ಸರವೆಂಬ ಭಲ್ಲೂಕಂಗಳನಡರಿಸಿ,
ಭವಾರಣ್ಯದ ಬಟ್ಟೆಯೊಳು ತಿರುವಿ ತಿರುವಿ ಕಾಡುತಿದ್ದೆಯಲ್ಲ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /83
ಕಾಲಸಂಹರ ಕಾಮವಿದೂರ
ಕರಣಾತೀತ ಕರ್ಮಗಿರಿಗೊಜ್ರ
ಕಮಲಮಿತ್ರ ಶಶಿಭೂಷ ಕರುಣಕಟಾಕ್ಷ
ಕಮಲೋದ್ಭವಶಿರಕರಕಪಾಲ
ಕಮಲಪೂಜಿತನಯನ ಪಾದಚರಣದಲಿ ಧರಿಸಿದ ದೇವ
ವಿಶ್ವಕ್ಷೇನ ಹೆಣನ ಹೊತ್ತ ದೇವ
ವೇದಶಾಸ್ತ್ರಕತೀತದೇವನೆಂದು ಮೊರೆಹೊಕ್ಕೆ.
ಎನ್ನಯ ಮೊರೆಯಂ ಕೇಳಿ ಕಾದರೆ ಕಾಯಿ,ಕೊಂದರೆ ಕೊಲ್ಲು,
ನಿಮ್ಮ ಧರ್ಮ, ನಿಮ್ಮ ಧರ್ಮ.
ನೀನೆ ಹುಟ್ಟಿಸಿ, ನೀನೆ ಕರ್ಮಕಾಯಕೆ ಗುರಿಮಾಡಿ,
ನೀನಗಲಿದರೆ ನೊಂದೆ ಬೆಂದೆ.
ಬಿಡಬೀಸದಿರು, ಎನ್ನನಿತ್ತ `ಬಾ’ಯೆಂದು ತಲೆದಡಹೊ
ಜಯಜಯ ಹರಹರ ಶಿವಶಿವ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./84
ಕಾಳರಕ್ಕಸಿಯ ಕೈಯೊಳಿಪ್ಪ ಶಿಶುವಿನ ಭ್ರಮೆ
ಮೂರುಲೋಕಕ್ಕೆ ಕೊಂಡು ಭ್ರಮಿತರಾಗುವುದ ಕಂಡೆ.
ಕಾಳರಕ್ಷಿಯ ಕೊಂದು, ಕಾಳ ರಕ್ಷಿಯ ಕೈಯೊಳಿಪ್ಪ ಶಿಶುವಿನ
ಗೋಣ ಮುರಿದಾತನಲ್ಲದೆ ಶಿವಶರಣನಲ್ಲ ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./85
ಕುಣಪ ಕೂಗದಕಿಂದ ಮುನ್ನ,
ಶಾಸ್ತ್ರ ತೆರೆಮುಸುಕದಕಿಂದ ಮುನ್ನವೆ
ಸಂಸಾರಪಾಶವ ಸುಟ್ಟು ನಿಃಸಂಸಾರಿಯಾಗಿಪ್ಪ
ಅಚಲರ ತೋರಿ ಬದುಕಿಸೊ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./86
ಕುಲ ಛಲ ರೂಪ ಯೌವ್ವನ ವಿದ್ಯೆ ಧನ ರಾಜ್ಯ ತಪಮದವೆಂಬ
ಅಷ್ಟಮದಂಗಳ ಬಹಿರಂಗದಲ್ಲಿ ನೆನೆದು
ಬರಿದೆ ಭ್ರಮೆಗೆ ಸಿಲ್ಕಿ ಬಳಲುತ್ತಿಪ್ಪರಯ್ಯ.
ಅದು ಎಂತೆಂದಡೆ : ಅಂಧಕನ ಮುಂದಣ ಬಟ್ಟೆಯಂತೆ,
ಹುಚ್ಚಾನೆಯ ಮುಂದಣ ಭಿತ್ತಿಯಂತೆ,
ಎನ್ನ ಅನ್ಯೋನ್ಯದ ಬಾಳುವೆಗೆ ಗುರಿಮಾಡಿ
ಎನ್ನ ಕಾಡುತಿದ್ದೆಯಯ್ಯ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /87
ಕುಲದಲ್ಲಿ ಶಿವಕುಲವೆಂಬೆ, ಛಲದಲ್ಲಿ ಶಿವಛಲವೆಂಬೆ,
ರೂಪದಲ್ಲಿ ಶಿವರೂಪವೆಂಬೆ, ತಪದಲ್ಲಿ ಶಿವತಪವೆಂಬೆ.
ಇಂತೀ ಅಷ್ಟಮದಮುಖದಲ್ಲಿ ಶಿವಮುಖವಾಗಿಪ್ಪ ಶಿವಶರಣರ
ಚರಣಕ್ಕೆ ನಮೋ ನಮೋ ಎಂಬೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./88
ಕುಲಮದಕ್ಕೆ ಹೋರಾಡಿ ಕೆಟ್ಟುದು ಕೋಟಿ.
ಧನಮದಕ್ಕೆ ಹೋರಾಡಿ ಕೆಟ್ಟುದು ಕೋಟಿ.
ವಿದ್ಯಾಮದಕ್ಕೆ ಹೋರಾಡಿ ಕೆಟ್ಟುದು ಕೋಟಿ.
ರಾಜ್ಯಮದಕ್ಕೆ ಹೋರಾಡಿ ಸತ್ತುದು ಕೋಟಿ.
ತಪಮದಘಕ್ಕೆಘೆ ಹೋರಾಡಿ ಕೆಟ್ಟುದು ಕೋಟಿ.
ನಿನಗಾಗಿ ಕೆಟ್ಟವರನಾರನೂ ಕಾಣೆನಯ್ಯ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /89
ಕೂಪದ ತಡಿಯ ಹುಲ್ಲ ಮೇವ ಎರಳೆಯನೆಚ್ಚಲು ಬಂದ
ವ್ಯಾಧನ ಬಾಣದಲೊಂದು ಅಚ್ಚ ಆಶ್ಚರ್ಯವ ಕಂಡೆನು.
ಕರಿಯ ಮುಖವೈದು, ಬಿಳಿಯ ಮುಖವೈದು,
ಮುಂದೈದು ಮುಖದ ಸಂಭ್ರಮವ ಕಂಡು
ಎರಳೆ ಬೆದರಿ ಬಾವಿಯ ಬೀಳುತಿರ್ದಡಿದೇನು ಚೋದ್ಯವೋ !
ಚೋದ್ಯದ ಹಗರಣವ ಕಂಡು ಅಡವಿಯ ರಕ್ಷಿ ನಗುತಿದೆ
ಇದೇನೋ ನಿನ್ನ ಮಾಯದ ವಿಗಡ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./90
ಕೆಚ್ಚಲ ಕಚ್ಚಿದ ಉಣ್ಣೆ
ನಿಚ್ಚಾಮೃತದ ಸವಿಯನೆತ್ತಬಲ್ಲುದಯ್ಯಾ ?
ಪಾಯಸದೊಳಿಹ ಸಟ್ಟುಗ ರುಚಿಯಬಲ್ಲುದೆ ?
ಸರ್ವವ ಮುಟ್ಟಿ ಮೂಸುವ ಮಕ್ಷಿಕ ಶುಚಿಯ ಬಲ್ಲುದೇನಯ್ಯಾ ?
ಸಂಸಾರದೋಷ ದುಸ್ಸಂಗ ದುಶ್ಚರಿತ್ರದೊಳಿಪ್ಪ ಮಾನವರು
ಶಿವಜ್ಞಾನಾಮೃತದ ಸವಿಯನೆತ್ತ ಬಲ್ಲರಯ್ಯಾ ? ಉಣ್ಣೆಯಂತೆ.
ಹುಗ್ಗಿಯೊಳಿಹ ಹುಟ್ಟು ತೊಳಸಬಲ್ಲುದಲ್ಲದೆ
ಸವಿಯ ಬಲ್ಲುದೇನಯ್ಯಾ ?
ವೇದಾಗಮವನೋದಿದ ಮಾನವರೆಲ್ಲ
ಸಂಸಾರಬಂಧನವ ಕಳೆಯಬಲ್ಲರೇನಯ್ಯಾ ?
ಮನಮಕ್ಷಿಕ ಸರ್ವದುಚ್ಚಿಷ್ಠವ ಮುಟ್ಟಿ ಮುಟ್ಟಿ
ಹಲವು ಕಡೆಗೆ ಹಾರುತಿರಲು, ಮಹದರುವನೆತ್ತ ಬಲ್ಲುದಯ್ಯಾ !
ಪರಮಗುರು ಪಡುವಿಡಿ ಸಿದ್ದಮಲ್ಲಿನಾಥಪ್ರಭುವೆ./91
ಕೈಲಾಸವೆಂಬುದು ಬೇರಿಲ್ಲಾ ಕಾಣಿರೋ !
ಲಿಂಗಾಂಗಸಂಗಮರಸದಲ್ಲಿಪ್ಪ ಶರಣನ
ಅಂತರಂಗದಲ್ಲಿ ಕೈಲಾಸವಿಪ್ಪುದು.
ಎಂತಿಪ್ಪುದೆಂದರೆ ಹೇಳುವೆ ಕೇಳಿರಣ್ಣಾ : ಆಚಾರ-ಕ್ರಿಯೆಗಳೆಂಬ ಕೋಟೆ-ಕೊತ್ತಳಂಗಳು,
ಶುಚಿ-ಶೀಲಗಳೆಂಬ ಅಗಳಂಗಳು,
ಪುಣ್ಯ-ಪಾಪಗಳೆಂಬೆರಡ ನೋಡಿ ನಡೆದುದೆ
ಕೈಲಾಸದ ಹೆಬ್ಬಾಗಿಲು ಕಾಣಿರೊ.
ಧರ್ಮಸಂಚೆಗಳೆಂಬ ದಾರುವಂದಲಗಳು,
ಕರ್ಮವ ಮೆಟ್ಟಿ ನಡೆದುದೆ ಹೊಸ್ತಿಲಸ್ತರ.
ಶಿವಭಕ್ತಿ ಕೀರ್ತಿವಡೆದ ವಾತರ್ೆಯೆಂಬ
ಹುಲಿಮುಖ ಡೆಂಕಣಿ ಮೇರುವ ಕಾಣಿರೊ.
ಜ್ಞಾನ ಸುಜ್ಞಾನದೊಳು ಬೆರಸುತಿಪ್ಪುದೆ
ಸೋಮಬೀದಿ ಸೂರ್ಯಬೀದಿ ಕಾಣಿರೊ.
ಅರುವೆಂಬುದನಾಚರಿಸುವುದೆ
ಶಿವ ಮೂರ್ತವಮಾಡುವ ಸಿಂಹಾಸನ ಕಾಣಿರೊ.
ಮರವೆಂಬ ಮಾಯವ ಮೆಟ್ಟಿ ನಡೆದುದೆ
ಸಿಂಹಾಸನವನೇರುವುದಕ್ಕೆ ಪಾವಟಿಗೆ ಕಾಣಿರಣ್ಣ.
ಇಂತಪ್ಪ ಶಂಗಾರವೆಲ್ಲ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭು
ಒಲಿದ ಶಿವಶರಣನಂತರಂಗದಲ್ಲೆ ಇದ್ದಿತ್ತು./92
ಕೊಡುವವ ಮಾನವನೆಂದು ಒಡಲಾಸೆಯ ತೋರದಿರು,
ಕೊಡುವವ ಮಾನವನಲ್ಲ.
ಕೊಡುವವ ಕೊಂಬುವವ ಮಾನವರ ನಡುವಿಪ್ಪ
ಮಹಾತ್ಮ ಸಂಜೀವಂಗೆ ಒಡಲಾಸೆ ತೋರಿ ಬೇಡಿಕೊ.
ಜೀವನ ಬುದ್ಧಿಯಿಂದ ನರನನಾಸೆಗೈಯದಿರು.
ಆಸೆಗೈದರೆ ಕಾವವರಲ್ಲ , ಕೊಲ್ಲುವವರೂ ಅಲ್ಲ ,
ಕೊಡುವವರೂ ಅಲ್ಲ , ಬಿಡುವವರೂ ಅಲ್ಲ .
ನಾಯ ಬಾಲವ ನಂಬಿ ಹೊಳೆಯ ಹಾದವರುಂಟೇ ?
ವಷಭನ ಬಾಲವ ಪಿಡಿದರೆ ನದಿಯ ತಡಿಯ ಸೇರುವರಲ್ಲದೆ.
ನಂಬು ನಂಬು ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲನೆಂಬ
ಮಹಾಭಾಗ್ಯವ ನಂಬಿದರೆ ನಿನಗೆ ಬಡತನವೆ ಆತ್ಮ ? /93
ಕೊಡುವಾತ ಶಿವ, ಕೊಂಬಾತ ಶಿವ, ಹುಟ್ಟಿಸುವಾತ ಶಿವ,
ಕೊಲ್ಲುವಾತ ಶಿವನೆಂಬ ದೃಷ್ಟವನರಿಯದೆ,
ನಡುಮನೆಯಲೊಂದು ದೇವರ ಜಗುಲಿಯನಿಕ್ಕಿ
ಅದರ ಮೇಲೆ ಹಲವು ಕಲ್ಲು ಕಂಚು ಬೆಳ್ಳಿ ತಾಮ್ರದ
ಪಾತ್ರೆಯನಿಟ್ಟು ಪೂಜೆ ಮಾಡಿ,
ತಲೆ, ಹೊಟ್ಟೆ, ಕಣ್ಣುಬೇನೆ ಹಲವು ವ್ಯಾಧಿ ದಿನ ತಮ್ಮ ಕಾಡುವಾಗ
ನಮ್ಮನೆದೇವರೊಡ್ಡಿದ ಕಂಟಕವೆಂದು ಬೇಡಿಕೊಂಡು
ಹರಕೆಯ ಮಾಡಿ,
ತನ್ನ ಸವಿಸುಖವ ಕೊಂಡು ಪರಿಣಾಮಿಸಿ,
ವಿಧಿ ವಿಘ್ನ ಹೋದ ಮೇಲೆ ಪರದೇವರು ಕಾಯಿತೆಂದು ನುಡಿವವರ
ಲೋಕದ ಗಾದೆಯ ಕಂಡು ನಾ ಬೆರಗಾದೆನೆಂದರೆ : ಹುಟ್ಟಿಸಿದ ಶಿವ ಪರಮಾತ್ಮ ಭಕ್ಷಿಸಿಕೊಂಡೊಯ್ಯುವಾಗ
ಕಟ್ಟೆಯ ಮೇಲಣ ಕಲ್ಲು ಕಾಯುವುದೆ ? ಕಾಯದಯ್ಯ.
ಮತ್ತೆ ಹೇಳುವೆ ಕೇಳಿರಣ್ಣಾ : ಸಿರಿ ತೊಲಗಿ ದರಿದ್ರ ಎಡೆಗೊಂಡು, ಮನೆಯೊಳಿಹ
ಚಿನ್ನ ಬೆಳ್ಳಿ ತಾಮ್ರ ಕಂಚಿನ ಪ್ರತಿಮೆಯನೆಲ್ಲ ಒತ್ತೆಯ ಹಾಕಿ,
ಹಣವ ತಂದು, ಉದರವ ಹೊರೆವಗೆ ಎತ್ತ ಹೋದನಯ್ಯಾ
ಅವರ ಮನೆಯೊಳಿಹ ಮಿಥ್ಯದೈವ ?
ಅಕ್ಕಸಾಲೆಯ ಮನೆಯ ಕುಪ್ಟುಟೆಯಲುರಿವುತಿಹ ಅಗ್ನಿದೇವತೆಗೆ
ಗುರಿಯಾಗಿ ಹೋದವಯ್ಯಾ.
ಸರ್ವದೇವಪಿತ ಶಂಭು[ವೆಂಬು]ದನರಿಯದೆ
ಶಿವನಿಂದ ಹುಟ್ಟಿ, ಶಿವನಿಂದ ಬೆಳೆದು, ಶಿವದೈವವ ಮರೆದು,
ಅನ್ಯದೈವವ ಹೊಗಳುವ
ಕುನ್ನಿಮಾನವರ ಕಂಡು ನಾ ಬೆರಗಾದೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./94
ಕೋಣನ ಕೊರಳಲ್ಲಿ ಕಪಿ, ಬೆನ್ನಿನಲ್ಲಿ ರಕ್ಷಿ,
ಬಾಲದ ಜವೆಗೊಂದೊಂದು ಮುಸುವ,
ಕೊಂಬಿನ ಮೇಲೆ ಕುಣಿವ ಗಿಡುಗ ;
ಇಂತಿವೆಲ್ಲವ ಸಂತೈಸಿಕೊಂಡು ರಕ್ಷಿ ನಡೆದಳು.
ತಮಪುರವೆಂಬ ಪಟ್ಟಣಕ್ಕೊಸ್ತಿಯ ಹೋಗಿ,
ಆ ಪಟ್ಟಣದೊಳು ಸ್ಥಿರವಾಗಿ ನಿಂದು,
ಬದುಕು ಮನೆ ಅರ್ಥವಂ ಗಳಿಸಿ,
ತಮಪುರದರಸಿಂಗೆ ಸರಿಗೊರನಿಕ್ಕಿ
ತಮದ ಮರೆಯಲ್ಲಿಪ್ಪ ವನಿತೆಯ ಕಂಡರೊ[ಂದ]ಗ್ನಿ,
ನಡೆದರೆರಡಗ್ನಿ, ನುಡಿದರೆ ಮೂರಗ್ನಿ,
ಕೇಳಿದರೆ ನಾಲ್ಕಗ್ನಿ, ವಾಸಿಸಿದರೈದಗ್ನಿ.
ಆ ಗಿರಿಯೊಳು ನಿಂದು, ಗಿಡುಗನನಡಸಿ, ಮುಸುವನ ಹರಿಯಬಿಟ್ಟು,
ಕಪಿಯ ಕೈವಿಡಿದು ಜಪವ ಮಾಡಿ,
ಕೋಣನ ನೆರೆ ಕೂಗುವವ ನುಡಿಯ ಪಾಶದೊಳು ಸಿಲ್ಕಿ,
ತ್ರಿಲೋಕವೆಲ್ಲ ವ್ರತಭ್ರಷ್ಟರಾದ ಚೋದ್ಯವ ಕಂಡು
ನಾ ಬೆರಗಾಗುತಿರ್ದೆನು
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./95
ಕ್ಷೀರವನೊಲ್ಲದೆ ಹಂಸ ನೀದಂಗೆ ಹರಿವಂತೆ,
ಕಮಲದ ಪರಿಮಳವನೊಲ್ಲದ ತುಂಬಿ ದತ್ತೂರ ಕುಸುಮಕ್ಕೆ ಹರಿವಂತೆ,
ನಿನ್ನಸಂಗದಿಂದಾದ ತನುಮನ ನಿನ್ನನರಿಯದೆ
ಸಂಸಾರಸಂಗಕ್ಕೆಳಸುವವು. ಇದಕಿನ್ನೆಂತೂ ಶಿವನೆ !
ನೀನೊಡ್ಡಿದ ಸಂಸಾರಬಂಧನವ ನೀನೆ ಪರಹರಿಸಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./96
ಗಗನದ ತಮವ ಕಳೆವರೆ ರವಿ ಅಧಿಕ ನೋಡಾ.
ವಿಪಿನದ ತರುಗಿರಿಕಾಷ್ಠವೆಲ್ಲಕೆಯು ಸುರತರು ಅಧಿಕ ನೋಡಾ.
ನವರತ್ನ ಮಾಣಿಕ್ಯ ಮೌಕ್ತಿಕ ವಜ್ರ ಪುಷ್ಯರಾಗ
ಅರ್ಥಭಾಗ್ಯವೆಲ್ಲಕ್ಕೆಯಾ ಪರುಷವಧಿಕ ನೋಡಾ.
ಧರೆಮೂರುಲೋಕದ ಗೋವುಗಳಿಗೆಲ್ಲ ಸುರಭಿಯಧಿಕ ನೋಡಾ.
ಈರೇಳು ಭುವನ ಹದಿನಾಲ್ಕು ಲೋಕವೆಲ್ಲಕ್ಕೆಯಾ
ಗುರುವಿಂದಧಿಕವಿಲ್ಲ ನೋಡಾ.
ಸಾಕ್ಷಿ :“ನ ಗುರೋರಧಿಕಂ ನ ಗುರೋರಧಿಕಂ ನ ಗುರೋರಧಿಕಂ |
ವಿದಿತಂ ವಿದಿತಂ ವಿದಿತಂ ವಿದಿತಂ ಶಿವಶಾಸನಂ ||”
ಎಂದುದಾಗಿ,
ಗುರುವಿಂದಧಿಕವಿಲ್ಲ, ಗುರುವಿಂದಧಿಕವಿಲ್ಲ, ಗುರುವೆ ಪರಮಾತ್ಮ.
ಎನ್ನ ಮಾನವಜನ್ಮದ ಹೊಲೆಯ ಕಳೆದು
ಶಿವದೇಹಿಯ ಮಾಡಿದ ಪರಮಗುರು ಪಡುವಿಡಿ
ಸಿದ್ಧಮಲ್ಲಿನಾಥಪ್ರಭುವೆಂಬ ಗುರುವ ಮರೆದವರಿಗೆ ಇದೇ ನರಕ./97
ಗಜಾಸುರಸಂಹರ ಗಗನಾತ್ಮ ಘನಗುರು
ಗರುಡಗಂಧರ್ವರೊಂದ್ಯ ಘನಶಿವ
ಗರಳಧರ ಘಟಾತ್ಮಜ್ಯೋತಿಪ್ರಕಾಶ
ಗಂಗಾಧರ ಗಮನನಿರ್ಗಮನ
ಗಣಸಕಲರಾತ್ಮೇಶ ಗರುಡ ಅತಿವಿಭೂಷ
ಜ್ಞಾನಜ್ಞೋತಿಪ್ರಕಾಶ ಗರುವ ಗಂಭೀರ
ಗುಣಸಾರ ಕುಜನಕುಠಾರ ಭವದೂರ
ಧರ್ಮವಿಚಾರ ದೇವರದೇವನೆಂದು ಮೊರೆಹೊಕ್ಕೆ
ಕೇಳೆನ್ನ ಹುಯ್ಯಲ,
ರಂಬಿಸಿ ಅಂಜದಿರೆಂದು ತಲೆದಡಹಿ ರಕ್ಷಿಸು
ಜಯಜಯ ಹರಹರ ಶಿವಶಿವ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./98
ಗಳಿಗೆಯ ಮೇಲೆ ಗಾಳಿ ಹರಿಯದ ಮುನ್ನ
ಕೊಳಗ ರಾಶಿಯ ನುಂಗುವುದ ಕಂಡೆ.
ಮುಂಡವೆದ್ದು ಭೂಮಂಡಲವ ನುಂಗಿ
ಆಲಿಯ ಮರೆಗೊಂಬುದ ಕಂಡೆನು.
ಹಗಲೆಗತ್ತಲೆಯಾಗಿ ಆಗ ಗಿಡಿಯ ಮಂಜಿನ ಹೊಗೆಯ
ದಾಳಿಯ ಕಂಡೆನು.
ಅಂಬುಧಿಯೊಳು ಮುಳುಗಿ ಲೋಕ ತೇಲಾಡುವುದ ಕಂಡೆನು.
ಇದೇನು ಚೋದ್ಯ ಹೇಳಾ !
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./99
ಗುದದಲ್ಲಿ ಆಧಾರಚಕ್ರ, ಪೃಥ್ವಿಯೆಂಬ ಮಹಾಭೂತ,
ಚತುಃಷ್ಕೋಣ, ಚೌದಳಪದ್ಮ, ಅಲ್ಲಿಯ ಅಕ್ಷರ ವಶಷಸವೆಂಬ
ನಾಲ್ಕು ಅಕ್ಷರ, ಅದರ ವರ್ಣ[ಪೀತ], ಅದಕ್ಕೆ ಅಧಿದೇವತೆ[ಬ್ರಹ್ಮ],
ಭಕ್ತ ಮುಖ, ಕ್ರಿಯಾಶಕ್ತಿ, ಆಚಾರಲಿಂಗ, ನಕಾರ ಸ್ವಾಯತ.
ಲಿಂಗಸ್ಥಾನದಲ್ಲಿ ಸ್ವಾಧಿಷ್ಠಾನಚಕ್ರ, ಅಪ್ಪುವೆಂಬ ಮಹಾಭೂತ, ಧನುರ್ಗತಿ,
ಷಡುದಳಪದ್ಮ, ಅಲ್ಲಿಯ ಅಕ್ಷರವಾರು ಬ ಭ ಮ ಯ ರ ಲ ;
ಅದರ ವರ್ಣ [ಶ್ವೇತ], ಅಧಿದೇವತೆ [ವಿಷ್ಣು], ಮಹೇಶ ಮುಖ,
ಜ್ಞಾನಶಕ್ತಿ, ಗುರುಲಿಂಗ, ಅಲ್ಲಿ ಮಕಾರ ಸ್ವಾಯತ.
ನಾಭಿಸ್ಥಾನದಲ್ಲಿ ಮಣಿಪೂರಕಚಕ್ರ, ತೇಜವೆಂಬ ಮಹಾಭೂತ,
ತ್ರಿಕೋಣ, ದಶದಳಪದ್ಮ, ಅಲ್ಲಿಯ ಅಕ್ಷರ ಹತ್ತು ;
ಡಢಣ ತಥದಧನ ಪಫ, ಅದಕ್ಕೆ [ಹರಿತ]ವರ್ಣ,
ಅಧಿದೇವತೆ [ರುದ್ರ], ಪ್ರಸಾದಿ ಮುಖ, ಇಚ್ಚಾಶಕ್ತಿ ,
ಶಿವಲಿಂಗ, ಶಿಕಾರ ಸ್ವಾಯತ.
ಹೃದಯಸ್ಥಾನದಲ್ಲಿ ಅನಾಹತಚಕ್ರ, ವಾಯುವೆಂಬ ಮಹಾಭೂತ,
ಷಟ್ಕೋಣ, ದ್ವಿದಶದಳಪದ್ಮ, ಅಲ್ಲಿಯ ಅಕ್ಷರ ಹನ್ನೆರಡು : ಕ ಖ ಗ ಘ ಙ ಚ ಛ ಜ ಝ ಞ ಟ ಠ ಅದರ ವರ್ಣ
[ಮಾಂಜಿಷ್ಟ], ಅದಕ್ಕೆ ಅಧಿದೇವತೆ [ಈಶ್ವರ],
ಪ್ರಾಣಲಿಂಗಿ ಮುಖ, ಘಆದಿಘೆಶಕ್ತಿ, ಜಂಗಮಲಿಂಗ,
ಅಲ್ಲಿ ವಕಾರ ಸ್ವಾಯತ.
ಕಂಠಸ್ಥಾನದಲ್ಲಿ ವಿಶುದ್ಧಿಚಕ್ರ, ಆಕಾಶವೆಂಬ ಮಹಾಭೂತ,
ವತರ್ುಳಾಕಾರ, ಷೋಡಷದಳಪದ್ಮ, ಅಲ್ಲಿಯ ಅಕ್ಷರ
ಹದಿನಾರು :ಅ ಆ ಇ ಈ ಉ ಊ ಋ ೂ ಲೃ ಲೃೂ ಏ ಐ
ಓ ಔ ಅಂ ಅಃ, ಅದಕ್ಕೆ ವರ್ಣ [ಕಪೋತ],
ಅಧಿದೇವತೆ ಸದಾಶಿವನು, ಶರಣ ಮುಖ, [ಪರಾ]ಶಕ್ತಿ ,
[ಪ್ರಸಾದಲಿಂಗ, ಯಕಾರ ಸ್ವಾಯತ.
ಭ್ರೂಮಧ್ಯದಲ್ಲಿ ಆಜ್ಞಾಚಕ್ರ, ಮನವೆಂಬ ಮಹಾಭೂತ, ದ್ವಿದಳಪದ್ಮ,]
ಅಲ್ಲಿಯ ಅಕ್ಷರವೆರಡು :ಹ ಷ ವೆಂಬ [ಅಕ್ಷರ],
ಮಾಣಿಕ್ಯ ವರ್ಣ, [ಅದಕ್ಕೆ ಅಧಿದೇವತೆ ಮಹೇಶ್ವರ],
ಐಕ್ಯ ಮುಖ, ಕ್ರಿಯಾಶಕ್ತಿ, ಮಹಾಲಿಂಗ, ಓಂಕಾರ ಸ್ವಾಯತ.
ಇಂತೀ ಷಡುಚಕ್ರದ, ಷಡುಸ್ಥಳದ, ಷಡುಲಿಂಗದ,
ಷಡುಶಕ್ತಿಯರಿಗೆ ಷಡಕ್ಷರವೆ ಪ್ರಾಣವಾಗಿ ವಿರಾಜಿಸುತ್ತಿದ್ದಿತಯ್ಯ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./100
ಗುರು ಕರುಣಾಕರ ಪರಶಿವ ಪರಮ
ಗುರು ಭವಹರ ಚಿನ್ಮಯ ಚಿದ್ರೂಪ
ಗುರುವೆ ನಿರಂಜನ ನಿರ್ಮಳ ನಿಃಖಳಗುರುವೆ ಸುರತುರವೆ.
ಪದ :ವಹ್ನಿ ವಿಪಿನ ತರು ಕಾಷ್ಠವ ಸುಡುವಂ
ತೆನ್ನ ಭವದ ಗೊಂಡಾರಣ್ಯವ
ನೆನ್ನಯ ಗುರುಕರುಣಗ್ನಿಯಲ್ಲಿ ಉರುಹಿ
ಮುನ್ನಿನ ಸುಕೃತದ ದೆಸೆಯಲಿ ಗುರುಕೃಪೆ
ಅನ್ಯಥಾ ಭಾಗ್ಯವ ಪಡೆದೆನು ಪರುಷದ
ಸನ್ನಿಧಿಯಲಿಹ ಲೋಹ ಪರಿಗು ಸಯುಕ್ತ. |1|
ಅಂಗಾತ್ಮನ ಪ್ರಾಣನ ಭವಿತನಗಳ
ಹಿಂಗಿಸಿ ಅವಿರಳ ಪರಬ್ರಹ್ಮದ ಮಹಾ
ಲಿಂಗವ ಕರ ಉರ ಶಿರ ಮನ ಭಾವದಲ್ಲಿ
ಸಂಗವ ಮಾಡಿಯೆ ಪ್ರಕೃತಿ ವಿಕೃತಿ ವಿಷ
ಯಂಗಳನೆಲ್ಲವ ತೊರಸಿ ಗಣಂಗಳ
ಡಿಂಗರಿಗನ ಮಾಡಿದೆನ್ನಯ ಗುರುಮಹಿಮೆ. |2|
ದುಲರ್ಿಖಿತಂಗಳ ತೊಡೆದು ವಿಭೂತಿ
ಧರಿಸ ಕಲಿಸಿ ಫಣಿಯೊಳು ರುದ್ರಾಕ್ಷಿಯ
ಸರಮಾಲೆಯ ತೊಡಕಲಿಸಿ ಷಡ
ಕ್ಷರಿಯ ಸ್ಮರಿಸ ಕಲಿಸಿ `ಶಿವಧ್ಯಾನವ ಹಿಂಗದ
ಲಿರು ನೀ ಕಂದಾ’ ಯೆಂದು ಅಭಯಕರ
ಶಿರದೊಳು ಮಡುಗಿಯೆ ಸಲುಹಿದ ಗುರು ನಿತ್ಯ. |3|
ರಂಬಿಸಿ ನಿಲ್ಲದಳುವಿಂಗೆ ಕಂದೆಗೆ ಮೇಣ್
ರಂಭೆ ಸ್ತನವನೂಡಿಯೆ ಸಲಹುವ ತೆರ
ಹಂಬಲಿಸಿ ಭಯಪಡುತಿಹಗೆ ಸೂರ್ಯ ನೀನೆ
ಶಂಭು ಚರಣತೀರ್ಥಪ್ರಸಾದವ
ನುಂಬಕಲಿಸಿಯೆ ಅನ್ಯಹಾರದ
ಬೆಂಬಳಿಗಳ ಕೆಡಿಸಿದೆನ್ನಯ ಗುರು ಮಹಿಮೆ. |4|
ಮಾಡಕಲಿಸಿದ ಲಿಂಗದ ಸೇವೆಯ ಸದಾ
ನೀಡಕಲಿಸಿದ ಜಂಗಮಕಮೃತಾನ್ನವ
ಬೇಡಕಲಿಸಿ ಮುಕ್ತಿಯ ಫಲಪದವ
ಗೂಡಕಲಿಸಿ ಶಿವಾನಂದದಾ ಲೀಲೆಯೊ
ಳಾಡಕಲಿಸಿ ನಿಜ ನಿತ್ಯ ನಿರ್ಮಳನ ಮಾಡಿದ ಗುರುವರ ಸಿದ್ಧಮಲ್ಲೇಶಾ |5|/101
ಗುರು ಕರುಣಿಸೆ ಇಷ್ಟಲಿಂಗವೆನ್ನ ಕರವ ಸೇರಲು
ಸರ್ವಾಂಗವೆಲ್ಲ ಲಿಂಗಮಯವಾದುದು ನೋಡಾ !
ಅದು ಎಂತೆಂದರೆ : ಇಷ್ಟಲಿಂಗದಿಂದ ಪ್ರಾಣಲಿಂಗ, ಪ್ರಾಣಲಿಂಗದಿಂದ
ಭಾವಲಿಂಗತ್ರಯಗಳಾದವು.
ಒಂದೊಂದು ಲಿಂಗದಲ್ಲಿ ಎರಡು ಲಿಂಗ ಹುಟ್ಟಿದವು : [ಇಷ್ಟಲಿಂಗದಿಂದ ಆಚಾರಲಿಂಗ ಗುರುಲಿಂಗ ಹುಟ್ಟಿದವು.
ಪ್ರಾಣಲಿಂಗದಿಂದ ಶಿವಲಿಂಗ ಜಂಗಮಲಿಂಗ ಹುಟ್ಟಿದವು.
ಭಾವಲಿಂಗದಿಂದ ಪ್ರಸಾದಲಿಂಗ ಮಹಾಲಿಂಗವೆಂಬೆರಡು ಲಿಂಗ ಹುಟ್ಟಿದವು.]
ಇಂತೀ ಷಡ್ವಿಧಲಿಂಗದಲ್ಲಿ ಷಡ್ವಿಧಸಂಬಂಧ : ಘ್ರಾಣದಲ್ಲಿ ಆಚಾರಲಿಂಗ ಸಂಬಂಧ.
ಜಿಹ್ವೆಯಲ್ಲಿ ಗುರುಲಿಂಗ ಸಂಬಂಧ.
ನೇತ್ರದಲ್ಲಿ ಶಿವಲಿಂಗ ಸಂಬಂಧ.
ತ್ವಕ್ಕಿನಲ್ಲಿ ಜಂಗಮಲಿಂಗ ಸಂಬಂಧ.
ಶ್ರೋತ್ರದಲ್ಲಿ ಪ್ರಸಾದಲಿಂಗ ಸಂಬಂಧ.
ಹೃದಯದಲ್ಲಿ ಮಹಾಲಿಂಗ ಸಂಬಂಧ.
ಆಚಾರಲಿಂಗದರಿವು ಗಂಧ, ಗುರುಲಿಂಗದರಿವು ರಸ,
ಶಿವಲಿಂಗದರಿವು ರೂಪು, ಜಂಗಮಲಿಂಗದರಿವು ಸ್ಪರುಶನ,
ಪ್ರಸಾದಲಿಂಗದರಿವು ಶಬ್ದ, ಮಹಾಲಿಂಗದರಿವು ಪರಿಣಾಮ.
ಒಂದೊಂದು ಲಿಂಗದಲ್ಲಿ ಆರುಲಿಂಗವಾದವು : ಆಚಾರಲಿಂಗದಲ್ಲಿ ಗುರುಲಿಂಗ ಶಿವಲಿಂಗ ಜಂಗಮಲಿಂಗ
ಪ್ರಸಾದಲಿಂಗ ಮಹಾಲಿಂಗವೆಂಬೈದು ಲಿಂಗವುಂಟು.
ಗುರುಲಿಂಗದಲ್ಲಿ ಆಚಾರಲಿಂಗ ಶಿವಲಿಂಗ ಜಂಗಮಲಿಂಗ
ಪ್ರಸಾದಲಿಂಗ ಮಹಾಲಿಂಗವೆಂಬೈದು ಲಿಂಗವುಂಟು.
ಶಿವಲಿಂಗಘದಲ್ಲಿಘೆ ಆಚಾರಲಿಂಗ ಗುರುಲಿಂಗ ಜಂಗಮಲಿಂಗ
ಪ್ರಸಾದಲಿಂಗ ಮಹಾಲಿಂಗವೆಂಬೈದು ಲಿಂಗವುಂಟು.
ಪ್ರಸಾದಲಿಂಗದಲ್ಲಿ ಆಚಾರಲಿಂಗ ಗುರುಲಿಂಗ ಶಿವಲಿಂಗ
ಜಂಗಮಲಿಂಗ ಮಹಾಲಿಂಗವೆಂಬೈದು ಲಿಂಗವುಂಟು.
ಇಂತಿವೆಲ್ಲ ಕೂಡಲ್ಕೆ ಮೂವತ್ತಾರು ಲಿಂಗ.
ಆ ಮೂವತ್ತಾರು ಲಿಂಗದಲ್ಲಿ ಒಂದೊಂದು ಲಿಂಗದಲ್ಲಿ ಆರುಲಿಂಗ ಕೂಡಲ್ಕೆ
ಇನ್ನೂರ ಹದಿನಾರು ಲಿಂಗವಾದವು.
ಅಂಗಪ್ರಭೆಯಲ್ಲಿ ಲಿಂಗಪ್ರಭೆಯಾಗಿ, ಲಿಂಗಪ್ರಭೆಯಲ್ಲಿ ಅಂಗಪ್ರಭೆಯಾಗಿ,
ಅಂಗಲಿಂಗಸಂಬಂಧಿಯಾಗಿದ್ದೆನು ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /102
ಗುರು ನರನೆಂದು, ಸತ್ತನುಕೆಟ್ಟನುಯೆಂಬ ನರಕಜೀವಿ ನೀ ಕೇಳಾ.
ಗುರು ಸತ್ತರೆ ಜಗವುಳಿಯಬಲ್ಲುದೆ ?
ಗುರು ಅಳಿವವನೂ ಅಲ್ಲ, ಉಳಿವವನೂ ಅಲ್ಲ.
ಸಾಕ್ಷಿ :“ಸ್ಥಾವರ ಜಂಗಮಾದರಂ ನಿರ್ಮಾಲ್ಯೇ ಸ್ಥಿರಮೇವ ಚ | (?)
ಜ್ಞಾನವಂದಿತಪಾದಾಯ ತಸ್ಮೆ ಶ್ರೀಗುರುವೇ ನಮಃ ||”
ಎಂದುದಾಗಿ,
ಗುರು ಸತ್ತ, ಕೆಟ್ಟ ಎಂದು ಬಸುರ ಹೊಯಿದುಕೊಂಡು ಅಳುತಿಪ್ಪ
ಕುರಿಮಾನವರಿಂಗೆ ಗುರುವಿಲ್ಲ, ಲಿಂಗವಿಲ್ಲ,
ಜಂಗಮವಿಲ್ಲ, ಪಾದೋದಕ ಪ್ರಸಾದವಿಲ್ಲವಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /103
ಗುರು ಲಿಂಗಜಂಗಮ ವಿಭೂತಿ ರುದ್ರಾಕ್ಷಿ ಪಂಚಾಕ್ಷರಿ
ಪಾದೋದಕ ಪ್ರಸಾದವೆಂಬವು ಅಷ್ಟಾವರಣವು
ಪರಶಿವನಿಂದುದಯವಾದವು.
ಪರಶಿವನಿಂದುತ್ಪತ್ಯವಾದ ವಸ್ತುವ ಪರಶಿವನೆಂದು ಕಾಣ್ಬುದಲ್ಲದೆ
ಅನ್ಯವೆಂದು ಕಂಡಿರಿಯಾದರೆ ಕೂಗಿಡೆ ಕೂಗಿಡೆ
ನರಕದಲ್ಲಿಕ್ಕುವ ನಮ್ಮ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./104
ಗುರು ಸಂಸಾರಿ, ಶಿಷ್ಯ ಯತಿಯಾದರೇನಯ್ಯಾ !
ಗುನುವಿನೆಡೆಗೆ ಶಿಷ್ಯ ಭಕ್ತಿ ಕಿಂಕುರ್ವಾಣವಿರಬೇಕಯ್ಯಾ.
ಇಲ್ಲದ ಅಹಂಕಾರದಲ್ಲಿ
`ನಾ ಯತಿ, ಗುರು ಸಂಸಾರಿ ‘ ಎಂಬ ಭಾವ
ಅಂಗದೊಳು ಹೊಳೆದರೆ ಕೂಗಿಡೆ ಕೂಗಿಡೆ ನರಕದಲ್ಲಿಕ್ಕುವ
ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /105
ಗುರು ಸಹಜವಾಗಿರೆ,
ಶಿಷ್ಯ ಸತ್ಯ ಪವಾಡಪುರುಷನಾದರೂ ಆಗಲಿ.
ಶಿಷ್ಯನ ಭಾವಕ್ಕೆ ಗುರು ಹೆಚ್ಚಲ್ಲದೆ,
ಗುರುವಿನ ಭಾವಕ್ಕೆ ಶಿಷ್ಯ ಹೆಚ್ಚೇ ?
`ನಾ ಪವಾಡಪುರುಷ, ಗುರು ಸಹಜಮಾನವ ಭಾವ ‘ ಎಂಬ
ಅಂಗದೊಳು ಹುಟ್ಟಿತಾದರೆ ಇಪ್ಪತ್ತೆಂಟುಕೋಟಿ ನರಕದಲ್ಲಿಕ್ಕುವ
ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /106
ಗುರುಕರುಣದ ಇಷ್ಟಲಿಂಗವ
ಜರಿದನ್ಯದೈವಕ್ಕೆರಗುವ
ಕುರಿಗಳ ಶಿವಭಕ್ತರೆನಬಹುದೆ ?
ಪದ :ಪತಿಯಿರಲು ಪರಪುರುಷಗೆ
ಗತಿಯಾಗಿ ತಿರುಗುವ ಹೊಲತಿಯ
ಮತಿಯಂತೆ ಸಜ್ಜನೆಯೆನಬಹುದೆ ?
ಸಿತಕಂಠಲಿಂಗ ಕರದೊಳಿರೆ ಪರ
ಪ್ರತುಮೆಗೆರಗುವ ಹೊಲೆಯನ
ಕ್ಷಿತಿಯೊಳು ಶಿವಭಕ್ತನೆನಬಹುದೆ ? |1|
ಮಾರಿ ಮಸಣಿ ಮೈಲಾರನ ಬಳಿ
ನೀರ ಕುಡಿದು ಅವರೆಂಜಲ
ಮಾರಾರಿಲಿಂಗಕ್ಕೆ[ರೆದುಂ]ಬ ಸಮ
ಗಾರನ ಯಮರಾಜ ಬಾಧಿಸಿ
ರೌರವ ನರಕದೊಳಿಕ್ಕುವನಿದ
ಧರಣಿಯೊಳು ತಿಳಿದು ನೋಡಿರೌ. |2|
ತಲೆಯೊಳು ಕಿಚ್ಚು ತಳಿಗೆ ಶಸ್ತ್ರ
ಸಲೆ ಬೇವಿನುಡುಗೆ ಬೆನ್ನಲಿ ಸಿಡಿ
ಹಲವು ಹರಕೆಯನು ಪರದೈವ
ಗಳಿಗೆ ಮಾಡುವ ಕ್ಷೀಣ ಅಜ್ಞಾನಿ
ಹೊಲೆಯ ತಾ ಶಿವಭಕ್ತನೆಂದೆನೆ ಮುಂದೆ
ಕುಲಕೋಟಿ ನರಕದೊಳಿಕ್ಕುವ ನೇಮ. |3|
ಗುರುಲಿಂಗಜಂಗಮವೆಂಬವು
ಪರಶಿವನ ಚಿದ್ರೂಪವೆಂಬುದ
ನರಿಯದ ಹಲವು ದೈವಗಳಿ
ಗೆರಗಿ ಸೂಳೆಯಂತೆ ತಿರುಗುವ
ನರನ ಲಿಂಗವಂತನೆಂದೆನ್ನೆ ಮುಂದೆ
ಹರ ಶಿಕ್ಷೆಯ ಮಾಡುವ ನನಗೆ. |4|
ಶಿವನೆ ದೈವ ಲಿಂಗಾಂಗಿಯೆ ಕುಲಜ
ಭವಿಗಳೆಲ್ಲರು ಅಕುಲಜರೊ
ಬವರ ಧರೆಯೊಳುಸುರಿದೆ
ಹವಿನೇತ್ರ ಪಡುವಿಡಿ ಸಿದ್ಧಮಲ್ಲನೆಂ
ಬುವನ ಸರ್ವಕನೆಂದು ನಂಬಿದ
ಅವ ನಿತ್ಯ ಸತ್ಯ ಸಜ್ಜನನೆಂಬೆ. |5|/107
ಗುರುಕೃಪೆಯಿಲ್ಲದವನ ಕರ್ಮಹರಿಯದು.
ಲಿಂಗ ಸೋಂಕದವನ ಅಂಗ ಚಿನ್ನವಡಿಯದು.
ಜಂಗಮದರುಶನವಿಲ್ಲದವಂಗೆ ಮೋಕ್ಷಾರ್ಥಬಟ್ಟೆ ದೊರೆಯದು.
ವಿಭೂತಿಯ ಧರಿಸದವ[ಂಗೆ] ದುರಿತಲಿಖಿತಂಗಳು ತೊಡೆಯವು.
ರುದ್ರಾಕ್ಷಿಯ ಧರಿಸದವಂಗೆ ರುದ್ರಪದ ಸಾಧ್ಯವಾಗದು.
ಪಂಚಾಕ್ಷರಿಯ ಜಪಿಸದವನ ಪಂಚಭೂತದ ಹೊಲೆಯಳಿಯದು.
ಪಾದೋದಕವ ಕೊಳದವನ ಪರಿಭವಂಗಳು ಅಳಿಯವು.
ಪ್ರಸಾದ ಸೋಂಕದವಂಗೆ ಮುಕ್ತಿ ಸಾಧ್ಯವಾಗದು.
ಇಂತೀ ಅಷ್ಟಾವರಣದಲ್ಲಿ ನೈಷ್ಠೆವಾರಿಯಾಗದನ್ನಕ್ಕರ
ದೇವನಲ್ಲ ಭಕ್ತನಲ್ಲ ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./108
ಗುರುದೀಕ್ಷೆಯ ಪಡೆದು, ಗುರುಲಿಂಗವ ಶಿರದಲ್ಲಿ ಧರಿಸಿ,
ಗುರುಮಂತ್ರವ ಕರ್ಣದಲ್ಲಿ ಕೇಳಿ, ಗುರುಕುಮಾರ ತಾನಾಗಿ,
ಮುಂಡೆಗೆ ಮುತ್ತೈದೆತನ ಬಂದಂತೆ ಭವದಂಡಲೆಯ ಕಳೆದು,
ಶಿವಭಕ್ತನ ಮಾಡಿದ ಗುರುದೈವವನರಿಯದೆ,
ಅನ್ಯದೈವವ ಹೊಗಳುವ ಕುನ್ನಿ ಮಾನವ ನೀ ಕೇಳಾ !
ಗರುದೇವರಲ್ಲದನ್ಯದೇವರ ಹೊಗಳಿದರೆ ನರಕವೆಂಬುದನರಿಯಾ.
ಗುರುವೆ ಪರಬ್ರಹ್ಮ, ಪರಶಿವ.
ಗುರುವಿನಿಂದ ಪರಮಾತ್ಮನ ನೆನಹು ಅಂಗದೊಳು ನೆಲೆಗೊಂಡಿತಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./109
ಗುರುದೀಕ್ಷೆಯಿಲ್ಲದ ಶಿಲೆಯ ಕೊರಳಲ್ಲಿ ಕಟ್ಟಿಕೊಂಡು
ಲಿಂಗವೆಂದು ನುಡಿವ ಚಾಂಡಾಲಿ ನೀ ಕೇಳಾ.
ಗುರುದೀಕ್ಷೆಯಿಲ್ಲದುದು ಶಿಲೆಯಲ್ಲದೆ, ಲಿಂಗವಲ್ಲ.
ಅದು ಎಂತೆಂದರೆ : ಭಿತ್ತಿಯ ಮೇಲಣ ಚಿತ್ರಕ್ಕೆ ಚೈತನ್ಯವುಂಟೇನಯ್ಯಾ ?
ಗುರುದೀಕ್ಷವಿಲ್ಲದ ಲಿಂಗಕ್ಕೆ ಪ್ರಾಣಕಳೆಯುಂಟೇನಯ್ಯಾ ?
ಪ್ರೇತಲಿಂಗವ ಕೊರಳಲ್ಲಿ ಕಟ್ಟಿ ಭೂತಪ್ರಾಣಿಗಳಾಗಿ
ಲಿಂಗವಂತರೆಂಬ ಪಾಷಂಡಿಗಳ ನೋಡಾ !
ಸಾಕ್ಷಿ :“ಪ್ರೇತಲಿಂಗ ಸಂಸ್ಕಾರಿ ಭೂತಪ್ರಾಣೀ ನ ಜಾನಾತಿ”
ಎಂದುದಾಗಿ,
ಹೆಸರಿನ ಲಿಂಗ, ಹೆಸರಿನ ಗುರುವಾದರೆ
ಅಸಮಾಕ್ಷನ ನೆನಹು ನೆಲೆಗೊಳ್ಳದು ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./110
ಗುರುದೈವದ ಮುಂದೆ ಪರದೈವವ ಹೊಗಳುವ
ಕರ್ಮಿ ನೀ ಕೇಳಾ.
ಗುರುದೈವವಿದ್ದ ಮೇಲೆ ಪರದೈವ ಸಲ್ಲದು.
ಪರದೈವವಿದ್ದ ಮೇಲೆ ಗುರುದೈವ ಸಲ್ಲದು.
ಪರದೈವವಿದ್ದು ಗುರುದೈವವೆಂದು ನುಡಿದುಕೊಂಡು ನಡೆದರೆ
ನೆರೆ ನರಕದಲಿಕ್ಕುವ
ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /111
ಗುರುಲಿಂಗಜಂಗಮವ ನೆರೆ ನಂಬಿಪ್ಪಾತನೆ ಶಿವಭಕ್ತ.
ಗುರುಲಿಂಗಜಂಗಮವೆ ಶಿವನೆಂದು
ಅರ್ಥ ಪ್ರಾಣ ಅಭಿಮಾನವ ಸೇವಿಸುತ್ತಿಪ್ಪಾತನೆ ಶಿವಭಕ್ತ.
ಸಾಕ್ಷಿ :`ಅರ್ಥಪ್ರಾಣಭಿಮಾನಂ ಚ ಗುರೌ ಲಿಂಗೇ ತು ಜಂಗಮೇ |’
ತಲ್ಲಿಂಗ ಜಂಗಮದಲ್ಲಿ ಧನವಂಚಕನಾಗಿ ಮಾಡುವ ಭಕ್ತಿಯ
ತೆರನೆಂತೆಂದರೆ : ನರಿಯ ಕೂಗು ಸ್ವರ್ಗಕ್ಕೆ ಮುಟ್ಟುವುದೆ ?
ಹರಭಕ್ತಿಯಲ್ಲಿ ನಿಜವನರಿಯದೆ ಮಾಡಿದ ಭಕ್ತಿ
ಸಯಿಧಾನದ ಕೇಡು ಕಾಣಾ
ಪರಮ[ಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ]./112
ಗುರುಲಿಂಗವಿದ್ದ ಊರು ಸೀಮೆಯ ಕಂಡಾಕ್ಷಣವೆ
ತುರಗ ಅಂದಣಾದಿಗಳನಿಳಿದು, ಭಯಭಕ್ತಿಕಿಂಕುರ್ವಾಣದಿಂದ
ಹೋಗಿ, ಗುರುವಿನ ಪಾದೋದಕವ ಕೊಂಬುದು ಶಿಷ್ಯಗೆ ನೀತಿ.
ಸಾಕ್ಷಿ :“ ಶಿಷ್ಯೋ ಗುರುಸ್ಥಿತಂ ಗ್ರಾಮಂ ಪ್ರವೇಶಿತಂ ವಾಹನಾದಿಕಂ |
ವರ್ಜಯೇತ್ ಗೃಹಸಾವಿೂಪ್ಯಂ ಛಂದಯೋಶ್ಚ ವಿಪಾದುಕಃ || ”
ಎಂದುದಾಗಿ,
ಹೀಗೆಂಬುದನರಿಯದೆ ಅಹಂಕಾರದಲ್ಲಿ ಬೆಬ್ಬನೆ ಬೆರತು,
ಗುರುವಿದ್ದ ಊರು ಸೀಮೆಯೊಳು ಅಂದಣ ಕುದುರೆಯನೇರಿ
ನಡೆದರೆ ರೌರವ ನರಕದಲ್ಲಿಕ್ಕುವ
ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./113
ಗುರುವ ನರನೆಂದು ನುಡಿವ ಕುರಿಮಾನವರ
ನೆರೆಹೊರೆಯಲ್ಲಿರಲಾಗದು.
ದೊರೆಸಂಗವಾದರೂ ನುಡಿಸಲಾಗದು.
ನುಡಿಸಿದರೆ ಮಹಾನರಕವಯ್ಯಾ !
ಗುರುವೆ ಪರಶಿವನು, ಗುರುವೆ ಪರಬ್ರಹ್ಮ, ಗುರುವು ಹರನಿಂದಲಧಿಕ.
ಗುರುವಿನಿಂದ ಹರನ ಕಾಣ್ಬರಲ್ಲದೆ, ಹರನಿಂದ ಗುರುವ ಕಾಣಬಾರದು.
ಅದು ಎಂತೆಂದರೆ : ಮರ್ತ್ಯಲೋಕಕ್ಕೆನ್ನ ಮಾನವಶರೀರಿಯ ಮಾಡಿ ಕಳುಹಿ,
ಎನ್ನ ಮಾನವಜನ್ಮದ ಬಂಧನ ಕಳೆದು,
ಗುರುವಾಗಿ ಬಂದು ಮುಕ್ತಿಯ ತೋರಿಸಿ
ಕೈಲಾಸಕೆನ್ನ ಯೋಗ್ಯನ ಮಾಡಿದ.
ಇಹದಲ್ಲಿ ಪುಣ್ಯ, ಪರದಲ್ಲಿ ಮುಕ್ತಿಯೆಂಬ ಇವನೆರಡು
ಗುರುಪಾದದಲ್ಲಿಯೆ ಕಂಡೆನಯ್ಯಾ,
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./114
ಗುರುವರಿಯದವನೆಂದುದಾಸೀನವ ಮಾಡಿ
ನೆರೆ ಬಲ್ಲವರನರಸಿ, ಭಕ್ತಿಯ ಮಾಡುವ
ಪಾಪಿ ಮಾನವ ನೀ ಕೇಳು.
ಸಾಕ್ಷಿ :“ಗುರೌ ಸನ್ನಿಹಿತೇ ಯಸ್ತು ಪೂಜಾಯಾಮನ್ಯಮಾನಸಃ |
ಸ ಪಾಪೀ ನರಕಂ ಯಾತಿ ಕಾಲಸೂತ್ರಮಿವೋತ್ಸರೇತ್ ||”
ಎಂದುದಾಗಿ,
ಗುರುವರಿಯದವನೂ ಅಲ್ಲ, ಬಲ್ಲವನೂ ಅಲ್ಲ.
ಗುರು ನಿರಂಜನ, ಗುರು ಪರಶಿವ,
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./115
ಗುರುವಾಗಿ ಎನ್ನ ಅನಂತಜನ್ಮದ ಹೊಲೆಯ ಕಳದೆಯಲ್ಲಾ ದೇವಾ !
ಲಿಂಗವಾಗಿ ಬಂದು ಎನ್ನ ಕರಸ್ಥಲ ಉರಸ್ಥಲದಲ್ಲಿ ನಿಂದು
ಎನ್ನ ಭವಿತನವ ಕಳದೆಯಲ್ಲಾ ದೇವಾ !
ಜಂಗಮವಾಗಿ ಬಂದು ಸುಳಿದು ಎನಗೆ
ಮೋಕ್ಷಾರ್ಥದ ಬಟ್ಟೆಯ ತೋರಿದೆಯಲ್ಲಾ ದೇವಾ !
ವಿಭೂತಿಯಾಗಿ ಬಂದು ಎನ್ನ ಲಲಾಟ ಮುಖ್ಯ
ನಾನಾ ಸ್ಥಾನಂಗಳಲ್ಲಿ ನಿಂದೆಯಲ್ಲಾ ದೇವಾ !
ರುದ್ರಾಕ್ಷಿಯಾಗಿ ಬಂದು ಕೊರಳು ಮುಖ್ಯ ನಾನಾ ಸ್ಥಾನಂಗಳಲ್ಲಿ
ಭೂಷಣವಾಗಿದ್ದೆಯಲ್ಲಾ ದೇವಾ !
ಷಡಕ್ಷರಿಯಾಗಿ ಬಂದು ಎನ್ನ ಜಿಹ್ವೆಯಲ್ಲಿ ನೆಲೆಗೊಂಡು
`ಓಂ ನಮಃ ಶಿವಾಯ’ ಎಂಬ ಪ್ರಣಮ ಪಂಚಾಕ್ಷರಿಯನೆ
ಸ್ಮರಿಸುತಿದ್ದೆಯಲ್ಲಾ ದೇವಾ !
ಪಾದೋದಕವಾಗಿ ಬಂದು ಎನ್ನ ಅಂಗವ ಚಿನ್ನವ ಮಾಡಿದೆಯಲ್ಲಾ ದೇವಾ !
ಪ್ರಸಾದವಾಗಿ ಬಂದು ಎನಗೆ ಮುಕ್ತಿಯ ತೋರಿದೆಯಲ್ಲಾ ದೇವಾ !
ಅಷ್ಟಾವರಣದಮುಖದಲ್ಲಿ ಬಂದು ನಿಂದು ಎನ್ನ ಕಷ್ಟಬಡುವ
ಭವಂಗಳ ತಪ್ಪಿಸಿ ನಿಂದ ನಿಲವ ನೀ ಬಲ್ಲೆಯಲ್ಲದೆ
ಮತ್ತಾರು ಬಲ್ಲರು ಹೇಳಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./116
ಗುರುವಾದಾತನು ಪರಶಿವ ತಾನೆ ನೋಡಾ !
ಲಿಂಗವಾದಾತನು ಪರಶಿವ ತಾನೆ ನೋಡಾ !
ಜಂಗಮವಾದಾತನು ಪರಶಿವ ತಾನೆ ನೋಡಾ !
ವಿಭೂತಿಯಾದಾತನು ಪರಶಿವ ತಾನೆ ನೋಡಾ !
ರುದ್ರಾಕ್ಷಿಯಾದಾತನು ಪರಶಿವ ತಾನೆ ನೋಡಾ !
ಪಾದೋದಕವಾದಾತನು ಪರಶಿವ ತಾನೆ ನೋಡಾ !
ಪ್ರಸಾದವಾದಾತನು ಪರಶಿವ ತಾನೆ ನೋಡಾ !
ಪಂಚಾಕ್ಷರಿಯಾದಾತನು ಪರಶಿವ ತಾನೆ ನೋಡಾ !
ಇಂತು ಅಷ್ಟಾವರಣಮುಖದಲ್ಲಿ ನಿಂತು
ಅಂತಕನ ಪಾಶವ ಸುಟ್ಟುರುಹಿದೆಯಲ್ಲ ಉರಗಧರ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./117
ಗುರುವಿನಲ್ಲಿ ಗುಣ ವಿದ್ಯೆ ಕುಲ ಬಾಲ್ಯ ಯೌವನ
ವೃದ್ಧನೆಂದು ಅರಸಲುಂಟೇ ? ಅರಸಿದರೆ ಮಹಾಪಾತಕ.
ಸಾಕ್ಷಿ :“ ಆಚಾರ್ಯೆ ಬಾಲಬುದ್ಧಿಶ್ಚ ನರಬುದ್ಧಿಸ್ತಥೈವ ಚ |
ಅಸಿಷ್ಟ ಬುದ್ಧಿಭಾವೇನ ರೌರವಂ ನರಕಂ ವ್ರಜೇತ್ || ”
ಎಂದುದಾಗಿ,
ಎನ್ನ ಗುರು ಬಾಲನೂ ಅಲ್ಲ, ಯೌವನನೂ ಅಲ್ಲ, ವೃದ್ಧನೂ ಅಲ್ಲ.
ಮೃತರಹಿತ ಪರಶಿವ.
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ
ಗುರುವ ಮರೆದವರಿಗೆ ಇದೇ ನರಕ./118
ಗುರುವಿನಲ್ಲಿ ಲಿಂಗವುಂಟು, ಜಂಗಮವುಂಟೆಂದು
ಗುರುಭಕ್ತಿಯ ಮಾಡೆಂದು ತೋರಿದಾತ ನಮ್ಮ ಬಸವಣ್ಣನಯ್ಯಾ.
ಲಿಂಗದಲ್ಲಿ ಜಂಗಮವುಂಟೆಂದು, ಗುರುವುಂಟೆಂದು
ಲಿಂಗಭಕ್ತಿಯ ಮಾಡೆಂದು ತೋರಿದಾತ ನಮ್ಮ ಬಸವಣ್ಣನಯ್ಯಾ.
ಜಂಗಮದಲ್ಲಿ ಗುರುವುಂಟು, ಲಿಂಗವುಂಟು
ಜಂಗಮ ಭಕ್ತಿಯ ಮಾಡೆಂದು ತೋರಿದಾತ ನಮ್ಮ ಬಸವಣ್ಣನಯ್ಯಾ.
ಒಂದೇ ಮೂರ್ತಿ ಮೂರೆಂದಾತ ನಮ್ಮ ಬಸವಣ್ಣನಯ್ಯಾ.
`ಏಕಮೂರ್ತಿ ತ್ರಯೋರ್ಭಾಗಾಃ’ ಎಂದುದಾಗಿ,
ಗುರು ಲಿಂಗಜಂಗಮವಾದಾತ ಒಬ್ಬನೆ ಶಿವನೆಂದು
ಪ್ರಸಾರ ಮಾಡಿ ಭಕ್ತಿಯ ಬೆಳಸಿದಾತ ನಮ್ಮ ಬಸವಣ್ಣನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./119
ಗುರುವೆ ಬೇರೆ ಹರ ಬೇರೆಯೆಂಬ
ಕುನ್ನಿ ಮಾನವ ನೀ ಕೇಳು.
ಗುರು ಬೇರಲ್ಲ, ಹರ ಬೇರಲ್ಲ ; ಗುರುವೂ ಹರನೂ ಒಂದೇ.
ಗುರು ಕಿರಿದ ಮಾಡಿ, ಹರನ ಹಿರಿದು ಮಾಡಬಾರದು.
ಹರನ ಕಿರಿದು ಮಾಡಿ, ಗುರುವ ಹಿರಿದು ಮಾಡಬಾರದು.
ಪಾರ್ವತಿಯೊಘಳುಘೆ ಪರಮೇಶ ಗುರುವಿನ ಮಹಿಮೆ ಹೇಳಿದ.
ಕೇಳರಿಯಾ ಮನುಜ ?
ಅದು ಎಂತೆಂದರೆ.
ಗುರುದೇವನು ಮಹಾದೇವನು, ಗುರುದೇವನೆ ಸದಾಶಿವನು,
ಗುರುವಿಂದ ಪರವಿನ್ನಾವುದೂ ಇಲ್ಲ.
ಸಾಕ್ಷಿ :“ಗುರುದೇವೋ ಮಹಾದೇವೋ ಗುರುದೇವಃ ಸದಾಶಿವಃ |
ಗುರುದೈವಾತ್ ಪರನ್ನಾಸ್ತಿ ತಸ್ಮೆ ಶ್ರೀಗುರುವೇ ನಮಃ ||”
ಎಂದುದಾಗಿ,
ಹೀಗೆಂಬ ಗುರುವ ಮರೆದಾಗಳೆ ಭವಮಾಲೆ ತಪ್ಪದಯ್ಯಾ,
[ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ]. /120
ಗುರುವೆ ಸುರತರುವೆ ಸಕಲಾಗಮದಿರವೆ
ಮುಕ್ತಿಯಾಗರವೆ ಚಿದ್ಘನಗುರುವೆ ಚಿತ್ಪ್ರಕಾಶಮೂರ್ತಿಗುರುವೆ.
ಶ್ರೀಗುರುವೆ ಶಾಂತಿಕಳಾ ಗುರುವೆ ವಿದ್ಯಾಗುರುವೆ
ಮದ್ಗುರುವೆ ಜ್ಞಾನಗುರುವೆ ಪರಬ್ರಹ್ಮಗುರುವೆ
ಪರಮಾನಂದಗುರುವೆ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ,
ನಿಮ್ಮಡಿದಾವರೆಯೊಳಗೆನ್ನ ಮನವ ಭೃಂಗವ ಮಾಡಾ./121
ಗುರುವೆಂಬೆರಡಕ್ಷರವು ಹರನಾಮವಲ್ಲದೆ ನರನಾಮವೇನಯ್ಯಾ ?
ನರರ ನಾಮವೆನಲಾಗದು.
ಗಿರಿಜೆಗೆ ಪರಮಾತ್ಮ ಹೇಳಿದ ವಾಕ್ಯವ ಕೇಳಿ ಅರಿಯಾ ಮನುಜ.
ಸಾಕ್ಷಿ :“ಗುಕಾರಂ ಮಮ ರೂಪಂಚ ರುಕಾರಂ ತವ ರೂಪಕಂ |
ಉಭಯೋಃ ಸಂಗಮೋ ದೇವಃ ಗುರುರೂಪೇ ಮಹೇಶ್ವರಿ ||”
ಎಂದುದಾಗಿ,
ಪಾಷಾಣದಮುಖದಲ್ಲಿ ಮರುಜೇವಣಿಗೆ ಉದಯವಾದಂತೆ,
ನರಜನ್ಮಮುಖದಿ ಬಂದು ಎನ್ನ ಸರ್ವಜನ್ಮವ ಕಳೆದು
ಪುನರ್ಜಾತನ ಮಾಡಿದ ಪರಮಗುರು
ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ ಗುರುವೆ ಎನ್ನ ಪ್ರಾಣ./122
ಗುರುಶಿಷ್ಯ ಸಂಬಂಧಕೆ ಹೋರಾಡಿ, ಧರೆಯೆಲ್ಲ ಬಂಡಾದರು ನೋಡಾ.
ಗುರುವಿನ ಭವವ ಶಿಷ್ಯನರಿಯ,
ಶಿಷ್ಯನ ಭವವ ಗುರುವರಿಯ.
ಜ್ಞಾನಹೀನ ಗುರುವಿಂಗೆ ಜ್ಞಾನಹೀನ ಶಿಷ್ಯನಾದರೆ
ಅವರ ಪಾತಕಕೆ ಕಡೆ ಏನಯ್ಯಾ ?
ಸಾಕ್ಷಿ :“ಜ್ಞಾನಹೀನಗುರೋ ಪ್ರಾಪ್ತಂ ಶಿಷ್ಯಜ್ಞಾನಂ ನ ಸಿದ್ಧತಿ |
ಮೂಲಚ್ಛಿನ್ನೇ ಯಥಾವೃಕ್ಷೇ ಗಂಧಃ ಪುಷ್ಪಂ ಫಲಂ ತಥಾ ||”
ಎಂದುದಾಗಿ,
ಹೀಗೆಂಬುದನರಿಯದೆ, ಹೊನ್ನು ವಸ್ತ್ರದಾಸೆಗೆ
ಲಿಂಗವ ಮಾರಿಕೊಂಡುಂಬ ಗುರು ಶಿವದ್ರೋಹಿ,
ಲಿಂಗವ ಕೊಂಬ ಶಿಷ್ಯ ನರದ್ರೋಹಿ.
ಇಂತಪ್ಪ ಗುರು ಶಿಷ್ಯ ಸಂಬಂಧವ ನೋಡಿ ನೋಡಿ ನಗುತಿದ್ದ
ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /123
ಗುರುಹಸ್ತದಿಂದ ಹುಟ್ಟಿದ ಮೇಲೆ
ಶಿವಭಕ್ತನೆಂಬ ನಾಮವಾದೀತಯ್ಯಾ !
ಗುರುಹಸ್ತದಿಂದ ಹುಟ್ಟದಿದ್ದರೆ ಶಿವಭಕ್ತನೆಂಬ ನಾಮವೆಲ್ಲಿಯದಯ್ಯಾ ?
ತಮ್ಮ ಪೂರ್ವಜನ್ಮವನು ಗುರುವಿಂಗೊಪ್ಪಿಸಿ ಪುನರ್ಜಾತರಾಗಿ
ಗುರುವಿನ ಕರುಣ ಕೃಪೆಯ ಪಡೆದ ಮೇಲೆ
ಅನ್ಯಜೀವಿಯ ಹೊಗಳುವ ನರಕಜೀವಿಯನೆನಗೊಮ್ಮೆ ತೋರದಿರಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./124
ಗೂಡಿನೊಳಗಿಪ್ಪ ಪಕ್ಷಿಗೆ ಗೂಡಿನ ಹೊರಗೆ ಪಕ್ಕ ಬಂದಿವೆ.
ನೋಡಿದರೆ ಪಕ್ಷಿ ಒಳಗೆ, ರೆಕ್ಕೆ ಹೊರಗೆ.
ಪಕ್ಷಿಯ ಎರಡು ರೆಕ್ಕೆಯೊಳು, ಒಂದು ರೆಕ್ಕೆಯೊಳು ಚಂದ್ರನಡಗಿಪ್ಪ,
ಒಂದು ರೆಕ್ಕೆಯೊಳು ಸೂರ್ಯನಡಗಿಪ್ಪ.
ಪಕ್ಷಿಯ ಕೊಂದು ಗೂಡಿನ ಹೊರಗಣ ರೆಕ್ಕೆಯೊಳಿಪ್ಪ
ಚಂದ್ರ ಸೂರ್ಯರ ಶೀತ ಉಷ್ಣವ ತೆಗೆಸಿ
ರೆಕ್ಕೆಯ ಮುರಿದಾತನಲ್ಲದೆ ಶಿವಶರಣನಲ್ಲ ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./125
ಘಟ್ಟಬೆಟ್ಟದ ನಟ್ಟನಡುವಿನ ಗಿರಿಯಲ್ಲಿ
ಹುಟ್ಟಿತೊಂದು ಸೋಜಿಗದಗ್ನಿಯ ಕಳೆ.
ಆ ಕಳೆಯ ಬೆಳಗ ಕಾಣೆನೆಂದು
ಇಬ್ಬರು ಮುಂದುಗೆಟ್ಟರು, ಮೂವರು ತಾಮಸಕ್ಕೊಳಗಾದರು,
ನಾಲ್ವರು ನಡೆಗೆಟ್ಟರು, ಐವರು ಅಂಧಕರಾದರು,
ಆರುಮಂದಿ ಹೋರಾಟಗೊಳುತಿರೆ,
ಏಳುಮಂದಿ ಕೂಪವ ಬಿದ್ದರು,
ಎಂಟುಮಂದಿ ತಂಟುಕಕ್ಕೆ ಒಳಗಾದರು.
ಒಂಬತ್ತು [ಮಂದಿ] ಕಣವಿಯ ಹರವರಿಯಲ್ಲಿ [ಹೊಕ್ಕರು.]
ಹತ್ತು ಬಗೆಯವರು ಹರಿದಾಡುತಿರೆ,
ಇದನು ಕಂಡು, ತರುಗಿರಿಯ ನಡುವೆ ಹರಿವ ಉದಕ ಗಾಳಿ ಬಂದು
ಬೆಟ್ಟವನಡರಿ, ಉರಿವ ಜ್ಯೋತಿಯ ತಾಗದ ಮುನ್ನ
ನೀರಹರಿಯನಡ್ಡಂಗಟ್ಟಿ, ಗಾಳಿಯ ಹಿಮ್ಮೆಟ್ಟಿಸಿ,
ಜ್ಞಾನಪರಬ್ರಹ್ಮದಲ್ಲಿ ನಿಂದವರಾರೆಂದರೆ : ಪ್ರಭುದೇವರು, ಚೆನ್ನಬಸವೇಶ್ವರದೇವರು,
ಮೋಳಿಗೆಯ್ಯನವರು, ಸಂಗನಬಸವೇಶ್ವರದೇವರು,
ನೀಲಾಂಬಿಕೆ ತಾಯಿ, ಅಕ್ಕನಾಗಮ್ಮ, ಮಹಾದೇವಿಯಕ್ಕ,
ಮುಕ್ತಾಯಿ ಮುಖ್ಯವಾದ ಏಳುನೂರಾ ಎಪ್ಪತ್ತು
ಅಮರಗಣಂಗಳ ಲೆಂಕರ ಲೆಂಕನಾಗಿ
ಎನ್ನ ಆದಿಪಿಂಡಿವ ಧರಿಸಿ,
ಮರ್ತ್ಯಕ್ಕೆ ಕಳುಹಿದ ಭೇದವ ಪಿಂಡಜ್ಞಾನದಿಂದಲರಿದು
ಆಚರಿಸುತ್ತಿದ್ದೆನಯ್ಯಾ ಎನ್ನಾಳ್ದ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./126
ಚತುರ್ವಿಂಶತಿತತ್ವಕೂಡಿ ಶರೀರ ಹೇಗಾಯಿತ್ತೆಂದಡೆ,
ಹೇಳುವೆ ಕೇಳಿರಣ್ಣಾ : ಆ ಆಕಾಶ ಆಕಾಶವ ಬೆರಸಲು ಜ್ಞಾನ ಹುಟ್ಟಿತ್ತು.
ಆ ಆಕಾಶ ವಾಯುವ ಬೆರಸಲು ಮನ ಹುಟ್ಟಿತ್ತು.
ಆಕಾಶ ಅಗ್ನಿಯ ಬೆರಸಲು ಅಹಂಕಾರ ಹುಟ್ಟಿತ್ತು.
ಆಕಾಶ ಅಪ್ಪುವ ಬೆರಸಲು ಬುದ್ಧಿ ಹುಟ್ಟಿತ್ತು.
ಆಕಾಶ ಪೃಥ್ವಿಯ ಬೆರಸಲು ಚಿತ್ತ ಹುಟ್ಟಿತ್ತು.
ಇಂತಿವು ಕರಣಚತುಷ್ಟಯಂಗಳುತ್ಪತ್ತಿಯೆಂದು ಹೇಳಲ್ಪಟ್ಟಿತ್ತಯ್ಯ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /127
ಚಿನ್ಮಯ ಚಿದ್ರೂಪ ಚಿತ್ಪ್ರಕಾಶ ಚಿದಾನಂದ
ಚಿದ್ಘನ ಚಿತ್ಪ್ರಣಮ ಚಿದ್ಘನಾತ್ಮ ಚಿದ್ಘನಲಿಂಗ
ಚಿದ್ಗುರು ಚಿದ್ಪರಶಿವ
ಚಿದ್ಪರಬ್ರಹ್ಮ ಚಿದಾತ್ಮಸಂಜೀವ ರಕ್ಷಿಪುದೆಮ್ಮ
ಜಯಜಯ ಹರಹರ ಶಿವಶಿವ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /128
ಛಲಮದವೆಂಬುದು ತಲೆಗೇರಿ
ಗುರುಹಿರಿಯರ ನೆಲೆಯನರಿಯದೆ ಮದಿಸಿಪ್ಪರಯ್ಯ.
ರೂಪಮದ ತಲೆಗೇರಿ ಮುಂದುಗೊಂಡು
ತಮ್ಮ ತನುವಿನ ರೂಪ ಚೆಲ್ವಿಕೆ ನೋಡಿ ಮರುಳಾಗಿ
ಚಿದ್ರೂಪನ ನೆನವ ಮರೆದರಯ್ಯಾ.
ಯವ್ವನಮದ ತಲೆಗೇರಿ
ಮದಸೊಕ್ಕಿದಾನೆಯಂತೆ ಪ್ರಯಾಸಮತ್ತರಾಗಿ
ಕಾಮನ ಬಲೆಯೊಳಗೆ ಸಿಲ್ಕಿ
ಕಾಮಾರಿನೆನವ ಮರೆದರಯ್ಯಾ.
ಧನಮದವೆಂಬುದು ತನುವಿನೊಳು ಇಂಬುಗೊಂಡು
ಅರ್ಥಭಾಗ್ಯ ಕಾಡಿ ವ್ಯರ್ಥ ಸತ್ತಿತು ಲೋಕ.
ವಿದ್ಯಾಮದವೆಂಬುದು ಬುದ್ಧಿಗೆಡಿಸಿ
ನಾ ಬಲ್ಲವ ತಾ ಬಲ್ಲವನೆಂದು ತಕರ್ಿಸಿ ಪ್ರಳಯಕಿಳಿದರು.
ರಾಜ್ಯಮದವೆದ್ದು ರಾಜ್ಯವನಾಡಿಸಿ ಬೇಡಿಸಿಕೊಂಡೆನೆಂದು
ರಾಜರಾಜರು ಹತವಾದರು.
ತಪಮದವೆದ್ದು ನಾ ತಪಸಿ ನಾ ಸಿದ್ಧ ನಾ ಯೋಗಿ
ನನಗಾರು ಸರಿಯಿಲ್ಲವೆಂದು
ಅಹಂಕಾರಕ್ಕೆ ಗುರಿಯಾಗಿ ಭವಕ್ಕೆ ಬಂದರು ಹಲಬರು.
ಇಂತೀ ಅಷ್ಟಮದವೆಂಬ ಭ್ರಾಂತು[ವ] ತೊಲಗಿಸಿ
ನಿಭ್ರಾಂತನಾಗಿರಬಲ್ಲರೆ ಶಿವಶರಣನೆಂಬೆ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /129
ಜಗದೊಳಗೆ ಜಗ ಹುಟ್ಟಿ
ಜಗಮಯವಾಗಿದ್ದುದ ಕಂಡೆನು.
ಜಗವನಾಳುವ ದೊರೆ ರಾಕ್ಷಿಗವಿಯಲ್ಲಿ ಸಿಲ್ಕಿ,
ಘಾಸಿಯಾಗುತಿರ್ದನು ನೋಡಾ.
ಆ ರಾಕ್ಷಿ ಬ್ರಹ್ಮನ ಚರ್ಮವ ಹೊತ್ತು,
ವಿಷ್ಣುವಿನ ರಕ್ತವ ಕುಡಿದು, ರುದ್ರನ ಭಸ್ಮವ ಮಾಡಿ,
ಈಶ್ವರನ ಗಾಳಿಯಾಗಿ ಹಾರಿಸಿ,
ಸದಾಶಿವನ ಆಕಾಶದ ಗುರಿಯನೆ[ಚ್ಚಿ] ಆಡುತಾಡುತ ಬಂದವಳು.
ಅರಸಿನ ಪ್ರಜೆ-ಪರಿವಾರ, ಆನೆ-ಸೇನೆ ಎಲ್ಲವ ನುಂಗಿ ತೇಗಿ,
ಜಗದೊಳಗಣ ಜಗ ಹಿರಿದಪ್ಪ ಜಗವಾಗಿ
ಜಲದ ಕೊಣದಲ್ಲಿ ಹೊರಟು
ದೃಷ್ಟವಾಗಿ ನಿಂದುದ ಕಂಡು ರಕ್ಷಿ ನಗುತಿದೆ.
ಈ ಭೇದವ ಹಳೆಯ ಮನೆಯ ಸುಟ್ಟು
ಹೊಸ ಮನೆಯಾದಲ್ಲಿ ಕಂಡೆ, ಇದೇನು ಚೋದ್ಯ ಹೇಳಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./130
ಜಗವಿದ್ದಂದು ನೀನೆ, ಜಗವಿಲ್ಲದಂದು ನೀನೆ ;
ಪಂಚಶತಕೋಟಿ ವಿಸ್ತೀರ್ಣ ಭೂಮಂಡಲವಿದ್ದಂದು ನೀನೆ,
ಅವು ಇಲ್ಲದಂದು ನೀನೆ ;
ಈರೇಳುಭುವನ ಹದಿನಾಲ್ಕು ಲೋಕವಿದ್ದಂದು ನೀನೆ,
ಅವು ಇಲ್ಲದಂದು ನೀನೆ ;
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./131
ಜನನಭಯದ ಮೂಲದ ಬೇರ ಕಿತ್ತು ಸುಟ್ಟುರುಹುವ ಭಸ್ಮ,
ಮರಣಭಯದ ಮೂಲದ ದುರಿತ ದುಃಕೃತವನಿಟ್ಟೊರೆಸುವ
ಶ್ರೀ ಮಹಾಭಸ್ಮ,
ಹಣೆಯೊಳಿಹ ದುರಿತಲಿಖಿತವ ತೊಡೆದು ದೂರಮಾಡುತ್ತಿಪ್ಪ ಭಸ್ಮ,
ತ್ರಿಣಯನ ಸಾಲೋಕ್ಯಪದದ ಬಯಕೆಯ ತೋರುವ ಭಸ್ಮ,
ಮರ್ತ್ಯಲೋಕದ ಯತಿ ಸಿದ್ಧ ಸಾಧ್ಯರು ಮಹಾಗಣಂಗಳ
ಮುಕ್ತರ ಮಾಡುತಿಪ್ಪ ಭಸ್ಮ,
ತ್ರಿಣಯನ ಸಾಲೋಕ್ಯದ ದೇವಗಣಂಗಳ
ನಿತ್ಯರ ತೋರುವ ಚಿದ್ಭಸ್ಮ , ಚಿದಾನಂದ ಭಸ್ಮ,
ಇದು ಶುದ್ಧ ಪರಶಿವನ ಚಿದ್ರೂಪವೆಂದು ಮುದದೆ ಧರಿಸಿ,
ಭವಸಾಗರವ ದಾಂಟಿ ನಿತ್ಯನಾಗಿದ್ದೆನು ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./132
ಜಪಿಸಿರೊ ಜಪಿಸಿರೊ ಶ್ರೀ ಪಂಚಾಕ್ಷರಿಯ.
ಜಪದಿಂದ ರುದ್ರನಪ್ಪುದು ತಪ್ಪದು ನೋಡಾ !
ಶ್ರೀ ಪಂಚಾಕ್ಷರಿಯನಿಂಬುಗೊಳದವನ ಅಂಗ ಹಾಳು.
ಶ್ರೀ ಪಂಚಾಕ್ಷರಿಯ ನೆನೆಯದವ ಜಿಹ್ವೆ ಹೇಳು.
ಶ್ರೀ ಪಂಚಾಕ್ಷರಿಯ ಕೇಳದವನ ಕರ್ಣ ಹಾಳು.
ನಡೆವೆಡೆಯಲ್ಲಿ ನುಡಿವೆಡೆಯಲ್ಲಿ ಕೊಡುವೆಡೆಯಲ್ಲಿ
ಕೊಂಬೆಡೆಯಲ್ಲಿ ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಬಿಡದೆ
ಪಂಚಾಕ್ಷರಿಯೆಂಬ ಮಂತ್ರವನೆ
`ನಮಃ ಶಿವಾಯ’ `ನಮಃ ಶಿವಾಯ’ `ನಮಃ ಶಿವಾಯ’ಯೆಂದು
ಜಪಿಸಿ, ಒಡಲ ದುಗುರ್ಣವ ಕೆಡಿಸಿ,
ಮೃಡ ನಿಮ್ಮ ನೆನೆದು ನಾ ಬದುಕಿದೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./133
ಜಯ ಜಯ ನಿತ್ಯನಿರಂಜನ ಪರಶಿವ,
ಜಯ ಜಯ ಅಮೃತಕರ,
ಜಯ ಸದಾನಂದ, ಜಯ ಕರುಣಜಲ,
ಜಯ ಭಕ್ತರೊಂದ್ಯ,
ಜಯ ಜ್ಞಾನಸಿಂಧು, ಜಯ ಕರ್ಮವಿದೂರ,
ಜಯ ಚಿನ್ಮಯ ಚಿದ್ರೂಪ, ಜಯ ಜಗದೀಶ
ಎನ್ನವಗುಣವ ನೋಡದೆ ರಕ್ಷಿಸು
ಜಯಜಯ ಹರಹರ ಶಿವಶಿವ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./134
ಜಯಜಯ ಪರಮೇಶ ಪರಬ್ರಹ್ಮ
ಜಯಜಯ ನಿತ್ಯಾನಂದ
ಪದ : ಹರಿಯಜಸುರರೊಂದ್ಯ ಜಯಜಯ
ಗಿರಿಸುತೆಪ್ರಾಣೇಶ ಜಯಜಯ
ಪರಮುನಿಗಳಾತ್ಮ ಜಯಜಯ
ಪರಂಜ್ಯೋತಿಲರ್ಿಂಗ ಜಯಜಯ
ತರಣಿಕೋಟಿತೇಜ ಜಯಜಯ
ಉರಗಾಭರಣಭವ ಜಯಜಯ
ಕರುಣರಸಸಿಂಧು ಜಯಜಯ
ಮುರಹರ ಮೃತರಹಿತ ಜಯಜಯ ||1||
ತ್ರಿಪುರಸಂಹರ ನಿತ್ಯ ಜಯಜಯ
ಅಪರಂಪಾರಮೂರ್ತಿ ಜಯಜಯ
ಕೃಪತ್ರೈಲೋಕೇಶ ಜಯಜಯ
ಉಪಮೆರಹಿತಪುಣ್ಯ ಜಯಜಯ
ಜಪತಪಕೊಲಿವಾತ ಜಯಜಯ
ಅಪಹರಿ ಶಿಖೆಯೊಳಿಟ್ಟ ಜಯಜಯ
ವಿಪಿನಕಾಷ್ಠಾರಿನೇತ್ರ ಜಯಜಯ
ನಿಪುಣ ನಿರ್ಗುಣ ಶಂಭು ಜಯಜಯ ||2||
ಮಾರಾರಿ ಮದಚರ್ಮ ಜಯಜಯ
ಮೂರುನೇತ್ರದ ಭವ ಜಯಜಯ
ಈರೇಳು ಭುವನಾತ್ಮಜ ಜಯಜಯ
ವಾರಿಜ ಅರಿಭೂಷ ಜಯಜಯ
ಮೇರುವಿಗಣಪೂಜ್ಯ ಜಯಜಯ
ಪೂರಿತ ಪುಣ್ಯಾಂಗ ಜಯಜಯ
ಧಾರುಣಿ ದಯಪಾಲ ಜಯಜಯ
ಕರುಣಿ ಚಿನ್ಮಯ ಜಯಜಯ ||3||
ನಂದಿವಾಹನ ನಿತ್ಯ ಜಯಜಯ
ಅಂಧಕಾಸುರವೈರಿ ಜಯಜಯ
ಕಂದುಗೊರಳ ಶಿವನೆ ಜಯಜಯ
ಸಂದ ಕುಣಪಶೂಲ ಜಯಜಯ
ಕಂದಗೆ ವರವಿತ್ತ ಜಯಜಯ
ಗಂಧರ್ವರಿಗೊಲಿದೆ ಜಯಜಯ
ಇಂದ್ರಪೂಜಿತಲಿಂಗ ಜಯಜಯ
ತಂದೆತಾಯಿಲ್ಲದ ಮೋನ ಜಯಜಯ ||4||
ಭವರೋಗಕ್ಕೆ ವೈದ್ಯ ಜಯಜಯ
ಶಿವ ವಿಶ್ವಕುಟುಂಬಿ ಜಯಜಯ
ಜವನ ಸಂಹರ ಅಮಲ ಜಯಜಯ
ಪವಿತ್ರಸ್ವರೂಪಕಾಯ ಜಯಜಯ
ಭುವನ ಸರ್ವಕೆ ದೇವ ಜಯಜಯ
ಕುವರ ಹಂಪನ ಪ್ರಾಣ ಜಯಜಯ
ದೇವ ಗುರುಸಿದ್ಧಮಲ್ಲ ಜಯಜಯ
ಕವಿವ ದುರಿತಹರ ಜಯಜಯ/135
ಜಲದ ಮರೆಯಲ್ಲಿಪ್ಪ ಸೂರ್ಯನಂತೆ,
ಸ್ಫಟಿಕದ ಘಟದೊಳಗೆತ್ತಿದ ಜ್ಯೋತಿಯಂತೆ,
ಮುಗಿಲಮರೆಯಲ್ಲಿ ಹೊಳೆಯುತ್ತಿಹ ಮಿಂಚಿನಂತೆ,
ಎನ್ನ ಪಿಂಡಾಂಡದೊಳು
ಜ್ಞಾನವಾಗಿ ಹೊಳೆಯುತ್ತಿದ್ದೆ ಅಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./136
ಜ್ಞಾನ ಗುರುವಿಗೆ ಜ್ಞಾನ ಶಿಷ್ಯನಾದರೆ
ಜೇನುತುಪ್ಪದೊಳು ಮಧುರ ಬೆರೆದಂತೆ.
ಅಜ್ಞಾನಿ ಗುರುವಿಂಗೆ ಅಜ್ಞಾನಿ ಶಿಷ್ಯನಾದರೆ
ಅಮವಾಸೆಯ ಮುಂದಣ ಕಾಳದೊಳು ಮೋಡಕವಿದು
ಘೋರಾಂಧಕಾರ ಕತ್ತಲೆಯಾಂದತೆ.
ಎನ್ನ ಗುರು ಶಿಷ್ಯ ಸಂಬಂಧ ಇಂತಲ್ಲವಯ್ಯಾ !
ಎನ್ನ ಗುರು ಜ್ಞಾನಿಯಲ್ಲ, ಅಜ್ಞಾನಿಯಲ್ಲ.
ಜ್ಞಾನಿಯಜ್ಞಾನಿಯಿಬ್ಬರಿಗೆ ಸುಜ್ಞಾನವನೀವ ನಿಬ್ಬೆರಗಿ ಪರಮಾತ್ಮ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /137
ಜ್ಯೋತಿ ಇದ್ದ ಗೃಹಕ್ಕೆ ತಮವುಂಟೇನಯ್ಯಾ ?
ಪರಂಜ್ಯೋತಿಲಿಂಗದ ಸಂಗದ ಬೆಳಗಲಿಹ ಮಹಾತ್ಮನಿಗೆ
ಮಾಯಾತಮಂಧದ ಭೀತಿಯುಂಟೇನಯ್ಯಾ ?
ಕಂಠೀರಘವಘೆನಿಹ ವನದೊಳು ಕರಿವುಂಟೇನಯ್ಯಾ ?
ಲಿಂಗವೆಂಬ ಸಿಂಹದ ಮರೆಯಬಿದ್ದಾತಂಗೆ
ಅಷ್ಟಮದವೆಂಬ ಕರಿಯ ಭಯವುಂಟೇನಯ್ಯಾ ?
ಗರುಡನಿದ್ದ ಸ್ಥಾನದಲ್ಲಿಗೆ ಉರಗನ ಭಯವುಂಟೇನಯ್ಯಾ ?
ಪರಮಾತ್ಮನೊಳುಬೆರೆದ ನಿಬ್ಬೆರಗಿ ಶರಣಂಗೆ
ಕುಂಡಲಿಸರ್ಪನ ಭಯವುಂಟೇನಯ್ಯಾ ?
ಆನೆಯ ಮೇಲೆ ಹೋಗುವ ಮಾನವನಿಗೆ ಶ್ವಾನನ ಭಯವುಂಟೇನಯ್ಯಾ ?
ಲಿಂಗಾಂಗಸಮರಸವೆಂಬ ಮದ ತಲೆಗೇರಿ ಹೋಗುವ
ಶಿವಶರಣಂಗೆ ಪಂಚೇಂದ್ರಿಯವೆಂಬ ಶ್ವಾನನ ಭಯವುಂಟೇನಯ್ಯಾ ?
ಉರಿವುತಿಹ ಅಗ್ನಿಗೆ ಸೀತದ ಭಯವುಂಟೇನಯ್ಯಾ ?
ಗುರುಕರುಣಾಗ್ನಿಯಲ್ಲಿ ಭವದಗ್ಧನಾದ ಶರಣಂಗೆ
ಅನ್ಯಭಯಭೀತಿಯ ಚಳಿ ಉಂಟೇನಯ್ಯಾ ?
ಉರಗಮುಟ್ಟಲು ಸರ್ವಾಂಗವನೆಲ್ಲ ವಿಷಕೊಂಡಂತೆ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ
ಲಿಂಗಸೋಂಕಿದವರೆಲ್ಲ ಸರ್ವಾಂಗಲಿಂಗಿಗಳಾದುದ ನೋಡಾ./138
ಜ್ಯೋತಿಯಿಲ್ಲದ ಕತ್ತಲೆಮನೆಯಂತೆ,
ಸೂರ್ಯನಿಲ್ಲದ ಗಗನದ ಕಾಳದಂತೆ,
ಆತ್ಮ ದೇಹ ಮಧ್ಯದ ಗೃಹದೊಳು
ಮಾಯಾತಮಂಧವೆಂಬ ಕತ್ತಲೆಯ ಹೆಚ್ಚಿಸಿ,
ಶಿವಜ್ಞಾನವನಡಗಿಸಿ,
ಅಹಂಕಾರ ಮಮಕಾರವೆಂಬ ಅಜ್ಞಾನಕೆನ್ನ ಗುರಿಮಾಡಿ,
ನೀ ತೊಲಗಿ ಹೋದರೆ ನಾ ಬೀದಿಗರುವಾದೆ.
ಗ್ರಾಣಕೊಂಡ ಚಂದ್ರನಂತಾದೆ,
ಪಿತ-ಮಾತೆಯಿಲ್ಲದ ಶಿಶುವಿನಂತಾದೆ,
ಎನ್ನ ಹುಯ್ಯಲಂ ಕೇಳಿ, ರಂಬಿಸಿ ತಲೆದಡಹು
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./139
ತನುಲಿಂಗವೆಂದೆಂಬ ಅದ್ವೈತಿಯ ಮಾತ ಕೇಳಲಾಗದು.
ಮನಲಿಂಗವೆಂದೆಂಬ ಮೂರ್ಖನ ಮಾತ ಕೇಳಲಾಗದು.
ಪ್ರಾಣಲಿಂಗವೆಂದೆಂಬ ಪ್ರಪಂಚಿಗಳ ಮಾತ ಕೇಳಲಾಗದು.
ತನುಲಿಂಗವಾದರೆ ಹೊನ್ನು ಹೆಣ್ಣು ಮಣ್ಣು ಮೂರೆಂಬ
ಅನ್ಯವಿಷಯಕ್ಕೆ ಸಿಲ್ಕಿ ಅನಂತ ಪಾಡಿಗೆ ಗುರಿಯಾಗಬಹುದೇ ?
ಮನಲಿಂಗವಾದರೆ ಮನವಿಕಾರದ ಭ್ರಮೆಯಲ್ಲಿ
ತೊಳಲಿ ಬಳಲಿ ಅಜ್ಞಾನಕ್ಕೆ ಗುರಿಯಾಗಬಹುದೇ ?
ಪ್ರಾಣಲಿಂಗವಾದರೆ ಪ್ರಳಯಕ್ಕೆ ಗುರಿಯಾಗಿ
ಸತ್ತು ಸತ್ತು ಹೂಳಿಸಿಕೊಳಬಹುದೇ ?
ತನು ಮನ ಪ್ರಾಣಲಿಂಗವಾದರೆ ಜನನ ಮರಣವೆಂಬ
ಅಣಲಿಂಗೆ ಗುರಿಯಾಗಿ ನಾನಾ ಯೋನಿಯಲ್ಲಿ ತಿರುಗಬಹುದೇನಯ್ಯಾ ?
ತನು ಮನ ಪ್ರಾಣವಾ ಘನಮಹಾಲಿಂಗಕ್ಕೆ ಸರಿಯೆಂದು
ಅಜ್ಞಾನದಿಂದ ತನುವೆ ಲಿಂಗ ಮನವೆ ಲಿಂಗ ಪ್ರಾಣವೆ ಲಿಂಗವೆಂದು
ಇಷ್ಟಲಿಂಗವ ಜರಿದು ನುಡಿವ ಭ್ರಷ್ಟ ಬಿನುಗು ದುರಾಚಾರಿ
ಹೊಲೆಯರ ನಾಯಕನರಕದಲ್ಲಿಕ್ಕುವ
ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /140
ತನುವಿನ ಹಂಬಲವ ಮರೆದಂಗೆ ತನುವ್ಯಸನವೆಲ್ಲಿಯದೋ ?
ಮಾಯದ ಬೇಳುವೆಯನೊರಸಿದಾತಂಗೆ ಮನವ್ಯಸನವೆಲ್ಲಿಯದೋ ?
ಶಿವಜ್ಞಾನದೊಳಿಂಬುಗೊಂಡಾತಂಗೆ ಧನವ್ಯಸನವೆಲ್ಲಿಯದೋ ?
ಶಿವಲಿಂಗ ವಿಶ್ವಾಸದಿ ಅನುಮಿಷದೃಷ್ಟಿಯಿಟ್ಟಾತಂಗೆ
ವಿಶ್ವಾಸವ್ಯಸನವೆಲ್ಲಿಯದೋ ?
ಶಿವಲಿಂಗ ಸಾಧ್ಯಮಾಡಿ ಕರುಣಕೃಪೆ ಪಡೆದಾತಂಗೆ
ಸೇವಕವ್ಯಸನವೆಲ್ಲಿಯದೋ ?
ಇಂತೀ ಸಪ್ತವ್ಯಸನಂಗಳಮುಖದಲ್ಲಿ
ಶಿವತನು ಶಿವಮನ ಶಿವದ್ರವ್ಯ ಶಿವರಾಜ್ಯ
ಶಿವಉತ್ಸಾಹ ಶಿವವಿಶ್ವಾಸ ಶಿವಸೇವಕವೆಂದಿಪ್ಪ
ಶರಣರ ಚೆಮ್ಮಾವುಗೆಯ ಕಿರುಗುಣಿಕೆಯ ಮಾಡೆನ್ನನಿರಿಸಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /141
ತನುವೆಂಬ ಹೊಲದೊಳು ಜೀವವೆಂಬ ಒಕ್ಕಲಿಗ,
ಅಜ್ಞಾನವೆಂಬ ಕೂರಿಗೆ, ಪಂಚೇಂದ್ರಿಯವೆಂಬ ತಾಳುಗಳಿಗೆ,
ಪಂಚವಿಷಯವೆಂಬ ಸೆಡ್ಡಿಯಕೋಲನಿಕ್ಕಿ,
ಚಿತ್ತವೆಂಬ ಸೆಡ್ಡಿಯಬಟ್ಟಲಿಗೆ ಬುದ್ಧಿಯೆಂಬ ಹಸ್ತದಿಂದ
ದಶವಾಯುಗಳೆಂಬ ಬೀಜವ ಬಿತ್ತಿ,
ಕರಣಾದಿಗುಣವೆಂಬ ಬೆಳೆಯ ಬೆಳೆವುತ್ತಿರೆ,
ಮನವಿಕಾರಭ್ರಮೆಯೆಂಬ ಮೂಷಕನ ಹಿಂಡು ಕವಿಯೆ,
ಅದಕ್ಕೆ ರೋಷವೆಂಬ ಬಡಿಗಲ್ಲನೊಡ್ಡಿ,
ಆಸೆಯೆಂಬ ಜಂಪವಿಟ್ಟು, ರೋಷವೆಂಬ ಬಡಿಗಲ್ಲು ಮೇಲೆ ಬೀಳೆ,
ಒದ್ದಾಡಿ ಒರಲೊರಲಿ ಸಾಯುತಿರೆ,
ತನುವೆಂಬ ಹೊಲನ ಕೆಡಿಸಿ, ಜೀವವೆಂಬ ಒಕ್ಕಲಿಗನ ಕೊಂದು,
ಅಜ್ಞಾನವೆಂಬ ಕೂರಿಗೆಯನುರುಹಿ,
ಪಂಚೇಂದ್ರಿಯವೆಂಬ ತಾಳ ಮುರಿದು,
ಪಂಚವಿಷಯವೆಂಬ ಸೆಡ್ಡಿಯಕೋಲ ಸೀಳಿಬಿಟ್ಟು,
ಚಿತ್ತವೆಂಬ ಸೆಡ್ಡಿಯಬಟ್ಟಲನೊಡದು,
ಬುದ್ಧಿಯೆಂಬ ಹಸ್ತದ ಸಂದ ತಪ್ಪಿಸಿ,
ದಶವಾಯುಗಳೆಂಬ ಬೀಜವ ಹುರಿದು,
ಕರಣೇಂದ್ರಿಯವೆಂಬ ಬೆಳೆಯ ಕೊಯಿದು ಕೆಡಿಸಿ,
ನಿಃಕರಣವಾಗಿ ನಿಜಲಿಂಗಪದವ ಸಾರಿಪ್ಪ ಶರಣಂಗೆ
ನಮೋ ನಮೋ ಎಂಬೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /142
ತನುವ್ಯಸನವೆತ್ತಿದಲ್ಲಿ ತರಣಿಕೋಟಿತೇಜಪ್ರಕಾಶನ ನೆನೆವೆನು.
ಮನವ್ಯಸನವೆತ್ತಿದಲ್ಲಿ ಮನೋಮೂರ್ತಿಯ ನೆನೆವೆನು.
ಧನ ವ್ಯಸನವೆತ್ತಿದಲ್ಲಿ ದಯಾಕರುಣಕೃಪಾಲನ ನೆನೆವೆನು.
ರಾಜ್ಯವ್ಯಸನವೆತ್ತಿದಲ್ಲಿ ವಿಷಕಂಠನ ನೆನೆವೆನು.
[ಉತ್ಸಾಹ ವ್ಯಸನವೆತ್ತಿದಲ್ಲಿ ರಜತಗಿರಿನಿವಾಸನ ನೆನೆವೆನು.
ವಿಶ್ವಾಸವ್ಯಸನವೆತ್ತಿದಲ್ಲಿ ಉರ್ವಿಪಾಲನ ನೆನೆವೆನು.]
ಸೇವಕವ್ಯಸನವೆತ್ತಿದಲ್ಲಿ ಶರಣಗಣರಕ್ಷಾಮಣಿಯ ನೆನೆವೆನು.
ಇಂತೀ ಸಪ್ತವ್ಯಸನಂಗಳ ಮುಖದಲ್ಲಿ ತರಣಿಕೋಟಿಪ್ರಕಾಶ,
ಮನೋಮೂರ್ತಿ, ದಯಾಕರುಣಕೃಪಾಲ,
ರಜತಗಿರಿನಿವಾಸ, ಉರ್ವಿಪಾಲ, ವಿಷಕಂಠ,
ಶರಣಗಣರಕ್ಷಾಮಣಿ ಶಿವಾಯ ಪರಾಯ ಭವಾಯಯೆಂದು
ಭವಸಾಗರವ ದಾಂಟಿ ನಿತ್ಯನಾಗಿರ್ದೆ ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /143
ತೆರಣಿಯ ಹುಳು ತನ್ನ ಮನೆಯೊಳು ತಾನೆ
ನುಲಿ ಸುತ್ತಿಕೊಂಡು ಸಾವಂತೆ,
ಎನ್ನ ಸಂಸಾರ ಸುಖ ದುಃಖ ಎನ್ನನೆ ಸುತ್ತಿಕೊಂಡು
ಕಾಲಮೃತ್ಯುವಿಂಗೆ ಗುರಿಮಾಡಿ ಕಾಡುತಿಪ್ಪುದು ನೋಡಯ್ಯಾ,
ಈ ಸಂಸಾರ ಸುಖ ದುಃಖವ ನೀಗಿ ನಿಶ್ಚಿಂತದಲ್ಲಿಪ್ಪುದೆಂದೊಯೆಂದೊ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./144
ತ್ರಿಪುಂಡ್ರ ತ್ರಿದೇವರುತ್ಪತ್ಯಸ್ಥಿತಿಲಯವ ಕೆಡಿಸುವುದೆಂದು
ಭಾಳೊಳು ಶ್ರೀ ವಿಭೂತಿಯ ಧರಿಸಕಲಿಸಿದನಯ್ಯಾ ಶ್ರೀಗುರು.
ಅದು ಎಂತೆಂದರೆ : ಪ್ರಥಮಪುಂಡ್ರ ಬ್ರಹ್ಮನ ಉತ್ಪತ್ಯವ ಕೆಡಿಸುವುದೆಂದು,
ದ್ವಿತೀಯಪುಂಡ್ರ ವಿಷ್ಣುವಿನ ಸ್ಥಿತಿಗತಿಯ ಕೆಡಿಸುವುದೆಂದು
ತೃತೀಯಪುಂಡ್ರ ರುದ್ರನ ಲಯದ ಹೊಡೆಗಿಚ್ಚ
ಕೆಡಿಸುವುದೆಂದು ಅರುಹಿದ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /145
ತ್ರಿಪುರಸಂಹರ ತ್ರಿಶೂಲಿ ತ್ರಿನಯನ
ತ್ರಿಗುಣಕತೀತ ತ್ರಿದೇವರಾತ್ಮಲಿಂಗ
ತ್ರಿಮಲವಿದೂರ ತ್ರಿಲಿಂಗೇಶ ತ್ರಿಪ್ರಸಾದ
ತ್ರಿಲೋಕೇಶ ತ್ರಿಣೇಯ ತ್ರಿತನು
ಆತ್ಮವಿಲೇಪ ತಿಮಿರಹರದ್ಭಾನು
ತ್ರ್ಯಕ್ಷರ ಅಘಮಘೆರತ್ರನೀಲಕಂಠ
ತ್ರಿಯಾಸ್ಯರುದ್ರ ಪರಮಾರ್ಥ ಪರಬ್ರಹ್ಮ
ರಕ್ಷಿಪುದೆಮ್ಮ ಜಯಜಯ ಹರಹರ ಶಿವಶಿವ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./146
ತ್ರಿವಿಧ ತನುವಿಗೆ ತ್ರಿವಿಧ ದೀಕ್ಷೆ.
ತ್ರಿವಿಧ ದೀಕ್ಷೆಗೆ ತ್ರಿವಿಧ ಲಿಂಗ.
ತ್ರಿವಿಧ ಲಿಂಗಕ್ಕೆ ತ್ರಿವಿಧ ಕರವ ತೋರಿದ ಗುರುವೆ ಶರಣು.
ಅದು ಎಂತೆಂದರೆ : ಕಾಯದ ಕರದಲ್ಲಿ ಇಷ್ಟಲಿಂಗವ ಕೊಟ್ಟು
ಸ್ಥೂಲತನುವಿನ ಪೂರ್ವಾಶ್ರಯವ ಕಳೆದು
ಕ್ರಿಯಾದೀಕ್ಷೆಯ ಮಾಡಿದ ಗುರುವೆ ಶರಣು.
ಮನದ ಕರದಲ್ಲಿ ಪ್ರಾಣಲಿಂಗವ ಕೊಟ್ಚು
ಸೂಕ್ಷ್ಮತನುವಿನ ಪೂರ್ವಾಶ್ರಯವ ಕಳೆದು
ಪ್ರಣಮಪಂಚಾಕ್ಷರಿಯ ಕರ್ಣದಲ್ಲಿ ಹೇಳಿ,
ಮಂತ್ರದೀಕ್ಷೆಯ ಮಾಡಿದ ಗುರುವೆ ಶರಣು.
ಭಾವದ ಕರದಲ್ಲಿ ಭಾವಲಿಂಗವ ಕೊಟ್ಟು
ಕಾರಣತನುವಿನ ಪೂರ್ವಾಶ್ರಯವ ಕಳೆದು
ಮಸ್ತಕದಲ್ಲಿ ಹಸ್ತವ ಮಡುಗಿ
ವೇಧಾದೀಕ್ಷೆಯನಿತ್ತ ಮದ್ಗುರುವೆ ಶರಣು.
ನಿಮ್ಮ ಪಾದದಡಿದಾವರೆಯೊಳು ಮನವ ಭೃಂಗನ ಮಾಡಿಸು
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /147
ದಶವಾಯುಗಳು ಅವಾವೆಂದಡೆ ಹೇಳುವ ಕೇಳಿರಣ್ಣಾ :
ಪ್ರಾಣ ಅಪಾನ ವ್ಯಾನ ಉದಾನ ಸಮಾನ ನಾಗ
ಕೂರ್ಮ ಕೃಕರ ದೇವದತ್ತ ಧನಂಜಯವೆಂಬ ದಶವಾಯುಗಳು.
ಇವರ ಗುಣಧರ್ಮಕರ್ಮವೆಂತೆಂದಡೆ, ಅದಕ್ಕೆ ವಿವರ : ಪ್ರಾಣವಾಯು ಇಂದ್ರನೀಲವರ್ಣ, ಹೃದಯಸ್ಥಾನದಲ್ಲಿದ್ದು
ಅಂಗುಷ್ಠ ತೊಡಗಿ ಪ್ರಾಣಾಗ್ರಪರಿಯಂತರದಲು
ಸಪ್ರಾಣಿಸಿಕೊಂಡು ಉಚ್ಛ್ವಾಸ ನಿಶ್ವಾಸಮನೈದು
ಅನ್ನ ಜೀರ್ಣಕಾರವಂ ಮಾಡಿಸುತ್ತಿಹುದು.
ಅಪಾನವಾಯು ಹರಿತವರ್ಣ, ಗುದಸ್ಥಾನದಲ್ಲಿದ್ದು
ಮಲಮೂತ್ರಂಗಳ ವಿಸರ್ಜನೆಯಂ ಮಾಡಿಸಿ
ಅಧೋದ್ವಾರಮಂ ಬಲಿದು ಅನ್ನರಸವ್ಯಾಪ್ತಿಯಂ ಮಾಡಿಸುತ್ತಿಹುದು.
ವ್ಯಾನವಾಯು ಗೋಕ್ಷೀರವರ್ಣ, ಸರ್ವಸಂಧಿಯಲ್ಲಿದ್ದು
ನೀಡಿಕೊಂಡಿದ್ದುದ ಅನುವಂ ಮಾಡಿಸಿ
ಅನ್ನಪಾನವ ತುಂಬಿಸುತ್ತಿಹುದು.
ಉದಾನವಾಯು ಎಳೆಮಿಂಚಿನವರ್ಣ, ಕಂಠಸ್ಥಾನದಲ್ಲಿದ್ದು
ಸೀನುವ, ಕೆಮ್ಮುವ, ಕನಸುಕಾಣುವ, ಏಳಿಸುವ ಕಾರ್ಯಗೈದು
ವಧರ್ಿಸಿ ರೋಧನಂಗಳಂ ಮಾಡಿಸಿ ಅನ್ನರಸ ಆಹಾರ
ಸ್ಥಾಪನಂಗೈಸುತ್ತಿಹುದು.
ಸಮಾನವಾಯು ನೀಲವರ್ಣ, ನಾಭಿಸ್ಥಾನದಲ್ಲಿದ್ದು
ಅಪಾದಮಸ್ತಕ ಪರಿಯಂತರದಲ್ಲು ಸಪ್ರಾಣಿಸಿಕೊಂಡು
ಇದ್ದಂಥ ಅನ್ನರಸವನು ಎಲ್ಲ ರೋಮನಾಳಂಗಳಿಗೆ
ಹಂಚಿಹಾಕುತ್ತಿಹುದು.
ಇಂತಿವು ಪ್ರಾಣಪಂಚಕವು.
ಇನ್ನು ನಾಗವಾಯು ಪೀತವರ್ಣ, ರೋಮನಾಳಂಗಳಲ್ಲಿದ್ದು
ಚಲನೆಯಿಲ್ಲದೆ ಹಾಡಿಸುತ್ತಿಹುದು.
ಕೂರ್ಮವಾಯು ಶ್ವೇತವರ್ಣ, ಉದರ ಲಲಾಟದಲ್ಲಿದ್ದು
ಶರೀರಮಂ ತಾಳ್ದು ದೇಹಮಂ ಪುಷ್ಟಿಯಂ ಮಾಡಿಕೊಂಡು
ಬಾಯ ಮುಚ್ಚುತ್ತ ತೆರೆಯುತ್ತ ನಯನದಲ್ಲಿ
ಉನ್ಮೀಲನಮಂ ಮಾಡಿಸುತ್ತಿಹುದು.
ಕೃಕರವಾಯು ಅಂಜನವರ್ಣ, ನಾಶಿಕಾಗ್ರದಲ್ಲಿದ್ದು
ಕ್ಷುಧಾದಿ ಧರ್ಮಂಗಳಂ ನೆಗಳಿಸಿ ಗಮನಾಗಮನಂಗಳಂ ಮಾಡಿಸುತ್ತಿಹುದು.
ದೇವದ ತ್ತವಾಯು ಸ್ಫಟಿಕವರ್ಣ, ಗುಹ್ಯ ಕಟಿಸ್ಥಾನದಲ್ಲಿದ್ದು
ಕುಳ್ಳಿರ್ದಲ್ಲಿ ಮಲಗಿಸಿ, ಮಲಗಿದ್ದಲ್ಲಿ ಏಳಿಸಿ,
ಚೇತರಿಸಿ, ಒರಲಿಸಿ, ಮಾತಾಡಿಸುತ್ತಲಿಹುದು.
ಧನಂಜಯವಾಯು ನೀಲವರ್ಣ, ಬ್ರಹ್ಮರಂಧ್ರಸ್ಥಾನದಲ್ಲಿದ್ದು
ಕರ್ಣದಲ್ಲಿ ಸಮುದ್ರಘೋಷವಂ ಘೋಷಿಸುತ್ತಿಹುದು.
ಮರಣಕಾಲಕ್ಕೆ ನಿಘರ್ೊಷಮಪ್ಪುದು.
ಇಂತಿವು ದಶವಾಯುಗಳು.
ನಿನ್ನ ಕಟ್ಟಳೆಯಿಲ್ಲದೆ ಅಂಗದೊಳು ಚರಿಸ್ಯಾಡಲು
ಈ ದಶವಾಯುಗಳಿಗಳವಲ್ಲ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /148
ದೇವರದೇವ ನಿತ್ಯದೇವ ಸ್ವಯಂಭೂದೇವ
ಗಿರಿವಾಸದೇವ ಗಣರೊಂದ್ಯ ದೇವೇಂದ್ರಭಜಿತದೇವ
ಸರ್ವಲೋಕಪ್ರಕಾಶದೇವ ಸರ್ವರ ಕಾವದೇವ
ಶುಭ್ರವರ್ಣದೇವ ನಂದೀಶದೇವ ಪಂಚವಕ್ತ್ರದೇವ
ಪಂಚಬ್ರಹ್ಮದೇವ ಪಂಚಾಕ್ಷರಿಯಧ್ಯಾತ್ಮಜ್ಯೋತಿದೇವ
ಕೆಂಜೆಡೆಯ ಭೂಷಣದೇವ ರವಿಕೋಟಿತೇಜದೇವ
ನಂದಮಯ ನಾದೋಲರ್ಿಂಗಂ ನಾದಪ್ರಿಯ ನಾಗೇಶ್ವರ
ಆದಿಮಧ್ಯಾಂತರಹಿತ ದೇವಂ ವೇದವಿದವರಂ
ವ್ಯೋಮಜ್ಯೋತಿರೂಪಕಂ ಎಂದೆನಿಸುವ ದೇವನೆಂದು ಮೊರೆಹೊಕ್ಕೆ.
ಎನ್ನಯ ಮೊರೆಯಂ ಕೇಳಿ ಅಂಜದಿರೆಂದು ರಕ್ಷಿಸು
ಹರಹರ ಜಯಜಯ ಶಿವಶಿವ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./149
ದ್ಯುಮಣಿ ಇಲ್ಲದ ನಭಕೆ ತಮದ ಹಾವಳಿ ನೋಡಾ.
ರಾಜರಿಲ್ಲದ ರಾಜ್ಯಕ್ಕೆ ತಸ್ಕರರ ಹಾವಳಿ ನೋಡಾ.
ಕದವಿಲ್ಲದ ಗೃಹಕೆ ಶುನಿ ಮಾರ್ಜಾಲಂಗಳ ಹಾವಳಿ ನೋಡಾ.
ಹಾಳೂರಿಂಗೆ ಧೂಳದ ಹಾವಳಿ ನೋಡಾ.
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
ನೀನಿಲ್ಲದಂಗಕ್ಕೆ ಮನೋವಿಕಾರದ ಹಾವಳಿ ನೋಡಾ./150
ಧರಣಿಯನಾಳುವ ಅರಸಿಂಗೆ,
ಮಾರಿಯ ಭಯ, ಭೂರಿಯ ಭಯ, ಚೋರ ಭಯ.
ಅಗ್ನಿಯ ಭಯ, ಹಿರಿದಪ್ಪ ಅರಿರಾಯರ ಭಯ.
ಇವೈದು ಭಯಕಂಜಿ, ಅಷ್ಟದಳಮಂಟಪದ ಕೋಣೆಯ
ನೆರೆ ಪೂರ್ವದಿಕ್ಕಿನ ರಾಜ್ಯಕ್ಕೊಳಿತಂ ಬಯಸಿ,
ಅಗ್ನಿಕೋಣೆಯ ರಾಜ್ಯವ ಭಕ್ಷಿಪೆನೆಂದು,
ಯಮದಿಕ್ಕಿನ ರಾಜ್ಯವ ಕ್ರೋಧದಲ್ಲುರುಹುವೆನೆಂದು,
ನೈಋತ್ಯದಿಕ್ಕಿನ ರಾಜ್ಯವ ಮರತು ಮಲಗಿಸುವೆನೆಂದು,
ವರುಣದಿಕ್ಕಿನ ರಾಜ್ಯಕ್ಕೆ ಸತ್ಯವ ಬಯಸಿ,
ವಾಯುವ್ಯದಿಕ್ಕಿನ ರಾಜ್ಯವ ಗಾಳಿಗಿಕ್ಕಿ ಹಾರಿಸುವೆನೆಂದು,
ಕುಬೇರದಿಕ್ಕಿನ ರಾಜ್ಯಕ್ಕೆ ಧರ್ಮನು ಬಯಸಿ
ಈಶಾನ್ಯಕೋಣೆಯ ರಾಜ್ಯದ ಹೆಣ್ಣ ವಿಷಯತೂರ್ಯದಲ್ಲಿ
ದಳೆಯ ಹಿಡಿವೆನೆಂದು,
ಅಷ್ಟದಿಕ್ಕಿನ ರಾಜ್ಯದ ನಟ್ಟನಡುವೆ ಕಷ್ಟಬಡುತಿರ್ಪ
ಅರಸಿನ ಕಳವಳಿಕೆ ; ಬುದ್ಧಿಗುಡುವ ಮಂತ್ರಿ,
ಕಪಿಚಾಷ್ಠಿ ತಂತ್ರಿ, ತಾಮಸಬುದ್ಧಿ ದಳವಾಯಿಗಳು,
ದಶಗುಣಿಗಳು ಮನ್ನೆಯ ನಾಯಕರು,
ಮದಡರು ಪಾಯದಳ.
ಪರಿಯಾಟಗೊಳಿಸುವ ಅರಸಿನ ಪ್ರಜೆ ಪರಿವಾರ ಮಂತ್ರಿಮನ್ನೆಯರನೆಲ್ಲ
ಕೈಸೆರೆಯ ಹಿಡಿದು ಆಳುವ ಅಂಗನೆ
ರಾಜ್ಯಾಧಿಪತಿಯಾದುದೇನು ಚೋದ್ಯ ಹೇಳಾ !
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./151
ಧರಿಸಿರಣ್ಣ ಶ್ರೀ ವಿಭೂತಿಯ, ಧರಿಸಿರಣ್ಣ ಶ್ರೀ ರುದ್ರಾಕ್ಷಿಯ,
ಸ್ಮರಿಸಿರಣ್ಣ ಶ್ರೀ ಪಂಚಾಕ್ಷರಿಯ.
ಶ್ರೀ ವಿಭೂತಿಯ ಹೂಸದೆ, ಶ್ರೀ ರುದ್ರಾಕ್ಷಿಯ ಧರಿಸದೆ,
ಶ್ರೀ ಪಂಚಾಕ್ಷರಿಯ ನೆನೆಯದೆ
ಶಿವಪದವ ಸಾಧಿಸಿದೆನೆಂದರೆ ಸಾಧ್ಯವಾಗದು ಕಾಣಿರಣ್ಣಾ !
ಕಣ್ಣು ಕಾಲು ಕಿವಿಯಿಲ್ಲದಿರೆ ಶರೀರಕೆ ಒಪ್ಪವಹುದೆ ?
ಮುಕ್ಕಣ್ಣನ ಆಭರಣವೆನಿಸುವ ಭಸ್ಮ ರುದ್ರಾಕ್ಷಿ ಷಡಕ್ಷರಿಯಿಂದಲೆನ್ನ
ಭವದಗ್ಧವಾಗಿ ನಿತ್ಯ ಮುಕ್ತನಾಗಿದ್ದೆನು ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./152
ಧರಿಸಿರೊ ಶ್ರೀ ರುದ್ರಾಕ್ಷಿಯ ಬಾಹು
ಉರ ಕಂಠ ಕರ್ಣ ಮಸ್ತಕದಲ್ಲಿ ಒಲಿದು.
ಪದ : ಹರನಕ್ಷಿ ಜಲದಲ್ಲುದಯವಾಗಿ ಮುನಿ
ವರ ವಿಶ್ವಾಮಿತ್ರ ಗೌತಮ ವಶಿಷ್ಠರ
ನೆರೆ ಮುಕ್ತರ ಮಾಡಿ ಕೈಲಾಸಪದದೊಳ
ಗಿರಿಸುವ ಭಸಿತ ರುದ್ರಾಕ್ಷಿಯನೊಲಿದು. |1|
ನೆತ್ತಿಯೊಳಗೆ ತ್ರಯ ಶಿಖಿಗೇಕ ಮೇಣ್
ಚಿತ್ತಸಮಸ್ತಕೆ ಧಾರಣಗಳು ಅದ
ರೊತ್ತಿಲಿ ಕರ್ಣಕುಂಡಲಕೆ ಏಕೈ
ಕೆಂದು ವಿಸ್ತರಿಸಿ ರುದ್ರಾಕ್ಷಿಯನೊಲಿದು. |2|
ಕೊರಳೊಳು ಬತ್ತೀಸ ಉರದೊಳು ಮಹಾ
ಸರ ಅಷ್ಟಶತಮಾಲೆಯನುವೆ ನೀವು
ಕರಕಂಕಣಕೆ ದಶಬಾಹುಪೂರಕೆ
ನೆರೆ ಷೋಡಶ ರುದ್ರಕ್ಷಿಯನೊಲಿದು. |3|
ಕರದಂಘ್ರಿಮಾಲೆಗೆ ದಶವೇಕ ಮಹಾಜಪ
ಸರ [ಕೂಡಿಕೊಂಡು ಲೇಸೆಂದು] ಮೇಣ್
ವಿರಚಿಸಿ ಶಿವಪೂಜೆಯನು ಮಾಡೆ ಕರ್ಮ
ಗಿರಿಗೊಜ್ರವೆನಿಪ ರುದ್ರಾಕ್ಷಿಯನೊಲಿದು. |4|
ಇನಿತು ತೆರದ ರುದ್ರಾಕ್ಷಿಯ ಮಹಾ
ಘನವೆಂಬಲ್ಲಿ ಮುಕ್ತಿಯ ಸಾರ
ತ್ರಿಣಯ ಸದ್ಗುರು ಪಡುವಿಡಿ ಸಿದ್ಧಮಲ್ಲನಾ
ನೆನವ ತೋರುವ ತತ್ವಚಿಂತಾಮಣಿಯನೊಲಿದು. |5|/153
ಧರೆಯಾಗಿ ನಿಂದು, ಹರಿಯಾಗಿ ಹರಿದು,
ಉರಿಯಾಗಿ ಉಲಿವ ಅಂಗನೆ,
ಬ್ರಹ್ಮ ವಿಷ್ಣು ರುದ್ರರ ನುಂಗಿ ಜಾಲವ ಬೀಸುತಿಪ್ಪಳು ನೋಡಾ !
ಆಕೆಯ ಮಹೇಂದ್ರಜಾಲದ ತೆರೆಯೊಳು ಅನುಮಿಷ
ಮೊದಲು ತಲೆಯಿಲ್ಲದ ಏಡಿಯ ನುಂಗಿ,
ಆ ಏಡಿಯ ಬೆನ್ನಿನಲ್ಲಿ ಆನೆ ಎಂಟು, ಶ್ವಾನ ಐದು,
ಆರು ಮೊಸಳೆಯ ನುಂಗಿ, ಏಳು ಬಗೆಯ ಮಡುವಿಗೆ ಬಿದ್ದು,
ತಮ್ಮ ತಾವೆ ಒದ್ದಾಡುತಿವೆ ಇದೇನು ಚೋದ್ಯ ಹೇಳಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ ! /154
ಧ್ಯಾನಕೆಲ್ಲ ಮೂಲ ಗುರುವಿನ ಮೂರ್ತಿ ಕಾಣಿರೊ !
ಪೂಜೆಗೆಲ್ಲ ಮೂಲ ಗುರುವಿನ ಪಾದ ಕಾಣಿರೋ !
ಮಂತ್ರಕೆಲ್ಲ ಮೂಲ ಗುರುವಿನ ವಾಕ್ಯ ಕಾಣಿರೋ !
ಮುಕ್ತಿಗೆಲ್ಲ ಮೂಲ ಗುರುವಿನ ಕೃಪೆ ಕಾಣಿರೋ !
ಗುರು ಹೇಳಿದಂತಿಹುದೆ ವೇದಾಗಮಶಾಸ್ತ್ರ ಕಾಣಿರೋ !
ಸಾಕ್ಷಿ :“ಧ್ಯಾನಮೂಲಂ ಗುರೋರ್ಮೂರ್ತಿಃ ಪೂಜಾಮೂಲಂ ಗುರೋಃ ಪದಂಃ |
ಮಂತ್ರಮೂಲಂ ಗುರೋರ್ವಾಕ್ಯಂ | ಮುಕ್ತಿಮೂಲಂ ಗುರೋಃ ಕೃಪಾ ||”
ಎಂದುದಾಗಿ,
ಗುರುಮೂರ್ತಿಯ ಧ್ಯಾನದಲ್ಲಿ ನೀನೇಯಾದೆ,
ಅನ್ಯವ ಧ್ಯಾನಿಸುವ ಅಜ್ಞಾನಿ ನೀ ಕೇಳಾ.
ಗುರುಪಾದಪೂಜೆಯ ಮಾಡದೆ ಅನ್ಯಪೂಜೆಯ ಮಾಡುವ
ಅಧಮ ಚಾಂಡಾಲಿ ಮಾನವ ನೀ ಕೇಳಾ.
ಗುರುಮಂತ್ರವ ಜಪಿಸದೆ ಅನ್ಯಮಂತ್ರವ ಜಪಿಸುವ
ಅನಾಮಿಕ ಹೊಲೆಯ ನೀ ಕೇಳಾ.
ಗುರುಕೃಪೆಯ ಪಡೆಯದೆ
ಅನ್ಯದೈವದ ಕೃಪೆಯ ಪಡೆದೆನೆಂಬ ಪಾಪಿ ನೀ ಕೇಳಾ.
ಗುರುಕರುಣ ಕೃಪೆಯ ಪಡೆದರೆ ಹರಿದು ಹೋಹುದು
ನಿನ್ನ ಪೂರ್ವಜನ್ಮದ ಹೊಲೆ.
ಗುರುವನರಿಯದೆ, ಲಿಂಗವನರಿಯದೆ, ಜಂಗಮವನರಿಯದೆ,
ಅನ್ಯದೈವ ಕೊಟ್ಟಿತೆಂದು ಅನ್ಯವ ಹೊಗಳಿದರೆ
ಎಂದೆಂದಿಗೂ ಭವಹಿಂಗದೆಂದಾತ
ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /155
ನಕಾರ ನರಜನ್ಮದ ಹೊಲೆಯ ಕಳೆದು,
ಮಕಾರ ಮಾಂಸಪಿಂಡದ ಹೊಲೆಯ ಕಳೆದು ಮಂತ್ರಪಿಂಡವ ಮಾಡಿತಯ್ಯಾ.
ಶಿಕಾರ ಶಿವದೇಹಿಯ ಮಾಡಿತಯ್ಯ,
ವಕಾರ ಒಳಹೊರಗೆ ತೊಳಗಿ ಬೆಳಗಿ ಶುದ್ಧನಮಾಡಿತಯ್ಯ,
ಯಕಾರ ಎನ್ನ ಭವವ ಹಿಂಗಿಸಿತಯ್ಯ.
ಓಂಕಾರ ಪ್ರಾಣ ಜೀವಾತ್ಮ ದೇಹದ ಮಧ್ಯದೊಳು
ಸರ್ವಪೂರ್ಣಮಯವಾಗಿದ್ದಿತಯ್ಯಾ.
ಇಂತೀ ಷಡಕ್ಷರಿಯ ಮಂತ್ರವ ಜಪಿಸಿ,
ಅಂತಕನ ಪಾಶವ ಸುಟ್ಟು ನಿಟ್ಟೊರಸಿದೆನು ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./156
ನಗನೂರಠಾಣ್ಯದ ತೆಳಗಿಪ್ಪ ಇಪ್ಪತ್ತೈದು ಹಳ್ಳಿಯ ಸಾಗಿಸಿ
ಕೋರನಡಸುವ ಕಾರಕೂನರೈವರು,
ಕಾಡಹೊಲನ ಕಂಡಣಿಯ ಮಾಡುತಿರೆ ;
ಹಾರುವರು ಹರಿಕಾರರು, ಗೌಡರಿಬ್ಬರು ಗೊಮಗುಸುಕರು,
ಊರೊಳಹೊರಗೆ ಬಾರದ ಸೇನಬೋವರು,
ಕಿಂಚಿತು ಉಳಿಯಗೊಡದ ಠೇವಣಿಯನಿಕ್ಕುವರು.
ಹೃದಯಧರರು ಹುಸಿಕಾರರು,
ರಾಶಿಯನೊಕ್ಕುವ ಒಕ್ಕಲಿಗರು ವಂಚಕರು,
ಊರ ಪಂಚಾಳರು ಪ್ರಪಂಚಿಗಳು, ಅಗಸ ಮೈಲಿಗೆಗಳ್ಳ,
ನಾಯಿಂದ ಕೇಶಭುಂಜಕ, ಕುರುಬ ಭುಸಗೊಂಡ,
ಕುಂಬಾರ ತಿಗುರಿಸುತ್ತಳ, ತಳವಾರರು ಮರೆದೊರಗುವರು,
ಬಾರಿಕ ಬಲುಬೆದಕ, ಹೊಲೆಯ ಹುಸಿಕಾರ,
ಮಾದಿಗ ಮಾಂಸಭುಂಜಕ ;
ರಾಜ್ಯದ ತಪ್ಪ ವಿಚಾರಿಸುವ ರಾಜ ಮಹಾಕ್ರೋಧಿ,
ಪರಿವಾರ ಬಾಧಕರು.
ಇಂತಿವರೊಳೊಬ್ಬನೂ ಮೋಹಿಯಲ್ಲ ! ನಾನೆಂತು ಜೀವಿಪೆನಯ್ಯಾ ?
ಕಾಯಪುರದ ಸಂಭ್ರಮದ ಮಾಯಾಪಾಶಕೆನ್ನನಿಕ್ಕಿ ನೀನಗಲಿದೆಯಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./157
ನಡೆಯಲಾರದ ಹೆಳವಂಗೆ ಅಂಧ ಹೆಂಡತಿ ದೊರೆತರೆ
ನಡೆವುದೇನಯ್ಯಾ ಅವರ ಜೀ[ವಿ]ತರೂಪ ?
ನುಡಿಯಿಲ್ಲದ ಮೂಕಮಾನವಂಗೆ ಅರಸುಪಟ್ಟಬಂದರೆ,
ಪ್ರಜೆ ಪರಿವಾರ ರಾಜ್ಯವ ನಡೆಸಿಕೊಳಬಲ್ಲನೇನಯ್ಯಾ ?
ಅಜ್ಞಾನಗುಣ ಮಾಯಕ ಹರಿವನಕ
ಸುಜ್ಞಾನಸಂಸಾರವುಂಟೇನಯ್ಯಾ ?
ಜೀವನ ಬುದ್ಧಿಗುಣವುಳ್ಳನಕ್ನ ಪರಮಾತ್ಮನ ಬೋಧೆಗೆ ಹರಿಯೆ
ಸ್ವಸ್ಥಿರ ಚಿತ್ತನಯ್ಯಾ !
ಸಂಸಾರಮಾಯೆ ಪ್ರಾಣವಾಗಿಪ್ಪವರಿಗೆ ನಿಃಸಂಸಾರವುಂಟೇನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥ ಪ್ರಭುವೆ ? /158
ನಿರಾಕಾರ ಪರಬ್ರಹ್ಮವಸ್ತು ಎನ್ನ ಕರಸ್ಥಲಕೆ ಆಕಾರವಾಗಿ ಬಂದರೆ
ಹೊಗಳಲಮ್ಮೆ, ಹೊಗಳದಿರಲಮ್ಮೆ.
ಅದೇನು ಕಾರಣವೆಂದರೆ : ಬ್ರಹ್ಮ ವಿಷ್ಣು ರುದ್ರರ ಸ್ತುತಿಗೆ ನಿಲುಕದ ವಸ್ತುವೆನ್ನ
ನೆಮ್ಮಲು ನಾ ಬದುಕಿದೆನಯ್ಯಾ ನಾ ಬದುಕಿದೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./159
ನಿರಾಕಾರಲಿಂಗವಿಡಿದು ಸಾಕಾರಲಿಂಗ,
ಸಾಕಾರಲಿಂಗವಿಡಿದು ಆಕಾರಲಿಂಗ,
ಆಕಾರಲಿಂಗವಿಡಿದು ಮಹಾಲಿಂಗ,
ಮಹಾಲಿಂಗವಿಡಿದು ವಿಷ್ಣು, ವಿಷ್ಣುವಿಡಿದು ಬ್ರಹ್ಮ,
ಬ್ರಹ್ಮವಿಡಿದು [ಬ್ರಹ್ಮಾಂಡ], ಬ್ರಹ್ಮಾಂಡವಿಡಿದು ಪಿಂಡಾಂಡ,
ಪಿಂಡಾಂಡವಿಡಿದು ಜ್ಞಾನ, ಜ್ಞಾನವಿಡಿದು ನಾನು,
ನಾನುವಿಡಿದು ನೀನು,
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./160
ನೀರ ನೆಳಲ ಮಧ್ಯದಲ್ಲಿ ಹಾರುವ ಭ್ರಮರನ ಗರಿಯ ಗಾಳಿಯಲ್ಲಿ
ಮೂರುಲೋಕವೆಲ್ಲ ತಲೆಕೆಳಗಾದುದ ಕಂಡೆ.
ನೀರನೆಳಲಂ ಕಡಿದು ಹಾರುವ ಭ್ರಮರನ ಗರಿಯ ಮುರಿದಲ್ಲದೆ
ನಿರ್ಮನ ನಿರ್ಮಳ ನಿಶ್ಚಿಂತ ನಿಃಶಂಕ ನಿಃಕಳಂಕ
ಶರಣನಲ್ಲ ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./161
ನೀರ ಮಧ್ಯೆ ಉರಿವ ಜ್ಯೋತಿ
ಊರೊಳಗೆ ಬೆಳಗುವುದ ಕಂಡೆ.
ಊರೊಳಗೆಲ್ಲ ಬೆಳಗಾಗಿ,
ಊರ ಕದಳಿಯವನದ ಗಿರಿಯನಡರಿ ಉರಿವುದ ಕಂಡೆನು.
ಇದೇನು ಚೋದ್ಯ ಹೇಳಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./162
ನುಡಿವೆಡೆಯಲ್ಲಿ ಕ್ರೋಧವನೆ ನುಡಿವರು,
ನೋಡುವೆಡೆಯಲ್ಲಿ ಕ್ರೋಧವನೆ ನೋಡುವರು,
ಕೇಳುವೆಡೆಯಲ್ಲಿ ಕ್ರೋಧವನೆ ಕೇಳುವರು,
ವಾಸಿಸುವೆಡೆಯಲ್ಲಿ ಕ್ರೋಧವನೆ ವಾಸಿಸುವರು,
ಮುಟ್ಟುವೆಡೆಯಲ್ಲಿ ಕ್ರೋಧವನೆ ಮುಟ್ಟಿಸುವರು,
ಇಂತೀ ಪಂಚೇಂದ್ರಿಯಮುಖದಲ್ಲಿ ಕ್ರೋಧವೆ
ಮುಖ್ಯವಾಗಿಪ್ಪರು ನಿಮ್ಮನೆಂತು ಬಲ್ಲರಯ್ಯ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /163
ನೆತ್ತಿಯಲ್ಲಿ ಶ್ರೀ ವಿಭೂತಿಯ ಧರಿಸಿ
ಮಿಥ್ಯದೈವಕೆರಗದ ಭಾಷೆ.
ನಯನದಲ್ಲಿ ಶ್ರೀ ವಿಭೂತಿಯ ಧರಿಸಿ
ಪರಧನ ಪರಸ್ತ್ರೀಯರ ನೋಡದ ಭಾಷೆ.
ಭಾಳೊಳು ವಿಭೂತಿಯ ಧರಿಸಿ
ಗಂಧ ಚಂದನಾದಿಗಳ ಪೂಸದ ಭಾಷೆ.
ಕರ್ಣದಲ್ಲಿ ವಿಭೂತಿಯ ಧರಿಸಿ ಶಿವನಿಂದ್ಯವ ಕೇಳದ ಭಾಷೆ.
ನಾಸಿಕದಲ್ಲಿ ವಿಭೂತಿಯ ಧರಿಸಿ
ಲಿಂಗಸಂಗವಲ್ಲದನ್ಯವ ವಾಸಿಸದ ಭಾಷೆ.
ಜಿಹ್ವೆಗೆ ಶ್ರೀ ವಿಭೂತಿಯ ಧರಿಸಿ
ಲಿಂಗ ಜಂಗಮ ಪ್ರಸಾದವಲ್ಲದನ್ಯವ ಸೇವಿಸದ ಭಾಷೆ.
ಕಂಠದಲ್ಲಿ ವಿಭೂತಿಯ ಧರಿಸಿ ಅನ್ಯಕೆ ಸೆರಗೊಡ್ಡದ ಭಾಷೆ.
ಭುಜದಲ್ಲಿ ವಿಭೂತಿಯ ಧರಿಸಿ
ಸತ್ಯ ಸದಾಚಾರವ ಭುಜಗೊಟ್ಟಾನುವ ಭಾಷೆ.
ತೋಳಿನಲ್ಲಿ ವಿಭೂತಿಯ ಧರಿಸಿ ಪರಧನವನಪ್ಪದ ಭಾಷೆ.
ಮುಂಗೈಯಲ್ಲಿ ವಿಭೂತಿಯ ಧರಿಸಿ
ಅನ್ಯರಿಗೆ ಕೈಯೊಡ್ಡಿ ಬೇಡದ ಭಾಷೆ.
ಅಂಗೈಯಲ್ಲಿ ವಿಭೂತಿಯ ಧರಿಸಿ
ಲಿಂಗವಲ್ಲದನ್ಯದೈವವ ಪೂಜಿಸದ ಭಾಷೆ.
ಇಂತಿವು ಮುಖ್ಯವಾದ ಸ್ಥಾನಂಗಳಲ್ಲಿ
ಶ್ರೀ ವಿಭೂತಿಯನೊಲಿದು ಧರಿಸಿ
ಶಿವಸತ್ಯ ಶಿವದೇಹಿಯಾದೆ ನೋಡಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./164
ನೆನೆವ ಜಿಹ್ವೆ[ಗೆ] ಕಾಮನ ನೆನಸಿದೆ,
ನೋಡುವ ಕಂಗಳಿಗೆ ಕಾಮನ ನೋಡಿಸಿದೆ,
ಕೇಳುವ ಕರ್ಣಕ್ಕೆ ಕಾಮವನೆ ಕೇಳಿಸಿದೆ,
ವಾಸಿಸುವ ನಾಸಿಕಕ್ಕೆ ಕಾಮವನೆ ವಾಸಿಸಿದೆ,
ಮುಟ್ಟುವ ಹಸ್ತಕ್ಕೆ ಕಾಮವನೆ ಮುಟ್ಟಿಸಿದೆ.
ಅದು ಎಂತೆಂದೊಡೆ : ನೆನೆವ ಜಿಹ್ವೆ ಪರಧನ ಪರಸ್ತ್ರೀಯರ ನೆನೆವುದು,
ನೋಡುವ ಕಂಗಳು ಪರಧನ ಪರಸ್ತ್ರೀಯರನೆ ನೋಡುವವು,
ಕೇಳುವ ಕರ್ಣ ಪರಧನ ಪರಸ್ತ್ರೀಯರ ಪರನಿಂದ್ಯವನೆ ಕೇಳುವವು,
ವಾಸಿಸುವ ನಾಸಿಕ ಪರಧನ ಪರಸ್ತ್ರೀಯರ ವಾಸಿಸುವುದು,
ಮುಟ್ಟುವ ಹಸ್ತ ಪರಧನ ಪರಸ್ತ್ರೀಯರನೆ ಮುಟ್ಟುವುದು.
ಇಂತೀ ಪಂಚೇಂದ್ರಿಯಮುಖದಲ್ಲಿ ಕಾಮವೆ ಮುಖ್ಯವಾಗಿಪ್ಪುದಯ್ಯ.
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರದ ಸೀಮೆಗೆಳಸದ
ನಿಸ್ಸೀಮ ಶರಣಂಗೆ ನಮೋ ನಮೋ ಎಂಬೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./165
ನೆಲೆಯನರಿಯದ ಮನುಜರು ಜಲವ ಹೊಕ್ಕರೆ ಮುಳುಗುವರಲ್ಲದೆ
ನೆಲೆಯಬಲ್ಲವರು ಮುಳುಗುವರೇನಯ್ಯಾ ?
ಆ ತೆರದಿ, ನಾ ನೆಲೆಯನರಿಯದೆ ಸಂಸಾರವೆಂಬ ಸಾಗರ ಹೊಕ್ಕರೆ
ಪ್ರಥಮದಲ್ಲಿ ಜಂಘೆಗೆ ಬಂತು,
ದ್ವಿತೀಯೆಯಲ್ಲಿ ಮಣಿಪಾದಕ್ಕೆ ಬಂತು,
ತೃತೀಯೆಯಲ್ಲಿ ಕಟಿಸ್ಥಾನಕ್ಕೆ ಬಂತು,
ಚತುರ್ಥದಲ್ಲಿ ನಾಭಿತನಕ್ಕೆ ಬಂತು,
ಪಂಚಮದಲ್ಲಿ ಉರಸ್ಥಾನಕ್ಕೆ ಬಂತು,
ಆರನೆಯಲ್ಲಿ ಕಂಠಸ್ಥಾನಕ್ಕೆ ಬಂತು,
ಏಳನೆಯಲ್ಲಿ ಸರ್ವಾಂಗವನೆಲ್ಲ ಮುಳುಗಿ
ಸಲೆ ಸಾಯಲಾರದೆ ಒದ್ದಾಡುತ್ತಿರುವನ ಕಂಡು ಸುಮ್ಮನಿರದಿರೋ
ಭೈತ್ರಾಧಿಪತಿಯೆ,
ನಿನ್ನ ಕರುಣಕೃಪೆಯೆಂಬ ಭೈತ್ರವ ಎನ್ನ ಕಡೆಗೆ ತಂದು
`ಸಂಸಾರಸಾಗರಜಲಂ’ ಎಂದುದಾಗಿ,
ಸಂಸಾರಸಾಗರದ ನಟ್ಟನಡುವೆ ಮುಳುಗಿಪ್ಪವನನೆಳೆದು
ತೆಗೆಯೊ ಅಘಹರನೆ ಅಮೃತಕರನೆ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./166
ನೊಂದೆನೀ ಮನದಿಂದಲಿ, ಬೆಂದೆನೀ ಮನದಿಂದಲಿ,
ಕಂದಿದೆನೀ ಮನದಿಂದಲಿ, ಕುಂದಿದೆನೀ ಮನದಿಂದಲಿ.
ಮನವೆಂಬ ಸಂದೇಹದ ಕೀಲ ಕಳೆದು,
ನಿಸ್ಸಂದೇಹಿಯಾಗಿಪ್ಪ ನಿರಾಭಾರಿ ಶರಣಂಗೆ ನಮೋ ನಮೋ ಎಂಬೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./167
ಪಂಕದಲ್ಲಿ ಬಿದ್ದ ಪಶುವಿನಂತೆ, ಕಿರಾತನ ಕೈಯ ಮೃಗದಂತೆ,
ಗರುಡನ ಮುಂದಿನ ಸರ್ಪನಂತೆ, ಸಿಂಹದ ಮುಂದಣ ಕರಿಯಂತೆ,
ದೀಪದ ಮುಂದಣ ಪತಂಗನಂತೆ, ಪಾಪಿಯ ಕೂಸಿನಂತೆ.
ಇಂತಿವೆಲ್ಲಕ್ಕೆಯೂ ಸ್ಥಿರವಿಲ್ಲದಂತೆ,
ಮಾಯವೆಂಬ ರಾಕ್ಷಿಯ ಬಲೆಯಲ್ಲಿ ಸಿಲ್ಕಿ ಬಳಲುತಿರ್ದೆ.
ನಿನಗನ್ಯನಾದ ಕಾರಣ ಎನಗೀ ದುರಿತ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /168
ಪಂಕದೊಳು ಬಿದ್ದ ಪಶುವಿನಂತೆ
ಸಂಸಾರರಸವಿಷಯದ ಕೊಗ್ಗೆಸರ ನಟ್ಟನಡು ಹುದಿಲೊಳಿಪ್ಪವನ
ಪಶುವಿನೊಡೆಯ ಪಶುವನರಸಿಕೊಂಡು ಬಂದು ಎಳೆತಗೆವಂತೆ
ನರಪಶು ನನ್ನವನೆಂದು ಹುದಿಲೊಳಿಪ್ಪವನ ತೆಗೆದು
ಕರುಣಜಲವೆಂಬ ನೀರೆರೆದು ಮೈದೊಳೆದು ತಲೆದಡಹಿ
ಕಾಯಿದು ರಕ್ಷಣ್ಯವ ಮಾಡಿಕೊಳ್ಳಯ್ಯ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./169
ಪಂಚಭೂತಂಗಳೆ ಪಂಚವಿಂಶತಿತತ್ವಯುಕ್ತವಾಗಿ
ಶರೀರವಾಯಿತ್ತು.
ಅದು ಹೇಗೆಂದಡೆ : ಆಕಾಶದಿಂದ ಅಂತಃಕರಣಚತುಷ್ಟಯಂಗಳು ಹುಟ್ಟಿದವಯ್ಯ.
ವಾಯುವಿನಿಂದ ಪಂಚಪ್ರಾಣವಾಯುಗಳು ಹುಟ್ಟಿದವಯ್ಯ.
ಅಗ್ನಿಯಿಂದ ಬುದ್ಧೀಂದ್ರಿಯಂಗಳು ಹುಟ್ಟಿದವಯ್ಯ.
ಅಪ್ಪುವಿನಿಂದ ಶಬ್ದಾದಿ ಪಂಚವಿಷಯಂಗಳು ಹುಟ್ಟಿದವಯ್ಯ.
ಪೃಥ್ವಿಯಿಂದ ವಾಗಾದಿ ಕರ್ಮೆಂದ್ರಿಯಂಗಳು ಹುಟ್ಟಿದವಯ್ಯ.
ಇಂತೀ ಚತುರ್ವಿಂಶತಿತತ್ವಯುಕ್ತವಾಗಿ
ಶರೀರವೆತ್ತಿ ಕರೆಸಿತಯ್ಯ
ಪರುಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./170
ಪಂಚಾಕ್ಷರವೆ ಶಿವನ ಪಂಚಮುಖದಿಂದಲುದಯವಾಗಿ
ಪಂಚತತ್ವಸ್ವರೂಪವಾಯಿತ್ತು ನೋಡಾ.
ಆ ಪಂಚಸ್ವರೂಪಿಂದಲೆ ಬ್ರಹ್ಮಾಂಡ ನಿರ್ಮಿತವಾಯಿತ್ತು.
ಆ ಬ್ರಹ್ಮಾಂಡದಿಂದ ಪಿಂಡಾಂಡ ನಿರ್ಮಿತವಾಯಿತ್ತು.
ಅದು ಎಂತೆಂದರೆ ಹೇಳುವೆ ಕೇಳಿರಣ್ಣಾ : ಸದ್ಯೋಜಾತಮುಖದಲ್ಲಿ ನಕಾರ ಪುಟ್ಟಿತ್ತು ,
ಆ ನಕಾರದಿಂದ ಪೃಥ್ವಿ ಪುಟ್ಟಿತ್ತು ,
ವಾಮದೇವಮುಖದಲ್ಲಿ ಮಕಾರ ಪುಟ್ಟಿತ್ತು.
ಆ ಮಕಾರದಿಂದ ಅಪ್ಪು ಪುಟ್ಟಿತ್ತು ,
ಅಘೋರಮುಖದಲ್ಲಿ ಶಿಕಾರ ಜನನ.
ಆ ಶಿಕಾರದಿಂದ ಅಗ್ನಿ ಪುಟ್ಟಿತ್ತು ,
ತತ್ಪುರುಷಮುಖದಲ್ಲಿ ವಕಾರ ಪುಟ್ಟಿತ್ತು ,
ಆ ವಕಾರದಿಂದ ವಾಯು ಪುಟ್ಟಿತ್ತು ,
ಈಶಾನಮುಖದಲ್ಲಿ ಯಕಾರ ಜನನ,
ಆ ಯಕಾರದಿಂದ ಆಕಾಶ ಹುಟ್ಟಿತ್ತು ,
ಈ ಪಂಚತತ್ವಸ್ವರೂಪಿಂದ ಬ್ರಹ್ಮಾಂಡ ನಿರ್ಮಿತವಾಯಿತ್ತು.
ಆ ಬ್ರಹ್ಮಾಂಡದಿಂದ ಪಿಂಡಾಂಡ ನಿರ್ಮಿತವಾಯಿತ್ತು.
ಹೇಗೆ ನಿರ್ಮಿತವಾಯಿತ್ತೆಂದರೆ,
ಪೃಥ್ವಿ ಅಪ್ ತೇಜ ವಾಯು ಆಕಾಶವೆಂಬ ಪಂಚಭೂತಂಗಳಿಂದವೆ
ಪಂಚವಿಂಶತಿತತ್ವಂಗಳುತ್ಪತ್ಯವಾದವು.
ಆ ಪಂಚವಿಂಶತಿ ತತ್ವಂಗಳಿಂದವೆ ಶರೀರವಾಯಿತ್ತು.
ನಕಾರದಿಂದ ಕರ್ಮೆಂದ್ರಿಯಂಗಳ ಜನನ.
ಮಕಾರದಿಂದ ಪಂಚವಿಷಯಂಗಳುತ್ಪತ್ಯ.
ಶಿಕಾರದಿಂದ ಬುದ್ಧೀಂದ್ರಿಯಗಳು ಜನನ.
ವಕಾರದಿಂದ ಐದು ಪ್ರಾಣವಾಯುಗಳ ಜನನ.
ಯಕಾರದಿಂದ ಅಂತಃಕರಣಚತುಷ್ಟಯಂಗಳು
`ನಮಃ ಶಿವಾಯ’ `ನಮಃ ಶಿವಾಯ’ವೆಂಬ ಪಂಚಾಕ್ಷರದಿಂದವೆ
ಉತ್ಪತ್ಯವೆಂದು ಹೇಳಲ್ಪಟ್ಟಿತ್ತಯ್ಯ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./171
ಪಂಚೇಂದ್ರಿಯೆಂಬ ಕರ್ಮಿಗಳ ಉರಿಯ ಪ್ರಪಂಚಿಗೆ ಗುರಿಯಾಗಿ
ಯತಿ ಸಿದ್ಧ ಸಾಧ್ಯರೆಲ್ಲ ಮತಿಭ್ರಷ್ಟರಾದರು.
ಅದು ಎಂತೆಂದೊಡೆ : ಹಾಳೂರ ಹೊಕ್ಕರೆ ನಾಯ ಜಗಳವ ಕಂಡಂತೆ,
ಶಿವಜ್ಞಾನವಿಲ್ಲದಂಗಹಾಳಿಂಗೆ ಪಂಚೇಂದ್ರಿಯವೆಂಬ,
ನಾಯಿ ಬೊಗಳೆ ಹಂಚು[ಹರಿಯಾದರು] ಕೆಲಬರು.
ಇಂತೀ ಪಂಚೇಂದ್ರಿಯಂಗಳು ಸುಟ್ಟು
ಲಿಂಗೇಂದ್ರಿಯಮುಖವಾಗಿಪ್ಪ ಶರಣನ
ಏನೆಂದು ಉಪಮಿಸುವೆನಯ್ಯಾ ?
ಆತನಂಗವೆ ಶಿವನಂಗ, ಶಿವನಂಗವೆ ಶರಣನಂಗ,
ಸಾಕ್ಷಿ :“ಶಿವಾಂಗಂ ಶರಣಾಂಗಂ, ಚ ಶರಣಾಂಗಂ ಶಿವಾಂಗಕಂ |
ದ್ವಯೋರಂಗಯೋಭರ್ೆದಃ ನಾಸ್ತಿ ಸಾಕ್ಷಾತ್ ಪರಶಿವಃ ||”
ಎಂದುದಾಗಿ, ನಿಮ್ಮ ಶರಣರ ದರುಶನದಿಂದಲೆನ್ನ ಬದುಕಿಸಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /172
ಪಕ್ಕವಿಲ್ಲದ ಹಕ್ಕಿ ಅಕ್ಕಜನ ಪಂಜರವ ಗೂಡುಮಾಡಿಕೊಂಡು
ದಿಕ್ಕುದಿಕ್ಕನ್ನೆಲ್ಲ ಚರಿಸ್ಯಾಡಿ ಬರುತಿಪ್ಪದು.
ಆ ಪಕ್ಷಿಯ ನೆರಳು ಬೀಳೆ ಯತಿ ಸಿದ್ಧ ಸಾಧ್ಯ ಯೋಗಿಗಳ
ಯೋಗತ್ವ ಯತಿತನ ಸಿದ್ಧತ್ವ ಕೆಟ್ಟು
ಕೆಲಸಾರಿ ಹೋಗುವುದ ಕಂಡೆ.
ಪಕ್ಕವಿಲ್ಲದ ಹಕ್ಕಿಯ ಕೊಂದು
ಅಕ್ಕಜನ ಪಂಜರವ ಮುರಿದುದಲ್ಲದೆ ನಿರ್ಮನನಲ್ಲ ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./173
ಪಟ್ಟವ ಕಟ್ಟಿದ ಮೇಲೆ ಲಕ್ಷಣವನರಸಲುಂಟೇನಯ್ಯಾ ?
ಕೊಡುಂಡು ಜಾತಿಭೇದವನರಸಲುಂಟೇನಯ್ಯಾ ?
ಅನ್ಯಭವಿಗೆ ಲಿಂಗುಪದೇಶವ ಕೊಟ್ಚು,
ಅವನಲ್ಲುಣಬಾರದೆಂದು ಕುಲಕಂಜಿ, ಒಣ ಪಡಿಯ
ತಂದು, ಬೆರಸಿ ಪಾಕವ ಮಾಡಿ ಉಂಬ ಅಜ್ಞಾನಿ ಗುರು ನೀ ಕೇಳಾ.
ನಿನ್ನ ಚಿತ್ಕಳಾಪರಬ್ರಹ್ಮಲಿಂಗವನವರಿಗೆ ಕುಡುವಾಗ
`ಅವರು ಮಾಡಿದ ದೋಷ ಎನ್ನನಂಡಲೆವವು ಕೊಡಲಮ್ಮೆ’
ಎಂಬ ಭಾವ ನಿನ್ನಲ್ಲರಿಯದೆ,
ಕಾಂಚಾಣ ಕಪ್ಪಡದಾಸೆಗೆ ದೀಕ್ಷವ ಮಾಡಿ,
ಹಿಂದೆ ಉಣಬಾರದೆಂಬ ಶೀಲವ ಹಿಡಿದರೆ,
ಮುಂದೆ ಯಮದಂಡನೆ ಬರುವುದನರಿಯಾ ?
ಇಂತೀ ಅಜ್ಞಾನಿಗಳ ಗುರು ಶಿಷ್ಯ ಸಂಬಂಧಕ್ಕೆ ಎಂತು ಮೆಚ್ಚುವನಯ್ಯಾ
ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /174
ಪರಬ್ರಹ್ಮ ಪರವಸ್ತುವಿನ ಪಂಚಮುಖದಲ್ಲಿ ಹುಟ್ಟಿದ
ಪಂಚಮಹಾಭೂತವೆ ಶರೀರವಾಯಿತ್ತು.
ಅದು ಎಂತೆಂದೊಡೆ : ಮಣ್ಣು ನೀರು ಶಿಲೆಯ ಕೂಡಿ ಭಿತ್ತಿಯನಿಕ್ಕುವಂತೆ,
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಇವೈದು ಕೂಡಿ
ಶರೀರ ನಿರ್ಮಿತವಾಯಿತಯ್ಯ,
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /175
ಪರಮಾರ್ಥ ಪರಬ್ರಹ್ಮ
ಪರಂಜ್ಯೋತಿಲಿಂಗ ಪರಶಿವ
ಪರಾಪರ ಶಾಂತಿ ಪರಾತ್ಮಸಂಜೀವ,
ಪನ್ನಗಭೂಷಣ, ಪರಹಿತ,
ಪರದೇವಾತ್ಮಲಿಂಗ, ಪರಜನ್ಮಕರ್ಮವಿದೂರ,
ಪರಿಣಾಮಿ, ಪರುಷವಿನೋಟ,
ಪಾವನಸ್ವರೂಪ ರಕ್ಷಿಪುದೆಮ್ಮ
ಜಯಜಯ ಹರಹರ ಶಿವಶಿವ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./176
ಪರುಷ ಮನೆಯೊಳಿರುತಿರೆ ಪಾಷಾಣಕೆ ಚಾಲಿವರಿವಂತೆ,
ಸುಧೆ ಇರಲು ಅಂಬಲಿ ಬಯಸುವನಂತೆ,
ಗುರುಕರುಣದ ಇಷ್ಟಲಿಂಗ ತನ್ನ ಕರದೊಳಿರುತಿರೆ
ಅದ ಮರೆದು
ಸೂಳೆಗೆ ಹುಟ್ಟಿದ ಮಗುವು ಕಂಡ ಕಂಡವರಿಗೆ
`ಅಪ್ಪಾ ‘ ಎಂದು ಕರೆವಂತೆ,
ಈ ಸಂತೆಸೊಳೆಮಕ್ಕಳಿಗೆ ಒಂದು ದೇವರು ನಿತ್ಯವಲ್ಲ !
ಹಲವು ಕಲ್ಲಿಗೆರಗಿ ಕುಲಕೋಟಿ ನರಕಕಿಳಿವ ಹೊಲೆಯರ
ಮುಖವನೆನಗೊಮ್ಮೆ ತೋರದಿರಯ್ಯ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./177
ಪಲ್ಲ :ಬಂಧನ ಸಂಸಾರದಂದುಗದ ದಾಳಿಯಲ್ಲಿ
ನೊಂದು ಬೆಂದೆನೊ ಎನ್ನ ಹುಯ್ಲು
ತಂಬಿಸು ಗುರುವೆ ಭವಹರ ನಿತ್ಯನಿರ್ಮಳಾತ್ಮಕ ಶಂಭುವೆ.
ಪದ :ಹಲವು ಜನ್ಮದಿ ಹುಟ್ಟಿ ಹಲವಾಹಾರವನುಂಡು
ಹಲವು ಭೂಮಿಯ ಮೆಟ್ಟಿ ಹಲವು ಕರ್ಮವ ಕಂಡು
ಹಲವು ಭವಕೀಡಾಗಿ ಹಲವು ಹಂಬಲಿಸುತಿರುವ
ಹೊಲೆಜನ್ಮ ಸಂಸಾರ ಮಾಯಾರಕ್ಕಸಿ ತುಡುರೆ
ನಿಲ್ಲಲಾರದಲಿ ನಿಮ್ಮ ಮರೆಹೊಕ್ಕೆ ಎನ್ನ ಕೊಡದೆ
ಗೆಲಿದುಕೊ ದುರಿತಹರ ಕರುಣಾಳು ಪರಮಗುರುವೆ. |1|
ಸಟೆ ಠಕ್ಕು ಠೌಳಿ ಅಟಮಟದ ಬಂಧನದ
ಕುಟಿಲಸಂಸಾರಸಾಗರದ ತೊರೆನೆರೆಗಳೊಳು
ಪುಟನೆಗೆದು ತಲೆ ಮುಣುಗುತಲಿರುವನ ಕಂಡು
ನಿಟಿಲಾಕ್ಷ ಕೃಪೆಯೆಂಬ ಹಡಗವನು ತಂದೊಲಿ
ತಟಕೆನ್ನನೆಳೆದು ತಗೆದೀಗ ಇನಿತಾತ್ಮ
ಘಟದೊಳಗೆ ಜ್ಞಾನಜ್ಯೋತಿಯ ತೀವು ಪರಮಗುರುವೆ. |2|
ರಸವಿಷಯ ಮೋಹನದ ಕೂಪಜಲದೊಳು ಮುಳುಗಿ
ದೆಸೆದೆಸೆಗೆ ಚಾಲಿವರಿವನ ಕಂಡು ಬೇಗದಲಿ
ವಿಷಕಂಠ ದುರಿತಸಂಹರ ಕರುಣಾಕರ ತೊಟ್ಟಿಲಿಗೆ
ಎಸೆವ ಹಗ್ಗವ ಕಟ್ಟಿ ಎಳೆದು ತಗೆಯೆನ್ನ ರಂ
ಬಿಸುತ ಸಂತೈಸಿ ದುಃಖದಲ್ಲಿ ಭೋರ್ಗರೆದಳುವ
ಶಿಶುವ ಬೋಳೈಸುವಂದದಲೆನ್ನ ಬೋಳೈಸು ಅಸಮಾಕ್ಷ ಪರಮಗುರುವೆ.|3|
ತೆರಣಿಯ ಹುಳು ನೂಲು ಸುತ್ತಿಕೊಂಡು ಎಸೆವ
ತೆರದಿ ಈ ಸಂಸಾರ ಸುಖದುಃಖ ಎನ್ನನು ಸುತ್ತಿ
ಪರಿಭವಕ್ಕೆ ಗುರಿಯಾಗಿ ಯೋನಿಯಂತ್ರದೆ
ತಿರುಗಿಯೆ ಬರುತಲಿರ್ದೆನು ಘೋರ ಅರಣ್ಯದೊಳು ಸುತ್ತಿ
ಹರಹರ ನಿಮ್ಮ ಸ್ಮರಣೆಯ ಮರೆದ ಕಾರಣದಿ
ದುರಿತನ್ಯಾಯದ ಬಂಧನಕೆ ಗುರಿಯಾಗಿದ್ದೆನಯ್ಯಾ ಶಿವನೆ. |4|
ಮಾಯಾಸಂಸಾರಸರ್ಪನ ವಿಷವು ತಲೆಗೇರಿ
ನೋಯುತಿದ್ದೆನು ಹಲವುವಿಧದಾಸೆಪಾಶದಲಿ
ಬೇಯುವವನ ಕಂಡು ನೀ ಬೇಗಲೊಯಿದ್ಯವ ಮಾಡಿಯೆ
ಶವವನುಳುವಿಕೋ ಭವರೋಗವೈದ್ಯ
ನಿತ್ಯ ಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭು ನೀವಲ್ಲದೆನಗನ್ಯವಿಲ್ಲ ಕಾಯೋ ಕಾಯೋ ದೇವಾ. |5|/178
ಪಶುವಿನ ಮುಂದೆ ಮುರವುಂ ಹಾಕಿ
ಅಮೃತವ ಕರಕೊಂಬಂತೆ,
ಹೊನ್ನು ಹೆಣ್ಣು ಮಣ್ಣು ಮೂರೆಂಬ ಮಾಯಾಪಾಶಘದಘೆ
ಹಸರು ಹುಲ್ಲಂ ಎನ್ನ ಮುಂದೆ ಚೆಲ್ಲಿ,
ಆಸೆಗೆಳೆಸಿ, ಶಿವಜ್ಞಾನಾಮೃತವನೊಯಿದು
ಅಜ್ಞಾನಕೆನ್ನ ಗುರಿ ಮಾಡಿ ಎನ್ನ ಕಾಡುತಿದ್ದೆಯಲ್ಲ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./179
ಪಿಂಡ ಬ್ರಹ್ಮಾಂಡವ ಒಂದು ಮಾಡಿ ನಿರ್ಮಿಸಿದ
ಶಿವನ ಕಂಡವರುಂಟೇ ? ಹೇಳಿರೆ !
ಕಂಡವರುಂಟು, ಅದು ಹೇಗೆಂದಡೆ : ಶಿಲೆಯೊಳಗಣ ಪಾವಕನಂತೆ, ತಿಲದೊಳಗಣ ತೈಲದಂತೆ,
ಬೀಜದೊಳಗಣ ವೃಕ್ಷದಂತೆ, ಉದಕದೊಳಗಣ ಪ್ರತಿಬಿಂಬದಂತೆ,
ಹಸುವಿನೊಳಗಣ ಘೃತದಂತೆ ಇದ್ದಿತ್ತು
ಆ ಪರಬ್ರಹ್ಮದ ನಿಲವು.ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
ಇದ್ದರೇನು, ಕಾಣಬಹುದೇ ? ಕಾಣಬಾರದು.
ಕಾಣುವ ಬಗೆ ಹೇಗೆಂದರೆ ಹೇಳುವೆ ಕೇಳಿರಣ್ಣಾ : ಶಿಲೆಯೊಳಗಣ ಅಗ್ನಿ
ಚಕಿಮಕಿ ದೂದಿವಿಡಿದು ಕ್ರೀಯಿಟ್ಟು ಮಾಡಿದಲ್ಲದೆ ಪ್ರಜ್ವಲಿಸದು.
ತಿಲದೊಳಗಣ ತೈಲ
ಯಂತ್ರದಲ್ಲಿ ಕ್ರೀಡಿಸಿದಲ್ಲದೆ ತೋರದು.
ಬೀಜದೊಳಗಣ ವೃಕ್ಷ
ಮೇಘದ ದೆಸೆಯಲ್ಲಿ ಪಸಿಯಕ್ಷೇತ್ರಕ್ಕೆ ಬಿದ್ದಲ್ಲದೆ ಮೊಳೆದೋರದು.
ಪಶುವಿನೊಳಗಣ ಘೃತ
ಪಶುವ ಬೋಧಿಸಿ ಕ್ರೀಯಿಟ್ಟು ಅಮೃತ ಕರೆದರೆ ಕೊಡುವುದು.
ಮೇಘದ ದೆಸೆಯಲಿ ಉದಕ ಬಂದು ಎಲೆಯ ತುಂಬಿದರೆ
ಸೂರ್ಯನ ಪ್ರತಿಬಿಂಬವದರೊಳು ತೋರುವಂತೆ,
ನಾದ ಬಿಂದು ಕಳೆಯ ದೆಸೆಯಲಿ ಪಿಂಡವಾಯಿತ್ತು.
ಆ ಪಿಂಡದೊಳಗಣ ಜೀವ ಶಿವಚೈತನ್ಯ.
ಅದು ಹೇಗೆಂದಡೆ, ಅದಕ್ಕೆ ಸಾಕ್ಷಿ : “ಶಿವೋ ಜೀವಃ ಜೀವಂ ಶಿವಃ
ಸ ಜೀವಃ ಕೇವಲಂ ಶಿವಃ”
ಎಂದುದಾಗಿ,
ಪಿಂಡ ಬ್ರಹ್ಮಾಂಡದೊಳಗಣ ಶಿವನಿಲವು ಇಂತಿದ್ದಿತ್ತು.
ಇದ್ದರೇನು ? ಲೋಕದ ಜಡದೇಹಿಗಳಿಗೆ ಕಾಣಬಾರದು.
ಆದಿಯಲ್ಲಿ ಶಿವಬೀಜವಾದ ಮಹಿಮರಿಗೆ ತೋರುವುದು.
ಉಳಿದವರಿಗೆ ಸಾಧ್ಯವೇ,
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./180
ಪಿಂಡವಾಯಿತ್ತು ನಾದಬಿಂದು ಕಳೆಗಳ ಕೂಡಿ
ಕೊಂಡು ಸ್ವರೂಪ ತತ್ವವಿಡಿದು ಚೆನ್ನಾಗಿ
ಧರೆಯಿಂದಲೆದು ಕರ್ಮೆಂದ್ರಿಯಂಗಳ ಜನನ
ಸರಸದಿಂದ ಪಂಚವಿಷಯಂಗಳುತ್ಪತ್ಯ ಮೇಣ್
ಉರಿಯಿಂದ ಬುದ್ಧೀಂದ್ರಿಯಂಗಳಾದವು ನೋಡಿರೆ.
ಮರುತನಿಂದೈದು ಪ್ರಾಣವಾಯುಗಳ ಜನನ
ಹಿರಿದಪ್ಪ ಗಗನದಲ್ಲಿ ಚತುರ ಕರಣವು
ಆತ್ಮ ನೆರೆ ಕೂಡಿ ಪಂಚವಿಂಶತಿತತ್ವವಿಡಿದು. |1|
ಆರೂರ್ಮೆ ಏಳುಧಾತೈದುವಿಂಶತಿ ಅಂಶ
ಈ ಮೂರು ತನುಗುಣವು ಇಪ್ಪತ್ತೈದು ಎರಡಂಗ
ಆರು ಚಕ್ರವು ಕಮಲದೈವತ್ತೊಂದರಕ್ಷರಗಳಿಂ
ವಾರಿಜ ದಾಕ್ಷಾಯಣಿ ಹರಿ ರುದ್ರ ಈಶ್ವರ
ಮೀರಿದ ಸದಾಶಿವನಧಿದೈವಂಗಳು,
ನವದ್ವಾರ ಚೆನ್ನಾಗಿ ಸಕಲಾರಂಭತತ್ವವಿಡಿದು. |2|
ಮೂರು ಕರ್ಮಗಳು ಏಳ್ನೂರು ಎಪ್ಪುತ್ತು ಲೊ
ಓರಣದ ಕರಣದ ಕರಣ ಅರುವತ್ತಾರು ಕೋಟಿಯಂ ಮೂ
[ರಾ]ರು ಗುಣ ಅಂತರಂಗದಷ್ಟವೇದವು ಸಹಿತದ
ಮೂರು ಮಲ ದಶವಾಯು ಅಂಗದೊಳು ಚರಿಸುತಿಹ
ಮಾರುತ ಮನ ಮಂತ್ರಿ ಪ್ರಾಣ ನಾಯಕನರಸು ಶ
ರೀರ ಜಗದೊಳುತ್ಪತ್ಯವಾಗಿದೆ ದೇವ. |3|
ನೆಲ ನೀರು ಶಿಲೆಯಿಂದ ಬಿತ್ತಿಗಟ್ಟಿಯೆ ಅದನು
ಸಲೆ ಗೋಮಯದಿ ಶುದ್ಧಮಾಡಿ ಸಾರಿಸುವಂತೆ
ಎಲು ಚರ್ಮ ನರ ತೊಗಲು ಮಾಂಸ ಮಜ್ಜೆಯ ಕೂಡಿಯೆ
ಚೆಲುವಾಗಿ ಈ ಕಾಯ ಗಾಳಿ ತುಂಬಿ ವೃಕ್ಷ
ಉಲಿವಂತೆ ಶಿವಬೀಜವ ಚೈತನ್ಯದಿಂದಲಿ
ಇಳೆಗೆ ತೋರುತಿರೆ ನೋಡಿದ ತಿಳಿಯಿರಣ್ಣ. |4|
ಆದಿ ಮಧ್ಯ ಅಂತ್ಯ ಭಾಂಡದೊಳು ಶಿವ ತಾನೆ
ಆದಿಯಾಗಿಯೆ ನೆಲದ ಮರೆಯಲ್ಲಿಹ ಧನದಂತೆ
ಭೇದಿಸದೆಯಿಪ್ಪ ಭೇದವನಾರು ಅರಿಯರಲ್ಲ
ಅಭೇದ್ಯಗುರು ಪಡುವಿಡಿ ಸಿದ್ಧಮಲ್ಲಿನಾಥನ
ಪಾದವಿಡಿದ ತನುವು ಸುಕೃತದೇಹಿಯಾಗಿ
ಮೇದಿನಿಗೆ ತೋರುತಿದೆ ಶಿವಶರಣರಿದ ತಿಳಿಯರೆ. |5|/181
ಪಿಂಡಾಂಡ ಕಿರಿದಲ್ಲ, ಬ್ರಹ್ಮಾಂಡ ಹಿರಿದಲ್ಲ, ಕಾಣಿರಣ್ಣಾ !
`ಪಿಂಡ ಬ್ರಹ್ಮಾಂಡ ದ್ವಯೋರೈಕ್ಯ’ಯೆಂದುದಾಗಿ.
ಇದು ಕಾರಣ, ಪಿಂಡ ಬ್ರಹ್ಮಾಂಡವಾಯಿತ್ತು.
ಆ ಪಂಚಭೂತವೆ ಶರೀರವಾಯಿತ್ತು.
ಅದು ಹೇಗೆಂದಡೆ : `ಪಂಚಭೂತಮಯಂ ದೇಹಂ’ ಎಂದುದಾಗಿ,
ಬ್ರಹ್ಮಾಂಡದಲ್ಲುಳ್ಳ ಜನನ ಪಿಂಡಾಂಡದಲ್ಲುಂಟು ;
ಪಿಂಡಾಂಡದಲ್ಲುಳ್ಳ ಜನನ ಬ್ರಹ್ಮಾಂಡದಲ್ಲುಂಟು.
ಬ್ರಹ್ಮಾಂಡದ ಲಯ ಬ್ರಹ್ಮಾಂಡಕ್ಕೆ.
ಪಿಂಡಾಂಡದ ಲಯ ಬ್ರಹ್ಮಾಂಡಕ್ಕೆ
ಇಂತೀ ಎರಡರ ಭೇದವ ನೀನೆ ಬಲ್ಲೆ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./182
ಪಿಂಡಾಂಡವ ನಿರ್ಮಿಸಿದ ಶಿವನು ಆ ಪಿಂಡದೊಳು ಜ್ಞಾನವ
ಆನೆ ಕಡೆ ಇರುವೆ ಮೊದಲು ಎಂಬತ್ತನಾಲ್ಕುಲಕ್ಷ ಜೀವರಾಶಿಯೊಳಗೆ
ಜ್ಞಾನಚೈತನ್ಯಸ್ವರೂಪವಾಗಿಯಿದ್ದನು.
ಅದಕ್ಕೆ ಸಾಕ್ಷಿ : “ಸಕಲಜೀವ ಶಿವಚೈತನ್ಯಂ ಸಕಲ ಜಗದಾರಾಧ್ಯದೈವಂ
ಸಕಲ ದೇವರೊಂದೇ ಪಿತಾ ಪರಮೇಶ್ವರಂ ನಿತ್ಯನಿತ್ಯಃ ||”
ಎಂದುದಾಗಿ, ಇದು ಕಾರಣ,
ಸಕಲರಾತ್ಮಜ್ಞಾನಜ್ಯೋತಿಯಾಗಿ ನೀನೆ ಇದ್ದೆಯಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./183
ಪುಣ್ಯಫಲಕೆ ಬೀಜ ಶ್ರೀಪಂಚಾಕ್ಷರಿ,
ಪಾಪಗಿರಿಗೆ ವಜ್ರ ಶ್ರೀಪಂಚಾಕ್ಷರಿ,
ಶ್ರೀಗುರುಕೃಪೆಯನೊಲಿಸುವರೆ ಶ್ರೀಪಂಚಾಕ್ಷರಿ,
ಲಿಂಗದೆಡೆಗೆ ನಡೆ ಸೋಪಾನ ಶ್ರೀಪಂಚಾಕ್ಷರಿ,
ಜಂಗಮಕೆ ತವರ್ಮನೆ ಶ್ರೀಪಂಚಾಕ್ಷರಿ.
ಶ್ರೀ ಗುರುಲಿಂಗಜಂಗಮ ನಿತ್ಯಮುಕ್ತರ ಮಾಡಿತೋರುವ
ಶ್ರೀಪಂಚಾಕ್ಷರಿಯ ಅರಿತು ನೆನೆದರೆ ಅನಂತಕೋಟಿ ಪುಣ್ಯ,
ಮರೆತು ನೆನೆದರೆ ಮಹಾಕೋಟಿ ಪುಣ್ಯ.
ಅರಿತು ಅರಿಯದೆ, ಮರೆತು ಮರೆಯದೆ ಸದಾವಕಾಲದಲ್ಲಿ
`ನಮಃಶಿವಾಯ’ ಎಂದು ಜಪಿಸುತಿಪ್ಪ ಶಿವಶರಣರ
ಪಾದಧ್ಯಾನದಲ್ಲಿಪ್ಪ ಕೃಪೆಯನೆನಗೆ ಪಾಲಿಸಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./184
ಪುರುಷನಿಂದ ಸತಿ ಹಿರಿಯಳಾದರೂ ಆಗಲಿ,
ಹಸೆಹಂದರವನಿಕ್ಕಿ ಮದುವೆಯ ಮಾಡಿದ ಮೇಲೆ
ಪುರುಷನಿಂದ ಕಿರಿಯಳು ನೋಡಾ.
ಗುರುವಿಗಿಂದ ಶಿಷ್ಯ ಅರುಹುಳ್ಳಾತನಾದರೂ ಆಗಲಿ,
ಶಿಷ್ಯನ ಭಾವಕ್ಕೆ ಗುರು ಅಧಿಕ ನೋಡಾ.
ನಾನರುಹುಳ್ಳಾತ, ಗುರುವಿಗರುಹುವಿಲ್ಲೆಂದು ಜರೆದು ನುಡಿವ ನುಡಿ
ಅಂಗದೊಳು ಹೊಳೆದರೆ ಕುಂಭಿನಿಯ ಪಾಪದೊಳಿಕ್ಕುವ
ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /185
ಪೃಥ್ವಿ ಆಕಾಶವ ಬೆರಸಲು
ವಾಗೀಂದ್ರಿಯದ ಜನನ.
ಪೃಥ್ವಿ ವಾಯುವ ಬೆರಸಲು
ಪ್ರಾಣೇಂದ್ರಿಯದ ಜನನ.
ಪೃಥ್ವಿ ತೇಜವ ಬೆರೆಸಲು
ಪಾದೇಂದ್ರಿಯದ ಜನನ.
ಪೃಥ್ವಿ ಅಪ್ಪುವ ಬೆರಸಲು
ಗುಹ್ಯೇಂದ್ರಿಯದ ಜನನ.
ಪೃಥ್ವಿ ಪೃಥ್ವಿಯ ಬೆರಸಲು
ಪಾಯುವಿಂದ್ರಿಯದ ಜನನ.
ಇಂತಿವು ಚತುರ್ವಿಂಶತಿತತ್ವಂಗಳುತ್ಪತ್ಯವೆಂದು
ಅರಿಯಲು ಯೋಗ್ಯವಯ್ಯ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./186
ಪೃಥ್ವಿಯೊಳಗಣ ಪೃಥ್ವಿ ಪಾಯುವಿಂದ್ರಿಯ.
ಪೃಥ್ವಿಯೊಳಗಣ ಆಕಾಶ ವಾಗೀಂದ್ರಿಯ.
ಪೃಥ್ವಿಯೊಳಗಣ ವಾಯು ಪಾಣೀಂದ್ರಿಯ.
ಪೃಥ್ವಿಯೊಳಗಣ ಅಗ್ನಿ ಪಾದೇಂದ್ರಿಯ.
ಪೃಥ್ವಿಯೊಳಗಣ ಅಪ್ಪು ಗುಹ್ಯೇಂದ್ರಿಯ.
ಇಂತಿವು ಪೃಥ್ವಿಯ ಪಂಚಕೃತಿಯಯ್ಯ.
ಪಂಚಮಹಾಭೂತಂಗಳು ಪಂಚೀಕೃತಿಯನ್ನೈದಿ
ಶರೀರರೂಪಾಯಿತ್ತಯ್ಯ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./187
ಬಡವನೆಡವಿ ಧನಕಂಡಂತೆ, ಭವಪಡುವನ ಕರದೊಳು
ಮೃಡಮೂರ್ತಿಲಿಂಗವ ಕಂಡೆನಲ್ಲ |
ಬಿಡದೆ ಅರಸುವ ಬಳ್ಳಿ ಕಾಲತೊಡರಿ ಬಂದಂತೆ
ಭವಭವಾಂತರದಲರಸಿದರೂ ಕಾಣದ
ಕಾಲಸಂಹರದೊಡೆಯನ ಕಂಡೆನಲ್ಲ ಎನ್ನ ಕರದೊಳು !
ವೇದಾತೀತ ನಿರಂಜನನೆಂಬ ಲಿಂಗವ ಕಂಡೆನಲ್ಲ ಎನ್ನ ಕರದೊಳು !
ಹರಿಯಜರ ಮಧ್ಯದಲ್ಲಿ ಉರಿವುತಿಹ ಪರಂಜ್ಯೋತಿಲಿಂಗನ
ಕಂಡೆನಲ್ಲ ಎನ್ನ ಕರದೊಳು !
ಕಂಡು ಕಂಡು ಬಿಡಲಾರದ ಸುವಸ್ತುವ ಕಂಡೆನಲ್ಲ ಎನ್ನ ಕರದೊಳು.
ಆಹಾ ಎನ್ನ ಪುಣ್ಯವೆ ! ಆಹಾ ಎನ್ನ ಭಾಗ್ಯವೆ !
ಆಹಾ ಎನ್ನ ಪ್ರಾಣದ ನಲ್ಲನೆಂಬ ಪರಮಾತ್ಮಲಿಂಗವನಪ್ಪಿ
ಅಗಲದಂತೆ ಮಾಡು ಕಂಡ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./188
ಬರುತ ಬರುತ ಅರಣ್ಯದೊಳಗೊಂದು ಬಟ್ಟೆಯ ಕಂಡೆನು.
ಆ ಬಟ್ಟೆಯಗೊಂಡು ಬರುತಲೊಂದು ಸಾಗರವ ಕಂಡೆನು.
ಸಾಗರದ ನಡುವೊಂದೂರ ಕಂಡೆನು.
ಊರಮುಂದೊಂದು ಭವಹರವೆಂಬ ವಕ್ಷವ ಕಂಡೆನು.
ಆ ವಕ್ಷವನಾರಾಧಿಸಿದರೆ ಪರಮಾರ್ಥವೆಂಬ ಹಣ್ಣ
ಕರದೊಳಗೆ ಧರಿಸಿತ್ತು ನೋಡಾ.
ಕರದ ಹಣ್ಣು ಉರವ ತಾಗಿ, ಉರದ ಹಣ್ಣು ಶಿರವ ತಾಗಿ,
ಶಿರದ ಹಣ್ಣು ಮವನ ತಾಗಿ, ಮನದ ಹಣ್ಣು ಭಾವವ ತಾಗಿ,
ಭಾವದ ಹಣ್ಣು ಸರ್ವಕರಣಂಗಳನೆಲ್ಲವ ತಾಗಿ,
ಸರ್ವಾಂಗದೊಳು ಪರಿಪೂರ್ಣವಾದುದಿದೇನು ಚೋದ್ಯ ಹೇಳಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ !/189
ಬಲೆಯೊಳಗಣ ಅನು[ಮಿಷ]ನಂತೆ,
ಕೂಪವ ಬಿದ್ದ ಸರ್ಪನಂತೆ, ಮಧುರದೊಳು ಬಿದ್ದ ಮಕ್ಷಕನಂತೆ,
ಮಾಯಪಾಶವೆಂಬ ಬಲೆಯೊಳೆನ್ನನಿಕ್ಕಿ ಕಾಡುತ್ತಿದ್ದೆಯಲ್ಲ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./190
ಬಲ್ಲೆನೆಂಬುವರ ಭ್ರಾಂತಿಗೊಳಗುಮಾಡಿತ್ತು ಮಾಯೆ,
ಅರಿಯೆನೆಂಬುವರ ಅನಂತಭವವ ಸುತ್ತಿಸಿತ್ತು ಸಂಸಾರಮಾಯೆ,
ವೀರರೆಂಬುವರ ಗಾರುಮಾಡಿತ್ತು ಮಾಯೆ,
ಧೀರನೆಂಬುವರ ಎದೆಯ ನಡುಗಿಸಿತ್ತು ಸಂಸಾರಮಾಯೆ,
ಯತಿಗಳೆಂಬುವರ ಏಡಿಶಾಡಿಕಾಡಿತ್ತು ಸಂಸಾರಮಾಯೆ,
ಜತಿಗಳೆಂಬುವರ ಜನ್ಮವ ಮೃತ್ಯುವಿಗೆ ಈಡುಮಾಡಿತ್ತು ಮಾಯೆ
ಸಿದ್ಧರೆಂಬುವರ ಬುದ್ಧಿಗೆಡಿಸಿತ್ತು ಸಂಸಾರಮಾಯೆ
ಸಾಧ್ಯರೆಂಬುವರ ಬೋಧೆಗೊಳಗುಮಾಡಿತ್ತು ಮಾಯೆ.
ಯತಿ ಸಿದ್ಧ ಸಾಧ್ಯರೆಂಬುವರ ಮತಿಭ್ರಷ್ಟರ ಮಾಡಿ ಕಾಡೂದದು.
ನೀನಿಕ್ಕಿದ ಸಂಸಾರಮಾಯದ ವಿಗಡ ಸರ್ವರ ಬಾಯಂ ಟೊಣೆದೆ
ಹೋಯಿತಯ್ಯ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./191
ಬಸವಣ್ಣ ಶ್ರುತಿಸಿದ ವಾಕ್ಯದಿಂದ
ಗುರುವೆಂಬ ಮಹಿಮೆಯ ಕಂಡೆನಯ್ಯಾ !
ಬಸವಣ್ಣ ಶ್ರುತಿಸಿದ ವಾಕ್ಯದಿಂದ ಲಿಂಗಸಾವಧಾನದ ಗೊತ್ತಿನ
ಪರಿಣಾಮದ ಸುಖದ ಸುಗ್ಗಿಯ ಕಂಡೆನಯ್ಯಾ !
ಬಸವಣ್ಣ ಶ್ರುತಿಸಿದ ವಾಕ್ಯದಿಂದ ಪಾದೋದಕ ಪ್ರಸಾದವ
ನಿತ್ಯ ನಾ ಸೇವಿಸಿ ಭವದಗ್ಧನಾದೆನಯ್ಯಾ !
ಬಸವಣ್ಣ ಶ್ರುತಿಸಿದ ವಾಕ್ಯದಿಂದ
ಭಕ್ತಿ ಉನ್ನತವೆಂದು ನಂಬಿದೆನಯ್ಯಾ !
ಅದೇನು ಕಾರಣವೆಂದರೆ : ಸಿರಿಗಂಧದೊತ್ತಿಲಿದ್ದ ಜಾಲಿಗೆ ಪರಿಮಳ ಬಾರದಿಹುದೇನಯ್ಯಾ ?
ಮರುಗದಗಿಡದೊತ್ತಿಲಿದ್ದ ಗರಗಕ್ಕೆ ಪರಿಮಳ ಬಾರದಿಹುದೇನಯ್ಯಾ ?
ಬಸವಣ್ಣನ ಸೆರಗ ಸೋಂಕಿದ ಮನುಜರೆಲ್ಲ
ಶಿವಗಣಂಗಳಾಗದಿಹರೇನಯ್ಯಾ ?
ಇದು ಕಾರಣ,
ಬಸವಣ್ಣನ ವಚನಾಮೃತವ ದಣಿಯಲುಂಡು ತೇಗಿದರೆ
ಪಾತಕಕೋಟಿ ಪರಿಹಾರವಾಗದಿಹದೇನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ ?/192
ಬಸುರಿಲ್ಲದ ಬಯಕೆ ಇದೆತ್ತಣದೊ !
ಶಿಶುವಿಲ್ಲದ ಜೋಗುಳ ತೊಟ್ಟಿಲು ತೂಗುವುದಿದೇನೊ !
ಆಸವಲ್ಲದ ಹೊಳೆಯ ಅಂಬಿಗನ ಹುಟ್ಟುನುಂಗಿ,
ಶಶಿಯಿದ್ದ ಗಗನ ಬಿಸಿಯಾಗಿಪ್ಪುದಿದೇನೊ !
ಮಸಣವ ನುಂಗಿದ ಹೆಣ, ವಿಷವ ನುಂಗಿದ ಸರ್ಪನೊ !
ಕೃಷಿ ಹೊಲನ ನುಂಗಿ, ಬೀಜಕೆ ನೆಲೆಯಿಲ್ಲ .
ಆಸವಲ್ಲದ ಕೊಟ್ಟವ ಬೇಡನ ಬಲೆ ನುಂಗಿ
ಎಸೆವುದಿದೇನು ಚೋದ್ಯ ಹೇಳಾ !
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭವೆ./193
ಬೀರ ಜಟ್ಟಿ ಮೈಲಾರ ಮಾರಿ ಮಸಣೆಯೆಂಬ
ಅನ್ಯದೈವವು ಮನೆಯೊಳಿರುತಿರೆ, ಅದ ವಿಚಾರಿಸದೆ,
ನಿನ್ನ ಚಿತ್ಕಳೆ ಪರಬ್ರಹ್ಮಲಿಂಗವನವರಿಗೆ ಕೊಟ್ಟು,
ಹೊನ್ನು ಹಣವ ಬೇಡಿ ಕೊಂಡು ಒಡಲ ಹೊರೆದು
ಗುರುವೆಂದುಕೊಂಬ ಗುರುವೆ ನೀ ಕೇಳಾ.
ವಿಚಾರಹೀನರಿಗೆ ಉಪದೇಶವ ಕೊಟ್ಟರೆ ಅವಿಚಾರಿ
ನೀನಹುದನರಿಯಾ ?
ಸಾಕ್ಷಿ :“ಅನ್ಯದೈವಪೂಜಕಸ್ಯ ಗುರೋರುಪದೇಶಃ ನಾಸ್ತಿ ನಾಸ್ತಿ |
ಅವಿಚಾರಂ ತದೀಕ್ಷಣಾತ್ ರೌರವಂ ನರಕಂ ವ್ರಜೇತ್ ||”
ಎಂದುದಾಗಿ,
ಮುನ್ನ ಯಮಪಾತಕಕೆ ಗುರಿಯಾಗುವ ಸಂದೇಹಿಗಳ
ಗುರು ಶಿಷ್ಯ ಸಂಬಂಧವ ಕಂಡು ನಸುನಗುತ್ತಿದ್ದನಯ್ಯಾ
ನಮ್ಮ ಪರುಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./194
ಬೆಟ್ಟದಷ್ಟು ಕರ್ಮವುಳ್ಳರೆ ಬೊಟ್ಟಿನಷ್ಟು ಶ್ರೀವಿಭೂತಿಯ ಧರಿಸಲು
ಬಟ್ಟಬಯಲಾಗಿ ದುರಿತನ್ಯಾಯ ದೆಸೆಗೆಟ್ಟು ಓಡುವವು.
ನೈಷ್ಠೆಯುಳ್ಳ ಶ್ರೀವಿಭೂತಿ ಧರಿಸಿಪ್ಪ ಸದ್ಭಕ್ತಂಗೆ
ಕಾಲಮೃತ್ಯು, ಅಪಮೃತ್ಯು, ಮಾರಿಗಳೆಂಬವು ಮುಟ್ಟಲಮ್ಮವು.
ಬ್ರಹ್ಮರಾಕ್ಷಸ ಪ್ರೇತ ಪಿಶಾಚಿಗಳು ಬಿಟ್ಟೋಡುವವು
ಶ್ರೀವಿಭೂತಿಯ ಕಾಣುತ್ತಲೆ.
ಮಂತ್ರ ಸರ್ವಕೆಲ್ಲ ಶ್ರೀವಿಭೂತಿಯಧಿಕ ನೋಡಾ.
ಯಂತ್ರ ಸರ್ವಕೆಲ್ಲ ಶ್ರೀವಿಭೂತಿ ಅಧಿಕ ನೋಡಾ.
ಸರ್ವ ಜಪತಪನೇಮ ನಿತ್ಯ ಹೋಮ ಗಂಗಾಸ್ನಾನ
ಅನುಷ್ಠಾನವೆಲ್ಲಕೆಯಾ ಶ್ರೀವಿಭೂತಿ ಅಧಿಕ ನೋಡಾ.
ಸರ್ವಕ್ರಿಯೆಗೆ ಶ್ರೀ ವಿಭೂತಿಯಧಿಕ ನೋಡಾ.
ಸರ್ವವಶ್ಯಕೆ ಶ್ರೀವಿಭೂತಿಯಧಿಕ ನೋಡಾ.
ಶ್ರೀ ವಿಭೂತಿಯಿಲ್ಲದಲಾವ ಕಾರ್ಯವೂ ಸಾಧ್ಯವಾಗದು.
ಶ್ರೀವಿಭೂತಿ ವೃಷಭಾಕಾರ, ಶ್ರೀವಿಭೂತಿ ಚಿದಂಗ.
ಸಾಕ್ಷಿ :“ಅನಾದಿ ಶಾಶ್ವತಂ ನಿತ್ಯಂ ಚೈತನ್ಯಂ ಚಿತ್ಸ್ವರೂಪಕಂ |
ಚಿದಂಗಂ ಋಷಭಾಕಾರಂ ಚಿದ್ಭಸ್ಮ ಲಿಂಗಧಾರಣಂ ||”
ಎಂದೆಂಬ ಶ್ರೀವಿಭೂತಿಯ ಸಂದುಸಂದು ಅವಯವಂಗಳು
ರೋಮ ರೋಮ ಅಪಾದಮಸ್ತಕ ಪರಿಯಂತರದಲ್ಲು
ಧರಿಸಿ ಶಿವದೇಹಿಯಾದೆನು ನೋಡಾ.
ಅದು ಎಂತೆಂದರೆ : ಸಾಕ್ಷಿ :“ಅಪಾದಮಸ್ತಕಾಂತಂ ಚ ರೋಮಾದೌ ಭವತೇ ಶಿವಃ |
ಸ್ವಕಾಯಮುಚ್ಯತೇ ಲಿಂಗಂ ವಿಭೂತ್ಯೂದ್ಧೂಳನಾದ್ ಭವೇತ್ ||”
ಹೀಗೆಂಬ ವಿಭೂತಿಯ ಧರಿಸಿ, ಭವಸಾಗರವ ದಾಟಿ
ನಿತ್ಯನಾಗಿದ್ದೆನು ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./195
ಬೆಳಗಿನೊಳು ಮಹಾಬೆಳಗಿನ ಜ್ಯೋತಿಯ ಕಂಡೆನು,
ಶತಕೋಟಿ ಮಿಂಚಿನ ಪ್ರಭೆಯ ಕಂಡೆನು,
ಅನಿಲನ ಸಂಗದಲುರಿವ ಕರ್ಪುರದ ಗಿರಿಯ ಕಂಡೆನು.
ಕಂಡ ಕಾರಣ,
ಎನ್ನ ಪಿಂಡದೊಳಗಿಹ ಸ್ವಯಜ್ಞಾನವೆ
ಪರಬ್ರಹ್ಮವೆಂದು ತಿಳಿದು ಸಂತೈಸುತಿದ್ದೆ.
ಭೇದದಿಂದೆ ಪರಮಾತ್ಮ ಎನ್ನ ಮರ್ತ್ಯಕ್ಕೆ ಆಜ್ಞೆಯಿಸಿ ಕಳುಹಿ
ಅಂಜದಿರೆಂದು ಅಭಯಕೊಟ್ಟು, ತಲೆದಡಹಿ,
ನೀನಿದ್ದಲ್ಲಿ ನಾನಿಹೆನೆಂದು ನಿರೂಪಿಸಿ,
ಆದಿಪಿಂಡವ ಮಾಡಿ, ಜಗಕ್ಕೆ ನಿರ್ಮಿಸೆ,
ಹೇಮಗಲ್ಲ ಹಂಪನೆಂಬ ನಾಮವಿಡಿದು ಬಂದೆ.
ಆ ಭೇದವ ಪಿಂಡಜ್ಞಾನದಿಂದಲರಿದು
ಆಚರಿಸುತ್ತಿದ್ದೆನು ಎನ್ನಾಳ್ದ
ಘಪರಮಘೆಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./196
ಬ್ರಹ್ಮ ವಿಷ್ಮು ರುದ್ರ ಈಶ್ವರ ಸದಾಶಿವ ಇದ್ದಂದು ನೀನೆ,
ಅವರಿಲ್ಲದಂದು ನೀನೆ ;
ಪಿಂಡದ ಬೀಜವ ನವಬ್ರಹ್ಮರು ತಂದಂದು ನೀನೆ,
ಅವ ತಾರದಂದು ನೀನೆ.
ಆದಿ ಮಧ್ಯಾಂತವಿದ್ದಂದು ನೀನೆ,ಅವು ಇಲ್ಲದಂದು ನೀನೆ ;
ಪಿಂಡನಿರ್ಮಿತವಾದಂದು ನೀನೆ ;
ಪಿಂಡಜ್ಞಾನವಾದಂದು ನೀನೆ, ಪಿಂಡಜ್ಞಾನವಿಲ್ಲದಂದು ನೀನೆ ;
ಸರ್ವರಾತ್ಮಜ್ಞಾನವಾಗಿ ತೋರುತ್ತಿದ್ದೆಯಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./197
ಭಕಾರ ಭವಬಂಧನ ಕರ್ಮವ ಕಳೆವುದೆಂದು,
ಸಿಕಾರ ಶಿವಪದದ ಬಯಕೆಯ ತೋರುವುದೆಂದು,
ತಕಾರ ತಾಮಸಗುಣ ಕಳೆವುದೆಂದು ನಿರೂಪಿಸಿ
ಶ್ರೀಭಸಿತವ ಧರಿಸಕಲಿಸಿದೆಯಲ್ಲ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./198
ಭಕ್ತಿಯಿಲ್ಲದೆ ಗುರುಪೂಜೆಯ ಅನಂತಕಾಲ ಮಾಡಿದರೂ
ವ್ಯರ್ಥವೆಂದಿತ್ತು ಗುರುವಚನ.
ಭಕ್ತಿಯಿಲ್ಲದೆ ಧ್ಯಾನ ಮೌನ ಗಂಗಾಸ್ನಾನ ಜಪತಪ
ನೇಮ-ನಿತ್ಯ ವ್ಯರ್ಥವೆಂದಿತ್ತು ಗುರುವಚನ.
ಜಂಗಮತೃಪ್ತಿಯಿಲ್ಲದೆ ಲಿಂಗಕೆ
ಪುಷ್ಪ ಪತ್ರಿಯನೇರಿಸಿ ಫಲವೇನು ?
ಲಿಂಗಕ್ಕೆ ಜಂಗಮವೆ ಬಾಯಿಯೆಂದಿತ್ತು ಗುರುವಚನ.
ವೃಕ್ಷಕ್ಕೆ ಭೂಮಿ ಬಾಯಿಯೆಂದು ನೀರನೆಸಿದರೆ
ಮೇಲೆ ಪಲ್ಲವಿಸಿತ್ತು ನೋಡಾ !
ಸ್ಥಾವರಕ್ಕೆ ಜಂಗಮವೆ ಬಾಯಿಯೆಂದು ಪಡಿಪದಾರ್ಥವ
ನೀಡಿದರೆ ಶಿವಂಗೆ ತೃಪ್ತಿಯೆಂದಿತ್ತು ರಹಸ್ಯ.
ಸಾಕ್ಷಿ : “ವೃಕ್ಷಸ್ಯ ವದನಂ ಭೂಮಿಃ ಸ್ಥಾವರಸ್ಯತು ಜಂಗಮಃ ||
ಮಮ ತೃಪ್ತಿರುಮಾದೇವಿ ಉಭಯೋಲರ್ಿಂಗ ಜಂಗಮತಾ ||”
ಎಂದುದಾಗಿ,
“ಸ್ಥಾವರಾರ್ಪಿತನೈವೇದ್ಯಾತ್ ನ ತೃಪ್ತಿರ್ಮಮ ಪಾರ್ವತಿ |
ಜಂಗಮಾರ್ಪಿತ ನೈವೇದ್ಯಾತ್ ಮಮ ತೃಪ್ತಿಶ್ಚ ಸರ್ವಥಾ |
ಎಂದುದಾಗಿ,
ಈ ಶ್ರುತ ದೃಷ್ಟ ಅನುಮಾನವ ಕಂಡು,
ಮಾಡುವಾತನೆ ಸದ್ಭಕ್ತನು ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./199
ಭವಿ ಭಕ್ತರೆಂಬೆರಡು ವಿವರವಾಯಿತು ನೋಡಾ ಅಯ್ಯಾ.
ಭವಿಗೆ ಶೈವ, ಭಕ್ತಂಗೆ ವೀರಶೈವ.
ಭವಿ ಶೈವಲಿಂಗವ ಪೂಜೆಮಾಡಿದರೆ
ಅವರ ಭಾವಕ್ಕೆ ಒಲಿವನಲ್ಲದೆ,
ಶಿವಭಕ್ತ ಶೈವಲಿಂಗವ ಪೂಜೆಮಾಡಿದರೆ ತಪ್ಪದು ನರಕ.
ಅದು ಕಾರಣವೆಂದರೆ : ಶಿವಲಿಂಗ ಕರಸ್ಥಲದಲ್ಲಿರುತಿರೆ ಆ ಲಿಂಗದ ಪೂಜೆಯ ಮಾಡಿ,
ವರವ ಪಡೆಯಲರಿಯದೆ, ಅನ್ಯಲಿಂಗಕ್ಕೆ ಹರಿದು ಹೋಗಿ,
ಗಡಗಡನುರುಳಿ, ಆ ಲಿಂಗದೇವಾಲಯವ ಪ್ರದಕ್ಷಣ ಮಾಡಿದರೆ,
ಕುನ್ನಿ ಬೂದಿಯೊಳಗೆ ಹೊರಳಿ ಲಟಪಟನೆ ಝಾಡಿಸಿ ಎದ್ದು
ತುಡುಗಿಗೆ ಮನೆಯೊಳು ಹೊಕ್ಕು ಸುತ್ತುತಿರೆ
ನಡುನೆತ್ತಿಯ ಮೇಲೆ ಬಡಿವಂತೆ,
ಏನೆಂದು ಸಟೆಮಾಡನಯ್ಯಾ ಇಂತಪ್ಪ ಅಜ್ಞಾನಿಗಳ,
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ ?/200
ಭಸಿತದ ಮೇಲೆ ಅನ್ಯದೇವರ ಬಂಡಾರವನಿಡುವ
ಅನಾಮಿಕ ಹೊಲೆಯನ ಶಿವಭಕ್ತನೆಂದು ಕರೆಯಬಹುದೆ ? ಕರೆಯಬಾರದು.
ಕರೆದವರಿಗೆ ಮಹಾದೋಷ.
ತೊತ್ತಿನಮೇಲೆ ಗರತಿಯಲ್ಲದೆ, ಗರತಿಯ ಮೇಲೆ ತೊತ್ತೆ ?
ಮಿಥ್ಯದೈವದ ಗಂಟಲಗಾಣವೆಂಬ ಶ್ರೀ ವಿಭೂತಿಯ ಧರಿಸಿ,
ಶಿವಪದ ಸಾಧಿಸಲರಿಯದೆ ಮಣ್ಣು ಪಟ್ಟಿಯ ಧರಿಸಿ ಕೆಡುವ
ಕುನ್ನಿಗಳ ನಾನೇನೆಂಬೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./201
ಭಸಿತವಿದು ಶಿವರೂಪೆಂದು
ನೊಸಲೊಳು ಧರಿಸಿದಡವ ನಿತ್ಯ.
ಪದ : ಭವಬಂಧನಕೆ ಅರಿಯು ಭಕಾರವು
ಶಿವಪದದ ಬಯಕೆಯನೀವ ಸಿಕಾರವು
ಕವಿವ ತಾಮಸಗುಣಹಾರ ತಕಾರವೆಂದು
ವಿವರಿಸಿ ಶ್ರೀ ಭಸಿತವನೆನ್ನ ಭಾಳೊಳು
ತವೆ ಪೂಸಕಲಿಸಿದ ಗುರುವ ನೆನೆದು ನಾ
ಜವನ ಪಾಶವನು ಸುಟ್ಟು ನಿಟ್ಟೊರೆಸಿದೆನು. |1|
ಈ ಜನ್ಮದ ಹೊಲೆಗಳೆವ `ವಿ’ಕಾರವು
ಸಾಜ ಭೂತಭಯ ಭೀತಿಗೆ `ಭೂ’ಕಾರವು
ರಾಜಿಪ ತಿಮಿರಕೆ ಜ್ಯೋತಿ `ತಿ’ಕಾರವೆಂದು
ಮೂಜಗಪಾಲಗೆ ಸಿತಗೊರಳನಾಮವು
ಸೂಚಿಸುತಿಹ [ವಿ]ಭೂತಿಯ ಧರಿಸಿಯೆ
ನೀ ಜೀವಿಸು ಮಗನೆಂದು ಅರುಹಿದ ಗುರುವೆ. |2|
ಪ್ರಥಮಪುಂಡ್ರ ಬ್ರಹ್ಮತ್ಯಕರ
ದ್ವಿತೀಯಪುಂಡ್ರ ವಿಷ್ಣುವಿನ ಸ್ಥಿತಿಗತಿಕ್ಷಯಂ
ತೃತೀಯ ಪುಂಡ್ರ ರುದ್ರನ ಲಯಗೆಡವುದೆಂದು
ಪ್ರತಿಯಿಲ್ಲ ತ್ರಿಪುಂಡ್ರವ ಭಾಳೊಳು
ಸದವಕಾಲ ಧರಿಸಿದಡವ
ನಿತ್ಯನೆಂದುನ್ನತಿ ಪೊಗಳೆ ವೇದ ಅಷ್ಟ ಪೌರಾಣದಲ್ಲಿ. |3|
ಪಂಚಗವ್ಯ ಗೋಮಯದಿ ಜನಿಸಿಯೆ
ಪಂಚಮುಖಗೆ ಆಭರಣವೆನಿಸಿ ತನು
ಪಂಚಭೂತಂಗಳನಳಿದು ಪಣೆಯೊಳಿರುವ
ಸಂಚಿತ ಪ್ರಾರಬ್ಧಾಗಾಮಿ ತ್ರೈಗಳ
ಹಂಚುಹರಿಯ ಮಾಡುರುಹುವ ಭಸ್ಮ ಪ್ರ
ಪಂಚಿಲ್ಲದೆ ಧರಿಸಿದಡವ ಮುಕ್ತ . |4|
ಚಿದಂಗ ವೃಷಭಾಕಾರ ವಿಭೂತಿಯ
ಅದ ಸರ್ವಾಂಗಕುದ್ಧೂಳನ ಮಾಡಿಪ
ಸದ್ಭಕ್ತನೆ ಶಿವ ತಾನೆಂದು
ಮುದದಿ ಪೊಗಳುತಿಹ ವೇದಾಗಮಗಳು
ಮಿದ ನೀ ಧರಿಸೆಂದೆನಗರುಹಿದ ಗುರು ಮದಹರ ಪಡುವಿಡಿ ಸಿದ್ಧಮಲ್ಲೇಶಾ. |5|/202
ಮಂತ್ರವ ಬಲ್ಲೆವೆಂದು ಪರಮನುಜರಿಗೆ ಭೂತ ಪ್ರೇತ ಪಿಶಾಚಿಗಳು
ಹೊಡೆದರೆ ಬಿಡಿಸುವ ಸಂತೆಸೂಳೆಯ ಮಕ್ಕಳು ನೀವು ಕೇಳಿರೋ.
ನಿಮ್ಮ ತನುವಿನೊಳಿಹ ಪಂಚಭೂತಂಗಳು ನಿಮ್ಮ ತಿಂದು ತೇಗುತಿಹವು.
ಅವನೇಕೆ ನೀವು ಬಿಡಿಸಿಕೊಳಲಾರದಾದಿರೊ ?
ಆಳುವ ಪಂಚಭೂತಶರೀರದ ಹೊಲೆಯ ಕಳೆದು
ಶಿವದೇಹಿಯಮಾಡುವುದೆ ಶಿವಪಂಚಾಕ್ಷರಿ.
ಜನನ ಮರಣಗಳ ನಿಟ್ಟೊರಸುವುದೆ ಶ್ರೀಪಂಚಾಕ್ಷರಿ.
ಕಾಲಮೃತ್ಯು ಅಪಮೃತ್ಯು ಮಾರಿಗಳನೋಡಿಸುವುದೆ ಶ್ರೀಪಂಚಾಕ್ಷರಿ.
ನಿತ್ಯ ಮುಕ್ತಿಯ ತೋರುವುದೆ ಶ್ರೀಪಂಚಾಕ್ಷರಿ.
ಸತ್ಯ ಜಗದೊಳಿರಿಸುವ ಶ್ರೀಪಂಚಾಕ್ಷರಿ.
ಏಳುಕೋಟಿ ಮಹಾಮಂತ್ರಕೆ ತಾಯಿ ಶ್ರೀಪಂಚಾಕ್ಷರಿ
ಎಂಬುದನರಿಯದೆ, ಕಳ್ಳಮಂತ್ರವ ಕಲಿತು, ಕಾಳುಭವಕೀಡಾಗಿ
ಕಾಳೊಡಲ ಹೊರೆವ ಮಾನವರು ನೀವು ಕೇಳಿರೊ.
ಸಾಕ್ಷಿ : “ಸಪ್ತಕೋಟಿ ಮಹಾಮಂತ್ರಾ ಉಪಮಂತ್ರಾಸ್ತ್ವನೇಕಶಃ |
ಪಂಚಾಕ್ಷರ್ಯಾಂ ಪ್ರಲೀಯಂತೇ ಪುನಸ್ತಥೈವ ನಿರ್ಗತಾಃ ||”
ಎಂದೆಂಬ ಮಂತ್ರವನರಿಯದೆ,
ಅಂಧಕರಂತೆ ಕಾಣದೆ ಹುಡುಕುವ ಸಂದೇಹಿಗಳಿಗಹುದೇನಯ್ಯಾ
`ನಮಃ ಶಿವಾಯ’ `ನಮಃ ಶಿವಾಯ’ ಎಂಬ ಮಂತ್ರ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ ?/203
ಮಣಿಮಾಡದೊಳಡಗಿಹ ಮಾಣಿಕಕ್ಕೆ
ಮಣಿ ಇಡಲಳವಲ್ಲ.
ಮಾಣಿಕದ ಪ್ರಭೆಯಲ್ಲಿ ಕಾಣಬಹುದಾಕಾರಮೂರ್ತಿಯ.
ಅಂತರಂಗದ ಜ್ಞಾನ ಬಹಿರಂಗದ ಕ್ರಿಯೆಯೊಳೊಮ್ಮೆ
ಸರ್ವಾಂಗದೊಳು ಲಿಂಗವ ಸಂತೈಸಿಪ್ಪ ಸದ್ಭಕ್ತರ
ಪಾದಕ್ಕೆ ನಮೋ ನಮೋ ಎಂಬೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./204
ಮದ ಎಂಟರೊಳು ಸಿಲ್ಕಿ ಮೈಮರೆದು ಅಲ್ಲಮನ
ಪಾದಯುಗಳನು ಮರೆಯದಿರು ಮರೆದರೆ ಆತ್ಮ
ಸುಧೆಯ ಹೊರಚೆಲ್ಲಿ ಸುರೆಗಾಟಿಯ ಸವಿವವನ
ವಿಧಿ ಕಂಡಾ ಶಿವನ ಮರೆಯದೆ ನೆನೆ ಆತ್ಮ .
ಪದ : ಕುಲ ಛಲ ರೂಪ ಯವ್ವನ ಧನ ವಿದ್ಯೆ ರಾಜ್ಯ
ಸಲೆ ತಪಮದವೆಂಬ ಎಂಟಾನೆಯವೆ ಆತ್ಮ.
ನಿಲಿಸುವನು ದೃಢವೆಂಬ ಕಂಬದೊಳು ಕಟ್ಟಿಯೆ
ಹಲವು ದೆಸೆಗವ ಹರಿಯಗೊಡದೆ ಎಲೆ ಆತ್ಮ.
ತಲೆಯೊಳಗೆ ವಿೂಟು ಶಿವಜ್ಞಾನಾಂಕುಶವ ಹಿಡಿದು
ಕೊಲ್ಲುತಲಿರು ಕಂಡ್ಯಾ ಮಲಹರನ ಮರೆಯದೆ ಆತ್ಮ |1|
ಮರವುಮೋಡವು ಕವಿದು ಕರಣೇಂದ್ರಿಯೆಂದೆಂಬ
ಬಿರುಮಳೆಯು ಕರೆವುತೆ ಭೀತಿಯಾಗದೆ ಆತ್ಮ.
ಬರಸಿಡಿಲು ಕಾಲನೆಂಬುವುದು ಚಿಟಿಚಿಟಿಲೆನುತ
ಬರುತಲದೆ ಮುಂದೆ ರಕ್ಷಿಯಾಗಿರ್ದ ನೀ ಆತ್ಮ.
ಅರಿಗಳಲ್ಲದೆ ಹಿತವರಾರಿಲ್ಲ ಕೇಳು ನೀ
ಪರಮಾತ್ಮನನು ಮರೆಯದಿರು ಕಂಡ್ಯಾ ಆತ್ಮ. |2|
ಕಾಳಗದಿ ಕೈಮರದ ಪಟ ಬರೆಸಿ ಮರಣಾರ್ಥಿ
ಯೊಳಗಲಿದನುಮಿಷಗೆ ಮೃತ್ಯು ಕೇಳಲೆ ಆತ್ಮ.
ನಾಲಗುಳ್ಳನಕ ಶಿವಸ್ಮೃತಿಯ ಮರೆದರೆ ನಿನಗೆ
ಕಾಲಮೃತ್ಯು ಮಾರಿಗಳು ಉಂಟೇ ಆತ್ಮ.
ಹೋರಾಡಿ ಲಿಂಗಾಂಗಸಂಗ ಖಡ್ಗದಲ್ಲಿ ನೀ
ಮೇಲಿಪ್ಪ ಗುರುಸಿದ್ಧ ಮಲ್ಲಿನಾಥನ ನಂಬು ಆತ್ಮ. |3|/205
ಮನವಿಕಾರ ಸುಟ್ಟದನು ಮನವಿಕಾರದ ಭ್ರಮೆಯ ಹೋರಟೆಯಾಗದೆಂ
ಬನುವಿನಿಂ ತ್ರಿಲೋಕಯೆಲ್ಲ ಭಂಗಿತರಾಗಿ
ಜನನ ಮರಣಕೆ ಬರುವ ಮನವು ನಿರ್ಮನವಾಗಲವ ಸತ್ಯ ನಿತ್ಯ ಶರಣ.
ಪದ :ಹರಿದು ಮರ್ಕಟನ ವಿಕಾರಕಿಂದಲಿ ಮೇಣು
ಸುರೆ ಸವಿದವನ ವಿಕಾರವದರಿಂದ ಧ
ತ್ತುರಿಯ ಸೇವಿಸಿದವನ ವಿಕಾರಯಿವು ತ್ರಿವಿಧಕೆ ಗೌರವಂ ಮನವಿಕಾರ
ಚರಿಯ ಮದದ ಅಮಲು ತಲೆಗೇರಿ ತಾಮಸದಲಿಂ
ಗಿರಿಯಂಧಕನವೋಲಿನಂತೆ ದೇವತಾ ಸತ್ಯ
ಪುರುಷರುಂ ಶಿವಜ್ಞಾನ ಹೊಲಬನರಿಯದೆ ಕೆಟ್ಟುದನೇನ ಹೊಗಳ್ವೆ ನಾನು |1|
ಹರಿಯ ಮುಂದುಗೆಡಿಸಿ ಅಜನ ಶಿರವ ಕಳೆಸಿ
ಸುರನ ಮೈಯೋನಿಯಂ ಮಾಡಿ ದೇವರ್ಕಳಂ
ನೆರೆ ಕೆಡಿಸಿ ಯತಿ ಸಿದ್ಧಸಾಧ್ಯರೆಲ್ಲರ ಸೆರೆಯ ಹಿಡಿದು ಭಂಗಿತರ ಮಾಡಿ
ಧರೆಯ ಮನುಜರ ತಿಂದು ತೇಗಿ ಕಾಡುವ ಮನವ
ನಿರಸನಮಾಡಿ ನಿರ್ಮೊಹಿಯಾಗಿಹ ಸತ್ಯ
ಶರಣರಡಿಧೂಳಿಯ ಚಮ್ಮಾವುಗೆಯ ಪೊರೆವೆನೆನಗಿದೆ ಸತ್ಯ ಮುಕ್ತಿ ಕಂಡಾ |2|
ಇಳೆಪತಿಗೆ ಮಂತ್ರಿ ತಾ ಮುಖ್ಯವಾದಂತೆ ಕಾಯ
ದೊಳು ಚರಿಸುವ ಜೀವ ಪ್ರಾಣದ್ವಯ ದಶವಾಯು
ಗಳು ಅಷ್ಟಮದ ಸಪ್ತವ್ಯಸನ ಅರಿವರ್ಗ ಚತುರಂತಃಕರಣವಿಷ್ಟೆಲ್ಲಕೆ
ಸಲೆ ಮನಂ ಮುಖ್ಯವಾಗಿಯೂ ಪಾಪ ಅನ್ಯಾಯವ
ಗಳಿಸಿ ಯಮನಿಂಗೆ ಗುರಿಮಾಡಿ ಬಂಧಿಸಿ ಜನರ
ಕೊಲ್ಲಿಸುತಿಹ ವಿಧಿಗಂಜಿ ನಿಮ್ಮ ಮೊರೆಹೊಕ್ಕೆನೆಲೆ ಕಾಯೋ ಶಂಭುವೆ. |3|
ಚಣಚಣಕ್ಕೆ ಪಾತಾಳಲೋಕಕೈದುವ ಮನಂ
ಚಣಚಣಕ್ಕೆ ಆಕಾಶದತ್ತ ಹಾರುವ ಮನಂ
ಚಣಚಣಕ್ಕೆ ಸಪ್ತಸಮುದ್ರವ ಚರಿಸಿಬರುವುದೀ ಮನಮರುತ ಸರ್ವಾಂಗದಿ
ಚಣಕೊಂದು ಬುದ್ಧಿಯ ನೆನದು ಕಾಡುವ ಮನದ
ಗುಣದಿಂದ ನಾ ಕರ್ಮಶರಧಿಯೊಳು ಮುಣಗಿದೆನು
ತ್ರಿಣಯ ನೀ ಕೈವಿಡಿದು ತೆಗೆದು ರಕ್ಷಿಸು ಎನ್ನ ಕರುಣಾಳು ದುರಿತಹರನೆ |4|
ಮನದಿಂದೆ ನೊಂದೆ ನಾ ಮನದಿಂದೆ ಬೆಂದೆ ನಾ
ಮನದಿಂದ ಕಂದಿ ಕುಂದಿಯೆ ಕುಸಿದು ಭವಗಿರಿಯ
ನನುದಿನಂ ಸುತ್ತುತಿರ್ದೆನು ಅಂಧಕನ ತೆರದಿ ಮನದ ನಸು
ಗುನ್ನಿ ಚುರಿಚಿತನವು ಸರ್ವಾಂಗವೆಲ್ಲವ ಕೊಂಡು
ತಿನಿಸೆದ್ದು ಮನದ ಗಂಧೆಯ ತುರಿಸಿ ತುರಿಸನೇ ಹಂಬಲಿಸಿ
ಕನಲುತಿರ್ದೆನು ಎನ್ನ ಗುಣವ ನೋಡದೆ ಕಾಯೋ ಕಾಯೋ ಕರುಣಾಳುವೆ |5|
ಪಾಪಿಮನ ಠಕ್ಕಮನ ಸರ್ವರೊಳು
ಕೋಪಿಮನ ಕುಕ್ಕಮನ ಕಾಕುಮನ
ಜಾಪಿಮನ ಹೇವಮನ ಹೆಬಗಮನ ಗುಣಧರ್ಮಕರ್ಮದಿಂದ
ತಾಪಸಬಡುತಿರ್ದೆ ಗಾಯವಡೆದ ಉರಗ
ನಾಪರಿಯಲೆನ್ನ ನೆರಳಿಸಿ ಒರಲಿಸುವ ಮನದ
ರೂಪನಳಿದು ಜ್ಞಾನವಿತ್ತು ಸಲವಯ್ಯಾ ಚಿದ್ರೂಪ ಚಿನ್ಮಯ ಶಂಭುವೆ. |6|
ಕೂಳಮನ ಕುರಿಮನ ಸರ್ವಚಾಂ
ಡಾಲಿಮನ ಪರಧನ ಪರಸ್ತ್ರೀಯರನ್ಯಕ್ಕೆ
ಕೋಳುಗೊಂಬುವ ಹೆಡ್ಡಮನ ಜಿಡ್ಡುಮನ ಜಾಳುಮನ
ಹಾಳುಮನದ ಪಾಳೆಯವು ಹಲವು ಪರಿಯ ಮನದ
ಗಾಡಿಗೆ ಸಿಲ್ಕಿ ಕಾಲಕರ್ಮಕ್ಕೆ ಗುರಿಯಾದೆನಿದ ಪರಿಹರಿಸಿ
ಶೂಲಿ ಸರಸಿಜನ ಕಪಾಲಿ ಶಿರಮಾಲಿ ರಕ್ಷಿಸು ಕರುಣಾಂಬುನಿಧಿ ಗಿರಿಜೇಶನೆ |7|
ಅಂಗಗೂಡಿನೊಳು ಮನಪಕ್ಷಿ ಹೊರಗಿರುವ ಪ
ಕ್ಕಂಗಳೆರಡರೊಳು ಉಡುಪತಿ ಭಾನುವಂ ಪಿಡಿದು
ಜಂಗಿಟ್ಟು ಭೂಯ್ಯೋಮ ಮಧ್ಯದೊಳು ಚರಿಸುತಿರಲೆತಿ ಸಿದ್ಧ ಸಾಧ್ಯರೆಲ್ಲ
ಭಂಗಬಡುವರು ಮನವೆಂಬ ಪಕ್ಷಿಯ ಮುರಿದು
ನುಂಗಬಲ್ಲಡೆ ಸತ್ಯಶಿವಯೋಗಿ ಶರಣ ನಿ
ರ್ಭಂಗ ನಿಲರ್ೆಪ ನಿರ್ಮನ ನಿರಾಭಾರಿಯಾಗಿಹರೆನ್ನ ಪ್ರಾಣಲಿಂಗ. |8|
ಹರನ ಶ್ರೀಪಾದದೊಳು ಮನವನಿಟ್ಟಿಹ ಸತ್ಯ
ಶರಣಬಸವೇಶ ಪ್ರಭುರಾಯ ಮೋಳಿಗೆ ಮಾರ
ಗುರುಭಕ್ತ ನೆಂಬಣ್ಣ ದಾಸಿ ಕೇಶಯ್ಯನೋಹಿಲದೇವನುದುಟಯ್ಯ
ಮರುಳಶಂಕರ ಮುಖ್ಯವಾದ ಪ್ರಮಥರ ದಿವ್ಯ
ಚರಣದಲಿ ಮನವ ಮಗ್ನಿಸಿದ ದಾಸೋಹಿಗಳ
ವರಪ್ರಸಾದಕ್ಕೆ ಯೋಗ್ಯನ ಮಾಡು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. |9|/206
ಮನವು ಮಹಾದೇವನಲ್ಲಿ ವೇದ್ಯವಾದರೆ,
ವೇದಶಾಸ್ತ್ರನಾಮದ ಶಿವನ ಅಂಗ ಲಿಂಗವ ಮಾಡಿ
ಹಿಂಗದೆ ಸದಾ ಪೂಜೆಮಾಡಬಲ್ಲರೆ ಶಾಸ್ತ್ರ.
ಪೂರ್ವವನಳಿದು ಪುನರ್ಜಾತನಾಗಿ ಮಾಯಾಮದ ಹಿಂಗಿಸಿ
ಆ ಜ್ಞಾನ ಅಂಗದೊಳು ಪೂರಿತವಾಗಿರಬಲ್ಲರೆ ಪುರಾಣ.
ಅಂತರಂಗದ ಅಷ್ಟಮದ ಹಿಂಗಿ, ನಿರಂತರನಾಗಿರಬಲ್ಲುದೆ ಆಗಮ.
ಇಂತಪ್ಪ ವೇದಶಾಸ್ತ್ರಪುರಾಣಾಗಮವ ಬಲ್ಲ
ನಿಜದೇಹಿಗಳ ಪಾದಕ್ಕೆ ನಮೋ ನಮೋಯೆಂಬೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./207
ಮನೆ ಮಡದಿ ಮಕ್ಕಳು ದ್ರವ್ಯ ಬಂಧುಬಳಗವೆಂಬುದು
ಸಂಸಾರವಲ್ಲ ಕಾಣಿರೋ.
ಸಂಸಾರವಾವುದೆಂದರೆ ಹೇಳುವೆ ಕೇಳಿರಣ್ಣ.
ತನುವೆಂಬುದೆ ಮನೆ, ಪ್ರಾಣನಾಯಕನೆಂಬುವನೆನ್ನೊಡೆಯ,
ಶರೀರಮಾಯೆಯೆಂಬುವಳೆ ಹೆಣ್ಣು,
ಪಂಚಭೂತವೆ ಮಕ್ಕಳು ಕಾಣಿರಣ್ಣ.
ಪಂಚೇಂದ್ರಿಯಮುಖದಲ್ಲಿ ಬಳಸುತಿಪ್ಪ ವಿಷಯವೆ ದ್ರವ್ಯಕಾಣಿರೊ.
ಅರುವತ್ತಾರುಕೋಟಿ ಕರಣದೊಳಿಂಬುಗೊಂಡಿಪ್ಪುದೆ ಬಂಧುಬಳಗ.
ಇಂತಪ್ಪ ಸಂಸಾರವನರಿಯದೆ, ತಮ್ಮ ತಿಂದು ತೇಗುವುದನರಿಯದೆ,
ಹೋರಾಟದ ಸಂಸಾರವ ಕಂಡರೆ ಸಂಸಾರವೆಂದು ನುಡಿಯುತಿಪ್ಪರಯ್ಯ.
ಈ ಸಂಸಾರಮಾಯೆಯ ಕಳೆದಿಪ್ಪವರೆನ್ನ ಪ್ರಾಣಲಿಂಗ ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /208
ಮರ್ಕಟ ಮದ್ಯಪಾನವ ಸವಿದು ಕುಡಿದು
ಹೇರಾರಣ್ಯದೊಳು ಹೋಗುತಿರೆ,
ವಿಜಿಯ ಪತ್ರಿಯ ಸವಿದು, ದತ್ತೂರಕಾಯ ಸವಿದು ತಿಂದು
ನೆತ್ತಿಗೇರಿ, ಅಡಿಯಿಡುತಿರೆ,
ಮೇಣ್ ವೃಶ್ಚಿಕ ಕಚ್ಚಿ ಬೇನೆಯಲ್ಲಿ ನರಳುತಿರೆ,
ಹಿರಿದಪ್ಪ ಭೂತ ಸೋಂಕಿ ಅಂಗಲಾಚುವ ಸಮಯಕ್ಕೆ,
ಪಗಲೊಡೆಯ ಮುಣುಗೆ, ಅಂಧಕಾರ ಕತ್ತಲೆಯೊಳಗೆ ಸಿಲ್ಕಿ,
ಕಪಿ, ವಿಕಾರ ಹಿಡಿದು ಕಲ್ಲನೆಲನಂ ಹಾಯ್ದು ಸಾವಂತೆ ಎನ್ನ ಬಾಳುವೆ.
ಅದು ಎಂತೆಂದೊಡೆ : ಭವಾರಣ್ಯದೊಳು ಬರುತಿರೆ ತನುವಿಕಾರವೆಂಬ ಸೋರೆಯ ಗಡಿಗೆ
ಮನವಿಕಾರವೆಂಬ ಭಂಗಿಯ ಸೊಪ್ಪು ಮೆದ್ದು,
ಹೊನ್ನು ಹೆಣ್ಣು ಮಣ್ಣು ಮೂರೆಂಬ ತೊರೆ ತಲೆಗೇರಿ,
ಮನವೆಂಬ ಚೇಳೂರಿ, ಕರಣಗುಣವೆಂಬ ಭೂತಸೋಂಕಿ,
ಅಜ್ಞಾನಕೆ ಗುರಿಮಾಡಿ, ಸುಜ್ಞಾನವೆಂಬ ಸೂರ್ಯನನಡಗಿಸಿ,
ಮಾಯಾತಮಂಧವೆಂಬ ಕತ್ತಲೆಯೊಳಗೆನ್ನನಿಕ್ಕಿ,
ಮುಕ್ತಿಯಹಾದಿಯ ಕಾಣಲೀಸದೆ ಎನ್ನ ಕಾಡುತಿರ್ದೆಯಲ್ಲಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./209
ಮಾನಸ ವಾಚಿಕ ಕಾಯಿಕದಲ್ಲಿ
ಆಸೆಯನೆ ಮುಂದುಗೊಳಿಸಿದೆಯಯ್ಯಾ.
ಅದು ಎಂತೆಂದರೆ : ಮನಸ್ಸು ನಿಮ್ಮ ನೆನೆಯದೆ ಅನ್ಯಕ್ಕೆ ಹರಿದು
ಪರಧನ ಪರಸ್ತ್ರೀಯರಾಸೆಯನೆ ನೆನವುದು.
ವಾಚಿಕ ನಿಮ್ಮ ಸ್ತೋತ್ರಿಸದೆ ಒಡಲಾಸೆಯನೆ ನುಡಿವುದು.
ಕಾಯಿಕ ನಿಮ್ಮ ಮುಟ್ಟಿ ಪೂಜಿಸದೆ
ಅನ್ಯವನಾಸೆಗೈದು ಮುಟ್ಟುತ್ತಿಪ್ಪುದು.
ಇಂತೀ ಮಾನಸ ವಾಚಿಕ ಕಾಯಿಕವೆಂಬ ತ್ರಿಕರಣದಲ್ಲಿ
ಆಸೆಯನೆ ಮುಂದುಗೊಂಡುಯಿಪ್ಪ ಮಾನವರು ನಿರಾಸಕ್ತನನೆತ್ತ ಬಲ್ಲರಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./210
ಮಾಯದ ಮರಣದೊಳು ಛಾಯದ ಗಿಡ ಹುಟ್ಟಿ,
ಒಂಬತ್ತು ಗಳಿಗೆಗೆ ಹೂವು ಕಾಯಿ ಹಣ್ಣು ಫಲವಾಗಿ,
ಮರ ಬೇರುವರಿದು ಪ್ರಜ್ವಲಿಸಿದುದ ಕಂಡೆನಯ್ಯಾ !
ಇದೇನು ಚೋದ್ಯ ಹೇಳಾ !
ಮಾರುದ್ದ ಮರನಡಗಿ ಛಾಯದ ಗಿಡವಾಗಿ,
ಪಿರಿದಪ್ಪ ವೃಕ್ಷವಾಗಿ, ಜಗಕೆ ತೋರಿದ ಭೇದವ
ವೃಕ್ಷಕೆ ನೀರೆರೆದು ಸಲಹಿದಾತ ಬಲ್ಲ ;
ಉಳಿದವರಿಗಸಾಧ್ಯ.
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./211
ಮಾಯದ ಸಂಸಾರಬಲೆಯೊಳು ಸಿಲ್ಕಿ ಆಯಾಸಗೊಳುತ
ಒರಲೊರಲಿ ಕರೆದರೆ `ಓ ‘ ಎನ್ನಲೊಲ್ಲೆಯೇಕೋ ಅಯ್ಯಾ ?
ಒಂದರ ಮುಂದೆ ಹುಲ್ಲು, ಒಂದರ ಮುಂದೆ ಕಲ್ಲು ಹಾಕಿದಂತೆ
ಮಾಡಬೇಡಯ್ಯಾ.
ಒಬ್ಬರಿಗೊಲಿದು ಒಬ್ಬರ ಕಾಡಬೇಡಯ್ಯಾ.
ನಿನಗೇಕೆ ಪ್ರಪಂಚದ ಗುಣ ? ನಿಃಪ್ರಪಂಚ ನಿಲರ್ೆಪ ನಿಜಗುಣ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./212
ಮಾಯಾತಮಂಧವೆಂಬ ಕತ್ತಲೆಯು ಮುಸುಕಿ ಮುಂದುಗಾಣದೆ
ಅರುಹಿರಿಯರೆಲ್ಲರು, ಸಿದ್ಧಸಾಧ್ಯರೆಲ್ಲರು ಕಣ್ಗಾಣದೆ ಮರೆದೊರಗಿದರು.
ಅದು ಎಂತೆಂದೊಡೆ :ವಸಂತತಿಲಕವೃತ್ತ –
“ಮಾಯಾತಮಂಧ ಮಹಾಘೋರ ಕಾಲವಿಷಂ
ಜ್ಞಾನಸ್ಯ ಸೂರ್ಯ ನಚ ಸಿದ್ಧ ಸಾಧ್ಯಂ ಭೂಲೋಕ
ತ್ರಿಗುಣಾಕಾರ ಮಧ್ಯ ಶಯನೇಶದೇಹಿ
ಶಿವಮುಕ್ತಿರಹಿತ ಭವಯಂತ್ರ ಕ್ರೀಡಾದಿಜನಿತಂ” (?)
ಎಂದುದಾಗಿ, ಇದು ಕಾರಣ,
ತನುವೆಂಬ ಉರುರಾಜ್ಯಕ್ಕೆ ಜ್ಞಾನಸೂರ್ಯನ ಮುಳುಗಿಸಿ
ಅನುದಿನ ಎನ್ನ ಕಣ್ಗೆಡಿಸಿ,
ಮಾಯಾತಮಂಧವೆಂಬ ಕತ್ತಲೆಗೆ ನಡೆಸಿ,
ಅಜ್ಞಾನವೆಂಬ ಕೊರಡನೆಡವಿಸಿ,
ತಾಪತ್ರಯವೆಂಬ ಅಗ್ನಿಗಿರಿಯನಡರಿಸಿ,
ಮನವಿಕಾರಗಳೆಂಬ ಭೂತಗಳ ಹರಿಯಬಿಟ್ಟು,
ಅರಿಷಡ್ವರ್ಗವೆಂಬ ಕೂರಸಿಯ ಸಿಗಿಸಿ,
ಷಡ್ಭಾವವೈಕರಣಗಳೆಂಬ ಹಳ್ಳಕೊಳ್ಳ ನಡುವಿಕ್ಕಿ
ಎನ್ನ ಕಾಡುತಿರ್ದೆಯಲ್ಲ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./213
ಮಾಯಾತಮಂಧವೆಂಬ ಸಹಗತ್ತಲೆ ಇರುತಿರೆ,
ಮರಹು ಮೋಹ ನಿದ್ರಾಂಗನೆಯೆಂಬ ಮೋಡವ ಕವಿಸಿ,
ಜಾಗ್ರ ಸ್ವಪ್ನ ಸುಷುಪ್ತಿಯೆಂಬ ಕಾಳಾಂಧಕಾರದೊಳು
ಮರದೊರಗಿ ಮೈಮರಸಿ ಎಚ್ಚರಗೊಡದೆ ಎನ್ನ ಕಾಡುತಿರ್ದೆಯಲ್ಲ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./214
ಮಾಯಾಪಾಶವದಾರನೂ ಬಿಟ್ಟುದಿಲ್ಲ.
ವೀರರು ಧೀರರು ಯತಿಗಳು ಜತಿಗಳು ಸಿದ್ಧರು ಸಾಧ್ಯರು
ಮನುಗಳು ಮುನಿಗಳು ದನುಜರು ಮನುಜರು
ಇಂತಿವರು ಸಮೂಹವಾದ ಮೂರು ಲೋಕವನೆಲ್ಲ
ತಿಂದು ತೇಗುತಿರ್ದುದಯ್ಯ ನಿನ್ನ ಮಾಯೆ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./215
ಮಾರಮಥನ ಮಸಣಾಲಯ ಮನಾತೀತ
ಮಾ[ನಿ] ದ್ಯುಮಣಿಧರ ಮತ್ಸರವಿರಹಿತ
ಮದ್ಗುರು ಮಹಾಶಂಭು ಮಹಾದೇವ
ಮಹಾಜ್ಞಾನ ಮಹಾತ್ಮನೆ ಮಹಾದೇವದೇವ
ಮರಣವಿರಹಿತ ಮರಹುದೂರ ಅರುಹಾನಂದ
ಮನುಮುನಿವಂದ್ಯ ಮೂಲಾಧಾರ ಮಹಾಗಣಪ್ರೇಮ
ಮಾಯಾಕೋಳಾಹಳ ಮಾಯ ನಿರ್ಮಮಗುಣಮಗೋಚರ
ಮಹಾಜ್ಯೋತಿ ಪರಶಿವ ಮೂರುಲೋಕಪ್ರಕಾಶ
ಸರ್ವಕಾವದೇವನೆಂದು ಮೊರೆಹೊಕ್ಕೆ,
ಎನ್ನ ಕಾಯ್ದು ರಕ್ಷಿಸು
ಜಯಜಯ ಹರಹರ ಶಿವಶಿವ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./216
ಮುಂಡದ ಮೇಲಣ ತಲೆಯ ಮೂರ್ತವ ಅಂಗೈ ಮೇಲೆಗೂಡಿ,
ಅಂಗೈ ಮೇಲೆಯ ಮೂರ್ತವ ಮುಂಡದ ತಲೆಗೂಡಿ,
ಕಂಡು ಸುಖಿಯಲ್ಲದೆ ಲಿಂಗಾಂಗಸಂಬಂಧಿಯಲ್ಲಾ,
ಅಂಗಲಿಂಗಸಂಬಂಧಿಯಲ್ಲಾ.
ಬರಿಯ ಮಾತಿನ ಬಣಗರ ಮೆಚ್ಚುವನೆ
ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./217
ಮುಂಡವ ಹೊಂದದ ರಣಭೂತ
ಸಂಖ್ಯೆಯ ಮೀರಿದ ತಲೆಯ ಕಂಡವರುಂಟೆ ? ಹೇಳಿರಣ್ಣಾ.
ತಲೆಯ ಕಂಡೆನೆಂದರೆ,
ಕಾಣಗುಡದೆ ಮುಂಡವೆದ್ದು ಭೂಮಂಡಲವ ನುಂಗುವುದ ಕಂಡೆ.
ಹರಿ ಸುರರು, ದನುಜ ಮನುಜರು
ಮುಂಡದ ಭೀತಿ ಸೋಂಕಿ ಭಯಕೊಳಗಾದುದ ಕಂಡೆ.
ಇದೇನು ಚೋದ್ಯ ಹೇಳಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./218
ಮುಂಡೆಗೆ ಮುತ್ತೈದೆತನ ಬಂದಂದಿಗೆ,
ಗಂಡ ಬಂದು ಹೆಂಡತಿಯನಪ್ಪಿದಂದಿಗೆ,
ಸಾಯದ ಮಗ ಹುಟ್ಟಿದಂದಿಗೆ,
ಅಂಗೈಯೊಳಗಣ ಮೊಲೆ ಅಮೃತವ ಕರೆದಂದಿಗೆ,
ಮಾಯದ ಬಲೆಯ ಸಂಸಾರಬಂಧನ ಹಿಂಗಿದಾಗಳೆ
ನಿರ್ಮಾಯಕ ನಿರಾಭಾರಿ ನಿಶ್ಚಲಶರಣ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /219
ಮುಂದೆ ಮಾಡಿದ ಕರ್ಮ ಬೆನ್ನಟ್ಟಿ ಬರುವಾಗ,
ಅದಕಿನ್ನು ದೇವರ ಹರಕೆಯೆಂದು ನುಡಿಯಲೇಕೆ ?
ಭ್ರಷ್ಟರಿರಾ ಕೇಳಿರೌ.
ಮಾನವನಾಗಿ ಹುಟ್ಟಿ, ಕೊರಳಲ್ಲಿ ಕವಡಿಯ ಕಟ್ಟಿ,
ಶ್ವಾನನಾಗಿ ಬೊಗಳುವುದು ಮುನ್ನಿನ ಕರ್ಮದ ದೆಸೆಯಲ್ಲದೆ,
ವಗ್ಗನ ಕರೆತಂದು, ಮೈಲಾರನ ಹರಕೆ ಮುಟ್ಟಿತೆಂದು
ನೀಡುವವನೊಬ್ಬ ಹಳೆನಾಯಿ.
ಮೈಲಾರನ ಪೂಜಿಸುವರೆಲ್ಲ ನಾಯಾಗಿ ಹುಟ್ಟುವುದು ತಪ್ಪದು.
ಉಟ್ಟುದ ಬಿಟ್ಟು ಅರಣ್ಯವಾಸಿಯ ಕಂಡರೆ ಬತ್ತಲೆ ಐದನೆ
ಲಜ್ಜೆಭಂಡನೆಂದು ನುಡಿವರು.
ಯೋನಿಯ ತೆರೆದು, ಬತ್ತಲೆಯಾಗಿ, ಚಿಕ್ಕದು ದೊಡ್ಡದು,
ಹೆಣ್ಣು ಗಂಡು ಊರು ರಾಜ್ಯವೆಲ್ಲ ನೋಡುವಂದದಿ ನಡೆವರು.
ನಡೆದು ನಮ್ಮ ಮಲ್ಲಾರಿಯ ಹರಕೆ ಮುಟ್ಟಿತೆಂದು ನುಡಿವ
ಖೊಟ್ಟಿಗಳು ಇದು ತಮ್ಮ ಪೂರ್ವದ ಕರ್ಮವೆಂದರಿಯರು ನೋಡಾ.
ಕಬ್ಬಿಣವಂಕಿಯ ತಮ್ಮ ತನುವಿಗೆ ಸಿಕ್ಕಿಸಿಕೊಂಡು
ಪಾಶದಲ್ಲಿ ಹಳಿಗೆ ಕಟ್ಟಿ, ಅಂತರದಲ್ಲಿ ತಿರುವಿ,
ಸಿಡಿಯೆಂದಾಡಿ, ಉಡುಚು ಮಾರಿ ಮಸಣಿಯೆಂಬ
ಕೇತು ಭೂತ ದೈವವ ಪೂಜೆಮಾಡುವವರೆಲ್ಲ
ಪ್ರೇತ ಭೂತಗಳಾಗಿ ಹುಟ್ಟುವದು ತಪ್ಪದು ನೋಡಾ.
ಗುರುಲಿಂಗಜಂಗಮ ನಿಂದಿಸುವ ನಾಲಗೆ[ಗೆ] ಶಸ್ತ್ರವನೂರಿಸುವ,
ಗುರುಲಿಂಗಜಂಗಮಕೆರಗದೆ ಪರದೈವಕೆರಗುವನ
ತಲೆಯೊಳು ಬೆಂಕಿಯ ಹೊರಿಸುವ, ಶಿವನರಿಯಬಾರದೆ ?
ಗುರುಲಿಂಗಜಂಗಮಕಡಿಯಿಡದೆ,
ಪರದೈವಕಡಿಯಿಡುವನ ಕಾಲಿಂಗೆ
ಕೆಂಡವನಿಕ್ಕುವ ಶಿವನರಿಯಬಾರದೆ ?
ಇದು ನಮ್ಮ ದೇವರ ಹರಕೆ,
ಅಗ್ನಿಗೊಂಡ ಗುಗ್ಗುಳ ಶಸ್ತ್ರವೆಂದು ನುಡಿವರು.
ಚಿಮಿಕಿ ಡೆಂಕಣಿ ಕಿಚ್ಚಿನಕೊಂಡ ಇರಿವ ಶಸ್ತ್ರಕದ ಮಿಟ್ಟಿಗೆ
ಇಂತಿವು ಮುಖ್ಯವಾದ ನಾನಾ ಬಾಧನೆಗಳೆಲ್ಲ ಯಮನಲ್ಲುಂಟು.
ಯಮನಲ್ಲುಂಟಾದ ದೃಷ್ಟಾಂತವ ಮರ್ತ್ಯದಲ್ಲುಂಟು ಮಾಡಿಕೊಂಡು
ಬಾಧನೆಗೆ ಸಿಲ್ಕಿ, ದೇವರ ಹರಕೆಯು ಮುಟ್ಟಿತೆಂದು ನುಡಿವ
ಅಜ್ಞಾನಿ ಹೊಲೆಯರ ಕಂಡು ನನ್ನೊಳು ನಾ ಬೆರಗಾಗುತ್ತಿದ್ದೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./220
ಮೂರುಮುಖದ ಪಕ್ಷಿಯ ಹೆಸರಕ್ಷರವೆಂಟು.
ಎರಡಕ್ಷರದಂಗನೆಯ ಸಂಗವ ಮಾಡುತ್ತಿರೆ
ಸಂಗದಿಂದ ಹುಟ್ಚಿತೊಂದು ಹೆಬ್ಬುಲಿ.
ಹೆಬ್ಬುಲಿಯ ಗಡಣದಿಂದ ಭೂಮಂಡಲವೆಲ್ಲ ನಡಗುವುದ ಕಂಡೆನು.
ಮೂರುಮುಖದ ಪಕ್ಷಿಯ ಮುಖ ಒಂದಾಗಿ,
ಕೆಳದಿಯರೈವರ ಕಡೆಗೆ ತಲೆದಿರುವಿ, ಎಂಟಕ್ಷರವ ಕೆಡಿಸಿ,
ಎರಡಕ್ಷರದಂಗನೆಯ ಶಿರವನರಿದು,
ಹುಟ್ಟಿದ ಹುಲಿಯ ಕೊಂದು, ಗಡಣೆಯ ತೂಲಗಿಸಿದಾತನಲ್ಲದೆ
ನಿರಾಸಕ್ತನಲ್ಲ ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./221
ಮೇಷನ ದನಿಗೇಳಿ ಹುಲಿ ಬಲಿಯ ಬೀಳ್ವಂತೆ,
ಕರ್ಣ ಹರನಿಂದ್ಯ ಗುರುನಿಂದ್ಯವ ಕೇಳುವುದು.
ಶಿವಮಂತ್ರ ಶಿವಸ್ತೋತ್ರ ಶಿವಾಗಮ ಶಿವಸೂತ್ರವ ಕೇಳದೆ
ಕರ್ಮಗುರಿಯಾಗುವದು ಈ ಶ್ರೋತ್ರೇಂದ್ರಿಯ.
ಕರಿಯು ಸ್ಪರುಶನೇಂದ್ರಿಯದಲ್ಲಿ ಮಡಿದಂತೆ,
ಪರಧನ ಪರಸ್ತ್ರೀ ಪರರನ್ನವ ಮುಟ್ಟೇನೆಂಬುದೀ ಹಸ್ತ.
ಶಿವಪೂಜೆ ಶಿವಲಿಂಗವ ಮುಟ್ಟಿ ಶಿವಜಪವನೆಣಿಸದೆ
ಅನ್ಯಕ್ಕೆ ಗುರಿಯಾಯಿತ್ತು ತ್ವಗಿಂದ್ರಿಯ.
ದೀಪವ ಕಂಡು ಮುಟ್ಟುವ ಪತಂಗನಂತೆ ನಯನೇಂದ್ರಿಯ.
ಪರಧನ ಪರಸ್ತ್ರೀಯ ಆಟ ನೋಟ ಪರಾನ್ನವ ನೋಡಿ
ಮರುಳಾಗಿ ಶಿವಲಿಂಗ ಶಿವಪೂಜೆಗೆ
ಅನುಮಿಷದೃಷ್ಟಿಯಿಡದೆ ಕೆಡುವುದೀ ನಯನೇಂದ್ರಿಯ.
ಕೀಳುಮಾಂಸದ ಸವಿಗೆ ಗಂಟಲಗಾಣವ ಬೀಳುವ ಮೀನಿನಂತೆ ಜಿಹ್ವೇಂದ್ರಿಯ.
ಹರನಿಂದೆ ಗುರುನಿಂದೆ ಪರನಿಂದ್ಯವ ಮಾಡಿ,
ಕಾಳಗವಾತರ್ೆಯನಾಡಿ,
ಪುರಾತರ ವಚನ ಶಿವಸ್ತುತ್ಯ ಶಿವಮಂತ್ರ ಶಿವಾಗಮವನೋದದೆ
ಕರ್ಮಕ್ಕೆ ಗುರಿಯಾಗುವದೀ ಜಿಹ್ವೇಂದ್ರಿಯ.
ಕಂದ :ಶ್ರೀಕಂಠ ಶಿವನ ನೆನೆಯದೆ
ಲೌಕಿಕ ವಾತರ್ೆಯನೆ ಪೊರಹುತ್ತಿರ್ದಪುದೆನ್ನೀ
ಬಾಕುಳಿಕ ಜಿಹ್ವೆಯಿದರಿಂ
ನಾ ಕರನೊಂದೆ ಪ್ರಸನ್ನಶಂಕರಲಿಂಗ |1|
ಎನ್ನಯ ನಾಲಿಗೆಯ ನಿಮ್ಮಯ
ಮನ್ನಣೆಯ ಮಹಾನುಭಾವಿಗಳ ಚರಣಕ್ಕಂ
ಹೊನ್ನಹಾವುಗೆಯ ಮಾಡೆಲೆ
ಪನ್ನಗಕಟಕಾ ಪ್ರಸನ್ನಶಂಕರಲಿಂಗ |2|
ಕಾಳಗದ ವಾತರ್ೆಯಂ ಸ್ಮರ
ಲೀಲೆಯ ಪದಗಳ ಗಳಹುತಿರ್ದಪುದೆನ್ನೀ.
ನಾಲಗೆಯಂ ಬೇರುಸಹಿತಂ
ಕೀಳುವರಿಲ್ಲಾ ಪ್ರಸನ್ನಶಂಕರಲಿಂಗ |3|
ಈ ತೆರದಿ ಸಂಪಿಗೆಯ ಕುಸುಮದ ಪರಿಮಳಕೆರ[ಗಿ]ದಳಿ ಮೃತವಾದಂತೆ
ನಾಸಿಕೇಂದ್ರಿಯ ಮಾಯಾದುರ್ಗಂಧಚಂದನವಾಸನೆಗೆಳಸಿ
ಸ್ವಾನುಭಾವಸದ್ವಾಸನೆಯ ಮರೆದು
ಕರ್ಮಕ್ಕೆ ಗುರಿಯಾಯಿತ್ತೀ ಘ್ರಾಣೇಂದ್ರಿಯ.
ಇಂತೀ ಪಂಚೇಂದ್ರಿಯಂಗಳೆಂಬ ಶುನಿ ಕಂಡಕಡೆಗೆ ಹರಿದು
ಭಂಗಬಡಿಸಿ ಕಾಡುತಿದೆ, ಇವಕಿನ್ನೆಂತೊ ಶಿವಶಿವ, ಇವಕ್ಕಿನ್ನೆಂತೊ ಹರಹರ.
ಇವ ನಿರಸನವ ಮಾಡೇನೆಂದರೆನ್ನಳವಲ್ಲ ,
ನಿಮ್ಮ ಧರ್ಮ ಕಾಯೋ ಕಾಯೋ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./222
ಮೊಲನ ಕಂಡರೆ ಶ್ವಾನಂಗಳು ತುಡುಕುವಂತೆ.
ಹೊನ್ನು ಹೆಣ್ಣು ಮಣ್ಣು ಮೂರೆಂಬ ಮೊಲಕ್ಕೆ
ಪಂಚೇಂದ್ರಿಯಂಗಳೆಂಬ ಬೇಟೆಯ ನಾಯಿಗಳು
ತೊಡರುತ ಎನ್ನಬಿಡು ತನ್ನ ಬಿಡು ಎನ್ನುತ್ತಲಿವೆ.
ನೊಂದೆನಿವರ ದಾಳಿಯಲ್ಲಿ, ಬೆಂದೆನಿವರ ದಾಳಿಯಲ್ಲಿ.
ನೊಂದು ಬೆಂದು ಕುಂದಿ ಕುಸಿವನ `ಕಂದ ಬಾ’ ಎಂದು
ಎನ್ನ ತಲೆದಡಹೊ ಭವವಿರಹಿತ ತಂದೆ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /223
ಯತಿಗಳು ಆಸೆರೋಷವ ಕಳೆಯಲರಿಯದೆ ಮತಿಭ್ರಷ್ಟರಾದರು.
ಸಿದ್ಧರು ಆಸೆರೋಷವ ಕಳೆಯಲರಿಯದೆ ಬುದ್ಧಿಹೀನರಾದರು.
ಯೋಗಿಗಳು ಆಸೆರೋಷವ ಕಳೆಯಲರಿಯದೆ ಹೆಗ್ಗರಾದರು.
ಇಂತೀ ಯತಿ ಸಿದ್ಧ ಸಾಧ್ಯಯೋಗಿಗಳನರಿಯದ ಆಸೆಬದ್ಧವೆಂಬ ಮಾಯೆ
ಕುರಿಮಾನವರನೆತ್ತ ಬಲ್ಲುದಯ್ಯ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./224
ಯೋನಿಯಲ್ಲಿ ಹುಟ್ಟಿ, ಯೋನಿಯನೆ ಬಯಸಿ,
ಯೋನಿಯ ಮುಖಕೆ ಗುರಿಯಾಗಿ ಸತ್ತು ಸತ್ತು
ಯೋನಿಯೆಂಬ ಗಾಣದಲ್ಲಿ ಹುಟ್ಟುತ್ತಿಪ್ಪುದು
`ಶಿವ’ ನಿಮ್ಮ ನೆನವ ಮರೆದ ಕಾರಣ.
ಅದು ಎಂತೆಂದರೆ : ಸಾಕ್ಷಿ : “ಇದಂ ಗರ್ಭಗತಂ ಶ್ರುತ್ವಾ ಯೋನಿಯಂತ್ರಪ್ರಪೀಡನಂ |
ಜಾಯತೇ ವಾಯುನಾ ವೇತ್ತಿ ವಿಸ್ಮೃತೇ ವೈಷ್ಣವೇ ಶ್ರುತೇ ||”
ಎಂದುದಾಗಿ, ಸಂಸಾರ ವಿಷಯದ ಸರ್ಪನ ವಿಷ ತಲೆಗೇರಿ
ಮುಂದುಗಾಣದೆ ಅರುಹಿರಿಯರೆಲ್ಲ ಭಂಗಬಡುತ್ತಿದ್ದರು-
ನಿನ್ನನೆಂತು ಬಲ್ಲರಯ್ಯ ?
ಸಂಸಾರವೆಂಬುದ ಮುಂದುಗೊಂಡು ನಿನ್ನ ಮರೆದೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./225
ರಕ್ಷಿಗೆ ಒತ್ತೆಯ ಕೊಟ್ಟ ಶಿಶುವಿನಂತೆ,
ಕಟುಕಗೆ ಮಾರಿದ ಕುರಿಯಂತೆ,
ಕಮ್ಮಾರಗೆ ಮಾರಿದ ಕಬ್ಬಿಣದಂತೆ,
ಅಕ್ಕಸಾಲಿಗೆ ಮಾರಿದ ಸೀಸದಂತೆ,
ಮಾಯಾಭ್ರಮೆಗೆನ್ನ ಮಾರಿ, ಕರಗಿಸಿ ಕೊರಗಿಸಿ
ಕೋಯಿಸಿ ತಿನಿಸಿ ಸುಟ್ಟು ಸೂರೆಮಾಡಿ ಎನ್ನ ಕಾಡುತ್ತಿದ್ದೆಯಲ್ಲ !
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./226
ರಾಜಂಗೆ ಮಂತ್ರಿ ಮುಖ್ಯವಾದಂತೆ
ಬಾಹ್ಯಪ್ರಾಣಕ್ಕೆ ಮನವೆ ಮುಖ್ಯ ನೋಡಾ.
ಮನ ಮುಖ್ಯವಾಗಿ ಸರ್ವಪಾಪ ಅನ್ಯಾಯವ ಗಳಿಸಿ,
ಕಾಲಂಗೆ ಗುರಿಮಾಡಿ, ಜನನ ಮರಣಕ್ಕೆ ತರಿಸಿ,
ಮುನ್ನ ಕಾಡುತ್ತಿದೆ.
ಮನವ ನಿರಸನವ ಮಾಡುವರೆನ್ನಳವೆ ?
ನಿನ್ನಳವ ಎನ್ನೊಳಿತ್ತು ಮನ್ನಿಸಿ ಕಾಯಯ್ಯ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./227
ಲಿಂಗಕ್ಕೆರಗದೆ ಅನ್ಯದೈವಂಗಳಿಗೆರಗುವಾತನ ತಲೆ
ಸುಡುಗಾಡಿನಲ್ಲುರುಳುವ ಓಡುವಿಂಗೆ ಸರಿಯೆಂಬೆ.
ಲಿಂಗಪೂಜೆಯ ಮಾಡದೆ, ಅನ್ಯದೈವಂಗಳ ಪೂಜೆಯ ಮಾಡುವನ ಕರವ
ಹೆಂಡವ ಜಾಲಿಸುವ ಕರವೆಂಬೆ.
ಲಿಂಗದ ಪೂಜೆಗಡಿಯಿಡದೆ ಅನ್ಯಲಿಂಗಕೆ ಅಡಿಯಿಡುವನ ಕಾಲು
ಇಮ್ಮನದ ಹುಳುವಿಂಗೆ ಸರಿಯೆಂಬೆನು.
ಇಂತಪ್ಪ ಲಿಂಗಾಂಗಸಂಗ ಸಮರಸವನರಿಯದೆ
ಭ್ರಾಂತಿಭವಿಗಳಂತೆ ಅನ್ಯಲಿಂಗಕ್ಕೆ ಹರಿವ ಜಡದೇಹಿಗಳ
ಎಂತು ಶಿವಭಕ್ತಜಂಗಮವೆಂಬೆನಯ್ಯ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./228
ಲಿಂಗವ ಧ್ಯಾನಿಸುವನ ಅಂಗ ಕೈಲಾಸದ ರಾಜ್ಯಾಂಗಣ ಕಾಣಿರೊ.
ಲಿಂಗವ ನೋಡುವ ಕಂಗಳು ಪರಮಾತ್ಮನಿದಿರಲಿ ಕಟ್ಟಿಹ
ನಿಲವುಗನ್ನಡಿ ಕಾಣಿರೊ.
ಲಿಂಗವ ಕೊಂಡಾಡುವನ ಜಿಹ್ವೆ ಕೈಲಾಸದಲ್ಲಿ ಸಾರುವ
ಪಾರಿಗಂಟೆ ಕಾಣಿರೊ
ಲಿಂಗದ ಶ್ರುತಿಯ ಕೇಳುವನ [ಕಿವಿ] ಮಾಣಿಕ ಮುತ್ತಂ
ಮುಚ್ಚಿಡುವ ಕರಡಿಗೆ ಕಾಣಿರೊ.
ಲಿಂಗವ ಮುಟ್ಟಿ ಪೂಜಿಸಿದವನ ಹಸ್ತ ಸುಹಸ್ತ ಕಾಣಿರೊ.
ಇಂತೀ ಲಿಂಗಾಂಗಸಂಗಮರಸದಲ್ಲಿಪ್ಪ ಶರಣಂಗೆ
ಅಂಗವಿಕಾರವುಂಟೇನಯ್ಯಾ ?
ಭೂತ ಸೋಂಕಿದ ಮೇಲೆ ಆತ್ಮನಗುಣ ಉಂಟೇನಯ್ಯಾ ?
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ
ಲಿಂಗ ಸೋಂಕಿದ ಮೇಲೆ ಅಂಗಗುಣವುಂಟೇನಯ್ಯಾ ?/229
ಲಿಂಗಾಸಕ್ತಂಗೆ ಅಂಗಾಸಕ್ತಿವುಂಟೇನಯ್ಯಾ ?
ಜಂಗಮಾಸಕ್ತಂಗೆ ಅನ್ಯಸಂಗ ಪರಧನ ಪರಸ್ತ್ರೀಯಾರಾಸೆ ಉಂಟೇನಯ್ಯಾ ?
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ
ನಿಮ್ಮಾಸೆಯೊಳು ಇಂಬುಗೊಂಡಾತಂಗೆ
ಜನ್ಮ ಮೃತ್ಯುವುಂಟೇನಯ್ಯಾ ?/230
ವನದೊಳಿಪ್ಪ ಕಪಿ ವನವನುಂಗಿ, ವನದ ತಿಳಿಗೊಳನನುಂಗಿ,
ತಿಳಿಗೊಳದೊಳಗಿಪ್ಪ ಕಮಲವ ನುಂಗಿ,
ಕಮಲದ ಪರಿಮಳವ ನುಂಗಿ, ವಾಯುವಿನೇಣಿಯಿಂದ
ಆಕಾಶಕ್ಕೆ ಹಾರಿದುದಿದೇನು ಚೋದ್ಯ ಹೇಳಾ !
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./231
ವಾಯು ಆಕಾಶವ ಬೆರಸಲು
ಸಮಾನವಾಯುಘವಿಘೆನ ಜನನ.
ವಾಯು ವಾಯುವ ಬೆರಸಿದಲ್ಲಿ
ಉದಾನವಾಯುಘವಿಘೆನ ಜನನ.
ವಾಯು ಅಗ್ನಿಯ ಬೆರಸಿದಲ್ಲಿ
ವ್ಯಾನವಾಯು[ವಿ]ನ ಜನನ.
ವಾಯು ಅಪ್ಪು[ವಿನ] ಬೆರಸಿದಲ್ಲಿ
ಅಪಾನವಾಯು[ವಿ]ನ ಜನನ.
ವಾಯು ಪೃಥ್ವಿಯ ಬೆರಸಿದಲ್ಲಿ
ಪ್ರಾಣವಾಯು[ವಿ]ನ ಜನನ.
ಇಂತಿವು ಪಂಚವಾಯು[ವಿ]ನ
ಪಂಚಕೃತಿಯೆಂದು ಹೇಳಲ್ಪಟ್ಟಿತ್ತು,
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /232
ವಾಯುಮುಖದಲುಲಿವಾವಯದ ವೃಕ್ಷದೊಳು
ಆಯತವಾಗಿಹ ಹಣ್ಣಿನ ರುಚಿಯನು
ಸವಿಯನರಿಯದೆ ಯತಿ ಸಿದ್ಧ ಸಾಧ್ಯರು
ಬಾಯಸವಿಯನುಂಬರು.
ಪದ :ಸರಸಿಜನೆಂಬ ಭೂಮಿಗೆ ವಿಷ್ಣುವೆಂಬ ನೀರಾಗಿ
ನೆರದು ರುದ್ರಾಗ್ನಿಯೆಂದೆಂಬುವ ಮೂಲದ
ಪರಬ್ರಹ್ಮವೃಕ್ಷದ ತುಟ್ಟತುದಿಯಲ್ಲಿಹ
ವರ ಅಮೂರ್ತ ಹಣ್ಣಿನ ಸವಿಗೆರಗೊಡದಲ್ಲಾಡಿ. |1|
ಐದು ಹತ್ತನು ಕೂಡಿದ ಸ್ವಸ್ಥಾನದಲ್ಲಿ ನಿಂದು ಈ
ರೈದು ಗುಣವ ಕೊಟ್ಟು ಒರಲಿ ಚೇತರಿಸುತಿರಲಿ
ಮೈಗುಂದಿ ಮೂಲೋಕ ಅಸುರಪಡೆಗೆ ಸಿಲ್ಕಿ
ಸಾಯಸಬಡುತಿದೆ ಸಂಸಾರಬಂಧನದೊಳು. |2|
ವಾಯು ಸರ್ಪನ ನುಂಗಿ ಮೇಲೆ ಗಗನವನಡರಿ
ಛಾಯದ ಮನೆಯೊಳು ನಿಂದು ಚತುಃಕರಣ
ಮಾಯಮದದಹಂಕಾರಗಿರಿಯನೇರಿ
ಆಯಸಗೊಳುತಿದೆ ಬರಿದೆ ಅಜ್ಞಾನದೊಳು. |3|
ವಾಯುಮುಖದ ತನು ವಾಯುಮುಖದ ಮನವು
ವಾಯುಮುಖದ ಕರಣ ವಾಯುಮುಖದ ಚಿತ್ತ
ವಾಯುಮುಖದ ಬುದ್ಧಿ ವಾಯುಮುಖದ ಆತ್ಮ
ವಾಯುವಿಂಗೆ ಗುರಿಯಾಯಿತ್ತು . |4|
ಗುಡಿಯಮುಖದಿ ದೇವರ ಕಾಣ್ಬಂದದಿಂ
ಒಡಲ ವಾಯುಮುಖದಿ ಲಿಂಗವ ಕಂಡು
ಕೂಡಿಯೆ ಒಡವೆರದು ಗುರುಸಿದ್ಧಮಲ್ಲಿನಾಥನ ಪಾದ
ದೆಡೆಯ ನಂಬಿಯೆ ನಿತ್ಯನಾದೆನೆಲೆ ದೇವ. |5|/233
ವಾಯುವಿನೊಳಗಣ ವಾಯು ಉದಾನವಾಯು.
ವಾಯುವಿನೊಳಗಣ ಆಕಾಶ ಸಮಾನವಾಯು.
ವಾಯುವಿನೊಳಗಣ ಅಗ್ನಿ ವ್ಯಾನವಾಯು.
ವಾಯುವಿನೊಳಗಣ ಅಪ್ಪು ಅಪಾನವಾಯು.
ವಾಯುವಿನೊಳಗಣ ಪೃಥ್ವಿ ಪ್ರಾಣವಾಯು.
ಇಂತಿವು ವಾಯುವಿನ ಪಂಚಕೃತಿಯೆಂದು ಹೇಳಲ್ಪಟ್ಟಿತ್ತಯ್ಯ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./234
ವಾರಿಯಿಲ್ಲದ ಕೆರೆಗೆ ಹಾರೈಸಿ ಬಂದ ತುರುವಿನತೆ,
ಬೂರದ ಮರಕ್ಕೆ ಹಾರೈಸಿ ಬಂದ ಗಿಣಿಹಿಂಡಿನಂತೆ,
ನಳಿನವಿಲ್ಲದ ಕೊಳಕೆರಗಿದಳಿವಿಂಡಿನಂತೆ,
ಮಲಹರನ ಭಕ್ತಿ ಜ್ಞಾನ ವೈರಾಗ್ಯವಿಲ್ಲದ ಅಧಮರಿಗೆ ಆಸೆಮಾಡದಿರು : ಆಸೆ ಮಾಡಿದರೆ ವ್ಯರ್ಥ.
ಆಸೆಮಾಡು ಆಸೆಮಾಡು ನಮ್ಮ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥನೆಂಬ ಧನಿಕನ./235
ವಿಕಾರ ಈ ಜನ್ಮದ ಹೊರೆಯ ಕಳೆವುದೆಂದು,
ಭೂಕಾರ ಭೂತ ಪಿಶಾಚಿಗಳ ಗ್ರಹಗಳ ನಿಟ್ಟೊರಸುವ ಅರಿಯೆಂದು,
ತಿಕಾರ ಅಂತರಂಗದ ಒಳಹೊರಗೆ ಇಡಿದಿಹ ತಿಮಿರಕೆ ಜ್ಯೋತಿಸ್ವರೂಪವೆಂದು
ಶ್ರೀ ವಿಭೂತಿಯ ಧರಿಸ ಕಲಿಸಿದನಯ್ಯಾ ಶ್ರೀಗುರು.
ಪಂಚಗವ್ಯ ಗೋಮಯದಿಂದುದಯವಾದ ಶ್ರೀವಿಭೂತಿ
ಪಂಚಭೂತದ ಪೂರ್ವಗ್ರಹವ ಕಳೆವುದೆಂದು ನಿರೂಪಿಸಿ ಧರಿಸಿದನಯ್ಯಾ.
ಇಂತಪ್ಪ ಶ್ರೀ ವಿಭೂತಿಯ ಸಂತತ ಧರಿಸಿ ನಿಶ್ಚಿಂತನಾಗಿದ್ದೆನು ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./236
ವಿಕಾರದೊಳು ವಿಕಾರ ಕಪಿವಿಕಾರ.
ವಿಕಾರದೊಳು ವಿಕಾರ ಸುರೆಗುಡಿದವನ ವಿಕಾರ.
ವಿಕಾರದೊಳು ವಿಕಾರ ದತ್ತೂರಿಯ ಸವಿದ ವಿಕಾರ.
ಇಂತೀ ಎಲ್ಲಕೆ ಗುರು ಮನೋವಿಕಾರವೆಂಬುದು.
ಸುರೆ ದತ್ತೂರಿಯ ಸವಿದವನದು ಒಂದಿನಕಾದರೂ ಪರಿಹಾರವಾಗುವದು.
ಮನೋವಿಕಾರದ ದತ್ತೂರಿ ಅನುದಿನ ತಲೆಹೇರಿಕೊಂಡು ಮುಳುಗಿತ್ತು.
ಭೂಲೋಕದ ಯತಿ ಸಿದ್ಧ ಸಾಧ್ಯರ ಕೊಂಡು ಮುಳುಗಿತ್ತು.
ದೇವಲೋಕದ ದೇವಗಣ ಅಜಹರಿಸುರರ
ಜನನಮರಣವೆಂಬ ಅಣಲೊಳಗಿಕ್ಕಿತ್ತು ಮನೋವಿಕಾರ.
ಮನೋವಿಕಾರದಿಂದ ತನುವಿನಕಾರ, ಮನೋವಿಕಾರದಿಂದ ಮಾಯಾಮದ.
ಮನೋವಿಕಾರದಿಂದ ಪಂಚಭೂತ ಸಪ್ತಧಾತು
ದಶವಾಯು ಅರಿಷಡ್ವರ್ಗ ಅಷ್ಟಮದ ಪಂಚೇಂದ್ರಿಯ,
ಅಂಗದೊಳು ಚರಿಸುವ ಜೀವ ಪ್ರಾಣ ಕರಣಾದಿ
ಗುಣಂಗಳೆಲ್ಲಕ್ಕೆಯು ಮನವೆ ಮುಖ್ಯ ನೋಡಾ.
ಮನೋವಿಕಾರವನಳಿದು ಶಿವವಿಕಾರದೊಳು ಇಂಬುಗೊಂಡಾತ
ಮೂರುಲೋಕಾರಾಧ್ಯನೆಂಬೆನು ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./237
ವೃಥಾ ಸತಿ ಸುತ ಪಿತ ಮಾತೆಯರ ಮದ ತಲೆಗೆ ಹತ್ತಿ,
ಉಮ್ಮತ್ತದ ಕಾಯ ಸವಿದ ಕಪಿಯಂತೆ,
ಹುಮ್ಮಸದಿಂದುಲಿದು, ಧರ್ಮದಾಯಗುಣವಿಲ್ಲದೆ
ಕರ್ಮಕೆ ಗುರಿಯಾಗಿ ಕೆಟ್ಟರು ಹಲಬರು.
ಮತ್ಸರದ ಮಾಯದ ಬಲೆಯಲ್ಲಿ ಹುಚ್ಚುಗೊಂಡಿಪ್ಪರು.
ಅದು ಎಂತೆಂದೊಡೆ : ಗುರುವಿನೆಡೆಗೆ ಮತ್ಸರ, ಲಿಂಗದೆಡೆಗೆ ಮತ್ಸರ,
ಜಂಗಮದೆಡೆಗೆ ಮತ್ಸರ, ಹಿರಿಯರೆಡೆಗೆ ಮತ್ಸರ ಮಾಡಿ,
ಭವವೆಂಬ ಮಾರಿಯ ಅಣಲೊಳಗೆ ಸಿಕ್ಕಿದರಯ್ಯ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./238
ವೇದಕ್ಕೆಯಾ [ಮುಖ್ಯ] ಶ್ರೀವಿಭೂತಿ,
ಶಾಸ್ತ್ರಕ್ಕೆಯಾ ಮುಖ್ಯ ಶ್ರೀವಿಭೂತಿ,
ಪೌರಾಣಕ್ಕೆ[ಯಾ] ಮುಖ್ಯ ಶ್ರೀವಿಭೂತಿ,
ಆಗಮಕ್ಕೆಯಾ ಮುಖ್ಯ ಶ್ರೀವಿಭೂತಿ.
ವೇದಾಗಮಶಾಸ್ತ್ರಪುರಾಣವನೋದುವ ವಿಪ್ರನಾದರೂ ಆಗಲಿ,
ಶ್ರೀವಿಭೂತಿ ಶ್ರೀ ಪಂಚಾ[ಕ್ಷ]ರಿಯಿಲ್ಲದೆ ಓದಿದ ಓದು ವ್ಯರ್ಥ.
ಶ್ರೀವಿಭೂತಿಯ ಧರಿಸಿ, ಶ್ರೀ ಪಂಚಾಕ್ಷರಿಯ ನೆನೆದು,
ಏಳು ಜನ್ಮದಲ್ಲಿ ಹೊರೆಯ ಕಳೆದು, ಶಿವದೇಹಿಯಾದೆನು ನೋಡಾ.
ಅದು ಎಂತೆಂದರೆ : ಸಾಕ್ಷಿ :“ನಮಃ ಶಿವಾಯೇತಿ ಮಂತ್ರಂ ಯಂ ಕರೋತಿ ತ್ರಿಪುಂಡ್ರಕಂ |
ಸಪ್ತಜನ್ಮಕೃತಂ ಪಾಪಂ ತತ್ಕ್ಷಣೇನ ವಿನಶ್ಯತಿ ||”
ಎಂದುದಾಗಿ,
ಪರಮಾತ್ಮನ ಸ್ವರೂಪವುಳ್ಳ ಶ್ರೀ ವಿಭೂತಿಯ ಸರ್ವಾಂಗವೆಲ್ಲಕೆಯೂ
ಉದ್ಧೂಳನವ ಮಾಡಿ ಪರಮಪದದಲ್ಲಿ ಓಲಾಡುತಿದ್ದೆನು ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./239
ವೇದವನೋದಿ ವ್ಯಾಧಿ ಪರಿಹಾರವಾಗದು.
ಶಾಸ್ತ್ರವನೋದಿ ಸಂಕಲ್ಪ ಹಿಂಗದು.
ಪುರಾಣವನೋದಿ ಪೂರ್ವಕರ್ಮವ ಕಳೆಯಲರಿಯರು.
ಆಗಮವನೋದಿ ಅಂಗದೊಳು ಹೊರಗಿಪ್ಪ
ಅಷ್ಟಮದವ ಕಳೆಯಲರಿಯರು.
ಇಂತು ವೇದಾಗಮಪುರಾಣವೆಂಬನಾದಿಯ ಮಾತ
ಮುಂದಿಟ್ಟುಕೊಂಡು ನಾ ಬಲ್ಲೆನೆಂದು
ಗರ್ವ ಅಹಂಕಾರಿಕೆಯೆಂಬ ಅಜ್ಞಾನಕ್ಕೆ ಗುರಿಯಾಗಿ ಕೆಟ್ಟರು
ಅರುಹಿರಿಯರೆಲ್ಲ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /240
ವೇದಶಾಸ್ತ್ರ ಪುರಾಣಾಗಮಂಗಳನೋದುತ್ತಿದ್ದೇವೆಂಬುತಿಪ್ಪರು,
ವೇದಶಾಸ್ತ್ರ ಪುರಾಣಾಗಮ ಆವೆಂದರಿಯರು.
ವೇದಶಾಸ್ತ್ರಪುರಾಣಾಗಮವನೋದಿ,
ಹೊರಹೊರಗಡೆ ಹೊತ್ತುಗಳೆದು,
ಒಳಗಿಪ್ಪ ಅಷ್ಟಮದವ ನಿರಸನವ ಮಾಡಲರಿಯದೆ
ಕಷ್ಟಬಡುತಿಪ್ಪುದೆನ್ನಯ ಮನವು.
ಲೋಕ ಆಡಿಯಾಡಿ ಕೆಟ್ಟು ಕೆಲಸಾರಿ ಹೋಗುತಿದೆ,
ಸೃಷ್ಟಿ ಪ್ರತಿಪಾಲಕ ನಿಮ್ಮ ಜ್ಞಾನವ ಮರದು,
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /241
ವ್ಯಸನವೇಳೆಂಬ, ರಸವ್ಯಸನವೇಳೆಂಬ
ರಸವಿಷಯದ ಮಡುವು ದೆಸೆದೆಸೆಗೆ ಹಬ್ಬಿ,
ವಸುಧೆಯರನೆಲ್ಲರ ಮಸಿಮಣ್ಣ ಮಾಡಿ ಹಸಗೆಡಿಸಿ ಕಾಡುತಿದೆ.
ವ್ಯಸನವೇಳನುರುಹಿ, ಅಸಮಪದದಲ್ಲಿಪ್ಪ
ನಿವ್ರ್ಯಸನಘನಘೆ ಪಾದಕ್ಕೆ ನಮೋ ನಮೋ ಎಂಬೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./242
ಶಕ್ತಿ ಸಾಧನೆಯ ಸಾಧಿಸಿ,
ಆನೆ ಸೇನೆ ತಳತಂತ್ರ ಮಾರ್ಬಲ ಅಲಗು ಈಟೆಯ
ಮೊನೆ ಹಿಡಿದು ಕಾದುವರುಂಟೆ ?
ಮಂತ್ರಿ ಮನ್ನೆಯ ಬಂಟರೆಲ್ಲರು ರಣದೊಳಗೆ
ಕಾದಿ ಗೆಲ್ವರಲ್ಲದೆ.
ಮಾಯಾಪಾಶವೆಂಬ ರಾಕ್ಷಿ,
ಕರಣಗುಣವೆಂಬ ಭೂತಗಳ ಕೂಡಿಕೊಂಡು,
ಭೂಮಂಡಲ ಹತಮಾಡುತ, ತಿಂದು ತೇಗುತ ಬರುತಿದೆ.
ಮಾಯಾರಣ್ಯವ ಕಾದಿ ಗೆಲುವರನಾರನೂ ಕಾಣೆ ಎನ್ನಾಳ್ದ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./243
ಶರಧಿಯನಾರಾಧಿಸಿದರೆ ಹವಳ ಮೌಕ್ತಿಕಗಳನೀವುದು ನೋಡಾ !
ಗಿರಿಯನಾರಾಧಿಸಿದರೆ ಬಯಸಿದ ಮೂಲಿಕೆಗಳನೀವುದು ನೋಡಾ !
ಗುರುವನಾರಾಧಿಸಿದರೆ ಗುರುಕರುಣ ಜಲಸಮುದ್ರದ ತೆರೆಯೊಳು
ಲಿಂಗವೆಂಬ ಸುವಸ್ತುವನೊಗೆಯಿತ್ತು ನೋಡಾ !
ಆ ಲಿಂಗ ಎನ್ನ ಸೋಂಕಿ, ಅಂಗ ಚಿನ್ನವಾಗಿ,
ಲಿಂಗವ ಪೂಜಿಸಿ ಭವಂಗಳ ದಾಂಟಿ ನಿರ್ಭವನಾಗಿದ್ದೆನು ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /244
ಶಿರದೊಳು ಧರಿಸಲು ಕೋಟಿ ಫಲ
ಕರ್ಣದೊಳು ಧರಿಸಲು ದಶಕೋಟಿ ಫಲ
ಕೊರಳೊಳು ಧರಿಸಲು ಶತಕೋಟಿ ಫಲ.
ಬಾಹುವಿನೊಳು ಧರಿಸಲು ಸಾವಿರ ಫಲವೆಂದಿಹುದು ದೃಷ್ಟ.
ಸಾಕ್ಷಿ : “ಶಿರಸಾ ಧಾರಣಾತ್ಕೋಟಿ ಕರ್ಣಯೋರ್ದಶಕೋಟಿ ಚ |
ಶತಂ ಕೋಟಿ ಗಳೇ ಬದ್ಧಂ ಸಾಹಸ್ರಂ ಬಾಹುಧಾರಣಾತ್ ||”
ಎಂದುದಾಗಿ,
ಹಸ್ತ ಬಾಹು ಉರ ಕಂಠ ಕರ್ಣ ಮಸ್ತಕದಲ್ಲಿ
ಶ್ರೀ ರುದ್ರಾಕ್ಷಿಯ ಧರಿಸಿ ನಿತ್ಯ ಮುಕ್ತನಾಗಿದ್ದೆನು ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./245
ಶಿಲೆ ಮೌಕ್ತಿಕ ಪದ್ಮಾಕ್ಷಿ ಸುವರ್ಣ ಸಲೆ ಪುತ್ರಂಜಿ ಮೊದಲಾದ
ಇಂತಿವರಲ್ಲಿ ಜಪವ ಮಾಡಿದರೆ ಒಂದೊಂದಕೊಂದು ಫಲವಿಹುದು.
ಶ್ರೀ ರುದ್ರಾಕ್ಷಿಯ ಧರಿಸಲು ಅನಂತಫಲವೆಂದಿತ್ತು ಪೌರಾಣ.
ಸಾಕ್ಷಿ : “ಅಂಗುಲೀ ಜಪಸಂಖ್ಯಾಭಿರೇಕೈಕಾಂತು ವರಾನನೇ |
ರೇಖಾಯಾಷ್ಟಗುಣಂ ಪ್ರೋಕ್ತಂ ಪುತ್ರಜೀವಿಪಲೈರ್ದಶ ||”
ಎಂದುದಾಗಿ,
“ಶಂಖೆಶ್ಶತಗುಣವಿಂದ್ಯಾತ್ಪ್ರವಾಳಸ್ತು ಸಹಸ್ರಕಂ |
ಸ್ಫಟಿಕೈರ್ದಶಸಾಹಸ್ರಂ ಮೌಕ್ತಕಂ ಲಕ್ಷಮೇವ ಚ ||”
ಎಂದುದಾಗಿ,
“ಪದ್ಮಾಕ್ಷಿರ್ದಶಲಕ್ಷಂತು ಸುವರ್ಣಕೋಟಿರುಚ್ಯತೇ |
ದಶಕೋಟಿ ಕುಶದ್ರಾಂತೆ ರುದ್ರಾಕ್ಷಿಯನಂತ ಫಲ ||” (?)
ಎಂದೆನಿಸುವ ರುದ್ರಾಕ್ಷಿಯ ಧರಿಸಿ ರುದ್ರನಾಗಿದ್ದೆನು ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./246
ಶಿವ ಗುರುವೆಂದು ನಂಬಿಪ್ಪಾತನೆ ಶಿವಭಕ್ತ.
ಶಿವ ಲಿಂಗವೆಂದು ನಂಬಿಪ್ಪಾತನೆ ಶಿವಭಕ್ತ.
ಶಿವ ಜಂಗಮವೆಂದು ನಂಬಿಪ್ಪಾತನೆ ಶಿವಭಕ್ತ.
ಶಿವ ಪಾದೋದಕ ಪ್ರಸಾದವೆಂದು ನಂಬಿಪ್ಪಾತನೆ ಶಿವಭಕ್ತ.
ಗುರುಲಿಂಗಜಂಗಮದ ಪಾದೋದಕ ಪ್ರಸಾದದ
ಬಂದ ಬಟ್ಟೆಯನರಿಯದೆ ಬರಿದೆ ಭಕ್ತರೆಂದು
ಅನ್ಯವನಾಶ್ರಯಿಸಿ ಅನ್ಯದೈವಕೆರಗುವ ಕುನ್ನಿಮಾನವರನೆಂತು
ಭಕ್ತರೆಂಬೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./247
ಶಿವಂಗೂ ಶಿವಭಕ್ತಂಗೂ ಭಿನ್ನವುಂಟೇ ? ಇಲ್ಲ.
ಅದೇನು ಕಾರಣವೆಂದರೆ ಪ್ರಸಾರವ ಮಾಡಿ ಹೇಳುವೆ ಕೇಳಿರಣ್ಣಾ .
ವೃಕ್ಷಕ್ಕೂ ವೃಕ್ಷದಿಂದಾದ ಫಲಕ್ಕೂ ಭಿನ್ನವುಂಟೇ ? ಇಲ್ಲ.
ಅಗ್ನಿಗೂ ಅಗ್ನಿಯಿಂದಾದ ಕಳೆಗೂ ಭಿನ್ನವುಂಟೇ? ಇಲ್ಲ.
ಚಂದ್ರ[ಂಗೂ] ಚಂದ್ರನಿಂದಾದ ಕಳೆಗೂ ಭಿನ್ನವುಂಟೇ ? ಇಲ್ಲ.
ಶಿವಂಗೂ ಶಿವನಿಂದಾದ ಭಕ್ತಂಗೂ ದೇಹ ಪ್ರಾಣದ ಹಾಗೆ.
ಆದ ಕಾರಣ ಭಕ್ತಗಣ ಶೋಡಷಗಣ ದಶಗಣಂಗಳು
ಮುಖ್ಯವಾದ ಏಳನೂರಾ ಎಪ್ಪತ್ತು ಅಮರಗಣಂಗಳೆಲ್ಲ
ಬಸವಣ್ಣನಿಂದ ಮೋಕ್ಷಪಡೆದರು ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./248
ಶಿವಪೂಜೆಯ ಮಾಡುತಿದ್ದೆನೆಂಬ ಅಣ್ಣಗಳು ನೀವು ಕೇಳಿರೊ.
ಶಿವ ಮಹೇಶ್ವರರುಗಳು ಗೃಹದ ಮುಂದೆ ಬಂದು
ಲಿಂಗಾರ್ಪಿತವೆಂಬ ಶಬ್ದವಿಡಲು,
ಜಪವ ಮಾಡುತ ನಾನೇಳಬಾರದೆಂದು ಬೆಬ್ಬನೆ ಬೆರತು,
ಅಹಂಕಾರದಲ್ಲಿ ಸತಿ ಸುತರುಗಳ ಕೈಯಲ್ಲಿ ಬಿನ್ನಹವ ಮಾಡಿಸದೆ,
ತಾನೆ ಭಕ್ತಿಕಿಂಕುರ್ವಾಣದಿಂದೆದ್ದು
ಭಸ್ಮಾಂಗಿಗಳಿಗೆ ಆಸನವ ಕೊಟ್ಟು,
ಮಾಡುವ ನಡೆನುಡಿಯು ಒಂದೇ ಆದರೆ,
ಮೃಡಬೇರೆ ಒಂದೆ ಕಡೆ [ಇರದೆ ಇವರೊ]ಡಲೊಳಿಪ್ಪನು
ಕಾಣಿರೋ ನಮ್ಮ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./249
ಶಿವಾಚಾರಸಂಪನ್ನನಾಗಿ ಶಿವಭಕ್ತನೆನಿಸಿಕೊಂಡು
ಶಿವಲಿಂಗವು ಕರಸ್ಥಲ ಉರಸ್ಥಲ ಶಿರಸ್ಥಲದಲ್ಲಿರುತಿರೆ
ಅದ ಮರೆದು, ಹಲವು ದೇವರ ಪೂಜೆಮಾಡಿ,
ಹಲವು ದೇವರ ಬಳಿಯಲ್ಲಿ ನೀರ ಕುಡಿದು,
ಹಲವು ದೇವರ ನೈವೇದ್ಯವ ತಿಂಬ ಹೊಲೆಯನ
ಶಿವಭಕ್ತನೆನಬಹುದೆ ? ಎನಲಾಗದು.
ಅದೇನು ಕಾರಣವೆಂದಡೆ, ಅದಕ್ಕೆ ಸಾಕ್ಷಿ : “ಶಿವಾಚಾರೇಣ ಸಂಪನ್ನಃ ಪ್ರಸಾದಂ ಭುಂಜತೇ ಯದಿ |
ಅಪ್ರಸಾದೀ ಅನಾಚಾರೀ ಸರ್ವಭಕ್ತಶ್ಚ ವಾಯಸಃ ||”
ಎಂಬುದನರಿಯದೆ,
ಮತ್ತೆ ಕೇಳು ಗ್ರಂಥ ಸಾಕ್ಷಿಯ ಮನುಜ : ಸಾಕ್ಷಿ :“ಲಿಂಗಾರ್ಚನೈಕ ಪರಾಣಾಂ ಅನ್ಯದೈವಂತು ಪೂಜನಂ |
ಶ್ವಾನಯೋನಿಶತಂ ಗತ್ವಾ ರೌರವಂ ನರಕಂ ವ್ರಜೇತ್ ||”
ಎಂಬುದನರಿಯದೆ, ಮತ್ತೆ ಮೇಣ್,
ಸಾಕ್ಷಿ :“ಶಿವಲಿಂಗಂ ಪರಿತ್ಯಜ್ಯ ಅನ್ಯದೈವಮುಪಾಸತೇ |
ಪ್ರಸಾದಂ ನಿಷ್ಫಲಂ ಚೈವ ರೌರವಂ ನರಕಂ ವ್ರಜೇತ್ ||”
ಹೀಗೆಂಬುದನರಿಯದೆ,
ಲಿಂಗವಿದ್ದು ಅನ್ಯದೈವಂಗಳಿಗೆರಗಿ, ಆಚಾರಭ್ರಷ್ಟನಾಗಿ
ಪಾದೋದಕ ಪ್ರಸಾದವ ಕೊಂಡರೆ ಎಂದೆಂದಿಗೂ ಭವಹಿಂಗದು.
ಅದೇನುಕಾರಣ ಹಿಂಗದೆಂದರೆ ಹೇಳುವೆ ಕೇಳಿರಣ್ಣಾ : ಹೆಗ್ಗಣವನೊಳ ಹೋಗಿಸಿ ನೆಲಗಟ್ಟ ಹೊರೆದಂತೆ,
ಅನ್ಯಕೆ ಹರಿವ ದುರ್ಗುಣವ ಕೆಡೆಮೆಟ್ಟದೆ
ಶಿವಭಕ್ತರೆಂದೆಂದು ನುಡಿದುಕೊಂಡು ನಡೆದರೆ,
ಹಂದಿ ನಾಯಿ ನರಿ ವಾಯಸನ ಜನ್ಮ ತಪ್ಪದೆಂದಾತ
ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./250
ಶೂಲದ ಮೇಲಣ ಕುಣಪಂಗಳು
ತಾಳು ತಾಳಮರದ ಮೇಲೆ ಕುಣಿವುದ ಕಂಡೆನು.
ಏಳು ಸಮುದ್ರದೊಳಿಪ್ಪ ಕಪ್ಪೆಯಧ್ವನಿ
ಮೂರುಲೋಕ ಕೇಳಿಸುವುದ ಕಂಡೆನು.
ಹೆಣನ ತಿನಬಂದ ನಾಯಿ ಕಪ್ಪೆಯ ಗೆಣೆತನದಿಂದ
ಅಲಗಿನ ಮೇಲೆ ಅಡಿ ಇಡುವುದ ಕಂಡೆನು.
ಇದೇನು ಚೋದ್ಯ ಹೇಳಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ !/251
ಶೈವರು ಕಟ್ಟಿದ ಗುಡಿಯ ಹೊಗದ ಭಾಷೆ,
ಶೈವರು ನಟ್ಟ ಲಿಂಗವ ಪೂಜಿಸದ ಭಾಷೆಯ
ವಿವರವನೆನಗೆ ಪಾಲಿಸಯ್ಯಾ !
ದೇಹದ ದೇವಾಲಯದ ಮಧ್ಯದಲ್ಲಿ ಭಾವಿಸುತಿಪ್ಪ
ಶಿವಲಿಂಗದ ಗೊತ್ತಿನ ಸುಖದ ಪರಿಣಾಮದ
ಭಕ್ತಿಯ ನಿರಾವಲಂಬವನೆನಗೆ ಕೃಪೆಮಾಡಯ್ಯ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./252
ಶ್ರೀ ಪಂಚಾಕ್ಷರಿಯುಳ್ಳ ಅಗ್ರಜ ವಿಪ್ರನಿಂದಧಿಕ ನೋಡಾ !
ಶ್ರೀ ಪಂಚಾಕ್ಷರಿಯುಳ್ಳ ಅಂತ್ಯಜ ವಿಪ್ರನಿಂದಧಿಕ ನೋಡಾ !
ಶ್ರೀ ಪಂಚಾಕ್ಷರಿಯನಾವಾತನಾದರೂ ನೆನೆದರೆ
ರುದ್ರನಪ್ಪುದು ತಪ್ಪದು ನೋಡಾ ಅಯ್ಯಾ !
ಅದೆಂತೆಂದರೆ : ಸಾಕ್ಷಿ : “ಅಗ್ರಜೋ ಅಂತ್ಯಜೋ ವಾಪಿ ಮೂಖರ್ೊವಾ ಪಂಡಿತೋ
ಪಿವಾ |
ಜಪೇತ್ ಪಂಚಾಕ್ಷರೀಂ ನಿತ್ಯಂ ಸ ರುದ್ರೋ ನಾತ್ರ ಸಂಶಯಃ ||”
ಎಂದಿತ್ತು ದೃಷ್ಟ.
`ಓಂ ನಮಃ ಶಿವಾಯಃ’ ಯೆಂಬ ಆರಕ್ಷರವ ನೆನೆಯಲರಿಯದೆ
ಜಪ ತಪ ನೇಮ ನಿತ್ಯ ಅನುಷ್ಠಾನ ಪೂಜೆಗಳೆಲ್ಲ
ನಿಷ್ಫಲವೆಂದಿತ್ತು ರಹಸ್ಯದಲ್ಲಿ.
ಸಾಕ್ಷಿ :“ಷಡಕ್ಷರಮಿದಂ ಖ್ಯಾತಂ ಷಡಾನನಂ ಷಡನ್ವಿತಂ |
ಷಡ್ವಿಧಂಯೋನ ಜಾನಾತಿ ಪೂಜಾಯಾಂ ನಿಃಫಲಂ [ಭವೇತ್]”
ಎಂಬ ಷಡಕ್ಷರಿಯ ಸಂಭ್ರಮದಲ್ಲಿ ನೆನೆದು, ಭವಾಂಬೋಧಿಯ ದಾಂಟಿ,
ಸ್ವಯಂಭುವಾಗಿದ್ದೆನು ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./253
ಶ್ರೀ ವಿಭೂತಿಯಿಲ್ಲದವನ ಹಣೆಯ ಸುಡುಯೆಂದಿತ್ತು ಪೌರಾಣ.
ಶಿವಾಲಯವಿಲ್ಲದ ಗ್ರಾಮವ ಸುಡುಯೆಂದಿತ್ತು ಪೌರಾಣ.
ಶಿವಾರ್ಚನೆಯಿಲ್ಲದವನ ಜನ್ಮವ ಸುಡುಯೆಂದಿತ್ತು ಪೌರಾಣ.
ಶ್ರೀ ಶಿವಸ್ತುತಿಯಿಲ್ಲದವನ ಆಗಮವ ಸುಡುಯೆಂದಿತ್ತು ಪೌರಾಣ.
ಅದು ಎಂತೆಂದರೆ : ಸಾಕ್ಷಿ :“ಧಿಗ್ ಭಸ್ಮರಹಿತಂ ಭಾಳಂ ಧಿಗ್ ಗ್ರಾಮಮಶಿವಾಲಯಂ |
ಧಿಗ್ ಗನೀಶ್ರಾಶ್ರಿತಂ ಜನ್ಮ ಧಿಗ್ವಿದ್ಯಾಮಶಿವಾಶ್ರಯಾಂ ||”
ಎಂದುದಾಗಿ,
ಎಲ್ಲಿ ಲಿಂಗಾರ್ಚನೆಯಿಲ್ಲ, ಎಲ್ಲಿ ತ್ರಿಪುಂಡ್ರವಿಲ್ಲ,
ಎಲ್ಲಿ ರುದ್ರಜಪವಿಲ್ಲ
ಅವನ ಮನೆ ಹೊಲೆಮಾದಿಗನ ಮನೆಯ ಸರಿಯೆಂದಿತ್ತು ಪೌರಾಣ.
ಅದು ಎಂತೆಂದರೆ : ಸಾಕ್ಷಿ :“ಯತ್ರ ಲಿಂಗಾರ್ಚನಂ ನಾಸ್ತಿ | ನಾಸ್ತಿ ಯತ್ರ ತ್ರಿಪುಂಡ್ರಕಂ |
ಯತ್ರ ರುದ್ರ ಜಪಂ ನಾಸ್ತಿ | ತತ್ಚಾಂಡಾಲ ಗುರೋಗರ್ೃಹಂ ||”
ಹೀಗೆಂಬುದನರಿಯದೆ ವಾಗದ್ವೈತದಿಂದ
ಶ್ರೀವಿಭೂತಿಯ ಪೂಸದೆ, ಶ್ರೀರುದ್ರಾಕ್ಷಿಯ ಧರಿಸದೆ,
ಶಿವಲಿಂಗದ ಪೂಜೆಯನನುದಿನ ಮಾಡದೆ,
ಶಿವನಿರೂಪದಿಂದಲಾವರಣವನರಿಯದೆ,
ಶಿವನ ಸಾಧಿಸೇನೆಂಬ ಅಜ್ಞಾನಿಗಳ ಕಂಡು ನಾ ಬೆರಗಾದೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./254
ಶ್ರೀಪಂಚಾಕ್ಷರಿಯ ಮೂಲದ ಹೊಲಬ ತಿಳಿಯಬಲ್ಲಾತನೆ
ವೇದಾಂತವಬಲ್ಲಾತನೆಂಬೆ.
ಶ್ರೀಪಂಚಾಕ್ಷರಿಯ ಮೂಲದ ಹೊಲಬ ತಿಳಿಯಬಲ್ಲಾತನೆ
ಸಿದ್ಧಾಂತವ ಬಲ್ಲಾತನೆಂಬೆ.
ಶ್ರೀಪಂಚಾಕ್ಷರಿಯ ಮೂಲವ ಬಲ್ಲಾತನೆ
ವೇದ ಶಾಸ್ತ್ರ ಪುರಾಣ ಆಗಮವ ಬಲ್ಲಾತನೆಂಬೆ.
ಶ್ರೀಪಂಚಾಕ್ಷರಿಯ ಧ್ಯಾನವ ಧ್ಯಾನಿಸಲರಿಯದೆ
ವೇದಾಗಮವನೋದುತ್ತಿದ್ದೆವೆಂಬ ಪಿಸುಣರ ಓದೆಲ್ಲ
ಕುಂಬಿಯ ಮೇಲೆ ಕುಳಿತು ಒದರುವ ವಾಯಸನಸರಿಯೆಂಬೆನಯ್ಯಾ,
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./255
ಶ್ರೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣವೆಂಬ ಪಂಚೇಂದ್ರಿಯಂಗಳು.
ಸಾಕ್ಷಿ :“ಶ್ರೋತ್ರತ್ವಕ್ನೇತ್ರಜಿಹ್ವಾಶ್ಚ ಘ್ರಾಣಂ ಪಂಚೇಂದ್ರಿಯಾಸ್ತಥಾ |
ಆಕಾಶ ಅಗ್ನಿವಾಯರ್ುಶ್ಚ ಅಪ್ಪೃಥ್ವೀ ಕ್ರಮೇಣ ಚ ||”
ಎಂದುದಾಗಿ, ಇವಕ್ಕೆ ವಿವರ : ಶ್ರೋತ್ರೇಂದ್ರಿಯಕ್ಕೆ ಆಕಾಶವೆಂಬ ಮಹಾಭೂತ,
ದಶದಿಕ್ಕುಗಳೆ ಅಧಿದೈವ, ಅದಕ್ಕೆ ಶಬ್ದ ವಿಷಯ.
ಅಕ್ಷರಾತ್ಮಕ ಅನಕ್ಷರಾತ್ಮಕ ಇವು ಎರಡು ಅಕ್ಷರ ಭೇದ.
ತ್ವಗಿಂದ್ರಿಯಕ್ಕೆ ವಾಯುವೆಂಬ ಮಹಾಭೂತ, ಚಂದ್ರನಧಿದೇವತೆ
ಅದಕ್ಕೆ ಸ್ಪರುಶನ ವಿಷಯ ; ಮೃದು ಕಠಿಣ ಶೀತ ಉಷ್ಣ
ಇವು ನಾಲ್ಕು ಸ್ಪರುಶನ ಭೇದ.
ನೇತ್ರೇಂದ್ರಿಯಕ್ಕೆ ಅಗ್ನಿಯೆಂಬ ಮಹಾಭೂತ, ಸೂರ್ಯನಧಿದೇವತೆ.
ಅದಕ್ಕೆ ರೂಪ ವಿಷಯ ; ಶ್ವೇತಪೀತ ಹರಿತ
ಮಾಂಜಿಷ್ಟ ಕೃಷ್ಣ ಕಪೋತವರ್ಣ ಇವಾರು ರೂಪಭೇದ.
ಜಿಹ್ವೇಂದ್ರಿಯಕ್ಕೆ ಅಪ್ಪುವೆಂಬ ಮಹಾಭೂತ, ವರುಣನಧಿದೇವತೆ.
ಅದಕ್ಕೆ ರಸ ವಿಷಯ ; ಮಧುರ ಆಮ್ಲ ತಿಕ್ತ
ಕಟು ಕಷಾಯ ಲವಣ ಇವಾರು ರಸಭೇದ.
ಘ್ರಾಣೇಂದ್ರಿಯಕ್ಕೆ ಪೃಥ್ವಿಯೆಂಬ ಮಹಾಭೂತ.
ಅಶ್ವಿನಿ ಅಧಿದೇವತೆ, ಇದಕ್ಕೆ ಗಂಧ ವಿಷಯ ;
ಸುಗಂಧ ದುರ್ಗಂಧವೆರಡು ಗಂಧ ಭೇದ.
ಇಂತೀ ಪಂಚೇಂದ್ರಿಯೆಂಬ ಶುನಕ
ಕಂಡಕಡೆಗೆ ಹರಿಯುತಿವೆ.
ಈ ಪಂಚೇಂದ್ರಿಯವ ನಿರಸನವ ಮಾಡಿ, ಪಂಚವದನನೊಳು
ಬೆರದಿಪ್ಪ ನಿರ್ವಂಚಕ ಶರಣಂಗೆ
ನಮೋ ನಮೋ ಎಂಬೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./256
ಸಂಸಾರಸುಖಕ್ಕೆ ಕಟ್ಟಿದ ಮನೆ, ಸಂಸಾರಸುಖಕ್ಕೆ ಕೊಂಡ ಹೆಣ್ಣು,
ಸಂಸಾರಸುಖಕ್ಕೆ ಆದ ಮಕ್ಕಳು, ಸಂಸಾರಸುಖಕ್ಕೆ ನೆರೆದ ಬಂಧುಬಳಗ,
ಸಂಸಾರಸುಖಕ್ಕೆ ಗಳಿಸಿದ ದ್ರವ್ಯ, ಸಂಸಾರಸುಖಕ್ಕೆ ಹೊಂದಿದ ಕ್ಷೇತ್ರ ಬೇಸಾಯ,
ಸಂಸಾರ ಸುಖ-ದುಃಖ ಘನವಾಗಿ ಸತ್ತು ಸತ್ತು ಹುಟ್ಟುವ ಮಾನವರು
ನಿಃಸಂಸಾರದಿಂದ ನಿಮ್ಮನರಿದು, ನಿಮ್ಮ ಜ್ಞಾನದೊಳಿಂಬುಗೊಂಡು,
ಭವವಿರಹಿತರಾಗುವುದಿದನೇನಬಲ್ಲರಯ್ಯ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. ?/257
ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನ್ಯವೆಂಬ
ಪರಶಿವನ ಪಂಚಮುಖವೆ ಪಂಚಕಳಸವೆಂದಿಕ್ಕಿ,
ಹಸೆ-ಹಂದರದ ನಡುವೆ, ಶಿವಗಣಂಗಳ ಮಧ್ಯದಲ್ಲಿ
ದೀಕ್ಷವನಿತ್ತು, ದೀಕ್ಷವೆಂಬೆರಡಕ್ಷರದ ವರ್ಮವನರುಹಿದ.
ದೀಕಾರವೆ ಲಿಂಗಸಂಬಂಧವೆಂದು,
ಕ್ಷಕಾರವೆ ಮಲತ್ರಯಂಗಳ ಕಳೆವುದೆಂದು ಅರುಹಿದ.
ಸಾಕ್ಷಿ :“ದೀಯತೇ ಲಿಂಗಸಂಬಂಧಃ ಕ್ಷೀಯತೇ ಚ ಮಲತ್ರಯಂ |
ದೀಯತೇ ಕ್ಷೀಯತೇ ಚೈವ ಶಿವದೀಕ್ಷಾಭಿಧೀಯತೇ ||”
ಎಂದುದಾಗಿ,
ದೀಕ್ಷದ ವರ್ಮವನರುಹಿ, ಅರುಹೆಂಬ ಸೂತ್ರವ ಹಿಡಿಸಿ,
ಮರವೆಂಬ ಮಾಯವ ಕಳೆದು, ಹಸ್ತಮಸ್ತಕ ಸಂಯೋಗ ಮಾಡಿ,
ನೆತ್ತಿಯೊಳಿಹ ಪರಬ್ರಹ್ಮವಸ್ತುವ ಇಂತೆನ್ನ
ಕರ ಉರ ಶಿರ ಮನ ಜ್ಞಾನದೊಳು ನೆಲೆಗೊಳಿಸಿ,
ಪ್ರಣವಮಂತ್ರವ ಕರ್ಣದಲ್ಲಿ ಹೇಳಿ,
ಮಾಂಸಪಿಂಡವ ಕಳೆದು ಮಂತ್ರಪಿಂಡವ ಮಾಡಿದ ಗುರು
ಪರಮಾತ್ಮನಲ್ಲದೆ ನರನೆನಬಹುದೇ ? ಎನಲಾಗದು.
ಎಂದರೆ ಕುಂಭೀ ನಾಯಕ ನರಕದಲ್ಲಿಕ್ಕುವ ನಮ್ಮ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./258
ಸಪ್ತವ್ಯಸನವೆಂಬ ಪಾಪಿಯ ಕೂಸಿಂಗೆ
ಒಪ್ಪಿಸಿಕೊಟ್ಟು ನೀನಗಲಬೇಡವೊ ಗುರುವೆ.
ಪದ : ಉರಿಗೆ ಕೊಟ್ಟ ಅರಗಿನಂದದಿ, ಕಿರಾತನ ಕೈಯ
ಲಿರುವ ಎರಳೆಯ ಮರಿಯಂತೆ, ಪಂಜರದೊಳಗ
ಣರಗಿಣಿಯ ಮಾರ್ಜಾಲಗೆ ಸೆರೆಗೊಡುವಂತೆ,
ಪರಿಯಲೆನ್ನನು ಮನಭ್ರಮೆಯ ಸಪ್ತವ್ಯಸನಕ್ಕೆ
ಗುರಿಮಾಡಿ ನೀ ಎನ್ನ ಅಗಲಿಹೋಗದೆ ಕರುಣಾ
ಕರ ರಕ್ಷಿಸಯ್ಯಾ ಕೃಪೆಯಿಂದ ರಕ್ಷಿಸು ಸದ್ಗುರುರಾಯ. |1|
ತನು ಮನ ವ್ಯಸನ ಸಮಸ್ಸಂಧಕಾರದ
ಧನವ್ಯಸನದ ಬಯಕೆಯ ರಾಜ್ಯವ್ಯಸನದ
ವಿನಯದುತ್ಸಾಹ ವ್ಯಸನವಿಶ್ವಾಸದಿಂದ ಪರರ
ಅನುದಿನ ಆಶ್ರಯಿಸುವ ಸೇವಕ ವ್ಯ
ಸನಗುಣವ ಕೊಟ್ಟು ಸಪ್ತವ್ಯಸನಕ್ಕೆ ಗುರಿ ಮಾಡಿ
ತ್ರಿಣಯ ಸದ್ಗುರುರಾಯ ಅಗಲದಿರಯ್ಯ. |2|
ಓಡಿನಲ್ಲುಂಟೆ ಕನ್ನಡಿಯ ನೋಟವು ? ಭವ
ಕಾಡೊಳು ತಿರುಗಿಯೆ ಸತ್ತು ಹುಟ್ಟುತಿಹೆ ;
ಮೂಢನಪಾಯವ ಕಾಯೋ ದೇವ, ನಿಮ್ಮೊ
ಳಾಡಲು ಹುರುಳಿಲ್ಲ, ಎನ್ನ ಗುಣವನು
ನೋಡಿ ಕಾಡದೆ ಬಿಡಬೀಸದೆ ಕುಮಾರನ
ಕೂಡಿಕೊ ಗುರು ಪಡುವಿಡಿ ಸಿದ್ಧಮಲ್ಲೇಶ. |3|/259
ಸರ್ಪಕಡಿದು ಸತ್ತ ಹೆಣನೆದ್ದು ಸುಳಿದಾಡುವುದ ಕಂಡೆ.
ಎಡೆ ಐದರೊಳಿಪ್ಪ ಅಗಳಿಗೊಂದೊಂದು ಭೂತನ ಕಂಡೆ.
ಭೂತನ ಗೆಣೆವಿಡಿದ ಕಾಗೆಯಕುಳ ತಿಂಬುದ ಕಂಡೆ.
ಮಡುವಿಗೆ ಜಾಲವಬೀಸುವ ಮಾಯದ ಜಾಲಗಾರ
ಚಂದ್ರಸೂರ್ಯರ ಒಡಲಂ ಹೊಕ್ಕು ನೆಗೆದಾಡದ ಮುನ್ನ
ಉಡುಪತಿ ಗಾದ ಬಿದ್ದ, ಕಸಪತಿ ತೊದಳಿಗನಾದ,
ಗಂಧಪತಿ ದಂದುಗಕ್ಕೊಳಗಾದ,
ಮುನ್ನ ಸ್ಪರುಷನಪತಿ ಪರಿಯಟಂಗೊಂಡ.
ಇಂತೀ ಎಳೆದಾಟ ಮುಂದುಗೊಳ್ಳದ ಮುನ್ನ
ಯತಿಗಳ ಯತಿತನ ಹಾರಿತ್ತು ; ಸಿದ್ಧರ ಸಿದ್ಧತ್ವ ಕೆಟ್ಟಿತ್ತು .
ಶಿವಯೋಗಿಗಳ ಯೋಗತ್ವ ಕೆಡುವುದ ಕಂಡೆನಿದೇನು ಚೋದ್ಯ ಹೇಳಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./260
ಸರ್ವದೇವಪಿತ ಶಂಭುವೆಂಬ ನಾಮ ಹರಗೆ ಸಲ್ಲುವುದಲ್ಲದೆ
ಹರಿಗೆ ಸಲ್ವುದೆ ? ಸಲ್ಲದು.
ಅದೇನು ಕಾರಣವೆಂದರೆ : ಸರ್ವದೈವ[ವ] ಹುಟ್ಟಿ[ಸ]ಬಲ್ಲ, ಕೊಲ್ಲಬಲ್ಲ,
ಸರ್ವದೈವದಿಂದ ಪೂಜೆ ಪುನಸ್ಕಾರವ ಕೊಳಬಲ್ಲ ಪರಮಾತ್ಮನಿಗೆ
ಕುರಿದೈವ ಸರಿಯೆನಬಹುದೆ ? ಬಾರದು.
ತಾ ಸಾವದೇವರು, ನಿಮ್ಮ ವಿಷ್ಣು ಮತ್ತಾರ ಕಾಯಬಲ್ಲುದು, ಹೇಳಿರೌ ?
ಹರಿ ಹತ್ತು ಪ್ರಳಯಕ್ಕೆ ಗುರಿಯಾದಲ್ಲಿ
ಹರನೆ ಲಿಂಗವಾಗಿ ರಕ್ಷಣ್ಯವ ಮಾಡಿದುದು ಸಟೆಯೆನಿಪ್ಪ
ಹರನ ಕಿರಿಘದುಘೆ ಮಾಡಿ ಹರಿಯ ಹಿರಿದೆಂದು ನುಡಿವ ಚಾಂಡಾಲಿಯ
ಬಾಯಲ್ಲಿ ಕಾದ ಸುಣ್ಣದ ಗಾರೆಯ ಹೊಯ್ಯದೆ ಬಿಡುವನೆ
ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./261
ಸರ್ವರಲ್ಲಿ ಹುಸಿಯನಾಡಿದರೆ ಆಡಲಿ,
ಗುರುವಿನೆಡೆಗೆ ಹುಸಿಯಿಲ್ಲದಿರಬೇಕು.
ಸರ್ಪ ಕಡೆಯಲೆಲ್ಲ ಡೊಂಕಾಗಿ ಚರಿಸುತ್ತ
ಹುತ್ತದೆಡೆಗೆ ಸಸಿನವಾಗಿ ಹೋದಂತೆ.
ಅನ್ಯರೆಡೆಗೆ ಹುಸಿ ಠಕ್ಕು ಠೌಳಿ ಇದ್ದರೂ ಇರಲಿ,
ಗುರುವಿನೆಡೆಗೆ ಹುಸಿಬೇಡ.
ಕೊಟ್ಟೆ ಕೊಂಡೆನೆಂದು ನುಡಿದು ಕೊಡದೆ ವಾಚಾಳತ್ವವಾದರೆ
ಬ್ರಾಹ್ಮಣನ ಕೊಂದ ಪಾಪದಷ್ಟು ಪಾಪ
ನಿಮಗಂಡಲೆವವು ಕಾಣಿರೊ !
ಸಾಕ್ಷಿ :“ಯೋ ಶುದ್ಧಿ ಗೋಪಾದಪ್ರೋಕ್ತಂ ಗುರುರಂಘ್ರಿನುತಸ್ಯ ಚ |
ವಾಗ್ವಿದನ್ಯಪ್ರದಾನೇನ ಬ್ರಹ್ಮಹತ್ಯಾಸಮಾಹಿತಃ (?) ||”
ಎಂದುದಾಗಿ,
ಇಂತಪ್ಪ ಗುರುವಿನೆಡೆಗೆ ಹುಸಿ[ದು] ಜೀವಿಸೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /262
ಸಹಸ್ರಲಕ್ಷ ದ್ರವ್ಯದೊರೆದರೂ ಅದು ಸಾಲದೆಂಬುದೀ
ಆಸೆಬದ್ಧವೆಂಬ ಮಾಯೆ.
ಸಹಸ್ರಲಕ್ಷ ಭೂಮಿದೊರೆದರೂ ಅದು ಸಾಲದೆಂಬುದೀ
ಆಸೆಬದ್ಧವೆಂಬ ಮಾಯೆ.
ಅದು ಎಂತೆಂದರೆ : ಸಾಕ್ಷಿ :“ಆಶಯಾ ಬದ್ಧತೇ ಲೋಕಃ ಕರ್ಮಣಾ ಬಹುಚಿಂತಯಾ |
ಆಶಾ ಚಲ ಪರಮಂ ದುಃಖಂ ನಿರಾಶಾ ಪರಮಂ ಸುಖಂ ||”
ಎಂದುದಾಗಿ,
ಈ ಆಸೆ ರೋಷ ಅಮಿಷವೆಂಬ ಮಾಯಾಪಾಶದೊಳಗೆ ಸಿಲ್ಕಿ
ನೊಂದೆ ಬೆಂದೆನಯ್ಯಾ,
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /263
ಸಾಗರದೊಳಿಪ್ಪ ಊರಿಂಗೆ ದ್ವಾರವತಿಯ ಭಯ.
ದ್ವಾರವತಿಗೆ ಅಗ್ರಗಿರಿಯ ಚಂದ್ರ ಸೂರ್ಯರ ಭಯ.
ಚಂದ್ರಸೂರ್ಯರಿಬ್ಬರಿಗೆ ನಡೆಗೋಟಿಯ ಭಯ.
ನಡೆಗೋಟಿಗೆ ಸ್ಪರುಷನಪುರದ ಭಯ.
ಇವು ನಾಲ್ಕನೂ ಮೂರುಮುಖದ ಪಕ್ಷಿ
ನುಂಗಿಕೊಂಡಿಪ್ಪುದಿದೇನು ಚೋದ್ಯ ಹೇಳಾ !
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./264
ಸಾಸುವೆಯ ಮೇಲೆ ಸಾಗರ ಹರಿವುದ ಕಂಡೆನು.
ರಾಶಿಯನೊಕ್ಕುವ ಒಕ್ಕಲಿಗ ರಾಶಿಯ ನುಂಗುವುದ ಕಂಡೆನು.
ಮಾಸಿದ ಕಪ್ಪಡವ ಅಂಗಕ್ಕೆ ತೊಟ್ಟ ಅಂಗನೆ,
ಮೂರುಲೋಕವ ಏಡಿಸುವುದ ಕಂಡೆನು.
ಮುಂಡ ಕುಣಿಯದ ಮುನ್ನ ಲೋಕವೆಲ್ಲ ಭಂಡಾಗಿ,
ಸಂಸಾರಬಂಧನರಾಗಿರುವುದ ಕಂಡೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./265
ಸೊಂಡಿಲ್ಲದಾನೆ ಹೊಯಿವುದ ಕಂಡೆ,
ಹಲ್ಲಿಲ್ಲದ ಹುಲಿ ತಿಂಬುದ ಕಂಡೆ,
ವಿಷವಿಲ್ಲದ ಸರ್ಪ ಕಚ್ಚುವದ ಕಂಡೆ,
ಮುಖವಿಲ್ಲದ ಸಿಂಹ ನುಂಗುವುದ ಕಂಡೆ,
ಕಣ್ಣಿಲ್ಲದ ಮರೆಯಹಿಂಡು ಕವಿವುದ ಕಂಡೆ.
ಕೈಕಾಲಿಲ್ಲದ ಭಲ್ಲೂಕ ಚೆಕಲಿಗುಲಿಯ ಮಾಡುವುದ ಕಂಡೆ.
ಇದೇನು ಚೋದ್ಯ ಹೇಳಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ !/266
ಸ್ಥೂಲದಲ್ಲಿಪ್ಪುದೆನ್ನಯ ಮನ, ಸೂಕ್ಷ್ಮದಲ್ಲಿಪ್ಪುದೆನ್ನಯ ಮನ,
ಕಾರಣದಲ್ಲಿಪ್ಪುದೆನ್ನ ಮನ.
ಅದೆಂತೆಂದರೆ : ಸ್ಥೂಲದಲ್ಲಿಪ್ಪುದ ಕಂಡು ಸೂಕ್ಷ್ಮದಲ್ಲಿ ನೆನೆದು,
ಕಾರಣದಲ್ಲಿ ಹೇಳುತ್ತಿಪ್ಪುದೆನ್ನಯ ಮನ.
ದಿವ್ಯಧ್ಯಾನದಂತೆ ಹಲವು ಪರಿಗಾದರೂ
ರತಿಸುತಿದೆ ಎನ್ನಯ ಮನ.
ಮರ್ಕಟನ ದಾಳಿಯಿಂದ ಸಾಯಸಬಡುತಿದ್ದೆನಯ್ಯ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./267
ಹಂಸೆಯ ಪಂಜರವ ಹಿಡಿದಾಳುವ ರಕ್ಷಿ
ಮಾಂಸದ ಗುಡಿಯ ತಿಂದು,
ಮರುಜೇವಣಿಗೆಯ ಬೆಟ್ಟವನಡರಿ
ಕೂಗುತ ತೆಳಗಿಳಿಯದ ಮುನ್ನ
ಒಡ್ಡಿದಾವೆ ಮಹಾದುಃಖದಲ್ಲಿ ಮೂರು ಬಲಿ.
ಬಲಿಯ ಬಿದ್ದು, ನಲಿದಾಡುವ ಮಾಯೆಯ ಕಂಡೆನೆಂದ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./268
ಹಡಗ ಹರಿಗೋಲ ನಂಬಿದವರು
ಕಡಲತೊರೆ ದಾಂಟರೇನಯ್ಯಾ ?
ಧನು ಖಡ್ಗವ ಪಿಡಿದು ಕಾಳಗವ ಮಾಡಿದವರು
ರಣವ ಗೆಲ್ಲರೇನಯ್ಯಾ ?
ಗುರುವ ನಂಬಿದವರು ಭವವ ಗೆಲ್ಲರೇನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ ?/269
ಹತ್ತುವಾಯು ಹರಿದಾಡಿ ಆನೊಳ ಸುತ್ತಿ ಸುತ್ತಿ
ಕೃತ್ಯದಿಂದ ನರಳಿಸಿ ಒರಲಿಸಿ ಚೇತರಿಸಿ ಆವರಿಸಿ ಕಾಡುತಿದೆ.
ಅದು ಎಂತೆಂದೊಡೆ : ಅರೆಗಾಯವಡೆದ ಉರಗಗೆ ಇರುವೆ ಮುಕುರುವಂತೆ,
ದಶವಾಯುಗಳ ಮುಖದಲ್ಲಿ ಹರಿವ ಕರಣೇಂದ್ರಿಯಂಗಳು
ಮನವೆಂಬ ಅರೆಗಾಯದ ಸರ್ಪಂಗೆ ಮುಕುರಿ
ನರಳಿ[ಸಿ] ಕಾಡುತಿವೆ ; ಕಾಡಿದರೇನು ?
ಹಲವು ಬಗೆಯಲ್ಲಿ ಹರಿವ ವಾಯುಮುಖದಲ್ಲಿ ನೀನೆ ;
ನೀನಲ್ಲದನ್ಯವಿಲ್ಲ .
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./270
ಹರ ತ್ರಿಪುರದಹನದಲ್ಲಿ [ಈಕ್ಷಿಸಿ] ನೋಡಲಾಕ್ಷಣ
ನಯನಜಲದೊರೆದು ಉದಯವಾದ ಶ್ರೀರುದ್ರಾಕ್ಷಿ.
ಪರಮ ಮುನಿಗಳಿಗೆ ಮೋಕ್ಷಾರ್ಥವನೀವ ಶ್ರೀರುದ್ರಾಕ್ಷಿ.
ಧರೆಯ ಸದ್ಭಕ್ತರುಗಳ ಪಾಲನಮಾಡಿ ತೋರುವ ಶ್ರೀರುದ್ರಾಕ್ಷಿ,
ಕರ್ಮಶರಧಿಯ ನಿಟ್ಟೊರಸುವುದಕ್ಕೆ ಶ್ರೀರುದ್ರಾಕ್ಷಿ.
ದರುಶನವ ಮಾಡಿದರೆ ಲಕ್ಷಪುಣ್ಯ, ಸ್ಪರುಶನವ ಮಾಡಿದರೆ ಕೋಟಿಫಲಂ,
ಧರಿಸಿದಡಂ ದಶಶತಕೋಟಿ ಫಲಂ
ಇನಿತು ಫಲವಪ್ಪುದು ಶ್ರೀ ರುದ್ರಾಕ್ಷಿಯಿಂ.
ಸಾಕ್ಷಿ : “ಲಕ್ಷಂ ತದ್ದರ್ಶನಾತ್ಪುಣ್ಯಂ ಕೋಟಿಃ ಸಂಸ್ಪರ್ಶನಾದಪಿ |
ದಶಕೋಟಿ ಶತಂ ಪುಣ್ಯಂ ಧಾರಣಾತ್ ಲಭತೇ ನರಃ ||”
ಹೀಗೆನಿಸುವ ರುದ್ರಾಕ್ಷಿಯ ಧರಿಸಿ,
ರುದ್ರಪದವಿಯನೈದುವುದು ತಪ್ಪದು ನೋಡಾ !
ಅದು ಹೇಗೆಂದರೆ :ಆವನೊಬ್ಬನು ಕೊರಳಲ್ಲಿ ರುದ್ರಾಕ್ಷಿಯ ಧರಿಸೆ
ಅವನ ಕುಲಕೋಟಿ ಸಹವಾಗಿ ಶಿವಲೋಕವನೈದರೆ ?
ಅದಕೆ ಶ್ರುತಿ ದೃಷ್ಟವುಂಟೇಯೆಂದರೆ ಉಂಟು.
ಸಾಕ್ಷಿ : “ರುದ್ರಾಕ್ಷಾಶ್ರಿತಕಂಠಶ್ಚ ಗೃಹೇ ತಿಷ್ಠತಿ ಯೋ ನರಃ |
ಕುಲೈಕಂ ವಿಂಶಯುಕ್ತಂ ಚ ಶಿವಲೋಕೇ ಮಹೀಯತೇ ||”
ಎಂದೆನಿಸುವ ರುದ್ರಾಕ್ಷಿಯ ಮೂಲ ಬ್ರಹ್ಮನೆಂದಿತ್ತು ಪೌರಾಣ.
ರುದ್ರಾಕ್ಷಿಯ ಗಳ ವಿಷ್ಣುವೆಂದಿತ್ತು ಪೌರಾಣ.
ರುದ್ರಾಕ್ಷಿಯ ಮುಖ ಸದಾಶಿವನೆಂದಿತ್ತು ಪೌರಾಣ.
ರುದ್ರಾಕ್ಷಿಯ ಸರ್ವಾಂಗವೆಲ್ಲ ಸರ್ವದೇವರೆಂದಿತ್ತು ಪೌರಾಣ.
ಸಾಕ್ಷಿ :“ರುದ್ರಾಕ್ಷಿಮೂಲಂ ಬ್ರಹ್ಮಾ ಚ ತನ್ನಾಳಂ ವಿಷ್ಣುರುಚ್ಯತೇ |
ಮುಖಂ ಸದಾಶಿವಂ ಪ್ರೋಕ್ತಂ ಬಿಂದುಃ ಸರ್ವತ್ರ ದೇವತಾ ||”
ಎಂದೆನಿಸುವ ರುದ್ರಾಕ್ಷಿಯ ಧರಿಸಿ ರುದ್ರನಾಗಿದ್ದೆನು.
`ಅತಏವ ರುದ್ರಾಕ್ಷಿಧಾರಣಂ ರುದ್ರಾ’ಯೆಂದಿತ್ತು ವೇದ.
ರುದ್ರಾಕ್ಷಿಯ ಧರಿಸಿ ಶುದ್ಧಚಿದ್ರೂಪನಾಗಿದ್ದೆನು ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./271
ಹರನಿಂದೆ ಗುರುನಿಂದೆ ಪರನಿಂದ್ಯವ ತೊರೆದು
ಶಿವಕೇಳಿಯೊಳಿಂಬುಗೊಂಡ ಕರ್ಣಕ್ಕೆ
ಕಣರ್ೆಂದ್ರಿಯವೆಲ್ಲಿಹುದೋ ?
ಕಾಮವೆಂಬ ಶೀತ, ಕ್ರೋಧವೆಂಬ ಉಷ್ಣ ,
ಮೋಹನ ಮುದ್ದುಮುಖ ಮೊಲೆ,
ಅಂಗನೆಯೆಂಬ ಮೃದು, ವಿಷಯಾತುರವೆಂಬ ಕಠಿಣವ ಮುಟ್ಟದೆ,
ಲಿಂಗ ಮುಟ್ಟಿ ಲಿಂಗವ ಪೂಜಿಸಿ ಲಿಂಗವ ಮೋಹಿಪ
ಹಸ್ತಕ್ಕೆ ತ್ವಗಿಂದ್ರಿಯವೆಲ್ಲಿಯದೋ ?
ಶ್ವೇತ ಪೀತ ಹರಿತ ಮಾಂಜಿಷ್ಟ ಮಾಣಿಕ್ಯ ಕಪೋತವರ್ಣವೆಂಬ
ಷಡುರೂಪವ ಕಳೆದು ಲಿಂಗದ ಷಡುರೂಪದೊಳಿಂಬುಪಡೆದುಕೊಂಡು
ಅನುಮಿಷದೃಷ್ಟಿ ಇಟ್ಟ ನಯನಕ್ಕೆ ನೇತ್ರೇಂದ್ರಿಯವೆಲ್ಲಿಯದೊ ?
ತಿಕ್ತ ಕಟು ಕಷಾಯ ಮಧುರ ಆಮ್ಲ ಲವಣವೆಂಬ
ಷಡುರುಚಿಗೆಳಸದೆ, ಲಿಂಗಾನುಭಾವಾಮೃತವ
ಸೇವಿಪ ಜಿಹ್ವೆಗೆ ಜಿಹ್ವೇಂದ್ರಿಯವೆಲ್ಲಿಯದೋ ?
ಗಂಧ ದುರ್ಗಂಧವನಳಿದು ಸ್ವಾನುಭಾವಸದ್ವಾಸನೆಗೆಳಸಿಪ್ಪ
ನಾಸಿಕಕ್ಕೆ ಘ್ರಾಣೇಂದ್ರಿಯವೆಲ್ಲಿಯದೋ ?
ಇಂತೀ ಪಂಚೇಂದ್ರಿಯಮುಖದಲ್ಲಿ ಪಂಚವದನನ ಮುಖವಾಗಿಪ್ಪ
ಶಿವಶರಣರು ಲಕ್ಷಗಾವುದದಲ್ಲಿದ್ದರೂ ಇರಲಿ,
ಅಲ್ಲಿಗೆನ್ನ ಮನಮಂ ಹರಿಯಬಿಟ್ಟು ನಮಸ್ಕರಿಸುವೆನು.
ಕಂದ :ಲಕ್ಷಯೋಜನದೊಳಾಡೆ
ಮುಕ್ಕಣ್ಣನ ಶರಣನೈದನೆನೆ ಕೇಳ್ದೊಲವಿಂ
ದಿಕ್ಕನೆ ಮನಮಂ ಕಳುಹಿ ಪ
ದಕ್ಕೆರಗುವೆ ನಾಂ ಪ್ರಸನ್ನಶಂಕರಲಿಂಗ.
ಈ ಕಾರಣ ನಿಮ್ಮ ಶರಣರ ನೆನೆದು ನೋಡಿ ವಾತರ್ೆಯ ಕೇಳಿ
ಮನಮುಟ್ಟಿ ದರುಶನವ ಮಾಡಲೆನ್ನ ಭವ ಹಿಂಗಿತ್ತು ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./272
ಹರಲಿಂಗಕೆ ಹರಿ ಅಜಾಸುರರು ಸರಿಯೆಂಬ
ಕುರಿಮಾನವ ನೀ ಕೇಳಾ.
ಹರ ನಿತ್ಯ, ಹರಿಯಜಾಸುರರು ಅನಿತ್ಯ.
ಅದೇನು ಕಾರಣವೆಂದರೆ : ಹರಿಗೆ ಹತ್ತು ಪ್ರಳಯ, ಬ್ರಹ್ಮಂಗೆ ಅನಂತಪ್ರಳಯ,
ಸುರರ ಪ್ರಳಯವೆಂದರೆ ಅಳವಲ್ಲ.
ಪ್ರಳಯಕ್ಕೆ ಗುರಿಯಾಗಿ ಸತ್ತು ಸತ್ತು ಹುಟ್ಟುವ ಅನಿತ್ಯದೈವವ ತಂದು
ನಿತ್ಯವುಳ್ಳ ಶಿವಂಗೆ ಸರಿಯೆಂಬ ವಾಗದ್ವೈತಿಯ ಕಂಡರೆ
ನೆತ್ತಿಯ ಮೇಲೆ ಟೊಂಗನಿಕ್ಕೆಂದಾತ ನಮ್ಮ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./273
ಹರಸ್ರಾವದಲ್ಲಿ ಹುಟ್ಟಿ ನರಸ್ರಾವವ ನೆನೆವ
ಭಂಡರನೆನಗೊಮ್ಮೆ ತೋರದಿರಯ್ಯಾ !
ಹರಸ್ರಾವವೆಂದರೆ-ಗುರುವಿನ ಕರಕಮಲದಲ್ಲಿ ಹುಟ್ಟಿ
ನರರ ತಂದೆತಾಯಿಗಳೆನಬಹುದೆ ? ಎನಲಾಗದು.
ನಿಮಗೆ ತಂದೆ ತಾಯಿಗಳೆಂದರೆ ಹೇಳುವೆ ಕೇಳಿರೊ.
ಗುರುವೆ ತಾಯಿ, ಗುರುವೆ ತಂದೆ, ಗುರುವೆ ಬಂಧು,
ಗುರುವೆ ಬಳಗ, ಗುರುವಿನಿಂದ ಅಧಿಕವಾಗಿಪ್ಪರು ಇನ್ನಾರೂ ಇಲ್ಲ.
ಸಾಕ್ಷಿ :“ಗುರುರ್ಮಾತಾ ಗುರುಃಪಿತಾ ಗುರುಶ್ಚ ಬಂಧುರೇವ ಚ |
ಗುರುದೈವತಾತ್ಪರಂ ನಾಸ್ತಿ ತಸ್ಮೆ ಶ್ರೀ ಗುರುವೇ ನಮಃ ||”
ಎಂದುದಾಗಿ,
ಗುರುಪುತ್ರನಾಗಿ ನರರ ಹೆಸರ ಹೇಳುವ
ನರಕಜೀವಿಯನೆನಗೊಮ್ಮೆ ತೋರದಿರಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./274
ಹರಿ ಸುರ ಬ್ರಹ್ಮರ ಪರಿಯಾಟಗೊಳಿಸಿದ
ಮಾಯಾದುರಿತವೆನ್ನ ಕಾಡುತಿದೆ, ಶಿವಶಿವ ಇದಕಿನ್ನೆಂತೊ !
ನೀನಿಕ್ಕಿದ ಕಿಚ್ಚು ನೀ ನೊಂದಿಸಿದರೆ ನೊಂದೂದಲ್ಲದೆ
ಮತ್ತಾರಿಗೆಯೂ ನೊಂದದು
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./275
ಹರಿಣಪಾದಮಾತ್ರದಷ್ಟು ಉಪಾಸ್ತಕೆ (?)
ಹರಿ ಸುರ ಬ್ರಹ್ಮಾದಿಗಳು ನೆರೆ ಮೂರುಲೋಕವೆಲ್ಲ ಮರುಳಾಗಿ
ವಿಷಯಭಂಗಿತರಾಗಿ ಭವಕೆ ಗುರಿಯಾದರಯ್ಯಾ.
ಅದು ಎಂತೆಂದರೆ : ಸಾಕ್ಷಿ :ಹರಣಿಪದಮಾತ್ರೇಣ ಮೋನಸ್ಯ (?) ಜಗತ್ರಯಂ |
ಸುಖ ಬಿಂದು ವಿಷಯಾಸ್ತತ ದುಃಖಪರ್ವತ ಏವ ಚ || (?) ”
ಎಂದುದಾಗಿ, ಬಿಂದುಸುಖ ವಿಷಯಧಾವತಿಯ ದಂದುಗ,
ಸಂಸಾರದುಃಖ ಪರ್ವತದಷ್ಟು ನೋಡ.
ನಿಃಸಂಸಾರಿ ನಿರಾಭಾರಿಯಾಗಿ ನೋಡುತಿದ್ದೆಯಲ್ಲ ಜಗದಾಟವ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./276
ಹರಿಯ ನಯನ ಹರನ ಶ್ರೀಪಾದದೊಳು ಅಡಕವಾದುದ
ಸಟೆಯೆಂಬ ವಿಪ್ರ ನೀ ಕೇಳಾ.
ಹರಿ ಸಹಸ್ರಕಮಲದಲ್ಲಿ ಹರನ ಶ್ರೀಪಾದದ ಪೂಜೆ ಮಾಡುತಿರೆ,
ಒಂದರಳು ಕುಂದಿದರೆ ನಯನಕಮಲವನೇರಿಸಿ,
ಶಿವನ ಪಾದಕೃಪೆಯಿಂದ ಶಂಖ ಚಕ್ರವ ಪಡೆದುದು ಹುಸಿಯೆ ? ಹುಸಿಯಲ್ಲ.
ಮತ್ತೆ ಹೇಳುವೆ ಕೇಳು ದ್ವಿಜ.
ಹರಿಯಜರಿಬ್ಬರು ಹರನ ಶ್ರೀಪಾದಮಗುಟವ ಕಾಣ್ಬೆನೆಂದು
ವರಗೃಧ್ರಗಳಾದುದು ಸಟೆಯೇ ?
ಸಾಕ್ಷಿ :“ಯುಗ್ಧಸಂಯುಕ್ತ ಉಭಯ ಚ ದೃಷ್ಟ ಬ್ರಾಹ್ಮಣ
ರಾಜಸಬದ್ಧ ವರಗೃಧ್ರ |” (?)
ಎಂದುದಾಗಿ,
ಹದ್ದು ಹೆಬ್ಬಂದಿಯಾಗಿ ಶ್ರೀಪರಮಾತ್ಮನ ಮಗುಟಚರಣವ ಕಾಣದೆ
ತೊಳಲಿ ಬಳಲುತಿರಲು,
ಹರಿಯಜರ ಮಧ್ಯದಲ್ಲಿ ಉರಿಲಿಂಗವಾದ ಪರಮಾತ್ಮನ ನಿಲವನರಿಯದೆ,
ಅನ್ಯದೈವವ ತಂದು ಪನ್ನಗಧರಗೆ ಸರಿಯೆಂಬ
ಕುನ್ನಿಮಾನವರ ತಲೆಕೆಳಗಾಗಿ ನರಕಕ್ಕೆ ಕೆಡುವುದ ಮಾಣ್ಬನೆ
ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./277
ಹಲವು ಜನ್ಮದಲೊದಗಿದ ಪಾಪವ ತೊಲಗಿಸುವುದಕ್ಕೆ ಶ್ರೀವಿಭೂತಿ.
ಮಲಿನದೇಹದ ಹೊಲೆಯ ಕಳೆವುದಕ್ಕೆ ಶ್ರೀವಿಭೂತಿ.
ದುರಿತವ ಕೆಡೆಮೆಟ್ಟುವರೆ ಶ್ರೀವಿಭೂತಿ
ದುಃಕೃತ್ಯವ ನಿಟ್ಟೊರೆಸುವರೆ ಶ್ರೀವಿಭೂತಿ.
ಮಲತ್ರಯಂಗಳನಳಿವರೆ ಶ್ರೀವಿಭೂತಿ.
ಅಷ್ಟಮದಂಗಳ ಸುಟ್ಟು ಸೂರೆಬಡುವುದಕ್ಕೆ ಶ್ರೀವಿಭೂತಿ.
ತನುಮದ ವ್ಯಸನ ವರ್ಗ ಗುಣಕರಣ ಮಲಮಾಯಕಂಗಳ
ಸುಟ್ಟು ಸೂರೆಮಾಡುವುದು ಶ್ರೀವಿಭೂತಿ.
ಪಣೆಯೊಳು ಧರಿಸ ಕಲಿಸಿ, ಒಳಗೆ ಹೊರಗೆ ತೊಳಗಿ ಬೆಳಗಿ
ತೋರಿದ ಚಿನ್ಮಯ ಚಿದ್ರೂಪ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./278
ಹಲವು ತರುಗಿರಿ ತೃಣಕಾಷ್ಠವೆಲ್ಲಕೆಯೂ ಒಂದೇ ಕಿಡಿ ಸಾಲದೇನಯ್ಯಾ !
ಹಲವು ಜನನದಲ್ಲಿ ಒದಗಿದ ಪಾಪಂಗಳ ಸುಡುವರೆ
ಗುರುಕರುಣವೆಂಬ ಒಂದೇ ಕಿಡಿ ಸಾಲದೇನಯ್ಯಾ ?
ಸಾಕ್ಷಿ :“ಇಂಧನಂ ವಹ್ನಿಸಂಯುಕ್ತಂ ವೃಕ್ಷನಾಮ ನ ವಿದ್ಯತೇ |
ಗುರುಸಂಸಾರಸಂಪನ್ನಃ ಸ ರುದ್ರೋ ನಾತ್ರ ಸಂಶಯಃ ||”
ಎಂದುದಾಗಿ,
ಅದು ಕಾರಣ, ಎನ್ನ ಭವವ ಕಳೆದು ಲಿಂಗದೇಹಿಯ ಮಾಡಿದ,
ಮಾಂಸಪಿಂಡವ ಕಳೆದು ಮಂತ್ರಪಿಂಡವ ಮಾಡಿದ,
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥನೆಂಬ ಗುರುವ
ಮರೆದವರಿಗೆ ಇದೇ ನರಕ./279
ಹಲವು ಹಡಗವಾದರೇನಯ್ಯಾ ? ಸಮುದ್ರ ಒಂದೇ ನೋಡಾ !
ಹಲವು ಪಕ್ಷಿ ಇದ್ದರೇನಯ್ಯಾ ? ಹಾರುವ ಪವನ ಒಂದೇ ನೋಡಾ !
ಹಲವು ಉಡುರಾಜರಿದ್ದರೇನಯ್ಯಾ ?
ಬೆಳಗಮಾಡಿ ತೋರುವ ಸೂರ್ಯ ಒಂದೇ ನೋಡಾ !
ಹಲಬರಿಗೆ ಹಲವು ಗುರುರೂಪಾದ ತಾ ಪರಮಾತ್ಮ ಒಬ್ಬನೆ ನೋಡಾ !
ಹಲಬರು ಕೈಯೊಳು ಬಿಲ್ಲ ಸೇರಿ ಹಲವಂಬಿಲೆಚ್ಚರದು
ಎಚ್ಚಾತನ ಕೈಯೋಜೆ.
ಇದಿರಿನಲ್ಲಿ ತೋರುವ ಗುರು ಒಬ್ಬನೆ ನೋಡಾ !
ಹಲವು ಲಿಂಗರೂಪಾದಾತ ಶ್ರೀಪರಮಾತ್ಮ ಒಬ್ಬನೆ ನೋಡಾ !
ಹಲಬರ ಕಣ್ಣಿಗೆ ಹಲವು ಜಂಗಮರೂಪಾಗಿ ತೋರುವಾತ
ಶ್ರೀ ಪರಮಾತ್ಮ ಒಬ್ಬನೆ ನೋಡಾ !
ಹಲಬರ ಹಣೆಯಲ್ಲಿಹ ದುಲರ್ಿಖಿತಗಳ ತೊಡೆದು
ಶ್ರೀ ವಿಭೂತಿಯಾಗಿ ನಿಂದಾತ ಶ್ರೀ ಪರಮಾತ್ಮ
ಒಬ್ಬನೆ ನೋಡಾ.
ಹಲಬರ ಕೊರಳಲ್ಲಿ ಶ್ರೀ ರುದ್ರಾಕ್ಷಿಯಾಗಿ ನಿಂದಾತ
ಶ್ರೀ ಪರಮಾತ್ಮ ಒಬ್ಬನೆ ನೋಡಾ !
ಹಲಬರ ಜಿಹ್ವೆಯ ಕೊನೆಯ ಮೊನೆಯಲ್ಲಿ
ಶ್ರೀ ಪಂಚಾಕ್ಷರಿಯಾಗಿ ನಿಂದಾತ
ಶ್ರೀ ಪರಮಾತ್ಮ ಒಬ್ಬನೆ ನೋಡಾ !
ಹಲವು ಶಿವಭಕ್ತಜನಂಗಳಿಗೆ ಪಾದೋದಕ ಪ್ರಸಾದವಾಗಿ
ಮುಕ್ತಿಯ ತೋರಿದಾತ ಶ್ರೀ ಪರಮಾತ್ಮ ಒಬ್ಬನೆ ನೋಡಾ !
ಹಲಬರಿಗೆ ಹಲವು ರೂಪಾದಾತ ನಮ್ಮ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ
ಪರಶಿವನೊಬ್ಬನೆ ಕಾಣಿರೋ !/280
ಹಸಿಹಂದರದಿ ಪಡೆದ ಗಂಡನ ವಂಚಿಸಿ,
ವಿಷಯಾತುರದಿ ಪಿಸುಣಮಾನವರನಪ್ಪುವ ಹಾದರಗಿತ್ತಿಯೆಂತೆ,
ಪಂಚಕಳಸವಿಕ್ಕಿ ದೇವಭಕ್ತರ ನಡುವೆ ಹಸ್ತಮಸ್ತಕ ಸಂಯೋಗವ ಮಾಡಿ
ಗುರುಕರುಣಿಸಿ ಕೊಟ್ಟ ಪ್ರಾಣಲಿಂಗವನವಿಶ್ವಾಸವ ಮಾಡಿ,
ಕ್ಷೇತ್ರ ಜಾತ್ರಿ ಲಿಂಗವ ಕಂಡು, ವಿಶ್ವಾಸವಿಟ್ಟು ಎರಗುವ
ಪಂಚಮಹಾಪಾತಕರ ನೋಡಾ !
ಸಾಕ್ಷಿ :“ಪ್ರಾಣಲಿಂಗಮವಿಶ್ವಸ್ಯ ತೀರ್ಥಲಿಂಗಂ ವಿಶೇಷಯೇತ್ |
ಪ್ರಸಾದನಿಷ್ಫಲಂ ಚೈವ ರೌರವಂ ನರಕಂ ವ್ರಜೇತ್ || ”
ಎಂದುದಾಗಿ,
ಮತ್ತೊಮ್ಮೆ ಗ್ರಂಥಸಾಕ್ಷಿಯ ಕೇಳು ಮುಂದರಿಯದ ಮಾನವ.
ಸಾಕ್ಷಿ :“ಇದಂ ತೀರ್ಥಮಿದಂ ತೀರ್ಥಂ ಭ್ರಮಂತಿ ತಾಮಸಾ ನರಾಃ|
ಶಿವಜ್ಞಾನಂ ನ ಜಾನಂತಿ ಸರ್ವತೀರ್ಥಂ ನಿರರ್ಥಕಂ ||”
ಎಂದುದಾಗಿ.
ಇಂತೆಂಬುದನರಿಯದೆ, ಅಜ್ಞಾನದ ಭ್ರಾಂತಿಯಲ್ಲಿ
ಅನ್ಯಲಿಂಗವನಾಶ್ರಯಿಸುವ
ಕುನ್ನಿಗಳಿಗೆ ಗುರುವಿಲ್ಲ ಜಂಗಮವಿಲ್ಲ
ಪಾದೋದಕವಿಲ್ಲ ಪ್ರಸಾದವಿಲ್ಲವಾಗಿ ಮುಕ್ತಿಯೆಂಬುದು
ಎಂದಿಗೂ ಇಲ್ಲವಾಗಿ ರೌರವನರಕದಲ್ಲಿಕ್ಕುವ ನಮ್ಮ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /281
ಹಳ್ಳ ಮೇರೆದಪ್ಪಿದರೆ ಇಳಿವುದು, ಹೊಳೆ ಮೇರೆದಪ್ಪಿದರೆ ಇಳಿವುದು,
ಸಮುದ್ರ ಮೇರೆದಪ್ಪಿದರೆ ಇಳಿವುದು.
ಮನ ಮೇರೆದಪ್ಪಿದರೆ ಏರಿ ಇಳಿದು ಕಾಡುತ್ತಿದೆ.
ಅದು ಎಂತೆಂದರೆ : ಹಳ್ಳ ಮೇರೆದಪ್ಪಿದರೆ ಸಂಗಡ ಕಾಯಿಯಿಂದ ನಡೆವುದು.
ಹೊಳೆ ಮೇರೆದಪ್ಪಿದರೆ ಹರುಗೋಲು ನಡೆವುದು.
ಸಮುದ್ರ ಮೇರೆದಪ್ಪಿದರೆ ಭೈತ್ರ ನಡೆವುದು.
ಮನ ಮೇರೆದಪ್ಪಿದರೆ ಎನ್ನ ಕೊಂಡು ಮುಳುಗಿತ್ತು.
ಈ ಮನ ವೇದ ಶಾಸ್ತ್ರ ಆಗಮದ ಕಟ್ಟಳೆಗೆ ನಿಲ್ಲುವುದೆ ?
ನಿಲ್ಲದು.
ಓದುವುದು ಮನ, ಹೇಳುವುದು ಮನ, ಕೇಳುವುದು ಮನ,
ಕೇಳಿ ನರಕಕ್ಕಿಳಿವುದು ಕೆಡುವುದು ಮನ.
ಈ ಮನದಂದುಗದ ದಾಳಿಯಲ್ಲಿ ನೊಂದು ಬೆಂದೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./282
ಹಳ್ಳದೊಳು ತೇಲಿಹೋಗುವ ಕಂಬಕೆ ತೊರೆನೆರೆಗಳು ಮುಸುಕಿ
ಹೋಗುತಿದೆ ನೋಡಾ !
ತೊರೆನೆರೆಗಳ ಸಂಭ್ರಮದಲ್ಲಿ ಹೋಗುವ ಸ್ತಂಭ
ಆರಿಗೆ ಕಾಣಬಾರದು ನೋಡಾ !
ಹಳ್ಳವ ಬತ್ತಿಸೆ, ತೊರೆನೆರೆಗಳ ಕೆಡಿಸಿ,
ಹಳ್ಳದೊಳಿಹ ಕಂಬದೊಳಿಪ್ಪ ಮಾಣಿಕ್ಯವ
ಸಾಧಿಸಿಕೊಳಬಲ್ಲರೆ ನಿಃಸಂಸಾರಿ ನಿರಾಭಾರಿ ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./283
ಹಾಳೂರೊಳಗಣ ನಾಯಜಗಳಕ್ಕೆ
ಭೂ[ತ]ಗಳೆದ್ದು ಕೆಲೆವುದ ಕಂಡೆ.
ಗಗನದಲಿಪ್ಪ ಗಿಣಿ, ಮಾರ್ಜಾಲನ ನುಂಗುವುದ ಕಂಡೆನು.
ಸೂಳೆ ನೆಂಟನ ನುಂಗಿ, ಕೋಳಿ ಸರ್ಪನ ನುಂಗಿ,
ಅರಗು ಉದಕವ ನುಂಗಿ, ಸಿರಿ ದರಿದ್ರವ ನುಂಗುವುದ ಕಂಡೆ.
ಇದೇನು ಚೋದ್ಯ ಹೇಳಾ !
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./284
ಹಿಂಗದೆನ್ನಯ ಮನಸು ಗುರುಪಾ
ದಂಗಳ ಕೃಪೆಯ ಪಡೆವೆನೆಂಬ ಸುಗ್ಗಿಯೊಳಗೆ ಸಿಲ್ಕಿ.
ಪದ : ಶ್ವೇದಜ, ಉದ್ಬಿಜ, ಜರಾಯುಜ, ಅಂಡಜವೆಂಬ
ಖ್ಯಾತಿಭವದೊಳು ಸಿಲ್ಕಿ ತೊಳಲಿ ಬಳಲಿ ಬಂದ
ಆತ್ಮಶುದ್ಧ ಮೂರೇಳುದೀಕ್ಷೆಯನಿತ್ತು ಶಿವಕುಲ
ಜತನ ಮಾಡಿದ ನಿಜಗುರುಪಾದಾಂಬುಜವ ಕಂಡು. ನೆತ್ತಿಯೊಳಿಹ ಪರಬ್ರಹ್ಮವಸ್ತುವ ತೆಗೆದು
ಬಿತ್ತೆನ್ನೀ ಕರಭೂಮಿಯಲ್ಲಿ ಪರತತ್ವವಂ
ವಿಸ್ತರಿಸಿ ಮೂರು ಷಡ್ವಿಧ ಮೂವತ್ತಾರು ದುರ್ಗುಣ
ಆತ್ಮ ಸರ್ವಲಿಂಗದೇಹಿಯ ಮಾಡ್ದ ಗುರುಪದವ. | ಪರಶಾಂತಿಯೆಂಬ ವಿಭೂತಿಯ ಪಣೆಯೊಳ
ಗೊರದು ಭವಾಂತರಕರ್ಮವೆಂದೆಂಬ
ಗಿರಿಯನಿಡುವ ವಜ್ರಗುಂಡು ರುದ್ರಾಕ್ಷಿಯ
ಕೊರಳೊಳು ಧರಿಸ ಕಲಿಸಿದ ಗುರುಪಾದವ. |1|
ವರಪಂಚಾಕ್ಷರಿಯ ದುರಿತಹರ ದುರ್ಗುಣನಾಶಂ
ಪರತತ್ವಕಿದೇ ನಿತ್ಯಾನಂದ ನಿಜನೆಲೆಯೆಂದು
ಒರೆದು ಶ್ರೋತ್ರದಿ ಸದಾಕಾಲದಿ ಪ್ರಣಮವನು
ಚ್ಚರಿಸೆಂದು ತೋರಿದ ಗುರುಪಾದಾಂಬುಜವ ಕಂಡು. |2|
ಭವರೋಗಕಿದೆ ವೈದ್ಯ ಶಿವಪಾದಾಂಬು ಪ್ರಸಾದ
ಹವಿ ಪಾಪಗಿರಿ ತರುಮರವನು ಸುಡುವುದು
ಪವಿತ್ರವಿದ ಸವಿದು ಮೂರಡಿಕ್ರಾಂತನಾಗಿ
ಪಾಲಿಪ ನಿಜಗುರುಪಾದಾಂಬುಜವ ಕಂಡು. |3|
ಗುರುವಿಗೆ ತನುವು ಲಿಂಗಕೆ ಮನವು ಜಂಗಮಕೆ
ವರಧನವನಿತ್ತು ಕಿಂಕರ ಭೃತ್ಯ [ಭಾವದಿಂ ಭವ]
ಶರಧಿಯ ದಾಂಟುವ ಹಡಗವೆಂ
ದೊರೆದು ಭಕ್ತಿಯ ಪಾಲಿಪ ನಿಜಗುರು ಪಾದವ. |4|
ಇಂತು ಶಿವನ ಅಷ್ಟಾವರಣದೊಳಗೆ ಮನ[ವ ನಿಲಿಸಿ
ಸಂತ ನಿರ್ಮ]ಲದೇಹಿಯಾಗಿ ಕೇಳ ನಿ
ಶ್ಚಿಂತ ಹೇಮಗಲ್ಲನೆಂದೊರೆದ ಗುರು ಪಡುವಿಡಿ
ಶಾಂತ ರಾಜೇಶ್ವರನ ಪಾದಕಮಲಕೆ ಭೃಂಗನಾಗಿಹಘನು ಸದಾಘೆ. |7| /285
ಹಿಂದಣಜನ್ಮದಲ್ಲಿ ಗುರುವ ಮರೆದ ಕಾರಣ,
ಹಿಂದಣಜನ್ಮದಲ್ಲಿ ಲಿಂಗವ ಮರೆದ ಕಾರಣ,
ಹಿಂದಣಜನ್ಮದಲ್ಲಿ ಅರುಹು ಕುರುಹೆಂಬುದನರಿಯದಕಾರಣದಿಂ
ಸಂಸಾರಬಂಧನಕ್ಕೆ ಗುರಿಯಾದೆನಯ್ಯಾ.
ನಿನ್ನವರ ಮರೆದ ಕಾರಣದಿ ಅನ್ಯ ಭವಕ್ಕೆ ಎನ್ನ ಗುರಿ ಮಾಡಿದೆ.
ಇನ್ನಾದರೂ ನಿಮ್ಮ ಸೊಮ್ಮೆಂಬ ಗುರುಲಿಂಗಜಂಗಮವ ಮರೆಯೆ.
ಮರೆದರೆ ಮೂಗಿನ ಧಾರೆಯ ತೆಗೆವೆನು.
ಸರ್ವ ಅಪರಾಧಿ, ಎನ್ನವಗುಣವ ನೋಡದೆ ಕಾಯೋ ಕಾಯೋ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./286
ಹಿಂದೇನು ಸುಕೃತವ ಮಾಡಿದ ಕಾರಣ
ಇಂದೆನಗೆ ಗುರುಪಾದ ದೊರೆಯಿತ್ತು ನೋಡಾ.
ಗುರುವೆಂಬೆರಡಕ್ಷರದ ಸ್ಮರಣೆಯ ನೆನೆದು
ಪರಿಭವವ ತಪ್ಪಿಸಿಕೊಂಡೆ ನೋಡಾ.
ಗುರುವೆಂಬೆರಡಕ್ಷರವನೇನೆಂದು ಉಪಮಿಸವೆನಯ್ಯಾ,
ಸಾಕ್ಷಿ :“ಗುಕಾರಂ ಚ ಗುಣಾತೀತಂ ರುಕಾರಂ ರೂಪವರ್ಜನಮ್ |
ಗುಣರೂಪಮತೀತೊ ಯೋ ಸದೃಷ್ಟಃ [ಸ]ಗುರುಃ ಸ್ಮೃತಃ ||”
ಎಂದುದಾಗಿ,
ಇಂತಪ್ಪ ಗುರುವನೆಂತು ಮರೆವೆನಯ್ಯಾ.
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ
ಗುರುವ ಮರೆದವರಿಗಿಂದೇ ನರಕ./287
ಹುಟ್ಟದ ಮುನ್ನ ಬೆಳೆವ ಶಿಶುವ ಹೆಸರಿಟ್ಟು ಕರೆವವರಾರೂಯಿಲ್ಲ.
ಬೆಳೆಯದ ಮುನ್ನ ಹುಟ್ಟಿದ ಶಿಶುವ ಹೆಸರಿಟ್ಟು ಕರೆವವರಾಘರೂಯಿಲ್ಲ.ಘೆ
ಶಿಶುವಿನ ತಂದೆ ತಾಯಿಯ ಕುರುಹ ಬಲ್ಲವರು ಮುನ್ನವೆ ಇಲ್ಲ.
ಮುನ್ನವೆಂಬ ಶಬ್ದವ ಎನ್ನೊಳಡಗಿಸಿ ಚಿಹ್ನವಡಸಿದ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./288
ಹುಟ್ಟಿದ ಮಾನ್ಯರೆಲ್ಲ ದಶವಾಯು ಪಂಚಭೂತ ಸಪ್ತಧಾತು
ಅರಿಷಡ್ವರ್ಗ ಅಷ್ಟಮದಂಗಳನೆಲ್ಲ ಸುಟ್ಟು ಸೂರೆಮಾಡಿ
ನಿನ್ನೊಳು ಬೆರೆದರೆ,
ಅಂಡಜ ಶ್ವೇದಜ ಉದ್ಬಿಜ ಜರಾಯುಜವೆಂಬ ನಾಲ್ಕು ತೆರದ
ಯೋನಿಯಲ್ಲಿ ಹುಟ್ಟಿ, ಚೌರಾಸಿಲಕ್ಷ ಜೀವರಾಸಿಯಾಗಿ
ಪಾಪಕರ್ಮವ ಗಳಿಸಿ ಯಮಂಗೆ ಗುರಿಯಾಗುವರಾರು ?
ಅದು ಕಾರಣ,
ಮೋಡದಮರೆಯ ಸೂರ್ಯನಂತೆ,
ಸ್ಫಟಿಕದ ಘಟದೊಳಗಣ ಜ್ಯೋತಿಯಂತೆ,
ಸರ್ವರ ಆತ್ಮದೊಳು ಮರೆಗೊಂಡುಯಿಪ್ಪ
ತನುಗುಣ ಮನಗುಣ ಅಹಂಕಾರ ಮಾಯಾಮದದ
ತಮಂಧದ ಕತ್ತಲೆಯ ಮರೆಮಾಡಿ
ಕಾಣಗೊಡದೆಯಿಪ್ಪ ಮರೆಗೊಂಡ ಭೇದವ
ಶಿವಶರಣರು ಬಲ್ಲರುಳಿದ ನರಗುರಿಗಳಿಗಸಾಧ್ಯ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./289
ಹುಟ್ಟಿದ ಶಿಶುವಿಗೆ ಮೊಲೆ ಮುಡಿ ಜವ್ವನ ಬಂದು,
ಬಟ್ಟೆಯೊಳು ನಿಂದು ಆಕಾರವಿಡಿದು ಬಂದ
ನಲ್ಲನ ಕೈಯ ಒತ್ತೆಯ ಹಿಡಿವುದ ಕಂಡು ಬೆರಗಾದೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./290
ಹುಟ್ಟಿದಂದು ತನುವ ಸೋಂಕಿದ ಲಿಂಗವ,
ಸಾವಾಗ ಶರೀರದೊಡನೆ ಹೂಳಿಸಿಕೊಂಬ ಲಿಂಗವ ಬಿಟ್ಟು
ಬಟ್ಟೆ ಬಟ್ಟೆಯಲ್ಲಿ ಕಂಡ ಕಲ್ಲಿಗೆರಗುವ
ಭ್ರಷ್ಟಹೀನ ಹೊಲೆಯರ ನೋಡಾ !
ಇಂತಪ್ಪವರ ಶಿವಭಕ್ತರೆನಬಹುದೆ ? ಎನಲಾಗದು.
ಶಿವಭಕ್ತರಾರೆಂದಡೆ ಹೇಳುವೆ ಕೇಳಿರಣ್ಣಾ ;
ಗುರುಲಿಂಗಜಂಗಮವೆ ಶಿವನೆಂದು ನಂಬಿಪ್ಪಾತನೆ ಶಿವಭಕ್ತ.
ಗುರುವ ನಂಬದೆ, ಲಿಂಗವ ನಂಬದೆ, ಜಂಗಮವ ನಂಬದೆ
ಕಿರುಕುಳದೈವಕ್ಕೆ ಹರಕೆಯ ಹೊರುವವ
ಭಕ್ತನೂ ಅಲ್ಲ, ಭವಿಯೂ ಅಲ್ಲ.
ಇಂತಿವೆರಡರೊಳು ಒಂದೂ ಅಲ್ಲಾದ ಎಡ್ಡಗಳ ನಾನೇನೆಂಬೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./291
ಹುಲಿಯ ಬಾಯೊಳು ಸಿಲ್ಕಿದೆರಳೆಯಮರಿಯಂತೆ,
ಸರ್ಪನ ಬಾಯೊಳು ಸಿಲ್ಕಿ[ದ] ಕಪ್ಪೆಯಮರಿಯಂತೆ,
ಮಾರ್ಜಾಲನ ಬಾಯೊಳು ಸಿಲ್ಕಿದ ಮೂಷಕನಂತೆ,
ಮಾಯೆ ತನ್ನ ಬಾಯೊಳಿಕ್ಕಿ ಎನ್ನ ತಿಂದು ತೇಗುತಿದೆ !
ಇದಕಿನ್ನೆಂತೊ ಹರಹರ ! ನಿನಗನ್ಯನಾದ ಕಾರಣ ಎನಗೀ ದುರಿತ,
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /292
ಹೆಣ್ಣಿನ ಮುದ್ದುಮುಖ ಮೊಲೆ ಮೋಹನ ಮುಗುಳುನಗೆಯ
ಕಣ್ಣಿಂದ ಕಂಡು ಕಾಮಾತುರದಿಂದ ತಿಲದಷ್ಟು ಸುಖಕ್ಕಾಗಿ
ಬಣ್ಣಗುಂದಿ ಭ್ರಮಿತರಾದರು ನೋಡಾ ಮನುಜರು.
ತೆರನರಿಯದೆ ಹೆಣ್ಣಿನ ಮುಖಕಳೆ ತನ್ನ ಕೆಡಿಸುವ
ಬಣ್ಣದ ಛಾಯೆಯೆಂದರಿಯರು ನೋಡಾ.
ಹೆಣ್ಣಿನ ಸೋಲ್ಮುಡಿ ತಮ್ಮ ಕಟ್ಟುವ ಪಾಶವೆಂದರಿಯದೆ
ಹೆಣ್ಣಿನ ಮುಗುಳನಗೆ ತಮ್ಮ ಮುದ್ದಿಸಿ ಭವಕೆ ತರುವ
ಮೋಹವೆಂದರಿಯರು ನೋಡಾ.
ಹೆಣ್ಣಿನ ಚುಂಬನ ತಮ್ಮ ಹೀರುವ ಭೂತವೆಂದರಿಯರು ನೋಡಾ.
ಹೆಣ್ಣಿನ | ನೋಟ ತಮ್ಮ ಇರಿವ ಕಠಾರಿಯೆಂದರಿಯರು ನೋಡಾ.
ಹೆಣ್ಣಿನ ಮೊಲೆ ತಮ್ಮ ಭವಕ್ಕಿಕ್ಕಿ ಈಡಿಸುವ ಗುಂಡೆಂದರಿಯರು ನೋಡಾ.
ಹೆಣ್ಣಿನ ಯೋನಿ ತಮ್ಮ ತಿರುಹುವ ಗಾಣವೆಂದರಿಯರು ನೋಡಾ.
ಇಂತಪ್ಪ ಹೆಣ್ಣಿನ ಮುದ್ದುಮುಖ ಮೊಲೆ ನೋಟ ಮುಗುಳನಗೆ ಚುಂಬನ
ಭವದ ಭ್ರಾಂತಿಗೆ ತರಿಸಿ ಹಿಂಡಿ ಹೀರಿ ಹಿಪ್ಪೆಯ ಮಾಡಿ
ನುಂಗುವ ಮೃತ್ಯುದೇವತೆಯೆಂದರಿಯರು ನೋಡಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./293
ಹೆಣ್ಣು ಗಂಡು ಕೂಡಿ ರಚಿಸಿದ ಬಣ್ಣದ ಕೊತ್ತಳದೊಳು
ಮನೆಮಾಡಿಕೊಂಡಿರ್ಪ ದುಗರ್ಿಯ ಕಂಡೆನಿಂದು.
ಆಕೆಯ ಮುಖ ಮೂರು, ಕಣ್ಣಾರು, ಬಾಯಿ ಮೂರು,
ನಾಸಿಕ ಮೂರು, ನಾಲಗೆ ಮೂರು, ಮೊಲೆ ಏಳು,
ಅಂಗವೆರಡು, ಶೃಂಗಾರ ನಾಲ್ಕು, ಬಯಕೆ ಎಂಟು,
ಬಾಳ್ವೆ ಎರಡು, ದುಃಖವೈದು.
ದುರಿತ ನೂರಿಪ್ಪತ್ತರ ದುಮ್ಮಾನದಲ್ಲಿ
ಮಾಯದ ರಕ್ಷಿಯ ಮುಂದಿಟ್ಟುಕೊಂಡು,
ಛಾಯದ ಕೊಳಗದಲಳೆವುತ್ತಲಳೆವುತ್ತ
ಮುಡಿ ಮಾಸಿತೆಂದು ಮಾನುನಿ ಮರುಗಿ,
ರಾಸಿಗೆ ಕಾಲ ಮಾಡಿ, ಮಾನಕೆ ತಲೆಯನಿಟ್ಟು,
ರೋಷದಿಂದ ಶೋಕಂಗೈವುತ್ತಿಪ್ಪ ಅಂಗನೆ,
ಮುಖ ಮೂರ ತಿರುವೆ, ಮೂರುಲೋಕವದರಿದ್ದ ಕಂಡೆ.
ಕಣ್ಣಾರಲ್ಲಿ ಉರಿವುತ್ತಿಪ್ಪ ಅಗ್ನಿ ಲೋಕವ ಸುತ್ತುವುದ ಕಂಡೆನು.
ಬಾಯಿ ಮೂರು ತೆರೆಯೆ ಎಣೆಯಿಲ್ಲದ ತಾರೆಯ ಕಂಡೆನು.
ಏಳು ಮೊಲೆಯೊಳಗಣ ವಿಷ ಹೊರಹಬ್ಬಿ ಹರಿವುದ ಕಂಡೆನು.
ಅಂಗವೆರಡು ಅಲೆದಾಡುವುದ ಕಂಡೆನು.
ಶೃಂಗಾರವು ನಾಲ್ಕು ದಿಕ್ಕಿಗೆ ಬೆಳಗುವುದ ಕಂಡೆನು.
ಬಯಕೆ ಎಂಟು ಬ್ರಹ್ಮಾಂಡವ ಕೊಂಡು ಮುಣುಗುವುದ ಕಂಡೆನು.
ದುಃಖವೈದು ಮೊರೆಯಿಡುವುದ ಕಂಡೆನು.
ದುರಿತ ನೂರಿಪ್ಪತ್ತು ಧೂಳಿಗೊಟ್ಟಿಯ ಕೊಂಬುದ ಕಂಡೆ,
ಕೋಟೆಯ ಅರಸು ಬೆನ್ನೂರಿಲಿ ನಿಂದು
ತಾಪಸಬಡುತಿರ್ದ, ಮಾಯದುರಿತಕಂಜಿ.
ಇದೇನು ಚೋದ್ಯ ಹೇಳಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./294
ಹೆಳವನಿದ್ದೆಸೆಗೆ ಜಲನಿಧಿ ನಡೆತಂದಂತೆ,
ಕರುಣಜಲಮೂರ್ತಿಲಿಂಗ ಎನ್ನ ಕರಸ್ಥಲಕೆ ನಡೆತಂದನಲ್ಲ !
ರೋಗಿಯಲ್ಲಿಗೆ ಅಮೃತವೆ ಮೈಯಾಗಿ ನಡೆತಂದಂತೆ,
ಭವರೋಗದ ಪಾಪಿ ಪಿಸುಣಮಾನವನಿದ್ದೆಡೆಗೆ
ಅಮೃತಕರಮೂರ್ತಿ ನಡೆತಂದನಲ್ಲ ಎನ್ನ ಕರದೊಳು !.
ಘೋರಾಂಧಕಾರದ ಕತ್ತಲೆಯೊಳು ತೊಳಲಿ ಬಳಲುವ
ಕಮಲದೆಡೆಗೆ ಸೂರ್ಯನುದಯವಾದಂತೆ,
ಮಾಯಾತಮಂಧವೆಂಬ ಕತ್ತಲೆಯೊಳು ತೊಳಲಿಬಳಲುವ
[ವೇಳೆಯೊಳು] ದ್ಯುಮಣಿಕೋಟಿ ಪ್ರಕಾಶಲಿಂಗವ
ಕಂಡೆನಲ್ಲಾ ಎನ್ನ ಕರದೊಳು !
ಹಗಲೆ ಬಳಲುವ ಕುಸುಮದೆಡೆಗೆ, ಇರುಳುಗವಿದು,
ಶಶಿ ಉದಯವಾದಂತೆ,
ಹಗಲು ಇರುಳೆಂಬ ಬಂಧನದ ಬಯಕೆಗೆ ಸಿಕ್ಕಿದ
ಮಾನವನೆಡೆಗೆ ಶಶಿಕಾಂತಲಿಂಗ ಉದಯವಾದನಲ್ಲ ಎನ್ನ ಕರದೊಳು !
ಸುದತಿ ಬಯಸಲು ಪುರುಷಾತ್ಮ ಕೈಸಾರಿದಂತೆ
ಹಲವು ಜನನದಿ ಬಯಸಿ ಬಳಸಿದರೂ ಸಿಲ್ಕದ
ಲಿಂಗವೆನ್ನ ಕೈಸಾರಿತಲ್ಲ !
ಪರವೆ ಗೂಢಾಗಿಪ್ಪ ಲಿಂಗವ ಕಂಡೆನಲ್ಲ ಎನ್ನ ಕರದೊಳು !
ಶರೀರದೊಳು ಪರಿಪೂರ್ಣವಾಗಿಹ ಲಿಂಗವ
ಕಂಡೆನಲ್ಲ ಎನ್ನ ಕರದೊಳು !
ಸಾಕ್ಷಿ :“ಪರಂ ಗೂಢಂ ಶರೀರಸ್ಥಂ ಲಿಂಗಕ್ಷೇತ್ರಮನಾಮಯಮ್ |”
ಯಥ್ಶೆಶ್ವರಂ ಹ್ಯಾದಿ ತೇಜಃ ತಲ್ಲಿಗಂ ಪಂಚಸಂಜ್ಞಕಂ ||”
ಎಂಬ ಪಂಚಸಂಜ್ಞೆಯನೊಳಕೊಂಡ ಲಿಂಗವು
ಎನ್ನ ಕರಸ್ಥಲ ಉರಸ್ಥಲ ಶಿರಸ್ಥಲ ಮನಸ್ಥಲ ಜ್ಞಾನಸ್ಥಲ ಭಾವಸ್ಥಲ
ಪರಿಪೂರ್ಣವಾಗಿ `ಲಿಂಗದಷ್ಟಸ್ಯ ದೇಹನಂ’,
ಸರ್ವಾಂಗದೊಳಗೆಲ್ಲ ಲಿಂಗಮಯವಾಗಿ
ಲಿಂಗಲಿಂಗ ಸಂಗಸಂಗಯೆಂಬಾ ಪರಮಹರುಷದೊಳೋಲಾಡುತಿದ್ದೆನಲ್ಲಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./295
ಹೆಳವರ ನಡುವೆ ಅಂಧಕರ ನಡುವೆ ಮನೆಬೆಂದಂತೆ ಸಂಸಾರ.
ಅದು ಎಂತೆಂದರೆ : ಹೆಳವ ಅಡಿಯಿಟ್ಟು ನೊಂದಿಸಲಾರ, ಅಂಧಕ ಕಣ್ಣುಗಾಣ.
ಅಜ್ಞಾನವೆಂಬುದೆ ಅಂಧಕನ ತೆರ,ಸುಜ್ಞಾನವೆಂಬುದೆ ಹೆಳವನ ತೆರ.
ಅದು ಎಂತೆಂದರೆ : ಕರಣಗುಣ ಮನವಿಕಾರಂಗಳು ಹೆಚ್ಚಿಗೆ ನಡೆಯದೆ,
ಕೈಕಾಲು ಮುರಿದು ಅಡಿಯಿಡಗೊಡದಕಾರಣ
ಹೆಳವನೆಂಬ ಭಾವ.
ಇಂತಿವರಿಬ್ಬರ ನಡುವೆ ಬೇವ ಮನೆಯೆಂದರೆ
ಪಂಚಭೂತಸಂಬಂಧವಪ್ಪ ದೇಹ.
ಈ ದೇಹಕ್ಕೆ ತಾಪತ್ರಯವೆಂಬ ಅಗ್ನಿ ಹತ್ತಿ
ಸುಡುತ್ತಿದ್ದಕಾರಣದಿ ಅಗ್ನಿಯೆಂಬ ನಾಮ.
ಮರಕೆ ಮರ ಹೊಸದು ಅಗ್ನಿ ಬಿದ್ದಂತೆ
ತನುಗುಣ ಮನಗುಣ ಹೊಸೆದಾಡಿ ಕಾಯದೊಳುರಿದುರಿದು
ಬೆಂದು ಜೀವ ಘೋರಸಂಸಾರ.
ಅದು ಎಂತೆಂದರೆ : ಸಾಕ್ಷಿ : “ಸಂಸಾರದುಃಖಕಾಂತಾರೇ ನಿಮಗ್ನಶ್ಚ ಮಹಾತಪೇ |
ಚಕ್ರದ್ಭ್ರಮತೇ ದೇವಿ ಲಿಂಗಂ ನೈವ ಚ ದಶರ್ಿತಂ || ”
ಎಂದುದಾಗಿ, ಇಂತಪ್ಪ ಸಂಸಾರವನೆಂತು ನೀಗುವೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ ? /296
ಹೊತ್ತು ಹೋಗಿ ಕತ್ತಲೆಯಾಗದಕಿಂದ ಮೊದಲೆ,
ಇತ್ತಣ ಮಾಯವಳದು ಅತ್ತಣ ರೂಹು ನೆಲೆಗೊಂಡು
ಹೊತ್ತಾರೆ ಬೆಯಿಗೆ[ಯೆ]ಂಬ ಮಿಥ್ಯವನಳಿದು,
ಸಂಸಾರಬಂಧನವ ಕಳೆದು ನಿರ್ಬಂಧನವಶರಾಗಿಪ್ಪ
ಸತ್ಯಸದಾಚಾರಿಗಳ ಪಾದವ ತೋರಿ ಬದುಕಿಸು.
ಗಡಗಡನುರುಳುವೆ ಎನ್ನವಸರವಂ ಕಳೆಯಯ್ಯ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /297
ಹೊನ್ನಿನಾಸೆ ತನುವಿನೊಳಿಂಬುಗೊಂಡು ಪನ್ನಗಧರ ನಿಮ್ಮ ಮರೆಸಿತಯ್ಯ.
ಹೆಣ್ಣಿನ ವಿಷಯ ಮನದೊಳಿಂಬುಗೊಂಡು ಪನ್ನಗಧರ
ನಿಮ್ಮಿಂದರಿವ ಜ್ಞಾನವ ಮರೆಸಿತಯ್ಯ.
ಮಣ್ಣಿನಾಸೆ ತನು ಮನ ಬುದ್ಧಿಯೊಳಿಂಬುಗೊಂಡು
ಜ್ಞಾನದಿಂದರಿವ ಪುಣ್ಯಫಲವ ಮರೆಸಿತಯ್ಯ.
ಹೊನ್ನು ಹೆಣ್ಣು ಮಣ್ಣು ಮೂರೆಂಬ ಭಿನ್ನ ವಿಷಯವ ನೆಚ್ಚಿ.
ಸಂಸಾರಸಾಗರದೊಳು ಮುಳುಗಿದವರು ನಿಮ್ಮನೆತ್ತ ಬಲ್ಲರಯ್ಯ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /298
ಹೊನ್ನು ಹೆಣ್ಣು ಮಣ್ಣಿನ ಮೇಲೆ ಮೋಹವಿಪ್ಪಂತೆ
ಗುರು ಲಿಂಗ ಜಂಗಮದ ಮೇಲೆ ಮೋಹವಿಲ್ಲ.
ಧನ ಧಾನ್ಯವ ಗಳಿಸುವಂತೆ
ಲಿಂಗ ಜಂಗಮ ಗಳಿಸಲರಿಯರು.
ಗುರು ಲಿಂಗ ಜಂಗಮ ಕಂಡರೆ, ವೈರಿಯ ಕಂಡಂತೆ ಕಾಣ್ಬರು.
ಮುಂದಕ್ಕೆ ಹೋಹ ಬಿಟ್ಟು, ಹೆದರಿಸಿ ಚೆದುರಿಸಿ
ನುಡಿದು ನಿಂದಿಸುವ ಪಾಪಿಯ ಕೊರಳಲ್ಲಿಪ್ಪುದು
ಶಿಲೆಯಲ್ಲದೆ ಲಿಂಗವಲ್ಲ.
ಅದು ಎಂತೆಂದೊಡೆ : ಆಡಿನ ಕೊರಳಲ್ಲಿ ಮೊಲೆ ಇದ್ದರೇನು
ಅಮೃತವ ಕರೆಯಬಲ್ಲುದೆ ? ಕರೆಯಲರಿಯದು.
ಕಡಿಯಲರಿಯದವ ಹಿಡಿದರೇನಾಯುಧವ ?
ಮಡದಿ ಮಕ್ಕಳು, ಅರ್ಥಭಾಗ್ಯವ ನೆಚ್ಚಿಪ್ಪ ಪಾಪಿಗೆ
ಹೊನ್ನೆ ದೈವ, ಹೆಣ್ಣೆ ದೈವ, ಮಣ್ಣೆ ದೈವ.
ಅವನಿಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ
ಪಾದೋದಕವಿಲ್ಲ ಪ್ರಸಾದವಿಲ್ಲ ,
ನಿಮ್ಮ ಕೃಪೆಯೆಂಬುದು ಮುನ್ನವೆ ಇಲ್ಲ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./299
ಹೊಲೆಯೊಳು ಹುಟ್ಟಿ, ಹೊಲೆಯೊಳು ಬೆಳೆದು,
ಕುಲಮದಕೆ ಹೋರಾಡುತಿಪ್ಪರಯ್ಯಾ.
ಅದು ಎಂತೆಂದರೆ : ಹುಟ್ಟುವುದು ಹೊಲೆ, ಹೊಂದುವುದು ಹೊಲೆ.
ಬಾಹ್ಯದ ಹೊಲೆಯ ಹೇಳೇನೆಂದರಳವಲ್ಲ.
ಕರುಳ ಜಾಳಿಗೆ, ಅಮೇಧ್ಯದ ಹುತ್ತು , ರಕ್ತದ ಮಡು,
ಮಾಂಸದ ಕೊಗ್ಗೆಸರು, ಕೀವಿನ ಹೊಲಸು,
ಕ್ರಿಮಿಕೀಟಕ ಜಂತಿನ ರಾಸಿ, ಎಲುವಿನ ಹಂಜರು,
ಚರ್ಮದ ಮೇಲುಹೊದಿಕೆ.
ಇಂತೀ ಹೊಲೆಯೊಳು ಜನಿತವಾದ ಕರ್ಮಕಾಯವೆಂದರಿಯದೆ
ಕುಲಮದಕ್ಕೆ ಹೋರಾಡುವರು.
ಕುಲವ ಕೇಳೇನೆಂದರೆ,
ಇಂದ್ರ ಶೂದ್ರ, ಬ್ರಹ್ಮ ವೈಶ್ಯ, ವಿಷ್ಣು ಕ್ಷತ್ರಿಯ,
ಈಶ್ವರ ಬ್ರಾಹ್ಮಣ.
ಸಾಕ್ಷಿ :“ಪಿತಾಮಹಸ್ತು ವೈಶ್ಯಸ್ಯ ಕ್ಷತ್ರಿಯಸ್ಯ ಪರೋ ಹರಿಃ |
ಬ್ರಾಹ್ಮಣೋ ಭಗವಾನ್ ರುದ್ರಃ ಇಂದ್ರಃ ಶೂದ್ರಕುಲಸ್ಯ ಚ || ”
ಎಂದುದಾಗಿ, ಇನ್ನುಳಿದ ಮುನಿಕುಲ ಕೇಳ್ವರೆ-
ಹೊಲೆಮಾದಿಗರ ಅಗಸರ ಬಸುರಲ್ಲಿ ಬಂದು
ಶಿವನ ಪೂಜೆಯ ಮಾಡಿ, ಶಿವಕುಲವಾದುದನರಿಯದೆ
ಕುಲಕ್ಕೆ ಹೋರಾಡುತಿಪ್ಪರಯ್ಯಾ.
ಸಾಕ್ಷಿ:“ಚಾಂಡಾಲವಾಟಿಕಾಯಾಂ ವಾ ಶಿವಭಕ್ತಃ ಸ್ಥಿತೋ ಯದಿ |
ತತ್ಶ್ರೇಣೀ ಶಿವಲೋಕಸ್ಯ ತದ್ಗೃಹಂ ಶಿವಮಂದಿರಂ ||
ಯಸ್ಯ ಚಿತ್ತಂ ಶಿವೇ ಲೀನಂ ತಸ್ಯ ಜಾತಿಃ ಕರೋತಿ ಕಿಂ |
ಶಿವಲಿಂಗಶೀಲಬುದ್ಧಿಂ ಕುರ್ವಣಮೇವ ಪಾತಕಂ ||”
ಎಂದುದಾಗಿ, ಇದುಕಾರಣ,
ಶಿವಕುಲವಾದವರೊಳು ಕುಲವನರಸುವರುಂಟೆ ? ಅರಸಲಿಲ್ಲ.
ಅರಸಿದರೆ ಪಾತಕ. ಅದಕ್ಕೆ ಸಾಕ್ಷಿ : “ಶಿವಕುಲಂ ಶಿವಭಕ್ತಸ್ಯ ಅನ್ಯಾಶ್ರಯೇಷು ನಿಂದಕಃ |
ಶ್ವಾನಯೋನಿಶತಂ ಗತ್ವಾ ರೌರವಂ ನರಕಂ ವ್ರಜೇತ್ ||”
ಎಂದುದಾಗಿ, ಪರಮಾತ್ಮಾ, ನಿನ್ನ ಕುಲವಾದವರಿಗೆ ಕುಲವನೆತ್ತಿನುಡಿವ
ಪಾತಕರನೆನಗೊಮ್ಮೆ ತೋರದಿರು
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ./300
Categories
ಶರಣರು / Sharanaru

ಹೇಮಗಲ್ಲ ಹಂಪ

ಅಂಕಿತ: ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.

ಗುರುವಿನಲ್ಲಿ ಲಿಂಗವುಂಟು, ಜಂಗಮವುಂಟೆಂದು
ಗುರುಭಕ್ತಿಯ ಮಾಡೆಂದು ತೋರಿದಾತ ನಮ್ಮ ಬಸವಣ್ಣನಯ್ಯಾ.
ಲಿಂಗದಲ್ಲಿ ಜಂಗಮವುಂಟೆಂದು, ಗುರುವುಂಟೆಂದು
ಲಿಂಗಭಕ್ತಿಯ ಮಾಡೆಂದು ತೋರಿದಾತ ನಮ್ಮ ಬಸವಣ್ಣನಯ್ಯಾ.
ಜಂಗಮದಲ್ಲಿ ಗುರುವುಂಟು, ಲಿಂಗವುಂಟು
ಜಂಗಮ ಭಕ್ತಿಯ ಮಾಡೆಂದು ತೋರಿದಾತ ನಮ್ಮ ಬಸವಣ್ಣನಯ್ಯಾ.
ಒಂದೇ ಮೂರ್ತಿ ಮೂರೆಂದಾತ ನಮ್ಮ ಬಸವಣ್ಣನಯ್ಯಾ.
`ಏಕಮೂರ್ತಿ ತ್ರಯೋರ್ಭಾಗಾಃ’ ಎಂದುದಾಗಿ,
ಗುರು ಲಿಂಗಜಂಗಮವಾದಾತ ಒಬ್ಬನೆ ಶಿವನೆಂದು
ಪ್ರಸಾರ ಮಾಡಿ ಭಕ್ತಿಯ ಬೆಳಸಿದಾತ ನಮ್ಮ ಬಸವಣ್ಣನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /1267

ಬಹುಶ: ಹಂಪೆಯ ಪರಿಸರಕ್ಕೆ ಸೇರಿದವನಾದ ಈತನ ಸ್ಥಳ ಹೇಮಗಲ್ಲು. ಕಾಲ 17ನೇ ಶತಮಾನ. ಲಿಂಗಾಯತ ಸಂಪ್ರದಾಯದಲ್ಲಿ ಮುಖ್ಯವಾದ ‘ಪಡುವಿಡಿ’ ಬಗೆಗೆ ಸೇರಿದವನು. ರಾಜೇಶ್ವರ ಈತನ ಗುರು. ಅಂಕಿತ-ಸಿದ್ಧಮಲ್ಲಿನಾಥ.

1080
ಕಾಮವುಳ್ಳವ ಭಕ್ತನಲ್ಲ , ಕ್ರೋಧವುಳ್ಳವ ಮಹೇಶ್ವರನಲ್ಲ ,
ಲೋಭವುಳ್ಳವ ಪ್ರಸಾದಿಯಲ್ಲ , ಮೋಹವುಳ್ಳವ ಪ್ರಾಣಲಿಂಗಿಯಲ್ಲ ,
ಮದವುಳ್ಳವ ಶರಣನಲ್ಲ , ಮತ್ಸರವುಳ್ಳವ ಐಕ್ಯನಲ್ಲ.
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವುಳ್ಳನಕ
ಎಂತು ಭಕ್ತನೆಂಬೆ ? ಎಂತು ಮಹೇಶ್ವರನೆಂಬೆ ?
ಎಂತು ಪ್ರಸಾದಿಯೆಂಬೆ ? ಎಂತು ಪ್ರಾಣಲಿಂಗಿಯೆಂಬೆ ?
ಎಂತು ಶರಣನೆಂಬೆ ? ಎಂತು ಐಕ್ಯನೆಂಬೆ ?
ಬರಿಯ ಮಾತಿನ ಬಣಗರು
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.

1081
ಕಾಮವಿಲ್ಲದಾತ ಭಕ್ತ , ಕ್ರೋಧವಿಲ್ಲದಾತ ಮಹೇಶ್ವರ,
ಲೋಭವಿಲ್ಲದಾತ ಪ್ರಸಾದಿ, ಮೋಹವಿಲ್ಲದಾತ ಪ್ರಾಣಲಿಂಗಿ,
ಮದವಿಲ್ಲದಾತ ಶರಣ, ಮತ್ಸರವಿಲ್ಲದಾತ ಐಕ್ಯ.
ಅದು ಎಂತೆಂದೊಡೆ : ಕಾಮವಿಲ್ಲದ ಭಕ್ತ ಬಸವಣ್ಣ ,
ಕ್ರೋಧವಿಲ್ಲದ ಮಹೇಶ್ವರ ಪ್ರಭುರಾಯ,
ಲೋಭವಿಲ್ಲದ ಪ್ರಸಾದಿ ಚೆನ್ನಬಸವೇಶ್ವರದೇವರು,
ಮೋಹವಿಲ್ಲದ ಪ್ರಾಣಲಿಂಗಿ ಘಟ್ಟಿವಾಳಯ್ಯ,
ಮದವಿಲ್ಲದ ಶರಣ ಮೋಳಿಗೆಯ್ಯನವರು,
ಮತ್ಸರವಿಲ್ಲದ ಲಿಂಗೈಕ್ಯಳು ನೀಲಲೋಚನ ತಾಯಿ.
ಇಂತಿವರು ಮುಖ್ಯವಾದ ಏಳನೂರ ಎಪ್ಪತ್ತು ಅಮರಗಣಂಗಳ
ಪಾದಕ್ಕೆ ನಮೋ ನಮೋ ಎಂಬೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.

‘ಹೇಮಗಲ್ಲ ಷಟ್ಸ್ಥಲ’ ಈತನ ಕೃತಿಯ ಹೆಸರು. ಹೆಸರೇ ಸೂಚಿಸುವಂತೆ ಆರು ಸ್ಥಲಗಳಲ್ಲಿ ವಚನಗಳನ್ನು ಸಂಕಲಿಸಿರಬಹುದು. ಆದರೆ ಈಗ ದೊರೆತ ಕೃತಿ ಭಕ್ತಸ್ಥಲಕ್ಕೆ ನಿಂತಿದ್ದು. ಇದರಲ್ಲಿ 23 ಸ್ಥಲಗಳಿವೆ. ಒಟ್ಟು 282 ವಚನ, 21 ಸ್ವರವಚನ, 1 ರಗಳೆ, 7 ಕಂದ ಪದ್ಯಗಳು ಸಮಾವೇಶಗೊಂಡಿವೆ. ಷಟ್ಸ್ಥಲ ತತ್ವಪ್ರತಿಪಾದನೆಯೇ ಇದರ ಪರಮಗುರಿ.

Categories
ಶರಣರು / Sharanaru

ಹುಂಜಿನ ಕಾಳಗದ ದಾಸಯ್ಯ

ಅಂಕಿತ: ಚಂದ್ರಚೂಡೇಶ್ವರಲಿಂಗವೆ
ಕಾಯಕ: ಹುಂಜಿನ ಕಾಳಗ ಆಡಿಸುವವನು

೧೧೯೨
ಹುಂಜ ಸೋತಡೆ ಹಿಡಿವೆ.
ವ್ರತ ಹೋದವರ ನೋಡೆನು,
ಚಂದ್ರಚೂಡೇಶ್ವರಲಿಂಗವೆ.

ಹುಂಜಿನ ಕಾಳಗ ಏರ್ಪಡಿಸುವುದು ಈತನ ಕಾಯಕ. ಕಾಲ-೧೧೬೦. ‘ಚಂದ್ರಚೂಡೇಶ್ವರ ಲಿಂಗ’ ಅಂಕಿತದಲ್ಲಿ ಒಂದು ವಚನ ಮಾತ್ರ ದೊರೆತಿದೆ. ಇದರಲ್ಲಿ ಇವನ ವೃತ್ತಿಸೂಚನೆ, ವ್ರತನಿಷ್ಠುರತೆ, ವ್ರತಹೀನರ ನಿಂದೆ ವ್ಯಕ್ತವಾಗಿದೆ. `ವ್ರತ ಹೋದವರ ನೋಡೆನು’ ಎನ್ನುವ ಮೂಲಕ ವ್ರತದ ಮೇಲಿನ ನಿಷ್ಠೆಯನ್ನು ಪ್ರಕಟಪಡಿಸಿರುವನು. ಮೂರೇ ಸಾಲಿನ ವಚನ ಇವನದು.

Categories
ಶರಣರು / Sharanaru

ಹಾದರಕಾಯಕದ ಮಾರಯ್ಯಗಳ ಪುಣ್ಯಸ್ತ್ರೀ ಗಂಗಮ್ಮ

ಅಂಕಿತ: ಗಂಗೇಶ್ವರ
ಕಾಯಕ: ಶರಣೆಯಾಗುವುದಕ್ಕಿಂತ ಮುಂಚೆ ಹಾದರದ ಕಾಯಕ (ವೇಶ್ಯೆ)

೧೩೪೯
ಆವ ಕಾಯಕವ ಮಾಡಿದಡೂ ಒಂದೆ ಕಾಯಕವಯ್ಯಾ.
ಆವ ವ್ರತವಾದಡೂ ಒಂದೆ ವ್ರತವಯ್ಯಾ.
ಆಯ ತಪ್ಪಿದಡೆ ಸಾವಿಲ್ಲ, ವ್ರತತಪ್ಪಿದಡೆ ಕೂಡಲಿಲ್ಲ.
ಕಾಕಪಿಕದಂತೆ ಕೂಡಲು ನಾಯಕನರಕ ಗಂಗೇಶ್ವರಲಿಂಗದಲ್ಲಿ.

ಈಕೆ ಹಾದರ ಕಾಯಕದ ಮಾರಯ್ಯನ ಸತಿ. ಕಾಲ-೧೧೬೦. ‘ಗಂಗೇಶ್ವರ’ ಅಂಕಿತದಲ್ಲಿ ಒಂದು ವಚನ ದೊರೆತಿದೆ. ಕಾಯಕ ಸಮಾನತೆ, ವ್ರತನಿಷ್ಠೆ, ಭಕ್ತರ ಗುಣ ಲಕ್ಷಣ, ಶರಣನ ಇರುವು ಅಪ್ರಾಮಾಣಿಕರ ದೂಷಣೆ, ಶರಣಸ್ತುತಿ ಇದರ ಮುಖ್ಯ ಆಶಯ.

Categories
ಶರಣರು / Sharanaru

ಹರಳಯ್ಯ ಮತ್ತು ಕಲ್ಯಾಣಮ್ಮ

Haralayya and Kalyanamma ಹರಳಯ್ಯ ಮತ್ತು ಕಲ್ಯಾಣಮ್ಮ

ಇಂದಿನ ಗುಲಬರ್ಗಾ ಜಿಲ್ಲೆಯ ಶಹಾಪೂರ ತಾಲ್ಲೂಕಿನಲ್ಲಿ ‘ಸಗರ’ ಎನ್ನುವ ಗ್ರಾಮವೊಂದಿದೆ. ಅಲ್ಲಿ ಹರಳಯ್ಯ ಮತ್ತು ಕಲ್ಯಾಣಮ್ಮ ಎಂಬ ದಂಪತಿಗಳು ವಾಸಿಸುತ್ತಿದ್ದರು. ತಮ್ಮ ಕುಲ ಕಸುಬಾದ ಜೋಡು (ಪಾದರಕ್ಷೆ) ತಯಾರಿಕೆಯಲ್ಲಿ ತೊಡಗಿದ್ದ, ಇವರು ಕಲ್ಯಾಣ ನಾಡಿನ ಗುರು ಬಸವಣ್ಣನವರ ಕೀರ್ತಿಯನ್ನೂ, ಅವರ ದಲಿತ ಪರ ಕಾಳಜಿ- ಕಕ್ಕುಲಾತಿಯನ್ನು, ಅವರಿವರ ಬಾಯಿಯಿಂದ ಕೇಳುತ್ತಲೇ ಇದ್ದರು. ತಮ್ಮೂರು ಹಾಗೂ ಸುತ್ತಮತ್ತಲಿನ ಕೈ-ಕಸಬುದಾರರು, ಬಸವಣ್ಣನ ಪ್ರಸಿದ್ಧಿಯನ್ನು ಕೇಳಿಸಿಕೊಂಡವರು, ಕಲ್ಯಾಣ ನಾಡಿನತ್ತ ವಲಸೆ ಹೋಗುತ್ತಿರುವುದನ್ನೂ ನೋಡುತ್ತಿದ್ದರು.

ಕಲ್ಯಾಣ ನಾಡಿಗೆ ಹೋಗಿ ಬಂದವರಂತೂ, ಗುರು ಬಸವಣ್ಣನವರನ್ನು ಹೊಗಳಿದ್ದೋ ಹೊಗಳಿದ್ದು. ಕಾಯಕ ಜೀವಿಗಳ ಕುರಿತು ಅಣ್ಣನಿಗಿರುವ ಅಭಿಮಾನ ಮತ್ತು ಅಪೂರ್ವವಾದ ಗೌರವಕ್ಕೆ, ಮಾರು ಹೋಗದವರೇ ಪಾಪಿಗಳು, ಎನ್ನುವಷ್ಟು ಬಸವನ ಪ್ರಭಾವ ಹಬ್ಬತೊಡಗಿತು. ಹರಳಯ್ಯ ದಂಪತಿಗಳು ಇದೆಲ್ಲವನ್ನು ಶಾಂತ ಚಿತ್ತರಾಗಿ ಗಮನಿಸುತ್ತಲೇ ಇದ್ದರು. ತಾವಾಯಿತು ತಮ್ಮ ಹಿರಿಯರಾಯಿತು, ತಲೆತಲಾಂತರದಿಂದ ಮಾನವ ಶರೀರದ ಅಡಿಪಾಯದಂತಿರುವ ಪಾದಗಳಿಗೆ, ಪಾದರಕ್ಷೆಗಳನ್ನು ಮಾಡಿ ಕೊಡುವುದೇ ಆಯಿತು. ಸಮಾಜ ತಮ್ಮನ್ನು ಯಾವ ಕಾಲಕ್ಕೂ ಗೌರವದಿಂದ ಕಾಣುವ ಮಾತು, ಅದೊಂದು ಕನಸಿನ ಸಂಗತಿಯೇ ಸರಿಯೆಂದು, ತೀರ್ಮಾನಿಸಿದ ಹರಳಯ್ಯ್ಯ ದಂಪತಿಗಳು, ತಾವೂ ಗುರು ಬಸವಣ್ಣನ ನಾಡಿಗೆ ಹೊರಡಲು ಸನ್ನದ್ಧರಾಗಿಯೇ ಬಿಟ್ಟರು.

ಶರಣು ಶರಣಾರ್ಥಿಗಳು

ಒಮ್ಮೆ ಕಲ್ಯಾಣ ಪಟ್ಟಣದ ರಾಜ ಬೀದಿಯಲ್ಲಿ, ದಿನ ನಿತ್ಯದಂತೆ ಹರಳಯ್ಯನವರು ಪಾದರಕ್ಷೆಗಳನ್ನು ಮಾರಿಕೊಂಡು ಬರುತ್ತಿದ್ದರು. ಆಕಸ್ಮಿಕವೋ ಏನೋ, ಅದೇ ಸಮಯಕ್ಕೆ ಗುರು ಬಸವಣ್ಣನವರು ಹರಳಯ್ಯನವರಿಗೆದುರಾದರು. ಇವರನ್ನು ಕಂಡ ತಕ್ಷಣ್ ಹರಳಯ್ಯನವರು; “ಗುರು ಬಸವೇಶ್ವರ ಶರಣು ತಂದೆ ಶರಣು” ಎಂದು ಕೈ ಮುಗಿದರು. ಅದಕ್ಕೆ ಪ್ರತಿಯಾಗಿ ಬಸವಣ್ಣನವರು, “ಶರಣು ಶರಣಾರ್ಥಿಗಳು ಹರಳಯ್ಯನವರಿಗೆ”; ಎಂದು ಬಾಗಿ ನಮಸ್ಕರಿಸಿದರು. ಮೊದಲೇ ಬಸವಣ್ಣನವರು; “ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ” ಎಂದು ನಂಬಿಕೊಂಡು ಬಂದವರು.

ತನ್ನ ಒಂದು “ಶರಣು” ಸ್ವೀಕರಿಸಿದರೆ ತನ್ನ ಜನ್ಮವೇ ಪಾವನವಾಯಿತೆಂದು ತಿಳಿದ ಹರಳಯ್ಯನನವರಿಗೆ; ಗುರು ಬಸವಣ್ಣನವರು ಪ್ರತಿಯಾಗಿ ಎರಡು ಬಾರಿ ಶರಣು ಹೇಳಿದ್ದು ಕೇಳಿಸಿಕೊಂಡಾಗ; ದಿಕ್ಕು ತೋಚದಂತಾಯಿತು; ಆಕಾಶ ಕಳಚಿ ಮೈ ಮೇಲೆ ಬಿದ್ದಂತಾಯಿತು. ಇದು ಕನಸೋ ನನಸೋ ಒಂದೂ ತಿಳಿಯದಾಯಿತು. ಯಾಕೆಂದರೆ ಇಲ್ಲಿಯವರೆಗೂ ಊರಲ್ಲಿ ಸವರ್ಣೀಯರು, ತನಗೆ ಹಾಗೂ ತನ್ನ ಕುಲ ಬಾಂಧವರಿಗೆ ನಮಸ್ಕಾರ ಮಾಡುವುದಂತೂ ಒತ್ತಟ್ಟಿಗಿರಲಿ; ನೆರಳೂ ಕೂಡಾ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದವರೆಲ್ಲಿ? ಸ್ವತಃ ಪ್ರಧಾನಿಯಾದ, ಹುಟ್ಟು ಬ್ರಾಹ್ಮಣನಾದ ಹಾಗೂ ಕಲ್ಯಾಣ ರಾಜ್ಯದ ಬಿಜ್ಜಳ ರಾಜನ ಅಳಿಯನಾದ; ಗುರು ಬಸವಣ್ಣ ತನಗೆ ಎರಡು ಸಲ ಶರಣು ಅನ್ನುವುದೆಂದರೇನು? ಎಂಬ ಪ್ರಶ್ನೆ ಮೂಡಿತು.

ಆತಂಕಗೊಂಡ ಕಲ್ಯಾಣಮ್ಮ.

ಒಂದು ರಾಜ್ಯದ ಪ್ರಧಾನ ಮಂತ್ರಿಯಿಂದ, ಎರಡು ಬಾರಿ ನಮಸ್ಕರಿಸಿಕೊಂಡ ಸಂಗತಿಯನ್ನು, ಮನದಲ್ಲೇ ಮೆಲಕು ಹಾಕುತ್ತ, ಮನೆಗೆ ಬಂದ ಹರಳಯ್ಯನರನ್ನು ಇದಿರುಗೊಂಡ ಕಲ್ಯಾಣಮ್ಮ, ಕೈ ಕಾಲು ಮುಖ ತೊಳೆದುಕೊಳ್ಳಲು, ನೀರು ಕೊಡಲು ಹೋದಾಗ, ಹರಳಯ್ಯನವರ ಚಿಂತಾಕ್ರಾಂತವಾದ ಮುಖ ಗಮನಿಸಿ ತಾನೂ ಆತಂಕಗೊಳ್ಳುತ್ತಾಳೆ.

ಹರಳಯ್ಯನವರ ಮನದಾಳದಲ್ಲಿ, ಗುರು ಬಸವಣ್ಣನವರು ಎರಡು ಬಾರಿ ಶರಣು ಹೇಳಿದ ಸಂಗತಿಯು, ತಲೆ ತಿನ್ನುತ್ತಲೇ ಇತ್ತು. ಮಾನಸಿಕವಾಗಿ ಹೊರಲಾರದ ಹೊರೆಯನ್ನು ಹೇಗೆ ಇಳಿಸಿಕೊಳ್ಳುವುದು? ಆ ಭಾರದಿಂದ ಮುಕ್ತಿ ಪಡೆಯುವ ಮಾರ್ಗ ಯಾವುದೆಂದು, ಚಿಂತಿಸುತ್ತಲೇ ಇದ್ದ ಪತಿಗೆ ತಕ್ಕ ಸತಿಯಾದ ಕಲ್ಯಾಣಮ್ಮ, ಹರಳಯ್ಯನವರ ಧರ್ಮ ಪತ್ನಿ. ಪತಿಯ ಹೆಜ್ಜೆಯಲ್ಲಿ ಹೆಜ್ಜೆಯಿಟ್ಟು ನಡೆಯುವ ಸದ್ಗೃಹಿಣಿ. ಗಂಡನ ಚಿಂತಾಕ್ರಾಂತಕ್ಕೆ ತಾನೂ ಖಿನ್ನವದಳಾಗಿ ಕಾರಣ ತಿಳಿಯಲು ಯತ್ನಿಸಿದಳು. ಉಹೂ ಹರಳಯ್ಯ ಜಪ್ಪೆನ್ನುತ್ತಿಲ್ಲ. ಕೊನೆಗೂ ಬಾಯಿ ಬಿಟ್ಟ ಹರಳಯ್ಯ, ತಾನು ದಾರಿಯಲ್ಲಿ ಬರುವಾಗಿನ ಘಟನೆಯನ್ನೆಲ್ಲ, ಸವಿವರವಾಗಿ ಪತ್ನಿಗೆ ವಿವರಿಸಿ ಹೇಳಿ ಮೂಕವಿಸ್ಮಿತನಾದ. ಮುಂದೆ ಯಾವುದಕ್ಕೂ ಬಾಯಿಯಿಂದ ಮಾತೇ ಹೊರಡುತ್ತಿಲ್ಲ. ಪತಿಯ ಮುಗ್ಧತೆ ಹಾಗೂ ದುಗುಡವನ್ನರಿತ ಕಲ್ಯಾಣಮ್ಮ ಕೊನೆಗೆ; “ಆ ಗುರು ಮಾಡಿದ್ದುದಾಗಲಿ, ಹೀಗೆ ಚಿಂತೆ ಮಾಡುತ್ತ ಕಾಲ ಹರಣ ಮಾಡುವುದು ತರವಲ್ಲ; ಅದಕ್ಕೇನಾದರೂ ಒಂದು ಮಾರ್ಗೋಪಾಯ ಹುಡುಕಿದರಾಯಿತು; ಎದ್ದೇಳಿ ಮೊದಲು ಕೈ ಕಾಲು ಮುಖ ತೊಳೆದುಕೊಂಡು ಊಟಕ್ಕೆ ಬನ್ನಿ”ಎಂದಾಗ, ಪತಿಗೆ ಎಲ್ಲೋ ಒಂದು ಕಡೆ ಕಪ್ಪು ಮೋಡದಲ್ಲೊಂದು ಬೆಳ್ಳಿಯ ಕೋಲ್ಮಿಂಚು ಕಂಡಂತಾಯಿತು.

ಪರಿಹಾರ ಕಂಡುಕೊಂಡ ದಂಪತಿಗಳು

ಒಂದೆರಡು ದಿನಗಳ ತರುವಾಯ ಕಲ್ಯಾಣಮ್ಮ, “ಪತಿದೇವಾ ಚಿಂತಸದಿರಿ”, ಇದೋ ಗುರು ಬಸವಣ್ಣನವರಿಗೆ ಸುಂದರತರವಾದ ಚಮ್ಮಾವುಗೆಗಳನ್ನು ಮಾಡೋಣ. ಆದರೆ ಸಾಮಾನ್ಯ ರೀತಿಯಾಗಿ ಬೇಡ. ಚಮ್ಮಾವುಗೆಯ ಅಟ್ಟಿಯಲ್ಲಿ ನಮ್ಮ ತೊಡೆಯ ಚರ್ಮವನ್ನು ಸೇರಿಸೋಣ. ಹೀಗೆ ಪವಿತ್ರ ಮನದಿಂದ ತಯಾರಿಸಿದ ಪಾದರಕ್ಷೆಗಳನ್ನು ಗುರು ಬಸವಣ್ಣನವರು ಮೆಟ್ಟಿದರೆ ನಾವು ಪುನೀತರಾಗುವುದಿಲ್ಲವೇ?” ಎಂದು ಪತಿಗೆ ಸೂಕ್ತ ಸಲಹೆ ನೀಡಿದ ತಕ್ಷಣ, ಹರಳಯ್ಯನವರಿಗೆ ಒಪ್ಪಿಗೆಯಾಯಿತು.
ಬಸವನಾಮ ಸ್ಮರಿಸುತ್ತ, ಹರಳಯ್ಯನವರು ತಮ್ಮ ಬಲ ತೊಡೆಯ, ಕಲ್ಯಾಣಮ್ಮನವರು ತಮ್ಮ ಎಡ ತೊಡೆಯ ಚರ್ಮ ಕೊಯ್ದು ಅಟ್ಟೆಯಲ್ಲಿ ಸೇರಿಸಿದರು.
ಮರುದಿನವೆ ಹರಳಯ್ಯ ಕೊರೆದ ಬಲದೊಡಿ ಚರ್ಮ
ಹರನೆಂದು ಮಡದಿಯೆಡದೊಡೆಯ ತಾ ಕೊಯ್ದು
ಭರದಿ ಹದಮಾಡಿ ಒಣಗಿಸಿದ |
ಎಂದು ಮುಂತಾಗಿ ಆ ಕಾಲದ ಜನಪದ ಕವಿಯೊಬ್ಬ ಹೃದಯಸ್ಪರ್ಶಿಯಾಗಿ ತ್ರಿಪದಿಗಳನ್ನು ಕಟ್ಟಿ ಹಾಡಿದ್ದಾನೆ.

ಪಾದರಕ್ಷೆಗಳನ್ನು ತಯಾರಿಸುವ ಅನುಭವವನ್ನೆಲ್ಲ ಎರಕಹೊಯ್ದು, ತಮ್ಮ ಕಲಾ ನೈಪುಣ್ಯವನ್ನೆಲ್ಲ ವಿನಿಯೋಗಿಸಿ ಚಮ್ಮಾವುಗೆಗಳನ್ನು ಸಿದ್ಧಪಡಿಸಿದರು. ಭಕ್ತಿ ಭಾಂಡಾರಿ ಬಸವೇಶ್ವರರು ಮೆಟ್ಟಿದರೆ, ತಾವು ಪುನೀತರಾಗುವೆವೆಂದು ಹರಳಯ್ಯ ದಂಪತಿಗಳು ಆನಂದಭರಿತರಾದರು.

ಗುರು ಬಸವಣ್ಣನ ಮನೆಯತ್ತ ಹರಳಯ್ಯ

ಸಡಗರದಿಂದ ರೇಶ್ಮೆಯ ವಸ್ತ್ರವನ್ನು ಚಮ್ಮಾವುಗೆಗಳಿಗೆ ಹೊದಿಸಿ, ಭಯ ಭಕ್ತಿಯಿಂದ ಗುರು ಬಸವಣ್ಣನನ್ನು ಸ್ಮರಿಸುತ್ತ ಮಹಾಮನೆಗೆ ಹೊರಟರು. ಬಸವಣ್ಣನವರು ದೂರದಿಂದಲೇ ಕಲ್ಯಾಣಮ್ಮ ಮತ್ತು ಹರಳಯ್ಯನವರನ್ನು ಕಂಡು, ಪತ್ನಿ ಸಮೇತರಾಗಿ ಬಂದು ಇದಿರ್ಗೊಂಡು, ಕೈಕಾಲು ಮುಖ ತೊಳೆಯಲು ನೀರಿತ್ತು, ಸತ್ಕರಿಸಿ ಒಳಗೆ ಕರೆದೊಯ್ದರು. ಹರಳಯ್ಯನವರು ತಮ್ಮಲ್ಲಿಗೆ ಆಗಮಿಸಿದ ಕಾರಣವನ್ನು ಕೇಳಿದಾಗ, ಭಾವ ಪುನೀತರಾದ ಹರಳಯ್ಯನವರು, ತಾವು ತಂದ ಚಮ್ಮಾವುಗೆಗಳನ್ನು ಗುರು ಬಸವಣ್ಣನವರಿಗೆ ತೋರಿಸಿ, ಅವನ್ನು ಸ್ವೀಕರಿಸಬೇಕೆಂದು ಬಹು ನಮೃತೆಯಿಂದ ಬೇಡಿಕೊಂಡರು.

ಹರಳಯ್ಯನವರು ಈ ಚಮ್ಮಾವುಗೆಗಳನ್ನು ಒಯ್ದು ಬಸವಣ್ಣನವರಿಗೆ ಕೊಟ್ಟಾಗ, ಅವರು ಭಾವಪರವಶರಾಗಿ, ಅವುಗಳನ್ನು ಮೆಟ್ಟಿಕೊಳ್ಳದೇ ಭಯ ಭಕ್ತಿಯಿಂದ, ತಮ್ಮ ತಲೆಯ ಮೇಲೆ ಇಟ್ಟುಕೊಂಡು, ’ಇವು ದೇವರ ಪಾದರಕ್ಷೆಗಳು’ ಎಂದರು.

ನಿಮ್ಮ ಶರಣರ ಚಮ್ಮಾವುಗೆಗೆ ಪೃಥ್ವಿ ಸಮಬಾರದು;
ಸರಿಯಲ್ಲ ನೋಡಾ.
ಕೂಡಲಸಂಗಮದೇವಾ,
ನಿಮ್ಮ ಶರಣರ ಚಮ್ಮಾವುಗೆಗೆ! -ಬಸವಣ್ಣ [1]
“ಈ ಪವಿತ್ರ ಚಮ್ಮಾವುಗೆಗೆಳನ್ನು ಮೆಡುವ ಯೋಗ್ಯತೆ, ನನ್ನದಲ್ಲ ಕೂಡಲ ಸಂಗಮನಿಗಲ್ಲದೆ ನನಗೆ ಸಲ್ಲವು”; ಎಂದು ನುಡಿದಾಗ, ಹರಳಯ್ಯನವರು ಬಸಣ್ಣನವರ ಕಿಂಕರತ್ವವನ್ನು ಮನದಲ್ಲೇ ಕೊಂಡಾಡಿದರು.

ದುಡುಕಿದ ಮಧುವರಸ

ಒಂದು ಭಾರವನ್ನು ಇಳಿಸಿಕೊಳ್ಳಲು ಹೋಗಿ, ಅದರ ಹತ್ತಾರು ಪಟ್ಟು ಹೊರೆ ಹೊರುವುದು ಬರಬೇಕೆ? ಹರಳಯ್ಯನವರು ಖಿನ್ನ-ಮನಸ್ಕರಾದರು. ನೊಂದ ಮನದಿಂದ ಬಾಡಿದ ಮುಖದಿಂದ ಹರಳಯ್ಯ ದಂಪತಿಗಳು ಮನೆಯತ್ತ ಸಾಗಿದರು. ರಾಜ ಮಾರ್ಗದಲ್ಲಿ ಹಾಗೂ ಮಹಾಮನೆಯ ಘಟನೆಯ ವಿಚಾರದಲ್ಲಿ ಮುಳುಗಿ ದಾರಿ ಕ್ರಮಿಸುತ್ತಿದ್ದ ಶರಣ ದಂಪತಿಗಳಿಗೆ, ಗಡುಸಾದ ಹಾಗೂ ದರ್ಪಯುಕ್ತವಾದ ಒಂದು ಧ್ವನಿ ಕೇಳಿ ಎಚ್ಚರಾಗಿ ನೋಡಿದಾಗ, ಎದುರಿಗೆ ಮಧುವರಸರು ಕಂಡರು. ಹರಳಯ್ಯನವರ ತಲೆಯ ಮೇಲಿದ್ದ ಚಮ್ಮಾವುಗೆಗಳಿಗೆ ಮಾರು ಹೋಗಿ, ಅದನ್ನು ಮಧುವರಸರು ತಮಗೆ ಕೊಡುವಂತೆ ಕೇಳಿಕೊಂಡರು. ಹರಳಯ್ಯನವರು ಕೊಡಲು ನಿರಾಕರಿಸಿದಾಗ, ಮಧುವರಸರು ತಮ್ಮ ಸೇವಕರಿಂದ ಚಮ್ಮಾವುಗೆಗಳನ್ನು ಕಿತ್ತುಕೊಂಡು, ಹೆಮ್ಮೆ ಮಿಶ್ರಿತ ಅಹಂಕಾರದಿಂದ ಮೆಟ್ಟಿದರು. ಮೆಡುವುದೊಂದೇ ತಡ, ಮಧುವರಸರ ಮೈಯ್ಯಲ್ಲಾ ಉರುಪಿನಿಂದ ಭಯಂಕರವಾಗಿ ಉರಿಯ ಹತ್ತಿತು.

ಹರಳಯ್ಯನವರ ಮಾತಿಗೆ ಬೆಲೆ ಕೊಡದೆ, ಶರಣರ ಮಹಿಮೆಯನ್ನರಿಯದೆ, ಅವರನ್ನು ತಿರಸ್ಕರಿಸಿ ತಾನು ಮಾಡಿದ ಅಪರಾಧಕ್ಕಾಗಿ ಮಧುವರಸರಿಗೆ ದಿಕ್ಕೇ ತೋಚದಂತಾಯಿತು. ಮೈಯ್ಯುರಿ ಹೆಚ್ಚುತ್ತಲೇ ಇತ್ತು. ಯಾರ ಸಲಹೆ ಸೂಚನೆಗಳಾಗಲೀ, ಯಾವ ಪಂಡಿತ ವೈದ್ಯರ ಔಷಧೋಪಚಾರವಾಗಲೀ, ಮಧುವರಸರ ಶರೀರ ತಾಪಕ್ಕೆ ಶಾಂತಿಯನ್ನೀಯಲಿಲ್ಲ. ಖ್ಯಾತ-ವಿಖ್ಯಾತ, ದೇಶ-ವಿದೇಶಗಳ ತಜ್ಣ ವೈದ್ಯರ ಉಪಚಾರವೆಲ್ಲ, ಹೊಳೆಯಲ್ಲಿ ಹುಣಸೇ ಹಣ್ಣು ತೊಳೆದಂತಾಯಿತು. ಅದ್ಯಾವ ಪುಣ್ಯಾತ್ಮ ಸಲಹೆ ಕೊಟ್ಟನೋ ಏನೋ, ಹರಳಯ್ಯನವರ ಮನೆಯ “ಕರಿಬಾನಿ” ನೀರು ಚುಮುಕಿಸಿದರೆ ಮೈಯುರಿ ಪ್ರಶಾಂತಗೊಳ್ಳುವುದೆಂದರಂತೆ. ಹಾಗೆ ಮಾಡಿದಾಗ ಮಧುವರಸರ ಮೈ ತಾಪ ತಣ್ಣಗಾಗಿ ಯಥಾಸ್ಥಿತಿಗೆ ಮರಳಿತಂತೆ.

ಜಾತಿ ಮೀರಿದ ಮದುವೆ

ಈಗ ಮಧುವರಸರಿಗೆ ಶರಣರ ಜೀವನದ ಹಿರಿಮೆ ಹಾಗೂ ಮಹಿಮೆಯ ಅರಿವಾಯಿತು. ಅವರಿಗೆ ಜ್ಣಾನೋದಯವಾಯಿತು. ಅವರು ಹರಳಯ್ಯನವರಲ್ಲಿ ಕ್ಷಮೆ ಕೇಳಿದರು. ಅವರ ಶಿಷ್ಯರಾದರು, ಶಿವಭಕ್ತರಾದರು, ಗುರುಕರುಣೆಯಿಂದ ಲಿಂಗಧಾರಿಗಳಾದರು. ಶರಣ ಧರ್ಮವನ್ನು ಅಂಗೀಕರಿಸಿದ ಅವರು ತಮ್ಮ ಮುದ್ದು ಮಗಳು ಲಾವಣ್ಯವತಿಯನ್ನು ಹರಳಯ್ಯನವರ ಪುತ್ರ ಶೀಲವಂತನಿಗೆ ಮದುವೆ ಮಾಡಿ ಕೊಡಲು ಮುಂದಾದರು.
“ಶರಣರ ಮಗಳನ್ನು ಶರಣರ ಮಗನಿಗೆ ಕೊಡಲು ಯಾವ ತಪ್ಪೂ ಇಲ್ಲ” ಎಂದು ಅನುಭವ ಮಂಟಪವೂ ಒಪ್ಪಿಗೆ ನೀಡಿತು. ಆದರೆ ಲೋಕದ ಕಣ್ಣಿಗೆ ಇದು ಸಮಾಜ ವಿರೋಧಿ ಕಾರ್ಯವಾಗಿತ್ತು, ಪ್ರತಿಲೋಮ ವಿವಾಹದ ಪ್ರಕಾರವಾಗಿತ್ತು. ಜನ ಮರುಳೋ ಜಾತ್ರೆ ಮರುಳೋ, ಎಂಬಂತೆ ಈ ಮದುವೆಯು ಸಂಪ್ರದಾಯಕ್ಕೆ ಕೊಡಲಿ ಏಟು ಹಾಕಿತ್ತು. ಜನ ಸಾಮಾನ್ಯರನ್ನು ರೊಚ್ಚಿಗೇಳುವಂತೆ ಪಟ್ಟಭದ್ರ ಹಿತಾಸಕ್ತಿಗಳು ಕುಮ್ಮಕ್ಕು ನೀಡಿದವು. ಜಾತಿ ಕೆಟ್ಟು ಹೋಯಿತೆಂದರು. ಧರ್ಮ ಹಾಳಾಯಿತೆಂದರು. ಕೆಳ ಜಾತಿಗಳಿಗೆ ಸೊಕ್ಕು ಹೆಚ್ಚಾಯಿತೆಂದರು. ನಾಯಿಗಳಿಗೆ ಸಲುಗೆ ಕೊಟ್ಟರೆ ಹೆಗಲೇರುತ್ತವೆಯೆಂದರು. ಮೇಲ್ಜಾತೀಯ ಸವರ್ಣೀಯರು ಸಹಜವಾಗಿ ದೊರೆಗೆ ದೂರಿತ್ತರು.

ಕಲ್ಯಾಣ ಕ್ರಾಂತಿಗೆ ಮುನ್ನುಡಿಯಾದ ಚಮ್ಮಾವುಗೆಗಳು

ದೊರೆಗೆ ಮತ್ತಿನ್ನೇನು ಬೇಕು? “ವರ್ಣ ಸಂಕರ ಮಾಡಿದವರಿಗೆ ಎಳೆ ಹೂಟ್ಟೆ ಶಿಕ್ಷೆ ವಿಧಿಸಿ” ಎಂಬ ಆಜ್ಷೆಯನ್ನು ಹೊರಡಿಸಿದರು ಹರಳಯ್ಯ- ಮಧುವರಸರ ಕಣ್ಣು ಕೀಳಿಸಿ, ಆನೆಯ ಕಾಲಿಗೆ ಕಟ್ಟಿ. ಕಲ್ಯಾಣದ ತುಂಬೆಲ್ಲ ಎಳೆದಾಡಿಸಿದರು. ಶರಣರ ಜಂಘಾ ಬಲ ಉಡುಗುವಂತೆ ಕೊಂಡಿ ಮಂಚಣ್ಣಗಳು ನೋಡಿಕೊಂಡರು. ಹರಳಯ್ಯ ಮಧುವಯ್ಯನವರು ಆತ್ಮಾರ್ಪಣೆಗೈದರು. ಇದರಿಂದ ಕಲ್ಯಾಣದಲ್ಲಿ ಮಹಾಕ್ರಾಂತಿಯಾಯಿತು. ಸಿಕ್ಕ ಸಿಕ್ಕಲ್ಲಿ ಶರಣರ ಕಗ್ಗೊಲೆ ನಡೆಯಿತು. ಶರಣ ತತ್ವ ಉಳಿಸಿ ಪ್ರಸಾರ ಕೈ ಗೊಳ್ಳಲು ಅಸಂಖ್ಯ ಶರಣ ಶರಣೆಯರು, ಕಲ್ಯಾಣ ಬಿಟ್ಟು ಹೊರ ಬಂದರು. ಆದರೂ ಹಲವಾರು ಶರಣರನ್ನು ಅರಸನ ಸೈಕರು, ಸಂಪ್ರದಾಯವಾದಿಗಳು, ಜಾತಿವಾದಿಗಳು ಹಿಡಿದು, ಕೊಲ್ಲುವ ಕಾಯಕ ಮಾಡುತ್ತಲೇ ಹೋದರು.

ಕ್ರಾಂತಿಯು ಉತ್ತುಂಗಕ್ಕೇರಿದಾಗ ಇಡೀ ಕಲ್ಯಾಣವು ಗೊಂದಲದ ಗೂಡಾಯಿತು. ಅರಾಜಕತೆಯ ಅಟ್ಟಹಾಸದ ಜ್ವಾಲೆ ಆಗಸದೆತ್ತರಕ್ಕೆ ಚಿಮ್ಮುತ್ತಿತ್ತು. ಮಹಾಕ್ರಾಂತಿಯ ಉತ್ತುಂಗದ ಪರಿಣಾಮವೆನ್ನುವಂತೆ ಬಿಜ್ಜಳರಸನ ಕಗ್ಗೊಲೆಯೂ ನಡೆದು ಹೋಯಿತು. ಕಲ್ಯಾಣ ಕ್ರಾಂತಿಗೆ ಮೂಲ ಕಾರಣವೆಂದರೆ ಕಲ್ಯಾಣಮ್ಮ ಮತ್ತು ಹರಳಯ್ಯನವರ ತೊಡೆಯ ಚರ್ಮದಿಂದ ತಯಾರಿಸಿದ ಪವಿತ್ರ ಚಮ್ಮಾವುಗೆಗಳೇ!

ಪಾದರಕ್ಷೆಗಳು ಈಗಲೂ ಇವೆ

ಇವತ್ತಿನ ಗುಲ್ಬರ್ಗ ಜಿಲ್ಲೆಯ ಸೇಡಂ ತಾಲ್ಲೂಕಿನ ಬಿಜನಳ್ಳಿಯಲ್ಲಿ; ಈ ಪಾದರಕ್ಷೆಗಳನ್ನು ಸಮಗಾರ ಹರಳಯ್ಯ ದಂಪತಿಗಳು ತಯಾರಿಸಿದ ಪವಿತ್ರ ಪಾದರಕ್ಷೆಗಳೆಂದೇ; ಭಯ ಭಕ್ತಿಯಿಂದ ಇಂದಿಗೂ ಕೂಡಕ ಪೂಜಿಸಲಾಗುತ್ತದೆ. ಹರಳಯ್ಯನವರ ಹೆಸರಿನಿಂದ; ವರುಷಕ್ಕೊಮ್ಮೆ ದಾಸೋಹ ನಡೆಯುತ್ತದೆ. ಬಿಜನಳ್ಳಿಯ ಈ ಚಮ್ಮಾವುಗೆಗಳು; ಹರಳಯ್ಯನವರು ತೊಡೆಯ ಚರ್ಮದಿಂದ ತಯಾರಿಸಿದ ಪಾದರಕ್ಷೆಗಳೆಂದು ಸಂಶೋದಕರು ಗುರುತಿಸಿದ್ದಾರೆ.

Haralayya Padarakshe
Categories
ವಚನಗಳು / Vachanagalu

ಹಾವಿನಹಾಳ ಕಲ್ಲಯ್ಯನ ವಚನಗಳು

ಅಂಗದ ಮೇಲೆ ಲಿಂಗವುಂಟೆಂದು
ಆಗವೆಲ್ಲ ಬೆಬ್ಬನೆ ಬೆರೆತು ಬೀಗಿ ನುಡಿವರು.
ಅಂಗವೇ ಲಿಂಗವನರಿಯದು ಲಿಂಗವೇ ಅಂಗವನರಿಯದು.
ಅಂಗವಾವುದು, ಲಿಂಗವಾವುದು, ಸಂಗಸಂಬಂಧವಾವುದೆಂದೆರಿಯರು.
ಅಂಗಗುಣವಳಿದು ಆಚಾರವಳಪಟ್ಟು ನಿಂದಂಗವೆ ಅಂಗ.
ಲಿಂಗವಾವುದೆನಲು,
ಪಾಷಾಣಗುಣವಿಡಿದ ಭ್ರಮೆಯಳಿದು, ಭಾವವಳಿದು,
ಲಿಂಗಸಂಬಂಧವುಳಿದುದೆ [ಲಿಂಗ]
ಲಿಂಗಸಂಬಂಧವಾವುದೆನಲು ಸಂಸಾರವಿಡಿದು ವರ್ತಿಸುವ
ಭ್ರಾಂತವಳಿದು ಜ್ಞಾನಸಂಬಂಧವನರಿಯದಿದ್ದಡೆ, ಅಂಗ ಬಿದ್ದು, ಲಿಂಗ ಉಳಿದು,
ಸಂಬಂಧಚೈತನ್ಯ ಹಿಂಗಿಹೋದಲ್ಲಿ ಭಂಗ ಹೊದ್ದಿತ್ತು,
ಮಹಾಲಿಂಗ ಕಲ್ಲೇಶ್ವರಾ./1
ಅಂತರಂಗದಲ್ಲಿ ಅರಿವ ತೋರಿ, ಬಹಿರಂಗದಲ್ಲಿ ಕುರುಹ ತೋರಿ,
ಉಭಯ ತನ್ನ ಹಿತವಹ ನಿಜನಿವಾಸವ ತೋರಿ ರಕ್ಷಿಸುವ
ಪರಮಪಾವನಮೂರ್ತಿ ಶ್ರೀಗುರುವನೆಂದು ಕಾಂಬೆನೋ!
ಎನ್ನ ಸುತ್ತಿ ಮುತ್ತಿದ ಭವಪಾಶವ ಹರಿದು,
ಎನ್ನ ಮುಸುಕಿಹ ಅಜ್ಞಾನ ತಿಮಿರವ ಪರಿಹರಿಸುವ,
ಸಂವಿತ್ಸ ರೂಪನಾದ ಮಹಾಮಹಿಮ
ಶ್ರೀಗುರುವನೆಂದೀಕ್ಷಿಸುವೆನೊ, ಮಹಾಲಿಂಗ ಕಲ್ಲೇಶ್ವರಾ! /2
ಅಂದಂದಿನ ದಿನಕ್ಕೆ ಬಂದ ದಂದುಗಕ್ಕೆ ಮನನಾಚದ ಪರಿಯ ನೋಡಾ!
ಕಂದದೀ ಮನವು, ಕುಂದದೀ ಮನವು
ಲಿಂಗದೇವನ ಒಲವು ಎಯ್ದದೆಂದು ಮರುಗುವ ಪರಿಯ ನೋಡಾ!
ಮಹಾಲಿಂಗ ಕಲ್ಲೇಶ್ವರಯ್ಯಾ,
ಈ ಬೆಂದ ಮನವು, ಹೇಸದ ಪರಿಯ ನೋಡಾ!/3
ಅಂದಂದಿನ ದಿನವ ಸಂಸಾರವಂದಂದಿಗೆ ಗ್ರಹಿಸುತ್ತಿದೆ.
ಎಂದಯ್ಯಾ ನಿಮ್ಮ ನೆನೆವೆ, ಎಂದಯ್ಯಾ ನಿಮ್ಮ ಪೂಜಿಸುವೆ.
ಸಮಚಿತ್ತದಿಂದ ನಿಮ್ಮ ನೆನೆವಡೆ,
ನಾಳಿಗಿಂದೇ ಲೇಸು ಮಹಾಲಿಂಗ ಕಲ್ಲೇಶ್ವರಾ./4
ಅತ್ಯಾಶೆಯೆಂಬುದೆ ಪಾಪ, ಬೇರೆ ಪಾಪೆಂಬುದಿಲ್ಲ, ಕಂಡಿರೆ ಅಯ್ಯಾ!
ಪರಿಣಾಮವೆಂಬುದೆ ಪರಮಾನಂದ, ಬೇರೆ ಪರಲೋಕವಿಲ್ಲ, ಕಂಡಿರೆ ಅಯ್ಯಾ!
ಇಹಪರದಾಶೆಯಿಲ್ಲದಿಹುದೆ ಶಿವಯೋಗ.
ಮಹಾಲಿಂಗ ಕಲ್ಲೇಶ್ವರ ಬಲ್ಲ, ಸಿದ್ಧರಾಮನ ಪರಿಯ./5
ಅನುನೇಹದ ಅನುರಚಿಯ ತೋರಲಿಕಾರಿಗೆಯೂ ಬಾರದು.
ಅದು ಸಕ್ಕರೆಯಂತುಟಲ್ಲ,
ಅದು ತವರಾಜದಂತುಟಲ್ಲ.
ಭಾವದ ಸುಖ ಭವಗೆಡಿಸಿತ್ತು. ಮಹಾಲಿಂಗ ಕಲ್ಲೇಶ್ವರದೇವಾ, ನೀನೆ ಬಲ್ಲೆ./6
ಅಯ್ಯಾ ವಿಪ್ರರೆಂಬವರು ಮಾತಂಗಿಯ ಮಕ್ಕಳೆಂಬುದಕ್ಕೆ
ಇದೇ ದೃಷ್ಟ.
ಮತ್ತೆ ವಿಚಾರಿಸಿ ಕೇಳಿದಡೆ ಹೇಳುವೆನು :
ಬಡಗಿ ಮಾಚಲದೇವಿಯ ಕುಲಜೆಯ ಮಾಡಿಹೆವೆಂದು,
ಕಡಿದು ಹಂಚಿ ತಿಂದರಂದು ಗೋಮಾಂಸವ.
ಬಿಡದೆ ಅತ್ಯಂತ ಉಜ್ಞಕ್ರಮವೆಂದು ಹೋತನ ಕೊಂದು,
ಚಿಕ್ಕ ಚಿಕ್ಕವಾಗಿ ಕಡಿಮೆ ಭಕ್ಷಿಸಿದುದ ಕಂಡು,
ಮಿಕ್ಕ ಹದಿನೇಳುಜಾತಿ ವಿಪ್ರರ ಕೈಯಲನುಗ್ರಹವ ಪಡೆದು,
ತಿನಕಲಿತರಯ್ಯಾ.
ಶ್ವಪಚೋಪಿ ವಿಪ್ರ ಸಮೋ ಜಾತಿಭೇದಂ ನ ಕಾರಯೇತ್|
ಅಜಹತ್ಯೋಪದೇಶೀನಾಂ ವರ್ಣನಾಂ ಬ್ರಾಹ್ಮಣೋ ಗುರುಃ||
ಎಂಬುದಾಗಿ,
ಕಿರಿಕಿರಿದ ತಿಂದ ದ್ವಿಜರು ನೆರೆದು ವೈಕುಂಠಕ್ಕೆ ಹೋಹರೆ?
ನೆರೆಯಲೊಂದ ತಿಂದ ವ್ಯಾಧ ದ್ವಿಜರಿಂದಧಿಕ.
`ಭಗರ್ೋ ದೇವಸ್ಯ ಧೀಮಹಿ’ ಎಂಬ ದಿವ್ಯಮಂತ್ರವನೋದಿ,
ನಿಬರ್ುದ್ಧಿಯಾದಿರಿ.
ಶಿವಪಥವನರಿಯದೆ ಬರುದೊರೆವೋದಿರಿ.
ಆದಡೀ ನರಕಕ್ಕೆ ಭಾಜನವಾದಿರಿ.
ಇದು ಕಾರಣ, ಮಹಾಲಿಂಗ ಕಲ್ಲೇಶ್ವರಾ,
ನಿಮ್ಮ ಶರಣಂಗೆ ಸರಿಯೆ ಜಗದನ್ಯಾಯಿಗಳು./7
ಅಯ್ಯಾ, ರುದ್ರಾಕ್ಷೆಯಿಂದ ಇಹವ ಕಂಡೆ.
ಅಯ್ಯಾ, ರುದ್ರಾಕ್ಷೆಯಿಂದ ಪರವ ಕಂಡೆ.
ಅಯ್ಯಾ, ರುದ್ರಾಕ್ಷೆಯಿಂದ ಗತಿಯ ಕಂಡೆ.
ಅಯ್ಯಾ, ರುದ್ರಾಕ್ಷೆಯಿಂದ ಮತಿಯ ಕಂಡೆ
ಅಯ್ಯಾ, ರುದ್ರಾಕ್ಷೆಯಿಂದ ಮೋಕ್ಷವ ಕಂಡೆ
ಅಯ್ಯಾ, ಇನ್ನ ಬದುಕಿದೆ, ಬದುಕಿದೆನಯ್ಯಾ,
ಅಯ್ಯಾ, ಭವಂ ನಾಸ್ತಿಯಾಯಿತ್ತೆನಗೆ.
ಅಯ್ಯಾ, ಮಹಾಲಿಂಗ ಕಲ್ಲೇಶ್ವರಾ,
ಶ್ರೀಮಹಾರುದ್ರಾಕ್ಷೆಯಿಂದೆ ಕಂಡೆನಯ್ಯಾ,
ಎನ್ನ ಕರಸ್ಥಳದಲ್ಲಿ ಮಹಾಗೂಢವಾಗಿರ್ಪ
ನಿಮ್ಮ ದಿವ್ಯಮೂರ್ತಿ ಪೆಂಪನು. /8
ಅರಳಿದ ಪುಷ್ಪ ಪರಿಮಳಿಸದಿಹುದೆ?
ತುಂಬಿದ ಸಾಗರ ನೊರೆತೊರೆಯಾಡದಿಪ್ಪುದೆ?
ಆಕಾಶವ ಮುಟ್ಟುವ ದೋಂಟಿಗೋಲವಿಡಿವನೆ?
ಪರಮಪರಿಣಾಮಿ, ಕರ್ಮವನತಿಗಳೆಯದಿಹನೆ,
ಮಹಾಲಿಂಗ ಕಲ್ಲೇಶ್ವರಾ?/9
ಅರಿವ ಬೈಚಿಟ್ಟುಕೊಂಡು ಮರೆಯಮಾನವರಂತೆ,
ಕುರುಹಿನ ಹೆಸರಲ್ಲಿ ಕರೆದಡೆ ಓ ಎನುತಿಪ್ಪವರು,
ಅವರು ನರರೆ ಅಯ್ಯಾ?
ಕುರುಹಿಲ್ಲ ಲಿಂಗಕ್ಕೆ, ತೆರಹಿಲ್ಲ ಶರಣಂಗೆ.
ಬರಿಯ ಸಂಸಾರವ ಬಳಸಿಯೂ ಬಳಸದಂತಿಪ್ಪವರು
ಅವರು ನರರೆ ಅಲ್ಲ, ಮಹಾಲಿಂಗ ಕಲ್ಲೇಶ್ವರಾ ನಿಮ್ಮ ಶರಣರು./10
ಅರಿವೆ ಗುರು, ಆಚಾರವೆ ಶಿಷ್ಯ, ಜ್ಞಾನವೆ ಲಿಂಗ,
ಪರಿಣಾಮವೆ ತಪ, ಸಮತೆಯೆಂಬುದೆ ಯೋಗದಾಗು ನೋಡಾ.
ಈಸುವನರಿಯದೆ ವೇಷವ ಧರಿಸಿ, ಲೋಚು ಬೋಳಾದಡೆ
ಮಹಾಲಿಂಗ ಕಲ್ಲೇಶ್ವರದೇವರು ನಗುವರು./11
ಅರ್ಚನೆಯಾವರಿಸಿತ್ತಯ್ಯಾ, ಪೂಜನೆ ಪೂರಿತವಾಯಿತ್ತಯ್ಯಾ,
ಅಜಪೆ ಅಕ್ಕಾಡಿತ್ತಯ್ಯಾ, ಸಮತೆ ಪರಿಣಾಮಿಸಿತ್ತಯ್ಯಾ,
ಮಹಾಲಿಂಗ ಕಲ್ಲೇಶ್ವರಯ್ಯಾ,, ನಿಮ್ಮ ನೆನೆವ ಮನಕ್ಕೆ. /12
ಅರ್ಥವೆಂಬುದೆ ಪಾಪ, ಬೇರೆ ಪಾಪವಿಲ್ಲ ಕಂಡನಯ್ಯಾ.
ಪರಿಣಾಮವೆಂಬುದೆ ಪುಣ್ಯ, ಬೇರೆ ಪುಣ್ಯವಿಲ್ಲ ಕಂಡಯ್ಯಾ.
ಪಪುಣ್ಯಗಳನತಿಗಳೆದ ಉಳುಮೆ, ಶಿವಯೋಗ.
ಮಹಾಲಿಂಗ ಕಲ್ಲೇಶ್ವರನು ಬಲ್ಲ ಸಿದ್ಧರಾಮನ ಪರಿಯ./13
ಅರ್ಧನಾರಿಯಾಗಿದ್ದ ಉಮಾದೇವಿ ಬೇರೆ ಮತ್ತೊಬ್ಬರೊಡನುಂಬಳೆ?
ಗಂಡಂಗೆ ತೆರಹಿಲ್ಲದ ವಧು ಪರಿವಿರೋಧಿಯಾಗಿ,
ಬೇರೆ ಮತ್ತೊಬ್ಬರೊಡನುಂಬ ಪರಿಯೆಂತೊ?
ಮನ ಪುನರ್ಜಾತನಾಗಿ, ಪ್ರಾಣಲಿಂಗ ಪ್ರಸಾದಿಯಾದ
ಪ್ರಸಾದಿಗ್ರಾಹಕ ಪ್ರಸಾದಿ,
ಇದರೊಡನೆ ಭುಂಜಿಸುವ ಪರಿಯಿನ್ನೆಂತೊ?
ಒಂದಾಗಿ ಭೋಜನವ ಮಾಡಿದಲ್ಲಿ, ಸಜ್ಜನಸ್ಥಲ ಬೆಂದಿತ್ತು,
ಗುರುವಚನ ನೊಂದಿತ್ತು, ಜಂಗಮ ನಾಚಿತ್ತು,
ಪ್ರಸಾದ ಹೇಸಿತ್ತು, ಅವಧಾನವಡಗಿತ್ತು,
ಭಕ್ತಿ ಮೀಸಲಳಿದು ಬೀಸರವೋಯಿತ್ತು,
ಪ್ರದೀಪಿಕೆ : ಭಕ್ತೋಭಕ್ತಸ್ಯ ಸಂಯೋಗಾನ್ನ ಭುಂಜಿಯಾತ್ಮವಾನ್ ಸಃ|
ತಥಾಪಿ ಭುಂಜನಾದ್ದೇವಿ ಪ್ರಸಾದತ್ರಯನಾಶನಂ||
ಇಂತೆಂದುದಾಗಿ,
ಇದು ಕಾರಣ, ಒಂದೆನಲಮ್ಮೆ ಬೇರೆನಲಮ್ಮೆ.
ನಿಮ್ಮ ಶರಣರೊಕ್ಕುದ ಕೊಂಬೆ ಕಾಣಾ, ಮಹಾಲಿಂಗ ಕಲ್ಲೇಶ್ವರಾ./14
ಅಶನದಾಪ್ಯಾಯನ, ವ್ಯಸನ ಉಳ್ಳನ್ನಕ್ಕ ಆ ನಿಮ್ಮ ನೆನೆವುದು
ಹುಸಿಯಯ್ಯಾ.
ಆ ನಿಮ್ಮ ಪೂಜಿಸುವುದು ಹುಸಿಯಯ್ಯಾ.
ಎನ್ನ ಹಸಿವಿಂಗೆ ನೀನೇ ಓಗರವಾದರೆ,
ನಾ ನಿಮ್ಮ ನೆನೆವುದು ದಿಟ ಕಾಣಾ, ಮಹಾಲಿಂಗ ಕಲ್ಲೇಶ್ವರಾ./15
ಆಗಮಾಚಾರವಿಲ್ಲೆಂದು ಭಕ್ತರನಲ್ಲೆಂಬ ಭ್ರಮಿತರು ನೀವು ಕೇಳಿರೆ!
ಮುಕ್ಕುಳಿಸಿದ ನೀರ ಮಜ್ಜನಕ್ಕೆರವುದಿದಾವಾಗಮಾಚಾರ?
ಸರವ ಕಟ್ಟಿ, ಪತ್ರೆಯ ಹರಿದು ಹಾಕೂದಿದಾವ ಮಂತ್ರದೊಳಗು?
ಸರ್ರನೆ ಹರಿತಂದು ಸುರ್ರನೆ ಕಲ್ಲಲಿಡುವುದಿದಾವ ಪೂಜೆ?
ಬಹುಬುದ್ಧಿಗಲಿತು, ಬಹಳ ನುಡಿ ಶಿವಭಕ್ತರ ಕೂಡೆ ಸಲ್ಲದು,
ಶರಣೆಂದು ಶುದ್ಧರಪ್ಪುದು.
ಮಹಾಲಿಂಗ ಕಲ್ಲೇಶ್ವರನು ತನ್ನ ಭಕ್ತರ ನಿಲುವನು ತಾನೆ ಬಲ್ಲನು./16
ಆದಿಜಂಗಮಕ್ಕೆ ಸ್ವಾಯತವಾದಲ್ಲಿ ಆಚಾರಲಿಂಗಪ್ರಾಣಿ.
ಆಚಾರಲಿಂಗ ಸ್ವಾಯತವಾದಲ್ಲಿ ಗುರುಲಿಂಗಪ್ರಾಣಿ.
ಗುರುಲಿಂಗ ಸ್ವಾಯತವಾದಲ್ಲಿ ಶಿವಲಿಂಗಪ್ರಾಣಿ.
ಶಿವಲಿಂಗ ಸ್ವಾಯತವಾದಲ್ಲಿ ಜಂಗಮಲಿಂಗಪ್ರಾಣ.
ಜಂಗಮಲಿಂಗ ಸ್ವಾಯತವಾದಲ್ಲಿ ಪ್ರಸಾದಲಿಂಗಪ್ರಾಣಿ.
ಪ್ರಸಾದಲಿಂಗ ಸ್ವಾಯತವಾದಲ್ಲಿ ಮಹಾಲಿಂಗಪ್ರಾಣಿ.
ಮಹಾಲಿಂಗ ಸ್ವಾಯತವಾದಲ್ಲಿ ಶೂನ್ಯಲಿಂಗಪ್ರಾಣಿ.
ಶ್ರುತಿ : ಆದಿಮಧ್ಯಾಂತಶೂನ್ಯಂ ಚ ವ್ಯೋಮಾವ್ಯೋಮವಿವರ್ಜಿತಂ |
ಧ್ಯಾನಜ್ಞಾನದ್ವಯಾಧೂಧ್ರ್ಛಂ ಶೂನ್ಯಲಿಂಗಮಿತಿ ಸ್ಮೃತಂ ||
ಇಂತೆಂದುದಾಗಿ, ಶೂನ್ಯಲಿಂಗ ಸ್ವಾಯತವಾದಲ್ಲಿ,
`ಲಿಂಗೇ ಜಾತಂ ಲಿಂಗೇ ಬೀಜಂ’ ಎಂಬುದಾಗಿ,
ಉಪಮೆಗೆ ನಿಲುಕದ ಉಪಮಾತೀತ ನೀನೆ ಬಲ್ಲೆ,
ಮಹಾಲಿಂಗ ಕಲ್ಲೇಶ್ವರಾ./17
ಆದಿಯಲ್ಲಿ ಪ್ರಸಾದ, ಏಕಮುಖ ಸಾಧಕರ ಮುಖದಿಂದ
ಅನಂತಮುಖವಾದುದು.
ಎಯ್ದಿ ನಿಂದಲ್ಲಿ ಮತ್ತೆ ಏಕಮುಖವಾದುದು.
ಇದರ ಭೇದವ ಬಸವಣ್ಣ ಚೆನ್ನ ಬಸವಣ್ಣನ ಸಂಪಾದನೆಯಿಂದಲಾನರಿದೆನು.
ಅರಿದಡೇನು ಎನಗಾಯತವಾಗದು. ಆಯತವಾದಡೇನು ಸನ್ನಹಿತವಾಗದು.
ಗುರುಲಿಂಗ ಜಂಗಮದನುವನರಿರದ ವಿಶ್ವಾಸ, ಜಾನಿಗಲ್ಲದೆ ಅಳವಡದು.
ಆ ಪರಮ ವಿಶ್ವಾಸ ಸತ್ಸದಯದಿಂದಲ್ಲದೆ ಸಮನಿಸದು.
ಇದು ಕಾರಣ, ಪ್ರಸಾದದಾದಿಕುಳವ ನಾನೆತ್ತ ಬಲ್ಲೆನಯ್ಯಾ?
ಪ್ರಸಾದವೆಂಬುದು ಅನಿಂದ್ಯ, ಅಮಲ ಅಗೋಚರ,
ನಿರಂಜನ, ನಿತ್ಯಸತ್ಯ, ಜ್ಞಾನಾನಂದ, ಪರಬ್ರಹ್ಮ, ನಿಶ್ಚಯ.
ಅದು ತನ್ನ ತಾನೆ ನುಡಿವುತ್ತಿಹುದು.
ಆ ನುಡಿಯೆ ಸುನಾದ, ಆ ಸುನಾದವೆ ಓಂಕಾರ.
ಆ ಓಂಕಾರ ತಾನೆ ಮಹಾಜ್ಞಾನ, ಪರಮಚೈತನ್ಯ, ಪ್ರಸಿದ್ಧ ಪಂಚಾಕ್ಷರ.
ಅದೆಂತೆಂದಡೆ : `ಪ್ರಣವೋ ಹಿ ಪರಬ್ರಹ್ಮ ಪ್ರಣವೋ ಹಿ ಪರಂ ಪರದಂ’
ಎಂದುದಾಗಿ,
ಆ ಪ್ರಸಿದ್ಧ ಪಂಚಾಕ್ಷರವು ತನ್ನಿಂದ ತಾನೆ ಸಕಲ ನಿಷ್ಕಲವಾಯಿತ್ತು.
ಆ ಪರಮನಿಷ್ಕಲವೇ ಶ್ರೀಗುರು, ಸಕಲವೇ ಲಿಂಗ,
ಸಕಲನಿಷ್ಕಲವೇ ಜಂಗಮ.
ಅದೆಂತೆಂದಡೆ : `ಏಕಮೂರ್ತಿಸ್ತ್ರೀಧಾ ಭೇದಾ ಗುರುಲರ್ಿಂಗಂತು ಜಂಗಮ’
ಎಂದುದಾಗಿ,
ಆ ಜಂಗಮಪ್ರಸಾದವೆ ಮೂಲವಾದ ಕಾರಣ, ಆ ಜಂಗಮವನಾರಾಧಿಸಿ,
ಅನಂತ ಪ್ರಮಥಗಣಂಗಳು ಪ್ರಸಾದವ ಪಡೆದು,
ತಮ್ಮ ಸದ್ಭಾವವೆಂತಂತೆ ಸ್ವೀಕರಿಸಿದ ಕಾರಣ, ಅನಂತಮುಖವಾಯಿತ್ತು.
ಅವೆಲ್ಲವನೊಳಕೊಂಡು ತಾನೆ ನಿಂದ ಕಾರಣ ಎಂದಿನಂತಾಯಿತ್ತು.
ಇದೇ ಪ್ರಸಾಧಾದಿ ಮಧ್ಯಾಂತದರಿವು ಕಾಣಿರೆ.
ಇಂತಪ್ಪ ಪ್ರಸಾದವ ಕೊಂಬ ಪ್ರಸಾದಿಯ ನಿಲವೆಂತೆಂದಡೆ :
ವಿಶ್ವಾಸವೆ ಒಡಲಾಗಿ, ಲಿಂಗನಿಷ್ಠೆಯೆ ಇಂದ್ರಿಯಂಗಳಾಗಿ,
ಸಾವಧಾನವೆ ಕರಣಂಗಳಾಗಿ, ಶಿವಾನುಭಾವವೆ ಪ್ರಾಣವಾಗಿ,
ಮಹದಾನಂದವೆ ತಾನಾಗಿ, ಲಿಂಗಸಮರಸವೆ ಭರಿತವಾಗಿರ್ಪ
ಮಹಾಜ್ಞಾನಿಯೆ ಪ್ರಸಾದಿ.
ಆ ಪ್ರಸಾದಿಯ ಪ್ರಸಾದವೆ ಎನ್ನ ಲಿಂಗಕ್ಕೆ ಕಳೆಯಾಯಿತ್ತು.
ಅದೆ ಎನಗೆ ತಿಳಿವಾಯಿತ್ತು, ಮಹಾಲಿಂಗ ಕಲ್ಲೇಶ್ವರಾ./18
ಆರಡಿ ತಾನಾಗಿಹ ಆಶ್ರಯವ ಮಾಡುವಲ್ಲಿ ಬೇರೆ ಬಾಯಿಲ್ಲ.
ಕುಸುಮದ ಕಂಪಿತವನುಂಬುದಕ್ಕೆ ಬೇರೆ ಬಾಯಿಲ್ಲ.
ಇಂತಿದು ಬಿಡುಮುಡಿಯ ಭೇದ.
ಕತರ್ು ಭೃತ್ಯನ ವಶಗತವಾಗಿರ್ದ ತ್ರಿವಿಧಮಲವ ಮುಟ್ಟುವಲ್ಲಿ.
ತನಗೆ ಬಿಟ್ಟು ಬಹ ಸಮರ್ಪಣೆಯನರಿತು, ಅವ ತೊಟ್ಟಿರ್ದುದ ತಾ
ತೊಡದೆ, ಅವ ಬಿಟ್ಟುದ ತಾ ಮುಟ್ಟದೆ,
ಅವ ಬಿಟ್ಟುದನರಿತು, ಅವಗೇನು ಪಾಶವ ಕಟ್ಟಿದೆ.
ತೊಟ್ಟ ಬಿಟ್ಟ ಹಣ್ಣಿನಂತೆ, ನಿಜನಿಶ್ಚಯವಾದ ಭಕ್ತಿಮೂರ್ತಿ.
ಮಹಾಮಹಿಮ ಕಲ್ಲೇಶ್ವರಲಿಂಗ ತಾನಾದ ಶರಣ./19
ಆವ ನೇಮವನು ಮಾಡ, ಕರ್ಮವನು ಹೊದ್ದ.
ಆವ ಶೀಲವ ಹಿಡಿಯ, ಆವ ತಪಕ್ಕೂ ನಿಲ್ಲ.
ಆವ ಜಂಜಡಕ್ಕೂ ಹಾರ, ಕೇವಲಾತ್ಮಕನು.
ಸಾವಯ ನಿರವಯವೆನಿಸಿದ ಸಹಜವು ತಾನೆ,
ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಶರಣು. /20
ಆವಂಗದಲ್ಲಿದ್ದಡೇನು, ಒಂದು ಸುಸಂಗ ಸುಶಬ್ದವ
ನಿಮಿಷವಿಂಬಿಟ್ಟುಕೊಂಡು,
ಆ ಘಳಿಗೆ ಅಳಿದಡೇನು, ಉಳಿದಡೇನು, ಸುಸಂಗ ಸುಶಬ್ದವೇದಿಯೆ?
ಲಿಂಗದಲ್ಲಿಯೇ ನಿರುತ ಭರಿತ ಕಾಣಿರೆ, ಶರಣ.
ಮನದಲ್ಲಿ ಚಲಾಚಲಿತವಿಲ್ಲದೆ ಲಿಂಗವನಿಂಬುಗೊಂಡ ಮಹಂತಂಗೆ
ಬೆದರಿ ಓಡವೆ ಕರ್ಮಂಗಳು? ಉದರಿಹೋಗವೆ ಭವಪಾಶಂಗಳು?
ಕರ್ಪುರದುರಿಯ ಸಂಗದಂತೆ, ಗುರುಪಾದ ಸೋಂಕು.
ಜ್ಞಾನವಾದ ಬಳಿಕ ಜಡಕರ್ಮವಿಹುದೆ, ಮಹಾಲಿಂಗ ಕಲ್ಲೇಶ್ವರಾ?/21
ಇಕ್ಕದ ಕೋಗಿಲೆ, ಕಾಗೆಯ ತತ್ತಿಯಲ್ಲಿ,
ಸಾಕದೆ ತನ್ನ ಶಿಶುವ ಮನಬುದ್ಧಿಯಿಂದ.
ಇಕ್ಕಿದಡೇನೊ, ದೇವಾ ಪಿಂಡವ ತಂದು
ಮಾನವ ಯೋನಿಯಲ್ಲಿ ಹುಟ್ಟಿದಡೇನೊ ?
ಲಿಂಗಶರಣನು ನರರ ಯೋನಿಯಲ್ಲಿ ಹುಟ್ಟಿದಾತನೇ ಅಲ್ಲ.
ಬಾರದೆ ಪಕ್ಷಿಯ ಬಸುರಲ್ಲಿ ಅಶ್ವತ್ಥವೃಕ್ಷವು ?
ಇದು ಕಾರಣ, ಮಹಾಲಿಂಗ ಕಲ್ಲೇಶ್ವರಾ ಕಾಗೆಗೆ ಪಿಕ ಶಿಶುವೆ ?/22
ಉದಕದ ತಂಪವ ತಾವರೆಯಲ್ಲದೆ ಹೊರಗಣ ಕೊರಡೆತ್ತಬಲ್ಲುದೊ ?
ಹೂವಿನ ಪರಿಮಳವ ತುಂಬಿಯಲ್ಲದೆ ಹೊರಗಣ ನೊಣನೆತ್ತಬಲ್ಲುದೊ ?
ಕ್ಷೀರದ ರುಚಿಯ ಹಂಸೆಯಲ್ಲದೆ ಕೆಲದಲ್ಲಿ ಬಕನೆತ್ತವಬಲ್ಲುದೊ ?
ಮಾವಿನ ಹಣ್ಣಿನ ರುಚಿಯನರಗಿಳಿಗಳು ಬಲ್ಲವಲ್ಲದೆ
ಹೊರಗಣ ಕೋಳಿಗಳೆತ್ತ ಬಲ್ಲವೊ ?
ಊಟದ ರುಚಿಯನು ನಾಲಗೆಯಲ್ಲದೆ ಕಲಸುವ ಕೈ ತಾನೆತ್ತ ಬಲ್ಲುದೊ?
ಕೂಟದ ಸುಖವನು ಯೌವನೆಯಲ್ಲದ ಬಾಲೆ ತಾನೆತ್ತ ಬಲ್ಲಳೊ ?
ಚಂದ್ರಸೂರ್ಯರಂತರಾಂತರವ ಖೇಚರರು ಬಲ್ಲರಲ್ಲದೆ
ಗಗನದೊಳಗಾಡುವ ಹದ್ದುಗಳು ತಾವೆತ್ತ ಬಲ್ಲವೊ ?
ಎಲೆ ಮಹಾಲಿಂಗ ಕಲ್ಲೇಶ್ವರಯ್ಯಾ.
ನಿಮ್ಮ ನಿತ್ಯನಿಜೈಕ್ಯರ ನಿಲುವನು ಮಹಾನುಭಾವಿಗಳು ಬಲ್ಲರಲ್ಲದೆ
ಲೋಕದ ಜಡಜೀವಿಗಳೆನಿಸುವ ಮಾನವರೆತ್ತ ಬಲ್ಲರೊ ?/23
ಉಪನಿಷದ್ವಾಕ್ಯವೆನಬಹುದಲ್ಲದೆ, ಆ ಪರಬ್ರಹ್ಮವೆನಬಾರದು
ಸಮತೆ ಸಮಾಧಾನವೆಂಬುದು ಯೋಗದಾಗು ನೋಡಾ.
ಸಮತೆ ಸಮಾಧಾನ ನೆಲೆಗೊಳ್ಳದಿರ್ದಡೆ, ಆ ಯೋಗ ಅಜ್ಞಾನದಾಗು.
ಅಷ್ಟಶಿಲೆ ಸಹಸ್ರ ಋಷಿಯರು ಸಮತೆ ಸಮಾಧಾನ ನೆಲೆಗೊಳ್ಳದೆ,
ನಾನಾ ಯೋನಿಯಲ್ಲಿ ಬಂದರು.
ಮಹಾಲಿಂಗ ಕಲ್ಲೇಶ್ವರದೇವಾ,
ಸಮತೆ ನೆಲೆಗೊಂಡು, ಸಮಾಧಾನ ಸಹಜವಾದುದೆ ಮುಕ್ತಿ ಕ್ಷೇತ್ರ./24
ಉರವೆ ಕುರುಕ್ಷೇತ್ರ, ಶಿರವೆ ಶ್ರೀಪರ್ವತ,
ಲಲಾಟವೆ ಕೇದಾರ, ಭ್ರೂನಾಸಿಕದ ಮದ್ಯವೆ ವಾರಣಾಸಿ ನೋಡಾ.
ಹೃದಯವೇ ಪ್ರಯಾಗ, ಸರ್ವಾಂಗವೆ ಸಕಲತೀರ್ಥಳಾಗಿ,
ಮಹಾಲಿಂಗ ಕಲ್ಲೇಶ್ವರನ ಶೃಣರ ಸುಳುಹು ಜಗವತ್ಪಾವನ. /25
ಎಡದ ಕೈಯಲ್ಲಿ ನಿಗಳ ಕಂಕಣನಿಕ್ಕಿ,
ಬಲದ ಕೈಯ ಕಡಿದುಕೊಂಡಡೆ, ನೋವಿನ್ನಾವುದು ಹೇಳಾ.
ಒಡಲೊಂದೆ ಪ್ರಾಣವೊಂದೆಯಾಗಿ, ನೋವಿನ್ನಾರದು ಹೇಳಾ.
ಲಿಂಗ ಜಂಗಮವನಾರಾಧಿಸಿ, ನಿಂದೆಗೆ ತಂದಡೆ ನೊಂದೆನಯ್ಯಾ,
ಮಹಾಲಿಂಗ ಕಲ್ಲೇಶ್ವರಾ./26
ಎತ್ತೆತ್ತ ನೋಡಿದಡತ್ತತ್ತ ನಿಮ್ಮನೆ ಕಾಬೆ.
ಎದ್ದು ನೋಡಿ ನಿಮ್ಮನೆ ಕಾಬೆ, ನಿದ್ರೆಗೆಯ್ದು ನಿಮ್ಮನೆ ಕಾಬೆ.
ಅಹೋರಾತ್ರಿಯಲ್ಲಿ ನಿಮ್ಮ ಧ್ಯಾನದಲ್ಲಿರಿಸು, ಮಹಾಲಿಂಗ ಕಲ್ಲೇಶ್ವರಾ /27
ಎನ್ನ ಕಕ್ಷೆಯಲ್ಲಿ ಸ್ವಾಯತವಾದನಯ್ಯಾ ಶಂಕರದಾಸಿಮಯ್ಯನು.
ಎನ್ನ ಕರಸ್ಥಲದಲ್ಲಿ ಸ್ವಾಯತವಾದನಯ್ಯಾ ಉರಿಲಿಂಗಪೆದ್ದಯ್ಯನು.
ಎನ್ನ ಉರಸೆಜ್ಜೆಯಲ್ಲಿ ಸ್ವಾಯತವಾದನಯ್ಯ ಘಟ್ಟಿವಾಳ ಮದ್ದಯ್ಯನು.
ಎನ್ನ ಅಮಳೋಕ್ಯದಲ್ಲಿ ಸ್ವಾಯತವಾದನಯ್ಯಾ ಅಜಗಣಯ್ಯನು.
ಎನ್ನ ಮುಖಸೆಜ್ಜೆಯಲ್ಲಿ ಸ್ವಾಯತವಾದನಯ್ಯಾ ನಿಜಗುಣದೇವರು.
ಎನ್ನ ಶಿಖೆಯಲ್ಲಿ ಸ್ವಾಯತವಾದನಯ್ಯಾ ಅನಿಮಿಷದೇವರು.
ಎನ್ನ ಘ್ರಾಣದಲ್ಲಿ ಸ್ವಾಯತವಾದನಯ್ಯಾ ಏಕೋರಾಮಿತಂದೆಗಳು.
ಎನ್ನ ಜಿಹ್ವೆಯಲ್ಲಿ ಸ್ವಾಯತವಾದನಯ್ಯಾ ಪಂಡಿತಾರಾಧ್ಯರು.
ಎನ್ನ ನೇತ್ರದಲ್ಲಿ ಸ್ವಾಯತವಾದನಯ್ಯಾ ರೇವಣಸಿದ್ದೇಶ್ವರದೇವರು.
ಎನ್ನ ತ್ವಕ್ಕಿನಲ್ಲಿ ಸ್ವಾಯತವಾದನಯ್ಯಾ ಸಿದ್ಧರಾಮೇಶ್ವರದೇರು.
ಎನ್ನ ಶ್ರೋತ್ರದಲ್ಲಿ ಸ್ವಾಯತವಾದನಯ್ಯಾ ಮರುಳಸಿದ್ಧೇಶ್ವರದೇವರು.
ಎನ್ನ ಹೃದಯದಲ್ಲಿ ಸ್ವಾಯತವಾದನಯ್ಯಾ ಪ್ರಭುದೇವರು.
ಎನ್ನ ಭ್ರೂಮಧ್ಯದಲ್ಲಿ ಸ್ವಾಯತವಾದನಯ್ಯಾ ಚೆನ್ನಬಸವಣ್ಣನು.
ಎನ್ನ ಬ್ರಹ್ಮರಂಧ್ರದಲ್ಲಿ ಸ್ವಾಯತವಾದನಯ್ಯಾ ಸಂಗನಬಸವಣ್ಣನು.
ಎನ್ನ ಉತ್ತಮಾಂಗದಲ್ಲಿ ಸ್ವಾಯತವಾದನಯ್ಯಾ ಮಡಿವಾಳಯ್ಯನು.
ಎನ್ನ ಲಲಾಟದಲ್ಲಿ ಸ್ವಾಯತವಾದನಯ್ಯಾ ಸೊಡ್ಡಳ ಬಾಚರಸರು.
ಎನ್ನ ಪಶ್ಚಿಮದಲ್ಲಿ ಸ್ವಾಯತವಾದನಯ್ಯಾ ಕಿನ್ನರ ಬ್ರಹ್ಮಯ್ಯನು.
ಎನ್ನ ಸರ್ವಾಂಗದಲ್ಲಿ ಸ್ವಾಯತವಾದನಯ್ಯಾ ಗಣಂಗಳು.
ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಶರಣರ ಶ್ರೀಪಾದಕ್ಕೆ
ನಮೋ ನಮೋ ಎನುತಿರ್ದೆನು. /28
ಎನ್ನ ಗುರುವೆನ್ನ ಪ್ರಾಣಲಿಂಗವ
ಕರುಣದಿಂದನುಗ್ರಹವ ಮಾಡಿದ ಪರಿ ಎಂತೆಂದಡೆ :
ಪಚ್ಚೆಯ ನೆಲಗಟ್ಟಿನ ಮೇಲೆ ಚೌಮೂಲೆಯ ಸರಿಸದಲ್ಲಿ.
ಷೋಡಶ ಕಂಬಂಗಳ ಮಂಟಪವ ಮಾಡಿ,
ಮಧ್ಯದಲ್ಲಿ ಕುಳ್ಳಿರ್ದು ಉಪದೇಶದ ಪಡೆಯಲೆಂದು ಹೋದಡೆ,
ಎನ್ನಂತರಂಗದಲ್ಲಿ ಚತುಷ್ಕೋಣೆಯ ಚತುರ್ದಳದ ನೆಲಗಟ್ಟಿನ ಮೇಲೆ
ಷೋಡಶಕಲೆಗಳೆಂಬ ಹದಿನಾರುಕಂಬವ ನೆಟ್ಟು,
ಧ್ಯಾನ ವಿಶ್ರಾಮದ ಮೇಲೆ ಆದಿಮಧ್ಯತ್ರಿಕೂಟವೆಂಬ ಮಂಟಪವನಿಕ್ಕೆ,
ಆ ಮಂಟಪಸ್ಥಾನದಲ್ಲಿ ಎನ್ನ ಗುರು ಕುಳ್ಳಿರ್ದು ಅನುಗ್ರಹವ ಮಾಡಿದಡೆ,
ನುಡಿಯಡಗಿದ, ಒಡಲಳಿದ ಸ್ವಯಲಿಂಗಸಂಬಂಧವಾದ ಭೇದವ
ಮಹಾಲಿಂಗಕಲ್ಲೇಶ್ವರಾ, ನಿಮ್ಮ ಶರಣ ಬಲ್ಲ./29
ಎಲ್ಲವನರಿದು ಇಲ್ಲವೆ ತಾನಾದ, ಅಲ್ಲಹುದೆಂಬುದಕ್ಕೆ ಸಹಜನಾದ.
ಆಕಾರವ ನಿರಾಕರಿಸ, ನಿರಾಕಾರವ ಪತಿಕರಿಸ,
ಭಾವದಾಕಾರವನೇನೆಂದರಿಯ,
ಮುಂದೆ ಬಲ್ಲೆವೆಂಬನುಭಾವಿಗಳ ಮಾತುಗುಷ್ಟ
ನಾರೂದ ಕಂಡು, ಮಹಾಲಿಂಗ ಕಲ್ಲೇಶ್ವರಾ,
ನಿಮ್ಮ ಶರಣ ಶಬ್ದಮುಗ್ಧವಾದ./30
ಏಕ ಏವ ರುದ್ರ ನ ದ್ವಿತೀಯಃ’ನೆಂಬ ಶ್ರುತಿ, ಲಿಂಗಭಕ್ತನೆ ದೇವನೆಂದಿತ್ತು.
`ಅಪಿ ವಾಯಶ್ಚಂಡಾಲೊ’ಯೆಂಬ ಶ್ರುತಿ, ಲಿಂಗಭಕ್ತನೆ ಕುಲಜನೆಂದಿತ್ತು.
`ಘ್ರಾತಂ ಜಿಘ್ನಂತಿ’ಯೆಂಬ ಶ್ರುತಿ, ಲಿಂಗಪ್ರಸಾದವೆ ಪರವೆಂದಿತ್ತು.
ಇದನೋದಿ ಬರುದೊರೆವೋದಿರಿ,
ಶ್ರುತಿಬಾಹ್ಯರಾದಿರಿ, ಶಿವಭಕ್ತಿಯಿಲ್ಲದೆ ಹೋದಿರಿ.
ಗುರುಲಿಂಗಜಂಗಮ ಪಾದೋದಕ ಪ್ರಸಾದವ
ಧರಿಸುವನೆ, ಭಜಿಸುವನೆ, ಕುಲಜನೆಂದು ಶ್ರುತಿ ಸಾರುತ್ತಿದೆ.
ಇದುಕಾರಣ,
ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಶರಣಂಗೆ ಮಿಗೆ ಮಿಗೆ ಶರಣೆಂಬೆ./31
ಒಂದಹದು ಒಂದನಲ್ಲಾಯೆಂಬುದು ಭಕ್ತಿಯ ಸತ್ಯಕ್ಕೆ ಅದೇ ಭಂಗ.
ಮಿಥ್ಯತಥ್ಯವನಳಿದವಂಗೆ, ಮತ್ತೊಂದರಲ್ಲಿ ಹೊತ್ತು ಹೋರುವುದೆ ಸತ್ಯವಲ್ಲ.
ಅದು ಮಹಾಲಿಂಗ ಕಲ್ಲೇಶ್ವರಲಿಂಗಕ್ಕೆ ದೂರವಪ್ಪುದು,/32
ಒಲಿದೊಲಿಸಿಕೊಳ್ಳಬೇಕು, ಒಲ್ಲದಿಲ್ಲದಿಲ್ಲ.
ಹಲವು ಕೊಂಬಿಂಗೆ ಹಾರದಿರು, ಮರುಳೆ.
ಅಟ್ಟಿ ನೋಡುವ, ಮುಟ್ಟಿ ನೋಡುವ, ತಟ್ಟಿ ನೋಡುವ, ಒತ್ತಿ ನೋಡುವ.
ಅಟ್ಟಿದಡೆ ತಟ್ಟಿದಡೆ, ನಿಷ್ಠೆಯಂ ಬಿಡದಿರ್ದಡೆ,
ತನ್ನನೀವ, ಮಹಾಲಿಂಗ ಕಲ್ಲೇಶ್ವರ./33
ಒಳಗೆ ಶೋಧಿಸಿ, ಹೊರಗಳವಡಿಸಿ,
ಭಾವದಿಂ ಗುಡಿ ತೋರಣವ ಕಟ್ಟುವೆನಯ್ಯಾ.
ಎನ್ನ ಲಿಂಗವೆ ಬಾರಯ್ಯಾ, ಎನ್ನ ದೇವ ಬಾರಯ್ಯಾ.
ಎನ್ನ ಅಂತರಂಗದ ಪರಂಜ್ಯೋತಿಲರ್ಿಂಗವ ಇದರುಗೊಂಬೆನು ಬಾರಯ್ಯಾ.
ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಧರ್ಮವು ಬಾರಯ್ಯಾ./34
ಕಂಗಳು ತುಂಬಿ ನಿಮ್ಮುವ ನೋಡುತ್ತ ನೋಡುತ್ತಲಯ್ಯಾ,
ಕಿವಿಗಳು ತುಂಬಿ ನಿಮ್ಮುವ ಕೇಳುತ್ತ [ಕೇಳುತ್ತ] ಲಯ್ಯಾ,
ಮನ ತುಂಬಿ ನಿಮ್ಮುವ ನೆನೆವುತ್ತ ನೆನೆವುತ್ತಲಯ್ಯಾ,
ಮಹಾಲಿಂಗ ಕಲ್ಲೇಶ್ವರದೇವರಲ್ಲಿ ಸುಖಿಯಾಗಿರ್ದೆನಯ್ಯಾ. /35
ಕತರ್ು ಭೃತ್ಯನ ವಾಸಕ್ಕೆಯಿದ್ದಲ್ಲಿ,
ಆತನ ಭಕ್ತಿಯನರಿತು, ತಾ ಒಡಗೂಡಿದಲ್ಲಿ,
ಆತ ಕೊಟ್ಟುದ ತಾ ಮುಟ್ಟದೆ,
ಆತನಲ್ಲಿ ದುರ್ವಾಕ್ಯ ದುಶ್ಚರಿತ್ರ ಪಗುಡಿ ಪರಿಹಾಸಕಂಗಳಂ ಬೀರದೆ,
ಆತನ ಚಿತ್ತನೋವಂತೆ ಮತ್ತಾವ ಬಂಧನದ ಕಟ್ಟನಿಕ್ಕದೆ,
ಕೃತ್ಯವೆಮಗೊಂದ ಮಾಡೆಂದು ನೇಮವ ಲಕ್ಷಿಸದೆ,
ಆತ ತನ್ನ ತಾನರಿತು ಮಾಡಿದಲ್ಲಿ,
ಅದು ತನಗೆ ಮುನ್ನಿನ ಸೋಂಕೆಂಬುದನರಿತು,
ಗನ್ನಗದುಕಿನಿಂ ಬಿನ್ನಾಣದಿಂದೊಂದುವ ಮುಟ್ಟದೆ,
ಆ ಪ್ರಸನ್ನವಪ್ಪ ವಸ್ತು, ಮಹಾಮಹಿಮ ಕಲ್ಲೇಶ್ವರಲಿಂಗ
ತಾನಾದ ಶರಣ./36
ಕರ್ಪುರದ ಕಳ್ಳನ ಹುಲ್ಲಿನಲ್ಲಿ ಕಟ್ಟಿಸಲು,
ಅಗ್ನಿಯೆಂಬ ಹಿತವ ಬಂದು ಬಿಡಿಸಲಾಗಿ,
ಪಾಶ ಬೆಂದು ಕಳ್ಳ ತನ್ನಲ್ಲಯೆ ಅಡಗಿದಂತೆ,
ಶರಣಂಗೆ ಬಯಲಪಾಶ ಬಂದು ಕಟ್ಟಿರಲು,
ಬಯಲಲಿಂಗ ಬಂದು ಬಿಡಿಸಲು, ಬಯಲು ಬಯಲು ಏಕವಾಯಿತ್ತು.
ಮಹಾಲಿಂಗ ಕಲ್ಲೇಶ್ವರನೆಂಬ ಸಂಪತ್ತು ಸದಾಶೂನ್ಯವಾಯಿತ್ತು./37
ಕಲುನಡೆಯ ಪಶುಗಳೈದೆ ಕರೆವ ಹಯನಪ್ಪಡೆ,
ಅಳೆಯ ಹಡೆಯದ ಲೋಕವೈ ಹೋಗಲೇಕೆ?
ಕೈದುವ ಹಿಡಿದವರೆಲ್ಲಾ ನೆಟ್ಟನೆ ಕಲಿಗಳಾದರೆ,
ಮಾರ್ಬಲಕಂಜಿ ತಿರುಗಲೇಕೆ?
ಇಷ್ಟಲಿಂಗವೆಂದು ಕಟ್ಟಿಕೊಂಡವರೆಲ್ಲಾ ನೆಟ್ಟನೆ ಭಕ್ತರಾದಡೆ
ಮುಟ್ಟಲಿಲ್ಲ, ದುರಿತ ದುಃಕರ್ಮ ಹುಟ್ಟಲಿಲ್ಲ ಭವದಲ್ಲಿ.
ಆದಿತ್ಯ ಪುರಾಣೇ : ಪೂಜಕಾ ಬಹವಸ್ಸಂತಿ ಭಕ್ತಾಶ್ಚತಸಹಸ್ರಶಃ |
ತತ್ರ ಪ್ರಸಾದಪಾತ್ರಸ್ತುದ್ವೌ ತ್ರಯೋ ಚತುಃ ಪಂಚವ್ಯೆ ||
ಇಂತೆಂದುದಾಗಿ,
ಪೂಜಕರು ಹಲಬರಹರು, ಭಕ್ತರು ಲಕ್ಷಸಂಖ್ಯೆಗಳು.
ಅಲ್ಲಿ ಪ್ರಸಾದ ಪಾತ್ರವಾಯಿತ್ತಾದಡೆ,
ಇಬ್ಬರು ಮೂವರಲ್ಲದೆ ಐವರರಿವರಿಲ್ಲ, [ಮಹಾಲಿಂಗ]ಕಲ್ಲೇಶ್ವರಾ./38
ಕಲ್ಲೊಳಗಣ ಕಿಚ್ಚು ಉರಿಯದ ಪರಿಯಂತೆ,
ಬೀಜದೊಳಗಣ ವೃಕ್ಷ ಉಲಿಯದ ಪರಿಯಂತೆ,
ಪುಷ್ಪದ ಕಂಪು ನನೆಯಲ್ಲಿ ತೋರದಂತೆ,
ಚಂದ್ರಕಾಂತದ ಉದಕ ಒಸರದ ಪರಿಯಂತೆ,
ಮಹಾಲಿಂಗ ಕಲ್ಲೇಶ್ವರನಲ್ಲಿ ಲಿಂಗೈಕ್ಯ.
ಇಹವೆನ್ನ ಪರವೆನ್ನ ಸಹಜವೆನ್ನ ತಾನೆನ್ನ./39
ಕುಲಹೀನಶಿಷ್ಯಂಗೆ ಅನುಗ್ರಹವ ಕೊಟ್ಟು,
ತನ್ನ ಪ್ರಾಣಲಿಂಗವ ನಿಕ್ಷೇಪಿಸಿ, ಕರ್ಣಮಂತ್ರವ ಹೇಳಿ,
ಆ ಶ್ರೀಗುರು ಬಂದು, ಆ ಶಿಷ್ಯನ ಮನೆಯ ಹೊಗಲೊಲ್ಲದೆ,
ಅಕ್ಕಿ ತುಪ್ಪವ ನೀ [ಡಿ]ಸಿಕೊಂಡುಂಬವನ ಕೇಡಿಂಗಿನ್ನೇವೆನಯ್ಯಾ ?
ತನ್ನ ಪ್ರಾಣಲಿಂಗವನವರಿಗೆ ಕೊಟ್ಟು,
ತಾ ಹೋಗೆನೆಂಬ ವ್ರತಗೇಡಿಗಿನ್ನೇವೆನಯ್ಯಾ ?
ಅವನ ಧನಕ್ಕೆ ತಂದೆಯಾದನಲ್ಲದೆ, ಅವನ ಕುಲಕ್ಕೆ ತಂದೆಯಲ್ಲ.
ಇದು ಕಾರಣ, ಮಹಾಲಿಂಗ ಕಲ್ಲೇಶ್ವರಾ,
ಲಿಂಗವ ಮಾರಿಕೊಂಡುಂಬ ಭಂಗಗಾರರು ಕೆಟ್ಟ ಕೇಡನೇನೆಂಬೆನಯ್ಯಾ./40
ಕೂತಾಗ ಭಕ್ತ ಮುನಿದಾಗ ಮಾನವನಾದ ಪಾತಕರ ನುಡಿಯ ಕೇಳಲಾಗದು.
ಅಂಥ ಪಾತಕರ ಉಲುಹೆಂಬುದು, ಉಲಿವ ಕಬ್ಬಕ್ಕಿಯ ಉಲುಹಿನಂತೆ.
ಅದನು ಮಹಂತರು ಕೇಳಲಾಗದು.
ಅದಕ್ಕದು ಸ್ವಭಾವವೆಂಬುದ ಬಲ್ಲರಾಗಿ,
ಮತಿಗೆಟ್ಟು ನುಡಿವ ಮತ್ತರಹ ಮತ್ರ್ಯರ ನುಡಿಯ ಗಡಣೆ,
ಭ್ರಾಂತಿವಿಡಿದ ಭ್ರಮಿತರಿಗೆ ಯೋಗ್ಯವಲ್ಲದೆ,
ಸಜ್ಜನ ಸಾತ್ವಿಕ ಜ್ಞಾನವೇದ್ಯರಹ ಸದ್ಭಕ್ತರು ಮೆಚ್ಚವರೆ ?
ಅಸತ್ಯವೆ ರೂಪಾಗಿಪ್ಪ ಶೂನ್ಯವಾದಿಗಳೆತ್ತಲೂ ಸಲ್ಲರಾಗಿ
ಅವರುಗಳು ಪ್ರೇತಗಾಮಿಗಳು.
ಅಮೇಧ್ಯ ಕೂಪದಲ್ಲಿ ಉತ್ಪನ್ನವಾದ ಕ್ರಿಮಿಗಳಂತಪ್ಪ ಜೀವಿಗಳು
ತಾವಾರೆಂದರಿಯರು.
ಇಂದು ನಿಂದ ಗತಿಯ ತಿಳಿಯರು, ಮುಂದಣ ಗತಿಯನೆಂತೂ ಎಯ್ದಲರಿಯರು.
ಆತ್ಮನು ಶ್ವೇತ ಪೀತ ಹರಿತ ಕಪೋತ ಮಾಂಡಿಷ್ಟ ಕೃಷ್ಣರೆಂಬ
ಷಡ್ವರ್ಣದೊಳಗಾವ ವರ್ಣವೆಂದೂ ವಿಚಾರಿಸಲರಿಯರಾಗಿ,
ಭ್ರಾಂತುವಿಡಿದು ಆತ್ಮೋಹಮೆಂದು ಅಹಂಕರಿಸಿ,
ಅಜ್ಞಾನ ತಲೆಗೇರಿ, ಮತ್ತತನದಿಂದಜಾತ ಶಿವಶರಣರ ದೂಷಿಸಿ,
ಮಿಥ್ಯವಾದದಿಂದ ನುಡಿವರು ತಾವೆ ಘನವೆಂದು,
ಬಯಲಬೊಮ್ಮದ ಹಮ್ಮಿನ ನೆಮ್ಮುಗೆವಿಡಿದು,
ಸಹಜ ಸಮಾಧಾನ ಶಿವೈಕ್ಯರ ಹಳಿದು ನುಡಿವರು.
ಆದಿಯಲ್ಲಿ ಅಹಂ ಬ್ರಹ್ಮವೆಂದು ಬ್ರಹ್ಮನೆ ವಿಧಿಯಾದನು.
ಹರಗಣಂಗಳೊಳಗೆ ಅಗ್ರಗಣ್ಯ ಗಣೇಶ್ವರನಹ
ನಂದಿಕೇಶ್ವರನ ಉದಾಸೀನಂ ಮಾಡಿ,
ಆ ನಂದಿಕೇರ್ಶವರನ ಶಾಪದಿಂದ ಸನುತ್ಕುಮಾರನೆ ವಿಧಿಯಾದನು.
ಕರ್ಮವೆ ಅಧಿಕವೆಂದು ಕೆಮ್ಮನೆ ಕೆಟ್ಟ ಹೆಮ್ಮೆಯಲ್ಲಿ,
ದ್ವಿಜ ಮುನಿಗಳ ನೆರಹಿ ಕ್ರತುವ ಮಾಡಿ, ಆ ದೇವ ಮುನಿಗಳೊಳಗಾಗಿ,
ದಕ್ಷಂಗೆ ಬಂದ ಅಪಾಯವನರಿದು ಮರೆದರಲ್ಲಾ.
ಕುಬೇರನಿಂದಧಿಕವಹ ಧನ, ದೇವೇಂದ್ರನಿಂದಧಿಕವಹ ಐಶ್ವರ್ಯ,
ಸೂರ್ಯನಿಂದಧಿಕವಹ ತೇಜಸ್ಸು,
ಗಜ ಪಟೌಳಿ ಸೀತಾಂಗನೆಗತ್ಯಧಿಕವಹ
ರೂಪು ಲಾವಣ್ಯ ಸೌಂದರ್ಯವನುಳ್ಳ ಸ್ತ್ರೀಯರುಂಟು.
ಕೋಟಿವಿದ್ಯದಲ್ಲಿ ನೋಡುವಡೆ ಸಹಸ್ರವೇದಿಯೆನಿಸುವ ರಾವಣನು
ಪಾರದ್ವಾರಕಿಚ್ಛೈಸಿ ಪರವಧುವಿನ ದೆಸೆಯಿಂದಲೇನಾದನರಿಯರೆ !
ತನು ಕೊಬ್ಬಿನ ಮನ, ಮನ ವಿಕಾರದ ಇಂದ್ರಿಯ ವಿಷಯಂಗಳ
ಅಂದವಿಡಿದ ವಿಕಳತೆಯಲ್ಲಿ ನುಡಿವ ಸಟೆಗರ ಕಾಯಲರಿವವೆ ?
ನಿಮ್ಮಯ ಮನ ಸನ್ನಿಧಿಯಲ್ಲಿ, ಇಂತಿವೆಲ್ಲವ ಕಂಡೂ ಕೇಳಿಯೂ ಅರಿಯರು.
ಹರನ ಸದ್ಭಕ್ತರ ಕೂಡೆ ವಿರೋಧಿಸಿ, ನರಕವನು ಮುಂದೆ ಅನುಭವಿಸಿ,
ಇಂದು ಅಪಖ್ಯಾತಿಗೊಳಗಾಗಿ ಕೆಟ್ಟುಹೋಗಬೇಡ.
ಅತ್ಯಧಿಕ ಶಿವನೆ ಸತ್ಸದಾಚಾರವಿಡಿದು,
ನಿತ್ಯಪದವ ಪಡೆಯಿರೆ ಘಾಸಿ ಮಾಡುವನು ನಿಮ್ಮ ಸೋಜಿಗ.
ಸದಾಶಿವ ಬಲ್ಲಿದನೆನ್ನ ದೇವ ಮಹಾಲಿಂಗ ಕಲ್ಲೇಶ್ವರನು
ತನ್ನ ಭಕ್ತರೆ ಕೆಡೆನುಡಿದವರ ಬಿಡದೆ ದಂಡಿಸುವನು./41
ಕೂಪರ ಕೊಲುವಡೆ ಮಸೆದ ಕೂರಲಗು ಮತ್ತೇಕೆ ?
ಒಲ್ಲೆನೆಂದಡೆ ಸಲದೆ, ಕೊಲೆ ಮರಳಿ ಮತ್ತುಂಟೆ ?
ಮಹಾಲಿಂಗ ಕಲ್ಲೇಶ್ವರ ಒಲ್ಲೆನೆಂದಟ್ಟಿದಡೆ,
ತುಪ್ಪದಲ್ಲಿ ಕಿಚ್ಚ ನಂದಿಸಿದಂತಾಯಿತ್ತು./42
ಕೇಳಿರೆ ಕೇಳಿರೆ ಶಿವವಚನ, ಗುರುವಚನ.
ಪುರಾತರ ವಚನಾನುಭವ ಕೇಳಿ ಬದುಕಿರಯ್ಯಾ.
ಕೇಳಿದ ಸದ್ಭಕ್ತರೆಲ್ಲರು ಕೃತಾರ್ಥರಪ್ಪರು.
ತನು ಕರಗಿ, ಮನ ಕೊರಗಿ, ಭಾವ ಬೆಚ್ಚದೊ !
ಅಹಂಕಾರವಳಿದು, ಶರಣರ ಅನುಭಾವವ ಕೇಳಿದಡೆ,
ಅದೇ ಮುಕ್ತಿ ನೋಡಿರೆ,
ಇಂತಲ್ಲದೆ ಮನೋವ್ಯಾಕುಲನಾಗಿ, ತನುಮುಟ್ಟಿ ಕೇಳಿದಡೆ,
ಉಪದೇಶವೆಂತು ಸಲುವುದಯ್ಯಾ ?
ಎಂತಳವಡುವುದಯ್ಯಾ ?
ಮಹಾಲಿಂಗ ಕಲ್ಲೇಶ್ವರಾ, ಗುರುವಚನ ಪರಾಙ್ಮುಖಂಗೆ
ಎಂದೆಂದೂ ಭವ ಹಿಂಗದು ನೋಡಾ. /43
ಕೋಗಿಲೆಗಳು ಉಗ್ಘಡಿಸಲು ಮಾಮರಂಗಳ ಮೇಲೆ,
ತುಂಬಿಗಳು ಝೇಂಕಾರದಿಂ ಮೆರೆದು ಮೋಹರಿಸಲು,
ಮಂದಾನಿಲಗಳ ತನ್ನ ಬೇಹಿಗೆ ಕಳುಹಲು,
ಅನಂಗ ತನ್ನ ಬರವೆರಸಿ ಬಂದು ನಿಲಲು,
ರಸಭರಿತವಾಗಿರ್ದ ಪರಿಯ ಕಬ್ಬಿನ ಬಿಲ್ಲೇರಿಸಿ, ಕುಸುಮ ಸರವನೆ ತೊಟ್ಟು,
ಎಸಲಾರದೆ, ಬಿಲ್ಲು ಬೇರಾಗಿ, ಇವರೆಲ್ಲರ ಪರಿಯೆಂದು ಬಗೆದುಬಂದೆ,
ಕಾಮಾ ನಿಲ್ಲದಿರೈ.
ನಿನ್ನ ರೂಪ ಮಹಾಲಿಂಗ ಕಲ್ಲೇಶ್ವರದೇವ ಬಲ್ಲ.
ಸಿದ್ಧರಾಮ ನಿನ್ನಳವಲ್ಲ, ಎಲವೊ ಕಾಮಾ./44
ಕ್ಷೇತ್ರ ವಿಶೇಷವೊ, ಬೀಜವಿಶೇಷವೊ ? ಬಲ್ಲವರು ನೀವು ಹೇಳಿರೆ !
ಬೀಜವಿಶೇಷವೆಂದಡೆ ಕುಲದಲಧಿಕ ಸದ್ಬ್ರಾಹ್ಮಣನ ಸತಿ ಜಾರೆಯಾಗಿ,
ಶ್ವಪಚನ ರಮಿಸಲು.
ಆ ಬೀಜ ಗರ್ಭವಾಗಿ ಜನಿಸಿದ ಸುತಂಗೆ
ಬ್ರಾಹ್ಮಣ ಕರ್ಮದಿಂದ ಉಪನಯನ, ಬ್ರಹ್ಮಚರ್ಯ, ವೇದಾಧ್ಯಯನ,
ಅಗ್ನಿ ಹೋತ್ರ, ಯಜ್ಞಯಜನಕ್ಕೆ ಯೋಗ್ಯವಾಗನೆ ಆ ಸುತನು ?
ಕುಲದಲಧಿಕ ಬ್ರಾಹ್ಮಣನು ಚಂಡಾಲ ಸತಿಯ ರಮಿಸಲು,
ಜನಿಸಿದ ಸುತಂಗೆ ವಿಪ್ರಕರ್ಮ ಸಲ್ಲದೆ ಹೋಗದೆ ?
ಇದು ದೃಷ್ಟ. ಇದನತಿಗಳೆದ ವೇದಾದಿ ವಿದ್ಯಂಗಳ ಬಲ್ಲ
ಲೌಕಿಕ ವಿದ್ವಾಂಸರು ತಿಳಿದುನೋಡಿ ಹೇಳಿರೆ !
ಶ್ರುತಿ: ಜನ್ಮನಾ ಜಾಯತೇ ಶೂದ್ರಃ ಕರ್ಮಣಾ ದ್ವಿಜ ಉಚ್ಯತೇ |
ವೇದಾಧ್ಯಾಯೀ ಭವೇದ್ವಿಪ್ರಃ ಬ್ರಹ್ಮ ಚರತೇತಿ ಬ್ರಾಹ್ಮಣಃ |
ವಣರ್ೇನ ಜಾಯತೇ ಶೂದ್ರಃ ಸ್ತ್ರೀ ಶುದ್ರಾಶ್ಚ ಕಾರಣಾತ್ |
ಉತ್ಪತ್ತಿ ಶೂದ್ರ ಪುತ್ರಶ್ಚ ವಿಪ್ರಶೂದ್ರಂ ನ ಭುಂಯೇತ್ ||
ಇಂತೆಂದುದಾಗಿ,
ಇದು ಕಾರಣ, ಗುರು ಸದ್ಭಾವದಲುದಯಿಸಿದ
ಶಿವಜ್ಞಾನಬೀಜ ಸದ್ಭಕ್ತಿಯನಿಂಬುಗೊಂಡ
ಶಿಷ್ಯನ ಹೃದಯ ಮನ ಕರಣವೆಂಬ ಸುಕ್ಷೇತ್ರವು
ಕುಲಹೀನ ಸ್ತ್ರೀ, ಕುಲಯುಕ್ತ ಸ್ತ್ರೀಯರ ದೋಷಪಿಂಡದಂತಲ್ಲ.
ಎನ್ನ ಮಹಾಲಿಂಗ ಕಲ್ಲೇಶ್ವರನ ಶರಣರೆ ಅಜಾತರೆಂದಿಕ್ಕಿದೆ
ಮುಂಡಿಗೆಯನಾ, ಪರವೆತ್ತಿಕೊಳ್ಳಿರೆ./45
ಗುರು ಕರುಣ,. ಚರಣ ಸೇವೆ,
ಭವದ ಬಳ್ಳಿಯ ಬೀಜವನತಿಗಳೆಯಿತ್ತು,
ನೋಡ ನೋಡಲುದಯಿಸಿತ್ತು, ಘನಪದದ ತೋರಿತ್ತು,
ನಿರಾಕುಳ ನಿರುಹರಣ ಮಹಾಲಿಂಗ ಕಲ್ಲೇಶ್ವರದೇವಾ./46
ಗುರುಕರುಣಾಮೃತವಿಲ್ಲದ ಭಕ್ತಿಯ ಅನು,
ಮನದಲನುಕರಿಸುವ ಜೀವಿಗಿನ್ನೆಲ್ಲಿಯದೊ ?
ಸತ್ಕ್ರಿಯೆ ಸತ್ಪಥವಿನ್ನೆಲ್ಲಿಯದೊ ?
ಇದು ಕಾರಣ, ಮಹಾಲಿಂಗ ಕಲ್ಲೇಶ್ವರದೇವ
ಲಿಂಗ ಜಂಗಮ ಕರುಣವಿಲ್ಲದ ಜಡಮತಿಗಿನ್ನೆಲ್ಲಿಯದೊ ?/47
ಗುರುಲಿಂಗಜಂಗಮಕ್ಕೆ ಅರ್ಥ ಪ್ರಾಣ ಅಭಿಮಾನವಂ ಕೊಟ್ಟು,
ಅಹಂಕಾರವಳಿದಿಹಂಥ ಪ್ರಮಥಗಣಂಗಳು,
ಇಂದೆನ್ನ ಮನೆಗೆ ಬಂದಾರೆಂದು,
ಗುಡಿ ತೋರಣವ ಕಟ್ಟಿ, ಷಡುಸಮ್ಮಾರ್ಜನೆಯ ಮಾಡಿ,
ರಂಗವಾಲಿಯನಿಕ್ಕಿ, ಉಘೇ ಚಾಂಗುಭಲಾ ಎಂದುಗ್ಗಡಿಸುವೆನು,
ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಪುರಾತನರು
ತಮ್ಮೊಕ್ಕುದನಿಕ್ಕಿ ಸಲಹುವರಾಗಿ./48
ಗುರುವಿದೆ, ಲಿಂಗವಿದೆ, ಜಂಗಮವಿದೆ, ಪಾದತೀರ್ಥಪ್ರಸಾದವಿದೆ.
ಮತ್ತೆಯೂ ಬಳಲುತ್ತಿದ್ದೇನೆ, ಭಕ್ತಿ ಸಹಜವಳಡದಾಗಿ.
ಇದರ ಸಂದುಸಕೀಲವನರಿಯದೆ ಮತ್ತೆಯೂ ಬಳಲುತ್ತಿದ್ದೇನೆ,
ಮಹಾಲಿಂಗ ಕಲ್ಲೇಶ್ವರಯ್ಯಾ,
ಸಹಜ ಸದ್ಭಾವ ಸತ್ಯಶರಣರ ಮಹಾನುಭಾವರ ಸಂಗವಲ್ಲಾಗಿ./49
ಘನದ ವೇದಿಸಿದ ಮನ, ಮನವ ವೇದಿಸಿದ ಇಂದ್ರಿಯಂಗಳು,
ಇಂದ್ರಿಯಂಗಳ ವೇದಿಸಿದ ತನು, ತನುವ ವೇದಿಸಿದ ಪ್ರಸಾದ,
ಪ್ರಸಾದವ ವೇದಿಸಿದ ಪರಿಣಾಮ, ಪರಿಣಾಮವ ವೇದಿಸಿದ ತೃಪ್ತಿ,
ತೃಪ್ತಿಯ ವೇದಿಸಿದ ಇಷ್ಟಲಿಂಗ, ಇಷ್ಟಲಿಂಗವ ವೇದಿಸಿದ ಜ್ಞಾನ,
ಜ್ಞಾನವ ವೇದಿಸಿದ ನಿರ್ಮಲ ಶಿವಕ್ರಿಯೆ,
ನಿರ್ಮಲ ಶಿವಕ್ರಿಯೆ[ಯ] ವೇದಿಸಿದ ಶರಣಂಗೆ
ಇನ್ನು ವೇದ್ಯರುಂಟೆ, ಮಹಾಲಿಂಗ ಕಲ್ಲೇಶ್ವರಾ ?/50
ಜಂಗಮದ ಪಾದೋದಕವ ಲಿಂಗಮಜ್ಜನಕ್ಕೆರೆದು,
ಆ ಜಂಗಮದ ಪ್ರಸಾದವನೆ ಲಿಂಗಕ್ಕರ್ಪಿಸುವ
ಅವಿವೇಕಿಗಳು ನೀವು ಕೇಳಿರೆ !
ಅಟ್ಟೋಗರವನಟ್ಟೆನೆಂಬ, ಕಾಷ್ಠವ ಸುಟ್ಟ ಬೂದಿಯ
ಮರಳಿ ಸುಟ್ಟೆಹೆನೆಂಬ ಭ್ರಮಿತರು ನೀವು ಕೇಳಿರೆ !
ಪದಾರ್ಥ ಪ್ರಸಾದವಾದುದು ಇಷ್ಟಲಿಂಗ ಮುಖದಿಂದ.
ಆ ಇಷ್ಟಲಿಂಗವ ಸೋಂಕಿ ಬಂದ ಆದಿಪ್ರಸಾದವೆ
ಪ್ರಾಣಲಿಂಗಕ್ಕೆ ಅಂತ್ಯಪ್ರಸಾದ.
ಆ ಪ್ರಾಣಲಿಂಗಮುಖದಿಂದಲೊದಗಿದ ಅಂತ್ಯಪ್ರಸಾದವೆ
ಭಾವಲಿಂಗಕ್ಕೆ ತೃಪ್ತಿಮುಖದಲ್ಲಿ ಸೇವ್ಯ ಪ್ರಸಾದ.
ಇಂತೀ ಆದಿಪ್ರಸಾದ, ಅಂತ್ಯಪ್ರಸಾದ, ಸೇವ್ಯಪ್ರಸಾದ ಗ್ರಾಹಕವೆಂಬ ಜಂಗಮ
ಇಷ್ಟಲಿಂಗವಿಡಿದು ಗುರು, ಇಷ್ಟಲಿಂಗವಿಡಿದು ಭಕ್ತ,
ಇಷ್ಟಲಿಂಗವಿಡಿದು ಜಂಗಮ.
ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಿ,
ಪ್ರಸನ್ನ ಪ್ರಸಾದವ ಪಡೆದು, ಅಷ್ಟಭೋಗವ ಭೋಗಿಸುವಾತನೆ ಗುರು.
ಇಂತೀ ಆದಿಕುಳ ಮಹಾನಂದ ಪ್ರಸಾದದ ನಿಜಾನುಭಾವಿಯೆ ಜಂಗಮ.
ಇಂತೀ ಗುರು ಲಿಂಗ ಜಂಗಮದಲ್ಲಿ ಭಕ್ತಿ ನೆಲೆಗೊಂಡ
ನಿರುಪಾಧಿಕನೆ ಭಕ್ತ.
ಆ ಭಕ್ತನು ಲಿಂಗಮುಖದಲ್ಲಿ ಸಿದ್ಧಪ್ರಸಾದವ ಪಡೆದು ಭೋಗಿಸೂದು.
ಸ್ವಚ್ಛಂದ ಲಲಿತ ಭೈರವಿಯಲ್ಲಿ : ಲಿಂಗಾರ್ಪಿತ ಪ್ರಸಾದಂ ಚ ನದದ್ಯಾತ್ ಜಂಗಮಾದಿಷು |
ಜಂಗಮಸ್ಯ ಪ್ರಸಾದಂ ಚ ನ ದದ್ಯಾ ಲಿಂಗಮೂರ್ತಿಷು |
ಜಂಗನಸ್ಯ ಪ್ರಸಾದಂ ಚ ಸ್ವೇಷ್ಟಲಿಂಗೇನ ಚಾರ್ಪಯೇತ್ |
ಪ್ರಮಾದಾದರ್ಪಯೇದ್ದೇವಿ ಪ್ರಸಾದೋ ನಿಷ್ಫಲೋ ಭವೇತ್ ||
ಇಂತೆಂದುದಾಗಿ,
ಅಂದಾದಿಯಿಂದಾದಿಯಾಗಿ ಎಂದೆಂದೂ ಇದೇ ಪ್ರಸಾದದಾದಿಕುಳ.
ಈ ಆದಿಕುಳದರಿವುವಿಡಿದು ಪ್ರಸಾದವಿಡಿವ
ಮಹಾಪ್ರಸಾದ ಸಾಧ್ಯಗ್ರಾಹಕರಿಗೆ ನಮೋ ನಮೋ ಎಂಬೆ.
ಉಳಿದ ಉದ್ದೇಶಿಗಳೆನಿಸುವ ಭ್ರಾಂತರಹ ಜಾತ್ಯಂಧಕರಿಗೆ
ನಾನಂಜುವೆನಯ್ಯಾ, ಮಹಾಲಿಂಗ ಕಲ್ಲೇಶ್ವರಾ./51
ಜಾಗ್ರ ಸ್ವಪ್ನ ಸುಷುಪ್ತಿಗಳಲ್ಲಿ ತಟ್ಟುವ ಮುಟ್ಟುವ ತಾಗುನಿರೋಧ
ಕೊರೆತ ನೆರೆತಗಳ ಹಿಡಿವನೆ ಶಿವಶರಣನು ? ಹಿಡಿಯನು.
ಅದೇನು ಕಾರಣವೆಂದೆಡೆ, ಅದೆ[ಲ್ಲವೂ] ನಿನ್ನ ಮಾಯೆಯೆಂಬುದನು ಬಲ್ಲನಾಗಿ.
ಇದು ಕಾರಣ, ಮಹಾಲಿಂಗ ಕಲ್ಲೇಶ್ವರದೇವಾ,
ನಿಮ್ಮ ಶರಣರು ನಿಜಗಲಿಗಳು./52
ಜಾತಿಯಲ್ಲಿ ಅಧಿಕವೆಂದು ನುಡಿವರು ವಿಪ್ರಜನರು.
ಶ್ವಪಚ ಮಚ್ಚಿಗ ಬೋಯ ಕುಲಜರೆ ದ್ವಿಜರು ?
ಅಗಸ ಕಮ್ಮಾರ ನಾವಿದ ಕುಲಜರೆ ದ್ವಿಜರು ?
ಸರ್ವವೇದೇಷು ಶಾಸ್ತ್ರೇಷು ಸರ್ವಯಜ್ಞೇಷು ದೀಕ್ಷಿತಃ |
ಮಹಾಪಾತಕಕೋಟಿಘ್ನಃ ಶ್ವಪಚೋ ಲಿಂಗಪೂಜಕಃ |
ತತ್ಸಂಭಾಷಣತೋ ಮುಕ್ತಿಃ ಗಣಮುಖ್ಯಂ ಸುಖಂ ಭವೇತ್ ||
ಇಂತೆಂದುದಾಗಿ, ಲಿಂಗಭಕ್ತನೆ ಕುಲಜನು.
ಮಹಾಲಿಂಗ ಕಲ್ಲೇಶ್ವರನನಾರಾಧಿಸಿ ಪಡೆದರೆಲವೊ.
ಮರೆದಡೆ ಹುಳುಗೊಂಡದಲ್ಲಿಪ್ಪಿರೆಲವೊ/53
ತನುವ ಗುರುವಿಂಗಿತ್ತ, ಮನವ ಲಿಂಗಕಿತ್ತ, ಧನವ ಜಂಗಮಕಿತ್ತ,
ಎನ್ನ ಬಸವರಾಜನಯ್ಯ.
ಗುರುವಿನಲ್ಲಿ ಶುದ್ಧ, ಲಿಂಗದಲ್ಲಿ ಸಿದ್ಧ, ಜಂಗಮದಲ್ಲಿ ಪ್ರಸಿದ್ಧ
ಪ್ರಸಾದಿಯಯ್ಯಾ,
ಎನ್ನ ಬಸವರಾಜನ[ಯ್ಯ]
ಲಿಂಗದಲ್ಲಿ ದೀಕ್ಷೆ ಶಿಕ್ಷೆ ಸ್ವಾನುಭಾವ ಆಯತ ಸ್ವಾಯತ ಸನ್ನಹಿತ,
ಎನ್ನ ಬಸವರಾಜನಯ್ಯ.
ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಶರಣ ಬಸವರಾಜನಯ್ಯ. /54
ತನ್ನ ಗುಣವ ಹೊಗಳಬೇಡ, ಇದರ ಗುಣವ ಹಳೆಯಬೇಡ.
ಕೆಮ್ಮೆನೊಬ್ಬರ ನುಡಿಯಬೇಡ, ನುಡಿದು ನುಂಪಿತನಾಗಬೇಡ.
ಇದಿರ ಮುನಿಯಿಸಬೇಡ, ತಾ ಮುನಿಯಬೇಡ.
ತಾನು ಬದುಕವೈಸುದಿನ, ಸಮತೆ ಸಮಾಧಾನ ತುಂಬಿ ತುಳುಕದಿರಬೇಕು.
ಮಹಾಲಿಂಗ ಕಲ್ಲೇಶ್ವರದೇವರ ನಿಚ್ಚಳ ನಿಜವನರಿದಡೆ,
ಬಚ್ಚಬರಿಯ ಸಹಜ ಸಮಾಧಾನವಳವಟ್ಟಿರಬೇಕು./55
ತಾನಿಲ್ಲದ ಮುನ್ನ ಗುರುವೆಲ್ಲಿಹುದೊ ?
ಲಿಂಗವೆಲ್ಲಿಹುದೊ ? ಜಂಗಮವೆಲ್ಲಿಹುದೊ ?
ಪ್ರಸಾದವೆಲ್ಲಿಹುದೊ ? ಪಾದೋದಕವೆಲ್ಲಿಹುದೊ ?
ಪರವೆಲ್ಲಿಹುದೊ ? ಸ್ವಯವೆಲ್ಲಿಹುದೊ ?
ತನಗೆ ತೋರಿದ ಗುರು, ತನಗೆ ತೋರಿದ ಲಿಂಗ,
ತನಗೆ ತೋರಿದ ಜಂಗಮ, ತನಗೆ ತೋರಿದ ಪ್ರಸಾದ,
ತನಗೆ ತೋರಿದ ಪಾದೋದಕ,
ತನಗೆ ತೋರಿದ ಪರವು, ತನಗೆ ತೋರಿದ ಸ್ವಯವು.
ಗುರುವೆಂದರಿದವನೂ ತಾನೆ,
ಲಿಂಗವೆಂದರಿದವನೂ ತಾನೆ, ಜಂಗಮವೆಂದರಿದವನೂ ತಾನೆ.
ಪ್ರಸಾದವೆಂದರಿದವನೂ ತಾನೆ, ಪಾದೋದಕವೆಂದರಿದವನೂ ತಾನೆ,
ಪರವೆಂದರಿದವನೂ ತಾನೆ, ಸ್ವಯಂವೆಂದರಿದವನೂ ತಾನೆ,
ಇಂತಿವೆಲ್ಲವ ಪೆತ್ತರಿವು ತಾನೆ ಸ್ವಯಂಜ್ಯೋತಿ, ಮಹಾಲಿಂಗ ಕಲ್ಲೇಶ್ವರಾ./56
ದಾನಿಯಾದಡೇನು ಅವನು ಬೇಡಿದಲ್ಲದರಿಯಬಾರದು.
ರಣರಂಗ ಧೀರನಾದಡೇನು ಅಲಗಲಗು ಹಳಚಿದಲ್ಲದರಿಯಬಾರದು.
ಸ್ನೇಹವಾದಡೇನು ಅಗಲಿದಲ್ಲದರಿಯಬಾರದು.
ಹೇಮಜಾತಿಯಾದಡೇನು ಒರೆದಲ್ಲದರಿಯಬಾರದು.
ಮಹಾಲಿಂಗ ಕಲ್ಲೇಶ್ವರನ ಘನವನರಿದೆಹೆನೆಂದಡೆ,
ಸಂಸಾರಸಾಗರವ ದಾಂಟಿದಲ್ಲದರಿಯಬಾರದು./57
ದೀಕ್ಷಾಮೂರ್ತಿಗರ್ುರುಲರ್ಿಂಗಂ ಪೂಜಾಮೂರ್ತಿಃ ಪರಶ್ಶಿವಃ |
ದೀಕ್ಷಾಂ ಪೂಜಾಂ ಚ ಶಿಕ್ಷಾಂ ಚ ಸರ್ವಕತರ್ಾ ಚ ಜಂಗಮಃ ||
ಎಂದುದಾಗಿ,
ಪಂಚಭೂತ ಅರಿಷಡ್ವರ್ಗದುರವಣೆಯ ನಿಲಿಸಿ,
ಭೀತಿ ಪ್ರೀತಿ ಪ್ರೇಮ ಕಾಲೋಚಿತವನರಿದು,
ಕಿಂಕಿಲನಾಗಿ, ನಿರುಪಾಧಿಕನಾಗಿ ದಾಸೋಹ ಮಾಡುವಲ್ಲಿ ಭಕ್ತನು.
ಅನ್ಯದೈವ ಪರವಧು ಪರಧನವಂ ಬಿಟ್ಟು,
ಇಹಪರದಲ್ಲಿಯ ಭೂಕ್ತಿ ಮುಕ್ತಿಗಳಾಶೆಇಲ್ಲದೆ,
ಏಕೋನಿಷ್ಠೆ ಗಟ್ಟಿಗೊಂಡು ಮಾಹೇಶ್ವರನಾಗಿರಬೇಕು.
ಕಾಯದ ಮರದಲ್ಲಿ ಇಷ್ಟಲಿಂಗಾರ್ಪಿತ.
ಮನ ಮೊದಲಾದ ಕರಣಂಗಳನು ಒಂದೆ ಮುಖದಲ್ಲಿ ನಿಲಿಸಿ,
ಅವಧಾನವಳವಟ್ಟ ರುಚಿಯನು ಜಿಹ್ವೆಯ ಕರದಿಂದಲರ್ಪಿಸುವಲ್ಲಿ
ಪ್ರಾಣಲಿಂಗಾರ್ಪಿತ.
ತಟ್ಟುವ ಮುಟ್ಟುವ ನಿರೂಪವಹ ಸರ್ವವನು ಜಾನುಮುಖದಲ್ಲಿ
ಭಾವದ ಕರದಿಂದ ಲಿಂಗ ಮುಂದು ಭಾವ ಹಿಂದಾಗಿ,
ತೃಪ್ತಿಲಿಂಗಕ್ಕರ್ಪಿಸುವಲ್ಲಿ ಭಾವಲಿಂಗಾರ್ಪಿತ.
ಇಂತೀ ಅರ್ಪಿತತ್ರಯದ ಅನುಭಾವ ವತ್ಸಲನಾಗಿ,
ಅರ್ಪಿತವನರಿತು ಅನರ್ಪಿತ ನಷ್ಟವಾದಲ್ಲಿ ಪ್ರಸಾದಿ.
ಮನ ಬದ್ಧಿ ಚಿತ್ತ ಅಹಂಕಾರದ ಗುಣವಳಿದು,
ಪ್ರಾಣಚೈತನ್ಯದೊಳು ವಾಯುವಿನೊಳಡಗಿದ ಪರಿಮಳದಂತೆ,
ಲಿಂಗಚೈತನ್ಯ ನೆಲೆಗೊಂಡಿಪ್ಪಲ್ಲಿ ಪ್ರಾಣಲಿಂಗಿ.
ಪಂಚೇಂದ್ರಿಯಂಗಳ ಸಂಚವ ನಿಲಿಸಿ, ಲಿಂಗೇಂದ್ರಿಯವೆನಿಸಿತ್ತು.
ಸಪ್ತಧಾತುವಿನ ಉರವಣೆಯಂ ಮೆಟ್ಟಿ,
ಪ್ರಸನ್ನ ಲಿಂಗದ ಪರಮಸುಖಕ್ಕೆ ರತಿಭೋಗದಲ್ಲಿ ಸತಿಯಾಗಿರಲು ಶರಣ.
ಕಾಯಜೀವ, ಪುಣ್ಯಪಾಪ, ಇಹಪರವೆಂಬ ಭ್ರಮೆಯಳಿದು,
ಮಹಾಲಿಂಗದಲ್ಲಿ ಅವಿರಳಸಂಬಂಧವಾದಲ್ಲಿ ಲಿಂಗೈಕ್ಯನು.
ಈ ಷಡುಸ್ಥಲದ ಆದಿಕುಳವು ಆರಿಗೆಯೂ ಅಳವಡದು.
ಘನಕ್ಕೆ ಘನವು, ಲೋಕ ಲೌಕಿಕರಿಗಸಾಧ್ಯ.
ನಿಮ್ಮ ಶರಣರಿಗೆ ಸುಲಭ ಕಾಣಾ, ಮಹಾಲಿಂಗ ಕಲ್ಲೇಶ್ವರಾ.
ಈ ಷಡುಸ್ಥಲಕ್ಕೆ ಒಡಲಾಗಿ, ಭಕ್ತಿಭಂಡಾರಿ ಬಸವಣ್ಣಂಗೆ
ಅಳವಡಿಸಿ ಮರೆದಿರಿ./58
ದೇಹದೊಳಗು ದೇಹವಿದ್ದು, ದೇಹ ಕರಣೇಂದ್ರಿಯಂಗಳ ಪ್ರೇರಿಸುವನು.
ಆ ಲೋಕದ ಆಗುಚೇಗೆ ತನಗಿಲ್ಲ. ಅದೆಂತೆಂದಡೆ :
ಕಮಲಪತ್ರ ಜಲದಂತೆ, ಆ ಕಹಳೆಯಲ್ಲಿಹ ನಾದದಂತೆ,
ಹುಡಿ ಹತ್ತದ ಗಾಳಿಯಂತೆ,
ನುಡಿ ಹತ್ತದ ಶಬ್ದದಂತಿಪ್ಪನಯ್ಯಾ ಶಿವನು,
ಸರ್ವಾಂತರ್ಯಾಮಿಯಾಗಿ ಮಹಾಲಿಂಗ ಕಲ್ಲೇಶ್ವರನು./59
ನಡೆವಲ್ಲಿ ಕಾಣದೆ ಎಡಹಿ, ಅರಿಕೆಯಲ್ಲಿ ಅರಿದ ಮತ್ತೆ
ನಡೆವಾಗ ಎಚ್ಚರಿಕೆ.
ಕಾಲಹುಣ್ಣು ಕತಿಕಿರಿವ ತೆರೆದಂತೆ,
ಮರವೆಯಿಂದ ಶರಣರಲ್ಲಿ ಬಿರುಬಿನ ಮಾತು ಬಂದಡೆ,
ಅದ ಒಡನೆ ತಿಳಿಯಬೇಕು.
ಅದು ಶರೀರದ ಪ್ರಕೃತಿ ಸಂಚಾರವೆಂದರಿತು,
ಬಿಡುವ ಗುಣವ ಬಿಟ್ಟು ಅರಿದಡೆ, ಭಕ್ತಿಗದೇ ಗುಣ.
ಬಟ್ಟೆಯಲ್ಲಿ ಭಯವೆಂದಡೆ ಎಚ್ಚರಿಕೆ ಬೇಕು.
ಮತ್ತೆ ಮರವೆಯ ಶರೀರಕ್ಕೆ ಅದು ಲಕ್ಷಣ.
ಮತ್ತೆ ಎಚ್ಚರಿಕೆ, ಮಹಾಲಿಂಗ ಕಲ್ಲೇಶ್ವರಾ./60
ನಿಃಕಲ ಪರತತ್ವವ ಮಹಾಲಿಂಗಕ್ಷೇತ್ರ.
ಆ ಕ್ಷೇತ್ರದಲ್ಲಿ ನಿಕ್ಷೇಪವಾಗಿ ನಿಧಾನಿಸಿದ್ದ ಘನಚೈತನ್ಯವೆ
ಷಟ್ಸ್ಥಲಲಿಂಗ ಮೂಲಾಂಕುರವೆನಿಸುವ ಪರಮಕಳೆ.
ಆ ಪರಮಕಳೆಯ ಪರಬ್ರಹ್ಮ ಪರಂಜ್ಯೋತಿ ಪರಾತ್ಪರ ಪರತತ್ವ,
ಪರಮಾತ್ಮ ಪರಮಜ್ಞಾನ ಪರಮಚೈತನ್ಯ
ನಿಃಕಲ ಚರವೆನಿಸುವ ಪರವಸ್ತು. ಶ್ರುತಿ :
ವರ್ಣಾತೀತಂ ಮನೋತೀತಂ ಭಾವಾತೀತಂ ಚ ತತ್ಪರಂ |
ಜ್ಞಾನಾತೀತಂ ನಿರಂಜನ್ಯಂ ತತ್ಕಲಾ ಸೂಕ್ಷ್ಮಭಾವತಃ ||
ಇಂತೆಂದುದಾಗಿ,
ಇಂತೀ ನಿರವಯ ಚರಲಿಂಗದ ಚೈತನ್ಯವೆಂಬ ಪ್ರಸನ್ನ ಪ್ರಸಾದಮಂ
ಇಷ್ಟಲಿಂಗಕ್ಕೆ ಕಲಾಸಾನಿಧ್ಯವಂ ಮಾಡಿ,
ಆ ಚರಲಿಂಗದ ಸಾಮರಸ್ಯ ಚರಣಾಂಬುವಿಂ ಮಜ್ಜನಕ್ಕೆರೆದು,
ನಿಜಲಿಂಗೈಕ್ಯವನೆಯ್ದಲರಿಯದೆ ಕಂಡವರ ಕಂಡು,
ತೀರ್ಥದಲ್ಲಿ ಮಂಡೆಯ ಬೋಳಿಸಿಕೊಂಡವರ ತೆರನಾದ
ಭಂಡರ ಮೆಚ್ಚವನೆ, ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಶರಣ ?/61
ನಿಮ್ಮ ನೆನವ ಮನಕ್ಕೆ ಜ್ಞಾನಸಿದ್ಧಿಯೆಂತಪ್ಪುದೆಂದರಿಯೆನಯ್ಯಾ.
ಕರ್ಮದೊಳಗಣ ಬಯಲಮೋಹವೆನ್ನ ಬೆನ್ನ ಬಿಡದು.
ಅನ್ಯವಿಷಯ ಭಿನ್ನ ರುಚಿಯಲೆನ್ನ ಮನವು ಹರಿವುದ ಮಾಣದನ್ನಕ್ಕರ,
ನಿಮ್ಮ ನೆನೆದೆಹೆನೆಂಬ ಮನದ ಕಲಿತನವ ನೋಡಾ,
ಮಹಾಲಿಂಗ ಕಲ್ಲೇಶ್ವರಾ !/62
ಪರಮಪದವಿಯ ನಿಮ್ಮ ಕೊರಳಲ್ಲಿ ಕಟ್ಟಿಕೊಳ್ಳಿ.
ಪರಮಪದವಿಯ ನಿಮ್ಮ ಎದೆಯಲ್ಲಿ ಇರಿದುಕೊಳ್ಳಿ.
ಎನಗೆ ನಿಮ್ಮ ತೊತ್ತು ಸೇವೆಯೆ ಸಾಕು, ಮಹಾಲಿಂಗ ಕಲ್ಲೇಶ್ವರಾ./63
ಪರಮಪವಿತ್ರ ನಿರ್ಮಲಲಿಂಗ ತನ್ನ ಅಂಗದ ಮೇಲಿರುತ್ತಿರಲು,
ಅಂಗಶುದ್ಧ ಸೌಕರ್ಯವಿಲ್ಲದವನ ಮುಖವ ನೋಡಲಾಗದು.
ಅವನ ಮುಟ್ಟಲೆಂತೂ ಆಗದು.
ಮನದ ಮಲಿನವ ಕಳೆದು ಪ್ರಾಣಲಿಂಗವ ಧರಿಸಬೇಕು.
ತನುವಿನ ಮಲವ ಕಳೆದು ಇಷ್ಟಲಿಂಗವ ಧರಿಸಬೇಕು.
ಜೀವತ್ರಯಂಗಳ ಮಲವ ಕಳೆದು ಪ್ರಸಾದವ ಧರಿಸಬೇಕು.
ಮನದ ಮಲಿನವಾವುದೆಂದಡೆ ಮನವ್ಯಾಕುಲ.
ತನುವಿನ ಮಲಿನವಾವುದೆಂದಡೆ ತನುಗುಣವ್ಯಾಪ್ತಿ
ತನುತ್ರಯದ ಮಲಿನವಾವುದೆಂದಡೆ ಈಷಣತ್ರಯ.
ಜೀವತ್ರಯದ ಮಲವಾವುದೆಂದಡೆ ಅವಸ್ಥಾತ್ರಯ.
ಕರಣಂಗಳ ಮಲವಾವುದೆಂದಡೆ ಸಂಕಲ್ಪ ವಿಕಲ್ಪ.
ಅಸತ್ಯ ನಿಂಧ್ಯ ಮಿಥ್ಯವಾದ ಸತ್ಕಿರಿಸುತಿಹ, ಅನ್ಯರಿಗೆ ಕೈಯನಾನುಹ.
`ನಿರ್ಮಲಸ್ಯ ತು ನಿರ್ಮಾಲ್ಯಂ ಮಲದೇಹೀ ನ ಧಾರಯೇತ್’
ಎಂದುದಾಗಿ,
ಲಿಂಗವಿಪ್ಪ ಸುಕ್ಷೇತ್ರ ಕಾಯದ ಮಲಿನವ ಕಳೆದು, ಪ್ರಸಾದವ ಧರಿಸದಿದ್ದಡೆ,
ಭವಮಾಲೆ ಹಿಂಗದು, ನರಕ ತಪ್ಪದಯ್ಯಾ, ಮಹಾಲಿಂಗ ಕಲ್ಲೇಶ್ವರಾ./64
ಪರಸ್ತ್ರೀಯರ ರೂಪ ಕಾಯದ ಕಣ್ಣಿನಲ್ಲಿ ಕಂಡು,
ಮನ ಹರಿದು, ತನು ಕರಗಿ ಬೆರಸಿದ ಬಳಿಕ ಸಂಗವಲ್ಲದೇನು ಹೇಳಾ !
ಮನ ಬೆರಸಿ, ತನು ತಳಿತು, ಇಂದ್ರಿಯಂಗಳು ತುಳುಕಿದ ಬಳಿಕ,
ಸಂಗವಲ್ಲದೇನು ಹೇಳಾ ?
ಮಹಾಲಿಂಗ ಕಲ್ಲೇಶ್ವರ ಬಲ್ಲ ಸಿದ್ಧರಾಮನ ಪರಿಯ.
ಮನದ ಹಾದರಿಗನು ಶಬ್ದ ರುಚಿಕರನು./65
ಪೂರ್ವಜಾತವ ಕಳೆದು ಪುನರ್ಜಾತನಾದ ಬಳಿಕ, ಏನೆಂದೆನಲುಂಟೆ ?
ಭಕ್ತಕಾಯ ಮಮಕಾಯವಾದ ಬಳಿಕ, ಏನೆಂದೆನಲುಂಟೆ ?
ಅದೆಂತೆಂದಡೆ : ನ ಮುಕ್ತಿಶ್ಚ ನ ಧರ್ಮಶ್ಚ ನ ಪುಣ್ಯಂ ನ ಚ ಪಾಪಕಂ |
ನ ಕರ್ಮಾ ಚ ನ ಜನ್ಮಾ ಚ ಗುರೋರ್ಭಾವನೀರಿಕ್ಷಣಾತ್ ||
ಎಂದುದಾಗಿ,
ಇದು ಕಾರಣ, ಹಮ್ಮು ಬಿಮ್ಮು ಸೊಮ್ಮನಳಿದ,
ಮಹಾಲಿಂಗ ಕಲ್ಲೇಶ್ವರ ತಾನಾದ ಬಳಿಕ, ಏನೆಂದೆನಲುಂಟೆ ?/66
ಬಯಲಬೊಮ್ಮವ ನುಡಿವ,
ಆ ನುಡಿಯ ಬಯಲಭ್ರಮೆಯಲ್ಲಿ ಬಿದ್ದ ಜಡರುಗಳು
ಬಲ್ಲರೆ, ಶಿವನಡಿಗಳ ?
ಗುರುಲಿಂಗಜಂಗಮದ ಪಾದೋದಕ ಪ್ರಸಾದವೆಂಬ
ಪರಮಾಮೃತವ ಸವಿದು, ಪರವಶನಾದ ಪರಮಮುಗ್ಧಂಗಲ್ಲದೆ
ಪರವು ಸಾಧ್ಯವಾಗದು,
ಮಹಾಲಿಂಗ ಕಲ್ಲೇಶ್ವರನ ಶರಣ ಪೂರ್ವಾಚಾರಿ ಬಸವಣ್ಣಂಗಲ್ಲದೆ./67
ಬಯಲು ಮೊಳಗಿ, ಮಳೆ ಸೃಜಿಸೆ, ಆ ಬಯಲು ಆ ಮಳೆಯನೊಡಗೂಡಿ,
ದೃಷ್ಟವಪ್ಪ ವಾರಿಕಲ್ಲಾಗಿ ತೋರಿದಂತೆ, ನಿನ್ನ ನೆನಹೆ ನಿನಗೆ ಶಕ್ತಿಯಾಯಿತ್ತಲ್ಲಾ.
ಆ ನಿಮ್ಮಿಬ್ಬರ ಸಮರತಿಯೆ,
ನಿಮಗೆ ಅಖಂಡವೆಂಬ ನಾಮ ಸೂಚನೆಯಾಯಿತ್ತಲ್ಲಾ.
ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಆದಿಗೆ, ಇದೇ ಪ್ರಥಮವಾಯಿತ್ತಲ್ಲಾ./68
ಬರಿಯಜ್ಞಾನಿಗಳಾದವರು ಅಂಗದ ಬಲದಲ್ಲಿ ನುಡಿವರು.
ಲಿಂಗಾನುಭಾವಿಗಳು ಲಿಂಗದ ಬಲದಲ್ಲಿ ನುಡಿವರು.
ಜ್ಞಾನಿಗಳಲ್ಲದ ಸುಜ್ಞಾನಿಗಳಲ್ಲದವರು,
ಗಂಡನಿಲ್ಲದ ಮುಂಡೆಯರು, ಹಲಬರನುರುವಂತೆ,
ಹಿಂದನರಿಯದೆ ನುಡಿವರು, ಮುಂದನರಿಯದೆ ಅನುಭಾವವ ಮಾಡುವರು.
ಸದ್ಭಕ್ತರ ನುಡಿಗಳು ಲಿಂಗದ ನುಡಿಗಳು.
ಬರಿಯಜ್ಞಾನಿಗಳ ನುಡಿಗಳು ಗಾಳಿಯ ಶಬ್ದಂಗಳು.
ಮತಿಗೆಟ್ಟು, ಅವಗತಿಯಲ್ಲಿ ಕಾಲೂರಿ, ಆಯತಗೆಟ್ಟು
ನಾಯನಡೆಯಲ್ಲಿ ನಡೆವರು.
ಅವರು ಅನುಭಾವಿಗಳಪ್ಪರೇ ? ಅಲ್ಲಲ್ಲ.
ಆದೆಂತೆಂದಡೆ : ಸುಜ್ಞಾನಿಗಳಾದಡೆ, ಕಾಮವೆ ಪ್ರಾಣವಾಗಿಹರೆ ? ಅನ್ನವೆ ಜ್ಞಾನವಾಗಿಹರೆ ?
ವರುಣನ ಹೊದಿಕೆಯನೆ ಹೊದೆದು,
ಚಂದ್ರಮನ ತೆರೆಯಲೊರಗಿ,
ಪರದಾರಕ್ಕೆ ಕೈಯ ನೀಡುವರೆ, ಶರಣಾಗುವರೆ ?
ಇಂತವರಲ್ಲಯ್ಯ ನಮ್ಮ ಶರಣರುಗಳು.
ಇವರುಗಳು ಪಾತಕಿಗಳು, ಆಸೆಯ ಸಮುದ್ರರು,
ಅಂಗಶೃಂಗಾರಿಗಳು, ಭವಭಾರಿ ಜೀವಿಗಳು.
ಇವರೆಂತು ಸರಿಯಪ್ಪರಯ್ಯ, ಲಿಂಗಾನುಭವಿಗಳಿಗೆ ?
ಸರ್ವಾಂಗಲಿಂಗಿಗಳಾಗಿರ್ದ ಮಹಾನುಭಾವಿಗಳ ನಿಲುವನು,
ಮಹಾಲಿಂಗ ಕಲ್ಲೇಶ್ವರ ಬಲ್ಲನಲ್ಲದೆ, ತೂತಜ್ಞಾನಿಗಳೆತ್ತ ಬಲ್ಲರಯ್ಯ./69
ಬಾರೆ, ಏತಕ್ಕಯ್ಯ ? ನಿಮ್ಮ ಬರವ ಹಾರುತ್ತಿರ್ದೆನು.
ಸಾರೆ, ಏತಕ್ಕಯ್ಯ ? ನಿಮ್ಮ ಸರವ ಹಾರುತ್ತಿರ್ದೆನು.
ತೋರೆ, ಏತಕ್ಕಯ್ಯ ? ನಿಮ್ಮ ಲಿಂಗರೂಪು, ನಿಜಜ್ಞಾನವ.
ಪೂಜೆಗೊಂಬಾಗಲಲ್ಲದೆ ಎನ್ನ ಮನಕ್ಕೆ ಬರಲಾಗದೆ,
ಮಹಾಲಿಂಗ ಕಲ್ಲೇಶ್ವರಾ ?/70
ಬಾಲಕಿ ಹಾಲ ಸವಿದಂತೆ, ಮರುಳಿನ ಮನದ ನೆನಹಿನಂತೆ,
ಮೂಗ ಕಂಡ ಕನಸಿನಂತೆ, ಮೈಯರಿಯದ ನೆಳಲಿನಂತೆ,
ಬಂಜೆಯ ಮನದ ಸ್ನೇಹದಂತೆ,
ಮಹಾಲಿಂಗ ಕಲ್ಲೇಶ್ವರನಲ್ಲಿ ಎನಗೆ ಲಿಂಗೈಕ್ಯವು./71
ಬ್ರಾಹ್ಮಣ ಮೊದಲಾಗಿ ಶ್ವಪಚ ಕಡೆಯಾಗಿ, ಎಲ್ಲಿರಿಗೆಯೂ ಜನನವೊಂದೆ.
ಆಹಾರ ನಿದ್ರೆ ಭಯ ಮೈಥುನವೊಂದೆ, ಪುಣ್ಯಪಾಪವೊಂದೆ, ಸ್ವರ್ಗವೊಂದೆ.
ಬೇರೆಂಬ ಭಂಗಿತರು ನೀವು ಕೇಳಿರೆ !
ಅರಿವೇ ಸತ್ಕುಲ, ಮರವೇ ದುಃಕುಲ, ಅರಿವುವಿಡಿದು ಮನಪಕ್ಷ.
ಆಗಮವಿಡಿದು ಆಚಾರ, ಆಚಾರವಿಡಿದು ಸಮಯ.
ಅರಿದಡೆ ಶರಣ, ಮರೆದಡೆ ಮಾನವ.
ವಿಚಾರಿಸಿದಡೆ ಸಚರಾಚರವೆಲ್ಲವೂ ಪಂಚಭೂತಮಯ.
ಚಂದಿರಾದಿಗಳೊಳಗೊಂದು ಮನುಷ್ಯಜನ್ಮ.
ಸಪ್ತಧಾತು ಸಮಂಪಿಂಡಂ ಸಮಯೋನಿ ಸಮುದ್ಭುವಂ |
ಆತ್ಮಾ ಜೀವನಸಮಾಯುಕ್ತಂ ವರ್ಣಾನಾಂ ಕಿಂ ಪ್ರಯೋಜನಂ ||
ಎಂದುದಾಗಿ,
ಇದು ಕಾರಣ, ಮಹಾಲಿಂಗ ಕಲ್ಲೇಶ್ವರಾ.
ನಿಮ್ಮ ಶರಣರು ಅಜಾತಚರಿತ್ರರಾಗಿ,
ಆವ ಜಾತಿಯನೂ ಹೊದ್ದರು./72
ಭಕ್ತದೇಹಿಕ ದೇವನೆಂದಂಜದ ಮನವದೇನಪ್ಪದೊ ?
ಭಯವಿಲ್ಲದ ಭಕ್ತಿ, ನಯವಿಲ್ಲದ ಸಸಿ,
ಗುಣವಿಲ್ಲದ ನಂಟು ಮುಂದೇನಪ್ಪುದೊ ?
ಬಲ್ಲವರಿಗೆಲ್ಲವನು ಬಿನ್ನಾಣಿಗೆ ಬಿನ್ನಾಣಿ.
ಮಹಾಲಿಂಗ ಕಲ್ಲೇಶ್ವರನನೊಲಿಸಬಾರದು./73
ಭಕ್ತನೆಂಬ ನಾಮಧಾರಕಂಗೆ ಅವುದು ಪಥ್ಯ ವೆಂದಡೆ :
ಗುರುಭಕ್ತನಾದಡೂ ಜಂಗಮವನಾರಾಧಿಸೂದು,
ಗುರುಶಿಷ್ಯರಿಬ್ಬರ ಗುರುತ್ವವ ಮಾಡಿದವನಾಗಿ,
ಆಚಾರಭಕ್ತನಾದಡೂ ಜಂಗಮವನಾರಾಧಿಸೂದು,
ಆ ಗುರುಶಿಷ್ಯರಿಬ್ಬರನೂ ಸದಾಚಾರದಲ್ಲಿ ನಿಲಿಸಿ ತೋರಿದನಾಗಿ.
ಪ್ರಸಾದಭಕ್ತನಾದಡೆಯೂ ಜಂಗಮವನಾರಾಧಿಸೂದು,
ಆ ಗುರುಶಿಷ್ಯ ಸಂಬಂಧದಲ್ಲಿ
ಪ್ರಸಾದದುದ್ಭವವ ನಿರೂಪಿಸಿ ತೋರಿದನಾಗಿ.
ಲಿಂಗಭಕ್ತನಾದಡೂ ಜಂಗಮವನಾರಾಧಿಸೂದು,
ಗುರು ತನ್ನ ಲಿಂಗವನು ಆ ಶಿಷ್ಯಂಗೆ ಕೊಟ್ಟು
ತಾನು ವ್ರತಗೇಡಿಯಾಗಿ ಹೋಹಲ್ಲಿ, ಆ ಗುರುವಿಂಗೆ ಆ ಲಿಂಗಸಹಿತವೆ
ಅ ಶಿಷ್ಯನೆ ಸಾಹಿತ್ಯವ ಮಾಡಿ ತೋರಿದನಾಗಿ.
ಇಂತು ಆವ ಪ್ರಕಾರದಲ್ಲಿಯೂ ಜಂಗಮವೆ ಅಧಿಕವೆಂಬ ಉತ್ತರಕ್ಕೆ
ಇನ್ನಾವುದು ಸಾಕ್ಷಿಯೆಂದಡೆ : ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣನೈಕ್ಯ.
ಇಂತು ಷಟ್ಸ್ಥಲವಿಡಿದು ನಡೆವ ಭಕ್ತಂಗೆ
ಅನುಭವವಿಡಿದು ಮಾಡುವ ಸದಾಚಾರವೆ ಸದಾಚಾರ.
ಅನುಭವಕ್ಕೆ ಬಾರದೆ ಮಾಡುವ ಸದಾಚಾರವೆ ಅನಾಚಾರ.
`ಜ್ಞಾನಹೀನಾ ಕ್ರಿಯಾಸ್ಸವರ್ೇ ನಿಷ್ಫಲಾಃ ಶ್ರುಣು ಪಾರ್ವತಿ’
ಎಂದುದಾಗಿ,
ಇದು ಕಾರಣ, ಶಿವನಲ್ಲಿ ಏಕಾಂತದಿಂದ ಜಂಗಮಪ್ರಸಾದವ ಕೊಂಡು,
ಬಸವಣ್ಣನ ಪ್ರಸಾದವ ಕರುಣಿಸಿ ಕಾರುಣ್ಯವ ಮಾಡು,
ಮಹಾಲಿಂಗ ಕಲ್ಲೇಶ್ವರಾ./74
ಭಾಜನದಲ್ಲಿ ಅಳವಟ್ಟು, ಗಡನಿಸಿದ, ಪದಾರ್ಥಂಗಳ ರೂಪ
ತನ್ನ ಕರಣಂಗಳಲ್ಲಿ ಅವಧಾನ ನಿರೀಕ್ಷಣೆಯಿಂದ ನಿರೀಕ್ಷಿಸಿ,
ಲಿಂಗಾವಧಾನ ನಿರೀಕ್ಷಣೆಯಿಂದ ನಿರೀಕ್ಷಿಸಿ,
ಆ ಪದಾರ್ಥವನು ಲಿಂಗತನುವಿನ ಕರದಿಂದ ಮುಟ್ಟಿ,
ಪದಾರ್ಥದ ಮೃದು ಕಠಿಣ ಶೀತ ಉಷ್ಣಂಗಳ ಸೋಂಕನು
ಇಷ್ಟಲಿಂಗ ಮುಖದಲ್ಲಿ ಅರ್ಪಿಸಿ,
ರೂಪವರ್ಪಿಸುವಡೆ ಇಷ್ಟಲಿಂಗಾರ್ಪಿತ.
ಆ ಇಷ್ಟಲಿಂಗಮುಖದಿಂದರ್ಪಿತವಾದ ರೂಪಪ್ರಸಾದವನು
ರುಚಿಕರದಿಂದ ಪದಾರ್ಥಮಂ ಮಾಡಿ,
ಜಿಹ್ವೆಯೆಂಬ ಭಾಜನದಲ್ಲಿ
ಮಧುರ ಆಮ್ಲ ಲವಣ ಕಟು ಕಷಾಯ ತಿಕ್ತವೆಂಬ ಷಡ್ವಿಧ ರುಚಿಯನು
ಲಿಂಗಾವಧಾನ ಮನದಿಂದ ಜಿಹ್ವೆಯ ಚೈತನ್ಯವನ್ನರಿದು,
ಹೃದಯಕಮಲಪೀಠಿಕೆಯಲ್ಲಿಹ ಪ್ರಾಣೇಶ್ವರನಾದ ಪ್ರಾಣಲಿಂಗಕ್ಕೆ
ಕರಣಂಗಳು ಒಮ್ಮುಖವಾಗಿ ಅರ್ಪಿಸುವೊಡೆ ರುಚ್ಯರ್ಪಿತ
ಆ ರುಚಿಪ್ರಸಾದವನು ಪರಿಣಾಮ ಭಾಜನದಲ್ಲಿ
ಸಾವಧಾನ ಸಮರಸದಿಂದರ್ಪಿಸುವಲ್ಲಿ
ತೃಪ್ತಿ ಲಿಂಗಮುಖದಿಂದ ತೃಪ್ತಿಪ್ರಸಾದಿ.
ರೂಪಂ ಸಮರ್ಪಯೇ ಲಿಂಗೇ ರುಚಿಮಪ್ಯರ್ಪಯೇತ್ತಥಾ |
ಉಭಯಾರ್ಪಣ ಹೀನಶ್ಯ ಪ್ರಸಾದೋ ನಿಷ್ಫಲೋ ಭವೇತ್ ||
ಇಂತೆಂದುದಾಗಿ,
ಇದು ಕಾರಣ, ಪ್ರಸಾದದಾದಿ ಕುಳವ
ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಶರಣರೆ ಬಲ್ಲರು./75
ಮನಕೆ ತೋರದು ನೆನೆವಡನುವಲ್ಲ, ಘನಕ್ಕೆ ಘನವನೇನ ಹೇಳುವೆ ?
ಆರರಿಂದ ಮೀರಿದುದ, ಬೇರೆ ತೋರಲಿಲ್ಲದುದ,
ದೇವ ದಾನವ ಮಾನವರ ಬಲ್ಲತನದ ಬಗೆಯ ಮೀರಿದುದನೇನ ಹೇಳುವೆ ?
ಆದಿ ಮಧ್ಯಾಂತ ಶೂನ್ಯಂ ಚ ವ್ಯೋಮಾವ್ಯೋಮ ವಿವರ್ಜಿತಂ |
ಧ್ಯಾನಜ್ಞಾನ ದಯಾದೂಧ್ರ್ವಂ ಶೂನ್ಯಲಿಂಗಮಿತಿ ಸ್ಮೃತಂ ||
ಇಂತೆಂದುದಾಗಿ,
ಅರಿಯಬಾರದು, ಕುರುಹ ತೋರದು,
ತೆರಹಿಲ್ಲದ ಘನಮಹಾಲಿಂಗ ಕಲ್ಲೇಶ್ವರನ ನಿಜ./76
ಮನಮನವೇಕಾರ್ಥವಾಗದವರಲ್ಲಿ,
ತನುಗುಣ ನಾಸ್ತಿಯಾಗದವರಲ್ಲಿ,
ಬುದ್ಧಿಗೆ ಬುದ್ಧಿ ಓರಣವಾಗದವರಲ್ಲಿ,
ಭಾವಕ್ಕೆ ಭಾವ ತಾರ್ಕಣೆಯಾಗದವರಲ್ಲಿ,
ಶೀಲಕ್ಕೆ ಶೀಲ ಸಮಾನವಿಲ್ಲದವರಲ್ಲಿ,
ಅವರೊಡನೆ ಕುಳ್ಳಿರಲಾಗದು,
ಸಮಗಡಣದಲ್ಲಿ ಮಾತನಾಡಲಾಗದು.
`ಸಂಸರ್ಗತೋ ದೋಷಗುಣಾ ಭವಂತಿ’ ಎಂದುದಾಗಿ,
ಇದು ಕಾರಣ, ಮಹಾಲಿಂಗ ಕಲ್ಲೇಶ್ವರಾ,
ನಿಮ್ಮ ಸದ್ಭಕ್ತಿಯನರಿದವರ ಸಂಗದಿಂದ
ನಿಮಗಾನು ದೂರವಾಗಿಪ್ಪೆನಯ್ಯಾ./77
ಮಾಡಿದ ಮಾಟದೊಳಗೆ ನುಡಿ ಘನವಾಡದೆ ಭಕ್ತನೆ ? ಅಲ್ಲ.
ಶೀಲವ ಹೇಳಿ ಮಾಡಿಸಿಕೊಂಬನ್ನಕ್ಕರ ಶೀಲವಂತನೆ ? ಅಲ್ಲ.
ನೋಡಿ ಸಯಿಧಾನಬೇಕೆಂಬನ್ನಕ್ಕರ ನಿತ್ಯನೇಮಿಯೆ ? ಅಲ್ಲ.
ಶೀಲ, ಮೀಸಲು, ಭಾಷೆ ಲಿಂಗದೊಡಲು,
ಪ್ರಾಣ ಜಂಗಮವಾಗಿಪ್ಪ ಭಕ್ತಂಗೆ
ಮಹಾಲಿಂಗ ಕಲ್ಲೇಶ್ವರಲಿಂಗ ತಾನೆ ಪ್ರಾಣವಾಗಿಪ್ಪನು./78
ಮುಟ್ಟಿತ್ತು ಕೆಟ್ಟಿತ್ತೆಂದಡೆ,
ಇನ್ನರಸುವ ಠಾವಾವುದಯ್ಯಾ ?
ತನುವ ಮರೆದಡೆ, ನೆನಹಿನೊಳಗದೇನೊ ?
ಹಾವು ಪರೆಗಳೆದಡೆ, ವಿಷ ನಾಶವಪ್ಪುದೆ ?
ಶರಣನು ಕಾಯವೆಂಬ ಕಂಥೆಯ ಕಳೆದಡೆ, ಗತ ಮೃತವಹನೆ ?
ಅರಿವು ಲಿಂಗದಲ್ಲಿ ಪ್ರತಿಷ್ಠೆಯಾಗಿ, ನಿರ್ಲೇಪನಾಗಿ,
ಮಹಾಲಿಂಗ ಕಲ್ಲೇರ್ಶವರನಲ್ಲಿ ಲೀಯವಾದ ಶರಣ./79
ಮುನಿಸ ಮುನಿಸದಡೆ ಶ್ರೀಗಂಧದ ಮರುಡಿನಂತಿರಬೇಕವ್ವಾ.
ತೇದಡೆ ತೆಗೆದಡೆ ಚಂದನದ ಶೀತಲದ ಹಾಗೆಯಾಗಿರಬೇಕಪ್ಪಾ.
ಹೆಣಗುವಲ್ಲಿ ಕೈಹಿಡಿದು ಹೆಣಗುತ್ತಿರಬೇಕವ್ವಾ.
ಮಹಾಲಿಂಗ ಕಲ್ಲೇಶ್ವರನ ನೆರೆವ ಭರದಿಂ ನೊಂದು,
ಉದಕ ಮೇಲ್ವಾಯ್ದ ಹಾಗಿರಬೇಕವ್ವಾ./80
ರೂಪ ನಿರೂಪ ವಿಚಾರಿಸುವರು, ಸಾಕಾರ ನಿರಾಕಾರವ
ವ್ಯಾಪಾರಿಸುವರು.
ಅರಿವು ಮರವೆಯ ಕುರು[ಹ] ಹಿಡಿವರು, ಮನ ಘನವ ಸಂಬಂಧಿಸುವರು.
ಒಂದೆಂದಡೆ ನಾಮಗಳೆರಡಾಗಿವೆ, ಎರಡೆಂದಡೆ ಮೂರ್ತಿವೊಂದೆ.
ಒಂದೆರಡೆಂಬುದು ತನ್ನಿಂದಾಯಿತ್ತಾಗಿ,
ತಾನೇ ಮಹಾಲಿಂಗ ಕಲ್ಲೇಶ್ವರಾ./81
ಲಿಂಗಕ್ಕೆ ಕೊಟ್ಟು ಕೊಂಡಡೆ ಪ್ರಸಾದಿ.
ಜಂಗಮವಾರೋಗಣೆಯ ಮಾಡಿ, ಮಿಕ್ಕುದ ಕೊಂಡಡೆ ಪ್ರಸಾದಿ.
ಇದೇ ಪ್ರಸಾದದಾದಿ ಕಂಡಯ್ಯಾ.
ಲಿಂಗಕ್ಕೆ ಕೊಡದೆ, ಜಂಗಮಕ್ಕೆ ನೀಡಿ,
ಶೇಷಪ್ರಸಾದಮಂ ಪಡೆಯದೆ ಕೊಂಡಡೆ,
ಹುಳುಗೊಂಡದಲ್ಲಿಕ್ಕುವ, ಮಹಾಲಿಂಗ ಕಲ್ಲೇಶ್ವರದೇವರು./82
ಲಿಂಗಕ್ಕೆ ಹೊರೆ ಹೊರೆಯಲ್ಲದೆ,
ನಿಜಶಿಲೆಯ ದೀಪ್ತಿಯ ತರಂಗಕ್ಕೆ ಹೊರೆಯುಂಟೆ ?
ಸಂಸಾರಿಗೆ ಪ್ರಕೃತಿರಾಗದ್ವೇಷವಲ್ಲದೆ,
ಮನ ಮಹದಲ್ಲಿ ನಿಂದ ನಿಜಲಿಂಗಾಂಗಿಗೆ ಉಭಯದ ಸಂದುಂಟೆ ?
ಈ ಗುಣ ಲಿಂಗಾಂಗಿಯ ಸಂಗ,
ಮಹಾಮಹಿಮ ಕಲ್ಲೇಶ್ವರಲಿಂಗವು ತಾನಾದ ಶರಣ./83
ಲಿಂಗನಿಷ್ಠೆಯಿಲ್ಲದವರಂಗಳವ ಮೆಟ್ಟಲಾಗದು.
ಜಂಗಮನಿಷ್ಠೆಯಿಲ್ಲದವರೊಡನೆ ಮಾತನಾಡಲಾಗದು.
ಪ್ರಸಾದನಿಷ್ಠೆಯಿಲ್ಲದವರ ಸಹಪಙ್ತಿಯಲ್ಲಿ ಕುಳ್ಳಿರಲಾಗದು.
ಲಿಂಗಮುಖಕ್ಕೆ ಬಾರದ ರುಚಿ,ಕಿಲ್ಬಿಷ[ನೋಡಾ],
ಮುಟ್ಟಲಾಗದು, ಮಹಾಲಿಂಗ ಕಲ್ಲೇಶ್ವರನನೊಲಿಸುವ ಶರಣಂಗೆ./84
ಲಿಂಗರೂಪಿನ ಸಹಜದುದಯದ ತುಟ್ಟತುದಿಯ ತುರೀಯಾವಸ್ಥೆಯ
ಆಡಿ ರೂಪಿಸುವ, ಹಾಡಿ ರೂಪಿಸುವ ಅರಿವಿನುಪಚಾರವುಳ್ಳನ್ನಕ್ಕರ.
ಬಯಲು ಬಲಿದು ತಾನು ತಾನಾಗಿಪ್ಪ.
ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಶರಣನು./85
ಲಿಂಗರ್ಪಿತವಿಲ್ಲದೆ ಕೊಂಬ ಕರ್ಮಿಗಳು, ನೀವು ಕೇಳರೆ.
ಅನರ್ಪಿತವೇನ ಮಾಡದು ? ಅನರ್ಪಿತವೆಲ್ಲಿಗೈಯದು ?
ಶ್ರುತಿ:ಅಸಮಪ್ರ್ಯ ಪದಾರ್ಥಮ ಶಂಭೋಃ ಭುಂಕ್ತೇ ಉದಕಂ ಪಾತಿ ಚ |
ಸ್ವಮಾಂಸಮಸ್ಥಿ ಮೂತ್ರಂ ಚ ಭುಂಕ್ತೇ ಖಾದತಿ ಪಾತಿ ಚ |ಎಂದುದಾಗಿ ಇದು ಕಾರಣ
ಮಹಾಲಿಂಗ ಕಲ್ಲೇಶ್ವರ ದೇವರಿಗರ್ಪಿಸದೆ ಕೊಂಡಡೆ
ನಾಯ ಮಾಂಸ ನಾಯ ಎಲ್ಲು [ವ] ನಾಯ ಮೂತ್ರವನು
ತಿಂದು ಅಗಿದು ಕುಡೆದಂತೆ ಕಾಣಿಕೆ,
/86
ವೇದವನೋದಿದಡೇನು ? ಶಾಸ್ತ್ರಪುರಾಣಾಗಮಂಗಳ ಕೇಳಿದಡೇನು ?
ಗುರುಕಾರುಣ್ಯವಿಲ್ಲದವನು ಲಿಂಗವ ಮುಟ್ಟಿ ಪೂಜಿಸಲಾಗದು.
ಜಪತಪಧ್ಯಾನ ವಿಭೂತಿ ರುದ್ರಾಕ್ಷಿಯ ಧರಿಸಿದಡೇನು ?
ಅವನು ಪಂಚಮಹಾಪಾತಕನು, ಅವನ ಮುಖವ ನೋಡಲಾಗದು.
ಇದನರಿದು ಗುರುಕರುಣವಿಡಿದು ಮಾಡುವ ಪೂಜೆಯೇ ಶಿವಂಗೆ ಪ್ರೀತಿ.
ಇದನರಿಯದೆ ಗುರುಕರುಣವಿಲ್ಲದವ ಶಿವಲಿಂಗಪೂಜೆಯ ಮಾಡಿದನಾದಡೆ,
ಅಘೋರನರಕ ತಪ್ಪದು, ಮಹಾಲಿಂಗ ಕಲ್ಲೇಶ್ವರಾ./87
ವೇದವೆಂಬುದು ಮಾಯಿಕದ ಕೈಯ ವಿಕಾರದಲ್ಲಿ ಹುಟ್ಟಿತ್ತು.
ಆಗಮವೆಂಬುದು ಮಾಯಿಕದ ಬಾಯವಿಕಾರದಲ್ಲಿ ಹುಟ್ಟಿತ್ತು.
ಶಾಸ್ತ್ರವೆಂಬುದು ಮಾಯಿಕದ ದೇಹವಿಕಾರದಲ್ಲಿ ಹುಟ್ಟಿತ್ತು.
ಇದು ಕಾರಣ, ಇವ ತೂರಿ ಕಳೆದು ಮಹಾಸ್ಥಲದಲ್ಲಿ ನಿಂದವರುಗಳನಲ್ಲದೆ,
ಮಹಾಲಿಂಗ ಕಲ್ಲೇಶ್ವರದೇವರು[ವೊ]ಲ್ಲರು./88
ಶರಣಸಂಬಂಧವನರಿದ ಬಳಿಕ, ಕುಲಮದ ಛಲಮದವಿಲ್ಲ ಕಂಡಯ್ಯಾ.
ಲಿಂಗಸಂಬಂಧವನರಿದ ಬಳಿಕ, ಶೀಲಸಂಬಂಧವಿಲ್ಲ ಕಂಡಯ್ಯಾ.
ಪ್ರಸಾದಸಂಬಂಧವನರಿದ ಬಳಿಕ, ಇಹಪರಂಗಳೆಂಬವಿಲ್ಲ ಕಂಡಯ್ಯಾ.
ಮಹಲಿಂಗ ಕಲ್ಲೇಶ್ವರಾ, ಇಂತೀ ತ್ರಿವಿಧ ಸಂಬಂಧಕ್ಕೆ ಇದೇ ದೃಷ್ಟ./89
ಶಿಲಾಮೂರ್ತಿ ಸ್ಥಾವರ ಶಿವಕುಲ ದೈವಕೆಲ್ಲಕೂ ಒಲವರದಿಂದ ಹೋಹಲ್ಲಿ,
ಆ ದೈವದ ಬಲುಮೆಯ ಅವನ ಕುಲವಾಸಾ ಬಲುಮೆಯ ತೆರನೊ!
ಈ ಹೊಲಬ ತಿಳಿದು, ಗುರು ಚರವಪ್ಪ ವಸ್ತುಸಂಸಾರದ ಒಡಲೆಳೆಗಾಗಿ,
ಭಕ್ತನ ನೆಲೆಹೊಲವಾಸಕ್ಕೆ ಹಲುಬಿ ಬರಬಹುದು ? ಇದು ವಸ್ತುವಿನ ನೆಲೆಯಿಲ್ಲ.
ಕರ್ತೃ ಸಂಬಂಧಕ್ಕೆ ಸಲ್ಲ, ಮಹಾಮಹಿಮ ಕಲ್ಲೇಶ್ವರಲಿಂಗ
ಅವರುವನೊಲ್ಲ./90
ಶಿವ ತನ್ನ ನಿಜರೂಪವನು ಸದ್ಭಕ್ತರಿಗಲ್ಲದೆ ತೋರನೆಂಬುದು ವೇದ.
ಆ ಸದ್ಭಕ್ತನೆ ಬ್ರಾಹ್ಮಣ, ಆ ಸದ್ಭಕ್ತನೆ ಸತ್ಕುಲಜ,
ಆ ಸದ್ಭಕ್ತನೆ ಎನಗಿಂದಧಿಕನೆಂದು ಶ್ರೀರುದ್ರವೇದ ಬೊಬ್ಬಿಡುತ್ತಿದೆ.
ಯಾತೇ ರುದ್ರ ಶಿವ ತನೂರಘೋರಾ ಪಾಪಕಾಶಿನೀ |
ತಯಾನಸ್ತನುವಾ ಶಂತಮಯಾ ಗಿರೀಶಂ ತಾಭಿ ಚಾಕಶೀಃ ||
ಎಂದುದಾಗಿ, ಶಿವಲಿಂಗಭಕ್ತನಲ್ಲದೆ ಅತಃಪರವೊಂದು ಇಲ್ಲ ಕೇಳಿಭೋ.
ನಿಮ್ಮ ಮನದೊಳಗೆ ಯಜುವರ್ೇದ ಶ್ರುತಿಯ ವಿಚಾರಿಸಿ ನೋಡಿರಣ್ಣಾ.
ಓಂ ಸಪದಸ್ತ್ರೈದ್ರ್ಯಾವಾ ಭೂಮೀ ಜನಯನ್ ದೇವಃ
ಎಂದುದಾಗಿ, ಶೈವಪುರಾಣೇ : ಯಥಾ ಪಂಕೇ ಸರೋಜಂ ಚ ಯಥಾ ಕಾಷ್ಠೇ ಹುತಾಶನಃ |
ಸುಪ್ರತಿಷ್ಠಿ ತಲಿಂಗೇ ತು ನಯಥಾ ಪೂರ್ವಭಾವನಂ ||
ಮತ್ತಂ ಲೈಂಗೇ: ಶಿವದೀಕ್ಷಾಭಿಜಾತಸ್ಯ ಪೂರ್ವಜಾತಿಂ ನ ಚಿಂತಯೇತ್ |
ಯಥಾ ಸುವರ್ಣಪಾಷಾಣೇ ಭಕಶ್ಚಂಡಾಲವಂಶಜಃ ||
ಇಂತೆಂದು ಪುರಾಣವಾಕ್ಯಂಗಳು ಸಾರುತ್ತಿವೆ.
ಶಿಲಿಂಗಬಕ್ತನೇ ಶ್ರೇಷ್ಠನು.
ಶ್ವಪಚನಾದಡೆಯೂ ಆ ಲಿಂಗಭಕ್ತನೇ ಕುಲಜನು,
ಆ ಲಿಂಗಭಕ್ನೇ ಉತ್ತಮನಯ್ಯ, ಮಹಾಲಿಂಗಕಲ್ಲೇಶ್ವರಾ./91
ಶುಚಿಗಳು ಶುದ್ಧಾತ್ಮರೆಂಬರು ನಾವಿದನರಿಯೆವಯ್ಯಾ.
ಕಾಯವಿಡಿದು ಶುಚಿ ಶುದ್ಧಾತ್ಮನೊ ? ಜೀವವಿಡಿದು[ಶುಚಿ] ಶುದ್ಧಾತ್ಮನೊ ?
ಅವುದವಿಡಿದು ಶುಚಿ ಶುದ್ಧಾತ್ಮನು ಹೇಳಿರೆ !
ಕಾಯದ ಮಲವ ತೊಳೆದು ಶುದ್ಧವ ಮಾಡಬಲ್ಲಡೆ,
ಕಾಯ ಸಕಾಯ ನೋಡಿರೆ !
ಜೀವನ ಮಲವ ಕಳೆದು ಜೀವನ ಶುದ್ಧವ ಮಾಡಬಲ್ಲಡೆ,
ಜೀವನ ಶುದ್ಧಾತ್ಮನು ಕೇಳಿರೆ !
ಅಂತರಂಗಕ್ಕೆ ಭಾವ ಮನ ನಿರ್ಮಲ ಶುದ್ಧಿ.
ಬಹಿರಂಗಕ್ಕೆ ತನು ಕರಣುಂಗಳಳಿದುದೆ ಶುದ್ಧಿ
ಇದು ಕಾರಣ, ಮಹಾಲಿಂಗ ಕಲ್ಲೇಶ್ವರಾ,
ನಿಮ್ಮ ಶರಣರು ಒಳಗೂ ಹೊರಗೂ ಸರ್ವಾಂಗಲಿಂಗವಾಗಿ,
ಸರ್ವಶುಚಿ ಶುದ್ಧಾತ್ಮರು ಕೇಳಿರೆ !/92
ಶ್ರೀಗುರು ಶಿಷ್ಯಂಗೆ ಉಪದೇಶವ ಮಾಡುವಲ್ಲಿ,
ಲಿಂಗಕ್ಕೆ ಅರ್ಚನೆ ಪೂಜೆಗಳನು ಮಾಡಿ,
ಲಿಂಗಾರ್ಪಿತದಲ್ಲಿ ಅವಧಾನಪ್ರಸಾದ, ಭೋಗದಲ್ಲಿ ಸುಯಿಧಾನ,
ಗುರುವಿನಲ್ಲಿ ಜ್ಞಾನಸಿದ್ಧಿ, ಜಂಗಮದಲ್ಲಿ ನಿರ್ವಂಚನೆ, ಪ್ರೀತಿ ಪ್ರೇಮ ಪರಧನ ಪರಸ್ತ್ರೀ ಪರದೈವಕ್ಕೆರಗದೆ,
ನಿತ್ಯಲಿಂಗಾರ್ಚನೆಯು ಮಾಡೆಂದು ಉಪದೇಶಮಂ ಕೊಟ್ಟನಲ್ಲದೆ,
ಪಾದತೀರ್ಥದಲ್ಲಿ ಲಿಂಗಮಜ್ಜನಕ್ಕೆರೆದು
ಪ್ರಸಾದವನರ್ಪಿಸ ಹೇಳಿಕೊಟ್ಟನೆ, ಇಲ್ಲ.
ಆ ಭಕ್ತನು ತನು ಮನ ಧನವನು ಗುರುಲಿಂಗಜಂಗಮಕ್ಕೆ ಸವೆಸಿ,
ತನು ಸವೆಸಿ ಮನಲೀಯವಾಗಿ ಧನಲೋಭವಿಲ್ಲದೆ ಸಂದು ನಿಂದ,
ಪರಮವೈರಾಗ್ಯ ಉರವಣಿಸಿ ಈಷಣತ್ರಯದ ಆಸೆಯಳಿದು,
ಸೋಹಂ ಎಂದು ನಿಂದು ಹರಗಣಂಗಳಂ ನೆರಪಿ,
ಆಚಾರ ಕರ್ಪರ, ವಿಚಾರ ಕರ್ಪರ, ಅವಿಚಾರ ಕರ್ಪರ ವೇಷಮಂ ತಾಳಿ,
ಭಕ್ತ ಭಿಕ್ಷಾಂದೇಹಿ ಎಂದು ಭಕ್ತರ ಮಠದಲ್ಲಿ ಹೊಕ್ಕು,
ಲಿಂಗಾರ್ಚನೆಯಂ ಮಾಡಿ, ಲಿಂಗಪ್ರಸಾದಮಂ ಭೋಗಿಸಿ,
ಶಿವಕ್ಷೇತ್ರ ತೀರ್ಥಂಗಳಂ ಚರಿಸಿ,
ಲಿಂಗಧ್ಯಾನ ನಿರತನಾಗಿ ಇರಹೇಳಿದರಲ್ಲದೆ,
ಲಿಂಗಕ್ಕೆ ಪಾದತೀರ್ಥವ ಕೊಟ್ಟು, ಪ್ರಸಾದವನಿಕ್ಕ ಹೇಳೆ
ಮಾಡಿದ ನಿರ್ವಾಣದೀಕ್ಷೆಯುಂಟೆ ?
ಸಲಿಂಗೀ ಪ್ರಾಣಮುಕ್ತಶ್ಚ ಮನೋಮುಕ್ತಶ್ಚ ಜಂಗಮಃ |
ಪ್ರಸಾದೀ ಕಾಯಮುಕ್ತಶ್ಚ ತ್ರಿವಿಧಸ್ತತ್ವನಿರ್ಣಯಃ ||
ಇಂತೆಂದುದಾಗಿ,
ಈ ನಿರ್ಣಯ ವಚನವನರಿಯಬಲ್ಲಡೆ ಜಂಗಮ,
ಅಲ್ಲದಿದ್ದಡೆ ಭವಭಾರಿಯೆಂಬೆ, ಮಹಾಲಿಂಗ ಕಲ್ಲೇಶ್ವರಾ./93
ಶ್ರೀಗುರುಸ್ವಾಮಿ ಶಿಷ್ಯಂಗೆ ಅನುಗ್ರಹವ ಮಾಡುವಲ್ಲಿ,
ಹಸ್ತಮಸ್ತಕಸಂಯೋಗಕಾಲದಲ್ಲಿ,
ಪಂಚಕಳಶದ ನಿರ್ಮಲಜಲವ ತನ್ನ ಕರುಣಜಲವ ಮಾಡಿ,
ಆತನ ಜನ್ಮದ ಮೇಲಿಗೆಯ ಕಳೆಯಲು,
ತಾ ನಿರ್ಮಲನಾಗಿ ಲಿಂಗವ ಗ್ರಹಿಸಿದಲ್ಲಿ,
ಲಿಂಗಕ್ಕೆ ಮಜ್ಜನಕ್ಕೆರೆಯತೊಡಗಿ, ಮಜ್ಜನೋದಕವನರಿದೆ.
ಲಿಂಗಸ್ಪರುಶನದಿಂದ ಪಾದೋದಕವನರಿದೆ.
ಲಿಂಗಾರ್ಪಿತ ಭೋಗೋಪಭೋಗದಲ್ಲಿ ಅರ್ಪಿತ ಪ್ರಸಾದೋದಕವನರಿದೆ.
ಅರಿದು, ಅನ್ಯೋದಕವ ಮರದು, ನಿಮ್ಮಲ್ಲಿ ತದ್ಗತನಾಗಿರ್ದೆನಯ್ಯಾ,
ಮಹಾಲಿಂಗ ಕಲ್ಲೇಶ್ವರಾ./94
ಶ್ರೀರುದ್ರಾಕ್ಷಿಯ ಹಸ್ತ ತೋಳು ಉರ ಕಂಠ ಮೊದಲಾದ
ಸ್ಥಾನಂಗಳಲ್ಲಿ ಧರಿಸಿ,
ಶಿವಾರ್ಚನೆಯ ಮಾಡುವುದು ಸದಾಚಾರ, ಅದೇ ಸದ್ಯೋನ್ಮುಕ್ತಿ.
ಅದು ಕಾರಣ, ಆ ಮಹಾರುದ್ರಾಕ್ಷಿಯ ಧರಿಸಿ, ಎನ್ನ ಭವಂ ನಾಸ್ತಿಯಾತಿತ್ತು.
ಮಹಾಲಿಂಗ ಕಲ್ಲೇಶ್ವರಾ, ರುದ್ರಾಕ್ಷಿಯಿಂದೆ ಕೃತಾರ್ಥನಾದೆನು./95
ಹಗಲು ಹಸಿವಿಂಗೆ ಕುದಿದು, ಇರುಳು ನಿದ್ರೆಗೆ ಸಂದು,
ಎಚ್ಚತ್ತು ಉಳಿದಾದ ಹೊತ್ತಿನಲ್ಲೆಲ್ಲಾ ಪಂಚೇಂದ್ರಿಯಂಗಳ ವಿಷಯಕ್ಕೆ ಹರಿದು,
ಅಯ್ಯಾ, ನಿಮ್ಮ ನೆನೆಯಲರಿಯದ ಪಾಪಿಯಯ್ಯಾ.
ಅಯ್ಯಾ, ನಿಮ್ಮ ದೆಸೆಯ ನೋಡದ ಕರ್ಮಿಯಯ್ಯಾ.
ಮಹಾಲಿಂಗ ಕಲ್ಲೇಶ್ವರಾ, ಅಸಗ ನೀರಡಿಸಿ ಸಾವಂತೆ ಎನ್ನ ಭಕ್ತಿ./96
ಹರವಸದಿ ಹಸಿವನರಿಯದಿಪ್ಪ ಪರಮಸುಖವೆನಗೆಂದಿಪ್ಪುದೊ ?
ಉರವಣೆಯ ಸುಖದ ಸೋಂಕಿನಲ್ಲಿ ಪರಿಣಾಮ ಎಂದಪ್ಪುದೊ ?
ನಿಮ್ಮ ನೆನಹ ಎನ್ನ ಹಸು ಲಿಂಗೋಗರವಾದಡೆ
ನಾ ನಿಮ್ಮ ನೆನೆವುದು ದಿಟವೆಂಬೆ ಕಾಣಾ, ಮಹಾಲಿಂಗ ಕಲ್ಲೇಶ್ವರಾ./97
ಹಸಿಯ ಕಪಾಲದಲ್ಲಿ ಉಂಬನೆಂಬರು, ಅದು ಹುಸಿ,
ಭಕ್ತನ ಮುಖದಲ್ಲಿ ಉಂಬನಾಗಿ.
ಅಸ್ಥಿಗಳ ತೊಟ್ಟನೆಂಬರು, ಅದು ಹುಸಿ, ಭಕ್ತದೇಹಿಕದೇವನಾಗಿ,
ಚರ್ಮವ ಹೊದ್ದನೆಂಬರು, ಅದು ಹುಸಿ, ಆ ಭಕ್ತನಲ್ಲಿ
ಸದಾಸನ್ನಹಿತನಾಗಿಪ್ಪನಾಗಿ.
ಅದೆಂತೆಂದಡೆ-ಬ್ರಹ್ಮಾಂಡ ಪುರಾಣೇ :
ನೈವೇದ್ಯಂ ಪುರತೋ ನ್ಯಸ್ತಂ ದರ್ಶನಾತ್ಸ್ವೀಕೃತಂ ಮಯಾ |
ರಸಾನ್ಭಕ್ತಸ್ಯ ಜಿಹ್ವಾಗ್ರಾದಶ್ನಾಮಿ ಕಮಲೋದ್ಭವ ||
ಎಂದುದಾಗಿ, ವಾತುಲೇ : ಯಾವನ್ನಿರ್ವಹತೇ ಯಸ್ತು ಯಾವಜ್ಜೀವಂ ಪ್ರತಿಜ್ಞಯಾ |
ಮನುಷ್ಯಚರ್ಮಣಾ ಬದ್ಧಃ ಸ ರುದ್ರೋ ನಾತ್ರ ಸಂಶಯಃ ||
ಎಂದುದಾಗಿ, ಮಹಾಲಿಂಗ ಕಲ್ಲೇಶ್ವರಾ,
ನಿಮ್ಮ ಸುಳುಹು ಪರಕಾಯಪ್ರವೇಶವಾಗಿಹುದು. /98
ಹಾಹಾ ! ವೇದವೆ ತತ್ವವಾದಡೆ, ಮಾದಾರನ ಮನೆಯಲುಂಡನೊಬ್ಬ.
ನಿಧಾನವುಳ್ಳ ಉಪಾಧ್ಯಾಯರಾರೂ ಇಲ್ಲದಾದಡೆ,
ಶಾಸ್ತ್ರವೆ ತತ್ವವಾದಡೆ ಶಿವರಾತ್ರಿಯನೊಬ್ಬ
ಬೇಡಂಗಿತ್ತುದನೊಬ್ಬ ಶ್ರೋತ್ರಿಯಂಗೀಯಲಾಗದೆ ?
ಆಗಮವಿಧಿಯಲ್ಲಿ ಮಂತ್ರ ಮೂರುತಿಯೆಂಬ ಮಾತಂತಿರಲಿ.
ಆದ ಕೇಳಲಾಗದು ಭ್ರಾಂತು ಬೇಡ.
ಭಾವಮೂರುತಿ ಬಲ್ಲ ಪ್ರಮಾಣವಿದೆ.
ಆ ಕುಲವೆಂದಡೆ ಹೊಕ್ಕ ಕಕ್ಕಯ್ಯಗಳ ಮನೆಯ.
ಅಕ್ಕಟಾ, ನಿಮ್ಮ ತರ್ಕ ಮುಕ್ಕಾಯಿತ್ತು, ಲೋಕವರಿಯದೆ ?
ಕಲ್ಲಲಿಟ್ಟು ಕಾಲಲೊದೆದಡೆ, ಅಲ್ಲಿ ಮೂರುತಿ ನುಡಿಯಿತ್ತಲ್ಲಯ್ಯಾ.
ಬಲ್ವದನು ದ್ವಿಜರು ನೀವೆಲ್ಲರೂ ಹೇಳಿರೆ,
ಸಲ್ಲದು, ನಿಮ್ಮ ವಾದ ನಿಲ್ಲಲಿ, ಬಲ್ಲಿದ ನಡೆದುದೇ ಬಟ್ಟೆ.
ಮಹಾಲಿಂಗ ಕಲ್ಲೇಶ್ವರಾ, ಲಿಂಗಾಚಾರಿಗಳು ನಿಸ್ಸೀಮರಯ್ಯಾ./99
ಹುಟ್ಟುವಂದು ನಿಮ್ಮ ಮೋಹವಿಲ್ಲ.
ಹೊಂದುವಂದು ನಿಮ್ಮ ಮೋಹವಿಲ್ಲ ಕಂಡಯ್ಯಾ.
ನಿಮ್ಮ ಮೋಹದವರಿಗೆ ಹುಟ್ಟುಂಟೆ ಅಯ್ಯಾ ?
ನಿಮ್ಮ ಮೋಹದ ಮುಖದಲ್ಲಿ ಮರಣವುಂಟೆ ಅಯ್ಯಾ ?
ಸಂಗಸಂಯೋಗದ ಉನ್ನನೀ ಭೂತ, ನಿನ್ನ ಮುಖದಲ್ಲಿ.
ಜನನ ಮರಣವುಂಟೆ, ಮಹಾಲಿಂಗ ಕಲ್ಲೇಶ್ವರಾ ?/100

ಹೊಟ್ಟು ಜಾಲಿಯ ಮುಳ್ಳ ಕೊನೆಯ ಮೇಲೊಂದು
ಇಪ್ಪತ್ತೈದು ಅಗ್ರಹಾರ.
ಅವ ಕಾವವ ಬಂಜೆಯ ಮಗ ತಳವಾರ.
ಅಷ್ಟದಳ ಕಮಲದ ವಿವೇಕದ ಕೂಟವ ಮಹಾಲಿಂಗ ಕಲ್ಲೇಶ್ವರ ಬಲ್ಲ,
ಪಂಚಮಹಾಜ್ಯೋತಿಯ ಮಹಾಬೆಳಗನು./101

 

Categories
ಶರಣರು / Sharanaru

ಹಾವಿನಾಳ ಕಲ್ಲಯ್ಯ

ಅಂಕಿತ: ಮಹಾಲಿಂಗ ಕಲ್ಲೇಶ್ವರ
ಕಾಯಕ: ಅಕ್ಕಸಾಲಿಗ

ಅಕ್ಕಸಾಲಿಗ ಮನೆತನಕ್ಕೆ ಸೇರಿದ ಈತನ ಜನ್ಮಸ್ಥಳ ವಿಜಾಪುರ ಜಿಲ್ಲೆಯ ಹಾವಿನಾಳು ಅಲ್ಲಿನ ಕಲ್ಲಿನಾಥ ಆರಾಧ್ಯದೈವ. ತಂದೆ-ಶಿವನಯ್ಯ, ತಾಯಿ-ಸೊಮವ್ವೆ. ಕಾಲ-೧೧೬೦. ಹರಿಹರನ ರಗಳೆಯಲ್ಲಿ ಈತ ಸತ್ತ ಸರ್ಪವನ್ನು ಬದುಕಿಸಿದ, ನಾಯಿಯಿಂದ ವೇದವನ್ನು ಓದಿಸಿದ, ಪರಕಾಯ ಪ್ರವೇಶಮಾಡಿದ ಎಂಬ ಪವಾಡಾತ್ಮಕ ಘಟನೆಗಳು ಉಕ್ತವಾಗಿವೆ. ರೇವಣಸಿದ್ಧ, ರುದ್ರಮುನಿ, ಸಿದ್ಧರಾಮರ ಸಂಪರ್ಕದಿಂದ ಶರಣನಾದ ಈತ, ಕಲ್ಯಾಣಕ್ಕೆ ಬಂದು ಅನುಭಾವ ಗೋಷ್ಠಿಗಳಲ್ಲಿ ಭಾಗವಹಿಸಿದ. ಕಲ್ಯಾಣಕ್ರಾಂತಿಯ ನಂತರ ಸೊಲ್ಲಾಪುರಕ್ಕೆ ತೆರಳಿ, ಅಲ್ಲಿಯೇ ಐಕ್ಯನಾದ. ಈತನ ಸಮಾಧಿ ಸಿದ್ಧರಾಮೇಶ್ವರ ದೇವಾಲಯದ ಪ್ರಾಕಾರದಲ್ಲಿದೆ.

೧೧೭೭
ವೇದವನೋದಿದಡೇನು ? ಶಾಸ್ತ್ರಪುರಾಣಾಗಮಂಗಳ ಕೇಳಿದಡೇನು ?
ಗುರುಕಾರುಣ್ಯವಿಲ್ಲದವನು ಲಿಂಗವ ಮುಟ್ಟಿ ಪೂಜಿಸಲಾಗದು.
ಜಪತಪಧ್ಯಾನ ವಿಭೂತಿ ರುದ್ರಾಕ್ಷಿಯ ಧರಿಸಿದಡೇನು ?
ಅವನು ಪಂಚಮಹಾಪಾತಕನು, ಅವನ ಮುಖವ ನೋಡಲಾಗದು.
ಇದನರಿದು ಗುರುಕರುಣವಿಡಿದು ಮಾಡುವ ಪೂಜೆಯೇ ಶಿವಂಗೆ ಪ್ರೀತಿ.
ಇದನರಿಯದೆ ಗುರುಕರುಣವಿಲ್ಲದವ ಶಿವಲಿಂಗಪೂಜೆಯ ಮಾಡಿದನಾದಡೆ,
ಅಘೋರನರಕ ತಪ್ಪದು, ಮಹಾಲಿಂಗ ಕಲ್ಲೇಶ್ವರಾ.

‘ಮಹಾಲಿಂಗ ಕಲ್ಲೇಶ್ವರ’ ಅಂಕಿತದಲ್ಲಿ ಈತ ರಚಿಸಿದ ೧೦೩ ವಚನಗಳು ದೊರೆತಿದ್ದು, ಅವುಗಳಲ್ಲಿ ಭಕ್ತಿನಿಷ್ಠೆ, ಶರಣತತ್ವ ವಿವೇಚನೆ, ಪರಮತ ಖಂಡನೆ, ನೀತಿ ಭೋಧೆ, ಆತ್ಮನಿರೀಕ್ಷಣೆ, ಶರಣಸ್ತುತಿ ಮೊದಲಾದವು ಪ್ರತಿಪಾದನೆಗೊಂಡಿವೆ. ಅಷ್ಟಾವರಣ, ಲಿಂಗಾಂಗ ಸಾಮರಸ್ಯ, ಶಿವಭಕ್ತಿ, ಶಿವಶರಣರ ನಿಷ್ಠೆ, ನಿಷ್ಕಾಮ ಸೇವೆ, ಅನುಭಾವ – ಇವೇ ಮೊದಲಾದ ವಿಷಯಗಳ ಪ್ರಸ್ತಾಪ ವಚನಗಳಲ್ಲಿ ಬಂದಿವೆ.

Categories
ವಚನಗಳು / Vachanagalu

ಹಡಪದ ಲಿಂಗಮ್ಮನ ವಚನಗಳು

ಅಂಗವ ಮರೆದವಂಗೆ ಲಿಂಗದ ಹಂಗೇಕೊ ?
ಅರಿವ ಕಂಡವಂಗೆ ಕುರುಹಿನ ಹಂಗೇಕೊ ?
ತಾನು ತಾನಾದವಂಗೆ ಧ್ಯಾನದ ಹಂಗೇಕೊ ?
ಮನ ಮುಗ್ಧವಾದವಂಗೆ ಮಾನವರ ಹಂಗೇಕೊ ?
ಆಸೆಯನಳಿದವಂಗೆ ರೋಷದ ಹಂಗೇಕೊ ?
ಕಾಮನ ಸುಟ್ಟವಂಗೆ ಕಳವಳದ ಹಂಗೇಕೊ ?
ನಡೆಗೆಟ್ಟವಂಗೆ ನುಡಿಯ ಹಂಗೇಕೊ ?
ನಿಶ್ಚಿಂತವಾದವಂಗೆ ಉಚ್ಚರಣೆಯ ಹಂಗೇಕೊ ?
ಬಯಲು ಬಯಲಾದವಂಗೆ ಭಾವದ ಹಂಗೇಕೊ ?
ತನ್ನ ಮರೆದು ನಿಮ್ಮನರಿದ ಶರಣಂಗೆ ಅಲ್ಲಿಯೆ ಐಕ್ಯ ಕಂಡೆಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./1
ಅಂಗವೆಂದಡೆ ಲಿಂಗದೊಳಡಗಿತ್ತು
ಲಿಂಗವೆಂದಡೆ ಅಂಗದೊಳಡಗಿತ್ತು.
ಅಂಗದೊಳಡಗಿದ ಲಿಂಗವನೆ ಕಂಗಳಲ್ಲಿ ಹೆರೆಹಿಂಗದೆ ನೋಡಿದಡೆ,
ಮಂಗಳದ ಮಹಾಬೆಳಗು ಕಾಣಿಸಿತ್ತು.
ಇಂತಪ್ಪ ಮಂಗಳದ ಮಹಾಬೆಳಗ ತೋರಿದ ಶರಣರಂಘ್ರಿಗೆರಗಿ ಸುಖಿಯಾದೆನಯ್ಯಾ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./2
ಅಂತರಂಗ ಬಹಿರಂಗ ಶುದ್ಭವಿಲ್ಲದೆ ನುಡಿವರು ಸಂತೆಯ ಸೂಳೆಯರಂತೆ.
ಅಂತರಂಗ ಬಹಿರಂಗವೆಂಬುದಿಲ್ಲ ನಮ್ಮ ಶಿವಶರಣರಿಗೆ.
ಅಂತರಂಗವೆಲ್ಲ ಅರುಹಾಯಿತ್ತುದ ಬಹಿರಂಗದಲ್ಲಿ ಲಿಂಗವಾಯಿತ್ತು,
ಆ ಲಿಂಗದಲ್ಲೆ ನುಡಿದು, ಲಿಂಗದಲ್ಲೆ ನಡೆದು,
ಲಿಂಗದಲ್ಲೆ ಮುಟ್ಟಿ, ಲಿಂಗದಲ್ಲೆ ವಾಸಿಸಿ,
ಲಿಂಗದಲ್ಲೆ ಕೇಳಿ, ಲಿಂಗವಾಗಿ ನೋಡಿ,
ಸರ್ವಾಂಗವು ಲಿಂಗವಾಗಿ, ಆ ಲಿಂಗವ ನೋಡುವ ಕಂಗಳಲ್ಲೆ ಐಕ್ಯ.
ಕಂಡೆಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ/3
ಅದೇನು ಕಾರಣವೆಂದಡೆ,
ಘನಕ್ಕೆ ಘನವಾದರುದ ಮನಕ್ಕೆ ಮನವಾದರು
ತನುವಿಂಗೆ ತನುವಾದರುದ ನಡೆನುಡಿಗೆ ಚೈತನ್ಯವಾದರು
ನೋಡುವುದಕ್ಕೆ ನೋಟವಾದರುದ ಕೂಡುವುದಕ್ಕೆ ಲಿಂಗವಾದರು.
ಈ ಒಳಹೊರಗೆ ಬೆಳಗುವ ಬೆಳಗು ನೀವೆಯಾದ ಕಾರಣ,
ನಿಮ್ಮ ಪಾದದಲ್ಲಿ ನಾ ನಿಜಮುಕ್ತಳಾದೆನಯ್ಯಾ ಚೆನ್ನಮಲ್ಲೇಶ್ವರ, ಅಪ್ಪಣ್ಣಪ್ರಿಯ ಚೆನ್ನಬಸವಣಾ/4
ಅಯ್ಯಾ ನಾನು ಬಂದ ಬಂದ ಭವಾಂತರದಲ್ಲಿ
ನೀವು ಕಡೆಹಾಯಿಸಿದಿರೆಂಬುದನರಿಯೆ.
ಕಂಗಳಿಗೆ ಕನ್ನಡಿಯ ತೋರಿದಡೂ ನಿಮ್ಮ ಕಾಣದೆ ಇದ್ದೆನಯ್ಯಾ.
ಅದು ಕಾರಣದಿಂದ, ಮನಕ್ಕೆ ಪ್ರಾಣವಾಗಿ ಬಂದು ನಿಂದಿರಿ,
ತನುವಿಂಗೆ ರೂಪಾಗಿ ಬಂದು ಸುಳದಿರಿ.
ನಿಮ್ಮ ಸುಳುಹ ಕಾಣಲೊಡನೆ,
ಎನ್ನ ತನು ಕರಗಿ, ಮನ ಮಗ್ನವಾಯಿತ್ತು.
ಎನ್ನ ಮರಣಭಯ ಹಿಂಗಿತ್ತುದ ರಿನ್ನ ಕಾಯಗುಣ ಕೆಟ್ಟಿತ್ತು
ಕರಣಗುಣ ಸುಟ್ಟಿತ್ತುದ ಭಾವವಳಿಯಿತ್ತುದ ಬಯಕೆ ಸವೆಯಿತ್ತು.
ಮಹಾದೇವನಾದ ಶರಣ ಚೆನ್ನಮಲ್ಲೇಶ್ವರನ ಪಾದವಿಡಿದು
ನಾ ನಿಜಮುಕ್ತಳಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./5
ಅಯ್ಯಾ, ಅದೇನು ಕಾರಣವೆಂದಡೆ,
ಕಂಗಳ ಕತ್ತಲೆಯನೆ ಹರಿದಿರಿ
ಮನದ ಕಾಳಿಕೆಯನೆ ಹಿಂಗಿಸಿದಿರಿ
ಮಾತಿನ ಮೊದಲನೆ ಹರಿದಿರಿ
ಜ್ಯೋತಿಯ ಬೆಳಗನೆ ತೋರಿದಿರಿ
ಮಾತು ಮಥನವ ಕೆಡಿಸಿದಿರಿ.
ವ್ಯಾಕುಳವನೆ ಬಿಡಿಸಿ, ವಿವೇಕಿಯ ಮಾಡಿ,
ನಿಮ್ಮ ಪಾದದಲ್ಲಿ ಏಕವಾದ ಕಾರಣದಿಂದ
ನಾ ನಿಜಮುಕ್ತಳಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./6
ಅಯ್ಯಾ, ಈ ಮಹಾಘನವ ಕಾಂಬುದಕ್ಕೆ
ಹಸಿವು ಕೆಡಬೇಕುದ ತೃಷೆಯಡಗಬೇಕುದ ವ್ಯಸನ ನಿಲ್ಲಬೇಕು;
ನಿದ್ರೆ ಹರಿಯಬೇಕುದ ಜೀವನ ಬುದ್ಧಿ ಹಿಂಗಬೇಕುದ
ಮನ ಪವನ ಬಿಂದು ಒಡಗೂಡಬೇಕು
ಚಿತ್ತ ಒತ್ತಟ್ಟಿಗೆ ಹೋಗದಿರಬೇಕು.
ಹೊತ್ತು ಹೊತ್ತಿಗೆ ಉತ್ತರವನೇರಿ ಬೆಚ್ಚು ಬೇರಿಲ್ಲದೆ
ಲಿಂಗದೊಳಗೆ ಅಚ್ಚೊತ್ತಿದಂತೆ ಬೆರೆದಡೆ,
ಕತ್ತಲೆ ಹರಿವುದು, ಮರವೆ ಹಿಂಗುವುದು, ನಿದ್ರೆ ಹರಿವುದು,
ಹಸಿವು ಕೆಡುವುದು, ತೃಷೆಯಡಗುವುದು, ವ್ಯಸನ ನಿಲುವುದು.
ಇವೆಲ್ಲವನು ಹಿಂಗಿಸಿ ತಾ ಲಿಂಗವ್ಯಸನಿಯಾಗಬಲ್ಲಡೆ,
ಮುಂದೆ ಮಹಾಮಂಗಳದ ಬೆಳಗು ಕಾಣಿಪುದೆಂದರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./7
ಅಯ್ಯಾ, ಏನೂ ಇಲ್ಲದ ಬಯಲ ದೇಹಕ್ಕೆ ತಾಮಸವ ಮುಂದುಮಾಡಿ,
ಹೀಗೆ ಕೆಟ್ಟಿತ್ತಲ್ಲಾ ಜಗವೆಲ್ಲ.
ಅದೇನು ಕಾರಣವೆಂದಡೆ,
ಸುಖದ ಮುಖ ಕಂಡಿತ್ತುದ ಜಗದ ರಚನೆಯ ನೋಡಿತ್ತು
ಇಚ್ಫೆಯ ಮೆಚ್ಚಿತ್ತುದ ಮನವ ನಿಶ್ಚಯವ ಮಾಡದು
ಅಂಗಸುಖವ ಬಯಸಿತ್ತುದ ಕಂಗಳ ಕಾಮವನೆ ಮುಂದುಮಾಡಿತ್ತು
ಇದರಿಂದ ಲಿಂಗವ ಮರೆಯಿತ್ತುದ ಜಂಗಮವ ತೊರೆಯಿತ್ತು.
ಇದು ಕಾರಣದಿಂದ ಜಗದ ಮನುಜರು ಭವಬಂಧನಕ್ಕೊಳಗಾದರು.
ಇವೆಲ್ಲವನು ಹಿಂಗಿಸಿ, ನಮ್ಮ ಶಿವಶರಣರು ಲಿಂಗದಲ್ಲಿಯೆ ಬೆರೆದರು.
ಜಂಗಮಪ್ರಾಣವೆಂದು ಪಾದೋದಕ ಪ್ರಸಾದವ ಕೊಂಡು, ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು./8
ಅಯ್ಯಾ, ಕಿಚ್ಚಿನೊಳಗೆ ಬೆಂದ ಕಾಯಕ್ಕೆ ಅಚ್ಚುಗವುಂಟೆ ?
ತಾನು ತಾನಾದ ಬಳಿಕ ಮಾನವರ ಹಂಗುಂಟೆ ?
ಮನವು ಮಹದಲ್ಲಿ ನಿಂದ ಬಳಿಕ ಮರವೆಯುಂಟೆ ?
ತನುವ ಮರೆದಂಗೆ ಇನ್ನರಿಯಬೇಕೆಂಬ ಅರುಹುಂಟೆ ?
ಬೆಳಗ ಕಂಡವಂಗೆ ಕತ್ತಲೆಯ ಹಂಗುಂಟೆ ?
ಇವೆಲ್ಲವನು ಹಿಂಗಿ ಮಹಾಘನದಲ್ಲಿ ಬೆರೆದ ಶರಣಂಗೆ
ನಮೋ ನಮೋ ಎಂದು ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./9
ಅಯ್ಯಾ, ನರರೊಳು ಹುಟ್ಟಿ, ಮರಹಿನೊಳಗೆ ಬಿದ್ದವಳ ತಂದು,
ಮಹಾಶರಣರು ಎನಗೆ ಕುರುಹ ತೋರಿದರು.
ಗುರುವೆಂಬುದನರುಹಿದರುದ ಜಂಗಮವೆ ಜಗದ ಕರ್ತುವೆಂದರುಹಿದರು.
ಅವರ ನೆಲೆವಿಡಿದು ಮನವ ನಿಲಿಸಿದೆ, ಕಾಯ ಜೀವವೆಂಬುದನರಿದೆ,
ಭವಬಂಧನವ ಹರಿದೆ, ಮನವ ನಿರ್ಮಲವ ಮಾಡಿದೆ.
ಬೆಳಗಿದ ದರ್ಪಣದಂತೆ ಚಿತ್ತ ಶುದ್ಭವಾದಲ್ಲಿ,
ನೀವು ಅಚ್ಚೊತ್ತಿದ್ದ ಕಾರಣದಿಂದ ನಿಮ್ಮ ಪಾದವಿಡಿದು
ನಾನು ನಿಜಮುಕ್ತಳಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./10
ಅಯ್ಯಾ, ನಾ ಕಾಬುದಕ್ಕೆ ನನ್ನ ಶಕ್ತಿಯಲ್ಲ
ನಿಮ್ಮಿಂದವೆ ಕಂಡೆನಯ್ಯಾ.
ಅದೇನು ಕಾರಣವೆಂದಡೆ
ತನುವ ತೋರಿದಿರಿ, ಮನವ ತೋರಿದಿರಿ, ಘನವ ತೋರಿದಿರಿ.
ತನುವ ಗುರುವಿಗಿತ್ತು, ಮನವ ಲಿಂಗಕ್ಕಿತ್ತು, ಧನವ ಜಂಗಮಕ್ಕಿತ್ತು,
ಇವೆಲ್ಲವು ನಿಮ್ಮೊಡನೆ ಎಂದು ನಿಮಗಿತ್ತು.
ತಳ್ಳಿಬಳ್ಳಿಯನೆ ಹರಿದು ನಿಮ್ಮಲ್ಲಿಯೆ ನೆಲೆಗೊಂಡ ಕಾರಣ,
ಚೆನ್ನಮಲ್ಲೇಶ್ವರನ ಪಾದದಲ್ಲಿ ನಿರ್ಮುಕ್ತಳಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./11
ಅಯ್ಯಾ, ನಾ ಮರ್ತ್ಯದಲ್ಲಿ ಹುಟ್ಟಿ ಕಷ್ಟಸಂಸಾರಿ ಎನಿಸಿಕೊಂಡೆ.
ಕತ್ತಲೆಯಲ್ಲಿ ಮುಳುಗಿ ಕರ್ಮಕ್ಕೆ ಗುರಿಯಾಗುತ್ತಿದ್ದಡೆ,
ಹೆತ್ತ ತಾಯಿ ಎಂಬ ಗುರುಸ್ವಾಮಿ ಎನ್ನ ಕೊರಳಿಗೆ ಗಂಡನೆಂಬ ಲಿಂಗವ ಕಟ್ಟಿದನು.
ತಂದೆಯೆಂಬ ಜಂಗಮಲಿಂಗವು ಎನ್ನ ಪ್ರಾಣಕ್ಕೆ ಪ್ರಸಾದವ ಊಡಿದನು.
ಪ್ರಾಣಕ್ಕೆ ಪ್ರಸಾದವನೂಡಲಾಗಲೆ ಕತ್ತಲೆ ಹರಿಯಿತ್ತು
ಕರ್ಮ ಹಿಂಗಿತ್ತು ಮನ ಬತ್ತಲೆಯಾಯಿತ್ತು
ಚಿತ್ತ ಸುಯಿದಾನವಾಯಿತ್ತು ನಿಶ್ಚಿಂತವಾಯಿತ್ತು.
ನಿಜವ ನೆಮ್ಮಿ ನೋಡುವನ್ನಕ್ಕ,
ಎನ್ನ ಅತ್ತೆ ಮಾವರು ಅರತುಹೋದರು
ಅತ್ತಿಗೆ ನಾದಿನಿಯರು ಎತ್ತಲೋಡಿಹೋದರು,
ಸುತ್ತಲಿರುವ ಬಂಧುಗಳೆಲ್ಲ ಬಯಲಾದರು.
ಎನ್ನ ತಂದೆ ತಾಯಿ ಕಟ್ಟಿದ ಚಿಕ್ಕಂದಿನ ಗಂಡನ ನೋಡುವ ನೋಟ ಹೋಗಿ,
ಎನ್ನ ಮನಕ್ಕೆ ಸಿಕ್ಕಿತ್ತು
ಅಂಗಲಿಂಗವೆಂಬ ಉಭಯವಳಿಯಿತ್ತುದ ಸಂಗಸುಖ ಹಿಂಗಿತ್ತು.
ಮಂಗಳದ ಮಹಾಬೆಳಗಿನಲ್ಲಿ ಓಲಾಡಿ ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./12
ಅಯ್ಯಾ, ನಾ ಹುಟ್ಟುವಾಗ ಬಟ್ಟಬಯಲೆ ಗಟ್ಟಿಯಾಯಿತ್ತು.
ಆ ಬಟ್ಟಬಯಲು ಗಟ್ಟಿಯಾದ ಬಳಿಯಲ್ಲಿ ನಾ ಜನನವಾದೆ.
ಜನನವಾದವರಿಗೆ ಮರಣ ತಪ್ಪದು.
ಅದೇನು ಕಾರಣವೆಂದಡೆ
ಮರವೆ ಮರವೆಗೆ ಮುಂದುಮಾಡಿತ್ತುದ
ಕರ್ಮಕ್ಕೆ ಗುರಿಮಾಡಿತ್ತುದ ಕತ್ತಲೆಯಲ್ಲಿ ಮುಳುಗಿಸಿತ್ತು.
ಕಣ್ಣು ಕಾಣದೆ ಅಂಧಕನಂತೆ ತಿರುಗುವುದ ನೋಡಿ,
ನಾ ಹೆದರಿಕೊಂಡು ರಿಚ್ಚತ್ತು ಚಿತ್ತವ ಸುಯಿದಾನವ ಮಾಡಿ,
ನಿಶ್ಚಿಂತವಾಗಿ ನಿಜವ ನೆಮ್ಮಿ ಅರುಹ ಕಂಡೆ.
ಅರುಹುವಿಡಿದು ಆಚಾರವ ಕಂಡೆದ ಆಚಾರವಿಡಿದು ಗುರುವ ಕಂಡೆದ
ಗುರುವಿಡಿದು ಲಿಂಗವ ಕಂಡೆದ ಲಿಂಗವಿಡಿದು ಜಂಗಮವ ಕಂಡೆದ
ಜಂಗಮವಿಡಿದು ಪಾದೋದಕ ಪ್ರಸಾದವ ಕಂಡ್ಝೆ
ಪಾದೋದಕ ಪ್ರಸಾದವಿಡಿದು ಮಹಾಶರಣನ ಕಂಡೆ.
ಆ ಮಹಾಶರಣನ ಪಾದವಿಡಿದು ರಿನ್ನ ಕಾಯಗುಣವಳಿಯಿತ್ತು
ಕರಣಗುಣ ಸುಟ್ಟಿತ್ತುದ ಅಂಗಗುಣ ಅಳಿಯಿತ್ತು
ಲಿಂಗಗುಣ ನಿಂದಿತ್ತುದ ಭಾವ ಬಯಲಾಯಿತ್ತು ಬಯಕೆ ಸವೆಯಿತ್ತು.
ಮಹಾದೇವನಾದ ಶರಣನ ಬರಿಯ ಬೆಳಗಲ್ಲದೆ,
ಕತ್ತಲೆ ಕಾಣಬಾರದು ಕಾಣಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ/13
ಅಯ್ಯಾ, ನಾನು ಊರ ಮರೆದು ಆಡ ಹೋದಡೆ,
ಒಕ್ಕಲು ಹೆಚ್ಚಿ ಸೊಕ್ಕಾಟ ಘನವಾಯಿತ್ತು.
ಇದ ಕಂಡು ಊರ ಹೊಕ್ಕೆ,
ಸ್ಥಾನದಲ್ಲಿ ನಿಂದೆ, ಒಂಬತ್ತು ಬಾಗಿಲ ಕದವನಿಕ್ಕಿದೆ.
ಆ ಜ್ಞಾನಾಗ್ನಿಯ ಹೊತ್ತಿಸಲು,
ಉರಿ ರಿದ್ದಿತ್ತು, ಉಷ್ಣ ಊಧ್ರ್ವಕ್ಕೇರಿತ್ತು.
ತಲೆಯೆತ್ತಿ ನೋಡಲು,
ಒಕ್ಕಲು ಓಡಿತ್ತು, ಊರು ಬಯಲಾಯಿತ್ತು.
ಆ ಬಯಲನೆ ನೋಡಿ, ನಿರಾಳದೊಳಗಾಡಿ
ಮಹಾಬೆಳಗನೆ ಕೂಡಿ, ಸುಖಿಯಾದರಯ್ಯಾ ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು./14
ಅಯ್ಯಾ, ನಿಮ್ಮ ಚರಣವಿಡಿದು ಮನವ ನಿಲಿಸಿದೆ,
ತನುವ ಮರೆದೆದ ಮಹಾಘನವ ಕಂಡೆ; ಲಿಂಗದನೆಲೆವಿಡಿದೆ.
ಅಂಗವ ಲಿಂಗವೆಂದು ನೋಡಲು ಕಂಗಳ ಮುಂದಣ ಬೆಳಗೇ ಲಿಂಗವಾಗಿ,
ಆ ಕಂಗಳ ಮುಂದಣ ಬೆಳಗ ನೋಡಿಹೆನೆಂದು ಸಂಗಸುಖವ ಮರೆದು,
ಆ ಮಂಗಳದ ಮಹಾಬೆಳಗಿನಲ್ಲಿ ನಾ ನಿಜಮುಕ್ತಳಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./15
ಆಗದಾಗದು ಮರ್ತ್ಯದ ಮನುಜರಿಗೆ ಶಿವಸುಖ ?
ಕಾಳುವಿಷಯದಲ್ಲಿ ಬಿದ್ದು
ನುಡಿವುತ್ತ ಮರವೆ, ನಡೆವುತ್ತ ಮರವೆ,
ಮೆಟ್ಟುತ್ತ ಮರವೆ, ಕೇಳುತ್ತ ಮರವೆ, ನೋಡುತ್ತ ಮರವೆ.
ಇಂತು ಮರಹಿನೊಳಗಿದ್ದು
ಅರುಹ ಕಂಡೆಹೆವೆಂಬ ಅಣ್ಣಗಳಿರಾ, ನೀವು ಕೇಳಿರೊ.
ನಮ್ಮ ಶರಣರ ನಡೆ ರಿಂತೆಂದಡೆದ
ಐದು ಗುಣವನೆ ಅಳಿದು, ಐದು ಹಿಡಿದು,
ನುಡಿವುತ್ತ ಲಿಂಗವಾಗಿ ನುಡಿವರುದ ನಡೆವುತ್ತ ಲಿಂಗವಾಗಿ ನಡೆವರುದ
ಮುಟ್ಟುತ್ತ ಲಿಂಗವಾಗಿ ಮುಟ್ಟುವರುದ ಕೇಳುತ್ತ ಲಿಂಗವಾಗಿ ಕೇಳುವರುದ
ನೋಡುತ್ತ ಲಿಂಗವಾಗಿ ನೋಡುವರುದ
ಸರ್ವಾಂಗವು ಲಿಂಗವಾಗಿ ಅಂಗಲಿಂಗವೆಂಬ ಉಭಯವಳಿದು,
ಮಂಗಳದ ಮಹಾಬೆಳಗಿನಲ್ಲಿ ಲಿಂಗವೆ ಗೂಡಾಗಿದ್ದ ಕಾರಣ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./16
ಆಧಾರವ ಬಲಿಯೆ ಬೇಗೆವರಿಯಿತ್ತು
ಕಿಚ್ಚು ಆವರಿಸಿ ಊಧ್ರ್ವಕ್ಕೇರಿತ್ತು.
ಸಾಸಿರದಳದ ಅಮೃತದ ಕೊಡ ಕಾಯಿತ್ತು.
ಕಾಯ್ದ ಅಮೃತ ಉಕ್ಕಿ ತೊಟ್ಟಿಕ್ಕೆ, ಅಮೃತವನುಂಡು
ಹಸಿವು ಕೆಟ್ಟಿತ್ತುದ ತೃಷೆಯಡಗಿತ್ತು ನಿದ್ರೆಯರತಿತ್ತುದ
ಅಂಗಗುಣವಳಿಯಿತ್ತು ಲಿಂಗಗುಣ ನಿಂದಿತ್ತು ಸಂಗಸುಖ ಹಿಂಗಿತ್ತು.
ಅಂಗಲಿಂಗವೆಂಬ ಉಭಯವಳಿದು,
ಮಂಗಳ ಮಹಾಬೆಳಗಿನಲ್ಲಿಯೇ ಓಲಾಡಿ ಸುಖಿಯಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./17
ಆಸೆಯನಳಿದು, ರೋಷವ ನಿಲಿಸಿ,
ಜಗದ ಪಾಶವ ಹರಿದು,
ಈಶ್ವರನೆನಿಸಿಕೊಂಬ ಶರಣರ
ಜಗದ ಹೇಸಿಗಳೆತ್ತಬಲ್ಲರು ಅಪ್ಪಣ್ಣಪ್ರಿಂ್Ùಳ ಚೆನ್ನಬಸವಣ್ಣಾ ?/18
ಆಸೆಯುಳ್ಳನ್ನಕ್ಕ ರೋಷ ಬಿಡದು
ಕಾಮವುಳ್ಳನ್ನಕ್ಕ ಕಳವಳ ಬಿಡದು
ಕಾಯಗುಣವುಳ್ಳನ್ನಕ್ಕ ಜೀವನ ಬುದ್ಧಿ ಬಿಡದು;
ಭಾವವುಳ್ಳನ್ನಕ್ಕ ಬಯಕೆ ಸವೆಯದುದ
ನಡೆಯುಳ್ಳನ್ನಕ್ಕ ನುಡಿಗೆಡದು.
ಇವೆಲ್ಲವು ಮುಂದಾಗಿದ್ದು ಹಿಂದನರಿದೆನೆಂಬ
ಸಂದೇಹಿಗಳಿರಾ, ನೀವು ಕೇಳಿರೋ.
ನಮ್ಮ ಶರಣರು ಹಿಂದ ಹೇಗೆ ಅರಿದರೆಂದಡೆ
ಆಸೆಯನಳಿದರು, ರೋಷವ ಹಿಂಗಿದರು,
ಕಾಮನ ಸುಟ್ಟರು, ಕಳವಳವ ಹಿಂಗಿದರು,
ಕಾಯಗುಣವಳಿದರು, ಜೀವನ ಬುದ್ಧಿಯ ಹಿಂಗಿದರು,
ಭಾವವ ಬಯಲುಮಾಡಿದರು, ಬಯಕೆಯ ಸವೆದರು.
ಹಿಂದನರಿದು ಮುಂದೆ ಲಿಂಗವೆ ಗೂಡಾದ ಶರಣರ ಈ ಸಂದೇಹಿಗಳೆತ್ತ ಬಲ್ಲರು,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?/19
ಈ ಪರಂಜ್ಯೋತಿ ಪ್ರಕಾಶವಾದ ಬೆಳಗ
ನೋಡಿ ನೋಟವ ಮರೆದೆ, ಕೂಡಿ ಕೂಟವ ಮರೆದೆ.
ತಾನು ತಾನಾಗಿಪ್ಪ ಮಹಾಬೆಳಗಿನಲ್ಲಿ ನಾನು ಓಲಾಡಿ ಸುಖಿಯಾದೆನಯ್ಯಾ,
ಚೆನ್ನಮಲ್ಲೇಶ್ವರನ ಕರುಣವಿಡಿದು ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./20
ಈ ಮಹಾದೇವನ ಸ್ತೋತ್ರವ ಮಾಡುವುದಕ್ಕೆ ಜಿಹ್ವೆ ಮೆಟ್ಟದು.
ಆ ಮಹಾದೇವನ ಸ್ತೋತ್ರವ ಕೇಳುವುದಕ್ಕೆ ಕರ್ಣಮೆಟ್ಟದು.
ಮುಟ್ಟಿ ಪೂಜಿಸಿಹೆನೆಂದಡೆ ಹಸ್ತ ಮೆಟ್ಟದು.
ನೋಡಿಹೆನೆಂದಡೆ ನೋಟಕ್ಕೆ ಅಗೋಚರ, ಅಪ್ರಮಾಣ.
ಇಂತು ನಿಶ್ಚಿಂತ ನಿರಾಳ ಬಯಲದೇಹಿ ರಿನ್ನಲ್ಲಿ ಅಚ್ಚೊತ್ತಿದಂತೆ ನಿಂದ ಕಾರಣದಿಂದ
ಬಟ್ಟಬಯಲನೆ ಕಂಡೆ, ಮಹಾಬೆಳಗನೆ ಕೂಡಿದೆ.
ಚಿತ್ತದಲ್ಲಿ ಚೆನ್ನಮಲ್ಲೇಶ್ವರನು ನೆಲೆಗೊಂಡ ಕಾರಣದಿಂದ
ನಾನೆತ್ತ ಹೋದೆನೆಂದರಿಯೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./21
ಉಸುರ ಉನ್ಮನಿಗಿತ್ತು, ಶಶಿರವಿಯೊಡಗೂಡಿ,
ಕುಶಲವ ತಿಳಿದು, ಮಿಶ್ರವನರಿದು,
ಎಸಗಿದ ಮಹಾಬೆಳಗಿನೊಳಗೆ ಹೆಜ್ಜೆವಿಡಿದು ಹೋಗಿ ಅಜನ ಕಂಡೆ.
ಅಜನ ಮಗಳ ಸಂಗವ ಮಾಡಲೊಡನೆ ಅಂಗಗುಣವಳಿಯಿತ್ತುದ
ಕಂಗಳ ಜಮಕಿ ಹಿಂಗಿತ್ತುದ ಸಂಗಸಂಯೋಗವಾಯಿತ್ತು.
ಮಂಗಳದ ಮಹಾಬೆಳಗಿನೊಳಗೆ ಅಜಗೆ ಅಳಿಯನಾಗಿ,
ಅಜ್ಜಗೆ ಮೊಮ್ಮಗನಾಗಿ,
ಒಮ್ಮನವಾಗಿ ಪರಬೊಮ್ಮನೆಯಾಗಿ ಆಡುವ ಶರಣ
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ./22
ಎನ್ನ ಸತ್ಯಳ ಮಾಡಿ ನಿತ್ಯವ ತೋರಿ,
ತತ್ವವೆಂಬುದನರುಹಿದಿರಿದ ಮತ್ಸರವ ಹಿಂಗಿಸಿದಿರಿ
ಆಸೆರೋಷವನೆ ಹಿಂಗಿಸಿದಿರಿದ ಮಾತುಮ ಥನವನೆ ಕೆಡಿಸಿದಿರಿ.
ವ್ಯಾಕುಳವನೆ ಕೆಡಿಸಿ, ಜ್ಯೋತಿಯ ಬೆಳಗನೆ ತೋರಿದನಯ್ಯಾ ಚೆನ್ನಮಲ್ಲೇಶ್ವರನು,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./23
ಏನೇನು ಇಲ್ಲದಾಗ ನೀವಿಲ್ಲದಿದ್ದಡೆ ನಾನಾಗಬಲ್ಲೆನೆ ಅಯ್ಯಾ ?
ಆದಿ ಅನಾದಿ ಇಲ್ಲದಂದು ನೀವಿಲ್ಲದಿದ್ದಡೆ ನಾನಾಗಬಲ್ಲೆನೆ ಅಯ್ಯಾ ?
ಮುಳುಗಿ ಹೋದವಳ ತೆಗೆದುಕೊಂಡು,
ನಿಮ್ಮ ತೊತ್ತಿನ ತೊತ್ತಿನ ಪಡಿದೊತ್ತಿನ ಮಗಳೆಂದು
ರಕ್ಷಣೆಯ ಮಾಡಿದ ಶಿಶುವಾದ ಕಾರಣ
ಹಡದಪ್ಪಣ್ಣನೆ ಎನ್ನ ಕರಸ್ಥಲಕ್ಕೆ ಲಿಂಗವಾಗಿ ಬಂದು ನೆಲೆಗೊಂಡನು.
ಚೆನ್ನಮಲ್ಲೇಶ್ವರನೆ ಎನ್ನ ಮನಸ್ಥಲಕ್ಕೆ ಪ್ರಾಣವಾಗಿ ಬಂದು ಮೂರ್ತಗೊಂಡನು.
ಆ ಕರಸ್ಥಲದ ಲಿಂಗವನಚರ್ಿಸಿ ಪೂಜಿಸಿ
ವರವ ಬೇಡಿದಡೆ ತನುವ ತೋರಿದನುದ
ಆ ತನುವಿಡಿದು ಮಹಾಘನವ ಕಂಡೆದ
ಆ ಘನವಿಡಿದು ಮನವ ನಿಲಿಸಿದೆ.
ಮನವ ನಿಲಿಸಿ ನೋಡುವನ್ನಕ್ಕ ಪ್ರಾಣದ ನೆಲೆಯನರಿದೆದ
ಪ್ರಣವವನೊಂದುಗೂಡಿದೆ.
ಕಾಣಬಾರದ ಕದಳಿಯನೆ ಹೊಕ್ಕು ನೂನ ಕದಳಿಯ ದಾಂಟಿದೆ.
ಜ್ಞಾನಜ್ಯೋತಿಯ ಕಂಡೆ.
ತಾನುತಾನಾಗಿಪ್ಪ ಮಹಾಬೆಳಗಿನಲ್ಲಿ ಓಲಾಡಿ ಸುಖಿಯಾದೆನಯ್ಯಾ,
ಚೆನ್ನಮಲ್ಲೇಶ್ವರನ ಕರುಣದ ಶಿಶುವಾದ ಕಾರಣದಿಂದ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./24
ಏರುವ ಇಳಿಯುವ ಆದಿಯ ಅನಾದಿಯನರಿದು,
ಭೇದವ ತಿಳಿದು ಸಾದಿಸಿ ನೋಡಿ,
ಅಂತರಂಗದಲ್ಲಿ ವೇದಿಸಿ ನೋಡುತಿರಲು,
ಭೋಗ್ಯವಲ್ಲದ ಮಣಿ ಪ್ರಜ್ವಲವಾಯಿತ್ತು.
ಆ ಬೆಳಗಿನೊಳಗೆ ಪಶ್ಚಿಮದ ಕದವ ತೆಗೆದು ಪರಮನೊಡಗೂಡಿ,
ಬಚ್ಚಬರಿಯ ಬಯಲಬೆಳಗಿನೊಳಗಾಡುವ ಶರಣ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ./25
ಒಂದು ಊರಿಗೆ ಒಂಬತ್ತು ಬಾಗಿಲು.
ಆ ಊರಿಗೆ ಐವರು ಕಾವಲು, ಆರುಮಂದಿ ಪ್ರಧಾನಿಗಳು,
ಇಪ್ಪತ್ತೈದು ಮಂದಿ ಪರಿವಾರ.
ಅವರೊಳಗೆ ತೊಟ್ಟನೆ ತೊಳಲಿ ಬಳಲಲಾರದೆ
ಎಚ್ಚತ್ತು ನಿಶ್ಚಿಂತನಾದ ಅರಸನ ಕಂಡೆ.
ಆ ಅರಸಿನ ಗೊತ್ತುವಿಡಿದು,
ಒಂಬತ್ತು ಬಾಗಿಲಿಗೆ ಲಿಂಗಸ್ಥಾಪ್ಯವ ಮಾಡಿ, ಒಂದು ಬಾಗಿಲಲ್ಲಿ ನಿಂದು,
ಕಾವಲವನೆ ಕಟ್ಟಿಸಿ, ಪ್ರಧಾನಿಗಳನೆ ಮೆಟ್ಟಿಸಿ,
ಪರಿವಾರವನೆ ಸುಟ್ಟು, ಅರಸನ ಮುಟ್ಟಿಹಿಡಿದು ಓಲೈಸಲು
ಸಪ್ತಧಾತು ಷಡುವರ್ಗವನೆ ಕಂಡು, ಕತ್ತಲೆಯ ಕದಳಿಯ ದಾಂಟಿ,
ನಿಶ್ಚಿಂತದಲ್ಲಿ ಬಚ್ಚಬರಿಯ ಬೆಳಗಿನೊಳಗೋಲಾಡಿ
ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./26
ಒಂದು ಹುತ್ತಕ್ಕೆ ಒಂಬತ್ತು ಬಾಗಿಲು.
ಒಂದು ಸರ್ಪ ಒಂಬತ್ತು ಬಾಗಿಲಲ್ಲಿಯೂ ನೋಡುತ್ತಿಪ್ಪುದು.
ಒಂಬತ್ತು ಬಾಗಿಲಿಗೆ ಕದವನಿಕ್ಕಿ,
ಒಂದು ಬಾಗಿಲ ಅಗುಳಿ ದಾರವಂದವನಿಕ್ಕಿ ಬಲಿಯಲು,
ತಿರುಗುವುದಕ್ಕೆ ತಾವ ಕಾಣದೆ, ಇರುವುದಕ್ಕೆ ಇಂಬ ಕಾಣದೆ,
ನಿಲುವುದಕ್ಕೆ ಎಡೆಯ ಕಾಣದೆ, ಉರಿ ಎದ್ದು ಊಧ್ರ್ವಕ್ಕೇರಲು,
ಶರದಿ ಬತ್ತಿತ್ತು, ಅಲ್ಲಿದ್ದ ಖಗಮೃಗವೆಲ್ಲ ದಹನವಾದವು.
ಸರೋವರವೆಲ್ಲ ಉರಿದು ಹೋದವು, ಕತ್ತಲೆ ಹರಿಯಿತ್ತು.
ಮುಂದೆ ದಿಟ್ಟಿಸಿ ನೋಡುವನ್ನಕ್ಕ ಇಟ್ಟೆಡೆಯ ಬಾಗಿಲು ಸಿಕ್ಕಿತ್ತು.
ಆ ಇಟ್ಟೆಡೆಯ ಬಾಗಿಲ ಹೊಕ್ಕು ಹೊಡೆಕರಿಸಿ, ಪಶ್ಚಿಮದ ಕದವ ತೆಗೆದು,
ಬಟ್ಟ ಬಯಲಲ್ಲಿ ನಿಂದು ನಾನೆತ್ತ ಹೋದೆಹೆನೆಂದರಿಯೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./27
ಒಡಕುಮಡಿಕೆಯಂತೆ ಒಡೆದುಹೋಗುವ ಹಡಿಕೆಕಾಯವ ನೆಚ್ಚಿ,
ತಟತಟನೆ ತಾಗಿ, ಮಠದ ಬೆಕ್ಕಾಗಿ ತಿಟ್ಟನೆ ತಿರುಗಿ,
ಬಟ್ಟೆಯಲಿಕ್ಕಿ ಕಡಿವ ಕಳ್ಳನನರಿಯದೆ, ತಿಂಬ ಹುಲಿಯನರಿಯದೆ,
ಒಡವೆಯ ಗಳಿಸಿಹೆನೆಂದು ಒಡೆಯನ ಮರೆದುದ
ತನ್ನ ಮಡದಿ ಮಕ್ಕಳಿಗೆಂದು
ಅವರ ಒಡವೆರೆದು ಹೋಗುವ ಮಡಿವರೊಡನೆ ನುಡಿಯರು, ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./28
ಕಂಗಳ ಮುಂದಣ ಬೆಳಗ ಕಾಣದೆ, ಕಂಡಕಂಡವರ ಹಿಂದೆ ಹರಿದು,
ಇನ್ನು ಬೇರೆ ಕಂಡೆನೆಂಬ ಭಂಗಿತರ ನೋಡಾ ?
ತನ್ನಲ್ಲಿ ತಾ ಸುಯಿದಾನಿಯಾಗಿ ನೋಡಲರಿಯದೆ,
ಬಿನ್ನಗಣ್ಣಿಲಿ ನೋಡಿಹೆನೆಂದು ತಮ್ಮ ಮರೆದು
ಇನ್ನುಂಟೆಂದು ಅರಸುವ ಅಣ್ಣಗಳಿರಾ, ನೀವು ಕೇಳಿರೆ.
ಮನವು ಮಹದಲ್ಲಿ ನಿಂದುದೆ ಲಿಂಗ
ಕರಣಂಗಳರತುದೆ ಕಂಗಳ ಮುಂದಣ ಬೆಳಗು.
ಇದನರಿಯದೆ, ಮುಂದೆ ಘನವುಂಟೆಂದು ತೊಳಲಿ ಬಳಲಿ ಅರಸಿಹೆನೆಂದು
ಅರೆಮರುಳಾಗಿ ಹೋದರಯ್ಯಾ ನಿಮ್ಮ ನೆಲೆಯನರಿಯದೆ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./29
ಕಂಗಳ ಮುಂದೆ ಮಾಣಿಕವಿದ್ದು ಕಾಣಲೇಕರಿಯರಯ್ಯಾ ?
ಬಾಗಿಲ ಮುಂದೆ ಹಾಲಸಾಗರವಿದ್ದು ಒರತೆಯ ನೀರಿಗೆ ಹಾರುವಂತೆ
ಕಂಗಳ ಮುಂದೆ ಮಹಾಶರಣನಿದ್ದು ಕತ್ತಲೆ ರಿನಲೇಕೆ ?
ಇನ್ನು ಬೇರೆ ಲಿಂಗವನರಸೆಹೆನೆನಲೇಕೆ ?
ಆ ಮಹಾಶರಣ ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./30
ಕಂಡಿಹೆ ಕೇಳಿಹೆನೆಂದು ಮುಂದುಗಾಣದೆ ಸಂದೇಹದಲ್ಲಿ ಮುಳುಗಿ.
ಕಳವಳಿಸಿ ಕಾತರಿಸುವ ಅಣ್ಣಗಳಿರಾ, ನೀವು ಕೇಳಿರೆ, ಹೇಳಿಹೆನು.
ಕಾಣಬಾರದ ಘನವ ಹೇಳಬಾರದಾಗಿ,
ಹೇಳುವುದಕ್ಕೆ ನುಡಿಯಿಲ್ಲ, ನೋಡುವುದಕ್ಕೆ ರೂಪಿಲ್ಲ.
ಇಂತಪ್ಪ ನಿರೂಪದ ಮಹಾಘನವು
ಶರಣರ ಹೃದಯದಲ್ಲಿ ನೆಲೆಗೊಂಬುದಲ್ಲದೆ,
ಈ ಜನನ ಮರಣಕ್ಕೊಳಗಾಗುವ ಮನುಜರೆತ್ತ ಬಲ್ಲರು ಆ ಮಹಾಘನದ ನೆಲೆಯ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?/31
ಕಂಡಿಹೆ ಕೇಳಿಹೆನೆಂಬ ದ್ವಂದ್ವವ ಹಿಂಗಿ,
ಉಂಡಿಹೆ ಉಟ್ಟಿಹೆನೆಂಬ ಹಂಗ ಬಿಟ್ಟು,
ನಡೆದಿಹೆ ನುಡಿದಿಹೆನೆಂಬ ಮಾಟವ ನಿಲಿಸಿ, ಜಗದಾಟವ ನಿಲಿಸಿ,
ಮಾಟಕೂಟ ಜಪಕೋಟಲೆಯೊಳು ಸಿಕ್ಕದೆ ದಾಟಿ ಹೋದ
ಶರಣರ ಪಾದಕ್ಕೆ ಶರಣೆಂದು ಬದುಕಿದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./32
ಕಂಡು ಕೇಳಿಹೆನೆಂಬ ದಂದುಗವ ಬಿಟ್ಟು,
ನೋಡಿ ನುಡಿವೆನೆಂಬ ನೋಟವ ನಿಲಿಸಿ,
ಮಾಡಿ ಕೂಡಿಹೆನೆಂಬ ಮನ ನಿಂದು,
ತನುವ ಮರೆದು ತಾ ನಿಜಸುಖಿಯಾದಲ್ಲದೆ
ಘನವ ಕಾಣಬಾರದೆಂದರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./33
ಕತ್ತಲೆ ಬೆಳಗೆಂಬುದಿಲ್ಲ ನಿತ್ಯನಾದವಂಗೆ,
ಚಿತ್ತ ಪರಚಿತ್ತವೆಂಬುದಿಲ್ಲ ವಸ್ತುವಿನ ನೆಲೆಯ ಕಂಡವಂಗೆ.
ನಿತ್ಯ ಅನಿತ್ಯವೆಂಬುದಿಲ್ಲ ಕರ್ತೃ ತಾನಾದವಂಗೆ.
ಈ ಮೂರರ ಗೊತ್ತುವಿಡಿದು ನಿಶ್ಚಿಂತನಾಗಿ ನಿರ್ವಯಲನೈದುವ
ಶರಣರ ಪಾದಕ್ಕೆ ಶರಣೆಂದು ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./34
ಕದಳಿಯ ಬನದೊಳಗಿರುವ ಲಿಂಗವ ಅರಸಿದಡೆ ಕಾಣಬಾರದು.
ನೋಡಿದಡೆ ನೋಟಕ್ಕಿಲ್ಲ, ಹಿಡಿದಡೆ ಹಸ್ತಕ್ಕಿಲ್ಲ,
ನೆನೆದಡೆ ಮನಕ್ಕಗೋಚರ.
ಇಂತು ಮಹಾಘನವ ಹೃದಯದಲ್ಲಿ ನೆಲೆಗೊಳಿಸಿದ ಶರಣರ
ಕಂಗಳಲ್ಲಿ ಹೆರೆಹಿಂಗದೆ ನೋಡಿ, ಅವರಂಘ್ರಿಯಲ್ಲಿ ಐಕ್ಯವಾದೆನಯ್ಯಾ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./35
ಕನಿಷ್ಠದಲ್ಲಿ ಹುಟ್ಟಿದೆ, ಉತ್ತಮದಲ್ಲಿ ಬೆಳೆದೆ,
ಸತ್ಯಶರಣರ ಪಾದವಿಡಿದೆ.
ಆ ಶರಣರ ಪಾದವಿಡಿದು ಗುರುವ ಕಂಡೆ, ಲಿಂಗವ ಕಂಡೆ,
ಜಂಗಮವ ಕಂಡೆ, ಪಾದೋದಕವ ಕಂಡೆ, ಪ್ರಸಾದವ ಕಂಡೆ.
ಇಂತಿವರ ಕಂಡೆನ್ನ ಕಂಗಳಮುಂದಣ ಕತ್ತಲೆ ಹರಿಯಿತ್ತು.
ಕಂಗಳಮುಂದಣ ಕತ್ತಲೆ ಹರಿಯಲೊಡನೆ,
ಮಂಗಳದ ಮಹಾಬೆಳಗಿನೊಳಗೋಲಾಡಿ ಸುಖಿಯಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./36
ಕರಗವ ಸುಟ್ಟೆ, ಕಂದಲವನೊಡದೆ,
ಮರನ ಮುರಿದೆ, ಬಣ್ಣವ ಹರಿದೆ,
ಭಿನ್ನಗಣ್ಣು ಕೆಟ್ಟಿತ್ತು, ಜ್ಞಾನಗಣ್ಣಿಲಿ ನಿಮ್ಮನೆ ನೋಡಿ,
ಕೂಡಿ ಸುಖಿಯಾದೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./37
ಕರುಳು ಒಣಗಿತ್ತು ತನು ಕರಗಿತ್ತು
ಮನ ನಿಂದಿತ್ತು ವಾಯು ಬರತಿತ್ತು
ಅಪ್ಪು ಅರತಿತ್ತು ಹಿಪ್ಪೆ ಉಳಿಯಿತ್ತು.
ನೆನಹು ನಿಷ್ಪತ್ತಿಯಾಗಿ ಬೆಳಗನೆ ಬೆರೆದ ಶರಣರ
ಜನನಮರಣಕ್ಕೊಳಗಾದ ಮನುಜರೆತ್ತ ಬಲ್ಲರು
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?/38
ಕಾಣಬಾರದ ಕದಳಿಯಲೊಂದು ಮಾಣಿಕ ಹುಟ್ಟಿತ್ತು.
ಇದಾರಿಗೂ ಕಾಣಬಾರದು.
ಮಾರಿಹೆನೆಂದಡೆ ಮಾನವರಿಗೆ ಸಾಧ್ಯವಾಗದು.
ಸಾವಿರಕ್ಕೆ ಬೆಲೆಯಾಯಿತ್ತು.
ಆ ಬೆಲೆಯಾದ ಮಾಣಿಕ ನಮ್ಮ ಶಿವಶರಣರಿಗೆ ಸಾಧ್ಯವಾಯಿತ್ತು.
ಅವರು ಆ ಮಾಣಿಕವ ಹೇಗೆ ಬೆಲೆಮಾಡಿದರೆಂದಡೆ
ಕಾಣಬಾರದ ಕದಳಿಯ ಹೊಕ್ಕು, ನೂನ ಕದಳಿಯ ದಾಂಟಿ,
ಜಲವ ಶೋದಿಸಿ, ಮನವ ನಿಲಿಸಿ,
ತನುವಿನೊಳಗಣ ಅನುವ ನೋಡುವನ್ನಕ್ಕ, ಮಾಣಿಕ ಸಿಕ್ಕಿತ್ತು.
ಆ ಮಾಣಿಕವ ನೋಡಿದೆನೆಂದು ಜಗದ ಮನುಜರನೆ ಮರೆದು,
ತಾನುತಾನಾಗಿ ಜ್ಞಾನಜ್ಯೋತಿಯ ಬೆಳಗಿನೊಳಗೋಲಾಡಿ
ಸುಖಿಯಾದೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ. !/39
ಕಾಮವಿಲ್ಲ, ಕ್ರೋಧವಿಲ್ಲ, ಲೋಭವಿಲ್ಲ,
ಮೋಹವಿಲ್ಲ, ಮದವಿಲ್ಲ, ಮತ್ಸರವಿಲ್ಲ
ಎಂಬ ಅಣ್ಣಗಳಿರಾ, ನೀವು ಕೇಳಿರೊ ಹೇಳಿಹೆನು.
ಕಾಮವಿಲ್ಲದವಂಗೆ ಕಳವಳವುಂಟೆ ?
ಕ್ರೋಧವಿಲ್ಲದವಂಗೆ ರೋಷವುಂಟೆ ?
ಲೋಭವಿಲ್ಲದವಂಗೆ ಆಸೆವುಂಟೆ ?
ಮೋಹವಿಲ್ಲದವಂಗೆ ಪಾಶವುಂಟೆ ?
ಮದವಿಲ್ಲದವಂಗೆ ತಾಮಸವುಂಟೆ ?
ಮತ್ಸರವಿಲ್ಲದವನು ಮನದಲ್ಲಿ ಮತ್ತೊಂದ ನೆನೆವನೆ ?
ಇವು ಇಲ್ಲವೆಂದು ಮನವ ಕದ್ದು ನುಡಿವ
ಅಬದ್ಭರ ಮಾತ ಮೆಚ್ಚುವನೆ
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ?/40
ಕಾಯವೆಂಬ ಕದಳಿಯ ಹೊಕ್ಕು ಜೀವಪರಮರ ನೆಲೆಯನರಿದು,
ರಸ ರುಧಿರ ಮಾಂಸ ಮಜ್ಜೆ ಮಿದುಳು ಅಸ್ತಿ ಶುಕ್ಲ
ಈ ಸಪ್ತಧಾತುಗಳ ಸಂಚವ ತಿಳಿದು,
ಮತ್ತೆ ಮನ ಪವನ ಬಿಂದುವನೊಡಗೂಡಿ
ಉತ್ತರಕ್ಕೇರಿ ನೋಡಲು ಬಟ್ಟಬಯಲಾಯಿತ್ತು.
ಆ ಬಯಲಲ್ಲಿ ನಿಂದು, ನಿರಾಳದೊಳಗಾಡಿ ಮಹಾಬೆಳಗನೆ ಕೂಡಿ
ನಾ ನಿಜಮುಕ್ತಳಾದೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./41
ಕಾಯವೆಂಬ ಕದಳಿಯನೆ ಹೊಕ್ಕು, ನೂನ ಕದಳಿಯ ದಾಂಟಿ,
ಜೀವಪರಮರ ನೆಲೆಯನರಿದು, ಜನನಮರಣವ ಗೆದ್ದು,
ಭವವ ದಾಂಟಿದಲ್ಲದೆ, ಘನವ ಕಾಣಬಾರದೆಂದರು
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./42
ಕೈಲಾಸ ಮರ್ತ್ಯಲೋಕ ಎಂಬರು.
ಕೈಲಾಸವೆಂದಡೇನೊ, ಮರ್ತ್ಯಲೋಕವೆಂದಡೇನೊ ?
ಅಲ್ಲಿಯ ನಡೆಯೂ ಒಂದೆ, ಇಲ್ಲಿಯ ನಡೆಯೂ ಒಂದೆ.
ಅಲ್ಲಿಯ ನುಡಿಯೂ ಒಂದೆ, ಇಲ್ಲಿಯ ನುಡಿಯೂ ಒಂದೆ ಕಾಣಿರಯ್ಯಾ ಎಂಬರು.
ಕೈಲಾಸದವರೆ ದೇವರ್ಕಳೆಂಬರುದ
ಸುರಲೋಕದೊಳಗೆ ಸಾಸಿರಕಾಲಕ್ಕಲ್ಲದೆ ಅಳಿದಿಲ್ಲವೆಂಬರು.
ನರಲೋಕದೊಳಗೆ ಸತ್ತು ಸತ್ತು ಹುಟ್ಟುತಿಹರೆಂಬರು.
ಇದ ಕಂಡು ನಮ್ಮ ಶರಣರು
ಸುರಲೋಕವನು ನರಲೋಕವನು ತೃಣವೆಂದು ಭಾವಿಸಿ,
ಭವವ ದಾಂಟಿ ತಮ್ಮ ತಮ್ಮ ಹುಟ್ಟನರಿದು,
ಮಹಾಬೆಳಗನೆ ಕೂಡಿ, ಬೆಳಗಿನಲ್ಲಿ ಬಯಲಾದರಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./43
ಘಟವೆಂಬ ಮಠದೊಳಗೆ ಮನವೆಂಬ ಮರ ಹುಟ್ಟಿತ್ತು.
ಬೇರುವರಿಯಿತ್ತು, ಅದಕ್ಕೆ ಶತಕೋಟಿಶಾಖೆ ಬಿಟ್ಟಿತ್ತು.
ಆ ಶಾಖೆಯ ಬೆಂಬಳಿಗೊಂಡು ಆಡುವರೆಲ್ಲ ಮುಂದುಗಾಣದೆ ಸಂದುಹೋದರು.
ಇದನರಿದು ನಿಮ್ಮ ಶರಣರು ಹಿಂದೆ ನೋಡಿ
ಮುಂದೆ ಲಿಂಗದಲ್ಲಿ ಬೆರೆವ ಭೇದವ ಕಂಡು,
ಮನವೆಂಬ ಮರದ ಬೇರನಗಿದು ಶತಕೋಟಿ ಶಾಖೆಯನು ಸವರಿ,
ತುತ್ತತುದಿಯ ಮೇಲೆ ನಿಂದು ನೋಡುವನ್ನಕ್ಕ,
ನಾನೆತ್ತ ಹೋದೆನೆಂದರಿಯೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ. /44
ಜಂಗಮವೆ ಗುರು, ಜಂಗಮವೆ ಲಿಂಗ, ಜಂಗಮವೆ ಪ್ರಾಣವೆಂದಡೆ,
ಇಲ್ಲವೆಂಬ ಅಂಗಹೀನರಿರಾ, ನೀವು ಕೇಳಿರೊ.
ಜಂಗಮವು ಗುರುವಲ್ಲದಿದ್ದಡೆ,
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವ ಹಿಂಗಿಸುವನೆ ?
ಜಂಗಮವು ಲಿಂಗವಲ್ಲದಿದ್ದಡೆ, ಪ್ರಾಣಲಿಂಗವ ತೋರುವನೆ ?
ಜಂಗಮವು ಪ್ರಾಣವಲ್ಲದಿದ್ದಡೆ, ಪ್ರಾಣಕ್ಕೆ ಪ್ರಸಾದವನೂಡುವನೆ ?
ಇದ ಕಂಡು ಕಾಣೆನೆಂಬ ಭಂಗಿತರ ನುಡಿಯ ಮೆಚ್ಚರು
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./45
ಜಂಗಮವೆ ಜಗತ್ಪಾವನವಯ್ಯಾ.
ಆ ಜಂಗಮದ ನೆನಹೆ ಲಿಂಗವಾಯಿತ್ತು.
ಅವರ ತನುವೆ ಎನ್ನ ಕಾಯವಾಯಿತ್ತು.
ಅವರ ದರ್ಶನವೆ ಎನಗೆ ಪರುಷವಾಯಿತ್ತು,
ಆ ಪರುಷವಿಡಿದು ಮನವ ಲಿಂಗದಲ್ಲಿ ಬೆರಸಿ,
ಕನಸು ಕಳವಳಿಕೆ ಹೆಸರುಗೆಟ್ಟು ಹೋದುವಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./46
ಜಗದೊಳಗೆ ಹುಟ್ಟಿ ಜಗದಪ್ರಪಂಚ ಹಿಂಗಿ,
ಜಂಗಮದೊಳಗಾಡುತ್ತ, ಲಿಂಗದೊಳಗೆ ನೋಡುತ್ತ,
ಅಂಗನೆಯರ ಸಂಗವ ಮಾಡಿಹೆನೆಂಬಿರಿ.
ಅದೆಂತೆಂದಡೆ, ನೋಟಕಿಲ್ಲದ ಘನದ ಕೂಟವ ಕೂಡುವ ಪರಿಯೆಂತಯ್ಯಾ ?
ರೂಪಿಲ್ಲದುದ ರೂಪಿಗೆತರುವ ಪರಿಯೆಂತಯ್ಯಾ ?
ಹೇಳಬಾರದ ಘನವ ಕೇಳುವ ಪರಿಯೆಂತಯ್ಯಾ ?
ಅತ್ಯತಿಷ್ಠದ್ದಶಾಂಗುಲಂ ಎಂಬ ವಸ್ತು
ಹಿಡಿದಡೆ ಹಿಡಿಗಿಲ್ಲ, ನುಡಿದಡೆ ನುಡಿಗಿಲ್ಲ.
ಒಡಲೊಳಗಿಲ್ಲದ ಹೊರಗಿಲ್ಲ, ಒಳಗಿಲ್ಲ.
ವಾಚಾತೀತ ಮನೋತೀತ ಭಾವಾತೀತವಾಗಿದ್ದ ವಸ್ತು
ತನ್ನೊಳಗೆ ತಾನೆ ತನ್ಮಯವಾಗಿ ಇರುವುದ
ತಿಳಿಯಲರಿಯದೆ ಬಿನ್ನವಿಟ್ಟರಸುವಿರಿ.
ಅದೆಂತೆಂದಡೆ ತ ಪುಷ್ಪಪರಿಮಳದಂತೆ, ತುಪ್ಪಕಂಪಿನಂತೆ,
ಅಲೆನೀರಿನಂತೆ, ಕಣ್ಣುಕಪ್ಪಿನಂತೆ, ಚಿನ್ನಬಣ್ಣದಂತೆ,
ಸಿಪ್ಪೆಹಣ್ಣಿನಂತೆ, ಒಪ್ಪಚಿತ್ರದಂತೆ,
ಕರ್ಪೂರ ಜ್ಯೋತಿಯೊಳಡಗಿದಂತೆ ನೆನಹು ನಿಷ್ಪತ್ತಿಯಾದ ಶರಣ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ./47
ತನು ಕರಗಿತ್ತು, ಮನ ನಿಂದಿತ್ತು, ಉಲುಹು ಅಡಗಿತ್ತು,
ನೆಲೆ ನಿಂದಿತ್ತು, ಮನ ಪವನ ಬಿಂದು ಒಡಗೂಡಿತ್ತು,
ಉರಿ ರಿದ್ದಿತ್ತು, ಊಧ್ರ್ವಕ್ಕೇರಿತ್ತು, ಶರದಿ ಬತ್ತಿತ್ತು,
ನೊರೆ ತೆರೆ ಅಡಗಿತ್ತು, ಅಷ್ಟಮದವೆಲ್ಲ ಹಿಟ್ಟುಗುಟ್ಟಿತ್ತು.
ಕರಣಂಗಳೆಲ್ಲ ಹುರಿದು ಹೋದವು, ಸಪ್ತಧಾತು ಕೆಟ್ಟಿತ್ತು,
ರಸವರತಿತ್ತು, ಅಪ್ಪುಬರತಿತ್ತು.
ಕೆಟ್ಟುಹೋದ ಬಿದಿರಿನಂತೆ ತೊಟ್ಟು ಬಿಟ್ಟು ಬಯಲೊಳಗೆ ಬಿದ್ದು,
ನಾನೆತ್ತ ಹೋದೆನೆಂದರಿಯೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ/48
ತನು ನಷ್ಟವಾದಡೇನಯ್ಯಾ, ಮನನಷ್ಟವಾಗದನ್ನಕ್ಕ ?
ವಾಕ್ಕು ನಷ್ಟವಾದಡೇನಯ್ಯಾ, ಬೇಕುಬೇಡೆಂಬುದಳಿಯದನ್ನಕ್ಕ ?
ಅಂಗಸುಖ ನಷ್ಟವಾದಡೇನಯ್ಯಾ, ಕಂಗಳಪಟಲಹರಿಯದನ್ನಕ್ಕ ?
ಮನ ಮುಗ್ಧವಾದಡೇನಯ್ಯಾ, ಅಹಂ ಎಂಬುದ ಬಿಡದನ್ನಕ್ಕ ?
ಇವೆಲ್ಲರೊಳಗಿದ್ದು ವಲ್ಲಭನೆನಿಸಿಕೊಂಬವರ ನುಡಿಯ ಬಲ್ಲರು
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./49
ತನುವ ಕರಗಿಸಿ, ಹರಿವ ಮನವ ನಿಲಿಸಿ,
ಅಂಗಗುಣವ ಅಳಿದು, ಲಿಂಗಗುಣವ ನಿಲಿಸಿ,
ಭಾವವಳಿದು, ಬಯಕೆ ಸವೆದು, ಮಹಾದೇವನಾದ ಶರಣರ
ಜಗದ ಮಾನವರೆತ್ತ ಬಲ್ಲರು, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?/50
ತನುವೆಂಬ ರಾಜ್ಯಕ್ಕೆ ಮನವೆಂಬ ಅರಸು.
ಆ ಅರಸಿಂಗೆ ನೋಟ ಬೇಟದವರಿಬ್ಬರು.
ಅಷ್ಟಮಣಿಹ ಹರಿಮಣಿಹದವರು.
ಅವರ ಸುತ್ತ ಓಲೈಸುವರು ಇಪ್ಪತ್ತೈದು ಮಂದಿ.
ಅವರಿಗೆ ಕತ್ತಲೆಯ ಬಲೆಯ ಬೀಸಿ ಕೆಡಹಿ,
ಅರಸಿನ ಗೊತ್ತುವಿಡಿದು ಉತ್ತರವನೇರಿ
ನಿಶ್ಚಿತವಾಗಿ ನಿಜದಲ್ಲಿ ನಿರ್ವಯಲನೆಯ್ದುವ ಶರಣರ ಪಾದವ ಹಿಡಿದು,
ಎತ್ತ ಹೋದೆನೆಂದರಿಯೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ. /51
ತನುವೆಂಬ ಹುತ್ತಕ್ಕೆ ಮನವೆಂಬ ಸರ್ಪ ಆವರಿಸಿ,
ಹೆಡೆಯೆತ್ತಿ ಆಡುತ್ತಿರಲು,
ಆ ಸರ್ಪನ ಕಂಡು, ನಾ ಹೆದರಿಕೊಂಡು,
ಗುರುಕರುಣವೆಂಬ ಪರುಷವ ತಂದು ಮುಟ್ಟಿಸಲು,
ನೋಟ ನಿಂದಿತ್ತು, ಹೆಡೆ ಅಡಗಿತ್ತು, ಹಾವು ಬಯಲಾಯಿತ್ತು.
ಆ ಗುರುಕರುಣವೆಂಬ ಪರುಷವೆ ನಿಂದಿತ್ತು.
ನಿಂದ ಪರುಷವನೆ ಕೊಂಡು ನಿಜದಲ್ಲಿ ನಿರ್ವಯಲಾಗುವ
ಶರಣರ ಪಾದವ ನಂಬಿ ಕೆಟ್ಟು ಬಟ್ಟಬಯಲಾದೆನಯ್ಯಾ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./52
ತನುವೆಂಬ ಹುತ್ತದಲ್ಲಿ ಮನವೆಂಬ ಸರ್ಪ ಹೆಡೆಯನುಡುಗಿಕೊಂಡಿರಲು
ಅಷ್ಟಮದವೆಲ್ಲ ಹಿಟ್ಟುಗುಟ್ಟಿದವುದ ಕರಣಂಗಳೆಲ್ಲ ಉರಿದುಹೋದವು.
ಇದ್ದ ಶಕ್ತಿಯನೆ ಕಂಡು, ಮನ ನಿಶ್ಚಯವಾದುದನೆ ನೋಡಿ,
ಪಶ್ಚಿಮದ ಕದವ ತೆಗೆದು, ಬಟ್ಟಬಯಲ ಬೆಳಗಿನೊಳಗೆ ಓಲಾಡಿ
ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
ಜ್ಞಾನಶಕ್ತಿ ಬಂದು ಎಬ್ಬಿಸಲು,
ಉರಿ ಭುಗಿಲೆನುತ್ತ ಹೆಡೆಯನೆತ್ತಿ ಊಧ್ರ್ವಕ್ಕೇರಲು,/53
ತನ್ನ ತಾನರಿಯದೆ ಅನ್ಯರಿಗೆ ಬೋಧೆಯ ಹೇಳುವ
ಅಣ್ಣಗಳಿರಾ, ನೀವು ಕೇಳಿರೊ.
ಅವರ ಬಾಳುವೆ ರಿಂತೆಂದಡೆ
ಕುರುಡ ಕನ್ನಡಿಯ ಹಿಡಿದಂತೆ.
ತನ್ನ ಒಳಗೆ ಮರೆದು ಇದಿರಿಂಗೆ ಬೋಧೆಯ ಹೇಳಿ,
ಉದರವ ಹೊರೆವ ಚದುರರೆಲ್ಲರೂ ಹಿರಿಯರೆ ? ಅಲ್ಲಲ್ಲ.
ಇದ ಮೆಚ್ಚುವರೆ ನಮ್ಮ ಶರಣರು ?
ಅವರ ನಡೆ ರಿಂತೆಂದಡೆತ
ಒಳಗನರಿದು, ಹೊರಗ ಮರೆದು,
ತನುವಿನೊಳಗಣ ಅನುವ ಹಸುಗೆಯ ಮಾಡಿದರು.
ಪೃಥ್ವಿಗೆ ಅಪ್ಪುವಿನ ಅದಿಕವ ಮಾಡಿದರು.
ಅಗ್ನಿಯ ಹುದುಗಿದರು, ವಾಯುವ ಬೀರಿದರು, ಆಕಾಶದಲ್ಲಿ ನಿಂದರು,
ಓಂಕಾರವನೆತ್ತಿದರುದ ಅದರೊಡಗೂಡಿದರು.
ಕಾಣದ ನೆಲೆಯನರಿದರುದ ಪ್ರಮಾಣವನೊಂದುಗೂಡಿದರು.
ಮಹಾಬೆಳಗಿನಲ್ಲಿ ಓಲಾಡುವ ಶರಣರ ವಾಗ್ಜಾಲವಕಲಿತುಕೊಂಡು ನುಡಿವ
ಕಾಕುಮನುಜರೆತ್ತ ಬಲ್ಲರು ನಿಮ್ಮ ನೆಲೆಯ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?/54
ತುಂಬಿದ ಕೆರೆಗೆ ಅಂಬಿಗ ಹರಿಗೋಲ ಹಾಕಿ ಬಲೆಯ ಬೀಸಿದಂತೆ,
ತುಂಬುತ್ತ ಕೆಡಹುತ್ತಿದ್ದು ಲಿಂಗವನೊಡಗೂಡಿದೆವೆಂದು,
ಜಂಗಮದ ನೆಲೆಯಕಾಣದೆ ಸಂದುಹೋದರಲ್ಲಾ ಈ ಲೋಕದವರೆಲ್ಲ.
ಲಿಂಗದ ನೆಲೆಯ ಕಾಂಬುದಕ್ಕೆ, ಹರಿಗೋಲನೆ ಹರಿದು, ಹುಟ್ಟ ಮುರಿದು,
ಆ ಬಲೆಯಲ್ಲಿ ಸಿಕ್ಕಿದ ಖಗಮೃಗವನೆ ಕೊಂದು,
ಆ ಬಲೆಯನೆ ಕಿತ್ತು, ಅಂಬಿಗ ಸತ್ತು,
ಕೆರೆ ಬತ್ತಿ, ಮೆಯ್ಮರೆದಲ್ಲದೆ ಆ ಮಹಾಘನವ ಕಾಣಬಾರದೆಂದರು
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./55
ತುಂಬಿದ ಮನೆಯ ಹೊಕ್ಕಡೆ ದಂದಳವಾಯಿತ್ತು.
ಈ ಸಂದಳಿಗಾರದೆ ತುಂಬಿದ ಮನೆಗೆ
ಕಿಚ್ಚನಿಕ್ಕಿದಡೆ ನಿಶ್ಚಿಂತವಾಯಿತ್ತು.
ಬಟ್ಟಬಯಲ ಬರಿಯ ಮನೆಯೊಳಗೆ
ನಿಮ್ಮ ಬೆಳಗನೆ ನೋಡಿ ಸುಖಿಯಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./56
ದಾರಿವಿಡಿದು ಬರಲು ಮುಂದೆ ಸರೋವರವ ಕಂಡೆ.
ಆ ಸರೋವರದ ಮೇಲೆ ಒಂದು ದಳದ ಕಮಲವ ಕಂಡೆ,
ಆ ಕಮಲವರಳಿ ವಿಕಸಿತವಾಗಿತ್ತು, ಪರಿಮಳವೆಸಗಿತ್ತು.
ಆ ಪರಿಮಳದ ಬೆಂಬಳಿವಿಡಿದು ಹೋಗುತ್ತಿರಲು,
ಮುಂದೆ ಒಂದು ದಾರಿಯ ಕಂಡು,
ಆ ಮುಂದಳ ದಾರಿಯಲ್ಲಿ ಹೋದವರೆಲ್ಲರು
ನಿಂದೆ ಕುಂದುಗಳಿಗೊಳಗಾಗಿ ಸಂದುಹೋದರು.
ಇದ ಕಂಡು ನಾ ಹೆದರಿಕೊಂಡು ಎಚ್ಚತ್ತು,
ಚಿತ್ತವ ಸುಯಿದಾನವ ಮಾಡಿ,
ಹಿತ್ತಲ ಬಾಗಿಲ ಕದವ ತೆಗೆದು ನೋಡಿದಡೆ ಬಟ್ಟಬಯಲಾಗಿದ್ದಿತ್ತು.
ಆ ಬಟ್ಟಬಯಲೊಳಗೆ ಮಹಾಬೆಳಗನೆ ನೋಡಿ
ನಾ ಎತ್ತಹೋದೆನೆಂದರಿಯೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./57
ದಾರಿವಿಡಿದು ಬರಲು ಮುಂದೆ ಸರೋವರವ ಕಂಡೆ.
ಆ ಸರೋವರದ ಮೇಲೆ ಮಹಾಘನವ ಕಂಡೆ.
ಆ ಮಹಾಘನವಿಡಿದು ಮನವ ನಿಲಿಸಿ
ಕಾಯಗುಣವನುಳಿದು ಕರಣಗುಣವ ಸುಟ್ಟು,
ಆಸೆಯನೆ ಅಳಿದು, ರೋಷವನೆ ನಿಲಿಸಿ,
ಜಗದೀಶ್ವರನಾದ ಶರಣರ ಮರ್ತ್ಯದ ಹೇಸಿಗಳೆತ್ತಬಲ್ಲರು
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?/58
ನರರ ಬೇಡೆನು, ಸುರರ ಹಾಡೆನು, ಕರಣಂಗಳ ಹರಿಯಬಿಡೆನು,
ಕಾಮನ ಬಲೆಗೆ ಸಿಲ್ಕೆನು, ಮರವೆಗೊಳಗಾಗೆನು.
ಪ್ರಣವ ಪಂಚಾಕ್ಷರಿಯ ಜಪಿಸಿಹೆನೆಂದು
ತನುವ ಮರೆದು ನಿಜಮುಕ್ತಳಾದೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./59
ನಾನೊಂದು ಹಾಳೂರಿಗೆ ಹೋಗುತ್ತಿರಲು, ಆ ಹಾಳೂರ ಹೊಕ್ಕಡೆ,
ಅಲ್ಲಿ ನಾಯಿಗಳು ಅಟ್ಟಿಕೊಂಡು ಬಂದವು,
ಹುಲಿ ಕರಡಿ ಅಡ್ಡಲಾದವು.
ಇವ ಕಂಡು ನಾ ಹೆದರಿಕೊಂಡು
ನನ್ನ ಕೈಗೊಂದು ಕಲ್ಲ ತೆಕ್ಕೊಂಡು ನೋಡುತ್ತ ಬರುತ್ತಿರಲು,
ಆ ನಾಯಿಗಳು ಓಡಿಹೋದವು.
ಹುಲಿ ಕರಡಿಗಳು ಅಲ್ಲಿಯೇ ಬಯಲಾದವು.
ಆ ಊರು ನಿರ್ಮಲವಾಯಿತ್ತು.
ಆ ನಿರ್ಮಲವಾದ ಊರ ಹೊಕ್ಕು ನೋಡಲು,
ಆ ನೋಡುವ ನೋಟವು, ಆ ಊರನಾಳುವ ಅರಸು,
ಆ ಊರು ಕೂಡಿ ಒಂದಾದವು.
ಆ ಒಂದಾದುದನೆ ನೋಡಿ, ದ್ವಂದ್ವವನೆ ಹರಿದು,
ನಿಮ್ಮ ಸಂಗಸುಖದೊಳಗೋಲಾಡಿ ಸುಖಿಯಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./60
ನಾಮ ರೂಪಿಲ್ಲದ ಘನವ ನಾಮರೂಪಿಂಗೆ ತಂದಿರಯ್ಯಾ.
ಅದೇನು ಕಾರಣವೆಂದಡೆ,
ಎನ್ನ ಮನಕ್ಕೆ ಚೆನ್ನಮಲ್ಲೇಶ್ವರನಾದಿರಿ.
ಹೀಗೆಂದು ನಿಮ್ಮ ನಾಮಾಂಕಿತ.
ಹೀಗಾದಡೆಯು ಕಾಣಲರಿಯರು ಎಂದು
ನಡೆನುಡಿ ಚೈತನ್ಯವಿಡಿದು, ಕರದಲ್ಲಿ ಲಿಂಗವ ಹಿಡಿದು,
ಚೆನ್ನಮಲ್ಲೇಶ್ವರನೆಂಬ ನಾಮಾಂಕಿತವಿಡಿದು ಬರಲಾಗಿ,
ಮರ್ತ್ಯಲೋಕದಲ್ಲಿ ತನ್ನ ನೆನೆವ ಶಿವಭಕ್ತರ
ಪಾವನ ಮಾಡಬೇಕೆಂದು ಬಂದು,
ಭೂಮಿಯಮೇಲೆ ಲೀಲೆಯ ನಟಿಸಿ,
ತಮ್ಮ ಪಾದದಲ್ಲಿ ನಿಜಮುಕ್ತಳ ಮಾಡಿದರಯ್ಯಾ ಚೆನ್ನಮಲ್ಲೇಶ್ವರನು
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./61
ನಿಮ್ಮ ಪಾದವಿಡಿದು ಮನ ಪಾವನವಾಯಿತ್ತು
ಎನ್ನ ತನು ಶುದ್ಧವಾಯಿತ್ತು ಕಾಯಗುಣವಳಿಯಿತ್ತು
ಕರಣಗುಣ ಸುಟ್ಟು, ಭಾವವಳಿದು, ಬಯಕೆ ಸವೆದು,
ಮಹಾದೇವನಾದ ಶರಣರ ಪಾದವಿಡಿದು ನಿಜಮುಕ್ತಳಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./62
ನಿರಾಳಲಿಂಗವ ಕಾಂಬುದಕ್ಕೆ
ಮನ ಮತ್ತೊಂದೆಡೆಗೆ ಹರಿಯದಿರಬೇಕುದ
ನೆನಹು ಲಿಂಗವಲ್ಲದೆ ಮತ್ತೊಂದ ನೆನೆಯದಿರಬೇಕುದ
ತನುವಿನಲ್ಲಿ ಮರಹಿಲ್ಲದಿರಬೇಕುದ ಕಾಳಿಕೆ ಹೊಗದಿರಬೇಕು.
ಇಂತು ನಿಶ್ಚಿಂತವಾಗಿ ಚಿತ್ತಾರದ ಬಾಗಿಲವ ತೆರೆದು
ಮುತ್ತು ಮಾಣಿಕ ನವರತ್ನ ತೆತ್ತಿಸಿದಂತಿಹ
ಉಪ್ಪರಿಗೆ ಮೇಗಳ ಶಿವಾಲಯವ ಕಂಡು,
ಅದರೊಳಗೆ ಮನ ಅಚ್ಚೊತ್ತಿದಂತಿದ್ದು,
ಇತ್ತ ಮರೆದು ಅತ್ತಲೆ ನೋಡಿ ನಿಜಮುಕ್ತಳಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ/63
ನಿರ್ಮಳವಾದ ದೇಹದಲ್ಲಿ ಇನ್ನೊಂದ ಕಲ್ಪಿಸಲುಂಟೆ ?
ಲಿಂಗವಾದ ತನುವಿನೊಳಗೆ ಜಂಗಮದ ನೆನಹಲ್ಲದೆ,
ಇನ್ನೊಂದರ ನೆನಹುಂಟೆ ?
ಪ್ರಸಾದವಾದ ಕಾಯದೊಳಗೆ ತನ್ನ ಪ್ರಾಣಲಿಂಗದ ನೆನಹಲ್ಲದೆ,
ಇನ್ನೊಂದರ ನೆನಹುಂಟೆ ?
ಈ ಸರ್ವಾಂಗವೂ ಲಿಂಗವಾಗಿ, ಜಂಗಮನೆ ಪ್ರಾಣವಾಗಿ,
ಅವರ ಪಾದದಲ್ಲಿಯೇ ನಾನು ನಿಜಮುಕ್ತಳಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./64
ನಿಶ್ಚಿಂತ ನಿರಾಳದಲ್ಲಿ ಆಡುವ ಮಹಾದೇವನ ಕರ್ತೃವೆಂದರಿದ ಕಾರಣದಿಂದ,
ತತ್ವವೆಂಬುದನರಿದು, ಮನವ ನಿಶ್ಚಿಂತವ ಮಾಡಿ,
ನಿಜಸುಖದಲ್ಲಿ ನಿಂದು, ಕತ್ತಲೆಯ ಹರಿಯಿಸಿ,
ತಮವ ಹಿಂಗಿಸಿ, ವ್ಯಾಕುಳವನಳಿದು, ನಿರಾಕುಳದಲ್ಲಿ ನಿಂದು,
ಬೇಕು ಬೇಡೆಂಬುಭಯವಳಿದು, ಲೋಕದ ಹಂಗಹರಿದು,
ತಾನು ವಿವೇಕಿಯಾಗಿ ನಿಂದು ಮುಂದೆ ನೋಡಿದಡೆ
ಜ್ಯೋತಿಯ ಬೆಳಗ ಕಾಣಬಹುದೆಂದರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./65
ನಿಶ್ಚಿಂತವಾದವಂಗೆ ಮತ್ತಾರ ಹಂಗುಂಟೆ ?
ಚಿತ್ತಸುಯಿದಾನವಾದವಂಗೆ ತತ್ವವ ಕಂಡೆಹೆನೆಂಬುದುಂಟೆ ?
ತಾನುತಾನಾದವಂಗೆ ಮಾನವರ ಹಂಗುಂಟೆ ?
ಭಾವಬಯಲಾದವಂಗೆ ಬಯಕೆಯೆಂಬುದುಂಟೆ ?
ಗೊತ್ತ ಕಂಡವಂಗೆ ಅತ್ತಿತ್ತಲರಸಲುಂಟೆ ?
ಇಂತು ನಿಶ್ಚಯವಾಗಿ ನಿಜವ ನೆಮ್ಮಿದ ಶರಣರ ಎನಗೊಮ್ಮೆ ತೋರಿಸಯ್ಯಾ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./66
ನೆನೆದೆಹೆನೆಂದಡೆ ಏನ ನೆನೆವೆನಯ್ಯಾ !
ಮನ ಮಂಕಾಯಿತ್ತು, ತನು ಬಯಲಾಯಿತ್ತು,
ಕಾಯ ಕರಗಿತ್ತು, ದೇಹ ಹಮ್ಮಳಿಯಿತ್ತು.
ತಾನು ತಾನಾಗಿ ಬೆಳಗಿನೊಳಗೋಲಾಡಿ ಸುಖಿಯಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./67
ನೆನೆವುತ್ತಿದೆ ಮನ; ದುರ್ವಾಸನೆಗೆ ಹರಿವುತ್ತಿದೆ ಮನ;
ಕೊನೆಗೊಂಬೆಗೆ ರಿಳೆವುತ್ತಿದೆ ಮನದ
ಕಟ್ಟಿಗೆ ನಿಲ್ಲದು ಮನದ ಬಿಟ್ಟಡೆ ಹೋಗದು ಮನ.
ತನ್ನಿಚ್ಫೆಯಲಾಡುವ ಮನವ ಕಟ್ಟಿಗೆ ತಂದು, ಗೊತ್ತಿಗೆ ನಿಲಿಸಿ,
ಬಚ್ಚ ಬರಿಯ ಬಯಲಿನೊಳಗೆ ಓಲಾಡುವ
ಶರಣರ ಪಾದದಲ್ಲಿ ನಾ ಬೆಚ್ಚಂತಿದ್ದೆನಯ್ಯಾ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./68
ನೋಟವನಿಟ್ಟು ನೋಡುತಿರಲು ಮೂರಾಯಿತ್ತು.
ಮೂರನೆ ಮೂಲಿಗನೆಂದರಿದು, ಮುದುಡ ಹರಿದು, ಸದವ ಬಡಿದು,
ಪೋದರೌ, ನಿರ್ದಸಿಗೆಯ ಪಿರಿದು ಕದಳಿಯ ಕಡಿದು,
ಕಂಭ ಬೇವ ಬೆಂಬಳಿವಿಡಿದು ಹೋಗುತಿರಲು, ಬೇರೆ ಕಂಡೆ.
ಕಿತ್ತಿಹೆನೆಂದಡೆ ಕೀಳಬಾರದು, ನೆಟ್ಟಿಹೆನೆಂದಡೆ ನೆಡಬಾರದು.
ಬಯಲಲ್ಲಿ ಬೆಳೆದ ಬೇರ ಮುಟ್ಟಿ ಹುಟ್ಟುಗೆಟ್ಟು ಹೋದೆನಯ್ಯಾ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ !/69
ನೋಡುವ ನೋಟ ಕೂಡಿ ಬಯಲಲ್ಲಿ ಸಿಕ್ಕಿ,
ಆಡಲೀಯದೆ ಅಲುಗದೆ ಅಗಲಿ, ಆಕಾಶದಲ್ಲಿ ಕೀಲಿಸಿ,
ಲೋಕಾದಿಲೋಕವ ನೋಡುತ್ತ, ಬೇಕಾದ ಠಾವಿಂಗೆ ಹೋಗುತ್ತ,
ಆತ್ಮನೊಳು ಬೆರೆವುತ್ತ, ಮಾತಿನ ಕೀಲನರಿವುತ್ತ,
ಪರಂಜ್ಯೋತಿಯ ಬೆಳಗಿನೊಳಗೆ ಅಜಾತನಾಗಿ
ಏತರೊಳಗೂ ಸಿಲುಕದೆ ಆಡುವ ಶರಣ
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ./70
ನೋಡುವೆನೆಂದಡೆ ನೋಟವಿಲ್ಲದ ಕೇಳುವೆನೆಂದಡೆ ಕಿವಿಯಿಲ್ಲ
ವಾಸಿಸುವೆನೆಂದಡೆ ನಾಸಿಕವಿಲ್ಲದ ನುಡಿವೆನೆಂದಡೆ ಬಾಯಿಯಿಲ್ಲ
ಹಿಡಿವೆನೆಂದಡೆ ಹಸ್ತವಿಲ್ಲದ ನಡೆವೆನೆಂದಡೆ ಕಾಲಿಲ್ಲದ ನೆನೆವೆನೆಂದಡೆ ಮನವಿಲ್ಲ.
ಇಂತು ನೆನೆಹು ನಿಷ್ಪತ್ತಿಯಾಗಿ,
ಶರಣರ ಪಾದದಲ್ಲಿಯೆ ಬೆರೆದು ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./71
ಪಶ್ಚಿಮದ ಕದವ ತೆಗೆದು ಬಚ್ಚಬರಿಯ ಬೆಳಗ ನೋಡಲೊಲ್ಲದೆ,
ಕತ್ತಲೆಯ ಬಾಗಿಲಿಗೆ ಮುಗ್ಗಿ,
ಕಣ್ಣುಕಾಣದ ಅಂಧಕನಂತೆ ಜಾರಿ ಜರಿಯಲ್ಲಿ ಬಿದ್ದು,
ಕರ್ಮಕ್ಕೆ ಗುರಿಯಾಗುವ ಮರ್ತ್ಯದ ಮನುಜರಿರಾ,
ನೀವು ಕೇಳಿರೋ ಹೇಳಿಹೆನು, ನಮ್ಮ ಶರಣರ ನಡೆ ಎಂತೆಂದಡೆ
ಕತ್ತಲೆಯ ಬಾಗಿಲಿಗೆ ಕದವನಿಕ್ಕಿ, ಪಶ್ಚಿಮದ ಕದವ ತೆಗೆದು,
ಬಚ್ಚಬಎಯ ಬೆಳಗಿನೊಳಗೋಲಾಡುವ ಶರಣರ ಪಾದಕ್ಕೆ
ನಮೋ ಎಂದು ಸುಖಿಯಾದೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ/72
ಪೃಥ್ವಿಯನೆ ಆದಿಯ ಮಾಡಿ, ಅಪ್ಪುವಿನಲ್ಲಿ ಗೋಡೆಯನಿಕ್ಕಿ,
ಅಗ್ನಿಯನೆ ಅಪ್ಪುವಿನೊಳಗೆ ಹುದುಗಿಸಿ,
ಅಸ್ತಿಯನೆ ಗಳುವ ಮಾಡಿ, ವಾಯುವನೆ ಬೀರಿ,
ಆಕಾಶವನೆ ಹೊದಿಸಿ, ಸಹಸ್ರದಳ ಕಮಲವನೆ ಮೇಲುಕಟ್ಟ ಕಟ್ಟಿ,
ಬಯಲಮಂಟಪವ ಶೃಂಗಾರವ ಮಾಡಿ,
ಒಡೆಯನ ಬರವ ಹಾರುತಿದ್ದೆನಯ್ಯಾ.
ಒಡೆಯನ ಬರವ ಹಾರೈಸುವ ಅವಸ್ಥೆಯನೆ ಕಂಡು,
ಹಡದಪ್ಪಣ್ಣನೆ ಕರ್ಪುರದ ಸಿಂಹಾಸನವಾಗಿ ನಿಂದರು.
ಅದಕ್ಕೆ ಚೆನ್ನಮಲ್ಲೇಶ್ವರನೆ ಜ್ಯೋತಿರ್ಮಯಲಿಂಗವಾಗಿ
ಬಂದು ನೆಲೆಗೊಂಡರು.
ಜ್ಯೋತಿರ್ಮಯಲಿಂಗವು ಕರ್ಪುರವು ಏಕವಾಗಿ
ಪ್ರಜ್ವಲಿಸಿ ಪರಮಪ್ರಕಾಶವಾಯಿತ್ತು.
ಈ ಬೆಳಗಿನಲ್ಲಿ ನಾ ನಿಜಮುಕ್ತಳಾದೆನಯ್ಯಾ ಚೆನ್ನಮಲ್ಲೇಶ್ವರ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ/73
ಬಂಡಿಯ ಮೇಗಣ ಹೆಳವನಂತೆ ಕಂಡ ಕಂಡ ಕಡೆಗೆ ಹಲುಬಿದಡೆ,
ನಿಮಗೆ ಬಂದುದೇನಿರೊ ?
ಆ ಮಹಾಘನವನರಿಯದನ್ನಕ್ಕ ಹಾಡಿದಡಿಲ್ಲ, ಹರಸಿದಡಿಲ್ಲದ
ಹೇಳಿದಡಿಲ್ಲ, ಕೇಳಿದಡಿಲ್ಲ.
ಇವೇನ ಮಾಡಿದಡೂ ವಾಯಕ್ಕೆ ವಾಯವೆಂದರು
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./74
ಬಚ್ಚಬರಿಯ ಬೆಳಗ ನೋಡಿಹೆನೆಂದು,
ಮನೆಯಾತನ ಮಂಕುಮಾಡಿದೆ ಭಾವನ ಬಯಲ ಮಾಡಿದೆ;
ಕಂದನ ಕಣ್ಮುಚ್ಚಿದೆ; ನಿಂದೆ ಕುಂದುಗಳ ಮರೆದೆ; ಜಗದ ಹಂಗ ಹರಿದೆ.
ಜಂಗಮದ ಪಾದೋದಕ ಪ್ರಸಾದವ ಕೊಂಡ ಕಾರಣದಿಂದ
ಮಂಗಳದ ಮಹಾಬೆಳಗಿನೊಳಗೋಲಾಡಿ ಸುಖಿಯಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./75
ಬಟ್ಟ ಬಯಲಲ್ಲಿ ಒಂದು ಶರದಿ ಹುಟ್ಟಿತ್ತು.
ಆ ಶರದಿಯ ನಡುವೆ ಒಂದು ಕಮಲ ಹುಟ್ಟಿತ್ತು.
ಆ ಕಮಲದ ನೆಲೆಯ ಕಾಣಲರಿಯದೆ ತೊಳಲಿ ಬಳಲಿ,
ಜಗದೊಳಗೆ ನಚ್ಚುಮಚ್ಚಿಗೊಳಗಾಗಿ, ಚುಚ್ಚಳ ಪೂಜೆಗೆ ಸಿಲ್ಕಿ,
ಕುಲಕೆ ಛಲಕೆ ಕೊಂದಾಡಿ, ಭವಕ್ಕೆ ಗುರಿಯಾಗುವ
ಮನುಜರ ಕಂಡು ನಾಚಿತ್ತೆನ್ನ ಮನವು.
ಆ ಮನದ ಬೆಂಬಳಿಗೊಂಡು ಹೋದವರೆಲ್ಲ ಮರುಳಾಗಿ ಹೋದರು.
ಇದ ನೋಡಿ ನಾನು ಬಟ್ಟಬಯಲಲ್ಲಿ ನಿಂದು ನೋಡಿದಡೆ,
ಶರದಿ ಬತ್ತಿತ್ತು ಕಮಲ ಕಾಣಬಂದಿತ್ತು.
ಆ ಕಮಲ ವಿಕಾಸವಾಯಿತ್ತು ಪರಿಮಳವೆಂಬ ವಾಸನೆ ತೀಡಿತ್ತು.
ಆ ವಾಸನೆವಿಡಿದು ಜಗದಾಸೆಯ ಹಿಂಗಿ ಮಾತು ಮ ಥನವ ಕೆಡಿಸಿ,
ಮಹಾಜ್ಯೋತಿಯ ಬೆಳಗಿನಲಿ ಓಲಾಡುವ ಶರಣರ
ಆಸೆ ರೋಷ ಪಾಶಕ್ಕೊಳಗಾದ ಈ ಜಗದ ಹೇಸಿಗಳೆತ್ತಬಲ್ಲರು,
ಈ ಮಹಾಶರಣರ ನೆಲೆಯ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?/76
ಬಟ್ಟಬಯಲಲ್ಲಿ ಒಂದು ಮೃಗ ಹುಟ್ಟಿತ್ತು.
ಅದ ಕಂಡಿಹೆನೆಂದಡೆ ಕಾಣಬಾರದು,
ಹೇಳಿಹೆನೆಂದಡೆ ಹೇಳಬಾರದು
ಅದು ಚಿದ್ರೂಪು, ಚಿನ್ಮಯವು.
ಅದು ಗೊತ್ತ ಮೆಟ್ಟಿ ಆಡುವುದನರಿಯದೆ,
ಕತ್ತಲೆಯಲ್ಲಿ ಮುಳುಗಿ ಕಾಮನ ಬಾಧೆಗೆ ಸಿಕ್ಕಿ,
ರಿತ್ತಲೆಂದರಿಯದೆ ಭವಬಂಧನದಲ್ಲಿ ಮುಳುಗಿ
ಕಾಲನ ಬಾಧೆಗೊಳಗಾಗಿ,
ಸತ್ತು ಮೆಟ್ಟಿ ಹೂಣಿಸಿಕೊಂಬ ಮನುಜರು
ಮತ್ತೆ ಶಿವಶರಣರ ಕೂಡೆ ತತ್ವವ ಬಲ್ಲೆವೆಂದು ತರ್ಕಕ್ಕೆ ಬಹರು.
ಇದು ಹುಸಿದ ನಮ್ಮ ಶರಣರು ಇದ ಮೆಚ್ಚರು.
ತತ್ವವೆಂಬುದನೆ ಮೆಟ್ಟಿನಿಂದು ಮಿಥ್ಯವ ನುಡಿವರ ತಮ್ಮ ಪುತ್ರರೆಂದು ಭಾವಿಸಿ,
ಸತ್ತು ಹುಟ್ಟುವರನೊತ್ತರಿಸಿ ನಿಶ್ಚಿಂತದಲ್ಲಿ ನಿಜವ ನೆಮ್ಮಿ,
ಬಟ್ಟಬಯಲೊಳಗಣ ಮೃಗದ ಗೊತ್ತ ಮೆಟ್ಟಿ,
ಬಚ್ಚಬರಿಯ ಬೆಳಗಿನೊಳಗೋಲಾಡುವ ಶರಣರ
ಈ ಸತ್ತು ಹುಟ್ಟಿ ಹೂಣಿಸಿಕೊಂಬ ಮಿದ್ಯಾವಾದಿಗಳೆತ್ತ ಬಲ್ಲರು,
ನಿಮ್ಮ ನೆಲೆಯ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?/77
ಬಟ್ಟಬಯಲಿನಲ್ಲಿ ಒಂದು ಮರ ಹುಟ್ಟಿತ್ತು.
ಅದಕ್ಕೆ ಸುತ್ತಲು ಬೇರು ಆವರಿಸಿತ್ತು.
ಅದಕ್ಕೆ ಶತಕೋಟಿ ಕೊನೆ ಬಿಟ್ಟಿತ್ತು.
ಅಡಗಿದ ಬೇರನೆ ಸವರಿ, ಶತಕೋಟಿ ಕೊನೆಯನೆ ಕಡಿಯೆ,
ಮರ ಒಣಗಿತ್ತು, ಉಲುಹು ನಿಂದಿತ್ತು, ಎಲೆ ಉದುರಿತ್ತು.
ತರಗೆಲೆಯಾದ ಶರಣರ ಚರಣವಿಡಿದು ನಿಜಮುಕ್ತಳಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./78
ಬಯಲ ದೇಹದಲ್ಲಿ ಒಂದು ತೊಲಗದ ಕಂಬವ ಕಂಡೆ.
ತೊಲಗದ ಕಂಬವ ಹಿಡಿದು ಹೋಗುವನ್ನಕ್ಕ
ಮುಂದೆ ಸರೋವರವ ಕಂಡೆ.
ಆ ಸರೋವರವ ಒಳಹೊಕ್ಕು ನೋಡಲು,
ಮುಂದೆ ಗಟ್ಟ ಬೆಟ್ಟಗಳು, ಹೊಗಬಾರದು.
ಆನೆಗಳು ಅಡ್ಡಲಾದವು, ಕೋಡಗ ಮುಂದುವರಿದವು,
ನಾಯಿಗಳಟ್ಟಿಕೊಂಡು ಬಂದವು, ಇರುಹೆ ಕಟ್ಟಿಕೊಂಡು ಬಿಡವು.
ಇದ ಕಂಡು ನಾ ಹೆದರಿಕೊಂಡು, ಮನವೆಂಬ ಅರಸನ ಹಿಡಿದು,
ಕಟ್ಟಿಗೆ ತಂದು, ಗೊತ್ತಿಗೆ ನಿಲಿಸಿ, ಆ ಅರಸನ ಶಕ್ತಿವಿಡಿದು,
ಆ ಸರೋವರದೊಳಗಣ ಗಟ್ಟ ಬೆಟ್ಟವನೆ ದಾಂಟಿ,
ಅಷ್ಟಮದವನೆ ಹಿಟ್ಟುಗುಟ್ಟಿ, ಕೋಡಗನ ಕೊರಳ ಮುರಿದು,
ನಾಯಿಗಳನೆ ಕೊಂದು, ಇರುಹೆಯ ಗೂಡಿಗೆ ಕಿಚ್ಚನಿಕ್ಕಿ,
ನಿರ್ಮಳವಾದ ದೇಹದಲ್ಲಿ ನಿಂದು ಮುಂದುವರಿದು ನೋಡಲು
ಇಟ್ಟೆಡೆಯ ಬಾಗಿಲ ಕಂಡೆ,
ಆ ಇಟ್ಟೆಡೆಯ ಬಾಗಿಲ ಹೊಕ್ಕು, ಹಿತ್ತಲ ಬಾಗಿಲಿನ ಕದವ ತೆಗೆದು ನೋಡಲು,
ಬಟ್ಟಬಯಲಾಯಿತ್ತು.
ಆ ಬಟ್ಟಬಯಲಲ್ಲಿ ನಿಂದು ನಾನೆತ್ತ ಹೋದೆನೆಂದರಿಯೆನಯ್ಯಾ
ನಿಮ್ಮ ಪಾದವಿಡಿದು ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./79
ಬಸವೇಶ್ವರ ಚೆನ್ನಬಸವೇಶ್ವರ ಮಡಿವಾಳಯ್ಯ ಅಲ್ಲಮಪ್ರಭು
ಚೆನ್ನಮಲ್ಲೇಶ್ವರ ಹಡಪದಪ್ಪಣ್ಣ
ತಮ್ಮೆಲ್ಲರ ತೊತ್ತಿನ ತೊತ್ತಿನ ಪಡಿದೊತ್ತಿನ ಮಗಳೆಂದು
ಹೊತ್ತು ಹೊತ್ತಿಗೆ ಎಚ್ಚರವ ಪಾಲಿಸಿ ರಕ್ಷಣೆಯ ಮಾಡಿದ ಕಾರಣದಿಂದ
ತಮ್ಮೆಲ್ಲರ ಶ್ರೀಪಾದದಲ್ಲಿಯೆ ನಿಜಮುಕ್ತಳಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./80
ಬೆಟ್ಟ ಬೆಂದಿತ್ತು, ಬಿದಿರುಗಣ್ಣ ಒಡೆಯಿತ್ತು
ಸುತ್ತ ನೋಡಿದಡೆ ನಿರಾಳವಾಯಿತ್ತು ಕತ್ತಲೆ ಹರಿಯಿತ್ತು
ಮನ ಬತ್ತಲೆಯಾಯಿತ್ತು ಚಿತ್ತ ಮನ ಬುದ್ಧಿ ಏಕವಾದವು.
ಎಚ್ಚತ್ತು ನೋಡಿದಡೆ, ಬಚ್ಚಬರಿಯ ಬೆಳಗಲ್ಲದೆ ಕತ್ತಲೆಯ ಕಾಣಬಾರದು ಕಾಣಾ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./81
ಬ್ರಹ್ಮಾಂಡದಲ್ಲಿ ಹುಟ್ಟಿದವರೆಲ್ಲ ಭವಬಂಧನಕ್ಕೊಳಗಾದರಯ್ಯಾ.
ನಿಮ್ಮ ನಂಬದ ಸದ್ಭಕ್ತ ಮಹೇಶ್ವರರು ಭವಬಂಧನವನೆ ಹಿಂಗಿ,
ಮರಣಭಯವ ಗೆದ್ದು, ಕರಣಂಗಳ ಸುಟ್ಟು, ಹರಿಮನವ ನಿಲಿಸಿ,
ಅನಲಪವನಗುಣವರತು, ಜನನಮರಣವಿರಹಿತವಾದ ಶರಣರ
ಭವಭಾರಿಗಳೆತ್ತ ಬಲ್ಲರು ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?/82
ಮಚ್ಚಬೇಡ, ಮರಳಿ ನರಕಕ್ಕೆರಗಿ ಕರ್ಮಕ್ಕೆ ಗುರಿಯಾಗಬೇಡ.
ನಿಶ್ಚಿಂತವಾಗಿ ನಿಜದಲ್ಲಿ ಚಿತ್ತವ ಸುಯಿದಾನವಮಾಡಿ,
ಲಿಂಗದಲ್ಲಿ ಮನವ ಅಚ್ಚೊತ್ತಿದಂತಿರಿಸಿ ಕತ್ತಲೆಯನೆ ಕಳೆದು,
ಬಚ್ಚಬರಿಯ ಬೆಳಗಿನೊಳಗೆ ಓಲಾಡಿ ಸುಖಿಯಾಗೆಂದರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./83
ಮದ ಮತ್ಸರ ಬಿಡದು, ಮನದ ಕನಲು ನಿಲ್ಲದು, ಒಡಲಗುಣ ಹಿಂಗದು.
ಇವ ಮೂರನು ಬಿಡದೆ ನಡಸುವನ್ನಕ್ಕ ಘನವ ಕಾಣಬಾರದು.
ಘನವ ಕಾಂಬುದಕ್ಕೆ ಮದಮತ್ಸರವನೆ ಬಿಟ್ಟು,
ಮನದ ಕನಲನೆ ನಿಲಿಸಿ, ಒಡಲಗುಣ ಹಿಂಗಿ,
ತಾ ಮೃಡರೂಪಾದಲ್ಲದೆ ಘನವ ಕಾಣಬಾರದೆಂದರು
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./84
ಮನ ಕತ್ತಲೆ, ತನು ಹಮ್ಮು, ನೆನಹು ಮರವೆ,
ಇವರೊಳಗೆ ಇದ್ದು ಘನವ ಕಂಡೆಹೆನೆಂಬ ಅಣ್ಣಗಳಿರಾ, ನೀವು ಕೇಳಿರೊ.
ಘನವ ಕಾಂಬುದಕ್ಕೆ ಮನವೆಂತಾಗಬೇಕೆಂದಡೆ,
ಅಕ್ಕಿಯ ಥಳಿಸಿದಂತೆ, ಹಲ್ಲ ಸುಲಿದಂತೆ, ಕನ್ನಡಿಯ ನೋಡಿದಂತೆ,
ಮನ ನಿರ್ಮಲವಾದಲ್ಲದೆ ಘನವ ಕಾಣಬಾರದು
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./85
ಮನ ಮಂಕಾಯಿತ್ತು; ತನು ಮರೆಯಿತ್ತು; ವಾಯು ಬರತಿತ್ತು.
ಉರಿ ಎದ್ದಿತ್ತು, ಹೊಗೆ ಹರಿಯಿತ್ತು, ಸರೋವರವೆಲ್ಲ ಉರಿದು ಹೋಯಿತ್ತು.
ಒಳಕ್ಕೆ ಹೊಕ್ಕು ಕದವ ತೆಗೆದು ಬಯಲು ನೋಡಿ ಬೆಳಗ ಕೂಡಿದಲ್ಲದೆ ನಿಜಮುಕ್ತಿ ಇಲ್ಲವೆಂದರು,
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./86
ಮನ ಮರವೆಗೆ ಮುಂದುಮಾಡಿತ್ತು.
ತನು ಕಳವಳಕ್ಕೆ ಮುಂದುಮಾಡಿತ್ತು.
ಆಸೆ ರೋಷವೆಂಬವು ಅಡ್ಡಗಟ್ಟಿದವು..
ಇವರೊಳಗೆ ಜಗದೀಶ್ವರನೆನಿಸಿಕೊಂಬವರ ನುಡಿಯು ಓಸರಿಸುವದು,
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./87
ಮನವ ಗೆದ್ದೆಹೆನೆಂದು, ತನುವ ಕರಗಿಸಿ ಕಾಯವ ಮರುಗಿಸಿ,
ನಿದ್ರೆಯ ಕೆಡಿಸಿ ವಿದ್ಯೆಯ ಕಲಿತೆಹೆನೆಂಬ ಬುದ್ಧಿಹೀನರಿರಾ ನೀವು ಕೇಳಿರೋ,
ನಮ್ಮ ಶರಣರು ಮನವನೆಂತು ಗೆದ್ದಹರೆಂದಡೆ
ಕಾಮ ಕ್ರೋಧವ ನೀಗಿ, ಲೋಭ ಮೋಹ ಮದ ಮತ್ಸರವ ಛೇದಿಸಿ,
ಆಸೆ ರೋಷವಳಿದು, ಜಗದ ಪಾಶವ ಬಿಟ್ಟು,
ಆ ಮರುಗಿಸುವ ಕಾಯವನೆ ಪ್ರಸಾದಕಾಯವ ಮಾಡಿ ಸಲಹಿದರು.
ಕೆಡಿಸುವ ನಿದ್ರೆಯನೆ ಯೋಗಸಮಾದಿಯ ಮಾಡಿ,
ಸುಖವನೇಡಿಸಿ ಜಗವನೆ ಗೆದ್ದ ಶರಣರ ಬುದ್ಧಿಹೀನರೆತ್ತಬಲ್ಲರೊ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?/88
ಮನವ ನಿರ್ಮಲವ ಮಾಡಿಹೆನೆಂದು
ತನುವ ಕರಗಿಸಿ ಮನವ ಬಳಲಿಸಿ ಕಳವಳಿಸಿ,
ಕಣ್ಣುಕಾಣದ ಅಂಧಕರಂತೆ ಮುಂದುಗಾಣದೆ,
ಸಂದೇಹದಲ್ಲಿ ಮುಳುಗಿರುವ ಮನುಜರಿರಾ,
ನೀವು ಕೇಳಿರೊ, ಹೇಳಿಹೆನು.
ಮನವ ನಿರ್ಮಲವ ಮಾಡಿ, ಆ ಘನವ ಕಾಂಬುದಕ್ಕೆ
ಆ ಮನವೆಂತಾಗಬೇಕೆಂದಡೆ
ಗಾಳಿಬೀಸದ ಜಲದಂತೆ, ಮೋಡವಿಲ್ಲದ ಸೂರ್ಯನಂತೆ,
ಬೆಳಗಿದ ದರ್ಪಣದಂತೆ ಮನ ನಿರ್ಮಲವಾದಲ್ಲದೆ
ಆ ಮಹಾಘನವ ಕಾಣಬಾರದೆಂದರು
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./89
ಮನವ ನಿಲಿಸಿಹೆನೆಂದು, ಆ ಮನದ ನೆಲೆಯ ಕಾಣದೆ,
ಅರುಹು ಮರವೆಗೊಳಗಾಗಿ, ಕಳವಳವ ಮುಂದುಮಾಡಿ,
ಚಿಂತೆ ಸಂತೋಷವನೊಡಲುಮಾಡಿ,
ಭ್ರಾಂತುಗೊಂಡು ತಿರುಗುವ ಮನುಜರಿರಾ, ನೀವು ಕೇಳಿರೊ.
ಮನವ ನಿಲಿಸುವುದಕ್ಕೆ ಶರಣರ ಸಂಗಬೇಕು, ಜನನಮರಣವ ಗೆಲಬೇಕು.
ಗುರುಲಿಂಗಜಂಗಮದಲ್ಲಿ ವಂಚನೆಯಿಲ್ಲದೆ, ಮನಸಂಚಲವ ಹರಿದು,
ನಿಶ್ಚಿಂತವಾಗಿ ನಿಜವ ನಂಬಿ ಚಿತ್ತ ಸುಯಿದಾನವಾದಲ್ಲದೆ,
ಮನದೊಳಗೆ ಲಿಂಗವು ಅಚ್ಚೊತ್ತಿದಂತಿರದೆಂದರು
ಬಸವಣ್ಣನ ಶರಣರು, ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./90
ಮನವೆಂದಡೆ ಮರವೆಗೆ ಒಳಗುಮಾಡಿತ್ತು.
ತನುವೆಂದಡೆ ತಾಮಸಕ್ಕೊಳಗುಮಾಡಿತ್ತು.
ಧನವೆಂದಡೆ ಆಶೆಯೆಂಬ ಪಾಶಕ್ಕೊಳಗುಮಾಡಿತ್ತು.
ಇವೀಸು ಮಾಯಾಪಾಶವೆಂದು ಬಿಟ್ಟು ಹುಟ್ಟನರಿದು,
ಬಟ್ಟಬಯಲಲ್ಲಿ ನಿಂದು, ಚಿತ್ತನಿರ್ಮಲನಾಗಿ ನೋಡಿ ಕಂಡ ಶರಣಂಗೆ
ತನುವೆ ಗುರುವಾಯಿತ್ತು.
ಮನವೆ ಘನವಾಯಿತ್ತು, ಧನವೆ ಜಂಗಮವಾಯಿತ್ತು.
ಈ ತ್ರಿವಿಧವನು ತ್ರಿವಿಧಕಿತ್ತು,
ತಾ ಬಯಲದೇಹಿಯಾದನಯ್ಯಾ ಆ ಮಹಾಶರಣನು.
ಇದರ ನೆಲೆಯನರಿಯದೆ, ಆ ಮನದ ಬೆಂಬಳಿಗೊಂಡಾಡಿದವರೆಲ್ಲ
ನರಗುರಿಗಳಾದರಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./91
ಮರನನೇರಿದೆ, ಬೇರ ಸವರಿದೆ,
ಕೊನೆಯ ತರಿದೆ, ಬುಡವ ಕೆಡಹಿದೆ,
ನಿರಾಲಂಬಿಯಾಗಿ, ನಿಮ್ಮ ಬೆಳಗನೆ ನೋಡಿ ಸುಖಿಯಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./92
ಮರ್ತ್ಯದ ಮನುಜರು ತಾವು ಸತ್ಯರು ಸತ್ಯರು ಎನುತಿಪ್ಪರು,
ಮತ್ತೆ ಮತ್ತೆ ಮರಳಿ, ಮಲಮೂತ್ರ ಕೀವಿನಕೊಣದ ಉಚ್ಚೆಯ ಬಚ್ಚಲ ಮೆಚ್ಚಿ,
ಹುಚ್ಚುಗೊಂಡು ತಿರುಗುವ ಕತ್ತೆ ಮನುಜರ ಮೆಚ್ಚರು ನಮ್ಮ ಶರಣರು,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./93
ಮರ್ತ್ಯದ ಮನುಜರು ಸತ್ತರೆಲ್ಲ ?
ಕತ್ತಲೆಯೊಳು ಮುಳುಗಿ, ಮಾತು ಕಲಿತುಕೊಂಡು,
ತೂತುಬಾಯೊಳಗೆ ನುಡಿದು, ಕಾತರಿಸಿ ಕಂಗೆಟ್ಟು,
ಹೇಸಿಕೆಯ ಮಲದ ಕೊಣದ ಉಚ್ಚೆಯ ಬಾವಿಗೆ ಮೆಚ್ಚಿ,
ಕಚ್ಚಿಯಾಡಿ ಹುಚ್ಚುಗೊಂಡು ತಿರುಗುವ ಕತ್ತೆಮನುಜರ
ಮೆಚ್ಚರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./94
ಮರ್ತ್ಯದಲ್ಲಿ ಹುಟ್ಟಿ ಎತ್ತಲೆಂದರಿಯದೆ, ಕತ್ತಲೆಯೊಳು ಮುಳುಗಿ,
ಕಾಮನ ಬಲೆಯೊಳಗೆ ಸಿಕ್ಕಿದ ಎಗ್ಗ ಮನುಜರಿರಾ, ನೀವು ಕೇಳಿರೋ.
ನಿಮ್ಮ ಇರವು ಎಂತೆಂದಡೆ
ಕಾಯವೆಂದಡೆ ಕಳವಳಕ್ಕೊಳಗಾಯಿತ್ತು
ಜೀವವೆಂದಡೆ ಅರುಹು ಮರವೆಗೊಳಗಾಯಿತ್ತುದ
ಮನವೆಂದಡೆ ಸಚರಾಚರವನೆಲ್ಲವ ಚರಿಸುವುದಕ್ಕೆ ಒಳಗಾಯಿತ್ತು
ಪ್ರಾಣವೆಂದಡೆ ಇವೆಲ್ಲವನು ಆಡಿಸಿ ನೋಡುವುದಕ್ಕೆ ಒಳಗಾಯಿತ್ತು.
ಇವರೊಳಗೆ ಬಿದ್ದು ಏಳಲಾರದ ಬುದ್ಧಿಹೀನರಿರಾ, ನೀವು ಕೇಳಿ, ಹೇಳಿಹೆನು.
ನಮ್ಮ ಶರಣರು ಜಗದೊಳಗೆ ಹುಟ್ಟಿ ಜಗವನೆ ಮರೆದು,
ರಿಚ್ಚತ್ತು ಚಿತ್ತವ ಸುಯಿದಾನವ ಮಾಡಿ,
ಕಳವಳಕ್ಕೊಳಗಾಗಿದ್ದ ಕಾಯವನೆ ಸರ್ವಾಂಗಲಿಂಗವ ಮಾಡಿದರು.
ಅರುಹು ಮರವೆಯೊಳಗಾಗಿದ್ದ ಜೀವನ ಬುದ್ಧಿಯನೆ
ಪರಮನ ಬುದ್ಧಿಯ ಮಾಡಿದರು.
ಸಚರಾಚರವ ಚರಿಸುವುದಕ್ಕೊಳಗಾಗಿದ್ದ ಮನವನೆ ಅರುಹು ಮಾಡಿದರು.
ಆಡಿಸಿ ನೋಡುವುದಕ್ಕೆ ಒಳಗಾಗಿದ್ದ ಪ್ರಾಣವನೆ ಲಿಂಗವಮಾಡಿದರು.
ಈ ಸರ್ವಾಂಗವನು ಲಿಂಗವ ಮಾಡಿ
ಆ ಲಿಂಗವನು ಕಂಗಳಲ್ಲಿ ಹೆರೆಹಿಂಗದೆ ನೋಡಿ,
ಆ ಮಂಗಳದ ಮಹಾಬೆಳಗಿನಲ್ಲಿ ಬಯಲಾದರಯ್ಯಾ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./95
ಮಹಾಬೆಳಗ ನೋಡಿ ಮನವ ನಿಮ್ಮ ವಶವ ಮಾಡಿ,
ತನುವ ಮರೆದು ಧನವ ಜಂಗಮಕಿತ್ತು,
ತಾನು ಬಯಲದೇಹಿಯಾದಲ್ಲದೆ ನಿಜಮುಕ್ತಿ ಇಲ್ಲವೆಂದರು
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./96
ಮಾಣಿಕವ ಕಂಡವರು ತೋರುವರೆ ಅಯ್ಯಾ,
ಮುತ್ತ ಕಂಡವರು ಅಪ್ಪಿಕೊಂಬರಲ್ಲದೆ ?
ಬಿಚ್ಚಿ ಬಿಚ್ಚಿ ತೋರುವರೆ ಅಯ್ಯಾ,
ಆ ಮುತ್ತಿನ ನೆಲೆಯನು, ಮಾಣಿಕದ ಬೆಲೆಯನು ?
ಬಿಚ್ಚಿ ಬೇರಾಗಿ ತೋರಿ ರಕ್ಷಣೆಯ ಮಾಡಿದ ಕಾರಣದಿಂದ
ಬಚ್ಚಬರಿಯ ಬೆಳಗಿನೊಳಗೋಲಾಡಿ
ನಿಮ್ಮ ಪಾದದೊಳಗೆ ನಿಜಮುಕ್ತಳಾದೆನಯ್ಯಾ,
ಚೆನ್ನಮಲ್ಲೇಶ್ವರ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./97
ಮಾಯದ ಬೊಂಬೆಯ ಮಾಡಿ, ಕಂಗಳಿಗೆ ಕಾಮನ ಬಾಣವ ಹೂಡಿ,
ನಡೆನುಡಿಯೊಳಗೆ ರಂಜಕದ ತೊಡಿಗೆಯನೆ ತೊಡಿಸಿ,
ಮುಂದುಗಾಣಿಸದೆ, ಹಿಂದನರಸದೆ, ಲಿಂಗವ ಮರಹಿಸಿ,
ಜಂಗಮವ ತೊರೆಯಿಸಿ, ಸಂದೇಹದಲ್ಲಿ ಸತ್ತು ಹುಟ್ಟುವ
ಈ ಭವಬಂಧನಿಗಳೆತ್ತ ಬಲ್ಲರೋ ಈ ಶರಣರ ನೆಲೆಯ ?
ಅವರ ನೆಲೆ ತಾನೆಂತೆಂದಡೆ
ಹಿಂದನರಿದು, ಮುಂದೆ ಲಿಂಗದಲ್ಲಿ ಬೆರೆವ ಭೇದವ ಕಂಡು,
ಜಗದ ಜಂಗುಳಿಗಳ ಹಿಂಗಿ, ಕಂಗಳ ಕರುಳನೆ ಕೊಯ್ದು,
ಮನದ ತಿರುಳನೆ ಹರಿದು, ಅಂಗಲಿಂಗವೆಂಬುಭಯವಳಿದು,
ಸರ್ವಾಂಗಲಿಂಗವಾಗಿ, ಮಂಗಳದ ಮಹಾಬೆಳಗಿನಲ್ಲಿ ಓಲಾಡುವ
ಶರಣರ ನೆಲೆಯ ಜಗದ ಜಂಗುಳಿಗಳೆತ್ತ ಬಲ್ಲರು ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?/98
ಮುಕ್ತಿಯ ಪಥವನರಿವುದಕ್ಕೆ ತತ್ವದ ಬಿತ್ತಿಯ ಕಾಣಬೇಕು
ಚಿತ್ತ ಲಿಂಗದಲ್ಲಿ ಅಚ್ಚೊತ್ತಿದಂತಿರಬೇಕು
ಮರ್ತ್ಯದ ಮಾನವರ ಸಂಗ ಹಿಂಗಬೇಕು
ತಾನು ತಾನಾದ ಲಿಂಗೈಕ್ಯವನರಿವಡೆ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ. /99
ಮೂಲಪ್ರಣವವನರಿದು ಮೂಲಮಂತ್ರದೊಳಗಾಡುತ್ತ,
ಮುಂದನರಿದು, ಹಿಂದ ಹರಿದು, ಸಂದು ಸಂಶಯವಿಲ್ಲದೆ,
ಸ್ವಯವ ನೋಡುತ್ತ, ಪರವ ಕೂಡುತ್ತ, ಶಬ್ದವ ಕೇಳುತ್ತ,
ನಿರ್ಧರವಾಗಿ ನಿರ್ಬುದ್ಧಿಯಲ್ಲಿ ನಿರಾಳವನೊಡಗೂಡಿ,
ನಿಜದಲ್ಲಿ ಆನಂದಾಮೃತವ ಆರೋಗಣೆಯ ಮಾಡುವ ಪರಿಯೆಂತೆಂದಡೆ
ಬೇಯದ ಬೆಂಕಿಯಲಿ ಬೆಂದು, ಕಾಯದ ಅಗ್ಗವಣಿಯಲಿ ಅಡಿಗೆಯ ಮಾಡಿ,
ಕಂದಲೊಡೆದು ಒಂದಾಗಿ ಉಂಡು, ಮಂಡೆಯಲ್ಲಿ ನಿಂದು,
ಮಡದಿಯ ಸಂಗವ ಮಾಡಿ, ಮಾರುತನ ನಿಲಿಸಿ,
ಮದನನ ಮರ್ದಿಸಿ, ನಿರ್ಧರವಾಗಿ ನಿಂದ ಶರಣ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ./100
ರಸವಡೆದಂತೆ ದೆಸೆದೆಸೆಯನಾಲಿಸುವ ಮನವ
ತನ್ನ ವಶವ ಮಾಡಿ ನಿಲಿಸಿ, ಹುಸಿಯ ಬಿಟ್ಟು,
ಮಾಯೆಯ ಬಲೆಯ ನುಸುಳಿ, ತಾ ನಿಶ್ಚಿಂತನಾಗಿ,
ಧೀರವೀರನಾದಲ್ಲದೆ ಆ ಮಹಾಘನವ ಕಾಣಬಾರದು ಎಂದರು,
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./101
ವ್ಯಾಪಾರವನೆ ಬಿಟ್ಟು ತಾಪತ್ರಯವನೆ ಹಿಂಗಿ,
ಲೋಕದ ಹಂಗನೆ ಹರಿದು ಬೇಕು ಬೇಡೆಂಬುವನೆ ನೂಕಿ,
ತಾನು ವಿವೇಕಿಯಾದಲ್ಲದೆ, ಜ್ಯೋತಿಯ ಬೆಳಗ ಕಾಣಬಾರದೆಂದರು,
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು./102
ಶರಣರೈಕ್ಯರೆಂದು ನುಡಿದಾಡುವರು,
ಶರಣಸ್ಥಲವೆಂತಿರ್ಪುದೆಂದರಿಯರು.
ಅನ್ನವನಿಕ್ಕಿದವರೆಲ್ಲ ಶರಣರೆ ?
ಹೊನ್ನು ಕೊಟ್ಟವರೆಲ್ಲ ಶರಣರೆ ?
ಹೆಣ್ಣುಕೊಟ್ಟವರೆಲ್ಲ ಶರಣರೆ ?
ಮಣ್ಣುಕೊಟ್ಟವರೆಲ್ಲ ಶರಣರೆ ?
ಅಲ್ಲಲ್ಲ ಅದಕ್ಕೆ ಪುಣ್ಯದಾ ಫಲವುಂಟು.
ಅದಂತಿರಲಿ
ಶರಣನಾದರೆ ತನ್ನ ಮರಣ ಬಾಧೆ ಗೆಲಿಯದಿಬೇಕು.
ಮರಣ ಬಾಧೆಯ ಗೆದ್ದ ಶರಣರು ಕಂಡನುವೆ
ಅಂಗ ಮನ ಸುಸಂಗ.
ಅವರು ಹಿಡಿದ ಧನವೆ ಪದಾರ್ಥ.
ಇದೀಗ ನಮ್ಮ ಮುನ್ನಿನ ಶರಣರ ನಡೆನುಡಿ.
ಇದನರಿಯದೆ
ಈಗ ಮನೆ ಮನೆಗೆ ಶರಣರು,
ತನತನಗೆ ಶರಣರ್ಬು
ಎಂದು ನುಡಿದಾಡುವರು.
ಈ ಬಿನುಗರ ನುಡಿಯ ಮೆಚ್ಚುವನೆ
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ?/103
ಸಹಸ್ರದಳ ಕಮಲವ ಸೂಸದೆ ಮೇಲುಕಟ್ಟು ಕಟ್ಟಿ,
ಭಾಸುರವೆಂಬ ಹೃದಯದ ಸಿಂಹಾಸನವಿಕ್ಕಿ,
ಲೇಸಾಗಿ ಗುರುಸ್ವಾಮಿಯ ಮೂರ್ತಮಾಡಿಸಿ,
ನಾಲ್ಕೆಸಳ ಪದ್ಮವ ಸಮ್ಮಾರ್ಜನೆಯ ಮಾಡಿ,
ಆರೆಸಳ ಪದ್ಮವ ರಂಗವಾಲೆಯ ತುಂಬಿ,
ಹತ್ತೆಸಳ ಪದ್ಮವ ಕರಕಮಲವಂ ಮಾಡಿ,
ನಿರ್ಭಾವವೆಂಬ ಅಗ್ಗವಣಿಯಲ್ಲಿ ಮಜ್ಜನಕ್ಕೆರೆದು,
ಚಿದ್ಬೆಳಗೆಂಬ ಚಿದ್ವಿಭೂತಿಯ ಧರಿಸಿ, ಶಾಂತಿಯೆಂಬ ಗಂಧವ ಧರಿಸಿ,
ಚಿತ್ತನಿರ್ಮಲವೆಂಬ ಅಕ್ಷತೆಯನರ್ಪಿಸಿ,
ಹೃತ್ಕಮಲವೆಂಬ ಅರಳಿದ ಪುಷ್ಪವ ಧರಿಸಿ,
ಸುಗಂಧವೆಂಬ ಧೂಪವ ಬೀಸಿ,
ಕಂಗಳೆ ದೀಪ, ಕರ್ಣವೆ ಗಂಟೆ, ನಾಸಿಕವೆ ಆಲವಟ್ಟಲು,
ಜಿಹ್ವೆಯ ತಾಳ, ಪಾದವೆ ಪಾತ್ರದವರು, ಹಸ್ತವೆ ಸೇವಕರು,
ನಿಶ್ಚಿಂತವೆಂಬ ಅಕ್ಕಿಯ ತಂದು, ಪಶ್ಚಿಮವೆಂಬೊರಳಿಗೆ ನೀಡಿ,
ಏಕೋಭಾವವೆಂಬೊನಕೆಯ ಪಿಡಿದು ತಳಿಸಿ,
ಸುಬುದ್ಭಿಯೆಂಬ ಮೊರದಲ್ಲಿ ಕೇರಿ, ತ್ರಿಕೂಟವೆಂಬ ಒಲೆಯ ಹೂಡಿ,
ಕರಣಂಗಳೆಂಬ ಸೌದೆಯನಿಟ್ಟು, ಜ್ಞಾನಾಗ್ನಿಯನುರುಹಲು,
ಒಮ್ಮನವೆಂಬ ಕಂದಲಿಗೆ ಆನಂದ ಜಲವೆಂಬಗ್ಗಣಿಯನೆತ್ತಿ,
ನಿಶ್ಚಿಂತವೆಂಬಕ್ಕಿಯ ನೀಡಿ, ಸುಮ್ಮಾನವೆಂಬ ಹುಟ್ಟಿನಲ್ಲಿ ಉಕ್ಕಿರಿದು,
ಮನ ಬುದ್ಧಿಯೆಂಬ ಚಿಬ್ಬಲುಮರದಟ್ಟೆಯನಿಕ್ಕಿ,
ಅಹಂಕಾರವೆಂಬ ಭಾಜನದಲ್ಲಿ ಬಾಗಿ,
ಜ್ಞಾತೃ ಜ್ಞಾನ ಜ್ಞೇಯವೆಂಬ ಅಡ್ಡಣಿಗೆಯನಿರಿಸಿ,
ಮನವೆಂಬ ಹರಿವಾಣದಲ್ಲಿ ಗಡಣಿಸಿ,
ಆನಂದವೆಂಬಮೃತವನಾರೋಗಣೆಯ ಮಾಡಿ,
ನಿತ್ಯವೆಂಬಗ್ಗವಣಿಯಲ್ಲಿ ಹಸ್ತಪ್ರಕ್ಷಾಲನವ ಮಾಡಿಸಿ,
ಸತ್ವರಜತಮವೆಂಬ ವೀಳೆಯವ ಕೊಟ್ಟು,
ಅಂತಃಕರಣಚತುಷ್ಟಯವೆಂಬ ನಾಲ್ಕು ಕಾಲು ಮಾಡಿ,
ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಮಂಚವ ಹಾಸಿ,
ನಾಸಿಕ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ರಿಂಬ ಸುಪ್ಪತ್ತಿಗೆಯನು ಹಚ್ಚಡಿಸಿ,
ಪ್ರಾಣ ಅಪಾನ ವ್ಯಾನ ಉದಾನ ಸಮಾನವೆಂಬ ಒರಗು ಇಕ್ಕಿ,
ತತ್ವ ಪರತತ್ವವೆಂಬ ಹಸ್ತಕ್ಕೆ ಮೆತ್ತೆಯನಿಕ್ಕಿ,
ಸುತ್ತಣ ಪರಿಚಾರಕರು, ಆನೆ ಕುದುರೆ ಅರಸು ಮನ್ನೆಯ ಪ್ರಧಾನಿಗಳು
ಎತ್ತ ಹೋದರೆಂದು ಅತ್ತಿತ್ತ ನೋಡುತ್ತಿರಲು,
ಊರು ಬಯಲಾಯಿತ್ತು, ಒಕ್ಕಲು ಓಡಿತ್ತು,
ಮಕ್ಕಳ ಗಲಭೆ ನಿಂದಿತ್ತು, ಮಾತಿನ ಮ ಥನವಡಗಿತ್ತು.
ಉತ್ತರದಲ್ಲಿ ವಸ್ತುವ ಕಂಡು ಓಲಗಂಗೊಟ್ಟಿರಲು,
ಓಲಗದಲ್ಲಿ ಲೋಲುಪ್ತವನೆಯ್ದಿ ಆವಲ್ಲಿ ಹೋದನೆಂದರಿಯೆನಯ್ಯಾ.
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ./104
ಸಾಕಯ್ಯಾ, ಲೋಕದ ಹಂಗು ಹರಿಯಿತ್ತು
ತನುವಿನಾಸೆ ಬಿಟ್ಟಿತ್ತು ಮನದ ಸಂಚಲ ನಿಂದಿತ್ತು.
ನುಡಿಗಡಣ ಹಿಂಗಿತ್ತು ಘನವಬೆರೆಯಿತ್ತು, ಬೆಳಗಕೂಡಿತ್ತು.
ಬಯಲಿನೊಳಗೋಲಾಡಿ ಸುಖಿಯಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./105
ಸಾಯದ ಮುಂಚೆ ಸತ್ತಹಾಗೆ ಇರುವರು.
ಆರಿಗೂ ವಶವಲ್ಲ, ನಮ್ಮ ಶರಣರಿಗಲ್ಲದೆ.
ಅದು ಹೇಗೆಂದಡೆತ ಹಗಲಿರುಳೆಂಬ ಹಂಬಲ ಹರಿದರುದ
ಜಗದಾಟವ ಮರೆದರುದ ಆಡದ ಲೀಲೆಯನೆ ಆಡಿದರು.
ಆರು ಕಾಣದ ಘನವನೆ ಕಂಡರು.
ಮಹಾಬೆಳಗಿನೊಳಗೋಲಾಡಿ ಸುಖಿಯಾದರಯ್ಯಾ,
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು./106
ಸಾಸಿರದಳಕಮಲವೆಂದಡೆ ಸೂಸಿಕೊಂಡಿರುವ ಮನ.
ಪವನವೆಂದಡೆ ಎಲ್ಲೆಡೆಯಲ್ಲಿ ಸೂಸಿ ಆಡುವಂತಹದು.
ಬಿಂದುವೆಂದಡೆ ಆಗುಮಾಡುವಂತಹದು.
ಈ ಮನ ಪವನ ಬಿಂದು ಮೂರನು ಒಡಗೂಡಿ ನೋಡಲು,
ಪರಂಜ್ಯೋತಿಪ್ರಕಾಶದಂತಹ ಬೆಳಗೆ ಎನ್ನ ಕಂಗಳ ಮುಂದೆ ನಿಂದಿತ್ತು.
ಆ ಮಹಾಬೆಳಗನೆ ಕಂಗಳಲ್ಲಿ ಹೆರೆಹಿಂಗದೆ ನೋಡಿದಡೆ,
ಎನ್ನಂಗದ ಒಳಹೊರಗೆ ಪರಿಪೂರ್ಣವಾಗಿದ್ದಿತ್ತು ಕಾಣಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ, ನಿಮ್ಮ ಪಾದಕರುಣದಿಂದ./107
ಹುಟ್ಟಿದ ಮನುಜರೆಲ್ಲಾ ಬಂದ ಬಟ್ಟೆಯ ನೋಡಿ
ಭ್ರಮೆಗೊಂಡು ಬಳಲುತ್ತೈದಾರೆ.
ಇದನರಿದು ಬಂದ ಬಟ್ಟೆಯ ಮೆಚ್ಚಿ, ಕಾಣದ ಹಾದಿಯ ಕಂಡು,
ಹೋಗದ ಹಾದಿಯ ಹೋಗುತ್ತಿರಲು,
ಕಾಲ ಕಾಮಾದಿಗಳು ಬಂದು ಮುಂದೆ ನಿಂದರು.
ಅಷ್ಟಮದಂಗಳು ಬಂದು ಅಡ್ಡಗಟ್ಟಿದವು.
ದಶವಾಯು ಬಂದು ಮುಸುಕುತಿವೆ.
ಸಪ್ತವ್ಯಸನ ಬಂದು ಒತ್ತರಿಸುತಿವೆ.
ಷಡುವರ್ಗ ಬಂದು ಸಮರಸವ ಮಾಡುತಿವೆ.
ಕರಣಂಗಳು ಬೆಂದು ಉರಿವುತಿವೆ.
ಮರವೆ ರಿಂಬ ಮಾಯೆ ಬಂದು ಕಾಡುತಿವಳೆ.
ತೋರುವ ತೋರಿಕೆಯೆಲ್ಲವೂ ಸುತ್ತಮೊತ್ತವಾಗಿವೆ.
ಇವ ಕಂಡು ಅಂಜಿ ಅಳುಕಿ ಅಂಜನದಿಂದ ನೋಡುತ್ತಿರಲು
ತನ್ನಿಂದ ತಾನಾದೆನೆಂಬ ಬಿನ್ನಾಣವ ತಿಳಿದು,
ಮುನ್ನೇತರಿಂದಲಾಯಿತು, ಆಗದಂತೆ ಆಯಿತೆಂಬ ಆದಿಯನರಿದು,
ಹಾದಿಯ ಹತ್ತಿ ಹೋಗಿ ಕಾಲ ಕಾಮಾದಿಗಳ ಕಡಿದು ಖಂಡಿಸಿ,
ಅಷ್ಟಮದಂಗಳ ಹಿಟ್ಟುಗುಟ್ಟಿ, ದಶವಾಯುಗಳ ಹೆಸರುಗೆಡಿಸಿ,
ಸಪ್ತವ್ಯಸನವ ತೊತ್ತಳದುಳಿದು, ಷಡ್ವರ್ಗವ ಸಂಹರಿಸಿ,
ಕರಣಂಗಳ ಸುಟ್ಟುರುಹಿ, ಮರವೆಯೆಂಬ ಮಾಯೆಯ ಮರ್ದಿಸಿ,
ನಿರ್ಧರವಾಗಿ ನಿಂದು ಸುತ್ತ ಮೊತ್ತವಾಗಿರುವವನೆಲ್ಲ ಕಿತ್ತು ಕೆದರಿ,
ಮನ ಬತ್ತಲೆಯಾಗಿ, ಭಾವವಳಿದು ನಿರ್ಭಾವದಲ್ಲಿ ಆಡುವ ಶರಣ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ./108
ಹೊತ್ತು ಹೊತ್ತಿಗೆ ಕಿಚ್ಚನೆಬ್ಬಿಸಿದಡೆ ಕಲೆ ಉರಿದುದೆಂದು,
ಹೊತ್ತು ಹೊತ್ತಿಗೆ ಪ್ರಾಣಕ್ಕೆ ಪ್ರಸಾದವ ಸ್ಥಾಪ್ಯವ ಮಾಡಿ,
ತನುವ ಖಂಡಿಸದೆ, ಕಾಯವ ಮರುಗಿಸದೆ,
ಭಾವವನೆ ಬಯಲು ಮಾಡಿ, ಬಯಕೆ ಸವೆದು,
ಕಾಣದ ಪ ಥವನೆ ಕಂಡು, ಮಹಾಬೆಳಗಿನಲ್ಲಿ ಬಯಲಾದರು ಕಾಣಾ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು./109
ಹೊತ್ತು ಹೊತ್ತಿಗೆ ಮೆತ್ತಹಾಕಿ ತಿಪ್ಪೆಯಲ್ಲಿ ಕರ್ಪೂರವನರಸುವನಂತೆ,
ತಿಪ್ಪೆಯಂತಹ ಒಡಲೊಳಗೆ ಕರ್ತುವನರಸಿಹೆನೆಂಬ ಅಣ್ಣಗಳಿರಾ,
ನೀವು ಕೇಳಿರೊ, ಹೇಳಿಹೆನು.
ಆ ಕರ್ತುವನರಸುವುದಕ್ಕೆ ಚಿತ್ತ ಹೇಗಾಗಬೇಕೆಂದಡೆ
ಜಲದೊಳಗಣ ಸೂರ್ಯನ ಪ್ರತಿಬಿಂಬದಂತಿರಬೇಕು.
ಮೋಡವಿಲ್ಲದ ಚಂದ್ರಮನಂತಿರಬೇಕು.
ಬೆಳಗಿನ ದರ್ಪಣದಂತಿರಬೇಕು.
ಇಂತು ಚಿತ್ತಶುದ್ಧವಾದಲ್ಲದೆ, ಆ ಕರ್ತೃವಿನ ನೆಲೆಯ ಕಾಣಬಾರದೆಂದರು,
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು./110
ಹೊಸ್ತಿಲೊಳಗಿರಿಸಿದ ಜ್ಯೋತಿಯಂತೆ
ಒಳಗೆ ನೋಡುವನು ತಾನೆ, ಹೊರಗೆ ನೋಡುವನು ತಾನೆ.
ಅರಿದೆನೆಂಬುವನು ತಾನೆ, ಮರೆದೆನೆಂಬುವನು ತಾನೆ.
ಕಂಡೆನೆಂಬವನು ತಾನೆ, ಕಾಣೆನೆಂಬವನು ತಾನೆ.
ದೃಷ್ಟ ದೃಕ್ಕು ದೃಶ್ಯವೆಂಬ ತ್ರಿಪುಟಿ ಭೇದವ ಮೀರಿ.
ತ್ರಿಕೂಟವನೇರಿ, ಅತ್ತಲೆ ನೋಡುತ್ತಿರಲು,
ಹಿತ್ತಲ ಕದವ ತೆರೆದು ಮತ್ತವಾಗಿ ರಿತ್ತಲೆಂದರಿಯದೆ,
ಸತ್ತುಚಿತ್ತಾನಂದದಲ್ಲಿ ಆಡುವ ಶರಣನ ಇರವೆಂತೆಂದಡೆ
ಬಿತ್ತಲಿಲ್ಲ ಬೆಳೆಯಲಿಲ್ಲದ ಒಕ್ಕಲಿಲ್ಲ ತೂರಲಿಲ್ಲ.
ಇವನೆಲ್ಲಾ ಇಕ್ಕಲಿಸಿ ನಿಂದು ಮಿಕ್ಕು ಮೀರಿ
ಕುಕ್ಕುಂಭೆ ಮೇಲೆ ಕುಳಿತುಕೊಂಡು ನೋಡುತ್ತಿರಲು,
ಹಡಗೊಡೆಯಿತ್ತು ಒಡವೆ ವಸ್ತು, ಮಡದಿ ಮಕ್ಕಳು
ನೀರೊಳಗೆ ನೆರೆದು ಹೋಯಿತ್ತು.
ಒಡನೆ ತಂಗಾಳಿ ಬಂದು ಬೀಸಲು, ತಂಪಿನೊಳಗೆ ನಿಂದು,
ಗುಂಪು ಬಯಲಾಗಿ ಗೂಢವಾಗಿ ಆಡುವ ಶರಣ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ./111
ಹೋಗುತ್ತ ಹೋಗುತ್ತ ಹೊಗೆಯ ಕಂಡೆ,
ಹೊಗೆಯೊಳಗೊಂದು ನಗೆಯಕಂಡೆ,
ನಗೆ ನಡೆಗೆಡಿಸಿ, ನಾನೆಂಬುದನರಿದು,
ತಾನು ತಾನೆಯಾಗಿ ತಲ್ಲಣವಿಲ್ಲದೆ,
ಎಲ್ಲವೂ ತಾನೆಂದರಿದು ತನ್ಮಯವಾಗಿ
ತರಹದಲ್ಲಿ ನಿಂದು ನೋಡುತ್ತಿರಲು
ಉರಿಯ ಕಂಡೆದ ಉರಿಯೊಳಗೊಂದು ಹೊಳೆವ ಜ್ಯೋತಿಯ ಕಂಡೆ;
ಆ ಜ್ಯೋತಿಯೊಳಗೊಂದು ಚಿಜ್ಜ್ಯೋತಿಯ ಕಂಡೆ
ಆ ಚಿಜ್ಜ್ಯೋತಿಯೊಳಗೊಂದು ಚಿತ್ಪ್ರಕಾಶವ ಕಂಡೆ.
ಆ ಚಿತ್ಪ್ರಕಾಶವೆ ತಾನೆಯಾಗಿ ಆಡುವ ಶರಣನ ಇರವೆಂತೆಂದಡೆ
ಇದ್ದೂ ಇಲ್ಲದಂತೆ, ಹೊದ್ದಿಯೂ ಹೊದ್ದದಂತೆ,
ಆಡಿಯೂ ಆಡದಂತೆ, ನೋಡಿಯೂ ನೋಡದಂತೆ,
ಕೂಡಿಯೂ ಕೂಡದಂತೆ, ಕುಂಭಕದೊಳು ನಿಂದು,
ತುಂಬಿದಮೃತವನುಂಡು, ಆ ಬೆಂಬಳಿಯಲ್ಲಾಡುವ ಶರಣ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ ?/112
ಹೋಗುತ್ತ ಹೋಗುತ್ತ ಹೊಟ್ಟೆಯಡಿಯಾಯಿತ್ತು;
ಬಟ್ಟಬಯಲಾಯಿತ್ತು.
ತುಟ್ಟತುದಿಯನೇರಿ ತೂರ್ಯಾತೀತನಾಗಿ,
ಇಷ್ಟ ಪ್ರಾಣ ಭಾವ ಬಯಲಾಯಿತ್ತು.
ಬಯಲಲ್ಲಿ ನಿಂದುಕೊಂಡು ನೋಡುತ್ತಿರಲು,
ಬ್ರಹ್ಮವೆಯಾಯಿತ್ತು, ಕರ್ಮ ಕಡೆಗೋಡಿತ್ತು.
ಅರಿವರತು ಮರಹು ನಷ್ಟವಾಯಿತ್ತು.
ತೆರನಳಿದು ನಿರಿಗೆ ನಿಃಪತಿಯಾಗಿ
ಮಿರುಗುವ ದೃಷ್ಟಿಯಲ್ಲಿ ನೋಡುತ್ತಿರಲು,
ನೋಟ ತ್ರಾಟಕವ ದಾಂಟಿ ಕೂಟದಲ್ಲಿ ಕೂಡಿ,
ಬೆರಸಿ ಬೇರಾಗದಿಪ್ಪ ಶರಣ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ./113
ಹೋಗುತ್ತ ಹೋಗುತ್ತ ಹೊಲಬುದಪ್ಪಿತ್ತು,
ತನ್ನ ನೆಲೆಯ ತಿಳಿದಿತ್ತು.
ಕತ್ತಲೆಯೊಳಗೆ ನಿಂದು ನೋಡುತ್ತಿರಲು,
ನೋಟ ಹಿಂದಾಯಿತ್ತುದ ಆಟವಡಗಿತ್ತು
ಮಾಟ ನಿಂದಿತ್ತುದ ಬೇಟ ಬೆರಗಾಯಿತ್ತು.
ಊಟವನುಂಡು ಕೂಟವ ಕೂಡಿ
ಉನ್ಮನಿಯ ಬೆಳಗಿನೊಳಗೆ ಒಂದೆಂದರಿದು,
ತನ್ನಂದವ ತಿಳಿದು, ಲಿಂಗದಲ್ಲಿ ಸಂದು, ಜಂಗಮದೊಳು ಬೆರೆದು,
ಮಂಗಳದ ಮಹಾಬೆಳಗಿನೊಳಗೆ ಆಡುವ ಶರಣ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ./114