Categories
ವಚನಗಳು / Vachanagalu

ಹೊಡೆಹುಲ್ಲ ಬಂಕಣ್ಣನ ವಚನಗಳು

1205
ಕಾಯ ಪ್ರಸಾದವಾದಲ್ಲಿ ಗುರುಪ್ರಸಾದವನೊಲ್ಲ.
ಭಾವ ಪ್ರಸಾದವಾದಲ್ಲಿ ಲಿಂಗಪ್ರಸಾದವನೊಲ್ಲ.
ಜ್ಞಾನ ಪ್ರಸಾದವಾದಲ್ಲಿ ಜಂಗಮಪ್ರಸಾದವನೊಲ್ಲ.
ಇಂತೀ ತ್ರಿವಿಧ ಪ್ರಸಾದವ ಬಲ್ಲವ, ಮಹಾಪ್ರಸಾದವ ಕೊಂಬ.
ಗುರುವಿಂಗೆ ತನುವಳಿದು, ಲಿಂಗಕ್ಕೆ ಮನವಳಿದು,
ಜಂಗನಕ್ಕೆ ತ್ರಿವಿಧಮಲವಳಿದು, ಅರಿವಿಂಗೆ ಕುರುಹಳಿದು,
ಸ್ವಯವೆ ತಾನಾದ, ಇಂದಿರೆಡೆಗೆ[ಟ್ಟ] ಐಕ್ಯಪ್ರಸಾದಿಗೆ
ಕುಂಭೇಶ್ವರಲಿಂಗದಲ್ಲಿ ಜಗನ್ನಾಥ ಸಾಕ್ಷಿಯಾಗಿ
ನಮೋ ನಮೋ ಎನುತಿದ್ದೆನು.
1206
ಕಾಷ್ಟವಗ್ನಿಯೊಳಗಿಡಲಿಕ್ಕಾಗಿ,
ಆ ಕಾಷ್ಟದೊಳಗಿದ್ದಗ್ನಿ ನಾನಿದ್ದೇನೆ, ನೀ ಬೇಡಾ ಎಂದಿತ್ತೆ ?
ತಾನಡಗಿ ಇದಿರಿಟ್ಟ ಅಗ್ನಿಗೆ ಒಡಲಾಯಿತ್ತು.
ಇಂತು ಇದ್ದ ಇದಿರಿಂಗೆ ಒಡಲೆಡೆಗೊಡದ ಅಗಮ್ಯಂಗೆ ಪಡಿಪುಚ್ಚವಿಲ್ಲ,
ಕುಂಭೇಶ್ವರಲಿಂಗದಲ್ಲಿದ್ದ ಜಗನ್ನಾಥನನರಿದವಂಗೆ.
1207
ಕೂಲಿ ಕೃಷಿ ಕಾಯಕಂಗಳಿಂದ ಮಾಡುವ
ಗುರುಲಿಂಗಜಂಗಮದ ಸೇವೆ, ಅದಾವ ತೆರನೆಂದರಿದು,
ಭಾವ ಶುದ್ಧವಾಗಿ ಮಾಡುವ ಸುಕಾಯಕವಂತನಿರವು
ಎಂತುಟೆಂದಡೆ : ಮಾಡಿಕೊಂಡ ಕೃತ್ಯದಲ್ಲಿ ಆರಿಗೂ ಒಡಲೆಡೆಗೂಡದೆ,
ಕೊಂಡುದು ಪ್ರಸಾದ, ನಿಂದುದು ಸಯಿದಾನವೆನ್ನದೆ,
ಉಭಯ ಪ್ರತಿಪಾಕದಲ್ಲಿ ಆದ ಸಯಿದಾನಕ್ಕೆ ಸಂಕಲ್ಪವಳಿದು,
ಉಭಯಭಾಂಡವೂ ಸರಿಯೆಂದ ಪ್ರಸಾದಿಗೆ ಪ್ರಸಾದವ ಎಡೆಮಾಡಬೇಕು.
ಅದು ನಿರ್ಮಾಲ್ಯವಲ್ಲ, ಅದು ಲಿಂಗಾಂಗ, ಕುಂಭದಲ್ಲಿ ನಿಂದಪ್ರಸಾದ.
ಇದರ ಸಂದೇಹವ ಹರಿದು ಕೊಂಬ ನಿರಂಗಪ್ರಸಾದಿಗೆ
ಕುಂಭೇಶ್ವರಲಿಂಗದಲ್ಲಿದ್ದ ಜಗನ್ನಾಥ ಸಾಕ್ಷಿಯಾಗಿ
ನಮೋ ನಮೋ ಎನುತಿದ್ದೆನು.
1208
ಕೈಯೊಡ್ಡಿ ಪ್ರಸಾದವ ಕೊಂಡಡೆ ಕರ್ಮಧಾರಿ.
ಶೇಷಪ್ರಸಾದವನಾಯ್ದು ಕೊಂಡಡೆ ವರ್ಮಹೀನ.
ಉಕ್ಕುಳಪ್ರಸಾದವ ಕೊಂಡಡೆ ಸತ್ಕ್ರೀಗೆ ಸಲ್ಲ.
ಇಂತಿವನರಿದು ಸಜ್ಜನಪ್ರಸಾದವ ನಿರ್ಧರದಿಂದ ಕೊಂಬ
ಮಹಾಪ್ರಸಾದಿಯ ಕಾರುಣ್ಯವೆನಗೆಂದಿಗೆ ಸಾಧ್ಯವಪ್ಪುದು ?
ಕುಂಭೇಶ್ವರಲಿಂಗದಲ್ಲಿ ಜಗನ್ನಾಥವವರಿದವಂಗಲ್ಲದೆ ಸಾಧ್ಯವಲ್ಲ.
1209
ಧರೆಯ ಮೇಲೆ ಬಿದ್ದ ಬೀಜ,
ಧರೆಯಲ್ಲಿಯೆ ಅಳಿದು, ಆಕಾಶದಲ್ಲಿ ಫಲವಾಯಿತ್ತು.
ಆ ಫಲವ ಬಯಲ ಕಣದಲ್ಲಿ ಒಕ್ಕಿ, ಮನದ ಹಗಹದಲ್ಲಿ ತುಂಬಿ,
ಬಾಯ ಹಗಹದಲ್ಲಿ ತೆಗೆದು, ಕಣ್ಣಿನ ಕೊಳಗದಲ್ಲಿ ಅಳೆವುತ್ತಿರಲಾಗಿ,
ಖಂಡುಗವೆಂಬುದಕ್ಕೆ ಮೊದಲೆ ಕೊರಳಡಗಿತ್ತು.
ಕುಂಭೇಶ್ವರಲಿಂಗದಲ್ಲಿದ್ದ ಜಗನ್ನಾಥನರಿಕೆಯಾಗಿ.
1210
ನೆಲ್ಲು ನೆಲದಲ್ಲಿಯೆ ಅಳಿದು, ಹುಲ್ಲಿನ ಒಡಲಲ್ಲಿಯೆ ಜನಿಸಿ,
ಆ ಹುಲ್ಲ ತನ್ನೊಳಗಿರಿಸಿದ ಭೇದವ ನೋಡಾ.
ತನ್ನೊಡಲಳಿದಲ್ಲಿ ನೆಲ್ಲೂ ಅಲ್ಲ, ಹುಲ್ಲೂ ಅಲ್ಲ !
ಆ ಹೊಡೆಯಲ್ಲಿ ಅಡಗಿತ್ತೆಂದರಿಯೆ,
ಕುಂಭೇಶ್ವರಲಿಂಗದಲ್ಲಿ ಜಗನ್ನಾಥನನರಿಯಲಾಗಿ,

1211
ಭಯಭಕ್ತಿಯಿಂದ ಸಂಗನಬಸವಣ್ಣನ ಶ್ರೀಪಾದವ ಕಂಡೆನು.
ಅನುಮಿಷ ದೃಷ್ಟಿಯಿಂದ ಚೆನ್ನಬಸವಣ್ಣನ ಶ್ರೀಪಾದವ ಕಂಡೆನು.
ಸುಜ್ಞಾನದ ಬೆಳಗಿನಿಂದ ಪ್ರಭುದೇವರ ಶ್ರೀಪಾದವ ಕಂಡೆನು.
ಇಂತೀ ಮೂವರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು,
ಕುಂಭೇಶ್ವರಲಿಂಗದಲ್ಲಿ ಜಗನ್ನಾಥ ಸಾಕ್ಷಿಯಾಗಿ.
1212
ಮಾತಿನ ಮಾತಿನ ಗೀತಾಂತದಲ್ಲಿ ಜಾಣನಾಗಿರಬಹುದು.
ಸ್ತೋತ್ರದ .. ..ಪರಿಣತೆಯಲ್ಲಿ ಜಾಣನಾಗಿರಬಹುದು.
ಅಂತರಂಗ ಬಹಿರಂಗವಂತನಾಗಿರಬಹುದು.
ಕಾಂತೆಯರ ರತಿಗುಣವರ್ಜಿತರಾಗಿರಬಹುದು.
ಕ್ಷೇತ್ರವಾಸಿಗಳಾಗಿರಬಹುದು, ತನುನಿಗ್ರಹ ಮಾಡಬಹುದು.
ವೈವಾಸದ ಕೊಂಬೆ ಕಿಂಚಿತ್ತಾಗಿ ಹೊದೆಯಬಹುದು.
ಹಿಡಿದು.. ..ಮುಚ್ಚಿ ಪೂರೈಸದಿರ್ದಡೆ,
ಎನ್ನೊಡೆಯ ಕುಂಭೇಶ್ವರನ ಶರಣರ ನಚ್ಚಿನ ಮಚ್ಚಿನ
ಇಚ್ಛಾವಾಸವೃತ್ತಿಯಾದ ಕುಂಭಾರ ಗಂಡನಲ್ಲಿ .. ..ಲದ್ಗುಗವು.
1213
ಲಿಂಗವಂತರು, ಲಿಂಗಾಚಾರಿಗಳಂಗಣಕ್ಕೆ.
ಲಿಂಗಾರ್ಪಿತ ಭಿಕ್ಷಕ್ಕೆ ಹೋದಲ್ಲಿ, ಲಿಂಗಾರ್ಪಿತವ ಮಾಡುವಲ್ಲಿ,
ಸಂದೇಹವಿಲ್ಲದೆ ಕಾಣದುದನೆಚ್ಚರಿಸದೆ,
ಕಂಡುದ ನುಡಿಯದೆ, ಕಂಡುದನು ಕಾಣದುದನು,
ಒಂದೆಸಮವೆಂದುತಿಳಿಯಬಲ್ಲಡೆ, ಕುಂಭೇಶ್ವರಲಿಂಗವೆಂಬೆನು.
1214
ಸ್ವಯಪ್ರಸಾದಿ ಗುರುಪ್ರಸಾದವನೊಲ್ಲ, ಲಿಂಗಪ್ರಸಾದವ ಕೊಂಬ.
ಜ್ಞಾನಪ್ರಸಾದಿ ಜಂಗಮಪ್ರಸಾದವ ಕೊಂಬ, ಲಿಂಗಪ್ರಸಾದವನೊಲ್ಲ.
ಮಹಾಪ್ರಸಾದಿ ಪ್ರಸನ್ನಪ್ರಸಾದವ ಕೊಂಬ, ಜಂಗಮಪ್ರಸಾದವನೊಲ್ಲ.
ಇಂತೀ ತ್ರಿವಿಧಪ್ರಸಾದದ ಭೇದವನರಿದು,
ಒಂದನೊಡಗೂಡಿ ಒಂದನರ್ಪಿಸಬೇಕು.
ಆ ಉಭಯಪ್ರಸನ್ನಪ್ರಸಾದವ
ಲಿಂಗಕ್ಕೆ ಕೊಟ್ಟು ಕೊಳಬಲ್ಲ ಮಹಾಪ್ರಸಾದಿಗೆ
ಕುಂಭೇಶ್ವರಲಿಂಗದಲ್ಲಿದ್ದ ಜಗನ್ನಾಥ[ಸಾಕ್ಷಿಯಾಗಿ]
ನಮೋ ನಮೋ ಎನುತಿದ್ದೆನು.