Categories
ವಚನಗಳು / Vachanagalu

ಹಾವಿನಹಾಳ ಕಲ್ಲಯ್ಯನ ವಚನಗಳು

ಅಂಗದ ಮೇಲೆ ಲಿಂಗವುಂಟೆಂದು
ಆಗವೆಲ್ಲ ಬೆಬ್ಬನೆ ಬೆರೆತು ಬೀಗಿ ನುಡಿವರು.
ಅಂಗವೇ ಲಿಂಗವನರಿಯದು ಲಿಂಗವೇ ಅಂಗವನರಿಯದು.
ಅಂಗವಾವುದು, ಲಿಂಗವಾವುದು, ಸಂಗಸಂಬಂಧವಾವುದೆಂದೆರಿಯರು.
ಅಂಗಗುಣವಳಿದು ಆಚಾರವಳಪಟ್ಟು ನಿಂದಂಗವೆ ಅಂಗ.
ಲಿಂಗವಾವುದೆನಲು,
ಪಾಷಾಣಗುಣವಿಡಿದ ಭ್ರಮೆಯಳಿದು, ಭಾವವಳಿದು,
ಲಿಂಗಸಂಬಂಧವುಳಿದುದೆ [ಲಿಂಗ]
ಲಿಂಗಸಂಬಂಧವಾವುದೆನಲು ಸಂಸಾರವಿಡಿದು ವರ್ತಿಸುವ
ಭ್ರಾಂತವಳಿದು ಜ್ಞಾನಸಂಬಂಧವನರಿಯದಿದ್ದಡೆ, ಅಂಗ ಬಿದ್ದು, ಲಿಂಗ ಉಳಿದು,
ಸಂಬಂಧಚೈತನ್ಯ ಹಿಂಗಿಹೋದಲ್ಲಿ ಭಂಗ ಹೊದ್ದಿತ್ತು,
ಮಹಾಲಿಂಗ ಕಲ್ಲೇಶ್ವರಾ./1
ಅಂತರಂಗದಲ್ಲಿ ಅರಿವ ತೋರಿ, ಬಹಿರಂಗದಲ್ಲಿ ಕುರುಹ ತೋರಿ,
ಉಭಯ ತನ್ನ ಹಿತವಹ ನಿಜನಿವಾಸವ ತೋರಿ ರಕ್ಷಿಸುವ
ಪರಮಪಾವನಮೂರ್ತಿ ಶ್ರೀಗುರುವನೆಂದು ಕಾಂಬೆನೋ!
ಎನ್ನ ಸುತ್ತಿ ಮುತ್ತಿದ ಭವಪಾಶವ ಹರಿದು,
ಎನ್ನ ಮುಸುಕಿಹ ಅಜ್ಞಾನ ತಿಮಿರವ ಪರಿಹರಿಸುವ,
ಸಂವಿತ್ಸ ರೂಪನಾದ ಮಹಾಮಹಿಮ
ಶ್ರೀಗುರುವನೆಂದೀಕ್ಷಿಸುವೆನೊ, ಮಹಾಲಿಂಗ ಕಲ್ಲೇಶ್ವರಾ! /2
ಅಂದಂದಿನ ದಿನಕ್ಕೆ ಬಂದ ದಂದುಗಕ್ಕೆ ಮನನಾಚದ ಪರಿಯ ನೋಡಾ!
ಕಂದದೀ ಮನವು, ಕುಂದದೀ ಮನವು
ಲಿಂಗದೇವನ ಒಲವು ಎಯ್ದದೆಂದು ಮರುಗುವ ಪರಿಯ ನೋಡಾ!
ಮಹಾಲಿಂಗ ಕಲ್ಲೇಶ್ವರಯ್ಯಾ,
ಈ ಬೆಂದ ಮನವು, ಹೇಸದ ಪರಿಯ ನೋಡಾ!/3
ಅಂದಂದಿನ ದಿನವ ಸಂಸಾರವಂದಂದಿಗೆ ಗ್ರಹಿಸುತ್ತಿದೆ.
ಎಂದಯ್ಯಾ ನಿಮ್ಮ ನೆನೆವೆ, ಎಂದಯ್ಯಾ ನಿಮ್ಮ ಪೂಜಿಸುವೆ.
ಸಮಚಿತ್ತದಿಂದ ನಿಮ್ಮ ನೆನೆವಡೆ,
ನಾಳಿಗಿಂದೇ ಲೇಸು ಮಹಾಲಿಂಗ ಕಲ್ಲೇಶ್ವರಾ./4
ಅತ್ಯಾಶೆಯೆಂಬುದೆ ಪಾಪ, ಬೇರೆ ಪಾಪೆಂಬುದಿಲ್ಲ, ಕಂಡಿರೆ ಅಯ್ಯಾ!
ಪರಿಣಾಮವೆಂಬುದೆ ಪರಮಾನಂದ, ಬೇರೆ ಪರಲೋಕವಿಲ್ಲ, ಕಂಡಿರೆ ಅಯ್ಯಾ!
ಇಹಪರದಾಶೆಯಿಲ್ಲದಿಹುದೆ ಶಿವಯೋಗ.
ಮಹಾಲಿಂಗ ಕಲ್ಲೇಶ್ವರ ಬಲ್ಲ, ಸಿದ್ಧರಾಮನ ಪರಿಯ./5
ಅನುನೇಹದ ಅನುರಚಿಯ ತೋರಲಿಕಾರಿಗೆಯೂ ಬಾರದು.
ಅದು ಸಕ್ಕರೆಯಂತುಟಲ್ಲ,
ಅದು ತವರಾಜದಂತುಟಲ್ಲ.
ಭಾವದ ಸುಖ ಭವಗೆಡಿಸಿತ್ತು. ಮಹಾಲಿಂಗ ಕಲ್ಲೇಶ್ವರದೇವಾ, ನೀನೆ ಬಲ್ಲೆ./6
ಅಯ್ಯಾ ವಿಪ್ರರೆಂಬವರು ಮಾತಂಗಿಯ ಮಕ್ಕಳೆಂಬುದಕ್ಕೆ
ಇದೇ ದೃಷ್ಟ.
ಮತ್ತೆ ವಿಚಾರಿಸಿ ಕೇಳಿದಡೆ ಹೇಳುವೆನು :
ಬಡಗಿ ಮಾಚಲದೇವಿಯ ಕುಲಜೆಯ ಮಾಡಿಹೆವೆಂದು,
ಕಡಿದು ಹಂಚಿ ತಿಂದರಂದು ಗೋಮಾಂಸವ.
ಬಿಡದೆ ಅತ್ಯಂತ ಉಜ್ಞಕ್ರಮವೆಂದು ಹೋತನ ಕೊಂದು,
ಚಿಕ್ಕ ಚಿಕ್ಕವಾಗಿ ಕಡಿಮೆ ಭಕ್ಷಿಸಿದುದ ಕಂಡು,
ಮಿಕ್ಕ ಹದಿನೇಳುಜಾತಿ ವಿಪ್ರರ ಕೈಯಲನುಗ್ರಹವ ಪಡೆದು,
ತಿನಕಲಿತರಯ್ಯಾ.
ಶ್ವಪಚೋಪಿ ವಿಪ್ರ ಸಮೋ ಜಾತಿಭೇದಂ ನ ಕಾರಯೇತ್|
ಅಜಹತ್ಯೋಪದೇಶೀನಾಂ ವರ್ಣನಾಂ ಬ್ರಾಹ್ಮಣೋ ಗುರುಃ||
ಎಂಬುದಾಗಿ,
ಕಿರಿಕಿರಿದ ತಿಂದ ದ್ವಿಜರು ನೆರೆದು ವೈಕುಂಠಕ್ಕೆ ಹೋಹರೆ?
ನೆರೆಯಲೊಂದ ತಿಂದ ವ್ಯಾಧ ದ್ವಿಜರಿಂದಧಿಕ.
`ಭಗರ್ೋ ದೇವಸ್ಯ ಧೀಮಹಿ’ ಎಂಬ ದಿವ್ಯಮಂತ್ರವನೋದಿ,
ನಿಬರ್ುದ್ಧಿಯಾದಿರಿ.
ಶಿವಪಥವನರಿಯದೆ ಬರುದೊರೆವೋದಿರಿ.
ಆದಡೀ ನರಕಕ್ಕೆ ಭಾಜನವಾದಿರಿ.
ಇದು ಕಾರಣ, ಮಹಾಲಿಂಗ ಕಲ್ಲೇಶ್ವರಾ,
ನಿಮ್ಮ ಶರಣಂಗೆ ಸರಿಯೆ ಜಗದನ್ಯಾಯಿಗಳು./7
ಅಯ್ಯಾ, ರುದ್ರಾಕ್ಷೆಯಿಂದ ಇಹವ ಕಂಡೆ.
ಅಯ್ಯಾ, ರುದ್ರಾಕ್ಷೆಯಿಂದ ಪರವ ಕಂಡೆ.
ಅಯ್ಯಾ, ರುದ್ರಾಕ್ಷೆಯಿಂದ ಗತಿಯ ಕಂಡೆ.
ಅಯ್ಯಾ, ರುದ್ರಾಕ್ಷೆಯಿಂದ ಮತಿಯ ಕಂಡೆ
ಅಯ್ಯಾ, ರುದ್ರಾಕ್ಷೆಯಿಂದ ಮೋಕ್ಷವ ಕಂಡೆ
ಅಯ್ಯಾ, ಇನ್ನ ಬದುಕಿದೆ, ಬದುಕಿದೆನಯ್ಯಾ,
ಅಯ್ಯಾ, ಭವಂ ನಾಸ್ತಿಯಾಯಿತ್ತೆನಗೆ.
ಅಯ್ಯಾ, ಮಹಾಲಿಂಗ ಕಲ್ಲೇಶ್ವರಾ,
ಶ್ರೀಮಹಾರುದ್ರಾಕ್ಷೆಯಿಂದೆ ಕಂಡೆನಯ್ಯಾ,
ಎನ್ನ ಕರಸ್ಥಳದಲ್ಲಿ ಮಹಾಗೂಢವಾಗಿರ್ಪ
ನಿಮ್ಮ ದಿವ್ಯಮೂರ್ತಿ ಪೆಂಪನು. /8
ಅರಳಿದ ಪುಷ್ಪ ಪರಿಮಳಿಸದಿಹುದೆ?
ತುಂಬಿದ ಸಾಗರ ನೊರೆತೊರೆಯಾಡದಿಪ್ಪುದೆ?
ಆಕಾಶವ ಮುಟ್ಟುವ ದೋಂಟಿಗೋಲವಿಡಿವನೆ?
ಪರಮಪರಿಣಾಮಿ, ಕರ್ಮವನತಿಗಳೆಯದಿಹನೆ,
ಮಹಾಲಿಂಗ ಕಲ್ಲೇಶ್ವರಾ?/9
ಅರಿವ ಬೈಚಿಟ್ಟುಕೊಂಡು ಮರೆಯಮಾನವರಂತೆ,
ಕುರುಹಿನ ಹೆಸರಲ್ಲಿ ಕರೆದಡೆ ಓ ಎನುತಿಪ್ಪವರು,
ಅವರು ನರರೆ ಅಯ್ಯಾ?
ಕುರುಹಿಲ್ಲ ಲಿಂಗಕ್ಕೆ, ತೆರಹಿಲ್ಲ ಶರಣಂಗೆ.
ಬರಿಯ ಸಂಸಾರವ ಬಳಸಿಯೂ ಬಳಸದಂತಿಪ್ಪವರು
ಅವರು ನರರೆ ಅಲ್ಲ, ಮಹಾಲಿಂಗ ಕಲ್ಲೇಶ್ವರಾ ನಿಮ್ಮ ಶರಣರು./10
ಅರಿವೆ ಗುರು, ಆಚಾರವೆ ಶಿಷ್ಯ, ಜ್ಞಾನವೆ ಲಿಂಗ,
ಪರಿಣಾಮವೆ ತಪ, ಸಮತೆಯೆಂಬುದೆ ಯೋಗದಾಗು ನೋಡಾ.
ಈಸುವನರಿಯದೆ ವೇಷವ ಧರಿಸಿ, ಲೋಚು ಬೋಳಾದಡೆ
ಮಹಾಲಿಂಗ ಕಲ್ಲೇಶ್ವರದೇವರು ನಗುವರು./11
ಅರ್ಚನೆಯಾವರಿಸಿತ್ತಯ್ಯಾ, ಪೂಜನೆ ಪೂರಿತವಾಯಿತ್ತಯ್ಯಾ,
ಅಜಪೆ ಅಕ್ಕಾಡಿತ್ತಯ್ಯಾ, ಸಮತೆ ಪರಿಣಾಮಿಸಿತ್ತಯ್ಯಾ,
ಮಹಾಲಿಂಗ ಕಲ್ಲೇಶ್ವರಯ್ಯಾ,, ನಿಮ್ಮ ನೆನೆವ ಮನಕ್ಕೆ. /12
ಅರ್ಥವೆಂಬುದೆ ಪಾಪ, ಬೇರೆ ಪಾಪವಿಲ್ಲ ಕಂಡನಯ್ಯಾ.
ಪರಿಣಾಮವೆಂಬುದೆ ಪುಣ್ಯ, ಬೇರೆ ಪುಣ್ಯವಿಲ್ಲ ಕಂಡಯ್ಯಾ.
ಪಪುಣ್ಯಗಳನತಿಗಳೆದ ಉಳುಮೆ, ಶಿವಯೋಗ.
ಮಹಾಲಿಂಗ ಕಲ್ಲೇಶ್ವರನು ಬಲ್ಲ ಸಿದ್ಧರಾಮನ ಪರಿಯ./13
ಅರ್ಧನಾರಿಯಾಗಿದ್ದ ಉಮಾದೇವಿ ಬೇರೆ ಮತ್ತೊಬ್ಬರೊಡನುಂಬಳೆ?
ಗಂಡಂಗೆ ತೆರಹಿಲ್ಲದ ವಧು ಪರಿವಿರೋಧಿಯಾಗಿ,
ಬೇರೆ ಮತ್ತೊಬ್ಬರೊಡನುಂಬ ಪರಿಯೆಂತೊ?
ಮನ ಪುನರ್ಜಾತನಾಗಿ, ಪ್ರಾಣಲಿಂಗ ಪ್ರಸಾದಿಯಾದ
ಪ್ರಸಾದಿಗ್ರಾಹಕ ಪ್ರಸಾದಿ,
ಇದರೊಡನೆ ಭುಂಜಿಸುವ ಪರಿಯಿನ್ನೆಂತೊ?
ಒಂದಾಗಿ ಭೋಜನವ ಮಾಡಿದಲ್ಲಿ, ಸಜ್ಜನಸ್ಥಲ ಬೆಂದಿತ್ತು,
ಗುರುವಚನ ನೊಂದಿತ್ತು, ಜಂಗಮ ನಾಚಿತ್ತು,
ಪ್ರಸಾದ ಹೇಸಿತ್ತು, ಅವಧಾನವಡಗಿತ್ತು,
ಭಕ್ತಿ ಮೀಸಲಳಿದು ಬೀಸರವೋಯಿತ್ತು,
ಪ್ರದೀಪಿಕೆ : ಭಕ್ತೋಭಕ್ತಸ್ಯ ಸಂಯೋಗಾನ್ನ ಭುಂಜಿಯಾತ್ಮವಾನ್ ಸಃ|
ತಥಾಪಿ ಭುಂಜನಾದ್ದೇವಿ ಪ್ರಸಾದತ್ರಯನಾಶನಂ||
ಇಂತೆಂದುದಾಗಿ,
ಇದು ಕಾರಣ, ಒಂದೆನಲಮ್ಮೆ ಬೇರೆನಲಮ್ಮೆ.
ನಿಮ್ಮ ಶರಣರೊಕ್ಕುದ ಕೊಂಬೆ ಕಾಣಾ, ಮಹಾಲಿಂಗ ಕಲ್ಲೇಶ್ವರಾ./14
ಅಶನದಾಪ್ಯಾಯನ, ವ್ಯಸನ ಉಳ್ಳನ್ನಕ್ಕ ಆ ನಿಮ್ಮ ನೆನೆವುದು
ಹುಸಿಯಯ್ಯಾ.
ಆ ನಿಮ್ಮ ಪೂಜಿಸುವುದು ಹುಸಿಯಯ್ಯಾ.
ಎನ್ನ ಹಸಿವಿಂಗೆ ನೀನೇ ಓಗರವಾದರೆ,
ನಾ ನಿಮ್ಮ ನೆನೆವುದು ದಿಟ ಕಾಣಾ, ಮಹಾಲಿಂಗ ಕಲ್ಲೇಶ್ವರಾ./15
ಆಗಮಾಚಾರವಿಲ್ಲೆಂದು ಭಕ್ತರನಲ್ಲೆಂಬ ಭ್ರಮಿತರು ನೀವು ಕೇಳಿರೆ!
ಮುಕ್ಕುಳಿಸಿದ ನೀರ ಮಜ್ಜನಕ್ಕೆರವುದಿದಾವಾಗಮಾಚಾರ?
ಸರವ ಕಟ್ಟಿ, ಪತ್ರೆಯ ಹರಿದು ಹಾಕೂದಿದಾವ ಮಂತ್ರದೊಳಗು?
ಸರ್ರನೆ ಹರಿತಂದು ಸುರ್ರನೆ ಕಲ್ಲಲಿಡುವುದಿದಾವ ಪೂಜೆ?
ಬಹುಬುದ್ಧಿಗಲಿತು, ಬಹಳ ನುಡಿ ಶಿವಭಕ್ತರ ಕೂಡೆ ಸಲ್ಲದು,
ಶರಣೆಂದು ಶುದ್ಧರಪ್ಪುದು.
ಮಹಾಲಿಂಗ ಕಲ್ಲೇಶ್ವರನು ತನ್ನ ಭಕ್ತರ ನಿಲುವನು ತಾನೆ ಬಲ್ಲನು./16
ಆದಿಜಂಗಮಕ್ಕೆ ಸ್ವಾಯತವಾದಲ್ಲಿ ಆಚಾರಲಿಂಗಪ್ರಾಣಿ.
ಆಚಾರಲಿಂಗ ಸ್ವಾಯತವಾದಲ್ಲಿ ಗುರುಲಿಂಗಪ್ರಾಣಿ.
ಗುರುಲಿಂಗ ಸ್ವಾಯತವಾದಲ್ಲಿ ಶಿವಲಿಂಗಪ್ರಾಣಿ.
ಶಿವಲಿಂಗ ಸ್ವಾಯತವಾದಲ್ಲಿ ಜಂಗಮಲಿಂಗಪ್ರಾಣ.
ಜಂಗಮಲಿಂಗ ಸ್ವಾಯತವಾದಲ್ಲಿ ಪ್ರಸಾದಲಿಂಗಪ್ರಾಣಿ.
ಪ್ರಸಾದಲಿಂಗ ಸ್ವಾಯತವಾದಲ್ಲಿ ಮಹಾಲಿಂಗಪ್ರಾಣಿ.
ಮಹಾಲಿಂಗ ಸ್ವಾಯತವಾದಲ್ಲಿ ಶೂನ್ಯಲಿಂಗಪ್ರಾಣಿ.
ಶ್ರುತಿ : ಆದಿಮಧ್ಯಾಂತಶೂನ್ಯಂ ಚ ವ್ಯೋಮಾವ್ಯೋಮವಿವರ್ಜಿತಂ |
ಧ್ಯಾನಜ್ಞಾನದ್ವಯಾಧೂಧ್ರ್ಛಂ ಶೂನ್ಯಲಿಂಗಮಿತಿ ಸ್ಮೃತಂ ||
ಇಂತೆಂದುದಾಗಿ, ಶೂನ್ಯಲಿಂಗ ಸ್ವಾಯತವಾದಲ್ಲಿ,
`ಲಿಂಗೇ ಜಾತಂ ಲಿಂಗೇ ಬೀಜಂ’ ಎಂಬುದಾಗಿ,
ಉಪಮೆಗೆ ನಿಲುಕದ ಉಪಮಾತೀತ ನೀನೆ ಬಲ್ಲೆ,
ಮಹಾಲಿಂಗ ಕಲ್ಲೇಶ್ವರಾ./17
ಆದಿಯಲ್ಲಿ ಪ್ರಸಾದ, ಏಕಮುಖ ಸಾಧಕರ ಮುಖದಿಂದ
ಅನಂತಮುಖವಾದುದು.
ಎಯ್ದಿ ನಿಂದಲ್ಲಿ ಮತ್ತೆ ಏಕಮುಖವಾದುದು.
ಇದರ ಭೇದವ ಬಸವಣ್ಣ ಚೆನ್ನ ಬಸವಣ್ಣನ ಸಂಪಾದನೆಯಿಂದಲಾನರಿದೆನು.
ಅರಿದಡೇನು ಎನಗಾಯತವಾಗದು. ಆಯತವಾದಡೇನು ಸನ್ನಹಿತವಾಗದು.
ಗುರುಲಿಂಗ ಜಂಗಮದನುವನರಿರದ ವಿಶ್ವಾಸ, ಜಾನಿಗಲ್ಲದೆ ಅಳವಡದು.
ಆ ಪರಮ ವಿಶ್ವಾಸ ಸತ್ಸದಯದಿಂದಲ್ಲದೆ ಸಮನಿಸದು.
ಇದು ಕಾರಣ, ಪ್ರಸಾದದಾದಿಕುಳವ ನಾನೆತ್ತ ಬಲ್ಲೆನಯ್ಯಾ?
ಪ್ರಸಾದವೆಂಬುದು ಅನಿಂದ್ಯ, ಅಮಲ ಅಗೋಚರ,
ನಿರಂಜನ, ನಿತ್ಯಸತ್ಯ, ಜ್ಞಾನಾನಂದ, ಪರಬ್ರಹ್ಮ, ನಿಶ್ಚಯ.
ಅದು ತನ್ನ ತಾನೆ ನುಡಿವುತ್ತಿಹುದು.
ಆ ನುಡಿಯೆ ಸುನಾದ, ಆ ಸುನಾದವೆ ಓಂಕಾರ.
ಆ ಓಂಕಾರ ತಾನೆ ಮಹಾಜ್ಞಾನ, ಪರಮಚೈತನ್ಯ, ಪ್ರಸಿದ್ಧ ಪಂಚಾಕ್ಷರ.
ಅದೆಂತೆಂದಡೆ : `ಪ್ರಣವೋ ಹಿ ಪರಬ್ರಹ್ಮ ಪ್ರಣವೋ ಹಿ ಪರಂ ಪರದಂ’
ಎಂದುದಾಗಿ,
ಆ ಪ್ರಸಿದ್ಧ ಪಂಚಾಕ್ಷರವು ತನ್ನಿಂದ ತಾನೆ ಸಕಲ ನಿಷ್ಕಲವಾಯಿತ್ತು.
ಆ ಪರಮನಿಷ್ಕಲವೇ ಶ್ರೀಗುರು, ಸಕಲವೇ ಲಿಂಗ,
ಸಕಲನಿಷ್ಕಲವೇ ಜಂಗಮ.
ಅದೆಂತೆಂದಡೆ : `ಏಕಮೂರ್ತಿಸ್ತ್ರೀಧಾ ಭೇದಾ ಗುರುಲರ್ಿಂಗಂತು ಜಂಗಮ’
ಎಂದುದಾಗಿ,
ಆ ಜಂಗಮಪ್ರಸಾದವೆ ಮೂಲವಾದ ಕಾರಣ, ಆ ಜಂಗಮವನಾರಾಧಿಸಿ,
ಅನಂತ ಪ್ರಮಥಗಣಂಗಳು ಪ್ರಸಾದವ ಪಡೆದು,
ತಮ್ಮ ಸದ್ಭಾವವೆಂತಂತೆ ಸ್ವೀಕರಿಸಿದ ಕಾರಣ, ಅನಂತಮುಖವಾಯಿತ್ತು.
ಅವೆಲ್ಲವನೊಳಕೊಂಡು ತಾನೆ ನಿಂದ ಕಾರಣ ಎಂದಿನಂತಾಯಿತ್ತು.
ಇದೇ ಪ್ರಸಾಧಾದಿ ಮಧ್ಯಾಂತದರಿವು ಕಾಣಿರೆ.
ಇಂತಪ್ಪ ಪ್ರಸಾದವ ಕೊಂಬ ಪ್ರಸಾದಿಯ ನಿಲವೆಂತೆಂದಡೆ :
ವಿಶ್ವಾಸವೆ ಒಡಲಾಗಿ, ಲಿಂಗನಿಷ್ಠೆಯೆ ಇಂದ್ರಿಯಂಗಳಾಗಿ,
ಸಾವಧಾನವೆ ಕರಣಂಗಳಾಗಿ, ಶಿವಾನುಭಾವವೆ ಪ್ರಾಣವಾಗಿ,
ಮಹದಾನಂದವೆ ತಾನಾಗಿ, ಲಿಂಗಸಮರಸವೆ ಭರಿತವಾಗಿರ್ಪ
ಮಹಾಜ್ಞಾನಿಯೆ ಪ್ರಸಾದಿ.
ಆ ಪ್ರಸಾದಿಯ ಪ್ರಸಾದವೆ ಎನ್ನ ಲಿಂಗಕ್ಕೆ ಕಳೆಯಾಯಿತ್ತು.
ಅದೆ ಎನಗೆ ತಿಳಿವಾಯಿತ್ತು, ಮಹಾಲಿಂಗ ಕಲ್ಲೇಶ್ವರಾ./18
ಆರಡಿ ತಾನಾಗಿಹ ಆಶ್ರಯವ ಮಾಡುವಲ್ಲಿ ಬೇರೆ ಬಾಯಿಲ್ಲ.
ಕುಸುಮದ ಕಂಪಿತವನುಂಬುದಕ್ಕೆ ಬೇರೆ ಬಾಯಿಲ್ಲ.
ಇಂತಿದು ಬಿಡುಮುಡಿಯ ಭೇದ.
ಕತರ್ು ಭೃತ್ಯನ ವಶಗತವಾಗಿರ್ದ ತ್ರಿವಿಧಮಲವ ಮುಟ್ಟುವಲ್ಲಿ.
ತನಗೆ ಬಿಟ್ಟು ಬಹ ಸಮರ್ಪಣೆಯನರಿತು, ಅವ ತೊಟ್ಟಿರ್ದುದ ತಾ
ತೊಡದೆ, ಅವ ಬಿಟ್ಟುದ ತಾ ಮುಟ್ಟದೆ,
ಅವ ಬಿಟ್ಟುದನರಿತು, ಅವಗೇನು ಪಾಶವ ಕಟ್ಟಿದೆ.
ತೊಟ್ಟ ಬಿಟ್ಟ ಹಣ್ಣಿನಂತೆ, ನಿಜನಿಶ್ಚಯವಾದ ಭಕ್ತಿಮೂರ್ತಿ.
ಮಹಾಮಹಿಮ ಕಲ್ಲೇಶ್ವರಲಿಂಗ ತಾನಾದ ಶರಣ./19
ಆವ ನೇಮವನು ಮಾಡ, ಕರ್ಮವನು ಹೊದ್ದ.
ಆವ ಶೀಲವ ಹಿಡಿಯ, ಆವ ತಪಕ್ಕೂ ನಿಲ್ಲ.
ಆವ ಜಂಜಡಕ್ಕೂ ಹಾರ, ಕೇವಲಾತ್ಮಕನು.
ಸಾವಯ ನಿರವಯವೆನಿಸಿದ ಸಹಜವು ತಾನೆ,
ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಶರಣು. /20
ಆವಂಗದಲ್ಲಿದ್ದಡೇನು, ಒಂದು ಸುಸಂಗ ಸುಶಬ್ದವ
ನಿಮಿಷವಿಂಬಿಟ್ಟುಕೊಂಡು,
ಆ ಘಳಿಗೆ ಅಳಿದಡೇನು, ಉಳಿದಡೇನು, ಸುಸಂಗ ಸುಶಬ್ದವೇದಿಯೆ?
ಲಿಂಗದಲ್ಲಿಯೇ ನಿರುತ ಭರಿತ ಕಾಣಿರೆ, ಶರಣ.
ಮನದಲ್ಲಿ ಚಲಾಚಲಿತವಿಲ್ಲದೆ ಲಿಂಗವನಿಂಬುಗೊಂಡ ಮಹಂತಂಗೆ
ಬೆದರಿ ಓಡವೆ ಕರ್ಮಂಗಳು? ಉದರಿಹೋಗವೆ ಭವಪಾಶಂಗಳು?
ಕರ್ಪುರದುರಿಯ ಸಂಗದಂತೆ, ಗುರುಪಾದ ಸೋಂಕು.
ಜ್ಞಾನವಾದ ಬಳಿಕ ಜಡಕರ್ಮವಿಹುದೆ, ಮಹಾಲಿಂಗ ಕಲ್ಲೇಶ್ವರಾ?/21
ಇಕ್ಕದ ಕೋಗಿಲೆ, ಕಾಗೆಯ ತತ್ತಿಯಲ್ಲಿ,
ಸಾಕದೆ ತನ್ನ ಶಿಶುವ ಮನಬುದ್ಧಿಯಿಂದ.
ಇಕ್ಕಿದಡೇನೊ, ದೇವಾ ಪಿಂಡವ ತಂದು
ಮಾನವ ಯೋನಿಯಲ್ಲಿ ಹುಟ್ಟಿದಡೇನೊ ?
ಲಿಂಗಶರಣನು ನರರ ಯೋನಿಯಲ್ಲಿ ಹುಟ್ಟಿದಾತನೇ ಅಲ್ಲ.
ಬಾರದೆ ಪಕ್ಷಿಯ ಬಸುರಲ್ಲಿ ಅಶ್ವತ್ಥವೃಕ್ಷವು ?
ಇದು ಕಾರಣ, ಮಹಾಲಿಂಗ ಕಲ್ಲೇಶ್ವರಾ ಕಾಗೆಗೆ ಪಿಕ ಶಿಶುವೆ ?/22
ಉದಕದ ತಂಪವ ತಾವರೆಯಲ್ಲದೆ ಹೊರಗಣ ಕೊರಡೆತ್ತಬಲ್ಲುದೊ ?
ಹೂವಿನ ಪರಿಮಳವ ತುಂಬಿಯಲ್ಲದೆ ಹೊರಗಣ ನೊಣನೆತ್ತಬಲ್ಲುದೊ ?
ಕ್ಷೀರದ ರುಚಿಯ ಹಂಸೆಯಲ್ಲದೆ ಕೆಲದಲ್ಲಿ ಬಕನೆತ್ತವಬಲ್ಲುದೊ ?
ಮಾವಿನ ಹಣ್ಣಿನ ರುಚಿಯನರಗಿಳಿಗಳು ಬಲ್ಲವಲ್ಲದೆ
ಹೊರಗಣ ಕೋಳಿಗಳೆತ್ತ ಬಲ್ಲವೊ ?
ಊಟದ ರುಚಿಯನು ನಾಲಗೆಯಲ್ಲದೆ ಕಲಸುವ ಕೈ ತಾನೆತ್ತ ಬಲ್ಲುದೊ?
ಕೂಟದ ಸುಖವನು ಯೌವನೆಯಲ್ಲದ ಬಾಲೆ ತಾನೆತ್ತ ಬಲ್ಲಳೊ ?
ಚಂದ್ರಸೂರ್ಯರಂತರಾಂತರವ ಖೇಚರರು ಬಲ್ಲರಲ್ಲದೆ
ಗಗನದೊಳಗಾಡುವ ಹದ್ದುಗಳು ತಾವೆತ್ತ ಬಲ್ಲವೊ ?
ಎಲೆ ಮಹಾಲಿಂಗ ಕಲ್ಲೇಶ್ವರಯ್ಯಾ.
ನಿಮ್ಮ ನಿತ್ಯನಿಜೈಕ್ಯರ ನಿಲುವನು ಮಹಾನುಭಾವಿಗಳು ಬಲ್ಲರಲ್ಲದೆ
ಲೋಕದ ಜಡಜೀವಿಗಳೆನಿಸುವ ಮಾನವರೆತ್ತ ಬಲ್ಲರೊ ?/23
ಉಪನಿಷದ್ವಾಕ್ಯವೆನಬಹುದಲ್ಲದೆ, ಆ ಪರಬ್ರಹ್ಮವೆನಬಾರದು
ಸಮತೆ ಸಮಾಧಾನವೆಂಬುದು ಯೋಗದಾಗು ನೋಡಾ.
ಸಮತೆ ಸಮಾಧಾನ ನೆಲೆಗೊಳ್ಳದಿರ್ದಡೆ, ಆ ಯೋಗ ಅಜ್ಞಾನದಾಗು.
ಅಷ್ಟಶಿಲೆ ಸಹಸ್ರ ಋಷಿಯರು ಸಮತೆ ಸಮಾಧಾನ ನೆಲೆಗೊಳ್ಳದೆ,
ನಾನಾ ಯೋನಿಯಲ್ಲಿ ಬಂದರು.
ಮಹಾಲಿಂಗ ಕಲ್ಲೇಶ್ವರದೇವಾ,
ಸಮತೆ ನೆಲೆಗೊಂಡು, ಸಮಾಧಾನ ಸಹಜವಾದುದೆ ಮುಕ್ತಿ ಕ್ಷೇತ್ರ./24
ಉರವೆ ಕುರುಕ್ಷೇತ್ರ, ಶಿರವೆ ಶ್ರೀಪರ್ವತ,
ಲಲಾಟವೆ ಕೇದಾರ, ಭ್ರೂನಾಸಿಕದ ಮದ್ಯವೆ ವಾರಣಾಸಿ ನೋಡಾ.
ಹೃದಯವೇ ಪ್ರಯಾಗ, ಸರ್ವಾಂಗವೆ ಸಕಲತೀರ್ಥಳಾಗಿ,
ಮಹಾಲಿಂಗ ಕಲ್ಲೇಶ್ವರನ ಶೃಣರ ಸುಳುಹು ಜಗವತ್ಪಾವನ. /25
ಎಡದ ಕೈಯಲ್ಲಿ ನಿಗಳ ಕಂಕಣನಿಕ್ಕಿ,
ಬಲದ ಕೈಯ ಕಡಿದುಕೊಂಡಡೆ, ನೋವಿನ್ನಾವುದು ಹೇಳಾ.
ಒಡಲೊಂದೆ ಪ್ರಾಣವೊಂದೆಯಾಗಿ, ನೋವಿನ್ನಾರದು ಹೇಳಾ.
ಲಿಂಗ ಜಂಗಮವನಾರಾಧಿಸಿ, ನಿಂದೆಗೆ ತಂದಡೆ ನೊಂದೆನಯ್ಯಾ,
ಮಹಾಲಿಂಗ ಕಲ್ಲೇಶ್ವರಾ./26
ಎತ್ತೆತ್ತ ನೋಡಿದಡತ್ತತ್ತ ನಿಮ್ಮನೆ ಕಾಬೆ.
ಎದ್ದು ನೋಡಿ ನಿಮ್ಮನೆ ಕಾಬೆ, ನಿದ್ರೆಗೆಯ್ದು ನಿಮ್ಮನೆ ಕಾಬೆ.
ಅಹೋರಾತ್ರಿಯಲ್ಲಿ ನಿಮ್ಮ ಧ್ಯಾನದಲ್ಲಿರಿಸು, ಮಹಾಲಿಂಗ ಕಲ್ಲೇಶ್ವರಾ /27
ಎನ್ನ ಕಕ್ಷೆಯಲ್ಲಿ ಸ್ವಾಯತವಾದನಯ್ಯಾ ಶಂಕರದಾಸಿಮಯ್ಯನು.
ಎನ್ನ ಕರಸ್ಥಲದಲ್ಲಿ ಸ್ವಾಯತವಾದನಯ್ಯಾ ಉರಿಲಿಂಗಪೆದ್ದಯ್ಯನು.
ಎನ್ನ ಉರಸೆಜ್ಜೆಯಲ್ಲಿ ಸ್ವಾಯತವಾದನಯ್ಯ ಘಟ್ಟಿವಾಳ ಮದ್ದಯ್ಯನು.
ಎನ್ನ ಅಮಳೋಕ್ಯದಲ್ಲಿ ಸ್ವಾಯತವಾದನಯ್ಯಾ ಅಜಗಣಯ್ಯನು.
ಎನ್ನ ಮುಖಸೆಜ್ಜೆಯಲ್ಲಿ ಸ್ವಾಯತವಾದನಯ್ಯಾ ನಿಜಗುಣದೇವರು.
ಎನ್ನ ಶಿಖೆಯಲ್ಲಿ ಸ್ವಾಯತವಾದನಯ್ಯಾ ಅನಿಮಿಷದೇವರು.
ಎನ್ನ ಘ್ರಾಣದಲ್ಲಿ ಸ್ವಾಯತವಾದನಯ್ಯಾ ಏಕೋರಾಮಿತಂದೆಗಳು.
ಎನ್ನ ಜಿಹ್ವೆಯಲ್ಲಿ ಸ್ವಾಯತವಾದನಯ್ಯಾ ಪಂಡಿತಾರಾಧ್ಯರು.
ಎನ್ನ ನೇತ್ರದಲ್ಲಿ ಸ್ವಾಯತವಾದನಯ್ಯಾ ರೇವಣಸಿದ್ದೇಶ್ವರದೇವರು.
ಎನ್ನ ತ್ವಕ್ಕಿನಲ್ಲಿ ಸ್ವಾಯತವಾದನಯ್ಯಾ ಸಿದ್ಧರಾಮೇಶ್ವರದೇರು.
ಎನ್ನ ಶ್ರೋತ್ರದಲ್ಲಿ ಸ್ವಾಯತವಾದನಯ್ಯಾ ಮರುಳಸಿದ್ಧೇಶ್ವರದೇವರು.
ಎನ್ನ ಹೃದಯದಲ್ಲಿ ಸ್ವಾಯತವಾದನಯ್ಯಾ ಪ್ರಭುದೇವರು.
ಎನ್ನ ಭ್ರೂಮಧ್ಯದಲ್ಲಿ ಸ್ವಾಯತವಾದನಯ್ಯಾ ಚೆನ್ನಬಸವಣ್ಣನು.
ಎನ್ನ ಬ್ರಹ್ಮರಂಧ್ರದಲ್ಲಿ ಸ್ವಾಯತವಾದನಯ್ಯಾ ಸಂಗನಬಸವಣ್ಣನು.
ಎನ್ನ ಉತ್ತಮಾಂಗದಲ್ಲಿ ಸ್ವಾಯತವಾದನಯ್ಯಾ ಮಡಿವಾಳಯ್ಯನು.
ಎನ್ನ ಲಲಾಟದಲ್ಲಿ ಸ್ವಾಯತವಾದನಯ್ಯಾ ಸೊಡ್ಡಳ ಬಾಚರಸರು.
ಎನ್ನ ಪಶ್ಚಿಮದಲ್ಲಿ ಸ್ವಾಯತವಾದನಯ್ಯಾ ಕಿನ್ನರ ಬ್ರಹ್ಮಯ್ಯನು.
ಎನ್ನ ಸರ್ವಾಂಗದಲ್ಲಿ ಸ್ವಾಯತವಾದನಯ್ಯಾ ಗಣಂಗಳು.
ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಶರಣರ ಶ್ರೀಪಾದಕ್ಕೆ
ನಮೋ ನಮೋ ಎನುತಿರ್ದೆನು. /28
ಎನ್ನ ಗುರುವೆನ್ನ ಪ್ರಾಣಲಿಂಗವ
ಕರುಣದಿಂದನುಗ್ರಹವ ಮಾಡಿದ ಪರಿ ಎಂತೆಂದಡೆ :
ಪಚ್ಚೆಯ ನೆಲಗಟ್ಟಿನ ಮೇಲೆ ಚೌಮೂಲೆಯ ಸರಿಸದಲ್ಲಿ.
ಷೋಡಶ ಕಂಬಂಗಳ ಮಂಟಪವ ಮಾಡಿ,
ಮಧ್ಯದಲ್ಲಿ ಕುಳ್ಳಿರ್ದು ಉಪದೇಶದ ಪಡೆಯಲೆಂದು ಹೋದಡೆ,
ಎನ್ನಂತರಂಗದಲ್ಲಿ ಚತುಷ್ಕೋಣೆಯ ಚತುರ್ದಳದ ನೆಲಗಟ್ಟಿನ ಮೇಲೆ
ಷೋಡಶಕಲೆಗಳೆಂಬ ಹದಿನಾರುಕಂಬವ ನೆಟ್ಟು,
ಧ್ಯಾನ ವಿಶ್ರಾಮದ ಮೇಲೆ ಆದಿಮಧ್ಯತ್ರಿಕೂಟವೆಂಬ ಮಂಟಪವನಿಕ್ಕೆ,
ಆ ಮಂಟಪಸ್ಥಾನದಲ್ಲಿ ಎನ್ನ ಗುರು ಕುಳ್ಳಿರ್ದು ಅನುಗ್ರಹವ ಮಾಡಿದಡೆ,
ನುಡಿಯಡಗಿದ, ಒಡಲಳಿದ ಸ್ವಯಲಿಂಗಸಂಬಂಧವಾದ ಭೇದವ
ಮಹಾಲಿಂಗಕಲ್ಲೇಶ್ವರಾ, ನಿಮ್ಮ ಶರಣ ಬಲ್ಲ./29
ಎಲ್ಲವನರಿದು ಇಲ್ಲವೆ ತಾನಾದ, ಅಲ್ಲಹುದೆಂಬುದಕ್ಕೆ ಸಹಜನಾದ.
ಆಕಾರವ ನಿರಾಕರಿಸ, ನಿರಾಕಾರವ ಪತಿಕರಿಸ,
ಭಾವದಾಕಾರವನೇನೆಂದರಿಯ,
ಮುಂದೆ ಬಲ್ಲೆವೆಂಬನುಭಾವಿಗಳ ಮಾತುಗುಷ್ಟ
ನಾರೂದ ಕಂಡು, ಮಹಾಲಿಂಗ ಕಲ್ಲೇಶ್ವರಾ,
ನಿಮ್ಮ ಶರಣ ಶಬ್ದಮುಗ್ಧವಾದ./30
ಏಕ ಏವ ರುದ್ರ ನ ದ್ವಿತೀಯಃ’ನೆಂಬ ಶ್ರುತಿ, ಲಿಂಗಭಕ್ತನೆ ದೇವನೆಂದಿತ್ತು.
`ಅಪಿ ವಾಯಶ್ಚಂಡಾಲೊ’ಯೆಂಬ ಶ್ರುತಿ, ಲಿಂಗಭಕ್ತನೆ ಕುಲಜನೆಂದಿತ್ತು.
`ಘ್ರಾತಂ ಜಿಘ್ನಂತಿ’ಯೆಂಬ ಶ್ರುತಿ, ಲಿಂಗಪ್ರಸಾದವೆ ಪರವೆಂದಿತ್ತು.
ಇದನೋದಿ ಬರುದೊರೆವೋದಿರಿ,
ಶ್ರುತಿಬಾಹ್ಯರಾದಿರಿ, ಶಿವಭಕ್ತಿಯಿಲ್ಲದೆ ಹೋದಿರಿ.
ಗುರುಲಿಂಗಜಂಗಮ ಪಾದೋದಕ ಪ್ರಸಾದವ
ಧರಿಸುವನೆ, ಭಜಿಸುವನೆ, ಕುಲಜನೆಂದು ಶ್ರುತಿ ಸಾರುತ್ತಿದೆ.
ಇದುಕಾರಣ,
ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಶರಣಂಗೆ ಮಿಗೆ ಮಿಗೆ ಶರಣೆಂಬೆ./31
ಒಂದಹದು ಒಂದನಲ್ಲಾಯೆಂಬುದು ಭಕ್ತಿಯ ಸತ್ಯಕ್ಕೆ ಅದೇ ಭಂಗ.
ಮಿಥ್ಯತಥ್ಯವನಳಿದವಂಗೆ, ಮತ್ತೊಂದರಲ್ಲಿ ಹೊತ್ತು ಹೋರುವುದೆ ಸತ್ಯವಲ್ಲ.
ಅದು ಮಹಾಲಿಂಗ ಕಲ್ಲೇಶ್ವರಲಿಂಗಕ್ಕೆ ದೂರವಪ್ಪುದು,/32
ಒಲಿದೊಲಿಸಿಕೊಳ್ಳಬೇಕು, ಒಲ್ಲದಿಲ್ಲದಿಲ್ಲ.
ಹಲವು ಕೊಂಬಿಂಗೆ ಹಾರದಿರು, ಮರುಳೆ.
ಅಟ್ಟಿ ನೋಡುವ, ಮುಟ್ಟಿ ನೋಡುವ, ತಟ್ಟಿ ನೋಡುವ, ಒತ್ತಿ ನೋಡುವ.
ಅಟ್ಟಿದಡೆ ತಟ್ಟಿದಡೆ, ನಿಷ್ಠೆಯಂ ಬಿಡದಿರ್ದಡೆ,
ತನ್ನನೀವ, ಮಹಾಲಿಂಗ ಕಲ್ಲೇಶ್ವರ./33
ಒಳಗೆ ಶೋಧಿಸಿ, ಹೊರಗಳವಡಿಸಿ,
ಭಾವದಿಂ ಗುಡಿ ತೋರಣವ ಕಟ್ಟುವೆನಯ್ಯಾ.
ಎನ್ನ ಲಿಂಗವೆ ಬಾರಯ್ಯಾ, ಎನ್ನ ದೇವ ಬಾರಯ್ಯಾ.
ಎನ್ನ ಅಂತರಂಗದ ಪರಂಜ್ಯೋತಿಲರ್ಿಂಗವ ಇದರುಗೊಂಬೆನು ಬಾರಯ್ಯಾ.
ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಧರ್ಮವು ಬಾರಯ್ಯಾ./34
ಕಂಗಳು ತುಂಬಿ ನಿಮ್ಮುವ ನೋಡುತ್ತ ನೋಡುತ್ತಲಯ್ಯಾ,
ಕಿವಿಗಳು ತುಂಬಿ ನಿಮ್ಮುವ ಕೇಳುತ್ತ [ಕೇಳುತ್ತ] ಲಯ್ಯಾ,
ಮನ ತುಂಬಿ ನಿಮ್ಮುವ ನೆನೆವುತ್ತ ನೆನೆವುತ್ತಲಯ್ಯಾ,
ಮಹಾಲಿಂಗ ಕಲ್ಲೇಶ್ವರದೇವರಲ್ಲಿ ಸುಖಿಯಾಗಿರ್ದೆನಯ್ಯಾ. /35
ಕತರ್ು ಭೃತ್ಯನ ವಾಸಕ್ಕೆಯಿದ್ದಲ್ಲಿ,
ಆತನ ಭಕ್ತಿಯನರಿತು, ತಾ ಒಡಗೂಡಿದಲ್ಲಿ,
ಆತ ಕೊಟ್ಟುದ ತಾ ಮುಟ್ಟದೆ,
ಆತನಲ್ಲಿ ದುರ್ವಾಕ್ಯ ದುಶ್ಚರಿತ್ರ ಪಗುಡಿ ಪರಿಹಾಸಕಂಗಳಂ ಬೀರದೆ,
ಆತನ ಚಿತ್ತನೋವಂತೆ ಮತ್ತಾವ ಬಂಧನದ ಕಟ್ಟನಿಕ್ಕದೆ,
ಕೃತ್ಯವೆಮಗೊಂದ ಮಾಡೆಂದು ನೇಮವ ಲಕ್ಷಿಸದೆ,
ಆತ ತನ್ನ ತಾನರಿತು ಮಾಡಿದಲ್ಲಿ,
ಅದು ತನಗೆ ಮುನ್ನಿನ ಸೋಂಕೆಂಬುದನರಿತು,
ಗನ್ನಗದುಕಿನಿಂ ಬಿನ್ನಾಣದಿಂದೊಂದುವ ಮುಟ್ಟದೆ,
ಆ ಪ್ರಸನ್ನವಪ್ಪ ವಸ್ತು, ಮಹಾಮಹಿಮ ಕಲ್ಲೇಶ್ವರಲಿಂಗ
ತಾನಾದ ಶರಣ./36
ಕರ್ಪುರದ ಕಳ್ಳನ ಹುಲ್ಲಿನಲ್ಲಿ ಕಟ್ಟಿಸಲು,
ಅಗ್ನಿಯೆಂಬ ಹಿತವ ಬಂದು ಬಿಡಿಸಲಾಗಿ,
ಪಾಶ ಬೆಂದು ಕಳ್ಳ ತನ್ನಲ್ಲಯೆ ಅಡಗಿದಂತೆ,
ಶರಣಂಗೆ ಬಯಲಪಾಶ ಬಂದು ಕಟ್ಟಿರಲು,
ಬಯಲಲಿಂಗ ಬಂದು ಬಿಡಿಸಲು, ಬಯಲು ಬಯಲು ಏಕವಾಯಿತ್ತು.
ಮಹಾಲಿಂಗ ಕಲ್ಲೇಶ್ವರನೆಂಬ ಸಂಪತ್ತು ಸದಾಶೂನ್ಯವಾಯಿತ್ತು./37
ಕಲುನಡೆಯ ಪಶುಗಳೈದೆ ಕರೆವ ಹಯನಪ್ಪಡೆ,
ಅಳೆಯ ಹಡೆಯದ ಲೋಕವೈ ಹೋಗಲೇಕೆ?
ಕೈದುವ ಹಿಡಿದವರೆಲ್ಲಾ ನೆಟ್ಟನೆ ಕಲಿಗಳಾದರೆ,
ಮಾರ್ಬಲಕಂಜಿ ತಿರುಗಲೇಕೆ?
ಇಷ್ಟಲಿಂಗವೆಂದು ಕಟ್ಟಿಕೊಂಡವರೆಲ್ಲಾ ನೆಟ್ಟನೆ ಭಕ್ತರಾದಡೆ
ಮುಟ್ಟಲಿಲ್ಲ, ದುರಿತ ದುಃಕರ್ಮ ಹುಟ್ಟಲಿಲ್ಲ ಭವದಲ್ಲಿ.
ಆದಿತ್ಯ ಪುರಾಣೇ : ಪೂಜಕಾ ಬಹವಸ್ಸಂತಿ ಭಕ್ತಾಶ್ಚತಸಹಸ್ರಶಃ |
ತತ್ರ ಪ್ರಸಾದಪಾತ್ರಸ್ತುದ್ವೌ ತ್ರಯೋ ಚತುಃ ಪಂಚವ್ಯೆ ||
ಇಂತೆಂದುದಾಗಿ,
ಪೂಜಕರು ಹಲಬರಹರು, ಭಕ್ತರು ಲಕ್ಷಸಂಖ್ಯೆಗಳು.
ಅಲ್ಲಿ ಪ್ರಸಾದ ಪಾತ್ರವಾಯಿತ್ತಾದಡೆ,
ಇಬ್ಬರು ಮೂವರಲ್ಲದೆ ಐವರರಿವರಿಲ್ಲ, [ಮಹಾಲಿಂಗ]ಕಲ್ಲೇಶ್ವರಾ./38
ಕಲ್ಲೊಳಗಣ ಕಿಚ್ಚು ಉರಿಯದ ಪರಿಯಂತೆ,
ಬೀಜದೊಳಗಣ ವೃಕ್ಷ ಉಲಿಯದ ಪರಿಯಂತೆ,
ಪುಷ್ಪದ ಕಂಪು ನನೆಯಲ್ಲಿ ತೋರದಂತೆ,
ಚಂದ್ರಕಾಂತದ ಉದಕ ಒಸರದ ಪರಿಯಂತೆ,
ಮಹಾಲಿಂಗ ಕಲ್ಲೇಶ್ವರನಲ್ಲಿ ಲಿಂಗೈಕ್ಯ.
ಇಹವೆನ್ನ ಪರವೆನ್ನ ಸಹಜವೆನ್ನ ತಾನೆನ್ನ./39
ಕುಲಹೀನಶಿಷ್ಯಂಗೆ ಅನುಗ್ರಹವ ಕೊಟ್ಟು,
ತನ್ನ ಪ್ರಾಣಲಿಂಗವ ನಿಕ್ಷೇಪಿಸಿ, ಕರ್ಣಮಂತ್ರವ ಹೇಳಿ,
ಆ ಶ್ರೀಗುರು ಬಂದು, ಆ ಶಿಷ್ಯನ ಮನೆಯ ಹೊಗಲೊಲ್ಲದೆ,
ಅಕ್ಕಿ ತುಪ್ಪವ ನೀ [ಡಿ]ಸಿಕೊಂಡುಂಬವನ ಕೇಡಿಂಗಿನ್ನೇವೆನಯ್ಯಾ ?
ತನ್ನ ಪ್ರಾಣಲಿಂಗವನವರಿಗೆ ಕೊಟ್ಟು,
ತಾ ಹೋಗೆನೆಂಬ ವ್ರತಗೇಡಿಗಿನ್ನೇವೆನಯ್ಯಾ ?
ಅವನ ಧನಕ್ಕೆ ತಂದೆಯಾದನಲ್ಲದೆ, ಅವನ ಕುಲಕ್ಕೆ ತಂದೆಯಲ್ಲ.
ಇದು ಕಾರಣ, ಮಹಾಲಿಂಗ ಕಲ್ಲೇಶ್ವರಾ,
ಲಿಂಗವ ಮಾರಿಕೊಂಡುಂಬ ಭಂಗಗಾರರು ಕೆಟ್ಟ ಕೇಡನೇನೆಂಬೆನಯ್ಯಾ./40
ಕೂತಾಗ ಭಕ್ತ ಮುನಿದಾಗ ಮಾನವನಾದ ಪಾತಕರ ನುಡಿಯ ಕೇಳಲಾಗದು.
ಅಂಥ ಪಾತಕರ ಉಲುಹೆಂಬುದು, ಉಲಿವ ಕಬ್ಬಕ್ಕಿಯ ಉಲುಹಿನಂತೆ.
ಅದನು ಮಹಂತರು ಕೇಳಲಾಗದು.
ಅದಕ್ಕದು ಸ್ವಭಾವವೆಂಬುದ ಬಲ್ಲರಾಗಿ,
ಮತಿಗೆಟ್ಟು ನುಡಿವ ಮತ್ತರಹ ಮತ್ರ್ಯರ ನುಡಿಯ ಗಡಣೆ,
ಭ್ರಾಂತಿವಿಡಿದ ಭ್ರಮಿತರಿಗೆ ಯೋಗ್ಯವಲ್ಲದೆ,
ಸಜ್ಜನ ಸಾತ್ವಿಕ ಜ್ಞಾನವೇದ್ಯರಹ ಸದ್ಭಕ್ತರು ಮೆಚ್ಚವರೆ ?
ಅಸತ್ಯವೆ ರೂಪಾಗಿಪ್ಪ ಶೂನ್ಯವಾದಿಗಳೆತ್ತಲೂ ಸಲ್ಲರಾಗಿ
ಅವರುಗಳು ಪ್ರೇತಗಾಮಿಗಳು.
ಅಮೇಧ್ಯ ಕೂಪದಲ್ಲಿ ಉತ್ಪನ್ನವಾದ ಕ್ರಿಮಿಗಳಂತಪ್ಪ ಜೀವಿಗಳು
ತಾವಾರೆಂದರಿಯರು.
ಇಂದು ನಿಂದ ಗತಿಯ ತಿಳಿಯರು, ಮುಂದಣ ಗತಿಯನೆಂತೂ ಎಯ್ದಲರಿಯರು.
ಆತ್ಮನು ಶ್ವೇತ ಪೀತ ಹರಿತ ಕಪೋತ ಮಾಂಡಿಷ್ಟ ಕೃಷ್ಣರೆಂಬ
ಷಡ್ವರ್ಣದೊಳಗಾವ ವರ್ಣವೆಂದೂ ವಿಚಾರಿಸಲರಿಯರಾಗಿ,
ಭ್ರಾಂತುವಿಡಿದು ಆತ್ಮೋಹಮೆಂದು ಅಹಂಕರಿಸಿ,
ಅಜ್ಞಾನ ತಲೆಗೇರಿ, ಮತ್ತತನದಿಂದಜಾತ ಶಿವಶರಣರ ದೂಷಿಸಿ,
ಮಿಥ್ಯವಾದದಿಂದ ನುಡಿವರು ತಾವೆ ಘನವೆಂದು,
ಬಯಲಬೊಮ್ಮದ ಹಮ್ಮಿನ ನೆಮ್ಮುಗೆವಿಡಿದು,
ಸಹಜ ಸಮಾಧಾನ ಶಿವೈಕ್ಯರ ಹಳಿದು ನುಡಿವರು.
ಆದಿಯಲ್ಲಿ ಅಹಂ ಬ್ರಹ್ಮವೆಂದು ಬ್ರಹ್ಮನೆ ವಿಧಿಯಾದನು.
ಹರಗಣಂಗಳೊಳಗೆ ಅಗ್ರಗಣ್ಯ ಗಣೇಶ್ವರನಹ
ನಂದಿಕೇಶ್ವರನ ಉದಾಸೀನಂ ಮಾಡಿ,
ಆ ನಂದಿಕೇರ್ಶವರನ ಶಾಪದಿಂದ ಸನುತ್ಕುಮಾರನೆ ವಿಧಿಯಾದನು.
ಕರ್ಮವೆ ಅಧಿಕವೆಂದು ಕೆಮ್ಮನೆ ಕೆಟ್ಟ ಹೆಮ್ಮೆಯಲ್ಲಿ,
ದ್ವಿಜ ಮುನಿಗಳ ನೆರಹಿ ಕ್ರತುವ ಮಾಡಿ, ಆ ದೇವ ಮುನಿಗಳೊಳಗಾಗಿ,
ದಕ್ಷಂಗೆ ಬಂದ ಅಪಾಯವನರಿದು ಮರೆದರಲ್ಲಾ.
ಕುಬೇರನಿಂದಧಿಕವಹ ಧನ, ದೇವೇಂದ್ರನಿಂದಧಿಕವಹ ಐಶ್ವರ್ಯ,
ಸೂರ್ಯನಿಂದಧಿಕವಹ ತೇಜಸ್ಸು,
ಗಜ ಪಟೌಳಿ ಸೀತಾಂಗನೆಗತ್ಯಧಿಕವಹ
ರೂಪು ಲಾವಣ್ಯ ಸೌಂದರ್ಯವನುಳ್ಳ ಸ್ತ್ರೀಯರುಂಟು.
ಕೋಟಿವಿದ್ಯದಲ್ಲಿ ನೋಡುವಡೆ ಸಹಸ್ರವೇದಿಯೆನಿಸುವ ರಾವಣನು
ಪಾರದ್ವಾರಕಿಚ್ಛೈಸಿ ಪರವಧುವಿನ ದೆಸೆಯಿಂದಲೇನಾದನರಿಯರೆ !
ತನು ಕೊಬ್ಬಿನ ಮನ, ಮನ ವಿಕಾರದ ಇಂದ್ರಿಯ ವಿಷಯಂಗಳ
ಅಂದವಿಡಿದ ವಿಕಳತೆಯಲ್ಲಿ ನುಡಿವ ಸಟೆಗರ ಕಾಯಲರಿವವೆ ?
ನಿಮ್ಮಯ ಮನ ಸನ್ನಿಧಿಯಲ್ಲಿ, ಇಂತಿವೆಲ್ಲವ ಕಂಡೂ ಕೇಳಿಯೂ ಅರಿಯರು.
ಹರನ ಸದ್ಭಕ್ತರ ಕೂಡೆ ವಿರೋಧಿಸಿ, ನರಕವನು ಮುಂದೆ ಅನುಭವಿಸಿ,
ಇಂದು ಅಪಖ್ಯಾತಿಗೊಳಗಾಗಿ ಕೆಟ್ಟುಹೋಗಬೇಡ.
ಅತ್ಯಧಿಕ ಶಿವನೆ ಸತ್ಸದಾಚಾರವಿಡಿದು,
ನಿತ್ಯಪದವ ಪಡೆಯಿರೆ ಘಾಸಿ ಮಾಡುವನು ನಿಮ್ಮ ಸೋಜಿಗ.
ಸದಾಶಿವ ಬಲ್ಲಿದನೆನ್ನ ದೇವ ಮಹಾಲಿಂಗ ಕಲ್ಲೇಶ್ವರನು
ತನ್ನ ಭಕ್ತರೆ ಕೆಡೆನುಡಿದವರ ಬಿಡದೆ ದಂಡಿಸುವನು./41
ಕೂಪರ ಕೊಲುವಡೆ ಮಸೆದ ಕೂರಲಗು ಮತ್ತೇಕೆ ?
ಒಲ್ಲೆನೆಂದಡೆ ಸಲದೆ, ಕೊಲೆ ಮರಳಿ ಮತ್ತುಂಟೆ ?
ಮಹಾಲಿಂಗ ಕಲ್ಲೇಶ್ವರ ಒಲ್ಲೆನೆಂದಟ್ಟಿದಡೆ,
ತುಪ್ಪದಲ್ಲಿ ಕಿಚ್ಚ ನಂದಿಸಿದಂತಾಯಿತ್ತು./42
ಕೇಳಿರೆ ಕೇಳಿರೆ ಶಿವವಚನ, ಗುರುವಚನ.
ಪುರಾತರ ವಚನಾನುಭವ ಕೇಳಿ ಬದುಕಿರಯ್ಯಾ.
ಕೇಳಿದ ಸದ್ಭಕ್ತರೆಲ್ಲರು ಕೃತಾರ್ಥರಪ್ಪರು.
ತನು ಕರಗಿ, ಮನ ಕೊರಗಿ, ಭಾವ ಬೆಚ್ಚದೊ !
ಅಹಂಕಾರವಳಿದು, ಶರಣರ ಅನುಭಾವವ ಕೇಳಿದಡೆ,
ಅದೇ ಮುಕ್ತಿ ನೋಡಿರೆ,
ಇಂತಲ್ಲದೆ ಮನೋವ್ಯಾಕುಲನಾಗಿ, ತನುಮುಟ್ಟಿ ಕೇಳಿದಡೆ,
ಉಪದೇಶವೆಂತು ಸಲುವುದಯ್ಯಾ ?
ಎಂತಳವಡುವುದಯ್ಯಾ ?
ಮಹಾಲಿಂಗ ಕಲ್ಲೇಶ್ವರಾ, ಗುರುವಚನ ಪರಾಙ್ಮುಖಂಗೆ
ಎಂದೆಂದೂ ಭವ ಹಿಂಗದು ನೋಡಾ. /43
ಕೋಗಿಲೆಗಳು ಉಗ್ಘಡಿಸಲು ಮಾಮರಂಗಳ ಮೇಲೆ,
ತುಂಬಿಗಳು ಝೇಂಕಾರದಿಂ ಮೆರೆದು ಮೋಹರಿಸಲು,
ಮಂದಾನಿಲಗಳ ತನ್ನ ಬೇಹಿಗೆ ಕಳುಹಲು,
ಅನಂಗ ತನ್ನ ಬರವೆರಸಿ ಬಂದು ನಿಲಲು,
ರಸಭರಿತವಾಗಿರ್ದ ಪರಿಯ ಕಬ್ಬಿನ ಬಿಲ್ಲೇರಿಸಿ, ಕುಸುಮ ಸರವನೆ ತೊಟ್ಟು,
ಎಸಲಾರದೆ, ಬಿಲ್ಲು ಬೇರಾಗಿ, ಇವರೆಲ್ಲರ ಪರಿಯೆಂದು ಬಗೆದುಬಂದೆ,
ಕಾಮಾ ನಿಲ್ಲದಿರೈ.
ನಿನ್ನ ರೂಪ ಮಹಾಲಿಂಗ ಕಲ್ಲೇಶ್ವರದೇವ ಬಲ್ಲ.
ಸಿದ್ಧರಾಮ ನಿನ್ನಳವಲ್ಲ, ಎಲವೊ ಕಾಮಾ./44
ಕ್ಷೇತ್ರ ವಿಶೇಷವೊ, ಬೀಜವಿಶೇಷವೊ ? ಬಲ್ಲವರು ನೀವು ಹೇಳಿರೆ !
ಬೀಜವಿಶೇಷವೆಂದಡೆ ಕುಲದಲಧಿಕ ಸದ್ಬ್ರಾಹ್ಮಣನ ಸತಿ ಜಾರೆಯಾಗಿ,
ಶ್ವಪಚನ ರಮಿಸಲು.
ಆ ಬೀಜ ಗರ್ಭವಾಗಿ ಜನಿಸಿದ ಸುತಂಗೆ
ಬ್ರಾಹ್ಮಣ ಕರ್ಮದಿಂದ ಉಪನಯನ, ಬ್ರಹ್ಮಚರ್ಯ, ವೇದಾಧ್ಯಯನ,
ಅಗ್ನಿ ಹೋತ್ರ, ಯಜ್ಞಯಜನಕ್ಕೆ ಯೋಗ್ಯವಾಗನೆ ಆ ಸುತನು ?
ಕುಲದಲಧಿಕ ಬ್ರಾಹ್ಮಣನು ಚಂಡಾಲ ಸತಿಯ ರಮಿಸಲು,
ಜನಿಸಿದ ಸುತಂಗೆ ವಿಪ್ರಕರ್ಮ ಸಲ್ಲದೆ ಹೋಗದೆ ?
ಇದು ದೃಷ್ಟ. ಇದನತಿಗಳೆದ ವೇದಾದಿ ವಿದ್ಯಂಗಳ ಬಲ್ಲ
ಲೌಕಿಕ ವಿದ್ವಾಂಸರು ತಿಳಿದುನೋಡಿ ಹೇಳಿರೆ !
ಶ್ರುತಿ: ಜನ್ಮನಾ ಜಾಯತೇ ಶೂದ್ರಃ ಕರ್ಮಣಾ ದ್ವಿಜ ಉಚ್ಯತೇ |
ವೇದಾಧ್ಯಾಯೀ ಭವೇದ್ವಿಪ್ರಃ ಬ್ರಹ್ಮ ಚರತೇತಿ ಬ್ರಾಹ್ಮಣಃ |
ವಣರ್ೇನ ಜಾಯತೇ ಶೂದ್ರಃ ಸ್ತ್ರೀ ಶುದ್ರಾಶ್ಚ ಕಾರಣಾತ್ |
ಉತ್ಪತ್ತಿ ಶೂದ್ರ ಪುತ್ರಶ್ಚ ವಿಪ್ರಶೂದ್ರಂ ನ ಭುಂಯೇತ್ ||
ಇಂತೆಂದುದಾಗಿ,
ಇದು ಕಾರಣ, ಗುರು ಸದ್ಭಾವದಲುದಯಿಸಿದ
ಶಿವಜ್ಞಾನಬೀಜ ಸದ್ಭಕ್ತಿಯನಿಂಬುಗೊಂಡ
ಶಿಷ್ಯನ ಹೃದಯ ಮನ ಕರಣವೆಂಬ ಸುಕ್ಷೇತ್ರವು
ಕುಲಹೀನ ಸ್ತ್ರೀ, ಕುಲಯುಕ್ತ ಸ್ತ್ರೀಯರ ದೋಷಪಿಂಡದಂತಲ್ಲ.
ಎನ್ನ ಮಹಾಲಿಂಗ ಕಲ್ಲೇಶ್ವರನ ಶರಣರೆ ಅಜಾತರೆಂದಿಕ್ಕಿದೆ
ಮುಂಡಿಗೆಯನಾ, ಪರವೆತ್ತಿಕೊಳ್ಳಿರೆ./45
ಗುರು ಕರುಣ,. ಚರಣ ಸೇವೆ,
ಭವದ ಬಳ್ಳಿಯ ಬೀಜವನತಿಗಳೆಯಿತ್ತು,
ನೋಡ ನೋಡಲುದಯಿಸಿತ್ತು, ಘನಪದದ ತೋರಿತ್ತು,
ನಿರಾಕುಳ ನಿರುಹರಣ ಮಹಾಲಿಂಗ ಕಲ್ಲೇಶ್ವರದೇವಾ./46
ಗುರುಕರುಣಾಮೃತವಿಲ್ಲದ ಭಕ್ತಿಯ ಅನು,
ಮನದಲನುಕರಿಸುವ ಜೀವಿಗಿನ್ನೆಲ್ಲಿಯದೊ ?
ಸತ್ಕ್ರಿಯೆ ಸತ್ಪಥವಿನ್ನೆಲ್ಲಿಯದೊ ?
ಇದು ಕಾರಣ, ಮಹಾಲಿಂಗ ಕಲ್ಲೇಶ್ವರದೇವ
ಲಿಂಗ ಜಂಗಮ ಕರುಣವಿಲ್ಲದ ಜಡಮತಿಗಿನ್ನೆಲ್ಲಿಯದೊ ?/47
ಗುರುಲಿಂಗಜಂಗಮಕ್ಕೆ ಅರ್ಥ ಪ್ರಾಣ ಅಭಿಮಾನವಂ ಕೊಟ್ಟು,
ಅಹಂಕಾರವಳಿದಿಹಂಥ ಪ್ರಮಥಗಣಂಗಳು,
ಇಂದೆನ್ನ ಮನೆಗೆ ಬಂದಾರೆಂದು,
ಗುಡಿ ತೋರಣವ ಕಟ್ಟಿ, ಷಡುಸಮ್ಮಾರ್ಜನೆಯ ಮಾಡಿ,
ರಂಗವಾಲಿಯನಿಕ್ಕಿ, ಉಘೇ ಚಾಂಗುಭಲಾ ಎಂದುಗ್ಗಡಿಸುವೆನು,
ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಪುರಾತನರು
ತಮ್ಮೊಕ್ಕುದನಿಕ್ಕಿ ಸಲಹುವರಾಗಿ./48
ಗುರುವಿದೆ, ಲಿಂಗವಿದೆ, ಜಂಗಮವಿದೆ, ಪಾದತೀರ್ಥಪ್ರಸಾದವಿದೆ.
ಮತ್ತೆಯೂ ಬಳಲುತ್ತಿದ್ದೇನೆ, ಭಕ್ತಿ ಸಹಜವಳಡದಾಗಿ.
ಇದರ ಸಂದುಸಕೀಲವನರಿಯದೆ ಮತ್ತೆಯೂ ಬಳಲುತ್ತಿದ್ದೇನೆ,
ಮಹಾಲಿಂಗ ಕಲ್ಲೇಶ್ವರಯ್ಯಾ,
ಸಹಜ ಸದ್ಭಾವ ಸತ್ಯಶರಣರ ಮಹಾನುಭಾವರ ಸಂಗವಲ್ಲಾಗಿ./49
ಘನದ ವೇದಿಸಿದ ಮನ, ಮನವ ವೇದಿಸಿದ ಇಂದ್ರಿಯಂಗಳು,
ಇಂದ್ರಿಯಂಗಳ ವೇದಿಸಿದ ತನು, ತನುವ ವೇದಿಸಿದ ಪ್ರಸಾದ,
ಪ್ರಸಾದವ ವೇದಿಸಿದ ಪರಿಣಾಮ, ಪರಿಣಾಮವ ವೇದಿಸಿದ ತೃಪ್ತಿ,
ತೃಪ್ತಿಯ ವೇದಿಸಿದ ಇಷ್ಟಲಿಂಗ, ಇಷ್ಟಲಿಂಗವ ವೇದಿಸಿದ ಜ್ಞಾನ,
ಜ್ಞಾನವ ವೇದಿಸಿದ ನಿರ್ಮಲ ಶಿವಕ್ರಿಯೆ,
ನಿರ್ಮಲ ಶಿವಕ್ರಿಯೆ[ಯ] ವೇದಿಸಿದ ಶರಣಂಗೆ
ಇನ್ನು ವೇದ್ಯರುಂಟೆ, ಮಹಾಲಿಂಗ ಕಲ್ಲೇಶ್ವರಾ ?/50
ಜಂಗಮದ ಪಾದೋದಕವ ಲಿಂಗಮಜ್ಜನಕ್ಕೆರೆದು,
ಆ ಜಂಗಮದ ಪ್ರಸಾದವನೆ ಲಿಂಗಕ್ಕರ್ಪಿಸುವ
ಅವಿವೇಕಿಗಳು ನೀವು ಕೇಳಿರೆ !
ಅಟ್ಟೋಗರವನಟ್ಟೆನೆಂಬ, ಕಾಷ್ಠವ ಸುಟ್ಟ ಬೂದಿಯ
ಮರಳಿ ಸುಟ್ಟೆಹೆನೆಂಬ ಭ್ರಮಿತರು ನೀವು ಕೇಳಿರೆ !
ಪದಾರ್ಥ ಪ್ರಸಾದವಾದುದು ಇಷ್ಟಲಿಂಗ ಮುಖದಿಂದ.
ಆ ಇಷ್ಟಲಿಂಗವ ಸೋಂಕಿ ಬಂದ ಆದಿಪ್ರಸಾದವೆ
ಪ್ರಾಣಲಿಂಗಕ್ಕೆ ಅಂತ್ಯಪ್ರಸಾದ.
ಆ ಪ್ರಾಣಲಿಂಗಮುಖದಿಂದಲೊದಗಿದ ಅಂತ್ಯಪ್ರಸಾದವೆ
ಭಾವಲಿಂಗಕ್ಕೆ ತೃಪ್ತಿಮುಖದಲ್ಲಿ ಸೇವ್ಯ ಪ್ರಸಾದ.
ಇಂತೀ ಆದಿಪ್ರಸಾದ, ಅಂತ್ಯಪ್ರಸಾದ, ಸೇವ್ಯಪ್ರಸಾದ ಗ್ರಾಹಕವೆಂಬ ಜಂಗಮ
ಇಷ್ಟಲಿಂಗವಿಡಿದು ಗುರು, ಇಷ್ಟಲಿಂಗವಿಡಿದು ಭಕ್ತ,
ಇಷ್ಟಲಿಂಗವಿಡಿದು ಜಂಗಮ.
ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಿ,
ಪ್ರಸನ್ನ ಪ್ರಸಾದವ ಪಡೆದು, ಅಷ್ಟಭೋಗವ ಭೋಗಿಸುವಾತನೆ ಗುರು.
ಇಂತೀ ಆದಿಕುಳ ಮಹಾನಂದ ಪ್ರಸಾದದ ನಿಜಾನುಭಾವಿಯೆ ಜಂಗಮ.
ಇಂತೀ ಗುರು ಲಿಂಗ ಜಂಗಮದಲ್ಲಿ ಭಕ್ತಿ ನೆಲೆಗೊಂಡ
ನಿರುಪಾಧಿಕನೆ ಭಕ್ತ.
ಆ ಭಕ್ತನು ಲಿಂಗಮುಖದಲ್ಲಿ ಸಿದ್ಧಪ್ರಸಾದವ ಪಡೆದು ಭೋಗಿಸೂದು.
ಸ್ವಚ್ಛಂದ ಲಲಿತ ಭೈರವಿಯಲ್ಲಿ : ಲಿಂಗಾರ್ಪಿತ ಪ್ರಸಾದಂ ಚ ನದದ್ಯಾತ್ ಜಂಗಮಾದಿಷು |
ಜಂಗಮಸ್ಯ ಪ್ರಸಾದಂ ಚ ನ ದದ್ಯಾ ಲಿಂಗಮೂರ್ತಿಷು |
ಜಂಗನಸ್ಯ ಪ್ರಸಾದಂ ಚ ಸ್ವೇಷ್ಟಲಿಂಗೇನ ಚಾರ್ಪಯೇತ್ |
ಪ್ರಮಾದಾದರ್ಪಯೇದ್ದೇವಿ ಪ್ರಸಾದೋ ನಿಷ್ಫಲೋ ಭವೇತ್ ||
ಇಂತೆಂದುದಾಗಿ,
ಅಂದಾದಿಯಿಂದಾದಿಯಾಗಿ ಎಂದೆಂದೂ ಇದೇ ಪ್ರಸಾದದಾದಿಕುಳ.
ಈ ಆದಿಕುಳದರಿವುವಿಡಿದು ಪ್ರಸಾದವಿಡಿವ
ಮಹಾಪ್ರಸಾದ ಸಾಧ್ಯಗ್ರಾಹಕರಿಗೆ ನಮೋ ನಮೋ ಎಂಬೆ.
ಉಳಿದ ಉದ್ದೇಶಿಗಳೆನಿಸುವ ಭ್ರಾಂತರಹ ಜಾತ್ಯಂಧಕರಿಗೆ
ನಾನಂಜುವೆನಯ್ಯಾ, ಮಹಾಲಿಂಗ ಕಲ್ಲೇಶ್ವರಾ./51
ಜಾಗ್ರ ಸ್ವಪ್ನ ಸುಷುಪ್ತಿಗಳಲ್ಲಿ ತಟ್ಟುವ ಮುಟ್ಟುವ ತಾಗುನಿರೋಧ
ಕೊರೆತ ನೆರೆತಗಳ ಹಿಡಿವನೆ ಶಿವಶರಣನು ? ಹಿಡಿಯನು.
ಅದೇನು ಕಾರಣವೆಂದೆಡೆ, ಅದೆ[ಲ್ಲವೂ] ನಿನ್ನ ಮಾಯೆಯೆಂಬುದನು ಬಲ್ಲನಾಗಿ.
ಇದು ಕಾರಣ, ಮಹಾಲಿಂಗ ಕಲ್ಲೇಶ್ವರದೇವಾ,
ನಿಮ್ಮ ಶರಣರು ನಿಜಗಲಿಗಳು./52
ಜಾತಿಯಲ್ಲಿ ಅಧಿಕವೆಂದು ನುಡಿವರು ವಿಪ್ರಜನರು.
ಶ್ವಪಚ ಮಚ್ಚಿಗ ಬೋಯ ಕುಲಜರೆ ದ್ವಿಜರು ?
ಅಗಸ ಕಮ್ಮಾರ ನಾವಿದ ಕುಲಜರೆ ದ್ವಿಜರು ?
ಸರ್ವವೇದೇಷು ಶಾಸ್ತ್ರೇಷು ಸರ್ವಯಜ್ಞೇಷು ದೀಕ್ಷಿತಃ |
ಮಹಾಪಾತಕಕೋಟಿಘ್ನಃ ಶ್ವಪಚೋ ಲಿಂಗಪೂಜಕಃ |
ತತ್ಸಂಭಾಷಣತೋ ಮುಕ್ತಿಃ ಗಣಮುಖ್ಯಂ ಸುಖಂ ಭವೇತ್ ||
ಇಂತೆಂದುದಾಗಿ, ಲಿಂಗಭಕ್ತನೆ ಕುಲಜನು.
ಮಹಾಲಿಂಗ ಕಲ್ಲೇಶ್ವರನನಾರಾಧಿಸಿ ಪಡೆದರೆಲವೊ.
ಮರೆದಡೆ ಹುಳುಗೊಂಡದಲ್ಲಿಪ್ಪಿರೆಲವೊ/53
ತನುವ ಗುರುವಿಂಗಿತ್ತ, ಮನವ ಲಿಂಗಕಿತ್ತ, ಧನವ ಜಂಗಮಕಿತ್ತ,
ಎನ್ನ ಬಸವರಾಜನಯ್ಯ.
ಗುರುವಿನಲ್ಲಿ ಶುದ್ಧ, ಲಿಂಗದಲ್ಲಿ ಸಿದ್ಧ, ಜಂಗಮದಲ್ಲಿ ಪ್ರಸಿದ್ಧ
ಪ್ರಸಾದಿಯಯ್ಯಾ,
ಎನ್ನ ಬಸವರಾಜನ[ಯ್ಯ]
ಲಿಂಗದಲ್ಲಿ ದೀಕ್ಷೆ ಶಿಕ್ಷೆ ಸ್ವಾನುಭಾವ ಆಯತ ಸ್ವಾಯತ ಸನ್ನಹಿತ,
ಎನ್ನ ಬಸವರಾಜನಯ್ಯ.
ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಶರಣ ಬಸವರಾಜನಯ್ಯ. /54
ತನ್ನ ಗುಣವ ಹೊಗಳಬೇಡ, ಇದರ ಗುಣವ ಹಳೆಯಬೇಡ.
ಕೆಮ್ಮೆನೊಬ್ಬರ ನುಡಿಯಬೇಡ, ನುಡಿದು ನುಂಪಿತನಾಗಬೇಡ.
ಇದಿರ ಮುನಿಯಿಸಬೇಡ, ತಾ ಮುನಿಯಬೇಡ.
ತಾನು ಬದುಕವೈಸುದಿನ, ಸಮತೆ ಸಮಾಧಾನ ತುಂಬಿ ತುಳುಕದಿರಬೇಕು.
ಮಹಾಲಿಂಗ ಕಲ್ಲೇಶ್ವರದೇವರ ನಿಚ್ಚಳ ನಿಜವನರಿದಡೆ,
ಬಚ್ಚಬರಿಯ ಸಹಜ ಸಮಾಧಾನವಳವಟ್ಟಿರಬೇಕು./55
ತಾನಿಲ್ಲದ ಮುನ್ನ ಗುರುವೆಲ್ಲಿಹುದೊ ?
ಲಿಂಗವೆಲ್ಲಿಹುದೊ ? ಜಂಗಮವೆಲ್ಲಿಹುದೊ ?
ಪ್ರಸಾದವೆಲ್ಲಿಹುದೊ ? ಪಾದೋದಕವೆಲ್ಲಿಹುದೊ ?
ಪರವೆಲ್ಲಿಹುದೊ ? ಸ್ವಯವೆಲ್ಲಿಹುದೊ ?
ತನಗೆ ತೋರಿದ ಗುರು, ತನಗೆ ತೋರಿದ ಲಿಂಗ,
ತನಗೆ ತೋರಿದ ಜಂಗಮ, ತನಗೆ ತೋರಿದ ಪ್ರಸಾದ,
ತನಗೆ ತೋರಿದ ಪಾದೋದಕ,
ತನಗೆ ತೋರಿದ ಪರವು, ತನಗೆ ತೋರಿದ ಸ್ವಯವು.
ಗುರುವೆಂದರಿದವನೂ ತಾನೆ,
ಲಿಂಗವೆಂದರಿದವನೂ ತಾನೆ, ಜಂಗಮವೆಂದರಿದವನೂ ತಾನೆ.
ಪ್ರಸಾದವೆಂದರಿದವನೂ ತಾನೆ, ಪಾದೋದಕವೆಂದರಿದವನೂ ತಾನೆ,
ಪರವೆಂದರಿದವನೂ ತಾನೆ, ಸ್ವಯಂವೆಂದರಿದವನೂ ತಾನೆ,
ಇಂತಿವೆಲ್ಲವ ಪೆತ್ತರಿವು ತಾನೆ ಸ್ವಯಂಜ್ಯೋತಿ, ಮಹಾಲಿಂಗ ಕಲ್ಲೇಶ್ವರಾ./56
ದಾನಿಯಾದಡೇನು ಅವನು ಬೇಡಿದಲ್ಲದರಿಯಬಾರದು.
ರಣರಂಗ ಧೀರನಾದಡೇನು ಅಲಗಲಗು ಹಳಚಿದಲ್ಲದರಿಯಬಾರದು.
ಸ್ನೇಹವಾದಡೇನು ಅಗಲಿದಲ್ಲದರಿಯಬಾರದು.
ಹೇಮಜಾತಿಯಾದಡೇನು ಒರೆದಲ್ಲದರಿಯಬಾರದು.
ಮಹಾಲಿಂಗ ಕಲ್ಲೇಶ್ವರನ ಘನವನರಿದೆಹೆನೆಂದಡೆ,
ಸಂಸಾರಸಾಗರವ ದಾಂಟಿದಲ್ಲದರಿಯಬಾರದು./57
ದೀಕ್ಷಾಮೂರ್ತಿಗರ್ುರುಲರ್ಿಂಗಂ ಪೂಜಾಮೂರ್ತಿಃ ಪರಶ್ಶಿವಃ |
ದೀಕ್ಷಾಂ ಪೂಜಾಂ ಚ ಶಿಕ್ಷಾಂ ಚ ಸರ್ವಕತರ್ಾ ಚ ಜಂಗಮಃ ||
ಎಂದುದಾಗಿ,
ಪಂಚಭೂತ ಅರಿಷಡ್ವರ್ಗದುರವಣೆಯ ನಿಲಿಸಿ,
ಭೀತಿ ಪ್ರೀತಿ ಪ್ರೇಮ ಕಾಲೋಚಿತವನರಿದು,
ಕಿಂಕಿಲನಾಗಿ, ನಿರುಪಾಧಿಕನಾಗಿ ದಾಸೋಹ ಮಾಡುವಲ್ಲಿ ಭಕ್ತನು.
ಅನ್ಯದೈವ ಪರವಧು ಪರಧನವಂ ಬಿಟ್ಟು,
ಇಹಪರದಲ್ಲಿಯ ಭೂಕ್ತಿ ಮುಕ್ತಿಗಳಾಶೆಇಲ್ಲದೆ,
ಏಕೋನಿಷ್ಠೆ ಗಟ್ಟಿಗೊಂಡು ಮಾಹೇಶ್ವರನಾಗಿರಬೇಕು.
ಕಾಯದ ಮರದಲ್ಲಿ ಇಷ್ಟಲಿಂಗಾರ್ಪಿತ.
ಮನ ಮೊದಲಾದ ಕರಣಂಗಳನು ಒಂದೆ ಮುಖದಲ್ಲಿ ನಿಲಿಸಿ,
ಅವಧಾನವಳವಟ್ಟ ರುಚಿಯನು ಜಿಹ್ವೆಯ ಕರದಿಂದಲರ್ಪಿಸುವಲ್ಲಿ
ಪ್ರಾಣಲಿಂಗಾರ್ಪಿತ.
ತಟ್ಟುವ ಮುಟ್ಟುವ ನಿರೂಪವಹ ಸರ್ವವನು ಜಾನುಮುಖದಲ್ಲಿ
ಭಾವದ ಕರದಿಂದ ಲಿಂಗ ಮುಂದು ಭಾವ ಹಿಂದಾಗಿ,
ತೃಪ್ತಿಲಿಂಗಕ್ಕರ್ಪಿಸುವಲ್ಲಿ ಭಾವಲಿಂಗಾರ್ಪಿತ.
ಇಂತೀ ಅರ್ಪಿತತ್ರಯದ ಅನುಭಾವ ವತ್ಸಲನಾಗಿ,
ಅರ್ಪಿತವನರಿತು ಅನರ್ಪಿತ ನಷ್ಟವಾದಲ್ಲಿ ಪ್ರಸಾದಿ.
ಮನ ಬದ್ಧಿ ಚಿತ್ತ ಅಹಂಕಾರದ ಗುಣವಳಿದು,
ಪ್ರಾಣಚೈತನ್ಯದೊಳು ವಾಯುವಿನೊಳಡಗಿದ ಪರಿಮಳದಂತೆ,
ಲಿಂಗಚೈತನ್ಯ ನೆಲೆಗೊಂಡಿಪ್ಪಲ್ಲಿ ಪ್ರಾಣಲಿಂಗಿ.
ಪಂಚೇಂದ್ರಿಯಂಗಳ ಸಂಚವ ನಿಲಿಸಿ, ಲಿಂಗೇಂದ್ರಿಯವೆನಿಸಿತ್ತು.
ಸಪ್ತಧಾತುವಿನ ಉರವಣೆಯಂ ಮೆಟ್ಟಿ,
ಪ್ರಸನ್ನ ಲಿಂಗದ ಪರಮಸುಖಕ್ಕೆ ರತಿಭೋಗದಲ್ಲಿ ಸತಿಯಾಗಿರಲು ಶರಣ.
ಕಾಯಜೀವ, ಪುಣ್ಯಪಾಪ, ಇಹಪರವೆಂಬ ಭ್ರಮೆಯಳಿದು,
ಮಹಾಲಿಂಗದಲ್ಲಿ ಅವಿರಳಸಂಬಂಧವಾದಲ್ಲಿ ಲಿಂಗೈಕ್ಯನು.
ಈ ಷಡುಸ್ಥಲದ ಆದಿಕುಳವು ಆರಿಗೆಯೂ ಅಳವಡದು.
ಘನಕ್ಕೆ ಘನವು, ಲೋಕ ಲೌಕಿಕರಿಗಸಾಧ್ಯ.
ನಿಮ್ಮ ಶರಣರಿಗೆ ಸುಲಭ ಕಾಣಾ, ಮಹಾಲಿಂಗ ಕಲ್ಲೇಶ್ವರಾ.
ಈ ಷಡುಸ್ಥಲಕ್ಕೆ ಒಡಲಾಗಿ, ಭಕ್ತಿಭಂಡಾರಿ ಬಸವಣ್ಣಂಗೆ
ಅಳವಡಿಸಿ ಮರೆದಿರಿ./58
ದೇಹದೊಳಗು ದೇಹವಿದ್ದು, ದೇಹ ಕರಣೇಂದ್ರಿಯಂಗಳ ಪ್ರೇರಿಸುವನು.
ಆ ಲೋಕದ ಆಗುಚೇಗೆ ತನಗಿಲ್ಲ. ಅದೆಂತೆಂದಡೆ :
ಕಮಲಪತ್ರ ಜಲದಂತೆ, ಆ ಕಹಳೆಯಲ್ಲಿಹ ನಾದದಂತೆ,
ಹುಡಿ ಹತ್ತದ ಗಾಳಿಯಂತೆ,
ನುಡಿ ಹತ್ತದ ಶಬ್ದದಂತಿಪ್ಪನಯ್ಯಾ ಶಿವನು,
ಸರ್ವಾಂತರ್ಯಾಮಿಯಾಗಿ ಮಹಾಲಿಂಗ ಕಲ್ಲೇಶ್ವರನು./59
ನಡೆವಲ್ಲಿ ಕಾಣದೆ ಎಡಹಿ, ಅರಿಕೆಯಲ್ಲಿ ಅರಿದ ಮತ್ತೆ
ನಡೆವಾಗ ಎಚ್ಚರಿಕೆ.
ಕಾಲಹುಣ್ಣು ಕತಿಕಿರಿವ ತೆರೆದಂತೆ,
ಮರವೆಯಿಂದ ಶರಣರಲ್ಲಿ ಬಿರುಬಿನ ಮಾತು ಬಂದಡೆ,
ಅದ ಒಡನೆ ತಿಳಿಯಬೇಕು.
ಅದು ಶರೀರದ ಪ್ರಕೃತಿ ಸಂಚಾರವೆಂದರಿತು,
ಬಿಡುವ ಗುಣವ ಬಿಟ್ಟು ಅರಿದಡೆ, ಭಕ್ತಿಗದೇ ಗುಣ.
ಬಟ್ಟೆಯಲ್ಲಿ ಭಯವೆಂದಡೆ ಎಚ್ಚರಿಕೆ ಬೇಕು.
ಮತ್ತೆ ಮರವೆಯ ಶರೀರಕ್ಕೆ ಅದು ಲಕ್ಷಣ.
ಮತ್ತೆ ಎಚ್ಚರಿಕೆ, ಮಹಾಲಿಂಗ ಕಲ್ಲೇಶ್ವರಾ./60
ನಿಃಕಲ ಪರತತ್ವವ ಮಹಾಲಿಂಗಕ್ಷೇತ್ರ.
ಆ ಕ್ಷೇತ್ರದಲ್ಲಿ ನಿಕ್ಷೇಪವಾಗಿ ನಿಧಾನಿಸಿದ್ದ ಘನಚೈತನ್ಯವೆ
ಷಟ್ಸ್ಥಲಲಿಂಗ ಮೂಲಾಂಕುರವೆನಿಸುವ ಪರಮಕಳೆ.
ಆ ಪರಮಕಳೆಯ ಪರಬ್ರಹ್ಮ ಪರಂಜ್ಯೋತಿ ಪರಾತ್ಪರ ಪರತತ್ವ,
ಪರಮಾತ್ಮ ಪರಮಜ್ಞಾನ ಪರಮಚೈತನ್ಯ
ನಿಃಕಲ ಚರವೆನಿಸುವ ಪರವಸ್ತು. ಶ್ರುತಿ :
ವರ್ಣಾತೀತಂ ಮನೋತೀತಂ ಭಾವಾತೀತಂ ಚ ತತ್ಪರಂ |
ಜ್ಞಾನಾತೀತಂ ನಿರಂಜನ್ಯಂ ತತ್ಕಲಾ ಸೂಕ್ಷ್ಮಭಾವತಃ ||
ಇಂತೆಂದುದಾಗಿ,
ಇಂತೀ ನಿರವಯ ಚರಲಿಂಗದ ಚೈತನ್ಯವೆಂಬ ಪ್ರಸನ್ನ ಪ್ರಸಾದಮಂ
ಇಷ್ಟಲಿಂಗಕ್ಕೆ ಕಲಾಸಾನಿಧ್ಯವಂ ಮಾಡಿ,
ಆ ಚರಲಿಂಗದ ಸಾಮರಸ್ಯ ಚರಣಾಂಬುವಿಂ ಮಜ್ಜನಕ್ಕೆರೆದು,
ನಿಜಲಿಂಗೈಕ್ಯವನೆಯ್ದಲರಿಯದೆ ಕಂಡವರ ಕಂಡು,
ತೀರ್ಥದಲ್ಲಿ ಮಂಡೆಯ ಬೋಳಿಸಿಕೊಂಡವರ ತೆರನಾದ
ಭಂಡರ ಮೆಚ್ಚವನೆ, ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಶರಣ ?/61
ನಿಮ್ಮ ನೆನವ ಮನಕ್ಕೆ ಜ್ಞಾನಸಿದ್ಧಿಯೆಂತಪ್ಪುದೆಂದರಿಯೆನಯ್ಯಾ.
ಕರ್ಮದೊಳಗಣ ಬಯಲಮೋಹವೆನ್ನ ಬೆನ್ನ ಬಿಡದು.
ಅನ್ಯವಿಷಯ ಭಿನ್ನ ರುಚಿಯಲೆನ್ನ ಮನವು ಹರಿವುದ ಮಾಣದನ್ನಕ್ಕರ,
ನಿಮ್ಮ ನೆನೆದೆಹೆನೆಂಬ ಮನದ ಕಲಿತನವ ನೋಡಾ,
ಮಹಾಲಿಂಗ ಕಲ್ಲೇಶ್ವರಾ !/62
ಪರಮಪದವಿಯ ನಿಮ್ಮ ಕೊರಳಲ್ಲಿ ಕಟ್ಟಿಕೊಳ್ಳಿ.
ಪರಮಪದವಿಯ ನಿಮ್ಮ ಎದೆಯಲ್ಲಿ ಇರಿದುಕೊಳ್ಳಿ.
ಎನಗೆ ನಿಮ್ಮ ತೊತ್ತು ಸೇವೆಯೆ ಸಾಕು, ಮಹಾಲಿಂಗ ಕಲ್ಲೇಶ್ವರಾ./63
ಪರಮಪವಿತ್ರ ನಿರ್ಮಲಲಿಂಗ ತನ್ನ ಅಂಗದ ಮೇಲಿರುತ್ತಿರಲು,
ಅಂಗಶುದ್ಧ ಸೌಕರ್ಯವಿಲ್ಲದವನ ಮುಖವ ನೋಡಲಾಗದು.
ಅವನ ಮುಟ್ಟಲೆಂತೂ ಆಗದು.
ಮನದ ಮಲಿನವ ಕಳೆದು ಪ್ರಾಣಲಿಂಗವ ಧರಿಸಬೇಕು.
ತನುವಿನ ಮಲವ ಕಳೆದು ಇಷ್ಟಲಿಂಗವ ಧರಿಸಬೇಕು.
ಜೀವತ್ರಯಂಗಳ ಮಲವ ಕಳೆದು ಪ್ರಸಾದವ ಧರಿಸಬೇಕು.
ಮನದ ಮಲಿನವಾವುದೆಂದಡೆ ಮನವ್ಯಾಕುಲ.
ತನುವಿನ ಮಲಿನವಾವುದೆಂದಡೆ ತನುಗುಣವ್ಯಾಪ್ತಿ
ತನುತ್ರಯದ ಮಲಿನವಾವುದೆಂದಡೆ ಈಷಣತ್ರಯ.
ಜೀವತ್ರಯದ ಮಲವಾವುದೆಂದಡೆ ಅವಸ್ಥಾತ್ರಯ.
ಕರಣಂಗಳ ಮಲವಾವುದೆಂದಡೆ ಸಂಕಲ್ಪ ವಿಕಲ್ಪ.
ಅಸತ್ಯ ನಿಂಧ್ಯ ಮಿಥ್ಯವಾದ ಸತ್ಕಿರಿಸುತಿಹ, ಅನ್ಯರಿಗೆ ಕೈಯನಾನುಹ.
`ನಿರ್ಮಲಸ್ಯ ತು ನಿರ್ಮಾಲ್ಯಂ ಮಲದೇಹೀ ನ ಧಾರಯೇತ್’
ಎಂದುದಾಗಿ,
ಲಿಂಗವಿಪ್ಪ ಸುಕ್ಷೇತ್ರ ಕಾಯದ ಮಲಿನವ ಕಳೆದು, ಪ್ರಸಾದವ ಧರಿಸದಿದ್ದಡೆ,
ಭವಮಾಲೆ ಹಿಂಗದು, ನರಕ ತಪ್ಪದಯ್ಯಾ, ಮಹಾಲಿಂಗ ಕಲ್ಲೇಶ್ವರಾ./64
ಪರಸ್ತ್ರೀಯರ ರೂಪ ಕಾಯದ ಕಣ್ಣಿನಲ್ಲಿ ಕಂಡು,
ಮನ ಹರಿದು, ತನು ಕರಗಿ ಬೆರಸಿದ ಬಳಿಕ ಸಂಗವಲ್ಲದೇನು ಹೇಳಾ !
ಮನ ಬೆರಸಿ, ತನು ತಳಿತು, ಇಂದ್ರಿಯಂಗಳು ತುಳುಕಿದ ಬಳಿಕ,
ಸಂಗವಲ್ಲದೇನು ಹೇಳಾ ?
ಮಹಾಲಿಂಗ ಕಲ್ಲೇಶ್ವರ ಬಲ್ಲ ಸಿದ್ಧರಾಮನ ಪರಿಯ.
ಮನದ ಹಾದರಿಗನು ಶಬ್ದ ರುಚಿಕರನು./65
ಪೂರ್ವಜಾತವ ಕಳೆದು ಪುನರ್ಜಾತನಾದ ಬಳಿಕ, ಏನೆಂದೆನಲುಂಟೆ ?
ಭಕ್ತಕಾಯ ಮಮಕಾಯವಾದ ಬಳಿಕ, ಏನೆಂದೆನಲುಂಟೆ ?
ಅದೆಂತೆಂದಡೆ : ನ ಮುಕ್ತಿಶ್ಚ ನ ಧರ್ಮಶ್ಚ ನ ಪುಣ್ಯಂ ನ ಚ ಪಾಪಕಂ |
ನ ಕರ್ಮಾ ಚ ನ ಜನ್ಮಾ ಚ ಗುರೋರ್ಭಾವನೀರಿಕ್ಷಣಾತ್ ||
ಎಂದುದಾಗಿ,
ಇದು ಕಾರಣ, ಹಮ್ಮು ಬಿಮ್ಮು ಸೊಮ್ಮನಳಿದ,
ಮಹಾಲಿಂಗ ಕಲ್ಲೇಶ್ವರ ತಾನಾದ ಬಳಿಕ, ಏನೆಂದೆನಲುಂಟೆ ?/66
ಬಯಲಬೊಮ್ಮವ ನುಡಿವ,
ಆ ನುಡಿಯ ಬಯಲಭ್ರಮೆಯಲ್ಲಿ ಬಿದ್ದ ಜಡರುಗಳು
ಬಲ್ಲರೆ, ಶಿವನಡಿಗಳ ?
ಗುರುಲಿಂಗಜಂಗಮದ ಪಾದೋದಕ ಪ್ರಸಾದವೆಂಬ
ಪರಮಾಮೃತವ ಸವಿದು, ಪರವಶನಾದ ಪರಮಮುಗ್ಧಂಗಲ್ಲದೆ
ಪರವು ಸಾಧ್ಯವಾಗದು,
ಮಹಾಲಿಂಗ ಕಲ್ಲೇಶ್ವರನ ಶರಣ ಪೂರ್ವಾಚಾರಿ ಬಸವಣ್ಣಂಗಲ್ಲದೆ./67
ಬಯಲು ಮೊಳಗಿ, ಮಳೆ ಸೃಜಿಸೆ, ಆ ಬಯಲು ಆ ಮಳೆಯನೊಡಗೂಡಿ,
ದೃಷ್ಟವಪ್ಪ ವಾರಿಕಲ್ಲಾಗಿ ತೋರಿದಂತೆ, ನಿನ್ನ ನೆನಹೆ ನಿನಗೆ ಶಕ್ತಿಯಾಯಿತ್ತಲ್ಲಾ.
ಆ ನಿಮ್ಮಿಬ್ಬರ ಸಮರತಿಯೆ,
ನಿಮಗೆ ಅಖಂಡವೆಂಬ ನಾಮ ಸೂಚನೆಯಾಯಿತ್ತಲ್ಲಾ.
ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಆದಿಗೆ, ಇದೇ ಪ್ರಥಮವಾಯಿತ್ತಲ್ಲಾ./68
ಬರಿಯಜ್ಞಾನಿಗಳಾದವರು ಅಂಗದ ಬಲದಲ್ಲಿ ನುಡಿವರು.
ಲಿಂಗಾನುಭಾವಿಗಳು ಲಿಂಗದ ಬಲದಲ್ಲಿ ನುಡಿವರು.
ಜ್ಞಾನಿಗಳಲ್ಲದ ಸುಜ್ಞಾನಿಗಳಲ್ಲದವರು,
ಗಂಡನಿಲ್ಲದ ಮುಂಡೆಯರು, ಹಲಬರನುರುವಂತೆ,
ಹಿಂದನರಿಯದೆ ನುಡಿವರು, ಮುಂದನರಿಯದೆ ಅನುಭಾವವ ಮಾಡುವರು.
ಸದ್ಭಕ್ತರ ನುಡಿಗಳು ಲಿಂಗದ ನುಡಿಗಳು.
ಬರಿಯಜ್ಞಾನಿಗಳ ನುಡಿಗಳು ಗಾಳಿಯ ಶಬ್ದಂಗಳು.
ಮತಿಗೆಟ್ಟು, ಅವಗತಿಯಲ್ಲಿ ಕಾಲೂರಿ, ಆಯತಗೆಟ್ಟು
ನಾಯನಡೆಯಲ್ಲಿ ನಡೆವರು.
ಅವರು ಅನುಭಾವಿಗಳಪ್ಪರೇ ? ಅಲ್ಲಲ್ಲ.
ಆದೆಂತೆಂದಡೆ : ಸುಜ್ಞಾನಿಗಳಾದಡೆ, ಕಾಮವೆ ಪ್ರಾಣವಾಗಿಹರೆ ? ಅನ್ನವೆ ಜ್ಞಾನವಾಗಿಹರೆ ?
ವರುಣನ ಹೊದಿಕೆಯನೆ ಹೊದೆದು,
ಚಂದ್ರಮನ ತೆರೆಯಲೊರಗಿ,
ಪರದಾರಕ್ಕೆ ಕೈಯ ನೀಡುವರೆ, ಶರಣಾಗುವರೆ ?
ಇಂತವರಲ್ಲಯ್ಯ ನಮ್ಮ ಶರಣರುಗಳು.
ಇವರುಗಳು ಪಾತಕಿಗಳು, ಆಸೆಯ ಸಮುದ್ರರು,
ಅಂಗಶೃಂಗಾರಿಗಳು, ಭವಭಾರಿ ಜೀವಿಗಳು.
ಇವರೆಂತು ಸರಿಯಪ್ಪರಯ್ಯ, ಲಿಂಗಾನುಭವಿಗಳಿಗೆ ?
ಸರ್ವಾಂಗಲಿಂಗಿಗಳಾಗಿರ್ದ ಮಹಾನುಭಾವಿಗಳ ನಿಲುವನು,
ಮಹಾಲಿಂಗ ಕಲ್ಲೇಶ್ವರ ಬಲ್ಲನಲ್ಲದೆ, ತೂತಜ್ಞಾನಿಗಳೆತ್ತ ಬಲ್ಲರಯ್ಯ./69
ಬಾರೆ, ಏತಕ್ಕಯ್ಯ ? ನಿಮ್ಮ ಬರವ ಹಾರುತ್ತಿರ್ದೆನು.
ಸಾರೆ, ಏತಕ್ಕಯ್ಯ ? ನಿಮ್ಮ ಸರವ ಹಾರುತ್ತಿರ್ದೆನು.
ತೋರೆ, ಏತಕ್ಕಯ್ಯ ? ನಿಮ್ಮ ಲಿಂಗರೂಪು, ನಿಜಜ್ಞಾನವ.
ಪೂಜೆಗೊಂಬಾಗಲಲ್ಲದೆ ಎನ್ನ ಮನಕ್ಕೆ ಬರಲಾಗದೆ,
ಮಹಾಲಿಂಗ ಕಲ್ಲೇಶ್ವರಾ ?/70
ಬಾಲಕಿ ಹಾಲ ಸವಿದಂತೆ, ಮರುಳಿನ ಮನದ ನೆನಹಿನಂತೆ,
ಮೂಗ ಕಂಡ ಕನಸಿನಂತೆ, ಮೈಯರಿಯದ ನೆಳಲಿನಂತೆ,
ಬಂಜೆಯ ಮನದ ಸ್ನೇಹದಂತೆ,
ಮಹಾಲಿಂಗ ಕಲ್ಲೇಶ್ವರನಲ್ಲಿ ಎನಗೆ ಲಿಂಗೈಕ್ಯವು./71
ಬ್ರಾಹ್ಮಣ ಮೊದಲಾಗಿ ಶ್ವಪಚ ಕಡೆಯಾಗಿ, ಎಲ್ಲಿರಿಗೆಯೂ ಜನನವೊಂದೆ.
ಆಹಾರ ನಿದ್ರೆ ಭಯ ಮೈಥುನವೊಂದೆ, ಪುಣ್ಯಪಾಪವೊಂದೆ, ಸ್ವರ್ಗವೊಂದೆ.
ಬೇರೆಂಬ ಭಂಗಿತರು ನೀವು ಕೇಳಿರೆ !
ಅರಿವೇ ಸತ್ಕುಲ, ಮರವೇ ದುಃಕುಲ, ಅರಿವುವಿಡಿದು ಮನಪಕ್ಷ.
ಆಗಮವಿಡಿದು ಆಚಾರ, ಆಚಾರವಿಡಿದು ಸಮಯ.
ಅರಿದಡೆ ಶರಣ, ಮರೆದಡೆ ಮಾನವ.
ವಿಚಾರಿಸಿದಡೆ ಸಚರಾಚರವೆಲ್ಲವೂ ಪಂಚಭೂತಮಯ.
ಚಂದಿರಾದಿಗಳೊಳಗೊಂದು ಮನುಷ್ಯಜನ್ಮ.
ಸಪ್ತಧಾತು ಸಮಂಪಿಂಡಂ ಸಮಯೋನಿ ಸಮುದ್ಭುವಂ |
ಆತ್ಮಾ ಜೀವನಸಮಾಯುಕ್ತಂ ವರ್ಣಾನಾಂ ಕಿಂ ಪ್ರಯೋಜನಂ ||
ಎಂದುದಾಗಿ,
ಇದು ಕಾರಣ, ಮಹಾಲಿಂಗ ಕಲ್ಲೇಶ್ವರಾ.
ನಿಮ್ಮ ಶರಣರು ಅಜಾತಚರಿತ್ರರಾಗಿ,
ಆವ ಜಾತಿಯನೂ ಹೊದ್ದರು./72
ಭಕ್ತದೇಹಿಕ ದೇವನೆಂದಂಜದ ಮನವದೇನಪ್ಪದೊ ?
ಭಯವಿಲ್ಲದ ಭಕ್ತಿ, ನಯವಿಲ್ಲದ ಸಸಿ,
ಗುಣವಿಲ್ಲದ ನಂಟು ಮುಂದೇನಪ್ಪುದೊ ?
ಬಲ್ಲವರಿಗೆಲ್ಲವನು ಬಿನ್ನಾಣಿಗೆ ಬಿನ್ನಾಣಿ.
ಮಹಾಲಿಂಗ ಕಲ್ಲೇಶ್ವರನನೊಲಿಸಬಾರದು./73
ಭಕ್ತನೆಂಬ ನಾಮಧಾರಕಂಗೆ ಅವುದು ಪಥ್ಯ ವೆಂದಡೆ :
ಗುರುಭಕ್ತನಾದಡೂ ಜಂಗಮವನಾರಾಧಿಸೂದು,
ಗುರುಶಿಷ್ಯರಿಬ್ಬರ ಗುರುತ್ವವ ಮಾಡಿದವನಾಗಿ,
ಆಚಾರಭಕ್ತನಾದಡೂ ಜಂಗಮವನಾರಾಧಿಸೂದು,
ಆ ಗುರುಶಿಷ್ಯರಿಬ್ಬರನೂ ಸದಾಚಾರದಲ್ಲಿ ನಿಲಿಸಿ ತೋರಿದನಾಗಿ.
ಪ್ರಸಾದಭಕ್ತನಾದಡೆಯೂ ಜಂಗಮವನಾರಾಧಿಸೂದು,
ಆ ಗುರುಶಿಷ್ಯ ಸಂಬಂಧದಲ್ಲಿ
ಪ್ರಸಾದದುದ್ಭವವ ನಿರೂಪಿಸಿ ತೋರಿದನಾಗಿ.
ಲಿಂಗಭಕ್ತನಾದಡೂ ಜಂಗಮವನಾರಾಧಿಸೂದು,
ಗುರು ತನ್ನ ಲಿಂಗವನು ಆ ಶಿಷ್ಯಂಗೆ ಕೊಟ್ಟು
ತಾನು ವ್ರತಗೇಡಿಯಾಗಿ ಹೋಹಲ್ಲಿ, ಆ ಗುರುವಿಂಗೆ ಆ ಲಿಂಗಸಹಿತವೆ
ಅ ಶಿಷ್ಯನೆ ಸಾಹಿತ್ಯವ ಮಾಡಿ ತೋರಿದನಾಗಿ.
ಇಂತು ಆವ ಪ್ರಕಾರದಲ್ಲಿಯೂ ಜಂಗಮವೆ ಅಧಿಕವೆಂಬ ಉತ್ತರಕ್ಕೆ
ಇನ್ನಾವುದು ಸಾಕ್ಷಿಯೆಂದಡೆ : ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣನೈಕ್ಯ.
ಇಂತು ಷಟ್ಸ್ಥಲವಿಡಿದು ನಡೆವ ಭಕ್ತಂಗೆ
ಅನುಭವವಿಡಿದು ಮಾಡುವ ಸದಾಚಾರವೆ ಸದಾಚಾರ.
ಅನುಭವಕ್ಕೆ ಬಾರದೆ ಮಾಡುವ ಸದಾಚಾರವೆ ಅನಾಚಾರ.
`ಜ್ಞಾನಹೀನಾ ಕ್ರಿಯಾಸ್ಸವರ್ೇ ನಿಷ್ಫಲಾಃ ಶ್ರುಣು ಪಾರ್ವತಿ’
ಎಂದುದಾಗಿ,
ಇದು ಕಾರಣ, ಶಿವನಲ್ಲಿ ಏಕಾಂತದಿಂದ ಜಂಗಮಪ್ರಸಾದವ ಕೊಂಡು,
ಬಸವಣ್ಣನ ಪ್ರಸಾದವ ಕರುಣಿಸಿ ಕಾರುಣ್ಯವ ಮಾಡು,
ಮಹಾಲಿಂಗ ಕಲ್ಲೇಶ್ವರಾ./74
ಭಾಜನದಲ್ಲಿ ಅಳವಟ್ಟು, ಗಡನಿಸಿದ, ಪದಾರ್ಥಂಗಳ ರೂಪ
ತನ್ನ ಕರಣಂಗಳಲ್ಲಿ ಅವಧಾನ ನಿರೀಕ್ಷಣೆಯಿಂದ ನಿರೀಕ್ಷಿಸಿ,
ಲಿಂಗಾವಧಾನ ನಿರೀಕ್ಷಣೆಯಿಂದ ನಿರೀಕ್ಷಿಸಿ,
ಆ ಪದಾರ್ಥವನು ಲಿಂಗತನುವಿನ ಕರದಿಂದ ಮುಟ್ಟಿ,
ಪದಾರ್ಥದ ಮೃದು ಕಠಿಣ ಶೀತ ಉಷ್ಣಂಗಳ ಸೋಂಕನು
ಇಷ್ಟಲಿಂಗ ಮುಖದಲ್ಲಿ ಅರ್ಪಿಸಿ,
ರೂಪವರ್ಪಿಸುವಡೆ ಇಷ್ಟಲಿಂಗಾರ್ಪಿತ.
ಆ ಇಷ್ಟಲಿಂಗಮುಖದಿಂದರ್ಪಿತವಾದ ರೂಪಪ್ರಸಾದವನು
ರುಚಿಕರದಿಂದ ಪದಾರ್ಥಮಂ ಮಾಡಿ,
ಜಿಹ್ವೆಯೆಂಬ ಭಾಜನದಲ್ಲಿ
ಮಧುರ ಆಮ್ಲ ಲವಣ ಕಟು ಕಷಾಯ ತಿಕ್ತವೆಂಬ ಷಡ್ವಿಧ ರುಚಿಯನು
ಲಿಂಗಾವಧಾನ ಮನದಿಂದ ಜಿಹ್ವೆಯ ಚೈತನ್ಯವನ್ನರಿದು,
ಹೃದಯಕಮಲಪೀಠಿಕೆಯಲ್ಲಿಹ ಪ್ರಾಣೇಶ್ವರನಾದ ಪ್ರಾಣಲಿಂಗಕ್ಕೆ
ಕರಣಂಗಳು ಒಮ್ಮುಖವಾಗಿ ಅರ್ಪಿಸುವೊಡೆ ರುಚ್ಯರ್ಪಿತ
ಆ ರುಚಿಪ್ರಸಾದವನು ಪರಿಣಾಮ ಭಾಜನದಲ್ಲಿ
ಸಾವಧಾನ ಸಮರಸದಿಂದರ್ಪಿಸುವಲ್ಲಿ
ತೃಪ್ತಿ ಲಿಂಗಮುಖದಿಂದ ತೃಪ್ತಿಪ್ರಸಾದಿ.
ರೂಪಂ ಸಮರ್ಪಯೇ ಲಿಂಗೇ ರುಚಿಮಪ್ಯರ್ಪಯೇತ್ತಥಾ |
ಉಭಯಾರ್ಪಣ ಹೀನಶ್ಯ ಪ್ರಸಾದೋ ನಿಷ್ಫಲೋ ಭವೇತ್ ||
ಇಂತೆಂದುದಾಗಿ,
ಇದು ಕಾರಣ, ಪ್ರಸಾದದಾದಿ ಕುಳವ
ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಶರಣರೆ ಬಲ್ಲರು./75
ಮನಕೆ ತೋರದು ನೆನೆವಡನುವಲ್ಲ, ಘನಕ್ಕೆ ಘನವನೇನ ಹೇಳುವೆ ?
ಆರರಿಂದ ಮೀರಿದುದ, ಬೇರೆ ತೋರಲಿಲ್ಲದುದ,
ದೇವ ದಾನವ ಮಾನವರ ಬಲ್ಲತನದ ಬಗೆಯ ಮೀರಿದುದನೇನ ಹೇಳುವೆ ?
ಆದಿ ಮಧ್ಯಾಂತ ಶೂನ್ಯಂ ಚ ವ್ಯೋಮಾವ್ಯೋಮ ವಿವರ್ಜಿತಂ |
ಧ್ಯಾನಜ್ಞಾನ ದಯಾದೂಧ್ರ್ವಂ ಶೂನ್ಯಲಿಂಗಮಿತಿ ಸ್ಮೃತಂ ||
ಇಂತೆಂದುದಾಗಿ,
ಅರಿಯಬಾರದು, ಕುರುಹ ತೋರದು,
ತೆರಹಿಲ್ಲದ ಘನಮಹಾಲಿಂಗ ಕಲ್ಲೇಶ್ವರನ ನಿಜ./76
ಮನಮನವೇಕಾರ್ಥವಾಗದವರಲ್ಲಿ,
ತನುಗುಣ ನಾಸ್ತಿಯಾಗದವರಲ್ಲಿ,
ಬುದ್ಧಿಗೆ ಬುದ್ಧಿ ಓರಣವಾಗದವರಲ್ಲಿ,
ಭಾವಕ್ಕೆ ಭಾವ ತಾರ್ಕಣೆಯಾಗದವರಲ್ಲಿ,
ಶೀಲಕ್ಕೆ ಶೀಲ ಸಮಾನವಿಲ್ಲದವರಲ್ಲಿ,
ಅವರೊಡನೆ ಕುಳ್ಳಿರಲಾಗದು,
ಸಮಗಡಣದಲ್ಲಿ ಮಾತನಾಡಲಾಗದು.
`ಸಂಸರ್ಗತೋ ದೋಷಗುಣಾ ಭವಂತಿ’ ಎಂದುದಾಗಿ,
ಇದು ಕಾರಣ, ಮಹಾಲಿಂಗ ಕಲ್ಲೇಶ್ವರಾ,
ನಿಮ್ಮ ಸದ್ಭಕ್ತಿಯನರಿದವರ ಸಂಗದಿಂದ
ನಿಮಗಾನು ದೂರವಾಗಿಪ್ಪೆನಯ್ಯಾ./77
ಮಾಡಿದ ಮಾಟದೊಳಗೆ ನುಡಿ ಘನವಾಡದೆ ಭಕ್ತನೆ ? ಅಲ್ಲ.
ಶೀಲವ ಹೇಳಿ ಮಾಡಿಸಿಕೊಂಬನ್ನಕ್ಕರ ಶೀಲವಂತನೆ ? ಅಲ್ಲ.
ನೋಡಿ ಸಯಿಧಾನಬೇಕೆಂಬನ್ನಕ್ಕರ ನಿತ್ಯನೇಮಿಯೆ ? ಅಲ್ಲ.
ಶೀಲ, ಮೀಸಲು, ಭಾಷೆ ಲಿಂಗದೊಡಲು,
ಪ್ರಾಣ ಜಂಗಮವಾಗಿಪ್ಪ ಭಕ್ತಂಗೆ
ಮಹಾಲಿಂಗ ಕಲ್ಲೇಶ್ವರಲಿಂಗ ತಾನೆ ಪ್ರಾಣವಾಗಿಪ್ಪನು./78
ಮುಟ್ಟಿತ್ತು ಕೆಟ್ಟಿತ್ತೆಂದಡೆ,
ಇನ್ನರಸುವ ಠಾವಾವುದಯ್ಯಾ ?
ತನುವ ಮರೆದಡೆ, ನೆನಹಿನೊಳಗದೇನೊ ?
ಹಾವು ಪರೆಗಳೆದಡೆ, ವಿಷ ನಾಶವಪ್ಪುದೆ ?
ಶರಣನು ಕಾಯವೆಂಬ ಕಂಥೆಯ ಕಳೆದಡೆ, ಗತ ಮೃತವಹನೆ ?
ಅರಿವು ಲಿಂಗದಲ್ಲಿ ಪ್ರತಿಷ್ಠೆಯಾಗಿ, ನಿರ್ಲೇಪನಾಗಿ,
ಮಹಾಲಿಂಗ ಕಲ್ಲೇರ್ಶವರನಲ್ಲಿ ಲೀಯವಾದ ಶರಣ./79
ಮುನಿಸ ಮುನಿಸದಡೆ ಶ್ರೀಗಂಧದ ಮರುಡಿನಂತಿರಬೇಕವ್ವಾ.
ತೇದಡೆ ತೆಗೆದಡೆ ಚಂದನದ ಶೀತಲದ ಹಾಗೆಯಾಗಿರಬೇಕಪ್ಪಾ.
ಹೆಣಗುವಲ್ಲಿ ಕೈಹಿಡಿದು ಹೆಣಗುತ್ತಿರಬೇಕವ್ವಾ.
ಮಹಾಲಿಂಗ ಕಲ್ಲೇಶ್ವರನ ನೆರೆವ ಭರದಿಂ ನೊಂದು,
ಉದಕ ಮೇಲ್ವಾಯ್ದ ಹಾಗಿರಬೇಕವ್ವಾ./80
ರೂಪ ನಿರೂಪ ವಿಚಾರಿಸುವರು, ಸಾಕಾರ ನಿರಾಕಾರವ
ವ್ಯಾಪಾರಿಸುವರು.
ಅರಿವು ಮರವೆಯ ಕುರು[ಹ] ಹಿಡಿವರು, ಮನ ಘನವ ಸಂಬಂಧಿಸುವರು.
ಒಂದೆಂದಡೆ ನಾಮಗಳೆರಡಾಗಿವೆ, ಎರಡೆಂದಡೆ ಮೂರ್ತಿವೊಂದೆ.
ಒಂದೆರಡೆಂಬುದು ತನ್ನಿಂದಾಯಿತ್ತಾಗಿ,
ತಾನೇ ಮಹಾಲಿಂಗ ಕಲ್ಲೇಶ್ವರಾ./81
ಲಿಂಗಕ್ಕೆ ಕೊಟ್ಟು ಕೊಂಡಡೆ ಪ್ರಸಾದಿ.
ಜಂಗಮವಾರೋಗಣೆಯ ಮಾಡಿ, ಮಿಕ್ಕುದ ಕೊಂಡಡೆ ಪ್ರಸಾದಿ.
ಇದೇ ಪ್ರಸಾದದಾದಿ ಕಂಡಯ್ಯಾ.
ಲಿಂಗಕ್ಕೆ ಕೊಡದೆ, ಜಂಗಮಕ್ಕೆ ನೀಡಿ,
ಶೇಷಪ್ರಸಾದಮಂ ಪಡೆಯದೆ ಕೊಂಡಡೆ,
ಹುಳುಗೊಂಡದಲ್ಲಿಕ್ಕುವ, ಮಹಾಲಿಂಗ ಕಲ್ಲೇಶ್ವರದೇವರು./82
ಲಿಂಗಕ್ಕೆ ಹೊರೆ ಹೊರೆಯಲ್ಲದೆ,
ನಿಜಶಿಲೆಯ ದೀಪ್ತಿಯ ತರಂಗಕ್ಕೆ ಹೊರೆಯುಂಟೆ ?
ಸಂಸಾರಿಗೆ ಪ್ರಕೃತಿರಾಗದ್ವೇಷವಲ್ಲದೆ,
ಮನ ಮಹದಲ್ಲಿ ನಿಂದ ನಿಜಲಿಂಗಾಂಗಿಗೆ ಉಭಯದ ಸಂದುಂಟೆ ?
ಈ ಗುಣ ಲಿಂಗಾಂಗಿಯ ಸಂಗ,
ಮಹಾಮಹಿಮ ಕಲ್ಲೇಶ್ವರಲಿಂಗವು ತಾನಾದ ಶರಣ./83
ಲಿಂಗನಿಷ್ಠೆಯಿಲ್ಲದವರಂಗಳವ ಮೆಟ್ಟಲಾಗದು.
ಜಂಗಮನಿಷ್ಠೆಯಿಲ್ಲದವರೊಡನೆ ಮಾತನಾಡಲಾಗದು.
ಪ್ರಸಾದನಿಷ್ಠೆಯಿಲ್ಲದವರ ಸಹಪಙ್ತಿಯಲ್ಲಿ ಕುಳ್ಳಿರಲಾಗದು.
ಲಿಂಗಮುಖಕ್ಕೆ ಬಾರದ ರುಚಿ,ಕಿಲ್ಬಿಷ[ನೋಡಾ],
ಮುಟ್ಟಲಾಗದು, ಮಹಾಲಿಂಗ ಕಲ್ಲೇಶ್ವರನನೊಲಿಸುವ ಶರಣಂಗೆ./84
ಲಿಂಗರೂಪಿನ ಸಹಜದುದಯದ ತುಟ್ಟತುದಿಯ ತುರೀಯಾವಸ್ಥೆಯ
ಆಡಿ ರೂಪಿಸುವ, ಹಾಡಿ ರೂಪಿಸುವ ಅರಿವಿನುಪಚಾರವುಳ್ಳನ್ನಕ್ಕರ.
ಬಯಲು ಬಲಿದು ತಾನು ತಾನಾಗಿಪ್ಪ.
ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಶರಣನು./85
ಲಿಂಗರ್ಪಿತವಿಲ್ಲದೆ ಕೊಂಬ ಕರ್ಮಿಗಳು, ನೀವು ಕೇಳರೆ.
ಅನರ್ಪಿತವೇನ ಮಾಡದು ? ಅನರ್ಪಿತವೆಲ್ಲಿಗೈಯದು ?
ಶ್ರುತಿ:ಅಸಮಪ್ರ್ಯ ಪದಾರ್ಥಮ ಶಂಭೋಃ ಭುಂಕ್ತೇ ಉದಕಂ ಪಾತಿ ಚ |
ಸ್ವಮಾಂಸಮಸ್ಥಿ ಮೂತ್ರಂ ಚ ಭುಂಕ್ತೇ ಖಾದತಿ ಪಾತಿ ಚ |ಎಂದುದಾಗಿ ಇದು ಕಾರಣ
ಮಹಾಲಿಂಗ ಕಲ್ಲೇಶ್ವರ ದೇವರಿಗರ್ಪಿಸದೆ ಕೊಂಡಡೆ
ನಾಯ ಮಾಂಸ ನಾಯ ಎಲ್ಲು [ವ] ನಾಯ ಮೂತ್ರವನು
ತಿಂದು ಅಗಿದು ಕುಡೆದಂತೆ ಕಾಣಿಕೆ,
/86
ವೇದವನೋದಿದಡೇನು ? ಶಾಸ್ತ್ರಪುರಾಣಾಗಮಂಗಳ ಕೇಳಿದಡೇನು ?
ಗುರುಕಾರುಣ್ಯವಿಲ್ಲದವನು ಲಿಂಗವ ಮುಟ್ಟಿ ಪೂಜಿಸಲಾಗದು.
ಜಪತಪಧ್ಯಾನ ವಿಭೂತಿ ರುದ್ರಾಕ್ಷಿಯ ಧರಿಸಿದಡೇನು ?
ಅವನು ಪಂಚಮಹಾಪಾತಕನು, ಅವನ ಮುಖವ ನೋಡಲಾಗದು.
ಇದನರಿದು ಗುರುಕರುಣವಿಡಿದು ಮಾಡುವ ಪೂಜೆಯೇ ಶಿವಂಗೆ ಪ್ರೀತಿ.
ಇದನರಿಯದೆ ಗುರುಕರುಣವಿಲ್ಲದವ ಶಿವಲಿಂಗಪೂಜೆಯ ಮಾಡಿದನಾದಡೆ,
ಅಘೋರನರಕ ತಪ್ಪದು, ಮಹಾಲಿಂಗ ಕಲ್ಲೇಶ್ವರಾ./87
ವೇದವೆಂಬುದು ಮಾಯಿಕದ ಕೈಯ ವಿಕಾರದಲ್ಲಿ ಹುಟ್ಟಿತ್ತು.
ಆಗಮವೆಂಬುದು ಮಾಯಿಕದ ಬಾಯವಿಕಾರದಲ್ಲಿ ಹುಟ್ಟಿತ್ತು.
ಶಾಸ್ತ್ರವೆಂಬುದು ಮಾಯಿಕದ ದೇಹವಿಕಾರದಲ್ಲಿ ಹುಟ್ಟಿತ್ತು.
ಇದು ಕಾರಣ, ಇವ ತೂರಿ ಕಳೆದು ಮಹಾಸ್ಥಲದಲ್ಲಿ ನಿಂದವರುಗಳನಲ್ಲದೆ,
ಮಹಾಲಿಂಗ ಕಲ್ಲೇಶ್ವರದೇವರು[ವೊ]ಲ್ಲರು./88
ಶರಣಸಂಬಂಧವನರಿದ ಬಳಿಕ, ಕುಲಮದ ಛಲಮದವಿಲ್ಲ ಕಂಡಯ್ಯಾ.
ಲಿಂಗಸಂಬಂಧವನರಿದ ಬಳಿಕ, ಶೀಲಸಂಬಂಧವಿಲ್ಲ ಕಂಡಯ್ಯಾ.
ಪ್ರಸಾದಸಂಬಂಧವನರಿದ ಬಳಿಕ, ಇಹಪರಂಗಳೆಂಬವಿಲ್ಲ ಕಂಡಯ್ಯಾ.
ಮಹಲಿಂಗ ಕಲ್ಲೇಶ್ವರಾ, ಇಂತೀ ತ್ರಿವಿಧ ಸಂಬಂಧಕ್ಕೆ ಇದೇ ದೃಷ್ಟ./89
ಶಿಲಾಮೂರ್ತಿ ಸ್ಥಾವರ ಶಿವಕುಲ ದೈವಕೆಲ್ಲಕೂ ಒಲವರದಿಂದ ಹೋಹಲ್ಲಿ,
ಆ ದೈವದ ಬಲುಮೆಯ ಅವನ ಕುಲವಾಸಾ ಬಲುಮೆಯ ತೆರನೊ!
ಈ ಹೊಲಬ ತಿಳಿದು, ಗುರು ಚರವಪ್ಪ ವಸ್ತುಸಂಸಾರದ ಒಡಲೆಳೆಗಾಗಿ,
ಭಕ್ತನ ನೆಲೆಹೊಲವಾಸಕ್ಕೆ ಹಲುಬಿ ಬರಬಹುದು ? ಇದು ವಸ್ತುವಿನ ನೆಲೆಯಿಲ್ಲ.
ಕರ್ತೃ ಸಂಬಂಧಕ್ಕೆ ಸಲ್ಲ, ಮಹಾಮಹಿಮ ಕಲ್ಲೇಶ್ವರಲಿಂಗ
ಅವರುವನೊಲ್ಲ./90
ಶಿವ ತನ್ನ ನಿಜರೂಪವನು ಸದ್ಭಕ್ತರಿಗಲ್ಲದೆ ತೋರನೆಂಬುದು ವೇದ.
ಆ ಸದ್ಭಕ್ತನೆ ಬ್ರಾಹ್ಮಣ, ಆ ಸದ್ಭಕ್ತನೆ ಸತ್ಕುಲಜ,
ಆ ಸದ್ಭಕ್ತನೆ ಎನಗಿಂದಧಿಕನೆಂದು ಶ್ರೀರುದ್ರವೇದ ಬೊಬ್ಬಿಡುತ್ತಿದೆ.
ಯಾತೇ ರುದ್ರ ಶಿವ ತನೂರಘೋರಾ ಪಾಪಕಾಶಿನೀ |
ತಯಾನಸ್ತನುವಾ ಶಂತಮಯಾ ಗಿರೀಶಂ ತಾಭಿ ಚಾಕಶೀಃ ||
ಎಂದುದಾಗಿ, ಶಿವಲಿಂಗಭಕ್ತನಲ್ಲದೆ ಅತಃಪರವೊಂದು ಇಲ್ಲ ಕೇಳಿಭೋ.
ನಿಮ್ಮ ಮನದೊಳಗೆ ಯಜುವರ್ೇದ ಶ್ರುತಿಯ ವಿಚಾರಿಸಿ ನೋಡಿರಣ್ಣಾ.
ಓಂ ಸಪದಸ್ತ್ರೈದ್ರ್ಯಾವಾ ಭೂಮೀ ಜನಯನ್ ದೇವಃ
ಎಂದುದಾಗಿ, ಶೈವಪುರಾಣೇ : ಯಥಾ ಪಂಕೇ ಸರೋಜಂ ಚ ಯಥಾ ಕಾಷ್ಠೇ ಹುತಾಶನಃ |
ಸುಪ್ರತಿಷ್ಠಿ ತಲಿಂಗೇ ತು ನಯಥಾ ಪೂರ್ವಭಾವನಂ ||
ಮತ್ತಂ ಲೈಂಗೇ: ಶಿವದೀಕ್ಷಾಭಿಜಾತಸ್ಯ ಪೂರ್ವಜಾತಿಂ ನ ಚಿಂತಯೇತ್ |
ಯಥಾ ಸುವರ್ಣಪಾಷಾಣೇ ಭಕಶ್ಚಂಡಾಲವಂಶಜಃ ||
ಇಂತೆಂದು ಪುರಾಣವಾಕ್ಯಂಗಳು ಸಾರುತ್ತಿವೆ.
ಶಿಲಿಂಗಬಕ್ತನೇ ಶ್ರೇಷ್ಠನು.
ಶ್ವಪಚನಾದಡೆಯೂ ಆ ಲಿಂಗಭಕ್ತನೇ ಕುಲಜನು,
ಆ ಲಿಂಗಭಕ್ನೇ ಉತ್ತಮನಯ್ಯ, ಮಹಾಲಿಂಗಕಲ್ಲೇಶ್ವರಾ./91
ಶುಚಿಗಳು ಶುದ್ಧಾತ್ಮರೆಂಬರು ನಾವಿದನರಿಯೆವಯ್ಯಾ.
ಕಾಯವಿಡಿದು ಶುಚಿ ಶುದ್ಧಾತ್ಮನೊ ? ಜೀವವಿಡಿದು[ಶುಚಿ] ಶುದ್ಧಾತ್ಮನೊ ?
ಅವುದವಿಡಿದು ಶುಚಿ ಶುದ್ಧಾತ್ಮನು ಹೇಳಿರೆ !
ಕಾಯದ ಮಲವ ತೊಳೆದು ಶುದ್ಧವ ಮಾಡಬಲ್ಲಡೆ,
ಕಾಯ ಸಕಾಯ ನೋಡಿರೆ !
ಜೀವನ ಮಲವ ಕಳೆದು ಜೀವನ ಶುದ್ಧವ ಮಾಡಬಲ್ಲಡೆ,
ಜೀವನ ಶುದ್ಧಾತ್ಮನು ಕೇಳಿರೆ !
ಅಂತರಂಗಕ್ಕೆ ಭಾವ ಮನ ನಿರ್ಮಲ ಶುದ್ಧಿ.
ಬಹಿರಂಗಕ್ಕೆ ತನು ಕರಣುಂಗಳಳಿದುದೆ ಶುದ್ಧಿ
ಇದು ಕಾರಣ, ಮಹಾಲಿಂಗ ಕಲ್ಲೇಶ್ವರಾ,
ನಿಮ್ಮ ಶರಣರು ಒಳಗೂ ಹೊರಗೂ ಸರ್ವಾಂಗಲಿಂಗವಾಗಿ,
ಸರ್ವಶುಚಿ ಶುದ್ಧಾತ್ಮರು ಕೇಳಿರೆ !/92
ಶ್ರೀಗುರು ಶಿಷ್ಯಂಗೆ ಉಪದೇಶವ ಮಾಡುವಲ್ಲಿ,
ಲಿಂಗಕ್ಕೆ ಅರ್ಚನೆ ಪೂಜೆಗಳನು ಮಾಡಿ,
ಲಿಂಗಾರ್ಪಿತದಲ್ಲಿ ಅವಧಾನಪ್ರಸಾದ, ಭೋಗದಲ್ಲಿ ಸುಯಿಧಾನ,
ಗುರುವಿನಲ್ಲಿ ಜ್ಞಾನಸಿದ್ಧಿ, ಜಂಗಮದಲ್ಲಿ ನಿರ್ವಂಚನೆ, ಪ್ರೀತಿ ಪ್ರೇಮ ಪರಧನ ಪರಸ್ತ್ರೀ ಪರದೈವಕ್ಕೆರಗದೆ,
ನಿತ್ಯಲಿಂಗಾರ್ಚನೆಯು ಮಾಡೆಂದು ಉಪದೇಶಮಂ ಕೊಟ್ಟನಲ್ಲದೆ,
ಪಾದತೀರ್ಥದಲ್ಲಿ ಲಿಂಗಮಜ್ಜನಕ್ಕೆರೆದು
ಪ್ರಸಾದವನರ್ಪಿಸ ಹೇಳಿಕೊಟ್ಟನೆ, ಇಲ್ಲ.
ಆ ಭಕ್ತನು ತನು ಮನ ಧನವನು ಗುರುಲಿಂಗಜಂಗಮಕ್ಕೆ ಸವೆಸಿ,
ತನು ಸವೆಸಿ ಮನಲೀಯವಾಗಿ ಧನಲೋಭವಿಲ್ಲದೆ ಸಂದು ನಿಂದ,
ಪರಮವೈರಾಗ್ಯ ಉರವಣಿಸಿ ಈಷಣತ್ರಯದ ಆಸೆಯಳಿದು,
ಸೋಹಂ ಎಂದು ನಿಂದು ಹರಗಣಂಗಳಂ ನೆರಪಿ,
ಆಚಾರ ಕರ್ಪರ, ವಿಚಾರ ಕರ್ಪರ, ಅವಿಚಾರ ಕರ್ಪರ ವೇಷಮಂ ತಾಳಿ,
ಭಕ್ತ ಭಿಕ್ಷಾಂದೇಹಿ ಎಂದು ಭಕ್ತರ ಮಠದಲ್ಲಿ ಹೊಕ್ಕು,
ಲಿಂಗಾರ್ಚನೆಯಂ ಮಾಡಿ, ಲಿಂಗಪ್ರಸಾದಮಂ ಭೋಗಿಸಿ,
ಶಿವಕ್ಷೇತ್ರ ತೀರ್ಥಂಗಳಂ ಚರಿಸಿ,
ಲಿಂಗಧ್ಯಾನ ನಿರತನಾಗಿ ಇರಹೇಳಿದರಲ್ಲದೆ,
ಲಿಂಗಕ್ಕೆ ಪಾದತೀರ್ಥವ ಕೊಟ್ಟು, ಪ್ರಸಾದವನಿಕ್ಕ ಹೇಳೆ
ಮಾಡಿದ ನಿರ್ವಾಣದೀಕ್ಷೆಯುಂಟೆ ?
ಸಲಿಂಗೀ ಪ್ರಾಣಮುಕ್ತಶ್ಚ ಮನೋಮುಕ್ತಶ್ಚ ಜಂಗಮಃ |
ಪ್ರಸಾದೀ ಕಾಯಮುಕ್ತಶ್ಚ ತ್ರಿವಿಧಸ್ತತ್ವನಿರ್ಣಯಃ ||
ಇಂತೆಂದುದಾಗಿ,
ಈ ನಿರ್ಣಯ ವಚನವನರಿಯಬಲ್ಲಡೆ ಜಂಗಮ,
ಅಲ್ಲದಿದ್ದಡೆ ಭವಭಾರಿಯೆಂಬೆ, ಮಹಾಲಿಂಗ ಕಲ್ಲೇಶ್ವರಾ./93
ಶ್ರೀಗುರುಸ್ವಾಮಿ ಶಿಷ್ಯಂಗೆ ಅನುಗ್ರಹವ ಮಾಡುವಲ್ಲಿ,
ಹಸ್ತಮಸ್ತಕಸಂಯೋಗಕಾಲದಲ್ಲಿ,
ಪಂಚಕಳಶದ ನಿರ್ಮಲಜಲವ ತನ್ನ ಕರುಣಜಲವ ಮಾಡಿ,
ಆತನ ಜನ್ಮದ ಮೇಲಿಗೆಯ ಕಳೆಯಲು,
ತಾ ನಿರ್ಮಲನಾಗಿ ಲಿಂಗವ ಗ್ರಹಿಸಿದಲ್ಲಿ,
ಲಿಂಗಕ್ಕೆ ಮಜ್ಜನಕ್ಕೆರೆಯತೊಡಗಿ, ಮಜ್ಜನೋದಕವನರಿದೆ.
ಲಿಂಗಸ್ಪರುಶನದಿಂದ ಪಾದೋದಕವನರಿದೆ.
ಲಿಂಗಾರ್ಪಿತ ಭೋಗೋಪಭೋಗದಲ್ಲಿ ಅರ್ಪಿತ ಪ್ರಸಾದೋದಕವನರಿದೆ.
ಅರಿದು, ಅನ್ಯೋದಕವ ಮರದು, ನಿಮ್ಮಲ್ಲಿ ತದ್ಗತನಾಗಿರ್ದೆನಯ್ಯಾ,
ಮಹಾಲಿಂಗ ಕಲ್ಲೇಶ್ವರಾ./94
ಶ್ರೀರುದ್ರಾಕ್ಷಿಯ ಹಸ್ತ ತೋಳು ಉರ ಕಂಠ ಮೊದಲಾದ
ಸ್ಥಾನಂಗಳಲ್ಲಿ ಧರಿಸಿ,
ಶಿವಾರ್ಚನೆಯ ಮಾಡುವುದು ಸದಾಚಾರ, ಅದೇ ಸದ್ಯೋನ್ಮುಕ್ತಿ.
ಅದು ಕಾರಣ, ಆ ಮಹಾರುದ್ರಾಕ್ಷಿಯ ಧರಿಸಿ, ಎನ್ನ ಭವಂ ನಾಸ್ತಿಯಾತಿತ್ತು.
ಮಹಾಲಿಂಗ ಕಲ್ಲೇಶ್ವರಾ, ರುದ್ರಾಕ್ಷಿಯಿಂದೆ ಕೃತಾರ್ಥನಾದೆನು./95
ಹಗಲು ಹಸಿವಿಂಗೆ ಕುದಿದು, ಇರುಳು ನಿದ್ರೆಗೆ ಸಂದು,
ಎಚ್ಚತ್ತು ಉಳಿದಾದ ಹೊತ್ತಿನಲ್ಲೆಲ್ಲಾ ಪಂಚೇಂದ್ರಿಯಂಗಳ ವಿಷಯಕ್ಕೆ ಹರಿದು,
ಅಯ್ಯಾ, ನಿಮ್ಮ ನೆನೆಯಲರಿಯದ ಪಾಪಿಯಯ್ಯಾ.
ಅಯ್ಯಾ, ನಿಮ್ಮ ದೆಸೆಯ ನೋಡದ ಕರ್ಮಿಯಯ್ಯಾ.
ಮಹಾಲಿಂಗ ಕಲ್ಲೇಶ್ವರಾ, ಅಸಗ ನೀರಡಿಸಿ ಸಾವಂತೆ ಎನ್ನ ಭಕ್ತಿ./96
ಹರವಸದಿ ಹಸಿವನರಿಯದಿಪ್ಪ ಪರಮಸುಖವೆನಗೆಂದಿಪ್ಪುದೊ ?
ಉರವಣೆಯ ಸುಖದ ಸೋಂಕಿನಲ್ಲಿ ಪರಿಣಾಮ ಎಂದಪ್ಪುದೊ ?
ನಿಮ್ಮ ನೆನಹ ಎನ್ನ ಹಸು ಲಿಂಗೋಗರವಾದಡೆ
ನಾ ನಿಮ್ಮ ನೆನೆವುದು ದಿಟವೆಂಬೆ ಕಾಣಾ, ಮಹಾಲಿಂಗ ಕಲ್ಲೇಶ್ವರಾ./97
ಹಸಿಯ ಕಪಾಲದಲ್ಲಿ ಉಂಬನೆಂಬರು, ಅದು ಹುಸಿ,
ಭಕ್ತನ ಮುಖದಲ್ಲಿ ಉಂಬನಾಗಿ.
ಅಸ್ಥಿಗಳ ತೊಟ್ಟನೆಂಬರು, ಅದು ಹುಸಿ, ಭಕ್ತದೇಹಿಕದೇವನಾಗಿ,
ಚರ್ಮವ ಹೊದ್ದನೆಂಬರು, ಅದು ಹುಸಿ, ಆ ಭಕ್ತನಲ್ಲಿ
ಸದಾಸನ್ನಹಿತನಾಗಿಪ್ಪನಾಗಿ.
ಅದೆಂತೆಂದಡೆ-ಬ್ರಹ್ಮಾಂಡ ಪುರಾಣೇ :
ನೈವೇದ್ಯಂ ಪುರತೋ ನ್ಯಸ್ತಂ ದರ್ಶನಾತ್ಸ್ವೀಕೃತಂ ಮಯಾ |
ರಸಾನ್ಭಕ್ತಸ್ಯ ಜಿಹ್ವಾಗ್ರಾದಶ್ನಾಮಿ ಕಮಲೋದ್ಭವ ||
ಎಂದುದಾಗಿ, ವಾತುಲೇ : ಯಾವನ್ನಿರ್ವಹತೇ ಯಸ್ತು ಯಾವಜ್ಜೀವಂ ಪ್ರತಿಜ್ಞಯಾ |
ಮನುಷ್ಯಚರ್ಮಣಾ ಬದ್ಧಃ ಸ ರುದ್ರೋ ನಾತ್ರ ಸಂಶಯಃ ||
ಎಂದುದಾಗಿ, ಮಹಾಲಿಂಗ ಕಲ್ಲೇಶ್ವರಾ,
ನಿಮ್ಮ ಸುಳುಹು ಪರಕಾಯಪ್ರವೇಶವಾಗಿಹುದು. /98
ಹಾಹಾ ! ವೇದವೆ ತತ್ವವಾದಡೆ, ಮಾದಾರನ ಮನೆಯಲುಂಡನೊಬ್ಬ.
ನಿಧಾನವುಳ್ಳ ಉಪಾಧ್ಯಾಯರಾರೂ ಇಲ್ಲದಾದಡೆ,
ಶಾಸ್ತ್ರವೆ ತತ್ವವಾದಡೆ ಶಿವರಾತ್ರಿಯನೊಬ್ಬ
ಬೇಡಂಗಿತ್ತುದನೊಬ್ಬ ಶ್ರೋತ್ರಿಯಂಗೀಯಲಾಗದೆ ?
ಆಗಮವಿಧಿಯಲ್ಲಿ ಮಂತ್ರ ಮೂರುತಿಯೆಂಬ ಮಾತಂತಿರಲಿ.
ಆದ ಕೇಳಲಾಗದು ಭ್ರಾಂತು ಬೇಡ.
ಭಾವಮೂರುತಿ ಬಲ್ಲ ಪ್ರಮಾಣವಿದೆ.
ಆ ಕುಲವೆಂದಡೆ ಹೊಕ್ಕ ಕಕ್ಕಯ್ಯಗಳ ಮನೆಯ.
ಅಕ್ಕಟಾ, ನಿಮ್ಮ ತರ್ಕ ಮುಕ್ಕಾಯಿತ್ತು, ಲೋಕವರಿಯದೆ ?
ಕಲ್ಲಲಿಟ್ಟು ಕಾಲಲೊದೆದಡೆ, ಅಲ್ಲಿ ಮೂರುತಿ ನುಡಿಯಿತ್ತಲ್ಲಯ್ಯಾ.
ಬಲ್ವದನು ದ್ವಿಜರು ನೀವೆಲ್ಲರೂ ಹೇಳಿರೆ,
ಸಲ್ಲದು, ನಿಮ್ಮ ವಾದ ನಿಲ್ಲಲಿ, ಬಲ್ಲಿದ ನಡೆದುದೇ ಬಟ್ಟೆ.
ಮಹಾಲಿಂಗ ಕಲ್ಲೇಶ್ವರಾ, ಲಿಂಗಾಚಾರಿಗಳು ನಿಸ್ಸೀಮರಯ್ಯಾ./99
ಹುಟ್ಟುವಂದು ನಿಮ್ಮ ಮೋಹವಿಲ್ಲ.
ಹೊಂದುವಂದು ನಿಮ್ಮ ಮೋಹವಿಲ್ಲ ಕಂಡಯ್ಯಾ.
ನಿಮ್ಮ ಮೋಹದವರಿಗೆ ಹುಟ್ಟುಂಟೆ ಅಯ್ಯಾ ?
ನಿಮ್ಮ ಮೋಹದ ಮುಖದಲ್ಲಿ ಮರಣವುಂಟೆ ಅಯ್ಯಾ ?
ಸಂಗಸಂಯೋಗದ ಉನ್ನನೀ ಭೂತ, ನಿನ್ನ ಮುಖದಲ್ಲಿ.
ಜನನ ಮರಣವುಂಟೆ, ಮಹಾಲಿಂಗ ಕಲ್ಲೇಶ್ವರಾ ?/100

ಹೊಟ್ಟು ಜಾಲಿಯ ಮುಳ್ಳ ಕೊನೆಯ ಮೇಲೊಂದು
ಇಪ್ಪತ್ತೈದು ಅಗ್ರಹಾರ.
ಅವ ಕಾವವ ಬಂಜೆಯ ಮಗ ತಳವಾರ.
ಅಷ್ಟದಳ ಕಮಲದ ವಿವೇಕದ ಕೂಟವ ಮಹಾಲಿಂಗ ಕಲ್ಲೇಶ್ವರ ಬಲ್ಲ,
ಪಂಚಮಹಾಜ್ಯೋತಿಯ ಮಹಾಬೆಳಗನು./101