Categories
ಶರಣರು / Sharanaru

ಹಾವಿನಾಳ ಕಲ್ಲಯ್ಯ

ಅಂಕಿತ: ಮಹಾಲಿಂಗ ಕಲ್ಲೇಶ್ವರ
ಕಾಯಕ: ಅಕ್ಕಸಾಲಿಗ

ಅಕ್ಕಸಾಲಿಗ ಮನೆತನಕ್ಕೆ ಸೇರಿದ ಈತನ ಜನ್ಮಸ್ಥಳ ವಿಜಾಪುರ ಜಿಲ್ಲೆಯ ಹಾವಿನಾಳು ಅಲ್ಲಿನ ಕಲ್ಲಿನಾಥ ಆರಾಧ್ಯದೈವ. ತಂದೆ-ಶಿವನಯ್ಯ, ತಾಯಿ-ಸೊಮವ್ವೆ. ಕಾಲ-೧೧೬೦. ಹರಿಹರನ ರಗಳೆಯಲ್ಲಿ ಈತ ಸತ್ತ ಸರ್ಪವನ್ನು ಬದುಕಿಸಿದ, ನಾಯಿಯಿಂದ ವೇದವನ್ನು ಓದಿಸಿದ, ಪರಕಾಯ ಪ್ರವೇಶಮಾಡಿದ ಎಂಬ ಪವಾಡಾತ್ಮಕ ಘಟನೆಗಳು ಉಕ್ತವಾಗಿವೆ. ರೇವಣಸಿದ್ಧ, ರುದ್ರಮುನಿ, ಸಿದ್ಧರಾಮರ ಸಂಪರ್ಕದಿಂದ ಶರಣನಾದ ಈತ, ಕಲ್ಯಾಣಕ್ಕೆ ಬಂದು ಅನುಭಾವ ಗೋಷ್ಠಿಗಳಲ್ಲಿ ಭಾಗವಹಿಸಿದ. ಕಲ್ಯಾಣಕ್ರಾಂತಿಯ ನಂತರ ಸೊಲ್ಲಾಪುರಕ್ಕೆ ತೆರಳಿ, ಅಲ್ಲಿಯೇ ಐಕ್ಯನಾದ. ಈತನ ಸಮಾಧಿ ಸಿದ್ಧರಾಮೇಶ್ವರ ದೇವಾಲಯದ ಪ್ರಾಕಾರದಲ್ಲಿದೆ.

೧೧೭೭
ವೇದವನೋದಿದಡೇನು ? ಶಾಸ್ತ್ರಪುರಾಣಾಗಮಂಗಳ ಕೇಳಿದಡೇನು ?
ಗುರುಕಾರುಣ್ಯವಿಲ್ಲದವನು ಲಿಂಗವ ಮುಟ್ಟಿ ಪೂಜಿಸಲಾಗದು.
ಜಪತಪಧ್ಯಾನ ವಿಭೂತಿ ರುದ್ರಾಕ್ಷಿಯ ಧರಿಸಿದಡೇನು ?
ಅವನು ಪಂಚಮಹಾಪಾತಕನು, ಅವನ ಮುಖವ ನೋಡಲಾಗದು.
ಇದನರಿದು ಗುರುಕರುಣವಿಡಿದು ಮಾಡುವ ಪೂಜೆಯೇ ಶಿವಂಗೆ ಪ್ರೀತಿ.
ಇದನರಿಯದೆ ಗುರುಕರುಣವಿಲ್ಲದವ ಶಿವಲಿಂಗಪೂಜೆಯ ಮಾಡಿದನಾದಡೆ,
ಅಘೋರನರಕ ತಪ್ಪದು, ಮಹಾಲಿಂಗ ಕಲ್ಲೇಶ್ವರಾ.

‘ಮಹಾಲಿಂಗ ಕಲ್ಲೇಶ್ವರ’ ಅಂಕಿತದಲ್ಲಿ ಈತ ರಚಿಸಿದ ೧೦೩ ವಚನಗಳು ದೊರೆತಿದ್ದು, ಅವುಗಳಲ್ಲಿ ಭಕ್ತಿನಿಷ್ಠೆ, ಶರಣತತ್ವ ವಿವೇಚನೆ, ಪರಮತ ಖಂಡನೆ, ನೀತಿ ಭೋಧೆ, ಆತ್ಮನಿರೀಕ್ಷಣೆ, ಶರಣಸ್ತುತಿ ಮೊದಲಾದವು ಪ್ರತಿಪಾದನೆಗೊಂಡಿವೆ. ಅಷ್ಟಾವರಣ, ಲಿಂಗಾಂಗ ಸಾಮರಸ್ಯ, ಶಿವಭಕ್ತಿ, ಶಿವಶರಣರ ನಿಷ್ಠೆ, ನಿಷ್ಕಾಮ ಸೇವೆ, ಅನುಭಾವ – ಇವೇ ಮೊದಲಾದ ವಿಷಯಗಳ ಪ್ರಸ್ತಾಪ ವಚನಗಳಲ್ಲಿ ಬಂದಿವೆ.