Categories
ವಚನಗಳು / Vachanagalu

ಹಡಪದ ಲಿಂಗಮ್ಮನ ವಚನಗಳು

ಅಂಗವ ಮರೆದವಂಗೆ ಲಿಂಗದ ಹಂಗೇಕೊ ?
ಅರಿವ ಕಂಡವಂಗೆ ಕುರುಹಿನ ಹಂಗೇಕೊ ?
ತಾನು ತಾನಾದವಂಗೆ ಧ್ಯಾನದ ಹಂಗೇಕೊ ?
ಮನ ಮುಗ್ಧವಾದವಂಗೆ ಮಾನವರ ಹಂಗೇಕೊ ?
ಆಸೆಯನಳಿದವಂಗೆ ರೋಷದ ಹಂಗೇಕೊ ?
ಕಾಮನ ಸುಟ್ಟವಂಗೆ ಕಳವಳದ ಹಂಗೇಕೊ ?
ನಡೆಗೆಟ್ಟವಂಗೆ ನುಡಿಯ ಹಂಗೇಕೊ ?
ನಿಶ್ಚಿಂತವಾದವಂಗೆ ಉಚ್ಚರಣೆಯ ಹಂಗೇಕೊ ?
ಬಯಲು ಬಯಲಾದವಂಗೆ ಭಾವದ ಹಂಗೇಕೊ ?
ತನ್ನ ಮರೆದು ನಿಮ್ಮನರಿದ ಶರಣಂಗೆ ಅಲ್ಲಿಯೆ ಐಕ್ಯ ಕಂಡೆಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./1
ಅಂಗವೆಂದಡೆ ಲಿಂಗದೊಳಡಗಿತ್ತು
ಲಿಂಗವೆಂದಡೆ ಅಂಗದೊಳಡಗಿತ್ತು.
ಅಂಗದೊಳಡಗಿದ ಲಿಂಗವನೆ ಕಂಗಳಲ್ಲಿ ಹೆರೆಹಿಂಗದೆ ನೋಡಿದಡೆ,
ಮಂಗಳದ ಮಹಾಬೆಳಗು ಕಾಣಿಸಿತ್ತು.
ಇಂತಪ್ಪ ಮಂಗಳದ ಮಹಾಬೆಳಗ ತೋರಿದ ಶರಣರಂಘ್ರಿಗೆರಗಿ ಸುಖಿಯಾದೆನಯ್ಯಾ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./2
ಅಂತರಂಗ ಬಹಿರಂಗ ಶುದ್ಭವಿಲ್ಲದೆ ನುಡಿವರು ಸಂತೆಯ ಸೂಳೆಯರಂತೆ.
ಅಂತರಂಗ ಬಹಿರಂಗವೆಂಬುದಿಲ್ಲ ನಮ್ಮ ಶಿವಶರಣರಿಗೆ.
ಅಂತರಂಗವೆಲ್ಲ ಅರುಹಾಯಿತ್ತುದ ಬಹಿರಂಗದಲ್ಲಿ ಲಿಂಗವಾಯಿತ್ತು,
ಆ ಲಿಂಗದಲ್ಲೆ ನುಡಿದು, ಲಿಂಗದಲ್ಲೆ ನಡೆದು,
ಲಿಂಗದಲ್ಲೆ ಮುಟ್ಟಿ, ಲಿಂಗದಲ್ಲೆ ವಾಸಿಸಿ,
ಲಿಂಗದಲ್ಲೆ ಕೇಳಿ, ಲಿಂಗವಾಗಿ ನೋಡಿ,
ಸರ್ವಾಂಗವು ಲಿಂಗವಾಗಿ, ಆ ಲಿಂಗವ ನೋಡುವ ಕಂಗಳಲ್ಲೆ ಐಕ್ಯ.
ಕಂಡೆಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ/3
ಅದೇನು ಕಾರಣವೆಂದಡೆ,
ಘನಕ್ಕೆ ಘನವಾದರುದ ಮನಕ್ಕೆ ಮನವಾದರು
ತನುವಿಂಗೆ ತನುವಾದರುದ ನಡೆನುಡಿಗೆ ಚೈತನ್ಯವಾದರು
ನೋಡುವುದಕ್ಕೆ ನೋಟವಾದರುದ ಕೂಡುವುದಕ್ಕೆ ಲಿಂಗವಾದರು.
ಈ ಒಳಹೊರಗೆ ಬೆಳಗುವ ಬೆಳಗು ನೀವೆಯಾದ ಕಾರಣ,
ನಿಮ್ಮ ಪಾದದಲ್ಲಿ ನಾ ನಿಜಮುಕ್ತಳಾದೆನಯ್ಯಾ ಚೆನ್ನಮಲ್ಲೇಶ್ವರ, ಅಪ್ಪಣ್ಣಪ್ರಿಯ ಚೆನ್ನಬಸವಣಾ/4
ಅಯ್ಯಾ ನಾನು ಬಂದ ಬಂದ ಭವಾಂತರದಲ್ಲಿ
ನೀವು ಕಡೆಹಾಯಿಸಿದಿರೆಂಬುದನರಿಯೆ.
ಕಂಗಳಿಗೆ ಕನ್ನಡಿಯ ತೋರಿದಡೂ ನಿಮ್ಮ ಕಾಣದೆ ಇದ್ದೆನಯ್ಯಾ.
ಅದು ಕಾರಣದಿಂದ, ಮನಕ್ಕೆ ಪ್ರಾಣವಾಗಿ ಬಂದು ನಿಂದಿರಿ,
ತನುವಿಂಗೆ ರೂಪಾಗಿ ಬಂದು ಸುಳದಿರಿ.
ನಿಮ್ಮ ಸುಳುಹ ಕಾಣಲೊಡನೆ,
ಎನ್ನ ತನು ಕರಗಿ, ಮನ ಮಗ್ನವಾಯಿತ್ತು.
ಎನ್ನ ಮರಣಭಯ ಹಿಂಗಿತ್ತುದ ರಿನ್ನ ಕಾಯಗುಣ ಕೆಟ್ಟಿತ್ತು
ಕರಣಗುಣ ಸುಟ್ಟಿತ್ತುದ ಭಾವವಳಿಯಿತ್ತುದ ಬಯಕೆ ಸವೆಯಿತ್ತು.
ಮಹಾದೇವನಾದ ಶರಣ ಚೆನ್ನಮಲ್ಲೇಶ್ವರನ ಪಾದವಿಡಿದು
ನಾ ನಿಜಮುಕ್ತಳಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./5
ಅಯ್ಯಾ, ಅದೇನು ಕಾರಣವೆಂದಡೆ,
ಕಂಗಳ ಕತ್ತಲೆಯನೆ ಹರಿದಿರಿ
ಮನದ ಕಾಳಿಕೆಯನೆ ಹಿಂಗಿಸಿದಿರಿ
ಮಾತಿನ ಮೊದಲನೆ ಹರಿದಿರಿ
ಜ್ಯೋತಿಯ ಬೆಳಗನೆ ತೋರಿದಿರಿ
ಮಾತು ಮಥನವ ಕೆಡಿಸಿದಿರಿ.
ವ್ಯಾಕುಳವನೆ ಬಿಡಿಸಿ, ವಿವೇಕಿಯ ಮಾಡಿ,
ನಿಮ್ಮ ಪಾದದಲ್ಲಿ ಏಕವಾದ ಕಾರಣದಿಂದ
ನಾ ನಿಜಮುಕ್ತಳಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./6
ಅಯ್ಯಾ, ಈ ಮಹಾಘನವ ಕಾಂಬುದಕ್ಕೆ
ಹಸಿವು ಕೆಡಬೇಕುದ ತೃಷೆಯಡಗಬೇಕುದ ವ್ಯಸನ ನಿಲ್ಲಬೇಕು;
ನಿದ್ರೆ ಹರಿಯಬೇಕುದ ಜೀವನ ಬುದ್ಧಿ ಹಿಂಗಬೇಕುದ
ಮನ ಪವನ ಬಿಂದು ಒಡಗೂಡಬೇಕು
ಚಿತ್ತ ಒತ್ತಟ್ಟಿಗೆ ಹೋಗದಿರಬೇಕು.
ಹೊತ್ತು ಹೊತ್ತಿಗೆ ಉತ್ತರವನೇರಿ ಬೆಚ್ಚು ಬೇರಿಲ್ಲದೆ
ಲಿಂಗದೊಳಗೆ ಅಚ್ಚೊತ್ತಿದಂತೆ ಬೆರೆದಡೆ,
ಕತ್ತಲೆ ಹರಿವುದು, ಮರವೆ ಹಿಂಗುವುದು, ನಿದ್ರೆ ಹರಿವುದು,
ಹಸಿವು ಕೆಡುವುದು, ತೃಷೆಯಡಗುವುದು, ವ್ಯಸನ ನಿಲುವುದು.
ಇವೆಲ್ಲವನು ಹಿಂಗಿಸಿ ತಾ ಲಿಂಗವ್ಯಸನಿಯಾಗಬಲ್ಲಡೆ,
ಮುಂದೆ ಮಹಾಮಂಗಳದ ಬೆಳಗು ಕಾಣಿಪುದೆಂದರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./7
ಅಯ್ಯಾ, ಏನೂ ಇಲ್ಲದ ಬಯಲ ದೇಹಕ್ಕೆ ತಾಮಸವ ಮುಂದುಮಾಡಿ,
ಹೀಗೆ ಕೆಟ್ಟಿತ್ತಲ್ಲಾ ಜಗವೆಲ್ಲ.
ಅದೇನು ಕಾರಣವೆಂದಡೆ,
ಸುಖದ ಮುಖ ಕಂಡಿತ್ತುದ ಜಗದ ರಚನೆಯ ನೋಡಿತ್ತು
ಇಚ್ಫೆಯ ಮೆಚ್ಚಿತ್ತುದ ಮನವ ನಿಶ್ಚಯವ ಮಾಡದು
ಅಂಗಸುಖವ ಬಯಸಿತ್ತುದ ಕಂಗಳ ಕಾಮವನೆ ಮುಂದುಮಾಡಿತ್ತು
ಇದರಿಂದ ಲಿಂಗವ ಮರೆಯಿತ್ತುದ ಜಂಗಮವ ತೊರೆಯಿತ್ತು.
ಇದು ಕಾರಣದಿಂದ ಜಗದ ಮನುಜರು ಭವಬಂಧನಕ್ಕೊಳಗಾದರು.
ಇವೆಲ್ಲವನು ಹಿಂಗಿಸಿ, ನಮ್ಮ ಶಿವಶರಣರು ಲಿಂಗದಲ್ಲಿಯೆ ಬೆರೆದರು.
ಜಂಗಮಪ್ರಾಣವೆಂದು ಪಾದೋದಕ ಪ್ರಸಾದವ ಕೊಂಡು, ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು./8
ಅಯ್ಯಾ, ಕಿಚ್ಚಿನೊಳಗೆ ಬೆಂದ ಕಾಯಕ್ಕೆ ಅಚ್ಚುಗವುಂಟೆ ?
ತಾನು ತಾನಾದ ಬಳಿಕ ಮಾನವರ ಹಂಗುಂಟೆ ?
ಮನವು ಮಹದಲ್ಲಿ ನಿಂದ ಬಳಿಕ ಮರವೆಯುಂಟೆ ?
ತನುವ ಮರೆದಂಗೆ ಇನ್ನರಿಯಬೇಕೆಂಬ ಅರುಹುಂಟೆ ?
ಬೆಳಗ ಕಂಡವಂಗೆ ಕತ್ತಲೆಯ ಹಂಗುಂಟೆ ?
ಇವೆಲ್ಲವನು ಹಿಂಗಿ ಮಹಾಘನದಲ್ಲಿ ಬೆರೆದ ಶರಣಂಗೆ
ನಮೋ ನಮೋ ಎಂದು ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./9
ಅಯ್ಯಾ, ನರರೊಳು ಹುಟ್ಟಿ, ಮರಹಿನೊಳಗೆ ಬಿದ್ದವಳ ತಂದು,
ಮಹಾಶರಣರು ಎನಗೆ ಕುರುಹ ತೋರಿದರು.
ಗುರುವೆಂಬುದನರುಹಿದರುದ ಜಂಗಮವೆ ಜಗದ ಕರ್ತುವೆಂದರುಹಿದರು.
ಅವರ ನೆಲೆವಿಡಿದು ಮನವ ನಿಲಿಸಿದೆ, ಕಾಯ ಜೀವವೆಂಬುದನರಿದೆ,
ಭವಬಂಧನವ ಹರಿದೆ, ಮನವ ನಿರ್ಮಲವ ಮಾಡಿದೆ.
ಬೆಳಗಿದ ದರ್ಪಣದಂತೆ ಚಿತ್ತ ಶುದ್ಭವಾದಲ್ಲಿ,
ನೀವು ಅಚ್ಚೊತ್ತಿದ್ದ ಕಾರಣದಿಂದ ನಿಮ್ಮ ಪಾದವಿಡಿದು
ನಾನು ನಿಜಮುಕ್ತಳಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./10
ಅಯ್ಯಾ, ನಾ ಕಾಬುದಕ್ಕೆ ನನ್ನ ಶಕ್ತಿಯಲ್ಲ
ನಿಮ್ಮಿಂದವೆ ಕಂಡೆನಯ್ಯಾ.
ಅದೇನು ಕಾರಣವೆಂದಡೆ
ತನುವ ತೋರಿದಿರಿ, ಮನವ ತೋರಿದಿರಿ, ಘನವ ತೋರಿದಿರಿ.
ತನುವ ಗುರುವಿಗಿತ್ತು, ಮನವ ಲಿಂಗಕ್ಕಿತ್ತು, ಧನವ ಜಂಗಮಕ್ಕಿತ್ತು,
ಇವೆಲ್ಲವು ನಿಮ್ಮೊಡನೆ ಎಂದು ನಿಮಗಿತ್ತು.
ತಳ್ಳಿಬಳ್ಳಿಯನೆ ಹರಿದು ನಿಮ್ಮಲ್ಲಿಯೆ ನೆಲೆಗೊಂಡ ಕಾರಣ,
ಚೆನ್ನಮಲ್ಲೇಶ್ವರನ ಪಾದದಲ್ಲಿ ನಿರ್ಮುಕ್ತಳಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./11
ಅಯ್ಯಾ, ನಾ ಮರ್ತ್ಯದಲ್ಲಿ ಹುಟ್ಟಿ ಕಷ್ಟಸಂಸಾರಿ ಎನಿಸಿಕೊಂಡೆ.
ಕತ್ತಲೆಯಲ್ಲಿ ಮುಳುಗಿ ಕರ್ಮಕ್ಕೆ ಗುರಿಯಾಗುತ್ತಿದ್ದಡೆ,
ಹೆತ್ತ ತಾಯಿ ಎಂಬ ಗುರುಸ್ವಾಮಿ ಎನ್ನ ಕೊರಳಿಗೆ ಗಂಡನೆಂಬ ಲಿಂಗವ ಕಟ್ಟಿದನು.
ತಂದೆಯೆಂಬ ಜಂಗಮಲಿಂಗವು ಎನ್ನ ಪ್ರಾಣಕ್ಕೆ ಪ್ರಸಾದವ ಊಡಿದನು.
ಪ್ರಾಣಕ್ಕೆ ಪ್ರಸಾದವನೂಡಲಾಗಲೆ ಕತ್ತಲೆ ಹರಿಯಿತ್ತು
ಕರ್ಮ ಹಿಂಗಿತ್ತು ಮನ ಬತ್ತಲೆಯಾಯಿತ್ತು
ಚಿತ್ತ ಸುಯಿದಾನವಾಯಿತ್ತು ನಿಶ್ಚಿಂತವಾಯಿತ್ತು.
ನಿಜವ ನೆಮ್ಮಿ ನೋಡುವನ್ನಕ್ಕ,
ಎನ್ನ ಅತ್ತೆ ಮಾವರು ಅರತುಹೋದರು
ಅತ್ತಿಗೆ ನಾದಿನಿಯರು ಎತ್ತಲೋಡಿಹೋದರು,
ಸುತ್ತಲಿರುವ ಬಂಧುಗಳೆಲ್ಲ ಬಯಲಾದರು.
ಎನ್ನ ತಂದೆ ತಾಯಿ ಕಟ್ಟಿದ ಚಿಕ್ಕಂದಿನ ಗಂಡನ ನೋಡುವ ನೋಟ ಹೋಗಿ,
ಎನ್ನ ಮನಕ್ಕೆ ಸಿಕ್ಕಿತ್ತು
ಅಂಗಲಿಂಗವೆಂಬ ಉಭಯವಳಿಯಿತ್ತುದ ಸಂಗಸುಖ ಹಿಂಗಿತ್ತು.
ಮಂಗಳದ ಮಹಾಬೆಳಗಿನಲ್ಲಿ ಓಲಾಡಿ ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./12
ಅಯ್ಯಾ, ನಾ ಹುಟ್ಟುವಾಗ ಬಟ್ಟಬಯಲೆ ಗಟ್ಟಿಯಾಯಿತ್ತು.
ಆ ಬಟ್ಟಬಯಲು ಗಟ್ಟಿಯಾದ ಬಳಿಯಲ್ಲಿ ನಾ ಜನನವಾದೆ.
ಜನನವಾದವರಿಗೆ ಮರಣ ತಪ್ಪದು.
ಅದೇನು ಕಾರಣವೆಂದಡೆ
ಮರವೆ ಮರವೆಗೆ ಮುಂದುಮಾಡಿತ್ತುದ
ಕರ್ಮಕ್ಕೆ ಗುರಿಮಾಡಿತ್ತುದ ಕತ್ತಲೆಯಲ್ಲಿ ಮುಳುಗಿಸಿತ್ತು.
ಕಣ್ಣು ಕಾಣದೆ ಅಂಧಕನಂತೆ ತಿರುಗುವುದ ನೋಡಿ,
ನಾ ಹೆದರಿಕೊಂಡು ರಿಚ್ಚತ್ತು ಚಿತ್ತವ ಸುಯಿದಾನವ ಮಾಡಿ,
ನಿಶ್ಚಿಂತವಾಗಿ ನಿಜವ ನೆಮ್ಮಿ ಅರುಹ ಕಂಡೆ.
ಅರುಹುವಿಡಿದು ಆಚಾರವ ಕಂಡೆದ ಆಚಾರವಿಡಿದು ಗುರುವ ಕಂಡೆದ
ಗುರುವಿಡಿದು ಲಿಂಗವ ಕಂಡೆದ ಲಿಂಗವಿಡಿದು ಜಂಗಮವ ಕಂಡೆದ
ಜಂಗಮವಿಡಿದು ಪಾದೋದಕ ಪ್ರಸಾದವ ಕಂಡ್ಝೆ
ಪಾದೋದಕ ಪ್ರಸಾದವಿಡಿದು ಮಹಾಶರಣನ ಕಂಡೆ.
ಆ ಮಹಾಶರಣನ ಪಾದವಿಡಿದು ರಿನ್ನ ಕಾಯಗುಣವಳಿಯಿತ್ತು
ಕರಣಗುಣ ಸುಟ್ಟಿತ್ತುದ ಅಂಗಗುಣ ಅಳಿಯಿತ್ತು
ಲಿಂಗಗುಣ ನಿಂದಿತ್ತುದ ಭಾವ ಬಯಲಾಯಿತ್ತು ಬಯಕೆ ಸವೆಯಿತ್ತು.
ಮಹಾದೇವನಾದ ಶರಣನ ಬರಿಯ ಬೆಳಗಲ್ಲದೆ,
ಕತ್ತಲೆ ಕಾಣಬಾರದು ಕಾಣಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ/13
ಅಯ್ಯಾ, ನಾನು ಊರ ಮರೆದು ಆಡ ಹೋದಡೆ,
ಒಕ್ಕಲು ಹೆಚ್ಚಿ ಸೊಕ್ಕಾಟ ಘನವಾಯಿತ್ತು.
ಇದ ಕಂಡು ಊರ ಹೊಕ್ಕೆ,
ಸ್ಥಾನದಲ್ಲಿ ನಿಂದೆ, ಒಂಬತ್ತು ಬಾಗಿಲ ಕದವನಿಕ್ಕಿದೆ.
ಆ ಜ್ಞಾನಾಗ್ನಿಯ ಹೊತ್ತಿಸಲು,
ಉರಿ ರಿದ್ದಿತ್ತು, ಉಷ್ಣ ಊಧ್ರ್ವಕ್ಕೇರಿತ್ತು.
ತಲೆಯೆತ್ತಿ ನೋಡಲು,
ಒಕ್ಕಲು ಓಡಿತ್ತು, ಊರು ಬಯಲಾಯಿತ್ತು.
ಆ ಬಯಲನೆ ನೋಡಿ, ನಿರಾಳದೊಳಗಾಡಿ
ಮಹಾಬೆಳಗನೆ ಕೂಡಿ, ಸುಖಿಯಾದರಯ್ಯಾ ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು./14
ಅಯ್ಯಾ, ನಿಮ್ಮ ಚರಣವಿಡಿದು ಮನವ ನಿಲಿಸಿದೆ,
ತನುವ ಮರೆದೆದ ಮಹಾಘನವ ಕಂಡೆ; ಲಿಂಗದನೆಲೆವಿಡಿದೆ.
ಅಂಗವ ಲಿಂಗವೆಂದು ನೋಡಲು ಕಂಗಳ ಮುಂದಣ ಬೆಳಗೇ ಲಿಂಗವಾಗಿ,
ಆ ಕಂಗಳ ಮುಂದಣ ಬೆಳಗ ನೋಡಿಹೆನೆಂದು ಸಂಗಸುಖವ ಮರೆದು,
ಆ ಮಂಗಳದ ಮಹಾಬೆಳಗಿನಲ್ಲಿ ನಾ ನಿಜಮುಕ್ತಳಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./15
ಆಗದಾಗದು ಮರ್ತ್ಯದ ಮನುಜರಿಗೆ ಶಿವಸುಖ ?
ಕಾಳುವಿಷಯದಲ್ಲಿ ಬಿದ್ದು
ನುಡಿವುತ್ತ ಮರವೆ, ನಡೆವುತ್ತ ಮರವೆ,
ಮೆಟ್ಟುತ್ತ ಮರವೆ, ಕೇಳುತ್ತ ಮರವೆ, ನೋಡುತ್ತ ಮರವೆ.
ಇಂತು ಮರಹಿನೊಳಗಿದ್ದು
ಅರುಹ ಕಂಡೆಹೆವೆಂಬ ಅಣ್ಣಗಳಿರಾ, ನೀವು ಕೇಳಿರೊ.
ನಮ್ಮ ಶರಣರ ನಡೆ ರಿಂತೆಂದಡೆದ
ಐದು ಗುಣವನೆ ಅಳಿದು, ಐದು ಹಿಡಿದು,
ನುಡಿವುತ್ತ ಲಿಂಗವಾಗಿ ನುಡಿವರುದ ನಡೆವುತ್ತ ಲಿಂಗವಾಗಿ ನಡೆವರುದ
ಮುಟ್ಟುತ್ತ ಲಿಂಗವಾಗಿ ಮುಟ್ಟುವರುದ ಕೇಳುತ್ತ ಲಿಂಗವಾಗಿ ಕೇಳುವರುದ
ನೋಡುತ್ತ ಲಿಂಗವಾಗಿ ನೋಡುವರುದ
ಸರ್ವಾಂಗವು ಲಿಂಗವಾಗಿ ಅಂಗಲಿಂಗವೆಂಬ ಉಭಯವಳಿದು,
ಮಂಗಳದ ಮಹಾಬೆಳಗಿನಲ್ಲಿ ಲಿಂಗವೆ ಗೂಡಾಗಿದ್ದ ಕಾರಣ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./16
ಆಧಾರವ ಬಲಿಯೆ ಬೇಗೆವರಿಯಿತ್ತು
ಕಿಚ್ಚು ಆವರಿಸಿ ಊಧ್ರ್ವಕ್ಕೇರಿತ್ತು.
ಸಾಸಿರದಳದ ಅಮೃತದ ಕೊಡ ಕಾಯಿತ್ತು.
ಕಾಯ್ದ ಅಮೃತ ಉಕ್ಕಿ ತೊಟ್ಟಿಕ್ಕೆ, ಅಮೃತವನುಂಡು
ಹಸಿವು ಕೆಟ್ಟಿತ್ತುದ ತೃಷೆಯಡಗಿತ್ತು ನಿದ್ರೆಯರತಿತ್ತುದ
ಅಂಗಗುಣವಳಿಯಿತ್ತು ಲಿಂಗಗುಣ ನಿಂದಿತ್ತು ಸಂಗಸುಖ ಹಿಂಗಿತ್ತು.
ಅಂಗಲಿಂಗವೆಂಬ ಉಭಯವಳಿದು,
ಮಂಗಳ ಮಹಾಬೆಳಗಿನಲ್ಲಿಯೇ ಓಲಾಡಿ ಸುಖಿಯಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./17
ಆಸೆಯನಳಿದು, ರೋಷವ ನಿಲಿಸಿ,
ಜಗದ ಪಾಶವ ಹರಿದು,
ಈಶ್ವರನೆನಿಸಿಕೊಂಬ ಶರಣರ
ಜಗದ ಹೇಸಿಗಳೆತ್ತಬಲ್ಲರು ಅಪ್ಪಣ್ಣಪ್ರಿಂ್Ùಳ ಚೆನ್ನಬಸವಣ್ಣಾ ?/18
ಆಸೆಯುಳ್ಳನ್ನಕ್ಕ ರೋಷ ಬಿಡದು
ಕಾಮವುಳ್ಳನ್ನಕ್ಕ ಕಳವಳ ಬಿಡದು
ಕಾಯಗುಣವುಳ್ಳನ್ನಕ್ಕ ಜೀವನ ಬುದ್ಧಿ ಬಿಡದು;
ಭಾವವುಳ್ಳನ್ನಕ್ಕ ಬಯಕೆ ಸವೆಯದುದ
ನಡೆಯುಳ್ಳನ್ನಕ್ಕ ನುಡಿಗೆಡದು.
ಇವೆಲ್ಲವು ಮುಂದಾಗಿದ್ದು ಹಿಂದನರಿದೆನೆಂಬ
ಸಂದೇಹಿಗಳಿರಾ, ನೀವು ಕೇಳಿರೋ.
ನಮ್ಮ ಶರಣರು ಹಿಂದ ಹೇಗೆ ಅರಿದರೆಂದಡೆ
ಆಸೆಯನಳಿದರು, ರೋಷವ ಹಿಂಗಿದರು,
ಕಾಮನ ಸುಟ್ಟರು, ಕಳವಳವ ಹಿಂಗಿದರು,
ಕಾಯಗುಣವಳಿದರು, ಜೀವನ ಬುದ್ಧಿಯ ಹಿಂಗಿದರು,
ಭಾವವ ಬಯಲುಮಾಡಿದರು, ಬಯಕೆಯ ಸವೆದರು.
ಹಿಂದನರಿದು ಮುಂದೆ ಲಿಂಗವೆ ಗೂಡಾದ ಶರಣರ ಈ ಸಂದೇಹಿಗಳೆತ್ತ ಬಲ್ಲರು,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?/19
ಈ ಪರಂಜ್ಯೋತಿ ಪ್ರಕಾಶವಾದ ಬೆಳಗ
ನೋಡಿ ನೋಟವ ಮರೆದೆ, ಕೂಡಿ ಕೂಟವ ಮರೆದೆ.
ತಾನು ತಾನಾಗಿಪ್ಪ ಮಹಾಬೆಳಗಿನಲ್ಲಿ ನಾನು ಓಲಾಡಿ ಸುಖಿಯಾದೆನಯ್ಯಾ,
ಚೆನ್ನಮಲ್ಲೇಶ್ವರನ ಕರುಣವಿಡಿದು ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./20
ಈ ಮಹಾದೇವನ ಸ್ತೋತ್ರವ ಮಾಡುವುದಕ್ಕೆ ಜಿಹ್ವೆ ಮೆಟ್ಟದು.
ಆ ಮಹಾದೇವನ ಸ್ತೋತ್ರವ ಕೇಳುವುದಕ್ಕೆ ಕರ್ಣಮೆಟ್ಟದು.
ಮುಟ್ಟಿ ಪೂಜಿಸಿಹೆನೆಂದಡೆ ಹಸ್ತ ಮೆಟ್ಟದು.
ನೋಡಿಹೆನೆಂದಡೆ ನೋಟಕ್ಕೆ ಅಗೋಚರ, ಅಪ್ರಮಾಣ.
ಇಂತು ನಿಶ್ಚಿಂತ ನಿರಾಳ ಬಯಲದೇಹಿ ರಿನ್ನಲ್ಲಿ ಅಚ್ಚೊತ್ತಿದಂತೆ ನಿಂದ ಕಾರಣದಿಂದ
ಬಟ್ಟಬಯಲನೆ ಕಂಡೆ, ಮಹಾಬೆಳಗನೆ ಕೂಡಿದೆ.
ಚಿತ್ತದಲ್ಲಿ ಚೆನ್ನಮಲ್ಲೇಶ್ವರನು ನೆಲೆಗೊಂಡ ಕಾರಣದಿಂದ
ನಾನೆತ್ತ ಹೋದೆನೆಂದರಿಯೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./21
ಉಸುರ ಉನ್ಮನಿಗಿತ್ತು, ಶಶಿರವಿಯೊಡಗೂಡಿ,
ಕುಶಲವ ತಿಳಿದು, ಮಿಶ್ರವನರಿದು,
ಎಸಗಿದ ಮಹಾಬೆಳಗಿನೊಳಗೆ ಹೆಜ್ಜೆವಿಡಿದು ಹೋಗಿ ಅಜನ ಕಂಡೆ.
ಅಜನ ಮಗಳ ಸಂಗವ ಮಾಡಲೊಡನೆ ಅಂಗಗುಣವಳಿಯಿತ್ತುದ
ಕಂಗಳ ಜಮಕಿ ಹಿಂಗಿತ್ತುದ ಸಂಗಸಂಯೋಗವಾಯಿತ್ತು.
ಮಂಗಳದ ಮಹಾಬೆಳಗಿನೊಳಗೆ ಅಜಗೆ ಅಳಿಯನಾಗಿ,
ಅಜ್ಜಗೆ ಮೊಮ್ಮಗನಾಗಿ,
ಒಮ್ಮನವಾಗಿ ಪರಬೊಮ್ಮನೆಯಾಗಿ ಆಡುವ ಶರಣ
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ./22
ಎನ್ನ ಸತ್ಯಳ ಮಾಡಿ ನಿತ್ಯವ ತೋರಿ,
ತತ್ವವೆಂಬುದನರುಹಿದಿರಿದ ಮತ್ಸರವ ಹಿಂಗಿಸಿದಿರಿ
ಆಸೆರೋಷವನೆ ಹಿಂಗಿಸಿದಿರಿದ ಮಾತುಮ ಥನವನೆ ಕೆಡಿಸಿದಿರಿ.
ವ್ಯಾಕುಳವನೆ ಕೆಡಿಸಿ, ಜ್ಯೋತಿಯ ಬೆಳಗನೆ ತೋರಿದನಯ್ಯಾ ಚೆನ್ನಮಲ್ಲೇಶ್ವರನು,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./23
ಏನೇನು ಇಲ್ಲದಾಗ ನೀವಿಲ್ಲದಿದ್ದಡೆ ನಾನಾಗಬಲ್ಲೆನೆ ಅಯ್ಯಾ ?
ಆದಿ ಅನಾದಿ ಇಲ್ಲದಂದು ನೀವಿಲ್ಲದಿದ್ದಡೆ ನಾನಾಗಬಲ್ಲೆನೆ ಅಯ್ಯಾ ?
ಮುಳುಗಿ ಹೋದವಳ ತೆಗೆದುಕೊಂಡು,
ನಿಮ್ಮ ತೊತ್ತಿನ ತೊತ್ತಿನ ಪಡಿದೊತ್ತಿನ ಮಗಳೆಂದು
ರಕ್ಷಣೆಯ ಮಾಡಿದ ಶಿಶುವಾದ ಕಾರಣ
ಹಡದಪ್ಪಣ್ಣನೆ ಎನ್ನ ಕರಸ್ಥಲಕ್ಕೆ ಲಿಂಗವಾಗಿ ಬಂದು ನೆಲೆಗೊಂಡನು.
ಚೆನ್ನಮಲ್ಲೇಶ್ವರನೆ ಎನ್ನ ಮನಸ್ಥಲಕ್ಕೆ ಪ್ರಾಣವಾಗಿ ಬಂದು ಮೂರ್ತಗೊಂಡನು.
ಆ ಕರಸ್ಥಲದ ಲಿಂಗವನಚರ್ಿಸಿ ಪೂಜಿಸಿ
ವರವ ಬೇಡಿದಡೆ ತನುವ ತೋರಿದನುದ
ಆ ತನುವಿಡಿದು ಮಹಾಘನವ ಕಂಡೆದ
ಆ ಘನವಿಡಿದು ಮನವ ನಿಲಿಸಿದೆ.
ಮನವ ನಿಲಿಸಿ ನೋಡುವನ್ನಕ್ಕ ಪ್ರಾಣದ ನೆಲೆಯನರಿದೆದ
ಪ್ರಣವವನೊಂದುಗೂಡಿದೆ.
ಕಾಣಬಾರದ ಕದಳಿಯನೆ ಹೊಕ್ಕು ನೂನ ಕದಳಿಯ ದಾಂಟಿದೆ.
ಜ್ಞಾನಜ್ಯೋತಿಯ ಕಂಡೆ.
ತಾನುತಾನಾಗಿಪ್ಪ ಮಹಾಬೆಳಗಿನಲ್ಲಿ ಓಲಾಡಿ ಸುಖಿಯಾದೆನಯ್ಯಾ,
ಚೆನ್ನಮಲ್ಲೇಶ್ವರನ ಕರುಣದ ಶಿಶುವಾದ ಕಾರಣದಿಂದ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./24
ಏರುವ ಇಳಿಯುವ ಆದಿಯ ಅನಾದಿಯನರಿದು,
ಭೇದವ ತಿಳಿದು ಸಾದಿಸಿ ನೋಡಿ,
ಅಂತರಂಗದಲ್ಲಿ ವೇದಿಸಿ ನೋಡುತಿರಲು,
ಭೋಗ್ಯವಲ್ಲದ ಮಣಿ ಪ್ರಜ್ವಲವಾಯಿತ್ತು.
ಆ ಬೆಳಗಿನೊಳಗೆ ಪಶ್ಚಿಮದ ಕದವ ತೆಗೆದು ಪರಮನೊಡಗೂಡಿ,
ಬಚ್ಚಬರಿಯ ಬಯಲಬೆಳಗಿನೊಳಗಾಡುವ ಶರಣ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ./25
ಒಂದು ಊರಿಗೆ ಒಂಬತ್ತು ಬಾಗಿಲು.
ಆ ಊರಿಗೆ ಐವರು ಕಾವಲು, ಆರುಮಂದಿ ಪ್ರಧಾನಿಗಳು,
ಇಪ್ಪತ್ತೈದು ಮಂದಿ ಪರಿವಾರ.
ಅವರೊಳಗೆ ತೊಟ್ಟನೆ ತೊಳಲಿ ಬಳಲಲಾರದೆ
ಎಚ್ಚತ್ತು ನಿಶ್ಚಿಂತನಾದ ಅರಸನ ಕಂಡೆ.
ಆ ಅರಸಿನ ಗೊತ್ತುವಿಡಿದು,
ಒಂಬತ್ತು ಬಾಗಿಲಿಗೆ ಲಿಂಗಸ್ಥಾಪ್ಯವ ಮಾಡಿ, ಒಂದು ಬಾಗಿಲಲ್ಲಿ ನಿಂದು,
ಕಾವಲವನೆ ಕಟ್ಟಿಸಿ, ಪ್ರಧಾನಿಗಳನೆ ಮೆಟ್ಟಿಸಿ,
ಪರಿವಾರವನೆ ಸುಟ್ಟು, ಅರಸನ ಮುಟ್ಟಿಹಿಡಿದು ಓಲೈಸಲು
ಸಪ್ತಧಾತು ಷಡುವರ್ಗವನೆ ಕಂಡು, ಕತ್ತಲೆಯ ಕದಳಿಯ ದಾಂಟಿ,
ನಿಶ್ಚಿಂತದಲ್ಲಿ ಬಚ್ಚಬರಿಯ ಬೆಳಗಿನೊಳಗೋಲಾಡಿ
ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./26
ಒಂದು ಹುತ್ತಕ್ಕೆ ಒಂಬತ್ತು ಬಾಗಿಲು.
ಒಂದು ಸರ್ಪ ಒಂಬತ್ತು ಬಾಗಿಲಲ್ಲಿಯೂ ನೋಡುತ್ತಿಪ್ಪುದು.
ಒಂಬತ್ತು ಬಾಗಿಲಿಗೆ ಕದವನಿಕ್ಕಿ,
ಒಂದು ಬಾಗಿಲ ಅಗುಳಿ ದಾರವಂದವನಿಕ್ಕಿ ಬಲಿಯಲು,
ತಿರುಗುವುದಕ್ಕೆ ತಾವ ಕಾಣದೆ, ಇರುವುದಕ್ಕೆ ಇಂಬ ಕಾಣದೆ,
ನಿಲುವುದಕ್ಕೆ ಎಡೆಯ ಕಾಣದೆ, ಉರಿ ಎದ್ದು ಊಧ್ರ್ವಕ್ಕೇರಲು,
ಶರದಿ ಬತ್ತಿತ್ತು, ಅಲ್ಲಿದ್ದ ಖಗಮೃಗವೆಲ್ಲ ದಹನವಾದವು.
ಸರೋವರವೆಲ್ಲ ಉರಿದು ಹೋದವು, ಕತ್ತಲೆ ಹರಿಯಿತ್ತು.
ಮುಂದೆ ದಿಟ್ಟಿಸಿ ನೋಡುವನ್ನಕ್ಕ ಇಟ್ಟೆಡೆಯ ಬಾಗಿಲು ಸಿಕ್ಕಿತ್ತು.
ಆ ಇಟ್ಟೆಡೆಯ ಬಾಗಿಲ ಹೊಕ್ಕು ಹೊಡೆಕರಿಸಿ, ಪಶ್ಚಿಮದ ಕದವ ತೆಗೆದು,
ಬಟ್ಟ ಬಯಲಲ್ಲಿ ನಿಂದು ನಾನೆತ್ತ ಹೋದೆಹೆನೆಂದರಿಯೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./27
ಒಡಕುಮಡಿಕೆಯಂತೆ ಒಡೆದುಹೋಗುವ ಹಡಿಕೆಕಾಯವ ನೆಚ್ಚಿ,
ತಟತಟನೆ ತಾಗಿ, ಮಠದ ಬೆಕ್ಕಾಗಿ ತಿಟ್ಟನೆ ತಿರುಗಿ,
ಬಟ್ಟೆಯಲಿಕ್ಕಿ ಕಡಿವ ಕಳ್ಳನನರಿಯದೆ, ತಿಂಬ ಹುಲಿಯನರಿಯದೆ,
ಒಡವೆಯ ಗಳಿಸಿಹೆನೆಂದು ಒಡೆಯನ ಮರೆದುದ
ತನ್ನ ಮಡದಿ ಮಕ್ಕಳಿಗೆಂದು
ಅವರ ಒಡವೆರೆದು ಹೋಗುವ ಮಡಿವರೊಡನೆ ನುಡಿಯರು, ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./28
ಕಂಗಳ ಮುಂದಣ ಬೆಳಗ ಕಾಣದೆ, ಕಂಡಕಂಡವರ ಹಿಂದೆ ಹರಿದು,
ಇನ್ನು ಬೇರೆ ಕಂಡೆನೆಂಬ ಭಂಗಿತರ ನೋಡಾ ?
ತನ್ನಲ್ಲಿ ತಾ ಸುಯಿದಾನಿಯಾಗಿ ನೋಡಲರಿಯದೆ,
ಬಿನ್ನಗಣ್ಣಿಲಿ ನೋಡಿಹೆನೆಂದು ತಮ್ಮ ಮರೆದು
ಇನ್ನುಂಟೆಂದು ಅರಸುವ ಅಣ್ಣಗಳಿರಾ, ನೀವು ಕೇಳಿರೆ.
ಮನವು ಮಹದಲ್ಲಿ ನಿಂದುದೆ ಲಿಂಗ
ಕರಣಂಗಳರತುದೆ ಕಂಗಳ ಮುಂದಣ ಬೆಳಗು.
ಇದನರಿಯದೆ, ಮುಂದೆ ಘನವುಂಟೆಂದು ತೊಳಲಿ ಬಳಲಿ ಅರಸಿಹೆನೆಂದು
ಅರೆಮರುಳಾಗಿ ಹೋದರಯ್ಯಾ ನಿಮ್ಮ ನೆಲೆಯನರಿಯದೆ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./29
ಕಂಗಳ ಮುಂದೆ ಮಾಣಿಕವಿದ್ದು ಕಾಣಲೇಕರಿಯರಯ್ಯಾ ?
ಬಾಗಿಲ ಮುಂದೆ ಹಾಲಸಾಗರವಿದ್ದು ಒರತೆಯ ನೀರಿಗೆ ಹಾರುವಂತೆ
ಕಂಗಳ ಮುಂದೆ ಮಹಾಶರಣನಿದ್ದು ಕತ್ತಲೆ ರಿನಲೇಕೆ ?
ಇನ್ನು ಬೇರೆ ಲಿಂಗವನರಸೆಹೆನೆನಲೇಕೆ ?
ಆ ಮಹಾಶರಣ ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./30
ಕಂಡಿಹೆ ಕೇಳಿಹೆನೆಂದು ಮುಂದುಗಾಣದೆ ಸಂದೇಹದಲ್ಲಿ ಮುಳುಗಿ.
ಕಳವಳಿಸಿ ಕಾತರಿಸುವ ಅಣ್ಣಗಳಿರಾ, ನೀವು ಕೇಳಿರೆ, ಹೇಳಿಹೆನು.
ಕಾಣಬಾರದ ಘನವ ಹೇಳಬಾರದಾಗಿ,
ಹೇಳುವುದಕ್ಕೆ ನುಡಿಯಿಲ್ಲ, ನೋಡುವುದಕ್ಕೆ ರೂಪಿಲ್ಲ.
ಇಂತಪ್ಪ ನಿರೂಪದ ಮಹಾಘನವು
ಶರಣರ ಹೃದಯದಲ್ಲಿ ನೆಲೆಗೊಂಬುದಲ್ಲದೆ,
ಈ ಜನನ ಮರಣಕ್ಕೊಳಗಾಗುವ ಮನುಜರೆತ್ತ ಬಲ್ಲರು ಆ ಮಹಾಘನದ ನೆಲೆಯ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?/31
ಕಂಡಿಹೆ ಕೇಳಿಹೆನೆಂಬ ದ್ವಂದ್ವವ ಹಿಂಗಿ,
ಉಂಡಿಹೆ ಉಟ್ಟಿಹೆನೆಂಬ ಹಂಗ ಬಿಟ್ಟು,
ನಡೆದಿಹೆ ನುಡಿದಿಹೆನೆಂಬ ಮಾಟವ ನಿಲಿಸಿ, ಜಗದಾಟವ ನಿಲಿಸಿ,
ಮಾಟಕೂಟ ಜಪಕೋಟಲೆಯೊಳು ಸಿಕ್ಕದೆ ದಾಟಿ ಹೋದ
ಶರಣರ ಪಾದಕ್ಕೆ ಶರಣೆಂದು ಬದುಕಿದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./32
ಕಂಡು ಕೇಳಿಹೆನೆಂಬ ದಂದುಗವ ಬಿಟ್ಟು,
ನೋಡಿ ನುಡಿವೆನೆಂಬ ನೋಟವ ನಿಲಿಸಿ,
ಮಾಡಿ ಕೂಡಿಹೆನೆಂಬ ಮನ ನಿಂದು,
ತನುವ ಮರೆದು ತಾ ನಿಜಸುಖಿಯಾದಲ್ಲದೆ
ಘನವ ಕಾಣಬಾರದೆಂದರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./33
ಕತ್ತಲೆ ಬೆಳಗೆಂಬುದಿಲ್ಲ ನಿತ್ಯನಾದವಂಗೆ,
ಚಿತ್ತ ಪರಚಿತ್ತವೆಂಬುದಿಲ್ಲ ವಸ್ತುವಿನ ನೆಲೆಯ ಕಂಡವಂಗೆ.
ನಿತ್ಯ ಅನಿತ್ಯವೆಂಬುದಿಲ್ಲ ಕರ್ತೃ ತಾನಾದವಂಗೆ.
ಈ ಮೂರರ ಗೊತ್ತುವಿಡಿದು ನಿಶ್ಚಿಂತನಾಗಿ ನಿರ್ವಯಲನೈದುವ
ಶರಣರ ಪಾದಕ್ಕೆ ಶರಣೆಂದು ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./34
ಕದಳಿಯ ಬನದೊಳಗಿರುವ ಲಿಂಗವ ಅರಸಿದಡೆ ಕಾಣಬಾರದು.
ನೋಡಿದಡೆ ನೋಟಕ್ಕಿಲ್ಲ, ಹಿಡಿದಡೆ ಹಸ್ತಕ್ಕಿಲ್ಲ,
ನೆನೆದಡೆ ಮನಕ್ಕಗೋಚರ.
ಇಂತು ಮಹಾಘನವ ಹೃದಯದಲ್ಲಿ ನೆಲೆಗೊಳಿಸಿದ ಶರಣರ
ಕಂಗಳಲ್ಲಿ ಹೆರೆಹಿಂಗದೆ ನೋಡಿ, ಅವರಂಘ್ರಿಯಲ್ಲಿ ಐಕ್ಯವಾದೆನಯ್ಯಾ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./35
ಕನಿಷ್ಠದಲ್ಲಿ ಹುಟ್ಟಿದೆ, ಉತ್ತಮದಲ್ಲಿ ಬೆಳೆದೆ,
ಸತ್ಯಶರಣರ ಪಾದವಿಡಿದೆ.
ಆ ಶರಣರ ಪಾದವಿಡಿದು ಗುರುವ ಕಂಡೆ, ಲಿಂಗವ ಕಂಡೆ,
ಜಂಗಮವ ಕಂಡೆ, ಪಾದೋದಕವ ಕಂಡೆ, ಪ್ರಸಾದವ ಕಂಡೆ.
ಇಂತಿವರ ಕಂಡೆನ್ನ ಕಂಗಳಮುಂದಣ ಕತ್ತಲೆ ಹರಿಯಿತ್ತು.
ಕಂಗಳಮುಂದಣ ಕತ್ತಲೆ ಹರಿಯಲೊಡನೆ,
ಮಂಗಳದ ಮಹಾಬೆಳಗಿನೊಳಗೋಲಾಡಿ ಸುಖಿಯಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./36
ಕರಗವ ಸುಟ್ಟೆ, ಕಂದಲವನೊಡದೆ,
ಮರನ ಮುರಿದೆ, ಬಣ್ಣವ ಹರಿದೆ,
ಭಿನ್ನಗಣ್ಣು ಕೆಟ್ಟಿತ್ತು, ಜ್ಞಾನಗಣ್ಣಿಲಿ ನಿಮ್ಮನೆ ನೋಡಿ,
ಕೂಡಿ ಸುಖಿಯಾದೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./37
ಕರುಳು ಒಣಗಿತ್ತು ತನು ಕರಗಿತ್ತು
ಮನ ನಿಂದಿತ್ತು ವಾಯು ಬರತಿತ್ತು
ಅಪ್ಪು ಅರತಿತ್ತು ಹಿಪ್ಪೆ ಉಳಿಯಿತ್ತು.
ನೆನಹು ನಿಷ್ಪತ್ತಿಯಾಗಿ ಬೆಳಗನೆ ಬೆರೆದ ಶರಣರ
ಜನನಮರಣಕ್ಕೊಳಗಾದ ಮನುಜರೆತ್ತ ಬಲ್ಲರು
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?/38
ಕಾಣಬಾರದ ಕದಳಿಯಲೊಂದು ಮಾಣಿಕ ಹುಟ್ಟಿತ್ತು.
ಇದಾರಿಗೂ ಕಾಣಬಾರದು.
ಮಾರಿಹೆನೆಂದಡೆ ಮಾನವರಿಗೆ ಸಾಧ್ಯವಾಗದು.
ಸಾವಿರಕ್ಕೆ ಬೆಲೆಯಾಯಿತ್ತು.
ಆ ಬೆಲೆಯಾದ ಮಾಣಿಕ ನಮ್ಮ ಶಿವಶರಣರಿಗೆ ಸಾಧ್ಯವಾಯಿತ್ತು.
ಅವರು ಆ ಮಾಣಿಕವ ಹೇಗೆ ಬೆಲೆಮಾಡಿದರೆಂದಡೆ
ಕಾಣಬಾರದ ಕದಳಿಯ ಹೊಕ್ಕು, ನೂನ ಕದಳಿಯ ದಾಂಟಿ,
ಜಲವ ಶೋದಿಸಿ, ಮನವ ನಿಲಿಸಿ,
ತನುವಿನೊಳಗಣ ಅನುವ ನೋಡುವನ್ನಕ್ಕ, ಮಾಣಿಕ ಸಿಕ್ಕಿತ್ತು.
ಆ ಮಾಣಿಕವ ನೋಡಿದೆನೆಂದು ಜಗದ ಮನುಜರನೆ ಮರೆದು,
ತಾನುತಾನಾಗಿ ಜ್ಞಾನಜ್ಯೋತಿಯ ಬೆಳಗಿನೊಳಗೋಲಾಡಿ
ಸುಖಿಯಾದೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ. !/39
ಕಾಮವಿಲ್ಲ, ಕ್ರೋಧವಿಲ್ಲ, ಲೋಭವಿಲ್ಲ,
ಮೋಹವಿಲ್ಲ, ಮದವಿಲ್ಲ, ಮತ್ಸರವಿಲ್ಲ
ಎಂಬ ಅಣ್ಣಗಳಿರಾ, ನೀವು ಕೇಳಿರೊ ಹೇಳಿಹೆನು.
ಕಾಮವಿಲ್ಲದವಂಗೆ ಕಳವಳವುಂಟೆ ?
ಕ್ರೋಧವಿಲ್ಲದವಂಗೆ ರೋಷವುಂಟೆ ?
ಲೋಭವಿಲ್ಲದವಂಗೆ ಆಸೆವುಂಟೆ ?
ಮೋಹವಿಲ್ಲದವಂಗೆ ಪಾಶವುಂಟೆ ?
ಮದವಿಲ್ಲದವಂಗೆ ತಾಮಸವುಂಟೆ ?
ಮತ್ಸರವಿಲ್ಲದವನು ಮನದಲ್ಲಿ ಮತ್ತೊಂದ ನೆನೆವನೆ ?
ಇವು ಇಲ್ಲವೆಂದು ಮನವ ಕದ್ದು ನುಡಿವ
ಅಬದ್ಭರ ಮಾತ ಮೆಚ್ಚುವನೆ
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ?/40
ಕಾಯವೆಂಬ ಕದಳಿಯ ಹೊಕ್ಕು ಜೀವಪರಮರ ನೆಲೆಯನರಿದು,
ರಸ ರುಧಿರ ಮಾಂಸ ಮಜ್ಜೆ ಮಿದುಳು ಅಸ್ತಿ ಶುಕ್ಲ
ಈ ಸಪ್ತಧಾತುಗಳ ಸಂಚವ ತಿಳಿದು,
ಮತ್ತೆ ಮನ ಪವನ ಬಿಂದುವನೊಡಗೂಡಿ
ಉತ್ತರಕ್ಕೇರಿ ನೋಡಲು ಬಟ್ಟಬಯಲಾಯಿತ್ತು.
ಆ ಬಯಲಲ್ಲಿ ನಿಂದು, ನಿರಾಳದೊಳಗಾಡಿ ಮಹಾಬೆಳಗನೆ ಕೂಡಿ
ನಾ ನಿಜಮುಕ್ತಳಾದೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./41
ಕಾಯವೆಂಬ ಕದಳಿಯನೆ ಹೊಕ್ಕು, ನೂನ ಕದಳಿಯ ದಾಂಟಿ,
ಜೀವಪರಮರ ನೆಲೆಯನರಿದು, ಜನನಮರಣವ ಗೆದ್ದು,
ಭವವ ದಾಂಟಿದಲ್ಲದೆ, ಘನವ ಕಾಣಬಾರದೆಂದರು
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./42
ಕೈಲಾಸ ಮರ್ತ್ಯಲೋಕ ಎಂಬರು.
ಕೈಲಾಸವೆಂದಡೇನೊ, ಮರ್ತ್ಯಲೋಕವೆಂದಡೇನೊ ?
ಅಲ್ಲಿಯ ನಡೆಯೂ ಒಂದೆ, ಇಲ್ಲಿಯ ನಡೆಯೂ ಒಂದೆ.
ಅಲ್ಲಿಯ ನುಡಿಯೂ ಒಂದೆ, ಇಲ್ಲಿಯ ನುಡಿಯೂ ಒಂದೆ ಕಾಣಿರಯ್ಯಾ ಎಂಬರು.
ಕೈಲಾಸದವರೆ ದೇವರ್ಕಳೆಂಬರುದ
ಸುರಲೋಕದೊಳಗೆ ಸಾಸಿರಕಾಲಕ್ಕಲ್ಲದೆ ಅಳಿದಿಲ್ಲವೆಂಬರು.
ನರಲೋಕದೊಳಗೆ ಸತ್ತು ಸತ್ತು ಹುಟ್ಟುತಿಹರೆಂಬರು.
ಇದ ಕಂಡು ನಮ್ಮ ಶರಣರು
ಸುರಲೋಕವನು ನರಲೋಕವನು ತೃಣವೆಂದು ಭಾವಿಸಿ,
ಭವವ ದಾಂಟಿ ತಮ್ಮ ತಮ್ಮ ಹುಟ್ಟನರಿದು,
ಮಹಾಬೆಳಗನೆ ಕೂಡಿ, ಬೆಳಗಿನಲ್ಲಿ ಬಯಲಾದರಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./43
ಘಟವೆಂಬ ಮಠದೊಳಗೆ ಮನವೆಂಬ ಮರ ಹುಟ್ಟಿತ್ತು.
ಬೇರುವರಿಯಿತ್ತು, ಅದಕ್ಕೆ ಶತಕೋಟಿಶಾಖೆ ಬಿಟ್ಟಿತ್ತು.
ಆ ಶಾಖೆಯ ಬೆಂಬಳಿಗೊಂಡು ಆಡುವರೆಲ್ಲ ಮುಂದುಗಾಣದೆ ಸಂದುಹೋದರು.
ಇದನರಿದು ನಿಮ್ಮ ಶರಣರು ಹಿಂದೆ ನೋಡಿ
ಮುಂದೆ ಲಿಂಗದಲ್ಲಿ ಬೆರೆವ ಭೇದವ ಕಂಡು,
ಮನವೆಂಬ ಮರದ ಬೇರನಗಿದು ಶತಕೋಟಿ ಶಾಖೆಯನು ಸವರಿ,
ತುತ್ತತುದಿಯ ಮೇಲೆ ನಿಂದು ನೋಡುವನ್ನಕ್ಕ,
ನಾನೆತ್ತ ಹೋದೆನೆಂದರಿಯೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ. /44
ಜಂಗಮವೆ ಗುರು, ಜಂಗಮವೆ ಲಿಂಗ, ಜಂಗಮವೆ ಪ್ರಾಣವೆಂದಡೆ,
ಇಲ್ಲವೆಂಬ ಅಂಗಹೀನರಿರಾ, ನೀವು ಕೇಳಿರೊ.
ಜಂಗಮವು ಗುರುವಲ್ಲದಿದ್ದಡೆ,
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವ ಹಿಂಗಿಸುವನೆ ?
ಜಂಗಮವು ಲಿಂಗವಲ್ಲದಿದ್ದಡೆ, ಪ್ರಾಣಲಿಂಗವ ತೋರುವನೆ ?
ಜಂಗಮವು ಪ್ರಾಣವಲ್ಲದಿದ್ದಡೆ, ಪ್ರಾಣಕ್ಕೆ ಪ್ರಸಾದವನೂಡುವನೆ ?
ಇದ ಕಂಡು ಕಾಣೆನೆಂಬ ಭಂಗಿತರ ನುಡಿಯ ಮೆಚ್ಚರು
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./45
ಜಂಗಮವೆ ಜಗತ್ಪಾವನವಯ್ಯಾ.
ಆ ಜಂಗಮದ ನೆನಹೆ ಲಿಂಗವಾಯಿತ್ತು.
ಅವರ ತನುವೆ ಎನ್ನ ಕಾಯವಾಯಿತ್ತು.
ಅವರ ದರ್ಶನವೆ ಎನಗೆ ಪರುಷವಾಯಿತ್ತು,
ಆ ಪರುಷವಿಡಿದು ಮನವ ಲಿಂಗದಲ್ಲಿ ಬೆರಸಿ,
ಕನಸು ಕಳವಳಿಕೆ ಹೆಸರುಗೆಟ್ಟು ಹೋದುವಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./46
ಜಗದೊಳಗೆ ಹುಟ್ಟಿ ಜಗದಪ್ರಪಂಚ ಹಿಂಗಿ,
ಜಂಗಮದೊಳಗಾಡುತ್ತ, ಲಿಂಗದೊಳಗೆ ನೋಡುತ್ತ,
ಅಂಗನೆಯರ ಸಂಗವ ಮಾಡಿಹೆನೆಂಬಿರಿ.
ಅದೆಂತೆಂದಡೆ, ನೋಟಕಿಲ್ಲದ ಘನದ ಕೂಟವ ಕೂಡುವ ಪರಿಯೆಂತಯ್ಯಾ ?
ರೂಪಿಲ್ಲದುದ ರೂಪಿಗೆತರುವ ಪರಿಯೆಂತಯ್ಯಾ ?
ಹೇಳಬಾರದ ಘನವ ಕೇಳುವ ಪರಿಯೆಂತಯ್ಯಾ ?
ಅತ್ಯತಿಷ್ಠದ್ದಶಾಂಗುಲಂ ಎಂಬ ವಸ್ತು
ಹಿಡಿದಡೆ ಹಿಡಿಗಿಲ್ಲ, ನುಡಿದಡೆ ನುಡಿಗಿಲ್ಲ.
ಒಡಲೊಳಗಿಲ್ಲದ ಹೊರಗಿಲ್ಲ, ಒಳಗಿಲ್ಲ.
ವಾಚಾತೀತ ಮನೋತೀತ ಭಾವಾತೀತವಾಗಿದ್ದ ವಸ್ತು
ತನ್ನೊಳಗೆ ತಾನೆ ತನ್ಮಯವಾಗಿ ಇರುವುದ
ತಿಳಿಯಲರಿಯದೆ ಬಿನ್ನವಿಟ್ಟರಸುವಿರಿ.
ಅದೆಂತೆಂದಡೆ ತ ಪುಷ್ಪಪರಿಮಳದಂತೆ, ತುಪ್ಪಕಂಪಿನಂತೆ,
ಅಲೆನೀರಿನಂತೆ, ಕಣ್ಣುಕಪ್ಪಿನಂತೆ, ಚಿನ್ನಬಣ್ಣದಂತೆ,
ಸಿಪ್ಪೆಹಣ್ಣಿನಂತೆ, ಒಪ್ಪಚಿತ್ರದಂತೆ,
ಕರ್ಪೂರ ಜ್ಯೋತಿಯೊಳಡಗಿದಂತೆ ನೆನಹು ನಿಷ್ಪತ್ತಿಯಾದ ಶರಣ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ./47
ತನು ಕರಗಿತ್ತು, ಮನ ನಿಂದಿತ್ತು, ಉಲುಹು ಅಡಗಿತ್ತು,
ನೆಲೆ ನಿಂದಿತ್ತು, ಮನ ಪವನ ಬಿಂದು ಒಡಗೂಡಿತ್ತು,
ಉರಿ ರಿದ್ದಿತ್ತು, ಊಧ್ರ್ವಕ್ಕೇರಿತ್ತು, ಶರದಿ ಬತ್ತಿತ್ತು,
ನೊರೆ ತೆರೆ ಅಡಗಿತ್ತು, ಅಷ್ಟಮದವೆಲ್ಲ ಹಿಟ್ಟುಗುಟ್ಟಿತ್ತು.
ಕರಣಂಗಳೆಲ್ಲ ಹುರಿದು ಹೋದವು, ಸಪ್ತಧಾತು ಕೆಟ್ಟಿತ್ತು,
ರಸವರತಿತ್ತು, ಅಪ್ಪುಬರತಿತ್ತು.
ಕೆಟ್ಟುಹೋದ ಬಿದಿರಿನಂತೆ ತೊಟ್ಟು ಬಿಟ್ಟು ಬಯಲೊಳಗೆ ಬಿದ್ದು,
ನಾನೆತ್ತ ಹೋದೆನೆಂದರಿಯೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ/48
ತನು ನಷ್ಟವಾದಡೇನಯ್ಯಾ, ಮನನಷ್ಟವಾಗದನ್ನಕ್ಕ ?
ವಾಕ್ಕು ನಷ್ಟವಾದಡೇನಯ್ಯಾ, ಬೇಕುಬೇಡೆಂಬುದಳಿಯದನ್ನಕ್ಕ ?
ಅಂಗಸುಖ ನಷ್ಟವಾದಡೇನಯ್ಯಾ, ಕಂಗಳಪಟಲಹರಿಯದನ್ನಕ್ಕ ?
ಮನ ಮುಗ್ಧವಾದಡೇನಯ್ಯಾ, ಅಹಂ ಎಂಬುದ ಬಿಡದನ್ನಕ್ಕ ?
ಇವೆಲ್ಲರೊಳಗಿದ್ದು ವಲ್ಲಭನೆನಿಸಿಕೊಂಬವರ ನುಡಿಯ ಬಲ್ಲರು
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./49
ತನುವ ಕರಗಿಸಿ, ಹರಿವ ಮನವ ನಿಲಿಸಿ,
ಅಂಗಗುಣವ ಅಳಿದು, ಲಿಂಗಗುಣವ ನಿಲಿಸಿ,
ಭಾವವಳಿದು, ಬಯಕೆ ಸವೆದು, ಮಹಾದೇವನಾದ ಶರಣರ
ಜಗದ ಮಾನವರೆತ್ತ ಬಲ್ಲರು, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?/50
ತನುವೆಂಬ ರಾಜ್ಯಕ್ಕೆ ಮನವೆಂಬ ಅರಸು.
ಆ ಅರಸಿಂಗೆ ನೋಟ ಬೇಟದವರಿಬ್ಬರು.
ಅಷ್ಟಮಣಿಹ ಹರಿಮಣಿಹದವರು.
ಅವರ ಸುತ್ತ ಓಲೈಸುವರು ಇಪ್ಪತ್ತೈದು ಮಂದಿ.
ಅವರಿಗೆ ಕತ್ತಲೆಯ ಬಲೆಯ ಬೀಸಿ ಕೆಡಹಿ,
ಅರಸಿನ ಗೊತ್ತುವಿಡಿದು ಉತ್ತರವನೇರಿ
ನಿಶ್ಚಿತವಾಗಿ ನಿಜದಲ್ಲಿ ನಿರ್ವಯಲನೆಯ್ದುವ ಶರಣರ ಪಾದವ ಹಿಡಿದು,
ಎತ್ತ ಹೋದೆನೆಂದರಿಯೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ. /51
ತನುವೆಂಬ ಹುತ್ತಕ್ಕೆ ಮನವೆಂಬ ಸರ್ಪ ಆವರಿಸಿ,
ಹೆಡೆಯೆತ್ತಿ ಆಡುತ್ತಿರಲು,
ಆ ಸರ್ಪನ ಕಂಡು, ನಾ ಹೆದರಿಕೊಂಡು,
ಗುರುಕರುಣವೆಂಬ ಪರುಷವ ತಂದು ಮುಟ್ಟಿಸಲು,
ನೋಟ ನಿಂದಿತ್ತು, ಹೆಡೆ ಅಡಗಿತ್ತು, ಹಾವು ಬಯಲಾಯಿತ್ತು.
ಆ ಗುರುಕರುಣವೆಂಬ ಪರುಷವೆ ನಿಂದಿತ್ತು.
ನಿಂದ ಪರುಷವನೆ ಕೊಂಡು ನಿಜದಲ್ಲಿ ನಿರ್ವಯಲಾಗುವ
ಶರಣರ ಪಾದವ ನಂಬಿ ಕೆಟ್ಟು ಬಟ್ಟಬಯಲಾದೆನಯ್ಯಾ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./52
ತನುವೆಂಬ ಹುತ್ತದಲ್ಲಿ ಮನವೆಂಬ ಸರ್ಪ ಹೆಡೆಯನುಡುಗಿಕೊಂಡಿರಲು
ಅಷ್ಟಮದವೆಲ್ಲ ಹಿಟ್ಟುಗುಟ್ಟಿದವುದ ಕರಣಂಗಳೆಲ್ಲ ಉರಿದುಹೋದವು.
ಇದ್ದ ಶಕ್ತಿಯನೆ ಕಂಡು, ಮನ ನಿಶ್ಚಯವಾದುದನೆ ನೋಡಿ,
ಪಶ್ಚಿಮದ ಕದವ ತೆಗೆದು, ಬಟ್ಟಬಯಲ ಬೆಳಗಿನೊಳಗೆ ಓಲಾಡಿ
ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
ಜ್ಞಾನಶಕ್ತಿ ಬಂದು ಎಬ್ಬಿಸಲು,
ಉರಿ ಭುಗಿಲೆನುತ್ತ ಹೆಡೆಯನೆತ್ತಿ ಊಧ್ರ್ವಕ್ಕೇರಲು,/53
ತನ್ನ ತಾನರಿಯದೆ ಅನ್ಯರಿಗೆ ಬೋಧೆಯ ಹೇಳುವ
ಅಣ್ಣಗಳಿರಾ, ನೀವು ಕೇಳಿರೊ.
ಅವರ ಬಾಳುವೆ ರಿಂತೆಂದಡೆ
ಕುರುಡ ಕನ್ನಡಿಯ ಹಿಡಿದಂತೆ.
ತನ್ನ ಒಳಗೆ ಮರೆದು ಇದಿರಿಂಗೆ ಬೋಧೆಯ ಹೇಳಿ,
ಉದರವ ಹೊರೆವ ಚದುರರೆಲ್ಲರೂ ಹಿರಿಯರೆ ? ಅಲ್ಲಲ್ಲ.
ಇದ ಮೆಚ್ಚುವರೆ ನಮ್ಮ ಶರಣರು ?
ಅವರ ನಡೆ ರಿಂತೆಂದಡೆತ
ಒಳಗನರಿದು, ಹೊರಗ ಮರೆದು,
ತನುವಿನೊಳಗಣ ಅನುವ ಹಸುಗೆಯ ಮಾಡಿದರು.
ಪೃಥ್ವಿಗೆ ಅಪ್ಪುವಿನ ಅದಿಕವ ಮಾಡಿದರು.
ಅಗ್ನಿಯ ಹುದುಗಿದರು, ವಾಯುವ ಬೀರಿದರು, ಆಕಾಶದಲ್ಲಿ ನಿಂದರು,
ಓಂಕಾರವನೆತ್ತಿದರುದ ಅದರೊಡಗೂಡಿದರು.
ಕಾಣದ ನೆಲೆಯನರಿದರುದ ಪ್ರಮಾಣವನೊಂದುಗೂಡಿದರು.
ಮಹಾಬೆಳಗಿನಲ್ಲಿ ಓಲಾಡುವ ಶರಣರ ವಾಗ್ಜಾಲವಕಲಿತುಕೊಂಡು ನುಡಿವ
ಕಾಕುಮನುಜರೆತ್ತ ಬಲ್ಲರು ನಿಮ್ಮ ನೆಲೆಯ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?/54
ತುಂಬಿದ ಕೆರೆಗೆ ಅಂಬಿಗ ಹರಿಗೋಲ ಹಾಕಿ ಬಲೆಯ ಬೀಸಿದಂತೆ,
ತುಂಬುತ್ತ ಕೆಡಹುತ್ತಿದ್ದು ಲಿಂಗವನೊಡಗೂಡಿದೆವೆಂದು,
ಜಂಗಮದ ನೆಲೆಯಕಾಣದೆ ಸಂದುಹೋದರಲ್ಲಾ ಈ ಲೋಕದವರೆಲ್ಲ.
ಲಿಂಗದ ನೆಲೆಯ ಕಾಂಬುದಕ್ಕೆ, ಹರಿಗೋಲನೆ ಹರಿದು, ಹುಟ್ಟ ಮುರಿದು,
ಆ ಬಲೆಯಲ್ಲಿ ಸಿಕ್ಕಿದ ಖಗಮೃಗವನೆ ಕೊಂದು,
ಆ ಬಲೆಯನೆ ಕಿತ್ತು, ಅಂಬಿಗ ಸತ್ತು,
ಕೆರೆ ಬತ್ತಿ, ಮೆಯ್ಮರೆದಲ್ಲದೆ ಆ ಮಹಾಘನವ ಕಾಣಬಾರದೆಂದರು
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./55
ತುಂಬಿದ ಮನೆಯ ಹೊಕ್ಕಡೆ ದಂದಳವಾಯಿತ್ತು.
ಈ ಸಂದಳಿಗಾರದೆ ತುಂಬಿದ ಮನೆಗೆ
ಕಿಚ್ಚನಿಕ್ಕಿದಡೆ ನಿಶ್ಚಿಂತವಾಯಿತ್ತು.
ಬಟ್ಟಬಯಲ ಬರಿಯ ಮನೆಯೊಳಗೆ
ನಿಮ್ಮ ಬೆಳಗನೆ ನೋಡಿ ಸುಖಿಯಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./56
ದಾರಿವಿಡಿದು ಬರಲು ಮುಂದೆ ಸರೋವರವ ಕಂಡೆ.
ಆ ಸರೋವರದ ಮೇಲೆ ಒಂದು ದಳದ ಕಮಲವ ಕಂಡೆ,
ಆ ಕಮಲವರಳಿ ವಿಕಸಿತವಾಗಿತ್ತು, ಪರಿಮಳವೆಸಗಿತ್ತು.
ಆ ಪರಿಮಳದ ಬೆಂಬಳಿವಿಡಿದು ಹೋಗುತ್ತಿರಲು,
ಮುಂದೆ ಒಂದು ದಾರಿಯ ಕಂಡು,
ಆ ಮುಂದಳ ದಾರಿಯಲ್ಲಿ ಹೋದವರೆಲ್ಲರು
ನಿಂದೆ ಕುಂದುಗಳಿಗೊಳಗಾಗಿ ಸಂದುಹೋದರು.
ಇದ ಕಂಡು ನಾ ಹೆದರಿಕೊಂಡು ಎಚ್ಚತ್ತು,
ಚಿತ್ತವ ಸುಯಿದಾನವ ಮಾಡಿ,
ಹಿತ್ತಲ ಬಾಗಿಲ ಕದವ ತೆಗೆದು ನೋಡಿದಡೆ ಬಟ್ಟಬಯಲಾಗಿದ್ದಿತ್ತು.
ಆ ಬಟ್ಟಬಯಲೊಳಗೆ ಮಹಾಬೆಳಗನೆ ನೋಡಿ
ನಾ ಎತ್ತಹೋದೆನೆಂದರಿಯೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./57
ದಾರಿವಿಡಿದು ಬರಲು ಮುಂದೆ ಸರೋವರವ ಕಂಡೆ.
ಆ ಸರೋವರದ ಮೇಲೆ ಮಹಾಘನವ ಕಂಡೆ.
ಆ ಮಹಾಘನವಿಡಿದು ಮನವ ನಿಲಿಸಿ
ಕಾಯಗುಣವನುಳಿದು ಕರಣಗುಣವ ಸುಟ್ಟು,
ಆಸೆಯನೆ ಅಳಿದು, ರೋಷವನೆ ನಿಲಿಸಿ,
ಜಗದೀಶ್ವರನಾದ ಶರಣರ ಮರ್ತ್ಯದ ಹೇಸಿಗಳೆತ್ತಬಲ್ಲರು
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?/58
ನರರ ಬೇಡೆನು, ಸುರರ ಹಾಡೆನು, ಕರಣಂಗಳ ಹರಿಯಬಿಡೆನು,
ಕಾಮನ ಬಲೆಗೆ ಸಿಲ್ಕೆನು, ಮರವೆಗೊಳಗಾಗೆನು.
ಪ್ರಣವ ಪಂಚಾಕ್ಷರಿಯ ಜಪಿಸಿಹೆನೆಂದು
ತನುವ ಮರೆದು ನಿಜಮುಕ್ತಳಾದೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./59
ನಾನೊಂದು ಹಾಳೂರಿಗೆ ಹೋಗುತ್ತಿರಲು, ಆ ಹಾಳೂರ ಹೊಕ್ಕಡೆ,
ಅಲ್ಲಿ ನಾಯಿಗಳು ಅಟ್ಟಿಕೊಂಡು ಬಂದವು,
ಹುಲಿ ಕರಡಿ ಅಡ್ಡಲಾದವು.
ಇವ ಕಂಡು ನಾ ಹೆದರಿಕೊಂಡು
ನನ್ನ ಕೈಗೊಂದು ಕಲ್ಲ ತೆಕ್ಕೊಂಡು ನೋಡುತ್ತ ಬರುತ್ತಿರಲು,
ಆ ನಾಯಿಗಳು ಓಡಿಹೋದವು.
ಹುಲಿ ಕರಡಿಗಳು ಅಲ್ಲಿಯೇ ಬಯಲಾದವು.
ಆ ಊರು ನಿರ್ಮಲವಾಯಿತ್ತು.
ಆ ನಿರ್ಮಲವಾದ ಊರ ಹೊಕ್ಕು ನೋಡಲು,
ಆ ನೋಡುವ ನೋಟವು, ಆ ಊರನಾಳುವ ಅರಸು,
ಆ ಊರು ಕೂಡಿ ಒಂದಾದವು.
ಆ ಒಂದಾದುದನೆ ನೋಡಿ, ದ್ವಂದ್ವವನೆ ಹರಿದು,
ನಿಮ್ಮ ಸಂಗಸುಖದೊಳಗೋಲಾಡಿ ಸುಖಿಯಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./60
ನಾಮ ರೂಪಿಲ್ಲದ ಘನವ ನಾಮರೂಪಿಂಗೆ ತಂದಿರಯ್ಯಾ.
ಅದೇನು ಕಾರಣವೆಂದಡೆ,
ಎನ್ನ ಮನಕ್ಕೆ ಚೆನ್ನಮಲ್ಲೇಶ್ವರನಾದಿರಿ.
ಹೀಗೆಂದು ನಿಮ್ಮ ನಾಮಾಂಕಿತ.
ಹೀಗಾದಡೆಯು ಕಾಣಲರಿಯರು ಎಂದು
ನಡೆನುಡಿ ಚೈತನ್ಯವಿಡಿದು, ಕರದಲ್ಲಿ ಲಿಂಗವ ಹಿಡಿದು,
ಚೆನ್ನಮಲ್ಲೇಶ್ವರನೆಂಬ ನಾಮಾಂಕಿತವಿಡಿದು ಬರಲಾಗಿ,
ಮರ್ತ್ಯಲೋಕದಲ್ಲಿ ತನ್ನ ನೆನೆವ ಶಿವಭಕ್ತರ
ಪಾವನ ಮಾಡಬೇಕೆಂದು ಬಂದು,
ಭೂಮಿಯಮೇಲೆ ಲೀಲೆಯ ನಟಿಸಿ,
ತಮ್ಮ ಪಾದದಲ್ಲಿ ನಿಜಮುಕ್ತಳ ಮಾಡಿದರಯ್ಯಾ ಚೆನ್ನಮಲ್ಲೇಶ್ವರನು
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./61
ನಿಮ್ಮ ಪಾದವಿಡಿದು ಮನ ಪಾವನವಾಯಿತ್ತು
ಎನ್ನ ತನು ಶುದ್ಧವಾಯಿತ್ತು ಕಾಯಗುಣವಳಿಯಿತ್ತು
ಕರಣಗುಣ ಸುಟ್ಟು, ಭಾವವಳಿದು, ಬಯಕೆ ಸವೆದು,
ಮಹಾದೇವನಾದ ಶರಣರ ಪಾದವಿಡಿದು ನಿಜಮುಕ್ತಳಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./62
ನಿರಾಳಲಿಂಗವ ಕಾಂಬುದಕ್ಕೆ
ಮನ ಮತ್ತೊಂದೆಡೆಗೆ ಹರಿಯದಿರಬೇಕುದ
ನೆನಹು ಲಿಂಗವಲ್ಲದೆ ಮತ್ತೊಂದ ನೆನೆಯದಿರಬೇಕುದ
ತನುವಿನಲ್ಲಿ ಮರಹಿಲ್ಲದಿರಬೇಕುದ ಕಾಳಿಕೆ ಹೊಗದಿರಬೇಕು.
ಇಂತು ನಿಶ್ಚಿಂತವಾಗಿ ಚಿತ್ತಾರದ ಬಾಗಿಲವ ತೆರೆದು
ಮುತ್ತು ಮಾಣಿಕ ನವರತ್ನ ತೆತ್ತಿಸಿದಂತಿಹ
ಉಪ್ಪರಿಗೆ ಮೇಗಳ ಶಿವಾಲಯವ ಕಂಡು,
ಅದರೊಳಗೆ ಮನ ಅಚ್ಚೊತ್ತಿದಂತಿದ್ದು,
ಇತ್ತ ಮರೆದು ಅತ್ತಲೆ ನೋಡಿ ನಿಜಮುಕ್ತಳಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ/63
ನಿರ್ಮಳವಾದ ದೇಹದಲ್ಲಿ ಇನ್ನೊಂದ ಕಲ್ಪಿಸಲುಂಟೆ ?
ಲಿಂಗವಾದ ತನುವಿನೊಳಗೆ ಜಂಗಮದ ನೆನಹಲ್ಲದೆ,
ಇನ್ನೊಂದರ ನೆನಹುಂಟೆ ?
ಪ್ರಸಾದವಾದ ಕಾಯದೊಳಗೆ ತನ್ನ ಪ್ರಾಣಲಿಂಗದ ನೆನಹಲ್ಲದೆ,
ಇನ್ನೊಂದರ ನೆನಹುಂಟೆ ?
ಈ ಸರ್ವಾಂಗವೂ ಲಿಂಗವಾಗಿ, ಜಂಗಮನೆ ಪ್ರಾಣವಾಗಿ,
ಅವರ ಪಾದದಲ್ಲಿಯೇ ನಾನು ನಿಜಮುಕ್ತಳಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./64
ನಿಶ್ಚಿಂತ ನಿರಾಳದಲ್ಲಿ ಆಡುವ ಮಹಾದೇವನ ಕರ್ತೃವೆಂದರಿದ ಕಾರಣದಿಂದ,
ತತ್ವವೆಂಬುದನರಿದು, ಮನವ ನಿಶ್ಚಿಂತವ ಮಾಡಿ,
ನಿಜಸುಖದಲ್ಲಿ ನಿಂದು, ಕತ್ತಲೆಯ ಹರಿಯಿಸಿ,
ತಮವ ಹಿಂಗಿಸಿ, ವ್ಯಾಕುಳವನಳಿದು, ನಿರಾಕುಳದಲ್ಲಿ ನಿಂದು,
ಬೇಕು ಬೇಡೆಂಬುಭಯವಳಿದು, ಲೋಕದ ಹಂಗಹರಿದು,
ತಾನು ವಿವೇಕಿಯಾಗಿ ನಿಂದು ಮುಂದೆ ನೋಡಿದಡೆ
ಜ್ಯೋತಿಯ ಬೆಳಗ ಕಾಣಬಹುದೆಂದರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./65
ನಿಶ್ಚಿಂತವಾದವಂಗೆ ಮತ್ತಾರ ಹಂಗುಂಟೆ ?
ಚಿತ್ತಸುಯಿದಾನವಾದವಂಗೆ ತತ್ವವ ಕಂಡೆಹೆನೆಂಬುದುಂಟೆ ?
ತಾನುತಾನಾದವಂಗೆ ಮಾನವರ ಹಂಗುಂಟೆ ?
ಭಾವಬಯಲಾದವಂಗೆ ಬಯಕೆಯೆಂಬುದುಂಟೆ ?
ಗೊತ್ತ ಕಂಡವಂಗೆ ಅತ್ತಿತ್ತಲರಸಲುಂಟೆ ?
ಇಂತು ನಿಶ್ಚಯವಾಗಿ ನಿಜವ ನೆಮ್ಮಿದ ಶರಣರ ಎನಗೊಮ್ಮೆ ತೋರಿಸಯ್ಯಾ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./66
ನೆನೆದೆಹೆನೆಂದಡೆ ಏನ ನೆನೆವೆನಯ್ಯಾ !
ಮನ ಮಂಕಾಯಿತ್ತು, ತನು ಬಯಲಾಯಿತ್ತು,
ಕಾಯ ಕರಗಿತ್ತು, ದೇಹ ಹಮ್ಮಳಿಯಿತ್ತು.
ತಾನು ತಾನಾಗಿ ಬೆಳಗಿನೊಳಗೋಲಾಡಿ ಸುಖಿಯಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./67
ನೆನೆವುತ್ತಿದೆ ಮನ; ದುರ್ವಾಸನೆಗೆ ಹರಿವುತ್ತಿದೆ ಮನ;
ಕೊನೆಗೊಂಬೆಗೆ ರಿಳೆವುತ್ತಿದೆ ಮನದ
ಕಟ್ಟಿಗೆ ನಿಲ್ಲದು ಮನದ ಬಿಟ್ಟಡೆ ಹೋಗದು ಮನ.
ತನ್ನಿಚ್ಫೆಯಲಾಡುವ ಮನವ ಕಟ್ಟಿಗೆ ತಂದು, ಗೊತ್ತಿಗೆ ನಿಲಿಸಿ,
ಬಚ್ಚ ಬರಿಯ ಬಯಲಿನೊಳಗೆ ಓಲಾಡುವ
ಶರಣರ ಪಾದದಲ್ಲಿ ನಾ ಬೆಚ್ಚಂತಿದ್ದೆನಯ್ಯಾ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./68
ನೋಟವನಿಟ್ಟು ನೋಡುತಿರಲು ಮೂರಾಯಿತ್ತು.
ಮೂರನೆ ಮೂಲಿಗನೆಂದರಿದು, ಮುದುಡ ಹರಿದು, ಸದವ ಬಡಿದು,
ಪೋದರೌ, ನಿರ್ದಸಿಗೆಯ ಪಿರಿದು ಕದಳಿಯ ಕಡಿದು,
ಕಂಭ ಬೇವ ಬೆಂಬಳಿವಿಡಿದು ಹೋಗುತಿರಲು, ಬೇರೆ ಕಂಡೆ.
ಕಿತ್ತಿಹೆನೆಂದಡೆ ಕೀಳಬಾರದು, ನೆಟ್ಟಿಹೆನೆಂದಡೆ ನೆಡಬಾರದು.
ಬಯಲಲ್ಲಿ ಬೆಳೆದ ಬೇರ ಮುಟ್ಟಿ ಹುಟ್ಟುಗೆಟ್ಟು ಹೋದೆನಯ್ಯಾ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ !/69
ನೋಡುವ ನೋಟ ಕೂಡಿ ಬಯಲಲ್ಲಿ ಸಿಕ್ಕಿ,
ಆಡಲೀಯದೆ ಅಲುಗದೆ ಅಗಲಿ, ಆಕಾಶದಲ್ಲಿ ಕೀಲಿಸಿ,
ಲೋಕಾದಿಲೋಕವ ನೋಡುತ್ತ, ಬೇಕಾದ ಠಾವಿಂಗೆ ಹೋಗುತ್ತ,
ಆತ್ಮನೊಳು ಬೆರೆವುತ್ತ, ಮಾತಿನ ಕೀಲನರಿವುತ್ತ,
ಪರಂಜ್ಯೋತಿಯ ಬೆಳಗಿನೊಳಗೆ ಅಜಾತನಾಗಿ
ಏತರೊಳಗೂ ಸಿಲುಕದೆ ಆಡುವ ಶರಣ
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ./70
ನೋಡುವೆನೆಂದಡೆ ನೋಟವಿಲ್ಲದ ಕೇಳುವೆನೆಂದಡೆ ಕಿವಿಯಿಲ್ಲ
ವಾಸಿಸುವೆನೆಂದಡೆ ನಾಸಿಕವಿಲ್ಲದ ನುಡಿವೆನೆಂದಡೆ ಬಾಯಿಯಿಲ್ಲ
ಹಿಡಿವೆನೆಂದಡೆ ಹಸ್ತವಿಲ್ಲದ ನಡೆವೆನೆಂದಡೆ ಕಾಲಿಲ್ಲದ ನೆನೆವೆನೆಂದಡೆ ಮನವಿಲ್ಲ.
ಇಂತು ನೆನೆಹು ನಿಷ್ಪತ್ತಿಯಾಗಿ,
ಶರಣರ ಪಾದದಲ್ಲಿಯೆ ಬೆರೆದು ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./71
ಪಶ್ಚಿಮದ ಕದವ ತೆಗೆದು ಬಚ್ಚಬರಿಯ ಬೆಳಗ ನೋಡಲೊಲ್ಲದೆ,
ಕತ್ತಲೆಯ ಬಾಗಿಲಿಗೆ ಮುಗ್ಗಿ,
ಕಣ್ಣುಕಾಣದ ಅಂಧಕನಂತೆ ಜಾರಿ ಜರಿಯಲ್ಲಿ ಬಿದ್ದು,
ಕರ್ಮಕ್ಕೆ ಗುರಿಯಾಗುವ ಮರ್ತ್ಯದ ಮನುಜರಿರಾ,
ನೀವು ಕೇಳಿರೋ ಹೇಳಿಹೆನು, ನಮ್ಮ ಶರಣರ ನಡೆ ಎಂತೆಂದಡೆ
ಕತ್ತಲೆಯ ಬಾಗಿಲಿಗೆ ಕದವನಿಕ್ಕಿ, ಪಶ್ಚಿಮದ ಕದವ ತೆಗೆದು,
ಬಚ್ಚಬಎಯ ಬೆಳಗಿನೊಳಗೋಲಾಡುವ ಶರಣರ ಪಾದಕ್ಕೆ
ನಮೋ ಎಂದು ಸುಖಿಯಾದೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ/72
ಪೃಥ್ವಿಯನೆ ಆದಿಯ ಮಾಡಿ, ಅಪ್ಪುವಿನಲ್ಲಿ ಗೋಡೆಯನಿಕ್ಕಿ,
ಅಗ್ನಿಯನೆ ಅಪ್ಪುವಿನೊಳಗೆ ಹುದುಗಿಸಿ,
ಅಸ್ತಿಯನೆ ಗಳುವ ಮಾಡಿ, ವಾಯುವನೆ ಬೀರಿ,
ಆಕಾಶವನೆ ಹೊದಿಸಿ, ಸಹಸ್ರದಳ ಕಮಲವನೆ ಮೇಲುಕಟ್ಟ ಕಟ್ಟಿ,
ಬಯಲಮಂಟಪವ ಶೃಂಗಾರವ ಮಾಡಿ,
ಒಡೆಯನ ಬರವ ಹಾರುತಿದ್ದೆನಯ್ಯಾ.
ಒಡೆಯನ ಬರವ ಹಾರೈಸುವ ಅವಸ್ಥೆಯನೆ ಕಂಡು,
ಹಡದಪ್ಪಣ್ಣನೆ ಕರ್ಪುರದ ಸಿಂಹಾಸನವಾಗಿ ನಿಂದರು.
ಅದಕ್ಕೆ ಚೆನ್ನಮಲ್ಲೇಶ್ವರನೆ ಜ್ಯೋತಿರ್ಮಯಲಿಂಗವಾಗಿ
ಬಂದು ನೆಲೆಗೊಂಡರು.
ಜ್ಯೋತಿರ್ಮಯಲಿಂಗವು ಕರ್ಪುರವು ಏಕವಾಗಿ
ಪ್ರಜ್ವಲಿಸಿ ಪರಮಪ್ರಕಾಶವಾಯಿತ್ತು.
ಈ ಬೆಳಗಿನಲ್ಲಿ ನಾ ನಿಜಮುಕ್ತಳಾದೆನಯ್ಯಾ ಚೆನ್ನಮಲ್ಲೇಶ್ವರ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ/73
ಬಂಡಿಯ ಮೇಗಣ ಹೆಳವನಂತೆ ಕಂಡ ಕಂಡ ಕಡೆಗೆ ಹಲುಬಿದಡೆ,
ನಿಮಗೆ ಬಂದುದೇನಿರೊ ?
ಆ ಮಹಾಘನವನರಿಯದನ್ನಕ್ಕ ಹಾಡಿದಡಿಲ್ಲ, ಹರಸಿದಡಿಲ್ಲದ
ಹೇಳಿದಡಿಲ್ಲ, ಕೇಳಿದಡಿಲ್ಲ.
ಇವೇನ ಮಾಡಿದಡೂ ವಾಯಕ್ಕೆ ವಾಯವೆಂದರು
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./74
ಬಚ್ಚಬರಿಯ ಬೆಳಗ ನೋಡಿಹೆನೆಂದು,
ಮನೆಯಾತನ ಮಂಕುಮಾಡಿದೆ ಭಾವನ ಬಯಲ ಮಾಡಿದೆ;
ಕಂದನ ಕಣ್ಮುಚ್ಚಿದೆ; ನಿಂದೆ ಕುಂದುಗಳ ಮರೆದೆ; ಜಗದ ಹಂಗ ಹರಿದೆ.
ಜಂಗಮದ ಪಾದೋದಕ ಪ್ರಸಾದವ ಕೊಂಡ ಕಾರಣದಿಂದ
ಮಂಗಳದ ಮಹಾಬೆಳಗಿನೊಳಗೋಲಾಡಿ ಸುಖಿಯಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./75
ಬಟ್ಟ ಬಯಲಲ್ಲಿ ಒಂದು ಶರದಿ ಹುಟ್ಟಿತ್ತು.
ಆ ಶರದಿಯ ನಡುವೆ ಒಂದು ಕಮಲ ಹುಟ್ಟಿತ್ತು.
ಆ ಕಮಲದ ನೆಲೆಯ ಕಾಣಲರಿಯದೆ ತೊಳಲಿ ಬಳಲಿ,
ಜಗದೊಳಗೆ ನಚ್ಚುಮಚ್ಚಿಗೊಳಗಾಗಿ, ಚುಚ್ಚಳ ಪೂಜೆಗೆ ಸಿಲ್ಕಿ,
ಕುಲಕೆ ಛಲಕೆ ಕೊಂದಾಡಿ, ಭವಕ್ಕೆ ಗುರಿಯಾಗುವ
ಮನುಜರ ಕಂಡು ನಾಚಿತ್ತೆನ್ನ ಮನವು.
ಆ ಮನದ ಬೆಂಬಳಿಗೊಂಡು ಹೋದವರೆಲ್ಲ ಮರುಳಾಗಿ ಹೋದರು.
ಇದ ನೋಡಿ ನಾನು ಬಟ್ಟಬಯಲಲ್ಲಿ ನಿಂದು ನೋಡಿದಡೆ,
ಶರದಿ ಬತ್ತಿತ್ತು ಕಮಲ ಕಾಣಬಂದಿತ್ತು.
ಆ ಕಮಲ ವಿಕಾಸವಾಯಿತ್ತು ಪರಿಮಳವೆಂಬ ವಾಸನೆ ತೀಡಿತ್ತು.
ಆ ವಾಸನೆವಿಡಿದು ಜಗದಾಸೆಯ ಹಿಂಗಿ ಮಾತು ಮ ಥನವ ಕೆಡಿಸಿ,
ಮಹಾಜ್ಯೋತಿಯ ಬೆಳಗಿನಲಿ ಓಲಾಡುವ ಶರಣರ
ಆಸೆ ರೋಷ ಪಾಶಕ್ಕೊಳಗಾದ ಈ ಜಗದ ಹೇಸಿಗಳೆತ್ತಬಲ್ಲರು,
ಈ ಮಹಾಶರಣರ ನೆಲೆಯ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?/76
ಬಟ್ಟಬಯಲಲ್ಲಿ ಒಂದು ಮೃಗ ಹುಟ್ಟಿತ್ತು.
ಅದ ಕಂಡಿಹೆನೆಂದಡೆ ಕಾಣಬಾರದು,
ಹೇಳಿಹೆನೆಂದಡೆ ಹೇಳಬಾರದು
ಅದು ಚಿದ್ರೂಪು, ಚಿನ್ಮಯವು.
ಅದು ಗೊತ್ತ ಮೆಟ್ಟಿ ಆಡುವುದನರಿಯದೆ,
ಕತ್ತಲೆಯಲ್ಲಿ ಮುಳುಗಿ ಕಾಮನ ಬಾಧೆಗೆ ಸಿಕ್ಕಿ,
ರಿತ್ತಲೆಂದರಿಯದೆ ಭವಬಂಧನದಲ್ಲಿ ಮುಳುಗಿ
ಕಾಲನ ಬಾಧೆಗೊಳಗಾಗಿ,
ಸತ್ತು ಮೆಟ್ಟಿ ಹೂಣಿಸಿಕೊಂಬ ಮನುಜರು
ಮತ್ತೆ ಶಿವಶರಣರ ಕೂಡೆ ತತ್ವವ ಬಲ್ಲೆವೆಂದು ತರ್ಕಕ್ಕೆ ಬಹರು.
ಇದು ಹುಸಿದ ನಮ್ಮ ಶರಣರು ಇದ ಮೆಚ್ಚರು.
ತತ್ವವೆಂಬುದನೆ ಮೆಟ್ಟಿನಿಂದು ಮಿಥ್ಯವ ನುಡಿವರ ತಮ್ಮ ಪುತ್ರರೆಂದು ಭಾವಿಸಿ,
ಸತ್ತು ಹುಟ್ಟುವರನೊತ್ತರಿಸಿ ನಿಶ್ಚಿಂತದಲ್ಲಿ ನಿಜವ ನೆಮ್ಮಿ,
ಬಟ್ಟಬಯಲೊಳಗಣ ಮೃಗದ ಗೊತ್ತ ಮೆಟ್ಟಿ,
ಬಚ್ಚಬರಿಯ ಬೆಳಗಿನೊಳಗೋಲಾಡುವ ಶರಣರ
ಈ ಸತ್ತು ಹುಟ್ಟಿ ಹೂಣಿಸಿಕೊಂಬ ಮಿದ್ಯಾವಾದಿಗಳೆತ್ತ ಬಲ್ಲರು,
ನಿಮ್ಮ ನೆಲೆಯ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?/77
ಬಟ್ಟಬಯಲಿನಲ್ಲಿ ಒಂದು ಮರ ಹುಟ್ಟಿತ್ತು.
ಅದಕ್ಕೆ ಸುತ್ತಲು ಬೇರು ಆವರಿಸಿತ್ತು.
ಅದಕ್ಕೆ ಶತಕೋಟಿ ಕೊನೆ ಬಿಟ್ಟಿತ್ತು.
ಅಡಗಿದ ಬೇರನೆ ಸವರಿ, ಶತಕೋಟಿ ಕೊನೆಯನೆ ಕಡಿಯೆ,
ಮರ ಒಣಗಿತ್ತು, ಉಲುಹು ನಿಂದಿತ್ತು, ಎಲೆ ಉದುರಿತ್ತು.
ತರಗೆಲೆಯಾದ ಶರಣರ ಚರಣವಿಡಿದು ನಿಜಮುಕ್ತಳಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./78
ಬಯಲ ದೇಹದಲ್ಲಿ ಒಂದು ತೊಲಗದ ಕಂಬವ ಕಂಡೆ.
ತೊಲಗದ ಕಂಬವ ಹಿಡಿದು ಹೋಗುವನ್ನಕ್ಕ
ಮುಂದೆ ಸರೋವರವ ಕಂಡೆ.
ಆ ಸರೋವರವ ಒಳಹೊಕ್ಕು ನೋಡಲು,
ಮುಂದೆ ಗಟ್ಟ ಬೆಟ್ಟಗಳು, ಹೊಗಬಾರದು.
ಆನೆಗಳು ಅಡ್ಡಲಾದವು, ಕೋಡಗ ಮುಂದುವರಿದವು,
ನಾಯಿಗಳಟ್ಟಿಕೊಂಡು ಬಂದವು, ಇರುಹೆ ಕಟ್ಟಿಕೊಂಡು ಬಿಡವು.
ಇದ ಕಂಡು ನಾ ಹೆದರಿಕೊಂಡು, ಮನವೆಂಬ ಅರಸನ ಹಿಡಿದು,
ಕಟ್ಟಿಗೆ ತಂದು, ಗೊತ್ತಿಗೆ ನಿಲಿಸಿ, ಆ ಅರಸನ ಶಕ್ತಿವಿಡಿದು,
ಆ ಸರೋವರದೊಳಗಣ ಗಟ್ಟ ಬೆಟ್ಟವನೆ ದಾಂಟಿ,
ಅಷ್ಟಮದವನೆ ಹಿಟ್ಟುಗುಟ್ಟಿ, ಕೋಡಗನ ಕೊರಳ ಮುರಿದು,
ನಾಯಿಗಳನೆ ಕೊಂದು, ಇರುಹೆಯ ಗೂಡಿಗೆ ಕಿಚ್ಚನಿಕ್ಕಿ,
ನಿರ್ಮಳವಾದ ದೇಹದಲ್ಲಿ ನಿಂದು ಮುಂದುವರಿದು ನೋಡಲು
ಇಟ್ಟೆಡೆಯ ಬಾಗಿಲ ಕಂಡೆ,
ಆ ಇಟ್ಟೆಡೆಯ ಬಾಗಿಲ ಹೊಕ್ಕು, ಹಿತ್ತಲ ಬಾಗಿಲಿನ ಕದವ ತೆಗೆದು ನೋಡಲು,
ಬಟ್ಟಬಯಲಾಯಿತ್ತು.
ಆ ಬಟ್ಟಬಯಲಲ್ಲಿ ನಿಂದು ನಾನೆತ್ತ ಹೋದೆನೆಂದರಿಯೆನಯ್ಯಾ
ನಿಮ್ಮ ಪಾದವಿಡಿದು ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./79
ಬಸವೇಶ್ವರ ಚೆನ್ನಬಸವೇಶ್ವರ ಮಡಿವಾಳಯ್ಯ ಅಲ್ಲಮಪ್ರಭು
ಚೆನ್ನಮಲ್ಲೇಶ್ವರ ಹಡಪದಪ್ಪಣ್ಣ
ತಮ್ಮೆಲ್ಲರ ತೊತ್ತಿನ ತೊತ್ತಿನ ಪಡಿದೊತ್ತಿನ ಮಗಳೆಂದು
ಹೊತ್ತು ಹೊತ್ತಿಗೆ ಎಚ್ಚರವ ಪಾಲಿಸಿ ರಕ್ಷಣೆಯ ಮಾಡಿದ ಕಾರಣದಿಂದ
ತಮ್ಮೆಲ್ಲರ ಶ್ರೀಪಾದದಲ್ಲಿಯೆ ನಿಜಮುಕ್ತಳಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./80
ಬೆಟ್ಟ ಬೆಂದಿತ್ತು, ಬಿದಿರುಗಣ್ಣ ಒಡೆಯಿತ್ತು
ಸುತ್ತ ನೋಡಿದಡೆ ನಿರಾಳವಾಯಿತ್ತು ಕತ್ತಲೆ ಹರಿಯಿತ್ತು
ಮನ ಬತ್ತಲೆಯಾಯಿತ್ತು ಚಿತ್ತ ಮನ ಬುದ್ಧಿ ಏಕವಾದವು.
ಎಚ್ಚತ್ತು ನೋಡಿದಡೆ, ಬಚ್ಚಬರಿಯ ಬೆಳಗಲ್ಲದೆ ಕತ್ತಲೆಯ ಕಾಣಬಾರದು ಕಾಣಾ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./81
ಬ್ರಹ್ಮಾಂಡದಲ್ಲಿ ಹುಟ್ಟಿದವರೆಲ್ಲ ಭವಬಂಧನಕ್ಕೊಳಗಾದರಯ್ಯಾ.
ನಿಮ್ಮ ನಂಬದ ಸದ್ಭಕ್ತ ಮಹೇಶ್ವರರು ಭವಬಂಧನವನೆ ಹಿಂಗಿ,
ಮರಣಭಯವ ಗೆದ್ದು, ಕರಣಂಗಳ ಸುಟ್ಟು, ಹರಿಮನವ ನಿಲಿಸಿ,
ಅನಲಪವನಗುಣವರತು, ಜನನಮರಣವಿರಹಿತವಾದ ಶರಣರ
ಭವಭಾರಿಗಳೆತ್ತ ಬಲ್ಲರು ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?/82
ಮಚ್ಚಬೇಡ, ಮರಳಿ ನರಕಕ್ಕೆರಗಿ ಕರ್ಮಕ್ಕೆ ಗುರಿಯಾಗಬೇಡ.
ನಿಶ್ಚಿಂತವಾಗಿ ನಿಜದಲ್ಲಿ ಚಿತ್ತವ ಸುಯಿದಾನವಮಾಡಿ,
ಲಿಂಗದಲ್ಲಿ ಮನವ ಅಚ್ಚೊತ್ತಿದಂತಿರಿಸಿ ಕತ್ತಲೆಯನೆ ಕಳೆದು,
ಬಚ್ಚಬರಿಯ ಬೆಳಗಿನೊಳಗೆ ಓಲಾಡಿ ಸುಖಿಯಾಗೆಂದರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./83
ಮದ ಮತ್ಸರ ಬಿಡದು, ಮನದ ಕನಲು ನಿಲ್ಲದು, ಒಡಲಗುಣ ಹಿಂಗದು.
ಇವ ಮೂರನು ಬಿಡದೆ ನಡಸುವನ್ನಕ್ಕ ಘನವ ಕಾಣಬಾರದು.
ಘನವ ಕಾಂಬುದಕ್ಕೆ ಮದಮತ್ಸರವನೆ ಬಿಟ್ಟು,
ಮನದ ಕನಲನೆ ನಿಲಿಸಿ, ಒಡಲಗುಣ ಹಿಂಗಿ,
ತಾ ಮೃಡರೂಪಾದಲ್ಲದೆ ಘನವ ಕಾಣಬಾರದೆಂದರು
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./84
ಮನ ಕತ್ತಲೆ, ತನು ಹಮ್ಮು, ನೆನಹು ಮರವೆ,
ಇವರೊಳಗೆ ಇದ್ದು ಘನವ ಕಂಡೆಹೆನೆಂಬ ಅಣ್ಣಗಳಿರಾ, ನೀವು ಕೇಳಿರೊ.
ಘನವ ಕಾಂಬುದಕ್ಕೆ ಮನವೆಂತಾಗಬೇಕೆಂದಡೆ,
ಅಕ್ಕಿಯ ಥಳಿಸಿದಂತೆ, ಹಲ್ಲ ಸುಲಿದಂತೆ, ಕನ್ನಡಿಯ ನೋಡಿದಂತೆ,
ಮನ ನಿರ್ಮಲವಾದಲ್ಲದೆ ಘನವ ಕಾಣಬಾರದು
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./85
ಮನ ಮಂಕಾಯಿತ್ತು; ತನು ಮರೆಯಿತ್ತು; ವಾಯು ಬರತಿತ್ತು.
ಉರಿ ಎದ್ದಿತ್ತು, ಹೊಗೆ ಹರಿಯಿತ್ತು, ಸರೋವರವೆಲ್ಲ ಉರಿದು ಹೋಯಿತ್ತು.
ಒಳಕ್ಕೆ ಹೊಕ್ಕು ಕದವ ತೆಗೆದು ಬಯಲು ನೋಡಿ ಬೆಳಗ ಕೂಡಿದಲ್ಲದೆ ನಿಜಮುಕ್ತಿ ಇಲ್ಲವೆಂದರು,
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./86
ಮನ ಮರವೆಗೆ ಮುಂದುಮಾಡಿತ್ತು.
ತನು ಕಳವಳಕ್ಕೆ ಮುಂದುಮಾಡಿತ್ತು.
ಆಸೆ ರೋಷವೆಂಬವು ಅಡ್ಡಗಟ್ಟಿದವು..
ಇವರೊಳಗೆ ಜಗದೀಶ್ವರನೆನಿಸಿಕೊಂಬವರ ನುಡಿಯು ಓಸರಿಸುವದು,
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./87
ಮನವ ಗೆದ್ದೆಹೆನೆಂದು, ತನುವ ಕರಗಿಸಿ ಕಾಯವ ಮರುಗಿಸಿ,
ನಿದ್ರೆಯ ಕೆಡಿಸಿ ವಿದ್ಯೆಯ ಕಲಿತೆಹೆನೆಂಬ ಬುದ್ಧಿಹೀನರಿರಾ ನೀವು ಕೇಳಿರೋ,
ನಮ್ಮ ಶರಣರು ಮನವನೆಂತು ಗೆದ್ದಹರೆಂದಡೆ
ಕಾಮ ಕ್ರೋಧವ ನೀಗಿ, ಲೋಭ ಮೋಹ ಮದ ಮತ್ಸರವ ಛೇದಿಸಿ,
ಆಸೆ ರೋಷವಳಿದು, ಜಗದ ಪಾಶವ ಬಿಟ್ಟು,
ಆ ಮರುಗಿಸುವ ಕಾಯವನೆ ಪ್ರಸಾದಕಾಯವ ಮಾಡಿ ಸಲಹಿದರು.
ಕೆಡಿಸುವ ನಿದ್ರೆಯನೆ ಯೋಗಸಮಾದಿಯ ಮಾಡಿ,
ಸುಖವನೇಡಿಸಿ ಜಗವನೆ ಗೆದ್ದ ಶರಣರ ಬುದ್ಧಿಹೀನರೆತ್ತಬಲ್ಲರೊ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?/88
ಮನವ ನಿರ್ಮಲವ ಮಾಡಿಹೆನೆಂದು
ತನುವ ಕರಗಿಸಿ ಮನವ ಬಳಲಿಸಿ ಕಳವಳಿಸಿ,
ಕಣ್ಣುಕಾಣದ ಅಂಧಕರಂತೆ ಮುಂದುಗಾಣದೆ,
ಸಂದೇಹದಲ್ಲಿ ಮುಳುಗಿರುವ ಮನುಜರಿರಾ,
ನೀವು ಕೇಳಿರೊ, ಹೇಳಿಹೆನು.
ಮನವ ನಿರ್ಮಲವ ಮಾಡಿ, ಆ ಘನವ ಕಾಂಬುದಕ್ಕೆ
ಆ ಮನವೆಂತಾಗಬೇಕೆಂದಡೆ
ಗಾಳಿಬೀಸದ ಜಲದಂತೆ, ಮೋಡವಿಲ್ಲದ ಸೂರ್ಯನಂತೆ,
ಬೆಳಗಿದ ದರ್ಪಣದಂತೆ ಮನ ನಿರ್ಮಲವಾದಲ್ಲದೆ
ಆ ಮಹಾಘನವ ಕಾಣಬಾರದೆಂದರು
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./89
ಮನವ ನಿಲಿಸಿಹೆನೆಂದು, ಆ ಮನದ ನೆಲೆಯ ಕಾಣದೆ,
ಅರುಹು ಮರವೆಗೊಳಗಾಗಿ, ಕಳವಳವ ಮುಂದುಮಾಡಿ,
ಚಿಂತೆ ಸಂತೋಷವನೊಡಲುಮಾಡಿ,
ಭ್ರಾಂತುಗೊಂಡು ತಿರುಗುವ ಮನುಜರಿರಾ, ನೀವು ಕೇಳಿರೊ.
ಮನವ ನಿಲಿಸುವುದಕ್ಕೆ ಶರಣರ ಸಂಗಬೇಕು, ಜನನಮರಣವ ಗೆಲಬೇಕು.
ಗುರುಲಿಂಗಜಂಗಮದಲ್ಲಿ ವಂಚನೆಯಿಲ್ಲದೆ, ಮನಸಂಚಲವ ಹರಿದು,
ನಿಶ್ಚಿಂತವಾಗಿ ನಿಜವ ನಂಬಿ ಚಿತ್ತ ಸುಯಿದಾನವಾದಲ್ಲದೆ,
ಮನದೊಳಗೆ ಲಿಂಗವು ಅಚ್ಚೊತ್ತಿದಂತಿರದೆಂದರು
ಬಸವಣ್ಣನ ಶರಣರು, ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./90
ಮನವೆಂದಡೆ ಮರವೆಗೆ ಒಳಗುಮಾಡಿತ್ತು.
ತನುವೆಂದಡೆ ತಾಮಸಕ್ಕೊಳಗುಮಾಡಿತ್ತು.
ಧನವೆಂದಡೆ ಆಶೆಯೆಂಬ ಪಾಶಕ್ಕೊಳಗುಮಾಡಿತ್ತು.
ಇವೀಸು ಮಾಯಾಪಾಶವೆಂದು ಬಿಟ್ಟು ಹುಟ್ಟನರಿದು,
ಬಟ್ಟಬಯಲಲ್ಲಿ ನಿಂದು, ಚಿತ್ತನಿರ್ಮಲನಾಗಿ ನೋಡಿ ಕಂಡ ಶರಣಂಗೆ
ತನುವೆ ಗುರುವಾಯಿತ್ತು.
ಮನವೆ ಘನವಾಯಿತ್ತು, ಧನವೆ ಜಂಗಮವಾಯಿತ್ತು.
ಈ ತ್ರಿವಿಧವನು ತ್ರಿವಿಧಕಿತ್ತು,
ತಾ ಬಯಲದೇಹಿಯಾದನಯ್ಯಾ ಆ ಮಹಾಶರಣನು.
ಇದರ ನೆಲೆಯನರಿಯದೆ, ಆ ಮನದ ಬೆಂಬಳಿಗೊಂಡಾಡಿದವರೆಲ್ಲ
ನರಗುರಿಗಳಾದರಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./91
ಮರನನೇರಿದೆ, ಬೇರ ಸವರಿದೆ,
ಕೊನೆಯ ತರಿದೆ, ಬುಡವ ಕೆಡಹಿದೆ,
ನಿರಾಲಂಬಿಯಾಗಿ, ನಿಮ್ಮ ಬೆಳಗನೆ ನೋಡಿ ಸುಖಿಯಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./92
ಮರ್ತ್ಯದ ಮನುಜರು ತಾವು ಸತ್ಯರು ಸತ್ಯರು ಎನುತಿಪ್ಪರು,
ಮತ್ತೆ ಮತ್ತೆ ಮರಳಿ, ಮಲಮೂತ್ರ ಕೀವಿನಕೊಣದ ಉಚ್ಚೆಯ ಬಚ್ಚಲ ಮೆಚ್ಚಿ,
ಹುಚ್ಚುಗೊಂಡು ತಿರುಗುವ ಕತ್ತೆ ಮನುಜರ ಮೆಚ್ಚರು ನಮ್ಮ ಶರಣರು,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./93
ಮರ್ತ್ಯದ ಮನುಜರು ಸತ್ತರೆಲ್ಲ ?
ಕತ್ತಲೆಯೊಳು ಮುಳುಗಿ, ಮಾತು ಕಲಿತುಕೊಂಡು,
ತೂತುಬಾಯೊಳಗೆ ನುಡಿದು, ಕಾತರಿಸಿ ಕಂಗೆಟ್ಟು,
ಹೇಸಿಕೆಯ ಮಲದ ಕೊಣದ ಉಚ್ಚೆಯ ಬಾವಿಗೆ ಮೆಚ್ಚಿ,
ಕಚ್ಚಿಯಾಡಿ ಹುಚ್ಚುಗೊಂಡು ತಿರುಗುವ ಕತ್ತೆಮನುಜರ
ಮೆಚ್ಚರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./94
ಮರ್ತ್ಯದಲ್ಲಿ ಹುಟ್ಟಿ ಎತ್ತಲೆಂದರಿಯದೆ, ಕತ್ತಲೆಯೊಳು ಮುಳುಗಿ,
ಕಾಮನ ಬಲೆಯೊಳಗೆ ಸಿಕ್ಕಿದ ಎಗ್ಗ ಮನುಜರಿರಾ, ನೀವು ಕೇಳಿರೋ.
ನಿಮ್ಮ ಇರವು ಎಂತೆಂದಡೆ
ಕಾಯವೆಂದಡೆ ಕಳವಳಕ್ಕೊಳಗಾಯಿತ್ತು
ಜೀವವೆಂದಡೆ ಅರುಹು ಮರವೆಗೊಳಗಾಯಿತ್ತುದ
ಮನವೆಂದಡೆ ಸಚರಾಚರವನೆಲ್ಲವ ಚರಿಸುವುದಕ್ಕೆ ಒಳಗಾಯಿತ್ತು
ಪ್ರಾಣವೆಂದಡೆ ಇವೆಲ್ಲವನು ಆಡಿಸಿ ನೋಡುವುದಕ್ಕೆ ಒಳಗಾಯಿತ್ತು.
ಇವರೊಳಗೆ ಬಿದ್ದು ಏಳಲಾರದ ಬುದ್ಧಿಹೀನರಿರಾ, ನೀವು ಕೇಳಿ, ಹೇಳಿಹೆನು.
ನಮ್ಮ ಶರಣರು ಜಗದೊಳಗೆ ಹುಟ್ಟಿ ಜಗವನೆ ಮರೆದು,
ರಿಚ್ಚತ್ತು ಚಿತ್ತವ ಸುಯಿದಾನವ ಮಾಡಿ,
ಕಳವಳಕ್ಕೊಳಗಾಗಿದ್ದ ಕಾಯವನೆ ಸರ್ವಾಂಗಲಿಂಗವ ಮಾಡಿದರು.
ಅರುಹು ಮರವೆಯೊಳಗಾಗಿದ್ದ ಜೀವನ ಬುದ್ಧಿಯನೆ
ಪರಮನ ಬುದ್ಧಿಯ ಮಾಡಿದರು.
ಸಚರಾಚರವ ಚರಿಸುವುದಕ್ಕೊಳಗಾಗಿದ್ದ ಮನವನೆ ಅರುಹು ಮಾಡಿದರು.
ಆಡಿಸಿ ನೋಡುವುದಕ್ಕೆ ಒಳಗಾಗಿದ್ದ ಪ್ರಾಣವನೆ ಲಿಂಗವಮಾಡಿದರು.
ಈ ಸರ್ವಾಂಗವನು ಲಿಂಗವ ಮಾಡಿ
ಆ ಲಿಂಗವನು ಕಂಗಳಲ್ಲಿ ಹೆರೆಹಿಂಗದೆ ನೋಡಿ,
ಆ ಮಂಗಳದ ಮಹಾಬೆಳಗಿನಲ್ಲಿ ಬಯಲಾದರಯ್ಯಾ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./95
ಮಹಾಬೆಳಗ ನೋಡಿ ಮನವ ನಿಮ್ಮ ವಶವ ಮಾಡಿ,
ತನುವ ಮರೆದು ಧನವ ಜಂಗಮಕಿತ್ತು,
ತಾನು ಬಯಲದೇಹಿಯಾದಲ್ಲದೆ ನಿಜಮುಕ್ತಿ ಇಲ್ಲವೆಂದರು
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./96
ಮಾಣಿಕವ ಕಂಡವರು ತೋರುವರೆ ಅಯ್ಯಾ,
ಮುತ್ತ ಕಂಡವರು ಅಪ್ಪಿಕೊಂಬರಲ್ಲದೆ ?
ಬಿಚ್ಚಿ ಬಿಚ್ಚಿ ತೋರುವರೆ ಅಯ್ಯಾ,
ಆ ಮುತ್ತಿನ ನೆಲೆಯನು, ಮಾಣಿಕದ ಬೆಲೆಯನು ?
ಬಿಚ್ಚಿ ಬೇರಾಗಿ ತೋರಿ ರಕ್ಷಣೆಯ ಮಾಡಿದ ಕಾರಣದಿಂದ
ಬಚ್ಚಬರಿಯ ಬೆಳಗಿನೊಳಗೋಲಾಡಿ
ನಿಮ್ಮ ಪಾದದೊಳಗೆ ನಿಜಮುಕ್ತಳಾದೆನಯ್ಯಾ,
ಚೆನ್ನಮಲ್ಲೇಶ್ವರ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./97
ಮಾಯದ ಬೊಂಬೆಯ ಮಾಡಿ, ಕಂಗಳಿಗೆ ಕಾಮನ ಬಾಣವ ಹೂಡಿ,
ನಡೆನುಡಿಯೊಳಗೆ ರಂಜಕದ ತೊಡಿಗೆಯನೆ ತೊಡಿಸಿ,
ಮುಂದುಗಾಣಿಸದೆ, ಹಿಂದನರಸದೆ, ಲಿಂಗವ ಮರಹಿಸಿ,
ಜಂಗಮವ ತೊರೆಯಿಸಿ, ಸಂದೇಹದಲ್ಲಿ ಸತ್ತು ಹುಟ್ಟುವ
ಈ ಭವಬಂಧನಿಗಳೆತ್ತ ಬಲ್ಲರೋ ಈ ಶರಣರ ನೆಲೆಯ ?
ಅವರ ನೆಲೆ ತಾನೆಂತೆಂದಡೆ
ಹಿಂದನರಿದು, ಮುಂದೆ ಲಿಂಗದಲ್ಲಿ ಬೆರೆವ ಭೇದವ ಕಂಡು,
ಜಗದ ಜಂಗುಳಿಗಳ ಹಿಂಗಿ, ಕಂಗಳ ಕರುಳನೆ ಕೊಯ್ದು,
ಮನದ ತಿರುಳನೆ ಹರಿದು, ಅಂಗಲಿಂಗವೆಂಬುಭಯವಳಿದು,
ಸರ್ವಾಂಗಲಿಂಗವಾಗಿ, ಮಂಗಳದ ಮಹಾಬೆಳಗಿನಲ್ಲಿ ಓಲಾಡುವ
ಶರಣರ ನೆಲೆಯ ಜಗದ ಜಂಗುಳಿಗಳೆತ್ತ ಬಲ್ಲರು ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?/98
ಮುಕ್ತಿಯ ಪಥವನರಿವುದಕ್ಕೆ ತತ್ವದ ಬಿತ್ತಿಯ ಕಾಣಬೇಕು
ಚಿತ್ತ ಲಿಂಗದಲ್ಲಿ ಅಚ್ಚೊತ್ತಿದಂತಿರಬೇಕು
ಮರ್ತ್ಯದ ಮಾನವರ ಸಂಗ ಹಿಂಗಬೇಕು
ತಾನು ತಾನಾದ ಲಿಂಗೈಕ್ಯವನರಿವಡೆ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ. /99
ಮೂಲಪ್ರಣವವನರಿದು ಮೂಲಮಂತ್ರದೊಳಗಾಡುತ್ತ,
ಮುಂದನರಿದು, ಹಿಂದ ಹರಿದು, ಸಂದು ಸಂಶಯವಿಲ್ಲದೆ,
ಸ್ವಯವ ನೋಡುತ್ತ, ಪರವ ಕೂಡುತ್ತ, ಶಬ್ದವ ಕೇಳುತ್ತ,
ನಿರ್ಧರವಾಗಿ ನಿರ್ಬುದ್ಧಿಯಲ್ಲಿ ನಿರಾಳವನೊಡಗೂಡಿ,
ನಿಜದಲ್ಲಿ ಆನಂದಾಮೃತವ ಆರೋಗಣೆಯ ಮಾಡುವ ಪರಿಯೆಂತೆಂದಡೆ
ಬೇಯದ ಬೆಂಕಿಯಲಿ ಬೆಂದು, ಕಾಯದ ಅಗ್ಗವಣಿಯಲಿ ಅಡಿಗೆಯ ಮಾಡಿ,
ಕಂದಲೊಡೆದು ಒಂದಾಗಿ ಉಂಡು, ಮಂಡೆಯಲ್ಲಿ ನಿಂದು,
ಮಡದಿಯ ಸಂಗವ ಮಾಡಿ, ಮಾರುತನ ನಿಲಿಸಿ,
ಮದನನ ಮರ್ದಿಸಿ, ನಿರ್ಧರವಾಗಿ ನಿಂದ ಶರಣ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ./100
ರಸವಡೆದಂತೆ ದೆಸೆದೆಸೆಯನಾಲಿಸುವ ಮನವ
ತನ್ನ ವಶವ ಮಾಡಿ ನಿಲಿಸಿ, ಹುಸಿಯ ಬಿಟ್ಟು,
ಮಾಯೆಯ ಬಲೆಯ ನುಸುಳಿ, ತಾ ನಿಶ್ಚಿಂತನಾಗಿ,
ಧೀರವೀರನಾದಲ್ಲದೆ ಆ ಮಹಾಘನವ ಕಾಣಬಾರದು ಎಂದರು,
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ./101
ವ್ಯಾಪಾರವನೆ ಬಿಟ್ಟು ತಾಪತ್ರಯವನೆ ಹಿಂಗಿ,
ಲೋಕದ ಹಂಗನೆ ಹರಿದು ಬೇಕು ಬೇಡೆಂಬುವನೆ ನೂಕಿ,
ತಾನು ವಿವೇಕಿಯಾದಲ್ಲದೆ, ಜ್ಯೋತಿಯ ಬೆಳಗ ಕಾಣಬಾರದೆಂದರು,
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು./102
ಶರಣರೈಕ್ಯರೆಂದು ನುಡಿದಾಡುವರು,
ಶರಣಸ್ಥಲವೆಂತಿರ್ಪುದೆಂದರಿಯರು.
ಅನ್ನವನಿಕ್ಕಿದವರೆಲ್ಲ ಶರಣರೆ ?
ಹೊನ್ನು ಕೊಟ್ಟವರೆಲ್ಲ ಶರಣರೆ ?
ಹೆಣ್ಣುಕೊಟ್ಟವರೆಲ್ಲ ಶರಣರೆ ?
ಮಣ್ಣುಕೊಟ್ಟವರೆಲ್ಲ ಶರಣರೆ ?
ಅಲ್ಲಲ್ಲ ಅದಕ್ಕೆ ಪುಣ್ಯದಾ ಫಲವುಂಟು.
ಅದಂತಿರಲಿ
ಶರಣನಾದರೆ ತನ್ನ ಮರಣ ಬಾಧೆ ಗೆಲಿಯದಿಬೇಕು.
ಮರಣ ಬಾಧೆಯ ಗೆದ್ದ ಶರಣರು ಕಂಡನುವೆ
ಅಂಗ ಮನ ಸುಸಂಗ.
ಅವರು ಹಿಡಿದ ಧನವೆ ಪದಾರ್ಥ.
ಇದೀಗ ನಮ್ಮ ಮುನ್ನಿನ ಶರಣರ ನಡೆನುಡಿ.
ಇದನರಿಯದೆ
ಈಗ ಮನೆ ಮನೆಗೆ ಶರಣರು,
ತನತನಗೆ ಶರಣರ್ಬು
ಎಂದು ನುಡಿದಾಡುವರು.
ಈ ಬಿನುಗರ ನುಡಿಯ ಮೆಚ್ಚುವನೆ
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ?/103
ಸಹಸ್ರದಳ ಕಮಲವ ಸೂಸದೆ ಮೇಲುಕಟ್ಟು ಕಟ್ಟಿ,
ಭಾಸುರವೆಂಬ ಹೃದಯದ ಸಿಂಹಾಸನವಿಕ್ಕಿ,
ಲೇಸಾಗಿ ಗುರುಸ್ವಾಮಿಯ ಮೂರ್ತಮಾಡಿಸಿ,
ನಾಲ್ಕೆಸಳ ಪದ್ಮವ ಸಮ್ಮಾರ್ಜನೆಯ ಮಾಡಿ,
ಆರೆಸಳ ಪದ್ಮವ ರಂಗವಾಲೆಯ ತುಂಬಿ,
ಹತ್ತೆಸಳ ಪದ್ಮವ ಕರಕಮಲವಂ ಮಾಡಿ,
ನಿರ್ಭಾವವೆಂಬ ಅಗ್ಗವಣಿಯಲ್ಲಿ ಮಜ್ಜನಕ್ಕೆರೆದು,
ಚಿದ್ಬೆಳಗೆಂಬ ಚಿದ್ವಿಭೂತಿಯ ಧರಿಸಿ, ಶಾಂತಿಯೆಂಬ ಗಂಧವ ಧರಿಸಿ,
ಚಿತ್ತನಿರ್ಮಲವೆಂಬ ಅಕ್ಷತೆಯನರ್ಪಿಸಿ,
ಹೃತ್ಕಮಲವೆಂಬ ಅರಳಿದ ಪುಷ್ಪವ ಧರಿಸಿ,
ಸುಗಂಧವೆಂಬ ಧೂಪವ ಬೀಸಿ,
ಕಂಗಳೆ ದೀಪ, ಕರ್ಣವೆ ಗಂಟೆ, ನಾಸಿಕವೆ ಆಲವಟ್ಟಲು,
ಜಿಹ್ವೆಯ ತಾಳ, ಪಾದವೆ ಪಾತ್ರದವರು, ಹಸ್ತವೆ ಸೇವಕರು,
ನಿಶ್ಚಿಂತವೆಂಬ ಅಕ್ಕಿಯ ತಂದು, ಪಶ್ಚಿಮವೆಂಬೊರಳಿಗೆ ನೀಡಿ,
ಏಕೋಭಾವವೆಂಬೊನಕೆಯ ಪಿಡಿದು ತಳಿಸಿ,
ಸುಬುದ್ಭಿಯೆಂಬ ಮೊರದಲ್ಲಿ ಕೇರಿ, ತ್ರಿಕೂಟವೆಂಬ ಒಲೆಯ ಹೂಡಿ,
ಕರಣಂಗಳೆಂಬ ಸೌದೆಯನಿಟ್ಟು, ಜ್ಞಾನಾಗ್ನಿಯನುರುಹಲು,
ಒಮ್ಮನವೆಂಬ ಕಂದಲಿಗೆ ಆನಂದ ಜಲವೆಂಬಗ್ಗಣಿಯನೆತ್ತಿ,
ನಿಶ್ಚಿಂತವೆಂಬಕ್ಕಿಯ ನೀಡಿ, ಸುಮ್ಮಾನವೆಂಬ ಹುಟ್ಟಿನಲ್ಲಿ ಉಕ್ಕಿರಿದು,
ಮನ ಬುದ್ಧಿಯೆಂಬ ಚಿಬ್ಬಲುಮರದಟ್ಟೆಯನಿಕ್ಕಿ,
ಅಹಂಕಾರವೆಂಬ ಭಾಜನದಲ್ಲಿ ಬಾಗಿ,
ಜ್ಞಾತೃ ಜ್ಞಾನ ಜ್ಞೇಯವೆಂಬ ಅಡ್ಡಣಿಗೆಯನಿರಿಸಿ,
ಮನವೆಂಬ ಹರಿವಾಣದಲ್ಲಿ ಗಡಣಿಸಿ,
ಆನಂದವೆಂಬಮೃತವನಾರೋಗಣೆಯ ಮಾಡಿ,
ನಿತ್ಯವೆಂಬಗ್ಗವಣಿಯಲ್ಲಿ ಹಸ್ತಪ್ರಕ್ಷಾಲನವ ಮಾಡಿಸಿ,
ಸತ್ವರಜತಮವೆಂಬ ವೀಳೆಯವ ಕೊಟ್ಟು,
ಅಂತಃಕರಣಚತುಷ್ಟಯವೆಂಬ ನಾಲ್ಕು ಕಾಲು ಮಾಡಿ,
ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಮಂಚವ ಹಾಸಿ,
ನಾಸಿಕ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ರಿಂಬ ಸುಪ್ಪತ್ತಿಗೆಯನು ಹಚ್ಚಡಿಸಿ,
ಪ್ರಾಣ ಅಪಾನ ವ್ಯಾನ ಉದಾನ ಸಮಾನವೆಂಬ ಒರಗು ಇಕ್ಕಿ,
ತತ್ವ ಪರತತ್ವವೆಂಬ ಹಸ್ತಕ್ಕೆ ಮೆತ್ತೆಯನಿಕ್ಕಿ,
ಸುತ್ತಣ ಪರಿಚಾರಕರು, ಆನೆ ಕುದುರೆ ಅರಸು ಮನ್ನೆಯ ಪ್ರಧಾನಿಗಳು
ಎತ್ತ ಹೋದರೆಂದು ಅತ್ತಿತ್ತ ನೋಡುತ್ತಿರಲು,
ಊರು ಬಯಲಾಯಿತ್ತು, ಒಕ್ಕಲು ಓಡಿತ್ತು,
ಮಕ್ಕಳ ಗಲಭೆ ನಿಂದಿತ್ತು, ಮಾತಿನ ಮ ಥನವಡಗಿತ್ತು.
ಉತ್ತರದಲ್ಲಿ ವಸ್ತುವ ಕಂಡು ಓಲಗಂಗೊಟ್ಟಿರಲು,
ಓಲಗದಲ್ಲಿ ಲೋಲುಪ್ತವನೆಯ್ದಿ ಆವಲ್ಲಿ ಹೋದನೆಂದರಿಯೆನಯ್ಯಾ.
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ./104
ಸಾಕಯ್ಯಾ, ಲೋಕದ ಹಂಗು ಹರಿಯಿತ್ತು
ತನುವಿನಾಸೆ ಬಿಟ್ಟಿತ್ತು ಮನದ ಸಂಚಲ ನಿಂದಿತ್ತು.
ನುಡಿಗಡಣ ಹಿಂಗಿತ್ತು ಘನವಬೆರೆಯಿತ್ತು, ಬೆಳಗಕೂಡಿತ್ತು.
ಬಯಲಿನೊಳಗೋಲಾಡಿ ಸುಖಿಯಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./105
ಸಾಯದ ಮುಂಚೆ ಸತ್ತಹಾಗೆ ಇರುವರು.
ಆರಿಗೂ ವಶವಲ್ಲ, ನಮ್ಮ ಶರಣರಿಗಲ್ಲದೆ.
ಅದು ಹೇಗೆಂದಡೆತ ಹಗಲಿರುಳೆಂಬ ಹಂಬಲ ಹರಿದರುದ
ಜಗದಾಟವ ಮರೆದರುದ ಆಡದ ಲೀಲೆಯನೆ ಆಡಿದರು.
ಆರು ಕಾಣದ ಘನವನೆ ಕಂಡರು.
ಮಹಾಬೆಳಗಿನೊಳಗೋಲಾಡಿ ಸುಖಿಯಾದರಯ್ಯಾ,
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು./106
ಸಾಸಿರದಳಕಮಲವೆಂದಡೆ ಸೂಸಿಕೊಂಡಿರುವ ಮನ.
ಪವನವೆಂದಡೆ ಎಲ್ಲೆಡೆಯಲ್ಲಿ ಸೂಸಿ ಆಡುವಂತಹದು.
ಬಿಂದುವೆಂದಡೆ ಆಗುಮಾಡುವಂತಹದು.
ಈ ಮನ ಪವನ ಬಿಂದು ಮೂರನು ಒಡಗೂಡಿ ನೋಡಲು,
ಪರಂಜ್ಯೋತಿಪ್ರಕಾಶದಂತಹ ಬೆಳಗೆ ಎನ್ನ ಕಂಗಳ ಮುಂದೆ ನಿಂದಿತ್ತು.
ಆ ಮಹಾಬೆಳಗನೆ ಕಂಗಳಲ್ಲಿ ಹೆರೆಹಿಂಗದೆ ನೋಡಿದಡೆ,
ಎನ್ನಂಗದ ಒಳಹೊರಗೆ ಪರಿಪೂರ್ಣವಾಗಿದ್ದಿತ್ತು ಕಾಣಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ, ನಿಮ್ಮ ಪಾದಕರುಣದಿಂದ./107
ಹುಟ್ಟಿದ ಮನುಜರೆಲ್ಲಾ ಬಂದ ಬಟ್ಟೆಯ ನೋಡಿ
ಭ್ರಮೆಗೊಂಡು ಬಳಲುತ್ತೈದಾರೆ.
ಇದನರಿದು ಬಂದ ಬಟ್ಟೆಯ ಮೆಚ್ಚಿ, ಕಾಣದ ಹಾದಿಯ ಕಂಡು,
ಹೋಗದ ಹಾದಿಯ ಹೋಗುತ್ತಿರಲು,
ಕಾಲ ಕಾಮಾದಿಗಳು ಬಂದು ಮುಂದೆ ನಿಂದರು.
ಅಷ್ಟಮದಂಗಳು ಬಂದು ಅಡ್ಡಗಟ್ಟಿದವು.
ದಶವಾಯು ಬಂದು ಮುಸುಕುತಿವೆ.
ಸಪ್ತವ್ಯಸನ ಬಂದು ಒತ್ತರಿಸುತಿವೆ.
ಷಡುವರ್ಗ ಬಂದು ಸಮರಸವ ಮಾಡುತಿವೆ.
ಕರಣಂಗಳು ಬೆಂದು ಉರಿವುತಿವೆ.
ಮರವೆ ರಿಂಬ ಮಾಯೆ ಬಂದು ಕಾಡುತಿವಳೆ.
ತೋರುವ ತೋರಿಕೆಯೆಲ್ಲವೂ ಸುತ್ತಮೊತ್ತವಾಗಿವೆ.
ಇವ ಕಂಡು ಅಂಜಿ ಅಳುಕಿ ಅಂಜನದಿಂದ ನೋಡುತ್ತಿರಲು
ತನ್ನಿಂದ ತಾನಾದೆನೆಂಬ ಬಿನ್ನಾಣವ ತಿಳಿದು,
ಮುನ್ನೇತರಿಂದಲಾಯಿತು, ಆಗದಂತೆ ಆಯಿತೆಂಬ ಆದಿಯನರಿದು,
ಹಾದಿಯ ಹತ್ತಿ ಹೋಗಿ ಕಾಲ ಕಾಮಾದಿಗಳ ಕಡಿದು ಖಂಡಿಸಿ,
ಅಷ್ಟಮದಂಗಳ ಹಿಟ್ಟುಗುಟ್ಟಿ, ದಶವಾಯುಗಳ ಹೆಸರುಗೆಡಿಸಿ,
ಸಪ್ತವ್ಯಸನವ ತೊತ್ತಳದುಳಿದು, ಷಡ್ವರ್ಗವ ಸಂಹರಿಸಿ,
ಕರಣಂಗಳ ಸುಟ್ಟುರುಹಿ, ಮರವೆಯೆಂಬ ಮಾಯೆಯ ಮರ್ದಿಸಿ,
ನಿರ್ಧರವಾಗಿ ನಿಂದು ಸುತ್ತ ಮೊತ್ತವಾಗಿರುವವನೆಲ್ಲ ಕಿತ್ತು ಕೆದರಿ,
ಮನ ಬತ್ತಲೆಯಾಗಿ, ಭಾವವಳಿದು ನಿರ್ಭಾವದಲ್ಲಿ ಆಡುವ ಶರಣ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ./108
ಹೊತ್ತು ಹೊತ್ತಿಗೆ ಕಿಚ್ಚನೆಬ್ಬಿಸಿದಡೆ ಕಲೆ ಉರಿದುದೆಂದು,
ಹೊತ್ತು ಹೊತ್ತಿಗೆ ಪ್ರಾಣಕ್ಕೆ ಪ್ರಸಾದವ ಸ್ಥಾಪ್ಯವ ಮಾಡಿ,
ತನುವ ಖಂಡಿಸದೆ, ಕಾಯವ ಮರುಗಿಸದೆ,
ಭಾವವನೆ ಬಯಲು ಮಾಡಿ, ಬಯಕೆ ಸವೆದು,
ಕಾಣದ ಪ ಥವನೆ ಕಂಡು, ಮಹಾಬೆಳಗಿನಲ್ಲಿ ಬಯಲಾದರು ಕಾಣಾ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು./109
ಹೊತ್ತು ಹೊತ್ತಿಗೆ ಮೆತ್ತಹಾಕಿ ತಿಪ್ಪೆಯಲ್ಲಿ ಕರ್ಪೂರವನರಸುವನಂತೆ,
ತಿಪ್ಪೆಯಂತಹ ಒಡಲೊಳಗೆ ಕರ್ತುವನರಸಿಹೆನೆಂಬ ಅಣ್ಣಗಳಿರಾ,
ನೀವು ಕೇಳಿರೊ, ಹೇಳಿಹೆನು.
ಆ ಕರ್ತುವನರಸುವುದಕ್ಕೆ ಚಿತ್ತ ಹೇಗಾಗಬೇಕೆಂದಡೆ
ಜಲದೊಳಗಣ ಸೂರ್ಯನ ಪ್ರತಿಬಿಂಬದಂತಿರಬೇಕು.
ಮೋಡವಿಲ್ಲದ ಚಂದ್ರಮನಂತಿರಬೇಕು.
ಬೆಳಗಿನ ದರ್ಪಣದಂತಿರಬೇಕು.
ಇಂತು ಚಿತ್ತಶುದ್ಧವಾದಲ್ಲದೆ, ಆ ಕರ್ತೃವಿನ ನೆಲೆಯ ಕಾಣಬಾರದೆಂದರು,
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು./110
ಹೊಸ್ತಿಲೊಳಗಿರಿಸಿದ ಜ್ಯೋತಿಯಂತೆ
ಒಳಗೆ ನೋಡುವನು ತಾನೆ, ಹೊರಗೆ ನೋಡುವನು ತಾನೆ.
ಅರಿದೆನೆಂಬುವನು ತಾನೆ, ಮರೆದೆನೆಂಬುವನು ತಾನೆ.
ಕಂಡೆನೆಂಬವನು ತಾನೆ, ಕಾಣೆನೆಂಬವನು ತಾನೆ.
ದೃಷ್ಟ ದೃಕ್ಕು ದೃಶ್ಯವೆಂಬ ತ್ರಿಪುಟಿ ಭೇದವ ಮೀರಿ.
ತ್ರಿಕೂಟವನೇರಿ, ಅತ್ತಲೆ ನೋಡುತ್ತಿರಲು,
ಹಿತ್ತಲ ಕದವ ತೆರೆದು ಮತ್ತವಾಗಿ ರಿತ್ತಲೆಂದರಿಯದೆ,
ಸತ್ತುಚಿತ್ತಾನಂದದಲ್ಲಿ ಆಡುವ ಶರಣನ ಇರವೆಂತೆಂದಡೆ
ಬಿತ್ತಲಿಲ್ಲ ಬೆಳೆಯಲಿಲ್ಲದ ಒಕ್ಕಲಿಲ್ಲ ತೂರಲಿಲ್ಲ.
ಇವನೆಲ್ಲಾ ಇಕ್ಕಲಿಸಿ ನಿಂದು ಮಿಕ್ಕು ಮೀರಿ
ಕುಕ್ಕುಂಭೆ ಮೇಲೆ ಕುಳಿತುಕೊಂಡು ನೋಡುತ್ತಿರಲು,
ಹಡಗೊಡೆಯಿತ್ತು ಒಡವೆ ವಸ್ತು, ಮಡದಿ ಮಕ್ಕಳು
ನೀರೊಳಗೆ ನೆರೆದು ಹೋಯಿತ್ತು.
ಒಡನೆ ತಂಗಾಳಿ ಬಂದು ಬೀಸಲು, ತಂಪಿನೊಳಗೆ ನಿಂದು,
ಗುಂಪು ಬಯಲಾಗಿ ಗೂಢವಾಗಿ ಆಡುವ ಶರಣ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ./111
ಹೋಗುತ್ತ ಹೋಗುತ್ತ ಹೊಗೆಯ ಕಂಡೆ,
ಹೊಗೆಯೊಳಗೊಂದು ನಗೆಯಕಂಡೆ,
ನಗೆ ನಡೆಗೆಡಿಸಿ, ನಾನೆಂಬುದನರಿದು,
ತಾನು ತಾನೆಯಾಗಿ ತಲ್ಲಣವಿಲ್ಲದೆ,
ಎಲ್ಲವೂ ತಾನೆಂದರಿದು ತನ್ಮಯವಾಗಿ
ತರಹದಲ್ಲಿ ನಿಂದು ನೋಡುತ್ತಿರಲು
ಉರಿಯ ಕಂಡೆದ ಉರಿಯೊಳಗೊಂದು ಹೊಳೆವ ಜ್ಯೋತಿಯ ಕಂಡೆ;
ಆ ಜ್ಯೋತಿಯೊಳಗೊಂದು ಚಿಜ್ಜ್ಯೋತಿಯ ಕಂಡೆ
ಆ ಚಿಜ್ಜ್ಯೋತಿಯೊಳಗೊಂದು ಚಿತ್ಪ್ರಕಾಶವ ಕಂಡೆ.
ಆ ಚಿತ್ಪ್ರಕಾಶವೆ ತಾನೆಯಾಗಿ ಆಡುವ ಶರಣನ ಇರವೆಂತೆಂದಡೆ
ಇದ್ದೂ ಇಲ್ಲದಂತೆ, ಹೊದ್ದಿಯೂ ಹೊದ್ದದಂತೆ,
ಆಡಿಯೂ ಆಡದಂತೆ, ನೋಡಿಯೂ ನೋಡದಂತೆ,
ಕೂಡಿಯೂ ಕೂಡದಂತೆ, ಕುಂಭಕದೊಳು ನಿಂದು,
ತುಂಬಿದಮೃತವನುಂಡು, ಆ ಬೆಂಬಳಿಯಲ್ಲಾಡುವ ಶರಣ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ ?/112
ಹೋಗುತ್ತ ಹೋಗುತ್ತ ಹೊಟ್ಟೆಯಡಿಯಾಯಿತ್ತು;
ಬಟ್ಟಬಯಲಾಯಿತ್ತು.
ತುಟ್ಟತುದಿಯನೇರಿ ತೂರ್ಯಾತೀತನಾಗಿ,
ಇಷ್ಟ ಪ್ರಾಣ ಭಾವ ಬಯಲಾಯಿತ್ತು.
ಬಯಲಲ್ಲಿ ನಿಂದುಕೊಂಡು ನೋಡುತ್ತಿರಲು,
ಬ್ರಹ್ಮವೆಯಾಯಿತ್ತು, ಕರ್ಮ ಕಡೆಗೋಡಿತ್ತು.
ಅರಿವರತು ಮರಹು ನಷ್ಟವಾಯಿತ್ತು.
ತೆರನಳಿದು ನಿರಿಗೆ ನಿಃಪತಿಯಾಗಿ
ಮಿರುಗುವ ದೃಷ್ಟಿಯಲ್ಲಿ ನೋಡುತ್ತಿರಲು,
ನೋಟ ತ್ರಾಟಕವ ದಾಂಟಿ ಕೂಟದಲ್ಲಿ ಕೂಡಿ,
ಬೆರಸಿ ಬೇರಾಗದಿಪ್ಪ ಶರಣ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ./113
ಹೋಗುತ್ತ ಹೋಗುತ್ತ ಹೊಲಬುದಪ್ಪಿತ್ತು,
ತನ್ನ ನೆಲೆಯ ತಿಳಿದಿತ್ತು.
ಕತ್ತಲೆಯೊಳಗೆ ನಿಂದು ನೋಡುತ್ತಿರಲು,
ನೋಟ ಹಿಂದಾಯಿತ್ತುದ ಆಟವಡಗಿತ್ತು
ಮಾಟ ನಿಂದಿತ್ತುದ ಬೇಟ ಬೆರಗಾಯಿತ್ತು.
ಊಟವನುಂಡು ಕೂಟವ ಕೂಡಿ
ಉನ್ಮನಿಯ ಬೆಳಗಿನೊಳಗೆ ಒಂದೆಂದರಿದು,
ತನ್ನಂದವ ತಿಳಿದು, ಲಿಂಗದಲ್ಲಿ ಸಂದು, ಜಂಗಮದೊಳು ಬೆರೆದು,
ಮಂಗಳದ ಮಹಾಬೆಳಗಿನೊಳಗೆ ಆಡುವ ಶರಣ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ./114