Categories
ಶರಣರು / Sharanaru

ಹೊಡೆಹುಲ್ಲ ಬಂಕಣ್ಣ

ಅಂಕಿತ: ಜಗನ್ನಾಥ ಸಾಕ್ಷಿಯಾಗಿ ಕುಂಭೇಶ್ವರ ಲಿಂಗ
ಕಾಯಕ: ಹುಲ್ಲು ಮಾರುವುದು

೧೨೧೩
ಲಿಂಗವಂತರು, ಲಿಂಗಾಚಾರಿಗಳಂಗಣಕ್ಕೆ.
ಲಿಂಗಾರ್ಪಿತ ಭಿಕ್ಷಕ್ಕೆ ಹೋದಲ್ಲಿ, ಲಿಂಗಾರ್ಪಿತವ ಮಾಡುವಲ್ಲಿ,
ಸಂದೇಹವಿಲ್ಲದೆ ಕಾಣದುದನೆಚ್ಚರಿಸದೆ,
ಕಂಡುದ ನುಡಿಯದೆ, ಕಂಡುದನು ಕಾಣದುದನು,
ಒಂದೆಸಮವೆಂದುತಿಳಿಯಬಲ್ಲಡೆ, ಕುಂಭೇಶ್ವರಲಿಂಗವೆಂಬೆನು.

ಹುಲ್ಲು ಮಾರುವ ಕಾಯಕ ಕೈಕೊಂಡಿದ್ದ ಬಂಕಣ್ಣನ ಕಾಲ-೧೧೬೦. ‘ಕುಂಭೇಶ್ವರಲಿಂಗದಲ್ಲಿ ಜಗನ್ನಾಥ ಸಾಕ್ಷಿಯಾಗಿ’ ಎಂಬುದು ಈತನ ಅಂಕಿತ. ೧೦ ವಚನಗಳು ದೊರೆತಿವೆ. ಪ್ರಸಾದದ ಮಹತಿ, ಶುದ್ಧಕಾಯಕ, ಶರಣರ ಸ್ತುತಿ ಅವುಗಳಲ್ಲಿದೆ. ಕೆಲವು ಬೆಡಗಿನ ರೂಪದಲ್ಲಿವೆ.

೧೨೧೧
ಭಯಭಕ್ತಿಯಿಂದ ಸಂಗನಬಸವಣ್ಣನ ಶ್ರೀಪಾದವ ಕಂಡೆನು.
ಅನುಮಿಷ ದೃಷ್ಟಿಯಿಂದ ಚೆನ್ನಬಸವಣ್ಣನ ಶ್ರೀಪಾದವ ಕಂಡೆನು.
ಸುಜ್ಞಾನದ ಬೆಳಗಿನಿಂದ ಪ್ರಭುದೇವರ ಶ್ರೀಪಾದವ ಕಂಡೆನು.
ಇಂತೀ ಮೂವರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು,
ಕುಂಭೇಶ್ವರಲಿಂಗದಲ್ಲಿ ಜಗನ್ನಾಥ ಸಾಕ್ಷಿಯಾಗಿ.

ಹೊಡೆ = ಅದೇ ಆಗ ಹುಟ್ಟಿದ ತೆನೆ

Categories
ಶರಣರು / Sharanaru

ಹೇಮಗಲ್ಲ ಹಂಪ

ಅಂಕಿತ: ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.

ಗುರುವಿನಲ್ಲಿ ಲಿಂಗವುಂಟು, ಜಂಗಮವುಂಟೆಂದು
ಗುರುಭಕ್ತಿಯ ಮಾಡೆಂದು ತೋರಿದಾತ ನಮ್ಮ ಬಸವಣ್ಣನಯ್ಯಾ.
ಲಿಂಗದಲ್ಲಿ ಜಂಗಮವುಂಟೆಂದು, ಗುರುವುಂಟೆಂದು
ಲಿಂಗಭಕ್ತಿಯ ಮಾಡೆಂದು ತೋರಿದಾತ ನಮ್ಮ ಬಸವಣ್ಣನಯ್ಯಾ.
ಜಂಗಮದಲ್ಲಿ ಗುರುವುಂಟು, ಲಿಂಗವುಂಟು
ಜಂಗಮ ಭಕ್ತಿಯ ಮಾಡೆಂದು ತೋರಿದಾತ ನಮ್ಮ ಬಸವಣ್ಣನಯ್ಯಾ.
ಒಂದೇ ಮೂರ್ತಿ ಮೂರೆಂದಾತ ನಮ್ಮ ಬಸವಣ್ಣನಯ್ಯಾ.
`ಏಕಮೂರ್ತಿ ತ್ರಯೋರ್ಭಾಗಾಃ’ ಎಂದುದಾಗಿ,
ಗುರು ಲಿಂಗಜಂಗಮವಾದಾತ ಒಬ್ಬನೆ ಶಿವನೆಂದು
ಪ್ರಸಾರ ಮಾಡಿ ಭಕ್ತಿಯ ಬೆಳಸಿದಾತ ನಮ್ಮ ಬಸವಣ್ಣನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /1267

ಬಹುಶ: ಹಂಪೆಯ ಪರಿಸರಕ್ಕೆ ಸೇರಿದವನಾದ ಈತನ ಸ್ಥಳ ಹೇಮಗಲ್ಲು. ಕಾಲ 17ನೇ ಶತಮಾನ. ಲಿಂಗಾಯತ ಸಂಪ್ರದಾಯದಲ್ಲಿ ಮುಖ್ಯವಾದ ‘ಪಡುವಿಡಿ’ ಬಗೆಗೆ ಸೇರಿದವನು. ರಾಜೇಶ್ವರ ಈತನ ಗುರು. ಅಂಕಿತ-ಸಿದ್ಧಮಲ್ಲಿನಾಥ.

1080
ಕಾಮವುಳ್ಳವ ಭಕ್ತನಲ್ಲ , ಕ್ರೋಧವುಳ್ಳವ ಮಹೇಶ್ವರನಲ್ಲ ,
ಲೋಭವುಳ್ಳವ ಪ್ರಸಾದಿಯಲ್ಲ , ಮೋಹವುಳ್ಳವ ಪ್ರಾಣಲಿಂಗಿಯಲ್ಲ ,
ಮದವುಳ್ಳವ ಶರಣನಲ್ಲ , ಮತ್ಸರವುಳ್ಳವ ಐಕ್ಯನಲ್ಲ.
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವುಳ್ಳನಕ
ಎಂತು ಭಕ್ತನೆಂಬೆ ? ಎಂತು ಮಹೇಶ್ವರನೆಂಬೆ ?
ಎಂತು ಪ್ರಸಾದಿಯೆಂಬೆ ? ಎಂತು ಪ್ರಾಣಲಿಂಗಿಯೆಂಬೆ ?
ಎಂತು ಶರಣನೆಂಬೆ ? ಎಂತು ಐಕ್ಯನೆಂಬೆ ?
ಬರಿಯ ಮಾತಿನ ಬಣಗರು
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.

1081
ಕಾಮವಿಲ್ಲದಾತ ಭಕ್ತ , ಕ್ರೋಧವಿಲ್ಲದಾತ ಮಹೇಶ್ವರ,
ಲೋಭವಿಲ್ಲದಾತ ಪ್ರಸಾದಿ, ಮೋಹವಿಲ್ಲದಾತ ಪ್ರಾಣಲಿಂಗಿ,
ಮದವಿಲ್ಲದಾತ ಶರಣ, ಮತ್ಸರವಿಲ್ಲದಾತ ಐಕ್ಯ.
ಅದು ಎಂತೆಂದೊಡೆ : ಕಾಮವಿಲ್ಲದ ಭಕ್ತ ಬಸವಣ್ಣ ,
ಕ್ರೋಧವಿಲ್ಲದ ಮಹೇಶ್ವರ ಪ್ರಭುರಾಯ,
ಲೋಭವಿಲ್ಲದ ಪ್ರಸಾದಿ ಚೆನ್ನಬಸವೇಶ್ವರದೇವರು,
ಮೋಹವಿಲ್ಲದ ಪ್ರಾಣಲಿಂಗಿ ಘಟ್ಟಿವಾಳಯ್ಯ,
ಮದವಿಲ್ಲದ ಶರಣ ಮೋಳಿಗೆಯ್ಯನವರು,
ಮತ್ಸರವಿಲ್ಲದ ಲಿಂಗೈಕ್ಯಳು ನೀಲಲೋಚನ ತಾಯಿ.
ಇಂತಿವರು ಮುಖ್ಯವಾದ ಏಳನೂರ ಎಪ್ಪತ್ತು ಅಮರಗಣಂಗಳ
ಪಾದಕ್ಕೆ ನಮೋ ನಮೋ ಎಂಬೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.

‘ಹೇಮಗಲ್ಲ ಷಟ್ಸ್ಥಲ’ ಈತನ ಕೃತಿಯ ಹೆಸರು. ಹೆಸರೇ ಸೂಚಿಸುವಂತೆ ಆರು ಸ್ಥಲಗಳಲ್ಲಿ ವಚನಗಳನ್ನು ಸಂಕಲಿಸಿರಬಹುದು. ಆದರೆ ಈಗ ದೊರೆತ ಕೃತಿ ಭಕ್ತಸ್ಥಲಕ್ಕೆ ನಿಂತಿದ್ದು. ಇದರಲ್ಲಿ 23 ಸ್ಥಲಗಳಿವೆ. ಒಟ್ಟು 282 ವಚನ, 21 ಸ್ವರವಚನ, 1 ರಗಳೆ, 7 ಕಂದ ಪದ್ಯಗಳು ಸಮಾವೇಶಗೊಂಡಿವೆ. ಷಟ್ಸ್ಥಲ ತತ್ವಪ್ರತಿಪಾದನೆಯೇ ಇದರ ಪರಮಗುರಿ.

Categories
ಶರಣರು / Sharanaru

ಹುಂಜಿನ ಕಾಳಗದ ದಾಸಯ್ಯ

ಅಂಕಿತ: ಚಂದ್ರಚೂಡೇಶ್ವರಲಿಂಗವೆ
ಕಾಯಕ: ಹುಂಜಿನ ಕಾಳಗ ಆಡಿಸುವವನು

೧೧೯೨
ಹುಂಜ ಸೋತಡೆ ಹಿಡಿವೆ.
ವ್ರತ ಹೋದವರ ನೋಡೆನು,
ಚಂದ್ರಚೂಡೇಶ್ವರಲಿಂಗವೆ.

ಹುಂಜಿನ ಕಾಳಗ ಏರ್ಪಡಿಸುವುದು ಈತನ ಕಾಯಕ. ಕಾಲ-೧೧೬೦. ‘ಚಂದ್ರಚೂಡೇಶ್ವರ ಲಿಂಗ’ ಅಂಕಿತದಲ್ಲಿ ಒಂದು ವಚನ ಮಾತ್ರ ದೊರೆತಿದೆ. ಇದರಲ್ಲಿ ಇವನ ವೃತ್ತಿಸೂಚನೆ, ವ್ರತನಿಷ್ಠುರತೆ, ವ್ರತಹೀನರ ನಿಂದೆ ವ್ಯಕ್ತವಾಗಿದೆ. `ವ್ರತ ಹೋದವರ ನೋಡೆನು’ ಎನ್ನುವ ಮೂಲಕ ವ್ರತದ ಮೇಲಿನ ನಿಷ್ಠೆಯನ್ನು ಪ್ರಕಟಪಡಿಸಿರುವನು. ಮೂರೇ ಸಾಲಿನ ವಚನ ಇವನದು.

Categories
ಶರಣರು / Sharanaru

ಹಾದರಕಾಯಕದ ಮಾರಯ್ಯಗಳ ಪುಣ್ಯಸ್ತ್ರೀ ಗಂಗಮ್ಮ

ಅಂಕಿತ: ಗಂಗೇಶ್ವರ
ಕಾಯಕ: ಶರಣೆಯಾಗುವುದಕ್ಕಿಂತ ಮುಂಚೆ ಹಾದರದ ಕಾಯಕ (ವೇಶ್ಯೆ)

೧೩೪೯
ಆವ ಕಾಯಕವ ಮಾಡಿದಡೂ ಒಂದೆ ಕಾಯಕವಯ್ಯಾ.
ಆವ ವ್ರತವಾದಡೂ ಒಂದೆ ವ್ರತವಯ್ಯಾ.
ಆಯ ತಪ್ಪಿದಡೆ ಸಾವಿಲ್ಲ, ವ್ರತತಪ್ಪಿದಡೆ ಕೂಡಲಿಲ್ಲ.
ಕಾಕಪಿಕದಂತೆ ಕೂಡಲು ನಾಯಕನರಕ ಗಂಗೇಶ್ವರಲಿಂಗದಲ್ಲಿ.

ಈಕೆ ಹಾದರ ಕಾಯಕದ ಮಾರಯ್ಯನ ಸತಿ. ಕಾಲ-೧೧೬೦. ‘ಗಂಗೇಶ್ವರ’ ಅಂಕಿತದಲ್ಲಿ ಒಂದು ವಚನ ದೊರೆತಿದೆ. ಕಾಯಕ ಸಮಾನತೆ, ವ್ರತನಿಷ್ಠೆ, ಭಕ್ತರ ಗುಣ ಲಕ್ಷಣ, ಶರಣನ ಇರುವು ಅಪ್ರಾಮಾಣಿಕರ ದೂಷಣೆ, ಶರಣಸ್ತುತಿ ಇದರ ಮುಖ್ಯ ಆಶಯ.

Categories
ಶರಣರು / Sharanaru

ಹರಳಯ್ಯ ಮತ್ತು ಕಲ್ಯಾಣಮ್ಮ

Haralayya and Kalyanamma ಹರಳಯ್ಯ ಮತ್ತು ಕಲ್ಯಾಣಮ್ಮ

ಇಂದಿನ ಗುಲಬರ್ಗಾ ಜಿಲ್ಲೆಯ ಶಹಾಪೂರ ತಾಲ್ಲೂಕಿನಲ್ಲಿ ‘ಸಗರ’ ಎನ್ನುವ ಗ್ರಾಮವೊಂದಿದೆ. ಅಲ್ಲಿ ಹರಳಯ್ಯ ಮತ್ತು ಕಲ್ಯಾಣಮ್ಮ ಎಂಬ ದಂಪತಿಗಳು ವಾಸಿಸುತ್ತಿದ್ದರು. ತಮ್ಮ ಕುಲ ಕಸುಬಾದ ಜೋಡು (ಪಾದರಕ್ಷೆ) ತಯಾರಿಕೆಯಲ್ಲಿ ತೊಡಗಿದ್ದ, ಇವರು ಕಲ್ಯಾಣ ನಾಡಿನ ಗುರು ಬಸವಣ್ಣನವರ ಕೀರ್ತಿಯನ್ನೂ, ಅವರ ದಲಿತ ಪರ ಕಾಳಜಿ- ಕಕ್ಕುಲಾತಿಯನ್ನು, ಅವರಿವರ ಬಾಯಿಯಿಂದ ಕೇಳುತ್ತಲೇ ಇದ್ದರು. ತಮ್ಮೂರು ಹಾಗೂ ಸುತ್ತಮತ್ತಲಿನ ಕೈ-ಕಸಬುದಾರರು, ಬಸವಣ್ಣನ ಪ್ರಸಿದ್ಧಿಯನ್ನು ಕೇಳಿಸಿಕೊಂಡವರು, ಕಲ್ಯಾಣ ನಾಡಿನತ್ತ ವಲಸೆ ಹೋಗುತ್ತಿರುವುದನ್ನೂ ನೋಡುತ್ತಿದ್ದರು.

ಕಲ್ಯಾಣ ನಾಡಿಗೆ ಹೋಗಿ ಬಂದವರಂತೂ, ಗುರು ಬಸವಣ್ಣನವರನ್ನು ಹೊಗಳಿದ್ದೋ ಹೊಗಳಿದ್ದು. ಕಾಯಕ ಜೀವಿಗಳ ಕುರಿತು ಅಣ್ಣನಿಗಿರುವ ಅಭಿಮಾನ ಮತ್ತು ಅಪೂರ್ವವಾದ ಗೌರವಕ್ಕೆ, ಮಾರು ಹೋಗದವರೇ ಪಾಪಿಗಳು, ಎನ್ನುವಷ್ಟು ಬಸವನ ಪ್ರಭಾವ ಹಬ್ಬತೊಡಗಿತು. ಹರಳಯ್ಯ ದಂಪತಿಗಳು ಇದೆಲ್ಲವನ್ನು ಶಾಂತ ಚಿತ್ತರಾಗಿ ಗಮನಿಸುತ್ತಲೇ ಇದ್ದರು. ತಾವಾಯಿತು ತಮ್ಮ ಹಿರಿಯರಾಯಿತು, ತಲೆತಲಾಂತರದಿಂದ ಮಾನವ ಶರೀರದ ಅಡಿಪಾಯದಂತಿರುವ ಪಾದಗಳಿಗೆ, ಪಾದರಕ್ಷೆಗಳನ್ನು ಮಾಡಿ ಕೊಡುವುದೇ ಆಯಿತು. ಸಮಾಜ ತಮ್ಮನ್ನು ಯಾವ ಕಾಲಕ್ಕೂ ಗೌರವದಿಂದ ಕಾಣುವ ಮಾತು, ಅದೊಂದು ಕನಸಿನ ಸಂಗತಿಯೇ ಸರಿಯೆಂದು, ತೀರ್ಮಾನಿಸಿದ ಹರಳಯ್ಯ್ಯ ದಂಪತಿಗಳು, ತಾವೂ ಗುರು ಬಸವಣ್ಣನ ನಾಡಿಗೆ ಹೊರಡಲು ಸನ್ನದ್ಧರಾಗಿಯೇ ಬಿಟ್ಟರು.

ಶರಣು ಶರಣಾರ್ಥಿಗಳು

ಒಮ್ಮೆ ಕಲ್ಯಾಣ ಪಟ್ಟಣದ ರಾಜ ಬೀದಿಯಲ್ಲಿ, ದಿನ ನಿತ್ಯದಂತೆ ಹರಳಯ್ಯನವರು ಪಾದರಕ್ಷೆಗಳನ್ನು ಮಾರಿಕೊಂಡು ಬರುತ್ತಿದ್ದರು. ಆಕಸ್ಮಿಕವೋ ಏನೋ, ಅದೇ ಸಮಯಕ್ಕೆ ಗುರು ಬಸವಣ್ಣನವರು ಹರಳಯ್ಯನವರಿಗೆದುರಾದರು. ಇವರನ್ನು ಕಂಡ ತಕ್ಷಣ್ ಹರಳಯ್ಯನವರು; “ಗುರು ಬಸವೇಶ್ವರ ಶರಣು ತಂದೆ ಶರಣು” ಎಂದು ಕೈ ಮುಗಿದರು. ಅದಕ್ಕೆ ಪ್ರತಿಯಾಗಿ ಬಸವಣ್ಣನವರು, “ಶರಣು ಶರಣಾರ್ಥಿಗಳು ಹರಳಯ್ಯನವರಿಗೆ”; ಎಂದು ಬಾಗಿ ನಮಸ್ಕರಿಸಿದರು. ಮೊದಲೇ ಬಸವಣ್ಣನವರು; “ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ” ಎಂದು ನಂಬಿಕೊಂಡು ಬಂದವರು.

ತನ್ನ ಒಂದು “ಶರಣು” ಸ್ವೀಕರಿಸಿದರೆ ತನ್ನ ಜನ್ಮವೇ ಪಾವನವಾಯಿತೆಂದು ತಿಳಿದ ಹರಳಯ್ಯನನವರಿಗೆ; ಗುರು ಬಸವಣ್ಣನವರು ಪ್ರತಿಯಾಗಿ ಎರಡು ಬಾರಿ ಶರಣು ಹೇಳಿದ್ದು ಕೇಳಿಸಿಕೊಂಡಾಗ; ದಿಕ್ಕು ತೋಚದಂತಾಯಿತು; ಆಕಾಶ ಕಳಚಿ ಮೈ ಮೇಲೆ ಬಿದ್ದಂತಾಯಿತು. ಇದು ಕನಸೋ ನನಸೋ ಒಂದೂ ತಿಳಿಯದಾಯಿತು. ಯಾಕೆಂದರೆ ಇಲ್ಲಿಯವರೆಗೂ ಊರಲ್ಲಿ ಸವರ್ಣೀಯರು, ತನಗೆ ಹಾಗೂ ತನ್ನ ಕುಲ ಬಾಂಧವರಿಗೆ ನಮಸ್ಕಾರ ಮಾಡುವುದಂತೂ ಒತ್ತಟ್ಟಿಗಿರಲಿ; ನೆರಳೂ ಕೂಡಾ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದವರೆಲ್ಲಿ? ಸ್ವತಃ ಪ್ರಧಾನಿಯಾದ, ಹುಟ್ಟು ಬ್ರಾಹ್ಮಣನಾದ ಹಾಗೂ ಕಲ್ಯಾಣ ರಾಜ್ಯದ ಬಿಜ್ಜಳ ರಾಜನ ಅಳಿಯನಾದ; ಗುರು ಬಸವಣ್ಣ ತನಗೆ ಎರಡು ಸಲ ಶರಣು ಅನ್ನುವುದೆಂದರೇನು? ಎಂಬ ಪ್ರಶ್ನೆ ಮೂಡಿತು.

ಆತಂಕಗೊಂಡ ಕಲ್ಯಾಣಮ್ಮ.

ಒಂದು ರಾಜ್ಯದ ಪ್ರಧಾನ ಮಂತ್ರಿಯಿಂದ, ಎರಡು ಬಾರಿ ನಮಸ್ಕರಿಸಿಕೊಂಡ ಸಂಗತಿಯನ್ನು, ಮನದಲ್ಲೇ ಮೆಲಕು ಹಾಕುತ್ತ, ಮನೆಗೆ ಬಂದ ಹರಳಯ್ಯನರನ್ನು ಇದಿರುಗೊಂಡ ಕಲ್ಯಾಣಮ್ಮ, ಕೈ ಕಾಲು ಮುಖ ತೊಳೆದುಕೊಳ್ಳಲು, ನೀರು ಕೊಡಲು ಹೋದಾಗ, ಹರಳಯ್ಯನವರ ಚಿಂತಾಕ್ರಾಂತವಾದ ಮುಖ ಗಮನಿಸಿ ತಾನೂ ಆತಂಕಗೊಳ್ಳುತ್ತಾಳೆ.

ಹರಳಯ್ಯನವರ ಮನದಾಳದಲ್ಲಿ, ಗುರು ಬಸವಣ್ಣನವರು ಎರಡು ಬಾರಿ ಶರಣು ಹೇಳಿದ ಸಂಗತಿಯು, ತಲೆ ತಿನ್ನುತ್ತಲೇ ಇತ್ತು. ಮಾನಸಿಕವಾಗಿ ಹೊರಲಾರದ ಹೊರೆಯನ್ನು ಹೇಗೆ ಇಳಿಸಿಕೊಳ್ಳುವುದು? ಆ ಭಾರದಿಂದ ಮುಕ್ತಿ ಪಡೆಯುವ ಮಾರ್ಗ ಯಾವುದೆಂದು, ಚಿಂತಿಸುತ್ತಲೇ ಇದ್ದ ಪತಿಗೆ ತಕ್ಕ ಸತಿಯಾದ ಕಲ್ಯಾಣಮ್ಮ, ಹರಳಯ್ಯನವರ ಧರ್ಮ ಪತ್ನಿ. ಪತಿಯ ಹೆಜ್ಜೆಯಲ್ಲಿ ಹೆಜ್ಜೆಯಿಟ್ಟು ನಡೆಯುವ ಸದ್ಗೃಹಿಣಿ. ಗಂಡನ ಚಿಂತಾಕ್ರಾಂತಕ್ಕೆ ತಾನೂ ಖಿನ್ನವದಳಾಗಿ ಕಾರಣ ತಿಳಿಯಲು ಯತ್ನಿಸಿದಳು. ಉಹೂ ಹರಳಯ್ಯ ಜಪ್ಪೆನ್ನುತ್ತಿಲ್ಲ. ಕೊನೆಗೂ ಬಾಯಿ ಬಿಟ್ಟ ಹರಳಯ್ಯ, ತಾನು ದಾರಿಯಲ್ಲಿ ಬರುವಾಗಿನ ಘಟನೆಯನ್ನೆಲ್ಲ, ಸವಿವರವಾಗಿ ಪತ್ನಿಗೆ ವಿವರಿಸಿ ಹೇಳಿ ಮೂಕವಿಸ್ಮಿತನಾದ. ಮುಂದೆ ಯಾವುದಕ್ಕೂ ಬಾಯಿಯಿಂದ ಮಾತೇ ಹೊರಡುತ್ತಿಲ್ಲ. ಪತಿಯ ಮುಗ್ಧತೆ ಹಾಗೂ ದುಗುಡವನ್ನರಿತ ಕಲ್ಯಾಣಮ್ಮ ಕೊನೆಗೆ; “ಆ ಗುರು ಮಾಡಿದ್ದುದಾಗಲಿ, ಹೀಗೆ ಚಿಂತೆ ಮಾಡುತ್ತ ಕಾಲ ಹರಣ ಮಾಡುವುದು ತರವಲ್ಲ; ಅದಕ್ಕೇನಾದರೂ ಒಂದು ಮಾರ್ಗೋಪಾಯ ಹುಡುಕಿದರಾಯಿತು; ಎದ್ದೇಳಿ ಮೊದಲು ಕೈ ಕಾಲು ಮುಖ ತೊಳೆದುಕೊಂಡು ಊಟಕ್ಕೆ ಬನ್ನಿ”ಎಂದಾಗ, ಪತಿಗೆ ಎಲ್ಲೋ ಒಂದು ಕಡೆ ಕಪ್ಪು ಮೋಡದಲ್ಲೊಂದು ಬೆಳ್ಳಿಯ ಕೋಲ್ಮಿಂಚು ಕಂಡಂತಾಯಿತು.

ಪರಿಹಾರ ಕಂಡುಕೊಂಡ ದಂಪತಿಗಳು

ಒಂದೆರಡು ದಿನಗಳ ತರುವಾಯ ಕಲ್ಯಾಣಮ್ಮ, “ಪತಿದೇವಾ ಚಿಂತಸದಿರಿ”, ಇದೋ ಗುರು ಬಸವಣ್ಣನವರಿಗೆ ಸುಂದರತರವಾದ ಚಮ್ಮಾವುಗೆಗಳನ್ನು ಮಾಡೋಣ. ಆದರೆ ಸಾಮಾನ್ಯ ರೀತಿಯಾಗಿ ಬೇಡ. ಚಮ್ಮಾವುಗೆಯ ಅಟ್ಟಿಯಲ್ಲಿ ನಮ್ಮ ತೊಡೆಯ ಚರ್ಮವನ್ನು ಸೇರಿಸೋಣ. ಹೀಗೆ ಪವಿತ್ರ ಮನದಿಂದ ತಯಾರಿಸಿದ ಪಾದರಕ್ಷೆಗಳನ್ನು ಗುರು ಬಸವಣ್ಣನವರು ಮೆಟ್ಟಿದರೆ ನಾವು ಪುನೀತರಾಗುವುದಿಲ್ಲವೇ?” ಎಂದು ಪತಿಗೆ ಸೂಕ್ತ ಸಲಹೆ ನೀಡಿದ ತಕ್ಷಣ, ಹರಳಯ್ಯನವರಿಗೆ ಒಪ್ಪಿಗೆಯಾಯಿತು.
ಬಸವನಾಮ ಸ್ಮರಿಸುತ್ತ, ಹರಳಯ್ಯನವರು ತಮ್ಮ ಬಲ ತೊಡೆಯ, ಕಲ್ಯಾಣಮ್ಮನವರು ತಮ್ಮ ಎಡ ತೊಡೆಯ ಚರ್ಮ ಕೊಯ್ದು ಅಟ್ಟೆಯಲ್ಲಿ ಸೇರಿಸಿದರು.
ಮರುದಿನವೆ ಹರಳಯ್ಯ ಕೊರೆದ ಬಲದೊಡಿ ಚರ್ಮ
ಹರನೆಂದು ಮಡದಿಯೆಡದೊಡೆಯ ತಾ ಕೊಯ್ದು
ಭರದಿ ಹದಮಾಡಿ ಒಣಗಿಸಿದ |
ಎಂದು ಮುಂತಾಗಿ ಆ ಕಾಲದ ಜನಪದ ಕವಿಯೊಬ್ಬ ಹೃದಯಸ್ಪರ್ಶಿಯಾಗಿ ತ್ರಿಪದಿಗಳನ್ನು ಕಟ್ಟಿ ಹಾಡಿದ್ದಾನೆ.

ಪಾದರಕ್ಷೆಗಳನ್ನು ತಯಾರಿಸುವ ಅನುಭವವನ್ನೆಲ್ಲ ಎರಕಹೊಯ್ದು, ತಮ್ಮ ಕಲಾ ನೈಪುಣ್ಯವನ್ನೆಲ್ಲ ವಿನಿಯೋಗಿಸಿ ಚಮ್ಮಾವುಗೆಗಳನ್ನು ಸಿದ್ಧಪಡಿಸಿದರು. ಭಕ್ತಿ ಭಾಂಡಾರಿ ಬಸವೇಶ್ವರರು ಮೆಟ್ಟಿದರೆ, ತಾವು ಪುನೀತರಾಗುವೆವೆಂದು ಹರಳಯ್ಯ ದಂಪತಿಗಳು ಆನಂದಭರಿತರಾದರು.

ಗುರು ಬಸವಣ್ಣನ ಮನೆಯತ್ತ ಹರಳಯ್ಯ

ಸಡಗರದಿಂದ ರೇಶ್ಮೆಯ ವಸ್ತ್ರವನ್ನು ಚಮ್ಮಾವುಗೆಗಳಿಗೆ ಹೊದಿಸಿ, ಭಯ ಭಕ್ತಿಯಿಂದ ಗುರು ಬಸವಣ್ಣನನ್ನು ಸ್ಮರಿಸುತ್ತ ಮಹಾಮನೆಗೆ ಹೊರಟರು. ಬಸವಣ್ಣನವರು ದೂರದಿಂದಲೇ ಕಲ್ಯಾಣಮ್ಮ ಮತ್ತು ಹರಳಯ್ಯನವರನ್ನು ಕಂಡು, ಪತ್ನಿ ಸಮೇತರಾಗಿ ಬಂದು ಇದಿರ್ಗೊಂಡು, ಕೈಕಾಲು ಮುಖ ತೊಳೆಯಲು ನೀರಿತ್ತು, ಸತ್ಕರಿಸಿ ಒಳಗೆ ಕರೆದೊಯ್ದರು. ಹರಳಯ್ಯನವರು ತಮ್ಮಲ್ಲಿಗೆ ಆಗಮಿಸಿದ ಕಾರಣವನ್ನು ಕೇಳಿದಾಗ, ಭಾವ ಪುನೀತರಾದ ಹರಳಯ್ಯನವರು, ತಾವು ತಂದ ಚಮ್ಮಾವುಗೆಗಳನ್ನು ಗುರು ಬಸವಣ್ಣನವರಿಗೆ ತೋರಿಸಿ, ಅವನ್ನು ಸ್ವೀಕರಿಸಬೇಕೆಂದು ಬಹು ನಮೃತೆಯಿಂದ ಬೇಡಿಕೊಂಡರು.

ಹರಳಯ್ಯನವರು ಈ ಚಮ್ಮಾವುಗೆಗಳನ್ನು ಒಯ್ದು ಬಸವಣ್ಣನವರಿಗೆ ಕೊಟ್ಟಾಗ, ಅವರು ಭಾವಪರವಶರಾಗಿ, ಅವುಗಳನ್ನು ಮೆಟ್ಟಿಕೊಳ್ಳದೇ ಭಯ ಭಕ್ತಿಯಿಂದ, ತಮ್ಮ ತಲೆಯ ಮೇಲೆ ಇಟ್ಟುಕೊಂಡು, ’ಇವು ದೇವರ ಪಾದರಕ್ಷೆಗಳು’ ಎಂದರು.

ನಿಮ್ಮ ಶರಣರ ಚಮ್ಮಾವುಗೆಗೆ ಪೃಥ್ವಿ ಸಮಬಾರದು;
ಸರಿಯಲ್ಲ ನೋಡಾ.
ಕೂಡಲಸಂಗಮದೇವಾ,
ನಿಮ್ಮ ಶರಣರ ಚಮ್ಮಾವುಗೆಗೆ! -ಬಸವಣ್ಣ [1]
“ಈ ಪವಿತ್ರ ಚಮ್ಮಾವುಗೆಗೆಳನ್ನು ಮೆಡುವ ಯೋಗ್ಯತೆ, ನನ್ನದಲ್ಲ ಕೂಡಲ ಸಂಗಮನಿಗಲ್ಲದೆ ನನಗೆ ಸಲ್ಲವು”; ಎಂದು ನುಡಿದಾಗ, ಹರಳಯ್ಯನವರು ಬಸಣ್ಣನವರ ಕಿಂಕರತ್ವವನ್ನು ಮನದಲ್ಲೇ ಕೊಂಡಾಡಿದರು.

ದುಡುಕಿದ ಮಧುವರಸ

ಒಂದು ಭಾರವನ್ನು ಇಳಿಸಿಕೊಳ್ಳಲು ಹೋಗಿ, ಅದರ ಹತ್ತಾರು ಪಟ್ಟು ಹೊರೆ ಹೊರುವುದು ಬರಬೇಕೆ? ಹರಳಯ್ಯನವರು ಖಿನ್ನ-ಮನಸ್ಕರಾದರು. ನೊಂದ ಮನದಿಂದ ಬಾಡಿದ ಮುಖದಿಂದ ಹರಳಯ್ಯ ದಂಪತಿಗಳು ಮನೆಯತ್ತ ಸಾಗಿದರು. ರಾಜ ಮಾರ್ಗದಲ್ಲಿ ಹಾಗೂ ಮಹಾಮನೆಯ ಘಟನೆಯ ವಿಚಾರದಲ್ಲಿ ಮುಳುಗಿ ದಾರಿ ಕ್ರಮಿಸುತ್ತಿದ್ದ ಶರಣ ದಂಪತಿಗಳಿಗೆ, ಗಡುಸಾದ ಹಾಗೂ ದರ್ಪಯುಕ್ತವಾದ ಒಂದು ಧ್ವನಿ ಕೇಳಿ ಎಚ್ಚರಾಗಿ ನೋಡಿದಾಗ, ಎದುರಿಗೆ ಮಧುವರಸರು ಕಂಡರು. ಹರಳಯ್ಯನವರ ತಲೆಯ ಮೇಲಿದ್ದ ಚಮ್ಮಾವುಗೆಗಳಿಗೆ ಮಾರು ಹೋಗಿ, ಅದನ್ನು ಮಧುವರಸರು ತಮಗೆ ಕೊಡುವಂತೆ ಕೇಳಿಕೊಂಡರು. ಹರಳಯ್ಯನವರು ಕೊಡಲು ನಿರಾಕರಿಸಿದಾಗ, ಮಧುವರಸರು ತಮ್ಮ ಸೇವಕರಿಂದ ಚಮ್ಮಾವುಗೆಗಳನ್ನು ಕಿತ್ತುಕೊಂಡು, ಹೆಮ್ಮೆ ಮಿಶ್ರಿತ ಅಹಂಕಾರದಿಂದ ಮೆಟ್ಟಿದರು. ಮೆಡುವುದೊಂದೇ ತಡ, ಮಧುವರಸರ ಮೈಯ್ಯಲ್ಲಾ ಉರುಪಿನಿಂದ ಭಯಂಕರವಾಗಿ ಉರಿಯ ಹತ್ತಿತು.

ಹರಳಯ್ಯನವರ ಮಾತಿಗೆ ಬೆಲೆ ಕೊಡದೆ, ಶರಣರ ಮಹಿಮೆಯನ್ನರಿಯದೆ, ಅವರನ್ನು ತಿರಸ್ಕರಿಸಿ ತಾನು ಮಾಡಿದ ಅಪರಾಧಕ್ಕಾಗಿ ಮಧುವರಸರಿಗೆ ದಿಕ್ಕೇ ತೋಚದಂತಾಯಿತು. ಮೈಯ್ಯುರಿ ಹೆಚ್ಚುತ್ತಲೇ ಇತ್ತು. ಯಾರ ಸಲಹೆ ಸೂಚನೆಗಳಾಗಲೀ, ಯಾವ ಪಂಡಿತ ವೈದ್ಯರ ಔಷಧೋಪಚಾರವಾಗಲೀ, ಮಧುವರಸರ ಶರೀರ ತಾಪಕ್ಕೆ ಶಾಂತಿಯನ್ನೀಯಲಿಲ್ಲ. ಖ್ಯಾತ-ವಿಖ್ಯಾತ, ದೇಶ-ವಿದೇಶಗಳ ತಜ್ಣ ವೈದ್ಯರ ಉಪಚಾರವೆಲ್ಲ, ಹೊಳೆಯಲ್ಲಿ ಹುಣಸೇ ಹಣ್ಣು ತೊಳೆದಂತಾಯಿತು. ಅದ್ಯಾವ ಪುಣ್ಯಾತ್ಮ ಸಲಹೆ ಕೊಟ್ಟನೋ ಏನೋ, ಹರಳಯ್ಯನವರ ಮನೆಯ “ಕರಿಬಾನಿ” ನೀರು ಚುಮುಕಿಸಿದರೆ ಮೈಯುರಿ ಪ್ರಶಾಂತಗೊಳ್ಳುವುದೆಂದರಂತೆ. ಹಾಗೆ ಮಾಡಿದಾಗ ಮಧುವರಸರ ಮೈ ತಾಪ ತಣ್ಣಗಾಗಿ ಯಥಾಸ್ಥಿತಿಗೆ ಮರಳಿತಂತೆ.

ಜಾತಿ ಮೀರಿದ ಮದುವೆ

ಈಗ ಮಧುವರಸರಿಗೆ ಶರಣರ ಜೀವನದ ಹಿರಿಮೆ ಹಾಗೂ ಮಹಿಮೆಯ ಅರಿವಾಯಿತು. ಅವರಿಗೆ ಜ್ಣಾನೋದಯವಾಯಿತು. ಅವರು ಹರಳಯ್ಯನವರಲ್ಲಿ ಕ್ಷಮೆ ಕೇಳಿದರು. ಅವರ ಶಿಷ್ಯರಾದರು, ಶಿವಭಕ್ತರಾದರು, ಗುರುಕರುಣೆಯಿಂದ ಲಿಂಗಧಾರಿಗಳಾದರು. ಶರಣ ಧರ್ಮವನ್ನು ಅಂಗೀಕರಿಸಿದ ಅವರು ತಮ್ಮ ಮುದ್ದು ಮಗಳು ಲಾವಣ್ಯವತಿಯನ್ನು ಹರಳಯ್ಯನವರ ಪುತ್ರ ಶೀಲವಂತನಿಗೆ ಮದುವೆ ಮಾಡಿ ಕೊಡಲು ಮುಂದಾದರು.
“ಶರಣರ ಮಗಳನ್ನು ಶರಣರ ಮಗನಿಗೆ ಕೊಡಲು ಯಾವ ತಪ್ಪೂ ಇಲ್ಲ” ಎಂದು ಅನುಭವ ಮಂಟಪವೂ ಒಪ್ಪಿಗೆ ನೀಡಿತು. ಆದರೆ ಲೋಕದ ಕಣ್ಣಿಗೆ ಇದು ಸಮಾಜ ವಿರೋಧಿ ಕಾರ್ಯವಾಗಿತ್ತು, ಪ್ರತಿಲೋಮ ವಿವಾಹದ ಪ್ರಕಾರವಾಗಿತ್ತು. ಜನ ಮರುಳೋ ಜಾತ್ರೆ ಮರುಳೋ, ಎಂಬಂತೆ ಈ ಮದುವೆಯು ಸಂಪ್ರದಾಯಕ್ಕೆ ಕೊಡಲಿ ಏಟು ಹಾಕಿತ್ತು. ಜನ ಸಾಮಾನ್ಯರನ್ನು ರೊಚ್ಚಿಗೇಳುವಂತೆ ಪಟ್ಟಭದ್ರ ಹಿತಾಸಕ್ತಿಗಳು ಕುಮ್ಮಕ್ಕು ನೀಡಿದವು. ಜಾತಿ ಕೆಟ್ಟು ಹೋಯಿತೆಂದರು. ಧರ್ಮ ಹಾಳಾಯಿತೆಂದರು. ಕೆಳ ಜಾತಿಗಳಿಗೆ ಸೊಕ್ಕು ಹೆಚ್ಚಾಯಿತೆಂದರು. ನಾಯಿಗಳಿಗೆ ಸಲುಗೆ ಕೊಟ್ಟರೆ ಹೆಗಲೇರುತ್ತವೆಯೆಂದರು. ಮೇಲ್ಜಾತೀಯ ಸವರ್ಣೀಯರು ಸಹಜವಾಗಿ ದೊರೆಗೆ ದೂರಿತ್ತರು.

ಕಲ್ಯಾಣ ಕ್ರಾಂತಿಗೆ ಮುನ್ನುಡಿಯಾದ ಚಮ್ಮಾವುಗೆಗಳು

ದೊರೆಗೆ ಮತ್ತಿನ್ನೇನು ಬೇಕು? “ವರ್ಣ ಸಂಕರ ಮಾಡಿದವರಿಗೆ ಎಳೆ ಹೂಟ್ಟೆ ಶಿಕ್ಷೆ ವಿಧಿಸಿ” ಎಂಬ ಆಜ್ಷೆಯನ್ನು ಹೊರಡಿಸಿದರು ಹರಳಯ್ಯ- ಮಧುವರಸರ ಕಣ್ಣು ಕೀಳಿಸಿ, ಆನೆಯ ಕಾಲಿಗೆ ಕಟ್ಟಿ. ಕಲ್ಯಾಣದ ತುಂಬೆಲ್ಲ ಎಳೆದಾಡಿಸಿದರು. ಶರಣರ ಜಂಘಾ ಬಲ ಉಡುಗುವಂತೆ ಕೊಂಡಿ ಮಂಚಣ್ಣಗಳು ನೋಡಿಕೊಂಡರು. ಹರಳಯ್ಯ ಮಧುವಯ್ಯನವರು ಆತ್ಮಾರ್ಪಣೆಗೈದರು. ಇದರಿಂದ ಕಲ್ಯಾಣದಲ್ಲಿ ಮಹಾಕ್ರಾಂತಿಯಾಯಿತು. ಸಿಕ್ಕ ಸಿಕ್ಕಲ್ಲಿ ಶರಣರ ಕಗ್ಗೊಲೆ ನಡೆಯಿತು. ಶರಣ ತತ್ವ ಉಳಿಸಿ ಪ್ರಸಾರ ಕೈ ಗೊಳ್ಳಲು ಅಸಂಖ್ಯ ಶರಣ ಶರಣೆಯರು, ಕಲ್ಯಾಣ ಬಿಟ್ಟು ಹೊರ ಬಂದರು. ಆದರೂ ಹಲವಾರು ಶರಣರನ್ನು ಅರಸನ ಸೈಕರು, ಸಂಪ್ರದಾಯವಾದಿಗಳು, ಜಾತಿವಾದಿಗಳು ಹಿಡಿದು, ಕೊಲ್ಲುವ ಕಾಯಕ ಮಾಡುತ್ತಲೇ ಹೋದರು.

ಕ್ರಾಂತಿಯು ಉತ್ತುಂಗಕ್ಕೇರಿದಾಗ ಇಡೀ ಕಲ್ಯಾಣವು ಗೊಂದಲದ ಗೂಡಾಯಿತು. ಅರಾಜಕತೆಯ ಅಟ್ಟಹಾಸದ ಜ್ವಾಲೆ ಆಗಸದೆತ್ತರಕ್ಕೆ ಚಿಮ್ಮುತ್ತಿತ್ತು. ಮಹಾಕ್ರಾಂತಿಯ ಉತ್ತುಂಗದ ಪರಿಣಾಮವೆನ್ನುವಂತೆ ಬಿಜ್ಜಳರಸನ ಕಗ್ಗೊಲೆಯೂ ನಡೆದು ಹೋಯಿತು. ಕಲ್ಯಾಣ ಕ್ರಾಂತಿಗೆ ಮೂಲ ಕಾರಣವೆಂದರೆ ಕಲ್ಯಾಣಮ್ಮ ಮತ್ತು ಹರಳಯ್ಯನವರ ತೊಡೆಯ ಚರ್ಮದಿಂದ ತಯಾರಿಸಿದ ಪವಿತ್ರ ಚಮ್ಮಾವುಗೆಗಳೇ!

ಪಾದರಕ್ಷೆಗಳು ಈಗಲೂ ಇವೆ

ಇವತ್ತಿನ ಗುಲ್ಬರ್ಗ ಜಿಲ್ಲೆಯ ಸೇಡಂ ತಾಲ್ಲೂಕಿನ ಬಿಜನಳ್ಳಿಯಲ್ಲಿ; ಈ ಪಾದರಕ್ಷೆಗಳನ್ನು ಸಮಗಾರ ಹರಳಯ್ಯ ದಂಪತಿಗಳು ತಯಾರಿಸಿದ ಪವಿತ್ರ ಪಾದರಕ್ಷೆಗಳೆಂದೇ; ಭಯ ಭಕ್ತಿಯಿಂದ ಇಂದಿಗೂ ಕೂಡಕ ಪೂಜಿಸಲಾಗುತ್ತದೆ. ಹರಳಯ್ಯನವರ ಹೆಸರಿನಿಂದ; ವರುಷಕ್ಕೊಮ್ಮೆ ದಾಸೋಹ ನಡೆಯುತ್ತದೆ. ಬಿಜನಳ್ಳಿಯ ಈ ಚಮ್ಮಾವುಗೆಗಳು; ಹರಳಯ್ಯನವರು ತೊಡೆಯ ಚರ್ಮದಿಂದ ತಯಾರಿಸಿದ ಪಾದರಕ್ಷೆಗಳೆಂದು ಸಂಶೋದಕರು ಗುರುತಿಸಿದ್ದಾರೆ.

Haralayya Padarakshe
Categories
ಶರಣರು / Sharanaru

ಹಾವಿನಾಳ ಕಲ್ಲಯ್ಯ

ಅಂಕಿತ: ಮಹಾಲಿಂಗ ಕಲ್ಲೇಶ್ವರ
ಕಾಯಕ: ಅಕ್ಕಸಾಲಿಗ

ಅಕ್ಕಸಾಲಿಗ ಮನೆತನಕ್ಕೆ ಸೇರಿದ ಈತನ ಜನ್ಮಸ್ಥಳ ವಿಜಾಪುರ ಜಿಲ್ಲೆಯ ಹಾವಿನಾಳು ಅಲ್ಲಿನ ಕಲ್ಲಿನಾಥ ಆರಾಧ್ಯದೈವ. ತಂದೆ-ಶಿವನಯ್ಯ, ತಾಯಿ-ಸೊಮವ್ವೆ. ಕಾಲ-೧೧೬೦. ಹರಿಹರನ ರಗಳೆಯಲ್ಲಿ ಈತ ಸತ್ತ ಸರ್ಪವನ್ನು ಬದುಕಿಸಿದ, ನಾಯಿಯಿಂದ ವೇದವನ್ನು ಓದಿಸಿದ, ಪರಕಾಯ ಪ್ರವೇಶಮಾಡಿದ ಎಂಬ ಪವಾಡಾತ್ಮಕ ಘಟನೆಗಳು ಉಕ್ತವಾಗಿವೆ. ರೇವಣಸಿದ್ಧ, ರುದ್ರಮುನಿ, ಸಿದ್ಧರಾಮರ ಸಂಪರ್ಕದಿಂದ ಶರಣನಾದ ಈತ, ಕಲ್ಯಾಣಕ್ಕೆ ಬಂದು ಅನುಭಾವ ಗೋಷ್ಠಿಗಳಲ್ಲಿ ಭಾಗವಹಿಸಿದ. ಕಲ್ಯಾಣಕ್ರಾಂತಿಯ ನಂತರ ಸೊಲ್ಲಾಪುರಕ್ಕೆ ತೆರಳಿ, ಅಲ್ಲಿಯೇ ಐಕ್ಯನಾದ. ಈತನ ಸಮಾಧಿ ಸಿದ್ಧರಾಮೇಶ್ವರ ದೇವಾಲಯದ ಪ್ರಾಕಾರದಲ್ಲಿದೆ.

೧೧೭೭
ವೇದವನೋದಿದಡೇನು ? ಶಾಸ್ತ್ರಪುರಾಣಾಗಮಂಗಳ ಕೇಳಿದಡೇನು ?
ಗುರುಕಾರುಣ್ಯವಿಲ್ಲದವನು ಲಿಂಗವ ಮುಟ್ಟಿ ಪೂಜಿಸಲಾಗದು.
ಜಪತಪಧ್ಯಾನ ವಿಭೂತಿ ರುದ್ರಾಕ್ಷಿಯ ಧರಿಸಿದಡೇನು ?
ಅವನು ಪಂಚಮಹಾಪಾತಕನು, ಅವನ ಮುಖವ ನೋಡಲಾಗದು.
ಇದನರಿದು ಗುರುಕರುಣವಿಡಿದು ಮಾಡುವ ಪೂಜೆಯೇ ಶಿವಂಗೆ ಪ್ರೀತಿ.
ಇದನರಿಯದೆ ಗುರುಕರುಣವಿಲ್ಲದವ ಶಿವಲಿಂಗಪೂಜೆಯ ಮಾಡಿದನಾದಡೆ,
ಅಘೋರನರಕ ತಪ್ಪದು, ಮಹಾಲಿಂಗ ಕಲ್ಲೇಶ್ವರಾ.

‘ಮಹಾಲಿಂಗ ಕಲ್ಲೇಶ್ವರ’ ಅಂಕಿತದಲ್ಲಿ ಈತ ರಚಿಸಿದ ೧೦೩ ವಚನಗಳು ದೊರೆತಿದ್ದು, ಅವುಗಳಲ್ಲಿ ಭಕ್ತಿನಿಷ್ಠೆ, ಶರಣತತ್ವ ವಿವೇಚನೆ, ಪರಮತ ಖಂಡನೆ, ನೀತಿ ಭೋಧೆ, ಆತ್ಮನಿರೀಕ್ಷಣೆ, ಶರಣಸ್ತುತಿ ಮೊದಲಾದವು ಪ್ರತಿಪಾದನೆಗೊಂಡಿವೆ. ಅಷ್ಟಾವರಣ, ಲಿಂಗಾಂಗ ಸಾಮರಸ್ಯ, ಶಿವಭಕ್ತಿ, ಶಿವಶರಣರ ನಿಷ್ಠೆ, ನಿಷ್ಕಾಮ ಸೇವೆ, ಅನುಭಾವ – ಇವೇ ಮೊದಲಾದ ವಿಷಯಗಳ ಪ್ರಸ್ತಾಪ ವಚನಗಳಲ್ಲಿ ಬಂದಿವೆ.

Categories
ಶರಣರು / Sharanaru

ಹಡಪದ ರೇಚಣ್ಣ

ಅಂಕಿತ: ನಿಃಕಳಂಕ ಕೂಡಲ ಚೆನ್ನ ಸಂಗಮದೇವ
ಕಾಯಕ: ಹಡಪದ (ಸಂಚಿ) ಕಾಯಕ (ತಾಂಬೂಲಕರಂಡ)

ತಾಂಬೂಲ ಹಡಪದ ಕಾಯಕವನ್ನು ಕೈಗೊಂಡಿದ್ದ ಈತ ಕಲ್ಯಾಣಕ್ರಾಂತಿಯ ಸಂದರ್ಭದಲ್ಲಿ ಶರಣರ ದಂಡಿನೊಂದಿಗೆ ಉಳುಮೆಯವರೆಗೆ ಹೋಗಿದ್ದನೆಂದು ತಿಳಿಯುತ್ತದೆ. ಕಾಲ-೧೧೬೦. ‘ನಿ:ಕಳಂಕ ಕೂಡಲಸಂಗಮದೇವ’ ಅಂಕಿತದಲ್ಲಿ ೯ ವಚನಗಳು ದೊರೆತಿವೆ. ಶಿವಭಕ್ತರ ಗುಣಲಕ್ಷಣ, ವ್ರತನಿಷ್ಠೆ, ಭಕ್ತರ ಗುಣ ಲಕ್ಷಣ, ಶರಣನ ಇರುವು ಅಪ್ರಾಮಾಣಿಕರ ದೂಷಣೆ, ಶರಣಸ್ತುತಿ ಅವುಗಳ ವಸ್ತು.

Categories
ಶರಣರು / Sharanaru

ಹಡಪದ ಅಪ್ಪಣ್ಣ

ಅಂಕಿತ: ಬಸವಪ್ರಿಯ ಕೂಡಲ ಚೆನ್ನಬಸವಣ್ಣ
ಕಾಯಕ: ಹಡಪದ ಕಾಯಕ (ತಾಂಬೂಲ ಕರಂಡ)

ಅಯ್ಯಾ ನಿಮ್ಮ ಶರಣರು ವೇಷವ ತೋರಿ ಗ್ರಾಸವ ಬೇಡುವರಲ್ಲ.
ದೇಶವ ತಿರುಗಿ ಕಲಿತಮಾತ ನುಡಿವರಲ್ಲ.
ಲೇಸಾಗಿ ನುಡಿವರು, ಆಶೆ ಇಲ್ಲದೆ ನಡೆವರು, ರೋಷವಿಲ್ಲದೆ ನುಡಿವರು.
ಹರುಷವಿಲ್ಲದೆ ಕೇಳುವರು, ವಿರಸವಿಲ್ಲದೆ ಮುಟ್ಟುವರು.
ಸರಸವಿದ್ದಲ್ಲಿಯೇ ವಾಸಿಸುವರು.
ಇಂತಪ್ಪ ಬೆರಸಿ ಬೇರಿಲ್ಲದ ನಿಜೈಕ್ಯಂಗೆ ನಮೋ ನಮೋ ಎಂಬೆ,
ಬಸವಪ್ರಿಯ ಕೂಡಲಚೆನ್ನಬಸವಣ್ಣ.
ಇಂತಪ್ಪ ಶರಣರ ನೆಲೆಯ ನಾನೆತ್ತ ಬಲ್ಲೆನಯ್ಯಾ ? /೮೬೧ [1]

ಬಸವಣ್ಣನವರ ಆಪ್ತವಲಯದ ಈತ ತಾಂಬೂಲಕರಂಡ ಕಾಯಕದವನಾಗಿದ್ದ. ಶರಣೆ ಮತ್ತು ವಚನಕಾರ್ತಿ ಲಿಂಗಮ್ಮ ಈತನ ಹೆಂಡತಿ. ಚೆನ್ನಬಸವೇಶ್ವರ ಈತನ ಗುರು. ಕಲ್ಯಾಣಕ್ರಾಂತಿಯ ಸಂದರ್ಭದಲ್ಲಿ ಬಸವಣ್ಣನವರ ಜೊತೆ ಕೂಡಲಸಂಗಮದವರೆಗೂ ಹೋಗುತ್ತಾನೆ. ಅವರ ಅಪ್ಪಣೆಯ ಮೇರೆಗೆ ಕಲ್ಯಾಣಕ್ಕೆ ಹೋಗಿ ನೀಲಮ್ಮನವರನ್ನು ಕರೆತರುವಷ್ಟರಲ್ಲಯೇ ಬಸವಣ್ಣನವರು ಐಕ್ಯರಾದ ಸಂಗತಿ ತಿಳಿಯುತ್ತದೆ. ಆಮೇಲೆ ನೀಲಮ್ಮ ಮತ್ತು ಅಪ್ಪಣ್ಣ ಅವರೂ ಅಲ್ಲಿಯೇ ಲಿಂಗೈಕ್ಯರಾಗುತ್ತಾರೆ.

ಅನ್ನವನ್ನಿಕ್ಕಿದರೇನು ? ಹೊನ್ನ ಕೊಟ್ಟರೇನು ?
ಹೆಣ್ಣು ಕೊಟ್ಟರೇನು ? ಮಣ್ಣು ಕೊಟ್ಟರೇನು ? ಪುಣ್ಯ ಉಂಟೆಂಬರು.
ಅವರಿಂದಾದೊಡವೆ ಏನು ಅವರೀವುದಕ್ಕೆ ?
ಇದಕ್ಕೆ ಪುಣ್ಯವಾವುದು, ಪಾಪವಾವುದು ?
ನದಿಯ ಉದಕವ ನದಿಗೆ ಅರ್ಪಿಸಿ,
ತನತನಗೆ ಪುಣ್ಯ ಉಂಟೆಂಬ ಬಡಹಾರುವರಂತೆ,
ಸದಮಳ ಶಾಶ್ವತ ಮಹಾಘನಲಿಂಗವನರಿಯದೆ,
ಇವೇನ ಮಾಡಿದರೂ ಕಡೆಗೆ ನಿಷ್ಪಲವೆಂದಾತ,
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ. /೮೪೬ [1]

ಬನವಾಸಿಯ ಮಧುಕೇಶ್ವರ ದೇವಾಲಯದ ಶಿವೋತ್ಸವ ಮಂಟಪದ ಗಗ್ಗರಿ ಕಲ್ಲಿನ ಮೇಲಿರುವ ಶರಣರ ಶಿಲ್ಪಗಳಲ್ಲಿ ಅಪ್ಪಣ್ಣನ ವಿಗ್ರಹವು ಇದೆ. ಅಪ್ಪಣ್ಣ ‘ಬಸವಪ್ರಿಯ ಕೂಡಲಚೆನ್ನಬಸವಣ್ಣ’ ಅಂಕಿತದಲ್ಲಿ ಇನ್ನೂರಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾನೆ. ಅವುಗಳಲ್ಲಿ ಬೆಡಗಿನವು ಅಧಿಕ. ಷಟ್-ಸ್ಥಲ ತತ್ವನಿರೂಪಣೆಗೆ ಆದ್ಯತೆ. ಕೆಲವು ಕಥನಶೈಲಿಯನ್ನು ಅಳವಡಿಸಿಕೊಂಡಿವೆ. ಬೆಡಗಿನ ವಚನಗಳು ಹೆಚ್ಚು ಷಟ್-ಸ್ಥಲ ವಿಷಯ ಪ್ರಧಾನವಾಗಿದೆ. ವಚನಗಳು ಗ್ರಹಿಸಲು ಸುಲಭವಾಗಿವೆ

ಹೊತ್ತುಹೊತ್ತಿಗೆ ಲಿಂಗಪೂಜೆಯ ಮಾಡಿಯೂ
ಮತ್ತೆಯು ಸತ್ಯವಾವುದು, ನಿತ್ಯವಾವುದೆಂದರಿಯದೆ ಕೆಟ್ಟರೆಲ್ಲ ಜಗವು.
ಸತ್ಯವಾಗಿ ನುಡಿವ ಶರಣರ ಕಂಡರೆ, ಕತ್ತೆಮಾನವರೆತ್ತಬಲ್ಲರೊ ?
ಅಸತ್ಯವನೆ ನುಡಿದು, ಹುಸಿಯನೆ ಬೋಧಿಸುವ ಹಸುಕರ ಕಂಡರೆ,
ಇತ್ತ ಬನ್ನಿ ಎಂಬರು.
ಇಂತಪ್ಪ ಅನಿತ್ಯದೇಹಿಗಳ ಭಕ್ತರೆಂದು ಜಂಗಮವೆಂದು
ನೋಡಿದರೆ, ನುಡಿಸಿದರೆ, ಮಾತನಾಡಿದರೆ, ನೀಡಿದರೆ,
ಅಘೋರನರಕವೆಂದು ನಮ್ಮ ಆದ್ಯರ ವಚನ ಸಾರುತಿದೆ,
ಬಸವಪ್ರಿಯ ಕೂಡಲಚೆನ್ನಬಸಣ್ಣಾ . /೧೦೭೮ [1]

ಎನ್ನ ತನು ನಿಮ್ಮ ಸೇವೆಯಲ್ಲಿ ಸವೆದು
ಎನ್ನ ಮನ ನಿಮ್ಮ ನೆನಹಿನಲ್ಲಿ ಸವೆದು
ಎನ್ನ ಅರಿವು ನಿಮ್ಮ ಘನದೊಳಗೆ ಸವೆದು
ನಿಶ್ಚಲ ನಿಜೈಕ್ಯವಾಗಿ ಬಸವ ಪ್ರಿಯ ಕೂಡಲ ಸಂಗಯ್ಯ
ನಾ ನೀನೆಂಬುದು ಏನಾಯಿತ್ತೆಂದರಿಯೆ!

Categories
ಶರಣರು / Sharanaru

ಹೆಂಡದ ಮಾರಯ್ಯ

ಅಂಕಿತ: ಧರ್ಮೇಶ್ವರಲಿಂಗ
ಕಾಯಕ: ಹೆಂಡ ಮಾರುವುದು, ನಂತರ ಶರಣನಾಗಿ ಹೆಂಡ ವ್ಯಸನರಾದವರನ್ನು ವ್ಯಸನಮುಕ್ತರನ್ನಾಗಿ ಪರಿವರ್ತಿಸಿವುದು

ಮೂಲತ: ಹೆಂಡ ಮಾರುವ ಕಾಯಕದವನಾಗಿದ್ದ ಈತ ಶರಣನಾಗಿ ಮಾರ್ಪಟ್ಟನು. ಕಾಲ-೧೧೬೦. ‘ಧರ್ಮೇಶ್ವರಲಿಂಗ’ ಅಂಕಿತದಲ್ಲಿ ೧೨ ವಚನಗಳು ದೊರೆತಿವೆ. ಎಲ್ಲವೂ ಈತನ ವೃತ್ತಿಪರಿಭಾಷೆಯನ್ನು ಅಳವಡಿಸಿಕೊಂಡು ಅನುಭಾವವನ್ನು ಅರುಹುತ್ತವೆ. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಬಸವತತ್ವವನ್ನರಿತ ಹೆಂಡದ ಮಾರಯ್ಯ, ಹೆಂಡ ಮಾರಾಟ ಮಾಡುವ ಕುಲಕಸುಬನ್ನು ಬಿಡಬೇಕೆಂದು ತೀರ್ಮಾನಿಸಿದರು. ಬಿಡುವುದಕ್ಕೆ ಮುಂಚೆ ಹೆಂಡವನ್ನು ಕುಡಿಯಲು ಬರುವವರನ್ನು ಪರಿವರ್ತಿಸಬೇಕೆಂದು ತೀರ್ಮಾನಿಸಿ, ಒಂದು ಶೇರೆ ಕುಡಿಯುವವರಿಗೆ ಅರ್ಧ ಶೇರೆ, ಅರ್ಧ ಶೇರೆಯಿಂದ ಕಾಲು ಶೇರೆಗಿಳಿಸಿ, ಶೇರಿ (ಹೆಂಡ) ಕುಡಿತದಿಂದಾಗುವ ದುಷ್ಪರಿಣಾಮಗಳನ್ನು ತಿಳಿಸಿ ಅವರನ್ನೆಲ್ಲಾ ವ್ಯಸನಮುಕ್ತರನ್ನಾಗಿ ಪರಿವರ್ತಿಸಿ, ಪರಿವರ್ತಿತಗೊಂಡ ರೀತಿಯನ್ನು ಈ ವಚನದಲ್ಲಿ ಹಂಚಿಕೊಂಡಿದ್ದಾರೆ.

“ನಾ ಮಾರ ಬಂದ ಸುರೆಯ ಕೊಂಬವರಾರೂ ಇಲ್ಲ
ಹೊರಗಣ ಭಾಜನಕ್ಕೆ, ಒಳಗಣ ಇಂದ್ರಿಯಕ್ಕೆ
ಉಂಡು ದಣಿದು, ಕಂಡು ದಣಿದು, ಸಂದೇಹ ಬಿಟ್ಟು
ದಣಿದು ಕಂಡುದ ಕಾಣದೆ, ಸಂದೇಹದಲ್ಲಿ ಮರೆಯದೆ
ಆನಂದವೆಂಬುದ ಆಲಿಂಗನವಂ ಮಾಡಿ
ಕಂಗಳಂ ಮುಚ್ಚಿ ಮತ್ತಮಾ ಕಂಗಳಂ ತೆರೆದು
ನೋಡಲಾಗಿ ಧರ್ಮೇಶ್ವರ ಲಿಂಗವು ಕಾಣ ಬಂದಿತ್ತು!”

ಮಧ್ಯಪಾನ ಮಾಡಿದಾಗ ಆಗುವ ಅನುಭವಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಅವುಗಳನ್ನು ಇಲ್ಲಿ ಬಳಸಿ ಶಿವಾನುಭಾವವೆಂಬ ಅಮೃತವನ್ನು ಕುಡಿದಾಗ ಆಗುವ ಭಗವಂತನ ಸಾಕ್ಷಾತ್ಕಾರದ ಆನಂದದ ಬಗೆಗೆ ಮೇಲಿನ ವಚನದಲ್ಲಿ ಮಾರಯ್ಯ ಹೇಳಿದ್ದಾರೆ. ಇವರ ದೃಷ್ಟಿಯಲ್ಲಿ ಮಧ್ಯವೆಂದರೆ ಕೇವಲ ಹೆಂಡ, ಸಾರಾಯಿಗಳಂತಹ ಮಾದಕ ಪದಾರ್ಥಗಳು ಮಾತ್ರವೇ ಅಲ್ಲ. ಐಹಿಕ ಸುಖ ಭೋಗಗಳು ಅಹಂಕಾರ ಮುಂತಾದವೂ ಮಧ್ಯಗಳೇ. ಅದರಿಂದಾಗಿ ಶಿವಾನುಭವವು ಮಧ್ಯಪಾನ ಮಾಡುವವರಿಗೆ ಅಲಭ್ಯ ಎಂದು..

“ಕರಣ ನಾಲ್ಕು ಮದವೆಂಟು ವ್ಯಸನಗಳು
ಅರಿಷಡ್ವರ್ಗಂಗಳಲ್ಲಿ ಇಂತೀ ಉರವಣೆಗೊಳಗಾಗುತ್ತ
ಅಣವ ಮಾಯಾ ಕಾರ್ಮಿಕ ಮೂರು ಸುರೆಯಲ್ಲಿ
ಮುದುಡುತ್ತ ನಾ ತಂದ ಸುಧೆ ನಿಮಗಿಲ್ಲ ಎಂದೆ
ಅದು ಧರ್ಮೇಶ್ವರ ಲಿಂಗದ ಅರ್ಪಣೆ!

ಮೇಲಿನ ವಚನದಲ್ಲಿ ಭವಿಗಳನ್ನು ಕುರಿತು ಹೇಳಿದ್ದಾರೆ. ಭವಿಗಳು ಸುರಾಪಾನಿಗಳು, ಅವರು ಕುಡಿದಿರುವ ಸೆರೆ ಎಂದರೆ ಅಣವ ಮಾಯಾ ಕಾರ್ಮಿಕ ಮಲಗಳು. ಇವಲ್ಲದೆ ನಾಲ್ಕು ಕರಣಂಗಳು, ಅಷ್ಟಮದಗಳು, ಸಪ್ತವ್ಯಸನಗಳು ಮತ್ತು ಅರಿಷಡ್ವರ್ಗಗಳು ಇವುಗಳ ಉರವಣೆಗೆ ಸಿಲುಹಿಸಿದ್ದಾರೆ. ಇಂತಹವರಿಗೆ ಲಿಂಗಾಂಗ ಸಾಮರಸ್ಯ ಸಾಧ್ಯವಿಲ್ಲ. ಈ ಮಾಯಾ ಮೋಹ ಜಾಲವನ್ನೆಲ್ಲ ಕಿತ್ತು ಬಿಸುಟಿದಾಗಲೆ ಆತ್ಮಜ್ಞಾನವನ್ನು ಪಡೆಯಲು ಸಾಧ್ಯ ಎಂದಿದ್ದಾರೆ. ಹೆಣ್ಣು ಮಣ್ಣುಗಳ ಜಾಲದಲ್ಲಿ ಸಿಕ್ಕಿ ಐಹಿಕ ಸುಖದಲ್ಲಿ ಮುಳುಗಿರುವವರು ಅವುಗಳಿಂದ ಉನ್ಮತ್ತರಾದ್ದರಿಂದ ಜ್ಞಾನದಿಂದ ಹೊರಗೆ ಉಳಿಯುತ್ತಾರೆ. ಅದರಿಂದಾಗಿ ಭಕ್ತಿ ವಿರಕ್ತಿಗಳು ಅವರ ಹತ್ತಿರ ಸುಳಿಯುವುದಿಲ್ಲ. ಆದ್ದರಿಂದ ಅವರು ಭಗವಂತನ ಸಾಮರಸ್ಯವನ್ನು ಹೊಂದುವುದು ದೂರದ ಮಾತೇ ಸರಿ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಈ ಕಲ್ಯಾಣಕ್ಕೆ ಬಂದ ಮಾರಯ್ಯನವರು ತಂಪಾದ ಪಾನೀಯ ಹಾಗೂ ಕಬ್ಬಿನ ಪಾನಕ ಮಾರುವ ಕಾಯಕವನ್ನು ಕೈಗೊಂಡು ಬಿಡುವಿನ ವೇಳೆಯಲ್ಲಿ ಅರವಟಿಗೆಯಿಟ್ಟುಕೊಂಡು ದಾರಿಹೋಕರಿಗೆ ನೀರೆರೆಯುವ ದಾಸೋಹ ಸೇವೆಯನ್ನು ಮಾಡಿ, ಅನೇಕ ವಿಚಾರಗಳನ್ನು ಅರಿತುಕೊಂಡು ಹೆಂಡವನ್ನು ಮಾರುವುದನ್ನು ಬಿಟ್ಟರೂ, ಇವರ ಚರಿತ್ರೆ ಜಗತ್ತಿಗೆ ಮಾರ್ಗದರ್ಶನ ಹಾಗೂ ದಾರಿದೀಪವಾಗಲೆಂದು ‘ಹೆಂಡದ ಮಾರಯ್ಯ’ ಎಂಬ ಹೆಸರನ್ನೇ ಮುಂದುವರೆಸಿಕೊಂಡು ಬಂದಿದ್ದಾರೆ. ಈಗಿನ ಸಮಾಜಕ್ಕೆ ಸತ್ಯ ಕಾಯಕದ ಸಂದೇಶವನ್ನು ಸಾರಿದ್ದಾರೆ ಹೆಂಡದ ಮಾರಯ್ಯನವರು. ಸಮಾಜದ ಸ್ವಸ್ತ್ಯವನ್ನೇ ತಮ್ಮ ಪ್ರಾಣ ಜೀವಾಳವಾಗಿಸಿಕೊಂಡು ಬದುಕಿ ಬಾಳಿ ಎಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ.

೧೨೦೪
ಶಾಸ್ತ್ರಮದ, ಸಂಪದಮದ, ಉಭಯಕೂಡಿಕೊಂಡಾತ್ಮಮದ,
ಅರಿದು ಎಲ್ಲರಿಗೆ ಹೇಳಿದೆನೆಂಬ ಗೆಲ್ಲ ಸೋಲದ ಮದ.
ಇಂತೀ ಎಲ್ಲಾ ಮದವ ಸೇವಿಸುತ್ತ,
ಅರಿಯದ ಮದವನೊಂದು ನುಡಿದಡೆ, ಬಿರುನುಡಿಯೆಂದೆಂಬರು.
ಅರಿಯದವ ಇಂತಿವ ಅರಿಯದಂತೆ ಸಂಚದಲ್ಲಿ ಸಂಚದಂತಿರಬೇಕು.
ಧರ್ಮೇಶ್ವರಲಿಂಗ ಹೀಂಗಲ್ಲದೆ ಅರಿಯಬಾರದು.

ಅರಿದು – ಆಶ್ಚರ್ಯ, ಅಸಾಧ್ಯ, ಶ್ರೇಷ್ಠ

ನುಲಿಯ ಚಂದಯ್ಯನ ಪ್ರಸಂಗವನ್ನು ನಿರೂಪಿಸುವ ತುಂಬ ಪ್ರಸಿದ್ಧವಾದ ಒಂದು ವಚನ ನಾಟಕೀಯ ಗುಣದಿಂದ ವಿಶೇಷ ಗಮನ ಸೆಳೆಯುತ್ತದೆ.

೧೨೦೧
ಮಣ್ಣು ಹೊನ್ನು ಹೆಣ್ಣೆಂಬ ತ್ರಿಭಂಗಿಯಲ್ಲಿ ಭಂಗಿತರಾಗಿ,
ಆಸೆಯೆಂಬ ಮಧುಪಾನದಿಂದ ಉಕ್ಕಲಿತವಿಲ್ಲದೆ,
ವಸ್ತುವ ಮುಟ್ಟುವದಕ್ಕೆ ದೃಷ್ಟವಿಲ್ಲದೆ,
ಕಷ್ಟದ ಮರವೆಯಲ್ಲಿ, ದೃಷ್ಟದ ಸರಾಪಾನವ ಕೊಂಡು ಮತ್ತರಾಗುತ್ತ,
ಇಷ್ಟದ ದೃಷ್ಟದ ಚಿತ್ತ ಮತ್ತುಂಟೆ ?
ಧರ್ಮೇಶ್ವರಲಿಂಗವ ಮುಟ್ಟದೆ ಇತ್ತಲೆ ಉಳಿಯಿತ್ತು.

ಮಾದಕ ಪದಾರ್ಥವಾದ ಮದ್ಯಕ್ಕೆ ಹೊಸ ವ್ಯಾಖ್ಯಾನ ನೀಡಿರುವನು. ಮದ್ಯ ಮಾರಾಟಕ್ಕೆ ದೃಷ್ಟಾಂತ, ಉಪಮೆಗಳನ್ನು ಹೆಚ್ಚಾಗಿ ಬಳಸಲಾಗಿದೆ.

Categories
ಶರಣರು / Sharanaru

ಸೊಡ್ಡಳ ಬಾಚರಸ

ಅಂಕಿತ: ಸೊಡ್ಡಳದೇವ, ಸೊಡ್ಡಳ
ಕಾಯಕ: ಬಿಜ್ಜಳನ ಅರಮನೆಯಲ್ಲಿ ಧಾನ್ಯ ಅಳೆದುಕೊಡುವುದರ ಲೆಕ್ಕ ಬರೆಯುವವನು

ಬಸವಣ್ಣನವರಿಗೆ ತುಂಬ ಆಪ್ತನೆನಿಸಿದ್ದ ಈತ ಬಿಜ್ಜಳನ ಅರಮನೆಯ ಕರಣಿಕ(ಲೆಕ್ಕಗುಮಾಸ್ತ)ನಾಗಿದ್ದ. ಈತ ಸೌರಾಷ್ಟ್ರ ಸೋಮೇಶ್ವರನ ಭಕ್ತ. ಬಸವಪುರಾಣ, ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರರತ್ನಾಕರ ಮೊದಲಾದ ಕೃತಿಗಳಲ್ಲಿ ಈತನ ಜೀವನಕ್ಕೆ ಸಂಬಂಧಿಸಿದ ಕೆಲವು ವಿವರಗಳು ಬಂದಿವೆ. ಕಾಲ-೧೧೬೦. ‘ಸೊಡ್ಡಳ’ ಅಂಕಿತದಲ್ಲಿ ೧೦೨ ವಚನಗಳು ಉಪಲಬ್ಧವಾಗಿವೆ. ತತ್ವ ವಿವೇಚನೆ, ನೀತಿಭೋಧೆ, ಅನ್ಯಮತ, ಅನ್ಯದೈವದೂಷಣೆ, ಶಿವಭಕ್ತಿನಿಷ್ಠೆ ಇವುಗಳಲ್ಲಿ ವ್ಯಕ್ತವಾಗಿದೆ. ಭಾಷಾಪ್ರಯೋಗ, ನಿರೂಪಣಾ ಶೈಲಿ ಇತರರಿಗಿಂತ ಭಿನ್ನವಾಗಿದೆ.