Categories
ಶರಣರು / Sharanaru

ಹೆಂಡದ ಮಾರಯ್ಯ

ಅಂಕಿತ: ಧರ್ಮೇಶ್ವರಲಿಂಗ
ಕಾಯಕ: ಹೆಂಡ ಮಾರುವುದು, ನಂತರ ಶರಣನಾಗಿ ಹೆಂಡ ವ್ಯಸನರಾದವರನ್ನು ವ್ಯಸನಮುಕ್ತರನ್ನಾಗಿ ಪರಿವರ್ತಿಸಿವುದು

ಮೂಲತ: ಹೆಂಡ ಮಾರುವ ಕಾಯಕದವನಾಗಿದ್ದ ಈತ ಶರಣನಾಗಿ ಮಾರ್ಪಟ್ಟನು. ಕಾಲ-೧೧೬೦. ‘ಧರ್ಮೇಶ್ವರಲಿಂಗ’ ಅಂಕಿತದಲ್ಲಿ ೧೨ ವಚನಗಳು ದೊರೆತಿವೆ. ಎಲ್ಲವೂ ಈತನ ವೃತ್ತಿಪರಿಭಾಷೆಯನ್ನು ಅಳವಡಿಸಿಕೊಂಡು ಅನುಭಾವವನ್ನು ಅರುಹುತ್ತವೆ. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಬಸವತತ್ವವನ್ನರಿತ ಹೆಂಡದ ಮಾರಯ್ಯ, ಹೆಂಡ ಮಾರಾಟ ಮಾಡುವ ಕುಲಕಸುಬನ್ನು ಬಿಡಬೇಕೆಂದು ತೀರ್ಮಾನಿಸಿದರು. ಬಿಡುವುದಕ್ಕೆ ಮುಂಚೆ ಹೆಂಡವನ್ನು ಕುಡಿಯಲು ಬರುವವರನ್ನು ಪರಿವರ್ತಿಸಬೇಕೆಂದು ತೀರ್ಮಾನಿಸಿ, ಒಂದು ಶೇರೆ ಕುಡಿಯುವವರಿಗೆ ಅರ್ಧ ಶೇರೆ, ಅರ್ಧ ಶೇರೆಯಿಂದ ಕಾಲು ಶೇರೆಗಿಳಿಸಿ, ಶೇರಿ (ಹೆಂಡ) ಕುಡಿತದಿಂದಾಗುವ ದುಷ್ಪರಿಣಾಮಗಳನ್ನು ತಿಳಿಸಿ ಅವರನ್ನೆಲ್ಲಾ ವ್ಯಸನಮುಕ್ತರನ್ನಾಗಿ ಪರಿವರ್ತಿಸಿ, ಪರಿವರ್ತಿತಗೊಂಡ ರೀತಿಯನ್ನು ಈ ವಚನದಲ್ಲಿ ಹಂಚಿಕೊಂಡಿದ್ದಾರೆ.

“ನಾ ಮಾರ ಬಂದ ಸುರೆಯ ಕೊಂಬವರಾರೂ ಇಲ್ಲ
ಹೊರಗಣ ಭಾಜನಕ್ಕೆ, ಒಳಗಣ ಇಂದ್ರಿಯಕ್ಕೆ
ಉಂಡು ದಣಿದು, ಕಂಡು ದಣಿದು, ಸಂದೇಹ ಬಿಟ್ಟು
ದಣಿದು ಕಂಡುದ ಕಾಣದೆ, ಸಂದೇಹದಲ್ಲಿ ಮರೆಯದೆ
ಆನಂದವೆಂಬುದ ಆಲಿಂಗನವಂ ಮಾಡಿ
ಕಂಗಳಂ ಮುಚ್ಚಿ ಮತ್ತಮಾ ಕಂಗಳಂ ತೆರೆದು
ನೋಡಲಾಗಿ ಧರ್ಮೇಶ್ವರ ಲಿಂಗವು ಕಾಣ ಬಂದಿತ್ತು!”

ಮಧ್ಯಪಾನ ಮಾಡಿದಾಗ ಆಗುವ ಅನುಭವಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಅವುಗಳನ್ನು ಇಲ್ಲಿ ಬಳಸಿ ಶಿವಾನುಭಾವವೆಂಬ ಅಮೃತವನ್ನು ಕುಡಿದಾಗ ಆಗುವ ಭಗವಂತನ ಸಾಕ್ಷಾತ್ಕಾರದ ಆನಂದದ ಬಗೆಗೆ ಮೇಲಿನ ವಚನದಲ್ಲಿ ಮಾರಯ್ಯ ಹೇಳಿದ್ದಾರೆ. ಇವರ ದೃಷ್ಟಿಯಲ್ಲಿ ಮಧ್ಯವೆಂದರೆ ಕೇವಲ ಹೆಂಡ, ಸಾರಾಯಿಗಳಂತಹ ಮಾದಕ ಪದಾರ್ಥಗಳು ಮಾತ್ರವೇ ಅಲ್ಲ. ಐಹಿಕ ಸುಖ ಭೋಗಗಳು ಅಹಂಕಾರ ಮುಂತಾದವೂ ಮಧ್ಯಗಳೇ. ಅದರಿಂದಾಗಿ ಶಿವಾನುಭವವು ಮಧ್ಯಪಾನ ಮಾಡುವವರಿಗೆ ಅಲಭ್ಯ ಎಂದು..

“ಕರಣ ನಾಲ್ಕು ಮದವೆಂಟು ವ್ಯಸನಗಳು
ಅರಿಷಡ್ವರ್ಗಂಗಳಲ್ಲಿ ಇಂತೀ ಉರವಣೆಗೊಳಗಾಗುತ್ತ
ಅಣವ ಮಾಯಾ ಕಾರ್ಮಿಕ ಮೂರು ಸುರೆಯಲ್ಲಿ
ಮುದುಡುತ್ತ ನಾ ತಂದ ಸುಧೆ ನಿಮಗಿಲ್ಲ ಎಂದೆ
ಅದು ಧರ್ಮೇಶ್ವರ ಲಿಂಗದ ಅರ್ಪಣೆ!

ಮೇಲಿನ ವಚನದಲ್ಲಿ ಭವಿಗಳನ್ನು ಕುರಿತು ಹೇಳಿದ್ದಾರೆ. ಭವಿಗಳು ಸುರಾಪಾನಿಗಳು, ಅವರು ಕುಡಿದಿರುವ ಸೆರೆ ಎಂದರೆ ಅಣವ ಮಾಯಾ ಕಾರ್ಮಿಕ ಮಲಗಳು. ಇವಲ್ಲದೆ ನಾಲ್ಕು ಕರಣಂಗಳು, ಅಷ್ಟಮದಗಳು, ಸಪ್ತವ್ಯಸನಗಳು ಮತ್ತು ಅರಿಷಡ್ವರ್ಗಗಳು ಇವುಗಳ ಉರವಣೆಗೆ ಸಿಲುಹಿಸಿದ್ದಾರೆ. ಇಂತಹವರಿಗೆ ಲಿಂಗಾಂಗ ಸಾಮರಸ್ಯ ಸಾಧ್ಯವಿಲ್ಲ. ಈ ಮಾಯಾ ಮೋಹ ಜಾಲವನ್ನೆಲ್ಲ ಕಿತ್ತು ಬಿಸುಟಿದಾಗಲೆ ಆತ್ಮಜ್ಞಾನವನ್ನು ಪಡೆಯಲು ಸಾಧ್ಯ ಎಂದಿದ್ದಾರೆ. ಹೆಣ್ಣು ಮಣ್ಣುಗಳ ಜಾಲದಲ್ಲಿ ಸಿಕ್ಕಿ ಐಹಿಕ ಸುಖದಲ್ಲಿ ಮುಳುಗಿರುವವರು ಅವುಗಳಿಂದ ಉನ್ಮತ್ತರಾದ್ದರಿಂದ ಜ್ಞಾನದಿಂದ ಹೊರಗೆ ಉಳಿಯುತ್ತಾರೆ. ಅದರಿಂದಾಗಿ ಭಕ್ತಿ ವಿರಕ್ತಿಗಳು ಅವರ ಹತ್ತಿರ ಸುಳಿಯುವುದಿಲ್ಲ. ಆದ್ದರಿಂದ ಅವರು ಭಗವಂತನ ಸಾಮರಸ್ಯವನ್ನು ಹೊಂದುವುದು ದೂರದ ಮಾತೇ ಸರಿ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಈ ಕಲ್ಯಾಣಕ್ಕೆ ಬಂದ ಮಾರಯ್ಯನವರು ತಂಪಾದ ಪಾನೀಯ ಹಾಗೂ ಕಬ್ಬಿನ ಪಾನಕ ಮಾರುವ ಕಾಯಕವನ್ನು ಕೈಗೊಂಡು ಬಿಡುವಿನ ವೇಳೆಯಲ್ಲಿ ಅರವಟಿಗೆಯಿಟ್ಟುಕೊಂಡು ದಾರಿಹೋಕರಿಗೆ ನೀರೆರೆಯುವ ದಾಸೋಹ ಸೇವೆಯನ್ನು ಮಾಡಿ, ಅನೇಕ ವಿಚಾರಗಳನ್ನು ಅರಿತುಕೊಂಡು ಹೆಂಡವನ್ನು ಮಾರುವುದನ್ನು ಬಿಟ್ಟರೂ, ಇವರ ಚರಿತ್ರೆ ಜಗತ್ತಿಗೆ ಮಾರ್ಗದರ್ಶನ ಹಾಗೂ ದಾರಿದೀಪವಾಗಲೆಂದು ‘ಹೆಂಡದ ಮಾರಯ್ಯ’ ಎಂಬ ಹೆಸರನ್ನೇ ಮುಂದುವರೆಸಿಕೊಂಡು ಬಂದಿದ್ದಾರೆ. ಈಗಿನ ಸಮಾಜಕ್ಕೆ ಸತ್ಯ ಕಾಯಕದ ಸಂದೇಶವನ್ನು ಸಾರಿದ್ದಾರೆ ಹೆಂಡದ ಮಾರಯ್ಯನವರು. ಸಮಾಜದ ಸ್ವಸ್ತ್ಯವನ್ನೇ ತಮ್ಮ ಪ್ರಾಣ ಜೀವಾಳವಾಗಿಸಿಕೊಂಡು ಬದುಕಿ ಬಾಳಿ ಎಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ.

೧೨೦೪
ಶಾಸ್ತ್ರಮದ, ಸಂಪದಮದ, ಉಭಯಕೂಡಿಕೊಂಡಾತ್ಮಮದ,
ಅರಿದು ಎಲ್ಲರಿಗೆ ಹೇಳಿದೆನೆಂಬ ಗೆಲ್ಲ ಸೋಲದ ಮದ.
ಇಂತೀ ಎಲ್ಲಾ ಮದವ ಸೇವಿಸುತ್ತ,
ಅರಿಯದ ಮದವನೊಂದು ನುಡಿದಡೆ, ಬಿರುನುಡಿಯೆಂದೆಂಬರು.
ಅರಿಯದವ ಇಂತಿವ ಅರಿಯದಂತೆ ಸಂಚದಲ್ಲಿ ಸಂಚದಂತಿರಬೇಕು.
ಧರ್ಮೇಶ್ವರಲಿಂಗ ಹೀಂಗಲ್ಲದೆ ಅರಿಯಬಾರದು.

ಅರಿದು – ಆಶ್ಚರ್ಯ, ಅಸಾಧ್ಯ, ಶ್ರೇಷ್ಠ

ನುಲಿಯ ಚಂದಯ್ಯನ ಪ್ರಸಂಗವನ್ನು ನಿರೂಪಿಸುವ ತುಂಬ ಪ್ರಸಿದ್ಧವಾದ ಒಂದು ವಚನ ನಾಟಕೀಯ ಗುಣದಿಂದ ವಿಶೇಷ ಗಮನ ಸೆಳೆಯುತ್ತದೆ.

೧೨೦೧
ಮಣ್ಣು ಹೊನ್ನು ಹೆಣ್ಣೆಂಬ ತ್ರಿಭಂಗಿಯಲ್ಲಿ ಭಂಗಿತರಾಗಿ,
ಆಸೆಯೆಂಬ ಮಧುಪಾನದಿಂದ ಉಕ್ಕಲಿತವಿಲ್ಲದೆ,
ವಸ್ತುವ ಮುಟ್ಟುವದಕ್ಕೆ ದೃಷ್ಟವಿಲ್ಲದೆ,
ಕಷ್ಟದ ಮರವೆಯಲ್ಲಿ, ದೃಷ್ಟದ ಸರಾಪಾನವ ಕೊಂಡು ಮತ್ತರಾಗುತ್ತ,
ಇಷ್ಟದ ದೃಷ್ಟದ ಚಿತ್ತ ಮತ್ತುಂಟೆ ?
ಧರ್ಮೇಶ್ವರಲಿಂಗವ ಮುಟ್ಟದೆ ಇತ್ತಲೆ ಉಳಿಯಿತ್ತು.

ಮಾದಕ ಪದಾರ್ಥವಾದ ಮದ್ಯಕ್ಕೆ ಹೊಸ ವ್ಯಾಖ್ಯಾನ ನೀಡಿರುವನು. ಮದ್ಯ ಮಾರಾಟಕ್ಕೆ ದೃಷ್ಟಾಂತ, ಉಪಮೆಗಳನ್ನು ಹೆಚ್ಚಾಗಿ ಬಳಸಲಾಗಿದೆ.