Categories
ವಚನಗಳು / Vachanagalu

ಸೊಡ್ಡಳ ಬಾಚರಸನ ವಚನಗಳು

ಅಂಗ ಲಿಂಗಕ್ಕೆ ಗೂಡಾಯಿತ್ತು, ಲಿಂಗ ಅಂಗಕ್ಕೆ ಗೂಡಾಯಿತ್ತು.
ಅಂಗಲಿಂಗಸಂಗವೆಂಬ ಸಂದಳಿದು ನಿಜಲಿಂಗೈಕ್ಯವಾಯಿತ್ತು.
ಭಾವ ನಿರ್ಭಾವ ನಿಷ್ಪತ್ತಿಯಲ್ಲಿ,
ಮಹಾದಾನಿ ಸೊಡ್ಡಳಂಗೆ ಸರ್ವನಿರ್ವಾಣವಾಯಿತ್ತು./1
ಅಂಗದ ಮೇಲೆ ಲಿಂಗವ ಬಿಜಯಂಗೈಸಿಕೊಂಡು,
ಲಿಂಗವಿಲ್ಲದಂಗನೆಯರನಪ್ಪಿದಡೆ, ಸುರಾಭಾಂಡವನಪ್ಪಿದಂತೆ ಕೇಳಿರಣ್ಣ.
ಲಿಂಗಸಾಹಿತ್ಯವಾಗಿದರ್ು, ಲಿಂಗವಿಲ್ಲದ ಸತಿಯರ ಕೂಡಿಕೊಂಡಿಹ ಪರಿಯೆಂತಯ್ಯ !
ಲಿಂಗವುಳ್ಳ ತನು ಲಿಂಗವಿಲ್ಲದ ತನುವಿನೊಡನೆ ಸಂಯೋಗಮಂ ಮಾಡಿದಡೆಂತಕ್ಕು,
ಹಾಲಗಡಿಗೆಯ ಹಂದಿ ಮುಟ್ಟಿದಂತಕ್ಕು !
ಅದೆಂತೆಂದಡೆ : ಲಿಂಗೇನ ಸಹಿತೋ ದೇಹೀ ಲಿಂಗಹೀನಾಂ ತು ಯಃ ಸತೀಮ್ |
ಸಹವಾಸೇ ಸಹತೇ ನಿತ್ಯಂ ಕಿಂ ಫಲಂ ಕಿಂ ಕೃತಂ ಭವೇತ್ ||
ಕಿಂ ತೇನ ಕ್ಷೀರಭಾಂಡೇನ ಸೂಕರೈ ಃ ಸಹ ವರ್ತಿನಾ |
ಎಂದುದಾಗಿ, ಲಿಂಗವುಳ್ಳ ಲಿಂಗಾರ್ಚಕರು ಲಿಂಗೈಕ್ಯರು,
ಲಿಂಗವಿಲ್ಲದೆ ಭವಿಯಾಗಿರ್ದ ಸತಿಯರ ಆಲಿಂಗನ, ಚುಂಬನವ ಮಾಡಿದಡೆ,
ಗುರುಕಾರುಣ್ಯ ಉಂಟೆಂದು ಸಾಧಾರಣಪಕ್ಷದಲ್ಲಿ ಮಾಡಿಕೊಂಡಿರ್ದಡೆ,
ಮಾಡಿದ ಲಿಂಗಾರ್ಚನೆ ನಿಷ್ಫಲಂ.
ಶತಜನ್ಮ ಪರಿಯಂತರ ಹೊಲೆಯರಲ್ಲಿಕ್ಕದೆ ಮಾಣ್ಬನೆ,
ನಮ್ಮ ದೇವರಾಯ ಸೊಡ್ಡಳ. /2
ಅಂಗಲಿಂಗಸಂಬಂಧವೆಂಬ ದ್ವಂದ್ವವನಳಿದು,
ಅಷ್ಟವಿಧಾರ್ಚನೆ ಷೋಡಶೋಪಚಾರದ ಹಂಗ ಹರಿದು,
ಸೋಹಂ ಸೋಹಂ ಎನುತ್ತಿದ್ದಿತ್ತು.
ಸೋಹಂ ಸೋಹಂ ಎಂಬ ಸುಖದ ಸವಿಯ,
ಮಹಾದಾನಿ ಸೊಡ್ಡಳಲಿಂಗವಾರೋಗಣೆಯ ಮಾಡಿ,
ನಿಜನಿವಾಸಿಯಾದ ಕಾರಣ, ನಾನು ನಾಮಸೀಮೆಗೆಟ್ಟೆನಯ್ಯ./3
ಅಟ್ಟಿ ಹಾವುತಲೊಮ್ಮೆ , ಹೋಗಿ ನಿಲುತಲೊಮ್ಮೆ , ಬೀಗಿ ನಗುತಲೊಮ್ಮೆ ,
ಮರುಳಿನಂತೆ, ಮಂಕಿನಂತೆ ದೆಸೆದೆಸೆಯ ನೋಡುತ್ತ,
ಅಂಗಡಿ ರಾಜಬೀದಿಯ ಶೃಂಗಾರಂಗಳ ನಲಿನಲಿದು ನೋಡುತ್ತ ,
ಇತ್ತರದ ಭದ್ರದ ಮೇಲೆ ನಾಟ್ಯವನಾಡುವವರ ನೋಡಿ ನಗುತ್ತ ,
ನೋಡುವ ಗಾವಳಿಯ ಜನರನಟ್ಟಿ ಹೊಯಿವಂತೆ ಹರಿವುತ್ತ ,
ಗುದಿಯಿಕ್ಕಿದಂತೆ ನಿಂದಿರೆ ಬೀಳುತ್ತ ,
ನಾಟ್ಯವನಾಡುವವವರಿಗೆ ಇದಿರಾಗಿ, ತಾ ಮರಳಿಯಾಡುತ್ತ ,
ಹಾಡುತ್ತ ಬೈವುತ್ತ ಕೆರಳಿ ನುಡಿವುತ್ತ ,
ವಾದ್ಯ ಮೇಳಾಪವ ಕಂಡು ಆಳಿಗೊಂಡು ನಗುತ್ತ ,
ಹಸ್ತವನಾಡಿಸಿ ಗತಿಯ ಮಚ್ಚರಿಸಿ ಕೈಯೊಡನೆ ಮರುಳಾಟವನಾಡುತ್ತ ,
ಮೆಲ್ಲಮೆಲ್ಲನೆ ನಿಂದು ನೋಡಿ ನಡೆವುತ್ತ ,
ಎಂದಿನ ಸುಳುಹಿನೊಳಗಲ್ಲದ ಸುಳುಹು, ಬಸವಣ್ಣ ನಿಮ್ಮಾಣೆ,
ಸೊಡ್ಡಳನಾಗದೆ ಮಾಣನು. /4
ಅಡಿಗಡಿಗೆಲ್ಲಾ ಮಡಿಯ ಹಾಸೆಂಬರು,
ನಡೆನಡೆಗೆಲ್ಲಾ ದೇವಾದೇವಾ ಎಂಬರು,
ನುಡಿನುಡಿಗೆಲ್ಲಾ ಜೀಯಾಜೀಯಾ ಎಂಬರು,
ಎನ್ನೊಡೆಯ ಸೊಡ್ಡಳದೇವರದೇವನ ಮುಡಿಗೊಂದರಳನೇರಿಸಿದವರಾ./5
ಅಣ್ಣ ನೆಂಬಣ್ಣಗಳಣ್ಣಿ ಸೂದೈ ಹೊನ್ನು.
ಅಣ್ಣಗಳ ಹೆಂಡಿರನಣ್ಣಿ ಸೂದೈ ಹೆಣ್ಣು.
ಅಣ್ಣನೆಂಬಣ್ಣಗಳನಣ್ಣಿ ಸೂದೈ ಮಣ್ಣು.
ಹೊನ್ನ ಕಂಡ ಬಳಿಕ ಅಣ್ಣದಣ್ಣಗಳುಂಟೆ ?
ಹೆಣ್ಣ ಕಂಡ ಬಳಿಕ ಅಣ್ಣದಣ್ಣಗಳುಂಟೆ ?
ಮಣ್ಣ ಕಂಡ ಬಳಿಕ ಅಣ್ಣದಣ್ಣಗಳುಂಟೆ ?
ಹೆಣ್ಣು ಹಿರಣ್ಯ ಭೂಮಿಯೆಂಬ ಹುಡಿಯ ಜಗದ ಕಣ್ಣಲ್ಲಿ ಹೊಯ್ದು,
ನಿಮ್ಮ ನೆನೆವುದಕ್ಕೆ ತೆರಹುಗುಡದಿದೆಯಲ್ಲಾ,
ಮುಕ್ಕಣ್ಣ ಸೊಡ್ಢಳ ಗರಳಧರಾ./6
ಅರೆಬಿರುದು ನುಡಿದವರು ಕೇಳಿರೆ. ಕೆರಳಿಕೆಯ ನುಡಿವರು,
ನೆರೆದ ಮಂದಿಯ ಕಂಡುಬ್ಬುವರು ಕೊಬ್ಬುವರು,
ನಿರುತದ ಕಾಳಗವೆಂದಡೆ ಬಿರುದ ಬೀಸಾಡುವರು, ಅರೆದು ಭಕ್ತಿಯ ಮಾಡಿ,
ನೆರೆಭಕ್ತನೆಂದರೆ ಎಂತು ಮೆಚ್ಚುವನಯ್ಯಾ, ನಮ್ಮ ದೇವರಾಯ ಸೊಡ್ಡಳ./7
ಆಕಾರವಿಲ್ಲದ ನಿರಾಕಾರದ ಮಂಟಪಕ್ಕೆ
ನಿರಾಳವೆಂಬ ಗಂಡ ಬಂದು ಕುಳ್ಳಿರಲು,
ಮೂವರು ಹೆಮ್ಮಕ್ಕಳು ಸೇವೆಯ ಮಾಡುವರು.
ಇಬ್ಬರು ಸಂಗವ ಮಾಡುತ್ತಿಪ್ಪರು.
ಒಬ್ಬಾಕೆ ಪುರುಷನ ನುಂಗಿಕೊಂಡಿಪ್ಪಳು.
ಇವರರುವರ ಕೂಡೆ ಹೊಯಿಕೈಯಾಗಿಪ್ಪವನ ಕಂಡು,
ಅನು ಪ್ರಭುದೇವರೆಂದರಿದು, ಆತನ ನಿಜಪಾದಕ್ಕೆರಗಿ,
ಎನ್ನ ಭವವ ಹರಿದೆನು.
ಮಹಾದಾನಿ ಸೊಡ್ಡಳನ ಕಂಡ ಕಡುಸುಖವನುಪಮಿಸಬಾರದು. /8
ಆದಿಯನಾದಿ ಆಚಾರವ ಕಾಣದೆ,
ಸಮಮಾನದ ಲಿಂಗದ ಘನವ ತಿಳಿಯದೆ,
ದಾಸಿಯ ಸಂಗಂಗೆಯ್ವ ಜಂಗಮಾಚಾರ್ಯಜ್ಞಾನಪುರುಷರು ಚಿತ್ತೈಸಿ,
ಶೈವಾರಾದನೆಯ ಸ್ಥಲದಂತೆ ನಡೆದು, ಗಳಹಿಕೊಂಡು ಇಪ್ಪಿರಿ.
ಅಂಗದನಿತ ದಾಸೆಗೆ, ಪಂತಿಯ ಗಡಣದ ಹಸುವಿನಾಸೆಗೆ,
ಕಾಂಚಾಣದ ಪಂತಿಯಾಸೆಗೆ, ಸ್ಥಲ ಜಂಗಮಸ್ಥಲವಾಸಿಯ ಗಡಣದಾಸೆಗೆ,
ಪಂತಿ ಪಾದಾರ್ಚನೆಯ ಹಿರಿಯತನದ ಗಡಣ ಗಮಕದಾಸೆಗೆ,
ಕೃತಿಯ ದ್ವೆ ತವ ನಟಿಸುವ ಪಂಚಮಹಾಪಾತಕದೇವರ
ದೇವತ್ವದ ಬಲ್ಲರು ಕೇಳಿರಣ್ಣ.
ನಾ ದೇವತಾದೇವನೆಂಬುದೊಂದು ಸಮದೇವತ್ವದ ಗಳಹುವಿರಿ.
ಅಂಗದಲ್ಲಿ ಸೋವಿ ಮಾತ್ರವೆಂಬ ಸ್ತ್ರೀಯ ಆಲಿಂಗನಂಗೈದು ಗಳಹುವಿರಿ.
ಶ್ರುತಿಃ
ಅರ್ಧವಣಿ ಕಥಃ ಸೋವಿ ವಚಃ ಬಾದಿನಿ ಪರ್ವಣಃ |
ಪಾಪಿಷ್ಟಾ ದುಷ್ಟದ್ರೋಹಿ ಚಾ ಪಾಪಿಷ್ಟ ಗುರುದ್ರೋಹಿ ಚಾ |
ಗುರುಶಿವಚ್ಚೇದನ ತತ್ ಗುರುಷಾಮಾ ಚಿ ಅಪಹಿನ್ |
ಗುರುಬಂಧನ ಗ್ರಾಹಿ ಚಃ | ಇಂತೆಂದುದಾಗಿ,
ಸೋವಿಮಾತ್ರವೆಂದು ವಾಗದ್ವೈತವನುಂಟುಮಾಡಿ ಕಂಡು,
ತಮ್ಮ ಸ್ವಯ ಇಚ್ಛೆಯ ಭಾವಕ್ಕೆ ಗಳಹಿಕೊಂಡು,
ಹಿರಿಯರ ಮರೆಯಲ್ಲಿ ಕುಳಿತು, ಒಡಲ ಹೊರೆವ ಶೂಕರನಂತೆ,
ತುಡುಗುಣಿತನಕ್ಕೆ ಗಡಣಿಸಿಕೊಂಡು ಹಿರಿಯರೆಂಬಿರಿ.
ಶಿವಾಚಾರ ಃ ಗಿರಿಜಾನಾಥಂಗೆ ಗೌರಿ ತ್ರಿವಿಧವಿಧಮೇಕಾರ್ಥಕಲ್ಯಾಣ,
ಗಿರಿಜಾಧಾರಿಯಲ್ಲಿ ಶಿವನ ದೇವತ್ವ ಕೆಟ್ಟಿತ್ತೆ ಪಾತಕರಿರಾ?
ಸೋವಿಯ ಆಲಿಂಗನಂಗೈದು, ಚುಂಬನ ಕರ ಉರ ಜಘನ
ಯೋನಿಚಕ್ರವ ಕೂಡಿ ನೆರೆದ ಬಳಿಕ,
ಪ್ರಾತಃಕಾಲದಲ್ಲಿ ಹನ್ನೆರಡು ಜಂಗಮದೇವರಿಗೆ ಹನ್ನೆರಡು ಸುವರ್ಣಗಾಣಿಕೆಯನಿಕ್ಕಿ,
ಹನ್ನೆರಡು ದ್ವಿವಸ್ತ್ರ, ಹನ್ನೆರಡು ತೆಂಗಿನಕಾಯಿಂದ
ಹನ್ನೆರಡು ಜಂಗಮದೇವರಿಗೆ ಈ ಪರಿಯಾರ್ಥ ಅರ್ಚನೆಯ ಮಾಡಿದರೆ,
ನವಭೋಗದೊಳಗಣ ತ್ರಿವಿಧ ಭಾಗೆಯ ಕಲೆಯಿರಣ್ಣ.
ಅರಿದು ಮಾಡಿ ಮರದಂತೆ, ಬೆಬ್ಬನೆ ಬೆರೆತುಕೊಂಡಿರುವಾತ ಹಿರಿಯನಲ್ಲ.
ಆತ ಗುರುವಲ್ಲ ಲಿಂಗವಲ್ಲ ಜಂಗಮವಲ್ಲ ಪಾದೋದಕ ಪ್ರಸಾದದೊಳಗಲ್ಲ.
ಅವ ಅಮೇಧ್ಯ ಸುರ ಭುಂಜಕನು.
ಇಂತೆಂಬ ಶ್ರುತಿಯ ಮೀರಿ ಆಚರಿಸುವ, ಬ್ರಹ್ಮರಾಕ್ಷಸ.
ನವಕೋಟಿ ಯೋನಿಚಕ್ರದಲ್ಲಿ ರಾಟಾಳದ ಘಟದಂತೆ ತಿರುಗುವನು.
ಆದಿಯ ವಚನದ ಸಮ್ಮತವಿದು, ಸೋವಿಯ ಸಂಗ ಆಲಿಂಗನಂಗೈವಿರಿ.
ಸೋವಿಯ ಸಂಗ ಆಲಿಂಗನಂಗೈದವ,
ಶತಕೋಟಿ ಶೂಕರಯೋನಿಯಲ್ಲಿ ಬಪ್ಪನು.
ನವಕೋಟಿ ಗಾರ್ಧಭಯೋನಿಯಲ್ಲಿ ಬಪ್ಪನು.
ಶತಕೋಟಿ ಕುಕ್ಕುಟಯೋನಿಯಲ್ಲಿ ಬಪ್ಪನು.
ಸಚರಾಚರಯೋನಿ ಯೋನಿನವಕೋಟಿ ತಪ್ಪದು.
ಅವಂಗೆ ಜನ್ಮ ಜನ್ಮಾಂತರದಲ್ಲಿ ಬಪ್ಪುದು ತಪ್ಪದು.
ಇಂತಿದನರಿದು ಮರೆದೆಡೆ, ದೇವ ಮತ್ರ್ಯ ತಪಲರ್ೊಕಕ್ಕೆ ಸಲ್ಲಸಲ್ಲ,
ಅಲ್ಲ ನಿಲ್ಲು, ಮಾಣು, ಹೊರಗಯ್ಯ.
ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಹೊಯ್ಯೋ ಡಂಗುರವ,
ದೇವರಾಯ ಸೊಡ್ಡಳಾ./9
ಈ ಪತ್ರೆಗೀ ಫಲ, ಈ ಪುಷ್ಪಕೀ ಫಲ,
ಈ ಪೂಜೆಗೀ ಫಲವೆಂಬ ಕೈಕೂಲಿಕಾರರೆಲ್ಲ ಕರ್ಮಿಗಳಯ್ಯಾ,
ಸ್ವರ್ಗನರಕಗಳನುಂಬ ಕರ್ಮಿಗಳಯ್ಯಾ.
ಒಡಲೊಡವೆ ಪಡೆದರ್ಥವ ಮೃಡದೇವ ಸೊಡ್ಡಳಂ,ಗರ್ಪಿತವೆಂದಾತ
ಬೆಡಗಿನ ಶಿವಪುತ್ರ, ಉಳಿದವರಂತಿರಲಿ,/10
ಉಂಡುಂಡು ಜರಿದವನು ಯೋಗಿಯೆ ?
ಅಶನಕ್ಕೆ ಅಳುವವನು ಯೋಗಿಯೆ ?
ವ್ಯಸನಕ್ಕೆ ಮರುಗುವವ[ನು] ಯೋಗಿಯೆ ?
ಆದಿವ್ಯಾಧಿಯುಳ್ಳವ[ನು] ಯೋಗಿಯೆ ?
ಯೋಗಿಗಳೆಂದಡೆ ಮೂಗನಾಗಳೆ ಕೊಯಿವೆ.
ಯೋಗಿಗಳ ಯೋಗಿ ಶಿವಯೋಗಿ ಸೊಡ್ಡಳಾ,
ಸಿದ್ಧರಾಮನೊಬ್ಬನೆ ಶಿವಯೋಗಿ./11
ಉಡಲು ತೊಡಲು ಹೊದೆಯಲೆಂದು,
ಮಡಿಹಿದ ಮೃಡ ಮೂವರತಂದು,
ತೊಗಲನುಗಿದನಮಮ.
ಕರಿದಾನವ ಕೇಸರಿ ದಾನವ, ಬಾಹೂರು ದಾನವರ ಸೊಡ್ಡಳನಂದು./12
ಉದ್ದವಾಗಿ ಕೂದಲು ನಿಮಿದರ್ು, ಗಡ್ಡಂಗಳು ಬೆಳದಡೇನು ಹೇಳಾ !
ಗಡ್ಡಂಗಳು ಬೆಳೆಯವೆ ಹೇಳಿರಣ್ಣಾ,
ದೊಡ್ಡದಾಗಿ ಬೆಳೆದ ಗಡ್ಡ ಹೋತುಗಳಿಗೆ.
ಗಡ್ಡದ ವೃದ್ಧ ವೈಶಿಕರ ಮೆಚ್ಚ,
ಮಹಾದೇವ ಸೊಡ್ಡಳ ಭಕ್ತಿ ಸಜ್ಜನರಲ್ಲದವರ./13
ಎನ್ನ ಕಾಯವೆಂಬ ಸಿಂಹಾಸನದಲ್ಲಿ,
ಪ್ರಾಣವೆಂಬ ಲಿಂಗವ ಮೂರ್ತಿಗೊಳಿಸಿ,
ಧ್ಯಾನವೆಂಬ ಹಸ್ತದಲ್ಲಿ ಮುಟ್ಟಿ ಪೂಜಿಸುತ್ತಿರಲು,
ಮೆಲ್ಲಮೆಲ್ಲನೆ ಸುತ್ತಿ ಮುತ್ತಿದ ಸಂಸಾರ ಬಯಲ ಬೆರಸಿ,
ನಾ ನೀನೆಂಬ ಭೇದವಳಿದು,
ಮಹಾದಾನಿ ಸೊಡ್ಡಳನಲ್ಲಿ ಲಿಂಗೈಕ್ಯವಾಯಿತ್ತು./14
ಎನ್ನನೆತ್ತಿಕೊಂಡನಯ್ಯಾ ಸಂಗನಬಸವಣ್ಣನು.
ಎನ್ನ ಮುದ್ದಾಡಿಸಿದನಯ್ಯಾ ಚನ್ನಬಸವಣ್ಣನು.
ಎನಗೆ ಪ್ರಸಾದವನುಣಕಲಿಸಿದನಯ್ಯಾ ಮರುಳಶಂಕರದೇವರು.
ಎನ್ನ ಸಲಹಿದನಯ್ಯಾ ಪ್ರಭುದೇವರು.
ಎನಗೆ ಅರುಹಕೊಟ್ಟನಯ್ಯಾ ಸಿದ್ಧರಾಮಯ್ಯನು.
ಇಂತೀ ಐವರ ಕಾರುಣ್ಯಪ್ರಸಾದವ ಕೊಂಡು ಬದುಕಿದೆನಯ್ಯಾ,
ಏಕಾಂತವೀರ ಸೊಡ್ಡಳಾ./15
ಎಲ್ಲಾ ದೈವಕ್ಕೆ ವಿಷ್ಣು ಘನವೆಂಬ ವೇದಾದಿಗಳು
ನೀವು ಕೇಳಿ.
ಎಲ್ಲಾ ದೈವಕ್ಕೆ ಸರಿಯೆಂಬ ಮಾಯಾವಾದಿಗಳು
ನೀವು ಕೇಳಿ.
ಗಾಯತ್ರಿ ಛಂದ, ವಿಶ್ವಾಮಿತ್ರ ಋಷಿ, ಸವಿತಾ ದೇವ,
ಅಗ್ನಿ ಮುಖ, ಬ್ರಹ್ಮ ಶಿರ, ವಿಷ್ಣು ಹೃದಯ, ರುದ್ರ ಲಲಾಟವೆಂದು
ಹೀಂಗೆ ಹೇಳುತ್ತಿದೆ [ಶ್ರುತಿ].
ಗಾಯತ್ರಿ ಕಲ್ಪದಲ್ಲಿ : ಒಂ ಭೂಃ ಒಂ ಭುವಃ ಒಂ ಸುವಃ ತತ್ಸ ವಿತುರ್ವರೇಣ್ಯಂ |
ಭಗರ್ೊ ದೇವಸ್ಯ ಧೀಮಹಿಯೋ ಯೋನಃ ಪ್ರಚೋದಯಾತ್ ||
ಎಂದುದು ಶ್ರುತಿ.
ಸರ್ವದೇವ ಶಿಖಾಮಣಿ ಸೊಡ್ಡಳನಲ್ಲದೆ ದೈವವಿಲ್ಲೆಂದುದು./16
ಎಳವತ್ತಿಗೆಯಲ್ಲಿದಲ್ಲಿ ತಿಳಿವು ನಿನಗಿಲ್ಲ ,
ರೂಹತ್ತಿಗೆ ಬಂದಲ್ಲಿ ಮುಂದ ನೀ ಕಾಣೆ.
ಸಿರಿವಳದಲ್ಲಿ ದೇವಕಾರ್ಯವಂ ಮಾಡು.
ಮದುವಳದಲ್ಲಿಗೆ ಹೋಗದ ಮುನ್ನ ಭಕ್ತಿಯ ಮಾಡು.
ನೀನರಿಯೆ ಕಾಡನೂರಿಗೆ ಹೋಗದ ಮುನ್ನ, ಸೊಡ್ಡಳಂಗೆ ಶರಣೆನ್ನಿ./17
ಏಕಭಾಜನದಲ್ಲಿ ಸಹಭೋಜನವ ಮಾಡುವಡೆ,
ಅಷ್ಟತನು ಬೆಂದು ನಷ್ಟವಾಗಿರಬೇಕು.
ಅಂಗವಿಕಾರ ಬಿಡದು, ಆನು ಲಿಂಗವಾದೆನೆಂಬ ಭಂಗವ ನೋಡಾ.
ಸವಿ ಸವೆಯದು, ತಮ್ಮ ಮರೆಯರು, ಸೊಡ್ಡಳ ಮೆಚ್ಚ./18
ಏಕಮೇವ ನ ದ್ವಿತೀಯಂ ಬ್ರಹ್ಮವೆಂಬ
ಘನಮಹಿಮನ ಕಂಡ ಕಾಣಿಕೆಯಲ್ಲಿ,
ತನುಮನ ಕರಗಿ, ಕರಣಂಗಳೆಲ್ಲ ತರಹರವಾದವಯ್ಯಾ.
ದೀರ್ಘದಂಡ ನಮಸ್ಕಾರಂ ನಿರ್ಲಜ್ಜಂ ಗುರುಸನ್ನಿಧೌ |
ಶರೀರಮರ್ಥಪ್ರಾಣಂ ಚ ಸದ್ಗುರುಭ್ಯೋ ನಿವೇದಯೇತ್ ||
ಎಂದುದಾಗಿ, ಶರಣುವೊಕ್ಕೆ ನಾನು.
ಎನ್ನ ಶಿರ ನಿಮ್ಮ ಚರಣದಲ್ಲಿ ಬಿಡಿಸಬಾರದ ಸಂಗ.
ಮಹಾದಾನಿ ಸೊಡ್ಡಳನ ಶರಣ ಪ್ರಭುದೇವರ ಕಂಡು,
ಎನ್ನ ಭವದ ಬಳ್ಳಿಯ ಬೇರು ಹರಿಯಿತ್ತಯ್ಯಾ./19
ಏರುವಡೆ ಮೊಲನಾಗನ ಗದ್ದುಗೆ ಕಪಾಲ ಕೈಯಲ್ಲಿ,
ಹೇಳುವಡೆ ಹರಿಯ ಹೆಗಲಲ್ಲಿ ನೋಡಾ.
ಬಿಚ್ಚಿ ಹೊದೆವಡೆ ನಾರಸಿಂಹನ ಹಸಿಯ ತೊವಲು.
ಉಬ್ಬಿ ಹಿಡಿವಡೆ ನಿನಗಾದಿ ವರಹನ ದಾಡೆ.
ನಲಿದು ಪಿಡಿವಡೆ ನಿನಗೆ ತ್ರಿವಿಕ್ರಮನ ನಿಟ್ಟೆಲುವು.
ಕಲಿಗಳ ತಲೆಗಳ ಮಾಲೆಗಳಾರಾದಡೇನು [ಯೋಗ್ಯವೆ] ?
ಸುಡು ಬಿಡು, ಎಲುವುಗಳ ಮುಟ್ಟುವರೆ ಸೊಡ್ಡಳಾ./20
ಒಂದು ಇಂದ್ರಿಯ ಮೊದಲಾದುದಕ್ಕೆ ಕಡೆಯಿಲ್ಲ.
ಕುಂಜರನು ಸ್ಪಶರ್ೆಂದ್ರಿಯದ ಬಳಿ ಸಂದು,
ಘಣಿರಾಗರಸದಿಂದ, ಭ್ರಮರ ಸೌರಭ್ಯದಿಂದ
ಮತ್ಸ್ಯರುಚಿಯಿಂದ, ಪತಂಗ ರೂಪಿಂದ,
ಒಂದೊಂದು ವಿಷಯದಲ್ಲಿ, ಒಂದೊಂದು ಪ್ರಾಣಿಗಳು ನೊಂದು,
ಬಂಧನಕ್ಕೆ ಬಂದುದನರಿಯಾ.
ಪಂಚೇಂದ್ರಿಯದ ಬೆಂಬಳಿಯಲ್ಲಿ ಹರಿವ ಮನುಜರ ಕೊಂದು,
ಕೂಗದೆ ಮಾಯೆ, ದೇವರಾಯ ಸೊಡ್ಡಳ ನೋಡೆ./21
ಕಣ್ಣಿಂ ತ್ರಿಜಗಮಂ ಸುಟ್ಟು ಮುಚ್ಚಿ ಬಚ್ಚಿಡುವನು.
ಪಾಪಕಂಜನು ಕೋಪಕಂಜನು ನೆರೆಗಂಜನು ಹೊರೆಗಂಜನು.
ಕೋಟಿಕೋಟಿ ಬ್ರಹ್ಮಹತ್ಯಮಂ ಮಾಡಿಪ್ಪನು.
ಮಾರಿ ತೊತ್ತು ಮುರಾರಿ ಬಂಟನು, ತನಗಾರು ಇದಿರಿಲ್ಲ ನೋಡಾ.
ಎಲುವುಗಳ ತಲೆಗಳ ಮಾಲೆಯ ಕೊರಳಲೆ ಒಳವನು ಮಾಡಿಕ್ಕಿದ.
ಒಲಿದವರ ಕಾವ, ಒಲ್ಲದವರ ಕೊಂದೀಡಾಡುವ ಸೊಡ್ಡಳದೇವನು./22
ಕತರ್ಾರನಟ್ಟಿದ ವಿಧಿಗಂಜಿ, ಪಾತಾಳಲೋಕದಲ್ಲಿ ಹೊಕ್ಕಡಗಿದಡೆ,
ಭೂತಳದ ಮೇಲೆ ಹೊಮ್ಮರೆಯಾಗಿ ಹರಿದಡೆ, ಕೊಲ್ಲದೆ ವಿಧಿ ?
ತಪ್ಪು ತಡೆಯಿಲ್ಲದ ತಪಸಿಗಪ್ಪುದೆ ಶಲದ ವಿಧಿ ?
ಹರನಟ್ಟಿದ ಬೆಸನದಿಂದ ಮೆಕ್ಕೆ ಹಾವಾಗಿ ತಿನ್ನದೆ ವಿಧಿ ?
ದೇವ ದಾನವ ಮಾನವರ ಒಕ್ಕಲಿಕ್ಕಿ ಕೊಲ್ಲದೆ ವಿಧಿ ?
ಮುಕ್ಕಣ್ಣ ಸೊಡ್ಡಳನಾಣತಿವಿಡಿದು./23
ಕಾಮದಲ್ಲಿ ಲೋಲುಪ್ತವಾದವರೆಲ್ಲರೂ ಮಹವನೆತ್ತ ಬಲ್ಲರು !
ಸೋಮಧರನ ಓಲಗದಲ್ಲಿ ಕಾಮಗಣಂಗಳುಂಟೆ ?
ಕಾಮಾರಿ ಲಿಂಗವಲ್ಲದೆ ಈ ಬಣ್ಣದ ಹೆಣ್ಣೆಂಬ ಜಾಲವ ಬೀಸಿದನೆಲ್ಲಾ.
ಕಾಮ ಭಂಡುಗಳಿಗೆ ತನ್ನ ತೋರುವನೆ, ದೇವರಾಯ ಸೊಡ್ಡಳ ?/24
ಕಾಲ ಕಾಮ ಮಹಾಕಾಲ ಪ್ರಳಯಕಾಲ,
ಕಾಲನ ಕೊಂದು, ಹರ ಲೀಲೆಯನಾಡುವಂದು,
ಬ್ರಹ್ಮ ವಿಷ್ಣು ಜಿನಪಾಲರೆಂಬವರೆಲ್ಲಿದ್ದರೊ ?
ಸರಿಯೆಂಬ ನಾರಸಿಂಹನ ಶಿರವರಿದು,
ಹರನ ಶಿವಾಲಯಕ್ಕೆ ಕೀರ್ತಿಮುಖವಾಗಿದೆ.
ಹರಿಯ ಚರ್ಮವ ಸೀಳಿ, ಹರನ ಖಟ್ವಾಂಗವಾಗಿದೆ.
ಮತ್ಸ್ಯಾವತಾರನ ಕರುಳಂ ತೆಗೆದು, ಹರನ ಜಡೆಯಲ್ಲಿ ಉತ್ತರಿಗೆಯಾಗಿದೆ.
ಸರಿಯೆಂಬ ಹೆಸರಿನ್ನಾರಿಗೊ, ಮುಕ್ಕಣ್ಣ ಸೊಡ್ಡಳಂಗಲ್ಲದೆ./25
ಕಾಲಾಂತ್ಯಕಾಲದಲ್ಲಿ, ಪ್ರಳಯಾಂತ್ಯಪ್ರಳಯದಲ್ಲಿ,
ಕಾಲ ಮಹಾಕಾಲನಂ ಕೊಂದು, ಹರನು ಲೀಲೆಯನಾಡುವಲ್ಲಿ,
ತ್ರಿವಿಕ್ರಮನ ನಿಟ್ಟೆಲುವು ಕಟ್ಟಿಗೆ ವಾಸುಗಿ ತೆಗೆ ನೇಣು,
ನರಸಿಂಹನು ಗುರುಕೊಂಕಿ ಆದಿವರಾಹನ ಎಲೆಯಮಾಡಿ.
ಅದೆಂತೆಂದಡೆ : ಕಲ್ಪಾಂತೇಶಮಿತತ್ರಿವಿಕ್ರಮ ಮಹಾಕಂಕಾಳ ಬದ್ಧಸ್ಫುರ |
ಚೈಷಃ ಸೂತ್ರಮಥೋ ನೃಸಿಂಹ ನಖಪ್ರೋತಾದಿಕೋಲಾಮಿಷಂ |
ವಿಶ್ವೈಕಾರ್ಣವ ಸಂವಿಹಾರಮುದಿತೌ ಯೌ ಮತ್ಸ್ಯ ಕೂರ್ಮೌ
ವುಚೌಕರ್ಷನಿವರತಾಂಗತಃ ಶ್ಯಾತು ಸತಾಂ ಮೋಹಂ ಮಹಾಭೈರವಃ ||
ಎಂದುದಾಗಿ, ಇಂತಪ್ಪ ಮತ್ಸ್ಯ ಕೂರ್ಮಂಗಳಂ ತೆಗೆದಾಡುವಂದು,
ಹರಿಹರನೆಂಬ ಹೆಸರಾಯಿತ್ತಯ್ಯಾ ಸೊಡ್ಡಳಾ. /26
ಕಾಶಿಯಲ್ಲಿಪ್ಪ ಈಶನನರಿಯದ ಮೂವರ
ಕೊರಳು ಕೈಗಳು ಮುರಿದು ಬಿದ್ದವು.
ಕೈಲಾಸದಲ್ಲಿಪ್ಪ ಈಶನನರಿಯದ ಮೂವರ
ದೇಹ ಕಾಲು ಕೈಗಳು ಮುರಿದುಬಿದ್ದವು.
ಶ್ರೀಶೈಲದಲ್ಲಿಪ್ಪ ಈಶನನರಿಯದ ಮೂವರ
ದೇಹ ಕರುಳು ತೊಗಲುಗಳು ಉದುರಿಬಿದ್ದವು.
ಸಮುದ್ರದಲ್ಲಿಪ್ಪ ಈಶನನರಿಯದಿಬ್ಬರು
ಒಬ್ಬರ ಹೊಟ್ಟೆಯ ಒಬ್ಬರು ಹೊಕ್ಕು ಬಿದ್ದರು.
ಇಂತೀ ದೇವ ದಾನವ ಮಾನವರು ಮೊದಲಾದ ಸಕಲರೂ
ಮಹಾದಾನಿ ಸೊಡ್ಡಳನನರಿಯದೆ ತರ್ಕಿಸಿ, ಕೆಟ್ಟುಹೋದರು./27
ಕಿಚ್ಚಿಲ್ಲದುರಿವ [ದೇವನು] ಮತ್ತೊಬ್ಬರಿಗಂಜುವನಲ್ಲ.
ಕೌತುಕದ ದೇವ ಕಾಣಿಭೋ ನಮ್ಮ ಶಿವನು.
ಬಿರುದರ ಬಿಂಕದ ಬಿಂಕವ ಮುರಿದು,
ಉಬ್ಬಿದವರ ಗರ್ಭವ ಕಲಂಕುವ, ಬಲ್ಲಿದನ ತಲೆ ಕೈಯಲ್ಲಿ .
ಮೆಲ್ಲಿದನ ನಯನ ಚರಣದಲ್ಲಿ.
ಅಯ್ಯಯ್ಯಾ, ಮಝ ಭಾಪುರೆ ರಾವುರಾವು ಸೊಡ್ಡಳಾ./28
ಕುಡುವವ ಮಾನವನೆಂದಡೆ ಹೊಡೆ ಬಾಯ ಕೆರವಿನಟ್ಟೆಯಲ್ಲಿ ,
ಮಾನುಷನ ಹೃದಯದೊಳು ತಾನೀಶ ಹೊಕ್ಕು,
ಸಲ್ಲುವಷ್ಟು ಕುಡಿಸುವ, ದೇವರಾಯ ಸೊಡ್ಡಳ./29
ಕೂರ್ಮನ ಶಿಶುವಿನ ಸ್ನೇಹದಂತಿರ್ಪ ದೇವನೆನಗಿಂದು
ಪ್ರತ್ಯಕ್ಷ ಕಣ್ಣ ಮುಂದೆ ಗೋಚರವಾದ ನೋಡಾ.
ಎನ್ನ ಅಂತರಂಗದಲ್ಲಿ ಹೂಣೆಹೊಕ್ಕು, ವಿನಯ ಸದ್ಗೋಷ್ಠಿಯ ಮಾಡುವ
ನಿಷ್ಕಳಂಕ ಚೈತನ್ಯನು ಸಕಲರೂಪ ಸನ್ನಹಿತವಾದ ನೋಡಾ.
ಬಟ್ಟಬಯಲು ಬಲಿದು ಗಟ್ಟಿಗೊಂಡಂತೆ,
ಏಕಾಂತವೀರ ಸೊಡ್ಡಳಾ, ನಿಮ್ಮ ಶರಣ ಪ್ರಭುದೇವರ ನಿಲವು./30
ಕೆಮ್ಮ ಕೆಮ್ಮನೆ ಕೇಳಯ್ಯ.
ಬ್ರಹ್ಮಾಂಡವ ಬೆರಣಿಯ ಮಾಡಿ,
ಅಯ್ಯಾ ಕಾಲಕರ್ಮವೆಂಬ ಯುಗಜುಗಂಗಳನೆಲ್ಲವ
ಬಣ್ಣಿಗದೆನೆಯಂ ಮಾಡಿ, ಅವ ಹುರಿವನು, ಒರಸುವನು, ಮುಕ್ಕುವನು.
ಅದೆಂತೆಂದಡೆ : `ಈಶಃ ಸರ್ವಸ್ಯ ಜಗತಃ ಪ್ರೇರಕೋ ವಿಶ್ವಭುತ್ ಪ್ರಭುಃ’
ಇತೆಂದುದು ಶ್ರುತಿ.
ಸರ್ವಜಗಂಗಳ ಪುಟ್ಟಿಸುವ, ರಕ್ಷಿಸುವ, ಭಕ್ಷಿಸುವ
ತನ್ನಿಚ್ಛೆಗಾರ ಸೊಡ್ಡಳದೇವನು./31
ಕೊಳ್ಳಿಯ ಬೆಳಕಿನಲ್ಲಿ ಕುಳಿತು,
ಒಡ್ಡದ ತಳಿಗೆಯಲಿ ಅಂಬಲಿಯನಿಕ್ಕಿಕೊಂಡು,
ಸುರಿದು ಕೈದೊಳೆದು ಮುರಿದ ಗುಡಿಯೊಳಗೆ,
ಹರಿದ ತಟ್ಟೆಯ ಮೇಲೆ ಹರಿದ ಬೊಂತೆಯ ಹಾಸಿಕೊಂಡು,
ಕೆಡದಿಹಂಗೊಬ್ಬ ಮಗ ಹುಟ್ಟಿ, ಸಿರಿವಂತನಾದಡೆ,
ಇಳಿಯ ಬಿಟ್ಟು ಕಳೆಯದಿಹನೆ ಹಿಂದಣ ಕಷ್ಟದರಿದ್ರವ ?
ಬಂಡಿಯ ಹಿಡಿದಾತನ ತಂದೆಯ ತಲೆ ಹೋಹುದುಯೆಂದು
ಪಿತರಾಚಾರವೆಂದು ವೃಥಾ ಸಾವನೆ ?
ಕಂದ ಜಾಣನಾದಡೆ ತಮ್ಮ ತಂದೆಯಂತಹನೆ ?
ವಿಷಯದಿಂ ಬಂದ ದೈವಂಗಳಿಗೆ ಅನು ಎಂದೂ ಎರಗೆ, ಸೊಡ್ಡಳಂಗಲ್ಲದೆ./32
ಗಂಗಾನದಿಯಲ್ಲಿ ಮಿಂದು ಗಂಜಳದಲ್ಲಿ ಹೊರಳುವರೆ ?
ಚಂದನವಿದ್ದಂತೆ ದುರ್ಗಂಧವ ಮೈಯಲ್ಲಿ ಪೂಸುವರೆ ?
ಸುರಭಿ ಮನೆಯಲ್ಲಿ ಕರೆವುತ್ತಿರೆ, ಹರಿವರೆ ಸೊಣಗನ ಹಾಲಿಂಗೆ ?
ಬಯಸಿದಮೃತವಿದ್ದಂತೆ,
ಅಂಬಿಲವ ನೆರೆದುಂಬ ಭ್ರಮಿತಮಾನವಾ, ನೀನು ಕೇಳಾ.
ಪರಮಪದವಿಯನೀವ ಚೆನ್ನಸೊಡ್ಡಳನಿದ್ದಂತೆ,
ಸಾವದೇವರ ನೋಂತರೆ, ಕಾವುದೆ ನಿನ್ನ ?/33
ಗಂಡನುಳ್ಳ ಹೆಂಡಿರನು ಕಂಡು ಅಳುಪದಿರು ಮನವೆ.
ಬಂದ ಬಸುರನೂ ಉಂಡ ಮೊಲೆಯನೂ ಕಂಡು ಮರುಗದಿರಾ ಮನವೆ.
ಉದ್ಧಂಡತನದಲ್ಲಿ ನಡೆವ ಭಂಡರನು
ಹುಳುಗೊಂಡದಲ್ಲಿಕ್ಕುವ ಸೊಡ್ಡಳದೇವ./34
ಘುಡುಘುಡಿಸಿ ಅನ್ಯದೈವಂಗಳ ಕೊಡೆವಿಡಿಸಿದನು.
ಪಿಂಬೇರ ಮೈಲಿಗೆಯನು ಅಡಗಿಸಿದ ಭೋ.
ದೈವಂಗಳ ದರ್ಪವನು ಉಡುಗಿಸಿದ ಭೋ.
ಮುದನೂರ ದಾಸನ ತವನಿಧಿಯನು ಉರಿಗಣ್ಣ ಬಿಟ್ಟೊಮ್ಮೆ,
ಹರಿಯ ಪ್ರತಿಮೆಯನೊಡೆದಡಗಿಸಿದ ಭೋ.
ದೈವಂಗಳ ದರ್ಪವನು ಮನ್ನಣೆಯ ಮಾಡದೆ,
ಮಾರಿಯ ಕೈಯ ಮೊರಡಿಯ ಧಾನ್ಯಂಗಳ ಮಿಡಿಸಿದನು.
ಒಂ ನಮಃ ಶಿವಾಯ ಶಂಕರದಾಸ, ಪಂಚವದನ ಸೊಡ್ಡಳಾ. /35
ಚಂದ್ರಬಲ ತಾರಾಬಲವೆಂಬಿರಿ ಎಲೆ ಅಣ್ಣಗಳಿರಾ !
ಚಂದ್ರಂಗೆ ಯಾರ ಬಲ ? ಇಂದ್ರಂಗೆ ಯಾರ ಬಲ ?
ಇಂದ್ರಂಗೆ, ಮುಕುಂದಂಗೆ, ಬ್ರಹ್ಮಂಗೆ,
ಚಂದ್ರಶೇಖರ ದೇವಸೊಡ್ಡಳನ ಬಲವು, ಕೇಳಿರಣ್ಣಾ./36
ಜಡೆಯೆಡೆಯಾಯಿತ್ತು, ಬೋಳೆಡೆಯಾಯಿತ್ತು, ಲೋಚೆಡೆಯಾಯಿತ್ತು.
ನಡೆಯ ಮುನ್ನಿನ, ನುಡಿಯ ಮುನ್ನಿನ
ಒಡಲಗುಣಂಗಳಾರಿಗೂ ಬಿಡವು. ಎಡೆಯಣ ತಪವೇಕೆ ?
ಬಡಸಂಸಾರ ಸಾಲದೇ, ಸೊಡ್ಡಳದೇವಾ ?/37
ಜವನಿದ್ದಾನೆ, ಜವನ ಪಟ್ಟಣವಿದೆ,
ಮಾಮರನಿದೆ, ಹೂಮರನಿದೆ, ತೋಮರನಿದೆ ನೋಡಯ್ಯಾ.
ಆವ ಕಾರ್ಯವಾದಡೂ ಮಾಡು, ದೇವ ಕಾರ್ಯವ ಮಾಡು.
ಸಾವ ಕಾರ್ಯ ತಪ್ಪದು, ನೀ ಕೆಡಬೇಡ ಕಂಡಾ.
ಬೇಗಬೇಗ ನಂಬಿ ಪೂಜಿಸು, ದೇವ ಸೊಡ್ಡಳನ, ಮರುಳೆ. /38
ತನುವಿಕಾರ, ಮನವಿಕಾರ, ಜನನಮರಣಸ್ಥಿತಿ ಕಾರಣ,
ಹೊನ್ನ ತೋರಿದೆ, ಜಗದ ಕಣ್ಣ ಮೊದಲಿಗೆ.
ಹೆಣ್ಣ ಸುಳಿಸಿದೆ, ಜಗದ ಕಣ್ಣ ಮೊದಲಿಗೆ.
ಮಣ್ಣ ಹರಹಿದೆ, ಜಗದ ಕಣ್ಣ ಮೊದಲಿಗೆ.
ತನುವ ತಪ್ಪಿಸಿ, ಜಗವ ಸಂಸಾರಕ್ಕೊಪ್ಪಿಸಿ,
ನುಣ್ಣನೆ ಹೋದನುಪಾಯದಿ ದೇವರಾಯಸೊಡ್ಡಳ./39
ತನ್ನ ಶ್ರೀಗುರುವಿಂಗೆ ಸಕಲಪದಾರ್ಥವ ಕೊಟ್ಟು ಕೊಂಡಡೆ ಪ್ರಸಾದ.
ತನ್ನ ಪ್ರಾಣಲಿಂಗಕ್ಕೆ ಸಕಲಪದಾರ್ಥವ ಕೊಟ್ಟು ಕೊಂಡಡೆ ಪ್ರಸಾದ.
ಜಂಗಮಕ್ಕೆ ಸಕಲಪದಾರ್ಥವ ಕೊಟ್ಟು ಕೊಂಡಡೆ ಪ್ರಸಾದ.
ಇದೇ ಪ್ರಸಾದದ ಹಾದಿ ಕಂಡಯ್ಯಾ.
ಮುನ್ನಾದಿಯ ಪುರಾತನರು ನಡೆದ ಪಥವು ಕಂಡಯ್ಯಾ.
ಇಂತೀ ಶ್ರೀಗುರುವಿಂಗೆ ಕೊಡದೆ, ಲಿಂಗಕ್ಕೆ ಕೊಡದೆ, ಜಂಗಮಕ್ಕೆ ಕೊಡದೆ
ತಾನೆ ಉಂಡನಾದಡೆ, ಹುಳುಗೊಂಡದಲ್ಲಿಕ್ಕುವ,
ನಮ್ಮ ದೇವರಾಯ ಸೊಡ್ಡಳ./40
ತಮ್ಮ ಪುತ್ರರಂಗದ ಮೇಲೆ, ತಮ್ಮ ಶ್ರೀಗುರುವಿನ ಹಸ್ತದಲ್ಲಿ,
ಲಿಂಗಸಾಹಿತ್ಯವ ಮಾಡಿದ ಬಳಿಕ,
ಆ ಗುರುವಿನ ಪುತ್ರರಲ್ಲದೆ, ತಮ್ಮ ಪುತ್ರರಲ್ಲ.
ತಾವವರೂ ಗುರುವಿನ ಸೊಮ್ಮೆಂದರಿದು,
ಮತ್ತೆ ತಮ್ಮ ಪುತ್ರಿಯರೆಂದು ಮಾರಿಕೊಂಡುಂಡು,
ನಾನು ಭಕ್ತ, ನಾನು ಮಹೇಶ್ವರನೆಂಬ ಶಿವಾಚಾರ ಭ್ರಷ್ಟರುಗಳ
ವೀರಸೊಡ್ಡಳ ಮೆಚ್ಚುವನೆ, ಚನ್ನಬಸವಣ್ಣಾ ?/41
ತಿರುಕನಾಗುವ, ನರಕಿಯಾಗುವ, ವಿರಸನಾಗುವ, ಕುರುಡನಾಗುವ,
ಕುರುಟನಾಗುವ, ಕುಂಟನಾಗುವ, ಮುರುಡನಾಗುವ, ಕನ್ನವನಿಕ್ಕುವ,
ಅನ್ಯಶಬ್ದವ ನುಡಿವ, ತೊನ್ನು ಹತ್ತುವ,
ಬಣ್ಣಬಿಡುವ, ಹೊನ್ನ ಕೆಡುವ ಮುನ್ನ,
ಸೊಡ್ಡಳನ ಆರಾಧನೆ ಇಲ್ಲದ ಕುನ್ನಿಗಳಿಗೆಲ್ಲಾ ಈ ವಿಧಿ ತಪ್ಪದು. /42
ತೆರಹು ಮರಹೆಂಬುದು ನಿಮ್ಮ ಗುಣವಲ್ಲ.
ಅಮೃತಸಾಗರದೊಳಗೆ ಬೇವಿನ ಬಿಂದುವುಂಟೆ ?
ಮನವ ನೋಡಲೆಂದು ನಟ ನಾಟಕವನೊಡ್ಡಿದಡೆ,
ಅದಕ್ಕೆ ಸಹಜವಲ್ಲಾಗಿ, ಹೆದರಲಿಲ್ಲ,
ಮಹಾದಾನಿ ಸೊಡ್ಡಳನ ಮನ ನೊಂದಿತ್ತೆಂದು,
ಅಂಜಬೇಡವೇಳಾ, ಸಂಗನಬಸವಣ್ಣಾ./43
ತೋಟದೊಡೆಯ ತೋಟದ ನಾಲ್ಕು ಗೋಟ ಮೆಟ್ಟಿ ಕಾವಾಗ,
ಕಣ್ಣ ತೆರೆವರಾರೊ ?
ಹೂ ಕಾಯ ಹಣ್ಣ ತಿರುವರಾರೊ ?
ಹೊಟ್ಟನೊಟ್ಟಿ ಬೀಜವನುಳುಹಿ ಸುಡುವ ಸೊಡ್ಡಳರಾಯ. /44
ನಿಜತತ್ವದ ನಿರ್ವಯಲು ನಿರ್ವಾಹವಾಯಿತ್ತು.
ನೆನೆವರ ಪರುಷ ಘನವನೊಡಗಲಿಸಿತ್ತು.
ಭಕ್ತರ ಭಾಗ್ಯ ಮುಕ್ತಿಯನೈದಿತ್ತು.
ಬಸವಣ್ಣ ಚನ್ನಬಸವಣ್ಣನ ಮಾಮನೆಯಲ್ಲಿ,
ಮಹಾದಾನಿ ಸೊಡ್ಡಳನ ಶರಣ ಪ್ರಭುದೇವರು
ನಿರವಯ ಬೆರಸಲೊಡನೆ, ಸತ್ಯಲೋಕದ ಬಾಗಿಲ ಕದವು ತೆರೆಯಿತ್ತು./45
ನಿತ್ಯ ನಿಜತತ್ವವು ಭಕ್ತಿಕಂಪಿತವಾಗಿ, ಎನ್ನತ್ತ ತಿರುಗಿತ್ತು .
`ವತ್ಸಂ ಗೌರಿವ ಗೌರೀಶ’ ಎಂಬ ಶ್ರುತಿಯ ತೋರಲೆಂದು,
ಎನಗೆ ಕೃಪೆಯಾಗಿ, ತನ್ನ ಶ್ರೀಪಾದವ ತೋರಿದನು.
ಜಯಜಯಶ್ರೀ ಮಹಾದೇವ ಜಯ ಜಯ ಶ್ರೀಮಹಾದೇವ.
ಗುರುವೆ ನಮೋ ನಮೋ, ಎನ್ನ ಪರಮ ಗುರುವೆ ನಮೋ ನಮೋ,
ಎನ್ನ ಭವಬಂಧನಂಗಳ ಬಿಡಿಸಿದೆಯಾಗಿ, ಗುರುವೆ ನಮೋ ನಮೋ ಎಂಬೆ.
ಮಹಾದಾನಿ ಸೊಡ್ಡಳಾ, ನಿಮ್ಮ ಶರಣ ಪ್ರಭುದೇವರ ಶ್ರೀಪಾದಕ್ಕೆ
ನಮೋ ನಮೋ ಎಂದು ಬದುಕಿದೆನು./46
ನಿಮ್ಮ ತಾಯಿತನವನೊಲ್ಲದವರು, ನಾಯಿ ಬಾರದ ಭವದಲ್ಲಿ ಬಂದರು.
ಒಬ್ಬ ಹೆಬ್ಬಕ್ಕಿಯಾದ, ಒಬ್ಬ ಸೂಕರನಾದ.
ಒಬ್ಬ ಬೆರಳನೆತ್ತಿ ಕಟ್ಟುವಡೆದ.
ಒಬ್ಬರೊಬ್ಬರ ವಿಧಿಯನೊಮ್ಮಿಂಗೆ ಕೈಕೊಳ್ಳಾ,
ಉವರ್ಿಶ ಸೊಡ್ಡಳಾ, ಭಾಪು ಭಾಪುರೆ./47
ನಿಮ್ಮಿಂದಲಾದೆ ನಾನು. ಎನಗೆ ದೇಹೇಂದ್ರಿಯ
ಮನಃಪ್ರಾಣಾದಿಗಳಾದುವು.
ಎನ್ನ ದೇಹೇಂದ್ರಿಯ ಮನಃಪ್ರಾಣಾದಿಗಳ ಕರ್ತ ನೀನೆ.
ಅವರ ಆಗುಚೇಗೆ ಸುಖದುಃಖ ನಿನ್ನವು.
ಒಳಗೂ ನೀನೆ, ಹೊರಗೂ ನೀನೆ. ನಾನೆಂಬುದು ನಡುವಣ ಭ್ರಾಂತು.
ಎಲ್ಲ ವಿನೋದ ನೀನೆ ಬಲ್ಲೆ, ದೇವರಾಯ ಸೊಡ್ಡಳಾ./48
ನೆರೆಮನೆಯಲ್ಲಿ ಸಿರಿಯಿರ್ದಡೆ ಕಾರಣವೇನು ?
ಪುರಾತನರ ವಚನ ವಚಿಸಿದಲ್ಲಿ ಫಲವೇನು ?
ವಚನದಂತೆ ತಾನಿಲ್ಲ, ತನ್ನಂತೆ ವಚನವಿಲ್ಲ.
ಮೂಗಿಲ್ಲದವರು ಕನ್ನಡಿಯ ನೋಡಿದಡೆ,
ಶೃಂಗಾರ ಮೆರೆವುದೆ, ದೇವರಾಯ ಸೊಡ್ಡಳಾ ? /49
ನೆಲ ದ್ವೀಪದೊಡೆಯನು, ಜಲ ತಂಪಿನೊಡೆಯನು,
ಹಿರಿಯ ಹೆಂಪಿನೊಡೆಯನು, ಕುಲ ಸೊಂಪಿನೊಡೆಯನು,
ಅಗ್ನಿ ಉಣ್ಣದೊಡೆಯನು, ಚಂದ್ರ ಕಾಂತದೊಡೆಯನು,
ಸೂರ್ಯ ಕಾಂತದೊಡೆಯನು, ವಿಷ್ಣು ಮಾಯೆಯೊಡೆಯನು.
ಸಕಲದೈವಂಗಳಿಗೆ ಆಯುಷ್ಯಭಾಷೆಯ ಕೊಟ್ಟ
ಭೋಗದೊಡೆಯನು, ಜಗತ್ಪ್ರಭು ಸೊಡ್ಡಳ./50
ನೊಸಲಕಣ್ಣ ಬಿಸಿಗೆಂಪಿಗೆ ಶಶಿಯಮೃತ ಒಸರಲು ಸುರಿದಹವೆ.
ಕಪಾಲ ಮಣಿಮಾಲೆಯ ಮೇಲೆ
ಉಲಿದಹವೆ, ನಲಿದಹವೆ, ಮಲಿದಹವೆ, ಕೆಲದಹವೆ.
ಎಲುವೆದ್ದಾಡುವದ ನೋಡಿ ನಗುತ್ತಿಹೆ ಸೊಡ್ಡಳಾ, ನಿಮ್ಮರ್ತಿಯಿಂದ./51
ಪಂಚಮಹಾಪಾತಕವ ಮಾಡಿ[ದೆ]ನಾದಡೆ, ಒಮ್ಮೆ ಹಂಚಿನಲ್ಲಿ ತಿರಿದುಂಡಡೆ,
ಪಾಪದಂಜನವನು ಕೊಂಡಡೆ, ಕರ್ಮನಿರ್ಮಳ.
ಇಹದಲ್ಲಿ ಸುಖ, ಪರದಲ್ಲಿ ಗತಿ.
ಬ್ರಹ್ಮನ ಶಿರವ ಚಿವುಟಿ, ಬ್ರಹ್ಮೇತಿ ಮುಖ ತಾಗಿದಡೆ,
ಸದ್ಗುರು ಸೊಡ್ಡಳ ತಿರಿದುಂಡ ಪರಿ./52
ಪಕ್ಷಿ ಜನಿಸಿ ಅಮೃತವನರಿಯದಂತೆ,
ಶಿವನಲ್ಲದೆ ಅನ್ಯದೈವ ಭಜನೆಯುಳ್ಳವರೇತಕ್ಕೆ ಬಾತೆ ?
ಅನ್ಯಾಯಿತ ವಧೆಯ ಮಾಡುವ ಅರ್ತಿಕಾರ ದೋಷವನರಿಯ.
ಪಾಪಿಯ ಕೈಯ ದಾರ, ಗಾಳದ ಕೊನೆಗೆ ಬಂದುಂಡ ಮತ್ಸ್ಯದ ಲಕ್ಷಣದಂತೆ,
ಮನುಷ್ಯ ಜನ್ಮದಲ್ಲಿ ಹುಟ್ಟಿ, ಶಿವಾಚಾರವನರಿಯದೆ ದುರಾಚಾರಕ್ಕೆರಗುವರು,
ಹಿರಿಯದೈವವನರಿಯದೆ, ಕಿರುಕುಳದೈವವಂ ಪಿಡಿವರು.
ಕೇಶವಂಗೆ ದಾಸತ್ವಮಂ ಮಾಡಿದಡೆ ಪ್ರತ್ಯಕ್ಷ ಮುಡುಹ ಸುಡಿಸನೆ ?
ಮೈಲಾರದೇವರೆಂಬವರ ನಾಯಾಗಿ ಬಗುಳಿಸನೆ ?
ಜಿನ ದೈವವೆಂಬವರ ತಲೆಯ ತರಿಸನೆ ?
ಹುಲುದೈವವ ಪೂಜಿಸಿದವರು ಕೈಲಾಸದ ಬಟ್ಟೆಯ ಹೊಲಬುದಪ್ಪಿದರು.
ಮುನ್ನ ಮಾಡಿದವರಿಗಿದಿಯಾಯಿತ್ತು.
ಇನ್ನು ಮಾಡುವರಿಗೆ ವಿಧಿಯಹುದೊ.
ನಮ್ಮ ದೇವರಾಯ ಸೊಡ್ಡಳಂಗೆ ಒಂದರಳನೇರಸಿದವ,
ಕೈಲಾಸಕ್ಕೆ ಹೋದನು./53
ಪಡೆದ ಕಾಣಿಭೋ ಕಾಲನಂ ಸಂಹರಿಸಿ, ಕಾಲಹರನೆಂಬ ನಾಮವ.
ಪಡೆದ ಕಾಣಿಭೋ ಕಾಮನಂ ಸಂಹರಿಸಿ, ತ್ರಿಪುರಹರನೆಂಬ ನಾಮವ.
ಪಡೆದ ಕಾಣಿಭೋಮತ್ಸ್ಯಕಶ್ಯಪನರಸಿಂಹಾದಿಗಳ ಸಂಹರಿಸಿ, ವೀರಭದ್ರನೆಂಬ, ಪೆಸರ.
`ಸರ್ವಂ ವಿಷ್ಣುಮಯಂ ಜಗತ್’ ಎಂಬ ಶ್ರುತಿಯ ಮತದಿಂ,
ತೋರ್ಪ ಸಮಸ್ತ ಜಗತ್ತನು ಉರಿಗಣ್ಣ ಬಿಟ್ಟು ಸುಟ್ಟು,
ಹರಿಹರನೆಂಬ ಪೆಸರ ಪಡೆದ ಕಾಣಿಭೋ.
ಹರನು ಹರಿಯನು ಕೊಂದನೆಂದು ಸಲೆ ಸಾರುತ್ತಿದೆ ಯಜುರ್ವೆದ.
ಒಂ ಹರಿಹರಂತಂ ಮನುಮಾತಿಂ ದೇವಾಃ |
ವಿಶ್ವಸ್ಯಶಾನಂ ವೃಷಭಂ ಮತಿನಾಂ ||
ಇಂತೆಂದುದಾಗಿ, ಕಾಲಹರ ಕರ್ಮಹರ ತ್ರಿಪುರಹರ,
ದುರಿತಹರ ಮಖಹರ ಹರಿಹರ ಸಕಲಹರ ಶರಣು ಸೊಡ್ಡಳಾ. /54
ಪರಶಿವಶಕ್ತಿಗಳಿಂದಾದ ಲಿಂಗ. ಲಿಂಗೋದ್ಭವ ಶಿವ, ಶಿವ ಮೂರ್ತಿತತ್ವ.
ತತ್ವಮೂರ್ತಿ ಮುಖದಿಂದ ಲೋಕ.
ಲೋಕದಿಂದ ಭೋರನೆ ಹುಟ್ಟಿದ ವೇದ.
ವೇದಾಗಮನದಿಂದ ಹುಟ್ಟಿದ ಶಿವವಿದ್ಯೆ.
ಶಿವವಿದ್ಯೆಯಿಂದ ಹುಟ್ಟಿದ ಶಿವದೀಕ್ಷೆ.
ಶಿವದೀಕ್ಷೆಯಿಂದಾದ ನಿಃಪತಿತತ್ವದ ಕುಳವಾರು.
ಆ ದೀಕ್ಷೆಯಿಂದ ಭಾವಹುಟ್ಟಿ, ಭಾವಕ್ಕೆ ಸ್ಥಾವರ ಹುಟ್ಟಿ,
ಜಂಗಮಮುಖದಿಂದ ಪ್ರಸಾದ ಉದಯವಾಯಿತ್ತು.
ಪ್ರಸಾದದಿಂದ ಲಿಂಗಾಚಾರವಾಯಿತ್ತು. ಆಚಾರದಿಂದ ಗುರು.
ಅಂತು ನಿಃಪತಿಗಾದ ಪ್ರತಿತತ್ವವೆಂಬ ಷಡುಸ್ಥಲವು.
ಗುರುವಿಂದ ಸಮಾಧಿ, ಸಮಾಧಿಗೆ ಧ್ಯಾನ ಹುಟ್ಟಿ,
ಧ್ಯಾನದಿಂದಾದ ಜ್ಞಾನ, ಜ್ಞಾನದಿಂದರ್ಪಣ.
ಅರ್ಪಣಕ್ಕೆ ನಿಯಮ, ನಿಯಮಕ್ಕೆ ಭಕ್ತಿ.
ಭಕ್ತಿ ಉಂಟಾದಲ್ಲಿ ಸಕೀಲವೆಂಬ ಷಡುಸ್ಥಲವು.
ಭಕ್ತಿಯಿಂದಾದ ಮನ, ಮನದಿಂದಾದ ಮತಿ,
ಮತಿಯಿಂದಾದ ಅಭ್ಯಾಸ, ಅಭ್ಯಾಸದಿಂದಾದ ಧನ,
ಧನದಿಂದಾದ ತನು, ತನುವಿನಿಂದಾದ ಮೋಹ.
ಮೋಹವೆಂಬಿವು ಅಸಾಧ್ಯವೆಂಬ ಷಡುಸ್ಥಲವು.
ಆ ಮೋಹದಿಂದ ಶಕ್ತಿ ಹುಟ್ಟಲು,
ಅದರಿಂದಾದ ಬಾವಶುದ್ಧಿ, ಭಾವಶುದ್ಧಿಯಿಂದ ನಿರಾಲಸ್ಯವಾಗಿ,
ಅಲ್ಲಿ ಶಿವಧರ್ಮ, ಆ ಶಿವಧರ್ಮದಲ್ಲಿ ನೀರಜತ್ವ.
ನೀರಜತ್ವವೆ ನಿರುಪಾಧಿ.
ನಿರುಪಾಧಿಕವೆಂಬ ಷಡುಸ್ಥಲವು, ನಿರುಪಾಧಿಯಿಂದೈಕ್ಯ,
ಐಕ್ಯನ ಶಿಶು ಶರಣ.
ಶರಣರ ಶಿಶು ಪ್ರಾಣಲಿಂಗಿ, ಪ್ರಾಣಲಿಂಗಿಯ ಶಿಶು ಪ್ರಸಾದಿ.
ಪ್ರಸಾದಿಯ ಶಿಶು ಮಹೇಶ್ವರ, ಮಹೇಶ್ವರನ ಶಿಶು ಭಕ್ತ.
ಇಂತು ಸಾಕಾರ ಷಡುಸ್ಥಲ.
ಶಂಭು ಸೊಡ್ಡಳ ಮಹಾಮಹಂತರುಮಪ್ಪ
ಮೂವತ್ತಾರು ಕುಳವರಿದಂಗೆ ಶರಣು, ಶರಣೆಂಬೆ. /55
ಪಾಪಿ ನಾನೊಂದು ಪಾಪವ ಮಾಡಿದೆ.
ಆ ಪಾಪವೆನಗೆ ಸತಿಸುತರಾಗಿ ಕಾಡುತ್ತಿದೆ.
ಪಾಪವನೆ ಬಿತ್ತಿ, ಕೋಪವನೆ ಬೆಳೆದು,
ಈ ಪರಿಯಲಿ ದಿನಂಗಳು ಹೋದವಲ್ಲ.
ಎನಗಿನ್ನೇನು ಪರಿ ಹೇಳಾ, ದೇವರಾಯ ಸೊಡ್ಡಳಾ ?/56
ಪ್ರಣವದ ಪ್ರಣವವೆ ನಕಾರ, ಪ್ರಣವದ ದಂಡಕವೆ ಮಕಾರ,
ಪ್ರಣವದ ಕುಂಡಲಿಯೆ ಶಿಕಾರ, ಪ್ರಣವದ ಅರ್ಧಚಂದ್ರವೆ ವಕಾರ,
ಪ್ರಣವದ ಬಿಂದುವೆ ಯಕಾರ.
ನಕಾರದ ದಂಡಕವೆ ಮಕಾರ, ನಕಾರದ ಬಲದ ಕೋಡೆ ಶಿಕಾರ,
ನಕಾರದ ಎಡದ ಕೋಡೆ ವಕಾರ, ನಕಾರದ ಬಿಂದುವೆ ಯಕಾರ,
ನಕಾರದ ತಾರಕವೆ ಒಂಕಾರ.
ಮಕಾರದ ದಂಡಕವೆ ನಕಾರ, ಮಕಾರದ ಬಲದ ಕೋಡೆ ಶಿಕಾರ,
ಮಕಾರದ ಎಡದ ಕೋಡೆ ವಕಾರ, ಮಕಾರದ ಬಿಂದುವೆ ಯಕಾರ,
ಮಕಾರದ ತಾರಕವೆ ಒಂಕಾರ.
ಶಿಕಾರದ ದಂಡಕವೆ ನಕಾರ, ಶಿಕಾರದ ಬಲದ ಕೋಡೆ ಮಕಾರ,
ಶಿಕಾರದ ಎಡದ ಕೋಡೆ ವಕಾರ, ಶಿಕಾರದ ಬಿಂದುವೆ ಯಕಾರ,
ಶಿಕಾರದ ತಾರಕವೆ ಒಂಕಾರ.
ವಕಾರದ ದಂಡಕವೆ ನಕಾರ, ವಕಾರದ ಬಲದ ಕೋಡೆ ಮಕಾರ,
ವಕಾರದ ಎಡದ ಕೋಡೆ ಶಿಕಾರ, ವಕಾರದ ಬಿಂದುವೆ ಯಕಾರ,
ವಕಾರದ ತಾರಕವೆ ಒಂಕಾರ.
ಯಾಕಾರದ ದಂಡಕವೆ ನಕಾರ, ಯಕಾರದ ಬಲದ ಕೋಡೆ ಮಕಾರ,
ಯಕಾರದ ಎಡದ ಕೋಡೆ ಶಿಕಾರ, ಯಕಾರದ ಬಿಂದುವೆ ವಕಾರ,
ಯಕಾರದ ತಾರಕವೆ ಒಂಕಾರ.
ಇಂತಪ್ಪ ಮೂವತ್ತಾರು ಮೂಲಪ್ರಣವಂಗಳೆ,
ಪ್ರಥಮಗುರು ಬಸವಣ್ಣನಾದುದಂ,
ಸೊಡ್ಡಳ ಲಿಂಗದಲ್ಲಿ ಕಂಡು ಸುಖಿಯಾಗಿ,
ನಾನು ಬಸವಾ ಬಸವಾ ಎಂದು ಜಪಿಸುತಿದರ್ೆನಯ್ಯಾ./57
ಬಂಟತನವ ಮಾಡಬೇಕೆಂದು, ಬಟ್ಟೆಯ ಬಡಿಯಬೇಕೆಂದು,
ಕೆಟ್ಟದುದನರಸಬೇಕೆಂದು, ಕೊಟ್ಟುದ ಬೇಡಬೇಕೆಂದು,
ಮುಂಜಾವದಲೇಳುವರಯ್ಯಾ, ಹಲಬರು ಕೆಲಬರು.
ಆಹಾರವನುಣಬೇಕೆಂದು, ವ್ಯವಹಾರವ ಮಾಡಬೇಕೆಂದು,
ಆ ಹೆಣ್ಣ ತರಬೇಕೆಂದು, ಈ ಹೆಣ್ಣ ಕೊಡಬೇಕೆಂದು,
ಮುಂಜಾವದಲೇಳುವರಯ್ಯಾ, ಹಲಬರು ಕೆಲಬರು.
ಕರ್ತು ಸೊಡ್ಡಳದೇವಂಗೆ ತೊತ್ತುಗೆಲಸವ ಮಾಡಬೇಕೆಂದು,
ಕಣ್ಣತೆರೆವುತ್ತಲೇಳುವರು ಅಲ್ಲಲ್ಲಿ ಒಬ್ಬೊಬ್ಬರು./58
ಬನ್ನಿ ಕರಣಿಕರು, ನೀವು ಲೆಕ್ಕವ ಹೇಳಿ, ಧಾನ್ಯ ಧಾನ್ಯಂಗಳ ಸಂಚವನು.
ಹೊಸಜೋಳ ಅರುವತ್ತುಲಕ್ಷ ಖಂಡುಗ,
ಶಾಲಿಧಾನ್ಯ ಮೂವತ್ತುಲಕ್ಷ ಖಂಡುಗ,
ಗೋದಿ ಹನ್ನೆರಡುಲಕ್ಷ ಖಂಡುಗ, ಕಡಲೆ ಬತ್ತೀಸ ಖಂಡುಗ,
ಹೆಸರು ಮೂವತ್ತಾರುಲಕ್ಷ ಖಂಡುಗ,
ನವಣೆ ಹಾರಕ ಬರಗು ಸಾವೆ ದೂಸಿಗಳೆಂಬ ಧಾನ್ಯ ಐವತ್ತುಲಕ್ಷ ಖಂಡುಗ.
ಹೊಸಸುಗ್ಗಿಯ ವೇಳೆಗೆ ಬಹ ಭತ್ತ ಅಗಣಿತ.
ಮಹಾದಾನಿ ಸೊಡ್ಡಳನ ಆರೋಗಣೆಯ ಅವಸರಕ್ಕೆ
ಅಳವಟ್ಟ ಸಯದಾನ ಇನಿತನವಧರಿಸಯ್ಯಾ, ಸಂಗನಬಸವಣ್ಣಾ. /59
ಬರದಲ್ಲಿ ಅರಲುಗೊಂಡವಂಗೆ ಅಮೃತ ಸಿಕ್ಕಿದಂತೆ,
ಜರಾಮರಣ ದುಃಖಿಗೆ ಮರುಜವಣಿಗೆಯ ಕಂಡಂತೆ,
ಭವದ ಬಾಗಿಲ ಹೊಗದೆ ಬದುಕಿದೆನಯ್ಯಾ ನಿತ್ಯವ ಕಂಡು.
ಒಳಗೆ ಬೆಳಗುವ ಪ್ರಕಾಶ ಹೊರಗೆ ಮೂರ್ತಿಗೊಂಡಂತೆ,
ಕಂಗೆ ಮಂಗಳವಾಯಿತ್ತಯ್ಯಾ.
ಮಹಾಘನದಲ್ಲಿ ಸಾಕಾರ ಸೊಡ್ಡಳನ ಶರಣ ಪ್ರಭುವಿನ ನಿಲವಿಂಗೆ
ನಮೋ ನಮೋ ಎನುತಿದರ್ೆನು. /60
ಬಸವ ಹರಿಯಿತ್ತು, ಬಸವ ಹರಿಯಿತ್ತು, ಬಸವ ಹರಿಯಿತ್ತು ಕಾಣಿಭೋ.
ತೊತ್ತಳದುಳಿಯಿತ್ತು, ತೊತ್ತಳದುಳಿಯಿತ್ತು.
ಮೀಮಾಂಸಕರ ಮಿತ್ತುವ ಮಿರಿಯಿತ್ತು,
ಬೌದ್ಧ ಜೈನರ ಕೋಡಿನಲ್ಲಿರಿಯಿತ್ತು,
ಕೊಳಗಿನಲ್ಲರೆಯಿತ್ತು ನೋಡಾ, ಸೊಡ್ಡಳಾ ಸಂಗನಬಸವ. /61
ಬಳಿನೀರಿಂಗೆ ಲಿಂಗವನರಸುತ್ತ ಹೋಹಲ್ಲಿ
ಅಲ್ಲಿ ನಿಮ್ಮ ಸಮಯ ತಪ್ಪಿತ್ತು ಭೋ.
ಶೋಭನಕ್ಕೆ ನಂದಿಮುಖವೆಂಬಿರಿ, ಅಲ್ಲಿ ನಿಮ್ಮ ಸಮಯ ತಪ್ಪಿತ್ತು ಭೋ.
ಸತ್ತಲ್ಲಿ ರುದ್ರಭೂಮಿಗೊಯ್ಯೆಂಬಿರಿ, ಅಲ್ಲಿ ನಿಮ್ಮ ಸಮಯ ತಪ್ಪಿತ್ತು ಭೋ.
ಮತ್ತೊಂದು ದೇಸಿಂಗೆ ರುದ್ರನ ಹೊಂಗಳೆಂದು ಇಕ್ಕುವರು,
ಅಲ್ಲಿ ನಿಮ್ಮ ಸಮಯ ತಪ್ಪಿತ್ತು ಭೋ.
ಮತ್ತೊಂದು ದಿನದಲ್ಲಿ ವೃಷಭನವಿಡಿಯೆಂಬಿರಿ,
ಅಲ್ಲಿ ನಿಮ್ಮ ಸಮಯ ತಪ್ಪಿತ್ತು ಭೋ.
ಅದೆಂತೆಂದಡೆ : ದೇವಕಾಯರ್ೆ ವಿವಾಹೇ ಚ ಸ್ವಗುರುತ್ವಂ ವಿವರ್ಜಯೇತ್ |
ತ್ರಯೋ ದೇವಾ ಸಮಂ ದೃಷ್ಟಾಃ ಶುನಿಗಭರ್ೆಷು ಜಾಯತೇ ||
ಎಂದುದಾಗಿ,
ಬೇರೆ ದೇವರ, ಬೇರೆ ಸಮಯವ ತೂರಿದಡೆ ಕಾಣೆ, ಕೇರಿದಡೆ ಕಾಣೆ.
ಭೂಮಿಯೆ ಪೀಠಿಕೆ, ಆಕಾಶವೆ ಲಿಂಗ.
ಇದರೊಳಗಲ್ಲದೆ ಹೊರಗೆ ಮತ್ತುಂಟೆ ?
ಸರ್ವಜ್ಞದೇವರ ಗರ್ಭದೊಳಗಿದು,
ಉಬ್ಬಿಕೊಬ್ಬಿ ನುಡಿವರ [ಕಂಡು] ನಗುವ ಭೋ ಸೊಡ್ಡಳನು. /62
ಬೀಸುವ ಬಿರುಗಾಳಿ ಬೀಸಬಾರದು, ಬೀಸದಿರಬಾರದು.
ಸುರಿವ ಮಳೆ ಸುರಿಯಬಾರದು, ಸುರಿಯದಿರಬಾರದು.
ಉರಿವ ಕಿಚ್ಚು ಉರಿಯಬಾರದು, ಉರಿಯದಿರಬಾರದು,
ಚಂದ್ರಸೂರ್ಯರು ನಿಂದಾಗಲೇ ಸಂದಿತ್ತು,
ಸೊಡ್ಡಳಾ ನಿಮ್ಮ ರಾಜತೇಜದ ಮಹಿಮೆ. /63
ಬೆರಗು ನಿಬ್ಬೆರಗು ಮಹಾಬೆರಗು ಹೊಡೆದಂತೆ,
ಸ್ವಪ್ನದಲ್ಲಿ ಸಿಂಹವ ಕಂಡ ಮದಹಸ್ತಿಯಂತೆ,
ಮುನಿದು ಮಲಗಿದ ಮಿಥುನದಂತೆ,
ಆವಿ ಅನಿಲದುಲಿವ ಅನಲನ ಅರನಂತೆ,
ಆಸೆ ಹಿಂಗಿದ ಮಹೇಶ್ವರನಂತೆ, ಒಡಬಾಗ್ನಿ ಸತ್ತ ವಾರುಧಿಯಂತೆ,
ಮರುತನಡಗಿದ ಆಕಾಶದಂತೆ,
ಉಭಯದೊಲುಮೆಯ ಪುರುಷ ಸ್ತ್ರೀಯನಗಲಿದಂತೆ,
ಪಾಶವಿಲ್ಲದೆ ಹರಿವ ನದಿಯಂತೆ, ದರ್ಪಣದೊಳಗಣ ಪ್ರತಿಬಿಂಬದಂತೆ,
ಸೊಡ್ಡಳನ ಶರಣ ಸಂಗಮೇಶ್ವರ ಅಪ್ಪಣ್ಣನ ನಿಲವ ಬಲ್ಲ
ಮಡಿವಾಳ ಮಾಚಯ್ಯಂಗೆ ನಮೋ ನಮೋ ಎಂಬೆ./64
ಬ್ರಹ್ಮ ನಿಮ್ಮ ಶ್ರೀಚರಣವನೊತ್ತುವ, ವಿಷ್ಣು ನಿಮ್ಮ ಶ್ರೀಹಸ್ತವನೊತ್ತುವ.
ದೇವರಾಜ ನಿಮಗೆ ಸತ್ತಿಗೆಯ ಹಿಡವ,
ವಾಯು ಬಂದು ನಿಮ್ಮ ರಾಜಾಂಗಣವನುಡುಗುವ.
ಉಳಿದಾದ ದೇವರ್ಕಳೆಲ್ಲ ನಿಮಗೆ ಜಯ ಜೀಯ ಹಸಾದವೆನುತ್ತಿಹರು.
ಮಹಾದೇವ, ಮಹಾಮಹಿಮರೆನಿಸಿಕೊಂಬವರೆಲ್ಲ ನಿಮ್ಮ ಸೇವಕರು.
ಅದೆಂತೆಂದಡೆ : ಮಮರ್ದ ಚರಣೌ ಬ್ರಹ್ಮಾ ವಿಷ್ಣು ಃ ಪಾಣಿ ಸಮಾಹಿತಃ |
ಛತ್ರಂ ಧಾರಯತೇ ಚೇಂದ್ರೋ ವಾಯುರ್ಮಾರ್ಗಂ ವಿಶೋಧಯೇತ್ |
ಅನ್ಯೇ ತು ದೇವತಾಃ ಸರ್ವ ಜಯ ಜೀಯ ಇತ್ಯಭ್ರುವನ್ ||
ಇಂತೆಂಬ ವಚನವಿಡಿದು, ನಿಮಗೆ ಸರಿಯೆಂಬವಂದಿರ
ತಲೆಯ ಮೆಟ್ಟಿ ನಡೆವೆ.
ಮಹಾಮಹಿಮ ಸೊಡ್ಡಳ, ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದನು./65
ಬ್ರಹ್ಮಪದವಿಯನೊಲ್ಲೆ , ವಿಷ್ಣುಪದವಿಯನೊಲ್ಲೆ ,
ರುದ್ರಪದವಿಯನೊಲ್ಲೆ , ಇಂದ್ರಪದವಿಯನೊಲ್ಲೆ ,
ಉಳಿದ ದೇವತೆಗಳ ಪದವಿಯನೊಲ್ಲೆ .
ಎಲ್ಲಕ್ಕೂ ಒಡೆಯನಾದ ಶಿವನ ಪ್ರಮಥಗಣಂಗಳ
ತಿಪ್ಪೆಯ ಮೇಲಣ ಹುಳುವಾಗಿ ಹುಟ್ಟುವ ಪದವಿಯ ಕರುಣಿಸು,
ಮಹಾಮಹಿಮ ಸೊಡ್ಡಳಾ./66
ಬ್ರಾಹ್ಮಣನು ಅಧಿಕವೆಂದೆಂಬಿರಿ ಭೋ, ಆ ಮಾತದು ಮಿಥ್ಯ.
ಬ್ರಾಹ್ಮಣನಾರೆಂದರಿಯಿರಿ, ಬ್ರಾಹ್ಮಣನೆ ಶಿವನು.
`ವಣರ್ಾನಾಂ ಬ್ರಾಹ್ಮಣೋ ದೈವಃ ವೆಂಬುದು ನಿಶ್ಚಯ.
ಆ ವರ್ಣಭಾವವೆಂದಡೆ ಬ್ರಹ್ಮ ವಿಷ್ಣು ಮಹೇಶ್ವರ ಇಂದ್ರ.
ಈ ನಾಲ್ವರು ಜಾತಿವರ್ಗಕ್ಕೆ ಸಲುವರು. ಇಂತೀ ವರ್ಣಂಗಳೆಲ್ಲಕ್ಕೆ ಶಿವನೆ ಗುರು.
ಆ ಸದಾಶಿವನ ಗುರುತ್ವಕ್ಕೆ ಏನು ಲಕ್ಷಣವೆಂದಡೆ : ಸರ್ವಭೂತಂಗಳೊಳಗೆ ಚೈತನ್ಯಾತ್ಮಕನಾಗಿಹನು.
ಅದೆಂತೆಂದಡೆ : `ಅಣೋರಣೀಯಾನ್ಮಹತೋ ಮಹೀಯಾನ್’ ಎಂದುದಾಗಿ,
`ಆತ್ಮನಾ ಪೂರಿತಂ ಸರ್ವಂ’ ಎಂದುದಾಗಿ, `ಆತ್ಮನಾಂ ಪತಯೆ’ ಎಂದುದಾಗಿ,
`ಆತ್ಮಾಂ ಅವರ್ಣಂ ಚ ಆತ್ಮಾಂ ಆಮೂರ್ತಯೆ’
`ಆತ್ಮಾಂ ಚಿದಂ ಕರ್ಮ ಆತ್ಮಮಕುಲಂ
ಯಥಾ ಆತ್ಮಾಂ ಪೂರಿತೋ ದೇವಾಯ ನಮಃ
ಆತ್ಮಾ ರುದ್ರಂ ಭವತಿ ಆತ್ಮಾ ಸದಾಶಿವಾಂ ಶೋಯೇ ತದ್ಭೂತಾಯ’
ಎಂದುದಾಗಿ,
ಆತ್ಮಂಗೆ ಆವ ಕುಲವುಂಟು ಹೇಳಿರೊ?
ಅಂತು ಆತ್ಮನು ಸರ್ವಭೂತಂಗಳಿಗೆ
ಗುರುವೆಂದೆನಿಸಿಕೊಂಬ ಆತ್ಮಂಗೆ, ಗುರು ಸದಾಶಿವನು.
ಆಯಾತ್ಮನು ಸದಾಶಿವನ ಕೂಡಲಿಕ್ಕೆ ಚೈತನ್ಯಾತ್ಮಕನಾಗಿ,
ಸರ್ವವೂ ಸದ್ಗುರುವೆನಿಸಿಕೊಂಬ
`ವಣರ್ಾನಾಂ ಬ್ರಾಹ್ಮಣೋ ಗುರುಃ’ ಎಂಬ ಶ್ರುತಿಯನರಿದು,
ದ್ವಿಜರು ತಾವು ಗುರುತನದ ಲಕ್ಷಣ ಬೇಡಾ.
ಗುರುವಾದಡೆ ಸಕಲವನು ಕೂಡಿಕೊಂಡಿರಬೇಡಾ.
ತಾವು ಗುರುವಾದಡೆ ಕುಲ ಅಕುಲಂಗಳುಂಟೆ ? ವರ್ಣ ಅವರ್ಣಂಗಳುಂಟೆ ?
ಎಂತು, ಕುಲದೊಳಗೆ ಇದ್ದು, ಆ ಕುಲದ ಮಾತನಾಡುವ
ದ್ವಿಜಭ್ರಮಿತರನೇನೆಂಬೆ ಸೊಡ್ಡಳಾ ? /67
ಭಕ್ತನಾದಡೆ ತನುಮನದಾಸೆಯಳಿದುಳಿದಿರಬೇಕು.
ಮಹೇಶ್ವರನಾದಡೆ ಪರಧನ ಪರಚಿಂತೆ ಪರಾಂಗನೆಯರೆಡೆಯಳಿದಿರಬೇಕು.
ಪ್ರಸಾದಿಯಾದಡೆ ಸುಖರುಚಿಯ ಗ್ರಹಣ ಮರೆದು,
ಪ್ರಸಾದ ಪುಟವಳಿಯದೆ ಉಳಿದಿರಬೇಕು.
ಪ್ರಾಣಲಿಂಗಿಯಾದಡೆ ಘಟದಾಸೆಯಂ ತೊರೆದು,
ಪ್ರಾಣಲಿಂಗದೊಳಗೆ ಬೆರಸಿ ಬೇರಿಲ್ಲದಿರಬೇಕು.
ಶರಣನಾದಡೆ ಸತಿಯ ಸಂಗವಳಿದು, ಲಿಂಗಕ್ಕೆ ತಾಯಾಗಿರಬೇಕು.
ಲಿಂಗೈಕ್ಯನಾದಡೆ ಆಪ್ಯಾಯನಮಡಸಿ,
ಸುಖದುಃಖಮಂ ತಾಳಿ ನಿಭ್ರಾಂತನಾಗಿರಬೇಕು.
ಮಾತಿನ ಮೋಡಿಯಲ್ಲಿ ಸಿಲ್ಕದು ಶಿವಾಚಾರ.
ಇಂತೀ ಷಡುಸ್ಥಲವಾರಿಗೂ ಅಳವಡದು.
ಸೊಡ್ಡಳದೇವನು, ಷಡುಸ್ಥಲಭಕ್ತಿಯನು
ಬಸವಣ್ಣಂಗೆ ಮೂರ್ತಿಯ ಮಾಡಿದನು./68
ಭಕ್ತಭಕ್ತನೆಂದು ಯುಕ್ತಿಗೆಟ್ಟು ನುಡಿವಿರಿ, ಭಕ್ತಿಸ್ಥಲವೆಲ್ಲರಿಗೆಲ್ಲಿಯದೊ ?
ಹಾಗದಾಸೆ, ಹಣವಿನಾಸೆಯುಳ್ಳನ್ನಕ್ಕ ಭಕ್ತನೆ ?
ಅಯ್ಯಾ, ಅರ್ಥಪ್ರಾಣಾಭಿಮಾನ ವಂಚನೆಯುಳ್ಳನ್ನಕ್ಕ ಭಕ್ತನೆ ?
ಹೊನ್ನು ಹೆಣ್ಣು ಮಣ್ಣು ಹಣಿದವಾಡದದನ್ನಕ್ಕ ಭಕ್ತನೆ ?
ಭಕ್ತರಿಗೆ ನಾವು ಹೇಳಿದಡೆ ದುಗುಡ ದುಮ್ಮಾನ,
ನೀನೊಮ್ಮೆ ಹೇಳಾ, ಪ್ರಳಯಕಾಲದ ಸೊಡ್ಡಳಾ./69
ಭಕ್ತರಲ್ಲದವರೊಡನೆ ಆಡದಿರು, ಆಡದಿರು.
ಅರ್ಥದಾಸೆಗೆ ದುರ್ಜನರ ಸಂಗವ ಮಾಡದಿರು, ಮಾಡದಿರು.
ಉತ್ತಮರ ಕೆಡೆನುಡಿಯದಿರು, ನುಡಿಯದಿರು.
ಮುಂದೆ ಹೊತ್ತ ಹೊರೆ ದಿಮ್ಮಿತ್ತಹುದು.
ನಿತ್ಯವಲ್ಲದ ದೈವಕ್ಕೆರಗದಿರು, ಎರಗದಿರು.
ಕರ್ತು ಸೊಡ್ಡಳನ ನೆರೆ ನಂಬು, ಡಂಬಕ ಬೇಡ./70
ಭವಿಯ ಕಳದು ಭಕ್ತನ ಮಾಡಿದ ಬಳಿಕ,
ಲಿಂಗಾಂಗಸಂಬಂಧಿಯಾಗಿ ಸರ್ವಭೋಗಂಗಳನು
ಲಿಂಗ ಮುಂತಾಗಿ ಭೋಗಿಸುತ್ತ,
ಷಡುರಸಂಗಳನು ಮುಂದೆ ಗಡಣಿಸಿಕೊಂಡು,
ಆಚಾರಾದಿ ಮಹಾಲಿಂಗಂಗಳಿಗೆ ನಿವೇದಿಸುತ್ತ,
ಗುರು ಮುಟ್ಟಿ ಶುದ್ಧಪ್ರಸಾದ, ಲಿಂಗ ಮುಟ್ಟಿ ಸಿದ್ಧಪ್ರಸಾದ,
ಜಂಗಮ ಮುಟ್ಟಿ ಪ್ರಸಿದ್ಧಪ್ರಸಾದ.
ಇಂತೀ ತ್ರಿವಿಧವ ಇಷ್ಟ ಪ್ರಾಣ ಭಾವಕ್ಕೆ ಸಂಬಂಧಿಸುತ್ತ ,
ರೂಪು ರುಚಿ ತೃಪ್ತಿಯನರಿದು, ಪ್ರಸನ್ನಪ್ರಸಾದವ ಭೋಗಿಸುವಲ್ಲಿ ,
ಭವಿದೃಷ್ಟಿ ಸೋಂಕುತ್ತಿರಲು,
ಸಂಕಲ್ಪಿಸಿ ಬಿಟ್ಟಡೆ ಪ್ರಸಾದದ್ರೋಹ, ಕೊಂಡಡೆ ಭವಿದೃಷ್ಟಿ ಕಿಲ್ಬಿಷ.
ಬಿಡಲೂ ಬಾರದು, ಕೊಳ್ಳಲೂ ಬಾರದು ನೋಡಯ್ಯ.
ಇನ್ನೇನೆಂದು ಚಿಂತಿಸಬೇಡ, ಎಲ್ಲವೂ ಮಹಾಪ್ರಸಾದದಿಂದಲೇ ಹುಟ್ಟಿದವು.
ಆ ಮಹಾಪ್ರಸಾದವನೆ ಉಂಡು ಬೆಳೆದವು, ಆ ಮಹಾಪ್ರಸಾದದಲ್ಲಿಯ ಲಯ.
ಸರ್ವವೆಲ್ಲವೂ ಶಿವನಿಂದಲೇ ಹುಟ್ಟಿದವು.
ಶಿವನೇ ಶರಣ, ಶರಣನೇ ಶಿವ ನೋಡಯ್ಯ.
ಎಲ್ಲವೂ ತನ್ನಿಂದಲಾದ ಬಳಿಕ, ಭವಿಯೆಂಬುದು ಎಲ್ಲಿಯದು ಹೇಳಾ.
ಪರಿಪೂರ್ಣ ತಾನಾದ ಬಳಿಕ, ಸಂಕಲ್ಪಿಸಲಾಗದು ನೋಡಾ,
ಮಹಾದಾನಿ ಸೊಡ್ಡಳಾ./71
ಭೃಗುಮುನೀಶ್ವರನ ಶಾಪದಿಂದ ವಿಷ್ಣು ದಶಾವತಾರವಾಗಿ ಬಂದಲ್ಲಿ,
ಶಿವಭಕ್ತಿಯನೆ ಮಾಡಿದನೆಂಬುದಕ್ಕೆ ಶಿವಧರ್ಮಪುರಾಣ ಪ್ರಸಿದ್ಧ ನೋಡಿ.
ಅದೆಂತೆಂದಡೆ : ಮತ್ಸ್ಯ ಕೂಮರ್ೊ ವರಾಹಶ್ಚ ನಾರಸಿಂಹಶ್ಚ ವಾಮನಃ |
ರಾಮೋ ರಾಮಶ್ಚ ರಾಮಶ್ಚ ಬೌದ್ಧಶ್ಚ ಕಲಿ ಕಾಹ್ವಯಃ ||
ಎಂದುದಾಗಿ, ಶಿವಲಿಂಗವ ಹರಿ ಪ್ರತಿಷ್ಠೆಯ ಮಾಡಿದ.
ಮತ್ಸ್ಯಾವತಾರದಲ್ಲಿ ಮತ್ಸ್ಯಕೇಶ್ವರದೇವರ
ಲಂಕಾಪುರಿಯಲ್ಲಿ ಶಿವಲಿಂಗವ ಹರಿ ಪ್ರತಿಷ್ಠೆಯ ಮಾಡಿದ.
ಕೂರ್ಮಾವತಾರದಲ್ಲಿ ಕೂಮರ್ೆಶ್ವರದೇವರ
ಧಾರಾವತಿಯಲ್ಲಿ ಶಿವಲಿಂಗವ ಹರಿ ಪ್ರತಿಷ್ಠೆಯ ಮಾಡಿದ.
ವರಾಹವತಾರದಲ್ಲಿ ವರಾಹೇಶ್ವರದೇವರ
ವೃಂದಗಿರಿಯಲ್ಲಿ ಶಿವಲಿಂಗವ ಹರಿ ಪ್ರತಿಷ್ಠೆಯ ಮಾಡಿದ.
ವಾಮನಾವತಾರದಲ್ಲಿ ವಾಮೇಶ್ವರದೇವರ
ವಾರಣಾಸಿಯಲ್ಲಿ ಶಿವಲಿಂಗವ ಹರಿ ಪ್ರತಿಷ್ಠೆಯ ಮಾಡಿದ.
ರಾಮಾವತಾರದಲ್ಲಿ ರಾಮೇಶ್ವರದೇವರ
ಸೇತುವಿನಲ್ಲಿ ಶಿವಲಿಂಗವ ಹರಿ ಪ್ರತಿಷ್ಠೆಯ ಮಾಡಿದ.
ನಾರಸಿಂಹಾವತಾರದಲ್ಲಿ ನರಸಿಂಹೇಶ್ವರದೇವರ
ಆವು [ಅಹೋ]ಬಳದಲ್ಲಿ ಶಿವಲಿಂಗವ ಹರಿ ಪ್ರತಿಷ್ಠೆಯ ಮಾಡಿದ
ಬೌದ್ಧಾವತಾರದಲ್ಲಿ ಬೌದ್ಧಕಲಿಕೆಯೆಂಬ ಹೆಸರ ದೇವರ
ಕಾಶಿಯಲ್ಲಿ ಶಿವಲಿಂಗವ ಹರಿ ಪ್ರತಿಷ್ಠೆಯ ಮಾಡಿದ.
ಪರಶುರಾಮಾವತಾರದಲ್ಲಿ ಪರಶುರಾಮೇಶ್ವರದೇವರ
ಕಪಿಲೆಯ ತೀರದಲ್ಲಿ ಶಿವಲಿಂಗವ ಹರಿ ಪ್ರತಿಷ್ಠೆಯ ಮಾಡಿದ.
ಕೃಷ್ಣಾವತಾರದಲ್ಲಿ ಕೃಷ್ಣೇಶ್ವರದೇವರ
ಹಿಮವತ್ಪರ್ವತದಲ್ಲಿ ಶಿವಲಿಂಗವ ಹರಿ ಪ್ರತಿಷ್ಠೆಯ ಮಾಡಿದ.
ಕಲಿಯುಗದಲ್ಲಿ ಸ್ತ್ರೀ ರೂಪಿಂದ ಅಗಲಕ್ಕೆ ನಿಂದ.
ಇಂತೀ ದಶಾವತಾರದಲ್ಲಿಯೂ ಹರಿಯೆ ಭಕ್ತ.
ಹರಿಯ ಬಿಟ್ಟು ಭಕ್ತರಿಲ್ಲ.
ಸೊಡ್ಡಳದೇವರಿಂದ ಬಿಟ್ಟು ಕರ್ತರಿಲ್ಲ ಕೇಳಿರಣ್ಣಾ./72
ಮತ್ಸ್ಯ ತಲೆಸುತ್ತಾಗಿ ಅಚ್ಚರಿಯ ಮುಡಿಯಲ್ಲದೆ.
ಕೂರ್ಮನ ಕಪಾಲ ಹರನ ಹಾರದ ಮಧ್ಯದಲ್ಲದೆ.
ನಿಮ್ಮ ಪರಿಯೆಂಬ ನರ ಹರಿಯ ಶಿರಪದದೊಳದೆ.
ನಿಮ್ಮ ಆದಿವರಹನ ಕೊಂದಂದಿನ ದಾಡೆ ಕೈಯಲ್ಲದೆ.
ನಿಮ್ಮ ತ್ರಿವಿಕ್ರಮನ ನಿಟ್ಟೆಲುವು ಖಟ್ವಾಂಗವಾಗಿ ಕೈಯಲ್ಲದೆ.
ಕೇಶವನ ಕಣ್ಣು ಸೋಮೇಶ್ವರನ ಪಾದದಲ್ಲದೆ.
ನಿಮ್ಮಗ್ಗದ ನಾರಾಯಣನ ಹೆಣನು ರುದ್ರನ ಹೆಗಲಲ್ಲದೆ.
ಸಮಸ್ತ ದೇವರ್ಕಳ ಶಿರಂಗಳು ಇತ್ತರದ ಸರಮಾಲೆ
ಬಲ್ಲಿದ ನರಹರಿಯ ತೊವಲು.
ಕರಿಗಜಾಸುರನ ತೊವಲು ಕರಿಪುಲಿದೊವಲನುಟ್ಟು ಹೊದ್ದ.
ಹಾವಿನಾಭರಣದ ತೊಟ್ಟ, ಕಾಮನ ಬೂದಿಯನಿಟ್ಟ.
ದೃಷ್ಟರಿಗೆ ದೃಷ್ಟ, ಮಹಾದಿಟ್ಟ, ಅಘಟ್ಟ ಕಟ್ಟುಗ್ರದೇವ,
ರಾವು ಭಾಪು ಸೊಡ್ಡಳಾ./73
ಮನದ ಸಂಚದೋವರಿಯೊಳಗೆ,
ಮಿಂಚಿನ ಗೊಂಚಲು ಬಳ್ಳಿವರಿಯಿತ್ತಯ್ಯಾ.
ಎನ್ನ ಕಾಯದ ಕರಣಂಗಳೊಳಗೆ,
ನಿರುಪಮಸುಖ ಸಾಧ್ಯವಾಯಿತ್ತು.
ಬಯಸುವ ಬಯಕೆ ಕೈಸಾರಿತ್ತು, ಅರಸುವ ಅರಕೆ ನಿಂದಿತ್ತು.
ಆಹಾ, ಕರತಲಾಮಲಕವಾಯಿತ್ತಲ್ಲಾ !
ಸತ್ಯಶರಣರ ದರುಶನ ಏನ ಮಾಡದೊ ?
ಮಹಾದಾನಿ ಸೊಡ್ಡಳನ ಶರಣ ಪ್ರಭುದೇವರ
ಶ್ರೀಪಾದವ ಕಂಡು, ಬದುಕಿದೆನಯ್ಯಾ./74
ಮನದೊಡೆಯ ಮನೆಗೆ ಬಹಡೆ,
ಮನ ಮನದಲಚ್ಚೊತ್ತಿದಂತಿಪರ್ುದು ನೋಡಯ್ಯಾ.
ಮನಕ್ಕೆ ಮನೋಹರ, ಚಿತ್ತಕ್ಕೆ ಮನೋಹರವಾಗಿಪರ್ುದಯ್ಯಾ.
ಮಹಾದಾನಿ ಸೊಡ್ಡಳನ ಬರವಿಂಗೆ,
ಶುಭಸೂಚನೆ ಮೆಯಿದೋರುತ್ತಿದೆ.
ಪ್ರಭುದೇವರ ಬರವನೀಗಳೆ ತೋರುವೆನಯ್ಯಾ ಸಂಗನಬಸವಣ್ಣಾ./75
ಮುರಿಸಬೇಕು ಹೊಲೆಯರ ಕೈಯಿಂದವರ ಮನೆಯನು,
ಕೆರಿಸಬೇಕು ಮಂಡೆಯನೇಳು ಪಟ್ಟಿಯ ಮಾಡಿ,
ಕುಳ್ಳಿರಿಸಬೇಕು ಕತ್ತೆಯ ನಡುಬೆನ್ನ ಮೇಲೆ, ಹುಟ್ಟಿಗೆಯನುಡಿಸಬೇಕು,
ಹಳೆಮರವ ಸತ್ತಿಗೆಯ ಹಿಡಿಯಬೇಕವಗೆ,
ನಿಟ್ಟೊರಸಬೇಕು ನೊಸಲಕ್ಷರವ,
ನಾಲಿಗೆಯ ಸರ್ರಸರ್ರನೆ ಸೀಳಬೇಕು,
ಎನ್ನೊಡೆಯ ಮಹಾಮಹಿಮ ಸೊಡ್ಡಳಂಗೆ
ಅನ್ಯದೈವ ಸರಿಯೆಂಬ ಕುನ್ನಿಮಾನವನ./76
ಲಿಂಗದೇವನೆ ಕರ್ತ, ಶಿವಭಕ್ತನೆ ಶ್ರೇಷ್ಠ.
ಕೊಲ್ಲದಿಪರ್ುದೆ ಧರ್ಮ.
ಅಧರ್ಮದಿಂದ ಬಂದುದನೊಲ್ಲದಿಪರ್ುದೆ ನೇಮ.
ಅಳುಪಿಲ್ಲದಿಪರ್ುದೆ ವ್ರತ.
ಇದೇ ಸತ್ಪಥ, ಉಳಿದುದೆಲ್ಲ ಮಿಥ್ಯವೆಂದೆ ಕಾಣಾ,
ದೇವರಾಯ ಸೊಡ್ಡಳಾ./77
ಲಿಂಗನಾಮ, ಅನಂಗ ಅನಾಮಯ, ನೋಡುವರಿಗೆ ವಿರಾಮ.
ಕರಗಿದವನು ಮರಳಿ ಕರಗಲಿಲ್ಲ.
ಉರಗಾಭರಣನು ಉಣಲಿಕ್ಕಲಿಲ್ಲ , ಉಡಲಿಕ್ಕಲಿಲ್ಲ.
ಅಂದು ಹಸುಬೆಯ ತೊಡಿಸಿದ ಹೊಸಬೆ ನಾನಯ್ಯಾ.
ಆ ದೇಶ ಈ ದೇಶ ಸರಮಂಡಲವೆನಗೇಕಯ್ಯಾ.
ರಮಹೆಣ ರುಂಡಮಾಲೆಯವನ ಮುಟ್ಟಿ,
ಲಿಂಗ ಮನ ಮುಟ್ಟಿ, ಶಿಷ್ಯ ಆಚಾರ ಮುಟ್ಟಿ ಜಂಗಮವಯ್ಯ.
ಆ ಜಂಗಮ ಸತ್ತು ಚಿತ್ತು ಲಿಂಗ ಆನಂದಗುರು.
ಹೃದಯದ ಮಹಾಲಿಂಗವೆ ಇಷ್ಟಲಿಂಗವಾಗಿ,
ಶರಣನಲ್ಲಿ ಅಚ್ಚೊತ್ತಿದ ಮುದ್ರೆಯೆಂದೆನಿಸಿತ್ತಯ್ಯಾ.
ಮುಡುಹು ಮುಂಬಲ್ಲು ಕುರುಳು ಅಂಗುಲಿ ಗಂಟಲು
ಕೈ ಬಾಯ್ಗೆ ಬಂದುಲಿವುಲಿವ,
ಇಷ್ಟು ಮುಪ್ಪಡಸಿ, ರಜೆ ರುಣ, ನಡೆ ನುಡಿ ದಟ್ಟವಾಗಿ.
ಸರ್ವಜಯಾಂಕುರ ನಷ್ಟ ನಾಲ್ಕು ಕೆಸರುಗಲ್ಲಿಂದೆ, ಈ ರೂಪುರಿದ.
ಅಚ್ಚಬೆಟ್ಟಗರಳಗ್ರೀವತ್ತುತಳಾಯಳ ಸಂಧಿಯಿಂದೆದವಂಗಡಚರ್ುಮುವಿಲ್ಲ.
ಹೆಣ್ಣಿಂಗೊಡೆತನವಿಲ್ಲೆಂ[ದು] ಬಣ್ಣಿಗಿದೆನೆಯ ಮಾಡಿ,
ಕೊರಳ ನೀನರಿಯಯ್ಯಾ, ದೇವರಾಯ ಸೊಡ್ಡಳಾ./78
ವಚನದ ರಚನೆಯ ನುಡಿವ ಬರುಬಾಯ ಭುಂಜಕರೆಲ್ಲ
ಭಕ್ತರಪ್ಪರೆ ಅಯ್ಯಾ ?
ಮಾಡುವ ದಾಸೋಹದಿಂದ ಭಕ್ತಂಗೆ ಅವಗುಣಂಗಳಿಲ್ಲದಿರಬೇಕು.
ಕೋಪದ ಕೆಚ್ಚಂ ಕಡಿದು, ಲೋಭಲಂಪಟಮಂ ಕೆದರಿ,
ಮೋಹದ ಮುಳ್ಳುಮೊನೆಯ ತೆಗೆದು, ಮದದಚ್ಚಂ ಮುರಿದು,
ಮಚ್ಚರಿಪ ಸರ್ಪನಂ ಸಮತೆಯೆಂಬ ಗಾರುಡದಲ್ಲಿ ಗಾರುಡಿಸಿ,
ಕರಣಾದಿ ಗುಣಂಗಳಿಚ್ಛೆಗೆ ಹರಿಯಲೀಯದೆ,
ವಿಶ್ರಮಿಸಿಪ್ಪ ಭಕ್ತನ ಕಾಯವೆ ಕೈಲಾಸ.
ಅಂತಲ್ಲದೆ ಬರಿಯಮಾತಿಂಗೆ ಮಾತನೆ ಕೊಟ್ಟು,
ತಾನಾಡಿದುದೆ ನೆಲೆಯೆಂಬಾತ ಭಕ್ತನೆ ? ಅಲ್ಲ, ಉಪಜೀವಿ.
ಹೇಮದಿಚ್ಛೆಗೆ ಹರಿದು ಕಾಮರತಿಗಳುಪವ,
ಕೋಪದುರಿಯ ಹೊದ್ದುಕೊಂಬ, ಲೋಭಮೋಹದ ಕೆಚ್ಚ ಕೂಡಿಕೊಂಡು,
ನರಕದೊಳಗೋಲಾಡುವಾತ ಭಕ್ತನೆ ? ಅಲ್ಲ.
ಆದಿಯಲ್ಲಿ ನಮ್ಮವರು ಹೊನ್ನು ಹೆಮ್ಣು ಮಣ್ಣು,
ಈ ತ್ರಿವಿಧವ ಬಿಟ್ಟಿದರೆ ? ಇಲ್ಲ.
ಆವ ತಲೆಯೆತ್ತಲೀಯರಾಗಿ, ಅನ್ಯಸಂಗವ ಹೊದ್ದರು.
ಭವಿಮಿಶ್ರವ ಮುಟ್ಟರು, ಹಮ್ಮುಬಿಮ್ಮುಯಿಲ್ಲದಿಪ್ಪ ಇಂತಪ್ಪರೆ ನಮ್ಮ ಭಕ್ತರು.
ನಮ್ಮ ಭಕ್ತರ ನೆಲೆಯ, ಮಹಾದಾನಿ ಸೊಡ್ಡಳಾ,
ನೀನೆ ಬಲ್ಲೆಯಲ್ಲದೆ, ಉಳಿದ ಜಡಜೀವಿಗಳೆತ್ತ ಬಲ್ಲರು ?/79
ವಿಪಿನದೊಳು ಮದಕರಿಯ ಹಿಂಡು ಆನಂದಲೀಲೆಯೊಳಾಡುತ್ತಿರಲು,
ಕೇಸರಿ ಬರಲು, ಮದಕರಿಗಳೆಲ್ಲಾ ಕೆದರಿ ಓಡುವ ತೆರನಂತೆ,
ಸಾಕಾರ ಸೊಡ್ಡಳಾ, ನಿಮ್ಮ ಶರಣ ಪ್ರಭುದೇವರು ಬರಲೊಡನೆ
ಹರೆದುದಯ್ಯಾ ನೆರೆದ ಶಿವಗಣಂಗಳು./80
ವಿಭೂತಿ ರುದ್ರಾಕ್ಷಿ ಲಿಂಗ ಲಾಂಛನಧಾರಿಯ ಕಂಡಡೆ,
ತನುಮನ ದಿಟವೆಂಬೆ.
ಅಲ್ಲದ ಸಟೆಗಳ, ಲೋಭಿಗಳ ಕಂಡು, ಮತ್ತೆ ಅಲ್ಲಿ ಅಲ್ಲವೆಂಬೆ.
ಅಗ್ನಿ ರವಿ ಶಶಿ ನಿನ್ನಕ್ಷಿಯೆಂದಡೆ, ಆನು ಭ್ರಮೆಗೊಂಡೆ.
ವಸುಧೆ ನಿನ್ನ ತನುವೆಂದಡೆ, ಕಠಿಣವ ಕಂಡಂತೆಂಬೆ.
ಸಾಗರ ನಿನ್ನ ತನುವೆಂದಡೆ, ಹೆಚ್ಚುಕುಂದ ಕಂಡಂತೆಂಬೆ.
ವಾಯು ನಿಮ್ಮ ತನುವೆಂದಡೆ, ದಿಕ್ಪಾಲಕರ ಕಂಡಂತೆಂಬೆ.
ಗಗನ ನಿಮ್ಮ ತನುವೆಂದಡೆ, ಬಯಲ ಕಂಡಂತೆಂಬೆ.
ಆತ್ಮ ನಿಮ್ಮ ತನುವೆಂದಡೆ, ಜನನ ಮರಣವ ಕಂಡಂತೆಂಬೆ.
ನ ಚ ಭೂಮಿ ನ ಚ ರವಿ ನ ಚ ತೇಜ ನ ಚ ವಾಯು
ನ ಚ ಗಗನಂ ನ ಚ ರವಿ ನ ಚ ಶಶಿ ನ ಚ ಆತ್ಮ ||
ಎಂದುದಾಗಿ,
ಭಿನ್ನರೂಪುಗಳ ನಿನ್ನ, ನಿಜವೆನ್ನೆ ನನ್ನೆ ಸೊಡ್ಡಳಾ. /81
ವಿಷ್ಣು ಪರಿಪೂರ್ಣನಾದಡೆ, ಸೀತೆ ಕೆಟ್ಟಳೆಂದು ಅರಸಲೇಕೊ ?
ವಿಷ್ಣು ಪರಿಪೂರ್ಣನಾದಡೆ, ವಟಪತ್ರದ ಮೇಲೆ ಕುಳಿತು,
ಜಲಪ್ರಳಯದಲ್ಲಿ ಅಡಗಿದನೆಂಬ ಮಾತೇಕೋ?
ವಿಷ್ಣುವಿನ ಬಾಣ ಸಮುದ್ರಕಡ್ಡಕಟ್ಟಿಯಾದಡೆ,
ಕಪಿ ಕೋಡಗವ ಹಿಡಿತಂದು,
ಬೆಟ್ಟಗಟ್ಟಂಗಳ ಹಿಡಿತಂದು, ಸೇತುವೆಯ ಕಟ್ಟಲೇಕೋ?
ವಿಷ್ಣು ಪರಿಪೂರ್ಣನಾದಡೆ, ರಾವಣನ ವಧೆಗಂಜಿ,
ಧರೆಯ ಮೇಲೆ ಲಿಂಗಪ್ರತಿಷ್ಠೆಗಳ ಮಾಡಿ ಪೂಜಿಸಲೇಕೋ ?
ಇಂತು ಬ್ರಹ್ಮಾಂಡದೊಳಗೆ ಸಿಕ್ಕಿ.
ಸತ್ತುಹುಟ್ಟುತ್ತಿಹ ದೇವತೆಗಳು ಒಬ್ಬರೂ ಪರಿಪೂರ್ಣರಲ್ಲ.
ಮಹಾದಾನಿ ಸೊಡ್ಡಳನೊಬ್ಬನೆ ಪರಿಪೂರ್ಣನು./82
ವೇದಂಗಳು ನಿಜವ ಬಲ್ಲಡೆ, ವಟ್ಟಂಕುರರ ಮರೆಯಬೇಕಲ್ಲದೆ,
ಚನ್ನಯ್ಯ ಕಕ್ಕಯ್ಯಗಳ ಮೆರೆಯಲೇಕೆ ?
ಶಾಸ್ತ್ರಂಗಳು ಸತ್ಯವ ನುಡಿದಡೆ, ಶಾಸ್ತ್ರಂಗಳ ಮಾತಿಂಗೆ ಹೇಸಿ,
ಕಿರಾತಬೊಮ್ಮಣ್ಣಂಗಳ ಮೆರೆಯಲೇಕೆ ?
ಆಗಮಂಗಳು ಆಚಾರವನರಿದಡೆ, ಆಗಮಂಗಳ ಮೆರೆಯದೆ,
ಕೆಂಬಾವಿಯ ಭೋಗಣ್ಣಗಳ ಹಿಂದುರುಳುತ್ತ ಹೋಗಿ ಮರೆಯಲೇಕೆ ?
ಇಂತೀ ವೇದಶಾಸ್ತ್ರಾಗಮಂಗಳು ಶಿವನಾದಿಯಂತವನರಿದಡೆ,
ಸಾಮವೇದಿಗಳು ಶ್ವಪಚಯ್ಯಂಗೆ ಶಿಷ್ಯರಾಗಲೇಕೆ ?
ವಾದಿಸಿದರೆಲ್ಲರು ಪ್ರತಿವಾದಿಗಳಾದರು ನಿಮ್ಮಂತವನರಿಯದೆ.
ಅಭೇದ್ಯವು, ಘನಕ್ಕೆ ಘನವು, ಶಂಭು ಸೊಡ್ಡಳಾ./83
ವೇದದವರನೊಲ್ಲದೆ ನಮ್ಮ ಮಾದಾರ ಚನ್ನಯ್ಯಂಗೊಲಿದ.
ಶಾಸ್ತ್ರದವರನೊಲ್ಲದೆ ಶಿವರಾತ್ರಿಯ ಸಂಕಣ್ಣಂಗೊಲಿದ.
ಆಗಮದವರನೊಲ್ಲದೆ ತೆಲುಗುಜೊಮ್ಮಯ್ಯಂಗೊಲಿದ.
ಪುರಾಣಕರ್ಮಿಗಳೆಂಬ ವಿಶಿಷ್ಟಬ್ರಹ್ಮರನೊಲ್ಲದೆ ಉದ್ಭಟಯ್ಯಂಗೊಲಿದ.
ಅಣ್ಣ ಕೇಳಾ ಸೋಜಿಗವ !
ದಾಸದುಗ್ಗಳೆಯರಿಗೊಲಿದ ಮುಕ್ಕಣ್ಣ ಸೊಡ್ಡಳ,
ಹಾರುವಣ್ಣಗಳಿಗೆ ಹೇಸಿ ಕದವನಿಕ್ಕಿಕೊಂಡನು./84
ಶರೀರವೆಂಬ ಹಸಿಯ ಮಣ್ಣು,
ಅದು ಹಿರಿಯತನಕ್ಕಿಕ್ಕಿದ ದುರ್ಗಧೂಳಿ,
ಗೊಂಟಿ ಪೋಪುದು ಮಾಣ್ಬುದೆ ?
ಜವನ ದಾಳಿ ಒಪ್ಪುದಯ್ಯಾ.
ಹರನ ವಿಶ್ವಾಸ ತಪ್ಪಲೊಡನೆ,
ನರನ ವಿಧಿಯ ನಾನೆಂಬೆ ಸೊಡ್ಡಳಾ./85
ಶಿಖಿ ಬ್ರಾಹ್ಮಣ, ನಯನ ಕ್ಷತ್ರಿಯ, ನಾಶಿಕ ಬಣಜಿಗ, ಅಧರ ಒಕ್ಕಲಿಗ,
ಕರ್ಣ ಗೊಲ್ಲ, ಕೊರಳು ಕುಂಬಾರ, ಬಾಹು ಪಂಚಾಳ, ಅಂಗೈ ಉಪ್ಪಾರ,
ನಖ ನಾಯಿಂದ, ಒಡಲು ಡೊಂಬ, ಬೆನ್ನು ಅಸಗ, ಚರ್ಮ ಬೇಡ,
ಪೃಷ್ಠಸ್ಥಾನ ಕಬ್ಬಿಲಿಗ, ಒಳದೊಡೆ ಹೊಲೆಯ,
ಮೊಣಕಾಲು ಈಳಿಗ, ಕಣಕಾಲು ಸಮಗಾರ,
ಮೇಗಾಲು ಮಚ್ಚಿಗ, ಚಲಪಾದವೆಂಬ ಅಂಗಾಲು ಶುದ್ಧ ಮಾದಿಗ ಕಾಣಿರೊ!
ಇಂತೀ ಹದಿನೆಂಟುಜಾತಿ ತನ್ನಲಿ ಉಂಟು.
ಇವು ಇಲ್ಲಾಯೆಂದು ಜಾತಿಗೆ ಹೋರುವ ಅಜ್ಞಾನಿಗಳ
ನಮ್ಮ ಸೊಡ್ಡಳದೇವರು ಮೆಚ್ಚನಯ್ಯಾ./86
ಶಿವನ ಮಹಿಮೆಯ ಘನವನೇನೆಂಬೆನಯ್ಯ!
ಉನ್ನತವಾದ ಮಹಾಗಂಗೆಯ ಜಟಾಗ್ರದಲ್ಲಿ ಧರಿಸಿದನು.
ಚರಣಕಮಲದ ಹೆಬ್ಬೆರಳಿಂದೌಂಕಲು,
ರಾವಣಾಸುರನು ಮೂಛರ್ಿತನಾಗಿ ಬಿದ್ದನು.
ಒಂದು ಬಾಣದಿಂದ ತ್ರಿಪುರವನು ಉರುಹಿದನು.
ನೊಸಲಕಣ್ಣ ಅಗ್ನಿಯಿಂದ ಮನ್ಮಥನ ದಹಿಸಿದನು.
ತ್ರಿಶೂಲದಿಂದ ಅಂಧಕಾಸುರನ ಇರಿದು ಕೊಂದನು.
ಅದೆಂತೆಂದಡೆ : ಜಲೌಘಕಲ್ಲೋಲತರಂಗತುಂಗಗಂಗಾವೃತಾ ಯೇನ ಜಟಾಗ್ರಭಾಗೇ
ಪಾದಾಂಬುಜಾಂಗುಷ್ಠನಿಪೀಡನೇನ ಪಾತ ಲಂಕಾಧಿಪತಿವರ್ಿಸಂಜ್ಞಾಃ |
ಏಕೇನ ದಗ್ಧಂ ತ್ರಿಪುರಂ ರೇಣಕಾಯೋ ಲಲಾಟಾಗ್ನಿಹುತಾಶನೇನ |
ಭಿನ್ನೋದಕಃ ಶೂಲವರೇಣ ಏನಕಸ್ತೋ ನ ಸಾರ್ಥಂ ಕುರುತೇ ವಿರೋಧಂ |
ಇಂತೆಂದುದಾಗಿ, ಶಿವನೊಡನೆ ವೈರವ ಮಾಡುವವರಾರುಂಟು ?
ಭಾಪು, ಭಾಪು ನಿನಗೆ ಸರಿಯುಂಟೆ, ದೇವರಾಯ ಸೊಡ್ಡಳಾ ?/87
ಶಿವಯೆಂದೋದದವನ ಓದು, ಗಿಳಿಯೋದು.
ಶಿವ ನಿಮ್ಮನಾರಾಧಿಸದವನ ಮನೆ, ಕೆಮ್ಮನೆ.
ಶಿವ ನಿಮ್ಮ ನೋಡದವನ ಕಣ್ಣು, ಹೀಲಿಯ ಕಣ್ಣು.
ಶಿವ ನಿಮ್ಮ ಹಾಡದವನ ಬಾಯಿ, ಕನ್ನಡದ ಬಾಯಿ.
ಶಿವ ನಿಮ್ಮ ಹೊಗಳದವನ ಬಾಯ ನಾಲಗೆ,
ಬಚ್ಚಲ ತಂಪಿನ ಜವುಗಿನಲ್ಲಿ ಹುಟ್ಟಿದ ಜಿಗುಳಿಯಯ್ಯಾ.
ಶಿವ ನಿಮಗೆರಗದ ಕರ್ಮಿ, ಶೂಲದ ಹೆಣ.
ಶಿವ ನಿಮ್ಮ ನೆನೆಯದವನ ದೇಹ, ಸಂದೇಹ.
ಶಿವ ನಿಮ್ಮ ಭಕ್ತನಲ್ಲದವನ ಸಿರಿಯು,
ವಿದ್ಯೆ ಬುದ್ಧಿ ಕುಲ ಧನ ಶಬ್ದದ ಮೇಲಣ ತೊಡಿಗೆ. ಅಂತವನೇತಕ್ಕೆ ಬಾತೆ ?
ಇದು ಕಾರಣ, ಭವಘೋರಕ್ಕಾರದೆ ಶರಣುಹೊಕ್ಕೆನಯ್ಯಾ.
ಸೊಡ್ಡಳಾ, ಇನ್ನು ಭವಬಂಧನ ನಮಗಿಲ್ಲವಯ್ಯಾ./88
ಶಿವಶಿವಾ, ಬೇಡಿಕೊಳ್ಳರೆ,
ಅಮೃತಮಥನದಲ್ಲಿ ದೈನ್ಯವ ಮಾಡಿದವರನುಳುಹಿದ ದೇವನ ?
ಶಿವಶಿವಾ, ಬೇಡಿಕೊಳ್ಳರೆ,
ದಕ್ಷಾಧ್ವರದಲ್ಲಿ ದೈನ್ಯವ ಮಾಡಿದವನುಳುಹಿದ ದೇವನ ?
ಶಿವಶಿವಾ, ಬೇಡಿಕೊಳ್ಳರೆ,
ಅಜಹರಿ ಅವತಾರಂಗಳ ಸಂಹಾರ ಮಾಡಿದ ದೇವನ?
ಶಿವಶಿವಾ, ಬೇಡಿಕೊಳ್ಳರೆ,
ಅಖಿಳಬ್ರಹ್ಮಾಂಡಂಗಳ ಹೆತ್ತ ತಂದೆ,
ನಮ್ಮ ಮಹಾದಾನಿ ಸೊಡ್ಡಳದೇವನ ?/89
ಶ್ರುತಿತತಿಗಳ ಶಿರದ ಮೇಲೆ ಒಪ್ಪುತಿಪ್ಪ
ಅತ್ಯತಿಷ್ಠದ್ದಶಾಂಗುಲನ ಕಂಡೆನಯ್ಯಾ.
ಅಣುವಿಂಗೆ ಅಣು, ಮಹತ್ತಿಂಗೆ ಮಹತ್ತಾದ
ತ್ರಿಣಯನ ಮೂರ್ತಿಯ ಕಂಡೆನಯ್ಯಾ.
ವಾಙ್ಮನಕ್ಕಗೋಚರವಾದ ನಿರವಯ ಬ್ರಹ್ಮವ ಕಂಡೆನಯ್ಯಾ.
ನಿತ್ಯನೇಕೋರುದ್ರನದ್ವಿತೀಯನ ಕಂಡೆನಯ್ಯಾ.
ಎನ್ನ ಕರಸ್ಥಲದೊಳಗೆ ಮಹಾದಾನಿ ಸೊಡ್ಡಳನ ಕಂಡೆನಯ್ಯಾ. /90
ಸಂಸಾರ ಸಂಸಾರ, ಕಾಳಗತ್ತಲೆ ಕಾಳಗತ್ತಲೆ.
ಕರ ಹಿರಿದು ಕರ ಹಿರಿದು, ಎಚ್ಚತ್ತಿರು ಎಚ್ಚತ್ತಿರು ಜ್ಞಾನಧನಕ್ಕೆ.
ಎಚ್ಚತ್ತಿರು ಎಚ್ಚತ್ತಿರು ಇಂದ್ರಿಯಗಳ್ಳರಿಗೆ.
ಕಾಮಃ ಕ್ರೋಧಶ್ಚ ಲೋಭಶ್ಚ ದೇಹೇ ತಿಷ್ಠಂತಿ ತಸ್ಕರಾಃ |
ಜ್ಞಾನರತ್ನಾಪಹಾರಾಯ ತಸ್ಮಾತ್ ಜಾಗ್ರತ ಜಾಗ್ರತ.
ಜನ್ಮ ದುಃಖಂ ಜರಾ ದುಃಖಂ ನಿತ್ಯಂ ದುಃಖಂ ಪುನಃ ಪುನಃ |
ಸಂಸಾರಸಾಗರೋ ದುಃಖಂ ತಸ್ಮಾತ್ ಜಾಗ್ರತ ಜಾಗ್ರತ ||
ಎಂದುದಾಗಿ,
ಸಲೆ ಜೀವಿತಗೊಂಡ ಸೊಡ್ಡಳ ಆಳು ಭಲಾ ಭಲಾ ಎನ್ನುತ್ತಿರಾ./91
ಸಜ್ಜನನಾದ ಶರಣನ ಮುಂದೆ, ಮಜ್ಜನಕ್ಕೆರೆವೆನಯ್ಯಾ ಶಿವಲಿಂಗಕ್ಕೆ.
ದುರ್ಜನರೊಡನೆ ಹೋಗಿ,
ಅನ್ಯದೈವಕ್ಕೆ ಸಾಹಿತ್ಯ ಕೆಳಗಾಗಿ ಬೀಳುವರು ನೋಡಾ.
ಹಾದರಕ್ಕೆ ಹುಟ್ಟಿದವರಿಗಲ್ಲದೆ
ಇಂತಹ ಬುದ್ಧಿಯಿಲ್ಲ ಕಾಣಾ, ದೇವರಾಯ ಸೊಡ್ಡಳಾ./92
ಸಾಗರ ಘನವೆಂದಡೆ, ಧರೆಯೊಳಗಡಗಿತ್ತು.
ಧರೆ ಘನವೆಂದಡೆ, ನಾಗೇಂದ್ರನ ಫಣಾಮಣಿಯ ಮೇಲಡಗಿತ್ತು.
ನಾಗೇಂದ್ರನ ಘನವೆಂದಡೆ, ದೇವಿಯರ ಕಿರುವೆರಳಿನ ಮುದ್ರಿಕೆಯಾಯಿತ್ತು.
ಅಂಥ ದೇವಿಯ ಘನವೆಂದಡೆ, ಶಿವನಧರ್ಾಂಗಿಯಾದಳು,
ಶಿವ ಘನವೆಂದಡೆ,
ಬಾಣನ ಬಾಗಿಲ ಕಾಯ್ದ, ನಂಬಿಯ ಹಡಪವ ಹಿಡಿದ.
ಇದು ಕಾರಣ, ಸೊಡ್ಡಳಾ ನಿಮ್ಮ ಭಕ್ತರೇ ಘನ./93
ಸುರರೆಲ್ಲಾ ಮೇಣು ಸತ್ಯಕವಪ್ಪ ದ್ವಿಜರು ತಿರಿಯಕ್ಕಾಗಿ
ವಿಭೂತಿಯ ಧರಿಸಿ ಇಹವರು, ನಿಷ್ಟಿಯರೆಲ್ಲಾ ಮೇಣು ಪಟ್ಟವರ್ಧನರು.
ಬಟ್ಟಿತ್ತಾಗಿಯೆ ಬೊಟ್ಟನಿಟ್ಟು ಇಹವರು,
ಸಿದ್ಧಾಯವ ತೆತ್ತು ಬಿತ್ತಿಯೆಂಬ ಒಕ್ಕಲಿಗರಾದವರು.
ಅರ್ಧಚಂದ್ರಾಕೃತಿಯ ಗಂಧದವರು ಕೀಳುಜಾತಿಗಳಯ್ಯಾ.
ನೀಳಗಂಧದವರೆಂದು ಹೇಳುವದು ಶೈವದೊಳಗಣ ವಿಭೂತಿಯ ಕಲ್ಪ.
ಒಂ ತ್ರಿಪುಂಡ್ರಂ ಸುರವಿಪ್ರಾಣಾಂ ವರ್ತುಳಂ ನೃಜವೈಶ್ಯಯೊಃ |
ಅರ್ಧಚಂದ್ರಂತು ಶೂದ್ರಾಣಾಂ ಅನ್ಯೇಷಾಮೂಧ್ರ್ವ ಪುಂಡ್ರಕಂ ||
ಎಂಬ ವಚನವಿಡಿದು, ಬತ್ತಲೆಗೊಂಬ ಮಾತಿನಲ್ಲಿ, ಮೆಚ್ಚ ಸೊಡ್ಡಳ./94
ಸೃಷ್ಟಿಪಾಲಕ ಪ್ರತಿಕೂಲವಾದಡೆ, ಸಿಟ್ಟುಗುಟ್ಟಿ ಚಿವುಟನೆ ಬ್ರಹ್ಮನ ಶಿರವ ?
ಅವನಿಗೊಡೆಯ ನಾನೆಂದಡೆ, ಬಂಧನದಲ್ಲಿರಿಸನೆ ಬಂಟನಿಂದ ಬಲಿಯ ?
ಜಗವಂದ್ಯವಿರಹಿತನಾಗಿ, ಭೂಮಿಯನಳದು ಕೊಂಡಡೆ,
ಕಾಲಬಿದ್ದು ಕಾಲಲ್ಲಿರಿಸನೆ ಹರಿಯೆ ?
ಹುಟ್ಟಿಸುವನಯ್ಯಾ, ಕುಸಕುಳಿಯೊಳಗೆ ದುಜರ್ಿವಿಗಳ ಮಾಡಿ.
ಕತ್ತಿ ಕೌಚಿಯಲ್ಲಿ ಕುಸುರಿದರಸಿಕೊಂಡು,
ಬಟ್ಟಬಯಲಲ್ಲಿ ಹೋದರು,
ಸೃಷ್ಟಿಗೀಶ್ವರ ಕರ್ತ ಸೊಡ್ಡಳನನರಿಯದನ್ಯಾಯಿಗಳು./95
ಸೊಣಗಂಗೆ [ಖ]ಂಡವ ಚೆಲ್ಲುವ ತೆರನಂತೆ,
ಸಂಸಾರಿಗೆ ಸಂಸಾರವ ಚೆಲ್ಲದೆ, ತೋರುವನೆ ಶರಣಪಥಂಗಳ ?
ತೋರುವನೆ ಭಕ್ತಿಪಥಂಗಳ ?
ಅದೆಂತೆಂದಡೆ : ಅಶ್ರುತಿಃ ಕರ್ಣಪೂರಂ ಚ ಶ್ರುತೋ ಧಮರ್ೊಪ್ಯರೋಚಕಃ |
ಚರ್ಮಖಂಡನ ಭಕ್ಷಾಣಾಂ ಶ್ವಾನಮನ್ನ ಮರೋಚಕಂ ||
ಎಂದುದಾಗಿ, ಸೊಡ್ಡಳದೇವ ತಾನೊಲ್ಲದವರ
ಭವದುಃಖ ದೋಣೆಯಲೂಡುವ./96
ಹಂದಿಯಾಗದೆ, ಸೊಣಗನಾಗದೆ, ಮೃಗನಾಗದೆ, ಪಕ್ಷಿಯಾಗದೆ,
ಕುರಿ ಬಳ್ಳು ಕತ್ತೆಯಾಗದೆ, ಚೆಂದವಾಯಿತ್ತು [ಚೆ]ಂದವಾಯಿತ್ತು .
ಹಿಂದಣ ಜನ್ಮದ ಪರಿಯಲ್ಲಿ
ಮಾನವನಾಗಿ ಹುಟ್ಟಿ, [ಚೆಂ]ದವಾಯಿತ್ತು [ಚೆಂ]ದವಾಯಿತ್ತು.
ಚೆಂದವಾದ ದೇಹ ವಿಚ್ಛಂದವಾಗದ ಮುನ್ನ,
ತಂದೆ ಸೊಡ್ಡಳಂಗೆ ಶರಣೆಂದು ಬದುಕಿದೆನಯ್ಯಾ./97
ಹದನರಿದು ಹರಗುವ, ಬೆದೆಯರಿದು ಬಿತ್ತುವ,
ಸಸಿ ಮಂದವಾದಡೆ ತೆಗೆವನಯ್ಯಾ.
ಒಂದೊಂದ ಹೊಕ್ಕು ಬೆಳವಸಿಯ ತೆನೆ ಮೆಲುವನಯ್ಯಾ.
ಕೊಯಿವನಯ್ಯಾ, ಕೊರೆವನಯ್ಯಾ, ಒಕ್ಕುವನಯ್ಯಾ, ತೂರುವನಯ್ಯಾ.
ಲೋಕಾದಿಲೋಕಂಗಳ ಹಗೆಯನಿಕ್ಕುವನಯ್ಯಾ, ದೇವರಾಯ ಸೊಡ್ಡಳ./98
ಹರನ ಡಿಂಗರಿಗ ದಧೀಚಿಯ ಶಾಪದಿಂದ
ಕರ ಬೇವಂತೆ ಬೆಂದರಾಗಳೆ ಹುರುಡಿಸುವರು.
ಇದುಕಾರಣ, ದಿಟದಿಟ ಗರುಡಧ್ವಜದೇವನೆಂದೆಂಬಿರಿ.
ಗರುಡವಾಹನನಲ್ಲದೆ ಬೇರೆರಡನೆಯ ದೇವರಿಲ್ಲೆಂದಡೆ,
ಹರಿದು ಕಳೆದರು ವ್ಯಾಸನ ತೋಳೆರಡ.
ನಂದಿ ಮಹಾಕಾಳರು ಬಂದು,
ಮನಸಿನ ಹೊಲಸುಗಳು ನಿಃಕರಡರರಿವರೆ ಶಿವನ ನಿಲುವನು ?
ಹರನ ಹೋಲುವ ದೈವರೊಳರೆ, ನಮ್ಮ ಪಂಚವದನ ಸೊಡ್ಡಳಂಗೆ ?/99
ಹರಿಬ್ರಹ್ಮಾದಿ ದೇವರ್ಕಳ ಸಲಹುವರೆ, ಮಾತಾ ಪಿತರುಂಟು.
ಅಜಾತಲಿಂಗವ ಸಲಹುವರೆ,
ಮಾತಾಪಿತರಿಲ್ಲವೆಂದು ಅಮ್ಮವ್ವೆ ಮರುಗುತ್ತಿರಲು,
ಅಮ್ವವ್ವೆಯರ ಮರುಕಕ್ಕೆ ಮೆಚ್ಚಿ ಶಿಶುವಾದನು.
ಅಮ್ವವ್ವೆ ಮೊಲೆಯನುಣ ಕಲಿಸಿದಳು.
ಕೊಡಗೂಸು ಹಾಲನಾರೋಗಿಸ ಕಲಿಸಿದಳು.
ಚೋಳಿಯಕ್ಕ ಸಕಲದ್ರವ್ಯಂಗಳು, ಅಪವಿತ್ರಗಳೆಂದವ ಮುಟ್ಟಲೀಯದೆ,
ತನ್ನ ಪ್ರಸಾದವನಾರೋಗಿಸಲು ಕಲಿಸಿದಳು.
ಇಂತೀ ಪ್ರಸಾದವಲ್ಲದೆ ಅನರ್ಪಿತವ ಮುಟ್ಟಲೊಲ್ಲನೆಂದು,
ಸಂಗನಬಸವಣ್ಣನು ಜಂಗಮಪ್ರಸಾದವ ಲಿಂಗಕ್ಕೆ ಸಮರ್ಪಿಸಿ,
ಆ ಪ್ರಸಾದವ ಸ್ವೀಕರಿಸಿ ಪ್ರಸಾದಿಯಾದ
ಕಾಣಾ, ದೇವರಾಯ ಸೊಡ್ಡಳಾ./100
ಹಳೆಯ ಮಿಣಿಯ ಕಡಿವನು,
ನಾದ ಹೋದ ಕೆರಹನು, ಬೂದಿಹೋದ ಎರಹನು.
ಒಣಗಿದೆಲುವ ನಾಯ ಕೊಂಡೊಡಲ ತುಂಬಿ,
ಬೂದಿಯೊಳಗೆ ಕೆಡದಿಪ್ಪ ಸ್ವಾನಬಲ್ಲುದೆ ?
ಅಮೃತಾನ್ನಗಳಿಪ್ಪೆಡೆಯಡಿಗಡಿಗೆ ಅಹಂಕಾರ ಗರ್ವಗಳ ನುಡಿದು,
ಪೊಡವಿ ಬ್ರಹ್ಮಾಂಡದೊಡೆಯ ಸೊಡ್ಡಳಂಗೆ
ವಿಷ್ಣು ಸರಿಯೆಂದು ನುಡಿವ ಕುನ್ನಿಗಳ ತಲೆಗಳೊಡೆದು ಕೆಡೆವ[ರು].
ಕಳುವ ಕಳ್ಳಂಗೆ ಕತ್ತಲೆಯಲ್ಲದೆ ಬೆಳಗು ಸಮನಿಸುವುದೆ ?/101
ಹಿಡಿದು ಬಿಟ್ಟ ಬಳಿಕ ಅಂತಿರಬೇಕಲ್ಲದೆ,
ಇನ್ನು ಹಿಡಿದು ತಪ್ಪಿದ ವಸ್ತುವ ಅರಸಿ ಹಿಡಿಯಲುಂಟೆ ?
ಮುನಿದು ಹಾವಿನೊಳಿಟ್ಟು ಒಸೆದು ಆನೆಯನೇರಿಸಿಹೆನೆಂದಡೆ,
ಶಿವಶರಣರ ಮುನಿಸು ತಿಳಿಯದು ನೋಡಾ.
ಒಡೆದ ಮುತ್ತು ನಾಣ್ಯಕ್ಕೆ ಸಲ್ಲದು, ಒಡೆದ ಹಾಲು ಅಮೃತಕ್ಕೆ ಸಲ್ಲದು.
ನಾವೇತಕಯ್ಯಾ, ನಿನಗಂದು ಸೊಡ್ಡಳನ ಶರಣರು ನಿರೂಪವ ಕೊಡಲು,
ಎನ್ನ ಪರಮಾರಾಧ್ಯರು ಸಂಗನಬಸವಣ್ಣನ ತಿಳುಹುತಿರ್ದರು./102
ಹುತ್ತ ಹೋರಿನೊಳಗೆ ಕೈಯನಿಕ್ಕುವನೆನ್ನ ಶಿಶುವೆಂದು,
ಹೆತ್ತ ತಾಯಿ ಮಗನ ಬೆಂಬತ್ತಿ ಬಪ್ಪಂತೆ, ಬೆಂಬತ್ತಿ ಬಿಡಂ ಭೋ.
ಅಯ್ಯಾ ಎಂದಡೆ ಓ ಎಂಬೆ.
ಅನ್ಯವಿಷಯಕೆನ್ನ ಹತ್ತಲೀಯದೆ, ಎತ್ತೆತ್ತ
ನೋಡಿದಡತ್ತತ್ತ ಸೊಡ್ಡಳ./103
ಹೆಂಗೂಸಿಂಗೆ ಶೃಂಗಾರ, ಪುರುಷನ ಕೂಟವೆಯುವನ್ನಕ್ಕ.
ಗಂಡುಗೂಸಿಂಗಾಚಾರ, ಪರಮನ ಕೂಟವೆಯ್ದುವನ್ನಕ್ಕ.
ಪುರುಷನ ಕೂಟದಲ್ಲಿ ಬಂಗಾರ ಶೃಂಗಾರ ವಸ್ತ್ರವಳಿಯಲು, ನಿಜ ಉಳಿಯಿತ್ತು.
ಪರಮನ ಕೂಟದಲ್ಲಿ ಆಗಮಾಚಾರವಳಿಯಲು, ನಿಜ ಉಳಿಯಿತ್ತು.
ಆ ಸಜ್ಜನಕ್ಕೆ, ಈ ಸಜ್ಜನಿಕಂಗೆ ಸಜ್ಜನವೆ ಲೇಸು,
ಸಜ್ಜನದ ಗಂಡ ದೇವರಾಯ ಸೊಡ್ಡಳಾ. /104