Categories
ಶರಣರು / Sharanaru

ಸೂಳೆ ಸಂಕವ್ವೆ

ಅಂಕಿತ: ನಿರ್ಲಜ್ಜೇಶ್ವರ
ಕಾಯಕ: ಶರಣೆಯಾಗುವುದಕಿಂತ ಮುಂಚೆ ವೇಶ್ಯಾವೃತ್ತಿ

1234
ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿಯೆ.
ಹಿಡಿದಡೆ ಬತ್ತಲೆ ನಿಲಿಸಿ ಕೊಲುವರಯ್ಯಾ.
ವ್ರತಹೀನನನರಿದು ಬೆರೆದಡೆ
ಕಾದ ಕತ್ತಿಯಲ್ಲಿ ಕೈ ಕಿವಿ ಮೂಗ ಕೊಯ್ವರಯ್ಯಾ.
ಒಲ್ಲೆನೊಲ್ಲೆ ಬಲ್ಲೆನಾಗಿ, ನಿಮ್ಮಾಣೆ ನಿರ್ಲಜ್ಜೇಶ್ವರಾ.

ಹೆಸರ ಹಿಂದಿನ ವಿಶೇಷಣದಿಂದ ಈಕೆ ಮೊದಲು ವೇಶಾವೃತ್ತಿಯನ್ನು ಮಾಡುತ್ತಿದ್ದು, ನಂತರ ಶರಣ ಜೀವನದತ್ತ ಸಾಗಿಬಂದಂತೆ ತೋರುತ್ತದೆ. ಕಾಲ-೧೧೬೦. ‘ನಿರ್ಲಜ್ಜೇಶ್ವರ’ ಅಂಕಿತದಲ್ಲಿ ಒಂದು ವಚನ ಮಾತ್ರ ದೊರೆತಿದೆ. ತನ್ನ ವೃತ್ತಿ ಪರಿಭಾಷೆಯನ್ನು ಬಳಸಿಕೊಂಡು ವ್ರತನಿಷ್ಠೆಯನ್ನು ಕುರಿತು ಹೇಳುವ ಈಕೆಯ ಅಭಿವ್ಯಕ್ತಿಯಲ್ಲಿ ದಿಟ್ಟನಿಲುವು ತೋರುತ್ತದೆ.

Categories
ಶರಣರು / Sharanaru

ಸುಂಕದ ಬಂಕಣ್ಣ

ಅಂಕಿತ: ಬಂಕೇಶ್ವರಲಿಂಗ
ಕಾಯಕ: ಸುಂಕಿಗ (Tax Collector)

ಪುರಾಣಗಳಲ್ಲಿ ಉಲ್ಲೇಖಿತನಾದ ಈತನ ಕಾಲ-೧೧೬೦. ಸುಂಕ (ತೆರಿಗೆ) ಸಂಗ್ರಹಿಸುವುದು ಕಾಯಕ. ‘ಬಂಕೇಶ್ವರಲಿಂಗ’ ಅಂಕಿತದಲ್ಲಿ ೧೦೮ ವಚನಗಳು ದೊರೆತಿವೆ. ಕಾಯಕದ ಪರಿಭಾಷೆಯನ್ನು ಬಳಸಿಕೊಂಡು ತತ್ವ ವಿವೇಚನೆ ಮಾಡುವುದು ಇವುಗಳ ಮುಖ್ಯ ಆಶಯವಾಗಿದೆ. ಹಲವು ಸ್ಥಲಗಳ ಅಡಿಯಲ್ಲಿ ವಚನಗಳನ್ನು ವಿಭಜಿಸಲಾಗಿದೆ. ಗಾತ್ರದಲ್ಲಿ ಚಿಕ್ಕವಾಗಿರುವ ವಚನಗಳು ಸರಳವಾಗಿವೆ. ಕೆಲವು ಬೆಡಗಿನ ಭಾಷೆಯಲ್ಲಿವೆ. ವ್ಯಾಪಾರ ಪದ್ಧತಿ, ಸುಂಕ ಪದ್ಧತಿ, ಸರಕು ಸಾಗಾಣಿಕೆಯ ಸಾಧನಗಳನ್ನು ಕುರಿತ ವಿವರಣೆಗಳನ್ನೊಳಗೊಂಡ ವಚನಗಳು ಸಾಂಸ್ಕೃತಿಕ ದೃಷ್ಟಿಯಿಂದ ಮಹತ್ವದವೆನಿಸಿವೆ.

Categories
ಶರಣರು / Sharanaru

ಸ್ವತಂತ್ರ ಸಿದ್ಧಲಿಂಗೇಶ್ವರ

ಅಂಕಿತ: ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರ

೯೦೧
ಹಾವಾಡಿಗ ಹಾವನಾಡಿಸುವಲ್ಲಿ, ತನ್ನ ಕಾಯ್ದುಕೊಂಡು,
ಹಾವನಾಡಿಸುವಂತೆ,
ಆವ ಮಾತನಾಡಿದಡೂ, ತನ್ನ ಕಾಯ್ದು ಆಡಬೇಕು.
ಅದೆಂತೆಂದಡೆ,
ತನ್ನ ವಚನವೆ ತನಗೆ ಹಗೆಯಹುದಾಗಿ.
ಅನ್ನಿಗರಿಂದ ಬಂದಿತ್ತೆನ್ನಬೇಡ.
ಅಳಿವುದು ಉಳಿವುದು ತನ್ನ ವಚನದಲ್ಲಿಯೆ ಅದೆ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ಹಗೆಯು ಕೆಳೆಯು ತನ್ನ ವಚನವೇ, ಬೇರಿಲ್ಲ.

ತೋಂಟದ ಸಿದ್ಧಲಿಂಗರ ಶಿಷ್ಯ ಪರಂಪರೆಗೆ ಸೇರಿದ ಮತ್ತೊಬ್ಬ ವಚನಕಾರ. ಕಾಲ ೧೬ನೇಯ ಶತಮಾತದ ಉತ್ತರಾರ್ಧ. ಸ್ಥಳ -ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ತಾಲೂಕಿನ ಕಾಪನಹಳ್ಳಿ. ಅಚರ ಸಮೀಪದ ‘ಗಜರಾಜಗಿರಿ’ ಈತನ ಶಿವಯೋಗ ಸಾಧನೆಯ ಸ್ಥಾನ. ಅಲ್ಲಿಯೇ ಐಕ್ಯ. ಸದ್ಯ ಈತನ ೪೩೦ ವಚನಗಳು ದೊರೆತಿವೆ. ‘ನಿಜಗುರುಸ್ವತಂತ್ರಸಿದ್ಧಲಿಂಗೇಶ್ವರ’ ಎಂಬುದು ಅಂಕಿತ. ಜಂಗಮರಗಳೆ, ಮುಕ್ತ್ಯಾಂಗನಾ ಕಂಠಮಾಲೆ ಎಂಬ ಕೃತಿಗಳನ್ನು ರಚಿಸಿದ್ದಾನೆ. ಆರು ಸ್ಥಲಗಳಲ್ಲಿ ಹಂಚಿಕೊಂಡಿರುವ ಈತನ ವಚನಗಳಲ್ಲಿ ಷಟ್-ಸ್ಥಲ ತತ್ವ ನಿರೂಪಣೆ ಮುಖ್ಯ ವಸ್ತುವಾಗಿದೆ. ಸಾಂಪ್ರದಾಯಿಕ ರೀತಿಯಲ್ಲಿ ಸಕ್ರಮವಾಗಿ ತತ್ವ ಪ್ರತಿಪಾದನೆ ಮಾಡಿದ್ದಾನೆ.

೯೫೨
ಹಲವು ದೇವರುಗಳ ಭಜಿಸಿ ಹೊಲಬುದಪ್ಪಿ ಹೋದರೆಲ್ಲ.
ದೇವರುದೇವರೆಂದರೇನು? ಒಮ್ಮರ ದೇವರೇ?
ವಿಶ್ವಾಧಿಪತಿ ಶಿವನೊಬ್ಬನೆ ದೇವನಲ್ಲದೆ,
ಉಳಿದವರೆಲ್ಲ ದೇವರೆ?
ಬ್ರಹ್ಮ ದೇವರೆಂಬಿರೇ? ಬ್ರಹ್ಮನ ಶಿರವ ಹರ ಚಿವುಟಿದ.
ವಿಷ್ಣು ದೇವರೆಂಬಿರೇ? ಹತ್ತವತಾರದಲ್ಲಿ ಹರನಿಂದ ಹತಿಸಿಕೊಂಡ.
ಇಂದ್ರ ದೇವರೆಂಬಿರೇ? ಇಂದ್ರನ ಮೈಯೆಲ್ಲಾ ಭಗವಾಗಿ
ನಿಂದೆಗೊಳಗಾದ.
ಚಂದ್ರ ದೇವರೆಂಬಿರೇ? ಕುಂದ ಹೆಚ್ಚ ತಾಳಿ ಕ್ಷಣಿಕನಾದ.
ಸೂರ್ಯ ದೇವರೆಂಬಿರೇ? ಸೂರ್ಯ ಕುಷ್ಠರೋಗದಿಂದ ಭ್ರಷ್ಟಾದ.
ಇನ್ನುಳಿದ ದೇವತೆಗಳು ಭಂಗಬಟ್ಟುದಕ್ಕೆ ಕಡೆಯಿಲ್ಲ.
‘ಸರ್ವದೇವ ಪಿತಾ ಶಂಭುಃ ಭರ್ಗೋಃ ದೇವಸ್ಯ ಧೀಮಹಿ’
ಎಂದುದಾಗಿ,
ಸರ್ವದೇವರುಗಳ ಉತ್ಪತ್ಯ ಸ್ಥಿತಿ ಲಯಂಗಳ ಮಾಡುವ ಕರ್ತ
ಶಿವನೊಬ್ಬನೇ ದೇವನೆಂದು ನುಡಿದೆನು ನಡೆದೆನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲದೆ ಇಲ್ಲವೆಂದು.

ಮಹಾದೇವಿಯಕ್ಕ ಬಸವಣ್ಣ ಮೊದಲಾದ ವಚನಕಾರರಿಂದ ಪ್ರಭಾವಿತನಾಗಿದ್ದಾನೆ. ಬಸವಣ್ಣ, ಮಡಿವಾಳ ಮಾಚಿದೇವ, ಚನ್ನ ಬಸವಣ್ಣ, ಪ್ರಭುದೇವ, ಅಜಗಣ್ಣ ಇವರೆಲ್ಲ ತನಗೆ ಷಡುಸ್ಥಲವನ್ನಿತ್ತರೆಂದು ಹೇಳಿರುವನು. ನಿರೂಪಣೆಗೆ ಒಳ್ಳೆಯ ದೃಷ್ಟಾಂತಗಳನ್ನು ಬಳಸಿಕೊಳ್ಳುವುದರಿಂದ ವಚನಗಳು ಕಾವ್ಯಕಮನೀಯತೆಯಿಂದ ಕಂಗೊಳಿಸುತ್ತವೆ.

Categories
ಶರಣರು / Sharanaru

ಸಿದ್ಧಾಂತಿ ವೀರಸಂಗಯ್ಯ

ಅಂಕಿತ: ಗೋಳಕಾಕಾರ ವಿಶ್ವವಿರಹಿತಲಿಂಗ
ಕಾಯಕ: ಸಿದ್ಧಾಂತವನ್ನು ಪ್ರತಿಪಾದಿಸುವುದು

ಈತ ವೀರನಿಷ್ಠೆಯ ಶಿವಭಕ್ತ. ಅನೇಕ ಪುರಾಣ ಕಾವ್ಯಗಳಲ್ಲಿ ಈ ನಿಷ್ಠೆಯ ವಿವರ ಬಂದಿದೆ. ಕಾಲ-೧೧೬೦ ಐದು ವಚನಗಳು ದೊರೆತಿವೆ. ಅಂಕಿತ ‘ಗೋಳಕಾಕಾರ ವಿಶ್ವವಿರಹಿತಲಿಂಗ’. ಹೆಸರಿಗೆ ತಕ್ಕಂತೆ ಸಿದ್ಧಾಂತ ವಿಷಯಗಳ ನಿರೂಪಣೆಯೇ ಈ ವಚನಗಳ ಮುಖ್ಯ ಉದ್ದೇಶವಾಗಿದೆ.

Categories
ಶರಣರು / Sharanaru

ಸಿದ್ಧರಾಮ ಶಿವಯೋಗಿ

ಅಂಕಿತ: ವಚನ ಮತ್ತು ಸ್ವರವಚನಗಳಲ್ಲಿ ‘ಕಪಿಲಸಿದ್ಧ ಮಲ್ಲಿಕಾರ್ಜುನ’ ಎಂಬ ಅಂಕಿತವಿದ್ದರೆ, ತ್ರಿವಿಧಿಗಳಲ್ಲಿ ‘ಯೋಗಿನಾಥ’
ಕಾಯಕ: ಕೆರೆ ಕಟ್ಟೆಗಳನ್ನು ಕಟ್ಟಿಸುವ ಕಾಯಕ, ಅನುಭವ ಮಂಟಪದ ಗೋಷ್ಠಿಯಲ್ಲಿ ಪಾಲ್ಗೊಂಡು, ಮಹಾಶಿವಯೋಗಿಯಾದ

ಬಸವಣ್ಣನೇ ತಾಯಿ
ಬಸವಣ್ಣನೇ ತಂದೆ
ಬಸವಣ್ಣನೇ ಪರಮ ಬಂಧುವೆನಗೆ
ವಸುಧೀಶ ಕಪಿಲಸಿದ್ಧ ಮಲ್ಲಿಕಾರ್ಜುನ
ನಿಮ್ಮ ಹೆಸರಿಟ್ಟ ಗುರು ಬಸವಣ್ಣನಯ್ಯ.

ಹನ್ನೆರಡನೆಯ ಶತಮಾನದ ಪ್ರಥಮ ಶ್ರೇಣಿಯ ವಚನಕಾರರಲ್ಲಿ ಒಬ್ಬ. ಈತನ ಜೀವನ ಜರಿತ್ರೆಗೆ ಸಂಬಂಧಿಸಿದ ಅನೇಕ ಅಧಾರಗಳು ವಚನ, ಕಾವ್ಯ ಶಾಸನ, ಐತಿಹ್ಯಗಳಲ್ಲಿ ದೊರಿಯುತ್ತವೆ. ಸೊನ್ನಲಿಗೆ (ಮಹಾರಾಷ್ಟ್ರದ ಇಂದಿನ ಸೊಲ್ಲಾಪುರ) ಈತನ ಜನ್ಮಸ್ಥಳ. ತಂದೆ-ಮುದ್ದುಗೌಡ. ತಾಯಿ-ಸುಗ್ಗಲೆ. ಮನೆದೈವ-ಧೂಳಿಮಾಕಾಳ. ರೇವಣಸಿದ್ಧನ ವರದಿಂದ ಹುಟ್ಟಿದ. ತಂದೆ ತಾಯಿ ಇಟ್ಟ ಹೆಸರು ಧೂಳಿಮಾಕಾಳ. ಅನಂತರ ನಾಥಸಿದ್ಧ ಸಂಪ್ರದಾಯದವನಾಗುವಲ್ಲಿ ಸಿದ್ಧರಾಮನೆಂದು ಪ್ರಸಿದ್ಧನಾದ. ಬಾಲ್ಯದಲ್ಲಿ ಮುಗ್ಧಭಕ್ತ. ದನಕಾಯುವ ಕಾಯಕ. ಶ್ರೀಶೈಲಕ್ಕೆ ಹೋಗಿ ಮಲ್ಲಿಕಾರ್ಜುನನ ದರ್ಶನ ಪಡೆದ. ಸೊನ್ನಲಿಗೆಗೆ ಬಂದು ದೇವಾಲಯ ಸ್ಥಾಪಿಸಿ, ಆ ಆವರಣಕ್ಕೆ ‘ಯೋಗ ರಮಣೀಯ ಕ್ಷೇತ್ರ’ವೆಂದು ಹೆಸರಿಸಿದ. ಲಿಂಗಸ್ಥಾಪನೆ, ಸಕಲ ಜೀವಾವಳಿಯ ನೆಮ್ಮದಿಯ ಬದುಕಿಗಾಗಿ ಕೆರೆ ಕಟ್ಟೆಗಳನ್ನು ಕಟ್ಟಿಸುವ ಕಾಯಕದಲ್ಲಿ ತೊಡಗಿ ಕರ್ಮಯೋಗಿ ಎನಿಸಿದ. ಪ್ರಭುದೇವ ಅವನನ್ನು ಕಲ್ಯಾಣಕ್ಕೆ ಕರೆದೋಯ್ದು ಚೆನ್ನಬಸವಣ್ಣನವರಿಂದ ಇಷ್ಟಲಿಂಗದೀಕ್ಷೆ ಕೊಡಿಸಿದ. ಅನುಭವ ಮಂಟಪದ ಗೋಷ್ಠಿಯಲ್ಲಿ ಪಾಲ್ಗೊಂಡು, ಮಹಾಶಿವಯೋಗಿಯಾದ. ಕಲ್ಯಾಣಕ್ರಾಂತಿಯ ನಂತರ ಸೊನ್ನಲಿಗೆಗೆ ಬಂದು ಅಲ್ಲಿಯೇ ಐಕ್ಯನಾದ.

ಸಿದ್ಧರಾಮ ವಚನ, ಸ್ವರವಚನ, ಬಸವಸ್ತೋತ್ರದ ತ್ರಿವಿಧಿ, ಅಷ್ಟಾವರಣ ಸ್ತೋತ್ರದ ತ್ರಿವಿಧಿ, ಸಂಕೀರ್ಣ ತ್ರಿವಿಧಿ ಎಂದು ಮುಂತಾಗಿ ವೈವಿಧ್ಯಮಯ ಸಾಹಿತ್ಯ ಸೃಷ್ಟಿಮಾಡಿದ್ದಾನೆ. ವಚನ ಮತ್ತು ಸ್ವರವಚನಗಳಲ್ಲಿ ‘ಕಪಿಲಸಿದ್ಧ ಮಲ್ಲಿಕಾರ್ಜುನ’ ಎಂಬ ಅಂಕಿತವಿದ್ದರೆ, ತ್ರಿವಿಧಿಗಳಲ್ಲಿ ‘ಯೋಗಿನಾಥ’ ಅಂಕಿತವಿದೆ. ಸದ್ಯ ಈತನ ೧೧೬೨ ವಚನಗಳು ದೊರೆತಿದ್ದು ಅವುಗಳಲ್ಲಿ ವೈಯುಕ್ತಿಕ ಬದುಕಿನ ಸಂಗತಿಗಳು ಧರ್ಮತತ್ವ ಜಿಜ್ಞಾಸೆ, ಸಾಮಾಜಿಕ ಕಳಕಳಿ ಪ್ರಧಾನವೆನಿಸಿವೆ.

ಗುರುವಾಗಿ ಬಂದೆನಗೆ ದೀಕ್ಷೆಯ ಮಾಡಿದಿರಿ,
ಲಿಂಗವಾಗಿ ಬಂದೆನ್ನ ಮನದ ಮಲಿನವ ಕಳೆದಿರಿ,
ಜಂಗಮವಾಗಿ ಬಂದೆನ್ನ ಪ್ರಪಂಚಕತನವ ಕಳೆದು ಪರಮ ಸೀಮೆಯ ಮಾಡಿದಿರಿ.
ಇಂತಿವೆಲ್ಲವೂ ಬಸವಣ್ಣನಾಗಿ ಎನಗೆ
ಪ್ರಸಾದವ ನೀಡಿಸಲಹಿದ ಕಪಿಲಸಿದ್ದಮಲ್ಲಿಕಾರ್ಜುನ
ಇನ್ನೆನಗತಿಶಯವೇನೂ ಇಲ್ಲ.

ತಾ ಮಾಡಿದ ಹೆಣ್ಣು ತನ್ನ ತಲೆಯನೇರಿತ್ತು
ತಾ ಮಾಡಿದ ಹೆಣ್ಣು ತನ್ನ ತೊಡೆಯನೇರಿತ್ತು
ತಾ ಮಾಡಿದ ಹೆಣ್ಣು ಬ್ರಹ್ಮನ ನಾಲಿಗೆಯನೇರಿತ್ತು
ತಾ ಮಾಡಿದ ಹೆಣ್ಣು ನಾರಾಯಣನ ಎದೆಯನೇರಿತ್ತು
ಅದು ಕಾರಣ, ಹೆಣ್ಣು ಹೆಣ್ಣಲ್ಲ ಹೆಣ್ಣು ರಾಕ್ಷಸಿಯಲ್ಲ;
ಹೆಣ್ಣು ಪ್ರತ್ಯಕ್ಷ ಕಪಿಲಸಿದ್ದಮಲ್ಲಿಕಾರ್ಜುನ ನೋಡಾ!

Categories
ಶರಣರು / Sharanaru

ಸಿದ್ಧಬುದ್ಧಯ್ಯಗಳ ಪುಣ್ಯಸ್ತ್ರೀ ಕಾಳವ್ವೆ

ಅಂಕಿತ: ಭೀಮೇಶ್ವರಾ

1233
ವ್ರತಭ್ರಷ್ಟನ, ಲಿಂಗಬಾಹ್ಯನ ಕಂಡಡೆ
ಸತ್ತ ನಾಯ, ಕಾಗೆಯ ಕಂಡಂತೆ.
ಅವರೊಡನೆ ನುಡಿಯಲಾಗದು ಬಿಮೇಶ್ವರಾ.

ಗಂಡ-ಸಿದ್ಧಬುದ್ಧಯ್ಯ. ಕಾಲ-೧೧೬೦. ‘ಭೀಮೇಶ್ವರ’ ಅಂಕಿತದಲ್ಲಿ ಒಂದು ವಚನ ಮಾತ್ರ ದೊರೆತಿದೆ. ಅದರಲ್ಲಿ ವ್ರತಭ್ರಷ್ಟರನ್ನು ಮತ್ತು ಲಿಂಗಬಾಹ್ಯರನ್ನು ಟೀಕಿಸುತ್ತಾಳೆ. ಗಣಾಚಾರದ ನಿಷ್ಠುರತೆ ಇಲ್ಲಿ ಎದ್ದು ಕಾಣುತ್ತದೆ.

Categories
ಶರಣರು / Sharanaru

ಸತ್ಯಕ್ಕ

ಅಂಕಿತ: ಶಂಭು ಜಕ್ಕೇಶ್ವರಾ
ಕಾಯಕ: ಶರಣರ ಮನೆಯ ಅಂಗಳದ ಕಸಗುಡಿಸುವುದು

ಈಕೆಯ ಸ್ಥಳ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ಸಮೀಪದ ಹಿರೇಜಂಬೂರು. ಶಿವಭಕ್ತರ ಮನೆಯ ಅಂಗಳ ಕಸಗುಡಿಸುವುದು ಈಕೆಯ ಕಾಯಕ. ‘ಶಂಭುಜಕ್ಕೇಶ್ವರ’ ಅಂಕಿತದಲ್ಲಿ ೨೭ ವಚನಗಳು ಲಭಿಸಿವೆ. ಶಿವಪಾರಮ್ಯ, ಜೊತೆಗೆ ಸದ್ಭಕ್ತರ ಮಹಿಮೆ, ಸತಿ-ಪತಿ ಭಾವ, ಸದಾಚಾರದಲ್ಲಿ ನಡೆಯುವ ಗುರು-ಶಿಷ್ಯ-ಜಂಗಮರ ಗುಣಲಕ್ಷಣ, ಡಾಂಭಿಕ ಭಕ್ತರ ಟೀಕೆ, ಸ್ತ್ರೀಪುರುಷ ಸಮಾನತೆಯ ಸಂದೇಶ ಇಲ್ಲಿ ವ್ಯಕ್ತವಾಗಿದೆ.

ಶಿವಪಾರಮ್ಯ ಹಾಗೂ ಏಕದೇವೋಪಾಸನಾನಿಷ್ಠೆ. ಸತಿ – ಪತಿ ಭಾವದ ನಿರೂಪಣೆ ಅವಳ ವಚನಗಳಲ್ಲಿದೆ. ಲಿಂಗ ಭೇದವನ್ನು ಅಲ್ಲಗಳೆಯುವ ಈಕೆ, ಪುರುಷಸಮಾನತೆಯನ್ನು ಎತ್ತಿ ಹಿಡಿದಿರುವಳು.

Categories
ಶರಣರು / Sharanaru

ಸತ್ತಿಗೆ ಕಾಯಕದ ಮಾರಯ್ಯ

ಅಂಕಿತ: ಐಘಂಟೇಶ್ವರಲಿಂಗ
ಕಾಯಕ: ಸತ್ತಿಗೆ ಕಾಯಕ (ಬಸವಣ್ಣನವರಿಗೆ ಛತ್ರಿ ಹಿಡಿಯುವ ಕಾಯಕ), ಮರ ಕಡಿಯುವ, ಪಂಜು ಹಿಡಿಯುವ ಕಾರ್ಯ

ಕೊಡೆ (ಸತ್ತಿಗೆ) ಹಿಡಿಯುವ ಕಾಯಕದ ಈತ, ಅದರ ಜೊತೆಗೆ ಮರ ಕಡಿಯುವ, ಪಂಜು ಹಿಡಿಯುವ ಕೆಲಸವನ್ನೂ ಮಾಡುತ್ತಿದ್ದನೆಂದು ತಿಳಿದುಬರುತ್ತದೆ. ಅವನ ವಚನಗಳಲ್ಲಿ ಆಧಾರ ಸಿಕ್ಕುತ್ತವೆ. ಈತನ ಕಾಲ-೧೧೬೦, ‘ಐಘಟೇಶ್ವರ’ ಅಂಕಿತದಲ್ಲಿ ಹತ್ತು ವಚನಗಳು ದೊರೆತಿವೆ. ಅವುಗಳಲ್ಲಿ ಈತನ ಕಾಯಕ ನಿಷ್ಠೆ, ಕಾಯಕ ತಪ್ಪುವವರ ಟೀಕೆ ಪ್ರಮುಖವಾಗಿವೆ.

Categories
ಶರಣರು / Sharanaru

ಸಗರದ ಬೊಮ್ಮಣ್ಣ

ಅಂಕಿತ: ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರ

ಗುಲಬರ್ಗಾ ಜಿಲ್ಲೆಯ ಸಗರ ಗ್ರಾಮಕ್ಕೆ ಸೇರಿದ ಈತ ಗಣಾಚಾರ ಪ್ರವೃತ್ತಿಯ ಶರಣ. ಹೆಂಡತಿ ಶಿವದೇವಿ. ಕಾಲ-1160. ಈತ ಜೈನರೊಡನೆ ಹೋರಾಡಿ ಶಿವಪಾರಮ್ಯವನ್ನು ಮೆರೆಯುತ್ತಾನೆ. ‘ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರ’ ಅಂಕಿತದಲ್ಲಿ ೯೧ ವಚನಗಳು ದೊರಕಿವೆ. ಬೆಡಗು ಪ್ರಧಾನವಾದ ಅವುಗಳಲ್ಲಿ ತಾತ್ವಿಕತೆಗೆ ಆದ್ಯತೆ ದೊರೆತಿದೆ.

ಶಿವನಲ್ಲದೆ ಅನ್ಯದೈವವಿಲ್ಲವೆನ್ನುವ ವೀರನಿಷ್ಠೆ. ಜೈನರೊಡನೆ ಹೋರಾಡಿ ಶಿವಪಾರಮ್ಯ ಮೆರೆಯುವನು. ಕಾವ್ಯಮಯವಾದ ಬೆಡಗಿನ ವಚನಗಳಿವೆ. ಭಕ್ತಿಯ ಮಹತ್ವ, ದೈವಾನುಗ್ರಹ, ಮಾನವ ಜನ್ಮದ ಹಿರಿಮೆ ಹೇಳಿರುವನು.

Categories
ಶರಣರು / Sharanaru

ಸಕಳೇಸ (ಸಕಲೇಶ) ಮಾದರಸ

ಅಂಕಿತ: ಸಕಳೇಶ್ವರದೇವ
ಕಾಯಕ: ಶಿವನಿಗೆ ಸಂಗೀತ ಸೇವೆ ಅರ್ಪಿಸುವ ಕಾಯಕ

371
ಅಂಗದ ಮೇಲಕ್ಕೆ ಶ್ರೀಗುರು ಲಿಂಗವಂ ಬಿಜಯಂಗೈಸಿದ ಬಳಿಕ,
ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ
ಆಲಸ್ಯವಿಲ್ಲದೆ ಭಯಭಕ್ತಿಯಿಂದ ಮಾಡೂದು ಭಕ್ತಂಗೆ ಲಕ್ಷಣ.
ಇಂತಲ್ಲದೆ ಲಿಂಗಾರ್ಚನೆಯ ಬಿಟ್ಟು, ಕಾಯದಿಚ್ಛೆಗೆ ಹರಿದು,
ಅದ್ವೈತದಿಂದ ಉದರವ ಹೊರೆದಡೆ,
ಭವಭವದಲ್ಲಿ ನರಕ ತಪ್ಪದಯ್ಯ, ಸಕಳೇಶ್ವರಾ.

ಬಸವಣ್ಣನವರ ಹಿರಿಯ ಸಮಕಾಲೀನನಾದ ಈತ ಕಲ್ಲುಕುರಿಕೆಯ ಅರಸ. ತಂದೆ ಮಲ್ಲಿಕಾರ್ಜುನ. ತರುವಾಯದ ಕೆರೆಯ ಪದ್ಮರಸ, ಕುಮಾರ ಪದ್ಮರಸ, ಪದ್ಮಣಾಂಕರು ಈತನ ವಂಶಕ್ಕೆ ಸೇರಿದ ಭಕ್ತಕವಿಗಳು. ಈತ ವ್ಯರಾಗ್ಯಪರನಾಗಿ ಕಲ್ಯಾಣಕ್ಕೆ ಬಂದು ಶರಣನಾದ ಕಾಲ-೧೧೩೦. ಕಲ್ಯಾಣಕ್ರಾಂತಿಯ ನಂತರ ಶ್ರೀಶೈಲಕ್ಕೆ ನಡೆದು, ಅಲ್ಲಿಯೇ ಐಕ್ಯನಾದ.

375
ಅಡವಿಗೆ ಹೋಗಿ ಏವೆನು ? ಮನದ ರಜ ತಮ ಬಿಡದು.
ಆಡ ಕಾವನ ತೋರಿ, ಗಿಡುವ ಕಡಿವನ ಬಡಿದೆ.
ಆಶ್ರಮವ ಕೆಡಿಸಿತ್ತಲ್ಲಾ.
ಸಕಳೇಶ್ವರದೇವಾ, ನಿನ್ನ ಮಾಯೆ ಎತ್ತಹೋದಡೂ ಬೆನ್ನಬಿಡದು.

ಮಾದರಸ ಶ್ರೇಷ್ಠ ಸಂಗೀತಜ್ಞಾನಿ ಆಗಿದ್ದ. ವೀಣಾದಿ ಅನೇಕ ವಾದ್ಯಗಳನ್ನು ನುಡಿಸುವುದರಲ್ಲಿ ಪರಿಣಿತನೆನಿಸಿದ್ದ. ‘ಸಕಳೇಶ್ವರದೇವ’ ಎಂಬ ಅಂಕಿತದಲ್ಲಿ ೧೩೩ ವಚನಗಳು ದೊರೆತಿವೆ. ಆತ್ಮನಿರೀಕ್ಷಣೆ, ಶಿವಭಕ್ತಿಯ ತೀವ್ರತೆ, ಪ್ರಸಾದ ಮಹತ್ವ, ನೀತಿಭೋದೆ, ಆಚಾರ, ನಿಷ್ಠೆ, ಸಮಾಜವಿಮರ್ಶೆ ಇವುಗಳಲ್ಲಿ ಒಡೆದು ತೋರುತ್ತವೆ. ಅನೇಕ ವಚನಗಳಲ್ಲಿ ವೈಯುಕ್ತಿಕ ಬದುಕಿನ ಅಂಶಗಳು, ಸಂಗೀತ ಸಂಬಂಧಿ ಉಲ್ಲೇಖಗಳು ಅಳವಟ್ಟಿರುವುದರಿಂದ ಚಾರಿತ್ರಿಕ ಮಹತ್ವ ಪ್ರಾಪ್ತವಾಗಿದೆ.

480
ಶೀಲ ಶೀಲವೆಂದು ಗರ್ವಿಕೃತದಲ್ಲಿ ನುಡಿವ
ಉದ್ದೇಶ ಪ್ರಾಣಿಗಳೆಲ್ಲರೂ ಅನಂತಶೀಲರೆ ?
ಹೂ ಬಾವಿ ಮಠಕ್ಕೆ ಸೀಮೆಯ ಮಾಡೂದು ಶೀಲವೇ ?
ಮನಕ್ಕೆ ಸೀಮೆಯ ಮಾಡೂದು ಶೀಲವಲ್ಲದೆ,
ಹುಸಿಯ ಕಳೆವುದು ಶೀಲವಲ್ಲದೆ, ಭಕ್ತರ ಕಳೆವುದು ಶೀಲವೆ?
ಲಿಂಗಪ್ರಾಣವ ಮಾಡೂದು ಶೀಲವಲ್ಲದೆ,
ಪ್ರಾಣಲಿಂಗವ ಮಾಡೂದು ಶೀಲವೆ?
ಇಂತೆಲ್ಲ ಶೀಲರು ದುಶ್ಶೀಲರು.
ಸಕಳೇಶ್ವರದೇವಾ, ನಾನೇನೆಂದರಿಯೆ, ನೀನಿರಿಸಿದಂತಿರ್ಪೆ.

ಆತ್ಮ ಶೋಧನೆ, ವಿಡಂಬನೆ, ಪ್ರಸಾದ ಮಹತ್ವ, ನೀತಿ ಬೋಧೆ, ಆಚಾರ, ಭಕ್ತಿಯ ತೀವ್ರತೆ, ಅಹಂಕಾರ ನಿರಸನ – ಇವೇ ಮೊದಲಾದ ವಿಷಯಗಳ ಪ್ರತಿಪಾದನೆ ವಚನಗಳಲ್ಲಿದೆ. ನೀಲಪಟರ ಉಲ್ಲೇಖ ಒಂದು ವಚನದಲ್ಲಿ ಬಂದಿದೆ.

455
ಬಸವಣ್ಣನ ಭಕ್ತಿಪ್ರಸಾದವ ಕೊಂಡೆನಯ್ಯಾ.
ಚೆನ್ನ ಬಸವಣ್ಣನ ಜ್ಞಾನಪ್ರಸಾದವ ಕೊಂಡೆನಯ್ಯಾ.
ಪ್ರಭುದೇವರ ಬಯಲಪ್ರಸಾದವ ಕೊಂಡೆನೆಯ್ಯಾ.
ಮಡಿವಾಳಯ್ಯನ ಕರುಣಪ್ರಸಾದವ ಕೊಂಡೆನಯ್ಯಾ.
ಸಿದ್ಧರಾಮಯ್ಯನ ನಿರ್ಮಲಪ್ರಸಾದವ ಕೊಂಡೆನಯ್ಯಾ.
ಮರುಳಶಂಕರದೇವರ ಪ್ರಸನ್ನ ಪ್ರಸಾದವ ಕೊಂಡೆನಯ್ಯಾ.
ಏಳ್ನೂರೆಪ್ಪತ್ತುಮರಗಣಂಗಳ ಪರಮಪ್ರಸಾದವ ಕೊಂಡು.
ಬದುಕಿದೆನಯ್ಯಾ, ಸಕಳೇಶ್ವರಾ.

479
ಶೀಲವಂತನಾದಡೆ ತಾ ಸವೆದು ಶೀಲವ ಮಾಡಬೇಕಲ್ಲದೆ
ತಾನಿದೆಡೆಯಲ್ಲಿ ಸುಳಿದು ಮಾಡುವ ಶೀಲ,
ಕೊಟ್ಟು ಪೂಜಿಸುವ ಕೈಕೂಲಿ ತನಗಿಲ್ಲ.
ಪೂಜೆಯ ಫಲವು ಕೊಡವಾಲ ಕರೆವ ಸುರಭಿಯಂತೆ
ಅಟ್ಟಿದರಟ್ಟು ವರವ ಬೇಡಿ ಮರುಗುವ ದಾಸಿಯ ಪಥದಂತೆ,
ತನ್ನ ಉದರನಿಮಿತ್ತ್ಯವಿಡಿದು,
ನೇಮ ಬೇಕೆಂಬ ದುಶ್ಶೀಲರ ಮೆಚ್ಚ, ಸಕಳೇಶ್ವರದೇವನು.

ಮಾಡುವ ಭಕ್ತಂಗೆಯೂ ಕೊಡುವ ದೇವಂಗೆಯೂ ಎಂದೆಂದಿಗೂ ಕೇಡಿಲ್ಲ,
ಮಾಡಿ ಭೋ ಮಾಡಿ ಭೋ
ಎನಗೆ ಲೆಸಾಯಿತ್ತು,ಹೋಯಿತ್ತೆಂಬ ಚಿಂತೆ ಬೇಡ
ಇದಿತ್ತೆಂಬ ಸಂತೋಷ ಬೇಡ
ಸಕಳೇಶ್ವರ ದೇವನವರನಂದು ಸಲಹುವನಾಗಿ.

ಈ ವಚನದಲ್ಲಿ ಸಕಲೇಶ ಮಾದರಸ ಕಾಯಕದಲ್ಲಿರಬೇಕಾದ ಸಹಜ ಗಣಗಳನ್ನು ವಿವರಿಸುತ್ತಾ ಅದು ಅಧ್ಯಾತ್ಮ ಸಾಧನೆ ಕೂಡ ಎಂದು ಹೇಳುತ್ತಾನೆ.ಸದಾ ಒಳ್ಳೆಯ ಕೆಲಸವನ್ನು ಮಾಡುವ ಭಕ್ತನಿಗೂ,ಅಂತ ಭಕ್ತನಿಗೆ ಸಕಲವನ್ನೂ ನೀಡುವ ದೇವರಿಗೂ ಎಂದಿಗೂ ಕೇಡು ಎಂಬುದಿಲ್ಲ.ತನಗೆ ಲೆಸಾಯಿತ್ತು,ತನಗೆ ಸಿಗಲಿಲ್ಲ ಎಂಬ ಚಿಂತೆ ಬೇಡ,ಎಂದು ಹೇಳುತ್ತಾ ಹೆಚ್ಚು ಇದೆ ಎಂಬ ಸಂತೋಷ ಪಡದೆ ತನ್ನ ಕಾಯಕವನ್ನು ಮಾಡಬೇಕು.ಆ ಕಾಯಕದಲ್ಲಿ ದೇವರನ್ನು ಅರಿಯಬೇಕು,ಆಗ ಶಿವನು ತಮ್ಮನ್ನು ಸಲಹುವವನು ಎಂದು ಹೇಳುತ್ತಾನೆ ವಚನಕಾರ.