Categories
ಶರಣರು / Sharanaru

ಅಕ್ಕಮ್ಮ

ಅಂಕಿತ: ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ

ಜನ್ಮ ಸ್ಥಳ ಏಲೇಶ್ವರ (ಏಲೇರಿ). ಐಕ್ಯಸ್ಥಳ – ಕಲ್ಯಾಣ. ಅಧಿದೈವ ‘ರಾಮೇಶ್ವರ’. ‘ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ’ ಅಂಕಿತದಲ್ಲಿ ೧೫೪ ವಚನಗಳು ದೊರೆತಿವೆ. ವಚನ ಸಂಖ್ಯೆಯ ದೃಷ್ಟಿಯಿಂದ ಅಕ್ಕಮಹಾದೇವಿ ಮತ್ತು ನೀಲಮ್ಮನ ನಂತರದ ಸ್ಥಾನ ಈಕೆಗೆ ಸಲ್ಲುತ್ತದೆ. ವ್ರತ, ನೇಮ, ಆಚಾರ, ಶೀಲ – ಇವು ಈಕೆಯ ವಚನಗಳ ಮೂಲ ದ್ರವ್ಯ. ಅವುಗಳಿಗೆ ಪೂರಕವಾಗಿ ಧಾನ್ಯ, ಪಶು-ಪಕ್ಷಿ; ಜನಪದ ನಂಬಿಕೆ, ರೂಢಿ, ವೃತ್ತಿಪರಿಭಾಷೆಗಳಲ್ಲಿ ಅಕಾರ ಪಡೆದ ಈ ವಚನಗಳು ಅ ಕಾಲದ ಸಾಮಾಜಿಕ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ಸಹಾಯಕವಾಗಿವೆ.

 

Categories
ಶರಣರು / Sharanaru

ಅಲ್ಲಮ ಪ್ರಭು

ಅಂಕಿತ ನಾಮ: ಗುಹೇಶ್ವರ

ಕಾಲ: 1160

ದೊರಕಿರುವ ವಚನಗಳು: 1670 (ಆಧಾರ: ಸಮಗ್ರ ವಚನ ಸಂಪುಟ)

ತಂದೆ/ತಾಯಿ: ನಾಗವಾಸಾಧಿಪತಿ

ಹುಟ್ಟಿದ ಸ್ಥಳ: ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿ

ಪರಿಚಯ: ಕಾಲ, ಸು. 1160. ಊರು: ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿ. ಇವನ ಬದುಕನ್ನು ಕುರಿತು ಹರಿಹರ ಮತ್ತು ಚಾಮರಸ ಎರಡು ಬೇರೆ ಬೇರೆಯ ರೀತಿಯ ಕಥೆಗಳನ್ನು ಹೇಳಿದ್ದಾರೆ. ಅಲ್ಲಮನ ತಂದೆ ನಿರಹಂಕಾರ, ತಾಯಿ ಸುಜ್ಞಾನಿ, ಗುರು ಅನಿಮಿಷ. ಇವು ಕಲ್ಪಿತವಾದ ಹೆಸರುಗಳಾಂತೆ ತೋರುತ್ತವೆ. ತಂದೆ ‘ನಾಗವಾಸಾಧಿಪತಿ’. ಅಲ್ಲಮ ದೇವಸ್ಥಾನದಲ್ಲಿ ಮದ್ದಳೆಯನ್ನು ನುಡಿಸುತ್ತಿದ್ದ. ಅವನನ್ನು ಕಾಮಲತೆ ಎಂಬ ಹೆಣ್ಣು ಮೆಚ್ಚಿ ಮದುವೆಯಾದಳು. ಅವಳು ಜ್ವರಬಾಧೆಯಿಂದ ತೀರಿಕೊಂಡಳು. ತಾನೂ ಸಾಯಲು ಬಯಸಿದ ಅಲ್ಲಮ ಗುಹೆಯನ್ನು ಪ್ರವೇಶಿಸಿದಾಗ ಅಲ್ಲಿ ಅನಿಮಿಷನ ದರ್ಶನವೂ ದೀಕ್ಷೆಯೂ ದೊರೆಯಿತು ಅನ್ನುವುದು ಹರಿಹರ ತನ್ನ ರಗಳೆಯಲ್ಲಿ ಹೇಳುವ ಕಥೆ. ಅಲ್ಲಮನು ಪರಮ ವಿರಾಗಿ. ಅವನನ್ನು ಮೆಚ್ಚಿಬಂದ ಕಾಮಲತೆಯನ್ನು ಸೋಲಿಸಿ ಗೆದ್ದ ಎಂಬುದು ಚಾಮರಸ ‘ಪ್ರಭುಲಿಂಗಲೀಲೆ’ಯಲ್ಲಿ ಹೇಳುವ ಕಥೆ. ಅಲ್ಲಮ ದೇಶಸಂಚಾರಿಯಾಗಿ ಅನೇಕ ಸಾಧಕರನ್ನು ಭೇಟಿಯಾಗಿ, ಅವರೊಡನೆ ಸಂವಾದ ನಡೆಸಿ ಮಾರ್ಗದರ್ಶನ ಮಾಡುತ್ತ ಕಲ್ಯಾಣಕ್ಕೆ ಬಂದು ಅಲ್ಲಿನ ಅನುಭವ ಮಂಟಪದ ಮುಖ್ಯಸ್ಥನಾಗಿ, ನಂತರ ಶ್ರೀಶೈಲಕ್ಕೆ ತೆರಳಿ ಮತ್ತೆ ಮರಳಿದ್ದನ್ನು ‘ಶೂನ್ಯಸಂಪಾದನೆ’ಗಳು ಹೇಳುತ್ತವೆ. ಅಲ್ಲಮನ 1670 ವಚನಗಳು ದೊರೆತಿವೆ. ಇವುಗಳಲ್ಲಿ ಹನ್ನೆರಡನೆಯ ಶತಮಾನದ ವೈಚಾರಿಕ ವಾಗ್ವಾದದ ಚರಿತ್ರೆಯನ್ನು ಕಾಣಬಹುದೆಂದು ಸಂಸ್ಕೃತಿ ಚಿಂತಕರು ಭಾವಿಸುತ್ತಾರೆ. ಅಲ್ಲಮನನ್ನು ಕುರಿತ ದೊಡ್ಡಾಟ, ಬಯಲಾಟಗಳಿವೆ. ಅಲ್ಲಮನ ಸಮಾಧಿಸ್ಥಳವೆಂದು ಗುರುತಿಸುವ ಇಪ್ಪತ್ತಕ್ಕೂ ಹೆಚ್ಚು ಸ್ಥಳಗಳು ಕರ್ನಾಟಕದಲ್ಲಿವೆ. ಕವಿ ದರಾ ಬೇಂದ್ರೆಯವರು ಅಲ್ಲಮನನ್ನು ಕನ್ನಡ ಸಂಸ್ಕೃತಿಯ ನಾಲ್ಕು ನಾಯಕರತ್ನರಲ್ಲಿ ಒಬ್ಬನು ಎಂದಿದ್ದಾರೆ. ಅಲ್ಲಮ, ನಾಗಚಂದ್ರ ಚಿತ್ರಿಸಿದ ರಾವಣ, ಕುಮಾರವ್ಯಾಸನ ಕೃಷ್ಣ, ರತ್ನಾಕರ ಚಿತ್ರಿಸಿದ ಭರತ ಚಕ್ರವರ್ತಿ ಇವರು ನಾಲ್ಕು ಜನ ಕನ್ನಡ ಬದುಕಿನ ನಾಲ್ಕು ಸಾಧ್ಯತೆಗಳನ್ನು ತೋರಿದವರು ಎನ್ನುತ್ತಾರೆ. ಅನುಭಾವ, ಆಧ್ಯಾತ್ಮಗಳ ಚಿಂತನೆ ಅಲ್ಲಮ ವಚನಗಳ ಮುಖ್ಯ ವಸ್ತು. ಅನಿರೀಕ್ಷಿತವಾದ ಅರ್ಥಗಳ ನಿರ್ಮಾಣ, ಮತ್ತು ಅರ್ಥಗಳ ನಿರಾಕರಣೆ ಅಲ್ಲಮನ ದಾರಿ. ಉಜ್ವಲವಾದ ರೂಪಕಗಳನ್ನು ಬಳಸಿ ಅವನು ಹೇಳುವ ಮಾತುಗಳು ವ್ಯಕ್ತಿ ವಿಕಾಸ, ಧರ್ಮಚಿಂತನೆ, ಸಂಸ್ಕೃತಿ ಚಿಂತನೆಗಳ ದೃಷ್ಟಿಯಿಂದ ಮುಖ್ಯವಾಗಿವೆ.

Categories
ಶರಣರು / Sharanaru

ಅಕ್ಕಮಹಾದೇವಿ