Categories
ಶರಣರು / Sharanaru

ಸಕಳೇಸ (ಸಕಲೇಶ) ಮಾದರಸ

ಅಂಕಿತ: ಸಕಳೇಶ್ವರದೇವ
ಕಾಯಕ: ಶಿವನಿಗೆ ಸಂಗೀತ ಸೇವೆ ಅರ್ಪಿಸುವ ಕಾಯಕ

371
ಅಂಗದ ಮೇಲಕ್ಕೆ ಶ್ರೀಗುರು ಲಿಂಗವಂ ಬಿಜಯಂಗೈಸಿದ ಬಳಿಕ,
ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ
ಆಲಸ್ಯವಿಲ್ಲದೆ ಭಯಭಕ್ತಿಯಿಂದ ಮಾಡೂದು ಭಕ್ತಂಗೆ ಲಕ್ಷಣ.
ಇಂತಲ್ಲದೆ ಲಿಂಗಾರ್ಚನೆಯ ಬಿಟ್ಟು, ಕಾಯದಿಚ್ಛೆಗೆ ಹರಿದು,
ಅದ್ವೈತದಿಂದ ಉದರವ ಹೊರೆದಡೆ,
ಭವಭವದಲ್ಲಿ ನರಕ ತಪ್ಪದಯ್ಯ, ಸಕಳೇಶ್ವರಾ.

ಬಸವಣ್ಣನವರ ಹಿರಿಯ ಸಮಕಾಲೀನನಾದ ಈತ ಕಲ್ಲುಕುರಿಕೆಯ ಅರಸ. ತಂದೆ ಮಲ್ಲಿಕಾರ್ಜುನ. ತರುವಾಯದ ಕೆರೆಯ ಪದ್ಮರಸ, ಕುಮಾರ ಪದ್ಮರಸ, ಪದ್ಮಣಾಂಕರು ಈತನ ವಂಶಕ್ಕೆ ಸೇರಿದ ಭಕ್ತಕವಿಗಳು. ಈತ ವ್ಯರಾಗ್ಯಪರನಾಗಿ ಕಲ್ಯಾಣಕ್ಕೆ ಬಂದು ಶರಣನಾದ ಕಾಲ-೧೧೩೦. ಕಲ್ಯಾಣಕ್ರಾಂತಿಯ ನಂತರ ಶ್ರೀಶೈಲಕ್ಕೆ ನಡೆದು, ಅಲ್ಲಿಯೇ ಐಕ್ಯನಾದ.

375
ಅಡವಿಗೆ ಹೋಗಿ ಏವೆನು ? ಮನದ ರಜ ತಮ ಬಿಡದು.
ಆಡ ಕಾವನ ತೋರಿ, ಗಿಡುವ ಕಡಿವನ ಬಡಿದೆ.
ಆಶ್ರಮವ ಕೆಡಿಸಿತ್ತಲ್ಲಾ.
ಸಕಳೇಶ್ವರದೇವಾ, ನಿನ್ನ ಮಾಯೆ ಎತ್ತಹೋದಡೂ ಬೆನ್ನಬಿಡದು.

ಮಾದರಸ ಶ್ರೇಷ್ಠ ಸಂಗೀತಜ್ಞಾನಿ ಆಗಿದ್ದ. ವೀಣಾದಿ ಅನೇಕ ವಾದ್ಯಗಳನ್ನು ನುಡಿಸುವುದರಲ್ಲಿ ಪರಿಣಿತನೆನಿಸಿದ್ದ. ‘ಸಕಳೇಶ್ವರದೇವ’ ಎಂಬ ಅಂಕಿತದಲ್ಲಿ ೧೩೩ ವಚನಗಳು ದೊರೆತಿವೆ. ಆತ್ಮನಿರೀಕ್ಷಣೆ, ಶಿವಭಕ್ತಿಯ ತೀವ್ರತೆ, ಪ್ರಸಾದ ಮಹತ್ವ, ನೀತಿಭೋದೆ, ಆಚಾರ, ನಿಷ್ಠೆ, ಸಮಾಜವಿಮರ್ಶೆ ಇವುಗಳಲ್ಲಿ ಒಡೆದು ತೋರುತ್ತವೆ. ಅನೇಕ ವಚನಗಳಲ್ಲಿ ವೈಯುಕ್ತಿಕ ಬದುಕಿನ ಅಂಶಗಳು, ಸಂಗೀತ ಸಂಬಂಧಿ ಉಲ್ಲೇಖಗಳು ಅಳವಟ್ಟಿರುವುದರಿಂದ ಚಾರಿತ್ರಿಕ ಮಹತ್ವ ಪ್ರಾಪ್ತವಾಗಿದೆ.

480
ಶೀಲ ಶೀಲವೆಂದು ಗರ್ವಿಕೃತದಲ್ಲಿ ನುಡಿವ
ಉದ್ದೇಶ ಪ್ರಾಣಿಗಳೆಲ್ಲರೂ ಅನಂತಶೀಲರೆ ?
ಹೂ ಬಾವಿ ಮಠಕ್ಕೆ ಸೀಮೆಯ ಮಾಡೂದು ಶೀಲವೇ ?
ಮನಕ್ಕೆ ಸೀಮೆಯ ಮಾಡೂದು ಶೀಲವಲ್ಲದೆ,
ಹುಸಿಯ ಕಳೆವುದು ಶೀಲವಲ್ಲದೆ, ಭಕ್ತರ ಕಳೆವುದು ಶೀಲವೆ?
ಲಿಂಗಪ್ರಾಣವ ಮಾಡೂದು ಶೀಲವಲ್ಲದೆ,
ಪ್ರಾಣಲಿಂಗವ ಮಾಡೂದು ಶೀಲವೆ?
ಇಂತೆಲ್ಲ ಶೀಲರು ದುಶ್ಶೀಲರು.
ಸಕಳೇಶ್ವರದೇವಾ, ನಾನೇನೆಂದರಿಯೆ, ನೀನಿರಿಸಿದಂತಿರ್ಪೆ.

ಆತ್ಮ ಶೋಧನೆ, ವಿಡಂಬನೆ, ಪ್ರಸಾದ ಮಹತ್ವ, ನೀತಿ ಬೋಧೆ, ಆಚಾರ, ಭಕ್ತಿಯ ತೀವ್ರತೆ, ಅಹಂಕಾರ ನಿರಸನ – ಇವೇ ಮೊದಲಾದ ವಿಷಯಗಳ ಪ್ರತಿಪಾದನೆ ವಚನಗಳಲ್ಲಿದೆ. ನೀಲಪಟರ ಉಲ್ಲೇಖ ಒಂದು ವಚನದಲ್ಲಿ ಬಂದಿದೆ.

455
ಬಸವಣ್ಣನ ಭಕ್ತಿಪ್ರಸಾದವ ಕೊಂಡೆನಯ್ಯಾ.
ಚೆನ್ನ ಬಸವಣ್ಣನ ಜ್ಞಾನಪ್ರಸಾದವ ಕೊಂಡೆನಯ್ಯಾ.
ಪ್ರಭುದೇವರ ಬಯಲಪ್ರಸಾದವ ಕೊಂಡೆನೆಯ್ಯಾ.
ಮಡಿವಾಳಯ್ಯನ ಕರುಣಪ್ರಸಾದವ ಕೊಂಡೆನಯ್ಯಾ.
ಸಿದ್ಧರಾಮಯ್ಯನ ನಿರ್ಮಲಪ್ರಸಾದವ ಕೊಂಡೆನಯ್ಯಾ.
ಮರುಳಶಂಕರದೇವರ ಪ್ರಸನ್ನ ಪ್ರಸಾದವ ಕೊಂಡೆನಯ್ಯಾ.
ಏಳ್ನೂರೆಪ್ಪತ್ತುಮರಗಣಂಗಳ ಪರಮಪ್ರಸಾದವ ಕೊಂಡು.
ಬದುಕಿದೆನಯ್ಯಾ, ಸಕಳೇಶ್ವರಾ.

479
ಶೀಲವಂತನಾದಡೆ ತಾ ಸವೆದು ಶೀಲವ ಮಾಡಬೇಕಲ್ಲದೆ
ತಾನಿದೆಡೆಯಲ್ಲಿ ಸುಳಿದು ಮಾಡುವ ಶೀಲ,
ಕೊಟ್ಟು ಪೂಜಿಸುವ ಕೈಕೂಲಿ ತನಗಿಲ್ಲ.
ಪೂಜೆಯ ಫಲವು ಕೊಡವಾಲ ಕರೆವ ಸುರಭಿಯಂತೆ
ಅಟ್ಟಿದರಟ್ಟು ವರವ ಬೇಡಿ ಮರುಗುವ ದಾಸಿಯ ಪಥದಂತೆ,
ತನ್ನ ಉದರನಿಮಿತ್ತ್ಯವಿಡಿದು,
ನೇಮ ಬೇಕೆಂಬ ದುಶ್ಶೀಲರ ಮೆಚ್ಚ, ಸಕಳೇಶ್ವರದೇವನು.

ಮಾಡುವ ಭಕ್ತಂಗೆಯೂ ಕೊಡುವ ದೇವಂಗೆಯೂ ಎಂದೆಂದಿಗೂ ಕೇಡಿಲ್ಲ,
ಮಾಡಿ ಭೋ ಮಾಡಿ ಭೋ
ಎನಗೆ ಲೆಸಾಯಿತ್ತು,ಹೋಯಿತ್ತೆಂಬ ಚಿಂತೆ ಬೇಡ
ಇದಿತ್ತೆಂಬ ಸಂತೋಷ ಬೇಡ
ಸಕಳೇಶ್ವರ ದೇವನವರನಂದು ಸಲಹುವನಾಗಿ.

ಈ ವಚನದಲ್ಲಿ ಸಕಲೇಶ ಮಾದರಸ ಕಾಯಕದಲ್ಲಿರಬೇಕಾದ ಸಹಜ ಗಣಗಳನ್ನು ವಿವರಿಸುತ್ತಾ ಅದು ಅಧ್ಯಾತ್ಮ ಸಾಧನೆ ಕೂಡ ಎಂದು ಹೇಳುತ್ತಾನೆ.ಸದಾ ಒಳ್ಳೆಯ ಕೆಲಸವನ್ನು ಮಾಡುವ ಭಕ್ತನಿಗೂ,ಅಂತ ಭಕ್ತನಿಗೆ ಸಕಲವನ್ನೂ ನೀಡುವ ದೇವರಿಗೂ ಎಂದಿಗೂ ಕೇಡು ಎಂಬುದಿಲ್ಲ.ತನಗೆ ಲೆಸಾಯಿತ್ತು,ತನಗೆ ಸಿಗಲಿಲ್ಲ ಎಂಬ ಚಿಂತೆ ಬೇಡ,ಎಂದು ಹೇಳುತ್ತಾ ಹೆಚ್ಚು ಇದೆ ಎಂಬ ಸಂತೋಷ ಪಡದೆ ತನ್ನ ಕಾಯಕವನ್ನು ಮಾಡಬೇಕು.ಆ ಕಾಯಕದಲ್ಲಿ ದೇವರನ್ನು ಅರಿಯಬೇಕು,ಆಗ ಶಿವನು ತಮ್ಮನ್ನು ಸಲಹುವವನು ಎಂದು ಹೇಳುತ್ತಾನೆ ವಚನಕಾರ.