Categories
ವಚನಗಳು / Vachanagalu

ಸಕಳೇಶ ಮಾದರಸನ ವಚನಗಳು

ಅಂಕುರ ಪಲ್ಲವ ತರು ಕುಸುಮಫಲರಸಸಾರಾಯ ಇನಿತಿನಿತೆಲ್ಲಿದುದೊ,
ಬೀಜ ಮೊಳೆದೋರದಂದು ?
ನಾಭಿಗಳೆಯದ ಪಶುವಿನ ಅಮೃತವೆಲ್ಲಿದ್ದುದೊ, ವೃಷಭ ಮುಟ್ಟದಂದು ?
ಘನಕುಚ ಯೌವನೆಯರ ರಜಪ್ರಶ್ನೆಯಲ್ಲಿ
ಒದಗಿದ ಹಸುಗೂಸು ಎಲ್ಲಿದ್ದುದೂ, ಕೊಡಗೂಸು ಕನ್ಯೆಯಳಿಯದಂದು ?
ತ್ರಿಜಗದ ಉತ್ಪತ್ಯ, ಸಚರಾಚರದ ಗಂಭೀರವೆಲ್ಲಿದ್ದುದೊ,
ಶಿವನ ಅಷ್ಟತನುಮೂರ್ತಿಗಳಿಲ್ಲದಂದು ?
ಸಪ್ತಸ್ವರ ಬಾವನ್ನಕ್ಷರವೆಲ್ಲಿದ್ದುದೊ, ಜ್ಞಾನ ಉದಯಿಸದಂದು?
ಶರಧಿಯೊಳಗಣ ರತ್ನವೆಲ್ಲಿದ್ದುದೊ, ಸ್ವಾತಿಯ ಸಲಿಲವೆರಗದಂದು ?
ಶರಣಪಥ ಲಿಂಗೈಕ್ಯವೆಲ್ಲಿದ್ದುದೊ,
ಆರಾಧ್ಯ ಸಕಳೇಶ್ವರದೇವರು ಕರುಣಿಸಿ ಕಣ್ದೆರೆದು ತೋರದಂದು ?/1
ಅಂಗದ ಗುಣವಳಿದು ಲಿಂಗಾಗಿಯಾದ ನಿಜಶರಣನು,
ಜಗದ ಠಕ್ಕರಾದ ಜಂಗುಳಿಗಳ ಬಾಗಿಲುಗಳಿಗೆ ಹೋಗನು ನೋಡ.
ಹೋದಡೆ ಗುರುವಾಕ್ಯವಿಡಿದು ಹೋಗಿ,
`ಲಿಂಗಾರ್ಪಿತ ಭಿಕ್ಷಾ’ ಎಂದು ಭಿಕ್ಷವ ಬೇಡಿ, ಲಿಂಗಾಣತಿಯಿಂದ ಬಂದ ಭಿಕ್ಷವ,
ಲಿಂಗ ನೆನಹಿನಿಂದ ಲಿಂಗನೈವೇದ್ಯವಾಗಿ ಕೈಕೊಂಡು,
ಬಂದಬಂದ ಸ್ಥಲವನರಿದು, ಲಿಂಗಾರ್ಪಿತವ ಮಾಡಬೇಕು.
ಅದೆಂತೆಂದಡೆ : ರಾಜಾನ್ನಂ ನರಕಶ್ಚವ ಸೂತಕಾನ್ನಂ ತಥೈವ ಚ |
ಮೃತಾನ್ನಂ ವರ್ಜಯೇತ್ ಜ್ಞಾನೀ ಭಕ್ತಾನ್ನಂ ಭುಂಜತೇ ಸದಾ ||
ಇಂತೆಂದುದಾಗಿ, ಲಿಂಗಾಂಗಿಗೆ, ಲಿಂಗಾಭಿಮಾನಿಗೆ, ಲಿಂಗಪ್ರಾಣಿಗೆ
ಇದೇ ಪಥವಯ್ಯಾ, ಸಕಳೇಶ್ವರದೇವಾ ನಿಮ್ಮಾಣೆ./2
ಅಂಗದ ಮೇಲಕ್ಕೆ ಶ್ರೀಗುರು ಲಿಂಗವಂ ಬಿಜಯಂಗೈಸಿದ ಬಳಿಕ,
ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ
ಆಲಸ್ಯವಿಲ್ಲದೆ ಭಯಭಕ್ತಿಯಿಂದ ಮಾಡೂದು ಭಕ್ತಂಗೆ ಲಕ್ಷಣ.
ಇಂತಲ್ಲದೆ ಲಿಂಗಾರ್ಚನೆಯ ಬಿಟ್ಟು, ಕಾಯದಿಚ್ಛೆಗೆ ಹರಿದು,
ಅದ್ವೈತದಿಂದ ಉದರವ ಹೊರೆದಡೆ,
ಭವಭವದಲ್ಲಿ ನರಕ ತಪ್ಪದಯ್ಯ, ಸಕಳೇಶ್ವರಾ./3
ಅಚ್ಚಪ್ರಸಾದಿ ಅಚ್ಚಪ್ರಸಾದಿಗಳೆಂದು ನಿಚ್ಚನಿಚ್ಚ ಹುಸಿವರು ನೋಡಾ.
ವಾಯು ಬೀಸುವಲ್ಲಿ, ಬಯಲು ಬೆರಸುವಲ್ಲಿ, ಭಾಜನ ಸಹಿತ ಭೋಜನವುಂಟೆ ?
ಅಂಗಕ್ಕೆ ಬಂದ ಸುಖವು, ಲಿಂಗವಿರಹಿತವಾದಡೆ ಸ್ವಯವಚನ ವಿರೋಧ.
ಸಕಳೇಶ್ವರದೇವನು ಆಳಿಗೊಂಡು ಕಾಡುವ./4
ಅಜಾತನು ಜಾತನ ಜಾತಕನೆಂಬೆನು.
ಅಜಾತಂಗೆ ಜಾತಂಗೆ ಕುಲಹೊಲೆಯಿಲ್ಲೆಂಬೆನು.
ಹಿರಿಯಮಾಹೇಶ್ವರನೆಂಬೆನು.
ಸಮಯಾಚಾರವ ಬೆರಸಲಮ್ಮೆನು.
ನಿಚ್ಚ ಪೂಜಿಸುವ ಪೂಜಕ ನಾನು.
ಸಕಳೇಶ್ವವರದೇವಾ, ಎನ್ನ ನಾಚಿಸಬೇಡ./5
ಅಡವಿಗೆ ಹೋಗಿ ಏವೆನು ? ಮನದ ರಜ ತಮ ಬಿಡದು.
ಆಡ ಕಾವನ ತೋರಿ, ಗಿಡುವ ಕಡಿವನ ಬಡಿದೆ.
ಆಶ್ರಮವ ಕೆಡಿಸಿತ್ತಲ್ಲಾ.
ಸಕಳೇಶ್ವರದೇವಾ, ನಿನ್ನ ಮಾಯೆ ಎತ್ತಹೋದಡೂ ಬೆನ್ನಬಿಡದು. /6
ಅದು ಬೇಕು, ಇದು ಬೇಕುಯೆಂಬರು.
ಎದೆಗುದಿಹಬೇಡ, ಸುದೈವನಾದಡೆ ಸಾಕು.
ಪಡಿಪದಾರ್ಥ ತಾನಿದೆಡೆಗೆ ಬಹುದು. ನಿಧಿ ನಿಕ್ಷೇಪಂಗಳಿದ್ದೆಡೆಗೆ ಬಹವಯ್ಯಾ.
ಹೃದಯಶುದ್ಧವಾಗಿ, ಸಕಳೇಶ್ವರಾ ಶರಣೆಂದಡೆ, ನಿಜಪದವನೀವ. /7
ಅಯ್ಯಾ ನಿಮ್ಮಲ್ಲಿ ಸಾರೂಪ್ಯವರವ ಬೇಡುವೆನೆ ?
ಬ್ರಹ್ಮನ ಶಿರಸ್ಸುವ ಹೋಗಾಡಿದೆ.
ಅಯ್ಯಾ ನಿಮ್ಮಲ್ಲಿ ಸಾಮೀಪ್ಯವರವ ಬೇಡುವೆನೆ ?
ವಿಷ್ಣು ದಶಾವತಾರಕ್ಕೆ ಬಂದ.
ಅಯ್ಯಾ ನಿಮ್ಮಲ್ಲಿ ಸಾಯುಜ್ಯವರವ ಬೇಡುವೆನೆ ?
ರುದ್ರ ಜಡೆಯ ಹೊತ್ತು ತಪಸ್ಸಿರುತ್ತೈದಾನೆ.
ಅಯ್ಯಾ ನಿಮ್ಮಲ್ಲಿ ಶ್ರೀಸಂಪತ್ತೆಂಬ ವರವ ಬೇಡುವೆನೆ ?
ಲಕ್ಷಿ ್ಮ ಪರಾಂಗನೆ ಪರಸ್ತ್ರೀ
ಸಕಳೇಶ್ವರಯ್ಯಾ ಆವ ವರವನೂ ಒಲ್ಲೆನು.
ಚೆನ್ನಬಸವಣ್ಣನ ಶ್ರೀಪಾದದ ಹತ್ತೆ ಇಪ್ಪಂಥ ವರವಕೊಡು. /8
ಅರಿವನಾಹಾರಗೊಂಬುದೆ ಪರಮಸುಖ.
ಮರವೆಯ ತೆರಹುಂಟೆ ?
ಶಿವೈಕ್ಯಂಗೆ ಇತರ ಸುಖವೆ ವ್ಯವಹಾರ.
ಅರುಹಿರಿಯರ ಸಂಗಸುಖವೆ ಆಹಾರ.
ಶ್ರುತಿಯಿಂದತಿಶಯ ಆ ಚರಿತನ ಮನವ,
ಮಹಂತ ಸಕಳೇಶ್ವರದೇವ, ತಾನೆ ಬಲ್ಲ./9
ಅರ್ಥಸನ್ಯಾಸಿ, ಬ್ರಹ್ಮಚಾರಿ ಆನಯ್ಯ.
ದೊರಕೊಳ್ಳದಿರ್ದಡೆ ಒಲ್ಲೆನೆಂಬೆನು.
ದಿಟಕ್ಕೆ ಬಂದಡೆ ಪರಿಹರಿಸಲರಿಯೆನು.
ಎನಗೆ ನಿಸ್ಪೃಹದ ದೆಸೆಯನೆಂದಿಂಗೀವೆಯಯ್ಯಾ.
ಸಕಳೇಶ್ವರದೇವಾ ! /10
ಅಶನ ವ್ಯಸನಾದಿಗಳನಂತನಂತ.
ಕಾಶಾಂಬರಧಾರಿಗಳನಂತನಂತ.
ಸಕಳೇಶ್ವರದೇವಾ,
ನೀನಲ್ಲದೆ ಪೆರತನರಿಯದವರು ಎತ್ತಾನು ಒಬ್ಬರು /11
ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಮಾಡುವ
ಮಿಟ್ಟೆಯಭಂಡರ ಕಂಡು, ನಾಚಿತ್ತೆನ್ನ ಮನ.
ಉಪಚಾರವೇಕೊ ಶಿವಲಿಂಗದ ಕೂಡೆ ಶ್ವಪಚರಿಗಲ್ಲದೆ ?
ಸಕಳೇಶ್ವರಯ್ಯಾ, ಇಂತಪ್ಪ ಮಾದಿಗ
ವಿದ್ಯಾಭ್ಯಾಸದವರನೊಲಿಯಬಲ್ಲನೆ ?/12
ಆಚಾರವ ನುಡಿವೆ, ಅನಾಚಾರವ ನಡೆವೆ.
ನಮಗೆ ನಿಮಗೆ ಪ್ರಸಾದಸ್ವಾಯತ ನೋಡಾ.
ನಾನು ಭಕ್ತನೆಂಬ ನುಡಿಗೆ, ಸಕಳೇಶ್ವರದೇವ ನಗುವ./13
ಆಟಮಟವೆ ಆಧಾರ, ಕಪಟವೆ ಸದಾಚಾರ,
ಕುಟಿಲವೆ ಮಹಾಘನವಾಯಿತ್ತು ಕೆಲಬರಿಗೆ.
ಹುಸಿಯ ಮಸಕವೆ ವರ್ತಕವಾಯಿತ್ತು ಕೆಲಬರಿಗೆ.
ಯಂತ್ರ ತಂತ್ರ ದ್ರವ್ಯ ಬೆವಹಾರವಾಯಿತ್ತು ಕೆಲಬರಿಗೆ.
ಸಟೆಯ ಸಾಗರದೊಳಗೆ ತೇಂಕಾಡುತ್ತಿದ್ದರು ಕೆಲಬರು.
ಸಕಳೇಶ್ವರದೇವರ ನೆರೆನಂಬಲರಿಯದವರೆಲ್ಲರು./14
ಆರುವನೊಲ್ಲೆನೆಂದು ಅರಣ್ಯವ ಹೊಗುವದು, ಕಾರ್ಯವಲ್ಲ, ದುರುಳತನ.
ಊರೊಳಗಿದ್ದಡೆ ನರರ ಹಂಗು. ಅರಣ್ಯದಲ್ಲಿದ್ದಡೆ ತರುಗಳ ಹಂಗು.
ಬಂದ ಪದಾರ್ಥವ ಲಿಂಗಾರ್ಪಿತವ ಮಾಡಿಕೊಂಬ
ಶರಣನೆ ಜಾಣ, ಸಕಳೇಶ್ವರದೇವಾ./15
ಆಶೆಯಿಂದ ಬಿಟ್ಟು ಕಿರಿಯರಿಲ್ಲ, ನಿರಾಶೆಯಿಂದ ಬಿಟ್ಟು ಹಿರಿಯರಿಲ್ಲ.
ದಯದಿಂದ ಬಿಟ್ಟು ಧರ್ಮವಿಲ್ಲ, ವಿಚಾರದಿಂದ ಬಿಟ್ಟು ಸಹಾಯಿಗಳಿಲ್ಲ.
ಸಚರಾಚರಕ್ಕೆ ಸಕಳೇಶ್ವರನಿಂದ ಬಿಟ್ಟು ದೈವವಿಲ್ಲ. /16
ಇಂಥವರ ದೆಸೆಯಿಂದ ಇಂತುಟಾದುದೆಂದು
ಚಿಂತಿಸುತಿಪ್ಪ ಭಾಷೆಗೆಟ್ಟ ಮನದವ ನಾನಲ್ಲವಯ್ಯಾ.
ಎನ್ನಲಿದ್ದುದ ನೀವೆ ಬಲ್ಲಿರಿ, ಬಹ ಅನುವನೂ ನೀವೆ ಬಲ್ಲಿರಿ,
ಸಕಳೇಶ್ವರದೇವಾ, ಈವರು ಕಾವರು ನೀವೆಯಾಗಿ./17
ಇದಿರೆನ್ನ ಹಳಿವವರು ಮತಿಯ ಬೆಳಗುವರು.
ಮನದ ಕಾಳಿಕೆಯ ಕಳೆವವರೆನ್ನ ನಂಟರು.
ದುರಾಚಾರದಲ್ಲಿ ನಡೆವವರು ಕನ್ನಡಿ ಎನಗೆ,
ಹೇಯೋಪಾದಿಯ ತೋರುವವರು.
ಇದು ಕಾರಣ, ನಾನನ್ಯ ದೇಶಕ್ಕೆ ಹೋಗೆನು.
ಸಕಳೇಶ್ವರದೇವರ ತೋರುವರೊಳರಿಲ್ಲಿಯೆ./18
ಇನ್ನೊಂದು ಭಾಷೆಯನವಧರಿಸುವದು ಮಹಾಮಹಿಮ ಗುರುವೆ,
ಮುನ್ನಾದುದಕ್ಕೆ ನಿನ್ನ ಮನ ಬಂದಂತೆ ಮಾಡು.
ಇನ್ನೊಂದು ಭಾಷೆಯನವಧರಿಸುವದು ಮಹಾಮಹಿಮ ಲಿಂಗವೆ,
ಪರವಧುವೆನ್ನ ಹೆತ್ತತಾಯಿ ಸಮಾನ.
ಇದ್ದವರೆನ್ನ ಸಹೋದಯಸ್ತ್ರೀಯ ಸಮಾನ.
ಪಣ್ಯಾಂಗನೆಯರ ಸಂಗವೆನಗೆ ನಾಯಮಾಂಸ ನರರಡಗಿನ ಸಮಾನ.
ದಾನವರ ಸಂಗವೆನಗೆ ಸೂಕರನ ಮಲದ ಸಮಾನ.
ಇಹಿಂಗೆಂದು ಭಾಷೆಯ ಮಾಡಿ, ತಿರುಗಿ ಆಸೆ ಮಾಡಿ ಕೂಡಿದೆನಾದಡೆ,
ನಿಮ್ಮ ಪ್ರಸಾದಕ್ಕೆ ಬಾಯಿದೆರೆಯನು.
ತನು ಲೋಭದಿಂದ ಕೂ[ಡಿದೆನಾದ]ಡಾ ತನುವ ದಿಗುಬಲಿಗೊಡುವೆನು,
ಕೊಡದಿರ್ದಡೆ, ಧರೆ ಚಂದ್ರಾರ್ಕರುಳ್ಳನ್ನ ಬರ ಅರಸು ನರಕದಲ್ಲಿಕ್ಕು.
ಸೂಕರ ನಾಯಿ ವಾಯಿಸ ಗಾರ್ದಭ ಬಸುರಲ್ಲಿ ಬರಿಸು.
ಬರಿಸದಿದಡೆ ನಿಮಗೆ ನಿಮ್ಮಾಣೆ ಸಕಳೇಶ್ವರಾ./19
ಈರೇಳುನೂರುವರುಷ ಮಜ್ಜನಕ್ಕೆರೆದು ವೃಥಾ ಹೋಯಿತ್ತಲ್ಲಾ !
ಏನೆಂದರಿಯದೆ ವೃಥಾ ಹೋಯಿತ್ತಲ್ಲಾ !
ನೂಲುವರ ಕಂಡು ನೂತಿಹೆನೆಂದಡೆ
ಅಯ್ಯಾ, ಎನ್ನ ಕರಿಯ ಕದಿರು ಬಿಳಿದಾಗದು.
ಅಯ್ಯಾ, ಎನ್ನ ತನುಮನಧನ ನಿಮ್ಮಲ್ಲಿ ಸಯವಾಗವು.
ಬಂದವಸರದಲ್ಲಿ ಮನವು ಲಿಂಗದೊಳಗೆ ತೋರಿತ್ತು , ಅನುಭವಕ್ಕೊಳಗಾಗದೆ.
ಎನ್ನ ವಿಚಾರಿಸಿ ನೋಡೆಹೆನೆಂದಡೇನು ಇಲ್ಲ .
ಸುಳುಹಿನೊಳಗೆ ಅರಿದೆಹೆನೆಂದಡೆ ಸುಳುಹಿಂಗೆ ಭಂಗವಾಯಿತ್ತು.
ಎನಗಿನ್ನು ಸುಳುಹೇಕೆ ಹೇಳಾ, ಸಕಳೇಶ್ವರದೇವಾ./20
ಈಶನಿಂದತ್ತ ಹಿರಿಯರಿಲ್ಲ, ಆಸೆಯಿಂದತ್ತ ಕಿರಿಯರಿಲ್ಲ.
ದೆಸೆಯಿಂದತ್ತ ದಿಕ್ಕಿಲ್ಲ, ಜಪದಿಂದತ್ತ ಪುಣ್ಯವಿಲ್ಲ.
ಸಚರಾಚರದೊಡೆಯ ಸಕಳೇಶ್ವರದೇವ, ವಿಚಾರದಿಂದತ್ತ ಸಹಾಯವಿಲ/21
ಉಡಲು ಸೀರೆಯ ಕಾಣದೆ ಬತ್ತಲೆಯಿಪ್ಪರಯ್ಯಾ.
ಉಣಲಶನವ ಕಾಣದೆ ಹಸಿದಿಪ್ಪರಯ್ಯಾ.
ಮೀಯಲೆಣ್ಣೆಯ ಕಾಣದೆ ಮಂಡೆಯ ಬೋಳುಮಾಡಿಕೊಂಡಿಪ್ಪರಯ್ಯಾ.
ದಿಟದಿಂ ಬಿಡಿಸಬಾರದಂತೆ,
ಈ ಸಟೆಯ ನಿಸ್ಸಂಸಾರವ ಧರಿಸಿಪ್ಪವರಿಗಂಜುವೆ ಕಾಣಾ, ಸಕಳೇಶ್ವರಾ./22
ಉರವಣಿಸುವ ಮನ ಮುಟ್ಟುವನ್ನಕ್ಕ ಕಾಡುವುದು.
ಘನಘನದಲ್ಲಿ ಮನ ನಂಬುವನ್ನಕ್ಕ ಕಾಡುವುದು.
ಮಹಂತ ಸಕಳೇಶ್ವರನೆಂಬ ಶಬವುಳ್ಳನ್ನಕ್ಕ ಕಾಡುವುದು./23
ಊರಿಗೊಕ್ಕಲಹ, ಹೆಂಡತಿಗೆ ಗಂಡನಹ.
ಮಕ್ಕಳಿಗೆ ತಂದೆಯಹ, ಮಸಣಕ್ಕೆ ಹೆಣನಹ.
ಸಕಳೇಶ್ವವರದೇವಾ, ನಿಮ್ಮ ಶರಣನ ಪರಿ ಬೇರೆ./24
ಋಗ್ವೇದ ಕಾಣವಯ್ಯಾ, ಸದ್ಯೋಜಾತನನು.
ಯಜುರ್ವೆದ ಕಾಣವಯ್ಯಾ, ವಾಮದೇವನನು.
ಸಾಮವೇದ ಕಾಣವಯ್ಯಾ, ತತ್ಪುರುಷನನು.
ಅಥರ್ವಣವೇದ ಕಾಣವಯ್ಯಾ, ಅಘೋರನಾಥನು.
ಅತೀತಃ ಪಂಥಾನಂ ತವ ಚ ಮಹಿಮಾ ವಾಙ್ಮನಸಯೋ |
ರತದ್ವ್ಯಾತ್ಯೇಯಂ ಚಕಿತಮಭಿದತ್ತೇ ಶೃತಿರಪಿ |
ಸ ಕಸ್ಯ ಸ್ತೋತವ್ಯಃ ಕತಿ ವಿಧಗುಣಃ ಕಸ್ಯ ವಿಷಯಃ |
ಪದೇ ತ್ವರ್ವಾಚೀನೇ ಪತತಿ ನ ಮನಃ ಕಸ್ಯ ನ ವಚಃ ||
ಎಂದುದಾಗಿ, ಚತುಮರ್ುಖ ಬ್ರಹ್ಮಂಗೆ
ಅಗಮ್ಯ ದೇವನಾದನೆಂದು, ಅನಂತವೇದ ಕಾಣಲಾರವು,
ಈಶಾನ್ಯ ಸಕಳೇಶ್ವರದೇವನ./25
ಎಂಜಲಮಾತ ನುಡಿವುತ್ತಿಪ್ಪ
ಜಗದ ಜಂಗುಳದೊಳಗಿದಡೆ ಶೀಲವಂತನೆ ?
ಭಿನ್ನರುಚಿಗಳಿಗೆರಗಿ, ಕಾಮನ ಬೆಂಬಳಿವರಿದು,
ಮಕರಶೃಂಗಾರವ ಮಾಡಿದಡೆ ಮಹಂತನೆ ?
ಲಿಂಗಶೃಂಗಾರವ ಮಾಡಿ,
ಅಂಗನೆಯರ ಸಂಗವ ತೊರೆದಡೆ, ಶೀಲವಂತನೆಂಬೆನು.
ಲೋಕದ ನಚ್ಚು ಮಚ್ಚು ಬಿಟ್ಟು, ಮನ ನಿಶ್ಚಿಂತವಾದಡೆ,
ಮಚ್ಚುವನಯ್ಯಾ, ಎಮ್ಮ ಸಕಳೇಶ್ವರದೇವ./26
ಎನಗೆ ನೀನು ಮಾಡಿದ ಸಂಸಾರದ ಬಳಲಿಕೆ, ನಿನಗೆನ್ನ ಕಾಡುವ ಬಳಲಿಕೆ.
ಬಳಲಿಕೆಯಿಬ್ಬರಿಗೆಯೂ ಸರಿ.
ನಿನ್ನ ಹೆಚ್ಚೇನು ? ಎನ್ನ ಕುಂದೇನು ?
ನೀನು ಭಕ್ತದೇಹಿಕದೇವನಾದ ಬಳಿಕ !
ಸಕಳೇಶ್ವರದೇವ ನೀನೂ ಬಲ್ಲೆ , ನಾನೂ ಬಲ್ಲೆ ./27
ಎನಗೆ ಸೋಂಕಿದ ಸಕಲರುಚಿಪದಾರ್ಥಂಗಳನು,
ನಿನಗೆ ಕೊಡುವೆನೆಂದವಧಾನಿಸುವನ್ನಬರ,
ಎನಗೂ ಇಲ್ಲದೆ ಹೋಯಿತ್ತು , ನಿನಗೂ ಇಲ್ಲದೆ ಹೋಯಿತ್ತು .
ಈ ಭೇದಬುದ್ಧಿಯು ಬಿಡಿಸಿ,
ಆನರಿದುದೆ ನೀನರಿದುದೆಂಬಂತೆ ಎಂದಿಂಗೆನ್ನನಿರಿಸುವೆ ಸಕಳೇಶ್ವರಾ./28
ಎನ್ನ ಈ ಸಂಸಾರದ ಬಾಳುವೆ ನೆಲೆಯಿಲ್ಲ ಕಂಡಾ !
ಆದಡೆ, ಶಿವನೆ ನೀನು ಕಾಡುವ ಕಾಟ ನೆಲೆಯಿಲ್ಲ.
ಸಂಸಾರದ ಕೂಡೆ ಕಾಡುವುದು ಲಯ.
ಇಂತೀ ಎರಡೂ ಲಯವಾದಡೆ
ನಾನು ನೀನೂ ಕೂಡಿ ನಿತ್ಯರಾಗಿ ಸುಖಿಯಿಸುವ, ಸಕಳೇಶ್ವರದೇವಾ./29
ಎನ್ನ ಮನದಲ್ಲಿ ದಿಟವಿಲ್ಲ , ಪೂಜಿಸಿ ಏವೆನು ?
ಹೃದಯದಲ್ಲೊಂದು, ವಚನದಲ್ಲೊಂದು ಎನಗೆ ನೋಡಾ.
ಎನ್ನ ಕಾಯ ಭಕ್ತ , ಮನ ಭವಿ ಸಕಳೇಶ್ವರದೇವಾ./30
ಎಲವದ ಎಕ್ಕೆಯ ಬಬರ್ೂರದ
ಕಾಗೆ ಗೂಗೆಗರಿಯ ಸೂವಾರವೆಯ ಪರಮಾಣುಗಳ
ಕಲ್ಲಮೇಲೆ ಬೆಳೆದಿಹ ಹುಲ್ಲುಕಡ್ಡಿಯ ಸೋಂಕುಗಳ ಬೇಡಿ
ಬಾಳುವ ಮಾನವನಂತೆ ಬೇಡಿ ನಿಂದವು.
ಇಂತುಟನರಿತು, ವಿರಕ್ತಿಯಿಂದ ಸಕಳೇಶ್ವರದೇವಾ ಶರಣೆಂದಡೆ,
ನಿಜಪದವ ಕೊಡುವುದಕ್ಕೆ ಸಂದೇಹಬೇಡ./31
ಏರಿಯ ಕಟ್ಟಬಹುದಲ್ಲದೆ ನೀರ ತುಂಬಬಹುದೆ ?
ಕೈದುವ ಕೊಡಬಹುದಲ್ಲದೆ ಕಲಿತನವ ಕೊಡಬಹುದೆ ?
ವಿವಾಹವ ಮಾಡಬಹುದಲ್ಲದೆ ಪುರುಷತನವ ಹರಸಬಹುದೆ ?
ಘನವ ತೋರಬಹುದಲ್ಲದೆ ನೆನಹ ನಿಲಿಸಬಹುದೆ ?
`ಓದು ಒಕ್ಕಾಲು ಬುದ್ಧಿ ಮುಕ್ಕಾಲು’ ಎಂಬ ಲೋಕದ ಗಾದೆಮಾತಿನಂತೆ,
ಸದ್ಗುರುಕಾರುಣ್ಯವಾದಡೂ ಸಾಧಿಸಿದವನಿಲ್ಲ , ಸಕಳೇಶ್ವರಾ./32
ಒಡಲುಗೊಂಡು, ಕಾಯವ ಬಳಿಗೊಂಡು,
ಸಂಸಾರದ ಕುರುಹಿನ ಹೆಸರಲ್ಲಿ ಕರೆದಡೆ,
ಓ ಎನುತಿಪ್ಪವರು ನರರೆ ?
ಬರಿದೆ ಸಂಸಾರವ ಬಳಸುವಂತಿಪ್ಪರು,
ಸಕಳೇಶ್ವರದೇವಾ, ನಿಮ್ಮ ಶರಣರು./33
ಕಂಡುದ ನುಡಿದಡೆ ಕಡುಪಾಪಿಯೆಂಬರು.
ಸುಮ್ಮನಿದ್ದಡೆ ಮುಸುಕುರ್ಮಿಯೆಂಬರು.
ಎನಲುಬಾರದು, ಎನದಿರಲುಬಾರದು.
ಸಟೆ ಕುಹಕಪ್ರಪಂಚಿಂಗಲ್ಲದೆ ಭಜಿಸರು. ಸಕಳೇಶ್ವರದೇವಾ, ನಿಮ್ಮಾಣೆ/34
ಕರ್ತನಿದ್ದೆಡೆಗೆ ಭೃತ್ಯ ಬಂದಡೆ,
ಭೃತ್ಯಾಚಾರವ ಮಾಡಿಸಿಕೊಂಬ ಕರ್ತಂಗೆ ಕತರ್ೃತ್ವವಲ್ಲದೆ
ಭೃತ್ಯನಿದ್ದೆಡೆಗೆ ಕರ್ತನೆಯ್ತಂದು,
ಭೃತ್ಯಾಚಾರವ ಮಾಡಿಸಿಕೊಂಬ ಕರ್ತಂಗೆ ಕತರ್ೃತ್ವವೆಲ್ಲಿಯದು ?
ಜಗದ ಕರ್ತನ ವೇಷವ ಧರಿಸಿ ಕರ್ತನಾದ ಬಳಿಕ,
ಭಕ್ತನಿದ್ದೆಡೆಗೆ ಭಕ್ತಿಯ ಬಂದು ಮಾಡೆಂದಡೆ,
ಎನ್ನ ಕರ್ತತನಕ್ಕೆ ಅದೇ ಹಾನಿ ನೋಡಾ.
ಲಿಂಗಾಣತಿಯಿಂದ ಬಂದ ಪದಾರ್ಥವ ಲಿಂಗಾರ್ಪಿತವ ಮಾಡುವದಲ್ಲದೆ,
ಅಂಗದಿಚ್ಛೆಗೆ ಅಂಗವಿಸಿ ಬೇಡಿದೆನಾದಡೆ,
ಎನ್ನ ಲಿಂಗಾಭಿಮಾನತನಕ್ಕೆ ಅದೇ ಹಾನಿ ನೋಡಾ.
ದೇಹ ಮನ ಪ್ರಾಣ ನಿಮ್ಮದಾಗಿ, ನಾ ಹೊರೆಯಬೇಕೆಂಬ ಭ್ರಾಂತೆನಗಿಲ್ಲ .
ಬಡಮನವ ಮಾಡಿ ಒಂದಡಿಯ ನಡೆದೆನಾದಡೆ,
ಮನದೊಡೆಯ ಸಕಳೇಶ್ವರದೇವಾ, ನಿಮ್ಮಾಣೆ./35
ಕರ್ತನೊಬ್ಬನೆ ದೇವ, ಸತ್ಯವೆ ಸುಭಾಷೆ, ಭೃತ್ಯಾಚಾರವೆ ಆಚಾರವಯ್ಯಾ.
ಮತ್ತೆ ದೇವರಿಲ್ಲ , ಮತ್ತೆ ಆಚಾರವಿಲ್ಲ , ಮತ್ತೆ ಸುಭಾಷೆಯೆಂಬುದಿಲ್ಲ .
ಮಹಂತ ಸಕಳೇಶ್ವರದೇವರನೊಲಿಸಿದ ಪುರಾತರ ಪಥವಿದು.
ಅವಿತಥವಿಲ್ಲದೆ ನಂಬುವದು./36
ಕಲಿಯಬಾರದು ಕಲಿತನವನು,
ಕಲಿಯಬಾರದು ವಿವೇಕಸಹಜವನು,
ಕಲಿಯಬಾರದು ದಾನಗುಣವನು,
ಕಲಿಯಬಾರದು ಸತ್ಪಥವನು,
ಸಕಳೇಶ್ವರದೇವಾ, ನೀ ಕರುಣಿಸಿದಲ್ಲದೆ./37
ಕಸವ ಬೋಹರಿಸಿ ದೇಹಾರಕ್ಕೆಡೆಮಾಡಿ.
ಕಸವಿರಲು ದೇಹಾರ ಶುಚಿಗೆ ಶೋಭಿತವಲ್ಲ.
ಪರದೈವವುಳ್ಳವಂಗೆ ಗುರುಲಿಂಗವಿಲ್ಲ.
ಪರಕೆ ಮೀಸಲ ಹಿಡಿಯಲು, ಲಿಂಗಕ್ಕೋಗರವಿಲ್ಲ.
ಇದು ಕಾರಣ, ಇಪ್ಪತ್ತಿನ ಬಿಳಿ ನೀರು.
ನನ್ನೀ ಪರಮಾರ್ಥಕ್ಕೆ ಸಲ್ಲರು, ಹರಭಕ್ತರು ಬಲ್ಲರು.
ಸಕಳೇಶ್ವರದೇವ, ಅವರ ಮೆಚ್ಚ./38
ಕಾಡಪತ್ರೆಯ ನಾಡಕೀಡೆ ತಿಂದಿರವೆ ? ಉಡು ಏಕಾಂತ ನಿವಾಸಿಯೆ ?
ತೋಳ ದಿಗಂಬರಿಯೇ ? ಎತ್ತು ಬ್ರಹ್ಮಚಾರಿಯೇ?
ಬಾವುಲ ತಲೆಕೆಳಗಾಗಿದ್ದಡೆ ತಪಸ್ವಿಯೇ ?
ಸಕಳೇಶ್ವರದೇವಾ, ನಿಮ್ಮ ನಿಜವನರಿಯದ ಶರಣರು
ಹೊರಹಂಚೆ ಒಳಬೊಳ್ಳೆ, ಒಲ್ಲದು ಲಿಂಗೈಕ್ಯರು./39
ಕಾಮನೆಂಬ ಬಿಲ್ಲಾಳವುಂಟೆಂಬುದ, ನಾವು ಕೇಳಿ ಬಲ್ಲೆವೈಸೆ !
ಅವನೆಲ್ಲರನೆಸೆವ
ಅವ ನಮ್ಮ ಕಂಡಡೆ, ಬೆಟ್ಟೆಮ್ಮ ನಿಟ್ಟೈಸದೆ ಸರಿವ.
ಸಕಳೇಶ್ವರದೇವರನರಿಯದ ನಿರ್ಭಾಗ್ಯರನೆಸೆವಾ. /40
ಕಾಮಿಸಿ ಕಲ್ಪಿಸಿ ಭಾವಿಸಿ ಬರಿದೆ ಬಳಲಿದೆ.
ಚಿಂತೆ ಮರುಳುತನಂ ಅದೆಂತು ಬಂದುದನಂತೆ ಕಾಬುದು.
ಚಿಂತೆ ಮರುಳುತನಂ ಅಚಿಂತ್ಯ ಸಕಳೇಶ್ವರ ಮಾಡಿದಂತೆ.
ಅಂತೆಯಲ್ಲದೆ ಎಂತೂ ಆಗದು ಚಿಂತೆ ಮರುಳುತನಂ./41
ಕಾಯಕಕ್ಕಾರದೆ, ಮೈಸೋಂಬತನದಿಂದ
ಬೇರೆ ಕೂಳ ಗಳಿಸಲಾರದೆ ಹಸಿದಿಪ್ಪರಯ್ಯಾ.
ಉಡಲು ಸೀರೆಯ ಗಳಿಸಲಾರದೆ, ಕಚ್ಚುಟವ ಕಟ್ಟಿಕೊಂಡಿಪ್ಪರಯ್ಯಾ.
ಮೀಯಲೆಣ್ಣೆಯ ಗಳಿಸಲಾರದೆ, ಮಂಡೆ ಬೋಳಾಗಿಪ್ಪರಯ್ಯಾ.
ದಿಟದಿಂದ ಬಿಡಿಸದೆ,
ನಿಸ್ಸಂಸಾರದ ಸಟೆಯನವಧರಿಸಿಕೊಂಡಿಪ್ಪವರಿಗೆ ಆನಂಜುವೆ,
ಸಕಳೇಶ್ವರದೇವಾ./42
ಕಾಯದ ಕಳವಳದಲ್ಲಿ ಹುಟ್ಟಿ, ಸಂಸಾರವನೆ ತೊರೆದು,
ಲಿಂಗಮುಖವರಿಯದವರೆಲ್ಲಾ ಅಂತಿರಲಿ ಅಂತಿರಲಿ.
ಬ್ರಹ್ಮೋಪದೇಶವನೆ ಕೊರಳಲ್ಲಿರಿಸಿಕೊಂಡು,
ವಿಷಯಾದಿಗಳ ಕೊಂಡಾತನಂತಿರಲಿ, ಅಂತಿರಲಿ.
ಪಂಚಮಹಾವೇದಶಾಸ್ತ್ರವನೋದಿ,
ಲಿಂಗವುಂಟು ಇಲ್ಲಾಯೆಂಬ ಶ್ವಾನರಂತಿರಲಿ, ಅಂತಿರಲಿ.
ತನುವ ಹೊತ್ತು ತೊಳಲಿ ಬಳಲುವ
ಕಾಲವಂಚಕ ಯೋಗಿಗಳೆಲ್ಲಾ ಅಂತಿರಲಿ, ಅಂತಿರಲಿ.
ಪಂಚಮಹಾಶೈವರು ಭ್ರಷ್ಟರಾಗಿಹೋದರು.
ಎಂತು ಲಿಂಗವಂತಂಗೆ ಸರಿಯೆಂಬೆ ?
ಅದ್ವೈತಿಗಳೆಲ್ಲಾ ಲಿಂಗಾರಾಧನೆ ಹುಸಿಯೆಂದು,
ಬುದ್ಧಿ ತಪ್ಪಿ, ಗಮನಗೆಟ್ಟುಹೋದರು.
ಅದೃಶ್ಯಂ ಭಾವನೋ ನಾಸ್ತಿ ದೃಶ್ಯಮೇವ ವಿನಶ್ಯತಿ |
ಸದ್ಬ್ರಹ್ಮಂ ತು ನಿರಾಕಾರಂ, ತಥ್ಯಂ ಧ್ಯಾಯಂತಿ ಯೋಗಿನಃ ||
ಎಂದುದಾಗಿ, ಬ್ರಾಹ್ಮಣನೆಂದಡೆ
ಬ್ರಹ್ಮನ ಶಿರವ ದಂಡವ ಕೊಂಡರು.
ಬ್ರಹ್ಮವಾದಿಗಳು ಲಿಂಗಕ್ಕೆ ದೂರವಾಗಿ ಹೋದರು.
ಅಹಮಿಲ್ಲದ ಕಾರಣ, ಸಕಳೇಶ್ವರದೇವಯ್ಯಾ,
ನಿಮ್ಮ ಶರಣರು ಜಗವಂದಯರಾದರು./43
ಕಾಯದಿಂದ ಗುರುವ ಕಂಡೆ, ಕಾಯದಿಂದ ಲಿಂಗವ ಕಂಡೆ,
ಕಾಯದಿಂದ ಜಂಗಮವ ಕಂಡೆ, ಕಾಯದಿಂದ ಪ್ರಸಾದವ ಕಂಡೆ.
ಕಾಯದಿಂದ ಸಕಳೇಶ್ವರದೇವರ ಪೂಜಿಸುವಲ್ಲಿ,
ಉತ್ತರಸಾಧಕನಾದೆಯಲ್ಲಾ, ಎಲೆ ಕಾಯವೆ./44
ಕಾಲವಶದಿಂದ ಕಾಲನೆಡಹಿದಡೆ,
ಹಾಲುಗುಡಿದಂತೆ ಪರಿಣಾಮಿಸಬೇಕು.
ಕಾಲಕ್ಕೆ ಬೇಸತ್ತು ಬೆಂಬೀಳಲಾಗದು.
ಕಾಲ ಮುನ್ನಾದಿಯಲ್ಲಿ ಬಂದುದಯ್ಯ !
ಕಾಲನ ಬಾಯಿಗೆ ಒಳಗಾಗದ ಮುನ್ನ,
ಕಾಲಾಂತಕ ಸಕಳೇಶ್ವರದೇವ ಶರಣೆಂದು ಬದುಕಿರಯ್ಯಾ./45
ಕಿವಿಯಲ್ಲಿ ಕೀಟಕ, ಕೊರಳಲೊಂದೊದರು.
ತಲೆಯಲ್ಲಿ ಹುಳಿತದೊಂದೇರು.
ನೋವರಿಯದೆ ವಿಷಯಕ್ಕೆ ಹರಿವುದು ಸೊಣಗನು.
ಬೆನ್ನಹೇರು ನೆಲಕ್ಕೆ ನೂಕಲು,
ಬರವೆಯ ಕಾಗೆ ಬಂದಿರಿಯಲು,
ನೋವನರಿಯದೆ ವಿಷಯಕ್ಕೆ ಹರಿವುದು ಗಾರ್ದಭನು.
ಹರೆಯ ಶಬುದಕ್ಕೆ, ಬೊಬ್ಬೆಯ ರಭಸಕ್ಕೆ
ತೊಟ್ಚಂಬು ತೊಟ್ಟುಚರ್ಿ ಬೀಳಲು,
ನೋವನರಿಯದೆ ವಿಷಯಕ್ಕೆ ಹರಿವುದು ಹರಿಣನು.
ಸಕಳೇಶ್ವರದೇವಾ,
ನೀ ಮಾಡಿದ ಮಾಯೆ,
ಆರಾರನಾಯತಗೆಡಿಸದೊ ?/46
ಕುಭಾಷೆ ಸುಭಾಷೆಯ ಕೇಳದಂತಿರಬೇಕು.
ಮೃದುಕಠಿಣಂಗಳನಾರಯ್ಯದಂತಿರಬೇಕು.
ರಸಗಂಧಂಗಳ ಅರಯದಂತಿರಬೇಕು
ಲಿಂಗವಲ್ಲದೆ ಮತ್ತೊಂದ ಕಾಣದಂತಿರಬೇಕು
ಇಂದ್ರಿಯಂಗಳ ಬಳಿ ಸಂದಲ್ಲದೆ
ದೇವ ಸಕಳೇಶ್ವರದೇವನನೊಲಿಸಬಾರದು./47
ಕುರುಹಿನ ರೂಹಿನ ಕೈಯಲ್ಲಿ ದರ್ಪಣವಿದ್ದಲ್ಲಿ ಫಲವೇನು ?
ಒಂದಕ್ಕೆ ಜೀವವಿಲ್ಲ , ಒಂದಕ್ಕೆ ತೇಜವಿಲ್ಲ .
ಕಾರಣವರಿಯದ ನಿಃಕಾರಣ ಮನುಜರ ಕೈಯಲ್ಲಿ
ಲಿಂಗವಿದ್ದು ಫಲವೇನು ?
ಅಂಗರಹಿತವಾದ ಸಂಗವನರಿಯರು.
ಸಂಗರಹಿತವಾದ ಸುಖವನರಿಯರು.
ನಿಸ್ಸಂಗಿ ನಿಂದ ನಿಲವ,
ಸಕಳೇಶ್ವರದೇವಾ, ನಿಮ್ಮ ಶರಣ ಬಲ್ಲ ./48
ಗರ ಹೊಡೆದಂತೆ ಬೆರತುಕೊಂಡಿಪ್ಪರು.
ಮರನೇರಿ ಬಿದ್ದಂತೆ ಹಮ್ಮದಂಬೋದರು.
ಉರಗನ ವಿಷವಾವರಿಸಿದಂತೆ, ನಾಲಗೆ ಹೊರಳದು, ಕಣ್ಗಾಣರು.
ನಿಮ್ಮ ಕರುಣವೆ ಕರ ಚೆಲುವು, ಸಕಳೇಶ್ವರಯ್ಯಾ.
ಸಿರಿ ಸೋಂಕಿದವನ ಪರಿ ಬೇರೆ ತಂದೆ./49
ಗಿರಿಯ ಕರದಿಂದೆತ್ತಿದಡೇನು ?
ಹರಿವ ವಾರುಧಿಯನಾಪೋಷಣಂಗೊಂಡಡೇನು ?
ಗಗನ ಗಮನದಲ್ಲಿ ಸುಳಿದಡೇನು ?
ಇವರೆಲ್ಲರೂ ಪವನದ ಬಳಿಯಲಭ್ಯಾಸಿಗಳು.
ಅಚರ್ಿಸಿ, ಪೂಜಿಸುವ ಮಚ್ಚರದೊಳಗಣ ಲೌಕಿಕರ ಮೆಚ್ಚ,
ಸಕಳೇಶ್ವರದೇವ, ವೇಷಡಂಬಕರ./50
ಗುರುಪ್ರಸಾದವ ಕೊಂಬರೆ, ನಾಚುವದು ಮನ.
ಲಿಂಗಪ್ರಸದಾವ ಕೊಂಬರೆ, ನಾಚುವದು ಮನ.
ಜಂಗಮಪ್ರಸಾದವ ಕೊಂಬರೆ, ನಾಚುವದು ಮನ.
ಸಮಯಪ್ರಸಾದವ ಕೊಂಬರೆ, ನಾಚುವದು ಮನ.
ಸೂಳೆಯ ಬೊಜಗನ ಎಂಜಲ ತಿಂಬರೆ, ನಾಚದು ಮನ.
ಮಹಂತ ಸಕಳೇಶ್ವರಯ್ಯನು ಮೂಗ ಕೊಯ್ಯದೆ ಮಾಣನು. /51
ಘನಕ್ಕೆ ಘನಪದವಿಯ ಬಯಸೆನಾಗಿ ಎನ್ನ ಮನವ ನೀ ಬಲ್ಲೆ.
ಭಕ್ತರಿಗೆ ಬೇಡಿತ್ತ ಕುಡುವ ವರದಾನಿ ನೋಡಯ್ಯಾ.
ಆನೇನುವ ಬೇಡೆನಾಗಿ, ಸಕಳೇಶ್ವರದೇವ ಎನ್ನ ಮಾತ ಮನ್ನಿಸುವ. /52
ಚಂದ್ರೋದದಯದಲುಂಬ ಚಕೋರಗೋಗರವ ಹಾಕಿ,
ಬಸುರ ಬಡಿದುಕೊಂಡು ಉಣ್ಣದೆಂದಳುವರು ನೋಡಾ.
ಲೋಕದ ಚಿಂತೆಯನನಂತವನಾಡುವರಲ್ಲದೆ,
ತಮ್ಮ ಚಿಂತೆಯನಾಡುವರೊಪ್ಪಚ್ಚಿಯೂ ನೋಡಾ.
ಮಹಂತ ಸಕಳೇಶ್ವರದೇವಾ, ನಿಮ್ಮ ಶರಣರ ನಿಲವಿಂಥಾದಯ್ಯಾ. /53
ಚಿಕ್ಕಟು ಕಡಿದಡೇನು ಮನಕ್ಕತಿಯರಿಯದು.
ಹೊಕ್ಕು ಹರಿದಡೇನು ಹೊಲನ ಮೇಯಲರಿಯದು.
ಮಕ್ಕಳ ಹಡೆದಡೇನು ಒಕ್ಕಲೂರಾಗದು.
ಲೆಕ್ಕಕ್ಕೊಂದೈನೂರಿದ ಡೇತಕೆ ಬಾತೆಯಯ್ಯಾ !
ಮಿಕ್ಕ ಕುಕವಿಗಳ ಅರೆವಚನ,
ಹೊಲದ ಕುಕ್ಕತೆನೆಯಾದಂತೆ ಕಾಣಾ, ಸಕಳೇಶ್ವರದೇವಾ. /54
ಛಲವನೆತ್ತಿಕೊಂಡ ಬಳಿಕ ಬಲುಹು ಸಲಿಸಲೇಬೇಕು.
ತನ್ನ ಮನವ ತಾನರಿದು ಗೆಲಲೇಬೇಕು.
ದೇವರೊಲವುಳ್ಳವರ ಕಂಡು ತಾನಾದೆನೆಂದೆಡೆ,
ಛಲ ಸಲ್ಲದು ಕಂಡಯ್ಯಾ.
ನೇಮವೆಂದಡೆ ಕಡೆ ಮುಟ್ಟಿಸಲೀಯೆ, ತಪ್ಪವಿಡಿವೆ ನೀನು.
ಇದು ಕಾರಣ,
ನಾನೇನು ಪೆರತೊಂದನರಿಯದಂತಿರಿಸೆನ್ನ, ಸಕಳೇಶ್ವರದೇವಾ./55
ಜಗದಗಲದ ಕಲ್ಲು ನೆಲಕ್ಕೆ ಬಿದ್ದಡೆ, ಕೆಲಕ್ಕೆ ಸಾರುವನೆಗ್ಗ.
ನಗುತಲು ತಲ್ಲಣಿಸದೆ ಶಿವಶರಣನುತ್ತಿಹುದು.
ನಗುತಲು ತಲ್ಲಣಿಸದೆ ಹರಶರಣೆನುತ್ತಿಹುದು.
ಸಕಳೇಶ್ವರದೇವರು ವಿಮುಖವಾದಡೆ,
ನೆನಹೆಂಬಲಗಿನಲ್ಲಿ ಕೈ ಮಾಡುತ್ತಿಹುದು./56
ಜನಮೆಚ್ಚೆ ಶುದ್ಧನಲ್ಲದೆ, ಮನಮೆಚ್ಚೆ ಶುದನಲ್ಲವಯ್ಯಾ
ನುಡಿಯಲ್ಲಿ ಜಾಣನಲ್ಲದೆ, ನಡೆಯಲ್ಲಿ ಜಾಣನಲ್ಲವಯ್ಯಾ.
ವೇಷದಲ್ಲಿ ಅಧಿಕನಲ್ಲದೆ, ಭಾಷೆಯಲ್ಲಿ ಅಧಿಕನಲ್ಲವಯ್ಯಾ.
ಧನ ದೊರಕದಿದ್ದಡೆ ನಿಸ್ಪೃಹನಲ್ಲದೆ, ಧನ ದೊರಕಿ ನಿಸ್ಪೃಹನಲ್ಲವಯ್ಯಾ.
ಏಕಾಂತದ್ರೋಹಿ, ಗುಪ್ತಪಾತಕ, ಯುಕ್ತಿಶೂನ್ಯಂಗೆ
ಸಕಳೇಶ್ವರದೇವ ಒಲಿ ಒಲಿಯೆಂದೆಡೆ, ಎಂತೊಲಿವನಯ್ಯಾ?/57
ಜ್ಯೋತಿ ಸೋಂಕಿದ ಬತ್ತಿಯೆಲ್ಲ ಜ್ಯೋತಿಯಪ್ಪವಯ್ಯಾ.
ಸಾಗರವ ಮುಟ್ಟಿದ ನದಿಗಳೆಲ್ಲ ಸಾಗರವಪ್ಪವಯ್ಯಾ.
ಪ್ರಸಾದವ ಮುಟ್ಟಿದ ಪದಾರ್ಥಂಗಳೆಲ್ಲ ಪ್ರಸಾದವಪ್ಪವಯ್ಯಾ.
ಲಿಂಗವ ಮುಟ್ಟಿದ ಅಂಗವೆಲ್ಲ ಲಿಂಗಾಂಗವಪ್ಪವಯ್ಯಾ.
ಸಕಳೇಶ್ವರದೇವಯ್ಯಾ, ನಿಮ್ಮ ಮುಟ್ಟಿದವರೆಲ್ಲ
ನಿಮ್ಮಂತೆ ಅಪ್ಪರಯ್ಯಾ./58
ತನುವ ಪಡದು, ಧನವ ಗಳಿಸಬೇಕೆಂದು
ಮನುಜರ ಮನೆಯ ಬಾಗಿಲಿಗೆ ಹೋಗಿ,
ಮನಬಂದ ಪರಿಯಲ್ಲಿ ನುಡಿಸಿಕೊಂಡು,
ಮನನೊಂದು ಬೆಂದು ಮರುಗುತ್ತಿರಲಾರೆ.
ಸಕಳೇಶ್ವರದೇವಾ, ನೀ ಕರುಣಿಸಿ ಇದ ಠಾವಿನಲ್ಲಿ ಇಹಂಥಾ
ಪರಮಸುಖ ಎಂದು ದೊರಕೊಂಬುದೊ ?/59
ತಮತಮಗೆ ಸಮತೆಯನು ಹೇಳಬಹುದಲ್ಲದೆ,
ತಮತಮಗೆ ಸಮತೆಯನು ಆಡಬಹುದಲ್ಲದೆ,
ಕನಲಿಕೆಯ ಕಳೆದಿಪ್ಪವರಾರು ಹೇಳಾ?
ಒಬ್ಬರೊಬ್ಬರ ಹಳಿಯದಿಯಪ್ಪವರಾರು ಹೇಳಾ ? ಮುನಿಸ ಮುಂದಿಟ್ಟಿಪ್ಪರು.
ಇದು ಯೋಗಿ, ಮಹಾಯೋಗಿಗಳಿದಪ್ಪುದು ನೋಡಾ.
ಸಕಳೇಶ್ವರದೇವಾ, ನೀನು ಕರುಣಿಸಿದವರಿಗಲ್ಲದೆಯಿಲ್ಲಾ./60
ದಾಸ ವಸ್ತ್ರವನಿತ್ತ ಠಾವು ಲೇಸಾಯಿತು ್ತ.
ತವನಿಧಿಯ ಪಡೆದ ಠಾವು ಹೊಲ್ಲೆಹವಾಯಿತ್ತು .
ಸಿರಿಯಾಳ ಮಗನನಿತ್ತ ಠಾವು ಲೇಸಾಯಿತ್ತು .
ಮರಳಿ ಬೇಡಿದ ಠಾವು ಹೊಲ್ಲೆಹವಾಯಿತ್ತು .
ಬಲ್ಲಾಳ ವಧುವಿನಿತ್ತ ಠಾವು ಲೇಸಾಯಿತ್ತು.
ಸ್ವಯಲಿಂಗವಾದ ಠಾವು ಹೊಲೆಹವಾಯಿತ್ತು .
ಇವರೆಲ್ಲರೂ ಸಕಳೇಶ್ವರದೇವರಲ್ಲಿ
ಅಪೇಕ್ಷಿತರಲ್ಲದೆ, ನಿರಪೇಕ್ಷಿತರಾರೂ ಇಲ್ಲ ./61
ದುಃಖ ಹೊಯಿತ್ತು ತನ್ನಲ್ಲಿ ತಾನಿಲ್ಲದೇ.
ಸುಖ ನಿಂದುದು ತನ್ನಲ್ಲಿ ತಾನು ನಿಜವಾಗಿ,
ಭ್ರಾಂತುದೋರದೆ, ಸಕಳೇಶ್ವರದೇವಾ ತಾನಾಗಿ ನಿಂದವಂಗೆ. /62
ದೇವರೆದರಾವು ಏಳುವೆವಯ್ಯಾ, ದೇವ ಬಿದ್ದರಾವು ಬೀಳುವೆವಯ್ಯಾ.
ದೇವ ಸತ್ತರಾವು ಸಾವೆವಯ್ಯಾ, ದೇವ ಬದುಕಿದರಾವು ಬದುಕುವೆವಯ್ಯಾ.
ನಾ ಸತ್ತು , ದೇವ ಹಿಂದುಳಿದಡೆ,
ಎನ್ನಿಂದ ಬಿಟ್ಟು ವ್ರತಗೇಡಿಗಳಾರು ಹೇಳಾ, ಸಕಳೇಶ್ವರದೇವಾ./63
ದೇವಾ, ನಿಮ್ಮಲ್ಲಿ ಬಯಸಿ ಬೇಡುವಡೆ ಏನಿಲ್ಲ ದೇವಾ ?
ಆಯುವ ಬೇಡುವೆನೆ ? ಸಂಸಾರಕ್ಕಾನಂಜುವೆ.
ಸ್ತ್ರೀಯ ಬೇಡುವೆನೆ? ಪರಾಂಗನೆಯ ಪಾಪ.
ಮುಕ್ತಿಯ ಬೇಡುವೆನೆ? ಅದು ನಿನ್ನ ಪದವಿ.
ಸಕಳೇಶ್ವರದೇವಾ, ಆನೇನುವನೊಲ್ಲೆ.
ನಿಮ್ಮ ಶರಣರ ಸಸಂಗವುಳ್ಳಡೆ ಸಾಕು./64
ದೇಶ ದೇಶಾಂತರವ ತಿರುಗಿ, ತೊಳಲಿ ಬಳಲಿ,
ಕೆಲರ ಹಳಿದು, ಕೆಲರ ಹೊಗಳಿ, ವೃಥಾ ಹೋಯಿತ್ತೆನ್ನ ಸಂಸಾರ.
ಗಿರಿಯ ಶಿಖರ ಮೇಲೆ ಲಿಂಗಧ್ಯಾನದಲ್ಲಿ
ಮೌನಿಯಾಗಿರಿಸೆನ್ನ, ಸಕಳೇಶ್ವರಯ್ಯಾ./65
ದೇಹಧರ್ಮದಾಸೆ ಬೇರೆ, ಭಕ್ತಿಯಿಲ್ಲದ ಬಗೆ ಬೇರೆ.
ಎನಗೆಂದು ಮಾಡಿದಿರಿ, ಈ ಸಕಲಪ್ರಪಂಚುವನು.
ಎನಗೆಂದು ಮಾಡಿದಿರಿ, ಈ ಸಕಲ ವ್ಯಾಪ್ತಿಗಳನು.
ನಿಶ್ಚಿಂತ ಪರಮಸುಖವನೆಂದಿಗೀವೆ, ಸಕಳೇಶ್ವರದೇವಾ./66
ದೊರೆಕೊಂಡಂತೆ ದಣಿದಿಹ ಮನದವರ ತೋರಾ,
ದುಃಖಕ್ಕೆ ದೂರವಾಗಿಹರ ತೋರಾ
ಸದಾನಂದದಲ್ಲಿ ಸುಖಿಯಾಗಿಪ್ಪವರ ತೋರಾ.
ಸಕಳೇಶ್ವರದೇವಾ ಎನಗಿದೇ ವರವು ಕಂಡಾ, ತಂದೆ./67
ಧನವ ಪಡೆದು ವಿಭೋಗವನರಿಯದ ಲೋಭಿಗೆ
ಸಿರಿಯೇಕೆ ಬಯಸುವಂತೆ ?
ಲೇಸ ಕಂಡು, ಮನ ಬಯಸಿ, ಪಂಚಭೂತಿಕ ಸುಯ್ದು ಮರುಗುವಂತೆ,
ಕನ್ನೆ ಅಳಿಯಳು, ಕನ್ನೆ ಉಳಿಯಳು.
ಜವ್ವನ ತವಕದಿಂದ ಅವಳು
ಕಂಗಳ ತಿರುಹುತ್ತ ಮತ್ತೊಬ್ಬಂಗೊಲಿದಡೆ, ಅದೆಂತು ಸೈರಿಸುವೆ ?
ನಿಧಾನವ ಕಾಯ್ದಿಪ್ಪ ಬೆಂತರನಂತೆ ನೋಡಿ ಸೈರಿಸುವೆ?
ಸಂಸಾರದಲ್ಲಿ ಹುಟ್ಟಿ, ಭಕ್ತಿಯನರಿಯದ ಭವದುಃಖಿಯ ಕಂಡು,
ಸಕಳೇಶ್ವರದೇವ ನಗುವ./68
ಧಾತುಗೆಟ್ಟು ಬೋಳಾದಡೆ, ನಿಜವನೆಯಲುಬಲ್ಲುದೆ ಅಯ್ಯಾ?
ವಿಕೃತವೇಷವ ತೋರಿ, ಉದರ ಹೊರೆವುದಕ್ಕೆಂತಯ್ಯಾ?
ಉಪಾಧಿವಿಡಿದು ಮಾಡುವ ಷೋಡಶಕ್ರೀ,
ಸಕಳೇಶ್ವರದೇವಂಗೆ ದೂರವಯ್ಯಾ./69
ನಡೆ ನುಡಿ ಚೈತನ್ಯಹರಣವುಳ್ಳನ್ನಕ್ಕ ಕ್ರೀಯೆಂತಂತೆ ನಡೆವುದು.
ಉರವಣೆ ಬೇಡ ಕಂಡಾ ಮನವೆ.
ಹೂಮಿಡಿ ಹರಿದಡೆ, ಹಣ್ಣಹವೆ, ಎಲೆ ಮರುಳೆ?
ಲಿಂಗದಲ್ಲಿ ಮನ ಲೀಯವಾಗದನ್ನಕ್ಕ ಸಕಳೇಶ್ವರದೇವ ಮೆಚ್ಚುವನೆ?/70
ನರರನುಪಧಾವಿಸಿ ಅವರಿಚ್ಛೆಗೆ ನುಡಿದು,
ಬಂದ ಒಡಲ ಹೊರೆದು, ಹಿರಿಯರೆನಿಸಿಕೊಂಬ
ಡಂಬಕತನಕಾನಂಜುವೆನಯ್ಯಾ.
ಹಿರಿದಡವಿಯ ಗಿರಿಗಹ್ವರದೊಳಗೆ ಪರಿಪರಿಯ ಹೂಪತ್ರೆಯ ತಂದು,
ಬಿಡದೆ ಲಿಂಗದೇವನ ಪೂಜಿಸುತ,
ನೋಡುವ ಸುಖವೆಂದಪ್ಪುದೊ ಎನಗೆ ?
ಸಕಳೇಶ್ವರದೇವಾ, ಶರಣೆಂದು ವೀಣಾವಾದ್ಯವ ಬಾರಿಸುತ,
ಆಡಿ ಹಾಡುವ ಸುಖವೆನಗೆಂದಪ್ಪುದೊ ಶ್ರೀಶೆಲದಲ್ಲಿ ?/71
ನವಸಾಸಾ ಅತಿಬಳನೆಂದಡೆ, ಒಂದು ಕೇಶವ ಕಿತ್ತನೆ ?
ಶಿವನಿತ್ತ ಪಿಂಡವ, ಶ್ರೀರಾಮನು ಸೀತೆಗೆ ದಿಬ್ಯವನಿಕ್ಕಿಹೆನೆಂದು,
ಹೋಮಕುಂಡಲದೊಳಗುರುಹಿದಡೆ,
ಬ್ರಹ್ಮಾಂಡವನೊಡೆದು ಮರುಳುತಿದ್ದಲಿ ್ಲ, ಉರಿನಾಲಗೆಯ ಕೀಳನೆ ?
ಪರಮನೊಲಿದ, ಪಶುಪತಿ ನಿರೂಪನೊಲಿದ, ಋಷಿಯನೊಂದು ವಾಕ್ಯದಿಂದ
ಜಲ ಸಾಗರಂಗಳು ಬಂಧನಕ್ಕೆ ಬಾರವೆ, ನಳನೀಲರ ಕೈಯಲ್ಲಿ ?
ಈಶ್ವರನ ಶರಣರ ಘಾಸಿಮಾಡನೆನೆಂದಡೆ, ನೊಸಲಕ್ಕರವ ತೊಡೆಯರೆ ?
ಅಸುರನ ಪ್ರಹಾರವಿಡಿದು, ಹಿರಣ್ಯಾಕ್ಷನ ಕೊಂದು,
ಶಿರವ ಹೋಗಾಡನೆ ನರಸಿಂಹನು?
ಸ್ವತಂತ್ರನಯ್ಯಾ, ಸಕಳೇಶ್ವರದೇವ ನಿಮ್ಮ ಶರಣನು.
ಸಿಡಿಲ ಸ್ವೀಕರಿಸನೆ ಶಿವಯೋಗಿ ಸಿದ್ಧರಾಮಯ್ಯನು?/72
ನಿಜವನರಿಯದ ಶರಣರು, ಲಿಂಗೈಕ್ಯರು,
ಗಿರಿ ಗಗನ ಗಹ್ವರದೊಳಗಿದ್ದಲ್ಲಿ ಫಲವೇನೊ?
ಮನವು ಲೇಸಾಗಿದ್ದಡೆ ಸಾಲದೆ?
ಪರಮಸುಖಿಯಾಗಿರ್ಪ ಶರಣನ ಹೃದಯದಲ್ಲಿ
ಸದಾಸನ್ನಹಿತನು ಸಕಳೇಶ್ವರದೇವ./73
ನಿನ್ನ ಹಂಗೇನು ಹರಿಯೇನು, ಅಂಜದೆ ನುಡಿವೆನು.
ನೀ ಹೊರೆವ ಜಗದ ಜೀವರಾಸಿಗಳೊಳಗೆ,
ಆಸೆಗೆ ಬೇರೆ ಕೊಟ್ಟುದುಳ್ಳಡೆ ಹೇಳು ದೇವಾ.
ಅಚರ್ಿಸಿ ಪೂಜಿಸಿ, ನಿಮ್ಮ ವರವ ಬೇಡಿದೆನಾದಡೆ
ಬಾರದ ಭವಂಗಳಲ್ಲಿ ಎನ್ನ ಬರಿಸು, ಸಕಳೇಶ್ವರದೇವಾ./74
ನೀನೆನ್ನನೊಲ್ಲದಿದ್ದರೆ ನಾನಾರ ಸಾರಿ ಬದುಕಲಯ್ಯಾ?
ಮೇಕುದೋರಿ ಗಂಡನ ಮಾಡಿಕೊಂಡವರುಂಟೆ?
ನಿಮ್ಮಿಂದಲಧಿಕರುಂಟೆ ಹೇಳಾ?
ತಲೆಯೂರಿ ತಪಿಸಿದಡೆ, ಅಲ್ಲಿ ಮೂರ್ತಿಯ ತೋರುವಾತ ನೀನೆ.
ಕಣ್ಣಮುಚ್ಚಿ ಕಮರಿಯ ಹಾಯ್ದರೆಯೂ
ಅಲ್ಲಿ ಪದವಿಯ ಕೊಡುವವನು ನೀನೆ.
ನೀನು ಕರುಣಿಸುವನ್ನಕ್ಕ, ನಾನು ಹೀಗಿದೇನೆ ಹೇಳಾ, ಸಕಳೇಶ್ವರಾ./75
ನೇಮವೆಂದಡೆ ಕಡೆಮುಟ್ಟ ಸಲ್ಲದಯ್ಯಾ.
ಸಮಯಾಚಾರದ ಮಾಡುವುದೆ ಉಚಿತವಯ್ಯಾ.
ತನ್ನ ನೇಮವನಿದಿರಿಂಗೆ ತೋರಿದಡೆ, ಅದೇ ವ್ರತಕ್ಕೆ ಭಂಗವಯ್ಯಾ.
ತನ್ನಲಿಂಗಕ್ಕೆ ಬೇಕೆಂಬ ಉಪಜೀವಿಗಳನು
ಸಕಳೇಶ್ವರದೇವರು ಮೆಚ್ಚರು./76
ನೇಮಿಯ ನೇಮ, ಲಿಂಗಾರ್ಚನೆಯ ಕೆಡಿಸಿತ್ತಲ್ಲಾ .
ಮತಿಗೆಟ್ಟ ಕುಂಬಾರ ಮಣ್ಣಸೂಜಿಯ ಮಾಡಿ,
ಕಮ್ಮಾರಗೇರಿಗೆ ಮಾರಹೋದಂತೆ,
ಸಕಳ್ವೇರದೇವಾ,
ನಿಮ್ಮ ಶರಣರು ಶೃಂಗಾರದಲ್ಲಿ ಲಿಂಗವ ಮರೆದರಲ್ಲಾ./77
ಪರಮಾರ್ಥದ ಪರೀಕ್ಷೆಯನರಿಯದೆ,
ನಿಂದಿಸಿ ನುಡಿವರ ಕಂಡಡೆ, ಏನೆಂಬೆನು?
ಅರಳಿಯ ಮರನುಲುಹೇಂಬೆನು.
ಮೂಗಜಾತಿಯ ಶಬುದವೆಂಬೆನು.
ಸಕಳೇಶ್ವರದೇವಾ,
ನಿಮ್ಮನುಭಾವವನರಿಯದವರ ಕಂಡೆನಾದಡೆ, ಹಳಿಹಳಿಯೆಂಬೆನು./78
ಪರಸತಿಯೆನಗೆ ತಾಯ ಸಮಾನವಯ್ಯಾ.
ಕನ್ಯಾಸ್ತ್ರೀ ಎನಗೆ ಸೋದರ ಸಮಾನವಯ್ಯಾ.
ವಿಧವೆಯೆನಗೆ ಅಮೇಧ್ಯದ ಸಮಾನವಯ್ಯಾ.
ಪಣ್ಣಾಂಗನೆಯ ಸಂಗವೆನಗೆ ಕುನ್ನಿಯ ಸಮಾನವಯ್ಯಾ.
ದಾಸಿಯ ಸಂಗವೆನಗೆ ಸೂಕರನ ಮಾಂಸದ ಸಮಾನವಯ್ಯಾ.
ಇಂತಿದಕ್ಕೆ ಹೇಸದೆ ಆಶೆಯ ಮಾಡಿ,
ತನುಲೋಭದಿಂದ ಕೂಡಿದಡೆ,
ತನುವ ದಿಗ್ಬಲಿಗೊಡುವೆ.
ಮನತೋಭದಿಂದ ನೆನೆದಡೆ.
[ರವಿ]ಶಶಿಗಳುನ್ನಕ್ಕರ ನರಕದಲ್ಲಿಕ್ಕದಿದರ್ೆಯಾದಡೆ
ನಿನಗೆನ್ನಾಣೆಯಯ್ಯಾ ಸಕಳೇಶ್ವರಾ./79
ಪರೀಕ್ಷೆಯನಾರು ಬಲ್ಲರು ? ಪರೀಕ್ಷೆಯನಾರು ಬಲ್ಲರು ?
ನಾದಬಿಂದುವಿನ ವಿಕೃತಿಯೊಳಗಣ ಹಂಸನ ಸ್ಥಳವಿಟ್ಟಾತ,
ಶಶಿಧರನಲ್ಲದೆ ಮತ್ತೊಬ್ಬನಿಲ್ಲ.
ಲೋಲುಪ್ತರಾದವರೆಲ್ಲ, ಹಂಸನ ವಂಶಿಕರಲ್ಲದೆ,
ಸುಪ್ಪಾಣಿಯಂತೆ ಸುಪಥವಾದ ಶರಣಂಗೆ ಹತ್ತೂದೆ ಲೌಕಿಕಾರ್ಥ ?
ಮುತ್ತ ಹುಳಿತಡೆ, ನಾತ ಹುಟ್ಟುವದೆ ಲೋಕದಲ್ಲಿ ?
ಬಯಕೆವಂತರೆಲ್ಲ ಐಕ್ಯವಂತರಹರೆ ?
ಹೊನ್ನು ಧರೆಯ ಮೇಲೆ ಬಿದ್ದರೆ, ನಿಟ್ಟೈಸುವದೆ ?
ಗಂಭೀರದ ತೆರನನರಿಯದವನ ನಿಧಿ, ಪರಮಪರೀಕ್ಷೆಯನರಿಯದೆ,
ಪರುಷದಂತಿಪ್ಪ ಮಹಂತ ಧರೆಯ ಮೇಲೆ,
ಕಾರಮೇಘ ಸುರಿದು, ನದಿಯ ಬೆರಸುವಂತೆ,
ಧರೆಯೊಳಗೆ ಹುಟ್ಟಿದ ಪುಣ್ಯಲಂಗಳ ಮಾಡಿ.
ನಿಮ್ಮ ಬೆರಸುವನೆ, ಸಕಳೇಶ್ವರದೇವಾ ನಿಮ್ಮ ಶರಣ./80
ಪರುಷಮೃಗ ಬಂದು ನಿಂದಲ್ಲಿ, ಜನ್ನ ಜಯವಾಗದೆ ಧರ್ಮಂಗೆ ?
ಲಿಂಗಜಂಗಮಭಕ್ತಿ ಪ್ರಜ್ವಲಿಸದೆ ಸಿರಿಯಾಳಂಗೆ ?
ಪ್ರಸಾದವ ಬಿಬ್ಬಿಬಾಚಯ್ಯ ಮೆರವುತ ಬಪ್ಪಲ್ಲಿ,
ಅರಿಯದೆ ನಿಂದಿಸಿದಡೆ, ಹರಿದು ಹತ್ತದೆ
ಉರಿಯ ನಾಲಗೆ ಗ್ರಾಮವ?
ಹರಸಿತ್ತ ನಿರೂಪವಿಡಿ ಮಾರ್ಗದಲ್ಲಿ
ಮಾರಾರಿಯ ಶರಣರು ಬಂದು ನಿಂದಲ್ಲಿ
ಅರ್ಧಗೃಹಂಗಳುಳಿಯವೆ ?
ಸದ್ಯೋಜಾತನ ಶರಣರ ಧರೆಯನುರಿಯ ನಾಲಗೆಯ ನೀಡಿ,
ಕಲ್ಯಾಣವನಾಳುವ ಬಿಜ್ಜಳನ ಮುಟ್ಟಿನಿಂದಡೆ,
ಹೋ ಹೋ! ಇದ್ದಂತೆ ಬರಬೇಕೆಂದಡೆ,
ಕೋಪಾಟೋಪವಂ ಬಿಟ್ಟು ಕಳದು, ಸಾಮಾನ್ಯವಾಗದೆ ?
ಶಿವನೊಲಿದ ಸಿದ್ಧರಿಗೆ ಅಂಗದ ಮೇಲೆ ಲಿಂಗವವಿಲ್ಲದವನು
ಅಂಗಳವನು ಮೆಟ್ಟಲಾಗದೆಂದಡೆ,
ಉರಿಯ ಜ್ವಾಲೆಯ ಬಿಟ್ಟಡೆ,
ಪರಿಹರಿಸದೆ ಕುಂಚಿಗೆಯ ತುದಿಯಲ್ಲಿ?
ಪರಮನೊಲಿದ ಶರಣರು ಸ್ವತಂತ್ರಮಹಿಮರು.
ಅದಂತೆಂದಡೆ: ಅವರೆಂದಂತೆ ಅಹುದೆಂದಡೆ, ಅಂಗದ ಮೇಲೆ ಲಿಂಗಪ್ರತಿಷ್ಠೆಯಾಗದೆ,
ಶಿವಯೋಗಿ ಸಿದ್ಧರಾಮಯ್ಯಂಗೆ
ಸಕಲಧೂರ್ತದುರಿತಂಗಳು ಬಿಟ್ಟೋಡುತ್ತಿದ್ದವು,
ಸಕಳೇಶ್ವರದೇವಾ, ನಿಮ್ಮ ಶರಣನ ದೇವತ್ವಕ್ಕಂಜಿ./81
ಪಿನಾಕಿಯ ಅಲ್ಲಟಪಲ್ಲಟದಿಂದ
ಪಂಚೈವರ ಪ್ರಾಣಂಗಳು ಸಂಚಗೆಡವೆ, ಹಲವು ಕಾಲ ?
ಲಿಂಗದ ಮೇಲಣ ನೋಟಭಾವ ತಪ್ಪಿ,
ತನು ಉರುಳಿ ಲಿಂಗವ ಬೆರಸನೆ ಅನುಮಿಷನು ?
ಒಬ್ಬ ಜಂಗಮ ಮನೆಗೆ ಬಂದಡೆ, ಇಲ್ಲೆಂದು ಕಳುಹಿದಡೆ,
ಅಲ್ಲಿ ಹೋಗದೆ ಬಸವರಾಜನ ಪ್ರಾಣ ?
ಬರಿದಳಲುವ ಬೆಳ್ಳಂಬವಿಲ್ಲದೆ ಪರಮಪದವುಳ್ಳವರ
ಮಹಾಬೆಳಗೊಳಕೊಳ್ಳದೆ ?
ತನ್ನಿಚ್ಛೆಯಲಾಗಿ ಹೋಗುತಿಪ್ಪ ಲಿಂಗದಿಚ್ಛೆಯನರಿಯದವರ ಕಂಡಡೆ,
ಮೆಚ್ಚುವನೆ ನಮ್ಮ ಸಕಳೇಶ್ವರದೇವ?/82
ಪುಷ್ಪ ಧೂಪ ದೀಪ ನೈವೇದ್ಯ ಸೋಂಕಿದ ಸುಖವ,
ಲಿಂಗಾರ್ಪಿತ ಮಾಡುವ ಪರಿಯಿನ್ನೆಂತೊ?
ಅವಧಾನದೊಳಗೊಂದು ವ್ಯವಧಾನ ಬಂದಡೆ,
ವ್ಯವಧಾನವ ಸುಯಿಧಾನವ ಮಾಡುವ ಪರಿಯಿನ್ನೆಂತೊ?
ವ್ಯಾಪ್ತಿ ವ್ಯಾಕುಳ ವಾಕುಮನ [ವ] ರಿಯದನ್ನಕ್ಕ,
ಶರಣನೆನಿಸಬಾರದು, ಸಕಳೇಶ್ವರದೇವಾ ನಿಮ್ಮಲ್ಲಿ./83
ಪ್ರಕೃತಿಗುಣವಳಿಯದೆ, ವಿಕೃತವೇಷವ ಧರಿಸಿ,
ಕ್ರತುಮಾನವನ ಬೇಡುವ ಯಾಚಕನಲ್ಲ.
ಲಿಂಗಾಭಿಮಾನಿ, ತ್ರಿಭುವನ ಲಿಂಗಾಭಿಮಾನಿ,
ತ್ರಿಭುವನ ಭವನನ ಮುಖದಲ್ಲಿ ಬಂದುದನಲ್ಲದೆ ಕೈಕೊಳ್ಳ.
ಕೂರ್ಮನ ಶಿಶುವಿನಾಪ್ಯಾಯನದಂತೆ,
[ಆರಾ]ಧ್ಯ ಸಕಳೇಶ್ವರಾ, ನಿಮ್ಮ ಜ್ಞಾನಾಮೃತವನುಂಡು ಸುಖಿಯಾಗಿ./84
ಬಲೀಂದ್ರನ ಸಿರಿಗಿಂದ ಅಧಿಕರನಾರನೂ ಕಾಣೆನಯ್ಯಾ.
ಅಂಥಾ ಸಂಪತ್ತು ಮೂರಡಿಗೆಯ್ದದು.
ಕೆಡುವಂತಿದ್ದುದೆ ಕೌರವನ ರಾಜ್ಯ ?
ಮಡಿವಂತಿದ್ದುದೆ ರಾವಳನ ಬಲಾಧಿಕೆ ?
ಪರಸ್ತ್ರೀ, ಲಕ್ಷ್ಮೀ ಆರಿಗೆಯೂ ನಿತ್ಯವಲ್ಲ.
ಇದು ಶಾಶ್ವತವೆ, ಸಕಳೇಶ್ವರದೇವಾ ?/85
ಬಸವಣ್ಣನ ಭಕ್ತಿಪ್ರಸಾದವ ಕೊಂಡೆನಯ್ಯಾ.
ಚೆನ್ನ ಬಸವಣ್ಣನ ಜ್ಞಾನಪ್ರಸಾದವ ಕೊಂಡೆನಯ್ಯಾ.
ಪ್ರಭುದೇವರ ಬಯಲಪ್ರಸಾದವ ಕೊಂಡೆನೆಯ್ಯಾ.
ಮಡಿವಾಳಯ್ಯನ ಕರುಣಪ್ರಸಾದವ ಕೊಂಡೆನಯ್ಯಾ.
ಸಿದ್ಧರಾಮಯ್ಯನ ನಿರ್ಮಲಪ್ರಸಾದವ ಕೊಂಡೆನಯ್ಯಾ.
ಮರುಳಶಂಕರದೇವರ ಪ್ರಸನ್ನ ಪ್ರಸಾದವ ಕೊಂಡೆನಯ್ಯಾ.
ಏಳ್ನೂರೆಪ್ಪತ್ತುಮರಗಣಂಗಳ ಪರಮಪ್ರಸಾದವ ಕೊಂಡು.
ಬದುಕಿದೆನಯ್ಯಾ, ಸಕಳೇಶ್ವರಾ./86
ಬೆಚ್ಚನೆ ಮಡಕೆಯಂತೆ ಬೆಬ್ಬಿಸಿಕೊಂಡಿದ್ದಡೇನಯ್ಯಾ ?
ಮುತ್ತ ಹೂತಂತೆ, ಆಲ ಬಿಳಲು ಬಿಟ್ಟು, ಜಡೆಗಟ್ಟಿಕೊಂಡಿದ್ದಡೇನು ?
ಕಂಥೆಬೊಂತೆಯ ಹೊದೆದು ಚಿಂತಿಸುತಿದ್ದಡೇನು ?
ತನುಮನಧನ ವಂಚನೆಯಿಲ್ಲದ ಭಕ್ತನ ಮನವ
ಮನೆಯಮಾಡಿಕೊಂಡಿಪ್ಪ, ಸಕಳೇಶ್ವರದೇವ./87
ಬೆಟ್ಟದ ಮೇಲಣ ಗಿಡಗಳು ಬೆಟ್ಟವ ಮುಟ್ಟಂತಿಪ್ಪವೆ ?
ವಿವರಿಸಿ ನೋಡಿದಡೆ,
ಸೃಷ್ಟಿಯೊಳಗಣ ಪ್ರಾಣಿಗಳು ಪರಮನ ಮುಟ್ಟದಿಪ್ಪವೆ ?
ಕಷ್ಟರು ಬೇಡವೆಂದು ಬಿಟ್ಟೋಡುತ್ತಿಪ್ಪ
ಪ್ರಾಣಿಗಳನಟ್ಟಿ, ಹಿಡಿದು ಕೊಂದಡೆ,
ಸಷ್ಟಿಗೀಶ್ವರನಿಕ್ಕದಿಪ್ಪನೆ ನರಕದಲ್ಲಿ ?
ಒಡೆಯರಿಲ್ಲೆಂದು ಹಲವು ಪ್ರಾಣಿಗಳ ಹರಿಹರಿದು ಕೊಂದಡೆ,
ಹರನಿಕ್ಕದಿಪ್ಪನೆ ಅಘೋರನರಕದಲ್ಲಿ ?
ಸಕಲಪ್ರಾಣಿಗಳಿಗೆ ಮೇಲಾರೈಕೆ,
ನಮ್ಮ ಸಕಳೇಶ್ವರದೇವನಲ್ಲದೆ ಮತ್ತೊಬ್ಬರುಂಟೆ?/88
ಭಕ್ತಂಗೆ ಬೇಡದ ಭಾಷೆ, ನಿನಗೆ ಕೊಡದ ಭಾಷೆ.
ಭಕ್ತಂಗೆ ಓಡದ ಭಾಷೆ, ನಿನಗೆ ಕಾಡುವ ಭಾಷೆ.
ಭಕ್ತಂಗೆ ಸತ್ಯದ ಬಲ, ನಿನಗೆ ಶಕ್ತಿಯ ಬಲ.
ಇಬ್ಬರ ಗೆಲ್ಲ ಸೋಲಕ್ಕೆ ಕಡೆಯಿಲ್ಲ.
ಈ ಇಬ್ಬರಿಗೆಯೂ ಒಡೆಯರಿಲ್ಲದ ಲೆಂಕ.
ಇನ್ನು ಭಕ್ತನು ಭಕ್ತಿಯ ಛಲವ ಬಿಡನಾಗಿ.
ಭಕ್ತ ಸೋತಡೆ, ಭಕ್ತನದೆ ಗೆಲುವು.
ಭಕ್ತ ಗೆದ್ದಡಂತು ಗೆಲುವು?
ಇದ ನೀನೆ ವಿಚಾರಿಸಿಕೊಳ್ಳಾ, ಭಕ್ತದೇಹಿಕದೇವ ಸಕಳೇಶ್ವರಾ. /89
ಭಕ್ತನೆಂಬೆನು ಬಸವಣ್ಣನ, ಐಕ್ಯನೆಂಬೆನು ಚಿಕ್ಕಣ್ಣನ.
ಶರಣನೆಂಬೆನು ಪ್ರಭುದೇವರ.
ಹಿಂದೆ ಆದವರಿಲ್ಲ, ಮುಂದೆ ಆಹವರಿಲ್ಲ.
ಸಕಳೇಶ್ವರದೇವಾ, ನಿಮ್ಮ ಶರಣರು ಮೂವರೆ./90
ಮನ ನಿಮ್ಮ ಬೆರಸಿದಡೆ ಬಿನದಕ್ಕೆ ಹೇಳುವನಲ್ಲ.
ಅನುಪಮಭಕ್ತಿ ಸುಖಸಾರಾಯ ಸಮರ್ಥವಾಗಿ,
ತನುವಪ್ಪಂತೆ ಇಪ್ಪ ನೋಡಾ.
ಮನುಜರ ಕಂಗಳಿಗೆ ಜ್ಞಾನಮೂರ್ತಿ ಜ್ಯೋತಿಯಂತಿಪ್ಪ
ಮಹಂತ ಸಕಳೇಶ್ವರದೇವನ ನಿಲವು./91
ಮನಮನವೇಕಾರ್ಥವಾಗದವರಲ್ಲಿ, ತುನುಗುಣ ನಾಸ್ತಿಯಾಗದವರಲ್ಲಿ.
ಶೀಲಕ್ಕೆ ಶೀಲ ಸಮಾನವಾಗದವರಲ್ಲಿ, ಬುದ್ಧಿಗೆ ಬುದ್ಧಿ ಕೂಟಸ್ಥವಾಗದವರಲ್ಲಿ.
ಭಾವಕ್ಕೆ ಭಾವ ತಾರ್ಕಣೆಯಾಗದವರಲ್ಲಿ, ಅವರೊಡನೆ ಕುಳ್ಳಿರಲಾಗದು.
ಗಡಣದಲ್ಲಿ ಮಾತಾಡಲಾಗದು,
`ಸಂಸರ್ಗಜಾ ದೋಷಗುಣಾ ಭವಂತಿ’
ಎಂದುದಾಗಿ, ಮಹಂತ ಸಕಳೇಶ್ವರದೇವಾ,
ನಿಮ್ಮ ಸಾತ್ವಿಕಸದ್ಭಕ್ತಿಯನರಿಯದವರ ಸಂಗದಿಂದ
ಕೈಲಾಸಕ್ಕೆ ದೂರವಾಗಿಪ್ಪರು./92
ಮಾಡುವ ಭಕ್ತಂಗೆಯೂ ಕೊಡುವ ದೇವಂಗೆಯೂ
ಎಂದೆಂದಿಗೂ ಕೇಡಿಲ್ಲ.
ಮಾಡಿ ಭೋ, ಮಾಡಿ ಭೋ.
ಎನಗೆ ಲೇಸಾಯಿತ್ತು , ಹೋಯಿತ್ತೆಂಬ ಚಿಂತೆ ಬೇಡ,
ಇದಿತ್ತೆಂಬ ಸಂತೋಷ ಬೇಡ,
ಸಕಳೇಶ್ವರದೇವನವರನರಿದು ಸಲಹುವನಾಗಿ./93
ಮುಟ್ಟಿದಡೆ ತಾನು ಚಿಟ್ಟೆಂಬುದನಲ್ಲ , ನಿಷ್ಠೆಯ ಪಡದಿದ್ದಡೆ ಸಾಕೈಸ.
ಆಗಮನರಿಯದೆ ಆಚಾರವ ಬೆರಸದೆ, ಪೂಜೆಯ ಕೈಕೊಂಬುವನಲ್ಲ.
ಸಕಳೇಶ್ವರದೇವ, ತಾನೊಲಿದವರನಲ್ಲದೆ, ಒಲ್ಲದವರ ಮೆಚ್ಚುನಯ್ಯಾ./94
ಮೃತ್ತಿಕೆಯೊಂದರಲಾದ ಭಾಂಡದಂತೆ,
ಚಿನ್ನವೊಂದರಲಾದ ಭೂಷಣದಂತೆ,
ಉದಕವೊಂದರಲಾದ ವಾರಿಕಲ್ಲಿನಂತೆ,
ಬ್ರಹ್ಮದಿಂದಲಾದ ಜಗವು, ಭಿನ್ನವೆಲ್ಲಿಯದು ಸಕಳೇಶ್ವರಾ ?/95
ಮೆಕ್ಕೆ ಮಿನಿಕೆ ಮೊದಲಾಗಿ ಅವು ಪಕ್ವಕ್ಕೆ ಬಂದಡೆ, ವಿಷ ಬಿಡುವುದೆ ?
ಸೋರೆ ವಾರಿಧಿ ಫಣಿ ಅವು ಹರೆಯ ಹಿರಿದಾದಡೆ, ಮನದ ವಿಷ ಬಿಡದು.
ಸಕಳೇಶ್ವರದೇವಾ, ನಿಮ್ಮ ನಿಜವನರಿಯದ ಮನುಜಂಗೆ,
ನರೆ ಹಿರಿದಾದಡೇನು, ಮನದ ಅವಗುಣ ಬಿಡದು./96
ಮೆಳೆಯ ಮೇಲೆ ಕಲ್ಲನಿಕ್ಕಿದಡೆ, ಮೆಳೆ ಭಕ್ತನಾಗಬಲ್ಲುದೆ ?
ಮೇಹನಿಕ್ಕಿ ಮೆಯ್ಯನೊರಸಿದಡೆ, ಪಶುಗಳೆಲ್ಲ ಮೆಚ್ಚುವವು.
ಅನ್ನವನಿಕ್ಕೆ ಹಿರಣ್ಯವ ಕೊಟ್ಟಡೆ, ಜಗವೆಲ್ಲ ಹೊಗಳುವುದು.
ಒಳಗನರಿದು, ಹೊರಗೆ ಮರೆದವರ ಎನಗೆ ತೋರಿಸಾ,
ಸಕಳೇಶ್ವರದೇವಾ./97
ಮೇಘಧಾರೆಯಿಂದ ಸುರಿದ ಹನಿಯೆಲ್ಲ ಮುತ್ತಪ್ಪವೆ ?
ಧರೆಯ ಮೇಲಿಪ್ಪರೆಲ್ಲ ಶರಣರಪ್ಪರೆ ?
ಪರುಷವ ಮುಟ್ಟದೆ ಪಾಷಾಣವ ಮುಟ್ಟಿದ ಕಬ್ಬುನ ಹೇಮವಹುದೆ ?
ಅಷ್ಟವಿಧಾರ್ಚನೆ ಶೋಡಷೋಪಚಾರವ ಮಾಡಿ,
ಭಾವ ಮುಟ್ಟದಿರ್ದಡೆ ವಾಯ ಕಾಣಿ ಭೋ.
ರಜವ ತೂರಿ ಚಿನ್ನವನರಸುವಂತೆ,
ನಿಮ್ಮನರಿಯದೆ, ಅಂಜನವನೆಚ್ಚಿದ ಕಣ್ಣಿಗೆ ತೋರೂದೆ ಕಡವರ ?
ಜಂಗಮವ ನಂಬಿದ ಮಹಂತಂಗೆ ತೋರದಿಪ್ಪನೆ ತನ್ನ ?
ಎಲ್ಲಾ ದೈವವ ಪೂಜಿಸಿ, ಬರಿದಾದೆಲವದ ಫಲದಂತೆ,
ಸಕಳೇಶ್ವರನ ಸಕೀಲವನರಿಯದವರು ಇಲ್ಲಿಂದತ್ತಲೆ./98
ಮೊಲೆ ಮುಡಿ ಮುದ್ದು ಮುಖದ ಅಸಿಯ ನಡುವಿನವಳ ಕಂಡಡೆ,
ಬ್ರಹ್ಮಚಾರಿಯಾದಡೇನು, ಮನದಿ ಅಳುಪದಿಪ್ಪನೆ ?
ತನುವಿನ ಮೇಲೆ ಬ್ರಹ್ಮಚಾರಿತ್ರವಳವಟ್ಟಡೇನು ?
ಮನದ ಮೇಲೆ ಬ್ರಹ್ಮಚಾರಿತ್ರವಳವಡದನ್ನಕ್ಕ !
ಸಕಲೇಶ್ವರದೇವ, ನೀ ಅರ್ಧನಾರಿಯಲ್ಲವೆ ?/99
ಯತಿಗೆ ಲಾಂಛನವೇಕೆ? ಶುಚಿಗೆ ಮೂದಲೆಯೇಕೆ ?
ಕಲಿಗೆ ಕಜ್ಜವೇಕೆ? ಒಲವಿಂಗೆ ರೂಹೇಕೆ ?
ದಿಟವುಳ್ಳ ಮನಕ್ಕೆ ಆಚಾರವೇಕೆ ?
ಸಜ್ಜನಸ್ತ್ರೀಗೆ ಬೇರೆ ನೋಂಪಿಯೇಕೆ?
ಭೃತ್ಯಾಚಾರವಿಂಬುಗೊಂಡವರ ಮನವ,
ಮಹಂತ ಸಕಳೇಶ್ವರದೇವನೆ ಬಲ್ಲ./100
ಯೋಗಿ, ಜೋಗಿ, ತಪಸಿ, ಸನ್ಯಾಸಿ,
ನರಮಾಂಸಕ, ನೀಲಪಟರು ಸುಳಿವರು ಕ್ಷುಧೆ ಕಾರಣ.
ತೋರಿ, ಮಾರಿಯುಂಬು ಬೆವಹಾರಗಳು!
ನಿರ್ಣಯ ನಿರ್ಲೆಪಭಕ್ತಿ ಯುಳ್ಳವರನಲ್ಲದೊಲ್ಲ,
ಸಕಳೇಶ್ವರದೇವ./101
ಲಲಾಟದೊಳಗಣ ಅಸ್ಥಿಯ ಬೆಳ್ಪು ವಿಭೂತಿ.
ಚರ್ಮದೊಳಗಣ ಕೆಂಪು ಕಿಸುಕಾಶಾಂಬರ.
ವ್ಯಾಕುಳವಿಲ್ಲದುದೆ ಲಾಕುಳ, ಮಹಾದೇವರ ನೆನೆವುದೆ ಆಧಾರ.
ನಿಮರ್ೊಹತ್ವಂ ಚ ಕೌಪೀನಂ ನಿಸ್ಸಂಗತ್ವಂ ಚ ಮೇಖಳಂ |
ಶಾಂತಿ ಯಜ್ಞೋಪವೀತಂ ಚ ಆಭರಣಂ ದಯಾಪರಂ |
ಪಂಚೇಂದ್ರಿಯ ವೀಣಾದಂಡಂ ಪಂಚಮುದ್ರಾಃ ಪ್ರಕೀರ್ತಿತಂ |
ಮಹಾಲಿಂಗ ಧ್ಯಾನಾಧಾರಂ ಶಿವಯೋಗಿ ಚ ಲಕ್ಷಣಂ |
[ಎಂಬುದಾಗಿ], ತುರುಬಿನ ತಪಸಿಯ ಪೆರರೆತ್ತ ಬಲ್ಲರು ?
ಸಕಳೇಶ್ವರದೇವಾ, ನೀನೆ ಬಲ್ಲೆ./102
ಲಿಂಗದ ಭಾವ ಹಿಂಗದ ನಂಬಿಗೆ, ಅಂಗನೆಯರ ಮೊಲೆ ಲಿಂಗವಾಯಿತ್ತು.
ಕಾಯ ಸಂಸಾರಸುಖವು, ಮನ ಪರಮಸುಖವು.
ಇದು ಕಾರಣ, ಸಕಳೇಶ್ವರದೇವಾ,
ನಿಮ್ಮ ಶರಣರ ಕಾಮಿಗಳೆಂದೆನಬಹುದೆ ?/103
ಲೆಂಕನಾಗಲಿ, ಕಿಂಕರನಾಗಲಿ, ಶರಣನಾಲಿ, ಸಂಯಮಿತನಾಗಲಿ,
ದರುಶನ ಪರುಶನವುಳ್ಳವರಾರದಡಾಗಲಿ,
ದುಶ್ಶೀಲಃ ಶೀಲಯುಕ್ತೋ ವಾಯೋವಾ ಕೋಪಸ್ಯ ಲಕ್ಷಣಂ |
ಭೂತಿಶಾಸನ ಸಂಯುಕ್ತಂ ಸಂಪೂಜ್ಯೋ ರಾಜಪುತ್ರವತ್ ||
ಎಂದುದಾಗಿ, ಸಕಳೇಶ್ವರದೇವ,
ಆರ ಮನದಲ್ಲಿ ಹೊದ್ದಿಹನೆಂದರಿಯಬಾರದು./104
ವೇದವಿದನಿತು ಬ್ರಹ್ಮರಾಕ್ಷಸನಾದಲ್ಲಿ, ಸಮತೆಯಿದ್ದನಿತು ಸಾಗುರಿಯಲ್ಲ.
ವೀರುಕುವರ ಸಾವಿನಲಿದ್ದನಿತು ಶಿವಪದವಾಗಲರಿವುದ,
ತನ್ನಲ್ಲಿ ಶಿವಸುಖವಿಲ್ಲದನುಭಾವ ?
ಸಕಳೇಶ್ವರದೇವನರಿದ ಶಿವ್ಯೆಕ್ಯ,
ಅರಿಯದ ಮರುಳುಗಳಲ್ಲಿ ಏನಿದ್ದಡೇನು?/105
ಶಂಭುವಿಕ್ಕಿದ ಆಜ್ಞೆಯ ಮೀರಿ, [ಅಂಬ]ರವಡ್ಡಬಿದ್ದಿತ್ತೆ ?
ಅಂಬುಧಿ ಮೇರೆವರಿಯಿತ್ತೆ ?
ಧಾರುಣಿಯೆಂಬುದೊಂದು ನೀರಲಿ ನೆರೆಯಿತ್ತೆ ?
ತಾನಿಪ್ಪನೆ ಆತನ ಒಳಗೆ ?
ಅಂಗದ ಮೇಲಣ ಲಿಂಗ ಹಿಂಗಿದ ಭಂಗವನರಿಯದೆ,
ನುಡಿವುತ್ತಿಪ್ಪ ಭಂಗಿತರನೇನೆಂಬೆನಯ್ಯಾ!
ಮಹೇಶ್ವರತ್ವವ ನುಡಿದಡೆ ಹೇಸುವನಯ್ಯಾ ಶಿವನು.
ಸ್ವೀಕರಿಸುವೆನಾ ಕೆಲರ ಕೈಯಲಿ.
ಸತ್ಯವುಳ್ಳಡೆ ಸಾಗರಹೊಕ್ಕ ಲಿಂಗ, ಅಗ್ರದಿಂದ ಬಾರದೆ
ಸಕಳೇಶ್ವರದೇವಾ, ನಿಮ್ಮ ಶರಣರಿಗೆ ?/106
ಶತವೇದಿ, ಸಹಸ್ರವೇದಿಗಳು,
ಕಬ್ಬುನವ ಹೊನ್ನ ಮಾಡುವ ಸಿದ್ಧರಸವಾದಡೇನು?
ಅಂತಿರಲಿ, ಅಂತಿರಲಿ.
ದೀಪವಾದಿಗಳು ಜಲವಾದಿಗಳು,
ಹಿರಣ್ಯಂಗಳ ವೇಧಿಸುವ ವೇದಿಗಳಾದಡೇನು ?
ಅಂತಿರಲಿ, ಅಂತಿರಲಿ.
ಘಟದಿಟ ಚಂದನ ಪರುಷ
ಕಾಗೆಯ ಹೊಂಬಣ್ಣದ ಮಾಡುವ ಮೇರುವಾದಡೇನು ?
ಅಂತಿರಲಿ, ಅಂತಿರಲಿ.
ಸಕಳೇಶ್ವರದೇವಾ, ನಿಮ್ಮ ಶರಣರು. ಸ್ವತಂತ್ರ[ರು], ಘನಮಹಿಮರು.
ಶರವೇದಿ ಶಬುದವೇದಿ ಕ್ಷಣವೇದಿಯೆಂಬವರು,
ಲಿಂಗವೇದಿಗೆಂತು ಸರಿಯೆಂಬೆ?/107
ಶಬ ಸ್ಪರ್ಶ ರೂಪು ರಸ ಗಂಧ ಪಂಚೇಂದ್ರಿಯವೆಲ್ಲ
ಏಕಾಕಾರಿಗಳಾಗಿ, ತಿರುಗಿ ಹರಿಯದೆ, ಏಕಾಕಾರಿಗಳಾಗಿದ್ದವು ತಮ್ಮೊಳಗೆ.
ಸಕಳೇಶ್ವರದೇವರಲ್ಲಿ, ಪರಿಣಾಮಪ್ರಸಾದಪದವಿಯ ಪಡೆದನಾಗಿ,
ಒಡನೆ ಹುಟ್ಟಿ, ನೀವೆಲ್ಲ ಸುಖಿಯಾದಿರಯ್ಯಾ./108
ಶಿವಯೋಗಿ ಭಿಕ್ಷವ ಕೊಂಬಲ್ಲಿ
ಜಾತಿಸೂತಕವಿಲ್ಲದಿರಬೇಕು, ಆಚಾರ ಸಂಕಲ್ಪವಿಲ್ಲದಿರಬೇಕು.
ಶಿವಂಗೆ ಸಲ್ಲದ ದ್ರವ್ಯಕ್ಕೆ ಕೈಯಾನದಿರಬೇಕು.
ಆಶೆ ರೋಷ ಹರುಷವಿಲ್ಲದಿರಬೇಕು.
ಇಂತೀ ಕ್ರಮವನರಿದು,
ಭಕ್ತಿಭಿಕ್ಷವ, ಲಿಂಗನೈವೇದ್ಯವ ಮಾಡಿಕೊಳ್ಳಬಲ್ಲ ಶರಣನ
ನೀನೆಂಬೆಯ್ಯಾ, ಸಕಳೇಶ್ವರಾ./109
ಶೀಲ ಶೀಲವೆಂದು ಗರ್ವಿಕೃತದಲ್ಲಿ ನುಡಿವ
ಉದ್ದೇಶ ಪ್ರಾಣಿಗಳೆಲ್ಲರೂ ಅನಂತಶೀಲರೆ ?
ಹೂ ಬಾವಿ ಮಠಕ್ಕೆ ಸೀಮೆಯ ಮಾಡೂದು ಶೀಲವೇ ?
ಮನಕ್ಕೆ ಸೀಮೆಯ ಮಾಡೂದು ಶೀಲವಲ್ಲದೆ,
ಹುಸಿಯ ಕಳೆವುದು ಶೀಲವಲ್ಲದೆ, ಭಕ್ತರ ಕಳೆವುದು ಶೀಲವೆ?
ಲಿಂಗಪ್ರಾಣವ ಮಾಡೂದು ಶೀಲವಲ್ಲದೆ,
ಪ್ರಾಣಲಿಂಗವ ಮಾಡೂದು ಶೀಲವೆ?
ಇಂತೆಲ್ಲ ಶೀಲರು ದುಶ್ಶೀಲರು.
ಸಕಳೇಶ್ವರದೇವಾ, ನಾನೇನೆಂದರಿಯೆ, ನೀನಿರಿಸಿದಂತಿರ್ಪೆ./110
ಶೀಲವಂತನಾದಡೆ ತಾ ಸವೆದು ಶೀಲವ ಮಾಡಬೇಕಲ್ಲದೆ
ತಾನಿದೆಡೆಯಲ್ಲಿ ಸುಳಿದು ಮಾಡುವ ಶೀಲ,
ಕೊಟ್ಟು ಪೂಜಿಸುವ ಕೈಕೂಲಿ ತನಗಿಲ್ಲ.
ಪೂಜೆಯ ಫಲವು ಕೊಡವಾಲ ಕರೆವ ಸುರಭಿಯಂತೆ
ಅಟ್ಟಿದರಟ್ಟು ವರವ ಬೇಡಿ ಮರುಗುವ ದಾಸಿಯ ಪಥದಂತೆ,
ತನ್ನ ಉದರನಿಮಿತ್ತ್ಯವಿಡಿದು,
ನೇಮ ಬೇಕೆಂಬ ದುಶ್ಶೀಲರ ಮೆಚ್ಚ, ಸಕಳೇಶ್ವರದೇವನು./111
ಶ್ರೀಗುರುವೆ ಬಸವ. ಸ್ಥೂಲಕ್ಕೆ ಸ್ಥೂಲ, ಸೂಕ್ಷ್ಮಕ್ಕೆ ಸೂಕ್ಷ್ಮ ಬಸವ.
ಶತಕೋಟಿಬ್ರಹ್ಮಾಂಡಂಗಳು ನಿನ್ನ ರೋಮದ ತುದಿಯಲ್ಲಿಪ್ಪವು ಬಸವ.
ಎನ್ನ ಭವವೆಂಬ ವಾರಿಧಿಯ ದಾಂಟುವುದಕ್ಕೆ
ನಿನ್ನ ಬಾಲತುದಿಯ ಎಯ್ದಿದೆನು ಬಸವ.
ಆರಾಧ್ಯಪ್ರಿಯ ಸಕಳೇಶ್ವರಾ,
ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿದರ್ೆನು./112
ಶ್ವಾನ ಮುಟ್ಟಿದ ಪಾಯಾಳು ಅಂಜನಕ್ಕೆ ಸಲುವನೆ?
ಭಕ್ತಿ ಮಿಶ್ರವಾದಡೆ ಈಶ್ವರನೊಲಿವನೆ?
ಅರಗು ಮಳಲು ಬೆರಸಿ ಉಕ್ಕ ಗೆಲುವಂತೆ,
ನಿಮ್ಮ ಬೆರೆಸಿದವರು ಇಟ್ಟೊರಸದಿಹರೆ ಷಡುದರುಶನವ ?
ಸಾಗರವ ದಾಂಟುವವ ಬಸವನ ಬಾಲವ ಬಿಟ್ಟು,
ಮತ್ತೊಂದಕ್ಕೆ ಹರಿದು ಕಡಲನೊಡಗೂಡುವಂತೆ,
ಶಿವಲಿಂಗದೇವನ ಪೂಜಾಕ್ರಿಯೆಯ ಮರೆದೆಡೆ,
ಒಡಗೂಡದಿಹನೆ, ಕರ್ಮದ ಕಡಲವ?
ದಿಟಪುಟವಿಲ್ಲದ ಭಕ್ತಿಯ ಮೆಚ್ಚ, ಸಕಳೇಶ್ವರದೇವ./113
ಷಡುಸಮ್ಮಾರ್ಜನೆಯ ಮಾಡೆನೆ? ರಂಗವಾಲಿಯನಿಕ್ಕೆನೆ?
ಹೂ ಅಗ್ಛವಣಿಯ ತಾರೆನೆ? ಪೂಜಾ ರಚನೆಯ ಮಾಡೆನೆ?
ಅಷ್ಟವಿಧಾರ್ಚನೆಯ ಮಾಡೆನೆ? ಮಾಡುವವರಿಗೆ ನೀಡಿ ಕೊಡೆನೆ?
ವೀಣೆಯ ಬಾರಿಸಿ, ಸಕಳೇಶ್ವರಂಗೊಂದು ಗೀತವ ಪಾಡೆನೆ?
ಇಂಥಾ ಪರಿಯಲಿ ಸುಖಿಮಾಡಿ ಸಲಹುವ, ಇಂತಪ್ಪಅಳುದರೊಳರೆ?/114
ಸಂಸಾರವ ಬಿಟ್ಟುದೇ ಆಚಾರವಯ್ಯಾ.
ಕಾಯದಿಚ್ಛೆಗೆ ಕಂಡವರಿಗೆ ಕಾರ್ಪಣ್ಯಬಡದಿಪ್ಪುದೇ ಶೀಲ.
ಲಿಂಗಾಣತಿಯಿಂದ ಬಂದುದ ಕೈಕೊಂಬುದೇ ವ್ರತ.
ಮನ ಘನವನಗಲದಿಪ್ಪುದೇ ಭಕ್ತಿ.
ಸಕಳೇಶ್ವರದೇವಾ, ನಿಮ್ಮನರಿದವನೆ ಶರಣ./115
ಸಕಲಜೀವಕ್ಕೆಲ್ಲಕ್ಕೂ ಜೀವವೆ ಆಧಾರ.
ಜೀವವ ತಪ್ಪಿಸಿ ಜೀವಿಸಲಿಕ್ಕಾರಿಗೆಯೂ ಬಾರದು.
ವಿಕೃತಿಯಿಂದ ನೋಡಿದಡಾರೂ ಸ್ವತಂತ್ರರಿಲ್ಲ.
ಸಕಳೇಶ್ವರದೇವಂಗುಪಹಾರ ಕೊಡಲು
ಅದು ಶುದ್ಧಭಕ್ತಿಪ್ರಸಾದ./116
ಸಕೃತು ಸಂಸಾರದಲ್ಲಿ ಜನಿಸಿ, ಪ್ರಕೃತಿಗುಣವಳಿಯದೆ,
ವಿಕೃತವೇಷವ ಧರಿಸಿ,
ಸುಕೃತ ಮನುಜರ ಬೇಡುವ ಯಾಚಕನಲ್ಲ.
ಲಿಂಗಾಭಿಮಾನಿಗಳನಲ್ಲದೆ,
ತ್ರಿಭುವನ ಅಭವನ ಮುಖದಲ್ಲಿ ಬಂದುದನಲ್ಲದೆ ಕೈಕೊಳ್ಳ.
ಕೂರ್ಮನ ಶಿಶುವಿನ ಆಪ್ಯಾಯನದಂತೆ,
ಆರಾಧ್ಯ ಸಕಳೇಶ್ವರದೇವರಲ್ಲಿ, ದಯಾಮೃತವನುಂಬ ಶರಣನು. /117
ಸದಾಚಾರದ ಬೆಂಬಳಿವಿಡಿದು ನಿಯತತ್ವದಲ್ಲಿ ನಡೆಯಬಹುದಲ್ಲದೆ,
ಭಕ್ತನೆನಿಸಿಕೊಳಲುಬಾರದು.
ಜ್ಞಾನದ ಉದಯದ ಸೌಕರ್ಯದ ನುಡಿಯ ನುಡಿಯಬುಹುದಲ್ಲದೆ,
ಭಕ್ತನೆನಿಸಿಕೊಳಲುಬಾರದು.
ಅತಿಶೀಲಸಂಬಂಧಿಯೆನಿಸಿಕೊಳಲುಬಹುದಲ್ಲದೆ,
ಭಕ್ತನೆನಿಸಿಕೊಳಲುಬಾರದು.
ಈ ತ್ರಿವಿಧವೂ ನಿಮ್ಮಲ್ಲಿ ಹೊದ್ದದೆ,
ಬಸವಾ ಶರಣೆಂದು ಬದುಕಿದೆನಯ್ಯಾ, ಸಕಳೇಶ್ವದೇವಾ./118
ಸದ್ಭಕ್ತರಲ್ಲಿಗೆ ಹೋಗಿ, ಸಮಯೋಚಿತವ ಮಾಡುವನ,
ಸದ್ಭಕ್ತರಿಗೆ ಉಣಲಿಕ್ಕಿ, ತನ್ನ ಹಸಿವ ಮರೆದಿಪ್ಪವನ,
ಸದ್ಭಕ್ತರಿಗೆ ಉಳ್ಳುದೆಲ್ಲವ ಕೊಟ್ಟು, ಎಯ್ದದೆಂದು ಮರುಗುವ
ಏಕೋಗ್ರಾಹಿ ನೆಟ್ಟನೆ ಶರಣ.
ತೊಟ್ಟನೆ ತೊಳಲಿ, ಅರಸಿ ಕಾಣದೆ,
ಮೂರು ತೆರನ ಮುಕ್ತಿಯ, ಹದಿನಾರುತೆರನ ಭಕ್ತಿಯ.
ಇಂತಪ್ಪ ವರವ ಕೊಟ್ಟಡೆ ಒಲ್ಲೆನು.
ಸಕಳೇಶ್ವರದೇವಾ, ನಿಮ್ಮ ಶರಣರ ತೋರಾ ಎನಗೆ./119
ಸದ್ಭಕ್ತರು ಲಿಂಗಾರ್ಚನೆಯ ಮಾಡುವ ಕಾಲದಲ್ಲಿ,
ಕದವಂ ಮುಚ್ಚಿ, ಸಮಾಧಾನದಲ್ಲಿ ಲಿಂಗಾರ್ಚನೆಯ ಮಾಡುವದು.
ಶಿವಪೂಜೆಯ ಗುಪ್ತದಲ್ಲಿ ಮಾಡಬೇಕಾಗಿ ತೆರೆಯ ಕಟ್ಟುವದು.
ಪಾಪಿಯು ಕೋಪಿಯು, ಶಿವಾಚಾರಭ್ರಷ್ಟನು,
ಆಳಿಗೊಂಬವನು, ವೈದಿಕವಿಪ್ರನು,ಹೊಲ್ಲಹ ದೃಷ್ಟಿಯವನು,
ಅನಾಚಾರಿಯು, ಮೂರ್ಖನು, ತನ್ನ ಗುರುವನು ನಿಂದಿಸುವಾತನು,
ಇಂತಪ್ಪವರುಗಳ ಪ್ರಮಾದದಿಂದಾದಡೆಯೂ ಕಂಡಡೆ,
ತಾ ಮಾಡಿದ ಲಿಂಗಾರ್ಚನೆ ನಿಷ್ಫಲವಹುದು.
ಇದನರಿದು, ಸಕಳೇಶ್ವರಲಿಂಗವ ಏಕಾಂತದಲ್ಲಿ ಭಜಿಸುವ ಭಕ್ತಂಗೆ
ನಮೋ ನಮಃ ಎಂದು ಬದುಕಿದೆನಯ್ಯಾ./120
ಸಮತೆಯಿಲ್ಲದ ಮಾಟವೆಂಬುದು, ಬಿತ್ತಿದ ಕೆಯ್ಯ ಕಸವು ಕೊಂಡಂತೆ.
ಸಮತೆಯಿಲ್ಲದ ಶೀಲವೆಂಬುದು, ಒಟ್ಟಿದರಳೆಯನುರಿ ಕೊಂಡಂತೆ.
ಇನ್ನಾರ ಮಾಟವಾದಡೇನು? ಆವ ಶೀಲವಾದಡೇನು?
ಹೊರಗನೆ ತೋರಿ, ಒಳಗನೆ ಪೂಜಿಸುವ ಉಪಾಯದಲ್ಲಿ ಬದುಕುವರು,
ಸಕಳೇಶ್ವರದೇವಂಗೆ ದೂರವಾಗಿಪ್ಪರು./121
ಸರವರದ ಮಂಡೂಕನು ತಾವರೆಯ ನೆಳಲ ಸಾರಿದಡೆ
ಪರಿಮಳವದಕೆ ಅಯ್ಯಾ? ಆ ಅರಿಯಬಾರದು.
ಪರಿಮಳವದಕೆ ಅಯ್ಯಾ? ಆ ಅರಿಯಬಾರದು, ಮದಾಳಿಗಲ್ಲದೆ.
ಸಕಳೇಶ್ವರದೇವಾ, ನಿಮ್ಮ ವೇದಿಸಿದ ವೇದ್ಯಂಗಲ್ಲದೆ,
ನಿಮ್ಮ ನಿಲವನರಿಯಬಾರದು./122
ಸರ್ಪದಷ್ಟವಾದವರು ತಮ್ಮ ತಾವರಿಯರು.
ಕಾಮದಷ್ಟವಾದವರು ಲಜ್ಜೆ ನಾಚಿಕೆಯ ತೊರೆವರು.
ಸಂಸಾರದಷ್ಟವಾದವರು ಪರಮಾರ್ಥವನರಿಯರು.
ಲಿಂಗದಷ್ಟವಾದಡೆ ಅಂಗವೆನಲಿಲ್ಲ,
ಆರಾಧ್ಯಪ್ರಿಯ ಸಕಳೇಶ್ವರದೇವನಲ್ಲಿ ಸುಖಿಯಾಗಿದ್ದರು./123
ಸರ್ವಸಂಗಪರಿತ್ಯಾಗವ ಮಾಡಿ, ಲಿಂಗ ಗೂಡಾಗಿ,
ತನು ಪರಿಣಾಮವನೈದಿ, ಪೆರತನರಿಯದೆ ಇರದು.
ಮೇಣಲ್ಲಿ ಜಂಗಮಕ್ಕೆ ತಕ್ಕ ಉಚಿತವೆ ಮಾಡಿ,
ನಿಮ್ಮ ಕರುಣವ ಹಡೆಯದ ಪಾಪಿ ನಾನಯ್ಯಾ.
ಇಂತೆರಡಕ್ಕಲ್ಲದ ಉಭಯಭ್ರಷ್ಟ ನಾನು.
ಸಕಳೇಶ್ವರದೇವನೊಲಿಯೆಂದರೆಂತೊಲಿವ?/124
ಸರ್ವಸಂಗಪರಿತ್ಯಾಗಿಯೆಂದಡೆ ಭೋಗಕ್ಕೆ ಮರುಗಿಸುವೆ.
ಪಾಕನೇಮಿಯೆಂದಡೆ ಷಡುರಸಾನ್ನಕ್ಕೆರಗಿಸುವೆ.
ಮೌನವ್ರತಿಯೆಂದಡೆ ಸನ್ನೆಯಲ್ಲಿ ಬೇಡಿಸುವೆ.
ಬ್ರಹ್ಮಚಾರಿಯೆಂದಡೆ ಅಂಗನೆಯರಿಗೆರಗಿಸುವೆ.
ಸಕಳೇಶ್ವರದೇವಾ, ಎನ್ನನಾಳವಾಡಿ ಕಾಡುವೆ./125
ಸವಣನ ಮನದ ಕೊನೆಯ ಮೊನೆಯ ಮೇಲೆ ಹೊಲೆಯಿದ್ದಿತ್ತಾಗಿ ಜಿನನಿಲ್ಲ.
ಸನ್ಯಾಸಿಯ ಮನದ ಕೊನೆಯ ಮೊನೆಯ ಮೇಲೆ ಹೆಣ್ಣಿದ್ದಿತ್ತಾಗಿ ವಿಷ್ಣುವಿಲ್ಲ.
ಶೀಲವಂತನ ಮನದ ಕೊನೆಯ ಮೊನೆಯ ಮೇಲೆ ಬಯಕೆಯಿದ್ದಿತ್ತಾಗಿ ಲಿಂಗವಿಲ್ಲ.
ಸಕಳೇಶ್ವರದೇವಾ, ಇವರೆಲ್ಲರೂ ಉಪಾಯವಂತರು./126
ಸುಖವನನುಭವಿಸಿ, ಆನು ಸುಖದ ಹದನನು ಕಂಡೆ.
ದುಃಖವನನುಭವಿಸಿ, ಆನು ದುಃಖದ ಹದನನು ಕಂಡೆ.
ಸಾಕೆಂದು ನಿಂದೆ ನಿಃಭ್ರಾಂತನಾಗಿ, ಸಾಕೆಂದು ನಿಂದೆ ನಿಶ್ಚಿಂತನಾಗಿ.
ಸಾಕೆಂದು ನಿಂದೆ ಸಕಳೇಶ್ವರದೇವನಲ್ಲದೆ
ಪೆರತೇನೂ ಇಲ್ಲೆಂದು ಸಾಕೆಂದು ನಿಂದೆ./127
ಸ್ಥಾವರ ಜಂಗಮ ಒಂದೆಯೆಂದು ಬಸವರಾಜದೇವರು ಹೇಳಿತ್ತ ಕೇಳದೆ,
ಪಾದೋದಕವೆಂಬೆ, ಪ್ರಸಾದೋದಕವೆಂಬೆ, ಲಿಂಗೋದಕವೆಂಬೆ.
ಮತ್ತೆಯೂ ಕ್ರೀಯ ನೆನೆಯುವೆ, ಸಂದೇಹವ ಹತ್ತಿಸಿ;
ಸಕಳೇಶ್ವರದೇವ, ಎನ್ನ ಮರುಳುಮಾಡಿದ./128
ಸ್ಥಾವರವೆಂತಂತೆ ಮನದಲ್ಲಿ ಭಾವಿಸಿ,
ಸಕಲಜೀವದ ನಿಂದೆಯ ಮಾಬುದು.
ಲಿಂಗಜಂಗಮವೊಂದೆಯೆಂದು ನಂಬೂದು.
ಬಂದುದು ಲಿಂಗಾಧೀನವೆಂದು ಕಾಬುದು.
ಸತ್ಯವ ನುಡಿವುದು, ಶುಚಿಯಾಗಿಪ್ಪುದು.
ಎರಡುವಿಡಿಯದೆ, ಎರಡು ನಡೆಯದೆ,
ಮುನ್ನಾದಿಯ ಪುರಾತರು ಕೂಡಿದ ಪಥವಿದು,
ಸಕಳೇಶ್ವರದೇವರನೊಲಿಸಿಹೆನೆಂಬವಂಗೆ./129
ಹರಗಣಂಗಳ ನೆರಹಿ ಮಾಡುವ ಮಾಟ,
ಉರಿಯನಾಲಗೆ ಕೊರಳನಪ್ಪಿದಂತಾಯಿತ್ತಯ್ಯಾ.
ಒಡೆದ ಮಡಕೆಯಲಮೃತವ ತುಂಬಿ,
ಮುರುವ ಕುಟ್ಟಿ ಅಟ್ಟುಂಬ ತೆರನಂತಾಯಿತ್ತಯ್ಯಾ.
ಭಕ್ತದೇಹಿಕದೇವ ಮನೆಗೆ ಬಂದಡೆ, ಮತ್ತೆ ಮಾಡಿಹೆನೆಂಬುದಿಲ್ಲವು.
ಮೂಗಿಲ್ಲದ ಮುಖಕ್ಕೆ ಶೃಂಗಾರವ ಮಾಡಿದಂತಾಯಿತ್ತಯ್ಯಾ.
ಶರಣಸನ್ನಹಿತ ಸಕಳೇಶ್ವರದೇವನ ಅರಿದೂ ಅರಿಯದಂತಿರ್ದಡೆ,
ಮಳಲಗೌರಿಯ ನೋಂತು ನದಿಯಲ್ಲಿ ಬೆರಸಿದಂತಾಯಿತ್ತಯ್ಯಾ./130
ಹಲವು ದಿನವೆಂಬುದೊಂದು ಮಾನವಂಗಯ್ಯಾ.
ದಿನವೊಂದೆ ಶಿವಶಿವಾಯೆಂಬವಂಗೆ.
ದಿನವೊಂದೆ ಹರಹರಾಯೆಂಬವಂಗೆ.
ಹಲವುದಿನವ ಕೊಂಡಾಡುವಂಗೆ ಲಿಂಗವಿಲ್ಲ, ಸಕಳೇಶ್ವರದೇವಾ./131
ಹಿರಿಯ ಅಡವಿಯ ಕಲ್ಲಗವಿಯ ಗಹ್ವರದೊಳಗೆ
ಬಿದಿರಲಳಿಗೆಯಲಗ್ಘವಣಿಯ ತಂದು, ದೇವದಾರಿಯ ಗಂಧವ ತೇದು,
ತಾವರೆಯ ನೆಯ್ದಿಲ ಹೂವನೆ ತಂದು, ಲಿಂಗವ ಸಿಂಗಾರವ ಮಾಡಿ,
ನೋಡುವದೆಂದು ದೊರಕೊಂಬುವುದೊ ಎನಗೆ ?
ಸಕಳೇಶ್ವರದೇವಾ, ಮುಂದಿನ ವರವನೊಲ್ಲೆ.
ಇಂದು ಎನಗಿದು ಪರಮಸುಖವು./132
ಹೊಯ್ದಿದ ಹರೆಗೆ ಕುಣಿದಾಡುವರೆಲ್ಲಾ.
ಹಾಡಿದ ಗೀತಕ್ಕೆ ತಲೆದೂಗುವರೆಲ್ಲಾ.
ಪಂಜರದೊಳಗಣ ಅರಗಿಳಿಯಂತೆ, ಅದು ಆಡುವದು, ಹಾಡುವದು.
ಸಕಳೇಶ್ವರದೇವರಲ್ಲಿ,
ಅಭ್ಯಾಸಕ್ಕೆ, ಮಜ್ಜನಕ್ಕೆ ಎರೆವರೆಲ್ಲಾ ಭಕ್ತರೆ ?/133