Categories
ಶರಣರು / Sharanaru

ಹಡಪದ ಅಪ್ಪಣ್ಣ

ಅಂಕಿತ: ಬಸವಪ್ರಿಯ ಕೂಡಲ ಚೆನ್ನಬಸವಣ್ಣ
ಕಾಯಕ: ಹಡಪದ ಕಾಯಕ (ತಾಂಬೂಲ ಕರಂಡ)

ಅಯ್ಯಾ ನಿಮ್ಮ ಶರಣರು ವೇಷವ ತೋರಿ ಗ್ರಾಸವ ಬೇಡುವರಲ್ಲ.
ದೇಶವ ತಿರುಗಿ ಕಲಿತಮಾತ ನುಡಿವರಲ್ಲ.
ಲೇಸಾಗಿ ನುಡಿವರು, ಆಶೆ ಇಲ್ಲದೆ ನಡೆವರು, ರೋಷವಿಲ್ಲದೆ ನುಡಿವರು.
ಹರುಷವಿಲ್ಲದೆ ಕೇಳುವರು, ವಿರಸವಿಲ್ಲದೆ ಮುಟ್ಟುವರು.
ಸರಸವಿದ್ದಲ್ಲಿಯೇ ವಾಸಿಸುವರು.
ಇಂತಪ್ಪ ಬೆರಸಿ ಬೇರಿಲ್ಲದ ನಿಜೈಕ್ಯಂಗೆ ನಮೋ ನಮೋ ಎಂಬೆ,
ಬಸವಪ್ರಿಯ ಕೂಡಲಚೆನ್ನಬಸವಣ್ಣ.
ಇಂತಪ್ಪ ಶರಣರ ನೆಲೆಯ ನಾನೆತ್ತ ಬಲ್ಲೆನಯ್ಯಾ ? /೮೬೧ [1]

ಬಸವಣ್ಣನವರ ಆಪ್ತವಲಯದ ಈತ ತಾಂಬೂಲಕರಂಡ ಕಾಯಕದವನಾಗಿದ್ದ. ಶರಣೆ ಮತ್ತು ವಚನಕಾರ್ತಿ ಲಿಂಗಮ್ಮ ಈತನ ಹೆಂಡತಿ. ಚೆನ್ನಬಸವೇಶ್ವರ ಈತನ ಗುರು. ಕಲ್ಯಾಣಕ್ರಾಂತಿಯ ಸಂದರ್ಭದಲ್ಲಿ ಬಸವಣ್ಣನವರ ಜೊತೆ ಕೂಡಲಸಂಗಮದವರೆಗೂ ಹೋಗುತ್ತಾನೆ. ಅವರ ಅಪ್ಪಣೆಯ ಮೇರೆಗೆ ಕಲ್ಯಾಣಕ್ಕೆ ಹೋಗಿ ನೀಲಮ್ಮನವರನ್ನು ಕರೆತರುವಷ್ಟರಲ್ಲಯೇ ಬಸವಣ್ಣನವರು ಐಕ್ಯರಾದ ಸಂಗತಿ ತಿಳಿಯುತ್ತದೆ. ಆಮೇಲೆ ನೀಲಮ್ಮ ಮತ್ತು ಅಪ್ಪಣ್ಣ ಅವರೂ ಅಲ್ಲಿಯೇ ಲಿಂಗೈಕ್ಯರಾಗುತ್ತಾರೆ.

ಅನ್ನವನ್ನಿಕ್ಕಿದರೇನು ? ಹೊನ್ನ ಕೊಟ್ಟರೇನು ?
ಹೆಣ್ಣು ಕೊಟ್ಟರೇನು ? ಮಣ್ಣು ಕೊಟ್ಟರೇನು ? ಪುಣ್ಯ ಉಂಟೆಂಬರು.
ಅವರಿಂದಾದೊಡವೆ ಏನು ಅವರೀವುದಕ್ಕೆ ?
ಇದಕ್ಕೆ ಪುಣ್ಯವಾವುದು, ಪಾಪವಾವುದು ?
ನದಿಯ ಉದಕವ ನದಿಗೆ ಅರ್ಪಿಸಿ,
ತನತನಗೆ ಪುಣ್ಯ ಉಂಟೆಂಬ ಬಡಹಾರುವರಂತೆ,
ಸದಮಳ ಶಾಶ್ವತ ಮಹಾಘನಲಿಂಗವನರಿಯದೆ,
ಇವೇನ ಮಾಡಿದರೂ ಕಡೆಗೆ ನಿಷ್ಪಲವೆಂದಾತ,
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ. /೮೪೬ [1]

ಬನವಾಸಿಯ ಮಧುಕೇಶ್ವರ ದೇವಾಲಯದ ಶಿವೋತ್ಸವ ಮಂಟಪದ ಗಗ್ಗರಿ ಕಲ್ಲಿನ ಮೇಲಿರುವ ಶರಣರ ಶಿಲ್ಪಗಳಲ್ಲಿ ಅಪ್ಪಣ್ಣನ ವಿಗ್ರಹವು ಇದೆ. ಅಪ್ಪಣ್ಣ ‘ಬಸವಪ್ರಿಯ ಕೂಡಲಚೆನ್ನಬಸವಣ್ಣ’ ಅಂಕಿತದಲ್ಲಿ ಇನ್ನೂರಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾನೆ. ಅವುಗಳಲ್ಲಿ ಬೆಡಗಿನವು ಅಧಿಕ. ಷಟ್-ಸ್ಥಲ ತತ್ವನಿರೂಪಣೆಗೆ ಆದ್ಯತೆ. ಕೆಲವು ಕಥನಶೈಲಿಯನ್ನು ಅಳವಡಿಸಿಕೊಂಡಿವೆ. ಬೆಡಗಿನ ವಚನಗಳು ಹೆಚ್ಚು ಷಟ್-ಸ್ಥಲ ವಿಷಯ ಪ್ರಧಾನವಾಗಿದೆ. ವಚನಗಳು ಗ್ರಹಿಸಲು ಸುಲಭವಾಗಿವೆ

ಹೊತ್ತುಹೊತ್ತಿಗೆ ಲಿಂಗಪೂಜೆಯ ಮಾಡಿಯೂ
ಮತ್ತೆಯು ಸತ್ಯವಾವುದು, ನಿತ್ಯವಾವುದೆಂದರಿಯದೆ ಕೆಟ್ಟರೆಲ್ಲ ಜಗವು.
ಸತ್ಯವಾಗಿ ನುಡಿವ ಶರಣರ ಕಂಡರೆ, ಕತ್ತೆಮಾನವರೆತ್ತಬಲ್ಲರೊ ?
ಅಸತ್ಯವನೆ ನುಡಿದು, ಹುಸಿಯನೆ ಬೋಧಿಸುವ ಹಸುಕರ ಕಂಡರೆ,
ಇತ್ತ ಬನ್ನಿ ಎಂಬರು.
ಇಂತಪ್ಪ ಅನಿತ್ಯದೇಹಿಗಳ ಭಕ್ತರೆಂದು ಜಂಗಮವೆಂದು
ನೋಡಿದರೆ, ನುಡಿಸಿದರೆ, ಮಾತನಾಡಿದರೆ, ನೀಡಿದರೆ,
ಅಘೋರನರಕವೆಂದು ನಮ್ಮ ಆದ್ಯರ ವಚನ ಸಾರುತಿದೆ,
ಬಸವಪ್ರಿಯ ಕೂಡಲಚೆನ್ನಬಸಣ್ಣಾ . /೧೦೭೮ [1]

ಎನ್ನ ತನು ನಿಮ್ಮ ಸೇವೆಯಲ್ಲಿ ಸವೆದು
ಎನ್ನ ಮನ ನಿಮ್ಮ ನೆನಹಿನಲ್ಲಿ ಸವೆದು
ಎನ್ನ ಅರಿವು ನಿಮ್ಮ ಘನದೊಳಗೆ ಸವೆದು
ನಿಶ್ಚಲ ನಿಜೈಕ್ಯವಾಗಿ ಬಸವ ಪ್ರಿಯ ಕೂಡಲ ಸಂಗಯ್ಯ
ನಾ ನೀನೆಂಬುದು ಏನಾಯಿತ್ತೆಂದರಿಯೆ!