Categories
ವಚನಗಳು / Vachanagalu

ಹಡಪದ ಅಪ್ಪಣ್ಣನ ವಚನಗಳು

ಅಂಗ ಲಿಂಗವಾಯಿತ್ತೆಂಬಿರಿ, ಲಿಂಗ ಅಂಗವಾಯಿತ್ತೆಂಬಿರಿ.
ಅಂಗ ಲಿಂಗ ಸಂಬಂಧ ಎಲ್ಲರಿಗೆ ಎಂತಾಯಿತ್ತು ಹೇಳಿರಣ್ಣಾ.
ಅಂಗ ಲಿಂಗ ಸಂಬಂಧವಾದರೆ, ಗುರುವಿನಲ್ಲಿ ಗುಡ್ಡನಾಗಿರಬೇಕು,
ಲಿಂಗದಲ್ಲಿ ನಿಷ್ಠನಾಗಿರಬೇಕು, ಜಂಗಮದಲ್ಲಿ ಅವಧಾನಿಯಾಗಿರಬೇಕು.
ಇವ ಮೂರರಲ್ಲಿ ದೂರಾಗಿಪ್ಪರ ಎನಗೊಮ್ಮೆ ತೋರದಿರಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./1
ಅಂಗ ಲಿಂಗವೆಂದರಿದ ಬಳಿಕ, ಲಿಂಗ ಅಂಗವೆಂದರಿದ ಬಳಿಕ,
ಇನ್ನೊಂದು ಸಂಗ ಉಂಟೆಂದು ಏಕೆ ಅರಸುವಿರಯ್ಯ?
ಸಂಗ ಉಂಟೆಂಬನ್ನಕ್ಕ ಕಂಗಳ ಪಟಲ ಹರಿದುದಿಲ್ಲ.
ಅದು ಮರವೆಗೆ ಬೀಜ.
ಈ ಮರಹಿಂದಲೆ ನೆರೆ ಮೂರುಲೋಕವೆಲ್ಲ ಬರುಸೂರೆಹೋಯಿತು.
ಅರಿದ ಶರಣಂಗೆ ಅಂಗಲಿಂಗಸಂಬಂಧವಿಲ್ಲ.
ಅಂಗಲಿಂಗಸಂಬಂಧವಳಿದ ಬಳಿಕ ಪ್ರಾಣಲಿಂಗಸಂಬಂಧ.
ಲಿಂಗಪ್ರಾಣಿ ಇವನರಿದರೆ ಲಿಂಗಸಂಬಂಧಿ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ ./2
ಅಂಗಕ್ಕೆ ಲಿಂಗಕ್ಕೆ ಪೊಂಗೆ ಪರಿಮಳದ ಶೃಂಗಾರದ ಹಾರ.
ಕಂಗಳ ಬೆಳಗಿನಲ್ಲಿ ಮಂಗಳದ ಮಹಾಬೆಳಗಿರುತಿರಲು,
ಇದ ಅಂಗವಿಸಿ ನೋಡಿ, ಎರಡರ ಸಂಗಸುಖವನೊಂದುಗೂಡಿ,
ತಾನೇ ಬೇರೆ ಲಿಂಗವಾಗಿ ನಿಂದು,
ಅಂಗವಳಿಯದೆ, ಬಿಂದು ತುಳುಕದೆ, ನಂದಿ ಮುಂದುಗೆಡದ ಮುನ್ನ,
ನಿಮ್ಮೊಳು ಒಂದಾದ ಲಿಂಗೈಕ್ಯವನರಿದು,
ಕಣ್ದೆರೆದು ಕರಗಿ ಆಲಿ ನೀರಾದಂತಾದೆನಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./3
ಅಂಗಗುಣಂಗಳನೆಲ್ಲ ಅನಲಂಗಿಕ್ಕಿ,
ಲಿಂಗಗುಣವನೆ ಗಟ್ಟಿಮಾಡಿ,
ಕಂಗಳು ಲಿಂಗ ಕರಸ್ಥಲ, ಜಂಗಮದ ಇಂಗಿತವನರಿದರೆ,
ಬಸವಪ್ರಿಯ ಕೂಡಲಚೆನ್ನಬಸವಣ್ಣ./4
ಅಂಗದ ಮೇಲೆ ಲಿಂಗವಿದ್ದವರೆಲ್ಲರು ಸರಿಗಾಣಬೇಕೆಂಬರು,
ಲಿಂಗಲಾಂಛನಧಾರಿಗಳೆಲ್ಲ, ಶರಣಂಗೆ ಸರಿಯೆ?
ಶರಣರ ಸಂಗ ಎಂತಿಪ್ಪುದೆಂದರೆ,
ಪರಮಜ್ಞಾನವೆಂಬ ಉರಿಯನೆ ಉಟ್ಟು, ಉರಿಯನೆ ತೊಟ್ಟು,
ಉರಿಯನೆ ಉಂಡು, ಉರಿಯನೆ ಹಾಸಿ, ಉರಿಯನೆ ಹೊದ್ದು,
ನಿರವಯಲಾದ ಶರಣಂಗೆ ನರರುಗಳು ಸರಿ ಎನ್ನಬಹುದೆ?
ಹರಿಗೆ ಕರಿ ಸರಿಯೇ? ಉರಗಗೆ ಒಳ್ಳೆ ಸರಿಯೇ?
ಮರುಗಕ್ಕೆ ಗರುಗ ಸರಿಯೇ?
ಇಂತೀ ನಿರ್ವಯಲಾದ ಶರಣಂಗೆ ಮರ್ತ್ಯದ ನರಗುರಿಗಳು ಸರಿ ಎಂದರೆ,
ನಾಯಕ ನರಕದಲ್ಲಿಕ್ಕುವ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ./5
ಅಂಗದ ಲಯ ಲಿಂಗದೊಳಗೆ, ಲಿಂಗದ ಲಯ ಅಂಗದೊಳಗೆ.
ಇವೆರಡರ ಸಂಗಸುಖ ಜಂಗಮದೊಳಗೆ ಏಕವಾಯಿತ್ತು .
ಅಂದೆ ಪ್ರಸಾದದಿಂದ ರೂಪಾಯಿತ್ತು.
ಮುಂದೆ ಪ್ರಸಾದದಲ್ಲಿ ಪರಿಪೂರ್ಣವಾಯಿತ್ತು.
ಇದರಂದವ ಬಲ್ಲ ಶರಣರೆ ಎನ್ನ ತಂದೆಗಳಾಗಿಪ್ಪರು ಕಾಣಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ ./6
ಅಂಗಲಿಂಗವೆಂದರಿ[ದು]ದಕ್ಕೆ ಕುರುಹು ಎಂತಿಪ್ಪುದೆಂದರೆ,
ಕರುಣರಸಭರಿತವಾಗಿಪ್ಪುದೇ ಕುರುಹು.
ಕಂಗಳು ಲಿಂಗವೆಂದರಿ[ದು]ದಕ್ಕೆ ಕುರುಹು ಎಂತಿಪ್ಪುದೆಂದರೆ,
ಕಾಮಾದಿಗಳ ಸೃಜಿಸದುದೇ ಕುರುಹು.
ಕರವೇ ಲಿಂಗವೆಂದರಿದುದಕ್ಕೆ ಕುರುಹು ಎಂತಿಪ್ಪುದೆಂದರೆ,
ಇಹ ಪರ ಮೋಕ್ಷವ ಬಯಸದಿಪ್ಪುದೇ ಕುರುಹು.
ಈ ತ್ರಿವಿಧವು ಏಕವಾದರೆ,
ಎಮ್ಮ ಬಸವಪ್ರಿಯ ಕೂಡಲಚೆನ್ನ ಬಸವಣ್ಣನಲ್ಲಿ ಮಹಾಲಿಂಗೈಕ್ಯವು./7
ಅಂಗಲಿಂಗಸಂಬಂಧವಾದ ಬಳಿಕ ಮನ ಹಿಂಗದಿಪ್ಪುದು.
ತನುವನು ಬಿಟ್ಟು, ಸಂಗಸುಖದ ಶರಣರ ಗೋಷ್ಠಿಯೊಳು ಇಪ್ಪಾತ
ಮಂಗಳಾತ್ಮಕ ಬಸವಪ್ರಿಯ ಕೂಡಲಚೆನ್ನಬಸವಣ್ಣ ./8
ಅಂಗವ ಮರೆದು ಲಿಂಗವ ಕೂಡಿ,
ಸಂಗವ ಮರೆದು ಜಂಗಮವ ಕೂಡಿ,
ಗುಣವ ಮರೆದು ಗುರುವ ಕೂಡಿ,
ಪರವ ಮರೆದು ಪ್ರಸಾದವ ಕೂಡಿ,
ಹರುಷವ ಮರೆದು ಹರನ ಕೂಡಿ,
ಬೆರಸಿ ಬೇರಿಲ್ಲದಿಹ ನಿಜಶರಣಂಗೆ ನಮೋ ನಮೋ ಎಂಬೆ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
/9
ಅಂಗವ ಮಾರಿಕೊಂಡು ಉಂಬಾತನೊಬ್ಬ ಠಕ್ಕ.
ಲಿಂಗವ ಮಾರಿಕೊಂಡು ಉಂಬಾತನೊಬ್ಬ ಠಕ್ಕ.
ಜಂಗಮವ ತೋರಿಕೊಂಡು ಉಂಬಾತನೊಬ್ಬ ಠಕ್ಕ.
ಇವರು ಮೂವರು ಕಂಗಳು ಕಾಲು ಹೋದವರ ಸಂಗದಂತೆ,
ಲಿಂಗ ಜಂಗಮಕ್ಕೆ ದೂರ,
ನಮ್ಮ ಶರಣರ ಸಂಗಸುಖಕ್ಕೆ ಸಲ್ಲರು ನೋಡಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./10
ಅಂಗವದಾರದು? ಲಿಂಗವದಾರದು? ಸಂಗವದಾರದು ?
ಸಮರಸವ ದಾರದು? ಸಂದೇಹದಿಂದ ಮುಂದುಗಾಣದೆ
ಒಂದೊಂದ ಕಲ್ಪಿಸಿಕೊಂಡು ಬಂದಿರಲ್ಲಾ ಭವ ಭವದಲ್ಲಿ.
ಅಂಗವೆ ಗುರು, ಲಿಂಗವೆ ಪ್ರಾಣ, ಸಂಗವೆ ಜಂಗಮ, ಸಮರಸವೆ ಪ್ರಸಾದ.
ಈ ಚತುವರ್ಿಧವು ಒಂದಂಗ.
ಈ ಚತುವರ್ಿಧವ ಶ್ರುತಿ ಸ್ಮೃತಿಗಳರಿಯವು, ನಿಮ್ಮ ಶರಣಬಲ್ಲ.
ಆ ಶರಣನೆ ಶಿವನವಾ.
ಬಸವಪ್ರಿಯ ಕೂಡಲಚೆನ್ನಸಂಗಮದೇವಾ, ನಿನ್ನ ನೀನೆ ಬಲ್ಲೆ. /11
ಅಂತರಂಗದಲ್ಲಿ ಆಸೆ, ಬಹಿರಂಗದಲ್ಲಿ ಕ್ರೋಧ,
ಭಾವಕ್ಕೆ ವೇಷ. ಪ್ರಾಣಕ್ಕೆ ರೋಷ, ಕಾಮಕ್ಕೆ ಮದ.
ಇಂತಿವನಿಂಬಿಟ್ಟುಕೊಂಡು ನಾವು ಜಂಗಮವೆಂದು ಸುಳಿದರೆ,
ಹೇಯವಿಲ್ಲದ ಭಕ್ತರು ವೇಷವ ಕಂಡು ಪೂಜೆಯ ಮಾಡಿದರೆ,
ಅಶನಕ್ಕೆ ಅನ್ನವನಿಕ್ಕಿದರೆ, ಶೀತಕ್ಕೆ ರಗಟೆಯ ಕೊಟ್ಟರೆ, ಅವರಿಗದು ಸಹಜ.
ನಿಮ್ಮ ನೀವು ನೋಡಲಿಲ್ಲವೆ ?
ನಾವು ದೇವರಾದೆವೆಂದು ವಿಚಾರಿಸಿ ನೋಡಿ, ಉಭಯವ ಮೆಟ್ಟಿನಿಂದು,
ಅಭವನೆಂಬ ಹೆಸರಿಗೆ ಸಂದವರಿಗೆ ಸುಲಭದಿಂದ ಜಗವೆಲ್ಲವು
ನಮೋ ನಮೋ ಎಂಬುದು.
ಬಸವಪ್ರಿಯ ಕೂಡಲಚೆನ್ನಬಸವಣ್ಣಾ,
ಈ ಉಭಯದ ಭೇದವ ನೀವೆ ಬಲ್ಲಿರಿ./12
ಅಖಂಡ ಗೋಳಾಕಾಕಾರವಾಗಿರ್ದ ಮಹಾಲಿಂಗವೆ ಅಂಗವಿಡಿದಲ್ಲಿ,
ಪ್ರಾಣಲಿಂಗವೆಂದು, ಇಷ್ಟಲಿಂಗವೆಂದು, ಇವೆರಡರ ಸಂಘಟ್ಟ
ಭಾವಲಿಂಗವೆಂದು
ಅಂಗವ ಕುರಿತು ಮೂರು ತೆರನಾಯಿತ್ತು.
ಆಚಾರಾದಿ ಮಹಾಲಿಂಗವೆಂದು ಇಂದ್ರಿಯವ ಕುರಿತು ಆರು ತೆರನಾಯಿತ್ತು.
ತತ್ತ್ವವ ಕುರಿತು ಮೂವತ್ತಾರು ತೆರನಾಯಿತ್ತು.
ಸ್ಥಲವ ಕುರಿತು ನೂರೊಂದು ತೆರನಾಯಿತ್ತು.
ಕರಣವ ಕುರಿತು ಇನ್ನೂರ ಹದಿನಾರಾಯಿತ್ತು.
ಇಂತೀ ಪಸರಿಸಿದ ಪರಬ್ರಹ್ಮವೇ ಏಕಮಯವಾಗಿ ನಿಂದುದಕ್ಕೆ ದೃಷ್ಟ :
ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ |
ಲಿಂಗಹ್ಯಾತ್ ಪರಂ ನಾಸ್ತಿ ತಸ್ಮಾಲ್ಲಿಂಗಂ ಪ್ರಪೂಜಯೇತ್ ||
ಇಂತಪ್ಪ ಲಿಂಗವೆ ನೀನಲಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ,
ಮಾಂ ತ್ರಾಹಿ, ತ್ರಾಹಿ ಕರುಣಾಕರನೆ./13
ಅತ್ತಿಗೆ ಸತ್ತಳು, ನಾದಿನಿ ಮೊರೆಯಲಿಲ್ಲ.
ಅತ್ತೆಯ ಕಣ್ಣು ಅರಯಿತ್ತು, ಮಾವನ ಕಾಲು ಮುರಿಯಿತ್ತು.
ಭಾವನ ಸಂದುಸಂದುವೆಲ್ಲ ಮುರಿದವು, ಮೈದುನನ ಮೈಯೆಲ್ಲ ಉರಿಯಿತ್ತು.
ಹಿತ್ತಿಲಗೋಡೆ, ಪಶ್ಚಿಮದ ಬಾಗಿಲು ಬಯಲಾಯಿತ್ತು.
ಇದ ನೋಡಿ ಕೂಡಿ, ನಾ ನಿಶ್ಚಿಂತ ಲಿಂಗೈಕ್ಯನಾದೆನಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./14
ಅನುಭಾವ ಅನುಭಾವವೆಂದು, ನುಡಿದಾಡುತ್ತಿಪ್ಪಿರಿ.
ನಿಮ್ಮ ತನುವಿನಿಚ್ಛೆಗೆ ಅನುವಿಗೆ ಬಂದಂತೆ,
ಬಿನುಗರ ಮುಂದೆ ಬೊಗುಳಿಯಾಡುವ ನಿನಗಂದೆ ದೂರ.
ಅನುಭಾವವೆಂತೆಂದರೆ,
ನಮ್ಮ ಹಿಂದನರಿದು, ಮುಂದೆ ಲಿಂಗದಲ್ಲಿ ನೋಡುವ ಶರಣರ
ಅಂಗವ ಸೋಂಕಿ ನಾ ಬದುಕಿದೆ ಕಾಣಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
/15
ಅನ್ನ ಉದಕವ ಕೊಂಡೆಹೆನೆಂದಡೆ ಭೂಮಿಯ ಹಂಗು,
ಹೊನ್ನ ಹಿಡಿದೆಹೆನೆಂದಡೆ ಲಕ್ಷ್ಮಿಯ ಹಂಗು.
ಹೆಣ್ಣ ಹಿಡಿದೆಹೆನೆಂದಡೆ ಕಾಮನ ಹಂಗು.
ಹಾಲ ಕೊಂಡೆಹೆನೆಂದಡೆ ಹಸುವಿನ ಹಂಗು.
ಹೂಫಲಾದಿಗಳ ಕೊಂಡೆಹೆನೆಂದಡೆ ತರುಮರದ ಹಂಗು.
ತರಗೆಲೆಯ ಕೊಂಡೆಹೆನೆಂದಡೆ ವಾಯುವಿನ ಹಂಗು.
ಬಯಲಾಪೇಕ್ಷೆಯ ಕೊಂಡೆಹೆನೆಂದಡೆ ಆಕಾಶದ ಹಂಗು.
ಇದನರಿದು, ಇವೆಲ್ಲವನು ಕಳೆದು,
ವಿಶ್ವಬ್ರಹ್ಮಾಂಡಕ್ಕೆ ನಡೆನುಡಿ ಚೈತನ್ಯವಾದ ಜಂಗಮಲಿಂಗದ ಪಾದವಿಡಿದು,
ಅವರು ಬಿಟ್ಟ ಪ್ರಸಾದವ, ಉಟ್ಟ ಮೈಲಿಗೆಯ, ಉಗುಳ ತಾಂಬೂಲವ,
ಈ ತ್ರಿವಿಧವ ಕೊಂಡೆನ್ನ ಭವಂ ನಾಸ್ತಿಯಾಯಿತ್ತು.
ಮತ್ರ್ಯಲೋಕದ ಮಹಾಗಣಂಗಳು ಸಾಕ್ಷಿಯಾಗಿ,
ದೇವಲೋಕದ ದೇವಗಣಂಗಳು ಸಾಕ್ಷಿಯಾಗಿ,
ನಾ ನಿಜಮುಕ್ತನಾದೆನಯ್ಯಾ, ನೀವು ಸಾಕ್ಷಿಯಾಗಿ,
ಬಸವಪ್ರಿಯ ಕೂಡಲಚೆನ್ನ ಸಂಗನಬಸವಣ್ಣಾ./16
ಅನ್ನವನ್ನಿಕ್ಕಿದರೇನು ? ಹೊನ್ನ ಕೊಟ್ಟರೇನು ?
ಹೆಣ್ಣು ಕೊಟ್ಟರೇನು ? ಮಣ್ಣು ಕೊಟ್ಟರೇನು ? ಪುಣ್ಯ ಉಂಟೆಂಬರು.
ಅವರಿಂದಾದೊಡವೆ ಏನು ಅವರೀವುದಕ್ಕೆ ?
ಇದಕ್ಕೆ ಪುಣ್ಯವಾವುದು, ಪಾಪವಾವುದು ?
ನದಿಯ ಉದಕವ ನದಿಗೆ ಅರ್ಪಿಸಿ,
ತನತನಗೆ ಪುಣ್ಯ ಉಂಟೆಂಬ ಬಡಹಾರುವರಂತೆ,
ಸದಮಳ ಶಾಶ್ವತ ಮಹಾಘನಲಿಂಗವನರಿಯದೆ,
ಇವೇನ ಮಾಡಿದರೂ ಕಡೆಗೆ ನಿಷ್ಪಲವೆಂದಾತ,
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ./17
ಅಯ್ಯಾ ಅರಗಿನ ಮರದ ಮೇಲೆ ಗಿರಿ ಹುಟ್ಟಿತ್ತಯ್ಯಾ.
ಆ ಗಿರಿಯ ತಪ್ಪಲಲ್ಲಿ ಸಪ್ತಶರಧಿಗಳಿಪ್ಪವು.
ಆ ಶರಧಿಯ ನಡುವೆ, ತರು ಮರ ಗಿರಿ ಗಹ್ವರ ಖಗ ಮೃಗಂಗಳಿಪ್ಪವು.
ಈ ಭಾರವ ತಾಳಲಾರದೆ,
ಅರಗಿನ ಮರದಡಿಯಲಿರ್ದ ಪರಮಜ್ಞಾನವೆಂಬ ಉರಿಯೆದ್ದು,
ಅರಗಿನ ಮರ ಕರಗಿ ಕುಸಿಯಿತ್ತು,
ಗಿರಿ ನೆಲಕ್ಕೆ ಬಿದ್ದಿತ್ತು, ಸಪ್ತಶರಧಿಗಳು ಬತ್ತಿದವು.
ಅಲ್ಲಿರ್ದ ತರು ಮರ ಖಗ ಮೃಗಾದಿಗಳು ಗಿರಿಗಹ್ವರವೆಲ್ಲ ದಹನವಾದವು.
ಇದ ಕಂಡು, ನಾ ನಿಮ್ಮೊಳು ಬೆರಗಾಗಿ ನೋಡುತಿದರ್ೆನಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./18
ಅಯ್ಯಾ ಆರೂ ಇಲ್ಲದ ಅರಣ್ಯದಲ್ಲಿ, ನಾನಡಿಯಿಟ್ಟು ನಡವುತ್ತಿದರ್ೆನಯ್ಯಾ.
ಮುಂದೆ ಬರೆಬರೆ ಮಹಾಸರೋವರವ ಕಂಡೆ.
ಸರೋವರದೊಳಗೊಂದು ಹಿರಿಯ ಮೃಗವ ಕಂಡೆ.
ಆ ಮೃಗಕ್ಕೆ ಕೊಂಬುಂಟು ತಲೆಯಿಲ್ಲ,
ಬಾಯುಂಟು ಕಣ್ಣಿಲ್ಲ, ಕೈಯುಂಟು ಹಸ್ತವಿಲ್ಲ,
ಕಾಲುಂಟು ಹೆಜ್ಜೆಯಿಲ್ಲ, ಒಡಲುಂಟು ಪ್ರಾಣವಿಲ್ಲ.
ಇದ ಕಂಡು ನಾ ಹೆದರಿ, ಹವ್ವನೆ ಹಾರಿ, ಬೆದರಿ ಬಿದ್ದೆನಯ್ಯಾ.
ಆಗೆನ್ನ ಹೆತ್ತತಾಯಿ ಬಂದು ಎತ್ತಿ ಕುಳ್ಳಿರಿಸಿ,
ಚಿತ್ತಮೂಲಾಗ್ನಿಯ ಒತ್ತಿ ಉರುಹಿದರೆ, ಇವೆಲ್ಲವು ಸುಟ್ಟು ಬಟ್ಟಬಯಲಾದವು.
ಆ ಬಟ್ಟಬಯಲೊಳಗೆ ಅಡಿಯಿಟ್ಟು ನಡೆವಾಗ,
ಮುಂದೆ ಇಟ್ಟಡಿಯ ಬಾಗಿಲೊಳಗೆ ಮತ್ತೊಂದು ಮೃಗವ ಕಂಡೆ.
ಆ ಮೃಗಕ್ಕೆ ತಲೆಯುಂಟು ಕೊಂಬಿಲ್ಲ, ಕಣ್ಣುಂಟು ಬಾಯಿಲ್ಲ,
ಹಸ್ತವುಂಟು ಕೈಯಿಲ್ಲ, ಹೆಜ್ಜೆಯುಂಟು ಕಾಲಿಲ್ಲ, ಪ್ರಾಣವುಂಟು ಒಡಲಿಲ್ಲ.
ಇದ ಕಂಡು ನಾ ಅಪ್ಪಿಕೊಳಹೋದಡೆ, ಮುಟ್ಟದ ಮುನ್ನವೆ ಎನ್ನನೆ ನುಂಗಿತ್ತು.
ನುಂಗಿದ ಮೃಗ ಮಹಾಲಿಂಗದಲ್ಲಿಯೆ ಅಡಗಿತ್ತು,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./19
ಅಯ್ಯಾ ಎನೆಗೆ ಬಸವಪ್ರಿಯನೆಂದರೂ ನೀನೆ,
ಕೂಡಲ ಚೆನ್ನಬಸವಣ್ಣನೆಂದರೂ ನೀನೆ,
ಗುರುವೆಂದರೂ ನೀನೆ, ಲಿಂಗವೆಂದರೂ ನೀನೆ,
ಜಂಗಮವೆಂದರೂ ನೀನೆ, ಪ್ರಸಾದವೆಂದರೂ ನೀನೆ.
ಅದೇನು ಕಾರಣವೆಂದರೆ,
ನೀ ಮಾಡಲಾಗಿ ಅವೆಲ್ಲವು ನಾಮರೂಪಿಗೆ ಬಂದವು.
ಅದು ಕಾರಣ, ನಾನೆಂದರೆ ಅಂಗ, ನೀನೆಂದರೆ ಪ್ರಾಣ.
ಈ ಉಭಯವನು ನೀವೆ ಅರುಹಿದಿರಾಗಿ,
ಇನ್ನು ಭಿನ್ನವಿಟ್ಟು ನೋಡಿದೆನಾದರೆ, ಚನ್ನಮಲ್ಲೇಶ್ವರ ನೀವೆ ಬಲ್ಲಿರಿ.
ಎಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನಲ್ಲಿ ಏಕವಾದ ಕಾರಣ,
ಎನಗೆ ಭವವಿಲ್ಲ, ಬಂಧನವಿಲ್ಲ, ಅದಕ್ಕೆ ನೀವೇ ಸಾಕ್ಷಿ. /20
ಅಯ್ಯಾ ಎನ್ನ ತಂದೆ ತಾಯಿಗಳು
ತಮ್ಮ ಕಂದನಪ್ಪ ಶಕ್ತಿಯ ಕೈಲೆಡೆಗೊಟ್ಟು ಕಳುಹಿದಡೆ,
ಎನ್ನ ಇಲ್ಲಿಗೆ ತಂದು ಮದುವೆಯಂ ಮಾಡಿ,
ಮುಗ್ಧನಪ್ಪ ಗಂಡನ ಕೊರಳಲ್ಲಿ ಕಟ್ಟಿ,
ಎನ್ನ ಅತ್ತೆ ಮಾವಂದಿರ ವಶಕ್ಕೆ ಕೊಟ್ಟರು.
ಎಮ್ಮತ್ತೆ ಮಾವಂದಿರ ಊರ ಹೊಕ್ಕರೆ, ಕತ್ತಲೆಯಲ್ಲದೆ ಬೆಳಗಿಲ್ಲ.
ಎಮ್ಮತ್ತೆ ಮಾವಂದಿರ ಮನೆಯ ಹೊಕ್ಕರೆ,
ಅತ್ತಿಗೆ ನಾದಿನಿ ಭಾವ ಮೈದುನ ಇವರು ನಾಲ್ವರು
ಎನ್ನ ಗಂಡನ ತಲೆಯೆತ್ತಿ ನೋಡಲೀಸರು.
ಹಟ್ಟಿಯಲಿಪ್ಪ ಶುನಕ ಅಡಿಯಿಟ್ಟು ನಡೆಯಲೀಸವು.
ಸುತ್ತಲಿಹ ಆನೆ ಕುದುರೆ ತೊತ್ತಳದುಳಿವುತಿಪ್ಪವು.
ಒತ್ತೊತ್ತಿನ ಬಾಗಿಲವರು ಎನ್ನ ಇತ್ತಿತ್ತ ಹೊರಡಲೀಸರು.
ಸುತ್ತಲಿಹ ಕಾಲಾಳ ಪ್ರಹರಿ, ಮೊತ್ತದ ಸರವರ
ಈ ಮುತ್ತಿಗೆಗೊಳಗಾಗಿ ನಾ ಸತ್ತು ಹುಟ್ಟುತಿದರ್ೆನಯ್ಯಾ,
ಆಗ ಎನ್ನ ಹೆತ್ತತಾಯಿ ಬಂದು
ತತ್ವವೆಂಬ ತವರುಮನೆಯ ಹಾದಿ ತೋರಿದಡೆ,
ಇತ್ತ ತಾ ನೋಡಿ ಎಚ್ಚತ್ತು, ಎನ್ನ ಚಿಕ್ಕಂದಿನ ಗಂಡನ ನೋಡಿದೆ.
ಎಮ್ಮಿಬ್ಬರ ನೋಟದಿಂದ ಒಂದು ಶಿಶು ಹುಟ್ಟಿತ್ತು.
ಆ ಶಿಶು ಹುಟ್ಟಿದಾಕ್ಷಣವೆ ಎಮ್ಮಿಬ್ಬರ ನುಂಗಿತ್ತು.
ನುಂಗಿದ ಶಿಶು ತಲೆಯೆತ್ತಿ ನೋಡಲು,
ಎಮ್ಮತ್ತೆ ಮಾವಂದಿರಿಬ್ಬರು ಹೆದರಿ ಬಿದ್ದರು.
ಅತ್ತಿಗೆ ನಾದಿನಿ ಭಾವ ಮೈದುನ ಇವರು ನಾಲ್ವರು ಎತ್ತಲೋ ಓಡಿಹೋದರು.
ಈ ಹಟ್ಟಿಯಲ್ಲಿಪ್ಪ ಶುನಕ ಸುತ್ತಲಿಹ ಆನೆ ಕುದುರೆ
ಒತ್ತೊತ್ತಿನ ಬಾಗಿಲವರು,
ಸುತ್ತಲಿಹ ಕಾಲಾಳ ಪ್ರಹರಿ ಮೊತ್ತದ ಸರವರ
ಹೊತ್ತಿ ನಿಂದುರಿದು,
ನಾ ಸುತ್ತಿ ನೋಡಿದರೆ ಎಲ್ಲಿಯೂ ಬಟ್ಟಬಯಲಾಗಿದರ್ಿತ್ತು ಕಾಣಾ.
ಬಸವಪ್ರಿಯ ಕೂಡಲಚೆನ್ನಬಸವಣ್ಣ./21
ಅಯ್ಯಾ ಎನ್ನಂಗದ ಮೇಲಿಪ್ಪ ಲಿಂಗವು ಕಪರ್ುರದಂತಾಯಿತ್ತು.
ಎನ್ನ ಪ್ರಾಣದ ಮೇಲಿಪ್ಪ ಲಿಂಗವು ಪರಂಜ್ಯೋತಿಯಂತಾಯಿತ್ತು.
ಎನ್ನ ನಿಃಪ್ರಾಣದ ಮೇಲಿಪ್ಪ ಲಿಂಗವು ನಿರಂಜನದಂತಾಯಿತ್ತು.
ಈ ತ್ರಿವಿಧವು ಏಕವಾದ ಭೇದವ ಹೇಳಿಹೆನು ಕೇಳಿರಣ್ಣಾ !
ಎನ್ನ ಅಂಗದ ಮೇಲಿದ ಕಪರ್ುರದಂತಿರ್ದ ಲಿಂಗ,
ಪ್ರಾಣದ ಮೇಲಿಪ್ಪ ಪರಂಜ್ಯೋತಿ ಲಿಂಗವ ಬೆರೆಯಿತ್ತು .
ಎನ್ನ ಪ್ರಾಮದ ಮೇಲಿಪ್ಪ ಪರಂಜ್ಯೋತಿ ಲಿಂಗ,
ನಿಃಪ್ರಾಣದ ಮೇಲಿಪ್ಪ ನಿರಂಜನ ಲಿಂಗವ ಬೆರೆಯಿತ್ತು.
ಈ ತ್ರಿವಿಧವು ಏಕವಾದ ಮೇಲೆ, ಒಂದಲ್ಲದೆ ಎರಡುಂಟೆ ?
ಇದಕ್ಕೆ ಸಂದೇಹ ಬೇರಿಲ್ಲವಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ. /22
ಅಯ್ಯಾ ಎನ್ನಂಗದಲ್ಲಿಪ್ಪ ಅರುವೆಯ ಕಂಡು, ತೆಗೆದೆನ್ನ ಲಿಂಗಕ್ಕೆ ಹೊದ್ದಿಸಿ,
ಆ ಲಿಂಗದಲ್ಲಿಪ್ಪ ಅರುವೆಯ ಕಂಡೆನ್ನ ಕಂಗಳು ನುಂಗಿತ್ತು.
ಕಂಗಳೊಳಗಣ ತಿಂಗಳ ತಿರುಳ ಮಂಗಳದ ಮಹಾಬೆಳಗಿನ
ಶೃಂಗಾರದೊಳು ನಾನೋಲಾಡುತಿದರ್ೆನಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./23
ಅಯ್ಯಾ ಏನು ಏನೂ ಇಲ್ಲದಂದು, ಧರೆ ಬ್ರಹ್ಮಾಂಡಗಳು ಇಲ್ಲದಂದು,
ಸಚರಾಚರ ರಚನೆಗೆ ಬಾರದಂದು
ಅಂದು ನೀವಿಪ್ಪ ಭೇದವ ಎನಗೆ ತೋರಿದರಾಗಿ.
ಅದು ಹೇಗೆಂದರೆ :ನಾನು ಪುಷ್ಪದ ಹಾಗೆ, ನೀವು ಪರಿಮಳದ ಹಾಗೆ,
ನಾನಾಲಿಯ ಹಾಗೆ, ನೀವು ನೋಟದ ಹಾಗೆ,
ನಾ ಬ್ರಹ್ಮಾಂಡದ ಹಾಗೆ, ನೀವು ಬಯಲಿನ ಹಾಗೆ,
ಒಳಹೊರಗೆ ಪರಿಪೂರ್ಣವಾಗಿಪ್ಪಿರಿಯಾಗಿ,
ಆ ಭೇದವನು ಎನಗೆ ನೀವೆ ಅರುಹಿದಿರಾಗಿ.
ಉರಿ ಕರ್ಪುರದ ಸಂಯೋಗದಂತೆ ಎರಡೂ ಒಂದೆ ಎಂಬ ಭೇದವ
ಎನ್ನ ಗುರು ತಂದೆ ನೀವು ತೋರಿದಿರಲ್ಲ.
ಚೆನ್ನಮಲ್ಲೇಶ್ವರ ಬಸವಪ್ರಿಯ ಕೂಡಲಚೆನ್ನಬಸವಣ್ಣಾ,
ನೀವೆನ್ನ ಪರಮಾರಾಧ್ಯರಾದ ಕಾರಣ./24
ಅಯ್ಯಾ ಧರೆಯ ಮೇಲೆ ಹುಟ್ಟಿದವರೆಲ್ಲ
ವಾಕ್ಕುಜಾಲವ ಕಲಿತುಕೊಂಡು, ಅನುಭಾವವ ಬಲ್ಲವೆಂದು ನುಡಿವರು.
ಅನುಭಾವವೆಂತಿಪ್ಪುದೆಂದರಿಯರು.
ತೂರ್ಯಾತೂರ್ಯ ನುಡಿಯ ಪರಾತ್ಪರದ ನುಡಿ ಎಂದು
ಹರಶರಣರ ವಾಕ್ಯವ ಕಲಿತುಕೊಂಡು ನುಡಿದಾಡುವರು.
ತೂರ್ಯಾತೂರ್ಯವೆಂಬುದು ನಾಮರೂಪಿಗುಂಟೆ ?
ಪರಾತ್ಪರವೆಂಬ ವಾಕ್ಯ ಮನಸಿಂಗುಂಟೆ ?
ಹೆಸರಿಗೆ ಬಾರದ ಘನವೆಂದು ನೀವೆ ಹೇಳುತಿರ್ದು
ಮತ್ತೆ ಹೆಸರಿಗೆ ತಂದು ನುಡಿದಾಡುವರು.
ಇದು ಹುಸಿಯೋ, ದಿಟವೊ ? ಇದು ಹಸುಮಕ್ಕಳಾಟ.
ಸಸಿನೆ ನೆನೆದು ಬದುಕಿದೆ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ. /25
ಅಯ್ಯಾ ನಾ ಉತ್ತರವನೇರಿ ನೋಡಲಾಗಿ,
ಊರೊಳಗಣ ಉಲುಹೆಲ್ಲ ನಿಂದಿತ್ತು.
ಪಶ್ಚಿಮಕ್ಕಿಳಿದು ನೋಡಲಾಗಿ, ಪ್ರಾಣ ಪವನನ ಸುಳುಹು ನಿಂದಿತ್ತು.
ಪೂರ್ವವ ಮೆಟ್ಟಿ ನೋಡಲಾಗಿ, ಆರು ನೆಲೆ ಮೂರಾಗಿದ್ದವು.
ಅಯ್ಯಾ ನಾ ದಕ್ಷಿಣಕ್ಕೆ ಬಂದು ನೋಡಲಾಗಿ
ಈರೇಳು ಭವನವು ಕುಕ್ಷಿಯೊಳಗೆ ನಿಕ್ಷೇಪವಾಗಿದ್ದಿತು.
ಅದು ಹೇಗೆಂದಡೆ : ಇಹಲೋಕವು ತನ್ನೊಳಗೆ, ಪರಲೋಕವು ತನ್ನೊಳಗೆ,
ಸಚರಾಚರವೆಲ್ಲ ತನ್ನೊಳಗೆ, ಶಿವಶಕ್ತಿಯು ತನ್ನೊಳಗೆ,
ಭುವನಾದಿ ಭುವನಂಗಳು ತನ್ನೊಳಗೆ.
ಅದು ಹೇಗೆಂದಡೆ : ಅದಕ್ಕೆ ದೃಷ್ಟವ ಹೇಳಿಹೆನು, ಬಲ್ಲವರು ತಿಳಿದುನೋಡಿ,
`ಒಂ ಏಕಮೇವನದ್ವಿತೀಯ’ ಎಂಬ ಶ್ರುತಿ ಕೇಳಿ ಬಲ್ಲಿರೆ.
ಇಂತಪ್ಪ ಮನಕ್ಕೆ ಒಂದಲ್ಲದೆ ಎರಡುಂಟೆ ?
ತಾನಲ್ಲದೆ ಅನ್ಯೋನ್ಯವಿಲ್ಲಾಯೆಂದು ಅರಿದ ಮೇಲೆ
ತನಗಿಂದ ಮುನ್ನ ಇವೇನಾದರು ಉಂಟೆ ?
ಇದು ಕಾರಣ, ನಮ್ಮ ದೇವನೊಬ್ಬನೆ.
ಬಸವಪ್ರಿಯ ಕೂಡಲಚೆನ್ನಬಸವಣ್ಣಾ, ಆತಂಗೆ ನಮೋ ನಮೋ ಎಂಬೆ./26
ಅಯ್ಯಾ ನಾ ಹುಟ್ಟಿದಂದಿಂದ ಎನ್ನ ಹೊಟ್ಟೆಗೆ ಕಾಣದೆ,
ಮೂರುವಟ್ಟೆಯನೆ ಕಾದಿರ್ದೆನಯ್ಯಾ.
ಹೊಟ್ಟೆಯ ಒಡೆಯರು ಹೊಟ್ಟೆಯ ಹೊಡೆದುಹೋದರೆ,
ಎನ್ನ ಹೊಟ್ಟೆ ಏಕೆ ತುಂಬಿತ್ತೆಂದು ನೋಡಿದರೆ,
ಅಲ್ಲಿ ಬಟ್ಟಬಯಲಾಗಿರ್ದಿತ್ತು ಕಾಣಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./27
ಅಯ್ಯಾ ನಾನು ದಿಟ್ಟಿಸಿ ನೋಡಿ ನಿಂದು ಬಟ್ಟಬಯಲ ಕಂಡೆ.
ಬಟ್ಟಬಯಲೊಳಗೊಂದು [ಮುಟ್ಟಬಾರದ] ಮೃಗವ ಕಂಡೆ.
ಆ ಮೃಗ ಹೋದ ಹೆಜ್ಜೆಯ ಕಾಣಬಾರದು, ಮೇದ ಮೋಟನರಿಯಬಾರದು.
ಈ ಭೇದವ ನೋಡಿ ಸಾಧಿಸಿಕೊಂಡು ಬರುವನ್ನಕ್ಕ
ಆ ಮೃಗವೆನ್ನ ಬಲೆಗೊಳಗಾಯಿತ್ತು.
ಆ ಬಲೆಯೊಳಗಣ ಮೃಗದ ತಲೆಯ ಹಿಡಿದು, ನೆಲೆಗೆಟ್ಟು ಹೋದೆನಯ್ಯಾ.
ಬಸವಪ್ರಿಯ ಕೂಡಲಚೆನ್ನಬಸವಣ್ಣಾ,
ಇದರನುವ ಬಲ್ಲ ಶರಣರೆಲ್ಲರೂ ತಲೆಹೊಲನ ಹತ್ತಿ ಬಯಲಾದರು.
ಇದಕ್ಕೆ ನೀವೇ ಸಾಕ್ಷಿ. /28
ಅಯ್ಯಾ ನಿಮ್ಮ ಶರಣರು ವೇಷವ ತೋರಿ ಗ್ರಾಸವ ಬೇಡುವರಲ್ಲ.
ದೇಶವ ತಿರುಗಿ ಕಲಿತಮಾತ ನುಡಿವರಲ್ಲ.
ಲೇಸಾಗಿ ನುಡಿವರು, ಆಶೆ ಇಲ್ಲದೆ ನಡೆವರು, ರೋಷವಿಲ್ಲದೆ ನುಡಿವರು.
ಹರುಷವಿಲ್ಲದೆ ಕೇಳುವರು, ವಿರಸವಿಲ್ಲದೆ ಮುಟ್ಟುವರು.
ಸರಸವಿದ್ದಲ್ಲಿಯೇ ವಾಸಿಸುವರು.
ಇಂತಪ್ಪ ಬೆರಸಿ ಬೇರಿಲ್ಲದ ನಿಜೈಕ್ಯಂಗೆ ನಮೋ ನಮೋ ಎಂಬೆ,
ಬಸವಪ್ರಿಯ ಕೂಡಲಚೆನ್ನಬಸವಣ್ಣ.
ಇಂತಪ್ಪ ಶರಣರ ನೆಲೆಯ ನಾನೆತ್ತ ಬಲ್ಲೆನಯ್ಯಾ ?/29
ಅಯ್ಯಾ ನೀನಿಲ್ಲದಿದ್ದರೆ ಎನಗೆ ಮುನ್ನ ನಾಮ ರೂಪುಂಟೆ ?
ನೀ ಮಾಡಲಾನಾದೆನಯ್ಯಾ.
ಅದು ಕಾರಣವಾಗಿ ನಾ ಬಂದ ಬಂದ ಭವಾಂತರದಲ್ಲಿ ನೀವು ಬರುತ್ತಿದಿರಾಗಿ,
ಇನ್ನೆನ್ನ ಗುರುತಂದೆಗೆ ಬಳಲಿಕೆ ಆಗುತಿದೆ ಎಂದು ನಾ ನೋಡಲಾಗಿ,
ನೀವೆನ್ನ ಭವವ ಕೊಂಡಿರಾಗಿ.
ಇದು ಕಾರಣ, ಅಂದಂದಿಗೆ ನೂರು ತುಂಬಿತ್ತೆಂಬ ಭೇದವನು ನೀವೆ ತೋರಿದಿರಿ.
ಇದನರಿದರಿದು ನಾನು ಹಿಂದಣ ಭವವ ಹರಿದು,
ಮುಂದಣ ಭಾವ ಬಯಕೆಯ ಮುಗ್ಧವ ಮಾಡಿ, ಹೊಂದದ
ಬಟ್ಟೆಯನೆ ಹೊಂದಿ,
ಸದಮಳಾನಂದ ಚೆನ್ನಮಲ್ಲೇಶ್ವರನ ನಂಬಿ ಕೆಟ್ಟು, ಬಟ್ಟಬಯಲಾದೆನಯ್ಯಾ
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./30
ಅಯ್ಯಾ ಲಿಂಗವ ಪೂಜಿಸಿಹೆನೆಂದು ಅಂಗದ ಕುರುಹ ಮರೆದೆ.
ಜಂಗಮವ ಪೂಜಿಸಿಹೆನೆಂದು ಪ್ರಾಣದ ಕುರುಹ ಮರೆದೆ.
ಪ್ರಸಾದವ ಕೊಂಡಿಹೆನೆಂದು ಪರವ ಮರೆದೆ.
ಈ ತ್ರಿವಿಧದ ಭೇದವನು ಶ್ರುತಿ ಸ್ಮೃತಿಗಳರಿಯವು.
ಹರಿ ಹರ ಬ್ರಹ್ಮದೇವ ದಾನವ ಮಾನವರು ಅರಿಯರು.
ನಮ್ಮ ಶರಣರೆ ಬಲ್ಲರು.
ಇವ ಬಲ್ಲ ಶರಣ ಚೆನ್ನಮಲ್ಲೇಶ್ವರ ಹೋದ ಹಾದಿಯಲ್ಲದೆ
ಎನಗೆ ಬೇರೊಂದು ಹಾದಿ ಇಲ್ಲವಯ್ಯಾ, ಬಸವಪ್ರಿಯ ಕೂಡಲಚೆನ್ನ ಬಸವಣ್ಣಾ.
ಇದಕ್ಕೆ ಮರ್ತ್ಯಲೋಕದ ಮಹಾಗಣಂಗಳೇ ಸಾಕ್ಷಿ./31
ಅಯ್ಯಾ ಹಾಳೂರೊಳಗೊಂದು ಹಗವ ಕಂಡೆನಯ್ಯಾ.
ಹಗದ ಮೇಲೊಂದು ಬಾವಿ ಹುಟ್ಟಿತ್ತು.
ಹಗದ ಬಾವಿಯ ನಡುವೆ ವಡಬಾಗ್ನಿಯೆಂಬ ಕಿಚ್ಚು ಹುಟ್ಟಿತ್ತು.
ಆ ಹಗದ ಧಾನ್ಯವ ತೆಗೆತೆಗೆದು, ಬಾವಿಯ ನೀರ ಮೊಗೆಮೊಗೆದು,
ವಡಬಾಗ್ನಿಯೆಂಬ ಕಿಚ್ಚಿನೊಳಗೆ ಅಡಿಗೆಯ ಮಾಡಿಕೊಂಡು,
ಉಂಡು ಉಟ್ಟಾಡಬಂದರು, ಹಲಬರು ಕೆಲಬರು.
ಉಂಡುಟ್ಟಾಡಿ ಗಂಡು ಗೆಲವುದ ಕಂಡು ತಾಳಲಾರದೆ,
ಕುಂಡಲಿ ಅಗ್ನಿಯ ಎಬ್ಬಿಸಿ ಉರುಹಿದಡೆ, ಇವರೆಲ್ಲರೂ ದಹನವಾದರು.
ಆ ಹಗವು ಬೆಂದಿತ್ತು, ಬಾವಿಯು ಬತ್ತಿತ್ತು,
ವಡಬಾಗ್ನಿಯೆಂಬ ಕಿಚ್ಚು ಕೆಟ್ಟಿತ್ತು.
ಇದಕಂಡು ನಾ ನಿಮ್ಮೊಳಚ್ಚೊತ್ತಿದಂತಿರ್ದೆನಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./32
ಅಯ್ಯಾ, ಎನ್ನ ಬಾಳುವೆಯಲ್ಲಿ ಹೇಳದೆ ಕೇಳದೆ,
ಒಬ್ಬ ಕಾಳರಕ್ಕಸಿ ನುಂಗಿದಳಯ್ಯ.
ಆ ಬಾಳುವೆಗೋಸುಗ ಕಾಳರಕ್ಕಸಿಯ ಬಾಯೊಳಗೆ ಸಿಲ್ಕಿದೆನಯ್ಯಾ.
ಆ ಕಾಳರಕ್ಕಸಿ ಆವಾಗ ಅಗಿದಾಳೆಂದರಿಯೆ, ಆವಾಗ ಉಗಿದಾಳೆಂದರಿಯೆ.
ಆ ಕಾಳರಕ್ಕಸಿಯ ಬಾಯಿಂದವೆ ಹೊರಟು
ಆ ಬಾಳುವೆಯನಲ್ಲಿಯೆ ಬಿಟ್ಟು, ಆ ಕಾಳರಕ್ಕಸಿಯ ಬಾಯಿಂದಲೆ ಹೊರವಂಟು
ಆ ಮಹಾಜಾಣನಾಳುವ ಪುರವ ಹೊಕ್ಕೆ.
ಆ ಜಾಣನಾಳುವ ಪುರದೊಳಗೆ,
ಕಾಣಬಾರದುದನೆ ಕಂಡೆ, ಕೇಳಬಾರದುದುನೆ ಕೇಳಿದೆ.
ಕದಳಿಯನೆ ದಾಂಟಿದೆ, ಜ್ಞಾನಜ್ಯೋತಿಯ ಕಂಡೆ.
ತಾನು ತಾನಾಗಿಪ್ಪ ಮಹಾಬೆಳಗಿನೊಳು ನಾನು ಓಲಾಡುತ್ತಿಪ್ಪೆನಯ್ಯ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ,/33
ಅಯ್ಯಾ, ಶಿವಭಕ್ತರು ನುಡಿವಲ್ಲಿ ಜಾಣತನದಿಂದ ನುಡಿವರು.
ನೀಡುವಲ್ಲಿ ಭೇದದಿಂದ ನೀಡುವರು.
ಕೊಡುವಲ್ಲಿ ಸತ್ಪಾತ್ರಕ್ಕೆ ಕೊಡುವರು.
ಬಿಡುವಲ್ಲಿ ಶರಣಗೋಷ್ಠಿಯ ಬಿಡುವರು.
ಪೊಡವಿಯೊಳಿವರ ಭಕ್ತರೆನ್ನಬಹುದೆ ?
ಅದಂತಿರಲಿ, ಎನ್ನೊಡೆಯ ಬಸವಪ್ರಿಯನಡಿಗಳ ನೆನೆವ ಶರಣ ಲಿಂಗೈಕ್ಯರು
ಮೆಡುವ ಪಡುಗ ಪಾದರಕ್ಷೆಯ ಕಾಯಿರಿಸಯ್ಯ, ಚೆನ್ನಬಸವಣ್ಣಾ. /34
ಅಯ್ಯಾ, ಹುಟ್ಟಿದ ಮನುಜರೆಲ್ಲ
ಹೊಟ್ಟೆ ಹೊಟ್ಟೆ ಎಂದು ಹೊಟ್ಟೆಗೆ ಹಸಿದು, ಹೊಟ್ಟೆಗೆ ಕುದಿದು,
ಹೊಟ್ಟೆಗೆ ಹೊರೆದು, ಹೊಟ್ಟೆಗೆ ತುಂಬಿ,
ತಾವು ಬಂದ ಬಟ್ಟೆಯನೆ ಅರಿಯದೆ ಕೆಟ್ಟಿತ್ತು ಜಗವೆಲ್ಲ.
ಅದಂತಿರಲಿ. ಇನ್ನು ಆ ಶರಣರ ಮತವೆಂತೆಂದರೆ,
ಹೊಟ್ಟೆ ಎಂಬುದನೆ ಮೆಟ್ಟಿಟ್ಟು ತೂರಿ,
ಅಲ್ಲಿದ್ದ ಗಟ್ಟಿಯಾಗಿರ್ದ ಪ್ರಸಾದವನೆ ಊಟವೆಂದು ಹಿಡಿದು,
ಮುಟ್ಟ ನಿಮ್ಮೊಳೊಡವೆರೆದು, ಬಟ್ಟಬಯಲಾದರು ಕಾಣಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./35
ಅಯ್ಯಾಎನ್ನ ಗುರು ಎನಗೆ ಉಪದೇಶವ ಮಾಡಿದ
ಭೇದವ ಎಲ್ಲ ಗಣಂಗಳು ಕೇಳಿ.
ಮಲತ್ರಯಂಗಳ ಹರಿದು, ಕಮರ್ೆಂದ್ರಿಯಂಗಳ ಜ್ಞಾನೇಂದ್ರಿಯ ಮಾಡಿ,
ಕಾಯ ಜೀವ ಪ್ರಾಣ ಈ ತ್ರಿವಿಧವರತು ಭೇದವನರುಹಿಸಿದ.
ಉರಸ್ಥಲದ ಪರಂಜ್ಯೋತಿಲಿಂಗವ ಎನ್ನ ಕರಸ್ಥಲಕ್ಕೆ ಕೊಟ್ಟರು.
ಆ ಗುರು ಕೊಟ್ಟ ಲಿಂಗವೆಂಬ ದರ್ಪಣವ ನೋಡಿ,
ಎನ್ನ ಮನೆವೆಂಬ ಸರ್ಪ ಆ ದರ್ಪಣದಲ್ಲಿ ಲೀಯವಾಯಿತ್ತು.
ಇದು ಕಾರಣ, ಎನ್ನ ರೂಪೆಲ್ಲ ಉರಿಯುಂಡ ಕಪರ್ುರದಂತಾಯಿತ್ತು,
ಆಲಿ ನುಂಗಿದ ನೋಟದಂತಾಯಿತ್ತು.
ಪುಷ್ಪ ನುಂಗಿದ ಪರಿಮಳದಂತೆ ಬಯಲು ನುಂಗಿದ ಬ್ರಹ್ಮಾಂಡದಂತೆ,
ಅಂಗಲಿಂಗ ಸಂಗಸಂಯೋಗವಾದ ಭೇದ.
ಇದ ಹಿಂಗದೆ ಶರಣ ಸಂಗವ ಮಾಡಿದವರಂಘ್ರಿಯಲ್ಲಿ ಐಕ್ಯವಾದೆನಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ,
ಇದನು ಕಂಗಳ ಪಟಲ ಹರಿದ ಲಿಂಗೈಕ್ಯರೇ ಬಲ್ಲರು./36
ಅರಿವೆಂಬುದೆ ಆಚಾರ, ಆಚಾರವೆಂಬುದೆ ಅರಿವು.
ಅರಿವು ಆಚಾರದ ಸಂಗಷ್ಟದ ಕೂಟದ ಸ್ಥಲದಲ್ಲಿ ವಿಭೇದವೇ ಕ್ರೀ.
ಆ ಕ್ರೀಯೆ ವರ್ಮ, ಧರ್ಮ, ಅದೇ ಮುಕ್ತಿಗೆ ಸಾಧನ.
ಆ ಭಕ್ತಿಯೇ ಮುಕ್ತಿಸಾಧನ, ಆ ಮುಕ್ತಿಯೆ ಗುರುಪದಸಾಧನ.
ಗುರುಪದವೆ ಲಿಂಗಸಾಧನ, ಆ ಲಿಂಗಸಾಧನವೆ ಜಂಗಮಸಾಧ್ಯ.
ಆ ಜಂಗಮಸಾಧ್ಯವೆ ಪ್ರಸಾದಸಾಧ್ಯ.
ಆ ಪ್ರಸಾದಸಾಧ್ಯವೆ ಪರಸಾಧ್ಯ, ಆ ಪರಸಾಧ್ಯವಾದ ಬಳಿಕ,
ಕ್ರಿಯಾ ಕರ್ಮ ಧರ್ಮ ಭಕ್ತಿ ಯುಕ್ತಿ ಮುಕ್ತಿ,
ಗುರು ಲಿಂಗ ಜಂಗಮ ಪ್ರಸಾದ ಗಣತ್ವವೆಲ್ಲವು ಉಂಟು.
ಇಂತೀ ಸರ್ವಾಂಗವೇದ್ಯವಾದ ಮಹಾಮಹಿಮನ
ಹಿಡಿದನೆನ್ನಬಾರದು, ಬಿಟ್ಟನೆನ್ನಬಾರದು,
ಮುಟ್ಟಿದನೆನ್ನಬಾರದು, ತಟ್ಟಿದನೆನ್ನಬಾರದು.
ಸರ್ವಭೋಗ ಮುಕ್ತಿ ಸುಖದುಃಖಗಳೊಳಗೆ ಉಂಟೆನಬಾರದು,
ಇಲ್ಲೆನಬಾರದು.
ಅದೆಂತೆಂದಡೆ: ಸರ್ವವೂ ಶಿವನಿಂದಲಾದವೆಂಬುದ ಕೇಳಿ ಬಲ್ಲಿರಿ.
ತನ್ನಿಂದಾದವರೊಳಗೆ ತಾನುಂಟಾಗಿ, ಇಲ್ಲವಾಗಿರ್ಪ ಭೇದವ ತಾನೆ ಬಲ್ಲ.
ಇದು ಕಾರಣ, ಶಿವನಾದ ಶರಣನ ಅಂತಿಂತೆಂದಡೆ,
ನಮ್ಮ ಬಸವಪ್ರಿಯ ಕೂಡಲಸಂಗಮದೇವ ಸಾಕ್ಷಿಯಾಗಿ
ನಾಯಕ ನರಕದಲ್ಲಿಕ್ಕುವ./37
ಅವರನಕ ಕೂಳ ಇಡಿದ ಒಡಲಿಗೆ,
ಅದೆದು ಕುದಿದು, ಕೋಟಲೆಗೊಂಬುತಿದ್ದರು.
ಈ ಹದನನರಿಯದೆ ಕೆಡುತ್ತಿದ್ದೆಯಲ್ಲಾ ಎಂದು ತುದಿ ಹಿಡಿದು,
ತೆಗೆದುಕೊಂಡಾತ ಚೆನ್ನಮಲ್ಲೇಶ್ವರನಯ್ಯ.
ಆ ಒಡಲಗುಣದ ಕೆಡಿಸುವುದಕ್ಕೆ ಪ್ರಸಾದವೆಂಬ ಮದ್ದನಿಕ್ಕಿ.
ಸಲಹಿದಾತ ಚೆನ್ನಮಲ್ಲೇಶ್ವರನಯ್ಯ.
ಅಂಗಕ್ಕೆ ಆಚಾರ, ಮನಸ್ಸಿಗೆ ಅರುಹು,
ಕಂಗಳಿಗೆ ಲಿಂಗವ ತೋರಿದಾತ ಚೆನ್ನಮಲ್ಲೇಶ್ವರನಯ್ಯ.
ಇಂತು ಎನ್ನ ಭವವ ಕೊಂದಿಹೆನೆಂದು
ಗುರುಲಿಂಗಜಂಗಮ ಈ ತ್ರಿವಿಧವಾಗಿಯು ಸುಳಿದಾತ ಚೆನ್ನಮಲ್ಲೇಶ್ವರನಯ್ಯ.
ಇಂತಪ್ಪ ಚೆನ್ನಮಲ್ಲೇಶ್ವರನ ಶ್ರೀಪಾದವಿಡಿದು ಕೆಟ್ಟು ಬಟ್ಟಬಯಲಾದೆನಯ್ಯ.
ಬಸವಪ್ರಿಯ ಚೆನ್ನಮಲ್ಲೇಶ್ವರನ ಪಾದವ ಮುಟ್ಟಿ,
ಹುಟ್ಟುಗೆಟ್ಟುಹೋದೆನಯ್ಯ./38
ಅವಲೋಹವ ಪರುಷ ಮುಟ್ಟಲು ಸುವರ್ಣವಾಗುತ್ತಿದೆ.
ಕಬ್ಬಿಣಕ್ಕೆ ಇದ್ದಲಿಯ ಹಾಕಿ ಅಗ್ನಿಯನಿಕ್ಕಿ,
ಕಾವುಗೊಳಲಾಗಿ, ಕರಗಿ ನೀರಾಗುತ್ತಿದೆ.
ಹಾಲಿಗೆ ನೀರ ಹೊಯ್ದರೆ ಅದು ಏರುವ ಭೇದವನಾರೂ ಅರಿಯರು.
ಶರಣರು ತನುವಿಡಿದಿದ್ದರೂ ಇದ್ದವರಲ್ಲ.
ಅದು ಹೇಗೆಂದರೆ, ಹಿಂದಣ ದೃಷ್ಟದ ಪರಿಯಲ್ಲಿ ಲಿಂಗವ ಹಿಡಿದಂಗಕ್ಕೆ
ಬೇರೊಂದು ಸಂಗಸುಖ ಉಂಟೆ ?
ಅದು ಕಾರಣ, ಸರ್ವಾಂಗಲಿಂಗಿಯಾ ಶರಣನು
ಮುಟ್ಟಿದ, ತಟ್ಟಿದ, ಕೇಳಿದ, ನೋಡಿದ, ನುಡಿದ, ಸೋಂಕಿದನೆನ್ನಬೇಡ.
ಅದು ಕಾರಣ,
ಕಬ್ಬಿಣ ನೀರುಂಡಂತೆ ಅರ್ಪಿತವ ಬಲ್ಲ ಐಕ್ಯಂಗೆ ಮೈಯೆಲ್ಲ ಬಾಯಿ.
ಇದರ ಬೇದವ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನೆ ಬಲ್ಲ. /39
ಅವಿರಳ ಲಿಂಗವ ಕಂಡಿಹೆನೆಂದು ಅವರಿವರಲ್ಲಿನ್ನೇನ ಕೇಳುವಿರಿ?
ಭವವಿರಹಿತ ಗುರುಲಿಂಗಜಂಗಮದೊಳು ತಾವೆ ಬೆರೆಯೆ,
ತಲ್ಲೀಯವಾಗಿಪ್ಪಲ್ಲಿಗೆ ಬಸವಪ್ರಿಯ ಕೂಡಲಚೆನ್ನಬಸವಣ್ಣಾ. /40
ಆಕಾಶವ ನೂಕುತ್ತಿಯ ಹಾಗೆ ಅಟಗೋಲ ಹಂಗುಂಟೆ ?
ಏಕ ಮನವ ನಿಲಿಸುವರೆ, ಬೇರೊಂದು ಸಾಕಾರ ಉಂಟೆ ?
ಬೇಕು ಬೇಡೆಂಬವೆರಡಳಿದವಂಗೆ, ಇಹಲೋಕದ ಹಂಗುಂಟೆ ?
ಈ ಜೋಕೆ ನಿಮ್ಮೊಳು ಏಕವಾಗಿಹ ಶರಣಂಗಲ್ಲದೆ, ಲೋಕದ ಮಾನವರಿಗುಂಟೆ?
ನಿಮ್ಮ ನೆಲೆಯನರಿವುದು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ. /41
ಆಗುತಿವೆ ಉದಯ ಮಧ್ಯಾಹ್ನ ಅಸ್ತಮಾನ.
ಹೋಗುತಿವೆ ದಿನ ವಾರ ಮಾಸ ಸಂವತ್ಸರವು.
ಸಾವುತಿವೆ ಆಯುಷ್ಯ ಭಾಷೆ.
ಇವರೊಳು ಬೇಗದಿ ತಿಳಿದು ನೀಗಿ, ನಿಷ್ಪತ್ತಿಯಾದರೆ,
ಬಸವಪ್ರಿಯ ಕೂಡಲಚೆನ್ನಬಸವಣ್ಣ.
/42
ಆಚಾರದ ಅರಿವು ಹೊರಗಾದ ಮೇಲೆ.
ಅಂಗದ ಮೇಲೆ ಲಿಂಗವಿದ್ದು ಫಲವೇನು?
ಕುರುಡನ ಕೈಯ ಕನ್ನಡಿ ಇದ್ದ ಹಾಗೆ,
ಬರಡಾವಿಗೆ ಶಿಶು ಹುಟ್ಟಿದ ಹಾಗೆ, ಕುರುಡಗೆ ಕಣ್ಣೆಬೇನೆ ಬಂದ ಹಾಗೆ,
ಕುರುಡಿಗೆ ಮಕ್ಕಳಾದ ಹಾಗೆ, ದೀನನ ಮನೆಯಲ್ಲಿ ಹೊನ್ನಿದ ಹಾಗೆ.
ಇವರೇನ ಮಾಡಿದರೇನು?
ತಮ್ಮ ಹಾನಿವೃದ್ಧಿಯನರಿಯದನ್ನಕ್ಕ, ಕಾಲ ಕಾಮಾದಿಗಳ ಬಾಯೊಳಗೆ ಸಿಲ್ಕಿ,
ಅಗಿದಗಿದು ತಿನಿಸಿಕೊಳುತಿಪ್ಪರಲ್ಲ,
ಎನ್ನ ದೇವ ಬಸವಪ್ರಿಯ ಕೂಡಲಚೆನ್ನಬಸವಣ್ಣಾ. /43
ಆಚಾರದರಿವು ಆಗಮವ ಕೂಡಿಕೊಂಡಿಹುದು.
ವಿಚಾರದರಿವು ಶಾಸ್ತ್ರವ ಕೂಡಿಕೊಂಡಿಹುದು.
ಲಿಂಗಾಚಾರದರಿವು ಅಂಗಭೋಗವ ಕೂಡಿಕೊಂಡಿಹುದು.
ಆದಿ ವಿಚಾರದರಿವು ಜ್ಞಾನವ ಕೂಡಿಕೊಂಡಿಹುದು.
ಈ ಚತುರ್ವಿಧದೊಳಗೆ ಆವಂಗವೂ ಅಲ್ಲ. ಎಮ್ಮ ಶರಣರ ಪರಿ ಬೇರೆ.
ಅದೆಂತೆಂದರೆ; ಗುರು ಕರದಲ್ಲಿ ಹುಟ್ಟಿದರು, ಲಿಂಗದಲ್ಲಿ ಬೆಳೆದರು.
ಜಂಗಮದ ಸಂಗವ ಮಾಡಿದರು, ಪ್ರಸಾದದಲ್ಲಿ ಅಡಗಿದರು.
ಇದೀಗ ನಮ್ಮ ಶರಣರ ನಡೆನುಡಿ ಅರಿವು ಆಚಾರ ಲಿಂಗೈಕ್ಯ.
ಈ ಚತುರ್ವಿಧವು ಹೊರತಾಗಿ, ಅವರೊಬ್ಬರು ಸಾಧಿಸಿ ಎಂದರೆ,
ಸಾಧಕರಿಗೆ ಸಾಧ್ಯವಲ್ಲ, ಭೇದಕರಿಗೆ ಭೇದ್ಯವಲ್ಲ.
ಅರಿವಿಂಗೆ ಅಪ್ರಮಾಣು, ವಾಙ್ಮನಕ್ಕಗೋಚರ.
ಆಗಮ ಶಾಸ್ತ್ರಂಗಳು ಅರಸಿ ಕಾಣವು. ಇದು ಕಾರಣವಾಗಿ,
ಎಮ್ಮ ಶರಣರು ಗುರು, ಲಿಂಗ, ಜಂಗಮ, ಪ್ರಸಾದ
ಈ ಚತುರ್ವಿಧವಿಡಿದು ಅಚಲಪದವನೆಯ್ದಿದರು.
ಇದಕ್ಕೆ ನೀವೆ ಸಾಕ್ಷಿ, ಬಸವಪ್ರಿಯ ಕೂಡಲಚೆನ್ನಬಸವಣ್ಣ. /44
ಆಚಾರಲಿಂಗ ಗುರುಲಿಂಗ ಶಿವಲಿಂಗ
ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗದೊಳು ಬೆರೆದರೆ,
ಬಸವಪ್ರಿಯ ಕೂಡಲಚೆನ್ನಬಸವಣ್ಣ ./45
ಆಟ ಕೋಟಲೆ ಎಂಬ ರಾಟಾಳವ ಮುರಿದು,
ನೋಟ ನುಡಿಗಳೆಂಬುವ ಸೂತ್ರವರಿದು,
ದಾಟಿ ಸಪ್ತಮದವೆಂಟು, ನೋಟ ಬೇಟದೊಳು ಲಿಂಗದೋಳು ಬೆರೆದಿದ್ದರೆ,
ಬಸವಪ್ರಿಯ ಕೂಡಲಚೆನ್ನಬಸವಣ್ಣ./46
ಆಟದಲಿ ಕೆಲಹೊತ್ತುಗಳೆದು, ಕೂಟದಲಿ ಕೆಲಹೊತ್ತುಗಳೆದು,
ನೋಟದಲಿ ಕೆಲಹೊತ್ತುಗಳೆದು,
ಊಟದ ಹೊತ್ತಿಗೆ ಲಿಂಗವ ಕೂಡಿಹೆನೆಂಬವನೊಬ್ಬ,
ಊಟ ಮಾಟಕೂಟದಲ್ಲಿ ಕೋಟಲೆಗೊಳುತ್ತಿದೆನೆಂಬುವನೊಬ್ಬ ಪೋಟ.
ಇವರಿಬ್ಬರ ನೋಟ ಬೇಟಕ್ಕೆ ಸಿಕ್ಕದೆ ದಾಂಟಿಹೋದನು,
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ. /47
ಆಡುವ ಹಾಡುವ ನಡೆವ ನುಡಿವ ಬೆಡಗ ಬಿಡದೆ,
ಒಡಲ ದುರ್ಗುಣಗಳ ಕೆಡದೆ,
ಪೊಡವಿಯೊಳು ನುಡಿಯ ನುಣ್ಣನೆ ನುಡಿದುಕೊಂಡು
ಒಡಲಹೊರೆವ ಅಣ್ಣಗಳಿರಾ,
ನೀವು ಭಕ್ತಮಾಹೇಶ್ವರರೆಂದು ನುಡಿದುಕೊಂಬಿರಿ ಅಂತಲ್ಲ, ಕೇಳಿರಣ್ಣಾ.
ನೋಡುವ ಕಣ್ಣು, ನುಡಿವ ನಾಲಿಗೆಯ ನುಂಗಿತ್ತು.
ಕೇಳುವ ಕಿವಿ, ವಾಸಿಸುವ ನಾಸಿಕವ ನುಂಗಿತ್ತು.
ಕೊಡುವ ಕೊಂಬುವ ಕೈ, ಅಡಿ ಇಡುವ ಕಾಲ ನುಂಗಿತ್ತು.
ಇವನೊಡಬಿಡದೆ ಕೊಂಬತನುವ ನುಂಗಿತ್ತು.
ತಲೆಯಷ್ಟೆಯುಳಿದು, ಆ ತಲೆಯ ನೆಲವಿಡಿದು,
ಘನವ ನಂಬಿದವರ ಭಕ್ತ ಮಹೇಶ್ವರರೆಂಬೆ ಕಾಣಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ,/48
ಆಣವಮಲ, ಮಾಯಾಮಲ, ಕಾರ್ಮಿಕಮಲದೊಳಗಣ
ಆಟ ಕೋಟಲೆ ಅಡಗದೆ,
ಕಂಡಕಂಡವರೊಳಗಣ ನುಡಿ ನೋಟ ಹಿಂಗದೆ,
ಮಾಟಕೂಟ ಜಪಕೋಟಲೆಯಿಂದ ನಟಿಸಿ,
ಲಿಂಗವ ನೋಡಿ ಕೂಡಿಹನೆಂಬವರ ಬದುಕೆಂತಾಯಿತ್ತೆಂದರೆ,
ಮೋಟ ಗಂಡನ ಮೂಕೊರತಿ ಹೆಂಡತಿ, ಬೇಟವ ಮಾಡಿದಂತಾಯಿತ್ತು ಕಾಣಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./49
ಆದಿ ಅನಾದಿ ಅಂತ್ಯವೆಂದು ನುಡಿದಾಡುವರಲ್ಲದೆ,
ಇವರ ಭೇದಾದಿ ಭೇದವನಾರೂ ಅರಿಯರು.
ಆದಿಯಿಂದತ್ತತ್ತಲಾರು ಬಲ್ಲರು? ಅನಾದಿಯಿಂದತ್ತತ್ತಲಾರು ಬಲ್ಲರು?
ಸಾಧಕರಿಗಳವಲ್ಲ. ವೇದ, ಶಾಸ್ತ್ರ, ಆಗಮ ಪುರಾಣಂಗಳು ಕಾಣದೆಹೋದವು.
ಅದು ಹೇಗೆಂದರೆ, ಆದಿ ಕೂರ್ಮ ಕರಿ ಸರ್ಪ ಹೊತ್ತಿಪ್ಪವೆಂಬರು.
ಅವನಾಗುಮಾಡಿ, ಅವಕ್ಕೆ ಆದಿಯಾಗಿಪ್ಪವರಾರೆಂದು ಅರಿಯರು.
ಅನಾದಿಯೆಂಬ ಆಕಾಶದ ಮೇಲೆ,
ದಿಕ್ಪಾಲಕರು, ದೇವರ್ಕಳು, ರುದ್ರ, ಶಿವ, ಸದಾಶಿವ ಉಂಟೆಂಬರು.
ಅವರನಾಗುಮಾಡಿ, ಅವರ ನಿಲಿಸಿಕೊಂಡಿಪ್ಪವರಾರೆಂದು ಅರಿಯರು.
ಇಂತೀ ಅಜಾಂಡ ಬ್ರಹ್ಮಾಂಡವೆಲ್ಲವು
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನ
[ಕುಕ್ಷಿ]ಯೊಳು ಇಪ್ಪವು ಕಾಣಿರೊ./50
ಆದಿ ಅನಾದಿ ಎಂದು ಗಾದೆಯ ಮಾತು ನುಡಿದಾಡುವರೆಲ್ಲ
ಇವೆರಡರ ಮಧ್ಯದಲ್ಲಿಪ್ಪ ಮಾಯಾಪ್ರಪಂಚನೆ ಅಳೆವುತ್ತ ಸುರಿವುತಿಪ್ಪರಲ್ಲದೆ,
ಆದಿಯಿಂದಲತ್ತತ್ತಲಾರು ಬಲ್ಲರು? ಅನಾದಿಯಿಂದತ್ತತ್ತಲಾರು ಬಲ್ಲರು?
ಇದರ ಭೇದಾದಿ ಭೇದವ ಮುನ್ನಿನ ಆದ್ಯರು ಬಲ್ಲರಲ್ಲದೆ, ಸಾಧಕರಿಗಳವಲ್ಲ.
ವೇದಶಾಸ್ತ್ರಾಗಮ ಪುರಾತರ ವಚನ ಬಹುಶ್ರುತಿ ಇದಿರಿಟ್ಟುಕೊಂಡು, ಕೂಗಿಯಾಡಿ,
ಗೋಡೆ ಹಾಯಿಸುವ ಜಡವಾದಿಗಳ ಮಾತ ಮೆಚ್ಚರು ನಮ್ಮ ಶರಣರು,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./51
ಆದಿ ಅನಾದಿ ಎಂದು ನೀವು ಗಾದೆಯಮಾತ ನುಡಿದಾಡುವಿರಿ.
ಇದರ ಭೇದಾದಿ ಭೇದವ ಬಲ್ಲರೆ ನೀವು ಹೇಳಿರೊ.
ಅಂಗವನೆ ಆದಿಯ ಮಾಡಿ, ಸಂಗವನೆ ಅನಾದಿಯ ಮಾಡಿ,
ಈ ಎರಡರ ಮಧ್ಯದಲ್ಲಿಪ್ಪ ಲಿಂಗವ ಸ್ಥಾಪ್ಯವ ಮಾಡಿದವರಾರೊ?
ಅಲ್ಲಿ ಮಾಂಗಲ್ಯಕ್ಕೆ ಮಾಂಗಲ್ಯವಾದ ಶೃಂಗಾರವ ನಿಲಿಸಿದವರಾರೊ?
ಅಲ್ಲಿಗೆರಡು ಕಂಗಳ ಢವಳಾರವ ಹೂಡಿದವರಾರೊ?
ಈ ಕಂಗಳ ಢವಳಾರದಿಂದ ನೋಡಿದವರು
ಹೆರೆಹಿಂಗಲಾರದೆ, ಆ ಲಿಂಗಗೂಡಾದರು ಕಾಣಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣ./52
ಆದಿ ನಿರಾಳ, ಮಧ್ಯ ನಿರಾಳ, ಊಧ್ರ್ವ ನಿರಾಳ.
ಪ್ರಮಾಣು ನಿರಾಳ, ಅಪ್ರಮಾಣು ನಿರಾಳ.
ಆಕಾರವು ನಿರಾಳ, ಉಕಾರವು ನಿರಾಳ, ಮಕಾರವು ನಿರಾಳ,
ನಿರಾಳವೆಂಬುದು ನಿರಾಳ, ಸುರಾಳವೆಂಬುದು ನಿರಾಳ,
ಅವಿರಳವೆಂಬುದು ನಿರಾಳ.
ಬಂದೆನೆಂಬುದು ನಿರಾಳ, ಹೋದೆನೆಂಬುದು ನಿರಾಳ.
ಅದೆಂತೆದಡೆ;
ಪ್ರಣಮ ನಿರಾಳವಾದ ಕಾರಣ ಪ್ರತಿಯಿಲ್ಲ.
ಪ್ರತಿಯಿಲ್ಲವಾಗಿ, ಅಪ್ರತಿಮ ನಮ್ಮ ಶರಣ
ಬಸವಪ್ರಿಯ ಕೂಡಲಚೆನ್ನಸಂಗಮದೇವ./53
ಆದಿಪ್ರಸಾದಿ, ಅನಾದಿಪ್ರಸಾದಿ, ಅಂತ್ಯಪ್ರಸಾದಿ,
ಆದಿಪ್ರಸಾದಿಯೆ ಗುರು, ಅನಾದಿಪ್ರಸಾದಿಯೆ ಲಿಂಗ,
ಅಂತ್ಯಪ್ರಸಾದಿಯೆಂಬುದೆ ಜಂಗಮ.
ಈ ಗುರು ಲಿಂಗ ಜಂಗಮದಿಂದಾದುದೆ ಪ್ರಸಿದ್ಧ ಪ್ರಸಾದ.
ಅದಕ್ಕೆ ದೃಷ್ಟ;
ಮತ್ಪ್ರಾಣೋ ಜಂಗಮೋ ನಿತ್ಯಂ ಮಲ್ಲಿಂಗಂ ಜಂಗಮಸ್ತಥಾ
ಅವಯೋಸ್ತತ್ಪ್ರಸಾದಂ ಚ ಭೋಗಸ್ಯಾದಿ ನಿಶ್ಚಯಂ||
ಎಂದುದಾಗಿ, ಇಂತಪ್ಪ ಪ್ರಸಿದ್ಧ ಪ್ರಸಾದಿಗೆ ನಮೋ ನಮೋ ಎಂಬೆ.
ಬಸವಪ್ರಿಯ ಕೂಡಲಸಂಗಮದೇವಾ,
ಮಾಂ ತ್ರಾಹಿ, ತ್ರಾಹಿ ಕರುಣಾಕರನೆ./54
ಆದಿಯ ತೋರಿದ, ಅನಾದಿಯ ತೋರಿದ, ಭಾವವ ತೋರಿದ.
ಅದು ಹೇಗೆ ಎಂದರೆ,
ಆದಿ ಲಿಂಗವೆಂದು ಅರುಹಿದಿರಿ, ಅನಾದಿ ಶರಣನೆಂದು ಅರುಹಿದಿರಿ.
ಈ ಎರಡರ ಭಾವವೇ ಜಂಗಮವೆಂದು ಅರುಹಿದಿರಿ.
ಈ ತ್ರಿವಿಧ ಪರಿಣಾಮವೆ ಪ್ರಸಾದವೆಂದರುಹಿದಿರಿ.
ಇಂತೀ ಚತುರ್ವಿಧವು ಏಕವೆಂದು ತೋರಿದ ಲೋಕಾರಾಧ್ಯರು
ಚೆನ್ನಮಲ್ಲೇಶ್ವರನ ಸಾಕಾರವೇ ರೂಪಾಗಿ, ನಾ ಬದುಕಿದೆನಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ. /55
ಆಧಾರ, ಸ್ವಾಧಿಷ್ಠನ, ಮಣಿಪೂರಕ, ಅನಾಹತ, ವಿಶುದ್ಧಿ,
ಆಜ್ಞಾಚಕ್ರವೆಂಬ ಷಡಾಧಾರಚಕ್ರವನರಿದು,
ಏರಿ ಏರಿ ಇಳಿದು ಆದಿಯ ನೋಡಿಕೊಂಡು,
ಆದಿ ಅನಾದಿ ಎಂಬ ಭೇದವ ನೋಡಿ, ಶೋಧಿಸಿ,
ಸಪ್ತಧಾತುವಿನ ನೆಲೆಯ ಕಂಡು, ಮನ ಬುದ್ಧಿ ಚಿತ್ತವ ಏಕಹುರಿಯ ಮಾಡಿ,
ಉತ್ಪತ್ತಿ ಸ್ಥಿತಿ ಲಯವೆಂಬ ಕಾಲಮೂಲಾದಿಗಳ ಸುಟ್ಟು, ಧ್ಯಾನದಲ್ಲಿ ನಿಂದು,
ಅಂಗ ಲಿಂಗ ಹಸ್ತ ಮುಖ ಅರ್ಪಿತ ಅವಧಾನವೆಂಬ ಷಟ್ಸ್ಥಲವ ಮೆಟ್ಟಿನಿಂದು,
ಆರರಿಂದ ವಿೂರಿ ತೋರುವ ಬೆಳಗ ಕಂಡು, ನಾನು ಒಳಹೊಕ್ಕು ನೋಡಲಾಗಿ,
ಒಳಹೊರಗೆ ತೊಳತೊಳಗಿ ಬೆಳಗುತ್ತ ಇಳೆ ಬ್ರಹ್ಮಾಂಡ ತಾನೆಯಾಗಿರ್ದ
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ./56
ಆಧಾರದ ಕುಂಡಲಿ ಸರ್ಪನ ಮಂಡೆಯ ಮೆಟ್ಟಿ ನಿಲಲು,
ಗಂಡಾಳ ಕಾಲ ಕಾಮ ಇಬ್ಬರು ಹತವಾದರು.
ಅವರ ಹೆಂಡಿರುಗಳು ಮುಂಡಮೋಚಿದರು.
ದಂಡೆಯನೂಡಿದರು, ತೊಂಡಲ ಹರಿದರು.
ತಮ್ಮ ಗಂಡಂದಿರ ಕೂಡೆ ಸಮಾಧಿಯ ಹೊಕ್ಕರು.
ಇದ ಕಂಡು ನಾ ಬೆರಗಾಗಿ ಮುಂದೆ ನೋಡಲು,
ಒಂದೂ ಇಲ್ಲದೆ ಸಂದುಸಂಶಯವಳಿಯಲು,
ಹೊಂದದ ಬಟ್ಟೆಯನೆ ಹೊಂದಿದೆ.
ಬಂದ ಬಟ್ಟೆಯನೊಲ್ಲದೆ ನಿಮ್ಮ ವೃಂದ ಚರಣದಲ್ಲಿ ವಂದಿದೆನಯ್ಯಾ.
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
ಇದರಂದವನಳಿದು ನೋಡಿದ ಶರಣರೆ ಬಲ್ಲರು./57
ಆಯತಲಿಂಗದಲ್ಲಿ ನೀವೆನಗೆ ಆಚಾರವ ತೋರಿದಿರಾಗಿ,
ಸ್ವಾಯತಲಿಂಗದಲ್ಲಿ ನೀವೆನಗೆ ಅರುಹ ತೋರಿದಿರಾಗಿ,
ಸನ್ನಹಿತಲಿಂಗದಲ್ಲಿ ನೀವೆನಗೆ ಪರಿಣಾಮವ ತೋರಿದಿರಾಗಿ.
ಈ ತ್ರಿವಿಧದ ವರನೆಲೆಯ ತೋರಿ, ಈ ತ್ರಿವಿಧದ ಸಂಬಂಧವನು ಹರಿದು,
ಎನ್ನ ಭವವ ದಾಂಟಿಸಿದ ಕಾರಣ,
ಭವವಿರಹಿತನೆಂದು ಚೆನ್ನಮಲ್ಲೇಶ್ವರನ ನಂಬಿ, ಕೆಟ್ಟು ಬಟ್ಟಬಯಲಾದೆನಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣ./58
ಆಶನ ವಸನಕ್ಕಾಗಿ ಒಂದು ಪಶುವು ಹುಟ್ಟಿತ್ತು.
ತನ್ನ ಸುಖವನರಿಯಲಾಗಿ, ತನಗೊಂದು ಶಿಶು ಹುಟ್ಟಿತ್ತು.
ಆ ಶಿಶುವಿನ ಮೇಲಣ ಮೋಹದಿಂದ, ಮೊಲೆಯಲ್ಲಿ ಅಮೃತ ಹುಟ್ಟಿತ್ತು.
ಅಮೃತವ ಸೇವಿಸಿ, ಆ ಶಿಶುವು ನಲಿದಾಡುವುದ ಕಂಡು,
ನಾನದರ ಬೆಂಬಳಿವಿಡಿದು ಹೋಗಿ,
ಅದು ಕೊಂಬ ಅಮೃತವ ನಾ ಕೊಳ್ಳಲಾಗಿ,
ಪರಮಸುಖಪರಿಣಾಮ ತಲೆದೋರಿತ್ತು .
ಅದರ ನೆಲೆವಿಡಿದು, ತಲೆಹೊಲನನೇರಿ ನೋಡಲಾಗಿ,
ಉಲುಹು ಅಡಗಿತ್ತು . ಪುರುದಗಲಕೆ ನಿಂದಿತ್ತು.
ಇಳಿದುಬರುವುದಕ್ಕೆ ಹಾದಿಯ ಕಾಣದೆ,
ಅದರಲ್ಲಿಯೇ ನಿರ್ಮುಕ್ತನಾದೆನಯ್ಯಾ.
ಬಸವಪ್ರಿಯ ಕೂಡಲಚೆನ್ನಬಸವಣ್ಣ ,/59
ಆಸೆ ರೋಷವೆಂಬ ದ್ವೇಷವ ಬಿಟ್ಟು,
ದೋಷ ದುರಿತವ ಬಿಟ್ಟು, ಕ್ಲೇಶವ ಹರಿದು,
ಸಾಸಿರಮುಖದೊಳು ಸೂಸುವ ಮನವ ನಿಲ್ಲಿಸಿ,
ನಿರಾಶಿಕನಾಗಿ ನಿಂದರೆ, ಬಸವಪ್ರಿಯ ಕೂಡಲಚೆನ್ನ ಬಸವಣ್ಣ./60
ಆಸೆಯನುಳಿದು ನಿರಾಸೆಯಲ್ಲಿ ನಿಂದು,
ವೇಷವ ಮರೆದು, ಜಗದ ಹೇಸಿಯಾಟವ ತೊರೆದು,
ವಿೂಸಲಾಗಿದ ಮನವನೆ ಲಿಂಗವ ಮಾಡಿ,
ಗಾಸಿಗೊಳಗಾಗುವ ತನುವನೆ ಗುರುವ ಮಾಡಿ,
ಇವಿಷ್ಟಕ್ಕೂ ಕರ್ತನಾಗಿರುವ ಪ್ರಾಣವನ್ನೆ ಜಂಗಮವ ಮಾಡಿ,
ಈ ತ್ರಿವಿಧವನು ಏಕವ ಮಾಡುವೆ.
ಆ ಭಾವವನೆ ಭಾವರುಚಿ ಪ್ರಸಾದವ ಮಾಡುವೆ.
ಈ ತ್ರಿವಿಧವನರಿದು ಅಂಗವಿಸಿದವನೆ ಎನ್ನ ದೇವನೆಂದು ಕಾಂಬೆ ಕಾಣಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣ, ನೀವು ಸಾಕ್ಷಿಯಾಗಿ./61
ಆಸೆಯಳಿದು, ನಿರಾಸೆಯಲ್ಲಿ ನಿಂದು,
ವೇಷವ ಜರೆದು, ಸರ್ವವ ಮರೆದು, ಈ ಗುಣತ್ರಯಮಂ ತೊರೆದು,
ನಿರಾಸೆಯ ಮೇಲೆ ನಿಂದರೆ, ಅದೇ ಶರಣಂಗೆ ಸರಿ ಎಂಬೆ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./62
ಇಂತಪ್ಪ ಘನವನಗಲಿಸಿದ ಮಹಾಪ್ರಸಾದಿಯ ನಿಲವೆಂತಿಪ್ಪುದೆಂದರೆ,
ಉರಿಯುಂಡ ಕರ್ಪುರದಂತೆ, ಶರಧಿಯ ಬೆರೆದ ಸಾರದಂತೆ,
ನೀರೊಳಗೆ ಬಿದ್ದ ಆಲಿಯಂತೆ, ಉರಿಯ ಗಿರಿಯನೆಚ್ಚ ಅರಗಿನ ಬಾಣದಂತೆ,
ಪರಿಮಳವನುಂಡ ಹರಿಯಂತೆ. ಇದರ ವಿವರವನರಿದರೆ,
ಪರವ ಬಲ್ಲವ, ತನ್ನ ಬಲ್ಲವ, ಎಲ್ಲವು ತನ್ಮಯನಾಗಿರುವ.
ಇಂತಪ್ಪ ಅಣುವಿಂಗಣುವಾಗಿ ನಿಂದ ಮಹಾಪ್ರಸಾದವ ನಾನೆತ್ತ ಬಲ್ಲೆನಯ್ಯಾ ?
ಇದ ಬಲ್ಲ ಪ್ರಸಾದಿಗಳ ಸೊಲ್ಲಿನೊಳಗೆ ನಾನಡಗಿದೆನಯ್ಯಾ,
ನಿಮ್ಮ ಧರ್ಮ ನಿಮ್ಮ ಧರ್ಮ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./63
ಇಂದು ನಾಳೆ ಎಂಬ ಸಂದೇಹವ ಬಿಟ್ಟು,
ನಿಂದ ನಿಜಾನಂದದಿಂದ ನೋಡಿ,
ಹಿಂದು ಮುಂದು, ಕುಂದು ಹೆಚ್ಚು, ದಂದುಗ ಧಾವತಿಯ ಕೊಂದು ನಿಂದರೆ,
ಬಸವಪ್ರಿಯ ಕೂಡಲಚೆನ್ನಬಸವಣ್ಣ./64
ಇತ್ತಲು ಪೃಥ್ವಿಯಿಂದ, ಅತ್ತಲು ಉತ್ತರಿಯ ಬೆಟ್ಟಕ್ಕೆ ಹತ್ತದ
ಕಸ್ತೂರಿಯ ಮೃಗದ ವಿಸ್ತಾರವ
ಹಸ್ತವಿಲ್ಲದೆ ಎಚ್ಚು, ಕಿಚ್ಚಿಲ್ಲದೆ ಸುಟ್ಟು, ಮಡಕೆಯಿಲ್ಲದೆ ಅಟ್ಟು,
ಮನವಿಲ್ಲದುಂಡು, ನೆನಹಿಲ್ಲದಾಡಿ ಪಾಡುವ ಘನವೇ
ಅಗಮ್ಯ ಅಗೋಚರ ಅಪ್ರಮಾಣ ಸುಪ್ರಭಾಕಳಾನಂದ
ಪ್ರಾಣಲಿಂಗ ಪರಂಜ್ಯೋತಿ, ಬಸವಪ್ರಿಯ ಕೂಡಲಸಂಗಮದೇವಾ./65
ಈ ಜಗದೊಳಗಣ ಆಟವ ನೋಡಿದರೆ, ಎನಗೆ ಹಗರಣವಾಗಿ ಕಾಣಿಸುತ್ತಿದೆ.
ಅದೇನು ಕಾರಣವೆಂದರೆ,
ಹಿಂದಣ ಮುಕ್ತಿಯನರಿಯರು, ಮುಂದಣ ಮುಕ್ತಿಯನರಿಯರು.
ಬಂದ ಬಂಬ ಭವದಲ್ಲಿ ಮುಳುಗುತ್ತಲಿದ್ದಾರೆ.
ನಾನಿದರಂದವನರಿದು, ದ್ವಂದ್ವವ ಹರಿದು,
ಜಗದ ನಿಂದೆ ಸ್ತುತಿಯ ಸಮಗಂಡು,
ಹಿಂದ ಹರಿದು ಮುಂದನರಿದು, ಸದಮಳಾನಂದದಲ್ಲಿ ನಿಂದು,
ಸಚ್ಚಿದಾನಂದದಲ್ಲಿ ಐಕ್ಯವಾಗಿ,
ಸತ್ಯಶರಣರ ಪಾದದಲ್ಲಿ ನಿರ್ಮುಕ್ತನಾದೆನಯ್ಯ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./66
ಈ ಬಚ್ಚಬರಿಯ ಬಯಲ ಕಂಡಿಹೆನೆಂದರೆ, ಕಾಣಬಾರದು.
ಕೇಳಿಹೆನೆಂದರೆ ಕೇಳಬಾರದು, ಹೇಳಿಹೆನೆಂದರೆ ಹೇಳಬಾರದು.
ಇವ ಮೂರರ ಕಾಳಿಕೆಯ ಕಳೆದು,
ಈ ಹನ್ನೆರಡ ಜಾಣಿಯಲ್ಲಿ ದಾಂಟಿ, ಒಂದರ ಮೇಲೆ ನಿಂದು,
ಅಂದವಳಿಯದೆ, ಬಿಂದು ತುಳುಕದೆ,
ಅಂದಂದಿನ ಹೊಸಪೂಜೆಯ ನೋಡಿ, ಕಣ್ದೆರೆದು
ಕರಗಿ ಒಂದಾದ ಶರಣರ ಚರಣವ ತೋರಿ ಬದುಕಿಸಯ್ಯಾ ಎನ್ನ ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./67
ಈ ಮಹಾಘನ ನೆಲೆಗೊಂಡಿಪ್ಪ ಶರಣನ ನೆಲೆ
ಎಂತಿಪ್ಪುದೆಂದಡೆ:
ಪೃಥ್ವಿ ಪೃಥ್ವಿಯನೆ ಕೂಡಿ, ಅಪ್ಪು ಅಪ್ಪುವನೆ ಕೂಡಿ,
ಅಗ್ನಿ ಅಗ್ನಿಯನೆ ಕೂಡಿ, ವಾಯು ವಾಯುವನೆ ಕೂಡಿ,
ಆಕಾಶ ಆಕಾಶವನೆ ಕೂಡಿ, ಪಂಚತತ್ವವೆಲ್ಲ ಹಂಚುಹುರಿಯಾಗಿ,
ಹಿಂಚುಮುಂಚು ಮಾಡುವ ಮನದ ಸಂಚಲವಡಗಿ,
ಕರ್ಮದ ಗೊಂಚಲ ನಿಂದ ನಿಶ್ಚಿಂತ ನಿಜೈಕ್ಯಂಗೆ ನಮೋ ನಮೋ ಎನುತಿರ್ದೆ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./68
ಈಡಾ ಪಿಂಗಳ ಸುಷುಮ್ನನಾಳದ
ಗಾಢ ಅಗಮ್ಯವನರಿದು ನೋಡೆ,
ಬ್ರಹ್ಮರಂಧ್ರವ ತಟಿ ಹಾಯ್ಯದು ಕೂಡಾಡಿ, ಪಶ್ಚಿಮದೋಳ್ಬೆರೆದರೆ,
ಬಸವಪ್ರಿಯ ಕೂಡಲಚೆನ್ನಬಸವಣ್ಣ./69
ಈಯನುವನರಿದು ಲಿಂಗವ ನೋಡಿ ಕೂಡಿಹೆನೆಂದರೆ,
ಮನವನೆಲ್ಲವ ನಿಲಿಸಿ ಇರಬೇಕು.
ಈ ಘನ ಪರಾಕ್ರಮವುಳ್ಳ ಭಕ್ತರ ತನುವೆ ಲಿಂಗ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./70
ಉಟ್ಟರೆ ತೊಟ್ಟರೇನಯ್ಯ ? ನಟ್ಟುವರಂತೆ.
ಕೊಟ್ಟರೆ ಕೊಂಡರೇನಯ್ಯ ? ವೇಶಿಯರಂತೆ.
ಬಿಟ್ಟರೆ ಕಟ್ಟಿದರೇನಯ್ಯ ? ಬೈರೂಪನಂತೆ.
ಇವಾವಂಗವ ಮಾಡಿದರೇನಯ್ಯ ?
ಮುಟ್ಟಿ ನಮ್ಮ ಶರಣರೊಡನೆ ಒಡವೆರೆಯದಿದವರು
ಉಟ್ಟಿದರೇನು, ಬಿಟ್ಟಿದ್ದರೇನು ಹೇಳಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ ?
/71
ಉತ್ತರ, ದಕ್ಷಿಣ , ಪೂರ್ವ, ಪಶ್ಚಿಮ
ನಾಲ್ಕು ಪಥವನು ಏಕವ ಮಾಡಿ, ಊಧ್ರ್ವಮುಖವ ಮಾಡಿ,
ಈಡಾ ಪಿಂಗಳ ನಾಳಮಂ ಕಟ್ಟಿ, ಸುಷಮ್ನನಾಳವಂ ಎತ್ತಿ ,
ಮನ ಪವನ ಬಿಂದು ಒಡಗೂಡಿ,
ಚಂದ್ರ ಸೂರ್ಯ ಶಿಖಿಯರಂ ಮುಪ್ಪುರಿಯ ಮಾಡಿ,
ಒಡಗೂಡಿ ಏಕವಾಗಿ ಹುರಿಗೂಡಿ,
ಮರ್ತ್ಯಲೋಕವ ಬಿಟ್ಟು, ದೇವಲೋಕವ ಮೆಟ್ಟಿನಿಂದು,
ಭಾವ ಬಯಲಾಗಿ, ಬಯಕೆ ಸವೆದು,
ಇನ್ನು ಈ ಲೋಕದೊಳಗೆ ಬಂದು ಬದುಕಿದೆನೆಂಬುದನಕ್ಕೆ ಹೇಯ ಹುಟ್ಟಿ,
ಇದಾವುದನೂ ಒಲ್ಲದಿರ್ಪರು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ./72
ಉದಯ, ಮಧ್ಯಾಹ್ನ ಅಸ್ತಮಯವೆಂಬ ತ್ರಿಕಾಲದಲ್ಲಿ
ತ್ರಿವಿಧ ಪೂಜೆಯ ಮಾಡಬೇಕೆಂಬರು, ಈ ತ್ರಿವಿಧದ ನೆಲೆಯನರಿಯರು.
ಲಿಂಗಲಿಂಗವೆಂದು ಲಿಂಗವನೆ ಅರ್ಚಿಸಿ,
ಲಿಂಗವನೆ ಪೂಜಿಸಿ, ಅಂಗ ಭಿನ್ನವಾಯಿತ್ತು.
ಆರಾರಿಗೆಂದರೆ,
ಸ್ವರ್ಗ, ಮರ್ತ್ಯ, ಪಾತಾಳದವರೆಗೆ ಮೂರುಲೋಕವು ಸೆರೆಸೂರೆಹೋಯಿತ್ತು.
ಗುರುಲಿಂಗಜಂಗಮ ತ್ರಿವಿಧವು ಏಕವಾದ ಭೇದವ ನಿಮ್ಮ ಶರಣರೇ ಬಲ್ಲರಲ್ಲದೆ,
ಈ ಮರಣಬಾಧೆಗೊಳಗಾಗುವ ಮರ್ತ್ಯರೆತ್ತ ಬಲ್ಲರು,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./73
ಉದಯ, ಮಧ್ಯಾಹ್ನ, ಅಸ್ತಮಯ, ಕತ್ತಲೆ ಬೆಳಗು,
ದಿನ ವಾರ ಲಗ್ನತಿಥಿ ಮಾಸ ಸಂವತ್ಸರ ಹೋಗುತ್ತ ಬರುತ್ತಲಿವೆ.
ಇವ ನೋಡಿದವರೆಲ್ಲ ಇದರೊಳಗೆ ಹೋಗುತ್ತ ಬರುತ್ತ ಇದ್ದಾರೆ.
ಜಗಕ್ಕೆ ಇವೀಗ ಇಷ್ಟವಾಗಿಪ್ಪವು. ಎನ್ನ ದೇವಂಗೆ ಇವೊಂದೂ ಅಲ್ಲ.
ದಿನಕಾಲ ಯುಗಜುಗ ಪ್ರಳಯಕ್ಕೆ ಹೊರಗಾದ ಆ ದೇವನ,
ಅಂಗವಿಸಿ ಮುಟ್ಟಿ ಹಿಡಿದ ಕಾರಣ, ಎಮ್ಮ ಶರಣರು ಪ್ರಳಯಕ್ಕೆ ಹೊರಗಾದರು.
ಇದನರಿದು, ಅಂತಪ್ಪ ಶರಣರ ಪಾದವ ನಂಬಿ, ಕೆಟ್ಟು ಬಟ್ಟಬಯಲಾದೆನಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣ./74
ಉರಗನ ಫಣಾಮಣಿಯ ಬೆಳಗಿನಲ್ಲಿ ನಿಂದ ಪ್ರಸದಿ
ಕರಿಯ ಕೊಂದು ಹರಿಯ ಬೆಳಗಿನಲ್ಲಿ ನಿಂದ ಪ್ರಸಾದಿ.
ಶಿರದ ಮೇಲೆ ನಿಂದ ಗಂಗೆಯ ಬೆಳಗಿನಲ್ಲಿ ನಿಂದ ಪ್ರಸಾದಿ.
ಉರಮಧ್ಯದಲ್ಲಿಪ್ಪ ಪರಂಜ್ಯೋತಿಯ ಬೆಳಗಿನಲ್ಲಿ ನಿಂದ ಪ್ರಸಾದಿ.
ಪೂರ್ವಪಶ್ಚಿಮ ಏಕವಾದ ಬೆಳಗಿನಲ್ಲಿ ನಿಂದ ಪ್ರಸಾದಿ.
ಇಂತೀ ಘನವನೆಲ್ಲ ಒಳಕೊಂಡ ಮಹಾಬೆಳಗಿನಲ್ಲಿ ನಿಂದ ಪ್ರಸಾದಿ.
ಅಯ್ಯಾ ಚೆನ್ನಮಲ್ಲೇಶ್ವರಾ, ಆ ಪ್ರಸಾದಿಯ ಪ್ರಸಾದವ ಕೊಂಡು
ನಾ ಉರಿಯುಂಡ ಕರ್ಪುರದಂತಾದೆನಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./75
ಉರಿಯೊಳಗೆ ಉರಿ ಹುಟ್ಟಿ, ಶರಧಿಯಾಪೋಷಣವಾಯಿತ್ತು.
ಧರೆ ನಿಬ್ಬೆರಗಾಯಿತ್ತು , ಶರಧಿ ಬತ್ತಿತ್ತು, ಉರಿ ನಿಂದಿತ್ತು.
ವಾಯು ನಾಶವಾಯಿತ್ತು, ಆಕಾಶ ಬಯಲಾಯಿತ್ತು.
ಇದು ಕಾರಣ, ಆತ್ಮ ಕರ್ಪುರದ ಗಿರಿಯಂತೆ ನಿಂದಿತ್ತು.
ಆತ್ಮ ಪರಂಜ್ಯೋತಿಯಂತೆ ಪ್ರಜ್ವಲಿಸಿತ್ತು.
ಇದರ ಭೇದವನರಿದು ಮೂರು ಮುಟ್ಟದೆ, ಆರು ತಟ್ಟದೆ ,
ಬೇರೆ ಒಂದರ ಮೇಲೆ ನಿಂದು, ಸಂದಿಗೊಂದಿಯನೆಲ್ಲವ ಶೋಧಿಸಿ,
ಬೆಂದ ನುಲಿಯ ಹಾಗೆ ಅಂದವಾಗಿಪ್ಪುದನೊಂದು ನೋಡುವರೆ ಸೇವೆಗೆ ಬಾರದು.
ಇದರಂದವ ಲಿಂಗೈಕ್ಯರೆ ಬಲ್ಲರಲ್ಲದೆ,
ಸಂದೇಹ ಭ್ರಮೆಯೊಳುಸಿಕ್ಕಿ ನೊಂದು ಬೆಂದು ಸಾವ ಹಂದಿಗಳೆತ್ತ ಬಲ್ಲರು,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ ?/76
ಊರ ಮೇಲೆ ಊರ ಕಂಡೆ, ನೀರ ಮೇಲೆ ನೀರ ಕಂಡೆ.
ಮರನ ಮೇಲೆ ಮರನ ಕಂಡೆ, ಗಿರಿಯ ಮೇಲೆ ಗಿರಿಯ ಕಂಡೆ.
ಉರಿಯ ಮೇಲೆ ಉರಿಯ ಕಂಡೆ. ಈ ಭಾರವ ತಾಳಲಾರದೆ,
ಆ ಉರಿಯೆ ಎದ್ದು ಊರು ಬೆಂದಿತ್ತು, ನೀರು ಬೆಂದಿತ್ತು,
ಮರನು ಬೆಂದಿತ್ತು, ಗಿರಿಯು ಬೆಂದಿತ್ತು.
ಆ ಉರಿ ಉಳಿಯಿತ್ತು, ಆ ಉರಿಯನೆರದು ಸಿರಿಯ ಸೆಳದು
ಪರಮಸುಖಪರಿಣಾಮದೊಳೋಲಾಡುತ್ತ ,
ನಿಮ್ಮ ಬರವನೆ ಹಾರುತಿರ್ದೆನಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
/77
ಎಡಬಲವೆಂದೇನೊ ನಿಮ್ಮ ಅಡಿಗಳನರಿದವಂಗೆ ?
ಕಡೆ ನಡುವೆಂದೇನೊ ಮೃಡನ ಹಾಡುವಂಗೆ ?
ಕುಲಛಲವೆಂದೇನೊ ಮನದ ಹೊಲೆಯ ಕಳೆದವಂಗೆ ?
ತಲೆಕಾಲೆಂದೇನೊ ಮಾಯೆಯ ಬಲೆಯ ನುಸುಳಿದವಂಗೆ ?
ಕಲಿಯುಗದ ಕತ್ತಲೆಯ ದಾಂಟಿದವಂಗೆ, ನಿಮ್ಮ ನೆಲೆಯನರಿದ ಶರಣಂಗೆ
ಇನ್ನು ಸ್ಥಲನೆಲೆ ಆವುದುಂಟು ಹೇಳಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ ?/78
ಎಮ್ಮ ಶರಣರು ಗುರುಸ್ಥಲ ನಾಸ್ತಿಯಾಯಿತ್ತೆಂಬರು,
ಅದೇನು ಕಾರಣವೆಂದರೆ ತಮ್ಮ ಗುಣ ಅವಗುಣವಿಲ್ಲವಾಗಿ.
ಲಿಂಗಸ್ಥಲ ನಾಸ್ತಿಯಾಯಿತ್ತೆಂಬರು, ಅಂಗಗುಣವಳಿಯಿತ್ತಾಗಿ.
ಜಂಗಮಸ್ಥಲ ನಾಸ್ತಿಯಾಯಿತ್ತೆಂಬರು, ಅದೇನು ಕಾರಣ ?
ಭಾವಬಯಲಾಯಿತ್ತಾಗಿ.
ಪ್ರಸಾದಿಸ್ಥಲ ನಾಸ್ತಿಯಾಯಿತ್ತೆಂಬರು, ಪರವು ತಮ್ಮಲ್ಲಿ ನಿಂದ ಕಾರಣ.
ಇಂತೀ ಸರ್ವಾವಧಾನಿಗಳೆಲ್ಲರು ನಮ್ಮ ಶರಣರು.
ಇಂತು ಸರ್ವಾಚಾರಸಂಪನ್ನರಯ್ಯ ನಮ್ಮ ಶರಣರು.
ಇಂತು ಸರ್ವಾಂಗಲಿಂಗಿಗಳಯ್ಯ ನಮ್ಮ ಶರಣರು.
ಇಂತಪ್ಪ ಶರಣ ಸನ್ನಹಿತ ಚೆನ್ನಮಲ್ಲೇಶ್ವರನ ಪಾದವ ನಂಬಿದ ಕಾರಣ,
ನಾ ಹೋದ ಹಾದಿಯನಾರೊ ಅರಿಯರಯ್ಯ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./79
ಒಂ ಏಕವ ನ ದ್ವಿತೀಯಾಃ ಸ್ವಯಂಭುವೇ
ಚಕಿತಮಭಿದತ್ತೇ ಶ್ರುತಿರಪಿ ಅತ್ಯತಿಷ್ಠದ ಶಾಂಗುಲವೆಂಬ
ಬಿರುದು ನಿಮಗೆ ಸಂದಿತ್ತು ಗುರುವೆ.
ನ ಗುರೋರಧಿಕಂ ನ ಗುರೋರಧಿಕಂ ವಿದಿತಂ ವಿದಿತಂ ಎಂಬ
ಬ್ರಹ್ಮಬ್ರಹ್ಮ ಶಬ್ದಕ್ಕೆ ಪರಬ್ರಹ್ಮ ಗುರುವೆ ಗುರು.
ಬಸವಪ್ರಿಯ ಕೂಡಲಸಂಗಮದೇವಾ
ಮಾಂ ತ್ರಾಹಿ ಕರುಣಾಕರನೆ./80
ಒಂಕಾರಂ ನಾದರೂಪಂ ಚ ಒಂಕಾರಂ ಮಂತ್ರರೂಪಕಂ
ಒಂಕಾರಂ ವ್ಯಾಪಿ ಸರ್ವತ್ರ ಒಂಕಾರಂ ಗೋಪ್ಯಮಾನನಂ ||
ಎಂದುದಾಗಿ, ಒಂ ಎಂಬ ಶಬ್ದಕ್ಕೆ ಸಿಲುಕದ
ನಿಶ್ಯಬ್ದಮಯಮಪ್ಪ ನಿರಾಲಂಬಮೂರ್ತಿ
ಮದ್ಗುರುವೆ ಮನೋಹರ ಗುರುವೆ ವದನ ಮಾರ್ತಾಂಡ
ಮಲಹರ ನಿರ್ಮಲ ಗುರುವೆ ನಿರುಪಮ ಗುರುವೆ
ನಿರಂಜನ ಗುರುವೆ ನಿತ್ಯಪ್ರಸನ್ನ ಗುರುವೆ
ಸತ್ಯಪ್ರಸಾದಿ ಗುರುವೆ
ಭಕ್ತರ ಹೃತ್ಕಮಲವಾಸ ನಿವಾಸ ವರ ಮನೋಹರ ಗುರುವೆ
ಬಸವಪ್ರಿಯ ಕೂಡಲಸಂಗಮದೇವಾ
ಮಾಂ ತ್ರಾಹಿ ಕರುಣಾಕರನೆ./81
ಒಂದು ಹುತ್ತಕ್ಕೆ ಒಂಬತ್ತು ಬಾಯಿ,
ಅಲ್ಲಿಪ್ಪ ಸರ್ಪನೊಂದೆ. ತಪ್ಪದೆ ಹತ್ತು ಬಾಯಲು ತಲೆಯ ಒಡೆವುದು.
ಅಂಜಿ ನೋಡಿದವರಿಗೆ ಸರ್ಪನಾಗಿಪ್ಪುದು.
ಅಂಜದೆ ನೋಡಿದವರಿಗೆ ಒಂದೆ ಸರ್ಪನಾಗಿರುವುದು.
ಇದು ಕಾರಣವಾಗಿ,
ಸಂಜೆ ಮುಂಜಾನೆ ಎಂಬ ಎರಡಳಿದ ಶರಣಂಗೆ ಒಂದಲ್ಲದೆ ಎರಡುಂಟೆ?
ಮೂರು ಲಿಂಗ, ಆರು ಲಿಂಗ, ಮೂವತ್ತಾರು ಲಿಂಗ,
ಬೇರೆ ಇನ್ನೂರು ಹದಿನಾರು ಲಿಂಗ ಉಂಟೆಂದು
ಸಂತೆಯೊಳಗೆ ಕುಳಿತುಕೊಂಡು ಸಾರುತಿಪ್ಪರು.
ಇದ ನಾನರಿಯೆ, ನಾನರಿಯೆ.
ಹೇಳುವುದಕ್ಕೆ ಎನ್ನ ದೂರ ಕೇಳಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./82
ಒಳಗೆ ತೊಳೆದು, ಹೊರಗೆ ಮೆರೆದ ಪ್ರಸಾದಿ.
ಕಳೆಮೊಳೆಯನೊಂದು ಮಾಡಿದ ಪ್ರಸಾದಿ.
ಅಳಿಯ ಬಣ್ಣದ ಮೇಲಿದ ಅಮೃತವನುಂಡ ಪ್ರಸಾದಿ.
ಕಳೆಯ ಬೆಳಗಿನ ಸುಳುಹಿನ ಸೂಕ್ಷ್ಮದಲ್ಲಿ ನಿಂದ ಪ್ರಸಾದಿ.
ಇಂತಪ್ಪ ಪ್ರಸಾದಿಯ ಒಕ್ಕುಮಿಕ್ಕಿದ ಕೊಂಡ ಕಾರಣದಿಂದ
ನಾನೆತ್ತ ಹೋದೆನೆಂದರಿಯೆನಯ್ಯಾ.
ಬಸವಪ್ರಿಯ ಕೂಡಲಚೆನ್ನಬಸವಣ್ಣಾ ನೀವೆ ಬಲ್ಲಿರಿ./83
ಒಳಹೊರಗೆಂಬೆರಡು ಬಟ್ಟೆಗಳೊಳು ಸುಳಿದು ಸೂಸುವ ಬೆಳಗನೆ ಕಂಡು,
ತಳುವಿಲ್ಲದೆ ಮನವನೆ ನೋಡಿ, ಆ ಬೆಳಗಿನೊಳ್ಬೆರೆದರೆ,
ಬಸವಪ್ರಿಯ ಕೂಡಲಚೆನ್ನಬಸವಣ್ಣ./84
ಓದಲೇಕೋ ಲಿಂಗದ ಭೇದಾದಿಭೇದವನರಿದವಂಗೆ?
ಹಾಡಲೇಕೊ ಹರನ ಕಂಡಾತಂಗೆ?
ಬೇಡಿ ಕಾಡಲೇಕೊ ನೋಡುವ ಕಂಗಳಿಗೆ ತೃಪ್ತಿಯಾದವಂಗೆ?
ನೀಡಿ ಮಾಡಲೇಕೊ ಉಡುವಾತನು ಉಂಬುವಾತನು ಏಕವಾದ ಮೇಲೆ.
ಮುಂದು ನೋಡುವರಾರುಂಟು ಹೇಳಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ? /85
ಓದಲೇತಕ್ಕೆ ಪ್ರಾಣಲಿಂಗಿಗೆ ? ಹಾಡಲೇತಕ್ಕೆ ಶರಣಂಗೆ ?
ನೋಡಿ ಕೂಡಲೇತಕ್ಕೆ ಐಕ್ಯಂಗೆ ?
ಆರೂಢಿಯ ಕೂಟ ಅಜಡತ್ವಂಗೆ ಬಾಹ್ಯಾಂತರಂಗೆ.
ಆಹ್ವಾನ ವಿಸರ್ಜನವೆಂದು ಭೇದಿಸದವನೆ ಪ್ರಾಣಲಿಂಗಿ,
ಪ್ರಣವ ಸ್ವರೂಪಿ, ಪರಂಜ್ಯೋತಿ,
ಬಸವಪ್ರಿಯ ಕೂಡಲಸಂಗಮದೇವ ಪ್ರಭುವೆ./86
ಓದಿದರೇನಯ್ಯಾ? ಗಾದೆಯ ಮಾತಾಯಿತ್ತು.
ಹಾಡಿದರೇನಯ್ಯಾ? ಹರಟೆಯ ಕಥೆಯಾಯಿತ್ತು.
ನೋಡಿದರೇನಯ್ಯಾ? ಭೂತದಂತಾಯಿತ್ತು.
ಇದರ ಭೇದಾದಿ ಭೇದವನರಿದು,
ಲಿಂಗದಲ್ಲಿ ಸಾಧನೆಯ ಮಾಡುವ ಶರಣರ ಪಾದಕ್ಕೆರಗಿ
ನಾನು ಬದುಕಿದೆನು ಕಾಣಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
/87
ಕಂಗಳ ಮಣಿಯ ಬೆಳಗಿನೊಳು, ಈರೇಳು ಭುವನದ ಶೃಂಗಾರವಡಗಿತ್ತು.
ಆರೂ ಅರಿಯರಲ್ಲಾ.
ಅತಿ ಶೃಂಗಾರದೊಳಗಣ ಗಂಧವನೊಂದು ಘ್ರಾಣ ನುಂಗಿತ್ತು.
ಘ್ರಾಣದೊಳಗಣ ಗಂಧವ ಪ್ರಾಣ ನುಂಗಿತ್ತು.
ಪ್ರಾಣದೊಳಗಣ ಗಂಧದ ಭಾವ ನುಂಗಿತ್ತು.
ಭಾವದೊಳಗಣ ಗಂಧದ ಬಯಲು ನುಂಗಿತ್ತು.
ಬಯಲೊಳಗಣ ಗಂಧವ ಮಹಾಬಯಲ ಕೂಡಿದ ಲಿಂಗೈಕ್ಯಂಗೆ
ಭವಬಂಧನವಿಲ್ಲೆಂದಿತ್ತು ಗುರುವಚನ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./88
ಕಂಡುವ ಹೇಳಿಹೆನೆ ? ಸಮಯಕ್ಕೆ ದೂರ,
ಎನ್ನ ಇರವನರಿಯರು. ಲೆಂಡನೆಂಬರು, ಸುಮ್ಮನಿದ್ದೇನೆ.
ಇವರೆನ್ನ ಆರೈದು ಕಂಡುದ ನುಡಿವರು.
ಎನ್ನ ಮುಟ್ಟಿದವರ ಎನ್ನಂತೆ ಮಾಡಿಕೊಂಬೆ.
ಎನ್ನ ಅರಿಯದವರ ಹಾದಿಯ ಹೋಗೆ.
ಎನ್ನನರಿತ ಜಂಗಮದ ಸಂಗವ ಮಾಡುವೆ.
ಜಗದ ಸಂಗವನೊಲ್ಲೆ, ನಿಗಮಾಗಮಶಾಸ್ತ್ರವನೊಲ್ಲೆ.
ಅವೆಲ್ಲವು ಸ್ಥಲ ನೆಲೆ ಇಟ್ಟು ಹೇಳುವವು.
ಎಮ್ಮ ಶರಣರು ನುಡಿದ ಶಾಸ್ತ್ರಕ್ಕೆ ಸ್ಥಲ ನೆಲೆ ಇಲ್ಲ.
ಇಂತಿವೆಲ್ಲವ ಬಲ್ಲೆನಾಗಿ, ಎನ್ನಂಗಕ್ಕೆ ಪ್ರಾಣಕ್ಕೆ ಭವವಿಲ್ಲ, ಬಂಧನವಿಲ್ಲ.
ಅದೇಕೆಂದರೆ:ಲಿಂಗವೆಂದ ಕಾರಣ, ನಾನೆಂಬುದಿಲ್ಲ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./89
ಕಟ್ಟಬೇಕು ಮನವ, ಮೆಟ್ಟಬೇಕು ಮದವ,
ಸುಟ್ಟುರುಹಬೇಕು ಸಪ್ತವ್ಯಸನಂಗಳ.
ಆ ತೊಟ್ಟಿಲ ಮುರಿದು, ಕಣ್ಣಿಯ ಹರಿದು, ಆ ಬಟ್ಟಬಯಲಲ್ಲಿ ನಿಂದಿರೆ,
ಬಸವಪ್ರಿಯ ಕೂಡಲಚೆನ್ನಬಸವಣ್ಣ,.
/90
ಕತ್ತಲೆ ಬೆಳಗೆನಬೇಡ, ಸತ್ಯ ತಾನೆನಬೇಡ,
ಚಿತ್ತವ ಸುಯಿಧಾನವ ಮಾಡಿ,
ಮೊತ್ತಾದ ಹೆಣ್ಣು ಹೊನ್ನು ಮಣ್ಣು ಗೆದ್ದರೆ ನಿರ್ಮುಕ್ತ ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./91
ಕರಕನಿಷ್ಟ ಕಬ್ಬಿಣವ ನೆರಹಿರೆ, ಪರುಷ ಮುಟ್ಟಲು ಚಿನ್ನವಾಗದೆ?
ಗುರುಕಾರುಣ್ಯವ ಪಡೆವರು ಇಂದು ಶರಣರೊಳು ಬೆರೆದರೆ,
ಬಸವಪ್ರಿಯ ಕೂಡಲಚೆನ್ನಬಸವಣ್ಣ./92
ಕರವನರಿದಂಗೆ ಕಮಲದ ಹಂಗೇಕೊ?
ಇರವನರಿದಂಗೆ ಪರದ ಹಂಗೇಕೊ ?
ಪರವನರಿದಂಗೆ ಇರವದ ಹಂಗೇಕೊ?
ಇಹ ಪರವೆಂಬ ಉಭಯವಳಿದ ಶರಣಂಗೆ
ಮರ್ತ್ಯದ ನರರ ಹಂಗೇಕೊ ಹೇಳಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ? /93
ಕರಿದೈದು ಬಿಳಿದೈದು ಭಾಸುರವೈದು ಹದಿನೈದು ಬಗೆಯ
ಕರಣವ ಸುಟ್ಟು, ಸುರತ ಸುಗ್ಗಿ, ಕಾಲಕಾಮಾದಿಗಳೈವರ ಗೆದ್ದರೆ,
ಬಸವಪ್ರಿಯ ಕೂಡಲಚೆನ್ನಬಸವಣ್ಣ./94
ಕಲ್ಲುದೇವರ ನಂಬಿದವರೆಲ್ಲ
ಕಲಿಯುಗದ ಕತ್ತಲೆಯೊಳಗಾಗಿ ಕತ್ತೆಗಳಾಗಿ ಹೋದರು.
ಅದೇನು ಕಾರಣವೆಂದರೆ: ತಮ್ಮ ದೇವರು ಇಕ್ಕಿದ ಓಗರವನುಣ್ಣಲೊಲ್ಲದೆ, ಒಡನೆ ಮಾತಾಡದು.
ಗುಡಿಯ ಕಲ್ಲು ಮೇಲೆ ಬಿದ್ದರೆ ಒಡೆದು ಹಾಳಾಗಿ ಹೋಗುತ್ತದೆ.
ಇಂತಪ್ಪ ಕಲ್ಲ ಪೂಜಿಸಿ, ಸಲ್ಲದೆ ಹೋದರು. ಅದಂತಿರಲಿ,
ಮಣ್ಣ ದೇವರು ಎಂದು ಪೂಜಿಸಿ,
ಮಜ್ಜನಕ್ಕೆ ನೀಡಲಮ್ಮದೆ, ಲಜ್ಜೆಗೆಟ್ಟು ನಾಯಾಗಿ ಬೊಗುಳಿ ಹೋದರು.
ಆದಂತಿರಲಿ,
ಮರನ ದೇವರೆಂದು ಪೂಜಿಸಿ ಧೂಪ ದೀಪವ ಮುಂದಿಡಲಮ್ಮರು.
ಅದೊಂದು ವ್ಯಾಪಾರಕ್ಕೊಳಗಾಗಿ,
ತಾಪತ್ರಯಕ್ಕೆ ಸಿಲ್ಕಿ ಪಾಪಿಗಳಾಗಿ ಸತ್ತುಹೋದರು.
ಸಲ್ಲದು ಶಿವನಲ್ಲಿ.
ಎಮ್ಮ ಭಕ್ತರಿಗೆ ಈ ಪರಿಯಲ್ಲ ಕೇಳಿರಣ್ಣಾ.
ಇದೆಲ್ಲ ಪಾಪಿಗಳ ಹಾಗೆ, ಎನ್ನ ದೇವ ನಡೆವ, ನುಡಿವ,
ಇಕ್ಕಿದರುಂಬ, ಕೊಟ್ಟರೆ ತಕ್ಕೊಂಬ, ಪೂಜಿಸಿದರೆ ಪೂಜೆಗೊಂಬ,
ಅನೇಕ ಪೂಜೆಯಲ್ಲಿ.
ತನ್ನ ನಂಬಿದ ಭಕ್ತರಿಗೆ-ಬುದ್ಧಿಯ ಹೇಳುವ, ಶುದ್ಧಾತ್ಮನ ತೋರುವ.
ತಾ ಮುದಿನಲ್ಲಿ ಸಜ್ಜನ ಸದ್ಭಕ್ತರಲ್ಲಿ ಇದ್ದೂ ಇಲ್ಲದಂತಿಪ್ಪ.
ಪ್ರಸಿದ್ಧ ಜಂಗಮಲಿಂಗವ ಪೂಜಿಸಿ, ಸ್ವಯಲಿಂಗಿಗಳಾದರು ಎಮ್ಮ ಶರಣರು.
ಅವರು ಹೋದ ಹಾದಿಯ ನೋಡಿದರೆ, ಎನಗೊಂದು ಹಾದಿ ಸಿಕ್ಕಿತ್ತು.
ಆ ಹಾದಿಗೊಂಡು ಹೋಗಿ ಅವರ ಪಾದವಕಂಡು,
ಕೆಟ್ಟು ಬಟ್ಟಬಯಲಾದೆ ನಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ. /95
ಕಾಡಬೇಡ ಕಂಡವರ, ಬೇಡಬೇಡ ನರರುಗಳ,
ಆಡಬೇಡ ಅನೃತವ, ನೋಡಬೇಡ ಪರಸ್ತ್ರೀಯರ,
ಗಾಢಗಂಭೀರ ಲಿಂಗಾರೂಢವಾದ
ಬಸವಪ್ರಿಯ ಕೂಡಲಚೆನ್ನಬಸವಣ್ಣ ./96
ಕಾಣಬಾರದ ಘನವೆಂದು, ಜಗವೆಲ್ಲ ಹೇಳುತ್ತಿದೆ.
ಈ ಕಾಣಬಾರದ ಘನವ ನಾನಾರ ಕೇಳಲಯ್ಯ!
ಗುರು ಹೇಳಲಿಲ್ಲ, ಲಿಂಗ ಹೇಳಲಿಲ್ಲ, ಜಂಗಮ ಹೇಳಲಿಲ್ಲ.
ಅದು ಹೇಗೆ ಎಂದರೆ:ಗುರು ಒಂದು ಲಿಂಗವ ಕೊಟ್ಟು,
ತನ್ನ ಅಂಗದ ಕುರಿತು, ಆ ಲಿಂಗಕ್ಕೆ ಬೆಲೆಯ ತಕ್ಕೊಂಡು ಹೋದನಲ್ಲದೆ,
ಆ ಕಾಣಬಾರದ ಘನವ ಹೇಳಿದುದು ಇಲ್ಲ.
ಇದ ಲಿಂಗವೆಂದು ಪೂಜಿಸಿದರೆ, ಕಂಗಳ ಕಾಮ ಘನವಾಯಿತ್ತಲ್ಲ !
ಎರಡರ ಸಂಗಸುಖವ ಹೇಳಲರಿಯದೆ, ಜಂಗಮವೆಂದು ಪೂಜೆಯ ಮಾಡಿದರೆ,
ಈ ಜಗದೊಳಗೆ ಹುಟ್ಟಿದ ಪದಾರ್ಥಕ್ಕೆ ಒಡೆಯನಾದನಲ್ಲದೆ,
ಈ ಕಾಣಬಾರದ ಘನವ, ಹೇಳಿದುದಿಲ್ಲ. ಅದೇನು ಕಾರಣವೆಂದರೆ: ಆ ಕಾಣಬಾರದ ಘನವ, ತಾನೊಬ್ಬ ಕೇಳಲು ಬಾರದು,
ತಾನೊಬ್ಬರಿಗೆ ಹೇಳಲು ಬಾರದು.
ಏಕೆ? ನಾಮರೂಪಿಲ್ಲವಾಗಿ, ನುಡಿಯಿಲ್ಲ.
ಇಂತಪ್ಪ ಘನ ತಾನೆ, ಒಂದು ರೂಪ ತೊಟ್ಟು,
ತನ್ನ ಲೀಲೆಯ ಎಲ್ಲ ಶರಣರೊಳು ನಟಿಸಿ, ತನ್ನ ತಾನೆ ಸಾಕಾರ ನಿರಾಕಾರವಾಗಿ,
ಏಕವಾದ ಭೇದವನರಿಯದೆ ಈ ಲೋಕದಲ್ಲಿ ಇದ್ದರೇನು?
ಆ ಲೋಕದಲ್ಲಿ ಹೋದರೇನು?
ಹದಿನಾಲ್ಕುಲೋಕವು ತಾನೆಯಾದ ಚಿನ್ಮಯನ ಹೇಳಿಹೆನೆಂದರೆ ಎನ್ನಳವಲ್ಲ.
ಬಸವಪ್ರಿಯ ಕೂಡಲಚೆನ್ನಬಸವಣ್ಣಾ ನೀವೆ ಬಲ್ಲಿರಿ./97
ಕಾಯ ಕರಣಾದಿಗಳ ಏಕವ ಮಾಡಿದ ಪ್ರಸಾದಿ.
ಪ್ರಾಣ ನಿಃಪ್ರಾಣವನೇಕವ ಮಾಡಿದ ಪ್ರಸಾದಿ.
ಭಾವ ನಿರ್ಭಾವವನೇಕವ ಮಾಡಿದ ಪ್ರಸಾದಿ.
ಮನಬುದ್ಧಿಚಿತ್ತಹಂಕಾರವನೇಕವ ಮಾಡಿದ ಪ್ರಸಾದಿ.
ಸಪ್ತಧಾತು ಷಡುವರ್ಣವನೇಕವ ಮಾಡಿದ ಪ್ರಸಾದಿ.
ಇಂತಿವೆಲ್ಲವನೇಕವ ಮಾಡಿದ ಪ್ರಸಾದಿ.
ಈ ಪ್ರಸಾದವ ಕಂಡು ಎನ್ನ ಭವಂ ನಾಸ್ತಿಯಾಯಿತ್ತು ಕಾಣಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./98
ಕಾಯಸ್ಥಲ, ಕರಸ್ಥಲ, ಉರಸ್ಥಲ,
ಶಿ ಸ್ಥಲ, ಪ್ರಾಣಸ್ಥಲ, ಭಾವಸ್ಥಲವೆಂದು ನುಡಿದಾಡುವರು.
ಆ ಸ್ಥಲದೊಳಗಣ ಸ್ವಯಸ್ಥಲವನರಿಯರು ಕಾಣಿರೆ.
ಸ್ವಯಸ್ಥಲವೆಂತಿಪ್ಪುದೆಂದರೆ, ಕಾಯಸ್ಥಲವನರಿದರೆ,
ಅದು ತಾನೇ ಲಿಂಗವಾಯಿತ್ತು.
ಕರಸ್ಥಲವನರಿದರೆ, ಕೈಲಾಸ ಮರ್ತ್ಯ ತನ್ನೊಳಗಾಯಿತ್ತು.
ಉರಸ್ಥಲವನರಿದರೆ, ಪರವು ತನ್ನೊಳಗಾಯಿತ್ತು.
ಶಿರಸ್ಥಲವನರಿದರೆ ಶಿವನೆಂಬುದಕ್ಕೆ ಇಲ್ಲ.
ಪ್ರಾಣಸ್ಥಲವನರಿದರೆ, ಭಯ ಮರಣಾದಿಗಳಿಲ್ಲ.
ಭಾವಸ್ಥಲವನರಿದರೆ, ಇನ್ನಾವುದೂ ನೆನಹಿಲ್ಲ.
ಇದರ ಭೇದವನರಿಯದ, ಸ್ಥಲನೆಲೆಯುಂಟೆಂಬಿರಿ.
ಅದರ ಭೇದವ ನೀವು ಅರಿಯಿರಿ ಕಾಣಿರೊ.
ಸ್ಥಲವೆಂದರೆ ಅಂಗ, ನೆಲೆಯೆಂದರೆ ಪ್ರಾಣ.
ಇದನರಿಯದೆ ತಲೆ ಕೆಳಗಾಗಿ ಹೋದರು. ಆರು? ದೇವದಾನವರು.
ನಿಮ್ಮ ಪಾಡೇನೋ ನರಗುರಿಗಳಿರಾ?
ಇದನರಿದು, ಇನ್ನಾದರೂ ನಮ್ಮ ಶರಣರಿಗೆರಗಿ ಬದುಕಿರೊ,
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಾ./99
ಕೀಡೆ ತುಂಬಿಯ ಬಿಡದೆ ನೆನೆಯೆ, ನೋಡಲಾಕ್ಷಣ ತುಂಬಿಯಾಗಿಹುದು.
ರೂಢಿಯೊಳು ಅಗಮ್ಯ ಶರಣರ ಪಾದವೆ ಗೂಡಾಗಿ ನಿಂದಿರೆ,
ಬಸವಪ್ರಿಯ ಕೂಡಲಚೆನ್ನ [ಬಸವಣ್ಣ] /100
ಕುದುರೆಯ ಕುಪ್ಪಟ ಘನವಾಯಿತ್ತು. ಆನೆಯ ಹರಿದಾಟ ನಿಲಬಾರದು.
ಒಂಟೆಯ ಕತ್ತು ನೆಟ್ಟಗಾಯಿತ್ತು. ಬಂಟರ ಹರಿದಾಟ ಉಂಟು
ಕಟ್ಟಿಗೆಯವರು ಉಗ್ಗಡಿಸುತ್ತ, ಭಟರುಗಳು ಪೊಗಳುತ್ತ ,
ಸಕಲವಾದ್ಯ ರಭಸದೊಳಗೆ ಸಂದಳಿಯೆಂಬ ಅಂದಳದ ಮೇಲೆ
ಚಂದವಾಗಿ ಮನೋರಾಜ್ಯಂಗೆಯ್ವುತ್ತಿರಲು,
ಈ ಸುಖವನೊಲ್ಲದೆ, ಮುಂದೆ ದುಃಖ ಉಂಟೆಂದು ಶರಣನರಿದು,
ತಲೆ ಎತ್ತಿ ನೋಡಿ, ಘನಗುರುವಿನ ಹಸ್ತದಿಂದ ಅನುಜ್ಞೆಯಂ ಪಡೆದು,
ಧ್ಯಾನ ಧಾರಣ ಸಮಾಧಿಯಿಂದ ತಿಳಿದು ನೋಡಲಾಗಿ,
ಇತ್ತ ಶೂನ್ಯವೆಂಬ ಪಟ್ಟಣದೊಳಗೆ ಅನಾಮಿಕನೆಂಬ ಲಿಂಗ ಅರಸು,
ಆ ಅರಸಿನ ಗೊತ್ತುವಿಡಿದು ಇತ್ತಲೆ
ಮನವೆಂಬ ಅರಸನು ಹಿಡಯಲಾಗಿ ಹಿಡಿದು,
ಆನೆ, ಕುದುರೆ, ಸೇನೆಯನೆಲ್ಲ ಸೂರೆಗೊಂಡು,
ಭಂಡಾರ ಬೊಕ್ಕಸ ಅರಮನೆಯನೆಲ್ಲ ಸುಟ್ಟು ಬಟ್ಟಬಯಲಮಾಡಿದ,
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ./101
ಕೂಟವಿಲ್ಲದ ಮಾಟ, ಬೇಟವಿಲ್ಲದ ನೋಟ,
ಅರಿವಿಲ್ಲದ ಕೂಟ, ಓಟವಿಲ್ಲದ [ಆಟ].
ನಾಲ್ಕರ ಅನುವನರಿಯದೆ ನುಡಿವುದೆ ಜಗದಾಟ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./102
ಕೇಳು ಕೇಳಾ, ಭಕ್ತ, ಮಹೇಶ, ಪ್ರಸಾದಿ,
ಪ್ರಾಣಲಿಂಗಿ, ಶರಣ, ಐಕ್ಯರೆಂದು ನುಡಿದಾಡುತಿಪ್ಪಿರಿ,
ಇಂತೀ ಷಟ್ಸ್ಥಲಸಂಪನ್ನತೆ ಎಲ್ಲರಿಗೆ ಎಂತಾಯಿತ್ತಯ್ಯ ಹೇಳಿರಣ್ಣಾ !
ಭಾಗ್ಯವುಳ್ಳಾತಂಗೆ ಭಕ್ತಿಸ್ಥಲವಾಗದು.
ಮಕ್ಕಳುಳ್ಳಾತಂಗೆ ಮಹೇಶ್ವರಸ್ಥಲವಾಗದು.
ಪರಧನ ಚೋರಂಗೆ ಪ್ರಸಾದಿಸ್ಥಲವಾಗದು.
ಇಹಪರವೆಂದು ಕಾಮಿಸುವಾತಂಗೆ ಪ್ರಾಣಲಿಂಗಿಸ್ಥಲವಾಗದು.
ಪರದಲ್ಲಿ ಪರಿಣಾಮವನರಿಯದಾತಂಗೆ ಪ್ರಾಣಲಿಂಗಿಸ್ಥಲವಾಗದು.
ಹರುಷವೇ ಹರನಲ್ಲಿ ಲೀಯವಾದಾತಂಗೆ ಐಕ್ಯಸ್ಥಲವಾಗದು.
ನೆರೆದ ದೇಹವು ಕರ್ಪುರ ಉರಿಗೊಂಡಂತೆ ಅಲ್ಲದೆ ನಿರವಯಸ್ಥಲವಾಗದು.
ಇದು ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಾ./103
ಗುರು ಗುರು ಎಂದು ನುಡಿದಾಡುತಿಪ್ಪರು,
ಆ ಗುರು ನೆಲೆ ಎಂತಿಪ್ಪುದೆಂದರಿಯರು.
ಆ ಗುರು ನೆಲೆ ಎಂತೆಂದರೆ,
ಪರಮಸುಖಪರಿಣಾಮ ತಲೆಗೇರಿ ನೆಲೆಗೊಂಬುದೆ ಗುರು ನೆಲೆ.
ವರ ಸಮಾಧಿಯೊಳಗೆ ಚರಿಸುವ
ಗುರು ಲಿಂಗ ಜಂಗಮ ಪಾದೋದಕ ಪ್ರಸಾದವನರಿದಿಪ್ಪುದೆ ಗುರು ನೆಲೆ.
ಇದನರಿಯದೆ ಮನಕೆ ಬಂದಂತೆ
ಕಾಯವೆ ಗುರು, ಪ್ರಾಣವೆ ಲಿಂಗ, ಭಾವವೆ ಜಂಗಮವೆಂದು ನುಡಿದಾಡುವ
ಗಾವಿಲರ ಮಾತ ಕೇಳಲಾಗದು ಎಂದಾತ,
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ. /104
ಗುರು ಗುರು ಎಂದು ಪೂಜೆಯ ಮಾಡುವರು.
ಮತ್ತೆಯಾ ಗುರುವ ನರನೆಂದೆಂಬರು, ಅವರು ಗುರುದ್ರೋಹಿಗಳು.
ಲಿಂಗ ಲಿಂಗವೆಂದು ಪೂಜೆಯ ಮಾಡುವರು, ಆ ಲಿಂಗವ ಶಿಲೆ ಎಂಬರು,
ಅವರು ಲಿಂಗದ್ರೋಹಿಗಳು.
ಜಂಗಮ ಜಂಗಮವೆಂದು ಪೂಜೆಯ ಮಾಡುವರು,
ಆ ಜಂಗಮವ ಜಗದ ಹಂಗಿಗರೆಂಬರು, ಅವರು ಜಂಗಮದ್ರೋಹಿಗಳು.
ಈ ಮೂರು ಕರ್ತರೆಂದು ಅರಿಯದವಂಗೆ ಕುಂಭೀಪಾಕ ನಾಯಕನರಕ ತಪ್ಪದು,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./105
ಗುರುಪಾದೋದಕಕ್ಕೆ ಹರಿವ ನದಿಯೆಲ್ಲ ಸರಿಯೆಂದು ನುಡಿದರೆ,
ಸುರಿಯವೆ ಬಾಲಹುಳು?
ಇಷ್ಟಲಿಂಗದ ಪಾದೋದಕಕ್ಕೆ ಅಷ್ಟಾಷಷ್ಟಿತೀರ್ಥಂಗಳು ಸರಿಯಿಲ್ಲ.
ಜಂಗಮದ ಪಾದೋದಕಕ್ಕೆ ಜಗದ ತೀರ್ಥ ಜಾತ್ರೆ ಸರಿಯೆಂದು ನುಡಿದರೆ,
ಜಗದ ಜಂಗುಳಿಗಳೆಂಬೆ.
ಇಂತೀ ತ್ರಿವಿಧ ಪಾದೋದಕ ತ್ರಿವಿಧ ಅಂಗಕ್ಕೆ ಪ್ರಾಣ.
ಇಂತು ಮಂತ್ರೋದಕ ಮಜ್ಜನೋದಕ ಪ್ರಸಾದೋದಕ
ಈ ತ್ರಿವಿಧವು ತ್ರಿವಿಧ ಲಿಂಗಕ್ಕೆ ಪ್ರಾಣವು.
ಈ ಷಡ್ವಿಧ ಪಾದೋದಕವೆ ಷಡ್ವಿಧ ಅಂಗ ಲಿಂಗದ ಕಳೆ.
ಆ ಕಳೆಯೆ ಕಾರಣ, ಆ ಕಾರಣವೆ ಎಲ್ಲರಿಗೆಯೂ ಪ್ರಾಣದ ಕಳೆ.
ಪ್ರಾಣದ ಕಳೆಯೆ ಪಾದೋದಕ. ಅದಕ್ಕೆ ದೃಷ್ಟ-ರಹಸ್ಯೇ :
ಸರ್ವತೀರ್ಥಾಭಿಷೇಕಾದಿ ಶುದ್ಧೇ ಮಾನಸಿ ಜಾಯತೇ |
ಗುರೋರಂಘ್ರಿಸ್ಪರ್ಶಜಲಂ ತಸ್ಮಾತ್ ಶಿರಸಿ ಧಾರಯೇತ್ ||
ಎಂದುದಾಗಿ, ಆ ಪಾದೋದಕವ ಕೊಂಡವನೆ ಪರಬ್ರಹ್ಮಸ್ವರೂಪು.
ಬಸವಪ್ರಿಯ ಕೂಡಲಸಂಗಮದೇವಾ,
ಮಾಂ ತ್ರಾಹಿ, ತ್ರಾಹಿ ಕರುಣಾಕರನೆ./106
ಗುರುಪ್ರಸಾದ, ಲಿಂಗಪ್ರಸಾದ, ಜಂಗಮಪ್ರಸಾದ,
ಅಚ್ಚಪ್ರಸಾದ, ಅರ್ಪಿತಪ್ರಸಾದ, ಸಹಭೋಜನ,
ಆರರಲ್ಲಿ ಅರ್ಪಿತ, ಮೂರರಲ್ಲಿ ಮುಕ್ತವೆಂದು
ಊರೆಲ್ಲರ ಮುಂದೆ ದೂರಿಯಾಡುವ ನಾಯಿಮನುಜರಿರಾ,
ಹೀಗೇಕೆ ದೂರುವಿರಿ?
ಗುರುವೆಷ್ಟು, ಲಿಂಗವೆಷ್ಟು, ಜಂಗಮವೆಷ್ಟು, ಪ್ರಸಾದವೆಷ್ಟು, ಅರ್ಪಿತವೆಷ್ಟು?
ಇದರ ಅವಧಾನವನರಿದ ಶರಣಂಗೆ, ಒಂದಲ್ಲದೆ ಎರಡುಂಟೆ?
ಅವು ಒಂದೆಂಬುವನಕ ಬಂಧನವು.
ತತ್ವಾರ್ಥಕ್ಕೆ ಇದಿರಿಟ್ಟುಕೊಂಡಿಪ್ಪನಲ್ಲದೆ,
ಅರಿದ ಶರಣಂಗೆ ಒಂದೆಂಬುದು ಸಂದೇಹ.
ಈ ರೀತಿಯನರಿಯದೆ ತೂತುಬಾಯೊಳಗೆ ಮಾತಿಗೆ ತಂದು
ನುಡಿದಾಡುವ ಪಾತಕರ ಮೆಚ್ಚುವನೆ,
ನಮ್ಮ ಶರಣ ಬಸವಪ್ರಿಯ ಕೂಡಲಚೆನ್ನಬಸವಣ್ಣ ?/107
ಗುರುಭಕ್ತಿಯ ಮಾಡಿಹೆವೆಂದು ಅಂಗಸೂತಕವ ಮಾಡಿದರು.
ಲಿಂಗಭಕ್ತಿಯ ಮಾಡಿಹೆವೆಂದು ಮನಸೂತಕವ ಮಾಡಿದರು.
ಜಂಗಮಭಕ್ತಿಯ ಮಾಡಿಹೆವೆಂದು ಜಗದ ಹಂಗಿಗರಾದರು.
ಈ ತ್ರಿವಿಧಭಕ್ತಿಯ ಮಾಡಿಹೆವೆಂದು ತ್ರಿವಿಧವ ಹಿಡಿದು,
ತ್ರಿವಿಧಮಲಸಂಬಂಧಿಗಳಾಗಿ ಹೋದರಲ್ಲದೆ
ತ್ರಿವಿಧವನು ತ್ರಿವಿಧಕ್ಕಿತ್ತು ತ್ರಿವಿಧದ ನೆಲೆಯನರಿದು,
ಈ ಕಲಿಯುಗದ-ಭವವ ದಾಂಟಿ,
ಬಯಕೆಯ ಸವಿದು, ಭಾವ ಬಯಲಾಗಿ, ಆ ಬಯಲನೆಯ್ದಿ ಹೋಗುವ ಶರಣರ
ಪಾದವ ನಂಬಿ ಕೆಟ್ಟು ಬಟ್ಟಬಯಲಾದೆನಯ್ಯಾ.
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./108
ಗುರುವ ಮುಟ್ಟಿ ಗುರುವಿನಂತಾಗಬೇಡವೆ?
ಲಿಂಗವ ಮುಟ್ಟಿ ಪೂಜಿಸಿ ಲಿಂಗದಂತಾಗಬೇಡವೆ?
ಜಂಗಮವ ಮುಟ್ಟಿ ಪೂಜಿಸಿ ಪಾದೋದಕ ಪ್ರಸಾದವ ಕೊಂಡು
ಜಂಗಮದಂತಾಗಬೇಡವೆ?
ಈ ತ್ರಿವಿಧವಿಡಿದು, ತ್ರಿವಿಧವ ಬಿಟ್ಟು, ತ್ರಿವಿಧವ ಮುಟ್ಟಿ,
ತ್ರಿವಿಧವನೇಕವ ಮಾಡಿ, ಈ ಭವವ ದಾಂಟಿ ಹೋದವರ ಭಕ್ತರೆಂಬೆ,
ಮಹೇಶ್ವರ, ಪ್ರಸಾದಿ ಪ್ರಾಣಲಿಂಗಿ, ಶರಣ, ಐಕ್ಯರೆಂಬೆ.
ಇದನರಿಯದೆ ಮದ ಮತ್ಸರವ ಬಿಡದೆ,
ಕುದಿದು ಕೋಟಲೆಗೊಂಬ, ಬಿನುಗರನೊಲ್ಲ,
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ ./109
ಗುರುವಿಂದಾದ ಬಯಲು, ಬಯಲಿಂದಾದ ಬ್ರಹ್ಮವೆ ಲಿಂಗ
ಆ ಲಿಂಗದಿಂದೊಗೆದ ಅವಯವಂಗಳೆ ಜಂಗಮ
ಆ ಜಂಗಮದ ಪರಮಾನಂದವೆ ಪಾದೋದಕ .
ಆ ಪಾದೋದಕ ಪರಿಣಾಮದ ಸುಖ ಪರಮ ಪ್ರಸಾದ
ಮತ್ತಾ ಪ್ರಸಾದದ ಪ್ರಚುರವೆ ಪ್ರಣಮಾನಂದ ಪರಂಜ್ಯೋತಿ
ಬಸವಪ್ರಿಯ ಕೂಡಲಸಂಗಮದೇವ ಪ್ರಭುವೆ./110
ಗುರುವಿಂದಾದ ಲಿಂಗ, ಲಿಂಗದಿಂದಾದ ಜಂಗಮ,
ಜಂಗಮದಿಂದಾದುದು ಜಗ.
ಜಗಹಿತಾರ್ಥವಾಗಿ ಪಾದೋದಕ ಪ್ರಸಾದವಾಯಿತ್ತು.
ಪಾದೋದಕ ಪ್ರಸಾದದಿಂದ ಪರವನೆಯ್ದಿದರು
ಜಗದೊಳು ಭಕ್ತಗಣಂಗಳು,
ಬಸವಪ್ರಿಯ ಕೂಡಲಸಂಗಮದೇವ ಪ್ರಭುವೆ./111
ಗುರುವಿನಿಂದಾದ ಪರಂ ಗೂಢಂ ಶರೀರ ಸ್ಥಲಂ.
ಲಿಂಗಕ್ಷೇತ್ರಮನಾದಿಯೆಂಬ
ಪಂಚಸಂಜ್ಞೆಯನುಳ್ಳ ಗುರುವಿನಿಂದಾದ ಕಾರಣ
ಗುರುವಿಂದ ಪರವಿಲ್ಲವೆಂದು ಒರೆವುತ್ತಿವೆ ನೋಡಾ
ವೇದಾಗಮ ಶಾಸ್ತ್ರ ಪುರಾಣಗಳು
ಇದು ಕಾರಣ, ನಿಮ್ಮ ಚರಣದ ಕಿರಣವೆ ಅಖಿಳ ಬ್ರಹ್ಮಾಂಡವೆಂದು
ಆದಿ ಪರಮ ಪ್ರಣಮವೆಂದೊರಲುತ್ತಿವೆ,
ಪರಂಜ್ಯೋತಿ ಬಸವಪ್ರಿಯ ಕೂಡಲಸಂಗಮದೇವ ಪ್ರಭುವೆ./112
ಗುರುಶಿಷ್ಯಸಂಬಂಧವೆಂತಿಪ್ಪುದೆಂದಡೆ, ಹೇಳಿಹೆ ಕೇಳಿರೋ,
ಅರಿಮರುಳುಗಳಿರಾ.
ಕಾಯಗುಣವಳಿದುದೇ ಗುರು, ಜೀವಗುಣವಳಿದುದೇ ಲಿಂಗ,
ಪ್ರಾಣಗುಣವಳಿದುದೇ ಜಂಗಮ.
ಈ ತ್ರಿವಿಧವನರಿದು ಆ ತ್ರಿವಿಧ ನಿಕ್ಷೇಪವನರುಹಿಸಿಕೊಟ್ಟವನೀಗ ಗುರು.
ಅಲ್ಲಿ ಉಪದೇಶವ ಕೊಂಡವನೀಗ ಶಿಷ್ಯ.
ಹೀಗಿರುವುದೀಗ ಗುರುಶಿಷ್ಯಸಂಬಂಧ.
ಅದಕ್ಕೆ ನಮೋ ನಮೋ ಎಂಬೆ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ. /113
ಘನವೆಂದರೆ ತನುವಿನೊಳಗಾಯಿತ್ತು, ತನುವೆಂದರೆ ಮನದೊಳಗಾಯಿತ್ತು.
ಮನವೆಂದರೆ ಮಾಯೆಯೊಳಗಾಯಿತ್ತು.
ಮಾಯೆಯೆಂದರೆ ಭಾವದೊಳಗಾಯಿತ್ತು.
ಭಾವವೆಂದಡೆ ನಿರ್ಭಾವವಾಯಿತ್ತು, ನಿರ್ಭಾವವೆಂದರೆ ಭಕ್ತನಾಯಿತ್ತು.
ಭಕ್ತನೆಂದರೆ ವಿರಕ್ತನಾದ, ವಿರಕ್ತನೆಂದರೆ ಭಕ್ತನಾದ.
ಗುರುವೆಂದರೆ ಶಿಷ್ಯನಾದ, ಶಿಷ್ಯನೆಂದರೆ ಗುರುವಾದ.
ಇಂತಿದೀಗ ಐಕ್ಯಸ್ಥಲವು.
ಇದನರಿಯದೆ ತಮ್ಮ ಪುದಿದ ಸಂಸಾರಕ್ಕೊಳಗಾಗಿ, ತುದಿ ಮೊದಲು ಕಾಣದೆ,
ಸದಮದವಹ ಸಂಸಾರವಿಷಯದೊಳಗೆ ಮುಳುಗಿದವರೆತ್ತ ಬಲ್ಲರೊ,
ನಿಮ್ಮ ಶರಣರ ಸುದ್ಧಿಯ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ? /114
ಚೌದಳ ಷಡುದಳ ದಶದಳ ದ್ವಾದಶದಳ ಷೋಡಶದಳ ದ್ವಿದಳ,
ಒಳಹೊರಗಣ ಸ್ಥಳಕುಳವನರಿದು,
ಬೆಳಗುವ ಬೆಳಗ, ಹೊಳೆವ ಪ್ರಭೆ ಪ್ರಜ್ವಲಿಸಿ ಕಳವಳವಳಿದು,
ಕಾಯದ ಕದಳಿಯ ಗೆಲಿದು, ಕರಗಿ ಒಂದಾದ ಶರಣನೆ ಹರನು,
ಒಸವಪ್ರಿಯ ಕೂಡಲಸಂಗಮದೇವ ಪ್ರಭುವೆ./115
ಜಂಗಮ ಜಂಗಮವೆಂದು ನುಡಿದು, ಜಗದ ಹಂಗಿಗರಾಗಿ ಇರಲಾಗದು.
ಜಗದ ಕರ್ತನ ಕೈಯಲ್ಲಿ ಹಿಡಿದುಕೊಂಡು ಜಂಗುಳಿಗಳ ಬಾಗಿಲ ಕಾಯಲಾಗದು.
ಜಂಗಮದ ಸುಳುಹು ಎಂತಿರಬೇಕೆಂದರೆ,
ತನ್ನ ನಂಬಿದ ಸಜ್ಜನರ ಸದ್ಭಕ್ತರಲ್ಲಿಗೆ ಲಿಂಗವಾಗಿ ಗಮಿಸಿ,
ತಾ ಕಂಡ ಲಿಂಗಾಂಗವನು ಅಲ್ಲಿಯೇ ನಿಕ್ಷೇಪಿಸಿ,
ತಾ ನಿರ್ಗಮನಿಯಾಗಿ ಸುಳಿಯಬಲ್ಲರೆ, ಜಂಗಮಲಿಂಗವದು
ಇಂತಲ್ಲದೆ ಕಂಡವರ ಕಾಡಿ ಬೇಡಿಕೊಟ್ಟರೆ ಕೊಂಡಾಡಿ, ಕೊಡದಿದ್ದಡೆ ಜರಿದು,
ತಾಗು ನಿರೋಧಕ್ಕೆ ಗುರಿಯಾಗಿ ನೋವುತ್ತ, ಬೇವುತ್ತ ಧಾವತಿಗೊಂಬ ಗಾವಿಲರ
ಎಂತು ಜಂಗಮವೆಂಬೆ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ?/116
ಜಂಗಮಲಿಂಗ ಎಂತಿಹನು ಎಂದರೆ,
ಅಂತರಂಗದಲ್ಲಿ ಅರಿವು, ಬಹಿರಂಗದಲ್ಲಿ ಶಮೆ, ದಮೆ,
ಸರ್ವಶಾಂತಿ ಎಡೆಗೊಂಡು,
ತನ್ನ ನಂಬಿದ ಸಜ್ಜನಸದ್ಭಕ್ತರಿಗೆ,
ಭಾವಕ್ಕೆ ಜಂಗಮವಾಗಿ, ಪ್ರಾಣಕ್ಕೆ ಲಿಂಗವಾಗಿ, ಕಾಯಕ್ಕೆ ಗುರುವಾಗಿ,
ಪ್ರಾಣಕ್ಕೆ ಬಂದ ಪದಾರ್ಥವ ಲಿಂಗಾರ್ಪಿತವ ಮಾಡುತ್ತ,
ಬಾರದ ಪದಾರ್ಥವ ಮನದಲ್ಲಿ ನೆನೆಯದೆ,
ಮಾನವರ ಬೇಡದೆ, ಬಡಭಕ್ತರ ಕಾಡದೆ,
ಒಡನೆ ಇಹ ಘನವನರಿದು, ದೃಢಭಕ್ತರೊಳು ಲಿಂಗವಾಗಿ,
ಏನು ನುಡಿದರೂ ನಿಕ್ಷೇಪಿಸಿ, ನಿರ್ಗಮನಿಯಾಗಿ ಸುಳಿಯಬಲ್ಲರೆ,
ಆತ ಲಿಂಗ ಜಂಗಮ.
ಅದಕ್ಕೆ ನಮೋ ನಮೋ ಎಂದು ಭವಂ ನಾಸ್ತಿಯಾಯಿತ್ತು ಕಾಣಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ. /117
ಜಂಗಮಲಿಂಗವೆಂತಾಹನೆಂದರೆ:
ಇಂತೀ ವಿಶ್ವಬ್ರಹ್ಮಾಂಡವು ತನ್ನ ಕುಕ್ಷಿಯೊಳು ನಿಕ್ಷೇಪವಾಗಿ,
ತಾ ನಿರ್ಗಮನಿಯಾಗಿ, ಲಿಂಗರೂಪಾಗಿ ಸುಳಿಯಬಲ್ಲರೆ
ಜಂಗಮಲಿಂಗವೆಂಬೆ. ಅದಕ್ಕೆ ನಮೋ ನಮೋ.
ಆ ನಿಲವಿಂಗೆ ಭವವಿಲ್ಲ, ಬಂಧನವಿಲ್ಲ.
ಇಂತಲ್ಲದೆ ವೇಷವ ಹೊತ್ತು, ಹೊರವೇಷದ ವಿಭೂತಿ ರುದ್ರಾಕ್ಷಿಯಂ ತೊಟ್ಟು,
ಕಾಸು ಹುಲುಸಕ್ಕೆ ಕೈಯಾಂತು, ವೇಶಿ ದಾಸಿಯರ ಬಾಗಿಲ ಕಾಯ್ದು,
ಲೋಕದೊಳಗೆ ಘಾಸಿಯಾಗಿ, ಜಂಗಮವೇಷಕ್ಕೆಲ್ಲ ಭಂಗವ ಹೊರಿಸಿ,
ಕಣ್ಣುಗಾಣದೆ ಜಾರಿ ಜರಿಯಬಿದ್ದು, ತಾ ದೂರಿಗೆ ಬಂದು,
ಈ ಮೂರಕ್ಕೊಳಗಾಗಿ ಗಾರಾಗಿ ಹೋಗುವರ ವೇಷಕ್ಕೆ ಶರಣಾರ್ಥಿ.
ಅವರ ಸುತ್ತಿರ್ದ ಪಾಶವ ಕಂಡು ಹೇಸಿತ್ತೆನ್ನ ಮನ,
ನಿಮ್ಮಾಣೆ ಬಸವಪ್ರಿಯ ಕೂಡಲಸಂಗಮದೇವಾ. /118
ಜಗದಗಲ ಮುಗಿಲಗಲ ಪಾದ ಪಾತಾಳದಿಂದತ್ತತ್ತ ಪಾದ.
ಬ್ರಹ್ಮಾಂಡದಿಂದತ್ತತ್ತ ಮಕುಟ
ವಿಶ್ವ ಬ್ರಹ್ಮಾಂಡವನು, ತನ್ನ ಕುಕ್ಷಿಯೊಳು
ನಿಕ್ಷೇಪವ ಮಾಡಿಕೊಂಡಿಪ್ಪ ದೇವನೀಗ ಎನ್ನದೇವ.
ಆ ದೇವನೊಳಗೆ ನಾನಡಕ, ನನ್ನೊಳಗೆ ಆ ದೇವನಡಕ.
ಇಂತಪ್ಪ ದೇವನ ನಂಬಿ, ನಾ ಕೆಟ್ಟು ಬಟ್ಟಬಯಲಾದೆ.
ಈ ದೇವನರಿಯದೆ ಜಗವೆಲ್ಲ ಕಲ್ಲದೇವರು, ಮಣ್ಣದೇವರು,
ಮರದೇವರು ಎಂದು ಇವನಾರಾಧಿಸಿ, ಕೆಟ್ಟರಲ್ಲಿ.
ಸ್ವರ್ಗ ಮರ್ತ್ಯ ಪಾತಾಳದವರೆಲ್ಲರು
ಎನ್ನ ದೇವನನರದು ಅರ್ಚಿಸಲಿಲ್ಲ, ಪೂಜಿಸಲಿಲ್ಲ, ಭಾವಿಸಲಿಲ್ಲ.
ಇದು ಕಾರಣ, ಆವ ಲೋಕದವರಾದರೂ ಆಗಲಿ,
ಎನ್ನ ದೇವನನರಿದರೆ, ಭವವಿಲ್ಲ ಬಂಧನವಿಲ್ಲ.
ನೆರೆ ನಂಬಿರೆ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನ./119
ಜಗದೊಳಗೆ ಹುಟ್ಟಿ ಜಗದ ಹಂಗಿಗರಾಗಿ,
ನಾವು ಜಂಗಮ, ನಾವು ಭಕ್ತರೆಂಬ ನುಡಿಗೆ ನಾಚರು ನೋಡಾ.
ಅಪ್ಪುವಿನ ಘಟನ ಹೊತ್ತುಕೊಂಡು ಅನ್ನಪಾಂಗಳಿಗೆ ಅನುಸರಿಸಿ ನಡೆವುತ್ತ,
ಹೊನ್ನು, ಹೆಣ್ಣು, ಮಣ್ಣನೀವವರ
ಬಾಗಿಲ ಕಾಯ್ವ ಅಣ್ಣಗಳ ವೇಷಕ್ಕೆ ಶರಣಾರ್ಥಿ.
ಅವರ ಆಶಾಪಾಶವ ಕಂಡು, ಹೇಸಿತ್ತೆನ್ನ ಮನವು. ಅದಂತಿರಲಿ,
ಅದು ಬ್ರಹ್ಮನ ಹುಟ್ಟು, ವಿಷ್ಣುವಿನ ಸ್ಥಿತಿ,
ರುದ್ರನ ಲಯಕ್ಕೊಳಗಾಗಿ ಹೋಯಿತ್ತು ಅಂತಲ್ಲ ಕೇಳಿರಣ್ಣ.
ಜಂಗಮವಾದರೆ ಜಗದೊಳಗೆ ಹುಟ್ಟಿ, ಜಗದ ಹಂಗ ಹರಿದು,
ಹೊನ್ನು, ಹೆಣ್ಣು, ಮಣ್ಣು ಕಣ್ಣಿಲೆ ನೋಡಿ ಕಾಮಿಸದೆ,
ಮನದಲ್ಲಿ ನೆನೆಯದೆ, ಮಾಯವನುಣ್ಣದೆ, ಆಶೆಗೊಳಗಾಗದೆ,
ವೇಷವ ಹೊರದೆ, ದೇಶದ ಮನುಜರ ಸುತ್ತಿದ ಪಾಶಕ್ಕೆ ಹೊರಗಾಗಿ
ಸುಳಿವ ಜಂಗಮದ ಈಶನೆಂದೆ ಕಾಂಬೆ.
ಆ ಜಂಗಮಕ್ಕೆ ಅರ್ಥ, ಪ್ರಾಣ, ಅಭಿಮಾನವನೊಪ್ಪಿಸಿ,
ತಪ್ಪದೆ ಒಡೆಯನೆಂದರಿದು ಮಾಡುವ ಭಕ್ತನ ಎಂತಿಪ್ಪನೆಂದು ಕಾಂಬೆ.
ಇದನೆಂತಾದರೂ ಒಪ್ಪುಗೊಳ್ಳ ಎನ್ನ.
ಬಸವಪ್ರಿಯ ಕೂಡಲಚೆನ್ನಸಂಗನ ಬಸವಣ್ಣನಲ್ಲಿ ಶರಣಗಣಂಗಳು./120
ಜಗದೊಳಗೆ ಹುಟ್ಟಿದವರೆಲ್ಲ ಹಗರಣಿಗರಾಗಿ ಹುಟ್ಟಿದರಲ್ಲದೆ,
ಜಗವ ಗೆಲ್ಲಲರಿಯದೆ, ನಗೆಗೆಡೆಯಾಗಿ ಹೋದರು.
ಎಮ್ಮ ಶರಣರು ಅಂತಲ್ಲ ಕೇಳಿರಣ್ಣಾ.
ಜಗದಲ್ಲಿಯೇ ಹುಟ್ಟಿ, ಜಗದಲ್ಲಿಯೇ ಬೆಳೆದು,
ಜಗದಂತೆ ಇದು, ಈ ಜಗವ ಗೆದ್ದು ಹೋಗುವರು.
ನಿಗಮಶಾಸ್ತ್ರ ಸಾಕ್ಷಿಯಾಗಿ, ಚೆನ್ನಮಲ್ಲೇಶ್ವರ ನಿನಗಾಯಿತ್ತಯ್ಯಾ.
ಅಂತಪ್ಪ ಚೆನ್ನಮಲ್ಲೇಶ್ವರನ ಪಾದವಡಿದು,
ಅವರು ಹೋದ ಹಾದಿಗೊಂಡು ಹೋಗುವನಲ್ಲದೆ,
ಈ ಮೇದಿನಿಯೊಳಗೆ ಕಾಮಕಾಲಾದಿಗಳ ಬಲೆಯೊಳಗೆ
ಸಿಕ್ಕಿಬಿದ್ದು ಹೋದೆನಾದರೆ,
ನಿಮ್ಮ ಪಾದಕ್ಕೆ ಅಂದೇ ದೂರವಯ್ಯಾ.
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./121
ಜಪ ತಪ ನೇಮ ನಿತ್ಯದಿಂದ ನಿಶ್ಚಂತರೂಪನ ಕಂಡೆ, ಏನೆಂಬಿರಿ?
ಆ ಪರಾತ್ಪರದೊಳಗಾಡುವ ಶರಣರ ಪಾದ ನಖದೊಳ್ಬರೆಯೆ
ಬಸವಪ್ರಿಯ ಕೂಡಲಚೆನ್ನಬಸವಣ್ಣ./122
ತನುವ ಕೊಟ್ಟು ಭಕ್ತರಾದೆವೆಂಬರು, ಮನವ ಕೊಟ್ಟು ಭಕ್ತರಾದೆವೆಂಬರು,
ಧನವ ಕೊಟ್ಟು ಭಕ್ತರಾದೆವೆಂಬರು.
ತನು, ಮನ, ಧನವನೆಂತು ಕೊಟ್ಟಿರಿ ಹೇಳಿರಣ್ಣಾ?
ನಿಮ್ಮ ಒಡವೆ ನಿಮ್ಮಲ್ಲಿ ಇದೆ.
ಅದು ಹೇಗೆಂದರೆ, ಬಲ್ಲವರು ನೀವು ಕೇಳಿ,
ತನುವ ನೀವು ಕೊಟ್ಟರೆ ನೀವು ರೂಪಾಗಿ ಇರುವದಕ್ಕೇನು?
ಮನವ ನೀವು ಕೊಟ್ಟರೆ ನೀವು ನಿಮಗೆ ನಡೆನುಡಿ ಚೈತನ್ಯವೇನು?
ಧನವ ನೀವು ಕೊಟ್ಟರೆ ಕ್ಷುತ್ತಿಂಗೆ ಭಿಕ್ಷ, ಸೀತಕ್ಕೆ ರಗಟೆ ಏನು?
ಅಂತಲ್ಲ, ಕೇಳಿರಣ್ಣಾ !
ತನುವ ಕೊಟ್ಟುದಾವುದೆಂದರೆ, ಹುಸಿಮನವ ಕೊಟ್ಟುದಾವುದೆಂದರೆ,
ವ್ಯಾಕುಳವನೆಲ್ಲ ಅಳಿದು ನಿರಾಕುಳವಾಗಿ ನಿಂದ ಮನವೆ ಲಿಂಗವಾಯಿತ್ತು
ಧನವ ಕೊಟ್ಟಿಹೆನೆಂಬುದಾವುದೆಂದರೆ,
ಇಂದಿಗೆ ನಾಳಿಗೆ ಎಂಬ ಸಂದೇಹದ ಭಾವಕ್ಕೆ,
ಭಯಕ್ಕೆ ಭವವಳಿವುದುದೆ ಜಂಗಮವಾಯಿತ್ತು.
ಇಂತಿದೀಗ ನಮ್ಮ ಮುನ್ನಿನ ಆದ್ಯರ ನಡೆನುಡಿ, ಮಾಟಕೂಟ.
ಇದನರಿಯದೆ ಏನೊಂದು ಮಾಡಿದರೂ ನೀಡಿದರೂ
ಕೊಟ್ಟರೂ ಕೊಂಡರೆಯೂ,
ವಾಯಕ್ಕೆ ವಾಯ ಬಸವಪ್ರಿಯ ಕೂಡಲಚೆನ್ನಬಸವಣ್ಣ. /123
ತನುವಿನಿಚ್ಛೆಗೆ ಶೀಲವ ಕಟ್ಟಿಕೊಂಬವರು ಲಕ್ಷೊಪಲಕ್ಷ ಉಂಟು.
ಮನದಿಚ್ಛೆಗೆ ಶೀಲವ ಕಟ್ಟಿಕೊಂಬವರು ಅಪೂರ್ವ ನೋಡಾ.
ತನುಮನವೆರಡು ಏಕವಾಗಿ, ಧನದಾಸೆಯಂ ಬಿಟ್ಟು,
ಮನ ಮಹದಲ್ಲಿ ನಿಂದುದೆ ಶೀಲಸಂಬಂಧ.
ಇನಿತಲ್ಲದ ದುಶ್ಶೀಲರ ಎನಗೊಮ್ಮೆ ತೋರದಿರು,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./124
ತನ್ನ ತಾನರಿದವರು ಎಂತಿಪ್ಪರೆಂದರೆ,
ಕನ್ನಡಿಗೆ ಕನ್ನಡಿಯ ತೋರಿದಂತಿಪ್ಪರು.
ಕಣ್ಣಿಲಿ ನೋಡಿದರೆ ಮನದಲ್ಲಿ ಹಳಚದಂತಿಪ್ಪರು.
ಕುಂದಣದ ಚಿನ್ನವ ಪುಟಕೆ ಹಾಕಿದಂತಿಪ್ಪರು.
ಅದಂತಿರಲಿ, ಮುಂದೆ ಮೀರಿದ ಘನವು ಅಗಮ್ಯವಾಯಿತ್ತು.
ಇದನರಿಯಬಾರದು.
ಇನ್ನು ತನ್ನ ತಾನರಿಯದವರು ಎತ್ತಿಪ್ಪರೆಂದರೆ, ಕೇಳಿ.
ಚಿನ್ನ ಬಣ್ಣವಿಟ್ಟಂತಿಪ್ಪರು ಕಾಣಾ.
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
/125
ತನ್ನ ತಾನರಿಯದೆ ತನ್ನ ತಾ ನೋಡದೆ, ತನ್ನ ತಾ ನುಡಿಯದೆ,
ಅನ್ಯರ ಸುದ್ದಿಯ ನುಡಿದಾಡುವ ಕುನ್ನಿಗಳಿಗೆ
ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪಾದೋದಕವಿಲ್ಲ, ಪ್ರಸಾದವಿಲ್ಲ.
ಅವನು ಸರ್ವಾಪರಾಧಿ, ಅವನ ಮುಖವ ನೋಡಲಾಗದು,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./126
ತನ್ನ ಮನೆಯನರಿಯದೆ ತವರುಮನೆಗೆ ಹಾರುವ ಹೆಣ್ಣಿನಂತೆ,
ಭಿನ್ನವಿಟ್ಟು ನೋಡಿಹೆನೆಂದು, ನಿಮ್ಮನರಿಯದೆ ಕೆಟ್ಟಿತು ಜಗವೆಲ್ಲ.
ಅದಂತಿರಲಿ, ಇನ್ನ ತನ್ನ ತಾನರಿದವಂಗೆ ತನುವೇ ಲಿಂಗ, ಮನವೇ ಪುಷ್ಪ.
ಈ ಅನುವರಿದು, ಘನವ ನೆಮ್ಮಿದ ಶರಣರ ಎನಗೊಮ್ಮೆ ತೋರಯ್ಯಾ,
ನಿಮ್ಮ ಧರ್ಮ ನಿಮ್ಮ ಧರ್ಮ, ಬಸವಪ್ರಿಯ ಕೂಡಲಚೆನ್ನಬಸವಣ್ಣ ./127
ತಲೆ ಇಲ್ಲದ ಮುಂಡ, ಮೊಲೆ ಇಲ್ಲದಾವು.
ಜಲವಿಲ್ಲದ ಕೆರೆ, ನೆಲೆ ಇಲ್ಲದ ನಂಟ, ಕಲಿ ಇಲ್ಲದ ಬಂಟ.
ಇವು ಅಯ್ದರ ಕಲೆಯನರಿಯದೆ ನುಡಿವ ಮನುಜನೆಂತುಂಟು,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ? /128
ತಾನೆನಬೇಡ, ಮನ ಮುಗ್ಧನೆನಬೇಡ,
ಮುನ್ನವರ ಬೇಡ ಬೇಡ, ತನುಜರೊಳ್ನುಡಿಬೇಡ,
ಕಂಡೆವೆಂದು ಉಲಿಯಬೇಡ, ಉಣ್ಣೆವೆಂದು ಸುಮ್ಮನಿರಬೇಡ,
ಬಂಡುಮಾಡಿಕೊಳಬೇಡ, ಚಂಡವಿಕ್ರಮ
ಬಸವಪ್ರಿಯ ಕೂಡಲಚೆನ್ನಬಸವಣ್ಣ./129
ತೀರ್ಥ ಯಾತ್ರೆ ಲಿಂಗದರುಶನಕ್ಕೆ ಹೋಗಿ,
ಕರ್ಮವ ಹಿಂಗಿಸಿಕೊಂಡೆನೆಂಬ ಭಂಗಿತರ ಮಾತ ಕೇಳಲಾಗದು.
ಅದೇನು ಕಾರಣವೆಂದರೆ,
ತೀರ್ಥವಾವುದು, ಯಾತ್ರೆ ಯಾವುದು, ಲಿಂಗವಾವುದು, ಬಲ್ಲರೆ ನೀವು ಹೇಳಿರೆ.
ಮಹಾಘನ ಗುರುಪಾದತೀರ್ಥದಿಂದ ವೆಗ್ಗಳ ತೀರ್ಥ ಉಂಟೆ ?
ಜಗತ್ಪಾವನ ಜಂಗಮ ದರುಶನದಿಂದ ಬೇರೆ ಯಾತ್ರೆ ಉಂಟೆ?
ಇಂಗಿತವನರಿದ ಬಳಿಕ ತನ್ನ ಅಂಗದ ಮೇಲಿರ್ಪ ಲಿಂಗವಲ್ಲದೆ
ಬೇರೆ ಲಿಂಗ ಉಂಟೆ ?
ಇದನರಿಯದೆ ಇನ್ನು ತೀರ್ಥಯಾತ್ರೆ ಲಿಂಗ ದರುಶನ ಉಂಟೆಂಬ
ಅಂಗಹೀನರ ಮುಖವ ನೋಡಲಾಗದು,
ಬಸವಪ್ರಿಯ ಕೂಡಲಚೆನ್ನಬಸವಣ್ಣ./130
ದಾಸಿಯ ಸಂಗ ಎರಡನೆಯ ಪಾತಕ, ವೇಶಿಯ ಸಂಗ ಮೂರನೆಯ ಪಾತಕ.
ಮೀಸಲಳಿದ ಪರಸ್ತ್ರೀಯರ ಸಂಗ ಪಂಚಮಹಾಪಾತಕ.
ಇನಿಸು ಶಿವಭಕ್ತರಿಗೆ ಸಲ್ಲವು.
ಇವನರಿದರಿದು ಮಾಡಿದನಾದರೆ, ಯಮಪಟ್ಟಣವೆ ವಾಸವಾಗಿಪ್ಪರಲ್ಲದೆ,
ಈ ದೇಶಕ್ಕೆ ಮರಳಿ ಬರಲಿಲ್ಲ ನೋಡಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣ. /131
ದಿನದಿನಕ್ಕೆ ದೀನಮಾನವನಂತೆ, ಹೀನಾಶ್ರಯದಲ್ಲಿ ಹುಟ್ಟಿ,
ಏನನೂ ಅರಿಯದೆ, ಜ್ಞಾನವು ಇಲ್ಲದೆ, ನಾನು ನೀನೆಂಬ ಉಭಯವು ಅಳಿಯದೆ,
ನಾನು ಭಕ್ತ, ನಾನು ಜಂಗಮವೆಂಬವರ ನೋಡಿ, ನಾಚಿತ್ತೆನ್ನ ಮನ್ನವು.
ಅಂಗಕ್ಕೆ ಆಚಾರವಿಲ್ಲ, ಮನಸಿಂಗೆ ಅರುಹಿಲ್ಲ, ಪ್ರಾಣಕ್ಕೆ ಗೊತ್ತು ಇಲ್ಲ.
ಭಾವಕ್ಕೆ ಹೇಯವಿಲ್ಲದೆ ಇನ್ನಾವ ಬಗೆಯಲ್ಲಿ ಭಕ್ತ ಜಂಗಮವಾದಿರೆ ಹೇಳಿರಣ್ಣ ?
ಭಕ್ತನಾದರೆ ಎಂತಿರಬೇಕೆಂದರೆ,
ಮಾಡಿಹನೆಂಬುದು ಮನದೊಳಗೆ ಹೊಳೆಯದೆ, ನೀಡಿಹೆನೆಂಬ ಅರಿಕೆ ಇಲ್ಲದೆ,
ಬೇಡುವುದಕ್ಕೆ ಮುನ್ನವೆ ಆ ಜಂಗಮದ ನಿಲುಕಡೆಯನರಿದು ಮಾಡಬಲ್ಲರೆ ಭಕ್ತ.
ಮಾಡಿದ ಭಕ್ತಿಯ ಕೈಕೊಂಡು,
ಆ ಭಕ್ತನ ಕರಸ್ಥಲಕ್ಕೆ ಲಿಂಗವಾಗಿ, ಮನಸ್ಥಲಕ್ಕೆ ಅರಿವಾಗಿ,
ಭಾವಸ್ಥಲಕ್ಕೆ ಜಂಗಮವಾಗಿ ಅಡಗಿದಡೆ,
ಐಕ್ಯನೆಂಬೆ, ಜಂಗಮವೆಂಬೆ, ಲಿಂಗವೆಂಬೆ, ಗುರುವೆಂಬೆ.
ಆ ಭಕ್ತ ಜಂಗಮ ಎರಡಕ್ಕೂ ಫಲಂ ನಾಸ್ತಿ, ಪದಂ ನಾಸ್ತಿ, ಭವಂ ನಾಸ್ತಿ.
ಆ ನಿಲುವಿಂಗೆ ನಮೋ ನಮೋ ಎಂದು ಬದುಕಿದೆ,
ನೀವು ಸಾಕ್ಷಿಯಾಗಿ, ಬಸವಪ್ರಿಯ ಕೂಡಲಚೆನ್ನ ಬಸವಣ್ಣ ./132
ದಿವ್ಯಾನಂದ ಗುರುವೆ, ದೇದೀಪ್ಯಮಯ ಗುರುವೆ,
ಆನಂದ ಪ್ರಸಾದಮಯ ಗುರುವೆ, ದೀಕ್ಷಾನಂದ ಗುರುವೆ,
ಶಿಕ್ಷಾ ಸಾಮಥ್ರ್ಯ ಗುರುವೆ, ಮೋಕ್ಷಸಾಧನ ಗುರುವೆ,
ಈಕ್ಷಿಸಿದಕ್ಷಿಯಲ್ಲಿ ನಿಕ್ಷೇಪಿಸಿದ ಗುರುವೆ, ಅವಧಾನಿ ಗುರುವೆ.
ಆನಂದ ಪ್ರಸಾದಮಯ ಗುರವೆ, ಪರಂಜ್ಯೋತಿ
ಬಸವಪ್ರಿಯ ಕೂಡಲಸಂಗಮದೇವ ಪ್ರಭುವೆ./133
ದೀಕ್ಷಾಗುರು, ಶಿಕ್ಷಾಗುರು, ಮೋಕ್ಷಗುರುವೆಂದು
ಹೆಸರಿಟ್ಟುಕೊಂಡು ನುಡಿವಿರಿ.
ದೀಕ್ಷಾಗುರುವಾದಡೆ, ಮಲತ್ರಯಂಗಳ ತಾ ಮುಟ್ಟದೆ,
ಆ ಶಿಷ್ಯನ ತಟ್ಟಲೀಯದೆ, ಅಂಗಕ್ಕೆ ಆಚಾರವನಳವಡಿಸಿಕೊಟ್ಟು,
ಪ್ರಾಣಕ್ಕೆ ಅರಿವ ತೋರಿ ಪ್ರಸಾದಕಾಯವ ಮಾಡಿದರೆ,
ಆತನೇ ದೀಕ್ಷಾಗುರುವೆಂಬೆ.
ಶಿಕ್ಷಾಗುರುವಾದಾತ ಶೂರಧೀರನಾಗಿ ಪಟುಭಟನಾಗಿ,
ಪರಸಮಯಕ್ಕೆ ಪರಂಜ್ಯೋತಿಯಂತಾಗಿ, ಅರಗಳಿಗೆ ಆರ್ಭಟಿಸುವ ಸಿಂಹದಂತಾಗಿ,
ತನ್ನ ಸ್ವಯಂಮಕ್ಕೆ ಸ್ವಯಂಜ್ಯೋತಿಯಂತೆ ಇರಬಲ್ಲರೆ, ಶಿಕ್ಷಾಗುರುವೆಂಬೆ.
ಮೋಕ್ಷಗುರುವೆಂತಿರಬೆಕೆಂದಡೆ,
ತನ್ನ ನಂಬಿದ ಸಜ್ಜನ ಭಕ್ತರ, ವಿರಕ್ತರ ತನ್ನಂತೆ ಮಾಡಿಕೊಂಬುದು.
ಅವರ ತನುತ್ರಯ, ಮನತ್ರಯ, ಧನತ್ರಯದ ನೆಲೆಯನರುಹಿ,
ಇಂತೀ ತ್ರಿವಿಧವನು ತ್ರಿವಿಧಕ್ಕೆ ಮುಖವ ಮಾಡಿ,
ತ್ರಿವಿಧದಲ್ಲಿ ತಾನಡಗಿ, ತನ್ನೊಳಗವರಡಗಿದಡೆ ಮೋಕ್ಷಾಗುರುವೆಂಬೆ.
ಇಂತಾದರೆ ತ್ರಿವಿಧವು ಒಂದಂಗ. ಇಂತೀ ಸ್ಥಲದ ನಿರ್ಣಯವನರಿಯದಿದ್ದರೆ,
ಆ ಮೂವರನು ಮುಂದುಗೆಡಿಸಿ ಮೂಗ ಕೊಯ್ದು,
ಇಟ್ಟಿಗಿಯಲದ್ದಿ, ದರ್ಪಣವ ತೋರಿ,
ಆವರ ದರ್ಪವ ಕೆಡಿಸುವನಲ್ಲದೆ ಅವರ ಮೆರೆವನಲ್ಲ,
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ ./134
ಧರೆಯ ಹೊತ್ತಿರ್ಪ ಸರ್ಪ ಹೆರಿಯಿತ್ತಾಕಾಶಕ್ಕೆ.
ನೆರೆದ ಜನವೆಲ್ಲಾ ಹೆದರಿ ನೆರೆಯಿತ್ತು ನೀರಲ್ಲಿ.
ಧರೆ ಜಲ ಅಗ್ನಿಯೊಳು ಬೆರೆದು ಬೆಂದು ಉರಿದವು.
ಹರನ ಮಂಥಣಿಯ ಶೂಲವನೇರಿ, ಸರ್ಪನನಡಗಿಸಿ,
ಉರಿಯ ಉಗುಳಿದರೆ, ಧರೆಯನುಗುಳಿಸಿತ್ತು,
ಬಸವಪ್ರಿಯ ಕೂಡಲಸಂಗಮದೇವ ಪ್ರಭುವೆ./135
ಧರೆಯೊಳಗೆ ಹುಟ್ಟಿದವರೆಲ್ಲ ಬಲ್ಲೆನೆಂದು
ಬಲ್ಲತನಕ್ಕೆ ಗೆಲ್ಲಸೋಲಕ್ಕೆ ಹೋರಿ, ಸಲ್ಲದೆ ಹೋದರು ನಮ್ಮ ಶರಣರಿಗೆ.
ಅದೇನು ಕಾರಣವೆಂದರೆ,
ಇವರೆಲ್ಲ ಪುರಾಣದ ಪುಂಡರು, ಶಾಸ್ತ್ರದ ಸಟೆಯರು,
ಆಗಮದ ತರ್ಕಿಗಳು, ವೇದದ ಹಾದರಿಗರು,
ಬೀದಿಯ ಪಸರದ, ಸಂತೆಯ ಸುದ್ದಿಯ ಗೊತ್ತಿಗರು.
ಇಂತಿವರಾರೂ ಲಿಂಗದ ನೆಲೆಯನರಿಯರು.
ಹಿಂದೆ ಹೋದ ಯುಗಂಗಳಲ್ಲಿ ಹರಿಬ್ರಹ್ಮರು ವಾದಿಸಿ,
ನಮ್ಮ ದೇವನ ಕಾಣದೆ ಹೋದರು. ಇದಕ್ಕೆ ಶ್ರುತಿ ಸಾರುತ್ತಿದೆ.
ದೇವ ದಾನವ ಮಾನವರು ಕಾಲ ಕಾಮಾದಿಗಳ ಆರಾಧಿಸಿ,
ನಮ್ಮ ದೇವರ ಕಾಣದೆ ಹೋದರು.
ನಿಮ್ಮ ಪಾಡೇನು ? ಅರಿಮರುಳುಗಳಿರಾ ?
ನಮ್ಮ ದೇವನ ಕಂಡೆನೆಂದರೆ ನೋಟಕಿಲ್ಲ, ನೆನಹಿಗಿಲ್ಲ.
ತನುವಿಗಿಲ್ಲ, ಸಾಧಕರಿಗಿಲ್ಲ, ಭಾವನೆಗಿಲ್ಲ.
ಇಂತಪ್ಪ ದೇವನ ಒಡಲ ಹಿಡಿವರ ಕಂಡೆನೆಂದರೆ ಆಗದು.
ಇದರ ಬಿಡುಮುಡಿಯನರಿದು ಅಂಗೈಸುವ ಶರಣರ ಸಂಗದೊಳಗೆ
ಎನ್ನ ಕಂಗಳು ಲಿಂಗವಾಗಿ, ಕರವೆ ಜಂಗಮವಾಗಿ,
ಇಹಪರದೊಳಗೆ ಪರಿಪೂರ್ಣವಾದೆನಯ್ಯಾ.
ನಿಮ್ಮ ಧರ್ಮ ನಿಮ್ಮ ಧರ್ಮ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ./136
ಧ್ಯಾನದಲ್ಲಿ ಕುಳ್ಳಿರ್ದು, ಜ್ಞಾನದಲ್ಲಿ ನೋಡಿ,
ಮೌನ ಮುಗ್ಧವ ಮಾಡಿ, ಸ್ವಾನುಭಾವದಿಂದರಿದು,
ಮತ್ತೇನೇನು ಹೊದ್ದಲೀಯದೆ, ತಾನು ತಾನಾಗಿ, ಜ್ಞಾನಕ್ಕತೀತನಾಗಿ,
ಧ್ಯಾನ ಧಾರಣ ಸಮಾಧಿಯ ಮೆಟ್ಟಿ ನಿಂದ ನಿಜಲಿಂಗೈಕ್ಯಂಗೆ
ನಮೋ ನಮೋ ಎಂಬೆ.
ಇಂದೆನ್ನ ಭವ ನಷ್ಟವಾಗಿ ಹೋದವು ಕಾಣಾ,
ಬಸವಪ್ರಿಯ ಕೂಡಲಚೆನ್ನ ಬಸವಣ್ಣಾ./137
ನಂಬುವುದು, ಶರಣರನೆ ನಂಬುವುದು.
ಕೊಂಬುವುದು, ಶರಣರ ಪ್ರಸಾದವನೆ ಕೊಂಬುವುದು.
ಕೊಡುವುದು, ಶರಣರಿಗೆ ಕೊಡುವುದು.
ಉಡುವುದು, ಶರಣರುಟ್ಟ ಮೈಲಿಗೆಯನೆ ಉಡುವುದು.
ಇಂತಪ್ಪ ಶರಣರ ಬರವೆ, ಎನ್ನ ಪ್ರಾಣದ ಬರವು.
ಅವರ ಹೊಕ್ಕೆ ಎನ್ನ ಪ್ರಾಣದ ಹೊಕ್ಕು.
ಇಂತಪ್ಪ ಶರಣರ ಸಂಗವ ಮಾಡಿದ ಕಾರಣ, ಏಕವಾಗಿ ಹೋದೆ ಅವರ ಪಾದದಲ್ಲಿ.
ಇನ್ನು ಬೇಕು ಬೇಡೆಂಬ ಸಂದೇಹ ಹುಟ್ಟಿದರೆ,
ಇಹಲೋಕಕ್ಕೂ ಅಲ್ಲ, ಪರಲೋಕಕ್ಕೂ ಅಲ್ಲ.
ಇದಕ್ಕೆ ನೀವೇ ಸಾಕ್ಷಿ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ/138
ನಮ್ಮಂತುವ ತಿಳಿದು, ನೋಡಿದರೆ ಹೇಳಿಹೆನು.
ಅದೆಂತೆಂದರೆ, ಮೇಲು ಕೀಳಾಯಿತ್ತು, ಕೀಳು ಮೇಲಾಯಿತ್ತು.
ನಿರಾಳ ಆಳವಾಯಿತ್ತು, ಆಳ ನಿರಾಳವಾಯಿತ್ತು.
ಉತ್ತರ ಪೂರ್ವವಾಯಿತ್ತು, ಪೂರ್ವ ಉತ್ತರವಾಯಿತ್ತು,
ಗುರುವು ಶಿಷ್ಯನಾಯಿತ್ತು, ಶಿಷ್ಯ ಗುರುವಾಯಿತ್ತು.
ಅರ್ಪಿತ ಅನರ್ಪಿತವಾಯಿತ್ತು, ಅನರ್ಪಿತ ಅರ್ಪಿತವಾಯಿತ್ತು,
ಇಂತಪ್ಪ ಘನವ ವೇಧಿಸಿ ನುಡಿಯಬಲ್ಲರೆ,
ಆತನೆ ಭಕ್ತ, ಮಹೇಶ್ವರ, ಪ್ರಸಾದಿ, ಪ್ರಾಣ.
ನಡೆದುದೆ ಬಟ್ಟೆ, ನುಡಿದುದೆ ತತ್ವ.
ಇಂತಪ್ಪ ಸರ್ವಾಂಗ ಪ್ರಸಾದಿಯ ಪ್ರಸಾದವ ಕೊಂಡು,
ಸರ್ವಾಂಗ ಶುದ್ಧವಾಯಿತ್ತು.
ನಾ ನಿಮ್ಮ ಪಾದದೊಳು ನಿರ್ಮುಕ್ತನಾಗಿ ಏನೂ ಇಲ್ಲದಂತಾದೆನಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ ./139
ನಾನೊಂದು ಸುಖವ ಕಂಡು, ಸುಯಿಧಾನಿಯಾಗಿ ನಿಂದೆ.
ಸುಖವೆನಗೆ ಸುಖವಾಸನೆಯಾಗಿ ವೇಧಿಸಿತ್ತು.
ಆ ವೇಧಿಸಿದ ಸುಖವ ನೋಡಲಾಗಿ, ಅದು ತಾನೆ ಬ್ರಹ್ಮನಾಗಿ ನಿಂದಿತ್ತು.
ಆ ಬ್ರಹ್ಮದ ನೆಲೆಯನರಿದವರಿಗೆ ಹಮ್ಮಬಿಮ್ಮು ಮನ ನಾಸ್ತಿ.
ಅವರು ಸುಮ್ಮಾನದ ಸುಖಿಗಳು.
ಒಮ್ಮನವಾಗಿ ನಿಮ್ಮನೆ ನೋಡಿ, ನಿಮ್ಮನೆ ಕೂಡಿದರಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ . /140
ನಾವು ಜಂಗಮವೆಂಬರು, ತಾವು ಭಕ್ತರೆಂಬರು.
ಭಕ್ತ, ಜಂಗಮದ ನಿಲುಕಡೆ ಎಂತಿರಬೇಕೆಂದರೆ,
ಮೂರುವಿಡಿದು ಮೂರನರಿದಡೆ ಭಕ್ತನೆಂಬೆ.
ಮೂರ ಬಿಟ್ಟರೆ, ಮೂರ ಕಂಡರೆ, ಜಂಗಮವೆಂಬೆ.
ಈ ಉಭಯವು ಒಂದಾದ ಭೇದವೆಂತೆಂದರೆ,
ಭಕ್ತನ ನಡೆನುಡಿಯಲ್ಲಿ ಕವಲುದೋರುತಿರ್ದಡೆ,
ಹೀಗಲ್ಲವೆಂದು ಆ ಸ್ಥಲಕ್ಕೆ ತಕ್ಕ ಹಾಗೆ ನಿಲುಕಡೆಯ ತೋರಿ ಕೊಟ್ಟು,
ಆತನಲ್ಲಿದ್ದ ಕರ್ಮವು ತನ್ನ ಮುಟ್ಟದಂತೆ, ಅವನ ತಟ್ಟದಂತೆ,
ಈ ಉಭಯಕ್ಕೊಡೆಯನಾಗಿ ನಿಂದರೆ, ಜಂಗಮಲಿಂಗವೆಂಬೆ.
ಇಂತಾದರೆ ಆ ಭಕ್ತ ಜಂಗಮಕ್ಕೆ ನಮೋ ನಮೋ ಎಂಬೆ.
ಇಂತಲ್ಲದೆ ಇದ್ದವರ ಎನ್ನತ್ತ ತೋರದಿರಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ . /141
ನಾವು ಭಕ್ತ, ಮಹೇಶ್ವರ, ಪ್ರಸಾದಿ,
ಪ್ರಾಣಲಿಂಗಿ, ಶರಣ, ಐಕ್ಯರೆಂದು ನುಡಿವಿರಿ.
ಭಕ್ತಸ್ಥಲ ಒತ್ತಿ ಹೇಳಿದರೆ, ಚಿತ್ತದಲ್ಲಿ ಕರಗುವಿರಿ, ಕೊರಗುವಿರಿ.
ಮತ್ತೆ ನಮಗೆ ಮುಕ್ತಿಯಾಗಬೇಕೆಂದು ಚಿಂತೆಯ ಮಾಡುವಿರಿ.
ಇಂತೀ ಉಭಯದಿಂದ ಸತ್ಯವಾವುದು, ನಿತ್ಯವಾವುದು
ಎಂದರಿಯದೆ, ಕೆಟ್ಟರಲ್ಲ ಜಗವೆಲ್ಲ.
ಜಗದ ವ್ಯಾಕುಳವಳಿದುದೇ ಸತ್ಯ ನಿರಾಕುಳದಲ್ಲಿ ನಿಂದುದೇ ನಿತ್ಯ.
ಈ ಉಭಯದ ಗೊತ್ತನರಿದರೆ ಅದೇ ಐಕ್ಯ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ . /142
ನಿತ್ಯ ಅನಿತ್ಯವೆಂಬುದ ತೋರಿದಿರಿ, ಸತ್ಯ ಅಸತ್ಯವೆಂಬುದ ತೋರಿದಿರಿ.
ಆಚಾರ ವಿಚಾರವೆಂಬುದ ತೋರಿದಿರಿ.
ಅಯ್ಯಾ ಸೋಹಂ ದಾಸೋಹಂ ಎಂಬುದ ತೋರಿದಿರಿ.
ಇದು ಎಂಬುದ ತೋರಿದಿರಿ. ಅಯ್ಯಾ ಮುಕ್ತಿ ಎಂಬುದ ತೋರಿದಿರಿ.
ಅಂಗ ಲಿಂಗವೆಂಬುದ ತೋರಿದಿರಿ, ಪ್ರಾಣವೇ ಜಂಗಮವೆಂಬುದ ತೋರಿದಿರಿ.
ಪ್ರಸಾದವೇ ಪರವೆಂದು ತೋರಿದಿರಿ.
ಇಂತಿವರ ಭೇದಾದಿ ಭೇದವನೆಲ್ಲ ತೋರಿದಿರಿ. ನಿಮ್ಮ ಹಾದಿಯ ಹತ್ತಿಸಿದಿರಿ.
ಮೂದೇವರೊಡೆಯ ಚೆನ್ನಮಲ್ಲೇಶ್ವರಾ, ನಿಮ್ಮ ಹಾದಿಗೊಂಡು ಹೋಗುತ್ತಿರ್ದು,
ನಾನೆತ್ತ ಹೋದೆನೆಂದರಿಯನಯ್ಯಾ.
ಬಸವಪ್ರಿಯ ಕೂಡಲಚೆನ್ನ ಬಸವಣ್ಣಾ ,
ನಾ ಹೋದ ಹಾದಿಯ ನೀವೆ ಬಲ್ಲಿರಿ./143
ನಿಶ್ಚಿಂತ ನಿರಾಕಾರ ಪರಂಜ್ಯೋತಿ ಪರಮಪ್ರಕಾಶ
ಆನಂದ ಸ್ವರೂಪನೆ ಜಂಗಮಲಿಂಗ.
ಚೈತ್ಯರೂಪವೆ ಲಿಂಗಜಂಗಮ, ಸತ್ವರೂಪವೆ ಗುರುಲಿಂಗ.
ಸತ್ತು ಚಿತ್ತಾನಂದವೆ ಸದ್ಭಕ್ತನಲ್ಲಿ ಉದಯ
ಇಂತಿವರ ನೆಲೆಯ
ವೇದಾಗಮ ಶಾಸ್ತ್ರ ಪುರಾಣಗಳು ಕಾಯದೆ
ವಾಗತೀತಃ ಮನೋತೀತಃ ಭಾವಾತೀತಃ ಪರಃ ಶಿವಃ
ಸರ್ವಶೂನ್ಯ ನಿರಾಕಾರಂ ನಿತ್ಯತ್ವಂ ಪರಮಂ ಪದಂ ||
ಎಂದುದಾಗಿ, ಇಂತಪ್ಪ ಶ್ರುತಿ ಒಳ ಹೊರಗಿಪ್ಪ
ಜಂಗಮಲಿಂಗವೆ ಜಗತ್ಪಾವನ ಜಂತು
ಜಯ ಶರಣಾಗು.
ಬಸವಪ್ರಿಯ ಕೂಡಲಸಂಗಮದೇವಾ
ಮಾಂ ತ್ರಾಹಿ ತ್ರಾಹಿ ಕರುಣಾಕರನೆ./144
ನಿಷ್ಠೆಯ ಮರೆದರೇನಯ್ಯಾ ?
ಲೋಕದ ಮನುಜರ ದೃಷ್ಟಿಗೆ ಸಿಲ್ಕಿ ಭ್ರಷ್ಟೆದ್ದುಹೋದರು.
ತನು ಕಷ್ಟಮಾಡಿದರೇನಯ್ಯಾ ಮನ ನಿಷ್ಠವಾಗದನ್ನಕ್ಕ ?
ತನು ಮನವೆರಡು ನಷ್ಟವಾಗಿ, ಘನವ ನೆಮ್ಮಿ,
ನಿಮ್ಮ ನೆನಹು ನಿಷ್ಪತ್ತಿಯಾದ ಶರಣರ
ಎನಗೊಮ್ಮೆ ತೋರಯ್ಯ, ನಿಮ್ಮ ಧರ್ಮ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./145
ನೀವು ಹೊತ್ತಿಪ್ಪ ವೇಷದಲ್ಲಿ ತತ್ವವ ತಿಳಿದು ನೋಡಿರಣ್ಣಾ.
ಜ್ಞಾನ ಬಿತ್ತಿಗಿಯ ಮೇಲೆ ನಿಂದು ಅಂಗದ ನಿಚ್ಚಣಿಕೆಯನಿಕ್ಕಿ,
ಒತ್ತಿನಿಂದರೆ ಉತ್ತರಜ್ಞಾನವೆಂಬುದು ನಿಮ್ಮ ಒತ್ತಿನಲ್ಲಿಪ್ಪುದು,
ಇದ ನೋಡಿದರೆ ನಿಶ್ಚಯ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ./146
ನುಡಿದ ನುಡಿಗೆ ನಡೆ ಇಲ್ಲದಿದ್ದರೆ,
ಮೃಡನ ಶರಣರು ಕಡೆನುಡಿದಲ್ಲದೆ ಮಾಣರು.
ಎಮ್ಮ ಶರಣರು ಮತ್ತೆ ಹೊಡೆಗೆಡೆದು ಎನ್ನ ನುಡಿದು, ಹೊಡೆದು, ರಕ್ಷಿಸಿದಿರಲ್ಲ.
ಎನ್ನ ಒಡೆಯರು ನೀವಹುದೆಂದು ಬಿಡದೆ ಅವರ ಬೇಡಿಕೊಂಬೆ.
ಇದೀಗ ನಮ್ಮ ಶರಣರ ನಡೆನುಡಿ. ಅದಂತಿರಲಿ. ಅದಕೆ ನಮೋ ನಮೋ ಎಂಬೆ.
ಈ ಪೊಡವಿಯೊಳು ಹುಟ್ಟಿದ ಮನುಜರೆಲ್ಲರು ಒಡೆಯರೆಂದು
ಪೂಜೆಯಮಾಡಿ,ತುಡುಗುಣಿನಾಯಿಯಂತೆ ಒಕ್ಕುದ ಮಿಕ್ಕುದ ನೆಕ್ಕಿ,
ತಮ್ಮ ಇಚ್ಛೆಗೆ ನುಡಿದರೆ ಒಳ್ಳಿದನೆಂಬರು.
ಸತ್ಯವ ನುಡಿದರೆ ಸಾಯಲವನೆಲ್ಲಿಯ ಶರಣ ? ಇವನೆಲ್ಲಿಯ ಜಂಗಮ?
ಇವರ ಕೂಡಿದ ಮನೆ ಹಾಳೆಂದು,
ಕಂಡ ಕಂಡವರ ಕೂಡ ಹೇಳಿಯಾಡುವ, ಈ ಕಾಳುಮನುಜರನು
ಲಿಂಗ ಜಂಗಮವೆಂದು ನುಡಿದು ಕೂಡಿಕೊಂಡು ಹೋದರೆ,
ತನ್ನ ತನ್ನ ಪದಾರ್ಥವ ಹಿಡಿದರೆ,
ಒಡೆಯನೆ ಬದುಕಿದೆ, ತ್ರಾಹಿ ಎಂಬ ಮೃಡಶರಣನು
ಈ ಅಡ[ಗು] ಕಚ್ಚಿಕೊಂಡಿರುವ, ಹಡಿಕಿಮನುಜರನು ಸರಿಗಂಡಡೆ,
ನಾಯಕ ನರಕದಲ್ಲಿಕ್ಕುವ,
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಾ./147
ನುಡಿದರೆ ಗುರುವಾಗಿ ನುಡಿಯಬೇಕು, ನಡೆದರೆ ಪರವಾಗಿ ನಡೆಯಬೇಕು.
ಕುಳಿತರೆ ಲಿಂಗವಾಗಿ ಕುಳಿತಿರಬೇಕು, ಇದ್ದರೆ ಜಂಗಮವಾಗಿ ಇರಬೇಕು.
ಈ ನಾಲ್ಕರ ಹೊಂದಿಗೆಯನರಿಯದವರು
ಎಷ್ಟು ದಿನವಿದ್ದರೂ ಫಲವೇನು ಹೇಳಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ ?
/148
ನುಡಿದರೇನಯ್ಯ ನಡೆ ಇಲ್ಲದನ್ನಕ್ಕ ?
ನಡೆದರೇನಯ್ಯ ನುಡಿ ಇಲ್ಲದನ್ನಕ್ಕ ?
ಈ ನಡೆನುಡಿಯರಿದು ಏಕವಾಗಿ,
ತಾವು ಮೃಡಸ್ವರೂಪರಾದ ಶರಣರಡಿಗೆರಗಿ ನಾನು ಬದುಕಿದೆನಯ್ಯಾ
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
/149
ಪರಾಪರದಲ್ಲಿ ಹುಟ್ಟಿದ ಪಾದೋದಕ.
ಪರಬ್ರಹ್ಮದ ಪರಮಪ್ರಕಾಶವೆ ಪಾದೋದಕ.
ಪರಿಪೂರ್ಣವ ಪ್ರವೇಶಿಸಿಕೊಂಡಿರ್ಪುದೆ ಪಾದೋದಕ.
ಪರಮನಂಘ್ರಿಕಮಲದಲ್ಲಿ ಹುಟ್ಟಿದುದೆ ಪಾದೋದಕ.
ತರತರದ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ
ಶರಣ ಐಕ್ಯದೊಳಡಗಿದ ಪಾದೋದಕ. ಅದಕ್ಕೆ ದೃಷ್ಟ :
ಪಾಕಾರಂ ಪರಮಜ್ಞಾನಂ ದೋಕಾರಂ ದೋಷನಾಶನಂ |
ದಕಾರಂ ದಹತೇ ಜನ್ಮ ಕಕಾರಂ ಕರ್ಮಛೇದನಂ ||
ಎಂದುದಾಗಿ, ಇಂತಪ್ಪ ಪಾದೋದಕವ ಕೊಂಡು,
ಪರಿಣಾಮ ತೃಪ್ತಿಯನೆಯ್ದುವ ಸದ್ಭಕ್ತಂಗೆ ನಮೋ ನಮೋ ಎಂಬೆ.
ಬಸವಪ್ರಿಯ ಕೂಡಲಸಂಗಮದೇವಾ,
ಮಾಂ ತ್ರಾಹಿ, ತ್ರಾಹಿ ಕರುಣಾಕರನೆ./150
ಪಿಂಡವಾದುದ ಪಿಂಡಜ್ಞಾನ ಹುಟ್ಟಿ ಅರಿದನಯ್ಯಾ ಶರಣನು.
ಅದೆಂತೆಂದಡೆ:ಆತ್ಮರುಗಳಲ್ಲಿ ಪರಮಾತ್ಮನ ಕಳೆ ವೇದ್ಯವಾಗಿರೆ,
ತನುವ ರುಧಿರವ ಕೂಡಿಕೊಂಡು ಅಷ್ಟತನುಮೂರ್ತಿಯೆನಿಸಿಕೊಂಡು,
ಸಪ್ತಧಾತು ಬೆರೆಸಿಕೊಂಡು, ಷಡುವರ್ಣವ ಕೂಡಿಕೊಂಡು,
ಪಂಚತತ್ವವ ಪ್ರವೇಶಿಸಿಕೊಂಡು,
ಚತುಷ್ಟಯ ಕರಣವ ದಳಕುಳವ ಮಾಡಿಕೊಂಡು,
ಸ್ಥೂಲಸೂಕ್ಷ್ಮಕಾರಣವ ಅಂಗವ ಮಾಡಿಕೊಂಡು,
ಕಾಯ ಜೀವವೆರಡು ದಳಕುಳವ ಮೆಟ್ಟಿಕೊಂಡು,
ಏಕದಳದ ಮೇಲೆ ಪರಮಾತ್ಮ ತಾ ನಿಂದು, ಸಾಕ್ಷಿಕನಾಗಿ ಸಾವು ಹುಟ್ಟನರಿವುತ್ತ,
ಜ್ಞಾನವಿದು ಅಜ್ಞಾನವಿದು ಎಂದು ಕಾಣುತ್ತ, ಸಂಸಾರ ಹೇಯವ ಮಾಡುತ್ತ,
ಲಿಂಗವ ಹಾಡುತ್ತ, ಲಿಂಗವ ಹಾಡುತ್ತ, ಜಂಗಮವ ಹರಸುತ್ತ,
ಲಿಂಗವಾಗಿ ಬಂದು ಗುರುಪಾದವಿಡಿದಾತನೀಗ ತತ್ಶಿಷ್ಯ.
ಆ ಶಿಷ್ಯಂಗೆ ಶ್ರೀ ಗುರುಸ್ವಾಮಿ, ಕಾಯವಿದು ಕರಣವಿದು
ಜೀವವಿದು ವಾಯುವಿದು,
ಮನವಿದು ಪ್ರಾಣವಿದು ಮಾಯವಿದು ಮದವಿದು ಮಲವಿದೆಂದು
ಆತನಾದಿಯನುರುಹಿ, ತನ್ನಾದಿಯ ಕುರುಹಿದೇಕೋ ಮಗನೇ ಎಂದು,
ಗಣಸಾಕ್ಷಿಯಾಗಿ ಹಸ್ತಮಸ್ತಕಸಂಯೋಗ ಮಾಡಿ,
ಕರ್ಣದಲಿ ಮಂತ್ರವ ಹೇಳಿ, ಕರಸ್ಥಲಕ್ಕೆ ಲಿಂಗವ ಕೊಡುವಲ್ಲಿ,
ಮಗನೆ ಹಸ್ತವೆಂದರೆ
ಮಂತ್ರಲಿಂಗವಾಗಿ ಇದೇನೆ,
ಮಸ್ತಕವೆಂದರೆ ಚಿದ್ಬ್ರಹ್ಮದಲ್ಲಿ ತೋರುವ ಸುನಾದಕಳೆ ನಾನೇಯಾಗಿ ಇದೇನೆ.
ಸಂಯೋಗವೆಂದರೆ ಸರ್ವಾಂಗದಲ್ಲಿ ಪ್ರಾಣಜಂಗಮನಾಗಿ ನಾನೇ ಇದೇನೆ.
ತ್ರಿವಿಧ ಉಪದೇಶವೆ ತ್ರಿವಿಧ ಪ್ರಣವವಾಗಿ ಅದಾವೆ.
ತ್ರಿವಿಧ ಪ್ರಣವವೆ ಗುರುಲಿಂಗಜಂಗಮವೆಂದು,
ಆ ಗುರುಲಿಂಗಜಂಗಮವೆ ಇಷ್ಟ ಪ್ರಾಣ ತೃಪ್ತಿಯೆಂದು,
ಆ ಇಷ್ಟ ಪ್ರಾಣ ತೃಪ್ತಿಯೆ ಆಚಾರಾದಿ ಮಹಾಲಿಂಗವೆಂದು,
ಆ ಆಚಾರಾದಿ ಮಹಾಲಿಂಗವೆ ಮೂವತ್ತಾರು ಲಿಂಗವೆಂದು,
ಆ ಮೂವತ್ತಾರು ಲಿಂಗವೆ ಇನ್ನೂರ ಹದಿನಾರು ಲಿಂಗವೆಂದರಿದು,
ಇಂತಿವೆಲ್ಲಕ್ಕೆ ಇಷ್ಟ ಗುರುವೆ ಆದಿ, ಇಷ್ಟೆ ಲಿಂಗವೆ ಮಧ್ಯ,
ಇಷ್ಟಜಂಗಮವೆ ಅವಸಾನ.
ಇದು ಕಾರಣ, ಗುರುವಿಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನ.
ಈ ತ್ರಿವಿಧವು ತ್ರಿವಿಧ ಮುಖದಲ್ಲಿ ಗುರುವಿಂದ ತನು ಶುದ್ಧಪ್ರಸಾದವಾಯಿತ್ತು.
ಲಿಂಗದಿಂದ ಮನ ಸಿದ್ಧಪ್ರಸಾದವಾಯಿತ್ತು.
ಜಂಗಮದಿಂದ ಪದಾರ್ಥ ಪ್ರಸಿದ್ಧಪ್ರಸಾದವಾಯಿತ್ತು.
ಈ ತ್ರಿವಿಧ ಪ್ರಸಾದವೆ ಅಂಗವಾದ ಶರಣಂಗೆ
ಅರಿವೇ ಗುರು, ಜ್ಞಾನವೆ ಲಿಂಗ, ಭಾವನೆ ಜಂಗಮ.
ಇಂತಪ್ಪ ಶರಣ ಮತ್ತೆ ಗುರುವೆನ್ನ, ಲಿಂಗವೆನ್ನ, ಜಂಗಮವೆನ್ನ, ಆಚಾರವೆನ್ನ,
ತಾನೆನ್ನ ನಾನೆನ್ನ, ಏನೂ ಎನ್ನ, ಬಸವಪ್ರಿಯ ಕೂಡಲಚೆನ್ನಸಂಗಮದೇವ
ತಾನೆ ತನ್ಮಯವಾಗಿ. /151
ಪುರಾತರು ಪುರಾತರು ಎಂದು,
ಪುರಾಣದೊಳಗಣ ಕಥೆಯನೆ ಕಲಿತುಕೊಂಡು,
ಪುರದ ಬೀದಿಯೊಳಗೆ ಹರದರಂತೆ,
ಮಾತಿನ ಹಸರವನಿಕ್ಕಿ ಮಾರುವ ಅಣ್ಣಗಳಿರಾ, ನೀವು ಕೇಳಿರೊ.
ಅಂದು ಹೋದವರ ಸುದ್ದಿಯ ನುಡಿದರೆ,
ಇಂದು ಬಂದರೊ ನಿಮಗೆ ಇಂದು ಬಂದವರ ಒಂದೇ ಎಂದರಿದ ಭಕ್ತರ
ಆಚರಣೆಯ ತೋರಿ ಬದುಕಿಸಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./152
ಪೃಥ್ವಿ, ಅಪ್ಪು, ಅಗ್ನಿ, ವಾಯು, ಆಕಾಶ, ಚಂದ್ರ,
ಸೂರ್ಯ, ಸೋಮ, ಮಂಗಳ, ಬುಧ, ಬೃಹಸ್ಪತಿ,
ಶುಕ್ರ, ಶನಿ ಇವು ಮೊದಲಾದ ಪಂಚತತ್ವ ನವಗ್ರಹಂಗಳಿಲ್ಲದಂದಿನ,
ನಕ್ಷತ್ರಂಗಳಿಲ್ಲದಂದಿನ, ಸಪ್ತ ಸಮುದ್ರಂಗಳಿಲ್ಲದಂದಿನ,
ಸಪ್ತಕುಲ ಪರ್ವತಂಗಳು ಇಲ್ಲದಂದಿನ, ಸಪ್ತಮುನಿವರ್ಗಂಗು ಇಲ್ಲದಂದಿನ,
ಹರಿಬ್ರಹ್ಮ, ಕಾಲಕರ್ಮ, ದಕ್ಷಾದಿಗಳಿಲ್ಲದಂದಿನ
ರುದ್ರಕೋಟಿ, ಸದಾಶಿವನಿಲ್ಲದಂದಿನ, ಏನೂ ಏನೂ ಇಲ್ಲದಂದಿನ,
ಶೂನ್ಯ ನಿಶ್ಶೂನ್ಯಕ್ಕೆ ನಿಲ್ಕುದ ಮಹಾಘನವ
ನಾನು ಬಲ್ಲೆ, ತಾನು ಬಲ್ಲೆನೆಂದು ನುಡಿವ ಹೀನಮನುಜರ ಕೂಗಾಟ,
ಬೇಟಕ್ಕೆ ನಾಯಿ ಬೊಗಳಿದಂತಾಯಿತ್ತು.
ಆ ತುಟ್ಟತುದಿಯಲ್ಲಿಪ್ಪ ಘನವ ಮುಟ್ಟಿ ಹಿಡಿದುಬಂದ ಶರಣರು ಬಲ್ಲರಲ್ಲದೆ,
ಬಹುವಾಕ್ಕು ಜಾಲವ ಕಲಿತಕೊಂಡು, ಗಟ್ಟಿತನದಲ್ಲಿ ಬೊಗಳಿಯಾಡುವ
ಮಿಟ್ಟೆಯ ಭಂಡರೆತ್ತ ಬಲ್ಲರು ನಮ್ಮ ಶರಣರ ಸುದ್ದಿಯ,
ಬಸವಪ್ರಿಯ ಕೂಡಲಚೆನ್ನಬಸವಣ್ಣ ? /153
ಪ್ರಣಮವೆ ಪ್ರಾಯ, ಪ್ರಾಣವೆ ಲಿಂಗ.
ಲಿಂಗವೆ ಅಂಗ, ಆ ಅಂಗವೆ ಆಗಮ್ಯ ಅಗೋಚರ ಅಪ್ರಮಾಣ.
ಲಿಂಗಸಂಗವೆ ಜಂಗಮಲಿಂಗ.
ಜಂಗಮ ಒಂದೆರಡೆಂದು ಸಂದು ಮಾಡಲಂಜಿ ಬೆರಗಾಗಿರಲು,
ಬೇಗೆಯೆದ್ದು ಬೆಳಗಾಯಿತ್ತ ಕಂಡು,
ಕಣ್ಣು ಮುಚ್ಚಿ ಕರಗಿ ಪ್ರಾಣಲಿಂಗ ಲೀಯವಾದ,
ಬಸವಪ್ರಿಯ ಕೂಡಸಂಗಮದೇವ ಪ್ರಭುವೆ./154
ಪ್ರಥಮದಲ್ಲಿ ಭಕ್ತಸ್ಥಲವೆಂದು ನುಡಿವಿರಿ.
ಆ ಭಕ್ತಸ್ಥಲವೆಲ್ಲರಿಗೆಂತಾಯಿತ್ತು ಹೇಳಿರಣ್ಣಾ !
ಸತಿಪತಿಸುತರು ಭೃತ್ಯಾಚಾರದಲ್ಲಿ ಭಕ್ತಿಯ ಮಾಡಿಹೆನೆಂದಣ್ಣಗಳು ಕೇಳಿರೊ.
ಪತಿಯ ಮಾತ ವಿೂರುವಾಕೆ ಸತಿಯಲ್ಲ. ಪಿತನ ಮಾತ ವಿೂರುವಾತ ಸುತನಲ್ಲ.
ಅತಿ ಕೃಪೆಯಿಂದ ದೀಕ್ಷೆ, ಶಿಕ್ಷೆಯನಿತ್ತ ಗುರುವಿನಾಜ್ಞೆಯ ವಿೂರುವಾತ ಶಿಷ್ಯನಲ್ಲ.
ಇಂತಿವು ಭಕ್ತಸ್ಥಲಕ್ಕೆ ಸಲ್ಲವು ಕೇಳಿರಣ್ಣಾ !
ಆ ಸತಿಗೆ ಪತಿಯೇ ಗುರುವಾಗಿ, ಆ ಸುತಗೆ ಪಿತನೆ ಗುರುವಾಗಿ,
ಆ ಪಿತಗೆ ಅತಿಕೃಪೆಯಿಂದ ದೀಕ್ಷೆ ಶಿಕ್ಷೆಯನಿತ್ತ ಗುರುವೆ ಗುರುವಾಗಿ,
ಏಕಪದವಿಲ್ಲಾಗ ಭಕ್ತಸ್ಥಲವ ಮಾಡಿಹೆನೆಂಬಣ್ಣಗಳಿರಾ ಕೇಳಿ.
ಈ ಒಂದು ಸ್ಥಲವುಳ್ಳವರಿಗೆ ಆರುಸ್ಥಲವು ಅಡಗಿತ್ತು.
ಇಂತಿವು ಏಕಸ್ಥಲವಾದ ಮೇಲೆ ಮುಂದೆಂತೆಂದಡೆ,
ಆ ಪತಿಗೆ ಸತಿಯೇ ಗುರುವಾಗಿ, ಆ ಪಿತಗೆ ಸುತನೇ ಗುರುವಾಗಿ,
ಅತಿಕೃಪೆಯಿಂದ ದೀಕ್ಷೆ ಶಿಕ್ಷೆಯನ್ನಿತ್ತ ಗುರುವೇ ಶಿಷ್ಯನಾಗಿ,
ಇಂತಿದೀಗ ನಿರ್ಣಯಸ್ಥಲವು.
ಇದನರಿಯದೆ, ಅವಳು ಸತಿ, ತಾ ಪತಿ ಎಂಬ ಹಮ್ಮಿಂದವೇ
ಅವರು ಸುತರು, ತಾ ಪಿತನೆಂಬ ಹಮ್ಮಿಂದವೇ
ಅವರು ಶಿಷ್ಯರು, ತಾ ಗುರುವೆಂಬ ಹಮ್ಮಿಂದವೇ
ಇದು ಲಿಂಗಪಥಕ್ಕೆ ಸಲ್ಲದು, ಹಿಡಿದ ವ್ರತಕ್ಕೆ ನಿಲ್ಲದು
ಇದ ಮುಂದೆ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಾ./155
ಪ್ರಸಾದವೆಂದು, ಅರ್ಪಿತಪ್ರಸಾದವೆಂದು, ಅವಧಾನಪ್ರಸಾದವೆಂದು,
ಪರಿಣಾಮಪ್ರಸಾದವೆಂದು, ಸಮಯಪ್ರಸಾದವೆ,ಧು, ಸರ್ವಾಂಗಪ್ರಸಾದವೆಂದು,
ಶುದ್ಧಪ್ರಸಾದವೆಂದು, ಸಿದ್ಧಪ್ರಸಾದವೆಂದು, ಪ್ರಸಿದ್ಧಪ್ರಸಾದವೆಂದು,
ಪರಿಪೂಣರಪ್ರಸಾದವೆಂದು, ದಿವ್ಯಪ್ರಸಾದವೆಂದು,
ಆದಿಪ್ರಸಾದವ ಅಂಗಪ್ರಾಣ ಭಾವ. ಅದಕ್ಕೆ ದೃಷ್ಟ :
ಪ್ರಕಾರೋಯಂ ಪ್ರಸಾದಸ್ಸ್ಯಾತ್ ಸಾಕಾರಂ ಭಕ್ತಿರುಚ್ಯತೇ |
ಪ್ರಸಾದ ಪೂರ್ವಿಕಾ ಭಕ್ತಿರ್ಮುಕ್ತಿರೇತಿ ದಕಾರಕಂ ||
ಎಂದುದಾಗಿ, ಇಂತೀ ಪ್ರಸಾದಿ ನೀನೆಯಲಾ,
ಬಸವಪ್ರಿಯ ಕೂಡಲಸಂಗಮದೇವಾ,
ಮಾಂ ತ್ರಾಹಿ, ತ್ರಾಹಿ ಕರುಣಾಕರನೆ./156
ಪ್ರಾಣಲಿಂಗಿ ಪ್ರಾಣಲಿಂಗಿ ಎಂದು ನುಡಿದಾಡುತಿಪ್ಪಿರಿ.
ಪ್ರಾಣಲಿಂಗದ ನೆಲೆಯನಾರು ಬಲ್ಲರು ?
ಪ್ರಾಣಲಿಂಗಿಯಾದರೆ,
ವಾಯು ಪ್ರಾಣವ ನಿಲಿಸಿ, ಲಿಂಗ ಪ್ರಾಣವಾಗುವದೀಗ ಪ್ರಾಣಲಿಂಗ.
ಪ್ರಾಣಲಿಂಗಿಯಾದರೆ,
ಗುರುಲಿಂಗಜಂಗಮದ ಪಾದೋದಕ ಪ್ರಸಾದವ
ತನ್ನೊಳರಿದು ಮೈರೆದು ಪರವಶನಾಗಿ,
ಲಿಂಗದೊಳಗೆ ಬೆರೆಸುವದೀಗ ಪ್ರಾಣಲಿಂಗಿ.
ಇದನರಿಯದೆ ವಾಯು ಪ್ರಾಣವಾಗಿ, ಬಾಯನುಡಿಯ ಬಲ್ಲಿದವರಾಗಿ,
ಬೊಗುಳಿಯಾಡುವ ಜಾವಳರ ಮಾತ ಮೆಚ್ಚುವನೆ,
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ ?/157
ಬಟ್ಟಬಯಲ ತುಟ್ಟತುದಿಯ ನಟ್ಟನಡುವಣ,
ಕಟ್ಟಕಡೆಯ ಮೆಟ್ಟಿ ನೋಡಿ,
ಉಟ್ಟುದನಳಿದು ಒಟ್ಟಬತ್ತಲೆಯಾದೆ.
ಇನ್ನು ಬಿಟ್ಟುದ ಹಿಡಿಯಬಾರದು, ಶಿಡಿದುದ ಬಿಡಬಾರದು.
ಇದಕ್ಕೆ ಒಡೆಯನಾವನೆಂದು ನೋಡಲಾಗಿ ನೋಡಿಹೆನೆಂದರೆ ನೋಟಕ್ಕಿಲ್ಲ.
ಕೂಡಿಹೆನೆಂದರೆ ಕೂಟಕ್ಕಿಲ್ಲ, ಹಿಡಿದಿಹೆನೆಂದರೆ ಹಿಡಿಹಿಗಿಲ್ಲ.
ಪೂಜಿಸಿಹೆನೆಂದರೆ ಪೂಜೆಗಿಲ್ಲ.
ಇದ ಮೆಲ್ಲಗೆ ಓಜೆಯಿಂದ ನೋಡಿಲಾಗಿ,
ನೋಡುವ ನೋಟವು ತಾನೆ, ಕೂಡುವ ಕೂಟವು ತಾನೆ,
ಹಿಡಿವುದು ಆ ಹಿಡಿಗೆ ಸಿಕ್ಕಿಕೊಂಬುದು ತಾನೆ,
ಪೂಜಿಸುವುದು ಪೂಜೆಗೊಂಬುದು ತಾನೆ.
ನಾನಿದರ ಭೇದವನರಿದು ಆದಿ ಅನಾದಿಯನು ಏಕವ ಮಾಡಿ,
ನಾನಲ್ಲೇ ಐಕ್ಯನಾದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ./158
ಬಯಲಬ್ರಹ್ಮವೆ ಪಿಂಡಬ್ರಹ್ಮವೆನಿಸಿ,
ಆ ಪಿಂಡಬ್ರಹ್ಮವೆ ಶಿವಶಕ್ತಿಯೆನಿಸಿ,
ಆ ಶಿವಶಕ್ತಿಯ ಪ್ರಪಂಚೇ ಪಂಚಮೂರ್ತಿಯ ಪ್ರಪಂಚೆನಿಸಿ,
ಆ ಪಂಚಮೂರ್ತಿಯ ಪ್ರಪಂಚು ಯುಕ್ತಿಯಿಂ
ಜಗಬ್ರಹ್ಮಾಂಡ ಜೀವ ಜಂತು ಜಾಲ
ಎಂಬತ್ತುನಾಲ್ಕು ಲಕ್ಷ ವರ್ಣಾಶ್ರಮದಲ್ಲಿ ಆಡಿಸಿ, ಆಡದಂತಿರ್ಪ
ಪರಂಜ್ಯೋತಿ ಬಸವಪ್ರಿಯ ಕೂಡಲಸಂಗಮದೇವ ಪ್ರಭುವೆ./159
ಬಯಲಿಂದಲೆ ಹುಟ್ಟಿ, ಬಯಲಿಂದಲೆ ಬೆಳೆದು,
ಬಯಲಾಮೃತವನೆ ಉಂಡು, ಬಯಲನೆ ಉಟ್ಟು,
ಬಯಲನೆ ತೊಟ್ಟು, ಬಯಲು ಬಯಲೊಳಗೆ ಬೆರೆದ ಭೇದವ,
ಈ ಭುವನದೊಳಗೆ ಇಪ್ಪ ಭವಭಾರಿಗಳು ಎತ್ತಬಲ್ಲರು, ಭವವಿರಹಿತ ಶರಣರ ನಿಲವ,
ಬಸವಪ್ರಿಯ ಕೂಡಲಚನ್ನಬಸವಣ್ಣಾ ?
/160
ಬಯಲೆ ರೂಪಾಯಿತ್ತು, ನಿರ್ವಯಲೆ ನಿರೂಪಾಯಿತ್ತು.
ಸರ್ವಾಂಗದೊಳು ಉರಿ ವೇಧಿಸಿತ್ತು.
ಅಲ್ಲೊಂದು ಸದಮದಗಜ ಹಯನಾಯಿತ್ತು.
ಅಮೃತವನೆ ಉಂಡಿತ್ತು, ಮಧುರಸವನೇ ಉಂಡಿತ್ತು.
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನ ಕೂಡಿತ್ತು./161
ಬೆಟ್ಟವ ಬೆಳ್ಳಕ್ಕಿ ನುಂಗಿ,
ತುಟ್ಟತುದಿಯ ಬಟ್ಟಬಯಲ ನಟ್ಟನಡುವಣ ಶಬ್ದವ ಮುಟ್ಟಿ,
ಹಿಡಿದವ ಹುಟ್ಟಲಿಲ್ಲ, ಹೊದ್ದಲಿಲ್ಲ, ಅಷ್ಟದಳ ಕುಳವ ಮುಟ್ಟಲಿಲ್ಲ.
ಹೃತ್ಕಮಲಕರ್ಣಿಕಾಮಧ್ಯದಲ್ಲಿರ್ಪ ಸದ್ವಾಸನೆಯ
ಸ್ವಾನುಭಾವ ಅಮೃತವನುಂಡು,
ಮನ ಮಗ್ನವಾದಾತನೆ ಪ್ರಾಣಲಿಂಗಿ,
ಬಸವಪ್ರಿಯ ಕೂಡಲಸಂಗಮದೇವ ಪ್ರಭುವೆ./162
ಬೆಳಗ ನುಂಗಿದ ಕತ್ತಲೆಯಂತೆ, ಕತ್ತಲೆಯ ನುಂಗಿದ ಬೆಳಗಿನಂತೆ,
ಹೊಳೆವ ಜ್ಯೋತಿಯ ಕಳೆ ಬಯಲೊಳಡಗಿದಂತೆ,
ನಳಿನಮಿತ್ರನ ಬೆಳಗು, ಹೊಳೆವ ಕಂಗಳ ಬೆಳಗು
ಥಳ ಥಳ ಹೊಳೆದು ಒಂದಾದಂತೆ,
ಸರ್ವಜೀವರೊಳು ಕಳೆ ಒಂದಲ್ಲದೆ ಎರಡಿಲ್ಲ.
ಸಂದಳಿದ ಸಮರಸೈಕ್ಯ,
ಬಸವಪ್ರಿಯ ಕೂಡಲಸಂಗಮದೇವ ಪ್ರಭುವೆ.
/163
ಬ್ರಹ್ಮನ ಹುಟ್ಟು, ವಿಷ್ಣುವಿನ ಸ್ಥಿತಿ,
ರುದ್ರನ ಲಯಕ್ಕೆ ಒಳಗಾದ ಮನುಜರೆಲ್ಲ
ತಾವು ಪ್ರಸಾದಿ, ಪ್ರಾಣಲಿಂಗಿಗಳೆಂದು ನುಡಿದುಕೊಂಬಿರಿ.
ಪ್ರಸಾದಿಸ್ಥಲ ಎಲ್ಲರಿಗೆಂತಾದುದಣ್ಣಾ ? ಪ್ರಸಾದಿಸ್ಥಲ ಪರಮಸುಖ ಪರಿಣಾಮ.
ಮನ ಮೇರೆದಪ್ಪಿ ತನುವನೆ ಪ್ರಸಾದವ ಮಾಡುವದೀಗ ಪ್ರಸಾದ.
ಇದನರಿಯದೆ ಸದಮದವಾಗಿ ಮುಡಿ ನೋಡಿ ಒಡಲ ಕೆಡಿಸಿಕೊಂಬ
ಜಡಮನುಜರ ನುಡಿಯ ಕೇಳಲಾಗದು,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ. /164
ಬ್ರಹ್ಮಾಂಡದ ಬಯಲ ಪಸರಿಸಿ, ಹಿಡಿವರೆ
ಬಯಲಾವುದುಂಟು ಹೇಳಿರಣ್ಣಾ ?
ಕಂಗಳ ಮುಂದಣ ಕತ್ತಲೆ ಹರಿವುದಕ್ಕೆ ಜ್ಯೋತಿ ಆವುದುಂಟು ಹೇಳಿರಣ್ಣಾ ?
ಇಂಗಿತವನರಿದ ಬಳಿಕ, ತ್ರಿವಿಧಕ್ಕೆ ತ್ರಿವಿಧವನಿತ್ತು
ತ್ರಿವಿಧವನರಿದು, ತ್ರಿವಿಧವ ಮರೆದು, ಕಲಿಯುಗದ ಕತ್ತಲೆಯ ದಾಂಟಿ,
ತನ್ನ ಭವವ ದಾಂಟಿದವಂಗೆ, ಬ್ರಹ್ಮಾಂಡದ ಬಯಲು ಕೈವಶವಾಯಿತ್ತು.
ಕಂಗಳ ಮುಂದಣ ಕತ್ತಲೆ ಹರಿದುಹೋಯಿತ್ತು,
ನಿಮ್ಮ ಸಂಗಸುಖದೊಳಗಿಪ್ಪ ಲಿಂಗೈಕ್ಯಂಗೆ
ಬಸವಪ್ರಿಯ ಕೂಡಲಚೆನ್ನಬಸವಣ್ಣಾ. /165
ಭಕ್ತ, ಮಹೇಶ್ವರ, ಪ್ರಸಾದಿ ಪ್ರಾಣಲಿಂಗಿ,
ಸತ್ಯಶರಣರೈಕ್ಯರೆಂಬ ಇತ್ತತ್ತ ಗೊತ್ತ ಬಿಟ್ಟು,
ನಿರ್ವಯಲ ಲಿಂಗದೊಳು ನಿಮ್ಮ ಭಕ್ತನಾದರೆ,
ಬಸವಪ್ರಿಯ ಕೂಡಲಚೆನ್ನಬಸವಣ್ಣ./166
ಭಕ್ತನಾದರು ಆಗಲಿ, ಗುರುವಾದರು ಆಗಲಿ,
ಲಿಂಗವಾದರು ಆಗಲಿ, ಜಂಗಮವಾದರು ಆಗಲಿ,
ಈ ಮರ್ತ್ಯದಲ್ಲಿ ಒಡಲುವಿಡಿದು ಹುಟ್ಟಿದ ಮೇಲೆ,
ಮಾಯೆಯ ಗೆದ್ದೆ[ಹೆ]ನೆಂದರೆ ಸಾಧ್ಯವಲ್ಲ ಕೇಳಿರಣ್ಣಾ !
ಗೆಲ್ಲಬಹುದು ಮತ್ತೊಂದು ಭೇದದಲ್ಲಿ.
ಅದೆಂತೆಂದರೆ:ಭಕ್ತನಾದರೆ ತನುವ ಗುರುವಿಂಗಿತ್ತು, ಮನವ ಲಿಂಗಕ್ಕಿತ್ತು,
ಧನವ ಜಂಗಮಕ್ಕಿತ್ತು ಬೆರೆದರೆ, ಮಾಯಾಪಾಶ ಹರಿಯಿತ್ತು.
ಇದರ ಗೊತ್ತು ಹಿಡಿವನೆಂದರೆ ಆತನ ಭಕ್ತನೆಂಬೆ.
ಗುರುವಾದರೆ ಸಕಲ ಆಗಮಂಗಳನರಿದು, ತತ್ವಮಸಿ ಎಂದು ನಿತ್ಯವ ನೆಮ್ಮಿ,
ತನ್ನ ಒತ್ತುವಿಡಿದ ಶಿಷ್ಯಂಗೆ ಪರತತ್ವವ ತೋರಿ,
ಪ್ರಾಣಲಿಂಗವ ಕರದಲ್ಲಿ ಕೊಟ್ಟು,
ಆ ಲಿಂಗ ಅಂಗವೆಂಬ ಉಭಯದೊಳಗೆ ತಾನಡಗಿ, ತನ್ನೊಳಗೆ ಶಿಷ್ಯನಡಗಿ,
ನಾನು ನೀನು ಎಂಬ ಉಭಯ ಎರಡಳಿದರೆ, ಆತನ ಗುರುವೆಂಬೆ.
ಜಂಗಮವಾದರೆ ಬಾಯಿಲೆಕ್ಕಕ್ಕೆ ಬಾರದೆ, ಬಂದು ಆಶ್ರಿತವೆನಿಸಿಕೊಳ್ಳದೆ
ಆಸೆಯಳಿದು ಲಿಂಗಜಂಗಮವಾಗಿ ನಿರ್ಗಮನಿಯಾಗಿ,
ಭರ್ಗೊ ದೇವಸ್ಯ ಎಂಬ, ಏಕೋದೇವ ನ ದ್ವಿತೀಯವೆಂಬ ಶ್ರುತಿಗೆ ತಂದು
ತಾ ಪರಮಾನಂದದಲ್ಲಿ ನಿಂದು, ಪರಿಪೂರ್ಣನೆನಿಸಿಕೊಂಡು,
ಅಣುವಿಂಗಣು, ಮಹತ್ತಿಂಗೆ ಮಹತ್ತು, ಘನಕ್ಕೆ ಘನವೆಂಬ ವಾಕ್ಯಕ್ಕೆ ಸಂದು,
ತಾ ನಿಂದು ಜಗವನೆಲ್ಲವ ಆಡಿಸುವ ಅಂತರಾತ್ಮಕನಾಗಿ ಅಡಗಿದರೆ ಜಂಗಮವೆಂಬೆ.
ಅಂತಾದರೆ ಈ ತ್ರಿವಿಧವು ಏಕವಾದುದನರಿದು, ಈ ಲೋಕದ ಕಾಕುಬಳಕೆಗೆ ಸಿಲ್ಕದೆ,
ಇಲ್ಲಿ ಹುಟ್ಟಿದವರೆಲ್ಲ ಇವರೊಳಗೆ ಆದರು.
ನಾನು ತ್ರಿವಿಧದ ನೆಲೆಯ ಹಿಡಿದುಕೊಂಡು ಇವೆಲ್ಲಕ್ಕೂ,
ಹೊರಗಾಗಿ ಹೋದನಯ್ಯಾ,
ಬಸವಪ್ರಿಯ ಕೂಡಲಚೆನ್ನ ಬಸವಣ್ಣಾ./167
ಭಕ್ತನಾದರೆ ಎಂತಿರಬೇಕೆಂದರೆ, ಉಲುಹಡಗಿದ ವೃಕ್ಷದಂತಿರಬೇಕು.
ಶಿಶು ಕಂಡ ಕನಸಿನಂತಿರಬೇಕು, ಗಲಭೆಗೆ ನಿಲ್ಲದ ಮೃಗದಂತಿರಬೇಕು.
ತಾಯ ಹೊಲಬುದಪ್ಪಿದ ಎಳೆಗರುವಿನಂತೆ,
ತ್ರಿಕಾಲದಲ್ಲಿಯು ಲಿಂಗವನೆ ನೆನೆವ ಶರಣರ ಎನಗೊಮ್ಮೆ ತೋರಯ್ಯಾ ಶಿವನೆ,
ಬಸವಪ್ರಿಯ ಕೂಡಲಚೆನ್ನಸಂಗನಬಸವಣ್ಣಾ.
/168
ಭಕ್ತನಾದರೆ ಪೃಥ್ವಿಸಾರದಲಾದ ಪದಾರ್ಥವ ಲಿಂಗಕ್ಕೆ ಕೊಡದ ಭಾಷೆ.
ಮಹೇಶ್ವರನಾದರೆ ಅಪ್ಪುವಿನ ಸಾರದಿಂದ
ಉದಕವ ಲಿಂಗಕ್ಕೆ ಮಜ್ಜನಕ್ಕೆರೆಯದ ಭಾಷೆ.
ಪ್ರಸಾದಿಯಾದರೆ ಅಗ್ನಿಯಿಂದಾದ ಕಳೆಯ ಲಿಂಗಕ್ಕೆ ವೇದಿಸದ ಭಾಷೆ.
ಪ್ರಾಣಲಿಂಗಿಯಾದರೆ ವಾಯುವಿನಿಂದಾದ ಧ್ಯಾನವ ಲಿಂಗದಲ್ಲಿ ನೋಡದ ಭಾಷೆ.
ಐಕ್ಯನಾದರೆ ಆತ್ಮದಿಂದಾದ ಅಹಂ ಮಮತೆಯಲಿ ಲಿಂಗವ ಭಾವಿಸದ ಭಾಷೆ.
ಇಂತೀ ಆರರಿಂದ ವಿೂರಿ ತೋರುವ ಘನವು,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./169
ಭಕ್ತನಾದರೆ ಮುಕ್ತಿಪಥಗತಿಗೆ ನಿಲುಕದಂತಿರಬೇಕು.
ಮಹೇಶ್ವರನಾದರೆ ಮನದಲ್ಲಿ ಮನ್ಮಥ ಹೊಗದಂತಿರಬೇಕು.
ಪ್ರಸಾದಿಯಾದರೆ ತನ್ನ ಪ್ರಾಣವೇ ಅಗ್ನಿಸ್ವರೂಪವೆಯಾಗಿರಬೇಕು.
ಪ್ರಾಣಲಿಂಗಿಯಾದರೆ ಪ್ರಾಣವ ನಿಲ್ಲಿಸಿ ಲಿಂಗಪ್ರಾಣಿಯಾಗಿರಬೇಕು.
ಶರಣನಾದರೆ ತನ್ನ ಮರಣಬಾಧೆಯ ಗೆಲಿದಿರಬೇಕು.
ಐಕ್ಯನಾದರೆ ಅನ್ನ ಪಾನಾದಿಗೆ ಇಚ್ಛೆ ಇಲ್ಲದಿರಬೇಕು.
ನಿರ್ವಯಲಾದರೆ ಸರ್ವರ ಕಣ್ಣಿಗೆ ಬಯಲು ಬಯಲಾಗಿರಬೇಕು.
ಈ ಷಟ್ಸ್ಥಲಸಂಪನ್ನತೆಯಲ್ಲಿ ಇರಬಲ್ಲಡೆ,
ಎಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ./170
ಭಕ್ತನೊಂದು ಕುಲ, ಭವಿಯೊಂದು ಕುಲವೆಂಬರು.
ಭಕ್ತನೆಂತಿಪ್ಪ ಭವಿಯೆಂತಿಪ್ಪನೆಂದರೆ, ಆರೂ ಅರಿಯರು.
ಇದು ಬಲ್ಲವರು ತಿಳಿದು ನೋಡಿ.
ಭಕ್ತನೆಂದರೆ ಅಂಗ, ಭವಿ ಎಂದರೆ ಲಿಂಗ,
ಈ ಎರಡರ ಸಕೀಲಸಂಬಂಧವನರಿದರೆ,
ಆತನೆ ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ./171
ಭಕ್ತಿಯ ಮಾಡಿಹೆನೆಂಬವರೆಲ್ಲ ಭಾಗ್ಯವಂತರಾದರು.
ಮುಕ್ತಿಯ ಸಾಧಿಸಿಹೆನೆಂಬವರೆಲ್ಲ ಮೂವಿಧಿಗೊಳಗಾದರು.
ತತ್ವವನರಿದಿಹೆನೆಂಬವರೆಲ್ಲ ತರ್ಕಿಗಳಾದರು.
ವಿರಕ್ತಿಯ ಮಾಡಿಹೆನೆಂಬವರೆಲ್ಲ ವೈರಾಗಿಗಳಾದರು.
ಈ ಚತುರ್ವಿಧದೊಳಗೆ ಆವಂಗವೂ ಅಲ್ಲ.
ಎಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನಲ್ಲಿ ಶರಣರ ಪರಿ ಬೇರೆ./172
ಮನವನರಿದಂಗೆ ಮತದ ಹಂಗೇಕೊ ?
ನಿತ್ಯವನರಿದಂಗೆ ತೀರ್ಥದ ಹಂಗೇಕೊ ?
ಪರಮಾರ್ಥವನರಿದಂಗೆ ಪ್ರಸಾದದ ಹಂಗೇಕೊ ?
ಜ್ಯೋತಿಯನರಿದಂಗೆ ಕತ್ತಲೆಯ ಹಂಗೇಕೊ?
ಲೋಕವನರಿದಂಗೆ ವ್ಯಾಕುಲದ ಹಂಗೇಕೊ?
ಈ ತೆರನನರಿದಂಗೆ ಮುಂದಾವ ಭೀತಿಯುಂಟು ಹೇಳಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ ?
/173
ಮನವೆ ಮಾರುತನ ಒಡಗೂಡಿರ್ದು, ತನುವೆ ವಿಕಾರದೊಳಗಿರ್ದು,
ಮನವೆಂತು ಕಂಡಿತ್ತೆಂಬಿರಿ ? ಎಲೆ ಅಣ್ಣಗಳಿರಾ, ಘನವೆಂತಿಪ್ಪುದೆಂದರೆ,
ಈ ತನುವ ಮರೆದು, ಹರಿವ ಮನವ ಲಿಂಗದಲಿ ನಿಲಿಸಿ,
ಈ ಜನಿತಕ್ಕೆ ನಾನಿನ್ನಾರೆಂದು
ತ್ರಿಕಾಲದಲ್ಲಿಯೂ ಎಮ್ಮ ಶರಣರಿಗೆ ನೆನೆವನೆ ನಿತ್ಯನು,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./174
ಮರದೊಳಗಣ ಕಿಚ್ಚು ಮರನ ಸುಡುತ್ತಿದ್ದಿತ್ತಯ್ಯ.
ಮರ ಬೆಂದು ನಿಂದುರಿಯಿತ್ತು ,
ಮಣ್ಣು ಜರಿದು ಬಿದ್ದಿತ್ತು , ಉರಿ ಹೋಗಿ ನಂದಿತ್ತು ,
ಸ್ವಯಂಪ್ರಕಾಶವಾಗಿಪ್ಪ ಎಲೆ ಉಳಿಯಿತ್ತು.
ಉರಿ ಬಂದು ಎನ್ನ ಕರಸ್ಥಲದಲ್ಲಿ ಅಡಗಿತ್ತು.
ಇದ ಕಂಡು ನಾ ಬೆರಗಾಗಿ ನೋಡುತಿರ್ದೆನಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ. /175
ಮರೆದರೆ ಮಾಯೆ, ಅರಿದರೆ ಮಾಯೆ ಇಲ್ಲ,
ಅರಿವು ಮರವೆ ಎರಡ ನೂಂಕಿ ನಿಂದರೆ,
ಮುಂದೆ ಕಣ್ಣು ತೆರಪಾಗಿ ತೋರುವ ಬಯಲೆ ಲಿಂಗದ ಬೆಳಗು.
ಆ ಲಿಂಗದ ಬೆಳಗೆ ನೆಮ್ಮುಗೆಯಾದರೆ ಲಿಂಗೈಕ್ಯವು.
ಆ ಲಿಂಗೈಕ್ಯವು ನಿಜವಾದರೆ ನಿಶ್ಚಿಂತವು.
ನಿಶ್ಚಿಂತದಲ್ಲಿ ಲೀಯವಾದರೆ, ನಿರವಯವು,
ಇದೀಗ ನಮ್ಮ ಮುನ್ನಿನ ಆದ್ಯರ ನಡೆನುಡಿ,
ಇದನರಿಯದೆ ವೇದ ಪುರಾಣ ಶಾಸ್ತ್ರ ಆಗಮ ಇವನೊಂದನು
ಓದಿದರೆ ಹಾಡಿದರೆ ಕೇಳಿದರೆ ಕಾಯ ವಾಯವೆಂದರು,
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಾ./176
ಮರ್ತ್ಯದಲ್ಲಿ ಹುಟ್ಟಿ, ಕಂಗಳ ಮುಂದಣ ಕತ್ತಲೆಯ ಕಳೆಯದೆ,
ನಾವು ಗುರು ಜಂಗಮ, ನಾವು ಭಕ್ತರು ಎಂಬ ನುಡಿಗೆ ಏಕೆ ನಾಚರೋ ?
ಭಕ್ತನಾದರೆ, ಸತ್ತುಚಿತ್ತಾನಂದವನೊತ್ತಿ ಮೆಟ್ಟಿ,
ತತ್ವಮಸಿವಾಕ್ಯವೆಂದು ಕಂಡು ಬಿಟ್ಟು,
ಲಿಂಗದ ಗೊತ್ತುವಿಡಿದು, ಹಿಂದೆ ಹರಿದು, ಗುರುವಿನ ಗೊತ್ತನರಿದು,
ಜಗದೊಳಗಣ ಗುಂಗುದಿಯನೆಲ್ಲವ ಹರಿದು, ಜಂಗಮದ ಗೊತ್ತನರಿದು,
ಮುಂದಣ ಮುಕ್ತಿ ಎಂಬುದ ಮರೆದು,
ಎಂತಿರ್ದಂತೆ ಬ್ರಹ್ಮವು ತಾನೆ ಎಂಬುದನರಿದು,
ಪರಿಣಾಮದಲ್ಲಿ ಪರವಶನಾಗಿ ನಿಂದು,
ಮತ್ತೆ ಆರನೆಣಿಸಲಿಲ್ಲ, ಮೂರು ಮುಟ್ಟಲಿಲ್ಲ, ಬೇರೊಂದುಂಟೆನಲಿಲ್ಲ ,
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನಿಗೆ
ಸೂರೆಹೋದ ಶರಣನು./177
ಮರ್ತ್ಯಲೋಕದ ಮಹಾಗಣಂಗಳು ನೀವು ಕೇಳಿರಯ್ಯ,
ಅದೇನು ಕಾರಣವೆಂದರೆ,
ಗುರುವೆನ್ನದು, ಲಿಂಗವೆನ್ನದು, ಜಂಗಮವೆನ್ನದು, ಪ್ರಸಾದವೆನ್ನದು.
ಈ ಚತುರ್ವಿಧವು ಎನ್ನದಾದ ಕಾರಣದಿಂದ,
ಇದರ ಹಾನಿವೃದ್ಧಿ ಎನ್ನದಾದ ಕಾರಣದಿಂದ,
ಕಂಡುದ ನುಡಿವೆನಲ್ಲದೆ, ಜಗದಂತೆ ಮಿಥ್ಯಾಳಾಪವಾಗಿ ನುಡಿವನಲ್ಲ.
ಮುಂದೆ ಸತ್ತುಗಿತ್ತು ಹುಟ್ಟುವನಲ್ಲ,
ಮುಂದೆ ಹೊತ್ತುದ ಹುಸಿಮಾಡಿ, ಮತ್ತೊಂದು ದಿಟ ಮಾಡುವನಲ್ಲ.
ಅದನೇನು ಕಂಡವರು ಕಂಡಂತೆ ನುಡಿವರು.
ಉಂಡವರು ಉಂಡಂತೆ ತೇಗುವರು ಎಂಬುದ ನೀವು ಅರಿದುಕೊಳ್ಳಿ.
ಪಂಚಾಚಾರಕ್ಕೊಳಗಾದ ಶಿವಭಕ್ತರು ಎಮ್ಮಲ್ಲಿ ಹಿಂಚುಮುಂಚು ನೋಡಬೇಡ.
ನಿಮ್ಮ ಪ್ರಪಂಚನೆಯ ಹರಿದುಕೊಂಡು,
ನಿಮ್ಮಲ್ಲಿರ್ದ ಭವಿಗಳನೆ ಭಕ್ತರ ಮಾಡಿ ವಿವರಿಸಿ ನೋಡಲಾಗಿ,
ನಾ ನೀನೆಂಬುವದಕ್ಕಿಲ್ಲ.
ಆ ಉಭಯದ ಗೊತ್ತ ಮೆಟ್ಟಲಾಗಿ, ಭಕ್ತಜಂಗಮ ಒಂದೇ ಅಂಗ,
ಅದಕ್ಕೆ ನಿಶ್ಚಿಂತ ನಿಜೈಕ್ಯವು.
ಆ ನಿಲುವಿಂಗೆ ನಮೋ ನಮೋ ಎನುತಿರ್ದೆ,
ಬಸವಪ್ರಿಯ ಕೂಡಲಚೆನ್ನಸಂಗನಬಸವಣ್ಣಾ./178
ಮಹಾಘನ ನೆಲೆಗೊಂಡಿಪ್ಪ ಶರಣನ ನೆಲೆ ಎಂತಿಪ್ಪುದೆಂದರೆ,
ನೆಲದ ಮರೆಯ ನಿಧಾನದಂತೆ, ತಿಲದ ಮರೆಯ ತೈಲದಂತೆ,
ಮುಗಿಲ ಮರೆಯ ಮಿಂಚಿನಂತೆ, ನೀರೊಳಗಣ ಕಿಚ್ಚಿನಂತೆ,
ಕಾಷ್ಠದೊಳಗಣ ಅಗ್ನಿಯಂತೆ, ತೃಣದೊಳಗಡಗಿದ ಚೈತನ್ಯದಂತೆ,
ಈ ವಿಶ್ವದೊಳು ಇದ್ದೂ ಇಲ್ಲದಂತಿಪ್ಪ ಮಹಾಘನವ
ನಿಮ್ಮ ಶರಣರು ಬಲ್ಲರಲ್ಲದೆ,
ಮರ್ತ್ಯದ ಮರಣಬಾಧೆಗೊಳಗಾದ ಮನುಜರೆತ್ತಬಲ್ಲರು,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ ? /179
ಮಾತು ಮಾತಿಗೆ ಮಥನವ ಮಾಡುವಾತನೆ ಜಾತ.
ಮಾತಿಗೆ ಮೊದಲ ಕಂಡಾತನೆ ಅಜಾತ,
ಕಾತರಕ್ಕೆ ಕಂಗೆಟ್ಟು, ಕಳವಳಿಸದಿಪ್ಪನೆ ಪರಮಾತ್ಮ.
ನೀತಿ ನಿಜ ನೆಲೆಗೊಂಡಾತನೆ ಜಗನ್ನಾಥ,
ಇವೇತರೊಳಗು ಸಿಕ್ಕದಿಪ್ಪಾತನೆ ಗುರುನಾಥ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
/180
ಮಿಥ್ಯವನರಿದವರೆಲ್ಲ ತತ್ವಕ್ಕೆ ಅಂದೇ ಹೊರಗು,
ತಥ್ಯವನರಿದ ಶರಣರು ಸತ್ತಂತೆ ಇರಬೇಕು.
ತಥ್ಯಮಿಥ್ಯ ಎರಡಳಿದ ಶರಣಂಗೆ ಮತ್ತೊಂದು ಬಾರಿ ನಮೋ ನಮೋ ಎಂಬೆ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ. /181
ಮುಟ್ಟಿಯೂ ಮುಟ್ಟಬಾರದ ಠಾವಿನಲ್ಲಿ,
ಹುಟ್ಟಿಯೂ ಹುಟ್ಟದೊಂದು ಶಿಶುವಾಯಿತ್ತು.
ಅವ ದಿಟ್ಟನಲ್ಲ, ಧೀರ ವೀರ, ಕೊಟ್ಟದವನಲ್ಲ, ಕೊಟ್ಟುದ ಬೇಡ,
ಅವನ ಮುಟ್ಟಿ ಒಡನೆರೆದವರು ನಿತ್ಯನಿತ್ಯಲಿಂಗೈಕ್ಯರು,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./182
ಮುಳುಗುತ್ತ ತೆರಹಿಲ್ಲದಲ್ಲಿ ಅಂಗವ ಬೇರಿಟ್ಟರಸಿಹೆನೆಂಬುದೆ ಭಿನ್ನಭಾವ,
ಆ ಭಿನ್ನಭಾವವೆ ಭ್ರಮೆ, ಆ ಭ್ರಮೆಯೆ ಭವ.
ಆ ಭವವೆ ಭವಿ, ಆ ಭವಿಯೆ ಜೀವ.
ಆ ಜೀವನೆ ಎಂಬತ್ತು ನಾಲ್ಕುಲಕ್ಷ ಜೀವಜಂತು.
ಇದನರಿದವನೆ ಐಕ್ಯ, ಮರೆದವನೆ ಮಾನವ,
ಇದೇ ಜೀವ ಪರಮರ ಹಸಿಗೆ.
ಬಸವಪ್ರಿಯ ಕೂಡಲಸಂಗಮದೇವ ಪ್ರಭುವೆ. /183
ಮೂಲಬ್ರಹ್ಮದಲ್ಲಿ ಮೊನೆದೋರಿದ ಪ್ರಸಾದವೆ ಪರಮಪ್ರಣಮ.
ಆ ಪ್ರಮಣದ ಪರಮಪ್ರಕಾಶವೆ ಪ್ರಸಿದ್ಧಪ್ರಸಾದ,
ಆ ಪ್ರಸಿದ್ಧಪ್ರಸಾದದಿಂದಲೆ ಬ್ರಹ್ಮಾಂಡ ರೂಪುದೋರಿತ್ತು.
ಆ ಸ್ವರೂಪವೆ ಪ್ರಸಾದ, ನಿರೂಪೇ ಲಿಂಗೈಕ್ಯ, ಅದಕ್ಕೆ ದೃಷ್ಟ :
ತತ್ತ್ವ ಪ್ರದೀಪಿಕಾಯಾಂ : ಪ್ರಸಾದಂ ಮುಕ್ತಿ ಮೂಲಂಚ ಯತ್ಪ್ರಸಾದಂ ಶಿವಸ್ಯ ಚ |
ಶಿವಸ್ಸರ್ವಾಧಿದೇವಸ್ಯಾದ್ ವೇದಕರ್ವೆಷು ತದ್ಘನಂ ||
ಎಂದುದಾಗಿ, ಇಂತಿದೀಗ ಪ್ರಸಾದ ಮಹಾತ್ಮೆ.
ಇದೇ ಪ್ರಸನ್ನಪ್ರಸಾದ, ಇಂತೀ ಪ್ರಸಾದವ ಕೊಂಡವನೆ ಶಿವಕುಲ.
ಬಸವಪ್ರಿಯ ಕೂಡಲಸಂಗಮದೇವಾ,
ಮಾಂ ತ್ರಾಹಿ, ತ್ರಾಹಿ ಕರುಣಾಕರನೆ, /184
ಯೋಗದಿಂದರಿದಿಹೆನೆಂಬಿರಿ, ಓದಿನಿಂದರಿದಿಹೆನೆಂಬಿರಿ.
ವೇದದಿಂದರಿದಿಹೆನೆಂಬಿರಿ, ಶಾಸ್ತ್ರದಿಂದರಿದಿಹೆನೆಂಬಿರಿ.
ಕೇಳಿರಣ್ಣಾ, ಯೋಗದಂತದು ಅಲ್ಲ, ಓದಿನಂತದು ಅಲ್ಲ,
ವೇದದಂತದು ಅಲ್ಲ, ಶಾಸ್ತ್ರದಂತದು ಅಲ್ಲ. ಶರಣಸ್ಥಲ ಬೇರೆ,
ಅದೆಂತೆಂದಡೆ :ಗಂಡಳಿದು ಹೆಣ್ಣಾಗಬೇಕು, ಹೆಣ್ಣಳಿದು ಗಂಡಾಗಬೇಕು.
ಉಂಡೆನುಟ್ಟೆನೆಂಬ ಹಂಗಳಿದು, ಈ ಲೋಕದ ಸಂದೇಹವಳಿದ ಶರಣಂಗೆ
ನಮೋ ನಮೋ ಎನುತಿರ್ದೆನಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣ./185
ಯೋಗಾಂಗ ಭೋಗಾಂಗ ತ್ಯಾಗಾಂಗ ಈ ತ್ರಿವಿಧವನು ಮರೆದು,
ಭಕ್ತಿಯೋಗದ ಮೇಲೆ ನಿಂದು, ರಾಜಯೋಗದ ಮೇಲೆ ನಿಂದು,
ನಡೆದು ನುಡಿದು ತೋರುವರು ನಮ್ಮ ಶರಣರು.
ಗುರು ಲಿಂಗ ಜಂಗಮ ಈ ತ್ರಿವಿಧವನು,
ಸುಖ ದುಃಖ ಚಿಂತೆ ಸಂತೋಷವೆಂಬುವ ಕಳೆದು,
ಉತ್ಪತ್ತಿ ಸ್ಥಿತಿಲಯವೆಂಬುವಂ ಸುಟ್ಟು,
ದೃಕ್ಕು ದೃಶ್ಯ ನಿಜವೆಂಬ ತ್ರಿಕರಣವ ಏಕವ ಮಾಡಿ,
ಪಿಂಡಾಂಡ ಬ್ರಹ್ಮಾಂಡ ಒಂದೆಂಬುದನರಿದು,
ಸಂದಹರಿದು ನಿಂದ ನಿಜಾನಂದದಲ್ಲಿ ಹಿಂದುಮುಂದೆಂಬುದನರಿಯದೆ,
ನಿಮ್ಮೊಳೊಂದಾದ ಲಿಂಗೈಕ್ಯಂಗೆ ವಂದಿಸಿ ವಂದಿಸಿ,
ಎನ್ನ ಬಂಧನ ಹರಿದು, ನಾನು ಬಟ್ಟಬಯಲಾದೆನಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./186
ರಾಗ ರಚನೆಯ ಬಲ್ಲೆನೆಂಬ ವ್ಯಂಗಿಮನುಜರಿರಾ, ನೀವು ಕೇಳಿ :
ರಾಗವಾವುದು, ರಚನೆಯಾವುದು ಬಲ್ಲರೆ ನೀವು ಹೇಳಿರೊ,
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ.
ಈ ರಾಗದ್ವೇಷವ ಹಿಡಿದು, ಕೂಗಿಡುವುದೆಲ್ಲವು ರಾಗವೆ?
ವೇದಪುರಾಣಾಗಮಶಾಸ್ತ್ರವನೋದಿ ಕಂಡವರ ಬೋಧಿಸುವದೆಲ್ಲ ರಚನೆಯೆ? ಅಲ್ಲ.
ಇನ್ನು ರಾಗವಾವುದು ಎಂದರೆ,
ಝೇಂಕಾರದ ಪ್ರಣಮದ ನಾದವನರಿಯಬಲ್ಲರೆ ರಾಗ.
ಇನ್ನು ರಚನೆ ಯಾವುದು ಎಂದರೆ,
ಯೋಗಿ, ಜೋಗಿ, ಶ್ರವಣ, ಸನ್ಯಾಸಿ, ಕಾಳಾಮುಖಿ, ಪಾಶುಪತ ಷಡುದರ್ಶನಕ್ಕೆ
ಶ್ರುತವ ತೋರಿ ನುಡಿದು, ದೃಷ್ಟವ ತೋರಿ ನಡೆದು,
ಅಲ್ಲದಿರ್ದರೆ ನೀತಿಯ ತೋರಿ ಮರೆವುದೀಗ ರಚನೆ.
ಇದನರಿಯದೆ ನಾನು ರಾಗ ರಚನೆಯ ಬಲ್ಲೆನೆಂದು ನುಡಿವ
ಮೂಗುಹೋದ ಮೂಕೊರೆಯರ ಮೆಚ್ಚುವನೆ,
ನಮ್ಮ ಬಸಪ್ರಿಯ ಕೂಡಲಚೆನ್ನಬಸವಣ್ಣ ?/187
ರಾಗವ ಹಾಡಿದವರೆಲ್ಲರು
ರೋಗ ರುಜಿನಕ್ಕೆ ಒಳಗಾಗಿ ಸತ್ತುಹೋದರು.
ರಚನೆ ಮಾಡಿದವರೆಲ್ಲರು
ಸುಚಿತ್ತ ಕೆಟ್ಟು ನಿಂದೆಕುಂದೆಗೊಳಗಾಗಿ ಸತ್ತುಹೋದರು.
ರಾಗರಚನೆಯ ಬಿಟ್ಟು,
ಮೂಗಮುಗ್ಧರಾಗಿಪ್ಪವರ ನಾನಾರನು ಕಾಣೆ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ ./188
ಲಿಂಗನಯನದಲ್ಲಿ ನೋಡುತ್ತ , ಲಿಂಗಜಿಹ್ವೆಯಲ್ಲಿ ನುಡಿವುತ್ತ ,
ಲಿಂಗಹಸ್ತದಲ್ಲಿ ಮುಟ್ಟುತ್ತ , ಲಿಂಗನಾಸಿಕದಲ್ಲಿ ವಾಸಿಸುತ್ತ ,
ಲಿಂಗಸ್ತೋತ್ರದಲ್ಲಿ ಕೇಳುತ್ತ , ಲಿಂಗಪಾದದಲ್ಲಿ ನಡೆವುತ್ತ ,
ಸರ್ವಾಂಗಲಿಂಗಮಯವಾದ ಶರಣರ ಸಂಗಸುಖದೊಳಗೆ
ಎನ್ನನಿರಿಸಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ ./189
ಲಿಂಗಪೂಜೆಯ ಮಾಡುತ್ತ ತಮ್ಮಂಗ ಸುಖದ ಸಲುವಾಗಿ
ಹಂಪೆಯ ಕಂಗಳರ ಹಾಗೆ ಕೂಗುತ್ತ , ಅರಚುತ್ತ ,
ಸತಿಸುತರೊಳಗೆ ಹೊಡೆದಾಡುತಿಪ್ಪರಲ್ಲದೆ,
ಆ ಲಿಂಗಕ್ಕೆ ತನಗೆ ಒಡೆಯರಾಗಿದ್ದ ಜಂಗಮ ಬಂದರೆ, ಎತ್ತಲೆಂದರಿಯರು.
ಇಂತಪ್ಪ ಕತ್ತಲೆಮನುಜರು, ಲಿಂಗವ ಕಟ್ಟಿದರೇನು ?
ಜಂಗಮಕಿಕ್ಕಿದರೇನು ? ಗುರುವಿಂಗೆ ಶರಣೆಂದರೇನು ?
ತಮ್ಮ ಮರಣಬಾಧೆಯ ಗೆಲುವನಕ ಹುರುಳಿಲ್ಲ ಹುರುಳಿಲ್ಲ .
ಮಾಡಿದ ಭಕ್ತಿ , ಅತ್ತಿಯ ಹಣ್ಣ ಬಿಚ್ಚಿದಂತೆ.
ಅವರು ಹೊತ್ತಿಪ್ಪ ವೇಷ ದೊಡ್ಡದು.
ಎಮ್ಮ ಸಮಯ ನಾನದನರಿದು, ನಿಮ್ಮಲ್ಲಿ ನಿರ್ಮುಕ್ತನಾದ ಬಳಿಕ,
ಈ ಜಗವೇನಾದರೇನಯ್ಯ ಬಸವಪ್ರಿಯ ಕೂಡಲಚೆನ್ನಬಸವಣ್ಣಾ ./190
ಲಿಂಗಪ್ರಸಾದವ ಜಂಗಮಕ್ಕೆ ಕೊಡುವ ಕರ್ಮಿಗಳು ನೀವು ಕೇಳಿರೆ.
ಜಂಗಮಪ್ರಸಾದವ ಲಿಂಗಕ್ಕೆ ಕೊಡುವ ಧರ್ಮಿಗಳು ನೀವು ಕೇಳಿರೆ.
ಲಿಂಗಪ್ರಸಾದವ ಜಂಗಮಕ್ಕೆ ಕೊಡುವುದು ಅನಾಚಾರ.
ಜಂಗಮಪ್ರಸಾದವ ಲಿಂಗಕ್ಕೆ ಕೊಡುವುದು ಸದಾಚಾರ.
ಅದೆಂತೆದಡೆ- ಶಿವಧರ್ಮ ಪುರಾಣದಲ್ಲಿ :
ಲಿಂಗಾರ್ಪಿತ ಪ್ರಸಾದಂ ಚ ನದದ್ಯಾಜ್ಜಂಗಮಾರ್ಪಿತಂ |
ಜಂಗಮಾರ್ಪಿತ ಪ್ರಸಾದಂ ತದದ್ಯಾಲಿಂಗಮೂರ್ತಿಷು ||
ಎಂದುದಾಗಿ, ಇದು ಕಾರಣ,
ಜಂಗಮಪ್ರಸಾದವ ಲಿಂಗಕ್ಕೆ ಕೊಟ್ಟು ಕೊಂಬೆನಾಗಿ,
ಎನ್ನ ಭವಂ ನಾಸ್ತಿಯಾಯಿತ್ತಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./191
ವಂದನೆಗೆ ನಿಲ್ಲಬೇಡ, ನಿಂದೆಗಂಜಿ ಓಡಲಿಬೇಡ.
ಹಿಂದು ಮುಂದು ಆಡಲಿಬೇಡ, ಸಂದೇಹಗೊಳಲಿಬೇಡ.
ದ್ವಂದ್ವಬುದ್ಧಿಯ ಕಳೆದು ನಿಂದಿರೆ,
ಬಸವಪ್ರಿಯ ಕೂಡಲಚೆನ್ನಬಸವಣ್ಣ ./192
ವಜ್ರದ ಮನೆಯೊಳಗಿರ್ದು, ಗೊರಲೆ ಮುಟ್ಟಿತೆಂಬ ಸಂದೇಹವೇಕೆ ?
ಭದ್ರಗಜ ಮೇಲೆ ಬರುತಿರ್ದು ಕೆಳಗಿರ್ದ ಗುಜ್ಜನಾಯಿ ಮುಟ್ಟಿತೆಂಬ ಸಂದೇಹವೇಕೆ ?
ಸಂಜೀವನ ಕೈಯ ಸಾರಿರ್ದು ಇಂದಿಗೆ ನಾಳಿಗೆಂಬ ಸಂದೇಹವೇಕೆ ?
ಸಜ್ಜನ ಸದ್ಭಕ್ತರ ಸಂಗದೊಳಗಿರ್ದು,
ಸತ್ತೆನೋ, ಬದುಕಿದೆನೋ ಎಂಬ ಸಂದೇಹವೇಕೆ ?
ಹತ್ತರಡಿಯ ಬಿದ್ದ ಹಾವು ಸಾಯದೆಂದು ಗಾದೆಯ ಮಾತ ನುಡಿವರು.
ನಿತ್ಯರಪ್ಪ ಶರಣರ ಸಂಗದೊಳಗಿರ್ದು,
ಮತ್ತೊಂದು ಉಂಟೆಂದು ಭಾವಿಸಿ ನೋಡುವ
ಕತ್ತೆಮನುಜರ ಅತ್ತ ಹೊದ್ದದೆ, ಇತ್ತಲೆ ನಿಂದು ನಾಚಿ ನಗುತಿರ್ದ,
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ . /193
ವಾದಿಗೆ ಜೂಜನಾಡುವಾತನೊಬ್ಬ ಪಾತಕ.
ಪರರ ಹಾದಿಯ ಹೋಗುವಾತನೊಬ್ಬ ಪಾತಕ.
ಪಶುವಧೆಯ ಮಾಡುವಾತನೊಬ್ಬ ಪಾತಕ.
ಇವರು ಮೂವರು ಹೋದ ಹಾದಿಯಲ್ಲಿ ಹೋಗಲಾಗದು.
ಅದೇನು ಕಾರಣವೆಂದರೆ,
ಅವರು ಚಂದ್ರ ಸೂರ್ಯರುಳ್ಳನ್ನಕ್ಕ ನರಕದಲ್ಲಿಪ್ಪುದು ತಪ್ಪದು ಕಾಣಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ ./194
ವಿೂಸಲು ಸೂಸಲಾಗಿ, ದೋಸೆ ಕಡಬು ಹೊಯ್ದು,
ಹಬ್ಬವ ಮಾಡಿಹೆನೆಂಬ ಹೇಸಿಗಳ ಮಾತ ಕೇಳಲಾಗದು.
ಅದೇಕೆ ಎಂದರೆ, ಲಿಂಗ ಜಂಗಮದ ಭಾಷೆ ಸಲ್ಲದಾಗಿ,
ಇನ್ನು ವಿೂಸಲಾವುದೆಂದರೆ,
ಭಾಷೆಗೇರಿಸಿದ ತನುವೆ ಅಡ್ಡಣಿಗೆ, ಘನವೆ ಹರಿವಾಣ, ಮನ ವಿೂಸಲೋಗರ,
ಈ ಅನುವನರಿದು, ಮಹಾಲಿಂಗಕ್ಕೆ ಅರ್ಪಿತವ ಮಾಡುವನೆ ಸದ್ಭಕ್ತನು,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./195
ವೇದಪುರಾಣಾಗಮಶಾಸ್ತ್ರ ನಾದದ ಸೊಮ್ಮೆಂಬಿರಿ.
ಆ ನಾದದಿಂದ ಆಕಾಶ ಪುಟ್ಟಿತ್ತು .
ಆಕಾಶದಿಂದ ವಾಯು ಪುಟ್ಟಿತ್ತು , ವಾಯುವಿನಿಂದ ಅಗ್ನಿ ಪುಟ್ಟಿತ್ತು .
ಅಗ್ನಿಯಿಂದ ಅಪ್ಪು ಪುಟ್ಟಿತ್ತು , ಅಪ್ಪುವಿನಿಂದ ಪೃಥ್ವಿ ಪುಟ್ಟಿತ್ತು.
ಪೃಥ್ವಿಯಿಂದ ಇರುವೆ ಕಡೆಯಾಗಿ ಎಂಬತ್ತುನಾಲ್ಕುಲಕ್ಷ ಜೀವಂಗಳು ಪುಟ್ಟಿದವು.
ಅದೇನು ಕಾರಣವೆಂದಡೆ, ರಸಗಂಧದಿಂದ ರೂಪಾದವು, ಅಗ್ನಿಕಳೆಯಾಯಿತ್ತು .
ವಾಯು ಚೈತನ್ಯವಾಯಿತ್ತು . ಆಕಾಶ ನಾದವಾಯಿತ್ತು.
ಇಂತಿದರೊಳಗೆ ನಮ್ಮ ದೇವ ಇವರೊಂದರಂತೆಯೂ ಅಲ್ಲ .
ಪಂಚತತ್ವವನಿಳುಹಿ, ಆತ್ಮತತ್ವ ಅನಾತ್ಮನೊಳು ಕೂಡಿ,
ಅನಾಮಯಲಿಂಗ ಕಾಣಬಹುದು.
ಅನಾಮಯಲಿಂಗವ ಕಂಡ ಬಳಿಕ, ಅದೇ ಲಿಂಗೈಕ್ಯವು.
ಇದು ತಪ್ಪದು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ ./196
ವೇದವನೋದಿದವರೆಲ್ಲ ನಮ್ಮ ಶರಣರು ಹೋದ ಹಾದಿಯನರಿಯದೆ,
ನಾಹಂ ಎಂದು ಅಹಂಕರಿಸಿ, ಅನಿತ್ಯದೇಹಿಗಳಾಗಿ, ಅನಾಮಿಕರಾಗಿಹೋದರು.
ಶಾಸ್ತ್ರವನೋದಿದವರೆಲ್ಲ ನಮ್ಮ ಶರಣರು ಹೋದ ಹಾದಿಯನರಿಯದೆ,
ಶ್ರವಣ, ಸನ್ಯಾಸಿ, ಯೋಗಿ, ಜೋಗಿಯಾಗಿ ಹೀಗೆ ಕೆಲಬರು ಕೆಟ್ಟರು.
ಆಗಮವನೋದಿದವರೆಲ್ಲ ನಮ್ಮ ಶರಣರು ಹೋದ ಹಾದಿಯನರಿಯದೆ,
ಕ್ರಿಯಾಪಾದ, ಚರ್ಯಪಾದ, ಜ್ಞಾನಪಾದವೆಂದು
ನಾನಾಪರಿಯ ಕರ್ಮಭಕ್ತಿಯ ಮಾಡಿ,
ಲಿಂಗ ಜಂಗಮದ ಮರ್ಮವನರಿಯದೆ, ಅಧರ್ಮಿಗಳಾಗಿ ಹೋದರು.
ಪುರಾಣವನೋದಿದವರೆಲ್ಲ ನಮ್ಮ ಪುರಾತರು ಹೋದ ಹಾದಿಯನರಿಯದೆ,
ಪುರದ ಬೀದಿಯೊಳಗೆ ಮಾತು ಕಥೆಯ ಪಸಾರವನಿಕ್ಕಿ ಮಾಡಿ,
ಫಲಪದ ಮುಕ್ತಿಗೆ ಸಲ್ಲದೆ ಹೋದರು.
ಇದು ಕಾರಣ, ಈ ಚತುರ್ವಿಧದೊಳಗಾವಂಗವೂ ಅಲ್ಲ .
ಎಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನ ಶರಣರ ಪರಿ ಬೇರೆ./197
ವೇಷವ ಹೊತ್ತು , ಆಶೆ ರೋಷವ ಬಿಡದೆ, ದೇಶವ ತಿರುಗಿ,
ಹೊರವೇಷದ ವಿಭೂತಿ ರುದ್ರಾಕ್ಷಿ ಕಾವಿ ಕಾಷಾಯಾಂಬರವ
ಧರಿಸಿ ಫಲವೇನು?
ಕಾಮ ಕೆಡದು, ಕ್ರೋಧ ಬಿಡದು, ಲೋಭ ಹಿಂಗದು, ಮೋಹ ನಿಲ್ಲದು,
ಮದ ಹೆರೆಸಾರದು, ಮತ್ಸರ ಬೆಂದುಹೋಗದು.
ಇವೆಲ್ಲ ಸಹಿತ ಜಂಗಮಭಕ್ತರೆಂದು ಸುಳಿವವರ ಕಂಡು ನಾಚಿತ್ತು ಎನ್ನ ಮನ.
ಭಕ್ತಜಂಗಮ ಘನವನೇನೆಂದು ಉಪಮಿಸುವೆ ?
ರೂಪಿನ ಹಾಗೆ, ನೆಳಲಿನ ಹಾಗೆ, ದೇಹದ ಹಾಗೆ,
ಪ್ರಾಣದ ಹಾಗೆ, ಭಾವದ ಹಾಗೆ, ನಿರ್ಭಾವದ ಹಾಗೆ,
ಉರಿಯ ಹಾಗೆ, ಕರ್ಪುರದ ಹಾಗೆ, ಆವಿಯ ಹಾಗೆ, ನೀರ ಹಾಗೆ,
ಎರಡೊಂದಾದರೆ ತೆರಹಿಲ್ಲ. ಆ ನಿಲುವಿಂಗೆ ನಮೋ ನಮೋ
ಎನುತಿರ್ದೆ ಕಾಣಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ ./198
ವ್ಯಸನವುಳ್ಳನ್ನಕ್ಕ ಪ್ರಸಾದಿಯಲ್ಲ .
ವಿಷಯವುಳ್ಳನ್ನಕ್ಕ ಪಾದೋದಕಸಂಬಂಧಿಯಲ್ಲ .
ಭಾವವುಳ್ಳನ್ನಕ್ಕ ಭವವಿರಹಿತನಲ್ಲ , ಬಯಕೆಯುಳ್ಳನ್ನಕ್ಕ ಐಕ್ಯನಲ್ಲ .
ಇಂತೀ ಐಕ್ಯಸ್ಥಲವೆಲ್ಲರಿಗೆಲ್ಲಿಯದೊ ?
ಐಕ್ಯನಾದರೆ ಅನ್ನಪಾನಾದಿಗಳ ಇಚ್ಛೆ ನಿಂದು,
ಅನಲ, ಪವನನ ಗುಣ ಕೆಟ್ಟು, ಆಕಾಶದ ಗುಣವರತು,
ಆತ್ಮನೊಳು ಬೆರೆದವರ ಐಕ್ಯರೆಂಬೆ.
ಆತ್ಮ ಅನಾತ್ಮನೊಳು ಅಡಗಿದರೆ ನಿರವಯಲನೆಂಬೆ.
ಇಂತಪ್ಪ ಶರಣ ಬಯಲು ಬಯಲಾಗಿಪ್ಪನಲ್ಲದೆ,
ವಿವರಿಸಿ ನೋಡಿದರೆ ಏನೆಂದರಿಯಬಾರದು,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ ./199
ಶರಣನ ಅಂಗವು ಎಂತಿಪ್ಪುದೆಂದರೆ,
ವಾರಿಕಲ್ಲು ನೀರೊಳಗೆ ಬಿದ್ದಂತೆ,
ಸಾರ ಬಲಿದು, ಶರಧಿಯ ಕೂಡಿದಂತೆ,
ಅರಗಿನ ಬೊಂಬೆಗೆ ಉರಿಯ ಸರವ ಮಾಡಿದಂತೆ,
ಪರಿಮಳವ ಕೂಡಿದ ವಾಯುವಿನಂತೆ,
ಆಡಂಬರವ ಮಾಡಿ ತೋರಿದ ಆಕಾಶದಂತೆ,
ಇದೀಗ ಶರಣರಂಗ. ಇದರಂದವ ತಿಳಿದರೆ ಐಕ್ಯ.
ಇದರೊಳು ನಿಶ್ಚಿಂತನಾದರೆ ನಿರವಯವು,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ ./200
ಶರಣರಿಗೆ ಭವವುಂಟೆಂದು ಮರ್ತ್ಯದಲ್ಲಿ ಹುಟ್ಟಿದ
ಭವಭಾರಿಗಳು ನುಡಿದಾಡುವರು.
ತಮ್ಮ ಹುಟ್ಟ ತಾವರಿಯರು, ತಾವು ಮುಂದೆ ಹೊಂದುವದನರಿಯರು.
ಇವರು ಬಂದ ಬಂದ ಭವಕ್ಕೆ ಕಡೆಮೊದಲಿಲ್ಲ .
ಇಂತಪ್ಪ ಸಂದೇಹಿಗಳು ನಮ್ಮ ಶರಣರ ಹುಟ್ಟ ಬಲ್ಲೆನೆನಬಹುದೆ ?
ತನ್ನ ನರಿದವನಲ್ಲದೆ ಇದಿರನರಿಯರು.
ಈ ಉದರಪೋಷಕರೆಲ್ಲರೂ ಇದ ಬಲ್ಲೆನೆಂಬುದು ಹುಸಿ.
ಇದ ಬಲ್ಲವರು ಬಲ್ಲರಲ್ಲದೆ, ಸೊಲ್ಲಿಗಭೇದ್ಯನ ನಾನೆತ್ತ ಬಲ್ಲೆ ?
ಎನ್ನ ಗುರು ಚೆನ್ನಮಲ್ಲೇಶ್ವರನೇ ಬಲ್ಲ .
ಇನ್ನು ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನೆ ಬಲ್ಲ . /201
ಶಿವಭಕ್ತರ ಹಾದಿಯ ಕಾಣದೆ,
ಹರಗಣಂಗಳೆಲ್ಲಕ್ಕೆ ಪರಮಗುರುವಾಗಿ, ಪರಮಾರಾಧ್ಯರಾಗಿ ಸುಳಿದಿರಲ್ಲದೆ
ನೀವು ಒಡಲುವಿಡಿದಿದ್ದರೆನ್ನಬಹುದೆ ? ಅದೇನು ಕಾರಣವೆಂದರೆ,
ಎನ್ನ ಭವವ ಛೇದನೆಯ ಮಾಡಿದುದಕ್ಕೆ ಎನ್ನ ಮನಕ್ಕೆ ಮನವೇ ಸಾಕ್ಷಿ.
ಮತ್ತೆ ಚೆನ್ನಮಲ್ಲೇಶ್ವರ ಸಾಕ್ಷಿ.
ಮರವೆಯಿಂದ ಈ ಮರ್ತ್ಯದಲ್ಲಿ ಒಡಲುವಿಡಿದು ಹುಟ್ಟಿದವರು
ಬ್ರಹ್ಮನಾದರೂ ಆಗಲಿ, ವಿಷ್ಣುವಾದರೂ ಆಗಲಿ,
ರುದ್ರನಾದರೂ ಆಗಲಿ, ಶಿವನಾದರೂ ಆಗಲಿ, ಸದಾಶಿವನಾದರೂ ಆಗಲಿ,
ಮಾಯೆವಿಡಿಸಿ ಕಾಡಿದಲ್ಲದೆ ಮಾಣದು. ಮಿಕ್ಕಿನವರ ಭವಕ್ಕೆ ಕಡೆ ಇಲ್ಲ .
ಎನ್ನ ಪರಮಾರಾಧ್ಯರು ಚೆನ್ನಮಲ್ಲೇಶ್ವರ ಮಾಯೆಯ ಮಂಡೆಯ ಮೆಟ್ಟಿ,
ಎನ್ನ ತನು ಮನ ಧನಕ್ಕೆ ಒಡೆಯನಾಗಿ ತನ್ಮಯನಾಗಿ ತಾನೇ ರೂಪಾದನಯ್ಯ.
ನಾನೆಂಬುದಿಲ್ಲ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ ./202
ಶೀಲವಂತರು, ಶೀಲವಂತರು ಎಂದೇನೊ ?
ಶೀಲವಂತಿಕೆಯನಾರು ಬಲ್ಲರು?
ಶೀಲವಾದರೆ ಶಿವನೊಳು ಬೆರೆವುದೇ ಶೀಲ.
ಶೀಲವಾದರೆ ಗುರುಲಿಂಗಜಂಗಮವ ತನ್ನೊಳಗರಿವುದೇ ಶೀಲ.
ಅದಕ್ಕೆ ಮೀರಿದ ಶೀಲವಾದರೆ, ಹಸಿವು ತೃಷೆ ನಿದ್ರೆ ವಿಷಯವ
ಕೆಡಿಸುವುದೇ ಶೀಲ.
ಅದಕ್ಕೆ ತುರಿಯಾತೀತ ಶೀಲವಾದರೆ,
ಬಾಲನಾಗಿ ತನ್ನ ಲೀಲಾವಿನೋದವ ಭೂಮಿಯ ಮೇಲೆ ನಟಿಸುವುದೇ ಶೀಲ.
ಇದನರಿಯದೆ ಶೀಲಶೀಲವೆಂದು ಮನೆಮನೆಗೆ ಶೀಲವಲ್ಲದೆ,
ತನ್ನ ತನಗೆ ಕಾಯಕೃತ್ಯವಲ್ಲದೆ,
ಇದನರಿದು ಮೋಹ ಘನವನೆ ಮರೆದು, ಮನವನೆ ಬಳಲಿಸಿ,
ಘನವ ಮಾಡಿ, ತನುವ ಹೊರೆದೆನೆಂಬ ಬಿನುಗರ ನುಡಿಯ ಮೆಚ್ಚುವನೆ,
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ ? /203
ಶೀಲವಂತರು, ಶೀಲವಂತರು ಎಂಬರು
ಶೀಲವಂತಿಕೆಯನಾರು ಬಲ್ಲರು ಹೇಳಾ ?
ನೆಲಕೆ ಶೀಲ ಶೀಲವೆಂಬೆನೆ ?
ಹೊಲೆ ಹದಿನೆಂಟುಜಾತಿ ನಡೆ ನುಡಿವುದಕ್ಕೆ ಒಂದೆಯಾಯಿತ್ತು .
ಜಲಕೆ ಶೀಲವೆಂಬೆನೆ ?
ವಿೂನ ಮೊಸಳೆಗಳು ಖಗಮೃಗಂಗಳು ನಿಂದೆಂಜಲು.
ಬೆಳೆಗೆ ಶೀಲವೆಂಬೆನೆ ? ಎತ್ತು ಕತ್ತೆ ತಿಂದು ಮಿಕ್ಕ ಎಂಜಲು.
ಹೊನ್ನಿಗೆ ಶೀಲವೆಂಬೆನೆ ? ಉರ ಹೊರೆಯಾಗಿಪ್ಪುದು.
ಹೆಣ್ಣಿಗೆ ಶೀಲವೆಂಬೆನೆ ? ಕಣ್ಣುಗೆಡಿಸಿ ಕಾಡುತಿಪ್ಪುದು.
ಇನ್ನಾವುದು ಶೀಲ ಹೇಳಿರಣ್ಣಾ ? ಇದಕ್ಕೆ ಒಳಗಾದವರೆಲ್ಲ ದುಃಶೀಲರು.
ಇದ ಹಿಡಿದು ಹಿಡಿಯದೆ, ಬಿಟ್ಟು ಬಿಡದೆ.
ತನ್ನ ಮನಕ್ಕೆ ಶೀಲವಾಗಿಪ್ಪುದೆ ಅಚ್ಚಶೀಲ ಕಾಣಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./204
ಶುದ್ಧ , ಸಿದ್ಧ , ಪ್ರಸಿದ್ಧ , ಪ್ರಸಾದವೆಂದು ಹೆಸರಿಟ್ಟುಕೊಂಡು
ಚೆನ್ನಾಗಿ ನುಡಿವಿರಿ.
ಶುದ್ಧವಾದ ಮುಖ, ಸಿದ್ಧವಾದ ಮುಖ, ಪ್ರಸಿದ್ಧವಾದ ಮುಖ,
ಅರಿದರೆ ನೀವು ಹೇಳಿರೊ.
ಅರಿದು ಅರಿಯದೆ, ಅರಿಮರುಳುಗಳಿರಾ ನೀವು ಕೇಳಿರೊ.
ಕಾಯಕರಣಾದಿಗಳ ಗುಣವಳಿದುದೆ ಶುದ್ಧ .
ಜೀವನ ದೃಶ್ಯ ಕೆಟ್ಟು, ಜಗದ ವ್ಯಾಕುಳವಳಿದು, ನಿರಾಕುಳದಲ್ಲಿ ನಿಂದುದೆ ಸಿದ್ಧ.
ಪ್ರಾಣದ ಭಯ ಮರಣದ ಭಯ ಮರಣಾದಿಗಳ ಹಿಂಗಿ,
ಭಾವಳಿದು ಭವಕ್ಕೆ ಸವೆದುದೆ ಪ್ರಸಿದ್ಧ .
ಈ ತೆರನನರಿಯದೆ ಎತ್ತರ ತೆತ್ತರನಾಗಿ ನುಡಿವಿರಿ.
ಬಲ್ಲವರೆನಿಸಿಕೊಂಡಿಹೆವೆಂದು ನಿಮ್ಮ ಬಲ್ಲತನ ಹಾಳಾಯಿತ್ತು .
ನೀವು ಬರುಸೂರೆಯ ಹೋಗುವುದನರಿಯದೆ,
ಬರಿದೆ ಏಕೆ ಅರಚಾಗಿ ಸತ್ತಿರಿ, ನೆರೆ ಮೂರುಲೊಕವೆಲ್ಲ ?
ಇದನರಿದಾದರೂ ಆರಿಗೂ ಕೊಡಬೇಡ, ಕೊಳಬೇಡ.
ಮನಮುಟ್ಟಿ ಎರಗಿ ಬದುಕಿರೆ,
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಾ ./205
ಶೃಂಗಾರದ ಊರಿಗೆ ಒಂಬತ್ತು ಹಾಗಿಲು,
ಐದು ದಿಡ್ಡಿ , ಎರಡು ತೋರಗಂಡಿ,
ಐವರು ತಳವಾರರು, ಮೂವರು ಪ್ರಧಾನರು,
ಇಬ್ಬರು ಸೇನಬೋವರು, ಒಬ್ಬ ಅರಸು.
ಅರಸಿಂಗೆ ಐವರು ಸೊಳೆಯರು, ಅವರ ಬಾಗಿಲ ಕಾವರು ಹತ್ತು ಮಂದಿ.
ಅವರ ಪಾ[ಲಿ]ಪ ಡಕ್ಕಣದವರು ಇಪ್ಪತ್ತೈದು ಮಂದಿ.
ಅವರ ಭಂಡಾರ ಬೊಕ್ಕಸ ಅಟ್ಟುಮಣಿಹ,
ಹರಿಮಣಿಹ, ಕಟ್ಟಿಗೆಯವರು, ಬೋಹೋ ಎಂದು ಕೊಂಡಾಡುವರು,
ಮೂವತ್ತಾರುಮಂದಿ ಚೂಣಿಯರು.
ಹುಯ್ಯಲ ಕಾಲಾಳುಗಳು ನೂರನಾಲ್ವತ್ತೆಂಟು.
ಈ ಸಂಭ್ರಮದಲ್ಲಿ ಆ ಮನವೆಂಬ ಅರಸು
ಸುಖಸಂತೋಷದಲ್ಲಿ ರಾಜ್ಯಂಗೆಯ್ಯುತ್ತಿರಲು,
ಇತ್ತ ಶರಣ ತನ್ನ ತಾನೆ ಎಚ್ಚೆತ್ತು ನೋಡಿ,
ಪಶ್ಚಿಮ ಕದವ ಮುರಿದು ಒಳಹೊಕ್ಕು,
ಒಳಗೆ ತೊಳಗಿ ಬೆಳಗುವ ಜ್ಯೋತಿರ್ಮಯ ಲಿಂಗವನೆ ಕಂಡು,
ಆ ಲಿಂಗದಂಘ್ರಿವಿಡಿದು ಸಂಗಸುಖದೊಳಗೆ
ಒಂಬತ್ತು ಬಾಗಿಲಿಗೂ ಲಿಂಗವನೆ ಸ್ಥಾಪ್ಯವ ಮಾಡಲಾಗಿ,
ಮನವೆಂಬ ಅರಸು ಒಳಗೆ ಸಿಕ್ಕಿದ ಅಗಳ ಮುರಿದು ಬರುತ್ತಿರಲು,
ದಾರಿಯ ಕಾಣದೆ ಕಣ್ಣುಗೆಟ್ಟು ಹೋದರು.
ಮನವೆಂಬ ಅರಸು ತನ್ನ ಸೊಳೆಯರೈವರು,
ಪ್ರಧಾನರು, ಸೇನಬೋವರು, ಪಾಲಿಪ ಡಕ್ಕಣದವರು,
ಬೋಹೋ ಎಂದು ಉಗ್ಘಡಿಸುವವರು,
ಆನೆ ಕುದುರೆ ಇವರೆಲ್ಲರನು ಹಿಡಿದು ಕಟ್ಟಿಕೊಂಡು
ಮಹಾಲಿಂಗವೆಂಬ ಅರಸಿಂಗೆ ತಂದೊಪ್ಪಿಸಿದನು.
ಆ ಲಿಂಗವ ಕಂಡವರೆಲ್ಲ ಲಿಂಗದಂತೆ ಆದರು.
ಇದು ಕಾರಣ, ಶರಣಂಗೆ ಅಂಗಭೋಗವೆಲ್ಲ ಲಿಂಗಭೋಗವಾಯಿತ್ತು .
ಲಿಂಗಭೋಗವೆ ಅರ್ಪಿತವಾಯಿತ್ತು , ಅರ್ಪಿತವೆ ಪ್ರಸಾದವಾಯಿತ್ತು ,
ಪ್ರಸಾದದೊಳಗೆ ಪರಿಣಾಮಿಯಾದ.
ಇದು ಕಾರಣ, ಎನ್ನ ಅಂಗ ಉರಿವುಂಡ ಕರ್ಪುರದಂತಾಯಿತ್ತಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ ./206
ಶ್ರೀ ಗುರುವಿನ ಕೃಪಾದೃಷ್ಟಿ ತತ್ಶಿಷ್ಯನ ಹೃದಯದಲ್ಲಿ ಪ್ರವೇಶಿಸಿ,
ಆ ತತ್ ಶಿಷ್ಯಂ ಗುರೂಪಾವಸ್ಥೆಯ ಮಾಡುತ್ತಿರಲು
ಆ ಶ್ರೀ ಗುರುಸ್ವಾಮಿ ಪ್ರಸನ್ನರಾಗಿ,
ಹತ್ತಿರಕ್ಕೆ ಕರೆದು, ಬತ್ತಿನಲ್ಲಿ ಕುಳ್ಳಿರಿಸಿ,
ಮಸ್ತಕದ ಮೇಲೆ ಹಸ್ತವನ್ನಿರಿಸಲು
ಅವಲೋಹದ ಮೇಲೆ ಪರುಷ ಬಿದ್ದಂತಾಯಿತ್ತಯ್ಯಾ
ಲಲಾಟದಲ್ಲಿ ವಿಭೂತಿಯ ಧರಿಸಲು
ಮುಕ್ತಿರಾಜ್ಯ ಕ್ಕೊಡೆತನವನಿತ್ತಂತಾಯಿತ್ತಯ್ಯಾ
ಸಂಚಿತ ಪ್ರಾರಬ್ಧ ಆಗಾಮಿ ಜಾರಿ ಹೋದವಯ್ಯಾ.
ಕರ್ಣದಲ್ಲಿ ಮಂತ್ರವ ಹೇಳಲೊಡನೆ
ಪಂಚಾಕ್ಷರವೆ ಸ್ಥಾಪ್ಯವಾಗಿ ಪಂಚಭೂತಂಗಳು ಬಿಟ್ಟುಹೋದವಯ್ಯಾ.
ಕರಸ್ಥಲಕ್ಕೆ ಲಿಂಗವ ಕೊಡಲೊಡನೆ
ಅಂಗವೆ ಲಿಂಗಾರ್ಪಣವಾಗಿ ಸರ್ವಾಂಗ ಲಿಂಗವಾಗಿ
ಅಂಗಕರಣಂಗಳಲ್ಲಿ ಲಿಂಗಕಿರಣಂಗಳಾಗಿ
ಆಡುವುದು ಲಿಂಗದ ಲೀಲೆ ಎಂದಂದು
ಆ ತತ್ಶಿಷ್ಯ ತಲೆಯೆತ್ತಿ ನೋಡಿ ತಾನನಾದಿ ಶಿವತತ್ವವಲ್ಲದಿದ್ದರೆ
ಆ ಪರಶಿವನಪ್ಪ ಗುರುವೆ ಪ್ರಸನ್ನರಪ್ಪರೆ ಎಂದರಿದು,
ಪಾದದ ಮೇಲೆ ಬಿದ್ದು ಬೇರಾಗದಿರಲು
ಆತನು ಗುರುವ ಸೋಂಕಿ
ಕಿಂಕುರ್ವಾಣ ಭಯಭಕ್ತಿಯಿಂದ ಅಹಂಕಾರವಳಿದು ಭಕ್ತನಾದ.
ಮನ ಲಿಂಗವ ಸೋಂಕಿ
ಭಯ ಭಕ್ತಿಯಿಂದ ಚಿತ್ತಗುಣವಳಿಸು ಮಹೇಶ್ವರನಾದ,
ಧನ ಜಂಗಮವ ಸೋಂಕಿ
ಪ್ರಕೃತಿಯಳಿದು, ಪರಮಾನಂದರಸಭರಿತನಾಗಿ
ಮನ ಮನನ ಲೀಯವಾಗಿ ಪ್ರಾಣಲಿಂಗಿಯಾದ.
ಭಾವ ಪ್ರಸಾದವ ಸೋಂಕಿಯೆ
ಭ್ರಮೆಯಳಿದು ನಿರ್ಭಾವಿಯಾಗಿ ಜೀವಗುಣವಳಿದು ಶರಣನಾದ.
ಅರಿವು ತನುಕರಣ ಮನ ಇಂದ್ರಿಯನವಗಿವಿಸಿ ಸರ್ವಾಂಗಲಿಂಗವಾಗಿ
ಅರಿವಡಗಿ ಮರಹು ನಷ್ಟವಾಗಿ ತೆರಹಿಲ್ಲದ
ಬಯಲಿನೊಳಗೆ ಕುರುಹಳಿದುನಿಂತ
ಬಸವಪ್ರಿಯ ಕೂಡಲಸಂಗಮದೇವನೆಂಬ
ಶ್ರೀಗುರುವಿನ ಚರಣಕ್ಕೆ ನಮೋ ನಮೋ ಎನುತಿರ್ದೆನು./207
ಶ್ರೀಗುರುವೆ ಮದ್ಗುರುವೆ ಸದ್ಗುರುವೆ ಸದಾಸನ್ನಿಹಿತ ಗುರುವೆ
ಷಡಾಂಗ ಸನ್ಮತಗುರುವೆ ಸಾವಧಾನದೊಳು ಸಮರಸ ಗುರುವೆ
ಭಾವದೊಳು ಭರಿತ ಗುರುವೆ
ಬ್ರಹ್ಮಾಂಡ ಪಿಂಡಾಂಡ ಪರಿಪೂರ್ಣ ಗುರುವೆ
ಮಹದಾನಂದ ಗುರುವೆ, ಬಸವಪ್ರಿಯ
ಕೂಡಲಸಂಗಮೇದೇವ ಪ್ರಭುವೆ. /208
ಶ್ರೀಜಂಗಮಲಿಂಗ ಎಂತಿಹನೆಂದಡೆ :
ಇಂತೀ ಅಜಾಂಡಬ್ರಹ್ಮಾಂಡವು ತನ್ನ ಕುಕ್ಷಿಯೊಳು ನಿಕ್ಷೇಪವಾಗಿ,
ತಾ ನಿರ್ಗಮನಿಯಾಗಿ ಲಿಂಗರೂಪಾಗಿ ಸುಳಿಯಬಲ್ಲರೆ ಜಂಗಮಲಿಂಗವೆಂಬೆ.
ಅದಕ್ಕೆ ನಮೋ ನಮೋ, ಆ ನಿಲವಿಂಗೆ ಭವವಿಲ್ಲ ಬಂಧನವಿಲ್ಲ .
ಇಂತಲ್ಲದೆ ವೇಷವ ಹೊತ್ತು , ಹೊರವೇಷದ ವಿಭೂತಿ ರುದ್ರಾಕ್ಷಿಯ ತೊಟ್ಟು,
ಕಾಸುವಿಗೆ ಕೈಯಾಂತು ವೇಶಿದಾಸಿಯರ ಬಾಗಿಲ ಕಾಯ್ದು,
ಲೋಕದೊಳಗೆ ಗಾಸಿಯಾಗಿ ಜಂಗಮವೇಷಕ್ಕೆಲ್ಲ ಭಂಗವ ಹೊರಿಸಿ,
ಕಣ್ಣುಗಾಣದೆ ಜಾರಿಬಿದ್ದು , ದೂರಿಂಗೆ ಬಂದು,
ಈ ಮೂರಕ್ಕೊಳಗಾಗಿ, ಪಾರಾಗಿ ಹೋಗುವರ ವೇಷಕ್ಕೆ ಶರಣಾರ್ಥಿ.
ಅವರು ಸುತ್ತಿರ್ದ ಪಾಶವ ಕಂಡು ಹೇಸಿತ್ತೆನ್ನ ಮನ.
ನಿಮ್ಮಾಣೆ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ . /209
ಶ್ರೋತ್ರ, ನೇತ್ರ, ಜಿಹ್ವೆ, ತ್ವಕ್ಕು, ಘ್ರಾಣವೆಂಬ ಬುದ್ಧೀಂದ್ರಿಯಂಗಳನರಿದು,
ವಾಕ್ಕು, ಪಾಣಿ, ಪಾದ, ಪಾಯು, ಗುಹ್ಯವೆಂಬ ಕರ್ಮೆಂದ್ರಿಯವ ತೊರೆದು,
ಗಂಧ, ರಸ, ರೂಪು, ಸ್ಪರ್ಶನ, ಶಬ್ದವೆಂಬ ಪಂಚೇಂದ್ರಿಯವ ಜರಿದು,
ಮನ, ಬುದ್ಧಿ, ಚಿತ್ತ, ಅಹಂಕಾರವೆಂಬ ಚತುಷ್ಟಯ ಕರಣಂಗಳ ಮೆಟ್ಟಿ,
ಕಾಮ, ಕ್ರೋಧ, ಲೋಭ, ಮೋಹ,
ಮದ, ಮತ್ಸರವೆಂಬ ಅರಿಷಡ್ವರ್ಗಮಂ ಸುಟ್ಟು,
ತನುವ್ಯಸನ, ಮನವ್ಯಸನ, ಧನವ್ಯಸನ, ವಾಹನವ್ಯಸನ,
ಉತ್ಸಾಹವ್ಯಸನ, ಸೇವಕವ್ಯಸನ, ಮತ್ಸರವ್ಯಸನವೆಂಬ
ಸಪ್ತವ್ಯಸನಂಗಳ ಸ್ವಪ್ನದಲ್ಲಿ ನೆನೆಯದೆ,
ಪೃಥ್ವಿ, ಅಪ್ಪು, ಅಗ್ನಿ, ವಾಯು, ಆಕಾಶ, ಚಂದ್ರ, ಸೂರ್ಯ, ಆತ್ಮರೆಂಬ
ಇಂತೀ ಅಷ್ಟಮದವ ಹಿಟ್ಟುಗುಟ್ಟಿ,
ಪ್ರಾಣ, ಅಪಾನ, ಉದಾನ, ಸಮಾನ,
ನಾದ, ಕೂರ್ಮ, ಕ್ರಕರ, ದೇವದತ್ತ, ಧನಂಜಯವೆಂಬ
ದಶವಾಯುವ ಕಡೆಮೆಟ್ಟಿ,
ಸಂಸಾರವ ಒಡಹಾಯ್ದು, ಜಗವ ಹೊದ್ದದೆ, ತಾನೊಂದು ಕಡೆಯಾಗಿ ನಿಂದು,
ಮಾಯೆಗೆ ಒಡೆಯನಾಗಿ, ಆ ಮಹಾಘನವ ಸೂರೆಗೊಂಡ ಶರಣಂಗೆ
ನಮೋ ನಮೋ ಎಂದು ಬದುಕಿದೆನಯ್ಯಾ.
ಬಸವಪ್ರಿಯ ಕೂಡಲಚೆನ್ನಬಸವಣ್ಣ, ನಿಮ್ಮ ಧರ್ಮ, ನಿಮ್ಮ ಧರ್ಮ./210
ಸಂಜೆ ಮಂಜಾನೆಯೆಂದೆನಬೇಡ, ಅಂಜಿಕೆ ಬೇಡ, ಅಳುಕು ಬೇಡ.
ಸಂದುಸಂಶಯವೆಂಬ ಸಂದೇಹ ಬೇಡ.
ಮನದಲ್ಲಿ ಸಂಕಲ್ಪ ವಿಕಲ್ಪ ಆದಿವ್ಯಾಧಿ ದುರಿತ ದುಮ್ಮಾನ
ಭಯ ಮೋಹ ಚಿಂತೆ ಸಂತೋಷ ಸುಖದುಃಖ ಮೊದಲಾದವು
ಒಂದೂ ಇಲ್ಲದಿಲ್ಲದ್ದಡೆ, ಆತನೇತರಲ್ಲಿರ್ದಡೂ ಅಜಾತ ಸ್ವಯಂಭು.
ಬಂದುದನೆ ಪರಿಣಾಮಿಸಿ, ನಿಶ್ಚಿಂತ ನಿಜನಿವಾಸಿಯಾಗಿಪ್ಪ
ಪರಮ ವಿರಕ್ತಂಗೆ ನಮೋ ನಮೋ ಎಂಬೆ.
ಆತ, ಬಸವಪ್ರಿಯ ಕೂಡಲಸಂಗಯ್ಯನಲ್ಲಿ ಒಂದಾದ ಲಿಂಗೈಕ್ಯನು./211
ಸತಿಸುತ ಮಾತಾಪಿತರಂದದಿ ಮೋಹದಲಿ ಮನಮಗ್ನವಾದರೆ,
ಅವನಿಗೆ ಲಿಂಗವಿಲ್ಲ , ಲಿಂಗಕ್ಕೆ ತಾನಿಲ್ಲ.
ಅದೇನು ಕಾರಣವೆಂದರೆ,
ಆತನ ಧ್ಯಾನ ಸತಿಯ ಮೇಲೆ ಸುತರ ಮೇಲೆ
ಮಾತಾಪಿತರ ಮೇಲೆ ಇಪ್ಪುದಲ್ಲದೆ,
ಲಿಂಗದ ಮೇಲಿಲ್ಲ. ಅದು ಕಾರಣ,
ಆತ ಕಟ್ಟಿದುದು ಲಿಂಗವಲ್ಲ , ತೊಟ್ಟುದುದು ವಿಭೂತಿ ರುದ್ರಾಕ್ಷಿಯಲ್ಲ .
ಅದು ಕಾರಣ, ಆತನಾಚಾರಕ್ಕೆ ದೂರ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ ./212
ಸಾಕಾರ ನಿರಾಕಾರ ಏಕೀಕೃತಾನಂದ ಗುರುವೆ
ಲೋಕ ಚೈತನ್ಯಮಯ ಗುರುವೆ
ಲಿಂಗವೇಕ ಪ್ರಣಮಾನಂದ ಗುರುವೆ
ಏಕಮೇವನ ದ್ವಿತೀಯಾನಂದ ಗುರುವೆ
ಲೋಕಾಲೋಕಂಗಳಿಗತ್ತತ್ತ ಏಕೀಕರಮಯ ಗುರುವೆ
ಗುರುವೆ ಪರಂಜ್ಯೋತಿ,
ಬಸವಪ್ರಿಯ ಕೂಡಲಸಂಗಮದೇವ ಪ್ರಭುವೆ./213
ಸಾವಾಗ ದೇವನೆಂದರೆ, ಸಾವು ಬಿಡುವುದೇ ?
ಇದಾವ ಮಾತೆಂದು ನುಡಿವಿರಿ.
ಎಲೆಯಣ್ಣಗಳಿರಾ, ಬಾಳುವಲ್ಲಿ , ಬದುಕುವಲ್ಲಿ ,
ಗುರು ಲಿಂಗ ಜಂಗಮವನರಿಯದೆ,
ಹಾಳುಹರಿಯ ತಿಂದ ಶುನಕನಂತೆ ಕಾಲ್ಗೆಡೆದು ಓಡಾಡಿ ಏಳಲಾರದೆ ಬಿದ್ದಾಗ,
ಶಿವ ಶಿವ ಎಂದರೆ, ಅಲ್ಲಿ ದೇವನಿಪ್ಪನೆಂದು ಇದ ನೋಡಿ ನಾಚಿ ನಗುರ್ತಿರ್ದೆ,
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಾ ./214
ಸೀಮೆಭೂಮಿಯೆಂದೇನೋ, ಹೇಮವನುರುಹಿದಂಗೆ.
ಕಾಮದ ಕತ್ತಲೆಯೆಂದೇನೋ, ಕಾಲನ ಗೆಲಿದಂಗೆ.
ನೇಮನಿತ್ಯವೆಂದೇನೋ, ತಾನು ತಾನಾದವಂಗೆ.
ಸಾಲ ಶೀಲವೆಂದೇನೋ, ನಿಶ್ಶೂನ್ಯವಾದ ಮಹಾಮಹಿಮ ಶರಣಂಗೆ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ ./215
ಸುಖಾನುಭಾವ, ಲಿಂಗಾನುಭಾವವೆಂದು ನುಡಿದಾಡುತಿಪ್ಪಿರಿ.
ಲಿಂಗದ ನೆಲೆಯನಾರು ಬಲ್ಲರು ?
ಆರುಲಿಂಗ, ಮೂರುಲಿಂಗ, ಮೂವತ್ತಾರುಲಿಂಗ,
ಬೇರೆ ಇನ್ನೂರ ಹದಿನಾರು ಲಿಂಗವೆಂದು
ಎಮ್ಮ ಶರಣರು ಸಾರಿಹೋದ ವಾಕ್ಯವನೆ ಮಾರುತಿಪ್ಪರಲ್ಲದೆ,
ಬೇರೆ ಇಪ್ಪತ್ತೊಂದು ಮಹಾಘನಲಿಂಗವನಾರೂ ಅರಿಯರು,
ನಿಮ್ಮ ಶರಣರಲ್ಲದೆ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ ./216
ಸುಪ್ರಭಾಕಳೆಯಿಂದ ಚಿತ್ಪ್ರಣಮ ಉದಯ.
ಆ ಚಿತ್ಪ್ರಣಮದ ಮುಂದಣ ಚಿದ್ವಿವೇಕವೆ ಚಿದಬ್ಧಿ .
ಆ ಚಿದಬ್ಧಿಯೆ ಪಾದೋದಕ, ಚಿದಮೃತವೆ ಪಾದೋದಕ.
ನಿಧಿ ನಿಧಾನವೆ ಪಾದೋದಕ, ಸುಧೆ ಸುರರ ತೃಪ್ತಿಯೆ ಪಾದೋದಕ.
ಅದಕ್ಕೆ ದೃಷ್ಟ : ಶೋಷಣಂ ಪಾಪಪಂಕಸ್ಯ ದೀಪನಂ ಜ್ಞಾನತೇಜಸಃ |
ಗುರುಪಾದೋದಕಂ ಪೀತ್ವಾ ಸಂಸಾರದ್ರುಮನಾಶನಂ ||
ಇಂತಪ್ಪ ಪಾದೋದಕವ ಕೊಂಡರೆ,
ಪಾಶಮುಕ್ತನಾಗಿ, ಪಶುಪತಿಯೆಂಬುಭಯವಳಿದು,
ನೀರು ಕ್ಷೀರ ಬೆರೆದಂತಿಪ್ಪ ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
ಮಾಂ ತ್ರಾಹಿ, ತ್ರಾಸಿ ಕರುಣಾಕರನೆ./217
ಸೋಹಂ ಹೊಕ್ಕು ದಾಸೋಹವೆಂಬ ಅಂಜನವ ಹಚ್ಚಿ,
ಮುಂದೆ ನೋಡಲಾಗಿ ಅರುಹ ಕಂಡೆ,
ಆ ಅರುಹಿಂದ ಆಚಾರವ ಕಂಡೆ, ಆಚಾರದಿಂದ ಗುರುವ ಕಂಡೆ,
ಗುರುವಿಂದ ಲಿಂಗವ ಕಂಡೆ, ಲಿಂಗದಿಂದ ಜಂಗಮವ ಕಂಡೆ,
ಜಂಗಮದಿಂದ ಪ್ರಸಾದವ ಕಂಡೆ, ಪ್ರಸಾದದಿಂದ ಪರವ ಕಂಡೆ,
ಪರದೊಳಗೆ ವಿಪರೀತ ಸ್ವರೂಪವ ಕಂಡೆ.
ವಿಪರೀತ ಸ್ವರೂಪದೊಳಗೆ ನಿರ್ಲೆಪವಾದ,
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ. /218
ಸ್ಥಲವಿಟ್ಟು ನಡೆಯಬೇಕೆಂಬರು, ಸ್ಥಲವಿಟ್ಟು ನುಡಿಯಬೇಕೆಂಬರು.
ಸ್ಥಲದ ನೆಲೆಯನಾರೂ ಅರಿಯರು.
ಕಾಯಸ್ಥಲ, ಕರಸ್ಥಲ, ಭಾವಸ್ಥಲವನರಿದು,
ಆ ಕಾಯಸ್ಥಲ ಕರಸ್ಥಲ ಭಾವಸ್ಥಲದಲ್ಲಿ ಕೂಡಿ ನಿಲಿಸುವದೆ ಸ್ಥಲ.
ಇದನರಿಯದೆ, ಹಿಂದಕ್ಕೆ ನುಡಿದವರ ಮಾತು ಕಲಿತುಕೊಂಡು,
ಈಗ ನುಡಿವವರ ಮಾತ ಮೆಚ್ಚುವರೆ ನಮ್ಮ ಶರಣರು ?
ಅದಂತಿರಲಿ. ಇನ್ನು ನೇಮವಾವುದು ಎಂದರೆ,
ಗುರುಲಿಂಗಜಂಗಮದ ಪಾದೋದಕ ಪ್ರಸಾದವನರಿದು, ಅಂಗೀಕರಿಸಿ,
ತನ್ನ ತನುವನೆ ಪ್ರಸಾದವ ಮಾಡುವದೀಗ ನೆಲೆ.
ಈ ಸ್ಥಲದ ನೆಲೆಯ ಬಲ್ಲವರಿಗೆ ನಮೋ ನಮೋ ಎಂಬೆ.
ಇದನರಿಯದೆ ಬರಿಯ ನುಡಿಯ ನುಡಿವವರ ಕಂಡರೆ ಛೀ ಎಂಬೆನು,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./219
ಸ್ಥಲವೆಂದರೆ ಒಂದು, ನೆಲೆಯೆಂದರೆ ಎರಡು,
ಕಲೆಯೆಂದರೆ ಮೂರು, ಕರಣವೆಂದರೆ ನಾಲ್ಕು,
ಕಾಯವೆಂದರೆ ಐದು, ಕಾಮವೆಂದರೆ ಆರು,
ಸೀಮೆಯೆಂದರೆ ಏಳು, ನೇಮವೆಂದರೆ ಎಂಟು,
ತಾಮಸವೆಂದರೆ ಒಂಬತ್ತು , ಹರಿಯೆಂದರೆ ಹತ್ತು,
ಹರನೆಂದರೆ ಇನ್ನೊಂದು.
ಇದೇ ದಶವಿಧ ಪಾದೋದಕ, ಇದೇ ಏಕಾದಶ ಪ್ರಸಾದ.
ಇದೇ ಅರ್ಪಿತ, ಇದೇ ಅವಧಾನ, ಇದೇ ಸುಯಿದಾನ.
ಇದೇ ಶುದ್ಧಸಿದ್ಧಪ್ರಸಿದ್ಧ ಪ್ರಸಾದ.
ಇದೇ ನಮ್ಮ ಬಸವಪ್ರಿಯ
ಕೂಡಲಚೆನ್ನಬಸವಣ್ಣ ಆಡುವ ಹೊಲಸ್ಥಲದ ನೆಲೆ./220
ಹಂಚುಕಂಥೆ, ಅತೀತ, ವಿರಕ್ತರು, ಸ್ಥಲದವರು ಎಂದು ನುಡಿದಾಡುವರು.
ಜಂಗಮ ಒಂದೆ, ಲಿಂಗ ಒಂದೆ, ಗುರು ಒಂದೆ.
ಎನ್ನ ಪರಮಾರಾಧ್ಯರು ಬಸವಣ್ಣ , ತನ್ನ ಲೀಲೆಯಿಂದ
ಒಂದ ಮೂರು ಮಾಡಿ ತೋರಿದ, ಮೂರನೊಂದು ಮಾಡಿ ತೋರಿದ.
ಆ ಒಂದು ನಾಮರೂಪಿಗಿಲ್ಲ .
ಇದರಂದವ ಬಲ್ಲ ಶರಣರು ತಿಳಿದು ನೋಡಿ.
ಇದನರಿಯದೆ ಸ್ಥಲನೆಲೆಯುಂಟೆಂದು ಹೊಲಬುಗಾಣದೆ ಹೋರಾಡಿ,
ಭವಭಾರಿಗಳಾಗಬೇಡಾ !
ಭವವಿರಹಿತ ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಂಗೆ,
ಬಯಕೆ ಸವೆದು, ಭಾವ ಬಯಲಾಗಿ ನಮೋ ನಮೋ ಎಂದು ಬದುಕಿದೆ.
ನೀವೂ ಬದುಕಿರೊ. /221
ಹಗಲು ಗೂಗೆಗೆ ಇರುಳಾಗಿಪ್ಪುದು, ಇರುಳು ಕಪಟಗೆ ಹಗಲಾಗಿಪ್ಪುದು.
ಇದು ಜಗದಾಟ.
ಈ ಹಗಲು ಇರುಳೆಂಬ ಉಭಯವಳಿದು, ನಿಗಮಂಗಳಿಗೆ ನಿಲುಕದ,
ಸಗುಣ ನಿರ್ಗುಣ ಅಗಮ್ಯ ಅಗೋಚರವಪ್ಪ
ಮಹಾಘನ ಗುರುವಿನ ನೆಲೆಯ, ನಿಮ್ಮ ಶರಣರು ಬಲ್ಲರಲ್ಲದೆ
ಮರ್ತ್ಯದ ಮರಣಬಾಧೆಗೊಳಗಾಗುವ ಮನುಜರೆತ್ತ ಬಲ್ಲರೊ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ !/222
ಹರನಲ್ಲದೆ ದೈವವಿಲ್ಲೆಂದು ಶ್ರುತಿ ಸಾರುತಿರ್ದು,
ವೇದಂಗಳು ಪೊಗಳುತಿರ್ದು, ನರರು ಸುರರು ಅರಿವಿರ್ದು, ಅರಿಯದೆ,
ಹರಿಯು ದೈವ, ಬ್ರಹ್ಮನು ದೈವ, ಸುರಪನು ದೈವ, ಮನುಮುನಿ
ತ್ರಿವಿಧ ದೇವರ್ಕಳು ದೈವವೆಂದು,
ಚಂದ್ರ, ಸೂರ್ಯರು ದೈವವೆಂದು ಆರಾಧಿಸುವಿರಿ.
ಪತಿವ್ರತೆಯಾದವಳಿಗೆ ತನ್ನ ಪುರುಷನ ನೆನೆಹಲ್ಲದೆ, ಅನ್ಯರ ನೆನೆವಳೆ ?
ವೇಶಿಯಂತೆ ಹಲಬರು ನಂಟರೆ ?
ಇವರೆಲ್ಲರ ಸಂತವಿಟ್ಟು, ಮತ್ತೆ ಶಿವನೆ ಎಂಬ ಶಿವದ್ರೋಹಿಗಳು ಕೇಳಿರೊ.
ಹರಿ ದೈವವೆಂದು ಆರಾಧಿಸುವರೆಲ್ಲ ಮುಡುಹ ಸುಡಿಸಿಕೊಂಡು,
ಮುಂದಲೆಯಲ್ಲಿ ಕೆರಹ ಹೊತ್ತರು.
ಬ್ರಹ್ಮವೇ ದೈವವೆಂದು ಆರಾಧಿಸುವವರೆಲ್ಲ ಹೆಮ್ಮೆಯ ನುಡಿದು,
ಹೋಮವನಿಕ್ಕಿ ಹೋತನ ಕೊಂದು ತಿಂದು, ಪಾತಕಕ್ಕೆ ಒಳಗಾದರು.
ಸುರಪ ದೈವವೆಂದು ಆರಾಧಿಸಿದವರೆಲ್ಲ
ತಮ್ಮ ಸಿರಿಯಲ್ಲಿ ಹೋಗಿ ಶಿವನಲ್ಲಿಗೆ ಸಲ್ಲದೆ ಹೋದರು.
ಮನುಮುನಿದೇವರ್ಕಳು ದೈವವೆಂದು ಆರಾಧಿಸಿದವರೆಲ್ಲ
ಹಿಂದುಮುಂದಾಗಿ ಅಡ್ಡಬಿದ್ದು , ಅವರು ಬಂದ ಭವಕ್ಕೆ ಕಡೆ ಇಲ್ಲ .
ಇದನ್ನೆಲ್ಲ ಅರಿದು ಮತ್ತೆ
ಇವರೇ ದೈವವೆಂದು ಆರಾಧಿಸುವ ವಿವರಗೆಟ್ಟ ಭವಭಾರಿಗಳ
ನುಡಿಯ ಕೇಳಲಾಗದು, ಅವರೊಡನೆ ನುಡಿಯಲಾಗದು.
ಅವರ ನಡೆಯ ಕಂಡರೆ ಛೀ ಎಂಬರು ನಿಮ್ಮ ಶರಣರು,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./223
ಹರಹರ ಎಂದು ಹತ್ತುಬಾರಿ ಎನಬಹುದಲ್ಲದೆ,
ಹರಿವ ಮನವ ಮೆಟ್ಟಿ,ಮನವ ಲಿಂಗದೊತ್ತಿನಲ್ಲಿ ನಿಂದಿರಲರಿಯದುನೋಡಾ!
ಇದು ಕಾರಣ, ತನುವ ಗುರುವಿಂಗಿತ್ತು , ಮನವ ಲಿಂಗಕ್ಕಿತ್ತು ,
ಧನವ ಜಂಗಮಕ್ಕಿತ್ತು , ತ್ರಿವಿಧವನು ತ್ರಿವಿಧಕಿತ್ತ ಬಳಿಕ,
ಒಂದಲ್ಲದೆ ಎರಡುಂಟೆ ?
ಇದು ಮುಂದೆ ಆವನಾನೊಬ್ಬ ಭಕ್ತನು ನೋಡಿ ನಡೆವುದಕ್ಕೆ ಇದೇ ಸಾಧನ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ . /224
ಹರಿ ಬ್ರಹ್ಮ ಕಾಲ ಕಾಮ ದಕ್ಷಾದಿಗಳ ದೇವರೆಂದು
ಗಟ್ಟಿಯತನದೊಳು ಬೊಗಳುವ ಮಿಟ್ಟೆಯಭಂಡರು ನೀವು ಕೇಳಿರೊ.
ಅವರ ಹುಟ್ಟನರಿಯಿರಿ, ಹೊಂದನರಿಯಿರಿ. ಅವರ ಹುಟ್ಟು ಕೇಳಿರಣ್ಣಾ !
ಏನೇನೂ ಇಲ್ಲದಂದು, ಶೂನ್ಯ ನಿಃಶೂನ್ಯಕ್ಕೆ ನಿಲುಕದ ಘನವು
ಕೋಟಿಚಂದ್ರಸೂರ್ಯರ ಬೆಳಗಾಗಿ ಬೆಳಗುತ್ತಿಪ್ಪಲ್ಲಿ ,
ಒಂಕಾರವೆಂಬ ನಿರಕ್ಷರ ಹುಟ್ಟಿತ್ತು .
ಒಂಕಾರದಿಂದ ನಕಾರ, ಮಕಾರ, ಶಿಕಾರ, ವಕಾರ,
ಯಕಾರವೆಂಬ ಪಂಚಾಕ್ಷರ ಹುಟ್ಟಿದವು.
ಆ ಪಂಚಾಕ್ಷರಿಗೆ ಪರಾಶಕ್ತಿ ರೂಪಾದಳು.
ಆ ಪಂಚಾಕ್ಷರಕ್ಕೂ ಪರಾಶಕ್ತಿಗೂ ಇಬ್ಬರಿಗೂ ಸದಾಶಿವನಾದ.
ಆ ಸದಾಶಿವಂಗೆ ಜ್ಞಾನಶಕ್ತಿಯಾದಳು.
ಆ ಸದಾಶಿವಂಗೆ ಜ್ಞಾನಶಕ್ತಿಯರಿಬ್ಬರಿಗೂ ಶಿವನಾದ.
ಆ ಶಿವಂಗೆ ಇಚ್ಛಾಶಕ್ತಿಯಾದಳು.
ಆ ಶಿವಂಗೂ ಇಚ್ಛಾಶಕ್ತಿಗೂ ಇಬ್ಬರಿಗೂ ರುದ್ರನಾದ.
ಆ ರುದ್ರಂಗೆ ಕ್ರಿಯಾಶಕ್ತಿಯಾದಳು.
ಆ ರುದ್ರಂಗೂ ಕ್ರಿಯಾಶಕ್ತಿಗೂ ಇಬ್ಬರಿಗೂ ವಿಷ್ಣುವಾದ.
ಆ ವಿಷ್ಣು ಪಡೆದ ಸತಿ ಲಕ್ಷಿ ್ಮಯು.
ಆ ವಿಷ್ಣುವಿಂಗೂ ಮಹಾಲಕ್ಷಿ ್ಮಗೂ ಇವರಿಬ್ಬರಿಗೂ ಬ್ರಹ್ಮನಾದ.
ಆ ಬ್ರಹ್ಮಂಗೆ ಸರಸ್ವತಿಯ ಕೊಟ್ಟು, ಬರೆವ ಸೇವೆಯ ಕೊಟ್ಟ.
ಬ್ರಹ್ಮಂಗೂ ಸರಸ್ವತಿಗೂ ಇಬ್ಬರಿಗೂ ಮನುಮುನಿದೇವರ್ಕಳಾದರು.
ಆ ಮನುಮುನಿದೇವರ್ಕಳಿಗೆ ಸಕಲ ಸಚರಾಚರವಾಯಿತ್ತು .
ಇಹಲೋಕಕ್ಕೆ ನರರು ಆಗಬೇಕೆಂದು ಬ್ರಹ್ಮನು ಹೋಗಿ,
ಹರನಿಗೆ ಬಿನ್ನಹಂ ಮಾಡಲು, ಹರನು ಪರಮಜ್ಞಾನದಿಂದ ನೋಡಿ,
ತನ್ನ ಶರೀರದಿಂದಲೆ ನಾಲ್ಕು ಜಾತಿಯ ಪುಟ್ಟಿಸಿ ಇಹಲೋಕಕ್ಕೆ ಕಳುಹಿಸಿದನು.
ಆ ಶಿವನ ಶರೀರದಲ್ಲಿ ಪುಟ್ಟಿದವರು ಶಿವನನ್ನೇ ಅರ್ಚಿಸಿ,
ಶಿವನನ್ನೇ ಪೂಜಿಸಿ, ಶಿವನನ್ನೇ ಭಾವಿಸಿ, ಶಿವನೊಳಗಾದರು.
ಅದರಿಂದಾದ ಭವಬಾಧೆಗಳು ತಾವು ತಮ್ಮ ಹುಟ್ಟನರಿಯದೆ,
ಹುಟ್ಟಿಸುವಾತ ಬ್ರಹ್ಮ , ರಕ್ಷಿಸುವಾತ ವಿಷ್ಣು , ಶಿಕ್ಷಿಸುವಾತ
ರುದ್ರನೆಂದು ಹೇಳಿದರು.
ಈ ಭ್ರಷ್ಟರ ಮಾತ ಕೇಳಿ ಕೆಟ್ಟಿತ್ತು ಜಗವೆಲ್ಲ .
ಆಗ ಶಿವನು ಕೊಟ್ಟು ಕಳುಹಿದ ಮಾಯೆಗೆ ಮರವೆಂಬ ಪಾಶ.
ಅವಳು ಕಟ್ಟಿ ಕೆಡಹಿದಳು ಮೂರುಜಗವೆಲ್ಲವನು.
ಇವಳ ಕಟ್ಟಿಗೊಳಗಾದ ಭ್ರಷ್ಟರೆತ್ತಬಲ್ಲರೋ ನಿಮ್ಮ ಶರಣರ ಸುದ್ದಿಯ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ ?/225
ಹರಿವ ಜಲಧಿಯಂತೆ, ಚರಿಸಿ ಬಹ ಮನವ ನಿಲ್ಲೆಂದು ನಿಲಿಸುವ ಪುರುಷರುಂಟೆ ?
ಬಿರುಗಾಳಿ ಬೀಸಿದರೆ ಒಲಿ ಒಲಿದು ಉರಿವ ಬಲುಗಿಚ್ಚಿನ ಉರಿಯ ನೆಲೆಗೆ
ನಿಲಿಸುವರುಂಟೆ ?
ಮಹಾಬಯಲೊಳಗಣ ಸಂಚವನರಿದು ಅವಗಡಿಸುವರುಂಟೆ ?
ಮಹಾಬಯಲೊಳಗಣ ಸಂಚವನರಿದು ಅವಗಡಿಸುವರುಂಟೆ ?
ಇವ ಬಲ್ಲೆನೆಂಬವರೆಲ್ಲ ಅನ್ನದ ಮದ, ಅಹಂಕಾರದ ಮದ,
ಕುಲಮದ, ಛಲಮದ,
ಯೌವನಮದ, ವಿದ್ಯಾಮದ, ತಪದ ಮದ, ಆತ್ಮದ ಮದ
ಇಂತೀ ಅಷ್ಟಮದವಿಡಿದು ಬಲ್ಲೆವೆಂಬರಲ್ಲದೆ, ದೃಷ್ಟನಷ್ಟವಾವುದೆಂದರಿಯದೆ,
ಎಲ್ಲರೂ ಭ್ರಷ್ಟರಾಗಿಹೋದರು,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ ,
ನಿಮ್ಮ ನೆಲೆಯನರಿಯದ ಕಾರಣ./226
ಹಲವಂದ ಚಂದದಲ್ಲಿ ಹಾಡಿದರೇನಯ್ಯ,
ಲಿಂಗದ ನೆಲೆಯನರಿಯದನ್ನಕ್ಕ ?
ಕಲಿಯಾಗಿ ವೈರಾಗ್ಯ ತಲೆಗೇರಿ ಹರಿದಾಡಿದರೇನಯ್ಯ ?
ಮಾಯೆಯ ಬಲೆಯ ನುಸುಳಿಸಿದಲ್ಲದೆ ನಿಮ್ಮ ನೆಲೆಯ ಕಾಣಬಾರದು,
ಬಸಪ್ರಿಯ ಕೂಡಲಚೆನ್ನಬಸವಣ್ಣಾ ./227
ಹಸನ ಮಾಡಿ ಹರಗಿ ಹೊಲದಲ್ಲಿ ಕಸವ ಬಿತ್ತುವ ಮರುಳರಂತೆ,
ವಿಷಯಸುಖಂಗಳಿಗೆ ಹುಸಿಯನೆ ನುಡಿದು,
ಗಸಣೆಗೊಳಗಾಗುವ ಮನುಜರೆತ್ತ ಬಲ್ಲರೊ, ಮಹಾಘನಗುರುವಿನ ನೆಲೆಯ ?
ಮರಣಬಾಧೆಗೊಳಗಾದವರು ನಿಮ್ಮನೆತ್ತ ಬಲ್ಲರೊ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ ? /228
ಹಸಿವಿನಾಸೆಗೆ ಅಶನವ ಕೊಂಬರು, ವಿಷಯದಾಸೆಗೆ ಹುಸಿಯ ನುಡಿವರು.
ಹಸನಾಗಿ ವ್ಯಸನವ ಹೊತ್ತು , ಭಸಿತವ ಹೂಸಿ ವಿಶ್ವವ ತಿರುಗಿದರು.
ಈ ಹುಸಿಯ ಬಿಟ್ಟು, ಮಾಯೆಯ ಮಸಕವ ಮಾಣ್ದಲ್ಲದೆ
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನ ಕೂಡಾ./229
ಹಾಕಿದ ಮುಂಡಿಗೆಯ ಎತ್ತುವರಿಲ್ಲ.
ಎತ್ತಿದ ಮುಂಡಿಗೆಯ ದೃಷ್ಟದಲ್ಲಿ , ಶ್ರುತದಲ್ಲಿ ಗೆದ್ದು , ಇಸಕೊಂಬವರಿಲ್ಲ .
ಈ ಉಭಯದ ಗೊತ್ತನರಿಯದೆ ಕೆಟ್ಟರು,
ನಾವು ಭಕ್ತ ಜಂಗಮರೆಂಬುವರೆಲ್ಲ . ಅದಂತಿರಲಿ.
ನಾನು ನೀನು ಎಂಬುಭಯದ ಗೊತ್ತನರಿದು,
ದೃಷ್ಟದಲ್ಲಿ ಶ್ರುತದಲ್ಲಿ ಗೆದ್ದು ಕೊಟ್ಟು, ನ್ಯಾಯದಲ್ಲಿ
ಜಗವನೊಡಂಬಡಿಸಿ ಕೊಟ್ಟು,
ಆ ಸಿಕ್ಕಿಹೋಗುವ ಮುಂಡಿಗೆಯ ಎತ್ತಿಕೊಂಡು,
ಸುತ್ತಿ ನೋಡಿದರೆ ಬಟ್ಟಬಯಲಾಗಿರ್ದಿತ್ತು .
ಆ ಬಟ್ಟಬಯಲ ದಿಟ್ಟಿಸಿ ನೋಡಲು, ನೆಟ್ಟಗೆ ಹೋಗುತ್ತಿದೆ .
ಹೋಗಹೋಗುತ್ತ ನೋಡಿದರೆ, ನಾ ಎತ್ತ ಹೋದೆನೆಂದರಿಯೆನಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣ./230
ಹಾಲ ಕಂಡ ಬೆಕ್ಕು ಮೆಲ್ಲುಲಿ ತೆಗೆದು ಕುಡಿವುತ್ತಿರಲು,
ಬಾಲನಿಗಿರ್ದ ಹಾಲ ಬೆಕ್ಕು ಕುಡಿವುತ್ತಿದೆಯೆಂದು ನಾರಿ ಕಂಡು,
ಗುದಿಗೆಯಲಿ ಹೊಡೆದರೆ, ಏಳುತ್ತ ಬೀಳುತ್ತ ಕಾಲ್ಗೆಡೆದು ಓಡುವಂತೆ,
ಏನ ಹೇಳುವೆಯಯ್ಯ ?
ಮರ್ತ್ಯದ ಮನುಜರು ಕರಣಂಗಳ ಹರಿಯ ಬಿಟ್ಟು,
ತಮ್ಮ ಬಾಳುವೆಯ ಮರೆದು,
ಕಾಲನ ಬಾಯಲ್ಲಿ ಅಳುತ್ತ ಮುಳುಗುತ್ತಲಿಪ್ಪುದನಾರೂ ಅರಿಯರು ನೋಡಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ ? /231
ಹಾಲಸಾಗರದೊಳು ತೇಲಾಡುತ್ತಿದ್ದು ,
ಚಿಲುಮೆಯ ನೀರಿಗೆ ಹರಿದಾಡಬೇಡ.
ಮೇಲುಗಿರಿ ಶಿಖರದ ಪಶ್ಚಿಮದಿ ತೇಲಾಡುತಿರೆ,
ಬಸವಪ್ರಿಯ ಕೂಡಲಚೆನ್ನಬಸವಣ್ಣ ./232
ಹಾವ ಹಿಡಿವುದ ಹಾವಾಡಿಗ ಬಲ್ಲನಲ್ಲದೆ,
ಕಡೆಯಲಿದ್ದ ಜಾವಳಿಗನೆತ್ತ ಬಲ್ಲನು ?
ನೋವು ಬಂದರೆ ವ್ಯಾಧಿಯಲ್ಲಿ ನರಳುವಾತ ಬಲ್ಲನಲ್ಲದೆ,
ಕಡೆಯಲಿಪ್ಪ ದುರುಳನೆತ್ತ ಬಲ್ಲನು ?
ದೇವ ನಿಮ್ಮ ಶರಣನು ಬೆರೆದಿಪ್ಪ ಭೇದವ
ನೋವುತ್ತ ಬೇವುತ್ತ ಧಾವತಿಗೊಳುತಿಪ್ಪ
ಗಾವಿಲರೆತ್ತ ಬಲ್ಲರು ಲಿಂಗೈಕ್ಯರನುವ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ ?/233
ಹಿಂದನರುಹಿ ಹಿಂದ ಹರಿದಿರಿ, ಮುಂದನರುಹಿ ಮುಕ್ತನ ಮಾಡಿದಿರಿ.
ಸಂದುಸಂಶಯವನಳಿದಿರಿ, ಗುರುಲಿಂಗಜಂಗಮವ ಒಂದೇ
ಎಂದು ತೋರಿದಿರಿ.
ಪ್ರಸಾದವೇ ಪರವೆಂದರುಹಿದಿರಿ.
ಇಂತಿವರ ಪೂರ್ವಶ್ರಯವ ಕಳೆದು ಎನಗೆ ಏಕವ ಮಾಡಿ ತೋರಬೇಕಾಗಿ,
ನೀವು ಒಂದು ಸಾಕಾರವ ತಾಳಿ ಬಂದಿರಿ.
ಇದು ಕಾರಣ ನಿಮ್ಮ ಲೋಕಾರಾಧ್ಯರೆಂದು ನೆರೆನಂಬಿ ಸಲೆಸಂದು
ನಿಮ್ಮ ಪಾದದೊಳು ಏಕವಾದೆನಯ್ಯ ಚೆನ್ನ ಮಲ್ಲೇಶ್ವರ.
ಇದ ನಿಮ್ಮನರಿದ ಶರಣರೇ ಬಲ್ಲರು.
ಬಸವಪ್ರಿಯ ಕೂಡಲಚೆನ್ನಬಸವಣ್ಣ ./234
ಹುಟ್ಟಲೇಕೊ ನರರ ಜನ್ಮದಲ್ಲಿ ? ಕಟ್ಟಲೇಕೋ ಕೊರಳಲ್ಲಿ ಲಿಂಗವ ?
ಕಟ್ಟಿಯೂ ಕಾಣದೆ, ತೊಟ್ಟನೆ ತೊಳಲಿ, ಅರಸಲೇಕೊ ಧರೆಯ ಮೇಲೆ ?
ಅರಸಿಯೂ ಕಾಣದೆ, ಸತ್ತು ಮೆಟ್ಟಿ ಮೆಟ್ಟಿ ಹೂಳಿಸಿಕೊಳಲೇಕೊ ?
ಇದನರಿದರಿದು, ಹುಟ್ಟು ಹೊಂದಳಿದ ಶರಣರ ನಿತ್ಯನಿತ್ಯ ನೆನೆದು ಬದುಕಿದೆ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ . /235
ಹುಟ್ಟಿದ ಮನುಜರೆಲ್ಲ ಹೊಟ್ಟೆಯ ಹೊರೆವುದೇನು ಸೋಜಿಗವೊ ?
ಹುಲುಹೆಣನ ಸುಟ್ಟು, ಹೊಲೆಯನು ಹೊಟ್ಟೆಯ ಹೊರೆವುತ್ತ
ಅವನೆ ಸಂತೆಯಲ್ಲಿ ಎದೆಯ ಮೇಲೆ ಕಲ್ಲಹಾಕಿಕೊಂಬವನು,
ಹೊಟ್ಟೆಯ ಹೊರೆವುತ್ತಲವನೆ ಉಲಿ ಉಲಿದು ಕಂಡವರಿಗೆ ಹಲುಗಿರಿವವನು.
ಹೊಟ್ಟೆಯ ಹೊರೆವುತ್ತ , ಅವನು, ಈ ಲಿಂಗದ ನೆಲೆಯನರಿಯದವರು
ಇವರೊಳು ಸಲುವರಲ್ಲದೆ ಎಮ್ಮ ಶರಣರಿಗೆ ನಿಲುಕರು ನೋಡಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ ./236
ಹುಟ್ಟುವಾತ ಲಿಂಗಪಿಂಡದೊಳಡಗಿ ಬರಲು, ಪಿಂಡಗತಸ್ಥಲವೆನಿಸಿತ್ತು .
ಬೆಳೆವಲ್ಲಿ ಶ್ರೀಗುರುಸ್ವಾಮಿ ಹಸ್ತಮಸ್ತಕಸಂಯೋಗವಂ ಮಾಡಿ,
ಅಷ್ಟಾವರಣವನಳವಡಿಸಿ, ಅಷ್ಟತನುಗುಣವ ಕೆಡಿಸಿ,
ಇಷ್ಟಲಿಂಗವಂ ದೃಷ್ಟವ ಮಾಡಿಕೊಡುವಲ್ಲಿ ,
ಅಂಗವೆ ಲಿಂಗಾರ್ಪಿತವೆಂದು ಸಂಗನಶರಣರಂ ಸಾಕ್ಷಿಯಂ ಮಾಡಿ,
ಮೋಕ್ಷವನೈದಿಸಿದಿರಾಗಿ ಅದೀಗ ಲಿಂಗೈಕ್ಯ.
ಇದು ಕಾರಣ, ಪಿಂಡಗತವೆಂದರೂ ಲಿಂಗೈಕ್ಯವೆಂದರೂ ಒಂದೇ ಸಮರಸ.
ಅದಕ್ಕೆ ದೃಷ್ಟ : ಅಭೇದಂ ಜ್ಞಾನರೂಪೇಣ ಮಹಾನಂದಮಮಲಂ ಧ್ರುವಂ
ಅತಕ್ರ್ಯಮದ್ವಯಂ ಪೂರ್ಣಂ ಬ್ರಹ್ಮೈವಾಸ್ತಿ ನ ಸಂಶಯಃ ||
ಎಂದುದಾಗಿ, ಇದೀಗ ಲಿಂಗೈಕ್ಯದಿರವು.
ಬಸವಪ್ರಿಯ ಕೂಡಲಚೆನ್ನಬಸವಣ್ಣ ,
ಮಾಂ ತ್ರಾಹಿ, ತ್ರಾಹಿ ಕರುಣಾಕರನೆ./237
ಹುಡಿಯ ಹಾರಿಸಿ ಅಡಗಿಸುವ ವಾಯು ಅಡಗಿ ತೋರುವ ಬೆಡಗಿನಂತೆ,
ಪ್ರಾಣಲಿಂಗಿಯ ಅಂಗ.
ಅಂಗವಡಗಿದಲ್ಲಿ ವಾಯುವಿಂಗೆ ಭಂಗವೊ ?
ಅಲ್ಲಾ , ನುಡಿದವರ ನುಡಿಗೆ ಭಂಗವೊ ?
ಇದರ ತೊಡಕ ತಿಳಿದಾತನೆ ಮೃಡನು,
ಬಸವಪ್ರಿಯ ಕೂಡಲಚೆನ್ನಬಸವಣ್ಣ ಪ್ರಭುವೆ./238
ಹುತ್ತಕ್ಕೆ ಹಾಲು ತುಪ್ಪವನೆರೆದು,
ಕೊಟ್ಟಿನ ಮೇಲೆ ಕೂಳನಿಕ್ಕಿ, ಒತ್ತಿ ಮಡಲದುಂಬಿ,
ಆ ಹೊತ್ತಿಗೆ ಮನೆಯ ಮೇಲೆ ಕೂಳ ಹಾಕಿ ಕಟ್ಟಿ,
ಬಡಿದುಕೊಂಡು ಅಳುವ ಲೊಟ್ಟಿಗಳ ಹಟ್ಟಿಯ ಮೆಟ್ಟಲಾಗದು.
ಅದೇನು ಕಾರಣವೆಂದರೆ,
ಅವರು ನಿತ್ಯನಿತ್ಯ ಮೃತ್ಯುಮಾರಿಯ ಬಾಯತುತ್ತಹರೆಂದು
ಎಮ್ಮ ಆದ್ಯರ ವಚನ ಸಾರುತಿಪ್ಪವು ನೋಡಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ./239
ಹುತ್ತದ ಮೇಲಣ ಸರ್ಪ ಸತ್ತಿತ್ತೆಂದು ಮುಟ್ಟಿ ಬಾಳ್ದ ಮನುಜರುಂಟೆ ?
ಒತ್ತಿಗೆ ಬಂದ ವ್ಯಾಘ್ರನನಪ್ಪಿಕೊಂಡ ಮನುಜರುಂಟೆ ?
ತತ್ವವ ಬಲ್ಲ ಶರಣರು ಸತ್ತ ಹಾಗೆ ಇದ್ದರೆ,
ಇವರು ಕತ್ತೆಯ ಮನುಜರೆಂದು ಮರ್ತ್ಯದವರು ಒತ್ತಿ ನುಡಿದರೆ,
ಅವರೆತ್ತ ಬಲ್ಲರೊ ?
ಅವರ ನುಡಿದವರು ಅತ್ತಲೂ ಅಲ್ಲ , ಇತ್ತಲೂ ಅಲ್ಲ ನೋಡಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ ./240
ಹುತ್ತದ ಮೇಲೊಂದು ಕಸ್ತೂರಿಯ ಮೃಗವ ಕಂಡೆ.
ಅದಕ್ಕೆ ಉದಯ ಅಸ್ತಮಯವಿಲ್ಲ .
ಒದವಿದ ಅಮೃತವನುಂಬುವದು, ಸದಮಲ ವಾಸನೆಯ ತೀಡುವುದು.
ಆ ವಾಸನೆಯ ಬೆಂಬಳಿವಿಡಿದು, ನಾನು ಆ ವಾಸಕ್ಕೆ ಹೋಗಿ,
ದೇಶದ ಹಂಗು ಮರೆದು, ಸಾಸಿರ ಮುಖವಾಗಿಪ್ಪ ಈಶನೊಳು
ಲೇಸಿಂದ ಬೆರೆದು, ವಿೂಸಲಳಿಯದೆ ಐಕ್ಯವಾದೆನಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ . /241
ಹುಸಿಯ ಹಟ್ಟಿಯಲಿಪ್ಪ ಸೊನಗ, ಹಾಕಿದ ಹಿಟ್ಟಿಗೆ ಬೊಗಳುವಂತೆ.
ಆರಾದರು ಕೊಟ್ಟುದೊಂದು ವಾಟುಹಾಸಿಗೆ, ಅವರಿಚ್ಛೆಗೆ ಬೊಗಳುವ
ಖೊಟ್ಟಿಗಳ ಮಾತ ಕೇಳಲಾಗದು.
ಅದೇನು ಕಾರಣವೆಂದರೆ, ಮುಟ್ಟಿ ಅವರ ಸಂಗವ ಮಾಡುವ ಮನುಜಗೆ,
ಕರ್ಮ ಕಟ್ಟಿಹುದಲ್ಲದೆ ಮಾಣದು ನೋಡಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ ./242
ಹೆತ್ತವರೇ ಹೆಸರಿಡಬೇಕಲ್ಲದೆ, ತೊತ್ತಿರು ಬಂಟರು ಎತ್ತಬಲ್ಲರೊ ?
ಕರ್ತೃ ನಿಮ್ಮ ನೆಲೆಯ ನಿಮ್ಮ ಒತ್ತಿನಲಿಪ್ಪ ಶರಣರು ಬಲ್ಲರಲ್ಲದೆ,
ಈ ಸತ್ತು ಹುಟ್ಟುವ ಮನುಜರೆತ್ತ ಬಲ್ಲರೊ ?
ನಿತ್ಯವಪ್ಪ ಮಹಾಘನ ಗುರು ಮಾತ ನೀನೆ ಬಲ್ಲೆ ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ ./243
ಹೆಸರಿಗೆ ಬಾರದ ಘನವ ಹೆಸರಿಗೆ ತಂದು,
ನುಡಿದಾಡುವ ಕಿಸುವಾಯರ ಮಾತ ಕೇಳಲಾಗದು.
ಅದೇನು ಕಾರಣವೆಂದರೆ, ಈ ಪಶುಗಳೇನು ಬಲ್ಲರು ?
ಬಸವನೆಂತಿಪ್ಪನೆಂಬುದ ವಸುಧೆಯ ಮನುಜರೆತ್ತಬಲ್ಲರು ?
ಇದು ಹುಸಿ ಹುಸಿ, ನಿಮ್ಮಾಣೆ, ನಿಮ್ಮ ಪ್ರಮಥರಾಣೆ.
ಆ ಬಸವನ ನೆಲೆಯ ಬಸವಾದಿ ಪ್ರಮಥರೆ ಬಲ್ಲರಲ್ಲದೆ,
ಈ ಹುಸಿಮಾಯೆಗೊಳಗಾದ ಸೂತಕರೆತ್ತಬಲ್ಲರು ನಿಮ್ಮ ಶರಣರ ಸುದ್ದಿಯ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ ?/244
ಹೊತ್ತಾರೆ ಎದ್ದು ಹೂವು ಪತ್ರೆ ಉದಕವ ತಂದು,
ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಿಹೆನೆಂದು,
ಸೊರಟೆಯ ಮೊರಟೆಯ ಹರಡಿ, ಕೈಕಾಲ ಮುಖವ ತೊಳೆದು,
ವಿಭೂತಿಯ ಧರಿಸಿ, ರುದ್ರಾಕ್ಷಿಯ ತೊಟ್ಟು,
ತನು ಶುದ್ಧವ ಮಾಡಿ, ಲಿಂಗಕ್ಕೆ ಮಜ್ಜನಕ್ಕೆರೆಯಬೇಕೆಂಬಿರಿ.
ಈ ಮೊದಲು ತಂದ ಪತ್ರೆ ಪುಷ್ಪ ಉದಕವೆ ದೇವರೊ ?
ಈ ಹರಡಿಕೊಂಡಿರುವ ಸೊರಟೆ ಮೊರಟೆಗಳೆ ದೇವರೊ ?
ಈ ತೊಳೆದುಕೊಂಬ ಕೈಕಾಲು ಮುಖವೆ ದೇವರೊ ?
ಈ ಧರಿಸಿದ ವಿಭೂತಿ ರುದ್ರಾಕ್ಷಿಯೆ ದೇವರೊ ?
ನಿಮ್ಮ ಕೈಯಲ್ಲಿ ಇಪ್ಪುದೆ ದೇವರೊ ? ನೀವೆ ದೇವರೊ ?
ಇವರೊಳಗೆ ಆವುದು ದೇವರೆಂಬಿರಿ ? ಅರಿವುಳ್ಳವರು ನೀವು ಹೇಳಿರೊ.
ದೇವರು ದೇವರು ಎಂದು ಒಂದಲ್ಲದೆ, ಎರಡುಂಟೆ ?
ಇಂತಿದನರಿಯದೆ, ಬರುವಸೂರೆಹೋದಿರಲ್ಲ .
ಇನ್ನಾದರು ಅರಿದು ಬದುಕಿರೊ ನಾನೊಂದ ಹೇಳಿದೆನು.
ಇವೆಲ್ಲವನು ಮಾಡಬೇಕೆಂಬುದೀಗ ಲಿಂಗ, ಮಾಡುವದೀಗ ಜಂಗಮ.
ಲಿಂಗ ಜಂಗಮವೆಂದರೆ ಒಂದೇ ಅಂಗಭೇದವು.
ನಮ್ಮ ಶರಣರು ಬಲ್ಲರಲ್ಲದೆ,
ಮರಣಬಾಧೆಗೊಳಗಾಗುವ ಮರ್ತ್ಯದ ಮನುಜರು ಅರಿಯರು
ಬಸವಪ್ರಿಯ ಕೂಡಲಚೆನ್ನಬಸವಣ್ಣಾ . /245
ಹೊತ್ತಾರೆಯಿಂದ ಅಸ್ತಮಯ ತನಕ
ಸುತ್ತಿರ್ದ ಮಾಯಾಪ್ರಪಂಚನೆ ಅಳೆವುತ್ತ ಸುರುವುತ್ತಲುರ್ದು,
ಕತ್ತಲೆಯಾದರೆ, ಕಾಳುವಿಷಯದೊಳಗೆ ಮುಳುಗುತ್ತ , ಸತ್ತು ಹುಟ್ಟುತ್ತ ,
ಮತ್ತೆ ಬೆಳಗಾಗಿರ್ದು, ನಾನು ತತ್ವವ ಬಲ್ಲೆನೆಂದು ನುಡಿವ ಕತ್ತಲೆಮನುಜರ
ಅತ್ತ ಹೊದ್ದದೆ, ಇತ್ತಲೆ ನಿಂದು ನಾಚಿ ನಗುತಿರ್ದ
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ ./246
ಹೊತ್ತುಹೊತ್ತಿಗೆ ನಿತ್ಯರ ಸಂಗವ ಮಾಡಿ,
ಕರ್ತೃವೆಂಬುದನರಿದೆ, ನಾ ಭೃತ್ಯನೆಂಬುದನರಿದೆ.
ಸತ್ಯವೆಂಬುದನರಿದು, ಸದಾಚಾರವಿಡಿದು,
ತುದಿ ಮೊದಲು ಕಡೆ ನಡುವೆ,
ಆದಿ ಅನಾದಿಗೆ ನಿಲುಕದ ಘನವೇದ್ಯ ಲಿಂಗವ ಕಂಡೆ.
ಆ ಲಿಂಗವ ಸೋಂಕಲೊಡನೆ ಲಿಂಗದಂತಾದೆ.
ಜಂಗಮವ ಮುಟ್ಟಿ ಪೂಜಿಸಲೊಡನೆ ಜಂಗಮದಂತಾದೆ.
ಪ್ರಸಾದವ ಕೊಳ್ಳಲಾಗಿ, ಆ ಪ್ರಸಾದದಂತಾದೆ.
ಇನ್ನು ಪರವಿಲ್ಲವೆಂದು ಪ್ರಸಾದದಲ್ಲಿಯೆ ತಲ್ಲೀಯವಾದೆ.
ಇದ ಬಲ್ಲವರು ನೀವು ಕೇಳಿ.
ಎನ್ನ ಹಮ್ಮು ಬಿಮ್ಮು ಉಂಟೆನಬೇಡ.
ಇದಕ್ಕೆ ದೃಷ್ಟವ ಹೇಳಿಹೆ ಕೇಳಿರಣ್ಣಾ !
ಕೀಡಿ ತುಂಬಿಯ ಸ್ನೇಹದ ಹಾಗೆ.
ಶರಣನಾದರೆ ಜ್ಯೋತಿ ಜ್ಯೋತಿಯ ಮುಟ್ಟಿದ ಹಾಗೆ.
ದರ್ಪಣ ದರ್ಪಣದೊಳಗೆ ಅಡಗಿದ ಹಾಗೆ.
ಇದರೊಪ್ಪವ ಬಲ್ಲವರು ತಪ್ಪದೆ ಎನ್ನಂಗ,
ಬಸವಪ್ರಿಯ ಕೂಡಲಚೆನ್ನಬಸವಣ್ಣ ./247
ಹೊತ್ತುಹೊತ್ತಿಗೆ ಲಿಂಗಪೂಜೆಯ ಮಾಡಿಯೂ
ಮತ್ತೆಯು ಸತ್ಯವಾವುದು, ನಿತ್ಯವಾವುದೆಂದರಿಯದೆ ಕೆಟ್ಟರೆಲ್ಲ ಜಗವು.
ಸತ್ಯವಾಗಿ ನುಡಿವ ಶರಣರ ಕಂಡರೆ, ಕತ್ತೆಮಾನವರೆತ್ತಬಲ್ಲರೊ ?
ಅಸತ್ಯವನೆ ನುಡಿದು, ಹುಸಿಯನೆ ಬೋಧಿಸುವ ಹಸುಕರ ಕಂಡರೆ,
ಇತ್ತ ಬನ್ನಿ ಎಂಬರು.
ಇಂತಪ್ಪ ಅನಿತ್ಯದೇಹಿಗಳ ಭಕ್ತರೆಂದು ಜಂಗಮವೆಂದು
ನೋಡಿದರೆ, ನುಡಿಸಿದರೆ, ಮಾತನಾಡಿದರೆ, ನೀಡಿದರೆ,
ಅಘೋರನರಕವೆಂದು ನಮ್ಮ ಆದ್ಯರ ವಚನ ಸಾರುತಿದೆ,
ಬಸವಪ್ರಿಯ ಕೂಡಲಚೆನ್ನಬಸಣ್ಣಾ ./248
ಹೊತ್ತುಹೋಗದ ಮುನ್ನ ನೀವು ಸತ್ತಂತೆ ಇರಿರೊ.
ಸತ್ತಂತೆ ಇದಲ್ಲದೆ ತತ್ವವ ಕಾಣಬಾರದು.
ತತ್ತವ ಕಂಡಲ್ಲದೆ ಮನ ಬತ್ತಲೆಯಾಗದು.
ಬತ್ತಲೆಯಾದಲ್ಲದೆ ಘನವ ಕಾಣಬಾರದು.
ಘನವ ಕಂಡಲ್ಲದೆ ನಿಮ್ಮ ನೆನಹು ನಿಷ್ಪತ್ತಿಯಾಗದು,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ ./249
ಹೊನ್ನ ಗಳಿಸಿದರೇನಯ್ಯಾ, ಹೊಲೆಯರ ಮನೆಯಲ್ಲಿದ್ದರೆ ?
ಹೆಣ್ಣ ಗಳಿಸಿದರೇನಯ್ಯಾ, ವೇಶಿಯರ ಮನೆ ದಾಸಿಯಾಗಿದ್ದರೆ ?
ಮಣ್ಣ ಗಳಿಸಿದರೇನಯ್ಯಾ, ಉಣ್ಣ ದಾಹಾರವನುಂಡರೆ ?
ಹೋಗುವ ಹಾಳುಗೇರಿಯಾಗಿರದೆ, ಇದನರಿದು ಮಹಾಘನವನೆ ಮರೆದು,
ಮತ್ತೆ ಹೊನ್ನು ಹೆಣ್ಣು ಮಣ್ಣು ತನ್ನದೆಂಬರು,
ಕಣ್ಣುಗಾಣದ ಕುರುಡರಂತಾದರು ಕಾಣಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ ./250