Categories
ಶರಣರು / Sharanaru

ಹರಳಯ್ಯ ಮತ್ತು ಕಲ್ಯಾಣಮ್ಮ

Haralayya and Kalyanamma ಹರಳಯ್ಯ ಮತ್ತು ಕಲ್ಯಾಣಮ್ಮ

ಇಂದಿನ ಗುಲಬರ್ಗಾ ಜಿಲ್ಲೆಯ ಶಹಾಪೂರ ತಾಲ್ಲೂಕಿನಲ್ಲಿ ‘ಸಗರ’ ಎನ್ನುವ ಗ್ರಾಮವೊಂದಿದೆ. ಅಲ್ಲಿ ಹರಳಯ್ಯ ಮತ್ತು ಕಲ್ಯಾಣಮ್ಮ ಎಂಬ ದಂಪತಿಗಳು ವಾಸಿಸುತ್ತಿದ್ದರು. ತಮ್ಮ ಕುಲ ಕಸುಬಾದ ಜೋಡು (ಪಾದರಕ್ಷೆ) ತಯಾರಿಕೆಯಲ್ಲಿ ತೊಡಗಿದ್ದ, ಇವರು ಕಲ್ಯಾಣ ನಾಡಿನ ಗುರು ಬಸವಣ್ಣನವರ ಕೀರ್ತಿಯನ್ನೂ, ಅವರ ದಲಿತ ಪರ ಕಾಳಜಿ- ಕಕ್ಕುಲಾತಿಯನ್ನು, ಅವರಿವರ ಬಾಯಿಯಿಂದ ಕೇಳುತ್ತಲೇ ಇದ್ದರು. ತಮ್ಮೂರು ಹಾಗೂ ಸುತ್ತಮತ್ತಲಿನ ಕೈ-ಕಸಬುದಾರರು, ಬಸವಣ್ಣನ ಪ್ರಸಿದ್ಧಿಯನ್ನು ಕೇಳಿಸಿಕೊಂಡವರು, ಕಲ್ಯಾಣ ನಾಡಿನತ್ತ ವಲಸೆ ಹೋಗುತ್ತಿರುವುದನ್ನೂ ನೋಡುತ್ತಿದ್ದರು.

ಕಲ್ಯಾಣ ನಾಡಿಗೆ ಹೋಗಿ ಬಂದವರಂತೂ, ಗುರು ಬಸವಣ್ಣನವರನ್ನು ಹೊಗಳಿದ್ದೋ ಹೊಗಳಿದ್ದು. ಕಾಯಕ ಜೀವಿಗಳ ಕುರಿತು ಅಣ್ಣನಿಗಿರುವ ಅಭಿಮಾನ ಮತ್ತು ಅಪೂರ್ವವಾದ ಗೌರವಕ್ಕೆ, ಮಾರು ಹೋಗದವರೇ ಪಾಪಿಗಳು, ಎನ್ನುವಷ್ಟು ಬಸವನ ಪ್ರಭಾವ ಹಬ್ಬತೊಡಗಿತು. ಹರಳಯ್ಯ ದಂಪತಿಗಳು ಇದೆಲ್ಲವನ್ನು ಶಾಂತ ಚಿತ್ತರಾಗಿ ಗಮನಿಸುತ್ತಲೇ ಇದ್ದರು. ತಾವಾಯಿತು ತಮ್ಮ ಹಿರಿಯರಾಯಿತು, ತಲೆತಲಾಂತರದಿಂದ ಮಾನವ ಶರೀರದ ಅಡಿಪಾಯದಂತಿರುವ ಪಾದಗಳಿಗೆ, ಪಾದರಕ್ಷೆಗಳನ್ನು ಮಾಡಿ ಕೊಡುವುದೇ ಆಯಿತು. ಸಮಾಜ ತಮ್ಮನ್ನು ಯಾವ ಕಾಲಕ್ಕೂ ಗೌರವದಿಂದ ಕಾಣುವ ಮಾತು, ಅದೊಂದು ಕನಸಿನ ಸಂಗತಿಯೇ ಸರಿಯೆಂದು, ತೀರ್ಮಾನಿಸಿದ ಹರಳಯ್ಯ್ಯ ದಂಪತಿಗಳು, ತಾವೂ ಗುರು ಬಸವಣ್ಣನ ನಾಡಿಗೆ ಹೊರಡಲು ಸನ್ನದ್ಧರಾಗಿಯೇ ಬಿಟ್ಟರು.

ಶರಣು ಶರಣಾರ್ಥಿಗಳು

ಒಮ್ಮೆ ಕಲ್ಯಾಣ ಪಟ್ಟಣದ ರಾಜ ಬೀದಿಯಲ್ಲಿ, ದಿನ ನಿತ್ಯದಂತೆ ಹರಳಯ್ಯನವರು ಪಾದರಕ್ಷೆಗಳನ್ನು ಮಾರಿಕೊಂಡು ಬರುತ್ತಿದ್ದರು. ಆಕಸ್ಮಿಕವೋ ಏನೋ, ಅದೇ ಸಮಯಕ್ಕೆ ಗುರು ಬಸವಣ್ಣನವರು ಹರಳಯ್ಯನವರಿಗೆದುರಾದರು. ಇವರನ್ನು ಕಂಡ ತಕ್ಷಣ್ ಹರಳಯ್ಯನವರು; “ಗುರು ಬಸವೇಶ್ವರ ಶರಣು ತಂದೆ ಶರಣು” ಎಂದು ಕೈ ಮುಗಿದರು. ಅದಕ್ಕೆ ಪ್ರತಿಯಾಗಿ ಬಸವಣ್ಣನವರು, “ಶರಣು ಶರಣಾರ್ಥಿಗಳು ಹರಳಯ್ಯನವರಿಗೆ”; ಎಂದು ಬಾಗಿ ನಮಸ್ಕರಿಸಿದರು. ಮೊದಲೇ ಬಸವಣ್ಣನವರು; “ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ” ಎಂದು ನಂಬಿಕೊಂಡು ಬಂದವರು.

ತನ್ನ ಒಂದು “ಶರಣು” ಸ್ವೀಕರಿಸಿದರೆ ತನ್ನ ಜನ್ಮವೇ ಪಾವನವಾಯಿತೆಂದು ತಿಳಿದ ಹರಳಯ್ಯನನವರಿಗೆ; ಗುರು ಬಸವಣ್ಣನವರು ಪ್ರತಿಯಾಗಿ ಎರಡು ಬಾರಿ ಶರಣು ಹೇಳಿದ್ದು ಕೇಳಿಸಿಕೊಂಡಾಗ; ದಿಕ್ಕು ತೋಚದಂತಾಯಿತು; ಆಕಾಶ ಕಳಚಿ ಮೈ ಮೇಲೆ ಬಿದ್ದಂತಾಯಿತು. ಇದು ಕನಸೋ ನನಸೋ ಒಂದೂ ತಿಳಿಯದಾಯಿತು. ಯಾಕೆಂದರೆ ಇಲ್ಲಿಯವರೆಗೂ ಊರಲ್ಲಿ ಸವರ್ಣೀಯರು, ತನಗೆ ಹಾಗೂ ತನ್ನ ಕುಲ ಬಾಂಧವರಿಗೆ ನಮಸ್ಕಾರ ಮಾಡುವುದಂತೂ ಒತ್ತಟ್ಟಿಗಿರಲಿ; ನೆರಳೂ ಕೂಡಾ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದವರೆಲ್ಲಿ? ಸ್ವತಃ ಪ್ರಧಾನಿಯಾದ, ಹುಟ್ಟು ಬ್ರಾಹ್ಮಣನಾದ ಹಾಗೂ ಕಲ್ಯಾಣ ರಾಜ್ಯದ ಬಿಜ್ಜಳ ರಾಜನ ಅಳಿಯನಾದ; ಗುರು ಬಸವಣ್ಣ ತನಗೆ ಎರಡು ಸಲ ಶರಣು ಅನ್ನುವುದೆಂದರೇನು? ಎಂಬ ಪ್ರಶ್ನೆ ಮೂಡಿತು.

ಆತಂಕಗೊಂಡ ಕಲ್ಯಾಣಮ್ಮ.

ಒಂದು ರಾಜ್ಯದ ಪ್ರಧಾನ ಮಂತ್ರಿಯಿಂದ, ಎರಡು ಬಾರಿ ನಮಸ್ಕರಿಸಿಕೊಂಡ ಸಂಗತಿಯನ್ನು, ಮನದಲ್ಲೇ ಮೆಲಕು ಹಾಕುತ್ತ, ಮನೆಗೆ ಬಂದ ಹರಳಯ್ಯನರನ್ನು ಇದಿರುಗೊಂಡ ಕಲ್ಯಾಣಮ್ಮ, ಕೈ ಕಾಲು ಮುಖ ತೊಳೆದುಕೊಳ್ಳಲು, ನೀರು ಕೊಡಲು ಹೋದಾಗ, ಹರಳಯ್ಯನವರ ಚಿಂತಾಕ್ರಾಂತವಾದ ಮುಖ ಗಮನಿಸಿ ತಾನೂ ಆತಂಕಗೊಳ್ಳುತ್ತಾಳೆ.

ಹರಳಯ್ಯನವರ ಮನದಾಳದಲ್ಲಿ, ಗುರು ಬಸವಣ್ಣನವರು ಎರಡು ಬಾರಿ ಶರಣು ಹೇಳಿದ ಸಂಗತಿಯು, ತಲೆ ತಿನ್ನುತ್ತಲೇ ಇತ್ತು. ಮಾನಸಿಕವಾಗಿ ಹೊರಲಾರದ ಹೊರೆಯನ್ನು ಹೇಗೆ ಇಳಿಸಿಕೊಳ್ಳುವುದು? ಆ ಭಾರದಿಂದ ಮುಕ್ತಿ ಪಡೆಯುವ ಮಾರ್ಗ ಯಾವುದೆಂದು, ಚಿಂತಿಸುತ್ತಲೇ ಇದ್ದ ಪತಿಗೆ ತಕ್ಕ ಸತಿಯಾದ ಕಲ್ಯಾಣಮ್ಮ, ಹರಳಯ್ಯನವರ ಧರ್ಮ ಪತ್ನಿ. ಪತಿಯ ಹೆಜ್ಜೆಯಲ್ಲಿ ಹೆಜ್ಜೆಯಿಟ್ಟು ನಡೆಯುವ ಸದ್ಗೃಹಿಣಿ. ಗಂಡನ ಚಿಂತಾಕ್ರಾಂತಕ್ಕೆ ತಾನೂ ಖಿನ್ನವದಳಾಗಿ ಕಾರಣ ತಿಳಿಯಲು ಯತ್ನಿಸಿದಳು. ಉಹೂ ಹರಳಯ್ಯ ಜಪ್ಪೆನ್ನುತ್ತಿಲ್ಲ. ಕೊನೆಗೂ ಬಾಯಿ ಬಿಟ್ಟ ಹರಳಯ್ಯ, ತಾನು ದಾರಿಯಲ್ಲಿ ಬರುವಾಗಿನ ಘಟನೆಯನ್ನೆಲ್ಲ, ಸವಿವರವಾಗಿ ಪತ್ನಿಗೆ ವಿವರಿಸಿ ಹೇಳಿ ಮೂಕವಿಸ್ಮಿತನಾದ. ಮುಂದೆ ಯಾವುದಕ್ಕೂ ಬಾಯಿಯಿಂದ ಮಾತೇ ಹೊರಡುತ್ತಿಲ್ಲ. ಪತಿಯ ಮುಗ್ಧತೆ ಹಾಗೂ ದುಗುಡವನ್ನರಿತ ಕಲ್ಯಾಣಮ್ಮ ಕೊನೆಗೆ; “ಆ ಗುರು ಮಾಡಿದ್ದುದಾಗಲಿ, ಹೀಗೆ ಚಿಂತೆ ಮಾಡುತ್ತ ಕಾಲ ಹರಣ ಮಾಡುವುದು ತರವಲ್ಲ; ಅದಕ್ಕೇನಾದರೂ ಒಂದು ಮಾರ್ಗೋಪಾಯ ಹುಡುಕಿದರಾಯಿತು; ಎದ್ದೇಳಿ ಮೊದಲು ಕೈ ಕಾಲು ಮುಖ ತೊಳೆದುಕೊಂಡು ಊಟಕ್ಕೆ ಬನ್ನಿ”ಎಂದಾಗ, ಪತಿಗೆ ಎಲ್ಲೋ ಒಂದು ಕಡೆ ಕಪ್ಪು ಮೋಡದಲ್ಲೊಂದು ಬೆಳ್ಳಿಯ ಕೋಲ್ಮಿಂಚು ಕಂಡಂತಾಯಿತು.

ಪರಿಹಾರ ಕಂಡುಕೊಂಡ ದಂಪತಿಗಳು

ಒಂದೆರಡು ದಿನಗಳ ತರುವಾಯ ಕಲ್ಯಾಣಮ್ಮ, “ಪತಿದೇವಾ ಚಿಂತಸದಿರಿ”, ಇದೋ ಗುರು ಬಸವಣ್ಣನವರಿಗೆ ಸುಂದರತರವಾದ ಚಮ್ಮಾವುಗೆಗಳನ್ನು ಮಾಡೋಣ. ಆದರೆ ಸಾಮಾನ್ಯ ರೀತಿಯಾಗಿ ಬೇಡ. ಚಮ್ಮಾವುಗೆಯ ಅಟ್ಟಿಯಲ್ಲಿ ನಮ್ಮ ತೊಡೆಯ ಚರ್ಮವನ್ನು ಸೇರಿಸೋಣ. ಹೀಗೆ ಪವಿತ್ರ ಮನದಿಂದ ತಯಾರಿಸಿದ ಪಾದರಕ್ಷೆಗಳನ್ನು ಗುರು ಬಸವಣ್ಣನವರು ಮೆಟ್ಟಿದರೆ ನಾವು ಪುನೀತರಾಗುವುದಿಲ್ಲವೇ?” ಎಂದು ಪತಿಗೆ ಸೂಕ್ತ ಸಲಹೆ ನೀಡಿದ ತಕ್ಷಣ, ಹರಳಯ್ಯನವರಿಗೆ ಒಪ್ಪಿಗೆಯಾಯಿತು.
ಬಸವನಾಮ ಸ್ಮರಿಸುತ್ತ, ಹರಳಯ್ಯನವರು ತಮ್ಮ ಬಲ ತೊಡೆಯ, ಕಲ್ಯಾಣಮ್ಮನವರು ತಮ್ಮ ಎಡ ತೊಡೆಯ ಚರ್ಮ ಕೊಯ್ದು ಅಟ್ಟೆಯಲ್ಲಿ ಸೇರಿಸಿದರು.
ಮರುದಿನವೆ ಹರಳಯ್ಯ ಕೊರೆದ ಬಲದೊಡಿ ಚರ್ಮ
ಹರನೆಂದು ಮಡದಿಯೆಡದೊಡೆಯ ತಾ ಕೊಯ್ದು
ಭರದಿ ಹದಮಾಡಿ ಒಣಗಿಸಿದ |
ಎಂದು ಮುಂತಾಗಿ ಆ ಕಾಲದ ಜನಪದ ಕವಿಯೊಬ್ಬ ಹೃದಯಸ್ಪರ್ಶಿಯಾಗಿ ತ್ರಿಪದಿಗಳನ್ನು ಕಟ್ಟಿ ಹಾಡಿದ್ದಾನೆ.

ಪಾದರಕ್ಷೆಗಳನ್ನು ತಯಾರಿಸುವ ಅನುಭವವನ್ನೆಲ್ಲ ಎರಕಹೊಯ್ದು, ತಮ್ಮ ಕಲಾ ನೈಪುಣ್ಯವನ್ನೆಲ್ಲ ವಿನಿಯೋಗಿಸಿ ಚಮ್ಮಾವುಗೆಗಳನ್ನು ಸಿದ್ಧಪಡಿಸಿದರು. ಭಕ್ತಿ ಭಾಂಡಾರಿ ಬಸವೇಶ್ವರರು ಮೆಟ್ಟಿದರೆ, ತಾವು ಪುನೀತರಾಗುವೆವೆಂದು ಹರಳಯ್ಯ ದಂಪತಿಗಳು ಆನಂದಭರಿತರಾದರು.

ಗುರು ಬಸವಣ್ಣನ ಮನೆಯತ್ತ ಹರಳಯ್ಯ

ಸಡಗರದಿಂದ ರೇಶ್ಮೆಯ ವಸ್ತ್ರವನ್ನು ಚಮ್ಮಾವುಗೆಗಳಿಗೆ ಹೊದಿಸಿ, ಭಯ ಭಕ್ತಿಯಿಂದ ಗುರು ಬಸವಣ್ಣನನ್ನು ಸ್ಮರಿಸುತ್ತ ಮಹಾಮನೆಗೆ ಹೊರಟರು. ಬಸವಣ್ಣನವರು ದೂರದಿಂದಲೇ ಕಲ್ಯಾಣಮ್ಮ ಮತ್ತು ಹರಳಯ್ಯನವರನ್ನು ಕಂಡು, ಪತ್ನಿ ಸಮೇತರಾಗಿ ಬಂದು ಇದಿರ್ಗೊಂಡು, ಕೈಕಾಲು ಮುಖ ತೊಳೆಯಲು ನೀರಿತ್ತು, ಸತ್ಕರಿಸಿ ಒಳಗೆ ಕರೆದೊಯ್ದರು. ಹರಳಯ್ಯನವರು ತಮ್ಮಲ್ಲಿಗೆ ಆಗಮಿಸಿದ ಕಾರಣವನ್ನು ಕೇಳಿದಾಗ, ಭಾವ ಪುನೀತರಾದ ಹರಳಯ್ಯನವರು, ತಾವು ತಂದ ಚಮ್ಮಾವುಗೆಗಳನ್ನು ಗುರು ಬಸವಣ್ಣನವರಿಗೆ ತೋರಿಸಿ, ಅವನ್ನು ಸ್ವೀಕರಿಸಬೇಕೆಂದು ಬಹು ನಮೃತೆಯಿಂದ ಬೇಡಿಕೊಂಡರು.

ಹರಳಯ್ಯನವರು ಈ ಚಮ್ಮಾವುಗೆಗಳನ್ನು ಒಯ್ದು ಬಸವಣ್ಣನವರಿಗೆ ಕೊಟ್ಟಾಗ, ಅವರು ಭಾವಪರವಶರಾಗಿ, ಅವುಗಳನ್ನು ಮೆಟ್ಟಿಕೊಳ್ಳದೇ ಭಯ ಭಕ್ತಿಯಿಂದ, ತಮ್ಮ ತಲೆಯ ಮೇಲೆ ಇಟ್ಟುಕೊಂಡು, ’ಇವು ದೇವರ ಪಾದರಕ್ಷೆಗಳು’ ಎಂದರು.

ನಿಮ್ಮ ಶರಣರ ಚಮ್ಮಾವುಗೆಗೆ ಪೃಥ್ವಿ ಸಮಬಾರದು;
ಸರಿಯಲ್ಲ ನೋಡಾ.
ಕೂಡಲಸಂಗಮದೇವಾ,
ನಿಮ್ಮ ಶರಣರ ಚಮ್ಮಾವುಗೆಗೆ! -ಬಸವಣ್ಣ [1]
“ಈ ಪವಿತ್ರ ಚಮ್ಮಾವುಗೆಗೆಳನ್ನು ಮೆಡುವ ಯೋಗ್ಯತೆ, ನನ್ನದಲ್ಲ ಕೂಡಲ ಸಂಗಮನಿಗಲ್ಲದೆ ನನಗೆ ಸಲ್ಲವು”; ಎಂದು ನುಡಿದಾಗ, ಹರಳಯ್ಯನವರು ಬಸಣ್ಣನವರ ಕಿಂಕರತ್ವವನ್ನು ಮನದಲ್ಲೇ ಕೊಂಡಾಡಿದರು.

ದುಡುಕಿದ ಮಧುವರಸ

ಒಂದು ಭಾರವನ್ನು ಇಳಿಸಿಕೊಳ್ಳಲು ಹೋಗಿ, ಅದರ ಹತ್ತಾರು ಪಟ್ಟು ಹೊರೆ ಹೊರುವುದು ಬರಬೇಕೆ? ಹರಳಯ್ಯನವರು ಖಿನ್ನ-ಮನಸ್ಕರಾದರು. ನೊಂದ ಮನದಿಂದ ಬಾಡಿದ ಮುಖದಿಂದ ಹರಳಯ್ಯ ದಂಪತಿಗಳು ಮನೆಯತ್ತ ಸಾಗಿದರು. ರಾಜ ಮಾರ್ಗದಲ್ಲಿ ಹಾಗೂ ಮಹಾಮನೆಯ ಘಟನೆಯ ವಿಚಾರದಲ್ಲಿ ಮುಳುಗಿ ದಾರಿ ಕ್ರಮಿಸುತ್ತಿದ್ದ ಶರಣ ದಂಪತಿಗಳಿಗೆ, ಗಡುಸಾದ ಹಾಗೂ ದರ್ಪಯುಕ್ತವಾದ ಒಂದು ಧ್ವನಿ ಕೇಳಿ ಎಚ್ಚರಾಗಿ ನೋಡಿದಾಗ, ಎದುರಿಗೆ ಮಧುವರಸರು ಕಂಡರು. ಹರಳಯ್ಯನವರ ತಲೆಯ ಮೇಲಿದ್ದ ಚಮ್ಮಾವುಗೆಗಳಿಗೆ ಮಾರು ಹೋಗಿ, ಅದನ್ನು ಮಧುವರಸರು ತಮಗೆ ಕೊಡುವಂತೆ ಕೇಳಿಕೊಂಡರು. ಹರಳಯ್ಯನವರು ಕೊಡಲು ನಿರಾಕರಿಸಿದಾಗ, ಮಧುವರಸರು ತಮ್ಮ ಸೇವಕರಿಂದ ಚಮ್ಮಾವುಗೆಗಳನ್ನು ಕಿತ್ತುಕೊಂಡು, ಹೆಮ್ಮೆ ಮಿಶ್ರಿತ ಅಹಂಕಾರದಿಂದ ಮೆಟ್ಟಿದರು. ಮೆಡುವುದೊಂದೇ ತಡ, ಮಧುವರಸರ ಮೈಯ್ಯಲ್ಲಾ ಉರುಪಿನಿಂದ ಭಯಂಕರವಾಗಿ ಉರಿಯ ಹತ್ತಿತು.

ಹರಳಯ್ಯನವರ ಮಾತಿಗೆ ಬೆಲೆ ಕೊಡದೆ, ಶರಣರ ಮಹಿಮೆಯನ್ನರಿಯದೆ, ಅವರನ್ನು ತಿರಸ್ಕರಿಸಿ ತಾನು ಮಾಡಿದ ಅಪರಾಧಕ್ಕಾಗಿ ಮಧುವರಸರಿಗೆ ದಿಕ್ಕೇ ತೋಚದಂತಾಯಿತು. ಮೈಯ್ಯುರಿ ಹೆಚ್ಚುತ್ತಲೇ ಇತ್ತು. ಯಾರ ಸಲಹೆ ಸೂಚನೆಗಳಾಗಲೀ, ಯಾವ ಪಂಡಿತ ವೈದ್ಯರ ಔಷಧೋಪಚಾರವಾಗಲೀ, ಮಧುವರಸರ ಶರೀರ ತಾಪಕ್ಕೆ ಶಾಂತಿಯನ್ನೀಯಲಿಲ್ಲ. ಖ್ಯಾತ-ವಿಖ್ಯಾತ, ದೇಶ-ವಿದೇಶಗಳ ತಜ್ಣ ವೈದ್ಯರ ಉಪಚಾರವೆಲ್ಲ, ಹೊಳೆಯಲ್ಲಿ ಹುಣಸೇ ಹಣ್ಣು ತೊಳೆದಂತಾಯಿತು. ಅದ್ಯಾವ ಪುಣ್ಯಾತ್ಮ ಸಲಹೆ ಕೊಟ್ಟನೋ ಏನೋ, ಹರಳಯ್ಯನವರ ಮನೆಯ “ಕರಿಬಾನಿ” ನೀರು ಚುಮುಕಿಸಿದರೆ ಮೈಯುರಿ ಪ್ರಶಾಂತಗೊಳ್ಳುವುದೆಂದರಂತೆ. ಹಾಗೆ ಮಾಡಿದಾಗ ಮಧುವರಸರ ಮೈ ತಾಪ ತಣ್ಣಗಾಗಿ ಯಥಾಸ್ಥಿತಿಗೆ ಮರಳಿತಂತೆ.

ಜಾತಿ ಮೀರಿದ ಮದುವೆ

ಈಗ ಮಧುವರಸರಿಗೆ ಶರಣರ ಜೀವನದ ಹಿರಿಮೆ ಹಾಗೂ ಮಹಿಮೆಯ ಅರಿವಾಯಿತು. ಅವರಿಗೆ ಜ್ಣಾನೋದಯವಾಯಿತು. ಅವರು ಹರಳಯ್ಯನವರಲ್ಲಿ ಕ್ಷಮೆ ಕೇಳಿದರು. ಅವರ ಶಿಷ್ಯರಾದರು, ಶಿವಭಕ್ತರಾದರು, ಗುರುಕರುಣೆಯಿಂದ ಲಿಂಗಧಾರಿಗಳಾದರು. ಶರಣ ಧರ್ಮವನ್ನು ಅಂಗೀಕರಿಸಿದ ಅವರು ತಮ್ಮ ಮುದ್ದು ಮಗಳು ಲಾವಣ್ಯವತಿಯನ್ನು ಹರಳಯ್ಯನವರ ಪುತ್ರ ಶೀಲವಂತನಿಗೆ ಮದುವೆ ಮಾಡಿ ಕೊಡಲು ಮುಂದಾದರು.
“ಶರಣರ ಮಗಳನ್ನು ಶರಣರ ಮಗನಿಗೆ ಕೊಡಲು ಯಾವ ತಪ್ಪೂ ಇಲ್ಲ” ಎಂದು ಅನುಭವ ಮಂಟಪವೂ ಒಪ್ಪಿಗೆ ನೀಡಿತು. ಆದರೆ ಲೋಕದ ಕಣ್ಣಿಗೆ ಇದು ಸಮಾಜ ವಿರೋಧಿ ಕಾರ್ಯವಾಗಿತ್ತು, ಪ್ರತಿಲೋಮ ವಿವಾಹದ ಪ್ರಕಾರವಾಗಿತ್ತು. ಜನ ಮರುಳೋ ಜಾತ್ರೆ ಮರುಳೋ, ಎಂಬಂತೆ ಈ ಮದುವೆಯು ಸಂಪ್ರದಾಯಕ್ಕೆ ಕೊಡಲಿ ಏಟು ಹಾಕಿತ್ತು. ಜನ ಸಾಮಾನ್ಯರನ್ನು ರೊಚ್ಚಿಗೇಳುವಂತೆ ಪಟ್ಟಭದ್ರ ಹಿತಾಸಕ್ತಿಗಳು ಕುಮ್ಮಕ್ಕು ನೀಡಿದವು. ಜಾತಿ ಕೆಟ್ಟು ಹೋಯಿತೆಂದರು. ಧರ್ಮ ಹಾಳಾಯಿತೆಂದರು. ಕೆಳ ಜಾತಿಗಳಿಗೆ ಸೊಕ್ಕು ಹೆಚ್ಚಾಯಿತೆಂದರು. ನಾಯಿಗಳಿಗೆ ಸಲುಗೆ ಕೊಟ್ಟರೆ ಹೆಗಲೇರುತ್ತವೆಯೆಂದರು. ಮೇಲ್ಜಾತೀಯ ಸವರ್ಣೀಯರು ಸಹಜವಾಗಿ ದೊರೆಗೆ ದೂರಿತ್ತರು.

ಕಲ್ಯಾಣ ಕ್ರಾಂತಿಗೆ ಮುನ್ನುಡಿಯಾದ ಚಮ್ಮಾವುಗೆಗಳು

ದೊರೆಗೆ ಮತ್ತಿನ್ನೇನು ಬೇಕು? “ವರ್ಣ ಸಂಕರ ಮಾಡಿದವರಿಗೆ ಎಳೆ ಹೂಟ್ಟೆ ಶಿಕ್ಷೆ ವಿಧಿಸಿ” ಎಂಬ ಆಜ್ಷೆಯನ್ನು ಹೊರಡಿಸಿದರು ಹರಳಯ್ಯ- ಮಧುವರಸರ ಕಣ್ಣು ಕೀಳಿಸಿ, ಆನೆಯ ಕಾಲಿಗೆ ಕಟ್ಟಿ. ಕಲ್ಯಾಣದ ತುಂಬೆಲ್ಲ ಎಳೆದಾಡಿಸಿದರು. ಶರಣರ ಜಂಘಾ ಬಲ ಉಡುಗುವಂತೆ ಕೊಂಡಿ ಮಂಚಣ್ಣಗಳು ನೋಡಿಕೊಂಡರು. ಹರಳಯ್ಯ ಮಧುವಯ್ಯನವರು ಆತ್ಮಾರ್ಪಣೆಗೈದರು. ಇದರಿಂದ ಕಲ್ಯಾಣದಲ್ಲಿ ಮಹಾಕ್ರಾಂತಿಯಾಯಿತು. ಸಿಕ್ಕ ಸಿಕ್ಕಲ್ಲಿ ಶರಣರ ಕಗ್ಗೊಲೆ ನಡೆಯಿತು. ಶರಣ ತತ್ವ ಉಳಿಸಿ ಪ್ರಸಾರ ಕೈ ಗೊಳ್ಳಲು ಅಸಂಖ್ಯ ಶರಣ ಶರಣೆಯರು, ಕಲ್ಯಾಣ ಬಿಟ್ಟು ಹೊರ ಬಂದರು. ಆದರೂ ಹಲವಾರು ಶರಣರನ್ನು ಅರಸನ ಸೈಕರು, ಸಂಪ್ರದಾಯವಾದಿಗಳು, ಜಾತಿವಾದಿಗಳು ಹಿಡಿದು, ಕೊಲ್ಲುವ ಕಾಯಕ ಮಾಡುತ್ತಲೇ ಹೋದರು.

ಕ್ರಾಂತಿಯು ಉತ್ತುಂಗಕ್ಕೇರಿದಾಗ ಇಡೀ ಕಲ್ಯಾಣವು ಗೊಂದಲದ ಗೂಡಾಯಿತು. ಅರಾಜಕತೆಯ ಅಟ್ಟಹಾಸದ ಜ್ವಾಲೆ ಆಗಸದೆತ್ತರಕ್ಕೆ ಚಿಮ್ಮುತ್ತಿತ್ತು. ಮಹಾಕ್ರಾಂತಿಯ ಉತ್ತುಂಗದ ಪರಿಣಾಮವೆನ್ನುವಂತೆ ಬಿಜ್ಜಳರಸನ ಕಗ್ಗೊಲೆಯೂ ನಡೆದು ಹೋಯಿತು. ಕಲ್ಯಾಣ ಕ್ರಾಂತಿಗೆ ಮೂಲ ಕಾರಣವೆಂದರೆ ಕಲ್ಯಾಣಮ್ಮ ಮತ್ತು ಹರಳಯ್ಯನವರ ತೊಡೆಯ ಚರ್ಮದಿಂದ ತಯಾರಿಸಿದ ಪವಿತ್ರ ಚಮ್ಮಾವುಗೆಗಳೇ!

ಪಾದರಕ್ಷೆಗಳು ಈಗಲೂ ಇವೆ

ಇವತ್ತಿನ ಗುಲ್ಬರ್ಗ ಜಿಲ್ಲೆಯ ಸೇಡಂ ತಾಲ್ಲೂಕಿನ ಬಿಜನಳ್ಳಿಯಲ್ಲಿ; ಈ ಪಾದರಕ್ಷೆಗಳನ್ನು ಸಮಗಾರ ಹರಳಯ್ಯ ದಂಪತಿಗಳು ತಯಾರಿಸಿದ ಪವಿತ್ರ ಪಾದರಕ್ಷೆಗಳೆಂದೇ; ಭಯ ಭಕ್ತಿಯಿಂದ ಇಂದಿಗೂ ಕೂಡಕ ಪೂಜಿಸಲಾಗುತ್ತದೆ. ಹರಳಯ್ಯನವರ ಹೆಸರಿನಿಂದ; ವರುಷಕ್ಕೊಮ್ಮೆ ದಾಸೋಹ ನಡೆಯುತ್ತದೆ. ಬಿಜನಳ್ಳಿಯ ಈ ಚಮ್ಮಾವುಗೆಗಳು; ಹರಳಯ್ಯನವರು ತೊಡೆಯ ಚರ್ಮದಿಂದ ತಯಾರಿಸಿದ ಪಾದರಕ್ಷೆಗಳೆಂದು ಸಂಶೋದಕರು ಗುರುತಿಸಿದ್ದಾರೆ.

Haralayya Padarakshe