Categories
ವಚನಗಳು / Vachanagalu

ಎಚ್ಚರಿಕೆ ಕಾಯಕದ ಮುಕ್ತನಾಥಯ್ಯ ವಚನಗಳು

1640
ಅಂಗವಿಕಾರ ಸಾಕೇಳಿ, ಬಹುವಿಡಂಗದ ಪ್ರಕೃತಿಯ ಮರದೇಳಿ.
ನಿಮ್ಮ ಭಕ್ತಿಮುಕ್ತಿಯ ಲಿಂಗದ ಕೂಟವ ನೆನೆದೇಳಿ.
ನಿಮ್ಮ ಗುರುವಾಜ್ಞೆಯ
ನಿಮ್ಮ ವಿರಕ್ತಿ ಅರಿವಿನ ಸಾವಧಾನವನರಿದೇಳಿ.
ಸಾರಿದೆ! ಎವೆ ಹಳಚಿದಡಿಲ್ಲ,
ಶುದ್ಧಸಿದ್ಧಪ್ರಸಿದ್ಧಪ್ರಸನ್ನ ಕುರುಂಗೇಶ್ವರಲಿಂಗವ ಕೂಡಬಲ್ಲಡೆ.

1641
ಆಟವನಾಡಿ ಜವನಿಕೆಯ ಕಟ್ಟಿದ ಮತ್ತೆ
ಭಾಷಾಂಗದ ಕ್ರೀಯುಂಟೆ?
ಭಕ್ತಿಯನಾಶ್ರಯಿಸಿ ನಿರ್ಮುಕ್ತನಾದ ಮತ್ತೆ
ಕೈಲಾಸಾದ್ರಿಯ ಆಶೆಯ ಘಾಸಿಯುಂಟೆ?
ಅಳಿವುಳಿವ ತಿಳಿದು ಕಳಿದ ಮತ್ತೆ,
ವಿರಕ್ತಿಯ ತೋರಿ ಕುಳವನರಿಯೆಂದು ಬೆಸಸಲುಂಟೆ?
ಸತ್ತ ಹೆಣಕ್ಕೆ ಎವೆ ಹಳಚುವ ಹೊಳವಳಿಯುಂಟೆ?
ಮತ್ತನಾದಾತ್ಮಂಗೆ ಚಿತ್ತದ ನಳನಳ ಶಬ್ದ[ವಾ]ಹೊತ್ತು ಕೇಳಬಲ್ಲುದೆ?
ಇಂತೀ ಕರ್ಮಕ್ರೀಗಳೆಲ್ಲವೂ ಧರ್ಮದಲ್ಲಿ ನಷ್ಟವಾದ ಮತ್ತೆ
ಸುಳುಹು ಶೂನ್ಯ ಒಳಗುಗೆಟ್ಟಿತ್ತು,
ಒಳಗು ತೊಳಗಿ ಬೆಳಗಾಯಿತ್ತು.
ಶುದ್ಧಸಿದ್ಧಪ್ರಸಿದ್ಧಪ್ರಸನ್ನ ಕುರುಂಗೇಶ್ವರಲಿಂಗದೊಳಗಾಗಲಾಗಿ.

1642
ಎನ್ನ ತನು ಬಸವಣ್ಣನ ಶುದ್ಧಪ್ರಸಾದವ ಕೊಂಡಿತ್ತು,
ಎನ್ನ ಮನ ಚೆನ್ನಸಬವಣ್ಣನ ಸಿದ್ಧಪ್ರಸಾದವ ಕೊಂಡಿತ್ತು,
ಎನ್ನ ಪ್ರಾಣ ಪ್ರಭುದೇವರ ಪ್ರಸಿದ್ಧಪ್ರಸಾದವ ಕೊಂಡಿತ್ತು.
ಇಂತೀ ಶುದ್ಧಸಿದ್ಧಪ್ರಸಿದ್ಧಪ್ರಸನ್ನ ಕುರಂಗೇಶ್ವರಾ,
ನಿಮ್ಮ ಶರಣರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.

1643
ಒಂದರಲ್ಲಿ ಎರಡದೆ, ಎರಡರಲ್ಲಿ ಮೂರದೆ,
ಮೂರರಲ್ಲಿ ನಾಲ್ಕದೆ, ನಾಲ್ಕರಲ್ಲಿ ಐದದೆ, ಐದರಲ್ಲಿ ಆರದೆ,
ಆರರೊಳಗಾದವರ ಭೇದವ ತಿಳಿದು,
ನೂರೊಂದರಲ್ಲಿ ಕಡೆಗಣಿಸಿ ಸಂದು,
ನಿಂದುನೋಡಿ ನಿಮ್ಮಂಗವ ಕಂಡುಕೊಳ್ಳಿ,
ಘನಲಿಂಗಸಂಗವ ಮಾಡಿಕೊಳ್ಳಿ,
ಸಂಗನ ಬಸವಣ್ಣನ ಬಟ್ಟೆಯ ಹೋಹಂದವ ತಿಳಿದುಕೊಳ್ಳಿ.
ಶಿವಲಿಂಗಾಂಗ ಶರಣರೆಲ್ಲರ ಸಾರುವ ತೊಂಡ ಮುಕ್ತಿ ಭಕ್ತನ ಮಾಡು,
ಶುದ್ಧಸಿದ್ಧಪ್ರಸಿದ್ಧಪ್ರಸನ್ನ ಕುರುಂಗೇಶ್ವರಲಿಂಗವ ವೇಧಿಸಿ ಭೇದಿಸಿಕೊಳ್ಳಿ.

1644
ಜಾಗ್ರದಲ್ಲಿ ನಿಮ್ಮ ದೇವರಿಗೆ ಸಲ್ಲದುದ ಮನ ನೆನೆಯದಿರಿ,
ಕಂಗಳು ತುಂಬಿ ಅಹುದೆಂದು ಒಂದ ನೋಡಿದಿರಿ,
ಅದು ಜಾಗ್ರದ ಬಯಕೆ, ಸ್ವಪ್ನದ ಕೂಡ, ನಿಜದ ಎಚ್ಚರಿಕೆ.
ಭಕ್ತಿಗುಣವ ತಪ್ಪದಿರಿ,
ಶುದ್ಧಸಿದ್ಧಪ್ರಸಿದ್ಧಪ್ರಸನ್ನ ಕುರುಂಗೇಶ್ವರಲಿಂಗವ ಕೂಡಬಲ್ಲಡೆ.

1645
ದುಃಸ್ವಪ್ನವ ಕಾಣದಿರಿ, ದುರ್ವಿಕಾರದಲ್ಲಿ ಕೂಡದಿರಿ,
ಮನೋವಿಕಾರದಲ್ಲಿ ಹರಿದಾಡದಿರಿ,
ಪಂಚಾಕ್ಷರಿಯ ಜಪಿಸಿ ಷಡಕ್ಷರಿಯ ಸಂಬಂಧಿಸಿಕೊಳ್ಳಿ,
ಮೂಲಮಂತ್ರವನಾತ್ಮಂಗೆ ವೇಧಿಸಿಕೊಳ್ಳಿ.
ಮರೆಯದಿರಿ ಗುರುವಾಜ್ಞೆಯ,
ತೊರೆಯದಿರಿ ಶಿವಪೂಜೆಯ,
ಅರಿದು ಮರೆಯದಿರಿ ಚರಸೇವೆಯ.
ಇಂತೀ ತ್ರಿಗುಣವ ನೆರೆ ನಂಬಿ,
ಶುದ್ಧಸಿದ್ಧಪ್ರಸಿದ್ಧಪ್ರಸನ್ನ ಕುರುಂಗೇಶ್ವರಲಿಂಗವ ಕೂಡಬಲ್ಲಡೆ.

1646
ನಾಲ್ಕು ಜಾವಕ್ಕೆ ಒಂದು ಜಾವ
ಹಸಿವು ತೃಷೆ ಮಿಕ್ಕಾದ ವಿಷಯದೆಣಿಕೆಗೆ ಸಂದಿತ್ತು.
ಮತ್ತೊಂದು ಜಾವ
ನಿದ್ರೆ, ಸ್ವಪ್ನ, ಕಳವಳ ನಾನಾ ಅವಸ್ಥೆ ಬಿಟ್ಟಿತ್ತು.
ಮತ್ತೊಂದು ಜಾವ
ಅಂಗನೆಯರ ಕುಚ, ಅಧರಚುಂಬನ
ಮಿಕ್ಕಾದ ಬಹುವಿಧ ಅಂಗವಿಕಾರದಲ್ಲಿ ಸತ್ತಿತ್ತು.
ಇನ್ನೊಂದು ಜಾವವಿದೆ: ನೀವು ನೀವು ಬಂದ ಬಟ್ಟೆಯ ತಿಳಿದು
ಮುಂದಳ ಆಗುಚೇಗೆಯನರಿದು,
ನಿತ್ಯನೇಮವ ವಿಸ್ತರಿಸಿಕೊಂಡು
ನಿಮ್ಮ ಶಿವಾರ್ಚನೆ, ಪೂಜೆ, ಪ್ರಣವದ ಪ್ರಮಥಾಳಿ,
ಭಾವದ ಬಲಿಕೆ, ವಿರಕ್ತಿಯ ಬಿಡುಗಡೆ, ಸದ್ಭಕ್ತಿಯ ಮುಕ್ತಿ,
ಇಂತೀ ಕೃತ್ಯದ ಕಟ್ಟ ತಪ್ಪದಿರಿ.
ಅರುಣೋದಯಕ್ಕೆ ಒಡಲಾಗದ ಮುನ್ನವೆ
ಖಗವಿಹಂಗಾದಿಗಳ ಪಶುಮೃಗನರಕುಲದುಲುಹಿಂಗೆ ಮುನ್ನವೆ
ಧ್ಯಾನಾರೂಢರಾಗಿ,
ಶುದ್ಧಸಿದ್ಧಪ್ರಸಿದ್ಧಪ್ರಸನ್ನ ಕುರುಂಗೇಶ್ವರಲಿಂಗವ ಕೊಡಬಲ್ಲಡೆ.

1647
ನಿತ್ಯನೇಮಿಗಳಿಗೆ ಹಿಂಜಾವವಾಯಿತ್ತು,
ಕೃತ್ಯ ಪೂಜಕರುಗಳಿಗೆ ತತ್ಕಾಲವಾಯಿತ್ತು.
ಅಂತರಂಗದ ವ್ರತದ ಲಿಂಗಾಂಗಿಗಳು
ನಿಮ್ಮ ಇರವ ಶಿವಲಿಂಗದಲ್ಲಿ ಸಂಬಂಧಿಸಿಕೊಳ್ಳಿ,
ಶುದ್ಧಸಿದ್ದಪ್ರಸಿದ್ಧಪ್ರಸನ್ನ ಕುರುಂಗೇಶ್ವರಲಿಂಗವ ಕೂಡಬಲ್ಲಡೆ.

1648
ನೇಮವ ಮರೆಯದಿರಿ,
ನಿತ್ಯಕೃತ್ಯವ ಚಿತ್ತದಲಿ ಅಚ್ಚೊತ್ತಿದಂತಿರಿಸಿಕೊಳ್ಳಿ.
ಆರುವತ್ತುನಾಲ್ಕು ವ್ರತದೊಳಗಾದ ನಾನಾ ಭೇದಂಗಳ ಕ್ರೀಯ
ಚಿತ್ತಶುದ್ಧವಾಗಿ,
ನಿಮ್ಮ ಆತ್ಮನರಿವಿನ, ನಿಜದರುವಿನ ಕೊನೆಯಲ್ಲಿ ಕುರುಹಿಟ್ಟುಕೊಳ್ಳಿ.
ತ್ರಿವಿಧಸ್ಥಲ ಮುಂತು ಆರುಸ್ಥಲದೊಳಗಾದ
ಮುವತ್ತಾರು ಸ್ಥಲಭೇದವಾದ
ಇಪ್ಪತ್ತೈದು ತತ್ವವ ಕೂಡಿದ ಒಂದರ ಭೇದದಲ್ಲಿ ಸಂದನರಿದುಕೊಳ್ಳಿ
ಸರ್ವಲಿಂಗಾಂಗಿಗಳು.
ಬಂಧಕರ್ಮಮೋಕ್ಷಂಗಳ ಸಂದಿಯ ವಿಚ್ಛಂದವ ಕೇಳಿ ಕಂಡುಕೊಳ್ಳಿ,
ನೀವು ನೀವು ಬಂದ ಮಣಿಹದ ಬೆಂಬಳಿಯ ಕಂಡುಕೊಳ್ಳಿ.
ನಿಮ್ಮ ಜ್ಞಾನ ಕಂಬಳಿಯ ಬೆಂಬಳಿ,
ಶುದ್ಧಸಿದ್ಧಪ್ರಸಿದ್ಧಪ್ರಸನ್ನ ಕುರುಂಗೇಶ್ವರಲಿಂಗದಲ್ಲಿಗೆ.

1649
ಬಕಧ್ಯಾನಿ ಜಪಧ್ಯಾನ ಉಂಟೆ?
ಜೂಜುವೇಂಟೆ ಚದುರಂಗ ನೆತ್ತ ಪಗಡೆ ಪಗುಡಿ ಪರಿಹಾಸಕರ ಕೂಡು ಕೆಲವಂಗೆ
ಶಿವಮೂರ್ತಿಧ್ಯಾನ ಉಂಟೆ?
ಕುಕ್ಕುರಂಗೆ ಪಟ್ಟೆಮಂಚ ಸುಪ್ಪತ್ತಿಗೆ
ಅಮೃತಾನ್ನವನನಿಕ್ಕಿ ಸಲಹಿದಡೂ ಹಡುಹಿಂಗೆ ಚಿತ್ತವನಿಕ್ಕುವುದೇ ದಿಟ.
ಇಂತೀ ಜಾತಿಮತ್ತರ ಲಕ್ಷಣಭೇದ.
ಇಂತೀ ಗುರುಚರ ಅಜ್ಞಾಪಿಸಿದ ಆಜ್ಞೆಯ ಮೀರಿದವಂಗೆ
ಕುಕ್ಕುರನಿಂದತ್ತಳ ಕಡೆ.
ಗುರುವಾದಡಾಗಲಿ, ಲಿಂಗವಾದಡಾಗಲಿ, ಚರವಾದಡಾಗಲಿ
ವರ್ತನೆ ತಪ್ಪಿ ನಡೆದವಂಗೆ ಭಕ್ತಿವಿರಕ್ತಿ, ಮೋಕ್ಷಮುಮುಕ್ಷತ್ವವಿಲ್ಲ.
ಸಂಗನಬಸವಣ್ಣ ಸಾಕ್ಷಿಯಾಗಿ, ಚನ್ನಬಸವಣ್ಣನರಿಕೆಯಾಗಿ,
ಪ್ರಭು ಸಿದ್ಧರಾಮೇಶ್ವರ ಮರುಳುಶಂಕರ ನಿಜಗುಣ
ಇಂತಿವರೊಳಗಾದ ನಿಜಲಿಂಗಾಂಗಿಗಳು ಮುಂತಾಗಿ
ಎನ್ನ ಕಾಯಕಕ್ಕೆ ಸಾರು ಹೋಗೆಂದಿಕ್ಕಿದ ಕಟ್ಟು.
ನಾ ಭಕ್ತನೆಂದು ನುಡಿದಡೆ ಎನಗೊಂದು ತಪ್ಪಿಲ್ಲ,
ಅದು ನಿಮ್ಮ ಚಿತ್ತದ ಎಚ್ಚರಿಕೆ,
ಶುದ್ಧಸಿದ್ಧಪ್ರಸಿದ್ಧಪ್ರಸನ್ನ ಕುರುಂಗೇಶ್ವರಲಿಂಗ ಸಾಕ್ಷಿಯಾಗಿ.

1650
ಸತ್ವಹೀನವಾದ ಮತ್ತೆ ಕಾಲೆರಡು ಕೋಲೊಂದಾಯಿತ್ತು.
ಕೃತ್ಯದ ಹೊತ್ತು ಹೋದ ಮತ್ತೆ
ವ್ಯಾಕುಲದ ಚಿತ್ತವದ ಲಕ್ಷರ, ಬಹುವ್ಯಾಪಾರ ಮೊತ್ತದ ಘಟ,
ಪ್ರಕೃತಿ ಆಶ್ರಯಕ್ಕೆ ಬಂಧನ ಪ್ರಾಪ್ತಿ, ಅಡಗುವ ಕರಂಡ.
ಇದರಂದವ ತಿಳಿದು,
ಹಿಂಜಾವಕೆ ಮುನ್ನವೆ ಶಿವಲಿಂಗದರ್ಶನವಾಗಿ
ಶುದ್ಧಸಿದ್ಧಪ್ರಸಿದ್ಧ ಪ್ರಸನ್ನ ಕುರುಂಗೇಶ್ವರಲಿಂಗವ ಕೂಡಬಲ್ಲದೆ