Categories
ವಚನಗಳು / Vachanagalu

ಕೂಡಲಸಂಗಮೇಶ್ವರ ವಚನಗಳು

ಎಲಾ ಶಿವಭಕ್ತನೇ ನೀ ಕೇಳು
ಬರಿದೆ ‘ನಾ ಶಿವಭಕ್ತ’ ‘ನೀ ಶಿವಭಕ್ತನೆಂದು ತಿರುಗುವಿರಲ್ಲ
ಶಿವಭಕ್ತಿಯ ನೆಲೆಯ ಬಲ್ಲಿರೇನಯ್ಯಾ ?
ಅದು ಎಂತೆಂದರೆ : ಶಿವಭಕ್ತನಾದ ಬಳಿಕ
ತ್ರಿವಿಧ ಪದಾರ್ಥವನ್ನು ತ್ರಿವಿಧರಿಗೆ ದಾನವ ಕೊಡಬೇಕು :
ತನುವ ಕೊಡಬೇಕು ಗುರುವಿಗೆ ;
ಮನವ ಕೊಡಬೇಕು ಲಿಂಗಕ್ಕೆ ;
ಧನವ ಕೊಡಬೇಕು ಜಂಗಮಕ್ಕೆ;.
ತ್ರಿವಿಧ ಪದಾರ್ಥವನ್ನು ತ್ರಿವಿಧರಿಗೆ ದಾನವ ಕೊಟ್ಟು,
ನಿಷ್ಕಳಂಕವೇ ತಾನಾಗಿ, ಆರು ಚಕ್ರವ ಹತ್ತಿ,
ವಿೂರಿದ ಸ್ಥಲದೊಳಗಿರ್ಪ ಲಿಂಗಮಂ ಪೂಜಿಸಿ,
ಮೋಕ್ಷಮಂ ಪಡೆದಡೆ,
ಶಿವಭಕ್ತನೆಂದು ನಮೋ ಎಂಬುವೆನಯ್ಯಾ.
ಬರಿದೆ ‘ನಾ ಶಿವಭಕ್ತ’ ‘ನೀ ಶಿವಭಕ್ತನೆಂದು ತಿರುಗುವ,
ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ
ಕೂಡಲಾದಿ ಚನ್ನಸಂಗಮದೇವಾ !/1
ಎಲಾ ಬ್ರಾಹ್ಮಣಾ ನೀ ಕೇಳು
ಬರಿದೆ ‘ನಾ ಬ್ರಾಹ್ಮಣ’ ‘ನೀ ಬ್ರಾಹ್ಮಣನೆಂದು ತಿರುಗುವಿರಲ್ಲದೆ,
ಬ್ರಹ್ಮದ ನೆಲೆಯ ಬಲ್ಲಿರೇನಯ್ಯಾ?
ಅದು ಎಂತೆಂದಡೆ : ವೇದಮಯವಾಗಿರ್ಪುದೇ ಬ್ರಹ್ಮ;
ಬ್ರಹ್ಮಮಯವಾಗಿರ್ಪುದೇ ವೇದ.
ಇಂತೀ ಚತುರ್ವೆದ ಪ್ರಕರಣಮಂ ಓದಿ
ಹಾದಿಯಂ ತಪ್ಪಿ
ಬೀದಿಯ ಸೂಳೆ[ಯ] ಹಿಂದೆ ತಿರುಗಿದ ಬಳಿಕ
ನಿನಗೆ ಬ್ರಹ್ಮತ್ವವು ಎಲೈತೆಲಾ?
ಬ್ರಹ್ಮತ್ವವು ದಾವುದೆಂದಡೆ ಪೇಳುವೆನು ಕೇಳೆಲಾ:
ವೇದದೊಳಗಣ ತತ್ತ್ವಸಾರವನು ತೆಗೆದು,
ಗುರುಪಥವು ಅನುಸರಣೆಯಾಗಿ,
ನಿಜಮಾರ್ಗವ ಕಂಡು ನಿತ್ಯತ್ವ ನೀನಾಗಿ,
ನಿರುಪಮ ನಿರ್ಮಾಯ ನಿರ್ವೆದ ವಸ್ತುವ ತಿಳಿದು,
ಸಾಧುಸಜ್ಜನರೊಡನಾಡಿ ಸಾಕ್ಷಾತ್ಕಾರವಾಗಿ,
ಸಾಯುಜ್ಯ ಸಾಮಿಪ್ಯ ಪಥಮಂ ಕಂಡುಳಿದು,
ಆರು ಚಕ್ರವ ಹತ್ತಿ,
ವಿೂರಿದ ಸ್ಥಲದೊಳಗಿರ್ಪ ಲಿಂಗಮಂ ಪೂಜಿಸಿ,
ಮೋಕ್ಷಮಂ ಪಡೆದಡೆ,
ಬ್ರಾಹ್ಮಣನೆಂದು ನಮೋ ಎಂಬುವೆನಯ್ಯಾ.
ಬರಿದೆ ಬಡಿವಾರಕ್ಕೆ ಮಿಂದುಟ್ಟು
‘ನಾ ಬ್ರಾಹ್ಮಣ’ ‘ನೀ ಬ್ರಾಹ್ಮಣನೆಂದು ತಿರುಗುವ
ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ,
ಕೂಡಲಾದಿ ಚೆನ್ನಸಂಗಮದೇವಾ !/2
ಸೂಳೆಯ ತನುಮನದ ಕೊನೆಯಲ್ಲಿ
ವಿಟಗಾರನೇ ಪ್ರಾಣಲಿಂಗ;
ಶೀಲವಂತನ ತನುಮನದ ಕೊನೆಯಲ್ಲಿ
ಭವಿಯೇ ಪ್ರಾಣಲಿಂಗ ;
ನಿತ್ಯ ಪ್ರಸಾದಿಯ ತನುಮನದ ಕೊನೆಯಲ್ಲಿ
ಬೆಕ್ಕೇ ಪ್ರಾಣಲಿಂಗ ;
ಬ್ರಾಹ್ಮಣರ ತನುಮನದ ಕೊನೆಯಲ್ಲಿ
ಸೂತಕವೇ ಪ್ರಾಣಲಿಂಗ;
ಇಂಥವರಿಗೆಲ್ಲಾ ಇಂತಾಯಿತು!
ದೇವರಗುಡಿಯೆಂದು ದೇಗುಲವ ಪೊಕ್ಕು
ನಮಸ್ಕಾರವ ಮಾಡುವಂಗೆ
ಹೊರಗೆ ಕಳೆದ ಪಾದರಕ್ಷೆಯೆ ಪ್ರಾಣಲಿಂಗ.
ಅದು ಎಂತೆಂದಡೆ : ಸೂಳೆಗೆ ವಿಟನ ಹಂಬಲು;
ಶೀಲವಂತನಿಗೆ ಭವಿಯ ಹಂಬಲು;
ನಿತ್ಯಪ್ರಸಾದಿಗೆ ಬೆಕ್ಕಿನ ಹಂಬಲು ;
ಬ್ರಾಹ್ಮಣನಿಗೆ ಸೂತಕದ ಹಂಬಲು ;
ಇವರು ಭಕ್ತಿಶೂನ್ಯರು ಕಾಣಿರಯ್ಯಾ !
ಇವಂ ಬಿಟ್ಟು,
ಪರಸ್ತ್ರೀಯರ ಮುಟ್ಟದಿರ್ಪುದೇ ಶೀಲ ;
ಪರದ್ರವ್ಯ[ವ]ಅಪಹರಿಸದಿರುವುದೇ ಆಚಾರ ;
ಪರನಿಂದೆ[ಯ] ಕರ್ಣದಿಂ ಕೇಳದಿರ್ಪುದೇ ನಿತ್ಯಪ್ರಸಾದತ್ವ ;
ಪರರಂ ದೂಷಿಸದಿರ್ಪುದೇ ಬ್ರಹ್ಮತ್ವ.
ಇಂತಿದರಲ್ಲಿ ನಡೆದು,
ದೇವರಿಗೆ ನಮಸ್ಕಾರವ ಮಾಡುವುದೇ ನಮಸ್ಕಾರ.
ಹಿಂದಿನ ಪುರಾತನರು ನಡೆದರೆಂಬೋ ಶಾಸ್ತ್ರವಂ ಕೇಳಿ,
ಈಗಿನ ಕಿರಾತರು ‘ನಾವು ಶೀಲವಂತರು’
‘ನಾವು ಆಚಾರವಂತರು’, ‘ನಾವು ನಿತ್ಯಪ್ರಸಾದಿಗಳು’,
‘ನಾವು [ ‘ಪೂಜಸ್ಥರು’], ‘ನಾವು ಬ್ರಾಹ್ಮಣರು’, ಎಂದು ತಿರುಗುವ
ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ
ಕೂಡಲಾದಿ ಚನ್ನಸಂಗಮದೇವಾ !/3
ಎಲಾ, ಸೂಳೆಮಗನೇನ ಬಲ್ಲನಯ್ಯಾ
ಕುದುರೆಯಾ ಕುರುಹನು ?
ಶೀಲವಂತನೇನ ಬಲ್ಲನಯ್ಯಾ
ಗುರುಲಿಂಗ ಜಂಗಮದ ಕುರುಹನು ?
ಗುರುಲಿಂಗ ಜಂಗಮವು ಮನೆಗೆ ಬಂದು
ಬೀಯೆಂಬೋ ಪಾಪವು ಕ್ಷಯವಾಗಲೆಂದು
‘ಭಿಕ್ಷಾ’ಎಂದು ನಿಂದಡೆ
‘ಅಯ್ಯಾ ನಮ್ಮ ಹಿರಿಯರು ಬಂದಿಲ್ಲಾ’
‘ನಮ್ಮ ಕಟ್ಟುಬಿನ್ನದ ಜಂಗಮವು ಬಂದಿಲ್ಲಾ’
‘ಇನ್ನೂ ಶೀಲವು ತೀರಿಲ್ಲಾ, ತಿರುಗಿ ಬಾ’
ಎಂದು ಹಿಂದಕ್ಕೆ ಕಳುಹಿದಡೆ
ಜಂಗಮದ ನೆಲೆ ಯಾವುದೆಲಾ ?
ಶೀಲವಂತನಿಗೆ ಶೀಲ ಯಾವುದೆಂದಡೆ,
ಅದಂ ಪೇಳ್ವೆ ಕೇಳು : ಪರಕ್ರೂರತ್ವವ ಮರೆದು,
ಪರಭೋಗದಭಿಲಾಷೆಯ ಬಿಟ್ಟು,
ಪರಮ ವಿರಕ್ತಿಯಂ ಅಂಗೀಕರಿಸಿ,
ಪಾಪಮಂ ಮುಟ್ಟಿನೋಡದೆ ಕಾಣದೆ ಕೇಳದೆ
ನಿಲರ್ಿಪ್ತನಾಗಿ ನಿಜವಸ್ತುವಾದಾ
ಶಿವಲಿಂಗ ಜಂಗಮವು ಮನೆಗೆ ಬಂದಡೆ
ಅನ್ನ ಅಗ್ಗಣಿಯ ಕೊಟ್ಟು ತೃಪ್ತಿಯ ಬಡಿಸಿ
ನಿತ್ಯತ್ವನಾಗಿ ಮೋಕ್ಷವ ಕಂಡಡೆ,
ಶೀಲವಂತನೆಂದು ನಮೋ ಎಂಬುವೆನಯ್ಯಾ.
ಬರಿದೆ, ‘ನಾ ಶೀಲವಂತ’ ‘ನೀ ಶೀಲವಂತ’ನೆಂದು ತಿರುಗುವ
ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ
ಕೂಡಲಾದಿ ಚನ್ನಸಂಗಮದೇವಾ !/4
ಎಲಾ, ಪರಮ ಪಾವನಚರಿತ
ಪಾರ್ವತೀಶ ಪಾಪನಾಶ ಪರಮೇಶ ಈಶ.
ಇಂತಪ್ಪ ಈಶನು ಭಕ್ತನಾ ಕರಸ್ಥಲದಲ್ಲಿ ಬಂದ ಬಳಿಕ
ಭಕ್ತನೇ ದೊಡ್ಡಿತ್ತು ಕಾಣೆಲಾ !
ಇಂತಪ್ಪ ಭಕ್ತನಾ ಶರೀರಕ್ಕೆ ರೋಗ ಬಂದರೆ,
ಬಳಿಕ ವೈದ್ಯನಾ ಕರೆಸಿ, ಮಹಾವೈದ್ಯವಾ ಮಾಡಿಸಿ,
ವೈದ್ಯ ಭಾಗವ ತೆಗೆದು, ವೈದ್ಯ ಸೇವಿಸಿ,
ಮಿಕ್ಕ ಎಂಜಲ ತಿಂದು ಬದುಕೇನೆಂಬೋ
ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ
ಕೂಡಲಾದಿ ಚನ್ನಸಂಗಮದೇವಾ !/5
ಅಯ್ಯಾ, ಯತಿಯತ್ವವ ಪಡೆದೆನೆಂಬೋ ಮನುಜನೇ, ನೀ ಕೇಳು :
ನಿನ್ನ ಯತಿಯತ್ವದ ಬಗೆ ಎಂತೆಲಾ ?
ಬರಿದೆ ದ್ರವ್ಯಕ್ಕೆ ಆಶೆಮಾಡಿ,
ಪರರ ಕಾರ್ಪಣ್ಯದಿಂದ ಕಾಡಿ ಬೇಡಿ,
ದ್ರವ್ಯವ ಗಳಿಸಿಕೊಂಡು, ಜನರ ಕಟ್ಟಿಕೊಂಡು
ಬಡಿವಾರದಿಂದ ತಿರುಗಿದ ಬಳಿಕ,
ನಿನಗೆ ಯತಿಯತ್ವವು ಎಲ್ಲೈತೆಲಾ ?
ಅದು ಎಂತೆಂದರೆ, ಯತಿಯತ್ವವ ಪೇಳುವೆನು ಕೇಳೆಲಾ : ಯತಿ ನೀನಾದ ಬಳಿಕ
ತನುವಿನ ಹಂಗು ಹರಿಯಬೇಕು ;
ಮನವ ಘನಲಿಂಗಕ್ಕೆ ಕಟ್ಟಿಹಾಕಬೇಕು ;
ಧನವ ಸ್ವಪ್ನದಲ್ಲಿ ಮುಟ್ಟಲಾಗದು ;
ಅನ್ನದ ಆಸೆಯ ಬಿಡಬೇಕು ;
ಚಿನ್ಮಯನಾಗಿ ನಡೆಯಬೇಕು ;
ಚಿಂತೆಯ ಮರೆತು ವೈರಾಗ್ಯದಿಂದಿರಬೇಕು ;
ಕಾಮದ ಹಂಗ ಕಳೆಯಬೇಕು ;
ಕರ್ಮೇಂದ್ರಿಯಂಗಳ ಸುಡಬೇಕು ;
ಲಿಂಗದಲ್ಲಿ ಕರುಣ ಇರಬೇಕು.
ಸ್ಫಟಿಕದಂತೆ ನಿರ್ಮಳ ಕಾಯನಾಗಿ, ನಿಶ್ಚಿಂತನಾಗಿ, ಮೋಕ್ಷವ ಕಂಡಡೆ
ಯತಿವರನೆಂದು ನಮೋ ಎಂಬುವೆನಯ್ಯಾ !
ಬರಿದೆ ಯತಿ ಎನಿಸಿಕೊಂಡು
ಕೋಪಾಟೋಪದೊಳು ಬಿದ್ದು ಹೊರಳಾಡುವ
ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ
ಕೂಡಲಾದಿ ಚನ್ನಸಂಗಮದೇವಾ./6
‘ಷಟುಸ್ಥಲದ ಬ್ರಹ್ಮಿಗಳೆಂದು ಹೇಳಿಕೊಂಬಿರಿ,
ನೀವು ಕೇಳಿರಯ್ಯಾ : ನಿಮ್ಮ ಷಟುಸ್ಥಲದ ಬ್ರಹ್ಮಿಗಳ ಲಕ್ಷಣ ದಾವುದೆಂದಡೆ,
ಅಂಗಲಿಂಗ ಸಂಬಂಧವಾದುದೇ ಷಟುಸ್ಥಲ.
ಅಂಗ ಲಿಂಗವಾದ ಪರಿ ಎಂತೆಂದಡೆ,
ಲಿಂಗ ಪೋದುದೇ ಷಟುಸ್ಥಲ: ಗ್ರಂಥ || ಅನಾದಿ ಸಂಸಿದ್ಧಸ್ಯ ಆತ್ಮಪರೀಕ್ಷಣಂ ಜಗತಾರಾ[ಧ್ಯಸ್ಯ] |
ಸತ್ಯಂ ಜನನಮರಣವಿರಹಿತಂ [ಇತಿ]ಷಟ್ಸ್ಥಲಂ ||
ಇಂತೀ ಸಾಕ್ಷಿ ಉಂಟಾಗಿ,
ಪರಾನ್ನ ಅಪೇಕ್ಷಿತನಾಗದೆ,
ಪರಸ್ತ್ರೀಯಂ ನೋಡದೆ,
ಪರರೊಡವೆಯ ಹಂಗು ಹಚ್ಚದೆ,
ಪರಾತ್ಪರವಾಗಿಪ್ಪುದೆ ಜಂಗಮ ಲಿಂಗ.
ಪರಮ ಹರುಷದಿಂದ ಪಾತಕವನೀಡಾಡಿ,
ಪರ[ಮ] ಪುರುಷಾರ್ಥವನೇ ಗ್ರಹಿಸಿ,
ಪಾವನಚರಿತನಾಗಿ, ಭಕ್ತನ ಮನೆಗೆ ನಡೆದು ಬಂದು
ಬೀಯೆಂಬೋ ಪಾಪವು ಕ್ಷಯವಾಗಲೆಂದು
‘ಭಿಕ್ಷಾ’ ಎಂದು ನಿಂದಡೆ,
ಅರಿದ ಭಕ್ತ ನೀಡಿದರೂ ಸಂತೋಷ
ಅರಿಯದಿದ್ದ ಭಕ್ತ ನೀಡದಿದ್ದರೂ ಸಂತುಷ್ಟನಾಗಿ
‘ಹಳ್ಳಿಗೇಕರಾತ್ರಿ ಪಟ್ಟಣಕ್ಕೆ ಪಂಚರಾತ್ರಿ’
ಸಂಚರಿಸುತಿರ್ಪುದೇ ಷಟುಸ್ಥಲದ ಬ್ರಹ್ಮಿ ಎಂದು
ನಮೋ ಎಂಬುವೆನಯ್ಯಾ
ಬರಿದೆ ‘ನಾ ಷಟುಸ್ಥಲದ ಬ್ರಹ್ಮಿ’ ‘ನೀ ಷಟುಸ್ಥಲದ ಬ್ರಹ್ಮಿ’ ಎಂದು ತಿರುಗುವ
ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ
ಕೂಡಲಾದಿ ಚನ್ನಸಂಗಮದೇವಾ./7
ಶಿವನಿಂದಧಿಕ ದೈವ ಇಲ್ಲ,
ಶಿವಭಕ್ತಂಗಧಿಕ ಕುಲಜನಿಲ್ಲವೆಂದು
ಹೇಳುವುವು ಆಗಮ ಶ್ರುತಿ.
ಅದು ಎಂತೆಂದಡೆ : ಸರ್ವ ಅಪ್ಸರರು ಸರ್ವ ಗಂಧರ್ವರು
ಸರ್ವ ಯತಿಗಳು ಸರ್ವ ಜತಿಗಳು
ಎಲ್ಲಾರು, ಎಲಾ ಈ ಶಿವಲಿಂಗಮಂ ಪೂಜಿಸಿ
ಮೋಕ್ಷವ ಪಡೆದೆನೆಂಬೋ ಭಕ್ತರು ನೀವು ಕೇಳಿರಯ್ಯಾ :
ಈ ಶಿವಲಿಂಗಮಂ ಬ್ರಹ್ಮ ಪೂಜಿಸಿ ಭವ ಹಿಂಗಿಸಿದ ;
ವಿಷ್ಣು ಪೂಜಿಸಿ ಹತ್ತು ಅವತಾರದ ದೋಷವನೀಡಾಡಿದ ;
ಇಂದ್ರ ಪೂಜಿಸಿ ಅಯಿಶ್ವರ್ಯಮಂ ಪಡೆದ ;
ಋಷಿಗಳು ಪೂಜಿಸಿ ಕುಲವಂ ಕಳೆದು
ಬ್ರಹ್ಮರೆನಿಸಿ ನಿಶ್ಚಿಂತರಾದರು ;
ಮಹಾಗಣಾಧೀಶ್ವರರೂ ಪೂಜಿಸಿ
ಕೈಲಾಸಕ್ಕೆ ಸೋಪಾನವ ಕಟ್ಟಿದರು ;
ಮಿಕ್ಕ ನರರು ಪೂಜಿಸಿ [ಸು]ರಲೋಕವನೈದಿದರೆಂಬೋ
ಶಾಸ್ತ್ರವಂ ಕೇಳಿ, ಓದಿ, ಹಾಡಿ, ತಿಳಿದು,
ಪರಮ ವಿರಕ್ತಿಯ ನಿಟ್ಟಿಸಲಾರದೆ
ಪರದೈವಕಡ್ಡ ಬಿದ್ದು
ಹಿಂದೆ ಅವ ಕಟ್ಟಿದ ಲಿಂಗವು
ಕೋಣನ ಕೊರಳಿಗೆ ಗುದಿಗೆ ಕಟ್ಟಿದಂತಾಯಿತು ಕಾಣಾ
ಕೂಡಲಾದಿ ಚನ್ನಸಂಗಮದೇವಾ./8
ಜ್ಯೋತಿಷ್ಯ ಘನವೆಂಬೋ ನೀತಿಗಾರನೇ ನೀ ಕೇಳು :
ಅಷ್ಟಗ್ರಹಂಗಳ ಬಲವು ದೊಡ್ಡಿತೆಂದು ನೀ ಪೇಳುವೆ.
ಗ್ರಹಂಗಳಿಗೆ ವಿಪತ್ತು ಬಂದಡೆ, ಆರೂ ತಿದ್ದಿಕೊಳಲರಿಯರು !
ಸೂರ್ಯನೇ ಘನವೆಂಬುವೆ,
ಚಕ್ರದಂತೆ ತಿರುಗುವನೇಕೆ ?
ಚಂದ್ರನೇ ಘನವೆಂಬುವೆ,
ಕ್ಷಯರೋಗದಿಂದ ಹೊರಳುವನೇಕೆ ?
ಬುಧನೇ ಘನವೆಂಬುವೆ,
ಬುದ್ಧಿಯಿಲ್ಲದನೆನಿಸಿಕೊಂಬನೇಕೆ ?
ಬೃಹಸ್ಪತಿಯೇ ಘನವೆಂಬುವೆ,
ತನ್ನ ಸ್ವಪತ್ನಿಯ ಕಳಕೊಂಡನೇಕೆ ?
ಶುಕ್ರನೇ ಘನವೆಂಬುವೆ,
ಕೊಡುವ ದಾನಕ್ಕಡ್ಡಲಾದನೇಕೆ ?
ಕಣ್ಣಕಳಕೊಂಡನೇಕೆ ?
ಶನಿಯೇ ಘನವೆಂಬುವೆ,
ಸಂಕೋಲೆಯೊಳಗಿರುವನೇಕೆ ?
ರಾಹು ಘನವೆಂಬುವೆ,
ಸೆರೆಮನೆಯೊಳು ಬಿದ್ದಿಹನೇಕೆ ?
ಇಂಥಾ ಜ್ಯೋತಿಷ್ಯ ಮುಖ್ಯವೇ ? ಮುಖ್ಯವಲ್ಲಾ !
ಮುಖ್ಯವು ದಾವುದೆಂದಡೆ,
ನಮ್ಮ ಪ್ರಮಥ ಗಣಾಧೀಶ್ವರರ ಪ್ರಸಾದ ವಾಕ್ಯವೇ
ಸರ್ವಸಿದ್ಧ ಎಂದು ನಂಬುವೆ ಕಾಣಾ
ಕೂಡಲಾದಿ ಚನ್ನಸಂಗಮದೇವಾ./9
ಎಲೆ ಎಲೆ, ಭಕ್ತ ಭವಿ ಎಂಬೋ ನೀತಿಯಂ ಕೇಳು :
ಭಕ್ತ ದಾರು ? ಭವಿ ದಾರು ? ಎಂದಡೆ,
ಎಲಾ, ಯಾವ ಕುಲ[ದವ]ನಾದಡೆ ಸರಿಯೋ ?
ಯಾವ ದೇವರು ಆದರೆ ಸರಿಯೋ ?
ಎಲ್ಲಾ ದೇವರಿಗೂ ಆತ್ಮಲಿಂಗವಾಗಿಪ್ಪನೇ ಮಹಾದೇವನೆಂದು
ಹೇಳುವುದು ಶ್ರುತಿವಾಕ್ಯ.
ಇದರೊಳಗೆ ಏಕದೈವವನು ಪಿಡಿದು
ಪೂಜಿಸಿ, ಧ್ಯಾನಿಸಿ, ನಮಸ್ಕರಿಸಿ,
ಕ್ರಿಯಾಚಾರದಿಂ ನಡೆದು,
ನೀತಿಗಳನೋದಿ,
ನಿರ್ಮಳಚಿತ್ತನಾದಡೆ ಭಕ್ತ.
ಇದಂ ಮರೆದು, ಹಲವು ಕಾಲ ಲಿಂಗಧ್ಯಾನ,
ಹಲವು ಕಾಲ ಹರಿಧ್ಯಾನ, ಹಲವು ಕಾಲ ಬ್ರಹ್ಮಧ್ಯಾನ,
ಹಲವು ಕಾಲ ಎಲ್ಲಮ್ಮ, ಎಕನಾತಿ, ಶಾಕಿನಿ, ಡಾಕಿನಿ
ಕಲ್ಲು ಮರದೊಳಗಿಪ್ಪ ದೇವರ ಪೂಜಿಸಿದಡೆ,
ಎಲ್ಲಾರ ಎಂಜಲ ತಿಂಬೋರ ಎಂಜಲ [ತಿಂದು],
ಭಕ್ತನೆಂದರಿಯದೆ, ಪ್ರಸಾದದ ಮಹಾತ್ಮೆಯ ತಿಳಿವ ತಿಳಿಯದೆ,
ಧನದ ಪಿಶಾಚಿ ಎಂದು ಧರ್ಮ ಪರಹಿತಾರ್ಥವನು ಮರೆದು,
ನಿತ್ಯ ನಿತ್ಯ ಅನ್ನಕ್ಲೇಶದಲ್ಲಿ ಹೊರಳುವ[ವ]
ಲಿಂಗದೇಹಿಕನಾದಡೆಯು
ಬ್ರಾಹ್ಮಣನಾದೆಡೆಯು,
ಇವನೇ ಭವಿ.
ಇಂತಾ ಭಕ್ತ ಭವಿಗಳ ನೆಲೆಯ ತಿಳಿದು
ನಮ್ಮ ಶರಣರು ನಿರ್ಲೆಪ ದೇಹಮಂ ಅಂಗೀಕರಿಸಿ ಪೋದರು ಕಾಣಾ
ಕೂಡಲಾದಿ ಚನ್ನಸಂಗಮದೇವಾ. /10
ಎಲಾ, ಶೈವ ವೀರಶೈವ ಎಂಬುವವು
ಉಭಯ ಮತಗಳುಂಟು.
ಅವು ಎಂತೆಂದಡೆ,
ಸ್ಥಾಪ್ಯಲಿಂಗವ ಪೂಜೆಮಾಡುವುದೇ ಶೈವ;
ಗುರುವು ಕೊಟ್ಟ ಇಷ್ಟಲಿಂಗವ ಪೂಜೆಮಾಡುವುದೇ ವೀರಶೈವ.
ಅದರೊಳಗೆ ಲಿಪ್ತವಾಗಿರ್ಪರೇ ಭಕ್ತರು, ನೀವು ಕೇಳಿರಯ್ಯಾ :
ಸ್ಥಾಪ್ಯಲಿಂಗವ ಪೂಜಿಸಿದ ಕರ ಪೋಗಿ
ಪರಸ್ತ್ರೀಯರ ಕುಚಂಗಳ ಪಿಡಿಯಬಹುದೆ ?
ಈಗ ಯತಿಯ ನುಡಿದ ಜಿಹ್ವೆ ಪೋಗಿ
ಪರಸ್ತ್ರೀಯರ ಅಧರಪಾನ ಮಾಡಬಹುದೆ ?
ಮಹಾಮಂತ್ರವ ಕೇಳಿದ ಕರ್ಣ ಪೋಗಿ
ಪರತಂತ್ರವ ಕೇಳಬಹುದೆ ?
ಲಿಂಗಪೂಜಕರ ಅಂಗ ಪೋಗಿ
ಪರರಂಗವನಪ್ಪಬಹುದೆ ?
ಇವನು ಶೈವ ಭಕ್ತನಲ್ಲಾ !
ಶೈವನಾಗಲಿ ವೀರಶೈವನಾಗಲಿ
ಏಕಲಿಂಗನಿಷ್ಠಾಪರನಾಗಿ,
ಅಷ್ಟಮದಂಗಳೊಳ್ದಳಗೊಂಡು ಸಂಹರಿಸಿ,
ಪಂಚಕ್ಲೇಶ ದುರಿತ ದುರ್ಗುಣಗಳ ಕಳೆದುಳಿದು,
ಆರು ಚಕ್ರವ ಹತ್ತಿ
ಮೀರಿದ ಸ್ಥಲದೊಳಗಿಪ್ಪ ಲಿಂಗಮಂ ಪೂಜಿಸಿ,
ಮೋಕ್ಷಮಂ ಪಡೆದಡೆ,
ವೀರಶೈವನೆಂದು ನಮೋ ಎಂಬುವೆನಯ್ಯಾ
ಬರಿದೆ ವೀರಶೈವನೆಂದು ತಿರುಗುವ
ಮೂಳ ಹೊಲೆಯರ ಮುಖವ ನೋಡಲಾಗದು ಕಾಣಾ
ಕೂಡಲಾದಿ ಚನ್ನಸಂಗಮದೇವಾ. /11
ಎಲಾ, ದೇವರು ಹಿಡಿಯಿತೆಂಬೋ ನಾಯಿಮಗನೇ ನೀ ಕೇಳು :
ಎಲಾ, ಹಿಂದಕ್ಕೆ ಅನಂತ ಋಷಿಗಳು ದೇವರ ಕುರಿತು ತಪಸ್ಸುಮಾಡಿ
ದೇವರ ಕಾಣದೆ ಪೋದರು.
ತ್ರಿಕಾಲದಲ್ಲಿ ಮಹಾಪುರುಷರು ಶಿವಪೂಜೆ ಅಂಗೀಕರಿಸಿ,
ಕೋಟ್ಯಾಂತರ ದ್ರವ್ಯವನ್ನು ಜಂಗಮಕ್ಕೆ ನೀಡಿ, ಮಾಡಿ,
ಸ್ವಪ್ನದಲ್ಲಿ ದೇವರ ಪಾದವ ಕಾಣದೆ ಹೋದರು.
ಈಗಿನವರು ಮಹಾಮಲಿನವಾದ ಕಾಯಕೂಷ್ಣವೂಷ್ಣವು (?),
ಬಿಷ್ಣದ (?) ದೇಹ, ಕನಿಷ್ಟದ ನಡತೆ, ಕಾರ್ಕೊಟಕ ಬುದ್ಧಿ
ಕರ್ಮೆಂದ್ರಿಯಂಗಳಲ್ಲಿ ಹೊರಳಾಡುವ ಹೊಲೆಯ[ರಿಂ]ಗೆ ದೇವರೆಲ್ಲೈತೆಲಾ ?
ಆದರೂ ಚಿಂತೆಯಿಲ್ಲ.
ಎಲಾ, ಹನುಮಂತ ದೇವರು ಹಿಡೀತು ಎಂಬವನೇ ನೀ ಕೇಳು :
ಹಿಂದಕ್ಕೆ ಹನುಮಂತದೇವರು ಸಂಜೀವನಕ್ಕೆ ಪೋಗಿ
ಅರ್ಧಬೆಟ್ಟವನ್ನು ಕಿತ್ತುಕೊಂಡು ಬಂದಿರ್ದ.
ಅಂಥ ಹನುಮಂತದೇವರು ನಿನ್ನ ದೇಹದಲ್ಲಿ ಇದ್ದ ಬಳಿಕ
ಈಗ ಹನ್ನೆರಡು ಮಣವು ಕಲ್ಲನಾದರು
ಎತ್ತಿ ನೆತ್ತಿಮೇಲೆ ಇಟ್ಟುಕೊಂಡರೆ ದೇವರೆನಬಹುದು !
ಎಲಾ, ವೀರಭದ್ರದೇವರು ಹಿಡೀತು ಎಂಬುವನೇ ನೀ ಕೇಳು :
ಹಿಂದಕ್ಕೆ ವೀರಭದ್ರದೇವರು ಮುನ್ನೂರು ಮೂರು ಕೋಟಿ
ರಾಕ್ಷಸರನ್ನು ಸಂಹರಿಸಿದ.
ಅಂತಪ್ಪ ವೀರಭದ್ರದೇವರು ನಿನ್ನ ದೇಹದಲ್ಲಿ ಇದ್ದ ಬಳಿಕ
ಕತ್ತಿ ಕಿತ್ತುಕೊಂಡು ಒಬ್ಬ ಇಬ್ಬರನಾದಡೆ ಸಂಹರಿಸಿದಡೆ
ದೇವರೆನಬಹುದು!
ಇದಂ ಬಿಟ್ಟು, ನೀನು ದೇವರುಹಿಡೀತು ಎಂದು ಕೂಗುವಾಗ,
ಗಟ್ಟಿಯುಳ್ಳವ ಬಂದು ತೆಕ್ಕೆಯೊಳಗೆ ಪಿಡಿದರೆ,
ತೆಕ್ಕೆಯೊಳಗೆ ಸೇರಿಕೊಂ[ಬೆಯ]ಲ್ಲದೆ
ತೆಕ್ಕೆ ಬಿಡಿಸಿಕೊಂ[ಬ]ಸಾಮಥ್ರ್ಯ ನಿನಗಿಲ್ಲಾ !
ನಿಮಗೆ ಹಿಡಿವುದು ಪಿಶಾಚಿ, ಪಿಶಾಚಿ ವಡವದೇ (?) ಪಾದರಕ್ಷೆ
ಇಂಥಾ ದೇವರ ಮಹಾತ್ಮೆಯಂ ತಿಳಿದು,
[ತ]ಮ್ಮ ಸುಜ್ಞಾನವಂ, ಮರೆದು,
‘ಇವರೇ ದೇವರೆಂದು ಅಡ್ಡಬೀಳುವ
ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ
ಕೂಡಲಾದಿ ಚನ್ನಸಂಗಮದೇವಾ./12
ಎಲಾ, ಶಿವಪೂಜೆಯ ಮಾಡುವ ಶಿವಪೂಜಕರು ನೀವು ಕೇಳಿರಯ್ಯಾ ;
ನಿಮ್ಮ ಶಿವಪೂಜೆ[ಯ]ವಿಧ ಯಾವುದೆಲಾ ?
ಜಲದಿಂದ ಮಜ್ಜನವ ನೀಡುವಿರಿ ;
ಜಲ ಮೀನಿನೆಂಜಲು.
ಅಡವಿಯಂ ತಿರುಗಿ, ಪುಷ್ಪವಂ ತಂದು, ಶಿವಗಂ ಅರ್ಪಿ[ಸುವಿರಿ];
ಪುಷ್ಪ ಭೃಂಗದೆಂಜಲು.
ಪಂಚಾಭಿಷೇಕ[ವ]ಮಾಡುವಿರಿ;
ಕ್ಷೀರ ಕರುವಿನೆಂಜಲು.
ಮಧು[ವ] ಅಭಿಷೇಕವ ಮಾಡುವಿರಿ;
[ಮಧು] ಮಧು[ಕ]ರಮಯಂ.
[ಇಂ]ತೀ ನೈವೇದ್ಯವಂ ಮಾಡುವೆಯಲ್ಲದೆ
ಶಿವಪೂಜೆಯ ವಿಧವ ಬಲ್ಲೆ ಏನಯ್ಯಾ ?
ಅದು ಎಂತೆಂದಡೆ: ಮಾನಸ ಪೂ[ಜಕ]ಸ್ಯ ಸರ್ವಪಾಪಃ [ಪರಿಹರತಿ] |
ಸಾ[ಮೀ]ಪ್ಯ[ಂ] ಸದ್ಗು[ರೋಃ] ಪ್ರಾ[ಪ್ಯ] ಪುನರ್ಭವ ವಿನಶ್ಯತಿ ||
ಇಂತೀ ಆಗಮ ಗ್ರಂಥವುಂಟಲ್ಲಾ ಇದನ್ನರಿತು
ಮಾನಸವೆಂಬೋ ಕಲ್ಲಿನ ಮೇಲೆ
ಮದಮಚ್ಚರವೆಂಬೋ ಗಂಧ ಕೊರಡಿನಿಂದ ತೇಯ್ದು,
ಸತ್ಯವೆಂಬೋ ಗಂಧವಂ ಹಚ್ಚಿ,
ನಿತ್ಯತ್ವ ಎಂಬೋ ಅಕ್ಷತೆಯನಿಟ್ಟು,
ಗುರುಕೀಲೆಂಬೋ ಒರಳಿನಲ್ಲಿ
ಮದಮಚ್ಚರವೆಂಬೋ ತಂಡಿಲಂ ಕುಟ್ಟಿ,
ಬುದ್ಧಿಯೆಂಬೋ ಮೊರದಿಂದ ಝಾಡಿಸಿ ಕೇರಿ,
ನಿಜವೆಂಬೋ ಅನ್ನವಂ ಮಾಡಿ,
ನಿರ್ಮಳ ಚಿತ್ತವೆಂಬೋ ತುಪ್ಪವಂ ನೀಡಿ,
ನಿರುಪಮ ಅವಸ್ಥೆಗಳಿಂದ ನೈವೇದ್ಯವಂ ಕೊಟ್ಟು,
ಕಾಮಕ್ರೋಧವೆಂಬೋ ಬತ್ತಿಯ ಹೊಸೆದು,
ಗುರುಪ್ರಣುತವೆಂಬೋ ಪಣತಿಯೊಳಗೆ
ನಿರ್ಮಳವೆಂಬೋ ತೈಲವಂ ಎರೆದು
ಜ್ಯೋತಿಯ ಮುಟ್ಟಿಸಿ,
ನಿರ್ಮಳ ಲಿಂಗಕ್ಕಂ ಅರ್ಪಿಸಿ
ಮೋಕ್ಷವ ಕಂಡಡೆ
ಶಿವಪೂಜಕನೆಂದು ನಮೋ ಎಂಬುವೆನಯ್ಯಾ
ಬರಿದೆ ‘ನಾ ಶಿವಪೂಜೆ’ ‘ನೀ ಶಿವಪೂಜಕ’ನೆಂದು ತಿರುಗುವ
ಮೂಳ ಹೊಲೆಯರ ಮುಖವ ನೋಡಲಾಗದು ಕಾಣಾ
ಕೂಡಲಾದಿ ಚನ್ನಸಂಗಮದೇವಾ./13
ಎಲಾ, ಓದಿದವರಿಗೆ ಮೋಕ್ಷವಿಲ್ಲಾ!
ಅದು ಎಂತೆಂದಡೆ,
ಒಂದು ಶಾಸ್ತ್ರವನೋದಿ ಮನಸು ನಿಲುಕಡೆಯಿಲ್ಲದೆ
ಮತ್ತೊಂದು ನೋಡುವೆ.
ಮತ್ತೊಂದು ಮತ್ತೊಂದು [ಎಂದು] ನೋಡುವರೆ
ದಿವಸ ಸಮೀಪಿಸಿತ್ತು.
ಸಮೀಪಿಸಿದ ಬಳಿಕ ಯಮದೂತರು ಬಂದು
ವಿಪ್ಲವ[ವ] ಮಾಡುವರು.
ಏನು ಕಾರಣವೆಂದಡೆ, ಓದಿದವರಿಗೆ ಮೋಕ್ಷವಿಲ್ಲಾ !
ಅದು ಎಂತೆಂದಡೆ,
ಬಿಳಿಯ ವಸ್ತ್ರವ ಹೊದ್ದುಕೊಂಡ ತಿರುಕಗೆ
ಎಲ್ಲರ ಮನ್ನಣೆಯುಂಟು.
ಮಾಸಿದರೆ ಅದಕೆ ಶುದ್ಧ ಮಾಡುವನು ರಜಕ.
ಇದರಂತೆ, ಓದಿನ [ಮರ್ಮವು] ತಿಳಿಯಲಿಲ್ಲ.
ಇದಂ ಬಿಟ್ಟು, ಬಿಳಿಯ ವಸ್ತ್ರವು
ಹೊಡೆಸಿಕೊಂಡು ಹೊಡೆಸಿಕೊಂಡು ಮುಪ್ಪಾದ ಬಳಿಕ
ಕೂಸುಗಳ ಗುದಕ್ಕೆ ಒರಸಿ ಬಿಸುಡುವರಲ್ಲದೆ,
ಅದಕ್ಕೆ ಅಧಿಕವುಂಟೇ ?
ಇದರಂತೆ ಓದಿನ [ಮರ್ಮವು] ತಿಳಿಯಲಿಲ್ಲ.
ಇದಂ ಬಿಟ್ಟು, ಮೂಢಭಾವದಿಂದ ಶಿವಲಿಂಗವ ಪೂಜಿಸಿದವರು
ಮೋಕ್ಷಕರಲ್ಲದೆ ಮಿಕ್ಕವರಿಗುಂಟೇನಲ್ಲ.
ಅದೇನು ಕಾರಣವೆಂದಡೆ,
ಮೂಢ ಭಕ್ತನೇ ಕಂಬಳಿಯೆಂದು ತಿಳಿಯೆಲಾ!
ಕಂಬಳಿಗೆ ಮನ್ನಣೆಯುಂಟೆ ?
ಹಾಸಿದರೆ ಮಾಸುವುದೆ ?
ಹೊದ್ದರೆ ಚಳಿಯ ತೋರುವುದೆ ?
ರಜಕನ ಮನೆಯ ಕಂಡುಬಲ್ಲುದೆ ?
ಮುಪ್ಪಾದ ಕಾಲಕ್ಕೆ ಕೃಮಿಶಳೆಗಶ್ವರ(?) ದೇವರಿಗೆ ಜೇಷ್ಮು(?)
ಎಲ್ಲಾ ಬರವಾಗಿ
ಭಕ್ತ ಪೋಷಿಸುವದಲ್ಲದೆ ಕೊರತೆಯುಂಟೆ ?
ಇದರಂತೆ ಮೂಢಭಕ್ತಂಗೆ ಮೋಕ್ಷವೆಂದು ತಿಳಿ.
ಇದಂ ಬಿಟ್ಟು, ಮಾತು ಕಲಿತ ಭೂತಗಳಂತೆ,
ಬರಿದೆ ಶಾಸ್ತ್ರವನೋದಿ,
ಕಂಡಕಂಡವರಲ್ಲಿ ಬಗುಳಿ,
ಕಾಲಕ್ಷೇಪವ ಕಳೆವ
ಮೂಳ ಹೊಲೆಯರ ಮುಖವ ನೋಡಲಾಗದು ಕಾಣಾ
ಕೂಡಲಾದಿ ಚನ್ನಸಂಗಮದೇವಾ./14
ಅಯ್ಯಾ, ಜೀವಾತ್ಮ ಭೇದವಾದಮಂ ಪೇಳ್ವೆನಯ್ಯಾ
ಜೀವ ಬೇರೆ, ಆತ್ಮ ಬೇರೆ ಎಂದು ಹೇಳುವ[ವು] ಹಲವು ಶಾಸ್ತ್ರ ;
ಜೀವಾತ್ಮ ಐಕ್ಯ ಹೇ[ಳುವವು] ಹಲವು ಶಾಸ್ತ್ರ.
ಅ[ದು] ಎಂತೆಂದಡೆ: ಸರ್ವ ಚೇತನದಲ್ಲಿಯು ಉಂಟು ಎಂದು ಹೇಳುವವು ಜೀವವು,
ಶಿವಶಾಸ್ತ್ರ ಇದಕ್ಕೆ ಸಾಕ್ಷಿ : ಅಣೋರಣೀಯಾ[ನ್] ಮಹತೋ ಮಹೀಯಾ[ನ್]
ಎಂದು ಶ್ರುತಿಯುಂಟಾಗಿ, ಇದಂ ತಿಳಿದು, ಭೇದವಾದಿಗಳು
ಸರ್ವಜೀವರಲ್ಲಿಯು ಆತ್ಮವುಂಟಾದಡೆಯು
ಪಶುಜೀವಜಂತುಗಳಿಗೆ ನಮಸ್ಕಾರವ ಮಾಡಬಾರದೆ ? ಎಂದು
ಹೇಳುವ ಮಾಯಾವಾದಿಗಳು ನೀವು ಕೇಳಿ ;
ಅದು ಎಂತೆಂದಡೆ : ಎಲಾ ಎಲಾ, ಉಚ್ಫಿಷ್ಟದಲ್ಲಿಯು ಅರ್ಕನ ಪ್ರಭೆ ಬಿದ್ದು ರಸ ಬತ್ತುವದು.
ಅದರ ರಸಾಸ್ವಾದವು ಅರ್ಕಂಗೆ ಮುಟ್ಟುವುದೆ ?
ಎಲಾ ಎಲಾ, ಸಿಲಹದಲ್ಲಿಯು ಸೂರ್ಯಪ್ರಭೆಯುಂಟು.
ಅಲ್ಲಿ ವಹ್ನಿಯು ಪುಟ್ಟುವು]ದೆ?]
ಇದರಂತೆ, ಸರ್ವ ಜೀವಜಂತುಗಳಲ್ಲಿ
ಮಾಯಾವಾದಿಗಳಲ್ಲಿ
ಆತ್ಮಪರೀಕ್ಷೆಯಿಲ್ಲದವರಲ್ಲಿ
[ದು]ಷ್ಟ ದುರ್ಜನರಲ್ಲಿ
ಶಿವಭಕ್ತರಾಗಿ ಲಿಂಗವ ಧರಿಸಿ
ದೇವರಾದರು ಸರಿಯೆ,
[ಬ್ರಾ]ಹ್ಮರಾಗಿ ಯಜ್ಞೋಪವೀತವ
ಹಾಕಿಕೊಂಡಿದ್ದರು ಸರಿಯೆ,
ಯತಿಗಳಾಗಿ ಮಂಡೆ ಬೋಳಿಸಿಕೊಂಡಿದ್ದರು ಸರಿಯೆ,
ಮಾರ್ಗ ತಪ್ಪಿ ನಡೆವ ಜೀವಜಂತುಗಳಲ್ಲಿ
ಸಿಲಹ ಉಚ್ಫಿಷ್ಟದ ಮೇಲೆ ಸೂರ್ಯನ ಪ್ರಭೆ ಬಿದ್ದಂತೆ
ಆತ್ಮ ಇದ್ದ ಕಾರಣ ಇವರಿಗೆ ಕೈಮುಗಿಯಲಾಗದು ಕಾಣಿರಯ್ಯಾ !
ಇ[ವ]ರೊಳಗೆ ಶಿವಯೋಗಿಗಳು ದಾರೆಂದು ಕೇಳುವ
ಮಾಯಾವಾದಿ ಕೇಳಲಾ.
ಅದು ಎಂತೆಂದಡೆ: ಸೂರ್ಯನ ಪ್ರಕಾಶಕ್ಕೆ ಬಿಲದ್ವಾರವ ಸಿಲಹಂ ಪಿಡಿಯೆ
ಅರ್ಕನ ಪ್ರಕಾಶಕ್ಕೆ ವಹ್ನಿ ಪುಟ್ಟೆ
ಸರ್ವಕಾಷ್ಠವನು ಸುಡುವದು ಕಾಣೆಲಾ.
ಶಿವಾತ್ಮ ಐಕ್ಯವ ಮಾಡಿದಾ ಶಿವಯೋಗಿಗಳಲ್ಲಿ
ಸರ್ವಕರ್ಮೆಂದ್ರಿಯ ಈ ತೆರದಲ್ಲಿ ಸುಟ್ಟ ಕಾರಣ
ನಿರ್ಮಳಕಾಯರಾದರು.
ಇಂತಪ್ಪ ಜೀವಾತ್ಮವ ಐಕ್ಯವ ಮಾಡಿದ ಶಿವಯೋಗಿಗಳಲ್ಲಿ
ನಮಸ್ಕರಿಸಬಹುದು.
ಇಂತಾ ಜೀವಾತ್ಮ ವೇದವ ತಿಳಿಯದೆ
‘ನಾ ಬ್ರಾಹ್ಮಣ’ ‘ನಾ ಶಿವಭಕ್ತ’ನೆಂದು ಹೇಳಿಕೊಂಡು ತಿರುಗುವ
ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ
ಕೂಡಲಾದಿ ಚನ್ನಸಂಗಮದೇವಾ/15
ಲಿಂಗಾಂಗಿಯೆಂದು ಪೇಳುವ[ವ]ನೇ ನೀ ಕೇಳು
ಬರಿದೆ ಲಿಂಗಮಂ ಕಟ್ಟಿ, ಅಂಗದಲ್ಲಿ ಧರಿಸಿ,
ಮಂಗದೈವಂಗಳಿಗೆ ಅಡ್ಡ ಬಿದ್ದ ಬಳಿಕ
ನಿನಗೆ ಲಿಂಗಾಂಗದೇಹವೆಲ್ಲೈತೆಲಾ ?
ಲಿಂಗಾಂಗದೇಹದ ಲಕ್ಷಣವ ಪೇಳುವೆನು ಕೇಳೆಲಾ : ಲಿಂಗಾಂಗದೇಹಿಯಾದ ಬಳಿಕ,
ಲಿಂಗ ಪೋದಡೆ ಅಂಗ ಬಹಿಷ್ಠೆ ;
ಅದರಿಂದ ಪೋಗಬೇಕು.
ಎಲ್ಲಾ ದೇವರಿಗೊಲ್ಲಭನಾದ ದೇವರು ಲಿಂಗವು.
ಅಂತಪ್ಪ ಲಿಂಗವು ನಿನ್ನ ಕರಸ್ಥಲ[ಕೆ] ಉರಸ್ಥಲಕೆ ಬಂದ ಬಳಿಕ
ಪರದೈವದ ಹಂಗೇಕಲಾ ?
ಮನೆಯಲ್ಲಿ ಪರುಷವ ಇಟ್ಟುಕೊಂಡು
ಹೆರರ ಪದಾರ್ಥಕ್ಕೆ ಹಲ್ಲು ತೆರೆವನಂದದಿ
ಗುರುವು ಕೊಟ್ಟ ಲಿಂಗವು ಅಂಗದಲ್ಲಿ ಇದ್ದ ಬಳಿಕ
ಗುರುಮಂತ್ರವು ಶ್ರವಣದಲ್ಲಿ ಉಪದೇಶವಾದ ಬಳಿಕ,
ಗುರುವಾಕ್ಯ ಜಿಹ್ವೆಯಲ್ಲಿ ಉದ್ಭವಿಸಿದ ಬಳಿಕ,
ಗುರುಪ್ರಣುತವು ಪಣೆಗೆ ಲಿಪ್ತವಾದ ಬಳಿಕ,
ಇದಂ ಮರೆದು ಮಾಯಾ ಮೋಹಕೊಳಗಾಗಿ,
ಅನಂತ ಪ್ರಪಂಚದೊಳು ತೇಲಾಡಿ,
ತನಗೆ ವಿಪತ್ತು ಬಂದಡೆ ಕೋಟಿ ಶೀಲವಂ ಕೇಳುವ ಹೇಳುವ
ತಾಟಕ ಹೊಲೆಯರ ಮುಖವ ನೋಡಲಾಗದು ಕಾಣಾ
ಕೂಡಲಾದಿ ಚನ್ನಸಂಗಮದೇವಾ./16
ಅಯ್ಯಾ, `ಬ್ರಹ್ಮಲಿಖಿತವೇ ದೊಡ್ಡಿತ್ತು’ ಎಂದು ಪೇಳುವಿರಿ,
‘ಬ್ರಹ್ಮಲಿಖಿತಕ್ಕೆ [ಇದಿರು] ಯಾರಾರು ಇಲ್ಲ’ ವೆಂದು ಹೇಳುವಿರಿ,
ನೀವು ಕೇಳಿರಯ್ಯಾ: ಇಂಥ ಬ್ರಹ್ಮಲಿಖಿತವ ಗೆದ್ದವರು ನಮ್ಮ ಶಿವಗಣಾಧೀಶ್ವರರಲ್ಲದೆ
ಮಿಕ್ಕಿನವರು ಗೆದ್ದದ್ದು ಇಲ್ಲಾ ಕಾಣಿರಯ್ಯಾ!
ಅದು ಎಂತೆಂದಡೆ: ಎಲೆ, ಬ್ರಹ್ಮನು ಶಿವನಂ ಕಾಣಲರಿಯದೆ
ತತ್ತ್ವಸಾರವ ತಿಳಿಯಲರಿಯದೆ
ಶಿರವ ಭೇದಿಸಿಕೊಂಡ.
ಇಂಥ ಬ್ರಹ್ಮಮುಖವಾದ ವೇದಗಳು
ರಥಕ್ಕೆ ವಾಜಿಯಾಗಿ ಹೋದವು.
ಇಂಥಾತ್ಮನು ತತ್ತ್ವಸಾರವ ತಿಳಿಯದೆ, ಅರಿಯದೆ,
ನಿಜವಸ್ತುವಾದ ಲಿಂಗಮಂ ಮರೆದು,
ಶಿರವ ಭೇದಿಸಿಕೊಂಡ.
ಅವ ನಮ್ಮ ಪ್ರಮಥ ಗಣಾಧೀಶ್ವರರಿಗೆ
ಅದೃಷ್ಟವ ಬರೆವುದಕ್ಕೆ ಕಾರಣಕರ್ತನೆ ?
ಅಥವಾ ಆ ಕ್ಷಣ ಮಾತ್ರದಲ್ಲಿ ಪುತ್ರಜನನವಾದ ಕಾಲದಲ್ಲಿಯು
ಬ್ರಹ್ಮನ ಬರ [ಹ ಹೋ]ಹಾಗಾಗಲಿಯೆಂದು,
ಮಹಾಗುರುವು ಬಂದು ತ್ರಿಪುಂಡ್ರವಾದ ಮೂರು ಬೆರಳಿಂದ
ಬ್ರಹ್ಮಲಿಖಿತವಂ ದಟ್ಟಿಸಿ ಪಣೆಗಿಟ್ಟು,
ಮಾಂಸಪಿಂಡವಂ ಪೋಗಿ[ಸಿ] ಮಂತ್ರಪಿಂಡವ ಮಾಡುವರಲ್ಲದೆ
ಮಿಕ್ಕವರಿಂದಾಗದು ಕಾಣಿರಯ್ಯಾ.
ಆ ಪ್ರಮಥ ಗಣಾಧೀಶ್ವರರು ನಡೆದರೆಂದು ಈಗ ಮನುಜರು
‘ನಾನೂ ನಡೆದೇನು’ ‘ನೀನೂ ನಡೆದೇನು’ ಎಂದು ತಿರುಗುವ
ಮೂಳ ಹೊಲೆಯರ ಮುಖವ ನೋಡಲಾಗದು ಕಾಣಾ
ಕೂಡಲಾದಿ ಚನ್ನಸಂಗಮದೇವಾ./17
ಈರೇಳು ಭವನ ಹದಿನಾಲ್ಕು ಲೋಕಕ್ಕೆ
ಶ್ರೀ ಮಹಾ ಸಾಂಬಶಿವನೇ ಘನವೆಂದು
ನಾಲ್ಕು ವೇದಗಳು ಸಾರುತಿರ್ದವು.
ಅಂತಪ್ಪ ಸಾಂಬಶಿವನು ತನ್ನ ಭಕ್ತನ ಏನೆನುತಿರ್ದನಯ್ಯಾ ?
‘ಭಕ್ತಂ ಮಹೇಶಗಿನ್ನಧಿಕ’,
‘ನನಗಿಂತಾ ನನ್ನ ಭಕ್ತನೇ ದೊಡ್ಡವನೆಂದು
ಸಾಂಬಶಿವನು ಹೇಳುತ್ತಿಹನು.
‘ಭಕ್ತಂ ಮಹೇಶಗಿನ್ನಧಿಕ’ವೆಂಬ ನಾಮಾಂಕಿತ
ಎಂತಪ್ಪ ಭಕ್ತಂಗೆ ಸಲುವದೆಂದರೆ : ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ
ಇಂತೀ ಆರು ಗುಣಂಗಳಳಿದು,
ಅಷ್ಟಮದಂಗಳ ತುಳಿದು,
ತ್ರಿವಿಧ ಪದಾರ್ಥವನ್ನು ತ್ರೈಮೂರ್ತಿಗಳಿಗೆ ಕೊಟ್ಟು,
ಇಷ್ಟಲಿಂಗನಿಷ್ಠಾಪರರಾಗಿ,
ಜಂಗಮವೇ ಮತ್ಪ್ರಾಣವೆಂದು ನಂಬಿ,
ಪೂಜಿಸುವ ಸದ್ಭಕ್ತಂಗೆ
‘ಭಕ್ತಂ ಮಹೇಶಗಿನ್ನಧಿಕ’ವೆಂಬ
ನಾಮಾಂಕಿತ ಸಲುವದು.
ಬರಿದೆ ಡಂಬಾಚಾರಕ್ಕೆ ಪ್ರಾತಃಕಾಲಕ್ಕೆ ಎದ್ದು,
ಮೇಕೆ ಹೋತಿನ ಬಂಧುಗಳಾಗಿ
ಆಡಿನ ಬೀಗಪ್ಪಗಳಾಗಿ
ಪತ್ರೆಗಿಡಕೆ ಹಿಡಿಯ ತೊಪ್ಪಲನ ತೆರಕೊಂಡು ಬಂದು
ಲಿಂಗದ ಮಸ್ತಕದ ಮೇಲೆ ಇಟ್ಟು,
ಮಧ್ಯಾಹ್ನ ಕಾಲದಲ್ಲಿ ಒಂದು ಶಿವಜಂಗಮಮೂರ್ತಿ
ಹಸಿದು ಬಂದು ‘ಭಿಕ್ಷಾಂದೇಹಿ’ ಎಂದರೆ
‘ಅಯ್ಯ ಕೈಯಿ ಅನುವು ಆಗಿಯಿಲ್ಲ’,
‘ಮನೆಯಲ್ಲಿ ಹಿರಿಯರು ಇಲ್ಲ’,
‘ಮುಂದಲಮನೆಗೆ ದಯಮಾಡಿರಿ’ ಎಂಬ
ಹಂದಿಮುಂಡೇಮಕ್ಕಳಿಗೆ
‘ಭಕ್ತಂ ಮಹೇಶನಿಂದಧಿಕ’ವೆಂಬ ನಾಮಾಂಕಿತ
ಸಲ್ಲದೆಂದಾತನಾರು ?
ನಮ್ಮ ಕೂಡಲಾದಿ ಚನ್ನಸಂಗಮದೇವ./18
ಒಂದು, ಎರಡು, ಮೂರು, ನಾಲಕ್ಕು,
ಅಯಿದು, ಆರು, ಏಳು, ಎಂಟು
ಒಂಬತ್ತು, ಹತ್ತು, ಹನ್ನೊಂದು ಹನ್ನೆರಡು,
ಹದಿಮೂರು, ಹದಿನಾಲಕ್ಕು, ಹದಿನೈದು, ಹದಿನಾರು,
ಹದಿನೇಳು, ಹದಿನೆಂಟು, ಹತ್ತೊಂಬತ್ತು, ಇಪ್ಪತ್ತು,
ಇಪ್ಪತ್ತೊಂದು, ಇಪ್ಪತ್ತೆರಡು, ಇಪ್ಪತ್ತಮೂರು, ಇಪ್ಪತ್ತನಾಲಕ್ಕು.
ಇಪ್ಪತ್ತನಾಲಕ್ಕು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ?
ಇಪ್ಪತ್ತನಾಲಕ್ಕು ಎಂದರೆ ಚಕ್ರವರ್ತಿಗಳು.
ಅದು ಎಂತೆಂದಡೆ: ಗ್ರಂಥ || ಯುದಿಷ್ಠಿರೋ ವಿಕ್ರ[ಮೋ]ಶಾಲಿವಾಹನ[ಃ]
ತ[ಪಸಾ] ಧ್ರುವಶ್ಚ [ದಿವಿ]ಜರಾಜನಂದನಃ
ನಾಗಾಂತಕೋ ಭೂಪತಿ [ಷಷ್ಠಮಃ]
ಕಲಿಯುಗೇ ಷಟ್ಚಕ್ರವರ್ತಿ[ನಃ]
ಈ ಆರು ಮಂದಿ ಕಲಿಯುಗದ ಚಕ್ರವರ್ತಿಗಳು.
ಇಪ್ಪತ್ತಮೂರು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ?
ಇಪ್ಪತ್ತಮೂರು ಎಂದರೆ ಚಕ್ರವರ್ತಿಗಳು.
ಅದು ಎಂತೆಂದಡೆ: ಗ್ರಂಥ || ಯಯಾತಿ ನಹುಷ[ಶ್ಶಂತನುಃ]
ಚಿತ್ರವೀರ್ಯಶ್ಚ ಪಾಂಡವಃ
ರಾಜಾ ದುರ್ಯೋಧನ[ಶ್ಚೈ]ವ
ದ್ವಾಪರೇ ಷ[ಟ್] ಚಕ್ರವರ್ತಿ[ನಃ]
ಆ ಆರು ಮಂದಿ ದ್ವಾಪರದ ಚಕ್ರವರ್ತಿಗಳು.
ಇಪ್ಪತ್ತೆರಡು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ?
ಇಪ್ಪತ್ತೆರಡು ಎಂದರೆ ಚಕ್ರವರ್ತಿಗಳು.
ಅದು ಎಂತೆಂದಡೆ: ಗ್ರಂಥ || ವೈವ[ಸ್ವ]ತೋ ದಿಲೀಪಶ್ಚ
ರಘು ಚಕ್ರೇಶ್ವರೋ ಅ[ಜಃ]
ದಶರಥೋ ರಾಮಚಂದ್ರ[ಶ್ಚ]
ಷಡೈತೇ ಚಕ್ರವರ್ತಿ[ನಃ]
ಈ ಆರು ಮಂದಿ ತ್ರೇತಾಯುಗದ ಚಕ್ರವರ್ತಿಗಳು.
ಅದು ಎಂತೆಂದಡೆ: ಗ್ರಂಥ || ಹರಿಶ್ಚಂ[ದ್ರೋ] ನ[ಳ]ರಾಜ[ಃ]
ಪುರುಕು[ತ್ಸ]ಶ್ಚ ಪುರೂರವಃ
ಸಗರಃ ಕಾರ್ತವೀರ್ಯಶ್ಚ
ಷಡೈತೇ ಚಕ್ರವರ್ತಿ[ನಃ]
ಈ ಆರು ಮಂದಿ ಕೃತಯುಗದ ಚಕ್ರವರ್ತಿಗಳು.
ಅಂತೂ ಇಪ್ಪತ್ತನಾಲ್ಕು ಮಂದಿ ಚಕ್ರವರ್ತಿಗಳು.
ಇಪ್ಪತ್ತು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ?
ಇಪ್ಪತ್ತು ಎಂದರೆ ಪ್ರಪಂಚ ನಿರ್ಮಾಣ ಸಹಾಯ[ದ]ವರು.
ಅದು ಎಂತೆಂದಡೆ: ಆಂಗೀರಸ, ಪುಲಸ್ತ್ಯ, ಪುಲಹ, ಶಾಂತ,
ದಕ್ಷ, ವಸಿಷ್ಠ, ವಾಮದೇವ, ನವಬ್ರಹ್ಮ, ಕೌಶಿಕ,
ಶೌನಕ, ಸ್ವಯಂಭು, ಸ್ವಾರೋಚಿಷ, ಉತ್ತಮ,
ತಾಮಸ, ರೈವತ, ಚಾಕ್ಷಷ, ವೈವಸ್ವತ,
ಸೂರ್ಯಸಾವಣರ್ಿ, ಚಂದ್ರಸಾವಣರ್ಿ,
ಬ್ರಹ್ಮಸಾವಣರ್ಿ, ಇಂದ್ರ ಸಾವಣರ್ಿ
ಇವರು ಇಪ್ಪತ್ತು ಮಂದಿ ಪ್ರಪಂಚ ನಿರ್ಮಾಣ ಸಹಾಯ[ದ]ವರು.
ಹತ್ತೊಂಬತ್ತು ಎಂದರೆ ಪುಣ್ಯನದಿಗಳು.
ಅದು ಎಂತೆಂದಡೆ: ಗ್ರಂಥ || ಗಂಗಾ ಪುಷ್ಕ[ರಿಣೀ] ನರ್ಮದಾ ಚ
ಯಮುನಾ ಗೋದಾವರೀ ಗೋಮತೀ
ಗಂಗಾದ್ವಾರ ಗಯಾ ಪ್ರಯಾಗ
ಬದರೀ ವಾರಾಣಸೀ ಸೈಯಿಂಧವೀ
ಇವು ಹತ್ತೊಂಬತ್ತು ಪುಣ್ಯನದಿಗಳು.
ಹದಿನೆಂಟು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ?
ಹದಿನೆಂಟು ಎಂದರೆ……….
ಅದು ಎಂತೆಂದಡೆ: ………………………
ಹದಿನೇಳು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ?
ಹದಿನೇಳು ಎಂದರೆ……………..
ಅದು ಎಂತೆಂದಡೆ: ………………..
ಹದಿನಾರು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ?
ಹದಿನಾರು ಎಂದರೆ [ಅ]ರಸುಗಳು
ಅದು ಎಂತೆಂದಡೆ: ಗ್ರಂಥ || ಗಯಾಂಬರೀ[ಷ] ಶ[ಶ]ಬಿಂದುರಂಗದೋ
ಪೃಥು[ರ್ಮ]ರು[ತ್] ಭರತ[ಸ್ಸು]ಹೋತ್ರಃ
ರಾಮೋ ದಿಲೀಪೋ ಸಗರ ರಂತಿ ರಾಮ[ಃ]
ಯಯಾತಿ ಮಾಂಧಾತ ಭಗೀರಥ[ಶ್ಚ]
ಎಂದುದಾಗಿ,
ಗಯ, ಅಂಬರೀಷ, ಶಶಬಿಂದು, ಪೃಥು,
ಮರುತ್, ಭರತ, ಸುಹೋತ್ರ, ಪರಶುರಾಮ,
ದಿಲೀಪ, ಸಗರ, ರಂತಿ, ರಾಮಚಂದ್ರ,
ಯಯಾತಿ, ಮಾಂಧಾತ, ಭಗೀರಥ, ಅ[ಂಗದ]-
ಇವರು ಹದಿನಾರು ಮಂದಿ ಅರಸುಗಳು.
ಹದಿನೈದು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ?
ಹದಿನೈದು ಎಂದರೆ ತಿಥಿಗಳು.
ಅದು ಎಂತೆಂದಡೆ: ಪಾಡ್ಯ, ಬಿದಿಗೆ, ತದಿಗೆ, ಚವುತಿ, [ಪಂಚಮಿ],
ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ, ದಶಮಿ,
ಏಕಾದಶಿ, ದ್ವಾದಶಿ, ತ್ರಯೋದಶಿ, ಅಮಾವಾಸ್ಯೆ
ಇವು ಹದಿನೈದು ತಿಥಿಗಳು.
ಹದಿನಾಲಕ್ಕು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ?
ಹದಿನಾಲಕ್ಕು ಎಂದರೆ ಲೋಕಂಗಳು.
ಅದು ಎಂತೆಂದಡೆ: ಅತಲ ವಿತಲ ಸುತಲ ತಲಾತಲ
ಮಹಾತಲ ರಸಾತಲ ಪಾತಾಳ
ಭೂಲೋಕ ಭುವಲರ್ೊಕ ಸುರ್ವಲರ್ೊಕ ಮಹಲರ್ೊಕ
ತಪೋಲೋಕ ಜನೋಲೋಕ ಸತ್ಯಲೋಕ
ಇವು ಹದಿನಾಲ್ಕು ಲೋಕಂಗಳು.
ಹದಿಮೂರು ಎಂದರೆ ನೋಡಿದ್ದೇನಪ್ಪ, ಕೇಳಿದ್ದೆನಪ್ಪ ?
ಹದಿಮೂರು ಎಂದರೆ ಚಕ್ರಂಗಳು.
ಅದು ಎಂತೆಂದಡೆ,
ಆಧಾರಚಕ್ರ, ಸ್ವಾಷ್ಠಾನಚಕ್ರ, ಮಣಿಪೂರಕಚಕ್ರ,
ಅನಾಹಚಕ್ರ, ವಿಶುದ್ಧಿಚಕ್ರ, ಆಜ್ಞಾಚಕ್ರ,
ಶಿಖಾಚಕ್ರ, ಬ್ರಹ್ಮಚಕ್ರ, ಘಟಚಕ್ರ, ಕಾಲಚಕ್ರ,
ಮೇಘಚಕ್ರ, ಭೂಚಕ್ರ, ಅವಗಡಚಕ್ರ
ಇವು ಹದಿಮೂರು ಚಕ್ರಂಗಳು.
ಹನ್ನೆರಡು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ?
ಹನ್ನೆರಡು ಎಂದರೆ ಮಾಸಂಗಳು.
ಅದು ಎಂತೆಂದರೆ,
ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ, ಶ್ರಾವಣ, ಭಾದ್ರಪದ,
ಆಶ್ವೀಜ, ಕಾರ್ತಿಕ, ಮಾರ್ಗಶಿರ, ಪುಷ್ಯ, ಮಾಘ, ಫಾಲ್ಗುಣ
ಇವು ಹನ್ನೆರಡು ಮಾಸಂಗಳು.
ಹನ್ನೊಂದು ಎಂದರೆ ನೋಡಿದ್ದೇನಪ್ಪ ? ಕೇಳಿದ್ದೇನಪ್ಪ ?
ಹನ್ನೊಂದು ಎಂದರೆ ಭಾರತಂಗಳು.
ಅದು ಎಂತೆಂದಡೆ: ಆದಿಭಾರತ, ಕೈಲಾಸಭಾರತ, ಶ್ರೀರುದ್ರಭಾರತ, ನಂದಿಭಾರತ,
ನಾರ[ದ]ಭಾರ[ತ], ಭೃಗುಭಾರತ, ಮನುಭಾರತ, ಉಮಾಭಾರತ,
ಪ್ರಸಿದ್ಧಭಾರತ, ಸಿದ್ಧೋರಗಭಾರತ, ಶ್ರೀರಂಗಭಾರತ
ಇವು ಹನ್ನೊಂದು ಭಾರತಂಗಳು.
ಹತ್ತು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ?
ಹತ್ತು ಎಂದರೆ, ದಶಾವತಾರಂಗಳು.
ಅದು ಎಂತೆಂದರೆ,
ಗ್ರಂಥ || ಮತ್ಸ್ಯಃ ಕೂರ್ಮಃ ವರಾಹಶ್ಚ
ನಾರಸಿಂಹಶ್ಚ ವಾಮನಃ
ರಾಮೋ ರಾಮಶ್ಚ [ಕೃಷ್ಣ]ಶ್ಚ
ಬೌದ್ಧಃ ಕಲ್ಕಿ[ರೇ]ವ ಚ
ಎಂದುದಾಗಿ, ಈ ದಶಾವತಾರಂಗಳಲ್ಲಿ ಯಾರಾರು ಸಂಹಾರ ಎಂದರೆ,
ಮತ್ಯ್ಸಾವತಾರದಲ್ಲಿ ಅಮೃತಮಥನೇ ಸೋಮಕಾಸುರನ ಸಂಹಾರ.
ಕೂರ್ಮಾವತಾರದಲ್ಲಿ ಮಂದರಪರ್ವತಕ್ಕೆ ಆಧಾರ.
ವರಾಹಾವತಾರದಲ್ಲಿ ಹಿರಣ್ಯಾಕ್ಷನ ಸಂಹಾರ.
ನರಸಿಂಹಾವತಾರದಲ್ಲಿ ಹಿರಣ್ಯಕಶ್ಯಪ ಸಂಹಾರ.
ವಾಮನಾವತಾರದಲ್ಲಿ ಪಂಚಮೇಢ್ರಾಸುರ ಎಂಬ ರಾಕ್ಷಸನ ಸಂಹಾರ.
ಪರಶುರಾಮಾವತಾರದಲ್ಲಿ ಕಾರ್ತವೀರ್ಯರ ಸಂಹಾರ.
ರಫ್ಸುರಾಮಾವತಾರದಲ್ಲಿ ರಾವಣಕುಂಭಕರ್ಣರ ಸಂಹಾರ./19
ಬಲಭದ್ರ ನವತಾರದಲ್ಲಿ ಪ್ರಲಂಬಕವಾದ ಅಸುರರ ಸಂಹಾರ.
ಬೌದ್ಧಾವತಾರದಲ್ಲಿ ತ್ರಿಪುರದಾನವಸತಿಯರ ಕೆಡಿಸಿದ.
ಕಲ್ಕ್ಯವತಾರದಲ್ಲಿ ಕಂಸಾಸುರ, ನರಕಾಸುರ, ಬಾಣಾಸುರರ ಸಂಹಾರ,
ಇವು ಹತ್ತು ದಶಾವತಾರಗಳು.
ಒಂಬತ್ತು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ?
ಒಂಬತ್ತು ಎಂದರೆ ನವಗ್ರಹಂಗಳು.
ಅದು ಎಂತೆಂದರೆ: ಆದಿತ್ಯ, ಸೋಮ, ಮಂಗಳ, ಬುಧ, ಬೃಹಸ್ಪತಿ,
ಶುಕ್ರ, ಶನಿ, ರಾಹು, ಕೇತು –
ಇವು ಒಂಬತ್ತು ನವಗ್ರಹಂಗಳು.
ಎಂಟು ಎಂದರೆ ನೋಡಿದ್ದೇನಪ್ಪ ಕೇಳಿದ್ದೇನಪ್ಪ ?
ಎಂಟು ಎಂದರೆ ಅಷ್ಟದಿಕ್ಪಾಲಕರು.
ಅದು ಎಂತೆಂದರೆ: ಇಂದ್ರ, ಅಗ್ನಿ, ಯಮ, ನೈರುತಿ,
ವರುಣ, ವಾಯುವ್ಯ, ಕುಬೇರ, ಈಶಾನ್ಯ –
ಎಂಟು ಮಂದಿ ಅಷ್ಟದಿಕ್ಪಾಲಕರು.
ಏಳು ಎಂದರೆ ನೋಡಿದ್ದೇನಪ್ಪ ಕೇಳಿದ್ದೇನಪ್ಪ ?
ಏಳು ಎಂದರೆ ಸಪ್ತಋಷಿಗಳು.
ಅದು ಎಂತೆಂದರೆ: ಗ್ರಂಥ || ಕಶ್ಯಪಾತ್ರಿ ಭರದ್ವಾಜ[ಃ]
ವಿಶ್ವಾಮಿ[ತ್ರಶ್ಚ] ಗೌತಮ[ಃ]
ಜಮದಗ್ನಿ[ಃ]ವಸಿಷ್ಠ[ಶ್ಚ]
ಸಪ್ತೈತೇ ಋಷಯ[ಃ ಸ್ಮೃತಾಃ]
ಎಂದುದಾಗಿ,
ಕಶ್ಯಪ, ಅತ್ರಿ, ಭರದ್ವಾಜ, ವಿಶ್ವಾಮಿತ್ರ,
ಗೌತಮ, ಜಮದಗ್ನಿ, ವಸಿಷ್ಠ –
ಇವರು ಏಳುಮಂದಿ ಸಪ್ತ ಋಷಿಗಳು.
ಆರು ಎಂದರೆ ನೋಡಿದ್ದೇನಪ್ಪ ಕೇಳಿದ್ದೇನಪ್ಪ ?
ಆರು ಎಂದರೆ ಶಾಸತ್ತ್ರಂಗಳು.
ಅದು ಎಂತೆಂದರೆ: ಶಿಲ್ಪಶಾಸ್ತ್ರ, ಭರತಶಾಸ್ತ್ರ, ತರ್ಕಶಾಸ್ತ್ರ, ಶಬ್ದಶಾಸ್ತ್ರ,
ಆ[ನ್ವೀಕ್ಷಕೀ]ಶಾಸ್ತ್ರ, ಜ್ಯೋತಿಷ್ಯಶಾಸ್ತ್ರ –
ಇವು ಆರು ಶಾಸ್ತ್ರಂಗಳು.
ಐದು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ?
ಐದು ಎಂದರೆ ಈಶ್ವರನ ಪಂಚ ಮುಖಂಗಳು
ಅದು ಎಂತೆಂದರೆ,
ಗ್ರಂಥ || ಸದ್ಯೋಜಾ[ತೋ]ದ್ಭವೋಭರ್ೂಮಿಃ]
ವಾಮದೇವೋದ್ಭ[ವಂ ಜಲಂ]
ಅಫ್ಸೊ[ರಾದ್ವಹ್ನಿ]ರು[ದ್ಭೂತಂ]
ತತ್ಪರು[ಷಾದ್ವಾಯುರ್ಭವೇತ್
ಈಶಾನಾದ್ಗಗನಂ ಜಾತಂ]
ಎಂದುದಾಗಿ,
ಸದ್ಯೋಜಾತಮುಖ, ವಾಮದೇವಮುಖ, ಅಘೋರಮುಖ,
ತತ್ಪುರುಷಮುಖ, ಈಶಾನ್ಯಮುಖ –
ಇವು ಐದು ಪಂಚಮುಖಂಗಳು.
ನಾಲಕ್ಕು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ?
ನಾಲಕ್ಕು ಎಂದರೆ ವೇದಂಗಳು.
ಅದು ಎಂತೆಂದರೆ: ಋಗ್ವೇದ, ಯಜುರ್ವೆದ, ಸಾಮವೇದ, ಅಥರ್ವಣವೇದ –
ಇವು ನಾಲ್ಕು ವೇದಂಗಳು.
ಮೂರು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ?
ಮೂರು ಎಂದರೆ ತ್ರಿಮೂರ್ತಿಗಳು.
ಅದು ಎಂತೆಂದರೆ: ಬ್ರಹ್ಮ, ವಿಷ್ಣು, ಈಶ್ವರ –
ಇವರು ಮೂವರು ತ್ರಿಮೂರ್ತಿಗಳು.
ಎರಡು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ?
ಎರಡು ಎಂದರೆ ಭಾನು ಶಶಿ.
ಅದು ಎಂತೆಂದರೆ: ಸೂರ್ಯ, ಚಂದ್ರ –
ಇವರಿಬ್ಬರು ಸೂರ್ಯಚಂದ್ರಾದಿಗಳು.
ಒಂದು ಎಂದರೆ ನೋಡಿದ್ದೆನಪ್ಪ ಕೇಳಿದ್ದೇನಪ್ಪ ?
ಒಂದು ಎಂದರೆ ಏಕೋ[ಏವ]ದೇವಃ
ಅದು ಎಂತೆಂದರೆ: ದೇವನು ಒಬ್ಬನೇ.
ದೇವನು]ಒಬ್ಬನೇ ಅಲ್ಲದೆ ಇಬ್ಬರೆಂದು ಬಗುಳುವನ
ಮುಖವ ನೋಡಲಾಗದು ಕಾಣೋ
ಕೂಡಲಾದಿ ಚನ್ನಸಂಗಮದೇವಾ./20