Categories
ವಚನಗಳು / Vachanagalu

ನುಲಿಯ ಚಂದಯ್ಯನ ವಚನಗಳು

ಅಂದು ಹೋಗಿ ಇಂದು ಬಾ ಎಂದಾಗ ದಂದುಗಕ್ಕೊಡಲುಂಟೆ?
ಘನಲಿಂಗ ಎಲ್ಲಿದ್ದಡೂ ಪರಿಪೂರ್ಣ,
ಚಂದೇಶ್ವರಲಿಂಗವು./1
ಅವಾವ ಕಾಯಕದಲ್ಲಿ ಬಂದಡೂ ಭಾವಶುದ್ಧವಾಗಿ
ಗುರು-ಲಿಂಗ-ಜಂಗಮಕ್ಕೆ ಮಾಡುವುದೇ ಶಿವಪೂಜೆ.
ಮಾಡುವ ಮಾಟವಿಲ್ಲದೆ ಮಾತಿಂಗೆ ಮಾತಾಡುವುದುಅದೇತರ ಪೂಜೆ?
ಅದು ಚಂದೇಶ್ವರಲಿಂಗಕ್ಕೆ ಒಪ್ಪವಲ್ಲ, ಮಡಿವಾಳಯ್ಯಾ./2
ಇದಿರ ಭೂತಹಿತಕ್ಕಾಗಿ ಗುರುಭಕ್ತಿಯ ಮಾಡಲಿಲ್ಲ.
ಅರ್ತಿಗಾರಿಕೆಗಾಗಿ ಲಿಂಗವ ಬಿಟ್ಟು ಪೂಜಿಸಲಿಲ್ಲ.
ರಾಜ ಚೋರರ ಭಯಕ್ಕಂಜಿ ಜಂಗಮ ದಾಸೋಹವಮಾಡಲಿಲ್ಲ.
ಆವ ಕೃಪೆಯಾದಡೂ ಭಾವ ಶುದ್ಧವಾಗಿರಬೇಕು,
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವನರಿಯ ಬಲ್ಲಡೆ./3
ಇಷ್ಟಲಿಂಗ ಗುರುವಿನ ಹಂಗು,
ಚಿತ್ತ ಕಾಮನ ಹಂಗು,
ಪೂಜೆ-ಪುಣ್ಯ ಮಹಾದೇವನ ಹಂಗು;
ಎನ್ನ ದಾಸೋಹ ಆರ ಹಂಗೂ ಇಲ್ಲ.
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವೆ,
ಕಣ್ಣಿಯ ಮಾಡಬಲ್ಲಡೆ ಬಾ, ಎನ್ನ ತಂದೆ./4
ಇಷ್ಟವೆಂಬುದು ಗುರುವಿನ ಹಂಗು
ಆ ಗುರುವಿಂಗೆಯು, ಇಷ್ಟಲಿಂಗಕ್ಕೆಯು,
ಜಂಗಮವೆ ಪ್ರಾಣಾಪದವೆಂದರಿದ ಬಳಿಕ
ಆ ಗುರುವೂ ಇಷ್ಟವೂ ಜಂಗಮದಲ್ಲಿಯೇ ಅಡಕ ನೋಡಾ!
ಆ ಗುರುವೂ ಲಿಂಗವೂ ಜಂಗಮದ ಹಂಗಿಗರು! ಇದು ಕಾರಣ
ಚಂದೇಶ್ವರಲಿಂಗಕ್ಕೆ ಕಣ್ಣಿಯ ಮಾಡಬಲ್ಲಡೆ ಬಾರಾ ಎನ್ನ ತಂದೆ./5
ಎನ್ನ ಸತ್ಕಿ ್ರ ಸಂಗನಬಸವಣ್ಣ
ಎನ್ನ ಸುಜ್ಞಾನವೇ ಚನ್ನಬಸವಣ್ಣ
ಈ ಎರಡರ ಏಕೀಭಾವವೇ ಪ್ರಭುವೆ ನೀವು ನೋಡಾ!
ನಿಮ್ಮೆಲ್ಲರ ನೈಷ್ಠೆಯೇ ಮಡಿವಾಳಯ್ಯನು!
ಇಂತೀ ಚತುವರ್ಿಧವೆನಗೆ ಬೇಕಾದ ಕಾರಣ
ಇಷ್ಟಲಿಂಗದ ಸೇವೆ ಚರಲಿಂಗದ ದಾಸೋಹವೆಂಬುದನು
ಬಸವಣ್ಣಪ್ರಿಯ ಚಂದೇಶ್ವರಲಿಂಗದಲ್ಲಿ
ಚನ್ನಬಸವಣ್ಣನ ಕೈಯಲ್ಲಿ ಎನಗೆ ತಿಳುಹಿಕೊಡಾ ಪ್ರಭುವೇ!/6
ಎನ್ನಂಗದ ಸತ್ಕಿ ್ರ ಸಂಗನಬಸವಣ್ಣನು
ಎನ್ನ ಲಿಂಗದ ಸತ್ಕಿ ್ರ ಚನ್ನಬಸವಣ್ಣನು.
ಎನ್ನ ಅರುಹಿನ ಸತ್ಕಿ ್ರ ಪ್ರಭುವೆ ನೀವು ನೋಡಾ!
ಎನ್ನ ದಾಸೋಹದ ನೈಷ್ಠೆಯೇ ಮಡಿವಾಳಯ್ಯನು!
ಇಂತೀ ಅಂಗ ಲಿಂಗ ಜ್ಞಾನ ದಾಸೋಹ
ಇವು ಮುಂತಾದವೆಲ್ಲವೂ ನಿಮ್ಮ ಪುರಾತನರಾದ ಕಾರಣ
ಚಂದೇಶ್ವರಲಿಂಗದಲ್ಲಿ ಚನ್ನಬಸವಣ್ಣನ ಕೃಪೆಯಿಂದ
ನಿಮ್ಮ ಶ್ರೀಪಾದವ ಬೆರಸಿದೆನಯ್ಯಾ ಪ್ರಭುವೇ! /7
ಒಂದ ಬಿಟ್ಟು ಒಂದು ಹಿಡಿವಲ್ಲಿ ಮೂರರಂಗ ಒಂದೂ ಇಲ್ಲ.
ಹಿಡಿದ ಭಾವ ಒಂದುಂಟಾಯಿತ್ತಾದಡೆ,
ಉಭಯದಂಗ ಸಲೆ ಸಂದಿತ್ತು
ಚಂದೇಶ್ವರಲಿಂಗಕ್ಕೆ ಮಡಿವಾಳಯ್ಯಾ./8
ಕಂದಿಸಿ ಕುಂದಿಸಿ ಬಂಧಿಸಿ ಕಂಡವರ ಬೇಡಿತಂದು
ಜಂಗಮಕ್ಕೆ ಮಾಡಿದೆನೆಂಬ ದಂದುಗದೋಗರ ಲಿಂಗಕ್ಕೆ
ನೈವೇದ್ಯ ಸಲ್ಲ.
ತನು ಕರಗಿ ಮನ ಬಳಲಿ ಬಂದ ಚರದ ಅನುವರಿತು
ಸಂದಿಲ್ಲದೆ ಸಂಶಯವಿಲ್ಲದೆ ಜಂಗಮಲಿಂಗಕ್ಕೆ
ದಾಸೋಹವ ಮಾಡುವುದೆ ಮಾಟ.
ಕಾಶಿಯಕಾಯಿ ಕಾಡಿನ ಸೊಪ್ಪಾಯಿತ್ತಾದಡೂ
ಕಾಯಕದಿಂದ ಬಂದುದು ಲಿಂಗಾರ್ಪಿತ.
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗಕ್ಕೆ ನೈವೇದ್ಯ
ಸಂದಿತ್ತು./9
ಕಾಯದಿಂದ ಕಾಬುದು ಕುರುಹಿನ ಮೂರ್ತಿಯ.
ಆತ್ಮದಿಂದ ಕಾಬುದು ಅರಿವಿನ ಮೂರ್ತಿಯ.
ಅರಿವ ಕುರುಹ ಮರೆದಲ್ಲಿ
ಪರಮ ದಾಸೋಹದಿಂದ ಪರಶಿವಮೂರ್ತಿಯ ಕಾಣಬಂದಿತ್ತು.
ಚನ್ನಬಸವಣ್ಣಪ್ರಿಯ ಚಂದೇಶ್ವರ ನೀನೆ ಬಲ್ಲೆ./10
ಕಾಯವಿಡಿದು ಕಾಬುದೆಲ್ಲವು ಗುರುವಿನ ಭೇದ.
ಜೀವವಿಡಿದು ಕಾಬುದೆಲ್ಲವು ಲಿಂಗದ ಭೇದ.
ಜ್ಞಾನವಿಡಿದು ಕಾಬುದೆಲ್ಲವು ಜಂಗಮದ ಭೇದ
ಮೂರನರಿತು ಬೇರೊಂದ ಕಾಬುದೆಲ್ಲವು ಮಹಾಪ್ರಕಾಶ
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗಕ್ಕೆ ಶಬ್ದಮುಗ್ಧವಾದ ಭೇದ./11
ಕೈದ ಹಿಡಿದಾಡುವರೆಲ್ಲರು ಇರಿಯಬಲ್ಲರೆ?
ಸಾಧನೆಯ ಮಾಡುವ ಬಾಲರೆಲ್ಲರೂ ಕಾದಬಲ್ಲರೆ?
ಅರ್ತಿಗೆ ಮಾಡುವ ಕೃತ್ಯವಂತರೆಲ್ಲರೂ ಸದ್ಭಕ್ತರಪ್ಪರೆ?
ಅದು ಚಂದೇಶ್ವರಲಿಂಗಕ್ಕೆ ಸಲ್ಲದ ಮಾಟ./12
ಗುರು ಇಷ್ಟವ ಕೊಟ್ಟು ಕೂಲಿಗೆ ಕಟ್ಟಿದ ಲಿಂಗ
ವೃಷ್ಟವ ತೋರಿ ತನ್ನ ರಜತದ ಬೆಟ್ಟದ ಮೇಲಿರಿಸಿದ.
ಇಂತು ಗುರುಲಿಂಗಕ್ಕೆ ಮಾಡಿ
ಹಿಂದಣ ಮುಂದಣ ಸಂದೇಹಕ್ಕೀಡಾದೆ.
ಪ್ರಸಿದ್ಧವಪ್ಪ ಜಂಗಮಲಿಂಗಕ್ಕೆ ಸಂದೇಹವಿಲ್ಲದೆ
ಮನಸಂದು ಮಾಡಲಾಗಿ
ಚಂದೇಶ್ವರಲಿಂಗಕ್ಕೆ ಹಿಂದುಮುಂದೆಂಬುದಿಲ್ಲ./13
ಗುರು ಶಿಷ್ಯಂಗೆ ಬೋಧಿಸುವಲ್ಲಿ
ತನ್ನನಳಿದು ಲಿಂಗವ ತೋರಿಸಬೇಕು.
ಲಿಂಗದ ಸಂಗ ನೆನಹಾದಲ್ಲಿ ಆ ಲಿಂಗಕ್ಕೆ
ಉಂಬ ಬಾಯಿ ಜಂಗಮವಾದ ಕಾರಣ,
ಆ ಜಂಗಮಲಿಂಗದ ದಾಸೋಹದಿಂದ ಬೇರೊಂದಂಗವಿಲ್ಲ.
ಸಂಗನಬಸವಣ್ಣಪ್ರಿಯ ಚಂದೇಶ್ವರಲಿಂಗವು
ಹಿಂಗದ ಭಾವ ಕಾಣಾ ಮಡಿವಾಳಯ್ಯಾ./14
ಗುರುಪೂಜಕರು ಲಿಂಗವನೆತ್ತ ಬಲ್ಲರು?
ಲಿಂಗಪೂಜಕರು ಜಂಗಮವನೆತ್ತ ಬಲ್ಲರು?
ಜಂಗಮ-ದಾಸೋಹವೆಂಬುದು ಉಭಯದ ಸಂಗನಾಸ್ತಿ;
ಚಂದೇಶ್ವರಲಿಂಗವೆಂಬ ಲಿಂಗದ ಪೂಜೆ./15
ಗುರುವ ಕುರಿತು ಮಾಡುವಲ್ಲಿ
ಬ್ರಹ್ಮನ ಭಜನೆಯ ಹರಿಯಬೇಕು.
ಲಿಂಗವ ಕುರಿತು ಮಾಡುವಲ್ಲಿ
ವಿಷ್ಣುವಿನ ಸಂತೋಷಕ್ಕೆ ಸಿಕ್ಕದಿರಬೇಕು.
ಜಂಗಮವ ಕುರಿತು ಮಾಡುವಲ್ಲಿ
ರುದ್ರನ ಪಾಶವ ಹೊದ್ದದಿರಬೇಕು.
ಒಂದನರಿದು ಒಂದ ಮರೆದು
ಸಂದಿಲ್ಲದ ಸುಖ ಜಂಗಮ ದಾಸೋಹದಲ್ಲಿ
ಸಂಗನಬಸವಣ್ಣ ನಿತ್ಯ ಚಂದೇಶ್ವರಲಿಂಗಕ್ಕೆ ತಲುಪಿ./16
ಗುರುವ ವಿಶ್ವಾಸಿಸಿದಲ್ಲಿ ಬಂಧನವಿಲ್ಲದಿಪ್ಪುದು.
ಲಿಂಗವ ವಿಶ್ವಾಸಿಸಿದಲ್ಲಿ ಭವವಿಲ್ಲದಿಪ್ಪುದು.
ಜಂಗಮವ ವಿಶ್ವಾಸಿಸಿದಲ್ಲಿ ಇಹ-ಪರ ಉಭಯವಿಲ್ಲ,
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವನರಿಯಲಾಗಿ/17
ಗುರುವನರಿತು ಮಾಡುವಲ್ಲಿ ಅಹಂಕಾರವ ಮರೆದುಮಾಡಬೇಕು.
ಲಿಂಗವನರಿತು ಮನಮುಟ್ಟುವಲ್ಲಿ ಪ್ರಕೃತಿ ತಲೆದೋರದಿರಬೇಕು
ಜಂಗಮವನರಿತು ಮುಟ್ಟಿ ಪೂಜಿಸುವಲ್ಲಿ
ಅರ್ಥ ಪ್ರಾಣ ಅಪಮಾನ ಈ ಮೂರರಲ್ಲಿ ನಿಶ್ಚಯವಾಗಿರಬೇಕು
ಸಂಗನಬಸವಣ್ಣಪ್ರಿಯ ಚಂದೇಶ್ವರಲಿಂಗವನರಿಯಬಲ್ಲಡೆ./18
ಗುರುವನರಿದಲ್ಲಿ ಉತ್ಪತ್ಯಕ್ಕೆ ಹೊರಗಾಗಬೇಕು.
ಲಿಂಗವನರಿದಲ್ಲಿ ಸ್ಥಿತಿಗೆ ಹೊರಗಾಗಬೇಕು.
ಜಂಗಮವನರಿದಲ್ಲಿ ಲಯಕ್ಕೆ ಹೊರಗಾಗಬೇಕು.
ಈ ಗುಣವನರಿದಲ್ಲದೆ ಸದ್ಭಕ್ತನಲ್ಲ.
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವ ಕಾಣಬಾರದು./19
ಗುರುವರಿದಲ್ಲಿ ಬ್ರಹ್ಮನ ಕಲ್ಪ ಹರಿವುದು.
ಲಿಂಗವನರಿದಲ್ಲಿ ವಿಷ್ಣುವಿನ ಸ್ಥಿತಿಯು ಹರಿವುದು.
ಜಂಗಮವನರಿದಲ್ಲಿ ರುದ್ರನ ಲಯಕ್ಕೆ ಸಿಕ್ಕ.
ಈ ತ್ರಿವಿಧ ಭೇದವನರಿದು, ತನ್ನ ತಾನರಿದಲ್ಲಿ
ಬಂಧ ಮೋಕ್ಷ ಕರ್ಮ ಒಂದೂ ಇಲ್ಲ.
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವನರಿದಲ್ಲಿ./20
ಗುರುವಾದಡೂ ಕಾಯಕದಿಂದವೆ ಜೀವನ್ಮುಕ್ತಿ.
ಲಿಂಗವಾದಡೂ ಕಾಯಕದಿಂದವೆ ವೇಷದ ಪಾಶ ಹರಿವುದು.
ಗುರುವಾದಡೂ ಚರಸೇವೆಯ ಮಾಡಬೇಕು.
ಲಿಂಗವಾದಡೂ ಚರಸೇವೆಯ ಮಾಡಬೇಕು.
ಜಂಗಮವಾದಡೂ ಚರಸೇವೆಯ ಮಾಡಬೇಕು
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗದ ಅರಿವು./21
ಗುರುವಿಂಗೆ ಮೋಹಿತವಾಗಿ ಮಾಡುವಲ್ಲಿ
ಮನ ಲಿಂಗವ ಮುಟ್ಟದಿರಬೇಕು.
ಲಿಂಗಕ್ಕೆ ಮೋಹಿತವಾಗಿ ಮಾಡುವಲ್ಲಿ
ಮನ ಜಂಗಮವ ಮುಟ್ಟದಿರಬೇಕು.
ಜಂಗಮಕ್ಕೆ ಮೋಹಿತವಾಗಿ ಮಾಡುವಲ್ಲಿ
ಮೂರು ಮಲತ್ರಯವ ಮುಟ್ಟದಿರಬೇಕು.
ಆ ಘನವನರಿತು ಮಾಡುವಲ್ಲಿ
ಸಂಗನ ಬಸವಣ್ಣಪ್ರಿಯ ಚಂದೇಶ್ವರಲಿಂಗಕ್ಕೆ ಅರ್ಪಿತ/22
ಗುರುವಿಗೆ ತನುವೆಂದಲ್ಲಿ, ಲಿಂಗಕ್ಕೆ ಮನವೆಂದಲ್ಲಿ
ಜಂಗಮಕ್ಕೆ ಧನವೆಂದಲ್ಲಿ
ಮತ್ತೊಂದರಾಸೆಗೆ ಕೊಂಡಾಡಲೇತಕ್ಕೆ?
ಆ ಗುಣ ಚಂದೇಶ್ವರಲಿಂಗಕ್ಕೆ ದೂರ./23
ಗುರುವಿನಲ್ಲಿ ಶುದ್ಧಾತ್ಮನಾದಲ್ಲಿ
ಲಿಂಗದಲ್ಲಿ ಸಲೆಸಂದು, ಜಂಗಮದಲ್ಲಿ ಹೆರಹಿಂಗದೆ
ಮನ ಭಾವ ಕರಣಂಗಳಲ್ಲಿ ಒಂದೂ ತೋರದಿದ್ದುದು
ಚಂದೇಶ್ವರಲಿಂಗಕ್ಕೆ ನಿಜ ನಿಂದುದು ಮಡಿವಾಳಯ್ಯಾ./24
ಗುರುಸೇವೆಯ ಮಾಡುವಲ್ಲಿ ಇಹದಲ್ಲಿ ಸುಖ;
ಲಿಂಗಸೇವೆಯ ಮಾಡುವಲ್ಲಿ ಪರದಲ್ಲಿ ಸುಖ;
ಜಂಗಮಸೇವೆಯ ಮಾಡುವಲ್ಲಿ
ಇಹ-ಪರವೆಂಬ ಉಭಯವು ನಾಸ್ತಿ,
ಚಂದೇಶ್ವರಲಿಂಗವ ಹಿಂಗದ ಭಾವ./25
ಗೋಡೆಯ ತೊಳೆದು ಕೆಸರ ಕೆಡಿಸಿಹೆನೆಂದಡೆ,
ಅದಾರ ವಶ?
ನೇಮಕ್ಕೆ ಕಡೆ ನಡು ಮೊದಲಿಲ್ಲ.
ಒಂದ ಬಿಟ್ಟು ಒಂದ ಹಿಡಿದೆಹೆನೆಂದಡೆ, ಸಂದಿಲ್ಲದ ಸಂಶಯ.
ಅದು ಚಂದೇಶ್ವರಲಿಂಗಕ್ಕೆ ದೂರ ಮಡಿವಾಳಯ್ಯಾ./26
ಚಾಪ ಕಪಿ(ತ್ಥ)ದ ಕಾಯ ಕೂಡಿ ಹಿಡಿದು ಎಸೆಯಬಹುದೆ?
ಪೂಜೆಗೆ ಷೋಡಶ ಉಪಚರಿಯಬೇಕು.
ಮಾಡುವನ್ನಬರ ಕಾಯಕ ನಿಂದಿತ್ತು.
ಕಾಯಕದೊದಗೆ ಮೂರರ ಕೂಟ ಚಂದೇಶ್ವರಲಿಂಗಕ್ಕೆಮಡಿವಾಳಯ್ಯಾ./27
ಜಂಗಮ ನಮಸ್ಕಾರವೆ ಗುರುಪೂಜೆ,
ಜಂಗಮ ಪೂಜೆಯ ಲಿಂಗಪೂಜೆ,
ಜಂಗಮ ತೃಪ್ತಿಯೆ ತನಗೆ ಪ್ರಸನ್ನ.
ತನಗೆ ಪ್ರಸನ್ನವಾದುದೆ ನಿತ್ಯಪ್ರಸಾದದಾಗು,
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗಕ್ಕೆ ಕಟ್ಟುಗೊತ್ತು ಕಾಣಾ!
ಸಂಗನ ಬಸವಣ್ಣ ಪ್ರಭುವೆ./28
ಜಂಗಮಸೇವೆಯ ಚಿತ್ತ ಶುದ್ಧವಾಗಿ ಮಾಡುವಲ್ಲಿ
ಗುರುಸೇವೆ ಸಂದಿತ್ತು.
ಜುಗಮಸೇವೆಯ ಚಿತ್ತಶುದ್ಧವಾಗಿ ಮಾಡಲಾಗಿ
ಲಿಂಗಪೂಜೆ ಸಂದಿತ್ತು.
ಜಂಗಮದಾಸೋಹದಿಂದ ಸರ್ವ ಪದವಾಯಿತ್ತು.
ಆ ಗುಣವನರಿದು ಹರಿಯಲಾಗಿ
ಬಟ್ಟಬಯಲು ಕಾಣಬಂದಿತ್ತು.
ಹುಟ್ಟುವ ಹೊಂದುವ ನೆಲೆ ಇತ್ತಲೆ ಉಳಿಯಿತ್ತು.
ಚನ್ನಬಸವಣ್ಣಪ್ರಿಯ ಚಂದೇಶ್ವರ ಲಿಂಗವನರಿಯಲಾಗಿ./29
ಜಲಚರಕೇಕೆ ತೆಪ್ಪದ ಹಂಗು?
ವಿಹಂಗಗೇಕೆ ಅಡಿವಜ್ಜೆಯ ಮೆಟ್ಟು?
ಮಧುರರಸಕ್ಕೇಕೆ ಮೇಲಪ್ಪ ಸಿಹಿ?
ಕಲ್ಪವೃಕ್ಷಕ್ಕೇಕೆ ಕಾಲದ ಹಂಗು?
ದಾಸೋಹವನರಿದು ಮಾಡುವಂಗೆ ಇನ್ನೇತರ ಪೂಜೆ ಪುಣ್ಯ?
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗಕ್ಕೆಎಡೆದೆರಪಿಲ್ಲ./30
ತನ್ನ ಮನವನರಿದಿಪ್ಪುದು ಗುರುಭಕ್ತಿ.
ತನ್ನ ಭಾವವನರಿದಿಪ್ಪುದು ಲಿಂಗಭಕ್ತಿ.
ತ್ರಿವಿಧ ಮಲವ ಮರೆದಿಪ್ಪುದು ಜಂಗಮಭಕ್ತಿ.
ಈ ಗುಣ ನಿಶ್ಚಯವಾಗಿ ನಿಂದುದು
ಚನ್ನಬಸವಣ್ಣಪ್ರಿಯ ಚಂದೇಶ್ವರ ಲಿಂಗವನರಿದುದು./31
ನಾನೆಂದು ಇಹನ್ನಬರ ಗುರುಪೂಜೆಯ ಮಾಡಬೇಕು.
ನಾನೆಂದು ಇಹನ್ನಬರ ಲಿಂಗಪೂಜೆಯ ಮಾಡಬೇಕು.
ನಾನೆಂದು ಇಹನ್ನಬರ ಜಂಗಮಪೂಜೆಯ ಮಾಡಬೇಕು.
ನಾ ನೀನೆಂಬುಭಯವಳಿಯೆ
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವ ಏನೂಎನಲಿಲ್ಲ./32
ನಾನೆಂಬುದ ಮರೆದಲ್ಲಿ ಗುರುಸ್ಥಲ.
ಜಗದ ಆಗುಛೇಗೆಗೆ ಸಿಕ್ಕದಿಪ್ಪುದು ಲಿಂಗಸ್ಥಲ.
ತ್ರಿವಿಧದ ಬಟ್ಟೆಗೆ ಬಾರದಿಪ್ಪುದು ಜಂಗಮಸ್ಥಲ.
ಅಂಗವರತು, ಮನದ ಪ್ರಕೃತಿ ನಿಂದು, ಗುರು ಲಿಂಗ ಜಂಗಮದ
ತ್ರಿವಿಧಾಂಗದದಲ್ಲಿ ನಿಶ್ಚಯವಾದ ಸದ್ಭಕ್ತ
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವು ತಾನೆ./33
ನುಡಿದ ಮಾತಿಂಗೆ ತಡಬಡ ಬಂದಲ್ಲಿ
ನುಡಿದ ಭಾಷೆಗೆ ಭಂಗ ನೋಡಾ.
ಹಿಡಿದ ಕುಳಕ್ಕೆ ಹಾನಿ ಬಂದಲ್ಲಿ
ಒಡಲನಿರಿಸುವದೆ ಭಂಗ ನೋಡಯ್ಯಾ.
ಇದು ಕಾರಣ ನಡೆ ನುಡಿ ಶುದ್ಧವಿಲ್ಲದಿದ್ದಡೆ
ಚಂದೇಶ್ವರಲಿಂಗವಾದಡೂ ತಪ್ಪನೊಳಕ್ಕೊಳ್ಳ ಕಾಣಾ
ಮಡಿವಾಳಯ್ಯಾ./34
ಪರವ ಕುರಿತು ಮಾಡುವನ್ನಬರ, ಇಹಕ್ಕೆ ಗೊತ್ತಾಯಿತ್ತು.
ಇಹ ಪರವನರಿತು ಮಾಡಬೇಕು.
ದ್ವಂದ್ವವಳಿದು ನಿಂದ ಮಾಟ
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗಕ್ಕೆ./35
ಬಿಟ್ಟು ಕಟ್ಟಿ ಪೂಜಿಸುವಲ್ಲಿ ಮನ ನಿಶ್ಚಯವಾಗದೆ ಮುಟ್ಟಲಾಗದು.
ಲಿಂಗವ ಮನ ಮುಟ್ಟಿದಲ್ಲಿ ಮೂರ ಮುಟ್ಟದೆ,
ಮನ ತೊಟ್ಟುಬಿಟ್ಟು ನಿಜ ನಿಶ್ಚಯವಾದಲ್ಲಿ
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವಹಿಂಗದಿರಬೇಕು./36
ಭಾವ ಶುದ್ಧವಾಗಿಪ್ಪುದೇ ಗುರುಪೂಜೆ
ಜ್ಞಾನಶುದ್ಧವಾಗಿಪ್ಪುದೇ ಲಿಂಗಪೂಜೆ.
ತ್ರಿಕರಣ ಶುದ್ಧವಾಗಿ ತ್ರಿವಿಧ ಮಲದಲ್ಲಿ
ನಿಶ್ಚಯವಾಗಿ ನಿಂದುದೇ ಜಂಗಮಪೂಜೆ.
ಇಂತೀ ತ್ರಿವಿಧ ಭೇದದಲ್ಲಿ ತ್ರಿವಿಧಾರ್ಪಣವ ಅರ್ಪಿಸಿ ನಿಂದುದೇ
ಚಂದೇಶ್ವರಲಿಂಗಕ್ಕೆ ಅರ್ಪಿತ, ಮಡಿವಾಳಯ್ಯಾ./37
ರಣವ ನಿಶ್ಚೆ ಸಿದ ಭಟಂಗೆ ಮನೆಯ ಮೋಹವುಂಟೆ?
ಅರ್ಥ ಪ್ರಾಣ ಅಪಮಾನ ಈ ಮೂರ ಕರ್ತರಿಗೆಂದಿತ್ತು
ಮತ್ತೆ ಹೊತ್ತು ಹೋರುವಂಗೆ ಸದ್ಭಕ್ತಿಯುಂಟೆ?
ಅದು ಚಂದೇಶ್ವರಲಿಂಗವ ಮುಟ್ಟದ ಮಾಟ./38
ಲಿಂಗ ಹೋಯಿತ್ತೆಂಬ ಸಂದೇಹ ಉಂಟಾಯಿತ್ತಾದಡೆ,
ಅಂಗ ಉಳಿಯಬಲ್ಲುದೆ?
ಆತ್ಮ ಹೋದಲ್ಲಿ ಘಟ ಎಷ್ಟು ದಿನ ಉಳಿಯುವುದು?
ಚಂದೇಶ್ವರಲಿಂಗಕ್ಕೆ ಸಂದಿಲ್ಲ, ಮಡಿವಾಳಯ್ಯಾ./39
ಲಿಂಗವೆಂಬುದು ಗುರುವಿನ ಹಂಗು,
ಗುರುವೆಂಬುದು ಲಿಂಗದ ಹಂಗು.
ಉಭಯಕ್ಕತೀತ ಜಂಗಮಲಿಂಗ ದಾಸೋಹ.
ಚಂದೇಶ್ವರಲಿಂಗಕ್ಕೆ ಕಟ್ಟುವ ಗೊತ್ತು./40
ಶಿಷ್ಯಂಗೆ ಗುರು ಬೋಧಿಸುವಲ್ಲಿ
ತನ್ನನಳಿದು ಲಿಂಗದ ಸಂಗವ ತೋರಿಸಬೇಕು.
ಲಿಂಗದ ಸಂಗ ನೆನಹಾದಲ್ಲಿ
ಆ ಲಿಂಗಕ್ಕೆ ಉಂಬ ಬಾಯಿ ಜಂಗಮವಾದ ಕಾರಣ
ಆ ಜಂಗಮದ ದಾಸೋಹದಿಂದ ಬೇರೊಂದಂಗವಿಲ್ಲ;
ಸಂಗನ ಬಸವಣ್ಣಪ್ರಿಯ ಚಂದೇಶ್ವರಲಿಂಗವ ಹಿಂಗದಭಾವ./41
ಶ್ರೀಗುರುವ ತಾನರಿದು ವರಗುರು ತಾನಾಗಬೇಕು.
ಲಿಂಗನೈಷ್ಠಿಕೆಯಾಗಿ ಪೂಜಿಸಿಕೊಳಬೇಕು.
ಜಂಗಮ ತಾ ತ್ರಿವಿಧವ ಮರೆದು
ಜಂಘ ನಾಸ್ತಿಯಾಗಿ ಜಂಗಮವಾಗಬೇಕು.
ಜಂಗಮಕ್ಕೆ ಮಾಡಿ ನೀಡಿ ಸಂದು ಸಂಶಯವನಳಿದು
ನಮ್ಮ ಚಂದೇಶ್ವರಲಿಂಗವನರಿಯಬೇಕು ಕಾಣಾ,
ಎಲೆ ಅಲ್ಲಮಪ್ರಭುವೆ./42
ಸಂಸಾರವೆಂಬ ಸಾಗರದ ಮಧ್ಯದೊಳಗೆ
ಬೆಳೆದ ಹೊಡಕೆಯಹುಲ್ಲ ಕೊಯ್ದು
ಮತ್ತಮಾ ಕಣ್ಣ ತೆಗೆದು, ಕಣ್ಣಿಯ ಮಾಡಿ
ಇಹಪರವೆಂಬ ಉಭಯದ ಗಂಟನಿಕ್ಕಿ
ತುದಿಯಲ್ಲಿ ಮಾಟಕೂಟವೆಂಬ ಮನದ ಕುಣಿಕೆಯಲ್ಲಿ
ಕಾಯಕವಾಯಿತ್ತು.
ಇದು ಕಾರಣ ಚಂದೇಶ್ವರಲಿಂಗವೆಂಬ ಭಾವವೆನಗಿಲ್ಲ/43
ಸತ್ಯ ಶುದ್ಧ ಕಾಯಕದಿಂದ ಬಂದ ದ್ರವ್ಯದಲ್ಲಿ
ಚಿತ್ತ ವಿಚ್ಛಂದವಾಗದಿರಬೇಕು.
ನೇಮದ ಕೂಲಿಯಂದಿನ ನಿತ್ಯ ನೇಮದಲ್ಲಿ ಸಂದಿಲ್ಲದಿರಬೇಕು.
ನೇಮದ ಕೂಲಿಯ ಬಿಟ್ಟು
ಹೇಮದಾಸೆಗೆ ಕಾಮಿಸಿ ದ್ರವ್ಯವ ಹಿಡಿದಡೆ
ತಾ ಮಾಡುವ ಸೇವೆ ನಷ್ಟವಯ್ಯಾ.
ನಿನ್ನಾಸೆಯ ವೇಷದ ಪಾಶಕ್ಕೆ ನೀನೆ ಹೋಗು.
ನನಗೆ ನಮ್ಮ ಜಂಗಮದ ಪ್ರಸಾದದಾಗೆ
ಚಂದೇಶ್ವರಲಿಂಗಕ್ಕೆ ಪ್ರಾಣವಯ್ಯಾ./44
ಸುಖ ದುಃಖ ಭೋಗಾದಿ ಭೋಗಂಗಳೆಲ್ಲವೂ
ಗುರು ಲಿಂಗ ಜಂಗಮದ ಒಡಲಾಗಿ ಬೆಳೆವುತ್ತಿಹವು.
ತಾನವ ಒಡಲುಗೊಂಡು ಮಾಡುವ ಕಾರಣ
ತನ್ನ ಬೆಂಬಳಿಯ ಮಾಯೆ.
ಅವ ಹಿಂಗಿ ತನ್ನ ತಾನರಿತಲ್ಲಿ
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವ ಕಾಣಬಂದಿತ್ತು./45
ಹಿಂದಣ ಭವಸಾಗರವ ದಾಂಟಿದೆ
ಮುಂದಣ ಮುಕ್ತಿಯಪಥಕ್ಕೆ ಜ್ಞಾನವಂಕುರಿಸಿತ್ತು.
ಇನ್ನಂಜೆನಿನ್ನಂಜೆನಯ್ಯಾ,
ಎನ್ನ ಮನೋಮಯ ಮೂರ್ತಿಯಪ್ಪ
ಚಂದೇಶ್ವರನ ಕಾರುಣ್ಯವಾಯಿತ್ತಾಗಿ
ಗೆದ್ದೆನಯ್ಯಾ ಮಹಾಮಾಯೆಯ!/46
ಹೊಕ್ಕಲ್ಲಿ ಹೊಕ್ಕು, ಒಕ್ಕುದ ಮಿಕ್ಕುದನುಂಡು
ಸುಖಿಯಾಗಿ ಸುಳಿವ ಜಂಗಮಕ್ಕೆ
ಕುಲವೆಲ್ಲಿಯದೊ ಛಲವೆಲ್ಲಿಯದೊ?
ಶೀಲ ವ್ರತ ನೇಮಂಗಳಿಲ್ಲ, ಜಾತ್ಯಾದಿ ಸೂತಕ ಮುನ್ನಿಲ್ಲ.
ಆವಾವಾಚಾರ ವಿಚಾರ ಭಕ್ತಂಗಲ್ಲದೆ ಜುಗಮಕ್ಕುಂಟೆ?
ಒಡೆಯರಲ್ಲಿ ಆಚಾರವಿಲ್ಲೆಂದು ಪಾದೋದಕ
ಪ್ರಸಾದವನೊಲ್ಲದಿಪ್ಪ
ಬಹುಭ್ರಮಿತ ಪಾತಕರ ಅಚ್ಚಲಿಂಗೈಕ್ಯರು ಮೆಚ್ಚರು ಕಾಣಾಚಂದೇಶ್ವರಾ./47
ಹೊಣಕೆಗೆ ಹೋರಿದಲ್ಲಿ ವನಿತೆಯರ ಮನೆಯಾಸೆ ಉಂಟೆ?
ಘನತರವಪ್ಪ ಪರಮ ದಾಸೋಹಿ ತಾನಾಗಿ
ಅಲ್ಲಿ ಅನುವರವನರಸಲುಂಟೆ?
ಮೂರಕ್ಕೆ ಆಶೆಯ ಹರಿದು ಮಾಡುವ ಮಾಟ
ಚಂದೇಶ್ವರಲಿಂಗದ ಕೂಟ./48