Categories
ವಚನಗಳು / Vachanagalu

ವೀರಸಂಗಯ್ಯನ ವಚನಗಳು

ಅಂಕಿತನಾಮದಿಂದ ಶಂಕರ ತಾಳ್ದ ಸರ್ಜಿವಿ ನಿರ್ಜಿವಿ.
ಪಂಕಜಕಮಲದಲಿ ಆತ್ಮ ಭಸಿತ
ಆಪಾದ ಮಸ್ತಕ ವಿಭೂತಿ ಭಸ್ಮಾಂಗ
ಕಂಕಣ ಸ್ಥಾನ ಸ್ಥಾನದಲಿ ಕರಪಾತ್ರೆ ಶಿರಮಾಲೆ
ಅಂಕದ ಕಣದೊಳು ಮೆಟ್ಟಿ ತುಳಿವರ ಬಿಟ್ಟಾಡಿ ಪಾದರಕ್ಷೆ
ಲೆಂಕರ ಲೆಂಕನೆಂಬ ಕರುಣಾರ್ಥ ಶಂಕರನ ಸದ್ಭಕ್ತರಿಗೆ
ಸಲುವುದು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./1
ಅಂತು ಇಪ್ಪ ಶರಣರ
ಅಂತಸ್ತವ ಎಂತು ಪೊಗಳುವೆನಯ್ಯ ?
ಮಂತ್ರಕೆ ಮೊದಲಿಗರು, ಉಪದೇಶಕೆ ಉಪಮಾತೀತರು.
ಅಂತಸ್ಥ ಆತ್ಮದಲ್ಲಿ ಸರ್ವರಕ್ಷಕರು ತಂತ್ರವಾಹಕರು.
ಸತ್ಯ ಶಿವಾರ್ಚಕರು ಚಿಂತೆ ನಿಶ್ಚಿಂತರು ಚಿದಾನಂದ ಶರಣರು.
ಅವರು ನಿಂತುದೇ ತೀರ್ಥ, ನಿದ್ರೆಯೇ ವಾರಣಾಸಿ,
ನಿರುತ ವಾಕ್ಯವೇ ಪರ್ವತ, ನಿಜವೇ ಕೈಲಾಸ.
ಅಂತು ಅಂತರ್ಮಯರ ಎನಗೊಮ್ಮೆ ತೋರಿಸಯ್ಯ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./2
ಅಂಬಿಗೆ ಗರಿ, ರೆಂಬೆಗೆ ರಾಜಸ್ಯ ಕೊಂಬುಯಿಲ್ಲದೆ
ಫಲವೆಂತು ಅಪ್ಪುದಯ್ಯ ?
ತುರೀಯಾತೀತವು ನಿಂಬಾಲ್ಯವೆನಿಸುವುದು ಸುವರ್ಣಬಿಂಬವು.
ಸಂಭ್ರಮ ಹೊನ್ನು ಹೆಣ್ಣು ಮಣ್ಣಿನ ಮಾಯಕೆ
ಹಂಬಲಿಸುವರೆ ಹರಿಸುರಬ್ರಹ್ಮರು ?
ಇಂಬಿಲ್ಲವು ನುಡಿವರೆ ಬಿಡುವರೆ ಹಿಡಿವರೆ
ಕೆಂಬೇಡಿಗೆಡುವರೆ ?
ಮೂವರಿಂದ ಮುಕ್ತಿಯಿಲ್ಲ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./3
ಅಜ್ಞಾನ ಮತ ಲಗ್ನ ಸುಮೂರ್ತ
ನಕ್ಷತ್ರವೆಂಬವು ವರ್ಗಮೂಲ ವಕ್ರಮೂಲ ವಾಚಾಸಿದ್ಧಿ-
ಸುಜ್ಞಾನಕ್ಕೆ ಸುಖ ದುಃಖವು ಏಕವು.
ಅವಿವೇಕಯುಕ್ತಿ ಹೋಕರು
ಋಗ್ವೇದ ಯಜುರ್ವೆದ ಅಥರ್ವಣವೇದ ದಿಗ್ಬಲೆ ಅಸಂತಕೆ
ಲಗ್ನಕ್ಕೆ ಮರಣ ಮುಹೂರ್ತಕ್ಕಪಜಯ
ಸದ್ಗುರು ಕಟಾಕ್ಷಯೆಂತಿಪ್ಪುದು ಅಂತು ಅಪ್ಪದು ತಪ್ಪದು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./4
ಅನಂತ ಯುಗದಲ್ಲಿ ಆತ್ಮದೈವವಲ್ಲದೆ
ಅನ್ಯಾರ್ಥ ದೈವವಿಲ್ಲ.
ಅನಾದಿ ಆದಿ ಅಧ್ಯಾತ್ಮ ಧ್ಯಾನ ಜ್ಞಾನ ಮುಗ್ಧವ್ರತ
ಮಾರ್ಗಗತಿ ಘಲಿಂಘೆಗಸ್ಥಲ
ಅನುರ್ದ ವಿದ್ಯ ಅವಿದ್ಯ ಕುಲ ಕಾಯಕ
ಆಯುಷ್ಯ ಅಲ್ಪಾಯುಷ್ಯ
ಮನೆ ದೈವವಂ [ಬಿಟ್ಟು] ಅನರ್ಥಕೆ ಎರಗುವುದು ಆವ ಸ್ವಯ ?
ಮನೋರಾಜ ಪ್ರಾಣಲಿಂಗ ಪ್ರತಿಷ್ಠದಿ ದ[ರುಶ]ನವುಂಟು
ತನು ತರ್ಕಿ ಅಂಗವಿಕಾರಿಗೆಯೆಲ್ಲಿಯ ಭಕ್ತಿಯೆನಲಿಲ್ಲ
ಎನಿಸಿಕೊಂಡವರಿಲ್ಲ , ಅನೃತ ಮೊದಲಿಲ್ಲ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./5
ಅನಾದಿ ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಮೂರ್ತಿಗೆ
ಪ್ರಸಾದವೆ ಗತಿ.
ಮನಹಿತ ಲಿಂಗಹಿತ ತನುತ್ರಯ ಗುರುಹಿತ
ಘನತರ ಘತಘತಯೆ ಗೋತ್ರ ಅಜಾತಜಂಗಮಹಿತ
ಅನಾದಿ ಗೊಹೇಶ್ವರಲಿಂಗಕ್ಕೆ ಆಗಮವಿಲ್ಲ ನಿಗಮವಿಲ್ಲ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./6
ಅನ್ನಭವಿ ಅಗ್ಗವಣಿ ಭವಿ
ಹೊನ್ನು ಭವಿ ಹೆಣ್ಣು ಭವಿ ಮಣ್ಣು ಭವಿ
ತನ್ನ ತಾನು ಮೊದಲು ಭವಿ
ಚೆನ್ನ ಚೆಲ್ವಿಕೆ ತಾ ಭವಿ
ಭವಿಯ ಪ್ರಸಾದ ಮುನ್ನ ಯೋಗಿಗೆ ಮಾಣಿಗೆ
ಕ್ರಿಯವ ಕಟ್ಟಿಯೈದಾರೆ ಪೂರ್ವಾಚಾರ್ಯರು .
ಉನ್ನತವಾದ ಕಾಮ ಕ್ರೋಧ ಲೋಭ
ಮೋಹ ಮದ ಮತ್ಸರ ತಾ ಭವಿ.
ಅನ್ಯರ ಮಾತಲ್ಲ
ಅಲ್ಲಮಪ್ರಭು ವಾಕ್ಯ ಲೆಂಕಂಗೆ ಉಪದೇಶ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./7
ಆರು ದರುಶನ ಹದಿನೆಂಟು ಸಮಯ
ನೂರೊಂದು ಕುಲಕೆ ಬೇರೆವೊಬ್ಬ ದೈವವೆ ?
ಹೋರಾಡುವರು ಭವಿ ಭಕ್ತರೆಂದು.
ಊರು ಮೊಗೆವ ನೀರು ಬಾವಿಯೆಂಜಲು,
ತೊರೆ ಅಗ್ನಿಗೆ ಕ್ರಿಯೆ ಉಂಟೆ ? ತಾ ಭವಿ.
ಸೂರ್ಯಚಂದ್ರರು ಭವಿಯ ಕಿರಣದೊಳಗಿದ್ದು
ಭಕ್ತನೆಂತು ದೂರವಿಲ್ಲ.
ಅಷ್ಟದಿಕ್ಪಾಲಕರು ಪಿಂಡಾಂಡ ಬ್ರಹ್ಮಾಂಡಕೆ
ಯಾರಾದರು ತರ್ಕಿಸುವರು.
ಭವಿ ಮೊದಲೊ ? ಭಕ್ತ ಮೊದಲೊ ?
ತೀರದ ಮಾತನಾಡುವ ತಿರುಬೋಡಿಗೆ ಭಕ್ತಿ ಇಲ್ಲ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./8
ಇಚ್ಛೆಯನಾಡಿದರೆ ಲೋಕ ಮಚ್ಚುವುದು ಬೆರವುದು
ಕಚ್ಚೆಗಡುಕರ ಸಂಗವ ಮಾಡುವ ಕರ್ಮಸಾಕು
ಚುಚ್ಚಕರು ಚುಲ್ಲಕರು ಮುಕ್ತಿಯ ಬೇಡಲರಿಯರು
ನಚ್ಚಬೇಡ ಅವರಿಂದ ನರಕ ತಪ್ಪದು.
ಹುಚ್ಚಾಗಿ ಹೋಗುವರೆ ಹುದುಗು ಹುಸಿಕರ
ನಿಶ್ಚಯವಿಲ್ಲದವರ ಸಂಗ
ಉಚ್ಚೆಯಲಿ ಮಿಂದಂತೆ ಬಚ್ಚಿಟ್ಟ ದ್ರವ್ಯವ ಬಂಕುಲಿಗೆ ಹಾಕುವರು.
ನುಚ್ಚಕಟ್ಟಬಾರದ ಅರಿವೆಯಲ್ಲಿ ನುರುಕಿದ ರಂಗೋಲೆ ನಿಲುವುದೆ ?
ಮಚ್ಚಿದ ದಾಸಿ ವೇಸಿಗೆ ಹರಿವ ಕರ್ಮಿಗೆ ಸಿಕ್ಕುವನೆ ಶಿವ ?
ಲಕ್ಷಕೊಬ್ಬ ಮುಗ್ಧ ದಶಲಕ್ಷಕೊಬ್ಬ ಸಿದ್ಧ
ನಿಶ್ಚಯ ಕೋಟಿಗೊಬ್ಬ ಪುರಾತ
ಅಚ್ಚಲಿಂಗೈಕ್ಯರು ಅಪೂರ್ವ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./9
ಇಟ್ಟಿಟ್ಟ ಕಲ್ಲಿಗೆ ಹರಿದಾಡುವರು
ನೆಟ್ಟನೆ ಜ್ಞಾನಿಗಳಾದರೇನಯ್ಯ ?
ಪಟ್ಟಾಭಿಷೇಕವುಳ್ಳ ರಾಜನಬಿಟ್ಟು
ರಾಜ್ಯಭ್ರಷ್ಟರಾಪರೆ ?
ಹುಟ್ಟು ಹೊಂದುವೆ ಬ್ರಹ್ಮನ ಕಾಣದೆ
ತಮ್ಮ ತಮ್ಮ ಇಚ್ಛೆಗೆ ಹರಿವರು.
ಭ್ರಷ್ಟತ್ವವಾಗಿ ಹೊಗಳುತಿವೆ ವೇದವಾಕ್ಯ.
ಆತ್ಮನೆಂಬ ರಟ್ಟಮತಕೆ ಪರಿಪ್ರತಿಯಿಲ್ಲ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./10
ಉದಯ ಅಸ್ತಮಯ ನದಿಯೊಳು ಮುಣುಗಿ
ಗದಗದನೆ ನಡುಗಲು ಗರ್ಭಕೆ ವೈರವು.
ಸುದ್ಧಮಂ ಮರದು ಸೂಕ್ಷ್ಮವಂ ತಿಳಿಯದೆ ಗದಬದಿಸಿ
ಎಮ್ಮೆ ಮಡುವಿನೊಳು ಬಿದ್ದಂತೆ ವ್ಯರ್ಥ ಸ್ನಾನವು.
ಪದರ ಆತ್ಮದೊಳು ಸೂಸಕವೆಂಬ ಅಘ ತಾ ಹಿಂಗದೆ
ಮದ ಹೊಲೆಯಿಂದ ಮರ್ಕಟಜ್ಞಾನಿಯಾದರು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./11
ಉದಯ ತತ್ಕಾಲವೆ ಅಸ್ತಮಯ,
ಅಸ್ತಮಯ ತತ್ಕಾಲವೆ ಉದಯ.
ಮಧುವೆ ವಿಷ, ವಿಷವೆ ಮಧು.
ಸದರಿವೆರಡಕ್ಕೆ ಮನಸ್ಸಿನ ಸಂದೇಹ ಮಾತ್ರ.
ಅದು ಕಾರಣ
ಮಧುರ ಸಮುದ್ರ, ಲವಣ ಸಮುದ್ರ,
ಕ್ಷೀರ ಸಮುದ್ರ, ದಧಿ ಸಮುದ್ರ
ಚತುರಂಗದೊಳಿರ್ದ ಸಪ್ತಸಮುದ್ರಕ್ಕೆ
ಏಕೋಮೂಲ್ಯ ಭಿನ್ನ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./12
ಉದ್ಯೋಗವ ಮಾಡಿ ತಂದಾಕ್ಷಣ
ಖಂಡಿಸುವದು ಅನಘ್ರ್ಯ.
ಉದ್ಯೋಗ ದಿನ ಕೃತಿ ಕಾಯಕ ಅಪೂರ್ವ
ಉದ್ಯೋಗ ಮನೆಯೊಳು ನಾಳೆಯೆಂಬುದು ಉತ್ತಮ
ಉದ್ಯೋಗ ದಿನ ನಾಳಿಗೆಂಬುದು ಮಧ್ಯಮ
ಉದ್ಯೋಗ ಅನುಪತ್ಯ ಕಡಮೆಗೊಡುವುದು ಕನಿಷ್ಠ
ಉದ್ಯೋಗ ದಿನ ವಾರ ಬಡ್ಡಿಗೊಡುವುದು ಅಧಮ
ಉದ್ಯೋಗ ಹುಸಿ ಚಾಂಡಾಲ ತೂಕಮಾಪು ಕಡಮೆಗೊಡುವುದು.
ಉದ್ಯೋಗ ತಾನು ಉಣ್ಣದೆ ದ್ರವ್ಯವ ಕೂಡಿಸುವುದು ನಿರ್ನಾಮಿ
ಉದ್ಯೋಗವ ಮಾಡದೆ ಮನೆಗಳ ಕನ್ನಗಳ
ದಾಸಿ ವೇಸಿಯ ಸಂಗ ಪಾಪದ ಪುಂಜ.
ಉದ್ಯೋಗ ನಂಬಿದ ವಡವೆಯನಳುಪುವುದು ನಾಯಕ ನರಕ.
ಉದ್ಯೋಗ ಪರಧನ ಪರಸ್ತ್ರೀ ಪರನಿಂದ್ಯ ಪಾಪದ ಶಾಪ
ಪ್ರಾರಬ್ಧ ನರಕ ತಪ್ಪದು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./13
ಉಳುವೆಯ ಸಮಯರ ಮುಂದೆ
ತಿಳಿವವರೇನ ಬಲ್ಲರಯ್ಯ ?
ಕಳವರೇವಿಧ ಉಂಟು ಕರ್ಮಭಯ ಪಾಶವ ?
ಸುಳುಹು ಸೂಕ್ಷ್ಮದಲಿ ಅರಿವುದು ಶುಭ ಸೂಚನೆ.
ಒಳಗುಂಟಾದರೆ ಎಸೆವುದು ಪರಿಮಳ
ತಿಳಿದವು ತೆಂಗಿನ ನೀರು ಒಳಗರತು ಗಟ್ಟಿಗೊಂಡಂತೆ
ನಿಮ್ಮ ಕೃಪೆ ಹೆಳವರ ಮೇಲೆ ಭಾಗ್ಯ ಬಂತೆಂಬರು
ಕಳಿವರೆ ಉಳಿವರೆ ಎನ್ನಳವಲ್ಲ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./14
ಎಂಟರ ಮದದಿಂದ ಕಂಟಕ ಹೊಂದಿಬಹುದು.
ನಂಟು ಪಕ್ಷದಿಂದ ನಾಯಕನರಕ ಹೊಂದಿಬಹುದು.
ವೆಂಟೆಯ ಶುದ್ಧನಹುದು, ವ್ಯರ್ಥದಿಂದ ಅರ್ಥವು
ಬಂಟತನ ಒಡೆಯತನಕೆ ವೈರವು, ಪ್ರಾಣಹತವು
ಒಂಟೆಯ ಹಾಲಕರದು ತಳೆಯಲಿ ವಡದಂತೆಯಾಯಿತು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./15
ಎಂಬತ್ತುನಾಲ್ಕು ಲಕ್ಷ ಜೀವರಾಶಿ ಬೆಂಬಳಿ
ಒಂದೊಂದು ಕುಲ, ಒಂದೊಂದು ವರ್ಣ, ಒಂದೊಂದು ಭಾಷೆ.
ಉಂಬುದು ಉಡುವುದು ಕೊಂಬುದು ಕೊಡುವುದು ಜಾತಿಗೆ ಜಾತಿ.
ಉಂಬುದು ಮನುಷ್ಯ ಜನ್ಮ ಒಂದೆ ವರ್ಣ
ಒಂದಕ್ಕೆ ಒಂದು ಕೋಟಿ ಭೇದ ಇಂಬಿಲ್ಲ ನೋಡಿದರೆ
ಇದಕ್ಕೆ ಕಾಯಕ ಕುತರ್ಕ ಸಂಬಳವ ಕಟ್ಟಿಕೊಂಡಿತು
ಕರ್ಮಧರ್ಮವೆಂಬ ವರ್ಮದ ಮೂಲವ
ನಂಬಿದ ಭಕ್ತಂಗೆ ಜಾತಿಯಿಲ್ಲ .
ಆಚಾರಕ್ಕೆ ವ್ರತವಿಲ್ಲ, ಆಕಾಶಕ್ಕೆ ನೆಳಲಿಲ್ಲ.
ಬೆಂಭೂಮಿಗೆ ಪಾತಕವಿಲ್ಲ
ನಂಬಿದರೆ ಪಂಚತತ್ವಕ್ಕೆ ಪ್ರಕಟವಿಲ್ಲ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./16
ಎನಬಹುದು ಎನಬಾರದು ;
ಜನರಿಂಗೆ ವೈರವರ್ಗ ಜ್ಞಾನಕ್ಕವರ್ಗ
ಕನಸಿನಲಿ ಕಾಣಿಸುವುದು.
ಮನಸಿನಲಿ ಉಚ್ಚರಿಸಿದಷ್ಟು ನೆನದ ದುಃಖ ಬಹುದು.
ನೇಮದ ಕಲೆನೆಲೆಯನರಿತು
ಅನುಶ್ರುತ ಶಿವಸನ್ನಿಧಿಯೊಳು ಮನವರತು ಇದ್ದರೆ
ಮನ ವಾಚಾ ಸಿದ್ಧಿ, ವಾಚಾಮನಸಿದ್ಧಿಯಪ್ಪುದು ತಪ್ಪದು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ/17
ಒಂಬತ್ತು ರತ್ನವೆಂಬರಲ್ಲದೆ,
ಕೊಂಬವರ ಕಾಣೆ ಕೊಡುವವರ ಕಾಣೆ.
ಏಕಾಂಬ ವರರತ್ನ ಮೌಕ್ತಿಕಕೆ ಬೆಲೆಯಿಡಲಿಲ್ಲವು.
ಶಂಭುವೆಸರು ವಸ್ತು ವಿಸ್ತೀರ್ಣ ಪ್ರಮಾಣ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./18
ಒಬ್ಬರ ಕಂಡು ಒಬ್ಬರು ಸಾಹಿತ್ಯವಾದರೇನಯ್ಯ ? ಸನ್ನಹಿತರಲ್ಲ.
ಮಬ್ಬುಗಾವಳ ಗವಿದಂತೆ
ಮೋರೆಗೆ ಮೋರೆ ತಾಕು ತಾಕು
ಇಬ್ಬರ ವಿಶ್ವಾಸ ಇಕ್ಕುರೋಗವಾಯಿತ್ತು .
ನಿಬ್ಬಣದ ಮನೆಯಲ್ಲಿ ನೀ ಕದ್ದೆ ತಾ ಕದ್ದೆಯೆಂದು
ಕೊಂಡಾಡಿದಂತೆ,
ಕಬ್ಬ ಕಡಿದು ಗಾಣವಂ ಆಡಿಸಿ
ಕಾವಲಿಯೊಳು ಸುಟ್ಟರೆ ಸಿಹಿ ಬಿಟ್ಟೀತೆ ?
ಹುಬ್ಬ ಹಾಕುತ ಹಿರೆ ಒಡೆಯರಿಗಿದಿರಾಗಿ ಒಡೆಯರು
ಕಬ್ಬು ಕಟ್ಟಿಗೆಗೆ ಆ ಗುಣವಿತ್ತು ಗುರುಶಿಷ್ಯರಿಗೆಯಿಲ್ಲ
ತುಬ್ಬನಿಕ್ಕಿ ತೆಗೆದಾರು ಇಬ್ಬರ ಕಳಂಕವ
ಇನ್ನೊಬ್ಬನೆ ಗುರು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./19
ಒಬ್ಬರಿಗೆ ಹೇಳಿ ನಡೆಯದವರ ಸಂಗ
ಗೊಬ್ಬರದೊಳಗಣ ಚೇಳಿನಂತೆ.
ಹುಬ್ಬ ಹಾಕತಿಪ್ಪ ಹುಸಿಕರ ಕಂಡರೆ ಹುಸಿ, ದಿಟರ ಕಂಡರೆ ದಿಟ,
ಹಬ್ಬಿಸುವ ಮಾತಿನ ಮಾಲೆಯ ಮರ್ಕಟನಂತೆ
ಇಬ್ಬಂದಿಗತನ ಇಹದಲ್ಲಿ ನಿಂತವಂಗೆ ಇಹಪರವಿಲ್ಲ.
ಉಬ್ಬಿಸುವ ಉರಿಗಿಚ್ಚಿನಂತೆ ಉರಿಗಂಟಿಕೆ
ಹಬ್ಬವ ಮಾಡಿದವರ ಮನೆಗೆ ಹಾಡ ಬಂದಂತೆ.
ಸರ್ಪಗ್ರಹಣ ಹಿಡಿವುತಿದೆ ಇಂತು ಎಚ್ಚಕರಿಗೆ
ಅರ್ಬುತನನೆಬ್ಬಿಸಲಿಕೆ ಆಗಮದ ದವಡೆಯ ಬಂದ
ತುಬ್ಬನಿಕ್ಕಿ ಇಂಥಾ ವೇಷವ ತುದಿ ಮೂಗ ಕೊಯ್ಯುವನು
ಇನ್ನು ಒಬ್ಬನ ಬೋಧೆಯಲ್ಲದೆ ಇಲ್ಲ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./20
ಒಬ್ಬರೊಬ್ಬರ ಕಂಡು ಗೊಬ್ಬರದ ಬಂಡಿಯ ಹೂಡಿದಂತೆ
ನಿಬ್ಬರವಾಗಿ ಅಚ್ಚುಮುರಿದು ನಿಜಗೇಡು,
ಅಪಜಯ ಇಬ್ಬಂದಿಗ ನಗುವ.
ಇಷ್ಟಲಿಂಗವ ಪ್ರಾಣಲಿಂಗವೆಂದ ಕಾರಣದಿಂದ
ಉಬ್ಬರವಾಯಿತು ಉಕ್ಕಿದ ಒಲೆ ತುಂಬಿತು
ಗಬ್ಬಿತನದಿಂದ ಗರತಿ ಜಾರೆಯಾದಂತೆ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./21
ಓಂಕಾರದ ಪ್ರಣಮದ ಮೂಲದಿಂದ
ವಸ್ತು ನಿರಾಳ ಪುಟ್ಟಿತು.
ನಕಾರದ ಪ್ರಣಮದ ಮೂಲದಿಂದ
ನಾದಬ್ರಹ್ಮದಲಿ ಆದಿಯಾಧಾರ ಪುಟ್ಟಿತು.
ಮಕಾರದ ಪ್ರಣಮದ ಮೂಲದಿಂದ
ವಿಶ್ವತೋಮಯ ವಿಶ್ವತೋಬಾಹು ವಿಶ್ವತೋ ಚಕ್ಷು ಪುಟ್ಟಿತು.
ಶಿಕಾರದ ಪ್ರಣಮದ ಮೂಲದಿಂದ
ಶಿಕ್ಷೆ ದೀಕ್ಷೆ ಮೋಕ್ಷಕೆ ರುದ್ರನಂಶ ಪುಟ್ಟಿತು.
ವಕಾರದ ಪ್ರಣಮದ ಮೂಲದಿಂದ
ವಿಷ್ಣು ಸ್ಥಿತಿ ಪುಟ್ಟಿತು.
ಯಕಾರದ ಪ್ರಣಮದ ಮೂಲದಿಂದ
ಯಥಾಬ್ರಹ್ಮ ತಥಾ ಉತ್ಪತ್ತಿ ಪುಟ್ಟಿತು.
ಸಹಕಾರ ಷಡು ಅಕ್ಷರದ ಪ್ರಣಮದ ಮೂಲದಿಂದ
ಸಮಸ್ತ ವಿಸ್ತೀರ್ಣ ಪೂರ್ಣವಾಯಿತು.
ಆ ಕಾಲ ಕಾಲ ಪರಿವರ್ತನೆಯಲ್ಲಿ
ಸದ್ಭಕ್ತ ಸಮಯ ಅಸಂಖ್ಯಾತರು ಪುಟ್ಟಿದರು.
ಆ ಅಸಂಖ್ಯಾತರಿಗಾಗಿ ಮೇಘಂಗಳಲಿ ಜಲ ಉದ್ಭವಿಸಿತು.
ಆ ಕಾರ್ಯ ಕಾರಣ ಅನುಭವಕ್ಕಾಗಿ
ಆದಿಯಲ್ಲಿ ಒಬ್ಬ ಶರಣ ಅನ್ನನಿಶುದ್ಧಿಯಾಗಿದ್ದ
ಆತನ ಆತ್ಮ ಸುಧೆಯಾಯಿತು.
ಅಕ್ಷುತ್ತಿಗೆ ಸಜ್ಜೀವಿ ಭಕ್ತಂಗೆ ನಿರ್ಜಿವಿ
ಭಕ್ತರು ತೃಪ್ತಿಗೆ ಆಹಾರವಾದರು, ಆ ಕಾಲ ಈ ಕಾಲ
ಆತನೆ ಅನಾಚಾರಿ, ಆತನೆ ಸದಾಚಾರಿ, ಆತನೆ ಶಿವಾಚಾರಿ.
ಆ ಕಾಲ ಸದ್ಭಕ್ತರ ಭಿನ್ನರುಚಿಗಾಗಿ
ಸಪ್ತ ಸಮುದ್ರಂಗಳು ಉದಯಂಗೈದವು.
ಆಕಾರ ಭಕ್ತಿ ನಿರಾಕಾರ ತೃಪ್ತಿ ಏಕೈಕ್ಯವಾಯಿತು.
ಆ ಭಕ್ತನ ನಿಡುಮಂಡೆ ಜಟಾಮಕುಟಕ್ಕೆ
ನಕ್ಷತ್ರವು ಪೂಮಾಲೆಯಾಯಿತು.
ಆ ಭಕ್ತ ನೋಡುವ ನೇತ್ರ ಚಂದ್ರಸೂರ್ಯರಾದರು.
ಆ ಭಕ್ತನ ನಡೆಪಾದತಳ ವಿಧಿಯ ಹೆಪ್ಪಿನಲ್ಲಿ ಪೃಥ್ವಿಯಾಯಿತು.
ಆ ಭಕ್ತನ ವದನೆಂಬೂದೇ ಮತ್ರ್ಯ, ಶಿರಸ್ಸುವೇ ಸ್ವರ್ಗ
ಆ ಭಕ್ತನ ಕಟಿಸೂತ್ರದಿಂದ ಗಂಗಾಸ್ನಾನಂಗಳಾದವು.
ಆ ಭಕ್ತನ ನುಡಿಪರುಷದಿಂದ
ತೆತ್ತೀಸಕೋಟಿ ದೇವರ್ಕಳು ಉದಯವಾದರು.
ಆ ಭಕ್ತ ಕೊಡುವೆಡೆಗೆ ಕೊಂಬೆಡೆಗೆ
ಅಸಂಖ್ಯಾತ ಗಣಾದಿಗಣಂಗಳು ಸಮ್ಮೋಹಿತವಾದರು.
ಆ ಭಕ್ತನ ಸಡಗರ[ಕ್ಕೆ], ಸಕಲ ಅನುಭವಕ್ಕೆ
ಸಚರಾಚರವಾದವು.
ಆ ಭಕ್ತನ ಒಡನಾಡಿ ಶಕ್ತಿ ಗಾಯತ್ರಿಯ ಮೂಲದಲ್ಲಿ
ಎಂಬತ್ತು ನಾಲ್ಕು ವರ್ಣಾಶ್ರಮಂಗಳು ಪುಟ್ಟಿದವು.
ಆ ಭಕ್ತನ ಷಡಾಧಾರ ಷಡುದರಿಸಿನ
ಷಡುಚಕ್ರ ಷಡುಸ್ಥಲಬ್ರಹ್ಮಿ
ಆ ಭಕ್ತನೆ ಕೂಡಲಚೆನ್ನಸಂಗನ ಬಸವಣ್ಣ
ನಮಸ್ತೇ ನಮಸ್ತುತೆ./22
ಓದುವುದು ಕುತರ್ಕ,
ಮೇದಾರನ ಕತ್ತೆಯಂತೆ ಕೆತ್ತುಗ ಪಾಶ
ಈದ ಹುಲಿಯಂತೆ ಇಮ್ಮನ ಇಕ್ಷು ಶಿಶುವಿಂಗೆ
ನಾದದ ಮೊದಲು, ಬಿಂದುವಿನ ನಡು, ಕಳೆಯ ಕಡೆಯನು
ವೇದದ ವಿಪ್ರಬಲ್ಲನೆ ಇಚ್ಛಾಶಕ್ತಿಯ ?
ಆದಿಯಾಧಾರದೊಳು ಅಖಂಡ ಬ್ರಹ್ಮಾಂಡ ಅಡಗಿಯವೆ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./23
ಓದುವುದು ಭಕ್ತಿಸ್ಥಲ
ಕಾದಿಹುದು ಕರ್ಮದ ಆಸೆ ಪಾಶ
ಉದರವಿಕ್ಕಿದಂತೆ ಹೊಟ್ಟೆಯೊಳು ಉಬ್ಬಸ ಉಬ್ಬಸ
ಮೇದರ ಕತ್ತಿಯಲ್ಲಿ ಕೆತ್ತಿದ ಸಿಬರಿನಂತೆ
ವಾದ ತರ್ಕ ಓದುವರೆ ಗಟ್ಟಿಯನೇನು
ಕಾಯ ಭೇದಕರಾಪರೆ ?
ಸಾಧ್ಯದ ಸ್ವಯ ಒಂದಾದರೆ ಸಲ್ಲದು ಸರ್ವತ್ರ.
ಭೇದವ ಮಾಡಿ ಕೆಟ್ಟುಹೋಗುವುದಕ್ಕೆ ಕೊಟ್ಟರು ಕ್ರೋಧವ.
ನಾದ ನಿಶ್ಚಳವಾದರೆ ಅದ್ವಿತಿ ಸಾಧ್ಯ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./24
ಕರ್ಮದಿಂದ ಧರ್ಮ, ಕ್ರಿಯದಿಂದ ನಿಃಕ್ರಿಯ ;
ವಣರ್ಿಸ ವಣರ್ಿಸ ನಿತ್ಯ ಕೃತ್ಯ.
ಧರ್ಮಕೆ ಅಧರ್ಮವೆ ಬುಡ
ಅಂಕರೂಪು ಮಾಳ್ಪುದು ನಿರ್ಮಳ ನಿರಾಧಿ ನಿರ್ಧರ ನಿತ್ಯಂಗೆ
ನಿರ್ಮೊಹಿ ಮೋಹಿ ನಿಮಿಷ ಜ್ಞಾನಿ ಅಜ್ಞಾನಿ
ನಿಮಿತ್ಯ ಕಲ್ಪನೆ ನಿರೂಪು ರೂಪು
ಭುಕ್ತಿ ಭಕ್ತಿ ಕರ್ಮಿಗಳೆಂದು ಕಾಬುದೆ
ಕರುಣ ಕೃಪೆ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./25
ಕಲಿಕೆಯ ಮಾತಿನ ಮಾಲೆಯ ನೀಲೆ ಸೀಲೆಗೆ
ನಿಲುಕದು ಸಂಗನ ಶರಣಸ್ಥಲ.
ಬಲಾತ್ಕಾರಕೆ ಬಡಿದು ಹಾಲನೆರೆದರೆ ಬಾಲತ್ವವಹುದೆ ?
ಯಲವದ ಮರದ ಎಲೆ ಹೂ ಸುಂದರ ಫಲಪದವಹುದೆ ?
ಕೊಲೆ ಆತ್ಮದಲಿ ಕೊನೆನಾಲಿಗೆಯ ಮೃದು ಕ್ರೋಧ…..
ಫಲ ನಿಃಫಲ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./26
ಕುರುವ ಹಿಡಿವರೆ ಗುರು ಕರಜಾತ.
ಅರುಹಿನ ಪಿಂಡಕ್ಕೆ ಮರವೆ ಸೋಂಕುವುದೇನಯ್ಯ ?
ವರಲಿಂಗ ಕರುಣದಿಂದ ವ್ಯರ್ಥವೆ ಅರ್ಥವಾಯಿತು.
ಪರಮ ತೃಪ್ತ ತಾನು ತಾನಾದ ಬಳಿಕ ಪರಿಕ್ಷುಪ್ತವುಂಟೆ ?
ವರಕೃಪೆಯುಳ್ಳ ವಸ್ತುವಿನ ವಚನವಂತಗೆ ಸಲ್ಲದು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./27
ಕುಲ ಅಕ್ಕುಲವೆಂಬ ಕುಮಂತ್ರಿಗಳ ಕೇಳಿರೈ
ಕುಲಜನ ಮೈಯಲ್ಲಿ ಹಾಲು, ಅಕ್ಕುಲಜನ ಮೈಯಲ್ಲಿ ರಕ್ತವಿಪ್ಪುದೆ ?
ಕುಲಭೇದವ ಮಾಡುವ ಅನ್ಯಾಯಿಗಳಿರಾ
ಕಲಿಕೆಯ ಮಾತು ಕಾತುರ ಭೂತ ಪ್ರಾಣಿಗೆ ಸೂತಕ
ಕುಲಮಲ ಭಾಂಡ ಮಾರ್ಗವೊಂದು
ಮೂತ್ರ ಕುಕ್ಷೆಯಿಂ ಪುಟ್ಟಿ ಮಾಯ ಮೋಹ ಬಿಲದ್ವಾರದೊಳು
ಸಿಳ್ಳಿ ಸಿಂಬಳ ಕುಗಿನಿ ಕಿಣಿ ಜಲ ಮಲ
ಕುಲಜ ಅಕ್ಕುಲಜನೆಂಬವನೆಂತು ? ಇಪ್ಪ ಕುರುಹ್ಯಾವುದು ?
ಸಲೆ ಶಿವನೊಪ್ಪಿದುದೆ ಕುಲ, ಒಪ್ಪದುದೆ ಅಕ್ಕುಲ.
ಬಟ್ಟೆಯೊಳು ಸಿಕ್ಕದೆ ಬಯಲ ಅಹಂ ಗರ್ವಮಂ ಬಿಟ್ಟ
ಚನ್ನನ ಕುಲಕೆ ಸರಿಯಲ್ಲ ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ./28
ಕುಲಪಾಶ ಮಲಪಾಶ ಜಲಜಾಡ್ಯ
ಹಲವು ಪಾಶವಾಸೆಯಲ್ಲಿ
ಉಲಿವುತಿದೆ ಶ್ವಾನನಂತೆ,
ಉಭಯದ ಹಳಗಕ್ಕೆ ಎಲೆ ಮಾನವ ಎತ್ತಣ ಭಕ್ತಿಯೊ ?
ವ್ಯಾಕುಳ ಬಿಡದು ; ಕಲಿವರೆ ವಚನದಂತೆ ಅದೆ ;
ಕಲಿವರೆ ಬೋಧೆಯಂತೆ ಅದೆ
ಸುಲಭದಿಂದ ಸಿಕ್ಕುವುದು ಸದ್ಗುರುವಿನ ಕೃಪೆಯಿಂದ ಭಕ್ತಿ ,
ಬಲ್ಲೆ ಬಲ್ಲೆನೆಂಬವರು ಬಲು ಸೂರೆಹೋದರು ಬಯಲಹಮ್ಮಿನಲ್ಲಿ
ಸಲುವುದು ನಿಮ್ಮ ಸಂಗನ ಶರಣರು
ಭಕ್ತ ಪಾಶವಂ ಹರಿಯಲು ಸಾಧ್ಯವು ಭಕ್ತಿ
ಕುಲಮಲಪಾಶದವೊಳಗೆ ಹೊರಳುವ ಕುನ್ನಿಗೆ
ಕುರುಹ್ಯಾಕೆ ಅರುಹ್ಯಾಕೆ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./29
ಖಂಡ ವಚನವ ಕಲಿತರೇನಯ್ಯ ?
ಕಂಡುದ ಬಿಡ, ಕೊಂಡುದ ಕೊಡ.
ಉಂಡಮನೆಗೆರಡ ಬಗೆವುದು ಬಂಡರಮತ.
ಹಂಡಿಗನ ವಗತನದಂತೆ ಹೋಯಿತ್ತು ಘಹೋಘೆಯಿತ್ತೆಂಬರು.
ಚಾಂಡಾಲರು ನುಡಿವರು ನಡೆಯರು
ಕಂಡದ್ದಾಡಿ ಖಂಡಿಸಿಕೊಂಬರು ಕರ್ಮಧರ್ಮವ.
ದಿಂಡೆಯರ ಸಂಗವ ಮಾಡುವುದು ದಿಕ್ಕುಗೇಡು
ಬಂಡು ಆಪುದು ತಪ್ಪದು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./30
ಖಂಡಿತವಂ ನುಡಿವುದು,
ಕರ್ಮ ಧರ್ಮವ ಕಂಡು ನಡವುದು.
ಮಂಡೆ ಮಾಸಿದರೆ ಮಿಂದಂತೆ
ಮನದ ಮಲಿನ ಬಿಡುವುದು.
ಕಂಡರೆ ಕಣ್ಣ ಮುಚ್ಚುವುದು
ಪರಧನ ಪರಸ್ತ್ರೀ ಪರನಿಂದ್ಯ.
ಉಂಡು ಉಣ್ಣದೆ, ಬಳಸಿ ಬಳಸದೆ, ಬೈದು ಬಯ್ಯದೆ
ಕೆಂಡದಪರಿ ಆರಿದರೆ ಆರಿದಂತೆ, ಉರಿದರೆ ಉರಿದಂತೆ
ಬೆಂಡಗುಂಡಿಗೆ ಕಟ್ಟಿದಂತೆ ಇರಬೇಕು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./31
ಗುರು ತೀರ್ಥಪ್ರಸಾದ ಅರುಹಿನಘಟ್ಟಿ
ದೊರಕೊಂಬುದೆ ನರಕೀಲಕರಿಗೆ
ಬರಿಯ ಮಾತಿನಮಾಲೆ ಕೊಳುಕೊಡೆಯಲ್ಲವು.
ಕರವೆತ್ತಿ ಕೊಟ್ಟಾತ ಗುರುವಲ್ಲ ; ಕೊಂಡಾತ ಶಿಷ್ಯನಲ್ಲ.
ನಿರುತ ನಿಜಗೊಹೇಶ್ವರನಲ್ಲಿ
ಬೆರದು ಕೊಂಬುದು ತೀರ್ಥ;
ಅರಿತು ಕೊಂಬುದು ಪ್ರಸಾದ.
ಮರೆಯಿದು ಮಾಟ, ಮತ್ರ್ಯದ ಕೂಟ, ಮತಿಗೆ ಬೇಟ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./32
ಗುರುಭಕ್ತಿಸ್ಥಲ ತತ್ವಜ್ಞಾನವು
ಅರುಹುತರಿಗಲ್ಲದೆ ದೊರಕುವುದೆ ?
ದೂರಣ ಮಾರ್ಗಕೆ ಕರಿ ಕನ್ನಡಿಯೊಳಡಗಿರದೆ ?
ಕಾರ್ಯಕಾರಣ ಪರುಷ ಪಾಷಾಣದೊಳಗಿದ್ದರೇನು ?
ಪಾಷಾಣದ ಮಗನೆ ?
ಗುರುಸ್ಥಲದರುಹು ನರಜೀವನದವರಿಗೆ ಸಿಕ್ಕದು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./33
ಗುರುಲಿಂಗ ಜಂಗಮವೆಂಬರಲ್ಲದೆ
ಅರಿವುದಕ್ಕೆ ಒಬ್ಬರೂ ಇಲ್ಲವಯ್ಯ.
ಕರುವ ಕಟ್ಟಿ ಎರದಲ್ಲದೆ ಕಂಚಿನ ಸ್ವರೂಪು ಅಪ್ಪುದೆ ?
ಸ್ಥಿರಚಿತ್ತದಿಂದ ಜೀವನೆ ಪರಮ,
ಪರಮನೆ ಜೀವನೆಂದು ಅರಿವುದು.
ಪರಿಪೂರ್ಣವಪ್ಪುದೇ ವಿರಹಿತ ಲೋಕಕ್ಕೆ ?
ಅದಲ್ಲದೆ ಏಕವಾಕ್ಯನು ಅಲ್ಲ
ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ
ಪ್ರಸಾದಲಿಂಗ ಮಹಾಲಿಂಗ ಪ್ರಾಣಲಿಂಗ ಸಂಗ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./34
ಗುರುವ ತನ್ನೊಳಗರಿವುದು ಗುಪ್ತಜ್ಞಾನವಯ್ಯ.
ಪುರೋಹಿತನಾಗುವುದು ಅಂಗದ್ವಾರಕ್ಕೆ.
ಪುರುಷಾರ್ಥ ಮರುಳುಗಳು ಎತ್ತ ಬಲ್ಲರು
ಮಂತ್ರ ಉಪದೇಶವ ?
ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ
ಅರುಹಿತರಿಗುಂಟಲ್ಲದೆ ಅನಂಗಿಗುಂಟೆ ?
ಗರಿಯಿಲ್ಲದ ಅಂಬ ಹೆದೆಯಿಲ್ಲದ ಬಿಲ್ಲಿನಲ್ಲಿ
ಸ್ವರವಂದಿಗನಿಲ್ಲದೆ ಎಚ್ಚಂತೆ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./35
ಗೊಹೇಶ್ವರಲಿಂಗವೆಂಬ
ಭೇದ ಭೇದಾದ್ವೈತ ಬಾಹ್ಯಾಚಾರವಿಡಿದು ನಡೆವ
ಬಸುರಿಗೇಕೋ ಗೋಹೇ ಗುಪ್ತವು ?
ಲಿಂಗವಿಪ್ಪವು ಜಂಗಮ ಸುಪ್ತವು.
ವಾಯು ಉದ್ಧರಣ ಉತ್ತರ ಪ್ರತಿ ಉತ್ತರ ಉಭಯದ ಮಧ್ಯವು.
ಮಾಯವಾದಿಗಳೆತ್ತ ಬಲ್ಲರೈ ಮಂತ್ರಪಿಂಡವ ?
ಐಕ್ಯ ಗೊಹೇಶ್ವರ ಸಾಹಿತ್ಯ ಈಶ್ವರ ತ್ರಾಹಿ ತ್ರಾಹಿ
ಅನುಭವ ಆಧ್ಯಾತ್ಮ ಅಖಂಡ ಬ್ರಹ್ಮಾಂಡ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./36
ಗ್ರಂಥವಾಕ್ಯ ಗರ್ವದ ಮಾತು
ಅಂತರಾತ್ಮದ ಸ್ವಯಖ್ಯಾತೇಕೊ ?
ಪ್ರಕೃತಿ ಪಲ್ಲಟವಂತಸ್ತ ವಂತಸ್ತ
ಆತ್ಮ ಅಧ್ಯಾತ್ಮ ಭ್ರಾಂತು ಭ್ರಮಿತ ಭಕ್ತನೆ ಕುತರ್ಕಿ
ಗ್ರಂಥಾತ್ಮಿ ಐಕ್ಯ ಗ್ರಂಥಾತ್ಮಿ ಪ್ರಕಟ
ಗ್ರಂಥಗೋಷ್ಠಿ ಪ್ರಸಂಗದೊಳಗಲ್ಲ
ಪಂತಿ ಪತ್ರಾರ್ಥ ಅಕ್ಷರ ನಿರಕ್ಷರ ಗ್ರಂಥಾಕ್ಷರ
ಗಮನ ನಿರ್ಗಮನ ಏತ್ವೈತ್ವ ಇಂತಪ್ಪ ಅಕ್ಷರ ಗ್ರಂಥವಂತು
ನಿಮ್ಮ ಶರಣಂಗೆ ಸಾಧ್ಯ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./37
ಜಂಗಮಕೆ ಜನನ ಮರಣವುಂಟೆ ?
ಸಂಗಯ್ಯ ಸಂಗದೋಷವು.
ನಾನು ಎಂದ ಕಾರಣದಿಂದ ನರಕಪ್ರಾಪ್ತಿ.
ಭೃಂಗ ಪುಷ್ಪದ ಕುಸುಮಕ್ಕೆರಗುವುದಲ್ಲದೆ
ಕೇಸರಿಗೆರಗುವುದೆ ?
ಬಂಗಾರ ಮಣ್ಣಿಂದ ಪುಟ್ಟಿತ್ತು
ಮಣ್ಣ ಕೂಡುವುದೆ ?
ಹಿಂಗಡಿಸಬಹುದೆ ತ್ರಿವಿಧವ ?
ವಿಷ ಪಾತಕವ ಶೃಂಗಾರಕ್ಕೆ ಕಟ್ಟಿಬಿಡುವ
ಸಂಬಂಧಿಗಳಿಗೆ ಕಷ್ಟವೆಯಟ್ಟಿತು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./38
ಜ್ಞಾನಸ್ವರೂಪು ಮಾನವಸ್ವರೂಪಿನೊಳು ಅಡಿಗಿದ್ದ
ಪರಿಯೆಂತು ಹೇಳಾ ?
ಮಾನೀಶಂಗೆ ಮಾಯವಿಲ್ಲದಿರೆ ಮತ್ತೆ
ಉತ್ಪತ್ತಿ ಸ್ಥಿತಿಲಯವಿಲ್ಲ .
ಜ್ಞಾನಕ್ಕೆ ಅಜ್ಞಾನವಾದಿ, ಮನಕ್ಕೆ ನಿರ್ಮನವೆ ಆದಿ.
ಸ್ವಾನುಭಾವ ಕ್ಷಣ ಚಿತ್ತ ಕ್ಷಣದುಶ್ಚಿತ್ತ ಇನಿತು ಅಂತಸ್ತ
ಮಾನೀಶಂಗೆ ಒಂದೆ ಬುಡ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./39
ತತ್ವ ಅಂತರಂಗ ತರಂಗ ತರಂಗ ತೃಪ್ತ
ನಿತೃಪ್ತ ನಿರಾಲಂಬ ತೃಪ್ತ ನಿರಾಳ ನಾಳ
ಭಕ್ತಾತ್ಮ ಅಘ್ರ್ಯ ಅನಘ್ರ್ಯ ಅಪರಿಮಿತ ಅನಘ್ರ್ಯ
ತತ್ವ ಪಂಚ ಪಂಚವಿಂಶತಿ
ಸತ್ಯಷಡುಸ್ಥಲಬ್ರಹ್ಮ ಸಾಧ್ಯ ಅಸಾಧ್ಯ
ನಿತ್ಯ ಗೊಹೇಶ್ವರಲಿಂಗ ನಿಶ್ಶೂನ್ಯ ನಿಶ್ಶೂನ್ಯ
ಮುಕ್ತ ಮುಖಪ್ರಕಾಶ ಐಕ್ಯಸ್ಥಲ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./40
ತತ್ವದ ಮಾತು ತೊತ್ತು ಮಾರಿಗಳಿಗ್ಯಾತಕಯ್ಯ ?
ಭಕ್ತಿಯೆಂಬುದು ಸಾಮಾನ್ಯರ ಪಕ್ಷವೆ ?
ಮಿಥ್ಯವ ಮನದಲ್ಲಿ ಇಟ್ಟವನ ಸತ್ಯವ ಸುಡು.
ಹುತ್ತಿನಲ್ಲಿ ಬಂದು ಸತ್ತರೆ ಹಾವಿನ ಕೊಲೆ
ಉತ್ತಮ ಮಧ್ಯಮ ಹೊಂದಲು ಉತ್ತಮಗೋಟ.
ಸತ್ತಲಿ ನಿಂದರೆ ದುಃಖ, ಹೆತ್ತಲಿ ನಿಂದರೆ ಮೋಹ
ಹತ್ರಹೊಂದಬಾರದು ಈ ಮೂರ್ಖ ಸಮೀಪಕ್ಕೆ
ಭಕ್ತರಂಗವ ಬಳಿವ ಕಸಬರಿಗೆಯಾಗಬಹುದಲ್ಲದೆ
ವ್ಯರ್ಥರ ಕೂಟ ಸಲ್ಲದು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./41
ತತ್ವಭಕ್ತಿ, ತತ್ವಮುಕ್ತಿ,
ತತ್ವ ಉತ್ಪತ್ಯದ ತನು ಸಾರಾಯ
ತತ್ವವೃಕ್ಷದಿಂದ ಪುಟ್ಟಿದವು.
ಎಂಬತ್ತು ನಾಲ್ಕು ಲಕ್ಷ ಸಂಕಲ್ಪವೆಲ್ಲ ತತ್ವಾದಿಗಳು.
ಯಾತಕ್ಕೆ ಭೇದವ ಮಾಳ್ಪಿರಯ್ಯಾ ?
ಪೃಥ್ವಿ ಪೃಥ್ವಿಯ ಕೂಡಿತು
ಅಪ್ಪು ಅಪ್ಪುವ ಕೂಡಿತು
ವಾಯು ವಾಯುವ ಕೂಡಿತು
ಆಕಾಶ ಆಕಾಶದೊಳು ಸಹಕಾರ್ಯವಾಯಿತು.
ಆ ಭಕ್ತನ ವಿಭೇದವಿಲ್ಲದ ಕಾರಣದಿಂದ
ಶರೀರ ಭಿನ್ನವಾಗದು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./42
ತನ್ನ ತಾನರಿವುದೆ ಉತ್ತಮ ಶರೀರ.
ಇನ್ನು ಹೇಳಿದರೆ ಕೇಳುವದೇ ಮಧ್ಯಮ ಶರೀರ.
ಮನ್ನಿಸದೆ ಅಗ್ನಿಗೆ ಬೀಳುವುದೆ ಕನಿಷ್ಠ ಶರೀರ.
ಹೊನ್ನಿನ ಬಣ್ಣಕೆ ಇವು ಮೂರು ಬಣ್ಣ ಹೆಚ್ಚು.
ಅನ್ನವ ದಂಡಿಸಿಕೊಂಬುದೆ ಅಧಮ ಜಾತಿ,
ಮನ್ನಣೆಯಿಂದ ನೀಡಿದ್ದ ಕೊಂಬುದೆ ಮಧ್ಯಮ ಜಾತಿ,
ಇನ್ನು ಯಾರನು ಬೇಡದೆ ಕೃಷಿಯ ಮಾಡಿ ಉಂಬುದೆ ಅಪೂರ್ವಜಾತಿ.
ಹನ್ನೊಂದು ಪರಿ ಉದ್ಯೋಗ ಉಂಟು.
ಕರ್ಮಧರ್ಮವ ಸೋದಿಸಬಲ್ಲರೆ ಅನ್ಯಾಯಹತ್ತರ
ಮೇಲು ಧರ್ಮಕಾಯಕ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./43
ತನ್ನ ಧರ್ಮಕೆ ನೀಡಿಸುವ
ಅನ್ನ ಉದಕ ಅರವಟ್ಟಿಗೆ ಕೆರೆ ಬಾವಿ
ಉನ್ನತವಿತ್ತವಿತ್ತ, ಮನದಂತೆ ಮಾಂಗಲ್ಯ
ಘನಮಹಾಲಿಂಗವು ನನ್ನದು ತನ್ನದು ಎಂಬ ಭಿನ್ನಭಾವದ
ಭ್ರಾಂತು ಭವಿಗಳು ಅನಿತ್ಯವೆಂಬರು.
ಸೊನ್ನಾರಿಯಲ್ಲಿ ಹುಟ್ಟಿದ ಹೊನ್ನು ಸೊನ್ನಾರಿಯ ಮಗನೆ ?
ಉನ್ಮತ್ತದಲ್ಲಿ ಹುಟ್ಟಿದ ಹೆಣ್ಣು ಉನ್ಮತ್ತದ ಮಗಳೆ ?
ತನ್ಮಯದಲ್ಲಿ ಹುಟ್ಟಿದ ಮಣ್ಣು ತನ್ಮಯದ ಮಗನೆ ?
ಸನ್ಮನ ಮೂರರ ಮಾಯವೆ ಅಭ್ರಚ್ಛಾಯೆ
ಗೊಹೇಶ್ವರಲಿಂಗನ ಉಪಾಯವು.
ನನ್ನದು ನಿನ್ನದುಯೆಂದು ಹೋರಾಡುವ
ಅನ್ಯಾಯಿಗಳ ಮಾತಕೇಳಲಾಗದು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./44
ತನ್ನ ಸತಿ ತನ್ನ ಕಾಯಕ ಕೃಷಿಯಲ್ಲದೆ
ಅನ್ಯಾರ್ಥವ ನೋಡಿ ಗ್ರಹಿಸದಾತನ ನೋಟವೆ ನೋಟ.
ಇನ್ನು ಶಿವಸ್ತುತಿಯಲ್ಲದೆ ನರಸ್ತುತಿಯ ಕೇಳ್ದುದೆ ಕರ್ಣ.
ಉನ್ನತದುರ್ಗಂಧ ಹೊಂದದೆ ಸುಗಂಧ ತೃಪ್ತಿ ವಡವುದೇ ನಾಸಿಕ.
ತನ್ನ ತಾನು ಅರಿತು ಒಬ್ಬರ ಬೇಡದೆ ನಿಂದ್ಯವ ಬಿಟ್ಟದ್ದೆ ಜೆಹ್ವೆ.
ಮುನ್ನ ತಾ ಈ ನಾಲ್ಕು ಮುಕ್ತಿ ಬೇಕಾದವರು
ಇಂತಪ್ಪುದ ಮನ್ನಿಸೂದು.
ಈ ನಾಲ್ಕು ಶುದ್ಧಯಿಲ್ಲದವರ
ಅನ್ಯಾಯಿಗಳನೊಪ್ಪುವರೆ ನಮ್ಮ ಸಂಗಯ್ಯನ ಶರಣರು ?
ಇನ್ನು ಅನ್ಯಾಯಿಗಳಿಗೆ ಪ್ರಳಯ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./45
ತನ್ನ ಸತಿಯಂ ಬಿಟ್ಟು ಅನ್ಯ ಸತಿಗೆರಗುವ
ಕುನ್ನಿ ನಾಯ ಮುಖವ ನೋಡಲಾಗದು.
ಬಿನ್ನಾಣ ಮಾಡಿದ ರೂಪಿನೊಳು ಶಿವನಿಪ್ಪನೆ ?
ತನ್ನ ಸತಿ ತನ್ನ ಅಂಗ, ಅನ್ಯ ಸತಿ ಅನ್ಯರಂಗ
ಮುನ್ನವೆ ಪ್ರತಿಗೆ ಪ್ರತಿಯಿಟ್ಟರು ಸತಿ ಪತಿಯ
ತನ್ನ ಧನ ತನ್ನ ಸತಿ ತನ್ನ ಮಕ್ಕಳ
ಇನ್ನೊಬ್ಬ ಕೊಂಡು ಪೋಪಾಗ ಸುಮ್ಮನೆ ಇಪ್ಪನೆ ?
ತಿನ್ನ ಬಂದುದ ತಿನ್ನಬೇಕಲ್ಲದೆ ತಿನ್ನದ ತಿಂಬರೆ ?
ಮುನ್ನಲೆ ಪರದ್ವಾರದಿಂದ ದಶಶಿರ ರಾವಣನ ಶಿರ ಹೋಯಿತ್ತು.
ಅನ್ಯಾಯದಿಂದ ಕೆಟ್ಟರು ಅನಂತ ಸಮರ್ಥರು,
ಇನ್ನವರಿಗೆ ಜಲ್ಮವಿಲ್ಲ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./46
ತೆಂಗು ತಿಳಿದಂತೆ ಅಂತರಂಗವ ತಿಳಿವರು
ಕಣ್ಣು ಮೂರುಳ್ಳವರು.
ಬಾಹಿರಂಗಕ್ಕೆ ಉಂಬರೆ ಲಿಂಗವೆ ಒಡಲಾಗಿ
ನಿರತಂಗವೆ ಅಡಿಯಾಗಿ
ಸಂಗಂಗೆ ಸಮರ್ಪಿಸಬಲ್ಲಾತ ಸರ್ವಾಂಗಲಿಂಗಮಯ.
ಬಂಗಾರದೊಳು ಮೃದು ಕುಂದಣ ಕಟ್ಟಾಳು ಕೀಳು ಆದಂತೆ
ತನ್ನ ಅಂತರಂಗವ ತಿಳಿವುದೆ ಕಾರಣ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./47
ತ್ರಿಗುಣಾತ್ಮ ತ್ರಿಸಂಧ್ಯಾಕಾಲದ ಪ್ರವರ್ತನೆಯಲ್ಲಿ ವೇದಿಸಿ,
ತ್ರಿವಿಧ ಶುದ್ಧ ಸಿದ್ಧ ಪ್ರಸಿದ್ಧವ ಪ್ರಮಾಣಿಸಿ,
ತ್ರಿಭುವನ ಏಕವಾದ ಲಿಂಗ ತಾ ತಲ್ಲಿಂಗ ಜಂಗಮ.
ಸನ್ಮತ ಗುರು ತ್ರಿಶೂಲ, ಆಣವಮಲ ಮಾಯಾಮಲ
ಕಾರ್ಮಿಕಮಲತ್ರಯವಂಬುಧಿ
ತ್ರಿಪುಂಡ್ರ ತ್ರಿಣಾಮಲದಲಿ ಧರಿಸಿ,
ತ್ರಿಯಕ್ಷರ ಪ್ರಮಾಣ ಉಚ್ಚರಿಸಿ,
ಊಧ್ರ್ವದಲ್ಲಿ ನಿಲಿಸಿ ತ್ರಿವಿಧನ ಕಾಣಬಲ್ಲರೆ
ತ್ರಿಭಾಗದೊಳು ಷಡ್ಭಾಗವಾಪುದು,
ತ್ರಿಕಾಲಜ್ಞಾನಕ್ಕೆ ಕೆಂಡ ಜ್ಞಾನ ಕಾಣಯ್ಯ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./48
ದರಿದ್ರವನು ಅನುಭವಿಸಿದಲ್ಲದೆ
ವೀರಧೀರತ್ವಗಳು ಅಳವಡದು.
ಕಾರಿದ ಕೂಳಿಗೆ ಕೈಯ್ಯಾಂತಲ್ಲದೆ
ಕರುಣಪ್ರಸಾದ ಸಿಕ್ಕದು.
ಮೂರ ಮಾರಿಸಿಕೊಂಡಲ್ಲದೆ
ಮಂತ್ರಪಿಂಡವಾಪುದೆ ?
ದೂರ ವಿಚಾರಿಸಿ ನೋಡಿದಲ್ಲದೆ
ದುಃಖವಡಗದು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./49
ದಾನಧರ್ಮ ಪರೋಪಕಾರ ದಯ ದಾಕ್ಷಿಣ್ಯ
ದೀನತನದಲಿ ಗಳಿಸುವುದು ಸ್ವಯ.
ನಿರ್ದಯ ದಾಕ್ಷಿಣ್ಯ ಮಾನೀಶಗ್ಯಾತಕು ?
ದಾನಧರ್ಮ ಪರೋಪಕಾರ ಅನಂತ ಕಲ್ಪನೆಗೆ ಕೊಟ್ಟ ಕ್ಷುಪ್ತಿತೃಪ್ತಿ
ಪ್ರಾಣಕೆ ಪಡಿಯ ನಾ ನೀಡಿದೆ ನಾ ಮಾಡಿದೆನೆಂಬ
ಅಹಂ ಗರ್ವದಿಂದ ನಾನಾ ದೇಹಮೆ ಪ್ರಾಪ್ತಿ.
ನಾನಾ ಯೋನಿಗೆ ಸ್ನಾನ ದೇಹವ ತಾಳಿ ಬಂದು
ಕೂಟಮಾಟದೊಳು ಮುಖದಿರುಗಿದಂತೆ
ಏನ ಮಾಡಿದರಿಲ್ಲ ನಿನ್ನ ಕೃಪೆಯಿಲ್ಲದೆ.
ನಾನುಯೆಂಬ ಜಲ್ಮ ನರಕ ತಪ್ಪದು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./50
ದಾನಧರ್ಮ ಪರೋಪಕಾರವೆಂಬ[ವ]
ಹೀನ ಮರುಳರು ಎತ್ತ ಬಲ್ಲರಯ್ಯ ?
ದೀನನಾರು ? ದಾನದಾರು ?
ಮಾನಿತ ಜ್ಞಾತ ಕೈಯಪರ ಉಪಕಾರ
ಬಾನದ ಕುರುಳೊಳು ಚೇಳಹಾಕಿ ಮಡಗುವರೆ ?
ಜ್ಞಾನದ ವಾಕ್ಯವಲ್ಲವು.
ನಾನು ನೀನುಯೆಂಬ ಧೇನುಕರ ಮಾತಿಗೆ
ಮೇಘಸುರಿಯುತಿದೆ ಬೆಳೆ ಬೆಳೆಯುತಿದೆ
ನಾ ನೀಡಿದೆ ನಾ ಮಾಡಿದೆ, ನಾ ಬೇಡಿದೆನೆಂಬ ಜನ್ಮಕೆ
ನರಕ ತಪ್ಪದು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ/51
ದಿನಚರಿ ವಾಲಿಯದಿನ ಅನುಭವದಲ್ಲಿ ಚರಿಸಿ
ಮನೋರಾಜನ ಮಂದಿರದ ಮಾರ್ಗವಿಡಿದರೆ
ದಿನಚರಿಗೆ ದಿನಚರಿಗೆ ಅಧಿಕ ಸ್ವರೂಪ
ದಿನವೊಂದಕ್ಕೆ ಧನಿಕರೆಷ್ಟು ಯಚ್ಚವ ಮಾಡಲೇನಯ್ಯ ?
ಕನಕದ ಮಯ ಕುಂದುವುದೆ ?
ದೀನ ವಚನದ ನೀತಿ ಅನರ್ಪಿತ ಅನಿತ್ಯ
ಎನಗೊಂದು ತೋರಿದ ವಚನವೇ ಮಾರ್ಗಾತೀತ
ಅನಾಥ ವಸ್ತುವನಾರು ಬಲ್ಲರಯ್ಯ ?
ಅನಿಲದಂತೆ ಅಡರುವ ಮನದೊಳು ಹೊಳದಂತೆ
ಅಳಿವುಳಿವ ಎನಗೊಂದು ಸ್ಥಾಪ್ಯವ ಮಾಡಿದ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./52
ದ್ವಂದ್ವವು ಜೀವನ ಕಾಯಕ್ಕೆ ಒಂದಲ್ಲ ಅನಂತ ಆಸ್ಕರ.
ಚಂದ್ರಾರ್ಕ ಹುಟ್ಟು ಹೊಂದು ಹೋಹುದು, ಬಪ್ಪುದು ;
ಒಂದನೆ ತಿಳಿವುದು ಸದ್ಬಿಂದು ಬೀಜ ಸಹಜವ.
ಮುಂದಣ ಸ್ಥಿತಿ ಹಿಂದಣ ಭವ.
ಅಂದಿಗಂದಿಗೆ ಕಾಬುದು ಅಗಣಿತಗಣಿತ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./53
ಧನ ಧಾನ್ಯ ಅಷ್ಟಮಹದೈಶ್ವರ್ಯದೊಳು
ಮನ ಹೀನನಾಗಿ ಮಾರ್ಗತಪ್ಪಿತು.
ಬೆನಕನ ಮದುವೆಯಂತೆಯಾಯಿತು.
ಇಂದು ನಾಳೆಯೆಂಬ ಸಂದೇಹಮಾತ್ರದಿಂದ
ವನಿತೆ ಸುತ ಮಿತ್ರ ಕಳತ್ರಯದಿಂದ ಅನಾಚಾರ ಹೊಂದಿತು.
ಮುನಿವ ವೈರಿಯ ಕೈಯ ಚಂದ್ರಾಯುಧದ ಮೊನೆಗೆ
ಇದಿರು ಆದಂತಾಯಿತು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./54
ನಾನು ನೀನುಯೆಂಬ ಸಂದೇಹ
ನಕಾರದೊಳು ಪುಟ್ಟಿತಯ್ಯ.
ಜ್ಞಾನ ಅಜ್ಞಾನವೆಂಬುದು ಎರಡು
ಕೊನೆ ಬುಡ ನಂಬಿಗೆ ಅಪನಂಬಿಗೆ
ಧ್ಯಾನಾರೂಢದಲಿ ಅಜ್ಞಾನವೆಂಬ ಅಂಕುರವ ಚಿವುಟಬಲ್ಲರೆ ?
ಮಾನ್ಯಗೆ ಅಂಧ ಕಾವಳ ಹರಿ[ಹರಿ]ದು ಅಹಂಕಾರವಳಿವುದು
ಮನ ಅನುಮನವೆಂಬ ಮರೆ ತೆರೆ ಮಾಯಪಾಶ ಹರಿ[ವುದು]
ಬೇನೆ ಬಂದರೆ ಶರೀರಕ್ಕೆ ಲಘುವಾದಂತೆಯಾಯಿತ್ತು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./55
ನಾನು ಭಕ್ತ , ನಾನು ಮಹೇಶ್ವರ,
ನಾನು ಪ್ರಸಾದಿ, ನಾನು ಪ್ರಾಣಲಿಂಗಿ,
ನಾನು ಶರಣ, ನಾನು ಐಕ್ಯನೆಂಬುದು ಅಜ್ಞಾನವಾಕ್ಯ.
ವಾನರ ವನದೊಳಗಿದ್ದರೆ ಹನುಮನೆನಬಹುದೆ ?
ಶ್ವಾನ ಬೂದಿಯೊಳು ಹೊರಳಿದರೆ ಭಸ್ಮಾಂಗಿಯಹುದೆ ?
ಮಾನವರೆಲ್ಲ ಭಕ್ತರಾಪರೆ ?
ಮರನೆಲ್ಲ ಗಂಧ ಚಂದನವಾಪುದೆ ?
ಬಾನದ ಕುರುಳ ಸುಟ್ಟ ಬೂದಿಯಲ್ಲಿ ಭಸಿತವಾಪುದೆ ?
ನಾನು ನೀನುಯೆಂಬ ವಂತಿನ ಸಂತೆಗೆ ಜ್ಞಾನವಳವಡದು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./56
ನಾನುಯೆಂಬ ಅಕ್ಷರದ ಮೊದಲ
ಏನೆಂದು ಬಲ್ಲರಯ್ಯ ?
ಕಾನನದೊಳು ಪುಳುವಿರಲು
ಜಲಮಲ ಪುಳುವಿಗೆ ಮರಣ.
ಜೇನುಯೆಂಬುದು ಹುಟ್ಟು ಹೊಂದಿನ ಜೀವನ ಅವಸ್ಥೆಯ
ನಾನಾ ವಿಧ ಮಧು ಬಂದು ಉದಯವು.
ಪುಟ್ಟುವೇ ಒಂ ನಮೋ ಎಂಬ ಮೂರಕ್ಷರ ಜ್ಞಾನಿಗೆ ತಿಳಿವುಂಟು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./57
ನಾನೆಂಬ ಬ್ರಹ್ಮನ ನುಂಗಿದಳು ಮಾಯೆ.
ನಾನೆಂಬ ವಿಷ್ಣುವ ನುಂಗಿದಳು ಮಾಯೆ.
ನಾನೆಂಬ ರುದ್ರನ ನುಂಗಿದಳು ಮಾಯೆ.
ಅಜ್ಞಾನ ತ್ರಿವಿಧವ ನುಂಗಿ ನಯನದೊಳು ಬೊಂಬೆಯಾದಳು ಮಾಯೆ.
ನಾನೆಂಬ ಮಾಯವನು ನುಂಗಿ ಗೊಹೇಶ್ವರ ಅಭ್ರಛಾಯವಾದನು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./58
ನಿತ್ಯ ವೈರಾಗ್ಯದಿಂದ ದೊರಕೊಂಬುದು ಭಕ್ತಿಸ್ಥಲ.
ತತ್ವ ವೈರಾಗ್ಯದಿಂದ ದೊರಕೊಂಬುದು ಐಕ್ಯಸ್ಥಲ.
ಚಿತ್ತವೃತ್ತಿಯಲಿ ತಿಳಿದು ಕಾಬುದು ಚಿತ್ಪ್ರಕಾಶವ
ರತ್ನಪರೀಕ್ಷೆಯ ರಾಜಾಧಿರಾಜ ಬಲ್ಲನಲ್ಲದೆ
ರಾಕ್ಷಸರೆತ್ತ ಬಲ್ಲರಯ್ಯ ?
ಕೃತಯುಗದಿಂದತ್ತತ್ತ ಜ್ಞಾನ, ಇತ್ತಿತ್ತ ಅಜ್ಞಾನ
ನಿತ್ಯಜ್ಞಾನ ಅವಿರಳ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./59
ನಿರಾಕಾರದೊಳು ನೀರಬೀಜವಮಾಡಿ
ಆರಿಸಿ ಘಟ್ಟಿಗೊಳಿಸಿ ಅರುಹಿದೆ ಸಕಲಕ್ಕೆ.
ಈ ನಾರ. ಗನರ ತಂತ್ರಕ್ಕೆ ಇಟ್ಟಿದಲ್ಲಿ ಮೀರಿದ ಸ್ವಯವು.
ನೀರು ತುಂಬಿಳಿದು ಸಾರಾಯ ಕೊಪ್ಪರಿಕೆ ಬೆಲ್ಲಬಂದಂತೆ.
ನೀರು ಬಂದು ನಿರುತದಲ್ಲಿ
ಕಡಿಗಟ್ಟುವಡೆ ಮರಣವಾದಂತೆ,
ಯಾರ ಕೂಡಬೇಕಾಯಿತು ಅವರ ಕೂಡಿತು.
ನಾರಿವಾಣ ಗುರು, ನೀರು ಬೆಲ್ಲ ಶಿಷ್ಯ.
ಸೇರಿದರೆ ಅಂತು ಆಪುದನು ಸೇರಿ ಸೈ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ/60
ನುಡಿದಂತೆ ನಡೆವವರ, ನಡೆದಂತೆ ನುಡಿವವರ
ನಡೆಯ ನಿಮ್ಮ ಭಕ್ತರ ಎನಗೊಮ್ಮೆ ತೋರಿಸಯ್ಯ.
ಅದರಡಿಗೆ ಮಡಿಯ ಹಾಸುವೆನು ;
ಅವರ ಲೆಂಕರ ಲೆಂಕನಾಗಿ ಉಗಿವ ಪಡುಗವ ಹಿಡಿವೆ.
ಉಗುಳ್ದ ತಂಬುಲಕೆ ಕೊಡವಿಡಿದು ನಡವೆ ಬೆಸ್ತರ ಬೋವನಾಗಿ.
ದೃಢವುಳ್ಳ ಭಕ್ತರ ಬಾಗಿಲ ಕಾಯ್ವ ನರನಾಗಿ
ಎಡದೆರವಿಲ್ಲದೆ ಅವರಿಪ್ಪಂತೆ ಇಪ್ಪೆ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./61
ನುಡಿನಡೆಯಿಂದ ಪಡೆದರು ಮೃಡನ ಸದ್ಭಕ್ತರು.
ಕೊಡುವೆಡೆಗೆ ಕೊಂಬೆಡೆಗೆ ಆಸ್ಕರಿಸರು ವೇಷವಂ ತಾಳರು.
ಬಡತನ ಬಂದರೆ ಅನುಭವಿಸಿ, ಬಾರದ ಬಯಸರು.
ಹಿಡಿದ ವ್ರತವ ಬಿಡದೆ ನಡೆದು
ಕೈವಲ್ಯವ ಪಡದರು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./62
ನೂರೊಂದು ಕುಲ ಕಾಯಕ
ಸಾರೆ ಸರ್ವರಿಗೆ ಬೇಕಾಗಿಹುದು ಅಯ್ಯ.
ಕಾಯಕವೊಂದಕೆ ಒಂದು ಆದಿ ಕಾರಣವದು ಹಾದಿ
ಮಾರಿಕೊಳಬೇಕಾಯಿತು ನೂರೊಂದು ಕುಲ
ಕಾಯಕವನೊಂದಿ ಸರ್ವವಂ ಹೊಂದಿ
ಯಾರಾದರಾಗಲಿ ಕುಲವಂ ಜರವರು
ಕುಲದ ಹಂಗಂ ಬಿಡುವುದು
ಮೋರೆಯ ಮುಚ್ಚಿದರೇನಯ್ಯ ?
ಮೂಗಿನಲ್ಲಿ ಹೋಗುವುದು ದುರ್ವಾಸನೆ
ಚಾರ್ವಾಕ ಮತಕೆ ಮುಕ್ತಿಯಿಲ್ಲ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./63
ನೆಳಲಾನು ಆಪೆನುಯೆಂಬ ಅರೆಮರುಳು ಭ್ರಾಂತನೆ ಕೇಳೈ.
ತಿಳಿ ನಿನ್ನೊಳು ನೀನು ತ್ರಿಪುರದ ಮಾರ್ಗವನು.
ಸುಳುಹಿನೊಳು ಸೂಕ್ಷ್ಮ ಸುಖದುಃಖಂಗಳು.
ಬೆಳಬೆಳದುಯಿದೆ ಭೇದಾಭೇದವು
ಮೊಳೆಯಂಚಿವು ಭೇದಕಾರಣದಿಂ ಹೆಮ್ಮರನಾಯಿತು ಕಾಣಾ.
ಒಳಗಿದ್ದರೆ ಹೊರಗೆಯಿತ್ತು, ಹೊರಗಿದ್ದರೆ ಒಳಗೆಯಿತ್ತು
ನೆಳಲ ನುಂಗಿ ತಾನೆ ತಾನಾಯಿತು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./64
ನೋಡುವರೆ ಎನ್ನಳವೆ ನೋಟಕ್ಕೆ ಸಿಕ್ಕರು;
ಕೂಡುವರೆ ಎನ್ನಳವೆ ಕೂಟಕ್ಕೆ ಬಾರರು;
ಬೇಡುವರೆ ಎನ್ನಳವೆ ಬೇಡಿದ್ದ ಕೊಡರು.
ಓಡಿ ಓಡಿ ಗತಬಿದ್ದೆ ಒಬ್ಬರನು ಕಾಣೆ.
ಬೇಡ ಬೇಂಟೆಗೆ ಹೋಗಿ ಬರಿಗೈಯಲಿ ಬಂದಂತೆ
ನಾಡ ತಿರುಗಲಾರೆ ನನ್ನಿಂದ ಆಪುದೇನು ?
ನೋಡಿಕೋ ಇನ್ನು ನನ್ನಿಂದ ಆಗದು ನಿನ್ನಿಂದ ಆದುದು
ಬೋಡಿಯಲಿ ಲಕ್ಷಣವ ಅರೆಸುವರೆ ?
ಕೂಡಗೊಡು ನಿನ್ನ ಮಹಾತ್ಮೆ
ಆಡಿದ ಮಾತಿಗೆ ತಪ್ಪಲಿಲ್ಲ ಏಕವಾಕ್ಯ
ಪತಿಷ್ಠಚಾರಿ ಕಾಡುವರೆ ನೀನು ನಿಃಕರುಣಿಯಲ್ಲ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./65
ಪಂಚಾಕ್ಷರಕೆ ಪ್ರಥಮ ಅಕ್ಷರವು ನಕಾರವು.
ಮಿಂಚಿನೊಳು ಮಳೆ ಸಿಡಿಲು ಗರ್ಜನೆ ಮಿಸುಕುವಂತೆ,
ಕಿಂಚಿತು ನಕಾರಾತ್ಮವ ತಿಳಿದ ಮಹಾತ್ಮಂಗೆ ಸಂಚಲ ಉಂಟೆ ?
ಷಡಾಧಾರ ಸಾಧ್ಯ ಷಡುಚಕ್ರಂಗಳು
ಪಂಚಭೂತಾತ್ಮವೆ ಲಿಂಗಾತ್ಮ , ವಂಚನೆಯಿಲ್ಲದೆ ಅರ್ಪಿತ
ಅರ್ಪಿತದ ಭೇದವ ಕಂಡರೆ
ಕಂಡ ಬೆಳಗೆ ಬೆಳಗೆ ಕನ್ನಡಿಯಾದಂತೆ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./66
ಪತಿವ್ರತ ಧರ್ಮ ಪಾಶಾಣವ ಪೂಜಿಸಲಾಪುದೆ ?
ಯತಿ-ಮುನಿ ಸನ್ಯಾಸಿಗಳು ಯಾತ್ರೆಯನು ಚರಿಸುವರು
ಸತ್ಪಾತ್ರವಂ ಕಾಣದೆ.
ಪತಿಯೆ ಪ್ರಾಣ, ಸತಿಯೆ ಅಂಗ, ಮಥನವಂ ಮಾಳ್ಪುದು ಪಾಶಕ್ಕೆ ಸಿಕ್ಕದೆ ?
ಘೃತವಾಯಿತು ರಕ್ತದಿಂದ, ರಕ್ತವಾಯಿತು ಘೃತದಿಂದ
ಅಮೃತ ಪಂಚವರ್ಣ ಅಸೀಮದ ಮೂಲವ ಕಾಣದೆ
ಮುಕ್ತಿಗೆಟ್ಟಿತು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./67
ಪಿಂಡಾಂಡವ ಕಾಣದವರು
ಬ್ರಹ್ಮಾಂಡವನೆತ್ತ ಬಲ್ಲರಯ್ಯ ?
ಮುಂಡದಲಿ ಕಾದಿ ಗೆಲ್ವೆನೆಂಬ ಮೂರ್ಖರ
ಒಪ್ಪುವನೆ ಗುರು ?
ಗಂಡನಿದ್ದು ಪರಪುರುಷರ ಸಂಗವ ಮಾಡುವುದು
ಗರತಿಗೆ ಲಕ್ಷಣವೆ ?
ಉಂಡು ತೇಗಿ ತೃಪ್ತಿವಡದಲ್ಲದೆ
ಊರ್ಜಿತಮಾಗುವುದೆ ?
ದಂಡವಾಯಿತು ಕ್ರೀಯದಮಾಟ, ನಿಃಕ್ರಿಯದ ಬೇಟ
ಅಂಡಿನಲಿ ಅಳೆದಂತೆ ಸಟ್ಟಿಯೆಂದು ಎಂದರೆ
ಖಂಡಿತವಿಲ್ಲಯಿಲ್ಲಿಂದಲಿ
ಕಾಲಜ್ಞಾನ ಬರ ಸಂವತ್ಸರ ಬ್ರಹ್ಮಾಂಡದೊಳು ಸೂತ್ರ ಕಾಣೈ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./68
ಪುಣ್ಯಪಾಪವೆಂಬೆರಡನು ಕಣ್ಣಿಲಿ ಕಾಣರು,
ಕಿವಿಯಲಿ ಕೇಳರು.
ಪಣ್ಣ ಮೆದ್ದು ಬೀಜವನುಗುಳುವಂತೆ
ಪುಣ್ಯವನೆತ್ತಬಲ್ಲರಯ್ಯ ?
ಕಣ್ಣೊಳು ಪಾಪ, ಕರ್ಣದೊಳು ಪುಣ್ಯ
ಬಣ್ಣಿಸುವರಾರಳವಲ್ಲ .
ಬಯಲನೆ ಬಯಲು ನುಂಗಿತ್ತು .
ನಿರ್ವಯಲು ಈ ದೇಹ ಮಣ್ಣಿನ ಮಾಟಕೂಟದೊಳು
ಬಣ್ಣವನಂತ ಸಿಕ್ಕಿಯವೆ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./69
ಪುರಾಣವಂ ಕಲಿತು ಪುಂಡರ ಸಂಗವ ಮಾಡಿದಂತೆ
ಪರೀಕ್ಷಿಸಿ ಪರರಲ್ಲಿ ತತ್ವಾರ್ಥವಂ ಕೊಚ್ಚಿ ದ್ರವ್ಯವಂ ತಂದು
ಬಿರಿದಿಗೆ ಉದಾರತ್ವವಂ ಬೀರಲು ಸೆರೆಯಾಗಿ ಮಾಳ್ಪನೆ ?
ಎರವಿನ ವಚನವ ಕಲಿತನೆಂಬ ಹೆಮ್ಮೆಗೆ
ಮುರುಕವ ಮಾಡುವ ಮೂರ್ಖರಿಗೆ ಮುಕ್ತಿಯಿಲ್ಲ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./70
ಪೃಥ್ವಿಯ ಪೋಲ್ವಡೆ ಭಕ್ತ ,
ಅಪ್ಪುವ ಪೋಲ್ವಡೆ ಮಹೇಶ್ವರ,
ಅಗ್ನಿಯ ಪೋಲ್ವಡೆ ಪ್ರಸಾದಿ,
ವಾಯುವ ಪೋಲ್ವಡೆ ಪ್ರಾಣಲಿಂಗಿ,
ಆಕಾಶವ ಪೋಲ್ವಡೆ ಶರಣ,
ಅಂತು ಐಕ್ಯ ಅಯ್ದರೊಳು ಸಕಾರಣ ಸಂಗತವದು
ಸೌಖ್ಯ ಷಡುಸ್ಥಲಬ್ರಹ್ಮ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./71
ಬಣ್ಣಿಸುವವರು ತಮ್ಮ ವಸ್ತವ ಬಣ್ಣನೆಯನ್ನಿಟ್ಟು ಭಜನೆಯಂ ಸುಟ್ಟು
ಕಣ್ಣು ತಪ್ಪಿದರೆ ತೂಕ ಮಾಪು ಮೋಸ ವಕ್ರ ಮರವೆವೊಂದೊಂದು
ಪುಣ್ಯವ್ಯಾವುದು ಪುಸಿಗೊಂಡ ವೇಷಕ್ಕೆ ? ಕಾಯಕವೆಲ್ಲಿ ?
ಬನ್ನಣೆ ವೇಶಿ ಬಾಯಮಾತಿನಲ್ಲಿ ಆ ವೇಶಿಯ ಮೀರಿಸಿದಂತೆ
ಕಣ್ಣಿಗೆ ಸಿಕ್ಕದ್ದೇ ಪಾಪ ಸಿಕ್ಕಿದ್ದೇ ಪುಣ್ಯ
ಮಣ್ಣಾಯಿತು ಮಿಕ್ಕಣ ಕಾರ್ಯ.
ಮರವೆಯ ಮಾಯ ಬಣ್ಣದೆ ಉರಿಯಿತು.
ಈ ಕಾಯದ ಸುದ್ದಿಯ ಆಯವಂ ಕಾಣದೆ.
ಹಣ್ಣು ಕಾತಂತೆ ಕಾಸರಿಕನ ಫಲವೆ ನಿಷ್ಪಲ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./72
ಬಲ್ಲಬಲ್ಲಿದರನೆಲ್ಲ ಬಲು ಮಾಯೆ ನುಂಗಿತು.
ಸೊಲ್ಲಿನ ಮೃದುವಾಕ್ಯ ಸಾರಾಯವೆಲ್ಲವಛಲಮಾಯೆ ನುಂಗಿತು.
ಅಲ್ಲ ಅಹುದು ಎಂಬ ಸಂಶಯವೆಲ್ಲವ ಕಲಿ ಮಾಯೆ ನುಂಗಿತು.
ಬಿಲ್ಲ ಹೆದೆಯಂಬ ನುಂಗಿತು ಬಿರಿದಂಕವನೆಚ್ಚಂತೆ.
ಎಲ್ಲವು ನಾನು ಎಂಬ ಅಹಂಕಾರಕ್ಕೆ ಮಾಯೆ ನಿರಾಕಾರಕ್ಕೆ ತಾಯಿ.
ಅಲ್ಲಿ ಎಲ್ಲರೊಳು ಶಿವಭಕ್ತಿ ಶಕ್ತಿ ಶಿವ
ಬಲ್ಲಿದ ಬಲ್ಲಿದರು ಬಲು ದೂರೆ ಹೋದರು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./73
ಬಲ್ಲವ ಮಾತ ಕಲಿತರೇನಯ್ಯ
ಬಯಲ ಬೊಮ್ಮದ ಮೇಳದೆ
ಮಾತಿನ ಮಾಲೆಯೊಳು ಘಾತಕವಿಪ್ಪುದು.
ಹಲ್ಲ ಕಿರಿವರು ಕನ್ನಡಿಗಿದಿರು
ಕನ್ನಡಿ ಕೊಡುವುದೆ ಕಳೆಯುವ ?
ಅಲ್ಲದ ಮಾತು ಅಲಗಿನ ಘಾಯ,
ಬೆಲ್ಲದ ಮಾತು ಭಲ್ಲೆಯದ ಘಾಯ.
ಎಲ್ಲರು ಮಾತಿನಿಂದ ಮರಣವಾದರು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./74
ಬಲ್ಲೆ ಬಲ್ಲಿದರೆಂಬ ಅಹಂಕಾರಿಗೆ ಸಲ್ಲದು ಭಕ್ತಿ .
ಹುಲ್ಲ ಬೆಂಕಿಯೊಳು ಕೆಂಡ ನಿಲ್ಲುವುದೆ ಹುದುಗಿ ಮುಚ್ಚಿದರೆ ?
ಹಲ್ಲಣವ ಕತ್ತೆಗೆ ಹಾಕಿದರೆ ಉತ್ತಮ ತೇಜಿಯಾದಪುದೆ ?
ಎಲ್ಲಿಯ ಭಕ್ತಿ ? ಎಲ್ಲಿ ಮುಕ್ತಿ ?
ಸಲ್ಲದು ನಿಮ್ಮಾಣೆ ನಿಮ್ಮ ಪ್ರಮಥರಾಣೆ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./75
ಬೀಜ ವೃಕ್ಷದ ಮೊದಲು ಕಡೆ
ಸ್ವಜಾತಿ ಇಂದ್ರಿಯ ಇಂದ್ರಿಯದ ಬುಡಕಡೆ
ಅಜಾತಿ ಜಾತಿ ಜನಿತದ ಜನ್ಮದ ಕಡೆ
ತೇಜ ಅಗ್ನಿ ಜಲವೆರಡರ ನಡುಗಡೆ
ದ್ವಿಜಾತಿ ಜಾತಿಯತ್ತತ್ತ ಕಡೆ
ಸುಜಾತನಾತ ವಣರ್ಿಸಿದಾತ ವೃಕ್ಷ ಬೀಜವ
ಪೂಜಿತ ಮಾತಿನೊಳು ಮಾತುಂಟು ಮಂತ್ರಗೋಪ್ಯ
ಅಜಾತ ಕೂಡಲಚೆನ್ನಸಂಗನ ಶರಣರುಯಿಕ್ಕಿದ
ಮುಂಡಿಗೆಯ ಕುಲಜಾತಿ ಭೇದವ ಮಾಡುವ
ಜಗದನ್ಯಾಯಿಗಳು ಎತ್ತಿಕೊಳ್ಳಿ./76
ಭಕ್ತರೆಂಬರು ಉತ್ತಮ ಜಲ್ಮವ ಕಾಣರು ;
ಸತ್ತು ಸತ್ತು ಹುಟ್ಟುವರು ಪರಮ ಪುರುಷಾರ್ಥಕ್ಕೆ.
ನಿತ್ಯ ದುಃಖಿಗಳು ಸುಖವ ನೋಡುವರು ಸುರತಾನಂದಕ್ಕೆ
ದಾಕ್ಷಿಣ್ಯ ಸರ್ವಜೀವದಯಾಳ್ದರು ರಾಜೀವ ಮಾನ್ಯರು
ಭುಕ್ತಿ ಮುಕ್ತಿ ಫಲದಾಯಕರು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./77
ಭೂಮಿಯ ಹೋಲುವ ಭಕ್ತ
ಜಲವ ಹೋಲುವ ಮಹೇಶ್ವರ
ಅಗ್ನಿಯ ಹೋಲುವ ಪ್ರಸಾದಿ
ವಾಯುವ ಹೋಲುವ ಪ್ರಾಣಲಿಂಗಿ
ಆಕಾಶವ ಹೋಲುವ ಆದ್ಯಂತ ಶರಣ
ಇಂತು ಈ ಪಂಚತತ್ವವ ಹೋಲುವ ಐಕ್ಯ.
ಷಡುಮುಖ ಸಮಸ್ತಕ್ಕೆ ಭಕ್ತನೆ ಬುಡ
ಶಿವನೇ ಬೀಜ, ವಿಶ್ವವೇ ಮುಖ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./78
ಮಲಿನವುಂಟೆ ಮಹಾಸಮುದ್ರಕ್ಕೆ ?
ಅರಸಲು ಕೊಲೆ ಹಗೆ ಉಂಟೆ ಸರ್ವ ಜೀವದಯಾಳ್ದಂಗೆ ?
ವಿಸ್ತರಿಸಲು ಕುಲ ಅಕ್ಕುಲವುಂಟೆ ಋಷಿವರ್ಗದೊಳು ?
ಉಚ್ಚರಿಸಲು ಎಲೋ ತಲೋ ಎಂಬುದುಂಟೆ ಜ್ಞಾನಿಸುಖಿಯಲಿ ಬೆರೆಯಲು?
ಭೇದವುಂಟೆ ಅಗ್ನಿ ಆಪೋಷಣಕೆ ?
ನಿದ್ದರಿಸಿನಕೆ ಪಿಂಡವೆ ಬ್ರಹ್ಮಾಂಡ, ಪೃಥ್ವಿಯೆ ಆಧಾರ
ಪ್ರಿಯವೆ ಅಪ್ರಿಯ ಅಪ್ರಿಯವೆ ಪ್ರಿಯ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./79
ಮಾಂಸಪಿಂಡ ಮಂತ್ರಪಿಂಡವೆಂಬುದಕ್ಕೆ ಕುರುಹ್ಯಾವುದು ?
ಹೊಲೆ ಮೊದಲೆಂಬುದೆ ಮಂತ್ರಪಿಂಡ ;
ಕೂಟ ಮೊದಲೆಂಬುದೆ ಮಾಂಸಪಿಂಡ ;
ಹೊಲಿದ ಪಾದರಕ್ಷೆ ಆಪಾದಮಸ್ತಕದಿಂ ಹುದುಗು
ಎಲುವಿನ ಮೂಳೆ ಮಾಂಸದ ಮಾಟ ರಕ್ತದ ಕೊಣ
ನರದ ಹಂಜರ ನಾನಾ ವಿಧದ ಕ್ರಿಮಿಕೀಟ
ಕುಲಮೊದಲ್ಯಾವುದು ಕಡೆಯಾವುದು ?
ವರ್ಣಾಶ್ರಮಕ್ಕೆ ಫಲವದರಿಂದ ನಿಃಫಲವಾಯಿತು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./80
ಮಾಡುವರೆ ಮಾಟದಂತಲ್ಲ ;
ಕೂಡುವರೆ ಕೂಟದಂತಲ್ಲ.
ಕೃಪೆಯದು ಲಿಂಗವ ಮಾಡುವರೆ ಕಂಗಳುಯಿಲ್ಲ
ತ್ರಿವಿಧ ಸೂತ್ರವ ನೀಡಿ ನಿಜವಿಲ್ಲದೆ ಕೆಟ್ಟಿತ್ತು.
ಆಡಾಡಿ ಅರ್ಥವುಹೋಯಿತ್ತು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./81
ಮಾತೇ ಮಂತ್ರ, ಮಾತೇ ತಂತ್ರ, ಮಾತೇ ಯಂತ್ರ,
ಮಾತೇ ಮಾತಿನಿಂದಲಿ ಮಥನ ಮರಣವು.
ಮಾತು ತಪ್ಪಿ ಆಡುವಂಗೆ ಆತ್ಮಲಿಂಗವೆಲ್ಲಿಯದು ?
ಪ್ರೇತ ಲಿಂಗಸಂಸ್ಕಾರಿಯೆಂಬವ ಮಾತಿಗೆ ತಪ್ಪುವನೆ ?
ಭೂತಪ್ರಾಣಿ ಲಿಂಗಪ್ರಾಣಿಯಾಪನೆ ?
ಬನ್ನಣೆ ಮಾತಿನ ರೀತಿ-
ನಿರುತವೆ ಸದಾಚಾರ, ನಿರ್ಣಯವೆ ಲೋಕಾಚಾರ,
ನಿಜ ಸ್ವರೂಪವೇ ಸದಾಚಾರ,
ಯಾತನ ಶರೀರಕ್ಕೆ ಅಳವಡದು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./82
ಮಿಸುರವಂ ನುಡಿವರು, ಮುಸುರುವರು ನೋಣದಂತೆ.
ಆಶಾಬದ್ಧಕೆ ಅಸಗ ಮೋಳಿಗೆ ಹೊತ್ತಂತೆ
ಜಡೆ ಮಕುಟಗಳು.
ಉಸುರುವರು ಪ್ರಣಮ ಉಪದೇಶವ,
ಅಶನಾರ್ಥಿಗಳು ಬಸವನ ಕಂಡು ಅರಿಯರು,
ಕೇಳಿ ಅರಿಯದೆ ಒಡೆಯರಾದರು.
ಉಂಡಮನೆಗೆರಡ ಬಗೆದ ಕಾರಣ
ಕೆಂಡವು ಆರಿ ಬೂದಿಯಾಯಿತು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./83
ಮಿಸುಳಸ್ಥಲ ಮೇಲುವ್ರತ
ಸುಸ್ಥಳಾತ್ಮ ಶುದ್ಧ ಸಿದ್ಧ ಪ್ರಸಿದ್ಧ
ಸಚರಾಚರ ಸನ್ನಿದ ಸಮಯಾಚಾರ
ಸಾದೃಶ್ಯ ವಚನ ಅನ್ವಯ ಆತ್ಮ ನಿವಾಸ ಸರ್ವಗತ
ಶುಚಿಭರ್ೂತ ಭುವನಪ್ರಕಾಶ ಚಿತ್ತು
ದಿವ್ಯಜ್ಞಾನ ಚಕ್ಷು ತ್ರೈಲೋಕ ಪ್ರಕಾಶ
ಚಿತ್ತೋನ್ನತ ಬ್ರಹ್ಮನ ಪ್ರತಿ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./84
ಮೂರರೊಳಗೆ ಮುಣುಗಿ ಮುಖಭಂಗವಾದರು ಮುನ್ನಿನ ಹಿರಿಯರು.
ವೀರ ಧೀರ ಪುರುಷರೆಲ್ಲರು ವಿವೇಕಗೆಟ್ಟರು ಹಿಡಿಯದ ಕಾರಣದಿಂದ.
ದಾರಿತಪ್ಪಿ ಅಡವಿಯಕೂಡಿ ಮೂರರ ಮೇರೆಯ ಕಾರಣದೆ
ವಾರಕ ಮೂರನು ತನ್ನದುಯೆಂದ ಕಾರಣದಿಂದ ಜಾರೆಯರಾದರು
ಹೋರಿ ಹೋರಿ ಗತಭ್ರಷ್ಟರಾದರು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./85
ಮೋಡಕೆ ಮುನಿವರು ಮಳೆಬಿಂಬಕೆ ಇಪ್ಪರೇನಯ್ಯ ?
ಬ್ಯಾಡ ಅನ್ಯಾಯಿಗಳ ಬಿಡು ಎಂದರೆ ಬಿಡದವರ ಬಿಡುವುದು.
ಅವರ ಸಂಗವ ಸಾಧಿಸಿ ಮಾಡ ಮಾಡ
ಪಾಪದ ಸಮುದ್ರದಲಿ ಮುಳುಗುವರು.
ಕುಂಭೀ ನರಕಿಗಳಿಗೆ ನೀಡ ಬ್ಯಾಡ ಅನ್ನವ
ಅವರಿಗೆ ಸತ್ತೇನೆಂದರೆ ನೀರ ಕೊಡಬ್ಯಾಡ.
ಮುಖವ ಮುಂದುಗಂಡರೆ ಮುಚ್ಚು ಕಣ್ಣ
ಆಡಬ್ಯಾಡ ಅವರ ಕೂಡ.
ಅನಂತವಾದ ಪೀಡೆ ಪಿಶಾಚಿಯಾಗಬಹುದಲ್ಲದೆ
ಹುಸಿ ಕಳವು ಸಲ್ಲ.
ಆಡಿ ಅಡಗುವದು ಅಂತಪ್ಪರ ಕಂಡಡೆ.
ಮಾಡಿದ್ದ ಉಂಡಾರು ತಮ್ಮ ಗಳಿಕೆಯ ತಾವೆ.
ಕೇಡು ತಪ್ಪದು ಇಂತು ಅಪ್ಪುದಕ್ಕೆ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./86
ಯದ್ಭಾವಂ ತದ್ಭವತಿ’ ಎಂಬರಲ್ಲದೆ
ತದ್ಭಾವದ ಸದ್ಗತಿಯನೆತ್ತಬಲ್ಲರಯ್ಯ?
ಬುದ್ಭುದಾಕಾರ ಭೂಮಿಯೊಳು ಹುಟ್ಟುಹೊಂದುಯಿಲ್ಲವೆ ?
ಅದ್ವೈತ ಪರಬ್ರಹ್ಮವನಾಡುವರಿಗೆ ಆತ್ಮನ ತಿಳುಹುಂಟೆ ?
ಯದ್ಭಾವ ಏಕೋದೇವ ಏಕಮನ ಏಕಚಿತ್ತವಾದರೆ
ಸಿದ್ಧಿಯಪ್ಪುದು ತಪ್ಪದು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./87
ಯಾವಕಾಲತಪ್ಪಿದರೆ ಸಾವಕಾಲ ತಪ್ಪದುಯೆಂಬರಯ್ಯ.
ದೇವದ್ರೋಹಿಗಳು ಎಲ್ಲ ಬಲ್ಲರಯ್ಯ.
ಕೇವಲ ಶರಣಸ್ಥಲಗಳ ಗಾವುದದೊಳು ನೆರಸೂರ ಮುಂದೆ ಕಾಣರು.
ಗೋವಿನ ಕ್ಷೀರದ ಸ್ವಾದವ ಗೋಗಾಯಿಬಲ್ಲನೆ ಗೋಪ್ಯಾರ್ಥವ ?
ಈವ ಕಾಲ ತಪ್ಪಿದರೆ ಸಾವಕಾಲ ತಪ್ಪುವುದು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./88
ರೂಪು ಸಂಪನ್ನನಾದಡೇನಯ್ಯ ಸ್ತ್ರೀಯರಿಗೆ ಭಾಜನವಾಯಿತ್ತು.
ಗುಣ ಸಂಪನ್ನನಾದಡೇನಯ್ಯ***ಭಾಜನವಾಯಿತ್ತು .
ದ್ರವ್ಯ ಸಂಪನ್ನನಾದಡೇನಯ್ಯ ರಾಜರಿಗೆ ಭಾಜನವಾಯಿತ್ತು .
ಖಡ್ಗ ಸಂಪನ್ನನಾದಡೇನಯ್ಯ ರಣಾಗ್ರಕ್ಕೆ ಭಾಜನವಾಯಿತ್ತು .
ತ್ಯಾಗ ಸಂಪನ್ನನಾದಡೇನಯ್ಯ ಯಾಚಕರಿಗೆ ಭಾಜನವಾಯಿತ್ತು .
ಬಸವಣ್ಣ ನಿಮ್ಮ ಭಕ್ತಿ ಸಂಪನ್ನನಾದ ಕಾರಣದಿಂದ
ಸ್ವಯಲಿಂಗಿಯಾದೆನು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./89
ಲಿಂಗದ ಬೆಳಗ ಅನಂಗದೊಳರಿಯದೆ ಅಂಗೀಕರಿಸುವರು.
ಮತ್ತೆ ಆಗಮ ಶ್ರುತಿಯ ಭಂಗಿತರ
ಮೂಲಂಗಿಯ ಮೇದಂತೆ ನುಂಗದೆ ಬೇಹುದೆ ?
ಲಿಂಗಾಂಗದ ಮೂಲವನರಿವುದು ಅನಂಗಿಗಹುದೆ ?
ಲಿಂಗಾಂಗಿಯ ನಡೆ ನುಡಿ ಚೈತನ್ಯ ಸರ್ವಾಂಗಲಿಂಗಮಯ.
ಹಂಗಿನ ಕಟ್ಟೊಡೆದು ಕಾಬುದೆ ಕರುಣ ಕೃಪೆ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./90
ವಂದನೆ ಸ್ತುತಿ ನಿಂದ್ಯಸ್ತುತಿ
ಒಂದಲ್ಲದೆ ಎರಡುಂಟೇನಯ್ಯ ?
ವಂದಿಸದೆ ಉಸಿವನತ್ತೆರಡು ಅಕ್ಷರವೈದಕ್ಷರವಿಲ್ಲ
ಕುಂದು ಮಾಡಿಕೊಂಡಿತು ಮನುಷ್ಯಜಲ್ಮ
ಕುತರ್ಕ ಬೇಕಾದ ಲೆಕ್ಕವೆಂದರೆ ಕೊಂದಲಿ
ಕೊಂದರೆ ನೊಂದೆನೆಂಬುದು ಆವ ಸ್ವಯ ?
ವಂದನೆ ತಾನು ತಾಘನಾಗಿಘೆ ವಿಚಾರಿಸಿದರೆ ತರ್ಕವಿಲ್ಲ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./91
ವಚನವಂ ಕಲಿತು ರಚಿಸುವ
ರುಚಿಕರವೆಂತು ಕುಶಲರಿಗೆ ?
ಕುರೂಪು ರೂಪಹುದೆ ?
ಅಚಲಭಕ್ತಿ ಅಳವಟ್ಟಿತೇಯವರಿಂಗೆ ?
ನೀಚಸ್ಥಲದವರು ಕೋಟಿ ವಚನವ ಕಲಿತರೇನು ?
ವಚನದಂತೆ ಇಹರೆ ?
ಅಚಿತ ಅಚಿತ ಆನಂದ ಆಗಮದಂತೆ
ವಚನ ವಚನದಂತೆ ತಾ ತನ್ನಂತೆ
ವಚನದ ಶ್ರುತಿ . ಅಜಾತರಿಗಲ್ಲದೆ ಅಳವಡದು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./92
ವಿರಕ್ತ ವಿರಕ್ತರು ತೊತ್ತಿನ ತಲೆಯ
ಸಿದಿಯರುವೆಯಾದರಯ್ಯ.
ಹೊತ್ತಿದ ಮಸ್ತಕವ ಮುಟ್ಟಿ ಮುಟ್ಟದೆ, ತಟ್ಟಿ ತಟ್ಟದೆ
ಪ್ರಸ್ತಾಯದ ಮೃತ್ತಿಕೆಯ ಮುಟ್ಟಿ ಮುಟ್ಟದೆ ತಟ್ಟಿ ತಟ್ಟದೆ
ಎತ್ತಲೆಂದರಿಯದೆ ತತ್ವಪೋಕರಾದರಯ್ಯ.
ಹೊತ್ತ ಮೃತ್ತಿಕೆಯೆಂಬುದೆ ತನು,
ಉತ್ತುಮಾಂಗವೆ ಮನ,
ಅತ್ತ ಇತ್ತ ಎರಡರ ಮಧ್ಯ ಅಬದ್ಧವೆ ತಲೆಯ ಸಿದಿಯರುವೆ.
ಮುಕ್ತರು ಆದರು ಮೋಹಿತ ವಿರಕ್ತರು.
ರಂಬೆ ಸಿಂಬಿಯೊಳು ಸತ್ತವೆಲ್ಲ ಹೆಣ, ಅತ್ತವೆಲ್ಲ ತೃಣ.
ಇತ್ತಿವೆಲ್ಲ ಹೋಗಲಾಡಿ ಅತ್ತಲರಸುವ ಕತ್ತೆಗಳ
ವಿರಕ್ತರೆನಬಹುದೆ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ ?/93
ವೇಶಿಯ ಕಾಯಕ ಮುಂತು
ಸರ್ವ ಅಸಗಕುಲ ಕಾಯಕ ಹಿಂತು.
ಹೇಸಿಕೆಯ ಬಿಟ್ಟಿತ್ತು, ಸೂಸಿತು ಸರ್ವತ್ರವ ಏಕವೆಂದು.
ಆಸೆಯಂ ಬಿಟ್ಟು ದೊರೆ ಬಡವನೇ ? ನಾಶವಾಗದು.
ಕಾಯಕವೆ ಧರ್ಮ ಪಾಶವಂ ತೊಳವುದು
ದೂಷಕ ಮಿಕ್ಕಣ ಕಾಯಕ
ದೋಷ ದ್ರೋಹ ಸಕಲ ಪ್ರಪಂಚು
ವೇಶಿಯ ಕಾಯಕವೇ ತುರೀಯ
ಮಿಕ್ಕಾದ ಅಸಗಕಾಯಕ ಅದರಿಂದಧಮ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./94
ವೇಶಿಯ ಕುಲವ್ಯಾವುದು ? ದಾಸಿಯ ಕುಲವ್ಯಾವುದು ?
ಹಾಸುವಳು ಸೆರಗ ಹದಿನೆಂಟು ಜಾತಿಗೆ.
ಹೇಸದೆ ಎಂಜಲತಿಂದು ಹಿರಿದುಕುಲನನ್ನದೆಂದು ಮೆರವೆ
ಕಾಸುಗಳ್ಳರಿಗೆ ಕಾತೂರ್ಯವೆ ದೇವಾ ?
ಈಸು ಮಾತು ಯಾತಕ್ಕೆ ಇಂತಪ್ಪುದಕ್ಕೆ ?
ದಾಸಿಯಲ್ಲಿ ಗುಣವುಂಟೆ ? ವೇಶಿಯಲಿ ಗುಣವುಂಟು.
ಸರ್ವಜಾತಿ ಒಂದೆಯೆಂದು ಕಾಬಳು.
ಹೇಸಿದ ಬಳಿಕ ಬಿಡಬೇಕು ಹಿಂದಣ ಅವಗುಣವ.
ಏಸು ಮಾತನಾಡಿದರೆ ಆಡಬಹುದು
ಮಾತಿನಂತೆ ಮನವಿದ್ದರೆ ಈಶ್ವರ ಬೇರೆಯಲ್ಲ.
ಈ ಪ್ರಪಂಚಬಿಟ್ಟರೆ
ತ್ರಾಸಿನಂತೆ ಸಮಕಟ್ಟು ಆದರೆ ತತ್ವವೇ ಕಟ್ಟಳೆ
ನಾಶವಾಗದು ಚಿನ್ನದ ಗಟ್ಟಿ
ನಂಬುಗೆಯೆಂಬುದು ಪಾಶದಾಸೆಯ ಬಿಟ್ಟವರಿಗೆ ಸಾಧ್ಯ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./95
ವ್ರತ ಸ್ವವ್ರತಸ್ಥರೆಲ್ಲ ಗತಿಯಿಂ
ಕೋಳಾದ ವ್ರತಗೇಡಿಯಾದರಯ್ಯ.
ವ್ರತಿಗೆ ಪ್ರತಿ ಗುರುವೆನಬಹುದೆ ?
ವ್ರತಿಗೆ ಪ್ರತಿ ಲಿಂಗವೆನಬಹುದೆ ?
ವ್ರತಿಗೆ ಪ್ರತಿ ಜಂಗಮವೆನಬಹುದೆ ?
ಅದು ಕಾರಣದಿಂದ ಮತ ತಪ್ಪಿಹೋದರು
ಸರಿಕರೆಂಬುತ ಮತಿ ಪ್ರಕಾಶವಡಗಿತು
ಮನದೊಳು ಸಂಚಲ ಪುಟ್ಟಿತು.
ಕೃತಯುಗ ಹೇಮ, ತ್ರೇತಾಯುಗ ಬೆಳ್ಳಿ,
ದ್ವಾಪರ ತಾಮ್ರ, ಕಲಿಯುಗಕೆ ಕಲ್ಲಾಯಿತು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./96
ಶಬ್ದವೇ ಸಾಹಿತ್ಯ, ಶಬ್ದವೇ ಸಾರೂಪ್ಯ,
ಶಬ್ದವೇ ಸಾಲೋಕ್ಯ, ಶಬ್ದವೇ ಸಾಮೀಪ್ಯ, ಶಬ್ದವೇ ಸಾಯುಜ್ಯ
ಶಬ್ದ ಸಮಾಧಾನಲಿಂಗಾಂಗಿಗೆ ಚತುರ್ವಿಧಪದ.
ಶಬ್ದವ ಸೂಸುವರು, ಆಸ್ಕ[ರಿಸ]ರು ಸೂಸರು.
ಈಶ್ವರನ ಭಕ್ತರು ಶಬ್ದದಲ್ಲಿಯೇ ಮೋಸಹೋದರು.
ಆಶಾಕೃತದಿಂದೀ ಅಭಾಷರು
ಶಬ್ದದ ಮನದ ಕೊನೆಯಲ್ಲಿ ಆಡುತಿಪ್ಪರು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./97
ಶರೀರ ಭಿನ್ನ, ಪರಮಾತ್ಮ ಏಕವೆಂಬುದೇ ವೇದವಾಕ್ಯ.
ಶರೀರ ಗೊಹೇಶ್ವರ, ಈಶ್ವರ ಪರಮಾರ್ಥ,
ಪರಿಪೂರ್ಣನೆಂಬುದೇ ಭಕ್ತಿವಾಕ್ಯ.
ವನಚರವಿದೇಕೆ ? ಚರವಿದೇಕೆ ?
ನರರೇನ ಬಲ್ಲರಯ್ಯ ಅಪ್ರತಿಮಲಿಂಗಾಂಗವ ?
ಅರುಹಿನ ತಿರುಳು, ಮರಹಿನ ಮರುಳು,
ಕರುಳು ಕಡುಸೂತ್ರ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./98
ಶಾಸ್ತ್ರವೆಲ್ಲ ಸಂತೆಯ ಸಂಗಡ ;
ಪುರಾಣವೆಲ್ಲ ಪುಂಡರ ಸಂಗಡ ;
ನೇತ್ರ ಸೂತ್ರದಲಿ ಗ್ರಹಿಸಿಪ್ಪುದೆಲ್ಲ ಸುದ್ಧ ಅಬದ್ಧವು.
ಕಾತುರ ಕಡು ಮೂರ್ಖತ್ವವು ಭ್ರಾಂತು ಚಿಷ್ಟ ಉಚ್ಛಿಷ್ಟವು
ಭೂತಪ್ರಾಣಿಗೆ ಯಾತಕಯ್ಯ ಭೂಸ್ವರ್ಗಂಗಳು
ಆತ್ಮ ಶುಚಿಭರ್ೂತನಾದರೆ ಅಪರಿಮಿತ ಅಸಾಧ್ಯ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./99
ಶಾಸ್ತ್ರವೈರಾಗ್ಯ, ಪ್ರಸೂತಿ ವೈರಾಗ್ಯ,
ಸ್ಮಶಾನ ವೈರಾಗ್ಯ-ಯಾತನ ಶರೀರಕೆ
ಇವು ವ್ಯಾಪಾರಂಗಳು.
ನೂತನ ಕಲಿಕೆಯ ಮಾತು ನುಡಿ ವೈರಾಗ್ಯವು.
ಸೂತಕ ಹೋದ ಮೂರು ದಿನಕ್ಕೆ ಸುರತಾನಂದವು.
ತತ್ಕಾಲದ ಶವಕ್ಕೇಪರಿ ದುಃಖಂಗಳು.
ಆ ತತ್ಕಾಲಕ್ಕೆ ವೈರಾಗ್ಯ ಕ್ಷಣದೊಳು ಯೋಗ್ಯವು
ನೀತಿ-ಭಕ್ತಿ-ವೈರಾಗ್ಯ ಸ್ವರೂಪು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./100
ಶಿವಲಿಖಿತಕ್ಕೆ ಸಿಕ್ಕು-ವಕ್ರಗಳುಂಟೇನಯ್ಯ ?
ಭವಭವದಲ್ಲಿ ಬಂದರು ಬ್ರಹ್ಮ ವಿಷ್ಣು ರುದ್ರರು,
ಮಾರ್ಕಂಡೇಯಗೆ ಮರಣ ತಪ್ಪುವುದೆ ?
ರವಿ ಚಂದ್ರರ್ಕಗಳಿಗೆ ರಾಹು ಕೇತು ಅಡರದೆ ಬಿಡುವುದೆ ?
ಭುವನದ ಹೆಪ್ಪುವೊಡದು ಭೂತಳವೊಂದಾಗದೆ ?
ದಿವಾರಾತ್ರಿಯೇಕ ದೀಪ್ತಿ ;
ಏಕೋವರ್ಣ ಶಾಂತಕ್ಕೆ ಪವಿತ್ರ ಅಪವಿತ್ರ
ಲೋಕಕ್ಕೆ ಭಿನ್ನ ಕಾಣೈ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./101
ಸಂದುಸಂಶಯವನಳಿದಲ್ಲದೆ
ಮುಂದುದೋರದು ಭಕ್ತಿಸ್ಥಲ.
ಗಂಧ ಗರಗಸದಿಂದ ಕೊರದು ಅರದು ಸುಟ್ಟರೆ
ಪರಿಮಳ ಮಾಣ್ಬುದೆ ?
ವೃಂದ ವನದಿ ವೃಕ್ಷ ಫಲವಾಪಕಾಲಕ್ಕೆ
ಪಾಷಾಣದಲ್ಲಿಯಿಡುವೆಡೆ
ನೊಂದೆನೆಂದು ನೋವ ತಾಳ್ದ ಮರನು ವರುಷಕೆ ಆಪುದೆ ?
ಅಂದು ಏನು, ಇಂದು ಏನು
ಭಕ್ತಂಗೆ ಕುಂದು ನಿಂದೆ ಸ್ತುತಿ ಒಂದೆ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./102
ಸಕಲಯಾತ್ರೆ ಸಮಸ್ತ ಪರ್ವತ
ಪುಣ್ಯಕ್ಷೇತ್ರಾದಿಗಳೆಲ್ಲ
ಮಕಾರತ್ವದೊಳು ಮಡಗಿಯಿದ್ದವು ಕಾಣಾ.
ಒಂಕಾರ ನಕಾರ ಮಕಾರ [ಉಕಾರವು]
ತ್ರಿಯಕ್ಷರವೆ ತ್ರಿಶೂಲಿ.
ಉತ್ಪತ್ತಿ ಸ್ಥಿತಿ ಲಯ ಪ್ರಕಾಶ ಪ್ರಕಾಶ
ಪ್ರಣಮವು ಅವೆ, ಪ್ರಕಾಶವೆಂಬರೆ ಅವೆ
ಪ್ರಣಹತವೆಂಬರೆ ಅವೆ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./103
ಸತಿಗೆ ಸದ್ಗತಿ ತನ್ನ ಪತಿಯಿಂದಲಪ್ಪುದಲ್ಲದೆ
ಅತಃಪರದೈವ ಇನ್ನುಂಟೇನಯ್ಯ ?
ಮಥನ ಇಬ್ಬರಿಗೆ ಮಾಯಸಂಸಾರದೊಳು ಮರ್ಕಟರಾದರು.
ಮತಿಗೇಡಿ ಮನೆದೈವವಂ ಬಿಟ್ಟು
ಮಾರ್ಗಗೆಟ್ಟು ವ್ರತನಾಶವು ರಥಮುರಿದು
ಆ ಕ್ಷಣವಳಿವುದಾಕ್ಷಣ್ಯ ತಪ್ಪುವುದು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./104
ಸಾಸಿರನಾಮ ಭಕ್ತಂಗೆ ಸಲುವುದಲ್ಲದೆ
ವಸ್ತುವಿಂಗೆ ಸಲ್ಲದು.
ಭಕ್ತಂಗೆ ನಾಮ, ವಸ್ತು ನಾಮವಿರಹಿತ
ದಾಸೋಹವ ಕೊಂಬಾತ ಅಂತರಂಗಿ
ನಿರಂಗಿ ನಿಶ್ಶಬ್ದ ಬ್ರಹ್ಮ.
ದೇಶಾಂತ್ರ ಚರಿಸುವ ಉಚ್ಚರಿಸುವ
ನಿಶ್ಚಿಂತ ನಿರಾಳವಾಸಕ್ಕೆ ನಾಮವಿಟ್ಟು ಕರವರೆ ?
ಪುತ್ರ ಮಿತ್ರ ಕಳತ್ರಯಂಗಳ ದೋಷ ದ್ರೋಹಂಗಳು
ಬೈವೊಡೆ ಹೊಯುವೊಡೆ ಈಶ್ವರ ಜನಿತಕ್ಕೆ ಬಹನೆ ?
ಎಷ್ಟು ಲಕ್ಷೊಪಲಕ್ಷ ವೃಕ್ಷ ಬೀಜದಿಂದ ?
ಆ ಬೀಜ ವೃಕ್ಷದಿಂದ ಸಹ
ಸ್ವನಾಮವ ಸದ್ಭಕ್ತಂಗೆ ಹೆಸರಿಟ್ಟು
ಲಿಂಗಾಂಗ ಸಂಗವಾದ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./105
ಸೂತಕದೊಳು ಪುಟ್ಟಿತು ಸುಜ್ಞಾನ ;
ಶೀತಳದೊಳು ಅಪವಿತ್ರವೆ ಪವಿತ್ರ.
ಜ್ಯೋತಿ ಹೊಲೆಯರ ಮನೆಯಲ್ಲಿರೆ
ಕುಲಹೀನನೆನಬಹುದೆ ?
ಕಾತುರವೆ ಅಕ್ಕುಲ, ಹುಸಿಯೆಂಬುದೆ ಹೊಲೆಯ,
ಹಸುವೆಂಬುದೆ ಹಾರುವ, ವಿಷಯವೆಂಬುದೆ ಮಾದಿಗ.
ಜಾತಿಯ ಜನಿತದ ಮೂತ್ರದ ಕುಕ್ಷಿಯೊಳಗಣ
ಮೋಹವಲ್ಲವೇನಯ್ಯ ?
ನೂತನ ನೂರೊಂದು ಕುಲ, ಹದಿನೆಂಟು ಸಮಯ,
ಆರು ದರಿಸಿನ, ಜ್ಯೋತಿರ್ಮಯದ ಲಿಂಗದ ಗೂಡು.
ಅಂಗವಿಕಾರ ಗೀತದ ಮಾತು ಅಲ್ಲ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./106
ಸೂತಕವೆಂದಲ್ಲಿ ಪಾತಕ ಹೊದ್ದುವುದೇನಯ್ಯ ?
ಮಾತೆಯ ಗರ್ಭದೊಳು ಮಾಂಸ ಹೊಲೆ,
ಅಸ್ಥಿ ಮಾಂಸ ಹೊಲೆ, ಮಜ್ಜೆ ಮಾಂಸ ಹೊಲೆ,
ನರಮಾಂಸ ಹೊಲೆ, ರಕ್ತಮಾಂಸ ಹೊಲೆ,
ಚರ್ಮಮಾಂಸ ಹೊಲೆ, ರೋಮ ಈ ತನು ಮಾಂಸ ಹೊಲೆ,
ತ್ರಿಮಾಂಸ ಹೊಲೆ,
ರೂಪು ಲಾವಣ್ಯ ಸೂಸಕದ ಮುದ್ದೆ
ಪಾತಕದ ಗಟ್ಟಿ ಇದಕೆ ಯಾತರ ಕುಲವೊ ?
ರಾತ್ರಿ ಒಂದು, ದಿನ ಒಂದು, ಹೆಣ್ಣೊಂದು ಗಂಡೊಂದು,
ಬಾಹತ್ರ ಕೂಡಿ ಬಲ್ಲೆ ಬಲ್ಲೆನೆಂದು ಹೋರಿ ಕೆಡುವುದು
ಮಾತನಾಡಲಿಕೆ ತೆರಪಿಲ್ಲ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./107
ಹಾರುವ ಹಾರೈದ ತನ್ನೊಳು
ದೂರವಿಲ್ಲ ಹೊಲೆ ನಿಷೇಧ ತನ್ನೊಳು
ಆರಂಭಗೈತ ವಿಷಯ ತನ್ನೊಳು
ಮಾರಾಟ ಮಾತಿನ ಮಾಲೆ ಬಣಜಿಗ ತನ್ನೊಳು
ಸೀರೆಯ ನೆಯ್ವ ಜಾಡ ದೇವಾಂಗ ತನ್ನೊಳು
ಮಾರುವ ಕುಂಬಾರ ಆಹಾರ ದೇಹಾರ ತನ್ನೊಳು
ಕರಿಯ ಪಂಚಾಳ ನಿರ್ಮಿತ ಪಂಚವಿಷಯ ತನ್ನೊಳು
ಬೇರಯಿಲ್ಲ ಕುರುಬ ಹೆಡ್ಡು ಹೇಕುಳಿ ತನ್ನೊಳು
ನೂರೊಂದು ಕಾಯ ತನ್ನೊಳು, ಕುಲವು ತನ್ನೊಳು
ತೋರಿದರೆ ವಿಶ್ವವ ತೋರಬಹುದು
ಆತ್ಮವ ಹೊಂದಿದಧ್ಯಾತ್ಮ ತನ್ನೊಳು
ಕಾರ್ಯ ಕಾರಣಕ್ಕೆ ಕುತರ್ಕವಿಲ್ಲದೆ ಕೂಡುವುದು ಐಕ್ಯಸ್ಥಲ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./108
ಹಿಂದು ಮುಂದುಯೆಂಬರು ಒಂದೆ ಗರ್ಭದೊಳುಪುಟ್ಟಿ
ಹಿಂದಾದ ಕ್ರಿಯೆ ಮುಂದಾದ ನಿಃಕ್ರಿಯೆ
ಬಂಧನವೆರಡು ಜಾತಕ.
ಬಲ್ಲಿದರಿಗೆ ಬಲ್ಲಿದರು ಆಗಿ ಹಿಂದರಿದು ಮುಂದರಿದು
ಒಂದು ಮಾಡಿ ನಡಸೆಂಬ ಅನುಜ್ಞೆಯಿಂದ ಬಂದರು
ತಂದವರ ಕೂನ ತಂದ[ವರು] ಬಲ್ಲರಲ್ಲದೆ
ಮುಂದೆ ಯಾರು ಅರಿಯರು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./109
ಹೇಡಿಯ ಕೈಯಲ್ಲಿ ಚಂದ್ರಾಯುಧವಿದ್ದರೇನಯ್ಯಾ ?
ಪಾಡಿಗೆ ಪಂಥ ಪರಾಕ್ರಮಿ ಪರದಳವಿಭಾಡನಾಪನೆ ?
ಕೋಡಗನ ಕೈಯಲ್ಲಿ ರತ್ನವಿದ್ದರೆ ರಾಜ್ಯರಾಷ್ಟ್ರದೊಳು ಬೆಲೆಗಾಬುದೆ ?
ಮೋಡಕ್ಕೆ ಬಾಯಿದೆರದರೇನು ಕಾಲಕಾಲಕ್ಕೆ ಮಳೆಬಹುದೆ ?
ಹೂಡುವರೆ ಕುದುರೆ ಕೋಣದ ರಥ ಶೃಂಗಾರಕ್ಕೆ ?
ಕಾಡಿನೊಳು ಕರದ ಮಳೆ, ಓಡಿನೊಳು ಎರದ ನೀರು
ಮೂಡುವೀ ಕ್ರಿಯೆಯ ಪೂಜೆಯು
ಬೇಡನ ಬೇಟೆಯ ನಾಯಿ ಮೊಲನಕಂಡು
ಆಚರಿಸಿದಂತಾಯಿತು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./110
ಹೊನ್ನೆಯ ಹುಳವ ಕಂಡು
ಕುನ್ನಿ ತನ್ನ ಬಾಲವ ಸುಟ್ಟುಕೊಂಡಲ್ಲಿ
ತೊನ್ನಾಗಿ ಹುಳಿತು ಕೊಳತು ಹೋಗುವುದಲ್ಲದೆ
ಹೊನ್ನೆಯಂತೆ ಹೊಳವುದೆ ?
ಧನ್ಯರಾಗಬೇಕು ಭಕ್ತರ ನುಡಿ ನಡೆಯ ಕೇಳಿ ಕಂಡು
ಇನ್ನು ಹೊಲುವೆಗೆ ವೇಷವ ತಾಳಿದರೆ ಕ್ಲೇಶ ತೊಳವುದೆ ?
ದಿನ್ನಾರಿಯ ಹೊನ್ನಿನ ತೂಕ ಬಣ್ಣ ಹೊನ್ನಿಗುಂಟೆ ?
ಸನ್ನಹಿತ ಲೋಕಕ್ಕೆ ಸಂಗನ ಶರಣ ವಿರಹಿತ
ಇನ್ನವರ ಪ್ರಭೆ ಸರ್ವಕ್ಕೆ ಕೀಳಾದ ಬಳಿಕ
ಮೇಲು ಮುನ್ನಲೇ ಹೊಲಗೇರಿಯೊಳು ಅಕ್ಕು[ಲ]ಜ ಹುಟ್ಟುವ
ಹನ್ನಿಬ್ಬರ ಬಾಯಿಗೆ ಮುಚ್ಚುಳ, ಮುಗಿದ ಕೈಯಿಕ್ಕುಳ
ತನ್ನ ತಾನರಿತ ಜ್ಞಾನಭರಿತನು ಜಗಭರಿತನ ಭಕ್ತ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./111
ಹೊರಗು ಒಳಗುಯೆಂಬ ಮರವೆಯ ಮನುಜರೆ ಕೇಳಿ
ಹೊರಗು ಜನನ ಮರಣಕೆ
ಹೆಣ್ಣು ಹೊನ್ನು ಮಣ್ಣು ತ್ರಿವಿಧಕ್ಕೆ ಹೊರಗು
ಸ್ವರ್ಗ ಮತ್ರ್ಯ ಪಾತಾಳಕ್ಕೆ
ಪರಾಪರ ವಸ್ತು ಹೊರಗಾದವರ ಹೊರಗೆಂಬುದೆ ಸದಾಚಾರ.
ಒಳಗಾದವರ ಹೊರಗೆಂಬುದೆ ಅನಾಚಾರ.
ಹೊರಗು ಒಳಗುಯೆಂಬ ಉಭಯದ ಭೇದವ
ಮರವೆಯ ನರರೇನ ಬಲ್ಲರಯ್ಯ !
ಶಿವಾಚಾರದ ಖೂನವ ಹೊರಗಾದಾತ ಶಿವಭಕ್ತ.,
ಭಕ್ತನೊಳಗಾದಾತ ಶಿವ.
ಹೊರಗೆಂಬುದು ಒಳಗುಂಟು
ಒಳಗೆಂಬುದು ಹೊರಗುಂಟು
ಅರುಹು ಜ್ಞಾನದ ಉಭಯದ ಮಧ್ಯ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ./112